- ಶ್ರೀಭಗವಂತನು ಹೇಳಿದನು – ಭಯದ ಸರ್ವಥಾ ಅಭಾವ, ಅಂತಃಕರಣದ ಪೂರ್ಣ ನಿರ್ಮಲತೆ, ತತ್ತ್ವಜ್ಞಾನಕ್ಕಾಗಿ ಧ್ಯಾನಯೋಗದಲ್ಲಿ ನಿರಂತರ ದೃಢಸ್ಥಿತಿ ಮತ್ತು ಸಾತ್ವಿಕದಾನ, ಇಂದ್ರಿಯಗಳ ದಮನ, ಭಗವಂತನ, ದೇವತೆಗಳ, ಗುರುಜನರ ಪೂಜೆ, ಅಗ್ನಿಹೋತ್ರಾದಿ ಉತ್ತಮ ಕರ್ಮಗಳ ಆಚರಣೆ, ವೇದ ಶಾಸ್ತ್ರಗಳ ಪಠಣ-ಪಾಠಣ, ಭಗವಂತನ ನಾಮ ಮತ್ತು ಗುಣಗಳ ಕೀರ್ತನೆ, ಸ್ವಧರ್ಮಪಾಲನೆಗಾಗಿ ಕಷ್ಟವನ್ನು ಸಹಿಸುವುದು ಹಾಗೂ ಶರೀರ ಇಂದ್ರಿಯಗಳಸಹಿತ ಅಂತಃಕರಣದ ಸರಳತೆ – (16.1)
- ಮನಸ್ಸು, ಮಾತು, ಶರೀರದಿಂದ ಯಾರಿಗೂ ಯಾವ ರೀತಿಯಿಂದಲೂ ಕಷ್ಟಕೊಡದಿರುವುದು, ಯಥಾರ್ಥ ಹಾಗೂ ಪ್ರಿಯವಾಗಿ ಮಾತನಾಡುವುದು, ತನಗೆ ಅಪಕಾರ ಮಾಡಿದವರ ಮೇಲೆ ಸಿಟ್ಟಾಗದಿರುವುದು, ಕರ್ಮಗಳಲ್ಲಿ ಕರ್ತೃತ್ವದ ಅಭಿಮಾನ ತ್ಯಾಗ, ಅಂತಃಕರಣದಲ್ಲಿ ಚಂಚಲತೆ ಇಲ್ಲದಿರುವುದು, ಯಾರನ್ನೂ ನಿಂದಿಸದಿರುವುದು, ಎಲ್ಲ ಪ್ರಾಣಿಗಳಲ್ಲಿ ಕಾರಣರಹಿತ ದಯೆ, ಇಂದ್ರಿಯಗಳು ವಿಷಯಗಳೊಡನೆ ಸಂಯೋಗವಾದರೂ ಅದರಲ್ಲಿ ಆಸಕ್ತರಾಗದಿರುವುದು, ಕೋಮಲತೆ, ಲೋಕ ಮತ್ತು ಶಾಸ್ತ್ರಕ್ಕೆ ವಿರುದ್ಧವಾದ ಆಚರಣೆಯಲ್ಲಿ ಲಜ್ಜೆ ಹಾಗೂ ವ್ಯರ್ಥವಾದ ಚೇಷ್ಟೆಯ ಅಭಾವ – (16.2)
- ತೇಜಸ್ಸು, ಕ್ಷಮೆ, ಧೈರ್ಯ, ಬಾಹ್ಯಶುದ್ಧಿ, ಯಾರಲ್ಲಿಯೂ ಶತ್ರುತ್ವ ಇಲ್ಲದಿರುವುದು ಮತ್ತು ತನ್ನಲ್ಲಿ ಹಿರಿತನದ ಅಭಿಮಾನ ಇಲ್ಲದಿರುವಿಕೆ, ಎಲೈ ಅರ್ಜುನ! ಇವೆಲ್ಲ ದೈವೀ ಸಂಪತ್ತನ್ನು ಪಡೆದು ಜನಿಸಿರುವ ಪುರುಷರ ಲಕ್ಷಣಗಳಾಗಿವೆ. (16.3)
- ಎಲೈ ಅರ್ಜುನ! ದಂಭ, ಅಹಂಕಾರ, ಅಭಿಮಾನ, ಕ್ರೋಧ, ಕಠೋರತೆ ಮತ್ತು ಅಜ್ಞಾನ ಇವೆಲ್ಲ ಆಸುರೀ ಸಂಪತ್ತನ್ನು ಪಡೆದು ಹುಟ್ಟಿದ ಪುರುಷರ ಲಕ್ಷಣವಾಗಿದೆ. (16.4)
