- ಶ್ರೀಭಗವಂತನು ಹೇಳಿದನು – ಜ್ಞಾನಗಳಲ್ಲಿ ಅತ್ಯುತ್ತಮವಾದ ಪರಮ ಜ್ಞಾನವನ್ನು ನಾನು ನಿನಗೆ ಪುನಃ ಹೇಳುವೆನು. ಅದನ್ನು ತಿಳಿದು ಎಲ್ಲ ಮುನಿಜನರು ಈ ಜಗತ್ತಿನಿಂದ ಮುಕ್ತರಾಗಿ ಪರಮ ಸಿದ್ಧಿಯನ್ನು ಪಡೆದಿದ್ದಾರೆ. (14.1)
- ಈ ಜ್ಞಾನವನ್ನು ಆಶ್ರಯಿಸಿ ಅಂದರೆ ಧಾರಣೆ ಮಾಡಿ ನನ್ನ ಸ್ವರೂಪವನ್ನು ಪಡೆದ ಪುರುಷರು ಸೃಷ್ಟಿಯ ಪ್ರಾರಂಭದಲ್ಲಿ ಪುನಃ ಹುಟ್ಟುವುದಿಲ್ಲ ಮತ್ತು ಪ್ರಳಯ ಕಾಲದಲ್ಲಿಯೂ ದುಃಖಿತರಾಗುವುದಿಲ್ಲ. (14.2)
- ಎಲೈ ಅರ್ಜುನ! ನನ್ನ ಮಹದ್ ಬ್ರಹ್ಮರೂಪೀ ಮೂಲಪ್ರಕೃತಿಯು ಸಮಸ್ತ ಪ್ರಾಣಿಗಳ ಯೋನಿಯಾಗಿದೆ. ಅರ್ಥಾತ್ ಗರ್ಭಾಧಾನದ ಸ್ಥಾನವಾಗಿದೆ. ನಾನು ಆ ಯೋನಿಯಲ್ಲಿ ಚೇತನ ಸಮುದಾಯರೂಪೀ ಗರ್ಭವನ್ನು ಸ್ಥಾಪಿಸುತ್ತೇನೆ. ಆ ಜಡ-ಚೇತನ ಸಂಯೋಗದಿಂದ ಎಲ್ಲ ಪ್ರಾಣಿಗಳ ಉತ್ಪತ್ತಿಯಾಗುತ್ತದೆ. (14.3)
- ಎಲೈ ಅರ್ಜುನ! ನಾನಾ ಪ್ರಕಾರದ ಎಲ್ಲ ಯೋನಿಗಳಲ್ಲಿ ಹುಟ್ಟುವ ಶರೀರಧಾರೀ ಪ್ರಾಣಿಗಳಿಗೆಲ್ಲರಿಗೆ ಗರ್ಭಧರಿಸುವ ತಾಯಿ ಪ್ರಕೃತಿಯಾಗಿದೆ ಮತ್ತು ಬೀಜವನ್ನು ಸ್ಥಾಪಿಸುವ ತಂದೆ ನಾನಾಗಿದ್ದೇನೆ. (14.4)
- ಎಲೈ ಅರ್ಜುನ! ಸತ್ತ್ವಗುಣ, ರಜೋಗುಣ ಮತ್ತು ತಮೋಗುಣ ಎಂಬ ಮೂರು ಗುಣಗಳು ಪ್ರಕೃತಿಯಿಂದ ಉತ್ಪನ್ನವಾಗಿ ಅವಿನಾಶೀ ಜೀವಾತ್ಮನನ್ನು ದೇಹದಲ್ಲಿ ಬಂಧಿಸುತ್ತವೆ. (14.5)
- ಎಲೈ ಪಾಪರಹಿತನೇ! ಆ ಮೂರು ಗುಣಗಳಲ್ಲಿ ಸತ್ವಗುಣವು ನಿರ್ಮಲವಾದ ಕಾರಣ ಪ್ರಕಾಶ ಉಂಟುಮಾಡುವುದು ಹಾಗೂ ವಿಕಾರರಹಿತವಾಗಿದೆ. ಆದರೆ ಅದು ಸುಖದ ಸಂಬಂಧದ ಮತ್ತು ಜ್ಞಾನ ಸಂಬಂಧದ ಅಭಿಮಾನದಿಂದ ಬಂಧಿಸುತ್ತದೆ. (14.6)
