೧೮ನೆ ಫೆಬ್ರುವರಿ ೧೮೮೩, ಮಾಘ ಶುಕ್ಲ ದ್ವಾದಶಿ, ಭಾನುವಾರ
ಶ್ರೀರಾಮಕೃಷ್ಣ ಪರಮಹಂಸರು ಕಲ್ಕತ್ತದ ಹತ್ತಿರವಿರುವ ಬೇಲಘರದ ಗೋವಿಂದ ಮುಖ್ಯೋಪಾಧ್ಯಾಯನ ಮನೆಗೆ ಬಂದಿದ್ದಾರೆ. ನರೇಂದ್ರ, ರಾಮ ಇವರೇ ಮೊದಲಾದ ಭಕ್ತರೂ ಅಲ್ಲದೆ ಗೋವಿಂದನ ನೆರೆಹೊರೆಯವರೂ ಬಂದು ಸೇರಿದ್ದಾರೆ. ಇಲ್ಲಿಗೆ ಬಂದ ಸ್ವಲ್ಪ ಹೊತ್ತಿನ ಮೇಲೆ ಪರಮಹಂಸರು ನರೇಂದ್ರನೇ ಮೊದಲಾದವರೊಡನೆ ಹಾಡುತ್ತ ನರ್ತನ ಮಾಡಿದರು. ಕೀರ್ತನೆ ಮುಗಿದ ನಂತರ ಎಲ್ಲರೂ ಕುಳಿತುಕೊಂಡಿದ್ದಾರೆ. ಈಗ ಅನೇಕರು ಒಬ್ಬೊಬ್ಬರಾಗಿ ಎದ್ದು ಬಂದು ಪರಮಹಂಸರಿಗೆ ಪ್ರಣಾಮ ಮಾಡುತ್ತಿದ್ದಾರೆ. ಪರಮಹಂಸರು ಹೇಳುತ್ತಿದ್ದಾರೆ: “ನನಗೇಕೆ? ಭಗವಂತನಿಗೆ ಪ್ರಣಾಮಮಾಡಿ.”
ಪರಮಹಂಸರು ಮತ್ತೆ ಈಗ ಹೇಳುತ್ತಿದ್ದಾರೆ: “ಭಗವಂತನೇ ಎಲ್ಲವೂ ಆಗಿದ್ದಾನೆ. ಆದರೆ ಕೆಲವು ವಸ್ತುಗಳಲ್ಲಿ ಮಾತ್ರ ವಿಶೇಷವಾಗಿ ವ್ಯಕ್ತನಾಗಿದ್ದಾನೆ. ಉದಾಹರಣೆಗೆ ಸಾಧುಗಳಲ್ಲಿ. ಹಾಗಾದರೆ ದುಷ್ಟರಿದ್ದಾರಲ್ಲ, ಹುಲಿಸಿಂಹಗಳಿವೆಯಲ್ಲ ಎಂಬುದಾಗಿ ನೀನು ಕೇಳಬಹುದು. ಹೌದು, ನಿಜ. ಆದರೆ ‘ಹುಲಿ ಭಗವಂತ’ ನನ್ನು ಆಲಿಂಗನ ಮಾಡಿಕೊಳ್ಳಲು ಯತ್ನಿಸಬಾರದು. ದೂರದಿಂದಲೇ ಅದಕ್ಕೆ ಪ್ರಣಾಮಮಾಡಿ ಹೊರಟುಬಂದುಬಿಡಬೇಕು. ಉದಾಹರಣೆಗೆ ನೀರನ್ನು ತೆಗೆದುಕೊ. ಕೆಲವು ನೀರನ್ನು ಕುಡಿಯಬಹುದು. ಇನ್ನು ಕೆಲವನ್ನು ಪೂಜೆಗೆ ಉಪಯೋಗಿಸಬಹುದು. ಮತ್ತೆ ಕೆಲವನ್ನು ಸ್ನಾನಕ್ಕೆ ಉಪಯೋಗಿಸಬಹುದು. ಮತ್ತೂ ಕೆಲವನ್ನು ಮುಸುರೆ ತಿಕ್ಕಲು ಮಾತ್ರ ಉಪಯೋಗಿಸಬಹುದು.”
ಒಬ್ಬ ನೆರೆಯವ: “ವೇದಾಂತಮತ ಏನು ಹೇಳುತ್ತದೆ?”
ಶ್ರೀರಾಮಕೃಷ್ಣರು: “ವೇದಾಂತವಾದಿಗಳು ಹೇಳುತ್ತಾರೆ, ‘ಸೋಽಹಮ್’, ಎಂದರೆ ‘ನಾನೇ ಭಗವಂತ.’ ಬ್ರಹ್ಮ ಸತ್ಯಂ, ಜಗನ್ಮಿಥ್ಯಾ. ‘ನಾನು’ ಎಂಬುದೂ ಮಿಥ್ಯಾ. ಕೇವಲ ಆ ಪರಬ್ರಹ್ಮ ಮಾತ್ರ ಸತ್ಯ
“ಆದರೆ ‘ಅಹಂ’ ಎಂಬುದು ಹೋಗುವುದಿಲ್ಲವಾದ್ದರಿಂದ, ‘ನಾನು ಭಗವಂತನ ದಾಸ, ಭಗವಂತನ ಪುತ್ರ, ಭಗವಂತನ ಭಕ್ತ’ ಎಂಬ ಭಾವ ಬಹಳ ಒಳ್ಳೆಯದು.
“ಕಲಿಯುಗಕ್ಕೆ ಭಕ್ತಿಯೋಗವೇ ಶ್ರೇಯಸ್ಕರವಾದ್ದು. ಭಕ್ತಿಯಿಂದಲೇ ಆತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು. ದೇಹಬುದ್ಧಿ ಇತ್ತು ಎಂದರೆ, ವಿಷಯಬುದ್ಧಿ ಇದ್ದೇ ಇರುತ್ತದೆ. ರೂಪ, ರಸ, ಗಂಧ, ಸ್ಪರ್ಶ, ಶಬ್ದ-ಇವು ವಿಷಯಗಳು. ವಿಷಯಬುದ್ಧಿ ಹೋಗಬೇಕಾದರೆ ಬಹಳ ಕಷ್ಟ. ವಿಷಯಬುದ್ಧಿ ಇರುವವರೆಗೆ ‘ಸೋಽಹಮ್’ ಭಾವ ಉಂಟಾಗದು.
“ತ್ಯಾಗಿಗಳಿಗೆ ವಿಷಯಬುದ್ಧಿ ಬಹಳ ಕಡಮೆ. ಸಂಸಾರಿಗಳು ಸರ್ವದಾ ವಿಷಯ ಚಿಂತನೆಯಲ್ಲಿಯೇ ನಿರತರಾಗಿರುತ್ತಾರೆ. ಆದ್ದರಿಂದ ಅವರಿಗೆ ‘ದಾಸೋಽಹಮ್’ ಭಾವ.”
ನೆರೆಯವ: “ನಾವು ಪಾಪಿಗಳು. ನಮಗೇನು ಗತಿ?”
ಶ್ರೀರಾಮಕೃಷ್ಣರು: “ಭಗವಂತನ ನಾಮಗುಣಕೀರ್ತನೆ ಮಾಡಿದ್ದೇ ಆದರೆ ದೇಹಕ್ಕೆ ಸಂಬಂಧಪಟ್ಟ ಪಾಪಗಳೆಲ್ಲಾ ಕಾಲಿಗೆ ಬುದ್ಧಿ ಹೇಳುತ್ತವೆ. ದೇಹವೆಂಬ ವೃಕ್ಷದಲ್ಲಿ ಪಾಪವೆಂಬ ಹಕ್ಕಿಗಳು ಕುಳಿತುಕೊಳ್ಳುತ್ತವೆ. ಭಗವಂತನ ನಾಮಗುಣಕೀರ್ತನೆ ಮಾಡುವುದೇ ಕೈಚಪ್ಪಾಳೆ ಹೊಡೆದ ಹಾಗೆ. ಕೈಚಪ್ಪಾಳೆ ಹಾಕಿದೊಡನೆಯೇ ಮರದಿಂದ ಎಲ್ಲಾ ಹಕ್ಕಿಗಳು ಓಡಿ ಹೋಗುವ ಹಾಗೆ, ಭಗವಂತನ ನಾಮಗುಣಕೀರ್ತನೆ ಮಾಡಿದೊಡನೆಯೇ ಎಲ್ಲಾ ಪಾಪಗಳೂ ಕಂಬಿಕೀಳುತ್ತವೆ.
“ಮತ್ತೆ ನೋಡು, ಹುಲ್ಲುಗಾವಲಿನಲ್ಲಿ ತೆಗೆದಿರುವ ಕುಂಟೆಯ ನೀರು ಸೂರ್ಯನ ತಾಪದಿಂದ ತನ್ನಷ್ಟಕ್ಕೆ ತಾನೇ ಇಂಗಿಹೋಗಿಬಿಡುತ್ತದೆ. ಅದೇ ರೀತಿಯಾಗಿ ಪಾಪ-ಪುಷ್ಕರಣಿಯ ನೀರು ಭಗವಂತನ ನಾಮಗುಣಕೀರ್ತನೆಯಿಂದ ತನ್ನಷ್ಟಕ್ಕೆ ತಾನೇ ಇಂಗಿಹೋಗಿಬಿಡುತ್ತದೆ.
“ಪ್ರತಿದಿನವೂ ಅಭ್ಯಾಸಮಾಡುತ್ತಿರಬೇಕು. ಅಂದು ಸರ್ಕಸ್ಸಿಗೆ ಹೋಗಿದ್ದೆ. ಅಲ್ಲಿ ನೋಡಿ ಬಂದೆ, ಒಂದು ಕುದುರೆ ಬಹಳ ವೇಗವಾಗಿ ಓಡುತ್ತಿದ್ದುದನ್ನು ಮತ್ತು ಅದರ ಮೇಲೆ ಒಬ್ಬ ಇಂಗ್ಲೀಷು ಮಹಿಳೆ ಒಂಟಿಕಾಲಿನಲ್ಲಿ ನಿಂತುಕೊಂಡಿರುತ್ತಿದ್ದುದನ್ನು. ಹಾಗೆ ಮಾಡಬೇಕಾದರೆ ಆಕೆ ಎಷ್ಟು ಕಾಲ ಅಭ್ಯಾಸಮಾಡಿರಬೇಕು!
“ಹೋಗಲಿ, ಭಗವಂತನ ದರ್ಶನ ಬೇಕೆಂದು ಒಮ್ಮೆಯಾದರೂ ಅಳು.
“ಇವೆರಡೂ ಅದಕ್ಕೆ ಸಾಧನ: ಅಭ್ಯಾಸ ಮತ್ತು ಅನುರಾಗ, ಅಂದರೆ ಆತನ ದರ್ಶನ ಪಡೆಯಬೇಕೆಂಬ ವ್ಯಾಕುಲತೆ.”
ಘಂಟೆ ಅಪರಾಹ್ನ ಒಂದು. ಪರಮಹಂಸರು ಭಕ್ತರೊಡನೆ ಊಟಕ್ಕೆ ಕುಳಿತುಕೊಂಡಿದ್ದಾರೆ. ಒಬ್ಬ ಕೆಳಗಿನ ಪ್ರಾಂಗಣದಲ್ಲಿ ಹಾಡುತ್ತಿದ್ದಾನೆ:
ಏಳು ತಾಯಿ, ಏಳು ತಾಯಿ, ಎಷ್ಟು ಕಾಲ ನಿದ್ದೆಗೈವೆ
ಮೂಲಾಧಾರಪದ್ಮದಿ!
ಏಳು ತಾಯಿ ಶಿವನಿರುವಾ ಸಾವಿರದಳ ಕಮಲವರಳ-
ಲೆನ್ನ ಶಿರೋಮಧ್ಯದಿ!
ಷಟ್ಚಕ್ರವ ಭೇದಿಸಮ್ಮ
ಮನದ ವ್ಯಥೆಯ ನೀಗಿಸಮ್ಮ
ಓ ಚೇತನ ರೂಪಿಣಿ!
ಈ ಹಾಡನ್ನು ಕೇಳಿ ಪರಮಹಂಸರು ಸಮಾಧಿಸ್ಥರಾಗಿಬಿಟ್ಟರು. ಇಡೀ ಶರೀರ ಸ್ಥಿರವಾಗಿಬಿಟ್ಟಿದೆ. ಕೈ ಎಲೆಯ ಮುಂದೆ ಇಟ್ಟದ್ದು ಇಟ್ಟ ಹಾಗೇ ನಿಂತಿದೆ. ಊಟಮಾಡುವುದು ನಿಂತುಹೋಗಿಬಿಟ್ಟಿತು. ಬಹಳ ಹೊತ್ತಾದ ನಂತರ ಕಿಂಚಿತ್ ಪ್ರಕೃತಿಸ್ಥರಾಗಿ ಹೇಳುತ್ತಿದ್ದಾರೆ: “ನಾನು ಕೆಳಕ್ಕೆ ಇಳಿದುಹೋಗಬೇಕು, ನಾನು ಕೆಳಕ್ಕೆ ಇಳಿದುಹೋಗಬೇಕು.” ಒಬ್ಬ ಭಕ್ತ ಅವರನ್ನು ಬಹಳ ಎಚ್ಚರಿಕೆಯಿಂದ ಕೆಳಕ್ಕೆ ಇಳಿಸಿಕೊಂಡು ಹೋಗುತ್ತಿದ್ದಾನೆ. ಇನ್ನೂ ಭಾವಾವಿಷ್ಟರಾಗಿಯೇ ಗಾಯಕನ ಹತ್ತಿರ ಹೋಗಿ ಕುಳಿತುಕೊಂಡರು. ಅಷ್ಟರಲ್ಲಿ ಹಾಡೂ ಮುಗಿಯಿತು. ಪರಮಹಂಸರು ಆತನನ್ನು ವಿನಯದಿಂದ ಕೇಳಿಕೊಳ್ಳುತ್ತಿದ್ದಾರೆ: “ಬಾಬು, ಮತ್ತೊಮ್ಮೆ ಭಗವತಿಯ ಹಾಡು ಕೇಳಬೇಕೆಂದಿದ್ದೇನೆ.”
ಗಾಯಕ ಹಾಡಲಾರಂಭಿಸಿದ:
ಏಳು ತಾಯಿ, ಏಳು ತಾಯಿ, ಎಷ್ಟು ಕಾಲ ನಿದ್ದೆಗೈವೆ
ಮೂಲಾಧಾರ ಪದ್ಮದಿ!…….
ಹಾಡನ್ನು ಕೇಳುತ್ತ ಕೇಳುತ್ತಲೇ ಪರಮಹಂಸರು ಮತ್ತೆ ಸಮಾಧಿಸ್ಥರಾಗಿಬಿಟ್ಟರು.
೨೫ನೆ ಫೆಬ್ರುವರಿ ೧೮೮೩, ಭಾನುವಾರ
ಮಧ್ಯಾಹ್ನದ ಊಟವಾದನಂತರ ಪರಮಹಂಸರು ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ. ರಾಮ, ಕೇದಾರ, ನಿತ್ಯಗೋಪಾಲ, ಮಾಸ್ಟರ್ ಮತ್ತು ಇನ್ನೂ ಕೆಲವರು ಕಲ್ಕತ್ತದಿಂದ ಬಂದಿದ್ದಾರೆ. ರಾಖಾಲ, ಹರೀಶ, ಲಾಟು, ಹಾಜರಾ ಈಗ ಸ್ವಲ್ಪ ಕಾಲದಿಂದ ಪರಮಹಂಸರೊಡನೆಯೇ ಇದ್ದಾರೆ. ವಿಶ್ವವಿದ್ಯಾನಿಲಯದ ನಾಲ್ಕು ಡಿಗ್ರಿಗಳನ್ನು ಪಡೆದುಕೊಂಡು ಸರ್ಕಾರದ ಹುದ್ದೆಯಲ್ಲಿರುವ ಚೌಧುರಿಯೂ ಬಂದಿದ್ದಾನೆ. ಆತ ಸ್ವಲ್ಪ ಕಾಲದ ಹಿಂದೆ ಪತ್ನಿಯನ್ನು ಕಳೆದುಕೊಂಡದ್ದರಿಂದ ಶಾಂತಿಗಾಗಿ ಆಗಾಗ ಪರಮಹಂಸರ ದರ್ಶನಕ್ಕೆ ಬರುತ್ತಿದ್ದಾನೆ.
ಶ್ರೀರಾಮಕೃಷ್ಣರು ರಾಮ ಮತ್ತು ಉಳಿದ ಭಕ್ತರಿಗೆ: “ರಾಖಾಲ, ನರೇಂದ್ರ, ಭವನಾಥ ಇವರು ನಿತ್ಯಸಿದ್ಧರು. ಹುಟ್ಟಿದಂದಿನಿಂದಲೂ ಆತ್ಮಜಾಗ್ರತಿಯುಳ್ಳವರಾಗಿದ್ದಾರೆ. ಲೋಕಶಿಕ್ಷಣಕ್ಕಾಗಿಯೆ ಜನ್ಮಧಾರಣೆ ಮಾಡಿದ್ದಾರೆ.
“ಕೃಪಾಸಿದ್ಧರು ಎಂಬ ಹೆಸರಿನ ಇನ್ನೊಂದು ಗುಂಪಿನವರಿದ್ದಾರೆ. ಅವರಿಗೆ ಇದ್ದಕ್ಕಿದ್ದ ಹಾಗೆ ಭಗವಂತನ ಕೃಪೆ ದೊರೆತು ಆತನ ದರ್ಶನ ದೊರೆತು ಜ್ಞಾನ ದೊರೆತುಬಿಡುತ್ತದೆ. ಉದಾಹರಣೆಗೆ ಸಾವಿರಾರು ವರ್ಷಗಳಿಂದ ಕತ್ತಲೆ ತುಂಬಿಕೊಂಡಿದ್ದ ಕೋಣೆಯನ್ನು ತೆಗೆದುಕೊಳ್ಳಿ. ಅಲ್ಲಿಗೆ ಬೆಳಕು ತೆಗೆದುಕೊಂಡು ಹೋದರೆ, ಅದು ಒಡನೆಯೇ ಬೆಳಗಲಾರಂಭಿಸುತ್ತದೆ ವಿನಾ ಕಿಂಚಿತ್ ಕಿಂಚಿತ್ತಾಗಿ ಅಲ್ಲ.
“ಯಾರು ಸಂಸಾರಿಗಳೊ ಅವರು ಸಾಧನೆಯಲ್ಲಿ ತೊಡಗಬೇಕು. ನಿರ್ಜನಪ್ರದೇಶದಲ್ಲಿ ಹೋಗಿ ವ್ಯಾಕುಲಹೃದಯದಿಂದ ಭಗವಂತನನ್ನು ಕರೆಯಬೇಕು. (ಚೌಧುರಿಗೆ) ಪಾಂಡಿತ್ಯದಿಂದ ಅವರ ಸಾಕ್ಷಾತ್ಕಾರವನ್ನು ಪಡೆಯಲಾಗುವುದಿಲ್ಲ. ವಿಚಾರದ ಮೂಲಕ ಯಾರು ತಾನೆ ಆತನ ಆದ್ಯಂತವನ್ನು ಅರಿತುಕೊಳ್ಳಬಲ್ಲರು? ಯಾವುದರಿಂದ ಆತನ ಪಾದಪದ್ಮಗಳಲ್ಲಿ ಭಕ್ತಿಯುಂಟಾಗುವುದೊ ಅದಕ್ಕಾಗಿ ಎಲ್ಲರೂ ಪ್ರಯತ್ನಮಾಡಬೇಕು.
“ಆತನ ಐಶ್ವರ್ಯ ಅನಂತವಾದ್ದು. ಎಷ್ಟು ಅಂತ ಅರಿತುಕೊಳ್ಳಲಾದೀತು? ಆತನ ಕಾರ್ಯವನ್ನು ಎಂದಿಗಾದರೂ ಅರಿತುಕೊಳ್ಳಲು ಸಾಧ್ಯವಾದೀತೆ?
“ಭೀಷ್ಮದೇವ ಸಾಕ್ಷಾತ್ ಅಷ್ಟವಸುಗಳಲ್ಲಿ ಒಬ್ಬ. ಆತನೂ ಶರಶಯ್ಯೆಯಲ್ಲಿ ಮಲಗಿ ಅಳಲಾರಂಭಿಸಿದ. ಆತ ಹೇಳಿದ: ‘ಏನಾಶ್ಚರ್ಯ ಇದು! ಪಾಂಡವರೊಡನೆ ಸರ್ವದಾ ಸಾಕ್ಷಾತ್ ಭಗವಂತನೇ ಇದ್ದಾನೆ. ಆದರೂ ಅವರ ದುಃಖ ವಿಪತ್ತುಗಳಿಗೆ ಕೊನೆಯೇ ಇಲ್ಲವಲ್ಲಾ!’ ಭಗವಂತನ ಕಾರ್ಯವನ್ನು ಯಾರು ತಾನೆ ಅರಿತುಕೊಳ್ಳಬಲ್ಲರು?
