೨೧ನೆ ಏಪ್ರಿಲ್ ೧೮೮೬, ಚೈತ್ರ ಕೃಷ್ಣ ತೃತೀಯ, ಬುಧವಾರ
ನರೇಂದ್ರ ಮತ್ತು ಮಾಸ್ಟರ್ ಕಾಶೀಪುರದ ಉದ್ಯಾನವನದಲ್ಲಿ ಅಡ್ಡಾಡುತ್ತ ಅಡ್ಡಾಡುತ್ತ ಮಾತುಕತೆ ಆಡುತ್ತಿದ್ದಾರೆ. ತನ್ನ ಮನೆಯ ಆರ್ಥಿಕ ಮುಗ್ಗಟ್ಟನ್ನು ಬಗೆಹರಿಸಲು ನರೇಂದ್ರನಿಗೆ ಇನ್ನೂ ಆಗದೆ ಇರುವುದರಿಂದ ಆತ ಬಹಳ ಚಿಂತೆಗೆ ಒಳಗಾಗಿದ್ದಾನೆ.
ನರೇಂದ್ರ: “ವಿದ್ಯಾಸಾಗರನ ಶಾಲೆಯ ನೌಕರಿ ನನಗೆ ಬೇಡವೇ ಬೇಡ. ಗಯೆಗೆ ಹೋಗಬೇಕೆಂದು ಯೋಚಿಸುತ್ತಾ ಇದ್ದೇನೆ. ಅಲ್ಲಿ ಜಮೀನುದಾರನೊಬ್ಬನಿಗೆ ಒಬ್ಬ ಮ್ಯಾನೇಜರ್ ಬೇಕಂತೆ. ಈ ಜಗತ್ತಿನಲ್ಲಿ ಭಗವಂತ ಎಂಬುವನು ಇಲ್ಲವೇ ಇಲ್ಲ.”
ಮಾಸ್ಟರ್ (ನಗುತ್ತ): “ಈಗ ನೀನು ಹೀಗೆ ಹೇಳುತ್ತಿದ್ದೀಯೆ, ಆದರೆ ಮುಂದೆ ನೀನು ಎಂದಿಗೂ ಹೀಗೆ ಹೇಳುವುದಿಲ್ಲ. ಪರಮಹಂಸರು ಹೇಳುತ್ತಿದ್ದಾರೆ: ಭಗವಂತನ ಸಾಕ್ಷಾತ್ಕಾರಮಾರ್ಗದಲ್ಲಿ ಸಂದೇಹ ಎಂಬುದು ಒಂದು ಹಂತ. ಮುಮುಕ್ಷು ಈ ವಿಧವಾದ ಹಂತಗಳನ್ನು ದಾಟಿ ಮುಂದಕ್ಕೆ ಹೋಗಬೇಕು; ಆಗ ಮಾತ್ರವೇ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ.”
ನರೇಂದ್ರ: “ನಾನು ಈ ಮರವನ್ನು ನೋಡುವ ಹಾಗೆ ಯಾರಾದರೂ ಭಗವಂತನನ್ನು ನೋಡಿದ್ದಾರೇನು?”
ಮಾಸ್ಟರ್: “ಹೌದು, ಪರಮಹಂಸರು ಹಾಗೆ ನೋಡಿದ್ದಾರೆ.”
ನರೇಂದ್ರ: “ಅದು ಅವರ ಚಿತ್ತಭ್ರಮಣೆಯಿಂದ ಇರಬಹುದು.”
ಮಾಸ್ಟರ್: “ಯಾವ ಅವಸ್ಥೆಯಲ್ಲಿ ವ್ಯಕ್ತಿ ಏನನ್ನು ನೋಡುತ್ತಾನೋ, ಅದು ಆತನಿಗೆ ಆಯಾಯ ಅವಸ್ಥೆಯಲ್ಲಿ ಸತ್ಯವಾಗಿಯೇ ತೋರುತ್ತದೆ. ನೀನು ಒಂದು ತೋಟಕ್ಕೆ ಹೋಗಿರುವುದಾಗಿ ನಿನಗೆ ಸ್ವಪ್ನ ಬಿದ್ದಿದೆ ಅಂತ ಇಟ್ಟುಕೊ. ನೀನು ಆ ಸ್ವಪ್ನಾವಸ್ಥೆಯಲ್ಲಿ ಇರುವವರೆಗೆ ನಿನಗೆ ಆ ತೋಟ ಸತ್ಯವಾದದ್ದೇ. ಆದರೆ ಆ ಅವಸ್ಥೆ ಬದಲಾವಣೆಯನ್ನು ಹೊಂದಿತು ಅಂದರೆ, ಜಾಗ್ರದವಸ್ಥೆಗೆ ಬಂತು ಎಂದರೆ, ಅದು ಮಿಥ್ಯವಾಗಿ ತೋರುತ್ತದೆ. ಯಾವ ಅವಸ್ಥೆಯಲ್ಲಿ ಭಗವಂತನ ಸಾಕ್ಷಾತ್ಕಾರ ಸಾಧ್ಯವೊ ಆ ಅವಸ್ಥೆಯನ್ನು ನಿನ್ನ ಮನಸ್ಸು ಮುಟ್ಟಿತು ಅಂದರೆ, ಆಗ ಸತ್ಯದ ಬೋಧೆ ಆಗುತ್ತದೆ.”
ನರೇಂದ್ರ: “ನನಗೆ ಬೇಕಾಗಿರುವುದು ಸತ್ಯ. ಅಂದು ಈ ವಿಷಯವಾಗಿ ಪರಮಹಂಸರೊಡನೆಯೇ ಬಹಳವಾಗಿ ಚರ್ಚಿಸಿಬಿಟ್ಟೆ.”
ಮಾಸ್ಟರ್: “ಏನು ನಡೆಯಿತು?”