- ದೈವೀ ಸಂಪತ್ತು ಮುಕ್ತಿಗಾಗಿ ಮತ್ತು ಆಸುರೀ ಸಂಪತ್ತು ಬಂಧನಕಾರಕವೆಂದು ತಿಳಿಯಲಾಗಿದೆ. ಆದ್ದರಿಂದ ಎಲೈ ಅರ್ಜುನ! ನೀನು ಶೋಕಪಡಬೇಡ, ಏಕೆಂದರೆ ನೀನು ದೈವೀ ಸಂಪತ್ತನ್ನು ಪಡೆದು ಜನಿಸಿರುವೆ. (16.5)
- ಎಲೈ ಅರ್ಜುನ! ಈ ಜಗತ್ತಿನಲ್ಲಿ ಮನುಷ್ಯ ಸಮುದಾಯವು ಎರಡೇ ಪ್ರಕಾರಗಳಿಂದ ಇದೆ. ಒಂದು ದೈವೀ ಪ್ರಕೃತಿಯವರು, ಇನ್ನೊಂದು ಆಸುರೀ ಪ್ರಕೃತಿಯವರು. ಅವುಗಳಲ್ಲಿ ದೈವೀ ಪ್ರಕೃತಿಯನ್ನು ವಿಸ್ತಾರವಾಗಿ ಹೇಳಲಾಯಿತು. ಇನ್ನು ನೀನು ಆಸುರೀ ಪ್ರಕೃತಿಯ ಮನುಷ್ಯ ಸಮುದಾಯದ ಕುರಿತೂ ವಿಸ್ತಾರವಾಗಿ ನನ್ನಿಂದ ಕೇಳು. (16.6)
- ಆಸುರೀ ಸ್ವಭಾವದ ಜನರು ಪ್ರವೃತ್ತಿ ಮತ್ತು ನಿವೃತ್ತಿ ಎರಡನ್ನೂ ತಿಳಿಯರು. ಅದಕ್ಕಾಗಿ ಅವರಲ್ಲಿ ಅಂತರ್ಬಾಹ್ಯ ಶುದ್ಧಿಯಾಗಲೀ, ಉತ್ತಮ ಆಚರಣೆಯಾಗಲೀ, ಸತ್ಯಭಾಷಣವಾಗಲೀ ಇರುವುದಿಲ್ಲ. (16.7)
- ಆ ಆಸುರೀ ಸ್ವಭಾವದ ಜನರು – ಈ ಜಗತ್ತು ಆಶ್ರಯರಹಿತ, ಸರ್ವಥಾ ಅಸತ್ಯ ಮತ್ತು ದೇವರಿಲ್ಲದೆಯೇ ತನ್ನಿಂದ ತಾನೇ ಕೇವಲ ಸ್ತ್ರೀ-ಪುರುಷರ ಸಂಯೋಗದಿಂದ ಸೃಷ್ಟಿಯಾಗಿದೆ. ಆದ್ದರಿಂದ ಕಾಮವೇ ಇದರ ಕಾರಣವಾಗಿದೆ. ಇದಲ್ಲದೆ ಬೇರೇನಿದೆ? ಎಂದು ಹೇಳುತ್ತಾರೆ. (16.8)
- ಇಂತಹ ಮಿಥ್ಯಾಜ್ಞಾನವನ್ನು ಅವಲಂಬಿಸಿದ ಮನುಷ್ಯರ ಸ್ವಭಾವವು ನಾಶವಾಗಿ ಹೋಗಿದೆ. ಅವರ ಬುದ್ಧಿ ಮಂದವಾಗಿದೆ. ಎಲ್ಲರಿಗೂ ಅಪಕಾರ ಮಾಡುವ ಕ್ರೂರ ಕರ್ಮಿಗಳಾದ ಇವರು ಕೇವಲ ಜಗತ್ತಿನ ನಾಶಕ್ಕಾಗಿಯೇ ಸಮರ್ಥರಾಗಿರುತ್ತಾರೆ. (16.9)
- ದಂಭ, ಮಾನ, ಮದದಿಂದ ಕೂಡಿದ ಮನುಷ್ಯರು ಯಾವ ರೀತಿಯಿಂದಲೂ ಪೂರ್ಣವಾಗದ ಕಾಮನೆಗಳ ಆಶ್ರಯಪಡೆದು, ಅಜ್ಞಾನದಿಂದ ಮಿಥ್ಯಾ ಸಿದ್ಧಾಂತಗಳನ್ನು ಗ್ರಹಿಸಿಕೊಂಡು, ಭ್ರಷ್ಟ ಆಚರಣೆಯನ್ನು ತಮ್ಮದಾಗಿಸಿಕೊಂಡು ಜಗತ್ತಿನಲ್ಲಿ ವ್ಯವಹರಿಸುತ್ತಾರೆ. (16.10)