“ಕೆಲವರು ಭಾವಿಸುತ್ತಾರೆ: ‘ನಾವು ಸಾಧನೆ ಭಜನೆ ಮಾಡಿಬಿಟ್ಟಿದ್ದೇವೆ. ನಾವು ಕೃತಾರ್ಥರಾಗಿಬಿಟ್ಟೆವು.’ ಆದರೆ ಸೋಲು ಗೆಲುವು ಎಲ್ಲವೂ ಆತನ ಕೈಯಲ್ಲಿ. ಇಲ್ಲಿ ಒಬ್ಬ ವೇಶ್ಯೆ ಕೊನೆಯ ಉಸಿರಿನವರೆಗೂ ಪೂರ್ಣ ಪ್ರಜ್ಞೆಯಿಂದಿದ್ದು ಗಂಗಾಪ್ರಾಪ್ತಿಯನ್ನು ಹೊಂದಿದಳು.”
ಚೌಧುರಿ: “ಭಗವದ್ದರ್ಶನ ಪಡೆಯುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಈ ಕಣ್ಣುಗಳಿಂದ ಆತನನ್ನು ನೋಡಲಾಗುವುದಿಲ್ಲ. ಆತ ದಿವ್ಯ ಚಕ್ಷು ಕೊಡುತ್ತಾನೆ; ಆಗ ಮಾತ್ರವೇ ನೋಡಬಹುದು. ಭಗವಂತ ತನ್ನ ವಿಶ್ವರೂಪವನ್ನು ಅರ್ಜುನನಿಗೆ ತೋರಿಸಲೋಸುಗ ಆತನಿಗೆ ದಿವ್ಯಚಕ್ಷು ಕೊಟ್ಟ.
“ನಿಮ್ಮ ತತ್ತ್ವಶಾಸ್ತ್ರ ಕೇವಲ ಊಹಾಪೋಹದಿಂದ ತುಂಬಿದೆ. ಕೇವಲ ವಿಚಾರದಲ್ಲೇ ತೊಡಗಿರುತ್ತದೆ. ಹಾಗೆ ಮಾಡುವುದರಿಂದ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲಾಗುವುದಿಲ್ಲ.
“ರಾಗಾಭಕ್ತಿ, ಅಂದರೆ ಅನುರಾಗಸಹಿತವಾದ ಭಕ್ತಿ ಉಂಟಾಯಿತು ಎಂದರೆ ಭಗವಂತನ ಹೃದಯ ಸುಮ್ಮನೆ ಇರಲಾರದು. ತನ್ನ ಭಕ್ತರ ಭಕ್ತಿ ಕಂಡರೆ ಆತನಿಗೆ ಎಷ್ಟು ಪ್ರೀತಿ ಗೊತ್ತೆ? ಹಸುವಿಗೆ ಹಿಂಡಿಯೊಡನೆ ನೆನೆಸಿದ ನೆಲ್ಲುಹುಲ್ಲು ಕಂಡರೆ ಎಷ್ಟು ಪ್ರೀತಿಯೋ ಅಷ್ಟು. ಅದು ‘ಗಬ ಗಬ’, ಅಂತ ತಿಂದುಬಿಡುತ್ತದೆ.
“ರಾಗಾಭಕ್ತಿ ಎಂಬುದು ಶುದ್ಧಭಕ್ತಿ, ಅಹೇತುಕ ಭಕ್ತಿ. ಉದಾಹರಣೆಗೆ ಪ್ರಹ್ಲಾದನದು.
“ಒಂದು ಪಕ್ಷ ನೀನು ಒಬ್ಬ ದೊಡ್ಡ ಧನಿಕನ ಹತ್ತಿರಕ್ಕೆ ದಿವಸವೂ ಹೋಗುತ್ತಿದ್ದೀಯೆ, ಆದರೆ ಅವನಿಂದ ಮಾತ್ರ ಏನನ್ನೂ ಅಪೇಕ್ಷಿಸುತ್ತಿಲ್ಲ, ಸುಮ್ಮನೆ ಆತನ ದರ್ಶನ ಪಡೆಯಲು ಮಾತ್ರ ಹೋಗುತ್ತಿದ್ದೀಯೆ ಅಂತ ಇಟ್ಟುಕೊ. ಆತನೇನಾದರೂ ನಿನಗೆ ಉಪಕಾರ ಮಾಡಲು ಮುಂದೆ ಬಂದರೆ ನೀನು ಹೇಳುತ್ತೀಯೆ: ‘ದಯವಿಟ್ಟು ಕಷ್ಟ ತೆಗೆದುಕೊಳ್ಳಬೇಡಿ. ನನಗೇನೂ ಬೇಕಾಗಿಲ್ಲ. ತಮ್ಮ ದರ್ಶನ ಪಡೆಯಲು ಮಾತ್ರ ಬಂದಿದ್ದೇನೆ.’ ಇದಕ್ಕೇ ಅಹೇತುಕಭಕ್ತಿ ಅಂತ ಹೆಸರು. ನಿನಗೆ ಭಗವಂತನಿಂದ ಏನೂ ಬೇಕಾಗಿಲ್ಲ. ಸುಮ್ಮನೆ ನೀನು ಆತನನ್ನು ಪ್ರೀತಿಸುತ್ತೀಯೆ.”
ಹೀಗೆಂದು ಹೇಳಿ ಪರಮಹಂಸರು ಹಾಡಲಾರಂಭಿಸಿದರು:
ಮುಕ್ತಿಪದವನು ನೀಡಲೆನಗೆ ಮನವಿದ್ದರೂ
ಶುದ್ಧಭಕ್ತಿಯ ಕೊಡಲು ಹಿಂಜರಿವೆನು.
ಪರಿಶುದ್ಧ ಪ್ರೇಮವನು ಪಡೆದ ಆ ಜಗವಂದ್ಯ
ಮೂರು ಲೋಕವ ಮೆಟ್ಟಿ ನಿಲ್ಲುವವನು!……
ಪರಮಹಂಸರು ಮಾತು ಮುಂದುವರಿಸುತ್ತಿದ್ದಾರೆ: “ಮುಖ್ಯವಾಗಿ ಭಗವಂತನಲ್ಲಿ ರಾಗಾಭಕ್ತಿ ಬೆಳೆಸಿಕೊಳ್ಳಬೇಕು. ವಿವೇಕವೈರಾಗ್ಯಗಳನ್ನು ಅಭಿವೃದ್ಧಿಗೊಳಿಸಬೇಕು.”
ಚೌಧುರಿ: “ಮಹಾಶಯರೆ, ಗುರುವಿಲ್ಲದೆ ಭಗವಂತನ ಸಾಕ್ಷಾತ್ಕಾರ ದೊರೆಯುವುದಿಲ್ಲವೆ?”
ಶ್ರೀರಾಮಕೃಷ್ಣರು: “ಸಚ್ಚಿದಾನಂದನೇ ಗುರು. ಶವಸಾಧನೆ ಮಾಡಿ ಇನ್ನೇನು ಇಷ್ಟ ದರ್ಶನವಾಗುತ್ತದೆ ಎನ್ನುವಾಗ ಗುರು ಕಾಣಿಸಿಕೊಂಡು ಸಾಧಕನಿಗೆ ಹೇಳುತ್ತಾನೆ: ‘ನೋಡಲ್ಲಿ! ನಿನ್ನಿಷ್ಟದೇವರನ್ನು ನೋಡಲ್ಲಿ.’ ಬಳಿಕ ಗುರು ಇಷ್ಟದೇವನಲ್ಲಿ ಲೀನನಾಗಿ ಬಿಡುತ್ತಾನೆ. ಯಾರು ಗುರುವೋ ಆತನೇ ಇಷ್ಟದೇವ. ಗುರು ಭಗವಂತನಿಗೆ ಕೊಂಡೊಯ್ಯುವ ದಾರ. ಹೆಂಗಸರು ಅನಂತನ ವ್ರತ ಆಚರಿಸುತ್ತಾರೆ. ಆದರೆ ಅವರು ಪೂಜೆ ಮಾಡುವುದು ವಿಷ್ಣುವನ್ನು. ಆತನ ಮೂಲಕವೇ ಭಗವಂತನ ಅನಂತತೆಯನ್ನು ಪೂಜೆ ಮಾಡುತ್ತಾರೆ.
(ರಾಮ ಮತ್ತು ಉಳಿದ ಭಕ್ತರಿಗೆ) “ಯಾವ ಮೂರ್ತಿಯ ಮೇಲೆ ಧ್ಯಾನ ಮಾಡಬೇಕು ಎಂಬುದಾಗಿ ನೀವು ಕೇಳುವುದಾದರೆ, ನನ್ನ ಉತ್ತರ: ‘ಯಾವ ಮೂರ್ತಿ ನಿಮಗೆ ಹಿಡಿಸುತ್ತದೊ ಅದರ ಮೇಲೆ’ ; ಆದರೆ ಎಲ್ಲಾ ಮೂರ್ತಿಗಳೂ ಒಂದೇ ಭಗವಂತನ ವಿವಿಧ ರೂಪ ಎಂಬುದನ್ನು ಮಾತ್ರ ಚೆನ್ನಾಗಿ ಮನಸ್ಸಿಗೆ ಒತ್ತಿ ತಿಳಿಸಿ.
“ಯಾರ ಮೇಲೂ ದ್ವೇಷ ಇಟ್ಟುಕೊಂಡಿರಕೂಡದು. ಶಿವ, ಕಾಳಿ, ಹರಿ ಎಲ್ಲರೂ ಒಂದೇ ಭಗವಂತನ ಭಿನ್ನ ಭಿನ್ನ ರೂಪ ಮಾತ್ರ. ಇದನ್ನು ಯಾರು ಅರಿತುಕೊಂಡಿದ್ದಾನೊ ಆತನೇ ಧನ್ಯ.
ಹೊರಗೆ ಶೈವ ಒಳಗೆ ಶಾಕ್ತ;
ಮುಖದಿ ಹರಿಯ ನುತಿಪನು!
“ಒಂದು ಕಿಂಚಿತ್ತೂ ಕಾಮಕ್ರೋಧಾದಿಗಳು ಇಲ್ಲದೆ ಇದ್ದುವು ಎಂದರೆ ಶರೀರ ಬದುಕಿರದು. ಆದ್ದರಿಂದ ಅವು ಕೇವಲ ಕನಿಷ್ಠಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು.”
ಕೇದಾರನ ಕಡೆ ನೋಡಿ ಪರಮಹಂಸರು ಹೇಳುತ್ತಿದ್ದಾರೆ: “ಈತ ಸರಿ. ನಿತ್ಯವನ್ನೂ ಒಪ್ಪುತ್ತಾನೆ. ಲೀಲೆಯನ್ನೂ ಒಪ್ಪುತ್ತಾನೆ. ಈತ ಬ್ರಹ್ಮನನ್ನು ಒಪ್ಪಿಕೊಳ್ಳುವುದೇ ಅಲ್ಲದೆ ದೇವಲೀಲೆ, ಮಾನುಷಲೀಲೆಗಳನ್ನು ಕೂಡ!”
ಕೇದಾರನ ದೃಷ್ಟಿಯಿಂದ ರಾಮಕೃಷ್ಣ ಪರಮಹಂಸರು ಅಂಥ ಒಂದು ಅವತಾರ.
ನಿತ್ಯಗೋಪಾಲನ ಕಡೆ ದೃಷ್ಟಿ ಹಾಕಿ ಪರಮಹಂಸರು ಹೇಳುತ್ತಿದ್ದಾರೆ: “ಈತ ಬಹಳ ಉನ್ನತ ಅವಸ್ಥೆಯಲ್ಲಿದ್ದಾನೆ.
(ನಿತ್ಯಗೋಪಾಲನಿಗೆ) “ನೀನು ಅಲ್ಲಿಗೆ ಬಹಳವಾಗಿ ಹೋಗಬೇಡ. ಬೇಕಾದರೆ ಅಪರೂಪಕ್ಕೆ ಒಮ್ಮೆ ಹೋಗು. ಭಕ್ತೆಯಾಗಿರಬಹುದು, ಆದರೆ ಆಕೆ ಹೆಂಗಸು ಎಂಬುದನ್ನು ಮರೆಯಬೇಡ. ಆದ್ದರಿಂದ ಎಚ್ಚರಿಕೆ!
“ಸಂನ್ಯಾಸಿಗಳಿಗೆ ಬಹಳ ಕಠಿಣ ನಿಯಮ. ಹೆಂಗಸರ ಚಿತ್ರಪಟ ಕೂಡ ನೋಡಕೂಡದು. ಆದರೆ ಇದು ಸಂಸಾರಿಗಳಿಗಲ್ಲ. ಹೆಂಗಸರು ಒಳ್ಳೆ ದೊಡ್ಡ ಭಕ್ತೆಯಾಗಿದ್ದರೂ ಸಾಧಕ ಆಕೆಯೊಡನೆ ಬೆರೆಯಕೂಡದು. ಜಿತೇಂದ್ರಿಯನಾಗಿದ್ದರೂ ಲೋಕಶಿಕ್ಷಣಾರ್ಥವಾಗಿ ಸಂನ್ಯಾಸಿ ಹಾಗೆ ವರ್ತಿಸಬೇಕಾಗುತ್ತದೆ.
“ಸಂನ್ಯಾಸಿಯ ನೂರಕ್ಕೆ ನೂರು ಭಾಗ ತ್ಯಾಗ ಕಣ್ಣಿಗೆ ಬಿದ್ದರೆ ತಾನೆ ಸಂಸಾರಿಗಳು ತ್ಯಾಗಿಗಳಾಗಲು ಪ್ರಯತ್ನಿಸುತ್ತಾರೆ; ಇಲ್ಲದಿದ್ದರೆ ಅವರು ಇನ್ನೂ ಆಳಕ್ಕೆ ಮುಳುಗಿ ಬಿಡುತ್ತಾರೆ. ಸಂನ್ಯಾಸಿ ಜಗದ್ಗುರು.”
೯ನೆ ಮಾರ್ಚ್ ೧೮೮೩, ಮಾಘ ಅಮಾವಾಸ್ಯೆ, ಶುಕ್ರವಾರ
ಪರಮಹಂಸರು ತಮ್ಮ ಕೊಠಡಿಯಲ್ಲಿ ರಾಖಾಲ, ಮಾಸ್ಟರ್ ಮೊದಲಾದ ಕೆಲವು ಮಂದಿ ಭಕ್ತರೊಡನೆ ಕುಳಿತುಕೊಂಡಿದ್ದಾರೆ. ಘಂಟೆ ಸುಮಾರು ಬೆಳಗಿನ ಒಂಬತ್ತು ಇರಬೇಕು. ಇಂದು ಅಮಾವಾಸ್ಯೆ. ಅವರಿಗೆ ಅಮಾವಾಸ್ಯೆಯ ದಿನ ಸರ್ವದಾ ಜಗನ್ಮಾತೆಯ ಉದ್ದೀಪನ ಆಗುತ್ತಿರುತ್ತದೆ. ಆದ್ದರಿಂದ ಇಂದೂ ಮತ್ತೆ ಮತ್ತೆ ಭಗವತಿಯ ಉದ್ದೀಪನ ಆಗುತ್ತಿದೆ. ಅವರು ಭಕ್ತರಿಗೆ ಹೇಳುತ್ತಿದ್ದಾರೆ: “ಭಗವಂತನೇ ವಸ್ತು, ಉಳಿದುದೆಲ್ಲ ಅವಸ್ತು. ಭಗವತಿ ಎಲ್ಲರನ್ನೂ ತನ್ನ ಮಹಾಮಾಯೆಯಿಂದ ಮುಗ್ಧರನ್ನಾಗಿ ಮಾಡಿಬಿಟ್ಟಿದ್ದಾಳೆ. ಮನುಷ್ಯರ ಕಡೆ ನೋಡು, ಬದ್ಧಜೀವರೇ ಅಧಿಕವಾಗಿದ್ದಾರೆ. ಅವರು ಬಹಳವಾಗಿ ಕಷ್ಟದುಃಖಕ್ಕೆ ಈಡಾಗುತ್ತಾರೆ. ಆದರೂ ಅದೇ ಕಾಮಕಾಂಚನದಲ್ಲೇ ಆಸಕ್ತಿ. ಒಂಟೆ ನೆಗ್ಗಲು ಮುಳ್ಳು ತಿನ್ನುತ್ತದೆ, ಅದರ ಬಾಯಿಂದ ರಕ್ತ ಧಾರಾಕಾರವಾಗಿ ಹರಿಯುತ್ತದೆ. ಆದರೂ ಅದು ಮತ್ತೆ ಅದೇ ಮುಳ್ಳನ್ನು ತಿನ್ನುತ್ತದೆ. ಹೆರಿಗೆ ಸಮಯದಲ್ಲಿ ನೋವು ತಾಳಲಾರದೆ ಹೆಂಗಸರು ಸಂಕಲ್ಪ ಮಾಡಿಕೊಳ್ಳುತ್ತಾರೆ: ‘ಅಯ್ಯೋ! ಏನು ಕಷ್ಟವಪ್ಪ ಇದು. ಬೇಕಾದ್ದಾಗಲಿ, ಇನ್ನೆಂದಿಗೂ ಪತಿಯ ಸಹವಾಸ ಮಾಡುವುದಿಲ್ಲ.’ ಆದರೆ ಮತ್ತೆ ಎಲ್ಲವನ್ನೂ ಮರೆತುಬಿಡುತ್ತಾರೆ.
“ಕಣ್ತೆರೆದು ನೋಡು, ಯಾರೂ ಭಗವಂತನಿಗಾಗಿ ಹುಡುಕುತ್ತಿಲ್ಲ. ಅನಾನಸ್ ಹಣ್ಣು ಬಿಸಾಡಿ ಜನ ಅದರ ಎಲೆ ತಿನ್ನುತ್ತಿದ್ದಾರೆ.”
ಒಬ್ಬ ಭಕ್ತ: “ಒಳ್ಳೇದು, ಭಗವಂತ ಈ ಸಂಸಾರಕ್ಕೆ ಏಕೆ ನಮ್ಮನ್ನು ದಬ್ಬಿ ಇಟ್ಟಿದ್ದಾನೆ?”
ಶ್ರೀರಾಮಕೃಷ್ಣರು: “ಸಂಸಾರ ಕರ್ಮಕ್ಷೇತ್ರ. ಕರ್ಮ ಮಾಡುತ್ತ ಮಾಡುತ್ತ ಜ್ಞಾನೋದಯವಾಗಿಬಿಡುತ್ತದೆ. ಗುರು, ಶಿಷ್ಯನಿಗೆ ಕೆಲವು ಕೆಲಸಗಳನ್ನು ಮಾಡುವ ಹಾಗೆ ಇನ್ನು ಕೆಲವನ್ನು ಮಾಡದೆ ಇರುವ ಹಾಗೆ ಉಪದೇಶವೀಯುತ್ತಾನೆ. ಕರ್ಮಮಾಡುತ್ತ ಮಾಡುತ್ತ ಮನಸ್ಸಿನ ಕೊಳೆ ತೊಳೆದುಹೋಗಿಬಿಡುತ್ತದೆ. ಇದು ಒಳ್ಳೇ ಡಾಕ್ಟರರ ಕೈಗೆ ಬಿದ್ದದ್ದೇ ಆದರೆ ಔಷಧ ಕುಡಿಯುತ್ತ ರೋಗ ಹೊರಟುಹೋಗುವ ಹಾಗೆ.
“ಏಕೆ ಭಗವಂತ ನಮ್ಮನ್ನು ಸಂಸಾರದಿಂದ ಬಿಡುಗಡೆ ಮಾಡುತ್ತಿಲ್ಲ ಗೊತ್ತೆ? ರೋಗ ಗುಣ ಆಗಬೇಕು, ಬಳಿಕ ಬಿಡುಗಡೆ. ಕಾಮಕಾಂಚನವನ್ನು ಭೋಗಿಸಬೇಕೆಂಬ ಇಚ್ಛೆ ಹೊರಟು ಹೋದೊಡನೆಯೆ ನಮ್ಮನ್ನು ಬಿಡುಗಡೆ ಮಾಡಿಬಿಡುತ್ತಾನೆ. ಒಮ್ಮೆ ಹೋಗಿ ಆಸ್ಪತ್ರೆಗೆ ದಾಖಲಾದ ಎಂದರೆ ಮತ್ತೆ ಓಡಿಬರಲಾಗುವುದಿಲ್ಲ. ರೋಗದ ಕೊಸರು ಸ್ವಲ್ಪ ಇದ್ದರೂ ಡಾಕ್ಟರು ಬಿಟ್ಟುಕೊಡುವುದಿಲ್ಲ.”
