೨೭ನೆ ಅಕ್ಟೋಬರ್ ೧೮೮೨, ಲಕ್ಷ್ಮಿಪೂಜೆ, ಶುಕ್ರವಾರ
ಕೇಶವಚಂದ್ರಸೇನ ಇಂದು ಪರಮಹಂಸರಿಗಾಗಿ ಒಂದು ಸಂತೋಷ ನೌಕಾವಿಹಾರ ಏರ್ಪಡಿಸಿದ್ದಾನೆ.
ಸುಮಾರು ಅಪರಾಹ್ನ ನಾಲ್ಕು ಘಂಟೆ ಸಮಯಕ್ಕೆ ಗಂಗಾನದಿಯಲ್ಲಿ ಒಂದು ಜಹಜು ಬಂದು ದಕ್ಷಿಣೇಶ್ವರ ಕಾಳೀದೇವಾಲಯ ಘಟ್ಟದ ಹತ್ತಿರ ಲಂಗರು ಹಾಕಿದೆ. ಒಳಗಡೆ ಕೇಶವಚಂದ್ರಸೇನ ಮತ್ತು ಬ್ರಾಹ್ಮಸಮಾಜದ ಆತನ ಅನುಯಾಯಿಗಳೆಲ್ಲ ಕುಳಿತಿದ್ದಾರೆ. ಅವರ ಮುಂದುಗಡೆಯೇ ಕಾಣಬರುತ್ತಿದೆ ಸ್ನಾನಘಟ್ಟ ಮತ್ತು ಎದುರುಮಂಟಪ. ಆ ಮಂಟಪದ ಎಡಗಡೆ ಆರು ಶಿವದೇವಾಲಯಗಳು, ಬಲಗಡೆ ಆರು ಶಿವದೇವಾಲಯಗಳು. ಭವತಾರಿಣಿ ಕಾಳೀದೇವಾಲಯದ ಶಿಖರ, ಪಂಚವಟಿಯಲ್ಲಿರುವ ಮರಗಿಡಗಳ ಮತ್ತು ಅವುಗಳಿಗೆ ಸಮೀಪದಲ್ಲೆ ಇರುವ ಸರ್ವೆ ಮರಗಳ ತುತ್ತತುದಿಗಳು ಶರತ್ಕಾಲದ ನೀಲಾಕಾಶವನ್ನು ಭೇದಿಸಿ ನಿಂತಿವೆ. ಎರಡು ನಹಬತ್ಖಾನೆಗಳ ಮಧ್ಯೆ ಹಬ್ಬಿರುವ ಹೂವಿನ ತೋಟ ಬಹಳ ಸುವಾಸನೆಯುಳ್ಳ ಹೂವುಗಳಿಂದ ತುಂಬಿದೆ. ಗಂಗಾನದಿಯ ದಡದಲ್ಲಿ ಸಾಲುಸಾಲಾಗಿ ಹೂವಿನ ಗಿಡಗಳು ಬೆಳೆದು ನಿಂತಿವೆ. ಇಂದಿನ ಸ್ವಚ್ಛ ನೀಲಾಕಾಶ ಜಾಹ್ನವೀ ಜಲದಲ್ಲಿ ಪ್ರತಿಬಿಂಬವಾಗುತ್ತಿದೆ. ಹೊರಗಿನ ಜಗತ್ತು ಕೋಮಲಭಾವ ತಾಳಿದೆ. ಬ್ರಾಹ್ಮ ಭಕ್ತರ ಹೃದಯಮಧ್ಯದಲ್ಲೂ ಕೋಮಲಭಾವ ನೆಲಸಿದೆ. ಮೇಲುಗಡೆ ಸುಂದರ ಸುನೀಲ ಅನಂತ ಆಕಾಶ, ಎದುರಿಗೆ ಭವ್ಯ ಕಾಳೀದೇವಾಲಯ, ಕೆಳಗಡೆ ಯಾವುದರ ತೀರವು ಆರ್ಯಋಷಿಗಳ ನೆಲೆಬೀಡಾಗಿತ್ತೊ ಅಂಥ ಪವಿತ್ರ ಗಂಗೆಯ ಸಲಿಲ; ಅದರ ದಡದಲ್ಲೆ ವಾಸವಾಗಿದ್ದಾರೆ ಸನಾತನ ಧರ್ಮವೇ ಮೂರ್ತಿಮತ್ತಾಗಿ ಅವತರಿಸಿದೆಯೊ ಏನೊ ಎಂಬಂತಿರುವ ವ್ಯಕ್ತಿ ಶ್ರೀರಾಮಕೃಷ್ಣ ಪರಮಹಂಸರು. ಅಂಥ ಮಹಾಪುರುಷನ ದರ್ಶನ ಪಡೆಯುವ ಸೌಭಾಗ್ಯ ಎಲ್ಲರ ಹಣೆಯಲ್ಲೂ ಬರೆದಿದೆಯೆ? ಇಂಥ ಭವ್ಯವಾದ ಸ್ಥಳದಲ್ಲಿರುವ ಆ ಮಹಾಪುರುಷರ ದರ್ಶನಮಾತ್ರದಿಂದಲೆ ಹೃದಯ ಎಂಥಾ ಕಲ್ಲಿನದಾಗಿದ್ದರೂ ಅದರಲ್ಲಿ ಭಕ್ತಿ ಉದ್ರೇಕಗೊಳ್ಳದೆ ಉಳಿದೀತೆ?
ಪರಮಹಂಸರು ತಮ್ಮ ಕೊಠಡಿಯಲ್ಲಿ ಕುಳಿತು ವಿಜಯಗೋಸ್ವಾಮಿ ಮತ್ತು ಹರಲಾಲನೊಡನೆ ಮಾತುಕತೆ ಆಡುತ್ತಿದ್ದಾರೆ. ಕೇಶವನ ಅನುಯಾಯಿಗಳಲ್ಲಿ ಕೆಲವರು ಕೊಠಡಿಯನ್ನು ಪ್ರವೇಶಿಸಿದರು. ಪರಮಹಂಸರಿಗೆ ಪ್ರಣಾಮಮಾಡಿ ಅವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಿದ್ದಾರೆ: “ಮಹಾಶಯರೆ, ಜಹಜು ಬಂದಿದೆ. ಕೇಶವಬಾಬು ನಿಮ್ಮನ್ನು ಕರೆದುಕೊಂಡು ಬರಬೇಕೆಂದು ನಮ್ಮನ್ನು ಕಳುಹಿಸಿದ್ದಾರೆ. ದಯವಿಟ್ಟು ಹೊರಡಿ. ಸ್ವಲ್ಪ ಸುತ್ತಾಡಿಕೊಂಡು ಬರುವಿರಂತೆ.” ಪರಮಹಂಸರನ್ನು ಜಹಜಿನ ಹತ್ತಿರಕ್ಕೆ ಕರೆದುಕೊಂಡು ಹೋಗಲು ಒಂದು ಚಿಕ್ಕ ದೋಣಿ ಸಿದ್ಧವಾಗಿ ನಿಂತಿದೆ. ಅವರು ಆ ದೋಣಿಗೆ ಕಾಲುಹಾಕುವುದೇ ತಡ ಬಾಹ್ಯಜ್ಞಾನಶೂನ್ಯರಾಗಿ ಸಮಾಧಿಸ್ಥರಾಗಿಬಿಟ್ಟರು. ವಿಜಯ ಅವರೊಡನೆ ಇದ್ದಾನೆ.
ಮಾಸ್ಟರ್ ಪ್ರಯಾಣಿಕರ ಮಧ್ಯೆ ನಿಂತಿದ್ದಾನೆ. ದೋಣಿ ಜಹಜಿನ ಹತ್ತಿರಕ್ಕೆ ಬರುವುದೇ ತಡ, ಅವರ ದರ್ಶನ ಪಡೆಯಲು ಜನರೆಲ್ಲರೂ ಕಟಕಟೆಯ ಹತ್ತಿರಕ್ಕೆ ನುಗ್ಗಿಬಿಟ್ಟರು. ಕೇಶವಸೇನನಿಗೆ ತುಂಬ ವ್ಯಾಕುಲ ಹತ್ತಿಬಿಟ್ಟಿತು, ಅವರನ್ನು ಹೇಗೆ ಸುರಕ್ಷಿತವಾಗಿ ಜಹಜಿಗ ಹತ್ತಿಸುವುದು ಅಂತ. ಬಹಳ ಕಷ್ಟಪಟ್ಟು ಅವರಿಗೆ ಸ್ವಲ್ಪ ಬಾಹ್ಯಪ್ರಜ್ಞೆ ಬರುವಂತೆ ಮಾಡಿ ಕೊನೆಗೆ ಅವರನ್ನು ಜಹಜಿನ ಒಂದು ಕ್ಯಾಬಿನ್ನಿಗೆ ಕರೆದುಕೊಂಡು ಬಂದುದಾಯಿತು. ಇನ್ನೂ ಭಾವಸ್ಥರಾಗಿದ್ದಾರೆ. ಒಬ್ಬ ಭಕ್ತನ ಮೇಲೆ ಭಾರಹಾಕಿ ಹೆಜ್ಜೆ ಇಡುತ್ತಿದ್ದಾರೆ. ಕೇಶವನೇ ಮೊದಲಾದ ಭಕ್ತರು ಅವರಿಗೆ ಪ್ರಣಾಮಮಾಡುತ್ತಿದ್ದಾರೆ. ಆದರೆ, ಅವರಿಗೆ ಎಚ್ಚರವೇ ಇಲ್ಲ. ಕ್ಯಾಬಿನ್ ಒಳಗೆ ಕೆಲವು ಕುರ್ಚಿ ಒಂದು ಮೇಜು ಹಾಕಲ್ಪಟ್ಟಿವೆ. ಒಂದು ಕುರ್ಚಿಯ ಮೇಲೆ ಪರಮಹಂಸರನ್ನು ಕೂರಿಸಿ ಇನ್ನೊಂದರ ಮೇಲೆ ಕೇಶವಸೇನ ಕುಳಿತುಕೊಂಡಿದ್ದಾನೆ. ವಿಜಯನೂ ಒಂದು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾನೆ. ಭಕ್ತರು ಜಾಗವಿದ್ದ ಎಡೆಯಲ್ಲಿ ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದಾರೆ. ಎಲ್ಲರಿಗೂ ಒಳಗೆ ಸ್ಥಳ ಆಗಲಿಲ್ಲ. ಉಳಿದವರು ಹೊರಗಡೆ ನಿಂತುಕೊಳ್ಳಬೇಕಾಯಿತು. ಅವರು ಬಾಗಿಲ ಮೂಲಕ ಕಿಟಕಿಯ ಮೂಲಕ ಇಣಿಕಿ ನೋಡುತ್ತಿದ್ದಾರೆ. ಪರಮಹಂಸರು ಕುರ್ಚಿಯ ಮೇಲೆ ಕುಳಿತು ಮತ್ತೆ ಸಮಾಧಿಸ್ಥರಾಗಿ ಬಿಟ್ಟಿದ್ದಾರೆ. ಸಂಪೂರ್ಣ ಬಾಹ್ಯಜ್ಞಾನಶೂನ್ಯರಾಗಿಬಿಟ್ಟಿದ್ದಾರೆ. ಎಲ್ಲರೂ ನೆಟ್ಟ ದೃಷ್ಟಿಯಿಂದ ಅವರ ಕಡೆಗೇ ನೋಡುತ್ತಿದ್ದಾರೆ.
ಕೊಠಡಿಯಲ್ಲಿ ಬಹಳ ಜನ ಸೇರಿಬಿಟ್ಟಿದ್ದರಿಂದ ಸಾಕಾದಷ್ಟು ಗಾಳಿ ಬರಲಿ ಎಂದು ಕೇಶವಚಂದ್ರಸೇನ ಕಿಟಕಿ ಬಾಗಿಲುಗಳನ್ನೆಲ್ಲಾ ತೆರೆದ. ವಿಜಯನಿಗೂ ಕೇಶವನಿಗೂ ಬ್ರಾಹ್ಮ ಸಮಾಜದ ಕೆಲವು ನಿಯಮಗಳ ಸಂಬಂಧವಾಗಿ ವೈಮನಸ್ಯ ಹುಟ್ಟಿ, ವಿಜಯ ಕೇಶವನ ಪಂಗಡ ಬಿಟ್ಟು ಸಾಧಾರಣ ಬ್ರಾಹ್ಮಸಮಾಜದ ಅನುಯಾಯಿಯಾಗಿದ್ದಾನೆ. ಆತ ಇಲ್ಲಿಗೆ ಬಂದಿರುವುದನ್ನು ನೋಡಿ ಕೇಶವನ ಮನಸ್ಸಿಗೆ ಹೇಗೋ ಆಯಿತು.
ಬ್ರಾಹ್ಮಭಕ್ತರು ಏಕದೃಷ್ಟಿಯಿಂದ ಪರಮಹಂಸರ ಕಡೆ ನೋಡುತ್ತಿದ್ದಾರೆ. ಅವರು ಕ್ರಮೇಣ ಪ್ರಕೃತಿಸ್ಥರಾಗಲಾರಂಭಿಸಿದ್ದಾರೆ. ಇನ್ನೂ ಭಾವಸ್ಥರಾಗಿಯೇ ಪರಮಹಂಸರು ಅಸ್ಪಷ್ಟ ಸ್ವರದಿಂದ ತಮಗೆ ತಾವೇ ಹೇಳಿಕೊಳ್ಳುತ್ತಿದ್ದಾರೆ: “ತಾಯೆ ನನ್ನನ್ನು ಇಲ್ಲಿಗೇಕೆ ಕರೆದುಕೊಂಡು ಬಂದೆ? ಬೇಲಿಯೊಳಗೆ ಸಿಕ್ಕಿಕೊಂಡಿರುವ ಇವರನ್ನು ಉದ್ಧರಿಸಲು ನನ್ನಿಂದ ಸಾಧ್ಯವೆ? ಅಲ್ಲಿ ನೆರೆದಿದ್ದ ಜನರು ಈ ಜಗತ್ತೆಂಬ ಬಂದೀಖಾನೆಯ ಆವರಣದಲ್ಲಿ ಬದ್ಧರಾಗಿರುವುದು ಅವರ ಕಣ್ಣಿಗೆ ಬಿತ್ತೇನು? ಅವರು ಅಸಹಾಯಕರಾಗಿರುವುದನ್ನು ನೋಡಿ ಪರಮಹಂಸರು ಈ ಕೆಲವು ಮಾತುಗಳನ್ನು ಭಗವತಿಯೊಡನೆ ಆಡಿದರೇನು?
ಪರಮಹಂಸರಿಗೆ ಕ್ರಮೇಣ ಬಾಹ್ಯಜ್ಞಾನ ಉಂಟಾಗುತ್ತಿದೆ. ಗಾಜೀಪುರದ ನೀಲ ಮಾಧವ ಬಾಬು ಮತ್ತು ಒಬ್ಬ ಬ್ರಾಹ್ಮಭಕ್ತ ಪವಾಹಾರಿಬಾಬನ ಸಂಬಂಧವಾಗಿ ಮಾತುಕತೆ ಆಡುತ್ತಿದ್ದರು. ಇನ್ನೊಬ್ಬ ಬ್ರಾಹ್ಮಭಕ್ತ ಪರಮಹಂಸರಿಗೆ ಹೇಳಿದ: “ಇವರು ಪವಾಹಾರಿಬಾಬರನ್ನು ನೋಡಿ ಬಂದಿದ್ದಾರೆ. ಅವರು ಗಾಜೀಪುರದಲ್ಲಿ ವಾಸಿಸುತ್ತಿದ್ದಾರೆ. ಅವರೂ ನಿಮ್ಮಂತೆಯೇ ಒಬ್ಬ ಮಹಾಪುರುಷರು.” ಮಾತನಾಡುವ ಶಕ್ತಿ ಪರಮಹಂಸರಿಗೆ ಇನ್ನೂ ಬಂದಿಲ್ಲ; ಎಲ್ಲೊ ಕಿಂಚಿತ್ ನಗುತ್ತಿದ್ದಾರೆ. ಆ ಭಕ್ತ ಮತ್ತೆ ಹೇಳಿದ: “ಮಹಾಶಯರೆ, ಪವಾಹಾರಿಬಾಬರು ತಮ್ಮ ಕೊಠಡಿಯಲ್ಲಿ ನಿಮ್ಮ ಫೋಟೊ ಇಟ್ಟುಕೊಂಡಿದ್ದಾರೆ.” ಪರಮಹಂಸರು ತಮ್ಮ ಶರೀರದ ಕಡೆ ಬೆರಳುಮಾಡಿ ಕಿಂಚಿತ್ ನಗುತ್ತ ಹೇಳುತ್ತಿದ್ದಾರೆ: “ಇದು ಕೇವಲ ದಿಂಬಿನ ಚೀಲ ಮಾತ್ರ.”
