- ಅರ್ಜುನನು ಹೇಳಿದನು – ಹೇ ಕೃಷ್ಣಾ! ಶಾಸ್ತ್ರವಿಧಿಯನ್ನು ಬಿಟ್ಟು ಶ್ರದ್ಧೆಯಿಂದ ಕೂಡಿದವರಾಗಿ ದೇವತೆಗಳ ಪೂಜೆ ಮಾಡುವ ಮನುಷ್ಯರ ಸ್ಥಿತಿಯು ಯಾವುದು? ಸಾತ್ವಿಕವೋ, ರಾಜಸವೋ ಅಥವಾ ತಾಮಸವೋ? (17.1)
- ಶ್ರೀಭಗವಂತನು ಹೇಳಿದನು – ಮನುಷ್ಯರ ಶಾಸ್ತ್ರೀಯ ಸಂಸ್ಕಾರರಹಿತವಾದ, ಕೇವಲ ಸ್ವಭಾವದಿಂದ ಉಂಟಾದ ಶ್ರದ್ಧೆಯು ಸಾತ್ತ್ವಿಕ, ರಾಜಸ ಹಾಗೂ ತಾಮಸ ಹೀಗೆ ಮೂರು ವಿಧದ್ದೇ ಆಗಿದೆ. ಅದನ್ನು ನೀನು ನನ್ನಿಂದ ಕೇಳು. (17.2)
- ಎಲೈ ಅರ್ಜುನ! ಎಲ್ಲ ಮನುಷ್ಯರ ಶ್ರದ್ಧೆಯು ಅವರವರ ಅಂತಃಕರಣಕ್ಕನು ರೂಪವಾಗಿ ಇರುತ್ತದೆ. ಈ ಪುರುಷನು ಶ್ರದ್ಧಾಮಯನಾಗಿದ್ದಾನೆ. ಆದ್ದರಿಂದ ಯಾವ ಮನುಷ್ಯನು ಎಂತಹ ಶ್ರದ್ಧೆಯುಳ್ಳವನೋ ಅವನು ಅದೇ ಆಗಿದ್ದಾನೆ. ಅರ್ಥಾತ್ ಆ ಶ್ರದ್ಧೆಗನುಸಾರವೇ ಅವನ ಸ್ವರೂಪ ಇರುತ್ತದೆ. (17.3)
- ಸಾತ್ತ್ವಿಕ ಜನರು ದೇವತೆಗಳನ್ನು ಪೂಜಿಸುತ್ತಾರೆ. ರಾಜಸ ಜನರು ಯಕ್ಷ-ರಾಕ್ಷಸರನ್ನು ಹಾಗೆಯೇ ಇತರ ತಾಮಸ ಜನರು ಪ್ರೇತ ಮತ್ತು ಭೂತಗಣಗಳನ್ನು ಪೂಜಿಸುತ್ತಾರೆ. (17.4)
- ಶಾಸ್ತ್ರವಿಧಿಯನ್ನು ಬಿಟ್ಟು ಕೇವಲ ಮನೋಕಲ್ಪಿತವಾದ ಘೋರ ತಪಸ್ಸನ್ನು ಆಚರಿಸುವ ಮನುಷ್ಯರು ದಂಭ, ಅಹಂಕಾರ, ಕಾಮನೆ, ಆಸಕ್ತಿಗಳಿಂದ ಕೂಡಿದವರಾಗಿ ಬಲದ ಅಭಿಮಾನದಿಂದಲೂ ಕೂಡಿಕೊಂಡಿದ್ದು – (17.5)
- ಶರೀರರೂಪದಿಂದ ಇರುವ ಪ್ರಾಣಿ ಸಮುದಾಯವನ್ನು ಮತ್ತು ಅಂತಃಕರಣದಲ್ಲಿ ಇರುವ ಪರಮಾತ್ಮನಾದ ನನ್ನನ್ನು ಕೃಶಗೊಳಿಸುವ ಅಜ್ಞಾನೀ ಜನರನ್ನು ಆಸುರೀ ಸ್ವಭಾವದವರೆಂದು ನೀನು ತಿಳಿ. (17.6)
- ಭೋಜನವೂ ಎಲ್ಲರಿಗೆ ತಮ್ಮ-ತಮ್ಮ ಪ್ರಕೃತಿಗೆ ಅನುಗುಣವಾಗಿ ಮೂರು ವಿಧವಾಗಿ ಪ್ರಿಯವಾಗಿರುತ್ತದೆ. ಹಾಗೆಯೇ ಯಜ್ಞ, ತಪಸ್ಸು ಮತ್ತು ದಾನವೂ ಕೂಡ ಮೂರು-ಮೂರು ಪ್ರಕಾರದಿಂದಿರುತ್ತವೆ. ಅವುಗಳ ಈ ಬೇರೆ-ಬೇರೆ ಭೇದಗಳನ್ನು ನೀನು ನನ್ನಿಂದ ಕೇಳು. (17.7)
