ನನ್ನ ಪ್ರೀತಿಯ ಸೋದರ, ಮಾಸ್ಟರ್ ಮಹಾಶಯ
ನೀನು ಕಳುಹಿಸಿದ ಶ್ರೀರಾಮಕೃಷ್ಣ ಕಥಾಮೃತದ ನಾಲ್ಕನೆ ಭಾಗ ಈ ಮೂರು ದಿನಗಳ ಹಿಂದೆಯೇ ನನಗೆ ತಲುಪಿತು. ಇಂದು ಅದನ್ನು ಓದಿ ಮುಗಿಸಿದೆ. ನೀನೇ ಧನ್ಯ. ಎಂಥ ದಿವ್ಯ ಅಮೃತವನ್ನು ದೇಶದಲ್ಲೆಲ್ಲಾ ಹರಡಿದ್ದೀಯೆ!….. ಪರಮಹಂಸರಿಗೂ ನನಗೂ ನಡೆದ ಸಂಭಾಷಣೆಗಳನ್ನು ಬರೆದು ಕಳುಹಿಸಬೇಕೆಂದು ಅನೇಕ ದಿವಸಗಳ ಹಿಂದೆ ನನಗೆ ತಿಳಿಸಿದ್ದೆ. ಈಗ ಅದನ್ನು ಬರೆದು ಕಳುಹಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ನಾನು ನಿನ್ನ ಹಾಗೆ ಅವರನ್ನು ಸಂಧಿಸಿದ ದಿನ, ತಾರೀಖು, ಮಹೂರ್ತ ಇವನ್ನೆಲ್ಲಾ ಮತ್ತು ಅವರ ಶ್ರೀಮುಖದಿಂದ ಬಂದುದನ್ನೆಲ್ಲ ಬಂದ ರೀತಿಯಲ್ಲೇ ಬರೆದಿಡೋ ಸುಯೋಗವನ್ನು ಪಡೆದು ಹುಟ್ಟಲಿಲ್ಲ. ಎಷ್ಟು ನನ್ನ ಜ್ಞಾಪಕದಲ್ಲಿ ಇರುವುದೊ ಅಷ್ಟನ್ನು ಮಾತ್ರ ಈ ಪತ್ರದಲ್ಲಿ ಬರೆದು ಕಳುಹಿಸುತ್ತಿದ್ದೇನೆ. ಬಹುಶಃ ಒಂದು ದಿನ ನಡೆದ ಮಾತುಕತೆಗಳನ್ನು ಇನ್ನೊಂದು ದಿನಕ್ಕೆ ಸೇರಿಸಿಬಿಟ್ಟಿರೋ ಸಂಭವವೆಲ್ಲಾ ಇದೆ. ಇದೂ ಅಲ್ಲದೆ ಇಷ್ಟರಲ್ಲಿ ಎಷ್ಟೋ ವಿಷಯಗಳನ್ನು ಮರೆತೂಬಿಟ್ಟಿದ್ದೇನೆ.
ನಾನು ಮೊಟ್ಟಮೊದಲು ಪರಮಹಂಸರ ದರ್ಶನ ಪಡೆದುದು ಬಹುಶಃ ೧೮೮೧ನೆ ಇಸವಿಯ ದುರ್ಗಾಪೂಜೆಯ ರಜಾದಿನಗಳಲ್ಲಿ ಅಂತ ಕಾಣುತ್ತೆ. ನಾನು ದೋಣಿಯಲ್ಲಿ ದಕ್ಷಿಣೇಶ್ವರಕ್ಕೆ ಹೋಗಿ ಸ್ನಾನಘಟ್ಟದ ಮೂಲಕ ಮೇಲಕ್ಕೆ ಹತ್ತಿದೊಡನೆಯೆ ಒಬ್ಬನನ್ನು ಕೇಳಿದೆ, ಪರಮಹಂಸರು ಎಲ್ಲಿದ್ದಾರೆ ಎಂಬುದಾಗಿ. ಆತ ಒಂದು ಕೊಠಡಿಯ ಉತ್ತರ ದಿಕ್ಕಿನ ವರಾಂಡದಲ್ಲಿ ಒರಗುದಿಂಬು ಒರಗಿಕೊಂಡು ಕುಳಿತಿದ್ದ ವ್ಯಕ್ತಿಯನ್ನು ತೋರಿಸಿ ಹೇಳಿದ: “ಅವರೇ ಪರಮಹಂಸರು.” ಅವರು ಕಪ್ಪು ಅಂಚಿನ ಪಂಚೆಯನ್ನು ಉಟ್ಟಿದ್ದರು. ಕಪ್ಪು ಅಂಚಿನ ಪಂಚೆ, ಒರಗು ದಿಂಬು ಇವನ್ನೆಲ್ಲಾ ನೋಡಿ ನನಗೆ ನಾನೇ ಹೇಳಿಕೊಂಡೆ: “ಇವರೆಂಥ ಪರಮಹಂಸರಪ್ಪ?”
ಅವರ ಹತ್ತಿರ ಹೋಗಿ ನೋಡಲಾಗಿ ಅವರು ಕಾಲುಗಳನ್ನು ಎಳೆದುಕೊಂಡು ಕೈಗಳನ್ನು ಮಂಡಿಯ ಸುತ್ತಲೂ ಕಟ್ಟಿ ಒರಗುದಿಂಬನ್ನು ಒಂದು ಕಿಂಚಿತ್ ಒರಗಿಕೊಂಡು ಕುಳಿತಿದ್ದರು. ಆಗ ನಾನು ಭಾವಿಸಿದೆ: “ಇವರು ಒರಗುದಿಂಬನ್ನು ಸಂಭಾವಿತರು ಉಪಯೋಗಿಸುವ ರೀತಿಯಲ್ಲಿ ಉಪಯೋಗಿಸುತ್ತಿಲ್ಲ. ಬಹುಶಃ ಅದಕ್ಕಾಗೇ ಇವರು ಪರಮಹಂಸರಿರಬೇಕು.” ಅವರ ಬಲಗಡೆ ಒರಗುದಿಂಬಿನ ಹತ್ತಿರವೇ ಒಬ್ಬ ಸಂಭಾವಿತ ಕುಳಿತುಕೊಂಡಿದ್ದ. ಆತನ ಹೆಸರು ರಾಜೇಂದ್ರಲಾಲ ಮಿತ್ರ ಎಂಬುದಾಗಿ. ಆತ ವಂಗ ಸರ್ಕಾರದ ಸಹಾಯಕ ಕಾರ್ಯದರ್ಶಿಯಾಗಿದ್ದ. ಇನ್ನು ಸ್ವಲ್ಪ ದೂರದಲ್ಲಿ ಇನ್ನು ಕೆಲವರು ಕುಳಿತಿದ್ದರು.
ಕೆಲವು ನಿಮಿಷಗಳಾದನಂತರ ಪರಮಹಂಸರು ರಾಜೇಂದ್ರಲಾಲ ಮಿತ್ರನಿಗೆ ಹೇಳಿದರು: “ಸ್ವಲ್ಪ ನೋಡು, ಕೇಶವಚಂದ್ರಸೇನ ಬರುತ್ತಿದ್ದಾನೆಯೆ?” ಪರಮಹಂಸರು ಕೇಶವಚಂದ್ರಸೇನನ ನಿರೀಕ್ಷಣೆಯಲ್ಲಿದ್ದಾರೆ ಎಂಬುದಾಗಿ ನನಗೆ ಆಗ ಅರ್ಥವಾಯಿತು. ಒಬ್ಬ ಸ್ವಲ್ಪ ದೂರ ಹೋಗಿ ನೋಡಿ ಹಿಂದಿರುಗಿ ಬಂದು ಹೇಳಿದ: “ಇಲ್ಲ, ಬರುತ್ತಿಲ್ಲ.”
ಇನ್ನು ಸ್ವಲ್ಪ ಹೊತ್ತಾದ ಮೇಲೆ ಏನೊ ಒಂದು ಶಬ್ದ ಆದುದನ್ನು ಕೇಳಿ ಅವರು ಮತ್ತೆ ಹೇಳಿದರು: “ಹೋಗಿ ಇನ್ನೊಮ್ಮೆ ನೋಡಿ ಬಾ.”
ಮತ್ತೆ ಇನ್ನೊಬ್ಬ ಸ್ವಲ್ಪ ದೂರ ಹೋಗಿ ಅದೇ ನಕಾರಾತ್ಮಕ ಉತ್ತರ ಕೊಟ್ಟ.
ಆಗ ಪರಮಹಂಸರು ನಗುತ್ತ ನಗುತ್ತ ಹೇಳಲಾರಂಭಿಸಿದರು: “ಹೊರಗೆ ಆಗೋ ಎಲೆಗಳ ಮರ್ಮರ ಶಬ್ದ ಕೇಳಿ ರಾಧೆ ಹೇಳುತ್ತಿದ್ದಳು: ‘ಬಹುಶಃ ಈಗ ಬರುತ್ತಾ ಇದ್ದಾನೆ ನನ್ನ ಪ್ರಾಣನಾಥ!”’ ಮತ್ತೆ ಅವರು ಹೇಳಿದರು: “ನೋಡಿ ಯಾವಾಗ ನೋಡಿದರೂ ಕೇಶವಸೇನ ಹೀಗೆ ವರ್ತಿಸುತ್ತಿದ್ದಾನೆ. ಬರುತ್ತಾನೆ ಬರುತ್ತಾನೆ ಅಂತ ಕಾದರೆ ಬರೋದೇ ಇಲ್ಲ.”
