- ಶ್ರೀಭಗವಂತನು ಹೇಳಿದನು – ಆದಿಪುರುಷ ಪರಮೇಶ್ವರನು ಬೇರು ಆಗಿರುವ, ಬ್ರಹ್ಮದೇವರೇ ಮುಖ್ಯಕಾಂಡವಾಗಿರುವ ಜಗದ್ರೂಪೀ ಅಶ್ವತ್ಥವೃಕ್ಷವನ್ನು ಅವಿನಾಶೀ ಎಂದು ಹೇಳುತ್ತಾರೆ. ಹಾಗೆಯೇ ವೇದಗಳು ಅದರ ಎಲೆಗಳೆಂದು ಹೇಳಲಾಗಿದೆ. ಆ ಜಗದ್ರೂಪೀ ಅಶ್ವತ್ಥವೃಕ್ಷವನ್ನು ಮೂಲಸಹಿತ ತತ್ತ್ವತಃ ತಿಳಿದವನು ವೇದಗಳ ತಾತ್ಪರ್ಯವನ್ನು ತಿಳಿದವನಾಗಿದ್ದಾನೆ. (15.1)
- ಆ ಜಗತ್ವೃಕ್ಷಕ್ಕೆ – ತ್ರಿಗುಣರೂಪೀ ನೀರಿನಿಂದ ಬೆಳೆದಿರುವ ವಿಷಯ ಭೋಗರೂಪೀ ಚಿಗುರುಗಳುಳ್ಳ ದೇವ, ಮನುಷ್ಯ ಮತ್ತು ತಿರ್ಯಕ್ ಮೊದಲಾದ ಯೋನಿರೂಪವಾದ ರೆಂಬೆಗಳು ಕೆಳಗೆ, ಮೇಲೆ ಎಲ್ಲೆಲ್ಲಿಯೂ ಹರಡಿಕೊಂಡಿವೆ ಹಾಗೂ ಮನುಷ್ಯ ಜನ್ಮದಲ್ಲಿ ಕರ್ಮಗಳಿಗನುಸಾರ ಬಂಧಿಸುವಂತಹ ಅಹಂತೆ, ಮಮತೆ ಮತ್ತು ವಾಸನಾರೂಪೀ ಬೀಳಲುಗಳೂ ಮೇಲೆ, ಕೆಳಗೆ ಎಲ್ಲ ಲೋಕಗಳಲ್ಲಿ ಹರಡಿಕೊಂಡಿವೆ. (15.2)
- ಈ ಸಂಸಾರವೃಕ್ಷದ ಸ್ವರೂಪವು ಹೇಗೆ ಹೇಳಲಾಗಿದೆಯೋ ಹಾಗೆ ಇಲ್ಲಿ ವಿಚಾರಕಾಲದಲ್ಲಿ ಕಂಡುಬರುವುದಿಲ್ಲ. ಏಕೆಂದರೆ ಇದರ ಆದಿಯಾಗಲೀ, ಅಂತ್ಯವಾಗಲೀ ಇಲ್ಲ. ಹಾಗೆಯೇ ಅದರ ಉತ್ತಮ ರೀತಿಯ ಸ್ಥಿರತೆಯೂ ಇಲ್ಲ. ಅದಕ್ಕಾಗಿ ಈ ಅಹಂತೆ, ಮಮತೆ ಮತ್ತು ವಾಸನಾರೂಪೀ ಬಹಳ ಗಟ್ಟಿಯಾದ ಬೇರುಗಳುಳ್ಳ ಜಗತ್ರೂಪೀ ಅಶ್ವತ್ಥವೃಕ್ಷವನ್ನು ದೃಢವಾದ ವೈರಾಗ್ಯರೂಪೀ ಶಸದಿಂದ ಕತ್ತರಿಸಿ – (15.3)
