೨೪ನೆ ಏಪ್ರಿಲ್ ೧೮೮೫, ವೈಶಾಖ ಶುಕ್ಲ ದಶಮಿ, ಶುಕ್ರವಾರ
ಶ್ರೀರಾಮಕೃಷ್ಣ ಪರಮಹಂಸರು ೧೫ನೆಯ ಆಗಸ್ಟ್ ೧೮೮೬, ಭಾನುವಾರ ಮಹಾ ಸಮಾಧಿಯನ್ನು ಹೊಂದಿದರು. ಇದು ಅವರ ಶಿಷ್ಯಭಕ್ತರನ್ನೆಲ್ಲಾ ಮಹಾ ದುಃಖಸಾಗರದಲ್ಲಿ ಮುಳುಗಿಸಿಬಿಟ್ಟಿದೆ. ಅವರ ಅವಸ್ಥೆ ಹಡಗು ಒಡೆದುಹೋಗಿ ಮಹಾಸಮುದ್ರದಲ್ಲಿ ಮುಳುಗಿ ಏಳುತ್ತಿರುವಂತೆ ಆಗಿಬಿಟ್ಟಿದೆ. ಆದರೂ ಬಲಯುತವಾದ ಪ್ರೇಮದ ಹಗ್ಗವೊಂದು ಅವರನ್ನೆಲ್ಲಾ ಬಿಗಿದು ಒಂದೇ ಕಡೆ ಕೂಡಿಸಿಬಿಟ್ಟಿದೆ. ಅವರು ಒಬ್ಬರಿಗೊಬ್ಬರು ತೋರಿಸು ತ್ತಿರುವ ಒತ್ತಾಸೆಯ ದೆಸೆಯಿಂದ ಧೈರ್ಯ ಮತ್ತು ಸಾಹಸ ಅವರ ಹೃದಯದಲ್ಲಿ ನೆಲೆಸಿದೆ. ಪ್ರಾಪಂಚಿಕರ ಸ್ನೇಹ ಅವರಿಗೆ ಸಪ್ಪೆಯಾಗಿ ತೋರುತ್ತಿದೆ. ಪರಮಹಂಸರ ವಿಷಯವಾಗಿಯೇ ಮಾತುಕತೆಗಳಾಡುತ್ತಿದ್ದಾರೆ. “ಅವರನ್ನು ಮತ್ತೆ ನಾವು ನೋಡಲಾರೆವೇ?” — ಎಂಬ ಭಾವನೆಯೇ ಅವರ ಸ್ವಪ್ನದ ಕನವರಿಕೆ; ಹಗಲುಗನಸಿನ ಹಂಬಲ; ಮನಸ್ಸಿನ ಏಕಮಾತ್ರ ಚಿಂತನೆ. ಪರಮಹಂಸರನ್ನು ಕಳೆದುಕೊಂಡಿರುವುದಕ್ಕಾಗಿ ಒಂಟೊಂಟಿಯಾಗಿ ಕುಳಿತು ಬಹಳವಾಗಿ ಅತ್ತರು; ಕಲ್ಕತ್ತದ ಬೀದಿಗಳಲ್ಲಿ ನಡೆಯುತ್ತಿರುವಾಗಲೂ ಅವರಿಗೆ ಪರಮಹಂಸರ ಭಾವನೆಯೇ. ಪರಮಹಂಸರು ಒಮ್ಮೆ ಮಾಸ್ಟರಿಗೆ ಹೇಳಿದ್ದರು: “ನಾನು ಈ ಶರೀರವನ್ನು ತ್ಯಜಿಸಿದ ನಂತರ ನೀವೆಲ್ಲರೂ ನನ್ನನ್ನು ಸ್ಮರಿಸಿಕೊಂಡು ದಿಕ್ಕಿಲ್ಲದವರ ಹಾಗೆ ಅಲೆದಾಡುವ ಚಿತ್ರ ನನ್ನ ಕಣ್ಣಮುಂದೆ ಬರುತ್ತಿರುವುದನ್ನು ನೋಡಿ ನನಗೆ ಈ ಶರೀರವನ್ನು ತ್ಯಜಿಸಲು ಕಷ್ಟವಾಗಿ ತೋರುತ್ತದೆ.” ಶಿಷ್ಯರಲ್ಲಿ ಕೆಲವರು ಯೋಚಿಸುತ್ತಿದ್ದಾರೆ: “ಪರಮಹಂಸರು ಈಗ ಈ ಭೌತಿಕ ಜಗತ್ತಿನಲ್ಲಿ ಇಲ್ಲ. ಆದರೆ ನಾವು ಮಾತ್ರ ಇನ್ನೂ ಬದುಕಿಕೊಂಡಿದ್ದೇವಲ್ಲ, ಯಾವ ಎದೆಯಿಂದ! ಇಚ್ಛೆಪಟ್ಟರೆ ನಾವು ನಮ್ಮ ನಮ್ಮ ದೇಹಗಳನ್ನು ತ್ಯಜಿಸಿಬಿಡಬಲ್ಲೆವು. ಆದರೆ ಹಾಗೆ ಮಾತ್ರ ನಾವು ಮಾಡದೆ ಇದ್ದೇವಲ್ಲ.” ಪದೇ ಪದೇ ಪರಮಹಂಸರು ಅವರಿಗೆಲ್ಲಾ ಹೇಳಿದ್ದರು, ಯಾರೇ ಆಗಲಿ, ಅತ್ಯಂತ ವ್ಯಾಕುಲಚಿತ್ತದಿಂದ ಭಗವಂತನ ಸಾಕ್ಷಾತ್ಕಾರಕ್ಕಾಗಿ ತವಕಪಡುತ್ತಿದ್ದರೆ, ಆತನಿಗೆ ಆತನ ಸಾಕ್ಷಾತ್ಕಾರ ದೊರೆತೇ ದೊರೆಯುತ್ತದೆ. ಪರಮಹಂಸರು ಅವರಿಗೆ ಅಭಯವನ್ನು ಕೊಟ್ಟಿದ್ದರು. ಹೃತ್ಪೂರ್ವಕವಾಗಿ ಭಗವಂತನನ್ನು ಪ್ರಾರ್ಥಿಸಿದರೆ, ಆತ ಅವರ ಪ್ರಾರ್ಥನೆಯನ್ನು ಕೇಳೇ ಕೇಳುತ್ತಾನೆ.
ಶ್ರೀರಾಮಕೃಷ್ಣರ ಅಂತರಂಗ ಶಿಷ್ಯರು ಹಗಲಿರುಳೆನ್ನದೆ ಪರಮಹಂಸರ ಸೇವೆಯನ್ನು ಕಾಶೀಪುರದ ಮನೆಯಲ್ಲಿ ಮಾಡಿದ್ದರು. ಅವರಲ್ಲಿ ಅನೇಕರು, ಪರಮಹಂಸರು ಮಹಾ ಸಮಾಧಿಯನ್ನು ಹೊಂದಿದ ನಂತರ ಸ್ವೇಚ್ಛೆಯಿಲ್ಲದಿದ್ದರೂ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿ ಹೋಗಿದ್ದರು. ಅವರು ಇನ್ನೂ ವಿಧಿಪೂರ್ವಕವಾಗಿ ಸಂಸಾರವನ್ನು ತ್ಯಜಿಸಿದ ಸಂನ್ಯಾಸಿಗಳಾಗಿರಲಿಲ್ಲ. ತಮ್ಮ ತಮ್ಮ ಹಳೆಯ ಹೆಸರುಗಳನ್ನೇ ಇಟ್ಟುಕೊಂಡಿದ್ದರು. ಆದರೆ ಮಾನಸಿಕವಾಗಿ ಸಂಸಾರವನ್ನು ತ್ಯಜಿಸಲು ಪರಮಹಂಸರು ಅವರಿಗೆಲ್ಲಾ ತರಬೇತು ಕೊಟ್ಟಿದ್ದರು. ಪರಮಹಂಸರೇ ಅವರಲ್ಲಿ ಕೆಲವರಿಗೆ ತಮ್ಮ ಕೈಗಳಿಂದ ಕಾಷಾಯವಸ್ತ್ರಗಳನ್ನು ಹರಸಿ ಕೊಟ್ಟಿದ್ದರು.
ಆ ಯುವಕ ಭಕ್ತರಲ್ಲಿ ಇಬ್ಬರು ಮೂವರಿಗೆ ಹಿಂದಿರುಗಿ ಹೋಗಲು ಮನೆ ಇರಲಿಲ್ಲ. ಉದಾರ ಹೃದಯಿಯಾದ ಸುರೇಂದ್ರ ಮಿತ್ರ ಅವರಿಗೆ ಹೇಳಿದ: “ಸಹೋದರರೇ, ನೀವು ಬೇರೆಲ್ಲಿಗಾದರೂ ಹೋಗುವುದು ತಾನೆ ಏಕೆ? ನಾವು ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಡುತ್ತೇವೆ. ನೀವು ಅದರಲ್ಲಿ ವಾಸಿಸುತ್ತ ಅದನ್ನು ಪರಮಹಂಸರ ದೇವಾಲಯ ವನ್ನಾಗಿ ಮಾಡಿಕೊಳ್ಳುವಿರಂತೆ; ಗೃಹಸ್ಥಭಕ್ತರಾದ ನಾವು ಮನಶ್ಶಾಂತಿಗಾಗಿ ಆಗಾಗ ಅಲ್ಲಿಗೆ ಬಂದುಹೋಗುವೆವು. ಹೆಂಡತಿಮಕ್ಕಳ ಸಹವಾಸದಲ್ಲೇ ಇನ್ನುಮೇಲೆ ನಮ್ಮ ಜೀವನವನ್ನು ಕಳೆಯಲು ಹೇಗೆ ತಾನೆ ಸಾಧ್ಯ? ಪರಮಹಂಸರು ಕಾಶೀಪುರದಲ್ಲಿದ್ದಾಗ ಅವರ ಸೇವೆಗೆಂದು ನಾನು ಸ್ವಲ್ಪ ಹಣ ಖರ್ಚುಮಾಡುತ್ತಿದ್ದೆ. ಅದನ್ನೇ ನಿಮ್ಮಗಳ ಖರ್ಚುವೆಚ್ಚಗಳಿಗಾಗಿ ಆನಂದದಿಂದ ಕೊಡುತ್ತೇನೆ.” ಬಳಿಕ ಸುರೇಂದ್ರ ಮಿತ್ರ ಆ ಯುವಕ ಭಕ್ತರಿಗೆ ಬರಾಹನಗರ ಎಂಬ ಹೆಸರಿನ ಕಲ್ಕತ್ತದ ಉಪನಗರದಲ್ಲಿ ಒಂದು ಬಾಡಿಗೆ ಮನೆಯನ್ನು ಮಾಡಿಕೊಟ್ಟ. ಕ್ರಮೇಣ ಅದು ಮಠದ ರೂಪವನ್ನು ತಾಳಿತು.
ಮೊದಲನೆಯ ಕೆಲವು ತಿಂಗಳು ಸುರೇಂದ್ರ ಮಿತ್ರ ತಿಂಗಳಿಗೆ ಮೂವತ್ತು ರೂಪಾಯಿ ಗಳಂತೆ ಅವರ ಖರ್ಚುವೆಚ್ಚಗಳಿಗಾಗಿ ಕೊಡುತ್ತಿದ್ದ. ಉಳಿದ ಯುವಭಕ್ತರು ಕ್ರಮಕ್ರಮೇಣ ಒಬ್ಬೊಬ್ಬರಾಗಿ ಅಲ್ಲಿಗೆ ಬಂದು ಸೇರುತ್ತಿರುವುದನ್ನು ನೋಡಿ ಅದರ ಎರಡರಷ್ಟನ್ನು ಕೊನೆಗೆ ತಿಂಗಳಿಗೆ ನೂರು ರೂಪಾಯಿಯಷ್ಟನ್ನು ಕೊಡಲಾರಂಭಿಸಿದ. ಮನೆಗೆ ತಿಂಗಳಿಗೆ ಹನ್ನೊಂದು ರೂಪಾಯಿ ಬಾಡಿಗೆ. ಅಡುಗೆಯವನಿಗೆ ತಿಂಗಳಿಗೆ ಆರು ರೂಪಾಯಿ ಸಂಬಳ. ಉಳಿದ ಹಣ ಆಹಾರಸಾಮಗ್ರಿಗಳಿಗಾಗಿ ಖರ್ಚಾಗುತ್ತಿತ್ತು.
ಚಿಕ್ಕ ಗೋಪಾಲ, ಪರಮಹಂಸರು ಕಾಶೀಪುರದಲ್ಲಿ ಉಪಯೋಗಿಸುತ್ತಿದ್ದ ಹಾಸಿಗೆ ಬಟ್ಟೆಬರೆ, ಅವರ ದಿನನಿತ್ಯದ ಉಪಯೋಗದ ವಸ್ತುಗಳು ಇವನ್ನೆಲ್ಲಾ ಈ ಮಠಕ್ಕೆ ತೆಗೆದು ಕೊಂಡುಬಂದು ಇಟ್ಟ. ಕಾಶೀಪುರದಲ್ಲಿದ್ದಾಗ ಅಡುಗೆ ಮಾಡುತ್ತಿದ್ದ ಬ್ರಾಹ್ಮಣನನ್ನೇ ಇಲ್ಲಿನ ಅಡುಗೆಗೆ ನೇಮಕಮಾಡಿಕೊಂಡರು. ಈ ಮಠಕ್ಕೆ ಬಂದು ಸ್ಥಾಯಿಯಾಗಿ ನಿಂತವರಲ್ಲಿ ಹಿರಿಯ ಗೋಪಾಲನೇ ಮೊದಲನೆಯವನು. ಶರಚ್ಚಂದ್ರ ರಾತ್ರಿಯನ್ನು ಮಾತ್ರ ಇಲ್ಲಿ ಕಳೆಯುತ್ತಿದ್ದ. ಮೊದಲು ಮೊದಲು ತಮ್ಮ ತಮ್ಮ ಅನುಕೂಲತೆಗನುಗುಣವಾಗಿ ಶರಚ್ಚಂದ್ರ, ಶಶಿ, ಬಾಬುರಾಮ, ನಿರಂಜನ, ಕಾಳೀಪ್ರಸಾದ ಇವರು ಆಗಾಗ ಮಠಕ್ಕೆ ಬಂದು ಹೋಗಲಾರಂಭಿಸಿದರು. ಪರಮಹಂಸರು ಮಹಾಸಮಾಧಿಯನ್ನು ಹೊಂದಿದ ನಂತರ ತಾರಕ, ಬೃಂದಾವನಕ್ಕೆ ಹೋಗಿ ಅಲ್ಲಿ ಕೆಲವು ತಿಂಗಳನ್ನು ಕಳೆದು ಮತ್ತೆ ಹಿಂದಿರುಗಿ ಕಲ್ಕತ್ತಕ್ಕೆ ಬಂದಮೇಲೆ ಈ ಮಠದಲ್ಲೇ ಸ್ಥಾಯಿಯಾಗಿ ಇರಲಾರಂಭಿಸಿದ. ಈ ಮಠ ಸ್ಥಾಪನೆಯಾದಾಗ ರಾಖಾಲ, ಯೋಗೀಂದ್ರ, ಲಾಟು, ಕಾಳೀಪ್ರಸಾದ ಇವರು ಬೃಂದಾವನದಲ್ಲಿ ಶ್ರೀಶಾರದಾದೇವಿಯವರೊಡನೆ ವಾಸಮಾಡುತ್ತಿದ್ದರು. ಕಾಳೀಪ್ರಸಾದ ಒಂದು ತಿಂಗಳೊಳಗಾಗಿ, ರಾಖಾಲ ಕೆಲವು ತಿಂಗಳೊಳಗಾಗಿ, ಲಾಟು ಮತ್ತು ಯೋಗೀಂದ್ರ ಒಂದು ವರ್ಷದೊಳಗಾಗಿ ಹಿಂದಿರುಗಿ ಕಲ್ಕತ್ತಕ್ಕೆ ಬಂದರು. ಗೃಹಸ್ಥ ಭಕ್ತರು ಆಗಾಗ ಈ ಮಠಕ್ಕೆ ಬಂದು ಹೋಗುತ್ತ ಒಮ್ಮೊಮ್ಮೆ ಇಲ್ಲಿ ತಮ್ಮ ಹಲವು ಘಂಟೆಗಳನ್ನೇ ಜಪತಪಾದಿಗಳಲ್ಲಿ ಕಳೆದುಬಿಡಲಾರಂಭಿಸಿದರು.
ಸ್ವಲ್ಪ ಕಾಲಾನಂತರ ನರೇಂದ್ರ, ರಾಖಾಲ, ನಿರಂಜನ, ಶರಚ್ಚಂದ್ರ, ಶಶಿ, ಬಾಬು ರಾಮ, ಯೋಗೀಂದ್ರ, ಲಾಟು ಒಮ್ಮೆಗೇ ಸಂಸಾರವನ್ನು ತ್ಯಜಿಸಿ ಮಠಕ್ಕೆ ಬಂದುಬಿಟ್ಟರು. ಶಾರದಾಪ್ರಸನ್ನ ಮತ್ತು ಸುಬೋಧ ಇನ್ನೂ ಸ್ವಲ್ಪ ಕಾಲಾನಂತರ ಮಠಕ್ಕೆ ಬಂದು ಸೇರಿದರು. ನರೇಂದ್ರನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಗಂಗಾಧರ ಕ್ರಮತಪ್ಪದೆ ಮಠಕ್ಕೆ ಬರುತ್ತಿದ್ದ. ಕಾಶೀದೇವಾಲಯದಲ್ಲಿ ಸಾಯಂಕಾಲದ ಮಂಗಳಾರತಿಯ ಸಮಯದಲ್ಲಿ ನಡೆಯುವ ಸ್ತೋತ್ರವನ್ನು ಉಳಿದ ಸಹೋದರರಿಗೆ ಹೇಳಿಕೊಟ್ಟವನು ಈತನೇ. ಈತ ತಪಸ್ಸಿಗೆಂದು ಟಿಬೆಟ್ಟಿಗೆ ಹೋಗಿದ್ದು, ಅಲ್ಲಿಂದ ಹಿಂದಿರುಗಿ ಬಂದನಂತರ ಮಠಕ್ಕೆ ಸೇರಿದ. ಹರಿ ಮತ್ತು ತುಳಸಿ ಆಗಾಗ ಮಠಕ್ಕೆ ಬರುತ್ತಿದ್ದು ಕೊನೆಗೆ ಅವರೂ ಮಠಕ್ಕೆ ಸೇರಿದರು.
ಸುರೇಂದ್ರ ನಿಜವಾಗಿಯೂ ಒಬ್ಬ ಧನ್ಯಪುರುಷ. ಪರಮಹಂಸರ ಯುವಕ ಶಿಷ್ಯರು ಮನೆ ಮಠಗಳನ್ನೂ ತ್ಯಜಿಸಿ ಭಗವಂತನ ಸಾಕ್ಷಾತ್ಕಾರಕ್ಕಾಗಿ ಒಂದು ಕಡೆ ವಾಸಿಸಲು ಸಾಧ್ಯವಾದುದು ಈತನ ಭಕ್ತಿ ಮತ್ತು ತ್ಯಾಗಬುದ್ಧಿಯಿಂದ. ಪರಮಹಂಸರು ತಮ್ಮ ಮುಖ್ಯೋಪದೇಶ–ಕಾಮಕಾಂಚನತ್ಯಾಗವೇ ಭಗವಂತನ ಸಾಕ್ಷಾತ್ಕಾರಕ್ಕೆ ಉಪಾಯ–ಈ ಯುವಕರ ಮೂಲಕ ಅನುಷ್ಠಾನ ಸಾಧ್ಯವಾಗಲು ಅನುಕೂಲತೆಗಳನ್ನು ಸುರೇಂದ್ರನ ಮೂಲಕ ಮಾಡಿಸಿದರು.
ಪರಮಹಂಸರ ಶಿಷ್ಯರು ಮಠದಲ್ಲಿ ತಬ್ಬಲಿ ಮಕ್ಕಳೋಪಾದಿಯಲ್ಲಿ ವಾಸಿಸಲಾರಂಭಿ ಸಿದ್ದಾರೆ. ಒಮ್ಮೊಮ್ಮೆ ಮನೆ ಬಾಡಿಗೆ ಕೊಡಲೂ ಕೈಯಲ್ಲಿ ಹಣವಿರುತ್ತಿರಲಿಲ್ಲ. ಕೆಲವು ವೇಳೆ ಉಗ್ರಾಣ ಬರಿದಾಗುತ್ತಿತ್ತು. ಸುರೇಂದ್ರ ಮಾತ್ರ ಆಗಾಗ ಬಂದು ಇವುಗಳ ವ್ಯವಸ್ಥೆ ಮಾಡಿ ಹೋಗುತ್ತಿದ್ದ. ಆತ ಈ ಸಂನ್ಯಾಸಿಗಳ ಹಿರಿಯ ಅಣ್ಣನಂತಿದ್ದ. ಮುಂದೆ ಈತನ ಅಕೃತ್ರಿಮ ಪ್ರೀತಿಯನ್ನು ನೆನೆಸಿಕೊಂಡಾಗಲೆಲ್ಲಾ ಮೊದಲನೆಯ ಮಠದ ಸಂನ್ಯಾಸಿಗಳು ಉಪಕಾರ ಸ್ಮರಣೀಯವಾದ ಅಶ್ರುವನ್ನು ಸುರಿಸುತ್ತಿದ್ದರು.
ಈ ಮಠವನ್ನು ಭಕ್ತರು “ಬರಾಹನಗರ ಮಠ” ಅಂತ ಕರೆಯಲಾರಂಭಿಸಿದರು. ನರೇಂದ್ರ, ರಾಖಾಲ ಮತ್ತು ಉಳಿದ ಯುವಕ ಶಿಷ್ಯರು ತೀವ್ರವೈರಾಗ್ಯದಿಂದ ತುಂಬಿ ತುಳುಕಾಡುತ್ತಿದ್ದಾರೆ. ಒಂದು ದಿನ ರಾಖಾಲನ ತಂದೆ ಅಲ್ಲಿಗೆ ಬಂದು ರಾಖಾಲನನ್ನು ಮನೆಗೆ ಹಿಂದಿರುಗಿ ಬರುವಂತೆ ಕೇಳಿಕೊಂಡ. ರಾಖಾಲ ಹೇಳಿದ: “ನೀವು ಬರಿದೆ ಏಕೆ ಇಷ್ಟು ದೂರ ನಡೆದು ಬರುವ ಶ್ರಮ ತೆಗೆದುಕೊಳ್ಳುತ್ತಾ ಇದ್ದೀರಿ? ನಾನು ಇಲ್ಲಿ ಅತ್ಯಂತ ಆನಂದದಿಂದ ಇದ್ದೇನೆ. ನೀವು ನನ್ನನ್ನು ಮರೆಯುವ ಹಾಗೆ, ನಾನು ನಿಮ್ಮನ್ನು ಮರೆಯುವ ಹಾಗೆ ನಮ್ಮೀರ್ವರಿಗೂ ಶಕ್ತಿಯನ್ನು ದಯಪಾಲಿಸು ಎಂಬುದಾಗಿ ನೀವು ಭಗವಂತನಿಗೆ ಪ್ರಾರ್ಥನೆ ಮಾಡಿ.” ಈ ಯುವಕ ಶಿಷ್ಯರು ತಮ್ಮೊಳಗೆ ತಾವೇ ಹೇಳಿಕೊಳ್ಳಲಾರಂಭಿಸಿದ್ದಾರೆ: “ನಾವು ಎಂದಿಗೂ ಸಂಸಾರಜೀವನಕ್ಕೆ ಕಾಲು ಹಾಕುವುದಿಲ್ಲ. ಕಾಮಕಾಂಚನ ತ್ಯಾಗಿಗಳಾಗಬೇಕೆಂದು ಪರಮಹಂಸರು ನಮಗೆ ಬೆಸಸಿಹೋಗಿದ್ದಾರೆ. ಆದ್ದರಿಂದ ನಾವು ಹಿಂದಿರುಗಿ ನಮ್ಮ ನಮ್ಮ ಮನೆಗೆ ಹೋಗಿ ಇರಲು ಹೇಗೆ ಸಾಧ್ಯ?”
ಶಶಿ ಶ್ರೀರಾಮಕೃಷ್ಣರ ನಿತ್ಯಪೂಜೆಯ ಭಾರವನ್ನು ವಹಿಸಿಕೊಂಡಿದ್ದಾನೆ. ಪರಮ ಹಂಸರ ಅಸ್ಥಿಯನ್ನು ಬಲರಾಮನ ಮನೆಯಿಂದ ತೆಗೆದುಕೊಂಡುಬಂದು ದೇವರ ಮನೆಯಲ್ಲಿ ಇಟ್ಟಿದೆ. ನಿತ್ಯವೂ ಅದಕ್ಕೆ ಪೂಜೆ ನಡೆಯುತ್ತಿದೆ. ನರೇಂದ್ರ ಮಠದ ಕಾರ್ಯಕಲಾಪಗಳನ್ನು ವಹಿಸಿಕೊಂಡಿದ್ದಾನೆ. ಯುವಕ ಶಿಷ್ಯರು ಆತನನ್ನು ತಮ್ಮ ನಾಯಕನನ್ನಾಗಿ ಮಾಡಿಕೊಂಡಿದ್ದಾರೆ. ಆತ ಆಗಾಗ ತನ್ನ ಸೋದರ ಶಿಷ್ಯರಿಗೆ ಹೇಳುತ್ತಿದ್ದಾನೆ: “ಗೀತೆಯಲ್ಲಿರುವ ನಿಷ್ಕಾಮಕರ್ಮ ಎಂಬುದು ಪೂಜೆ, ಜಪ, ತಪ, ಧ್ಯಾನ ಮೊದಲಾದುವೇ ವಿನಾ ಉಳಿದ ಕರ್ಮಗಳಲ್ಲ.” ಮಠದ ಸೋದರ ಸಂನ್ಯಾಸಿಗಳು ತಮ್ಮ ಆಧ್ಯಾತ್ಮಿಕ ಉನ್ನತಿಗಾಗಿನರೇಂದ್ರನನ್ನು ದೊಡ್ಡ ಆಸರೆಯನ್ನಾಗಿ ಮಾಡಿಕೊಂಡಿದ್ದಾರೆ. ಆತ ಅವರಿಗೆ ಹೇಳುತ್ತಿದ್ದಾನೆ: “ನಮಗೆ ಸಾಧನೆ ಅತ್ಯಂತ ಆವಶ್ಯಕ. ಇಲ್ಲದಿದ್ದರೆ ನಾವು ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಲಾಗುವುದಿಲ್ಲ.”
ನರೇಂದ್ರ ಮತ್ತು ಆತನ ಸೋದರ ಶಿಷ್ಯರು ತಪೋನಿಷ್ಠ ಭಾವನೆಯಿಂದ ತುಂಬಿ ತುಳುಕಾಡುತ್ತ ಸಾಧನೆ ಭಜನೆಯಲ್ಲಿ ಮಗ್ನರಾಗಿಬಿಟ್ಟಿದ್ದಾರೆ. ಭಗವಂತನ ಸಾಕ್ಷಾತ್ಕಾರವೇ ಅವರ ಜೀವನದ ಏಕಮಾತ್ರ ಉದ್ದೇಶ. ವೇದಗಳಲ್ಲಿ, ಪುರಾಣಗಳಲ್ಲಿ, ತಂತ್ರಗಳಲ್ಲಿ ಸಂನ್ಯಾಸಿಯ ಜೀವನದ ಸಂಬಂಧವಾಗಿ ಏನೇನು ನೀತಿನಿಯಮಗಳು ವಿದಿತವಾಗಿವೆಯೋ ಅವನ್ನೆಲ್ಲಾ ತಮ್ಮ ತಮ್ಮ ಹೃದಯ ತಣಿದು ತೃಪ್ತವಾಗುವವರೆಗೆ ಅಭ್ಯಸಿಸಲಾರಂಭಿಸಿದ್ದಾರೆ. ತಮ್ಮ ಇಡೀ ಸಮಯವನ್ನೆಲ್ಲಾ ಜಪತಪಾದಿಗಳಲ್ಲಿಯೂ ಸ್ವಾಧ್ಯಾಯಪ್ರವಚನಾದಿಗಳಲ್ಲಿಯೂ ಕಳೆಯಲಾರಂಭಿಸಿದ್ದಾರೆ. ತಮ್ಮ ಭಗವದ್ಭಾವನೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿ ಹೋಗಿದೆ ಎಂಬುದರ ಅರಿವು ಅವರಿಗೆ ಆದಾಗಲೆಲ್ಲಾ ಅವರು ಶಂಕೆಪಡುತ್ತಿದ್ದರು, ತಮ್ಮ ಇಡೀ ಜೀವನವೇ ನಾಶವಾಗಿಬಿಡುವುದೊ ಏನೊ ಎಂಬುದಾಗಿ. ಅವರು ಏಕಾಂಗಿಯಾಗಿ ಕೆಲವು ವೇಳೆ ಮರದ ಕೆಳಗೆ, ಇನ್ನು ಕೆಲವು ವೇಳೆ ಸ್ಮಶಾನದಲ್ಲಿ, ಮತ್ತೆ ಕೆಲವು ವೇಳೆ ಗಂಗಾದಡದಲ್ಲಿ ಜಪತಪಾದಿಗಳಲ್ಲಿ ತೊಡಗುತ್ತಿದ್ದಾರೆ. ಒಮ್ಮೊಮ್ಮೆ ಮಠದ ಕೊಠಡಿಯಲ್ಲೇ ಇಡೀ ದಿನವನ್ನೆಲ್ಲಾ ಜಪತಪಾದಿಗಳಲ್ಲಿ ಕಳೆದುಬಿಡಲಾರಂಭಿಸಿದ್ದಾರೆ; ಇನ್ನು ಕೆಲವು ವೇಳೆ ಹಾಡಲು ಮತ್ತು ನರ್ತಿಸಲು ಎಲ್ಲರೂ ಒಟ್ಟಿಗೆ ಸೇರುತ್ತಿದ್ದಾರೆ. ಎಲ್ಲರನ್ನೂ, ವಿಶೇಷತಃ ನರೇಂದ್ರನನ್ನು ಭಗವಂತನ ಸಾಕ್ಷಾತ್ಕಾರ ಪಡೆಯಬೇಕೆಂಬ ದಾವಾನಲ ಸುಮ್ಮನೆ ದಹಿಸಿ ಬಿಡುತ್ತಿದೆ. ಆಗಾಗ ಅವರು ತಮ್ಮೊಳಗೆ ತಾವೇ ಹೇಳಿಕೊಳ್ಳುತ್ತಿದ್ದಾರೆ: “ಭಗವಂತನ ಸಾಕ್ಷಾತ್ಕಾರ ಪಡೆಯಲು ನಮ್ಮ ಇಡೀ ಜೀವನವನ್ನೆ ಆಹುತಿಯಾಗಿ ಕೊಡಲು ಸಿದ್ಧರಿರ ಬೇಡವೇ?”
೨೧ನೇ ಫೆಬ್ರವರಿ ೧೮೮೭, ಶಿವರಾತ್ರಿ, ಸೋಮವಾರ
ನರೇಂದ್ರ, ರಾಖಾಲ, ನಿರಂಜನ, ಶರಚ್ಚಂದ್ರ, ಶಶಿ, ಕಾಳೀಪ್ರಸಾದ, ಬಾಬುರಾಮ, ತಾರಕ, ಶಾರದಾಪ್ರಸನ್ನ ಇವರು ಬರಹಾನಗರದ ಮಠದಲ್ಲಿ ವಾಸಿಸುತ್ತಿದ್ದಾರೆ. ಇಂದು ಶಿವರಾತ್ರಿಯಾದ್ದರಿಂದ, ಎಲ್ಲರೂ ಉಪವಾಸ ವ್ರತ ಕೈಕೊಂಡಿದ್ದಾರೆ. ಶರಚ್ಚಂದ್ರ, ಕಾಳೀ ಪ್ರಸಾದ, ನಿರಂಜನ, ಶಾರದಾಪ್ರಸನ್ನ ಮುಂದಿನ ಶನಿವಾರ ಪೂರಿ-ಜಗನ್ನಾಥನ ದರ್ಶನಕ್ಕೆ ಹೋಗಿಬರಬೇಕೆಂದು ಯೋಚಿಸುತ್ತಿದ್ದಾರೆ. ಯೋಗೀಂದ್ರ ಮತ್ತು ಲಾಟು ಇನ್ನೂ ಬೃಂದಾವನದಲ್ಲೇ ಇದ್ದಾರೆ. ಇವರಿಬ್ಬರು ಈ ಹೊಸ ಮಠವನ್ನು ಇನ್ನೂ ನೋಡಿಲ್ಲ.
ನರೇಂದ್ರನ ತಂದೆ ಸತ್ತ ಬಳಿಕ, ಆತನ ಮನೆಯವರು ಒಂದು ವ್ಯಾಜ್ಯಕ್ಕೆ ಒಳಗಾಗಿದ್ದಾರೆ. ಅದರ ಸಂಬಂಧವಾಗಿ ನರೇಂದ್ರ ಪ್ರಾತಃಕಾಲವೇ ಎದ್ದು ಕಲ್ಕತ್ತಕ್ಕೆ ಹೋಗಿದ್ದಾನೆ. ಮಾಸ್ಟರ್ ಬೆಳಿಗ್ಗೆ ಒಂಬತ್ತು ಘಂಟೆಗೆ ಮಠಕ್ಕೆ ಬಂದ. ಆತನನ್ನು ನೋಡಿ ತಾರಕ ಬಹಳ ಆನಂದಪಟ್ಟು ರಾಖಾಲನೊಡನೆ ಶಿವನ ಸಂಬಂಧವಾಗಿ ಹಾಡಲಾರಂಭಿಸಿದ್ದಾನೆ:
ಅದೊ ಅಲ್ಲಿ ಪರಮಶಿವನು
ನರ್ತಿಸುವನು ಮೋದದಿ, ಡಿಮಿ ಡಿಮಿ ಡಿಮಿ ಡಮರುನಾದ
ಮೊಳಗಿದೆ ಬ್ರಹ್ಮಾಂಡದಿ!
ಕೊರಳ ಸುತ್ತ ರುಂಡಮಾಲೆ
ದಿಕ್ಕು ದೆಸೆಗೆ ತೂಗಿದೆ
ಜಟೆಯಗಂಗೆ ಬುಸುಗುಟ್ಟಿದೆ,
ಉಗ್ರ ಅನಲ ಶೂಲಕಾಂತಿ
ಕಣ್ಣುಗಳನೆ ಕುಕ್ಕಿದೆ!
ಕಟಿಯ ಸುತ್ತ ಸರ್ಪರಾಜ
ಹೆಡೆಯಾಡಿಸಿ ಮಿರುಗಿದೆ.
ಅದೊ, ಲಲಾಟದಲ್ಲಿ ನೋಡು
ಶಶಿಕಳೆಯೂ ಜ್ವಲಿಸಿದೆ!
ರಾಖಾಲ ಮತ್ತು ತಾರಕ ಈ ಹಾಡನ್ನು ಹಾಡುತ್ತಾ ಹಾಡುತ್ತಾ ನರ್ತಿಸಲು ಆರಂಭಿಸಿದ್ದಾರೆ. ಈಗ ಕೆಲವು ದಿನಗಳ ಹಿಂದೆ ನರೇಂದ್ರ ಈ ಹಾಡನ್ನು ರಚಸಿದ್ದ.
ಶಶಿ ಪ್ರಾತಃಕಾಲ ಪೂಜೆಯನ್ನು ಮಾಡಿ ಮುಗಿಸಿದ್ದಾನೆ. ಶರಚ್ಚಂದ್ರ ತಂಬೂರಿ ತೆಗೆದುಕೊಂಡು ಸ್ವಲ್ಪ ಹೊತ್ತಿನಿಂದ ಶಿವನ ಸಂಬಂಧವಾಗಿ ಹಾಡುತ್ತಿದ್ದಾನೆ.
ಅಷ್ಟರಲ್ಲಿ ನರೇಂದ್ರ ಕಲ್ಕತ್ತದಿಂದ ಹಿಂದಿರುಗಿ ಬಂದಿದ್ದಾನೆ. ಆತ ಇನ್ನೂ ಸ್ನಾನ ಮಾಡಿರಲಿಲ್ಲ. ಕಾಳೀಪ್ರಸಾದ ಆತನನ್ನು ಕೇಳಿದ: “ವ್ಯಾಜ್ಯ ಏನಾಯಿತು?” ಒಡನೆ ನರೇಂದ್ರ ಸ್ವಲ್ಪ ಮುಟ್ಟಿ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರವಿತ್ತ: “ನಿನಗೇಕೆ ಅದರ ಚಿಂತೆ?”
ನರೇಂದ್ರ ಹುಕ್ಕ ಸೇದುತ್ತ ಮಾಸ್ಟರ್ ಮೊದಲಾದವರೊಡನೆ ಮಾತುಕತೆ ಆಡುತ್ತಿದ್ದಾನೆ. ಆತ ಹೇಳಿದ: “ಕಾಮಕಾಂಚನ ತ್ಯಜಿಸದೆ ಅಧ್ಯಾತ್ಮ ಜೀವನದಲ್ಲಿ ಮುಂದುವರಿಯಲಾಗುವುದಿಲ್ಲ. ಕಾಮಿನಿಯೇ ನರಕದ ಮಹಾದ್ವಾರ. ಎಲ್ಲರೂ ವಶರಾಗಿಬಿಟ್ಟಿದ್ದಾರೆ. ಶಿವ ಮತ್ತು ಕೃಷ್ಣ ಇವರ ವಿಷಯವೇ ಬೇರೆ. ಶಿವ ಶಕ್ತಿಯನ್ನು ತನ್ನ ದಾಸಿಯನ್ನಾಗಿ ಮಾಡಿಕೊಂಡಿದ್ದ. ಶ್ರೀಕೃಷ್ಣ ಸಂಸಾರದಲ್ಲಿ ಇದ್ದುದೇನೋ ನಿಜ. ಆದರೆ ಆತ ಎಷ್ಟು ನಿರ್ಲಿಪ್ತನಾಗಿದ್ದ! ಹೇಗೆ ಕ್ಷಣಮಾತ್ರದಲ್ಲಿ ಬೃಂದಾವನ, ಗೋಪಿಯರು ಇವರನ್ನೆಲ್ಲಾ ತ್ಯಜಿಸಿ ಹೊರಟುಹೋದ!”
ರಾಖಾಲ: “ಅದೂ ಅಲ್ಲದೆ ದ್ವಾರಕೆಯನ್ನೂ ಆತ ಹೇಗೆ ತ್ಯಜಿಸಿಬಿಟ್ಟ!”
ನರೇಂದ್ರ ಗಂಗಾಸ್ನಾನ ಮಾಡಿಕೊಂಡು ಮಠಕ್ಕೆ ಹಿಂದಿರುಗಿದ. ಕೈಯಲ್ಲಿ ಒದ್ದೆ ಬಟ್ಟೆಗಳನ್ನೂ ಮತ್ತು ಚೌಕವನ್ನೂ ಹಿಡಿದುಕೊಂಡು ಬಂದಿದ್ದಾನೆ. ಶಾರದಾಪ್ರಸನ್ನ ಬಂದು ನರೇಂದ್ರನಿಗೆ ಸಾಷ್ಟಾಂಗ ಪ್ರಣಾಮಮಾಡಿದ. ಆತನೂ ಉಪವಾಸ ಮಾಡುತ್ತಿದ್ದಾನೆ. ಈಗ ಆತ ಗಂಗಾಸ್ನಾನಕ್ಕೆ ಹೊರಟಿದ್ದಾನೆ. ನರೇಂದ್ರ ದೇವರ ಮನೆಗೆ ಹೋಗಿ ಪರಮಹಂಸರ ಭಾವಚಿತ್ರಕ್ಕೆ ಪ್ರಣಾಮಮಾಡಿ ಧ್ಯಾನಕ್ಕೆ ಕುಳಿತುಕೊಂಡ.