ಮುಂಗತ್ತಲೆ ಸಮಯಕ್ಕೆ ಕೇಶವಸೇನ ಅಲ್ಲಿಗೆ ತನ್ನ ಕೆಲವು ಮಂದಿ ಅನುಯಾಯಿ ಗಳೊಡನೆ ಬಂದು ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ. ಪರಮಹಂಸರು ಆತನಿಗೆ ಪ್ರತಿಸಾಷ್ಟಾಂಗ ಮಾಡಿದರು.
ಸ್ವಲ್ಪ ಹೊತ್ತಾದ ನಂತರ ಪರಮಹಂಸರು ಭಾವಾವಿಷ್ಟರಾಗಿ ಹೇಳುತ್ತಿದ್ದಾರೆ: “ಇಲ್ಲಿ ನೋಡಿ! ನಾನು ಏನೋ ಒಂದು ದೊಡ್ಡ ಉಪನ್ಯಾಸವನ್ನೇ ಕೊಟ್ಟುಬಿಡುತ್ತೇನೆ ಎಂಬುದಾಗಿ ಈತ ಇಡೀ ಕಲ್ಕತ್ತವನ್ನೇ ಇಲ್ಲಿಗೆ ಕರೆದುಕೊಂಡು ಬಂದಿದ್ದಾನೆ. ನನ್ನ ಕೈಯಲ್ಲಿ ಉಪನ್ಯಾಸ ಸಾಧ್ಯವಿಲ್ಲ. ಬೇಕಾದರೆ ನೀನೇ ಮಾಡು. ನನ್ನ ಕೈಯಲ್ಲಿ ಅದೆಲ್ಲ ಸಾಧ್ಯವಿಲ್ಲ.”
ಇನ್ನೂ ಭಾವಾವಿಷ್ಟರಾಗಿಯೇ ಮಂದಸ್ಮಿತರಾಗಿ ಹೇಳುತ್ತಿದ್ದಾರೆ: “ನಾನು ಉಂಡು ತಿಂದೂ ಆನಂದದಿಂದ ಇರುತ್ತೇನೆ. ಉಂಡು ತಿಂದೂ ಮಲಗುತ್ತೇನೆ. ನನ್ನ ಕೈಯಲ್ಲಿ ಉಪನ್ಯಾಸ ಸಾಧ್ಯವಿಲ್ಲ.”
ಕೇಶವಸೇನ ಪರಮಹಂಸರ ಅವಸ್ಥೆಯನ್ನು ನೋಡುತ್ತ ನೋಡುತ್ತ ಭಾವಾವಿಷ್ಟನಾಗಿ ಬಿಡುತ್ತಿದ್ದಾನೆ. ಈಗ ಆತ ಭಾವಪರವಶನಾಗಿ ಆಗಾಗ ಹೇಳುತ್ತಿದ್ದಾನೆ: “ಆಹ! ಆಹ!”
ಪರಮಹಂಸರ ಆ ಅವಸ್ಥೆಯನ್ನು ನೋಡಿ ನನಗೆ ನಾನೆ ಹೇಳಿಕೊಂಡೆ: “ಇದೇನು ಬೂಟಾಟಿಕೆಯದಾಗಿರಬಹುದೆ?” ಈ ವಿಧವಾದ ಅವಸ್ಥೆಯನ್ನು ನಾನು ಹಿಂದೆ ಎಂದೂ ನೋಡಿದವನಲ್ಲ. ಇಂಥವುಗಳಲ್ಲಿ ನನಗೆಂಥ ವಿಶ್ವಾಸವಿದೆ ಎಂಬುದು ನಿನಗೆ ಗೊತ್ತಾದ ವಿಷಯವೆ.
ಪ್ರಕೃತಿಸ್ಥರಾದ ನಂತರ ಪರಮಹಂಸರು ಕೇಶವಸೇನನಿಗೆ ಹೇಳುತ್ತಿದ್ದಾರೆ: “ಒಮ್ಮೆ ನಾನು ನಿಮ್ಮ ದೇವಾಲಯಕ್ಕೆ ಹೋಗಿದ್ದೆ. ಉಪಾಸನೆ ಸಮಯದಲ್ಲಿ ನೀನು ಹೇಳುತ್ತಿದ್ದೆ: ‘ಭಕ್ತಿ ನದಿಯಲ್ಲಿ ಮುಳುಗಿ ಮುಳುಗಿ ನೇರವಾಗಿ ಸಚ್ಚಿದಾನಂದಸಾಗರವನ್ನು ತಲುಪಿ ಬಿಡೋಣ.’ ಆಗ ನಾನು ಮೇಲಕ್ಕೆ (ಕೇಶವಸೇನನ ಹೆಂಡತಿ ಮತ್ತು ಉಳಿದ ಸ್ತ್ರೀಯರ ಗ್ಯಾಲರಿಯ ಕಡೆ) ನೋಡಿ ಭಾವಿಸಿದೆ: ‘ಇವರ ಗತಿ?’ ಕೇಶವ ನೋಡಿಲ್ಲಿ. ನೀವು ಗೃಹಸ್ಥರು. ಒಮ್ಮೆಗೆ ನೀವು ಸಚ್ಚಿದಾನಂದಸಾಗರವನ್ನು ತಲುಪುವ ಬಗೆ ಹೇಗೆ? ನಿಮ್ಮ ಅವಸ್ಥೆ ಬಾಲಕ್ಕೆ ಇಟ್ಟಿಗೆಯನ್ನು ಕಟ್ಟಿರುವ ಮುಂಗುಸಿಯ ಅವಸ್ಥೆಯ ಹಾಗೆ. ಅದಕ್ಕೇನಾದರು ಹೆದರಿಕೆ ಆಯಿತು ಎಂದರೆ ಒಡನೆ ಗೋಡೆಯಲ್ಲಿರೋ ತನ್ನ ಗೂಡಿಗೆ ನೆಗೆದು ಕುಳಿತುಕೊಳ್ಳುತ್ತದೆ. ಆದರೆ ಅದಕ್ಕೆ ಅಲ್ಲೇ ಕುಳಿತಿರಲು ಹೇಗೆ ಸಾಧ್ಯವಾದೀತು?’ ಬಾಲಕ್ಕೆ ಕಟ್ಟಿರೋ ಇಟ್ಟಿಗೆ ಅದನ್ನು ಕೆಳಕ್ಕೆ ಎಳೆದು ಬಿಡುತ್ತದೆ. ಅದು ‘ಧಫ್’ ಎಂದು ಕೆಳಕ್ಕೆ ಬೀಳುತ್ತದೆ. ನೀವೂ ಸ್ವಲ್ಪ ಧ್ಯಾನವನ್ನೇನೊ ಮಾಡಬಲ್ಲಿರಿ. ಆದರೆ ಹೆಂಡತಿ ಮಕ್ಕಳೆಂಬ ಇಟ್ಟಿಗೆಯ ಭಾರ ನಿಮ್ಮನ್ನು ಕೆಳಕ್ಕೆ ಎಳೆದು ಬಿಡುತ್ತದೆ. ನೀವು ಭಕ್ತಿ ನದಿಯಲ್ಲೇನೊ ಮುಳುಗಬಹುದು. ಆದರೆ ಎದ್ದು ಬರಬೇಕಾಗುತ್ತದೆ. ನೀವು ಅದರಲ್ಲಿ ಮುಳುಗಿ ಎದ್ದು ಮಾಡಲೇಬೇಕಾಗುತ್ತದೆ. ನೀವು ಒಮ್ಮೆಗೇ ಅದರಲ್ಲಿ ಮುಳುಗಿಹೋಗಿಬಿಡೋ ಬಗೆ ಹೇಗೆ?”
ಕೇಶವಸೇನ ಹೇಳಿದ: “ಆದ್ದರಿಂದ ಗೃಹಸ್ಥನಿಗೆ ಎಂದಿಗೂ ಸಾಧ್ಯವಿಲ್ಲವೇನು? ಹಾಗಾದರೆ ಮಹರ್ಷಿ ದೇವೇಂದ್ರನಾಥ ಠಾಕೂರ!”
ಪರಮಹಂಸರು ಎರಡು ಮೂರು ಸಲ ಮೆತ್ತಗೆ, “ದೇವೇಂದ್ರನಾಥ ಠಾಕೂರ–ದೇವೇಂದ್ರ–ದೇವೇಂದ್ರ” ಎಂಬುದಾಗಿ ಹೇಳಿ ಆತನಿಗೆ ಅನೇಕ ಸಲ ಕೈ ಮುಗಿದರು.
