೭ನೆ ಏಪ್ರಿಲ್ ೧೮೮೩, ಚೈತ್ರ ಅಮಾವಾಸ್ಯೆ, ಶನಿವಾರ
ಪರಮಹಂಸರು ಭವನಾಥ, ರಾಖಾಲ, ಮಾಸ್ಟರ್ ಇವರೇ ಮೊದಲಾದವರೊಡನೆ ಕಲ್ಕತ್ತದಲ್ಲಿರುವ ಬಲರಾಮನ ಮನೆಗೆ ಬಂದಿದ್ದಾರೆ. ಬಲರಾಮ ಪರಮಹಂಸರ ಇಚ್ಛೆಗನುಸಾರ ಕೆಲವು ಮಂದಿ ಯುವಕರನ್ನು ಊಟಕ್ಕೆ ಕರೆದಿದ್ದಾನೆ. ಪರಮಹಂಸರು ಅನೇಕ ವೇಳೆ ಆತನಿಗೆ ಹೇಳಿದ್ದರು : “ಆಗಾಗ ಈ ಹುಡುಗರನ್ನು ಮನೆಗೆ ಕರೆದುಕೊಂಡು ಹೋಗಿ ಅನ್ನ ಹಾಕು. ಅದರಿಂದ ಅನೇಕ ಸಾಧುಗಳಿಗೆ ಅನ್ನಹಾಕಿದ ಪುಣ್ಯ ಬರುತ್ತದೆ” ಎಂಬುದಾಗಿ. ಪರಮಹಂಸರು ತಮ್ಮ ಯುವಕಶಿಷ್ಯರನ್ನು ಕಾಮಕಾಂಚನ ಸ್ಪರ್ಶವಿಹೀನರಾದ ಭಗವಂತನ ಅಂಶಗಳೇ ಎಂಬುದಾಗಿ ಭಾವಿಸುತ್ತಿದ್ದರು.
ಕೆಲವು ದಿನಗಳ ಹಿಂದೆ ಪರಮಹಂಸರು “ನವಬೃಂದಾವನ” ಎಂಬ ನಾಟಕ ನೋಡಲು ಕೇಶವಸೇನನ ಮನೆಗೆ ಹೋಗಿದ್ದರು. ನರೇಂದ್ರ, ರಾಖಾಲ ಅವರನ್ನು ಹಿಂಬಾಲಿಸಿದ್ದರು. ನರೇಂದ್ರನೂ ಆ ನಾಟಕದಲ್ಲಿ ಪಾರ್ಟು ತೆಗೆದುಕೊಂಡಿದ್ದ. ಕೇಶವಸೇನ ಅದರಲ್ಲಿ ಪವಾಹಾರಿ ಬಾಬನ ಪಾರ್ಟು ತೆಗೆದುಕೊಂಡಿದ್ದ.
ಶ್ರೀರಾಮಕೃಷ್ಣರು : “ಕೇಶವಸೇನ ಸಾಧುವಿನ ವೇಷ ಧರಿಸಿ ರಂಗಭೂಮಿಯಲ್ಲಿ ಶಾಂತಿ ಜಲವನ್ನು ಪ್ರೋಕ್ಷಿಸಲು ಆರಂಭಿಸಿದ. ಅದು ನನಗೆ ಸರಿ ಅಂತ ತೋರಲಿಲ್ಲ. ಅಭಿನಯ ಮುಗಿದ ಮೇಲೆ ‘ಶಾಂತಿಜಲ’ ಪ್ರೋಕ್ಷಿಸುವುದೆ!
“ಇನ್ನೊಬ್ಬ (ಕು-ಬಾಬು) ಪಾಪಪುರುಷನ ಪಾರ್ಟು ತೆಗೆದುಕೊಂಡಿದ್ದ. ಆ ರೀತಿಯ ಪಾರ್ಟು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಯಾರೂ ಪಾಪಕಾರ್ಯಗಳನ್ನು ಮಾಡಕೂಡದು. ಪಾಪಿಯಂತೆ ಅಭಿನಯಿಸುವುದೂ ಶ್ರೇಯಸ್ಕರವಲ್ಲ.”
ನರೇಂದ್ರನಿಗೆ ಶರೀರಾರೋಗ್ಯ ಸರಿಯಾಗಿಲ್ಲ. ಆದರೆ ಪರಮಹಂಸರಿಗೆ ಆತನ ಬಾಯಿಂದ ಹಾಡು ಕೇಳಬೇಕೆಂಬುದಾಗಿ ಬಹಳ ಇಚ್ಛೆಯುಂಟಾಗಿಬಿಟ್ಟಿದೆ. ಆದ್ದರಿಂದ ನರೇಂದ್ರ ಪರಮಹಂಸರ ಇಚ್ಛೆಗನುಸಾರ ತಂಬೂರಿ ಹಿಡಿದು ಹಾಡಲಾರಂಭಿಸಿದ:
ಆ ಪ್ರಾಣಪಂಜರದಿ ಕುಳಿತು ಹಾಡು ಹಕ್ಕಿ
ಅವನ ವಿಭುಗುಣಗಳನು ಕುರಿತು ಹಾಡು….
ಬಳಿಕ ಹಾಡಿದ:
ವಿಶ್ವಭುವನರಂಜನ ಬ್ರಹ್ಮ ಪರಮಜ್ಯೋತಿ
ಅನಾದಿದೇವ ಜಗಪತಿ ಪ್ರಾಣಾಧಿಕ ಮೂರುತಿ
ಮತ್ತೆ:
ದರುಶನವ ನೀಡಯ್ಯ ರಾಜರಾಜೇಶ್ವರನೆ
ನಿನ್ನ ಕರುಣೆಯ ಬೇಡಿ ಬಂದಿರುವೆನು….
ನರೇಂದ್ರ ಮುಂದುವರಿಸುತ್ತಿದ್ದಾನೆ:
ಬಾನ ತಳಿಗೆಯೊಳಿಟ್ಟ ಹಣತೆಗಳ ರೀತಿಯಲ್ಲಿ
ರವಿಶಶಿಗಳಾರತಿಯ ಬೆಳಗುತಿರಲು….
ಮತ್ತೆ ಹಾಡುತ್ತಿದ್ದಾನೆ :
ಉದಯಿಪನದೊ ಚಿದಾಕಾಶದಲ್ಲಿ ಪೂರ್ಣ ಇಂದು
ಪ್ರೇಮಸಿಂಧು ಉಕ್ಕಿ ಹರಿದು ಲೋಕಗಳೇ ನಾಂದು!….
ಬಳಿಕ ಪರಮಹಂಸರ ಅಜ್ಞಾನುಸಾರ ಭವನಾಥ ಹಾಡುತ್ತಿದ್ದಾನೆ:
ನೀನೇ ದಯಾಮಯ, ಇನ್ನಾರಿರುವರು ನಿನ್ನಂದದ ಹಿತಕಾರಿ?
ನೋವುನಲಿವಿನಲಿ ಸಮೀಪಬಂಧುವು ಶೋಕತಾಪಭಯಹಾರಿ.
ಸಂಕಟಪೂರಿತ ಮೋಹಭವಾರ್ಣವದುತ್ತರಣಕೆ ನೀ ಸಹಕಾರಿ
ಪ್ರಸನ್ನವಾಗಿಸು ಈ ಬಿರುಗಾಳಿಯ ರಿಪುದಲವಿಪ್ಲವಕಾರೀ!
ಪಾಪದಹನ ಪರಿತಾಪವನಾರಿಸು, ವರ್ಷಿಸು ಶೀತಲವಾರಿ;
ಎಲ್ಲರು ತ್ಯಜಿಸುವ ಅಂತಿಮಕಾಲದಿ ನೀನೇ ಆಶ್ರಯಕಾರಿ!
ನರೇಂದ್ರ ಭವನಾಥನನ್ನು ಉದ್ದೇಶಿಸಿ ಪರಮಹಂಸರಿಗೆ ಹೇಳುತ್ತಿದ್ದಾನೆ: “ಈತ ಮೀನು ಎಲೆ ಅಡಿಕೆ ತ್ಯಾಗಮಾಡಿಬಿಟ್ಟಿದ್ದಾನೆ.”
ಶ್ರೀರಾಮಕೃಷ್ಣರು: “ಏಕೆ ಹಾಗೆ? ಅವು ಏನು ಮಾಡಿದುವು? ಅವು ಕೆಡುಕಾದುದೇನಲ್ಲ. ಕಾಮಕಾಂಚನ ತ್ಯಾಗವೇ ತ್ಯಾಗ.
“ರಾಖಾಲನೆಲ್ಲಿ?”
ಒಬ್ಬ ಭಕ್ತ : “ಆತ ನಿದ್ದೆ ಮಾಡುತ್ತಿದ್ದಾನೆ.”
ಶ್ರೀರಾಮಕೃಷ್ಣರು ನಗುತ್ತ: “ಒಬ್ಬ ಚಾಪೆಯನ್ನು ಕಂಕುಳಲ್ಲಿ ಇರುಕಿಕೊಂಡು ಬಯಲು ನಾಟಕ ನೋಡಲು ಹೋದ. ನಾಟಕ ಶುರುವಾಗಲು ಇನ್ನೂ ಸಮಯ ಬೇಕು ಎಂಬುದನ್ನು ಕೇಳಿ ಚಾಪೆ ಹಾಸಿ ಮಲಗಿಕೊಂಡ. ಎದ್ದಾಗ ನೋಡುತ್ತಾನೆ, ಎಲ್ಲಾ ಮುಗಿದುಬಿಟ್ಟಿದೆ. (ಎಲ್ಲರೂ ನಗುತ್ತಿದ್ದಾರೆ.) ಬಳಿಕ ಅವನು ಚಾಪೆಯನ್ನು ಕಂಕುಳಿಗೆ ಹಾಕಿಕೊಂಡು ಮನೆಗೆ ಹಿಂದಿರುಗಿದ.”
ರಾಮದಯಾಳ ಬಹಳ ರೋಗಗ್ರಸ್ತನಾಗಿದ್ದಾನೆ. ಆತ ಇನ್ನೊಂದು ಕೊಠಡಿಯಲ್ಲಿ ಮಲಗಿಕೊಂಡಿದ್ದ. ಪರಮಹಂಸರು ಅಲ್ಲಿಗೆ ಹೋಗಿ ಆತನ ದೇಹಾರೋಗ್ಯ ವಿಚಾರಿಸುತ್ತಿದ್ದಾರೆ.
ಘಂಟೆ ಅಪರಾಹ್ನ ನಾಲ್ಕು. ಕೆಲವು ಮಂದಿ ಬ್ರಾಹ್ಮಭಕ್ತರು ಬಂದಿದ್ದಾರೆ. ಪರಮಹಂಸರು ಅವರೊಡನೆ ಮಾತುಕತೆ ಆಡುತ್ತಿದ್ದಾರೆ.
ಒಬ್ಬ ಬ್ರಾಹ್ಮಭಕ್ತ : “ಮಹಾಶಯರೆ, ಪಂಚದಶಿ ಓದಿದ್ದೀರೇನು?”
ಶ್ರೀರಾಮಕೃಷ್ಣರು: “ಮೊದಮೊದಲು ಇಂಥ ಪುಸ್ತಕಗಳು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಂಡು ವಿಚಾರದಲ್ಲಿ ತೊಡಗಬೇಕು. ಬಳಿಕ-
ಅಂತರಂಗದಲ್ಲಿ ಶ್ರೀ ಘನಶ್ಯಾಮೆಯ
ಆದರಿಸೆಲೆ ಮನವೇ,
ನಮ್ಮಿಬ್ಬರ ಹೊರತಿನ್ನಾರೂ ತಿಳಿಯದ
ರೀತಿಯೊಳವಳೆಡೆ ಸಾಗುವೆವೇ!
“ಸಾಧನೆಯ ಅವಸ್ಥೆಯಲ್ಲಿ ಅವು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಭಗವಂತನ ಸಾಕ್ಷಾತ್ಕಾರ ದೊರೆತನಂತರ ಜ್ಞಾನದ ಅಭಾವವಿರದು. ಬಳಿಕ ಭಗವತಿ ಜ್ಞಾನರಾಶಿಯನ್ನು ನೂಕಿಕೊಡುತ್ತಲೇ ಇರುತ್ತಾಳೆ.”
“ಮಗು ಬರೆಯಲು ಆರಂಭಿಸಿದಾಗ ಮೊದಮೊದಲು ಅಕ್ಷರವಾದ ಮೇಲೆ ಅಕ್ಷರವನ್ನು ನೋಡಿ ನೋಡಿ ಬರೆಯಬೇಕಾಗುತ್ತದೆ. ಆದರೆ ಕ್ರಮೇಣ ಅದು ನೀರು ಕುಡಿದ ಹಾಗೆ ಬರೆದುಕೊಂಡು ಹೋಗಿಬಿಡುತ್ತದೆ.”
“ಚಿನ್ನ ಕರಗಿಸುವಾಗ ಬಹಳ ಚಟುವಟಿಕೆಯಿಂದ ಕೆಲಸ ಮಾಡಬೇಕು. ಒಂದು ಕೈಯಲ್ಲಿ ತಿದಿ, ಇನ್ನೊಂದು ಕೈಯಲ್ಲಿ ಬೀಸಣಿಗೆ, ಬಾಯಲ್ಲಿ ಊದುಕೊಳವೆ-ಚಿನ್ನ ಕರಗದವರೆಗೆ. ಕರಗಿದ ನಂತರ ಅಚ್ಚಿಗೆ ಸುರಿದ ಒಡನೇ ನಿಶ್ಚಿಂತೆ.
“ಶಾಸ್ತ್ರಗಳನ್ನು ಕೇವಲ ಓದಿ ಬಿಟ್ಟರೇ ಸಾಲದು. ಕಾಮಕಾಂಚನಾಸಕ್ತಿ ಇತ್ತು ಎಂದರೆ ಶಾಸ್ತ್ರಗಳ ಮರ್ಮ ತಿಳಿದುಕೊಳ್ಳಲು ಅದು ಬಿಟ್ಟುಕೊಡುವುದಿಲ್ಲ. ಸಂಸಾರಾಸಕ್ತಿಯ ದೆಸೆಯಿಂದ ಜ್ಞಾನ ಲೋಪವಾಗಿಬಿಡುತ್ತದೆ.
ಅತುಲ ಆಸಕ್ತಿಯಲಿ ಕಾವ್ಯನಾಟ್ಯಾದಿಗಳ
ಒಂದಿನಿತು ಬಿಡದೆ ನಾ ಕಲಿತಿದ್ದರೂ
ಶ್ರೀಕೃಷ್ಣನೊಲವಿನಲಿ ಸೆರೆಯಾಗಿ ನಾನಿಂದು
ಆ ಎಲ್ಲ ಕಲಿಕೆಗಳ ಮರೆತಿರುವೆನು!
“ಕೇಶವಸೇನ ಯೋಗಿ ಭೋಗಿ ಎರಡೂ. ಸಂಸಾರದಲ್ಲಿದ್ದರೂ ಭಗವಂತನ ಕಡೆಗೆ ಮನಸ್ಸನ್ನು ಇಟ್ಟಿದ್ದಾನೆ.”
ಒಬ್ಬ ಭಕ್ತ ಕಲ್ಕತ್ತ ವಿಶ್ವವಿದ್ಯಾನಿಲಯದ ಪಟ್ಟಪ್ರಧಾನ ಸಭೆಯ (ಕಾನ್ವೊಕೇಷನ್ ಅಸೆಂಬ್ಲಿಯ) ಸಂಬಂಧವಾಗಿ ವರ್ಣಿಸುತ್ತ ಹೇಳಿದ, ಅದು ಒಂದು ಜನಾರಣ್ಯವೇ ಆಗಿ ಕಂಡಿತು ಎಂಬುದಾಗಿ.
ಶ್ರೀರಾಮಕೃಷ್ಣರು: “ಅನೇಕ ಜನ ಒಟ್ಟಿಗೆ ಸೇರಿರುವುದನ್ನು ಕಂಡರೆ ನನಗೆ ಉದ್ದೀಪನವಾಗಿಬಿಡುತ್ತದೆ. ನಾನು ಅದನ್ನು ನೋಡಿದ್ದರೆ ಭಾವೋದ್ರೇಕವಾಗಿಬಿಡುತ್ತಿತ್ತು.”
೮ನೆ ಏಪ್ರಿಲ್ ೧೮೮೩, ಚೈತ್ರಶುಕ್ಲ ಪಾಡ್ಯಮಿ, ಭಾನುವಾರ
ಪರಮಹಂಸರು ದಕ್ಷಿಣೇಶ್ವರದ ತಮ್ಮ ಕೊಠಡಿಯಲ್ಲಿ ಬಾಲಕನೋಪಾದಿಯಲ್ಲಿ ಕುಳಿತುಕೊಂಡಿದ್ದಾರೆ. ಅವರ ಹತ್ತಿರ ಇನ್ನೊಬ್ಬ ಹುಡುಗ ರಾಖಾಲ ಕುಳಿತುಕೊಂಡಿದ್ದಾನೆ. ಮಾಸ್ಟರ್ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ. ಪರಮಹಂಸರ ಅಣ್ಣನ ಮಗ ರಾಮಲಾಲನೂ ಕೊಠಡಿಯಲ್ಲಿ ಕುಳಿತಿದ್ದಾನೆ. ಕಿಶೋರಿ, ಮಣಿಲಾಲ ಮಲ್ಲಿಕ ಇವರೇ ಮೊದಲಾದ ಭಕ್ತರು ಕ್ರಮಕ್ರಮೇಣ ಬಂದು ಸೇರಿದರು.
ಮಣಿಮಲ್ಲಿಕ ಒಬ್ಬ ವ್ಯಾಪಾರಿ. ಕಾಶಿಯಲ್ಲಿ ಆತನಿಗೆ ಒಂದು ಬಂಗಲೆ ಇದೆ. ಈಗತಾನೆ ಅಲ್ಲಿಗೆ ಹೋಗಿಬಂದಿದ್ದಾನೆ.
