- ಅರ್ಜುನ ಕೇಳಿದನು – ಹೇ ಮಹಾಬಾಹೋ! ಹೇ ಅಂತರ್ಯಾಮಿ! ಹೇ ವಾಸುದೇವಾ! ನಾನು ಸಂನ್ಯಾಸ ಮತ್ತು ತ್ಯಾಗದ ತತ್ತ್ವವನ್ನು ಬೇರೆ-ಬೇರೆಯಾಗಿ ತಿಳಿಯಲು ಬಯಸುತ್ತೇನೆ. (18.1)
- ಶ್ರೀಭಗವಂತನು ಹೇಳಿದನು – ಎಷ್ಟೋ ಪಂಡಿತರು ಕಾಮ್ಯಕರ್ಮಗಳ ತ್ಯಾಗವನ್ನು ಸಂನ್ಯಾಸವೆಂದು ತಿಳಿಯುತ್ತಾರೆ ಹಾಗೂ ಇತರ ವಿಚಾರಶೀಲರಾದ ಜನರು ಎಲ್ಲ ಕರ್ಮಗಳ ಫಲತ್ಯಾಗವನ್ನು ತ್ಯಾಗವೆಂದು ಹೇಳುತ್ತಾರೆ. (18.2)
- ಎಲ್ಲಾ ಕರ್ಮಗಳು ದೋಷಯುಕ್ತವಾಗಿವೆ ಆದ್ದರಿಂದ ತ್ಯಜಿಸಲು ಯೋಗ್ಯವಾಗಿವೆ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ ಹಾಗೂ ಯಜ್ಞ, ದಾನ ಮತ್ತು ತಪಸ್ಸುರೂಪವಾದ ಕರ್ಮಗಳು ತ್ಯಜಿಸಲು ಯೋಗ್ಯವಲ್ಲ ಎಂದು ಇತರ ವಿದ್ವಾಂಸರು ಹೇಳುತ್ತಾರೆ. (18.3)
- ಎಲೈ ಪುರುಷಶ್ರೇಷ್ಠ ಅರ್ಜುನ! ಸಂನ್ಯಾಸ ಮತ್ತು ತ್ಯಾಗ ಇವೆರಡರಲ್ಲಿ ಮೊದಲು ತ್ಯಾಗದ ವಿಷಯದಲ್ಲಿ ನನ್ನ ನಿಶ್ಚಯವನ್ನು ಕೇಳು, ಏಕೆಂದರೆ ತ್ಯಾಗವು ಸಾತ್ತ್ವಿಕ, ರಾಜಸ ಹಾಗೂ ತಾಮಸ ಎಂಬ ಭೇದದಿಂದ ಮೂರು ಪ್ರಕಾರದ್ದೆಂದು ಹೇಳಲಾಗಿದೆ. (18.4)
- ಯಜ್ಞ, ದಾನ ಮತ್ತು ತಪಸ್ಸುರೂಪೀ ಕರ್ಮ ತ್ಯಜಿಸುವುದು ಯೋಗ್ಯವಲ್ಲ. ಅಲ್ಲದೆ ಅದು ಅವಶ್ಯವಾದ ಕರ್ತವ್ಯವಾಗಿದೆ, ಏಕೆಂದರೆ ಯಜ್ಞ, ದಾನ, ತಪಸ್ಸು ಈ ಮೂರು ಕರ್ಮಗಳೇ ಬುದ್ಧಿವಂತರಾದ ಮನುಷ್ಯರನ್ನು ಪವಿತ್ರಗೊಳಿಸುವುದಾಗಿದೆ. (18.5)
- ಆದ್ದರಿಂದ ಎಲೈ ಪಾರ್ಥಾ! ಈ ಯಜ್ಞ, ದಾನ, ತಪೋರೂಪೀ ಕರ್ಮಗಳನ್ನು ಹಾಗೂ ಇತರ ಸಮಸ್ತ ಕರ್ತವ್ಯ ಕರ್ಮಗಳನ್ನು ಆಸಕ್ತಿ ಮತ್ತು ಫಲಗಳನ್ನು ತ್ಯಜಿಸಿ ಅವಶ್ಯವಾಗಿ ಮಾಡಬೇಕು. ಇದು ನನ್ನ ನಿಶ್ಚಿತವಾದ ಉತ್ತಮ ಅಭಿಪ್ರಾಯವಾಗಿದೆ. (18.6)
- (ನಿಷಿದ್ಧ ಮತ್ತು ಕಾಮ್ಯ ಕರ್ಮಗಳನ್ನಾದರೋ ಸ್ವರೂಪದಿಂದ ತ್ಯಾಗ ಮಾಡುವುದು ಉಚಿತವೇ ಆಗಿದೆ.) ಆದರೆ ನಿಯತ ಕರ್ಮವನ್ನು ಸ್ವರೂಪದಿಂದ ತ್ಯಜಿಸುವುದು ಯೋಗ್ಯವಲ್ಲ. ಅದಕ್ಕಾಗಿ ಮೋಹದಿಂದ ಅದನ್ನು ತ್ಯಜಿಸುವುದು ತಾಮಸ ತ್ಯಾಗವೆಂದು ಹೇಳಲಾಗಿದೆ. (18.7)
- ಇರುವುದೆಲ್ಲ ಕರ್ಮಗಳು ದುಃಖರೂಪವಾಗಿವೆ ಎಂದು ತಿಳಿದು ಶಾರೀರಿಕ ಕ್ಲೇಶದ ಭಯದಿಂದ ಕರ್ತವ್ಯ ಕರ್ಮಗಳನ್ನು ತ್ಯಾಗ ಮಾಡಿದರೆ, ಇಂತಹ ರಾಜಸ ತ್ಯಾಗವನ್ನು ಮಾಡಿದ ಅವನಿಗೆ ತ್ಯಾಗದ ಫಲವು ಯಾವ ರೀತಿಯಿಂದಲೂ ಸಿಗುವುದಿಲ್ಲ. (18.8)
- ಎಲೈ ಅರ್ಜುನ! ‘ಶಾಸವಿಹಿತ ಕರ್ಮ ಮಾಡುವುದು ಕರ್ತವ್ಯವಾಗಿದೆ’ ಎಂಬ ಭಾವನೆಯಿಂದ ಆಸಕ್ತಿ ಮತ್ತು ಫಲವನ್ನು ತ್ಯಾಗಮಾಡಿ ಮಾಡುವ ತ್ಯಾಗವೇ ಸಾತ್ವಿಕ ತ್ಯಾಗವೆಂದು ತಿಳಿಯಲಾಗಿದೆ. (18.9)
