೧೪ನೆ ಡಿಸೆಂಬರ್ ೧೮೮೨, ಮಾರ್ಗಶಿರ ಶುಕ್ಲ ಚತುರ್ಥಿ, ಗುರುವಾರ
ಶ್ರೀರಾಮಕೃಷ್ಣ ಪರಮಹಂಸರು ಮಧ್ಯಾಹ್ನ ಊಟವಾದ ಮೇಲೆ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ದಕ್ಷಿಣೇಶ್ವರದಲ್ಲಿ ತಮ್ಮ ಹಾಸಿಗೆಯ ಮೇಲೆ ಕುಳಿತಿದ್ದಾರೆ. ವಿಜಯ, ಬಲರಾಮ, ಮಾಸ್ಟರ್ ಮತ್ತು ಇನ್ನೂ ಕೆಲವು ಮಂದಿ ಭಕ್ತರು ಪರಮಹಂಸರ ಎದುರಿಗೆ ನೆಲದಮೇಲೆ ಕುಳಿತುಕೊಂಡಿದ್ದಾರೆ. ಬಾಗಿಲಿನ ಮೂಲಕ ಗಂಗಾನದಿಯೂ ಅವರ ಕಣ್ಣಿಗೆ ಬೀಳುತ್ತಿದೆ. ಚಳಿಗಾಲವಾದ್ದರಿಂದ ಎಲ್ಲರೂ ಉಣ್ಣೆಬಟ್ಟೆಗಳನ್ನು ಹಾಕಿಕೊಂಡಿದ್ದಾರೆ. ವಿಜಯನಿಗೆ ಆಗಾಗ ಹೊಟ್ಟೆ ಶೂಲೆ ಬರುತ್ತಿದ್ದುದರಿಂದ ಆತ ಜೊತೆಯಲ್ಲಿ ಔಷಧಿಯನ್ನೂ ತೆಗೆದುಕೊಂಡು ಬಂದಿದ್ದಾನೆ.
ವಿಜಯ ಸಾಧಾರಣ ಬ್ರಾಹ್ಮಸಮಾಜದ ವೇತನ ಪಡೆಯುತ್ತಿರುವ ಆಚಾರ್ಯರಲ್ಲಿ ಒಬ್ಬ. ಆದರೆ ಈಗ ಈತನಿಗೂ ಸಮಾಜದ ಮುಖ್ಯಸ್ಥರಿಗೂ ಅನೇಕ ವಿಷಯಗಳಲ್ಲಿ ಮತಭೇದ ಬಂದುಬಿಟ್ಟಿದೆ. ಈತ, ದಯೆ ನಡತೆ ಶೀಲ ಭಗವದ್ಭಕ್ತಿ ಇವುಗಳಲ್ಲಿ ಬಹಳ ಹೆಸರನ್ನು ಗಳಿಸಿರುವ ಶ್ರೀಚೈತನ್ಯದೇವನ ಪರಮ ಸ್ನೇಹಿತ ಅದ್ವೈತಗೋಸ್ವಾಮಿಯ ವಂಶದಲ್ಲಿ ಜನ್ಮ ತಳೆದಿದ್ದಾನೆ. ಆದ್ದರಿಂದ ಆ ವಂಶದ ರಕ್ತ ಈತನ ನರನಾಡಿಗಳಲ್ಲಿ ಹರಿಯುತ್ತಿದೆ. ವಿಜಯ ಬ್ರಾಹ್ಮಸಮಾಜದ ಅನುಯಾಯಿಯಾಗಿರುವುದರಿಂದ ನಿರಾಕಾರ ಬ್ರಹ್ಮನ ಮೇಲೆಯೂ ಧ್ಯಾನ ಮಾಡುತ್ತಾ ಇದ್ದಾನೆ. ಆದರೆ ವಂಶಪಾರಂಪರ್ಯದಿಂದ ಬಂದ ಭಕ್ತಿ ಆತನ ಆಂತರ್ಯದಲ್ಲಿ ಹುದುಗಿಕೊಂಡು ವ್ಯಕ್ತಗೊಳ್ಳಲು ಸುಸಮಯಕ್ಕಾಗಿ ಕಾದು ಕುಳಿತಿದೆ. ಆದ್ದರಿಂದ ಪರಮಹಂಸರು ದೇವದುರ್ಲಭ ಭಗವತ್ಪ್ರೇಮದಿಂದ ತುಂಬಿ ತುಳುಕಾಡುತ್ತ ಭಗವದುನ್ಮತ್ತರಾಗಿರುವುದನ್ನು ನೋಡಿ ಆತ ಮುಗ್ಧನಾಗಿ ಹೋಗಿ ಆಗಾಗ ಬಂದು ಅವರ ಸಹವಾಸ ಮಾಡುತ್ತಿದ್ದಾನೆ. ಅವರ ಬಾಯಿಂದ ಬರುವುದೆಲ್ಲವೂ ಅಮೃತಧಾರೆಯೇ ಎಂದು ಆತ ಭಾವಿಸುತ್ತಿದ್ದಾನೆ. ಪರಮಹಂಸರು ಭಗವತ್ಪ್ರೇಮದಿಂದ ಬಾಲಕನ ಹಾಗೆ ನರ್ತಿಸುತ್ತಿರುವುದನ್ನು ಕಂಡಾಗಲೆಲ್ಲಾ ವಿಜಯನೂ ಅವರೊಡನೆ ಬೆರೆತು ನರ್ತಿಸುತ್ತಾನೆ.
ಪ್ರತಿ ಭಾನುವಾರ ಅನೇಕ ಮಂದಿ ಭಕ್ತರು ಪರಮಹಂಸರನ್ನು ಸಂದರ್ಶಿಸಲು ಬರುತ್ತಾರೆ. ಆದ್ದರಿಂದ ಯಾರು ಅವರೊಡನೆ ಅನ್ಯೋನ್ಯವಾಗಿ ಬೆರೆಯಬೇಕು ಅಂತ ಇದ್ದಾರೊ ಅವರು ಉಳಿದ ಬಿಡುವು ದಿನಗಳಲ್ಲಿ ಇಲ್ಲಿಗೆ ಬರುತ್ತಿದ್ದಾರೆ.
ಏಡೇದೇರ್ ಎಂಬ ಗ್ರಾಮದಲ್ಲಿ ವಾಸವಾಗಿದ್ದ ವಿಷ್ಣು ಎಂಬ ಹುಡುಗ ಚೂರಿಯಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡುಬಿಟ್ಟ. ಈಗ ಮಾತು ಆತನ ಸಂಬಂಧವಾಗಿ ಆರಂಭವಾಯಿತು.
ಶ್ರೀರಾಮಕೃಷ್ಣರು: “ಆ ಹುಡುಗ ಆತ್ಮಹತ್ಯೆ ಮಾಡಿಕೊಂಡುಬಿಟ್ಟದ್ದನ್ನು ಕೇಳಿ ನನ್ನ ಮನಸ್ಸು ಕೆಟ್ಟುಹೋಗಿಬಿಟ್ಟಿದೆ. ಸ್ಕೂಲಿನಲ್ಲಿ ಓದುತ್ತಿದ್ದ. ಆಗಾಗ ಇಲ್ಲಿಗೆ ಬರುತ್ತಿದ್ದ ಮತ್ತು ಹೇಳುತ್ತಿದ್ದ, ಸಂಸಾರ ತನಗೆ ರುಚಿಸುತ್ತಿಲ್ಲ ಎಂಬುದಾಗಿ. ಒಮ್ಮೆ ಪಶ್ಚಿಮ ಪ್ರಾಂತಕ್ಕೆ ಹೋಗಿ ಅಲ್ಲಿ ಕೆಲವು ದಿನವನ್ನು ತನ್ನ ಸಂಬಂಧಿಗಳೊಡನೆ ಕಳೆದ. ಅಲ್ಲಿ ಹುಲ್ಲುಗಾವಲು, ಕಾಡು, ಬೆಟ್ಟ, ಇವುಗಳ ಕಡೆಗೆ ಹೋಗಿ ಏಕಾಂತದಲ್ಲಿ ಧ್ಯಾನಮಾಡುತ್ತಿದ್ದ. ತನಗೆ ಅನೇಕ ಬಾರಿ ಭಗವದ್ರೂಪದರ್ಶನ ಆಗಿದೆ ಎಂಬುದಾಗಿ ಒಮ್ಮೆ ನನಗೆ ತಿಳಿಸಿದ್ದ.
“ಬಹುಶಃ ಇದು ಆತನ ಕೊನೆ ಜನ್ಮ ಆಗಿರಬೇಕು. ಹಿಂದಿನ ಜನ್ಮಗಳಲ್ಲಿ ಆತ ಬಹಳವಾಗಿ ಸಾಧನೆ ಮಾಡಿದ್ದ ಹಾಗೆ ಕಾಣುತ್ತದೆ. ಎಲ್ಲೋ ಸ್ವಲ್ಪ ಬಾಕಿ ಉಳಿದುಕೊಂಡಿದ್ದಿರಬೇಕು. ಅದು ಈ ಜನ್ಮದಲ್ಲಿ ಮುಗಿದುಹೋಗಿಬಿಟ್ಟಿತು.
“ಪೂರ್ವಜನ್ಮದ ಸಂಸಾರವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇದರ ಸಂಬಂಧವಾಗಿ ಶವಸಾಧನೆ ಮಾಡುತ್ತಿದ್ದ ಒಬ್ಬನ ಕಥೆ ಕೇಳಿದ್ದೇನೆ. ಆತ ದಟ್ಟ ಕಾಡಿಗೆ ಹೋಗಿ ಭಗವತಿಯ ಆರಾಧನೆ ನಡೆಸುತ್ತಿದ್ದ. ಮೊದಲು ಆತನಿಗೆ ಭಯಂಕರ ದರ್ಶನಗಳೆಲ್ಲಾ ಆದುವು. ಕೊನೆಗೆ ಒಂದು ಹುಲಿ ಬಂದು ಆತನನ್ನು ಹಿಡಿದು ಕೊಂದುಹಾಕಿಬಿಟ್ಟಿತು. ಆ ಮಾರ್ಗವಾಗಿ ಹೋಗುತ್ತಿದ್ದ ಒಬ್ಬ ಮನುಷ್ಯ ಹುಲಿಯನ್ನು ಕಂಡು ಮರ ಹತ್ತಿಬಿಟ್ಟಿದ್ದ. ಶವ ಮತ್ತು ಅದರ ಪೂಜೆಗೆ ಬೇಕಾದ ಅನೇಕ ಪೂಜಾ ಸಲಕರಣೆಗಳು ಅಲ್ಲಿ ಸಿದ್ಧವಾಗಿರುವುದನ್ನು ನೋಡಿ, ಮರದಿಂದಿಳಿದು ಬಂದು ಆಚಮನಮಾಡಿ ಶವದ ಮೇಲೆ ಕುಳಿತುಕೊಂಡುಬಿಟ್ಟ. ಸ್ವಲ್ಪ ಜಪ-ತಪ ಮಾಡುವುದರೊಳಗೇ ಭಗವತಿ ಸಾಕ್ಷಾತ್ಕಾರಳಾಗಿ ಆತನಿಗೆ ಹೇಳಿದಳು: ‘ಮಗು, ನಾನು ನಿನ್ನ ತಪಸ್ಸನ್ನು ಬಹಳ ಮೆಚ್ಚಿದ್ದೇನೆ. ಯಾವ ವರ ಬೇಕಾದರೂ ಕೇಳು.’ ಭಗವತಿಯ ಪಾದಪದ್ಮಗಳಿಗೆ ಪ್ರಣಾಮಮಾಡಿ ಆತ ಹೇಳಿದ: ‘ಹೇ ತಾಯೆ, ನಿನಗೊಂದು ಪ್ರಶ್ನೆ ಹಾಕಬೇಕೆಂದಿದ್ದೇನೆ. ನಿನ್ನ ಕಾರ್ಯ ನೋಡಿ ನಾನು ಬಹಳವಾಗಿ ಆಶ್ಚರ್ಯಚಕಿತನಾಗಿದ್ದೇನೆ. ಆ ಮನುಷ್ಯ ಅಷ್ಟೊಂದು ಕಷ್ಟ ತೆಗೆದುಕೊಂಡು ಇಷ್ಟೊಂದು ಪೂಜಾ ಸಾಮಗ್ರಿಗಳನ್ನೆಲ್ಲಾ ಹವಣಿಸಿಕೊಂಡು, ಬಹಳ ಕಾಲ ನಿನ್ನನ್ನು ಪೂಜಿಸಿದ. ಆದರೂ ನೀನು ಆತನ ಮೇಲೆ ದಯೆ ತೋರಲೇ ಇಲ್ಲ! ಆದರೆ ನನಗೆ ಏನೆಂದರೆ ಏನೂ ಗೊತ್ತಿಲ್ಲ; ನಾನು ಭಜನಹೀನ, ಸಾಧನಹೀನ, ಜ್ಞಾನಹೀನ, ಭಕ್ತಿಹೀನ. ಆದರೂ ನನ್ನ ಮೇಲೆ ಇಷ್ಟೊಂದು ಕೃಪೆತೋರಿಬಿಟ್ಟೆಯಲ್ಲ!’ ಭಗವತಿ ನಗುತ್ತ ನಗುತ್ತ ಹೇಳಿದಳು: ‘ಮಗು, ನಿನಗೆ ನಿನ್ನ ಹಿಂದಿನ ಜನ್ಮಗಳ ಜ್ಞಾಪಕ ಇಲ್ಲ. ನೀನು ನನಗಾಗಿ ಅನೇಕ ಜನ್ಮಗಳ ತಪಸ್ಸು ಮಾಡಿದ್ದೀಯೆ. ಆ ತಪಸ್ಸಿನ ಬಲದಿಂದ ಈ ಅನುಕೂಲತೆಗಳೆಲ್ಲಾ ದೊರೆತು ನಿನಗೆ ನನ್ನ ದರ್ಶನ ದೊರೆತಿದೆ. ಈಗ ಯಾವ ವರಬೇಕು ಕೇಳು.”
ಒಬ್ಬ ಭಕ್ತ: “ಅವನು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕೇಳಿ ನನಗೆ ಭಯ ಆಗುತ್ತದೆ.”
ಶ್ರೀರಾಮಕೃಷ್ಣರು: “ಆತ್ಮಹತ್ಯೆ ನಿಸ್ಸಂದೇಹವಾಗಿಯೂ ಮಹಾ ಪಾಪಕಾರ್ಯವೇ. ಮತ್ತೆ ಮತ್ತೆ ಜನ್ಮವೆತ್ತಿ ಈ ಸಂಸಾರದ ಕೋಟಲೆಗಳನ್ನೆಲ್ಲಾ ಅನುಭವಿಸಬೇಕಾಗುತ್ತದೆ.
“ಆದರೆ ಯಾರೇ ಆಗಲಿ, ಭಗವಂತನ ದರ್ಶನ ದೊರೆತನಂತರ ಶರೀರವನ್ನು ತ್ಯಜಿಸಿ ಬಿಟ್ಟಿದ್ದೇ ಆದರೆ, ಆತ್ಮಹತ್ಯೆಯಾಗಲಾರದು. ಆ ರೀತಿಯಾಗಿ ಶರೀರತ್ಯಾಗ ಮಾಡುವುದು ತಪ್ಪೇನೂ ಅಲ್ಲ. ಬ್ರಹ್ಮಜ್ಞಾನವನ್ನು ಹೊಂದಿದ ನಂತರ ಕೆಲವರು ಶರೀರವನ್ನು ತ್ಯಜಿಸಿಬಿಡುತ್ತಾರೆ. ಜೇಡಿಮಣ್ಣಿನ ಅಚ್ಚಿನಲ್ಲಿ ಚಿನ್ನದ ಪ್ರತಿಮೆಯನ್ನು ಎರಕಹೊಯ್ದ ನಂತರ ಆ ಅಚ್ಚನ್ನು ಬೇಕಾದರೆ ಹಾಗೇ ಇಡಬಹುದು. ಇಲ್ಲದಿದ್ದರೆ ಒಡೆದು ಹಾಕಿಬಿಡಬಹುದು.
“ಅನೇಕ ವರ್ಷಗಳ ಹಿಂದೆ ಗೋಪಾಲಸೇನ ಎಂಬ ಹೆಸರಿನ ಇಪ್ಪತ್ತು ವರ್ಷದ ಒಬ್ಬ ಯುವಕ ಇಲ್ಲಿಗೆ ಬರುತ್ತಿದ್ದ. ನನ್ನ ಎದುರಿನಲ್ಲಿ ಆತನಿಗೆ ಅಷ್ಟೊಂದು ಭಾವ ಬಂದುಬಿಡುತ್ತಿತ್ತು. ಕೆಳಗೆ ಬಿದ್ದು ಕೈಕಾಲು ಮುರಿದುಕೊಳ್ಳದೆ ಇರಲಿ ಎಂದು ಹೃದೆ ಆತನನ್ನು ಹಿಡಿದುಕೊಳ್ಳಬೇಕಾಗುತ್ತಿತ್ತು. ಆ ಯುವಕ ಒಂದು ದಿನ ಇದ್ದಕ್ಕಿದ್ದ ಹಾಗೆ ನನ್ನ ಕಾಲು ಹಿಡಿದುಕೊಂಡು ಹೇಳಿದ: ‘ಮತ್ತೆ ನಾನು ನಿಮ್ಮ ದರ್ಶನಕ್ಕಾಗಿ ಬರಲಾಗುವುದಿಲ್ಲ; ನಮಸ್ತೆ.’ ಕೆಲವು ದಿನಗಳಲ್ಲೇ ಕೇಳಿದೆ, ಆತ ಶರೀರ ತ್ಯಾಗಮಾಡಿಬಿಟ್ಟ ಎಂಬುದಾಗಿ.
“ಜೀವರಲ್ಲಿ ನಾಲ್ಕು ದರ್ಜೆಯವರಿದ್ದಾರೆ ಎಂಬುದಾಗಿ ಶಾಸ್ತ್ರದಲ್ಲಿ ಹೇಳಿದೆ-ಬದ್ಧ, ಮುಮುಕ್ಷು, ಮುಕ್ತ, ನಿತ್ಯ.
“ಈ ಜಗತ್ತು ಮೀನುಬಲೆ ಇದ್ದ ಹಾಗೆ. ಜೀವ ಮೀನು ಇದ್ದ ಹಾಗೆ.ಯಾರ ಮಾಯೆಯಿಂದ ಈ ಜಗತ್ತು ಸ್ಪಷ್ಟವಾಗಿದೆಯೋ ಆ ಭಗವಂತ ಬೆಸ್ತ ಇದ್ದಹಾಗೆ. ಬೆಸ್ತನ ಬಲೆಗೆ ಮೀನು ಬಿದ್ದಾಗ ಕೆಲವು ಮೀನುಗಳು ಬಲೆಯನ್ನು ಕತ್ತರಿಸಿ ಓಡಿಹೋಗಲು, ಅಂದರೆ ಬಂಧನದಿಂದ ಪಾರಾಗಲು ಯತ್ನಿಸುತ್ತವೆ. ಇವನ್ನೇ ಮುಮುಕ್ಷು ಜೀವಕ್ಕೆ ಹೋಲಿಸಬಹುದು. ಬಂಧನದಿಂದ ಪಾರಾಗಲು ಯತ್ನಿಸಿದ ಮೀನುಗಳಲ್ಲಿ ಎಲ್ಲವೂ ಪಾರಾಗಲಾರವು. ಎಲ್ಲೊ ಮೂರೋ ನಾಲ್ಕೋ ಮೀನು ‘ದಬಕ್’ ಅಂತ ಶಬ್ದ ಮಾಡಿ ಓಡಿಹೋಗುತ್ತವೆ. ಆಗ ಜನ ಹೇಳುತ್ತಾರೆ: ‘ಓ, ಅಲ್ಲಿ ಒಂದು ಬಹಳ ದೊಡ್ಡದು ಓಡಿಹೋಗುತ್ತಿದೆ!’ ಈ ಮೂರೋ ನಾಲ್ಕೋ ಮೀನುಗಳನ್ನು ಮುಕ್ತಜೀವರಿಗೆ ಹೋಲಿಸಬಹುದು. ಕೆಲವು ಮೀನುಗಳು ಸ್ವಾಭಾವಿಕವಾಗಿಯೇ ಅಷ್ಟು ಎಚ್ಚರಿಕೆಯುಳ್ಳವು; ಅವು ಎಂದಿಗೂ ಬಲೆಗೆ ಬೀಳುವುದೇ ಇಲ್ಲ. ಆದರೆ ಮೀನುಗಳಲ್ಲಿ ಅಧಿಕಾಂಶ ಬಲೆಗೆ ಬೀಳುತ್ತವೆ; ಆದರೂ ಅವಕ್ಕೆ ತಾವು ಬಲೆಗೆ ಬಿದ್ದಿರುವುದರ ಮತ್ತು ಒಡನೆ ಸಾಯಬೇಕಾಗಿರುವುದರ ಪ್ರಜ್ಞೆಯೇ ಇರುವುದಿಲ್ಲ. ಬಲೆಗೆ ಬಿದ್ದೊಡನೆಯೇ ಅವು ನೇರವಾಗಿ ಬಲೆಯೊಡನೆ ಓಡಿಹೋಗಿ ಬದಿಯನ್ನು ಹೊಕ್ಕು ತಮ್ಮನ್ನು ಮರೆಮಾಚಿಕೊಳ್ಳಲು ಪ್ರಯತ್ನಮಾಡುತ್ತವೆ. ಬಂಧನದಿಂದ ಪಾರಾಗಲು ಸ್ವಲ್ಪವೂ ಪ್ರಯತ್ನ ಮಾಡುವುದಿಲ್ಲ. ಅದಕ್ಕೆ ಬದಲು ಬದಿಯ ಇನ್ನೂ ಆಳಕ್ಕೆ ಹೋಗುತ್ತವೆ. ಇವನ್ನೇ ಬದ್ಧ ಜೀವರಿಗೆ ಹೋಲಿಸಬಹುದು. ಈ ಮೀನು ಬಲೆಗೆ ಸಿಕ್ಕಿಬಿದ್ದಿದೆ, ಆದರೂ ಇದು ಭಾವಿಸುತ್ತಿದೆ; ತಾನು ಸುರಕ್ಷಿತನಾಗಿದ್ದೇನೆ ಎಂಬುದಾಗಿ. ಬದ್ಧಜೀವರು ಜಗತ್ತಿನಲ್ಲಿ, ಎಂದರೆ ಕಾಮಕಾಂಚನದಲ್ಲಿ ಆಸಕ್ತರಾಗಿಬಿಟ್ಟಿದ್ದಾರೆ; ಕಳಂಕಸಾಗರದಲ್ಲಿ ಬಹಳವಾಗಿ ಮಗ್ನರಾಗಿಬಿಟ್ಟಿದ್ದಾರೆ. ಆದರೂ ಭಾವಿಸುತ್ತಾರೆ, ತಾವು ಸೌಖ್ಯದಿಂದಿದ್ದೇವೆ ಎಂಬುದಾಗಿ. ಮುಮುಕ್ಷುಗಳಿಗೆ ಮತ್ತು ಮುಕ್ತರಿಗೆ ಈ ಜಗತ್ತು ದೊಡ್ಡ ಆಳವಾದ ಬಾವಿಯ ಹಾಗೆ ಕಾಣುತ್ತದೆ; ಹೇಯವಾಗಿಯೇ ಕಾಣುತ್ತದೆ. ಅದಕ್ಕಾಗಿಯೇ ಕೆಲವರು ಬ್ರಹ್ಮಜ್ಞಾನ ದೊರೆತನಂತರ, ಭಗವಂತನ ಸಾಕ್ಷಾತ್ಕಾರ ದೊರೆತನಂತರ ಶರೀರವನ್ನು ತ್ಯಜಿಸಿಬಿಡುತ್ತಾರೆ. ಆದರೆ ಆ ವಿಧದ ಶರೀರತ್ಯಾಗ ಬಹಳ ದೂರದ ಮಾತು.
“ಬದ್ಧಜೀವರು-ಈ ಜಗತ್ತಿಗೆ ಕಟ್ಟುಬಿದ್ದ ಜೀವರು-ಏನು ಮಾಡಿದರೂ ಎಚ್ಚರಗೊಳ್ಳರು. ಅವರು ಎಷ್ಟೊಂದು ದುಃಖ, ಶೋಕ ಇವುಗಳಿಗೆ ತುತ್ತಾಗುತ್ತಾರೆ; ಎಷ್ಟೊಂದು ವಿಪತ್ತುಗಳಿಗೆ ಸಿಕ್ಕಿಕೊಳ್ಳುತ್ತಾರೆ! ಆದರೂ ಅವರು ಎಚ್ಚರಗೊಳ್ಳರು.