ಬಳಿಕ ಅವರು ಹೇಳಿದರು: “ಒಂದು ಕಥೆ ಹೇಳುತ್ತೇನೆ ಕೇಳು: ಒಬ್ಬ ತನ್ನ ಮನೆಯಲ್ಲಿ ದುರ್ಗಾಪೂಜೆಯನ್ನು ಬಹಳ ವಿಜೃಂಭಣೆಯಿಂದ ನಡೆಸುತ್ತಿದ್ದ. ಆಡುಗಳ ಬಲಿ ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗೂ ನಡೆಯುತ್ತಲೇ ಇರುತ್ತಿತ್ತು. ಕೆಲವು ವರ್ಷಗಳಾದ ನಂತರ ಬಲಿ ಅಷ್ಟು ಆಕರ್ಷಣೀಯವಾಗಿ ಏನೂ ನಡೆಯುತ್ತಿರಲಿಲ್ಲ. ಒಬ್ಬ ಆತನನ್ನು ಕೇಳಿದ: ‘ಮಹಾಶಯ, ಈಗ ಕೆಲವು ವರ್ಷಗಳಿಂದ ಬಲಿ ನಿಮ್ಮ ಮನೆಯಲ್ಲಿ ಅಷ್ಟು ವೈಭವದಿಂದ ನಡೆಯುತ್ತಿಲ್ಲವಲ್ಲ ಏಕೆ?’ ಆತ ಹೇಳಿದ: ‘ಕಾಣುತ್ತ ಇಲ್ಲವೇನು ನನ್ನ ಹಲ್ಲು ಬಿದ್ದುಹೋಗಿರೋದು?’ ದೇವೇಂದ್ರನಾಥ ಠಾಕೂರ ಈಗ ಧ್ಯಾನವನ್ನೇನೋ ಮಾಡುತ್ತಾ ಇದ್ದಾನೆ. ಮುಪ್ಪಾದಮೇಲೆ ಮಾಡದೆಯೇನು? ಆದರೆ ಆತ ನಿಜವಾಗಿ ಒಬ್ಬ ವಿಶೇಷ ವ್ಯಕ್ತಿಯೇ.
“ಇಲ್ಲಿ ನೋಡು, ಎಲ್ಲಿಯವರೆಗೆ ಮನುಷ್ಯನಲ್ಲಿ ಮಾಯೆ ಇರುವುದೊ ಅಲ್ಲಿಯವರೆಗೆ ಆತ ಎಳನೀರಿನ ಹಾಗೆ ಇರುತ್ತಾನೆ. ಎಳನೀರಿನ ತಿರುಳನ್ನೂ ಕೆರೆದುಕೊಳ್ಳಲು ಪ್ರಯತ್ನಿಸಿದರೆ ಅದರೊಡನೆ ಒಂದು ಸ್ವಲ್ಪ ಕರಟವೂ ಕಚ್ಚಿಕೊಂಡು ಬಂದೇ ಬರುತ್ತದೆ. ಆದರೆ ತೆಂಗಿನ ತಿರುಳಿನಲ್ಲಿ ಗಿಟುಕು ಮತ್ತು ಕರಟ ಪ್ರತ್ಯೇಕವಾಗಿಬಿಟ್ಟಿರುತ್ತದೆ. ತಿರುಳನ್ನು ಹಿಡಿದು ಅಲ್ಲಾಡಿಸಿದಾಗ ಗಿಟುಕು ಒಳಗೆ ‘ಟಕ, ಟಕ’ ಅಂತ ಶಬ್ದ ಮಾಡುವುದನ್ನೂ ಕೇಳಬಹುದು. ಮಾಯೆಯಿಂದ ಮುಕ್ತನಾದ ಮನುಷ್ಯ ತೆಂಗಿನ ತಿರುಳಿನ ಹಾಗೆ ಇರುತ್ತಾನೆ. ಆತ್ಮ ಪ್ರತ್ಯೇಕ ದೇಹ ಪ್ರತ್ಯೇಕ; ಅವೆರಡಕ್ಕೂ ಯಾವ ಸಂಬಂಧವೂ ಇಲ್ಲ ಎಂಬ ಬೋಧೆ ಆತನಿಗಾಗುತ್ತದೆ.
“ಸಕಲ ದುಃಖದುರಿತಗಳಿಗೆಲ್ಲ ಮೂಲ ಈ ‘ಅಹಂ’ ಎಂಬುದು. ಈ ನೀಚ ‘ಅಹಂ’ ಮನುಷ್ಯನನ್ನು ಎಂದಿಗೂ ಬಿಟ್ಟು ತೊಲಗದೇನು? ಪಾಳು ಮನೆಗಳಲ್ಲಿ ಅಶ್ವತ್ಥ ವೃಕ್ಷಗಳು ಬೆಳೆಯೋದನ್ನು ನೀನು ನೋಡಿರಬಹುದು. ಈ ದಿನ ಅವನ್ನು ಕತ್ತರಿಸಿಹಾಕಿದರೆ ಮಾರನೆ ದಿನವೇ ಅವುಗಳಲ್ಲಿ ಮೊಳಕೆ ಬಂದುಬಿಟ್ಟಿರುತ್ತದೆ. ಈ ‘ಅಹಂ’ ಕೂಡ ಈ ರೀತಿಯದೆ. ಬೆಳ್ಳುಳ್ಳಿ ಹಾಕಿದ್ದ ಪಾತ್ರೆಯನ್ನು ಹತ್ತಾರು ಸಲ ತೊಳೆದರೂ ಆ ಹಾಳಾದ ವಾಸನೆ ಮಾತ್ರ ಎಂದಿಗೂ ಹೋಗದು.”
ಹಾಗೆಯೇ ಏನೇನೊ ಮಾತಾಡುತ್ತ ಮಾತಾಡುತ್ತ ಮತ್ತೆ ಅವರು ಕೇಶವಸೇನನಿಗೆ ಹೇಳಿದರು: “ಒಳ್ಳೆಯದು ಕೇಶವ, ನಿಮ್ಮ ಕಲ್ಕತ್ತದ ಬಾಬುಗಳು ಭಗವಂತನಿಲ್ಲ ಎಂಬುದಾಗಿ ಹೇಳುತ್ತಾರಂತೆ. ನಿಮ್ಮ ಕಲ್ಕತ್ತದ ಬಾಬು ಮೆಟ್ಟಲಸಾಲು ಹತ್ತಲು ಪ್ರಯತ್ನಿಸುತ್ತಾನೆ. ಒಂದು ಹಂತಕ್ಕೆ ಕಾಲಿಟ್ಟು ಇನ್ನೊಂದು ಹಂತಕ್ಕೆ ಕಾಲಿಡುವಷ್ಟರಲ್ಲೇ, ‘ಓ ನನ್ನ ಈ ಭಾಗ! ನನ್ನ ಈ ಭಾಗ!’ ಎಂಬುದಾಗಿ ಕೂಗಿಕೊಳ್ಳುತ್ತ ಮೂರ್ಛಿತನಾಗಿ ಬಿಡುತ್ತಾನೆ. ಆತನ ಬಂಧುಗಳು ಆಕಾಂಕ್ಷಿತರಾಗಿ ಕೂಗಿಕೊಳ್ಳುವರು: ‘ಕರೆಯಿರಿ, ಕರೆಯಿರಿ ಡಾಕ್ಟರನ್ನ!’ ಡಾಕ್ಟರು ಬರುವುದರಲ್ಲೇ ಆತ ಚಟ್ ಆಗಿ ಹೋಗಿಬಿಟ್ಟಿರುತ್ತಾನೆ. ಇಂಥ ದುರ್ಬಲರು ಭಗವಂತನಿಲ್ಲ ಎಂಬುದಾಗಿ ಹೇಳುವುದು!”
ಬಳಿಕ ಒಂದು ಘಂಟೆ ಕಳೆದನಂತರವೊ ಏನೊ ಕೀರ್ತನೆ ಆರಂಭವಾಯಿತು. ಆಗ ನನ್ನ ಕಣ್ಣಿಗೆ ಏನು ಬಿತ್ತೊ ಅದನ್ನು ಜನ್ಮಜನ್ಮಾಂತರಗಳಲ್ಲೂ ಮರೆಯಲಾರೆ. ಕೇಶವ ಮತ್ತು ಎಲ್ಲರೂ ನರ್ತಿಸುತ್ತಿದ್ದಾರೆ. ನರ್ತಿಸುತ್ತ ನರ್ತಿಸುತ್ತ ಪರಮಹಂಸರು ಇದ್ದಕ್ಕಿದ್ದ ಹಾಗೆ ಸ್ಥಿರವಾಗಿ ನಿಂತುಕೊಂಡುಬಿಟ್ಟರು–ಸಮಾಧಿಸ್ಥರಾಗಿಬಿಟ್ಟರು. ಬಹಳ ಹೊತ್ತು ಹಾಗೇ ನಿಂತಿದ್ದರು. ಅವರ ಮಾತುಕತೆಗಳನ್ನೆಲ್ಲಾ ಕೇಳಿ, ಜೊತೆಗೆ ಈ ದೃಶ್ಯಗಳನ್ನೆಲ್ಲಾ ನೋಡಿ ನನಗೆ ನಾನೇ ಹೇಳಿಕೊಂಡೆ: “ಹೌದು, ಇವರು ನಿಜವಾಗಿಯೂ ಪರಮಹಂಸರೆ!”
ಇನ್ನೊಂದು ದಿನ. ಬಹುಶಃ ೧೮೮೩ನೆಯ ಇಸವಿಯಲ್ಲಿರಬೇಕು. ಶ್ರೀರಾಮಪುರದ ಕೆಲವು ಮಂದಿ ಯುವಕರನ್ನು ಜೊತೆಯಲ್ಲಿ ಕರೆದುಕೊಂಡು ದಕ್ಷಿಣೇಶ್ವರಕ್ಕೆ ಹೋಗಿ ಪರಮಹಂಸರ ದರ್ಶನ ಮಾಡಿದೆ. ಅವರ ಕಡೆ ನೋಡಿ ಪರಮಹಂಸರು ಕೇಳಿದರು: “ಇವರೆಲ್ಲಾ ಏಕೆ ಇಲ್ಲಿಗೆ ಬಂದಿದ್ದಾರೆ?”
