೧ನೆ ಜನವರಿ ೧೮೮೧, ಶನಿವಾರ
ಬ್ರಾಹ್ಮಸಮಾಜದ ವಾರ್ಷಿಕೋತ್ಸವ ಇನ್ನೇನು ಬರಲಿದೆ. ಇಂದು ಬ್ರಾಹ್ಮಸಮಾಜದ ಮುಖ್ಯಸ್ಥ ಕೇಶವಚಂದ್ರಸೇನ ಪರಮಹಂಸರ ದರ್ಶನ ಪಡೆಯಲು ಜಹಜಿನಲ್ಲಿ ದಕ್ಷಿಣೇ ಶ್ವರಕ್ಕೆ ಬರುವನೆಂಬುದಾಗಿ ಆತನ ಅನುಯಾಯಿಗಳು–ಪ್ರತಾಪ, ತ್ರೈಲೋಕ್ಯ, ಜಯ ಗೋಪಾಲ, ಇನ್ನೂ ಅನೇಕ ಬ್ರಾಹ್ಮಭಕ್ತರು–ಉತ್ಸುಕರಾಗಿ ದಕ್ಷಿಣದ ಕಡೆಗೇ ನೋಡುತ್ತಾ ಪರಮಹಂಸರ ಕೊಠಡಿಯಲ್ಲಿ ಕುಳಿತಿದ್ದಾರೆ. ರಾಮ, ಮನಮೋಹನ ಇವರೇ ಮೊದಲಾದ ಪರಮಹಂಸರ ಭಕ್ತರು ಅಲ್ಲಿ ಕುಳಿತಿದ್ದಾರೆ. ಕೊಠಡಿಯಲ್ಲಿ ಏನೇನೋ ಕಾಡುಹರಟೆಯ ಶಬ್ದ ಸುಮ್ಮನೆ ಮೊಳಗುತ್ತಿದೆ. ಅದು ಕೇಶವಸೇನನು ಬರುವವರೆಗೂ ಮುಂದುವರಿಯಿತು.
ಈಗ ಕೇಶವಸೇನನು ಕೈಯಲ್ಲಿ ಎರಡು ಬಿಲ್ವದ ಹಣ್ಣುಗಳನ್ನು ಮತ್ತು ಹೂವಿನ ಒಂದು ಗೊಂಚಲನ್ನು ಹಿಡಿದು ಪರಮಹಂಸರ ಕೊಠಡಿಯನ್ನು ಪ್ರವೇಶಿಸಿದ. ಅವನ್ನು ಶ್ರೀರಾಮಕೃಷ್ಣರ ಪಕ್ಕದಲ್ಲಿ ಇಟ್ಟು ಅವರ ಪಾದಗಳನ್ನು ಸ್ಪರ್ಶಿಸಿ ಅವರಿಗೆ ಸಾಷ್ಟಾಂಗ ಪ್ರಣಾಮಮಾಡಿದ. ಒಡನೆ ಪರಮಹಂಸರು ಆತನಿಗೆ ಪ್ರತಿ ಸಾಷ್ಟಾಂಗ ಪ್ರಣಾಮ ಮಾಡಿದರು. ಈಗ ಪರಮಹಂಸರು ಆನಂದದಿಂದ ನಗುತ್ತ ಕೇಶವಸೇನನೊಡನೆ ಮಾತುಕತೆಗಳಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಕೇಶವ, ನಿನಗೇನೊ ನನ್ನನ್ನು ಕಂಡರೆ ಅಕ್ಕರೆ. ಆದರೆ ನಿನ್ನ ಅನುಯಾಯಿಗಳಿಗೆ ನಾನು ಬೇಕಾಗಿಲ್ಲ. ನಿನ್ನ ಅನುಯಾಯಿಗಳಿಗೆ ಹೇಳುತ್ತಿದ್ದೆ: ‘ಈಗ ಗೊಂದಲವನ್ನು ಎಬ್ಬಿಸೋಣ, ಬಳಿಕ ಗೋವಿಂದ ಬರುತ್ತಾನೆ.’ (ಕೇಶವನ ಅನುಯಾಯಿಗಳಿಗೆ) ಇಗೋ ನೋಡಿ ಇಲ್ಲಿ ನಿಮ್ಮ ಗೋವಿಂದ!
“ನಿನ್ನನ್ನು ರಂಗಮಂಟಪದಲ್ಲಿ ಎದುರುಗೊಳ್ಳಲು ನಾವು ಇದುವರೆಗೆ ಸುಮ್ಮನೆ ಚಡ ಪಡಿಸುತ್ತಿದ್ದೆವು. ಗೋವಿಂದನ ದರ್ಶನವನ್ನು ಸಹಜವಾಗಿ ಪಡೆಯಲಾಗುವುದಿಲ್ಲ. ಕೃಷ್ಣಲೀಲೆಯ ಬಯಲುನಾಟಕದಲ್ಲಿ ನಾರದ ಬೃಂದಾವನವನ್ನು ಪ್ರವೇಶಿಸಿ ವ್ಯಾಕುಲ ಹೃದಯದಿಂದ, ‘ಪ್ರಾಣ ಹೇ ಗೋವಿಂದ ಮಮಜೀವನ’ ಎಂದು ಪ್ರಾರ್ಥಿಸಿದೊಡನೆಯೇ ಶ್ರೀಕೃಷ್ಣ ಗೋಪಾಲರೊಡನೆ ರಂಗಮಂಟಪವನ್ನು ಪ್ರವೇಶಿಸುವುದನ್ನೂ ಬಳಿಕ ಸಖಿಯರು ಮತ್ತು ಗೋಪಿಯರು ಅವರನ್ನು ಹಿಂಬಾಲಿಸುವುದನ್ನೂ ನೀನು ನೋಡಿರಲೇಬೇಕು. ವ್ಯಾಕುಲತೆ ಇಲ್ಲದಿದ್ದರೆ ಆತನ ದರ್ಶನ ದೊರೆಯದು.
“ಹೋಗಲಿ, ಕೇಶವ, ನಮಗೇನಾದರು ಸ್ವಲ್ಪ ಹೇಳು! ನಿನ್ನ ಮಾತನ್ನು ಕೇಳಲು ಎಲ್ಲರೂ ಕಾತರರಾಗಿ ಕುಳಿತಿದ್ದಾರೆ.”
ಕೇಶವಸೇನ (ವಿನಯದಿಂದ ನಗುತ್ತ): “ಇಲ್ಲಿ ನಾನು ಬಾಯನ್ನು ಬಿಡುವುದೆಂದರೆ ‘ಗುಡ್ಡಕ್ಕೆ ಕಲ್ಲು ಹೊತ್ತ ಹಾಗೆ.”’
ಶ್ರೀರಾಮಕೃಷ್ಣರು (ನಗುತ್ತ): “ಆದರೆ ಗೊತ್ತೆ, ಭಕ್ತರ ಸ್ವಭಾವ ಗಾಂಜಾಖೋರರ ಸ್ವಭಾವದ ಹಾಗೆ ಎಂಬುದು? ಗಾಂಜಾ ಚಿಲುಮೆಯನ್ನು ನೀನು ಒಮ್ಮೆ ಸೇದಿದೆ ಎಂದರೆ ನಾನೂ ಒಮ್ಮೆ ಸೇದುತ್ತೇನೆ.” (ಎಲ್ಲರೂ ನಗುತ್ತಿದ್ದಾರೆ.)
ಘಂಟೆ ಅಪರಾಹ್ನ ನಾಲ್ಕು. ಕಾಳೀದೇವಾಲಯದ ನಹಬತ್ ಖಾನೆಯಿಂದ ವಾದ್ಯ ಕೇಳಿ ಬರಲಾರಂಭಿಸಿತು.
ಶ್ರೀರಾಮಕೃಷ್ಣರು ಕೇಶವಸೇನ ಮೊದಲಾದವರಿಗೆ: “ಶಹನಾಯಿ ಎಷ್ಟು ಇಂಪಾಗಿ ಕಿವಿಗೆ ಬೀಳುತ್ತಿದೆ ನೋಡಿದೆಯಾ? ಒಬ್ಬ ಕೇವಲ ‘ಪ್ಞೋ’ ಅಂತ ಊದುತ್ತಿದ್ದಾನೆ, ಇನ್ನೊಬ್ಬ ವಿವಿಧ ರಾಗರಾಗಿಣಿಗಳ ಮನೋಹರ ತರಂಗಗಳನ್ನು ಎಬ್ಬಿಸುತ್ತಿದ್ದಾನೆ. ನನ್ನ ಭಾವ ಈ ಎರಡನೆಯವನ ಹಾಗೆ. ಏಳು ರಂಧ್ರಗಳಿರುವ ವಾದ್ಯ ನನ್ನ ಕೈಯಲ್ಲಿರುವಾಗ ನಾನೇಕೆ ಕೇವಲ ‘ಪ್ಞೋ’ ಅಂತ ಊದಲಿ? ನಾನೇಕೆ ಕೇವಲ ಹೇಳಲಿ ‘ಸೋಠ್ಹಮ್.’ ನಾನು ಏಳು ರಂಧ್ರಗಳ ಮೂಲಕವೂ ವಿವಿಧ ರಾಗರಾಗಿಣಿಗಳನ್ನು ಹೊರಗೆಡಹುತ್ತೇನೆ. ಕೇವಲ ‘ಬ್ರಹ್ಮ! ಬ್ರಹ್ಮ’ ಅಂತ ಏಕೆ ಹೇಳುತ್ತಿರಲಿ? ನಾನು ಎಲ್ಲಾ ಭಾವಗಳಿಂದಲೂ–ಶಾಂತ, ದಾಸ್ಯ, ವಾತ್ಸಲ್ಯ, ಸಖ್ಯ, ಮಧುರ-ಆತನನ್ನು ಕರೆಯುತ್ತೇನೆ, ಆತನೊಡನೆ ಆನಂದಪಡುತ್ತೇನೆ, ಆತನೊಡನೆ ವಿಲಾಸಿಸುತ್ತೇನೆ.”
ಕೇಶವಸೇನ ಆಶ್ಚರ್ಯಚಕಿತನಾಗಿ ಈ ಮಾತುಗಳನ್ನೆಲ್ಲ ಕೇಳುತ್ತಿದ್ದಾನೆ. ಆತ ಬ್ರಾಹ್ಮ ಭಕ್ತರಿಗೆ ಹೇಳುತ್ತಿದ್ದಾನೆ: “ಭಕ್ತಿ ಮತ್ತು ಜ್ಞಾನದ ಸಂಬಂಧವಾಗಿ ಇಷ್ಟು ಅದ್ಭುತವಾದ ಸುಂದರವಾದ ವಿವರಣೆಯನ್ನು ನಾನು ಇದುವರೆಗೆ ಯಾರ ಬಾಯಿಂದಲೂ ಕೇಳಿರಲಿಲ್ಲ!”
ಕೇಶವಸೇನ (ಶ್ರೀರಾಮಕೃಷ್ಣರಿಗೆ): “ಇನ್ನೆಷ್ಟು ದಿನ ನೀವು ಈ ರೀತಿಯಾಗಿ ಗೋಪ್ಯವಾಗಿ ಇರಬಲ್ಲಿರಿ? ಕ್ರಮೇಣ ಈ ಸ್ಥಳವನ್ನು ಜನರ ಗುಂಪು ಗುಂಪೇ ಮುತ್ತಲಾರಂಭಿಸುತ್ತದೆ.”
ಶ್ರೀರಾಮಕೃಷ್ಣರು: “ಏಕೆ ಹೀಗೆಲ್ಲ ಹೇಳುತ್ತಿದ್ದೀಯೆ? ನಾನು ಉಂಡು, ತಿಂದು ಭಗವನ್ನಾಮಜಪ ಮಾಡುತ್ತ ಸುಮ್ಮನೆ ಇದ್ದೇನೆ. ಜನರು ಈ ಸ್ಥಳವನ್ನು ಗುಂಪು ಗುಂಪಾಗಿ ಮುತ್ತುವುದು ಇದೆಲ್ಲ ನನಗೆ ಏನೂ ಗೊತ್ತಿಲ್ಲ. ಹನುಮಂತ ಒಮ್ಮೆ ಹೇಳಿದ: ‘ನನಗೆ ವಾರವೇ ಆಗಲಿ, ತಿಥಿಯೇ ಆಗಲಿ, ಇವು ಯಾವುವೂ ಗೊತ್ತಿಲ್ಲ. ನಾನು ಕೇವಲ ರಾಮಚಿಂತನೆಯನ್ನು ಮಾಡಿಕೊಂಡಿದ್ದೇನೆ.”’
ಕೇಶವ: “ಜನ ಬಂದು ನಿಮ್ಮನ್ನು ಮುತ್ತೋ ಹಾಗೆ ಮಾಡುತ್ತೇನೆ. ಆದರೆ ಅವರೆಲ್ಲರೂ ನಿಮ್ಮ ಈ ಸ್ಥಳಕ್ಕೆ ಬಂದೇ ನಿಮ್ಮನ್ನು ಮುತ್ತಬೇಕು.”
ಶ್ರೀರಾಮಕೃಷ್ಣರು: “ನಾನು ಎಲ್ಲರ ಪಾದಗಳ ಧೂಳಿನ ಧೂಳು. ಯಾರು ಕೃಪೆ ಮಾಡಿ ಇಲ್ಲಿ ಬರುವರೋ ಅವರಿಗೆ ಸುಸ್ವಾಗತ.”
ಕೇಶವ: “ನೀವು ಏನೂ ಬೇಕಾದರೂ ಹೇಳಿಕೊಳ್ಳಿ. ನಿಮ್ಮ ಅವತರಣ ವ್ಯರ್ಥವಾಗಿ ಹೋಗದು.”
ಇಷ್ಟರಲ್ಲಿ ಕೀರ್ತನೆಯ ವ್ಯವಸ್ಥೆ ನಡೆದು ಅನೇಕ ಭಕ್ತರು ಭಾಗತೆಗೆದುಕೊಂಡಿದ್ದಾರೆ. ಅವರ ಗುಂಪು ಪಂಚವಟಿಯಿಂದ ಹೊರಟು ಪರಮಹಂಸರ ಕೊಠಡಿಯ ಕಡೆ ಮುಂದು ವರಿಯಲಾರಂಭಿಸಿತು. ಹೃದಯ ಶಿಂ (ಕೊಂಬು)ವನ್ನು ಊದುತ್ತಿದ್ದಾನೆ. ಗೋಪಿದಾಸ ಮೃದಂಗವನ್ನು ಬಾಜಿಸುತ್ತಿದ್ದಾನೆ. ಇನ್ನಿಬ್ಬರು ಭಕ್ತರು ತಾಳವನ್ನು ಹೊಡೆಯುತ್ತಿದ್ದಾರೆ.
ಪರಮಹಂಸರು ಹಾಡಲಾರಂಭಿಸಿದ್ದಾರೆ:
ಶ್ರೀಹರಿನಾಮವ ನುತಿಸೆ ನಿರಂತರ
ಹಿರಿಯಾನಂದದಿ ನೀನಿರುವೆ,
ಸಿರಿವೈಕುಂಠವ ನೀ ಪಡೆವೆ
ಮೋಕ್ಷಫಲವ ನೀ ಸೇವಿಸುವೆ.
ಶ್ರೀ ಹರಿನಾಮದ ಮಹಿಮೆ ಅಂಟುತಿದೆ,
ದೇವದೇವರಾ ಶಿವನೇ ಹರಿಯನು
ಐದು ಮುಖದೊಳು ಭಜಿಸುವನು
ಪರಮಹಂಸರು ಸಿಂಹಪರಾಕ್ರಮದಿಂದ ನರ್ತಿಸಲಾರಂಭಿಸಿದರು. ಈಗ ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಪ್ರಕೃತಿಸ್ಥರಾದನಂತರ ಕೊಠಡಿಯಲ್ಲೇ ಕುಳಿತು ಕೇಶವಸೇನ ಮೊದಲಾದವರೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಎಲ್ಲಾ ಮಾರ್ಗಗಳಿಂದಲೂ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬಹುದು. ಯಾವ ರೀತಿಯಾಗಿ ನೀವೆಲ್ಲರೂ ಈ ಸ್ಥಳವನ್ನು ಬಂಡಿಯ ಮೂಲಕವೊ, ದೋಣಿಯ ಮೂಲಕವೊ, ಜಹಜಿನ ಮೂಲಕವೊ, ಕಾಲುನಡಗೆಯಿಂದಲೂ ಮುಟ್ಟಿದಿರೊ ಹಾಗೆ, ನೀವು ನಿಮ್ಮ ನಿಮ್ಮ ಅನುಕೂಲತೆ ಮತ್ತು ರುಚಿಗನುಸಾರವಾಗಿ ಈ ಸ್ಥಳವನ್ನು ಬಂದು ತಲುಪಿದಿರಿ; ಆದರೆ ಮಾತ್ರ ಎಲ್ಲರ ಉದ್ದೇಶವೂ ಒಂದೇ. ಕೆಲವರು ಮುಂಚೆ ಇನ್ನು ಕೆಲವರು ಆಮೇಲೆ ಇಲ್ಲಿಗೆ ಬಂದು ಸೇರಿದಿರಿ; ಆದರೆ ಎಲ್ಲರೂ ಈ ಸ್ಥಳಕ್ಕೆ ಬಂದು ಸೇರಿಬಿಟ್ಟಿರಿ.
