೨೮ನೆ ಅಕ್ಟೋಬರ್ ೧೮೮೨, ಆಶ್ವೀಜ ಕೃಷ್ಣ ಬಿದಿಗೆ, ಶನಿವಾರ
ಬ್ರಾಹ್ಮಸಮಾಜದ ಷಾಣಾಸ್ಮಿಕ ಮಹೋತ್ಸವ, ಶರತ್ಕಾಲದಲ್ಲಿ ಒಮ್ಮೆ, ವಸಂತಕಾಲದಲ್ಲಿ ಒಮ್ಮೆ, ಕಲ್ಕತ್ತಕ್ಕೆ ಮೂರು ಮೈಲಿ ಉತ್ತರದಲ್ಲಿರುವ ಸಿಂಥಿಯಲ್ಲಿ ವೇಣೀಮಾಧವ ಪಾಲನ ಸುಂದರವಾದ ಉದ್ಯಾನವನದಲ್ಲಿ ನಡೆದುಕೊಂಡು ಬರುತ್ತಿದೆ. ಇಂದು ಶರತ್ಕಾಲದ ಮಹೋತ್ಸವ. ಇಲ್ಲಿನ ಉದ್ಯಾನಗೃಹ ನಿರ್ಜನಪ್ರದೇಶದಲ್ಲಿದೆ. ಧ್ಯಾನಕ್ಕೆ ಒಳ್ಳೆ ಜಾಗ; ಹೂವಿನಿಂದ ತುಂಬಿದ್ದ ಗಿಡಗಳು, ಕೊಳಗಳು, ಹುಲ್ಲುಮೈದಾನ, ಲತಾಗೃಹಗಳು ಇವೆಲ್ಲಾ ಉದ್ಯಾನವನಕ್ಕೆ ಹೆಚ್ಚು ಶೋಭೆಯನ್ನು ಕೊಟ್ಟಿವೆ. ಈಗತಾನೆ ಸೂರ್ಯ ಮುಳುಗುತ್ತಿದ್ದಾನೆ. ಪಶ್ಚಿಮ ದಿಗಂತದ ಮುಗಿಲು ಕೆಂಬಣ್ಣದುಡಿಗೆ ಉಡುತ್ತಿದೆ. ಪರಮಹಂಸರು ಇನ್ನೇನು ಇಲ್ಲಿಗೆ ಬರಲಿದ್ದಾರೆ.
ಅನೇಕ ಬ್ರಾಹ್ಮಭಕ್ತರು ಇಂದಿನ ಬೆಳಗಿನ ಉಪಾಸನೆಗೆ ಇಲ್ಲಿಗೆ ಬಂದು ಸೇರಿಬಿಟ್ಟಿದ್ದಾರೆ. ಸಾಯಂಕಾಲದ ಹೊತ್ತಿಗೆ ಕಲ್ಕತ್ತದಿಂದ ಮತ್ತು ಸಿಂಥಿಯ ಸುತ್ತಮುತ್ತಣ ಗ್ರಾಮಗಳಿಂದ ಇನ್ನೂ ಅನೇಕರು ಬಂದು ಕೂಡಿದರು. ಪರಮಹಂಸರು ಬಹಳವಾಗಿ ಪ್ರೀತಿಸುತ್ತಿದ್ದ ಶಿವನಾಥ ಶಾಸ್ತ್ರಿಯೂ ಇಲ್ಲಿಗೆ ಬಂದಿದ್ದಾನೆ. ಎಲ್ಲರೂ ಪರಮಹಂಸರ ಬರುವಿಕೆಯನ್ನು ಎದುರು ನೋಡುತ್ತ ಕುಳಿತಿದ್ದಾರೆ.
ಪರಮಹಂಸರನ್ನು ಮತ್ತು ಇನ್ನು ಕೆಲವು ಭಕ್ತರನ್ನು ಕರೆತರುತ್ತಿದ್ದ ಗಾಡಿ ಉದ್ಯಾನಗೃಹವನ್ನು ಸಮೀಪಿಸಿದೊಡನೆಯೆ ಇಡೀ ಸಭೆಯೇ ಎದ್ದುನಿಂತು ಅವರಿಗೆ ಸುಸ್ವಾಗತವನ್ನಿತ್ತಿತು. ನಾಟಕಶಾಲೆಯಲ್ಲಿ ಪರದೆ ಮೇಲಕ್ಕೆ ಹೋದೊಡನೆಯೆ ಯಾವ ರೀತಿಯಾದ ಶಾಂತಿಯನ್ನು ಕಾಣಬಹುದೊ ಅದೇ ರೀತಿಯಾದ ಶಾಂತಿ ತತ್ಕ್ಷಣವೇ ನೆಲೆಗೊಂಡಿತು. ಇದುವರೆಗೆ ಪರಸ್ಪರ ಮಾತುಕತೆಗಳನ್ನಾಡುತ್ತಿದ್ದವರೆಲ್ಲಾ ಪರಮಹಂಸರ ಸೌಮ್ಯ ಮುಖದ ಕಡೆಗೆ ದಿಟ್ಟಿಸಿ ನೋಡುತ್ತ ಅವರ ಬಾಯಿಂದ ಬೀಳುವ ಅಮೃತವಾಣಿಯನ್ನು ಒಂದೂ ತಪ್ಪದಂತೆ ಕೇಳಲೋಸುಗ ಅತ್ಯಂತ ಕಾತರರಾಗಿ ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು ಶಿವನಾಥನೇ ಮೊದಲಾದ ಭಕ್ತಸಮುದಾಯವನ್ನು ದೃಷ್ಟಿಸಿ: “ಓಹೊ, ಶಿವನಾಥ ಬಂದುಬಿಟ್ಟಿದ್ದಾನೆ! ನೋಡಿ, ನೀವೆಲ್ಲರೂ ಭಕ್ತರು. ನಿಮ್ಮನ್ನು ನೋಡಿ ನನಗೆ ಬಹಳ ಆನಂದ ಆಗುತ್ತಿದೆ. ಗಾಂಜಾಖೋರನಿಗೆ ಇನ್ನೊಬ್ಬ ಗಾಂಜಾಖೋರನನ್ನು ಕಂಡರೆ ಬಹಳ ಆನಂದ. ಅನೇಕ ವೇಳೆ ಆನಂದೋತ್ಕರ್ಷದಿಂದ ಒಬ್ಬರನ್ನೊಬ್ಬರು ಆಲಿಂಗನ ಮಾಡಿಕೊಂಡೂಬಿಡುತ್ತಾರೆ.”
ಶಿವನಾಥ ಮತ್ತು ಭಕ್ತರೆಲ್ಲರೂ ಗಹಗಹಿಸಿ ನಗುತ್ತಿದ್ದಾರೆ.
ಶ್ರೀರಾಮಕೃಷ್ಣರು : “ಅನೇಕರು ದಕ್ಷಿಣೇಶ್ವರ ದೇವಾಲಯಕ್ಕೆ ಬರುತ್ತಾರೆ. ಅವರಲ್ಲಿ ಕೆಲವರಿಗೆ ಭಗವಂತನ ಕಡೆ ಮನಸ್ಸಿಲ್ಲದಿರುವುದಾಗಿ ಕಂಡುಬಂದರೆ ನಾನು ಹೇಳುತ್ತೇನೆ: ‘ನೀವು ಅಲ್ಲಿ ಎಲ್ಲಾದರೂ ಸ್ವಲ್ಪ ಹೊತ್ತು ಕುಳಿತುಕೊಂಡಿರಿ.’ ಇನ್ನು ಕೆಲವು ವೇಳೆ ಹೇಳುತ್ತೇನೆ : ‘ಹೋಗಿ, ಇಲ್ಲಿರುವ ಕಟ್ಟಡಗಳನ್ನೆಲ್ಲ ನೋಡಿಕೊಂಡು ಬನ್ನಿ. ಹೋಗಿ.’ (ನಗು)
“ಕೆಲವು ಕೆಲಸಕ್ಕೆ ಬಾರದವರೂ ಭಕ್ತರೊಡನೆ ಬರುತ್ತಾರೆ. ಅವರಿಗೆ ವಿಷಯಾಸಕ್ತಿ ಅಧಿಕ. ಭಗವಂತನ ಮಾತುಕತೆ ರುಚಿಸುವುದಿಲ್ಲ. ಭಕ್ತರು ನನ್ನೊಡನೆ ಬಹಳ ಹೊತ್ತಿನವರೆಗೆ ಭಗವಂತನ ಮಾತುಕತೆ ಆಡುತ್ತ ಕುಳಿತುಬಿಡುವುದರಿಂದ ವಿಷಯಾಸಕ್ತರಿಗೆ ಬೇಜಾರು ಹಿಡಿದುಸುಮ್ಮನೆ ಮೈಮುರಿಯುತ್ತಿರುತ್ತಾರೆ. ಅವರು ಭಕ್ತರ ಕಿವಿಯಲ್ಲಿ ಆಗಾಗ ಪಿಸುಗುಟ್ಟುತ್ತಿರುತ್ತಾರೆ: ‘ಯಾವಾಗ ಹೋಗೋಣ? ಯಾವಾಗ ಹೋಗೋಣ?’ ಅವರು ಹೇಳುತ್ತಾರೆ: ‘ಇನ್ನೂ ಸ್ವಲ್ಪ ಹೊತ್ತು ತಾಳಿ, ಅನಂತರ ಹೋಗೋಣ.’ ಆಗ ಅವರು ಬೇಸರಗೊಂಡು ಹೇಳುತ್ತಾರೆ: ‘ಹಾಗಾದರೆ, ನೀವು ಮಾತುಕತೆ ಆಡಿಕೊಂಡು ಬನ್ನಿ. ನಾವು ಹೋಗಿ ದೋಣಿಯಲ್ಲಿ ಕುಳಿತಿರುತ್ತೇವೆ.’ (ಎಲ್ಲರೂ ನಗುತ್ತಾರೆ.)
“ಸಂಸಾರಿಗಳಿಗೆ ಹೇಳಿದ್ದೇ ಆದರೆ, ನೀವು ಎಲ್ಲವನ್ನೂ ತ್ಯಾಗಮಾಡಿ ಭಗವಂತನ ಪಾದಪದ್ಮಗಳಲ್ಲಿ ಮಗ್ನರಾಗಿಬಿಡಿ ಎಂಬುದಾಗಿ, ಅದಕ್ಕೆ ಅವರು ಎಂದಿಗೂ ಬೆಲೆಯನ್ನೇ ಕೊಡುವುದಿಲ್ಲ. ಅದಕ್ಕಾಗಿಯೆ ವಿಷಯಾಸಕ್ತರನ್ನು ಭಗವಂತನ ಕಡೆಗೆ ಎಳೆಯಲೋಸುಗ ಗೌರಾಂಗ ಮತ್ತು ನಿತಾಯಿ ಇಬ್ಬರೂ ಕೂಡಿ ಒಂದು ಸಂಧಾನ ಹೂಡಿದರು. ಅವರು ವಿಷಯಾಸಕ್ತರಿಗೆ ಹೇಳುತ್ತಿದ್ದರು : ‘ಬನ್ನಿ, “ಹರಿ, ಹರಿ” ಎಂದು ಹೇಳಿ, ನಿಮಗೆ ಮಾಗೂರು ಮೀನಿನ ಸಾರು, ಯುವತಿಯ ಆಲಿಂಗನ ಎರಡೂ ದೊರೆಯುತ್ತವೆ.’ ಜನರು ಇವೆರಡಕ್ಕೂ ಲೋಭಪಟ್ಟು ಭಗವನ್ನಾಮೋಚ್ಚಾರಣೆ ಮಾಡಲು ಆರಂಭಿಸುತ್ತಿದ್ದರು. ಭಗವನ್ನಾಮ ಸುಧೆಯಲ್ಲಿ ಒಂದು ಸ್ವಲ್ಪ ರುಚಿ ಸಿಕ್ಕಿದೊಡನೆ ಅವರಿಗೆ ಅರ್ಥವಾಗುತ್ತಿತ್ತು. ‘ಮಾಗೂರು ಮೀನಿನ ಸಾರು’ ಎಂದರೆ ಬೇರೆ ಏನಿಲ್ಲ. ಭಗವತ್ಪ್ರೇಮದಿಂದ ಪ್ರೇಮಾಶ್ರು ಸುರಿಯುತ್ತದೆಯಲ್ಲ ಅದು. ‘ಯುವತಿ’ ಎಂದರೆ ಪೃಥಿವಿ. ಯುವತಿಯ ಆಲಿಂಗನ ಎಂದರೆ, ಪ್ರೇಮೋನ್ಮತ್ತತೆಯಿಂದ ಭೂಮಿಯ ಮೇಲೆ ಹೊರಳಾಡುವಿಕೆ.
“ನಿತಾಯಿ ಹೇಗಾದರೂ ಮಾಡಿ ಜನರು ಭಗವನ್ನಾಮೋಚ್ಚಾರಣೆ ಮಾಡುವಂತೆ ಮಾಡುತ್ತಿದ್ದ. ಚೈತನ್ಯದೇವ ಹೇಳುತ್ತಿದ್ದ : ‘ಭಗವನ್ನಾಮಕ್ಕೆ ಬಹಳ ಮಹಾತ್ಮ್ಯೆ. ಒಡನೆಯೇ ಫಲ ದೊರಕದೆ ಹೋಗಬಹುದು. ಆದರೆ ಒಂದಲ್ಲ ಒಂದು ದಿನ ಫಲ ದೊರೆತೇ ದೊರೆಯುತ್ತದೆ. ಇದು ಮನೆಯ ಕಾರ್ನೀಸಿನ ಮೇಲೆ ಬಿದ್ದಿರುವ ಬೀಜದ ಹಾಗೆ. ಬಹಳ ಕಾಲವಾದ ಮೇಲೆ ಕಟ್ಟಡ ನೆಲಸಮವಾಗುತ್ತದೆ. ಬೀಜ ನೆಲಕ್ಕೆ ಬೀಳುತ್ತದೆ. ಕೊನೆಗೆ ಅದು ಮೊಳೆತು ಫಲ ಕೊಡುತ್ತದೆ.
“ಸಂಸಾರಿಗಳಲ್ಲಿ ಸಾತ್ತ್ವಿಕ, ರಾಜಸಿಕ, ತಾಮಸಿಕ ಗುಣದವರು ಇರುವ ಹಾಗೆ ಭಕ್ತಿಯಲ್ಲೂ ಈ ಮೂರು ಗುಣದ ಭಕ್ತಿಗಳಿವೆ.
“ಸಾತ್ತ್ವಿಕ ಸಂಸಾರಿ ಹೇಗೆ ಇರುತ್ತಾನೆ ಗೊತ್ತೆ ? ಆತನ ಮನೆ ಈ ಕಡೆ ಮುರುಕಲು. ಅದಕ್ಕೆ ಸುಣ್ಣ ಒರೆಮಣ್ಣು ಹಚ್ಚುವ ಬಾಬೇ ಇಲ್ಲ, ಪೂಜಾಂಗಣದಲ್ಲಿ ಪಾರಿವಾಳಗಳ ಹಿಕ್ಕೆ ಬಿದ್ದಿರಬಹುದು, ಪ್ರಾಂಗಣವೆಲ್ಲಾ ಪಾಚಿಮಯವಾಗಿರಬಹುದು. ಇದಾವುದರ ಮೇಲೂ ಆತನಿಗೆ ಗಮನವೇ ಇರುವುದಿಲ್ಲ. ಮನೆ ಮುಟ್ಟುಗಳೆಲ್ಲವೂ ಬಹಳ ಹಳೆಯದಾಗಿ ಹೋಗಿರುತ್ತವೆ; ಅವಕ್ಕೆ ಮೆರಗು ಕೊಟ್ಟು ಸರಿಪಡಿಸುವ ಯೋಚನೆಯೇ ಇಲ್ಲ. ಉಡಿಗೆ ತೊಡಿಗೆಗಳ ಮೇಲೆ ಲಕ್ಷ್ಯವೇ ಇಲ್ಲ; ಸಿಕ್ಕದ್ದೇ ಉಡಿಗೆ ತೊಡಿಗೆ. ಸ್ವಾಭಾವಿಕವಾಗಿ ಆತ ಅತ್ಯಂತ ಶಾಂತಸ್ವರೂಪಿ, ಶಿಷ್ಟಾಚಾರಸಂಪನ್ನ, ದಯಾಳು, ನಮ್ರ; ಯಾರಿಗೂ ಯಾವ ತೊಂದರೆಯನ್ನೂ ಕೊಡುವುದಿಲ್ಲ.
“ಸಂಸಾರಿಗಳಲ್ಲಿ ರಾಜಸಿಕ ಪ್ರವೃತ್ತಿಯುಳ್ಳವರಿದ್ದಾರೆ. ಅವರು ಕೈಗೆ ಚೈನು ಇರುವ ಗಡಿಯಾರ ಕಟ್ಟಿರುತ್ತಾರೆ; ಬೆರಳುಗಳಿಗೆ ಎರಡು ಮೂರು ಉಂಗುರ ಹಾಕಿರುತ್ತಾರೆ. ಮನೆಮಟ್ಟುಗಳೆಲ್ಲಾ ಠಾಕು ಠೀಕು, ಗೋಡೆಗಳಲ್ಲಿ ರಾಣಿಯ ಮತ್ತು ದೊಡ್ಡದೊಡ್ಡ ಮನುಷ್ಯರ ಪಟ ತೂಗಹಾಕಿರುತ್ತಾರೆ. ಮನೆಗೆ ಅಷ್ಟು ಚೆನ್ನಾಗಿ ಸುಣ್ಣ ಒರೆಮಣ್ಣು ಹಾಕಿರುತ್ತಾರೆ. ಒಂದು ಚೂರು ಧೂಳೇ ಆಗಲಿ, ಒಂದು ಬೊಟ್ಟು ಕರೆಯೇ ಆಗಲಿ, ಎಲ್ಲೂ ಕಂಡುಬರುವುದಿಲ್ಲ. ನಾನಾ ಬಗೆಯ ಅಂದಚೆಂದದ ಉಡುಪು ಹಾಕಿಕೊಳ್ಳುತ್ತಾರೆ. ಅವನ ಸೇವಕರಿಗೂ ಒಳ್ಳೊಳ್ಳೆ ಪೋಷಾಕು. ಹೀಗೇ ಇನ್ನೂ ಏನೇನೊ.”
“ತಾಮಸಿಕ ಸಂಸಾರಿ ನಿದ್ರೆ, ಕಾಮ, ಕ್ರೋಧ, ಅಹಂಕಾರ ಇವುಗಳಿಂದ ತುಂಬಿರುತ್ತಾನೆ.”
“ಹೀಗೆ ಸಾತ್ತ್ವಿಕಭಕ್ತಿ ಎಂಬುದೂ ಇದೆ. ಸಾತ್ತ್ವಿಕಭಕ್ತ ಗೋಪ್ಯವಾಗಿ, ಬಹುಶಃ ಸೊಳ್ಳೆಪರದೆಯೊಳಗೆ ಕುಳಿತು ಧ್ಯಾನಮಾಡುತ್ತಾನೆ. ಆತ ನಿದ್ದೆಯಿಂದೇಳಲು ಹೊತ್ತಾಗುತ್ತಿರುವುದನ್ನು ನೋಡಿ ಜನ ಭಾವಿಸಿಕೊಳ್ಳುತ್ತಾರೆ, ಬಹುಶಃ ಆತನಿಗೆ ರಾತ್ರಿ ವೇಳೆ ನಿದ್ದೆ ಬರುತ್ತಿಲ್ಲ ಅಂತ ಕಾಣುತ್ತದೆ ಎಂಬುದಾಗಿ. ಆತನಿಗೆ ತನ್ನ ಶರೀರದ ಮೇಲಿನ ಮಮತೆ ಕೇವಲ ಹಸಿವು ಇಂಗಿಸುವವರೆಗೆ ಮಾತ್ರ. ಒಂದಿಷ್ಟು ಸೊಪ್ಪು ಅನ್ನ ಸಿಕ್ಕಿದರೆ ಸಾಕು. ಊಟದ ಮನೆಯಲ್ಲಿ ವಿಶೇಷವಾದ ವ್ಯವಸ್ಥೆ ಏನೂ ಇಲ್ಲ. ಉಡಿಗೆ ತೊಡಿಗೆಗಳಲ್ಲೂ ಆಡಂಬರವೇನಿಲ್ಲ. ಮನೆಯ ಮುಟ್ಟುತಟ್ಟುಗಳಲ್ಲಿ ಯಾವ ವಿಧವಾದ ನಯ ನಾಜೂಕು ಕಂಡುಬರುವುದಿಲ್ಲ. ಆತ ಹೊಗಳುಭಟ್ಟತನ ಮಾಡಿ ಎಂದಿಗೂ ದ್ರವ್ಯ ಸಂಪಾದಿಸುವುದಿಲ್ಲ.”
“ರಾಜಸಿಕ ಭಕ್ತ ಹಣೆಗೆ ತಿಲಕ ಇಟ್ಟುಕೊಳ್ಳುತ್ತಾನೆ. ಕೊರಳಿಗೆ ರುದ್ರಾಕ್ಷಿಮಾಲೆ ಹಾಕಿಕೊಳ್ಳುತ್ತಾನೆ. ಆ ರುದ್ರಾಕ್ಷಿಮಾಲೆಯ ಮಧ್ಯೆ ಮಧ್ಯೆ ಚಿನ್ನದ ಮಣಿ ಇರುತ್ತದೆ. (ಎಲ್ಲರೂ ನಗುತ್ತಾರೆ.) ಪೂಜೆ ಸಮಯದಲ್ಲಿ ರೇಶ್ಮೆ ವಸ್ತ್ರ ಉಡುತ್ತಾನೆ.
“ತಾಮಸಿಕ ಭಕ್ತನ ಶ್ರದ್ಧೆ ಉಜ್ವಲವಾದ್ದು. ಡಕಾಯಿತರು ದರೋಡೆಮಾಡಿ ಜನರಿಂದ ಹಣ ಕಸಿದುಕೊಳ್ಳುವ ಹಾಗೆ. ಈ ವಿಧದ ಭಕ್ತ ಭಗವಂತನನ್ನು ಬಲಾತ್ಕರಿಸಿ ಆತನಿಂದ ವರ ಪಡೆದುಕೊಳ್ಳುತ್ತಾನೆ. ಡಕಾಯಿತರ ಹಾಗೆ, ‘ಬಡಿ! ಹೊಡಿ! ಕಡಿ!’ ಎಂಬುದೇ ಈತನ ಮಂತ್ರ”
ಹೀಗೆಂದು ಹೇಳುತ್ತಾ ಪರಮಹಂಸರು ಊರ್ಧ್ವದೃಷ್ಟಿಯುಳ್ಳವರಾಗಿ ಪ್ರೇಮರಸಾಭಿ ಯುಕ್ತ ಕಂಠದಿಂದ ಹಾಡಲಾರಂಭಿಸಿದ್ದಾರೆ:
ಏತಕೆ, ಇನ್ನೇತಕೆ ?
ಕಾಶಿ ಕಾಂಚಿಯೊ, ಗಯೆಯೊ ಗಂಗೆಯೊ
ಪುಣ್ಯಕ್ಷೇತ್ರಗಳೇತಕೆ ?
ಎಲ್ಲಿವರೆಗೂ ನಾನು ಕಾಳಿಯ ನೆನೆಯುತಿರುವೆನೊ ನಿತ್ಯವೂ,
ಅಲ್ಲಿವರೆಗೂ ಜಪತಪಾದಿಯ ಕಟ್ಟುಕಟ್ಟಲೆ ಏತಕೆ ?
ದಾನಧರ್ಮವೊ, ನಿಯಮವ್ರತವೊ-ಎಲ್ಲವೂ ನನಗೇತಕೆ?
ಬ್ರಹ್ಮಮಯಿಯಾ ಪಾದಪದ್ಮವೆ ಸರ್ವವೂ ಎನುವಾತಗೆ!
ತಾಯಿ ದುರ್ಗೆಯ ಹೆಸರು ಮಹಿಮೆಯ
ತಿಳಿವರಾರೊ ಜಗದೊಳು !
ದೇವದೇವರ ದೇವ ಶಿವನೇ
ತಾಯಿ ದುರ್ಗೆಯ ನುತಿಸಿ ನಲಿವನು
ತನ್ನ ಐದೂ ಮುಖದೊಳು!