ನಾನು: “ತಮ್ಮನ್ನು ನೋಡಲು.”
ಶ್ರೀರಾಮಕೃಷ್ಣರು: “ನನ್ನಲ್ಲಿ ಏನು ನೋಡೋದಿದೆ? ದೇವಾಲಯದ ಕಡೆ ಏಕೆ ಹೋಗಿ ನೋಡಬಾರದು?”
ನಾನು: “ಇವರು ಅವನ್ನು ನೋಡಲು ಬಂದಿಲ್ಲ. ತಮ್ಮನ್ನು ನೋಡುವುದಕ್ಕೆ ಬಂದಿದ್ದಾರೆ.”
ಶ್ರೀರಾಮಕೃಷ್ಣರು: “ಆಹ! ಹಾಗಾದರೆ ಇವರು ಚಕಮಕಿ ಕಲ್ಲೇ ಆಗಿರಬೇಕು. ಅಂತರ್ಯದಲ್ಲಿ ಬೆಂಕಿಯಿದೆ. ಸಾವಿರ ವರ್ಷ ನೀರಿನಲ್ಲಿ ಹಾಕಿದ್ದು ಅದನ್ನು ತೆಗೆದು ಕುಟುಕಿದೆ ಎಂದರೆ ಬೆಂಕಿ ಕಿಡಿ ಹೊರಡುತ್ತದೆ. ಇವರು ಬಹುಶಃ ಆ ವಿಧದ ಗುಂಪಿಗೆ ಸೇರಿದವರಾಗಿರಬೇಕು. ನನ್ನನ್ನು ಕುಟುಕಿದರೆ ಎಲ್ಲಿ ಬೆಂಕಿ ಹೊರಕ್ಕೆ ಬರುತ್ತದೆ!”
ಅವರ ಕೊನೆಯ ಮಾತನ್ನು ಕೇಳಿ ನಾವೆಲ್ಲರೂ ನಕ್ಕೆವು. ಅಂದು ಅವರು ಇನ್ನೂ ಏನೇನು ಹೇಳಿದರು ಎಂಬುದು ಜ್ಞಾಪಕದಲ್ಲಿ ಇಲ್ಲ. ಅಂದು ಕಾಮಕಾಂಚನತ್ಯಾಗದ ಸಂಬಂಧವಾಗಿ ಮತ್ತು ಈ “ಅಹಂ” ಎಂಬುದರ ಗಂಧ ಏನು ಮಾಡಿದರೂ ಹೋಗದು ಎಂಬುದರ ವಿಷಯವಾಗಿಯೂ ಮಾತಾಡಿರಬೇಕು.
ಇನ್ನೊಂದು ದಿನ ಅಲ್ಲಿಗೆ ಹೋಗಿ ಅವರನ್ನು ಕಂಡೆ. ಪ್ರಣಾಮ ಮಾಡಿ ಕುಳಿತು ಕೊಳ್ಳುವುದೆ ತಡ ಹೇಳಿದರು: “ನೋಡು, ಕಾರ್ಕು ತೆಗೆದೊಡನೆಯೆ ‘ಪುಸ್, ಪುಸ್’ ಅಂತ ಮೇಲೇಳುವ ಮತ್ತು ಸ್ವಲ್ಪ ಸಿಹಿಯಾಗಿಯೂ ಸ್ವಲ್ಪ ಹುಳಿಯಾಗಿಯೂ ಇರುವ ಒಂದು ವಸ್ತು ಇದೆಯಲ್ಲ ಅದನ್ನು ನನಗೆ ತಂದುಕೊಡುವೆಯಾ?”
ನಾನು: “ಲೆಮೊನೇಡ್ ಏನು?”
ಶ್ರೀರಾಮಕೃಷ್ಣರು: “ಏಕೆ ಒಂದನ್ನು ತರಬಾರದು?”
ನಾನು ಅದನ್ನು ಅವರಿಗೆ ತಂದುಕೊಟ್ಟೆ ಎಂಬುದಾಗಿ ಜ್ಞಾಪಕದಲ್ಲಿದೆ. ಅಂದು ಅಲ್ಲಿ ಬೇರೆ ಯಾರೂ ಇರಲಿಲ್ಲ. ಅವರಿಗೆ ಕೆಲವು ಪ್ರಶ್ನೆಗಳನ್ನು ಹಾಕಿದೆ.
ನಾನು: “ನಿಮಗೆ ಜಾತಿ-ಭೇದ ಇರುವುದೆ?”
ಶ್ರೀರಾಮಕೃಷ್ಣರು: “ಇನ್ನೆಲ್ಲಿದೆ? ಕೇಶವಸೇನನ ಮನೆಯಲ್ಲಿ ಪಲ್ಯ ತಿಂದು ಬಿಟ್ಟಿದ್ದೇನೆ. ಒಮ್ಮೆ ಏನು ನಡೆಯಿತು ಎಂಬುದನ್ನು ತಿಳಿಸುತ್ತೇನೆ. ಒಮ್ಮೆ ಉದ್ದವಾದ ಗಡ್ಡವಿರೋ ಒಬ್ಬ ‘ಐಸ್’ ಅನ್ನು ಹೊತ್ತುಕೊಂಡು ಬಂದ. ಆದರೆ ಏಕೊ ಆತನಿಂದ ಕೊಂಡು ತಿನ್ನಲು ಇಚ್ಛೆ ಆಗಲಿಲ್ಲ. ಸ್ವಲ್ಪ ಹೊತ್ತಾದನಂತರ ಆತನ ಹತ್ತಿರದಿಂದಲೇ ಒಬ್ಬ ‘ಐಸ್’ ಅನ್ನು ಕೊಂಡುಕೊಂಡು ಬಂದ. ಅದನ್ನು ಬಹಳ ಆನಂದದಿಂದ ಚೀಪಿ ಚೀಪಿ ತಿಂದುಬಿಟ್ಟೆ. ನೋಡು, ಜಾತಿಭೇದ ತಾನಾಗಿಯೇ ಹೊರಟುಹೋಗುತ್ತದೆ. ತೆಂಗಿನ ಮರ, ವಾಲೆ ಮರ, ಇವು ಬೆಳೆದ ಹಾಗೆಲ್ಲಾ ಅವುಗಳ ಒಣಗಿದ ಮಟ್ಟೆಗಳು ತಾವಾಗೇ ಕಳಚಿ ಬಿದ್ದುಹೋಗುತ್ತವೆ. ಜಾತಿಭೇದವೂ ಅದೇ ರೀತಿಯಾಗಿ ತಾನಾಗೇ ಬಿಟ್ಟು ತೊಲಗಿಹೋಗುತ್ತದೆ. ಆ ತಿಳಿಗೇಡಿಗಳು (ಬ್ರಾಹ್ಮಸಮಾಜದವರು) ಮಾಡೋ ಹಾಗೆ ಬಲಾತ್ಕಾರದಿಂದ ತೆಗೆಯಲು ಹೋಗಬೇಡ.”
ನಾನು: “ಕೇಶವಬಾಬು ಎಂಥವನು?”
ಶ್ರೀರಾಮಕೃಷ್ಣರು: “ಆತ ಒಬ್ಬ ಸಂತ.”
ನಾನು: “ತ್ರೈಲೋಕ್ಯಬಾಬು?”
ಶ್ರೀರಾಮಕೃಷ್ಣರು: “ಬಹಳ ಒಳ್ಳೆ ಮನುಷ್ಯ. ದೊಡ್ಡ ಸಂಗೀತ ವಿದ್ವಾನ್.”
ನಾನು: “ಶಿವನಾಥಬಾಬು?”
ಶ್ರೀರಾಮಕೃಷ್ಣರು: “ಒಳ್ಳೆ ಮನುಷ್ಯನೆ, ಆದರೆ ಬಹಳವಾಗಿ ವಾದಿಸುತ್ತಾನೆ.”
ನಾನು: “ಹಿಂದೂಗಳಿಗೂ ಬ್ರಾಹ್ಮೋಗಳಿಗೂ ಇರೋ ವ್ಯತ್ಯಾಸವೇನು?”
ಶ್ರೀರಾಮಕೃಷ್ಣರು: “ಇನ್ನೇನು ವ್ಯತ್ಯಾಸ? ನೋಡು, ಇಲ್ಲಿ ಶಹನಾಯಿಯನ್ನು ಊದುತ್ತಾರೆ. ಒಬ್ಬ ವಾದ್ಯಗಾರ ಕೇವಲ ‘ಪ್ಞೋ’ ಎಂಬ ಸ್ವರವನ್ನು ಹೊರಡಿಸುತ್ತಾನೆ, ಇನ್ನೊಬ್ಬ ವಿವಿಧ ರಾಗರಾಗಿಣಿಗಳನ್ನು ಹೊರಡಿಸುತ್ತಾನೆ. ಬ್ರಾಹ್ಮೋಗಳು ಕೇವಲ ‘ಪ್ಞೋ’ ಎಂಬ ರಾಗವನ್ನು, ನಿರಾಕಾರ ರಾಗವನ್ನು ಹೊರಡಿಸುತ್ತಾರೆ. ಹಿಂದೂಗಳು ವಿವಿಧ ರಾಗರಾಗಿಣಿಗಳನ್ನು ಹೊರಡಿಸುತ್ತಾರೆ; ಎಂದರೆ ಭಗವಂತನನ್ನು ವಿವಿಧ ರೀತಿಯಲ್ಲಿ ಪೂಜಿಸಿ ಆನಂದಪಡುತ್ತಾರೆ.