- ಬಳಿಕ ಆ ಪರಮಪದರೂಪೀ ಪರಮೇಶ್ವರನನ್ನು ಚೆನ್ನಾಗಿ ಅರಸಬೇಕು. ಅಲ್ಲಿಗೆ ಹೋಗಿರುವ ಪುರುಷರು ಮತ್ತೆ ಸಂಸಾರಕ್ಕೆ ಬರುವುದಿಲ್ಲ ಹಾಗೂ ಯಾವ ಪರಮೇಶ್ವರನಿಂದ ಪುರಾತನ ಜಗದ್ರೂಪೀ ವೃಕ್ಷದ ಪರಂಪರೆ ವಿಸ್ತಾರಗೊಂಡಿದೆಯೋ ಆ ಆದಿಪುರುಷ ನಾರಾಯಣನಿಗೆ ನಾನು ಶರಣಾಗಿದ್ದೇನೆ ಎಂಬ ದೃಢ ನಿಶ್ಚಯದಿಂದ ಆ ಪರಮೇಶ್ವರನನ್ನು ಮನನ ಮತ್ತು ನಿದಿಧ್ಯಾಸನ ಮಾಡಬೇಕು. (15.4)
- ಮಾನ-ದೊಡ್ಡಸ್ತಿಕೆ ಮತ್ತು ಮೋಹ ನಾಶವಾಗಿರುವ, ಆಸಕ್ತಿರೂಪ ದೋಷವನ್ನು ಜಯಿಸಿದ, ಪರಮಾತ್ಮನ ಸ್ವರೂಪದಲ್ಲಿ ನಿತ್ಯಸ್ಥಿತಿಯಿರುವ ಹಾಗೆಯೇ ಕಾಮನೆಗಳು ಪೂರ್ಣವಾಗಿ ನಾಶವಾದ, ಸುಖ-ದುಃಖಗಳೆಂಬ ದ್ವಂದ್ವಗಳಿಂದ ವಿಮುಕ್ತರಾದ ಜ್ಞಾನೀಜನರು ಅವಿನಾಶೀ ಪರಮಪದವನ್ನು ಪಡೆಯುತ್ತಾರೆ. (15.5)
- ಆ ಸ್ವಯಂಪ್ರಕಾಶ ಪರಮಪದವನ್ನು ಸೂರ್ಯನಾಗಲೀ, ಚಂದ್ರನಾಗಲೀ, ಇಲ್ಲವೇ ಅಗ್ನಿಯೂ ಪ್ರಕಾಶಿಸಲಾರರು. ಆ ಪರಮಪದವನ್ನು ಪಡೆದ ಮನುಷ್ಯನು ಮರಳಿ ಸಂಸಾರಕ್ಕೆ ಬರುವುದಿಲ್ಲ. ಅದೇ ನನ್ನ ಪರಮಧಾಮವಾಗಿದೆ. (15.6)
- ಈ ದೇಹದಲ್ಲಿ ಇರುವ ಸನಾತನ ಜೀವಾತ್ಮನು ನನ್ನ ಅಂಶನೇ ಆಗಿದ್ದಾನೆ ಮತ್ತು ಅವನೇ ಈ ಪ್ರಕೃತಿಯಲ್ಲಿ ಸ್ಥಿತನಾಗಿ ಮನಸ್ಸು ಹಾಗೂ ಐದು ಇಂದ್ರಿಯಗಳನ್ನು ಆಕರ್ಷಿಸುತ್ತಾನೆ. (15.7)
- ವಾಯುವು ಸುಗಂಧ ವಸ್ತುವಿನಿಂದ ಪರಿಮಳವನ್ನು ಗ್ರಹಣಮಾಡಿ ತೆಗೆದುಕೊಂಡು ಹೋಗುವಂತೆಯೇ ದೇಹಾದಿಗಳ ಸ್ವಾಮಿಯಾದ ಜೀವಾತ್ಮನು ತ್ಯಜಿಸಿದ ಶರೀರದಿಂದ ಮನಸಹಿತ ಇಂದ್ರಿಯಗಳನ್ನು ಗ್ರಹಣಮಾಡಿ ಹೊಸದಾಗಿ ಸಿಗುವ ಶರೀರವನ್ನು ಪ್ರವೇಶಿಸುವನು. (15.8)
- ಜೀವಾತ್ಮನು ಕಿವಿ, ಕಣ್ಣು, ಚರ್ಮ, ನಾಲಿಗೆ, ಮೂಗು ಮತ್ತು ಮನಸ್ಸು ಇವುಗಳನ್ನು ಆಶ್ರಯಿಸಿ ವಿಷಯಗಳನ್ನು ಅನುಭವಿಸುತ್ತಾನೆ. (15.9)