- ಕುಶಲವಲ್ಲದ ಕರ್ಮವನ್ನು ದ್ವೇಷಿಸದೆ, ಕುಶಲಕರ್ಮದಲ್ಲಿ ಆಸಕ್ತನಾಗದೆ, ಶುದ್ಧವಾದ ಸತ್ತ್ವಗುಣದಿಂದ ಕೂಡಿದ ಪುರುಷನು ಸಂಶಯರಹಿತ, ಬುದ್ಧಿವಂತ ಮತ್ತು ನಿಜವಾದ ತ್ಯಾಗಿಯೂ ಆಗಿದ್ದಾನೆ. (18.10)
- ಏಕೆಂದರೆ ಶರೀರಧಾರೀಯಾದ ಯಾವದೇ ಮನುಷ್ಯನು ಪೂರ್ಣವಾಗಿ ಕರ್ಮಗಳೆಲ್ಲವನ್ನು ತ್ಯಜಿಸುವುದು ಸಾಧ್ಯವಾಗದು. ಆದ್ದರಿಂದ ಕರ್ಮಫಲ ತ್ಯಾಗಿಯಾಗಿರುವವನೇ ತ್ಯಾಗಿಯಾಗಿದ್ದಾನೆ ಎಂದು ಹೇಳಲಾಗುತ್ತದೆ. (18.11)
- ಕರ್ಮಫಲವನ್ನು ತ್ಯಾಗ ಮಾಡದಿರುವ ಮನುಷ್ಯನಿಗೆ ಕರ್ಮದ ಒಳ್ಳೆಯ, ಕೆಟ್ಟ ಮತ್ತು ಮಿಶ್ರ ಎಂಬ ಮೂರು ವಿಧದ ಫಲಗಳು ಸತ್ತ ಬಳಿಕ ಅವಶ್ಯವಾಗಿ ಸಿಗುತ್ತವೆ, ಆದರೆ ಕರ್ಮಫಲವನ್ನು ತ್ಯಾಗಮಾಡಿದ ಮನುಷ್ಯರಿಗೆ ಕರ್ಮಗಳ ಫಲಗಳು ಎಂದಿಗೂ ಸಿಗಲಾರವು. (18.12)
- ಎಲೈ ಮಹಾಬಾಹೋ! ಸಂಪೂರ್ಣ ಕರ್ಮಗಳ ಸಿದ್ಧಿಗೆ ಈ ಐದು ಕಾರಣಗಳನ್ನು, ಕರ್ಮಗಳನ್ನು ಮುಗಿಸಲು ಉಪಾಯವನ್ನು ತಿಳಿಸುವ ಸಾಂಖ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅವುಗಳನ್ನು ನೀನು ನನ್ನಿಂದ ಚೆನ್ನಾಗಿ ತಿಳಿದುಕೋ. (18.13)
- ಕರ್ಮಗಳ ಸಿದ್ಧಿಗಾಗಿ ಅಧಿಷ್ಠಾನ, ಕರ್ತಾ, ಭಿನ್ನ-ಭಿನ್ನ ಪ್ರಕಾರದ ಕರಣಗಳು, ಅನೇಕ ವಿಧದ ಬೇರೆ-ಬೇರೆ ಕ್ರಿಯೆಗಳು ಮತ್ತು ಹಾಗೆಯೇ ಐದನೆಯ ಕಾರಣ ದೈವವಾಗಿದೆ. (18.14)
- ಮನುಷ್ಯನು ಮನಸ್ಸು, ವಾಣಿ ಮತ್ತು ಶರೀರದಿಂದ ಶಾಸ್ತ್ರಾನುಕೂಲವಾಗಲೀ ಅಥವಾ ಅದಕ್ಕೆ ವಿರುದ್ಧವಾಗಲೀ ಯಾವುದೇ ಕರ್ಮಮಾಡಲು ಈ ಐದೇ ಕಾರಣಗಳಿರುತ್ತವೆ. (18.15)
- ಆದರೆ ಹೀಗಿದ್ದರೂ ಯಾವ ಮನುಷ್ಯನು ಅಶುದ್ಧ ಬುದ್ಧಿಯಿಂದಾಗಿ ಕರ್ಮಗಳು ಪೂರ್ಣವಾಗುವುದರಲ್ಲಿ ಕೇವಲ ಮತ್ತು ಶುದ್ಧ ಸ್ವರೂಪೀ ಆತ್ಮನನ್ನು ಕರ್ತಾ ಎಂದು ತಿಳಿಯುತ್ತಾನೋ, ಆ ಮಲಿನ ಬುದ್ಧಿಯ ಅಜ್ಞಾನಿಯು ಯಥಾರ್ಥವನ್ನು ತಿಳಿಯುವುದಿಲ್ಲ. (18.16)
- ಯಾವ ಪುರುಷನ ಅಂತಃಕರಣದಲ್ಲಿ ‘ನಾನು ಕರ್ತಾ ಆಗಿದ್ದೇನೆ’ ಎಂಬ ಭಾವ ಇರುವುದಿಲ್ಲವೋ, ಹಾಗೆಯೇ ಯಾರ ಬುದ್ಧಿಯು ಸಾಂಸಾರಿಕ ಪದಾರ್ಥಗಳಲ್ಲಿ ಮತ್ತು ಕರ್ಮಗಳಲ್ಲಿ ಅಂಟಿಕೊಳ್ಳುವುದಿಲ್ಲವೋ, ಆ ಮನುಷ್ಯನು ಎಲ್ಲ ಜನರನ್ನು ಕೊಂದರೂ ವಾಸ್ತವಿಕವಾಗಿ ಕೊಲ್ಲುವುದಿಲ್ಲ ಹಾಗೂ ಅವನು ಪಾಪದಿಂದ ಬಂಧಿತನಾಗುವುದೂ ಇಲ್ಲ. (18.17)
- ಜ್ಞಾತಾ, ಜ್ಞಾನ ಮತ್ತು ಜ್ಞೇಯ ಇವು ಮೂರು ವಿಧದ ಕರ್ಮ ಪ್ರೇರಣೆಯಾಗಿದೆ ಮತ್ತು ಕರ್ತಾ, ಕರಣ ಹಾಗೂ ಕ್ರಿಯೆ ಇವು ಮೂರು ಪ್ರಕಾರದ ಕರ್ಮಸಂಗ್ರಹವಾಗಿದೆ. (18.18)
- ಗುಣಗಳ ಸಂಖ್ಯೆಯನ್ನು ತಿಳಿಸುವ ಶಾಸ್ತ್ರದಲ್ಲಿ ಜ್ಞಾನ, ಕರ್ಮ ಮತ್ತು ಕರ್ತಾ ಇವು ಗುಣಗಳ ಭೇದದಿಂದ ಮೂರು- ಮೂರು ಪ್ರಕಾರದಿಂದಲೇ ಹೇಳಲಾಗಿದೆ. ಅದನ್ನೂ ನೀನು ನನ್ನಿಂದ ಚೆನ್ನಾಗಿ ಕೇಳು. (18.19)