“ನಿರಾಕಾರ ಮತ್ತು ಸಾಕಾರವನ್ನು, ನೀರು ಮತ್ತು ನೀರ್ಗಲ್ಲಿಗೆ ಹೋಲಿಸಬಹುದು. ಯಾವುದು ನೀರೋ ಅದೇ ಶೈತ್ಯದಿಂದ ನೀರ್ಗಲ್ಲಾಗುತ್ತದೆ. ಜ್ಞಾನದ ಕಾವಿನಿಂದ ನೀರ್ಗಲ್ಲು ನೀರಾಗುತ್ತದೆ. ಭಕ್ತಿಯ ಶೈತ್ಯದಿಂದ ನೀರು ನೀರ್ಗಲ್ಲಾಗುತ್ತದೆ.
“ಇರುವುದು ಒಂದೇ ವಸ್ತು. ವಿವಿಧ ಜನರು ಅದಕ್ಕೆ ವಿವಿಧ ಹೆಸರನ್ನು ಕೊಡುತ್ತಾರೆ. ಉದಾಹರಣೆಗೆ ನಾಲ್ಕು ದಿಕ್ಕುಗಳಲ್ಲೂ ನಾಲ್ಕು ಘಟ್ಟಗಳಿರುವ ಕೊಳವನ್ನು ತೆಗೆದುಕೊ. ಒಂದನೆ ಘಟ್ಟದಲ್ಲಿ ನೀರು ತೆಗೆದುಕೊಳ್ಳುವವರು ಅದಕ್ಕೆ ‘ಜಲ ‘ಎಂಬುದಾಗಿಯೂ, ಎರಡನೆ ಘಟ್ಟದಲ್ಲಿ ತೆಗೆದುಕೊಳ್ಳುವವರು ಅದಕ್ಕೆ ‘ಪಾನಿ’ ಎಂಬುದಾಗಿಯೂ, ಮೂರನೆ ಘಟ್ಟದಲ್ಲಿ ತೆಗೆದುಕೊಳ್ಳುವವರು ಅದಕ್ಕೆ ‘ವಾಟರ್’ ಎಂಬುದಾಗಿಯೂ, ನಾಲ್ಕನೆ ಘಟ್ಟದಲ್ಲಿ ತೆಗೆದುಕೊಳ್ಳುವವರು ಅದಕ್ಕೆ ‘ಆಕ್ವಾ’ ಎಂಬುದಾಗಿಯೂ ಕರೆಯುತ್ತಾರೆ. ಆದರೆ ಅವರೆಲ್ಲರೂ ತೆಗೆದುಕೊಂಡು ಹೋಗುತ್ತಿರುವುದು ಒಂದೇ ವಸ್ತುವನ್ನು–ನೀರನ್ನ.”
ನಾನು ಪರಮಹಂಸರಿಗೆ ಹೇಳಿದೆ, ನಾನು ಬರಿಸಾಲಿನ ಅಚಲಾನಂದತೀರ್ಥ ಅವಧೂತನನ್ನು ನೋಡಿದೆ ಎಂಬುದಾಗಿ.
ಶ್ರೀರಾಮಕೃಷ್ಣರು: “ಕೋತರಂಗದ ರಾಮಕುಮಾರನನ್ನೇನು?”
ನಾನು: “ಹೌದು.”
ಶ್ರೀರಾಮಕೃಷ್ಣರು: “ಆತ ನಿನಗೆ ಹೇಗೆ ಕಂಡ?”
ನಾನು: “ಆತ ಬಹಳ ಒಳ್ಳೆಯವ.”
ಶ್ರೀರಾಮಕೃಷ್ಣರು: “ಒಳ್ಳೆಯದು, ನಮ್ಮಿಬ್ಬರಲ್ಲಿ ನಿನಗೆ ಯಾರನ್ನು ಕಂಡರೆ ಇಷ್ಟ? ನನ್ನನ್ನು ಕಂಡರೋ, ಅವನನ್ನು ಕಂಡರೋ?”
ನಾನು: “ಆತನೊಡನೆ ನಿಮ್ಮನ್ನು ಹೋಲಿಸಲಾಗುವುದೆ? ಆತ ಪಂಡಿತ, ವಿದ್ಯಾವಂತ. ನೀವೂ ಅಂಥವರೇನು?”
ನನ್ನ ಉತ್ತರ ಕೇಳಿ ಪರಮಹಂಸರು ಸ್ವಲ್ಪ ದಿಗ್ಭ್ರಮೆ ಹಿಡಿದಂತವರಾಗಿ ಸುಮ್ಮನೆ ಕುಳಿತುಕೊಂಡರು. ಸ್ವಲ್ಪ ಹೊತ್ತಾದನಂತರ ನಾನು ಹೇಳಿದೆ: “ಆತನೇನೊ ಪಂಡಿತ, ಆದರೆ ನೀವು ವಿನೋದಭರಿತರು! ನಿಮ್ಮೊಡನೆ ಬಹಳವಾಗಿ ಆನಂದಪಡಬಹುದು.”
ಇದನ್ನು ಕೇಳಿ ಪರಮಹಂಸರು ನಗುತ್ತ ಹೇಳಿದರು: “ಸರಿ! ಸರಿ! ನೀನುಹೇಳುವುದು ಸರಿ!”
ಅವರು ನನ್ನನ್ನು ಕೇಳಿದರು: “ನಮ್ಮ ಪಂಚವಟಿ ನೋಡಿದ್ದೀಯಾ?”
ನಾನು: “ಹೌದು, ನೋಡಿದ್ದೇನೆ.”
ಅದರ ಕೆಳಗೆ ಏನೇನು ಸಾಧನೆಗಳನ್ನು ಮಾಡಿದ್ದರೊ ಅದರ ಸಂಬಂಧವಾಗಿ ಸ್ವಲ್ಪ ಹೊತ್ತು ಹೇಳಿದರು. ತೋತಾಪುರಿಯ ಸಂಬಂಧವಾಗಿಯೂ ಸ್ವಲ್ಪ ಹೇಳಿದರು.
ಬಳಿಕ ನಾನು ಕೇಳಿದೆ: “ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳೋ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ನೋಡು, ಚುಂಬಕ ಕಬ್ಬಿಣವನ್ನು ಆಕರ್ಷಿಸುವ ರೀತಿಯಲ್ಲಿ ಆತ ನಮ್ಮನ್ನು ಸತತ ಆಕರ್ಷಿಸುತ್ತಿದ್ದಾನೆ. ಆದರೆ ಕೊಳೆಯಿಂದ ತುಂಬಿಕೊಂಡಿದ್ದರೆ ಅದು ಹೋಗಿ ಚುಂಬಕವನ್ನು ಮುಟ್ಟಲಾಗುವುದಿಲ್ಲ. ಅದರ ಕೊಳೆಯನ್ನು ತೊಳೆದೊಡನೆಯೆ ಅದು ಥಟ್ಟನೆ ಹೋಗಿ ಚುಂಬಕವನ್ನು ಮುಟ್ಟುತ್ತದೆ. ಭಗವಂತನಿಗಾಗಿ ಅಳು. ಅದು ನಿನ್ನ ಮನಸ್ಸಿನ ಕೊಳೆಯನ್ನು ತೊಳೆದುಬಿಡುತ್ತದೆ.”
ಅವರ ಈ ಮಾತುಗಳನ್ನು ನಾನು ಗುರುತುಮಾಡಿಕೊಳ್ಳುತ್ತಿದ್ದಾಗ ಅವರು ಹೇಳಿದರು: “ಇಲ್ಲಿ ನೋಡು, ಬಂಗಿಸೊಪ್ಪು ಅಂತ ಕೇವಲ ಬಾಯಲ್ಲಿ ಮಾತ್ರ ಹೇಳುತ್ತಿದ್ದರೆ ಅದು ನಮಗೆ ಮತ್ತನ್ನು ಹತ್ತಿಸದು. ಅದನ್ನು ಸ್ವಲ್ಪ ತೆಗೆದುಕೊಂಡು ಬಂದು ಅದಕ್ಕೆ ನೀರು ಬೆರೆಸಿ ಅರೆದು ಕುಡಿಯಬೇಕು….”