“ಒಂಟೆಗೆ ನೆಗ್ಗಲು ಮುಳ್ಳು ಕಂಡರೆ ಬಹಳ ಪ್ರೀತಿ. ಅದು ಅದನ್ನು ಅಧಿಕವಾಗಿ ತಿಂದಂತೆಲ್ಲ ಅದರ ಬಾಯಿಂದ ರಕ್ತ ಸುಮ್ಮನೆ ಧಾರಾಕಾರವಾಗಿ ಹರಿಯಲಾರಂಭಿಸುತ್ತದೆ. ಆದರೂ ಅದಕ್ಕೆ ಆ ಮುಳ್ಳೇ ಬೇಕು. ಅದನ್ನು ತಿನ್ನುವುದನ್ನು ಎಂದಿಗೂ ಬಿಡದು. ಸಂಸಾರಿಗಳು ಬಹಳವಾಗಿ ಶೋಕ, ತಾಪ ಇವುಗಳಿಂದ ಬೆಂದು ಬೆಂಡಾಗುತ್ತಾರೆ. ಆದರೂ ಕೆಲವು ದಿನಗಳಲ್ಲೇ ಎಲ್ಲವನ್ನೂ ಮರೆತು ಎಂದಿನ ಮೂರ್ತಿಗಳೇ ಆಗಿಬಿಡುತ್ತಾರೆ. ಹೆಂಡತಿ ಸತ್ತುಹೋಗಿಬಿಟ್ಟಳು ಅಥವಾ ಬೇರೊಬ್ಬನನ್ನು ಕಟ್ಟಿಕೊಂಡು ಹೋಗಿಬಿಟ್ಟಳು ಅಂತ ಇಟ್ಟುಕೊ. ಆದರೂ ಆತ ಮತ್ತೆ ವಿವಾಹವಾಗುತ್ತಾನೆ.
“ಅಥವಾ ಉದಾಹರಣೆಗೆ ಮಗುವನ್ನು ಕಳೆದುಕೊಂಡ ತಾಯಿಯನ್ನು ತೆಗೆದುಕೊ. ಅವಳು ಅಷ್ಟೊಂದು ದುಃಖಪಡುತ್ತಾಳೆ ಏನು ಕತೆ! ಆದರೇನು, ಕೆಲವು ದಿನಗಳಲ್ಲೇ ಅದನ್ನೆಲ್ಲಾ ಮರೆತುಬಿಡುತ್ತಾಳೆ. ಈಗ ಎಲ್ಲೋ ಕೆಲವು ದಿನದ ಹಿಂದೆಯೇ ಅಷ್ಟೊಂದು ದುಃಖಾಕ್ರಾಂತಳಾಗಿ ಕಂಗೆಟ್ಟಿದ್ದ ಆ ತಾಯಿಯೇ ಮತ್ತೆ ತಲೆಬಾಚಿಕೊಂಡು, ಒಡವೆ ವಸ್ತ್ರ ಹಾಕಿಕೊಂಡು ಸಿಂಗರಿಸಿಕೊಳ್ಳುತ್ತಾಳೆ! ಸಂಸಾರಿಗಳು ತಮ್ಮ ಮದುವೆಗಾಗಿ ಇದ್ದುಬದ್ದುದನ್ನೆಲ್ಲ ಖರ್ಚು ಮಾಡಿ ದಿವಾಳಿಗಳಾಗುತ್ತಾರೆ. ಆದರೂ ವರ್ಷವರ್ಷವೂ ಮಕ್ಕಳನ್ನು ಹೆರುತ್ತಲೇ ಇರುತ್ತಾರೆ. ಜನ ಕೋರ್ಟು ಹತ್ತಿ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಆದರೂ ಅವರು ಕೋರ್ಟು ಹತ್ತುವುದನ್ನು ಎಂದಿಗೂ ಬಿಡರು. ಜನರಿಗೆ, ತಾವು ಆಗಲೇ ಪಡೆದು ಕೊಂಡಿರುವ ಮಕ್ಕಳಿಗೆ ಅನ್ನ ಹಾಕಲು, ಬಟ್ಟೆಬರೆ ಒದಗಿಸಲು, ಒಳ್ಳೆ ವಸತಿ ಕಲ್ಪಿಸಿಕೊಡಲು ಸಾಧ್ಯವಿಲ್ಲ. ಆದರೂ ವರ್ಷವರ್ಷವೂ ಮಕ್ಕಳನ್ನು ಪಡೆದುಕೊಳ್ಳುತ್ತಲೇ ಇರುತ್ತಾರೆ.
“ಪ್ರಾಪಂಚಿಕರನ್ನು ಹೆಗ್ಗಣ ನುಂಗಲು ಪ್ರಯತ್ನಿಸಿದ ಹಾವಿಗೆ ಹೋಲಿಸಬಹುದು. ಅದು ಅದನ್ನು ನುಂಗಲೂ ಆರದು, ಬಿಡಲೂ ಆರದು. ಅಮಟೆಕಾಯಿಯಲ್ಲಿ ಕೇವಲ ಸಿಪ್ಪೆ ಬೀಜ ಮಾತ್ರ ಇರುವ ಹಾಗೆ, ಈ ಸಂಸಾರದಲ್ಲಿ ಯಾವ ಸಾರವೂ ಇಲ್ಲ ಎಂಬುದಾಗಿ ಬದ್ಧಜೀವರಿಗೆ ತೋರಬಹುದು. ಆದರೂ ಅವರು ಅದನ್ನು ಬಿಡಲಾರರು. ಅದನ್ನು ಬಿಟ್ಟು ಭಗವಂತನ ಕಡೆಗೆ ಮನಸ್ಸು ತಿರುಗಿಸಲಾರರು.
“ನಾನು ಒಮ್ಮೆ ಕೇಶವಸೇನನ ಒಬ್ಬ ಸಂಬಂಧಿಯನ್ನು ನೋಡಿದೆ. ಆಗಲೆ ಐವತ್ತು ವರ್ಷವಾಗಿದ್ದರೂ ಇಸ್ಪೀಟು ಆಡುತ್ತ ಕುಳಿತಿದ್ದ. ಭಗವಂತನ ಧ್ಯಾನಕ್ಕೆ ಇನ್ನೂ ಸಮಯ ಬಂದಿಲ್ಲ ಅಂತ ಕಾಣುತ್ತದೆ ಆತನಿಗೆ!”
“ಬದ್ಧಜೀವರಿಗೆ ಇನ್ನೊಂದು ಸ್ವಭಾವ ಇದೆ. ಅವರಿಗೆ ಪ್ರಾಪಂಚಿಕ ವಾತಾವರಣವನ್ನು ತಪ್ಪಿಸಿ, ಆಧ್ಯಾತ್ಮಿಕ ವಾತಾವರಣವನ್ನು ಕಲ್ಪಿಸಿಕೊಡುವುದಾದರೆ ಹಾಗೆಯೇ ಕೃಶವಾಗಿ ಕೃಶವಾಗಿ ಸತ್ತೇಹೋಗಿಬಿಡುತ್ತಾರೆ. ಮಲದ ಹುಳುವಿಗೆ ಮಲವನ್ನು ಕಂಡರೇ ಆನಂದ. ಅಲ್ಲೇ ಅದು ಹೃಷ್ಟ ಪುಷ್ಟವಾಗಿ ಬೆಳೆಯುತ್ತದೆ. ಅದನ್ನು ತಂದು ಅನ್ನದ ತಪ್ಪಲೆಯಲ್ಲಿ ಇಟ್ಟುದೇ ಆದರೆ ಅದು ಅಲ್ಲಿ ಸತ್ತೇಹೋಗುತ್ತದೆ.”
ಎಲ್ಲರೂ ನಿಶ್ಯಬ್ದವಾಗಿ ಕುಳಿತಿದ್ದಾರೆ.
ವಿಜಯ: “ಬದ್ಧಜೀವನ ಮನಸ್ಸು ಯಾವ ಅವಸ್ಥೆಯನ್ನು ಮುಟ್ಟಿದರೆ ಆತನಿಗೆ ಮುಕ್ತಿ ದೊರಕಬಹುದು?”
ಶ್ರೀರಾಮಕೃಷ್ಣರು: “ಭಗವಂತನ ಕೃಪೆಯಿಂದ ಆತನಲ್ಲಿ ತೀವ್ರ ವೈರಾಗ್ಯ ಉಂಟಾದದ್ದೇ ಆದರೆ, ಆಗ ಆತ ಕಾಮಕಾಂಚನಾಸಕ್ತಿಗಳಿಂದ ಮುಕ್ತನಾಗಬಲ್ಲ. ಯಾವುದಕ್ಕೆ ತೀವ್ರ ವೈರಾಗ್ಯ ಅಂತ ಹೆಸರು? ಮಂದ ವೈರಾಗ್ಯವಿರುವವನು ಹೇಳುತ್ತಾನೆ: ‘ಎಲ್ಲಾ ಸಕಾಲಕ್ಕೆ ನಿಧಾನವಾಗಿ ಬರಲಿ; ಈಗ ಸದ್ಯ ನಾನು ಸುಮ್ಮನೆ ಭಗವಂತನ ನಾಮಜಪ ಮಾಡುತ್ತಿರುತ್ತೇನೆ.’ ಆದರೆ ಯಾರಲ್ಲಿ ತೀವ್ರ ವೈರಾಗ್ಯ ಉಂಟಾಗಿದೆಯೋ, ಆತ ಹೇಗೆ ತಾಯಿ ತನ್ನ ಮಗುವಿಗಾಗಿ ವ್ಯಾಕುಲಳಾಗಿರುತ್ತಾಳೊ ಹಾಗೆಯೇ ಭಗವಂತನಿಗಾಗಿ ಬಹಳವಾಗಿ ವ್ಯಾಕುಲಪಡುತ್ತಿರುತ್ತಾನೆ. ತೀವ್ರ ವೈರಾಗ್ಯವುಳ್ಳವನಿಗೆ ಭಗವಂತನ ಹೊರತು ಇನ್ನು ಏನೂ ಬೇಕೆನಿಸುವುದಿಲ್ಲ. ಆತನಿಗೆ ಈ ಸಂಸಾರ ಒಂದು ದೊಡ್ಡ ಬಾವಿಯ ಹಾಗೆ ಕಾಣುತ್ತದೆ; ಅನ್ನಿಸುತ್ತದೆ, ಇದರಲ್ಲಿ ಮುಳುಗಿಹೋಗಿಬಿಡುತ್ತೇನಲ್ಲ ಎಂಬುದಾಗಿ. ಸ್ವಬಾಂಧವರು ಕಾಳಸರ್ಪಗಳ ಹಾಗೆ ಕಂಡು ಬರುತ್ತಾರೆ; ಅವರಿಂದ ತಪ್ಪಿಸಿಕೊಂಡು ಓಡಿಹೋಗಲು ಇಚ್ಛೆಯಾಗುತ್ತದೆ. ಆತ ಕೊನೆಗೆ ಓಡಿಯೂ ಹೋಗುತ್ತಾನೆ. ‘ಮನೆಯಲ್ಲಿ ಸುವ್ಯವಸ್ಥೆ ಮಾಡಿಬಿಟ್ಟು ಬಳಿಕ ಭಗವಚ್ಚಿಂತನೆ ಮಾಡೋಣ’ ಎಂದು ಆತ ಎಂದಿಗೂ ಯೋಚಿಸುವುದೇ ಇಲ್ಲ. ಆಂತರ್ಯದಲ್ಲಿ ಆತನಿಗೆ ಒಳ್ಳೇ ಬಲ ಇದೆ.
“ತೀವ್ರ ವೈರಾಗ್ಯದ ಸಂಬಂಧವಾಗಿ ಒಂದು ಕತೆ ಕೇಳು. ಒಂದು ದೇಶದಲ್ಲಿ ಅನಾವೃಷ್ಟಿಯಾಗಿತ್ತು. ರೈತರು ಬಹಳ ದೂರದಿಂದ ನೀರು ತರಲು ಕಾಲುವೆ ತೋಡಲಾರಂಭಿಸಿದರು. ಒಬ್ಬ ಒಳ್ಳೇ ದೃಢಸಂಕಲ್ಪಶಾಲಿ. ಒಂದು ದಿನ ಪ್ರತಿಜ್ಞೆಮಾಡಿಕೊಂಡ, ನದಿಯಿಂದ ತನ್ನ ಜಮೀನಿನವರೆಗೆ ಕಾಲುವೆ ತೋಡಿ ನೀರು ತರುವವರೆಗೆ ಹಿಡಿದ ಗುದ್ದಲಿಯನ್ನು ಬಿಡುವುದೇ ಇಲ್ಲ ಎಂಬುದಾಗಿ. ಅಗೆಯಲು ಶುರುಮಾಡಿದ, ಸ್ನಾನಕ್ಕೆ ಸಮಯ ಆಯಿತು. ಹೆಂಡತಿ, ಮಕ್ಕಳ ಕೈಯಲ್ಲಿ ಎಣ್ಣೆ ಕೊಟ್ಟು ಕಳುಹಿಸಿದಳು. ಮಗಳು ಬಂದು ಹೇಳಿದಳು: ‘ಅಪ್ಪ, ಸ್ನಾನಕ್ಕೆ ಸಮಯವಾಗಿದೆ. ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡು.’ ಆತ ಗುಡುಗಿದ: ‘ಹೋಗು ಇಲ್ಲಿಂದ! ನನ್ನ ಕೆಲಸ ಇನ್ನೂ ಮುಗಿದಿಲ್ಲ.’ ಆಗಲೇ ಸಮಯ ಅಪರಾಹ್ನ ಒಂದು. ಇನ್ನೂ ಕೆಲಸ ಮಾಡುತ್ತಲೇ ಇದ್ದಾನೆ. ಸ್ನಾನದ ಯೋಚನೆಯೇ ಇಲ್ಲ. ಬಳಿಕ ಹೆಂಡತಿ ಬಂದು ಹೇಳಿದಳು: ‘ಇನ್ನೂ ನೀವು ಸ್ನಾನವನ್ನೇ ಮುಗಿಸಿಲ್ಲವಲ್ಲ? ಅಡಿಗೆಯೆಲ್ಲಾ ಆರಿಹೋಗಿ ಬಿಡುತ್ತಾ ಇದೆ. ಯಾವಾಗ ನೋಡಿದರೂ ನಿಮ್ಮದು ಹಿಡಿದದ್ದೇ ಹಠ. ಉಳಿದುದನ್ನು ನಾಳೆ ಮಾಡಿದರಾಯಿತು. ಇಲ್ಲವೆ ಊಟ ಮುಗಿಸಿ ಮಾಡಿದರಾಯಿತು.’ ಆಕೆಯನ್ನು ಚೆನ್ನಾಗಿ ಬಯ್ದು ಗುದ್ದಲಿ ಹಿಡಿದುಕೊಂಡು, ಅಟ್ಟಿಸಿಕೊಂಡು ಹೋಗುತ್ತಾ ಕಿರಿಚಲಾರಂಭಿಸಿದ: ‘ನಿನಗೇನು ಬುದ್ಧಿ ಎಂಬುದು ಎಳ್ಳಷ್ಟೂ ಇಲ್ಲವೆ? ಮಳೆ ಬರಲಿಲ್ಲ. ಬೆಳೆಯೆಲ್ಲಾ ಒಣಗಿಹೋಗುತ್ತಿದೆ. ಮಕ್ಕಳು ಮರಿ ಏನು ತಿನ್ನಬೇಕು? ನೀವೆಲ್ಲಾ ಹೊಟ್ಟೆಗಿಲ್ಲದೆ ಸತ್ತುಹೋಗಿಬಿಡುವಿರಿ. ಜಮೀನಿಗೆ ಇಂದು ನೀರು ತರುವುದಕ್ಕಿಂತ ಮುಂಚೆ ಸ್ನಾನ, ಊಟ ಯಾವುದರ ಯೋಚನೆಯನ್ನೂ ಮಾಡುವುದೇ ಇಲ್ಲ ಎಂದು ಪ್ರತಿಜ್ಞೆಮಾಡಿಕೊಂಡುಬಿಟ್ಟಿದ್ದೇನೆ.’ ಹೆಂಡತಿ ಆತನ ಸ್ವರೂಪ ನೋಡಿ ಹೆದರಿ ಸುಮ್ಮನೆ ಓಡಿದ್ದೂ ಓಡಿದ್ದೆ. ರೈತ ಬೆನ್ನು ಮುರಿಯುವ ಹಾಗೆ ಇಡೀ ದಿನವೆಲ್ಲ ಕೆಲಸಮಾಡಿ ಸಾಯಂಕಾಲದ ಹೊತ್ತಿಗೆ ತನ್ನ ಜಮೀನಿನಿಂದ ನದಿಯವರೆಗೆ ಕಾಲುವೆ ತೋಡಿ ಮುಗಿಸಿಯೇ ಬಿಟ್ಟ. ಬಳಿಕ ಒಂದು ಕಡೆ ಕುಳಿತುಕೊಂಡು ನದಿನೀರು ತನ್ನ ಜಮೀನಿಗೆ ‘ಕಲ, ಕಲ’ ಅಂತ ಶಬ್ದಮಾಡಿಕೊಂಡು ನುಗ್ಗುತ್ತಿರುವುದನ್ನು ನೋಡಲಾರಂಭಿಸಿದ. ಆಗ ಆತನ ಮನಸ್ಸು ಶಾಂತಿಯಿಂದ ಮತ್ತು ಪೂರ್ಣ ಆನಂದದಿಂದ ತುಂಬಿ ತುಳುಕಾಡಲಾರಂಭಿಸಿತು. ಬಳಿಕ ಮನೆಗೆ ಹೋಗಿ ಹೆಂಡತಿಯನ್ನು ಕರೆದು ಹೇಳಿದ: “ಈಗ ಎಣ್ಣೆ ತಂದುಕೊಂಡು; ಗುಡುಗುಡಿ ಸಿದ್ಧಪಡಿಸು.’ ನಿಶ್ಚಿಂತೆಯಿಂದ ಸ್ನಾನ, ಊಟ ಮುಗಿಸಿ ಮಲಗಿಕೊಂಡು ಮನೆ ಸೂರು ಕಿತ್ತುಹೋಗುವ ಹಾಗೆ ಗೊರಕೆ ಹೊಡೆಯ ಲಾರಂಭಿಸಿದ. ಈ ವಿಧದ ದೃಢಸಂಕಲ್ಪವೇ ತೀವ್ರ ವೈರಾಗ್ಯದ ಉಪಮೆ.
“ಇನ್ನೊಬ್ಬ ರೈತನೂ ತನ್ನ ಜಮೀನಿಗೆ ನೀರು ತರಲು ಕಾಲುವೆ ಅಗೆಯುತ್ತಿದ್ದ. ಆತನ ಹೆಂಡತಿಯೂ ಜಮೀನಿನ ಹತ್ತಿರಕ್ಕೆ ಬಂದು ಹೇಳಿದಳು: ‘ಆಗಲೇ ಬಹಳವಾಗಿ ಹೊತ್ತಾಗಿ ಬಿಟ್ಟಿದೆ. ಸಾಕು, ಸಾಕು ಬನ್ನಿ. ಮಿತಿಮೀರಿ ಕೆಲಸ ಮಾಡುವುದು ಒಳ್ಳೆಯದೇನಲ್ಲ.’ ಆತ ವಿಶೇಷವಾಗಿ ಏನೂ ಅಸಮ್ಮತಿ ತೋರಿಸದೆ, ಗುದ್ದಲಿಯನ್ನು ಒಂದು ಕಡೆಗಿಟ್ಟು ಹೆಂಡತಿಗೆ ಹೇಳಿದ: ‘ಆಗಲಿ, ನಿನ್ನ ಮಾತಿನಂತೆಯೇ ಆಗಲಿ. ನಡೆ ಹೋಗೋಣ.’ (ಎಲ್ಲರೂ ನಗುತ್ತಾರೆ.) ಆತನಿಗೆ ತನ್ನ ಜಮೀನಿಗೆ ನೀರು ತರಲಾಗಲೇ ಇಲ್ಲ. ಇದು ಮಂದ ವೈರಾಗ್ಯದ ಉಪಮೆ.
“ಒಳ್ಳೆ ದೃಢಸಂಕಲ್ಪವಿಲ್ಲದಿದ್ದರೆ ಯಾವ ರೀತಿಯಾಗಿ ರೈತ ತನ್ನ ಜಮೀನಿಗೆ ನೀರು ತರಲಾರನೊ ಹಾಗೆಯೇ ತೀವ್ರ ವೈರಾಗ್ಯವಿಲ್ಲದಿದ್ದರೆ ಮನುಷ್ಯ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಲಾರ. (ವಿಜಯನಿಗೆ) ಹಿಂದೆ ನೀನು ಬಹಳವಾಗಿ ಇಲ್ಲಿಗೆ ಬರುತ್ತಿದ್ದೆ. ಈಗ ಏಕೆ ಹಾಗೆ ಬರುತ್ತಿಲ್ಲವಲ್ಲ?”
ವಿಜಯ: “ನನಗೇನೊ ಬರಬೇಕು ಎಂಬುದಾಗಿ ಬಹಳ ಇಚ್ಛೆಯಿದೆ. ಆದರೆ ನಾನು ಸ್ವತಂತ್ರನಲ್ಲ, ಬ್ರಾಹ್ಮಸಮಾಜದಲ್ಲಿ ಕೆಲಸಕ್ಕೆ ಒಪ್ಪಿಕೊಂಡಿದ್ದೇನೆ.”
ಶ್ರೀರಾಮಕೃಷ್ಣರು: “ಕಾಮಕಾಂಚನ ಮನುಷ್ಯನನ್ನು ಬಂಧಿಸಿ ಆತನ ಸ್ವಾತಂತ್ರ್ಯವನ್ನು ಕಸಿದುಕೊಂಡುಬಿಡುತ್ತದೆ. ಕಾಮದ ದೆಸೆಯಿಂದಲೇ ಕಾಂಚನ ಬೇಕಾಗುತ್ತದೆ. ಕಾಮದ ದೆಸೆಯಿಂದಲೇ ಪರರ ದಾಸ್ಯತ್ವಕ್ಕೆ ಇಳಿದು ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಆಗ ಸ್ವಂತ ಇಚ್ಛೆಯಂತೆ ಏನನ್ನೂ ಮಾಡಲಾಗುವುದಿಲ್ಲ.
“ಜಯಪುರದ ಗೋವಿಂದ ದೇವಾಲಯದ ಅರ್ಚಕರು ಮೊದಮೊದಲು ವಿವಾಹ ಮಾಡಿಕೊಳ್ಳುತ್ತಿರಲಿಲ್ಲ. ಆಗ ಅವರು ಬಹಳ ತೇಜಸ್ವಿಗಳಾಗಿರುತ್ತಿದ್ದರು. ಒಮ್ಮೆ ರಾಜ ಅವರಿಗಾಗಿ ಕರೆ ಕಳುಹಿಸಿದ. ಅವರು ಹೋಗದೆ ದೂತನಿಗೆ ತಿಳಿಸಿದರು, ‘ರಾಜನನ್ನೇ ಇಲ್ಲಿಗೆ ಬರುವಂತೆ ಹೇಳು.’ ದೊರೆ ಮತ್ತು ಆತನ ಮಂತ್ರಿಗಳು ಸಮಾಲೋಚನೆ ನಡೆಸಿ ಆ ಅರ್ಚಕರಿಗೆಲ್ಲಾ ವಿವಾಹಮಾಡಿಸಿದರು. ಅಲ್ಲಿಂದಾಚೆಗೆ ಅವರಿಗಾಗಿ ಕರೆಕಳುಹಿಸುವ ಆವಶ್ಯಕತೆಯೇ ದೊರೆಗೆ ಬರಲಿಲ್ಲ. ತಮ್ಮಷ್ಟಕ್ಕೆ ತಾವೇ ಬರಲಾರಂಭಿಸಿದರು. ಬಂದು ಹೇಳುತ್ತಿದ್ದರು ‘ಮಹಾರಾಜ, ನಿಮಗೆ ಆಶೀರ್ವಾದ ಮಾಡಲು ಬಂದಿದ್ದೇವೆ. ನಿರ್ಮಾಲ್ಯ ತಂದಿದ್ದೇವೆ. ದಯವಿಟ್ಟು ಸ್ವೀಕರಿಸಿ.’ ಈ ದಿನ ಮನೆಯ ಶಂಕುಸ್ಥಾಪನೆ, ಈ ದಿನ ಮಗುವಿಗೆ ಅನ್ನಪ್ರಾಶನ, ಈ ದಿನ ಮಗುವಿಗೆ ಅಕ್ಷರಾಭ್ಯಾಸ, ಹೀಗೇ ಏನೇನೋ ನೆಪ ತೆಗೆದುಕೊಂಡು ರಾಜನನ್ನು ಸಮೀಪಿಸಲಾರಂಭಿಸಿದರು.