ನರೇಂದ್ರ: “ಅವರು ನನಗೆ ಹೇಳಿದರು: ‘ಕೆಲವರು ನನ್ನನ್ನು ಭಗವಂತ ಅಂತ ಕರೆಯುತ್ತಿದ್ದಾರೆ.’ ನಾನು ಹೇಳಿದೆ: ‘ಸಹಸ್ರಾರು ಜನ ಹಾಗೆ ಬೇಕಾದರೆ ಕೂಗಿಕೊಳ್ಳಲಿ. ನನಗೆ ಅದು ಸತ್ಯ ಎಂಬುದಾಗಿ ತೋರುವವರೆಗೆ ನಾನು ನಿಮ್ಮನ್ನು ಹಾಗೆ ಎಂದಿಗೂ ಕರೆಯುವುದಿಲ್ಲ.’ ಅವರು ಹೇಳಿದರು: ‘ಯಾವುದನ್ನು ಅನೇಕರು ಪ್ರತಿಪಾದಿಸುತ್ತಾರೊ, ಅದೇ ತಾನೇ ಸತ್ಯ, ಅದೇ ತಾನೇ ಧರ್ಮ’. ನಾನು ಹೇಳಿದೆ: “ನನಗದು ಸತ್ಯವೆಂದು ಬೋಧೆಯಾಗುವ ತನಕ ಉಳಿದವರ ಮಾತಿಗೆ ನಾನು ಬೆಲೆ ಕೊಡುವುದಿಲ್ಲ.”’
ಮಾಸ್ಟರ್ (ನಗುತ್ತ): “ನಿನ್ನ ಮನೋಭಾವ ಪಾಶ್ಚಾತ್ಯ ಪಂಡಿತರ–ಬರ್ಕ್ಲೆ, ಕೋಪರ್ನಿಕಸ್–ಹಾಗೆ. ಇಡೀ ಜಗತ್ತಿನ ಜನರು ಹೇಳುತ್ತಾರೆ, ಸೂರ್ಯ ಭೂಮಿಯ ಸುತ್ತ ಸುತ್ತುತ್ತಿದ್ದಾನೆ ಅಂತ. ಆದರೆ ಕೋಪರ್ನಿಕಸ್ ಅವರ ಮಾತಿಗೆ ಬೆಲೆ ಕೊಡಲಿಲ್ಲ. ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಹೇಳುತ್ತಾರೆ: ಈ ಬಾಹ್ಯ ಜಗತ್ತು ಸತ್ಯ ಅಂತ. ಆದರೆ ಬರ್ಕ್ಲೆ ಅವರ ಮಾತಿಗೆ ಬೆಲೆಕೊಡಲಿಲ್ಲ. ಅದಕ್ಕಾಗಿಯೇ ಲ್ಯೂಯಿಸ್ ಹೇಳಿದ: ‘ನಾವು ಬರ್ಕ್ಲೆಯನ್ನು ದಾರ್ಶನಿಕ ಕೋಪರ್ನಿಕಸ್ ಅಂತ ಏಕೆ ಕರೆಯಬಾರದು?”’
ನರೇಂದ್ರ: “ನೀವು ನನಗೊಂದು ದಾರ್ಶನಿಕ ಇತಿಹಾಸದ ಪ್ರತಿಯನ್ನು ಕೊಡ ಬಲ್ಲಿರೇನು?”
ಮಾಸ್ಟರ್: “ಏನು ಲ್ಯೂಯಿಸನದೇ?”
ನರೇಂದ್ರ: “ಅದು ಬೇಡಿ. ಉಬೆರ್ವೆಗ್ ಬರೆದಿರುವುದು. ಒಬ್ಬ ಜರ್ಮನ್ ಬರೆದಿರುವುದನ್ನು ಓದಲು ಇಚ್ಛೆ.”
ಮಾಸ್ಟರ್: “ನೀನು ಈಗ ತಾನೆ ಕೇಳಿದೆ: ‘ನಾನು ಈ ಮರವನ್ನು ನೋಡುವ ರೀತಿಯಲ್ಲಿ ಯಾರಾದರೂ ಭಗವಂತನನ್ನು ನೋಡಿದ್ದಾರೆಯೇ?’ ಎಂದು. ಒಂದು ಪಕ್ಷ ಭಗವಂತ ಮನುಷ್ಯರೂಪವನ್ನು ಧರಿಸಿ ನಿನ್ನ ಎದುರಿಗೇ ಬಂದು ‘ನಾನು ಭಗವಂತ’ ಅಂತ ಹೇಳಿದರೆ, ನೀನು ಆತನನ್ನು ನಂಬುವಿಯೇನು? ನಿನಗೆ ಲ್ಯಾಸರಸ್ಸನ ಕಥೆ ಗೊತ್ತೇ ಇರಬೇಕಲ್ಲವೇ? ಲ್ಯಾಸರಸ್ ಪರಲೋಕಕ್ಕೆ ಹೋದಾಗ, ಅಲ್ಲಿ ಏಬ್ರಹಾಮನಿಗೆ ಹೇಳಿದ: ‘ನಾನು ಭೂಮಿಗೆ ಇಳಿದು ಹೋಗಿ, ಅಲ್ಲಿ ನನ್ನ ಬಂಧುಮಿತ್ರರಿಗೆಲ್ಲ ಪರಲೋಕ, ನರಕ ಇವೆಲ್ಲ ಇವೆ ಎಂಬುದಾಗಿ ಹೇಳಿಬರುತ್ತೇನೆ.’ ಅದಕ್ಕೆ ಏಬ್ರಹಾಮ್ ಹೇಳಿದ: ‘ನೀನು ಹಾಗೆ ಹೋಗಿ ಹೇಳಿದರೆ, ಅವರು ಅದನ್ನು ನಂಬುವರೇ? ಒಬ್ಬ ಮಾತಿನಮಲ್ಲ ಬಂದು ಹೀಗೆಲ್ಲಾ ಹೇಳುತ್ತಿದ್ದಾನೆಂದು ಅವರು ಭಾವಿಸುತ್ತಾರೆ.’ ಪರಮಹಂಸರು ಹೇಳುತ್ತಿದ್ದಾರೆ: ಭಗವಂತನನ್ನು ವಿಚಾರದ ಮೂಲಕ ಪಡೆಯಲಾಗುವುದಿಲ್ಲ. ವಿಶ್ವಾಸದಿಂದಲೇ ಎಲ್ಲವೂ–ಜ್ಞಾನ, ವಿಜ್ಞಾನ-ದೊರೆತುಬಿಡುತ್ತವೆ. ವಿಶ್ವಾಸದಿಂದಲೇ ಆತನ ದರ್ಶನ, ಆತನೊಡನೆ ಬೆರೆಯುವಿಕೆ ಎಲ್ಲಾ ದೊರೆತುಬಿಡುತ್ತವೆ.”