ಸೋದರ ಸಂನ್ಯಾಸಿಗಳೆಲ್ಲರೂ ಒಂದೇ ಕೊಠಡಿಯಲ್ಲಿ ಕುಳಿತು ಮಾತುಕತೆಗಳಾಡುತ್ತಿದ್ದಾರೆ. ಭವನಾಥನ ಸಂಬಂಧವಾಗಿ ಮಾತುಕತೆ ಆರಂಭವಾಯಿತು. ನರೇಂದ್ರ ಹೇಳುತ್ತಿದ್ದಾನೆ: “ಅಂಥವರೆಲ್ಲರೂ ಸಂಸಾರದ ಕೀಟಗಳು.”
ಅಪರಾಹ್ನವಾಗಿದೆ. ಶಿವರಾತ್ರಿ ಪೂಜೆಯ ವ್ಯವಸ್ಥೆ ನಡೆಯುತ್ತಿದೆ. ಬಿಲ್ವಪತ್ರೆ, ಬಿಲ್ವ ಸಮಿತ್ತು ಇವನ್ನು ಶೇಖರಿಸಲಾಯಿತು. ಪೂಜೆಯಾದ ನಂತರ ಹೋಮ ನಡೆಯಲಿದೆ.
ಸಾಯಂಕಾಲವಾಗಿದೆ. ಶಶಿ ದೇವರಮನೆಗೆ ಧೂಪ ಹಾಕಿ ಉಳಿದ ಕೊಠಡಿಗಳಿಗೂ ಅದನ್ನು ತೆಗೆದುಕೊಂಡು ಹೋದ. ಪ್ರತಿಯೊಂದು ದೇವ ದೇವಿಯರ ಪಟದ ಹತ್ತಿರವೂ ಪ್ರಣಾಮಮಾಡುತ್ತ ವಿಶೇಷವಾದ ಶ್ರದ್ಧಾಭಕ್ತಿಯಿಂದ ಭಗವನ್ನಾಮೋಚ್ಚಾರಣೆ ಮಾಡು ತ್ತಿದ್ದಾನೆ: ಶ್ರೀಗುರುದೇವಾಯ ನಮಃ! ಶ್ರಿಕಾಳಿಕಾಯೈ ನಮಃ! ಶ್ರೀಜಗನ್ನಾಥ-ಸುಭದ್ರ ಬಲರಾಮೇಭ್ಯೋ ನಮಃ! ಶ್ರೀಷಡ್ಭುಜಾಯ ನಮಃ! ಶ್ರೀರಾಧಾವಲ್ಲಭಾಯ ನಮಃ! ಶ್ರೀರಾಮಾಯ ಶ್ರೀಲಕ್ಷ್ಮಣಾಯ ಶ್ರೀ ವಿಶ್ವಾಮಿತ್ರಾಯ ನಮಃ!
ಮಠದ ಆವರಣದಲ್ಲೇ ಇದ್ದ ಬಿಲ್ವವೃಕ್ಷದ ಕೆಳಗೆ ಪೂಜೆ ಮಾಡಲು ವ್ಯವಸ್ಥೆ ಮಾಡ ಲಾಗಿದೆ. ಘಂಟೆ ರಾತ್ರಿ ಒಂಬತ್ತು. ಈಗ ಮೊದಲನೆಯ ಜಾವದ ಪೂಜೆ ಆರಂಭವಾಗಲಿದೆ. ಎರಡನೆ ಜಾವದ ಪೂಜೆ ಹನ್ನೊಂದೂವರೆ ಘಂಟೆಗೆ. ನಾಲ್ಕು ಜಾವದ ಪೂಜೆಯೂ ನಡೆಯುತ್ತದೆ. ನರೇಂದ್ರ, ರಾಖಾಲ, ಶರಚ್ಚಂದ್ರ, ಕಾಳೀಪ್ರಸಾದ ಮತ್ತು ಉಳಿದ ಸೋದರರು, ಸಿಂಥಿಯ ಗೋಪಾಲ ಇವರೇ ಮೊದಲಾದವರು ಬಿಲ್ವ ಮರದ ಕೆಳಗೆ ಸೇರಿದ್ದಾರೆ. ಭೂಪತಿ ಮತ್ತು ಮಾಸ್ಟರೂ ಅಲ್ಲಿ ಕುಳಿತಿದ್ದಾರೆ. ಮಠದ ಸೋದರರಲ್ಲಿ ಒಬ್ಬ ಪೂಜೆ ಮಾಡುತ್ತಿದ್ದಾನೆ. ಕಾಳೀಪ್ರಸಾದ ಗೀತಾಪಾರಾಯಣ ಮಾಡುತ್ತಿದ್ದಾನೆ. ಆಗಾಗ ಆತ ನರೇಂದ್ರನೊಡನೆ ತರ್ಕ ಮಾಡುತ್ತಿದ್ದಾನೆ.
ಕಾಳೀಪ್ರಸಾದ: “ನಾನೇ ಎಲ್ಲ. ನಾನೇ ಸೃಷ್ಟಿ, ಸ್ಥಿತಿ, ಪ್ರಳಯ ಎಲ್ಲವನ್ನೂ ಮಾಡುತ್ತಿದ್ದೇನೆ.”
ನರೇಂದ್ರ: “ಸೃಷ್ಟಿ ಎಲ್ಲಿಂದ ಸಾಧ್ಯ ನನಗೆ? ಇನ್ನೊಂದು ಶಕ್ತಿ ನನ್ನ ಮೂಲಕ ಆ ಕಾರ್ಯವನ್ನು ಮಾಡಿಸುತ್ತಿದೆ. ನಮ್ಮ ವಿವಿಧ ಕಾರ್ಯಗಳು–ಚಿಂತನೆ ಕೂಡ–ಆ ಶಕ್ತಿಯಿಂದ ಮಾಡಲ್ಪಡುತ್ತಿವೆ.”
ಮಾಸ್ಟರ್ (ತನಗೆ ತಾನೇ): “ಪರಮಹಂಸರು ಹೇಳುತ್ತಿದ್ದರು: ‘ಧ್ಯಾನ ಮಾಡುತ್ತಿರು ವವನು ತಾನು ಎಂಬ ಬೋಧೆ ಎಲ್ಲಿಯವರೆಗೆ ಮನುಷ್ಯನಿಗೆ ಇರುವುದೋ ಅಲ್ಲಿಯವರೆಗೆ ಆತ ಇನ್ನೂ ಆದ್ಯಾಶಕ್ತಿಯ ಎಲ್ಲೆಯೊಳಗೆ ಇದ್ದಾನೆ. ಆತ ಶಕ್ತಿಯನ್ನು ಒಪ್ಪಲೇ ಬೇಕಾಗುತ್ತದೆ.”’
ಕಾಳೀಪ್ರಸಾದ ಹಾಗೆ ಕುಳಿತು ಸ್ವಲ್ಪ ಯೋಚಿಸಿ ಹೇಳುತ್ತಿದ್ದಾನೆ: “ನೀನು ಹೇಳಿದ ಕಾರ್ಯ, ಇವೆಲ್ಲ ಮಿಥ್ಯ. ಚಿಂತನೆ ಎಂಬುದೂ ಮಿಥ್ಯ. ಇವುಗಳ ಭಾವನೆಯೇ ನನಗೆ ನಗುವನ್ನು ತರುತ್ತದೆ.”
ನರೇಂದ್ರ: “ಸೋಽಹಮ್, ಎಂಬುದರ ‘ಅಹಂ’ ನಮ್ಮ ಈ ‘ಅಹಂ’ ಅಲ್ಲ. ದೇಹ, ಮನಸ್ಸು ಇವನ್ನೆಲ್ಲಾ ವರ್ಜಿಸಿದ ಮೇಲೆ ಉಳಿಯೋ ‘ಅಹಂ’.”
ಗೀತಾಪಾರಾಯಣವನ್ನು ಮುಗಿಸಿದ ನಂತರ ಕಾಳೀಪ್ರಸಾದ ಪಠಿಸಿದ “ಶಾಂತಿ! ಶಾಂತಿ! ಶಾಂತಿ!” ಎಂಬುದಾಗಿ.
ಈಗ ನರೇಂದ್ರಾದಿ ಭಕ್ತರೆಲ್ಲರೂ ಎದ್ದುನಿಂತು ನರ್ತಿಸುತ್ತ ಹಾಡುತ್ತ ಬಿಲ್ವ ಮರಕ್ಕೆ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಆಗಾಗ ಒಕ್ಕೊರಲಿನಿಂದ ಹೇಳುತ್ತಿದ್ದಾರೆ, “ಶಿವ ಗುರು! ಶಿವ ಗುರು!” ಎಂಬುದಾಗಿ.
ಇಂದು ಕೃಷ್ಣ ಪಕ್ಷದ ಚತುರ್ದಶಿ. ಎಲ್ಲೆಲ್ಲೂ ಗಾಢಾಂಧಕಾರ. ಜೀವ ಜಂತು ಎಲ್ಲವೂ ನಿಶ್ಶಬ್ದತೆಯಿಂದ ಮಲಗಿವೆ. ಯುವಕ ಸಂನ್ಯಾಸಿಗಳು ಕಾಷಾಯವಸ್ತ್ರಧಾರಿಗಳಾಗಿದ್ದಾರೆ. ಅವರೆಲ್ಲರೂ ಕೂಡಿ ಉಚ್ಚರಿಸುತ್ತಿದ್ದ “ಶಿವ ಗುರು! ಶಿವ ಗುರು!” ಎಂಬ ಮಂತ್ರಧ್ವನಿ ಮೇಘಗಂಭೀರ ರವದಿಂದ ಅನಂತ ಆಕಾಶದ ಕಡೆಗೆ ನುಗ್ಗುತ್ತ ಅಖಂಡ ಸಚ್ಚಿದಾನಂದದಲ್ಲಿ ಲಯವಾಗುತ್ತಿದೆ.
ಪೂಜೆ ಮುಗಿಯಿತು. ಇನ್ನೇನು ಅರುಣೋದಯವಾಗುವುದರಲ್ಲಿದೆ. ಆ ಬ್ರಾಹ್ಮೀ ಮುಹೂರ್ತದಲ್ಲಿ ನರೇಂದ್ರಾದಿ ಭಕ್ತರೆಲ್ಲರೂ ಗಂಗಾಸ್ನಾನ ಮಾಡಿ ಹಿಂತಿರುಗುತ್ತಿದ್ದಾರೆ.
ಬೆಳಗಾಯಿತು. ಭಕ್ತರೆಲ್ಲರೂ ದೇವರಮನೆಯನ್ನು ಪ್ರವೇಶಿಸಿ, ಪರಮಹಂಸರ ಭಾವ ಚಿತ್ರಕ್ಕೆ ಪ್ರಣಾಮಮಾಡಿ ಹೊರಕ್ಕೆ ಬರುತ್ತಿದ್ದಾರೆ. ಈಗ ಎಲ್ಲರೂ ದೊಡ್ಡ ಅಂಗಳದಲ್ಲಿ ನೆರೆಯುತ್ತಿದ್ದಾರೆ. ನರೇಂದ್ರ ಹೊಸ ಕಾಷಾಯವಸ್ತ್ರವನ್ನು ಧರಿಸಿಕೊಂಡಿದ್ದಾನೆ. ಆ ಹೊಸ ಕಾಷಾಯವಸ್ತ್ರದ ಕಾಂತಿಯೊಡನೆ ಆತನ ತಪಃಪ್ರಭಾವದಿಂದ ಎದ್ದು ಕಾಣುತ್ತಿರುವ ಅಪೂರ್ವ ಸ್ವರ್ಗೀಯ ಕಾಂತಿಯೂ ಬೆರೆತುಕೊಂಡಿದೆ. ಆತನ ವದನಮಂಡಲ ತೇಜಸ್ಸಿನಿಂದ ಪರಿಪೂರ್ಣವಾಗಿದೆ. ಪ್ರೇಮದಿಂದ ತುಂಬಿ ತುಳುಕಾಡುತ್ತಿದೆ. ಆ ಅಖಂಡ ಸಚ್ಚಿದಾನಂದ ಸಾಗರದ ಗುಳ್ಳೆಯೊಂದು ಜ್ಞಾನ, ಭಕ್ತಿ ಇವನ್ನು ಪ್ರಚಾರಮಾಡಲು ಪರಮಹಂಸರಿಗೆ ನೆರವಾಗಲೋಸುಗ ಈತನ ರೂಪಿನಲ್ಲಿ ಬಂದಿದೆಯೊ ಏನೊ ಎಂಬಂತೆ ನರೇಂದ್ರ ಕಾಣಬರುತ್ತಿದ್ದಾನೆ. ಎಲ್ಲಾ ಕಣ್ಣುಗಳೂ ಆತನ ಕಡೆಗೆ ನೋಡುತ್ತಿವೆ. ಅವಕ್ಕೆ ಬೇರೆ ಕಡೆ ದೃಷ್ಟಿಹಾಕಲು ಇಚ್ಛೆಯಾಗುತ್ತಿಲ್ಲ. ಈಗ ಆತನ ವಯಸ್ಸು ಕೇವಲ ಇಪ್ಪತ್ತುನಾಲ್ಕು ಮಾತ್ರ. ಇದೇ ವಯಸ್ಸಿನಲ್ಲೇ ಶ್ರೀಚೈತನ್ಯನೂ ಸಂಸಾರವನ್ನು ತ್ಯಜಿಸಿದ.
ಭಕ್ತರ ಪಾರಣೆಗಾಗಿ ಬಲರಾಮ ತನ್ನ ಮನೆಯಿಂದ ಹಣ್ಣು ಹಂಪಲು ಮೃಷ್ಟಾನ್ನಾದಿ ಗಳನ್ನು ಹಿಂದಿನ ದಿನವೇ ಕಳುಹಿಸಿಕೊಟ್ಟಿದ್ದ. ನರೇಂದ್ರ, ರಾಖಾಲ ಮತ್ತು ಇನ್ನೂ ಕೆಲವರು ನಿಂತುಕೊಂಡೇ ಫಲಾಹಾರವನ್ನು ತೆಗೆದುಕೊಳ್ಳುತ್ತಾ ಇದ್ದಾರೆ. ಒಂದೆರಡು ಚೂರುಗಳನ್ನು ತಿಂದನಂತರ ಅವರಲ್ಲಿ ಒಬ್ಬ ಕೂಗಿಕೊಳ್ಳುತ್ತಿದ್ದಾನೆ: “ಧನ್ಯ! ಧನ್ಯ! ಬಲರಾಮ!” (ಎಲ್ಲರೂ ನಗುತ್ತಿದ್ದಾರೆ.)
ಈಗ ನರೇಂದ್ರ ಬಾಲಕನ ಹಾಗೆ ತಮಾಷೆ ಮಾಡುತ್ತಿದ್ದಾನೆ. ಪರಮಹಂಸರ ಹಾಗೆ ನಟಿಸುತ್ತ, ಒಂದು ರಸಗುಲ್ಲ (ಸಿಹಿ ತಿಂಡಿ) ಬಾಯಿಗೆ ಹಾಕಿಕೊಂಡು ಸಮಾಧಿಸ್ಥನಾದವನ ಹಾಗೆ ಸ್ಥಿರವಾಗಿ ನಿಂತಿದ್ದಾನೆ. ಆತನ ಕಣ್ಣುಗಳು ಎವೆಯಿಕ್ಕದೆ ನೋಡುತ್ತಿವೆ. ಆತ ಕೆಳಕ್ಕೆ ಬಿದ್ದುಬಿಡಬಹುದೆಂದು ಆತನನ್ನು ಹಿಡಿದುಕೊಂಡಿರುವವನ ಹಾಗೆ ಇನ್ನೊಬ್ಬ ಭಕ್ತ ನಟಿಸುತ್ತಿದ್ದಾನೆ. ನರೇಂದ್ರ ಈಗ ಕಣ್ಣು ಮುಚ್ಚಿಕೊಂಡಿದ್ದಾನೆ. ಕೆಲವು ನಿಮಿಷಗಳಾದ ನಂತರ ರಸಗುಲ್ಲವನ್ನು ಇನ್ನೂ ಬಾಯಲ್ಲೇ ಇಟ್ಟುಕೊಂಡು ಕಣ್ಣು ತೆರೆದ. ಈಗ ತೊದಲಿಸುತ್ತ ಹೇಳುತ್ತಿದ್ದಾನೆ: “ಈಗ-ನನಗೆ-ಎಂದಿನ-ಸ್ಥಿತಿ ಬಂದಿದೆ.” (ಎಲ್ಲರೂ ಗಹಗಹಿಸಿ ನಗುತ್ತಿದ್ದಾರೆ.)
ಈಗ ಎಲ್ಲರೂ ಕುಳಿತು ಫಲಾಹಾರ ಸ್ವೀಕರಿಸುತ್ತಿದ್ದಾರೆ. ಮಾಸ್ಟರ್ ಆ ಆನಂದ ಕೂಟದ ಕಡೆ ನೋಡಿ ನಲಿಯುತ್ತಿದ್ದಾನೆ. ಭಕ್ತರೆಲ್ಲರೂ ಕೂಡಿ ಆನಂದದಿಂದ ಘೋಷಿಸುತ್ತಿದ್ದಾರೆ: “ಜೈ ಗುರುಮಹಾರಾಜ್! ಜೈ ಗುರುಮಹಾರಾಜ್!”
೨೫ನೇ ಮಾರ್ಚ್ ೧೮೮೭, ಶುಕ್ರವಾರ
ಸೋದರ ಸಂನ್ಯಾಸಿಗಳ ದರ್ಶನ ಪಡೆಯಲು ಮಾಸ್ಟರ್ ಮಠಕ್ಕೆ ಬಂದಿದ್ದಾನೆ. ಆತನೊಡನೆ ದೇವೇಂದ್ರನೂ ಬಂದಿದ್ದಾನೆ. ಮಾಸ್ಟರ್ ಆಗಾಗ ಮಠಕ್ಕೆ ಬಂದು ಹೋಗು ತ್ತಿದ್ದಾನೆ. ಒಮ್ಮೊಮ್ಮೆ ಒಂದೆರಡು ದಿನಗಳ ಮಟ್ಟಿಗೆ ಮಠದಲ್ಲೇ ಇದ್ದುಬಿಡುತ್ತಾನೆ. ಹಿಂದಿನ ವಾರ ಆತ ಒಟ್ಟಿಗೆ ಮೂರು ದಿನಗಳನ್ನು ಮಠದಲ್ಲೇ ಕಳೆದ. ಈ ಯುವಕ ಸಂನ್ಯಾಸಿಗಳ, ವಿಶೇಷತಃ ನರೇಂದ್ರನ ತೀವ್ರ ವೈರಾಗ್ಯವನ್ನು ಲಕ್ಷ್ಯವಿಟ್ಟು ನೋಡಬೇಕೆಂದು ಆಸೆ. ಅದಕ್ಕಾಗಿ ಆತ ಆಗಾಗ ಬಂದು ಮಠದಲ್ಲೇ ಇದ್ದುಬಿಡುತ್ತಿದ್ದಾನೆ.
ಸಾಯಂಕಾಲವಾಗಿದೆ. ಮಾಸ್ಟರ್ ಇಂದಿನ ರಾತ್ರಿಯನ್ನು ಇಲ್ಲೇ ಕಳೆಯುತ್ತಿದ್ದಾನೆ. ಶಶಿ ಭಗವನ್ನಾಮೋಚ್ಚಾರಣೆ ಮಾಡುತ್ತ ದೇವರಮನೆಗೆ ದೀಪ ಹಚ್ಚಿ ಧೂಪ ಹಾಕಿದ ಬಳಿಕ ಪ್ರತಿಯೊಂದು ಕೊಠಡಿಗೂ ಹೋಗಿ ಅಲ್ಲಿದ್ದ ದೇವದೇವಿಯರ ಪಟಗಳಿಗೆ ಧೂಪ ತೋರಿಸಿ ಅವುಗಳಿಗೆಲ್ಲಾ ಪ್ರಣಾಮಮಾಡಲಾರಂಭಿಸಿದ್ದಾನೆ. ಈಗ ಮಂಗಳಾರತಿ ಶುರು ಆಯಿತು. ಶಶಿ ಮಂಗಳಾರತಿ ಮಾಡುತ್ತಿದ್ದಾನೆ. ಮಠದ ಸೋದರರು, ಮಾಸ್ಟರ್, ದೇವೇಂದ್ರ ಇವರೆಲ್ಲಾ ಕೈಕಟ್ಟಿ ನಿಂತುಕೊಂಡು ಮಂಗಳಾರತಿಯ ಹಾಡನ್ನು ಹಾಡುತ್ತಿದ್ದಾರೆ:
ಜೈ ಶಿವ ಓಂಕಾರ, ಭಜ ಶಿವ ಓಂಕಾರ!
ಬ್ರಹ್ಮ ವಿಷ್ಣು ಸದಾಶಿವ!!
ಹರ ಹರ ಮಹಾದೇವ!!!
ಈಗ ಮಾಸ್ಟರ್ ಮತ್ತು ನರೇಂದ್ರ ಮಾತುಕತೆ ಆಡುತ್ತಿದ್ದಾರೆ. ತಾನು ಪರಮಹಂಸರನ್ನು ಮೊಟ್ಟಮೊದಲು ಸಂಧಿಸಿದಂದಿನಿಂದ ಇದುವರೆಗೆ ನಡೆದ ತನ್ನ ಜೀವನದ ಘಟನಾವಳಿಗಳನ್ನೆಲ್ಲಾ ನರೇಂದ್ರನು ಮಾಸ್ಟರ್ ಮುಂದೆ ತೋಡಿಕೊಳ್ಳುತ್ತಾ ಇದ್ದಾನೆ.
ನರೇಂದ್ರ: “ನಾನು ಮೊದಲು ಮೊದಲು ಅವರ ಹತ್ತಿರ ಹೋಗುತ್ತಿದ್ದಾಗ ಒಂದು ದಿನ ಭಾವದಲ್ಲಿ ಅವರು ಹೇಳಿದರು: ‘ಬಂದೆಯಾ!’ ನಾನು ಭಾವಿಸಿದೆ: ‘ಏನಾಶ್ಚರ್ಯ ಇದು! ಇವರು ನನ್ನ ಪರಿಚಯ ಆಗಲೇ ಇರುವವರ ಹಾಗೆ ಮಾತಾಡುತ್ತಿದ್ದಾರಲ್ಲ!’ ಬಳಿಕ ಕೇಳಿದರು: ‘ನಿನಗೇನಾದರೂ ಒಂದು ಜ್ಯೋತಿ ಕಾಣಿಸಿಕೊಳ್ಳುವುದೆ!’ ಅದಕ್ಕೆ ನಾನು ಹೇಳಿದೆ: ‘ಹೌದು. ನನಗೆ ನಿದ್ದೆ ಬರುವುದಕ್ಕೆ ಮುನ್ನ ಯಾವುದೋ ಒಂದು ಜ್ಯೋತಿ ನನ್ನ ಭ್ರೂಮಧ್ಯದ ಹತ್ತಿರ “ಗರಗರ’ ಅಂತ ಸುತ್ತುತ್ತಿರುತ್ತದೆ.”’
ಮಾಸ್ಟರ್: “ಈಗಲೂ ಹಾಗೆ ಕಾಣಿಸಿಕೊಳ್ಳುತ್ತಿದೆಯೇನು?”
ನರೇಂದ್ರ: “ಹಿಂದೆ ಪದೇ ಪದೇ ಕಾಣಿಸಿಕೊಳ್ಳುತ್ತಿತ್ತು. ಯದುಮಲ್ಲಿಕನ ತೋಟದ ಮನೆಯಲ್ಲಿ ಒಂದು ದಿನ ಪರಮಹಂಸರು ನನ್ನನ್ನು ಸ್ಪರ್ಶಿಸಿ ಏನನ್ನೋ ವಟಗುಟ್ಟಲಾರಂಭಿ ಸಿದರು. ಒಡನೆಯೇ ನಾನು ಬಾಹ್ಯಜ್ಞಾನಶೂನ್ಯನಾಗಿಬಿಟ್ಟೆ. ಅದರ ಅಮಲು ಒಂದು ತಿಂಗಳವರೆಗೂ ಇತ್ತು.
“ನನಗೆ ವಿವಾಹವಾಗಲಿದೆಯೆಂದು ಕೇಳಿ ಕಾಳಿಯ ಪಾದಗಳನ್ನು ಹಿಡಿದು ಅಳಲಾರಂಭಿಸಿದರು. ಕಣ್ಣೀರು ಸುರಿಸುತ್ತಲೇ ಭಗವತಿಗೆ ಹೇಳಿದರು: ‘ಹೇ ತಾಯೆ, ಅದು ನಡೆಯದ ಹಾಗೆ ಮಾಡಿಬಿಡು! ನರೇಂದ್ರ ಮುಳುಗಿಹೋಗದ ಹಾಗೆ ನೋಡಿಕೊ.’
“ತಂದೆ ಸತ್ತ ಬಳಿಕ ಮನೆಯಲ್ಲಿ ನನ್ನ ತಾಯಿ, ಸೋದರ ಸೋದರಿಯರು ಹೊಟ್ಟೆಗಿಲ್ಲದೆ ಕಷ್ಟಪಡುತ್ತಿದ್ದರು. ಒಂದು ದಿನ ಅನ್ನದಾಗುಹನೊಡನೆ ಪರಮಹಂಸರನ್ನು ನೋಡಲು ಹೋಗಿದ್ದೆ. ಆಗ ಅವರು ಆತನಿಗೆ ಹೇಳಿದರು: ‘ಈತನ (ನರೇಂದ್ರನ) ತಂದೆ ಸತ್ತುಹೋಗಿದ್ದಾನೆ. ಈತನ ಮನೆಯಲ್ಲಿ ಬಹಳ ಕಷ್ಟಪರಿಸ್ಥಿತಿ ಬಂದಿದೆ. ಈ ಸಂದರ್ಭದಲ್ಲಿ ಈತನ ಬಂಧು-ಬಾಂಧವರು ಈತನಿಗೆ ಸಹಾಯ ನೀಡಿದರೆ ಬಹಳ ಒಳ್ಳೆಯದಾಗುತ್ತದೆ.’
“ಅನ್ನದಾಗುಹ ಹೊರಟುಹೋದನಂತರ ನಾನು ಅವರಿಗೆ ಚೆನ್ನಾಗಿ ತಗುಲಿಸಿದೆ. ಹೇಳಿದೆ: ‘ಏಕೆ ನೀವು ಆತನ ಹತ್ತಿರ ಇದನ್ನೆಲ್ಲಾ ಹೇಳುವುದಕ್ಕೆ ಹೋದಿರಿ?’ ಅವರು ಪೆಚ್ಚಾಗಿ ಅಳುತ್ತಾ ಹೇಳಿದರು: ‘ನೋಡು ನರೇಂದ್ರ, ನಾನು ನಿನ್ನ ಸಲುವಾಗಿ ಬಾಗಿಲಿಂದ ಬಾಗಿಲಿಗೆ ಅಲೆದು ಭಿಕ್ಷೆ ಬೇಡಿ ತರಬಲ್ಲೆ.’
“ಅವರು ತಮ್ಮ ಪ್ರೀತಿಯಿಂದ ನಮ್ಮನ್ನೆಲ್ಲ ವಶಮಾಡಿಕೊಂಡುಬಿಟ್ಟರು. ನಿಮಗೆ ಹೇಗೆ ಅನಿಸುತ್ತದೆ?”
ಮಾಸ್ಟರ್: “ಲೇಶಮಾತ್ರವೂ ಸಂದೇಹವಿಲ್ಲ. ಅವರದು ಅಹೇತುಕ ಪ್ರೀತಿ.”
ನರೇಂದ್ರ: “ಒಂದು ದಿನ ನಾನೊಬ್ಬನೆ ಅವರೊಡನೆ ಇದ್ದಾಗ, ಅವರು ನನಗೆ ಒಂದು ವಿಷಯ ತಿಳಿಸಿದರು. ಹತ್ತಿರ ಬೇರೆ ಯಾವ ನರಪ್ರಾಣಿಯೂ ಇರಲಿಲ್ಲ. ಬೇರೆ ಯಾರ ಕಿವಿಗೂ ಇದು ಹೋಗಕೂಡದು.”
ಮಾಸ್ಟರ್: “ಇಲ್ಲ, ನಾನು ಬೇರೆ ಯಾರ ಕಿವಿಗೂ ಹಾಕುವುದಿಲ್ಲ. ಏನು ಹೇಳಿದರು?”
ನರೇಂದ್ರ: “ಅವರು ಹೇಳಿದರು, ‘ನಾನಂತೂ ಸಿದ್ಧಿಗಳನ್ನು ಉಪಯೋಗಿಸುವ ಹಾಗೆಯೇ ಇಲ್ಲ; ನಿನ್ನ ಮೂಲಕ ಅವನ್ನು ಉಪಯೋಗಿಸಿಬೇಕೆಂದಿದ್ದೇನೆ. ನೀನು ಏನು ಹೇಳುತ್ತೀಯಾ?’ ಅದಕ್ಕೆ ನಾನು ಹೇಳಿದೆ: ‘ಬೇಡಿ. ಅದಕ್ಕೆ ನಾನು ಒಪ್ಪುವವನಲ್ಲ.’
“ಅವರ ಮಾತುಗಳನ್ನೆಲ್ಲ ನಾನು ಸುಮ್ಮನೆ ಪರಿಹಾಸ್ಯಮಾಡಿಬಿಡುತ್ತಿದ್ದೆ. ನೀವು ಅವರಿಂದಲೇ ಈ ವಿಷಯಗಳನ್ನೆಲ್ಲಾ ಕೇಳಿರಬೇಕು. ಅವರ ಭಗವದ್ರೂಪದ ದರ್ಶನಗಳ ಸಂಬಂಧವಾಗಿ ನಾನು ಅವರಿಗೆ ಹೇಳಿಬಿಡುತ್ತಿದ್ದೆ: ‘ಇವೆಲ್ಲ ನಿಮ್ಮ ಮಾನಸಿಕ ಭ್ರಾಂತಿ.’
“ಅವರು ಹೇಳುತ್ತಿದ್ದರು: ‘ನಾನು ಕುಟೀರದ ಮೇಲಕ್ಕೆ ಹತ್ತಿಹೋಗಿ ತಾರಸ್ವರದಿಂದ ಕೂಗುತ್ತಿದ್ದೆ: “ಭಕ್ತರಿರಾ, ಎಲ್ಲಿದ್ದೀರಿ ನೀವು? ಬೇಗ ಬನ್ನಿ! ನಿಮ್ಮನ್ನು ಕಾಣದೆ ನನ್ನ ಪ್ರಾಣ ಇನ್ನೇನು ಹೋಗುವುದರಲ್ಲಿದೆ” ಭಗವತಿ ನನಗೆ ಹೇಳಿದಳು: ‘ಭಕ್ತರು ಬಂದೇ ಬರುತ್ತಾರೆ.’ ಈಗ ನೋಡು, ಎಲ್ಲವೂ ಸತ್ಯವಾಗುತ್ತಿದೆ.’
“ಅದಕ್ಕೆ ನಾನು ಬೇರೆ ಯಾವ ಉತ್ತರವನ್ನು ತಾನೆ ಕೊಡಲಿ? ಸುಮ್ಮನೆ ಇದ್ದುಬಿಟ್ಟೆ.
“ಒಂದು ದಿನ ಕೊಠಡಿಯ ಕಿಟಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ ದೇವೇಂದ್ರಬಾಬು ಮತ್ತು ಗಿರೀಶಬಾಬುವಿಗೆ ನನ್ನ ಸಂಬಂಧವಾಗಿ ಹೇಳಿದರು: ‘ಈತ ಯಾರು ಎಂಬುದನ್ನು ನಾನು ಈತನಿಗೆ ತಿಳಿಸಿಬಿಟ್ಟಿದ್ದೇ ಆದರೆ, ಬಳಿಕ ಈತ ತನ್ನ ಶರೀರವನ್ನು ಇಟ್ಟುಕೊಳ್ಳುವುದಿಲ್ಲ.”’
ಮಾಸ್ಟರ್: “ಹೌದು, ಅದನ್ನು ಕೇಳಿದ್ದೇನೆ. ನಮ್ಮ ಎದುರಿಗೇ ಅದನ್ನು ಅನೇಕ ವೇಳೆ ಹೇಳಿದ್ದಾರೆ. ನೀನು ಕಾಶೀಪುರದಲ್ಲಿದ್ದಾಗ, ನಿನಗೊಮ್ಮೆ ನಿರ್ವಿಕಲ್ಪ ಸಮಾಧಿಯುಂಟಾಗಿ, ಅದರಲ್ಲಿ ನೀನು ಯಾರು ಎಂಬುದನ್ನು ನೀನು ಅರಿತುಕೊಂಡುಬಿಟ್ಟೆ, ಅಲ್ಲವೆ?”
ನರೇಂದ್ರ: “ಹೌದು, ಆ ಅವಸ್ಥೆಯಲ್ಲಿ ನನಗೆ ಶರೀರವೇ ಇಲ್ಲದಿರುವ ಹಾಗೆ ಅನುಭವವಾಗಿ ಕೇವಲ ನನ್ನ ಮುಖ ಮಾತ್ರ ಕಾಣಿಸಿಕೊಳ್ಳಲಾರಂಭಿಸಿತು. ಪರಮಹಂಸರು ಮೇಲಿನ ಅಂತಸ್ತಿನಲ್ಲಿದ್ದರು. ಕೆಳಗಿನ ಅಂತಸ್ತಿನಲ್ಲಿ ನನಗೀ ಅನುಭವ ಆಯಿತು. ಆಗ ನಾನು ಸುಮ್ಮನೆ ಅಳಲಾರಂಭಿಸಿದೆ. ಕೂಗಲಾರಂಭಿಸಿದೆ: ‘ನನಗೇನು ಆಗಿಬಿಟ್ಟಿದೆ?’ ಹಿರಿಯ ಗೋಪಾಲ ಮೇಲಕ್ಕೆ ಹೋಗಿ ಪರಮಹಂಸರಿಗೆ ತಿಳಿಸಿದ: ‘ನರೇಂದ್ರ ಅಳುತ್ತಿದ್ದಾನೆ.’
“ನಾನು ಮೇಲಕ್ಕೆ ಹೋಗಿ ಅವರನ್ನು ನೋಡಿದಾಗ ಅವರು ಹೇಳಿದರು: ‘ಈಗ ನೀನು ಅರಿತುಕೊಂಡಿದ್ದೀಯೆ. ಆದರೆ ಬೀಗದ ಕೈ ನನ್ನ ಹತ್ತಿರವೇ ಉಳಿದಿರುತ್ತದೆ.’
“ನಾನು ಅವರನ್ನು ಕೇಳಿದೆ: ‘ನನಗೇನಾಗಿಬಿಟ್ಟಿತು?’
“ಭಕ್ತರ ಕಡೆ ತಿರುಗಿ ಅವರು ಹೇಳಿದರು: ‘ಈತ ತಾನು ಯಾರು ಎಂಬುದನ್ನು ಅರಿತುಕೊಂಡುಬಿಟ್ಟರೆ, ಬಳಿಕ ತನ್ನ ದೇಹವನ್ನು ಇಟ್ಟುಕೊಂಡಿರುವುದಿಲ್ಲ. ಅದಕ್ಕಾಗಿ ನಾನು ಈತನಿಗೆ ಗೊತ್ತಾಗದ ಹಾಗೆ ಮಾಡಿಬಿಟ್ಟಿದ್ದೇನೆ.’
“ಒಂದು ದಿನ ಹೇಳಿದರು: ‘ನೀನು ಇಚ್ಛೆಪಟ್ಟರೆ, ನೀನು ನಿನ್ನ ಹೃದಯಮಧ್ಯದಲ್ಲಿ ಶ್ರೀಕೃಷ್ಣನನ್ನು ನೋಡಬಹುದು.’ ನಾನು ಹೇಳಿದೆ: ‘ನನಗೆ ಕೃಷ್ಣನಲ್ಲಿ ನಂಬಿಕೆಯೇ ಇಲ್ಲ!’ (ಮಾಸ್ಟರ್ ಮತ್ತು ನರೇಂದ್ರ ಇಬ್ಬರೂ ನಗುತ್ತಿದ್ದಾರೆ.)
“ಒಮ್ಮೊಮ್ಮೆ ನನಗೆ ಅಸಾಧಾರಣ ಅನುಭವವಾಗುತ್ತಿದೆ. ಕೆಲವು ಸ್ಥಳಗಳು, ಕೆಲವು ವಸ್ತುಗಳು, ಕೆಲವು ಮನುಷ್ಯರು ನನ್ನ ಕಣ್ಣಿಗೆ ಬಿದ್ದಾಗ ನನಗೆ ಅನಿಸುತ್ತದೆ, ನಾನಾಗಲೇ ಇವನ್ನು ನನ್ನ ಹಿಂದಿನ ಜನ್ಮದಲ್ಲಿ ನೋಡಿದ್ದೆನಲ್ಲ ಅಂತ. ಆವೆಲ್ಲಾ ನನಗೆ ಗೊತ್ತಿದ್ದ ವಸ್ತುಗಳಾಗಿಯೇ ಕಾಣಬರುತ್ತಿವೆ. ನಾನು ಒಂದು ದಿನ ಅಮ್ಹರ್ಟ್ಸ ಬೀದಿಯಲ್ಲಿರುವ ಶರಚ್ಚಂದ್ರನ ಮನೆಗೆ ಹೋಗಿದ್ದೆ. ಮನೆಗೆ ಕಾಲಿಟ್ಟೊಡನೆಯೇ ಆತನಿಗೆ ಹೇಳಿದೆ: ‘ಏನಿದು, ಈ ಮನೆ ನನಗಾಗಲೆ ಪರಿಚಯವಿದ್ದ ಹಾಗೆ ಇದೆಯಲ್ಲ! ಒಳಗಿರುವ ಮಾರ್ಗಗಳು ಕೊಠಡಿಗಳು ಎಲ್ಲಾ ತಿಳಿದಿರುವ ಹಾಗೆ ಇವೆಯಲ್ಲ!’
“ನಾನು ನನ್ನ ಇಚ್ಛಾನುಸಾರವಾಗಿಯೇ ಎಲ್ಲಾ ಕೆಲಸಕಾರ್ಯಗಳನ್ನು ಮಾಡುತ್ತಿದ್ದೆ. ಅದಕ್ಕೆ ಅವರು ಏನೂ ಹೇಳುತ್ತಿರಲಿಲ್ಲ. ನಾನು ಸಾಧಾರಣ ಬ್ರಾಹ್ಮಸಮಾಜದ ಸದಸ್ಯನಾಗಿದ್ದುದು ನಿಮಗೆ ಜ್ಞಾಪಕದಲ್ಲಿರಬೇಕು ಅಲ್ಲವೆ?”
ಮಾಸ್ಟರ್: “ಹೌದು, ಜ್ಞಾಪಕದಲ್ಲಿದೆ.”
ನರೇಂದ್ರ: “ಹೆಂಗಸರು ಅಲ್ಲಿಗೆ ಹೋಗುತ್ತಾರೆ ಎಂಬುದು ಅವರಿಗೆ ಗೊತ್ತಿತ್ತು. ಹೆಂಗಸಿನ ಬಳಿಯಲ್ಲಿ ಕುಳಿತು ಭಗವಚ್ಚಿಂತನೆ ಮಾಡಲಾಗುವುದಿಲ್ಲ; ಅದಕ್ಕಾಗಿ ಬ್ರಾಹ್ಮ ಸಮಾಜದ ಧ್ಯಾನದ ವ್ಯವಸ್ಥೆಯನ್ನು ಅವರು ಹೀಯಾಳಿಸುತ್ತಿದ್ದರು. ಆದರೂ ಅವರು ನನಗೇನನ್ನೂ ಹೇಳುತ್ತಿರಲಿಲ್ಲ. ಆದರೆ ಒಂದು ದಿನ ಹೇಳಿದರು: ‘ನೀನು ಬ್ರಾಹ್ಮ ಸಮಾಜಕ್ಕೆ ಸದಸ್ಯನಾಗಿರುವುದನ್ನು ರಾಖಾಲನಿಗೆ ತಿಳಿಸಬೇಡ, ಅದು ಗೊತ್ತಾದರೆ ಆತನೂ ಸದಸ್ಯನಾಗಲು ಇಚ್ಛಿಸಬಹುದು.”’