ಈಗ ಕೆಲವು ಕಾಲದಿಂದ ಪರಮಹಂಸರು ಯಶೋದೆಯಂತೆ ವಾತ್ಸಲ್ಯಭಾವದಿಂದ ತುಂಬಿತುಳುಕಾಡುತ್ತಿದ್ದಾರೆ. ಆದ್ದರಿಂದ ಅವರು ರಾಖಾಲನನ್ನು ತಮ್ಮ ಹತ್ತಿರವೆ ಇಟ್ಟುಕೊಂಡಿದ್ದಾರೆ. ರಾಖಾಲ ಪರಮಹಂಸರನ್ನು ಗೋಪಾಲಭಾವದಿಂದ ನೋಡುತ್ತಿದ್ದಾನೆ. ಮಗು ಹಾಲು ಕುಡಿಯುವಾಗ ತಾಯನ್ನು ಒರಗಿ ಕುಳಿತುಕೊಳ್ಳುವ ರೀತಿಯಲ್ಲಿ ರಾಖಾಲನೂ ಆಗಾಗ ಪರಮಹಂಸರ ತೊಡೆಯ ಮೇಲೆ ಹೋಗಿ ಕುಳಿತುಕೊಳ್ಳುತ್ತಿರುತ್ತಾನೆ.
ರಾಖಾಲ ಈ ರೀತಿಯಾಗಿ ಪರಮಹಂಸರ ತೊಡೆಯ ಮೇಲೆ ಕುಳಿತಿದ್ದಾಗ ಒಬ್ಬ ಬಂದು ತಿಳಿಸಿದ, ಗಂಗೆಯಲ್ಲಿ ದೊಡ್ಡ ಉಬ್ಬರ ಬರುತ್ತಿದೆ ಎಂಬುದಾಗಿ. ಪರಮಹಂಸರು, ರಾಖಾಲ, ಮಾಸ್ಟರು ಎಲ್ಲರೂ ಅದನ್ನು ನೋಡಲು ಪಂಚವಟಿಯ ಕಡೆಗೆ ಸುಮ್ಮನೆ ಓಡಲಾರಂಭಿಸಿದರು. ಆ ಉಬ್ಬರಕ್ಕೆ ಸಿಕ್ಕಿ ಒಂದು ದೋಣಿ ಸುಮ್ಮನೆ ಹೊಯ್ದಾಡುತ್ತಿರುವುದನ್ನು ನೋಡಿ ಪರಮಹಂಸರು ಕೂಗಿಕೊಳ್ಳುತ್ತಿದ್ದಾರೆ: “ಅಲ್ಲಿ ನೋಡು! ಇಲ್ಲಿ ನೋಡು! ಭಗವಂತನ ಕೃಪೆಯಿಂದ ಅದಕ್ಕೇನೂ ಆಗದೆ ಇರಲಿ.”
ಈಗ ಎಲ್ಲರೂ ಪಂಚವಟಿಯಲ್ಲಿ ಕುಳಿತುಕೊಂಡಿದ್ದಾರೆ. ಉಬ್ಬರವಿಳಿತಕ್ಕೆ ಕಾರಣ ಏನು ಎಂಬುದಾಗಿ ಪರಮಹಂಸರು ಮಾಸ್ಟರನ್ನು ಕೇಳಿದರು. ಮಾಸ್ಟರ್ ನೆಲದ ಮೇಲೆ ಸೂರ್ಯ, ಚಂದ್ರ, ಭೂಮಿಗಳ ನಕ್ಷೆ ಬರೆದು ಗುರುತ್ವಾಕರ್ಷಣೆ ಎಂದರೇನು; ಉಬ್ಬರವಿಳಿತ, ಪೂರ್ಣಿಮೆ, ಅಮಾವಾಸ್ಯೆ, ಗ್ರಹಣ ಇವೆಲ್ಲ ಹೇಗಾಗುತ್ತವೆ ಎಂಬುವುಗಳ ವಿಷಯವಾಗಿ ವಿವರಿಸಲಾರಂಭಿಸಿದ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಹೋಗು! ನನಗೊಂದೂ ಅರ್ಥವಾಗುತ್ತಿಲ್ಲ. ತಲೆ ತಿರುಗಲಾರಂಭಿಸುತ್ತಿದೆ. ತಲೆ ನೋಯಲಾರಂಭಿಸಿದೆ. ಒಳ್ಳೇದು, ಅಷ್ಟೊಂದು ದೂರದಲ್ಲಿರುವ ವಸ್ತುಗಳ ಸಂಬಂಧವಾಗಿ ಅರಿತ ಬಗೆ ಹೇಗೆ?
“ನೋಡು, ನಾನು ಚಿಕ್ಕವನಿದ್ದಾಗ ಚೆನ್ನಾಗಿ ಚಿತ್ರ ಬರೆಯಲು ಆಗುತ್ತಿತ್ತು. ಆದರೆ ಲೆಕ್ಕ ಮಾತ್ರ ನನಗೆ ತಲೆನೋವು ತರುತ್ತಿತ್ತು. ಸಾಮಾನ್ಯ ಲೆಕ್ಕವನ್ನು ಕಲಿತುಕೊಳ್ಳಲೂ ನನ್ನ ಕೈಯಲ್ಲಾಗಲಿಲ್ಲ.”
ಈಗ ಪರಮಹಂಸರು ಹಿಂದಿರುಗಿ ತಮ್ಮ ಕೊಠಡಿಗೆ ಬಂದಿದ್ದಾರೆ. ಗೋಡೆಗೆ ತೂಗುಹಾಕಿದ್ದ ಯಶೋದೆಯ ಚಿತ್ರ ನೋಡಿ ಹೇಳುತ್ತಿದ್ದಾರೆ: “ಚಿತ್ರ ಚೆನ್ನಾಗಿ ಬಂದಿಲ್ಲ. ಆಕೆ ಹೂವಾಡಗಿತ್ತಿಯ ಹಾಗೆ ಕಾಣುತ್ತಿದ್ದಾಳೆ.”
ಮಧ್ಯಾಹ್ನದ ಊಟವಾದ ನಂತರ ಪರಮಹಂಸರು ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡರು. ಅಧರಸೇನ ಮತ್ತು ಇನ್ನೂ ಕೆಲವು ಮಂದಿ ಭಕ್ತರು ಕ್ರಮೇಣ ಬಂದು ಸೇರಲಾರಂಭಿಸಿದರು. ಅಧರಸೇನ ಪರಮಹಂಸರನ್ನು ದರ್ಶನಮಾಡಿದ್ದು ಇದೇ ಮೊದಲನೆ ಸಲ. ಆತನಿಗೆ ಮನೆ ಕಲ್ಕತ್ತದಲ್ಲಿ ಇದೆ. ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿದ್ದಾನೆ. ವಯಸ್ಸು ಮೂವತ್ತರ ಹತ್ತಿರ.
ಅಧರಸೇನ ಶ್ರೀರಾಮಕೃಷ್ಣರಿಗೆ “ಮಹಾಶಯರೆ, ನನ್ನದೊಂದು ಪ್ರಶ್ನೆ. ದೇವರ ಮುಂದೆ ಬಲಿಕೊಡುವುದು ಒಳ್ಳೆಯದೆ? ಜೀವಹಿಂಸೆಮಾಡಿದ ಹಾಗೆ ಆಗುತ್ತದೆಯಲ್ಲ?”
ಶ್ರೀರಾಮಕೃಷ್ಣರು: “ವಿಶೇಷ ಸಂದರ್ಭಗಳಲ್ಲಿ ಬಲಿಕೊಡಲು ಶಾಸ್ತ್ರ ಅನುಮತಿ ಇತ್ತಿದೆ. ವಿಧಿವತ್ ಬಲಿ ದೋಷವಾದ್ದೇನಲ್ಲ. ಉದಾಹರಣೆಗೆ ಅಷ್ಟಮಿ ತಿಥಿಗಳಲ್ಲಿ ಹೋತನ ಬಲಿ.
“ನಾನು ಈಗ ಅಂಥ ಮಾನಸಿಕ ಅವಸ್ಥೆಯಲ್ಲಿದ್ದೇನೆ, ನಿಂತುಕೊಂಡು ಬಲಿಕೊಡುವುದನ್ನು ನೋಡಲಾಗುತ್ತಿಲ್ಲ. ಭಗವತಿಗೆ ಅರ್ಪಿಸಿದ ಮಾಂಸವನ್ನು ಈಗ ತಿನ್ನಲಾಗುತ್ತಿಲ್ಲ. ಭಗವತಿ ಕೋಪಿಸಿಕೊಂಡುಬಿಡುವಳೊ ಏನೋ ಎಂದು ಹೆದರಿ ಅದನ್ನು ಮೊದಲು ಬೆರಳಿನಿಂದ ಮುಟ್ಟಿ ತಲೆಗೆ ಸವರಿಕೊಳ್ಳುತ್ತೇನೆ.
“ಮತ್ತೆ ನನಗೆ ಅಂಥ ಮಾನಸಿಕ ಅವಸ್ಥೆ ಬರುತ್ತದೆ, ಆಗ ಸರ್ವಭೂತಗಳಲ್ಲೂ ಭಗವಂತನಿರುವುದು ಕಾಣಬರುತ್ತದೆ-ಇರುವೆಗಳಲ್ಲಿ ಕೂಡ. ಆ ಅವಸ್ಥೆಯಲ್ಲಿ ಯಾವುದಾದರೂ ಜೀವಿ ಸತ್ತುಹೋಯಿತು ಎಂದರೆ ಮನಸ್ಸಿಗೆ ಸಮಾಧಾನ ತಂದುಕೊಳ್ಳುತ್ತೇನೆ, ಆತ್ಮ ಜನ್ಮಮೃತ್ಯುಗಳಿಗೆ ಅತೀತವಾದ್ದರಿಂದ, ನಾಶಹೊಂದಿದ್ದು ಕೇವಲ ದೇಹ ಮಾತ್ರ ಎಂಬುದಾಗಿ.
“ಹೆಚ್ಚಾಗಿ ವಿಚಾರದಲ್ಲಿ ತೊಡಗುವುದು ಶ್ರೇಯಸ್ಕರವಲ್ಲ; ಭಗವತಿಯ ಪಾದಪದ್ಮಗಳಲ್ಲಿ ಭಕ್ತಿ ಇದ್ದರೆ ಅದೇ ಯಥೇಷ್ಟ. ಅಧಿಕವಾಗಿ ವಿಚಾರದಲ್ಲಿ ತೊಡಗಿದರೆ ಮನಸ್ಸಿನೊಳಗೆ ಎಲ್ಲಾ ಕಲಸಿಕೊಂಡುಬಿಡುತ್ತದೆ. ಕೆರೆಯ ಮೇಲ್ಭಾಗದಲ್ಲಿ ನೀರನ್ನು ತುಂಬಿಕೊಂಡರೆ ಅದು ಶುದ್ಧವಾಗಿರುತ್ತದೆ. ಕೈಯನ್ನು ಆಳಕ್ಕೆ ಹಾಕಿ ಕಲಕಿದರೆ ನೀರು ಬಗ್ಗಡವಾಗುತ್ತದೆ. ಆದ್ದರಿಂದ ಭಗವಂತನನ್ನು ಭಕ್ತಿಗಾಗಿ ಪ್ರಾರ್ಥನೆ ಮಾಡಿಕೊ.
“ಧ್ರುವನದು ಸಕಾಮ ಭಕ್ತಿ. ರಾಜ್ಯಪ್ರಾಪ್ತಿಗಾಗಿ ತಪಸ್ಸು ಮಾಡಿದ. ಆದರೆ ಪ್ರಹ್ಲಾದನದು ಅಹೇತುಕ ಭಕ್ತಿ.”
ಒಬ್ಬ ಭಕ್ತ: “ಭಗವಂತನ ಸಾಕ್ಷಾತ್ಕಾರ ಪಡೆಯುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಆ ವಿಧದ ಭಕ್ತಿಯ ಮೂಲಕ. ಆದರೆ ಭಗವಂತನನ್ನು ಬಲಾತ್ಕರಿಸಿ ಕೇಳಬೇಕು. ಹೇಳುವಂತಿರಬೇಕು : ‘ಹೇ ಭಗವಂತ, ನೀನು ನಿನ್ನ ದರ್ಶನ ಕೊಡುವುದಿಲ್ಲವೆ? ಇಗೋ ನೋಡು, ಕೊರಳಿಗೆ ಕತ್ತಿಹಾಕಿಕೊಳ್ಳುತ್ತೇನೆ.’ ಇದಕ್ಕೆ ಭಕ್ತಿಯ ತಮಸ್ಸು ಅಂತ ಹೆಸರು.”
ಭಕ್ತ: “ಭಗವಂತನನ್ನು ನೋಡಲು ಸಾಧ್ಯವೆ?”
ಶ್ರೀರಾಮಕೃಷ್ಣರು: “ಹೌದು, ಖಂಡಿತವಾಗಿಯೂ. ಸಾಕಾರ ನಿರಾಕಾರ ಎರಡೂ ರೂಪದಲ್ಲೂ. ಭಗವಂತನನ್ನು ಸಾಕಾರ ರೂಪದಲ್ಲಿ ಅಂದರೆ ಚಿನ್ಮಯ ರೂಪದಲ್ಲಿ ದರ್ಶನ ಮಾಡಬಹುದು. ಮನುಷ್ಯನಲ್ಲೂ ಆತನನ್ನು ಪ್ರತ್ಯಕ್ಷವಾಗಿ ನೋಡಬಹುದು. ಅವತಾರ ಪುರುಷನನ್ನು ನೋಡಿದ್ದೇ ಆದರೆ ಭಗವಂತನನ್ನೇ ನೋಡಿದ ಹಾಗೆ. ಭಗವಂತ ಯುಗಯುಗದಲ್ಲೂ ಮಾನುಷ ರೂಪ ಧರಿಸಿ ಅವತರಿಸುತ್ತಾನೆ.”
೧೧ನೆ ಮಾರ್ಚ್ ೧೮೮೩, ಫಾಲ್ಗುಣ ಶುಕ್ಲ ದ್ವಿತೀಯ, ಭಾನುವಾರ
ಇಂದು ಪರಮಹಂಸರು ಹುಟ್ಟಿದ ದಿನ. ಅವರ ಅಂತರಂಗ ಭಕ್ತರು ಅವರ ಜನ್ಮ ಮಹೋತ್ಸವವನ್ನು ಕಾಳೀದೇವಾಲಯದಲ್ಲಿ ನಡೆಸಬೇಕೆಂದು ನಿಶ್ಚಯಮಾಡಿಕೊಂಡಿದ್ದಾರೆ.
ಭಕ್ತರು ಪ್ರಾತಃಕಾಲದಿಂದಲೆ ಒಬ್ಬೊಬ್ಬರಾಗಿ ಬಂದು ಸೇರುತ್ತಿದ್ದಾರೆ. ದೇವಾಲಯಗಳಲ್ಲಿ ಸುಪ್ರಭಾತ ಮಂಗಳಾರತಿ ಮುಗಿದನಂತರ ನಹಬತ್ಖಾನೆಯಿಂದ ಉದಯರಾಗದ ಮಧುರಸ್ವರ ಕೇಳಿಬರುತ್ತಿದೆ. ವಸಂತಕಾಲವಾದ್ದರಿಂದ ವೃಕ್ಷ, ಲತೆ, ಬಳ್ಳಿಗಳೆಲ್ಲಾ ಚಿಗುರು ಹೂವುಗಳಿಂದ ಕೂಡಿ ಹೊಸ ಉಡಿಗೆ-ತೊಡಿಗೆಗಳನ್ನು ತೊಟ್ಟುಕೊಂಡಿವೆ. ಇಂದಿನ ದಿನ ಒಂದು ದೊಡ್ಡ ಭಾಗ್ಯೋದಯ ದಿನವಾದ್ದರಿಂದ ಭಕ್ತರ ಹೃದಯ ಆನಂದದಿಂದ ತುಂಬಿ ನಲಿದಾಡುತ್ತಿದೆ. ಯಾವ ಕಡೆಗೆ ದೃಷ್ಟಿ ಹಾಕಿದರೂ ಆನಂದವೆಂಬುದು ಚಿಮ್ಮಿ ಹೊರಹೊಮ್ಮುತ್ತಿದೆ.
ಮಾಸ್ಟರ್ ಪ್ರಾತಃಕಾಲವೆ ಬಂದು ನೋಡಿದಾಗ ಪರಮಹಂಸರು ಆನಂದದಿಂದ ಭವನಾಥ, ರಾಖಾಲ, ಕಾಳೀಕೃಷ್ಣ ಇವರೊಡನೆ ಮಾತುಕತೆಯಾಡುತ್ತಿರುವುದು ಕಣ್ಣಿಗೆ ಬಿತ್ತು. ಮಾಸ್ಟರ್ ಕೊಠಡಿಗೆ ಬಂದೊಡನೆ ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಬಂದೆಯಾ? ಬಹಳ ಸಂತೋಷ.”
(ಭಕ್ತರಿಗೆ) “ಲಜ್ಜೆ, ದ್ವೇಷ, ಭಯ ಇವು ಮೂರು ಇರಕೂಡದು. ಈ ದಿನ ಇಲ್ಲಿ ಆನಂದ ಬಹಳವಾಗಿ ತುಂಬಿತುಳುಕಾಡಲಾರಂಭಿಸುತ್ತದೆ. ಆದರೆ ಯಾವ ನೀಚರು ಭಗವನ್ನಾಮದಿಂದ ಮತ್ತರಾಗಿ ನೃತ್ಯಗೀತೆಗಳಲ್ಲಿ ಭಾಗವಹಿಸಲೊಲ್ಲರೊ ಅವರಿಗೆ ಎಂದಿಗೂ ಭಗವಂತನ ಸಾಕ್ಷಾತ್ಕಾರ ದೊರಕದು. ಭಗವದ್ವಿಷಯವಾಗಿ ಲಜ್ಜೆಯೇಕೆ? ಭಯವೇಕೆ? ಈಗ ನೀವು ಎಲ್ಲರೂ ಹಾಡಿ.”
ಭವನಾಥ ಮತ್ತು ಆತನ ಸ್ನೇಹಿತ ಕಾಳೀಕೃಷ್ಣ ಹಾಡಲಾರಂಭಿಸಿದ್ದಾರೆ:
ಧನ್ಯ ಧನ್ಯವಿದೇ ಸುದಿನ
ನಾವೆಲ್ಲರು ಸೇರುವ,
ಪುಣ್ಯಭೂಮಿ ಭಾರತಿಯಲಿ
ನಿನ್ನ ಸತ್ಯಧರ್ಮಗಳನು
ಈ ದಿನವೇ ಸಾರುವ.
ಎದೆ ಎದೆಯೂ ನಿನ್ನ ಧಾಮ;
ನಿನ್ನ ಪುಣ್ಯ ಮಧುರನಾಮ
ದಿಗ್ದೆಸೆಗಳ ತುಂಬಿದೆ!
ಭಕ್ತವೃಂದ ನಿನ್ನಪಾರ
ಮಹಿಮೆಯನ್ನು ಸಾರಿದೆ.
ನಾವೆಂದಿಗು ಬಯಸೆವಯ್ಯ
ಜನ ಧನಾದಿ ಗೌರವ,
ನಮಗಿಲ್ಲವೊ ಅನ್ಯ ಕಾಮ;
ಆರ್ತರಾಗಿ ಬಂದೆವಿಲ್ಲಿ
ನಂಬಿ ನಿನ್ನ ಪಾದವ!
ನಿನ್ನ ಪಾದ ಅಮೃತ ನಿಲಯ
ನಮಗಿಲ್ಲವೊ ಮರಣದ ಭಯ!
ಜಯತು ಜಯತು-ನಿರ್ಭಯ.
ಪರಮಹಂಸರು ಅಂಜಲಿಬದ್ಧರಾಗಿ ಈ ಹಾಡನ್ನು ಕೇಳುತ್ತಿದ್ದ ಹಾಗೆಯೇ ಅವರ ಮನಸ್ಸು ಭಾವರಾಜ್ಯಕ್ಕೆ ಹೋಗಿ ಅಲ್ಲಿ ವಿಹರಿಸಲಾರಂಭಿಸಿದೆ. ಪರಮಹಂಸರ ಮನಸ್ಸು ಒಣಗಿದ ಬೆಂಕಿಕಡ್ಡಿಯ ಹಾಗೆ. ಅದು ಗೀಚಿದೊಡನೆಯೆ ಹೊತ್ತಿಕೊಂಡುಬಿಡುತ್ತದೆ. ಅವರು ಬಹಳ ಹೊತ್ತಿನವರೆಗೆ ಧ್ಯಾನಸ್ಥರಾಗಿಯೇ ಇದ್ದುಬಿಟ್ಟರು. ಸ್ವಲ್ಪ ಹೊತ್ತಾದ ನಂತರ ಕಾಳೀಕೃಷ್ಣ ಭವನಾಥನ ಕಿವಿಗೆ ಏನನ್ನೊ ಪಿಸುಗುಟ್ಟಿದ. ನಂತರ ಆತ ಪರಮಹಂಸರಿಗೆ ಪ್ರಣಾಮಮಾಡಿ ಹೊರಡಲು ಸಿದ್ಧನಾದ. ಪರಮಹಂಸರು ವಿಸ್ಮಯಗೊಂಡು ಆತನನ್ನು ಕೇಳುತ್ತಿದ್ದಾರೆ: “ಎಲ್ಲಿಗೆ ಹೋಗುತ್ತಿದ್ದೀಯೆ?”
ಭವನಾಥ: “ಆತನಿಗೆ ಸ್ವಲ್ಪ ಕೆಲಸವಿದೆ. ಅದಕ್ಕಾಗಿ ಹೋಗುತ್ತಿದ್ದಾನೆ.”