ಘಂಟೆ ಅಪರಾಹ್ನ ಮೂರು, ಪರಮಹಂಸರು ಸುಮ್ಮನೆ ಮಲಗಿಕೊಂಡಿದ್ದಾರೆ. ರಾಮಲಾಲ ಅವರ ಪಾದಗಳನ್ನು ಒತ್ತುತ್ತಿದ್ದಾನೆ. ಸಿಂಥಿಯ ಗೋಪಾಲ ಮತ್ತು ಮಾಸ್ಟರ್ ಕೊಠಡಿಯಲ್ಲಿ ಕುಳಿತಿದ್ದಾರೆ. ರಾಮಲಾಲ ಪರಮಹಂಸರ ಯೋಗಕ್ಷೇಮವನ್ನು ವಿಚಾರಿಸಿ ಕೊಂಡು ಹೋಗುವುದಕ್ಕೆ ದಕ್ಷಿಣೇಶ್ವರದಿಂದ ಬಂದಿದ್ದಾನೆ.
ಪರಮಹಂಸರು ಮಾಸ್ಟರಿಗೆ ಕಿಟಕಿಗಳನ್ನು ಮುಚ್ಚಿ ತಮ್ಮ ಪಾದಗಳನ್ನು ಒತ್ತುವಂತೆ ಹೇಳಿದರು. ಪರಮಹಂಸರ ಇಚ್ಛೆಗನುಸಾರ ಪೂರ್ಣ ಒಂದು ಗಾಡಿ ಮಾಡಿಕೊಂಡು ಕಾಶೀಪುರದ ಮನೆಗೆ ಬಂದಿದ್ದಾನೆ. ಮಾಸ್ಟರ್ ಅದರ ಬಾಡಿಗೆ ಕೊಡುವಂತೆ ವ್ಯವಸ್ಥೆ ಆಗಿದೆ. ಪರಮಹಂಸರು ಗೋಪಾಲನನ್ನು ಸನ್ನೆಯ ಮೂಲಕ ಕೇಳುತ್ತಿದ್ದಾರೆ: “ಈತ ಕೊಟ್ಟನೇನು?” ಗೋಪಾಲ ಹೇಳಿದ: “ಹೌದು, ಕೊಟ್ಟಿದ್ದಾನೆ.”
ಘಂಟೆ ರಾತ್ರಿ ಒಂಬತ್ತು. ಸುರೇಂದ್ರ, ರಾಮ ಇವರೇ ಮೊದಲಾದವರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಲು ಸಿದ್ಧರಾಗುತ್ತಿದ್ದಾರೆ. ಈಗ ವೈಶಾಖ ಮಾಸವಾಗಿರುವುದರಿಂದ ಪರಮಹಂಸರ ಕೊಠಡಿ ಬಿಸಿಲಿನಿಂದ ಬಹಳವಾಗಿ ಕಾದುಬಿಡುತ್ತಿದೆ. ಅದನ್ನು ಸ್ವಲ್ಪ ತಂಪಾಗಿರಿಸಲು ಸುರೇಂದ್ರ ಕೆಲವು ಲಾವಂಚದ ಪರದೆಗಳನ್ನು ತಂದುಕೊಟ್ಟಿದ್ದಾನೆ.
ಸುರೇಂದ್ರ: “ಏಕೆ, ಯಾರೂ ಈ ಲಾವಂಚದ ಪರದೆಗಳನ್ನು ಕಟ್ಟಲಿಲ್ಲವೇ? ಇಲ್ಲಿ ಯಾರಿಗೂ ಯಾವುದರ ಮೇಲೂ ಗಮನವೇ ಇಲ್ಲ ಅಂತ ಕಾಣುತ್ತದೆ.”
ಒಬ್ಬ ಭಕ್ತ (ನಗುತ್ತ): “ಈಗ ಇಲ್ಲಿರುವ ಭಕ್ತರಿಗೆಲ್ಲ ಬ್ರಹ್ಮಜ್ಞಾನಾವಸ್ಥೆ ಬಂದು ಬಿಟ್ಟಿದೆ. ಈಗ ಎಲ್ಲರಿಗೂ ‘ಸೋಠ್ಹಮ್’ ಭಾವ–ಜಗತ್ತು ಮಿಥ್ಯವಾಗಿ ಕಾಣುತ್ತಿದೆ. ಮತ್ತೆ ಯಾವಾಗ ‘ನೀನು ಪ್ರಭು, ನಾನು ದಾಸ’ ಎಂಬ ಅವಸ್ಥೆ ಬರುವುದೊ, ಆಗ ಅವುಗಳ ಕಡೆಗೆಲ್ಲಾ ಮನಸ್ಸು ಕೊಡುತ್ತಾರೆ.” (ಎಲ್ಲರೂ ನಗುತ್ತಾರೆ.)
೨೨ನೇ ಏಪ್ರಿಲ್, ೧೮೮೬, ಗುರುವಾರ
ಸಾಯಂಕಾಲವಾಗಿದೆ. ಶಶಿ, ರಾಖಾಲ, ಮಾಸ್ಟರ್ ಕಾಶೀಪುರದ ತೋಟದಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದಾರೆ.
ಮಾಸ್ಟರ್: “ಪರಮಹಂಸರು ಮಗುವಿನ ಹಾಗೆ ತ್ರಿಗುಣಾತೀತರು.”
ಶಶಿ ಮತ್ತು ರಾಖಾಲ: “ತಮ್ಮದು ಆ ಅವಸ್ಥೆ ಎಂದು ಅವರೇ ಹೇಳಿದ್ದಾರಲ್ಲ.”
ರಾಖಾಲ: “ಅವರು ಬಹಳ ಎತ್ತರವಾದ ಒಂದು ಗೋಪುರದ ಮೇಲೆ ಕುಳಿತು ಕೊಂಡವರಂತಿದ್ದಾರೆ. ಅಲ್ಲಿ ಕುಳಿತು ಎಲ್ಲಾ ವಿಷಯಗಳನ್ನೂ ತಿಳಿದುಕೊಳ್ಳಬಲ್ಲರು, ಎಲ್ಲವನ್ನೂ ನೋಡಬಲ್ಲರು; ಆದರೆ ಬೇರೆ ಯಾರೂ ಅಲ್ಲಿಗೆ ಹೋಗಿ ಅವರನ್ನು ಮುಟ್ಟ ಲಾಗುವುದಿಲ್ಲ.”