ಪರಮಹಂಸರು ಮಾತು ಮುಂದುವರಿಸುತ್ತಿದ್ದಾರೆ: “ಆದರೆ ಒಂದು ವಿಷಯ. ಭಕ್ತನ ಹೃದಯ ಭಗವಂತನ ಆವಾಸಸ್ಥಾನ. ಆತ ಸರ್ವಭೂತಗಳಲ್ಲೂ ಇರುವುದೇನೊ ನಿಜ, ಆದರೆ ಭಕ್ತನ ಹೃದಯದಲ್ಲಿ ವಿಶೇಷ ರೂಪದಿಂದ ಇರುತ್ತಾನೆ. ಜಮೀನುದಾರ ತನ್ನ ಎಸ್ಟೇಟಿನಲ್ಲಿ ಎಲ್ಲಿ ಬೇಕಾದರಲ್ಲಿ ಇರಬಲ್ಲ. ಆದರೆ ಆತನನ್ನು ವಿಶೇಷವಾಗಿ ಆತನ ಬೈಠಕ್ಖಾನೆಯಲ್ಲಿ ನೋಡಬಹುದು ಎಂಬುದಾಗಿ ಜನ ಹೇಳುತ್ತಾರೆ. ಭಕ್ತನ ಹೃದಯ ಭಗವಂತನ ಬೈಠಕ್ಖಾನೆ.”
“ಜ್ಞಾನಿಗಳು ಯಾರನ್ನು ಬ್ರಹ್ಮ ಅಂತ ಕರೆಯುತ್ತಾರೊ, ಆತನನ್ನೇ ಯೋಗಿಗಳು ಆತ್ಮ ಅಂತ ಕರೆಯುತ್ತಾರೆ. ಭಕ್ತರು ಭಗವಂತ ಅಂತ ಕರೆಯುತ್ತಾರೆ. ಒಬ್ಬನೇ ಬ್ರಾಹ್ಮಣನಿಗೆ ಪೂಜೆ ಮಾಡುವಾಗ ಪೂಜಾರಿ ಅಂತ ಹೆಸರು; ಅಡಿಗೆ ಮಾಡುವಾಗ ಅಡಿಗೆಯವ ಅಂತ ಹೆಸರು. ಜ್ಞಾನಯೋಗಿ ಜ್ಞಾನಮಾರ್ಗನಿಷ್ಠನಾಗಿ ಸರ್ವದಾ ‘ನೇತಿ, ನೇತಿ’ ಎಂಬ ವಿಚಾರದಲ್ಲಿ, ಅಂದರೆ ‘ಬ್ರಹ್ಮ ಇದಲ್ಲ, ಅದಲ್ಲ, ಜೀವವಲ್ಲ, ಜಗತ್ತಲ್ಲ’ ಎಂಬ ವಿಚಾರದಲ್ಲಿ ತೊಡಗಿರುತ್ತಾನೆ. ಈ ರೀತಿಯಾಗಿ ವಿಚಾರ ಮಾಡುತ್ತ ಮಾಡುತ್ತ ಮುಂದುವರಿದರೆ ಮನಸ್ಸು ಸ್ಥಿರವಾಗುತ್ತದೆ. ಬಳಿಕ ಮನಸ್ಸು ಲಯಹೊಂದುತ್ತದೆ, ಸಮಾಧಿಯುಂಟಾಗುತ್ತದೆ; ಆಗ ಬ್ರಹ್ಮಜ್ಞಾನ ದೊರೆಯುತ್ತದೆ. ಬ್ರಹ್ಮಜ್ಞಾನಿಯ ನಿಶ್ಚಿತಾಭಿಪ್ರಾಯ ಬ್ರಹ್ಮಸತ್ಯ ಜಗನ್ಮಿಥ್ಯಾ. ಈ ನಾಮರೂಪಗಳೆಲ್ಲ ಸ್ವಪ್ನದ ಹಾಗೆ ಮಿಥ್ಯಾ. ಬ್ರಹ್ಮ ಏನು ಎಂಬುದನ್ನು ಬಾಯಿಂದ ವರ್ಣಿಸಲಾಗುವುದಿಲ್ಲ. ಆತನನ್ನು ಒಬ್ಬ ವ್ಯಕ್ತಿ ಎಂತಲೂ ಹೇಳಲಾಗುವುದಿಲ್ಲ. ಹೀಗೆಂದು ಜ್ಞಾನಿಗಳು-ವೇದಾಂತವಾದಿಗಳು ಹೇಳುತ್ತಾರೆ.
“ಆದರೆ ಭಕ್ತರು ಎಲ್ಲಾ ಅವಸ್ಥೆಗಳನ್ನೂ ಸ್ವೀಕರಿಸುತ್ತಾರೆ. ಜಾಗ್ರತ್ ಅವಸ್ಥೆ ಕೂಡ ಸತ್ಯ ಅಂತ ಹೇಳುತ್ತಾರೆ. ಅವರು ಜಗತ್ತು ಸ್ವಪ್ನವತ್ ಅಂತ ಹೇಳುವುದಿಲ್ಲ. ಹೇಳುತ್ತಾರೆ, ಈ ಜಗತ್ತು ಭಗವಂತನ ಐಶ್ವರ್ಯ ಎಂದು. ಆಕಾಶ, ನಕ್ಷತ್ರ, ಚಂದ್ರ, ಸೂರ್ಯ, ಪರ್ವತ, ಸಮುದ್ರ, ಜೀವ, ಜಂತು ಎಲ್ಲವನ್ನೂ ಭಗವಂತ ಸೃಷ್ಟಿಸಿದ್ದಾನೆ. ಇವೆಲ್ಲವೂ ಆತನ ಐಶ್ವರ್ಯವೇ. ಆತ ನಮ್ಮ ಆಂತರ್ಯದಲ್ಲಿ, ಹೃದಯಮಧ್ಯದಲ್ಲಿ ಇದ್ದಾನೆ. ಮತ್ತೆ ಹೊರಗೂ ಇದ್ದಾನೆ. ಉತ್ತಮ ಭಕ್ತ ಹೇಳುತ್ತಾನೆ, ಆತನೇ ಈ ಚತುರ್ವಿಂಶತಿ ತತ್ತ್ವ-ಜೀವಜಗತ್ತು ಆಗಿದ್ದಾನೆ. ಭಕ್ತನ ಇಚ್ಛೆ ಸಕ್ಕರೆ ತಿನ್ನಬೇಕು ಅಂತಲೇ ವಿನಾ ಸಕ್ಕರೆ ಆಗಬೇಕು ಅಂತಲ್ಲ. (ಎಲ್ಲರೂ ನಗುತ್ತಿದ್ದಾರೆ.)
“ಭಕ್ತನ ಭಾವ ಯಾವ ರೀತಿಯದು ಗೊತ್ತೆ ? ಆತನ ಭಾವ: ‘ಹೇ ಭಗವಂತ, ನೀನು ಪ್ರಭು, ನಾನು ನಿನ್ನ ದಾಸ. ನೀನು ತಾಯಿ, ನಾನು ನಿನ್ನ ಮಗು’ ಎಂಬುದಾಗಿ. ಮತ್ತೆ : ‘ನೀನು ನನ್ನ ತಾಯಿ, ತಂದೆ, ನೀನು ಪೂರ್ಣ, ನಾನು ಅಂಶ’ ಎಂಬುದಾಗಿ. ಭಕ್ತ ‘ನಾನೇ ಬ್ರಹ್ಮ’ ಎಂಬುದಾಗಿ ಹೇಳಲು ಎಂದಿಗೂ ಇಚ್ಛೆಪಡುವುದಿಲ್ಲ.
“ಯೋಗಿಯೂ ಪರಮಾತ್ಮನ ಸಾಕ್ಷಾತ್ಕಾರ ಪಡೆಯಲು ಯತ್ನಿಸುತ್ತಾನೆ. ಆತನ ಗುರಿ ಜೀವಾತ್ಮ ಪರಮಾತ್ಮರ ಐಕ್ಯ. ಆತ ವಿಷಯವಸ್ತುಗಳಿಂದ ಮನಸ್ಸನ್ನು ಸೆಳೆದುಕೊಂಡು ಅದನ್ನು ಪರಮಾತ್ಮನಲ್ಲಿ ಸ್ಥಿರಮಾಡಲು ಯತ್ನಿಸುತ್ತಾನೆ. ಅದಕ್ಕಾಗಿಯೇ ಮೊದಮೊದಲು ನಿರ್ಜನ ಪ್ರದೇಶಕ್ಕೆ ಹೋಗಿ ಸ್ಥಿರ ಆಸನದಲ್ಲಿ ಕುಳಿತು ಅನನ್ಯಮನಸ್ಕನಾಗಿ, ಧ್ಯಾನ, ಚಿಂತನೆ ಮಾಡುತ್ತಾನೆ.
“ಆದರೆ ವಸ್ತು ಮಾತ್ರ ಒಂದೇ, ಹೆಸರು ಮಾತ್ರ ವಿವಿಧ. ಯಾರು ಬ್ರಹ್ಮನೊ, ಆತನೇ ಆತ್ಮ, ಆತ್ಮನೇ ಭಗವಂತ. ಜ್ಞಾನಮಾರ್ಗಿಗಳ ಬ್ರಹ್ಮನೇ ಯೋಗಿಗಳ ಪರಮಾತ್ಮ, ಭಕ್ತರ ಭಗವಂತ.”
ಜಹಜು ಕಲ್ಕತ್ತದ ಕಡೆಗೆ ಹೋಗುತ್ತಿದೆ. ಆದರೆ ಯಾರು ಜಹಜಿನಲ್ಲಿ ಕುಳಿತು ಪರಮಹಂಸರ ದರ್ಶನಮಾಡುತ್ತ ಅವರ ಅಮೃತಮಯ ವಾಣಿಯನ್ನು ಕೇಳುತ್ತಿದ್ದರೊ, ಅವರಿಗೆ ಜಹಜು ಚಲಿಸುತ್ತಿರುವುದು ಗೊತ್ತೇ ಆಗಲಿಲ್ಲ. ಸುಂದರವಾದ ಉದ್ಯಾನ ವನಗಳಿಂದ ಮತ್ತು ದೇವಾಲಯಗಳಿಂದ ಕೂಡಿದ ದಕ್ಷಿಣೇಶ್ವರ ಕಣ್ಣಿಗೆ ಮರೆಯಾಗುತ್ತಾ ಬಂತು. ಜಹಜಿನ ಹುಟ್ಟುಗಾಲಿಯ ಕಡೆತಕ್ಕೆ ಸಿಕ್ಕಿದ ಗಂಗಾವಾರಿ ನೊರೆಯಿಂದ ತುಂಬಿ ಭೋರ್ಗರೆಯುತ್ತ ಅಲೆಗಳಿಂದ ಅಲ್ಲೋಲಕಲ್ಲೋಲವಾಗುತ್ತಿದೆ. ಭಕ್ತರಿಗೆ ಇವುಗಳಾವುದರ ಅರಿವೂ ಆಗುತ್ತಲೇ ಇಲ್ಲ. ಅವರು ಮುಗ್ಧರಾಗಿ ನೋಡುತ್ತಿದ್ದಾರೆ, ನಗುಮುಖರಾದ, ಆನಂದಮಯರಾದ, ಪ್ರೇಮಾನುರಂಜಿತ ನಯನರಾದ, ಪ್ರಿಯದರ್ಶನರಾದ ಅದ್ಭುತ ಯೋಗಿವರ್ಯ ಪರಮಹಂಸರನ್ನು. ಪರಮಹಂಸರಿಗೆ ಭಗವಂತನ ಹೊರತು ಬೇರೇನೂ ಗೊತ್ತಿಲ್ಲ. ಜ್ಞಾನವಾಹಿನಿ ಅವರ ಬಾಯಿಂದ ಸುಮ್ಮನೆ ಹರಿಯುತ್ತಲೇ ಇದೆ.
ಶ್ರೀರಾಮಕೃಷ್ಣರು: “ಜ್ಞಾನಮಾರ್ಗಾವಲಂಬಿ ವೇದಾಂತಿಗಳು ಹೇಳುತ್ತಾರೆ: ಸೃಷ್ಟಿ, ಸ್ಥಿತಿ, ಪ್ರಳಯ, ಜೀವ ಜಗತ್ತು ಇವೆಲ್ಲಾ ಶಕ್ತಿಯ ಕ್ರೀಡೆ. ವಿಚಾರಮಾಡಿ ನೋಡಿದರೆ ಇವೆಲ್ಲಾ ಸ್ವಪ್ನದ ಹಾಗೆ. ನಿಜವಾಗಿ ಬ್ರಹ್ಮನೇ ಏಕಮಾತ್ರ ವಸ್ತು. ಉಳಿದುದೆಲ್ಲಾ ಅವಸ್ತು. ಶಕ್ತಿಯೂ ಸ್ವಪ್ನದೋಪಾದಿಯಲ್ಲಿ ಅವಸ್ತು.
“ಆದರೆ ಇಡೀ ಜೀವನವನ್ನೆಲ್ಲಾ ವಿಚಾರಕ್ಕೆ ಮೀಸಲಾಗಿ ಇಟ್ಟರೂ ಸಮಾಧಿಯ ಸ್ಥಿತಿಯನ್ನು ಹೊಂದುವವರೆಗೆ ಶಕ್ತಿಯ ಇಲಾಖೆಯನ್ನು ಬಿಟ್ಟು ಹೊರಗೆ ಹೋಗುವ ಹಾಗೇ ಇಲ್ಲ. ‘ನಾನು ಧ್ಯಾನ ಮಾಡುತ್ತೇನೆ,’ ‘ನಾನು ಚಿಂತನೆ ಮಾಡುತ್ತೇನೆ’ ಎಂಬುದಾಗಿ ನೀನು ಯಾವಾಗಲೂ ಇನ್ನೂ ಶಕ್ತಿಯ ಮಧ್ಯೆ, ಶಕ್ತಿಯ ಐಶ್ವರ್ಯದ ಮಧ್ಯೆ ಚಲಿಸುತ್ತಿದ್ದೀಯೆ.
“ಅದಕ್ಕಾಗಿಯೇ ಬ್ರಹ್ಮನಿಗೂ ಶಕ್ತಿಗೂ ಅಭೇದ ಎಂದು ಹೇಳುವುದು. ಒಂದನ್ನು ಸ್ವೀಕರಿಸಿದರೆ ಇನ್ನೊಂದನ್ನು ಸ್ವೀಕರಿಸಲೇಬೇಕಾಗುತ್ತದೆ. ಇದು ಬೆಂಕಿ ಮತ್ತು ಅದರ ಸುಡುವ ಶಕ್ತಿಯ ಹಾಗೆ; ಬೆಂಕಿಯನ್ನು ಸ್ವೀಕರಿಸಿದರೆ ಸುಡುವ ಶಕ್ತಿಯನ್ನೂ ಸ್ವೀಕರಿಸಬೇಕಾಗುತ್ತದೆ. ಸುಡುವ ಶಕ್ತಿಯನ್ನು ಬಿಟ್ಟು ಬೆಂಕಿಯನ್ನು, ಬೆಂಕಿಯನ್ನು ಬಿಟ್ಟು ಸುಡುವ ಶಕ್ತಿಯನ್ನು ಭಾವಿಸಲಾಗುವುದೇ ಇಲ್ಲ. ಸೂರ್ಯನನ್ನು ಬಿಟ್ಟು ಸೂರ್ಯರಶ್ಮಿಯನ್ನು ಭಾವಿಸಲಾಗುವುದಿಲ್ಲ. ಸೂರ್ಯರಶ್ಮಿಯನ್ನು ಬಿಟ್ಟು ಸೂರ್ಯನನ್ನು ಭಾವಿಸಲಾಗುವುದಿಲ್ಲ.”
“ಹಾಲು ಹೇಗಿದೆ? ಅದು ಬಿಳುಪು. ಹಾಲನ್ನು ಬಿಟ್ಟು ಬಿಳುಪನ್ನು ಭಾವಿಸಲಾಗುವುದಿಲ್ಲ. ಹಾಲಿನ ಬಿಳುಪನ್ನು ಬಿಟ್ಟು ಹಾಲನ್ನು ಭಾವಿಸಲಾಗುವುದಿಲ್ಲ.”
“ಹಾಗೇ ಬ್ರಹ್ಮನನ್ನು ಬಿಟ್ಟು ಶಕ್ತಿಯನ್ನು, ಶಕ್ತಿಯನ್ನು ಬಿಟ್ಟು ಬ್ರಹ್ಮನನ್ನು ಭಾವಿಸಲಾಗುವುದೇ ಇಲ್ಲ. ನಿತ್ಯವನ್ನು ಬಿಟ್ಟು ಲೀಲೆಯನ್ನು, ಲೀಲೆಯನ್ನು ಬಿಟ್ಟು ನಿತ್ಯವನ್ನು ಭಾವಿಸಲಾಗುವುದೇ ಇಲ್ಲ.