“ನಮ್ಮ ಉಪಾಧಿ ಕಡಮೆಕಡಮೆಯಾದಷ್ಟೂ ಭಗವಂತನು ನಮ್ಮ ಹತ್ತಿರಹತ್ತಿರಕ್ಕೆ ಬರಲಾರಂಭಿಸುತ್ತಾನೆ. ದಿಣ್ಣೆ ಮೇಲೆ ಮಳೆನೀರು ನಿಲ್ಲದು; ತಗ್ಗು ಪ್ರದೇಶದಲ್ಲಿ ಮಾತ್ರ ಶೇಖರವಾಗುತ್ತದೆ. ಅದೇ ರೀತಿ ಆತನ ಕೃಪಾವಾರಿ ಅಹಂಕಾರದ ದಿಣ್ಣೆ ಮೇಲೆ ನಿಲ್ಲದು. ಭಗವಂತನೊಡನೆ ದೀನ ನಮ್ರಭಾವದಿಂದ ನಡೆದುಕೊಳ್ಳುವುದೇ ಶ್ರೇಯಸ್ಕರ.
“ನಾವು ಬಹಳ ಎಚ್ಚರಿಕೆಯಿಂದ ಇರಬೇಕು. ಉಡಿಗೆ-ತೊಡಿಗೆಗಳು ಅಹಂಕಾರವನ್ನು ಉತ್ಪತ್ತಿ ಮಾಡಿಬಿಡುತ್ತವೆ. ಕಾಮಾಲೆ ರೋಗದಿಂದ ನರಳುವ ಮನುಷ್ಯ ಕರಿ ಅಂಚಿನ ಪಂಚೆಯನ್ನು ಉಟ್ಟಿದ್ದೇ ಆದರೆ ಆತನೂ ಸಾಧುಬಾಬುವಿನ ಲಘುಗೀತೆಗಳನ್ನು ಹಾಡೋದನ್ನು ನೋಡಿದ್ದೇನೆ. ಕೆಲವರು ಕಾಲಿಗೆ ಬೂಟ್ಸ್ ಹಾಕಿಕೊಳ್ಳುವುದೇ ತಡ, ಒಡನೆಯೇ ಇಂಗ್ಲಿಷಿನಲ್ಲಿ ಮಾತನಾಡಲು ಆರಂಭಿಸುತ್ತಾರೆ. ಸಾಮಾನ್ಯಮನುಷ್ಯ ಕಾಷಾಯವಸ್ತ್ರಧಾರಿಯಾದ್ದೇ ಆದರೆ, ಆತನಿಗೆ ಅಹಂಕಾರ ಬಂದುಬಿಡುತ್ತದೆ, ಯಾರಾದರೂ ಆತನಿಗೆ ಒಂದು ಕಿಂಚಿತ್ ಉದಾಸೀನತೆಯನ್ನು ತೋರಿಸಿದರೇ ಸಾಕು, ಒಡನೆಯೆ ಆತನಲ್ಲಿ ಕೋಪ ಉಂಟಾಗಿಬಿಡುತ್ತದೆ.
“ವ್ಯಾಕುಲರಾಗದೆ ಭಗವಂತನ ದರ್ಶನ ಪಡೆಯಲಾಗುವುದಿಲ್ಲ. ಜೀವನದ ಸುಖೋಪಭೋಗಗಳನ್ನು ಪೂರ್ಣವಾಗಿ ಅನುಭವಿಸುವ ತನಕ ವ್ಯಾಕುಲತೆ ಉಂಟಾಗದು. ಯಾರು ಕಾಮಕಾಂಚನದ ಮಧ್ಯೆ ವಾಸಿಸುತ್ತಿದ್ದಾರೊ, ಯಾರ ಸುಖೋಪಭೋಗಗಳು ಇನ್ನೂ ಮುಗಿದಿಲ್ಲವೊ, ಅವರಿಗೆ ವ್ಯಾಕುಲತೆ ಉಂಟಾಗದು.
“ನಾನು ಕಾಮಾರಪುಕುರದಲ್ಲಿ ಇದ್ದಾಗ ಹೃದಯನ ನಾಲ್ಕೊ ಐದು ವರ್ಷದ ಒಂದು ಮಗು ತನ್ನ ಇಡೀ ದಿನವನ್ನೆಲ್ಲ ನನ್ನೊಡನೆಯೇ ಕಳೆಯುತ್ತಿತ್ತು. ಇಡೀ ದಿನವನ್ನೆಲ್ಲ ನನ್ನ ಹತ್ತಿರ ಆಟಪಾಠಗಳಲ್ಲಿ ತೊಡಗಿ ಪ್ರಪಂಚವನ್ನೇ ಮರೆತುಬಿಡುತ್ತಿತ್ತು. ಆದರೆ ಸಾಯಂಕಾಲ ವಾಗುವುದೇ ತಡ, ಒಡನೆಯೇ ತನ್ನ ತಾಯಿಯ ಹತ್ತಿರಕ್ಕೆ ಹೋಗಬೇಕೆಂದು ಚಂಡಿ ಹಿಡಿಯುತ್ತಿತ್ತು. ತಾಯಿಯನ್ನು ಮರೆಸಲು ಆ ಹುಡುಗನಿಗೆ ಹೇಳುತ್ತಿದ್ದೆ: ‘ಈ ಪಾರಿವಾಳವನ್ನು ಹಿಡಿದು ಕೊಡುತ್ತೇನೆ, ಇದು ಕೊಡುತ್ತೇನೆ, ಅದು ಕೊಡುತ್ತೇನೆ.’ ಆ ಮಗು ಏನು ಮಾಡಿದರೂ ತಾಯಿಯನ್ನು ಮರೆಯದೆ ಅಳುತ್ತ ಅಳುತ್ತ ಹೇಳುತ್ತಿತ್ತು: ‘ಉಹ್ಞೂ, ಏನು ಬೇಡ, ತಾಯಿಯ ಹತ್ತಿರಕ್ಕೆ ಹೋಗಬೇಕು.’ ಆಗ ಮಗುವಿಗೆ ಆಟ ಬೇಕಾಗಿರಲಿಲ್ಲ. ಅದರ ಆ ಅವಸ್ಥೆಯನ್ನು ನೋಡಿ ನಾನು ಅಳುತ್ತಿದ್ದೆ.
“ನಾವು ಈ ರೀತಿಯಾಗಿ–ಮಗುವಿನ ಹಾಗೆ–ಭಗವಂತನ ಸಾಕ್ಷಾತ್ಕಾರಕ್ಕಾಗಿ ಅಳ ಬೇಕು. ಇದಕ್ಕೆ ವ್ಯಾಕುಲತೆ ಅಂತ ಹೆಸರು. ಆಟ-ಊಟ ಯಾವುದೂ ಆಗ ರುಚಿಸದು. ಸುಖೋಪಭೋಗಗಳನ್ನು ಪೂರ್ಣವಾಗಿ ಅನುಭವಿಸಿ ಮುಗಿಸಿದೊಡನೆಯೇ ಮನುಷ್ಯನಿಗೆ ಈ ವಿಧವಾದ ವ್ಯಾಕುಲತೆ ಉಂಟಾಗುತ್ತದೆ. ಆಗ ಭಗವಂತನಿಗಾಗಿ ಸುಮ್ಮನೆ ಅಳಲಾರಂಭಿ ಸುತ್ತಾನೆ.”
ಪರಮಹಂಸರ ಈ ಮಾತುಗಳನ್ನು ಎಲ್ಲರೂ ಆಶ್ಚರ್ಯಚಕಿತರಾಗಿ ಕೇಳುತ್ತ ನಿಶ್ಶಬ್ದರಾಗಿ ಕುಳಿತಿದ್ದಾರೆ. ಆಗಲೆ ಸಾಯಂಕಾಲವಾಗಿಬಿಟ್ಟಿದೆ. ಕೊಠಡಿಗೆ ದೀಪವನ್ನು ಹಚ್ಚಿ ಇಡಲಾಯಿತು. ಈಗ ಕೇಶವ ಮೊದಲಾದವರ ಫಲಾಹಾರಕ್ಕೆ ವ್ಯವಸ್ಥೆ ನಡೆಯುತ್ತಿದೆ.
ಕೇಶವ (ನಗುತ್ತ): “ಇಂದು ಕೇವಲ ಪುರಿ ಮಾತ್ರ?”
ಶ್ರೀರಾಮಕೃಷ್ಣರು (ನಗುತ್ತ): “ಅದು ಹೃದೂನಿಗೇ ಗೊತ್ತು.”
ಎಲೆ ಹಾಕಲಾಯಿತು. ಮೊದಲು ಪುರಿ, ಬಳಿಕ ಪೂರಿಪಲ್ಯ ಬಡಿಸಲಾಯಿತು. ಎಲ್ಲರೂ ಆನಂದದಿಂದ ಫಲಾಹಾರವನ್ನು ಸ್ವೀಕರಿಸಿದರು. ಫಲಾಹಾರ ಮುಗಿಯುವುದರೊಳಗಾಗಿ ರಾತ್ರಿ ಹತ್ತಾಯಿತು.
ಪರಮಹಂಸರು ಕೇಶವಸೇನ ಮೊದಲಾದವರೊಡನೆ ಪಂಚವಟಿಗೆ ಹೋದರು.
ಶ್ರೀರಾಮಕೃಷ್ಣರು (ಕೇಶವಸೇನ ಮೊದಲಾದವರಿಗೆ): “ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಂಡ ಮೇಲೆ ಈ ಜಗತ್ತಿನಲ್ಲಿ ಆನಂದದಿಂದ ಇರಬಹುದು. ಮೊದಲು ಅಜ್ಜಿಯನ್ನು ಮುಟ್ಟಿಬಿಟ್ಟು, ಬಳಿಕ ಏಕೆ ಕಣ್ಣು ಮುಚ್ಚಾಲೆ ಆಟದಲ್ಲಿ ತೊಡಗಬಾರದು?
“ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಂಡ ನಂತರ, ಭಕ್ತ ಕೆಸರುಮೀನಿನ ಹಾಗೆ, ಈ ಜಗತ್ತಿನಲ್ಲಿ ನಿರ್ಲಿಪ್ತನಾಗಿರುತ್ತಾನೆ. ಕೆಸರುಮೀನು ಕೆಸರಿನಲ್ಲಿ ವಾಸಿಸುತ್ತಿದ್ದರೂ ಕೆಸರಿನಿಂದ ಅದು ನಿರ್ಲಿಪ್ತವಾಗಿರುತ್ತದೆ.”
ಘಂಟೆ ರಾತ್ರಿ ಹನ್ನೊಂದಾಯಿತು. ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಲು ವ್ಯಸ್ತರಾಗಿದ್ದಾರೆ. ಪ್ರತಾಪ ಹೇಳಿದ:
“ಈ ರಾತ್ರಿಯನ್ನು ಇಲ್ಲೇ ಕಳೆದುಬಿಟ್ಟರೆ ಬಹಳ ಚೆನ್ನಾಗಿರುತ್ತದೆ.”
ಶ್ರೀರಾಮಕೃಷ್ಣರು ಕೇಶವಸೇನನಿಗೆ: “ಹೌದು, ಈ ರಾತ್ರಿಯನ್ನು ಏಕೆ ಇಲ್ಲೇ ಕಳೆಯಬಾರದು?”
ಕೇಶವ (ನಗುತ್ತ): “ಕೆಲಸಕಾರ್ಯಗಳಿವೆ. ಹಿಂದಿರುಗಿ ಹೋಗಬೇಕು.”
ಶ್ರೀರಾಮಕೃಷ್ಣರು: “ಏಕೆ? ಬಹುಶಃ ಮೀನಿನ ಕುಕ್ಕೆ ಹತ್ತಿರ ಇಲ್ಲದಿದ್ದರೆ ನಿದ್ದೆ ಹತ್ತೋದಿಲ್ಲ ಅಂತ ಕಾಣುತ್ತೆ. ಒಮ್ಮೆ ರಾತ್ರಿ ವೇಳೆಯಲ್ಲಿ ಒಬ್ಬ ಬೆಸ್ತರವಳು ಹೂವಿನ ತೋಟದವಳ ಅತಿಥಿಯಾದಳು. ಆಕೆಗೆ ಮಲಗಲು ಹೂವು ತುಂಬಿದ್ದ ಕೊಠಡಿಯನ್ನು ಬಿಟ್ಟುಕೊಡಲಾಯಿತು. ಆದರೆ ಅಲ್ಲಿ ಆಕೆಗೆ ನಿದ್ದೆಯೇ ಹತ್ತದೆಹೋಯಿತು. (ಎಲ್ಲರೂ ನಗುತ್ತಿದ್ದಾರೆ.) ಆಕೆ ಸುಮ್ಮನೆ ಈ ಕಡೆಯಿಂದ ಆ ಕಡೆಗೆ ಆ ಕಡೆಯಿಂದ ಈ ಕಡೆಗೆ ಹೊರಳಾಡುತ್ತಲೇ ಇದ್ದಳು. ಅದನ್ನು ನೋಡಿ ಆ ತೋಟದವಳು ಕೇಳಿದಳು: ‘ಏನು ಸಮಾಚಾರ? ಏಕೆ ಸುಮ್ಮನೆ ಹೊರಳಾಡುತ್ತಾ ಇದ್ದೀಯೆ?’ ಬೆಸ್ತರವಳು ಹೇಳಿದಳು: ‘ಏಕೋ ನಿದ್ದೆ ಹತ್ತುತ್ತಿಲ್ಲ. ಏನಿಲ್ಲಿ ಈ ಹೂವುಗಳ ವಾಸನೆ! ಇದಕ್ಕಾಗೇ ಇರಬೇಕು. ದಯವಿಟ್ಟು ನೀನು ಆ ಮೀನಿನ ಕುಕ್ಕೆಯನ್ನು ನನ್ನ ಹತ್ತಿರಕ್ಕೆ ತಂದುಕೊಡಬಲ್ಲೆಯಾ?’ ಬಳಿಕ ಆ ಬೆಸ್ತರವಳು ತನ್ನ ಆ ಕುಕ್ಕೆಗೆ ನೀರು ಚಿಮುಕಿಸಿ ಅದನ್ನು ಮೂಗಿನ ಹತ್ತಿರ ಇಟ್ಟುಕೊಂಡು ಅದರ ಗಂಧವನ್ನು ಸವಿಯುತ್ತ ಸವಿಯುತ್ತ ಗಾಢನಿದ್ರೆಯನ್ನು ಮಾಡಿದಳು.” (ಎಲ್ಲರೂ ಗಹಗಹಿಸಿ ನಗುತ್ತಿದ್ದಾರೆ.)
ಬೀಳ್ಕೊಳ್ಳುವಾಗ ಕೇಶವಸೇನ ಪರಮಹಂಸರ ಪಾದಗಳನ್ನು ಸ್ಪರ್ಶಿಸಿ ಅವರಿಗೆ ಸಾಷ್ಟಾಂಗ ಪ್ರಣಾಮಮಾಡಿ, ತಾನು ಅವರಿಗೆ ಅರ್ಪಿಸಿದ್ದ ಹೂವುಗೊಂಚಲಿನಿಂದ ಕೆಲವು ಹೂಗಳನ್ನು ತೆಗೆದುಕೊಂಡ. ಪ್ರಣಾಮಮಾಡುವಾಗ ಬ್ರಾಹ್ಮಭಕ್ತರೊಡನೆ ಜಯಘೋಷ ಮಾಡಿದ: “ಜೈ ನವವಿಧಾನ್.”