ಮಾಸ್ಟರ್: “ಪರಮಹಂಸರು ಹೇಳಿದ್ದಾರೆ: ‘ಆ ಅವಸ್ಥೆಯಲ್ಲಿ ಸರ್ವದಾ ಭಗವಂತನ ದರ್ಶನ ಸಾಧ್ಯ.’ ಆ ಅವಸ್ಥೆಯನ್ನು ಪಡೆದವನ ಮನಸ್ಸಿನಲ್ಲಿ ಎಳ್ಳಷ್ಟೂ ವಿಷಯರಸ ಇರದು. ಒಣ ಸೌದೆಯ ಹಾಗೆ ಬೇಗ ಹೊತ್ತಿಕೊಂಡುಬಿಡುತ್ತದೆ.”
ಶಶಿ: “ಬುದ್ಧಿಸೂಕ್ಷ್ಮತೆಯಲ್ಲಿ ಎಷ್ಟು ವಿಧ ಎಂಬುದನ್ನು ಪರಮಹಂಸರು ಒಮ್ಮೆ ಚಾರುವಿಗೆ ವರ್ಣಿಸಿ ಹೇಳಿದರು. ಯಾವುದರಿಂದ ಭಗವಂತನ ಸಾಕ್ಷಾತ್ಕಾರ ದೊರೆಯು ವುದೊ ಅದೇ ಸರಿಯಾದ ಬುದ್ಧಿಸೂಕ್ಷ್ಮತೆ. ಯಾವ ಬುದ್ಧಿಸೂಕ್ಷ್ಮತೆಯಿಂದ ಹಣ ಗಳಿಸಿ ಕೊಳ್ಳಬಹುದೊ, ಮನೆ ಕಟ್ಟಿಕೊಳ್ಳಬಹುದೊ, ಡೆಪ್ಯುಟಿ ಮಾಜಿಸ್ಟ್ರೇಟ್ ಆಗಬಹುದೊ, ವಕೀಲನಾಗಬಹುದೊ ಅದು ನೀಚಬುದ್ಧಿಸೂಕ್ಷ್ಮತೆ. ಅದು ಕೇವಲ ನೀರುಮಜ್ಜಿಗೆಯ ಹಾಗೆ, ಅದು ಅವಲಕ್ಕಿಯನ್ನೇನೊ ನೆನೆಸುತ್ತದೆ. ಆದರೆ, ಅದಕ್ಕೆ ಯಾವ ರುಚಿಯನ್ನೂ ಕೊಡದು. ಅದು ಎಂದಿಗೂ ಗಟ್ಟಿ ಮೊಸರಿನ ಮಟ್ಟಕ್ಕೆ ಬಾರದು. ಯಾವ ಬುದ್ಧಿಸೂಕ್ಷ್ಮತೆಯಿಂದ ಭಗವಂತನ ಸಾಕ್ಷಾತ್ಕಾರ ದೊರೆಯುವುದೊ ಅದು ಗಟ್ಟಿ ಮೊಸರಿನ ಹಾಗೆ ಉತ್ಕೃಷ್ಟ ಶ್ರೇಣಿಗೆ ಸೇರಿದ್ದು.”
ಮಾಸ್ಟರ್: “ಆಹಾ! ಎಂಥಾ ಮಾತುಗಳು!”
ಶಶಿ: “ತಪಸ್ವಿ ಕಾಳೀಪ್ರಸಾದ ಪರಮಹಂಸರಿಗೆ ಹೇಳಿದ: ‘ಆನಂದದಿಂದ ಏನು ಪ್ರಯೋಜನ? ಎಲ್ಲರೂ ಆನಂದಭರಿತರೆ. ಕಾಡುಜನರು ಯಾವಾಗಲೂ ಆನಂದದಿಂದ “ಹೋ! ಹೋ!” ಅಂತ ಹಾಡುವುದು ನರ್ತಿಸುವುದು ಇವನ್ನೆಲ್ಲಾ ಮಾಡುತ್ತಾರೆ.”’
ರಾಖಾಲ: “ಪರಮಹಂಸರು ಕಾಳೀಪ್ರಸಾದನಿಗೆ ಉತ್ತರವಿತ್ತರು: ‘ಏನು ನೀನು ಹೇಳುವುದು? ಬ್ರಹ್ಮಾನಂದ ವಿಷಯಾನಂದ ಒಂದೇ ಏನು? ಜೀವರು ವಿಷಯಾನಂದದಲ್ಲಿ ಮಗ್ನರಾಗಿರುತ್ತಾರೆ. ವಿಷಯಾಸಕ್ತಿ ಸಂಪೂರ್ಣವಾಗಿ ಹೋಗದ ಹೊರತು ಬ್ರಹ್ಮಾನಂದ ದೊರಕದು. ಒಂದು ಕಡೆ ಹಣದ ಆನಂದ, ಇಂದ್ರಿಯಸುಖಗಳ ಆನಂದ; ಇನ್ನೊಂದು ಕಡೆ ಭಗವತ್ಸಾಕ್ಷಾತ್ಕಾರದ ಆನಂದ. ಇವೆರಡೂ ಎಂದಿಗಾದರೂ ಒಂದೇ ಶ್ರೇಣಿಗೆ ಸೇರಿದವುಗಳಾಗುವುದೆ? ಋಷಿಗಳು ಬ್ರಹ್ಮಾನಂದವನ್ನು ಅನುಭವಿಸಿದ್ದರು.”’
ಮಾಸ್ಟರ್: “ಕಾಳೀಪ್ರಸಾದ ಈಗ ಬುದ್ಧದೇವನ ಧ್ಯಾನಮಾಡುತ್ತಿಲ್ಲವೇ? ಅದಕ್ಕಾಗಿ ಆತ ಆನಂದಾತೀತವಾದ ಅವಸ್ಥೆಯ ಸಂಬಂಧವಾಗಿ ಮಾತಾಡುತ್ತಿರುವುದು.”
ರಾಖಾಲ: “ಹೌದು, ಕಾಳೀಪ್ರಸಾದ ಪರಮಹಂಸರ ಹತ್ತಿರವೂ ಬುದ್ಧನ ಸಂಬಂಧವಾಗಿ ಮಾತಾಡಿದ. ಅವರು ಹೇಳಿದರು: ‘ಬುದ್ಧದೇವ ಅವತಾರಪುರುಷ; ಆತನನ್ನು ಬೇರೆಯವರೊಡನೆ ಹೋಲಿಸುವುದೆ? ಆತ ಒಬ್ಬ ಮಹಾಪುರುಷ. ಆತನಿಗೆ ತಕ್ಕಂತೆ ಆತನ ಉಪದೇಶಗಳು ಮಹತ್ತಾದುವೆ.’ ಕಾಳೀಪ್ರಸಾದ ಹೇಳಿದ: ‘ಎಲ್ಲವೂ ಭಗವಂತನ ಶಕ್ತಿಯಿಂದ ತಾನೆ ಉದ್ಭವವಾಗಿದೆ? ಆ ಶಕ್ತಿಯಿಂದಲೇ ಭಗವದಾನಂದ, ವಿಷಯಾನಂದ ಎರಡೂ ಹೊರಹೊಮ್ಮಿವೆ.”’