ಪರಮಹಂಸರು ಪ್ರೇಮೋನ್ಮತ್ತರಾಗಿಬಿಟ್ಟಿದ್ದಾರೆ. ಈಗ ಮತ್ತೆ ಹಾಡಲಾರಂಭಿಸಿದ್ದಾರೆ, ಅಗ್ನಿಮಂತ್ರೋಪದೇಶ ಪಡೆದವರ ಹಾಗೆ:
ನಾ ಪಾಪಿಯಾದರೂ ನನ್ನ ಕಡೆಗಾಲದಲ್ಲಿ
ನಿನ್ನ ಶ್ರೀನಾಮವನು ಜಪಿಸುತಿರಲು
ಮುಕ್ತಿಗೊಯ್ಯದೆ ನೀನು ಬಿಡುವಳೇನು?…..
ಬಳಿಕ ಹೇಳುತ್ತಿದ್ದಾರೆ: “ದೃಢಭಾವ ಆರೋಪಿಸಿಕೊಂಡು ಹೇಳಬೇಕು: ‘ಏನು? ನಾನು ಭಗವತಿಯ ನಾಮ ಜಪಿಸಿದ್ದೇನೆ. ನನ್ನಲ್ಲಿ ಇನ್ನೂ ಪಾಪ ಅಂದರೆ? ನಾನು ಆಕೆಯ ಮಗು, ಆಕೆಯ ಐಶ್ವರ್ಯಕ್ಕೆ ಅಧಿಕಾರಿ.’
“ತಮೋಗುಣದ ಗತಿಯನ್ನು ಭಗವಂತನ ಕಡೆಗೆ ತಿರುಗಿಸಿಬಿಟ್ಟದ್ದೇ ಆದರೆ ಆತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ಆತನನ್ನು ಬಲಾತ್ಕರಿಸಿ ಕೇಳಿ, ಆತ ಅಪರಿಚಿತನೇನಲ್ಲ, ನಿಮ್ಮವನೆ.
“ಮತ್ತೆ ನೋಡಿ, ಇದೇ ತಮೋಗುಣವನ್ನು ಇತರರ ಮಂಗಳಕ್ಕಾಗಿ ಉಪಯೋಗಿಸಬಹುದು. ಡಾಕ್ಟರುಗಳಲ್ಲಿ ಮೂರು ವಿಧ-ಉತ್ತಮ, ಮಧ್ಯಮ, ಅಧಮ. ಯಾವ ಡಾಕ್ಟರ್ರೋಗಿಯ ನಾಡಿ ಹಿಡಿದುನೋಡಿ ಔಷಧ ಕುಡಿಯಪ್ಪ ಅಂತ ಹೇಳಿ ಹೊರಟು ಹೋಗುತ್ತಾನೊ, ಆತ ಅಧಮ ಡಾಕ್ಟರ್. ರೋಗಿ ಔಷಧ ಕುಡಿದನೊ ಇಲ್ಲವೊ ಎಂಬುದನ್ನು ಆತ ಬಂದು ವಿಚಾರ ಮಾಡುವುದೇ ಇಲ್ಲ. ಮಧ್ಯಮ ಡಾಕ್ಟರ್, ವಿವಿಧ ರೀತಿಯಿಂದ ಔಷಧ ಕುಡಿಯುವಂತೆ ರೋಗಿಗೆ ತಿಳಿಸಿ ಆತನ ಮನಸ್ಸನ್ನು ಒಪ್ಪಿಸಿ ಆತನಿಗೆ ಅಕ್ಕರೆಯಿಂದ ಹೇಳುತ್ತಾನೆ: ‘ಎಲಾ ಅಪ್ಪ, ನೀನು ಔಷಧ ಕುಡಿಯದಿದ್ದರೆ ನಿನಗೆ ಹೇಗೆ ಗುಣವಾದೀತು? ಗೆಳೆಯಾ, ಕುಡಿ, ನಾನೇ ಸ್ವತಃ ಔಷಧ ತಯಾರು ಮಾಡಿದ್ದೇನೆ ಕುಡಿ.’ ಆದರೆ ಯಾವ ಡಾಕ್ಟರ್ ಯಾವ ವಿಧದಿಂದಲೂ ರೋಗಿ ಔಷಧ ಸೇವಿಸದಿರುವುದನ್ನು ನೋಡಿ ಆತನ ಎದೆಮೇಲೆ ಮಂಡಿಯೂರಿ ಬಲಾತ್ಕಾರದಿಂದ ಆತನಿಗೆ ಕುಡಿಸಿಬಿಡುತ್ತಾನೊ, ಆತನೇ ಉತ್ತಮ ಡಾಕ್ಟರ್. ಈತನಲ್ಲಿ ತಾಮಸಿಕ ಗುಣ ವ್ಯಕ್ತವಾಗಿದೆ. ಈ ಗುಣದಿಂದರೋಗಿಗೆ ಒಳ್ಳೆಯದಾಗುತ್ತದೆಯೇ ವಿನಾ ಅಪಕಾರವೇನೂ ಆಗುವುದಿಲ್ಲ.
“ಡಾಕ್ಟರುಗಳ ಹಾಗೇ ಆಚಾರ್ಯರಲ್ಲೂ ಮೂರು ವಿಧ. ಅಧಮ ಆಚಾರ್ಯ ಶಿಷ್ಯರಿಗೆ ಉಪದೇಶವಿತ್ತು ಮತ್ತೆ ಅವರು ಬದುಕಿದ್ದಾರೆಯೇ ಸತ್ತರೇ ಎಂಬುದರ ಗೋಜಿಗೇ ಹೋಗುವುದಿಲ್ಲ. ಮಧ್ಯಮ ಆಚಾರ್ಯ ತನ್ನ ಶಿಷ್ಯರ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ತಾನು ಕೊಟ್ಟ ಉಪದೇಶ ಸರಿಯಾಗಿ ಬೇರೂರಲೆಂದು ಅದನ್ನು ಪದೇಪದೇ ಅವರಿಗೆ ತಿಳಿಸುತ್ತಾನೆ. ಬಹಳವಾಗಿ ಅನುನಯ ವಿನಯ ತೋರಿಸುತ್ತಾನೆ. ಪ್ರೀತಿ ತೋರಿಸುತ್ತಾನೆ. ಆದರೆ ಯಾರು ತನ್ನ ಶಿಷ್ಯರು ಯಾವ ವಿಧದಿಂದಲೂ ದಾರಿಗೆ ಬಾರದೆ ಇರುವುದನ್ನು ನೋಡಿ ಕೊನೆಗೆ ಬಲಪ್ರಯೋಗವನ್ನು ಮಾಡಿಯೇಬಿಡುತ್ತಾನೊ, ಆತ ಉತ್ತಮ ಆಚಾರ್ಯ.”
ಒಬ್ಬ ಬ್ರಾಹ್ಮಭಕ್ತ : “ಮಹಾಶಯರೇ, ಭಗವಂತ ಸಾಕಾರನೆ ಅಥವಾ ನಿರಾಕಾರನೆ ?”
ಶ್ರೀರಾಮಕೃಷ್ಣರು: “ಆತನ ಸಂಬಂಧವಾಗಿ, ಆತ ಕೇವಲ ಇದು ಮಾತ್ರವೇ ಎಂದು ಎಂದಿಗೂ ಹೇಳಲಾಗುವುದಿಲ್ಲ. ಆತ ನಿರಾಕಾರನೂ ಹೌದು, ಸಾಕಾರನೂ ಹೌದು. ಭಕ್ತರಿಗಾಗಿ ಆತ ಸಾಕಾರನಾಗುತ್ತಾನೆ. ಜ್ಞಾನಿಗಳಿಗೆ, ಈ ಜಗತ್ತು ಸ್ವಪ್ನವತ್ ಎಂಬ ಅಭಿಮತವುಳ್ಳವರಿಗೆ, ಆತ ನಿರಾಕಾರ. ಭಕ್ತನಿಗೆ ಗೊತ್ತಿದೆ ತಾನೂ ಒಂದು ವಸ್ತು, ಹಾಗೆಯೇ ಈ ಜಗತ್ತು ಕೂಡ. ಆದ್ದರಿಂದ ಭಗವಂತ ಭಕ್ತನಿಗೆ ವ್ಯಕ್ತಿರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಆದರೆ ಜ್ಞಾನಿ, ಉದಾಹರಣೆಗೆ ವೇದಾಂತವಾದಿ, ಕೇವಲ ‘ನೇತಿ’, ‘ನೇತಿ’ ಎಂಬ ವಿಚಾರದಲ್ಲಿ ತೊಡಗುತ್ತಾನೆ. ಈ ರೀತಿಯ ವಿಚಾರದಿಂದ ಜ್ಞಾನಿಯ ಅಂತರ್ದೃಷ್ಟಿಗೆ ಗೋಚರವಾಗುತ್ತದೆ. ‘ಈ “ಅಹಂ” ಎಂಬುದೂ ಮಿಥ್ಯ. ಈ ಜಗತ್ತೂ ಮಿಥ್ಯಾಸ್ವಪ್ನದ ಹಾಗೆ.’ ಬಳಿಕ ಜ್ಞಾನಿ ತನ್ನ ಆಂತರಿಕ ಪ್ರಜ್ಞೆಯಲ್ಲಿ ಬ್ರಹ್ಮನನ್ನು ಸಾಕ್ಷಾತ್ಕಾರಮಾಡಿಕೊಳ್ಳುತ್ತಾನೆ. ಬ್ರಹ್ಮ ಏನು ಎಂಬುದನ್ನು ಆತ ಬಾಯಿಂದ ಹೇಳಲಾರ.
“ನಾನು ಹೇಳಿದ್ದು ಅರ್ಥವಾಯಿತೆ? ಭಾವಿಸಿಕೊ, ಪರಬ್ರಹ್ಮ ದಡವೇ ಇಲ್ಲದ ಸಚ್ಚಿದಾನಂದ ಸಾಗರ ಅಂತ. ಭಕ್ತಿಯ ಶೈತ್ಯದ ದೆಸೆಯಿಂದ ಅಲ್ಲಲ್ಲಿ ನೀರು ಗಡ್ಡೆ ಕಟ್ಟುತ್ತದೆ-ಹಿಮಗಡ್ಡೆಯಾಗುತ್ತದೆ. ಎಂದರೆ ಭಗವಂತ ತನ್ನ ಭಕ್ತರ ಸಲುವಾಗಿ ವ್ಯಕ್ತವಾಗಿ ಆಗಾಗ ಸಾಕಾರರೂಪ ಧರಿಸುತ್ತಾನೆ. ಜ್ಞಾನಸೂರ್ಯ ಉದಯಿಸಿದನೆಂದರೆ ಆ ಹಿಮಗಡ್ಡೆ ಕರಗಿ ಹೋಗುತ್ತದೆ. ಆಗ ಭಗವಂತ ಸಾಕಾರ ಅಂತ ಮನಸ್ಸಿಗೆ ಅನಿಸುವುದೂ ಇಲ್ಲ. ಆತನ ರೂಪ ಕಾಣಿಸುವುದೂ ಇಲ್ಲ. ಆತ ಏನು ಎಂಬುದನ್ನು ಬಾಯಿಂದ ಹೇಳಲಾಗುವುದಿಲ್ಲ. ಆತನನ್ನು ವರ್ಣಿಸಲು ಯಾರು ಉಳಿದುಕೊಂಡಿರುತ್ತಾರೆ? ಯಾರು ವರ್ಣನೆ ಮಾಡಬೇಕಾಗಿತ್ತೊ ಆತನ ಅಸ್ತಿತ್ವವೇ ಉಳಿದುಕೊಂಡಿರುವುದಿಲ್ಲ. ಆತ ‘ಅಹಂ’ ಗಾಗಿ ಎಷ್ಟು ಹುಡುಕಿದರೂ ಅದು ಮಾತ್ರ ದೊರೆಯಲೊಲ್ಲದು.
“ವಿಚಾರದಲ್ಲಿ ಮುಂದುವರಿಯುತ್ತ ಮುಂದುವರಿಯುತ್ತ ಹೋದರೆ ಕೊನೆಗೆ ‘ಅಹಂ’ ಏನೂ ಉಳಿದುಕೊಳ್ಳದು. ಉದಾಹರಣೆಗೆ ಈರುಳ್ಳಿ. ಹೊರಗಿನ ಕೆಂಪು ಸಿಪ್ಪೆ ತೆಗೆದನಂತರ ಮಂದವಾಗಿರುವ ಬಿಳಿ ಸಿಪ್ಪೆ ಕಾಣಿಸಿಕೊಳ್ಳುತ್ತವೆ. ಅವನ್ನು ಒಂದಾದಮೇಲೊಂದು ತೆಗೆಯುತ್ತಾ ಬಂದರೆ ಒಳಗೆ ಏನೂ ಕಾಣಿಸದು.
“ಆ ಅವಸ್ಥೆಯಲ್ಲಿ ಮನುಷ್ಯ ತನ್ನ ‘ಅಹಂ’ ಗಾಗಿ ಎಷ್ಟು ಹುಡುಕಿದರೂ ಅದು ದೊರೆಯಲೊಲ್ಲದು. ಅದನ್ನು ಹುಡುಕುವುದಕ್ಕೆ ಅಲ್ಲಿ ಉಳಿದುಕೊಂಡಿರುವವರು ಯಾರು? ಆ ಅವಸ್ಥೆಯನ್ನು ಮುಟ್ಟಿದಾಗ ಆತ ಆಂತರಿಕ ಪ್ರಜ್ಞೆಯಲ್ಲಿ ಬ್ರಹ್ಮನ ನಿಜಸ್ವರೂಪದ ಸಂಬಂಧವಾಗಿ ಏನು ಅನುಭವ ಪಡೆಯುತ್ತಾನೆ ಎಂಬುದನ್ನು ಯಾರುತಾನೆ ಹೇಳಬಲ್ಲರು? ಒಮ್ಮೆ ಒಂದು ಉಪ್ಪಿನ ಗೊಂಬೆ ಸಮುದ್ರದ ಆಳ ಕಂಡುಹಿಡಿಯಲು ಹೋಯಿತು. ಸಮುದ್ರಕ್ಕೆ ಕಾಲಿಡುವುದೇ ತಡ, ಒಡನೆಯೇ ನೀರಲ್ಲಿ ಕರಗಿಹೋಯಿತು. ಈಗ ಸಮುದ್ರದ ಆಳ ಎಷ್ಟು ಅಂತ ಹೇಳಲು ಯಾರು ಉಳಿದುಕೊಂಡಿದ್ದಾರೆ?
“ಪೂರ್ಣಜ್ಞಾನದ ಲಕ್ಷಣ : ಪೂರ್ಣಜ್ಞಾನ ದೊರೆಯಿತು ಎಂದರೆ ಮನುಷ್ಯ ಮೂಕನಾಗಿಬಿಡುತ್ತಾನೆ. ಆಗ ‘ಅಹಂ’ ರೂಪದ ಉಪ್ಪಿನ ಗೊಂಬೆ ಸಚ್ಚಿದಾನಂದರೂಪದ ಉಪ್ಪಿನ ಸಾಗರದಲ್ಲಿ ಕರಗಿ ಒಂದಾಗಿಬಿಡುತ್ತದೆ. ಬಳಿಕ ಕಿಂಚಿತ್ ಭೇದಬುದ್ಧಿಯೂ ಉಳಿಯದು.”
“ವಿಚಾರಮಾಡುವುದು ಕೊನೆಮುಟ್ಟದವರೆಗೆ. ಜನ ಬಹಳವಾಗಿ ತರ್ಕದಲ್ಲಿ ತೊಡಗುತ್ತಾರೆ. ಮುಟ್ಟಿತು ಎಂದರೆ, ತೆಪ್ಪಗಾಗಿಬಿಡುತ್ತಾರೆ. ಕೊಡ ತುಂಬಿಕೊಂಡಿತು ಎಂದರೆ, ಕೊಡದ ನೀರು ಕೆರೆ ನೀರು ಒಂದಾದವು ಎಂದರೆ, ಬಳಿಕ ಶಬ್ದ ನಿಂತುಹೋಗುತ್ತದೆ. ಕೊಡ ಪೂರ್ಣವಾಗಿ ತುಂಬಿಕೊಳ್ಳದವರೆಗೆ ಮಾತ್ರ ಶಬ್ದ.
“ಹಿಂದಿನ ಕಾಲದಲ್ಲಿ ಜನ ಹೇಳುತ್ತಿದ್ದರು: ಜಹಜು ಸಾಗರದ ಕಪ್ಪು ನೀರಿನ ಕಡೆ ಹೋಯಿತು ಎಂದರೆ ಮತ್ತೆ ಹಿಂದಿರುಗಿ ಬಾರದು ಎಂದು.
“ಅಹಂ” ಎಂಬುದು ಸತ್ತಿತು ಎಂದರೆ, ಎಲ್ಲಾ ಕೋಟಲೆಗಳೂ ಕೊನೆಗಾಣುವುವು. ಬೇಕಾದಷ್ಟು ವಿಚಾರದಲ್ಲಿ ತೊಡಗಬಹುದು. ಆದರೂ ಈ ‘ಅಹಂ’ ಎಂಬುದು ಮಾತ್ರ ಹೋಗದು. ನಿಮ್ಮಂಥವರಿಗೆ, ನನ್ನಂಥವರಿಗೆ ‘ಭಕ್ತನ ಅಹಂ’ ಬಹಳ ಶ್ರೇಯಸ್ಕರ.
“ಭಕ್ತರಿಗೆ ಸಗುಣಬ್ರಹ್ಮ. ಎಂದರೆ ಭಕ್ತ ನಂಬುತ್ತಾನೆ, ಭಗವಂತ ಸಗುಣ, ಆತ ತನಗಾಗಿ ರೂಪವನ್ನು ಧರಿಸಿ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ ಎಂಬುದಾಗಿ. ನಮ್ಮ ಪ್ರಾರ್ಥನೆ ಕೇಳತಕ್ಕವನು ಆತನೇ. ನೀವು ಪ್ರಾರ್ಥನೆ ಮಾಡುತ್ತೀರಲ್ಲ, ಅದೂ ಆತನನ್ನು ಉದ್ದೇಶಿಸಿಯೇ. ನೀವು ವೇದಾಂತವಾದಿಗಳಲ್ಲ, ಜ್ಞಾನಿಗಳಲ್ಲ, ಭಕ್ತರು. ಭಗವಂತನ ಸಾಕಾರ ರೂಪವನ್ನು ಒಪ್ಪಿದರೆ ಒಪ್ಪಿ, ಇಲ್ಲದಿದ್ದರೆ ಬಿಡಿ; ಅದರಿಂದಲೇನು ಆಕಾಶ ಕಳಚಿ ಬಿದ್ದುಹೋಗುವುದಿಲ್ಲ. ಭಗವಂತ ಒಬ್ಬ ವ್ಯಕ್ತಿ, ಆತ ನಮ್ಮ ಪ್ರಾರ್ಥನೆ ಕೇಳುತ್ತಾನೆ, ಸೃಷ್ಟಿಸ್ಥಿತಿಪ್ರಳಯ ಮಾಡುತ್ತಾನೆ, ಆತನಿಗೆ ಅನಂತ ಶಕ್ತಿ ಇದೆ ಎಂಬ ಭಾವನೆ ಇದ್ದುಬಿಟ್ಟರೆ ಅದೇ ಯಥೇಷ್ಟ.
“ಭಕ್ತಿಮಾರ್ಗದಿಂದ ಆತನನ್ನು ಸುಲಭವಾಗಿ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು.”
ಒಬ್ಬ ಬ್ರಾಹ್ಮ ಭಕ್ತ : “ಭಗವಂತನನ್ನು ನೋಡಲು ಸಾಧ್ಯವೇ? ಸಾಧ್ಯವಿದ್ದರೆ ನನ್ನಿಂದೇಕೆ ಆತನನ್ನು ನೋಡಲಾಗುತ್ತಿಲ್ಲ ?”
ಶ್ರೀರಾಮಕೃಷ್ಣರು : “ಸಾಧ್ಯ, ನಿಸ್ಸಂದೇಹವಾಗಿಯೂ ಆತನನ್ನು ನೋಡಬಹುದು. ಆತನ ಸಾಕಾರರೂಪವನ್ನು ನೋಡಬಹುದು, ಆತನ ಅರೂಪವನ್ನೂ ನೋಡಬಹುದು. ಅದನ್ನು ನಾನು ನಿನಗೆ ಹೇಗೆ ವಿವರಿಸಲಿ?”
ಬ್ರಾಹ್ಮ ಭಕ್ತ : “ಏನು ಮಾಡಿದರೆ ಆತನ ದರ್ಶನವನ್ನು ಪಡೆದುಕೊಳ್ಳಬಹುದು?”
ಶ್ರೀರಾಮಕೃಷ್ಣರು: “ವ್ಯಾಕುಲನಾಗಿ ಆತನ ದರ್ಶನಕ್ಕಾಗಿ ಅಳಬಲ್ಲೆಯಾ? ಜನ ಮಕ್ಕಳಿಗಾಗಿ, ಹೆಂಡತಿಗಾಗಿ, ಹಣಕ್ಕಾಗಿ ಬಿಂದಿಗೆ ತುಂಬ ಕಣ್ಣೀರು ಸುರಿಸುತ್ತಾರೆ. ಆದರೆ ಭಗವಂತನಿಗಾಗಿ ಯಾರು ಅಳುತ್ತಾರೆ? ಮಗು ಗಿಲಿಕೆಯಲ್ಲೇ ಮಗ್ನವಾಗಿ ತಾಯಿಯನ್ನೇ ಮರೆತಿರುವಾಗ ಆಕೆ ಅಡಿಗೆ ಮತ್ತು ಉಳಿದ ಮನೆಕೆಲಸ ಇವನ್ನೆಲ್ಲಾ ಮಾಡುತ್ತಿರುತ್ತಾಳೆ. ಯಾವಾಗ ಮಗುವಿಗೆ ಗಿಲಿಕೆ, ಉರುಟುಗೋಲು ಯಾವುದೂ ಬೇಡವಾಗಿ, ಅವನ್ನು ಬಿಸಾಡಿ ಚೀತ್ಕಾರಮಾಡುತ್ತ ಅಳಲಾರಂಭಿಸುವುದೊ, ಆಗ ತಾಯಿ ಅನ್ನದ ತಪ್ಪಲೆ ಕೆಳಗಿಳಿಸಿ ಓಡಿ ಓಡಿ ಬಂದು ಮಗುವನ್ನು ಕಂಕುಳಿಗೆ ಹಾಕಿಕೊಳ್ಳುತ್ತಾಳೆ.”
ಬ್ರಾಹ್ಮ ಭಕ್ತ : “ಮಹಾಶಯರೆ, ಭಗವಂತನ ಸ್ವರೂಪದ ಸಂಬಂಧವಾಗಿ ನಾನಾ ಅಭಿಮತಗಳಿವೆಯಲ್ಲ ಏಕೆ? ಕೆಲವರು ಹೇಳುತ್ತಾರೆ, ಭಗವಂತ ಸಾಕಾರ ಅಂತ, ಇನ್ನು ಕೆಲವರು ಹೇಳುತ್ತಾರೆ ಆತ ನಿರಾಕಾರ ಅಂತ. ಇದೂ ಅಲ್ಲದೆ ಈ ಸಾಕಾರವಾದಿಗಳು ಹೇಳುತ್ತಾರೆ, ಆತನಿಗೆ ನಾನಾ ರೂಪಗಳೂ ಇವೆ ಎಂಬುದಾಗಿ. ಇಷ್ಟೊಂದು ಗೊಂದಲವೆಲ್ಲ ಏಕೆ?”
ಶ್ರೀರಾಮಕೃಷ್ಣರು: “ಭಗವಂತ ಭಕ್ತನಿಗೆ ಯಾವ ರೂಪದಿಂದ ಕಾಣಿಸಿಕೊಳ್ಳುತ್ತಾನೋ ಭಕ್ತ ಆ ರೂಪದ ಸಂಬಂಧವಾಗಿಯೇ ಭಾವಿಸುತ್ತಾನೆ. ವಾಸ್ತವಿಕವಾಗಿ ಯಾವ ಗೊಂದಲವೂ ಇಲ್ಲ. ಹೇಗಾದರೂ ಮಾಡಿ ಆತನ ಸಾಕ್ಷಾತ್ಕಾರ ಪಡೆದುಕೊಂಡುಬಿಟ್ಟಿದ್ದೇ ಆದರೆ ಬಳಿಕ ಆತ ಎಲ್ಲವನ್ನೂ ತಿಳಿಸಿಕೊಟ್ಟುಬಿಡುತ್ತಾನೆ. ಆ ಕಡೆಗೆ ನೀನು ಇನ್ನೂ ಒಂದು ಹೆಜ್ಜೆಯನ್ನು ಹಾಕಿಯೇ ಇಲ್ಲ-ಅಂಥಾದ್ದರಲ್ಲಿ ಭಗವಂತನ ಸಂಬಂಧವಾಗಿ ಎಲ್ಲವನ್ನೂ ತಿಳಿದುಕೊಂಡು ಬಿಡಲು ಹೇಗೆ ಸಾಧ್ಯ?