ಬಳಿಕ ಹೇಳಿದರು: “ನೀವು ಸಂಸಾರದಲ್ಲಿರಬೇಕಾಗಿದೆ. ಆದ್ದರಿಂದ ಭಗವಂತನ ಸಂಬಂಧವಾಗಿ ನಿಮಗೆ ಸಾಮಾನ್ಯವಾದ ನೆಶಾ ಹತ್ತೋಹಾಗೆ ಮಾಡಿಕೊಳ್ಳಿ. ನೀವು ನಿಮ್ಮ ಕೆಲಸಕಾರ್ಯಗಳನ್ನು ಮಾಡುತ್ತಿದ್ದರೂ ಆ ನೆಶಾ ಮಾತ್ರ ನಿಮಗೆ ಹತ್ತಿಕೊಂಡೇ ಇರಲಿ. ಆದರೆ ನಿಮಗೆ ಶುಕದೇವನ ಹಾಗೆ ಬತ್ತಲೆಯಾಗಿ ಒಂದು ಕಡೆ ಬಾಹ್ಯಜ್ಞಾನಶೂನ್ಯರಾಗಿ ಬಿದ್ದುಕೊಂಡಿರುವಷ್ಟು ಭಗವದ್ಭಾವನೆಯಿಂದ ಮತ್ತರಾಗಲು ಸಾಧ್ಯವೇ ಇಲ್ಲ. ನೀವು ಈ ಸಂಸಾರದಲ್ಲಿ ಇರಬೇಕಾಗಿರುವವರೆಗೆ ಭಗವಂತನಿಗೆ ನಿಮ್ಮ ವಕಾಲತ್ತನ್ನು ವಹಿಸಿಬಿಡಿ. ನಿಮ್ಮ ಭಾರವನ್ನೆಲ್ಲ ಆತನ ಮೇಲೆ ಹಾಕಿಬಿಡಿ; ಆತ ಏನು ಬೇಕಾದರೂ ಮಾಡಿಕೊಳ್ಳಲಿ. ಶ್ರೀಮಂತನ ಮನೆಯ ದಾಸಿಯೋಪಾದಿಯಲ್ಲಿ ನೀವು ಸಂಸಾರದಲ್ಲಿರಬೇಕು. ಆಕೆ ತನ್ನ ಯಜಮಾನನ ಮಕ್ಕಳು ಮರಿಗಳಿಗೆ ಸ್ನಾನಮಾಡಿಸುವುದೇನು, ಬಟ್ಟೆಬರೆಗಳನ್ನು ಹಾಕುವುದೇನು, ಊಟಕ್ಕೆ ಹಾಕುವುದೇನು, ಇವೇ ಮೊದಲಾದ ವಿಧದಿಂದ ಅವು ತನ್ನ ಮಕ್ಕಳೇ ಎಂಬುದಾಗಿ ಅವನ್ನು ಸಾಕಿ ಸಲಹುತ್ತಾಳೆ. ಆದರೆ ಆಕೆಗೆ ಚೆನ್ನಾಗಿ ಗೊತ್ತಿದೆ ಅವೊಂದೂ ತನ್ನವಲ್ಲವೆಂಬುದು. ಆಕೆಯನ್ನು ಕೆಲಸದಿಂದ ತೆಗೆದುಹಾಕಿದೊಡನೆಯೆ ಆಕೆಗೂ ಆ ಮಕ್ಕಳಿಗೂ ಯಾವ ಸಂಪರ್ಕ ಇರದು.
“ಹಲಸಿನ ಹಣ್ಣನ್ನು ಬಿಡಿಸುವ ಮುನ್ನ ಕೈಗೆ ಎಣ್ಣೆ ಸವರಿಕೊಳ್ಳಬೇಕು. ಅದೇ ರೀತಿ ಮೊದಲು ಭಕ್ತಿ ಎಂಬ ಎಣ್ಣೆಯನ್ನು ಮೈಗೆ ಹಚ್ಚಿಕೊಂಡುಬಿಡಿ; ಬಳಿಕ ಸಂಸಾರ ನಿಮಗೆ ಅಂಟಿಕೊಳ್ಳದು. ನೀವು ಅದರಿಂದ ಲಿಪ್ತರಾಗುವುದಿಲ್ಲ.”
ಅದುವರೆಗೂ ಪರಮಹಂಸರು ನೆಲದ ಮೇಲೆ ಕುಳಿತಿದ್ದರು. ಬಳಿಕ ಎದ್ದುಹೋಗಿ ತಮ್ಮ ಮಂಚದ ಮೇಲೆ ಮಲಗಿಕೊಂಡರು.
ಅವರು ನನಗೆ ಹೇಳಿದರು: “ಸ್ವಲ್ಪ ನನಗೆ ಗಾಳಿ ಬೀಸು.”
ನಾನು ಅವರಿಗೆ ಗಾಳಿ ಬೀಸಲು ಆರಂಭಿಸಿದೆ. ಅವರು ಸುಮ್ಮನೆ ಮಲಗಿಕೊಂಡರು. ಸ್ವಲ್ಪ ಹೊತ್ತಾದನಂತರ ಅವರು ಹೇಳಿದರು: “ಬಹಳ ಸೆಕೆ. ಬೀಸಣಿಗೆಯನ್ನು ಏಕೆ ನೀರಿನಲ್ಲಿ ಅದ್ದಿ ತರಬಾರದು?”
ನಾನು: “ಓಹೋ! ನಿಮಗೂ ಷೋಕಿ ಇದೆ!” ಪರಮಹಂಸರು ನಕ್ಕು ಮಾತನ್ನು ಎಳೆದು ಹೇಳಿದರು: “ಏಕೆ-ಇರ-ಬಾರದು?” ಅದಕ್ಕೆ ನಾನು ಹೇಳಿದೆ: “ಬಹಳ ಒಳ್ಳೆಯದು! ಇರಲಿ, ಇರಲಿ, ತುಂಬಿರಲಿ!” ಅಂದು ನಾನು ಅವರೊಡನೆ ಬೆರೆತು ಎಷ್ಟು ಆನಂದಪಟ್ಟೆ ಎಂಬುದನ್ನು ಬಾಯಿಂದ ವರ್ಣನೆ ಮಾಡಲಾಗುವುದಿಲ್ಲ.
ಕೊನೆಯ ಸಲ ನಾನು ಅವರನ್ನು ದರ್ಶನ ಮಾಡಿದ್ದು-ನೀನು ಆಗಲೆ ನಿನ್ನ ಪುಸ್ತಕದಲ್ಲಿ ಬರೆದಿದ್ದೀಯೆ–ಆಗತಾನೆ ಡಿಗ್ರಿ ಪಡೆದಿದ್ದ ನಮ್ಮ ಸ್ಕೂಲಿನ ಹೆಡ್ಮಾಸ್ಟರನೊಡನೆ ಹೋಗಿದ್ದಾಗ. ನೀನು ಆತನನ್ನು ಈಗ ಸ್ವಲ್ಪ ಕಾಲದ ಹಿಂದೆ ನೋಡಿದ್ದೀಯೆ. ಆತ ಅವರ ಕಣ್ಣಿಗೆ ಬಿದ್ದೊಡನೆ ಅವರು ಹೇಳಿದರು: “ಈತನೆಲ್ಲಿ ನಿನಗೆ ದೊರಕಿದ? ಬಹಳ ಒಳ್ಳೆಯವ!”
ಮತ್ತೆ ಅವರು ಹೇಳಿದರು: “ನೀನು ಒಬ್ಬ ವಕೀಲ; ಬಹಳ ಬುದ್ಧಿಶಾಲಿ. ನನಗೊಂದು ಸ್ವಲ್ಪ ಬುದ್ಧಿವಂತಿಕೆ ಕೊಡಬಲ್ಲೆಯಾ? ನಿಮ್ಮ ತಂದೆ ಅಂದು ಇಲ್ಲಿಗೆ ಬಂದಿದ್ದ. ಇಲ್ಲಿ ಮೂರು ದಿನ ಇದ್ದ.”
ನಾನು: “ಅವರು ನಿಮ್ಮ ಕಣ್ಣಿಗೆ ಹೇಗೆ ಕಂಡರು?”
ಶ್ರೀರಾಮಕೃಷ್ಣರು: “ಒಳ್ಳೆಯವನೆ, ಆದರೆ ಒಮ್ಮೊಮ್ಮೆ ಹುಚ್ಚುಹುಚ್ಚಾಗಿ ಮಾತಾಡುತ್ತಾನೆ.”
ನಾನು: “ಮುಂದಿನ ಸಲ ನೀವು ಅವರನ್ನು ನೋಡಿದಾಗ, ದಯವಿಟ್ಟು ಆ ದೋಷದಿಂದ ಅವರು ಮುಕ್ತರಾಗೊ ಹಾಗೆ ಮಾಡಿ.”
ಈ ಮಾತನ್ನು ಕೇಳಿ ಪರಮಹಂಸರು ಸ್ವಲ್ಪ ನಕ್ಕರು.
ನಾನು: “ನಮಗೇನಾದರು ಒಂದೆರಡು ಬುದ್ಧಿವಾದದ ಮಾತು ಹೇಳಿ.”
ಶ್ರೀರಾಮಕೃಷ್ಣರು: “ನಿನಗೆ ಹೃದೆ ಗೊತ್ತೆ?”
ನಾನು: “ನಿಮ್ಮ ಅಕ್ಕನ ಮಗ ತಾನೆ? ಆತನ ಹೆಸರು ಕೇಳಿದ್ದೇನೆ.”
ಶ್ರೀರಾಮಕೃಷ್ಣರು: “ಹೃದೆ ನನಗೆ ಹೇಳುತ್ತಿದ್ದ: ‘ಮಾವ, ನಿಮ್ಮ ಉಪದೇಶಗಳ ಉಗ್ರಾಣವನ್ನು ಒಮ್ಮೆಗೆ ಬರಿದುಮಾಡಿಕೊಂಡುಬಿಡಬೇಡಿ. ಹೇಳಿದ್ದನ್ನೇ ಮತ್ತೆ ಮತ್ತೆ ಏಕೆ ಹೇಳುತ್ತಿದ್ದೀರಿ?’ ನಾನು ಹೇಳುತ್ತಿದ್ದೆ: ‘ಏ ತಿಳಿಗೇಡಿ, ಅದಕ್ಕೇಕೆ ನಿನಗೆ ತಲೆನೋವು? ಇವೆಲ್ಲ ನನ್ನ ಮಾತು. ಬೇಕಾದರೆ ಒಂದು ಲಕ್ಷ ಸಲ ಪುನಃ ಹೇಳುತ್ತೇನೆ. ನೀನು ಬಾಯಿ ಮುಚ್ಚಿ ಸುಮ್ಮನೆ ಕುಳಿತಿರು!”’