ಶ್ರೀರಾಮಕೃಷ್ಣರು: “ನೀನು ಕಾಶಿಗೆ ಹೋಗಿದ್ದೆಯಲ್ಲ, ಅಲ್ಲಿ ಯಾರಾದರೂ ಸಾಧುಗಳನ್ನು ದರ್ಶನಮಾಡಿ ಬಂದೆಯಾ?”
ಮಣಿಲಾಲ: “ಹೌದು, ತ್ರೈಲಂಗಸ್ವಾಮಿ, ಭಾಸ್ಕರಾನಂದ ಇವರೇ ಮೊದಲಾದವರನ್ನು ನೋಡಿ ಬಂದೆ.”
ಶ್ರೀರಾಮಕೃಷ್ಣರು: “ಅವರ ವಿಷಯವಾಗಿ ನಮಗೆ ಸ್ವಲ್ಪ ತಿಳಿಸು.”
ಮಣಿಲಾಲ: “ತ್ರೈಲಂಗಸ್ವಾಮಿ ಹಿಂದೆ ಇದ್ದ ಸ್ಥಳದಲ್ಲೇ-ಮಣಿಕರ್ಣಿಕಾ ಘಟ್ಟದಲ್ಲಿ ಆ ವೇಣೀಮಾಧವ ಗೋಪುರದ ಹತ್ತಿರ ಇದ್ದಾರೆ. ಜನ ಹೇಳುತ್ತಿದ್ದಾರೆ: ಹಿಂದೆ ಇವರು ಉಚ್ಚ ಅವಸ್ಥೆಯಲ್ಲಿ ಇದ್ದರು, ಬಹಳ ಬಹಳ ಅದ್ಭುತ ಪವಾಡಗಳನ್ನು ಮಾಡಿ ತೋರಿಸಲು ಶಕ್ತರಾಗಿದ್ದರು; ಈಗ ಆ ಶಕ್ತಿ ಕಡಿಮೆಯಾಗಿಬಿಟ್ಟಿದೆ.”
ಶ್ರೀರಾಮಕೃಷ್ಣರು: “ಇವುಗಳೆಲ್ಲ ಪ್ರಾಪಂಚಿಕರ ದೋಷಾರೋಪಣೆ.”
ಮಣಿಲಾಲ: “ಭಾಸ್ಕರಾನಂದರು ಎಲ್ಲರೊಡನೆಯೂ ಬೆರೆಯುತ್ತಾರೆ. ಇವರು ತ್ರೈಲಂಗಸ್ವಾಮಿಗಳಂತಲ್ಲ-ಶುದ್ಧಾಂಗ ಮೌನಿಗಳಲ್ಲ.”
ಶ್ರೀರಾಮಕೃಷ್ಣರು: “ಭಾಸ್ಕರಾನಂದರೊಡನೆ ನೀನು ಮಾತುಕತೆ ಆಡಿದೆಯೇನು?
ಮಣಿಲಾಲ: “ಹೌದು, ಬಹಳ ಹೊತ್ತು. ಪಾಪಪುಣ್ಯಗಳ ಸಂಬಂಧವಾಗಿಯೂ ಮಾತುಕತೆ ನಡೆಯಿತು. ಅವರು ನನಗೆ ಹೇಳಿದರು: ‘ಪಾಪಮಾರ್ಗದಲ್ಲಿ ಹೋಗಬೇಡ; ಪಾಪಚಿಂತನೆ ಮಾಡಬೇಡ. ಈ ರೀತಿಯಾಗಿಯೇ ನಾವು ನಡೆದುಕೊಳ್ಳಬೇಕೆಂಬುದೇ ಭಗವಂತನ ಇಚ್ಛೆ. ಕೇವಲ ಪುಣ್ಯಕೆಲಸಗಳನ್ನೇ ಮಾಡು.”
ಶ್ರೀರಾಮಕೃಷ್ಣರು: “ಹೌದು, ಇದೂ ಒಂದು ದಾರಿ ಪ್ರಾಪಂಚಿಕರಿಗೆ. ಯಾರಲ್ಲಿ ಆತ್ಮಜಾಗ್ರತಿಯುಂಟಾಗಿದೆಯೋ, ಯಾರಿಗೆ ಭಗವಂತನೊಬ್ಬನೇ ಸತ್, ಉಳಿದುದೆಲ್ಲಾ ಅಸತ್ ಎಂದರೆ ಅನಿತ್ಯ ಎಂಬ ಬೋಧೆಯಾಗಿರುವುದೊ, ಅವರ ಭಾವವೇ ಬೇರೆ. ಅವರಿಗೆ ಗೊತ್ತಿದೆ, ಭಗವಂತನೊಬ್ಬನೇ ಏಕಮಾತ್ರ ಕರ್ತಾ, ಉಳಿದವರೆಲ್ಲಾ ಅಕರ್ತರು ಎಂಬುದಾಗಿ.
“ಯಾರಿಗೆ ಆತ್ಮಜಾಗ್ರತಿ ಉಂಟಾಗಿದೆಯೋ ಅವರ ಕಾಲು ತಪ್ಪು ಹೆಜ್ಜೆಯನ್ನಿಡುವುದಿಲ್ಲ. ಅವರು ವಿಚಾರಮಾಡಿ ಪಾಪಕಾರ್ಯಗಳನ್ನು ತ್ಯಾಗಮಾಡಬೇಕಾಗಿರುವುದಿಲ್ಲ. ಅವರಿಗೆ ಭಗವಂತನ ಮೇಲೆ ಅಷ್ಟೊಂದು ಪ್ರೀತಿ, ಅವರು ಯಾವ ಕರ್ಮ ಮಾಡಿದರೂ ಅದು ಸತ್ಕರ್ಮವೇ ಆಗಿರುತ್ತದೆ. ಅವರಿಗೆ ಚೆನ್ನಾಗಿ ಗೊತ್ತಿದೆ, ಕರ್ಮಗಳ ಕರ್ತೃ ನಾವಲ್ಲ, ನಾವು ಕೇವಲ ಭಗವಂತನ ದಾಸರು ಎಂಬುದಾಗಿ. ಅವರು ಸತತ ಭಾವಿಸುತ್ತಾರೆ: ‘ನಾನು ಯಂತ್ರ, ಆತ ಯಾಂತ್ರಿಕ. ಆತ ಮಾಡಿಸಿದ ಹಾಗೆ ಮಾಡುತ್ತೇನೆ, ನುಡಿಸಿದ ಹಾಗೆ ನುಡಿಯುತ್ತೇನೆ, ಚಲಿಸಿದ ಹಾಗೆ ಚಲಿಸುತ್ತೇನೆ.’
“ಯಾರಿಗೆ ಆತ್ಮಜಾಗ್ರತಿ ಉಂಟಾಗಿಬಿಟ್ಟಿದೆಯೋ ಅವರು ಪಾಪಪುಣ್ಯಗಳಿಗೆ ಅತೀತರು ಅವರ ಕಣ್ಣಿಗೆ ಬೀಳುತ್ತದೆ, ಭಗವಂತನೇ ಎಲ್ಲವನ್ನೂ ಮಾಡುತ್ತಿರುವುದು.
“ಒಂದು ಜಾಗದಲ್ಲಿ ಒಂದು ಆಶ್ರಮ ಇತ್ತು. ಅಲ್ಲಿನ ಸಾಧುಗಳು ದಿನವೂ ಮಧುಕರಿಗೆ ಹೋಗುತ್ತಿದ್ದರು. ಒಂದು ದಿನ ಒಬ್ಬ ಸಾಧು ಮಧುಕರಿಗೆ ಹೋಗಿದ್ದಾಗ ಒಬ್ಬ ಜಮೀನುದಾರ ಒಬ್ಬನನ್ನು ಬಹಳವಾಗಿ ಹೊಡೆಯುತ್ತಿದ್ದುದನ್ನು ನೋಡಿದ. ಸಾಧು ಒಳ್ಳೆ ಪರಮ ದಯಾಳು. ಆತ ಅಡ್ಡಲಾಗಿ ಬಂದು ಹೊಡೆಯಬೇಡವೆಂದು ಹೇಳಿದ. ಆ ಜಮೀನುದಾರನ ಕೋಪ ಬಹಳವಾಗಿ ಕೆರಳಿತ್ತು. ಅದನ್ನು ಆತ ಆ ಬಡ ಸಾಧುವಿನ ಕಡೆಗೆ ತಿರುಗಿಸಿದ. ಆತ ಆ ರೀತಿಯಾಗಿ ಹೊಡೆದ, ಸಾಧುಪ್ರಜ್ಞೆ ತಪ್ಪಿದವನಾಗಿ ನೆಲಕ್ಕೆ ಬಿದ್ದ! ಯಾರೋ ಬಂದು ಈ ಸಮಾಚಾರವನ್ನು ಆಶ್ರಮಕ್ಕೆ ತಿಳಿಸಿದರು. ಸಾಧುಗಳು ಓಡಿಬಂದು ನೋಡುತ್ತಾರೆ, ತಮ್ಮ ಸೋದರ ಪ್ರಜ್ಞೆತಪ್ಪಿ ಬಿದ್ದಿದ್ದಾನೆ. ಅವರಲ್ಲಿ ನಾಲ್ಕೈದು ಜನ ಸೇರಿಕೊಂಡು ಆತನನ್ನು ಆಶ್ರಮಕ್ಕೆ ಎತ್ತಿಕೊಂಡು ಹೋಗಿ ಹಾಸಿಗೆ ಮೇಲೆ ಮಲಗಿಸಿದರು. ಆತನಿಗೆ ಇನ್ನೂ ಪ್ರಜ್ಞೆ ಬಂದಿರಲಿಲ್ಲ. ಉಳಿದ ಸಾಧುಗಳು ಚಿಂತಾಕ್ರಾಂತರಾಗಿ ಆತನ ಸುತ್ತಲೂ ಕುಳಿತುಕೊಂಡರು. ಕೆಲವರು ಆತನಿಗೆ ಗಾಳಿ ಬೀಸಲಾರಂಭಿಸಿದರು. ಅವರಲ್ಲಿ ಒಬ್ಬ ಸಲಹೆ ಇತ್ತ, ಬಾಯಿಗೆ ಸ್ವಲ್ಪ ಹಾಲು ಬಿಡುವುದು ಒಳ್ಳೆಯದು ಎಂದು. ಬಾಯಿಗೆ ಹಾಲು ಬಿಡುತ್ತ ಬಿಡುತ್ತ ಆ ಸಾಧು ಚೇತರಿಸಿಕೊಳ್ಳಲಾರಂಭಿಸಿದ. ಕಣ್ಣು ಬಿಟ್ಟು ದಿಟ್ಟಿಸಿ ನೋಡಲಾರಂಭಿಸಿದ. ಒಬ್ಬ ಸಾಧು ಹೇಳಿದ: ‘ಎಲ್ಲಿ ನೋಡೋಣ, ಜ್ಞಾನ ಬಂದಿದೆಯೇ ಇಲ್ಲವೇ; ನಮ್ಮನ್ನು ಗುರುತಿಸುತ್ತಾನೆಯೇ ಇಲ್ಲವೇ.’ ಆಗ ಆತ ಗಟ್ಟಿಯಾಗಿ ಕೂಗಿ ಹೇಳಿದ: “ಮಹಾರಾಜ್, ನಿಮಗೆ ಹಾಲು ಯಾರು ಕುಡಿಸುತ್ತಾ ಇದ್ದಾರೆ?’ ಆ ಸಾಧು ಮೆತ್ತಮೆತ್ತಗೆ ಉಸಿರೆಳೆದು ಹೇಳಿದ: ‘ಸೋದರ, ಯಾರು ನನ್ನನ್ನು ಬಡಿದು ಹಾಕಿದನೋ ಆತನೇ ಈಗ ಹಾಲು ಕುಡಿಸುತ್ತಿದ್ದಾನೆ.’
“ಭಗವಂತನ ಸಾಕ್ಷಾತ್ಕಾರ ದೊರೆಯದ ಹೊರತು ಈ ರೀತಿಯ ಮಾನಸಿಕ ಅವಸ್ಥೆ ಉಂಟಾಗದು.”
ಮಣಿಲಾಲ: “ಮಹಾರಾಜ್, ಈಗ ನೀವು ತಿಳಿಸಿದಿರಲ್ಲ ಅದು ಉಚ್ಚ ಅವಸ್ಥೆಗೆ ಸೇರಿದ ಮನುಷ್ಯನಿಗೆ ಅನ್ವಯಿಸತಕ್ಕದ್ದು. ಭಾಸ್ಕರಾನಂದರೊಡನೆ ಹೀಗೇ ಏನೇನೋ ಮಾತುಕತೆ ನಡೆಯಿತು.”
ಶ್ರೀರಾಮಕೃಷ್ಣರು: “ಆತ ಯಾರ ಮನೆಯಲ್ಲಾದರೂ ಇದ್ದಾನೆಯೇ?”
ಮಣಿಲಾಲ: “ಹೌದು, ಒಬ್ಬ ಭಕ್ತನ ಮನೆಯಲ್ಲಿ.”
ಶ್ರೀರಾಮಕೃಷ್ಣರು: “ವಯಸ್ಸೆಷ್ಟು?”
ಮಣಿಲಾಲ: “ಐವತ್ತೈದು ಇರಬಹುದು.”
ಶ್ರೀರಾಮಕೃಷ್ಣರು: “ಇನ್ನೇನಾದರೂ ಮಾತುಕತೆ ನಡೆಯಿತೇ?”
ಮಣಿಲಾಲ: “ಭಕ್ತಿಯನ್ನು ಬೆಳೆಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದೆ. ಅವರು ಹೇಳಿದರು: ‘ಭಗವನ್ನಾಮ ಜಪಮಾಡು, ರಾಮನಾಮ ಜಪಮಾಡು’.”
ಶ್ರೀರಾಮಕೃಷ್ಣರು: “ಇದು ಬಹಳ ಒಳ್ಳೆಯ ಬುದ್ಧಿವಾದ.”
ಕಾಳೀದೇವಾಲಯದ ಎಲ್ಲಾ ದೇವಾಲಯಗಳಲ್ಲೂ ಮಧ್ಯಾಹ್ನದ ಪೂಜೆ ಮುಗಿದು ಭೋಗಾರತಿಯ ಗಂಟೆಗಳ ಶಬ್ದ ಕೇಳಿಬರಲಾರಂಭಿಸಿತು. ಬೇಸಿಗೆಯ ಮಧ್ಯಾಹ್ನವಾದ್ದರಿಂದ ಸೂರ್ಯ ಬಹಳ ತೀಕ್ಷ್ಣವಾಗಿದ್ದಾನೆ. ಗಂಗೆಯಲ್ಲಿ ಉಬ್ಬರ ಬರಲಾರಂಭಿಸಿದೆ. ದಕ್ಷಿಣ ದಿಕ್ಕಿನಿಂದ ಗಾಳಿ ಬೀಸುತ್ತಿದೆ. ಪರಮಹಂಸರು ಊಟ ಮುಗಿಸಿ ವಿಶ್ರಮಿಸಿಕೊಳ್ಳುತ್ತಿದ್ದಾರೆ.
ರಾಖಾಲನ ಊರು ಇರುವುದು ಬಸಿರಹಾಟಿನ ಹತ್ತಿರ. ಗ್ರೀಷ್ಮಋತುವಿನಲ್ಲಿ ನೀರಿಗೆ ಬಹಳ ಕಷ್ಟ.
ಶ್ರೀರಾಮಕೃಷ್ಣರು ಮಣಿಲಾಲನಿಗೆ: “ರಾಖಾಲ ಹೇಳುತ್ತಿದ್ದಾನೆ, ಅವರ ಊರಿನಲ್ಲಿ ನೀರಿನ ಅಭಾವ ಬಹಳ ಅಧಿಕ ಎಂಬುದಾಗಿ. ನೀನು ಏಕೆ ಅಲ್ಲಿ ಒಂದು ಕೊಳ ತೋಡಿಸಬಾರದು? ಅದು ಬಹಳ ಜನರಿಗೆ ಉಪಕಾರ ಮಾಡಿದಂತಾಗುತ್ತದೆ. (ನಗುತ್ತ) ನಿನ್ನಲ್ಲಿ ತುಂಬಾ ಹಣ ಇದೆ. ಇಟ್ಟುಕೊಂಡು ಏನು ಮಾಡುತ್ತೀಯೆ? ಆದರೆ ಕೇಳಿದ್ದೇನೆ, ಗಾಣಿಗರು ತುಂಬಾ ಲೆಕ್ಕಾಚಾರ ಬುದ್ಧಿಯುಳ್ಳವರು ಎಂಬುದಾಗಿ.” (ಎಲ್ಲರೂ ನಗುತ್ತಾರೆ).
ಮಣಿಲಾಲ ನಿಜವಾಗಿಯೂ ಲೆಕ್ಕಾಚಾರ ಬುದ್ಧಿಯುಳ್ಳವನೇ. ಅವನಲ್ಲಿ ಹಣದ ಅಭಾವವೇನಿಲ್ಲ. ಈಗ ಕೆಲವು ಕಾಲದ ಹಿಂದೆ ಬಡ ವಿದ್ಯಾರ್ಥಿಗಳ ಪೋಷಣೆಗಾಗಿ ಇಪ್ಪತ್ತೈದು ಸಾವಿರ ರೂಪಾಯಿಯ ಶಾಶ್ವತ ವರಮಾನ ದಾನ (ಎಂಡೌಮೆಂಟ್) ಮಾಡಿದ್ದಾನೆ.