“ಒಂದು ಕತೆ ಕೇಳು. ಒಮ್ಮೆ ಒಬ್ಬ ಒಂದು ತೋಪಿನ ಕಡೆ ಹೋಗಿದ್ದ. ಅಲ್ಲಿ ಒಂದು ಮರದ ಮೇಲೆ ಒಂದು ಪ್ರಾಣಿ ಕಾಣಿಸಿಕೊಂಡಿತು. ಆತ ಬಂದು ಇನ್ನೊಬ್ಬನಿಗೆ ಹೇಳಿದ: ‘ನೋಡು, ಆ ಮರದ ಮೇಲೆ ಒಂದು ಕೆಂಪು ಬಣ್ಣದ ಪ್ರಾಣಿಯನ್ನು ನೋಡಿ ಬಂದೆ.’ ಅವನು ಹೇಳಿದ : ‘ನಾನು ಅಲ್ಲಿ ಹೋಗಿದ್ದಾಗ, ನಾನೂ ಅದನ್ನು ನೋಡಿ ಬಂದಿದ್ದೇನೆ; ಅದು ಕೆಂಪು ಏಕಾದೀತು ? ಹಸುರು,’ ಅವರ ಹತ್ತಿರ ನಿಂತಿದ್ದ ಮತ್ತೊಬ್ಬ ಹೇಳಿದ : ‘ಇಲ್ಲ ಇಲ್ಲ, ಅದನ್ನು ನಾನೂ ನೋಡಿದ್ದೇನೆ. ಅದರ ಬಣ್ಣ ಹಳದಿ.’ ಹೀಗೆ ಅಲ್ಲಿ ನಿಂತಿದ್ದವರು ಅದರ ಬಣ್ಣ ಬೂದು, ನೇರಳೆ ಹಣ್ಣಿನ ಬಣ್ಣ, ನೀಲಿ ಇತ್ಯಾದಿಯಾಗಿ ಹೇಳಲಾರಂಭಿಸಿದರು. ಕೊನೆಗೆ ಒಬ್ಬರಿಗೊಬ್ಬರಿಗೆ ಜಗಳ ಹತ್ತಿಕೊಂಡುಬಿಟ್ಟಿತು. ಇದರ ಸಂಬಂಧವಾಗಿ ಒಂದು ಇತ್ಯರ್ಥಕ್ಕೆ ಬರಲು ಎಲ್ಲರೂ ಆ ಮರದ ಹತ್ತಿರಕ್ಕೆ ಹೋದರು. ಒಬ್ಬ ಮನುಷ್ಯ ಆ ಮರದ ಕೆಳಗೆ ಕುಳಿತುಕೊಂಡಿದ್ದುದು ಅವರ ಕಣ್ಣಿಗೆ ಬಿತ್ತು. ಆತನನ್ನು ಆ ಪ್ರಾಣಿಯ ಬಣ್ಣದ ಸಂಬಂಧವಾಗಿ ಕೇಳಲಾಗಿ ಆತ ಹೇಳಿದ: ‘ನಾನು ಈ ಮರದ ಕೆಳಗೇ ವಾಸಿಸುತ್ತಿದ್ದೇನೆ. ಆ ಪ್ರಾಣಿಯ ಸ್ವರೂಪ ನನಗೆ ಬಹಳ ಚೆನ್ನಾಗಿ ಗೊತ್ತಿದೆ. ನೀವು ಪ್ರತಿಯೊಬ್ಬರು ಹೇಳುತ್ತಿರುವುದೂ ಸತ್ಯವೆ. ಕೆಲವು ವೇಳೆ ಅದು ಕೆಂಪಾಗಿ, ಇನ್ನು ಕೆಲವು ವೇಳೆ ಹಸುರಾಗಿ, ಮತ್ತೆ ಕೆಲವು ವೇಳೆ ಹಳದಿಯಾಗಿ, ಮತ್ತೂ ಕೆಲವು ವೇಳೆ ನೀಲಿಯಾಗಿ, ಹೀಗೇ ಇನ್ನೂ ಏನೇನೋ ಬಣ್ಣಗಳಾಗಿ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಗೋಸುಂಬೆ ಅಂತ ಹೆಸರು. ಒಂದೊಂದು ವೇಳೆ ಅದಕ್ಕೆ ಯಾವ ಬಣ್ಣವೂ ಇರುವುದೇ ಇಲ್ಲ. ಕೆಲವು ವೇಳೆ ಅದು ಸಗುಣ, ಇನ್ನು ಕೆಲವು ವೇಳೆ ನಿರ್ಗುಣ.’
“ಇದೇ ರೀತಿ ಯಾರು ಸರ್ವದಾ ಭಗವಚ್ಚಿಂತನೆ ಮಾಡುತ್ತಾ ಇರುತ್ತಾರೋ ಆತನಿಗೆ ಗೊತ್ತಾಗುತ್ತದೆ ಆತನ ನಿಜಸ್ವರೂಪ ಏನು ಎಂಬುದು. ಆತನಿಗೆ ಮಾತ್ರವೇ ಕೇವಲ ಗೊತ್ತಿರುತ್ತದೆ, ಭಗವಂತ ನಾನಾ ರೂಪಗಳಿಂದ, ನಾನಾ ಭಾವಗಳಿಂದ ಕಾಣಿಸಿಕೊಳ್ಳುತ್ತಾನೆ-ಆತ ಸಗುಣನೂ ಹೌದು, ನಿರ್ಗುಣನೂ ಹೌದು ಎಂಬುದು. ಕೇವಲ ಆ ಮರದ ಕೆಳಗೆ ವಾಸಿಸುತ್ತಿರುವವನಿಗೆ ಮಾತ್ರ ಗೊತ್ತಿರುತ್ತದೆ, ಗೋಸುಂಬೆ ವಿವಿಧ ಬಣ್ಣಗಳನ್ನು ಧರಿಸುತ್ತದೆ ಮತ್ತು ಕೆಲವು ವೇಳೆ ಅದಕ್ಕೆ ಯಾವ ಬಣ್ಣವೂ ಇರದು ಎಂಬುದು. ಉಳಿದವರು ಬರಿದೆ ವಾದ-ವಿವಾದ, ಜಗಳ-ಬವರ ಇವುಗಳಲ್ಲಿ ತೊಡಗಿ ಸತ್ತು ಸುಣ್ಣವಾಗಿ ಹೋಗುತ್ತಾರೆ.
“ಕಬೀರ ಹೇಳುತ್ತಿದ್ದ : ‘ನಿರಾಕಾರ ನನ್ನ ತಂದೆ, ಸಾಕಾರ ನನ್ನ ತಾಯಿ.’
“ಭಗವಂತ ಭಕ್ತವತ್ಸಲ. ಭಕ್ತ ಯಾವ ರೂಪವನ್ನು ಪ್ರೀತಿಸುತ್ತಾನೊ ಆ ರೂಪದಿಂದ ಆತ ಭಕ್ತನಿಗೆ ಕಾಣಿಸಿಕೊಳ್ಳುತ್ತಾನೆ. ಪುರಾಣದಲ್ಲಿ ಹೇಳಿದೆ : ವೀರಭಕ್ತ ಹನುಮಂತನಿಗಾಗಿ ಭಗವಂತ ರಾಮರೂಪವನ್ನು ಧರಿಸಿದ ಎಂಬುದಾಗಿ.
“ವೇದಾಂತವಿಚಾರದ ಮುಂದೆ ಭಗವಂತನ ರೂಪಗಳೆಲ್ಲ ಗಾಳಿಯಲ್ಲಿ ಹಾರಿಹೋಗಿ ಬಿಡುತ್ತದೆ. ಆದರೆ ಕೊನೆಯ ಸಿದ್ಧಾಂತ: ಬ್ರಹ್ಮನೇ ಸತ್ಯ; ನಾಮರೂಪಯುಕ್ತ ಈ ಜಗತ್ತು ಮಿಥ್ಯಾ. ‘ನಾನು ಭಕ್ತ’ ಎಂಬ ಭಾವನೆ ಭಕ್ತನಲ್ಲಿ ಇರುವವರೆಗೆ ಆತನಿಗೆ ಸಾಧ್ಯವಾಗುತ್ತದೆ ಭಗವಂತನನ್ನು ದರ್ಶನಮಾಡಲು, ಆತನನ್ನು ಒಬ್ಬ ವ್ಯಕ್ತಿ ಎಂದು ಭಾವಿಸಲು. ವಿಚಾರದೃಷ್ಟಿಯಿಂದ ನೋಡಿದರೆ ಭಕ್ತನ ‘ಅಹಂ’ ಎಂಬುದು ಆತನನ್ನು ಭಗವಂತನಿಂದ ಒಂದು ಸ್ವಲ್ಪ ದೂರದಲ್ಲೇ ನಿಲ್ಲಿಸಿಬಿಟ್ಟಿರುತ್ತದೆ. ಕೃಷ್ಣನ ಅಥವಾ ಕಾಳಿಯ ವಿಗ್ರಹ ಮೂರುವರೆ ಮೊಳ ಮಾತ್ರ ಇದೆಯಲ್ಲ ಏಕೆ ಗೊತ್ತೆ ? ಸೂರ್ಯ ದೂರದಲ್ಲಿರುವುದರಿಂದ ಚಿಕ್ಕದಾಗಿ ಕಾಣುತ್ತಾನೆ. ಹತ್ತಿರ ಹೋಗಿ ನೋಡು, ಆತ ಎಷ್ಟೊಂದು ದೊಡ್ಡವನು, ಗ್ರಹಿಸಲೇ ಸಾಧ್ಯವಾಗುವುದಿಲ್ಲ. ಮತ್ತೆ ನೋಡು, ಕಾಳಿಯ ಮತ್ತು ಕೃಷ್ಣನ ವಿಗ್ರಹ ಕಪ್ಪಾಗಿವೆಯಲ್ಲ ಏಕೆ ? ಅದಕ್ಕೂ ಕಾರಣ, ದೂರವೇ. ಉದಾಹರಣೆಗೆ ಸಮುದ್ರದ ನೀರು ಅದು ದೂರದಿಂದ ಹಸುರು, ನೀಲಿ ಅಥವಾ ಕಪ್ಪು ಬಣ್ಣದ್ದಾಗಿ ಕಾಣಿಸಿಕೊಳ್ಳುತ್ತದೆ. ಹತ್ತಿರ ಹೋಗಿ ಕೈಯಲ್ಲಿ ಒಂದು ಸ್ವಲ್ಪ ನೀರು ತೆಗೆದುಕೊಂಡು ನೋಡು. ಅದಕ್ಕೆ ಯಾವ ಬಣ್ಣವೂ ಇಲ್ಲ. ಆಕಾಶ ದೂರದಿಂದ ನೀಲವರ್ಣದ್ದಾಗಿ ಕಾಣುತ್ತದೆ. ಹತ್ತಿರದಲ್ಲಿ ನೋಡು, ಅದಕ್ಕೆ ಯಾವ ಬಣ್ಣವೂ ಇಲ್ಲ.
“ಅದಕ್ಕಾಗಿಯೇ ನಾನು ಹೇಳುವುದು, ವೇದಾಂತ ವಿಚಾರದ ದೃಷ್ಟಿಯಿಂದ ಬ್ರಹ್ಮ ನಿರ್ಗುಣ ಎಂಬುದಾಗಿ. ಆತನ ನೈಜರೂಪ ಏನು ಎಂಬುದನ್ನು ಬಾಯಿಂದ ವರ್ಣನೆ ಮಾಡಲಾಗುವುದಿಲ್ಲ. ಆದರೆ ನಿನ್ನ ವ್ಯಕ್ತಿತ್ವ ಸತ್ಯವಾಗಿರುವವರೆಗೆ ಜಗತ್ತೂ ಸತ್ಯ. ಭಗವಂತನ ನಾನಾ ರೂಪಗಳೂ ಸತ್ಯ! ಭಗವಂತ ಒಬ್ಬ ವ್ಯಕ್ತಿ ಎಂಬ ಭಾವನೆಯೂ ಸತ್ಯ.
“ನಿಮ್ಮ ಮಾರ್ಗ ಭಕ್ತಿಮಾರ್ಗ. ಇದು ತುಂಬ ಒಳ್ಳೆಯದೆ-ಬಹಳ ಸಹಜವಾದ ಮಾರ್ಗ. ಅನಂತವಾದ ಭಗವಂತನನ್ನು ಯಾರು ತಾನೆ ಅರಿತುಕೊಳ್ಳಬಲ್ಲರು? ಆತನನ್ನು ಅರಿತುಕೊಳ್ಳುವ ಆವಶ್ಯಕತೆ ತಾನೆ ಏನಿದೆ? ಈ ದುರ್ಲಭ ಮಾನುಷಜನ್ಮ ಪಡೆದನಂತರ ನಮಗೆ ಅವಶ್ಯವಾಗಿ ಬೇಕಾಗಿರುವುದು ಆತನ ಪಾದಪದ್ಮಗಳಲ್ಲಿ ಭಕ್ತಿ.
“ನನ್ನ ದೇಹ ಅಡಗಿಸಲು ಒಂದು ಲೋಟ ನೀರೇ ಸಾಕಾಗಿರುವಾಗ ಕೆರೆಯಲ್ಲಿ ಎಷ್ಟು ಕೊಡ ನೀರಿದೆ ಎಂಬುದನ್ನು ಅಳೆದುನೋಡುವ ಆವಶ್ಯಕತೆ ತಾನೆ ಏನಿದೆ ನನಗೆ? ಅರ್ಧ ಸೀಸೆ ಮದ್ಯದಿಂದಲೇ ನನಗೆ ಮತ್ತು ಬರುವಾಗ, ಇನ್ನು ಸಾರಾಯಿ ಅಂಗಡಿಯಲ್ಲಿ ಎಷ್ಟು ಪೀಪಾಯಿ ಮದ್ಯ ಇದೆ ಎಂಬುದರ ಲೆಕ್ಕಾಚಾರವೇಕೆ ನನಗೆ? ಅನಂತನನ್ನು ಅರಿತುಕೊಳ್ಳಬೇಕಾದ ಆವಶ್ಯಕತೆ ತಾನೆ ಏನಿದೆ?”
“ವೇದದಲ್ಲಿ ಬ್ರಹ್ಮಜ್ಞಾನಿಯ ವಿವಿಧ ಮಾನಸಿಕ ಅವಸ್ಥೆಗಳ ಸಂಬಂಧವಾಗಿ ವರ್ಣನೆ ಇದೆ. ಜ್ಞಾನಮಾರ್ಗ ಬಹಳ ಕಠಿಣಮಾರ್ಗ. ವಿಷಯಬುದ್ಧಿ-ಕಾಮಕಾಂಚನಾಸಕ್ತಿ ಲೇಶಮಾತ್ರವಿದ್ದರೂ ಬ್ರಹ್ಮಜ್ಞಾನ ದೊರಕುವುದಿಲ್ಲ. ಈ ಮಾರ್ಗ ಕಲಿಯುಗಕ್ಕಲ್ಲ.
“ವೇದ ಸಪ್ತಭೂಮಿಕೆಗಳ ಸಂಬಂಧವಾಗಿ ಹೇಳುತ್ತದೆ. ಈ ಏಳು ಭೂಮಿಕೆಗಳೂ ಮನಸ್ಸು ವಾಸಮಾಡುವ ಸ್ಥಾನಗಳು. ಸಂಸಾರದಲ್ಲಿ ಮನಸ್ಸು ಇರುವವರೆಗೆ ಅದು ಲಿಂಗ, ಗುಹ್ಯ, ನಾಭಿ ಈ ಭೂಮಿಕೆಗಳಲ್ಲಿ ನೆಲಸಿರುತ್ತದೆ. ಆಗ ಮನಸ್ಸಿಗೆ ಊರ್ಧ್ವದೃಷ್ಟಿ ಇರದು-ಕಾಮಕಾಂಚನಗಳಲ್ಲೇ ಆಸಕ್ತವಾಗಿರುತ್ತದೆ. ಮನಸ್ಸಿನ ನಾಲ್ಕನೆ ಭೂಮಿಕೆ ಹೃದಯ. ಇಲ್ಲಿ ಮನಸ್ಸು ನೆಲಸಿದಾಗ ಆತ್ಮಜಾಗೃತಿಗೊಳ್ಳುತ್ತದೆ; ಸುತ್ತಲೂ ಜ್ಯೋತಿ ಕಾಣಿಸಿಕೊಳ್ಳಲಾರಂಭಿಸುತ್ತದೆ. ಆ ಅಂತಸ್ತಿನಲ್ಲಿರುವ ವ್ಯಕ್ತಿ ಆ ಭಗವಜ್ಜ್ಯೋತಿಯನ್ನು ನೋಡಿ ಆಶ್ಚರ್ಯಚಕಿತನಾಗಿ ಹೇಳುತ್ತಾನೆ: ‘ಆಹ! ಏನಿದು? ಏನಿದು?’ ಆತನ ಮನಸ್ಸು ಕೆಳಕ್ಕೆ ಇಳಿದುಹೋಗುವುದಿಲ್ಲ. ಸಂಸಾರದ ಕಡೆಗೆ ಇಳಿದುಹೋಗುವುದಿಲ್ಲ.
“ಮನಸ್ಸಿನ ಐದನೇ ಭೂಮಿಕೆ ಕಂಠ. ಯಾರ ಮನಸ್ಸು ಕಂಠದವರೆಗೆ ಏರಿದೆಯೊ ಅವರ ಅವಿದ್ಯೆ ಅಜ್ಞಾನ ಎಲ್ಲಾ ನಾಶವಾಗಿಹೋಗಿ ಅವರಿಗೆ ಭಗವಂತನ ಮಾತುಕತೆ ವಿನಾ ಬೇರೆ ಯಾವ ಮಾತುಕತೆಯನ್ನೂ ಕೇಳಲು ಇಚ್ಛೆಯಾಗುವುದಿಲ್ಲ. ಆಡಲೂ ಇಚ್ಛೆಯಾಗುವುದಿಲ್ಲ. ಜನರು ಬೇರೆ ವಿಧದ ಮಾತು ಎತ್ತಿದರೆ ಅವರು ಅಲ್ಲಿಂದ ಎದ್ದುಹೋಗುತ್ತಾರೆ.
“ಮನಸ್ಸಿನ ಆರನೇ ಭೂಮಿಕೆ ಹಣೆ. ಮನಸ್ಸು ಇಲ್ಲಿಗೆ ಬಂದರೆ ಹಗಲೂ ಇರುಳೂ ಭಗವಂತನ ರೂಪದರ್ಶನ ಆಗುತ್ತದೆ. ಆಗಲೂ ಕಿಂಚಿತ್ ‘ಅಹಂ’ ಉಳಿದುಕೊಂಡಿರುತ್ತದೆ. ಆ ವ್ಯಕ್ತಿ ಆ ನಿರುಪಮ ರೂಪವನ್ನು ದರ್ಶನಮಾಡಿ ಉನ್ಮತ್ತನಾಗಿಬಿಟ್ಟು ಆ ರೂಪವನ್ನು ಸ್ಪರ್ಶ ಮಾಡಲು ಆಲಿಂಗನಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಜಯಶೀಲನಾಗುವುದಿಲ್ಲ. ಇದು ಲಾಟೀನಿನಲ್ಲಿರುವ ಬೆಳಕಿನ ಹಾಗೆ. ಮನಸ್ಸಿಗೆ ಅನ್ನಿಸುತ್ತದೆ, ಅದನ್ನು ಇನ್ನೇನು ಮುಟ್ಟಿಬಿಡೋಣ, ಮುಟ್ಟಿಬಿಡೋಣ ಎಂದು. ಆದರೆ ಅದಕ್ಕೆ ಗಾಜು ಹಾಕಿರುವುದರಿಂದ ಸಾಧ್ಯವಾಗುವುದಿಲ್ಲ.
“ಶಿರಪ್ರದೇಶವೇ ಏಳನೆ ಭೂಮಿಕೆ. ಇಲ್ಲಿಗೆ ಮನಸ್ಸು ಬಂದಿತೆಂದರೆ ಸಮಾಧಿಯುಂಟಾಗುತ್ತದೆ. ಆಗ ಬ್ರಹ್ಮಜ್ಞಾನಿಗೆ ಬ್ರಹ್ಮನ ಪ್ರತ್ಯಕ್ಷ ದರ್ಶನ ದೊರೆಯುತ್ತದೆ. ಆದರೆ ಆ ಅವಸ್ಥೆಯನ್ನು ಹೊಂದಿದನಂತರ ಆತನ ಶರೀರ ಹೆಚ್ಚು ದಿನ ಬದುಕಿರಲಾರದು. ಯಾವಾಗಲೂ ಬಾಹ್ಯಪ್ರಜ್ಞೆ ಇಲ್ಲದವನಾಗಿಯೇ ಇರುತ್ತಾನೆ. ಆತನ ಕೈಯಲ್ಲಿ ಏನು ತಿನ್ನುವುದಕ್ಕೂ ಸಾಧ್ಯವಾಗುವುದಿಲ್ಲ. ಬಾಯಿಗೆ ಹಾಲು ಹಾಕಿದರೆ ಅದು ಕಟಬಾಯಿಂದ ಹೊರಕ್ಕೆ ಹರಿದು ಬಂದುಬಿಡುತ್ತದೆ. ಆ ಅವಸ್ಥೆಯನ್ನು ಹೊಂದಿದ ನಂತರ ಇಪ್ಪತ್ತೊಂದು ದಿನದಲ್ಲಿ ದೇಹತ್ಯಾಗವಾಗಿಬಿಡುತ್ತದೆ. ಇದೇ ಬ್ರಹ್ಮಜ್ಞಾನಿಯ ಅವಸ್ಥೆ. ನಿಮ್ಮದು ಭಕ್ತಿಮಾರ್ಗ. ಅದು ಬಹಳ ಒಳ್ಳೆಯದು ಮತ್ತು ಸಹಜವಾದ್ದು.
“ಒಮ್ಮೆ ಒಬ್ಬ ನನ್ನನ್ನು ಕೇಳಿದ: ‘ಮಹಾಶಯರೆ, ನನಗೆ ಸಮಾಧಿಯನ್ನು ಕಲಿಸಿಕೊಡುವುದು ನಿಮಗೆ ಸಾಧ್ಯವೆ? (ಎಲ್ಲರೂ ನಗುತ್ತಿದ್ದಾರೆ.)
“ಸಮಾಧಿ ದೊರೆಯಿತು ಎಂದರೆ ಎಲ್ಲಾ ಕರ್ಮಗಳು ನಮ್ಮನ್ನು ಬಿಟ್ಟು ಹೊರಟು ಹೋಗುತ್ತವೆ. ಪೂಜೆ, ಜಪತಪಾದಿ ಕರ್ಮ, ಪ್ರಾಪಂಚಿಕ ಕರ್ಮ ಎಲ್ಲಾ ಬಿಟ್ಟು ಹೊರಟು ಹೋಗುತ್ತವೆ. ಮೊದಮೊದಲು ಕರ್ಮದ ಗಡಿಬಿಡಿ ಹೆಚ್ಚಾಗಿಯೇ ಇರುತ್ತದೆ. ಭಗವಂತನ ಕಡೆಗೆ ಮುಂದುವರಿದಷ್ಟೂ ಕರ್ಮದ ಆಡಂಬರವೂ ಕಡಿಮೆಕಡಿಮೆಯಾಗುತ್ತಾ ಬರುತ್ತದೆ. ಅಷ್ಟೇ ಅಲ್ಲ, ಆತನ ನಾಮಗುಣಕೀರ್ತನೆಯೂ ಕೊನೆಗೆ ಸಾಧ್ಯವಿಲ್ಲದ್ದಾಗಿಬಿಡುತ್ತದೆ. (ಶಿವನಾಥನಿಗೆ) ನೀನು ಈ ಸಭೆಗೆ ಬರುವ ಮುನ್ನ ನಿನ್ನ ನಾಮಗುಣಕೀರ್ತನೆ ಇಲ್ಲಿ ಬಹಳವಾಗಿ ನಡೆಯುತ್ತಿತ್ತು. ನೀನೇ ಪ್ರತ್ಯಕ್ಷವಾಗಿ ಇಲ್ಲಿಗೆ ಬಂದೆಯೊ ಇಲ್ಲವೊ ಒಡನೆ ಅದೆಲ್ಲವೂ ನಿಂತುಹೋದುವು. ಈಗ ಕೇವಲ ನಿನ್ನ ದರ್ಶನದಿಂದಲೇ ಜನರಿಗೆ ಆನಂದ ಆಗುತ್ತದೆ. ಅವರು ಕೇವಲ ಹೇಳುತ್ತಿದ್ದಾರೆ: ‘ಇಗೋ, ಇಲ್ಲಿ ಶಿವನಾಥ!’ ನಿನ್ನ ಸಂಬಂಧವಾದ ಉಳಿದ ಮಾತುಕತೆಗಳೆಲ್ಲಾ ನಿಂತುಹೋಗಿಬಿಟ್ಟುವು.