“ಆದ್ಯಾಶಕ್ತಿ ಲೀಲಾಮಯಿ; ಸೃಷ್ಟಿ ಸ್ಥಿತಿ ಪ್ರಳಯ ಮಾಡುತ್ತಾಳೆ. ಆಕೆಗೇ ಕಾಳೀ ಅಂತ ಹೆಸರು. ಕಾಳಿಯೇ ಬ್ರಹ್ಮ, ಬ್ರಹ್ಮನೇ ಕಾಳಿ. ವಸ್ತು ಒಂದೇ. ನಿಷ್ಕ್ರಿಯವಾಗಿರುವಾಗ, ಸೃಷ್ಟಿ ಸ್ಥಿತಿ ಪ್ರಳಯ ಮಾಡದಿರುವಾಗ ಅದೇ ವಸ್ತುವಿಗೆ ಬ್ರಹ್ಮ ಅಂತ ಹೆಸರು. ಆದರೆ ಆ ಎಲ್ಲಾ ಕಾರ್ಯಗಳನ್ನೂ ಮಾಡುತ್ತಿರುವಾಗ ಅದೇ ವಸ್ತುವಿಗೆ ಕಾಳಿ ಅಂತ ಹೆಸರು. ಶಕ್ತಿ ಅಂತ ಹೆಸರು. ವಸ್ತುವೇನೋ ಒಂದೇ; ಹೆಸರು ರೂಪ ಮಾತ್ರ ಬೇರೆ ಬೇರೆ.
“ಇದು ನೀರೆಂಬ ಒಂದೇ ವಸ್ತುವನ್ನು ವಿವಿಧ ಭಾಷೆಗಳಲ್ಲಿ ವಿವಿಧ ಹೆಸರಿನಿಂದ ಕರೆದ ಹಾಗೆ. ಒಂದು ಕೊಳಕ್ಕೆ ಮೂರು ನಾಲ್ಕು ಘಟ್ಟಗಳಿವೆ ಅಂತ ಇಟ್ಟುಕೊಳ್ಳಿ. ಒಂದು ಘಟ್ಟದಲ್ಲಿ ಹಿಂದೂಗಳು ನೀರು ಕುಡಿಯುತ್ತಾರೆ. ಅವರು ಅದಕ್ಕೆ ‘ಜಲ’ ಅಂತ ಕರೆಯುತ್ತಾರೆ. ಇನ್ನೊಂದರಲ್ಲಿ ಮುಸಲ್ಮಾನರು ನೀರು ಕುಡಿಯುತ್ತಾರೆ. ಅವರು ಅದನ್ನು ಕರೆಯುತ್ತಾರೆ, ‘ಪಾನಿ’ ಅಂತ. ಮತ್ತೊಂದರಲ್ಲಿ ಆಂಗ್ಲೇಯರು ನೀರು ಕುಡಿಯುತ್ತಾರೆ. ಅವರು ಅದಕ್ಕೆ ಹೇಳುತ್ತಾರೆ ‘ವಾಟರ್’ ಎಂಬುದಾಗಿ. ಈ ಮೂವರು ಕುಡಿಯುವುದೂ ನೀರೇ, ಆದರೆ ಹೆಸರಿನಲ್ಲಿ ಮಾತ್ರ ಪ್ರಭೇದ. ಹಾಗೆಯೇ ಕೆಲವರು ಭಗವಂತನನ್ನು ‘ಅಲ್ಲಾ,’ ಇನ್ನು ಕೆಲವರು ‘ಗಾಡ್’, ಮತ್ತೆ ಕೆಲವರು ‘ಬ್ರಹ್ಮ’, ಮತ್ತು ಕೆಲವರು ‘ಕಾಳಿ’, ಇನ್ನೂ ಬೇರೆಬೇರೆಯವರು ‘ರಾಮ’, ‘ಹರಿ’, ‘ಯೇಸು’, ‘ದುರ್ಗಾ’ ಎಂಬಿವೇ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ.”
ಕೇಶವಚಂದ್ರಸೇನ ನಗುತ್ತ : “ಕಾಳಿ ಈ ಜಗತ್ತಿನಲ್ಲಿ ಎಷ್ಟೊಂದು ಭಾವಗಳಿಂದ ಕ್ರೀಡಿಸುತ್ತಾಳೆ ಎಂಬುದರ ವಿಷಯವಾಗಿ ಸ್ವಲ್ಪ ವರ್ಣನೆಮಾಡಿ ತಿಳಿಸಿ.”
ಶ್ರೀರಾಮಕೃಷ್ಣರು ನಗುತ್ತ : “ಓ, ಆಕೆ ವಿವಿಧ ಭಾವಗಳಿಂದ ಕ್ರೀಡಿಸುತ್ತಾಳೆ. ಆಕೆಯೇ ಮಹಾಕಾಳಿ, ನಿತ್ಯಕಾಳಿ, ಶ್ಮಶಾನಕಾಳಿ, ರಕ್ಷಾಕಾಳಿ, ಶ್ಯಾಮಾಕಾಳಿ, ಮಹಾಕಾಳಿ, ನಿತ್ಯಕಾಳಿ- ಇವರ ವಿಷಯವಾಗಿ ತಂತ್ರಶಾಸ್ತ್ರದಲ್ಲಿ ವರ್ಣನೆ ಇದೆ. ಸೃಷ್ಟಿ ಆರಂಭವಾಗುವುದಕ್ಕೆ ಮುನ್ನ, ಚಂದ್ರ, ಸೂರ್ಯ, ಗ್ರಹ, ಪೃಥಿವಿ, ಇವೆಲ್ಲಾ ಉದ್ಭವವಾಗುವುದಕ್ಕೆ ಮುನ್ನ, ಎಲ್ಲೆಲ್ಲೂ ನಿಬಿಡಾಂಧಕಾರ ಹಬ್ಬಿದ್ದಾಗ ಭಗವತಿ-ನಿರಾಕಾರ ಸ್ವರೂಪಿಣಿ ಮಹಾಕಾಳಿ ಮಹಾಕಾಲನೊಡನೆ ಐಕ್ಯವಾಗಿದ್ದಳು.
“ಶ್ಯಾಮಾಕಾಳಿಯದು ಸ್ವಲ್ಪಮಟ್ಟಿಗೆ ಕೋಮಲ ಸ್ವಭಾವ. ಆಕೆ ವರಾಭಯದಾಯಿನಿ. ಗೃಹಸ್ಥರು ಆಕೆಯನ್ನು ಪೂಜಿಸುತ್ತಾರೆ. ಮಹಾಮಾರಿಕೋಪದ್ರವ, ದುರ್ಭಿಕ್ಷ, ಭೂಕಂಪ, ಅನಾವೃಷ್ಟಿ-ಅತಿವೃಷ್ಟಿಗಳಾದಾಗ ರಕ್ಷಾಕಾಳಿಯ ಪೂಜೆ ಮಾಡಬೇಕಾಗುತ್ತದೆ. ಶ್ಮಶಾನಕಾಳಿ ಸಂಹಾರಮೂರ್ತಿ. ಆಕೆ ಶವ, ನರಿ, ಡಾಕಿನಿ, ಯೋಗಿನಿ ಇವುಗಳೊಡಗೂಡಿ ಶ್ಮಶಾನದಲ್ಲಿ ವಾಸಿಸುತ್ತಾಳೆ. ಆಕೆಯ ಬಾಯಿಂದ ರಕ್ತದ ಕೋಡಿ ಹರಿಯುತ್ತಿರುತ್ತದೆ. ಕೊರಳಿಗೆ ರುಂಡ ಮಾಲೆ ಹಾಕಿಕೊಂಡಿರುತ್ತಾಳೆ. ಸೊಂಟಕ್ಕೆ ನರಹಸ್ತಗಳ ಒಡ್ಯಾಣ ಹಾಕಿಕೊಂಡಿರುತ್ತಾಳೆ.
“ಈ ಜಗತ್ತು ನಾಶವಾದಾಗ, ಮಹಾಪ್ರಳಯವಾದಾಗ ಮುಂದಿನ ಸೃಷ್ಟಿಗಾಗಿ ಬೀಜಗಳನ್ನೆಲ್ಲಾ ಶೇಖರಿಸಿ ಇಟ್ಟುಕೊಂಡಿರುತ್ತಾಳೆ. ಇದು ಮನೆಯ ಯಜಮಾನಿ ತನಗೆ ಬೇಕಾಗುವ ಎಲ್ಲಾ ಬಗೆಯ ವಸ್ತುಗಳನ್ನು ಒಂದು ಗುಡಾಣದಲ್ಲಿ ಶೇಖರಿಸಿ ಇಟ್ಟುಕೊಳ್ಳುವುದಿಲ್ಲವೆ, ಹಾಗೆ. (ಎಲ್ಲರೂ ನಗುತ್ತಾರೆ.)
“ನಗಬೇಡಿ! ಯಜಮಾನಿಯರು ಇಂಥದೊಂದು ಗುಡಾಣ ಇಟ್ಟುಕೊಂಡಿರುತ್ತಾರೆ. ಅದರೊಳಗೆ ಸಮುದ್ರದ ನೊರೆ, ನೀಲಿ ಗುಳಿಗೆ, ಸೌತೆಕಾಯಿ, ಕುಂಬಳಕಾಯಿ, ಸೋರೆಕಾಯಿ ಬೀಜಗಳ ಚಿಕ್ಕಚಿಕ್ಕ ಪೊಟ್ಟಣಗಳು ಇವನ್ನೆಲ್ಲಾ ಇಡುತ್ತಾರೆ. ಬೇಕಾದಾಗ ಅವನ್ನು ಹೊರಕ್ಕೆ ತೆಗೆಯುತ್ತಾರೆ. ಅದೇ ರೀತಿಯಾಗಿ ಭಗವತಿ ಬ್ರಹ್ಮಮಯಿ, ಈ ಜಗತ್ತು ನಾಶವಾದ ನಂತರ ಎಲ್ಲಾ ವಿಧದ ಬೀಜಗಳನ್ನೂ ಮುಂದಿನ ಸೃಷ್ಟಿಗಾಗಿ ಶೇಖರಿಸಿ ಇಟ್ಟುಕೊಳ್ಳುತ್ತಾಳೆ. ಸೃಷ್ಟಿ ಮಾಡಿದ ನಂತರ ಆದ್ಯಾಶಕ್ತಿ ಈ ಜಗತ್ತಿನ ಒಳಗೇ ಇರುತ್ತಾಳೆ-ಈ ಜಗತ್ತು ಹೆತ್ತು ಅದರೊಳಗೇ ಅಂತರ್ಗತವಾಗಿರುತ್ತಾಳೆ. ವೇದದಲ್ಲಿ ಇದೆ ‘ಊರ್ಣನಾಭಿ’ ಯ (ಜೇಡರ ಹುಳುವಿನ) ಮತ್ತು ಅದರ ಬಲೆಯ ವಿಷಯ. ಜೇಡರ ಹುಳು ತನ್ನ ಹೊಟ್ಟೆಯಿಂದಲೇ ತೆಗೆದ ತಂತುವಿನಿಂದ ಬಲೆ ಕಟ್ಟಿ ಅದರ ಮೇಲೆ ತಾನೂ ನಿಲ್ಲುತ್ತದೆ. ಹಾಗೆಯೇ ಭಗವಂತ ಈ ಆಧಾರ ಆಧೇಯ ಎರಡೂ ಆಗಿದ್ದಾನೆ.
“ಕಾಳಿ ನಿಜವಾಗಿ ಕಪ್ಪೇನು? ದೂರದಿಂದ ನೋಡಿದರೆ ಕಪ್ಪಗೆ ಕಾಣುತ್ತಾಳೆ, ಹತ್ತಿರದಿಂದ ನೋಡಿದರೆ ಕಪ್ಪಲ್ಲ, ಆಕಾಶ ದೂರದಿಂದ ನೀಲವರ್ಣದ್ದಾಗಿ ಕಾಣುತ್ತದೆ. ಹತ್ತಿರದಲ್ಲಿ ನೋಡಿದರೆ ಅದಕ್ಕೆ ಯಾವ ವರ್ಣವೂ ಇಲ್ಲ. ಸಮುದ್ರದ ನೀರು ದೂರದಿಂದ ನೀಲಿಯಾಗಿ ಕಾಣುತ್ತದೆ. ಹತ್ತಿರ ಹೋಗಿ ಕೈಗೆ ತೆಗೆದುಕೊಂಡು ನೋಡು, ಅದಕ್ಕೆ ಯಾವ ವರ್ಣವೂ ಇಲ್ಲ.”
ಪರಮಹಂಸರು ಪ್ರೇಮೋನ್ಮತ್ತರಾಗಿ ಈಗ ಹಾಡಲಾರಂಭಿಸಿದ್ದಾರೆ:
ಕಾಲರೂಪೆ ದಿಗಂಬರೀ
ಹೃದಯಪದ್ಮ ಭಾಸ್ಕರೀ
ನಿಜವಾಗಿಯೂ ಕಪ್ಪಗಿಹಳೆ ನನ್ನ ತಾಯಿ ಕಾಳಿ?…….
ಶ್ರೀರಾಮಕೃಷ್ಣರು ಮಾತು ಮುಂದುವರಿಸುತ್ತಿದ್ದಾರೆ : “ಬಂಧನ ಮತ್ತು ಮುಕ್ತಿ ಇವೆರಡರ ಕರ್ತಳೂ ಅವಳೇ. ಆಕೆಯ ಮಾಯೆಯ ದೆಸೆಯಿಂದ ಸಾಂಸಾರಿಕ ಜೀವರು ಕಾಮಕಾಂಚನಗಳಿಂದ ಬದ್ಧರಾಗುತ್ತಾರೆ. ಮತ್ತೆ ಆಕೆಯ ಕೃಪೆಯಿಂದಲೇ ಮುಕ್ತರಾಗುತ್ತಾರೆ. ಆಕೆ ನಮ್ಮ ಭವಬಂಧನವನ್ನು ಹರಿದು ಕಾಪಾಡತಕ್ಕವಳು.”
ಈಗ ಪರಮಹಂಸರು ತಮ್ಮ ಗಂಧರ್ವನಿಂದಿತ ಕಂಠದಿಂದ ಹಾಡಲಾರಂಭಿಸಿದ್ದಾರೆ:
ಪಟವನಾಡಿಸುತಿಹಳು ಈ ನನ್ನ ಘನಶ್ಯಾಮೆ
ಜಗದ ಸಂಸಾರಗಳ ಪೇಟೆಯಲ್ಲಿ,
ಮಾಯೆಯೀ ಸೂತ್ರದಲಿ ಬಿಗಿದ ಪಟವೇರುತ್ತಿವೆ,
ತುಂಬಿರುವ ಭರವಸೆಯ ಗಾಳಿಯಲ್ಲಿ.
ನರರಸ್ಥಿಪಂಜರದಿ ಮೂರು ಗುಣಗಳ ಬೆಸೆದು
ಮಾಡಿರುವಳೀ ತಾಯಿ ಕುಶಲಕಲೆಯ;
ಪಟದ ಸೂತ್ರದ ಮೇಲೆ ವಿಷಯದಂಟನು ಬಲಿದು
ಹರಿಯದಂತವುಗಳನು ರಚಿಸಿರುವಳು.
ಇಂತು ಹಾರುವ ನೂರುಸಾವಿರದ ಪಟಗಳಲಿ
ಒಂದೊ ಎರಡೊ ಹರಿದು ಬಿಡುಗಡೆಯ ಪಡೆದು
ಹೋಗುತಿರಲವುಗಳನು ನಿರುಕಿಸುತ ಈ ತಾಯಿ
ಕೈಯ ಚಪ್ಪಳೆ ತಟ್ಟಿ ನಲಿಯುತಿಹಳು.
ರಾಮಪ್ರಸಾದನಿದೊ ನುಡಿಯುವನು: “ಓ ತಾಯಿ
ಅನುಕೂಲ ಮಾರುತವು ಬೀಸುವಾಗ
ನೀನಿನಿತು ಕೃಪೆಗೈದು ಕೈ ಸಡಿಲಗೊಳಿಸಿದರೆ
ಎನಿತೊ ಪಟ ದಾಟುವುವು ಭವಜಲಧಿಯ!”
ಶ್ರೀರಾಮಕೃಷ್ಣರು ಹೇಳುತ್ತಿದ್ದಾರೆ: “ಭಗವತಿ ಲೀಲಾಮಯಿ. ಈ ಜಗತ್ತು ಆಕೆಯ ಕ್ರೀಡೆ. ಆಕೆ ಇಚ್ಛಾಮಯಿ. ಲಕ್ಷ ಜನರಲ್ಲಿ ಎಲ್ಲೊ ಒಬ್ಬರಿಗೆ ಮಾತ್ರ ಮುಕ್ತಿಕೊಡುತ್ತಾಳೆ.”