- ಶರೀರವನ್ನು ಬಿಟ್ಟು ಹೋಗುವಾಗ ಇಲ್ಲವೇ ಶರೀರದಲ್ಲಿ ಇರುವಾಗ ಅಥವಾ ವಿಷಯಗಳನ್ನು ಭೋಗಿಸುವಾಗ, ಇಲ್ಲವೇ ಮೂರು ಗುಣಗಳಿಂದ ಕೂಡಿರುವಾಗಲೂ (ಆ ಆತ್ಮಸ್ವರೂಪವನ್ನು) ಅಜ್ಞಾನಿಗಳು ತಿಳಿಯಲಾರರು. ಕೇವಲ ಜ್ಞಾನರೂಪೀ ದೃಷ್ಟಿಯುಳ್ಳ ವಿವೇಕೀ ಜ್ಞಾನಿಗಳೇ ತತ್ತ್ವದಿಂದ ತಿಳಿಯುತ್ತಾರೆ. (15.10)
- ಪ್ರಯತ್ನಶೀಲರಾದ ಯೋಗೀ ಜನರೇ ತಮ್ಮ ಹೃದಯದಲ್ಲಿ ಸ್ಥಿತನಾಗಿರುವ ಈ ಆತ್ಮನನ್ನು ತತ್ತ್ವದಿಂದ ಬಲ್ಲರು, ಆದರೆ ತಮ್ಮ ಅಂತಃಕರಣವನ್ನು ಶುದ್ಧಮಾಡಿಕೊಳ್ಳದ ಅಜ್ಞಾನೀ ಜನರು ಪ್ರಯತ್ನ ಮಾಡಿದರೂ ಈ ಆತ್ಮಸ್ವರೂಪವನ್ನು ತಿಳಿಯಲಾರರು. (15.11)
- ಸಂಪೂರ್ಣ ಜಗತ್ತನ್ನು ಪ್ರಕಾಶಗೊಳಿಸುವ ಸೂರ್ಯನ ತೇಜಸ್ಸು, ಚಂದ್ರನಲ್ಲಿರುವ ತೇಜಸ್ಸು, ಅಗ್ನಿಯಲ್ಲಿರುವ ತೇಜಸ್ಸು ನನ್ನದೇ ತೇಜಸ್ಸು ಎಂದು ನೀನು ತಿಳಿ. (15.12)
- ಮತ್ತು ನಾನೇ ಪೃಥಿವಿಯಲ್ಲಿ ಪ್ರವೇಶಿಸಿ ನನ್ನ ಶಕ್ತಿಯಿಂದ ಎಲ್ಲ ಪ್ರಾಣಿಗಳನ್ನು ಧರಿಸುತ್ತೇನೆ ಮತ್ತು ರಸರೂಪೀ ಅರ್ಥಾತ್ ಅಮೃತಮಯ ಚಂದ್ರನಾಗಿ ಸಂಪೂರ್ಣ ವನಸ್ಪತಿಗಳನ್ನು ಪೋಷಿಸುತ್ತೇನೆ. (15.13)
- ನಾನೇ ಎಲ್ಲ ಪ್ರಾಣಿಗಳ ಶರೀರದಲ್ಲಿ ಸ್ಥಿತನಾಗಿ ಪ್ರಾಣ ಮತ್ತು ಅಪಾನಗಳಿಂದ ಕೂಡಿದ ವೈಶ್ವಾನರ ಅಗ್ನಿರೂಪನಾಗಿ ನಾಲ್ಕು ಪ್ರಕಾರದ ಅನ್ನವನ್ನು ಜೀರ್ಣಗೊಳಿಸುತ್ತೇನೆ. (15.14)
- ನಾನೇ ಎಲ್ಲ ಪ್ರಾಣಿಗಳ ಹೃದಯದಲ್ಲಿ ಅಂತರ್ಯಾಮಿಯಾಗಿ ನೆಲೆಸಿದ್ದೇನೆ. ನನ್ನಿಂದಲೇ ಸ್ಮೃತಿ, ಜ್ಞಾನ ಉಂಟಾಗಿ, ಸಂಶಯಾದಿ ದೋಷಗಳ ನಿವಾರಣೆಯಾಗುತ್ತದೆ. ಎಲ್ಲ ವೇದಗಳ ಮೂಲಕ ತಿಳಿಯಲು ನಾನೇಯೋಗ್ಯನಾಗಿದ್ದೇನೆ ಹಾಗೂ ವೇದಾಂತದ ಕರ್ತೃ ಮತ್ತು ವೇದಗಳನ್ನು ಬಲ್ಲವನೂ ನಾನೇ ಆಗಿದ್ದೇನೆ. (15.15)