“ನನಗೀ ಅವಸ್ಥೆ ಬಂದನಂತರ ತರ್ಪಣ ಕೊಡೋಣ ಅಂತ ಗಂಗಾನದಿಗೆ ಹೋದೆ. ಕೈಯಲ್ಲಿ ನೀರು ತೆಗೆದುಕೊಳ್ಳೋಣ ಎಂದರೆ ಬೆರಳ ಸಂದಿನಿಂದ ನೀರೆಲ್ಲಾ ಸೋರಿಹೋಗುತ್ತಿದೆ. ಆಗ ಅಳುತ್ತಾ ಅಳುತ್ತಾ ಹಲಧಾರಿಯನ್ನು ಕೇಳಿದೆ: “ಸೋದರ, ಏಕೆ ಹೀಗಾಗುತ್ತಿದೆ?” ಹಲಧಾರಿ ತಿಳಿಸಿದ: ‘ಇದಕ್ಕೇ “ಗಳಿತ ಹಸ್ತ” ಅಂತ ಕರೆಯುತ್ತಾರೆ.’ ಭಗವಂತನ ದರ್ಶನ ದೊರಕಿದ ನಂತರ ತರ್ಪಣಾದಿ ಕರ್ಮ ಸಾಧ್ಯವಿಲ್ಲ.
“ಕೀರ್ತನೆಯ ಶುರುವಿನಲ್ಲಿ ಭಕ್ತ ಮೊದಮೊದಲು ಹಾಡುತ್ತಿರುತ್ತಾನೆ: ‘ನಿತಾಯಿ ನಮ್ಮ ಮದಿಸಿದ ಆನೆ! ನಿತಾಯಿ ನಮ್ಮ ಮದಿಸಿದ ಆನೆ!’ ಎಂಬುದಾಗಿ. ಭಾವ ಗಾಢವಾಯಿತು ಎಂದರೆ, ಕೇವಲ ಹೇಳುತ್ತಿರುತ್ತಾನೆ : ‘ಆನೆ! ಆನೆ!’ ಎಂದು. ಕೊನೆಗೆ ‘ಆ!’ ಎಂದು ಹೇಳುತ್ತ ಹೇಳುತ್ತ ಭಾವಸಮಾಧಿಸ್ಥನಾಗುತ್ತಾನೆ. ಆಗ ಅದುವರೆಗೆ ಅಷ್ಟೊಂದಾಗಿ ಹಾಡುತ್ತಿದ್ದ ವ್ಯಕ್ತಿ ಮೂಕನಾಗಿಬಿಡುತ್ತಾನೆ.
“ಬ್ರಾಹ್ಮಣಸಂತರ್ಪಣೆಯ ಸಮಯದಲ್ಲಿ ಮೊದಮೊದಲು ಬಹಳವಾಗಿ ಗದ್ದಲ ಕೇಳಿಬರುತ್ತದೆ. ಎಲ್ಲರ ಮುಂದೆಯೂ ಊಟದ ಎಲೆ ಬಿತ್ತು ಎಂದರೆ ಗದ್ದಲ ಸ್ವಲ್ಪ ಕಡಿಮೆಯಾಗಿ ‘ಅನ್ನ ಸಾರು ತೆಗೆದುಕೊಂಡು ಬನ್ನಿ! ತುಪ್ಪ ತೆಗೆದುಕೊಂಡು ಬನ್ನಿ’ ಎಂಬ ಶಬ್ದ ಕೇಳಿಬರುತ್ತದೆ. ಅನ್ನ ಸಾರು ಊಟ ಮಾಡಲು ಶುರುಮಾಡಿದ ಒಡನೆ ಮುಕ್ಕಾಲು ಭಾಗ ಶಬ್ದ ಅಡಗಿ ಹೋಗುತ್ತದೆ. ಬಳಿಕ ಮೊಸರು ತಂದು ಬಡಿಸಿದಾಗ ಕೇವಲ ‘ಸುಪ್, ಸುಪ್’ ಎಂಬ ಶಬ್ದ. (ಎಲ್ಲರೂ ನಗುತ್ತಾರೆ.) ಬಳಿಕ ಬಹುಮಟ್ಟಿಗೆ ಶಬ್ದವೇ ಇಲ್ಲ ಅಂತ ಹೇಳಬಹುದು. ಅನಂತರ ನಿದ್ರೆ, ಆಗ ಸಂಪೂರ್ಣ ನಿಶ್ಶಬ್ದ.
“ಅದಕ್ಕಾಗಿಯೇ ನಾನು ಹೇಳುವುದು ಆಧ್ಯಾತ್ಮಜೀವನದ ಆರಂಭದಲ್ಲಿ ಕರ್ಮಗಳ ಗಡಿಬಿಡಿ ಬಹಳವಾಗಿ ಇರುತ್ತದೆ. ಭಗವಂತನ ಕಡೆಗೆ ಮುಂದುವರಿದಷ್ಟೂ ಕರ್ಮ ಕಡಮೆ ಕಡಮೆಯಾಗಿಹೋಗುತ್ತದೆ. ಕಟ್ಟಕಡೆಗೆ ಕರ್ಮತ್ಯಾಗ ಉಂಟಾಗಿ ಸಮಾಧಿ ದೊರೆಯುತ್ತದೆ.
“ಸಮಾಧಿ ದೊರೆತನಂತರ ಪ್ರಾಯಿಕವಾಗಿ ಶರೀರ ಬದುಕಿಕೊಂಡಿರುವುದಿಲ್ಲ. ಕೆಲಕೆಲವರ ಶರೀರ ಲೋಕಶಿಕ್ಷಣಾರ್ಥವಾಗಿ ಬದುಕಿಕೊಂಡಿರುತ್ತದೆ. ಉದಾಹರಣೆಗೆ ನಾರದಾದಿಗಳು. ಚೈತನ್ಯದೇವನಂಥ ಅವತಾರಪುರುಷರ ದೇಹವೂ ಬದುಕಿಕೊಂಡಿರುತ್ತದೆ. ಬಾವಿ ತೋಡಿ ಮುಗಿಸಿದೊಡನೆ ಸಾಮಾನ್ಯವಾಗಿ ಜನ ಗುದ್ದಲಿ, ಕುಕ್ಕೆ ಎಲ್ಲವನ್ನೂ ಬಿಸಾಡಿಬಿಡುತ್ತಾರೆ. ಆದರೆ ಕೆಲವರು ಪರರಿಗೆ ಉಪಕಾರವಾಗಲಿ ಎಂದು ಅವನ್ನು ಸುರಕ್ಷಿತವಾಗಿ ಇಡುತ್ತಾರೆ. ಇದೇ ರೀತಿ ಮಹಾಪುರುಷರು ಜೀವರ ದುಃಖನಿವಾರಣೆ ಮಾಡಲು ಕಾತರರಾಗಿ ತಮ್ಮ ಶರೀರವನ್ನು ಉಳಿಸಿಕೊಂಡಿರುತ್ತಾರೆ. ಇವರು ತಮಗೆ ಜ್ಞಾನ ದೊರೆತು ಬಿಟ್ಟರೆ ಸಾಕು ಎಂಬತಕ್ಕ ಸ್ವಾರ್ಥಿಗಳಲ್ಲ. ಸ್ವಾರ್ಥಿಗಳ ಸ್ವಭಾವ ಏನೆಂಬುದು ನಿಮಗೆ ಚೆನ್ನಾಗಿ ಗೊತ್ತೇ ಇದೆ. ಒಂದು ಕಡೆ ಮೂತ್ರಮಾಡಿ ಎಂದರೆ ಅವರು ಹಾಗೆ ಮಾಡುವುದೇ ಇಲ್ಲ, ಎಲ್ಲಿ ನಿಮಗೆ ಉಪಕಾರವಾಗಿಬಿಡುತ್ತದೋ ಅಂತ! ಅಂಗಡಿಯಿಂದ ಕಾಲಾಣೆ ಸಂದೇಶ (ಸಿಹಿ ತಿಂಡಿ) ತೆಗೆದುಕೊಂಡು ಬಾ ಅಂತ ಕಳುಹಿಸಿದರೆ ಹಿಂದಿರುಗಿ ಬರುವಾಗ ಅದನ್ನು ನೆಕ್ಕಿ ನೆಕ್ಕಿ ತಂದುಕೊಡುತ್ತಾರೆ (ಎಲ್ಲರೂ ನಗುತ್ತಾರೆ).
“ಆದರೆ ಶಕ್ತಿವಿಶೇಷತೆಯನ್ನು ಒಪ್ಪಲೇಬೇಕು. ಸಾಮಾನ್ಯ ಜೀವಿಗಳು ಲೋಕಶಿಕ್ಷಣ ಮಾಡಲು ಹೆದರುತ್ತಾರೆ. ಸಾಮಾನ್ಯ ಕಡ್ಡಿ ಹೇಗೋ ಮಾಡಿ ತಾನು ಮಾತ್ರ ನೀರಿನ ಮೇಲೆ ತೇಲಿಹೋಗಬಲ್ಲುದು. ಆದರೆ ಅದರ ಮೇಲೇನಾದರೂ ಒಂದು ಹಕ್ಕಿ ಬಂದು ಕುಳಿತರೂ ಅದು ಮುಳುಗಿಹೋಗುತ್ತದೆ. ಆದರೆ ನಾರದಾದಿಗಳು ಭಾರೀ ದಿಮ್ಮಿಗಳಂಥ ಮನುಷ್ಯರು. ಈ ವಿಧದ ದಿಮ್ಮಿ ತಾನೂ ತೇಲಿಹೋಗುವುದಲ್ಲದೆ ಮನುಷ್ಯರನ್ನು, ಹಸುಗಳನ್ನು, ಕೊನೆಗೆ ಆನೆಯನ್ನೂ ಹೊತ್ತುಕೊಂಡು ಹೋಗಿಬಿಡುತ್ತದೆ.
(ಶಿವನಾಥ ಮೊದಲಾದ ಭಕ್ತರಿಗೆ): “ಒಳ್ಳೆಯದು, ನೀವು ಭಗವಂತನ ಐಶ್ವರ್ಯದ ವರ್ಣನೆಯ ಕಡೆ ಅಷ್ಟೊಂದಾಗಿ ಮನಸ್ಸು ಕೊಡುತ್ತೀರಲ್ಲ ಏಕೆ? ನಾನು ಕೇಶವಸೇನನಿಗೂ ಇದೇ ಪ್ರಶ್ನೆ ಹಾಕಿದೆ. ಒಂದು ದಿನ ಆತ ಮತ್ತು ಆತನ ಗುಂಪು ಎಲ್ಲರೂ ದಕ್ಷಿಣೇಶ್ವರಕ್ಕೆ ಬಂದಿದ್ದರು. ನಾನು ಅವರಿಗೆ ಹೇಳಿದೆ: ‘ನಿಮ್ಮಗಳ ಲೆಕ್ಚರ್ ಕೇಳಬೇಕು ಅಂತ ಇದ್ದೇನೆ.’ ಗಂಗಾಘಟ್ಟದ ಎದುರಿಗಿರುವ ಮುಖಮಂಟಪದಲ್ಲಿ ಎಲ್ಲರೂ ನೆರೆದರು. ಕೇಶವಸೇನ ಉಪನ್ಯಾಸ ಕೊಡಲಾರಂಭಿಸಿದ. ಆತ ಬಹಳ ಚೆನ್ನಾಗಿ ಮಾತನಾಡಿದ. ನನಗೆ ಭಾವಾವಸ್ಥೆ ಬಂದುಬಿಟ್ಟಿತು. ಉಪನ್ಯಾಸವಾದ ನಂತರ ನಾನು ಕೇಶವನಿಗೆ ಹೇಳಿದೆ: ‘ನೀನು ಇವನ್ನು ಬಾರಿಬಾರಿಗೂ ಹೇಳುತ್ತೀಯಲ್ಲ-ಹೇ ಭಗವಂತ, ನೀನು ಎಂಥ ಸುಂದರ ಹೂವುಗಳನ್ನು ಸೃಷ್ಟಿಸಿದ್ದೀಯೆ! ಹೇ ಭಗವಂತ, ನೀನು ಆಕಾಶ, ನಕ್ಷತ್ರ, ಸಮುದ್ರ ಇವನ್ನು ಸೃಷ್ಟಿಸಿದ್ದೀಯೆ! ಇತ್ಯಾದಿ-ಏಕೆ?’ ಯಾರಿಗೆ ತಮಗೇ ವೈಭವದ ಮೇಲೆಯೇ ಪ್ರೀತಿ ಇದೆಯೋ, ಅವರು ಮಾತ್ರವೇ ಭಗವಂತನ ವೈಭವವನ್ನು ವರ್ಣಿಸಲು ಪ್ರೀತಿಸುತ್ತಾರೆ.
“ಒಮ್ಮೆ ಒಬ್ಬ ಕಳ್ಳ ರಾಧಾಕಾಂತ ದೇವಾಲಯಕ್ಕೆ ನುಗ್ಗಿ ದೇವರ ಆಭರಣಗಳನ್ನು ಕದ್ದುಕೊಂಡು ಹೋಗಿಬಿಟ್ಟ. ಮಥುರಬಾಬು ದೇವಾಲಯಕ್ಕೆ ಹೋಗಿ ದೇವರಿಗೆ ಹೇಳಿದ: ‘ಛೆ! ನೀನು ಎಂಥ ದೇವರು! ನೀನು ನಿನ್ನ ಒಡವೆಯನ್ನು ರಕ್ಷಿಸಿಕೊಳ್ಳಲಾರದೆ ಹೋದೆಯಲ್ಲ ?’ ನಾನು ಮಥುರಬಾಬುವಿಗೆ ಹೇಳಿದೆ : ‘ನಿನ್ನದು ಎಂಥಾ ಬುದ್ಧಿ ! ಸಾಕ್ಷಾತ್ ಲಕ್ಷ್ಮಿಯನ್ನೇ ದಾಸಿಯನ್ನಾಗಿ ಮಾಡಿಕೊಂಡು ಆಕೆಯಿಂದ ಪಾದಸೇವೆ ಕೈಕೊಳ್ಳುತ್ತಿರುವ ಶ್ರೀಮನ್ನಾರಾಯಣನಿಗೆ ಐಶ್ವರ್ಯದ ಅಭಾವವಿರುವುದೆ? ಆ ಒಡವೆ ನಿನಗೇನೋ ಬಹಳ ಬೆಲೆಯುಳ್ಳ ವಸ್ತು ಆಗಿರಬಹುದು. ಆದರೆ ಭಗವಂತನಿಗೆ ಅವೆಲ್ಲಾ ಕೆಲವು ಮಣ್ಣಿನ ಹೆಂಟೆ ಮಾತ್ರ. ಛೆ! ನೀನು ಇಂಥ ಬುದ್ಧಿಯಿಲ್ಲದ ಮಾತನ್ನು ಎಂದಿಗೂ ಆಡಬಾರದಾಗಿತ್ತು. ನೀನು ಭಗವಂತನಿಗೆ ಏನು ಐಶ್ವರ್ಯಗಳನ್ನು ತಾನೆ ಕೊಡಬಲ್ಲೆ ?’
“ಅದಕ್ಕಾಗಿಯೇ ನಾನು ಹೇಳುವುದು, ಯಾರಿಗೆ ಯಾರಿಂದ ಆನಂದ ದೊರೆಯುವುದೋ ಅವರು ಅವರಿಗಾಗಿಯೇ ಅಪೇಕ್ಷೆಪಡುತ್ತಾರೆ. ಆ ವ್ಯಕ್ತಿಯ ಮನೆ ಎಲ್ಲಿದೆ, ಅವರಿಗೆಷ್ಟು ಮನೆಗಳಿವೆ, ಎಷ್ಟು ತೋಟತುಡಿಕೆಗಳಿವೆ, ಆಳುಕಾಳು ಎಷ್ಟು ಜನ ಇದ್ದಾರೆ, ದಾಸಿ-ಗೀಸಿಯರು ಎಷ್ಟು ಮಂದಿ-ಇವುಗಳ ಸುದ್ದಿ ಸಮಾಚಾರಗಳಿಂದ ಅವರಿಗೇನು ಪ್ರಯೋಜನ? ನರೇಂದ್ರ ಕಣ್ಣಿಗೆ ಬಿದ್ದ ಎಂದರೆ, ಎಲ್ಲವೂ ಮರೆತೇ ಹೋಗಿಬಿಡುತ್ತದೆ. ಆತನ ಮನೆ ಎಲ್ಲಿದೆ, ಆತನ ತಂದೆಗೆ ಏನು ಕೆಲಸ, ಆತನಿಗೆ ಎಷ್ಟು ಜನ ಸಹೋದರರಿದ್ದಾರೆ, ಇವೇ ಮೊದಲಾದ ಪ್ರಶ್ನೆಯನ್ನು ಮರೆತೂ ನಾನು ಅವನಿಗೆ ಇದುವರೆಗೆ ಒಂದು ದಿನವೂ ಹಾಕಿಲ್ಲ.”
“ಭಗವಂತನ ಮಾಧುರ್ಯರಸದಲ್ಲಿ ಮುಳುಗಿಹೋಗಿಬಿಡು. ಆತನ ಅನಂತಸೃಷ್ಟಿಯ, ಆತನ ಅನಂತ ಐಶ್ವರ್ಯದ ಸುದ್ದಿಸಮಾಚಾರ ನಮಗೇಕೆ?”
ಪರಮಹಂಸರು ಹಾಡುತ್ತಿದ್ದಾರೆ:
ಮುಳುಗು ಮುಳುಗು ಮನವೇ-
ಹಿರಿಯೊಲವಿನ ಕಡಲಾಳಕೆ
ಮುಳುಗು ಮುಳುಗು ಒಳಗೇ….
ಶ್ರೀರಾಮಕೃಷ್ಣರು ಮಾತು ಮುಂದುವರಿಸುತ್ತಿದ್ದಾರೆ: “ಹೌದು, ನಿಜ, ಭಗವಂತನ ದರ್ಶನ ದೊರೆತ ಮೇಲೆ ಭಕ್ತನಿಗೆ ಇಚ್ಛೆಯಾಗುತ್ತದೆ, ಆತನ ಲೀಲೆ ನೋಡೋಣ ಅಂತ. ರಾವಣನನ್ನು ವಧಿಸಿದ ನಂತರ ಶ್ರೀರಾಮಚಂದ್ರ ಲಂಕಾಪುರಿಯನ್ನು ಪ್ರವೇಶಮಾಡಿದ. ವೃದ್ಧೆಯಾದ ರಾವಣನ ತಾಯಿ ನಿಕಷೆ ಪ್ರಾಣರಕ್ಷಣೆಗಾಗಿ ಸುಮ್ಮನೆ ಓಡಲಾರಂಭಿಸಿದಳು, ಲಕ್ಷ್ಮಣ ರಾಮನನ್ನು ಕೇಳಿದ: ‘ರಾಮ, ಇದೇನಾಶ್ಚರ್ಯ! ಈ ನಿಕಷೆ ಇಷ್ಟೊಂದು ವೃದ್ಧೆಯಾಗಿದ್ದಾಳೆ, ಇಷ್ಟೊಂದು ಪುತ್ರಶೋಕ ಪಡೆದಿದ್ದಾಳೆ; ಆದರೂ ಪ್ರಾಣಭಯದಿಂದ ಓಡಿಹೋಗುತ್ತಾ ಇದ್ದಾಳಲ್ಲ, ಏನಾಶ್ಚರ್ಯ!’ ಶ್ರೀರಾಮಚಂದ್ರ ನಿಕಷೆಗೆ ಅಭಯದಾನವಿತ್ತು, ಹತ್ತಿರಕ್ಕೆ ಕರೆಸಿಕೊಂಡು ಆಕೆ ಓಡಿಹೋಗುತ್ತಿದ್ದುದಕ್ಕೆ ಕಾರಣ ಕೇಳಲಾಗಿ, ಆಗ ಹೇಳಿದಳು: ‘ಹೇ, ರಾಮ, ನಾನು ಇಲ್ಲಿಯವರೆಗೆ ಬದುಕಿಕೊಂಡಿದ್ದುದರಿಂದ ಇದುವರೆಗೆ ನಿನ್ನ ಅನೇಕ ಲೀಲೆಗಳನ್ನು ನೋಡಿದ್ದೇನೆ. ನೀನು ಇನ್ನೂ ಮಾಡಬಹುದಾದ ಲೀಲೆಗಳನ್ನು ನೋಡಲು ಇನ್ನೂ ಹೆಚ್ಚು ಕಾಲ ಬದುಕಿರಬೇಕು ಎಂಬುದಾಗಿ ಇಚ್ಛೆಯಾಗುತ್ತದೆ.’ (ಎಲ್ಲರೂ ನಗುತ್ತಿದ್ದಾರೆ.)
(ಶಿವನಾಥನಿಗೆ) “ನಿಮ್ಮನ್ನು ನೋಡಲು ನನಗೆ ಇಚ್ಛೆಯಾಗುತ್ತಿದೆ. ಶುದ್ಧಾತ್ಮರನ್ನು ನೋಡದೆ ಮಾತಾಡದೆ ನಾನು ಹೇಗೆತಾನೆ ಬದುಕಿಕೊಂಡಿರಲಿ? ಅವರು ಪೂರ್ವಜನ್ಮದ ನನ್ನ ಬಂಧುಗಳಾಗಿ ಕಾಣಬರುತ್ತಾರೆ.”
ಒಬ್ಬ ಬ್ರಾಹ್ಮಭಕ್ತ : “ಮಹಾಶಯರೆ, ನಿಮಗೆ ಜನ್ಮಾಂತರದಲ್ಲಿ ನಂಬಿಕೆ ಇದೆಯೆ?”
ಶ್ರೀರಾಮಕೃಷ್ಣರು: “ಹೌದು, ಜನ್ಮಾಂತರ ಇದೆ ಎಂದು ಕೇಳಿದ್ದೇನೆ. ಭಗವಂತನ ಕಾರ್ಯ ಏನು ಎಂಬುದನ್ನು ನಮ್ಮ ಈ ಅಲ್ಪಬುದ್ಧಿಯಿಂದ ಅರಿಯುವ ಬಗೆ ಹೇಗೆ ಜನ್ಮಾಂತರದ ಸಂಬಂಧವಾಗಿ ಅನೇಕರು ಹೇಳಿದ್ದಾರೆ; ಆದ್ದರಿಂದ ಅದರಲ್ಲಿ ನಂಬಿಕೆ ಇಡದೆ ಇರಲಾಗುವುದಿಲ್ಲ. ಭೀಷ್ಮ ಶರಶಯ್ಯೆಯಲ್ಲಿ ಮಲಗಿ ಸಾಯುವುದರಲ್ಲಿದ್ದಾಗ ಪಾಂಡವರು ಶ್ರೀಕೃಷ್ಣನೊಡನೆ ಆತನ ಸುತ್ತಲೂ ನಿಂತುಕೊಂಡಿದ್ದರು. ಆ ಮಹಾವೀರನ ಕಣ್ಣಿನಲ್ಲಿ ನೀರು ತೊಟ್ಟಿಕ್ಕುತ್ತಿರುವುದು ಅವರ ಕಣ್ಣಿಗೆ ಬಿತ್ತು. ಅರ್ಜುನ ಶ್ರೀಕೃಷ್ಣನಿಗೆ ಹೇಳಿದ: ‘ಸೋದರ, ಏನಾಶ್ಚರ್ಯ ಇದು! ಸತ್ಯವಾದಿ, ಜಿತೇಂದ್ರಿಯ, ಜ್ಞಾನಿ ಇವೆಲ್ಲಾ ಆದ, ಅಷ್ಟವಸುಗಳಲ್ಲಿ ಒಬ್ಬನಾದ ನಮ್ಮ ಈ ಪಿತಾಮಹ ಭೀಷ್ಮದೇವನೂ ಮಾಯೆಯ ದೆಸೆಯಿಂದ ಈಗ ದೇಹತ್ಯಾಗವಾಗುವ ಸಮಯದಲ್ಲಿ ಅಳುತ್ತಾ ಇದ್ದಾನಲ್ಲ !’ ಶ್ರೀಕೃಷ್ಣ ಭೀಷ್ಮನಿಗೆ ಇದನ್ನು ತಿಳಿಸಲಾಗಿ, ಆತ ಹೇಳಿದ: ‘ಓ ಕೃಷ್ಣ, ನಾನು ಅದಕ್ಕಾಗಿ ಅಳುತ್ತಿಲ್ಲ ಎಂಬುದು ನಿನಗೆ ಗೊತ್ತಿದೆ. ಸಾಕ್ಷಾತ್ ಭಗವಂತನೇ ಪಾಂಡವರ ಸಾರಥಿಯಾಗಿದ್ದರೂ ಅವರ ದುಃಖಕ್ಕೂ ವಿಪತ್ತಿಗೂ ಕೊನೆಯೇ ಇಲ್ಲವಲ್ಲ ಎಂಬ ಒಂದು ಭಾವನೆಯಿಂದ, ಭಗವಂತನ ಕಾರ್ಯ ಎಳ್ಳಷ್ಟೂ ನನಗೆ ಅರ್ಥವಾಗುತ್ತಿಲ್ಲವಲ್ಲ ಎಂಬುದಾಗಿ ಭಾವಿಸಿ ಅಳುತ್ತಿದ್ದೇನೆ.’