“ಸಾವಿರದ ಇನ್ನೂರು ‘ನೇಡರ’1 ಸಾವಿರದ ಮುನ್ನೂರು ‘ನೇಡಿಯರ’2 ಒಂದು ಕಥೆ ಇದೆ. ನಿತ್ಯಾನಂದ ಗೋಸ್ವಾಮಿಯ ಮಗ ವೀರಭದ್ರನಿಗೆ ಸಾವಿರದ ಮುನ್ನೂರು ಮಂದಿ ನೇಡ ಶಿಷ್ಯರಿದ್ದರು. ಅವರೆಲ್ಲರೂ ಸಿದ್ಧಪುರುಷರಾಗಿಬಿಟ್ಟದ್ದರಿಂದ ವೀರಭದ್ರನಿಗೆ ಭಯ ಆಯಿತು. ಆತ ಯೋಚಿಸಲಾರಂಭಿಸಿದ: ‘ಇವರು ಸಿದ್ಧಪುರುಷರಾಗಿಬಿಟ್ಟಿದ್ದಾರೆ. ಇವರ ಬಾಯಿಂದ ಬರುವುದೆಲ್ಲವೂ ಫಲಿಸಿಬಿಡುತ್ತದೆ. ಇವರು ಹೋದ ಕಡೆಯಲ್ಲೆಲ್ಲಾ ಜನ ಭಯಪಡಬೇಕಾಗುತ್ತದೆ. ಏಕೆಂದರೆ ಜನ ತಿಳಿಯದೆ ಇವರಿಗೆ ಅಪರಾಧ ಮಾಡಿದ್ದೇ ಆದರೆ, ಅವರಿಗೆ ಅನಿಷ್ಟ ಉಂಟಾಗುತ್ತದೆ.’ ಹೀಗೆಲ್ಲಾ ಯೋಚಿಸಿ ವೀರಭದ್ರ ಅವರನ್ನು ಕರೆದು ಹೇಳಿದ: ‘ನೀವು ಗಂಗೆಗೆ ಹೋಗಿ ಸ್ನಾನ ಸಂಧ್ಯಾವಂದನೆ ಆಹ್ನಿಕ ಇವನ್ನೆಲ್ಲಾ ಮುಗಿಸಿಕೊಂಡು ಬಂದು ನನ್ನನ್ನು ನೋಡಿ.’ ನೇಡರು ಅಂತಹ ಆಧ್ಯಾತ್ಮಿಕ ಉನ್ನತಿಯನ್ನು ಹೊಂದಿದ್ದರು, ಧ್ಯಾನ ಮಾಡುತ್ತ ಮಾಡುತ್ತ ಸಮಾಧಿಸ್ಥರಾಗಿಬಿಡುತ್ತಿದ್ದರು. ಗಂಗೆಯಲ್ಲಿ ಉಬ್ಬರ ಬಂದು ಅವರ ತಲೆಯ ಮೇಲೆ ಹರಿದುಹೋದರೂ ಅವರಿಗೆ ಬಾಹ್ಯಪ್ರಜ್ಞೆಯೇ ಉಂಟಾಗುತ್ತಿರಲಿಲ್ಲ. ಬಳಿಕ ಇಳಿತವಾದಾಗಲೂ ಅವರು ಇನ್ನೂ ಧ್ಯಾನಸ್ಥರಾಗಿಯೇ ಇರುತ್ತಿದ್ದರು.
“ಈ ಸಾವಿರದ ಮುನ್ನೂರು ಮಂದಿ ನೇಡರಲ್ಲಿ ನೂರು ಮಂದಿ ನೇಡರು ಊಹಿಸಿ ಕೊಂಡುಬಿಟ್ಟರು, ವೀರಭದ್ರ ತಮಗೇನು ಹೇಳಬಹುದು ಎಂಬುದನ್ನು. ಗುರುವಿನ ಮಾತನ್ನು ಶಿಷ್ಯ ಮೀರಕೂಡದು. ಅದಕ್ಕಾಗಿ ಅವರು ಗುರು ತಮಗಾಗಿ ಕರೆಕಳುಹುವ ಮುನ್ನವೇ ಬೇರೆ ಕಡೆಗೆ ಹೊರಟುಹೋಗಿಬಿಟ್ಟರು. ಅವರು ಆತನನ್ನು ಸಂಧಿಸಹೋಗಲಿಲ್ಲ. ಉಳಿದ ಒಂದು ಸಾವಿರದ ಇನ್ನೂರು ನೇಡರು ಹೋಗಿ ಗುರುವನ್ನು ಕಂಡರು. ವೀರಭದ್ರ ಅವರಿಗೆ ಹೇಳಿದ: ‘ಈ ಸಾವಿರದ ಮುನ್ನೂರು ಮಂದಿ ನೇಡಿಯರು ನಿಮ್ಮ ಸೇವೆ ಮಾಡಿಕೊಂಡಿರುತ್ತಾರೆ. ನೀವು ಇವರನ್ನು ಮದುವೆಯಾಗಬೇಕು.’ ಅವರು ಹೇಳಿದರು. ‘ಅಪ್ಪಣೆ; ಆದರೆ ನಮ್ಮಲ್ಲಿ ಒಂದು ನೂರು ಮಂದಿ ಎಲ್ಲಿಗೋ ಹೊರಟು ಹೋಗಿಬಿಟ್ಟಿದ್ದಾರೆ.’ ಬಳಿಕ ಆ ಸಾವಿರದ ಇನ್ನೂರು ನೇಡರೂ ಒಬ್ಬೊಬ್ಬ ನೇಡಿಯ ಕೈಹಿಡಿದು ಬದುಕಲಾರಂಭಿಸಿದರು. ಅನಂತರ ಅವರಲ್ಲಿ ಆ ತೇಜಸ್ಸೂ ಉಳಿಯಲಿಲ್ಲ. ಆ ತಪಸ್ಸಿನ ಬಲವೂ ಉಳಿಯಲಿಲ್ಲ. ಹೆಂಗಸಿನ ಸಹವಾಸದಿಂದ ಸ್ವಾತಂತ್ರ್ಯವನ್ನು ಕಳೆದುಕೊಂಡದ್ದರಿಂದ ತಪಸ್ಸಿನ ಬಲವೂ ಕುಗ್ಗಿ ಹೋಯಿತು.
(ವಿಜಯನಿಗೆ) “ಪರರ ದಾಸತ್ವಕ್ಕೆ ಇಳಿದರೆ ಎಷ್ಟು ಆಳಕ್ಕೆ ಇಳಿದು ಹೋಗಬೇಕಾಗುತ್ತದೆ ಎಂಬುದು ನಿಮಗೇ ತೋರಿಬರುತ್ತದೆ. ಮತ್ತೆ ಹಾಗೇ ನೋಡು, ವಿಶ್ವವಿದ್ಯಾನಿಲಯದ ಅನೇಕ ಡಿಗ್ರಿಗಳನ್ನು ಪಡೆದುಕೊಂಡಿರುವ ಒಳ್ಳೇ ಇಂಗ್ಲೀಷು ವ್ಯಾಸಂಗ ಮಾಡಿರುವ ಅನೇಕ ಮಂದಿ ವಿದ್ವಾಂಸರು ಆಂಗ್ಲದಣಿಗಳ ಕೈಕೆಳಗೆ ಕೆಲಸಕ್ಕೆ ಒಪ್ಪಿಕೊಂಡು ದಿನವೂ ಅವರ ಬೂಟ್ಸ್ ಕಾಲಿನ ಒದೆತ ತಿನ್ನುವುದನ್ನು! ಇದಕ್ಕೆಲ್ಲಾ ಮುಖ್ಯ ಕಾರಣ ಹೆಂಗಸು. ವಿವಾಹವಾಗಿ ಸಂಸಾರದ ಅಂಗಡಿಯನ್ನು ತೆರೆದುಬಿಟ್ಟಿದ್ದಾರೆ. ಇಚ್ಛೆಪಟ್ಟರೂ ಈಗ ಅದನ್ನು ಮುಚ್ಚುವ ಹಾಗಿಲ್ಲ. ಆದ್ದರಿಂದಲೇ ಅವರು ಅಷ್ಟೊಂದು ಒದೆತ, ಹೊಡೆತ ಮತ್ತು ಇನ್ನೂ ಏನೇನೋ ಅಪಮಾನಗಳನ್ನು ಅನುಭವಿಸಬೇಕಾಗಿದೆ; ದಾಸತ್ವದ ಯಮಯಾತನೆಯನ್ನು ಸಹಿಸಬೇಕಾಗಿದೆ.
“ಒಮ್ಮೆ ತೀವ್ರ ವೈರಾಗ್ಯದಿಂದ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಂಡು ಬಿಟ್ಟದ್ದೇ ಆದರೆ ಬಳಿಕ ಹೃದಯದಲ್ಲಿ ಸ್ತ್ರೀಯ ಮೇಲಿನ ಆಸಕ್ತಿ ಉಳಿದುಕೊಂಡಿರದು. ಒಂದು ಪಕ್ಷ ಆತ ಸಂಸಾರದಲ್ಲಿರಬೇಕಾಗಿ ಬಂದರೂ ಆತನಲ್ಲಿ ಸ್ತ್ರೀಯ ಮೇಲಿನ ಆಸಕ್ತಿ ಇರುವುದಿಲ್ಲ. ಎರಡು ಸೂಜಿಗಲ್ಲು-ಒಂದು ದೊಡ್ಡದು, ಒಂದು ಚಿಕ್ಕದು ಹತ್ತಿರ ಇವೆ ಅಂತ ಇಟ್ಟುಕೊ. ಆಗ ಅವುಗಳಲ್ಲಿ ಯಾವುದು ಲೋಹವನ್ನು ಸೆಳೆದುಕೊಳ್ಳುತ್ತದೆ? ದೊಡ್ಡದೇನೇ ನಿಸ್ಸಂದೇಹವಾಗಿ. ಭಗವಂತನೇ ದೊಡ್ಡ ಸೂಜಿಗಲ್ಲು. ಆತನಿಗೆ ಹೋಲಿಸಿದರೆ ಹೆಂಗಸು ಬಹಳ ಚಿಕ್ಕ ಸೂಜಿಗಲ್ಲು. ಆದ್ದರಿಂದ ಹೆಂಗಸು ಏನು ಮಾಡಬಲ್ಲಳು?”
ಒಬ್ಬ ಭಕ್ತ: “ಮಹಾಶಯರೆ, ಹಾಗಾದರೆ ನಾವು ಹೆಂಗಸರನ್ನು ದ್ವೇಷಿಸಬೇಕೆ?”
ಶ್ರೀರಾಮಕೃಷ್ಣರು: “ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಂಡ ವ್ಯಕ್ತಿ ಹೆಂಗಸನ್ನು ಕಾಮದ ಕಣ್ಣಿನಿಂದ ನೋಡುವುದಿಲ್ಲ. ಆದ್ದರಿಂದ ಆಕೆಯನ್ನು ಕಂಡರೆ ಆತನಿಗೆ ಹೆದರಿಕೆ ಯಾಗುವುದಿಲ್ಲ. ಆತನ ಕಣ್ಣಿಗೆ ಸ್ಪಷ್ಟವಾಗಿ ಕಂಡುಬರುತ್ತದೆ, ಹೆಂಗಸು ಬ್ರಹ್ಮಮಯಿಯ ಅಂಶ ಎಂಬುದು. ಆಕೆಯನ್ನು ಸಾಕ್ಷಾತ್ ಭಗವತಿಯೇ ಎಂಬುದಾಗಿ ಆತ ಪೂಜೆಮಾಡುತ್ತಾನೆ.
(ವಿಜಯನಿಗೆ) “ಆಗಾಗ ಇಲ್ಲಿಗೆ ಬಂದುಹೋಗುತ್ತಿರು. ನಿನ್ನನ್ನು ನೋಡಬೇಕೆಂಬ ಇಚ್ಛೆ ನನಗೆ ಬಹಳವಾಗಿ ಇದೆ.”
ವಿಜಯ: “ನನಗೆ ಬ್ರಾಹ್ಮಸಮಾಜದಲ್ಲಿ ಬಹಳ ಕೆಲಸ ಇದೆ; ಆದ್ದರಿಂದ ಸರ್ವದಾ ಇಲ್ಲಿಗೆ ಬರಲಾಗುವುದಿಲ್ಲ. ಆದರೆ ಸಮಯ ದೊರೆತಾಗಲೆಲ್ಲ ಖಂಡಿತ ಬರುತ್ತೇನೆ.”
ಶ್ರೀರಾಮಕೃಷ್ಣರು ವಿಜಯನಿಗೆ: “ನೋಡು, ಆಚಾರ್ಯನ ಕೆಲಸ ಬಹಳ ಕಠಿಣವಾದ್ದು. ಭಗವಂತನಿಂದ ನೇರವಾಗಿ ಆದೇಶ ಬಾರದ ಹೊರತು ಲೋಕಶಿಕ್ಷಣ ಸಾಧ್ಯವಿಲ್ಲ. ಆದೇಶವಿಲ್ಲದೆ ಉಪದೇಶ ಕೊಟ್ಟದ್ದೇ ಆದರೆ ಯಾರೂ ಕಿವಿಗೊಡರು. ಅಂಥ ಉಪದೇಶಗಳಲ್ಲಿ ಯಾವ ಶಕ್ತಿಯೂ ಇರದು. ಸಾಧನೆಯಿಂದಾಗಲಿ ಅಥವಾ ಬೇರೆ ಯಾವ ಮಾರ್ಗದಿಂದಾಗಲಿ ಮೊದಲು ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬೇಕು. ಬಳಿಕ ಆತನ ಆದೇಶವನ್ನು ಪಡೆದುಕೊಂಡು ಲೆಕ್ಚರ್ ಕೊಡಬೇಕು.
“ಆತನ ಆದೇಶವನ್ನು ಪಡೆದುಕೊಂಡ ನಂತರ ಎಲ್ಲಿ ಅಂದರೆ ಅಲ್ಲಿ ಆಚಾರ್ಯನ ಕೆಲಸ ಮಾಡಬಹುದು, ಲೆಕ್ಚರ್ ಕೊಡಬಹುದು. ಯಾರಿಗೆ ಭಗವಂತನಿಂದ ಆದೇಶ ದೊರೆಯುತ್ತದೆಯೋ, ಆತನಿಗೆ ಆತನಿಂದ ಶಕ್ತಿಯೂ ಬರುತ್ತದೆ. ಆಗ ಮಾತ್ರವೇ ಆತ ಆಚಾರ್ಯನ ಈ ಮಹಾ ಕಠಿಣ ಕೆಲಸವನ್ನು ಯಶಸ್ವಿಯಾಗಿ ಮಾಡಬಲ್ಲ.
“ಒಬ್ಬ ಸಾಮಾನ್ಯ ಗುತ್ತಿಗೆದಾರ ಒಬ್ಬ ದೊಡ್ಡ ಜಮೀನುದಾರನೊಡನೆ ಹೈಕೋರ್ಟಿನಲ್ಲಿ ವ್ಯಾಜ್ಯವಾಡತೊಡಗಿದ. ಆಗ ಜನರಿಗೆ ಗೊತ್ತಾಯಿತು, ಆ ಗುತ್ತಿಗೆದಾರನ ಹಿಂದೆ ಯಾರೊ ಒಬ್ಬ ಬಲಶಾಲಿ ನಿಂತಿದ್ದಾನೆ; ಬಹುಶಃ ಇನ್ನೊಬ್ಬ ದೊಡ್ಡ ಜಮೀನುದಾರನೇ ಹಿಂದೆ ನಿಂತುಕೊಂಡು ಕೇಸು ನಡೆಸುತ್ತಿರಬೇಕು ಅಂತ. ಮನುಷ್ಯ ಸಾಮಾನ್ಯ ಜೀವ. ನೇರವಾಗಿ ಭಗವಂತನಿಂದ ಶಕ್ತಿಯನ್ನು ಪಡೆದುಕೊಳ್ಳದೆ ಮಹಾ ಕಠಿಣ ಕೆಲಸವಾದ ಆಚಾರ್ಯನ ಕಾರ್ಯವನ್ನು ಆತ ಎಂದಿಗೂ ಮಾಡಲಾರ.”
ವಿಜಯ: “ಮಹಾಶಯರೆ, ಬ್ರಾಹ್ಮಸಮಾಜದಲ್ಲಿ ನಡೆಯುವ ಉಪದೇಶಾದಿಗಳಿಂದ ಜನರ ಉದ್ಧಾರವಾಗುವುದಿಲ್ಲವೇನು ?”
ಶ್ರೀರಾಮಕೃಷ್ಣರು: “ಒಬ್ಬ ಇನ್ನೊಬ್ಬನನ್ನು ಸಂಸಾರಬಂಧನದಿಂದ ಮುಕ್ತನನ್ನಾಗಿ ಮಾಡಲು ಸಾಧ್ಯವೆ? ಈ ಭುವನಮೋಹಿನಿ ಮಾಯೆ ಯಾರದೋ ಆತನೇ ಅದರಿಂದ ಮನುಷ್ಯರನ್ನು ಮುಕ್ತರನ್ನಾಗಿ ಮಾಡಬಲ್ಲ. ಸಚ್ಚಿದಾನಂದಗುರುವೊಬ್ಬನನ್ನು ಬಿಟ್ಟರೆ ಬೇರೆ ಯಾರೂ ಶರಣ್ಯರೇ ಇಲ್ಲ. ಯಾರು ಭಗವಂತನ ಸಾಕ್ಷಾತ್ಕಾರ ಪಡೆದುಕೊಂಡಿಲ್ಲವೊ, ಯಾರಿಗೆ ಆತನಿಂದ ಆದೇಶ ದೊರೆತಿಲ್ಲವೊ, ಯಾರು ಭಗವಂತನ ಶಕ್ತಿಯಿಂದ ಶಕ್ತಿಯುತರಾಗಿಲ್ಲವೊ ಅವರ ಕೈಯಲ್ಲಿ ಜೀವರ ಭವಬಂಧನವನ್ನು ಬಿಡಿಸಲು ಎಂದಿಗಾದರೂ ಸಾಧ್ಯವಾಗುವುದೇ?
“ಒಂದು ದಿನ ಪಂಚವಟಿಯ ಮಾರ್ಗವಾಗಿ ಸರ್ವೆ ಮರಗಳ ತೋಪಿನ ಕಡೆಗೆ ಹೋಗುತ್ತಿದ್ದಾಗ ಒಂದು ಗೂಳಿಗಪ್ಪೆ ಬಹಳವಾಗಿ ಕೂಗುತ್ತಿದ್ದುದು ಕಿವಿಗೆ ಬಿತ್ತು. ಅದನ್ನು ಹಾವು ಹಿಡಿದಿರಬೇಕು ಅಂತ ಭಾವಿಸಿದೆ. ತೋಪಿನಲ್ಲಿ ಸ್ವಲ್ಪಹೊತ್ತು ಇದ್ದು, ಬಳಿಕ ಹಿಂದಿರುಗಿ ಪಂಚವಟಿಗೆ ಬಂದಾಗ ಏನು ಸಮಾಚಾರ ಎಂಬುದಾಗಿ ಹುಡುಕಿ ನೋಡಿದೆ. ನೋಡುತ್ತೇನೆ, ಒಂದು ನೀರುಹಾವು ಅದನ್ನು ಹಿಡಿದುಕೊಂಡಿದೆ. ಹಾವಿನ ಕೈಯಲ್ಲಿ ಅದನ್ನು ನುಂಗುವುದಕ್ಕೂ ಆಗುವುದಿಲ್ಲ, ಉಗುಳುವುದಕ್ಕೂ ಆಗುವುದಿಲ್ಲ. ಆದ್ದರಿಂದ ಕಪ್ಪೆಗೆ ತಾಳಲಾರದ ಸಂಕಟ. ಆಗ ಯೋಚನೆ ಬಂತು, ಅದನ್ನೇನಾದರೂ ನಾಗರಹಾವೇ ಹಿಡಿದಿದ್ದೇ ಆಗಿದ್ದರೆ, ಅತಿ ಹೆಚ್ಚೆಂದರೆ ಅದು ಮೂರು ಸಲ ಕೂಗುವುದರೊಳಗೇ ಅದರ ಆಟ ಮುಗಿದುಹೋಗುತ್ತಿತ್ತು. ಆದರೆ ಅದು ಕೇವಲ ನೀರುಹಾವು ಆಗಿದ್ದುದರಿಂದ ಅದಕ್ಕೂ ಪ್ರಾಣಸಂಕಟ, ಕಪ್ಪೆಗೂ ಪ್ರಾಣಸಂಕಟ. ಸದ್ಗುರುವಿನ ಕೈಗೆ ಸಿಕ್ಕಿದ್ದೇ ಆದರೆ ಜೀವರ ‘ಅಹಂ’ ಎಂಬುದು ಮೂರು ಸಲ ಕೂಗಿಕೊಳ್ಳುವುದರಲ್ಲೇ ಅದರ ಹುಟ್ಟು ಅಡಗಿಹೋಗುತ್ತದೆ. ಆದರೆ ಗುರು ‘ಅಪಕ್ವ’ ಮನುಷ್ಯನಾಗಿದ್ದರೆ ಆತನಿಗೂ ಪ್ರಾಣಸಂಕಟ, ಶಿಷ್ಯನಿಗೂ ಪ್ರಾಣಸಂಕಟ. ಶಿಷ್ಯನ ಅಹಂಕಾರವೂ ನಾಶವಾಗುವ ಹಾಗಿಲ್ಲ; ಭವಬಂಧನವೂ ಕಡಿದುಹೋಗುವ ಹಾಗಿಲ್ಲ. ಶಿಷ್ಯ ‘ಅಪಕ್ವ’ ಗುರುವಿನ ಕೈಗೆ ಬಿದ್ದುದೇ ಆದರೆ ಆತನಿಗೆ ಮುಕ್ತಿ ದೊರಕದು.”
ವಿಜಯ: ‘ಮಹಾಶಯರೆ, ಏಕೆ ಹೀಗೆ ನಾವು ಬದ್ಧರಾಗಿಬಿಟ್ಟಿದ್ದೇವೆ? ನಾವು ಏಕೆ ಭಗವಂತನನ್ನು ನೋಡಲಾಗುತ್ತಿಲ್ಲ ?’
ಶ್ರೀರಾಮಕೃಷ್ಣರು: “ಜೀವರ ‘ಅಹಂ’ ಎಂಬುದೇ ಮಾಯೆ. ಈ ‘ಅಹಂ’ ಎಂಬುದು ಎಲ್ಲವನ್ನೂ ಮರೆಸಿಬಿಟ್ಟಿದೆ. ಈ ‘ಅಹಂ’ ಎಂಬುದು ಸತ್ತಿತು ಎಂದರೆ ಎಲ್ಲಾ ತೊಂದರೆಗಳೂ ಕೊನೆಗಾಣುವುವು.” ಭಗವಂತನ ಕೃಪೆಯಿಂದ ನಾನು ಅಕರ್ತನೆಂಬ ಬೋಧೆ ವ್ಯಕ್ತಿಗೆ ಬಂದು ಬಿಟ್ಟಿದ್ದೇ ಆದರೆ, ಆತ ಜೀವನ್ಮುಕ್ತನಾಗಿಬಿಡುತ್ತಾನೆ. ಬಳಿಕ ಅವನಿಗೆ ಯಾವ ಹೆದರಿಕೆಯೂ ಇರದು.
“ಈ ಮಾಯೆ, ಅಂದರೆ ‘ಅಹಂ’ ಎಂಬುದು, ಒಂದು ಚೂರು ಮೋಡವಿದ್ದ ಹಾಗೆ. ಈ ಚೂರು ಮೋಡದ ದೆಸೆಯಿಂದ ಸೂರ್ಯನನ್ನು ನೋಡಲಾಗುವುದಿಲ್ಲ; ಅದು ಸರಿದು ಹೋದೊಡನೆಯೇ ಸೂರ್ಯ ಕಾಣಿಸಿಕೊಳ್ಳುತ್ತಾನೆ. ಗುರುವಿನ ಕೃಪೆಯಿಂದ ಈ ‘ಅಹಂ’ ಎಂಬುದು ನಾಶವಾಯಿತು ಎಂದರೆ ಭಗವಂತನ ದರ್ಶನ ದೊರೆತುಬಿಡುತ್ತದೆ.
“ಸಾಕ್ಷಾತ್ ಭಗವಂತನೇ ಆದ ಶ್ರೀರಾಮಚಂದ್ರ ಲಕ್ಷ್ಮಣನ ಮುಂದೆ ಕೇವಲ ಎರಡೂವರೆ ಮೊಳ ದೂರದಲ್ಲಿ ನಡೆದುಹೋಗುತ್ತಿದ್ದ. ಅವರಿಬ್ಬರ ಮಧ್ಯೆ ಸೀತೆಯ ರೂಪವನ್ನು ಧರಿಸಿದ್ದ ಮಾಯೆ ನಡೆದುಹೋಗುತ್ತಿದ್ದುದರಿಂದ ಲಕ್ಷ್ಮಣನ ರೂಪವನ್ನು ಧರಿಸಿದ್ದ ಜೀವ ಆ ಭಗವಂತನನ್ನು ನೋಡಲಾಗುತ್ತಿರಲಿಲ್ಲ. ಇಲ್ಲಿ ನೋಡು; ಈ ಚೌಕವನ್ನು ನನ್ನ ಮುಖದ ಮುಂದೆ ಹಿಡಿದುಕೊಳ್ಳುತ್ತೇನೆ. ನಾನು ಮಾತ್ರ ನಿನ್ನ ಹತ್ತಿರದಲ್ಲೇ ಇದ್ದರೂ ನೀನು ಮಾತ್ರ ನನ್ನನ್ನು ನೋಡಲಾಗುವುದಿಲ್ಲ. ಇದೇ ರೀತಿ ದೇವರು ಎಲ್ಲಕ್ಕಿಂತಲೂ ಹತ್ತಿರದಲ್ಲೇ ಇದ್ದಾನೆ. ಆದರೂ ಈ ಮಾಯೆಯ ಆವರಣದ ದೆಸೆಯಿಂದ ಆತನನ್ನು ನೋಡಲಾಗುವುದಿಲ್ಲ.
“ಜೀವ ಸಚ್ಚಿದಾನಂದನೇ ಅಲ್ಲದೆ ಇನ್ನು ಬೇರೆ ಏನೂ ಅಲ್ಲ. ಆದರೆ ಈ ಮಾಯೆ, ಎಂದರೆ ಅಹಂಕಾರ ಅನೇಕ ಉಪಾಧಿಗಳನ್ನು ಸೃಷ್ಟಿಸಿರುವುದರಿಂದ ಆತ ತನ್ನ ನಿಜಸ್ವರೂಪವನ್ನು ಮರೆತುಬಿಟ್ಟಿದ್ದಾನೆ.