ಬ್ರಾಹ್ಮಭಕ್ತ : “ಮಹಾಶಯರೆ, ಇಚ್ಛೆಪಟ್ಟರೆ ಆಕೆ ಎಲ್ಲರನ್ನೂ ಮುಕ್ತರನ್ನಾಗಿ ಮಾಡಿಬಿಡಬಲ್ಲಳು. ಹಾಗಿರುವಾಗ ನಮ್ಮನ್ನೇಕೆ ಸಂಸಾರದಲ್ಲಿ ಬಂಧಿಸಿ ಇಟ್ಟಿದ್ದಾಳೆ?”
ಶ್ರೀರಾಮಕೃಷ್ಣರು: “ಆಕೆಯ ಇಚ್ಛೆ. ತಾನು ಸೃಷ್ಟಿಸಿದ ವಸ್ತುಗಳೊಡನೆ ತಾನು ಆಟವಾಡುತ್ತಲೇ ಇರಬೇಕು ಅಂತ ಆಕೆಯ ಇಚ್ಛೆ. ಕಣ್ಣುಮುಚ್ಚಾಲೆ ಆಟದಲ್ಲಿ ಯಾರು ಹೋಗಿ ಅಜ್ಜಿಯನ್ನು ಮುಟ್ಟಿಬಿಡುತ್ತಾರೊ, ಅವರು ಅನಂತರ ಓಡಾಡಬೇಕಾಗಿರುವುದಿಲ್ಲ. ಎಲ್ಲರೂ ಹೋಗಿ ಅಜ್ಜಿಯನ್ನು ಮುಟ್ಟಿಬಿಟ್ಟರೆ ಆಟ ಹೇಗೆ ಮುಂದುವರಿಯಬೇಕು? ಅದು ಆಕೆಗೆ ಅಸಂತೋಷವನ್ನುಂಟುಮಾಡುತ್ತದೆ. ಆಟ ಮುಂದುವರಿದರೇನೇ ಆಕೆಗೆ ಸಂತೋಷ. ಅದಕ್ಕಾಗಿಯೇ ರಾಮಪ್ರಸಾದ ಹೇಳಿರುವುದು:
ಇಂತು ಹಾರುವ ನೂರುಸಾವಿರದ ಪಟಗಳಲಿ
ಒಂದೊ ಎರಡೋ ಹರಿದು ಬಿಡುಗಡೆಯ ಪಡೆದು
ಹೋಗುತಿರಲವುಗಳನು ನಿರುಕಿಸುತ ಈ ತಾಯಿ
ಕೈಯ ಚಪ್ಪಳೆ ತಟ್ಟಿ ನಲಿಯುತಿಹಳು.
“ಭಗವತಿ ಕಣ್ಣುಸನ್ನೆ ಮಾಡಿ ಮನಸ್ಸಿಗೆ ರಹಸ್ಯವಾಗಿ ಆಜ್ಞೆ ಮಾಡಿಬಿಟ್ಟಿರುವಂತಿದೆ: ‘ಹೋಗು. ಹೋಗಿ ಸಂಸಾರಸುಖ ಅನುಭವಿಸು.’ ಆದ್ದರಿಂದ ಮನಸ್ಸಿನದೇನು ತಪ್ಪು? ಆದರೆ ಆಕೆ ಮತ್ತು ಕೃಪೆ ಇಟ್ಟು ಅದನ್ನು ತನ್ನ ಕಡೆಗೆ ಹರಿಯುವಂತೆ ಮಾಡಿಕೊಟ್ಟರೆ, ಆಗ ಮಾತ್ರವೇ ವಿಷಯಬುದ್ಧಿಯ ಬಂಧನದಿಂದ ಪಾರಾಗಿ ನಾವು ಮುಕ್ತಿ ಗಳಿಸಿಕೊಳ್ಳಬಹುದು. ಆಗ ಮಾತ್ರವೇ ಅದು ಭಗವತಿಯ ಪಾದಪದ್ಮಗಳಲ್ಲಿ ನೆಲಸಿ ಇರುತ್ತದೆ.”
ಪರಮಹಂಸರು ಸಂಸಾರಿಗಳ ನರಕಯಾತನೆಯ ಭಾರವನ್ನು ತಾವೇ ತಮ್ಮ ತಲೆಯ ಮೇಲೆ ಹೊತ್ತುಕೊಂಡಿರುವಂತೆ, ಮತ್ತೆ ಅದಕ್ಕೆಲ್ಲಾ ತಾವೇ ಹೊಣೆ ಎಂಬ ಭಾವವನ್ನು ವ್ಯಕ್ತಪಡಿಸುವ ಒಂದು ಹಾಡನ್ನು ಹಾಡಲಾರಂಭಿಸಿದ್ದಾರೆ:
ಈ ಎದೆಯ ಕೊರೆಯುವುದು ಒಂದೆ ವ್ಯಥೆ ನನಗೆ;
ನೀನೊಡನೆ ಇದ್ದರೂ ನಾನೆಚ್ಚರಿದ್ದರೂ
ಕಳ್ಳತನವಾಯ್ತಲ್ಲ ನನ್ನ ಮನೆಯೊಳಗೆ!
ಎನಿತೊ ಸಲ ನಾನಿನ್ನ ಕರೆಯಬೇಕೆಂದೆಂಬ
ಸಂಕಲ್ಪವಿದ್ದರೂ, ಪ್ರಾರ್ಥನೆಯ ಹೊತ್ತಿನಲಿ
ನಿನ್ನ ಮರೆತೆ
ಇನಿತೆಲ್ಲ ನಿನ್ನ ಮಾಯೆಯೆ ಎಂದು
ಈಗ ಅರಿತೆ!
ನೀನು ನನಗೇನನೂ ಕೊಟ್ಟಿಲ್ಲವದರಿಂದ
ನಾನೇನು ಕೊಡಬಲ್ಲೆ ನಿನಗೆ ಹೇಳು?
ನೀ ಕೊಟ್ಟುದನೆ ನಿನಗೆ ಕೊಡುತಿದ್ದೆ ನಾನು!
ಯಶ-ಅಪಯಶ, ಸುರಸ-ಕುರಸ
ಸಕಲ ರಸವು ನಿನ್ನದೇ,
ಸಕಲ ರಸೇಶ್ವರಿಯು ನೀನೆ
ಜಗವೆಲ್ಲವು ನಿನ್ನ ಲೀಲೆ
ಇದರೊಳೇಕೆ ನೀನೀತೆರ ರಸಭಂಗವ ಮಾಡುವೆ ?
ಈ ಮನವನು ನೀನಿತ್ತಿಹೆ,
ಜಗದ ಸುಖವ ಪಡೆಯಲೆಂದು ನನ್ನನಿಲ್ಲಿ ನಿಲಿಸಿಹೆ.
ನಾನು ನಿನ್ನ ಶಿಶುವಾದರು
ಈ ಜಗದೀ ಜಂಜಡದಲಿ
ಪರಿತ್ಯಕ್ತನಂದದಿ,
ಮಿಥ್ಯೆಯನೇ ಸತ್ಯವೆಂದು
ಕಹಿಯನ್ನೇ ಮಧುರವೆಂದು
ಭ್ರಮಿಸಿ ಬಳಲುತಿರುವೆನು
ಎನುವನೀ ಪ್ರಸಾದನು!
ಶ್ರೀರಾಮಕೃಷ್ಣರು ಮಾತು ಮುಂದುವರಿಸುತ್ತಿದ್ದಾರೆ: “ಭಗವತಿಯ ಮಾಯೆಯಿಂದಲೆ ಜನರು ಮೋಹಿತರಾಗಿ ಈ ಜಗತ್ತಿನಲ್ಲಿ ಕಟ್ಟುಬೀಳುತ್ತಾರೆ.
ಈ ಮನವನು ನೀನಿತ್ತಿಹೆ
ಜಗದ ಸುಖವ ಪಡೆಯಲೆಂದು ನನ್ನನಿಲ್ಲಿ ನಿಲಿಸಿಹೆ,
ಎನುವನೀ ಪ್ರಸಾದನು!”
ಬ್ರಾಹ್ಮಭಕ್ತ : “ಮಹಾಶಯರೆ, ಪೂರ್ಣತ್ಯಾಗ ಮಾಡದೆ ಇದ್ದರೆ ಭಗವಂತನ ಸಾಕ್ಷಾತ್ಕಾರ ಪಡೆಯಲಾಗುವುದಿಲ್ಲವೆ?”
ಶ್ರೀರಾಮಕೃಷ್ಣರು ನಗುತ್ತ : “ನಿಮಗೆ ಸಾಧ್ಯವಾಗಬಹುದು! ನೀವು ಸಂಪೂರ್ಣವಾಗಿ ತ್ಯಾಗ ಮಾಡುವುದರ ಆವಶ್ಯಕತೆ ಏನಿದೆ? ಭಗವಂತ, ಜಗತ್ತು ಎರಡು ಕಡೆಗೂ ನೀವು ದೃಷ್ಟಿಯಿಟ್ಟು ಆನಂದದಿಂದಲೇ ಇದ್ದೀರಿ. ಜೋನಿ ಬೆಲ್ಲ ಗಟ್ಟಿಯೂ ಅಲ್ಲ, ನೀರಿಗೆ ನೀರೂ ಅಲ್ಲ ! (ಎಲ್ಲರೂ ನಗುತ್ತಾರೆ.) ನೀವೀಗಿರುವ ರೀತಿಯಲ್ಲಿ ಆನಂದದಿಂದಲೇ ಇದ್ದೀರಿ. ನಿಮಗೆ ‘ನಕ್ಸ್’ ಎಂಬ ಇಸ್ಪೀಟಾಟ ಗೊತ್ತೆ ? ನಾನು ಹೆಚ್ಚಾಗಿ ನಂಬರು ಗೆದ್ದು ನನ್ನ ಆಟ ಮುಗಿದು ಹೋಗಿದೆ. ನೀವು ಬಹಳ ಬುದ್ಧಿವಂತರು. ನಿಮ್ಮಲ್ಲಿ ಕೆಲವರು ಹತ್ತು, ಇನ್ನು ಕೆಲವರು ಆರು, ಮತ್ತೆ ಕೆಲವರು ಐದು ನಂಬರುಗಳನ್ನು ಮಾತ್ರ ಗಳಿಸಿಕೊಂಡಿದ್ದೀರಿ. ಹೆಚ್ಚಾಗೇನೂ ಗಳಿಸಿಕೊಂಡಿಲ್ಲ; ಆದ್ದರಿಂದ ನನ್ನ ಹಾಗೆ ನೀವು ಆಟವಾಡದೆ ಉಳಿದಿರಬೇಕಾಗಿರುವುದಿಲ್ಲ. ನಿಮ್ಮ ಆಟ ಮುಂದುವರಿಯುತ್ತಿದೆ. ಭೇಷ್! (ಎಲ್ಲರೂ ನಗುತ್ತಿದ್ದಾರೆ.)
“ಸತ್ಯವಾಗಿ ಹೇಳುತ್ತೇನೆ: ನೀವು ಸಂಸಾರದಲ್ಲಿ ಇದ್ದೀರಿ. ಇದು ದೋಷವಾದ್ದೇನಲ್ಲ. ಆದರೆ ನೀವು ಭಗವಂತನ ಕಡೆಗೆ ಮನಸ್ಸು ತಿರುಗಿಸಿ ಇಡಬೇಕು; ಇಲ್ಲದಿದ್ದರೆ ನೀವು ಜಯಶಾಲಿಗಳಾಗೋದಿಲ್ಲ. ಒಂದು ಕೈಯಿಂದ ಕೆಲಸಮಾಡಿ, ಇನ್ನೊಂದು ಕೈಯಿಂದ ಭಗವಂತನನ್ನು ಬಲವಾಗಿ ಹಿಡಿದುಕೊಳ್ಳಿ. ಕರ್ಮ ಮುಗಿದ ನಂತರ ಎರಡು ಕೈಗಳಿಂದಲೂ ಭಗವಂತನನ್ನು ಹಿಡಿದುಕೊಳ್ಳಿ.
“ಎಲ್ಲಾ ಮನಸ್ಸಿನ ಮೇಲೆ ನಿಂತಿದೆ. ಮನಸ್ಸೇ ಬಂಧನಕ್ಕೆ ಕಾರಣ, ಮನಸ್ಸೇ ಮುಕ್ತಿಗೆ ಕಾರಣ. ಮನಸ್ಸಿಗೆ ಯಾವ ಬಣ್ಣ ಕೊಟ್ಟರೆ ಅದು ಆ ಬಣ್ಣ ಧರಿಸುತ್ತದೆ. ಉದಾಹರಣೆಗೆ ಆಗಸನ ಮನೆಯಿಂದ ತಂದ ಬಟ್ಟೆ. ಕೆಂಪು ಬಣ್ಣದಲ್ಲಿ ಅದ್ದಿದರೆ ಕೆಂಪು, ನೀಲಿ ಬಣ್ಣದಲ್ಲಿ ಅದ್ದಿದ್ದರೆ ನೀಲಿ, ಹಳದಿ ಬಣ್ಣದಲ್ಲಿ ಅದ್ದಿದರೆ ಹಳದಿ, ಮತ್ತಾವ ಬಣ್ಣದಲ್ಲಿ ಅದ್ದಿದರೂ ಆ ಬಣ್ಣ ಧರಿಸುತ್ತದೆ. ನೋಡಿಲ್ಲವೆ, ಒಂದಿಷ್ಟು ಇಂಗ್ಲಿಷು ಓದುವುದಕ್ಕೆ ಕಲಿತುಕೊಂಡಿರಿ ಎಂದರೆ, ನಿಮ್ಮನ್ನು ಹೇಳದೆ ಕೇಳದೆ ‘ಕೋಸ್ಪಿಸ್’ ಎಂಬ ಇಂಗ್ಲಿಷು ಪದಗಳು ನಿಮ್ಮ ಬಾಯಿಂದ ಹೊರಬೀಳುವುದನ್ನ? (ಎಲ್ಲರೂ ನಗುತ್ತಾರೆ.) ಬಳಿಕ ಕಾಲಿಗೆ ಬೂಟ್ಸು, ಸಿಳ್ಳು ಹಾಕುತ್ತಾ ಆಲಾಪನೆ ಮಾಡುವುದು ಇವೆಲ್ಲಾ ಬಂದುಬಿಡುತ್ತವೆ. ಇವೆಲ್ಲಾ ಒಂದೇ ಜೊತೆ. ವಿದ್ಯಾವಂತ ಸಂಸ್ಕೃತ ಕಲಿತುಕೊಂಡಿದ್ದೇ ಆದರೆ ಪದೇ ಪದೇ ಸಂಸ್ಕೃತ ಶ್ಲೋಕಗಳನ್ನು ಎತ್ತಿ ಹೇಳುತ್ತಲೇ ಇರುತ್ತಾನೆ. ನೀನು ಕೆಟ್ಟವರೊಡನೆ ಬೆಳೆದರೆ, ನಿನ್ನ ನಡೆನುಡಿ ವ್ಯವಹಾರ ಎಲ್ಲವೂ ಅವರಂತೆ ಆಗಿಬಿಡುತ್ತವೆ; ಭಕ್ತರ ಸಹವಾಸದಲ್ಲಿ ಬೆಳೆದರೆ, ಮನಸ್ಸು ಭಗವಚ್ಚಿಂತನೆ, ಭಗವತ್ಕತೆ ಇವುಗಳಲ್ಲೇ ನಿರತವಾಗಿರುತ್ತದೆ.
“ಮನಸ್ಸೇ ಎಲ್ಲಕ್ಕೂ ಕಾರಣ. ಮನಷ್ಯನ ಒಂದು ಪಕ್ಕದಲ್ಲಿ ಹೆಂಡತಿ, ಇನ್ನೊಂದು ಪಕ್ಕದಲ್ಲಿ ಮಗಳು. ಒಬ್ಬಳಿಗೆ ಒಂದು ವಿಧದಲ್ಲಿ ಇನ್ನೊಬ್ಬಳಿಗೆ ಇನ್ನೊಂದು ವಿಧದಲ್ಲಿ ಪ್ರೀತಿ ತೋರಿಸುತ್ತಾನೆ. ಆದರೆ ಮನಸ್ಸು ಮಾತ್ರ ಒಂದೇ ಒಂದು.