ಮಾಸ್ಟರ್: “ಅದಕ್ಕೆ ಪರಮಹಂಸರು ಏನು ಉತ್ತರಕೊಟ್ಟರು?”
ರಾಖಾಲ: “ಅವರು ಹೇಳಿದರು ‘ಏನು ನೀನು ಹೇಳುವುದು? ಸಂತಾನೋತ್ಪಾದನೆಗೆ ಮೂಲಭೂತವಾದ ಶಕ್ತಿ, ಭಗವತ್ಸಾಕ್ಷಾತ್ಕಾರಕ್ಕೆ ಕಾರಣಭೂತವಾದ ಶಕ್ತಿ ಎರಡೂ ಒಂದೇ ಏನು?”’
ಪರಮಹಂಸರು ಎರಡನೆ ಅಂತಸ್ತಿನ ತಮ್ಮ ಕೊಠಡಿಯಲ್ಲಿ ಕುಳಿತಿದ್ದಾರೆ. ಅಲ್ಲಿ ರಾಖಾಲ, ನರೇಂದ್ರ, ಶಶಿ, ಸುರೇಂದ್ರ, ಮಾಸ್ಟರ್, ಭವನಾಥ ಇವರೇ ಮೊದಲಾದ ಭಕ್ತರು ಕುಳಿತುಕೊಂಡಿದ್ದಾರೆ. ಡಾಕ್ಟರ್ ಮಹೇಂದ್ರ ಸರ್ಕಾರ್, ಡಾಕ್ಟರ್ ರಾಜೇಂದ್ರದತ್ತ ಇವರು ಪರಮಹಂಸರ ದೇಹಾರೋಗ್ಯವನ್ನು ಪರೀಕ್ಷಿಸಲು ಬಂದಿದ್ದಾರೆ. ಪರಮಹಂಸರ ರೋಗ ದಿನದಿನವೂ ಪ್ರಬಲಗೊಳ್ಳುತ್ತಿದೆ.
ಮನೆಯ ಬಾಡಿಗೆ ಅರುವತ್ತೊ ಅರುವತ್ತೈದೊ ಆಗುತ್ತಿದೆ. ಸುರೇಂದ್ರ ಅದರ ಅಧಿಕಾಂಶ ಭಾಗವನ್ನು ಕೊಡುತ್ತಿದ್ದಾನೆ. ಆ ಮನೆಯನ್ನು ಆತನ ಹೆಸರಿನಲ್ಲೇ ಬಾಡಿಗೆಗೆ ತೆಗೆದುಕೊಂಡಿದೆ. ಉಳಿದವರು ತಮ್ಮ ಶಕ್ತ್ಯನುಸಾರ ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಮನೆಯ ಕೆಲಸಕಾರ್ಯಗಳನ್ನೆಲ್ಲ ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಒಬ್ಬ ಅಡುಗೆಯವನನ್ನು ಮತ್ತು ಒಬ್ಬಳು ದಾಸಿಯನ್ನು ನೇಮಿಸಿದ್ದಾರೆ.
ಶ್ರೀರಾಮಕೃಷ್ಣರು ಡಾಕ್ಟರ್ ಸರ್ಕಾರನಿಗೆ ಮತ್ತು ಉಳಿದವರಿಗೆ: “ಖರ್ಚು ಸುಮ್ಮನೆ ಬೆಳೆಯುತ್ತಿದೆ.”
ಡಾಕ್ಟರ್ ಸರ್ಕಾರ್ (ಭಕ್ತರ ಕಡೆ ತಿರುಗಿ): “ಅದಕ್ಕೆಲ್ಲ ಇವರು ಸಿದ್ಧರಾಗಿಯೇ ಇದ್ದಾರೆ. ಇಲ್ಲಿನ ಖರ್ಚನ್ನೆಲ್ಲಾ ಇವರು ನಿರಾಯಾಸವಾಗಿ ಕೊಡಬಲ್ಲರು. (ಪರಮಹಂಸರಿಗೆ) ಈಗ ನೋಡಿ, ಕಾಂಚನದ ಆವಶ್ಯಕತೆಯನ್ನು.”
ಶ್ರೀರಾಮಕೃಷ್ಣರು (ನರೇಂದ್ರನಿಗೆ): “ಏಕೆ ನೀನು ಉತ್ತರ ಕೊಡಬಾರದು?”
ನರೇಂದ್ರ ಸುಮ್ಮನೆ ಕುಳಿತುಕೊಂಡಿದ್ದಾನೆ. ಡಾಕ್ಟರ್ ಮತ್ತೆ ಮಾತು ಮುಂದುವರಿಸಿದ.
ಡಾಕ್ಟರ್: “ಕಾಂಚನ ಆವಶ್ಯಕ. ಕಾಮಿನಿಯೂ ಆವಶ್ಯಕ.”
ಡಾಕ್ಟರ್ ರಾಜೇಂದ್ರದತ್ತ: “ಹೌದು, ಇವರ (ಪರಮಹಂಸರ) ಹೆಂಡತಿ ಇವರಿಗೆ ಅಡುಗೆ ಮಾಡಿ ಹಾಕುತ್ತಿದ್ದಾರೆ.”
ಡಾಕ್ಟರ್ ಸರ್ಕಾರ್ (ಪರಮಹಂಸರಿಗೆ): “ನೋಡಿದಿರೋ?”
ಶ್ರೀರಾಮಕೃಷ್ಣರು (ನಗುತ್ತ): ಹೌದು, –ಆದರೆ ಬಹಳ ತಾಪತ್ರಯ!”
ಡಾಕ್ಟರ್ ಸರ್ಕಾರ್: “ತಾಪತ್ರಯವಿಲ್ಲದೆ ಇತ್ತು ಎಂದರೆ ಎಲ್ಲರೂ ಪರಮಹಂಸರಾಗಿ ಬಿಡುತ್ತಾರೆ.”