“ಪ್ರತಿಯೊಂದು ಉಪಾಧಿಯೂ ಮನುಷ್ಯನ ಸ್ವಭಾವವನ್ನು ಬದಲಾಯಿಸಿಬಿಡುತ್ತದೆ. ಆತನೇನಾದರೂ ಕರಿ ಅಂಚಿನ ಪಂಚೆ ಉಟ್ಟುಕೊಂಡ ಅಂದರೆ ಹೇಳದೆ ಕೇಳದೆ ಆತನ ಬಾಯಿಂದ ನಿಧುಬಾಬುವಿನ ಪ್ರಣಯಗೀತೆಗಳು ಹೊರಬರಲಾರಂಭಿಸುತ್ತವೆ. ಬಳಿಕ ಇಸ್ಪೀಟು ಆಡುವುದು, ಗಾಳಿ ಸಂಚಾರಕ್ಕೆ ಹೋದಾಗ ವಾಕಿಂಗ್ಸ್ಟಿಕ್ ಹಿಡಿದುಕೊಂಡು ಹೋಗುವುದು ಇವೆಲ್ಲಾ ಶುರುವಾಗಿಬಿಡುತ್ತದೆ. ರೋಗಿಮನುಷ್ಯ ಕಾಲಿಗೆ ಬೂಟ್ಸು ಗೀಟ್ಸು ಹಾಕಿಕೊಂಡುಬಿಟ್ಟಿದ್ದೆ ಆದರೆ ಆತನೂ ಸಿಳ್ಳು ಹಾಕಲು ಶುರುಮಾಡುತ್ತಾನೆ. ಹಂತ ಹತ್ತುವಾಗ ಇಂಗ್ಲೀಷಿನವರ ಹಾಗೆ ನೆಗೆದು ನೆಗೆದು ಹತ್ತುತ್ತಾನೆ. ಕೈಯಲ್ಲಿ ಲೇಖನಿ ಇದ್ದುದೇ ಆದರೆ, ಅದರ ಪ್ರಭಾವ ಅಂಥದು. ಹಾಗೆಯೇ ಒಂದು ಚೂರು-ಪಾರು ಕಾಗದ ಸಿಕ್ಕಿತು ಎಂದರೆ ಮನುಷ್ಯ ಅದರ ಮೇಲೆ ಏನಾದರೂ ಒಂದನ್ನು ಗೀಚಲೇಬೇಕು.
“ಹಣವೂ ಒಂದು ದೊಡ್ಡ ಉಪಾಧಿ. ಹಣ ಕೈಗೆ ಬಂತು ಎಂದರೆ ಮನುಷ್ಯ ಬದಲಾವಣೆ ಹೊಂದಿಬಿಡುತ್ತಾನೆ! ಆತ ಹಿಂದಿನ ಮನುಷ್ಯನೇ ಅಲ್ಲದವನಾಗಿಬಿಡುತ್ತಾನೆ. ಒಬ್ಬ ಬ್ರಾಹ್ಮಣ ಇಲ್ಲಿಗೆ ಬಂದುಹೋಗುವುದು ಮಾಡುವುದು ಮಾಡುತ್ತಿದ್ದ. ಹೊರಗಡೆ ನೋಡುವುದಕ್ಕೆ ಬಹಳ ವಿನಯಿಯಾಗಿದ್ದ. ಒಂದು ದಿನ ನಾನು ಹೃದೂನೊಡನೆ ಕೊನ್ನಗರಕ್ಕೆ ಹೋದೆ. ನಾವು ನೌಕೆಯಿಂದ ಇಳಿಯುವುದೇ ತಡ, ಆ ಬ್ರಾಹ್ಮಣ ಗಂಗಾದಡದಲ್ಲಿ ಕುಳಿತಿರುವುದು ಕಣ್ಣಿಗೆ ಬಿತ್ತು. ಬಹುಶಃ ಗಾಳಿ ಸೇವಿಸುತ್ತ ಕುಳಿತಿದ್ದಿರಬೇಕು; ನಮ್ಮನ್ನು ಕಂಡು ಆತ ಕೂಗಲಾರಂಭಿಸಿದ: ‘ಏನೂ ಅರ್ಚಕರೋ! ಹೇಗಿದ್ದೀರಿ?’ ಆತನ ಮಾತಿನ ಸ್ವರ ಕೇಳಿ ನಾನು ಹೃದೂಗೆ ಹೇಳಿದೆ: ‘ಓ ಹೃದೂ, ಈತನಿಗೆ ಹಣ ದೊರೆತಿರಬೇಕು. ಅದಕ್ಕಾಗಿ ಈತ ಹೀಗೆ ಮಾತಾಡುತ್ತಿದ್ದಾನೆ.’ ಹೃದು ನಗಲಾರಂಭಿಸಿದ.
“ಒಂದು ಕಪ್ಪೆ ಒಂದು ಬಿಲದಲ್ಲಿ ಒಂದು ರೂಪಾಯಿಯನ್ನು ಇಟ್ಟುಕೊಂಡಿತ್ತು. ಒಂದು ದಿನ ಒಂದು ಆನೆ ಆ ಬಿಲವನ್ನು ದಾಟಿ ಹೋಗುತ್ತಿತ್ತು. ಆಗ ಕಪ್ಪೆ ಕೋಪದಿಂದ ಬಿಲದ ಹೊರಕ್ಕೆ ಬಂದು ತನ್ನ ತೊಡೆ ತಟ್ಟುತ್ತ ಆನೆಯನ್ನು ಗದರಿಸಿತು: ‘ಏನಿದು? ನನ್ನ ಬಿಲ ದಾಟಿಹೋಗುವಷ್ಟು ಕೆಚ್ಚು ನಿನಗೆ?’ ಹಾಗೇ ನೋಡು, ಹಣದ ಮದವನ್ನು!
“ಬ್ರಹ್ಮಜ್ಞಾನ ದೊರೆಯಿತು ಎಂದರೆ ಅಹಂಕಾರ ಹೊರಟುಹೋಗುವ ಸಂಭವ. ಬ್ರಹ್ಮಜ್ಞಾನ ದೊರೆತನಂತರ ಮನುಷ್ಯ ಸಮಾಧಿಸ್ಥನಾಗುತ್ತಾನೆ. ಆಗ ಆತನ ‘ಅಹಂ’ ಎಂಬುದು ಹೊರಟುಹೋಗುತ್ತದೆ. ಆದರೆ ಆ ವಿಧದ ಜ್ಞಾನ ಸುಲಭಸಾಧ್ಯವಲ್ಲ.
“ವೇದದಲ್ಲಿ ಹೇಳಿದೆ, ಮನಸ್ಸು ಸಪ್ತಮ ಭೂಮಿಕೆಯನ್ನು ಮುಟ್ಟಿತು ಎಂದರೆ, ಮನುಷ್ಯನಿಗೆ ಸಮಾಧಿಯುಂಟಾಗುತ್ತದೆ ಎಂಬುದಾಗಿ. ಸಮಾಧಿ ದೊರೆತ ನಂತರವೇ ‘ಅಹಂ’ ಎಂಬುದು ಹೊರಟುಹೋಗುವ ಸಂಭವ. ಮನುಷ್ಯನ ಮನಸ್ಸು ಸಾಮಾನ್ಯವಾಗಿ ಎಲ್ಲಿ ನೆಲೆಸಿರುತ್ತದೆ ಗೊತ್ತೆ? ಮೊದಲನೆ ಮೂರು ಭೂಮಿಕೆಗಳಲ್ಲಿ-ಲಿಂಗ, ಗುಹ್ಯ, ನಾಭಿ ಇವುಗಳಲ್ಲಿ. ಆಗ ಮನಸ್ಸಿನ ಆಸಕ್ತಿ ಕೇವಲ ಸಂಸಾರದಲ್ಲಿ, ಕಾಮಕಾಂಚನದಲ್ಲಿ ಮನಸ್ಸು ಹೃದಯಭೂಮಿಕೆಗೆ ಹತ್ತಿ ನೆಲಸಿದಾಗ ಅದಕ್ಕೆ ಭಗವಜ್ಜ್ಯೋತಿಯ ದರ್ಶನ ಆಗುತ್ತದೆ. ಮನುಷ್ಯ ಆ ಜ್ಯೋತಿಯನ್ನು ದರ್ಶಿಸಿದಾಗ ವಿಸ್ಮಯಗೊಂಡು ಕೇಳುತ್ತಾನೆ: ‘ಅಹ ! ಏನಿದು? ಏನಿದು?’ ಬಳಿಕ ಕಂಠದ ಭೂಮಿಕೆ. ಅಲ್ಲಿಗೆ ಮನಸ್ಸು ಹತ್ತಿ ನೆಲಸಿದಾಗ ಕೇವಲ ಭಗವದ್ವಿಷಯವಾಗಿ ಕೇಳಲು ಮಾತಾಡಲು ಇಚ್ಛೆಯಾಗುತ್ತದೆ. ಲಲಾಟಕ್ಕೆ ಅಂದರೆ, ಭ್ರೂಮಧ್ಯಕ್ಕೆ ಮನಸ್ಸು ಹತ್ತಿ ನೆಲಸಿದರೆ ಆಗ ಸಚ್ಚಿದಾನಂದನ ರೂಪ ದರ್ಶನ ಆಗುತ್ತದೆ. ಆತನನ್ನು ಸ್ಪರ್ಶಿಸಲು ಮತ್ತು ಆಲಿಂಗನ ಮಾಡಿಕೊಳ್ಳಲು ಇಚ್ಛೆಯಾಗುತ್ತದೆ. ಆದರೆ ಅದು ಸಾಧ್ಯವಾಗುವುದಿಲ್ಲ. ಇದು ಲಾಟೀನಿನ ಒಳಗಿರುವ ಬೆಳಕಿನ ಹಾಗೆ. ಅದನ್ನು ನೋಡ ಬಹುದೇ ವಿನಾ ಸ್ಪರ್ಶಮಾಡಲಾಗುವುದಿಲ್ಲ. ಮುಟ್ಟಿಬಿಡೋಣ, ಮುಟ್ಟಿಬಿಡೋಣ ಅನ್ನಿಸುತ್ತದೆ. ಆದರೆ ಮುಟ್ಟಲಾಗುವುದಿಲ್ಲ. ಮನಸ್ಸು ಸಪ್ತಮ ಭೂಮಿಕೆಯನ್ನು ಮುಟ್ಟಿದಾಗ ‘ಅಹಂ’ ಎಂಬುದು ಉಳಿದಿರದು. ಮನುಷ್ಯ ಸಮಾಧಿಸ್ಥನಾಗುತ್ತಾನೆ.”
ವಿಜಯ: “ಏಳನೆ ಭೂಮಿಕೆಯನ್ನು ಮುಟ್ಟಿ ಬ್ರಹ್ಮಜ್ಞಾನವನ್ನು ಪಡೆದುಕೊಂಡ ನಂತರ ಮನುಷ್ಯನಿಗೆ ಏನು ಕಾಣಬರುತ್ತದೆ ?”
ಶ್ರೀರಾಮಕೃಷ್ಣರು: “ಸಪ್ತಮ ಭೂಮಿಕೆಯನ್ನು ಮುಟ್ಟಿದ ನಂತರ ಅಲ್ಲಿ ಏನಾಗುತ್ತದೆ ಎಂಬುದನ್ನು ಬಾಯಿಂದ ವರ್ಣನೆಮಾಡಲಾಗುವುದಿಲ್ಲ.
“ಜಹಜು ಒಮ್ಮೆ ಸಮುದ್ರದ ‘ಕಪ್ಪು ನೀರಿನ’ ಕಡೆ ಹೋಯಿತು ಎಂದರೆ ಮತ್ತೆ ಅದು ಹಿಂದಿರುಗದು. ಬಳಿಕ ಅದರ ಸುದ್ದಿ ಸಮಾಚಾರವೇ ಗೊತ್ತಾಗದು. ಆದ್ದರಿಂದ ಜಹಜು ನಮಗೆ ಸಮುದ್ರದ ಸಮಾಚಾರ ಕೊಡಲಾರದು.
“ಒಮ್ಮೆ ಉಪ್ಪಿನ ಬೊಂಬೆಯು ಸಮುದ್ರದ ಆಳವನ್ನು ಅಳೆಯಲು ಹೋಯಿತು. ಅದು ಸಮುದ್ರಕ್ಕೆ ಕಾಲು ಹಾಕಿದುದೆ ತಡ, ಒಡನೆಯೆ ಕರಗಿಹೋಗಿಬಿಟ್ಟಿತು. ಈಗ ಸಮುದ್ರ ಎಷ್ಟು ಆಳವಾಗಿದೆ ಎಂಬುದನ್ನು ತಿಳಿಸಲು ಯಾರು ಉಳಿದುಕೊಂಡಿದ್ದಾರೆ? ಯಾವುದು ಅದನ್ನು ನಮಗೆ ತಿಳಿಸಬಹುದಾಗಿತ್ತೊ ಅದೇ ಸಮುದ್ರದಲ್ಲಿ ಕರಗಿಹೋಗಿಬಿಟ್ಟಿತು. ಸಪ್ತಮ ಭೂಮಿಕೆಯಲ್ಲಿ ಮನಸ್ಸು ನಾಶವಾಗಿಬಿಡುತ್ತದೆ; ಸಮಾಧಿಯುಂಟಾಗುತ್ತದೆ. ಅಲ್ಲಿ ಏನು ಅನುಭವ ದೊರೆಯುತ್ತದೆಯೊ ಅದನ್ನು ಮಾತಿನಿಂದ ವರ್ಣಿಸಲಾಗುವುದಿಲ್ಲ.
“ಯಾವ ‘ಅಹಂ’ ಮನುಷ್ಯನನ್ನು ಸಂಸಾರಿಯನ್ನಾಗಿ ಕಾಮಕಾಂಚನಾಸಕ್ತನನ್ನಾಗಿ ಮಾಡುವುದೊ ಅದು ‘ಕೆಟ್ಟ ಅಹಂ’. ಜೀವನಿಗೂ ಆತ್ಮನಿಗೂ ಪ್ರಭೇದ ಉಂಟಾಗಿರುವುದು ಈ ‘ಅಹಂ’ ಎಂಬುದು ಮಧ್ಯೆ ನಿಂತುಕೊಂಡಿರುವುದರಿಂದ. ನೀರಿನ ಮೇಲೆ ಒಂದು ದೊಣ್ಣೆ ಎಸೆದರೆ ನೀರು ಇಬ್ಭಾಗವಾಗಿರುವ ಹಾಗೆ ಕಾಣುತ್ತದೆ. ನಿಜವಾಗಿ ಅಲ್ಲಿ ಇರುವುದು ಒಂದೇ ಜಲರಾಶಿ. ಆ ದೊಣ್ಣೆಯ ದೆಸೆಯಿಂದ ಎರಡಾಗಿ ತೋರ್ಪಡಿಸಿಕೊಳ್ಳುತ್ತದೆ. ಈ ‘ಅಹಂ’ ಎಂಬುದೇ ಆ ದೊಣ್ಣೆ. ಆ ದೊಣ್ಣೆಯನ್ನು ತೆಗೆದುಹಾಕಿಬಿಟ್ಟರೆ, ಬಳಿಕ ಎಂದಿನ ಒಂದೇ ಜಲರಾಶಿ ಉಳಿದುಕೊಳ್ಳುತ್ತದೆ.
“ಈ ‘ಕೆಟ್ಟ ಅಹಂ’ ಎಂಬುದು ಯಾವುದು? ಯಾವನು ಹೇಳುತ್ತಾನೊ, ‘ಏನು? ನಾನಾರು ಎಂಬುದು ಗೊತ್ತಿಲ್ಲ? ನನ್ನ ಹತ್ತಿರ ಎಷ್ಟೊಂದು ಹಣ ಇದೆ! ನನಗಿಂತಲೂ ದೊಡ್ಡ ಧನಿಕರು ಯಾರಾದರೂ ಇದ್ದಾರೆಯೇನು?’ ಎಂದು.ಅಂಥ ಮನುಷ್ಯನಿಂದ ಕಳ್ಳ, ಹೆಚ್ಚಾಗಿ ಯೇನೂ ಬೇಡ, ಕೇವಲ ಒಂದು ಹತ್ತು ರೂಪಾಯಿ ಕದ್ದುಬಿಟ್ಟರೇ ಸಾಕು, ಮೊದಲು ಆತ ಅವನಿಂದ ಹಣ ಕಿತ್ತುಕೊಂಡು ನಂತರ ಚರ್ಮ ಸುಲಿದುಹೋಗುವವರೆಗೆ ಚೆನ್ನಾಗಿ ಹೊಡೆಯುತ್ತಾನೆ. ಅದು ಅಷ್ಟಕ್ಕೇ ಮುಗಿದುಹೋಗುವ ಹಾಗಿಲ್ಲ; ಆತನನ್ನು ಪೋಲೀಸಿನವರ ಕೈಗೆ ಒಪ್ಪಿಸಿ ಕೊನೆಗೆ ಜೇಲಿಗೆ ಕಳುಹಿಸುತ್ತಾನೆ. ಆ ‘ಕೆಟ್ಟ ಅಹಂ’ ಹೇಳುತ್ತದೆ: ‘ಆ ನೀಚನಿಗೆ ಗೊತ್ತಿರಲಿಲ್ಲ ತಾನು ಯಾರಿಂದ ಕದಿಯುತ್ತೇನೆ ಎಂಬುದು. ನೋಡಿದೆಯಾ, ನನ್ನಿಂದ ಹತ್ತು ರೂಪಾಯಿ ಕದ್ದುಬಿಟ್ಟಿದ್ದನಲ್ಲಾ! ಎಷ್ಟು ಧೈರ್ಯವಿರಬೇಕು ಅವನಿಗೆ?’
ವಿಜಯ: “ಈ ‘ಅಹಂ’ ಹೋಗದವರೆಗೂ ಸಂಸಾರಾಸಕ್ತಿ ಹೋಗದೆ ಇದ್ದರೆ, ಸಮಾಧಿ ದೊರೆಯದೆ ಇದ್ದರೆ, ಸಮಾಧಿಯನ್ನು ದೊರಕಿಸಿಕೊಳ್ಳಲು ಬ್ರಹ್ಮಜ್ಞಾನವನ್ನು ಅವಲಂಬಿಸುವುದೇ ಮೇಲು ಅಂತ ಕಾಣುವುದು. ಭಕ್ತಿಯೋಗದಲ್ಲಿ ‘ಅಹಂ’ ಉಳಿದು ಕೊಳ್ಳುವುದಾದರೆ ಜ್ಞಾನಯೋಗವೇ ಮೇಲು.”
ಶ್ರೀರಾಮಕೃಷ್ಣರು: “ಎಲ್ಲೋ ಕೆಲವರಿಗೆ ಮಾತ್ರ ಸಮಾಧಿಯುಂಟಾಗಿ ಈ ‘ಅಹಂ’ ಎಂಬುದು ಹೊರಟುಹೋಗುವುದೇನೋ ನಿಜ; ಆದರೆ ಇದು ಪ್ರಾಯಿಕವಾಗಿ ಹೋಗುವುದಿಲ್ಲ. ಸಾವಿರ ವಿಚಾರ ಮಾಡು, ‘ಅಹಂ’ ತಿರುತಿರುಗಿ ಬಂದುಬಿಡುತ್ತದೆ. ಅಶ್ವತ್ಥ ವೃಕ್ಷವನ್ನು ಚೆನ್ನಾಗಿ ಬುಡದವರೆಗೆ ಕತ್ತರಿಸಿಹಾಕಿಬಿಟ್ಟು ಮಾರನೆ ದಿನ ಹೋಗಿ ನೋಡಿದರೆ ಆಗಲೇ ಅದು ಚಿಗುರಿಬಿಟ್ಟಿರುತ್ತದೆ. ಈ ‘ಅಹಂ’ ಎಂಬುದು ಬಡಪೆಟ್ಟಿಗೆ ಹೋಗುವುದಿಲ್ಲವೆಂದರೆ, ಈ ನೀಚಮುಂಡೇದು ‘ದಾಸ ಅಹಂ’ ಹಾಗೇ ಉಳಿದುಕೊಂಡಿರಲಿ. ನೀನು ಬದುಕಿಕೊಂಡಿರುವವರೆಗೆ, ‘ಹೇ ಭಗವಂತ, ನೀನು ಪ್ರಭು, ನಾನು ದಾಸ’ ಎಂಬ ಭಾವದಿಂದ ಬದುಕಿಕೊಂಡಿರು. ‘ನಾನು ದಾಸ,’ ‘ನಾನು ಭಕ್ತ’ ಎಂಬ ‘ಅಹಂ’ ಕೆಡುಕಾದ ‘ಅಹಂ’ ಏನಲ್ಲ. ಸಿಹಿ ತಿಂದರೆ ಹೊಟ್ಟೆಯಲ್ಲಿ ಹುಳಿ ಅಧಿಕವಾಗುವುದೇನೋ ನಿಜ. ಆದರೆ ಕಲ್ಲುಸಕ್ಕರೆ ಸಿಹಿಪದಾರ್ಥಗಳ ಗುಂಪಿಗೆ ಸೇರಿಲ್ಲ.
“ಜ್ಞಾನಯೋಗ ಬಹಳ ಕಠಿಣ. ದೇಹಾತ್ಮಬುದ್ಧಿ ಹೋಗದ ಹೊರತು ಜ್ಞಾನ ಉಂಟಾಗುವುದಿಲ್ಲ. ಕಲಿಯುಗದಲ್ಲಿ ಅನ್ನಗತಪ್ರಾಣ. ದೇಹಾತ್ಮಬುದ್ಧಿ, ಅಹಂಬುದ್ಧಿ ಹೋಗದು. ಆದ್ದರಿಂದ ಈ ಯುಗಕ್ಕೆ ಭಕ್ತಿಯೋಗವೇ ಔಷಧ. ಇದು ಬಹಳ ಸುಲಭವಾದ ಮಾರ್ಗ. ಹೃತ್ಪೂರ್ವಕ ವ್ಯಾಕುಲತೆಯಿಂದ ಆತನ ನಾಮಗುಣಕೀರ್ತನೆ ಮಾಡು, ಪ್ರಾರ್ಥನೆ ಮಾಡು, ಆತ ದೊರೆತುಬಿಡುತ್ತಾನೆ. ಇದರಲ್ಲಿ ಯಾವ ಸಂದೇಹವೂ ಇಲ್ಲ.
“ಒಂದು ಗಳುವಿನ ತುಂಡು ತೆಗೆದುಕೊಂಡು ನೀರಿನ ಮೇಲೆ ಗೆರೆ ಎಳೆದೆ ಅಂತ ಇಟ್ಟುಕೊ. ನೀರು ಇಬ್ಭಾಗವಾದ ಹಾಗೆ ಕಾಣುತ್ತದೆ. ಆದರೆ ಆ ಗೆರೆ ಹೆಚ್ಚುಕಾಲ ನಿಲ್ಲದು. ‘ದಾಸ ಅಹಂ’, ‘ಭಕ್ತ ಅಹಂ’, ‘ಬಾಲಕ ಅಹಂ’ ಇವು ‘ಅಹಂ’ ನ ಗೆರೆ ಮಾತ್ರ.”
ವಿಜಯ: “ಮಹಾಶಯರೆ, ನೀವು ‘ಕೆಟ್ಟ ಅಹಂ’ ತ್ಯಜಿಸುವಂತೆ ಬೋಧನೆ ಮಾಡುತ್ತಿದ್ದೀರಿ. ‘ದಾಸ ಅಹಂ’ ನಿಂದ ಕೆಡುಕೇನು ಆಗುವುದಿಲ್ಲ ತಾನೆ?”
ಶ್ರೀರಾಮಕೃಷ್ಣರು: “ಹೌದು, ‘ದಾಸ ಅಹಂ’, ಎಂದರೆ ನಾನು ಭಗವಂತನ ದಾಸ, ನಾನು ಆತನ ಭಕ್ತ ಎಂಬ ಭಾವ ಕೆಡುಕಾದುದೇನಲ್ಲ. ಅದಕ್ಕೆ ಬದಲು ಅದು ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.”
ವಿಜಯ: “ಒಳ್ಳೇದು, ಯಾರ ‘ಅಹಂ’ ‘ದಾಸ ಅಹಂ’ ಆಗಿರುವುದೋ ಅವರ ಕಾಮ ಕ್ರೋಧಾದಿಗಳ ಸಮಾಚಾರವೇನು?”
ಶ್ರೀರಾಮಕೃಷ್ಣರು: “ಮನುಷ್ಯನಿಗೆ ನಿಜವಾಗಿ ಆ ಭಾವ ಬಂದಿರುವುದಾದರೆ, ಆತನಲ್ಲಿ ಕಾಮಕ್ರೋಧಾದಿಗಳ ಕೇವಲ ಸೋಗು ಉಳಿದುಕೊಳ್ಳುತ್ತದೆ. ಭಗವಂತನ ಸಾಕ್ಷಾತ್ಕಾರ ದೊರೆತ ನಂತರ ಆತನಲ್ಲಿ ‘ದಾಸ ಅಹಂ’ ಅಥವಾ ‘ಭಕ್ತ ಅಹಂ’ ಉಳಿದುಕೊಂಡರೆ ಆತ ಯಾರಿಗೂ ಕೆಡುಕನ್ನು ತರಲಾರ. ಕತ್ತಿ ಸ್ಪರ್ಶಮಣಿಯನ್ನು ಮುಟ್ಟಿದ ನಂತರ ಚಿನ್ನವಾಗಿ ಬಿಡುತ್ತದೆ. ಕತ್ತಿಯ ಆಕಾರವೇನೋ ಹಾಗೆಯೇ ಉಳಿದುಕೊಳ್ಳುತ್ತದೆ. ಆದರೆ ಅದು ಯಾವುದನ್ನೂ ಕತ್ತರಿಸಲಾರದು.