- ಯಾವ ಜ್ಞಾನದಿಂದ ಮನುಷ್ಯನು ಬೇರೆ-ಬೇರೆಯಾದ ಎಲ್ಲ ಪ್ರಾಣಿಗಳಲ್ಲಿ ಒಂದೇ ಅವಿನಾಶಿಯಾದ ಪರಮಾತ್ಮ ಭಾವವನ್ನು ವಿಭಾಗರಹಿತ ಸಮಭಾವದಿಂದ ಸ್ಥಿತನಾಗಿದ್ದಾನೆ ಎಂದು ನೋಡುವ ಜ್ಞಾನವನ್ನು ನೀನು ಸಾತ್ತ್ವಿಕವೆಂದು ತಿಳಿ. (18.20)
- ಆದರೆ ಯಾವ ಜ್ಞಾನದಿಂದ ಮನುಷ್ಯನು ಸಮಸ್ತ ಭೂತಗಳಲ್ಲಿ ಭಿನ್ನ-ಭಿನ್ನ ಪ್ರಕಾರಗಳ ಅನೇಕ ಭಾವಗಳನ್ನು ಬೇರೆ-ಬೇರೆಯಾಗಿ ತಿಳಿಯುವನೋ, ಆ ಜ್ಞಾನವನ್ನು ನೀನು ರಾಜಸವೆಂದು ತಿಳಿ. (18.21)
- ಆದರೆ ಒಂದು ಕಾರ್ಯರೂಪೀ ಶರೀರದಲ್ಲೇ ಪೂರ್ಣದಂತೆ ಆಸಕ್ತವಾಗಿದೆಯೋ, ಹಾಗೆಯೇ ಯುಕ್ತಿಶೂನ್ಯ, ತಾತ್ತ್ವಿಕ ಅರ್ಥರಹಿತ ಮತ್ತು ತುಚ್ಛವಾಗಿರುವ ಜ್ಞಾನವನ್ನು ತಾಮಸವೆಂದು ಹೇಳಲಾಗಿದೆ. (18.22)
- ಶಾಸ್ತ್ರವಿಧಿಯಿಂದ ನಿಯಮಿಸಿದ ಕರ್ಮವನ್ನು ಕರ್ತೃತ್ವದ ಅಭಿಮಾನದಿಂದ ರಹಿತವಾಗಿ, ಫಲವನ್ನು ಬಯಸದೆ ಇರುವ ಮನುಷ್ಯನು ರಾಗ-ದ್ವೇಷ ರಹಿತವಾಗಿ ಮಾಡುವನೋ ಆ ಕರ್ಮವನ್ನು ಸಾತ್ತ್ವಿಕವೆಂದು ಹೇಳಲಾಗಿದೆ. (18.23)
- ಆದರೆ ಬಹಳ ಪರಿಶ್ರಮಪೂರ್ವಕ ಹಾಗೂ ಭೋಗಗಳನ್ನು ಬಯಸುವ ಅಥವಾ ಅಹಂಕಾರದಿಂದ ಕೂಡಿದ ಮನುಷ್ಯನು ಮಾಡಿದ ಕರ್ಮವನ್ನು ರಾಜಸವೆಂದು ಹೇಳಲಾಗಿದೆ. (18.24)
- ಪರಿಣಾಮ, ಹಾನಿ, ಹಿಂಸೆ ಮತ್ತು ಸಾಮರ್ಥ್ಯ ಇವುಗಳ ವಿಚಾರ ಮಾಡದೆ, ಕೇವಲ ಅಜ್ಞಾನದಿಂದ ಮಾಡುವ ಕರ್ಮವನ್ನು ತಾಮಸವೆಂದು ಹೇಳಲಾಗುತ್ತದೆ. (18.25)
- ಸಂಗರಹಿತನಾಗಿ, ಅಹಂಕಾರದ ಮಾತನ್ನು ಆಡದೆ, ಧೈರ್ಯ, ಉತ್ಸಾಹದಿಂದ ಹಾಗೂ ಕಾರ್ಯವು ಸಿದ್ಧವಾಗಲೀ, ಆಗದಿರಲೀ ಅದರಲ್ಲಿ ಹರ್ಷ-ಶೋಕಾದಿ ವಿಕಾರಗಳಿಂದ ರಹಿತನಾದ ಕರ್ತನನ್ನು ಸಾತ್ತ್ವಿಕನೆಂದು ಹೇಳಲಾಗುತ್ತದೆ. (18.26)
- ಆಸಕ್ತಿಯಿಂದ ಕೂಡಿದವನಾಗಿ, ಕರ್ಮಗಳ ಫಲಗಳನ್ನು ಬಯಸುತ್ತಾ, ಲೋಭಿ, ಇತರರಿಗೆ ಕಷ್ಟಕೊಡುವ ಸ್ವಭಾವವುಳ್ಳ, ಅಶುದ್ಧ ಆಚರಣೆಯುಳ್ಳ ಮತ್ತು ಹರ್ಷ-ಶೋಕಗಳಿಂದ ಕೂಡಿದ ಕರ್ತನನ್ನು ರಾಜಸನೆಂದು ಹೇಳುತ್ತಾರೆ. (18.27)
- ಅಯುಕ್ತನೂ, ಶಿಕ್ಷಣರಹಿತನೂ, ಅಹಂಕಾರಿಯೂ, ಧೂರ್ತನೂ ಮತ್ತು ಇತರರ ಜೀವನವನ್ನು ನಾಶಪಡಿಸುವವನೂ, ಶೋಕಿಸುವವನೂ, ಸೋಮಾರಿಯೂ, ದೀರ್ಘಸೂತ್ರಿಯೂ ಆದ ಕರ್ತೃನನ್ನು ತಾಮಸನೆಂದು ಹೇಳಲಾಗುತ್ತದೆ. (18.28)
- ಎಲೈ ಧನಂಜಯ! ಇನ್ನು ಬುದ್ಧಿಯ ಮತ್ತು ಧೃತಿಯ ಗುಣಗಳಿಗನುಸಾರ ಮೂರು ಪ್ರಕಾರದ ಭೇದಗಳನ್ನು, ಪೂರ್ಣವಾಗಿ, ವಿಭಾಗಪೂರ್ವಕ ನಾನು ಹೇಳುವೆನು, ಅದನ್ನು ನೀನು ಕೇಳು. (18.29)