“ಮನಸ್ಸಿನಿಂದಲೇ ಬಂಧನ, ಮನಸ್ಸಿನಿಂದಲೇ ಮುಕ್ತಿ. ‘ನಾನು ಮುಕ್ತಪುರುಷ. ಸಂಸಾರದಲ್ಲಿ ಇದ್ದರೆ ತಾನೆ ಏನು, ಅರಣ್ಯದಲ್ಲಿ ಇದ್ದರೆ ತಾನೆ ಏನು, ನನಗೆಲ್ಲಿಯದು ಬಂಧನ ? ನಾನು ಭಗವಂತನ ಮಗು; ರಾಜಾಧಿರಾಜನ ಮಗು. ನನಗಾವುದರ ಬಂಧನ ?’ ಎಂಬುದಾಗಿ ಯಾರು ಸತತ ಚಿಂತಿಸುತ್ತಾನೊ, ಆತ ಮುಕ್ತನಾಗಿಬಿಡುತ್ತಾನೆ. ಒಂದು ಪಕ್ಷ ಹಾವೇನಾದರೂ ಕಡಿದರೆ ‘ನನ್ನನ್ನು ವಿಷ ಏನೂ ಮಾಡಲಾರದು’ ಎಂಬುದಾಗಿ ದೃಢವಾಗಿ ನಂಬಿದರೆ ಆಗ ಅದರಿಂದ ಪಾರಾಗಿಬಿಡಬಹುದು. ಹಾಗೆ ‘ನಾನು ಬದ್ಧನಲ್ಲ, ಮುಕ್ತ’ ಎಂಬುದಾಗಿ ದೃಢವಾಗಿ ನಂಬಿದರೆ ಹಾಗೇ ಆಗಿಬಿಡಬಹುದು-ಮುಕ್ತನೇ ಆಗಿಬಿಡಬಹುದು.
“ಒಮ್ಮೆ ನನಗೆ ಒಬ್ಬ ಕ್ರಿಶ್ಚಿಯನ್ನನು ಒಂದು ಪುಸ್ತಕ ತಂದುಕೊಟ್ಟ. ನಾನು ಆತನಿಗ ಅದನ್ನು ಓದಿ ಹೇಳುವಂತೆ ಹೇಳಿದೆ. ಅದರಲ್ಲಿ ಕೇವಲ ಪಾಪದ ವಿಷಯವೇ ಹೊರತು ಬೇರೇನೂ ಇರಲಿಲ್ಲ. (ಕೇಶವನಿಗೆ) ನಿಮ್ಮ ಬ್ರಾಹ್ಮಸಮಾಜದಲ್ಲೂ ಕೇವಲ ಪಾಪದ ಮಾತುಕತೆಯೇ. ಯಾವ ವ್ಯಕ್ತಿ, ‘ನಾನು ಬದ್ಧ’ ಎಂಬುದಾಗಿ ಪದೇಪದೇ ಹೇಳುತ್ತಾನೊ ಆ ನೀಚ ಬದ್ಧನೇ ಆಗಿಬಿಡುತ್ತಾನೆ. ಯಾರು ಹಗಲೂ ಇರುಳೂ ‘ನಾನು ಪಾಪಿ, ನಾನು ಪಾಪಿ’ ಎಂಬುದಾಗಿ ಹೇಳುತ್ತಲೇ ಇರುತ್ತಾನೊ ಆತ ಪಾಪಿಯೇ ಆಗಿ ಬಿಡುತ್ತಾನೆ.
“ಭಗವಂತನ ನಾಮಮಹಿಮೆಯಲ್ಲಿ ಮನುಷ್ಯನಿಗೆ ಅಂಥ ಶ್ರದ್ಧೆಯುಂಟಾಗಿಬಿಡಬೇಕು, ಆತ ಹೇಳುವಂತಾಗಬೇಕು: ‘ಏನು? ನಾನು ಭಗವಂತನ ನಾಮ ಜಪಿಸುತ್ತಾ ಇದ್ದೇನೆ, ನನ್ನಲ್ಲಿ ಇನ್ನೂ ಪಾಪ ? ನನಗಿನ್ನಾವುದರ ಪಾಪ? ನನಗಿನ್ನೆಂಥದರ ಬಂಧನ?’
“ಭಗವಂತನ ನಾಮ ಜಪಿಸಿದರೆ ಮನುಷ್ಯನ ದೇಹ ಮತ್ತು ಮನಸ್ಸು ಎಲ್ಲವೂ ಶುದ್ಧವಾಗಿಬಿಡುತ್ತದೆ. ಕೇವಲ ಪಾಪ, ನರಕ ಈ ಮಾತುಗಳಲ್ಲೇ ಏಕೆ ತೊಡಗಬೇಕು? ಭಗವಂತನಿಗೆ ಒಮ್ಮೆ ಹೇಳಿಬಿಡು: ‘ಹೇ ಭಗವಂತ, ಇದುವರೆಗೆ ಅನ್ಯಾಯ ಕರ್ಮಗಳನ್ನು ಮಾಡಿದ್ದೇನೆ, ಇನ್ನು ಮುಂದೆ ಮಾಡುವುದಿಲ್ಲ.’ ಆತನ ಹೆಸರಿನಲ್ಲಿ ಶ್ರದ್ಧೆಯಿಡು.”
ಪರಮಹಂಸರು ಪ್ರೇಮೋನ್ಮತ್ತರಾಗಿ ಹಾಡುತ್ತಿದ್ದಾರೆ :
ನಾ ಪಾಪಿಯಾದರೂ ನನ್ನ ಕಡೆಗಾಲದಲಿ
ನಿನ್ನ ಶ್ರೀನಾಮವನು ಜಪಿಸುತಿರಲು
ಮುಕ್ತಿಗೊಯ್ಯದೆ ನೀನು ಬಿಡುವಳೇನು?……
ಬಳಿಕ ಹೇಳುತ್ತಿದ್ದಾರೆ: “ನಾನು ಭಗವತಿಯನ್ನು ಕೇವಲ ಭಕ್ತಿಗಾಗಿಯೇ ಪ್ರಾರ್ಥನೆ ಮಾಡಿದೆ. ಹೂವನ್ನು ಭಗವತಿಯ ಪಾದಪದ್ಮಗಳಿಗೆ ಅರ್ಪಿಸಿ ಪ್ರಾರ್ಥನೆ ಮಾಡಿದೆ: ‘ಹೇ ತಾಯಿ, ಇಗೋ ತೆಗೆದುಕೊ ನಿನ್ನ ಪಾಪವನ್ನು, ಇಗೋ ತೆಗೆದುಕೊ ನಿನ್ನ ಪುಣ್ಯವನ್ನು. ನನಗೆ ಶುದ್ಧ ಭಕ್ತಿ ಕೊಡು. ಇಗೋ ತೆಗೆದುಕೊ ಜ್ಞಾನವನ್ನು, ಇಗೋ ತೆಗೆದುಕೊ ನಿನ್ನ ಅಜ್ಞಾನವನ್ನು. ನನಗೆ ಶುದ್ಧ ಭಕ್ತಿ ಕೊಡು. ಇಗೋ ತೆಗೆದುಕೊ ನಿನ್ನ ಶುಚಿಯನ್ನು, ಇಗೋ ತೆಗೆದುಕೊ ನಿನ್ನ ಅಶುಚಿಯನ್ನು. ನನಗೆ ಶುದ್ಧ ಭಕ್ತಿ ನೀಡು. ಇಗೋ ತೆಗೆದುಕೋ ನಿನ್ನ ಧರ್ಮವನ್ನು, ಇಗೋ ತೆಗೆದುಕೋ ನಿನ್ನ ಅಧರ್ಮವನ್ನು. ನನಗೆ ಶುದ್ಧ ಭಕ್ತಿ ಕರುಣಿಸು.’
(ಬ್ರಾಹ್ಮ ಭಕ್ತರಿಗೆ) “ರಾಮಪ್ರಸಾದನ ಒಂದು ಹಾಡು ಕೇಳಿ:
ಸುಮ್ಮನೆ ತಿರುಗಾಟಕೆ ಬಾ ಮನವೇ
ಶ್ರೀ ಕಾಳೀಸುರತರುವಿರುವೆಡೆಗೆ!……
“ಸಂಸಾರದಲ್ಲಿರತಕ್ಕವರಿಗೆ ಭಗವಂತನ ಸಾಕ್ಷಾತ್ಕಾರ ಏಕೆ ದೊರೆಯದೆ ಹೋಗುತ್ತದೆ ? ಜನಕರಾಜನಿಗೆ ದೊರೆತಿತ್ತು. ರಾಮಪ್ರಸಾದ ಈ ಜಗತ್ತನ್ನು ವರ್ಣಿಸಿದ್ದಾನೆ: ‘ಕನಸಿನ ತೆರೆ’ ಎಂಬುದಾಗಿ. ಆದರೆ ಭಗವಂತನ ಪಾದಪದ್ಮಗಳಲ್ಲಿ ಭಕ್ತಿಯನ್ನು ದೊರಕಿಸಿಕೊಂಡದ್ದೇ ಆದರೆ-
ಈ ಜಗವೆಂಬುದು ಮೋಜಿನ ಮನೆಯೊ!
ಇದರೊಳು ನಾ ಮನಬಂದೊಲು ನಡೆವೆ,
ತಿನ್ನುವೆ-ಕುಡಿಯುವೆ-ಕುಣಿಯುವೆ-ನಲಿವೆ.
ಜನಕನ ತೇಜವ ಮೀರಿದರಾರೊ?
ಇಹ-ಪರದಲ್ಲೂ ಕೊರತೆಯಿಲ್ಲದೊಲು
ಬಾಳಿದನವನು.
ಅದನೂ-ಇದನೂ ಎರಡನು ಹಿಡಿದು
ಕುಡಿದನು ತುಂಬಿದ ಹಾಲ್ಬಟ್ಟಲನು! (ಎಲ್ಲರೂ ನಗುತ್ತಿದ್ದಾರೆ.)
“ಆದರೆ ಇದ್ದಕ್ಕಿದ್ದ ಹಾಗೆ ಜನಕರಾಜ ಆಗಿಬಿಡುವುದಿಲ್ಲ. ಜನಕರಾಜ ಮೊದಲು ನಿರ್ಜನ ಪ್ರದೇಶದಲ್ಲಿ ಬಹಳವಾಗಿ ತಪಸ್ಸು ಮಾಡಿದ.
“ಸಂಸಾರದಲ್ಲಿರುವವರೂ ಒಮ್ಮೊಮ್ಮೆ ಹೋಗಿ ನಿರ್ಜನಪ್ರದೇಶದಲ್ಲಿ ವಾಸಮಾಡ ಬೇಕು. ಸಂಸಾರದ ಹೊಸಲು ದಾಟಿಹೋಗಿ ಒಬ್ಬನೇ ಹೊರಗೆ ಇದ್ದು ಕನಿಷ್ಠಪಕ್ಷ ಒಂದು ಮೂರು ದಿನಗಳಾದರೂ ಭಗವಂತನಿಗಾಗಿ ಅಳಲು ಸಾಧ್ಯವಾಗುವುದಾದರೆ ಅದೂ ಒಳ್ಳೆಯದೆ. ಹೋಗಲಿ ಒಂದು ದಿನವಾದರೂ ಸರಿಯೆ, ವಿರಾಮಮಾಡಿಕೊಂಡು ನಿರ್ಜನ ಪ್ರದೇಶದಲ್ಲಿ ಆತನ ಚಿಂತನೆ ಮಾಡಲು ಸಾಧ್ಯವಾಗುವುದಾದರೆ ಅದೂ ಎಷ್ಟೊ ಒಳ್ಳೆಯದೆ. ಜನ ಹೆಂಡತಿಮಕ್ಕಳಿಗಾಗಿ ಕೊಡಗಟ್ಟಲೆ ನೀರು ಸುರಿಸುತ್ತಾರೆ. ಭಗವಂತನಿಗಾಗಿ ಯಾರು ಅಳುತ್ತಾರೆ ಹೇಳು? ಆಗಾಗ ನಿರ್ಜನಪ್ರದೇಶಕ್ಕೆ ಹೋಗಿ ಭಗವಂತನ ಸಾಕ್ಷಾತ್ಕಾರಕ್ಕಾಗಿ ಸಾಧನೆ ಮಾಡಬೇಕು. ಸಂಸಾರದಲ್ಲಿ ಕಾಲಿಟ್ಟು ಅದರ ವಿವಿಧ ಕರ್ಮಗಳಲ್ಲಿ ತೊಡಗಿರುವ ವ್ಯಕ್ತಿಗೆ ಭಗವಂತನಲ್ಲಿ ಮನಸ್ಸನ್ನು ಸ್ಥಿರವಾಗಿ ಇಡಬೇಕು ಎಂದರೆ ಮೊದಲು ಮೊದಲು ಅನೇಕ ವಿಘ್ನಗಳು ಬರುತ್ತವೆ. ಫುಟ್ಪಾತಿನ ಗಿಡ ಇನ್ನೂ ಸಸಿಯಾಗಿರುವಾಗ ಅದಕ್ಕೆ ಬೇಲಿ ಹಾಕದೆ ಇದ್ದರೆ ಆಡುಕುರಿಗಳು ತಿಂದುಬಿಡುತ್ತವೆ. ಗಿಡ ಸಸಿಯಾಗಿರುವಾಗ ಬೇಲಿ ಆವಶ್ಯಕ. ಬುಡ ದಪ್ಪವಾಯಿತು ಎಂದರೆ ಬೇಲಿಯ ಆವಶ್ಯಕತೆಯೇನೂ ಇರುವುದಿಲ್ಲ. ಆಗ ಆನೆ ತಂದು ಕಟ್ಟಿದರೂ ಅದಕ್ಕೆ ಏನೂ ಆಗದು.
“ತಗಲಿರುವ ರೋಗ ವಿಷಮಶೀತಜ್ವರ. ಅಂಥಾ ರೋಗಿ ಇರುವ ಕೊಠಡಿಯಲ್ಲಿ ಇವೆ ನೀರಿನ ಹಂಡೆ, ಹುಣಸೆಕಾಯಿಯ ಉಪ್ಪಿನಕಾಯಿ. ಆತನನ್ನು ಗುಣಪಡಿಸಬೇಕಾಗಿದ್ದರೆ ಮೊದಲು ಆತನನ್ನು ಬೇರೆ ಕೊಠಡಿಗೆ ಕರೆದುಕೊಂಡು ಹೋಗಿ ಮಲಗಿಸಬೇಕು. ಸಂಸಾರಿ ಜೀವವೇ ವಿಷಮಶೀತಜ್ವರದ ರೋಗಿ. ವಿಷಯವಸ್ತುಗಳೇ ನೀರಿನ ಹಂಡೆ. ವಿಷಯಭೋಗ ತೃಷ್ಣೆಯೇ ನೀರಡಿಕೆ. ಹುಣಸೆಕಾಯಿಯ ಉಪ್ಪಿನಕಾಯಿಯ ಯೋಚನೆ ಮನಸ್ಸಿಗೆ ಬಂದರೇನೇ ಬಾಯಲ್ಲಿ ನೀರು ಊರುತ್ತದೆ. ಅಂಥಾದ್ದರಲ್ಲಿ ಹತ್ತಿರ ತೆಗೆದುಕೊಂಡು ಬಂದರೆ ಇನ್ನು ಕೇಳಬೇಕೆ? ಈ ವಿಧದ ವಸ್ತುಗಳು ಕೊಠಡಿಯಲ್ಲಿ ಇವೆ. ಹೆಂಗಸಿನ ಸಹವಾಸವೇ ಉಪ್ಪಿನಕಾಯಿ. ಆದ್ದರಿಂದ ನಿರ್ಜನ ಪ್ರದೇಶದಲ್ಲಿ ಚಿಕಿತ್ಸೆ ಆವಶ್ಯಕ.
“ವಿವೇಕ ವೈರಾಗ್ಯಗಳನ್ನು ಗಳಿಸಿಕೊಂಡು ಬೇಕಾದರೆ ಸಂಸಾರದಲ್ಲಿ ಇರಬಹುದು. ಸಂಸಾರ ಸಮುದ್ರದಲ್ಲಿ ಕಾಮಕ್ರೋಧಾದಿ ಮೊಸಳೆ ವಾಸವಾಗಿವೆ. ಅರಸಿಣ ಮೈಗೆ ಹಚ್ಚಿಕೊಂಡು ನೀರಿಗೆ ಇಳಿದರೆ ಮೊಸಳೆಗಳ ಕಾಟ ಇರುವುದಿಲ್ಲ. ವಿವೇಕ ವೈರಾಗ್ಯವೇ ಅರಸಿಣ. ಸದಸದ್ವಿಚಾರಕ್ಕೆ ವಿವೇಕ ಅಂತ ಹೆಸರು. ಭಗವಂತನೇ ಸತ್, ನಿತ್ಯವಸ್ತು; ಉಳಿದುದೆಲ್ಲಾ ಅಸತ್, ಅನಿತ್ಯವಸ್ತು, ಎರಡು ದಿನದ ಬಾಳಿನವು-ಎಂಬುದೇ ಜ್ಞಾನ. ಭಗವಂತನಲ್ಲಿ ಅನುರಾಗ ಬೆಳಸಿಕೊಳ್ಳಬೇಕು. ಆತನ ಕಡೆ ಮನಸ್ಸು ಹರಿಯುವಂತೆ ಮಾಡಿಕೊಳ್ಳಬೇಕು, ಆತನನ್ನು ಪ್ರೀತಿಸಬೇಕು. ಕೃಷ್ಣನನ್ನು ಕಂಡರೆ ಗೋಪಿಯರಿಗೆ ಅತ್ಯಂತ ಮಹತ್ತಾದ ಆಕರ್ಷಣೆ. ಒಂದು ಹಾಡು ಕೇಳು:
ಕೇಳಿರೇ ಸಖಿ ಕೇಳಿರೇ ದೂರಕೊಳಲಿನ ಕರೆಯನು !