ಮಣಿಲಾಲ ಪರಮಹಂಸರು ತಮ್ಮ ಜಾತಿಯ ಸಂಬಂಧವಾಗಿ ಆಡಿದ ಮಾತುಗಳಿಗೆ ಯಾವ ಉತ್ತರವನ್ನೂ ಕೊಡಲಿಲ್ಲ. ಆದರೆ ಸ್ವಲ್ಪ ಹೊತ್ತಾದ ಮೇಲೆ ಆ ಮಾತು ಈ ಮಾತು ಆಡುತ್ತ ತನ್ನ ಜಾತಿಯ ಸಂಬಂಧವಾಗಿ ಮಾತೆತ್ತಿ ಹೇಳಿದ: “ಮಹಾಶಯರೆ, ಕೊಳ ತೋಡಿಸುವ ವಿಷಯವಾಗಿ ಹೇಳಿದಿರಿ. ಅಷ್ಟಕ್ಕೆ ಮಾತು ನಿಲ್ಲಿಸಿಬಿಟ್ಟಿದ್ದರೇ ಚೆನ್ನಾಗಿತ್ತು. ಗಾಣಿಗ ಗೀಣಿಗ ಈ ಮಾತುಗಳೆಲ್ಲ ಏಕೆ?”
ಭಕ್ತರು ತಮ್ಮೊಳಗೆ ತಾವೇ ನಗುತ್ತಿದ್ದಾರೆ. ಪರಮಹಂಸರೂ ನಗುತ್ತಿದ್ದಾರೆ.
ಸ್ವಲ್ಪ ಹೊತ್ತಾದ ಮೇಲೆ ಕೆಲವು ಮಂದಿ ಹಿರಿಯ ಬ್ರಾಹ್ಮಭಕ್ತರು ಕೊಠಡಿಯನ್ನು ಪ್ರವೇಶಿಸಿದರು. ಕೊಠಡಿ ಭಕ್ತರಿಂದ ತುಂಬಿದೆ. ಪರಮಹಂಸರು ಉತ್ತರಾಭಿಮುಖವಾಗಿ ತಮ್ಮ ಹಾಸಿಗೆಯ ಮೇಲೆ ಕುಳಿತಿದ್ದಾರೆ. ನಗುತ್ತ ಬಹಳ ಆನಂದದಿಂದ ಬ್ರಾಹ್ಮಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೀವು ‘ಪ್ರೇಮ’, ‘ಪ್ರೇಮ’ ಅನ್ನುತ್ತಲೇ ಇರುತ್ತೀರಿ. ಅದೇನು ಮೂರು ಕಾಸಿಗೆ ಸಿಕ್ಕತಕ್ಕದ್ದೇ? ಚೈತನ್ಯದೇವನಲ್ಲಿ ಪ್ರೇಮ ಉಂಟಾಗಿತ್ತು. ಅದಕ್ಕೆ ಎರಡು ವಿಶೇಷ ಗುಣಗಳಿವೆ. ಮೊದಲನೆಯದು-ಅದು ಈ ಜಗತ್ತನ್ನು ಮರೆಯುವಂತೆ ಮಾಡುತ್ತದೆ. ಭಗವಂತನನ್ನು ಕಂಡರೆ ಬಹಳ ಪ್ರೀತಿ. ಭಕ್ತ ಬಾಹ್ಯಜ್ಞಾನಶೂನ್ಯನಾಗಿಬಿಡುತ್ತಾನೆ. ಚೈತನ್ಯದೇವ ‘ವನ ನೋಡಿ ಅದೇ ಬೃಂದಾವನ ಅಂತ ಭಾವಿಸಿದ, ಸಮುದ್ರ ನೋಡಿ ಅದೇ ಯಮುನೆ ಅಂತ ಭಾವಿಸಿದ.’ ಎರಡನೆಯದು-ಸ್ವಂತ ದೇಹ ಪ್ರತಿಯೊಬ್ಬನಿಗೂ ಬಹಳ ಪ್ರಿಯವಾದ ವಸ್ತು. ಅದರ ಮೇಲೂ ಮಮತೆ ಇರುವುದಿಲ್ಲ. ದೇಹಾತ್ಮ ಬುದ್ಧಿ ಆತನನ್ನು ಒಮ್ಮೆಗೇ ಬಿಟ್ಟು ತೊಲಗಿಹೋಗಿಬಿಡುತ್ತದೆ.
“ಭಗವಂತನ ಸಾಕ್ಷಾತ್ಕಾರ ದೊರೆತಿರುವುದಕ್ಕೆ ಕೆಲವು ಚಿಹ್ನೆಗಳಿವೆ. ಯಾರಲ್ಲಿ ಅನುರಾಗಸಂಪತ್ತು ವಿಶೇಷವಾಗಿ ವ್ಯಕ್ತವಾಗಿದೆಯೋ ಅವರು ಭಗವಂತನ ಸಾಕ್ಷಾತ್ಕಾರಕ್ಕಾಗಿ ಇನ್ನು ಹೆಚ್ಚು ಕಾಲ ಕಾಯಬೇಕಾಗಿರುವುದಿಲ್ಲ. ಅನುರಾಗದ ಸಂಪತ್ತು ಯಾವ್ಯಾವುವು? ವಿವೇಕ, ವೈರಾಗ್ಯ, ಭೂತದಯೆ, ಸಾಧುಸೇವೆ, ಸಾಧು ಸಂಗ, ಭಗವನ್ನಾಮಗುಣಕೀರ್ತನೆ, ಸತ್ಯವಚನ ಇವೇ ಮೊದಲಾದುವು. ಇವೆಲ್ಲಾ ಸಾಧಕನಲ್ಲಿ ಇರುವುದು ಕಂಡುಬಂದರೆ ನಿಸ್ಸಂದೇಹವಾಗಿ ಹೇಳಿಬಿಡಬಹುದು, ಆತನ ಭಗವತ್ಸಾಕ್ಷಾತ್ಕಾರಕ್ಕೆ ಇನ್ನು ಹೆಚ್ಚು ವಿಳಂಬವೇನಿಲ್ಲ ಎಂಬುದಾಗಿ.
“ಸೇವಕನ ಮನೆಯ ವ್ಯವಸ್ಥೆಯೇ ನಿಸ್ಸಂದೇಹವಾಗಿ ತಿಳಿಸಿಬಿಡುತ್ತದೆ, ಅಲ್ಲಿಗೆ ಆತನ ಯಜಮಾನ ಭೇಟಿಕೊಡುವನೆ ಇಲ್ಲವೆ ಎಂಬುದನ್ನು. ಮೊದಲನೆಯದಾಗಿ, ಆಳಿನ ಮನೆಯ ಸುತ್ತಲೂ ಬೆಳೆದಿದ್ದ ಕಾಡೆಲ್ಲಾ ಹೋಗಿ ಸ್ವಚ್ಛವಾಗಿ ಕಾಣುತ್ತದೆ. ಎರಡನೆಯದಾಗಿ, ಮನೆಯ ಒಳಗೆಲ್ಲಾ ಸಾರಿಸಿ ಗುಡಿಸಿ ಮಾಡಿ ಅಲಂಕಾರ ಮಾಡಿರುತ್ತದೆ. ಮೂರನೆಯದಾಗಿ, ಅಂಗಳ ಪರಿಷ್ಕಾರ ಪರಿಚ್ಛಿನ್ನವಾಗಿರುತ್ತದೆ. ಕೊನೆಯಲ್ಲಿ ಯಜಮಾನನೇ ಅಲ್ಲಿಗೆ ತನ್ನ ರತ್ನಗಂಬಳಿ, ಗುಡುಗುಡಿ, ಇನ್ನೂ ಏನೇನೊ ವಸ್ತುಗಳನ್ನು ಕಳುಹಿಸಿಕೊಡುತ್ತಾನೆ. ಇವೆಲ್ಲಾ ಬರುತ್ತಿರುವುದು ಕಣ್ಣಿಗೆ ಬಿತ್ತು ಎಂದರೆ, ಜನ ನಿಸ್ಸಂದೇಹವಾಗಿ ಭಾವಿಸಿಕೊಳ್ಳುತ್ತಾರೆ, ಯಜಮಾನ ಈ ಮನೆಗೆ ಭೇಟಿ ಕೊಡುವುದರಲ್ಲಿದ್ದಾನೆ ಎಂಬುದಾಗಿ.”
ಒಬ್ಬ ಭಕ್ತ: “ಮೊದಲು ವಿಚಾರದಲ್ಲಿ ತೊಡಗಿ ಬಳಿಕ ಇಂದ್ರಿಯನಿಗ್ರಹ ಕಾರ್ಯಕ್ಕೆ ಕೈಹಚ್ಚಬೇಕೆ?”
ಶ್ರೀರಾಮಕೃಷ್ಣರು: “ಅದೂ ಒಂದು ಮಾರ್ಗ-ವಿಚಾರಮಾರ್ಗ. ಭಕ್ತಿಮಾರ್ಗದಿಂದಲೂ ಅಂತರಿಂದ್ರಿಯನಿಗ್ರಹ ತನಗೆ ತಾನೇ ಆಗುತ್ತದೆ; ಸಹಜವಾಗಿ ಆಗುತ್ತದೆ. ಭಗವಂತನಲ್ಲಿ ಪ್ರೀತಿ ಅಧಿಕವಾದಷ್ಟೂ ಇಂದ್ರಿಯಸುಖ ಸಪ್ಪೆಯಾಗಿ ತೋರಿಬರಲಾರಂಭಿಸುತ್ತದೆ. ತಂದೆತಾಯಿಗಳು ಎಂದು ತಮ್ಮ ಮಗುವನ್ನು ಕಳೆದುಕೊಂಡು ದುಃಖಾಕ್ರಾಂತರಾಗಿದ್ದಾರೋ, ಅಂದೇ ಅವರನ್ನು ವಿಷಯಸುಖ ಆಕರ್ಷಿಸಬಲ್ಲುದೆ?”
ಭಕ್ತ: “ಭಗವಂತನನ್ನು ಪ್ರೀತಿಸಲಾಗುತ್ತಿಲ್ಲವಲ್ಲ, ಏನು ಮಾಡಲಿ?”
ಶ್ರೀರಾಮಕೃಷ್ಣರು: “ಆತನ ನಾಮದಲ್ಲಿ ಅಭಿರುಚಿ ಉಂಟಾಗುವಂತೆ ವ್ಯಾಕುಲನಾಗಿ ಆತನಿಗೆ ಪ್ರಾರ್ಥನೆಮಾಡು. ಆತ ಸಕಲಾಭೀಷ್ಟದಾಯಕ. ನಿಶ್ಚಯವಾಗಿಯೂ ಪೂರ್ಣ ಮಾಡಿಕೊಡುತ್ತಾನೆ.”
ಹೀಗೆಂದು ಹೇಳಿ ಪರಮಹಂಸರು ಜೀವಿಗಳ ದುಃಖವನ್ನು ನೋಡಿ ಸಹಿಸಲಾರದೆ ಅವರಿಗೆ ಕೃಪೆಮಾಡುವಂತೆ ಅವರ ಪರವಾಗಿ ಭಗವತಿಯನ್ನು ತಮ್ಮ ಸುಮಧುರ ಕಂಠದಿಂದ ಪ್ರಾರ್ಥನೆ ಮಾಡುತ್ತಿದ್ದಾರೆ:
ನಾನಾರ ದೂಷಿಸಲಿ, ನಾನೆ ತೋಡಿದ ಕೂಪ-
ದಾಳದಲಿ ನಾನಾಗಿ ಮುಳುಗುತಿಹೆನು!
ಅರಿವರ್ಗಗಳ ಹಿಡಿದು ನಿನ್ನ ಸುಕ್ಷೇತ್ರದಲಿ
ನಾನೆ ಈ ಬಾವಿಯನು ತೋಡಿರುವೆನು.
ಕಾಲರೂಪದ ಕರಿಯ ನೀರೆದ್ದು ನುಗ್ಗುತ್ತಿದೆ
ಓ ತಾಯಿ ನಾ ನಿನಗೆ ಶರಣೆನುವೆನು.
ನಾನೆಯೇ ನನಗೆ ಹಗೆ; ಹೇಗೆ ತಡೆಯಲಿ ಹೇಳು
ಮೇಲೆದ್ದು ನುಗ್ಗುವೀ ಕಾಳ ಜಲವ?
ಎನ್ನ ಎದೆಯುದ್ದಕ್ಕೂ ತುಂಬಿಕೊಂಡಿತು ನೀರು
ನೀನಲ್ಲದಿನ್ನಾರು ರಕ್ಷಿಸುವರು?
ನೀನೊಬ್ಬಳೇ ರಕ್ಷೆ. ನಿನ್ನೊಳಗೆ ಈ ಭಿಕ್ಷೆ;
ದಾಟಿಸಾಚೆಯ ದಡಕೆ ಈ ಶಿಶುವನು.
ಪರಮಹಂಸರು ಮತ್ತೆ ಹಾಡುತ್ತಿದ್ದಾರೆ:
ಇರುವುದೊಂದೇ ವಿಕಾರ;
ನಿನ್ನ ಪದಕಮಲಗಳ ಕೃಪೆಯಲ್ಲದಿನ್ನಿಲ್ಲ
ಬೇರೆ ಪರಿಹಾರ
ಅಲ್ಪ ಗೌರವ ದಾಹ; ಧನಜನ ತೃಷ್ಣೆ; ಮಮಕಾರ ಮೋಹಗಳು
ಹಿಂಗಲಿಲ್ಲ
ನಾನು ಉಳಿಯುವುದೆಂತೊ ತಿಳಿಯಲಿಲ್ಲ.
ತುಚ್ಛ ವಿಷಯಾಲಾಪದಲ್ಲಿ ಮಾನಸ ಮಗ್ನ;
ಮಾಯಾ ನಿದ್ರಾಲೋಲ ಸುಪ್ತನೇತ್ರ,
ಉದಾರವಾಯಿತು ಹಿಂಸೆ ಕ್ರೌರ್ಯಗಳ ಪಾತ್ರ!
ಅರ್ಥವಿಲ್ಲದ ತೆರದಿ ಏಕೆ ಭ್ರಮಿಸುವೆ ನಾನು?
ನಿನ್ನ ನಾಮವು ಕೂಡ ರುಚಿಸದಲ್ಲ!
ಹಗಲಿರುಳು ರೋಗದಲಿ ನರಳುತಿರುವೆನು ನಾನು,
ಇದರ ಪರಿಹಾರವೇ ಕಾಣದಲ್ಲ!
ಬಳಿಕ ಶ್ರೀರಾಮಕೃಷ್ಣರು ಹೇಳುತ್ತಿದ್ದಾರೆ: “ನಿನ್ನ ನಾಮದಲ್ಲಿ ನನಗೆ ಅರುಚಿ.’ ವಿಷಮಶೀತಜ್ವರದ ರೋಗಿಗೆ ಆಹಾರದಲ್ಲಿ ರುಚಿಯೇ ಇಲ್ಲದೆ ಹೋಯಿತು ಎಂದರೆ ಆತ ಬದುಕುವಂತೆಯೇ ಇಲ್ಲ; ಆದರೆ ಲೇಶಮಾತ್ರವಾದರೂ ರುಚಿ ಇದ್ದದ್ದೇ ಆದರೆ ಅವನ ಸಂಬಂಧವಾಗಿ ಆಸೆಯನ್ನು ಬಿಟ್ಟುಬಿಡಬೇಕಾಗಿಲ್ಲ. ಆದ್ದರಿಂದ ಆತನ ನಾಮದಲ್ಲಿ ರುಚಿ ಬೆಳೆಸಿಕೊಳ್ಳಬೇಕು. ಭಗವನ್ನಾಮವನ್ನು ಜಪಿಸಬೇಕು-ದುರ್ಗಾನಾಮವೊ, ಕೃಷ್ಣನಾಮವೊ, ಶಿವನಾಮವೊ ಯಾವುದಾದರೂ ಸರಿಯೆ. ನಾಮಜಪ ಮಾಡುತ್ತ ಮಾಡುತ್ತ ದಿನದಿನಕ್ಕೂ ಅನುರಾಗ ವೃದ್ದಿಯಾಗುತ್ತಾ ಬರುತ್ತಿದ್ದರೆ, ಆನಂದ ದೊರಕುತ್ತಿದ್ದರೆ, ಇನ್ನು ಹೆದರಿಕೊಳ್ಳಬೇಕಾದ್ದೇನಿಲ್ಲ. ವಿಷಮಶೀತಜ್ವರ ಗುಣವಾಗಿಯೇ ಆಗುತ್ತದೆ; ಭಗವಂತನ ಕೃಪೆ ದೊರೆತೇ ದೊರೆಯುತ್ತದೆ.