ಮಾಸ್ಟರ್: “ನಿನ್ನ ಮನಸ್ಸು ಬಹಳ ಬಲವಾದ್ದು. ಅದಕ್ಕಾಗಿ ಅವರು ನೀನು ಅಲ್ಲಿಗೆ ಹೋಗುತ್ತಿದ್ದುದಕ್ಕೆ ಯಾವ ಅಡ್ಡಿಯನ್ನೂ ತರಲಿಲ್ಲ.”
ನರೇಂದ್ರ: “ನಾನು ಬಹಳವಾಗಿ ದುಃಖ, ಕಷ್ಟ ಇವನ್ನು ಅನುಭವಿಸಿದ ನಂತರ ನನಗೀ ಮಾನಸಿಕ ಅವಸ್ಥೆ ಬಂದಿದೆ. ನೋಡಿ, ನೀವು ಅಂಥ ದುಃಖ, ಕಷ್ಟ ಯಾವುದಕ್ಕೂ ಒಳಗಾಗಲಿಲ್ಲ. ದುಃಖ, ಕಷ್ಟ ಇವುಗಳಿಗೆ ಒಳಗಾಗದಿದ್ದರೆ, ಭಗವಂತನಲ್ಲಿ ಆತ್ಮಸಮರ್ಪಣೆ ಮಾಡಿಕೊಳ್ಳಬೇಕೆಂಬ ಬುದ್ಧಿ ಬರುವುದಿಲ್ಲ ಎಂಬುದು ಈಗ ನನ್ನ ಅನುಭವಕ್ಕೆ ಬರುತ್ತಿದೆ.
“ಒಳ್ಳೆಯದು – ಬಹಳ ನಮ್ರ ಸ್ವಭಾವಿ, ನಿರಹಂಕಾರಿ! ಎಂಥಾ ವಿನಯಿ! ವಿನಯಿ ಆಗುವುದು ಹೇಗೆ ಎಂಬುದನ್ನು ನನಗೆ ತಿಳಿಸಬಲ್ಲಿರಾ?”
ಮಾಸ್ಟರ್: “ಪರಮಹಂಸರು ಒಮ್ಮೆ ನಿನ್ನ ಅಹಂಕಾರದ ಮಾತೆತ್ತಿ ಹೇಳಿದರು: ‘ಅದು ಯಾರ “ಅಹಂ” ?”’
ನರೇಂದ್ರ : “ಅದರ ಅರ್ಥ?”
ಮಾಸ್ಟರ್: “ಒಬ್ಬ ಸಖಿ ರಾಧೆಗೆ ಹೇಳಿದಳು: ‘ನಿನಗೆ ಅಹಂಕಾರ ಬಂದುಬಿಟ್ಟಿದೆ. ಅದಕ್ಕಾಗಿಯೇ ನೀನು ಶ್ರೀಕೃಷ್ಣನಿಗೆ ಅಪಮಾನಮಾಡಿದ್ದು.’ ಅದಕ್ಕೆ ಇನ್ನೊಬ್ಬ ಸಖಿ ಹೇಳಿದಳು: ‘ಹೌದು, ರಾಧೆಗೆ ಅಹಂಕಾರ ಬಂದುಬಿಟ್ಟಿರುವುದೇನೋ ನಿಜ. ಆದರೆ, ಆ ‘ಅಹಂ’ ಯಾರದು?’ ಆಕೆಯ ಉತ್ತರದ ಅರ್ಥ, ರಾಧೆಗೆ ಬಂದಿರುವುದು ಶ್ರೀಕೃಷ್ಣನೇ ತನ್ನ ಪತಿ ಎಂಬ ಅಹಂಕಾರ. ಅದನ್ನು ಆತನೇ ಆಕೆಯಲ್ಲಿ ಇಟ್ಟಿದ್ದಾನೆ.
“ಪರಮಹಂಸರು ಹೇಳಿದ್ದರ ಅರ್ಥ, ಭಗವಂತ ನಿನ್ನ ಮೂಲಕ ತನ್ನ ಅನೇಕ ಕೆಲಸಗಳನ್ನು ಮಾಡಿಕೊಳ್ಳಲೋಸುಗ ಈ ‘ಅಹಂ’ ಅನ್ನು ನಿನ್ನಲ್ಲಿ ಇಟ್ಟಿದ್ದಾನೆ ಎಂಬುದಾಗಿ.”
ನರೇಂದ್ರ: “ನನ್ನ ಅಹಂಕಾರ ಡಂಗುರ ಹೊಡೆದು ಎಲ್ಲರಿಗೂ ಹೇಳುತ್ತಿದೆ ನನಗೇನೂ ದುಃಖವಿಲ್ಲ ಅಂತ.”
ಮಾಸ್ಟರ್ (ನಗುತ್ತ): “ಇಚ್ಛೆಯಿದ್ದರೆ ಹಾಗೆ ಡಂಗುರ ಹೊಡೆದು ನೋಡು.” (ಇಬ್ಬರೂ ನಗುತ್ತಿದ್ದಾರೆ.)
ಈಗ ಉಳಿದ ಭಕ್ತರ ಸಂಬಂಧವಾಗಿ ಮಾತುಕತೆ ಆರಂಭವಾಯಿತು.
ನರೇಂದ್ರ: “ಅವರು ವಿಜಯಕೃಷ್ಣ ಗೋಸ್ವಾಮಿಯ ಸಂಬಂಧವಾಗಿ ಹೇಳಿದರು: ‘ಆತ ಬಾಗಿಲ ಹತ್ತಿರ ನಿಂತು ಕದ ತಟ್ಟುತ್ತಿದ್ದಾನೆ.”’
ಮಾಸ್ಟರ್: “ಅಂದರೆ ಆತ ಇನ್ನೂ ಒಳಕ್ಕೆ ಪ್ರವೇಶ ಮಾಡಿಲ್ಲ ಅಂತ ಅರ್ಥ. ಆದರೆ ಆತ ಶ್ಯಾಮಪುಕುರದ ಮನೆಯಲ್ಲಿ ಪರಮಹಂಸರಿಗೆ ಹೇಳಿದ: ‘ನಾನು ನಿಮ್ಮ ಈ ಆಕಾರವನ್ನೇ, ಈ ಸ್ಥೂಲ ಶರೀರವನ್ನೇ ಢಾಕಾದಲ್ಲಿ ನೋಡಿದ್ದೇನೆ.’ ಅಂದು ನೀನು ಅಲ್ಲೇ ಇದ್ದೆಯಲ್ಲ.”
ನರೇಂದ್ರ: “ದೇವೇಂದ್ರಬಾಬು, ರಾಮಬಾಬು ಇವರಿಗೆ ಸಂಸಾರವನ್ನು ತ್ಯಜಿಸಿಬಿಡ ಬೇಕೆಂಬ ಇಚ್ಛೆ ಇದೆ. ಅದಕ್ಕಾಗಿ ಅವರು ಬಹಳವಾಗಿ ಪ್ರಯತ್ನ ಮಾಡುತ್ತಿದ್ದಾರೆ. ರಾಮ ಬಾಬು ರಹಸ್ಯವಾಗಿ ನನಗೆ ಹೇಳಿದ, ಎರಡು ವರ್ಷಗಳಾದ ಮೇಲೆ ತಾನು ಸಂಸಾರವನ್ನು ತ್ಯಜಿಸಿಬಿಡುವುದಾಗಿ.”
ಮಾಸ್ಟರ್: “ಎರಡು ವರ್ಷಗಳಾದ ಮೇಲೆಯೇ? ಮಕ್ಕಳು ಮರಿಗಳಿಗೆ ಸುವ್ಯವಸ್ಥೆ ಮಾಡಿಯಾದ ಮೇಲೆ ಅಂತ ಕಾಣುತ್ತದೆ?”
ನರೇಂದ್ರ : “ಅದೂ ಅಲ್ಲದೆ ತನ್ನ ಈಗಿನ ಮನೆಯನ್ನು ಬಾಡಿಗೆಗೆ ಕೊಟ್ಟುಬಿಟ್ಟು, ಇನ್ನೊಂದು ಚಿಕ್ಕ ಮನೆಯನ್ನು ಕೊಂಡುಕೊಳ್ಳುತ್ತಾನಂತೆ. ಆತನ ಹೆಣ್ಣುಮಕ್ಕಳ ವಿವಾಹವನ್ನು ಆತನ ಬಂಧುಬಾಂಧವರು ನೋಡಿಕೊಳ್ಳುತ್ತಾರಂತೆ.”
ಮಾಸ್ಟರ್: “ಗೋಪಾಲ ಈಗ ಒಳ್ಳೆ ಉಚ್ಚ ಮಾನಸಿಕ ಅವಸ್ಥೆಯಲ್ಲಿ ಇದ್ದಾನೆ, ಅಲ್ಲವೆ?”
ನರೇಂದ್ರ: “ಯಾವ ಅವಸ್ಥೆ ?”
ಮಾಸ್ಟರ್: “ಎಷ್ಟೊಂದು ಭಾವ! ಕೇವಲ ಭಗವನ್ನಾಮೋಚ್ಚಾರಣೆಯಿಂದಲೇ ಎಷ್ಟೊಂದು ಪ್ರೇಮಾಶ್ರು ಮತ್ತು ರೋಮಾಂಚನ!”
ನರೇಂದ್ರ : “ಕೇವಲ ಭಾವವೇ ಆಧ್ಯಾತ್ಮಿಕ ಉನ್ನತಿಯನ್ನು ತಂದುಬಿಡುವುದೆ? ಕಾಳೀಪ್ರಸಾದ, ಶರಚ್ಚಂದ್ರ, ಶಶಿ, ಶಾರದಾಪ್ರಸನ್ನ ಇವರು ಗೋಪಾಲನಿಗಿಂತ ಎಷ್ಟೋ ಮುಂದುವರೆದಿದ್ದಾರೆ. ಇವರ ತ್ಯಾಗ ಎಷ್ಟು ಮಹತ್ತಾದುದು! ಗೋಪಾಲನೆಲ್ಲಿ ಪರಮ ಹಂಸರನ್ನು ಸ್ವೀಕರಿಸಿದ್ದಾನೆ?”
ಮಾಸ್ಟರ್: “ಅವನು ಇಲ್ಲಿಗೆ ಸೇರಿದವನಲ್ಲ ಅಂತ ಪರಮಹಂಸರು ಹೇಳು ತ್ತಿದ್ದುದೇನೋ ನಿಜ. ಆದರೆ ಆತ ಪರಮಹಂಸರನ್ನು ಬಹಳವಾಗಿ ಗೌರವಿಸುತ್ತಿದ್ದುದನ್ನು ನಾನು ನೋಡಿದ್ದೇನೆ.”
ನರೇಂದ್ರ : “ಏನಪ್ಪ, ಅದು ನೀವು ನೋಡಿರುವುದು?”
ಮಾಸ್ಟರ್: “ಮೊದಲು ಮೊದಲು ನಾನು ದಕ್ಷಿಣೇಶ್ವರಕ್ಕೆ ಹೋಗುತ್ತಿದ್ದಾಗ, ಒಂದು ದಿನ ಪರಮಹಂಸರ ಕೊಠಡಿಯಲ್ಲಿ ಮಾತುಕತೆ ಮುಗಿದನಂತರ ಭಕ್ತರೆಲ್ಲರೂ ಹೊರಕ್ಕೆ ಎದ್ದು ಬರುತ್ತಿದ್ದರು. ನಾನು ಹೊರಕ್ಕೆ ಬಂದಾಗ ಗೋಪಾಲ ಪುಟ್ಪಾತಿನಲ್ಲಿ ಪರಮಹಂಸರೆದುರಿಗೆ ಮಂಡಿಯೂರಿ ಕೈಮುಗಿದು ನಿಂತಿರುವುದನ್ನು ಕಂಡೆ. ಚಂದ್ರ ನಡುನೆತ್ತಿಯಲ್ಲಿ ಚೆನ್ನಾಗಿ ಬೆಳಗುತ್ತಿದ್ದ. ಇದು ನಡೆದದ್ದು ಪರಮಹಂಸರ ಕೊಠಡಿಯ ಆ ಉದ್ದವಾದ ವರಾಂಡದಲ್ಲಿರುವ ಕೆಂಪು ಇಟ್ಟಿಗೆ ಚೂರುಗಳಿಂದ ನಿರ್ಮಿತವಾದ ಪುಟ್ಪಾತಿನಲ್ಲಿ. ಅಲ್ಲಿ ಬೇರೆ ಯಾರೂ ಇರಲಿಲ್ಲ. ಗೋಪಾಲ ಪರಮಹಂಸರಿಗೆ ಶರಣಾಗತನಾಗಿರುವಂತೆಯೂ, ಅವರು ಅವನಿಗೆ ಅಭಯವನ್ನು ನೀಡುತ್ತಿರುವಂತೆಯೂ ಕಂಡಿತು.”
ನರೇಂದ್ರ: “ನಾನು ಅದನ್ನು ನೋಡಲಿಲ್ಲ.”
ಮಾಸ್ಟರ್: “ಇದೂ ಅಲ್ಲದೆ, ಪರಮಹಂಸರು ಆಗಾಗ ಹೇಳುತ್ತಿದ್ದರು: ‘ಗೋಪಾಲ ಪರಮಹಂಸಾವಸ್ಥೆಯಲ್ಲಿದ್ದಾನೆ.’ ಆದರೆ ಅವರು ಆತನಿಗೆ ಹೆಂಗಸರೊಡನೆ ಅತಿಯಾಗಿ ಬೆರೆಯಬೇಡ ಅಂತ ಹೇಳುತ್ತಿದ್ದುದೂ ನನಗೆ ಚೆನ್ನಾಗಿ ಜ್ಞಾಪಕದಲ್ಲಿದೆ. ಆ ವಿಷಯವಾಗಿ ಅವರು ಆತನಿಗೆ ಅನೇಕ ವೇಳೆ ಎಚ್ಚರಿಕೆ ಕೊಟ್ಟಿದ್ದರು.”
ನರೇಂದ್ರ: “ಆದರೆ ಗೋಪಾಲನ ಮಾತೆತ್ತಿ ಪರಮಹಂಸರು ನನ್ನನ್ನು ಕೇಳಿದರು: ‘ಗೋಪಾಲ ನಿಜವಾಗಿಯೂ ಪರಮಹಂಸನಾಗಿದ್ದರೆ, ಆತ ಹಣಕ್ಕಾಗಿ ಏಕೆ ಆಸೆಪಡುತ್ತಾ ಇದ್ದಾನೆ?’ ಮತ್ತೆ ಹೇಳಿದರು: ‘ಆತ ಈ ಸ್ಥಳಕ್ಕೆ ಸೇರಿದವನಲ್ಲ, ನನಗೆ ಸೇರಿದವರು ಇಲ್ಲಿಗೆ ಸರ್ವದಾ ಬರುತ್ತಾರೆ.’ ಟಿ-ತಮ್ಮನ್ನು ಆಗಾಗ ಬಂದು ಕಾಣದೆ, ಗೋಪಾಲನೊಡನೆಯೇ ಇರುತ್ತಿದ್ದುದನ್ನು ನೋಡಿ ಪರಮಹಂಸರು ಒಮ್ಮೆ ನನಗೆ ಹೇಳಿದರು: ‘ಗೋಪಾಲನೇನೂ ಸಿದ್ಧ–ಹಠಾತ್ ಸಿದ್ಧ. ಆದರೆ ಆತ ಇಲ್ಲಿಗೆ ಸೇರಿದವನಲ್ಲ. ಆತನೇನಾದರೂ ಇಲ್ಲಿಗೆ ಸೇರಿದವನಾಗಿದ್ದರೆ, ಆತನನ್ನು ನೋಡಬೇಕೆಂದು ನಾನು ಅಳಲಿಲ್ಲವಲ್ಲ ಏಕೆ ಮತ್ತೆ?’
“ಕೆಲಕೆಲವರು, ಗೋಪಾಲ ನಿತ್ಯಾನಂದನ ಅವತಾರ ಅಂತ ಸಾರುತ್ತಿದ್ದಾರೆ, ಆದರೆ ಪರಮಹಂಸರೇ ನನಗೆ ಎಷ್ಟೊಂದು ಸಾರಿ ಹೇಳಿದ್ದಾರೆ ಏನು ಕತೆ! ಅವರು ಹೇಳಿದ್ದಾರೆ: ‘ನಾನೇ ಅದ್ವೈತ-ಚೈತನ್ಯ-ನಿತ್ಯಾನಂದ. ಇವರು ಮೂವರೂ ನನ್ನಲ್ಲಿ ವ್ಯಕ್ತವಾಗಿದ್ದಾರೆ.”’
೮ನೆ ಏಪ್ರಿಲ್ ೧೮೮೭, ಶುಕ್ರವಾರ
ಮಾಸ್ಟರ್ ಪ್ರಾತಃಕಾಲ ಎಂಟು ಘಂಟೆ ಸಮಯಕ್ಕೆ ಸರಿಯಾಗಿ ಬರಾಹನಗರದ ಮಠಕ್ಕೆ ಬಂದು ನೋಡಿದಾಗ ಒಂದು ಕೊಠಡಿಯಲ್ಲಿ ಒಬ್ಬ ಸಂನ್ಯಾಸಿ ಒಬ್ಬ ಗೃಹಸ್ಥ ಭಕ್ತನೊಡನೆ ಮಾತುಕತೆಯಾಡುತ್ತಿದ್ದುದು ಆತನ ಕಣ್ಣಿಗೆ ಬಿತ್ತು. ಅವರಿಬ್ಬರಿಗೂ ಒಂದೇ ವಯಸ್ಸು–ಇಪ್ಪತ್ತನಾಲ್ಕೊ ಅಥವಾ ಇಪ್ಪತ್ತೈದೊ. ಈ ಸಲ ಮಾಸ್ಟರ್ ಮಠದಲ್ಲಿ ಮೂರು ದಿನಗಳನ್ನು ಕಳೆಯಲು ಸಂಕಲ್ಪಿಸಿದ್ದಾನೆ. ಆತ ನೇರವಾಗಿ ದೇವರಮನೆಗೆ ಹೋಗಿ ಪರಮಹಂಸರ ಭಾವಚಿತ್ರಕ್ಕೆ ಪ್ರಣಾಮಮಾಡಿದ. ಬಳಿಕ ನರೇಂದ್ರ, ರಾಖಾಲ ಇವರೇ ಮೊದಲಾದ ಸೋದರ ಸಂನ್ಯಾಸಿಗಳನ್ನೆಲ್ಲಾ ಸಂಧಿಸಿ, ಕೊನೆಗೆ ಆ ಇಬ್ಬರು ಭಕ್ತರು ಮಾತುಕತೆಯಾಡುತ್ತಿದ್ದ ಕೊಠಡಿಗೆ ಬಂದು ಒಂದು ಕಡೆ ಕುಳಿತುಕೊಂಡ. ಗೃಹಸ್ಥ ಭಕ್ತನಿಗೆ ಸಂಸಾರವನ್ನು ತ್ಯಜಿಸಬೇಕೆಂಬ ಇಚ್ಛೆ. ಆತ ಹಾಗೆ ಮಾಡದೆ ಇರುವಂತೆ ಸಂನ್ಯಾಸಿ ಆತನಿಗೆ ಬುದ್ಧಿವಾದವೀಯುತ್ತಿದ್ದಾನೆ.
ಸಂನ್ಯಾಸಿ: “ಈಗ ಮಾಡಬೇಕಾಗಿ ಉಳಿದುಕೊಂಡಿರುವ ಕೆಲವು ಕರ್ಮಗಳನ್ನು ಮಾಡಿ ಮುಗಿಸಿಬಿಡು. ಇನ್ನೂ ಸ್ವಲ್ಪ ಪ್ರಯತ್ನಪಟ್ಟರೆ ಅವೆಲ್ಲಾ ಮುಗಿದುಹೋಗಿ ಬಿಡುತ್ತವೆ.’
“ಒಬ್ಬನಿಗೆ ಗೊತ್ತಾಯಿತು. ತನಗೆ ನರಕಪ್ರಾಪ್ತಿಯಾಗುವುದೆಂದು. ಆತ ತನ್ನ ಒಬ್ಬ ಸ್ನೇಹಿತನನ್ನು ಕೇಳಿದ: ‘ನರಕ ಹೇಗಿದೆ?’ ಸ್ನೇಹಿತ ಸೀಮೆಸುಣ್ಣ ತೆಗೆದುಕೊಂಡು ನೆಲದ ಮೇಲೆ ನರಕದ ನಕ್ಷೆಯನ್ನು ಬರೆಯಲಾರಂಭಿಸಿದ. ಆತ ಆ ನಕ್ಷೆಯನ್ನು ಪೂರ್ಣ ಮಾಡುವುದೇ ತಡ, ನರಕಪ್ರಾಪ್ತಿಯನ್ನು ಹೊಂದಬೇಕಾದವ ಅದರ ಮೇಲೆ ಬಿದ್ದು ಹೊರಳಲಾರಂಭಿಸಿದ. ಬಳಿಕ ಹೇಳಿದ: ‘ಈಗ ನನಗೆ ನರಕಪ್ರಾಪ್ತಿ ಆಗಿಹೋಗಿಬಿಟ್ಟಿತು!”’
ಗೃಹಸ್ಥ: “ನನಗೆ ಸಂಸಾರ ರುಚಿಸುತ್ತಿಲ್ಲ. ಆಹ, ನೀವೆಲ್ಲರೂ ಎಷ್ಟು ಆನಂದದಿಂದ ಇದ್ದೀರಿ!”
ಸಂನ್ಯಾಸಿ: “ಹಾಗೆಂದೇಕೆ ಸುಮ್ಮನೆ ಒರಲುತ್ತಾ ಇದ್ದೀಯೆ? ನಿಜವಾಗಿ ಇಚ್ಛೆ ಇದ್ದರೆ ಏಕೆ ತ್ಯಜಿಸಿಬಿಡಬಾರದು? ಆದರೆ ಮತ್ತೆ ನಾನು ನಿನಗೆ ಒತ್ತಿ ಹೇಳುತ್ತೇನೆ, ಇನ್ನೇನು ಭೋಗಾಸಕ್ತಿ ಉಳಿದುಕೊಂಡಿವೆಯೊ ಅವನ್ನೆಲ್ಲ ಏಕೆ ಹಿಡಿದ ಕೈಯಲ್ಲೇ ಮುಗಿಸಿಕೊಂಡು ಬಿಡಬಾರದು?”
ಶಶಿ ಒಂಬತ್ತು ಘಂಟೆಗೆ ದೇವಾಲಯಕ್ಕೆ ಹೋಗಿ ನಿತ್ಯಪೂಜೆಯನ್ನು ಮಾಡಿ ಮುಗಿಸಿದ. ಈಗ ಘಂಟೆ ಹನ್ನೊಂದು. ಮಠದ ಸೋದರರೆಲ್ಲರೂ ಗಂಗಾಸ್ನಾನ ಮಾಡಿ ಹಿಂದಿರುಗಿ ಬಂದಿದ್ದಾರೆ. ಎಲ್ಲರೂ ಮಡಿ ವಸ್ತ್ರಗಳನ್ನು ಉಟ್ಟು, ದೇವಾಲಯಕ್ಕೆ ಹೋಗಿ ಗುರುಮಹಾರಾಜರಿಗೆ (ಪರಮಹಂಸರಿಗೆ) ನಮಸ್ಕಾರ ಮಾಡಿದನಂತರ ಧ್ಯಾನದಲ್ಲಿ ಕುಳಿತುಕೊಂಡಿದ್ದಾರೆ.
ನೈವೇದ್ಯವನ್ನು ದೇವರಿಗೆ ಅರ್ಪಿಸಿದ ನಂತರ ಸೋದರರೆಲ್ಲರೂ ಮಾಸ್ಟರರೊಡನೆ ಕುಳಿತು ಪ್ರಸಾದವನ್ನು ಸ್ವೀಕರಿಸಿದರು.
ಸಾಯಂಕಾಲವಾಗಿದೆ. ದೇವರ ಮನೆಗೆ ದೀಪಹಚ್ಚಿ ಧೂಪವನ್ನು ಹಾಕಲಾಯಿತು. ಈಗ ಮಂಗಳಾರತಿ ಮುಗಿಯಿತು. ರಾಖಾಲ, ಶಶಿ, ಹಿರಿಯ ಗೋಪಾಲ, ಹರೀಶ ಇವರು ದೊಡ್ಡ ಅಂಗಳದಲ್ಲಿ ಕುಳಿತಿದ್ದಾರೆ. ರಾಖಾಲ ಈಗ ಒಬ್ಬ ಸಹೋದರನಿಗೆ ಗುರುಮಹಾ ರಾಜರಿಗೆ ಅರ್ಪಿಸುವ ನೈವೇದ್ಯದ ಸಂಬಂಧವಾಗಿ ಎಚ್ಚರಿಕೆ ಕೊಡುತ್ತಿದ್ದಾನೆ.
ರಾಖಾಲ (ಶಶಿ ಮೊದಲಾದವರಿಗೆ): “ಒಂದು ದಿನ ಅವರು ಉಪಾಹಾರ ತೆಗೆದುಕೊಳ್ಳುವ ಮುನ್ನವೇ ಅವರಿಗಾಗಿ ಇಟ್ಟಿದುದರಲ್ಲಿ ನಾನು ಸ್ವಲ್ಪವನ್ನು ತೆಗೆದುಕೊಂಡು ತಿಂದುಬಿಟ್ಟೆ. ಅವರು ಹೇಳಿದರು: ‘ನಾನು ನಿನ್ನ ಮುಖದ ಕಡೆ ನೋಡಲಾಗುತ್ತಿಲ್ಲವಲ್ಲ, ಹಾಗೇಕೆ ಮಾಡಿದೆ?’ ನಾನು ಅಳಲಾರಂಭಿಸಿದೆ.”
ಹಿರಿಯ ಗೋಪಾಲ: “ಒಂದು ದಿನ ನಾನು ಕಾಶೀಪುರದಲ್ಲಿ ಅವರ ಆಹಾರದ ಮೇಲೆ ಗಟ್ಟಿಯಾಗಿ ಉಸಿರುಬಿಟ್ಟೆ. ಅದಕ್ಕೆ ಅವರು ಹೇಳಿದರು: ‘ಅದನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿಬಿಡು.”’
ಮಾಸ್ಟರ್ ಮತ್ತು ನರೇಂದ್ರ ವರಾಂಡದಲ್ಲಿ ಸುಮ್ಮನೆ ಅಡ್ಡಾಡುತ್ತ ತಮ್ಮ ಹಿಂದಿನ ದಿನಗಳನ್ನು ಜ್ಞಾಪಕಮಾಡಿಕೊಳ್ಳುತ್ತಿದ್ದಾರೆ.
ನರೇಂದ್ರ: “ನನಗೆ ಯಾವುದರ ಮೇಲೂ ವಿಶ್ವಾಸವಿರಲಿಲ್ಲ.”
ಮಾಸ್ಟರ್: “ಏನು, ಭಗವಂತನ ಆಕಾರದ ಸಂಬಂಧವಾಗಿಯೇ?”
ನರೇಂದ್ರ: “ಮೊದಲು ಮೊದಲು ಪರಮಹಂಸರು ಹೇಳುತ್ತಿದ್ದುದರ ಬಹುಭಾಗವನ್ನು ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಒಂದು ದಿನ ಅವರು ನನ್ನನ್ನು ಕೇಳಿದರು: ‘ಹಾಗಾದರೆ, ನೀನು ಏಕೆ ಇಲ್ಲಿಗೆ ಬರುತ್ತಾ ಇದ್ದೀಯೆ?’ ‘ನಾನು ಬರುತ್ತಾ ಇರುವುದು ನಿಮ್ಮನ್ನು ನೋಡಲು ವಿನಾ ನಿಮ್ಮ ಮಾತನ್ನು ಕೇಳುವುದಕ್ಕಲ್ಲ.”’
ಮಾಸ್ಟರ್: “ಅದಕ್ಕೆ ಅವರು ಏನು ಹೇಳಿದರು?”
ನರೇಂದ್ರ: “ಅವರಿಗೆ ಬಹಳ ಆನಂದವಾಗಿಬಿಟ್ಟಿತು.”
೯ನೆ ಏಪ್ರಿಲ್ ೧೮೮೭, ಶನಿವಾರ
ಮಧ್ಯಾಹ್ನದ ಊಟವಾದ ನಂತರ ಮಠದ ಸೋದರರೆಲ್ಲರೂ ವಿಶ್ರಮಿಸಿಕೊಳ್ಳುತ್ತಿದ್ದಾರೆ. ನರೇಂದ್ರ ಮತ್ತು ಮಾಸ್ಟರ್ ಮಠದ ಪಶ್ಚಿಮಭಾಗದ ತೋಟದಲ್ಲಿ ಒಂದು ಮರದ ಕೆಳಗೆ ಕುಳಿತುಕೊಂಡಿದ್ದಾರೆ. ಅದು ನಿರ್ಜನ ಸ್ಥಳ. ಬೇರೆ ಯಾರೂ ಅಲ್ಲಿ ಇಲ್ಲ. ತಾನು ಪರಮಹಂಸರನ್ನು ಸಂಧಿಸಿದ ನಂತರ ನಡೆದ ಕೆಲವು ಘಟನೆಗಳನ್ನು ನರೇಂದ್ರ ಮಾಸ್ಟರಿಗೆ ಹೇಳಿಕೊಳ್ಳುತ್ತಿದ್ದಾನೆ: ನರೇಂದ್ರನಿಗೆ ಇಪ್ಪತ್ತುನಾಲ್ಕು, ಮಾಸ್ಟರಿಗೆ ಮೂವತ್ತೆರಡು ವಯಸ್ಸು.
ಮಾಸ್ಟರ್: “ನೀನು ಅವರನ್ನು ಮೊಟ್ಟಮೊದಲು ನೋಡಿದ ದಿನ ನಿನಗೆ ಚೆನ್ನಾಗಿ ಜ್ಞಾಪಕದಲ್ಲಿ ಇರಬೇಕಲ್ಲವೆ?”
ನರೇಂದ್ರ: “ಹೌದು, ಜ್ಞಾಪಕದಲ್ಲಿದೆ. ದಕ್ಷಿಣೇಶ್ವರದಲ್ಲಿ, ಅವರ ಕೊಠಡಿಯಲ್ಲಿ. ಅಂದು ನಾನು ಈ ಎರಡು ಹಾಡುಗಳನ್ನು ಹಾಡಿದೆ.”
ನರೇಂದ್ರ ಅದನ್ನು ಹಾಡುತ್ತಿದ್ದಾನೆ:
ಓ ನಡೆಯೋ ಹೋಗೋಣ ನಮ್ಮ ನೆಲೆಗೆ!
ಎಲ್ಲಿಂದ ಬಂದೆವೋ ಅತ್ತಕಡೆಗೆ!
ಸಂಸಾರವೆಂತೆಂಬ ಈ ವಿದೇಶದಿ ನಾವು
ವಿದೇಶ ವೇಷದಲಿ ಬರಿ ಬಯಲು ಭ್ರಾಂತಿಯಲಿ
ಅಲೆದುದಾಯ್ತು.
ಕಡೆಗೆ ಏನೂ ನಮಗೆ ದೊರೆಯದಾಯ್ತು.
ಸುತ್ತ ನಡೆಯವ ಬಾಳು, ಈ ವಿಷಯಪಂಚಕವು
ಏನಾದರೂ ನಮಗೆ ಅಪರಿಚಿತವೇ!
ನಮ್ಮವರು ಇಲ್ಲಿಲ್ಲ, ನಿನ್ನ ನೀನೇ ಮರೆತು
ಈ ವಿದೇಶದಲಿಂತು ಅಲೆಯಬಹುದೇ?
ಸಾಕು, ನಡೆ ಹೋಗೋಣ ನಮ್ಮ ನೆಲೆಗೆ
ಎಲ್ಲಿಂದ ಬಂದೆವೋ ಅತ್ತ ಕಡೆಗೆ.
ಸತ್ಯಪಥವನ್ನೇರು, ನಡೆ ಮುಂದೆ ಚಣಚಣವು
ಪ್ರೇಮದಲಿ ಹೃದಯವನು ದೀಪ್ತಗೊಳಿಸು.
ಲೋಭ ಮೋಹಗಳೆಂಬ ಚೋರರಿಗೆ ಸಿಕ್ಕದೊಲು
ಪುಣ್ಯಧನವನು ಒಳಗೆ ಭದ್ರಪಡಿಸು,
ಶಾಂತಿ-ಶಮೆಯನು ಜೊತೆಗೆ ಕಾವಲಿರಿಸು.
ನಡೆವಾಗ ಒಮ್ಮೊಮ್ಮೆ ಸಂದೇಹ ಬಂದಾಗ
ನಿನ್ನ ಪಯಣದ ಪಥದಿ ಸಾಧುಸಂಗವೆ ನಿನಗೆ
ವಿಶ್ರಾಂತಿ ಭವನ.
ಅಲ್ಲಿ ವಿರಮಿಸಿಕೊಂಡು ಪಥದ ವಿವರವ ತಿಳಿದು
ಮುಂದೆ ಸಾಗಲಿ ಮತ್ತೆ ನಿನ್ನ ಪಯಣ
ದಾರಿಯಲಿ ನಿನಗಾವ ಆಪತ್ತು ಬಂದರೂ
ಆ ದೇವನನು ಕೂಗು; ಅವನೇ ರಾಜ!
ಮೃತ್ಯುವನೆ ಬೆದರಿಸುವುದವನ ತೇಜ!
ಇನ್ನೆಷ್ಟು ದಿನ ನಾನು ಬರಿಯ ವಿಫಲತೆಯಲ್ಲಿ
ತೊಳಲಬೇಕೋ……
ಮಾಸ್ಟರ್: “ನಿನ್ನ ಹಾಡುಗಳನ್ನು ಕೇಳಿ ಏನು ಹೇಳಿದರು?”
ನರೇಂದ್ರ: “ಅವರು ಭಾವಾವಿಷ್ಟರಾಗಿಬಿಟ್ಟರು. ರಾಮಬಾಬುವನ್ನು ಕೇಳಿದರು: ‘ಈ ಹುಡುಗನಾರು? ಆಹ, ಎಷ್ಟು ಚೆನ್ನಾಗಿ ಹಾಡುತ್ತಾನೆ!’ ಅವರು ನನಗೆ ಮತ್ತೆ ಬರುವಂತೆ ಹೇಳಿದರು.”
ಮಾಸ್ಟರ್: “ಮತ್ತೆ ನೀನು ಅವರನ್ನು ನೋಡಿದುದು ಎಲ್ಲಿ?”
ನರೇಂದ್ರ: “ರಾಜಮೋಹನನ ಮನೆಯಲ್ಲಿ. ಮೂರನೆ ಭೇಟಿ ಮತ್ತೆ ದಕ್ಷಿಣೇಶ್ವರದಲ್ಲಿ. ಮೂರನೆಯ ಸಲ ನನ್ನನ್ನು ನೋಡಿದಾಗ ಭಾವಾವಿಷ್ಟರಾಗಿ ನನ್ನನ್ನು ಸ್ತುತಿಸಲು ಆರಂಭಿಸಿದರು. ಸ್ತುತಿಸುತ್ತಾ ಹೇಳಿದರು: ‘ಹೇ, ನಾರಾಯಣ, ನೀನು ನನಗಾಗಿ ನರರೂಪವನ್ನು ಧಾರಣೆಮಾಡಿಕೊಂಡು ಬಂದಿದ್ದೀಯೆ.’ ಆದರೆ ನೋಡಿ, ದಯವಿಟ್ಟು ಇದನ್ನು ಯಾರಿಗೂ ತಿಳಿಸಬೇಡಿ.”
ಮಾಸ್ಟರ್: “ಅವರು ಮತ್ತೇನನ್ನು ಹೇಳಿದರು?”
ನರೇಂದ್ರ: “ಅವರು ಹೇಳಿದರು: ‘ನೀನು ನನಗಾಗಿ ದೇಹಧಾರಣೆ ಮಾಡಿಕೊಂಡು ಬಂದಿದ್ದೀಯೆ. ಭಗವತಿಗೆ ನಾನು ಪ್ರಾರ್ಥನೆ ಮಾಡಿದ್ದೆ: “ಹೇ, ತಾಯೆ, ಕಾಮಕಾಂಚನವನ್ನು ತ್ಯಜಿಸಿದ ಶುದ್ಧಭಕ್ತರ ಸಹವಾಸ ದೊರೆಯದೆ ಇದ್ದರೆ ನಾನು ಈ ಧರೆಯಲ್ಲಿ ಹೇಗೆ ಬದುಕಿಕೊಂಡಿರಲಿ?” ಬಳಿಕ ಹೇಳಿದರು: ‘ನೀನು ರಾತ್ರಿ ವೇಳೆ ಬಂದು ನನ್ನನ್ನು ಏಳಿಸಿ ಹೇಳಿದೆ: “ಇಗೋ ನೋಡಿ ನಾನು ಬಂದಿದ್ದೇನೆ!”’ ಆದರೆ ನನಗೆ ಇದಾವುದೂ ಗೊತ್ತಿಲ್ಲ. ನಾನು ಮಾತ್ರ ನಮ್ಮ ಕಲ್ಕತ್ತದ ಮನೆಯಲ್ಲಿ ಮಲಗಿ ಗೊರಕೆ ಹೊಡೆಯುತ್ತಿದ್ದೆ.”
ಮಾಸ್ಟರ್: “ಹೇಗೆ ಭಗವಂತನು ಸಾಕಾರನೂ ಹೌದೊ, ನಿರಾಕಾರನೂ ಹೌದು, ಹಾಗೇ ನೀನು ನಿನ್ನ ಮನೆಯಲ್ಲಿ ಮಲಗಿಯೂ ಇದ್ದೆ, ಅಲ್ಲಿಗೆ ಹೋಗಿಯೂ ಇದ್ದೆ.”
ನರೇಂದ್ರ : “ಆದರೆ ದಯವಿಟ್ಟು ಬೇರೆ ಯಾರಿಗೂ ಹೇಳಬೇಡಿ. ಕಾಶೀಪುರದಲ್ಲಿ ಅವರು ನನ್ನಲ್ಲಿ ಶಕ್ತಿಸಂಚಾರ ಮಾಡಿಬಿಟ್ಟರು.”
ಮಾಸ್ಟರ್: “ಕಾಶೀಪುರದ ತೋಟದಲ್ಲಿ ಒಂದು ಮರದ ಕೆಳಗೆ ಧುನಿ ಹೊತ್ತಿಸಿಕೊಂಡು ನೀನು ಧ್ಯಾನಮಾಡುತ್ತಿದ್ದೆಯಲ್ಲ, ಆಗೇನು ?”
ನರೇಂದ್ರ: “ಹೌದು, ಒಂದು ದಿನ ನಾನು ಧ್ಯಾನಮಾಡುತ್ತಿದ್ದಾಗ, ಕಾಳೀಪ್ರಸಾದನಿಗೆ ಹೇಳಿದೆ ನನ್ನ ಕೈಯನ್ನು ಹಿಡಿದುಕೊಳ್ಳುವಂತೆ. ಬಳಿಕ ಕಾಳೀಪ್ರಸಾದ ಹೇಳಿದ: ‘ನಾನು ನಿನ್ನ ಶರೀರವನ್ನು ಮುಟ್ಟಿದೊಡನೆ ವಿದ್ಯುತ್ತಿನಂತೆ ಒಂದು ಷಾಕ್ ನನಗೆ ಹೊಡೆಯಿತು.’