“ತೆಂಗಿನ ಮರದ ಮಟ್ಟೆ ಒಣಗಿ ಕೆಳಕ್ಕೆ ಬಿದ್ದುಹೋಯಿತು ಎಂದರೆ, ಅದು ಒಂದು ಗುರುತನ್ನು ಬಿಡುತ್ತದೆ. ಆ ಗುರುತು ಹೇಳುತ್ತದೆ, ಒಮ್ಮೆ ಅಲ್ಲಿ ಒಂದು ಮಟ್ಟೆ ಇತ್ತು ಎಂಬುದಾಗಿ. ಅದೇ ರೀತಿಯಾಗಿ ಯಾರಿಗೆ ಭಗವಂತನ ಸಾಕ್ಷಾತ್ಕಾರವಾಗಿದೆಯೋ ಅವರ ‘ಅಹಂ’ ನ ಗುರುತು ಮಾತ್ರ ನಿಲ್ಲುತ್ತದೆ. ಕಾಮಕ್ರೋಧಾದಿಗಳ ಆಕಾರ ಮಾತ್ರ ಇರುತ್ತದೆ. ಆತ ಮಗುವಿನಂತಾಗಿಬಿಡುತ್ತಾನೆ. ಮಗುವಿಗೆ ಸತ್ತ್ವರಜಸ್ತಮೋಗುಣಗಳ ಸ್ಪರ್ಶಸ್ವಲ್ಪವೂ ಇಲ್ಲ. ಅದಕ್ಕೆ ಯಾವುದಾದರೂ ಒಂದು ವಸ್ತುವಿನ ಮೇಲೆ ಆಸಕ್ತಿ ಉಂಟಾಗಲು ಎಷ್ಟು ಸಮಯವು ಬೇಕೋ, ಅಷ್ಟೇ ಸಮಯ ಸಾಕು ಅದರ ಮೇಲೆ ನಿರಾಸಕ್ತಿ ಉಂಟಾಗಲು ಕೂಡ. ಅದಕ್ಕೆ ಅರ್ಧಾಣೆ ಗೊಂಬೆ ಕೊಟ್ಟು ಐದು ರೂಪಾಯಿಯ ಪಂಚೆ ಕಸಿದುಕೊಳ್ಳ ಬಹುದು. ಮೊದಲೇನೋ ಅದು ಬಹಳ ಆಸಕ್ತಿಯಿಂದ ಹೇಳುತ್ತದೆ: ‘ಊಹ್ಞೂ, ನಾನು ಕೊಡೋದಿಲ್ಲ, ನನಗೆ ನಮ್ಮ ತಂದೆ ತಂದುಕೊಟ್ಟಿದ್ದಾನೆ.’ ಮಗುವಿನ ಕಣ್ಣಿಗೆ ಎಲ್ಲರೂ ಒಂದೆ-ಇವನು ದೊಡ್ಡವನು ಅವನು ಚಿಕ್ಕವನು ಎಂಬ ಭೇದ ಭಾವನೆ ಇಲ್ಲ. ಅದಕ್ಕಾಗಿ ಜಾತಿ-ಮತದ ಸಮಾಚಾರ ಅದರ ತಲೆಗೇ ಹತ್ತದು. ತಾಯಿಯೇನಾದರೂ ಒಬ್ಬನನ್ನು ತೋರಿಸಿ, ಆತ ನಿನಗೆ ಅಣ್ಣನಾಗಬೇಕು ಎಂದು ಹೇಳಿಬಿಟ್ಟರೆ ಆತ ಕಮ್ಮಾರಜಾತಿಯವ ನಾಗಿದ್ದರೂ ಸರಿಯೆ ಆತನ ಎಲೆಯಲ್ಲೇ ಕುಳಿತು ಊಟಮಾಡಿ ಬಿಡುತ್ತದೆ. ಮಗುವಿನಲ್ಲಿ ದ್ವೇಷ ಎಂಬುದು ಇಲ್ಲವೇ ಇಲ್ಲ. ಶುಚಿ-ಅಶುಚಿಯ ಬೋಧೆಯೇ ಅದಕ್ಕಿಲ್ಲ, ಬಹಿರ್ದೇಶಕ್ಕೆ ಹೋಗಿ ಕೈಗೆ ಮೃತ್ತಿಕೆ ಹಚ್ಚುವ ಬಾಬೇ ಇಲ್ಲ ಅದಕ್ಕೆ.
“ಕೆಲವರು ಸಮಾಧಿ ದೊರೆತ ನಂತರವೂ ‘ಭಕ್ತ ಅಹಂ’ ಅಥವಾ ‘ದಾಸ ಅಹಂ’ ಇವನ್ನು ಇಟ್ಟುಕೊಂಡಿರುತ್ತಾರೆ. ಭಕ್ತ ‘ಭಕ್ತ ಅಹಂ’ ಇಟ್ಟುಕೊಂಡಿರುತ್ತಾನೆ. ಆತ ಹೇಳುತ್ತಾನೆ: ‘ಹೇ ಭಗವಂತ, ನೀನು ಪ್ರಭು, ನಾನು ದಾಸ; ನೀನು ಭಗವಂತ, ನಾನು ಭಕ್ತ.’ ಭಗವಂತನ ಸಾಕ್ಷಾತ್ಕಾರ ದೊರೆತ ನಂತರವೂ ಈ ಭಾವ ಆತನಲ್ಲಿರುತ್ತದೆ. ಆತನ ‘ಅಹಂ’ ಪೂರ್ಣವಾಗಿ ಹೊರಟುಹೋಗದು. ಈ ವಿಧದ ಭಾವವನ್ನು ಕಾರ್ಯತಃ ಆಚರಣೆಗೆ ತರುತ್ತ ತರುತ್ತ ಕೊನೆಗೆ ಭಗವಂತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ಇದಕ್ಕೇ ಭಕ್ತಿಯೋಗ ಅಂತ ಹೆಸರು.
“ಭಕ್ತಿಮಾರ್ಗವನ್ನು ಅನುಸರಿಸಿ ಮುಂದುವರಿದರೆ ಬ್ರಹ್ಮಜ್ಞಾನವನ್ನೂ ಪಡೆದು ಕೊಂಡುಬಿಡಬಹುದು. ಭಗವಂತ ಸರ್ವಶಕ್ತಿಮಾನ್. ಆತ ಇಚ್ಛೆಪಟ್ಟರೆ ತನ್ನ ಭಕ್ತನಿಗೆ ಬ್ರಹ್ಮಜ್ಞಾನವನ್ನು ಕೊಡಬಲ್ಲ. ಆದರೆ ಭಕ್ತನಿಗೆ ಪ್ರಾಯಿಕವಾಗಿ ಬ್ರಹ್ಮಜ್ಞಾನ ಬೇಕೆಂದೆ ನಿಸುವುದಿಲ್ಲ. ಆತ, ‘ನಾನು ದಾಸ, ನೀನು ಪ್ರಭು; ನಾನು ಮಗು, ನೀನು ತಾಯಿ’ ಎಂಬ ಈ ಭಾವದಿಂದಿರಲು ಇಚ್ಛೆಪಡುತ್ತಾನೆ.”
ವಿಜಯ: “ವೇದಾಂತವಿಚಾರ ಮಾಡುವವರೂ ಆತನನ್ನೇ ಕೊನೆಗೆ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರಲ್ಲವೇ?”
ಶ್ರೀರಾಮಕೃಷ್ಣರು: “ಹೌದು, ವಿಚಾರಮಾರ್ಗದಿಂದಲೂ ಆತನ ಸಾಕ್ಷಾತ್ಕಾರ ಪಡೆದು ಕೊಳ್ಳಬಹುದು. ಇದಕ್ಕೆ ಜ್ಞಾನಯೋಗ ಅಂತ ಹೆಸರು. ವಿಚಾರಮಾರ್ಗ ಬಹಳ ಕಠಿಣ. ನಾನಾಗಲೆ ನಿನಗೆ ಸಪ್ತ ಭೂಮಿಕೆಗಳ ವಿಷಯವಾಗಿ ತಿಳಿಸಿದ್ದೇನೆ. ಮನಸ್ಸು ಸಪ್ತಮ ಭೂಮಿಕೆಯನ್ನು ಮುಟ್ಟಿದಾಗ ಸಮಾಧಿಯುಂಟಾಗುತ್ತದೆ. ಬ್ರಹ್ಮಸತ್ಯಂ ಜಗನ್ಮಿಥ್ಯಾ ಎಂಬ ದೃಢಜ್ಞಾನ ಉಂಟಾದುದೇ ಆದರೆ ಮನಸ್ಸು ಲಯಹೊಂದಿಬಿಡುತ್ತದೆ; ಸಮಾಧಿಯುಂಟಾಗುತ್ತದೆ. ಆದರೆ ಈ ಕಲಿಯುಗದಲ್ಲಿ ಅನ್ನಗತಪ್ರಾಣ. ‘ಬ್ರಹ್ಮಸತ್ಯಂ ಜಗನ್ಮಿಥ್ಯಾ’ ಎಂಬ ಬೋಧೆ ಎಲ್ಲಿ ಸಾಧ್ಯವಾದೀತು? ಆ ಅರಿವು ದೇಹಬುದ್ಧಿ ಹೋದ ಹೊರತು ಉಂಟಾಗದು. ‘ನಾನು ದೇಹವಲ್ಲ, ನಾನು ಮನಸ್ಸಲ್ಲ, ನಾನು ಚತುರ್ವಿಂಶತಿ ತತ್ತ್ವ ಅಲ್ಲ; ನಾನು ಸುಖದುಃಖಗಳಿಗೆ ಅತೀತ. ನನಗೆಲ್ಲಿಯ ರೋಗ, ಶೋಕ, ಮುಪ್ಪು, ಮೃತ್ಯು?’ ಎಂಬ ಬೋಧೆ ಕಲಿಯುಗದಲ್ಲಿ ಉಂಟಾಗುವುದು ಬಹಳ ಕಠಿಣ. ವಿಚಾರ ಎಷ್ಟೇ ಮಾಡು, ದೇಹಾತ್ಮಬುದ್ಧಿ ಯಾವುದೋ ಮೂಲೆಯಿಂದ ನುಸುಳಿಕೊಂಡು ಒಳಕ್ಕೆ ನುಗ್ಗಿ ಬಿಡುತ್ತದೆ. ಅಶ್ವತ್ಥ ವೃಕ್ಷವನ್ನು ಇಂದು ನೆಲಮಟ್ಟದವರೆಗೂ ಕತ್ತರಿಸಿ ಹಾಕಿ ಇದು ಇನ್ನೇನು ಸತ್ತುಹೋಯಿತು ಎಂದು ಭಾವಿಸಿ ಮಾರನೆ ದಿನ ಹೋಗಿ ನೋಡಿದರೆ ಆಗಲೆ ಅದು ಚಿಗುರಿಬಿಟ್ಟಿರುತ್ತದೆ. ದೇಹಾಭಿಮಾನ ಹೋಗುವುದಿಲ್ಲ, ಆದ್ದರಿಂದ ಭಕ್ತಿಯೋಗವೇ ಈ ಯುಗಕ್ಕೆ ಒಳ್ಳೆಯದು. ಇದು ಬಹಳ ಸುಲಭವಾದ್ದು.
“ಸಕ್ಕರೆಯಾಗಲು ಇಚ್ಛೆಯಿಲ್ಲ; ಸಕ್ಕರೆ ತಿನ್ನಲು ಇಚ್ಛೆ.’ ನನಗೆ ಎಂದಿಗೂ ಇಚ್ಛೆ ಯಾಗುವುದಿಲ್ಲ, ‘ನಾನು ಬ್ರಹ್ಮ’ ಅಂತ ಹೇಳಲು. ನಾನು ಹೇಳುತ್ತೇನೆ: ‘ನೀನು ಭಗವಂತ, ನಾನು ನಿನ್ನ ದಾಸ.’ ಐದನೆ ಮತ್ತು ಆರನೆ ಭೂಮಿಕೆಗಳ ಮಧ್ಯೆ ಮನಸ್ಸಿನ ದೋಣಿ ಜೂಜು ನಡೆಸುವುದು ಬಹಳ ಒಳ್ಳೆಯದು. ಆರನೆ ಭೂಮಿಕೆಯನ್ನು ದಾಟಿ ಏಳನೆ ಭೂಮಿಕೆಯಲ್ಲಿ ಹೆಚ್ಚು ಹೊತ್ತು ಇರಲು ನನಗೆ ಇಚ್ಛೆಯಿಲ್ಲ. ನನಗೆ ಆತನ ನಾಮಗುಣಕೀರ್ತನೆ ಮಾಡಿ ಕೊಂಡಿರಬೇಕೆಂದು ಇಚ್ಛೆ. ಸೇವ್ಯಸೇವಕ ಭಾವ ಬಹಳ ಒಳ್ಳೆಯದು. ಮತ್ತೆ ನೋಡು, ಅಲೆ ಗಂಗೆಯದು ಎಂದು ಜನ ಹೇಳುತ್ತಾರೆಯೆ ಹೊರತು ಗಂಗೆ ಅಲೆಯದು ಎಂದು ಯಾರೂ ಹೇಳುವುದಿಲ್ಲ. ‘ನಾನೇ ಅವನು’ ಎಂಬ ಭಾವ ಒಳ್ಳೆಯದಲ್ಲ. ದೇಹಾತ್ಮಬುದ್ಧಿ ಇನ್ನೂ ಇರುವಾಗಲೇ ಮನುಷ್ಯ ಹೀಗೆ ಭಾವಿಸಿದರೆ ಆತನಿಗೆ ವಿಶೇಷ ಹಾನಿ ಬಂದೊದಗುತ್ತದೆ. ಆತ ಆಧ್ಯಾತ್ಮಿಕ ಜೀವನದಲ್ಲಿ ಮುಂದುವರಿಯಲಾರದೆ ಕ್ರಮೇಣ ಅಧಃಪತನಕ್ಕೆ ಇಳಿದು ಬಿಡುತ್ತಾನೆ. ಪರರನ್ನೂ ಮೋಸಗೊಳಿಸುತ್ತಾನೆ, ತಾನೂ ಮೋಸಹೋಗುತ್ತಾನೆ. ಆತನಿಗೆ ತನ್ನ ಮಾನಸಿಕ ಅವಸ್ಥೆ ಏನು ಎಂಬುದನ್ನು ಅರಿತುಕೊಳ್ಳಲಾಗುವುದಿಲ್ಲ.
“ಆದರೆ ಕಾಟಾಚಾರದ ಭಕ್ತಿಯಿಂದ ಭಗವಂತನನ್ನು ಪಡೆಯಲಾಗುವುದಿಲ್ಲ. ಪ್ರೇಮಾ ಭಕ್ತಿಯಿಲ್ಲದೆ ಆತನ ಸಾಕ್ಷಾತ್ಕಾರ ಮಾಡಿಕೊಳ್ಳಲಾಗುವುದಿಲ್ಲ. ಪ್ರೇಮಾಭಕ್ತಿಗೆ ಇನ್ನೊಂದು ಹೆಸರು ‘ರಾಗಾಭಕ್ತಿ’ ಅಂತ. ಪ್ರೇಮ, ಅನುರಾಗ ಇಲ್ಲದೆ ಭಗವಂತನ ಸಾಕ್ಷಾತ್ಕಾರ ದೊರೆಯದು. ಭಗವಂತನಲ್ಲಿ ಪ್ರೀತಿ ಉಂಟಾಗದ ಹೊರತು ಆತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲಾಗುವುದಿಲ್ಲ.
“ಇನ್ನೊಂದು ವಿಧದ ಭಕ್ತಿ ಇದೆ. ಅದರ ಹೆಸರು ‘ವೈಧಿಭಕ್ತಿ’ ಅಂತ. ಅದರ ಪ್ರಕಾರ ಕೆಲವು ನಿರ್ದಿಷ್ಟ ಸಲ ಜಪಮಾಡಬೇಕು, ಉಪವಾಸವಿರಬೇಕು, ತೀರ್ಥಯಾತ್ರೆಗೆ ಹೋಗಬೇಕು, ನಿರ್ದಿಷ್ಟ ಉಪಚಾರಗಳಿಂದ ಪೂಜೆಮಾಡಬೇಕು, ನಿಯಮಿತ ಬಲಿದಾನ ಕೊಡಬೇಕು ಇತ್ಯಾದಿ. ಇವೆಲ್ಲವನ್ನೂ ಬಹಳವಾಗಿ ಮಾಡುತ್ತ ಮಾಡುತ್ತ ಬಂದರೆ, ಕ್ರಮೇಣ ರಾಗಾಭಕ್ತಿ ಉಂಟಾಗುತ್ತದೆ. ಈ ರಾಗಾಭಕ್ತಿ ಉಂಟಾಗದ ಹೊರತು ಭಗವಂತನ ಸಾಕ್ಷಾತ್ಕಾರ ದೊರೆಯುವುದಿಲ್ಲ. ಆತನ ಮೇಲೆ ಪ್ರೀತಿ ಉಂಟಾಗಬೇಕು. ಸಾಂಸಾರಿಕ ಬುದ್ಧಿ ಸಂಪೂರ್ಣವಾಗಿ ತೊಲಗಿಹೋಗಿ ನೂರಕ್ಕೆ ನೂರು ಭಾಗ ಮನಸ್ಸು ಆತನಲ್ಲಿ ನೆಲಸಬೇಕು. ಆಗ ಮಾತ್ರವೇ ಆತನ ಸಾಕ್ಷಾತ್ಕಾರ ದೊರೆಯುತ್ತದೆ.
“ಆದರೆ ಕೆಲವರಿಗೆ ರಾಗಾಭಕ್ತಿ ತಾನಾಗಿಯೇ ಉಂಟಾಗಿಬಿಡುತ್ತದೆ. ಅವರಲ್ಲಿ ಅದು ಸ್ವತಸ್ಸಿದ್ಧವಾಗಿದೆ. ಬಾಲ್ಯಕಾಲದಿಂದಲೆ ಅದು ಅವರಲ್ಲಿ ಇದೆ. ಚಿಕ್ಕ ವಯಸ್ಸಿನಲ್ಲೇ ಅವರು ಭಗವಂತನಿಗಾಗಿ ಅಳಲಾರಂಭಿಸುತ್ತಾರೆ. ಉದಾಹರಣೆಗೆ ಪ್ರಹ್ಲಾದ. ವೈಧೀಭಕ್ತಿ, ಗಾಳಿ ಬೀಸಿಕೊಳ್ಳಲು ಬೇಕಾಗುವ ಬೀಸಣಿಗೆ ಹಾಗೆ. ಗಾಳಿ ಬೀಸಿಕೊಳ್ಳಬೇಕಾದರೆ ಬೀಸಣಿಗೆ ಬೇಕು. ಭಗವಂತನಲ್ಲಿ ಪ್ರೀತಿಯುಂಟಾಗುತ್ತದೆ ಎಂದು ಜಪ, ತಪ, ಉಪವಾಸ ಇವುಗಳನ್ನೆಲ್ಲಾ ಜನ ಮಾಡುತ್ತಾರೆ. ಆದರೆ ದಕ್ಷಿಣದ ಗಾಳಿ ತಾನಾಗಿಯೇ ಬೀಸಲಾರಂಭಿಸಿದರೆ ಅವರು ಬೀಸಣಿಗೆಯನ್ನು ಒಂದು ಕಡೆ ಬಿಸಾಡಿಬಿಡುತ್ತಾರೆ. ಭಗವಂತನಲ್ಲಿ ಅನುರಾಗ ಪ್ರೇಮ ತಾನಾಗಿಯೇ ಉದಯವಾಯಿತು ಎಂದರೆ, ಜಪತಪಾದಿ ಕರ್ಮ ತಾನಾಗಿಯೇ ನಿಂತು ಹೋಗುತ್ತದೆ. ಭಗವತ್ಪ್ರೇಮದಲ್ಲಿ ಮತ್ತರಾದ ನಂತರ ವೈಧೀಕರ್ಮವನ್ನು ಯಾರು ತಾನೆ ಮಾಡುತ್ತಾರೆ?
“ಭಗವಂತನಲ್ಲಿ ಪ್ರೀತಿ ಉದಯವಾಗದವರೆಗೆ ಭಕ್ತಿ ಹಸಿಯದಾಗಿರುತ್ತದೆ. ಅದು ಉಂಟಾಗಿಬಿಟ್ಟಿತು ಎಂದರೆ, ಭಕ್ತಿ ಪಕ್ವಭಕ್ತಿಯಾಗಿಬಿಡುತ್ತದೆ.
“ಯಾರ ಭಕ್ತಿ ಇನ್ನೂ ಹಸಿಯೊ ಆತ ಭಗವತ್ಕಥಾ, ಉಪದೇಶ ಇವನ್ನು ಗ್ರಹಿಸಲಾರ. ಆದರೆ ಅದು ಪಕ್ವವಾಯಿತು ಎಂದರೆ ಗ್ರಹಿಸಬಲ್ಲ. ಫೋಟೋಗ್ರಾಫರನ ಗಾಜಿನ ಮೇಲೆ ಬೆಳ್ಳಿಯ ಉಪ್ಪನ್ನು (ಸಿಲ್ವರ್ ನೈಟ್ರೇಟ್) ಸವರಿದ್ದರೆ ಅದರ ಮೇಲೆ ಬಿದ್ದ ಪ್ರತಿಬಿಂಬ ಹಾಗೆಯೆ ಉಳಿದುಕೊಳ್ಳುತ್ತದೆ. ಆದರೆ ಬರೀ ಗಾಜಿನ ಮೇಲೆ ಸಹಸ್ರಾರು ಪ್ರತಿಬಿಂಬ ಬೀಳಲಿ ಅವೊಂದೂ ನಿಲ್ಲುವುದಿಲ್ಲ. ವಸ್ತು ಸರಿದುಹೋಯಿತು ಎಂದರೆ ಅದು ಎಂದಿದ್ದಂತೇ ಇರುತ್ತದೆ. ಭಗವಂತನಲ್ಲಿ ಪ್ರೀತಿ ಇಲ್ಲದೆ ಇದ್ದರೆ, ಉಪದೇಶವನ್ನು ಗ್ರಹಿಸಲಾಗುವುದಿಲ್ಲ.
ವಿಜಯ: “ಮಹಾಶಯರೆ, ಭಗವಂತನ ಸಾಕ್ಷಾತ್ಕಾರ ಪಡೆದುಕೊಳ್ಳಲು, ಆತನ ದರ್ಶನಹೊಂದಲು ಕೇವಲ ಭಕ್ತಿಯೇ ಸಾಕೆ?”
ಶ್ರೀರಾಮಕೃಷ್ಣರು: “ಹೌದು, ಭಕ್ತಿಯ ಮೂಲಕವೇ ಆತನ ದರ್ಶನ ಪಡೆಯ ಬಹುದು. ಆದರೆ ಅದು ಪಕ್ವಭಕ್ತಿ, ಪ್ರೇಮಾಭಕ್ತಿ, ರಾಗಾಭಕ್ತಿ ಆಗಿರಬೇಕು. ಆ ಭಕ್ತಿ ಉಂಟಾಯಿತು ಎಂದರೆ ತಾಯಿ ಮಗುವನ್ನು ಪ್ರೀತಿಸುವಂತೆ, ಮಗು ತಾಯಿಯನ್ನು ಪ್ರೀತಿಸುವಂತೆ, ಸತಿ ಪತಿಯನ್ನು ಪ್ರೀತಿಸುವಂತೆ, ಭಕ್ತ ಭಗವಂತನನ್ನು ಪ್ರೀತಿಸುತ್ತಾನೆ.
“ಈ ಪ್ರೀತಿ, ಈ ರಾಗಾಭಕ್ತಿ ಉಂಟಾಯಿತು ಎಂದರೆ, ಹೆಂಡತಿ, ಮಕ್ಕಳು, ಸ್ವಬಾಂಧವರು ಇವರ ಮೇಲೆ ಮನುಷ್ಯನಿಗಿರುವ ಮಾಯಾಪ್ರೇರಿತ ಆಕರ್ಷಣೆ ಇರದು. ಅವರ ಕಡೆಗೆ ಆತನಲ್ಲಿ ದಯೆ ಮಾತ್ರ ಉಳಿದಿರುತ್ತದೆ, ಈ ಜಗತ್ತು ವಿದೇಶವಾಗಿ ತೋರಿಬರುತ್ತದೆ. ಕೇವಲ ಕರ್ಮಭೂಮಿಯಾಗಿ ಕಂಡುಬರುತ್ತದೆ. ಇದು ಹಳ್ಳಿಯಲ್ಲಿ ಸ್ವಂತ ಮನೆ ಇದ್ದು ಕಲ್ಕತ್ತಕ್ಕೆ ಕೆಲಸಕ್ಕೆ ಬರುವ ಹಾಗೆ. ಬಂದವರು ಕೆಲಸದ ಸಲುವಾಗಿ ಬಾಡಿಗೆ ಮನೆ ಮಾಡಿಕೊಳ್ಳಬೇಕಾಗುತ್ತದೆ. ಭಗವಂತನಲ್ಲಿ ಪ್ರೀತಿ ಉಂಟಾಯಿತು ಎಂದರೆ, ಸಂಸಾರಾಸಕ್ತಿ, ವಿಷಯಬುದ್ಧಿ, ಒಮ್ಮೆಗೇ ತೊಲಗಿಹೋಗುತ್ತವೆ.