- ಆಯುಸ್ಸು, ಬುದ್ಧಿ, ಬಲ, ಆರೋಗ್ಯ, ಸುಖ ಮತ್ತು ಪ್ರೀತಿಯನ್ನು ಹೆಚ್ಚಿಸುವ, ರಸಯುಕ್ತ, ಸ್ನೇಹಯುಕ್ತ, ಸ್ನಿಗ್ಧ, ಸ್ಥಿರವಾಗಿರುವ ಹಾಗೂ ಸ್ವಭಾವದಿಂದಲೇ ಮನಸ್ಸಿಗೆ ಪ್ರಿಯವಾದ ಭೋಜನ ಪದಾರ್ಥಗಳು ಸಾತ್ತ್ವಿಕ ಪುರುಷನಿಗೆ ಪ್ರಿಯವಾಗಿರುತ್ತವೆ. (17.8)
- ಕಹಿ, ಹುಳಿ, ಹೆಚ್ಚು ಉಪ್ಪಿನಿಂದ ಕೂಡಿದ, ಹೆಚ್ಚು ಬಿಸಿ, ಹೆಚ್ಚು ಖಾರ, ಹುರಿದಿರುವ, ಉರಿಯನ್ನುಂಟುಮಾಡುವ, ದುಃಖ, ಚಿಂತೆ ಹಾಗೂ ರೋಗಗಳನ್ನುಂಟು ಮಾಡುವ ಭೋಜನ ಪದಾರ್ಥಗಳು ರಾಜಸ ಜನರಿಗೆ ಪ್ರಿಯವಾಗಿರುತ್ತವೆ. (17.9)
- ಅರ್ಧಬೆಂದಿರುವ, ರಸರಹಿತವಾದ, ದುರ್ಗಂಧಯುಕ್ತವಾದ, ಹಳಸಿದ, ಎಂಜಲಾದ ಹಾಗೂ ಅಪವಿತ್ರವೂ ಆದ ಭೋಜನವು ತಾಮಸ ಜನರಿಗೆ ಪ್ರಿಯವಾಗಿರುತ್ತದೆ. (17.10)
- ಶಾಸ್ತ್ರವಿಧಿಯು ನೇಮಿಸಿದ ಯಜ್ಞ ಮಾಡುವುದು ಕರ್ತವ್ಯವಾಗಿದೆ ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಫಲೇಚ್ಛೆಯನ್ನು ಬಯಸದೆ ಮಾಡುವ ಯುಜ್ಞವು ಸಾತ್ತ್ವಿಕವಾಗಿದೆ. (17.11)
- ಆದರೆ ಎಲೈ ಅರ್ಜುನ! ಕೇವಲ ತೋರಿಕೆಗಾಗಿ ಅಥವಾ ಫಲವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾಡುವ ಯಜ್ಞವನ್ನು ನೀನು ರಾಜಸವೆಂದು ತಿಳಿ. (17.12)
- ಶಾಸ್ತ್ರವಿಧಿಯನ್ನು ಬಿಟ್ಟು, ಅನ್ನದಾನವಿಲ್ಲದ, ಮಂತ್ರಗಳಿಲ್ಲದ, ದಕ್ಷಿಣೆಕೊಡದೆ, ಅಶ್ರದ್ಧೆಯಿಂದ ಮಾಡುವ ಯಜ್ಞವನ್ನು ತಾಮಸ ಯಜ್ಞವೆಂದು ಹೇಳುತ್ತಾರೆ. (17.13)
- ದೇವತೆಗಳ, ಬ್ರಾಹ್ಮಣರ, ಗುರುಗಳ ಮತ್ತು ಜ್ಞಾನಿಗಳ ಪೂಜೆ ಮಾಡುವುದು, ಪವಿತ್ರತೆ, ಸರಳತೆ, ಬ್ರಹ್ಮಚರ್ಯ, ಅಹಿಂಸೆ, ಇವು ಶಾರೀರಿಕ ತಪಸ್ಸು ಎಂದು ಹೇಳಲಾಗುತ್ತದೆ. (17.14)