ಈಗ ಸಮಾಜಗೃಹದಲ್ಲಿ ಸಾಯಂ ಉಪಾಸನೆ ಆರಂಭವಾಯಿತು. ಸಮಯ ಎಂಟೂವರೆ. ಸ್ವಲ್ಪ ಹೊತ್ತಿನಲ್ಲೆ ಚಂದ್ರೋದಯವಾಯಿತು. ಉದ್ಯಾನವನದ ವೃಕ್ಷಲತಾಪಲ್ಲವಗಳು ಶರಚ್ಚಂದ್ರನ ವಿಮಲ ಕಿರಣಗಳಿಂದ ಬೆಳಗಲಾರಂಭಿಸಿದುವು. ಉಪಾಸನೆ ಮುಗಿದನಂತರ ಸಂಕೀರ್ತನೆ ಆರಂಭವಾಯಿತು. ಪರಮಹಂಸರು ಭಗವತ್ಪ್ರೇಮದಿಂದ ಮತ್ತರಾಗಿ ನರ್ತಿಸುತ್ತಿದ್ದಾರೆ. ಬ್ರಾಹ್ಮಭಕ್ತರು ತಾಳ ಮೃದಂಗಗಳೊಡನೆ ಅವರನ್ನು ಸುತ್ತುಗಟ್ಟಿ ನರ್ತಿಸುತ್ತಿದ್ದಾರೆ. ಭಗವಂತನ ಸಾಕ್ಷಾತ್ಕಾರ ದೊರೆತುಬಿಟ್ಟಿದೆಯೊ ಏನೊ ಎಂಬಂತೆ ಎಲ್ಲರೂ ಭಾವದಿಂದ ಮತ್ತರಾಗಿಬಿಟ್ಟಿದ್ದಾರೆ. ಭಗವನ್ನಾಮದ ಧ್ವನಿ ಆ ಸ್ಥಳದಲ್ಲೆಲ್ಲಾ ಸುಮ್ಮನೆ ಪ್ರತಿಧ್ವನಿತವಾಗುತ್ತಿದೆ.
ಕೀರ್ತನೆ ಮುಗಿದನಂತರ ಪರಮಹಂಸರು ಜಗನ್ಮಾತೆಗೆ ಮತ್ತೆ ಮತ್ತೆ ಸಾಷ್ಟಾಂಗ ಪ್ರಣಾಮ ಮಾಡುತ್ತಾ ಹೇಳುತ್ತಿದ್ದಾರೆ: “ಭಾಗವತ-ಭಕ್ತ-ಭಗವಾನ್! ಜ್ಞಾನಿಗಳ ಚರಣಗಳಿಗೆ ಪ್ರಣಾಮ! ಸಾಕಾರವಾದಿ ಭಕ್ತರ, ನಿರಾಕಾರವಾದಿ ಭಕ್ತರ ಚರಣಗಳಿಗೆ ಪ್ರಣಾಮ! ಹಿಂದಿನ ಕಾಲದ ಬ್ರಹ್ಮಜ್ಞಾನಿಗಳ ಚರಣಗಳಿಗೂ, ಬ್ರಾಹ್ಮಸಮಾಜದ ಈಗಿನ ಕಾಲದ ಬ್ರಹ್ಮಜ್ಞಾನಿಗಳ ಚರಣಗಳಿಗೂ ಪ್ರಣಾಮ!”
ವೇಣೀಮಾಧವ ಅನೇಕ ವಿಧದ ಭಕ್ಷ್ಯಭೋಜ್ಯಗಳನ್ನು ಮಾಡಿಸಿ ಭಕ್ತರೆಲ್ಲರಿಗೂ ಊಟಕ್ಕೆ ಬಡಿಸಿದ. ಪರಮಹಂಸರು ಭಕ್ತರೊಡನೆ ಕುಳಿತು ಆನಂದದಿಂದ ಪ್ರಸಾದ ಸ್ವೀಕರಿಸುತ್ತಿದ್ದಾರೆ.
೧೫ನೆ ನವೆಂಬರ್ ೧೮೮೨, ಕಾರ್ತಿಕ ಶುಕ್ಲ ಪಂಚಮಿ, ಬುಧವಾರ
ಪರಮಹಂಸರು ರಾಖಾಲನೇ ಮೊದಲಾದ ಒಬ್ಬಿಬ್ಬರು ಭಕ್ತರೊಡನೆ ಮಾಸ್ಟರನ್ನೂ ವಿಲ್ಸನ್ ಸರ್ಕಸ್ಸಿಗೆ ಕರೆದುಕೊಂಡು ಹೋಗಲು ವಿದ್ಯಾಸಾಗರನ ಶಾಲೆಯ ಹತ್ತಿರಕ್ಕೆ ಗಾಡಿಯಲ್ಲಿ ಬಂದರು. ಈಗ ಎಲ್ಲರೂ ಮೈದಾನದ ಕಡೆ ತೆರಳುತ್ತಿದ್ದಾರೆ. ಗಾಡಿ ಜನಸಂದಣಿಯಿಂದ ಕೂಡಿದ ಚಿತ್ಪುರ ರಸ್ತೆಯ ಮಾರ್ಗವಾಗಿ ಹೋಗಲಾರಂಭಿಸಿತು. ಪರಮಹಂಸರ ಆನಂದಕ್ಕೆ ಪಾರವೇ ಇಲ್ಲ. ಚಿಕ್ಕ ಮಕ್ಕಳ ಹಾಗೆ ಗಾಡಿಯ ಈ ಕಡೆಯ ಕಿಟಕಿಯಿಂದ ಒಮ್ಮೆ, ಆ ಕಡೆಯ ಕಿಟಕಿಯಿಂದ ಒಮ್ಮೆ, ಹೀಗೆ ಹೊರಕ್ಕೆ ಬಗ್ಗಿ ನೋಡುತ್ತ ರಸ್ತೆಯ ಜನರನ್ನು ಸಂಬೋಧಿಸುತ್ತಿರುವರೊ ಏನೊ ಎಂಬಂತೆ ತಮಗೆ ತಾವೇ ಹೇಳಿಕೊಳ್ಳುತ್ತಿದ್ದಾರೆ: “ಹೊಟ್ಟೆಪಾಡಿಗಾಗಿ ಎಲ್ಲರೂ ಹೋಗುತ್ತಿದ್ದಾರೆ. ಭಗವಂತನ ಕಡೆಗೆ ದೃಷ್ಟಿಯನ್ನೇ ಇಟ್ಟಿಲ್ಲ.”
ಗಾಡಿ ಸರ್ಕಸ್ಸಿನ ಹತ್ತಿರಕ್ಕೆ ಬಂದಿತು. ಭಕ್ತರು ಸುಲಭ ಬೆಲೆಯ ಟಿಕೆಟ್ಟುಗಳನ್ನು ಕೊಂಡುಕೊಂಡು ಪರಮಹಂಸರನ್ನು ಒಂದು ಎತ್ತರವಾದ ಜಾಗದಲ್ಲಿ ಕೂರಿಸಿ ತಾವೂ ಒಂದು ಬೆಂಚಿನ ಮೇಲೆ ಕುಳಿತುಕೊಂಡರು. ಪರಮಹಂಸರು ಆನಂದದಿಂದ ಹೇಳುತ್ತಿದ್ದಾರೆ: “ಭೇಷ್! ಇಲ್ಲಿಂದ ಬಹಳ ಚೆನ್ನಾಗಿ ಕಾಣುತ್ತದೆ.” ರಂಗಭೂಮಿಯಲ್ಲಿ ಅನೇಕ ವಿಧದ ಸಾಹಸ ಕಾರ್ಯಗಳು ನಡೆಯಲಾರಂಭಿಸಿದುವು. ಒಂದು ಕುದುರೆ ಒಂದು ಗುಂಡಾದ ಮಾರ್ಗದಲ್ಲಿ ಓಡಲಾರಂಭಿಸಿತು. ಅದರ ಮೇಲೆ ಒಬ್ಬ ಆಂಗ್ಲ ಮಹಿಳೆ ಒಂಟಿ ಕಾಲಿನಲ್ಲಿ ನಿಂತುಕೊಂಡಿದ್ದಳು. ಆಕೆಯ ಮುಂದೆ ಮಧ್ಯೆ ಮಧ್ಯೆ ಆ ದಾರಿಯ ಮೇಲೆ ಕಬ್ಬಿಣದ ಭಾರಿ ಭಾರಿ ಉಂಗುರಗಳನ್ನು ನೇತುಹಾಕಿದ್ದರು. ಕುದುರೆ ಪ್ರತಿಯೊಂದು ಉಂಗುರದ ಕೆಳಗೆ ಹೋದಾಗಲೆಲ್ಲ ಆ ಮಹಿಳೆ ಕುದುರೆಯಿಂದ ನೆಗೆದು, ಆ ಉಂಗುರದ ಮೂಲಕ ಹಾದು ಮತ್ತೆ ಒಂಟಿ ಕಾಲಿನಲ್ಲೇ ಆ ಕುದುರೆಯ ಬೆನ್ನು ಮೇಲಕ್ಕೆ ಇಳಿದು ಮುಂದುವರಿಯುತ್ತಿದ್ದಳು. ಕುದುರೆ ಆ ಗುಂಡಾದ ಮಾರ್ಗದಲ್ಲಿ ಮತ್ತೆಮತ್ತೆ ಸುತ್ತುತ್ತಲೇ ಇತ್ತು; ಆ ಮಹಿಳೆ ಕೂಡ ಎಲ್ಲೂ ತಪ್ಪದೆ ಆ ಕುದುರೆಯ ಮೇಲೆ ಸಕಾಲಕ್ಕೆ ಆ ಉಂಗುರಗಳ ಮೂಲಕ ಹಾದು ಹಾದು ಉಳಿದು ಮುಂದುವರಿಯುತ್ತಲೇ ಇದ್ದಳು.
ಸರ್ಕಸ್ಸು ಮುಗಿಯಿತು ಪರಮಹಂಸರು ಮತ್ತು ಭಕ್ತರು ಗಾಡಿಯ ಹತ್ತಿರಕ್ಕೆ ಬಂದರು. ಚಳಿ ಶುರುವಾಗಿದೆ. ಹಸುರು ಶಾಲು ಹೊದ್ದುಕೊಂಡು ಪರಮಹಂಸರು ಭಕ್ತರೊಡನೆ ಮಾತುಕತೆಯಾಡುತ್ತ ಮೈದಾನದಲ್ಲಿ ನಿಂತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ ತೋರಿಸುತ್ತಿದ್ದಾರೆ: “ನೋಡಿದೆಯೊ, ಹೇಗೆ ಆ ಕುದುರೆ ಮಿಂಚಿನ ವೇಗದಲ್ಲಿ ಓಡುತ್ತಿದ್ದರೂ ಆ ಮಹಿಳೆ ಒಂಟಿಕಾಲಿನಲ್ಲಿ ಅದರ ಮೇಲೆ ನಿಂತುಕೊಂಡಿರುತ್ತಿದ್ದಳು? ಅದು ಎಂಥ ಕಷ್ಟವಾದ ಸಾಹಸಕಾರ್ಯ! ಆಕೆ ಬಹಳ ಕಾಲ ಅಭ್ಯಾಸ ಮಾಡಿರಬೇಕು. ಒಂದು ಸ್ವಲ್ಪವಾದರೂ ಅಜಾಗರೂಕಳಾದಳು ಎಂದರೆ ಕೈಕಾಲು ಮುರಿದುಕೊಳ್ಳುವ ಸಂಭವ. ಪ್ರಾಣವೂ ಹೋಗುವ ಸಂಭವ. ಸಂಸಾರಿಯ ಜೀವನವೂ ಇದೇ ರೀತಿ ಕಠಿಣ. ಎಲ್ಲೊ ಕೆಲವರು ಮಾತ್ರ ಭಗವಂತನ ಕೃಪೆಯಿಂದ ಮತ್ತು ತಮ್ಮ ತೀವ್ರ ಸಾಧನೆ ಭಜನೆಯ ಬಲದಿಂದ ಅದರಲ್ಲಿ ಜಯಶೀಲರಾಗುತ್ತಾರೆ. ಆದರೆ ಅಧಿಕಾಂಶ ಜನರಿಗೆ ಇದು ಸಾಧ್ಯವಿಲ್ಲ. ಸಂಸಾರಕ್ಕೆ ಕಾಲಿಟ್ಟು ಇನ್ನೂ ಅಧಿಕವಾಗಿ ಬಂಧನಕ್ಕೆ ಒಳಗಾಗಿಬಿಡುತ್ತಾರೆ; ಇನ್ನೂ ಆಳಕ್ಕೆ ಮುಳುಗಿಹೋಗಿಬಿಡುತ್ತಾರೆ; ಬಹಳ ಕಷ್ಟಕ್ಕೆ ತುತ್ತಾಗುತ್ತಾರೆ. ಎಲ್ಲೊ ಕೆಲವರು, ಉದಾಹರಣೆಗೆ ಜನಕನೇ ಮೊದಲಾದವರು, ತಮ್ಮ ಮಹಾತಪಸ್ಸಿನ ಬಲದಿಂದ ಸಂಸಾರ ಜೀವನದಲ್ಲಿ ಜಯಶೀಲರಾದರು. ಆದ್ದರಿಂದ ಸಾಧನೆ ಭಜನೆ ಅತ್ಯಂತ ಆವಶ್ಯಕ; ಇಲ್ಲದಿದ್ದರೆ ಸಂಸಾರದಲ್ಲಿ ಸರಿಯಾಗಿ ಇರಲಾಗುವುದಿಲ್ಲ.”
ಶ್ರೀರಾಮಕೃಷ್ಣರು ಭಕ್ತರೊಡನೆ ಗಾಡಿಯನ್ನು ಹತ್ತಿ ಬಲರಾಮ ಬಸುವಿನ ಮನೆಗೆ ಬಂದರು. ಆ ಮನೆಯವರು ಅವರೆಲ್ಲರನ್ನೂ ಎರಡನೆ ಅಂತಸ್ತಿಗೆ ಕರೆದುಕೊಂಡು ಹೋದರು. ಸಾಯಂಕಾಲವಾಗಿದೆ. ದೀಪ ಹಚ್ಚಿದ್ದಾರೆ. ಪರಮಹಂಸರು ತಾವು ಸರ್ಕಸ್ಸಿನಲ್ಲಿ ನೋಡಿದ ಸಾಹಸಕಾರ್ಯಗಳನ್ನೆಲ್ಲಾ ಈ ಮನೆಯವರಿಗೆ ವರ್ಣಿಸಲು ಆರಂಭಿಸಿದರು. ಕ್ರಮೇಣ ಅನೇಕ ಭಕ್ತರು ಅಲ್ಲಿಗೆ ಬಂದು ಸೇರಿಬಿಟ್ಟರು. ಅವರೊಡನೆಯೆಲ್ಲಾ ಈಗ ಭಗವತ್ಸಂಬಂಧವಾಗಿ ಮಾತುಕತೆ ಆಡಲು ಆರಂಭಿಸಿದ್ದಾರೆ.
ಹಾಗೇ ಮಾತು ಜಾತಿಭೇದದ ಸಂಬಂಧವಾಗಿ ಆರಂಭವಾಯಿತು. ಪರಮಹಂಸರು ಹೇಳುತ್ತಿದ್ದಾರೆ: “ಜಾತಿಭೇದವನ್ನು ಒಂದು ವಿಧದಿಂದ ತೆಗೆದುಹಾಕಿಬಿಡಬಹುದು. ಆ ಮಾರ್ಗವೇ ಭಕ್ತಿ. ಭಕ್ತರಿಗೆ ಜಾತಿ ಎಂಬುದೇ ಇಲ್ಲ. ಭಕ್ತಿ ದೊರೆಯಿತು ಎಂದರೆ, ದೇಹ, ಮನಸ್ಸು, ಆತ್ಮ, ಎಲ್ಲಾ ಶುದ್ಧವಾಗಿಬಿಡುತ್ತದೆ. ಗೌರಾಂಗ ಮತ್ತು ನಿತಾಯಿ ಆಚಂಡಾಲಾದಿಯಾಗಿ ಎಲ್ಲರಿಗೂ ಭಗವನ್ನಾಮವನ್ನು ಕೊಡಲಾರಂಭಿಸಿದರು. ಹೃದಯದಲ್ಲಿ ಭಕ್ತಿ ಇಲ್ಲದೆ ಇತ್ತು ಎಂದರೆ, ಬ್ರಾಹ್ಮಣ ಬ್ರಾಹ್ಮಣನಲ್ಲ. ಹೃದಯದಲ್ಲಿ ಅದು ಇತ್ತು ಎಂದರೆ, ಚಂಡಾಲ ಚಂಡಾಲನಲ್ಲ. ಭಕ್ತಿಯೊಂದಿತ್ತು ಎಂದರೆ ಅಸ್ಪೃಶ್ಯ ಜಾತಿಯೂ ಶುದ್ಧ ಪವಿತ್ರ ಆಗಿ ಬಿಡುತ್ತದೆ.”
ಶ್ರೀರಾಮಕೃಷ್ಣರು ಸಂಸಾರದಲ್ಲಿ ಬದ್ಧರಾಗಿರುವ ಜೀವಿಗಳ ಮಾತೆತ್ತಿ ಹೇಳುತ್ತಿದ್ದಾರೆ: “ಅವರನ್ನು ರೇಶ್ಮೆಹುಳುವಿಗೆ ಹೋಲಿಸಬಹುದು. ಅದು ಇಚ್ಛೆಪಟ್ಟರೆ ತನ್ನ ಗೂಡನ್ನು ಕತ್ತರಿಸಿ ಹೊರಕ್ಕೆ ಬರಬಲ್ಲುದು. ಆದರೆ ಬಹಳ ಪ್ರಯಾಸಪಟ್ಟು ತಾನೇ ಗೂಡನ್ನು ಕಟ್ಟಿರುವುದರಿಂದ ಅದು ಹಾಗೆ ಮಾಡಲಿಚ್ಛಿಸದು, ಅದು ಅಲ್ಲೇ ಸಾಯುತ್ತದೆ. ಮತ್ತೆ ಅವರನ್ನು
ಬೋನಿಗೆ1 ನುಗ್ಗಿದ ಮೀನಿಗೆ ಹೋಲಿಸಬಹುದು. ಅದು ಬೋನಿನೊಳಕ್ಕೆ ಹೋದ ದಾರಿಯಲ್ಲೇ ಹಿಂದಿರುಗಿ ಬರಲು ಅವಕಾಶವಿದೆ. ಆದರೆ ‘ಕಲ ಕಲ’ ಎಂಬ ನೀರಿನ ಮಧುರ ಶಬ್ದ ಕೇಳುತ್ತ ಉಳಿದ ಮೀನುಗಳೊಡನೆ ಕ್ರೀಡಿಸುವುದರಲ್ಲೇ ಎಲ್ಲವನ್ನೂ ಮರೆತುಬಿಡುತ್ತದೆ. ಹೊರಕ್ಕೆ ಬರಲು ಪ್ರಯತ್ನವನ್ನೇ ಮಾಡುವುದಿಲ್ಲ. ಮಕ್ಕಳು-ಮರಿಗಳ ತೊದಲು ನುಡಿಯೇ ನೀರಿನ ‘ಕಲ ಕಲ’ ಎಂಬ ಮಧುರ ಶಬ್ದ. ಉಳಿದ ಮೀನುಗಳೇ ಬಂಧುಬಾಂಧವರು. ಆದರೂ ಎಲ್ಲೊ ಒಂದೆರಡು ಅಲ್ಲಿಂದ ಓಡಿ ಹೊರಕ್ಕೆ ಬಂದುಬಿಡುತ್ತವೆ. ಅವೇ ಮುಕ್ತಜೀವಿಗಳು.”
ಪರಮಹಂಸರು ಈಗ ಹಾಡುತ್ತಿದ್ದಾರೆ:
ತಾಯ ಮಾಯೆಯ ಬಲೆಯು ಹರಹಿದೆ
ಮೂರು ಲೋಕದ ಅಗಲಕೆ,
ಬ್ರಹ್ಮ ವಿಷ್ಣುಗಳೆಲ್ಲ ಮೂರ್ಛಿತ-
ರಾಗಿ ಸಂದರು ಮಾಯೆಗೆ!
ಇನ್ನು ಮನುಜರ ಪಾಡು ಏನಿದೆ,
ನಮಗೆ ಎಲ್ಲಿದೆ ಬಿಡುಗಡೆ?
ಬಲೆಗೆ ಸಿಲುಕಿದ ಮೀನಿನಂದದಿ
ಮನುಜಕುಲವಿಲ್ಲಲೆದಿದೆ
ತನ್ನ ನೂಲೊಳು ತಾನೆ ಸಿಲುಕಿದೆ
ತೆರಣಿ ಹುಳುವಿನ ತೆರನಿದೆ!
ಪರಮಹಂಸರು ಮಾತು ಮುಂದುವರಿಸುತ್ತಿದ್ದಾರೆ: ‘ಜೀವನವನ್ನು ಒಂದು ವಿಧದ ಧ್ಯಾನಕ್ಕೆ ಹೋಲಿಸಬಹುದು. ಅದನ್ನು ಬೀಸುವ ಕಲ್ಲಿಗೆ ಸುರಿದಿದೆ ಅಂತ ಇಟ್ಟುಕೊಳ್ಳಿ. ಇನ್ನೇನು ಅದು ಒಡೆದು ಚೂರ್ಣವಾಗಿಬಿಡುವುದರಲ್ಲಿದೆ. ಆದರೆ ಯಾವ ಕಾಳುಗಳು ಗೂಟದ ಮೇಲೆ ಇರುತ್ತವೊ ಅವು ಒಡೆದು ಚೂರ್ಣವಾಗಿ ಹೋಗುವುದಿಲ್ಲ. ಆದ್ದರಿಂದ ಜೀವ ಗೂಟಕ್ಕೆ ಎಂದರೆ ಭಗವಂತನಿಗೆ ಶರಣಾಗತನಾಗಬೇಕು. ಆತನನ್ನು ಕರೆ; ಆತನ ನಾಮಗುಣಕೀರ್ತನೆ ಮಾಡು. ಆಗ ಮುಕ್ತಿ. ಇಲ್ಲದಿದ್ದರೆ ಮೃತ್ಯು ಎಂಬ ಬೀಸುವ ಕಲ್ಲಿನಿಂದ ಬೀಸಲ್ಪಟ್ಟು ಚೂರ್ಣವಾಗಿಹೋಗಿಬಿಡುವೆ.”
ಪರಮಹಂಸರು ಮತ್ತೆ ಹಾಡುತ್ತಿದ್ದಾರೆ:
ಓ ತಾಯಿ, ಓ ತಾಯಿ, ಮುಳುಗುತಿದೆ ನೌಕೆ
ಈ ಜಗದ ಕತ್ತಲಿನ ಕಡಲ ತೆರೆ ತಳಕೆ!
ಸುತ್ತಮುತ್ತಲಿನ ಮಾಯಮೋಹದ ಗಾಳಿ
ಬೀಸಿ ದಾಳಿಯ ಮಾಡಿ ಭೋರಾಡಿದೆ!
ಮನವಿಲ್ಲಿ ಮಂಕಾಯ್ತು, ಅರಿವರ್ಗ ಬಲವಾಯ್ತು,
ಹುಟ್ಟೊಡೆದು ಪಟ ಹರಿದು ಮುರಿದುಬಿತ್ತು.