“ವಿಷಯಬುದ್ಧಿ ಲೇಶಮಾತ್ರವಿದ್ದರೂ ಭಗವಂತನ ದರ್ಶನ ದೊರೆಯುವುದಿಲ್ಲ. ಬೆಂಕಿಕಡ್ಡಿ ಒದ್ದೆಯಾಗಿತ್ತು ಎಂದರೆ ಒಂದು ಸಾವಿರ ಕಡ್ಡಿ ಗೀಚು, ಒಂದೂ ಹೊತ್ತಿಕೊಳ್ಳುವುದೇ ಇಲ್ಲ. ಕೇವಲ ಒಂದು ರಾಶಿ ಬೆಂಕಿಕಡ್ಡಿಯ ನಷ್ಟ, ಅಷ್ಟೆ. ವಿಷಯಾಸಕ್ತ ಮನಸ್ಸು ನೆನೆದ ಬೆಂಕಿಕಡ್ಡಿ. ಒಮ್ಮೆ ಶ್ರೀಮತಿ (ರಾಧೆ) ತನ್ನ ಸಖಿಯರಿಗೆ ಹೇಳಿದಳು, ತನ್ನ ಕಣ್ಣಿಗೆ ಎಲ್ಲವೂ ಕೃಷ್ಣಮಯವಾಗಿ ಕಾಣುತ್ತಿದೆ ಎಂಬುದಾಗಿ. ಸಖಿಯರು ಹೇಳಿದರು: ‘ಎಲ್ಲಿ, ನಮಗೆ ಹಾಗೆ ಕಾಣುತ್ತಿಲ್ಲವಲ್ಲ! ನಿನಗೇನು ಬುದ್ಧಿಭ್ರಮಣೆಯಾಗಿದೆಯೇ?’ ಶ್ರೀಮತಿ ಹೇಳಿದಳು: ‘ಸಖಿಯರೆ, ಅನುರಾಗವೆಂಬ ಅಂಜನವನ್ನು ಕಣ್ಣಿಗೆ ಹಚ್ಚಿಕೊಳ್ಳಿ. ಆಗ ನಿಮಗೆ ಆತ ಕಾಣುತ್ತಾನೆ.’
(ವಿಜಯನಿಗೆ): “ನಿಮ್ಮ ಬ್ರಾಹ್ಮಸಮಾಜದ ಒಂದು ಹಾಡಿನಲ್ಲಿ ಹೇಳಿದೆ:
ಅನುರಾಗಕಲ್ಲದೆಯೆ
ಒಲಿಯದಿಹ ಪ್ರಭು ನೀನು!
ಯಜ್ಞಯಾಗಗಳಿಂದ ಇನ್ನು ಫಲವೇನು?
“ಈ ಅನುರಾಗ, ಈ ಪ್ರೇಮ, ಈ ಪಕ್ವಭಕ್ತಿ, ಈ ಪ್ರೀತಿ ಒಮ್ಮೆ ಉಂಟಾಯಿತು ಎಂದರೆ ಭಗವಂತನನ್ನು ಆತನ ಸಾಕಾರ ನಿರಾಕಾರ ರೂಪಗಳೆರಡರಲ್ಲೂ ನೋಡಬಹುದು.”
ವಿಜಯ: “ಭಗವಂತನ ದರ್ಶನವನ್ನು ಪಡೆಯುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಚಿತ್ತಶುದ್ಧಿ ಆಗದೆ ಇತ್ತು ಎಂದರೆ, ಪಡೆಯಲಾಗುವುದಿಲ್ಲ. ಕಾಮಕಾಂಚನಾಸಕ್ತಿಯಿಂದ ಮನಸ್ಸು ಮಲಿನವಾಗಿಬಿಟ್ಟಿದೆ-ಕೊಳೆಯಿಂದ ತುಂಬಿದೆ. ಸೂಜಿ ಮಣ್ಣಿನಿಂದ ಆವೃತವಾಗಿದ್ದರೆ ಆಗ ಸೂಜಿಕಲ್ಲು ಅದನ್ನು ಎಳೆಯಲಾರದು. ಆ ಮಣ್ಣನ್ನು ತೊಳೆದುಬಿಟ್ಟಿದ್ದೇ ಆದರೆ ಒಡನೆ ಸೂಜಿಕಲ್ಲು ಅದನ್ನು ಎಳೆದುಬಿಡುತ್ತದೆ. ಅದೇ ರೀತಿ ಮನಸ್ಸಿನ ಕೊಳಕನ್ನು ಕಣ್ಣೀರಿನಿಂದ ತೊಳೆದುಬಿಡಬಹುದು. ಯಾರೇ ಆಗಲಿ, ‘ಹೇ ಭಗವಂತ, ಮತ್ತೆ ನಾನು ಅಂಥ ಕಾರ್ಯಗಳನ್ನು ಮಾಡುವುದಿಲ್ಲ’ ಅಂತ ಹೇಳಿ ಅನುತಾಪದಿಂದ ಅತ್ತುದೇ ಆದರೆ, ಕೊಳೆ ತೊಳೆದುಹೋಗುತ್ತದೆ. ಆಗ ಭಗವದ್ರೂಪದ ಸೂಜಿಗಲ್ಲು ಮನಸ್ಸೆಂಬ ಸೂಜಿಯನ್ನು ಎಳೆದುಕೊಂಡುಬಿಡುತ್ತದೆ. ಆಗ ಸಮಾಧಿ ಯುಂಟಾಗುತ್ತದೆ. ಭಗವಂತನ ದರ್ಶನ ದೊರೆಯುತ್ತದೆ.
“ಆದರೆ, ಸಾವಿರ ಪ್ರಯತ್ನಮಾಡು. ಭಗವಂತನ ಕೃಪೆ ಇಲ್ಲದೆ ಏನೂ ಆಗದು. ಆತನ ಕೃಪೆ ಇಲ್ಲದಿದ್ದರೆ ಆತನ ದರ್ಶನ ಮಾಡಲಾಗುವುದಿಲ್ಲ. ಆತನ ಕೃಪೆ ಸುಲಭದಲ್ಲಿ ದೊರೆತು ಬಿಡುವುದೆ? ‘ಅಹಂ’ ಅನ್ನು ಒಮ್ಮೆಗೇ ತ್ಯಜಿಸಿಬಿಡಬೇಕಾಗುತ್ತದೆ. ‘ನಾನು ಕರ್ತ’ ಎಂಬ ಭಾವನೆ ಇತ್ತು ಎಂದರೆ, ಭಗವಂತನ ದರ್ಶನ ದೊರೆಯುವುದಿಲ್ಲ. ಮನೆಯ ಉಗ್ರಾಣವನ್ನು ಒಬ್ಬ ನೋಡಿಕೊಳ್ಳುತ್ತಾನೆ ಅಂತ ಇಟ್ಟುಕೊ. ಒಬ್ಬ ಹೋಗಿ ಯಜಮಾನನನ್ನು ಕಂಡು, ‘ಮಹಾಶಯರೆ, ದಯವಿಟ್ಟು ತಾವು ಉಗ್ರಾಣಕ್ಕೆ ಬಂದು ಸಾಮಾನು ತೆಗೆದುಕೊಡಿ’ ಎಂದು ಹೇಳಿದರೆ; ಆತ ಹೇಳುತ್ತಾನೆ: ‘ಉಗ್ರಾಣ ನೋಡಿಕೊಳ್ಳುವವನು ಆಗಲೇ ಒಬ್ಬ ಇದ್ದಾನೆ. ಅಲ್ಲಿಗೆ ಬಂದು ನಾನೇನು ಮಾಡಲಿ?’
“ಯಾರು ತಾನೇ ತನ್ನನ್ನು ಯಜಮಾನ ಅಂತ ಭಾವಿಸಿಕೊಂಡಿದ್ದಾನೊ, ಆತನ ಹೃದಯಕ್ಕೆ ಭಗವಂತ ಸುಲಭದಲ್ಲಿ ಬರುವುದಿಲ್ಲ. ಆದರೆ ಆತನ ಕೃಪೆ ದೊರೆತೊಡನೆಯೇ ಆತನ ದರ್ಶನ ದೊರೆಯುತ್ತದೆ. ಆತ ಜ್ಞಾನಸೂರ್ಯ, ಕೇವಲ ಆತನ ಒಂದು ಕಿರಣವೇ ಈ ಜಗತ್ತಿಗೆ ಜ್ಞಾನದ ಬೆಳಕನ್ನು ಕೊಟ್ಟಿದೆ. ಆದ್ದರಿಂದಲೇ ನಮಗೆ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಮತ್ತು ವಿವಿಧ ಜ್ಞಾನವನ್ನು ಸಂಪಾದಿಸಿಕೊಳ್ಳಲು ಸಾಧ್ಯವಾಗುತ್ತಿರುವುದು. ಆತ ತನ್ನ ಬೆಳಕನ್ನು ತಾನೇ ತನ್ನ ಮುಖದ ಮೇಲೆ ಬೀಳಿಸಿಕೊಂಡದ್ದೇ ಆದರೆ, ಆಗ ಮಾತ್ರ ಆತನ ದರ್ಶನ ಪಡೆಯಬಹುದು.
“ಸಾರ್ಜಂಟು ರಾತ್ರಿವೇಳೆ ಕತ್ತಲೆ ಕಾಲದಲ್ಲಿ ಕೈಯಲ್ಲಿ ಲಾಟೀನು ಹಿಡಿದು ಕಾವಲು ಕಾಯುತ್ತಾ ಸುತ್ತಾಡುತ್ತಾನೆ; ಆತನ ಮುಖ ಯಾರಿಗೂ ಕಾಣಬರುವುದಿಲ್ಲ; ಆದರೆ ಆ ಲಾಟೀನಿನ ಬೆಳಕಿನಿಂದ ಆತ ಎಲ್ಲರ ಮುಖವನ್ನೂ ನೋಡಬಲ್ಲ; ಉಳಿದವರೂ ಒಬ್ಬರನ್ನೊಬ್ಬರು ನೋಡಬಲ್ಲರು. ಒಂದು ಪಕ್ಷ ಯಾರಾದರೂ ಸಾರ್ಜಂಟನನ್ನು ನೋಡ ಬೇಕೆಂದಿದ್ದರೆ ಆತ ಆತನನ್ನು ಪ್ರಾರ್ಥನೆಮಾಡಿಕೊಳ್ಳಬೇಕು: ‘ಮಹಾಶಯ, ಕೃಪೆಯಿಟ್ಟು ಬೆಳಕನ್ನು ನಿಮ್ಮ ಮುಖದ ಮೇಲೆ ತಿರುಗಿಸಿಕೊಳ್ಳಿ. ನಿಮ್ಮನ್ನು ನೋಡಬೇಕು ಅಂತ ಇದ್ದೇನೆ.’ ಅದೇ ರೀತಿಯಾಗಿ ಭಗವಂತನಲ್ಲಿ ಪ್ರಾರ್ಥನೆಮಾಡಬೇಕು: ‘ಹೇ ಪ್ರಭು, ಕೃಪೆ ಮಾಡಿ ಜ್ಞಾನದ ಬೆಳಕನ್ನು ನಿನ್ನ ಮೇಲೆ ಬೀಳಿಸಿಕೊ. ನಿನ್ನ ದರ್ಶನ ಮಾಡಬೇಕೆಂದಿದ್ದೇನೆ.’
“ಮನೆಯಲ್ಲಿ ಬೆಳಕು ಇಲ್ಲದೆ ಇತ್ತು ಎಂದರೆ ಅದು ದಾರಿದ್ರ್ಯದ ಲಕ್ಷಣ. ಆದ್ದರಿಂದ ಹೃದಯಮಧ್ಯದಲ್ಲಿ ಜ್ಞಾನದೀಪವನ್ನು ಹಚ್ಚಿ ಇಡಬೇಕು, ಒಂದು ಹಾಡಿನಲ್ಲಿ ಹೇಳಿರುವ ಹಾಗೆ:
“ಹೃದಯಮಂದಿರದಲ್ಲಿ ಜ್ಞಾನದೀವಿಗೆ ಹಚ್ಚಿ
ಬ್ರಹ್ಮಮಯಿ ಮಾತಾಯಿ ಮುಖವ ನೋಡು!”
ವಿಜಯ ತನ್ನೊಡನೆ ಔಷಧ ತಂದಿದ್ದಾನೆ. ಅದನ್ನು ಸೇವಿಸಲು ಆತನಿಗೆ ಸ್ವಲ್ಪ ನೀರು ಬೇಕಾಗಿತ್ತು. ಪರಮಹಂಸರು ಒಬ್ಬ ಭಕ್ತನಿಗೆ ಹೇಳಿದರು, ಆತನಿಗೆ ನೀರು ತಂದು ಕೊಡುವಂತೆ. ಪರಮಹಂಸರು ಅಹೇತುಕ ಕೃಪಾಸಿಂಧು. ವಿಜಯನಿಗೆ ಬಹಳವಾಗಿ ಬಡತನ ವಿದ್ದುದರಿಂದ ಪರಮಹಂಸರು ಆತನ ದೋಣಿ ಮತ್ತು ಗಾಡಿ ಬಾಡಿಗೆಗಳ ವ್ಯವಸ್ಥೆ ಮಾಡಿದ್ದಾರೆ. ವಿಜಯ, ಬಲರಾಮಬಸು, ಮಾಸ್ಟರ್ ಇನ್ನೂ ಕೆಲವು ಮಂದಿ ಭಕ್ತರು ದೋಣಿಯಲ್ಲಿ ಕುಳಿತು ಕಲ್ಕತ್ತಕ್ಕೆ ಹೊರಟರು.
೧ನೇ ಜನವರಿ ೧೮೮೩, ಮಾರ್ಗಶಿರ ಕೃಷ್ಣ ಅಷ್ಟಮಿ, ಸೋಮವಾರ
ಶ್ರೀರಾಮಕೃಷ್ಣರು ಕಾಳೀದೇವಾಲಯದ ತಮ್ಮ ಕೊಠಡಿಯಲ್ಲಿ ನೆಲದ ಮೇಲೆ ಹಾಸಿದ್ದ ಮಂದಲಿಗೆ ಮೇಲೆ ಕುಳಿತಿದ್ದಾರೆ. ಘಂಟೆ ಬೆಳಗಿನ ಎಂಟು. ಚಳಿಗಾಲವಾದ್ದರಿಂದ ಶಾಲನ್ನು ಹೊದ್ದುಕೊಂಡಿದ್ದಾರೆ. ಪ್ರಾಣಕೃಷ್ಣ, ಮಾಸ್ಟರ್ ಅವರ ಮುಂದೆ ಕುಳಿತಿದ್ದಾರೆ. ರಾಖಾಲನೂ ಕೊಠಡಿಯಲ್ಲಿ ಕುಳಿತಿದ್ದಾನೆ. ಪ್ರಾಣಕೃಷ್ಣ ಸರ್ಕಾರದ ಒಂದು ದೊಡ್ಡ ಹುದ್ದೆಯಲ್ಲಿದ್ದಾನೆ. ಕಲ್ಕತ್ತದಲ್ಲಿ ವಾಸವಾಗಿದ್ದಾನೆ. ಆತನಿಗೆ ಮೊದಲನೆ ಹೆಂಡತಿಯಲ್ಲಿ ಮಕ್ಕಳು ಇಲ್ಲದೆ ಇದ್ದುದರಿಂದ ಆಕೆಯ ಅನುಮತಿ ಪಡೆದು ಎರಡನೆ ಹೆಂಡತಿಯನ್ನು ಮದುವೆಯಾಗಿದ್ದಾನೆ. ಎರಡನೆ ಹೆಂಡತಿಯಲ್ಲಿ ಆತನಿಗೆ ಒಬ್ಬ ಮಗನಿದ್ದಾನೆ. ಆತ ಸ್ವಲ್ಪ ದಪ್ಪವಾಗಿದ್ದುದರಿಂದ ಪರಮಹಂಸರು ಆತನನ್ನು ಸಂಬೋಧಿಸುತ್ತಿದ್ದರು: “ದಡಿಯ ಬ್ರಾಹ್ಮಣ” ಎಂಬುದಾಗಿ. ಪರಮಹಂಸರನ್ನು ಕಂಡರೆ ಆತನಿಗೆ ವಿಶೇಷ ಗೌರವ. ಗೃಹಸ್ಥನಾದರೂ ಪ್ರಾಣಕೃಷ್ಣನಿಗೆ ವೇದಾಂತ ವಿಚಾರದಲ್ಲಿ ತುಂಬಾ ಪ್ರೀತಿ. ಆತ ಹೇಳುತ್ತಾನೆ. “ಬ್ರಹ್ಮ ಸತ್ಯಂ ಜಗನ್ಮಿಥ್ಯಾ. ಅವನೇ ನಾನು, ಅಂದರೆ ಸೋಹಮ್.” ಪರಮಹಂಸರು ಆತನಿಗೆ ಹೇಳುತ್ತಿದ್ದರು : “ಕಲಿಯುಗದಲ್ಲಿ ಅನ್ನಗತ ಪ್ರಾಣ. ಆದ್ದರಿಂದ ಈ ಯುಗಕ್ಕೆ ಶ್ರೇಯಸ್ಕರವಾದ್ದು ನಾರದೀಯ ಭಕ್ತಿ.”
ಒಬ್ಬ ಭಕ್ತ ಪರಮಹಂಸರಿಗೆಂದು ಒಂದು ಬುಟ್ಟಿಯಲ್ಲಿ ಜಿಲೇಬಿ ತಂದಿದ್ದ. ಅದನ್ನು ಪರಮಹಂಸರು ತಮ್ಮ ಹತ್ತಿರ ಇಟ್ಟುಕೊಂಡಿದ್ದಾರೆ. ಅದರಿಂದ ಒಂದು ಚೂರು ತೆಗೆದುಕೊಂಡು ನಗುತ್ತ ಪ್ರಾಣಕೃಷ್ಣನಿಗೆ ಹೇಳುತ್ತಿದ್ದಾರೆ: “ನೋಡು, ನಾನು ಭಗವತಿಯ ಹೆಸರು ಹೇಳುತ್ತಿರುವುದರಿಂದ ಇವೆಲ್ಲಾ ತಿನ್ನುವುದಕ್ಕೆ ದೊರೆಯುತ್ತಿದೆ. (ನಗು) ಆದರೆ ಆಕೆ ಸೋರೆಕಾಯಿ ಕುಂಬಳಕಾಯಿ ಇಂಥ ಫಲಗಳನ್ನು ಕೊಡುವುದಿಲ್ಲ. ಆಕೆ ಅಮೃತ ಫಲಗಳನ್ನು-ಜ್ಞಾನ, ಪ್ರೇಮ, ವಿವೇಕ, ವೈರಾಗ್ಯ ಫಲಗಳನ್ನು ಕೊಡುತ್ತಾಳೆ.”
ಏಳೊ ಎಂಟೊ ವರ್ಷದ ಒಬ್ಬ ಹುಡುಗ ಕೊಠಡಿಯನ್ನು ಪ್ರವೇಶಮಾಡಿದ. ಪರಮಹಂಸರಿಗೂ ಬಾಲಕಾವಸ್ಥೆ ಬಂದುಬಿಟ್ಟಿದೆ. ಒಬ್ಬ ಹುಡುಗ ಇನ್ನೊಬ್ಬ ಹುಡುಗನನ್ನು ಕಂಡು ಆತ ಎಲ್ಲಿ ತನ್ನ ಹತ್ತಿರವಿರುವ ತಿಂಡಿಯನ್ನು ಕಿತ್ತುಕೊಂಡು ತಿಂದುಬಿಡುವನೋ ಏನೋ ಎಂದು ಅದನ್ನು ಕೈಯಿಂದ ಮುಚ್ಚಿಕೊಳ್ಳುವ ಹಾಗೆ ಪರಮಹಂಸರೂ ತಮ್ಮ ಕೈಗಳಿಂದ ಬುಟ್ಟಿಯನ್ನು ಮುಚ್ಚಿಕೊಂಡರು. ಈಗ ಕ್ರಮೇಣ ಅದನ್ನು ತಮ್ಮ ಪಕ್ಕಕ್ಕೆ ಸರಿಸುತ್ತಿದ್ದಾರೆ.
ಇದ್ದಕ್ಕಿದ್ದ ಹಾಗೆ ಪರಮಹಂಸರು ಸಮಾಧಿಸ್ಥರಾಗಿಬಿಟ್ಟಿದ್ದಾರೆ. ದೇಹ ಅಲುಗುತ್ತಿಲ್ಲ. ಕಣ್ಣು ಸ್ಪಂದಹೀನವಾಗಿದೆ. ಉಸಿರಾಡುತ್ತಿದ್ದಾರೋ ಇಲ್ಲವೋ ಎಂಬುದು ಗೊತ್ತಾಗುತ್ತಿಲ್ಲ. ಬಹಳ ಹೊತ್ತಾದ ನಂತರ ದೀರ್ಘ ನಿಶ್ವಾಸಬಿಟ್ಟರು. ಅವರು ಮತ್ತೆ ಈ ಇಂದ್ರಿಯ ರಾಜ್ಯಕ್ಕೆ ಬರುತ್ತಿದ್ದಾರೆ ಎಂಬುದನ್ನು ಅದು ತೋರಿಸಿತು.
ಶ್ರೀರಾಮಕೃಷ್ಣರು ಪ್ರಾಣಕೃಷ್ಣನಿಗೆ: “ಭಗವತಿ ಸಾಕಾರಳಷ್ಟೇ ಅಲ್ಲ, ನಿರಾಕಾರಳೂ ಕೂಡ. ಆಕೆಯ ರೂಪವನ್ನು ದರ್ಶನಮಾಡಲು ಸಾಧ್ಯ. ಭಾವಭಕ್ತಿಗಳಿಂದ ಆಕೆಯ ಅತುಲನೀಯ ರೂಪವನ್ನು ದರ್ಶನಮಾಡಲು ಸಾಧ್ಯ. ಭಗವತಿ ವಿವಿಧ ರೂಪಗಳಿಂದ ದರ್ಶನವೀಯುತ್ತಾಳೆ.
“ನಾನು ಆಕೆಯನ್ನು ನಿನ್ನೆ ನೋಡಿದೆ. ಅಂಚು ಹೊಲಿಯದ ಕಾಷಾಯ ಉಡುಪು ಹಾಕಿಕೊಂಡಿದ್ದಳು. ನನ್ನೊಡನೆ ಮಾತಾಡಿದಳು.
“ಆಕೆ ಇನ್ನೊಂದು ದಿನ ಆರೇಳು ವರ್ಷದ ಮುಸಲ್ಮಾನ ಹುಡುಗಿಯ ರೂಪ ಧರಿಸಿ ನನ್ನನ್ನು ಸಮೀಪಿಸಿದಳು. ಹಣೆಗೆ ತಿಲಕ, ಆದರೆ ದಿಗಂಬರಿ. ನನ್ನೊಡನೆ ಸುತ್ತಾಡುತ್ತಾ ತಮಾಷೆ ಮಾಡಲಾರಂಭಿಸಿದಳು.
“ಹೃದೂನ ಮನೆಯಲ್ಲಿ ನನಗೆ ಗೌರಾಂಗನ ದರ್ಶನವಾಯಿತು. ಅವನು ಕಪ್ಪು ಅಂಚಿನ ಪಂಚೆ ಉಟ್ಟುಕೊಂಡಿದ್ದ.
“ಹಲಧಾರಿ ಹೇಳುತ್ತಿದ್ದ, ಭಗವಂತ ಭಾವ ಅಭಾವಗಳಿಗೆ ಅತೀತ ಎಂಬುದಾಗಿ. ನಾನು ಹೋಗಿ ಆತ ಹೇಳಿದುದನ್ನು ಭಗವತಿಗೆ ತಿಳಿಸಿ ಆಕೆಯನ್ನು ಕೇಳಿದೆ: ‘ತಾಯೆ ಹಾಗಾದರೆ ಭಗವದ್ರೂಪಗಳೆಲ್ಲ ಮಿಥ್ಯೆಯೇನು?’ ಭಗವತಿ ರತಿ ತಾಯಿಯ ವೇಷ ಧರಿಸಿ ನನ್ನನ್ನು ಸಮೀಪಿಸಿ ಹೇಳಿದಳು: ‘ನೀನು ಭಾವದಲ್ಲೇ 3 ಇರು.’ ನಾನು ಇದನ್ನು ಹಲಧಾರಿಗೆ ತಿಳಿಸಿದೆ. ಒಮ್ಮೊಮ್ಮೆ ನಾನು ಆಕೆಯ ಆದೇಶವನ್ನು ಮರೆತು ಕಷ್ಟಕ್ಕೀಡಾಗುತ್ತಿದ್ದೇನೆ. ಒಮ್ಮೆ ನಾನು ಹಲ್ಲು ಮುರಿದುಕೊಂಡೆ, ಭಾವದಲ್ಲಿ ಇಲ್ಲದೆ ಇದ್ದುದರಿಂದ. ಆದ್ದರಿಂದ ದೈವವಾಣಿಯೇ ಆಗಲಿ, ಅಥವಾ ಯಾವುದಾದರೂ ಪ್ರತ್ಯಕ್ಷ ಅನುಭವವೇ ಆಗಲಿ, ಆಕೆಯ ಆದೇಶಕ್ಕೆ ವಿರುದ್ಧ ಆಗದವರೆಗೆ ಭಾವದಲ್ಲೇ ಇರುತ್ತೇನೆ, ಭಕ್ತನಾಗಿಯೇ ಉಳಿಯುತ್ತೇನೆ. ಏನು ಹೇಳುತ್ತೀಯೆ?”