- ಎಲೈ ಪಾರ್ಥ! ಪ್ರವೃತ್ತಿಮಾರ್ಗ ಮತ್ತು ನಿವೃತ್ತಿಮಾರ್ಗ, ಕರ್ತವ್ಯ ಹಾಗೂ ಅಕರ್ತವ್ಯ, ಭಯ ಮತ್ತು ಅಭಯ ಹಾಗೆಯೇ ಬಂಧನ ಹಾಗೂ ಮೋಕ್ಷ ಇವನ್ನು ಯಥಾರ್ಥವಾಗಿ ತಿಳಿಯುವ ಬುದ್ಧಿಯು ಸಾತ್ತ್ವಿಕವಾಗಿದೆ. (18.30)
- ಎಲೈ ಪಾರ್ಥಾ! ಧರ್ಮವನ್ನು ಮತ್ತು ಅಧರ್ಮವನ್ನು, ಕರ್ತವ್ಯ ಹಾಗೂ ಅಕರ್ತವ್ಯವನ್ನು ಯಥಾರ್ಥವಾಗಿ ತಿಳಿಯುವ ಮನುಷ್ಯನ ಬುದ್ಧಿಯು ರಾಜಸವಾಗಿದೆ. (18.31)
- ಎಲೈ ಅರ್ಜುನಾ! ತಮೋಗುಣದಿಂದ ವ್ಯಾಪಿಸಿದ ಬುದ್ಧಿಯು ಅಧರ್ಮವನ್ನೂ ಕೂಡ ‘ಇದು ಧರ್ಮವಾಗಿದೆ’ ಎಂದು ತಿಳಿಯುತ್ತದೆ, ಹಾಗೆಯೇ ಇತರ ಪದಾರ್ಥಗಳನ್ನೂ ವಿಪರೀತವಾಗಿ ತಿಳಿಯುವ ಬುದ್ಧಿಯು ತಾಮಸಿಯಾಗಿದೆ. (18.32)
- ಎಲೈ ಪಾರ್ಥನೆ! ಯಾವ ಅವ್ಯಭಿಚಾರಿಣಿಯಾದ ಧಾರಣ ಶಕ್ತಿಯಿಂದ ಮನುಷ್ಯನು ಧ್ಯಾನಯೋಗದಿಂದ ಮನಸ್ಸು, ಪ್ರಾಣ ಮತ್ತು ಇಂದ್ರಿಯಗಳ ಕ್ರಿಯೆಗಳನ್ನು ಧಾರಣೆ ಮಾಡುತ್ತಾನೋ, ಆ ಧೃತಿಯು ಸಾತ್ತ್ವಿಕವಾಗಿದೆ. (18.33)
- ಆದರೆ ಕುಂತೀಪುತ್ರ ಅರ್ಜುನನೇ! ಫಲದ ಇಚ್ಛೆಯುಳ್ಳ ಮನುಷ್ಯನು ಅತಿ ಆಸಕ್ತಿಯಿಂದಾಗಿ ಯಾವ ಧಾರಣಶಕ್ತಿಯಿಂದ ಧರ್ಮ, ಅರ್ಥ ಮತ್ತು ಕಾಮ ಇವನ್ನು ಧರಣೆ ಮಾಡುತ್ತಾನೋ ಆ ಧಾರಣಶಕ್ತಿಯು ರಾಜಸವಾಗಿದೆ. (18.34)
- ಎಲೈ ಪಾರ್ಥನೇ! ದುಷ್ಟಬುದ್ಧಿಯುಳ್ಳ ಮನುಷ್ಯನು ಯಾವ ಧಾರಣ ಶಕ್ತಿಯಿಂದ ನಿದ್ದೆ, ಭಯ, ಚಿಂತೆ, ದುಃಖ ಮತ್ತು ಉನ್ಮತ್ತತೆಯನ್ನೂ ಬಿಡುವುದಿಲ್ಲವೋ ಅರ್ಥಾತ್ ಧರಿಸಿಕೊಂಡಿರುವನೋ, ಆ ಧಾರಣಶಕ್ತಿಯು ತಾಮಸಿಯಾಗಿದೆ. (18.35)
- ಎಲೈ ಭರತಶ್ರೇಷ್ಠಾ! ಈಗ ಮೂರು ಪ್ರಕಾರದ ಸುಖವನ್ನು ಕೂಡ ನನ್ನಿಂದ ನೀನು ಕೇಳು. ಯಾವ ಸುಖದಲ್ಲಿ ಸಾಧಕನು ಭಜನೆ, ಧ್ಯಾನ ಮತ್ತು ಸೇವೆ ಮೊದಲಾದ ಅಭ್ಯಾಸದಲ್ಲಿ ರಮಿಸುತ್ತಾನೋ ಮತ್ತು ಯಾವುದರಿಂದ ಅವನ ದುಃಖ ಇಲ್ಲವಾಗುತ್ತದೋ, ಇದು ಪ್ರಾರಂಭದಲ್ಲಿ ವಿಷದಂತೆ ಕಂಡರೂ ಪರಿಣಾಮದಲ್ಲಿ ಅಮೃತಕ್ಕೆ ಸಮಾನವಾಗಿರುತ್ತದೆ. ಅದು ಪರಮಾತ್ಮನ ವಿಷಯಕ ಬುದ್ಧಿಯ ಪ್ರಸಾದದಿಂದ ಉಂಟಾಗುತ್ತದೆ. ಆ ಸುಖವನ್ನು ಸಾತ್ತ್ವಿಕ ಸುಖವೆಂದು ಹೇಳಲಾಗಿದೆ. (18.36-37)
- ವಿಷಯ ಮತ್ತು ಇಂದ್ರಿಯಗಳ ಸಂಯೋಗದಿಂದ ಉಂಟಾಗುವ ಸುಖವು ಮೊದಲು ಭೋಗಕಾಲದಲ್ಲಿ ಅಮೃತಕ್ಕೆ ಸಮವಾಗಿ ತೋರಿದರೂ ಪರಿಣಾಮದಲ್ಲಿ ವಿಷಕ್ಕೆ ಸಮಾನವಾಗಿದೆ. ಆದ್ದರಿಂದ ಆ ಸುಖವನ್ನು ರಾಜಸವೆಂದು ಹೇಳುತ್ತಾರೆ. (18.38)
- ಭೋಗಕಾಲದಲ್ಲಿ ಹಾಗೂ ಪರಿಣಾಮದಲ್ಲಿಯೂ ಆತ್ಮನನ್ನು ಮೋಹಗೊಳಿಸುತ್ತದೋ, ನಿದ್ದೆ, ಆಲಸ್ಯ ಮತ್ತು ಪ್ರಮಾದದಿಂದ ಉತ್ಪನ್ನವಾಗುತ್ತದೋ, ಆ ಸುಖವನ್ನು ತಾಮಸವೆಂದು ಹೇಳಲಾಗಿದೆ. (18.39)