ನಾನು ಹಾರುವೆನಲ್ಲಿಗೀಗಲೆ, ಕಾಯುತಿರುವನು ಕೃಷ್ಣನು !
ನೀವು ಬರುವಿರೊ ಇಲ್ಲವೋ ಸಖಿ, ಹೇಳಿರೀಗಲೆ ನಡೆವೆನು.
ನಿಮ್ಮ ಪಾಲಿಗೆ ನನ್ನ ಕೃಷ್ಣನು ಬರಿಯ ಹೆಸರಾಗಿರುವನು
ನನಗೊ ಆತನು ಹೃದಯದೊಲವಿನ ಉಸಿರಿನುಸಿರಾಗಿರುವನು !
ನೀವು ಕಿವಿಯಲಿ ಕೇಳುತಿರುವಿರಿ ಅವನ ಕೊಳಲಿನ ರಾಗವ
ನಾನು ಕೇಳುವೆನಾತ್ಮದಾಳದಿ ಮಧುರ ಮುರಳೀನಾದವ !
‘ನಿನ್ನ ಹೊರತೀ ಕುಂಜಕಾನನ ಬರಿಯ ನೀರಸವಾಗಿದೆ
ಬಾರ ರಾಧೇ, ಬಾರ ಪ್ರಿಯಸಖಿ’ -ಎಂದು ಕೊಳಲುಲಿ ಕರೆದಿದೆ !
ಪರಮಹಂಸರು ಈ ಹಾಡನ್ನು ಹಾಡುತ್ತ ಹಾಡುತ್ತ ಅಶ್ರುಪೂರ್ಣಲೋಚನರಾಗಿ ಕೇಶವನೇ ಮೊದಲಾದವರಿಗೆ ಹೇಳುತ್ತಿದ್ದಾರೆ: “ರಾಧಾಕೃಷ್ಣರನ್ನು ಒಪ್ಪಿದರೆ ಒಪ್ಪಿ, ಇಲ್ಲದಿದ್ದರೆ ಬಿಡಿ. ಅವರಲ್ಲಿ ಪರಸ್ಪರ ಇದ್ದ ಆಕರ್ಷಣೆಯನ್ನು ಮಾತ್ರ ಒಪ್ಪಿಕೊಂಡುಬಿಡಿ. ಭಗವಂತನಿಗಾಗಿ ಅದೇ ವಿಧದ ವ್ಯಾಕುಲತೆ ನಿಮ್ಮಲ್ಲುಂಟಾಗುವಂತೆ ಪ್ರಯತ್ನ ಮಾಡಿ. ವ್ಯಾಕುಲತೆ ಉಂಟಾಯಿತು ಎಂದರೆ ಆತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು.”
ಈಗ ನದಿ ಇಳಿಯಲು ಪ್ರಾರಂಭಿಸಿದೆ. ಜಹಜು ಕಲ್ಕತ್ತದ ಕಡೆಗೆ ವೇಗವಾಗಿ ಹೋಗುತ್ತಿದೆ. ಅದು ಈಗ ಹೌರಾ ಸೇತುವೆ ದಾಟಿ ‘ಬೊಟಾನಿಕಲ್ ಗಾರ್ಡನ್’ ಹತ್ತಿರಕ್ಕೆ ಬರುತ್ತಿದೆ. ಇನ್ನೂ ಸ್ವಲ್ಪ ಕೆಳಕ್ಕೆ ಹೋಗುವಂತೆ ಕ್ಯಾಪ್ಟನ್ನನಿಗೆ ತಿಳಿಸಲಾಯಿತು. ಜಹಜು ಎಷ್ಟು ದೂರ ಮುಂದುವರಿದುಬಿಟ್ಟಿದೆ! ಆದರೆ ಅನೇಕರಿಗೆ ಅದರ ಅರಿವೇ ಇರಲಿಲ್ಲ. ಅವರು ಮಗ್ನರಾಗಿ ಪರಮಹಂಸರ ಮಾತು ಕೇಳುತ್ತಿದ್ದಾರೆ, ಹೊತ್ತು ಹೇಗೆ ಕಳೆದುಹೋಯಿತು ಎಂಬುದರ ಪ್ರಜ್ಞೆಯೇ ಅವರಿಗಿರಲಿಲ್ಲ.
ಕೇಶವಸೇನ ಪುರಿ ಮತ್ತು ತೆಂಗಿನಕಾಯಿಯ ತುರಿ ಇವನ್ನು ಹಂಚುತ್ತಿದ್ದಾನೆ. ಎಲ್ಲರೂ ಅವನ್ನು ತಮ್ಮ ಚೌಕದ ಸೆರಗಿಗೆ ಹಾಕಿಸಿಕೊಳ್ಳುತ್ತಿದ್ದಾರೆ. ಈಗ ಕೈಗೂ ಬಾಯಿಗೂ ಕೆಲಸ ಶುರುವಾಗಿದೆ. ಎಲ್ಲರೂ ಆನಂದದಿಂದ ತುಂಬಿತುಳುಕಾಡುತ್ತಿದ್ದಾರೆ. ಆದರೆ ಇಂಥ ಆನಂದದ ಸಮಯದಲ್ಲಿ ಕೇಶವನಿಗೂ ವಿಜಯನಿಗೂ ಸರಿಹೋಗದೆ ಇರುವುದನ್ನು ನೋಡಿ ಅವರಿಬ್ಬರಿಗೂ ಸ್ನೇಹ ಬೆಳೆಸಲು ಪರಮಹಂಸರು ಕಾತರರಾಗಿದ್ದಾರೆ.
ಶ್ರೀರಾಮಕೃಷ್ಣರು ಕೇಶವನಿಗೆ: “ನೋಡಿಲ್ಲಿ, ವಿಜಯ ಬಂದಿದ್ದಾನೆ. ನಿಮ್ಮಿಬ್ಬರ ಜಗಳ-ವಿವಾದ ಶಿವ ಮತ್ತು ರಾಮರ ಜಗಳದಂತಿದೆ. ಶಿವ ರಾಮನ ಗುರು. ಇಬ್ಬರಿಗೂ ಯುದ್ಧವು ನಡೆಯಿತು; ಬಳಿಕ ಒಪ್ಪಂದಕ್ಕೂ ಬಂದುಬಿಟ್ಟರು. ಆದರೆ ಶಿವನ ಭೂತಪ್ರೇತಗಳಿಗೂ ರಾಮನ ವಾನರಸೈನ್ಯಕ್ಕೂ ಕಚ್ಚಾಟ ಬಡಿದಾಟ ಏನು ಮಾಡಿದರೂ ನಿಲ್ಲಲೊಲ್ಲದು! (ಗಟ್ಟಿಯಾಗಿ ನಗು.) ರಕ್ತ ಸಂಬಂಧಿಗಳಲ್ಲೂ ಈ ರೀತಿಯಾದ ಜಗಳ ಆಗುವುದುಂಟು. ಲವಕುಶರು ರಾಮನೊಡನೆ ಯುದ್ಧ ಮಾಡಲಿಲ್ಲವೆ? ತಾಯಿಯ ಶುಭ, ಮಗಳ ಶುಭ ಪ್ರತ್ಯೇಕಪ್ರತ್ಯೇಕವೊ ಏನೊ ಎಂಬುವ ಹಾಗೆ ಅವರಿಬ್ಬರು ಪ್ರತ್ಯೇಕ ಪ್ರತ್ಯೇಕವಾಗಿ ಮಂಗಳ ಗೌರಿ ವ್ರತ ಆಚರಿಸುವುದನ್ನು ನೀನು ನೋಡಿಲ್ಲ ವೆ? ಆದರೆ ವಾಸ್ತವವಾಗಿ ಇವಳ ಶುಭದಿಂದ ಅವಳಿಗೆ ಶುಭ, ಅವಳ ಶುಭದಿಂದ ಇವಳಿಗೆ ಶುಭ. ನಿನಗೊಂದು ಸಮಾಜ ಇದೆ. ಹಾಗೆಯೇ ವಿಜಯನಿಗೂ ಒಂದು ಸಮಾಜ ಆವಶ್ಯಕ (ಎಲ್ಲರ ನಗು). ಸಾಕ್ಷಾತ್ ಭಗವಂತ ಶ್ರೀಕೃಷ್ಣನೇ ಬೃಂದಾವನದಲ್ಲಿ ಗೋಪಿಯರೊಡನೆ ಕ್ರೀಡೆಯಲ್ಲಿ ತೊಡಗಿರುವಾಗ ಜಟಿಲೆ ಕುಟಿಲೆಯರು ಅಲ್ಲಿಗೆ ಬರುತ್ತಾರೆ. ನೀನು ಕೇಳಬಹುದು. ಏಕೆ ಎಂಬುದಾಗಿ. ಜಟಿಲೆ ಕುಟಿಲೆಯರಿಲ್ಲದೆ ಇದ್ದರೆ ಕ್ರೀಡೆ ಕಳೆಕಟ್ಟದು. (ಎಲ್ಲರೂ ನಗುತ್ತಿದ್ದಾರೆ.) ಅವರಿಲ್ಲದೆ ಇದ್ದರೆ ತಮಾಷೆಯೇ ಇರದು. (ಗಟ್ಟಿಯಾದ ನಗು.)
“ರಾಮಾನುಜಾಚಾರ್ಯರು ವಿಶಿಷ್ಟಾದ್ವೈತವಾದಿ. ಆದರೆ ಅವರ ಗುರು ಅದ್ವೈತವಾದಿ. ಕೊನೆಗೆ ಅವರಿಬ್ಬರಿಗೂ ಹತ್ತಿಕೊಂಡಿತು. ಗುರುಶಿಷ್ಯರು ಪರಸ್ಪರ ಮತಖಂಡನೆ ಮಾಡಲು ಶುರುಮಾಡಿದರು. ಹೀಗೆ ಯಾವಾಗಲೂ ಆಗುವುದುಂಟು. ಆದರೆ ಗುರುವಿಗೆ ಶಿಷ್ಯ ತನ್ನವನೇ.”
ಎಲ್ಲರೂ ಪರಮಹಂಸರ ಮಾತು ಕೇಳಿ ಆನಂದದಿಂದಿದ್ದಾರೆ.
ಶ್ರೀರಾಮಕೃಷ್ಣರು ಕೇಶವನಿಗೆ: “ನೀನು ಜನರ ಪ್ರಕೃತಿಯನ್ನು ಚೆನ್ನಾಗಿ ಪರೀಕ್ಷಿಸಿ ಶಿಷ್ಯರನ್ನಾಗಿ ಮಾಡಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಈ ರೀತಿ ನಿನ್ನನ್ನು ಬಿಟ್ಟು ಬಿಟ್ಟು ಹೋಗುತ್ತಾರೆ.
“ಮನುಷ್ಯರೆಲ್ಲರೂ ನೋಡುವುದಕ್ಕೇನೋ ಒಂದು ರೀತಿ ಕಾಣುತ್ತಾರೆ. ಆದರೆ ಭಿನ್ನ ಭಿನ್ನ ಪ್ರಕೃತಿಯುಳ್ಳವರು ಇದ್ದಾರೆ. ಕೆಲವರಲ್ಲಿ ಸತ್ತ್ವಗುಣ, ಇನ್ನು ಕೆಲವರಲ್ಲಿ ರಜೋ ಗುಣ, ಮತ್ತೆ ಕೆಲವರಲ್ಲಿ ತಮೋಗುಣ ಅಧಿಕವಾಗಿರುತ್ತದೆ. ಎಲ್ಲಾ ಕಡುಬುಗಳು ನೋಡುವುದಕ್ಕೇನೋ ಒಂದೇ ರೀತಿ ಕಾಣುತ್ತವೆ. ಆದರೆ ಕೆಲವುದರೊಳಗೆ ಹಾಲುಖೋವ ಇರುತ್ತದೆ, ಮತ್ತೆ ಕೆಲವುದರೊಳಗೆ ಉದ್ದಿನಬೇಳೆ ಹೂರ್ಣ ಇರುತ್ತದೆ. (ಎಲ್ಲರೂ ನಗುತ್ತಾರೆ).
“ನನ್ನ ಭಾವ ಏನು ಗೊತ್ತೆ ? ನಾನು ಉಂಡು ತಿಂದು ಆನಂದದಿಂದಿದ್ದೇನೆ. ಉಳಿದುದೆಲ್ಲ ಭಗವತಿಗೆ ಗೊತ್ತು. ಈ ಮೂರು ಮಾತುಗಳನ್ನು-ಗುರು, ಕರ್ತ, ತಂದೆ ಎಂಬುವದನ್ನು ಎತ್ತಿತು ಎಂದರೆ ನನಗೆ ಮುಳ್ಳು ಚುಚ್ಚಿದ ಹಾಗೆ ಆಗುತ್ತದೆ.
“ಇರತಕ್ಕ ಗುರು ಕೇವಲ ಒಬ್ಬನೇ ಒಬ್ಬ. ಆತನೆ ಸಚ್ಚಿದಾನಂದ. ಆತ ಮಾತ್ರನೇ ಶಿಕ್ಷಣ ಕೊಡಬಲ್ಲ. ನನ್ನದು ಸಂತಾನಭಾವ. ಮಾನವನ ಅಂತಸ್ತಿನಲ್ಲಿರುವ ಗುರುಗಳು ಲಕ್ಷಗಟ್ಟಲೆ ಸಿಗುತ್ತಾರೆ. ಎಲ್ಲರಿಗೂ ಗುರು ಆಗಬೇಕು ಅಂತ ಇಚ್ಛೆ. ಆದರೆ ಶಿಷ್ಯನಾಗಬೇಕು ಅಂತ ಯಾರಿಗೆ ತಾನೆ ಇಚ್ಛೆಯಿದೆ?
“ಲೋಕಶಿಕ್ಷಣ ಬಹಳ ಕಠಿಣವಾದ ಕೆಲಸ. ಭಗವಂತ ತನ್ನ ಸಾಕ್ಷಾತ್ಕಾರ ಕೊಟ್ಟು ಆದೇಶವೀಯುವುದಾದರೆ ಮನುಷ್ಯ ಲೋಕಶಿಕ್ಷಣ ಕಾರ್ಯವನ್ನು ಮಾಡಬಲ್ಲ. ನಾರದ ಶುಕದೇವಾದಿಗಳಿಗೆ ಭಗವಂತನಿಂದ ಆದೇಶ ದೊರೆತಿತ್ತು. ಶಂಕರಾಚಾರ್ಯರಿಗೂ ದೊರೆತಿತ್ತು. ಆದೇಶವಿಲ್ಲದೆ ಇತ್ತು ಎಂದರೆ, ಯಾರುತಾನೇ ನಿನ್ನ ಮಾತಿಗೆ ಬೆಲೆಕೊಡುತ್ತಾರೆ ?”
“ಕಲ್ಕತ್ತದ ಜನರು ಎಷ್ಟು ಸುಲಭವಾಗಿ ಭಾವೋದ್ರೇಕಗೊಂಡುಬಿಡುತ್ತಾರೆ ಗೊತ್ತೆ ? ಸೌದೆ ಕೆಳಗೆ ಉರಿಯುತ್ತಿರುವವರೆಗೆ ಹಾಲು ಉಕ್ಕಿ ಉಕ್ಕಿ ಮರಳುತ್ತಿರುತ್ತದೆ. ಸೌದೆಯನ್ನು ಒಲೆಯಿಂದ ಹೊರಕ್ಕೆ ಎಳೆದರೆ, ಅದು ಶಾಂತವಾಗಿಬಿಡುತ್ತದೆ. ಕಲ್ಕತ್ತದ ಜನರಿಗೆ ಯಾವುದಾದರೂ ಒಂದು ಭಾವೋದ್ರೇಕಕರವಾದ್ದು ಬೇಕೇಬೇಕು. ನೀರು ಬೇಕು ಅಂತ ಒಂದು ಬಾವಿ ತೋಡುತ್ತಾರೆ. ಅಲ್ಲೇನಾದರೂ ಒಂದು ಸ್ವಲ್ಪ ಅರೆ ಸಿಕ್ಕಿತು ಅಂದರೆ, ಆ ಸ್ಥಳ ಬಿಟ್ಟುಬಿಡುತ್ತಾರೆ. ಬಳಿಕ ಬೇರೆ ಕಡೆ ಅಗೆಯಲು ಶುರು ಮಾಡುತ್ತಾರೆ. ಅಲ್ಲೇನಾದರೂ ಮರಳು ಸಿಕ್ಕಿಬಿಟ್ಟಿತು ಎಂದರೆ, ಆ ಭಾಗವನ್ನೂ ಬಿಟ್ಟು ಬಿಡುತ್ತಾರೆ. ಹೀಗೆ ಮುಂದುವರಿಯುತ್ತಲೇ ಇರುತ್ತಾರೆ. ಸುಮ್ಮಸುಮ್ಮನೆ ಮನಸ್ಸಿನಲ್ಲಿ ತನಗೆ ಆದೇಶ ದೊರೆತು ಬಿಟ್ಟಿದೆ ಎಂದು ಭಾವಿಸಿಕೊಂಡುಬಿಟ್ಟರೆ ಅದು ಯಾವ ಪ್ರಯೋಜನಕ್ಕೂ ಬಾರದು.”