- ಉದ್ವೇಗಗೊಳಿಸದ, ಪ್ರಿಯವಾದ, ಹಿತಕರವಾದ ಮತ್ತು ಯಥಾರ್ಥವಾದ ಮಾತು, ಹಾಗೆಯೇ, ವೇದಶಾಸಗಳ ಅಧ್ಯಯನ, ಪರಮೇಶ್ವರನ ನಾಮ ಜಪದ ಅಭ್ಯಾಸ – ಇವನ್ನು ವಾಣಿಯ ತಪಸ್ಸೆಂದು ಹೇಳಲಾಗುತ್ತದೆ. (17.15)
- ಮನಸ್ಸಿನ ಪ್ರಸನ್ನತೆ, ಶಾಂತಭಾವ, ಭಗವಚ್ಚಿಂತನದ ಸ್ವಭಾವ, ಮನಸ್ಸಿನ ನಿಗ್ರಹ, ಅಂತಃಕರಣದ ಭಾವಗಳ ಪೂರ್ಣ ಪವಿತ್ರತೆ ಇವು ಮನಸ್ಸಿನ ತಪಸ್ಸೆಂದು ಹೇಳಲಾಗುತ್ತದೆ. (17.16)
- ಫಲದ ಇಚ್ಛೆ ಇಲ್ಲದ ಯೋಗೀ ಪುರುಷರು ಅತ್ಯಂತ ಶ್ರದ್ಧೆಯಿಂದ ಮಾಡುವ ಹಿಂದೆ ಹೇಳಿದ ಮೂರು ಪ್ರಕಾರದ (ಕಾಯಿಕ, ವಾಚಿಕ, ಮಾನಸಿಕ) ತಪಸ್ಸನ್ನು ಸಾತ್ತ್ಪಿಕವೆಂದು ಹೇಳುತ್ತಾರೆ. (17.17)
- ಸತ್ಕಾರ, ಮಾನ ಮತ್ತು ಪೂಜೆಗಾಗಿ ಹಾಗೆಯೇ ಬೇರೆ ಯಾವುದೋ ಸ್ವಾರ್ಥಕ್ಕಾಗಿ, ಸ್ವಭಾವದಿಂದಾಗಿ ಅಥವಾ ದಂಭಾಚಾರದಿಂದ ಮಾಡುವ ತಪಸ್ಸು, ಕ್ಷಣಿಕ ಹಾಗೂ ಅನಿಶ್ಚಿತ ಫಲವುಳ್ಳ ತಪಸ್ಸನ್ನು ಇಲ್ಲಿ ರಾಜಸವೆಂದು ಹೇಳಲಾಗಿದೆ. (17.18)
- ಮೂರ್ಖತೆಯಿಂದ, ಹಟದಿಂದ, ಮನಸ್ಸು, ವಾಣಿ, ಶರೀರಕ್ಕೆ ಕಷ್ಟಕೊಟ್ಟು ಅಥವಾ ಇತರರಿಗೆ ಅನಿಷ್ಟ ಮಾಡುವುದಕ್ಕಾಗಿ ಮಾಡಲಾಗುವ ತಪಸ್ಸನ್ನು ತಾಮಸವೆಂದು ಹೇಳಲಾಗಿದೆ. (17.19)
- ‘ದಾನ ಕೊಡುವುದೇ ಕರ್ತವ್ಯವಾಗಿದೆ’ ಈ ಭಾವದಿಂದ ದೇಶ, ಕಾಲ ಮತ್ತು ಪಾತ್ರ ದೊರಕಿದಾಗ ಪ್ರತ್ಯುಪಕಾರವನ್ನು ಬಯಸದೆ ಮಾಡುವ ದಾನವನ್ನು ಸಾತ್ತ್ವಿಕವೆಂದು ಹೇಳಲಾಗಿದೆ. (17.20)
- ಆದರೆ ಕ್ಲೇಶಪೂರ್ವಕ, ಪ್ರತ್ಯುಪಕಾರದ ಇಚ್ಛೆಯಿಂದ, ಅಥವಾ ಫಲವನ್ನು ದೃಷ್ಟಿಯಲ್ಲಿಟ್ಟು ಕೊಡಲಾಗುವ ದಾನವನ್ನು ರಾಜಸ ಎಂದು ಹೇಳಲಾಗಿದೆ. (17.21)