ನಿಷ್ಕರುಣ ಗಾಳಿಯಲ್ಲಿ ನನ್ನ ದೋಣಿಯು ಬಂದು
ಇಂದು ಈ ಗತಿಯಲ್ಲಿ ಸಿಕ್ಕುದಾಯ್ತು !
ಇದೊ ನುಗ್ಗುತ್ತಿದೆ ನೋಡು, ದೋಣಿಯೊಳಗಡೆ ನೀರು;
ಹೇಳು ನಾನಿನ್ನೀಗ ಮಾಳ್ಪುದೇನು?
ಸೋತ ಕಣ್ಣಿನ ಸುತ್ತ ಕತ್ತಲೆಯ ಪರಿವಾರ;
ನಿನ್ನ ನಾಮವೆ ನನಗೆ ತೇಲ್ತೊಟ್ಟಿಲು!
ವಿಶ್ವಾಸಬಾಬು ಬಹಳ ಹೊತ್ತಿನವರೆಗೆ ಕೊಠಡಿಯಲ್ಲಿ ಕುಳಿತಿದ್ದು ಈಗ ಎದ್ದು ಹೊರಟುಹೋದ. ಆತ ಒಳ್ಳೆ ಧನಿಕನಾಗಿದ್ದ. ಆದರೆ ನೀತಿಬಾಹಿರನಾಗಿ ವರ್ತಿಸಿ ಎಲ್ಲವನ್ನೂ ಕಳೆದುಕೊಂಡುಬಿಟ್ಟಿದ್ದಾನೆ. ಈಗ ಆತ ತನ್ನ ಹೆಂಡತಿ ಮಕ್ಕಳು ಇವರ ಕಡೆ ಗಮನವನ್ನೇ ಕೊಡುತ್ತಿಲ್ಲ. ಆತನ ಮಾತೆತ್ತಿ ಪರಮಹಂಸರು ಹೇಳುತ್ತಿದ್ದಾರೆ: “ಆತನದು ದೌರ್ಭಾಗ್ಯ ನೀಚಜನ್ಮ. ಗೃಹಸ್ಥನಿಗೆ ಕರ್ತವ್ಯವಿದೆ; ಋಣವಿದೆ. ಆತ ದೇವಋಣ, ಋಷಿಋಣ ಇವನ್ನು ತೀರಿಸಬೇಕಾಗಿರುವುದಲ್ಲದೆ ಹೆಂಡತಿಯ ಋಣವನ್ನೂ ತೀರಿಸಬೇಕಾಗಿದೆ. ಹೆಂಡತಿ ಪತಿವ್ರತೆಯಾಗಿದ್ದರೆ ಗಂಡ ಆಕೆಯನ್ನು ಪಾಲಿಸಿಕೊಂಡು ಬರಬೇಕು. ಮಕ್ಕಳು ವಯಸ್ಕರಾಗುವವರೆಗೆ ಅವರನ್ನು ಬೆಳೆಸಬೇಕು. ಕೇವಲ ಸಂನ್ಯಾಸಿ ಮಾತ್ರ ಸಂಚಯ ಮಾಡಿಡಕೂಡದು. ಹಕ್ಕಿ ಮತ್ತು ಸಂನ್ಯಾಸಿ ಸಂಚಯಮಾಡುವುದಿಲ್ಲ. ಆದರೆ ಹಕ್ಕಿಗೆ ಮರಿಯಾದರೆ ಆಗ ಅದು ಸಂಚಯ ಮಾಡಿಡುತ್ತದೆ. ತನ್ನ ಮರಿಗಳಿಗಾಗಿ ಕೊಕ್ಕಿನೊಳಗೆ ಆಹಾರ ಶೇಖರಿಸಿಕೊಂಡು ಬರುತ್ತದೆ.”
ಬಲರಾಮ: “ಈಗ ವಿಶ್ವಾಸಬಾಬುವಿಗೆ ಸಾಧುಸಂಗ ಮಾಡಬೇಕು ಅಂತ ಇಚ್ಛೆ.”
ಶ್ರೀರಾಮಕೃಷ್ಣರು ನಗುತ್ತ : “ಸಂನ್ಯಾಸಿಯ ಕಮಂಡಲು ಆತನೊಡನೆ ನಾಲ್ಕು ಧಾಮಗಳಿಗೂ-ಬದರಿ, ದ್ವಾರಕಾ, ರಾಮೇಶ್ವರ, ಪುರಿ-ಹೋಗಿಬರುತ್ತದೆ. ಆದರೆ ಹಿಂದೆ ಯಾವ ರೀತಿಯಾಗಿ ಕಹಿಯಾಗಿತ್ತೊ ಹಾಗೆ ಕಹಿಯಾಗಿಯೇ ಇರುತ್ತದೆ. ಮಲಯ ಮಾರುತ ತಗಲಿದ ಗಿಡಗಳೆಲ್ಲಾ ಚಂದನಗಿಡಗಳಾಗಿಬಿಡುತ್ತವೆ. ಆದರೆ ಹತ್ತಿಯ ಗಿಡ, ಅಶ್ವತ್ಥ ಗಿಡ, ಅಮಟೆ ಕಾಯಿಯ ಮರ ಇವು ಮಾತ್ರ ಚಂದನ ಗಿಡಗಳಾಗಿ ಪರಿವರ್ತನೆ ಹೊಂದುವುದಿಲ್ಲ.”
“ಕೆಲವರು ಸಾಧುಸಂಗ ಮಾಡುತ್ತಾರೆ, ಗಾಂಜಾ ಕುಡಿಯುವುದಕ್ಕೆ. (ನಗು.) ಸಾಧುಗಳು ಗಾಂಜಾ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುವುದರಿಂದ ಜನರು ಅವರ ಹತ್ತಿರಕ್ಕೆ ಬಂದು ಅವರಿಗೆ ಗಾಂಜಾ ತಯಾರುಮಾಡಿಕೊಟ್ಟು ತಾವೂ ಅವರ ಪ್ರಸಾದ ಸ್ವೀಕರಿಸುತ್ತಾರೆ.” (ಎಲ್ಲರೂ ನಗುತ್ತಾರೆ.)
೧೬ನೆ ನವೆಂಬರ್ ೧೮೮೨, ಕಾರ್ತಿಕ ಶುಕ್ಲ ಷಷ್ಠಿ ಗುರುವಾರ
ಶ್ರೀರಾಮಕೃಷ್ಣ ಪರಮಹಂಸರು ಇಂದಿನ ಅಪರಾಹ್ನವೇ ಕಲ್ಕತ್ತಕ್ಕೆ ಬಂದು, ಈಗ ಸಾಯಂಕಾಲ ಸಿಮೂಲಿಯದಲ್ಲಿ ವಾಸಿಸುತ್ತಿರುವ ರಾಜಮೋಹನನ ಮನೆಗೆ ಬಂದಿದ್ದಾರೆ. ಅವರ ಕಿವಿಗೆ ಬಿದ್ದಿತ್ತು-ನರೇಂದ್ರನೇ ಮೊದಲಾದ ಯುವಕರು ಒಟ್ಟುಗೂಡಿ ಬ್ರಾಹ್ಮ ಸಮಾಜ ರೀತಿಯಾಗಿ ಇಲ್ಲಿ ಉಪಾಸನೆ ನಡಸುತ್ತಿದ್ದಾರೆ ಎಂಬುದು. ಅದನ್ನು ನೋಡಬೇಕು ಅಂತ ಅವರಿಗೆ ಇಚ್ಛೆ. ಅದಕ್ಕಾಗಿ ಮಾಸ್ಟರ್ ಮೊದಲಾದ ಭಕ್ತರೊಡನೆ ಇಲ್ಲಿಗೆ ಬಂದಿದ್ದಾರೆ. ರಾಜಮೋಹನ ಹಿರಿಯ ಬ್ರಾಹ್ಮಭಕ್ತ.
ಪರಮಹಂಸರಿಗೆ ನರೇಂದ್ರನನ್ನು ಕಂಡು ಬಹಳ ಆನಂದವಾಯಿತು. ಅವರು ಅವನಿಗೆ ಹೇಳಿದರು: “ನಿಮ್ಮ ಉಪಾಸನೆ ನೋಡಬೇಕು ಅಂತ ನನಗೆ ಇಚ್ಛೆ ಇದೆ.” ನರೇಂದ್ರ ಹಾಡಲಾರಂಭಿಸಿದ. ಆ ಹುಡುಗರಲ್ಲಿ ಒಬ್ಬ ಉಪಾಸನೆ ನಡೆಸಲಾರಂಭಿಸಿದ. ಆತ ಪ್ರಾರ್ಥನೆ ಮಾಡುತ್ತಿದ್ದಾನೆ: “ಹೇ ಭಗವಂತ, ಎಲ್ಲವನ್ನೂ ತ್ಯಾಗಮಾಡಿ ನಿನ್ನಲ್ಲಿ ನಾವು ಮಗ್ನರಾಗುವಂತೆ ಮಾಡು.” ಬಹುಶಃ ಪರಮಹಂಸರನ್ನು ನೋಡಿ ಆತನಿಗೆ ಉದ್ದೀಪನವಾಗಿರಬೇಕು. ಅದಕ್ಕಾಗಿಯೇ ಆತ ಸರ್ವತ್ಯಾಗದ ಸಂಬಂಧವಾಗಿ ಪ್ರಾರ್ಥನೆ ಮಾಡಿದ ಅಂತ ಕಾಣುತ್ತದೆ. ಪರಮಹಂಸರು ತಮಗೆ ತಾವೇ ಮೆತ್ತಗೆ ಹೇಳಿಕೊಂಡರು: “ಸರಿ, ಇದಾದಂತೆಯೇ!”
ರಾಜಮೋಹನ ಪರಮಹಂಸರಿಗೆ ಉಪಾಹಾರ ಮಾಡಿಸಿದ.
೧೯ನೆ ನವೆಂಬರ್, ೧೮೮೨, ಕಾರ್ತಿಕ ಶುಕ್ಲ ನವಮಿ, ಭಾನುವಾರ
ಈ ದಿನ ಜಗದ್ಧಾತ್ರಿಯ ಪೂಜೆ. ಸುರೇಂದ್ರ ಪರಮಹಂಸರನ್ನು ಕಲ್ಕತ್ತದಲ್ಲಿರುವ ತನ್ನ ಮನೆಗೆ ಆಹ್ವಾನಿಸಿದ್ದಾನೆ. ಆದರೆ ಮೊದಲು ಅವರು ಮನಮೋಹನನ ಮನೆಗೆ ಬಂದಿದ್ದಾರೆ.
ಪರಮಹಂಸರು ಮನಮೋಹನನ ಬೈಠಕ್ ಕೋಣೆಯಲ್ಲಿ ಕುಳಿತಿದ್ದಾರೆ. ಅವರು ಹೇಳುತ್ತಿದ್ದಾರೆ: “ಹಸು, ಹಿಂಡಿ ತವುಡು ಹಾಕಿದ ಕಲಗಚ್ಚನ್ನು ಬಹಳವಾಗಿ ಪ್ರೀತಿಸುವಂತೆ ಭಗವಂತ ವಿನೀತರ, ದೀನರ ಭಕ್ತಿಯನ್ನು ಬಹಳವಾಗಿ ಪ್ರೀತಿಸುತ್ತಾನೆ. ದುರ್ಯೋಧನ ತನ್ನ ವಿಪುಲ ಹಣ, ಐಶ್ವರ್ಯ ಇವುಗಳ ವೈಭವವನ್ನು ಶ್ರೀಕೃಷ್ಣನ ಮುಂದೆ ಪ್ರದರ್ಶಿಸಲಾರಂಭಿಸಿದ. ಆದರೆ ಶ್ರೀಕೃಷ್ಣ ಆತನ ಆತಿಥ್ಯವನ್ನು ಸ್ವೀಕರಿಸದೆ ಬಡವನಾದ ವಿದುರನ ಆತಿಥ್ಯವನ್ನು ಸ್ವೀಕರಿಸಿದ. ಹಸು ತನ್ನ ಕರುವಿನ ಕಡೆಗೆ ಓಡಿ ಓಡಿ ಹೋಗುವ ಹಾಗೆ ಭಗವಂತ ಭಕ್ತರ ಕಡೆಗೆ ಓಡಿ ಓಡಿ ಹೋಗುತ್ತಾನೆ.”
ಪರಮಹಂಸರು ಹಾಡುತ್ತಿದ್ದಾರೆ:
ಪರಮ ಯೋಗಿಗಳೆಲ್ಲ ಯುಗಯುಗ ತಪವಗೈವರು ಪ್ರೇಮಕೆ;
ಪ್ರೇಮವೆಚ್ಚರಗೊಳಲು ಎದೆಯೊಳು, ಸೂಜಿಗಲ್ಲೆಳೆವಂತೆ ಸೂಜಿಯ
ದೇವನೆಳೆವನು ಭಕ್ತರಾತ್ಮವ ತನ್ನ ಪ್ರೇಮದ ನಿಲಯಕೆ!
ಬಳಿಕ ಹೇಳುತ್ತಿದ್ದಾರೆ: “ಶ್ರೀಕೃಷ್ಣನ ಹೆಸರು ಕಿವಿಗೆ ಬಿದ್ದೊಡನೆಯೇ ಚೈತನ್ಯದೇವನ ಕಣ್ಣುಗಳಿಂದ ಪ್ರೇಮಾಶ್ರು ಸುರಿಯುತ್ತಿತ್ತು. ಭಗವಂತನೇ ನಿಜವಾದ ವಸ್ತು; ಉಳಿದುದೆಲ್ಲಾ ಅವಸ್ತು. ಮನುಷ್ಯ ಇಚ್ಛೆಪಟ್ಟರೆ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಲ್ಲ. ಆದರೆ ಏನು ಮಾಡುವುದು, ಆತ ಕಾಮಕಾಂಚನಗಳ ಭೋಗದಲ್ಲೇ ಮತ್ತನಾಗಿದ್ದಾನೆ. ಹಾವಿನ ತಲೆಯ ಮೇಲೆ ರತ್ನವಿದೆ. ಆದರೂ ಅದು ಕಪ್ಪೆಯನ್ನು ತಿಂದೇ ಸಾಯುತ್ತದೆ.
“ಭಕ್ತಿಯೇ ಸಾರವಸ್ತು. ವಿಚಾರದ ಮೂಲಕ ಯಾರು ತಾನೆ ಭಗವಂತನನ್ನು ಅರಿಯಬಲ್ಲರು? ನನಗೆ ಬೇಕಾಗಿರುವುದು ಭಕ್ತಿ. ಆತನ ಅನಂತ ಐಶ್ವರ್ಯದ ಸಂಬಂಧವಾಗಿ ಅರಿತುಕೊಳ್ಳಬೇಕಾದ ಆವಶ್ಯಕತೆ ಏನಿದೆ ನನಗೆ? ಒಂದು ಸೀಸೆ ಮದ್ಯವೇ ನನ್ನನ್ನು ಮತ್ತನನ್ನಾಗಿ ಮಾಡುವಾಗ ಇನ್ನು ಸೇಂದಿಯ ಅಂಗಡಿಯಲ್ಲಿ ಏನಿದೆ ನನಗೆ? ಒಂದು ತಂಬಿಗೆ ನೀರೇ ತನ್ನ ತೃಷೆಯನ್ನು ಇಂಗಿಸಿಬಿಡಬಲ್ಲದಾದ್ದರಿಂದ ಈ ಜಗತ್ತಿನಲ್ಲಿ ಒಟ್ಟು ಎಷ್ಟು ಪರಿಮಾಣ ನೀರು ಇದೆ ಎಂಬುದನ್ನು ಅರಿಯುವ ಆವಶ್ಯಕತೆಯೇನಿರದು.”
ಈಗ ಪರಮಹಂಸರು ಸುರೇಂದ್ರನ ಮನೆಗೆ ಬಂದು ಬೈಠಕ್ಖಾನೆಯಲ್ಲಿ ಕುಳಿತುಕೊಂಡಿದ್ದಾರೆ. ಅನೇಕ ಮಂದಿ ಭಕ್ತರು ಸುತ್ತಲೂ ಕುಳಿತುಕೊಂಡಿದ್ದಾರೆ. ಜಡ್ಜಿಯಾಗಿರುವ ಸುರೇಂದ್ರನ ಅಣ್ಣನೂ ಬಂದು ಕುಳಿತಿದ್ದಾನೆ.
ಶ್ರೀರಾಮಕೃಷ್ಣರು ಸುರೇಂದ್ರನ ಅಣ್ಣನಿಗೆ: “ನೀವು ಒಬ್ಬ ಜಡ್ಜಿಯಾಗಿದ್ದೀರಿ. ಅದು ಬಹಳ ಒಳ್ಳೆಯದೆ. ಆದರೆ ತಿಳಿದುಕೊಂಡಿರಬೇಕು ಎಲ್ಲವೂ ಭಗವಂತನ ಶಕ್ತಿಯಿಂದ ಘಟಿಸುತ್ತದೆ ಎಂಬುದನ್ನು. ಉತ್ತಮ ಪದವಿಯನ್ನು ಆತನೇ ಕೊಟ್ಟಿದ್ದಾನೆ. ಆದ್ದರಿಂದ ನೀವು ಜಡ್ಜಿಯಾಗಿದ್ದೀರಿ. ಜನ ಭಾವಿಸುತ್ತಾರೆ, ತಾವು ಬಹಳ ದೊಡ್ಡವರು ಎಂಬುದಾಗಿ. ಚಾವಣಿಯ ನೀರು ಸಿಂಹದ ತಲೆಯಾಕಾರದ ನಳಿಕೆಯಿಂದ ಹೊರಕ್ಕೆ ಬರುತ್ತದೆ. ಕಣ್ಣಿಗೆ ಕಾಣಿಸುತ್ತದೆ, ಸಿಂಹ ತನ್ನ ಬಾಯಿಂದ ನೀರನ್ನು ಹೊರಕ್ಕೆ ತರುತ್ತಿರುವಂತೆ! ಆದರೆ ನೋಡಿ, ಆ ನೀರು ಎಲ್ಲಿಂದ ಬರುತ್ತದೆ ಎಂಬುದನ್ನು! ಆಕಾಶದಲ್ಲಿ ಮೇಘ ಕಟ್ಟಿ ಚಾವಣಿಯ ಮೇಲೆ ಸುರಿಯುತ್ತದೆ; ಬಳಿಕ ನೀರು ಕೊಳವೆಯ ಮೂಲಕ ಹರಿದು ಕಟ್ಟಕಡೆಯಲ್ಲಿ ಸಿಂಹಾಕಾರದ ನಳಿಕೆಯ ಮೂಲಕ ಹೊರಕ್ಕೆ ಬರುತ್ತದೆ.”
ಸುರೇಂದ್ರನ ಅಣ್ಣ: “ಬ್ರಾಹ್ಮಸಮಾಜ ಪ್ರಚಾರ ಮಾಡುತ್ತದೆ, ಹೆಂಗಸರಿಗೆ ಸ್ವಾಧೀನತೆ ಕೊಡಬೇಕು, ಜಾತಿಭೇದವನ್ನು ನಿರ್ಮೂಲಮಾಡಬೇಕು ಎಂಬುದಾಗಿ. ಇವುಗಳ ಸಂಬಂಧವಾಗಿ ನಿಮ್ಮ ಅಭಿಪ್ರಾಯವೇನು?”
ಶ್ರೀರಾಮಕೃಷ್ಣರು: “ಜನರಿಗೆ ಭಗವಂತನಲ್ಲಿ ಹೊಸದಾಗಿ ಅನುರಾಗ ಉಂಟಾಗಿದ್ದರೆ ಹಾಗೆನಿಸುತ್ತದೆ. ಬಿರುಗಾಳಿ ಬಂತು ಎಂದರೆ ಧೂಳು ಏಳುತ್ತದೆ. ಆಗ ಅಮಟೆಕಾಯಿಯ ಮರ ಯಾವುದು, ಹುಣಸೆ ಮರ ಯಾವುದು, ಮಾವಿನ ಮರ ಯಾವುದು ಎಂಬುದನ್ನು ಪ್ರತ್ಯೇಕಿಸಲಾಗುವುದಿಲ್ಲ. ಆದರೆ ಬಿರುಗಾಳಿ ನಿಂತುಹೋದ ನಂತರ ಎಲ್ಲವೂ ಸ್ಪಷ್ಟವಾಗಿ ತೋರಿಬರುತ್ತದೆ. ನವಾನುರಾಗದ ಬಿರುಗಾಳಿ ನಿಂತುಹೋದನಂತರ ಕ್ರಮೇಣ ಅರ್ಥವಾಗುತ್ತದೆ, ನಿಜವಾಗಿ ಭಗವಂತನೇ ಶ್ರೇಯಸ್ಕರ ನಿತ್ಯವಸ್ತು, ಉಳಿದುದೆಲ್ಲಾ ಅವಸ್ತು ಎಂಬುದಾಗಿ. ಸಾಧುಸಂಗ, ತಪಸ್ಸು ಇವನ್ನು ಮಾಡದಿದ್ದರೆ ಇದನ್ನು ಗ್ರಹಿಸಲಾಗುವುದಿಲ್ಲ. ಮೃದಂಗದ ಶಬ್ದವನ್ನು ಕೇವಲ ಬಾಯಿಂದ ಮಾತ್ರ ಹೊರಡಿಸಿದರೆ ಏನು ಪ್ರಯೋಜನ? ಅದನ್ನು ಮೃದಂಗದ ಮೂಲಕ ಹೊರಡಿಸುವುದು ಬಹಳ ಕಠಿಣ. ಕೇವಲ ಲೆಕ್ಚರ್ನಿಂದಲೇ ಏನು ಪ್ರಯೋಜನ? ತಪಸ್ಸು ಮಾಡಬೇಕು. ಆಗ ಗ್ರಹಿಸಲು ಸಾಧ್ಯವಾಗುತ್ತದೆ.
“ಜಾತಿಭೇದದ ವಿಷಯ ಕೇಳಿದೆಯಲ್ಲವೆ? ಅದನ್ನು ನಿರ್ಮೂಲಮಾಡಲು ಇರುವುದು ಕೇವಲ ಒಂದೇ ಮಾರ್ಗ. ಅದು ಭಕ್ತಿಮಾರ್ಗ. ಭಕ್ತರಿಗೆ ಜಾತಿ ಎಂಬುದೇ ಇಲ್ಲ. ಹೃದಯದಲ್ಲಿ ಭಕ್ತಿ ಅಂಕುರವಾಗಿಬಿಟ್ಟಿತು ಎಂದರೆ ಅಸ್ಪೃಶ್ಯ ಶುದ್ಧನಾಗಿಬಿಡುತ್ತಾನೆ-ಚಂಡಾಲ ಚಂಡಾಲನಾಗಿ ಉಳಿದುಕೊಳ್ಳುವುದಿಲ್ಲ. ಶ್ರೀಚೈತನ್ಯದೇವ ಆಚಂಡಾಲಾದಿಯಾಗಿ ಎಲ್ಲರನ್ನೂ ಆಲಿಂಗನ ಮಾಡಿಕೊಂಡ.
“ಬ್ರಾಹ್ಮಸಮಾಜದ ಅನುಯಾಯಿಗಳು ಭಗವನ್ನಾಮ ಸಂಕೀರ್ತನೆ ಮಾಡುತ್ತಾರೆ. ಅದು ಬಹಳ ಒಳ್ಳೆಯದು. ವ್ಯಾಕುಲರಾಗಿ ಕರೆದರೆ ಭಗವಂತನ ಕೃಪೆ ದೊರೆಯುತ್ತದೆ, ಆತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ಎಲ್ಲಾ ಮಾರ್ಗಗಳಿಂದಲೂ ಆತನ ಸಾಕ್ಷಾತ್ಕಾರವನ್ನು ಪಡೆಯಬಹುದು. ಒಬ್ಬನೇ ಭಗವಂತನನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ, ಅಷ್ಟೆ.”
ಸುರೇಂದ್ರನ ಅಣ್ಣ: “ಥಿಯಾಸೊಫಿ ಸಂಬಂಧವಾಗಿ ನಿಮ್ಮ ಅಭಿಪ್ರಾಯವೇನು?”