ಶ್ರೀರಾಮಕೃಷ್ಣರು: “ಏನದು?”
ಭವನಾಥ: “ವರಾಹನಗರದಲ್ಲಿರುವ ಶ್ರಮಜೀವಿಗಳ ಶಿಕ್ಷಣಾಲಯಕ್ಕೆ ಹೋಗುತ್ತಿದ್ದಾನೆ.”
ಶ್ರೀರಾಮಕೃಷ್ಣರು: “ಇದು ಆತನ ದುರದೃಷ್ಟ. ಇಂದು ಇಲ್ಲಿ ಆನಂದವಾಹಿನಿಯೇ ಹರಿಯಲಾರಂಭಿಸುತ್ತಿದೆ. ಅದರಲ್ಲಿ ಆತ ಭಾಗಿಯಾಗಬಹುದಿತ್ತು. ಎಂಥ ದುರದೃಷ್ಟಶಾಲಿ?”
ಪರಮಹಂಸರ ಶರೀರಾರೋಗ್ಯ ಸರಿಯಾಗಿಲ್ಲ. ಆದ್ದರಿಂದ ಅವರು ಗಂಗಾನದಿಗೆ ಹೋಗಿ ಸ್ನಾನಮಾಡಲಿಲ್ಲ. ಅಲ್ಲಿಂದ ಕೆಲವು ಬಿಂದಿಗೆ ನೀರು ತರಿಸಿಕೊಂಡು ತಮ್ಮ ಕೊಠಡಿಯ ಪೂರ್ವ ವರಾಂಡದಲ್ಲೆ ಸ್ನಾನದ ಶಾಸ್ತ್ರ ಮುಗಿಸಿದರು.
ಸ್ನಾನದ ನಂತರ ಮಡಿವಸ್ತ್ರಗಳನ್ನುಟ್ಟು ಭಗವತಿಯ ನಾಮವನ್ನು ಜಪಿಸುತ್ತ ಒಬ್ಬೊಬ್ಬರು ಭಕ್ತರನ್ನು ಜತೆಯಲ್ಲಿ ಕರೆದುಕೊಂಡು ಅಂಗಳಕ್ಕೆ ಇಳಿದು ಕಾಳೀದೇವಾಲಯಾಭಿಮುಖರಾಗಿ ಬರುತ್ತಿದ್ದಾರೆ. ಹಕ್ಕಿ ಕಾವಿಗೆ ಕುಳಿತಿರುವಾಗ ಅದು ಯಾವ ದೃಷ್ಟಿಯುಳ್ಳದ್ದಾಗಿರುವುದೋ ಅದೇ ರೀತಿಯ ದೃಷ್ಟಿಯುಳ್ಳವರಾಗಿ ನಡೆಯುತ್ತಿದ್ದಾರೆ.
ದೇವಾಲಯವನ್ನು ಪ್ರವೇಶಿಸಿದ ನಂತರ ಭಗವತಿಗೆ ಪ್ರಣಾಮಮಾಡಿ ಪೂಜೆಮಾಡುತ್ತಿದ್ದಾರೆ. ಅವರಿಗೆ ಪೂಜೆಯ ಯಾವ ನಿಯಮವೂ ಇಲ್ಲ. ಗಂಧಪುಷ್ಪಗಳನ್ನು ಕೆಲವು ವೇಳೆ ಭಗವತಿಯ ಪಾದಗಳಿಗೆ ಅರ್ಪಿಸುತ್ತಿದ್ದಾರೆ. ಇನ್ನು ಕೆಲವು ವೇಳೆ ತಮ್ಮ ತಲೆಯ ಮೇಲೆಯೆ ಇಟ್ಟುಕೊಳ್ಳುತ್ತಿದ್ದಾರೆ. ಈ ರೀತಿಯಾಗಿ ತಮಗಿಚ್ಛೆ ಬಂದಂತೆ ಭಗವತಿಯ ಪೂಜೆ ಮುಗಿಸಿ ಭಗವತಿಗೆ ಅರ್ಪಿಸಿದ ಎಳನೀರನ್ನು ಕೊಠಡಿಗೆ ತೆಗೆದುಕೊಂಡು ಬರುವಂತೆ ಭವನಾಥನಿಗೆ ಹೇಳಿದರು. ಹಿಂದಿರುಗುವಾಗ ವಿಷ್ಣುದೇವಾಲಯಕ್ಕೆ ಹೋಗಿ ರಾಧಾಕೃಷ್ಣರ ದರ್ಶನ ಮಾಡಿದರು.
ಈಗ ಕೊಠಡಿಗೆ ಹಿಂದಿರುಗಿ ಬಂದು ನೋಡುತ್ತಾರೆ, ರಾಮ, ನಿತ್ಯಗೋಪಾಲ, ಕೇದಾರ ಇವರೇ ಮೊದಲಾದ ಇನ್ನೂ ಅನೇಕಮಂದಿ ಭಕ್ತರು ಬಂದು ಸೇರಿಬಿಟ್ಟಿದ್ದಾರೆ. ಅವರೆಲ್ಲರೂ ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದಾರೆ. ಪರಮಹಂಸರು ಅವರ ಕ್ಷೇಮಸಮಾಚಾರ ವಿಚಾರಿಸುತ್ತಿದ್ದಾರೆ.
ಪರಮಹಂಸರು ನಿತ್ಯಗೋಪಾಲನನ್ನು ಕೇಳಿದರು: “ಈಗ ಏನಾದರೂ ಸ್ವಲ್ಪ ತಿನ್ನುತ್ತೀಯಾ?” ಆತ ಉತ್ತರವಿತ್ತ : “ಹೌದು, ತಿನ್ನುತ್ತೇನೆ.” ಆತನಿಗೆ ವಯಸ್ಸು ಇಪ್ಪತ್ತ ಮೂರೊ-ಇಪ್ಪತ್ತನಾಲ್ಕೊ. ಇನ್ನೂ ವಿವಾಹವಾಗಿಲ್ಲ. ಬಾಲಕನ ಅವಸ್ಥೆ. ಸರ್ವದಾ ಭಾವ ರಾಜ್ಯದಲ್ಲೇ ಮುಳುಗಿರುತ್ತಾನೆ. ಆತ ಕೆಲವು ವೇಳೆ ಒಬ್ಬನೇ, ಇನ್ನು ಕೆಲವು ವೇಳೆ ರಾಮನೊಡನೆ ಪರಮಹಂಸರ ದರ್ಶನ ಪಡೆಯಲು ಬರುತ್ತಿದ್ದಾನೆ. ಪರಮಹಂಸರು ಆತನ ಆಧ್ಯಾತ್ಮಿಕ ಉನ್ನತಿ ನೋಡಿ ಆತನನ್ನು ಬಹಳವಾಗಿ ಪ್ರೀತಿಸುತ್ತಿದ್ದಾರೆ. ಆಗಾಗ ಪರಮಹಂಸರು ಆತನದು ಪರಮಹಂಸಾವಸ್ಥೆ ಎಂಬುದಾಗಿ ಹೇಳುತ್ತಿದ್ದರು.
ನಿತ್ಯಗೋಪಾಲ ಪ್ರಸಾದವನ್ನು ತಿಂದು ಮುಗಿಸಿದ ನಂತರ ಪರಮಹಂಸರು ಆತನನ್ನು ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ ಏನೇನೋ ಉಪದೇಶವಿತ್ತರು.
ಸುಮಾರು ಮೂವತ್ತೊಂದು-ಮೂವತ್ತೆರಡು ವಯಸ್ಸಿನ ಒಬ್ಬ ಪರಮ ಭಕ್ತೆ ಅಡಿಗಡಿಗೆ ಪರಮಹಂಸರ ದರ್ಶನ ಪಡೆಯಲು ಬರುತ್ತಾಳೆ. ಆಕೆ ಪರಮಹಂಸರನ್ನು ಬಹಳ ಶ್ರದ್ಧಾಭಕ್ತಿಯಿಂದ ಕಾಣುತ್ತಾಳೆ. ಆಕೆ ನಿತ್ಯಗೋಪಾಲನ ಅದ್ಭುತ ಬಾಲಾವಸ್ಥೆಯನ್ನು ನೋಡಿ ಆತನನ್ನು ಸಂತಾನಭಾವದಿಂದ ನೋಡುತ್ತ ಅಡಿಗಡಿಗೆ ಆತನನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದಾಳೆ.
ಶ್ರೀರಾಮಕೃಷ್ಣರು ನಿತ್ಯಗೋಪಾಲನಿಗೆ: “ಈಗ ನೀನು ಅಲ್ಲಿಗೆ ಹೋಗುತ್ತಿದ್ದೀಯೊ?”
ನಿತ್ಯಗೋಪಾಲ ಬಾಲಕನ ಹಾಗೆ: “ಹೌದು, ಹೋಗುತ್ತಿದ್ದೇನೆ. ಕರೆದುಕೊಂಡು ಹೋಗುತ್ತಾಳೆ.”
ಶ್ರೀರಾಮಕೃಷ್ಣರು: “ಸಾಧು, ಎಚ್ಚರಿಕೆ! ಎಲ್ಲೋ ಅಪರೂಪಕ್ಕೆ ಒಮ್ಮೆ ಹೋಗು. ಅಡಿಗಡಿಗೆ ಹೋಗಬೇಡ-ಬಲೆಗೆ ಬಿದ್ದುಬಿಡುತ್ತೀಯೆ. ಕಾಮಕಾಂಚನವೇ ಮಾಯೆ. ಸಾಧು ಹೆಂಗಸಿನಿಂದ ಬಹಳ ದೂರದಲ್ಲೇ ಇರಬೇಕು. ಅಲ್ಲಿ ಎಲ್ಲರೂ ಮುಳುಗಿಹೋಗುತ್ತಾರೆ. ‘ಆ ಸುಳಿಯಲ್ಲಿ ಬ್ರಹ್ಮವಿಷ್ಣುಗಳೇ ಬಿದ್ದುಹೋಗಿ ಪ್ರಾಣಸಂಕಟಪಡುತ್ತಿದ್ದಾರೆ.”
ನಿತ್ಯಗೋಪಾಲ ಎಲ್ಲವನ್ನೂ ಕೇಳಿದ.
ಮಾಸ್ಟರ್ ತನಗೆ ತಾನೆ: “ಏನಾಶ್ಚರ್ಯ! ಈತನಿಗೆ ಪರಮಹಂಸಾವಸ್ಥೆಯುಂಟಾಗಿದೆ. ಹೀಗೆಂದು ಪರಮಹಂಸರು ಆಗಾಗ ಹೇಳುತ್ತಿದ್ದಾರೆ. ಈ ಉಚ್ಚ ಅವಸ್ಥೆ ಮುಟ್ಟಿದ ಮೇಲೂ ಕೆಳಕ್ಕೆ ಬೀಳುವ ಸಂಭವವಿರುವುದೆ? ಸಾಧುಗಳಿಗೆ ಎಂಥಾ ಕಠಿಣ ನಿಯಮ! ಸಾಧು ಹೆಂಗಸಿನೊಡನೆ ಅನ್ಯೋನ್ಯವಾಗಿ ಬೆರೆತರೆ ಆತ ಕೆಳಕ್ಕೆ ಬಿದ್ದುಹೋಗುವ ಸಂಭವ! ಇಂಥ ಉಚ್ಚ ಆದರ್ಶ ಇಲ್ಲದೆ ಇತ್ತು ಎಂದರೆ ಜೀವರ ಉದ್ಧಾರ ಯಾವ ರೀತಿಯಾಗಿ ತಾನೇ ಆಗಬಲ್ಲದು. ಈ ಹೆಂಗಸು ಭಕ್ತಿಮತಿ; ಆದರೂ ಕೆಳಕ್ಕೆ ಬೀಳುವ ಸಂಭವ! ಈಗ ನನಗೆ ಅರ್ಥವಾಗುತ್ತಿದೆ; ಶ್ರೀಚೈತನ್ಯದೇವ ಏಕೆ ತನ್ನ ಚಿಕ್ಕ ಶಿಷ್ಯ ಹರಿದಾಸನಿಗೆ ಅಂಥ ಕಠಿಣ ಶಿಕ್ಷೆ ವಿಧಿಸಿದ ಎಂಬುದು. ಶ್ರೀಚೈತನ್ಯದೇವ ಕೂಡದು ಎಂದು ಹೇಳಿದ್ದರೂ ಹರಿದಾಸ ಒಬ್ಬ ವಿಧವೆ ಭಕ್ತೆಯೊಡನೆ ಮಾತುಕತೆಯಾಡಿದ. ಆದರೆ ಹರಿದಾಸ ಸಂನ್ಯಾಸಿ. ಆದ್ದರಿಂದ ಶ್ರೀಚೈತನ್ಯದೇವ ಆತನನ್ನು ಬಹಿಷ್ಕರಿಸಿಬಿಟ್ಟ. ಎಂಥ ಶಿಕ್ಷೆ! ಸಂನ್ಯಾಸಿಗೆ ಎಂಥ ಕಠಿಣ ನಿಯಮ? ಆಹಾ, ಈ ನಿತ್ಯಗೋಪಾಲನ ಮೇಲೆ ಪರಮಹಂಸರಿಗೆ ಎಷ್ಟೊಂದು ಪ್ರೀತಿ! ಮುಂದೆ ವಿಪತ್ತಿಗೆ ಬೀಳದೆ ಇರಲಿ ಎಂದು ಈಗಿನಿಂದಲೇ ಆತನಿಗೆ ಎಚ್ಚರಿಕೆ ಕೊಡುತ್ತಿದ್ದಾರೆ.”
“ಸಾಧು, ಎಚ್ಚರಿಕೆ!” ಎಂಬ ಮೇಘಗಂಭೀರ ಧ್ವನಿ ಭಕ್ತರ ಕಿವಿಯಲ್ಲಿ ಮತ್ತೆ ಅನುರಣಿತವಾಗುತ್ತಲೇ ಇದೆ.
ಈಗ ಪರಮಹಂಸರು ಭಕ್ತರೊಡನೆ ತಮ್ಮ ಕೊಠಡಿಯ ಈಶಾನ್ಯ ವರಾಂಡಕ್ಕೆ ಬಂದಿದ್ದಾರೆ. ಭಕ್ತರ ಮಧ್ಯೆ ಒಬ್ಬ ಗೃಹಸ್ಥ, ದಕ್ಷಿಣೇಶ್ವರ ನಿವಾಸಿ ಕುಳಿತಿದ್ದಾನೆ. ಆತ ಮನೆಯಲ್ಲಿ ವೇದಾಂತಾಧ್ಯಯನ ಮಾಡುತ್ತಿದ್ದಾನೆ. ಆತ ಪರಮಹಂಸರೆದುರಿಗೆ ಕೇದಾರನೊಡನೆ ಶಬ್ದ ಬ್ರಹ್ಮದ ವಿಷಯವಾಗಿ ಸಂಭಾಷಿಸುತ್ತಿದ್ದಾನೆ. ಆತ ಹೇಳಿದ: “ಈ ಅನಾಹುತ ಶಬ್ದ ಸರ್ವದಾ ಒಳಗೆ ಹೊರಗೆ ಆಗುತ್ತಿರುತ್ತದೆ.”
ಶ್ರೀರಾಮಕೃಷ್ಣರು: “ಬರೀ ಶಬ್ದಕ್ಕೆ ಯಾವ ಬೆಲೆಯೂ ಇಲ್ಲ. ಅದು ಬೇರೊಂದನ್ನು ಸೂಚಿಸುತ್ತದೆ. ಕೇವಲ ನಿನ್ನ ಹೆಸರೇ ನನಗೆ ಆನಂದ ತರಬಲ್ಲುದೇ? ನಿನ್ನನ್ನು ನೋಡುವವರೆಗೆ ಪೂರ್ಣ ಆನಂದ ದೊರೆಯುವುದಿಲ್ಲ.”
ಗೃಹಸ್ಥ: “ಈ ಶಬ್ದವೇ ಬ್ರಹ್ಮ. ಇದೇ ಅನಾಹತ ಶಬ್ದ.”
ಶ್ರೀರಾಮಕೃಷ್ಣರು ಕೇದಾರನಿಗೆ: “ಏನು, ಅರ್ಥವಾಯಿತೆ? ಈತನದು ಋಷಿಗಳ ಮತ. ಋಷಿಗಳು ರಾಮಚಂದ್ರನಿಗೆ ಹೇಳಿದರು: ‘ಹೇ ರಾಮ, ನಮಗೆ ಗೊತ್ತಿದೆ. ನೀನು ದಶರಥನ ಪುತ್ರ ಎಂಬುದು. ನೀನು ಒಬ್ಬ ಅವತಾರಪುರುಷನೆಂದು ತಿಳಿದು ಭಾರದ್ವಾಜಾದಿ ಋಷಿಗಳು ನಿನ್ನನ್ನು ಪೂಜಿಸುತ್ತಿದ್ದಾರೆ. ನಮಗೆ ಕೇವಲ ಅಖಂಡ ಸಚ್ಚಿದಾನಂದನೇ ಬೇಕು.’ ಈ ಮಾತುಗಳನ್ನು ಕೇಳಿ ರಾಮಚಂದ್ರ ನಗುತ್ತ ಹೊರಟುಹೋದ.”
ಕೇದಾರ: “ಆ ಋಷಿಗಳ ಕೈಯಲ್ಲಿ ಶ್ರೀರಾಮಚಂದ್ರ ಅವತಾರಪುರುಷ ಎಂಬುದನ್ನು ಅರಿತುಕೊಳ್ಳಲಾಗಲಿಲ್ಲ. ಆದ್ದರಿಂದ ಅವರು ದಡ್ಡರಿದ್ದಿರಬೇಕು.”
ಶ್ರೀರಾಮಕೃಷ್ಣರು ಗಂಭೀರಮುದ್ರೆಯಿಂದ: “ನೀನು ಹಾಗೆ ಎಂದಿಗೂ ಹೇಳಕೂಡದು. ಜನರು ಭಗವಂತನನ್ನು ತಮ್ಮ ತಮ್ಮ ರುಚಿಭಾವಗಳಿಗನುಸಾರ ಪೂಜೆಮಾಡುತ್ತಾರೆ. ಇದು ಮನೆಗೆ ಒಂದು ಮೀನು ತಂದು ಅದನ್ನೇ ತಾಯಿ ವಿವಿಧ ರೀತಿಯಲ್ಲಿ ಅಡಿಗೆ ಮಾಡಿ ಮಕ್ಕಳಿಗೆ ಬಡಿಸುವ ಹಾಗೆ. ಕೆಲವಕ್ಕೆ ಪಲಾವು ಮಾಡಿ ಬಡಿಸುತ್ತಾಳೆ. ಆದರೆ ಎಲ್ಲಾ ಮಕ್ಕಳು ಅದನ್ನು ಅರಗಿಸಿಕೊಳ್ಳಲಾರವು. ಜೀರ್ಣಶಕ್ತಿ ಕಡಮೆ ಇರುವ ಮಕ್ಕಳಿಗೆ ಆಕೆ ಮೀನಿನ ಸಾರು ಮಾಡಿ ಬಡಿಸುತ್ತಾಳೆ. ಇನ್ನು ಕೆಲವಕ್ಕೆ ಮೀನಿನ ಬಜ್ಜಿ, ಮೀನಿನ ಗೊಜ್ಜು ಕಂಡರೆ ಇಷ್ಟ. ಎಲ್ಲಾ ಜೀರ್ಣಶಕ್ತಿ ಮತ್ತು ರುಚಿಯನ್ನು ಅವಲಂಬಿಸಿದೆ.
“ಋಷಿಗಳು ಜ್ಞಾನಮಾರ್ಗಿಗಳಾಗಿದ್ದರು. ಆದ್ದರಿಂದ ಅವರು ಅಖಂಡ ಸಚ್ಚಿದಾನಂದನಿಗಾಗಿ ಹುಡುಕುತ್ತಿದ್ದರು. ಆದರೆ ಭಕ್ತರಿಗೆ ಭಕ್ತಿಯನ್ನು ಆಸ್ವಾದಿಸಬೇಕೆಂಬ ಇಚ್ಛೆ. ಆದ್ದರಿಂದ ಅವರಿಗೆ ಅವತಾರಪುರುಷ ಬೇಕು. ಭಗವಂತನ ಸಾಕ್ಷಾತ್ಕಾರ ದೊರೆಯಿತು ಎಂದರೆ ಮನಸ್ಸಿನ ಅಂಧಕಾರ ನಾಶವಾಗಿಬಿಡುತ್ತದೆ. ಪುರಾಣಗಳಲ್ಲಿ ಹೇಳಿದೆ: ರಾಮಚಂದ್ರ ಸಭೆಗೆ ಬಂದಾಗ, ಶತಸೂರ್ಯರು ಉದಯವಾದಂತಾಯಿತು ಎಂಬುದಾಗಿ. ಹಾಗಾದರೆ ಸಭಿಕರೆಲ್ಲ ಏಕೆ ಸುಟ್ಟು ಭಸ್ಮವಾಗಿಬಿಡಲಿಲ್ಲ ? ಅದಕ್ಕೆ ಕಾರಣ, ಆತನ ಜ್ಯೋತಿ ಜಡ ಜ್ಯೋತಿ ಅಲ್ಲ. ಸೂರ್ಯೋದಯವಾದೊಡನೆ ಪದ್ಮಗಳು ಅರಳುವ ಹಾಗೆ ಇಡೀ ಸಭಿಕರ ಹೃತ್ಪದ್ಮ ಅರಳಲಾರಂಭಿಸಿದುವು.”