“ಸತ್ಯವಾಗಿಯೂ ಭಗವಂತ ನಮ್ಮ ಕಣ್ಣಿಗೆ ಕಾಣಿಸಿಕೊಳ್ಳುತ್ತಾನೆ, ನಮ್ಮೊಡನೆ ಮಾತುಕತೆ ಆಡುತ್ತಾನೆ. ಆಗ ಆತನಿಂದ ಆದೇಶ ಪಡೆಯಲು ಸಾಧ್ಯ. ಆ ರೀತಿಯಾಗಿ ಆದೇಶ ಪಡೆದ ವ್ಯಕ್ತಿಯ ಬಾಯಿಂದ ಬರುವ ಮಾತಿಗೆ ಎಷ್ಟು ಬಲ! ಅದು ಪರ್ವತಗಳನ್ನೂ ಚಲಿಸಿಬಿಡಬಲ್ಲದು. ಬರಿದೆ ಉಪನ್ಯಾಸ ಯಾವುದಕ್ಕೆ ಬಂದೀತು? ಒಂದೆರಡು ದಿನಗಳ ಮಟ್ಟಿಗೆ ಕೇಳುತ್ತಾರೆ, ಬಳಿಕ ಮರೆತುಬಿಡುತ್ತಾರೆ. ಅದರಂತೆ ಅವರು ಎಂದಿಗೂ ನಡೆದುಕೊಳ್ಳುವುದಿಲ್ಲ.
“ಆ ದೇಶದಲ್ಲಿ (ಕಾಮಾರಪುಕುರದಲ್ಲಿ) ಹಾಲಧಾರಪುಕುರ ಎಂಬ ಹೆಸರಿನ ಒಂದು ಕೆರೆ ಇದೆ. ಕೆಲವರು ಬೆಳಗಿನ ಜಾವ ಎದ್ದುಹೋಗಿ ಏರಿ ಬಳಿ ಹೇಸಿಗೆ ಮಾಡಿಬಿಡುತ್ತಿದ್ದರು. ಅಲ್ಲಿಗೆ ಪ್ರಾತಃಕಾಲ ಸ್ನಾನಕ್ಕಾಗಿ ಬರುತ್ತಿದ್ದವರು ಬಾನು ಬಿರಿಯುವ ಹಾಗೆ ತಪ್ಪಿತಸ್ಥರನ್ನು ಬಯ್ಯುತ್ತಿದ್ದರು. ಎಷ್ಟು ಬಯ್ದರೂ ದಿನವೂ ಅದೇ ಅವಸ್ಥೆ. ಹೇಸಿಗೆ ಮಾಡುವುದು ನಿಲ್ಲದೇನೇ ಹೋಯಿತು. (ಎಲ್ಲರೂ ನಗುತ್ತಿದ್ದಾರೆ.) ಅಲ್ಲಿನ ಜನರು ತಮ್ಮ ಕಷ್ಟವನ್ನು ಸರ್ಕಾರಕ್ಕೆ ತಿಳಿಸಿದರು. ಅವರು ಅಲ್ಲಿಗೆ ಒಬ್ಬ ಜವಾನನನ್ನು ಕಳುಹಿಸಿದರು. ಆತ ಬಂದು ಅಲ್ಲಿ ಒಂದು ಸೈನ್ಬೋರ್ಡ್ ನೆಟ್ಟ. ಅದರಲ್ಲಿ ಬರೆದಿತ್ತು : ‘ಹೇಸಿಗೆ ಮಾಡಿದವರಿಗೆ ಶಿಕ್ಷೆ ವಿಧಿಸಲಾಗುತ್ತದೆ.’ ಒಡನೆಯೇ ಎಲ್ಲಾ ನಿಂತುಹೋಯಿತು. (ಎಲ್ಲರೂ ನಗುತ್ತಿದ್ದಾರೆ.)
“ಲೋಕಶಿಕ್ಷಣ ಮಾಡಬೇಕಾಗಿದ್ದರೆ ಭಗವಂತನಿಂದ ಆದೇಶ ಪಡೆದುಕೊಂಡಿರಬೇಕು. ಇಲ್ಲದಿದ್ದರೆ ಅದು ಹಾಸ್ಯಾಸ್ಪದಕ್ಕೆ ಇಟ್ಟುಕೊಳ್ಳುತ್ತದೆ. ತನಗೇ ಪರಿಪಕ್ವತೆ ತಂದುಕೊಂಡಿಲ್ಲ, ಬೇರೆಯವರಿಗೆ ಪರಿಪಕ್ವತೆ ತರಲು ಹೋಗುವುದು! ಕುರುಡ ಕುರುಡನಿಗೆ ದಾರಿ ತೋರಿಸಿದಂತೆ! ಈ ವಿಧವಾದ ಹಿತ ವಿಪರೀತಕ್ಕಿಟ್ಟುಕೊಳ್ಳುತ್ತದೆ. ಭಗವಂತನ ಸಾಕ್ಷಾತ್ಕಾರ ಪಡೆದುಕೊಂಡ ನಂತರ ಅಂತರ್ದೃಷ್ಟಿ ಉಂಟಾಗುತ್ತದೆ; ಯಾರಿಗೆ ಏನು ಎಂಬುದು ಗೊತ್ತಾಗುತ್ತದೆ. ಆಗ ಸರಿಯಾದ ಔಷಧ ಕೊಡಬಹುದು.
“ಭಗವಂತನ ಆದೇಶ ಪಡೆದುಕೊಳ್ಳದೆ ಇದ್ದರೆ, ‘ನಾನು ಲೋಕಶಿಕ್ಷಣ ಮಾಡುತ್ತಿದ್ದೇನೆ’ ಎಂಬ ಅಹಂಕಾರ ಬಂದುಬಿಡುತ್ತದೆ. ಅಹಂಕಾರ ಅಜ್ಞಾನದಿಂದ ಉಂಟಾಗುತ್ತದೆ. ಅಜ್ಞಾನದಿಂದಲೇ ಅನ್ನಿಸುತ್ತದೆ, ‘ನಾನು ಕರ್ತ’ ಎಂಬುದಾಗಿ. ‘ಭಗವಂತನೇ ಕರ್ತ, ಆತನೇ ಎಲ್ಲವನ್ನೂ ಮಾಡುತ್ತಿದ್ದಾನೆ. ನಾನು ಏನನ್ನೂ ಮಾಡುತ್ತಿಲ್ಲ’ ಎಂಬ ಬೋಧೆ ಮನುಷ್ಯನಿಗೆ ಉಂಟಾಯಿತು ಎಂದರೆ ಆತ ಜೀವನ್ಮುಕ್ತನಾಗಿಬಿಡುತ್ತಾನೆ. ‘ನಾನು ಕರ್ತ, ನಾನು ಕರ್ತ’ ಎಂಬ ಈ ಬೋಧೆಯಿಂದಲೇ ಮನುಷ್ಯ ಪಡುವ ಸಕಲ ದುಃಖದುರಿತಗಳೆಲ್ಲ ಜನ್ಮ ತಳೆಯುತ್ತವೆ.
‘ನೀವು ಹೇಳುತ್ತೀರಿ, ಜಗತ್ತಿಗೆ ಉಪಕಾರ ಮಾಡಬೇಕು ಎಂಬುದಾಗಿ. ಜಗತ್ತೇನು ಒಂದು ಅಂಗೈಯಗಲದ್ದೆ ? ಅದೂ ಈ ಜಗತ್ತಿಗೆ ಉಪಕಾರ ಮಾಡಲು ಮೊದಲನೆಯದಾಗಿ ನೀವು ಯಾರು? ಮೊದಲು ಸಾಧನೆಮಾಡಿ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಿ, ಆತನನ್ನು ಪಡೆದುಕೊಳ್ಳಿ. ಆತ ಶಕ್ತಿಯನ್ನು ಕರುಣಿಸಿದ್ದೇ ಆದರೆ ಆಗ ಎಲ್ಲರಿಗೂ ಹಿತವನ್ನು ಮಾಡಬಲ್ಲಿರಿ; ಇಲ್ಲದಿದ್ದರೆ ಸಾಧ್ಯವಿಲ್ಲ.”
ಒಬ್ಬ ಬ್ರಾಹ್ಮಭಕ್ತ : “ಭಗವಂತನ ಸಾಕ್ಷಾತ್ಕಾರ ದೊರಕುವವರೆಗೆ ನಾವು ಎಲ್ಲಾ ಕೆಲಸಕಾರ್ಯಗಳನ್ನು ಬಿಟ್ಟುಬಿಡೋಣವೆ?”
ಶ್ರೀರಾಮಕೃಷ್ಣರು: “ಇಲ್ಲ, ಹಾಗೇಕೆ ಮಾಡಬೇಕು? ಭಗವಚ್ಚಿಂತನೆ, ನಾಮಗುಣ ಕೀರ್ತನೆ, ನಿತ್ಯಕರ್ಮ ಇವೇ ಮೊದಲಾದವುಗಳಲ್ಲಿ ತೊಡಗಿರಬೇಕು.”
ಬ್ರಾಹ್ಮಭಕ್ತ : “ಸಂಸಾರಕ್ಕೆ ಸಂಬಂಧಪಟ್ಟ ಕೆಲಸಕಾರ್ಯಗಳಿವೆಯಲ್ಲ-ಹಣ ಸಂಪಾದಿಸುವುದು, ಇವೇ ಮೊದಲಾದುವು-ಅವನ್ನು ?”
ಶ್ರೀರಾಮಕೃಷ್ಣರು : “ಹೌದು, ಅವನ್ನೂ ಮಾಡಬೇಕು-ಸಂಸಾರಯಾಪನೆಗೆ ಅತ್ಯಾವಶ್ಯಕವಾದವುಗಳನ್ನು ಮಾತ್ರ. ಆದರೆ ಅದೇ ಸಮಯದಲ್ಲಿ ನಿನ್ನ ಕರ್ಮಗಳನ್ನು ನೀನು ನಿಷ್ಕಾಮಭಾವನೆಯಿಂದ ಜರುಗಿಸಲು ಶಕ್ತನಾಗುವಂತೆ ಭಗವಂತ ಶಕ್ತಿ ದಯಪಾಲಿಸಬೇಕೆಂದು ಕಣ್ಣೀರು ಸುರಿಸುತ್ತ ಏಕಾಂತದಲ್ಲಿ ಆತನನ್ನು ಪ್ರಾರ್ಥಿಸಿಕೊಳ್ಳುತ್ತಿರಬೇಕು. ನೀನು ಆತನಿಗೆ ಹೇಳಬೇಕು : “ಹೇ ಭಗವಂತ, ನನ್ನ ಸಾಂಸಾರಿಕ ಕೆಲಸಕಾರ್ಯಗಳನ್ನು ಕಡಮೆ ಮಾಡಿಕೊಡು; ಇಲ್ಲದಿದ್ದರೆ, ನನ್ನ ಅನುಭವಕ್ಕೆ ಬಂದಿದೆ, ಹೆಚ್ಚು ಕೆಲಸ ಬಂತು ಎಂದರೆ ನಿನ್ನನ್ನು ಮರೆತುಬಿಡುತ್ತೇನೆ.’ ನಿಷ್ಕಾಮಕರ್ಮ ಮಾಡುತ್ತಿದ್ದೇನೆ ಅಂತ ಭಾವಿಸುತ್ತೇವೆ. ಆದರೆ ಅದು ಸಕಾಮಕರ್ಮ ಆಗಿಬಿಡುತ್ತದೆ. ದಾನಧರ್ಮಾದಿ ಕಾರ್ಯಗಳನ್ನು ಹೆಚ್ಚಾಗಿ ಮಾಡಹೋಗಿ ಕೊನೆಗೆ ಲೋಕಮಾನ್ಯನಾಗುವ ಇಚ್ಛೆ ಬಂದುಬಿಡಬಹುದು.
“ಒಮ್ಮೆ ಶಂಭುಮಲ್ಲಿಕ ತಾನು ಕಟ್ಟಿಸಬೇಕೆಂದಿರುವ ಆಸ್ಪತ್ರೆ, ಔಷಧಾಲಯ, ಸ್ಕೂಲು, ರಸ್ತೆ, ಕೊಳ ಇವೇ ಮೊದಲಾದವುಗಳ ಮಾತು ಎತ್ತಿದ. ನಾನು ಆತನಿಗೆ ಹೇಳಿದೆ: ‘ಆ ವಿಧದ ಕೆಲಸಗಳಿಗಾಗಿ ಸುಮ್ಮನೆ ಹುಡುಕಿಕೊಂಡು ಹೋಗಬೇಡ. ತಾನಾಗಿಯೇ ಬರುವ ಮತ್ತು ಅತ್ಯಾವಶ್ಯಕವಾಗಿರುವ ಕೆಲಸ ಕಾರ್ಯಗಳನ್ನು ಮಾತ್ರ ಮಾಡು-ನಿಷ್ಕಾಮ ಭಾವನೆಯಿಂದ.’ ಬೇಕೂ ಅಂತ ಹೆಚ್ಚಾಗಿ ಕೆಲಸಕಾರ್ಯ ಗಂಟುಹಾಕಿಕೊಳ್ಳುವುದು ಶ್ರೇಯಸ್ಕರವಲ್ಲ. ಹಾಗೆ ಮಾಡಿದರೆ ಭಗವಂತನನ್ನು ಮರೆತುಬಿಡಬೇಕಾಗುತ್ತದೆ. ಒಮ್ಮೆ ಕೆಲವರು ಕಾಳೀಘಟ್ಟಕ್ಕೆ ಬಂದರು. ಅವರ ಇಡೀ ಸಮಯವೆಲ್ಲ ದಾನಧರ್ಮಾದಿ ಕಾರ್ಯಗಳಲ್ಲೇ ಕಳೆದುಹೋಯಿತು. ಅವರಿಗೆ ಭಗವತಿಯ ದರ್ಶನ ಮಾಡುವುದಕ್ಕೆ ಸಮಯವೇ ದೊರಕಲಿಲ್ಲ ! (ನಗು) ಮೊದಲು ಹೇಗೊ ಮಾಡಿ ಗುಂಪಿನೊಳಕ್ಕೆ ನುಗ್ಗಿ ತಳ್ಳಿಯೋ ತಳ್ಳಿಸಿಕೊಂಡೋ ಕಾಳಿಯ ದರ್ಶನ ಮಾಡಿಬಿಡಬೇಕು. ಬಳಿಕ ಇಚ್ಛೆ ಬಂತು ಅಂದರೆ ದಾನ ಮಾಡು, ಇಲ್ಲದಿದ್ದರೆ ಬಿಡು. ಆದರೆ ಇಚ್ಛೆ ಬಂತು ಎಂದರೆ, ಹೃದಯ ತಣಿದು ತೃಪ್ತಿಯಾಗುವವರೆಗೂ ಮಾಡು. ಭಗವಂತನ ಸಾಕ್ಷಾತ್ಕಾರಕ್ಕೆ ಕೆಲಸ ಕೇವಲ ಸಾಧನ ಮಾತ್ರ. ಅದಕ್ಕಾಗಿಯೇ ನಾನು ಶಂಭುಮಲ್ಲಿಕನಿಗೆ ಹೇಳಿದೆ : ‘ಒಂದು ಪಕ್ಷ ನಿನಗೆ ಭಗವಂತನ ಸಾಕ್ಷಾತ್ಕಾರ ಆಯಿತು ಅನ್ನು; ಆಗ ನೀನು ಆತನನ್ನು ನಿನಗೆ ಕೆಲವು ಆಸ್ಪತ್ರೆ, ಔಷಧಾಲಯ ಇವೇ ಮೊದಲಾದುವನ್ನು ಕಟ್ಟಿಸಿಕೊಡುವಂತೆ ಕೇಳಿಕೊಳ್ಳುತ್ತೀಯಾ?’ (ನಗು.) ಭಕ್ತ ಎಂದಿಗೂ ಹಾಗೆ ಮಾಡುವುದಿಲ್ಲ. ಅದಕ್ಕೆ ಬದಲು ಆತನನ್ನು ಪ್ರಾರ್ಥನೆ ಮಾಡಿಕೊಳ್ಳುತ್ತಾನೆ: ‘ಹೇ ಭಗವಂತ, ನಿನ್ನ ಪಾದಪದ್ಮಗಳಲ್ಲಿ ನನಗೊಂದು ಸ್ಥಾನ ಕೊಡು. ನನ್ನನ್ನು ಸದಾ ನಿನ್ನೊಡನೇ ಇಟ್ಟುಕೊ. ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧ ಭಕ್ತಿ ಉಂಟಾಗುವಂತೆ ಮಾಡು.’