ಶ್ರೀರಾಮಕೃಷ್ಣರು: “ಅದು ಅಲೌಕಿಕ ಶಕ್ತಿಯನ್ನು ದೊರಕಿಸಿಕೊಡುತ್ತದೆ ಅಂತ ಕೇಳಿದ್ದೇನೆ. ಒಂದು ಮನೆಯಲ್ಲಿ ಒಬ್ಬ ಪಿಶಾಚಸಿದ್ಧ ಇದ್ದ. ಆತನಿಗೆ ಪಿಶಾಚಿ ಏನೇನೊ ವಸ್ತುಗಳನ್ನು ತಂದುಕೊಡುತ್ತಿತ್ತು. ಅಲೌಕಿಕ ಶಕ್ತಿ ನನಗೇಕೆ? ಅದರಿಂದ ಭಗವಂತನ ಸಾಕ್ಷಾತ್ಕಾರ ದೊರಕುವುದೆ? ಭಗವಂತನ ಸಾಕ್ಷಾತ್ಕಾರ ದೊರೆಯದೆಹೋಯಿತು ಎಂದರೆ, ಆಗ ಪ್ರತಿಯೊಂದೂ ಮಿಥ್ಯೆಯಾಗಿಬಿಡುತ್ತದೆ.
೨೬ನೇ ನವೆಂಬರ್ ೧೮೮೨
ಶ್ರೀರಾಮಕೃಷ್ಣ ಪರಮಹಂಸರು ಕಲ್ಕತ್ತದಲ್ಲಿರುವ ಮಣಿಲಾಲ ಮಲ್ಲಿಕನ ಮನೆಗೆ ಸಾಯಂಕಾಲ ನಾಲ್ಕು ಘಂಟೆ ಸಮಯಕ್ಕೆ ಶುಭಾಗಮನ ಮಾಡಿದ್ದಾರೆ. ಇಂದು ಈತನ ಮನೆಯಲ್ಲಿ ಬ್ರಾಹ್ಮಸಮಾಜದ ವಾರ್ಷಿಕೋತ್ಸವ. ವಿಜಯಕೃಷ್ಣ ಗೋಸ್ವಾಮಿ ಮತ್ತು ಅನೇಕ ಬ್ರಾಹ್ಮಭಕ್ತರು ಬಂದಿದ್ದಾರೆ. ಮಾಸ್ಟರ್ ಮೊದಲಾದವರೂ ಬಂದಿದ್ದಾರೆ. ಈ ಉತ್ಸವವನ್ನು ಬಹಳ ಯಶಸ್ವಿಯಾಗಿ ನೆರವೇರಿಸಲು ಮನೆಯ ಯಜಮಾನ ಬಹಳ ಒಳ್ಳೆಯ ವ್ಯವಸ್ಥೆ ಮಾಡಿದ್ದಾನೆ. ಪ್ರಹ್ಲಾದಚರಿತ್ರೆಯ ಹರಿಕಥೆ ನಡೆದ ನಂತರ ವಿಜಯ ಇಂದಿನ ಉಪಾಸನೆ ನಡೆಸುತ್ತಾನೆ.
ಈಗ ಭಾಗವತರು ಹರಿಕಥೆ ಮಾಡಲಾರಂಭಿಸಿದರು. ಹೇಳುತ್ತಿದ್ದಾರೆ: “ಪ್ರಹ್ಲಾದನ ತಂದೆಯಾದ ಹಿರಣ್ಯಕಶಿಪು ಹರಿಯ ನಿಂದೆಯನ್ನು ಮಾಡುತ್ತ ಪ್ರಹ್ಲಾದನನ್ನು ಪದೇ ಪದೇ ಚಿತ್ರಹಿಂಸೆಗೆ ಒಳಪಡಿಸುತ್ತಿದ್ದಾನೆ. ಪ್ರಹ್ಲಾದ ಕೈಮುಗಿದು ಹರಿಗೆ ಪ್ರಾರ್ಥನೆ ಮಾಡುತ್ತಿದ್ದಾನೆ: ‘ಹೇ ಹರಿ, ನನ್ನ ಪಿತನಿಗೆ ಸುಮತಿಯನ್ನು ಕರುಣಿಸು’ ಎಂಬುದಾಗಿ.”
ಇದನ್ನು ಕೇಳಿ ಪರಮಹಂಸರು ಅಳಲಾರಂಭಿಸಿದ್ದಾರೆ. ಆಗ ಅವರು ಭಾವಾವಸ್ಥರಾಗಿದ್ದಾರೆ. ಸ್ವಲ್ಪ ಹೊತ್ತು ಆ ಅವಸ್ಥೆಯಲ್ಲೇ ಇದ್ದು ಈಗ ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ.
.ಶ್ರೀರಾಮಕೃಷ್ಣರು: “ಭಕ್ತಿಯೇ ಸಾರವಸ್ತು. ಸರ್ವದಾ ಭಗವಂತನ ನಾಮಗುಣ ಕೀರ್ತನೆ ಮಾಡುತ್ತ ಮಾಡುತ್ತ ಇದ್ದರೆ ಭಕ್ತಿ ದೊರೆತುಬಿಡುತ್ತದೆ. ಆಹಾ! ಶಿವನಾಥ ಎಂಥ ಭಕ್ತ! ಸಕ್ಕರೆ ರಸದಲ್ಲಿ ನೆಂದ ಛಾನಾದ ವಡೆಯ2 ಹಾಗೆ ಆತ ಭಕ್ತಿರಸದಲ್ಲಿ ನೆಂದುಹೋಗಿಬಿಟ್ಟಿದ್ದಾನೆ.
“ನನ್ನ ಧರ್ಮವೇ ಸರಿ, ಉಳಿದವರದೆಲ್ಲಾ ತಪ್ಪು” ಎಂಬ ಭಾವನೆ ಒಳ್ಳೆಯದಲ್ಲ. ಎಲ್ಲಾ ಮಾರ್ಗಗಳಿಂದಲೂ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಬಹುದು. ಹೃತ್ಪೂರ್ವಕ ವ್ಯಾಕುಲತೆ ಇತ್ತು ಎಂದರೆ, ದೊರೆತುಬಿಡುತ್ತದೆ. ಮಾರ್ಗಗಳು ಅನೇಕ. ಹಾಗೆಯೇ ಮತಗಳು ಅನೇಕ.
“ನೋಡಿ, ನಾವು ಭಗವಂತನನ್ನು ನೋಡಬಹುದು. ಆತ ಅವಾಜ್ಮಾನಸಗೋಚರ ಎಂಬುದಾಗಿ ವೇದದಲ್ಲಿ ಹೇಳಿದೆ. ಇದರ ಅರ್ಥ ವಿಷಯಾಸಕ್ತ ಮನಸ್ಸಿಗೆ ಅಗೋಚರ ಎಂಬುದಾಗಿ. ವೈಷ್ಣವಚರಣ ಹೇಳುತ್ತಿದ್ದ: ‘ಆತ ಶುದ್ಧ ಬುದ್ಧಿಗೆ ಗೋಚರ’ ಎಂಬುದಾಗಿ. ಆದ್ದರಿಂದಲೇ ಸಾಧುಸಂಗ, ಪ್ರಾರ್ಥನೆ, ಗುರುವಿನಿಂದ ಉಪದೇಶ-ಇವುಗಳೆಲ್ಲದರ ಆವಶ್ಯಕತೆ ಇರುವುದು. ಆಗ ಮಾತ್ರವೇ ಚಿತ್ತಶುದ್ಧಿ ಉಂಟಾಗುತ್ತದೆ. ಆಗ ಮಾತ್ರವೇ ಆತನ ದರ್ಶನ ದೊರೆಯುತ್ತದೆ. ಬಗ್ಗಡದ ನೀರಿಗೆ ಶುದ್ಧಿಕರಣ ವಸ್ತುವನ್ನು ಹಾಕಿದರೆ ಆಗ ಅದು ಶುದ್ಧವಾಗುತ್ತದೆ. ಆಗ ಅದರಲ್ಲಿ ಮುಖ ಕಾಣುತ್ತದೆ. ಕೊಳಕಾಗಿರುವ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಾಗುವುದಿಲ್ಲ.
“ಚಿತ್ತಶುದ್ಧಿಯಾದ ನಂತರ ಭಕ್ತಿ ಉಂಟಾಗುತ್ತದೆ. ಆಗ ಮಾತ್ರವೇ ಭಗವಂತನ ಕೃಪೆಯಿಂದ ಆತನ ದರ್ಶನ ದೊರೆಯುತ್ತದೆ. ದರ್ಶನ ದೊರೆತ ನಂತರ ಆತನಿಂದ ಆದೇಶ ದೊರೆತರೆ ಆಗ ಲೋಕಶಿಕ್ಷಣಕಾರ್ಯವನ್ನು ಮಾಡಲು ಸಾಧ್ಯ. ಅದಕ್ಕಿಂತ ಮುಂಚೆ ಲೆಕ್ಚರ್ ಕೊಡುವುದು ಒಳ್ಳೆಯದಲ್ಲ. ಇದರ ಸಂಬಂಧವಾಗಿ ಒಂದು ಹಾಡು ಇದೆ. ಅದು ಹೇಳುತ್ತದೆ:
ಮೂರ್ತಿಯನು ನಿಲಿಸಿಲ್ಲ
ಗುಡಿಯ ಪೀಠದಲಿ,
ಆದರೂ ಶಂಖವನು ಊದುತಿರುವೆ!…..
“ಮೊದಲು ಹೃದಯಮಂದಿರವನ್ನು ಚೊಕ್ಕಟಮಾಡಬೇಕು. ವಿಗ್ರಹವನ್ನು ಪ್ರತಿಷ್ಠಾಪನೆಮಾಡಿ ಪೂಜೆಗೆ ವ್ಯವಸ್ಥೆ ಮಾಡಬೇಕು. ಏನೆಂದರೆ ಏನೂ ಮಾಡಿಲ್ಲ. ಸುಮ್ಮನೆ ‘ಭ್ಞೋ! ಭ್ಞೋ!’ ಅಂತ ಶಂಖ ಊದಿದರೆ ಏನಾದಹಾಗಾಯಿತು?”
ವಿಜಯ ವೇದಿಕೆಯ ಮೇಲೆ ಕುಳಿತು ಬ್ರಾಹ್ಮಸಮಾಜದ ಪದ್ಧತಿಗನುಸಾರ ಉಪಾಸನೆ ನಡೆಸುತ್ತಿದ್ದಾನೆ. ಅದನ್ನು ಮುಗಿಸಿ ಈಗ ಪರಮಹಂಸರ ಹತ್ತಿರ ಬಂದು ಕುಳಿತುಕೊಂಡ.
ಶ್ರೀರಾಮಕೃಷ್ಣರು ವಿಜಯನಿಗೆ: “ನೀವು ಅಷ್ಟೊಂದಾಗಿ, ‘ಪಾಪ, ಪಾಪ’ ಅಂತ ಹೇಳುತ್ತಲೇ ಇರುತ್ತೀರಲ್ಲ ಏಕೆ? ಒಂದು ನೂರು ಸಲ, ‘ನಾನು ಪಾಪಿ, ನಾನು ಪಾಪಿ’ ಎಂದು ಹೇಳಿದ್ದೇ ಆದರೆ, ವ್ಯಕ್ತಿ ಹಾಗೆಯೇ ಆಗಿಬಿಡುತ್ತಾನೆ. ವ್ಯಕ್ತಿ ಅಂಥ ದೃಢವಿಶ್ವಾಸವುಳ್ಳವನಾಗಿರಬೇಕು, ಆತನಿಗೆ ಹೇಳಲು ಸಾಧ್ಯವಾಗಬೇಕು: ‘ಏನು? ನಾನು ಭಗವಂತನ ಹೆಸರನ್ನು ಜಪಿಸುತ್ತಿದ್ದೇನೆ. ನನ್ನಲ್ಲಿ ಇನ್ನು ಪಾಪ ಅಂದರೆ?’ ಭಗವಂತ ನಮ್ಮ ತಂದೆ-ತಾಯಿ. ಆತನಿಗೆ ಹೇಳು: ‘ಹೇ ಭಗವಂತ, ನಿಜ, ನಾನು ಪಾಪಕಾರ್ಯಗಳನ್ನು ಮಾಡಿದ್ದೇನೆ. ಆದರೆ ಇನ್ನು ಮೇಲೆ ಮಾಡುವುದಿಲ್ಲ.’ ಆತನ ನಾಮ ಜಪಿಸಿ ಅದರ ಮಹತ್ತಿನಿಂದ ದೇಹ ಮನಸ್ಸನ್ನು ಪವಿತ್ರಗೊಳಿಸು-ನಿನ್ನ ನಾಲಗೆಯನ್ನು ಪವಿತ್ರಗೊಳಿಸು.”
ಡಿಸೆಂಬರ್ ೧೮೮೨
ಪರಮಹಂಸರು ದಕ್ಷಿಣೇಶ್ವರದಲ್ಲಿ ತಮ್ಮ ಕೊಠಡಿಯ ಪಶ್ಚಿಮ ವರಾಂಡದಲ್ಲಿ ಕುಳಿತು ಭಕ್ತರೊಡನೆ ಮಾತುಕತೆಯಾಡುತ್ತಿದ್ದಾರೆ. ಈಗ ವೇಳೆ ಅಪರಾಹ್ನ. ಬಾಬುರಾಮ, ರಾಮದಯಾಲ, ಮಾಸ್ಟರ್ ಇವರೂ ಅಲ್ಲಿ ಕುಳಿತಿದ್ದಾರೆ. ಇವರು ಮೂವರೂ ಇಂದಿನ ರಾತ್ರಿಯನ್ನು ಪರಮಹಂಸರೊಡನೆ ಕಳೆಯಲು ನಿಶ್ಚಯಿಸಿದ್ದಾರೆ. ಕ್ರಿಸ್ಮಸ್ ರಜಾ ಬಂದಿರುವುದರಿಂದ ಮಾಸ್ಟರ್ ಮಾರನೆ ದಿನವನ್ನೂ ಪರಮಹಂಸರೊಡನೆ ಕಳೆಯ ಬೇಕೆಂದಿದ್ದಾನೆ. ಬಾಬುರಾಮನಿಗೆ ಪರಮಹಂಸರ ಪರಿಚಯವಾದದ್ದು ಈಗೆಲ್ಲೊ ಕೆಲವು ದಿನಗಳ ಹಿಂದೆ ಮಾತ್ರ.
ಶ್ರೀರಾಮಕೃಷ್ಣರು ಭಕ್ತರಿಗೆ: “ಭಗವಂತನೇ ಎಲ್ಲಕ್ಕೂ ಕರ್ತ ಎಂಬ ಜ್ಞಾನೋದಯವಾಗಿ ಬಿಟ್ಟಿತು ಎಂದರೆ, ಮನುಷ್ಯ ಜೀವನ್ಮುಕ್ತನಾಗಿಬಿಡುತ್ತಾನೆ. ಒಮ್ಮೆ ಕೇಶವಚಂದ್ರಸೇನ ಶಂಭುಮಲ್ಲಿಕನೊಡನೆ ಇಲ್ಲಿಗೆ ಬಂದ. ನಾನು ಆತನಿಗೆ ಹೇಳಿದೆ: ‘ಮರದ ಎಲೆ ಕೂಡ ಆತನ ಇಚ್ಛೆ ಇಲ್ಲದೆ ಅಲುಗಲಾರದು’ ಎಂಬುದಾಗಿ. ಸ್ವಾಧೀನ ಇಚ್ಛೆ (ಫ್ರೀವಿಲ್) ಎಂಬುದು ಎಲ್ಲಿದೆ? ಎಲ್ಲವೂ ಭಗವಂತನ ಅಧೀನ. ತೋತಾಪುರಿ ಒಳ್ಳೆ ದೊಡ್ಡ ಜ್ಞಾನಿ. ಆದರೂ ಆತ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳಲು ಯತ್ನಿಸಿದ್ದ. ಇಲ್ಲಿ ಆತ ಹನ್ನೊಂದು ತಿಂಗಳು ಇದ್ದ. ಒಮ್ಮೆ ಆಗ ಆತನಿಗೆ ಹೊಟ್ಟೆಬೇನೆ ಬಂದಿತ್ತು. ಹೊಟ್ಟೆನೋವನ್ನು ತಡೆಯಲಾರದೆ ಗಂಗೆಯಲ್ಲಿ ಮುಳುಗಿ ಸಾಯಲು ಯತ್ನಿಸಿದ. ಆಗ ಘಟ್ಟದ ಹತ್ತಿರ ನೀರು ಆಳವಾಗಿಯೇ ಇರಲಿಲ್ಲ. ಆತ ನದಿಯಲ್ಲಿ ಎಷ್ಟುದೂರ ಹೋದರೂ ಮಂಡಿಯುದ್ದಕ್ಕಿಂತ ಅಧಿಕವಾಗಿ ನೀರು ಎಲ್ಲೂ ಬರಲೇ ಇಲ್ಲ. ಆಗ ಆತನಿಗೆ ಅದರ ರಹಸ್ಯ 3 ಅರ್ಥವಾಯಿತು. ಆಗ ಹಿಂದಿರುಗಿ ಬಂದ. ಒಮ್ಮೆ ನನಗೆ ಬಹಳವಾಗಿ ವಾಯು ವೃದ್ಧಿಯಾಗಿಬಿಟ್ಟಿತು. ಅದನ್ನು ತಡೆಯಲಾರದೆ ಚೂರಿಯಿಂದ ಕತ್ತು ಕೊಯ್ದುಕೊಳ್ಳಲು ಯತ್ನಿಸಿದ್ದೆ. ಅದಕ್ಕಾಗಿಯೇ ನಾನು ಹೇಳುವುದು: ‘ಹೇ ತಾಯಿ : ನಾನು ಯಂತ್ರ, ನೀನು ಯಂತ್ರಿ, ನಾನು ರಥ, ನೀನು ರಥಿ. ನೀನು ಚಲಿಸಿದಂತೆ ಚಲಿಸುತ್ತೇನೆ; ಮಾಡಿಸಿದಂತೆ ಮಾಡುತ್ತೇನೆ.”
ಭಕ್ತರು ಪರಮಹಂಸರ ಕೊಠಡಿಯಲ್ಲಿ ಹಾಡಲಾರಂಭಿಸಿದ್ದಾರೆ:
ಹೃದಯಬೃಂದಾವನದಿ ಬಂದು ಮನೆ ಮಾಡಯ್ಯ ಕಮಲಾಪತೀ,
ಓಹೊ, ಭಕ್ತಿಪ್ರಿಯನೆ ನನ್ನ ಭಕ್ತಿಯೆ ನಿನಗೆ ರಾಧಾಸತೀ
ನನ್ನ ದೇಹವೆ ನಿನ್ನ ನಂದಗೋಕುಲವಯ್ಯ
ನನ್ನ ನೇಹವೆ ನಿನಗೆ ಶ್ರೀ ಯಶೋದೆ.
ನನ್ನ ಮುಕ್ತಿಯ ಬಯಕೆ ಗೋಪನಾರಿಯರಯ್ಯ
ಬಾ ಇಲ್ಲಿ ನೆಲಸಯ್ಯ, ಇದು ನಿನ್ನದೇ.
ಇದನೆತ್ತಿ ಬಿಸುಡಯ್ಯ, ನೋಡು ಬಿದ್ದಿದೆ ಇಲ್ಲಿ
ನನ್ನ ಪಾಪದ ಭಾರ ಗೋವರ್ಧನ;
ಕಂಸ ಚರರಾಗಿರುವ ಅರಿವರ್ಗಗಳ ಕೊಂದು
ನನ್ನೊಳಗೆ ನೆಲಸಯ್ಯ ಜನಾರ್ದನ!
ನನ್ನ ಮನಸ್ಸಿನ ಬಯಲು ಹುಲ್ಲುಗಾವಲ ಚರಿಸು
ನಿನ್ನ ಕರುಣೆಯ ಕೊಳಲು ಸವಿರಾಗದೊಳಗೆನ್ನ
ಮನದ ಧೇನುವ ನಿನ್ನ ವಶಪಡಿಸು,
ನನ್ನ ಹೃದಯದ ಕರೆಯ ಯಮುನಾನದೀ ತಟದಿ
ನನ್ನ ಬಯಕೆಯ ವೃಕ್ಷದಡಿಗೆ ನೆಲಸು.
ಇಲ್ಲಿ ಬೃಂದಾವನದಿ ರಾಖಾಲನ ಪ್ರೇಮವೇ
ನಿನ್ನನೀ ತೆರದಲ್ಲಿ ಬಂಧಿಸಿರಲು,
ಆ ಅಲ್ಲಿ ನನ್ನನೂ ಗೊಲ್ಲನಾಗಿಸು ದೇವ,
ಎಂದು ಈ ದಾಶರಥಿ ಬೇಡುತಿಹನು.
ಅವರು ಮತ್ತೆ ಹಾಡುತ್ತಿದ್ದಾರೆ:
ಈ ಪ್ರಾಣಪಂಜರದಿ ಕುಳಿತು ಹಾಡು ಹಕ್ಕಿ,
ಅವನ ವಿಭುಗಣಗಳನು ಕುರಿತು ಹಾಡು,
ಶ್ರೀಬ್ರಹ್ಮಕಲ್ಪತರು ಮೂಲದಲಿ ನೀ ಕುಳಿತು
ಪುರುಷಾರ್ಥ ಫಲಗಳನು ಸವಿದುನೋಡು.
‘ಅವನೆ ನಿತ್ಯಾನಂದ, ಅವನೆ ಆತ್ಮದ ಅಮೃತ’ –
ಎಂದು ನೀ ನಿತ್ಯವೂ ಹೊಗಳು ಹಾಡು,
ಅಚ್ಚರಿಯನುಕ್ಕಿಸುವ ನನ್ನ ಜೀವದ ಹಕ್ಕಿ
ಅವನಿಗೆಂದೇ ಬರಲಿ ನಿನ್ನ ಹಾಡು;
ಮಳೆಹನಿಗೆ ಜಾತಕವು ಕಾತರಿಸುವಂದದಲಿ
ಅವನ ಕೃಪೆಯನು ನಿರುತ ಬೇಡಿನೋಡು.
ನಂದನ ತೋಟದ ಶ್ರೀನಾಥಮಿತ್ರ ತನ್ನ ಬಂಧುಗಳೊಡನೆ ಕೊಠಡಿಯನ್ನು ಪ್ರವೇಶಿಸಿದ. ಪರಮಹಂಸರು ಆತನ ಕಡೆ ನೋಡಿ ಹೇಳುತ್ತಿದ್ದಾರೆ: “ಗಾಜಿನ ಬಾಗಿಲ ಮೂಲಕ ಕೊಠಡಿಯ ಒಳಗಿರುವುದೆಲ್ಲ ಕಾಣಬರುವ ಹಾಗೆ, ಈತನ ಕಣ್ಣಿನ ಮೂಲಕ ಈತನ ಆಂತರ್ಯವೆಲ್ಲ ತೋರಿಬರುತ್ತದೆ.” ಈತ ಮತ್ತು ಈತನ ಸಹೋದರರೆಲ್ಲರೂ ಕೂಡಿ ಪ್ರತಿವರ್ಷವೂ ತಮ್ಮ ಮನೆಯಲ್ಲಿ ಬ್ರಾಹ್ಮಸಮಾಜದ ವಾರ್ಷಿಕೋತ್ಸವವನ್ನು ನಡೆಸಿ ಕೊಂಡು ಬರುತ್ತಿದ್ದಾರೆ. ಪರಮಹಂಸರು ಈ ಉತ್ಸವಗಳಲ್ಲಿ ಅನೇಕ ಸಲ ಭಾಗಿಗಳಾಗಿದ್ದರು.
ದೇವಾಲಯಗಳಲ್ಲಿ ಸಾಯಂ ಮಂಗಳಾರತಿ ಆರಂಭವಾಯಿತು. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತು ಭಗವಂತನ ಧ್ಯಾನ ಮಾಡುತ್ತಿದ್ದಾರೆ. ಕ್ರಮೇಣ ಭಾವಾವಿಷ್ಟರಾಗಿಬಿಟ್ಟರು. ಭಾವ ಉಪಶಮನವಾದನಂತರ ಹೇಳುತ್ತಿದ್ದಾರೆ: “ತಾಯೆ, ಆತನನ್ನೂ ಆಕರ್ಷಿಸಿಬಿಡು. ಆತ ಬಹಳ ದೀನ ಮತ್ತು ನಮ್ರ, ಬಂದು ಹೋಗಿ ನಿನ್ನ ದರ್ಶನ ಮಾಡುತ್ತಿದ್ದಾನೆ.” ಪರಮಹಂಸರು ಬಾಬುರಾಮನ ಸಂಬಂಧವಾಗಿಯೇನು ಹಾಗೆ ಹೇಳುತ್ತಿದ್ದುದು?