ಪರಮಹಂಸರು ಈ ಮಾತುಗಳನ್ನು ಭಕ್ತರ ಹತ್ತಿರ ನಿಂತು ಆಡುತ್ತಿದ್ದರು. ಮಾತಾಡುತ್ತ ಇದ್ದ ಹಾಗೆ ಅವರ ಮನಸ್ಸು ಬಾಹ್ಯಜಗತ್ತನ್ನು ಬಿಟ್ಟು ಆಂತರ್ಯ ರಾಜ್ಯಕ್ಕೆ ಹೊರಟು ಹೋಯಿತು. “ಹೃತ್ಪದ್ಮ ಅರಳಲಾರಂಭಿಸಿದುವು” ಎಂಬ ಮಾತು ಅದರ ಬಾಯಿಂದ ಬೀಳುವುದೇ ತಡ, ಸಮಾಧಿಸ್ಥರಾಗಿಬಿಟ್ಟರು. ನಿಂತುಕೊಂಡೇ ಇದ್ದಾರೆ, ಆದರೆ ಚಿತ್ರದ ಬೊಂಬೆಯ ಹಾಗೆ ಬಾಹ್ಯಜ್ಞಾನಶೂನ್ಯರಾಗಿ. ಮುಖ ಉಜ್ಜ್ವಲವಾಗಿದೆ; ಮುಗುಳುನಗೆ ಬೀರುತ್ತಿದೆ.
ಪರಮಹಂಸರು ಬಹಳ ಹೊತ್ತಾದ ನಂತರ ಪ್ರಕೃತಿಸ್ಥರಾಗುತ್ತಿದ್ದಾರೆ. ಈಗ ಪರಮಹಂಸರು ದೀರ್ಘನಿಶ್ವಾಸ ಬಿಟ್ಟು ರಾಮನಾಮವನ್ನು ಆವೃತ್ತಿಮಾಡುತ್ತಿದ್ದಾರೆ. ಪ್ರತಿಯೊಂದು ಪದವೂ ಅಮೃತವನ್ನೇ ಭಕ್ತರ ಹೃದಯಕ್ಕೆ ವರ್ಷಿಸುತ್ತಿದೆಯೋ ಏನೋ ಎಂಬಂತಿದೆ. ಈಗ ಪರಮಹಂಸರು ಕೆಳಗೆ ಕುಳಿತುಕೊಂಡರು. ಭಕ್ತರೂ ಅವರ ಸುತ್ತ ಕುಳಿತುಕೊಳ್ಳುತ್ತಿದ್ದಾರೆ.
ಶ್ರೀರಾಮಕೃಷ್ಣರು ಭಕ್ತರಿಗೆ : “ಅವತಾರಪುರುಷ ಅವತರಿಸಿ ಬಂದಾಗ ಅದು ಸಾಮಾನ್ಯ ಜನರಿಗೆ ಗೊತ್ತಾಗುವುದಿಲ್ಲ. ರಹಸ್ಯವಾಗಿ ಬರುತ್ತಾನೆ. ಎಲ್ಲೊ ಒಂದು ಐದಾರು ಮಂದಿ ಅಂತರಂಗ ಭಕ್ತರು ಮಾತ್ರ ಆತನನ್ನು ಗುರುತಿಸಬಲ್ಲರು. ರಾಮ ಪೂರ್ಣಬ್ರಹ್ಮ, ಪೂರ್ಣ ಅವತಾರ ಎಂಬುದು ಕೇವಲ ಹನ್ನೆರಡು ಜನ ಋಷಿಗಳಿಗೆ ಮಾತ್ರ ಗೊತ್ತಿತ್ತು. ಉಳಿದ ಋಷಿಗಳು ಆತನಿಗೆ ಹೇಳಿದರು : ‘ಹೇ ರಾಮ, ನೀನು ದಶರಥನ ಪುತ್ರ ಎಂಬುದಾಗಿ ಮಾತ್ರ ನಮಗೆ ಗೊತ್ತಿದೆ.’
“ಅಖಂಡ ಸಚ್ಚಿದಾನಂದನನ್ನು ಏನು ಎಲ್ಲರೂ ಗ್ರಹಿಸಬಲ್ಲರೆ? ಆದರೆ ಯಾರು ನಿತ್ಯವನ್ನು ಮುಟ್ಟಿದ ನಂತರ ವಿಲಾಸಕ್ಕಾಗಿ ಲೀಲೆಯಲ್ಲಿ ಇರುತ್ತಾರೋ ಅವರದೇ ಪಕ್ವ ಭಕ್ತಿ. ಇಂಗ್ಲೆಂಡಿಗೆ ಹೋಗಿ ರಾಣಿಯನ್ನು ನೋಡಿ ಬಂದವರು ಮಾತ್ರವೇ ಆಕೆಯ ನಡೆನುಡಿ ರೀತಿ ನೀತಿಗಳನ್ನು ವರ್ಣಿಸಬಲ್ಲರು. ಆಗ ಮಾತ್ರವೇ ಅವರ ವರ್ಣನೆ ಯಥಾರ್ಥವಾಗಿರುತ್ತದೆ. ಭಾರದ್ವಾಜಾದಿ ಋಷಿಗಳು ರಾಮನನ್ನು ಸ್ತೋತ್ರಮಾಡಿದರು: ‘ಹೇ ರಾಮ, ನೀನೇ ಅಖಂಡ ಸಚ್ಚಿದಾನಂದ. ನೀನು ನಮ್ಮ ಹತ್ತಿರಕ್ಕೆ ಮನುಷ್ಯರೂಪ ಧರಿಸಿ ಬಂದಿದ್ದೀಯೆ. ನೀನೇ ನಿನ್ನನ್ನು ನಿನ್ನ ಮಾಯೆಯಿಂದ ಮುಚ್ಚಿಕೊಂಡಿರುವುದರಿಂದ ಮನುಷ್ಯನಾಗಿ ಕಾಣಬರುತ್ತಿದ್ದೀಯೆ.’ ಈ ಋಷಿಗಳು ರಾಮನ ಪರಮಭಕ್ತರು. ಇವರದು ಪಕ್ವ ಭಕ್ತಿ.”
ಸ್ವಲ್ಪ ಹೊತ್ತಿನಲ್ಲೇ ಕೊನ್ನಗರದ ಭಕ್ತರು ಮೃದಂಗ ತಾಳಗಳೊಡನೆ ಸಂಕೀರ್ತನೆ ಮಾಡುತ್ತ ಮಾಡುತ್ತ ಉದ್ಯಾನವನ್ನು ಮುಟ್ಟಿದರು. ಅವರು ಪರಮಹಂಸರ ಕೊಠಡಿಯ ಈಶಾನ್ಯ ವರಾಂಡವನ್ನು ಮುಟ್ಟುವುದೇ ತಡ, ಪರಮಹಂಸರೂ ಅವರೊಡನೆ ಸೇರಿ ಪ್ರೇಮೋನ್ಮತ್ತತೆಯಿಂದ ನರ್ತಿಸುತ್ತ ಸಂಕೀರ್ತನೆ ಮಾಡುತ್ತಿದ್ದಾರೆ. ಆಗಾಗ ಸಮಾಧಿಸ್ಥರಾಗುತ್ತಿದ್ದಾರೆ-ಚಿತ್ರಪಟದ ಗೊಂಬೆಯೋಪಾದಿಯಲ್ಲಿ ನಿಂತುಕೊಂಡೇ. ಅವರು ಒಮ್ಮೆ ಆ ಅವಸ್ಥೆಯಲ್ಲಿ ಇದ್ದಾಗ ಭಕ್ತರು ಅವರ ಕೊರಳಿಗೆ ಮಲ್ಲಿಗೆ ಹೂವಿನ ದಪ್ಪವಾದೊಂದು ಹಾರ ಹಾಕಿದರು. ಭಕ್ತರಿಗೆ ತೋರಿತು, ಸಾಕ್ಷಾತ್ ಗೌರಾಂಗದೇವನೇ ತಮ್ಮ ಎದುರಿಗೆ ನಿಂತಿರುವನೋ ಏನೋ ಎಂಬಂತೆ. ಪರಮಹಂಸರು ಗಂಭೀರ ಭಾವಸಮಾಧಿಸ್ಥರಾಗಿದ್ದಾರೆ. ಪರಮಹಂಸರಿಗೂ ಗೌರಾಂಗನ ಹಾಗೆ ಮೂರು ಅವಸ್ಥೆಗಳು ಒಂದಾದ ಮೇಲೊಂದು ಬರುತ್ತವೆ. ಕೆಲವು ವೇಳೆ ಅವರು ಅಂತರ್ದಶಾವಸ್ಥೆಯಲ್ಲಿರುತ್ತಾರೆ. ಆಗ ಚಿತ್ರಪಟದ ಬೊಂಬೆಯೋ ಪಾದಿಯಲ್ಲಿ ಜಡರಾಗಿ ಬಾಹ್ಯಜ್ಞಾನಶೂನ್ಯರಾಗಿ ಇರುತ್ತಾರೆ. ಇನ್ನು ಕೆಲವು ವೇಳೆ ಅರ್ಧ ಬಾಹ್ಯದಶೆಯಲ್ಲಿರುತ್ತಾರೆ. ಆಗ ಅವರು ಪ್ರೇಮಾವಿಷ್ಟರಾಗಿ ನರ್ತಿಸುತ್ತಿರುತ್ತಾರೆ. ಮತ್ತೆ ಕೆಲವು ವೇಳೆ ಬಾಹ್ಯದಶಾವಸ್ಥೆಯಲ್ಲಿರುತ್ತಾರೆ. ಆಗ ಭಕ್ತರೊಡನೆ ಸಂಕೀರ್ತನೆ ಮಾಡುತ್ತಿರುತ್ತಾರೆ. ಪರಮಹಂಸರು ಸಮಾಧಿಸ್ಥರಾಗಿ ಸ್ಥಿರವಾಗಿ ನಿಂತುಕೊಂಡಿರುವುದು, ಅವರ ಕೊರಳಲ್ಲಿ ಒಳ್ಳೇ ಸುವಾಸನೆ ಬೀರುತ್ತಿರುವ ಮಲ್ಲಿಗೆ ಹೂವಿನ ಹಾರ ನೇತಾಡುತ್ತಿರುವುದು, ಅವರ ಚಂದ್ರವದನ ಪ್ರೇಮಾನುರಂಜಿತವಾಗಿರುವುದು, ಭಕ್ತರು ಅವರ ಸುತ್ತಲೂ ನರ್ತಿಸುತ್ತ ಹಾಡುತ್ತಿರುವುದು-ಈ ದೃಶ್ಯಗಳೆಲ್ಲ ದೇವದುರ್ಲಭವಾದುದಾಗಿ ಕಂಡುಬಂದುವು.
ಈಗ ಮಧ್ಯಾಹ್ನದ ಊಟಕ್ಕೆ ಸಮಯ ಆಯಿತು. ಪರಮಹಂಸರು ಹೊಸ ಪೀತಾಂಬರ ಉಟ್ಟು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಪೀತಾಂಬರಧಾರಿಗಳಾದ ಆ ಆನಂದಮಯ ಮಹಾಪುರುಷರ ಜ್ಯೋತಿರ್ಮಯವಾದ ಭಕ್ತಚಿತ್ತವಿನೋದಕಾರಿ ಅಪರೂಪ ರೂಪವನ್ನು ಭಕ್ತರು ದರ್ಶನಮಾಡುತ್ತ ಕುಳಿತಿದ್ದಾರೆ. ಆ ದೇವದುರ್ಲಭ ಪವಿತ್ರ ಮೋಹನಮೂರ್ತಿಯನ್ನು ಎಷ್ಟು ಹೊತ್ತು ನೋಡಿದರೂ ಕಣ್ಣುಗಳಿಗೆ ತೃಪ್ತಿ ದೊರೆಯುತ್ತಿಲ್ಲ ಅದು ಮತ್ತೆ ಮತ್ತೆ ದೊರೆಯಬೇಕು, ಆ ರೂಪಸಾಗರದಲ್ಲಿ ಲೀನವಾಗಿ ಹೋಗಬೇಕು, ಅನ್ನುತ್ತಲೇ ಇದೆ.
ಊಟವಾದ ನಂತರ ಪರಮಹಂಸರು ಸ್ವಲ್ಪ ಹೊತ್ತು ಚಿಕ್ಕ ಮಂಚದ ಮೇಲೆ ವಿಶ್ರಮಿಸಿಕೊಂಡರು. ಕೊಠಡಿಯಲ್ಲಿ ಭಕ್ತರ ಗುಂಪು ಅಧಿಕವಾಗಲಾರಂಭಿಸಿತು. ಹೊರಗೆ ವರಾಂಡಗಳಲ್ಲೂ ತುಂಬಿದ್ದಾರೆ. ಕೇದಾರ, ಸುರೇಶ, ರಾಮ, ಮನಮೋಹನ, ಗಿರೀಂದ್ರ, ರಾಖಾಲ, ಭವನಾಥ, ಮಾಸ್ಟರ್ ಮೊದಲಾದವರೂ ಕೊಠಡಿಯಲ್ಲಿ ಕುಳಿತಿದ್ದಾರೆ.
ಒಬ್ಬ ವೈಷ್ಣವ ಗೋಸ್ವಾಮಿ ಕೊಠಡಿಯಲ್ಲಿ ಕುಳಿತುಕೊಂಡಿದ್ದಾನೆ. ಪರಮಹಂಸರು ಆತನಿಗೆ ಪ್ರಶ್ನೆ ಹಾಕಿದರು: “ಒಳ್ಳೆಯದು, ನೀನು ಏನು ಹೇಳುತ್ತೀಯೆ? ಮಾರ್ಗವೇನು?”
ಗೋಸ್ವಾಮಿ: “ಮಹಾಶಯರೇ, ಕೇವಲ ನಾಮವೇ ಸಾಕು. ಕಲಿಯುಗದಲ್ಲಿ ನಾಮ ಮಹಾತ್ಮ್ಯ.”
ಶ್ರೀರಾಮಕೃಷ್ಣರು: “ಹೌದು. ನಾಮದಲ್ಲಿ ಒಳ್ಳೇ ಮಹಾತ್ಮ್ಯ ಇರುವುದೇನೋ ನಿಜ. ಆದರೆ ಅನುರಾಗವಿಲ್ಲದಿದ್ದರೆ ಏನು ದೊರೆಯುತ್ತದೆ? ಭಗವಂತನಿಗಾಗಿ ಪ್ರಾಣ ಸುಮ್ಮನೆ ವ್ಯಾಕುಲಪಡಬೇಕು. ನಾಮವನ್ನೇನೋ ಸುಮ್ಮನೆ ಉಚ್ಚರಿಸುತ್ತ ಕಾಮಕಾಂಚನಗಳಲ್ಲಿ ಮನಸ್ಸಿಟ್ಟಿದ್ದರೆ ಭಗವಂತನ ಸಾಕ್ಷಾತ್ಕಾರ ದೊರೆಯುವುದೆ? ಚೇಳು ಅಥವಾ ಜೇಡರಹುಳುಗಳ ಕಡಿತದ ನೋವು ಕೇವಲ ಮಂತ್ರದಿಂದಲೇ ಇಳಿದುಹೋಗುವುದಿಲ್ಲ. ಬೆರಣಿಯ ಹೊಗೆ ಕೊಡಬೇಕು.”
ಗೋಸ್ವಾಮಿ: “ಹಾಗಾದರೆ, ಅಜಾಮಿಳ? ಆತ ಮಹಾಪಾತಕಿ. ಆತ ಮಾಡದ ಪಾಪವೇ ಇಲ್ಲ. ಆದರೆ ಸಾಯುವಾಗ ನಾರಾಯಣನೆಂಬ ಹೆಸರಿನ ತನ್ನ ಮಗನನ್ನು ಕೂಗಿದ ಮಾತ್ರದಿಂದಲೇ ಆತ ಉದ್ಧಾರವಾಗಿಬಿಟ್ಟ.”
ಶ್ರೀರಾಮಕೃಷ್ಮರು: “ಬಹುಶಃ ಅಜಾಮಿಳ ಹಿಂದಿನ ಜನ್ಮಗಳಲ್ಲಿ ಬಹಳವಾಗಿ ತಪಸ್ಸು ಮಾಡಿರಬೇಕು. ಕೊನೆ ಜನ್ಮದಲ್ಲೂ ಆತ ಒಮ್ಮೆ ತಪಸ್ಸು ಮಾಡಿದ ಎಂಬುದಾಗಿ ಒಂದು ಕಡೆ ಹೇಳಿದೆ. ಅದೂ ಅಲ್ಲದೆ ಅದು ಆತನ ಅವಸಾನ ಕಾಲ. ಆನೆಗೆ ಮೈ ತೊಳೆದು ಸ್ನಾನಮಾಡಿಸುವುದರಿಂದ ಆಗುವ ಪ್ರಯೋಜನವೇನು? ಅದು ಮತ್ತೆ ಧೂಳು, ಬಗ್ಗಡ, ಬದಿ ಹೊಯ್ದುಕೊಂಡು ಎಂದಿನಂತೆಯೇ ಆಗಿಬಿಡುತ್ತದೆ. ಆದರೆ ಅದು ಗಜಶಾಲೆಯನ್ನು ಪ್ರವೇಶಿಸುವ ಮುನ್ನ ಚೆನ್ನಾಗಿ ಮೈತೊಳೆದು ಸ್ನಾನಮಾಡಿಸಿ ಬಿಟ್ಟರೆ ಸ್ವಚ್ಛವಾಗಿಯೇ ಇರುತ್ತದೆ.
“ಭಗವನ್ನಾಮೋಚ್ಚಾರಣೆಯಿಂದ ಮನುಷ್ಯ ಒಮ್ಮೆ ಶುದ್ಧನೇನೋ ಆದ ಅಂತ ಇಟ್ಟುಕೊ. ಆದರೆ ಮತ್ತೆ ಆತ ಅನೇಕ ಪಾಪಕಾರ್ಯಗಳಲ್ಲಿ ತೊಡಗಿಬಿಡುತ್ತಾನೆ. ಆತನದು ದುರ್ಬಲ ಮನಸ್ಸು. ಮತ್ತೆ ಪಾಪಕಾರ್ಯಗಳನ್ನು ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಲಾರ. ಗಂಗಾ ಸ್ನಾನದಿಂದ ಎಲ್ಲಾ ಪಾಪಗಳೂ ಹೋಗುವುದೇನೋ ನಿಜ; ಆದರೆ ಹೋದರೇನು? ಜನ ಹೇಳುತ್ತಾರೆ : ಪಾಪಗಳೆಲ್ಲಾ ಗಂಗಾತೀರದಲ್ಲಿರುವ ಮರಗಳ ಮೇಲೆ ಕುಳಿತಿರುತ್ತವೆ; ಗಂಗಾಸ್ನಾನ ಮಾಡಿ ಮನುಷ್ಯ ಹಿಂದಿರುಗಿ ದಡ ಹತ್ತಿದ ಎಂದೊಡನೆಯೇ, ಆತನ ಹಿಂದೆ ಪಾಪಗಳು ಮರಗಳಿಂದ ಹಾರಿ ಮತ್ತೆ ಆತನ ಹೆಗಲು ಹತ್ತಿಬಿಡುತ್ತವೆ. (ಎಲ್ಲರೂ ನಗುತ್ತಾರೆ.) ಸ್ನಾನ ಮಾಡಿ ಒಂದೆರಡು ಹೆಜ್ಜೆ ಇಡುವುದರಲ್ಲಿಯೇ ಅವು ಆತನ ಹೆಗಲು ಹತ್ತಿಬಿಡುತ್ತವೆ.
“ಅದಕ್ಕಾಗಿಯೇ ನಾನು ಹೇಳುವುದು, ಭಗವನ್ನಾಮೋಚ್ಚಾರಣೆಯನ್ನೂ ಮಾಡಿ; ಜೊತೆಗೆ ಆತನಲ್ಲಿ ನಿಮಗೆ ಅನುರಾಗ ಉಂಟಾಗುವಂತೆ ಕರುಣಿಸಬೇಕೆಂದೂ ಆತನಿಗೆ ಪ್ರಾರ್ಥನೆಮಾಡಿ. ಭಗವಂತನನ್ನು ಪ್ರಾರ್ಥಿಸಿಕೊಳ್ಳಿ: ಈ ಎರಡು ದಿನದ ಬಾಳಿನಲ್ಲಿ ಹಣ, ಕೀರ್ತಿ, ದೇಹಸುಖ ಇವುಗಳ ಮೇಲಿನ ಆಸಕ್ತಿ ದಿನದಿನಕ್ಕೂ ಕಡಮೆಯಾಗುತ್ತಾ ಬರುವಂತೆ ಕರುಣಿಸಬೇಕೆಂದು.