- ಹಾಗೆಯೇ ಅವರು ಆಮರಣಾಂತ ಅಸಂಖ್ಯ ಚಿಂತೆಗಳನ್ನು ಆಶ್ರಯಿಸಿ, ವಿಷಯಭೋಗಗಳನ್ನು ಭೋಗಿಸಲು ತತ್ಪರರಾಗಿ ‘ಸುಖವೆಂದರೆ ಇಷ್ಟೇ’ ಎಂದು ತಿಳಿದವರಾಗಿರುತ್ತಾರೆ. (16.11)
- ನೂರಾರು ಆಸೆಗಳ ಪಾಶಗಳಿಂದ ಬಂಧಿತರಾದ ಆ ಮನುಷ್ಯರು ಕಾಮ-ಕ್ರೋಧ ಪರಾಯಣರಾಗಿ ವಿಷಯ ಭೋಗಗಳಿಗಾಗಿ, ಅನ್ಯಾಯಪೂರ್ವಕ ಧನಾದಿ ಪದಾರ್ಥಗಳನ್ನು ಸಂಗ್ರಹಿಸುವ ಪ್ರಯತ್ನ ಮಾಡುತ್ತಾ ಇರುತ್ತಾರೆ. (16.12)
- ನಾನು ಇಂದು ಇದನ್ನು ಗಳಿಸಿದೆ ಹಾಗೂ ಇನ್ನು ಇಂತಹ ಮನೋರಥವನ್ನು ಪೂರ್ಣಗೊಳಿಸುವೆನು. ನನ್ನ ಬಳಿ ಇಷ್ಟು ಧನವಿದೆ ಮತ್ತು ಇನ್ನೂ ಧನಸಂಗ್ರಹವಾಗುವುದು ಎಂದು ಅವರು ಯೋಚಿಸುತ್ತಾರೆ. (16.13)
- ಈ ಶತ್ರುವನ್ನು ನಾನು ಕೊಂದೆ ಮತ್ತು ಆ ಇತರ ಶತ್ರುಗಳನ್ನೂ ನಾನು ಕೊಲ್ಲುವೆನು. ನಾನೇ ಈಶ್ವರನಾಗಿದ್ದೇನೆ, ಐಶ್ವರ್ಯವನ್ನು ಭೋಗಿಸುವವನಾಗಿದ್ದೇನೆ. ನಾನು ಎಲ್ಲ ಸಿದ್ಧಿಗಳಿಂದ ಕೂಡಿರುವೆನು ಮತ್ತು ಬಲಶಾಲಿಯೂ, ಸುಖಿಯೂ ಆಗಿದ್ದೇನೆ. (16.14)
- ನಾನು ದೊಡ್ಡ ಶ್ರೀಮಂತ ಮತ್ತು ದೊಡ್ಡ ಮನೆತನದಲ್ಲಿ ಹುಟ್ಟಿದವನು. ನನಗೆ ಸಮಾನರು ಬೇರೆ ಯಾರಿದ್ದಾರೆ? ನಾನು ಯಜ್ಞವನ್ನು ಮಾಡುವೆನು, ದಾನ ಕೊಡುವೆನು, ಆಮೋದ-ಪ್ರಮೋದ ಮಾಡುವೆನು. ಹೀಗೆ ಅಜ್ಞಾನದಿಂದ ಮೋಹಿತರಾಗಿ, ಅನೇಕ ಪ್ರಕಾರದಿಂದ ಭ್ರಮಿತ ಚಿತ್ತವುಳ್ಳವರು, ಮೋಹಜಾಲದಲ್ಲಿ ಸಿಕ್ಕಿಹಾಕಿಕೊಂಡು, ವಿಷಯ ಭೋಗಗಳಲ್ಲಿ ಅತ್ಯಂತ ಆಸಕ್ತರಾದ ಆಸುರೀ ಜನರು ಮಹಾ ಅಪವಿತ್ರ ನರಕದಲ್ಲಿ ಬೀಳುತ್ತಾರೆ. (16.15-16)
- ತಮ್ಮನ್ನೇ ಶ್ರೇಷ್ಠರೆಂದು ತಿಳಿದ ಅಹಂಕಾರೀ ಆ ಜನರು ಧನ ಮತ್ತು ಮಾನದ ಮದದಿಂದ ಉನ್ಮತ್ತರಾಗಿ, ಕೇವಲ ಹೆಸರಿಗಷ್ಟೇ ಯಜ್ಞಗಳ ಮೂಲಕ ದಂಭ (ಪಾಖಂಡತೆ)ದಿಂದ ಶಾಸ್ತ್ರವಿಧಿರಹಿತ ಯಜ್ಞ ಮಾಡುತ್ತಾರೆ. (16.17)