ಶ್ರೀರಾಮಕೃಷ್ಣರು ವಿವಿಧ ಸಮಾಧಿಗಳ ಸಂಬಂಧವಾಗಿ ಸ್ವಲ್ಪ ಹೊತ್ತು ಭಕ್ತರಿಗೆ ವಿವರಿಸಿದರು. ಈಗ ಜೀವನದ ಸುಖದುಃಖದ ಸಂಬಂಧವಾಗಿ ಮಾತುಕತೆ ಆರಂಭವಾಯಿತು. ಭಗವಂತ ಈ ಜಗತ್ತಿನಲ್ಲಿ ಇಷ್ಟೊಂದು ದುಃಖವನ್ನು ಏಕೆ ಸೃಷ್ಟಿಸಿದ್ದಾನೆ?
ಮಾಸ್ಟರ್: “ಒಮ್ಮೆ ವಿದ್ಯಾಸಾಗರ ಸಿಟ್ಟುಗೊಂಡು ಹೇಳಿದರು: ‘ಏಕೆ ಭಗವಂತನನ್ನು ಕರೆಯಬೇಕು? ಹಾಗೇ ನೋಡು. ಚಂಗೇಸ್ಖಾನ್ ಲೂಟಿ ಆರಂಭಮಾಡಿದಾಗ ಅನೇಕರನ್ನು ಸೆರೆಹಿಡಿದ. ಕೈದಿಗಳ ಸಂಖ್ಯೆ ಕ್ರಮೇಣ ಒಂದು ಲಕ್ಷದವರೆಗೂ ಏರಿತು. ಆಗ ಸೇನಾಪತಿ ಬಂದು ಆತನಿಗೆ ತಿಳಿಸಿದ: “ಮಹಾಶಯ, ಇವರಿಗೆಲ್ಲ ಅನ್ನ ಹಾಕುವುದು ಹೇಗೆ? ಇವರನ್ನು ನಮ್ಮ ಹತ್ತಿರ ಇಟ್ಟುಕೊಳ್ಳುವುದೂ ವಿಪತ್ಕಾರಿಯೆ. ಇವರನ್ನು ಸುಮ್ಮನೆ ಬಿಟ್ಟುಬಿಟ್ಟರೂ ವಿಪತ್ತಿಗೆ ಒಳಗಾಗಬೇಕಾಗುತ್ತದೆ. ಏನು ಮಾಡೋಣ ಈಗ?” ಆಗ ಚಂಗೇಸ್ಖಾನ್ ಹೇಳಿದ: “ಆದ್ದರಿಂದ ಇನ್ನೇನು ಮಾಡುವುದು? ಎಲ್ಲರನ್ನೂ ಕೊಂದುಹಾಕಿಬಿಡು.” ಒಡನೆ ಹುಕುಮ್ ಆಗಿಬಿಟ್ಟಿತು, “ಕಚ್, ಕಚ್” ಅಂತ ಎಲ್ಲರನ್ನೂ ಕೊಂದುಹಾಕಿಬಿಡುವ ಹಾಗೆ. ಭಗವಂತ ಈ ಹತ್ಯೆಯನ್ನು ನೋಡಿದ ತಾನೆ? ಅದನ್ನು ತಡೆಗಟ್ಟಲು ಯಾವ ಪ್ರಯತ್ನವನ್ನೂ ಆತ ಮಾಡಲೇ ಇಲ್ಲ. ಆದ್ದರಿಂದ ಆತ ಇದ್ದರೂ ಒಂದೇ, ಸತ್ತರೂ ಒಂದೆ, ನನಗೆ ಅಂಥವನ ಆವಶ್ಯಕತೆಯೇ ಇಲ್ಲ. ಅಂಥವನಿಂದ ನನಗೆ ಯಾವ ಉಪಕಾರವೂ ಆಗುವ ಹಾಗಿಲ್ಲ.”
ಶ್ರೀರಾಮಕೃಷ್ಣರು: “ಭಗವಂತನ ಕಾರ್ಯವನ್ನು, ಅಂದರೆ ಆತ ಯಾವ ಉದ್ದೇಶದಿಂದ ಏನು ಮಾಡುತ್ತಾನೆ ಎಂಬುದನ್ನು ಅರಿಯಲು ಸಾಧ್ಯವೇ? ಆತ ಸೃಷ್ಟಿಯ ಪಾಲನೆ, ಸಂಹಾರ ಎಲ್ಲವನ್ನೂ ಮಾಡುತ್ತ ಇದ್ದಾನೆ. ಆತ ಏತಕ್ಕೆ ಸಂಹಾರ ಮಾಡುತ್ತಾನೆ ಎಂಬುದನ್ನು ನಮಗೆ ಅರಿತುಕೊಳ್ಳಲು ಸಾಧ್ಯವೆ? ನಾನು ಭಗವತಿಗೆ ಹೇಳುತ್ತೇನೆ: ಹೇ ತಾಯೆ, ನನಗೆ ಅದನ್ನು ಅರಿತುಕೊಳ್ಳುವ ಆವಶ್ಯಕತೆಯೇನೂ ಇಲ್ಲ, ದಯವಿಟ್ಟು ನಿನ್ನ ಪಾದಪದ್ಮಗಳಲ್ಲಿ ನನಗೆ ಭಕ್ತಿ ನೀಡು.” ಮಾನವಜನ್ಮದ ಉದ್ದೇಶ ಭಕ್ತಿಯನ್ನು ದೊರಕಿಸಿಕೊಳ್ಳುವುದೇ. ಉಳಿದವುಗಳ ಸಂಬಂಧವಾಗಿ ನಮಗೆ ಯಾವುದು ಶ್ರೇಯಸ್ಕರವಾದ್ದು ಎಂಬುದು ತಾಯಿಗೇ ಗೊತ್ತು. ನಾನು ತೋಟಕ್ಕೆ ಬಂದಿರುವುದು ಮಾವಿನಹಣ್ಣು ತಿನ್ನುವುದಕ್ಕೆ. ಮರಗಳೆಷ್ಟಿವೆ, ಕೊಂಬೆಗಳೆಷ್ಟಿವೆ, ಎಷ್ಟೊಂದು ಕೋಟಿ ಎಲೆಗಳಿವೆ, ಇವುಗಳ ಲೆಕ್ಕಾಚಾರ ನನಗೇಕೆ? ನಾನು ಕೇವಲ ಮಾವಿನಹಣ್ಣು ಮಾತ್ರ ತಿನ್ನುತ್ತೇನೆ; ಮರ, ಕೊಂಬೆ, ಎಲೆಗಳ ಲೆಕ್ಕಾಚಾರ ನನಗೆ ಬೇಕಾಗಿಲ್ಲ.”
ಪರಮಹಂಸರ ಕೊಠಡಿಯಲ್ಲೆ ನೆಲದ ಮೇಲೆ ಬಾಬುರಾಮ, ಮಾಸ್ಟರ್, ರಾಮದಯಾಲ ಈಗ ಮಲಗಿಕೊಳ್ಳುತ್ತಿದ್ದಾರೆ.
ಘಂಟೆ ರಾತ್ರಿ ಎರಡೊ ಮೂರೊ ಇರಬೇಕು. ದೀಪವನ್ನು ಆರಿಸಿಬಿಟ್ಟಿದೆ. ಪರಮ ಹಂಸರು ತಮ್ಮ ಹಾಸಿಗೆಯ ಮೇಲೆ ಕುಳಿತೇ ಭಕ್ತರೊಡನೆ ಆಗಾಗ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೋಡಿ. ದಯೆ ಮತ್ತು ಮಾಯೆ ಇವೆರಡೂ ಬೇರೆ ಬೇರೆ. ಮಾಯೆ ಎಂದರೆ, ಆತ್ಮೀಯ ಮಮತೆ. ಉದಾಹರಣೆಗೆ ತಂದೆತಾಯಿ, ಸೋದರಸೋದರಿ, ಹೆಂಡತಿಮಕ್ಕಳು ಅವರ ಮೇಲೆ ಇಟ್ಟಿರುವ ಪ್ರೀತಿ. ದಯೆ ಎಂಬುದು ಸರ್ವಭೂತಗಳಲ್ಲಿಯೂ ಇಟ್ಟಿರುವ ಪ್ರೀತಿ; ಸಮದೃಷ್ಟಿ. ಯಾರಲ್ಲಾದರೂ ದಯೆ ಕಂಡುಬರುವುದಾದರೆ, ಉದಾಹರಣೆಗೆ ವಿದ್ಯಾಸಾಗರ, ಆಗ ಅರಿತುಕೊಳ್ಳಬೇಕು ಅದು ಭಗವಂತನ ದಯೆ ಎಂಬುದಾಗಿ. ದಯೆಯಿಂದ ಎಲ್ಲಾ ಭೂತಗಳ ಸೇವೆ ಸಾಧ್ಯ. ಮಾಯೆಯೂ ಭಗವಂತನಿಗೆ ಸೇರಿದುದು. ಮಾಯೆಯಿಂದ ಭಗವಂತ ಆತ್ಮೀಯರ ಸೇವೆಯನ್ನು ಮಾಡುವಂತೆ ಮನುಷ್ಯನನ್ನು ಪ್ರೇರೇಪಿಸುತ್ತಾನೆ. ಆದರೆ ಇದನ್ನು ಚೆನ್ನಾಗಿ ಜ್ಞಾಪಕದಲ್ಲಿಡಬೇಕು; ಮಾಯೆ ನಮ್ಮನ್ನು ಅಜ್ಞಾನದಿಂದ ಆವೃತ್ತರಾಗುವಂತೆ, ಬಂಧನಕ್ಕೆ ಸಿಲುಕುವಂತೆ ಮಾಡಿಬಿಡುತ್ತದೆ. ಆದರೆ ದಯೆ ಕ್ರಮೇಣ ನಮಗೆ ಚಿತ್ತಶುದ್ಧಿಯನ್ನು ತಂದು ನಮ್ಮನ್ನು ಮುಕ್ತರನ್ನಾಗಿ ಮಾಡುತ್ತದೆ.
“ಚಿತ್ತಶುದ್ಧಿ ಆಗುವವರೆಗೂ ಭಗವಂತನ ದರ್ಶನ ದೊರೆಯುವ ಹಾಗಿಲ್ಲ. ಕಾಮ, ಕ್ರೋಧ, ಲೋಭ ಇವನ್ನೆಲ್ಲ ಜಯಿಸಿದರೆ ಮಾತ್ರ ಆತನ ಕೃಪೆ ಒದಗುತ್ತದೆ; ಆತನ ದರ್ಶನ ದೊರೆಯುತ್ತದೆ. ಕಾಮವನ್ನು ಜಯಿಸಲು ನಾನು ಏನೇನೋ ಸಾಧನೆಯನ್ನು ಮಾಡಬೇಕಾಯಿತು.
“ನನ್ನ ಹತ್ತೊ ಹನ್ನೊಂದೊ ವಯಸ್ಸಿನಲ್ಲಿ ನಾನು ಊರಿನಲ್ಲಿ ಇದ್ದಾಗ ನನಗೆ ಸಮಾಧಿಯ ಅನುಭವ ದೊರೆಯಿತು. ಗದ್ದೆಬಯಲಿನಲ್ಲಿ ಹೋಗುತ್ತ ಹೋಗುತ್ತ ಇದ್ದಾಗ, ಏನೋ ಒಂದನ್ನು ನೋಡಿ ವಿಹ್ವಲನಾಗಿಬಿಟ್ಟೆ. ಭಗವಂತನ ದರ್ಶನ ದೊರೆತಿರುವುದಕ್ಕೆ ಕೆಲವು ಲಕ್ಷಣಗಳಿವೆ. ಜ್ಯೋತಿ ಕಾಣಿಸಿಕೊಳ್ಳುತ್ತದೆ; ಆನಂದ ಉಂಟಾಗುತ್ತದೆ; ಎದೆಯ ಒಳಗೆ ಮಹಾವಾಯು ಆಕಾಶಬಾಣದ ಹಾಗೆ ‘ಸುರ್, ಸುರ್’ ಅಂತ ಮೇಲಕ್ಕೆ ಹತ್ತಲಾರಂಭಿಸುತ್ತದೆ.”
ಬೆಳಗಾದ ಮೇಲೆ ಬಾಬುರಾಮ ಮತ್ತು ರಾಮದಯಾಲ ಹಿಂದಿರುಗಿ ಮನೆಗೆ ಹೊರಟು ಹೋದರು. ಮಾಸ್ಟರ್ ಇಂದಿನ ಹಗಲು ಮತ್ತು ರಾತ್ರಿಯನ್ನು ಪರಮಹಂಸರೊಡನೆ ಕಳೆದ.
ಡಿಸೆಂಬರ್ ೧೮೮೨
ಅಪರಾಹ್ನವೇಳೆ ಪರಮಹಂಸರು ತಮ್ಮ ಕೊಠಡಿಯಲ್ಲಿ ಮಾಸ್ಟರ್ ಮತ್ತು ಒಬ್ಬಿಬ್ಬರು ಭಕ್ತರೊಡನೆ ಕುಳಿತುಕೊಂಡಿದ್ದಾರೆ. ಕೆಲವು ಮಂದಿ ಮಾರ್ವಾಡಿ ಭಕ್ತರು ಬಂದು ಪರಮಹಂಸರಿಗೆ ಪ್ರಣಾಮಮಾಡಿದರು. ಅವರು ಪರಮಹಂಸರನ್ನು ತಮಗೆ ಸ್ವಲ್ಪ ಉಪದೇಶ ಮಾಡಬೇಕು ಎಂಬುದಾಗಿ ಕೇಳಿಕೊಂಡರು. ಪರಮಹಂಸರು ನಗುತ್ತಿದ್ದಾರೆ.
ಶ್ರೀರಾಮಕೃಷ್ಣರು ಮಾರ್ವಾಡಿ ಭಕ್ತರಿಗೆ: “ನೋಡಿ, ‘ನಾನು, ನನ್ನದು’ ಎಂಬುದೇ ಅಜ್ಞಾನ. ಆದರೆ, ‘ಹೇ ಭಗವಂತ, ನೀನೇ ಕರ್ತ; ಎಲ್ಲವೂ ನಿನಗೆ ಸೇರಿದವೆ’ ಎಂದು ಭಾವಿಸುವುದೇ ಜ್ಞಾನದ ಚಿಹ್ನೆ. ಜೊತೆಗೆ ‘ನನ್ನದು’ ಎಂದು ಹೇಳುವ ಬಗೆ ಹೇಗೆ? ತೋಟದ ಸೂಪರಿಂಟೆಂಡೆಂಟ್ ಹೇಳುತ್ತಾನೆ: ‘ಇದು ನಮ್ಮ ತೋಟ’. ಆದರೆ ಆತನ ಯಾವುದೊ ಒಂದು ತಪ್ಪಿಗಾಗಿ ಆತನನ್ನು ತೋಟದ ಯಜಮಾನ ವಜಾಮಾಡಿಬಿಟ್ಟಿದ್ದೇ ಆದರೆ, ಆಗ ಆತ ತನ್ನ ಮಾವಿನ ಮರದ ಪೆಟ್ಟಿಗೆಯನ್ನು ಹೊರಕ್ಕೆ ತೆಗೆದುಕೊಂಡು ಹೋಗುವುದಕ್ಕೂ ಸಾಹಸ ಪಡಲಾರದವನಾಗಿಬಿಡುತ್ತಾನೆ. ಕಾಮ, ಕ್ರೋಧ ಮೊದಲಾದುವು ನಮ್ಮನ್ನು ಬಿಟ್ಟು ಹೋಗತಕ್ಕವಲ್ಲ. ಅವನ್ನು ಭಗವಂತನ ಕಡೆಗೆ ತಿರುಗಿಸಿಬಿಡಿ. ಆಸೆಪಡಬೇಕಾಗಿದ್ದರೆ, ವಿವೇಚನೆಯ ಮೂಲಕ ಅವನ್ನು ಭಗವಂತನ ಕಡೆಗೆ ಅಟ್ಟಿಬಿಡಿ. ಆನೆ ಬೇರೆಯವರ ಬಾಳೆತೋಟದ ಕಡೆ ಸೊಂಡಿಲು ನೀಡಿದರೆ ಮಾವುತ ಅಂಕುಶದಿಂದ ಅದನ್ನು ತಿವಿಯುತ್ತಾನೆ.
“ನೀವೆಲ್ಲಾ ವ್ಯಾಪಾರಿಗಳು, ನಿಮ್ಮ ವ್ಯಾಪಾರವನ್ನು ಹೇಗೆ ಉನ್ನತಿಗೆ ತರಬೇಕು ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ. ಮೊಟ್ಟಮೊದಲು ನಿಮ್ಮಲ್ಲಿ ಕೆಲವರು ಹರಳೆಣ್ಣೆ ಮಿಲ್ಲು ಇಡುತ್ತೀರಿ. ಸ್ವಲ್ಪ ಹೆಚ್ಚು ದುಡ್ಡು ಸಂಪಾದನೆ ಆಯಿತು ಎಂದರೆ, ಜವಳಿ ಅಂಗಡಿ ಇಡುತ್ತೀರಿ. ಹಾಗೇಯೆ ಭಗವಂತನ ಮಾರ್ಗದಲ್ಲೂ ಮುಂದುವರಿಯಬೇಕು. ಆಗಾಗ ನಿರ್ಜನಪ್ರದೇಶಕ್ಕೆ ಹೋಗಿ ಭಗವಂತನನ್ನು ಸ್ವಲ್ಪ ತೀವ್ರತೆಯಿಂದ ಕರೆಯಲು ನಿಮಗೆ ಸಾಧ್ಯ ಆದರೂ ಆಗಬಹುದು.
“ಆದರೆ ಒಂದು ವಿಷಯ, ಕಾಲ ಬಾರದೆ ಏನೂ ಆಗುವುದಿಲ್ಲ. ಕೆಲವರು ಭೋಗಿಸಬೇಕಾದ್ದು, ಮಾಡಬೇಕಾದ್ದು ಬಹಳವಾಗಿ ಉಳಿದುಕೊಂಡಿರುತ್ತದೆ. ಆದ್ದರಿಂದ ಅವರು ಭಗವಂತನ ಕಡೆಗೆ ತಿರುಗಬೇಕಾದರೆ ಸ್ವಲ್ಪ ಹೆಚ್ಚು ಸಮಯವೇ ಬೇಕಾಗುತ್ತದೆ. ಕುರು ಇನ್ನೂ ಮಾಗದೆ ಇರುವಾಗ ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿದರೆ ಅದು ವಿಪರೀತಕ್ಕಿಟ್ಟುಕೊಳ್ಳುತ್ತದೆ. ಅದು ಹಣ್ಣಾಗಿ ಮೊಳೆ ಬಂದರೆ ಆಗ ಡಾಕ್ಟರ್ ಶಸ್ತ್ರಚಿಕಿತ್ಸೆ ಮಾಡುತ್ತಾನೆ. ಒಮ್ಮೆ ಒಂದು ಮಗು ತನ್ನ ತಾಯಿಗೆ ಹೇಳಿತು: ‘ಅಮ್ಮ, ನನಗೆ ಈಗ ನಿದ್ದೆ ಬರುತ್ತದೆ. ನನಗೆ ಮೂತ್ರ ಬಂದಾಗ ದಯವಿಟ್ಟು ನನ್ನನ್ನು ಎಬ್ಬಿಸಿಬಿಡು’. ತಾಯಿ ಹೇಳಿದಳು: ‘ಮಗು, ಅದೇ ನಿನ್ನನ್ನು ಎಬ್ಬಿಸಿಬಿಡುತ್ತದೆ. ನಾನು ಏಳಿಸಬೇಕಾದ ಆವಶ್ಯಕತೆಯೇನೂ ಇರುವುದಿಲ್ಲ.”
ಮಾರ್ವಾಡಿ ಭಕ್ತರು ಪರಮಹಂಸರಿಗಾಗಿ ಆಗಾಗ ಹಣ್ಣುಹಂಪಲು, ಕಲ್ಲುಸಕ್ಕರೆ, ಸಿಹಿತಿಂಡಿ ಇವೇ ಮೊದಲಾದುವನ್ನು ತರುತ್ತಿದ್ದರು. ಆದರೆ ಅವರಿಗೆ ಅವನ್ನು ತಿನ್ನಲು ಬಹುಮಟ್ಟಿಗೆ ಆಗುತ್ತಲೇ ಇರಲಿಲ್ಲ. ಅವರು ಹೇಳುತ್ತಿದ್ದರು: “ಅವರು ಬಹಳವಾಗಿ ಸುಳ್ಳು ಹೇಳಿ ದುಡ್ಡು ಸಂಪಾದನೆ ಮಾಡುತ್ತಾರೆ. ಅವರು ತರುವುದನ್ನು ನನ್ನ ಕೈಯಲ್ಲಿ ತಿನ್ನಲಾಗುವುದಿಲ್ಲ.” ಅವರು ಮಾರ್ವಾಡಿಗಳಿಗೆ ಹೇಳುತ್ತಿದ್ದಾರೆ: “ನೋಡಿ, ವ್ಯಾಪಾರದಲ್ಲಿ ಪೂರ್ಣ ಸತ್ಯವಾದಿಯಾಗಿರಲಾಗುವುದಿಲ್ಲ. ಅದರಲ್ಲಿ ಏರು ಇಳಿತ ಇವೆ. ನಾನಕ್ ಹೇಳಿದ್ದಾನೆ: ಅಸಾಧುಗಳ ಅನ್ನ ತಿನ್ನಲು ನಾನು ಯತ್ನಿಸಿದಾಗ ಅದೆಲ್ಲಾ ರಕ್ತಮಯವಾಗಿ ಕಂಡಿತು’ ಎಂಬುದಾಗಿ. ಸಾಧುಗಳಿಗೆ ಶುದ್ಧವಸ್ತುಗಳನ್ನು ಅರ್ಪಿಸಬೇಕು. ಮಿಥ್ಯಾಚಾರದಿಂದ ಆರ್ಜಿಸಿದ ವಸ್ತುಗಳನ್ನು ಅವರಿಗೆ ಕೊಡಬಾರದು. ಸತ್ಯಪಥಾವಲಂಬಿಯಾದರೆ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಬಹುದು. ಯಾವಾಗಲೂ ಆತನ ನಾಮವನ್ನು ಜಪಿಸುತ್ತಿರಬೇಕು. ಕೆಲಸದ ಸಮಯದಲ್ಲಿ ಕೂಡ ಮನಸ್ಸನ್ನು ಆತನ ಅಡಿದಾವರೆಯಲ್ಲಿ ನೆಲಸಿರುವಂತೆ ಮಾಡಬೇಕು. ಉದಾಹರಣೆಗೆ, ಒಬ್ಬನಿಗೆ ಬೆನ್ನಫಣಿ ಎದ್ದಿದೆ ಅಂತ ಇಟ್ಟುಕೊಳ್ಳಿ. ಆತ ಎಲ್ಲಾ ಕೆಲಸಗಳನ್ನೂ ಮಾಡುತ್ತಾನೆ, ಆದರೆ ಆತನ ಮನಸ್ಸು ಮಾತ್ರ ಸರ್ವದಾ ಬೆನ್ನುಫಣಿಯ ಮೇಲೆಯೇ ನೆಲಸಿರುತ್ತದೆ. ರಾಮನಾಮವನ್ನು ಜಪಿಸುವುದು ಬಹಳ ಒಳ್ಳೆಯದು. ‘ಯಾವ ರಾಮ, ದಶರಥನ ಪುತ್ರನೊ, ಆತನೇ ಈ ಜಗತ್ತನ್ನು ಸೃಷ್ಟಿಸಿದ್ದಾನೆ. ಮತ್ತೆ ಆತ ಸರ್ವಭೂತಗಳಲ್ಲೂ ಇದ್ದಾನೆ. ಆತ ನಮಗೆ ಅತ್ಯಂತ ಸಮೀಪದಲ್ಲಿ ಇದ್ದಾನೆ; ಒಳಗೂ ಇದ್ದಾನೆ. ಹೊರಗೂ ಇದ್ದಾನೆ.’
1. ಕಟ್ಟುಗುಣಿ, ಇದನ್ನು ಜೊಂಡಿನಿಂದ ತಯಾರಿಸುತ್ತಾರೆ.
2. ಹಾಲನ್ನು ಒಡೆಯಿಸಿ, ನೀರನ್ನು ಚೆಲ್ಲಿ, ಗಟ್ಟಿಯಿಂದ ವಡೆಮಾಡಿ ಕರಿದು ಸಕ್ಕರೆ ಪಾಕದಲ್ಲಿ ನೆನೆಸಿ ತಯಾರಿಸಿದ ಸಿಹಿ ಪದಾರ್ಥ.
3. “ಸಾಯುವುದು ಕೂಡ ಮನುಷ್ಯನ ಕೈಯಲ್ಲಿ ಇಲ್ಲ. ಎಲ್ಲವೂ ಭಗವತಿಯ ಅಧೀನ” ಎಂಬುದಾಗಿ ಆತನಿಗೆ ಅನುಭವವಾಯಿತು