(ಗೋಸ್ವಾಮಿಗೆ) “ಅಂತರಂಗ ಶುದ್ಧವಾಗಿತ್ತು ಎಂದರೆ, ಎಲ್ಲಾ ಧರ್ಮಗಳ ಮೂಲಕವೂ ಭಗವಂತನನ್ನು ಪಡೆದುಕೊಳ್ಳಬಹುದು. ವೈಷ್ಣವರಿಗೂ ಭಗವಂತ ದೊರೆಯುತ್ತಾನೆ. ಶಾಕ್ತರಿಗೂ ದೊರೆಯುತ್ತಾನೆ. ವೇದಾಂತವಾದಿಗಳಿಗೂ ದೊರೆಯುತ್ತಾನೆ. ಬ್ರಾಹ್ಮ ಭಕ್ತರಿಗೂ ದೊರೆಯುತ್ತಾನೆ. ಮುಸಲ್ಮಾನ ಕ್ರಿಶ್ಚಿಯನ್ನರಿಗೂ ಆತ ದೊರೆಯುತ್ತಾನೆ. ಹೃತ್ಪೂರ್ವಕ ಮನಸ್ಸು ಇತ್ತು ಎಂದರೆ ಎಲ್ಲರಿಗೂ ಆತ ದೊರೆಯುತ್ತಾನೆ.
“ಕೆಲಕೆಲವರು ಜಗಳವಾಡುತ್ತಾರೆ: ‘ನಮ್ಮ ಶ್ರೀಕೃಷ್ಣನನ್ನು ಭಜಿಸದಿದ್ದರೆ ಏನೂ ದೊರೆಯದು’, ಅಥವಾ ‘ನಮ್ಮ ಭಗವತಿ ಕಾಳಿಯನ್ನು ಭಜಿಸದಿದ್ದರೆ ಏನೂ ದೊರೆಯದು’, ಅಥವಾ ‘ಕ್ರಿಸ್ತಧರ್ಮವನ್ನು ಒಪ್ಪಿಕೊಳ್ಳಲಿಲ್ಲ ಎಂದರೆ, ಯಾರೂ ಉದ್ಧಾರವಾಗುವ ಹಾಗೆಯೇ ಇಲ್ಲ.’ ಇದು ಶುದ್ಧ ಮತಾಂಧಶ್ರದ್ಧೆಯೇ. ‘ನನ್ನ ಧರ್ಮವೇ ಸರಿ, ಉಳಿದವರದೆಲ್ಲಾ ತಪ್ಪು’ ಎಂದು ಹೇಳುವುದು ಬಹಳ ಕೆಟ್ಟದ್ದು. ಭಗವಂತನನ್ನು ವಿವಿಧ ಮಾರ್ಗಗಳಿಂದ ಮುಟ್ಟಬಹುದು.
“ಇನ್ನು ಕೆಲವರು ಹೇಳುತ್ತಾರೆ, ಭಗವಂತ ಸಾಕಾರನೇ; ನಿರಾಕಾರವಲ್ಲ ಎಂಬುದಾಗಿ. ಇದಕ್ಕಾಗಿ ಅವರು ಜಗಳ ಕಾಯುತ್ತಾರೆ. ವೈಷ್ಣವರು ಈ ರೀತಿಯಾಗಿ ವೇದಾಂತವಾದಿಗಳೊಡನೆ ಜಗಳ ಕಾಯುತ್ತಾರೆ.
“ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡಿದ್ದರೆ ಮಾತ್ರ ಆತನ ಸಂಬಂಧವಾಗಿ ಯಥಾರ್ಥವಾಗಿ ಹೇಳಬಹುದು. ಯಾರಿಗೆ ಭಗವಂತನ ಸಾಕ್ಷಾತ್ಕಾರವಾಗಿದೆಯೋ, ಆತನಿಗೆ ಚೆನ್ನಾಗಿ ಗೊತ್ತಿದೆ, ಭಗವಂತ ಸಾಕಾರನೂ ಹೌದು, ನಿರಾಕಾರನೂ ಹೌದು ಎಂಬುದು. ಆತ ಇನ್ನೂ ಏನೇನು ಆಗಿದ್ದಾನೊ ಅದನ್ನು ಹೇಳಲಾಗುವುದಿಲ್ಲ.
“ಒಮ್ಮೆ ಕೆಲವು ಮಂದಿ ಕುರುಡರು ಒಂದು ಆನೆಯ ಹತ್ತಿರಕ್ಕೆ ಬಂದು ಸೇರಿದರು. ಯಾರೋ ಒಬ್ಬ ಅವರಿಗೆ ತಿಳಿಸಿದ, ಆ ಪ್ರಾಣಿಯ ಹೆಸರು ಆನೆ ಎಂಬುದಾಗಿ. ಆನೆ ಅವರಿಗೆ ಹೇಗೆ ತೋರಿಬರುತ್ತದೆ ಎಂದು ಆ ಕುರುಡರಿಗೆ ಪ್ರಶ್ನೆ ಹಾಕಲಾಗಿ ಅವರು ಅದನ್ನು ಮುಟ್ಟಿ ನೋಡಲಾರಂಭಿಸಿದರು. ಒಬ್ಬ ಹೇಳಿದ, ಆನೆ ಕಂಬದ ಹಾಗೆ ಇದೆ ಎಂದು. ಆತ ಅದರ ಕಾಲನ್ನು ಮಾತ್ರ ಮುಟ್ಟಿ ನೋಡಿದ್ದ. ಇನ್ನೊಬ್ಬ ಹೇಳಿದ, ಅದು ಮೊರದ ಹಾಗೆ ಇದೆ ಅಂತ. ಆತ ಅದರ ಕಿವಿಯನ್ನು ಮಾತ್ರ ಮುಟ್ಟಿ ನೋಡಿದ್ದ. ಈ ರೀತಿಯಾಗಿ ಸೊಂಡಿಲು, ಹೊಟ್ಟೆ ಇತ್ಯಾದಿ ಮುಟ್ಟಿದವರು ಬೇರೆ ಬೇರೆ ರೀತಿಯಾಗಿ ಹೇಳಲಾರಂಭಿಸಿದರು. ಇವರ ಹಾಗೆ ಯಾರ್ಯಾರು ಭಗವಂತನನ್ನು ಯಾವ್ಯಾವ ರೀತಿಯಾಗಿ ನೋಡಿದ್ದಾರೋ ಅವರು ಭಾವಿಸುತ್ತಾರೆ, ಭಗವಂತ ತಾವು ನೋಡಿದ ರೀತಿಯಲ್ಲಿ ಅಲ್ಲದೆ ಬೇರೆ ಯಾವ ರೀತಿಯಲ್ಲೂ ಇಲ್ಲವೇ ಇಲ್ಲ ಎಂಬುದಾಗಿ.
(ಗೋಸ್ವಾಮಿಗೆ) “ಭಗವಂತ ಕೇವಲ ಸಾಕಾರ ಅಂತ ಹೇಳಿಬಿಟ್ಟರೆ ಹೇಗಾದೀತು? ಭಗವಂತ ಶ್ರೀಕೃಷ್ಣನ ರೂಪದಲ್ಲಿ ಬಂದಿದ್ದ ಹಾಗೆ, ಮನುಷ್ಯ ದೇಹಧಾರಣೆ ಮಾಡಿಕೊಂಡು ಬರುತ್ತಾನೆ ಎಂಬುದು ಖಂಡಿತ ಸತ್ಯ; ವಿವಿಧ ರೂಪಗಳನ್ನು ಧರಿಸಿ ಭಕ್ತರಿಗೆ ಗೋಚರನಾಗುತ್ತಾನೆ ಎಂಬುದೂ ಸತ್ಯ; ಆದರೆ ಆತ ನಿರಾಕಾರ ಎಂಬುದೂ ಸತ್ಯ; ಆತ ಅಖಂಡ ಸಚ್ಚಿದಾನಂದ ಬ್ರಹ್ಮ. ವೇದದಲ್ಲಿ ಹೇಳಿದೆ, ಆತ ಸಾಕಾರ ನಿರಾಕಾರ ಎರಡೂ ಎಂದು. ಅದರಲ್ಲಿ ಹೇಳಿದೆ, ಆತ ಸಗುಣನೂ ಹೌದು, ನಿರ್ಗುಣನೂ ಹೌದು ಎಂದು.
“ಇದು ಹೇಗೆ ಗೊತ್ತೆ? ಸಚ್ಚಿದಾನಂದ, ಅನಂತ ಸಾಗರವಿದ್ದ ಹಾಗೆ. ಶೈತ್ಯದ ದೆಸೆಯಿಂದ ನೀರು ಹಿಮಕಟ್ಟಿ ವಿವಿಧ ಹಿಮಗಡ್ಡೆಗಳ ರೂಪ ತಾಳಿ ಸಾಗರದ ನೀರಿನಲ್ಲಿ ತೇಲಾಡುತ್ತಿರುತ್ತದೆ. ಅದೇ ರೀತಿಯಾಗಿ ಭಕ್ತಿ ಎಂಬ ಶೈತ್ಯದ ದೆಸೆಯಿಂದ ಸಚ್ಚಿದಾನಂದ ಸಾಗರದಲ್ಲಿ ಭಗವಂತನ ಅನೇಕ ರೂಪಗಳನ್ನು ನೋಡಬಹುದು. ಆಕಾರಗಳು ಭಕ್ತರಿಗಾಗಿ ಮಾತ್ರವೇ. ಆದರೆ ಜ್ಞಾನಸೂರ್ಯ ಉದಯಿಸಿದ ಎಂದರೆ ಹಿಮಗಡ್ಡೆಗಳೆಲ್ಲಾ ಕರಗಿ ಎಂದಿನಂತೆ ನೀರಾಗುತ್ತವೆ. ಮೇಲೆ ನೀರು, ಕೆಳಗೆ ನೀರು, ಎಲ್ಲೆಲ್ಲೂ ನೀರೇ ನೀರು. ಇದಕ್ಕಾಗಿಯೇ ಶ್ರೀಮದ್ಭಾಗವತದ ಒಂದು ಸ್ತೋತ್ರ ಹೇಳುತ್ತದೆ: ‘ಹೇ ಭಗವಂತ, ನೀನೇ ಸಾಕಾರ ನೀನೇ ನಿರಾಕಾರ. ನಮ್ಮ ಮುಂದೆ ನೀನು ಮನುಷ್ಯರೂಪ ಧರಿಸಿ ಸುತ್ತಾಡುತ್ತಿದ್ದೀಯೆ; ಆದರೆ ವೇದದಲ್ಲಿ ನಿನ್ನನ್ನೇ ವಾಙ್ಮನಾತೀತ ಎಂಬುದಾಗಿ ಹೇಳಿದೆ.’
“ಆದರೆ ನೀನು ಹೇಳಬಹುದು, ಕೆಲಕೆಲವು ಭಕ್ತರಿಗಾಗಿ ಭಗವಂತ ನಿತ್ಯಸಾಕಾರ ರೂಪ ತಾಳುತ್ತಾನೆ ಎಂಬುದಾಗಿ. ಸಾಗರದಲ್ಲಿ ಕೆಲವು ಸ್ಥಳಗಳಿವೆ; ಅಲ್ಲಿ ಹಿಮಗಡ್ಡೆ ಕರಗುವುದೇ ಇಲ್ಲ. ಅಲ್ಲಿ ಅದು ಸ್ಫಟಿಕಾಕಾರವನ್ನು ತಾಳುತ್ತದೆ.”
ಕೇದಾರ: “ವ್ಯಾಸಮಹರ್ಷಿ ತನ್ನ ಮೂರು ಅಪರಾಧಕ್ಕಾಗಿ ಭಗವಂತನಿಂದ ಕ್ಷಮೆ ಬೇಡಿದ ಎಂಬುದಾಗಿ ಭಾಗವತದಲ್ಲಿ ಹೇಳಿದೆ. ಆತ ಅದರಲ್ಲಿ ಪ್ರಾರ್ಥನೆಮಾಡಿದ್ದಾನೆ: ‘ಹೇ ಭಗವಂತ, ನೀನು ನಿರಾಕಾರ; ಆದರೆ ನಾನು ನಿನ್ನ ಧ್ಯಾನದ ಸಮಯದಲ್ಲಿ ನಿನಗೆ ಸಾಕಾರರೂಪ ಕಲ್ಪಿಸಿಕೊಂಡಿದ್ದೇನೆ; ನೀನು ವಾಗತೀತ, ಆದರೆ ನಾನು ನಿನ್ನನ್ನು ಸ್ತುತಿಸಿದ್ದೇನೆ; ನೀನು ಸರ್ವವ್ಯಾಪಿ, ಆದರೆ ನಾನು ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆಗಾಗಿ ಹೋಗಿದ್ದೇನೆ. ಹೇ ಭಗವಂತ, ಕೃಪೆಮಾಡಿ ನನ್ನ ಈ ಮೂರು ಅಪರಾಧಗಳನ್ನು ಕ್ಷಮಿಸಿಬಿಡು.’
ಶ್ರೀರಾಮಕೃಷ್ಣರು: “ಹೌದು, ಭಗವಂತನು ಸಾಕಾರನೂ ಹೌದು, ನಿರಾಕಾರನೂ ಹೌದು. ಮತ್ತೆ ಆತ ಸಾಕಾರನಿರಾಕಾರಗಳಿಗೆ ಅತೀತನೂ ಹೌದು. ಆತ ಇದೇ ಅಂತ ಹೇಳಲಾಗುವುದಿಲ್ಲ.”
ರಾಖಾಲನ ತಂದೆ ಕೊಠಡಿಯಲ್ಲಿ ಕುಳಿತುಕೊಂಡಿದ್ದಾನೆ. ಈಗ ಕೆಲವು ದಿನಗಳಿಂದ ರಾಖಾಲ ಪರಮಹಂಸರೊಡನೆಯೇ ಇದ್ದಾನೆ. ರಾಖಾಲನ ತಾಯಿ ಸತ್ತ ಬಳಿಕ ಆತನ ತಂದೆ ದ್ವಿತೀಯ ವಿವಾಹ ಮಾಡಿಕೊಂಡಿದ್ದಾನೆ. ರಾಖಾಲ ಇಲ್ಲೇ ಇರುವುದರಿಂದ ಆತನನ್ನು ನೋಡಲು ಆತ ಅಡಿಗಡಿಗೆ ಬರುತ್ತಿದ್ದಾನೆ. ರಾಖಾಲ ಇಲ್ಲೇ ಇರುವುದನ್ನು ನೋಡಿ ಆತ ವಿಶೇಷವಾಗಿ ಏನೂ ಬೇಡ ಅಂತ ಹೇಳಲಿಲ್ಲ. ಆತ ಒಳ್ಳೇ ಧನಿಕ ಪ್ರಾಪಂಚಿಕನಾದ್ದರಿಂದ ಆಗಾಗ ಕೋರ್ಟು ಕಚೇರಿಗಳಿಗೆ ಹತ್ತುತ್ತಲೇ ಇರಬೇಕಾಗಿತ್ತು. ಪರಮಹಂಸರನ್ನು ನೋಡಲು ಅನೇಕ ಮಂದಿ ವಕೀಲರು, ಡೆಪ್ಯುಟಿ ಮ್ಯಾಜಿಸ್ಟ್ರೇಟರುಗಳು ಬರುತ್ತಿದ್ದುದರಿಂದ, ಅವರೊಡನೆ ಸಮಾಲೋಚಿಸಲೂ ಆಗಾಗ ಬರುತ್ತಿದ್ದಾನೆ. ಅವರಿಂದ ಆತನಿಗೆ ಪ್ರಾಪಂಚಿಕ ಕಾರ್ಯಗಳ ಸಂಬಂಧವಾಗಿ ಅನೇಕ ಒಳ್ಳೆಯ ಸಹಾಯಕಾರಿ ಸಲಹೆಗಳು ದೊರೆಯುತ್ತಿವೆ.
ಪರಮಹಂಸರು ಆಗಾಗ ರಾಖಾಲನ ತಂದೆಯ ಕಡೆ ದೃಷ್ಟಿಹಾಕುತ್ತಿದ್ದಾರೆ. ಅವರ ಇಚ್ಛೆ ರಾಖಾಲ ಖಾಯಂ ಆಗಿ ತಮ್ಮೊಡನೇ ದಕ್ಷಿಣೇಶ್ವರದಲ್ಲಿ ಇದ್ದುಬಿಡಬೇಕೆಂದು.
ಶ್ರೀರಾಮಕೃಷ್ಣರು ರಾಖಾಲನ ತಂದೆಗೆ ಮತ್ತು ಭಕ್ತರಿಗೆ: “ಆಹ, ರಾಖಾಲ ಈಗ ಕೆಲವು ಕಾಲದಿಂದ ಎಂಥ ಒಳ್ಳೆ ಗುಣಗಳನ್ನು ಬೆಳೆಸಿಕೊಂಡುಬಿಟ್ಟಿದ್ದಾನೆ! ಆತನ ಮುಖವನ್ನು ದೃಷ್ಟಿಸಿ ನೋಡಿ-ಆಗಾಗ ತುಟಿಗಳು ಅಲುಗುತ್ತಿರುತ್ತವೆ. ಆಂತರ್ಯದಲ್ಲಿ ಆತ ಭಗವನ್ನಾಮೋಚ್ಚಾರಣೆ ಮಾಡುತ್ತಿರುವುದರಿಂದ ಆತನ ತುಟಿಗಳು ಅಲುಗುತ್ತಿರುತ್ತವೆ.
“ಈ ವಿಧದ ಹುಡುಗರು ನಿತ್ಯಸಿದ್ಧರ ಗುಂಪಿಗೆ ಸೇರಿದವರು. ಬ್ರಹ್ಮಜ್ಞಾನವಿಟ್ಟುಕೊಂಡೇ ಜನ್ಮ ತಳೆದಿದ್ದಾರೆ. ಸ್ವಲ್ಪ ವಯಸ್ಸಾಯಿತು ಎಂದರೆ ಇವರಿಗೆ ಗೊತ್ತಾಗಿಬಿಡುತ್ತದೆ, ಸಂಸಾರದ ಸ್ಪರ್ಶವೇನಾದರೂ ಶರೀರಕ್ಕೆ ತಾಗಿತು ಎಂದರೆ ಬದುಕುವ ಹಾಗಿಲ್ಲ ಎಂಬುದಾಗಿ. ವೇದದಲ್ಲಿ ಹೋಮಾಪಕ್ಷಿಯ ಕಥೆ ಇದೆ. ಆ ಹಕ್ಕಿ ಆಕಾಶದಲ್ಲಿಯೇ ವಾಸವಾಗಿರುತ್ತದೆ. ಭೂಮಿಯ ಮೇಲಕ್ಕೆ ಎಂದಿಗೂ ಇಳಿದುಬಾರದು. ಅದು ಆಕಾಶದಲ್ಲೇ ಮೊಟ್ಟೆ ಇಡುತ್ತದೆ. ಆ ಮೊಟ್ಟೆ ಬೀಳುತ್ತಲೇ ಇರುತ್ತದೆ. ಆ ಹಕ್ಕಿ ಅಷ್ಟು ಎತ್ತರದಲ್ಲಿ ವಾಸಿಸುತ್ತದೆ. ಮೊಟ್ಟೆ ಬೀಳುತ್ತ ಬೀಳುತ್ತಲೇ ಬಿರಿದು ಮರಿಯಾಗುತ್ತದೆ. ಬಳಿಕ ಮರಿ ಬೀಳಲಾರಂಭಿಸುತ್ತದೆ. ಆ ಮರಿ ಇನ್ನೂ ಅಷ್ಟು ಎತ್ತರದಲ್ಲಿ ಬೀಳುತ್ತಿರುತ್ತದೆ. ಅದು ಬೀಳುತ್ತ ಬೀಳುತ್ತ ಅದಕ್ಕೆ ರೆಕ್ಕೆ ಹುಟ್ಟುತ್ತವೆ. ಕಣ್ಣು ತೆರೆಯುತ್ತವೆ. ಆಗ ಅದರ ಅರಿವಿಗೆ ಬರುತ್ತದೆ, ತಾನು ಭೂಮಿಯ ಮೇಲೆ ಇನ್ನೇನು ಬೀಳುವುದರಲ್ಲಿದ್ದೇನೆ; ಬಿದ್ದರೆ ಒಡನೆಯೇ ಮೃತ್ಯು ಎಂಬುದಾಗಿ. ಭೂಮಿ ಕಣ್ಣಿಗೆ ಬಿತ್ತೊ ಇಲ್ಲವೊ ಒಡನೆ ಮೇಲಕ್ಕೆ ತಿರುಗಿ ‘ಸೊಯ್ಞ್’ ಅಂತ ತಾಯಿಯ ಕಡೆಗೆ ಹಾರಿ ಹೋಗುತ್ತದೆ. ಆಗ ಅದರ ಏಕಮಾತ್ರ ಗುರಿ ತಾಯಿಯನ್ನು ಮುಟ್ಟುವುದು.