ಪ್ರಾಣಕೃಷ್ಣ: “ಹೌದು, ಅದು ಸರಿ.”
ಶ್ರೀರಾಮಕೃಷ್ಣರು: “ಆದರೆ ಎಲ್ಲವನ್ನೂ ಬಿಟ್ಟು ಅದರ ಸಂಬಂಧವಾಗಿ ನಿನ್ನನ್ನೇಕೆ ನಾನು ಕೇಳಬೇಕು? ನನ್ನ ಆಂತರ್ಯದಲ್ಲಿ ಏನೋ ಒಂದು ಇದೆ. ಅದು ನನ್ನನ್ನು ಹಿಡಿದುಕೊಂಡು ಹೀಗೆಲ್ಲಾ ಮಾಡಿಸುತ್ತಿದೆ. ಆಗಾಗ ನನಗೆ ದೇಹಭಾವ ಬಂದುಬಿಡುತ್ತಿತ್ತು. ಆಗ ಪೂಜೆ ಮಾಡದೆ ಇದ್ದರೆ ನನಗೆ ಶಾಂತಿಯಿಂದ ಇರಲಾಗುತ್ತಿರಲಿಲ್ಲ.
“ನಾನು ಯಂತ್ರ, ಭಗವತಿ ಯಂತ್ರಿ. ಆಕೆ ಮಾಡಿಸಿದಂತೆ ಮಾಡುತ್ತೇನೆ. ಹೇಳಿಸಿದಂತೆ ಹೇಳುತ್ತೇನೆ.
ಇಂಥ ತಾಯಿಯ ನಾಮನೌಕೆಯ ಹಿಡಿದು ಭವಸಾಗರದೊಳು
ತೇಲಿ ನಡೆಯಿರಿ ಎಂದು ನುಡಿವನು ಭಕ್ತ ರಾಮಪ್ರಸಾದನು.
“ಇದು ಸುಂಟರಗಾಳಿಗೆ ಸಿಕ್ಕಿದ ಎಂಜಲೆಲೆಯ ಹಾಗೆ. ಅದು ಗಾಳಿ ಬೀಸಿದ ಹಾಗೆ, ಕೆಲವು ವೇಳೆ ಒಳ್ಳೆ ಸ್ಥಳಗಳಿಗೆ ಹೋಗಿ ಬೀಳುತ್ತದೆ; ಇನ್ನು ಕೆಲವು ವೇಳೆ ಚರಂಡಿಗೆ ಹೋಗಿ ಬೀಳುತ್ತದೆ.
“ಆ ಕಥೆಯಲ್ಲಿ ನೆಯ್ಗೆಯವನು ಹೇಳಿದ ಹಾಗೆ: ‘ರಾಮನ ಇಚ್ಛೆಯಿಂದ ಕಳ್ಳತನವಾಯಿತು; ರಾಮನ ಇಚ್ಛೆಯಿಂದ ಪೋಲೀಸಿನವರು ನನ್ನನ್ನು ಹಿಡಿದರು; ಮತ್ತೆ ಅವರು ರಾಮನ ಇಚ್ಛೆಯಿಂದಲೇ ನನ್ನನ್ನು ಬಿಟ್ಟುಬಿಟ್ಟರು.’
“ಒಮ್ಮೆ ಹನುಮಂತ ರಾಮನಿಗೆ ಹೇಳಿದ: ‘ಹೇ ರಾಮ, ನಾನು ನಿನ್ನಲ್ಲಿ ಶರಣಾಗತ, ಶರಣಾಗತ ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧ ಭಕ್ತಿಯುಂಟಾಗುವಂತೆಯೂ, ನಿನ್ನ ಭುವನಮೋಹಿನಿ ಮಾಯೆಯಿಂದ ನಾನು ಮುಗ್ಧನಾಗದೆ ಇರುವಂತೆಯೂ ಆಶೀರ್ವಾದ ಮಾಡು.’
“ಒಮ್ಮೆ ಸಾಯುತ್ತಿರುವ ಗೂಳಿಕಪ್ಪೆ ರಾಮನಿಗೆ ಹೇಳಿತು: ‘ಹೇ ರಾಮ, ಸರ್ಪ ನನ್ನನ್ನು ಹಿಡಿದಾಗ ನಾನು ಕೂಗಿಕೊಳ್ಳುತ್ತೇನೆ: “ಓ ರಾಮ, ನನ್ನನ್ನು ರಕ್ಷಿಸು” ಎಂಬುದಾಗಿ. ಆದರೆ ಈಗ ನಾನು ನಿನ್ನದೇ ಬಿಲ್ಲಿನ ಮೊನೆಯ ತಿವಿತಕ್ಕೆ ಸಿಕ್ಕಿ ಸತ್ತುಹೋಗುವುದರಲ್ಲಿದ್ದೇನೆ. ಅದಕ್ಕಾಗಿ ಸುಮ್ಮನೆ ಇದ್ದೇನೆ.’
“ನಾನು ಈಗ ನಿನ್ನನ್ನು ನೋಡುತ್ತಿರುವಂತೆ ಹಿಂದೆ ಇದೇ ಕಣ್ಣುಗಳಿಂದ ಭಗವಂತನನ್ನು ಪ್ರತ್ಯಕ್ಷವಾಗಿ ದರ್ಶನಮಾಡುತ್ತಿದ್ದೆ. ಈಗ ಭಾವಾವಸ್ಥೆಯಲ್ಲಿ ಮಾತ್ರ ಆತನ ದರ್ಶನ ದೊರೆಯುತ್ತಿದೆ.
“ಭಗವಂತನ ಸಾಕ್ಷಾತ್ಕಾರ ದೊರೆಯಿತು ಎಂದರೆ ಮಗುವಿನ ಸ್ವಭಾವ ಬಂದು ಬಿಡುತ್ತದೆ. ಯಾರು ಯಾರ ಚಿಂತನೆಯನ್ನು ಮಾಡುತ್ತಾರೋ ಅವರಿಗೆ ಅವರ ಸತ್ತ್ವಬಂದು ಬಿಡುತ್ತದೆ. ಭಗವಂತನ ಸ್ವಭಾವ ಮಗುವಿನ ಹಾಗೆ. ಮಗು ಆಟದ ಮನೆ ಕಟ್ಟಿ ಮತ್ತೆ ಅದನ್ನು ತುಳಿದುಹಾಕುವಂತೆ ಭಗವಂತನೂ ಸೃಷ್ಟಿಸ್ಥಿತಿ ಪ್ರಳಯಗಳ ಸಂಬಂಧವಾಗಿ ಹಾಗೆಯೇ ವರ್ತಿಸುತ್ತಾನೆ. ಮಗು ಯಾವ ರೀತಿಯಾಗಿ ಯಾವ ಗುಣಕ್ಕೂ ಕಟ್ಟುಬಿದ್ದಿಲ್ಲವೋ ಅದೇ ರೀತಿಯಾಗಿ ಭಗವಂತ ಸತ್ತ್ವ ರಜಸ್ತಮೋಗುಣಗಳಿಗೆ ಅತೀತನಾಗಿದ್ದಾನೆ. ಅದಕ್ಕಾಗಿಯೇ ಮಕ್ಕಳ ಸ್ವಭಾವ ತಮಗೆ ಬರಲೆಂದು ಪರಮಹಂಸರಾದವರು ತಮ್ಮೊಡನೆ ಹತ್ತು ಹದಿನೈದು ಮಕ್ಕಳನ್ನು ಇಟ್ಟುಕೊಂಡಿರುತ್ತಾರೆ.”
ಅಗಡಪಾಡಾದ ಇಪ್ಪತ್ತೊ ಇಪ್ಪತ್ತೆರಡೊ ವಯಸ್ಸಿನ ಒಬ್ಬ ಹುಡುಗ ಬಂದು ನೆಲದ ಮೇಲೆ ಕುಳಿತಿದ್ದಾನೆ. ಆತ ಕಾಳೀದೇವಾಲಯಕ್ಕೆ ಬಂದಾಗಲೆಲ್ಲಾ ಪರಮಹಂಸರನ್ನು ಸನ್ನೆ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪಿಸುಗುಟ್ಟುತ್ತ ತನ್ನ ಮನಸ್ಸನ್ನು ತೋಡಿಕೊಳ್ಳುತ್ತಿದ್ದ. ಆತ ಹೊಸದಾಗಿ ಬಂದುಹೋಗುತ್ತಿದ್ದಾನೆ. ಇಂದು ಆ ಹುಡುಗ ಪರಮಹಂಸರ ಬಳಿಯಲ್ಲೆ ನೆಲದ ಮೇಲೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು ಆ ಯುವಕನಿಗೆ, “ಪರರ ಗುಣವನ್ನು ಆರೋಪಿಸಿಕೊಂಡುದೇ ಆದರೆ, ಮನುಷ್ಯ ಬದಲಾವಣೆ ಹೊಂದಿಬಿಡಬಲ್ಲ. ಪ್ರಕೃತಿಯ ಭಾವವನ್ನು ಆರೋಪಿಸಿ ಕೊಂಡರೆ ಕ್ರಮೇಣ ಕಾಮಾದಿ ರಿಪುಗಳು ನಾಶವಾಗಿ ಹೋಗುತ್ತವೆ. ನಡೆ ನುಡಿ ಎಲ್ಲಾ ಹೆಂಗಸರ ಹಾಗೇ ಆಗಿಬಿಡುತ್ತವೆ. ನಾಟಕದಲ್ಲಿ ಹೆಂಗಸರ ಪಾತ್ರವನ್ನು ವಹಿಸುವವರನ್ನು ನೋಡಿದ್ದೇನೆ. ಅವರು ಸ್ನಾನ ಮಾಡುವಾಗ ಹೆಂಗಸರ ಹಾಗೆ ಹಲ್ಲುಜ್ಜುತ್ತಾರೆ, ಮಾತುಕತೆಯಾಡುತ್ತಾರೆ. ನೀನು ಮತ್ತೆ ಶನಿವಾರವೊ ಮಂಗಳವಾರವೋ ಇಲ್ಲಿಗೆ ಬಾ.
(ಪ್ರಾಣಕೃಷ್ಣನಿಗೆ) “ಬ್ರಹ್ಮ ಶಕ್ತಿ ಅಭೇದ. ಶಕ್ತಿಯನ್ನು ಒಪ್ಪದೆ ಇದ್ದರೆ ಈ ಜಗತ್ತು ಮಿಥ್ಯೆಯಾಗಿಬಿಡುತ್ತದೆ. ನಾನು, ನೀನು, ಮಠ, ಹೆಂಡತಿ, ಮಕ್ಕಳು ಎಲ್ಲಾ ಮಿಥ್ಯೆಯಾಗಿಬಿಡುತ್ತವೆ. ಆದ್ಯಾಶಕ್ತಿ ಆಧಾರವಾಗಿರುವುದರಿಂದ ಈ ಜಗತ್ತು ನಿಂತುಕೊಂಡಿದೆ. ಆಸರೆ ಕೋಲು ಇಲ್ಲದೆ ಇತ್ತು ಎಂದರೆ, ಆಧಾರಕಟ್ಟು ಆಗುವ ಹಾಗಿಲ್ಲ. ಆಧಾರಕಟ್ಟು ಇಲ್ಲದೆ ಇತ್ತು ಎಂದರೆ ಸುಂದರ ದುರ್ಗಾಪ್ರತಿಮೆ ಆಗುವ ಹಾಗೆಯೇ ಇಲ್ಲ.
“ವಿಷಯಬುದ್ಧಿಯನ್ನು ತ್ಯಜಿಸಿದೆ ಇದ್ದರೆ ಆತ್ಮಜಾಗೃತಿ ಉಂಟಾಗದು-ಭಗವಂತನ ಸಾಕ್ಷಾತ್ಕಾರ ದೊರೆಯದು. ವಿಷಯಬುದ್ಧಿ ಲೇಶಮಾತ್ರವಿತ್ತು ಎಂದರೂ ಮನುಷ್ಯ ಕಪಟಿಯಾಗಿಬಿಡುತ್ತಾನೆ. ಸರಳತೆ ಇಲ್ಲದೆ ಇತ್ತು ಎಂದರೆ, ಭಗವಂತನ ಸಾಕ್ಷಾತ್ಕಾರ ದೊರೆಯದು.
ಮರೆಮೋಸಗಳ ತಳ್ಳು; ಒಳಗೆ ಭಕ್ತಿಯ ಬೆಳೆಸು,
ನಿಃಸ್ವಾರ್ಥ ಸೇವೆಯಲಿ ಪೂಜೆಯನು ನಡೆಸು,
ಆಗ ಶ್ರೀ ರಘುರಾಮ ದರುಶನವು ನಿನಗೆ!
ಯಾರು ಪ್ರಾಪಂಚಿಕ ಕೆಲಸಗಳನ್ನು ಎಂದರೆ, ಆಫೀಸಿನಲ್ಲಿ ಕೆಲಸ, ವ್ಯಾಪಾರ ಇತ್ಯಾದಿಗಳನ್ನು ಮಾಡುತ್ತಾರೊ ಅವರು ಸತ್ಯವಾದಿಗಳಾಗಿರಬೇಕು. ಸತ್ಯವಚನವೆ ಕಲಿಯುಗದಲ್ಲಿ ತಪಸ್ಸು.
ಪ್ರಾಣಕೃಷ್ಣ: “ಹೌದು, ಮಹಾನಿರ್ವಾಣತಂತ್ರದಲ್ಲಿ ಹೇಳಿದೆ: ‘ಹೇ ಮಹೇಶಿ, ಈ ಕೌಲ ಧರ್ಮದಲ್ಲಿ ಸತ್ಯವಾದಿಯಾಗಿಯೂ, ಜಿತೇಂದ್ರಿಯನಾಗಿಯೂ, ಪರೋಪಕಾರನಿರತ ನಾಗಿಯೂ, ನಿರ್ವಿಕಾರನಾಗಿಯೂ, ಸದಾಶಯನಾಗಿಯೂ ಇರಬೇಕು ಎಂಬುದಾಗಿ ವಿಧಿ ಇದೆ.”
ಶ್ರೀರಾಮಕೃಷ್ಣರು: “ಒಳ್ಳೆಯದೆ. ಆದರೆ ಈ ಭಾವನೆಗಳೆಲ್ಲ ರಕ್ತಗತವಾಗುವ ಹಾಗೆ ಮಾಡಿಕೊಳ್ಳಬೇಕು.”
ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಭಾವಾವಿಷ್ಟರಾಗಿ ರಾಖಾಲನ ಕಡೆ ನೋಡುತ್ತಿದ್ದಾರೆ. ಹಾಗೆಯೆ ಆತನನ್ನು ನೋಡುತ್ತ ನೋಡುತ್ತ ಇದ್ದಂತೆ ವಾತ್ಸಲ್ಯಭಾವದಿಂದ ತುಂಬಿತುಳುಕಾಡಲಾರಂಭಿಸಿದರು. ಅಂಗಾಂಗಗಳೆಲ್ಲ ಪುಲಕಿತಗೊಳ್ಳಲಾರಂಭಿಸಿದುವು. ಕಣ್ಣುಬಿಟ್ಟು ನೋಡುವುದರಲ್ಲೇ ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಭಕ್ತರೆಲ್ಲರೂ ಆಶ್ಚರ್ಯಚಕಿತರಾಗಿಯೂ ನಿಶ್ಶಬ್ದರಾಗಿಯೂ ಕುಳಿತು ಪರಮಹಂಸರನ್ನು ದೃಷ್ಟಿಸಿ ನೋಡುತ್ತಿದ್ದಾರೆ.
ಕಿಂಚಿತ್ ಪ್ರಕೃತಿಸ್ಥರಾಗಿ ಪರಮಹಂಸರು ಹೇಳುತ್ತಿದ್ದಾರೆ: “ರಾಖಾಲನನ್ನು ನೋಡಿ ನನಗೇಕೆ ಉದ್ದೀಪನ ಆಗಿಬಿಟ್ಟಿತು? ಭಗವಂತನ ಕಡೆ ಮುಂದುವರಿದಂತೆಲ್ಲ ಆತನ ಐಶ್ವರ್ಯ ಕಡಮೆ ಕಡಮೆಯಾಗಿ ಕಾಣಬರಲಾರಂಭಿಸುತ್ತದೆ. ಸಾಧಕನಿಗೆ ಮೊತ್ತ ಮೊದಲು ದೊರೆಯುತ್ತದೆ, ಹತ್ತು ಭುಜಗಳುಳ್ಳ ಭಗವತಿಯ ದರ್ಶನ. ಆ ಮೂರ್ತಿಯಲ್ಲಿ ಐಶ್ವರ್ಯ ಬಹಳವಾಗಿ ವ್ಯಕ್ತವಾಗಿರುತ್ತದೆ. ಅನಂತರ ಎರಡು ಭುಜಗಳುಳ್ಳ ದೇವಿಯದರ್ಶನ. ಆ ಮೂರ್ತಿಗೆ ವಿವಿಧ ಅಸ್ತ್ರಶಸ್ತ್ರಾಸ್ತ್ರಗಳನ್ನು ಹಿಡಿದಿರುವ ಹತ್ತು ಕೈಗಳಿರುವುದಿಲ್ಲ. ಬಳಿಕ ಗೋಪಾಲಮೂರ್ತಿಯ ದರ್ಶನ ದೊರೆಯುತ್ತದೆ. ಅದರಲ್ಲಿ ಯಾವ ಐಶ್ವರ್ಯವೂ ಇರುವುದಿಲ್ಲ. ಅದೇ ಕೇವಲ ಹಾಲು ಹಸುಳೆಯ ಮೂರ್ತಿ. ಇವುಗಳಿಂದಾಚೆಗೂ ಕೆಲವು ದರ್ಶನಗಳಾಗುತ್ತವೆ. ಬಳಿಕ ಸಾಧಕನಿಗೆ ಕೇವಲ ಜ್ಯೋತಿಯ ದರ್ಶನ ಆಗುತ್ತದೆ.”
“ಭಗವಂತನ ಸಾಕ್ಷಾತ್ಕಾರ ಪಡೆದನಂತರ, ಸಮಾಧಿಯಲ್ಲಿ ಆತನೊಡನೆ ಐಕ್ಯವಾದ ನಂತರ ಜ್ಞಾನ, ವಿಚಾರ ಎಲ್ಲ ನಿಂತುಹೋಗಿಬಿಡುತ್ತವೆ. ಜ್ಞಾನ, ವಿಚಾರ ಎಲ್ಲಿಯವರೆಗೆ ಇರುತ್ತದೆ? ಬಹುತ್ವದ ಜ್ಞಾನವಿರುವವರೆಗೆ-ಜೀವ, ಜಗತ್ತು, ನಾನು, ನೀನು ಇವೆ ಮೊದಲಾದವುಗಳ ಬೋಧೆ ಇರುವವರೆಗೆ. ಯಾವಾಗ ಸರಿಯಾಗಿ ಏಕತೆಯ ಜ್ಞಾನ ದೊರೆಯುವುದೊ ಆಗ ಸಾಧಕ ಶಾಂತನಾಗಿಬಿಡುತ್ತಾನೆ. ಉದಾಹರಣೆಗೆ ತ್ರೈಲಂಗ ಸ್ವಾಮಿ.
“ಬ್ರಾಹ್ಮಣರ ಸಂತರ್ಪಣೆಯನ್ನು ನೀನು ನೋಡಿಲ್ಲವೆ? ಮೊದಮೊದಲು ಬಹಳ ಗದ್ದಲವಿರುತ್ತದೆ. ಹೊಟ್ಟೆ ತುಂಬುತ್ತ ತುಂಬುತ್ತ ಗದ್ದಲ ಕಡಮೆಯಾಗುತ್ತದೆ. ಲಾಡು ಪಾಯಸ ಮುಗಿದ ಮೇಲೆ ಕಟ್ಟಕಡೆಯಾಗಿ ಸಿಹಿ ಮೊಸರು ಬಡಿಸಿದಾಗ ಕೇವಲ ‘ಸುಪ್ ಸುಪ್’ ಎಂಬ ಶಬ್ದವೇ ಕೇಳಿಬರಲಾರಂಭಿಸುತ್ತದೆ. ಆ ಬಳಿಕ ನಿದ್ರೆ-ಸಮಾಧಿ. ಆಗ ಯಾವ ಗದ್ದಲವೂ ಇರದು.
(ಮಾಸ್ಟರಿಗೆ ಮತ್ತು ಪ್ರಾಣಕೃಷ್ಣನಿಗೆ) “ಅನೇಕರು ಬ್ರಹ್ಮಜ್ಞಾನದ ವಿಷಯವಾಗಿ ಮಾತಾಡುತ್ತಾರೆ. ಆದರೆ ಅವರ ಮನಸ್ಸು ಪ್ರಾಪಂಚಿಕ ವಸ್ತುಗಳ ಕಡೆಗೆ-ಮನೆ, ಮಠ, ಹಣ, ಕೀರ್ತಿ, ಇಂದ್ರಿಯಸುಖ ಇವುಗಳ ಕಡೆಗೆ ಹರಿದುಹೋಗಿರುತ್ತದೆ. ಸ್ಮಾರಕ ಸ್ತಂಭದ 4 ಕೆಳಗಡೆ ನಿಂತಿರುವವರೆಗೆ ಗಾಡಿ, ಕುದುರೆ, ಆಂಗ್ಲಪುರುಷರು ಮತ್ತು ಮಹಿಳೆಯರು ಇತ್ಯಾದಿಗಳನ್ನು ನೋಡಬಹುದು. ಆದರೆ, ಅದರ ಮೇಲಕ್ಕೆ ಹತ್ತಿದರೆ ಆಗ ಕಾಣುತ್ತದೆ, ಆಕಾಶ ಮತ್ತು ಸಮುದ್ರ ಸುಮ್ಮನೆ ವಿಶಾಲವಾಗಿ ಹಬ್ಬಿಕೊಂಡಿರುವುದು. ಆಗ ಮನೆ, ಕುದುರೆ, ಗಾಡಿ, ಮನುಷ್ಯರು ಇವು ಯಾವುವೂ ಕಾಣಿಸವು. ಅವೆಲ್ಲಾ ಇರುವೆಗಳ ಹಾಗೆ ಕಾಣುತ್ತವೆ.”
“ಬ್ರಹ್ಮಜ್ಞಾನ ದೊರೆಯಿತು ಎಂದರೆ ಸಂಸಾರಾಸಕ್ತಿ, ಕಾಮಕಾಂಚನದಲ್ಲಿ ಉತ್ಸಾಹ ಇವೆಲ್ಲಾ ಹೊರಟುಹೋಗುತ್ತವೆ. ಎಲ್ಲವೂ ಶಾಂತಮಯವಾಗಿಬಿಡುತ್ತವೆ. ಸೌದೆ ಉರಿಯುವಾಗ ಅದು ‘ಪಟ್, ಪಟ್’ ಅಂತ ಶಬ್ದಮಾಡುತ್ತದೆ, ಉರಿಯನ್ನೂ ನೋಡಬಹುದು. ಆದರೆ ಅದು ಉರಿದು ಬೂದಿ ಉಳಿದುಕೊಂಡಾಗ ಯಾವ ಶಬ್ದವೂ ಇರದು. ಆಸಕ್ತಿ ಹೋಯಿತು ಎಂದರೆ ಉತ್ಸಾಹವೂ ಹೊರಟುಹೋಗುತ್ತದೆ. ಕೊನೆಗೆ ಶಾಂತಿ.
“ಭಗವಂತನ ಸಮೀಪಕ್ಕೆ ಮುಂದು ಮುಂದುವರಿದಂತೆಲ್ಲ ಶಾಂತಿಯೂ ಅಧಿಕಾಧಿಕವಾಗುತ್ತಾ ಬರುತ್ತದೆ. ಶಾಂತಿಃ, ಶಾಂತಿಃ, ಶಾಂತಿಃ, ಪ್ರಶಾಂತಿಃ! ಗಂಗೆಯ ಹತ್ತಿರಕ್ಕೆ ಮುಂದು ಮುಂದುವರಿದಂತೆಲ್ಲ ತಂಪೂ ಹೆಚ್ಚುಹೆಚ್ಚಾಗುತ್ತಾ ಬರುತ್ತದೆ. ಸ್ನಾನಮಾಡಿದರೆ ಇನ್ನೂ ಹೆಚ್ಚಿನ ಹಿತ.