ನಾನು (ನಗುತ್ತ ನಗುತ್ತ): “ಹಾಗಲ್ಲದೆ ಮತ್ತೇನು?”
ಸ್ವಲ್ಪ ಹೊತ್ತಾದ ಮೇಲೆ ಹಾಸಿಗೆ ಮೇಲೆ ಎದ್ದು ಕುಳಿತು “ಓಂ, ಓಂ” ಅಂತ ಹೇಳುತ್ತಿದ್ದು ಬಳಿಕ ಹಾಡನ್ನು ಆರಂಭಿಸಿದರು:
ಮುಳುಗು ಮುಳುಗು ಮನವೆ–
ಹಿರಿಯೊಲವಿನ ಕಡಲಾಳಕೆ
ಮುಳುಗು ಮುಳುಗು ಒಳಗೇ….
ಅವರು ಈ ಹಾಡಿನ ಒಂದೆರಡು ಚರಣಗಳನ್ನು ಹಾಡುವುದರಲ್ಲೆ ಆನಂದಸಾಗರದ ಆಳಕ್ಕೆ ತಾವೇ ಮುಳುಗಿ ಸಮಾಧಿಸ್ಥರಾಗಿಬಿಟ್ಟರು.
ಪ್ರಕೃತಿಸ್ಥರಾದನಂತರ ಅವರು ತಮ್ಮ ಕೊಠಡಿಯಲ್ಲಿ ಶತಪಥ ತಿರುಗಾಡಲಾರಂಭಿ ಸಿದರು. ತಾವು ಉಟ್ಟಿದ್ದ ಪಂಚೆಯನ್ನು ಸೊಂಟದ ಮೇಲಿನವರೆಗೂ ಎರಡು ಕೈಗಳಿಂದಲೂ ಎಳೆದುಕೊಂಡರು. ಅದರ ಒಂದು ಕೊನೆ ನೆಲ ಸಾರಿಸಲಾರಂಭಿಸಿತು. ಇನ್ನೊಂದು ಕೊನೆ ಇಳಿಬೀಳಲಾರಂಭಿಸಿತು.
ನಾನು ನನ್ನೊಡನೆ ಬಂದಿದ್ದವನನ್ನು ಮೆತ್ತಗೆ ಮೊಳಕೈಯಿಂದ ಗುದ್ದಿ ಪಿಸುಗುಟ್ಟಿದೆ; “ನೋಡು, ಪಂಚೆಯನ್ನು ಎಷ್ಟು ಚೆನ್ನಾಗಿ ಉಟ್ಟುಕೊಂಡಿದ್ದಾರೆ!”
ಇನ್ನೊಂದು ಕ್ಷಣದ ನಂತರ, “ಹೋಗು, ಹಾಳಾದ ಪಂಚೆಯೆ!” ಎಂಬುದಾಗಿ ಹೇಳಿ ಅದನ್ನು ತೆಗೆದು ಬಿಸಾಡೇಬಿಟ್ಟರು.
ಬಳಿಕ ದಿಗಂಬರರಾಗೇ ಕೊಠಡಿಯಲ್ಲಿ ತಿರುಗಾಡಲಾರಂಭಿಸಿದರು. ಕೊಠಡಿಯ ಉತ್ತರ ದಿಕ್ಕಿನ ಕೊನೆಯಲ್ಲಿದ್ದ ಕೋಲು ಮತ್ತು ಛತ್ರಿಯನ್ನು ತೆಗೆದುಕೊಂಡು ಬಂದು ಹೇಳಿದರು: “ಇವು ನಿಮ್ಮವೆ?”
ನಾನು “ಅಲ್ಲ” ಎಂದು ಹೇಳುವುದೇ ತಡ, ಅವರು ಹೇಳಿದರು: “ಇವು ನಿಮ್ಮವಲ್ಲ ಎಂಬುದಾಗಿ ಮೊದಲೇ ಗೊತ್ತಾಗಿಬಿಟ್ಟಿತು. ಮನುಷ್ಯನ ಛತ್ರಿ, ಕೋಲು ನೋಡಿದೊಡನೆಯೆ ಆತನ ಸ್ವಭಾವ ಏನು ಎಂಬುದನ್ನು ಅರಿತುಕೊಂಡುಬಿಡಬಲ್ಲೆ. ಈಗ ಇಲ್ಲಿ ಸ್ವಲ್ಪ ಹೊತ್ತಿನ ಹಿಂದೆ ಕುಳಿತು ನಾನು ಹೇಳಿದ್ದನ್ನೆಲ್ಲಾ ಒಂದು ಸ್ವಲ್ಪವೂ ಅರ್ಥಮಾಡಿಕೊಳ್ಳದೆ ‘ಗೊಳಕ್, ಗೊಳಕ್’ ಅಂತ ನುಂಗುತ್ತಿದ್ದನಲ್ಲ ಆತನದೆ ಖಂಡಿತವಾಗಿ ಆಗಿರಬೇಕು.”
ಸ್ವಲ್ಪ ಹೊತ್ತಾದನಂತರ ದಿಗಂಬರರಾಗಿಯೇ ಅವರು ಮಂಚದ ಉತ್ತರದ ಅಂಚಿನಲ್ಲಿ ಪಶ್ಚಿಮಾಭಿಮುಖವಾಗಿ ಕುಳಿತು ಕೇಳಿದರು: “ಒಳ್ಳೆಯದು, ನಾನೊಬ್ಬ ಅಸಭ್ಯನೆ?”
ನಾನು: “ಇಲ್ಲ, ನೀವು ನಿಜವಾಗಿಯೂ ಸಭ್ಯರೇ. ಈಗ ಏಕೆ ಈ ಪ್ರಶ್ನೆ?”
ಶ್ರೀರಾಮಕೃಷ್ಣರು: “ನೋಡು ಶಿವನಾಥನೇ ಮೊದಲಾದವರು ನನ್ನನ್ನು ಒಬ್ಬ ಸಭ್ಯ ಅಂತ ಪರಿಗಣಿಸುತ್ತಿಲ್ಲ. ಅವರು ಇಲ್ಲಿಗೆ ಬಂದಾಗ ನಾನು ಒಂದು ಪಂಚೆಯನ್ನು ಸೊಂಟಕ್ಕೆ ಸುತ್ತಿಕೊಳ್ಳಬೇಕಾಗುತ್ತದೆ. ನಿನಗೆ ಗಿರೀಶಘೋಷ ಗೊತ್ತೆ?”
ನಾನು: “ಯಾವ ಗಿರೀಶಘೋಷ? ಥಿಯೇಟರ್ ನಡೆಸುತ್ತಾನಲ್ಲ ಅವನೇನು?”
ಶ್ರೀರಾಮಕೃಷ್ಣರು: “ಹೌದು.”
ನಾನು: “ಆತನನ್ನು ನಾನು ನೋಡಿಲ್ಲ. ಪ್ರಸಿದ್ಧವಾದ ಆತನ ಹೆಸರನ್ನು ಕೇಳಿದ್ದೇನೆ.”
ಶ್ರೀರಾಮಕೃಷ್ಣರು: “ಆತ ಬಹಳ ಒಳ್ಳೆಯವ.”
ನಾನು: “ಆತ ಮದ್ಯಸೇವನೆ ಮಾಡುತ್ತಾನಂತಲ್ಲ?”
ಶ್ರೀರಾಮಕೃಷ್ಣರು: “ಸೇವಿಸಲಿ! ಸೇವಿಸಲಿ! ನೋಡೋಣ ಇನ್ನೆಷ್ಟು ದಿನ ಸೇವಿಸುತ್ತಾನೆ? ನಿನಗೆ ನರೇಂದ್ರ ಗೊತ್ತೆ?”
ನಾನು: “ಇಲ್ಲ.”
ಶ್ರೀರಾಮಕೃಷ್ಣರು: “ನೀನು ಆತನೊಡನೆ ಮಾತುಕತೆ ಆಡಬೇಕೆಂದು ನನಗೆ ಬಹಳ ಇಚ್ಛೆ ಇದೆ. ಆತ ಬಿ. ಎ. ಪಾಸು ಮಾಡಿದ್ದಾನೆ. ವಿವಾಹವಾಗಿಲ್ಲ.”
ನಾನು: “ಆಗಲಿ, ಆತನನ್ನು ಸಂಧಿಸುತ್ತೇನೆ.”
ಶ್ರೀರಾಮಕೃಷ್ಣರು: “ಇಂದು ರಾಮನ ಮನೆಯಲ್ಲಿ ಕೀರ್ತನೆ ನಡೆಯುತ್ತಿದೆ. ನೀನು ಅಲ್ಲಿ ಆತನನ್ನು ನೋಡಬಹುದು. ಸಾಯಂಕಾಲ ಅಲ್ಲಿಗೆ ದಯವಿಟ್ಟು ಹೋಗು.”
ನಾನು: “ಆಗಲಿ.”
ಶ್ರೀರಾಮಕೃಷ್ಣರು: “ಹಾಗೆ ಮಾಡು, ಖಂಡಿತ ಮರೆಯಬೇಡ.”