“ಈ ಹುಡುಗರೆಲ್ಲ ಆ ಹಕ್ಕಿಯ ಹಾಗೆ. ಬಾಲ್ಯದಿಂದಲೇ ಸಂಸಾರ ಕಂಡರೆ ಭಯ. ಇವರ ಒಂದೇ ಒಂದು ಚಿಂತನೆ, ಯಾವ ರೀತಿಯಾಗಿ ಭಗವತಿಯನ್ನು ಮುಟ್ಟುವುದು, ಯಾವ ರೀತಿಯಾಗಿ ಭಗವಂತನ ಸಾಕ್ಷಾತ್ಕಾರವನ್ನು ಪಡೆಯುವುದು ಎಂಬುದಾಗಿ.”
“ನೀವು ಕೇಳಬಹುದು: ‘ಪ್ರಾಪಂಚಿಕರ ಹೊಟ್ಟೆಯಲ್ಲಿ ಹುಟ್ಟಿ, ಪ್ರಾಪಂಚಿಕರ ಸಹವಾಸದಲ್ಲಿ ಬೆಳೆದು, ಇಂಥ ಭಕ್ತಿ, ಇಂಥ ಜ್ಞಾನ ಇವರಿಗೆ ಬಂದಿರುವ ಬಗೆ ಹೇಗೆ?’ ಇದಕ್ಕೆ ವಿವರಣೆ ಕೊಡಬಹುದು : ಒಂದು ಪಕ್ಷ ತಿಪ್ಪೆಗುಂಡಿಗೆ ಬಟಾಣಿ ಕಾಳು ಬಿದ್ದರೆ ಅಲ್ಲೂ ಅದು ಬಟಾಣಿ ಗಿಡವಾಗಿಯೇ ಹುಟ್ಟುತ್ತದೆ. ಆ ಗಿಡದ ಬಟಾಣಿ ಕಾಳು ಎಷ್ಟೋ ಉಪಯೋಗಕ್ಕೆ ಬರುತ್ತವೆ! ಬಟಾಣಿ ತಿಪ್ಪೆಗುಂಡಿಗೆ ಬಿದ್ದುಬಿಟ್ಟದ್ದರಿಂದ ಅದು ಅಲ್ಲಿ ಬೇರೆ ಗಿಡವಾಗಿ ಹುಟ್ಟಿಬಿಟ್ಟೀತೆ?
“ಆಹಾ, ರಾಖಾಲ ಈಗ ಎಂಥ ಗುಣಶಾಲಿಯಾಗಿಬಿಟ್ಟಿದ್ದಾನೆ! ಆತ ಹಾಗೆ ಏಕೆ ಆಗಬಾರದು? ಸುವರ್ಣಗಡ್ಡೆ ಒಳ್ಳೆಯದಾಗಿದ್ದರೆ ಅದರ ಮೊಳಕೆಯೂ ಒಳ್ಳೆಯದಾಗುತ್ತದೆ. (ಎಲ್ಲರೂ ನಗುತ್ತಾರೆ.) ತಂದೆಯಂತೆ ಮಗ.”
ಮಾಸ್ಟರ್ ಏಕಾಂತದಲ್ಲಿ ಗಿರೀಂದ್ರನಿಗೆ: “ಭಗವಂತನ ಸಾಕಾರ ನಿರಾಕಾರದ ಸಂಬಂಧವಾಗಿ ಇವರು ಎಷ್ಟು ಚೆನ್ನಾಗಿ ವಿವರಿಸಿ ತಿಳಿಸಿದರು! ವೈಷ್ಣವರು ಭಗವಂತ ಕೇವಲ ಸಾಕಾರ ಅಂತಲೇ ಹೇಳುತ್ತಾರೆ ಅಂತ ಕಾಣುತ್ತದೆ?”
ಗಿರೀಂದ್ರ: “ಹಾಗೇ ಅಂತ ಕಾಣುತ್ತದೆ. ಅವರು ಒಂದೇ ಸ್ವರದವರು.”
ಮಾಸ್ಟರ್: “ಭಗವಂತ ‘ನಿತ್ಯಸಾಕಾರ’ ಅಂತ ಹೇಳಿದರಲ್ಲ; ಅದು ನಿನಗೆ ಅರ್ಥವಾಯಿತೆ? ಆ ಸ್ಫಟಿಕದ ವಿಷಯ? ಅದು ನನಗೆ ಸರಿಯಾಗಿ ಅರ್ಥವಾಗಲಿಲ್ಲ.”
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಏನು ಸಮಾಚಾರ? ಏನು ಮಾತಾಡಿಕೊಳ್ಳುತ್ತಿದ್ದೀರಿ?”
ಮಾಸ್ಟರ್ ಮತ್ತು ಗಿರೀಂದ್ರ ನಕ್ಕು ಸುಮ್ಮನಿದ್ದುಬಿಟ್ಟರು.
ಅಪರಾಹ್ನ. ಭಕ್ತರು ಪಂಚವಟಿಯಲ್ಲಿ ಹಾಡುತ್ತಿದ್ದಾರೆ. ಪರಮಹಂಸರು ಅವರೊಡನೆ ಸೇರಿ ಹಾಡಲಾರಂಭಿಸಿದ್ದಾರೆ. ಎಲ್ಲರೂ ಕೂಡಿ ಭಗವತಿಯ ಸಂಬಂಧವಾಗಿ ಹಾಡುತ್ತಿದ್ದಾರೆ:
ಶ್ರೀ ಘನಶ್ಯಾಮೆಯ ಚರಣಾಕಾಶದಿ ಗಾಳಿಪಟದ ತೆರದಿ
ಹಾರುತಿರಲು ಮನ, ದುರಿತ ಕಲುಷ ಬಿರುಗಾಳಿಯು ಭರದಿ…..
ಹಾಡುವುದು ಮುಂದುವರಿಯಿತು. ಪರಮಹಂಸರು ಭಕ್ತರೊಡನೆ ನರ್ತಿಸುತ್ತಿದ್ದಾರೆ, ಭಕ್ತರು ಹಾಡುತ್ತಿದ್ದಾರೆ:
ಸಾಗುತಿಹುದು ಚಿತ್ತಭೃಂಗ
ಕಾಳೀಪದ ನೀಲಕಮಲ ಮಧುಪಾನದ ಆಸೆಗೆ!……
ಕೀರ್ತನೆ ಮುಂದುವರಿಯುತ್ತಿದೆ:
ನಿನ್ನದೇ ಈ ಯಂತ್ರ? ಎಂಟು ಗೇಣಿನ ಬೊಂಬೆ:
ಯಾವ ಆಟಕೆ ಇದನು ನೀ ಮಾಡಿದೆ?
ಒಡಲ ಯಂತ್ರದೊಳಡಗಿ ಅದರ ಸೂತ್ರವ ಹಿಡಿದು
ನೀನೆ ಈ ಜೀವವನು ನಡೆಸುತಿರುವೆ!
ಅದನರಿಯದೀ ಯಂತ್ರ ತಾನೆ ನಡೆಯುವೆನೆಂಬ
ಮಮಕಾರ ಭ್ರಾಂತಿಯಲಿ ಸಾಗುತ್ತಿದೆ.
ನೀನೆ ಚಾಲಕಶಕ್ತಿ-ಎಂದರಿತ ಜೀವಕ್ಕೆ
ಯಂತ್ರಭಾವವು ಮತ್ತೆ ಉಳಿವುದುಂಟೆ?
ಆದರೂ ಹಲಕೆಲವು ಯಂತ್ರಗಳು ಕಾಳಿಯನು
ಪ್ರೇಮಸೂತ್ರದಿ ಕಟ್ಟಿ ಸಾಗುತ್ತಿವೆ!
ಇಂದು ಎಲ್ಲರ ಹೃದಯದಲ್ಲೂ ಆನಂದ ಉಕ್ಕಿ ಉಕ್ಕಿ ಹರಿಯುತ್ತಿದೆ.
ಪರಮಹಂಸರು ಪಂಚವಟಿಯಿಂದ ಎದ್ದು ತಮ್ಮ ಕೊಠಡಿಗೆ ಬರುತ್ತಿದ್ದಾರೆ. ಮಾಸ್ಟರ್ ಅವರನ್ನು ಹಿಂಬಾಲಿಸುತ್ತಿದ್ದಾನೆ. ಬಕುಳವೃಕ್ಷದ ಹತ್ತಿರಕ್ಕೆ ಬಂದಾಗ ತ್ರೈಲೋಕ್ಯನನ್ನು ಸಂಧಿಸಿದರು. ಆತ ಪರಮಹಂಸರಿಗೆ ಪ್ರಣಾಮಮಾಡಿದ.
ಶ್ರೀರಾಮಕೃಷ್ಣರು: “ಅವರು ಪಂಚವಟಿಯಲ್ಲೆ ಹಾಡುತ್ತಿದ್ದಾರೆ. ಅಲ್ಲಿಗೆ ಹೋಗುವುದಿಲ್ಲವೆ?”
ತ್ರೈಲೋಕ್ಯ: “ನಾನು ಅಲ್ಲಿಗೆ ಹೋಗಿ ಏನು ಮಾಡಲಿ?”
ಶ್ರೀರಾಮಕೃಷ್ಣರು: “ಏಕೆ, ಕುಳಿತು ಆನಂದಪಡು.”
ತ್ರೈಲೋಕ್ಯ: “ಒಮ್ಮೆ ಆಗಲೇ ಅಲ್ಲಿಗೆ ಹೋಗಿದ್ದೆ.”
ಶ್ರೀರಾಮಕೃಷ್ಣರು: “ಒಳ್ಳೇದು, ಒಳ್ಳೇದು! ಹಾಗಾದರೆ ಸರಿ.”
ಈಗ ಸಾಯಂಕಾಲ ಆರು. ಪರಮಹಂಸರು ಭಕ್ತರೊಡನೆ ತಮ್ಮ ಕೊಠಡಿಯ ಆಗ್ನೇಯ ವರಾಂಡದಲ್ಲಿ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು: “ಸಂಸಾರವನ್ನು ತ್ಯಜಿಸಿದ ಸಾಧು ಭಗವನ್ನಾಮವನ್ನು ಜಪಿಸೇ ಜಪಿಸುತ್ತಾನೆ. ಆಗ ಹಾಗೆ ಮಾಡಬೇಕಾದ್ದೆ. ಆತನಿಗೆ ಬೇರೇನೂ ಕೆಲಸವೇ ಇಲ್ಲ. ಆತ ಭಗವಚ್ಚಿಂತನೆ ಮಾಡುತ್ತಿದ್ದರೆ ಅದು ಆಶ್ಚರ್ಯವಾದ ವಿಷಯವೇನಲ್ಲ. ಆತ ಭಗವಚ್ಚಿಂತನೆ ಮಾಡದೆ ಇದ್ದ ಎಂದರೆ, ಭಗವನ್ನಾಮೋಚ್ಚಾರಣೆ ಮಾಡದೆ ಇದ್ದ ಎಂದರೆ, ಆಗ ಜನ ಆತನನ್ನು ನಿಂದಿಸುತ್ತಾರೆ.
“ಆದರೆ ಸಂಸಾರಿ ಭಗವನ್ನಾಮಜಪ ಮಾಡಿದರೆ ಅದೀಗ ಒಂದು ದೊಡ್ಡ ವಿಷಯ. ಜನಕರಾಜನನ್ನು ನೆನಸಿಕೊಳ್ಳಿ. ಆತ ಎಂಥ ಸಾಹಸಿ! ಆತ ಎರಡು ಕತ್ತಿಗಳ ವರಸೆ ಮಾಡುತ್ತಿದ್ದ. ಒಂದು ಜ್ಞಾನದ್ದು, ಇನ್ನೊಂದು ಕರ್ಮದ್ದು. ಒಂದು ಕಡೆ ಪೂರ್ಣ ಬ್ರಹ್ಮಜ್ಞಾನಿಯಾಗಿದ್ದ. ಇನ್ನೊಂದು ಕಡೆ ಈ ಜಗತ್ತಿನ ಕೆಲಸಕಾರ್ಯಗಳನ್ನೂ ಮಾಡುತ್ತಿದ್ದ. ಶೀಲ ಭ್ರಷ್ಟಳಾದ ಹೆಂಗಸು ಸಂಸಾರದ ಎಲ್ಲಾ ಕೆಲಸಗಳನ್ನೂ ಚಾಚೂ ತಪ್ಪದೆ ಮಾಡುತ್ತಾಳೆ. ಆದರೆ ಅವಳ ಮನಸ್ಸೆಲ್ಲಾ ಸರ್ವದಾ ಉಪಪತಿಯ ಮೇಲೇ ನೆಲಸಿರುತ್ತದೆ.
“ಯಾವಾಗಲೂ ಸಾಧುಸಂಗ ಇದ್ದೇ ಇರಬೇಕು. ಸಾಧು ಭಗವಂತನ ಪರಿಚಯ ಮಾಡಿಕೊಟ್ಟುಬಿಡುತ್ತಾನೆ.”
ಕೇದಾರ: “ಹೌದು, ಮಹಾಪುರುಷ ಜೀವರ ಉದ್ಧಾರಕ್ಕಾಗಿ ಜನ್ಮತಳೆಯುತ್ತಾನೆ. ರೈಲ್ವೆ ಎಂಜಿನ್ ಅನೇಕ ಗಾಡಿಗಳನ್ನು ಎಳೆದುಕೊಂಡು ಹೋಗುವ ಹಾಗೆ ಅನೇಕರನ್ನು ಭಗವಂತನ ಕಡೆಗೆ ಕರೆದೊಯ್ದುಬಿಡುತ್ತಾನೆ. ಅಥವಾ ಆತನನ್ನು ನದಿಗೆ ಅಥವಾ ಸರೋವರಕ್ಕೆ ಹೋಲಿಸಬಹುದು. ಅದು ಎಷ್ಟೊಂದು ಜನರ ಬಾಯಾರಿಕೆಯನ್ನು ಇಂಗಿಸುತ್ತದೆ!”
ಭಕ್ತರು ಮನೆಗೆ ಹಿಂದಿರುಗಲು ಸಿದ್ಧವಾಗಿದ್ದಾರೆ. ಒಬ್ಬೊಬ್ಬರಾಗಿ ಎಲ್ಲರೂ ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಅವರ ಪಾದಧೂಳಿಯನ್ನು ತೆಗೆದುಕೊಂಡರು. ಭವನಾಥನನ್ನು ನೋಡಿ ಪರಮಹಂಸರು ಹೇಳುತ್ತಿದ್ದಾರೆ: “ನೀನು ಇಂದೇ ಹೋಗಬೇಡ. ನಿನ್ನನ್ನು ನೋಡಿದರೇ ನನಗೆ ಉದ್ದೀಪನವಾಗುತ್ತದೆ.” ಭವನಾಥ ಇನ್ನೂ ಸಂಸಾರಕ್ಕೆ ಕಾಲು ಹಾಕಿಲ್ಲ. ವಯಸ್ಸು ಹತ್ತೊಂಬತ್ತೊ ಇಪ್ಪತ್ತೊ. ಗೌರವರ್ಣ, ಸುಂದರ ದೇಹ. ಭಗವನ್ನಾಮ ಆತನ ಕಿವಿಗೆ ಬಿತ್ತು ಎಂದರೆ, ಆತನ ಕಣ್ಣುಗಳಿಂದ ಪ್ರೇಮಾಶ್ರು ಸುರಿಯುತ್ತದೆ. ಪರಮಹಂಸರು ಆತನನ್ನು ಸಾಕ್ಷಾತ್ ನಾರಾಯಣನೆ ಏನೊ ಎಂಬಂತೆ ನೋಡುತ್ತಿದ್ದಾರೆ.
೨೯ನೆ ಮಾರ್ಚ್ ೧೮೮೩, ಫಾಲ್ಗುಣ ಕೃಷ್ಣಪಂಚಮಿ, ಗುರುವಾರ
ಪರಮಹಂಸರು ಮಧ್ಯಾಹ್ನದ ಊಟದ ನಂತರ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡರು. ಅಷ್ಟರಲ್ಲಿ ಕೆಲವು ಮಂದಿ ಭಕ್ತರು ಕಲ್ಕತ್ತದಿಂದ ಬಂದು ಸೇರಿದರು. ಅವರ ಮಧ್ಯೆ ಬ್ರಾಹ್ಮಸಮಾಜದ ಅನುಯಾಯಿ ಅಮೃತ ಮತ್ತು ಹೆಸರಾಂತ ಗಾಯಕ ತ್ರೈಲೋಕ್ಯ ಕುಳಿತಿದ್ದಾರೆ.
ರಾಖಾಲನ ಶರೀರಾರೋಗ್ಯ ಸರಿಯಾಗಿಲ್ಲ. ಅದಕ್ಕಾಗಿ ಪರಮಹಂಸರು ಬಹಳವಾಗಿ ಚಿಂತಿಸುತ್ತ ಭಕ್ತರಿಗೆ ಹೇಳುತ್ತಿದ್ದಾರೆ: “ಅಲ್ಲಿ ನೋಡಿ. ರಾಖಾಲನಿಗೆ ದೇಹಸೌಖ್ಯವಿಲ್ಲ. ಸೋಡ ಕುಡಿದರೆ ಆತನಿಗೆ ಒಳ್ಳೆಯದಾಗುತ್ತದೆಯೇ? ಏನು ಮಾಡಲಿ ನಾನು ಈಗ? ರಾಖಾಲ, ನೀನು ಜಗನ್ನಾಥ ಪ್ರಸಾದ ತಿನ್ನು.”
ಪರಮಹಂಸರು ಹೀಗೆ ಹೇಳುತ್ತ ಹೇಳುತ್ತ ಇದ್ದ ಹಾಗೇ ಅವರಲ್ಲಿ ಒಂದು ಅದ್ಭುತ ಪರಿವರ್ತನೆ ತೋರಿಬರಲಾರಂಭಿಸಿತು. ಅವರು ರಾಖಾಲನನ್ನು ವಾತ್ಸಲ್ಯಭಾವದಿಂದ ನೋಡುತ್ತ ಪ್ರೇಮೋನ್ಮತ್ತರಾಗಿ, “ಗೋವಿಂದ”, “ಗೋವಿಂದ” ಎಂದು ಸಂಬೋಧಿಸಿದರು. ಅವರು ರಾಖಾಲನಲ್ಲಿ ಸಾಕ್ಷಾತ್ ನಾರಾಯಣನನ್ನೇ ನೋಡಿದರೇನು? ರಾಖಾಲ ಕಾಮಕಾಂಚನತ್ಯಾಗಿ, ಶುದ್ಧಾತ್ಮ ಬಾಲಭಕ್ತ. ಪರಮಹಂಸರು ಭಗವತ್ಪ್ರೇಮದಿಂದ ಹಗಲಿರುಳೂ ಉನ್ಮತ್ತರು. ಬಾಲಕನಾದ ಶ್ರೀಕೃಷ್ಣನನ್ನು ನೋಡಿ ಯಶೋದೆಗೆ ಯಾವ ಭಾವ ಉಂಟಾಗುತ್ತಿತ್ತೋ, ಅದೇ ಭಾವ ರಾಖಾಲನನ್ನು ನೋಡಿ ಪರಮಹಂಸರಿಗೆ ಉಂಟಾಗಿರಬೇಕು. ಭಕ್ತರೆಲ್ಲರೂ ಆಶ್ಚರ್ಯಚಕಿತರಾಗಿ ಅವರನ್ನೇ ದೃಷ್ಟಿಸಿ ನೋಡುತ್ತಿದ್ದಾರೆ. ಪರಮಹಂಸರ ಶರೀರ ಚಿತ್ರದ ಬೊಂಬೆಯಂತೆ ಸ್ಥಿರವಾಗಿಬಿಟ್ಟಿದೆ. ಇಂದ್ರಿಯ ಸಮೂಹಗಳೆಲ್ಲ ತಮ್ಮ ತಮ್ಮ ಕೆಲಸಗಳಿಗೆ ರಾಜೀನಾಮೆ ಕೊಟ್ಟುಬಿಟ್ಟಿವೆ. ದೃಷ್ಟಿ ನಾಸಿಕಾಗ್ರದಲ್ಲಿ ಸ್ಥಿರವಾಗಿಬಿಟ್ಟಿದೆ, ಉಸಿರಾಡುವುದು ನಿಂತುಹೋದಂತೆಯೇ ಇದೆ. ಅವರ ಆತ್ಮಪಕ್ಷಿ ಬಹುಶಃ ಚಿದಾಕಾಶದಲ್ಲಿ ಸಂಚರಿಸುತ್ತಿದೆ ಅಂತ ಕಾಣುತ್ತದೆ.
ಕಾಷಾಯವಸ್ತ್ರಧಾರಿಯಾದ ಒಬ್ಬ ಅಪರಿಚಿತ ಬಂಗಾಳಿ ವ್ಯಕ್ತಿ ಕೊಠಡಿಯನ್ನು ಪ್ರವೇಶಿಸಿ ಒಂದು ಕಡೆ ಕುಳಿತುಕೊಂಡ. ಪರಮಹಂಸರು ಕ್ರಮಕ್ರಮೇಣ ಪ್ರಕೃತಿಸ್ಥರಾಗುತ್ತಿದ್ದಾರೆ. ಭಾವಸ್ಥರಾಗಿಯೇ ತಮಗೆ ತಾವೇ ಮಾತಾಡಿಕೊಳ್ಳುತ್ತಿದ್ದಾರೆ.