“ಇದನ್ನು ನೀವು ಇಲ್ಲಿ ಯಾರಿಗೂ ಹೇಳಕೂಡದು. ದಯವಿಟ್ಟು ಹಾಗೆ ವಾಗ್ದಾನ ಮಾಡಿ.”
ಮಾಸ್ಟರ್: “ನಿನ್ನಲ್ಲಿ ಅವರು ಶಕ್ತಿಸಂಚಾರ ಮಾಡಿದ್ದು ವಿಶೇಷ ಉದ್ದೇಶದಿಂದ. ನಿನ್ನ ಮೂಲಕ ಅವರು ಅನೇಕ ಕೆಲಸ ಮಾಡಿಸಬೇಕಾಗಿದೆ. ಒಂದು ದಿನ ಅವರು ಒಂದು ಚೂರು ಕಾಗದದ ಮೇಲೆ ಬರೆದು ತಿಳಿಸಿದರು: ‘ನರೇಂದ್ರ ಲೋಕಶಿಕ್ಷಣ ಮಾಡಬೇಕಾಗಿದೆ.”’
ನರೇಂದ್ರ: “ಆದರೆ ನಾನು ಅವರಿಗೆ ಹೇಳಿದೆ: ‘ಅದೆಲ್ಲಾ ನನ್ನ ಕೈಯಲ್ಲಿ ಸಾಧ್ಯವಿಲ್ಲ.’ ಅದಕ್ಕೆ ಅವರು ಹೇಳಿದರು: ‘ನಿನ್ನ ಮೂಳೆಗಳೇ ಆ ಕೆಲಸವನ್ನು ಮಾಡಿ ಬಿಡುತ್ತವೆ.’ ಶರಚ್ಚಂದ್ರನ ಯೋಗಕ್ಷೇಮವನ್ನು ನನಗೆ ಒಪ್ಪಿಸಿದ್ದಾರೆ. ಈಗ ಆತ ಭಗವಂತನಿಗಾಗಿ ಅತ್ಯಂತ ವ್ಯಾಕುಲನಾಗಿದ್ದಾನೆ. ಆತನ ಕುಂಡಲಿನಿ ಜಾಗೃತಿಗೊಂಡುಬಿಟ್ಟಿದೆ.”
ಮಾಸ್ಟರ್: “ಈಗ ಆತ ತನ್ನಲ್ಲಿ ಕೊಳೆತುಹೋದ ಎಲೆಗಳು ಬಂದು ಶೇಖರವಾಗದ ಹಾಗೆ ನೋಡಿಕೊಳ್ಳಬೇಕು. ಬಹುಶಃ ನಿನಗೂ ಜ್ಞಾಪಕದಲ್ಲಿರಬೇಕು; ಪರಮಹಂಸರು ಹೇಳುತ್ತಿದ್ದುದು ‘ಕೊಳಗಳಲ್ಲಿ ಮೀನು ವಿಶ್ರಮಿಸಿಕೊಳ್ಳಲು ರಂಧ್ರಗಳನ್ನು ತೋಡಿಕೊಳ್ಳುತ್ತವೆ. ಅದರಲ್ಲಿ ಕೊಳೆತ ಎಲೆಗಳೇನಾದರೂ ಶೇಖರವಾಗಿಬಿಟ್ಟಿದ್ದೇ ಆದರೆ ಮತ್ತೆ ಅವು ಅಲ್ಲಿ ವಿಶ್ರಮಿಸಿಕೊಳ್ಳುವುದಿಲ್ಲ.”’
ನರೇಂದ್ರ: “ಪರಮಹಂಸರು ನನ್ನನ್ನು ‘ನಾರಾಯಣ’ ಅಂತ ಕರೆಯುತ್ತಿದ್ದರು.”
ಮಾಸ್ಟರ್: “ಹೌದು, ಅವರು ನಿನ್ನನ್ನು ಹಾಗೆ ಕರೆಯುತ್ತಿದ್ದುದು ನನಗೆ ಗೊತ್ತಿದೆ.”
ನರೇಂದ್ರ: “ಅವರು ರೋಗಗ್ರಸ್ತರಾಗಿದ್ದಾಗ, ಅವರ ಶೌಚಕ್ಕೆ ನೀರು ಕೊಡಲು ನನ್ನನ್ನು ಅವರು ಬಿಟ್ಟುಕೊಡುತ್ತಿರಲಿಲ್ಲ. ಒಮ್ಮೆ ಅವರು ಕಾಶೀಪುರದಲ್ಲಿ ಹೇಳಿದರು: ‘ಬೀಗದ ಕೈ ನನ್ನ ಹತ್ತಿರ ಇರುತ್ತದೆ. ತಾನು ಯಾರು ಎಂಬುದನ್ನು ನರೇಂದ್ರ ಅರಿತೊಡನೆಯೆ ಆತ ತನ್ನ ದೇಹವನ್ನು ತ್ಯಜಿಸಿಬಿಡುತ್ತಾನೆ.”’
ಮಾಸ್ಟರ್: “ನೀನು ನಿರ್ವಿಕಲ್ಪ ಸಮಾಧಿಯಲ್ಲಿದ್ದಾಗ ಅವರು ಹಾಗೆ ಹೇಳಿದರು ತಾನೆ?”
ನರೇಂದ್ರ: “ಹೌದು, ಆ ಅವಸ್ಥೆಯಲ್ಲಿ ನನಗೆ ಕೇವಲ ಮುಖ ಮಾತ್ರ ಇದ್ದು ಶರೀರ ಇಲ್ಲದೆ ಇರುವ ಹಾಗೆ ಬೋಧೆಯಾಗುತ್ತಿತ್ತು.”
“ಮನೆಯಲ್ಲೇ ‘ಲಾ’ ಪರೀಕ್ಷೆಗಾಗಿ ಓದುತ್ತಿದ್ದೆ. ಆಗ ಇದ್ದಕ್ಕಿದ್ದಹಾಗೆ ಅನಿಸಿತು; ‘ಇದೇನು ನಾನು ಮಾಡುತ್ತಾ ಇರುವುದು?”’
ಮಾಸ್ಟರ್: “ನಿನಗೆ ಹಾಗಾದದ್ದು ಪರಮಹಂಸರು ಕಾಶೀಪುರದಲ್ಲಿ ಇದ್ದಾಗಲೇನು?”
ನರೇಂದ್ರ: “ಹೌದು, ಆಗಲೆ. ಹುಚ್ಚನೋಪಾದಿಯಲ್ಲಿ ಮನೆಯಿಂದ ಓಡಲಾರಂಭಿ ಸಿದೆ. ಅಲ್ಲಿಂದ ಕಾಶೀಪುರಕ್ಕೆ ಬಂದನಂತರ ಪರಮಹಂಸರು ಕೇಳಿದರು: ‘ನಿನಗೇನು ಬೇಕು?’ ನಾನು ಹೇಳಿದೆ: ‘ನನಗೆ ಸಮಾಧಿಸ್ಥನಾಗಿಯೇ ಇರಬೇಕೆಂಬ ಇಚ್ಛೆ.’ ಅದಕ್ಕೆ ಅವರು ಹೇಳಿದರು: ‘ನಿನ್ನದು ಎಂಥ ಹೀನಬುದ್ಧಿ! ಸಮಾಧಿಗಿಂತಲೂ ಅತೀತವಾದ ಸ್ಥಿತಿಗೆ ಹೋಗು! ಸಮಾಧಿ ಬಹಳ ಸಾಮಾನ್ಯವಾದ್ದು.”’
ಮಾಸ್ಟರ್: “ಹೌದು, ಅವರು ಹೇಳುತ್ತಿದ್ದರು, ಜ್ಞಾನದ ನಂತರ ವಿಜ್ಞಾನ. ಇದು ಮೇಲ್ಛಾವಣಿಗೆ ಹತ್ತಿದನಂತರ ಹಂತದ ಮೂಲಕ ಇಳಿದು ಹತ್ತಿ ಮಾಡುವ ಹಾಗೆ.”
ನರೇಂದ್ರ: “ಕಾಳೀಪ್ರಸಾದ, ‘ಜ್ಞಾನ’ ‘ಜ್ಞಾನ’ ಅನ್ನುತ್ತಲೇ ಇದ್ದಾನೆ. ಅದಕ್ಕಾಗಿ ನಾನು ಆತನನ್ನು ಬಯ್ಯುತ್ತೇನೆ. ಬರೀ ಬಾಯಿಮಾತಿನಿಂದಲೇ ಜ್ಞಾನ ದೊರೆತು ಬಿಡುವುದೆ? ಮೊದಲು ಆತನ ಭಕ್ತಿ ಪರಿಪಕ್ವವಾಗಲಿ. ಪರಮಹಂಸರು ದಕ್ಷಿಣೇಶ್ವರದಲ್ಲಿ ತಾರಕನಿಗೆ ಹೇಳಿದ್ದರು: ‘ಭಾವ ಭಕ್ತಿ ಇವೇ ಸತ್ಯದ ಕೊನೆಯ ಮಾತಲ್ಲ.”’
ಮಾಸ್ಟರ್: “ನಿನ್ನ ವಿಷಯವಾಗಿ ಅವರು ಇನ್ನೂ ಏನೇನನ್ನು ಹೇಳಿದರು?”
ನರೇಂದ್ರ: “ಒಮ್ಮೆ ನಾನು ಅವರಿಗೆ ಹೇಳಿದೆ: ‘ನೀವು ದರ್ಶನ ಮಾಡುತ್ತಿರುವ ಭಗವಂತನ ದರ್ಶನಗಳೆಲ್ಲ ನಿಮ್ಮ ಮಾನಸಿಕ ಭ್ರಾಂತಿ.’ ಅವರಿಗೆ ನನ್ನ ಮಾತಿನಲ್ಲಿ ಅಷ್ಟೊಂದು ವಿಶ್ವಾಸ. ಒಡನೆಯೇ ದೇವಾಲಯಕ್ಕೆ ಹೋಗಿ ಭಗವತಿಯನ್ನು ಕೇಳಿದರು: ‘ತಾಯೆ, ನರೇಂದ್ರ ಹೀಗೆಲ್ಲ ಹೇಳುತ್ತಾ ಇದ್ದಾನಲ್ಲ. ಹಾಗಾದರೆ ಇವೆಲ್ಲ ನನ್ನ ಮಾನಸಿಕ ಭ್ರಾಂತಿಗಳೇನು?’ ಹಿಂದಿರುಗಿ ಬಂದು ನನಗೆ ಹೇಳಿದರು: ‘ಭಗವತಿ ಹೇಳಿದಳು, ಅವೆಲ್ಲ ಸತ್ಯ ಅಂತ.’
“ಬಹುಶಃ ಇದು ನಿಮ್ಮ ಜ್ಞಾಪಕದಲ್ಲಿರಬೇಕು. ಅವರು ಹೇಳುತ್ತಿದ್ದರು: ‘ನಿನ್ನ ಹಾಡು ಕಿವಿಗೆ ಬಿತ್ತು ಎಂದರೆ, ಇದರ (ತಮ್ಮ ಎದೆಯ ಕಡೆ ಕೈ ತೋರಿಸಿ) ಆಂತರ್ಯದಲ್ಲಿರು ವವನು ಹಾವಿನೋಪಾದಿಯಲ್ಲಿ ಬುಸುಗುಟ್ಟುತ್ತ ಮೇಲಕ್ಕೆ ಹೆಡೆಬಿಚ್ಚಿ ಎದ್ದು ಕಿವಿಗೊಟ್ಟು ಕೇಳುತ್ತಾನೆ.’
“ನೋಡಿ, ಮಾಸ್ಟರ್ ಮಹಾಶಯರೆ, ನನ್ನ ವಿಷಯವಾಗಿಯೇನೊ ಅವರು ಬಹಳ ವಾಗಿ ಹೊಗಳಿ ಹೇಳಿದರು; ಆದರೆ ನನಗೆ ಯಾವ ಉನ್ನತಿಯೂ ದೊರೆತಿಲ್ಲವಲ್ಲ?”
ಮಾಸ್ಟರ್: “ಈಗ ನೀನು ಶಿವನ ವೇಷವನ್ನು ಧರಿಸಿದ್ದೀಯೆ; ನೀನು ಈಗ ದುಡ್ಡು ಮುಟ್ಟುವ ಹಾಗಿಲ್ಲ. ಪರಮಹಂಸರು ಹೇಳುತ್ತಿದ್ದ ಕಥೆ ನಿನ್ನ ಜ್ಞಾಪಕದಲ್ಲಿರಬೇಕಲ್ಲವೇ?”
ನರೇಂದ್ರ: “ಏನದು, ಹೇಳಿ ನೋಡೋಣ.”
ಮಾಸ್ಟರ್: “ಒಬ್ಬ ಬಹುರೂಪಿ ಶಿವನ ವೇಷ ಧರಿಸಿ ಒಬ್ಬರ ಮನೆಗೆ ಹೋದ. ಆ ಮನೆಯವರು ಆತನಿಗೆ ಒಂದು ರೂಪಾಯಿ ಕೊಡಲು ಬಂದರು. ಆತ ಅದನ್ನು ಸ್ವೀಕರಿಸಲಿಲ್ಲ. ಆತ ತನ್ನ ಮನೆಗೆ ಹಿಂದಿರುಗಿ ಹೋಗಿ ವೇಷವನ್ನು ತೆಗೆದುಹಾಕಿ, ಬಳಿಕ ಆ ಮನೆಗೆ ಬಂದು ಆ ಒಂದು ರೂಪಾಯಿಯನ್ನು ಕೊಡುವಂತೆ ಕೇಳಿದ. ಆಗ ಆ ಮನೆಯವರು ಕೇಳಿದರು: ‘ಆಗ ಏಕೆ ನೀನು ಸ್ವೀಕರಿಸದೆ ಹೋದೆ?’ ಆತ ಹೇಳಿದ: ‘ಆಗ ನಾನು ಶಿವನ ವೇಷವನ್ನು, ಸಂನ್ಯಾಸಿಯ ವೇಷವನ್ನು ಧರಿಸಿದ್ದೆ; ಹಣವನ್ನು ಮುಟ್ಟಕೂಡದು.”’
ಈ ಕಥೆಯನ್ನು ಕೇಳಿದ ನಂತರ ನರೇಂದ್ರ ಬಹಳ ಹೊತ್ತು ಗಹಗಹಿಸಿ ನಕ್ಕ.
ಮಾಸ್ಟರ್: “ಈಗ ನೀನು ಡಾಕ್ಟರ್ ಪಾತ್ರವನ್ನು ವಹಿಸಿದ್ದೀಯೆ. ಎಲ್ಲಾ ಹೊರೆಯು ನಿನ್ನ ಮೇಲೆ ಬಂದು ಬಿದ್ದಿದೆ. ನೀನು ಈ ಮಠದ ಸೋದರರನ್ನೆಲ್ಲ ಪುರುಷಸಿಂಹರನ್ನಾಗಿ ಮಾಡಬೇಕಾಗಿದೆ.”
ನರೇಂದ್ರ: “ನಾವು ಇಲ್ಲಿ ಮಾಡುತ್ತಿರುವ ಸಾಧನೆ, ಪರಮಹಂಸರ ಆದೇಶಕ್ಕನು ಗುಣವಾಗಿ. ಆದರೆ ಆಶ್ಚರ್ಯಕರವಾದುದೇನೆಂದರೆ, ಈ ರಾಮಬಾಬು ನಾವು ಮಾಡುತ್ತಿರುವ ಸಾಧನೆಗಳನ್ನು ಖಂಡಿಸುತ್ತಿದ್ದಾನೆ. ಆತ ಹೇಳುತ್ತಿದ್ದಾನೆ: ‘ನಾವು ಅವರನ್ನು (ಪರಮಹಂಸರನ್ನು) ದರ್ಶನ ಮಾಡಿದ್ದೇವೆ. ಇನ್ನು ನಮಗೇಕೆ ಸಾಧನೆ?”’
ಮಾಸ್ಟರ್: “ಯಾರಿಗೆ ಯಾವುದರಲ್ಲಿ ವಿಶ್ವಾಸವೊ, ಅವರು ಅದರಂತೆ ನಡೆದು ಕೊಳ್ಳಲಿ.”
ನರೇಂದ್ರ: “ಪರಮಹಂಸರು ನಮಗೆ ಸಾಧನೆಮಾಡುವಂತೆ ಆದೇಶವಿತ್ತಿದ್ದಾರೆ.”
ಪರಮಹಂಸರು ತನ್ನಲ್ಲಿಟ್ಟಿದ್ದ ಪ್ರೀತಿಯ ಸಂಬಂಧವಾಗಿ ಮತ್ತೆ ನರೇಂದ್ರ ಹೇಳಿಕೊಳ್ಳಲು ಆರಂಭಿಸಿದ.
ನರೇಂದ್ರ: “ನನಗಾಗಿ ಅವರು ಭಗವತಿಯನ್ನು ಎಷ್ಟೊಂದು ಸಲ ಪ್ರಾರ್ಥಿಸಿದರು ಏನು ಕತೆ! ನನ್ನ ತಂದೆ ಸತ್ತ ನಂತರ ಮನೆಯಲ್ಲಿ ತಿನ್ನುವುದಕ್ಕೆ ಏನೂ ಇಲ್ಲದೆ ತಾಯಿ, ನನ್ನ ಸೋದರ ಸೋದರಿಯರೆಲ್ಲರೂ ಸಾಯುತ್ತಿರುವಾಗ ನನಗೆ ದುಡ್ಡಿನ ಸಹಾಯ ಮಾಡುವ ಹಾಗೆ ಭಗವತಿಯನ್ನು ಪ್ರಾರ್ಥನೆ ಮಾಡಿದರು.”
ಮಾಸ್ಟರ್: “ಅದು ನನಗೆ ಗೊತ್ತಿದೆ. ನೀನು ಅದನ್ನು ನನಗೆ ಹಿಂದೆಯೇ ಹೇಳಿದ್ದೀಯೆ.”
ನರೇಂದ್ರ: “ನನಗೆ ದುಡ್ಡು ಏನೂ ದೊರೆಯಲಿಲ್ಲ. ಅವರು ನನಗೆ ಹೇಳಿದರು: ‘ಭಗವತಿ ಹೇಳಿದಳು, ನಿನಗೆ ಸಾಮಾನ್ಯವಾದ ಆಹಾರ ಬಟ್ಟೆಬರೆ ದೊರೆಯುವುದು, ಅನ್ನ ಸಾರು ದೊರೆಯುವುದು ಎಂಬುದಾಗಿ.’
“ಅವರು ನನ್ನನ್ನು ಇಷ್ಟೊಂದು ಪ್ರೀತಿಸುತ್ತಿದ್ದರು! ಆದರೂ ನನ್ನ ಹೃದಯದಲ್ಲಿ ಏನಾದರೂ ಅಪವಿತ್ರ ಭಾವನೆ ಮೂಡಿತು ಎಂದರೆ, ಅದು ಒಡನೆಯೆ ಅವರಿಗೆ ಗೊತ್ತಾಗಿ ಬಿಡುತ್ತಿತ್ತು. ಅನ್ನದಾಗುಹನೊಡನೆ ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದಾಗ, ಒಮ್ಮೊಮ್ಮೆ ಕೆಟ್ಟವರ ಸಹವಾಸವೂ ದೊರೆತುಬಿಡುತ್ತಿತ್ತು. ಅಂಥ ಸಂದರ್ಭದಲ್ಲಿ ಪರಮಹಂಸರು ನನ್ನ ಕೈಯಿಂದ ಯಾವ ಆಹಾರವನ್ನೂ ಸ್ವೀಕರಿಸುತ್ತಿರಲಿಲ್ಲ; ಅವರ ಕೈಯೇನೋ ಬಾಯಿ ಕಡೆ ಸ್ವಲ್ಪ ಏಳುತ್ತಿತ್ತು. ಆದರೆ ಮುಂದುವರಿಯುತ್ತಿರಲಿಲ್ಲ. ಒಮ್ಮೆ ಅವರು ಅಸ್ವಸ್ಥರಾಗಿದ್ದಾಗ, ನಾನೂ ಅಂಥ ಒಂದು ಅವಸ್ಥೆಯಲ್ಲಿದ್ದಾಗ ಅವರ ಕೈ ಬಾಯಿಯವರೆಗೇನೋ ಬಂದು ಹಾಗೆಯೇ ನಿಂತುಕೊಂಡುಬಿಟ್ಟಿತು. ಆಗ ಅವರು ಹೇಳಿದರು: ‘ನೀನು ಇನ್ನೂ ಸಿದ್ಧನಾಗಿಲ್ಲ.’
“ಒಮ್ಮೊಮ್ಮೆ ನನಗೆ ನಾಸ್ತಿಕ ಭಾವನೆ ಬಂದುಬಿಡುತ್ತದೆ. ಒಂದು ಸಲ ನಾನು ಬಾಬುರಾಮನ ಮನೆಯಲ್ಲಿ ಕುಳಿತಿದ್ದಾಗ, ಏನೂ ಇಲ್ಲದ ಹಾಗೆ–ದೇವರೇ ಇಲ್ಲದ ಹಾಗೆ ಬೋಧೆಯಾಯಿತು.”
ಮಾಸ್ಟರ್: “ಪರಮಹಂಸರೂ ಹೇಳುತ್ತಿದ್ದರು, ತಮಗೂ ಒಮ್ಮೊಮ್ಮೆ ಹೀಗಾಗುತ್ತಿತ್ತು ಎಂಬುದಾಗಿ.”
ಇಬ್ಬರೂ ಸ್ವಲ್ಪ ಹೊತ್ತು ಹಾಗೇ ಕುಳಿತುಕೊಂಡಿದ್ದರು. ಬಳಿಕ ಮಾಸ್ಟರ್ ಹೇಳಿದ: “ನೀವೇ ಧನ್ಯರು! ಹಗಲೂ ಇರುಳೂ ನೀವು ಪರಮಹಂಸರ ಚಿಂತನೆಯಲ್ಲೇ ಇದ್ದೀರಿ.”
ನರೇಂದ್ರ: “ಎಲ್ಲಿ? ಭಗವಂತನ ಸಾಕ್ಷಾತ್ಕಾರ ದೊರೆಯುತ್ತಿಲ್ಲವಲ್ಲ ಎಂದು ಪ್ರಾಣ ನೀಗಿಕೊಳ್ಳುವ ಇಚ್ಛೆ ಎಲ್ಲಿ ಬಂದಿದೆ ನಮಗೆ?”
ರಾತ್ರಿಯಾಗಿದೆ. ಜಗನ್ನಾಥ-ಪೂರಿ ಯಾತ್ರೆಗೆ ಹೋಗಿದ್ದ ನಿರಂಜನ ಸ್ವಲ್ಪ ಹೊತ್ತಿನ ಹಿಂದೆ ಹಿಂದಿರುಗಿ ಬಂದ. ಆತನನ್ನು ಕಂಡೊಡನೆಯೇ ಮಠದ ಸೋದರರೆಲ್ಲರೂ ಬಹಳವಾಗಿ ಆನಂದಪಟ್ಟರು. ಆತ ತನ್ನ ಯಾತ್ರೆಯ ಸಂಬಂಧವಾಗಿ ಈಗ ವರ್ಣನೆ ಮಾಡಲಾರಂಭಿಸಿದ. ಆತನ ವಯಸ್ಸು ಇಪ್ಪತ್ತೈದೊ ಇಪ್ಪತ್ತಾರೊ.
ಸಾಯಂಕಾಲದ ಮಂಗಳಾರತಿ ಮುಗಿಯಿತು. ಸೋದರರಲ್ಲಿ ಕೆಲವರು ಧ್ಯಾನ ಮಾಡುತ್ತಾ ಕುಳಿತಿದ್ದಾರೆ. ಆದರೆ ಉಳಿದವರಲ್ಲಿ ಅನೇಕರು ನಿರಂಜನನ ಸುತ್ತ ಆ ದೊಡ್ಡ ಅಂಗಳದಲ್ಲಿ ಕುಳಿತು ಮಾತುಕತೆ ಆಡುತ್ತಿದ್ದಾರೆ. ಶಶಿ ಒಂಬತ್ತು ಘಂಟೆಯಾದನಂತರ ಗುರುಮಹಾರಾಜರಿಗೆ ನೈವೇದ್ಯ ಅರ್ಪಿಸಿ ಬಳಿಕ ಅವರಿಗೆ ಶಯನ ಮಾಡಿಸಿದ.
ಈಗ ಸಹೋದರರೆಲ್ಲರೂ ನಿರಂಜನನೊಡನೆ ಊಟಕ್ಕೆ ಕುಳಿತಿದ್ದಾರೆ. ಈಗಿನ ಊಟ ರೊಟ್ಟಿ, ಒಂದು ಪಲ್ಯ, ಬೆಲ್ಲ ಮತ್ತು ಗುರುಮಹಾರಾಜರಿಗೆ ಅರ್ಪಿಸಿದ್ದ ಒಂದು ಕಿಂಚಿತ್ ರವೆಪಾಯಸ ಇವುಗಳಿಂದ ಮುಗಿಯಿತು.
೭ನೆ ಮೇ ೧೮೮೭, ವೈಶಾಖ ಪೂರ್ಣಿಮೆ, ಶನಿವಾರ
ಮಾಸ್ಟರ್ ಕಲ್ಕತ್ತದ ಒಂದು ಭಾಗದಲ್ಲಿದ್ದ ಒಂದು ಮನೆಯ ಕೊಠಡಿಯೊಂದನ್ನು ತನ್ನ ಓದುವ ಕೊಠಡಿಯನ್ನಾಗಿ ಮಾಡಿಕೊಂಡಿದ್ದ. ಅಲ್ಲಿ ಒಂದು ಮಂಚದ ಮೇಲೆ ಕುಳಿತು ಮಾಸ್ಟರ್ ಮತ್ತು ನರೇಂದ್ರ ಮಾತುಕತೆಯಾಡುತ್ತಿದ್ದಾರೆ. ಇಂದು ನರೇಂದ್ರ ಅಲ್ಲಿಗೆ ಬರುವ ಮುನ್ನ ಮಾಸ್ಟರ್ ತಾನು ಸ್ಕೂಲಿನಲ್ಲಿ ಪಾಠ ಹೇಳಿಕೊಡಬೇಕಾದ ಪುಸ್ತಕಗಳನ್ನು– ‘ಮರ್ಚೆಂಟ್ ಆಫ್ ವೆನಿಸ್’, ‘ಕೋಮಸ್’, ಬ್ಲ್ಯಾಕಿಯ ‘ಸೆಲ್ಫ್ ಕಲ್ಚರ್’ — ಓದುತ್ತಾ ಕುಳಿತಿದ್ದ.
ನರೇಂದ್ರ ಮತ್ತು ಉಳಿದ ಮಠದ ಸೋದರರೆಲ್ಲರೂ ಭಗವಂತನ ಸಾಕ್ಷಾತ್ಕಾರಕ್ಕಾಗಿ ಅತ್ಯಂತ ವ್ಯಾಕುಲರಾಗಿದ್ದಾರೆ. ಅವರ ಹೃದಯದಲ್ಲಿ ತೀವ್ರ ವೈರಾಗ್ಯದ ಬೆಂಕಿ ಜಾಜ್ವಲ್ಯ ಮಾನವಾಗಿ ಉರಿಯುತ್ತಿದೆ.
ನರೇಂದ್ರ: “ನನಗೆ ಯಾವುದೂ ರುಚಿಸುತ್ತಿಲ್ಲ. ನೋಡಿ, ಈಗ ನಾನು ನಿಮ್ಮೊಡನೆ ಮಾತುಕತೆಯಾಡುತ್ತಿದ್ದೇನೆ. ಆದರೆ ಈ ಕ್ಷಣವೇ ಇಲ್ಲಿಂದ ಎದ್ದು ಓಡಿಹೋಗಿಬಿಡಬೇಕು ಅಂತ ಅನ್ನಿಸುತ್ತಿದೆ.”
ನರೇಂದ್ರ ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡ. ಮತ್ತೆ ಹೇಳಲಾರಂಭಿಸಿದ್ದಾನೆ: “ಭಗವಂತನ ಸಾಕ್ಷಾತ್ಕಾರಕ್ಕಾಗಿ ಪ್ರಾಯೋಪವೇಶ ಕೈಗೊಳ್ಳುತ್ತೇನೆ.”
ಮಾಸ್ಟರ್: “ಅದು ಬಹಳ ಒಳ್ಳೆಯದೆ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಏನನ್ನು ಬೇಕಾದರೂ ಮಾಡಿಬಿಡಬಹುದು.”
ನರೇಂದ್ರ: “ನನ್ನ ಕೈಯಲ್ಲಿ ಹಸಿವನ್ನು ತಡೆಯಲಾರದೆ ಹೋಗಿಬಿಟ್ಟರೆ?”
ಮಾಸ್ಟರ್: “ತಿಂದು ಮತ್ತೆ ಆರಂಭಮಾಡು.”
ಕೆಲವು ನಿಮಿಷ ನರೇಂದ್ರ ಸುಮ್ಮನೆ ಕುಳಿತುಕೊಂಡ.
ನರೇಂದ್ರ; “ಭಗವಂತನೆಂಬುವವನು ಇಲ್ಲವೆಂಬ ಬೋಧೆಯಾಗುತ್ತದೆ. ಆತನಿಗೆ ಬಹಳವಾಗಿ ಪ್ರಾರ್ಥನೆ ಸಲ್ಲಿಸುತ್ತಾ ಇದ್ದೇನೆ, ಆದರೂ ಆತನಿಂದ ಯಾವ ಉತ್ತರವೂ ಇದುವರೆಗೆ ದೊರೆತಿಲ್ಲ–ಒಂದೂ ಇಲ್ಲ.
“ನನಗೆ ಎಷ್ಟೊಂದು ಆಲೌಕಿಕ ದರ್ಶನಗಳಾದುವು! ಮಂತ್ರ ಸುವರ್ಣಾಕ್ಷರಗಳಿಂದ ಪ್ರಜ್ವಲಿಸುವುದನ್ನು ನೋಡಿದ್ದೇನೆ! ಭಗವತಿ ಕಾಳಿಯ ಸಂಬಂಧವಾಗಿ ಎಷ್ಟೊಂದು ದರ್ಶನಗಳಾಗಿವೆ! ಉಳಿದ ರೂಪುಗಳನ್ನು ಎಷ್ಟೊಂದು ದರ್ಶನಮಾಡಿದ್ದೇನೆ! ಆದರೂ ನನಗೆ ಶಾಂತಿ ಮಾತ್ರ ದೊರೆಯುತ್ತಿಲ್ಲವಲ್ಲ!
“ನನಗೆ ಒಂದೂವರೆ ಆಣೆ ಕೊಡುವಿರೇನು?”
ನರೇಂದ್ರ ಬರಾಹನಗರದ ಮಠಕ್ಕೆ ಹಿಂದಿರುಗಲು ಗಾಡಿ ಬಾಡಿಗೆಗಾಗಿ ಈ ದುಡ್ಡನ್ನು ಕೇಳಿದ. ಆ ಸಮಯಕ್ಕೆ ಸರಿಯಾಗಿ ಸಾತ್ಕರಿ ಗಾಡಿ ಮಾಡಿಕೊಂಡು ಅಲ್ಲಿಗೆ ಬಂದ ಆತ ನರೇಂದ್ರನ ಸಮವಯಸ್ಕ. ಮಠದ ಸೋದರರನ್ನು ಕಂಡರೆ ಆತನಿಗೆ ಬಹಳ ಪ್ರೀತಿ. ಆಗಾಗ ಮಠಕ್ಕೆ ಹೋಗುತ್ತಲೇ ಇರುತ್ತಾನೆ. ಬರಾಹನಗರದ ಮಠದ ಹತ್ತಿರವೇ ಆತನ ಮನೆ. ಕಲ್ಕತ್ತದ ಆಫೀಸೊಂದರಲ್ಲಿ ಆತನಿಗೆ ಕೆಲಸ. ಆತನಿಗೆ ಸ್ವಂತ ಗಾಡಿ ಇದೆ, ಆಫೀಸಿನಿಂದ ಹಿಂದಿರುಗುವಾಗ ಅಲ್ಲಿಗೆ ಬಂದಿದ್ದಾನೆ.
ತಾನು ಸಾತ್ಕರಿಯ ಗಾಡಿಯಲ್ಲಿ ಹಿಂದಿರುಗುವುದಾಗಿ ನರೇಂದ್ರ ಮಾಸ್ಟರಿಗೆ ತಿಳಿಸಿ ಆತನಿಗೆ ಆ ಒಂದೂವರೆ ಆಣೆಯನ್ನು ಹಿಂದಿರುಗಿ ಕೊಟ್ಟುಬಿಟ್ಟ. ತಮಗೇನಾದರೂ ಸ್ವಲ್ಪ ಉಪಾಹಾರ ತಂದುಕೊಡುವಂತೆ ನರೇಂದ್ರ ಮಾಸ್ಟರನ್ನು ಕೇಳಿದ. ಮಾಸ್ಟರ್ ಅವರಿಗೆ ಉಪಾಹಾರ ಮಾಡಿಸಿದ.
ಮಾಸ್ಟರೂ ಅದೇ ಗಾಡಿಯಲ್ಲಿ ಮಠಕ್ಕೆ ಬಂದ. ಮಠವನ್ನು ತಲುಪುವುದರಲ್ಲಿ ಸಾಯಂಕಾಲವಾಗಿತ್ತು. ಮಠದ ಸೋದರರು ಯಾವ ಯಾವ ಸಾಧನೆಗಳನ್ನು ಮಾಡುತ್ತ ದಿನಗಳನ್ನು ಕಳೆಯುತ್ತಿದ್ದಾರೆ ಎಂಬುದನ್ನು ನೋಡಲೋಸುಗ ಆತ ಬಂದಿದ್ದಾನೆ. ಪರಮ ಹಂಸರು ಯಾವಾವ ರೀತಿ ಅವರ ಶಿಷ್ಯರ ಮೂಲಕ ವ್ಯಕ್ತರಾಗುತ್ತಿದ್ದಾರೆ ಎಂಬುದನ್ನು ನೋಡಿ ಆನಂದಪಡಲೋಸುಗ ಆಗಾಗ ಮಠಕ್ಕೆ ಬರುತ್ತಲೇ ಇದ್ದಾನೆ. ನಿರಂಜನನಿಗೆ ಕೇವಲ ಹೆತ್ತತಾಯಿಯೊಬ್ಬಳು ವಿನಾ ಬೇರೆ ಯಾರೂ ಇರಲಿಲ್ಲ. ಆಕೆಯನ್ನು ನೋಡಿಬರಲು ಆತ ಮನೆಗೆ ಹೋಗಿದ್ದಾನೆ. ಬಾಬುರಾಮ, ಶರಚ್ಚಂದ್ರ, ಕಾಳೀಪ್ರಸಾದ–ಇವರು ಜಗನ್ನಾಥ-ಪುರಿಗೆ ಹೋಗಿದ್ದಾರೆ. ಅವರು ರಥಜಾತ್ರೆಯವರೆಗೆ ಅಲ್ಲೇ ಇದ್ದು ಬಳಿಕ ಹಿಂದಿರುಗುವರು.
ನರೇಂದ್ರ ಮಠದ ಸೋದರರ ಭಾರವನ್ನೆಲ್ಲ ಹೊತ್ತುಕೊಂಡಿದ್ದಾನೆ. ಶಾರದಾಪ್ರಸನ್ನ ಕೆಲವು ದಿನಗಳಿಂದ ಬಹಳವಾಗಿ ಸಾಧನೆಯಲ್ಲಿ ತೊಡಗಿಬಿಟ್ಟಿದ್ದಾನೆ. ಭಗವಂತನ ಸಾಕ್ಷಾತ್ಕಾರಕ್ಕಾಗಿ ತಾನು ಪ್ರಾಯೋಪವೇಶ ಮಾಡುವುದಾಗಿ ನರೇಂದ್ರ ಆತನಿಗೂ ತಿಳಿಸಿದ್ದ. ನರೇಂದ್ರ ಕಲ್ಕತ್ತಕ್ಕೆ ಹೋದ ಸಮಯವನ್ನು ನೋಡಿಕೊಂಡಿದ್ದು, ಶಾರದಾಪ್ರಸನ್ನ ತನ್ನ ನಿರ್ದೇಶವನ್ನು ತಿಳಿಸದೆ ಎಲ್ಲಿಗೋ ಹೊರಟುಹೋಗಿಬಿಟ್ಟಿದ್ದಾನೆ. ನರೇಂದ್ರ ಹಿಂದಿರುಗಿ ಬಂದು ಸಮಾಚಾರವನ್ನೆಲ್ಲಾ ಕೇಳಿದ. ಆತ ಉಳಿದ ಸೋದರರನ್ನು ಕೇಳಿದ: “ರಾಜ (ರಾಖಾಲ) ಏಕೆ ಹಾಗೆ ಹೋಗಲು ಬಿಟ್ಟುಕೊಟ್ಟ?” ಆದರೆ ರಾಖಾಲನೂ ಆ ಸಂದರ್ಭದಲ್ಲಿ ಅಲ್ಲಿ ಇರಲಿಲ್ಲ. ಆತ ತಿರುಗಾಡಿಕೊಂಡು ಬರಲು ದಕ್ಷಿಣೇಶ್ವರಕ್ಕೆ ಹೋಗಿದ್ದ.
ನರೇಂದ್ರ: “ರಾಜ ಹಿಂದಿರುಗಿ ಬರಲಿ. ಚೆನ್ನಾಗಿ ಬಯ್ಯುತ್ತೇನೆ. ಏಕೆ ಆತ ಅವನನ್ನು ಬಿಟ್ಟುಕೊಟ್ಟ? (ಹರೀಶನಿಗೆ) ನೀನು ದೂರದಿಂದಲೇ ಲೆಕ್ಚರ್ ಹೊಡೆಯುತ್ತಾ ಇದ್ದೆಯಂತ ಕಾಣುತ್ತದೆ. ಹೋಗಬೇಡ ಅಂತ ಹೇಳಬಾರದಿತ್ತೆ?”
ಹರೀಶ (ಮೃದು ಕಂಠದಿಂದ): “ಹಾಗೆ ಹೋಗಬೇಡವೆಂದು ತಾರಕ ಹೇಳಿದ. ಆದರೂ ಆತ ಹೊರಟಹೋದ.”
ನರೇಂದ್ರ (ಮಾಸ್ಟರಿಗೆ): “ನೋಡಿ ನಾನು ಎಂಥ ಕಷ್ಟಗಳಿಗೆ ಸಿಕ್ಕಿಬಿದ್ದಿದ್ದೇನೆ! ಇಲ್ಲಿಯೂ ಒಂದು ವಿಧವಾದ ಮಾಯಾಸಂಸಾರದ ಬಲೆಗೆ ಬಿದ್ದಿದ್ದೇನೆ. ಈ ಹುಡುಗ ಎಲ್ಲಿಗೆ ಹೋದನೊ, ಏನು ಕತೆಯೊ? ಏನು ಮಾಡುವುದು ಈಗ?”
ರಾಖಾಲ ದಕ್ಷಿಣೇಶ್ವರದಿಂದ ಹಿಂದಿರುಗಿ ಬಂದ. ಭವನಾಥನೂ ಆತನೊಡನೆ ಹೋಗಿದ್ದ.