೧೮೮೧ನೆಯ ಇಸವಿಯ ಆಷಾಢಮಾಸದ ಒಂದು ದಿನ ಪರಮಹಂಸರು ತಮ್ಮ ಭಕ್ತರೊಡನೆ ಸುರೇಂದ್ರನ ಮನೆಗೆ ಬಂದಿದ್ದಾರೆ. ಇನ್ನೇನು ಸಾಯಂಕಾಲವಾಗುವುದರಲ್ಲಿದೆ.
ಶ್ರೀರಾಮಕೃಷ್ಣರನ್ನು ಸುರೇಂದ್ರನ ಮನೆಯ ಎರಡನೆಯ ಅಂತಸ್ತಿನಲ್ಲಿದ್ದ ಬೈಠಕ್ ಖಾನೆಗೆ ಕರೆದುಕೊಂಡು ಹೋಗಲಾಯಿತು. ಸುರೇಂದ್ರನ ನೆರೆಹೊರೆಯವರು ಆಗಲೆ ಪರಮಹಂಸರಿಗಾಗಿ ಅಲ್ಲಿ ಕಾದುಕುಳಿತಿದ್ದರು. ಕೇಶವಸೇನನಿಗೂ ಆಹ್ವಾನ ಕಳುಹಿಸಲಾಗಿತ್ತು. ಆದರೆ ಆತನಿಗೆ ಬರಲಾಗಲಿಲ್ಲ. ತ್ರೈಲೋಕ್ಯ ಮತ್ತು ಇನ್ನು ಕೆಲವು ಬ್ರಾಹ್ಮಭಕ್ತರು ಅಲ್ಲಿ ಕುಳಿತಿದ್ದಾರೆ. ನೆಲದ ಮೇಲೆ ಮಂದಲಿಗೆ ಹಾಸಿ ಅದರ ಮೇಲೆ ಬಿಳಿ ಬಟ್ಟೆಯನ್ನು ಹಾಸಿದೆ. ಅದರ ಮೇಲೆ ಒಂದು ಕಡೆ ಸುಂದರವಾದ ರತ್ನಗಂಬಳಿಯನ್ನು ಇಟ್ಟಿದೆ. ಆ ರತ್ನಗಂಬಳಿಯ ಮೇಲೆ ಮಂಡಿಸುವಂತೆ ಸುರೇಂದ್ರ ಪರಮಹಂಸರನ್ನು ಬೇಡಿಕೊಂಡ. ಆದರೆ ಅವರು ಹಾಗೆ ಮಾಡದೇ ಸುರೇಂದ್ರನ ನೆರೆಯವನಾದ ಮಹೇಂದ್ರ ಗೋಸ್ವಾಮಿಯ ಹತ್ತಿರ ಮಂದಲಿಗೆ ಮೇಲೆ ಕುಳಿತುಕೊಂಡರು.
ಮಹೇಂದ್ರ ಗೋಸ್ವಾಮಿ (ಭಕ್ತರಿಗೆ): “ನಾನು ಕೆಲವು ತಿಂಗಳ ಬಹುಭಾಗವನ್ನು ಇವರೊಡನೆಯೇ (ಪರಮಹಂಸರೊಡನೆ) ಕಳೆದೆ. ನಾನು ಹಿಂದೆ ಎಂದೂ ಇವರಂಥ ಮಹಾ ಪುರುಷರನ್ನು ನೋಡಿರಲಿಲ್ಲ. ಇವರ ಭಾವಗಳು ಸಾಮಾನ್ಯವಾದವುಗಳಲ್ಲ.”
ಶ್ರೀರಾಮಕೃಷ್ಣರು (ಮಹೇಂದ್ರ ಗೋಸ್ವಾಮಿಗೆ): “ಏಕೆ ಹೀಗೆಲ್ಲಾ ಹೇಳುತ್ತಿದ್ದೀಯೆ? ನಾನು ಹೀನರಲ್ಲೆಲ್ಲಾ ಹೀನ, ದೀನರಲ್ಲೆಲ್ಲಾ ದೀನ. ನಾನು ಭಗವಂತನ ದಾಸಾನುದಾಸ. ಕೇವಲ ಕೃಷ್ಣನೊಬ್ಬನೇ ಮಹಾಪುರುಷ.
“ಯಾರು ಅಖಂಡ ಸಚ್ಚಿದಾನಂದನೊ, ಆತನೇ ಶ್ರೀಕೃಷ್ಣ. ದೂರದಿಂದ ನೋಡಿದರೆ ಸಮುದ್ರ ನೀಲಿವರ್ಣದ್ದಾಗಿ ಕಾಣುತ್ತದೆ. ಆದರೆ ಹತ್ತಿರ ಹೋಗಿ ನೋಡಿದರೆ ಅದಕ್ಕೆ ಯಾವ ವರ್ಣವೂ ಇಲ್ಲ. ಯಾರು ಸಗುಣನೊ, ಆತನೇ ನಿರ್ಗುಣ. ನಿತ್ಯ ಯಾರದೊ ಆತನದೇ ಲೀಲೆ.
“ಶ್ರೀಕೃಷ್ಣ ತ್ರಿಭಂಗಿಯಾಗಿರುವುದೇಕೆ? ಆತ ರಾಧೆಯಲ್ಲಿಟ್ಟಿರುವ ಪ್ರೇಮದ ದೆಸೆಯಿಂದ.
“ಯಾರು ಬ್ರಹ್ಮನೊ, ಆತನೇ ಕಾಳಿ, ಆತನೇ ಆದ್ಯಾಶಕ್ತಿ, ಆತನೇ ಸೃಷ್ಟಿಸ್ಥಿತಿಪ್ರಳಯ ಕಾರ್ಯಗಳನ್ನು ಮಾಡುತ್ತಿದ್ದಾನೆ. ಯಾರು ಕೃಷ್ಣನೊ, ಆತನೇ ಕಾಳಿ, ಮೂಲ ಒಂದೇ–ಇದೆಲ್ಲಾ ಆತನ ಕ್ರೀಡೆ, ಲೀಲೆ.
“ಆತನ ದರ್ಶನ ಪಡೆಯಲು ಸಾಧ್ಯ. ಶುದ್ಧ ಮನಸ್ಸು, ಶುದ್ಧ ಬುದ್ಧಿಯಿಂದ ಆತನ ದರ್ಶನವನ್ನು ಪಡೆಯಬಹುದು. ಕಾಮಕಾಂಚನಾಸಕ್ತಿ ಇತ್ತು ಎಂದರೆ ಮನಸ್ಸು ಮಲಿನ ವಾಗುತ್ತದೆ.
“ಎಲ್ಲವೂ ಮನಸ್ಸನ್ನು ಅವಲಂಬಿಸಿದೆ. ಅದು ಅಗಸನ ಮನೆಯಿಂದ ಆಗತಾನೆ ಬಂದ ಬಿಳಿ ಬಟ್ಟೆಯ ಹಾಗೆ. ಯಾವ ಬಣ್ಣದಲ್ಲಿ ಅದನ್ನು ಅದ್ದುವೆಯೋ ಅದಕ್ಕೆ ಆ ಬಣ್ಣ ಬಂದು ಬಿಡುತ್ತದೆ. ಜ್ಞಾನವೂ ಮನಸ್ಸಿಗೆ ಸೇರಿದ್ದೆ; ಮನಸ್ಸಿನಲ್ಲೇ ಅಜ್ಞಾನ. ಯಾರೊ ಒಬ್ಬ ಕೆಟ್ಟುಹೋದ ಅಂದರೆ, ಆತನ ಮನಸ್ಸು ಕೆಟ್ಟ ಬಣ್ಣವನ್ನು ತೆಗೆದುಕೊಂಡಿದೆ ಎಂದು ಅರ್ಥ.”
ಸುರೇಂದ್ರ ಕೈಯಲ್ಲಿ ಒಂದು ಹೂವಿನ ಮಾಲೆಯನ್ನು ತೆಗೆದುಕೊಂಡು ಅದನ್ನು ಪರಮಹಂಸರಿಗೆ ಹಾಕಲು ಬಂದ. ಆದರೆ ಪರಮಹಂಸರು ಅದನ್ನು ತಮ್ಮ ಕೈಗೆ ತೆಗೆದು ಕೊಂಡು ತಮ್ಮ ಪಕ್ಕದಲ್ಲಿ ಒಂದು ಕಡೆ ಸ್ವಲ್ಪ ದೂರದಲ್ಲೇ ಇಟ್ಟುಬಿಟ್ಟರು. ಸುರೇಂದ್ರ ಅಶ್ರುಪೂರ್ಣಲೋಚನನಾಗಿ ಪಶ್ಚಿಮ ವರಾಂಡಕ್ಕೆ ಹೋಗಿ ಕುಳಿತುಕೊಂಡ. ಆತನ ಹತ್ತಿರ ರಾಮ, ಮನಮೋಹನ ಮೊದಲಾದವರು ಕುಳಿತಿದ್ದಾರೆ. ಸುರೇಂದ್ರ ಅಭಿಮಾನದಿಂದ ಹೇಳುತ್ತಿದ್ದಾನೆ: “ನನಗೆ ಕೋಪ ಬಂದುಬಿಟ್ಟಿದೆ. ಅದರ ಬೆಲೆ ಏನು ಎಂಬುದು ಈ ಬಡ ಬ್ರಾಹ್ಮಣನಿಗೆ ಹೇಗೆ ಗೊತ್ತಾಗಬೇಕು? ಬಹಳ ದುಡ್ಡು ಖರ್ಚುಮಾಡಿ ಆ ಮಾಲೆಯನ್ನು ತಯಾರಿಸಿದ್ದೇನೆ; ಅವರು ಅದನ್ನು ಸ್ವೀಕರಿಸದೆ ಹೋದರಲ್ಲ. ಕೋಪವನ್ನು ತಾಳಲಾರದೆ ಬಾಕಿ ಮಾಲೆಗಳನ್ನು ಭಕ್ತರ ಕೊರಳಿಗೆ ಹಾಕಿಬಿಡಿ ಎಂದು ಹೇಳಿಬಿಟ್ಟೆ. ನನ್ನ ಅಪರಾಧವೇನೆಂಬುದು ಈಗ ನನಗೆ ಅರ್ಥವಾಗುತ್ತಿದೆ. ದುಡ್ಡಿನಿಂದ ಭಗವಂತನನ್ನು ಕೊಂಡುಕೊಳ್ಳಲಾಗುವುದಿಲ್ಲ; ಅಹಂಕಾರದ ನನ್ನ ಅರ್ಪಣೆಯನ್ನು ಹೇಗೆ ತಾನೆ ಅವರು ಸ್ವೀಕರಿಸಿಯಾರು? ಇನ್ನು ಮೇಲೆ ಬದುಕಿರಲು ನನಗೆ ಇಚ್ಛೆ ಆಗುತ್ತಿಲ್ಲ.” ಕಣ್ಣೀರು ಆತನ ಕೆನ್ನೆಗಳ ಮೇಲಿಂದ ತೊಟ್ಟಿಕ್ಕಿ ಎದೆಯ ಮೇಲೆ ಹರಿಯಲಾರಂಭಿಸಿತು.
ಆದರೆ ಆ ಕಡೆ, ಕೊಠಡಿಯೊಳಗೆ ತ್ರೈಲೋಕ್ಯ ಹಾಡುತ್ತಿದ್ದಾನೆ. ಪರಮಹಂಸರು ಪ್ರೇಮೋನ್ಮತ್ತರಾಗಿ ನರ್ತಿಸುತ್ತಿದ್ದಾರೆ. ಯಾವ ಮಾಲೆಯನ್ನು ಒಂದು ಕಡೆಗೆ ತಳ್ಳಿಬಿಟ್ಟಿದ್ದರೊ ಅದನ್ನು ಈಗ ಕೊರಳಿಗೆ ಹಾಕಿಕೊಳ್ಳುತ್ತಿದ್ದಾರೆ. ಒಂದು ಕೈಯಿಂದ ಆ ಮಾಲೆಯನ್ನು ಹಿಡಿದುಕೊಂಡು ಇನ್ನೊಂದು ಕೈಯಿಂದ ಅದನ್ನು ತೂಗುತ್ತ ಹಾಡುತ್ತಲೂ ಮತ್ತು ನರ್ತಿಸುತ್ತಲೂ ಇದ್ದಾರೆ. ಅದನ್ನು ನೋಡಿ ಸುರೇಂದ್ರನ ಆನಂದಕ್ಕೆ ಪಾರವೇ ಇಲ್ಲದಂತಾಗಿ ಬಿಟ್ಟಿತು. ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೆ: “ಭಗವಂತ ಮನುಷ್ಯನ ಅಹಂಕಾರವನ್ನು ಧ್ವಂಸವನ್ನೇನೊ ಮಾಡಿಯೇ ಮಾಡುತ್ತಾನೆ. ಆದರೆ ಆತ ನಿಸ್ಸಂದೇಹವಾಗಿ ದೀನಹೀನರ ಪರಮನಿಧಿ.”
ಪರಮಹಂಸರು ಈಗ ಹಾಡುತ್ತಾರೆ:
ಹರಿನಾಮವನು ನುತಿಸಿ, ಆನಂದಬಾಷ್ಪವನು
ಕರೆವಣ್ಣತಮ್ಮದಿರು; ಇವರು ನೋಡು!……
ಪರಮಹಂಸರು ಈ ಹಾಡಿನೊಡನೆ ನರ್ತಿಸುತ್ತಿದ್ದಾರೆ. ಭಕ್ತರಲ್ಲಿ ಅನೇಕರು ಅವರೊಡನೆ ನರ್ತಿಸುತ್ತಿದ್ದಾರೆ.
ಈಗ ಎಲ್ಲರೂ ಕುಳಿತುಕೊಂಡು ಪರಮಹಂಸರೊಡನೆ ಮಾತುಕತೆ ಆಡುತ್ತಿದ್ದಾರೆ. ಪರಮಹಂಸರು ಸುರೇಂದ್ರನಿಗೆ ಹೇಳುತ್ತಿದ್ದಾರೆ: “ನನಗೆ ಏನಾದರೂ ಉಪಾಹಾರ ಕೊಡುವುದಿಲ್ಲವೆ?” ಬಳಿಕ ಅವರು ಮನೆಯ ಒಳಕ್ಕೆ ಹೋದರು. ಹೆಂಗಸರೆಲ್ಲರೂ ಶ್ರದ್ಧಾಭಕ್ತಿಯಿಂದ ಅವರಿಗೆ ಪ್ರಣಾಮಮಾಡಲಾರಂಭಿಸಿದರು. ಉಪಾಹಾರವನ್ನು ತೆಗೆದುಕೊಂಡ ನಂತರ ಪರಮಹಂಸರು ದಕ್ಷಿಣೇಶ್ವರಕ್ಕೆ ಹಿಂದಿರುಗಿ ಹೊರಟರು.
೩ನೆ ಡಿಸೆಂಬರ್ ೧೮೮೧, ಶನಿವಾರ
ಘಂಟೆ ಅಪರಾಹ್ನ ನಾಲ್ಕು. ಪರಮಹಂಸರು ಕಲ್ಕತ್ತದಲ್ಲಿ ಸಿಮ್ಲಾ ಬೀದಿಯಲ್ಲಿರುವ ಮನಮೋಹನನ ಮನೆಗೆ ಭೇಟಿ ಇತ್ತಿದ್ದಾರೆ. ಎರಡು ಅಂತಸ್ತಿನ ಒಂದು ಚಿಕ್ಕ ತೊಟ್ಟಿ ಮನೆ. ಪರಮಹಂಸರು ನೆಲ ಅಂತಸ್ತಿನ ಬೈಠಕ್ಖಾನೆಯಲ್ಲಿ ಕುಳಿತು ಈಶಾನ ಮುಖ್ಯೋಪಾಧ್ಯಾಯನೊಡನೆ ಮಾತುಕತೆ ಆಡುತ್ತಿದ್ದಾರೆ.
ಈಶಾನ: “ಮಹಾಶಯರೆ, ನೀವು ಸಂಸಾರವನ್ನು ಏಕೆ ತ್ಯಜಿಸಿಬಿಟ್ಟಿರಿ? ಗೃಹಸ್ಥಾಶ್ರಮ ಶ್ರೇಷ್ಠವಾದ್ದು ಎಂಬುದಾಗಿ ಶಾಸ್ತ್ರ ಹೇಳುತ್ತಿದೆಯಲ್ಲ.”