ಶ್ರೀರಾಮಕೃಷ್ಣರು ಕಾಷಾಯವಸ್ತ್ರ ನೋಡಿ, : “ಈ ಕಾಷಾಯವಸ್ತ್ರ ಏಕೆ? ಇದೊಂದು ಧರಿಸಿದರೆ ಎಲ್ಲಾ ಮುಗಿದ ಹಾಗೆಯೋ? ಒಬ್ಬ ಒಮ್ಮೆ ಹೇಳಿದ: ‘ಈಗ ಚಂಡೀಪಠನೆ ಬಿಟ್ಟು ಮದ್ದಲೆ ಬಾರಿಸುತ್ತಿದ್ದೇನೆ.’ ಹಿಂದೆ ಚಂಡೀಪಠನೆ ಮಾಡುತ್ತಿದ್ದವನು ಈಗ ಮದ್ದಲೆ ಬಾರಿಸುತ್ತಿದ್ದಾನೆ. (ಎಲ್ಲರೂ ನಗುತ್ತಿದ್ದಾರೆ.)
“ವೈರಾಗ್ಯದಲ್ಲಿ ಮೂರು-ನಾಲ್ಕು ವಿಧ. ಸಂಸಾರದ ಬೇಗೆಯಲ್ಲಿ ಬೆಂದು ಕಾಷಾಯವಸ್ತ್ರ ಧರಿಸುವುದು; ಇದು ಹೆಚ್ಚು ಕಾಲ ನಿಲ್ಲದು. ಬಹುಶಃ ಒಬ್ಬ ವ್ಯಕ್ತಿಗೆ ಯಾವ ಕೆಲಸವೂ ಸಿಕ್ಕಲಿಲ್ಲ ಅಂತ ಇಟ್ಟುಕೊ. ಆತ ಕಾಷಾಯವಸ್ತ್ರ ಧರಿಸಿ ಕಾಶಿಗೆ ಹೋಗಿಬಿಡುತ್ತಾನೆ. ಮೂರು ತಿಂಗಳ ನಂತರ ಮನೆಗೆ ಬರೆಯುತ್ತಾನೆ. ‘ನನಗೊಂದು ಕೆಲಸ ಸಿಕ್ಕಿದೆ. ಇನ್ನು ಸ್ವಲ್ಪ ದಿನಗಳಲ್ಲೇ ಊರಿಗೆ ಬರುತ್ತೇನೆ. ಇನ್ನು ನೀವು ನನ್ನ ಸಂಬಂಧವಾಗಿ ಚಿಂತಿಸಬೇಕಾಗಿಲ್ಲ.’ ಬೇರೊಬ್ಬ ವ್ಯಕ್ತಿಗೆ ಎಲ್ಲವೂ ಇದೆ. ಯಾವುದರ ಅಭಾವವೂ ಇಲ್ಲ. ಆದರೂ ಆತನಿಗೆ ಅವೊಂದೂ ಬೇಕಾಗಿಲ್ಲ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಏಕಾಕಿಯಾಗಿ ಅಳುತ್ತಾನೆ. ಇದೇ ಯಥಾರ್ಥ ವೈರಾಗ್ಯ.
“ಸೋಗು ಸ್ವಲ್ಪವೂ ಒಳ್ಳೆಯದಲ್ಲ. ಮಿಥ್ಯಾ ವೇಷ ಖಂಡಿತ ಒಳ್ಳೆಯದಲ್ಲ. ಹೊರಗಿನ ವೇಷಕ್ಕೆ ತಕ್ಕಂತೆ ಆಂತರ್ಯದಲ್ಲಿ ಭಾವನೆ ಅನುರೂಪವಾಗಿರದಿದ್ದರೆ ಕ್ರಮೇಣ ಅಧೋಗತಿಗೆ ಇಳಿದುಬಿಡಬೇಕಾಗುವುದು. ಸುಳ್ಳು ಹೇಳುತ್ತ ಹೇಳುತ್ತ, ಕಪಟಿಯಾಗಿ ವ್ಯವಹರಿಸುತ್ತ ವ್ಯವಹರಿಸುತ್ತ ಕೊನೆಗೆ ಮನುಷ್ಯ ಭಯಭಕ್ತಿಗಳನ್ನೇ ಕಳೆದುಕೊಂಡು ಬಿಡುತ್ತಾನೆ. ಮನಸ್ಸಿನಲ್ಲಿ ಪ್ರಾಪಂಚಿಕ ಆಸಕ್ತಿ ಇದೆ, ಆಗಾಗ ಪತನವೂ ಆಗುತ್ತಿದೆ, ಹೊರಗೆ ಮಾತ್ರ ಕಾಷಾಯವಸ್ತ್ರ-ಇದು ಎಷ್ಟು ಭೀಕರ! ಇದಕ್ಕೆ ಬದಲು ಬಿಳಿ ವಸ್ತ್ರವೇ ಮೇಲು.
“ಅಷ್ಟೇಕೆ, ಯಾರು ಸನ್ಮಾರ್ಗಿಗಳೊ, ಅವರು ಅಭಿನಯದಲ್ಲಿ ಕೂಡ ಸುಳ್ಳು ಹೇಳುವುದನ್ನೆ ಆಗಲಿ ಅಥವಾ ಮಿಥ್ಯಾ ವ್ಯವಹಾರವನ್ನೆ ಆಗಲಿ ಮಾಡಕೂಡದು. ಒಮ್ಮೆ ನಾನು ಕೇಶವಸೇನನ ಮನೆಗೆ ‘ನವ-ಬೃಂದಾವನ’ ಎಂಬ ನಾಟಕ ನೋಡಲು ಹೋಗಿದ್ದೆ. ರಂಗಸ್ಥಳಕ್ಕೆ ಏನೋ ಒಂದನ್ನು ತಂದು ‘ಕ್ರಾಸ್’ ಅಂತ ಹೇಳಿದರು. ಬಳಿಕ ನೀರು ಪ್ರೋಕ್ಷಣೆ ಮಾಡಿ ‘ಶಾಂತಿಜಲ’ ಅಂತ ಹೇಳಿದರು. ಒಬ್ಬ ಕುಡುಕನ ವೇಷ ಧರಿಸಿ ಕುಡುಕನಂತೆ ವರ್ತಿಸುತ್ತಿದ್ದುದನ್ನು ನೋಡಿದೆ.
ಒಬ್ಬ ಬ್ರಾಹ್ಮ ಭಕ್ತ: “ಆತ ಕು-ಬಾಬು.”
ಶ್ರೀರಾಮಕೃಷ್ಣರು: “ಆ ರೀತಿಯ ವೇಷ ಧರಿಸುವುದು ಭಕ್ತನಿಗೆ ಒಳ್ಳೆಯದಲ್ಲ. ಮನಸ್ಸನ್ನು ಅಂಥವುಗಳ ಮೇಲೆ ಹೆಚ್ಚು ಕಾಲ ಇಟ್ಟರೆ ಅದು ಕೆಟ್ಟು ಹೋಗಿಬಿಡುತ್ತದೆ. ಮನಸ್ಸು ಆಗಸನ ಮನೆಯಿಂದ ಬಂದ ಮಡಿಯ ಹಾಗೆ; ಅದನ್ನು ಯಾವ ಬಣ್ಣಕ್ಕೆ ಅದ್ದಿದ್ದರೂ ಅದು ಆ ಬಣ್ಣವನ್ನು ತಾಳುವುದು. ಸುಳ್ಳು ತಟವಟಗಳಲ್ಲಿ ಹೆಚ್ಚುಕಾಲ ಮುಳುಗಿಸಿ ಇಟ್ಟರೆ ಅದಕ್ಕೆ ಸುಳ್ಳು ತಟವಟಗಳ ಬಣ್ಣ ಹತ್ತಿಕೊಂಡುಬಿಡುತ್ತದೆ.
“ಇನ್ನೊಂದು ದಿನ ‘ನಿಮಾಯಿಯ ಸಂನ್ಯಾಸ’ ಎಂಬ ನಾಟಕ ನೋಡಲು ಕೇಶವಸೇನನ ಮನೆಗೆ ಹೋಗಿದ್ದೆ. ಕೇಶವಸೇನನ ಕೆಲವು ಮಂದಿ ಹೊಗಳುಭಟ್ಟ ಶಿಷ್ಯರು ಅಲ್ಲಿ ಸೇರಿಕೊಂಡು ಬಿಟ್ಟು ಇಡೀ ನಾಟಕವನ್ನು ಕೆಡಿಸಿಬಿಟ್ಟರು. ಅವರಲ್ಲಿ ಒಬ್ಬ ಕೇಶವನನ್ನು ಹೊಗಳಿದ : ‘ನೀವು ಕಲಿಯುಗ ಚೈತನ್ಯ ಮಹಾಪ್ರಭು.’ ಆಗ ಕೇಶವ ನನ್ನನ್ನು ತೋರಿಸಿ ನಗುತ್ತ ನಗುತ್ತ ಹೇಳಿದ: ‘ಹಾಗಾದರೆ ಅವರು?’ ನಾನು ಹೇಳಿದೆ: ‘ಏಕೆ, ನಾನು ನಿಮ್ಮ ದಾಸಾನುದಾಸ; ರೇಣುವಿನ ರೇಣು.’ ಕೇಶವನಿಗೆ ಲೋಕಮಾನ್ಯನಾಗಬೇಕೆಂಬ ಇಚ್ಛೆ ಇತ್ತು.
(ಅಮೃತ ಮತ್ತು ತ್ರೈಲೋಕ್ಯರಿಗೆ:) “ನರೇಂದ್ರ, ರಾಖಾಲ ಮುಂತಾದವರೆಲ್ಲ ನಿತ್ಯ ಸಿದ್ಧರು. ಇವರು ಜನ್ಮಜನ್ಮದಲ್ಲಿಯೂ ಭಗವದ್ಭಕ್ತರು. ಅನೇಕರಿಗೆ ಎಷ್ಟೋ ಸಾಧನ-ಭಜನೆ ಮಾಡಿದ ನಂತರ ಸ್ವಲ್ಪ ಭಕ್ತಿ ಉಂಟಾಗುತ್ತದೆ. ಆದರೆ ಇವರಿಗೆ ಆಜನ್ಮದಿಂದಲೇ ಭಗವಂತನನ್ನು ಕಂಡರೆ ಪ್ರೀತಿ. ಇವರು ಒಡೆದು ಮೂಡಿದ ಲಿಂಗಗಳು, ನೆಟ್ಟ ಲಿಂಗಗಳಲ್ಲ.
“ನಿತ್ಯಸಿದ್ಧರ ಗುಂಪೇ ಬೇರೆ. ಎಲ್ಲಾ ಹಕ್ಕಿಗಳ ಕೊಕ್ಕೂ ಬಾಗಿರುವುದಿಲ್ಲ. ಇವರು ಎಂದೂ ಸಂಸಾರದಲ್ಲಿ ಆಸಕ್ತರಾದವರಲ್ಲ. ಉದಾಹರಣೆಗೆ ಪ್ರಹ್ಲಾದ.
“ಸಾಧಾರಣ ಜನರು ಸಾಧನೆ ಮಾಡುತ್ತಾರೆ, ಭಗವಂತನನ್ನು ಪ್ರೀತಿಸಿಯೂ ಪ್ರೀತಿಸುತ್ತಾರೆ. ಆದರೂ ಸಂಸಾರದಲ್ಲೂ ಆಸಕ್ತರಾಗುತ್ತಾರೆ. ಕಾಮಕಾಂಚನದಿಂದಲೂ ಮುಗ್ಧರಾಗುತ್ತಾರೆ. ಅವರು ಸಾಮಾನ್ಯ ನೊಣದ ಹಾಗೆ. ಅದು ಹೂವಿನ ಮೇಲೂ ಕುಳಿತುಕೊಳ್ಳುತ್ತದೆ, ಸಿಹಿ ತಿಂಡಿಗಳ ಮೇಲೂ ಕುಳಿತುಕೊಳ್ಳುತ್ತದೆ, ಕೊನೆಗೆ ಹೇಸಿಗೆ ಮೇಲೂ ಕುಳಿತುಕೊಳ್ಳುತ್ತದೆ.
“ಆದರೆ ನಿತ್ಯಸಿದ್ಧರು ಜೇನುನೊಣದ ಹಾಗೆ. ಅದು ಕೇವಲ ಹೂವಿನ ಮೇಲೆ ಕುಳಿತು ಮಧುಪಾನ ಮಾಡುತ್ತದೆ. ನಿತ್ಯಸಿದ್ಧ ಭಗವದ್ರಸವನ್ನು ಮಾತ್ರ ಪಾನಮಾಡುತ್ತಾನೆ. ಆತ ಎಂದಿಗೂ ವಿಷಯ ರಸದ ಕಡೆಗೆ ಹೋಗುವುದಿಲ್ಲ.
“ನಿತ್ಯಸಿದ್ಧರ ಭಕ್ತಿ, ಸಾಧನೆ ಮಾಡಿದರೆ ಉಂಟಾಗುತ್ತದೆಯಲ್ಲ ಆ ತರಹದ್ದಲ್ಲ. ಇಷ್ಟೊಂದು ಜಪ, ಇಷ್ಟೊಂದು ಧ್ಯಾನ, ಮಾಡಬೇಕು; ಈ ರೀತಿಯಾಗಿ ಪೂಜೆಮಾಡಬೇಕು-ಇವೆಲ್ಲಾ ‘ವಿಧಿವತ್’ ಭಕ್ತಿಗೆ ಸೇರಿದೆ. ಇದು ಗದ್ದೆಗೆ ಪೈರು ಹಾಕಿದ್ದರೆ ಅದನ್ನು ದಾಟಬೇಕಾದರೆ ತೆವರಿ ಮೇಲೆ ಸುತ್ತಿ ಸುತ್ತಿ ನಡೆದುಹೋಗಬೇಕಾಗುವ ಹಾಗೆ. ಅಥವಾ ಹತ್ತಿರವೇ ಇರುವ ಹಳ್ಳಿಯನ್ನು ದೋಣಿಯಲ್ಲಿ ಕುಳಿತು ಸೊಟ್ಟಸೊಟ್ಟವಾಗಿ ಸುತ್ತಿ ಹರಿಯುತ್ತಿರುವ ನದಿಯ ಮೂಲಕ ತಲುಪಬೇಕಾಗಿ ಬರುವ ಹಾಗೆ.
“ರಾಗಾಭಕ್ತಿ, ಪ್ರೇಮಾಭಕ್ತಿ: ಭಗವಂತ ತನ್ನವನೇ ಎಂಬ ಪ್ರೀತಿ ಉಂಟಾಯಿತು ಎಂದರೆ, ಆಗ ವಿಧಿನಿಯಮಗಳಾವುವೂ ಬೇಕಾಗಿರುವುದಿಲ್ಲ. ಆಗ ಅದು ಕೊಯ್ಲಾದ ಗದ್ದೆಯ ಮೇಲೆ ಹಾದುಹೋದ ಹಾಗೆ. ತೆವರಿ ಮೇಲೆ ನಡೆದುಕೊಂಡು ಹೋಗಬೇಕಾಗಿರುವುದಿಲ್ಲ. ಯಾವ ದಿಕ್ಕಿಗೆ ಬೇಕಾದರೂ ನೇರವಾಗಿ ಹೋದರೇ ಆಯಿತು.
“ಪ್ರವಾಹ ಬಂತು ಎಂದರೆ ಮತ್ತೆ ಸೊಟ್ಟಸೊಟ್ಟವಾಗಿ ತಿರುಗಿಕೊಂಡು ಹರಿಯುತ್ತಿರುವ ನದಿಯ ಮೂಲಕ ಹಾದುಹೋಗಬೇಕಾಗಿರುವುದಿಲ್ಲ. ಆಗ ಗದ್ದೆಗಳ ಮೇಲೆಲ್ಲಾ ಒಂದು ಜಲ್ಲೆ ಉದ್ದದ ನೀರು. ನೇರವಾಗಿ ದೋಣಿ ನೆಡಸಿಕೊಂಡು ಹೋಗಿಬಿಟ್ಟರೇ ಮುಗಿಯಿತು.
“ಈ ರಾಗಾಭಕ್ತಿ, ಅನುರಾಗ, ಪ್ರೀತಿ ಬಾರದೆ ಇತ್ತು ಎಂದರೆ, ಭಗವಂತನ ಸಾಕ್ಷಾತ್ಕಾರ ದೊರೆಯುವುದಿಲ್ಲ.”
ಅಮೃತ: “ಮಹಾಶಯರೆ, ನಿಮಗೆ ಸಮಾಧಿ ಅವಸ್ಥೆಯಲ್ಲಿ ಏನು ಬೋಧೆಯಾಗುತ್ತದೆ?”
ಶ್ರೀರಾಮಕೃಷ್ಣರು: “ಕೀಟವು ಭ್ರಮರವನ್ನು ಕುರಿತು ಚಿಂತಿಸುತ್ತ ಕೊನೆಗೆ ಭ್ರಮರವೇ ಆಗಿಬಿಡುತ್ತದೆ ಎಂಬುದನ್ನು ನೀನು ಕೇಳಿರಬೇಕು. ನನಗೆ ಆಗ ಹೇಗನಿಸುತ್ತದೆ ಗೊತ್ತೆ? ಪಾತ್ರೆಯಲ್ಲಿ ಇಟ್ಟ ಮೀನನ್ನು ಗಂಗೆಗೆ ಬಿಟ್ಟರೆ ಅದಕ್ಕೆ ಹೇಗೋ ಹಾಗೆ.”
ಅಮೃತ: “ಆಗ ‘ಅಹಂ’ ಒಂದು ಕಿಂಚಿತ್ತೂ ಉಳಿದುಕೊಳ್ಳದೇ?
ಶ್ರೀರಾಮಕೃಷ್ಣರು: “ಹೌದು, ನನ್ನಲ್ಲಿ ಪ್ರಾಯಿಕವಾಗಿ ಕಿಂಚಿತ್ ‘ಅಹಂ’ ಉಳಿದುಕೊಂಡಿರುತ್ತದೆ. ಚಿನ್ನದ ಗಟ್ಟಿಯನ್ನು ಒರೆಗಲ್ಲಿನ ಮೇಲೆ ಎಷ್ಟೇ ಉಜ್ಜಿದರೂ ಕೊನೆಗೆ ಒಂದು ಕಿಂಚಿತ್ ಭಾಗ ಕೈಯಲ್ಲಿ ಉಳಿದೇ ಉಳಿದುಕೊಳ್ಳುತ್ತದೆ. ಮತ್ತೆ ಉದಾಹರಣೆಗೆ ದೊಡ್ಡ ಬೆಂಕಿಯನ್ನು ತೆಗೆದುಕೊ; ‘ಅಹಂ’ ಎಂಬುದು ಅದರ ಒಂದು ಕಿಡಿ ಇದ್ದ ಹಾಗೆ. ಸಮಾಧಿಯಲ್ಲಿ ಬಾಹ್ಯಜ್ಞಾನ ಹೊರಟುಹೋಗುತ್ತದೆ; ಆದರೆ ಭಗವಂತ ಪ್ರಾಯಿಕವಾಗಿ ಕಿಂಚಿತ್ ‘ಅಹಂ’ ಉಳಿಸಿಡುತ್ತಾನೆ-ವಿಲಾಸಕ್ಕೋಸ್ಕರ. ‘ನಾನು’ ‘ನೀನು’ ಎಂಬ ಭೇದಬುದ್ಧಿ ಉಳಿದರೆ ತಾನೆ ಆಸ್ವಾದನೆ ಸಾಧ್ಯ?
“ಕೆಲವು ವೇಳೆ ಭಗವಂತ ಆ ಕಿಂಚಿತ್ ‘ಅಹಂ’ ಅನ್ನೂ ನಿರ್ಮೂಲಮಾಡಿಬಿಡುತ್ತಾನೆ. ಆಗ ನಿರ್ವಿಕಲ್ಪ ಸಮಾಧಿ, ಜಡ ಸಮಾಧಿ ಉಂಟಾಗುತ್ತದೆ. ಆಗ ದೊರೆಯುವ ಅನುಭವವನ್ನು ಬಾಯಿಂದ ಹೇಳಲಾಗುವುದಿಲ್ಲ. ಒಂದು ಉಪ್ಪಿನ ಬೊಂಬೆ ಸಮುದ್ರದ ಆಳ ಕಂಡುಹಿಡಿಯಲು ಹೋಯಿತು. ಸ್ವಲ್ಪ ಇಳಿಯುವುದರೊಳಗೇ ಅದು ಕರಗಿಹೋಯಿತು. ಸಮುದ್ರದೊಡನೆ ಒಂದಾಗಿಬಿಟ್ಟಿತು. ಆಗ ಸಮುದ್ರದ ಹೊರಕ್ಕೆ ಬಂದು ಸಮುದ್ರ ಎಷ್ಟು ಆಳ ಎಂಬುದಾಗಿ ತಿಳಿಸಲು ಯಾರು ತಾನೆ ಉಳಿದುಕೊಂಡಿರುತ್ತಾರೆ?”