ನಾನು: “ನಿಮ್ಮಿಂದ ಈ ಹುಕುಮ್ ಆದ ಮೇಲೆ ನಾನು ಹೋಗದೆ ಇರುತ್ತೇನೆಯೇ? ಖಂಡಿತ ಹೋಗುತ್ತೇನೆ.”
ಕೊಠಡಿಯಲ್ಲಿದ್ದ ಪಟಗಳನ್ನೆಲ್ಲಾ ತೋರಿಸಿ ನನ್ನನ್ನು ಕೇಳಿದರು, ಬುದ್ಧನ ಪಟ ದೊರೆಯುವುದೆ ಎಂಬುದಾಗಿ.
ನಾನು: “ದೊರೆಯುತ್ತದೆ ಎಂಬುದಾಗಿ ಕೇಳಿದ್ದೇನೆ.”
ಶ್ರೀರಾಮಕೃಷ್ಣರು: “ಹಾಗಾದರೆ ನನಗೊಂದು ಕೊಂಡುಕೊಂಡು ಬಾ.”
ನಾನು: “ಒಳ್ಳೆಯದು. ಮತ್ತೆ ಇಲ್ಲಿಗೆ ಬರೋವಾಗ ಒಂದನ್ನು ತೆಗೆದುಕೊಂಡು ಬರುತ್ತೇನೆ.”
ಆದರೆ ಅಯ್ಯೋ! ಮತ್ತೆ ನಾನು ದಕ್ಷಿಣೇಶ್ವರಕ್ಕೆ ಹೋಗಲಾಗಲೇ ಇಲ್ಲ. ಅಂದಿನ ಸಾಯಂಕಾಲ ನರೇಂದ್ರನನ್ನು ಸಂಧಿಸಲು ನಾನು ರಾಮನ ಮನೆಗೆ ಹೋದೆ. ನರೇಂದ್ರನೊಡನೆ ಮಾತುಕತೆ ಆಡಿದೆ. ಅಲ್ಲಿ ಒಂದು ಕೊಠಡಿಯಲ್ಲಿ ಪರಮಹಂಸರು ಒಂದು ಒರಗುದಿಂಬನ್ನು ಒರಗಿಕೊಂಡು ಕುಳಿತಿದ್ದರು. ನರೇಂದ್ರ ಅವರ ಬಲಪಕ್ಕದಲ್ಲಿ ಕುಳಿತು ಕೊಂಡ, ನಾನು ಅವರ ಮುಂದುಗಡೆ ಕುಳಿತುಕೊಂಡೆ.
ಪರಮಹಂಸರು ನರೇಂದ್ರನಿಗೆ ಹೇಳಿದರು, ನನ್ನೊಡನೆ ಮಾತುಕತೆ ಆಡುವಂತೆ.
ಆದರೆ ನರೇಂದ್ರ ಹೇಳಿದ: “ನನಗೆ ಇಂದು ಭಯಂಕರ ತಲೆನೋವು ಬಂದಿದೆ. ಬಾಯಿ ತೆರೆಯಲೇ ಇಚ್ಛೆಯಾಗುತ್ತಿಲ್ಲ.”
ನಾನು: “ಹಾಗಾದರೆ ಬೇಡ. ಇನ್ನೊಂದು ದಿನ ಮಾತುಕತೆ ಆಡೋಣ.”
ಮತ್ತೆ ಆತನೊಡನೆ ಮಾತುಕತೆಯಾಡೋ ಸುಯೋಗ ದೊರೆತದ್ದು ೧೮೯೭ನೆ ಇಸವಿಯ ಮೇ ಅಥವಾ ಜೂನ್ ತಿಂಗಳಲ್ಲಿ ಆಲ್ಮೋರಾದಲ್ಲಿ. ಪರಮಹಂಸರ ಇಚ್ಛೆ ಪೂರ್ಣವಾಗಲೇಬೇಕು. ಅದು ಹನ್ನೆರಡು ವರ್ಷಗಳ ಬಳಿಕ ಪೂರ್ಣಗೊಂಡಿತು. ಆಹ, ಆ ಕೆಲವು ದಿವಸಗಳನ್ನು ನಾನು ಸ್ವಾಮಿ ವಿವೇಕಾನಂದರೊಡನೆ ಎಷ್ಟು ಆನಂದದಿಂದ ಕಳೆದೆ! ಕೆಲವು ವೇಳೆ ಅವರು ಇಳಿದುಕೊಂಡಿದ್ದ ಮನೆಯಲ್ಲಿ, ಇನ್ನು ಕೆಲವು ವೇಳೆ ನಾನು ಇಳಿದುಕೊಂಡಿದ್ದ ಮನೆಯಲ್ಲಿ. ಒಂದು ದಿನ ನಾವಿಬ್ಬರೇ ಬೆಟ್ಟದ ಮೇಲೆ ಆನಂದಪಟ್ಟೆವು. ಬಳಿಕ ಅವರನ್ನು ಸಂಧಿಸುವ ಸುಯೋಗವೇ ದೊರೆಯಲಿಲ್ಲ. ಪರಮಹಂಸರ ಇಚ್ಛೆಯನ್ನು ಪೂರ್ಣಮಾಡಲೇ ಇರಬೇಕು ಅಂತ ಕಾಣುತ್ತೆ ನಾನು ಅವರನ್ನು ಆಲ್ಮೋರಾದಲ್ಲಿ ಸಂಧಿಸಿದ್ದು.
ನಾನು ಪರಮಹಂಸರನ್ನು ನೋಡಿದ್ದು ಒಂದು ನಾಲ್ಕೈದು ಸಲಕ್ಕಿಂತ ಹೆಚ್ಚೇನಿಲ್ಲ; ಆದರೆ ಆ ಸ್ವಲ್ಪ ಕಾಲದೊಳಗೇ ನನಗೂ ಅವರಿಗೂ ಸ್ನೇಹ ಅಷ್ಟೊಂದು ಬೆಳೆದುಬಿಟ್ಟಿತು. ನಾವಿಬ್ಬರೂ ಸಹಪಾಠಿಗಳೇ ಎಂಬುದಾಗಿ ನನಗೆ ತೋರಲಾರಂಭಿಸಿತು. ಅವರೊಡನೆ ನಾನು ಎಷ್ಟು ಸಲಿಗೆಯಿಂದ ಮಾತನಾಡುತ್ತಿದ್ದೆ ಏನು ಕತೆ! ಆದರೆ ಅವರಿಂದ ಬೀಳ್ಕೊಂಡು ಹೊರಟೊಡನೆ ಮನಸ್ಸಿಗೆ ಹೊಳೆಯುತ್ತಿತ್ತು: “ಅಬ್ಬಬ್ಬ! ನಾನು ಹೋಗಿದ್ದುದು ಯಾರ ಹತ್ತಿರಕ್ಕೆ!” ಆ ಕೆಲವು ಸಂದರ್ಭಗಳಲ್ಲಿ ನಾನು ಏನೇನನ್ನು ನೋಡಿದೆನೊ, ನನಗೇನೇನು ಉಪದೇಶ ದೊರೆಯಿತೊ ಅವೆಲ್ಲಾ ಕೂಡಿ ನನ್ನ ಇಡೀ ಜೀವನವನ್ನೇ ಮಧುಮಯವನ್ನಾಗಿ ಮಾಡಿಬಿಟ್ಟಿವೆ. ದಿವ್ಯಾಮೃತವನ್ನೇ ವರ್ಷಿಸುತ್ತಿದ್ದ ಅವರ ನಗುವನ್ನು ನಾನು ಹೃದಯಾಂತರಾಳದಲ್ಲಿ ರಕ್ಷಿಸಿಕೊಂಡಿರುವೆನು. ಅದು ನನ್ನಂತಹ ದೌರ್ಭಾಗ್ಯನ ಎಂದಿಗೂ ಬರಿದಾಗದ ನಿಧಿಯಾಗಿದೆ. ಆ ನಗುವಿನಿಂದ ವರ್ಷಿಸಲ್ಪಟ್ಟ ಆನಂದದ ಒಂದು ಬಿಂದು ಅಷ್ಟೊಂದು ದೂರದಲ್ಲಿರುವ ಕೋಟ್ಯನುಕೋಟಿ ಅಮೆರಿಕನ್ನರ ಜೀವನವನ್ನು ಮಧುಮಯವನ್ನಾಗಿ ಮಾಡುತ್ತಿದೆ ಎಂಬುದನ್ನು ಭಾವಿಸಿದರೇ ನನ್ನ ಹೃದಯ ಆನಂದದಿಂದ ತುಂಬಿತುಳುಕಾಡುತ್ತಾ ನಲಿದಾಡುತ್ತದೆ. ನನಗೇ ಹೀಗನ್ನಿಸುತ್ತಿರುವಾಗ ನೀನೆಂಥ ಸೌಭಾಗ್ಯಶಾಲಿ ಎಂಬುದನ್ನು ನೀನೇ ಊಹಿಸಿಕೊ.
1. ಮಾಸ್ಟರ್ ಮಹಾಶಯನಿಗೆ ಅಶ್ವಿನೀಕುಮಾರದತ್ತ ಬರೆದ ಪತ್ರ ಅಶ್ವಿನೀಕುಮಾರದತ್ತ ವಂಗದೇಶದ ಸಂತರ ಪಂಕ್ತಿಗೆ ಒಬ್ಬ ದೇಶಭಕ್ತ.