“ಜೀವ, ಜಗತ್ತು ಚತುರ್ವಿಂಶತಿ ತತ್ತ್ವ ಇವೆಲ್ಲಾ ಭಗವಂತನಿರುವುದರಿಂದ ಇದ್ದುಕೊಂಡಿದೆ. ಆತನನ್ನು ಬಿಟ್ಟುಬಿಟ್ಟರೆ ಯಾವುವೂ ಇರವು. ಒಂದು ಎನ್ನುವ ಸಂಖ್ಯೆಯ ಪಕ್ಕದಲ್ಲಿ ಸೊನ್ನೆಗಳನ್ನು ಬರೆಯುತ್ತಾ ಹೋದರೆ ಸಂಖ್ಯೆ ದೊಡ್ಡದೊಡ್ಡದಾಗುತ್ತಾ ಬರುತ್ತದೆ. ಆದರೆ ಆ ಒಂದನ್ನು ಅಳಿಸಿಬಿಡು, ಆಗ ಸೊನ್ನೆಗಳಿಗೆ ಯಾವ ಬೆಲೆಯೂ ಇರದು.”
ಪರಮಹಂಸರು ಮಾತು ಮುಂದುವರಿಸುತ್ತಿದ್ದಾರೆ: “ಬ್ರಹ್ಮಜ್ಞಾನ ದೊರೆತನಂತರ, ಸಮಾಧಿ ದೊರೆತನಂತರ ಕೆಲಕೆಲವರು ಕೆಳಕ್ಕೆ ಇಳಿದು ಬಂದು ‘ವಿದ್ಯಾ ಅಹಂ’, ‘ಭಕ್ತಿ ಅಹಂ’ ಇಟ್ಟುಕೊಂಡಿರುತ್ತಾರೆ. ಇದು ಸಂತೆ ಮುಗಿದುಹೋದ ನಂತರವೂ ಕೆಲವರು ತಮ್ಮ ಖುಶಿಯಿಂದ ಸಂತೆಯಲ್ಲಿ ಕುಳಿತಿರುವ ಹಾಗೆ. ಉದಾಹರಣೆಗೆ ನಾರದಾದಿಗಳು. ಇವರು ಲೋಕಶಿಕ್ಷಣಾರ್ಥವಾಗಿ ‘ಭಕ್ತಿ ಅಹಂ’ ಇಟ್ಟುಕೊಂಡಿರುತ್ತಾರೆ. ಶ್ರೀಶಂಕರಾಚಾರ್ಯರು ಇದೇ ಕಾರ್ಯಕ್ಕಾಗಿ ‘ವಿದ್ಯಾ ಅಹಂ’ ಇಟ್ಟುಕೊಂಡಿದ್ದರು.
“ಪ್ರಾಪಂಚಿಕ ಆಸಕ್ತಿ ಲೇಶಮಾತ್ರವಿದ್ದರೂ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲಾಗುವುದಿಲ್ಲ. ದಾರದ ಕೊನೆಗೆ ಅಡ್ಡ ಎಳೆ ಅಂಟಿಕೊಂಡಿದ್ದರೆ ಅದನ್ನು ಸೂಜಿಗೆ ಪೋಣಿಸಲಾಗುವುದಿಲ್ಲ.
“ಯಾರಿಗೆ ಭಗವಂತನ ಸಾಕ್ಷಾತ್ಕಾರವಾಗಿದೆಯೊ ಆತನ ಕಾಮಕ್ರೋಧಾಧಿಗಳು ನಾಮಮಾತ್ರಕ್ಕೆ ಇರುತ್ತವೆ. ಅವು ಸುಟ್ಟ ಹಗ್ಗದ ಹಾಗೆ. ಅದು ನೋಡುವುದಕ್ಕೇನೊ ಹಗ್ಗದ ಹಾಗೆ ಕಾಣುತ್ತದೆ. ಆದರೆ ಊದಿದರೆ ಎಲ್ಲಾ ಹಾರಿಹೋಗಿಬಿಡುತ್ತದೆ.
“ಮನಸ್ಸಿನಲ್ಲಿ ಪ್ರಪಂಚಾಸಕ್ತಿ ಶೂನ್ಯವಾಗಿಬಿಟ್ಟೊಡನೆಯೆ ಭಗವಂತನ ದರ್ಶನ ದೊರೆತುಬಿಡುತ್ತದೆ. ಶುದ್ಧ ಮನಸ್ಸಿನಲ್ಲಿ ಮೂಡುವುದೆಲ್ಲವೂ ಭಗವಂತನ ವಾಣಿಯೆ. ಯಾವುದು ಶುದ್ಧ ಮನಸ್ಸೋ, ಅದೇ ಶುದ್ಧ ಬುದ್ಧಿ, ಅದೇ ಶುದ್ಧ ಆತ್ಮ. ಏಕೆಂದರೆ ಭಗವಂತನೊಬ್ಬನನ್ನು ಹೊರತು ಶುದ್ಧವಾದ ವಸ್ತು ಬೇರೊಂದಿಲ್ಲ. ಆದರೆ ಆತನ ಸಾಕ್ಷಾತ್ಕಾರವನ್ನು ಪಡೆದುಕೊಂಡುಬಿಟ್ಟುದೇ ಆದರೆ, ಧರ್ಮಾಧರ್ಮಗಳಿಗೆ ಅತೀತವಾಗಿ ಬಿಡಬಹುದು.”
ಆಗ ಪರಮಹಂಸರು ತಮ್ಮ ದೇವದುರ್ಲಭ ಕಂಠದಿಂದ ಹಾಡಲಾರಂಭಿಸಿದ್ದಾರೆ:
ಸುಮ್ಮನೆ ತಿರುಗಾಟಕ್ಕೆ ಬಾ ಮನವೇ
ಶ್ರೀಕಾಳೀ ಸುರತರುವಿರುವೆಡೆಗೆ!….
ಪರಮಹಂಸರು ತಮ್ಮ ಕೊಠಡಿಯ ಆಗ್ನೇಯ ವರಾಂಡಕ್ಕೆ ಹೋಗಿ ಕುಳಿತುಕೊಂಡರು. ಪ್ರಾಣಕೃಷ್ಣ ಮತ್ತು ಉಳಿದ ಭಕ್ತರೂ ಅಲ್ಲಿಗೆ ಹೋಗಿ ಕುಳಿತುಕೊಂಡರು. ಹಾಜರಾ ಕೂಡ ಅಲ್ಲಿ ಇದ್ದಾನೆ. ಪರಮಹಂಸರು ನಗುನಗುತ್ತಾ, ಪ್ರಾಣಕೃಷ್ಣನಿಗೆ ಹೇಳುತ್ತಿದ್ದಾರೆ: “ಹಾಜರಾ ಸ್ವಲ್ಪವೂ ಕಡಮೆಯೇನಲ್ಲ. ಇದು 5 ಒಂದು ದೊಡ್ಡ ದರ್ಗಾ 6 ಆದರೆ, ಹಾಜರಾ ಒಂದು ಚಿಕ್ಕ ದರ್ಗಾ.” ಈ ಮಾತು ಕೇಳಿ ಎಲ್ಲರೂ ನಗುತ್ತಿದ್ದಾರೆ. ನವಕುಮಾರ ಎಂಬುವನು ಬಾಗಿಲಿನ ಹತ್ತಿರಕ್ಕೆ ಬಂದು ಭಕ್ತರು ಕುಳಿತಿರುವುದನ್ನು ನೋಡಿ ಹಿಂದಿರುಗಿ ಹೊರಟುಹೋದ. “ಅಹಂಕಾರದ ಮುದ್ದೆ!” ಎಂದು ಪರಮಹಂಸರು ಹೇಳಿದರು.
ಘಂಟೆ ಬೆಳಗಿನ ಒಂಬತ್ತೂವರೆ. ಪ್ರಾಣಕೃಷ್ಣ ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡ. ಅನಂತರ ಒಬ್ಬ ಬೈರಾಗಿ ಗೋಪೀಯಂತ್ರ ಎಂಬ ಹೆಸರಿನ ಒಂದು ತಂತೀವಾದ್ಯ ಬಾಜಿಸುತ್ತಾ ಹಾಡಲಾರಂಭಿಸಿದ. ಪರಮಹಂಸರು ಆತನ ಹಾಡುಗಳನ್ನು ಕೇಳುತ್ತಿದ್ದ ಹಾಗೆಯೇ, ಕೇದಾರ ಚಟ್ಟೋಪಾಧ್ಯಾಯ ಆಫೀಸಿನ ಉಡಿಗೆ ತೊಟ್ಟೇ ಕೊಠಡಿಯನ್ನು ಪ್ರವೇಶಿಸಿದ. ಕಿವಿಗೆ ಭಗವತ್ಸಂಬಂಧವಾದ ಮಾತುಕತೆ ಬಿತ್ತು ಎಂದರೆ ಆತನ ಕಣ್ಣುಗಳಲ್ಲಿ ಪ್ರೇಮಾಶ್ರು ಸುರಿಯಲಾರಂಭಿಸುತ್ತದೆ. ಒಳ್ಳೆಯ ಪ್ರೇಮಿ. ಆಂತರ್ಯದಲ್ಲಿ ಗೋಪೀಭಾವ.
ಕೇದಾರ ಚಟ್ಟೋಪಾಧ್ಯಾಯ ಕಣ್ಣಿಗೆ ಬೀಳುವುದೇ ತಡ, ಒಮ್ಮೆಗೆ ಪರಮಹಂಸರಿಗೆ ಬೃಂದಾವನ ಲೀಲೆಯ ಉದ್ದೀಪನವಾಗಿಬಿಟ್ಟಿತು. ಪ್ರೇಮದಿಂದ ಮತ್ತರಾಗಿ ಎದ್ದು ನಿಂತುಕೊಂಡು ಕೇದಾರನನ್ನು ಸಂಬೋಧಿಸಿ ಹಾಡಲಾರಂಭಿಸಿದ್ದಾರೆ:
ಹೃದಯವಲ್ಲಭನಿರುವ ಕದಂಬವನವೆನ್ನುವುದು
ಇನ್ನೆಷ್ಟು ದೂರವಿದೆ ಹೇಳು ಕೆಳದೀ?
ಕೃಷ್ಣಗಂಧವು ಇದೆಕೊ ಇಲ್ಲಿಗೂ ಬೀಸುತಿದೆ!
ನಡೆಯಲಾರೆನು ಮುಂದೆ ಸೋತಿರುವೆನು.
ಪರಮಹಂಸರು ಶ್ರೀ ರಾಧೆಯ ಭಾವವನ್ನು ಆರೋಪಿಸಿಕೊಂಡು ಈ ಹಾಡನ್ನು ಹಾಡುತ್ತ ಹಾಡುತ್ತ ಗಾಢಸಮಾಧಿಸ್ಥರಾಗಿಬಿಟ್ಟಿದ್ದಾರೆ. ಪಟದ ಮೇಲಿನ ಚಿತ್ರದ ಹಾಗೆ ನಿಂತುಕೊಂಡಿದ್ದಾರೆ. ಅವರ ಎರಡು ಕಣ್ಣುಗಳಿಂದಲೂ ಆನಂದಾಶ್ರು ಸುರಿಯುತ್ತಿದೆ.
ಕೇದಾರ ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಅವರ ಪಾದವನ್ನು ಸ್ಪರ್ಶಿಸಿದ ನಂತರ ಒಂದು ಸ್ತೋತ್ರವನ್ನು ಹೇಳಲಾರಂಭಿಸಿದ:
ಹೃದಯಕಮಲಮಧ್ಯೇ ನಿರ್ವಿಶೇಷಂ ನಿರೀಹಂ,
ಹರಿಹರ ವಿಧಿವೇದ್ಯಂ ಯೋಗಿಭಿರ್ಧ್ಯಾನಗಮ್ಯಮ್….
ಸ್ವಲ್ಪ ಹೊತ್ತಾದ ನಂತರ ಪರಮಹಂಸರು ಪ್ರಕೃತಿಸ್ಥರಾದರು. ಅನಂತರ ಕೇದಾರ ಅವರಿಂದ ಬೀಳ್ಕೊಂಡು ಕಲ್ಕತ್ತದಲ್ಲಿರುವ ತನ್ನ ಆಫೀಸಿಗೆ ಹಿಂತಿರುಗಿ ಹೊರಟುಹೋದ.
ಮಧ್ಯಾಹ್ನ ಹನ್ನೆರಡು ಗಂಟೆಗೆ ರಾಮಲಾಲ, ಒಂದು ತಟ್ಟೆ ಭಗವತಿ ಕಾಳಿಯ ಪ್ರಸಾದ ತೆಗೆದುಕೊಂಡು ಬಂದು ಪರಮಹಂಸರಿಗೆ ಕೊಟ್ಟ. ಮಗುವಿನ ಹಾಗೆ ಪ್ರತಿಯೊಂದು ಬಗೆಯನ್ನೂ ಸ್ವಲ್ಪಸ್ವಲ್ಪವಾಗಿ ತಿಂದರು.
ಅಪರಾಹ್ನ ಮೂರುಗಂಟೆ ಸಮಯಕ್ಕೆ ಕೆಲವು ಮಂದಿ ಮಾರ್ವಾಡಿ ಭಕ್ತರು ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡರು. ಕೊಠಡಿಯಲ್ಲಿ ರಾಖಾಲ ಮತ್ತು ಮಾಸ್ಟರೂ ಕುಳಿತಿದ್ದಾರೆ.
ಒಬ್ಬ ಮಾರ್ವಾಡಿ ಭಕ್ತ: “ಮಹಾರಾಜ್, ನಮಗೆ ಉಪಾಯವೇನು?”
ಶ್ರೀರಾಮಕೃಷ್ಣರು: “ಎರಡು ಮಾರ್ಗಗಳಿವೆ-ವಿಚಾರಮಾರ್ಗ ಮತ್ತು ಅನುರಾಗ ಅಥವಾ ಭಕ್ತಿಮಾರ್ಗ. ವಿಚಾರವೆಂದರೆ ಸದಸದ್ವಿಚಾರ. ಏಕಮಾತ್ರ ಸತ್, ಎಂದರೆ ನಿತ್ಯವಸ್ತು ಭಗವಂತ ಮಾತ್ರ. ಉಳಿದುದೆಲ್ಲಾ ಅಸತ್, ಎಂದರೆ ಅನಿತ್ಯವಸ್ತು. ಕೇವಲ ಐಂದ್ರಜಾಲಿಕನೇ ಸತ್ಯ; ಆತನ ಇಂದ್ರಜಾಲ ಮಿಥ್ಯೆ. ಇದಕ್ಕೇ ವಿಚಾರ ಅಂತ ಹೆಸರು.
“ವಿವೇಕ ವೈರಾಗ್ಯ. ಸದಸದ್ವಿಚಾರಕ್ಕೇ ‘ವಿವೇಕ’ ಅಂತ ಹೆಸರು. ವೈರಾಗ್ಯವೆಂದರೆ ಪ್ರಾಪಂಚಿಕ ವಸ್ತುಗಳ ಕಡೆಗೆ ವಿರಕ್ತಿ. ಇವು ಒಮ್ಮೆಗೇ ದೊರೆತುಬಿಡುವುದಿಲ್ಲ-ದಿನವೂ ಅಭ್ಯಾಸ ಮಾಡಬೇಕು. ಮೊದಲು ಕಾಮಕಾಂಚನ ತ್ಯಾಗವನ್ನು ಮಾನಸಿಕವಾಗಿ ಮಾಡಬೇಕು. ಬಳಿಕ ಭಗವತ್ ಕೃಪೆಯಿಂದ ಮಾನಸಿಕವಾಗಿಯೂ ಬಾಹ್ಯಿಕವಾಗಿಯೂ ತ್ಯಾಗ ಮಾಡಲು ಆಗುತ್ತದೆ. ಕಲ್ಕತ್ತದ ಜನರಿಗೆ ಹೇಳುವಂತೆಯೂ ಇಲ್ಲ, ಎಲ್ಲವನ್ನೂ ಭಗವಂತನಿಗೆ ತ್ಯಾಗ ಮಾಡಿಬಿಡಿ ಎಂಬುದಾಗಿ. ಅವರಿಗೆ ಹೇಳಬೇಕು, ಮಾನಸಿಕವಾಗಿ ತ್ಯಾಗಮಾಡಿ ಅಂತ.
“ಅಭ್ಯಾಸಯೋಗದಿಂದ ಕಾಮಕಾಂಚನಾಸಕ್ತಿಯನ್ನು ತ್ಯಾಗಮಾಡಲು ಸಾಧ್ಯ. ಗೀತೆಯಲ್ಲಿ ಹೀಗೆಂದು ಹೇಳಿದೆ: ಅಭ್ಯಾಸದಿಂದ ಮನಸ್ಸು ಅಸಾಧಾರಣ ಶಕ್ತಿಯನ್ನು ಗಳಿಸಿಕೊಳ್ಳುತ್ತದೆ. ಆಗ ಇಂದ್ರಿಯ ಸಂಯಮ ಮಾಡಲು-ಕಾಮಕ್ರೋಧಾದಿಗಳನ್ನು ವಶಪಡಿಸಿಕೊಳ್ಳಲು ಕಷ್ಟವಾಗುವುದಿಲ್ಲ. ಅಂಥ ಮನುಷ್ಯ ಆಮೆಯಂತೆ ವರ್ತಿಸುತ್ತಾನೆ. ಆಮೆ ಒಮ್ಮೆ ತನ್ನ ಕೈ ಕಾಲುಗಳನ್ನು ಒಳಕ್ಕೆ ಸೆಳೆದುಕೊಂಡಿತೆಂದರೆ ಮತ್ತೆ ಅದು ಹೊರಕ್ಕೆ ಬಿಡದು. ಕೊಡಲಿ ತೆಗೆದುಕೊಂಡು ಅದನ್ನು ಚೂರು ಚೂರು ಮಾಡಿದರೂ ಅದು ಅವನ್ನು ಹೊರಕ್ಕೆ ಬಿಡದು.”
ಮಾರ್ವಾಡಿ ಭಕ್ತ: “ಮಹಾರಾಜ್, ಎರಡು ಮಾರ್ಗಗಳು ಇವೆ ಅಂತ ಹೇಳಿದಿರಿ. ಇನ್ನೊಂದು ಮಾರ್ಗವಾವುದು?”
ಶ್ರೀರಾಮಕೃಷ್ಣರು: “ಅನುರಾಗ ಅಥವಾ ಭಕ್ತಿಮಾರ್ಗ. ವ್ಯಾಕುಲ ಹೃದಯದಿಂದ ಭಗವಂತನಿಗಾಗಿ ನಿರ್ಜನಪ್ರದೇಶದಲ್ಲಿ ಏಕಾಂತವಾಗಿ ಅಳು; ದರ್ಶನಕೊಡಬೇಕೆಂದು ಪ್ರಾರ್ಥಿಸು.
ನಂಬಿ ಕರೆದರೆ ತಾಯಿ ಓ ಎನ್ನದಿಹಳೇನೋ?
ನಿನ್ನ ತೊರೆದವಳೆಂತು ಇರಬಲ್ಲಳೊ?
ಮಾರ್ವಾಡಿ ಭಕ್ತ: “ಮಹಾರಾಜ್, ಸಾಕಾರ ಪೂಜೆ ಅಂದರೆ ಏನು? ನಿರಾಕಾರ ನಿರ್ಗುಣ ಪೂಜೆ ಅಂದರೆ ಏನು?”
ಶ್ರೀರಾಮಕೃಷ್ಣರು: “ತಂದೆಯ ಭಾವಚಿತ್ರ ತಂದೆಯನ್ನು ಜ್ಞಾಪಕಕ್ಕೆ ತರುವಂತೆ, ಪ್ರತಿಮಾಪೂಜೆ ಮಾಡುತ್ತ ಮಾಡುತ್ತ ಮುಂದುವರಿದರೆ ಸತ್ಯದ ರೂಪ ಉದ್ದೀಪನವಾಗುತ್ತದೆ.
“ಸಾಕಾರ ರೂಪ ಹೇಗೆ ಗೊತ್ತೆ? ಜಲರಾಶಿಯ ಮಧ್ಯದಿಂದ ಗುಳ್ಳೆಗಳು ಏಳುವಂತೆ, ಮಹಾ ಚಿದಾಕಾಶದಿಂದ ಒಂದೊಂದು ಭಗವದ್ರೂಪ ಏಳುವುದನ್ನು ನೋಡಬಹುದು. ಅವತಾರ ಈ ರೂಪಗಳಲ್ಲಿ ಒಂದು. ಅವತಾರ ಲೀಲೆ, ಆ ಆದ್ಯಾಶಕ್ತಿಯ ಕ್ರೀಡೆಯೇ.
“ಪಾಂಡಿತ್ಯದಲ್ಲಿ ತಾನೆ ಏನಿದೆ? ವ್ಯಾಕುಲತೆಯಿಂದ ಭಗವಂತನನ್ನು ಕರೆದರೆ ಆತನ ದರ್ಶನ ಪಡೆಯಬಹುದು. ಅನೇಕ ವಿಷಯಗಳನ್ನು ತಿಳಿದುಕೊಳ್ಳುವುದರ ಆವಶ್ಯಕತೆಯೇನಿಲ್ಲ.
“ಆಚಾರ್ಯಪುರುಷ ಮಾತ್ರ ಅನೇಕ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಪರರನ್ನು ವಧಿಸಬೇಕಾದರೆ ಕತ್ತಿ ಗುರಾಣಿ ಬೇಕು; ತನ್ನನ್ನು ತಾನೇ ಕೊಂದುಕೊಳ್ಳಬೇಕಾದರೆ ಒಂದು ಸೂಜಿ ಅಥವಾ ಉಗುರುಗತ್ತಿಯೆ ಸಾಕು.
‘ನಾನು’ ಎಂಬುದು ಏನು ಎಂದು ಹುಡುಕುತ್ತಾ ಹುಡುಕುತ್ತಾ ಹೋದರೆ, ಕೊನೆಗೆ ಭಗವಂತನೇ ದೊರೆತುಬಿಡುತ್ತಾನೆ. ಈ ‘ನಾನು’ ಎಂಬುದು ಮಾಂಸವೆ, ಮೂಳೆಯೆ, ರಕ್ತವೆ, ಮಜ್ಜವೆ? ಅಥವಾ ಮನಸ್ಸೆ, ಬುದ್ಧಿಯೆ? ಹಾಗೆ ವಿಚಾರಮಾಡುತ್ತಾ ಮುಂದುವರಿದರೆ ಕೊನೆಗೆ ಗೊತ್ತಾಗುತ್ತದೆ, ‘ನಾನು’ ಎಂಬುದು ಇದೊಂದೂ ಅಲ್ಲವೆಂಬುದಾಗಿ. ಇದೇ ‘ನೇತಿ, ನೇತಿ’ ಮಾರ್ಗ. ಆತ್ಮನನ್ನು ಹಿಡಿಯಲೇ ಆಗಲಿ, ಸ್ಪರ್ಶಿಸಲೇ ಆಗಲಿ ಆಗುವ ಹಾಗಿಲ್ಲ. ಆತ ನಿರ್ಗುಣ-ನಿರುಪಾಧಿಕ.
“ಆದರೆ ಭಕ್ತಿಪಥದ ದೃಷ್ಟಿಯಿಂದ ಭಗವಂತ ಸಗುಣ. ಭಕ್ತನಿಗೆ ಚಿನ್ಮಯಶ್ಯಾಮ, ಚಿನ್ಮಯಧಾಮ, ಎಲ್ಲವೂ ಚಿನ್ಮಯ.”
ಮಾರ್ವಾಡಿ ಭಕ್ತರು ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡರು.
ಸಂಜೆಯಾಗಿದೆ. ಪರಮಹಂಸರು ಗಂಗಾದರ್ಶನ ಮಾಡುತ್ತಿದ್ದಾರೆ. ಕೊಠಡಿಗೆ ದೀಪ ಹಚ್ಚಿದೆ. ಪರಮಹಂಸರು ಭಗವತಿಯ ನಾಮಜಪ ಮಾಡುತ್ತ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತಿದ್ದಾರೆ. ದೇವಾಲಯಗಳಲ್ಲಿ ಸಾಯಂಕಾಲ ಮಂಗಳಾರತಿ ಶುರುವಾಯಿತು. ಗಂಟೆ ಜಾಗಟೆಗಳ ನಿನಾದ ಗಂಗೆಯ ಮರ್ಮರ ಧ್ವನಿಯೊಡನೆ ಬೆರೆತು ಬಹಳ ಸೊಗಸಾಗಿ ಕೇಳಿಬರುತ್ತಿದೆ. ಶಾಂತಿ ಮತ್ತು ಆನಂದ ಎಲ್ಲೆಲ್ಲೂ ತುಂಬಿತುಳುಕಾಡುತ್ತಿದೆ.
1. ವೈಷ್ಣವ ಸಂನ್ಯಾಸಿಗಳು.
2. ವೈಷ್ಣವ ಸಂನ್ಯಾಸಿನಿಯರು
3. ಇದು ಸಾಕಾರಕ್ಕೂ ನಿರಾಕಾರಕ್ಕೂ ಮಧ್ಯೆ ಇರುವ ಒಂದು ಅದ್ಭುತ ಅವಸ್ಥೆ. ಈ ಅವಸ್ಥೆಯಲ್ಲಿ ಸಾಕಾರ ನಿರಾಕಾರ ಎರಡೂ ಸತ್ಯ ಎಂಬ ಬೋಧೆಯಾಗುತ್ತದೆ.
4. ಕಲ್ಕತ್ತದಲ್ಲಿರುವ ಆಕ್ಟರ್ಲೋನಿ ಮಾನ್ಯುಮೆಂಟ್ (ಸ್ಮಾರಕಸ್ತಂಭ)
5. ತಮ್ಮನ್ನು ಸೂಚಿಸಿ.
6. ಪ್ರಖ್ಯಾತ ಮಹಮ್ಮದೀಯ ಸಂತನ ಗೋರಿ.