ಶ್ರೀರಾಮಕೃಷ್ಣರು: “ಹೆಂಗಸೇನಾದರೂ ನನ್ನನ್ನು ಮುಟ್ಟಿದ್ದೇ ಆದರೆ, ನಾನು ರೋಗಗ್ರಸ್ತನಾಗಿಬಿಡುತ್ತೇನೆ. ಅವರು ಮುಟ್ಟಿದ ಭಾಗ ಸುಮ್ಮನೆ ‘ಚಳಕ್ ಚಳಕ್’ ಅಂತ ಮುಳ್ಳುಳ್ಳ ಮೀನು ಚುಚ್ಚಿದ ಹಾಗೆ ನೋಯಲಾರಂಭಿಸುತ್ತದೆ.”
ಡಾಕ್ಟರ್ ಸರ್ಕಾರ್: “ಅದರಲ್ಲೇನೋ ನನಗೆ ವಿಶ್ವಾಸ. ಆದರೆ ಹೆಂಗಸರು ಇಲ್ಲದಿದ್ದರೆ ಕೆಲಸಕಾರ್ಯ ನಡೆಯುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಹಣವನ್ನು ಕೈಯಲ್ಲಿ ತೆಗೆದುಕೊಂಡೆನೆಂದರೆ ಕೈ ತಿರುಚು ಮುರುಚು ಕೊಂಡುಬಿಡುತ್ತದೆ. ಉಸಿರಾಡುವುದೂ ನಿಂತುಹೋಗುತ್ತದೆ. ಹಣದಿಂದ ವಿದ್ಯಾ ಸಂಸಾರವನ್ನು–ಭಗವಂತನ ಸೇವೆ, ಸಾಧುಭಕ್ತರ ಸೇವೆ–ನಡೆಸಿಕೊಂಡು ಹೋಗುವುದಾದರೆ, ಅದರಿಂದ ಯಾವ ಕೆಡುಕೂ ಸಂಭವಿಸದು.
“ಹೆಂಗಸರನ್ನು ಕಟ್ಟಿಕೊಂಡು ಮಾಯಾಸಂಸಾರವನ್ನು ನಡೆಸಿಕೊಂಡು ಹೋದರೆ, ಭಗವಂತನನ್ನು ಮರೆತೇಬಿಡಬೇಕಾಗುತ್ತದೆ. ಯಾರು ಈ ಜಗತ್ತಿನ ಮಾತೆಯೊ ಆಕೆಯೇ ಈ ಮಾಯಾರೂಪವನ್ನು ಹೆಂಗಸಿನ ರೂಪವನ್ನು ಧರಿಸಿದ್ದಾಳೆ. ಇದನ್ನು ಸರಿಯಾಗಿ ಅರಿತು ಕೊಂಡಿದ್ದೇ ಆದರೆ, ಬಳಿಕ ಮಾಯಾಸಂಸಾರವನ್ನು ಮುಂದುವರಿಸಿಕೊಂಡು ಹೋಗಲು ಇಚ್ಛೆಯಾಗುವುದಿಲ್ಲ. ಎಲ್ಲಾ ಸ್ತ್ರೀಯರೂ ಮಾತೆಯರೇ ಎಂಬ ಬೋಧೆಯಾಗಿಬಿಟ್ಟಿತು ಎಂದರೆ, ಬಳಿಕ ಬೇಕಾದರೆ ವಿದ್ಯಾಸಂಸಾರವನ್ನು ನಡೆಯಿಸಿಕೊಂಡು ಹೋಗಲು ಸಾಧ್ಯ. ಭಗವದ್ದರ್ಶನ ಆಗದ ಹೊರತು ಹೆಂಗಸಿನ ಸ್ವರೂಪ ಏನು ಎಂಬುದು ಅರ್ಥವಾಗುವುದಿಲ್ಲ.”
ಹೋಮಿಯೋಪತಿ ಔಷಧ ತೆಗೆದುಕೊಳ್ಳುತ್ತಿರುವುದರಿಂದ ಪರಮಹಂಸರು ಈಗ ಕೆಲವು ದಿನಗಳಿಂದ ಸ್ವಲ್ಪ ಉತ್ತಮಗೊಂಡವರಂತೆ ಕಾಣುತ್ತಿದ್ದಾರೆ.
ಡಾಕ್ಟರ್ ರಾಜೇಂದ್ರ (ಶ್ರೀರಾಮಕೃಷ್ಣರಿಗೆ): “ನಿಮಗೆ ಗುಣವಾದ ನಂತರ ನೀವು ಹೋಮಿಯೋಪತಿ ಚಿಕಿತ್ಸೆ ಮಾಡುವುದನ್ನು ಕಲಿಯಬೇಕು. ಇಲ್ಲದಿದ್ದರೆ ನೀವು ಬದುಕಿ ಫಲವೇನು?” (ಎಲ್ಲರೂ ನಗುತ್ತಿದ್ದಾರೆ.)
ನರೇಂದ್ರ: “ಚರ್ಮದ ಹಾಗೆ ಬೇರೊಂದೂ ಇಲ್ಲ! ಮೋಚಿಗೆ ಚರ್ಮದಂಥ ಉತ್ಕೃಷ್ಟ ವಸ್ತು ಈ ಜಗತ್ತಿನಲ್ಲಿ ಬೇರೊಂದಿಲ್ಲ!” (ಎಲ್ಲರೂ ನಗುತ್ತಿದ್ದಾರೆ.)
ಸ್ವಲ್ಪ ಹೊತ್ತಾದನಂತರ ಡಾಕ್ಟರುಗಳು ಹೊರಟುಹೋದರು. ಶ್ರೀರಾಮಕೃಷ್ಣರು ಮಾಸ್ಟರೊಡನೆ ಮಾತುಕತೆ ಆಡುತ್ತಿದ್ದಾರೆ. ಕಾಮಿನಿಯ ಸಂಬಂಧವಾಗಿ ತಮ್ಮ ಮಾನಸಿಕ ವರ್ತನೆ ಏನು ಎಂಬುದನ್ನು ವಿವರಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಇವರು ಕಾಮಕಾಂಚನವಿಲ್ಲದೆ ಬದುಕಿರ ಲಾಗುವುದಿಲ್ಲ ಅಂತ ಹೇಳುತ್ತಿದ್ದಾರೆ. ನನ್ನ ಮಾನಸಿಕ ಅವಸ್ಥೆ ಏನು ಎಂಬುದು ಇವರಿಗೆ ಅರ್ಥವಾಗುತ್ತಿಲ್ಲ.