ಶ್ರೀರಾಮಕೃಷ್ಣರು: “ಯಾವುದು ಒಳ್ಳೆಯದೊ, ಯಾವುದು ಕೆಟ್ಟದ್ದೊ ಅದೆಲ್ಲ ನನಗೆ ಗೊತ್ತಿಲ್ಲ. ಭಗವಂತ ಮಾಡಿಸಿದ ಹಾಗೆ ಮಾಡಿದ್ದೇನೆ. ಭಗವಂತ ಪ್ರೇರೇಪಿಸಿದ ಹಾಗೆ ಮಾತಾಡುತ್ತಿದ್ದೇನೆ.”
ಈಶಾನ: “ಎಲ್ಲರೂ ಸಂಸಾರವನ್ನು ತ್ಯಜಿಸಿಬಿಟ್ಟಿದ್ದೇ ಆದರೆ, ಅದು ಆತನ ಇಚ್ಛೆಗೆ ವಿರುದ್ಧವಾಗಿ ನಡೆದಂತಾಗುತ್ತದೆ.”
ಶ್ರೀರಾಮಕೃಷ್ಣರು: “ಎಲ್ಲರೂ ಏಕೆ ತ್ಯಾಗ ಮಾಡಬೇಕು? ಹಾಗಾದರೆ ಆತನ ಇಚ್ಛೆ ಎಲ್ಲರೂ ನಾಯಿನರಿಗಳ ಹಾಗೆ ಕಾಮಕಾಂಚನದಲ್ಲೇ ಕ್ರೀಡಾಲೋಲರಾಗಿರಬೇಕೆ? ಇದನ್ನು ಬಿಟ್ಟರೆ ಬೇರೆ ಇನ್ನಾವ ಇಚ್ಛೆಯೂ ಆತನಿಗೆ ಇಲ್ಲ ಅಂತಲೇನು? ಯಾವುದು ಆತನ ಇಚ್ಛೆ, ಯಾವುದು ಆತನ ಅನಿಚ್ಛೆ ಇದನ್ನೆಲ್ಲ ನೀನು ಅರಿತುಕೊಂಡು ಬಿಟ್ಟಿದ್ದೀಯೇನು?
“ನೀನು ಹೇಳುತ್ತಾ ಇದ್ದೀಯೆ, ಎಲ್ಲರೂ ಸಂಸಾರಿಗಳಾಗಿರಬೇಕೆಂಬುದು ಆತನ ಇಚ್ಛೆ ಎಂಬುದಾಗಿ. ಹೆಂಡತಿ ಮಕ್ಕಳು ಸತ್ತಾಗ ಅದೂ ಭಗವಂತನ ಇಚ್ಛೆಗನುಸಾರ ಅಂತ ಏಕೆ ನೀನು ಭಾವಿಸುವುದಿಲ್ಲ? ದಟ್ಟದಾರಿದ್ರ್ಯದಿಂದ ತಿನ್ನಲಿಕ್ಕೆ ಏನೂ ದೊರೆಯದೆ ಇರುವಾಗ ಅದೂ ಭಗವಂತನ ಇಚ್ಛೆಗನುಸಾರ ಅಂತ ಏಕೆ ನೀನು ಭಾವಿಸುವುದಿಲ್ಲ?
“ಆತನ ಇಚ್ಛೆ ಏನು ಎಂಬುದನ್ನು ಅರಿತುಕೊಳ್ಳಲು ಮಾಯೆ ನಮ್ಮನ್ನು ಬಿಟ್ಟು ಕೊಡಲೊಲ್ಲದು. ಆತನ ಮಾಯೆಯ ದೆಸೆಯಿಂದ ನಿತ್ಯ ಅನಿತ್ಯವಾಗಿಯೂ, ಅನಿತ್ಯ ನಿತ್ಯವಾಗಿಯೂ ಬುದ್ಧಿಗೆ ಬೋಧೆಯಾಗುತ್ತದೆ. ಈ ಜಗತ್ತು ಅನಿತ್ಯವಾದ್ದು. ಈಗಿದೆ, ಈಗಿಲ್ಲ. ಆದರೆ ಆತನ ಮಾಯೆಯ ದೆಸೆಯಿಂದ ಬೋಧೆಯಾಗುತ್ತದೆ ಈ ಜಗತ್ತು ಸತ್ಯವಾದ್ದು ಎಂಬುದಾಗಿ. ನಾನು ಕರ್ತ ಎಂಬ ಬೋಧೆಯಾಗುತ್ತಿರುವುದೂ ಆತನ ಮಾಯೆಯ ದೆಸೆಯಿಂದಲೆ….. ಇದೂ ಅಲ್ಲದೆ ಈ ಮಾಯೆಯ ದೆಸೆಯಿಂದಲೇ ಹೆಂಡತಿ ಮಕ್ಕಳು, ಸಹೋದರ ಸಹೋದರಿಯರು, ತಂದೆ ತಾಯಿಗಳು, ಮನೆಮಠಗಳು ತನ್ನದೆಂದು ಬೋಧೆಯಾಗುತ್ತದೆ.
“ಮಾಯೆಯಲ್ಲಿ ಎರಡು ವಿಧ: ‘ವಿದ್ಯಾಮಾಯೆ, ಅವಿದ್ಯಾಮಾಯೆ.’ ಅವಿದ್ಯಾಮಾಯೆ ಭಗವಂತನನ್ನು ಮರೆಯುವಂತೆ ಮಾಡಿ ಸಂಸಾರದಲ್ಲೇ ಮುಳುಗಿಸಿಬಿಡುತ್ತದೆ. ಆದರೆ ವಿದ್ಯಾಮಾಯೆ-ಜ್ಞಾನ, ಭಕ್ತಿ, ಸಾಧುಸಂಗ-ಭಗವಂತನ ಕಡೆಗೆ ಕರೆದೊಯ್ಯುತ್ತದೆ.
“ಯಾರು ಭಗವಂತನ ಕೃಪೆಯಿಂದ ಮಾಯಾತೀತನಾಗುತ್ತಾನೊ ಆತನ ದೃಷ್ಟಿಗೆ ವಿದ್ಯಾಮಾಯೆ, ಅವಿದ್ಯಾಮಾಯೆ ಎರಡೂ ಒಂದೇ ಸರಿಸಮನಾಗಿ ಕಾಣಿಸಿಕೊಳ್ಳುತ್ತವೆ. ಸಂಸಾರಾಶ್ರಮ ನಿಸ್ಸಂದೇಹವಾಗಿ ಭೋಗಾಶ್ರಮ. ಹಾಗೆ ನೋಡಿದರೆ ಕಾಮಕಾಂಚದನಲ್ಲಿ ಇರೋ ಸುಖ ತಾನೆ ಏನು? ಸಂದೇಶ (ಸಿಹಿ ತಿಂಡಿ) ಗಂಟಲಿನಿಂದ ಕೆಳಕ್ಕೆ ಇಳಿಯಿತು ಎಂದರೆ ಅದು ಸಿಹಿಯೋ ಹುಳಿಯೋ ಎಂಬುದೇ ಜ್ಞಾಪಕದಲ್ಲಿರದು.
“ಆದರೆ ಎಲ್ಲರೂ ತ್ಯಾಗ ಮಾಡಬೇಕಾದ ಆವಶ್ಯಕತೆಯೇನಿದೆ? ಸಕಾಲ ಬಾರದೆ ಇದ್ದರೆ ತ್ಯಾಗಬುದ್ಧಿ ಬರುವುದೆ? ಭೋಗಪಡುವುದೆಲ್ಲ ಮುಗಿಯಿತು ಎಂದರೆ, ಆಗ ತ್ಯಾಗ ಬುದ್ಧಿ ಕಾಲಿಡುತ್ತದೆ. ಬಲಾತ್ಕಾರದಿಂದ ತ್ಯಾಗಿಯಾಗಲಾಗುವುದೆ? ಒಂದು ವಿಧವಾದ ವೈರಾಗ್ಯವಿದೆ. ಅದಕ್ಕೆ ‘ಮರ್ಕಟ ವೈರಾಗ್ಯ’ ಅಂತ ಹೆಸರು. ಹೀನಬುದ್ಧಿಯ ಜನರಿಗೆ ಈ ವಿಧದ ವೈರಾಗ್ಯ ಉಂಟಾಗುತ್ತದೆ. ಉದಾಹರಣೆಗೆ ತಂದೆಸತ್ತ ಹುಡುಗನನ್ನು ತೆಗೆದುಕೊಳ್ಳಿ. ಆತನ ತಾಯಿ ನೂಲು ನೂತು ಜೀವನ ಮಾಡಿಕೊಂಡಿದ್ದಾಳೆ. ಆ ಹುಡುಗನಿಗೆ ಇದ್ದ ಯಾವುದೋ ಒಂದು ಸಾಮಾನ್ಯ ಕೆಲಸವೂ ತಪ್ಪಿಹೋಗಿ ಇದ್ದಕ್ಕಿದ್ದ ಹಾಗೆ ವೈರಾಗ್ಯ ಬಂದುಬಿಡುತ್ತದೆ. ಆತ ಕಾಷಾಯವಸ್ತ್ರ ಧರಿಸಿ ಕಾಶಿಗೆ ಹೋಗುತ್ತಾನೆ. ಕೆಲವು ದಿವಸಗಳಾದ ನಂತರ ಆತ ಮನೆಗೆ ಕಾಗದ ಬರೆಯುತ್ತಾನೆ: ‘ನನಗೆ ಒಂದು ಕೆಲಸ ಸಿಕ್ಕಿದೆ. ತಿಂಗಳಿಗೆ ಹತ್ತು ರೂಪಾಯಿ ಸಂಬಳ.’ ಇಷ್ಟರೊಳಗೇ ಆತ ಬೆರಳುಗಳಿಗೆ ಚಿನ್ನದ ಉಂಗುರವನ್ನು ಮತ್ತು ಒಳ್ಳೆ ಪೋಷಾಕನ್ನು ಕೊಂಡುಕೊಳ್ಳಲು ಪ್ರಯತ್ನಪಟ್ಟುಬಿಡುತ್ತಾನೆ. ಭೋಗೇಚ್ಛೆ ಎಲ್ಲಿ ಬಿಟ್ಟುಹೋದೀತು ಆತನನ್ನು?”
ಕೆಲವು ಮಂದಿ ಬ್ರಾಹ್ಮಭಕ್ತರೊಡಗೂಡಿ ಕೇಶವಸೇನ ಕೊಠಡಿಯನ್ನು ಪ್ರವೇಶಿಸಿದ.
ಬಳಿಕ ಪರಮಹಂಸರಿಗೆ ಶ್ರದ್ಧಾಪೂರ್ವಕವಾಗಿ ಪ್ರಣಾಮಮಾಡಿ ಅವರ ಎಡಗಡೆ ಕುಳಿತುಕೊಂಡ. ಬಲಗಡೆಯಲ್ಲಿ ರಾಮ ಕುಳಿತಿದ್ದಾನೆ. ಸ್ವಲ್ಪ ಹೊತ್ತಿನಿಂದ ಭಾಗವತ ಪ್ರವಚನ ನಡೆಯುತ್ತಿದೆ.
ಭಾಗವತ ಪ್ರವಚನ ಮುಗಿದ ನಂತರ ಪರಮಹಂಸರು ಮಾತುಕತೆಗಳಾಡಲು ಆರಂಭಿಸಿದ್ದಾರೆ.
ಶ್ರೀರಾಮಕೃಷ್ಣರು (ಭಕ್ತರಿಗೆ): “ಈ ಸಂಸಾರದಲ್ಲಿ ಕೆಲಸ ಮಾಡುವುದು ಎಂದರೆ ಬಹಳ ಕಷ್ಟ. ಗಿರ್ರೆಂದು ಸುಮ್ಮನೆ ಸುತ್ತಿದರೆ ತಲೆಸುತ್ತು ಬಂದು ಮೂರ್ಛೆ ಬರುವಂತಾಗುತ್ತದೆ. ಆದರೆ ಕಂಬ ಹಿಡಿದು ಸುತ್ತಿದರೆ ಹಾಗೇನು ಭಯಪಡಬೇಕಾದ್ದೇನಿಲ್ಲ. ಕೆಲಸ ಕಾರ್ಯಗಳನ್ನು ಮಾಡಿ. ಆದರೆ ಭಗವಂತನನ್ನು ಮಾತ್ರ ಮರೆಯಬೇಡಿ.
“ನೀವು ಕೇಳಬಹುದು: ‘ಈ ಸಂಸಾರ ಅಷ್ಟು ಕಷ್ಟವಾದ್ದೇ ಆದರೆ, ಅದರಿಂದ ಪಾರಾಗುವ ಬಗೆ ಹೇಗೆ?’ ಅಭ್ಯಾಸಯೋಗವೇ ಅದಕ್ಕೆ ಉಪಾಯ. ಕಾಮಾರಪುಕುರದಲ್ಲಿ ಬಡಗಿಯ ಹೆಂಗಸರು ಏತದಿಂದ ಅವಲಕ್ಕಿ ಕುಟ್ಟುವುದನ್ನು ನೋಡಿದ್ದೇನೆ. ಏತದ ಕಣ್ಣು ಎಲ್ಲಿ ಕೈಮೇಲೆ ಬಿದ್ದು ಬೆರಳನ್ನು ಜಜ್ಜಿಬಿಡುವುದೊ ಎಂಬ ಭಯ ಇದ್ದೇ ಇರುತ್ತದೆ; ಆದರೂ ಆ ಕೆಲಸದೊಡನೆ ಮಗುವಿಗೆ ಹಾಲನ್ನೂ ಕೊಡುತ್ತಾ ಗಿರಾಕಿಗಳೊಡನೆ ವ್ಯಾಪಾರವನ್ನೂ ಮಾಡುತ್ತಾರೆ. ಅವರು ಗಿರಾಕಿಗಳಿಗೆ ಹೇಳುತ್ತಾರೆ: ‘ನೀವು ಹೊರಡುವ ಮುನ್ನ ಈ ಬಾಕಿಗಳನ್ನೆಲ್ಲ ತೀರಿಸಿ ಹೋಗಿ.’
“ಶೀಲಭ್ರಷ್ಟಳಾದ ಹೆಂಗಸು ಮನೆಯ ಎಲ್ಲಾ ಕೆಲಸಗಳನ್ನೇನೊ ಮಾಡಿಕೊಂಡು ಹೋಗುತ್ತಾಳೆ. ಆದರೆ ಆಕೆಯ ಮನಸ್ಸು ಮಾತ್ರ ಸರ್ವದಾ ತನ್ನ ಉಪಪತಿಯ ಮೇಲೆ ನೆಲೆಸಿರುತ್ತದೆ.
“ಅದೇ ರೀತಿ ಮನಸ್ಸು ಭಗವಂತನ ಮೇಲೆ ನೆಲಸಬೇಕಾದರೆ ಸ್ವಲ್ಪ ಸಾಧನೆ ಆವಶ್ಯಕ. ಆಗಾಗ ನಿರ್ಜನಪ್ರದೇಶಕ್ಕೆ ಹೋಗಿ ಆತನನ್ನು ಕರೆಯಬೇಕಾಗುತ್ತದೆ. ಭಕ್ತಿಯನ್ನು ಪಡೆದುಕೊಂಡನಂತರ ಈ ಜಗತ್ತಿನ ಕರ್ಮಗಳನ್ನು ಮಾಡಲು ಸಾಧ್ಯ. ಸುಮ್ಮನೆ ಹೋಗಿ ಹಲಸಿನ ಹಣ್ಣನ್ನು ಬಿಡಿಸಲು ಶುರು ಮಾಡಿದರೆ ಅದರ ಅಂಟು ಕೈಗೆಲ್ಲಾ ಅಂಟಿಕೊಂಡು ಬಿಡುತ್ತದೆ. ಆದರೆ ಮೊದಲೇ ಕೈಗೆ ಎಣ್ಣೆ ಸವರಿಕೊಂಡು ಬಿಡಿಸಿದರೆ, ಅದರ ಅಂಟು ಅಂಟದು.”