- ಪೃಥಿವಿಯಲ್ಲಿ, ಆಕಾಶದಲ್ಲಿ ಅಥವಾ ದೇವತೆಗಳಲ್ಲಿ ಹಾಗೆಯೇ ಇವಲ್ಲದೆ ಮತ್ತೆ ಎಲ್ಲೇ ಆಗಿರಲಿ ಪ್ರಕೃತಿಯಿಂದ ಉತ್ಪನ್ನವಾದ ಯಾವುದೇ ಪ್ರಾಣಿ ಇಲ್ಲವೇ ಪದಾರ್ಥಗಳು ಮೂರು ಗುಣಗಳಿಂದ ರಹಿತವಾದಸತ್ತ್ವವು ಯಾವುದೂ ಇಲ್ಲ. (18.40)
- ಎಲೈ ಪರಂತಪನೇ! ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಇವರ ಕರ್ಮಗಳು ಸ್ವಭಾವತಃ ಉತ್ಪನ್ನವಾದ ಗುಣಗಳಿಂದಾಗಿ ವಿಭಾಗಿಸಲಾಗಿದೆ. (18.41)
- ಅಂತಃಕರಣದ ನಿಗ್ರಹ, ಇಂದ್ರಿಯಗಳ ಮೇಲೆ ಹತೋಟಿ, ಧರ್ಮಪಾಲನೆಗಾಗಿ ಕಷ್ಟ ಸಹಿಸುವುದು, ಒಳ ಹೊರಗೆ ಶುದ್ಧವಾಗಿರುವುದು, ಬೇರೆಯವರ ಅಪರಾಧಗಳನ್ನು ಕ್ಷಮಿಸುವುದು, ಮನಸ್ಸು, ಇಂದ್ರಿಯಗಳು ಮತ್ತು ಶರೀರವನ್ನು ಸರಳವಾಗಿರುವುದು, ವೇದ, ಶಾಸ್ತ್ರ, ದೇವರು ಮತ್ತು ಪರಲೋಕಾದಿಗಳಲ್ಲಿ ಶ್ರದ್ಧೆಯನ್ನಿಡುವುದು, ವೇದಶಾಸ್ತ್ರಗಳ ಅಧ್ಯಯನ ಮತ್ತು ಅಧ್ಯಾಪನ ಮಾಡುವುದು, ಪರಮಾತ್ಮ ತತ್ತ್ವದ ಅನುಭವ ಪಡೆಯುವುದು – ಇವೆಲ್ಲವೂ ಬ್ರಾಹ್ಮಣನ ಸ್ವಾಭಾವಿಕವಾದ ಕರ್ಮಗಳಾಗಿವೆ. (18.42)
- ಶೌರ್ಯ, ತೇಜ, ಧೈರ್ಯ, ಚಾತುರ್ಯ, ಯುದ್ಧದಿಂದ ಓಡಿ ಹೋಗದಿರುವುದು, ದಾನ ಕೊಡುವುದು ಮತ್ತು ಸ್ವಾಮಿಭಾವ ಇವೆಲ್ಲವೂ ಕ್ಷತ್ರಿಯನ ಸ್ವಾಭಾವಿಕ ಕರ್ಮಗಳಾಗಿವೆ. (18.43)
- ಕೃಷಿ, ಗೋಪಾಲನೆ ಮತ್ತು ಕ್ರಯ-ವಿಕ್ರಯರೂಪೀ ಸತ್ಯ ವ್ಯವಹಾರ – ಇವು ವೈಶ್ಯರ ಸ್ವಾಭಾವಿಕ ಕರ್ಮಗಳಾಗಿವೆ. ಹಾಗೆಯೇ ಸರ್ವ ವರ್ಣಗಳ ಸೇವೆ ಮಾಡುವುದು ಶೂದ್ರನ ಸ್ವಾಭಾವಿಕ ಕರ್ಮವಾಗಿದೆ. (18.44)
- ತಮ್ಮ-ತಮ್ಮ ಸ್ವಾಭಾವಿಕ ಕರ್ಮಗಳಲ್ಲಿ ತತ್ಪರತೆಯಿಂದ ತೊಡಗಿರುವ ಮನುಷ್ಯನಿಗೆ ಭಗವತ್ ಪ್ರಾಪ್ತಿರೂಪೀ ಪರಮ ಸಿದ್ಧಿಯ ಲಾಭವಾಗುತ್ತದೆ. ತನ್ನ ಸ್ವಾಭಾವಿಕ ಕರ್ಮದಲ್ಲಿ ರತನಾದ ಮನುಷ್ಯನು ಹೇಗೆ ಕರ್ಮಮಾಡಿ ಪರಮ ಸಿದ್ಧಿಯನ್ನು ಪಡೆಯುತ್ತಾನೆ? ಆ ವಿಧಿಯನ್ನು ನೀನು ಕೇಳು. (18.45)
- ಯಾವ ಪರಮೇಶ್ವರನಿಂದ ಎಲ್ಲ ಪ್ರಾಣಿಗಳ ಉತ್ಪತ್ತಿಯಾಗಿದೆಯೋ ಹಾಗೂ ಯಾರಿಂದ ಈ ಜಗತ್ತು ವ್ಯಾಪಿಸಿದೆಯೋ, ಆ ಪರಮೇಶ್ವರನನ್ನು ತಮ್ಮ ಸ್ವಾಭಾವಿಕ ಕರ್ಮಗಳಿಂದ ಪೂಜಿಸಿ ಮನುಷ್ಯನು ಪರಮ ಸಿದ್ಧಿಯನ್ನು ಪಡೆಯುತ್ತಾನೆ. (18.46)
- ಚೆನ್ನಾಗಿ ಆಚರಿಸಲಾದ ಬೇರೆಯವರ ಧರ್ಮಕ್ಕಿಂತ, ಗುಣರಹಿತವಾಗಿದ್ದರೂ ತನ್ನ ಧರ್ಮವು ಶ್ರೇಷ್ಠವಾಗಿದೆ. ಏಕೆಂದರೆ ಸ್ವಭಾವದಿಂದ ನಿಯಮಿಸಲ್ಪಟ್ಟ ಸ್ವಧರ್ಮರೂಪೀ ಕರ್ಮವನ್ನು ಮಾಡುವವನಿಗೆ ಪಾಪವು ತಟ್ಟುವುದಿಲ್ಲ. (18.47)
- ಆದ್ದರಿಂದ ಕುಂತೀಪುತ್ರನೇ! ದೋಷಯುಕ್ತವಾಗಿದ್ದರೂ ಕೂಡ ಸ್ವಾಭಾವಿಕ ಕರ್ಮವನ್ನು ಬಿಡಬಾರದು. ಏಕೆಂದರೆ ಹೊಗೆಯಿಂದ ಅಗ್ನಿಯು ಕೂಡಿರುವಂತೆಯೇ ಎಲ್ಲ ಕರ್ಮಗಳೂ ಒಂದಲ್ಲ ಒಂದು ದೋಷದಿಂದ ಕೂಡಿರುತ್ತದೆ. (18.48)