“ಹೆಂಗಸಿನ ಶರೀರವೇನಾದರೂ ನನ್ನ ಕೈಗೆ ತಾಕಿತೆಂದರೆ, ಅದಕ್ಕೆ ಜೋಮು ಹಿಡಿದು ನೋಯಲಾರಂಭಿಸುತ್ತದೆ. ಆತ್ಮೀಯ ಭಾವನೆಯಿಂದ ಹೆಂಗಸನ್ನು ಸಮೀಪಿಸಿ ಆಕೆಯೊಡನೆ ಮಾತುಕತೆಗಳಾಡಲು ಆರಂಭಿಸಿದರೆ ನನಗೂ ಆಕೆಗೂ ಮಧ್ಯೆ ಒಂದು ಅಡ್ಡಕಟ್ಟನ್ನು ಹಾಕಿರುವ ಹಾಗೆ ಅನುಭವವಾಗುತ್ತದೆ. ಅದನ್ನು ನಾನು ದಾಟಿ ಆ ಕಡೆಗೆ ಹೋಗುವ ಹಾಗೇ ಇಲ್ಲ.
“ಕೊಠಡಿಯಲ್ಲಿ ನಾನೊಬ್ಬನೇ ಕುಳಿತುಕೊಂಡಿರುವಾಗ, ಅಕಸ್ಮಾತ್ತಾಗಿ ಹೆಂಗಸರು ಕೊಠಡಿಯನ್ನು ಪ್ರವೇಶಿಸಿದರೆ, ಒಡನೆಯೇ ನನಗೆ ಬಾಲಕನ ಅವಸ್ಥೆ ಬಂದುಬಿಡುತ್ತದೆ. ಆಗ ಆಕೆ ನನ್ನ ತಾಯಿಯಾಗಿ ಕಂಡುಬರುತ್ತಾಳೆ.”
ಮಾಸ್ಟರ್ ಪರಮಹಂಸರ ಹಾಸಿಗೆಯ ಹತ್ತಿರ ಕುಳಿತುಕೊಂಡು ಆಶ್ಚರ್ಯಚಕಿತನಾಗಿ ಈ ಮಾತುಗಳನ್ನೆಲ್ಲಾ ಕೇಳುತ್ತಿದ್ದಾನೆ. ನರೇಂದ್ರ ಹಾಸಿಗೆಯಿಂದ ಸ್ವಲ್ಪ ದೂರದಲ್ಲಿ ಕುಳಿತು ಕೊಂಡು ಭವನಾಥನೊಡನೆ ಮಾತುಕತೆ ಆಡುತ್ತಿದ್ದಾನೆ. ಭವನಾಥ ವಿವಾಹ ಮಾಡಿ ಕೊಂಡಿದ್ದಾನೆ. ಉದ್ಯೋಗಕ್ಕಾಗಿ ಪ್ರಯತ್ನಮಾಡುತ್ತಾ ಇದ್ದಾನೆ. ಅದಕ್ಕಾಗಿ ಆತನಿಗೆ ಕಾಶೀಪುರದ ಮನೆಗೆ ಆಗಾಗ ಬಂದು ಹೋಗಲಾಗುತ್ತಿಲ್ಲ. ಭವನಾಥ ಸಂಸಾರಸಾಗರಕ್ಕೆ ಕಾಲುಹಾಕಿರುವುದರಿಂದ, ಆತನ ಯೋಗಕ್ಷೇಮದ ಸಂಬಂಧವಾಗಿ ಪರಮಹಂಸರು ಬಹಳವಾಗಿ ಚಿಂತಿಸುತ್ತಿದ್ದಾರೆ. ವಯಸ್ಸು ಇಪ್ಪತ್ತಮೂರೊ ಇಪ್ಪತ್ತನಾಲ್ಕೊ.
ಶ್ರೀರಾಮಕೃಷ್ಣರು (ನರೇಂದ್ರನಿಗೆ): “ಆತನಿಗೆ ಬಹಳ ಧೈರ್ಯ ಹೇಳು.”
ನರೇಂದ್ರ, ಭವನಾಥ ಇಬ್ಬರೂ ಪರಮಹಂಸರ ಕಡೆ ನೋಡಿ ನಗಲಾರಂಭಿಸಿದ್ದಾರೆ.
ಪರಮಹಂಸರು ಸನ್ನೆಯ ಮೂಲಕ ಭವನಾಥನಿಗೆ ಹೇಳುತ್ತಿದ್ದಾರೆ: “ಬಹಳ ದೊಡ್ಡ ವೀರಪುರುಷನಾಗಿ ಬದುಕು. ಆಕೆ ಮುಸುಕು ಹಾಕಿಕೊಂಡು ಅಳುವುದನ್ನು ನೋಡಿ ನಿನ್ನನ್ನು ನೀನು ಮರೆಯಬೇಡ. ಹೆಂಗಸರು ಬಹಳವಾಗಿ ಅಳುವುದುಂಟು. ಸಿಂಬಳ ತೆಗೆಯುವಾಗಲೂ! (ನರೇಂದ್ರ, ಮಾಸ್ಟರ್, ಭವನಾಥ ನಗುತ್ತಿದ್ದಾರೆ.)
“ಭಗವಂತನನ್ನು ಎಂದಿಗೂ ಮರೆಯಬೇಡ. ವೀರಪುರುಷ ರಮಣಿಯೊಡನೆ ವಾಸಿ ಸಿದರೂ ಆಕೆಯ ಸಹವಾಸವನ್ನು ಮಾಡುವುದಿಲ್ಲ. ನಿನ್ನ ಹೆಂಡತಿಯೊಡನೆ ಭಗವಂತನ ವಿಷಯವಾಗಿಯೇ ಮಾತಾಡು.”
ಕೆಲವು ನಿಮಿಷಗಳಾದನಂತರ ಪರಮಹಂಸರು ಸನ್ನೆಯ ಮೂಲಕ ಭವನಾಥನಿಗೆ ಹೇಳುತ್ತಿದ್ದಾರೆ: “ಇಂದು ಇಲ್ಲೇ ಊಟ ಮಾಡು.”
ಭವನಾಥ: “ಆಗಲಿ, ನನಗಾವ ಸಂಕೋಚವೂ ಇಲ್ಲ.”