ಈಗ ಕೀರ್ತನೆ ಆರಂಭವಾಯಿತು. ತ್ರೈಲೋಕ್ಯ ಹಾಡುತ್ತಿದ್ದಾನೆ. ಪರಮಹಂಸರು ಆನಂದದಿಂದ ನರ್ತಿಸುತ್ತಿದ್ದಾರೆ. ಅವರೊಡನೆ ಕೇಶವನೇ ಮೊದಲಾದ ಭಕ್ತರೂ ನರ್ತಿಸು ತ್ತಿದ್ದಾರೆ. ಚಳಿಗಾಲವಾಗಿದ್ದರೂ ಪರಮಹಂಸರ ದೇಹದಿಂದ ಬೆವರು ಸುರಿಯಲಾರಂಭಿಸಿತು. ಕೀರ್ತನೆ ಮುಗಿದ ನಂತರ ಎಲ್ಲರೂ ಕೆಳಗೆ ಕುಳಿತುಕೊಂಡರು. ಪರಮಹಂಸರಿಗೆ ಏನನ್ನಾದರೂ ತಿನ್ನಬೇಕು ಅನ್ನಿಸಿತು. ಮನೆಯೊಳಗಿನಿಂದ ಒಂದು ತಟ್ಟೆಯಲ್ಲಿ ಮೃಷ್ಟಾನ್ನಾದಿಗಳನ್ನು ತಂದಿದ್ದಾರೆ. ಕೇಶವಸೇನ ಆ ತಟ್ಟೆಯನ್ನು ಕೈಯಲ್ಲಿ ಹಿಡಿದು ಪರಮಹಂಸರ ಮುಂದೆ ನಿಂತುಕೊಂಡ. ಪರಮಹಂಸರು ತಟ್ಟೆಯಿಂದ ತಿನ್ನುತ್ತಿದ್ದಾರೆ. ಪರಮಹಂಸರು ತಿಂದು ಮುಗಿಸಿದ ನಂತರ ಕೇಶವಸೇನ ಅವರ ಕೈ ತೊಳೆಯಲು ಕೊಟ್ಟು ಕೈಬಾಯಿ ಗಳನ್ನು ಒಂದು ಶುಭ್ರವಾದ ಚೌಕದಿಂದ ಒರೆಸಿದ. ಬಳಿಕ ಅವರಿಗೆ ಬೀಸಣಿಗೆಯಿಂದ ಗಾಳಿ ಬೀಸಲಾರಂಭಿಸಿದ.
ಶ್ರೀರಾಮಕೃಷ್ಣರು (ಕೇಶವಸೇನ ಮೊದಲಾದವರಿಗೆ): “ಯಾರು ಸಂಸಾರದಲ್ಲಿದ್ದು ಭಗವಂತನನ್ನು ಕರೆಯಬಲ್ಲರೊ ಅವರೇ ವೀರಭಕ್ತರು. ಅವರ ತಲೆಮೇಲೆ ಇಪ್ಪತ್ತು ಮಣದ ಹೊರೆ ಇದೆ; ಆದರೂ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಲು ಪ್ರಯತ್ನಪಡುತ್ತಿದ್ದಾರೆ. ಅವರೇ ನಿಜವಾದ ಭಕ್ತರು. ಹೀಗೆ ಮಾಡುವುದು ಬಹಳ ಕಠಿಣ ಎಂದು ನೀವು ಹೇಳಬಹುದು. ಆದರೂ ಭಗವಂತನ ಕೃಪೆಯಿಂದ ಏನು ತಾನೆ ಸಾಧ್ಯವಾಗದು? ಅಸಂಭವ ಸಂಭವವಾಗುತ್ತದೆ. ಸಾವಿರಾರು ವರ್ಷಗಳಿಂದ ಕಗ್ಗತ್ತಲೆ ಕವಿದಿದ್ದ ಕೊಠಡಿಗೆ ಬೆಳಕನ್ನು ತಂದುದೇ ಆದರೆ, ಅದು ಕಿಂಚಿತ್ತಾಗಿ ಆ ಕೊಠಡಿಯನ್ನು ಬೆಳಗಲಾರಂಭಿಸುವುದೆ? ಕೊಠಡಿ ಒಮ್ಮೆಗೇ ಬೆಳಕಿನಿಂದ ಬೆಳಗಲಾರಂಭಿಸುತ್ತದೆ.” ಪರಮಹಂಸರ ಆ ಆಶಾಭರಿತ ಮಾತುಗಳನ್ನು ಕೇಳಿ ಕೇಶವನೇ ಮೊದಲಾದ ಗೃಹಸ್ಥ ಭಕ್ತರಿಗೆ ಆನಂದವಾಗಿದೆ.
ಕೇಶವಸೇನ (ರಾಮ ಮತ್ತು ಮನಮೋಹನನ ಚಿಕ್ಕಪ್ಪನಾದ ರಾಜೇಂದ್ರಮಿತ್ರನಿಗೆ): “ನಿಮ್ಮ ಮನೆಯಲ್ಲಿ ಒಂದು ದಿನ ಹೀಗೆ ಆನಂದಕೂಟ ನೆರೆದರೆ ಬಹಳ ಚೆನ್ನಾಗಿರುತ್ತದೆ. ಅಲ್ಲವೆ?”
ರಾಜೇಂದ್ರ: “ಒಳ್ಳೆಯದು, ನಡೆಯಲಿ ಒಂದು ದಿನ. ರಾಮ, ಎಲ್ಲಾ ಭಾರ ನಿನ್ನ ಮೇಲೆ.”
ಮನಮೋಹನನ ತಾಯಿ ತನ್ನ ಕೈಯಿಂದಲೇ ಪರಮಹಂಸರಿಗೆಂದು ವಿವಿಧ ಭಕ್ಷ್ಯ-ಭೋಜ್ಯಗಳನ್ನು ತಯಾರುಮಾಡಿದ್ದಾಳೆ. ಪರಮಹಂಸರನ್ನು ಮನೆಯ ಒಳಕ್ಕೆ ಕರೆದುಕೊಂಡು ಹೋಗಿ ಅವರಿಗೆ ಅವನ್ನೆಲ್ಲಾ ಬಡಿಸುತ್ತಿದ್ದಾಳೆ. ಅವರು ಪ್ರೀತಿಸುತ್ತಿದ್ದ ಮಂಜಿನಗಡ್ಡೆ ಹಾಕಿದ ನೀರನ್ನೂ ಒಂದು ಲೋಟದಲ್ಲಿ ತುಂಬಿ ಅವರ ಹತ್ತಿರ ಇಟ್ಟಿದ್ದಾಳೆ.
ಕೇಶವಸೇನ ಮತ್ತು ಉಳಿದ ಭಕ್ತರು ಅಂಗಳದಲ್ಲಿ ಕುಳಿತು ಆನಂದದಿಂದ ಊಟ ಮಾಡುತ್ತಿದ್ದಾರೆ. ಪರಮಹಂಸರೂ ಅಲ್ಲಿಗೆ ಬಂದು ಅವರಿಗೆ ಆನಂದವನ್ನುಂಟುಮಾಡಲು ಶ್ಲೋಕಗಳನ್ನು ಹೇಳುತ್ತ ನರ್ತಿಸುತ್ತಿದ್ದಾರೆ.
ಪರಮಹಂಸರು ಈಗ ದಕ್ಷಿಣೇಶ್ವರಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಕೇಶವಸೇನ ಮತ್ತು ಉಳಿದ ಭಕ್ತರು ಅವರ ಪಾದಧೂಳಿಯನ್ನು ತೆಗೆದುಕೊಂಡು ಅವರನ್ನು ಒಂದು ಗಾಡಿಗೆ ಹತ್ತಿಸಿ ಕಳುಹಿಸಿಕೊಟ್ಟರು.
೧೦ನೆ ಡಿಸೆಂಬರ್ ೧೮೮೧, ಶನಿವಾರ
ರಾಜೇಂದ್ರಮಿತ್ರ ಕೇಶವಸೇನನ ಸಲಹೆಗೆ ಅನುಸಾರ ಕಲ್ಕತ್ತದಲ್ಲಿರುವ ತನ್ನ ಮನೆಯಲ್ಲಿ ಒಂದು ಸಂತೋಷಕೂಟವನ್ನು ಇಂದು ಏರ್ಪಡಿಸಿ ಪರಮಹಂಸರನ್ನಲ್ಲದೆ ಅನೇಕ ಮಂದಿ ಭಕ್ತರನ್ನು, ವಿಶೇಷತಃ ಬ್ರಾಹ್ಮಭಕ್ತರನ್ನೂ ಆಹ್ವಾನಿಸಿದ್ದಾನೆ.
ಎರಡು ದಿನಗಳ ಹಿಂದೆ ಬ್ರಾಹ್ಮಸಮಾಜದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬನಾದ ಅಘೋರನಾಥ ಎಂಬುವನು ಇದ್ದಕ್ಕಿದ್ದ ಹಾಗೆ ಸತ್ತುಹೋಗಿಬಿಟ್ಟಿದ್ದಾನೆ. ಕೇಶವಸೇನನೇ ಮೊದಲಾದ ಬ್ರಾಹ್ಮಭಕ್ತರಿಗೆ ಸತ್ತ ಸೂತಕ ಬಂದುಬಿಟ್ಟಿದೆ. ಆದ್ದರಿಂದ ಕೇಶವಸೇನನೇ ಮೊದಲಾದವರು ತನ್ನ ಮನೆಯ ಸಂತೋಷಕೂಟಕ್ಕೆ ಬಾರದೆಹೋಗಬಹುದು ಎಂಬುದಾಗಿ ರಾಜೇಂದ್ರಮಿತ್ರನಿಗೆ ಯೋಚನೆ ಬಂದು, ಅದು ಆತನಿಗೆ ಒಂದು ದೊಡ್ಡ ಚಿಂತೆಯನ್ನೇ ತುಂಬಿಬಿಟ್ಟಿದೆ. ಆದರೆ ರಾಮ ಆತನಿಗೆ ಧೈರ್ಯ ಕೊಟ್ಟ: “ಇದಕ್ಕೆ ನೀನು ಏಕೆ ಇಷ್ಟೊಂದು ಚಿಂತಿಸುತ್ತಿದ್ದೀಯೆ? ಕೇಶವಸೇನ ಬರುವುದಕ್ಕೆ ಆಗದೆ ಹೋದರೆ ಯಾವ ಆಕಾಶ ಕಳಚಿ ಬಿದ್ದುಹೋಗುತ್ತದೆ? ಪರಮಹಂಸರು ಬರುತ್ತಾರಲ್ಲ ಇನ್ನೇನು? ಅವರು ಸರ್ವದಾ ಸಮಾಧಿಸ್ಥರಾಗಿರೋದು ನಿನಗೆ ಗೊತ್ತಿಲ್ಲವೆ? ಅವರು ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಂಡಿದ್ದಾರೆ. ಅವರ ಸಾನ್ನಿಧ್ಯವೆ ಈ ಸಂತೋಷಕೂಟವನ್ನು ಜಯಪ್ರದವಾದುದನ್ನಾಗಿ ಮಾಡಿಬಿಡುತ್ತದೆ.”
ರಾಜೇಂದ್ರಮಿತ್ರ, ರಾಮ ಮತ್ತು ಇನ್ನೂ ಕೆಲವರನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿ ಕೇಶವಸೇನನ್ನು ಕಂಡು ಅಘೋರನಾಥ ಸತ್ತುಹೋದುದಕ್ಕಾಗಿ ತನ್ನ ಸಂತಾಪವನ್ನು ಸೂಚಿಸಿದ. ಕೇಶವಸೇನ ರಾಜೇಂದ್ರಮಿತ್ರನಿಗೆ ಹೇಳಿದ: “ನಿನ್ನ ಮನೆಯ ಸಂತೋಷಕೂಟಕ್ಕೆ ಬರುವುದಿಲ್ಲವೆಂದು ನಾನು ನಿನಗೆ ತಿಳಿಸಲಿಲ್ಲವಲ್ಲ? ಪರಮಹಂಸರು ಅಲ್ಲಿಗೆ ಬರಲಿದ್ದಾರೆ; ಆದ್ದರಿಂದ ನಾನು ಹೇಗೆ ಅಲ್ಲಿಗೆ ಬಾರದೆ ಉಳಿದುಕೊಳ್ಳಲಿ? ಖಂಡಿತ ಬರುತ್ತೇನೆ. ಸೂತಕವೇನೊ ಬಂದಿದೆ; ಆದರೆ ಅಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳುತ್ತೇನೆ.”
ಕೇಶವಸೇನನ ಕೊಠಡಿಯ ಒಂದು ಗೋಡೆಮೇಲೆ ಪರಮಹಂಸರ ಸಮಾಧಿಸ್ಥ ಅವಸ್ಥೆಯ ಒಂದು ಭಾವಚಿತ್ರ ತೂಗಹಾಕಿತ್ತು.
ರಾಜೇಂದ್ರಮಿತ್ರ (ಕೇಶವಸೇನನಿಗೆ): “ಅನೇಕರು ಹೇಳುತ್ತಿದ್ದಾರೆ ಅವರು (ಚಿತ್ರವನ್ನು ತೋರಿಸಿ) ಚೈತನ್ಯದೇವನ ಅವತಾರ ಎಂಬುದಾಗಿ.”
ಕೇಶವಸೇನ (ಚಿತ್ರದ ಕಡೆ ನೋಡಿ): “ಈ ವಿಧವಾದ ಸಮಾಧಿ ಬಹಳ ದುರ್ಲಭ ವಾದ್ದು. ಯೇಸು, ಮಹಮ್ಮದ್, ಚೈತನ್ಯದೇವ ಇವರಿಗೆ ಅದು ಉಂಟಾಗುತ್ತಿತ್ತು.”
ಘಂಟೆ ಮೂರು. ಪರಮಹಂಸರು ಮನಮೋಹನನ ಮನೆಗೆ ಬಂದಿದ್ದಾರೆ. ಅಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಉಪಾಹಾರವನ್ನು ಸ್ವೀಕರಿಸಿದರು. ಸುರೇಂದ್ರ ಪರಮಹಂಸರಿಗೆ ಒಂದು ಗಾಡಿ ಮಾಡಿ ಅವರನ್ನು ಬೆಂಗಾಲ್ ಫೋಟೋಗ್ರಾಫರ್ ಸ್ಟುಡಿಯೋಗೆ ಕರೆದುಕೊಂಡು ಹೋದ. ಅಲ್ಲಿ ಫೋಟೋಗ್ರಾಫರ್ ಫೋಟೋ ಹೇಗೆ ತೆಗೆಯುವುದು ಎಂಬ ವಿಷಯವಾಗಿ ಪರಮಹಂಸರಿಗೆ ವಿವರಿಸಲಾರಂಭಿಸಿದ. ಬೆಳ್ಳಿಯ ಉಪ್ಪನ್ನು (ಸಿಲ್ವರ್ ನೈಟ್ರೇಟ್) ಸವರಿದ ಗಾಜಿನಲ್ಲಿ ಯಾವ ರೀತಿಯಾಗಿ ಭಾವಚಿತ್ರ ಏಳುತ್ತದೆ ಎಂಬುದನ್ನು ಈಗ ತೋರಿಸುತ್ತಿದ್ದಾನೆ. ಬಳಿಕ ಪರಮಹಂಸರ ಫೋಟೋವನ್ನು ತೆಗೆದುಕೊಳ್ಳಲಾಯಿತು. ಆ ಸಮಯದಲ್ಲಿ ಅವರು ಇದ್ದಕ್ಕಿದ್ದ ಹಾಗೆ ಸಮಾಧಿಸ್ಥರಾಗಿಬಿಟ್ಟರು.
ಈಗ ಪರಮಹಂಸರು ರಾಜೇಂದ್ರಮಿತ್ರನ ಮನೆಗೆ ಬಂದಿದ್ದಾರೆ. ಕೇಶವಸೇನ ಇನ್ನೂ ಬಂದಿರಲಿಲ್ಲ. ಮಹೇಂದ್ರಗೋಸ್ವಾಮಿ ಭಾಗವತವನ್ನು ಓದುತ್ತಿದ್ದಾನೆ. ಪರಮಹಂಸರು ಭಕ್ತರೊಡನೆ ಮಾತುಕತೆಗಳಾಡಲು ಆರಂಭಿಸಿದ್ದಾರೆ.