- ಅವರು ಅಹಂಕಾರ, ಬಲ, ದರ್ಪ, ಕಾಮನೆ ಮತ್ತು ಕ್ರೋಧಾದಿಗಳ ವಶರಾಗಿರುತ್ತಾರೆ. ಹಾಗೆಯೇ ಇತರರನ್ನು ನಿಂದಿಸುವ ಪುರುಷರು ತಮ್ಮ ಮತ್ತು ಬೇರೆಯವರ ಶರೀರದಲ್ಲಿ ಸ್ಥಿತನಾಗಿರುವ ಅಂತರ್ಯಾಮಿಯಾದ ನನ್ನನ್ನು ದ್ವೇಷಿಸುತ್ತಾರೆ. (16.18)
- ಆ ದ್ವೇಷಿಸುವ ಪಾಪೀ, ಕ್ರೂರಕರ್ಮಿಗಳೂ ಆದ ನರಾಧಮರನ್ನು ನಾನು ಸಂಸಾರದಲ್ಲಿ ಪದೇ-ಪದೇ ಆಸುರೀ ಯೋನಿಗಳಲ್ಲಿ ಹಾಕುತ್ತಾ ಇರುತ್ತೇನೆ. (16.19)
- ಎಲೈ ಅರ್ಜುನ! ಆ ಮೂಢರು ನನ್ನನ್ನು ಪಡೆಯದೆ ಜನ್ಮ-ಜನ್ಮಗಳಲ್ಲಿ ಆಸುರೀ ಯೋನಿಯನ್ನೇ ಪಡೆಯುತ್ತಾರೆ. ಬಳಿಕ ಅದಕ್ಕಿಂತಲೂ ಅತಿ ನೀಚ ಗತಿಯನ್ನೇ ಹೊಂದುತ್ತಾರೆ. ಅಂದರೆ ಘೋರವಾದ ನರಕದಲ್ಲಿ ಬೀಳುತ್ತಾರೆ. (16.20)
- ಕಾಮ, ಕ್ರೋಧ ಮತ್ತು ಲೋಭ ಇವು ಮೂರು ರೀತಿಯ ನರಕದ ಬಾಗಿಲುಗಳು. ಆತ್ಮನ ನಾಶಮಾಡುವ ಅರ್ಥಾತ್ ಅವನನ್ನು ಅಧೋಗತಿಗೆ ಕೊಂಡೊಯ್ಯುವಂತಹವುಗಳು. ಆದ್ದರಿಂದ ಆ ಮೂರನ್ನೂ ತ್ಯಜಿಸಬಿಡಬೇಕು. (16.21)
- ಎಲೈ ಅರ್ಜುನ! ಈ ಮೂರು ನರಕದ ದ್ವಾರಗಳಿಂದ ಮುಕ್ತನಾದ ಪುರುಷನು ತನ್ನ ಶ್ರೇಯಸ್ಸಿಗಾಗಿ ಆಚರಣೆ ಮಾಡುತ್ತಾನೆ. ಅದರಿಂದ ಅವನು ಪರಮಗತಿಯನ್ನು ಗಳಿಸುತ್ತಾನೆ. ಅರ್ಥಾತ್ ನನ್ನನ್ನೇ ಹೊಂದುತ್ತಾನೆ. (16.22)
- ಶಾಸ್ತ್ರವಿಧಿಯನ್ನು ಬಿಟ್ಟು ತನ್ನ ಮನಸ್ಸಿಗೆ ಬಂದಂತೆ ಆಚರಣೆ ಮಾಡುವವನು ಸಿದ್ಧಿಯನ್ನು ಪಡೆಯುವುದಿಲ್ಲ, ಪರಮಗತಿಯನ್ನೂ ಪಡೆಯುವುದಿಲ್ಲ ಹಾಗೂ ಸುಖವನ್ನೂ ಹೊಂದುವುದಿಲ್ಲ. (16.23)
- ಆದ್ದರಿಂದ ನಿನಗೆ ಕರ್ತವ್ಯ ಮತ್ತು ಅಕರ್ತವ್ಯದ ವ್ಯವಸ್ಥೆಯಲ್ಲಿ ಶಾಸ್ತ್ರವೇ ಪ್ರಮಾಣವಾಗಿದೆ. ಹೀಗೆ ತಿಳಿದು ನೀನು ಶಾಸ್ತ್ರವಿಧಿಯಿಂದ ನಿಯತ ಕರ್ಮವನ್ನೇ ಮಾಡಲು ಯೋಗ್ಯನಾಗಿರುವೆ. (16.24)