- ಸರ್ವತ್ರ ಆಸಕ್ತಿರಹಿತ ಬುದ್ಧಿಯುಳ್ಳವನು, ನಿಃಸ್ಪೃಹ ಮತ್ತು ಅಂತಃಕರಣವನ್ನು ಗೆದ್ದುಕೊಂಡಿರುವ ಮನುಷ್ಯನು ಸಾಂಖ್ಯಯೋಗದಿಂದ ಆ ಶ್ರೇಷ್ಠ ‘ನೈಷ್ಕರ್ಮ್ಯ ಸಿದ್ಧಿ’ಯನ್ನು ಪಡೆಯುತ್ತಾನೆ. (18.49)
- ಎಲೈ ಕುಂತೀಪುತ್ರನೇ! ಜ್ಞಾನಯೋಗದ ಅಂತಿಮ ಸ್ಥಿತಿಯಾದ ನೈಷ್ಕರ್ಮ್ಯ ಸಿದ್ಧಿಯನ್ನು ಹೇಗೆ ಪಡೆದುಕೊಂಡು ಮನುಷ್ಯನು ಬ್ರಹ್ಮನನ್ನು ಪಡೆದುಕೊಳ್ಳುವನೋ, ಆ ರೀತಿಯನ್ನು ಸಂಕ್ಷೇಪವಾಗಿ ನನ್ನಿಂದ ನೀನು ಕೇಳು. (18.50)
- ವಿಶುದ್ಧ ಬುದ್ಧಿಯಿಂದ ಕೂಡಿದ, ಹಗುರವಾದ, ಸಾತ್ತ್ವಿಕ ಮತ್ತು ನಿಯಮಿತ ಭೋಜನ ಮಾಡುವವನು, ಶಬ್ದಾದಿ ವಿಷಯಗಳನ್ನು ತ್ಯಜಿಸಿ ಏಕಾಂತದಲ್ಲಿ ಶುದ್ಧ ಜಾಗದಲ್ಲಿ ವಾಸಿಸುವವನು, ಸಾತ್ವಿಕ ಧಾರಣಶಕ್ತಿಯಿಂದ ಅಂತಃಕರಣ ಮತ್ತು ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು, ಮನಸ್ಸು, ವಾಣಿ, ಶರೀರ ವಶದಲ್ಲಿಟ್ಟುಕೊಂಡು, ರಾಗ-ದ್ವೇಷಗಳನ್ನು ಸರ್ವಥಾ ನಾಶಗೊಳಿಸಿ, ಚೆನ್ನಾದ ದೃಢವಾದ ವೈರಾಗ್ಯವನ್ನು ಆಶ್ರಯಿಸಿದ, ಅಹಂಕಾರ, ಬಲ, ದರ್ಪ, ಕಾಮ, ಕ್ರೋಧ, ಸಂಗ್ರಹವೃತ್ತಿ ಇವುಗಳನ್ನು ತ್ಯಜಿಸಿ ನಿರಂತರ ಧ್ಯಾನಯೋಗ ಪರಾಯಣನಾದ, ಮಮತಾರಹಿತ, ಶಾಂತಿಯುಕ್ತ ಪುರುಷನು ಸಚ್ಚಿದಾನಂದಘನ ಬ್ರಹ್ಮನಲ್ಲಿ ಅಭಿನ್ನಭಾವದಿಂದ ಸ್ಥಿತನಾಗಿರಲು ಪಾತ್ರನಾಗುತ್ತಾನೆ. (18.51-53)
- ಮತ್ತೆ ಆ ಸಚ್ಚಿದಾನಂದಘನ ಬ್ರಹ್ಮನಲ್ಲಿ ತದ್ರೂಪನಾದ ಪ್ರಸನ್ನ ಚಿತ್ತವುಳ್ಳ ಯೋಗಿಯು ಯಾವುದಕ್ಕಾಗಿಯೂ ಶೋಕಿಸುವುದಿಲ್ಲ ಹಾಗೂ ಯಾವುದನ್ನೂ ಬಯಸುವುದಿಲ್ಲ. ಹೀಗೆ ಸಮಸ್ತ ಪ್ರಾಣಿಗಳಲ್ಲಿ ಸಮಭಾವವುಳ್ಳ ಯೋಗಿಯು ನನ್ನ ಪರಾಭಕ್ತಿಯನ್ನು ಪಡೆಯುತ್ತಾನೆ. (18.54)
- ಆ ಪರಾಭಕ್ತಿಯ ಮೂಲಕ ಅವನು ಪರಮಾತ್ಮನಾದ ನನ್ನನ್ನು ‘ನಾನು ಹೇಗಿರುವೆನೋ ಹಾಗೆಯೇ’ ಸರಿಯಾಗಿ ತತ್ತ್ವಶಃ ತಿಳಿಯುತ್ತಾನೆ. ಹಾಗೆಯೇ ಆ ಭಕ್ತಿಯಿಂದ ನನ್ನನ್ನು ತತ್ತ್ವದಿಂದ ತಿಳಿದ ಕೂಡಲೇ ನನ್ನಲ್ಲಿ ಪ್ರವಿಷ್ಟನಾಗುತ್ತಾನೆ. (18.55)
- ನನ್ನ ಆಶ್ರಯದಲ್ಲಿರುವ ಕರ್ಮಯೋಗಿಯು ಎಲ್ಲ ಕರ್ಮಗಳನ್ನು ಸದಾಕಾಲ ಮಾಡುತ್ತಿದ್ದರೂ ನನ್ನ ಕೃಪೆಯಿಂದ ಸನಾತನ ಅವಿನಾಶೀ ಪರಮಪದವನ್ನು ಹೊಂದುವನು. (18.56)
- ಎಲ್ಲ ಕರ್ಮಗಳನ್ನು ಮನಃಪೂರ್ವಕ ನನ್ನಲ್ಲಿ ಅರ್ಪಣೆಮಾಡಿ ಹಾಗೆಯೇ ಸಮತ್ವಬುದ್ಧಿರೂಪೀ ಯೋಗವನ್ನು ಅವಲಂಬಿಸಿ ನೀನು ನನ್ನ ಪರಾಯಣನಾಗಿ, ನಿರಂತರ ನನ್ನಲ್ಲಿ ಚಿತ್ತವುಳ್ಳವನಾಗು. (18.57)