ಶ್ರೀರಾಮಕೃಷ್ಣರು: “ಸಂಸಾರದಲ್ಲಿದ್ದರೂ ಭಗವಂತನ ಸಾಕ್ಷಾತ್ಕಾರವನ್ನು ಏಕೆ ಪಡೆಯಲಾಗುವುದಿಲ್ಲವೆ? ಆದರೆ ಬಹಳ ಕಠಿಣ. ಬರುವಾಗ ಬಾಗ್ಬಜಾರಿನ ಸೇತುವೆಯನ್ನು ದಾಟಿ ಬಂದೆ. ಅದನ್ನು ಎಷ್ಟೊಂದು ಸರಪಣಿಗಳಿಂದ ಕಟ್ಟಿದ್ದಾರೆ! ಒಂದು ಪಕ್ಷ ಆ ಸರಪಣಿಗಳಲ್ಲಿ ಒಂದು ಕಿತ್ತುಹೋಗಿಬಿಟ್ಟಿದ್ದೇ ಆದರೆ ಆ ಸೇತುವೆಗೆ ಏನೂ ಆಗದು, ಏಕೆಂದರೆ ಆ ಸೇತುವೆಯನ್ನು ಸರಿಯಾಗಿ ಹಿಡಿದು ನಿಲ್ಲಿಸಲು ಇನ್ನೂ ಅನೇಕ ಸರಪಣಿಗಳಿವೆ. ಅದೇ ರೀತಿ ಸಂಸಾರಿಗಳಿಗೆ ಅನೇಕ ಬಂಧನಗಳಿವೆ. ಭಗವಂತನ ಕೃಪೆಯೊಂದಿಲ್ಲದಿದ್ದರೆ ಅವುಗಳಿಂದ ಮುಕ್ತರಾಗಲು ಅವರಿಗೆ ಬೇರೆ ಉಪಾಯವೇ ಇಲ್ಲ.
“ಆತನ ದರ್ಶನವೊಂದು ದೊರೆತುಬಿಟ್ಟಿದ್ದೇ ಆದರೆ ಮತ್ತೆ ಭಯಪಡಬೇಕಾದ್ದೇನಿಲ್ಲ. ಆತನ ಮಾಯೆಯಲ್ಲಿ ವಿದ್ಯಾ, ಅವಿದ್ಯಾ, ಎರಡೂ ಇವೆ; ಭಗವಂತನ ದರ್ಶನ ದೊರೆತ ನಂತರ ಅವುಗಳಿಂದ ನಿರ್ಲಿಪ್ತವಾಗಿರಲು ಸಾಧ್ಯ. ಪರಮಹಂಸಾವಸ್ಥೆಯಲ್ಲಿ ನಿಜಸ್ಥಿತಿ ಏನು ಎಂಬುದು ಸರಿಯಾಗಿ ಅರ್ಥವಾಗುತ್ತದೆ. ನೀರುಮಿಶ್ರಣ ಹಾಲಿನಿಂದ ಕೇವಲ ಹಾಲನ್ನು ಕುಡಿದು ನೀರನ್ನು ನಿರಾಕರಿಸಲು ಹಂಸಪಕ್ಷಿಗೆ ಸಾಧ್ಯ. ಬಕಪಕ್ಷಿ ಹಾಗೆ ಮಾಡಲಾರದು.”
ಒಬ್ಬ ಭಕ್ತ: “ಹಾಗಾದರೆ ಸಂಸಾರಿಗಳಿಗೆ ಉಪಾಯ?”
ಶ್ರೀರಾಮಕೃಷ್ಣರು: “ಗುರುವಾಕ್ಯದಲ್ಲಿ ವಿಶ್ವಾಸವಿಡಬೇಕು. ಆತ ಹೇಳುವ ಹಾಗೆ ನಡೆದುಕೊಳ್ಳಬೇಕು. ಕಂಬವನ್ನು ಹಿಡಿದು ಸುತ್ತುವವನಂತೆ ಆತನ ಉಪದೇಶವನ್ನು ಅನುಷ್ಠಾನಕ್ಕೆ ತರುತ್ತಾ ಸಂಸಾರದಲ್ಲಿರಬೇಕು.
“ಗುರುವನ್ನು ಮನುಷ್ಯ ಅಂತ ಭಾವಿಸಬಾರದು; ಸಚ್ಚಿದಾನಂದನೇ ಗುರುವಿನ ರೂಪನ್ನು ಧರಿಸಿರುತ್ತಾನೆ. ಗುರುವಿನ ಕೃಪೆಯಿಂದ ಇಷ್ಟದೇವನ ದರ್ಶನ ದೊರೆಯುತ್ತದೆ. ಬಳಿಕ ಗುರು ಇಷ್ಟದೇವನಲ್ಲಿ ಲೀನವಾಗಿಬಿಡುತ್ತಾನೆ.
“ಸರಳ ವಿಶ್ವಾಸವಿದ್ದರೆ ಏನು ತಾನೆ ಸಾಧ್ಯವಿಲ್ಲ! ಒಮ್ಮೆ ಒಬ್ಬ ಗುರುವಿನ ಮನೆಯಲ್ಲಿ ಆತನ ಪುತ್ರನ ಅನ್ನಪ್ರಾಶನ ನಡೆಯಬೇಕಾಗಿತ್ತು. ಆತನ ಶಿಷ್ಯರು ಆ ಸಂದರ್ಭದಲ್ಲಿ ತಮ್ಮ ಶಕ್ತ್ಯನುಸಾರ ಆತನಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಿಕೊಡಲು ಮುಂದೆ ಬಂದರು. ಒಬ್ಬ ಬಡ ವಿಧವೆಯೂ ಆತನ ಶಿಷ್ಯೆ. ಆಕೆ ಒಂದು ಹಸುವನ್ನು ಸಾಕಿಕೊಂಡಿದ್ದಳು. ಒಂದು ಗಡಿಗೆ ಹಾಲನ್ನು ತಂದು ಗುರುವಿಗೆ ಅರ್ಪಿಸಿದಳು. ಗುರು ಭಾವಿಸಿಕೊಂಡಿದ್ದ, ತನಗೆ ಬೇಕಾಗುವ ಹಾಲೂ, ಮೊಸರೂ ಎಲ್ಲದರ ಭಾರವನ್ನು ಆಕೆ ಹೊತ್ತುಕೊಳ್ಳುತ್ತಾಳೆ ಎಂಬುದಾಗಿ. ಆತ ವಿರಕ್ತಿಗೊಂಡು ಆಕೆ ತಂದಿದ್ದ ಹಾಲನ್ನು ಒಂದು ಕಡೆಗೆ ಚೆಲ್ಲಿಬಿಟ್ಟು ಹೇಳಿದ: ‘ನೀನು ಬದುಕಿರೋದಕ್ಕಿಂತ ನೀರಿನಲ್ಲಿ ಮುಳುಗಿ ಸತ್ತುಹೋಗಬಾರದೆ!’ ಆಕೆ ಇದು ಗುರುವಿನ ಆಜ್ಞೆಯೇ ಎಂದು ಭಾವಿಸಿ ನೀರಿನಲ್ಲಿ ಮುಳುಗಿ ಸಾಯಲು ನದಿಯ ಹತ್ತಿರಕ್ಕೆ ಬಂದಳು. ಶ್ರೀಮನ್ನಾರಾಯಣ ಆಕೆಯ ಸರಳ ವಿಶ್ವಾಸವನ್ನು ನೋಡಿ ಸುಪ್ರೀತನಾಗಿ ಅವಳಿಗೆ ತನ್ನ ದರ್ಶನ ಕೊಟ್ಟು ಹೇಳಿದ: ‘ಈ ಪಾತ್ರೆಯಲ್ಲಿ ಮೊಸರಿದೆ. ಪಾತ್ರೆಯನ್ನು ಬರಿದುಮಾಡಿದಂತೆಲ್ಲ ಅದು ಮತ್ತೆ ಮತ್ತೆ ಮೊಸರಿನಿಂದ ತುಂಬಿಕೊಳ್ಳುತ್ತಲೇ ಇರುತ್ತದೆ. ನಿನ್ನ ಗುರುವಿಗೆ ಇದನ್ನು ತೆಗೆದುಕೊಂಡು ಹೋಗಿ ಕೊಡು. ಆತ ಸಂತುಷ್ಟನಾಗಿ ಬಿಡುತ್ತಾನೆ.’ ಆಕೆ ಆ ಪಾತ್ರೆಯನ್ನು ಗುರುವಿನ ಕೈಗೆ ಕೊಟ್ಟಾಗ ಆತ ಆಶ್ಚರ್ಯಚಕಿತನಾಗಿಬಿಟ್ಟ. ಬಳಿಕ ಗುರು ನಡೆದ ವೃತ್ತಾಂತವನ್ನೆಲ್ಲ ವಿಸ್ತಾರವಾಗಿ ಆಕೆಯಿಂದ ಕೇಳಿ, ನದಿಯ ಹತ್ತಿರಕ್ಕೆ ಬಂದು ಹೇಳಿದ: ‘ನೀನು ಈಗ ಶ್ರೀಮನ್ನಾರಾಯಣನನ್ನು ನನಗೆ ತೋರಿಸದೆ ಇದ್ದರೆ, ಈ ಕ್ಷಣವೇ ನದಿಗೆ ಬಿದ್ದು ಪ್ರಾಣತ್ಯಾಗ ಮಾಡಿಬಿಡುತ್ತೇನೆ.’ ಶ್ರೀಮನ್ನಾರಾಯಣನೇನೊ ಒಡನೆಯೇ ಕಾಣಿಸಿಕೊಂಡ, ಆದರೆ ಗುರುವಿನ ಕಣ್ಣಿಗೆ ಮಾತ್ರ ಗೋಚರನಾಗಲಿಲ್ಲ. ಆಗ ವಿಧವೆ ಶ್ರೀಮನ್ನಾರಾಯಣನಿಗೆ ಪ್ರಾರ್ಥನೆ ಮಾಡಿಕೊಂಡಳು; ‘ಪ್ರಭು, ಗುರುವಿನ ಕಣ್ಣಿಗೆ ಗೋಚರನಾಗದೆ ನೀನು ಉಳಿದುಕೊಂಡರೆ, ಆತನೇನಾದರೂದೇಹತ್ಯಾಗ ಮಾಡಿಬಿಟ್ಟ ಎಂದರೆ ನಾನೂ ಆತನೊಡನೆ ದೇಹತ್ಯಾಗ ಮಾಡಿಬಿಡುತ್ತೇನೆ.’ ಆಗ ಶ್ರೀಮನ್ನಾರಾಯಣನು ಗುರುವಿಗೂ ಕಾಣಿಸಿಕೊಂಡ.
“ನೋಡಿ, ಗುರುಭಕ್ತಿಯ ದೆಸೆಯಿಂದ ಆಕೆಗೂ ಭಗವಂತನ ದರ್ಶನ ದೊರೆಯಿತು. ಆಕೆಯ ಗುರುವಿಗೂ ಭಗವಂತನ ದರ್ಶನ ದೊರೆಯಿತು. ಅದಕ್ಕಾಗಿಯೇ ನಾನು ಹೇಳುವುದು ‘ನನ್ನ ಗುರು ಹೆಂಡದಂಗಡಿಗೆ ಹೋಗುತ್ತಿರಬಹುದು; ಆದರೂ ಆತ ನನಗೆ ನಿತ್ಯಾನಂದರಾಯನೆ.’
“ಎಲ್ಲರೂ ಗುರು ಆಗಬೇಕು ಅಂತ ಇಚ್ಛೆಪಡುವರೇ ವಿನಾ ಶಿಷ್ಯ ಆಗಬೇಕು ಎಂಬುವವರು ಅತಿ ವಿರಳ. ಆದರೆ ನೋಡಿ, ನೀರು ದಿಣ್ಣೆ ಮೇಲೆ ಶೇಖರವಾಗುವುದಿಲ್ಲ; ಅದು ಶೇಖರವಾಗುವುದು ತಗ್ಗುಪ್ರದೇಶದಲ್ಲಿ ಮಾತ್ರ.
“ಗುರು ಯಾವ ಮಂತ್ರವನ್ನು ಕೊಡುತ್ತಾನೊ ಅದರಲ್ಲಿ ವಿಶ್ವಾಸವಿಟ್ಟು ಸಾಧನೆ ಭಜನೆ ಮಾಡಬೇಕು. ಮುತ್ತಿನ ಹುಳು ತನ್ನ ಚಿಪ್ಪನ್ನು ತೆರೆದು ಸ್ವಾತಿ ನಕ್ಷತ್ರದ ಮಳೆಗಾಗಿ ಕಾದು ಕುಳಿತಿರುತ್ತದೆ. ಆ ಮಳೆ ಬಿದ್ದೊಡನೆಯೇ ನೇರವಾಗಿ ಸಮುದ್ರದ ತಳಕ್ಕೆ ಮುಳುಗಿ ಆ ನೀರು ಮುತ್ತಾಗುವವರೆಗೆ ಅದು ಅಲ್ಲೇ ಇರುತ್ತದೆ ಎಂಬುದಾಗಿ ಒಂದು ಹೇಳಿಕೆ ಇದೆ.”
ಅಲ್ಲಿ ಅನೇಕ ಬ್ರಾಹ್ಮಭಕ್ತರು ನೆರೆದಿರುವುದನ್ನು ನೋಡಿ ಪರಮಹಂಸರು ಅವರಿಗೆ ಹೇಳಿದರು: “ಬ್ರಾಹ್ಮಸಭೆ ನಿಜವಾದ ಶ್ರದ್ಧಾಭಕ್ತಿಯ ಕೂಟವೊ ಅಥವಾ ಕೇವಲ ತೋರಿಕೆಯದೊ? ಬ್ರಾಹ್ಮಸಮಾಜದಲ್ಲಿ ಒಂದು ನಿಯಮಿತ ಉಪಾಸನೆ ನಡೆಯುತ್ತದೆ; ಅದು ಬಹಳ ಒಳ್ಳೆಯದೆ; ಆದರೆ ಆಳಕ್ಕೆ ಮುಳುಗಬೇಕು; ಕೇವಲ ಉಪಾಸನೆ, ಲೆಕ್ಚರುಗಳಿಂದಲೇ ಆತನ ಸಾಕ್ಷಾತ್ಕಾರ ದೊರೆಯದು. ಹೃದಯದಿಂದ ಭೋಗಾಸಕ್ತಿ ಹೊರಟು ಹೋಗುವಂತೆಯೂ, ಆತನ ಪಾದಪದ್ಮಗಳಲ್ಲಿ ಭಕ್ತಿ ಉಂಟಾಗುವಂತೆಯೂ ಆತನಿಗೆ ಸತತ ಪ್ರಾರ್ಥನೆ ಮಾಡುತ್ತಿರಬೇಕು.
“ಆನೆಗೆ ಹೊರಗೆ ಕಾಣೋ ಕೋರೆಹಲ್ಲುಗಳಲ್ಲದೆ ಒಳಗೆ ದವಡೆ ಹಲ್ಲುಗಳು ಇವೆ. ಹೊರಗಿನ ಕೋರೆ ಹಲ್ಲುಗಳು ಅದಕ್ಕೆ ಕೇವಲ ಅಲಂಕಾರಪ್ರಾಯ ಮಾತ್ರ; ಒಳಗಿರುವ ದವಡೆ ಹಲ್ಲುಗಳಿಂದ ಅದು ಆಹಾರ ತಿನ್ನುತ್ತದೆ. ಆಂತರ್ಯದಲ್ಲೇ ಕಾಮಕಾಂಚನಗಳನ್ನು ಭೋಗಿಸಿದರೆ ಅದು ವ್ಯಕ್ತಿಯ ಭಕ್ತಿಗೆ ಹಾನಿಯನ್ನು ತರುತ್ತದೆ.
“ಹೊರಗೆ ಲೆಕ್ಚರ್-ಗಿಕ್ಚರ್ ಕೊಡುವುದರಿಂದ ದೊರೆಯುವ ಫಲವೇನು? ರಣಹದ್ದು ಬಹಳ ಎತ್ತರಕ್ಕೇನೊ ಹಾರಿಹೋಗುತ್ತದೆ. ಆದರೆ ಅದರ ದೃಷ್ಟಿಯೆಲ್ಲಾ ಹೆಣದ ಗುಂಡಿಗಳ ಕಡೆಗೇ. ಬಾಣ ಬಿರುಸು ‘ಪುಸ್’ ಅಂತ ಆಕಾಶದ ಕಡೆಗೆ ಮೊದಲು ಏರೇನೊ ಹೋಗುತ್ತದೆ. ಆದರೆ ಸ್ವಲ್ಪ ಹೊತ್ತಿನಲ್ಲಿ ಅದು ಕೆಳಕ್ಕೆ ಬಿದ್ದು ಬಿಡುತ್ತದೆ.