“ಭಾವಕ್ಕೆ ತಕ್ಕಂತೆ ಲಾಭ.” ಇಬ್ಬರು ಸ್ನೇಹಿತರು ಒಂದು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅಲ್ಲಿ ಒಂದು ಕಡೆ ಭಾಗವತಶ್ರವಣ ಆಗುತ್ತಿತ್ತು. ಒಬ್ಬ ಇನ್ನೊಬ್ಬನಿಗೆ ಹೇಳಿದ: ‘ಬಾ ಒಳಕ್ಕೆ ಹೋಗೋಣ; ಸ್ವಲ್ಪ ಭಾಗವತ ಕೇಳೋಣ.’ ಹಾಗೆಂದು ಹೇಳಿ ಆತ ಒಳಕ್ಕೆ ಹೋಗಿ ಕುಳಿತುಕೊಂಡ. ಇನ್ನೊಬ್ಬ ಹಾಗೆಯೇ ಇಣಿಕಿ ನೋಡಿಬಿಟ್ಟು ಅಲ್ಲಿಂದ ಹೊರಟುಹೋಗಿ ಒಬ್ಬ ವೇಶ್ಯೆಯ ಮನೆಯನ್ನು ಪ್ರವೇಶಿಸಿದ. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಆತನ ಮನಸ್ಸಿನಲ್ಲಿ ಜಿಗುಪ್ಸೆಯುಂಟಾಗಿ ತನ್ನನ್ನು ತಾನೇ ಬಯ್ದುಕೊಳ್ಳಲಾರಂಭಿಸಿದ: ‘ಛೆ, ನನ್ನದು ಎಂಥ ನಡತೆ! ನನ್ನ ಸ್ನೇಹಿತ ಭಾಗವತ ಕೇಳುತ್ತಿದ್ದಾನೆ; ಆದರೆ ನಾನು ಯಾವ ಸ್ಥಳಕ್ಕೆ ಬಂದಿದ್ದೇನೆ!’ ಅತ್ತ ಭಾಗವತ ಕೇಳುತ್ತಿದ್ದವನಿಗೂ ಬೇಜಾರಾಗಿ ಹೋಯಿತು. ಆತನೂ ತನ್ನನ್ನು ತಾನೇ ನಿಂದಿಸಿಕೊಳ್ಳಲಾರಂಭಿಸಿದ: ‘ನಾನು ಎಂಥ ತಿಳಿಗೇಡಿ! ಈತ ಏನೇನನ್ನೋ ಸುಮ್ಮನೆ ಬೊಗಳುತ್ತಿದ್ದಾನೆ, ನಾನು ಸುಮ್ಮನೆ ಮೂಕನಾಗಿ ಕುಳಿತಿದ್ದೇನೆ. ಆದರೆ ನನ್ನ ಸ್ನೇಹಿತ ಅಲ್ಲಿ ಎಷ್ಟೋ ಆಮೋದ ಆಹ್ಲಾದಗಳಲ್ಲಿ ತೊಡಗಿರಬೇಕು, ಏನು ಕತೆ!’ ಇವರು ಸತ್ತಾಗ ಭಾಗವತ ಕೇಳುತ್ತಿದ್ದವನನ್ನು ಯಮದೂತರು ನರಕಕ್ಕೆ ಎಳೆದುಕೊಂಡು ಹೋದರು. ವೇಶ್ಯೆಯ ಮನೆಗೆ ಹೋಗಿದ್ದವನನ್ನು ವಿಷ್ಣುದೂತರು ವೈಕುಂಠಕ್ಕೆ ಕರೆದುಕೊಂಡು ಹೋದರು.
“ಭಗವಂತ ಹೃದಯ ನೋಡುತ್ತಿದ್ದಾನೆಯೇ ವಿನಾ ಯಾರ್ಯಾರು ಏನೇನು ಕೆಲಸ ಮಾಡುತ್ತಿದ್ದಾರೆ, ಎಲ್ಲೆಲ್ಲಿ ಇದ್ದಾರೆ, ಎಂಬುದರ ಕಡೆ ಗಮನವೀಯುವುದಿಲ್ಲ. ‘ಜನಾರ್ದನ ಭಾವಗ್ರಾಹಿ.’
“ಕರ್ತಾಭಜ ಸಂಪ್ರದಾಯದ ಗುರು ಮಂತ್ರೋಪದೇಶ ಮಾಡುವಾಗ ಶಿಷ್ಯನಿಗೆ ಹೇಳುತ್ತಾನೆ: ‘ಈಗ ಎಲ್ಲವೂ ನಿನ್ನ ಮನಸ್ಸನ್ನು ಅವಲಂಬಿಸಿದೆ.’ ಈ ಸಂಪ್ರದಾಯದ ಪ್ರಕಾರ, ‘ಯಾರಿಗೆ ಒಳ್ಳೇ ಮನಸ್ಸಿದೆಯೋ ಅವರಿಗೆ ಒಳ್ಳೇ ಮಾರ್ಗವೂ ದೊರೆಯುತ್ತದೆ, ಒಳ್ಳೇ ಫಲವೂ ದೊರೆಯುತ್ತದೆ.’ ಮನಸ್ಸಿನ ಬಲದಿಂದ ಹನುಮಂತ ಸಮುದ್ರವನ್ನು ದಾಟಿಬಿಟ್ಟ. ‘ನಾನು ರಾಮದಾಸ; ರಾಮನಾಮ ಜಪಿಸುತ್ತಿದ್ದೇನೆ. ನನ್ನ ಕೈಯಲ್ಲಿ ಏನುತಾನೆ ಸಾಧ್ಯವಿಲ್ಲ?’ ಎಂಬುದಾಗಿತ್ತು ಹನುಮಂತನ ವಿಶ್ವಾಸ.
‘ಅಹಂಕಾರವಿರುವವರೆಗೆ ಅಜ್ಞಾನ ಇದ್ದೇ ಇರುತ್ತದೆ. ಅಹಂಕಾರ ಇತ್ತು ಎಂದರೆ ಮುಕ್ತಿ ದೊರೆಯುವ ಹಾಗಿಲ್ಲ. ‘ಹೇ ಭಗವಂತ, ನೀನೇ ಕರ್ತೃ, ನಾನು ಅಕರ್ತ’ -ಎಂಬುದೇ ಜ್ಞಾನ.
“ನಮ್ರತೆ ಇತ್ತು ಎಂದರೆ ಉನ್ನತಿ ಉಂಟಾಗುತ್ತದೆ. ಚಾತಕಪಕ್ಷಿ ತಗ್ಗುಪ್ರದೇಶಗಳಲ್ಲಿ ಗೂಡು ಕಟ್ಟುತ್ತದೆ. ಆದರೆ ಅದು ಬಹಳ ಎತ್ತರ ಹಾರಬಲ್ಲುದು. ದಿಣ್ಣೆಯ ಮೇಲೆ ಬೆಳೆ ಬೆಳೆಯಲಾಗುವುದಿಲ್ಲ. ತಗ್ಗುಪ್ರದೇಶದಲ್ಲಿ ನೀರು ಶೇಖರವಾಗಿರುವುದರಿಂದ ಬೆಳೆ ಸಾಧ್ಯವಾಗುತ್ತದೆ.”
“ಸ್ವಲ್ಪ ಶ್ರಮ ತೆಗೆದುಕೊಂಡು ಸತ್ಸಂಗ ಮಾಡಬೇಕು. ಮನೆಯಲ್ಲಿ ಮನುಷ್ಯನ ಕಿವಿಗೆ ಬೀಳುವುದು ಕೇವಲ ಪ್ರಾಪಂಚಿಕ ಮಾತು. ರೋಗ ತಗುಲಿಕೊಂಡೇ ಇರುತ್ತದೆ. ಗಿಳಿ ಅಡ್ಡಗಿಡ್ಡಿಯ ಮೇಲೆ ಕುಳಿತು, ‘ರಾಮ!ರಾಮ!’ ಅಂತ ಹೇಳುತ್ತಿರುತ್ತದೆ. ಆದರೆ ಅದನ್ನು ಕಾಡಿಗೆ ಬಿಟ್ಟುಬಿಡು, ಮತ್ತೆ ಅದು ‘ಕ್ಯಾ, ಕ್ಯಾ’ ಅಂತ ಕೂಗಲಾರಂಭಿಸುತ್ತದೆ.
“ಕೈಯಲ್ಲಿ ಹಣವಿದ್ದ ಮಾತ್ರಕ್ಕೇ ಜನ ದೊಡ್ಡವರಾಗುವುದಿಲ್ಲ. ದೊಡ್ಡಮನುಷ್ಯನ ಮನೆ ಇದು ಎಂದು ಹೇಳುವುದಕ್ಕೆ ಒಂದು ಕುರುಹು, ಆತನ ಮನೆಯ ಎಲ್ಲಾ ಕೊಠಡಿಗಳಲ್ಲೂ ದೀಪ ಉರಿಯುತ್ತಿರುತ್ತದೆ. ಬಡವರು ಅಷ್ಟೊಂದು ಎಣ್ಣೆ ಖರ್ಚುಮಾಡಲಾರರು. ಆದ್ದರಿಂದ ಅವರು ಅನೇಕ ದೀಪಗಳನ್ನು ಉರಿಸಲಾರರು. ಈ ದೇಹಮಂದಿರವನ್ನು ಅಂಧಕಾರದಲ್ಲಿ ಇರಿಸಕೂಡದು; ಅದನ್ನು ಜ್ಞಾನದೀಪದಿಂದ ಬೆಳಗಿಸಬೇಕು.
ಹೃದಯಮಂದಿರದಲ್ಲಿ ಜ್ಞಾನದೀವಿಗೆ ಹಚ್ಚಿ
ಬ್ರಹ್ಮಮಯಿ ಮಾತಾಯಿ ಮುಖವ ನೋಡು!
“ಎಲ್ಲರಿಗೂ ಬ್ರಹ್ಮಜ್ಞಾನ ಸಾಧ್ಯ. ಜೀವಾತ್ಮ ಪರಮಾತ್ಮ ಎಂಬ ಎರಡು ವಸ್ತುಗಳು ಇವೆ. ಪ್ರಾರ್ಥನೆಯಿಂದ ಜೀವಾತ್ಮ ಪರಮಾತ್ಮನೊಡನೆ ಐಕ್ಯವಾಗಲು ಸಾಧ್ಯ. ಗ್ಯಾಸ್ ಕಂಪೆನಿಯವರು ಪ್ರತಿಯೊಂದು ಮನೆಗೂ ತಮ್ಮ ಕೊಳವೆಯನ್ನು ಕೂಡಿಸಿದ್ದಾರೆ. ಗ್ಯಾಸನ್ನು ಕಂಪೆನಿಯಿಂದ ಪಡೆದುಕೊಳ್ಳಬಹುದು. ಕಂಪೆನಿಗೆ ಒಂದು ಅರ್ಜಿ ಹಾಕಿಕೊಂಡರೆ ಅವರು ಗ್ಯಾಸ್ ಸರಬರಾಜು ಮಾಡುತ್ತಾರೆ. ಬಳಿಕ ಮನೆಗಳಲ್ಲಿ ದೀಪ ಹೊತ್ತಿಸಿಕೊಳ್ಳಬಹುದು.
“ಕೆಲವರಲ್ಲಿ ಆಗಲೇ ಆತ್ಮಜಾಗ್ರತಿ ಉಂಟಾಗಿಬಿಟ್ಟಿರುತ್ತದೆ. ಅವರಲ್ಲಿ ಒಂದು ವಿಶೇಷ ಗುಣ ನೋಡಬಹುದು. ಭಗವತ್ಸಂಬಂಧವಾದ ಮಾತುಕತೆ ವಿನಾ ಬೇರೆ ಏನೂ ಅವರಿಗೆ ರುಚಿಸದು. ಅವರು ಚಾತಕಪಕ್ಷಿಯ ಹಾಗೆ. ಏಳು ಸಮುದ್ರದಲ್ಲಿ, ಗಂಗೆಯಲ್ಲಿ, ಯಮುನೆಯಲ್ಲಿ ಉಳಿದ ನದಿಗಳಲ್ಲಿ ನೀರು ಸುಮ್ಮನೆ ತುಂಬಿದೆ. ಅದಕ್ಕೆ ಬೇಕಾಗಿರುವುದು ಮಳೆ ನೀರು. ನೀರಡಿಕೆಯಿಂದ ಗಂಟಲು ಒಣಗಿ ಸಾಯುತ್ತಿದ್ದರೂ ಅದು ಬೇರೆ ಯಾವ ನೀರನ್ನೂ ಕುಡಿಯದು.”
ಕೆಲವು ಹಾಡುಗಳನ್ನು ಕೇಳಬೇಕು ಅಂತ ಪರಮಹಂಸರಿಗೆ ಇಚ್ಛೆಯಾಯಿತು. ರಾಮಲಾಲ ಮತ್ತು ಕಾಳೀ ದೇವಾಲಯದ ಒಬ್ಬ ಬ್ರಾಹ್ಮಣ ಉದ್ಯೋಗಿ ಹಾಡುತ್ತಿದ್ದಾರೆ:
ಹೃದಯ ಬೃಂದಾವನದಿ ಬಂದು ಮನೆ ಮಾಡಯ್ಯ ಕಮಲಾಪತೀ,
ಓಹೋ ಭಕ್ತಿಪ್ರಿಯನೆ ನನ್ನ ಭಕ್ತಿಯೆ ನಿನಗೆ ರಾಧಾಸತೀ……..
ಮತ್ತೆ :
ಅಧರದಿ ನಸುನಗೆ, ಕರದಲಿ ಕೊಳಲು;
ತನುಕಾಂತಿಗೆ ಜಗವಚ್ಚರಿಗೊಳಲು
ಬರುವೀ ಶ್ಯಾಮನ ಬಣ್ಣಕೆ ನಾಚಿ
ನವನೀರದವೇ ಕರಗುತಿದೆ!
ಮಯ್ಯ ಮುಚ್ಚಿರುವ ಪೀತಾಂಬರವು
ಮುಗಿಲೊಳು ಹೊಳೆಯುವ ಮಿಂಚಿಗು ಮಿಗಿಲು;
ಹೃದಯಸರೋಜದ ಶ್ರೀ ವನಮಾಲೆ
ಚರಣವ ಚುಂಬಿಸಿ ತೂಗುತಿದೆ!
ಅದೊ ನೋಡಾ ಪ್ರಭು ನಿಂತಿಹನಲ್ಲಿ
ಯಮುನಾ ತೀರದಿ ತಿಂಗಳ ಚೆಲ್ಲಿ!
ಕೊಳಲನ್ನೂದಲು ನಂದಕುಲೇಂದು
ಜಗಜಗವೇ ಮರಳಾಗುತಿದೆ!
ಮನೆಮನೆಯೊಳಗಿನ ಗೋಪೀ ಜನಮನ
ಮನೆಯ ತೊರೆವವೊಲು ಈ ಶ್ರೀಕೃಷ್ಣನ
ಕೊಳಲಿನ ಇನಿದನಿ ಕರೆಯುತಿದೆ!
ಇದೊ ನನ್ನದೆಗುಡಿಯೊಳಗೂ ಬಂದನು
ಪ್ರಾಣ-ಬುದ್ಧಿ-ಮನವೆಲ್ಲವ ಕದ್ದನು
ಕೊಳಲಿಂಚರವನು ತುಂಬಿದನು!
ನಾನೀ ವ್ಯಥೆಯನು ನಿನಗೆಂತೊರೆಯಲಿ?
ಓಹೋ ಪ್ರಿಯಸಖಿ ಯಮುನಾ ತಟದಲಿ!
ಕೊಡವನು ತುಂಬಲು ನೀನೂ ನಡೆದರೆ
ನಿನಗೀ ವ್ಯಥೆಯರಿವಾಗುವುದು!
ಮತ್ತೆ ಹಾಡುತ್ತಿದ್ದಾರೆ:
ಶ್ರೀ ಘನಶ್ಯಾಮೆಯ ಚರಣಾಕಾಶದಿ ಗಾಳಿಪಟದ ತೆರದಿ
ಹಾರುತಿರಲು ಮನ, ದುರಿತ ಕಲುಷ ಬಿರುಗಾಳಿಯು ಭರದಿ……
ಶ್ರೀರಾಮಕೃಷ್ಣರು ಭಕ್ತರಿಗೆ: “ಹುಲಿ ಉಳಿದ ಮೃಗಗಳನ್ನು ‘ಗಪ, ಗಪ’ ಅಂತ ತಿಂದುಬಿಡುವ ಹಾಗೆ ಅನುರಾಗವೆಂಬ ಹುಲಿ ಕಾಮಕ್ರೋಧಗಳೆಂಬ ರಿಪುಗಳನ್ನು ತಿಂದು ಹಾಕಿಬಿಡುತ್ತದೆ. ಒಮ್ಮೆ ಹೃದಯದಲ್ಲಿ ಅನುರಾಗ ಉಂಟಾಗಿಬಿಟ್ಟಿತು ಎಂದರೆ ಮತ್ತೆ ಅಲ್ಲಿ ಕಾಮಕ್ರೋಧಾದಿಗಳು ನಿಲ್ಲವು. ಗೋಪಿಯರಿಗೆ ಕೃಷ್ಣನಲ್ಲಿ ಅನುರಾಗವಿದ್ದುದರಿಂದ ಅವರಿಗೆ ಈ ಅವಸ್ಥೆ ಬಂದಿತ್ತು.
“ಮತ್ತೆ ಇದೆ, ‘ಅನುರಾಗ-ಅಂಜನ’ ಎಂಬುದು. ರಾಧೆ ತನ್ನ ಸಖಿಯರಿಗೆ ಹೇಳಿದಳು. ‘ಸಖಿಯರೇ, ಎಲ್ಲವೂ ನನಗೆ ಕೃಷ್ಣಮಯವಾಗಿ ಕಾಣುತ್ತಿದೆ.’ ಅವರು ಹೇಳಿದರು: ‘ಸಖಿ, ನೀನು ಅನುರಾಗವೆಂಬ ಅಂಜನವನ್ನು ಕಣ್ಣಿಗೆ ಹಚ್ಚಿಕೊಂಡಿದ್ದೀಯೆ; ಆದ್ದರಿಂದ ನಿನಗೆ ಹಾಗೆ ಕಾಣುತ್ತಿದೆ.”
“ಜನ ಹೇಳುತ್ತಾರೆ, ಕಪ್ಪೆಯ ತಲೆಬೂದಿಯಿಂದ ತಯಾರಿಸಿದ ಕಾಡಿಗೆಯನ್ನು ಕಣ್ಣಿಗೆ ಹಚ್ಚಿಕೊಂಡರೆ, ಎಲ್ಲವೂ ಸರ್ಪಮಯವಾಗಿ ಕಾಣುತ್ತದೆ ಎಂಬುದಾಗಿ.