“ಕರ್ಮಯೋಗ ಬಹಳ ಕಠಿನ. ಶಾಸ್ತ್ರಗಳಲ್ಲಿ ಹೇಳಿರುವ ಕರ್ಮಗಳನ್ನೆಲ್ಲಾ ಈ ಕಲಿಯುಗದಲ್ಲಿ ಮಾಡಬೇಕು ಅಂದರೆ ಬಹಳ ಕಷ್ಟ. ಈ ಯುಗದಲ್ಲಿ ಅನ್ನಗತ ಪ್ರಾಣ. ಹೆಚ್ಚಾಗಿ ಕರ್ಮ ಸಾಧ್ಯವಿಲ್ಲ. ಈಗಿನವರಿಗೆ ಜ್ವರ ಬಂತು ಅಂದರೆ, ಅವರಿಗೆ ಕವಿರಾಜರ ಕೈಯಲ್ಲಿ ಔಷಧ ಕೊಡಿಸಲು ಯತ್ನಿಸಿದ್ದೇ ಆದರೆ ಅದು ಅಷ್ಟು ನಿಧಾನವಾಗಿ ಕೆಲಸ ಮಾಡುತ್ತದೆ, ಅಷ್ಟರಲ್ಲಿ ರೋಗಿ ಫೈಸಲೇ ಆಗಿಬಿಡುವ ಸಂಭವ. ಈಗಿನ ರೋಗಿ ಅಧಿಕಕಾಲ ವಿಳಂಬವನ್ನು ತಡೆಯಲಾರ. ಈಗಿನ ಕಾಲಕ್ಕೆ ಡಿ. ಗುಪ್ತನ ಔಷಧ (ಕ್ವಿನಿನ್ ಮಿಕ್ಸ್ಚರ್). ಕಲಿಯುಗಕ್ಕೆ ಸೂಕ್ತವಾದ್ದು ಭಕ್ತಿಯೋಗ-ಭಗವಂತನ ನಾಮಗುಣ ಕೀರ್ತನೆ ಮತ್ತು ಪ್ರಾರ್ಥನೆ. ಭಕ್ತಿ ಯೋಗವೇ ಯುಗಧರ್ಮ. (ಬ್ರಾಹ್ಮಭಕ್ತರಿಗೆ) ನಿಮ್ಮದೂ ಭಕ್ತಿಯೋಗವೇ. ನೀವೂ ಭಗವ ನ್ನಾಮ, ಭಗವತಿಯ ನಾಮಗುಣಕೀರ್ತನೆ ಮಾಡುತ್ತಿದ್ದೀರಿ. ಆದ್ದರಿಂದ ನೀವು ಧನ್ಯರೇ. ನಿಮ್ಮ ಭಾವ ಬಹಳ ಒಳ್ಳೆಯದು. ವೇದಾಂತವಾದಿಗಳ ಹಾಗೆ ನೀವು ಈ ಜಗತ್ತು ಸ್ವಪ್ನವತ್ ಎಂಬುದಾಗಿ ಹೇಳುತ್ತಿಲ್ಲ ನೀವು ಆ ವಿಧದ ಬ್ರಹ್ಮಜ್ಞಾನಿಗಳಲ್ಲ; ನೀವು ಭಕ್ತರು. ನೀವು ಭಗವಂತನನ್ನು ವ್ಯಕ್ತಿ ಅಂತ ಭಾವಿಸುತ್ತೀರಿ. ಇದೂ ಒಳ್ಳೆಯದೆ. ನೀವು ಭಕ್ತರು. ವ್ಯಾಕುಲರಾಗಿ ಕರೆದರೆ ಖಂಡಿತ ಆತನ ಸಾಕ್ಷಾತ್ಕಾರ ಪಡೆದುಕೊಳ್ಳುತ್ತೀರಿ.”
ಜಹಜು ಕೊಯಲಾಘಟ್ಟದ ಹತ್ತಿರ ಲಂಗರು ಹಾಕಿತು. ಎಲ್ಲರೂ ಕೆಳಕ್ಕೆ ಇಳಿಯುವ ಪ್ರಯತ್ನದಲ್ಲಿದ್ದಾರೆ. ಕ್ಯಾಬಿನ್ ಬಿಟ್ಟು ಹೊರಗಡೆ ಬಂದು ನೋಡುತ್ತಾರೆ, ಆಶ್ವೀಜ ಪೂರ್ಣಿಮೆಯ ಚಂದ್ರ ಸುಮ್ಮನೆ ‘ಕಿಲಕಿಲ’ ಅಂತ ನಗುತ್ತಿದ್ದಾನೆ. ಭಾಗೀರಥಿಯ ವಕ್ಷಸ್ಥಲ ಕೌಮುದಿಯ (ಬೆಳದಿಂಗಳ) ಕ್ರೀಡಾಭೂಮಿಯಾಗಿಬಿಟ್ಟಿದೆ. ಪರಮಹಂಸರಿಗಾಗಿ ಒಂದು ಗಾಡಿಯನ್ನು ತರಿಸಲಾಯಿತು. ಮಾಸ್ಟರ್ ಮತ್ತು ಇನ್ನೂ ಕೆಲವು ಮಂದಿ ಭಕ್ತರು ಅದಕ್ಕೆ ಹತ್ತಿದರು. ಪರಮಹಂಸರು ಕೇಶವನಿಗಾಗಿ ಕೇಳಿದರು. ಆತ ಅಲ್ಲಿಗೆ ಬಂದು ಪರಮಹಂಸರನ್ನು ಕಂಡು ಅವರು ಹಿಂದಿರುಗಿ ದಕ್ಷಿಣೇಶ್ವರಕ್ಕೆ ಹೋಗಲು ಏನೇನು ವ್ಯವಸ್ಥೆ ಆಗಿದೆ ಎಂಬುದನ್ನು ವಿಚಾರಿಸಿದ. ಈಗ ಆತ ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಅವರ ಪಾದಧೂಳಿಯನ್ನು ತೆಗೆದುಕೊಂಡು ಅವರಿಂದ ಬೀಳ್ಕೊಳ್ಳುತ್ತಿದ್ದಾನೆ.
ಗಾಡಿ ಐರೋಪ್ಯ ನಿವಾಸಿಗಳ ಬೀದಿಯಲ್ಲಿ ಮುಂದುವರಿಯುತ್ತಿದೆ. ರಸ್ತೆ ಸೊಗಸಾದ ರಾಜಮಾರ್ಗ. ಒಳ್ಳೆ ಬೆಳಕುಗಳಿಂದ ಬೆಳಗುತ್ತಿವೆ. ಇಕ್ಕೆಲಗಳಲ್ಲಿಯೂ ದೊಡ್ಡ ದೊಡ್ಡ ಬಂಗಲೆಗಳ ಸಾಲು. ಸಾಲದುದಕ್ಕೆ ಪೂರ್ಣ ಚಂದ್ರೋದಯ ಬೇರೆ. ಪರಮಹಂಸರಿಗೆ ಬಹಳ ಆನಂದವಾಗಿಬಿಟ್ಟಿದೆ. ಇದ್ದಕ್ಕಿದ್ದ ಹಾಗೆ ಪರಮಹಂಸರು ಹೇಳುತ್ತಿದ್ದಾರೆ : “ನನಗೆ ನೀರಡಿಕೆಯಾಗುತ್ತಿದೆ. ಏನು ಮಾಡುವುದು ಈಗ ?” ಗಾಡಿಯನ್ನು ಇಂಡಿಯಾ ಕ್ಲಬ್ಬಿನ ಹತ್ತಿರ ನಿಲ್ಲಿಸಿ, ಕೇಶವನ ಅಣ್ಣನ ಮಗನು ನಂದಲಾಲವಸು ಕ್ಲಬ್ಬಿನ ಮಹಡಿ ಮೇಲಕ್ಕೆ ಹತ್ತಿಹೋಗಿ ಒಂದು ಗ್ಲಾಸಿನಲ್ಲಿ ನೀರು ತಂದ. ಗ್ಲಾಸನ್ನು ಚೆನ್ನಾಗಿ ತೊಳೆದಿರುವುದೇ ಎಂಬುದಾಗಿ ಪರಮಹಂಸರು ಕೇಳಿದರು. ಚೆನ್ನಾಗಿ ತೊಳೆದಿದೆ ಎಂಬ ಉತ್ತರವನ್ನು ಪಡೆದನಂತರ ಅವರು ಈಗ ನೀರು ಕುಡಿಯುತ್ತಿದ್ದಾರೆ.
ಗಾಡಿ ಮುಂದುವರಿಯಲಾರಂಭಿಸಿತು. ಪರಮಹಂಸರು ಮಕ್ಕಳ ಹಾಗೆ ತಲೆಯನ್ನು ಕಿಟಕಿಯಿಂದ ಹೊರಕ್ಕೆ ಚಾಚಿ, ರಸ್ತೆಯಲ್ಲಿ ತಿರುಗಾಡುತ್ತಿರುವ ಜನ, ಕುದುರೆ ಮತ್ತು ಎಲ್ಲೆಲ್ಲೂ ಹರಡಿರುವ ಚಂದ್ರನ ಬೆಳಕು ಇವನ್ನೆಲ್ಲ ಬಹಳ ಕುತೂಹಲದಿಂದ ನೋಡುತ್ತಿದ್ದಾರೆ. ಅಲ್ಲಲ್ಲಿ ಐರೋಪ್ಯ ಮಹಿಳೆಯರು ಪಿಯಾನೊ ನುಡಿಸುತ್ತಿರುವುದೂ ಅವರ ಕಿವಿಗೆ ಬೀಳುತ್ತಿದೆ. ಅವರು ಬಹಳ ಆನಂದಾವಸ್ಥೆಯಲ್ಲಿದ್ದಾರೆ.
ಗಾಡಿ ಸುರೇಶಮಿತ್ರನ ಮನೆಯ ಹತ್ತಿರಕ್ಕೆ ಬಂದು ನಿಂತಿತು. ಆತ ಪರಮಹಂಸರ ಒಬ್ಬ ದೊಡ್ಡ ಭಕ್ತ. ಅವರು ಆತನನ್ನು ಪ್ರೀತಿಯಿಂದ ಕರೆಯುತ್ತಿದ್ದರು, “ಸುರೇಂದ್ರ” ಎಂಬುದಾಗಿ. ಆತ ಮನೆಯಲ್ಲಿ ಇರಲಿಲ್ಲ.
ಆ ಮನೆಯವರು ಪರಮಹಂಸರಿಗೂ ಅವರ ಜೊತೆಯಲ್ಲಿ ಬಂದಿದ್ದವರಿಗೂ ಕುಳಿತುಕೊಳ್ಳಲು ನೆಲ ಅಂತಸ್ತಿನ ಒಂದು ಕೊಠಡಿಯನ್ನು ತೆರೆದಿಟ್ಟರು. ಗಾಡಿ ಬಾಡಿಗೆ ಕೊಡಬೇಕಾಗಿದೆ. ಸುರೇಂದ್ರ ಇದ್ದಿದ್ದರೆ ಆ ವಿಷಯವಾಗಿ ಯೋಚನೆ ಮಾಡಬೇಕಾಗಿಯೇ ಇರಲಿಲ್ಲ. ಪರಮಹಂಸರು ಒಬ್ಬ ಭಕ್ತನಿಗೆ ಹೇಳಿದರು : “ಬಾಡಿಗೆಯನ್ನು ಏಕೆ ಮನೆ ಹೆಂಗಸರನ್ನೇ ಕೇಳಿ ತೆಗೆದುಕೊಳ್ಳಬಾರದು? ಅವರಿಗೆ ನಾನೇನು ಹೊಸಬನಲ್ಲ.” (ಎಲ್ಲರೂ ನಗುತ್ತಿದ್ದಾರೆ).
ಸುರೇಂದ್ರನ ಮನೆಯ ಹತ್ತಿರವೇ ವಾಸಿಸುತ್ತಿದ್ದ ನರೇಂದ್ರನಿಗೆ ಹೇಳಿ ಕಳುಹಿಸಲಾಯಿತು. ಇಷ್ಟರಲ್ಲಿ ಮನೆಯವರು ಪರಮಹಂಸರನ್ನು ಮತ್ತು ಅವರೊಡನೆ ಬಂದಿದ್ದವರನ್ನೆಲ್ಲ ಎರಡನೆ ಅಂತಸ್ತಿನಲ್ಲಿದ್ದ ಬೈಠಕ್ಖಾನೆಗೆ ಕರೆದುಕೊಂಡು ಹೋಗಿ ಕೂರಿಸಿದರು. ನೆಲಕ್ಕೆ ಜಮಖಾನೆ ಹಾಸಿ ಅದರ ಮೇಲೆ ಬಿಳಿ ಬಟ್ಟೆ ಹಾಸಿದೆ. ಕೆಲವು ದಿಂಬುಗಳನ್ನು ಅಲ್ಲಿ ಇಲ್ಲಿ ಹಾಕಿದೆ. ಸುರೇಂದ್ರ ವಿಶೇಷ ಯತ್ನದಿಂದ ಬರೆಯಿಸಿದ ಒಂದು ತೈಲಚಿತ್ರ ಗೋಡೆಯ ಮೇಲೆ ತೂಗುಹಾಕಿದೆ. ಅದರಲ್ಲಿ ಪರಮಹಂಸರು ಬೆರಳುಮಾಡಿ ಕೇಶವನಿಗೆ ತೋರಿಸುತ್ತಿದ್ದಾರೆ, ಹಿಂದೂ, ಮುಸಲ್ಮಾನ, ಕ್ರಿಶ್ಚಿಯನ್, ಬೌದ್ಧ ಇವೇ ಮೊದಲಾದ ಧರ್ಮಗಳ ಸಮನ್ವಯವನ್ನು.
ಪರಮಹಂಸರು ನಗುತ್ತ ಮಾತುಕತೆ ಆಡುತ್ತಿದ್ದಾರೆ. ಈಗ ನರೇಂದ್ರ ಬಂದಿದ್ದಾನೆ. ಪರಮಹಂಸರಿಗೆ ಆನಂದ ಇಮ್ಮಡಿಯಾಗಿಬಿಟ್ಟಿತು. ಅವರು ಆತನಿಗೆ ಹೇಳುತ್ತಿದ್ದಾರೆ : “ಈ ದಿನ ನಾನು ಕೇಶವನೊಡನೆ ನೌಕಾವಿಹಾರಕ್ಕೆ ಹೋಗಿದ್ದೆ. ವಿಜಯನೇ ಮೊದಲಾದ ಅನೇಕ ಬ್ರಾಹ್ಮಭಕ್ತರೂ ಬಂದಿದ್ದರು. (ಮಾಸ್ಟರನ್ನು ತೋರಿಸಿ) ಇವನನ್ನು ಕೇಳು, ನಾನು ಹೇಗೆ ವಿಜಯನಿಗೆ ಮತ್ತು ಕೇಶವನಿಗೆ ತಿಳಿಸಿದೆ, ತಾಯಿ-ಮಗಳು ಪ್ರತ್ಯೇಕ ಪ್ರತ್ಯೇಕವಾಗಿ ಮಂಗಳಗೌರೀ ವ್ರತ ಆಚರಿಸುವುದನ್ನು; ಜಟಿಲೆಕುಟಿಲೆಯರಿಲ್ಲದಿದ್ದರೆ ಕ್ರೀಡೆ ಸ್ಫೂರ್ತಿಗೊಳ್ಳದು ಎಂಬುದನ್ನು. (ಮಾಸ್ಟರಿಗೆ) ಏನು, ಅಲ್ಲವೆ ?”
ಮಾಸ್ಟರ್: “ಹೌದು, ನಿಜ.”
ಆಗಲೇ ಬಹಳವಾಗಿ ರಾತ್ರಿಯಾಗಿಬಿಟ್ಟಿದೆ. ಆದರೂ ಸುರೇಂದ್ರ ಇನ್ನೂ ಬರಲಿಲ್ಲ. ಪರಮಹಂಸರು ದಕ್ಷಿಣೇಶ್ವರಕ್ಕೆ ಹೊರಡಬೇಕಾಗಿದೆ. ಒಂದು ಗಾಡಿಯನ್ನು ಮಾಡಿಕೊಂಡು ಬಂದದ್ದಾಯಿತು. ಮಾಸ್ಟರ್ ಮತ್ತು ನರೇಂದ್ರ ಅವರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡರು. ಪರಮಹಂಸರ ಗಾಡಿ ಬೆಳದಿಂಗಳ ಹಾಲು ಚೆಲ್ಲಿದಂತಿದ್ದ ರಸ್ತೆಯಲ್ಲಿ ದಕ್ಷಿಣೇಶ್ವರಕ್ಕೆ ಮುಂದುವರಿಯುತ್ತಿದೆ.