“ಭೋಗಾಸಕ್ತಿ ಸಂಪೂರ್ಣವಾಗಿ ಬಿಟ್ಟುಹೋಗಿದ್ದರೆ, ಸಾಯುವ ಸಮಯದಲ್ಲಿ ಕೇವಲ ಭಗವಂತನ ಸ್ಮೃತಿಯೇ ಮನಸ್ಸಿಗೆ ಬರುತ್ತದೆ. ಇಲ್ಲದೆ ಇತ್ತು ಎಂದರೆ ಈ ಪ್ರಾಪಂಚಿಕ ವಸ್ತುಗಳ–ಹೆಂಡತಿ, ಮಕ್ಕಳು, ಮನೆ, ಧನ, ಮಾನ, ಸಂಭ್ರಮ–ಭಾವನೆಯೇ ಮನಸ್ಸಿಗೆ ಬರುತ್ತದೆ. ‘ರಾಧಾಕೃಷ್ಣ’ ಎಂದು ಹೇಳೋ ಹಾಗೆ ಹಕ್ಕಿಗೆ ಅಭ್ಯಾಸಮಾಡಿಸಬಹುದು; ಆದರೆ ಅದನ್ನು ಬೆಕ್ಕೇನಾದರೂ ಹೋಗಿ ಹಿಡಿದುಕೊಂಡಿತು ಎಂದರೆ ಅದು ಕೇವಲ ‘ಕ್ಯಾ, ಕ್ಯಾ’ ಅಂತ ಕೂಗಿಕೊಳ್ಳುತ್ತದೆ.
“ಅದಕ್ಕಾಗಿಯೇ ಆತನ ನಾಮಗುಣಕೀರ್ತನೆ, ಆತನ ಧ್ಯಾನ, ಆತನ ಚಿಂತನೆ ಇವನ್ನು ಸತತ ಮಾಡುತ್ತಿರಬೇಕು. ಇವೂ ಅಲ್ಲದೆ ಭೋಗಾಸಕ್ತಿ ಹೃದಯವನ್ನು ಬಿಟ್ಟು ತೊಲಗಿ ಹೋಗುವ ಹಾಗೆ, ಆತನ ಪಾದಪದ್ಮಗಳ ಕಡೆ ಮನಸ್ಸು ಸತತ ಹರಿಯುವ ಹಾಗೆ ಮಾಡಿಕೊಡಬೇಕೆಂದು ಆತನಿಗೆ ಪ್ರಾರ್ಥನೆ ಮಾಡಿಕೊಳ್ಳುತ್ತಿರಬೇಕು.
“ಈ ವಿಧದ ಸಂಸಾರಿಗಳು ಈ ಜಗತ್ತಿನಲ್ಲಿ ದಾಸಿಯೋಪಾದಿಯಲ್ಲಿ ವಾಸಿಸುತ್ತಾರೆ. ಆಕೆ ಯಜಮಾನನ ಮನೆಯ ಎಲ್ಲಾ ಕೆಲಸಗಳನ್ನು ಮಾಡುತ್ತಿರುತ್ತಾಳೆ. ಆದರೆ ಆಕೆಯ ಮನಸ್ಸು ಮಾತ್ರ ತನ್ನ ಹಳ್ಳಿಯ ಮೇಲೆ ನೆಲೆಸಿರುತ್ತದೆ; ಅಂದರೆ ಭಗವಂತನಲ್ಲಿ ಮನಸ್ಸಿಟ್ಟು ಈ ಜಗತ್ತಿನ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಸಂಸಾರಕ್ಕೆ ಕಾಲು ಬಿತ್ತು ಎಂದರೆ ಕೈ ಮೈಗೆಲ್ಲ ಕೆಸರು ತಗಲಿಯೇ ತಗಲುತ್ತದೆ. ಆದರೆ ಭಕ್ತ-ಸಂಸಾರಿ ಕೆಸರುಮೀನಿನೋಪಾದಿಯಲ್ಲಿ ಈ ಜಗತ್ತಿನಲ್ಲಿ ವಾಸಿಸುತ್ತಾನೆ. ಕೆಸರುಮೀನು ಕೆಸರಿನಲ್ಲಿ ವಾಸಿಸುತ್ತಿದ್ದರೂ ಅದು ಕೆಸರನ್ನು ಮೈಗೆ ಅಂಟಿಸಿಕೊಳ್ಳದು.
“ಬ್ರಹ್ಮ, ಶಕ್ತಿ ಅಭೇದ. ಭಗವಂತನನ್ನು ತಾಯಿ ಎಂಬುದಾಗಿ ಸಂಬೋಧಿಸಲಾರಂಭಿ ಸಿದರೆ ಬಹು ಬೇಗ ಹೃದಯದಲ್ಲಿ ಭಕ್ತಿ ಉಂಟಾಗಿಬಿಡುತ್ತದೆ, ಪ್ರೀತಿ ಉಂಟಾಗಿಬಿಡುತ್ತದೆ.”
ಹೀಗೆಂದು ಹೇಳಿ ಪರಮಹಂಸರು ಹಾಡಲಾರಂಭಿಸಿದ್ದಾರೆ:
ಶ್ರೀ ಘನಶ್ಯಾಮೆಯ ಚರಣಾಕಾಶದಿ ಗಾಳಿಪಟದ ತೆರದಿ
ಹಾರುತಿರಲು ಮನ, ದುರಿತ ಕಲುಷ ಬಿರುಗಾಳಿಯು ಭರದಿ
ಬೀಸಿ ಪಟವ ಈ ದರಿಗೆ ತಳ್ಳಿತೋ ಮತ್ತೆ ಏರದಂತೆ
ಸತಿ ಸುತ ವ್ಯಾಮೋಹದ ಮಾಯೆಗೆ ಸಿಕ್ಕಿ ಹರಿಯುವಂತೆ!
ಮನದ ಪಟದ ಅಜ್ಞಾನಮುಂಡವೇ ಮುರಿಯಲಿಳೆಗೆ ಬಿತ್ತು.
ಶ್ರದ್ಧೆಯ ಸೂತ್ರವು ಹಿಡಿದಿದ್ದರು ಪಟ ಅರಿವರ್ಗದಿ ನಮೆದಾಯ್ತು.
“ಇಂಥ ಪಟವ ನಾ ಹಾರಾಟಕೆ ಬಿಡದಿದ್ದರೆ ಒಳಿತಾಗಿತ್ತು”
ಎಂದು ನುಡಿವನೀ ನರೇಶಚಂದ್ರನು ನೋವಿನಲಿ ನಮೆದು.
ಅವರು ಮತ್ತೆ ಹಾಡುತ್ತಿದ್ದಾರೆ:
ಅಂದು–
ನಂದಗೋಕುಲದಲ್ಲಿ ಗೋಪಾಲನಾದಂದು….
ಪರಮಹಂಸರು ಎದ್ದುನಿಂತು ಈ ಹಾಡುಗಳನ್ನು ಹಾಡುತ್ತ ಹಾಡುತ್ತ ನರ್ತಿಸುತ್ತಲೂ ಇದ್ದಾರೆ. ಭಕ್ತರೆಲ್ಲರೂ ಎದ್ದು ನಿಂತುಕೊಂಡಿದ್ದಾರೆ. ಪರಮಹಂಸರು ಆಗಾಗ ಸಮಾಧಿಸ್ಥ ರಾಗುತ್ತಲೇ ಇದ್ದಾರೆ. ಭಕ್ತರೆಲ್ಲರೂ ಬೊಂಬೆಗಳೋಪಾದಿಯಲ್ಲಿ ನಿಂತು ಪರಮಹಂಸರನ್ನು ಏಕದೃಷ್ಟಿಯಿಂದ ನೋಡುತ್ತಿದ್ದಾರೆ. ಡಾಕ್ಟರ್ ದುಕಾರಿ ಅವರ ಕಣ್ಣಿನೊಳಕ್ಕೆ ಬೆರಳಿಟ್ಟು ಪರೀಕ್ಷೆ ಮಾಡುತ್ತಿದ್ದಾನೆ. ಡಾಕ್ಟರರ ಈ ವರ್ತನೆಯನ್ನು ನೋಡಿ ಭಕ್ತರಿಗೆ ಮುಖ ಮುರಿದಂತೆ ಆಗಿಬಿಟ್ಟಿದೆ.
ಈ ಅದ್ಭುತ ಸಂಕೀರ್ತನೆ ಮತ್ತು ನೃತ್ಯ ಮುಗಿದನಂತರ ಎಲ್ಲರೂ ಕೆಳಕ್ಕೆ ಕುಳಿತು ಕೊಂಡರು. ಈ ಸಮಯಕ್ಕೆ ಸರಿಯಾಗೇ ಕೇಶವಸೇನ ಕೆಲವು ಬ್ರಾಹ್ಮಭಕ್ತರೊಡನೆ ಅಲ್ಲಿಗೆ ಬಂದ. ಆತ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡ. ರಾಜೇಂದ್ರ ಕೇಶವಸೇನನಿಗೆ ಹೇಳಿದ, ಬಹಳ ಸೊಗಸಾದ ಕೀರ್ತನೆ ನಡೆಯಿತು ಎಂಬುದಾಗಿ. ಬಳಿಕ ಆತ ತ್ರೈಲೋಕ್ಯನನ್ನು ಹಾಡುವಂತೆ ಕೇಳಿಕೊಂಡ. ಅದಕ್ಕೆ ಕೇಶವ ಹೇಳಿದ: “ಪರಮಹಂಸರು ಆಗಲೆ ಕೆಳಕ್ಕೆ ಕುಳಿತುಕೊಂಡುಬಿಟ್ಟಿರುವುದರಿಂದ ಕೀರ್ತನೆಯಲ್ಲಿ ಜೀವಾಳವೇ ಇರುವುದಿಲ್ಲ.”
ತ್ರೈಲೋಕ್ಯ ಮತ್ತು ಬ್ರಾಹ್ಮಭಕ್ತರು ಹಾಡಲಾರಂಭಿಸಿದ್ದಾರೆ:
ಹರಿನಾಮವ ಜಪಿಸೋ ಮನ
ಹರಿನಾಮವ ನುತಿಸೋ ಮನ
ಹರಿನಾಮವ ಗಾಯನಗೈ ಓ ಮನವೆ…..
ಎಲೆ ಹಾಕಲು ಎರಡನೆ ಅಂತಸ್ತಿನಲ್ಲಿ ಸಿದ್ಧತೆ ನಡೆಯುತ್ತಿದೆ. ಪರಮಹಂಸರು ಕೇಶವಸೇನನೊಡನೆ ಮಾತುಕತೆಗಳಾಡುತ್ತ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ನಗುತ್ತ): “ಇಂದು ಮನುಷ್ಯನ ಫೋಟೋ ತೆಗೆಯುವ ಯಂತ್ರ ವನ್ನು ನೋಡಿ ನನಗೆ ಬಹಳ ಆನಂದವಾಗಿಬಿಟ್ಟಿದೆ. ಒಂದು ವಿಶೇಷ ಏನೆಂದರೆ ಬರಿ ಗಾಜಿನ ಮೇಲೆ ಭಾವಚಿತ್ರ ಏಳದೆ, ಏನೊ ಒಂದು ದ್ರಾವಕವನ್ನು ಸವರಿದ ಗಾಜಿನ ಮೇಲೆ ಏಳುತ್ತದೆ. ಅದೇ ರೀತಿಯಾಗಿ ಬರಿದೆ ಭಗವದ್ವಿಷಯಗಳನ್ನು ಕಿವಿಯಲ್ಲಿ ಕೇಳುವುದರಿಂದ ಮನಸ್ಸಿನ ಮೇಲೆ ಯಾವ ಪರಿಣಾಮವೂ ಆಗದು. ಅದು ಬೇಗ ಮರೆತುಹೋಗಿ ಬಿಡುತ್ತದೆ. ಆದರೆ ಭಕ್ತಿ ಮತ್ತು ಅನುರಾಗಗಳಿಂದ ಆಂತರ್ಯ ಸವರಲ್ಪಟ್ಟಿದ್ದರೆ ಭಗವದ್ಭಾವನೆಗಳು ಮನಸ್ಸಿನಲ್ಲಿ ಚಿರಮುದ್ರಿತವಾಗುತ್ತವೆ.”
ಈಗ ಪರಮಹಂಸರನ್ನು ಎರಡನೆ ಅಂತಸ್ತಿಗೆ ಕರೆದುಕೊಂಡು ಹೋಗಿ ಬಹಳ ಸುಂದರವಾದ ರತ್ನಗಂಬಳಿಯ ಮೇಲೆ ಕೂರಿಸಲಾಯಿತು. ಮನಮೋಹನನ ತಾಯಿ ಅವರಿಗೆ ಊಟಕ್ಕೆ ಬಡಿಸುತ್ತಿದ್ದಾಳೆ. ಕೇಶವಸೇನ ಮತ್ತು ಉಳಿದ ಭಕ್ತರೂ ಆನಂದದಿಂದ ಊಟ ಮಾಡುತ್ತಿದ್ದಾರೆ.
೧ನೆ ಜನವರಿ ೧೮೮೨, ಭಾನುವಾರ
ಪರಮಹಂಸರು ಸಿಮೂಲಿಯಾ ಬ್ರಾಹ್ಮಸಮಾಜದ ವಾರ್ಷಿಕೋತ್ಸವದಲ್ಲಿ ಭಾಗ ವಹಿಸಲು ಕಲ್ಕತ್ತದಲ್ಲಿರುವ ಜ್ಞಾನಚೌಧುರಿಯ ಮನೆಗೆ ತಮ್ಮ ಭಕ್ತರೊಡನೆ ಬಂದಿದ್ದಾರೆ. ಕೇಶವಸೇನ, ರಾಮ, ಮನಮೋಹನ, ಬಲರಾಮ, ಕೇದಾರ, ನರೇಂದ್ರ, ರಾಖಾಲ ಜೊತೆಗೆ ಇನ್ನು ಕೆಲವರು ಅಲ್ಲಿಗೆ ಬಂದಿದ್ದಾರೆ. ನರೇಂದ್ರ ಈಗ ಕೆಲವು ದಿನಗಳ ಹಿಂದೆ ರಾಮ ಮೊದಲಾದವರೊಡನೆ ದಕ್ಷಿಣೇಶ್ವರಕ್ಕೆ ಹೋಗಿ ಪರಮಹಂಸರನ್ನು ಕಂಡು ಬಂದಿದ್ದ. ಆತ ಆಗಾಗ ಈ ಸಿಮೂಲಿಯ ಬ್ರಾಹ್ಮಸಮಾಜಕ್ಕೆ ಬಂದು ಹಾಡೋದು ಉಪಾಸನೆ ನಡೆಸುವುದು ಇವನ್ನೆಲ್ಲಾ ಮಾಡುತ್ತಿದ್ದ. ಇಂದೂ ಆತ ಈ ಸಭೆಯಲ್ಲಿ ಭಾಗವಹಿಸುತ್ತಾನೆ.