ಶಾರದಾಪ್ರಸನ್ನ ಮಠ ಬಿಟ್ಟು ಹೊರಟುಹೋಗಿರುವ ಸಮಾಚಾರವನ್ನು ನರೇಂದ್ರ ರಾಖಾಲನಿಗೆ ತಿಳಿಸಿದ. ಶಾರದಾಪ್ರಸನ್ನ ನರೇಂದ್ರನಿಗೆ ಒಂದು ಪತ್ರ ಬರೆದು ಅದನ್ನು ನರೇಂದ್ರನ ಮೇಜಿನ ಮೇಲೆ ಇಟ್ಟುಹೋಗಿದ್ದ. ಅದರಲ್ಲಿ ಬರೆದಿದ್ದ: “ನಾನು ನಡೆದೇ ಬೃಂದಾವನಕ್ಕೆ ಹೋಗುತ್ತಿದ್ದೇನೆ. ನಾನು ಇಲ್ಲೇ ಇದ್ದರೆ, ವಿಪತ್ತುಗಳು ಬರುವ ಸಂಭವಗಳು ಇವೆ. ಇಲ್ಲಿ ನನ್ನ ಮನಸ್ಸು ಬದಲಾಯಿಸುತ್ತಾ ಇದೆ. ಹಿಂದೆ ತಂದೆತಾಯಿಯರ ಮತ್ತು ಉಳಿದ ಬಂಧುಗಳ ಸ್ವಪ್ನ ಆಗಾಗ ಬರುತ್ತಿತ್ತು. ಬಳಿಕ ಮಾಯಾಮೂರ್ತಿಯ–ಹೆಂಗಸಿನ–ಸ್ವಪ್ನವೂ ಆಗುತ್ತಿತ್ತು. ಎರಡು ಸಲ ಬಹಳ ಕಷ್ಟಕ್ಕೆ ಒಳಗಾಗಿದ್ದೆ; ಮನೆಗೆ ಹಿಂದಿರುಗಿ ಹೋಗಬೇಕಾಗಿ ಬಂದಿತ್ತು. ಅದಕ್ಕಾಗಿ ನಾನು ಈಗ ದೂರಪ್ರದೇಶಕ್ಕೆ ಹೋಗುತ್ತಿದ್ದೇನೆ. ಪರಮಹಂಸರು ಒಮ್ಮೆ ನನಗೆ ಹೇಳಿದ್ದರು: ‘ನಿನ್ನ ಮನೆಯವರು ನಿನ್ನನ್ನು ಸಂಸಾರಕ್ಕೆ ಎಳೆಯಲು ಯಾವುದಕ್ಕೂ ಹೇಸುವುದಿಲ್ಲ; ಆದ್ದರಿಂದ ಅವರನ್ನು ಎಂದಿಗೂನಂಬಬೇಡ.”’
ರಾಖಾಲ ಹೇಳಿದ: “ಆತ ಹೊರಟುಹೋಗಲು ಇನ್ನೂ ಅನೇಕ ಕಾರಣಗಳಿವೆ. ಒಮ್ಮೆ ಆತ ನನಗೆ ಹೇಳಿದ: ‘ತಾಯಿ, ಸೋದರಿಯರ ಯೋಗಕ್ಷೇಮ ವಿಚಾರಮಾಡಿ ಕೊಂಡುಬರಲು ಆಗಾಗ ನರೇಂದ್ರ ಮನೆಗೆ ಹೋಗಿಬರುತ್ತಲೇ ಇದ್ದಾನೆ. ಇದೂ ಅಲ್ಲದೆ ತನ್ನ ಮನೆಯವರ ಮೊಕದ್ದಮೆಯನ್ನೂ ನೋಡಿಕೊಳ್ಳುತ್ತಾ ಇದ್ದಾನೆ. ಆತ ಹಾಗೆ ಮಾಡುತ್ತಿರುವುದನ್ನು ನೋಡಿ ನನಗೂ ಮನೆಗೆ ಹೋಗಿಬರಬೇಕು ಎಂಬ ಇಚ್ಛೆ ಎಲ್ಲಿ ಬಂದುಬಿಡುವುದೊ ಏನೊ ಎಂಬ ಹೆದರಿಕೆಯಾಗುತ್ತದೆ.”’
ನರೇಂದ್ರ ಇದನ್ನೆಲ್ಲಾ ಸುಮ್ಮನೆ ಕೇಳಿಕೊಂಡ.
ತೀರ್ಥಯಾತ್ರೆಗೆ ಹೋಗಿಬರುವುದರ ಸಂಬಂಧವಾಗಿ ರಾಖಾಲ ಮಾತು ಎತ್ತಿದ. ಆತ ಹೇಳಿದ: “ಇಲ್ಲೇ ಇದ್ದಂತೂ ನಮಗೇನೂ ದೊರೆತಿಲ್ಲ. ಭಗವಂತನ ದರ್ಶನ ಮಾಡಿಕೊಳ್ಳ ಬೇಕು ಎಂಬುದಾಗಿ ಪರಮಹಂಸರು ಹೇಳುತ್ತಿದ್ದರಲ್ಲ, ನಾವು ಅದನ್ನು ಪಡೆದುಕೊಂಡಿರುವುದೆಲ್ಲಿ?”
ರಾಖಾಲ ಹಾಗೇ ಸ್ವಲ್ಪ ಮಲಗಿಕೊಂಡ. ಉಳಿದವರಲ್ಲಿ ಕೆಲವರು ಹಾಗೇ ಮಲಗಿ ಕೊಂಡಿದ್ದಾರೆ. ಇನ್ನು ಕೆಲವರು ಕುಳಿತಿದ್ದಾರೆ.
ರಾಖಾಲ: “ಸಿದ್ಧರಾಗಿಬಿಡಿ, ನರ್ಮದಾ ತೀರಕ್ಕೆ ಹೋಗಿಬಿಡೋಣ.”
ನರೇಂದ್ರ: “ಸುಮ್ಮನೆ ಸುತ್ತುವುದರಿಂದ ದೊರೆಯುವುದೇನು? ಸುಮ್ಮನೆ ‘ಜ್ಞಾನ! ಜ್ಞಾನ!’ ಅನ್ನುತ್ತಿದ್ದರೆ ದೊರೆತುಬಿಡುವುದೇ?”
ಒಬ್ಬ ಭಕ್ತ: “ಹಾಗಾದರೆ, ಸಂಸಾರವನ್ನು ಏಕೆ ತ್ಯಜಿಸಿ ಬಂದಿರಿ?”
ನರೇಂದ್ರ: “ರಾಮ ದೊರೆಯಲಿಲ್ಲ ಅಂತ ಶ್ಯಾಮಳೊಡನೆ ಇರಬೇಕೆ? ಭಗವಂತನ ಸಾಕ್ಷಾತ್ಕಾರ ದೊರೆಯಲಿಲ್ಲವೆಂದು ಕೈಗೊಂದು ಕಾಲಿಗೊಂದು ಮಕ್ಕಳನ್ನು ಹೆರುತ್ತಾ ಇರ ಬೇಕೋ? ಏನು ಮಾತಾಡುತ್ತ ಇದ್ದೀಯೆ ನೀನು?”
ನರೇಂದ್ರ ಸ್ವಲ್ಪ ಹೊತ್ತು ಹೊರಕ್ಕೆ ಹೋಗಿದ್ದು ಮತ್ತೆ ಹಿಂದಿರುಗಿ ಬಂದ. ರಾಖಾಲ ಇನ್ನೂ ಮಲಗೇ ಇದ್ದಾನೆ.
ಒಬ್ಬ ಸೋದರ ಹಾಗೇ-ಮಲಗಿಕೊಂಡೇ ಭಗವಂತನ ದರ್ಶನ ದೊರೆಯದೆ ಇರುವುದರಿಂದ ಅತ್ಯಂತ ತೀವ್ರವಾದ ವಿರಹಾಗ್ನಿಯಿಂದ ನರಳುತ್ತಿರುವವನ ಹಾಗೆ ನಟಿಸುತ್ತಾ ಕೂಗಿಕೊಳ್ಳುತ್ತಿದ್ದಾನೆ: “ಗೆಳೆಯರಾ, ನನಗೊಂದು ಕತ್ತಿ ತಂದುಕೊಡಿರಪ್ಪ! ಇನ್ನು ಮೇಲೆ ಬದುಕಿ ಫಲವೇನು? ಇನ್ನು ನಾನು ಈ ವಿರಹವನ್ನು ತಾಳಲಾರೆ!”
ನರೇಂದ್ರ ಗಂಭೀರ ಮುದ್ರೆಯಿಂದ: “ನೋಡು, ಅಲ್ಲೇ ಇದೆ. ಸ್ವಲ್ಪ ಕೈ ಚಾಚಿ ತೆಗೆದುಕೊ.” (ಎಲ್ಲರೂ ನಗುತ್ತಿದ್ದಾರೆ.)
ಮತ್ತೆ ಮಾತುಕತೆ ಪ್ರಸನ್ನನ ಸಂಬಂಧವಾಗಿ ಆರಂಭವಾಯಿತು.
ನರೇಂದ್ರ: “ಇಲ್ಲಿಯೂ ಮಾಯೆಗೆ ಸಿಕ್ಕಿಬಿದ್ದಿದ್ದೇವೆ! ಹಾಗಾದರೆ ನಾವು ಸಂನ್ಯಾಸಿ ಗಳಾದುದೇಕೆ?”
ರಾಖಾಲ: “ಸಂನ್ಯಾಸಿಗಳು ಒಟ್ಟಿಗೆ ಇರುವುದು ಶ್ರೇಯಸ್ಕರವಲ್ಲ ಎಂಬುದಾಗಿ ‘ಮುಕ್ತಿ ಮತ್ತು ಅದಕ್ಕೆ ಸಾಧನೆ’ ಎಂಬ ಪುಸ್ತಕ ಹೇಳುತ್ತದೆ. ಅದರಲ್ಲಿ ಸಂನ್ಯಾಸಿನಗರದ ವರ್ಣನೆ ಇದೆ.”
ಶಶಿ: “ನಾನು ಸಂನ್ಯಾಸಕ್ಕೆ ವಿಶೇಷವಾಗಿ ಏನೂ ಬೆಲೆ ಕೊಡುತ್ತಿಲ್ಲ. ನಾನು ವಾಸಿಸಲಾಗದ ಸ್ಥಳವೇ ಈ ಜಗತ್ತಿನಲ್ಲಿ ಇಲ್ಲ.”
ಈಗ ಭವನಾಥನ ಸಂಬಂಧವಾಗಿ ಮಾತು ಆರಂಭವಾಯಿತು. ಆತನ ಹೆಂಡತಿ ಪ್ರಾಣಾಂತಿಕ ರೋಗಕ್ಕೆ ತುತ್ತಾಗಿದ್ದಳು. ನರೇಂದ್ರ ರಾಖಾಲನಿಗೆ ಹೇಳಿದ: “ಭವನಾಥನ ಹೆಂಡತಿ ಯಮನ ದಾಡೆಯಿಂದ ನುಣುಚಿಕೊಂಡುಬಿಟ್ಟಳು ಅಂತ ಕಾಣುತ್ತೆ. ಅದಕ್ಕಾಗಿಯೇ ಏನು ಆತ ನಿನ್ನೊಡನೆ ದಕ್ಷಿಣೇಶ್ವರಕ್ಕೆ ಸುತ್ತಾಡಿಬರೋಕೆ ಹೋಗಿದ್ದುದು.”
ಈಗ ಕಾಕುರಗಾಚಿಯ (ಪರಮಹಂಸರ ಅಸ್ಥಿಯನ್ನು ಹೂತಿಟ್ಟಿರುವ ಜಾಗದ) ಸಂಬಂಧವಾಗಿ ಮಾತುಕತೆ ಆರಂಭವಾಯಿತು. ರಾಮ ಅಲ್ಲಿ ಒಂದು ದೇವಾಲಯನ್ನು ಕಟ್ಟಿಸುವುದರಲ್ಲಿದ್ದಾನೆ.
ನರೇಂದ್ರ (ರಾಖಾಲನಿಗೆ): “ರಾಮಬಾಬು ಮಾಸ್ಟರನ್ನು ಆ ತೋಟದ ಒಬ್ಬ ಟ್ರಸ್ಟಿಯನ್ನಾಗಿ ಮಾಡಿದ್ದಾನೆ.”
ಮಾಸ್ಟರ್ (ರಾಖಾಲನಿಗೆ): “ಏನದು ಈ ವಿಷಯವಾಗಿ ನನಗೆ ಏನೂ ಗೊತ್ತಿಲ್ಲವಲ್ಲ.”
ಸಾಯಂಕಾಲವಾಗಿದೆ. ಶಶಿ ದೇವಾಲಯಕ್ಕೆ ಧೂಪ ಹಾಕಿ ಬಳಿಕ ಕೊಠಡಿಗಳಲ್ಲಿದ್ದ ಪ್ರತಿಯೊಂದು ಪಟಕ್ಕೂ ಧೂಪ ತೋರಿಸಿ, ಮಧುರ ಕಂಠದಿಂದ ಭಗವನ್ನಾಮವನ್ನು ಜಪಿಸುತ್ತಾ ಅವಕ್ಕೆ ಪ್ರಣಾಮಮಾಡುತ್ತಿದ್ದಾನೆ.
ಈಗ ಮಂಗಳಾರತಿ ನಡೆಯುತ್ತಿದೆ. ಮಠದ ಸೋದರರೆಲ್ಲರೂ ಉಳಿದ ಭಕ್ತರೊಡನೆ ಎದ್ದು ಕೈಮುಗಿದು ನಿಂತುಕೊಂಡು ಮಂಗಳಾರತಿಯನ್ನು ನೋಡುತ್ತಿದ್ದಾರೆ. ಗಂಟೆ ಮತ್ತು ಜಾಗಟೆಗಳ ಶಬ್ದ ಆಗುತ್ತಿದೆ. ಭಕ್ತರು ಏಕಕಂಠದಿಂದ ಮಂಗಳಾರತಿಯ ಶ್ಲೋಕವನ್ನು ಹಾಡುತ್ತಿದ್ದಾರೆ:
ಜಯ ಶಿವ ಓಂಕಾರ, ಭಜ ಶಿವ ಓಂಕಾರ!
ಬ್ರಹ್ಮ ವಿಷ್ಣು ಸದಾಶಿವ, ಹರ ಹರ ಮಹಾದೇವ!!
ಈ ಶ್ಲೋಕವನ್ನು ಸಾಯಂ ಮಂಗಳಾರತಿಯ ಸಮಯದಲ್ಲಿ ಹಾಡುವ ಆಚರಣೆಯನ್ನು ನರೇಂದ್ರ ತಂದಿದ್ದಾನೆ. ಇದೇ ಶ್ಲೋಕವನ್ನು ಕಾಶಿಯ ವಿಶ್ವನಾಥ ದೇವಾಲಯದಲ್ಲಿ ಹಾಡುತ್ತಾರೆ.
ಮಠದಲ್ಲಿ ಊಟ ಮುಗಿಯುವುದರೊಳಗಾಗಿ ರಾತ್ರಿ ಹನ್ನೊಂದು ಘಂಟೆ ಆಯಿತು. ಮಠದ ಸೋದರರು ಮಾಸ್ಟರಿಗೆ ಒಂದು ಹಾಸಿಗೆಯನ್ನು ಸಿದ್ಧಮಾಡಿ ತಾವು ಮಲಗಿ ಕೊಂಡರು.
ಈಗ ನಡುರಾತ್ರಿ. ಮಾಸ್ಟರಿಗೆ ಇನ್ನೂ ನಿದ್ದೆ ಹತ್ತಿಲ್ಲ. ಆತ ತನಗೆ ತಾನೆ ಹೇಳಿಕೊಳ್ಳುತ್ತಿದ್ದಾನೆ: “ಎಲ್ಲವೂ ಹಿಂದಿನ ಹಾಗೆಯೇ ಇದೆ. ಹಿಂದಿನ ಅಯೋಧ್ಯೆಯೆ–ಆದರೆ ರಾಮ ಮಾತ್ರ ಇಲ್ಲ.” ಮಾಸ್ಟರ್ ಮೆತ್ತಗೆ ಹಾಸಿಗೆಯಿಂದ ಎದ್ದ. ಇಂದು ವೈಶಾಖ ಪೂರ್ಣಿಮೆ. ಬೌದ್ಧರ ಮೂರುಮಡಿ ಪವಿತ್ರವಾದ ಪೂರ್ಣಿಮೆ–ಬುದ್ಧ ಜನ್ಮತಳೆದದ್ದು, ನಿರ್ವಾಣ ಪಡೆದದ್ದು, ಮಹಾಸಮಾಧಿಯನ್ನು ಹೊಂದಿದ್ದು–ಇಂಥ ಪೂರ್ಣಿಮೆಯ ದಿನಗಳಲ್ಲೇ. ಈಗ ಮಾಸ್ಟರ್ ಏಕಾಕಿಯಾಗಿ ಗಂಗಾದಡದಲ್ಲಿ ನಡೆಯುತ್ತಾ ಪರಮಹಂಸರ ಜೀವನವನ್ನು ಸ್ಮರಿಸಿಕೊಳ್ಳುತ್ತಿದ್ದಾನೆ.
ಇಂದು ಭಾನುವಾರ. ಮಾಸ್ಟರ್ ನಿನ್ನೆ ಶನಿವಾರ ಇಲ್ಲಿಗೆ (ಮಠಕ್ಕೆ) ಬಂದ. ಬರುವ ಬುಧವಾರದವರೆಗೆ ಇಲ್ಲೇ ಇರುತ್ತಾನೆ. ಗೃಹಸ್ಥ ಭಕ್ತರು ಸಾಮಾನ್ಯವಾಗಿ ಭಾನುವಾರ ಮಠಕ್ಕೆ ಬರುವ ವಾಡಿಕೆ.
೮ನೆ ಮೇ, ೧೮೮೭, ಭಾನುವಾರ
ಮಠದಲ್ಲಿ ಈಗ ಕೆಲವು ದಿನಗಳಿಂದ ಯೋಗವಾಸಿಷ್ಠದ ಪ್ರವಚನ ನಡೆಯುತ್ತಿದೆ. ಮಾಸ್ಟರ್ ಇದರ ಸಂಬಂಧವಾಗಿ ಪರಮಹಂಸರಿಂದ ಅಲ್ಪಸ್ವಲ್ಪವಾಗಿ ಕೇಳಿದ್ದ. ಅದು ಜೀವ ಬ್ರಹ್ಮ ಒಂದೇ; ಈ ಜಗತ್ತು ಮಿಥ್ಯಾ ಅಂತ ಬೋಧಿಸುತ್ತದೆ. ದೇಹಬುದ್ಧಿ ಇರುವವರೆಗೆ ಯೋಗವಾಸಿಷ್ಠದ “ಸೋಠ್ಹಮ್” ಭಾವವನ್ನು ಅನುಸರಿಸಕೂಡದು; ಗೃಹಸ್ಥರಿಗೆ “ಸೇವ್ಯ-ಸೇವಕ” ಭಾವವೇ ಒಳ್ಳೆಯದು ಎಂದು ಪರಮಹಂಸರು ತಿಳಿಸಿದ್ದರು.
ಈಗ ಮಾತುಕತೆ ಯೋಗವಾಸಿಷ್ಠದ ಸಂಬಂಧವಾಗಿ ಆರಂಭವಾಯಿತು.
ಮಾಸ್ಟರ್: “ಒಳ್ಳೆಯದು, ಯೋಗವಾಸಿಷ್ಠವು ಬ್ರಹ್ಮಜ್ಞಾನದ ಸಂಬಂಧವಾಗಿ ಏನು ಹೇಳುತ್ತದೆ?”
ರಾಖಾಲ: “ಹಸಿವು, ಬಾಯಾರಿಕೆ, ಸುಖ, ದುಃಖ ಇವೆಲ್ಲಾ ಮಾಯೆ. ಬ್ರಹ್ಮ ಸಾಕ್ಷಾತ್ಕಾರಕ್ಕೆ ಮನೋನಾಶವೇ ಉಪಾಯ.”
ಮಾಸ್ಟರ್: “ಮನೋನಾಶವಾದ ಮೇಲೆ ಏನು ಉಳಿದುಕೊಳ್ಳುತ್ತದೆಯೊ ಅದೇ ಬ್ರಹ್ಮ, ಅಲ್ಲವೆ?”
ರಾಖಾಲ: “ಹೌದು.”
ಮಾಸ್ಟರ್: “ಪರಮಹಂಸರೂ ಹೀಗೆ ಹೇಳುತ್ತಿದ್ದರು. ಇದೇ ರೀತಿಯಾಗಿ ತೋತಾಪುರಿ ಅವರಿಗೆ ಹೇಳಿದ್ದನಂತೆ. ಒಳ್ಳೆಯದು, ವಸಿಷ್ಠ ರಾಮನಿಗೆ ಸಂಸಾರಿಯಾಗು ಅಂತ ಹೇಳಿರುವುದೇನಾದರೂ ಅದರಲ್ಲಿ ಇದೆಯೇನು?”
ರಾಖಾಲ: “ಅಂಥದೇನು ನನ್ನ ಕಣ್ಣಿಗೆ ಇದುವರೆಗೆ ಬಿದ್ದಿಲ್ಲ. ರಾಮನನ್ನು ಅವತಾರ ಪುರುಷ ಅಂತ ಗ್ರಂಥಕರ್ತರು ಒಪ್ಪಿಕೊಳ್ಳುತ್ತಲೇ ಇಲ್ಲ.”
ಈ ಸಮಯಕ್ಕೆ ಸರಿಯಾಗಿ ಗಂಗಾತೀರದಿಂದ ನರೇಂದ್ರ, ತಾರಕ, ಇನ್ನೊಬ್ಬ ಭಕ್ತ ಹಿಂದಿರುಗಿ ಮಠಕ್ಕೆ ಬಂದರು. ಗಂಗೆಯ ಆಚೆದಡದಲ್ಲಿರುವ ಕೊನ್ನಗರಕ್ಕೆ ಹೋಗಬೇಕೆಂದು ಅವರು ಗಂಗೆಯ ಹತ್ತಿರಕ್ಕೆ ಹೋಗಿದ್ದರು. ದೋಣಿ ಸಿಕ್ಕದೆ ಹೋದುದರಿಂದ ಹಿಂದಿರುಗಿ ಬಂದು ಕುಳಿತುಕೊಂಡರು. ಯೋಗವಾಸಿಷ್ಠದ ಸಂಬಂಧವಾಗಿ ಮಾತುಕತೆ ಮುಂದುವರಿಯಿತು.
ನರೇಂದ್ರ (ಮಾಸ್ಟರಿಗೆ): “ಅದರಲ್ಲಿ ಅನೇಕ ಒಳ್ಳೆ ಕಥೆಗಳಿವೆ. ಲೀಲೆಯ ಕಥೆ ನಿಮಗೆ ಗೊತ್ತೇನು?”
ಮಾಸ್ಟರ್: “ಹೌದು, ಅದು ಯೋಗವಾಸಿಷ್ಠದಲ್ಲಿ ಇದೆ. ಅದರ ಹಾಳೆಗಳನ್ನು ಅಲ್ಲಿ ಇಲ್ಲಿ ತಿರುವಿಹಾಕಿ ನೋಡಿದ್ದೇನೆ. ಲೀಲೆಗೆ ಬ್ರಹ್ಮಜ್ಞಾನ ದೊರೆತಿತ್ತು. ಅಲ್ಲವೇನು?”
ನರೇಂದ್ರ: “ಹೌದು, ಇಂದ್ರ ಅಹಲ್ಯೆ ಇವರ ಸಂವಾದ ಜ್ಞಾಪಕದಲ್ಲಿದೆಯೆ? ವಿದೂರಥರಾಜ ಚಂಡಾಲನಾದದ್ದು?”
ಮಾಸ್ಟರ್: “ಜ್ಞಾಪಕದಲ್ಲಿದೆ.”
ನರೇಂದ್ರ: “ವನದ ವರ್ಣನೆ ಎಷ್ಟು ಸೊಗಸಾಗಿದೆ!”
ನರೇಂದ್ರನೇ ಮೊದಲಾದವರು ಗಂಗಾಸ್ನಾನಕ್ಕೆ ಹೊರಟಿದ್ದಾರೆ. ಮಾಸ್ಟರ್ ಅವರನ್ನು ಹಿಂಬಾಲಿಸಿದ. ಬಹಳ ಬಿಸಿಲು. ಆದ್ದರಿಂದ ಮಾಸ್ಟರ್ ಜೊತೆಯಲ್ಲಿ ಕೊಡೆ ತೆಗೆದು ಕೊಂಡಿದ್ದಾನೆ. ಬರಾಹನಗರದ ನಿವಾಸಿ ಶರಚ್ಚಂದ್ರನೂ ಗಂಗಾಸ್ನಾನಕ್ಕೆ ಹೊರಟಿದ್ದಾನೆ. ಆತ ಸದಾಚಾರನಿಷ್ಠ ಬ್ರಾಹ್ಮಣ ಯುವಕ. ಆಗಾಗ ಮಠಕ್ಕೆ ಬರುತ್ತಲೇ ಇದ್ದಾನೆ. ಆತ ತೀರ್ಥಯಾತ್ರೆಗೆ ಹೋಗಿದ್ದು, ಕೆಲವು ದಿನಗಳ ಹಿಂದೆ ಹಿಂದಿರುಗಿ ಬಂದಿದ್ದಾನೆ.
ಮಾಸ್ಟರ್ (ಶರಚ್ಚಂದ್ರನಿಗೆ): “ಬಿಸಿಲು ಬಹಳ.”
ನರೇಂದ್ರ: “ಓಹೋ ಅದಕ್ಕಾಗೋ ನೀವು ಕೊಡೆ ತೆಗೆದುಕೊಂಡು ಬಂದಿರೋದು?”
ಮಾಸ್ಟರ್ ನಕ್ಕ.
ಮಠದ ಸೋದರರೆಲ್ಲರು ಕಾಷಾಯವಸ್ತ್ರಧಾರಿಗಳಾಗಿದ್ದಾರೆ.
ಮಾಸ್ಟರ್ (ನರೇಂದ್ರನಿಗೆ): “ನಿಜವಾಗಿಯೂ ಇಂದು ಬಹಳ ಬಿಸಿಲು. ಸನ್ಸ್ಟ್ರೋಕ್ ಆಗುವ ಸಂಭವ.”
ನರೇಂದ್ರ: “ಓಹೋ, ಈಗ ನನಗೆ ಅರ್ಥವಾಯಿತು. ನಿಮ್ಮ ಈ ಶರೀರ ನಿಮ್ಮ ವೈರಾಗ್ಯದ ಪ್ರತಿಬಂಧಕ, ಅಲ್ಲವೇ? ನಿಮ್ಮ ದೇವೇನಬಾಬುವಿನ-”
ಮಾಸ್ಟರ್ ನಗುತ್ತಾ ತನಗೆ ತಾನೆ ಹೇಳಿಕೊಳ್ಳುತ್ತಿದ್ದಾನೆ: “ಕೇವಲ ಶರೀರವೇ ಏಕೆ?”
ಸ್ನಾನಾನಂತರ ಭಕ್ತರು ಮಠಕ್ಕೆ ಹಿಂದಿರುಗಿದರು. ಕೈಕಾಲು ತೊಳೆದುಕೊಂಡು ದೇವರ ಮನೆಗೆ ಹೋಗಿ ಗುರುಮಹಾರಾಜರಿಗೆ ಪ್ರಣಾಮಮಾಡಿ ಅವರಿಗೆ ಪುಷ್ಪಾಂಜಲಿಯನ್ನು ಅರ್ಪಿಸಿದರು.
ನರೇಂದ್ರ ದೇವರಮನೆಗೆ ಸ್ವಲ್ಪ ತಡವಾಗಿ ಬಂದ. ಅಷ್ಟರಲ್ಲಿ ತಟ್ಟೆಯಲ್ಲಿದ್ದ ಹೂವು ಗಳೆಲ್ಲಾ ಮುಗಿದುಹೋಗಿದ್ದುವು; ಎಲ್ಲೊ ಕೆಲವು ಬಿಲ್ವಪತ್ರೆಗಳು ಮಾತ್ರ ಉಳಿದು ಕೊಂಡಿದ್ದುವು. ಅವುಗಳಿಗೇನೆ ಸ್ವಲ್ಪ ಗಂಧಚಂದನಗಳನ್ನು ಹಚ್ಚಿ ಗುರುಮಹಾರಾಜರಿಗೆ ಅರ್ಪಿಸಿ ಪ್ರಣಾಮಮಾಡಿದ. ಬಳಿಕ ಘಂಟಾನಾದವನ್ನು ಮಾಡಿ ಮತ್ತೆ ಗುರುಮಹಾರಾಜರಿಗೆ ಪ್ರಣಾಮ ಮಾಡಿದ. ಈಗ “ದಾನವರ ಕೊಠಡಿ” ಎಂಬ ಹೆಸರಿನ ಆ ದೊಡ್ಡ ಅಂಗಳಕ್ಕೆ ಬಂದು ಉಳಿದ ಸೋದರರೊಡನೆ ಕುಳಿತುಕೊಂಡ.
ಮಠದ ಸೋದರರು ತಮ್ಮನ್ನು ತಾವೆ “ದಾನವರು” “ದೈತ್ಯರು” ಎಂಬುದಾಗಿ–ಶಿವನ ಅನುಯಾಯಿಗಳಾದ ದೆವ್ವಪಿಶಾಚಿಗಳು ಎಂದು ಕರೆದುಕೊಳ್ಳುತ್ತಿದ್ದರು. ಅವರು ಈ ಜಗತ್ತಿನ ಸುಖದುಃಖಗಳ ಕಡೆ ಅತ್ಯಂತ ಉದಾಸೀನರಾಗಿದ್ದುದರಿಂದ ಈ ಹೆಸರುಗಳನ್ನು ತಮಗೆ ತಾವೇ ನಾಮಕರಣ ಮಾಡಿಕೊಂಡಿದ್ದರು.
ಎರಡನೆ ಅಂತಸ್ತಿನಲ್ಲಿ ಅತ್ಯಂತ ದಕ್ಷಿಣದಲ್ಲಿದ್ದ ಕೊಠಡಿಯನ್ನು ಧ್ಯಾನ ಮತ್ತು ಪಾಠಕ್ಕಾಗಿ ಉಪಯೋಗಿಸುತ್ತಿದ್ದರು. ಅದರಲ್ಲೇ ಕಾಳೀಪ್ರಸಾದ ತನ್ನ ಸಮಯದ ಬಹುಭಾಗವನ್ನು ಕಳೆದುಬಿಡುತ್ತಿದ್ದ. ಆದ್ದರಿಂದ ಆ ಕೊಠಡಿಗೆ “ಕಾಳೀ ತಪಸ್ವಿಯ ಕೊಠಡಿ” ಎಂಬ ಹೆಸರು ಬಂದುಬಿಟ್ಟಿತ್ತು. ಅದಕ್ಕೆ ಉತ್ತರದಲ್ಲಿದ್ದ ಕೊಠಡಿಯೇ ದೇವರಮನೆ. ಅದಕ್ಕೆ ಉತ್ತರದ್ದು ನೈವೇದ್ಯ ತಯಾರಿಸುವ ಕೊಠಡಿ. ಈ ಕೊಠಡಿಯಲ್ಲೇ ನಿಂತು ಮಂಗಳಾರತಿ ನೋಡಬೇಕಾಗಿತ್ತು. ಭಕ್ತರು ಈ ಕೊಠಡಿಗೆ ಬಂದು ಗುರುಮಹಾರಾಜರಿಗೆ ಪ್ರಣಾಮ ಮಾಡುತ್ತಿದ್ದರು. ಇದಕ್ಕೆ ಉತ್ತರದಲ್ಲಿ ದಾನವರ ಕೊಠಡಿ. ಮಠದ ಸೋದರರೆಲ್ಲಾ ನೆರೆಯುತ್ತಿದ್ದುದು ಈ ಕೊಠಡಿಯಲ್ಲೇ. ಇದೇ ಬೈಠಾಕ್ಖಾನೆಯಾಗಿತ್ತು. ಇದಕ್ಕೆ ಉತ್ತರದಲ್ಲಿ ಒಂದು ಚಿಕ್ಕ ಕೊಠಡಿ, ಇದಕ್ಕೇ “ಪಾನದ” ಕೊಠಡಿ ಎಂಬ ಹೆಸರನ್ನಿಟ್ಟಿದ್ದರು. ಇದರಲ್ಲಿ ಸೋದರರೆಲ್ಲರೂ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು. ದೇವರಮನೆಯ ಮತ್ತು ಕಾಳಿತಪಸ್ವಿಯ ಕೊಠಡಿಯ ಪೂರ್ವಕ್ಕೆ ಒಂದು ಉದ್ದವಾದ ವರಾಂಡವಿತ್ತು. ಇದರ ನೈಋತ್ಯದ ಕೊಠಡಿಯಲ್ಲಿ ಬರಾಹನಗರದ ಒಂದು ಸಮಿತಿಯ ವಾಚನಾಲಯವಿತ್ತು. ಈ ವಾಚನಾಲಯಕ್ಕೂ ಕಾಳಿತಪಸ್ವಿಯ ಕೊಠಡಿಗೂ ಮಧ್ಯೆ ಕೆಳಗಿನಿಂದ ಮೇಲಕ್ಕೆ ಹತ್ತಿಬರಲು ಒಂದು ಮೆಟ್ಟಲಸಾಲು ಇತ್ತು. “ಪಾನದ” ಕೊಠಡಿಯ ಉತ್ತರದಿಕ್ಕಿನಲ್ಲಿ ಈ ಎರಡನೆ ಅಂತಸ್ತಿನಿಂದ ಚಾವಣಿಗೆ ಹೋಗಲು ಒಂದು ಮೆಟ್ಟಲಸಾಲೂ ಇತ್ತು.
ನರೇಂದ್ರ ಮತ್ತು ಉಳಿದ ಮಠದ ಸೋದರರು ಅನೇಕ ವೇಳೆ ಈ ಚಾವಣಿ ಮೇಲೆಯೆ ತಮ್ಮ ಸಾಯಂಕಾಲವನ್ನು ಕಳೆಯುತ್ತಿದ್ದರು. ಆ ಸಮಯದ ಬಹುಭಾಗವನ್ನು ಅವರು ಶ್ರೀರಾಮಕೃಷ್ಣರ, ಶಂಕರಾಚಾರ್ಯರ, ರಾಮಾನುಜಾಚಾರ್ಯರ, ಏಸುವಿನ ಉಪದೇಶಗಳ ಸಂಬಂಧವಾಗಿ ಮತ್ತು ಹಿಂದೂದರ್ಶನ, ಪಾಶ್ಚಾತ್ಯದರ್ಶನ, ವೇದ, ಪುರಾಣ, ತಂತ್ರ ಇವುಗಳ ಸಂಬಂಧವಾಗಿ ಮಾತುಕತೆಗಳಾಡುತ್ತಲೇ ಕಳೆಯುತ್ತಿದ್ದರು.
ನರೇಂದ್ರ ತನ್ನ ದೇವದುರ್ಲಭ ಕಂಠದಿಂದ ಆಗಾಗ ‘ದಾನವರ” ಕೊಠಡಿಯಲ್ಲಿ ಕುಳಿತು ಹಾಡುತ್ತಿದ್ದ ಮತ್ತು ಶರಚ್ಚಂದ್ರ ಮೊದಲಾದವರಿಗೆ ಸಂಗೀತ ಕಲಿಸುತ್ತಿದ್ದ. ಕಾಳಿ ಇಲ್ಲಿ ತಬಲವನ್ನು ಕಲಿಯುತ್ತಿದ್ದ. ಸೋದರರೆಲ್ಲರೂ ತಮ್ಮ ಅನೇಕ ಘಂಟೆಗಳನ್ನು ಈ ಕೊಠಡಿಯಲ್ಲಿ ಆನಂದದಿಂದ ಹಾಡುತ್ತ ನರ್ತಿಸುತ್ತ ಕಳೆಯುತ್ತಿದ್ದರು.
ನರೇಂದ್ರ ಭಕ್ತರೊಡನೆ “ದಾನವರ” ಕೊಠಡಿಯಲ್ಲಿ ಕುಳಿತಿದ್ದಾನೆ. ಧರ್ಮಪ್ರಚಾರದ ಸಂಬಂಧವಾಗಿ ಮಾತುಕತೆ ಆರಂಭವಾಯಿತು.
ಮಾಸ್ಟರ್ (ನರೇಂದ್ರನಿಗೆ): “ವಿದ್ಯಾಸಾಗರ ಹೇಳುತ್ತಾನೆ: ‘ಬೆತ್ತದ ಏಟಿಗೆ ಹೆದರಿ ನಾನು ಯಾರಿಗೂ ಭಗವಂತನ ವಿಷಯವನ್ನು ಏನನ್ನೂ ಹೇಳುತ್ತಿಲ್ಲ.”’
ನರೇಂದ್ರ: “ಬೆತ್ತದ ಏಟಿಗೆ ಹೆದರುವುದೆ? ಏನದು?”
ಮಾಸ್ಟರ್: “ವಿದ್ಯಾಸಾಗರ ಹೇಳುತ್ತಾನೆ: ಸತ್ತ ಮೇಲೆ ನಾವೆಲ್ಲರೂ ಭಗವಂತನ ಹತ್ತಿರಕ್ಕೆ ಹೋಗುತ್ತೇವೆ ಅಂತ ಭಾವಿಸಿಕೊಳ್ಳಿ. ಕೇಶವಸೇನ ಈ ಜಗತ್ತಿನಲ್ಲಿ ಅನೇಕ ಪಾಪಕೃತ್ಯಗಳನ್ನು ಮಾಡಿರುವುದರಿಂದ, ಯಮದೂತರು ಆತನನ್ನೂ ಭಗವಂತನ ಹತ್ತಿರಕ್ಕೆ ಕರೆದುಕೊಂಡುಹೋಗುತ್ತಾರೆ. ಅವನು ಪಾಪ ಮಾಡಿರೋದು ಪ್ರಮಾಣವಾದನಂತರ ಬಹುಶಃ ಭಗವಂತ ಆತನಿಗೆ ಇಪ್ಪತ್ತೈದು ಬೆತ್ತದ ಏಟುಗಳನ್ನು ಹೊಡೆಯುವ ಹಾಗೆ ಕಿಂಕರನಿಗೆ ಆಜ್ಞೆಮಾಡಬಹುದು. ಬಳಿಕ ನನ್ನನ್ನೂ ಭಗವಂತನ ಹತ್ತಿರಕ್ಕೆ ಕಿಂಕರರು ಕರೆದುಕೊಂಡು ಹೋಗುತ್ತಾರೆ ಅಂತ ಇಟ್ಟುಕೊಳ್ಳಿ. ನಾನು ಕೇಶವಸೇನನ ಸಮಾಜಕ್ಕೆ ಹೋಗುತ್ತಿರುವುದರಿಂದ ಅನೇಕ ಅನ್ಯಾಯ ಕೆಲಸಗಳನ್ನು ಮಾಡಿದ್ದೇನೆ. ಅದಕ್ಕಾಗಿ ನನಗೂ ಬೆತ್ತದ ಏಟಿನ ಹುಕುಮ್ ಆಗಬಹುದು. ಆಗ ನಾನು ಹೇಳುತ್ತೇನೆ: “ಕೇಶವಸೇನನ ಬೋಧೆ ಕೇಳಿ ಹೀಗೆಲ್ಲಾ ಮಾಡಿಬಿಟ್ಟೆ.” ಆಗ ಭಗವಂತ ಕೇಶವಸೇನನನ್ನು ಮತ್ತೆ ಕೇಳುತ್ತಾನೆ: “ಏನು, ನೀನು ಈತನಿಗೆ ಉಪದೇಶ ಕೊಟ್ಟೆಯೇನು? ನನ್ನ ವಿಷಯವಾಗಿ ನಿನಗೆ ಏನೂ ಗೊತ್ತಿಲ್ಲ. ಅಂಥಾದ್ದರಲ್ಲಿ ನೀನು ಪರರಿಗೆ ಉಪದೇಶ ಮಾಡಿದೆಯಾ!ಏನ್ರೋ ಯಾರಿದೀರ್ರೋ ಇಲ್ಲಿ. ಕೊಡಿ ಇವನಿಗೆ ಇನ್ನಿಪ್ಪತ್ತೈದು.” (ಎಲ್ಲರೂ ನಗುತ್ತಿದ್ದಾರೆ.)