- ಎಲೈ ಅರ್ಜುನ! ರಾಗರೂಪೀ ರಜೋಗುಣವು ಕಾಮನೆ ಮತ್ತು ಆಸಕ್ತಿಯಿಂದ ಉತ್ಪನ್ನವಾದುದು ಎಂದು ತಿಳಿ. ಅದು ಈ ಜೀವಾತ್ಮನನ್ನು ಕರ್ಮಗಳ ಹಾಗೂ ಅವುಗಳ ಫಲಗಳ ಸಂಬಂಧದಿಂದ ಬಂಧಿಸುತ್ತದೆ. (14.7)
- ಎಲೈ ಅರ್ಜುನ! ಎಲ್ಲ ದೇಹಾಭಿಮಾನಿಗಳನ್ನು ಮೋಹಗೊಳಿಸುವ ತಮೋಗುಣವು ಅಜ್ಞಾನದಿಂದ ಉಂಟಾಗಿದೆ ಎಂದು ತಿಳಿ. ಅದು ಈ ಜೀವಾತ್ಮನನ್ನು ಪ್ರಮಾದ, ಆಲಸ್ಯ ಮತ್ತು ನಿದ್ದೆ ಇವುಗಳಿಂದ ಬಂಧಿಸುತ್ತದೆ. (14.8)
- ಎಲೈ ಅರ್ಜುನ! ಸತ್ತ್ವಗುಣವು ಸುಖದಲ್ಲಿ ತೊಡಗಿಸುತ್ತದೆ. ರಜೋಗುಣವು ಕರ್ಮಗಳಲ್ಲಿ ಮತ್ತು ತಮೋಗುಣವು ಜ್ಞಾನವನ್ನು ಮುಚ್ಚಿಹಾಕಿ ಪ್ರಮಾದದಲ್ಲಿಯೂ ತೊಡಗಿಸುತ್ತದೆ. (14.9)
- ಎಲೈ ಅರ್ಜುನ! ರಜೋಗುಣ ಮತ್ತು ತಮೋಗುಣಗಳನ್ನು ಅದುಮಿ ಸತ್ತ್ವಗುಣವು ವೃದ್ಧಿಸುತ್ತದೆ. ಸತ್ತ್ವಗುಣ ಹಾಗೂ ತಮೋಗುಣಗಳನ್ನು ಅದುಮಿ ರಜೋಗುಣವು ಬೆಳೆಯುತ್ತದೆ, ಹಾಗೆಯೇ ಸತ್ತ್ವಗುಣ ಮತ್ತು ರಜೋಗುಣಗಳನ್ನು ಅದುಮಿ ತಮೋಗುಣವು ಬೆಳೆಯುತ್ತದೆ. (14.10)
- ಈ ದೇಹದಲ್ಲಿ ಅಂತಃಕರಣದಲ್ಲಿ ಮತ್ತು ಇಂದ್ರಿಯಗಳಲ್ಲಿ ಚೈತನ್ಯ ಹಾಗೂ ವಿವೇಕ ಶಕ್ತಿಯು ಉಂಟಾದಾಗ ಸತ್ತ್ವಗುಣವು ಹೆಚ್ಚಾಗಿದೆ ಎಂದು ತಿಳಿಯಬೇಕು. (14.11)
- ಎಲೈ ಅರ್ಜುನ! ರಜೋಗುಣವು ಹೆಚ್ಚಾದಾಗ ಲೋಭ, ಪ್ರವೃತ್ತಿ, ಸ್ವಾರ್ಥಪ್ರೇರಿತನಾಗಿ ಸಕಾಮಭಾವದಿಂದ ಕರ್ಮಮಾಡುವುದು, ಅಶಾಂತಿ ಮತ್ತು ವಿಷಯ ಭೋಗಗಳ ಲಾಲಸೆ-ಇವೆಲ್ಲವೂ ಉಂಟಾಗುತ್ತವೆ. (14.12)