“ಯಾರು ಕಾಮಕಾಂಚನಗಳಲ್ಲೇ ನಿರತರಾಗಿದ್ದಾರೋ, ಭಗವಂತನ ಕಡೆಗೆ ಒಂದಿನಿತೂ ಮನಸ್ಸು ಕೊಡುವುದಿಲ್ಲವೋ ಅವರೇ ಬದ್ಧಜೀವರು. ಅವರಿಂದ ಮಹತ್ಕಾರ್ಯವೇನಾದರೂ ಸಾಧ್ಯವಾಗಬಲ್ಲುದೇ? ಅವರು ಕಾಗೆ ಕುಟುಕಿದ ಮಾವಿನ ಹಣ್ಣಿನ ಹಾಗೆ. ದೇವರಿಗಂತೂ ಅರ್ಪಿಸಲಾಗುವುದಿಲ್ಲ; ಮನುಷ್ಯರೂ ತಿನ್ನಲು ಹಿಂಜರಿಯುತ್ತಾರೆ.
“ಬದ್ಧಜೀವ, ಅಂದರೆ ಸಂಸಾರಿಜೀವ ರೇಷ್ಮೆಹುಳುವಿನ ಹಾಗೆ. ಇಚ್ಛೆಪಟ್ಟರೆ ಅದು ತನ್ನ ಗೂಡನ್ನು ಕತ್ತರಿಸಿ ಹೊರಕ್ಕೆ ಬರಬಲ್ಲುದು. ಆದರೆ ಅದು ತಾನೇ ಅದನ್ನು ನಿರ್ಮಿಸಿರುವುದರಿಂದ ಮೋಹ ಅಡ್ಡಲಾಗಿ ಬಂದು ನಿಂತುಕೊಳ್ಳುತ್ತದೆ. ಕೊನೆಗೆ ಅಲ್ಲೇ ಅದಕ್ಕೆ ಮೃತ್ಯು.
“ಮುಕ್ತಜೀವ, ಕಾಮಕಾಂಚನಗಳ ವಶ ಅಲ್ಲ. ಕೆಲಕೆಲವು ರೇಷ್ಮೆಹುಳುಗಳು ತಾವು ಅಷ್ಟೊಂದು ಶ್ರಮವಹಿಸಿ ಕಟ್ಟಿದ್ದ ಗೂಡುಗಳನ್ನೂ ಕತ್ತರಿಸಿ ಹೊರಕ್ಕೆ ಬಂದುಬಿಡುತ್ತವೆ. ಆದರೆ ಅಂಥವೆಲ್ಲೊ ಒಂದೆರಡು.
“ಮಾಯೆ ಜೀವರನ್ನು ಮುಗ್ಧಗೊಳಿಸಿ ತನ್ನ ಬಂಧನದಲ್ಲಿ ಇಟ್ಟುಕೊಳ್ಳುತ್ತದೆ. ಎಲ್ಲೋ ಕೆಲವರಿಗೆ ಮಾತ್ರ ಬ್ರಹ್ಮಜ್ಞಾನ ದೊರೆಯುತ್ತದೆ. ಅವರು ಮಾಯೆಯ ಇಂದ್ರಜಾಲದಿಂದ ಮೋಹಿತರಾಗುವುದಿಲ್ಲ; ಕಾಮಕಾಂಚನಗಳಿಗೆ ವಶರಾಗುವುದಿಲ್ಲ.”
“ಸಿದ್ಧರಲ್ಲಿ ಎರಡು ವಿಧ; ಸಾಧನ-ಸಿದ್ಧರು, ಕೃಪಾಸಿದ್ದರು. ಕೆಲಕೆಲವು ಮಂದಿ ರೈತರು ಬಹಳವಾಗಿ ದುಡಿದು ತಮ್ಮ ತಮ್ಮ ಗದ್ದೆಗಳಿಗೆ ನೀರು ಹಾಯಿಸುತ್ತಾರೆ. ಹಾಗೆ ಮಾಡಿದರೇನೇ ಅವರು ಬೆಳೆ ಬೆಳೆಯಲು ಸಾಧ್ಯ. ಇನ್ನು ಕೆಲವರಿಗೆ ನೀರು ಹಾಯಿಸುವ ಆವಶ್ಯಕತೆಯೇ ಇರದು. ಮಳೆಯ ನೀರೇ ಯಥೇಷ್ಟ; ಅವರು ದುಡಿದು ನೀರು ಹಾಯಿಸಬೇಕಾಗಿರುವುದಿಲ್ಲ. ಈ ಮಾಯೆಯ ಹಿಡಿತದಿಂದ ಬಿಡಿಸಿಕೊಳ್ಳಬೇಕಾದರೆ ಬಹಳ ಕಷ್ಟಪಟ್ಟು ಸಾಧನೆ ಮಾಡಬೇಕು. ಕೃಪಾ-ಸಿದ್ಧರು ಕಷ್ಟಪಡಬೇಕಾಗಿರುವುದಿಲ್ಲ. ಆದರೆ ಅಂಥವರು ಬಹಳ ವಿರಳ.
“ಮತ್ತೆ ನಿತ್ಯಸಿದ್ಧರಿದ್ದಾರೆ. ಅವರು ಆತ್ಮಜಾಗ್ರತಿಯನ್ನು ಹೊಂದಿಯೇ ಪ್ರತಿಯೊಂದು ಸಲವೂ ಜನ್ಮವೆತ್ತುತ್ತಾರೆ. ಇವರನ್ನು ಮುಚ್ಚಿಹೋಗಿರುವ ಬುಗ್ಗೆಗಳಿಗೆ ಹೋಲಿಸಬಹುದು. ಕೊಳಾಯಿಗಾರ ತೋಟದಲ್ಲಿ ಅಲ್ಲಿ ಇಲ್ಲಿ ಅಗೆಯುತ್ತಿರುವಾಗ ಅಕಸ್ಮಾತ್ತಾಗಿ ಆತ ಬುಗ್ಗೆಯ ತಡೆಯನ್ನು ತೆಗೆದುಹಾಕಿಬಿಡಬಹುದು. ಆಗ ನೀರು ‘ಭರ್, ಭರ್’ ಅಂತ ಹೊರಕ್ಕೆ ನುಗ್ಗಿಬರುತ್ತದೆ. ಹಾಗೆ ನಿತ್ಯಸಿದ್ಧರ ಪ್ರಥಮಾನುರಾಗ ವ್ಯಕ್ತವಾದಾಗ ಜನ ಆಶ್ಚರ್ಯಚಕಿತರಾಗಿ ಹೇಳುತ್ತಾರೆ: “ಇಷ್ಟೊಂದು ಭಕ್ತಿ, ವೈರಾಗ್ಯ, ಪ್ರೇಮ ಎಲ್ಲಿ ಇತ್ತು?”
ಮಾತುಕತೆ ಗೋಪಿಯರ ಅನುರಾಗದ ಸಂಬಂಧವಾಗಿ ಆರಂಭವಾಯಿತು. ರಾಮಲಾಲ ಹಾಡುತ್ತಿದ್ದಾನೆ.
ನೀನೆನ್ನ ಸರ್ವಸ್ವ, ನನ್ನ ಜೀವದ ಜೀವ, ನನ್ನೊಳಗಿನೊಳಗು,
ನಿನ್ನ ಹೊರತೆನಗಾರು ನನ್ನವರು ಇಲ್ಲವೋ ಮೂಲೋಕದೊಳಗೂ!…..
ಶ್ರೀರಾಮಕೃಷ್ಣರು ಭಕ್ತರಿಗೆ: “ಆಹಾ! ಎಷ್ಟು ಸುಂದರವಾದ ಹಾಡು! ‘ನೀನೆನ್ನ ಸರ್ವಸ್ವ.”
ತಮ್ಮ ಪ್ರಾಣವಲ್ಲಭನಾದ ಶ್ರೀಕೃಷ್ಣನ ವಿರಹದಿಂದ ಗೋಪಿಯರ ಹೃದಯ ಯಾವರೀತಿ ಪರಿತಪಿಸುತ್ತಿತ್ತು ಎಂಬುದನ್ನು ವರ್ಣಿಸುವ ಒಂದು ಹಾಡನ್ನು ರಾಮಲಾಲ ಹಾಡಲಾರಂಭಿಸಿದ:1
ತಡೆಯದಿರಿ, ತಡೆಯದಿರಿ ರಥಚಕ್ರಗಳನು;
ಚಕ್ರದಿಂದೀ ರಥವು ಮುನ್ನಡೆವುದೇನು?
ಯಾವ ಚಕ್ರಿಯ ಇಚ್ಛೆಗೀ ಲೋಕಚಕ್ರ
ನಡೆಯುವುದೊ, ಅವನಿಚ್ಛೆ ನಡೆಸುವುದು ಇದನೂ!
ಹಾಡನ್ನು ಕೇಳುತ್ತ ಕೇಳುತ್ತ ಪರಮಹಂಸರು ಗಾಢಸಮಾಧಿಸ್ಥರಾಗಿದ್ದಾರೆ. ಕೈ ಜೋಡಿಸಿ ಕುಳಿತುಕೊಂಡಿದ್ದಾರೆ-ಅವರ ಭಾವಚಿತ್ರದಲ್ಲಿ ಕಾಣಬರುವ ಹಾಗೆ. ಅವರ ಕಡೆಗಣ್ಣುಗಳಿಂದ ಪ್ರೇಮಾಶ್ರು ಸುರಿಯುತ್ತಿದೆ. ಬಹಳ ಹೊತ್ತಾದ ಮೇಲೆ ಪ್ರಕೃತಿಸ್ಥರಾಗುತ್ತಿದ್ದಾರೆ. ಅವರು ಏನನ್ನೋ ವಟಗುಟ್ಟುತ್ತಿದ್ದಾರೆ. ಎಲ್ಲೊ ಅಲ್ಲೊಂದು ಇಲ್ಲೊಂದು ಪದ ಭಕ್ತರ ಕಿವಿಗೆ ಬೀಳುತ್ತಿದೆ. ಅವರು ತಮಗೆ ತಾವೇ ಹೇಳಿಕೊಳ್ಳುತ್ತಿದ್ದಾರೆ: “ನೀನೇ ನಾನು, ನಾನೇ ನೀನು-ನೀನು ತಿನ್ನು-ನೀನು-ನಾನು ತಿನ್ನುತ್ತೇನೆ!… ಆದರೆ ಒಳ್ಳೇ ಕೆಲಸ ಮಾಡುತ್ತಿದ್ದೀಯೆ!”
ಹಾಗೆ ವಟಗುಟ್ಟುವುದನ್ನು ಮುಂದುವರಿಸುತ್ತಾ ಪರಮಹಂಸರು ಹೇಳುತ್ತಿದ್ದಾರೆ :
“ಕಾಮಾಲೆ ರೋಗದವನ ಹಾಗೆ ಎಲ್ಲಾ ಕಾಣಬರುತ್ತಿದೆ! ಯಾವ ದಿಕ್ಕಿಗೆ ನೋಡಿದರೂ ನೀನೇ ನನ್ನ ಕಣ್ಣಿಗೆ! ಹೇ ಕೃಷ್ಣ! ಹೇ ದೀನಬಂಧು! ಗೋವಿಂದ! ಪ್ರಾಣವಲ್ಲಭ! ಗೋವಿಂದ!”
ಪರಮಹಂಸರು “ಪ್ರಾಣವಲ್ಲಭ!”, “ಗೋವಿಂದ!” ಎಂದು ಹೇಳಿದೊಡನೆಯೇ ಮತ್ತೆ ಸಮಾಧಿಸ್ಥರಾಗಿಬಿಟ್ಟರು. ಕೊಠಡಿ ನಿಶ್ಶಬ್ದವಾಗಿದೆ. ಭಕ್ತರೆಲ್ಲರೂ ಮಹಾಭಾವಮಯ ಪರಮಹಂಸರನ್ನು ತಮ್ಮ ಅತೃಪ್ತ ನಯನಗಳಿಂದ ಮತ್ತೆ ಮತ್ತೆ ದಿಟ್ಟಿಸಿ ನೋಡುತ್ತಿದ್ದಾರೆ.
ಅಧರಸೇನ ತನ್ನ ಕೆಲವು ಮಂದಿ ಸ್ನೇಹಿತರೊಡನೆ ಕೊಠಡಿಯನ್ನು ಪ್ರವೇಶಿಸಿದ. ಆತ ಒಬ್ಬ ಡೆಪ್ಯುಟಿ ಮ್ಯಾಜಿಸ್ಟ್ರೇಟ್. ವಯಸ್ಸು ಸುಮಾರು ಮೂವತ್ತು. ಇದು ಆತನ ಎರಡನೆಯ ಭೇಟಿ. ಅಧರನ ಸ್ನೇಹಿತ ಶಾರದಾಚರಣ ಸ್ಕೂಲುಗಳ ಡೆಪ್ಯುಟಿ ಇನ್ಸ್ ಪೆಕ್ಟರನಾಗಿದ್ದು ಈಗ ವಿಶ್ರಾಂತಿ ವೇತನ ಪಡೆಯುತ್ತಿದ್ದಾನೆ. ಸ್ವಲ್ಪ ಕಾಲದ ಹಿಂದೆ ಆತ ತನ್ನ ಹಿರಿಯ ಮಗನನ್ನು ಕಳೆದುಕೊಂಡುಬಿಟ್ಟಿದ್ದರಿಂದ ಪುತ್ರಶೋಕವನ್ನು ತಾಳಲಾರದೆ ಬಹಳವಾಗಿ ಕಂಗೆಟ್ಟು ಹೋಗಿದ್ದಾನೆ. ಆತನಿಗೆ ಮನಶ್ಶಾಂತಿ ದೊರಕಿಸಿಕೊಡಲೋಸುಗ ಅಧರಸೇನ ಆತನನ್ನು ಪರಮಹಂಸರ ಹತ್ತಿರಕ್ಕೆ ಕರೆದುಕೊಂಡು ಬಂದಿದ್ದಾನೆ.
ಪರಮಹಂಸರು ಪ್ರಕೃತಿಸ್ಥರಾಗಿ ನೋಡುತ್ತಾರೆ, ತಮ್ಮ ಕೊಠಡಿಯ ತುಂಬ ಜನ ತುಂಬಿಕೊಂಡು ತಮ್ಮನ್ನು ಏಕದೃಷ್ಟಿಯಿಂದ ನೋಡುತ್ತಿದ್ದಾರೆ. ಆಗ ಅವರು ತಮಗೆ ತಾವೇ ಏನನ್ನೊ ಹೇಳಿಕೊಳ್ಳುತ್ತಿದ್ದಾರೆ.
ಬಳಿಕ ಭಕ್ತರನ್ನು ಸಂಬೋಧಿಸಿ ಪರಮಹಂಸರು ಹೇಳುತ್ತಿದ್ದಾರೆ: “ಪ್ರಾಪಂಚಿಕರ ಭಗವತ್ಸಂಬಂಧವಾದ ವಿವೇಚನೆ ಎಲ್ಲೋ ಅಪರೂಪಕ್ಕೆ ಒಮ್ಮೊಮ್ಮೆ ಅವರಲ್ಲಿ ವ್ಯಕ್ತವಾಗುತ್ತದೆ. ಅದನ್ನು ದೀಪದ ಶಿಖೆಗೆ ಹೋಲಿಸಬಹುದು. ಇಲ್ಲ ಇಲ್ಲ, ಗೋಡೆಯ ಕುಡಿಯ ಕಂಡಿಯಿಂದ ಬರುವ ಸೂರ್ಯನ ಒಂದೇ ಒಂದು ಕಿರಣಕ್ಕೆ ಹೋಲಿಸಬಹುದು. ಪ್ರಾಪಂಚಿಕರು ಭಗವನ್ನಾಮವನ್ನೇನೋ ಜಪಿಸುತ್ತಾರೆ. ಆದರೆ ಅನುರಾಗವನ್ನು ಮಾತ್ರ ಕೇಳಲೇಬೇಡಿ. ಇದು ಮಕ್ಕಳು ತಮ್ಮ ಜಗಳದಲ್ಲಿ ‘ದೇವರಾಣೆಗೂ’ ಎಂದು ಹೇಳುವ ಹಾಗೆ. ಅವು ಆ ರೀತಿ ಆಣೆ ತೆಗೆದುಕೊಳ್ಳುವುದನ್ನು ಕಲಿತುಕೊಂಡದ್ದು, ತಮ್ಮ ಚಿಕ್ಕಮ್ಮ ದೊಡ್ಡಮ್ಮಂದಿರ ಜಗಳ ಕೇಳಿ.
“ಪ್ರಾಪಂಚಿಕರಲ್ಲಿ ಒಂದು ಹಿಡಿತ ಎಂಬುದೇ ಇಲ್ಲ. ಆದರೆ ಆಗಲಿ, ಹೋದರೆ ಹೋಗಲಿ ಎಂಬ ಮನೋಭಾವ. ನೀರು ಬೇಕಾದಾಗ ಬಾವಿ ತೋಡುತ್ತಾರೆ. ಹಾಗೆ ತೋಡುತ್ತಿರುವಾಗ ಅರೆಯೇನಾದರೂ ಸಿಕ್ಕಿತು ಎಂದರೆ, ಆ ಸ್ಥಳವನ್ನು ಹಾಗೆಯೇ ಬಿಟ್ಟು ಬೇರೆ ಕಡೆ ತೋಡುತ್ತಾರೆ. ಅಲ್ಲಿ ಮರಳೇನಾದರೂ ದೊರೆಯಲಾರಂಭಿಸಿತು ಎಂದರೆ, ಆ ಸ್ಥಳವನ್ನೂ ಬಿಟ್ಟುಬಿಡುತ್ತಾರೆ. ಮೊದಲು ಎಲ್ಲಿ ತೋಡಲು ಆರಂಭಿಸಿದರೊ ಅಲ್ಲೇ ಪಟ್ಟಿನಿಂದ ಆ ಕೆಲಸವನ್ನು ಮುಂದುವರಿಸದಿದ್ದರೆ ಅವರಿಗೆ ನೀರು ದೊರೆಯುವ ಬಗೆ ಹೇಗೆ?