“ಇದಕ್ಕಾಗೇ ವಿದ್ಯಾಸಾಗರ ಹೇಳೋದು: ‘ನನ್ನ ಯೋಗಕ್ಷೇಮವನ್ನು ನಾನೇ ನೋಡಿ ಕೊಳ್ಳಲಾರೆ; ಅಂಥಾದ್ದರಲ್ಲಿ ಪರರಿಗೆ ತಪ್ಪುದಾರಿ ತೋರಿಸಿ ಬೆತ್ತದ ಏಟನ್ನು ತಿನ್ನಲೇ?’ ಭಗವಂತನ ವಿಷಯ ನನಗೇ ಗೊತ್ತಿಲ್ಲ. ನಿಜಸ್ಥಿತಿ ಹೀಗಿರುವಾಗ ನಾನು ಭಗವಂತನ ಸಂಬಂಧವಾಗಿ ಪರರಿಗೆ ಉಪದೇಶ ಕೊಡಲೆ?”
ನರೇಂದ್ರ: “ಯಾರಿಗೆ ಭಗವಂತನ ವಿಷಯವಾಗಿ ಏನೂ ಗೊತ್ತಿಲ್ಲವೊ, ಅಂಥವನಿಗೆ ಉಳಿದ ಹತ್ತಾರು ವಿಷಯಗಳ ಸಂಬಂಧವಾಗಿ ಅರಿವಾದ ಬಗೆ ಹೇಗೆ?”
ಮಾಸ್ಟರ್: “ಉಳಿದ ಹತ್ತಾರು ಯಾವುದು?”
ನರೇಂದ್ರ: “ಆತ ಹೇಳುತ್ತಿದ್ದಾನೆ, ಭಗವಂತನ ವಿಷಯವಾಗಿ ತನಗೆ ಏನೂ ಗೊತ್ತಿಲ್ಲ ಅಂತ. ಹಾಗಾದರೆ ಆತ ದಯೆ, ಪರೋಪಕಾರ ಇವುಗಳ ಸಂಬಂಧವಾಗಿ ಅರಿತುಕೊಂಡ ಬಗೆ ಹೇಗೆ? ಸ್ಕೂಲನ್ನು ಕಟ್ಟಿಸಬೇಕು ಎಂಬುದಾಗಿ ಅರಿತ ಬಗೆ ಹೇಗೆ? ಸ್ಕೂಲನ್ನು ಕಟ್ಟಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಬೇಕು ಎಂಬುದನ್ನು ಅರಿತ ಬಗೆ ಹೇಗೆ? ಸಂಸಾರಕ್ಕೆ ಕಾಲಿಟ್ಟು, ವಿವಾಹ ಮಾಡಿಕೊಂಡು ಮಕ್ಕಳನ್ನು ಹೆರುವುದು ಸರಿ ಎಂಬುದಾಗಿ ಅರಿತ ಬಗೆ ಹೇಗೆ?
“ಯಾರು ಒಂದನ್ನು ಸರಿಯಾಗಿ ಅರಿತುಕೊಳ್ಳಬಲ್ಲನೊ ಆತ ಎಲ್ಲವನ್ನೂ ಸರಿಯಾಗಿ ಅರಿತುಕೊಳ್ಳಬಲ್ಲ.”
ಮಾಸ್ಟರ್ (ತನಗೆ ತಾನೆ): “ಹೌದು, ಪರಮಹಂಸರೂ ಹೇಳುತ್ತಿದ್ದರು: ‘ಯಾರಿಗೆ ಭಗವಂತನ ಸಾಕ್ಷಾತ್ಕಾರವಾಗಿದೆಯೊ ಆತನಿಗೆ ಎಲ್ಲವೂ ಗೊತ್ತಾಗುತ್ತದೆ.’ ಸಂಸಾರದ ಸಂಬಂಧವಾಗಿ, ಸ್ಕೂಲಿನ ಸಂಬಂಧವಾಗಿ, ವಿದ್ಯಾಸಾಗರನಿಗೆ ಹೇಳಿದ್ದರು: ‘ರಜೋಗಣದಿಂದ ಆ ಪ್ರವೃತ್ತಿ ಬರುತ್ತದೆ.’ ವಿದ್ಯಾಸಾಗರನ ದಯೆಯ ಸಂಬಂಧವಾಗಿ ಅವರು ಹೇಳಿದ್ದರು: ‘ಇದು ಸತ್ತ್ವಪ್ರಧಾನ ರಜೋಗುಣದ ಕಾರ್ಯ, ಈ ರಜೋಗುಣದಿಂದ ಯಾವ ಹಾನಿಯೂ ಬಾರದು.”’
ಮಧ್ಯಾಹ್ನ ಊಟವಾದನಂತರ ಮಠದ ಸೋದರರೆಲ್ಲರೂ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಮಾಸ್ಟರ್ ಮತ್ತು ಚುಣಿಲಾಲ ಒಂದು ಕಡೆ ಕುಳಿತು ಮಾತುಕತೆಗಳಾಡುತ್ತಿದ್ದಾರೆ. ಚುಣಿ ಲಾಲ ಮಾಸ್ಟರಿಗೆ ಹೇಳುತ್ತಿದ್ದಾನೆ, ಯಾವ ರೀತಿ ದಕ್ಷಿಣೇಶ್ವರದಲ್ಲಿ ತನಗೆ ಪರಮಹಂಸರ ಮೊಟ್ಟ ಮೊದಲ ದರ್ಶನ ದೊರೆಯಿತು ಎಂಬುದರ ವಿಷಯವಾಗಿ. ಆತನಿಗೆ ಸಂಸಾರ ರುಚಿಸದೆ ಹೋಗಿ, ಆತ ಮನೆಯಿಂದ ಹೊರಟು ತೀರ್ಥಯಾತ್ರೆ ಮಾಡಿಕೊಂಡು ಹಿಂದಿರುಗಿ ಬಂದಿದ್ದಾನೆ. ಆ ವಿಷಯವಾಗಿ ಆತ ಮಾತಾಡುತ್ತಿದ್ದಾನೆ. ಸ್ವಲ್ಪ ಹೊತ್ತಾದ ನಂತರ ನರೇಂದ್ರ ಎದ್ದುಬಂದು ಅವರ ಹತ್ತಿರ ಕುಳಿತುಕೊಂಡ. ಆತ ಚಿಕ್ಕಗೋಪಾಲನಿಗೆ ಹೇಳಿದ, ತನಗೆ ಹುಕ್ಕ ತಯಾರುಮಾಡಿಕೊಡುವಂತೆ. ಚಿಕ್ಕಗೋಪಾಲ ಧ್ಯಾನದಲ್ಲಿ ಕುಳಿತಿದ್ದಾನೆ. ನರೇಂದ್ರ ಆತನಿಗೆ ಹೇಳುತ್ತಿದ್ದಾನೆ: “ನಾನು ಹೇಳುತ್ತಿರುವುದು ಕಿವಿಗೆ ಬಿತ್ತೇನು? ಈ ನಿನ್ನ ಧ್ಯಾನದಿಂದ ಏನು ಪ್ರಯೋಜನ? ಮೊದಲು ಭಗವಂತನ, ಸಾಧುಗಳ ಸೇವೆ ಮಾಡುವುದನ್ನು ಕಲಿತುಕೊ; ತರುವಾಯ ನಿನಗೆ ಧ್ಯಾನಮಾಡುವ ಯೋಗ್ಯತೆ ಬರುತ್ತದೆ. ಮೊದಲು ಕರ್ಮ, ಬಳಿಕ ಧ್ಯಾನ.” (ಎಲ್ಲರೂ ನಗುತ್ತಿದ್ದಾರೆ.)
ಮಠದ ಆವರಣದ ಪಶ್ಚಿಮಕ್ಕೆ ಗಿಡಮರಗಳಿಂದ ಕೂಡಿದ ಒಂದು ವಿಸ್ತಾರವಾದ ಪ್ರದೇಶವಿದೆ. ಮಾಸ್ಟರ್ ಅಲ್ಲಿ ಒಂದು ಮರದ ಕೆಳಗೆ ಏಕಾಕಿಯಾಗಿ ಕುಳಿತಿದ್ದಾನೆ. ಇದ್ದಕ್ಕಿದ್ದ ಹಾಗೆ ಅಲ್ಲಿಗೆ ಶಾರದಾಪ್ರಸನ್ನ ಬಂದ. ಸಮಯ ಅಪರಾಹ್ನ ಮೂರು.
ಮಾಸ್ಟರ್: “ಈ ಕೆಲವು ದಿವಸಗಳನ್ನು ನೀನು ಎಲ್ಲಿ ಕಳೆದೆ? ನಿನ್ನ ಸಂಬಂಧವಾಗಿ ಎಲ್ಲರೂ ಬಹಳವಾಗಿ ಚಿಂತಿಸುತ್ತಿದ್ದರು. ಮಠದ ಸೋದರರನ್ನೆಲ್ಲ ಸಂಧಿಸಿದೆಯೇನು? ಯಾವಾಗ ಬಂದೆ?”
ಪ್ರಸನ್ನ: “ಈಗತಾನೆ ಬಂದು ಅವರನ್ನೆಲ್ಲ ಸಂಧಿಸಿದೆ.”
ಮಾಸ್ಟರ್: “ನೀನು ಬೃಂದಾವನಕ್ಕೆ ಹೋಗುವುದಾಗಿ ಪತ್ರ ಬರೆದಿಟ್ಟು ಹೋಗಿದ್ದೆ. ನಾವೆಲ್ಲರೂ ನಿನಗಾಗಿ ಬಹಳ ಚಿಂತಿಸುತ್ತಿದ್ದೆವು. ಏನು ಎಲ್ಲಿಯವರೆಗೆ ಹೋಗಿದ್ದೆ?”
ಪ್ರಸನ್ನ: “ಓ, ಕೊನ್ನಗರದ (ಸ್ವಲ್ಪ ದೂರ)ವರೆಗೆ ಮಾತ್ರ.”
ಇಬ್ಬರೂ ನಗುತ್ತಿದ್ದಾರೆ.
ಮಾಸ್ಟರ್: “ಕುಳಿತುಕೊ. ನಡೆದ ವೃತ್ತಾಂತವನ್ನೆಲ್ಲಾ ತಿಳಿಸು. ಮೊದಲು ನೀನು ತಂಗಿದ ಸ್ಥಳವಾವುದು?”
ಪ್ರಸನ್ನ: “ದಕ್ಷಿಣೇಶ್ವರದ ಕಾಳೀದೇವಾಲಯ. ಅಲ್ಲಿ ಒಂದು ರಾತ್ರಿಯನ್ನು ಕಳೆದೆ.”
ಮಾಸ್ಟರ್ (ನಗುತ್ತ): “ಹಾಜರಾ ಮಹಾಶಯನ ಪ್ರಸ್ತುತ ಭಾವ ಏನು?”
ಪ್ರಸನ್ನ: “ಹಾಜರಾ ಕೇಳಿದ: ‘ನನ್ನ ಸಂಬಂಧವಾಗಿ ನಿನ್ನ ಅಭಿಪ್ರಾಯವೇನು?”’ (ಇಬ್ಬರೂ ನಗುತ್ತಿದ್ದಾರೆ.)
ಮಾಸ್ಟರ್: “ನೀನು ಏನು ಉತ್ತರ ಕೊಟ್ಟೆ?”
ಪ್ರಸನ್ನ: “ನಾನು ಸುಮ್ಮನೆ ಇದ್ದುಬಿಟ್ಟೆ.”
ಮಾಸ್ಟರ್: “ಬಳಿಕ?”
ಪ್ರಸನ್ನ: “ಮತ್ತೆ ಕೇಳಿದ: ‘ನನಗಾಗಿ ಹೊಗೆಸೊಪ್ಪು ತಂದಿದೀಯಾ?’ (ಇಬ್ಬರೂ ನಗುತ್ತಿದ್ದಾರೆ.) ನಾನು ಆತನ ಸೇವೆ ಮಾಡಿಕೊಂಡಿರಬೇಕೆಂಬುದಾಗಿ ಆತ ಇಚ್ಛೆಪಟ್ಟ.” (ನಗು.)
ಮಾಸ್ಟರ್: “ಬಳಿಕ ಎಲ್ಲಿಗೆ ಹೋದೆ?”
ಪ್ರಸನ್ನ: “ಕ್ರಮಕ್ರಮೇಣ ಕೊನ್ನಗರವನ್ನು ತಲುಪಿದೆ. ಮೈದಾನದಲ್ಲಿ ಒಂದು ಕಡೆ ಮಲಗಿ ರಾತ್ರಿಯನ್ನು ಕಳೆದೆ. ಇನ್ನೂ ಮುಂದುವರಿಯಬೇಕು ಅಂತ ಭಾವಿಸಿದೆ. ಪಶ್ಚಿಮಕ್ಕೆ ಹೋಗಲು ಬೇಕಾಗುವ ರೈಲ್ವೆ ಚಾರ್ಜನ್ನು ಯಾರಾದರೂ ಕೊಡುವರೆ ನೋಡೋಣ ಅಂತ ಕೆಲವು ಸದ್ಗೃಹಸ್ಥರನ್ನು ಕೇಳಿನೋಡಿದೆ.”
ಮಾಸ್ಟರ್ : “ಅವರು ಏನು ಹೇಳಿದರು?”
ಪ್ರಸನ್ನ: “ಅವರು ಹೇಳಿದರು: ‘ನಿನಗೆ ಒಂದು ರೂಪಾಯಿಯಷ್ಟನ್ನು ಬೇಕಾದರೆ ಯಾರಾದರೂ ಕೊಡಬಲ್ಲರು; ಸಂಪೂರ್ಣ ಚಾರ್ಜನ್ನು ಯಾರು ಕೊಡುತ್ತಾರೆ?”’ (ಇಬ್ಬರೂ ನಗುತ್ತಿದ್ದಾರೆ.)
ಮಾಸ್ಟರ್: “ಜೊತೆಯಲ್ಲಿ ಏನೇನು ತೆಗೆದುಕೊಂಡು ಹೋಗಿದ್ದೆ?”
ಪ್ರಸನ್ನ : “ಓ, ಒಂದೆರಡು ಬಟ್ಟೆತುಂಡು ಮತ್ತು ಪರಮಹಂಸರ ಭಾವಚಿತ್ರ. ಭಾವ ಚಿತ್ರವನ್ನು ನಾನು ಯಾರಿಗೂ ತೋರಿಸಲಿಲ್ಲ.”
ಶಶಿಯನ್ನು ಮನೆಗೆ ಕರೆದುಕೊಂಡುಹೋಗಿಬಿಡಬೇಕೆಂದು ಆತನ ತಂದೆ ಬಂದಿದ್ದಾನೆ. ಶ್ರೀರಾಮಕೃಷ್ಣರು ಅಸ್ವಸ್ಥರಾಗಿದ್ದಾಗ ಶಶಿ ಏಕನಿಷ್ಠೆಯಿಂದ ಸುಮಾರು ಒಂಬತ್ತು ತಿಂಗಳ ಕಾಲ ಅವರ ಸೇವೆ ಮಾಡಿದ್ದ. ಆತ ಬಿ.ಎ. ಕ್ಲಾಸಿಗೆ ಬಂದಿದ್ದಾನೆ. ಆದರೆ ಪರೀಕ್ಷೆಗೆ ಇನ್ನೂ ಕುಳಿತಿರಲಿಲ್ಲ. ಪ್ರವೇಶಪರೀಕ್ಷೆಯಲ್ಲಿ ಆತನಿಗೆ ವಿದ್ಯಾರ್ಥಿವೇತನ ದೊರೆತಿತ್ತು. ಶಶಿಯ ತಂದೆ ಒಬ್ಬ ಬಡಬ್ರಾಹ್ಮಣ. ಆದರೆ ನಿಷ್ಠಾವಂತ ಮತ್ತು ಭಗವದ್ಭಕ್ತ. ಶಶಿಯೆ ಆತನ ಹಿರಿಯ ಮಗ. ಶಶಿ ವ್ಯಾಸಂಗವನ್ನು ಮುಗಿಸಿದನಂತರ ಸಾಕಾದಷ್ಟು ಹಣ ಸಂಪಾದಿಸಿ ತಮ್ಮ ದಾರಿದ್ರ್ಯವನ್ನು ದೂರಮಾಡುವನೆಂದು ಆತನ ತಂದೆತಾಯಿಗಳು ಆತನ ಮೇಲೆ ಭರವಸೆಯನ್ನಿಟ್ಟುಕೊಂಡಿದ್ದರು. ಆದರೆ ಆತ ಭಗವಂತನ ಸಾಕ್ಷಾತ್ಕಾರಕ್ಕಾಗಿ ಎಲ್ಲವನ್ನು ತ್ಯಜಿಸಿಬಿಟ್ಟಿದ್ದಾನೆ. ತಂದೆತಾಯಿಗಳ ಜ್ಞಾಪಕ ಬಂದಾಗಲೆಲ್ಲ ಆತನ ಹೃದಯ ಬಹಳವಾಗಿ ಸಂಕಟಪಡುತ್ತಿದೆ. ಅನೇಕವೇಳೆ ಕಣ್ಣೀರು ಸುರಿಸುತ್ತಾ ತನ್ನ ಸ್ನೇಹಿತರಿಗೆ ಹೇಳುತ್ತಾನೆ: “ಏನು ಮಾಡಲಿ, ಏನು ಮಾಡಬೇಕೆಂಬುದೇ ಸರಿಯಾಗಿ ಹೊಳೆಯುತ್ತಿಲ್ಲ. ಹಾ ದೇವರೆ! ನಾನು ನನ್ನ ತಂದೆತಾಯಿಗಳ ಸೇವೆಯನ್ನು ಸ್ವಲ್ಪವೂ ಮಾಡಲಾಗಲಿಲ್ಲ. ಅವರು ನನ್ನ ಸಂಬಂಧವಾಗಿ ಎಂಥ ದೊಡ್ಡ ಸ್ವರ್ಣಕನಸನ್ನು ಕಟ್ಟಿದ್ದರು! ದಾರಿದ್ರ್ಯದ ದೆಸೆಯಿಂದ ನನ್ನ ತಾಯಿ ಒಡವೆಯ ಮುಖವನ್ನೇ ನೋಡಲಾಗಲಿಲ್ಲ. ಆಕೆಗೆ ಕೆಲವು ಒಡವೆಗಳನ್ನು ಮಾಡಿಸಿಕೊಡಬೇಕೆಂದು ಕನಸುಕಂಡಿದ್ದೆ. ಆದರೆ ಒಂದೂ ಸಾಧ್ಯವಿಲ್ಲ, ಮನೆಗೆ ಎಂದಿಗೂ ಹಿಂದಿರುಗಿ ಹೋಗಲಾರೆ. ಪರಮಹಂಸರು ಕಾಮಕಾಂಚನ ತ್ಯಜಿಸುವ ಹಾಗೆ ಹೇಳಿ ಹೋಗಿದ್ದಾರೆ. ಹರಿಹರಬ್ರಹ್ಮಾದಿಗಳು ಒತ್ತಾಯ ಪಡಿಸಿದರೂ ಮನೆಗೆ ಹಿಂದಿರುಗಿ ಹೋಗುವುದಕ್ಕೆ ಆಗೋದೇ ಇಲ್ಲ.”
ಶ್ರೀರಾಮಕೃಷ್ಣ ಪರಮಹಂಸರು ಮಹಾಸಮಾಧಿಯನ್ನು ಹೊಂದಿದ ಮೇಲೆ ಶಶಿ ಮನೆಗೆ ಹಿಂದಿರುಗಿ ಬಂದುಬಿಡುತ್ತಾನೆ ಎಂಬುದಾಗಿ ಆತನ ತಂದೆ ಭಾವಿಸಿದ್ದ. ಶಶಿಯೇನೊ ಒಂದು ಕೆಲವು ದಿವಸಗಳ ಮಟ್ಟಿಗೆ ಮನೆಗೆ ಹಿಂದಿರುಗಿ ಹೋಗಿದ್ದ. ಆದರೆ ಬರಾಹನಗರದ ಮಠಸ್ಥಾಪನೆ ಆದಮೇಲೆ ಆಗಾಗ ಅಲ್ಲಿಗೆ ಹೋಗುತ್ತಿದ್ದು ಕೊನೆಗೆ ಮಠದಲ್ಲೇ ಇರಲು ನಿರ್ಧರಿಸಿ ಅಲ್ಲೇ ಸ್ಥಾಯಿಯಾಗಿ ನಿಂತುಬಿಟ್ಟ. ಇದನ್ನು ನೋಡಿ ಆತನನ್ನು ಮನೆಗೆ ಹಿಂದಿರುಗುವಂತೆ ಒತ್ತಾಯಪಡಿಸಲೋಸುಗ ಆತನ ತಂದೆ ಮಠಕ್ಕೆ ಆಗಾಗ ಬರಲಾರಂಭಿಸಿದ್ದಾನೆ. ಶಶಿ ಮಾತ್ರ ಹಿಂದಿರುಗಿ ಹೋಗೋದಿಲ್ಲವೆಂದು ಸ್ಥಿರ ಸಂಕಲ್ಪ ಮಾಡಿಬಿಟ್ಟಿದ್ದಾನೆ.
ಇಂದು ತನ್ನ ತಂದೆ ಮಠಕ್ಕೆ ಬಂದಿರುವುದನ್ನು ನೋಡಿ ಶಶಿ ಬೇರೊಂದು ಬಾಗಿಲಿನಿಂದ ಮಠದಿಂದ ಹೊರಕ್ಕೆ ಹೊರಟುಹೋದ. ಆತನಿಗೆ ತನ್ನ ತಂದೆಯನ್ನು ಸಂಧಿಸಲು ಇಚ್ಛೆ ಆಗಲಿಲ್ಲ.
ಶಶಿಯ ತಂದೆಗೆ ಮಾಸ್ಟರ ಪರಿಚಯವಿತ್ತು. ಅವರಿಬ್ಬರು ಎರಡನೆ ಅಂತಸ್ತಿನಲ್ಲಿದ್ದ ವರಾಂಡದಲ್ಲಿ ತಿರುಗಾಡುತ್ತ ಮಾತುಕತೆ ಆಡುತ್ತಿದ್ದಾರೆ.
ಶಶಿಯ ತಂದೆ: “ಇಲ್ಲಿಗೆ ಯಜಮಾನನಾರು? ನರೇಂದ್ರನೇ ಇದಕ್ಕೆಲ್ಲ ಮೂಲ. ಯುವಕರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿಬಂದು ಮತ್ತೆ ಓದೋದು ಬರೆಯೋದರಲ್ಲಿ ನಿರತರಾಗಿದ್ದರು.”
ಮಾಸ್ಟರ್: “ಇಲ್ಲಿಗೆ ಯಜಮಾನನೆಂಬುವನೇ ಇಲ್ಲ. ಎಲ್ಲರೂ ಇಲ್ಲಿ ಸರಿಸಮಾನರು. ಪಾಪ, ನರೇಂದ್ರ ಏನು ಮಾಡಿಯಾನು? ಸ್ವಂತ ಇಚ್ಛೆ ಇಲ್ಲದೆ ಮನೆಬಿಟ್ಟು ಬಂದು ಬಿಡಲಾಗುತ್ತದೆಯೇ? ನಾವು ಒಮ್ಮೆಗೆ ಮನೆಯನ್ನು ತ್ಯಜಿಸಿಬರಲು ಶಕ್ತರಾಗಿರುವೆವೇನು?”
ಶಶಿಯ ತಂದೆ: “ನಿನ್ನ ವ್ಯವಹಾರ ಬಹಳ ಒಳ್ಳೆಯದು. ನೀನು ಪ್ರಪಂಚ, ಭಗವಂತ ಎರಡೂ ಕಡೆಗೂ ದೃಷ್ಟಿ ಇಟ್ಟಿದ್ದೀಯೆ. ನೀನು ನಡೆದುಕೊಳ್ಳುತ್ತಿರುವ ರೀತಿಯಲ್ಲಿ ನಡೆದು ಕೊಂಡರೆ ಭಗವಂತನ ಕಡೆಗೆ ಹೋಗೋಕಾಗೋದಿಲ್ಲವೊ? ಶಶಿಯೂ ಹೀಗೆ ವ್ಯವಹರಿಸ ಬೇಕು ಅಂತ ನಮ್ಮ ಇಚ್ಛೆ. ಆತ ಇಲ್ಲೂ ಇರಲಿ, ಅಲ್ಲೂ ಇರಲಿ. ಹೆತ್ತತಾಯಿ ಆತನಿಗಾಗಿ ಎಷ್ಟೊಂದು ಅಳುತ್ತಿದ್ದಾಳೆ ಎಂಬುದನ್ನು ನಿನಗೆ ಊಹಿಸಲೂ ಸಾಧ್ಯವಿಲ್ಲ!”
ಮಾಸ್ಟರ್ ದುಃಖಿತನಾಗಿ ಯಾವ ಉತ್ತರವನ್ನೂ ಕೊಡಲಿಲ್ಲ.
ಶಶಿಯ ತಂದೆ: “ಸಾಧುವಿನ ಸಹವಾಸಕ್ಕಾಗಿ ಹುಡುಕಾಡುತ್ತಿದ್ದರೆ ನಾನು ಆತನನ್ನು ಒಬ್ಬ ಸಾಧುವಿನ ಹತ್ತಿರಕ್ಕೆ ಕರೆದುಕೊಂಡು ಹೋಗಬಲ್ಲೆ. ಇಂದ್ರನಾರಾಯಣನ ಮನೆಗೆ ಒಬ್ಬ ಸಾಧು ಬಂದಿದ್ದಾನೆ. ಬಹಳ ಒಳ್ಳೆಯವ. ಅಲ್ಲಿಗೆ ಬೇಕಾದರೆ ಅವನು ಹೋಗಲಿ.”
ಕಾಳಿತಪಸ್ವಿಯ ಕೊಠಡಿಯ ಪೂರ್ವದಿಕ್ಕಿನಲ್ಲಿರುವ ವರಾಂಡದಲ್ಲಿ ರಾಖಾಲ ಮತ್ತು ಮಾಸ್ಟರ್ ಅಡ್ಡಾಡುತ್ತಿದ್ದಾರೆ. ಪರಮಹಂಸರ ಮತ್ತು ಭಕ್ತರ ಸಂಬಂಧವಾಗಿ ಮಾತುಕತೆ ಆಡುತ್ತಿದ್ದಾರೆ.
ರಾಖಾಲ (ವ್ಯಸ್ತನಾಗಿ): “ಮಾಸ್ಟರ್ ಮಹಾಶಯ, ಬನ್ನಿ ನಾವೆಲ್ಲರೂ ಸಾಧನೆಯಲ್ಲಿ ತೊಡಗೋಣ! ಇದಕ್ಕಾಗೇ ನಾನು ಮನೆಗೆ ಹಿಂದಿರುಗಿ ಹೋಗಲಿಲ್ಲ. ಯಾರಾದರೂ ಹೇಳಿದರೆ ‘ಮನೆ, ಮಠ ಬಿಟ್ಟು ಬಂದಿದ್ದರಿಂದಲೇನೂ ನಿಮಗೆ ಭಗವಂತನ ಸಾಕ್ಷಾತ್ಕಾರ ದೊರೆತಿಲ್ಲ; ಆದ್ದರಿಂದ ಇನ್ನೇಕೆ ಈ ವಿಧದ ಜೀವನ?’ ನರೇಂದ್ರ ಅವರಿಗೆ ಬಹಳ ಚೆನ್ನಾದ ಉತ್ತರ ಕೊಡುತ್ತಾನೆ. ಆತ ಹೇಳುತ್ತಾನೆ: ‘ರಾಮ ದೊರೆಯಲಿಲ್ಲ ಅಂತ, ಶ್ಯಾಮಳೊಡನೆ ಬೆರೆತು ಮನೆ, ಮಠ ಮಾಡಿಕೊಳ್ಳಬೇಕೇನು?’ ಆಹ! ನರೇಂದ್ರ ಆಗಾಗ ಬಹಳ ಒಳ್ಳೊಳ್ಳೆ ಮಾತುಗಳನ್ನಾಡುತ್ತಾನೆ. ನೀವೇ ಹೋಗಿ ಆತನನ್ನು ಕೇಳಿ.”
ಮಾಸ್ಟರ್: “ನೀನು ಹೇಳುತ್ತಿರುವುದು ಸರಿ, ರಾಖಾಲಬಾಬು. ನಿನ್ನ ಮನಸ್ಸೂ ಕೂಡ ಭಗವಂತನ ಸಾಕ್ಷಾತ್ಕಾರಕ್ಕಾಗಿ ಬಹಳವಾಗಿ ವ್ಯಾಕುಲಪಡುತ್ತಿರುವಂತೆ ನನಗೆ ತೋರಿ ಬರುತ್ತಿದೆ.”
ರಾಖಾಲ: “ಮಾಸ್ಟರ್ ಮಹಾಶಯ, ನನ್ನ ಮಾನಸಿಕ ಅವಸ್ಥೆಯನ್ನು ನಾನು ಹೇಗೆ ತಾನೆ ವರ್ಣಿಸಿ ಹೇಳಲಿ? ಇಂದು ಮಧ್ಯಾಹ್ನ ನನ್ನ ಮನಸ್ಸು ನರ್ಮದಾತೀರಕ್ಕೆ ಹೋಗಬೇಕೆಂದು ಬಹಳವಾಗಿ ವ್ಯಾಕುಲಪಡಲಾರಂಭಿಸಿತು. ಮಾಸ್ಟರ್ ಮಹಾಶಯ, ನೀವೂ ಸಾಧನೆಯಲ್ಲಿ ತೊಡಗಿ; ಇಲ್ಲದಿದ್ದರೆ ಏನೂ ದೊರೆಯುವ ಹಾಗಿಲ್ಲ. ನೋಡಿ, ಶುಕದೇವನಿಗೂ ಈ ಜಗತ್ತನ್ನು ನೋಡಿ ಬಹಳ ಭಯವಾಯಿತು. ಅದಕ್ಕಾಗೇ ಆತ ಜನ್ಮ ತಳೆದೊಡನೆಯೇ ಈ ಜಗತ್ತನ್ನು ಬಿಟ್ಟು ಪಲಾಯನ ಮಾಡಿದ. ವ್ಯಾಸ ಸ್ವಲ್ಪ ನಿಲ್ಲುವಂತೆ ಹೇಳಿದ, ಆದರೆ ಆತ ನೇರವಾಗಿ ಹೊರಟುಹೋದ.”
ಮಾಸ್ಟರ್: “ಹೌದು ಶುಕದೇವ ಯಾವ ರೀತಿ ಈ ಮಾಯಾಪ್ರಪಂಚವನ್ನು ಬಿಟ್ಟು ಪಲಾಯನ ಮಾಡಿದ ಎಂಬುದನ್ನು ಯೋಗೋಪನಿಷತ್ ವರ್ಣನೆ ಮಾಡುತ್ತದೆ. ವ್ಯಾಸ ಶುಕದೇವನೊಡನೆ ನಡೆಸಿದ ಸಂಭಾಷಣೆಯನ್ನೂ ಅದು ತಿಳಿಸುತ್ತದೆ. ಸಂಸಾರದಲ್ಲೇ ಇದ್ದು ಧಾರ್ಮಿಕನಾಗುವಂತೆ ವ್ಯಾಸ ಹೇಳಿದ; ಆದರೆ ಪ್ರಾಪಂಚಿಕರು ವಿವಾಹವಾಗಿ ಹೆಂಗಸಿನೊಡನೆ ವಾಸಿಸುವುದರ ಬಗ್ಗೆ ಶುಕ ತನ್ನ ಜಿಗುಪ್ಸೆಯನ್ನು ವ್ಯಕ್ತಗೊಳಿಸಿದ್ದಾನೆ.”
ರಾಖಾಲ: “ಹೆಂಗಸಿನ ಮುಖ ನೋಡದೆ ಇದ್ದುಬಿಟ್ಟರೇ ಬೇಕಾದಷ್ಟು ಅಂತ ಅನೇಕರು ಭಾವಿಸುತ್ತಾರೆ. ಹೆಂಗಸು ಕಣ್ಣಿಗೆ ಬಿದ್ದಳೆಂದರೆ ದೃಷ್ಟಿಯನ್ನು ನೆಲದ ಕಡೆಗೆ ತಿರುಗಿಸಿಬಿಟ್ಟ ಮಾತ್ರಕ್ಕೇ ದೊರಕೋ ಫಲವೇನು? ನರೇಂದ್ರ ಈ ವಿಷಯವಾಗಿ ನಿನ್ನೆ ಬಹಳ ಚೆನ್ನಾಗಿ ಹೇಳಿದ. ಆತ ಹೇಳಿದ: ‘ಎಲ್ಲಿಯವರೆಗೆ ನನ್ನಲ್ಲಿ ಕಾಮವಿರುವುದೊ, ಅಲ್ಲಿಯವರೆಗೆ ನನಗೆ ಹೆಂಗಸಿನ ಭಾವನೆ ಇದ್ದೇ ಇರುತ್ತದೆ. ಕಾಮ ಇಲ್ಲದೆ ಇತ್ತು ಎಂದರೆ ಸ್ತ್ರೀ ಪುರುಷ ಎಂಬ ಭೇದಭಾವನೆಯೇ ಇರದು.”’
ಮಾಸ್ಟರ್: “ಇದು ಎಷ್ಟು ಸತ್ಯವಾದ ಮಾತು! ಮಕ್ಕಳಿಗೆ ಗಂಡು ಹೆಣ್ಣು ಎಂಬ ಭಾವನೆಯೇ ಇಲ್ಲ.”
ರಾಖಾಲ: “ಅದಕ್ಕಾಗೇ ನಾನು ಹೇಳುತ್ತಿರೋದು ನಾವು ಸಾಧನೆಯಲ್ಲಿ ತೊಡಗಬೇಕು ಎಂಬುದಾಗಿ. ಮಾಯಾತೀತರಾಗದೆ ಭಗವಂತನ ಸಾಕ್ಷಾತ್ಕಾರ ಪಡೆಯುವ ಬಗೆ ಹೇಗೆ?
“ಬನ್ನಿ ಆ ದೊಡ್ಡ ಅಂಗಳಕ್ಕೆ ಹೋಗೋಣ. ಬರಾಹನಗರದಿಂದ ಕೆಲವರು ಬಂದಿದ್ದಾರೆ. ನರೇಂದ್ರ ಅವರೊಡನೆ ಮಾತುಕತೆಗಳಾಡುತ್ತಿದ್ದಾನೆ. ಬನ್ನಿ ಅಲ್ಲಿಗೆ ಹೋಗಿ ಅದನ್ನು ಕೇಳೋಣ.”
ಮಾಸ್ಟರ್ ಆ ಅಂಗಳವನ್ನು ಪ್ರವೇಶಿಸದೆ, ಅದರ ಹೊರಗಡೆಯೇ ಅಡ್ಡಾಡುತ್ತ ನರೇಂದ್ರನಾಡುತ್ತಿರುವ ಮಾತುಕತೆಗಳನ್ನು ಕೇಳುತ್ತಿದ್ದಾನೆ.
ನರೇಂದ್ರ: “ಸಂಧ್ಯಾದಿ ಕರ್ಮಗಳಿಗೆ ನಿರ್ದಿಷ್ಟ ಸ್ಥಾನವೇ ಆಗಲಿ ಅಥವಾ ಸಮಯವೇ ಆಗಲಿ ಯಾವುದೂ ಇಲ್ಲ.”
ಒಬ್ಬ ಸಂಭಾವಿತ: “ಒಳ್ಳೇದು, ಕೇವಲ ಸಾಧನೆಯಿಂದಲೇ ಭಗವಂತನ ಸಾಕ್ಷಾತ್ಕಾರ ಪಡೆದುಕೊಳ್ಳಲಾಗುವುದೆ?”
ನರೇಂದ್ರ: “ಅದು ಆತನ ಕೃಪೆಯನ್ನು ಅವಲಂಬಿಸಿದೆ. ಶ್ರೀಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ:
ಈಶ್ವರಃ ಸರ್ವಭೂತಾನಾಂ ಹೃದ್ದೇಶೇರ್ಠ್ಜುನ ತಿಷ್ಠತಿ ।
ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ ॥
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ ।
ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ॥
೧೮-೬೧-೬೨
“ಆತನ ಕೃಪೆ ದೊರೆಯದೆ ಇತ್ತು ಎಂದರೆ ಕೇವಲ ಸಾಧನೆ ಭಜನೆ ಇವುಗಳಿಂದಲೇ ಏನೂ ದೊರೆಯದು. ಇದಕ್ಕಾಗಿಯೇ ಭಗವಂತನಲ್ಲಿ ಶರಣಾಗತನಾಗಬೇಕು.”
ಸಂಭಾವಿತ: “ನಾವು ಆಗಾಗ ಬಂದು ನಿಮ್ಮನ್ನು ಸ್ವಲ್ಪ ಕಾಡಿಸಿ ಹೋಗಲು ಅನುಮತಿ ಇರುವುದೆ?”
ನರೇಂದ್ರ: “ಇಚ್ಛೆ ಬಂದಾಗಲೆಲ್ಲ ದಯವಿಟ್ಟು ಬನ್ನಿ. ನಾವು ನಿಮ್ಮ ಗಂಗಾಘಟ್ಟಕ್ಕೆ ಹೋಗಿ ಸ್ನಾನಮಾಡಿ ಬರುತ್ತಿದ್ದೇವೆ.”
ಸಂಭಾವಿತ: “ಅದಕ್ಕೆ ನನ್ನ ಆಕ್ಷೇಪಣೆಯೇನಿಲ್ಲ. ಆದರೆ ಬೇರೆಯವರು ಅಲ್ಲಿಗೆ ಹೋಗದೆ ಇರಲಿ.”
ನರೇಂದ್ರ: “ನೀವು ಹಾಗೆ ಹೇಳುವುದಾದರೆ, ನಾವೂ ಅಲ್ಲಿಗೆ ಹೋಗೋದಿಲ್ಲ.”
ಸಂಭಾವಿತ: “ಹಾಗಲ್ಲ, ನೀವು ಉಪಯೋಗಿಸಬಾರದು ಅಂತಲೇನಲ್ಲ. ಅಲ್ಲಿ ಆಗಲೇ ಜನರಿರುವಾಗ ನೀವು ಅಲ್ಲಿಗೆ ಹೋಗದಿರುವುದೇ ಮೇಲು.”