ಈಗ ಬ್ರಾಹ್ಮಸಮಾಜಸಂಪ್ರದಾಯಕ್ಕೆ ತಕ್ಕಂತೆ ಉಪಾಸನೆ ಆರಂಭವಾಯಿತು. ಮೊದಲು ಸ್ವಲ್ಪ ಹೊತ್ತು ಶಾಸ್ತ್ರಪಠನ ನಡೆಯಿತು; ಬಳಿಕ ನರೇಂದ್ರ ಸ್ವಲ್ಪ ಹೊತ್ತು ಹಾಡಿದ. ಆಗಲೆ ಮುಂಗತ್ತಲೆ ಕಾಲಿಟ್ಟಿದೆ. ಭಕ್ತರೆಲ್ಲರೂ ಆನಂದದಿಂದ ಮಾತುಕತೆಗಳನ್ನಾಡಿಕೊಳ್ಳುತ್ತಿದ್ದಾರೆ. ಪರಮಹಂಸರು ತಮ್ಮ ಸುತ್ತಲೂ ಕುಳಿತಿರುವ ಗೃಹಸ್ಥ ಭಕ್ತರ ಕಡೆ ದೃಷ್ಟಿ ಹಾಕಿ ನಗುತ್ತ ನಗುತ್ತ ಹೇಳುತ್ತಿದ್ದಾರೆ: “ತನ್ನ ಮನಸ್ಸನ್ನು ಭಗವಂತನಿಗೆ ಅರ್ಪಿಸಲು ಸಂಸಾರಿಗೆ ಸಾಧ್ಯವಾಗದೆ ಏನು? ಆದರೆ ಒಂದು ವಿಷಯ. ಆತನ ಮನಸ್ಸು ಆತನ ವಶದಲ್ಲಿ ಇಲ್ಲ. ಅದು ಆತನ ವಶದಲ್ಲಿ ಇದ್ದರೆ ತಾನೆ ಆತ ಅದನ್ನು ಭಗವಂತನಿಗೆ ಅರ್ಪಿಸಬಲ್ಲ. ಅದನ್ನು ಆತ ಅಡವಿಟ್ಟುಬಿಟ್ಟಿದ್ದಾನೆ–ಕಾಮಕಾಂಚನಗಳಿಗೆ ಅಡವಿಟ್ಟುಬಿಟ್ಟಿದ್ದಾನೆ. ಅದಕ್ಕಾಗೇ ಆತನಿಗೆ ಸಾಧುಸಂಗದ ಆವಶ್ಯಕತೆ ಇದೆ. ಆತ ತನ್ನ ಮನಸ್ಸನ್ನು ಅಡವಿನಿಂದ ಬಿಡಿಸಿಕೊಂಡ ಮೇಲೆ ತಾನೆ ಅದನ್ನು ಭಜನೆಯಲ್ಲಿ ತೊಡಗಿಸಬಲ್ಲ. ಆದ್ದರಿಂದ ಮೊದಲು ಆತನಿಗೆ ಅತ್ಯಾವಶ್ಯಕವಾಗಿ ಬೇಕಾಗಿರುವುದು ಗುರುವಿನ ಸೇವೆ, ಸಾಧುಸಂಗ. ಸಾಧ್ಯವಾದರೆ ಆತ ನಿರ್ಜನಪ್ರದೇಶದಲ್ಲಿ ಭಗವಂತನ ಧ್ಯಾನದಲ್ಲೇ ಮಗ್ನನಾಗಿರಬೇಕು. ಇಲ್ಲದಿದ್ದರೆ ಸಾಧುಸುತ್ಪುರುಷರೊಡನೆ ವಾಸಿಸಬೇಕು. ಮನಸ್ಸನ್ನು ಒಂಟಿಯಾಗಿ ಬಿಟ್ಟು ಬಿಟ್ಟಿದ್ದೇ ಆದರೆ ಕ್ರಮೇಣ ಅದು ಶುಷ್ಕವಾಗಿಬಿಡುತ್ತದೆ. ಒಂದು ಕೊಡ ನೀರನ್ನು ಪ್ರತ್ಯೇಕವಾಗಿ ಒಂದು ಕಡೆ ಇಟ್ಟುಬಿಟ್ಟಿದ್ದರೆ ಕ್ರಮೇಣ ಅದು ಇಂಗಿ ಬರಿದಾಗಿಬಿಡುತ್ತದೆ. ಆದರೆ ಅದನ್ನು ಗಂಗೆಯಲ್ಲಿ ಮುಳುಗಿಸಿ ಇಟ್ಟಿದ್ದರೆ ಅದಕ್ಕೆ ಆ ಅವಸ್ಥೆ ಬರುವ ಹಾಗೇ ಇಲ್ಲ.
“ಕುಲುಮೆಯಲ್ಲಿ ಕಬ್ಬಿಣ ಕೆಂಪಗೆ ಕಾದಿರುತ್ತದೆ. ಅದನ್ನು ಅಲ್ಲಿಂದ ತೆಗೆದು ಹೊರಗೆ ಪ್ರತ್ಯೇಕವಾಗಿ ಇಟ್ಟಿದ್ದೇ ಆದರೆ, ಅದು ಮತ್ತೆ ಎಂದಿನಂತೆ ಕಪ್ಪಾಗುತ್ತದೆ. ಅದಕ್ಕಾಗಿ ಅದನ್ನು ಆಗಾಗ ಕುಲುಮೆಗೆ ಹಾಕುತ್ತಲೆ ಇರಬೇಕು.
“ನಾನು ಕರ್ತ, ನನ್ನಿಂದಲೇ ಈ ಸಂಸಾರ ನಡೆದುಕೊಂಡು ಹೋಗುತ್ತದೆ. ನನ್ನ ಗೃಹ ನನ್ನ ಬಂಧುಬಳಗ–ಎಂಬಿವೇ ಮೊದಲಾದ ಭಾವನೆಗಳು ಅಜ್ಞಾನಜನ್ಯವಾದುವು. ನಾನು ಆತನ ದಾಸ, ಆತನ ಭಕ್ತ, ಆತನ ಸಂತಾನ–ಈ ಭಾವನೆಗಳು ಬಹಳ ಶ್ರೇಯಸ್ಕರ ವಾದುವು.
“ಒಮ್ಮೆಗೇ ‘ಅಹಂ’ ಎಂಬುದು ಹೊರಟುಹೋಗದು. ಈ ನಿಮಿಷ ಅದು ಇಲ್ಲವೇ ಇಲ್ಲವೆಂದು ವಿಚಾರದ ಮೂಲಕ ಮನಸ್ಸಿಗೆ ತೋರಿಸಬಹುದು. ಆದರೆ ಮರುನಿಮಿಷ ಎಲ್ಲಿಂದಲೊ ಗೊತ್ತಿಲ್ಲ ಅದು ಮನಸ್ಸನ್ನು ಪ್ರವೇಶಿಸಿಬಿಡುತ್ತದೆ. ತಲೆಯನ್ನು ಕತ್ತರಿಸಿ ಹಾಕಿದ ಮೇಲೂ ಆಡು ಸ್ವಲ್ಪ ‘ಬ್ಯಾ, ಬ್ಯಾ’ ಅಂತ ಕೂಗೋ ಹಾಗೆ ಮತ್ತು ಕೈಕಾಲು ಒದರೋ ಹಾಗೆ ಅದು ವರ್ತಿಸುತ್ತದೆ.
“ಭಗವಂತನ ದರ್ಶನ ದೊರೆತ ಮೇಲೂ ಆತ ನಮ್ಮ ಹೃದಯದಲ್ಲಿ ಇಡುತ್ತಾನಲ್ಲ ‘ಅಹಂ’ ಎಂಬುದನ್ನು, ಅದು ‘ಮಾಗಿದ’ ಅಹಂ. ಅದು ಕತ್ತಿ ಸ್ಪರ್ಶವೇದಿಯನ್ನು ಮುಟ್ಟಿಬಿಟ್ಟು ಚಿನ್ನವಾಗಿ ಬಿಟ್ಟ ಹಾಗೆ; ಮತ್ತೆ ಆದರಿಂದ ಯಾವ ಹಿಂಸಾತ್ಮಕ ಕಾರ್ಯವೂ ಸಾಧ್ಯವಾಗುವುದಿಲ್ಲ.”
ಈ ರೀತಿ ಪರಮಹಂಸರು ಪೂಜೆಯ ಅಂಗಳದಲ್ಲಿ ಕುಳಿತು ಮಾತನಾಡುತ್ತಿದ್ದಾರೆ; ಕೇಶವಸೇನ ಮೊದಲಾದವರು ಮೈಮರೆತು ಕೇಳುತ್ತಿದ್ದಾರೆ. ಘಂಟೆ ರಾತ್ರಿ ಎಂಟಾಯಿತು. ಉಪಾಸನೆಯನ್ನು ಆರಂಭಿಸಲು ಮೂರು ಸಲ ಗಂಟೆ ಶಬ್ದ ಆಯಿತು.
ಶ್ರೀರಾಮಕೃಷ್ಣರು (ಕೇಶವಸೇನ ಮೊದಲಾದವರಿಗೆ): “ಏಕೆ ಹೀಗೆ? ನಿಮ್ಮ ಉಪಾಸನೆ ಇನ್ನೂ ಆರಂಭವಾಗಿಯೇ ಇಲ್ಲ ಅಂತ ಕಾಣುತ್ತದೆಯಲ್ಲ!”
ಕೇಶವಸೇನ: “ಇನ್ನು ಬೇರೆ ಉಪಾಸನೆ ಏನು? ಈಗ ನಡೆಯುತ್ತಿರುವುದು ಉಪಾಸನೆ ಅಲ್ಲವೇ?”
ಶ್ರೀರಾಮಕೃಷ್ಣರು: “ಹಾಗೆ ಮಾಡಬಾರದು. ಪದ್ಧತಿಗನುಸಾರ ಮೊದಲು ನಡೆಯಲಿ.”
ಕೇಶವ: “ಏಕೆ ಅದು? ಇದೇ ಚೆನ್ನಾಗಿ ನಡೆಯುತ್ತಿದೆಯಲ್ಲ.”
ಪರಮಹಂಸರಿಂದ ಅನೇಕ ಸಾರಿ ಹೇಳಿಸಿಕೊಂಡು ಕೇಶವಸೇನ ಎದ್ದು ಈಗ ಉಪಾಸನೆ ಆರಂಭ ಮಾಡಿದ್ದಾನೆ. ಉಪಾಸನೆ ನಡೆಯುತ್ತಿದ್ದ ಹಾಗೆ ಪರಮಹಂಸರು ಇದ್ದಕ್ಕಿದ್ದ ಹಾಗೆ ಎದ್ದು ನಿಂತು ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಬ್ರಾಹ್ಮಭಕ್ತಮಂಡಲಿ ಹಾಡುತ್ತಿದೆ:
ಹರಿನಾಮವ ಜಪಿಸೋ ಮನ
ಹರಿನಾಮವ ನುತಿಸೋ ಮನ
ಹರಿನಾಮವ ಗಾಯನಗೈ ಓ ಮನವೆ……
ಪರಮಹಂಸರು ಇನ್ನೂ ಭಾವಾವಿಷ್ಟರಾಗೇ ನಿಂತಿದ್ದಾರೆ. ಕೇಶವಸೇನ ಅವರ ಕೈಯನ್ನು ಹಿಡಿದುಕೊಂಡು ಬಹಳ ಎಚ್ಚರಿಕೆಯಿಂದ ದೇವಾಲಯದಿಂದ ಪ್ರಾಂಗಣಕ್ಕೆ ಇಳಿಸಿಕೊಂಡು ಹೋದ. ಕೀರ್ತನೆ ಮುಂದುವರಿಯುತ್ತಿದೆ. ಪರಮಹಂಸರು ಕೀರ್ತನೆಯೊಡನೆ ನರ್ತಿಸುತ್ತಿದ್ದಾರೆ. ಭಕ್ತರು ಅವರ ಸುತ್ತಲೂ ನರ್ತಿಸುತ್ತಿದ್ದಾರೆ.
ಪರಮಹಂಸರು ಮತ್ತೆಲ್ಲರೂ ಉಪಾಹಾರವನ್ನು ಮಾಡಿ ಮುಗಿಸಿದರು. ಈಗ ಪರಮ ಹಂಸರು ಕೇಶವಸೇನನೊಡನೆ ಮಾತುಕತೆ ಆಡುತ್ತಿದ್ದಾರೆ. ಮಾತಾಡುತ್ತ ಪರಮಹಂಸರು ಹಾಡಲಾರಂಭಿಸಿದ್ದಾರೆ. ಕೇಶವಸೇನನೂ ಅವರೊಡನೆ ಹಾಡುತ್ತಿದ್ದಾನೆ:
ಸಾಗುತಿಹುದು ಚಿತ್ತಭೃಂಗ
ಕಾಳೀಪದ ನೀಲಕಮಲ, ಮಧುಪಾನದ ಆಸೆಗೆ!…..
ಅವರು ಮತ್ತೆ ಹಾಡುತ್ತಿದ್ದಾರೆ:
ಶ್ರೀ ಘನಶ್ಯಾಮೆಯ ಚರಣಾಕಾಶದಿ ಗಾಳಿಪಟದ ತೆರದಿ
ಹಾರುತಿರಲು ಮನ, ದುರಿತ ಕಲುಷ ಬಿರುಗಾಳಿಯ ಭರದಿ…..
ಪರಮಹಂಸರು ಮತ್ತು ಕೇಶವಸೇನ ಇಬ್ಬರೂ ಪ್ರೇಮೋನ್ಮತ್ತರಾಗಿಬಿಟ್ಟಿದ್ದಾರೆ. ಉಳಿದ ಭಕ್ತರೂ ಅವರೊಡನೆ ಮಧ್ಯರಾತ್ರಿಯವರೆಗೆ ಹಾಡಿ ನರ್ತಿಸಿದರು.
ಶ್ರೀರಾಮಕೃಷ್ಣರು ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಕೇಶವಸೇನನಿಗೆ ಹೇಳುತ್ತಿದ್ದಾರೆ: “ನಿನ್ನ ಮಗನ ವಿವಾಹದ ಸಂದರ್ಭದಲ್ಲಿ ನನಗೇಕೆ ನೀನು ಬಹುಮಾನಗಳನ್ನು ಕಳುಹಿಸಿದೆ? ಅವನ್ನು ತೆಗೆದುಕೊಂಡು ನಾನು ಏನು ಮಾಡಲಿ? ದಯವಿಟ್ಟು ಹಿಂದಕ್ಕೆ ತೆಗೆದುಕೊಂಡುಬಿಡು.”
ಕೇಶವಸೇನ ಸ್ವಲ್ಪ ನಕ್ಕ. ಪರಮಹಂಸರು ಮತ್ತೆ ಆತನಿಗೆ ಹೇಳುತ್ತಿದ್ದಾರೆ: “ನನ್ನ ಸಂಬಂಧವಾಗಿ ಏಕೆ ನೀನು ನಿಮ್ಮ ಪತ್ರಿಕೆಗಳಲ್ಲಿ ಬರೆಯುತ್ತಾ ಇದ್ದೀಯೆ? ಪುಸ್ತಕಗಳಲ್ಲಿ ವಾರ್ತಾಪತ್ರಿಕೆಗಳಲ್ಲಿ ಪ್ರಕಟಿಸಿ ಯಾರನ್ನೇ ಆಗಲಿ ದೊಡ್ಡವನನ್ನಾಗಿ ಮಾಡಲಾಗುವುದಿಲ್ಲ. ಆದರೆ ಭಗವಂತ ಯಾರನ್ನು ದೊಡ್ಡವನನ್ನಾಗಿ ಮಾಡುತ್ತಾನೊ ಆತ ಕಾಡಿನ ಮಧ್ಯೆ ವಾಸಿಸುತ್ತಿದ್ದರೂ ಆತನ ವಿಷಯ ಎಲ್ಲರಿಗೂ ಗೊತ್ತಾಗಿ ಬಿಡುತ್ತದೆ. ದಟ್ಟವಾದ ಕಾಡಿನ ಮಧ್ಯೆ ಹೂವು ಅರಳಿದರೆ ಅದು ಜೇನುಹುಳುಗಳಿಗೆ ತಿಳಿದುಬಂದುಬಿಡುವುದು. ಆದರೆ ನೊಣಗಳಿಗೆ ಅದು ಸಾಧ್ಯವಿಲ್ಲ. ಮನುಷ್ಯನ ಕೈಯಲ್ಲಿ ಏನು ತಾನೆ ಸಾಧ್ಯ? ಆತನಲ್ಲಿ ಆಶ್ರಯವನ್ನು ಹೊಂದಬೇಡ. ಆತ ಒಂದು ಕ್ರಿಮಿ ಮಾತ್ರ. ಈ ದಿನ ನಿನ್ನನ್ನು ಹೊಗಳುವ ನಾಲಗೆಯೇ ನಾಳೆ ನಿನ್ನನ್ನು ತೆಗಳುವುದು. ನನಗೆ ಹೆಸರು ಕೀರ್ತಿ ಬೇಕಾಗಿಲ್ಲ. ನಾನು ದೀನರಲ್ಲಿ ದೀನನಾಗಿ ನಮ್ರನಲ್ಲಿ ನಮ್ರನಾಗಿ ಯಾವಾಗಲೂ ಇರುವಂತಾಗಲಿ!”