“ಮನುಷ್ಯ ತಾನು ಬಿತ್ತಿದ್ದನ್ನು ತಾನೇ ಕೊಯ್ಯಬೇಕಾಗುತ್ತದೆ. ಅದಕ್ಕಾಗಿ ಈ ಹಾಡು ಹೇಳುತ್ತದೆ:
ನಾನಾರ ದೂಷಿಸಲಿ, ನಾನೆ ತೋಡಿದ ಕೂಪ-
ದಾಳದಲಿ ನಾನಾಗಿ ಮುಳುಗುತಿಹೆನು!…..
‘ನಾನು’ ; ‘ನನ್ನದು’ ಎಂಬುದೇ ಅಜ್ಞಾನ. ವಿಚಾರ ಮಾಡುತ್ತಾ ಹೋದರೆ ಈ ‘ನಾನು’ ಎಂಬುದು ಆತ್ಮವಲ್ಲದೆ ಬೇರೇನೂ ಅಲ್ಲ ಎಂಬ ಅರಿವು ಉಂಟಾಗುತ್ತದೆ. ವಿಚಾರಮಾಡಿ ನೋಡು-ನೀನು ಶರೀರವೆ, ಮೂಳೆಯೆ, ಮಾಂಸವೆ ಅಥವಾ ಬೇರೇನಾದರೂ ಆಗಿದ್ದೀಯಾ ಎಂಬುದನ್ನು. ಕೊನೆಗೆ ನಿನಗೆ ಅರ್ಥವಾಗುತ್ತದೆ, ಅವೊಂದೂ ನೀನಲ್ಲ, ನಿನಗೆ ಯಾವ ಉಪಾಧಿಯೂ ಇಲ್ಲ ಎಂಬುದಾಗಿ. ಬಳಿಕ ನಿನ್ನ ಅನುಭವಕ್ಕೆ ಬರುತ್ತದೆ, ನೀನು ಯಾವ ಕಾರ್ಯವನ್ನೂ ಮಾಡಿದವನಲ್ಲ, ನಿನ್ನಲ್ಲಿ ಯಾವ ದೋಷವೂ ಇಲ್ಲ, ಗುಣವೂ ಇಲ್ಲ, ನೀನು ಪಾಪಪುಣ್ಯಗಳಿಗೆ ಅತೀತ ಎಂಬುದಾಗಿ.
“ಅಜ್ಞಾನವಶದಿಂದ ಮನುಷ್ಯ ಹೇಳುತ್ತಾನೆ, ‘ಇದು ಚಿನ್ನ, ಅದು ಹಿತ್ತಾಳೆ’ ಎಂಬುದಾಗಿ. ಆದರೆ ಜ್ಞಾನಿ ಹೇಳುತ್ತಾನೆ, ‘ಎಲ್ಲವೂ ಚಿನ್ನ’ ಅಂತ.
“ಭಗವಂತನ ದರ್ಶನವಾದೊಡನೆ ವಿಚಾರ ನಿಂತುಹೋಗುತ್ತದೆ. ಆದರೆ ಕೆಲ ಕೆಲವರು ಭಗವಂತನ ದರ್ಶನವಾದ ಮೇಲೂ ವಿಚಾರದಲ್ಲಿ ತೊಡಗುವುದುಂಟು. ಮತ್ತೆ ಕೆಲವರು ಭಕ್ತರಾಗಿಯೇ ಉಳಿದು ಆತನ ನಾಮಗುಣಕೀರ್ತನೆ ಮಾಡುವುದುಂಟು.”
“ಮಗು ಎಷ್ಟು ಹೊತ್ತಿನವರೆಗೆ ಅಳುತ್ತದೆ? ಸ್ತನ ದೊರೆಯದವರೆಗೆ. ಅದು ದೊರೆತ ಒಡನೇ ಅಳು ಎಲ್ಲಾ ನಿಂತುಹೋಗಿಬಿಡುತ್ತದೆ. ಬಳಿಕ ಆನಂದದಿಂದ ಹಿಗ್ಗುತ್ತದೆ. ಆನಂದದಿಂದ ತಾಯಿಯ ಸ್ತನದಿಂದ ಹಾಲು ಕುಡಿಯಲಾರಂಭಿಸುತ್ತದೆ. ಆದರೆ ಇದೂ ನಿಜ; ಕುಡಿಯುತ್ತ ಕುಡಿಯುತ್ತ ಇದ್ದ ಹಾಗೆ ಒಮ್ಮೊಮ್ಮೆ ಆಟವಾಡುವುದು, ನಗುವುದು.
“ಎಲ್ಲವೂ ಭಗವಂತನೇ ಆಗಿದ್ದಾನೆ. ಆದರೆ ಆತ ಮನುಷ್ಯನಲ್ಲಿ ವಿಶೇಷವಾಗಿ ವ್ಯಕ್ತವಾಗಿದ್ದಾನೆ. ಯಾರಲ್ಲಿ ಬಾಲಕನಂಥ ಶುದ್ಧಹೃದಯವಿದೆಯೋ, ಯಾರು ಪ್ರೇಮೋನ್ಮತ್ತನಾಗಿ ನಗುವನೋ, ಅಳುವನೋ, ನರ್ತಿಸುವನೋ, ಹಾಡುವನೋ ಅಂಥವನಲ್ಲಿ ಭಗವಂತ ತಾನೇ ಸಾಕ್ಷಾತ್ತಾಗಿ ಇರುತ್ತಾನೆ.”
ಈ ಸಲ ಪರಮಹಂಸರಿಗೆ ಅಧರನ ಪರಿಚಯ ಇನ್ನೂ ಹೆಚ್ಚಾಗಿ ಆಯಿತು. ಆತ ತನ್ನ ಸ್ನೇಹಿತನ ದುಃಖಕ್ಕೆ ಕಾರಣ ಏನು ಎಂಬುದನ್ನು ಪರಮಹಂಸರಿಗೆ ತಿಳಿಸಿದ. ಪರಮಹಂಸರು ಈಗ ತಮಗೆ ತಾವೇ ಹಾಡಿಕೊಳ್ಳುತ್ತಿರುವಂತೆ ಒಂದು ಹಾಡನ್ನು ಹಾಡುತ್ತಿದ್ದಾರೆ:
ಕೈದುಗೊಳು, ಕೈದುಗೊಳು, ಮನೆಯ ಸುತ್ತಲು ಮೃತ್ಯು
ನಿಂತು ರಣಭೇರಿಯನು ಹೊಡೆಯುತ್ತಿದೆ.
ಜ್ಞಾನತೂಣೀರವನು ಹೆಗಲಿಗೇರಿಸು; ಹತ್ತು
ಭಕ್ತಿಯ ರಥವ; ಸಮರ ಕರೆಯುತ್ತಿದೆ!
ಪ್ರೇಮಗುಣವನು ಬಿಗಿದು ನಿನ್ನ ರಸನೆಯ ಧನುವಿ-
ನಿಂದ ಬಿಡು ಶ್ರೀಕಾಳಿ ನಾಮಾಸ್ತ್ರವ!
ರಥರಥಿಕರತ್ತಿರಲಿ; ಭಾಗೀರಥೀ ತೀರ-
ದಲಿ ನಿಂತು ಗೆದ್ದು ಬಾ ಈ ಸಮರವ!
ಬಳಿಕ ಹೇಳುತ್ತಿದ್ದಾರೆ: “ಮತ್ತೇನು ಮಾಡಬಲ್ಲೆ? ಮೃತ್ಯುವಿಗಾಗಿ ಸಿದ್ಧನಾಗು. ಮೃತ್ಯು ಮನೆಯನ್ನು ಪ್ರವೇಶಿಸಿದ್ದಾನೆ. ಭಗವಂತನ ನಾಮವೆಂಬ ಅಸ್ತ್ರ ಹಿಡಿದು ಆತನೊಡನೆ ಯುದ್ಧ ಮಾಡಬೇಕಾಗಿದೆ. ಭಗವಂತನೇ ಕರ್ತ. ನಾನು ಹೇಳುತ್ತೇನೆ: ‘ಹೇ ಭಗವಂತ, ನೀನು ಮಾಡಿಸಿದ ಹಾಗೆ ಮಾಡುತ್ತೇನೆ, ಹೇಳಿಸಿದ ಹಾಗೆ ಹೇಳುತ್ತೇನೆ. ನಾನು ಯಂತ್ರ, ನೀನು ಯಾಂತ್ರಿಕ. ನಾನು ಗೃಹ, ನೀನು ಗೃಹಪತಿ. ನಾನು ಗಾಡಿ, ನೀನು ಚಾಲಕ.’ ಆತನಿಗೆ ವಕಾಲತು ವಹಿಸಿಬಿಡು. ಒಳ್ಳೆಯವರ ಮೇಲೆ ಭಾರಹಾಕಿಬಿಟ್ಟರೆ ಅವರು ಕೆಟ್ಟದ್ದನ್ನು ಮಾಡುವುದಿಲ್ಲ. ಭಗವಂತ ತನ್ನ ಇಚ್ಛೆಯಿದ್ದಂತೆ ನಡೆಸಲಿ.
“ಏನು, ದುಃಖ ಆಗಬೇಡವೆ? ಪುತ್ರ ಆತ್ಮಜ. ರಾವಣನ ವಧೆ ಆಯಿತು; ಲಕ್ಷ್ಮಣ ಒಡನೇ ಅಲ್ಲಿಗೆ ಓಡಿಹೋಗಿ ನೋಡಿದ. ನೋಡುತ್ತಾನೆ, ರಾವಣನ ಮೂಳೆಗಳಲ್ಲಿ ಛಿದ್ರವಿಲ್ಲದ ಜಾಗವೇ ಕಂಡುಬರಲಿಲ್ಲ. ಆಗ ಆತ ರಾಮನಿಗೆ ಹೇಳಿದ: ‘ಹೇ ರಾಮ, ನಿನ್ನ ಬಾಣಗಳ ಮಹಿಮೆ ಎಷ್ಟು ಅದ್ಭುತವಾದ್ದು! ರಾವಣನ ಶರೀರದಲ್ಲಿ ಛಿದ್ರವಾಗದ ಜಾಗವೇ ಕಂಡುಬರಲಿಲ್ಲವಲ್ಲ!’ ರಾಮ ಹೇಳಿದ: ‘ತಮ್ಮ, ಆತನ ಮೂಳೆಗಳಲ್ಲಿ ಕಾಣುತ್ತಾ ಇವೆಯಲ್ಲ ಛಿದ್ರಗಳು, ಅವು ನನ್ನ ಬಾಣಗಳಿಂದಾದುದಲ್ಲ. ಪುತ್ರಶೋಕದಿಂದ ಆತನ ಮೂಳೆ ಜರ್ಜರಿತವಾಗಿಬಿಟ್ಟಿವೆ. ಈ ಛಿದ್ರಗಳೆಲ್ಲ ಆತನ ಶೋಕ ಎಷ್ಟರಮಟ್ಟಿನದು ಎಂಬುದನ್ನು ತೋರಿಸುತ್ತಿವೆ. ಪುತ್ರಶೋಕ ಮೂಳೆಯನ್ನೂ ಕೊರೆದುಬಿಟ್ಟಿದೆ.’
“ಆದರೆ ಮನೆ, ಹೆಂಡತಿ, ಮಕ್ಕಳು ಇವೆಲ್ಲಾ ಅನಿತ್ಯ. ಎರಡು ದಿನದವು. ತಾಳೆ ಮರವೇ ಸತ್ಯ; ಆದರಿಂದ ಒಂದೆರಡು ಹಣ್ಣು ಕಳಚಿಕೊಂಡವು. ಅದಕ್ಕೇಕೆ ಅಳಬೇಕು?
“ಭಗವಂತ ಈ ಮೂರು ಕೆಲಸ ಮಾಡುತ್ತಿದ್ದಾನೆ: ಸೃಷ್ಟಿ, ಸ್ಥಿತಿ, ಪ್ರಳಯ. ಮೃತ್ಯು ತಪ್ಪಿದ್ದಲ್ಲ. ಪ್ರಳಯವಾದಾಗ ಎಲ್ಲಾ ಧ್ವಂಸವಾಗಿ ಹೋಗುತ್ತವೆ. ಯಾವುದೂ ಉಳಿಯುವುದಿಲ್ಲ. ಭಗವತಿ ಆಗ ಸೃಷ್ಟಿಗೆ ಬೇಕಾಗುವ ಬೀಜಗಳನ್ನು ಮಾತ್ರ ಶೇಖರಿಸಿ ಇಟ್ಟುಕೊಳ್ಳುತ್ತಾಳೆ. ಆಕೆ ಹೊಸದಾಗಿ ಸೃಷ್ಟಿ ಆರಂಭಿಸುವಾಗ ಅವುಗಳನ್ನೆಲ್ಲಾ ಹೊರಕ್ಕೆ ತೆಗೆಯುತ್ತಾಳೆ. ಗೃಹಿಣಿಯರು ಸೌತೆಕಾಯಿ ಬೀಜ, ಸಮುದ್ರದ ನೊರೆ, ನೀಲಿಗುಳಿಗೆ ಇನ್ನೂ ಏನೇನೋ ಚಿಕ್ಕಚಿಕ್ಕ ಪೊಟ್ಟಣಗಳನ್ನು ಒಂದು ಗುಡಾಣದಲ್ಲಿ ತುಂಬಿಟ್ಟುಕೊಂಡು ಬೇಕಾದಾಗ ಹೊರಕ್ಕೆ ತೆಗೆಯುವುದಿಲ್ಲವೇ ಹಾಗೆ.” (ಎಲ್ಲರೂ ನಗುತ್ತಾರೆ.)
ಪರಮಹಂಸರು ತಮ್ಮ ಕೊಠಡಿಯ ಉತ್ತರ ವರಾಂಡದಲ್ಲಿ ನಿಂತುಕೊಂಡು ಅಧರ ಸೇನನೊಡನೆ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೀನು ಒಬ್ಬ ಡೆಪ್ಯುಟಿ ಮ್ಯಾಜಿಸ್ಟ್ರೇಟ್. ಈ ಹುದ್ದೆಯೂ ನಿನಗೆ ಭಗವಂತನ ಅನುಗ್ರಹದಿಂದ ದೊರೆತಿದೆ. ಆತನನ್ನು ಎಂದಿಗೂ ಮರೆಯಬೇಡ. ಆದರೆ ಒಂದಲ್ಲ ಒಂದು ದಿನ ಆ ಮಾರ್ಗವಾಗಿ ಎಲ್ಲರೂ ಹೋಗಲೇಬೇಕು ಎಂಬುದನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊ. ಇಲ್ಲಿ ನಮ್ಮ ಬಾಳು ಎರಡು ದಿನದ್ದು ಮಾತ್ರ.
“ಈ ಜಗತ್ತು ಕರ್ಮಭೂಮಿ. ಇಲ್ಲಿಗೆ ನಾವು ಕೆಲವು ಕರ್ಮಗಳನ್ನು ಮಾಡಲು ಬಂದಿದ್ದೇವೆ. ಜನ ಹಳ್ಳಿಗಳಲ್ಲಿ ವಾಸವಾಗಿದ್ದು ಕಲ್ಕತ್ತಕ್ಕೆ ಕೆಲಸಕ್ಕೆ ಬರುವುದಿಲ್ಲವೆ, ಹಾಗೆ.
“ಇಲ್ಲಿ ಒಂದು ಸ್ವಲ್ಪ ಕೆಲಸ ಮಾಡಬೇಕಾದದ್ದೆ. ಇದೂ ಒಂದು ವಿಧದ ಸಾಧನೆಯೇ. ಆದಷ್ಟು ಬೇಗ ನಾವು ಮಾಡಬೇಕಾಗಿರುವ ಕರ್ಮಗಳನ್ನು ಮಾಡಿ ಮುಗಿಸಿಕೊಂಡುಬಿಡಬೇಕು. ಅಕ್ಕಸಾಲಿಗ ಚಿನ್ನ ಕರಗಿಸುವಾಗ ಸಾಕಾದಷ್ಟು ಶಾಖವನ್ನು ಉತ್ಪತ್ತಿಮಾಡಲು ತಿದಿ, ಬೀಸಣಿಗೆ, ಊದುಕೊಳವೆ ಎಲ್ಲವನ್ನೂ ಉಪಯೋಗಿಸುತ್ತಾನೆ. ಚಿನ್ನವನ್ನು ಕರಗಿಸಿದ ನಂತರ ಹಾಯಾಗಿ ಕುಳಿತು ತನ್ನ ಸೇವಕರಿಗೆ ಹೇಳುತ್ತಾನೆ, ಗುಡುಗುಡಿ ತಯಾರುಮಾಡುವಂತೆ. ಇದುವರೆಗೆ ಆತನ ಮುಖದಿಂದ ಬೆವರು ಸುರಿಯುತ್ತಿತ್ತು; ಈಗ ಆತ ತಂಬಾಕು ಸೇದಬಲ್ಲ.”
“ಅಧಿಕವಾದ ಉತ್ಸಾಹ ಬೇಕು. ಆಗ ಸಾಧನೆ ಸಾಧ್ಯವಾಗುತ್ತದೆ. ದೃಢಪ್ರತಿಜ್ಞೆ ಬೇಕು.
“ಭಗವಂತನ ನಾಮಬೀಜದಲ್ಲಿ ಬಹಳ ಶಕ್ತಿ ಇದೆ. ಅದು ಅವಿದ್ಯೆಯನ್ನು ನಾಶಮಾಡಿ ಬಿಡುತ್ತದೆ. ಸಾಮಾನ್ಯವಾಗಿ ಬೀಜವೂ ಮೃದು, ಅದರ ಮೊಳಕೆಯೂ ಮೃದು. ಆದರೂ ಅದು ಗಟ್ಟಿ ನೆಲವನ್ನು ಭೇದಿಸಿಬಿಡುತ್ತದೆ. ನೆಲ ಒಡೆದು ಮೊಳಕೆಗೆ ದಾರಿ ಮಾಡಿಕೊಟ್ಟು ಬಿಡುತ್ತದೆ.