ಸಾಯಂಕಾಲವಾಗಿದೆ. ಸಾಯಂ-ಮಂಗಳಾರತಿ ನಡೆಯಲಾರಂಭಿಸಿತು. ಭಕ್ತರು ಕೈಕಟ್ಟಿ ನಿಂತು “ಜಯ ಶಿವ ಓಂಕಾರ” ಎಂಬ ಶ್ಲೋಕವನ್ನು ಒಕ್ಕೊರಲಿನಿಂದ ಹಾಡಲಾರಂಭಿಸಿದ್ದಾರೆ. ಮಂಗಳಾರತಿ ಮುಗಿಯಿತು. ಈಗ ಭಕ್ತರೆಲ್ಲರೂ “ದಾನವರ” ಕೊಠಡಿಯಲ್ಲಿ ನೆರೆದಿದ್ದಾರೆ. ಮಾಸ್ಟರೂ ಅಲ್ಲಿ ಕುಳಿತಿದ್ದಾನೆ. ಶಾರದಾಪ್ರಸನ್ನ ಗುರುಗೀತೆಯನ್ನು ಪಠಿಸಲಾರಂಭಿಸಿದ್ದಾನೆ. ಈಗ ನರೇಂದ್ರ ಅಲ್ಲಿಗೆ ಬಂದು ಅದಕ್ಕೆ ಸ್ವರ ಕೊಟ್ಟು ಹಾಡಲಾರಂಭಿಸಿದ್ದಾನೆ:
ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಂ ।
ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್ ॥
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ ।
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ॥
ಮತ್ತೆ ಹಾಡುತ್ತಿದ್ದಾನೆ:
ನ ಗುರೋರಧಿಕಂನಗುರೋರಧಿಕಂ ।
ಶಿವಶಾಸನತಃಶಿವಶಾಸನತಃ ॥
ಶ್ರೀಮತ್ಪರಂ ಬ್ರಹ್ಮಗುರುಂ ವದಾಮಿ
ಶ್ರೀಮತ್ಪರಂ ಬ್ರಹ್ಮಗುರುಂ ಭಜಾಮಿ ॥
ಶ್ರೀಮತ್ಪರಂ ಬ್ರಹ್ಮಗುರುಂ ಸ್ಮರಾಮಿ
ಶ್ರೀಮತ್ಪರಂ ಬ್ರಹ್ಮಗುರುಂ ನಮಾಮಿ ॥
ನರೇಂದ್ರ ತನ್ನ ಮಧುರಕಂಠದಿಂದ ಗುರುಗೀತೆಯ ಈ ಕೆಲವು ಶ್ಲೋಕಗಳನ್ನು ಹಾಡುತ್ತಿದ್ದ ಹಾಗೇ ಭಕ್ತರ ಮನಸ್ಸು ನಿವಾತ, ನಿಷ್ಕಂಪ ದೀಪಶಿಖದ ಹಾಗೆ ಸ್ಥಿರವಾಗಿ ನಿಂತುಬಿಟ್ಟಿತು.
ಕಾಳಿತಪಸ್ವಿಯ ಕೊಠಡಿಯಲ್ಲಿ ರಾಖಾಲ ಕುಳಿತಿದ್ದಾನೆ. ಆತನ ಹತ್ತಿರವೇ ಪ್ರಸನ್ನ ಕುಳಿತಿದ್ದಾನೆ. ಮಾಸ್ಟರೂ ಅದೇ ಕೊಠಡಿಯಲ್ಲಿ ಕುಳಿತಿದ್ದಾನೆ.
ರಾಖಾಲ ತನ್ನ ಸಂತಾನ, ಪರಿವಾರ ಇಬ್ಬರನ್ನೂ ತ್ಯಜಿಸಿ ಬಂದಿದ್ದಾನೆ. ತೀವ್ರ ವೈರಾಗ್ಯ ಆತನ ಆಂತರ್ಯದಲ್ಲಿ ಪ್ರಜ್ವಲಿಸುತ್ತಿದೆ. ಒಬ್ಬನೇ ನರ್ಮದಾ ನದಿಯ ತೀರಕ್ಕಾಗಲಿ ಅಥವಾ ಬೇರೆಲ್ಲಿಗಾದರಾಗಲಿ ಹೊರಟುಹೋಗಬೇಕೆಂದು ಬಹಳವಾಗಿ ಯೋಚಿಸುತ್ತಿದ್ದಾನೆ. ಆದರೂ ಆತ ಪ್ರಸನ್ನನಿಗೆ ಮಠವನ್ನು ಬಿಟ್ಟುಹೋಗಬೇಡವೆಂದು ಬುದ್ಧಿವಾದ ನೀಡುತ್ತಿದ್ದಾನೆ.
ರಾಖಾಲ (ಪ್ರಸನ್ನನಿಗೆ): “ಈ ಜಾಗ ಬಿಟ್ಟು ಎಲ್ಲಿಗೆ ಓಡಿಹೋಗಬೇಕು ಅಂತ ಇದ್ದೀಯೆ? ಇಲ್ಲಿರುವ ಸಾಧುಸಂಗವನ್ನು ಬಿಟ್ಟು ಎಲ್ಲಾದರೂ ಓಡಿಹೋಗುವುದುಂಟೆ? ವಿಶೇಷತಃ ನರೇಂದ್ರನ ಸಂಗ! ಇದನ್ನು ಬಿಟ್ಟು ಎಲ್ಲಿಗೆ ಓಡಿಹೋಗುತ್ತೀಯೆ?”
ಪ್ರಸನ್ನ: “ಕಲ್ಕತ್ತದಲ್ಲಿ ತಂದೆತಾಯಿಗಳಿದ್ದಾರೆ. ಭಯವಾಗುತ್ತಿದೆ. ಅವರ ಪ್ರೇಮ ನನ್ನನ್ನು ಎಲ್ಲಿ ಅವರ ಕಡೆಗೆ ಎಳೆದುಬಿಡುತ್ತೊ ಏನೊ ಎಂಬುದಾಗಿ. ಅದಕ್ಕಾಗಿ ಒಂದು ದೂರ ದೇಶಕ್ಕೆ ಓಡಿಬಿಡೋಣ ಅಂತ ಮನಸ್ಸು ಮಾಡಿಕೊಂಡಿದ್ದೇನೆ.”
ರಾಖಾಲ: “ಗುರಮಹಾರಾಜರು ನಮ್ಮನ್ನು ಪ್ರೀತಿಸಿದಷ್ಟು ಮಟ್ಟಿಗೆ ಎಂದಿಗಾದರೂ ನಮ್ಮ ತಂದೆತಾಯಿಗಳು ನಮ್ಮನ್ನು ಪ್ರೀತಿಸಬಲ್ಲರೆ? ಪರಮಹಂಸರು ನಮ್ಮನ್ನು ಅಷ್ಟೊಂದು ಪ್ರೀತಿಸಿದರು. ನಾವು ಅವರಿಗೆ ಏನು ಕೊಟ್ಟಿರುವೆವು? ಅವರು ನಮ್ಮ ದೇಹ, ಮನಸ್ಸು, ಆತ್ಮ ಇವುಗಳ ಮಂಗಳಕ್ಕಾಗಿ ಅಷ್ಟೊಂದು ವ್ಯಸ್ತರಾಗಿದ್ದರು–ಅವರಿಂದ ಇವನ್ನೆಲ್ಲಾ ಪಡೆಯಲು ನಾವು ಅವರಿಗೆ ಏನನ್ನಾದರೂ ಮಾಡಿರುವೆವೆ?”
ಮಾಸ್ಟರ್ (ತನಗೆ ತಾನೆ): “ಆಹ, ರಾಖಾಲ ಹೇಳುವುದು ಸಂಪೂರ್ಣ ಸತ್ಯ. ಅದಕ್ಕಾಗಿಯೇ ಅಂಥವರನ್ನು ಜನ ಕರೆಯೋದು, ‘ಅಹೇತುಕಕೃಪಾಸಿಂಧು’ ಎಂಬುದಾಗಿ.”
ಪ್ರಸನ್ನ (ರಾಖಾಲನಿಗೆ): “ಇಲ್ಲಿಂದ ಹೊರಟುಹೋಗಬೇಕು ಅಂತ ನಿನಗೂ ಇಚ್ಛೆಯಾಗುತ್ತಿಲ್ಲವೇ?”
ರಾಖಾಲ: “ಹೌದು, ಕೆಲವು ದಿನಗಳನ್ನು ನರ್ಮದಾ ತೀರದಲ್ಲಿ ಕಳೆಯಬೇಕು ಎಂಬ ಚಪಲವೊಂದು ನನ್ನನ್ನು ಬಾಧಿಸುತ್ತದೆ. ಇನ್ನು ಕೆಲವು ವೇಳೆ ಭಾವಿಸುತ್ತೇನೆ: ‘ಅಂಥದೊಂದು ಜಾಗಕ್ಕೆ ಹೋಗಿ ನಿರ್ಜನ ತೋಟದಲ್ಲಿ ತಪಸ್ಸು ಮಾಡೋಣ.’ ಮೂರು ದಿನ ಪಂಚತಪ ಮಾಡೋಣ ಅಂತ ಬೇರೆ ಅನಿಸುತ್ತಿದೆ. ಆದರೆ ಗೃಹಸ್ಥರ ಮನೆ ತೋಟಗಳಿಗೆ ಹೋಗಿ ಇರಲು ಇಚ್ಛೆಯಾಗುತ್ತಿಲ್ಲ.”
ತಾರಕ ಮತ್ತು ಪ್ರಸನ್ನ “ದಾನವರ” ಕೊಠಡಿಯಲ್ಲಿ ಮಾತುಕತೆ ಆಡುತ್ತಿದ್ದಾರೆ. ತಾರಕ ತನ್ನ ತಾಯಿಯನ್ನು ಕಳೆದುಕೊಂಡಿದ್ದಾನೆ. ಆತನ ತಂದೆ ರಾಖಾಲನ ತಂದೆಯ ಹಾಗೆ ಎರಡನೆ ಸಲ ಮದುವೆಯಾಗಿದ್ದಾನೆ. ತಾರಕನಿಗೂ ವಿವಾಹವಾಗಿತ್ತು, ಆದರೆ ಆತನ ಪತ್ನಿ ಸ್ವರ್ಗಸ್ಥಳಾಗಿ ಬಿಟ್ಟಿದ್ದಾಳೆ. ಈಗ ಆತನಿಗೆ ಮಠವೇ ಮನೆಯಾಗಿದೆ. ಆತನು ಪ್ರಸನ್ನನಿಗೆ ಮಠವನ್ನು ಬಿಟ್ಟು ಹೋಗಬೇಡವೆಂದು ಬುದ್ಧಿವಾದವೀಯುತ್ತಿದ್ದಾನೆ.
ಪ್ರಸನ್ನ: “ನನ್ನಲ್ಲಿ ಜ್ಞಾನವೂ ಇಲ್ಲ, ಪ್ರೇಮವೂ ಇಲ್ಲ; ನಾನು ಯಾವುದನ್ನು ಅವಲಂಬಿಸಿಕೊಂಡು ಈ ಜಗತ್ತಿನಲ್ಲಿ ಇರಲಿ ಹೇಳು ಮತ್ತೆ?”
ತಾಕರ: “ಜ್ಞಾನವನ್ನು ಪಡೆದುಕೊಳ್ಳುವುದೇನೋ ಬಹಳ ಕಷ್ಟ. ಆದರೆ ನಿನ್ನಲ್ಲಿ ಪ್ರೇಮ ಇಲ್ಲ ಅಂತ ಹೇಗೆ ಹೇಳುತ್ತೀಯೆ?”
ಪ್ರಸನ್ನ: “ಭಗವಂತನ ಸಾಕ್ಷಾತ್ಕಾರಕ್ಕಾಗಿ ನಾನು ಇದುವರೆಗೆ ಅತ್ತಿಲ್ಲ. ಆದ್ದರಿಂದ ನನ್ನಲ್ಲಿ ಪ್ರೇಮವಿದೆ ಅಂತ ಹೇಗೆ ತಿಳಿದುಕೊಳ್ಳಲಿ? ಇದೂ ಅಲ್ಲದೆ, ಇದುವರೆಗೆ ನನಗೆ ಏನು ತಾನೆ ದೊರೆತಿದೆ?”
ತಾರಕ: “ಏಕೆ, ನೀನು ಪರಮಹಂಸರನ್ನು ದರ್ಶನಮಾಡಿದ್ದೀಯಲ್ಲ; ನಿನ್ನಲ್ಲಿ ಜ್ಞಾನವಿಲ್ಲ ಅಂತ ಏಕೆ ಹೇಳಿಕೊಳ್ಳುತ್ತಿದ್ದಿಯೆ?”
ಪ್ರಸನ್ನ: “ಯಾವುದರ ಜ್ಞಾನ ನೀನು ಹೇಳುತ್ತಿರೋದು? ಜ್ಞಾನ ಎಂದರೆ ಅರಿವು. ಯಾವುದರ ಅರಿವು? ನಿಸ್ಸಂದೇಹವಾಗಿ ಭಗವಂತನ ಅರಿವು. ಆದರೆ ನನಗೆ ಭಗವಂತನ ಇರುವಿಕೆಯಲ್ಲಿ ಸಂದೇಹ.”
ತಾರಕ: “ಹೌದು, ಅದೇನೊ ನಿಜ. ಜ್ಞಾನಿಗಳ ದೃಷ್ಟಿಯಿಂದ ಭಗವಂತ ಇಲ್ಲ.”
ಮಾಸ್ಟರ್ (ತನಗೆ ತಾನೆ): “ಆಹ! ಪರಮಹಂಸರು ಹೇಳುತ್ತಿದ್ದರು. ಯಾರು ಭಗವಂತನಿಗಾಗಿ ವ್ಯಾಕುಲರಾಗುತ್ತಾರೊ ಅವರು, ಈಗ ಪ್ರಸನ್ನನಿಗೆ ಬಂದಿದೆಯಲ್ಲ ಅವಸ್ಥೆ, ಅಂಥದರ ಮೂಲಕ ಹಾದುಹೋಗಬೇಕಾಗುತ್ತದೆ ಎಂಬುದಾಗಿ. ಆ ಅವಸ್ಥೆಯಲ್ಲಿ ಒಮ್ಮೊಮ್ಮೆ ಭಗವಂತನ ಇರುವಿಕೆಯಲ್ಲೇ ಸಂದೇಹ ಬಂದುಬಿಡುತ್ತದೆ. ಬಹುಶಃ ತಾರಕ ಈಗ ಬೌದ್ಧ ಮತದ ಶಾಸ್ತ್ರಗಳನ್ನು ಓದುತ್ತಿರಬೇಕು. ಅದಕ್ಕಾಗೇ ಆತ ಜ್ಞಾನಿಯ ದೃಷ್ಟಿಯಿಂದ ಭಗವಂತ ಗಿಗವಂತ ಯಾಯಾರೂ ಇಲ್ಲ ಅಂತ ಹೇಳಿದ್ದು. ಆದರೆ ಪರಮಹಂಸರು ಹೇಳುತ್ತಿದ್ದರು, ಜ್ಞಾನಿ ಮತ್ತು ಭಕ್ತ ಇಬ್ಬರೂ ಕೊನೆಗೆ ಒಂದೇ ಗುರಿಯನ್ನು ತಲುಪುವರು ಎಂಬುದಾಗಿ.”
ನರೇಂದ್ರ ಮತ್ತು ಪ್ರಸನ್ನ ಧ್ಯಾನದ ಕೊಠಡಿಯಲ್ಲಿ ಎಂದರೆ, ಕಾಳಿಯ ಕೊಠಡಿಯಲ್ಲಿ ಮಾತುಕತೆ ಆಡುತ್ತಿದ್ದಾರೆ. ಆ ಕೊಠಡಿಯ ಒಂದು ಭಾಗದಲ್ಲಿ ರಾಖಾಲ, ಹರೀಶ, ಚಿಕ್ಕ ಗೋಪಾಲ ಇವರು ಕುಳಿತಿದ್ದಾರೆ. ಸ್ವಲ್ಪ ಹೊತ್ತಾದ ನಂತರ ಅಲ್ಲಿಗೆ ಹಿರಿಯ ಗೋಪಾಲ ಬಂದ.
ನರೇಂದ್ರ ಗೀತೆಯನ್ನು ಓದುತ್ತ ೧೮ನೇ ಅಧ್ಯಾಯದ ಕೆಲವು ಶ್ಲೋಕಗಳನ್ನು ವಿವರಿಸಿ ಹೇಳುತ್ತಿದ್ದಾನೆ:
ಈಶ್ವರಃ ಸರ್ವಭೂತಾನಾಂ ಹೃದ್ದೇಶೇರ್ಠ್ಜುನ ತಿಷ್ಠತಿ ।
ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ ॥ ೬೧ ॥
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ ।
ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ॥ ೬೨ ॥
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ । ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ॥ ೬೬ ॥
ನರೇಂದ್ರ: “ಶ್ರೀಕೃಷ್ಣ, ‘ಯಂತ್ರಾರೂಢಾನಿ’ ಅಂತ ಹೇಳಿರುವುದನ್ನು ನೀನು ನೋಡಿದೆಯಾ? ಭಗವಂತ ತನ್ನ ಮಹಾಶಕ್ತಿಯಿಂದ ಈ ಜಗತ್ತಿನ ಸರ್ವಭೂತಗಳನ್ನೂ ಯಂತ್ರದ ಮೇಲೆ ಇಟ್ಟು ಸುತ್ತಿಸುತ್ತಿರುವನೊ ಏನೊ ಎಂಬಂತೆ ಸುತ್ತಿಸುತ್ತಿದ್ದಾನೆ. ಭಗವಂತನನ್ನು ಅರಿತುಕೊಳ್ಳಲು ಇಚ್ಛಿಸುವುದು! ಕ್ರಿಮಿಕೀಟಗಳಲ್ಲಿ ನೀನೊಂದು ಕ್ರಿಮಿ-ಅಂತಹ ನೀನು ಆತನನ್ನು ಅರಿತುಕೊಳ್ಳುವುದು! ಮನುಷ್ಯ ಏನು ಎಂಬುದನ್ನು ಸ್ವಲ್ಪ ಆಲೋಚಿಸಿ ನೋಡು. ನೋಡು, ಆಕಾಶದಲ್ಲಿ ಕಾಣುತ್ತವೆಯಲ್ಲ ಈ ಅಸಂಖ್ಯ ನಕ್ಷತ್ರಗಳು ಅವು ಒಂದೊಂದು ಒಂದು ಸೌರವ್ಯೂಹವಂತೆ. ನಮ್ಮ ಈ ಭೂಮಿ ಕೇವಲ ಒಂದೇ ಒಂದು ಕಿಂಚಿತ್ ಭಾಗ ಮಾತ್ರ. ಇದೇ ನಮಗೆ ಅತಿ ದೊಡ್ಡದಾಗಿ ಕಾಣುತ್ತಿದೆ. ಈ ಭೂಮಿಯನ್ನು ಸೂರ್ಯನಿಗೆ ಹೋಲಿಸಿ ನೋಡಿದರೆ ಒಂದು ಚಿಕ್ಕ ಚೆಂಡಿನ ಗಾತ್ರದ್ದೂ ಅಲ್ಲ. ಇಂಥಾ ಭೂಮಿಯ ಮೇಲೆ ಮನುಷ್ಯ ಒಂದು ಕೀಟವೊ ಏನೊ ಎಂಬಂತೆ ಚಲನವಲನ ಮಾಡುತ್ತಿದ್ದಾನೆ.”
ನರೇಂದ್ರ ಹಾಡುತ್ತಿದ್ದಾನೆ:
ಈ ಮರ್ತ್ಯಧೂಳಿಯಲಿ ಹುಟ್ಟಿ ಬೆಳೆದೆವು ನಾವು
ಈ ಧೂಳಿಯಲಿ ದೃಷ್ಟಿ ಕುರುಡಾಯಿತು.
ಈ ಮಣ್ಣಿನಲಿ ನಾವು ಮಕ್ಕಳಂತಾಡಿಹೆವು
ಅಭಯವನು ನೀಡಯ್ಯ ದಿವ್ಯಗುರುವೆ.
ನಮ್ಮ ಏನೋ ಒಂದು ಅಲ್ಪ ತಪ್ಪಿಗೆ ನೀನು
ನಿನ್ನ ತೊಡೆಯಿಂದಾಚೆ ನೂಕಲಿಹೆಯಾ?
ನೀನೆ ನಮ್ಮನು ತಳ್ಳಿ, ಅನಾಥರಂದದಿ ನಮ್ಮ
ತೊಳಲಿಸುವೆಯಾ?
ಓವೊ ಪ್ರಭು, ನೀನಂತೆ ಗೈಯ್ಯಬೇಡ
ಮತ್ತೆಂದು ಮೇಲೇಳದಂಥ ನರಕದಿ ನಮ್ಮ
ನೂಕಬೇಡ.
ನಿನ್ನೆದುರು ನಾವೆಲ್ಲ ಬರಿಯ ಹಸುಳೆಗಳಯ್ಯ
ಹೆಜ್ಜೆಹೆಜ್ಜೆಗು ಎಡವಿ ಬೀಳುತಿಹೆವು!
ಇದನರಿತರೂ ನೀನು ರುದ್ರಮುಖ ಭ್ರುಕುಟಿಯೊಳು
ನಮ್ಮನೇತಕೆ ಇಂತು ನಡುಗಿಸಿರುವೆ?
ನಾವು ಅಲ್ಪರು ಗುರುವೆ-ಸಿಟ್ಟಾಗದಿರು ನಮಗೆ.
ಅಪರಾಧವೆಸಗದಿರು, ಮೃದುನುಡಿಯೊಳೆಮ್ಮೊಡನೆ
ಮಾತನಾಡು.
ನೂರು ಸಲ ನೀನೆತ್ತಿ ನಿಲ್ಲಿಸಿದರೂ ಕೂಡ
ನೂರು ಸಲ ಬೀಳುವುದು ನಮ್ಮ ಪಾಡು,
ಇಂಥ ದುರ್ಬಲ ಮತಿಯ ಕರುಣದಲೆ ನೋಡು!
ಬಳಿಕ ನರೇಂದ್ರ ಪ್ರಸನ್ನನಿಗೆ ಹೇಳಿದ: “ಆತನ ಪಾದಪದ್ಮಗಳಲ್ಲಿ ಶರಣಾಗತನಾಗು; ಇಚ್ಛೆಯಿದ್ದಂತಾಗಲಿ ಎಂದು ಆತನಿಗೆ ಆತ್ಮಸಮರ್ಪಣೆ ಮಾಡಿಬಿಡು.”
ಈಗ ನರೇಂದ್ರ ಭಾವಾವೇಶನಾಗಿ ಹಾಡಲಾರಂಭಿಸಿದ್ದಾನೆ:
ನಾ ನಿನ್ನ ಕಿಂಕರನು, ನಾ ನಿನ್ನ ಕಿಂಕರನು,
ನಾ ನಿನ್ನ ಕಿಂಕರನು ನನ್ನ ಪ್ರಭುವೇ.
ನೀನೆನ್ನ ಪ್ರಭುದೇವ, ನೀನೆನ್ನ ಪ್ರಭುದೇವ,
ನೀನೆನ್ನ ಪ್ರಭುದೇವ ನನ್ನ ದೊರೆಯೇ.
ನಾನು ಹೊದೆದೀ ತುಂಡು ಕಾವಿಯರಿವೆಯ ನೀನು
ಕೊಟ್ಟಿರುವೆ ನನಗೆ!
ನಿನ್ನ ನಾಮವ ನುತಿಸಲೆನ್ನ ಎದೆಯೊಳು ಭಕ್ತಿ
ಹೊಮ್ಮಿ ಕಾಪಾಡುವುದು ಎಡರಿನೊಳಗೆ!
ನೀನೆನ್ನ ಪ್ರಭುದೇವ ಪರಮಕರುಣಾಮಯನು
ಈ ಕಬೀರನು ನಿನಗೆ ಶರಣೆನುವನು!
ನರೇಂದ್ರ ಪ್ರಸನ್ನನಿಗೆ ಹೇಳಿದ: “ ‘ಭಗವಂತ ಒಂದು ಸಕ್ಕರೆಯ ಬೆಟ್ಟ, ನೀನು ಕೇವಲ ಒಂದು ಪುಟ್ಟ ಇರುವೆ. ನಿನ್ನ ಹೊಟ್ಟೆ ತುಂಬಲು ಸಕ್ಕರೆಯ ಒಂದು ಕಣವೇ ಸಾಕು; ಆದರೂ ನೀನು ಆ ಸಕ್ಕರೆಯ ಬೆಟ್ಟವನ್ನೇ ಗೂಡಿಗೆ ಹೊತ್ತು ತರಬೇಕು ಅಂತ ಭಾವಿಸುತ್ತಿದ್ದೀಯೆ!’ ಎಂಬುದಾಗಿ ಪರಮಹಂಸರು ಹೇಳಿರುವುದು ನಿನ್ನ ಜ್ಞಾಪಕದಲ್ಲಿಲ್ಲವೇನು? ಶುಕದೇವನ ಸಂಬಂಧವಾಗಿ ಪರಮಹಂಸರು ಹೇಳಿದ್ದು ನಿನ್ನ ಸ್ಮೃತಿಯಲ್ಲಿಲ್ಲವೇನು? ಶುಕದೇವ ಅತಿ ಹೆಚ್ಚೆಂದರೆ ಒಂದು ದೊಡ್ಡ ಇರುವೆ ಮಾತ್ರ. ಅದಕ್ಕಾಗೇ ನಾನು ಗದರಿಸೋದು: ‘ಎಲಾ ತಿಳಿಗೇಡಿ! ನಿನ್ನ ಟೇಪು, ಗಜಕಡ್ಡಿ ಇವುಗಳಿಂದ ಭಗವಂತನನ್ನು ಅಳೆಯಲು ಹೋಗುತ್ತೀಯಾ?’
“ಭಗವಂತ ದಯಾಸಿಂಧು. ಆತನ ಸೇವಕನಾಗಿ ಆತನಲ್ಲಿ ಶರಣಾಗತಿಯನ್ನು ಹೊಂದು. ಆತ ನಿನಗೆ ಕೃಪೆ ಮಾಡುತ್ತಾನೆ. ಆತನಿಗೆ ಪ್ರಾರ್ಥನೆ ಮಾಡು:
ಯತ್ತೇ ದಕ್ಷಿಣಂ ಮುಖಮ್ ।
ತೇನ ಮಾಂ ಪಾಹಿ ನಿತ್ಯಮ್ ॥
ಓಂ ಅಸತೋ ಮಾ ಸದ್ಗಮಯ ।
ತಮಸೋ ಮಾ ಜ್ಯೋತಿರ್ಗಮಯ ।
ಮೃತ್ಯೋರ್ಮಾಠ್ಮೃತಂ ಗಮಯ ॥
ಆವಿರಾವಿರ್ಮ ವಿಧಿ ।
ರುದ್ರ ಯತ್ತೇ ದಕ್ಷಿಣಂ ಮುಖಮ್ ।
ತೇನ ಮಾಂ ಪಾಹಿ ನಿತ್ಯಮ್ ॥”
ಪ್ರಸನ್ನ: “ಯಾವ ವಿಧವಾದ ಸಾಧನೆಯನ್ನು ಮಾಡಬೇಕು?”
ನರೇಂದ್ರ: “ಕೇವಲ ಭಗವಂತನ ನಾಮಜಪ ಮಾಡು. ಅದೇ ಯಥೇಷ್ಟ, ಪರಮ ಹಂಸರು ಹಾಡುತ್ತಿದ್ದ ಹಾಡು ನಿನ್ನ ಜ್ಞಾಪಕದಲ್ಲಿ ಇಲ್ಲವೇನು?”
ನರೇಂದ್ರ ಹಾಡುತ್ತಿದ್ದಾನೆ:
ಓ ನನ್ನ ಘನಶ್ಯಾಮೆ ನಿನ್ನ ನಾಮವೆ ನನಗೆ
ಭರವಸೆಯ ಸೂತ್ರ.
ಗಂಟೆಜಾಗಟೆಯೇಕೆ? ಮತ್ತೆ ಬೇಕೇ ನನಗೆ
ಸಂಪ್ರದಾಯದ ಬಿರುದು ಮಂತ್ರ-ಗಿಂತ್ರ?
ನಿನ್ನ ತಾರಕ ನಾಮ ಮೃತ್ಯುವನೆ ಜಯಿಸುವುದು-
ಎಂದು ಆ ಪರಶಿವನೆ ಘೋಷಿಸಿಹನು!
ನಾನು ಶಿವಕಿಂಕರನು ಮೃತ್ಯು ಅಲ್ಪವೊ ನನಗೆ
ಏನ ಬಂದರು ನಿನ್ನ ದಿವ್ಯ ಶುಭನಾಮವನು
ಶಿವನ ವಚನವ ನಂಬಿ ಹಿಡಿದುಕೊಂಡವಗೆ!
ಆತ ಮತ್ತೆ ಹಾಡಿದ:
ನಿನ್ನೆದುರು ನಾವೆಲ್ಲ ಬರಿಯ ಹಸುಳೆಗಳಯ್ಯ
ಹೆಜ್ಜೆಹೆಜ್ಜೆಗು ಎಡವಿ ಬೀಳುತಿಹೆವು!
ಇದನರಿತರೂ ನೀನು ರುದ್ರಮುಖ ಭ್ರುಕುಟಿಯೊಳು
ನಮ್ಮನೇತಕೆ ಇಂತು ನಡುಗಿಸಿರುವೆ?
ಪ್ರಸನ್ನ: “ಈಗ ನೀನು ಹೇಳುತ್ತಾ ಇದ್ದೀಯೆ ಭಗವಂತನಿದ್ದಾನೆ, ಎಂಬುದಾಗಿ ಮತ್ತೆ ಹೇಳೋನು ನೀನೆ, ಚಾರ್ವಾಕರ ಮತ್ತು ಉಳಿದ ಇನ್ನೂ ಕೆಲವರ ದೃಷ್ಟಿಯಿಂದ ಈ ಜಗತ್ತು ಸ್ವಕೃತವಾದ್ದು ಎಂಬುದಾಗಿ!”
ನರೇಂದ್ರ: “ನೀನು ರಸಾಯನಶಾಸ್ತ್ರವನ್ನು ಓದಿಲ್ಲವೇನು? ವಿವಿಧ ಮೂಲಧಾತು ಗಳನ್ನು ಒಟ್ಟುಗೂಡಿಸುವವರಾರು? ನೀರನ್ನು ತಯಾರಿಸಲು ಜಲಜನಕ, ಆಮ್ಲಜನಕ, ವಿದ್ಯುತ್ ಇವನ್ನು ಸಂಯೋಜಿಸುವುದು ಮನುಷ್ಯನ ಕೈಕೆಲಸವೆ? ಜ್ಞಾನಪೂರ್ವಕವಾದ ಒಂದು ಶಕ್ತಿ ಈ ಜಗತ್ತಿನ ವ್ಯಾಪಾರವನ್ನು ನಡೆಯಿಸಿಕೊಂಡು ಹೋಗುತ್ತಿರುವುದು ಎಂಬುದಾಗಿ ಒಪ್ಪಿಕೊಳ್ಳುತ್ತಿದ್ದಾರೆ.”
ಪ್ರಸನ್ನ: “ಭಗವಂತ ದಯಾಮಯ ಎಂಬುದಾಗಿ ನಾವು ಅರಿತುಕೊಳ್ಳುವ ಬಗೆ ಹೇಗೆ?”
ನರೇಂದ್ರ: “ವೇದದಲ್ಲಿ ‘ಯತ್ತೇ ದಕ್ಷಿಣಂ ಮುಖಮ್ ॥’ ಎಂಬುದಾಗಿ ಹೇಳಿದೆ. ಜಾನ್ ಸ್ಟೂಯರ್ಟ್ ಮಿಲ್ಲನೂ ಹೀಗೆ ಹೇಳಿದ್ದಾನೆ. ಆತ ಹೇಳಿದ್ದಾನೆ: ‘ಯಾರು ಮಾನವನ ಹೃದಯದಲ್ಲಿ ದಯೆ ಎಂಬುದನ್ನು ನೆಟ್ಟಿರುವನೊ, ಆತ ಇನ್ನೆಷ್ಟು ದಯಾಮಯನಾಗಿ ಇರಬೇಕು!’ ಪರಮಹಂಸರು ಹೇಳುತ್ತಿದ್ದರು: ‘ಅತ್ಯಾವಶ್ಯಕವಾದ್ದು ವಿಶ್ವಾಸ. ಭಗವಂತ ನಮ್ಮ ಹತ್ತಿರವೇ ಇದ್ದಾನೆ. ವಿಶ್ವಾಸ ಉಂಟಾದೊಡನೆಯೆ ಆತನ ದರ್ಶನ ದೊರೆತುಬಿಡುತ್ತದೆ.”’
ನರೇಂದ್ರ ಈಗ ತನ್ನ ಸುಮಧುರ ಕಂಠದಿಂದ ಹಾಡಲಾರಂಭಿಸಿದ್ದಾನೆ:
ಎಲ್ಲಿ ಅರಸುವೆ ನನ್ನ, ಓ ನನ್ನ ಕಿಂಕರನೆ
ನಿನ್ನ ಬಳಿಯೇ ನಾನು ವ್ಯಾಪಿಸಿರುವೆ!
ನಾನು ನಿನ್ನೊಂದಿಗೇ ಇದ್ದರೂ ನನಗಾಗಿ
ಎಲ್ಲೊ ದೂರದಿ ಹುಡುಕಿ ಬಳಲುತಿರುವೆ!
ನಾನು ಚರ್ಮದೊಳಿಲ್ಲ, ವೈರಾಗ್ಯದೊಳಗೂ ಇಲ್ಲ,
ಅಸ್ಥಿಯಲೊ ಮಾಂಸದಲೊ ಹುದುಗಿಕೊಂಡಿಲ್ಲ.
ಗುಡಿ ಮಸೀದಿಯೊಳಿಲ್ಲ, ಕಾಶಿ ಕೈಲಾಸದಲೊ,
ದ್ವಾರಕೆ ಅಯೋಧ್ಯೆಯೊಳು, ದೊರೆವನಲ್ಲ!
ಸಂನ್ಯಾಸದೊಳಗಿಲ್ಲ, ವೈರಾಗ್ಯದೊಳಗಿಲ್ಲ,
ಯೋಗಾದಿ ಸಿದ್ಧಿಗೂ ದೂರ ನಾನು.
ಶ್ರದ್ಧೆ ಎಲ್ಲಿರುವುದೋ ಅಲ್ಲಿ ದೊರೆಯುವೆ ನಾನು,
ನನಗಾಗಿ ಹುಡುಕಿದರೆ ದೊರೆವೆ ನಾನು!
ಪ್ರಸನ್ನ: “ಕೆಲಕೆಲವು ವೇಳೆ ನೀನು ಭಗವಂತ ಇಲ್ಲ ಅಂತ ಹೇಳುತ್ತೀಯೆ; ಆದರೆ ಈಗ ನೋಡಿದರೆ ಹೀಗೆಲ್ಲಾ ಹೇಳುತ್ತಿದ್ದೀಯೆ! ನಿನ್ನ ಮಾತಿನಲ್ಲಿ ಒಂದು ಸ್ತಿಮಿತ ಎಂಬುದು ಇಲ್ಲ. ನೀನು ಬಹುಮಟ್ಟಿಗೆ ನಿನ್ನ ಅಭಿಪ್ರಾಯಗಳನ್ನು ಬದಲಾಯಿಸುತ್ತಲೇ ಇರುತ್ತೀಯೆ.”
ಎಲ್ಲರೂ ನಗುತ್ತಾರೆ.
ನರೇಂದ್ರ: “ಒಳ್ಳೇದು! ಈಗ ನಾನು ಆಡಿದ ಮಾತುಗಳನ್ನು ಎಂದಿಗೂ ಬದಲಾಯಿಸೋದಿಲ್ಲ. ಎಲ್ಲಿಯವರೆಗೆ ಕಾಮನೆ, ವಾಸನೆ ಇರುವುವೋ ಅಲ್ಲಿಯವರೆಗೆ ಭಗವಂತನಲ್ಲಿ ಅವಿಶ್ವಾಸ ಇದ್ದೇ ಇರುತ್ತದೆ. ವ್ಯಕ್ತಿಗೆ ಒಂದಲ್ಲ ಒಂದು ಕಾಮನೆ ಇದ್ದೇ ಇರುತ್ತದೆ–ಎಂದರೆ ಓದಿ ಏನೇನೊ ಡಿಗ್ರಿಗಳನ್ನು ಪಾಸು ಮಾಡೋದು, ಪಾಂಡಿತ್ಯ ಪಡೆಯೋದು ಇವೇ ಮೊದಲಾದುವು.”
ನರೇಂದ್ರ ಭಾವಾವೇಶನಾಗಿ ಗದ್ಗದ ಕಂಠದಿಂದ ಹಾಡಲಾರಂಭಿಸಿದ್ದಾನೆ:
ಜಯ ದೇವ ಜಯ ದೇವ ಮಂಗಳದಾತಾ, ಜಯ ಜಯ ಮಂಗಳದಾತಾ ।
ಸಂಕಟಭಯದುಃಖತ್ರಾತಾ ವಿಶ್ವಭುವನ ಪಾತಾ, ಜಯ ದೇವ ಜಯ ದೇವ ॥
ಅಚಿಂತ್ಯ ಅನಂತ ಅಪಾರ, ನಾಹಿ ತವ ಉಪಮಾ ಪ್ರಭು, ನಾಹಿ ತವ ಉಪಮಾ ।
ಪ್ರಭು ವಿಶ್ವೇಶ್ವರ ವ್ಯಾಪಕ ವಿಭು ಚಿನ್ಮಯ ಪರಮಾತ್ಮಾ. ಜಯ ದೇವ ಜಯ ದೇವ ॥
ಜಯ ಜಗವಂದ್ಯ ದಯಾಳು ಪ್ರಣಾಮ ತವಚರಣೇ, ಪ್ರಭು ಪ್ರಣಾಮ ತವ ಚರಣೇ ।
ಪರಮಶರಣ ತುಮಿ ಹೇ, ಜೀವನೇ ಮರಣೇ, ಜಯ ದೇವ ಜಯ ದೇವ ॥
ಕಿ ಆರ್ ಯಾಚಿಬೊ ಅಮರಾ ಕೊರಿ ಹೇ ಏ ಮಿನತಿ, ಪ್ರಭು ಕೊರಿ ಹೇ ಮಿನತಿ ।
ಏ ಲೋಕೇ ಸುಮತಿ ದೇವೋ, ಪರಲೋಕೇ ಸುಗತಿ, ಜಯ ದೇವ ಜಯ ದೇವ ॥
ನರೇಂದ್ರ ಭಗವಂತ ನಮಗೆ ಎಷ್ಟು ಹತ್ತಿರದಲ್ಲಿ–ಕಸ್ತೂರಿ, ಕಸ್ತೂರಿಮೃಗಕ್ಕೆ ಎಷ್ಟು ಹತ್ತಿರದಲ್ಲಿರುವುದೋ ಅಷ್ಟು ಹತ್ತಿರದಲ್ಲಿ–ಇದ್ದಾನೆ ಎಂಬುದನ್ನು ವರ್ಣಿಸುವ ಮತ್ತು ಹರಿನಾಮ ಮದಿರೆಯನ್ನು ಕುಡಿಯುವಂತೆ ತನ್ನ ಸೋದರರನ್ನು ಪ್ರೇರೇಪಿಸುವ ಒಂದು ಹಾಡನ್ನು ಹಾಡಿದ:
ಓ ಸಾಧೂ–
ಪ್ರೇಮಪಾತ್ರೆಯನು ಈಗಾದರು ತುಟಿಗಿಡು
ಹರಿನಾಮದ ಸುಧೆ ಹೀರು,
ಆನಂದದಿ ಕರಗು!
ಬಾಲ್ಯವ ನೂಕಿದೆ ಆಟಪಾಟವಿನೋದ ಸಂಭ್ರಮದಿ,
ಯೌವನವೂ ಜಾರಿತು ಕಾಮಿನಿಯರ ಸಹವಾಸದಲಿ,
ಇದೋ ಬಂದಿತು ಮುಪ್ಪು; ರೋಗರುಜಿನ ತಾಪತ್ರಯದಿ
ಮಸಣದ ಸೂಡನು ಕಾಯುತ ಕುಳಿತಿಹೆ
ಬಾಳಿನ ತುದಿಯಲಿ!
ಮೃಗದ ನಾಭಿಯಲಿ ಕತ್ತುರಿಯಿದ್ದರು
ಅದು ತಿಳಿಯದು ಅದನೊರೆವವರಾರು?
ಸದ್ಗುರುವಿನ ನಿರ್ದೇಶನವಿಲ್ಲದೆ,
ಕಾನನವಲೆಯುವ ಮೃಗದಂತೀ
ಮಾನವನಿಹನು!
ಮಾಸ್ಟರ್ ವರಾಂಡದಿಂದಲೆ ಇದೆಲ್ಲವನ್ನೂ ಕೇಳುತ್ತಿದ್ದಾನೆ.