- ಈ ಜಗತ್ತಿನಲ್ಲಿ ನಾಶವಾಗುವ ಮತ್ತು ನಾಶವಾಗದಿರುವ ಎರಡು ಪ್ರಕಾರದ ಪುರುಷರಿದ್ದಾರೆ. ಇದರಲ್ಲಿ ಸಂಪೂರ್ಣ ಭೂತಪ್ರಾಣಿಗಳ ಶರೀರಗಳು ನಾಶವಾಗುವಂತಹುದು ಮತ್ತು ಜೀವಾತ್ಮನು ಅವಿನಾಶಿಯೆಂದು ಹೇಳಲಾಗಿದೆ. (15.16)
- ಇವರಿಬ್ಬರಿಗಿಂತ ಉತ್ತಮ ಪುರುಷನಾದರೋ ಬೇರೆಯೇ ಆಗಿದ್ದಾನೆ. ಅವನು ಮೂರು ಲೋಕಗಳಲ್ಲಿ ಪ್ರವೇಶಮಾಡಿ ಎಲ್ಲರ ಧಾರಣೆ-ಪೋಷಣೆ ಮಾಡುತ್ತಾನೆ. ಹಾಗೆಯೇ ಅವನನ್ನು ಅವಿನಾಶೀ ಪರಮೇಶ್ವರ ಮತ್ತು ಪರಮಾತ್ಮಾ ಎಂದು ಹೇಳಲಾಗಿದೆ. (15.17)
- ಏಕೆಂದರೆ ನಾಶವಾಗುವ ಜಡವರ್ಗ – ಕ್ಷೇತ್ರಕ್ಕಿಂತ ನಾನು ಸರ್ವಥಾ ಅತೀತನಾಗಿದ್ದೇನೆ ಹಾಗೂ ಅವಿನಾಶೀ ಜೀವಾತ್ಮನಿಗಿಂತಲೂ ಉತ್ತಮನಾಗಿದ್ದೇನೆ. ಆದ್ದರಿಂದ ಲೋಕದಲ್ಲಿ ಮತ್ತು ವೇದದಲ್ಲಿಯೂ ಪುರುಷೋತ್ತಮ ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ದೇನೆ. (15.18)
- ಎಲೈ ಅರ್ಜುನ! ಯಾವ ಜ್ಞಾನೀ ಪುರುಷನು ನನ್ನನ್ನು ಈ ರೀತಿಯಾಗಿ ತತ್ತ್ವದಿಂದ ಪುರುಷೋತ್ತಮನೆಂದು ತಿಳಿಯುತ್ತಾನೋ, ಆ ಸರ್ವಜ್ಞನಾದವನು ಎಲ್ಲ ವಿಧದಿಂದ ನಿರಂತರವಾಗಿ ವಾಸುದೇವ ಪರಮೇಶ್ವರನಾದ ನನ್ನನ್ನೇ ಭಜಿಸುತ್ತಾನೆ. (15.19)
- ಎಲೈ ನಿಷ್ಪಾಪನಾದ ಅರ್ಜುನ! ಹೀಗೆ ಈ ಅತಿರಹಸ್ಯಮಯ ಗೋಪ್ಯವಾದ ಶಾಸ್ತ್ರವನ್ನು ನಾನು ನಿನಗೆ ಹೇಳಿದೆನು. ಇದನ್ನು ತತ್ತ್ವಶಃ ತಿಳಿದ ಮನುಷ್ಯನು ಜ್ಞಾನಿಯೂ ಮತ್ತು ಕೃತಾರ್ಥನೂ ಆಗುತ್ತಾನೆ. (15.20)