- ಸತ್ಕಾರವಿಲ್ಲದೆ, ಅಥವಾ ತಿರಸ್ಕಾರದಿಂದ ಅಯೋಗ್ಯ ದೇಶ-ಕಾಲಗಳಲ್ಲಿ ಮತ್ತು ಕುಪಾತ್ರನಿಗೆ ಕೊಡಲಾಗುವ ದಾನವನ್ನು ತಾಮಸವೆಂದು ಹೇಳಲಾಗಿದೆ. (17.22)
- ಓಂ, ತತ್, ಸತ್ – ಹೀಗೆ ಮೂರು ಪ್ರಕಾರದ ಹೆಸರುಗಳು ಓರ್ವ ಸಚ್ಚಿದಾನಂದಘನ ಬ್ರಹ್ಮನದ್ದೇ ಆಗಿವೆ. ಅವುಗಳಿಂದಲೇ ಸೃಷ್ಟಿಯ ಆದಿಯಲ್ಲಿ ಬ್ರಾಹ್ಮಣ, ವೇದ ಹಾಗೂ ಯಜ್ಞಾದಿಗಳು ರಚಿತವಾಗಿವೆ. (17.23)
- ಆದ್ದರಿಂದ ವೇದಮಂತ್ರಗಳನ್ನು ಉಚ್ಚರಿಸುವ ಶ್ರೇಷ್ಠ ಪುರುಷರ ಶಾಸ್ತ್ರಗಳು ಹೇಳಿದ ಯಜ್ಞ, ದಾನ ಮತ್ತು ತಪೋರೂಪೀ ಕ್ರಿಯೆಗಳನ್ನು ಯಾವಾಗಲೂ ‘ಓಂ’ ಎಂಬ ಈ ಪರಮಾತ್ಮನ ನಾಮವನ್ನು ಉಚ್ಚರಿಸಿಯೇ ಪ್ರಾರಂಭವಾಗುತ್ತವೆ. (17.24)
- ‘ತತ್’ ಈ ಹೆಸರಿನಿಂದ ಸಂಬೋಧಿಸುವ ಪರಮಾತ್ಮನದ್ದೇ ಇದೆಲ್ಲವೂ ಆಗಿದೆ. ಈ ಭಾವನೆಯಿಂದ ಫಲವನ್ನು, ಬಯಸದೆ ನಾನಾ ಪ್ರಕಾರದ ಯಜ್ಞ, ತಪಸ್ಸು ಮತ್ತು ದಾನರೂಪೀ ಕ್ರಿಯೆಗಳನ್ನು ಶ್ರೇಯಸ್ಸಿನ ಇಚ್ಛೆಯುಳ್ಳ ಪುರುಷರು ಮಾಡುತ್ತಾರೆ. (17.25)
- ‘ಸತ್’ಈ ಪರಮಾತ್ಮನ ಹೆಸರನ್ನು ಸತ್ಯಭಾವದಲ್ಲಿ ಮತ್ತು ಶ್ರೇಷ್ಠಭಾವದಲ್ಲಿ ಪ್ರಯೋಗಿಸಲಾಗುತ್ತದೆ. ಹಾಗೆಯೇ ಪಾರ್ಥನೇ! ಉತ್ತಮವಾದ ಕರ್ಮದಲ್ಲಿಯೂ ‘ಸತ್‘ ಶಬ್ದವನ್ನು ಪ್ರಯೋಗಿಸಲಾಗುತ್ತದೆ. (17.26)
- ಹಾಗೆಯೇ ಯಜ್ಞ, ತಪಸ್ಸು ಮತ್ತು ದಾನದಲ್ಲಿ ಇರುವ ಸ್ಥಿತಿಯನ್ನೂ, ಕೂಡ ‘ಸತ್’ ಎಂದು ಹೇಳಲಾಗುತ್ತದೆ ಮತ್ತು ಪರಮಾತ್ಮನಿಗಾಗಿ ಮಾಡಿದ ಕರ್ಮವು ನಿಶ್ಚಯವಾಗಿ ‘ಸತ್’ ಎಂದು ಹೇಳಲಾಗುತ್ತದೆ. (17.27)
- ಎಲೈ ಅರ್ಜುನ! ಶ್ರದ್ಧೆಯಿಲ್ಲದೆ ಮಾಡಿದ ಹವನ, ಕೊಟ್ಟ ದಾನ, ಮಾಡಿದ ತಪಸ್ಸು ಮತ್ತು ಮಾಡಿದ ಶುಭಕರ್ಮಗಳೆಲ್ಲವೂ ‘ಅಸತ್’ ಎಂದು ಹೇಳಲಾಗುತ್ತದೆ. ಆದ್ದರಿಂದ ಅದು ಈ ಲೋಕದಲ್ಲಾಗಲೀ, ಪರಲೋಕದಲ್ಲಾಗಲೀ ಲಾಭದಾಯಕವಾಗುವುದಿಲ್ಲ. (17.28)