ನರೇಂದ್ರ ಮೇಲಕ್ಕೆ ಎದ್ದ. ಆತ ಕೊಠಡಿಯಿಂದ ಹೊರಕ್ಕೆ ಬರುತ್ತ ಹೇಳುತ್ತಿದ್ದಾನೆ: “ಈ ಸೋದರರಿಗೆಲ್ಲಾ ಬುದ್ಧಿವಾದ ಹೇಳಿ ಹೇಳಿ ನನ್ನ ಮೆದುಳು ಕಾದುಹೋಗಿಬಿಟ್ಟಿದೆ.”
ನರೇಂದ್ರ ಮಾಸ್ಟರನ್ನು ವರಾಂಡದಲ್ಲಿ ಕಂಡು ಆತನಿಗೆ ಹೇಳಿದ: “ಕುಡಿಯೋ ನೀರು ಬೇಕಲ್ಲ.”
ಮಠದ ಸೋದರನೊಬ್ಬ ನರೇಂದ್ರನಿಗೆ: ‘ಆದರೆ, ಭಗವಂತ ಇಲ್ಲ ಅಂತ ಏಕೆ ಹೇಳುತ್ತೀಯೆ?”
ನರೇಂದ್ರ ನಕ್ಕ.
೯ನೆ ಮೇ ೧೮೮೭ ಸೋಮವಾರ
ಮಾಸ್ಟರ್ ಪ್ರಾತಃಕಾಲವೇ ಎದ್ದು ಮಠದ ತೋಟದಲ್ಲಿ ಒಂದು ಮರದ ಕೆಳಗೆ ಒಬ್ಬನೇ ಕುಳಿತಿದ್ದಾನೆ. ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೆ: “ಪರಮಹಂಸರು ಕಾಮ ಕಾಂಚನವನ್ನು ತ್ಯಾಗಮಾಡುವಂತೆ ಈ ಮಠದ ಸೋದರರನ್ನು ಪ್ರೇರೇಪಿಸಿ ಜಯಶೀಲರಾದರು. ಅಹ! ಇವರು ಭಗವಂತನ ಸಾಕ್ಷಾತ್ಕಾರಕ್ಕಾಗಿ ಎಷ್ಟೊಂದು ವ್ಯಾಕುಲರಾಗಿದ್ದಾರೆ. ಈ ಸ್ಥಾನ ವೈಕುಂಠವಿದ್ದ ಹಾಗೇ ಇದೆಯಲ್ಲ! ಮಠದ ಪ್ರತಿಯೊಬ್ಬ ಸೋದರನೂ ಸಾಕ್ಷಾತ್ ನಾರಾಯಣನೇ ಏನೊ ಎಂಬಂತೆ ತೋರುತ್ತಿದ್ದಾನಲ್ಲ! ಪರಮಹಂಸರು ಮಹಾಸಮಾಧಿಯನ್ನು ಹೊಂದಿ ಹೆಚ್ಚು ದಿನಗಳೇನಾಗಿಲ್ಲ; ಅದಕ್ಕಾಗೇ ಅವರ ಉಪದೇಶ ಇವರ ಹೃದಯದಲ್ಲಿ ಅಚ್ಚಳಿಯದೆ ಉಳಿದುಕೊಂಡಿವೆ. ‘ಅಯೋಧ್ಯೆ ಹಿಂದಿನದೇ–ಕೇವಲ ರಾಮ ಮಾತ್ರ ಇಲ್ಲ.’ ಈ ಯುವಕರು ಗೃಹವನ್ನು ತ್ಯಜಿಸಿ ಬರುವಂತೇನೊ ಪರಮಹಂಸರು ಮಾಡಿದರು. ಆದರೆ ಇನ್ನು ಕೆಲವರನ್ನು ಗೃಹದಲ್ಲೇ ಉಳಿಸಿಬಿಟ್ಟಿದ್ದಾರಲ್ಲ ಏಕೆ? ಅವರಿಗೆ ಬೇರೆ ಉಪಾಯವೇ ಇಲ್ಲವೇನು?”
ಮಾಸ್ಟರ್ ಏಕಾಕಿಯಾಗಿ ಮರದ ಕೆಳಗೆ ಕುಳಿತಿರುವುದನ್ನು ನರೇಂದ್ರ ಎರಡನೆ ಅಂತಸ್ತಿನಿಂದ ನೋಡಿದ. ಆತ ಇಳಿದು ಬಂದು ನಗುತ್ತ ಮಾಸ್ಟರಿಗೆ ಹೇಳುತ್ತಿದ್ದಾನೆ: “ಏನು ಮಾಸ್ಟರ್ ಮಹಾಶಯ! ಏನು ನಡೆಯುತ್ತಾ ಇದೆ ಇಲ್ಲಿ?”
ಇಬ್ಬರು ಸ್ವಲ್ಪ ಹೊತ್ತು ಮಾತುಕತೆಗಳಾಡಿದ ನಂತರ ಮಾಸ್ಟರ್ ನರೇಂದ್ರನಿಗೆ ಹೇಳಿದ: “ಆಹ, ನಿನ್ನ ಕಂಠ ಎಷ್ಟು ಮಧುರವಾದ್ದು! ಯಾವುದಾದರೂ ಒಂದು ಸ್ತೋತ್ರವನ್ನು ಹಾಡು.”
ನರೇಂದ್ರ ಈಗ ಶಿವಾಪರಾಧ ಕ್ಷಮಾಪಣಸ್ತೋತ್ರವನ್ನು ಹಾಡುತ್ತಾನೆ.
ಸ್ತೋತ್ರಪಠನೆ ಮುಗಿಯಿತು. ಮತ್ತೆ ನರೇಂದ್ರ ಮಾಸ್ಟರೊಡನೆ ಮಾತುಕತೆಯಾಡಲು ಆರಂಭಿಸಿದ.
ನರೇಂದ್ರ: “ಮನುಷ್ಯ ಸಂಸಾರದಲ್ಲಿ ನಿರ್ಲಿಪ್ತನಾಗಿರಲಿ ಅಥವಾ ಇನ್ನೇನು ಬೇಕಾದರೂ ಆಗಿರಲಿ, ಕಾಮಕಾಂಚನವನ್ನು ತ್ಯಜಿಸದ ಹೊರತು ಆತನಿಗೆ ಭಗವಂತನ ಸಾಕ್ಷಾತ್ಕಾರ ದೊರೆಯದು. ಹೆಂಗಸಿನೊಡನೆ ಸಹವಾಸಮಾಡಲು ಅಸಹ್ಯ ತೋರುವುದಿಲ್ಲವೆ?
ಅಮೇಧ್ಯಪೂರ್ಣೇ ಕ್ರಿಮಿಜಾಲಸಂಕುಲೇ
ಸ್ವಭಾವದುರ್ಗಂಧ ನಿರಂತಕಾಂತರೇ ।
ಕಲೇಬರೇ ಮೂತ್ರಪುರೀಷಭಾವಿತೇ
ರಮಂತಿ ಮೂಢಾ, ವಿರಮಂತಿ ಪಂಡಿತಾಃ ॥
“ವೇದಾಂತ ಉಪದೇಶಗಳಲ್ಲಿ ಯಾರಿಗೆ ಅಭಿರುಚಿ ಇಲ್ಲವೊ, ಯಾರು ಹರಿರಸ ಮದಿರೆಯನ್ನು ಪಾನ ಮಾಡರೊ ಅವರ ಜೀವನ ಬರಿದೆ ವ್ಯರ್ಥ.
ಓಂಕಾರಮೂಲಂ ಪರಮಂ ಪದಾಂತರಂ
ಗಾಯತ್ರೀ ಸಾವಿತ್ರೀ ಸುಭಾಷಿತಾಂತರಮ್ ।
ವೇದಾಂತರಂ ಯಂ ಪುರುಷೋ ನ ಸೇವತೇ
ವೃಥಾಂತರಂ ತಸ್ಯ ನರಸ್ಯ ಜೀವನಮ್ ॥
“ಒಂದು ಹಾಡನ್ನು ಕೇಳಿ.”
ನರೇಂದ್ರ ಹಾಡುತ್ತಿದ್ದಾನೆ:
ಕತ್ತರಿಸು ಮೋಹವನು, ದುರ್ಮಂತ್ರಗಳ ದೂಡು;
ಅವನ ಇರವನು ಅರಿತು ಬಿಡುತೆಯನು ಗಳಿಸು.
ನಾಲ್ಕು ದಿನಗಳ ಸುಖಕೆ ಪ್ರಾಣಸಖನನು ಮರೆತೆ!
ಏನೀ ವಿಡಂಬನೆಯು? ಅವನೊಲವ ಬೆಳಸು.
ಮತ್ತೆ ನರೇಂದ್ರ ಹೇಳುತ್ತಿದ್ದಾನೆ: “ಸಂನ್ಯಾಸಿಯ ಕೌಪೀನ-ಜೀವನವನ್ನು ಕೈಗೊಳ್ಳದೇ ಇದ್ದರೆ ಮನುಷ್ಯನಿಗೆ ಮುಕ್ತಿ ದೊರಕದು. ಸಂಸಾರವನ್ನು ತ್ಯಜಿಸಲೇಬೇಕು.”
ಈಗ ನರೇಂದ್ರನು ಶ್ರೀಶಂಕರಾಚಾರ್ಯ ವಿರಚಿತ ಕೌಪೀನಪಂಚಕವನ್ನು ಸ್ವರದಿಂದ ಹಾಡುತ್ತಿದ್ದಾನೆ.
ನರೇಂದ್ರ ಮತ್ತೆ ಮಾತು ಮುಂದುವರಿಸುತ್ತ ಹೇಳಿದ: “ಮನುಷ್ಯ ಏಕೆ ಸಂಸಾರದಲ್ಲಿ ಬದ್ಧನಾಗಬೇಕು? ಏಕೆ ಆತ ಮಾಯಾಬಲೆಗೆ ಸಿಕ್ಕಿಬೀಳಬೇಕು? ಮನುಷ್ಯನ ನಿಜಸ್ವರೂಪವೇನು? ‘ಚಿದಾನಂದರೂಪ ‘ಶಿವೋಠ್ಹಮ್ ॥ ಣಿ’ ನಾನೇ ಆ ಸಚ್ಚಿದಾನಂದ.”
ನರೇಂದ್ರ ಶ್ರೀಶಂಕರಾಚಾರ್ಯ ವಿರಚಿತ ನಿರ್ವಾಣಷಟ್ಕವನ್ನು ಸ್ವರದಿಂದ ಹಾಡಿದ. ಅನಂತರ ಮಧುಸೂದನ ಸ್ತೋತ್ರವನ್ನು ಹಾಡಿದ.
ಮಾಸ್ಟರ್ ನರೇಂದ್ರ ಹಾಡಿದ ಈ ಶ್ಲೋಕಗಳನ್ನು ಕೇಳಿ ಮಂತ್ರಮುಗ್ಧನಾಗಿ ಬಿಟ್ಟಿದ್ದಾನೆ. ಆತ ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೆ: “ನರೇಂದ್ರನದು ಎಂಥ ತೀವ್ರ ವೈರಾಗ್ಯ! ಈ ಕಾರಣದಿಂದಲೇ ಮಠದ ಸೋದರರೆಲ್ಲರಿಗೂ ಈತನ ಅವಸ್ಥೆಯೇ! ಪರಮಹಂಸರ ಗೃಹಸ್ಥಭಕ್ತರಲ್ಲಿಯೂ ಇವರನ್ನು ನೋಡಿ ಕಾಮಕಾಂಚನಾಸಕ್ತಿಯನ್ನು ತ್ಯಜಿಸಬೇಕೆಂಬ ಭಾವನೆ ಪ್ರಬಲವಾಗಿ ಬೆಳೆಯುತ್ತಿದೆ. ಆಹ, ಈ ಸೋದರರ ಅವಸ್ಥೆ ಎಷ್ಟು ಅದ್ಭುತವಾದ್ದು! ನಮ್ಮೀ ಕೆಲವರನ್ನು ಪರಮಹಂಸರು ಏಕೆ ಸಂಸಾರದಲ್ಲಿ ಇಟ್ಟಿದ್ದಾರೆ? ನಮಗೂ ಒಂದು ಉಪಾಯವನ್ನು ತೋರಿಸಿಕೊಡುವರೆ? ನಮ್ಮಲ್ಲಿಯೂ ತೀವ್ರ ವೈರಾಗ್ಯವನ್ನು ಉಂಟುಮಾಡುವರೊ ಅಥವಾ ಈ ಸಂಸಾರದಲ್ಲೇ ಮೋಹಗೊಂಡಿರುವಂತೆ ಮಾಡಿಬಿಡುವರೋ ಏನೋ?”
೯ನೇ ಮೇ ೧೮೮೭, ಸೋಮವಾರ
ಊಟವಾದ ನಂತರ ಮಠದ ಸೋದರರೆಲ್ಲರೂ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಹಿರಿಯ ಗೋಪಾಲ ಕೆಲವು ಹಾಡುಗಳನ್ನು ಬರೆದುಕೊಳ್ಳುತ್ತಿದ್ದಾನೆ, ನಿರಂಜನ ತನ್ನ ತಾಯಿಯನ್ನು ನೋಡಿ ಬರಲು ಮನೆಗೆ ಹೋಗಿದ್ದಾನೆ. ಶರಚ್ಚಂದ್ರ, ಕಾಳೀಪ್ರಸಾದ, ಬಾಬುರಾಮ ಜಗನ್ನಾಥಪುರಿಗೆ ಹೋಗಿದ್ದಾರೆ.
ನರೇಂದ್ರ ತನ್ನ ಮನೆಯ ಮೊಕದ್ದಮೆಯ ಸಂಬಂಧವಾಗಿ ಒಬ್ಬಿಬ್ಬರು ಸಹೋದರ ರೊಡನೆ ಊಟವಾದ ನಂತರ ಕಲ್ಕತ್ತಕ್ಕೆ ಹೋಗಿದ್ದಾನೆ. ಆತ ಸಾಯಂಕಾಲ ಹಿಂದಿರುಗಿ ಬರುತ್ತಾನೆ. ನರೇಂದ್ರ ಮಠದಲ್ಲಿ ಇಲ್ಲದೆ ಇರುವುದು ಸಹೋದರರಿಗೆ ಸಹಿಸಲಾಗುತ್ತಿಲ್ಲ. ನರೇಂದ್ರ ಎಷ್ಟು ಹೊತ್ತಿಗೆ ಹಿಂದಿರುಗಿ ಬರುವನೆಂದು ಎಲ್ಲರೂ ಭಾವಿಸುತ್ತಿದ್ದಾರೆ.
ಅಪರಾಹ್ನವಾಗಿದೆ. ರವೀಂದ್ರ ಉನ್ಮತ್ತನಂತೆ ಮಠಕ್ಕೆ ಬಂದಿದ್ದಾನೆ. ಕಾಲಿಗೆ ಏನನ್ನೂ ಹಾಕಿಕೊಂಡಿಲ್ಲ. ಕಪ್ಪು ಅಂಚಿನ ಪಂಚೆಯ ಅರ್ಧಭಾಗವನ್ನು ಮಾತ್ರ ಸೊಂಟಕ್ಕೆ ಸುತ್ತಿ ಕೊಂಡಿದ್ದಾನೆ. ಆತನ ಕಣ್ಣುಗಳು ಹುಚ್ಚನ ಕಣ್ಣುಗಳ ಹಾಗೆ ತಿರುಗುತ್ತಿವೆ. ಏನು ಸಮಾಚಾರ ಎಂಬುದಾಗಿ ಎಲ್ಲರೂ ಕಾತರರಾಗಿ ಕೇಳುತ್ತಿದ್ದಾರೆ.
ರವೀಂದ್ರ ಹೇಳಿದ: “ಮೊದಲು ಸ್ವಲ್ಪ ಉಸಿರು ತೆಗೆದುಕೊಂಡು ಬಳಿಕ ಎಲ್ಲವನ್ನೂ ನಿಮಗೆ ಸಾಂಗವಾಗಿ ತಿಳಿಸುತ್ತೇನೆ. ನಾನು ಇನ್ನು ಮನೆಗೆ ಹಿಂದಿರುಗಿ ಹೋಗುವುದಿಲ್ಲ; ನಿಮ್ಮೊಡನೆ ಇಲ್ಲೇ ಇದ್ದುಬಿಡುತ್ತೇನೆ. ಆಕೆ ವಿಶ್ವಾಸಘಾತಕಿ! ಆಕೆಗಾಗಿ ಐದು ವರ್ಷದ ಕುಡಿಯೋ ಅಭ್ಯಾಸವನ್ನೂ ಬಿಟ್ಟುಬಿಟ್ಟೆ.
“ಈಗ ಎಂಟು ತಿಂಗಳಿಂದ ಒಂದು ತೊಟ್ಟನ್ನೂ ಮುಟ್ಟಿಲ್ಲ. ಆಕೆ ವಿಶ್ವಾಸಘಾತಕಿ!”
ಮಠದ ಸೋದರರು: “ಶಾಂತನಾಗು! ಈಗ ಇಲ್ಲಿಗೆ ಹೇಗೆ ಬಂದೆ?”
ರವೀಂದ್ರ: “ಕಲ್ಕತ್ತದಿಂದ ಬರೀ ಕಾಲಿನಲ್ಲೇ ನಡೆದುಬಂದೆ.”
ಮಠದ ಸೋದರರು: “ನಿನ್ನ ಪಂಚೆಯ ಇನ್ನೊಂದರ್ಧ ಎಲ್ಲಿ?”
ರವೀಂದ್ರ: “ಆಕೆಯ ಮನೆಯಿಂದ ನಾನು ಹೊರಟಾಗ, ಆಕೆ ನನ್ನ ಪಂಚೆಯನ್ನು ಹಿಡಿದು ಎಳೆಯಲಾರಂಭಿಸಿದಳು. ಆಗ ಪಂಚೆ ಅರ್ಧಕ್ಕೆ ಹರಿದುಹೋಯಿತು.”
ಮಠದ ಸೋದರರು: “ಹೋಗಿ ಗಂಗಾಸ್ನಾನ ಮಾಡಿ ಬಾ. ಮೊದಲು ನಿನ್ನ ಮಿದುಳು ಸ್ವಲ್ಪ ಶಾಂತವಾಗಲಿ. ಬಳಿಕ ಎಲ್ಲವನ್ನೂ ಕೇಳುತ್ತೇವೆ.”
ರವೀಂದ್ರ ಕಲ್ಕತ್ತದ ಒಂದು ಸಂಭಾವಿತ ಕಾಯಸ್ಥರ ಮನೆತನಕ್ಕೆ ಸೇರಿದವ. ಆತನ ವಯಸ್ಸು ಇಪ್ಪತ್ತೊ ಇಪ್ಪತ್ತೆರಡೊ. ಪರಮಹಂಸರನ್ನು ಕಾಳೀದೇವಾಲಯದಲ್ಲಿ ದರ್ಶನ ಮಾಡಿದ್ದ. ಅವರಿಂದ ವಿಶೇಷ ಕೃಪೆಯನ್ನು ಪಡೆದಿದ್ದ. ಒಮ್ಮೆ ಆತ ಪರಮಹಂಸರೊಡನೆ ಮೂರು ದಿನಗಳನ್ನು ಕಳೆದಿದ್ದ. ಆತನ ಸ್ವಭಾವ ಅತಿ ಮೃದು ಮತ್ತು ಕೋಮಲ. ಪರಮಹಂಸರು ಆತನನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಆದರೆ ಒಮ್ಮೆ ಅವರು ಆತನಿಗೆ ಹೇಳಿದ್ದರು: “ನೀನು ಇನ್ನೂ ಸ್ವಲ್ಪ ಕಾಲ ಕಾದಿರಬೇಕಾಗಿದೆ; ಇನ್ನೂ ಕೆಲವು ಅನುಭವಗಳನ್ನು ಪಡೆಯಬೇಕಾಗಿದೆ. ಈಗ ಏನೂ ದೊರೆಯುವ ಹಾಗಿಲ್ಲ. ಕಳ್ಳರು ಮನೆಗೆ ಕನ್ನ ಹಾಕುತ್ತಿರುವಾಗ ಪೋಲೀಸರ ಕೈಯಲ್ಲಿ ಏನನ್ನೂ ಮಾಡಲಾಗುವುದಿಲ್ಲ. ಸೂರೆಮಾಡಿ ಇನ್ನೇನು ಮುಗಿಯಿತು ಅನ್ನುವಷ್ಟರಲ್ಲಿ ಬಂದು ಅವರನ್ನು ಹಿಡಿದು ಕೈದಿಗಳನ್ನಾಗಿ ಮಾಡುತ್ತಾರೆ.”
ರವೀಂದ್ರನಿಗೆ ಅನೇಕ ಗುಣಗಳಿವೆ. ಆತನಿಗೆ ಭಗವಂತನಲ್ಲಿ ಶ್ರದ್ಧಾಭಕ್ತಿ ಇದೆ; ಬಡಬಗ್ಗರಲ್ಲಿ ಪ್ರೀತಿ, ದಯೆ ಇಟ್ಟಿದ್ದಾನೆ. ಆದರೆ ಆತ ಒಬ್ಬ ವೇಶ್ಯೆಯ ಬಲೆಗೆ ಬಿದ್ದು ಹೋಗಿಬಿಟ್ಟಿದ್ದ. ಈಗ ಆತನ ಅರಿವಿಗೆ ಬಂದಿದೆ ಆಕೆ ಒಬ್ಬಳು ವಿಶ್ವಾಸಘಾತಕಿ ಎಂಬುದಾಗಿ. ಸಂಸಾರಕ್ಕೆ ಹಿಂದಿರುಗಿ ಹೋಗುವುದಿಲ್ಲವೆಂದು ಸಂಕಲ್ಪಿಸಿ ಅರ್ಧಪಂಚೆಯನ್ನು ಉಟ್ಟೇ ಮಠಕ್ಕೆ ಬಂದು ಬಿಟ್ಟಿದ್ದಾನೆ. ರವೀಂದ್ರ ಗಂಗಾಸ್ನಾನಕ್ಕೆ ಹೋಗುತ್ತಿದ್ದಾನೆ. ಒಬ್ಬ ಭಕ್ತ ಆತನನ್ನು ಹಿಂಬಾಲಿಸುತ್ತಿದ್ದಾನೆ. ಆ ಭಕ್ತನ ಮಹದಾಕಾಂಕ್ಷೆ ರವೀಂದ್ರನೂ ಮಠದ ಸೋದರರೊಡನೆ ಇದ್ದು ಆತ್ಮಜಾಗೃತಿಯನ್ನು ಪಡೆದುಕೊಳ್ಳಬೇಕು ಎಂಬುದಾಗಿ. ಸ್ನಾನಮುಗಿದ ನಂತರ ಆ ಭಕ್ತ ರವೀಂದ್ರನನ್ನು ಹತ್ತಿರವೇ ಇದ್ದ ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಬಿದ್ದಿದ್ದ ಹೆಣಗಳನ್ನು ತೋರಿಸುತ್ತಾ ಹೇಳುತ್ತಿದ್ದಾನೆ: “ಇಲ್ಲಿಗೆ ಮಠದ ಸೋದರರು ಆಗಾಗ ಒಬ್ಬೊಬ್ಬರೇ ರಾತ್ರಿವೇಳೆ ಬಂದು ಧ್ಯಾನ ಮಾಡುತ್ತಾರೆ. ಇಲ್ಲಿ ಧ್ಯಾನ ಮಾಡುವುದು ಬಹಳ ಒಳ್ಳೆಯದು; ಸಂಸಾರ ಅನಿತ್ಯ ಎಂಬುದು ಬಹಳ ಚೆನ್ನಾಗಿ ಮನದಟ್ಟಾಗುತ್ತದೆ.”
ರವೀಂದ್ರ ಧ್ಯಾನಕ್ಕೆಂದು ಆ ಸ್ಮಶಾನದಲ್ಲಿ ಕುಳಿತುಕೊಂಡ. ಆದರೆ ಹೆಚ್ಚು ಹೊತ್ತು ಧ್ಯಾನ ಮಾಡಲಾಗಲಿಲ್ಲ; ಮನಸ್ಸು ಆಂದೋಳನದಲ್ಲಿತ್ತು.
ಈಗ ರವೀಂದ್ರ ಮತ್ತು ಆ ಭಕ್ತ ಇಬ್ಬರೂ ಮಠಕ್ಕೆ ಹಿಂದಿರುಗಿದರು. ಬಳಿಕ ದೇವರ ಮನೆಗೆ ಹೋಗಿ ಗುರುಮಹಾರಾಜರಿಗೆ ಪ್ರಣಾಮಮಾಡಿದರು. ಆ ಭಕ್ತ ರವೀಂದ್ರನಿಗೆ ಹೇಳಿದ: “ಮಠದ ಸೋದರರು ಅಲ್ಲಿ ಧ್ಯಾನಮಾಡುತ್ತಾರೆ.”
ರವೀಂದ್ರ ಅಲ್ಲೂ ಧ್ಯಾನಕ್ಕೆ ಕುಳಿತ, ಆದರೆ ಮತ್ತೆ ಹೆಚ್ಚು ಹೊತ್ತು ಧ್ಯಾನದಲ್ಲಿ ಕುಳಿತುಕೊಳ್ಳಲಾಗಲಿಲ್ಲ.
ಭಕ್ತ: “ಈಗ ನಿನಗೆ ಹೇಗಿದೆ? ನಿನ್ನ ಮನಸ್ಸು ಇನ್ನೂ ಸ್ಥಿರವಾಗಿ ನಿಲ್ಲುತ್ತಿಲ್ಲವೇನು? ಬಹುಶಃ ಅದಕ್ಕಾಗೇ ಸಾಧ್ಯವಾಗದೆ ಹೋಗಿರಬೇಕು.”
ರವೀಂದ್ರ: “ನಾನು ಸಂಸಾರಕ್ಕೆ ಹಿಂದಿರುಗಿ ಹೋಗದಿರುವುದೇನೊ ಖಂಡಿತ ನಿಜ. ಆದರೆ ಮನಸ್ಸು ಮಾತ್ರ ಚಂಚಲವಾಗಿದೆ.”
ಮಾಸ್ಟರ್ ಮತ್ತು ರವೀಂದ್ರ ಬೇರೆ ಯಾರೂ ಇಲ್ಲದ ಮಠದ ಒಂದು ಭಾಗದಲ್ಲಿ ನಿಂತು ಮಾತುಕತೆ ಆಡುತ್ತಿದ್ದಾರೆ. ಮಾಸ್ಟರ್ ಬುದ್ಧದೇವನ ಸಂಬಂಧವಾಗಿ ಕೆಲವು ಕಥೆಗಳನ್ನು ಹೇಳುತ್ತಿದ್ದಾನೆ. ಈಗ ಕೆಲವು ದಿವಸಗಳಿಂದ ಮಠದ ಸೋದರರು ಬುದ್ಧದೇವನ ಮತ್ತು ಚೈತನ್ಯದೇವನ ಚರಿತ್ರೆಗಳನ್ನು ದಿನವೂ ಓದುತ್ತಿದ್ದಾರೆ. ಮಾಸ್ಟರ್ ರವೀಂದ್ರನಿಗೆ ಬುದ್ಧದೇವನ ಆತ್ಮ ಮೊದಲು ಜಾಗೃತಿಗೊಂಡುದು ದೇವಕನ್ಯೆಯರ ಹಾಡನ್ನು ಕೇಳಿದ ನಂತರ ಎಂಬುದಾಗಿ ಹೇಳುತ್ತಿದ್ದಾನೆ.
ಈಗ ಮಾಸ್ಟರ್ ಆ ಹಾಡನ್ನು ಹಾಡುತ್ತಿದ್ದಾನೆ:
ಹಾ ಸುತ್ತುತಿರುವೆವು ನಾವು ವಿಶ್ರಾಂತಿಯಿನಿತಿಲ್ಲ
ಬಂದುದೆಲ್ಲಿಂದಲೊ, ನಡೆವುದೆಲ್ಲೋ?……
ನರೇಂದ್ರ, ತಾರಕ, ಹರೀಶ ಕಲ್ಕತ್ತದಿಂದ ಮಠಕ್ಕೆ ಹಿಂದಿರುಗುವುದರಲ್ಲಿ ರಾತ್ರಿಯಾಗಿತ್ತು. ಬಂದೊಡನೆಯೆ ಹೇಳಿದರು: “ಇಂದು ಹೊಟ್ಟೆ ಒಡೆಯೋ ಹಾಗೆ ಒಳ್ಳೆ ಚೆನ್ನಾದ ಊಟ!” ಕಲ್ಕತ್ತದಲ್ಲಿ ಒಬ್ಬ ಭಕ್ತ ಅವರಿಗೆ ಅತಿಥಿಸತ್ಕಾರ ಮಾಡಿ ಕಳುಹಿಸಿದ್ದ.
ಮಠದ ಸೋದರರೆಲ್ಲರು ಈಗ ‘ದಾನವರ’ ಕೊಠಡಿಯಲ್ಲಿ ನೆರೆದಿದ್ದಾರೆ. ನರೇಂದ್ರ ರವೀಂದ್ರನ ವೃತ್ತಾಂತವನ್ನೆಲ್ಲಾ ಕೇಳಿದ. ಆತನಿಗೆ ಬುದ್ಧಿವಾದವೀಯೋ ಉದ್ದೇಶದಿಂದ ನರೇಂದ್ರ ಹಾಡಲಾರಂಭಿಸಿದ್ದಾನೆ:
ಕತ್ತರಿಸು ಮೋಹವನು, ದುರ್ಮಂತ್ರಗಳ ದೂಡು;
ಅವನ ಇರವನು ಅರಿತು ಬಿಡುತೆಯನು ಗಳಿಸು……
ನರೇಂದ್ರ ಮತ್ತೆ ಹಾಡುತ್ತಿದ್ದಾನೆ:
ಓ ಸಾಧೂ–
ಪ್ರೇಮ ಪಾತ್ರೆಯನು ಈಗಾದರೂ ತುಟಿಗಿಡು
ಹರಿನಾಮದ ಸುಧೆ ಹೀರು,
ಆನಂದದಿ ಕರಗು!….
ಸ್ವಲ್ಪ ಹೊತ್ತಾದ ನಂತರ ಸೋದರರೆಲ್ಲರು ಕಾಳಿಯ ಕೊಠಡಿಗೆ ಬಂದು ಕುಳಿತು ಕೊಂಡಿದ್ದಾರೆ. ಗಿರೀಶಘೋಷನ ಎರಡು ಹೊಸ ಪುಸ್ತಕಗಳು–ಬುದ್ಧದೇವನ ಚರಿತೆ, ಚೈತನ್ಯದೇವನ ಚರಿತೆ–ಈಗತಾನೆ ಬಂದಿವೆ.
ಮಠವನ್ನು ಸ್ಥಾಪಿಸಿದಂದಿನಿಂದ ಶಶಿ ತನ್ನ ಇಡೀ ಮನಸ್ಸನ್ನಿಟ್ಟು ಹಗಲಿರುಳೆನ್ನದೆ ಗುರುಮಹಾರಾಜರ ಪೂಜೆ ಪುರಸ್ಕಾರಗಳಲ್ಲೇ ನಿರತನಾಗಿದ್ದಾನೆ. ಆತನ ಶ್ರದ್ಧಾಭಕ್ತಿಯನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಪರಮಹಂಸರು ಅಸ್ವಸ್ಥರಾಗಿದ್ದಾಗ ಯಾವ ರೀತಿ ಶಶಿ ಹಗಲೂ ಇರುಳೂ ಅವರ ಸೇವೆಯಲ್ಲಿ ನಿರತನಾಗಿದ್ದನೊ ಅದೇ ರೀತಿ ಈಗಲೂ ಏಕಚಿತ್ತದಿಂದ ಅವರ ಸೇವೆಯಲ್ಲಿ ನಿರತನಾಗಿದ್ದಾನೆ.
ಮಠದ ಒಬ್ಬ ಸೋದರ ಬುದ್ಧದೇವನ ಮತ್ತು ಚೈತನ್ಯದೇವನ ಚರಿತೆಗಳಿಂದ ಗಟ್ಟಿಯಾಗಿ ಓದಲಾರಂಭಿಸಿದ. ಚೈತನ್ಯದೇವನ ಚರಿತೆಯನ್ನು ಓದುವಾಗ ಸ್ವಲ್ಪ ಅದನ್ನು ಪರಿಹಾಸ್ಯ ಸ್ವರದಿಂದ ಓದಲಾರಂಭಿಸಿದ. ನರೇಂದ್ರ ಆತನ ಕೈಯಿಂದ ಆ ಪುಸ್ತಕವನ್ನು ಕಿತ್ತುಕೊಂಡು ಹೇಳಿದ: “ಒಳ್ಳೆಯದನ್ನೆಲ್ಲ ನೀನು ಈ ರೀತಿಯಾಗೆ ಹಾಳುಮಾಡೋದು!”
ಚೈತನ್ಯದೇವ ತನ್ನ ಪ್ರೇಮವನ್ನು ಚಂಡಾಲಾದಿಯಾಗಿ ಬ್ರಾಹ್ಮಣನವರೆಗೆ ಯಾವ ರೀತಿಯಾಗಿ ಹಂಚಿದ ಎಂಬ ಅಧ್ಯಾಯವನ್ನು ನರೇಂದ್ರ ತಾನೇ ಓದಲಾರಂಭಿಸಿದ.
ಒಬ್ಬ ಸೋದರ: “ನಾನು ಹೇಳುತ್ತೇನೆ, ಯಾರೇ ಆಗಲಿ ಯಾರಿಗೂ ಪ್ರೇಮವನ್ನು ಹಂಚಲಾಗುವುದಿಲ್ಲ.”
ನರೇಂದ್ರ: “ಆದರೆ ಪರಮಹಂಸರು ನನಗೆ ಅದನ್ನು ಕೊಟ್ಟಿದ್ದಾರೆ.”
ಸೋದರ: “ಆಗಲಿ, ನಿನಗೆ ಅದು ದೊರೆತಿದೆ ಅಂತ ತಿಳಿದುಕೊಂಡಿದ್ದೀಯೇನು?”
ನರೇಂದ್ರ: “ಅದರ ಸಂಬಂಧವಾಗಿ ನಿನಗೇನು ಗೊತ್ತು? ನೀನು ಭಗವಂತನ ಸೇವಕರ ದರ್ಜೆಗೆ ಸೇರಿದವ. ನೀವೆಲ್ಲರೂ ಬಂದು ನನಗೆ ಸೇವೆ ಮಾಡಬೇಕು. ಕಾಲು ಒತ್ತಬೇಕು. ಎಲ್ಲಾ ತಿಳಿದುಹೋಗಿಬಿಟ್ಟಿದೆ ಅಂತ ಆತ್ಮಪ್ರಶಂಸೆಯನ್ನು ಮಾಡಿಕೊಳ್ಳಬೇಡಿ, ಈಗ ಹೋಗಿ ನೀನು ಹುಕ್ಕ ತಯಾರುಮಾಡಿ ತೆಗೆದುಕೊಂಡು ಬಾ.”
ಎಲ್ಲರೂ ನಗುತ್ತಿದ್ದಾರೆ.
ಸೋದರ: “ತ-ಯಾ-ರು-ಮಾ-ಡೋ-ದಿ-ಲ್ಲಾ.”
ಎಲ್ಲರೂ ನಗುತ್ತಿದ್ದಾರೆ.
ಮಾಸ್ಟರ್ (ತನಗೆ ತಾನೆ): “ಪರಮಹಂಸರು ಕೇವಲ ನರೇಂದ್ರನೊಬ್ಬನಲ್ಲೇ ಅಲ್ಲ ಉಳಿದ ಸೋದರರಲ್ಲೂ ಎದೆ ಕೆಚ್ಚನ್ನು ಬೆಳೆಸಿಬಿಟ್ಟಿದ್ದಾರೆ. ಈ ಕೆಚ್ಚು ಇಲ್ಲದಿದ್ದರೆ ಕಾಮ ಕಾಂಚನವನ್ನು ತ್ಯಜಿಸಲು ಸಾಧ್ಯವಾಗುವುದೆ?”
೧೦ನೆ ಮೇ ೧೮೮೭, ಮಂಗಳವಾರ
ಭಗವತಿಯ ಪೂಜೆಗೆ ಮಂಗಳವಾರ ಬಹಳ ಪವಿತ್ರವಾದ ದಿನ. ಆದ್ದರಿಂದ ಇಂದು ಮಠದಲ್ಲಿ ಭಗವತಿಯ ವಿಶೇಷ ಪೂಜೆಗೆ ವ್ಯವಸ್ಥೆ ನಡೆದಿದೆ. ಗುರುಮಹಾರಾಜರ ಎದುರಿಗೆ ಒಂದು ಯಂತ್ರವನ್ನು ಬರೆದಿದೆ. ಹೋಮ ನಡೆಯಲಿದೆ; ಬಳಿಕ ಬಲಿಯೂ ನಡೆಯಲಿದೆ. ಹೋಮ ಮತ್ತು ಬಲಿಯನ್ನು ತಾಂತ್ರಿಕ ರೀತಿಯಾಗಿ ಮಾಡುವಂತೆ ವ್ಯವಸ್ಥೆ ಆಗಿದೆ.
ಮಾಸ್ಟರ್ ಈಗ ಗಂಗಾಸ್ನಾನಕ್ಕೆ ಹೊರಟಿದ್ದಾನೆ. ರವೀಂದ್ರ ಒಬ್ಬನೆ ಚಾವಣಿಯ ಮೇಲೆ ಅಡ್ಡಾಡುತ್ತಿದ್ದಾನೆ. ನರೇಂದ್ರ ಸ್ವರಸಹಿತ ನಿರ್ವಾಣಷಟ್ಕವನ್ನು ಹಾಡುತ್ತಿರೋದು ಮಾಸ್ಟರ್ ಕಿವಿಗೆ ಬೀಳುತ್ತಿದೆ.
ಈಗ ರವೀಂದ್ರ ಗಂಗಾಸ್ನಾನಮಾಡಿ ಒದ್ದೆ ಬಟ್ಟೆ ಉಟ್ಟುಕೊಂಡೇ ಬಂದಿದ್ದಾನೆ.
ನರೇಂದ್ರ (ಮೆತ್ತಗೆ ಮಾಸ್ಟರಿಗೆ): “ಗಂಗಾಸ್ನಾನ ಮಾಡಿ ಬಂದಿದ್ದಾನೆ. ಈಗ ಸಂನ್ಯಾಸ ಕೊಟ್ಟುಬಿಟ್ಟರೇ ಮುಗಿಯಿತಲ್ಲ.”
ನರೇಂದ್ರ ಮತ್ತು ಮಾಸ್ಟರ್ ಇಬ್ಬರೂ ನಗುತ್ತಿದ್ದಾರೆ.
ಪ್ರಸನ್ನ ರವೀಂದ್ರನಿಗೆ ಕಾಷಾಯವಸ್ತ್ರವನ್ನು ಕೊಟ್ಟು ಒದ್ದೆ ಬಟ್ಟೆಯನ್ನು ಬಿಚ್ಚಿ ಹಾಕುವಂತೆ ಹೇಳಿದ. ನರೇಂದ್ರ ಮಾಸ್ಟರಿಗೆ ಹೇಳಿದ: “ಈಗ ಅವನು ತ್ಯಾಗದ ವಸ್ತ್ರವನ್ನು ಧರಿಸುವುದರಲ್ಲಿದ್ದಾನೆ.”
ಮಾಸ್ಟರ್ (ನಗುತ್ತ): “ಯಾವುದರ ತ್ಯಾಗ?”
ನರೇಂದ್ರ: “ಕಾಮಕಾಂಚನ ತ್ಯಾಗ.”
ರವೀಂದ್ರ ಕಾಷಾಯವಸ್ತ್ರವನ್ನು ಧರಿಸಿ ಧ್ಯಾನಕ್ಕೆಂದು ಕಾಳಿಯ ಕೊಠಡಿಗೆ ಹೋದ.