“ಕಾಮಕಾಂಚನಗಳ ಮಧ್ಯೆ ಬಹಳ ಕಾಲ ಇದ್ದುದೇ ಆದರೆ, ಅವು ಮನಸ್ಸನ್ನು ಚೆಲ್ಲಾಪಿಲ್ಲಿ ಮಾಡಿಬಿಡುತ್ತವೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಆದರೆ ಸಂನ್ಯಾಸಿಗಳು ಅಷ್ಟೊಂದು ಹೆದರಿಕೊಳ್ಳಬೇಕಾದ್ದೇನಿಲ್ಲ. ನಿಜವಾದ ತ್ಯಾಗಿಗಳು ಕಾಮಕಾಂಚನಗಳಿಂದ ಬಹಳ ದೂರದಲ್ಲೇ ಇರುತ್ತಾರೆ. ಆದ್ದರಿಂದ ಸಾಧನೆಯ ಮೂಲಕ ಆತ ಸರ್ವದಾ ಭಗವಂತನಲ್ಲಿ ತನ್ನ ಮನಸ್ಸನ್ನು ಇಡಬಲ್ಲ.”
“ಸರ್ವದಾ ಭಗವಂತನಲ್ಲೇ ಮನಸ್ಸನ್ನಿಡಬಲ್ಲ ನಿಜವಾದ ತ್ಯಾಗಿಗಳನ್ನು ಜೇನುಹುಳುಗಳಿಗೆ ಹೋಲಿಸಬಹುದು. ಅವು ಕೇವಲ ಹೂವುಗಳ ಮೇಲೆ ಇಳಿದು ಮಧುಪಾನ ಮಾಡುತ್ತವೆ. ಯಾರು ಈ ಜಗತ್ತಿನಲ್ಲಿ ಕಾಮಕಾಂಚನಗಳ ಮಧ್ಯೆ ಇರುತ್ತಾರೊ, ಅವರ ತಮ್ಮ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಬಲ್ಲರು. ಆದರೆ ಕೆಲವು ವೇಳೆ ಅವರು ಕಾಮಕಾಂಚನಗಳ ಕಡೆಗೂ ಅದನ್ನು ತಿರುಗಿಸಿಬಿಡುತ್ತಾರೆ. ಅವರು ಈ ಸಾಧಾರಣ ನೊಣಗಳ ಹಾಗೆ. ಅವು ಸಿಹಿ ತಿಂಡಿಗಳ ಮೇಲೂ ಕೂರುತ್ತವೆ, ಕೊಳೆತು ನಾರುವ ಹಣ್ಣುಗಳ ಮೇಲೂ ಕೂರುತ್ತವೆ, ಹೇಸಿಗೆ ಮೇಲೂ ಕೂರುತ್ತವೆ.
“ಭಗವಂತನಲ್ಲಿ ಸರ್ವದಾ ಮನಸ್ಸನ್ನಿಡುವ ಮೊದಲು ಸ್ವಲ್ಪ ಶ್ರಮಿಸಬೇಕಾಗುತ್ತದೆ; ಕೊನೆಗೆ ವಿಶ್ರಾಂತಿವೇತನ ದೊರೆಯುತ್ತದೆ.
೧೫ನೆ ಏಪ್ರಿಲ್ ೧೮೮೩, ಚೈತ್ರಶುಕ್ಲ ಅಷ್ಟಮಿ, ಭಾನುವಾರ
ಪರಮಹಂಸರ ಪ್ರಿಯಶಿಷ್ಯರಲ್ಲೊಬ್ಬನಾದ ಸುರೇಂದ್ರ ಅವರನ್ನು ತನ್ನ ಮನೆಗೆ ಅನ್ನ ಪೂರ್ಣಾಪೂಜೆಯ ನಿಮಿತ್ತವಾಗಿ ಆಹ್ವಾನಿಸಿದ್ದಾನೆ. ತಮ್ಮ ಭಕ್ತರೊಡನೆ ಪರಮಹಂಸರು ಬಂದಾಗ ಸಾಯಂಕಾಲ ಆರು. ಸುರೇಂದ್ರ ದೇವರ ಕೋಣೆಯಲ್ಲಿ ಭಗವತಿಯನ್ನು ಪೂಜೆ ಮಾಡುತ್ತಿದ್ದಾನೆ. ಆತ ಆಕೆಯ ಪಾದಪದ್ಮಗಳಿಗೆ ದಾಸವಾಳದ ಹೂವು ಮತ್ತು ಬಿಲ್ವದಳಗಳನ್ನು ಅರ್ಪಿಸಿದ್ದಾನೆ. ಕೊರಳಿಗೆ ಹೂವಿನ ಮಾಲೆಯನ್ನು ಹಾಕಿದ್ದಾನೆ. ಪರಮಹಂಸರು ಒಳ ಅಂಗಳಕ್ಕೆ ಬಂದು ದೇವಿಗೆ ಪ್ರಣಾಮ ಮಾಡಿದರು. ಅನಂತರ ಹೊರ ಅಂಗಳಕ್ಕೆ ಬಂದು ಭಕ್ತರೊಡನೆ ರತ್ನಗಂಬಳಿಯ ಮೇಲೆ ಕುಳಿತುಕೊಂಡರು. ಆ ರತ್ನಗಂಬಳಿಯ ಮೇಲೆ ಅಲ್ಲಲ್ಲಿ ಕೆಲವು ಒರಗುದಿಂಬುಗಳು ಬಿದ್ದಿದ್ದುವು. ಪರಮಹಂಸರಿಗೆ ಅವುಗಳಲ್ಲೊಂದನ್ನು ಕೊಟ್ಟಾಗ ಅವರು ಅದನ್ನು ಒಂದು ಕಡೆಗೆ ತಳ್ಳಿಬಿಟ್ಟರು.
ಶ್ರೀರಾಮಕೃಷ್ಣರು ಭಕ್ತರಿಗೆ: “ಒರಗುದಿಂಬಿಗೆ ಒರಗಿ ಕುಳಿತುಕೊಳ್ಳುವುದು! ನೋಡಿ, ಅಭಿಮಾನ ತ್ಯಜಿಸುವುದೆಂದರೆ ಬಹಳ ಕಷ್ಟ. ವಿಚಾರಮಾಡಬಹುದು, ಅಹಂಕಾರವೆಂಬುದು ಏನೂ ಇಲ್ಲ ಎಂಬುದಾಗಿ. ಆದರೂ ಎಲ್ಲಿಂದಲೋ ಅದು ಬಂದುಬಿಡುತ್ತದೆ. ಆಡಿನ ತಲೆಯನ್ನು ಕತ್ತರಿಸಿದ ನಂತರವೂ ಅದರ ಅಂಗ ಪ್ರತ್ಯಂಗ ಸ್ವಲ್ಪ ಹೊತ್ತು ಅಲುಗಾಡುತ್ತಿರುತ್ತದೆ. ಸ್ವಪ್ನದಲ್ಲಿ ಏನೋ ಒಂದು ಭಯಂಕರ ಅನುಭವ ಆಯಿತು ಎಂದು ಇಟ್ಟುಕೊಳ್ಳಿ. ನಿದ್ದೆಯಿಂದ ಏಳುತ್ತೇವೆ, ಚೆನ್ನಾಗಿ ಎಚ್ಚರಗೊಂಡಿರುತ್ತೇವೆ. ಆದರೂ ಎದೆ ಮಾತ್ರ ‘ಡಬ, ಡಬ’ ಅಂತ ಇನ್ನೂ ಹೊಡೆದುಕೊಳ್ಳುತ್ತಿರುತ್ತದೆ. ಅಹಂಕಾರವೂ ಹಾಗೆ. ಹೊಡೆದೋಡಿಸಿದರೂ ಎಲ್ಲಿಂದಲೋ ಬಂದುಬಿಡುತ್ತದೆ. ಆಗ ಮನುಷ್ಯ ಹುಬ್ಬುಗಂಟು ಹಾಕಿಕೊಂಡವನಾಗಿ ಹೇಳುತ್ತಾನೆ: ‘ಏನಿದು! ನನಗೆ ಗೌರವ ತೋರಿಸದೆ ಹೋದರಲ್ಲ!”
ಕೇದಾರ: “ಹುಲ್ಲಿಗಿಂತಲೂ ಕಡೆಯಾಗಿ, ಮರದಂತೆ ಸಹಿಷ್ಣುವಾಗಿ ಇರಬೇಕು.”
ಶ್ರೀರಾಮಕೃಷ್ಣರು: “ನಾನು ಭಕ್ತರ ರೇಣುವಿನ ರೇಣು.”
ವೈದ್ಯನಾಥ ಕೊಠಡಿಯನ್ನು ಪ್ರವೇಶಿಸಿದ. ಆತ ಒಳ್ಳೇ ವಿದ್ಯಾವಂತ, ಹೈಕೋರ್ಟಿನಲ್ಲಿ ವಕೀಲನಾಗಿದ್ದಾನೆ. ಆತ ಕೈಜೋಡಿಸಿ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡ.
ಸುರೇಂದ್ರ ಶ್ರೀರಾಮಕೃಷ್ಣರಿಗೆ: “ಈತ ನನ್ನ ಸಂಬಂಧಿ.”
ಶ್ರೀರಾಮಕೃಷ್ಣರು: “ಹಾಗೇನು? ಈತನಲ್ಲಿ ಒಳ್ಳೇ ಗುಣಗಳಿವೆ.”
ಸುರೇಂದ್ರ: “ಈತ ನಿಮ್ಮನ್ನು ಏನೋ ಕೇಳಬೇಕಂತೆ. ಅದಕ್ಕಾಗಿ ಬಂದಿದ್ದಾನೆ.”
ಶ್ರೀರಾಮಕೃಷ್ಣರು ವೈದ್ಯನಾಥನಿಗೆ: “ಏನೇನು ನಿನ್ನ ಕಣ್ಣಿಗೆ ಬೀಳುತ್ತಿರುವುವೋ ಎಲ್ಲವೂ ಭಗವಂತನ ಶಕ್ತಿಯಿಂದ ಉತ್ಪನ್ನವಾದುವೇ. ಆ ಶಕ್ತಿಯನ್ನು ಬಿಟ್ಟು ಯಾರೂ ಏನನ್ನೂ ಮಾಡುವ ಹಾಗಿಲ್ಲ. ಆದರೆ ಒಂದು ವಿಷಯ. ಆತನ ಶಕ್ತಿ ಎಲ್ಲರಲ್ಲೂ ಒಂದೇ ಸಮನಾಗಿ ವ್ಯಕ್ತವಾಗಿಲ್ಲ. ಒಮ್ಮೆ ವಿದ್ಯಾಸಾಗರ ನನ್ನನ್ನು ಕೇಳಿದ: ‘ಏನು, ಭಗವಂತ ಕೆಲಕೆಲವರಿಗೆ ಹೆಚ್ಚು ಶಕ್ತಿ ಕೊಡುತ್ತಾನೇನು?’ ನಾನು ಹೇಳಿದೆ: ‘ಆತ ಹೆಚ್ಚುಕಡಮೆ ಕೊಡದಿದ್ದ ಪಕ್ಷದಲ್ಲಿ, ನಿನ್ನನ್ನು ನೋಡಲು ನಾವೇಕೆ ಇಲ್ಲಿಗೆ ಬಂದಿದ್ದೇವೆ? ನಿನಗೇನು ಎರಡು ಕೊಂಬು ಬೆಳದಿವೆಯೇ? ಆದ್ದರಿಂದ ಭಗವಂತ ವಿಭುರೂಪದಿಂದಲೇನೋ ಸರ್ವಭೂತಗಳಲ್ಲಿಯೂ ಇದ್ದಾನೆ. ಆದರೆ ಆವಿರ್ಭಾವದಲ್ಲಿ ತರತಮವಿದೆ. ಇದು ನ್ಯಾಯಸಮ್ಮತವಾಗಿದೆ.”
ವೈದ್ಯನಾಥ: “ಮಹಾಶಯರೇ, ನನಗೊಂದು ಸಂದೇಹವಿದೆ. ಜನ ಹೇಳುತ್ತಾರಲ್ಲ, ಸ್ವತಂತ್ರ ಇಚ್ಛೆಯೆಂಬುದೊಂದಿದೆ; ಮನುಷ್ಯ ತನ್ನ ಇಚ್ಛೆಗನುಸಾರ ಒಳ್ಳೆಯದನ್ನೂ ಮಾಡಬಲ್ಲ, ಕೆಟ್ಟದ್ದನ್ನೂ ಮಾಡಬಲ್ಲ ಎಂಬುದಾಗಿ. ಅದು ಸತ್ಯವೇ? ಸತ್ಯವಾಗಿಯೂ ನಾವು ಸ್ವತಂತ್ರರೇ?”
ಶ್ರೀರಾಮಕೃಷ್ಣರು: “ಎಲ್ಲವೂ ಭಗವದಧೀನ. ಈ ಜಗದ ಲೀಲೆ ಆತನದೇ. ಆತ ವಿವಿಧ ವಸ್ತುಗಳನ್ನು ಸೃಷ್ಟಿಸಿದ್ದಾನೆ-ದೊಡ್ಡದು, ಚಿಕ್ಕದು, ಬಲಿಷ್ಠವಾದ್ದು, ದುರ್ಬಲವಾದ್ದು. ಒಳ್ಳೇದು, ಕೆಟ್ಟದ್ದು, ಒಳ್ಳೆಯವರು, ಕೆಟ್ಟವರು ಮೊದಲಾದುವನ್ನು. ಇವೆಲ್ಲಾ ಆತನ ಮಾಯೆ, ಆತನ ಕ್ರೀಡೆ. ನಿನ್ನ ಅನುಭವಕ್ಕೆ ಬಂದಿರಬೇಕು, ಈ ತೋಟದಲ್ಲಿರುವ ಮರಗಿಡಗಳೆಲ್ಲಾ ಒಂದೇ ಜಾತಿಯವಲ್ಲ ಎಂಬುದು.
“ಭಗವಂತನ ಸಾಕ್ಷಾತ್ಕಾರವಾಗದವರೆಗೆ ಅನ್ನಿಸುತ್ತದೆ, ನಾವು ಸ್ವತಂತ್ರರು ಎಂಬುದಾಗಿ. ಈ ಭ್ರಮೆಯನ್ನು ಆತನೇ ಮನುಷ್ಯನಲ್ಲಿ ಇಟ್ಟಿದ್ದಾನೆ. ಇಲ್ಲದಿದ್ದರೆ ಪಾಪ ಪ್ರವೃತ್ತಿ ಬೆಳೆದು ಬಿಡುತ್ತಿತ್ತು.
“ಆದರೆ ಯಾರಿಗೆ ಭಗವಂತನ ಸಾಕ್ಷಾತ್ಕಾರವಾಗಿದೆಯೋ ಆತನ ಭಾವ ಏನು ಎಂಬುದು ಗೊತ್ತೆ? ಆತನಿಗೆ ಅನ್ನಿಸುತ್ತದೆ: ‘ಹೇ ಭಗವಂತ, ನಾನು ಯಂತ್ರ, ನೀನು ಯಾಂತ್ರಿಕ. ನಾನು ಗೃಹ, ನೀನು ಗೃಹಪತಿ. ನಾನು ರಥ, ನೀನು ರಥಿಕ. ನೀನು ಚಲಿಸಿದಂತೆ ಚಲಿಸುತ್ತೇನೆ; ನೀನು ನುಡಿಸಿದಂತೆ ನುಡಿಯುತ್ತೇನೆ.’ (ವೈದ್ಯನಾಥನಿಗೆ) ತರ್ಕದಲ್ಲಿ ತೊಡಗುವುದು ಒಳ್ಳೆಯದಲ್ಲ. ಏನು ಹೇಳುತ್ತೀಯೆ?”
ವೈದ್ಯನಾಥ: “ಹೌದು, ಜ್ಞಾನ ದೊರೆಯಿತು ಎಂದರೆ ಆ ಪ್ರವೃತ್ತಿ ಹೊರಟು ಹೋಗುತ್ತದೆ.”
ಪರಮಹಂಸರು ತಮಗೆ ಗೊತ್ತಿದ್ದ ಒಂದು ಡಜನ್ ಇಂಗ್ಲಿಷ್ ಪದಗಳ ಕೋಶವನ್ನು ಉಪಯೋಗಿಸಿ ಹೇಳಿದರು: “ಥ್ಯಾಂಕ್ ಯೂ. (ನಿನಗೆ ವಂದನೆ.)” (ಎಲ್ಲರೂ ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು ವೈದ್ಯನಾಥನಿಗೆ : “ನಿನಗೆ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ. ಭಗವಂತನ ವಿಷಯವಾಗಿ ಹೇಳಿದರೆ ಜನ ಅದನ್ನು ನಂಬುವುದಿಲ್ಲ. ತಾವು ಭಗವಂತನನ್ನು ನೋಡಿರುವುದಾಗಿ ಮಹಾಪುರುಷರಾದವರು ಹೇಳಿದರೂ, ಸಾಧಾರಣ ಜನರು ಅವರ ಮಾತಿಗೆ ಬೆಲೆ ಕೊಡುವುದಿಲ್ಲ. ಸಾಧಾರಣ ಜನ ಭಾವಿಸುತ್ತಾರೆ: ‘ಇವರು ಭಗವಂತನನ್ನು ನೋಡಿರುವುದಾದರೆ, ನಮಗೆ ತೋರಿಸಿಕೊಡಲಿ ನೋಡೋಣ.’ ಆದರೆ ಒಂದೇ ದಿನದೊಳಗೆ ನಾಡಿ ನೋಡುವುದನ್ನು ಕಲಿತುಕೊಳ್ಳಲಾಗುವುದೇ? ವೈದ್ಯನೊಡನೆ ಅನೇಕ ದಿನ ಸುಮ್ಮನೆ ಸುತ್ತಬೇಕು; ಆಗ ಅರಿತುಕೊಳ್ಳಬಹುದು, ಯಾವುದು ವಾಯುವಿನ ನಾಡಿ, ಯಾವುದು ಪಿತ್ತದ ನಾಡಿ ಎಂಬುದನ್ನು. ನಾಡಿಯನ್ನು ನೋಡುವುದು ಯಾರ ಮುಖ್ಯ ವೃತ್ತಿಯಾಗಿರುವುದೋ ಅವರ ಸಂಗ ಮಾಡಬೇಕು.