- ಎಲೈ ಅರ್ಜುನ! ತಮೋಗುಣವು ಹೆಚ್ಚಾದಾಗ ಅಂತಃಕರಣ ಮತ್ತು ಇಂದ್ರಿಯಗಳಲ್ಲಿ ಅಂಧಕಾರ, ಕರ್ತವ್ಯ ಕರ್ಮಗಳಲ್ಲಿ ಅಪ್ರವೃತ್ತಿ, ವ್ಯರ್ಥ ಚೇಷ್ಟೆಗಳು ಹಾಗೂ ನಿದ್ದೆ ಮುಂತಾದವು ಅಂತಃಕರಣವನ್ನು ಮೋಹಿತಗೊಳಿಸುವ ವೃತ್ತಿಗಳು – ಇವೆಲ್ಲವೂ ಉಂಟಾಗುತ್ತವೆ. (14.13)
- ಸತ್ತ್ವಗುಣವು ಹೆಚ್ಚಿದಾಗ ಮನುಷ್ಯನು ಸತ್ತರೆ, ಆಗ ಅವನು ಉತ್ತಮ ಕರ್ಮ ಮಾಡುವವರ ನಿರ್ಮಲ, ದಿವ್ಯ, ಸ್ವರ್ಗಾದಿ ಲೋಕಗಳನ್ನು ಪಡೆಯುತ್ತಾನೆ. (14.14)
- ರಜೋಗುಣವು ಬೆಳೆದಾಗ ಸತ್ತರೆ ಕರ್ಮಗಳಲ್ಲಿ ಆಸಕ್ತಿಯುಳ್ಳ ಮನುಷ್ಯರಲ್ಲಿ ಹುಟ್ಟುವನು. ಹಾಗೆಯೇ ತಮೋಗುಣವು ಹೆಚ್ಚಾದಾಗ ಸತ್ತ ಮನುಷ್ಯನು ಕೀಟ, ಪಶು ಮುಂತಾದ ಮೂಢ (ವಿವೇಕ ಶೂನ್ಯ) ಯೋನಿಗಳಲ್ಲಿ ಹುಟ್ಟುತ್ತಾನೆ. (14.15)
- ಶ್ರೇಷ್ಠವಾದ ಕರ್ಮಗಳ ಫಲವು ಸಾತ್ವಿಕ ಅಂದರೆ ಸುಖ, ಜ್ಞಾನ ಮತ್ತು ವೈರಾಗ್ಯವೇ ಮುಂತಾದ ನಿರ್ಮಲ
ವೆಂದೂ ಹೇಳಲಾಗಿದೆ. ರಾಜಸ ಕರ್ಮಗಳ ಫಲವು ದುಃಖವೆಂದೂ, ತಾಮಸ ಕರ್ಮಗಳ ಫಲವು ಅಜ್ಞಾನವೆಂದೂ ಹೇಳಲಾಗಿದೆ. (14.16) - ಸತ್ತ್ವ ಗುಣದಿಂದ ಜ್ಞಾನವು ಉಂಟಾಗುತ್ತದೆ. ರಜೋಗುಣದಿಂದ ನಿಸ್ಸಂದೇಹವಾಗಿ ಲೋಭವು ಹಾಗೂ ತಮೋಗುಣದಿಂದ ಪ್ರಮಾದ, ಮೋಹಗಳು ಮತ್ತು ಅಜ್ಞಾನವೂ ಉಂಟಾಗುತ್ತವೆ. (14.17)