- ಮೇಲೆ ಹೇಳಿದಂತೆ ನನ್ನಲ್ಲಿ ಚಿತ್ತವುಳ್ಳವನಾಗಿ ನೀನು ನನ್ನ ಕೃಪೆಯಿಂದ ಎಲ್ಲ ಸಂಕಟಗಳನ್ನು ಸುಲಭವಾಗಿ ದಾಟಿಬಿಡುವೆ. ಮತ್ತು ಅಹಂಕಾರದಿಂದ ನನ್ನ ಮಾತನ್ನು ಕೇಳದಿದ್ದರೆ ನಾಶವಾಗುವೆ. ಅರ್ಥಾತ್ ಪರಮಾರ್ಥದಿಂದ ವಂಚಿತನಾಗುವೆ. (18.58)
- ನೀನು ಅಹಂಕಾರಪಟ್ಟು ‘ನಾನು ಯುದ್ಧ ಮಾಡುವುದಿಲ್ಲ’ ಎಂದು ತಿಳಿದಿರುವೆ. ಆ ನಿನ್ನ ನಿಶ್ಚಯವು ವ್ಯರ್ಥವಾಗಿದೆ, ಏಕೆಂದರೆ ನಿನ್ನ ಸ್ವಭಾವವು ನಿನ್ನನ್ನು ಬಲವಂತವಾಗಿ ಯುದ್ಧಕ್ಕೆ ತೊಡಗಿಸೀತು. (18.59)
- ಎಲೈ ಕುಂತೀಪುತ್ರನೇ! ಯಾವ ಕರ್ಮವನ್ನು ನೀನು ಮೋಹದಿಂದಾಗಿ ಮಾಡಲು ಇಚ್ಛಿಸದಿದ್ದರೂ ಅದನ್ನೂ ಕೂಡ ನಿನ್ನ ಪೂರ್ವಕೃತ ಸ್ವಾಭಾವಿಕ ಕರ್ಮದಿಂದ ಬದ್ಧನಾದ್ದರಿಂದ ಪರಾಧೀನನಾಗಿ ಮಾಡುವೆ. (18.60)
- ಎಲೈ ಅರ್ಜುನ! ಅಂತರ್ಯಾಮೀ ಪರಮೇಶ್ವರನು ತನ್ನ ಮಾಯೆಯಿಂದ ಶರೀರರೂಪೀ ಯಂತ್ರದ ಮೇಲೆ ಆರೂಢನಾಗಿ ಸರ್ವ ಪ್ರಾಣಿಗಳನ್ನು ಅವರ ಕರ್ಮಾನುಸಾರ ಅಲೆಸುತ್ತಾ, ಎಲ್ಲ ಪ್ರಾಣಿಗಳ ಹೃದಯದಲ್ಲಿ ನೆಲೆಸಿರುವನು. (18.61)
- ಎಲೈ ಭಾರತಾ! ನೀನು ಎಲ್ಲ ಪ್ರಕಾರದಿಂದ ಆ ಪರಮೇಶ್ವರನಿಗೇ ಶರಣಾಗು. ಆ ಪರಮಾತ್ಮನ ಕೃಪೆಯಿಂದಲೇ ನೀನು ಪರಮ ಶಾಂತಿಯನ್ನು ಹಾಗೂ ಸನಾತನ ಪರಮಧಾಮವನ್ನು ಹೊಂದುವೆ. (18.62)
- ಹೀಗೆ ಈ ಗೋಪನೀಯಕ್ಕಿಂತಲೂ ಅತಿಗೋಪನೀಯ ಜ್ಞಾನವನ್ನು ನಾನು ನಿನಗೆ ಹೇಳಿದೆ. ಇನ್ನು ನೀನು ಈ ರಹಸ್ಯಮಯ ಜ್ಞಾನವನ್ನು ಪೂರ್ಣವಾಗಿ ಚೆನ್ನಾಗಿ ವಿಚಾರಮಾಡಿ ಮತ್ತೆ ನಿನಗೆ ಇಷ್ಟವಿರುವಂತೆ ಮಾಡು. (18.63)
- ಸರ್ವ ಗೋಪನೀಯಕ್ಕಿಂತಲೂ ಅತಿ ಗೋಪನೀಯವಾದ ನನ್ನ ಪರಮ ರಹಸ್ಯಯುಕ್ತವಾದ ಮಾತನ್ನು ನೀನು ಇನ್ನೊಮ್ಮೆ ಕೇಳು. ನೀನು ನನಗೆ ಅತ್ಯಂತ ಪ್ರಿಯನಾಗಿರುವೆ. ಆದ್ದರಿಂದ ಈ ಪರಮ ಹಿತಕಾರಕವಾದ ವಚನವನ್ನು ನಾನು ನಿನಗೆ ಹೇಳುವೆನು. (18.64)
- ಎಲೈ ಅರ್ಜುನ! ನೀನು ನನ್ನಲ್ಲಿ ಮನಸ್ಸುಳ್ಳವನಾಗು. ನನ್ನ ಭಕ್ತನಾಗು. ನನ್ನನ್ನು ಪೂಜಿಸು ಮತ್ತು ನನಗೆ ನಮಸ್ಕರಿಸು. ಹೀಗೆ ಮಾಡುವುದರಿಂದ ನೀನು ನನ್ನನ್ನೇ ಪಡೆಯುವೆ. ಇದನ್ನು ನಾನು ನಿನಗೆ ಸತ್ಯವಾಗಿ ಪ್ರತಿಜ್ಞಾಪೂರ್ವಕ ಹೇಳುವೆನು, ಏಕೆಂದರೆ ನೀನು ನನಗೆ ಅತ್ಯಂತ ಪ್ರಿಯನಾಗಿರುವೆ. (18.65)
- ಸರ್ವಧರ್ಮ ಅಂದರೆ ಸಮಸ್ತ ಕರ್ತವ್ಯ ಕರ್ಮಗಳನ್ನು ನನಗೆ ಅರ್ಪಿಸಿ ನೀನು ಕೇವಲ ಸರ್ವಶಕ್ತಿವಂತ, ಸರ್ವಾಧಾರ ಪರಮೇಶ್ವರನಾದ ನನಗೇ ಶರಣಾಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದ ಬಿಡುಗಡೆಗೊಳಿಸುವೆನು. ನೀನು ಶೋಕಿಸಬೇಡ. (18.66)
- ಈ ಗೀತಾರೂಪೀ ರಹಸ್ಯಮಯ ಉಪದೇಶವನ್ನು ಎಂದಿಗೂ ತಪಸ್ಸು ಮಾಡದ ಮನುಷ್ಯನಿಗೆ ಹೇಳಬೇಡ.