“ಎಲ್ಲರಿಗೂ ಇದು ಇಷ್ಟನೇ ನಂಬರು ನೂಲು ಅಂತ ಹೇಳಲು ಸಾಧ್ಯವೇ? ಯಾರು ನೂಲು ವ್ಯಾಪಾರಿಗಳೋ ಅವರು ಯಾವುದು ನಲವತ್ತು ನಂಬರು ನೂಲು, ಯಾವುದು ನಲವತ್ತೊಂದನೇ ನಂಬರು ನೂಲು ಎಂಬುದನ್ನು ಒಡನೇ ಹೇಳಬಲ್ಲರು.”
ಇನ್ನೇನು ಸಂಕೀರ್ತನೆ ಆರಂಭವಾಗುವುದರಲ್ಲಿದೆ. ಈಗ ಮೃದಂಗಬಾಜನ ಆಗುತ್ತಿದೆ. ಮೃದಂಗದ ಮಧುರಧ್ವನಿ ಶ್ರೀಗೌರಾಂಗನ ಪ್ರೇಮೋನ್ಮತ್ತಕಾರಿ ಸಂಕೀರ್ತನೆಯನ್ನು ಮನಸ್ಸಿಗೆ ತರಲಾರಂಭಿಸಿತು. ಪರಮಹಂಸರು ಭಾವಸ್ಥರಾಗುತ್ತಿದ್ದಾರೆ. ಆಗಾಗ ಮೃದಂಗ ಬಾಜಿಸುವವನ ಕಡೆ ದೃಷ್ಟಿಹಾಕುತ್ತ ಹೇಳುತ್ತಿದ್ದಾರೆ: “ಆಹಾ! ಆಹಾ! ನನಗ ರೋಮಾಂಚನವಾಗುತ್ತಿದೆ.”
ಗಾಯಕ ಕೇಳಿದ: “ದಯವಿಟ್ಟು ಹೇಳಿ, ಯಾವುದನ್ನು ಹಾಡಬೇಕು ಎಂಬುದನ್ನು.” ಶ್ರೀರಾಮಕೃಷ್ಣರು ವಿನಯದಿಂದ ಹೇಳಿದರು: “ಸಾಧ್ಯವಾದರೆ ಗೌರಾಂಗನ ಸಂಬಂಧವಾಗಿ.”
ಸಂಕೀರ್ತನೆ ಆರಂಭವಾಯಿತು. ಅವರು ಶ್ರೀಗೌರಾಂಗನ ಸ್ವರ್ಗೀಯರೂಪದ ಸಂಬಂಧವಾಗಿ ಹಾಡಲಾರಂಭಿಸಿದರು:
ಶ್ರೀಗೌರಾಂಗನ ವದನದ ತೇಜವು
ಚಿನ್ನಕ್ಕಿಂತ ಮಿಗಿಲು
ಕೋಟಿಚಂದ್ರಸಮ ಕಾಂತಿಯು ಸುರಿವುದು
ಅವನು ಒಮ್ಮೆ ನಗಲು!
ಈಗ ಕೀರ್ತನಕಾರ ಆಶುಕವಿತೆಗಳನ್ನು ಮಾಡಿ ಹಾಡುತ್ತಿದ್ದಾನೆ. ಅವರು ಹಾಡುತ್ತಿದ್ದಾರೆ: “ಕಂಡೆ ಸಖಿ, ಕುಂದಿಲ್ಲದ ಕರೆಯಿಲ್ಲದ ಪೂರ್ಣ ಚಂದ್ರಬಿಂಬವ. ಹೃದಯ ದೀಪ್ತ ರೂಪವ!” ಮತ್ತೆ ಕೀರ್ತನಕಾರ ಆಶುಕವಿತೆ ಮಾಡಿ ಹಾಡುತ್ತಿದ್ದಾನೆ: “ಕೋಟಿ ಚಂದ್ರ ಕಾಂತಿಯಿಂದ ರಂಜಿಸುತ್ತಿದೆ ಶ್ರೀಮುಖ!”
ಈ ಮಾತು ಕೇಳಿ ಪರಮಹಂಸರು ಗಾಢಸಮಾಧಿಸ್ಥರಾಗಿಬಿಟ್ಟಿದ್ದಾರೆ. ಕೀರ್ತನೆ ಮುಂದುವರಿಯುತ್ತಲೇ ಇದೆ. ಪರಮಹಂಸರು ಈಗ ಪ್ರಕೃತಿಸ್ಥರಾಗುತ್ತಿದ್ದಾರೆ. ಭಾವದಿಂದ ತುಂಬಿ ತುಳುಕಾಡುತ್ತಾ ಇದ್ದಕ್ಕಿದ್ದ ಹಾಗೆ ನಿಂತುಕೊಂಡಿದ್ದಾರೆ, ಪ್ರೇಮೋನ್ಮತ್ತ ಗೋಪಿಯರ ಹಾಗೆ. ಶ್ರೀಕೃಷ್ಣನ ರೂಪವರ್ಣನೆ ಮಾಡುತ್ತ ಮಾಡುತ್ತ ಕೀರ್ತನಕಾರರೊಡನೆ ಆಶುಕವಿತೆ ಮಾಡಿ ಹಾಡುತ್ತಿದ್ದಾರೆ: “ಯಾರದೇ ಸಖಿ, ದೋಷವಿದು-ಮತ್ತಾರದೇ!” “ಅವನಿಗಾಗಿಯೆ ಮರುಳುಗೊಳ್ಳುವ ತನ್ನ ಮನಸ್ಸಿನ ದೋಷವೋ, ನನ್ನನೀತೆರ ಮರುಳುಗೊಳಿಸುವ ಅವನ ರೂಪದ ದೋಷವೋ?” ಯಾರದೇ ಸಖಿ, ಯಾರದೇ ದೋಷವಿದು ಇನ್ನಾರದೇ? “ಸಕಲ ಭುವನವಿದು ಶ್ಯಾಮಮಯೀ.”
ಪರಮಹಂಸರು ನರ್ತಿಸುತ್ತ ಹಾಡುತ್ತಿದ್ದಾರೆ. ಭಕ್ತರು ಆಶ್ಚರ್ಯಚಕಿತರಾಗಿ ನೋಡುತ್ತಿದ್ದಾರೆ. ಕೀರ್ತನಕಾರ ಗೋಪಿಯರ ಉಕ್ತಿಯನ್ನು ಹಾಡುತ್ತಿದ್ದಾನೆ: “ನಿದ್ದೆ ಬೇಡವೆ ಮುರಳಿ ನುಡಿಯದಿರು ನೀನು!” ಗಾಯಕರಲ್ಲಿ ಒಬ್ಬ ಒಂದು ನುಡಿ ಆಶುಕವಿತೆ ಮಾಡಿ ಹಾಡಲಾರಂಭಿಸಿದ್ದಾನೆ: “ನಿರಂತರವು ಶ್ರೀಕೃಷ್ಣನಧರದಲಿ ಮಲಗಿರಲು, ನಿದ್ರಿಪುದೆಂತೀ ಮುರಳಿ!”
ಪರಮಹಂಸರು ಕುಳಿತುಕೊಂಡಿದ್ದಾರೆ. ಹಾಡುವುದು ಮುಂದುವರಿಯುತ್ತಿದೆ. ಗಾಯಕರು ರಾಧೆಯ ಭಾವವನ್ನು ಆರೋಪಿಸಿಕೊಂಡು ಹಾಡುತ್ತಿದ್ದಾರೆ: ಕೊನೆಗೆ ರಾಧಾಕೃಷ್ಣರ ಮಿಲನ ಕೀರ್ತನೆ ಆರಂಭವಾಯಿತು.
ರಾಧಾಕೃಷ್ಣರ ಮಧುರ ಮಿಲನವಿದೊ ನಿಧುವನದಿ!
ಅನುಪಮ ರೂಪರು, ಅನಂತ ಪ್ರೇಮದ ಮೂರ್ತಿಗಳು
ಕಟ್ಟಕಡೆಯಲಿ ಒಂದಾಗಿರುವರು
ಈ ಅತಿಸುಂದರ ನಿಧುವನದಿ!
ಕನಕ ವರ್ಣದಲಿ ರಂಜಿಸೆ ರಾಧೆ
ನೀಲಮಣಿಯವೊಲು ಹೊಳೆವನು ಕೃಷ್ಣ!
ಒಂದೆಡೆ ತೂಗುತಲಿದೆ ವನಮಾಲೆ
ಮತ್ತೊಂದೆಡೆ ಕಂಠೀಹಾರ;
ಒಂದೆಡೆ ಶೋಭಿಸೆ ಕರ್ಣಕುಂಡಲವು
ಮತ್ತೊಂದೆಡೆ ರನ್ನದ ಬೆಂಡೋಲೆ.
ಒಂದು ಕಪಾಲದಿ ಉಜ್ಜ್ವಲ ಸೂರ್ಯ
ಮತ್ತೊಂದರೊಳು ಮೂಡುವ ಚಂದ್ರ!
ಒಂದೆಡೆ ರಂಜಿಸೆ ಮಯೂರ ಪಿಂಛ
ಮತ್ತೊಂದೆಡೆ ತೂಗುತ್ತಲಿದೆ ಫಣಿವೇಣೀ!
ಓಹೋ ನೋಡಿರೆ, ರಾಧಾಕೃಷ್ಣರ
ಮಧುರ ಮಿಲನವಿದೊ ನಿಧುವನದಿ!
ಕೀರ್ತನೆ ಮುಗಿಯಿತು. ಪರಮಹಂಸರು “ಭಾಗವತ-ಭಕ್ತ-ಭಗವಾನ್” ಎಂದು ಪದೇ ಪದೇ ಹೇಳುತ್ತ ಭಕ್ತರ ಕಡೆಗೆಲ್ಲಾ ತಿರುಗಿ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದಾರೆ. ಈಗ ಕೀರ್ತನೆ ನಡೆದ ಸ್ಥಳದಿಂದ ಧೂಳನ್ನು ತೆಗೆದುಕೊಂಡು ತಮ್ಮ ಹಣೆಗೆ ಹಚ್ಚಿಕೊಳ್ಳುತ್ತಿದ್ದಾರೆ.
ಈಗ ಘಂಟೆ ಸುಮಾರು ರಾತ್ರಿ ಒಂಬತ್ತೂವರೆ, ಸುರೇಂದ್ರ ಪರಮಹಂಸರಿಗೂ ಭಕ್ತರಿಗೂ ತೃಪ್ತಿಯಾಗುವಂತೆ ಊಟಕ್ಕೆ ಬಡಿಸಿದ. ಪರಮಹಂಸರು ಈಗ ದಕ್ಷಿಣೇಶ್ವರಕ್ಕೆ ತೆರಳಬೇಕಾಗಿದೆ. ಅವರು, ಸುರೇಂದ್ರ, ಉಳಿದ ಭಕ್ತರು ದೇವರ ಕೋಣೆಗೆ ಬಂದು ಭಗವತಿ ಅನ್ನಪೂರ್ಣೆಯ ಮುಂದೆ ನಿಂತುಕೊಂಡಿದ್ದಾರೆ.
ಸುರೇಂದ್ರ ಶ್ರೀರಾಮಕೃಷ್ಣರಿಗೆ: “ಆದರೆ ಈ ದಿನ ಭಗವತಿಯ ಸಂಬಂಧವಾಗಿ ಯಾರೂ ಹಾಡಲೇ ಇಲ್ಲವಲ್ಲ.”
ಶ್ರೀರಾಮಕೃಷ್ಣರು ದೇವಿಯ ಪ್ರತಿಮೆ ತೋರಿಸಿ: “ಆಹಾ, ದೇವಿಯ ಮನೆ ಎಷ್ಟು ಚೆನ್ನಾಗಿ ಶೋಭಿಸುತ್ತಿದೆ! ಭಗವತಿಯ ಪ್ರಭೆ ಇಡೀ ಅಂಗಳವನ್ನು ಬೆಳಗುತ್ತಿರುವಂತೆ ತೋರಿಬರುತ್ತಿದೆ. ಈ ವಿಧದ ದರ್ಶನ ಮನಸ್ಸಿಗೆ ಎಷ್ಟು ಆನಂದಕರವಾಗಿದೆ! ಭೋಗೇಚ್ಛೆ, ಶೋಕ ಇವೆಲ್ಲಾ ಸುಮ್ಮನೆ ಕಂಬಿಕೀಳುತ್ತವೆ.”
“ಆಧುನಿಕ ಬ್ರಹ್ಮಜ್ಞಾನಿಗಳು (ಬ್ರಾಹ್ಮಭಕ್ತರು), ‘ಅಚಲಘನ’ ಎಂದು ಹಾಡುತ್ತಾರೆ. ಆದರೆ ಅದು ನನಗೆ ನೀರಸವಾಗಿ ತೋರುತ್ತದೆ. ಆ ರೀತಿಯಾಗಿ ಹಾಡತಕ್ಕವರಿಗೆ ಸಕ್ಕರೆ ಪಾನಕ ದೊರೆತೇ ಇಲ್ಲ ಅಂತ ಕಾಣುತ್ತದೆ. ಜೋನಿ ಬೆಲ್ಲದ ಪಾನಕದಲ್ಲೇ ತೃಪ್ತರಾಗಿಬಿಟ್ಟರೆ ಇನ್ನು ಅವರಿಗೆ ಸಕ್ಕರೆ ಪಾನಕದ ಇಚ್ಛೆಯಾಗುವುದೆಲ್ಲಿ ಬಂತು?
“ಹಾಗೇ ನೋಡಿ, ಈ ವಿಗ್ರಹ ನೋಡಿ ನಿಮಗೆಷ್ಟು ಆನಂದವಾಗುತ್ತಿದೆ. ಆದರೆ ಯಾರು ‘ನಿರಾಕಾರ, ನಿರಾಕಾರ’ ಅನ್ನುತ್ತಾರೋ ಅವರಿಗೆ ಇಂಥಾದ್ದೇನೂ ದೊರೆಯುವುದಿಲ್ಲ. ಅವರಿಗೆ ಒಳಗೂ ಆನಂದವಿಲ್ಲ, ಹೊರಗೂ ಆನಂದವಿಲ್ಲ.”
ಈಗ ಪರಮಹಂಸರು ಭಗವತಿಯ ಸಂಬಂಧವಾಗಿ ಹಾಡಲಾರಂಭಿಸಿದ್ದಾರೆ:
ನಿನ್ನ ನಿತ್ಯಾನಂದದಾಚೆಗೆ ತಳ್ಳದಿರು ನೀನೆನ್ನನು-
ನಿನ್ನ ಪಾದವನಲ್ಲದೀತನು ಬೇರೆ ಏನೂ ಕಾಣನು…..
ಮತ್ತೆ ಹಾಡುತ್ತಿದ್ದಾರೆ:
ನಮೋ ಗೌರಿ ನಾರಾಯಣಿ ಶ್ರೀದುರ್ಗಾಮಾಯಿ
ನಿನ್ನಯ ಕೃಪೆ ಇಲ್ಲದಿರಲು ನಾನು ಕಾಣೆ ತಾಯಿ…….
ಪರಮಹಂಸರು ಮತ್ತೆ ಭಗವತಿಗೆ ಪ್ರಣಾಮ ಮಾಡುತ್ತಿದ್ದಾರೆ. ಮೆಟ್ಟಿಲಿನಿಂದ ಕೆಳಕ್ಕೆ ಇಳಿಯುವಾಗ ರಾಖಾಲನನ್ನು ಕೂಗಿ ಮೆತ್ತಗೆ ಹೇಳುತ್ತಿದ್ದಾರೆ: “ಏನು, ಮೆಟ್ಟು ಇವೆಯೋ ಅಥವಾ ಯಾರಾದರೂ ಹಾರಿಸಿಬಿಟ್ಟಿದ್ದಾರೊ?”
ಪರಮಹಂಸರು ಗಾಡಿಗೆ ಹತ್ತಿ ಕುಳಿತುಕೊಂಡರು. ಸುರೇಂದ್ರ ಮತ್ತು ಉಳಿದ ಭಕ್ತರು ಅವರಿಗೆ ಪ್ರಣಾಮ ಮಾಡುತ್ತಿದ್ದಾರೆ. ಇನ್ನೂ ಚಂದ್ರನ ಬೆಳಕಿದೆ. ಗಾಡಿ ದಕ್ಷಿಣೇಶ್ವರದ ಕಡೆಗೆ ಹೊರಟಿತು.
1. ಒಮ್ಮೆಗೇ ಮಥುರೆಗೆ ಹೊರಟುಹೋಗಲು ಶ್ರೀಕೃಷ್ಣ ಅಕ್ರೂರನೊಡನೆ ರಥ ಹತ್ತಿದಾಗ ಗೋಪಿಯರು ರಥದ ಚಕ್ರಗಳನ್ನು ಬಿಗಿದಪ್ಪಿ ಅದು ಚಲಿಸಲು ಬಿಟ್ಟುಕೊಡಲಿಲ್ಲ