- ಸತ್ತ್ವಗುಣದಲ್ಲಿ ಸ್ಥಿತರಾದ ಮನುಷ್ಯರು ಸ್ವರ್ಗಾದಿ ಉಚ್ಚ ಲೋಕಗಳಿಗೆ ಹೋಗುತ್ತಾರೆ. ರಜೋಗುಣದಲ್ಲಿ ನೆಲೆಸಿದವರು ಮಧ್ಯದಲ್ಲಿ ಅರ್ಥಾತ್ ಮನುಷ್ಯ ಲೋಕದಲ್ಲೇ ಇರುತ್ತಾರೆ ಮತ್ತು ತಮೋಗುಣದ ಕಾರ್ಯರೂಪೀ ನಿದ್ದೆ, ಪ್ರಮಾದ, ಆಲಸ್ಯಾದಿಗಳಲ್ಲಿ ನೆಲೆನಿಂತ ತಾಮಸ ಪುರುಷರು ಅಧೋಗತಿಗೆ ಅಂದರೆ, ಕೀಟ, ಪಶು ಮೊದಲಾದ ನೀಚ ಯೋನಿಗಳಲ್ಲಿ ಹಾಗೂ ನರಕಗಳಿಗೆ ಹೋಗುತ್ತಾರೆ. (14.18)
- ದೃಷ್ಟಾ ಅಂದರೆ ಸಮಷ್ಟಿ ಚೇತನದಲ್ಲಿ ಏಕೀಭಾವದಿಂದ ನೆಲೆಸಿದ ಸಾಕ್ಷೀ ಪುರುಷನು ಮೂರು ಗುಣಗಳಿಲ್ಲದೆ ಬೇರೆ ಯಾರನ್ನು ಕರ್ತಾ ಎಂದು ನೋಡದಿದ್ದಾಗ, ತ್ರಿಗುಣಗಳಿಗಿಂತ ಅತ್ಯಂತ ಶ್ರೇಷ್ಠವಾದ ಸಚ್ಚಿದಾನಂದಘನ ಸ್ವರೂಪೀ ಪರಮಾತ್ಮನಾದ ನನ್ನನ್ನು ತತ್ತ್ವದಿಂದ ತಿಳಿಯುವ ಸಮಯದಲ್ಲೇ ನನ್ನ ಸ್ವರೂಪವನ್ನು ಹೊಂದುತ್ತಾನೆ. (14.19)
- ಈ ಪುರುಷನು ಶರೀರದ ಉತ್ಪತ್ತಿಗೆ ಕಾರಣವಾದ ಮೂರು ಗುಣಗಳನ್ನು ದಾಟಿ ಜನ್ಮ, ಮೃತ್ಯು, ವೃದ್ಧಾವಸ್ಥೆ ಮತ್ತು ಎಲ್ಲ ರೀತಿಯ ದುಃಖಗಳಿಂದ ಮುಕ್ತನಾಗಿ ಪರಮಾನಂದವನ್ನು ಪಡೆಯುತ್ತಾನೆ. (14.20)
- ಅರ್ಜುನನು ಹೇಳಿದನು – ಈ ಮೂರು ಗುಣಗಳಿಂದಲೂ ಅತೀತನಾದ ಪುರುಷನು ಯಾವ-ಯಾವ ಲಕ್ಷಣಗಳಿಂದ ಕೂಡಿರುತ್ತಾನೆ? ಹಾಗೂ ಅವನ ಆಚರಣೆ ಹೇಗಿರುತ್ತದೆ? ಹಾಗೆಯೇ ಪ್ರಭುವೇ! ಮನುಷ್ಯನು ಯಾವ ಉಪಾಯದಿಂದ ಈ ಮೂರು ಗುಣಗಳನ್ನು ದಾಟಿ ಹೋಗುತ್ತಾನೆ? (14.21)
- ಶ್ರೀಭಗವಂತನು ಹೇಳಿದನು – ಎಲೈ ಅರ್ಜುನ ! ಯಾವ ಪರುಷನು ಸತ್ತ್ವಗುಣದ ಕಾರ್ಯರೂಪೀ ಪ್ರಕಾಶವನ್ನು, ರಜೋಗುಣದ ಕಾರ್ಯರೂಪೀ ಪ್ರವೃತ್ತಿಯನ್ನು ಮತ್ತು ತಮೋಗುಣದ ಕಾರ್ಯರೂಪೀ ಮೋಹ ಇವುಗಳು ಪ್ರಾಪ್ತವಾದರೂ ಅವುಗಳನ್ನು ದ್ವೇಷಿಸುವುದಿಲ್ಲ ಹಾಗೂ ನಿವೃತ್ತನಾದ ಮೇಲೆ ಅವುಗಳನ್ನು ಬಯಸುವುದಿಲ್ಲ. (14.22)