ಹಾಗೆಯೇ ಭಕ್ತಿಹೀನ ಮನುಷ್ಯನಿಗೆ ಹಾಗೆಯೇ ಕೇಳುವ ಇಚ್ಛೆ ಇಲ್ಲದವನಿಗೂ ಹೇಳಬಾರದು ಹಾಗೂ ನನ್ನಲ್ಲಿ ದೋಷ ದೃಷ್ಟಿಯನ್ನಿರಿಸುವನಿಗಂತೂ ಎಂದಿಗೂ ಹೇಳಬಾರದು. (18.67) - ನನ್ನಲ್ಲಿ ಪರಮ ಪ್ರೇಮವನ್ನಿಟ್ಟು ಈ ಪರಮ ರಹಸ್ಯಯುಕ್ತ ಗೀತಾಶಾಸ್ತ್ರವನ್ನು ನನ್ನ ಭಕ್ತರಲ್ಲಿ ಹೇಳುವವನು ನನ್ನನ್ನೇ ಪಡೆಯುತ್ತಾನೆ – ಇದರಲ್ಲಿ ಯಾವ ಸಂದೇಹವೂ ಇಲ್ಲ. (18.68)
- ಅವನಿಗಿಂತ ಹೆಚ್ಚಾಗಿ ನನ್ನ ಪ್ರಿಯಕಾರ್ಯ ಮಾಡುವವನು ಮನುಷ್ಯರಲ್ಲಿ ಬೇರೆ ಯಾರೂ ಇಲ್ಲ ಹಾಗೂ ಭೂಮಂಡಲದಲ್ಲಿ ಅವನಿಗಿಂತ ಮಿಗಿಲಾಗಿ ನನಗೆ ಪ್ರಿಯನಾದವನು ಬೇರೆ ಯಾರೂ ಇಲ್ಲ ಹಾಗೂ ಭವಿಷ್ಯದಲ್ಲಿಯೂ ಆಗಲಾರನು. (18.69)
- ನಮ್ಮಿಬ್ಬರ ಈ ಧರ್ಮಮಯ ಸಂವಾದರೂಪೀ ಈ ಗೀತಾಶಾಸ್ತ್ರವನ್ನು ಅಧ್ಯಯನ ಮಾಡುವ ಮನುಷ್ಯನ ಮೂಲಕ ನಾನು ಜ್ಞಾನಯಜ್ಞದಿಂದ ಪೂಜಿತನಾಗುವೆನು ಎಂಬುದು ನನ್ನ ಮತವಾಗಿದೆ. (18.70)
- ಶ್ರದ್ಧಾಯುಕ್ತನಾಗಿ ದೋಷದೃಷ್ಟಿಯನ್ನಿಡದೆ ಈ ಗೀತಾಶಾಸ್ತ್ರದ ಶ್ರವಣ ಮಾಡುವವನೂ ಕೂಡ ಪಾಪಗಳಿಂದ ಮುಕ್ತನಾಗಿ ಪುಣ್ಯಕರ್ಮ ಮಾಡುವವರ ಶ್ರೇಷ್ಠ ಲೋಕಗಳನ್ನು ಹೊಂದುವನು. (18.71)
- ಎಲೈ ಪಾರ್ಥನೆ! ಈ ಗೀತಾಶಾಸ್ತ್ರವನ್ನು ನೀನು ಏಕಾಗ್ರಚಿತ್ತದಿಂದ ಕೇಳಿರುವೆಯಲ್ಲ? ಹಾಗೂ ಧನಂಜಯನೇ! ಅಜ್ಞಾನದಿಂದ ಉಂಟಾದ ನಿನ್ನ ಮೋಹವು ನಾಶವಾಗಿದೆಯಲ್ಲ? (18.72)
- ಅರ್ಜುನನು ಹೇಳಿದನು – ಹೇ ಅಚ್ಯುತಾ! ನಿನ್ನ ಕೃಪೆಯಿಂದ ನನ್ನ ಮೋಹವು ನಾಶವಾಯಿತು ಹಾಗೂ ನಾನು ಸ್ಮೃತಿಯನ್ನು ಪಡೆದುಕೊಂಡಿದ್ದೇವೆ. ಈಗ ನಾನು ಸಂಶಯರಹಿತನಾಗಿ ಸ್ಥಿತನಾಗಿದ್ದೇನೆ. ಆದ್ದರಿಂದ ನಿನ್ನ ಆಜ್ಞೆಯನ್ನು ಪಾಲಿಸುವೆನು. (18.73)
- ಸಂಜಯನು ಹೇಳಿದನು – ಎಲೈ ರಾಜನೇ! ಹೀಗೆ ನಾನು ಶ್ರೀವಾಸುದೇವ ಮತ್ತು ಮಹಾತ್ಮಾ ಅರ್ಜುನರ ಈ ಅದ್ಭುತ ರಹಸ್ಯಮಯ ರೋಮಾಂಚಕರ ಸಂವಾದವನ್ನು ಕೇಳಿದನು. (18.74)
- ಶ್ರೀವ್ಯಾಸರ ಕೃಪೆಯಿಂದ ದಿವ್ಯದೃಷ್ಟಿಯನ್ನು ಪಡೆದ ನಾನು ಈ ಪರಮ ಗೋಪನೀಯ ಯೋಗವನ್ನು ಸ್ವತಃ ಯೋಗೇಶ್ವರ ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಿರುವಂತೆ ಪ್ರತ್ಯಕ್ಷವಾಗಿ ಕೇಳಿದ್ದೇನೆ. (18.75)
- ಮಹಾರಾಜಾ! ಭಗವಾನ್ ಶ್ರೀಕೃಷ್ಣ ಮತ್ತು ಅರ್ಜುನರ ಈ ರಹಸ್ಯಮಯ, ಕಲ್ಯಾಣಕಾರಕ ಹಾಗೂ ಅದ್ಭುತ ಸಂವಾದವನ್ನು ಪುನಃ-ಪುನಃ ಸ್ಮರಿಸಿಕೊಂಡು ನಾನು ಪದೇ-ಪದೇ ಹರ್ಷಿತವಾಗುತ್ತಿದ್ದೇನೆ. (18.76)
- ಎಲೈ ರಾಜಾ! ಶ್ರೀಹರಿಯ ಆ ಅತ್ಯಂತ ಅಲೌಕಿಕ ರೂಪವನ್ನು ಬಾರಿಬಾರಿಗೂ ಸ್ಮರಿಸಿಕೊಂಡು ನನ್ನ ಚಿತ್ತದಲ್ಲಿ ತುಂಬಾ ಆಶ್ಚರ್ಯವಾಗುತ್ತದೆ ಮತ್ತು ನಾನು ಪದೇ-ಪದೇ ಹರ್ಷಿತನಾಗುತ್ತಿದ್ದೇನೆ. (18.77)
- ಎಲ್ಲಿ ಯೋಗೇಶ್ವರನಾದ ಭಗವಾನ್ ಶ್ರೀಕೃಷ್ಣನಿದ್ದಾನೋ ಹಾಗೂ ಗಾಂಡೀವ ಧನುರ್ಧಾರಿ ಅರ್ಜುನನಿರುವನೋ ಅಲ್ಲಿಯೇ ಶ್ರೀ, ವಿಜಯ, ವಿಭೂತಿ ಮತ್ತು ಅಚಲವಾದ ನೀತಿಯು ಇದೆ, ಎಂಬುದೇ ನನ್ನ ಮತವಾಗಿದೆ. (18.78)