- ಸಾಕ್ಷಿಯಂತೆ ಇದ್ದು ಗುಣಗಳ ಮೂಲಕ ವಿಚಲಿತಗೊಳಿಸಲಾಗುವುದಿಲ್ಲ ಮತ್ತು ಗುಣಗಳೇ ಗುಣಗಳಲ್ಲಿ ವರ್ತಿಸುತ್ತವೆ ಎಂದು ತಿಳಿಯುತ್ತಾ, ಸಚ್ಚಿದಾನಂದಘನ ಪರಮಾತ್ಮನಲ್ಲಿ ಏಕೀಭಾವದಿಂದ ಇರುತ್ತಾ ಮತ್ತು ಆ ಸ್ಥಿತಿಯಿಂದ ಎಂದೂ ಕದಲಲಾರನು – (14.23)
- ನಿರಂತರ ಆತ್ಮಭಾವದಲ್ಲಿ ನೆಲೆಸಿರುವವನು, ಸುಖ-ದುಃಖಗಳನ್ನು ಸಮಾನವಾಗಿ ತಿಳಿಯುವವನು, ಕಲ್ಲು, ಮಣ್ಣು ಮತ್ತು ಚಿನ್ನಗಳನ್ನು ಸಮಾನವಾಗಿ ತಿಳಿಯುವವನು, ಜ್ಞಾನಿಯಾದವನು, ಪ್ರಿಯ ಹಾಗೂ ಅಪ್ರಿಯಗಳನ್ನು ಒಂದೇ ಎಂದು ತಿಳಿಯುವವನು, ನಿಂದಾ-ಸ್ತುತಿಗಳಲ್ಲಿ ಸಮಭಾವ ಉಳ್ಳವನು – (14.24)
- ಮಾನ-ಅಪಮಾನ ಒಂದೇ ಎಂದು ತಿಳಿಯುವವನು, ಮಿತ್ರ ಮತ್ತು ಶತ್ರು ಇವರ ವಿಷಯದಲ್ಲಿ ಸಮನಾಗಿರುವವನು ಮತ್ತು ಸಮಸ್ತ ಕರ್ಮಗಳಲ್ಲಿ ಕರ್ತೃತ್ವದ ಅಭಿಮಾನರಹಿತನಾಗಿರುವ ಪುರುಷನನ್ನು ಗುಣಾತೀತನೆಂದು ಹೇಳುತ್ತಾರೆ. (14.25)
- ಅವ್ಯಭಿಚಾರೀ ಭಕ್ತಿಯೋಗದಿಂದ ನನ್ನನ್ನು ನಿರಂತರ ಭಜಿಸುವವನೂ ಕೂಡ ಈ ಮೂರು ಗುಣಗಳನ್ನು ಪೂರ್ಣವಾಗಿ ದಾಟಿ ಸಚ್ಚಿದಾನಂದಘನ ಬ್ರಹ್ಮನನ್ನು ಪಡೆಯಲು ಯೋಗ್ಯನಾಗುತ್ತಾನೆ. (14.26)
- ಏಕೆಂದರೆ ಆ ಅವಿನಾಶೀ ಪರಬ್ರಹ್ಮನ, ಅಮೃತದ, ನಿತ್ಯವಾದ ಧರ್ಮದ ಮತ್ತು ಅಖಂಡ ಏಕರಸ ಆನಂದದ ಆಶ್ರಯವು ನಾನೇ ಆಗಿದ್ದೇನೆ. (14.27)