ಸುರೇಂದ್ರ ಕೊಠಡಿಗೆ ಬಂದು ಒಂದು ಕಡೆ ಕುಳಿತುಕೊಂಡ. ಭಕ್ತರು ದಿನವೂ ಹೂವಿನ ಹಾರಗಳನ್ನು ತಂದು ಪರಮಹಂಸರಿಗೆ ಅರ್ಪಿಸುತ್ತಿದ್ದಾರೆ. ಅವರು ಅದನ್ನು ಒಂದೊಂದಾಗಿ ತಮ್ಮ ಕೊರಳಿಗೆ ಹಾಕಿಕೊಳ್ಳುವ ಅಭ್ಯಾಸ. ಸುರೇಂದ್ರ ಸುಮ್ಮನೆ ಕುಳಿತುಕೊಂಡಿದ್ದಾನೆ. ಪರಮಹಂಸರು ಪ್ರಸನ್ನರಾಗಿ ಆತನಿಗೆ ಎರಡು ಹಾರಗಳನ್ನು ತಮ್ಮ ಕೊರಳಿನಿಂದ ತೆಗೆದುಕೊಟ್ಟರು. ಈಗ ಸುರೇಂದ್ರ ಅವರಿಗೆ ಪ್ರಣಾಮಮಾಡಿ ಅವರಿಂದ ಹಾರಗಳನ್ನು ಪಡೆದುಕೊಂಡು ಅವನ್ನು ಕೊರಳಿಗೆ ಹಾಕಿಕೊಳ್ಳುತ್ತಿದ್ದಾನೆ.
ಎಲ್ಲರೂ ನಿಶ್ಶಬ್ದರಾಗಿ ಕುಳಿತು ಪರಮಹಂಸರ ಕಡೆ ನೋಡುತ್ತಿದ್ದಾರೆ. ಈಗ ಮತ್ತೆ ಸುರೇಂದ್ರ ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮಮಾಡಿ ನಿಂತುಕೊಂಡಿದ್ದಾನೆ. ಇನ್ನೇನು ಅವರಿಂದ ಬೀಳ್ಕೊಳ್ಳುವುದರಲ್ಲಿದ್ದಾನೆ. ತಾನು ಹೋಗುತ್ತಿದ್ದ ಹಾಗೆ ಭವನಾಥನನ್ನು ಕರೆದು ಹೇಳುತ್ತಿದ್ದಾನೆ: “ದಯವಿಟ್ಟು ಲಾವಂಚದ ಪರದೆಗಳನ್ನು ಕಟ್ಟಿಬಿಡು.”
ಹೀರಾನಂದ ತನ್ನ ಇಬ್ಬರು ಸ್ನೇಹಿತರೊಡನೆ ಕೊಠಡಿಯನ್ನು ಪ್ರವೇಶಿಸಿದ. ಆತ ಕಲ್ಕತ್ತಕ್ಕೆ ಎರಡು ಸಾವಿರದ ಇನ್ನೂರು ಮೈಲಿ ದೂರದಲ್ಲಿರುವ ಸಿಂಧೂ ದೇಶದ ನಿವಾಸಿ. ಆತ ಕಲ್ಕತ್ತದ ವಿಶ್ವವಿದ್ಯಾನಿಲಯದಲ್ಲಿ ತನ್ನ ವ್ಯಾಸಂಗ ಮುಗಿಸಿಕೊಂಡು ತನ್ನ ದೇಶಕ್ಕೆ ಹಿಂದಿರುಗಿ ಹೋಗಿ ಅಲ್ಲಿ “ಸಿಂಧ್ ಟೈಮ್ಸ”, ‘ಸಿಂಧ್ ಸುಧಾರ್’ ಎಂಬ ಎರಡು ವಾರ್ತಾಪತ್ರಿಕೆಗಳ ಸಂಪಾದಕನಾಗಿದ್ದಾನೆ. ಆತ ಕಲ್ಕತ್ತದಲ್ಲಿ ವ್ಯಾಸಂಗಮಾಡುತ್ತಿದ್ದಾಗ, ಕೇಶವಚಂದ್ರಸೇನನನ್ನು ನೋಡಲು ಹೋಗುತ್ತಿದ್ದ ಮತ್ತು ಆತನೊಡನೆ ವಿಶೇಷವಾಗಿ ಪರಿಚಯಮಾಡಿಕೊಂಡಿದ್ದ. ಆತ ಪರಮಹಂಸರನ್ನು ದಕ್ಷಿಣೇಶ್ವರದಲ್ಲಿ ಹಿಂದೆ ನೋಡಿದ್ದ. ಎಲ್ಲೋ ಒಂದು ಸಲ ಪರಮಹಂಸರೊಡನೆ ಒಂದು ರಾತ್ರಿಯನ್ನೂ ಕಳೆದಿದ್ದ. ಪರಮಹಂಸರು ರೋಗಗ್ರಸ್ತರಾಗಿದ್ದಾರೆ ಎಂಬುದನ್ನು ಕೇಳಿ, ಆತ ಸಿಂಧೂ ದೇಶದಿಂದ ಇಲ್ಲಿಗೆ ಅವರ ದರ್ಶನ ಪಡೆಯಲು ಬಂದಿದ್ದಾನೆ. ಪರಮಹಂಸರೂ ಆತನನ್ನು ನೋಡಬೇಕೆಂದು ಬಹಳವಾಗಿ ತವಕಪಡುತ್ತಿದ್ದರು.
ಶ್ರೀರಾಮಕೃಷ್ಣರು ಸಂಜ್ಞೆಯ ಮೂಲಕ ಮಾಸ್ಟರಿಗೆ ಹೀರಾನಂದನನ್ನು ತೋರಿಸಿ “ಈತ ಒಳ್ಳೆಯವ. ನಿನಗೆ ಪರಿಚಯವಿದೆಯೆ?”
ಮಾಸ್ಟರ್: “ಹೌದು, ಪರಿಚಯವಿದೆ.”
ಶ್ರೀರಾಮಕೃಷ್ಣರು (ಹೀರಾನಂದನಿಗೆ ಮತ್ತು ಮಾಸ್ಟರಿಗೆ): “ನೀವಿಬ್ಬರೂ ಒಂದು ಸ್ವಲ್ಪ ಹೊತ್ತು ಮಾತಾಡಿ ನೋಡೋಣ. ನಿಮ್ಮಿಬ್ಬರ ಮಾತು ಕೇಳಬೇಕು ಅಂತ ನನಗೆ ಇಚ್ಛೆಯಾಗಿದೆ.”
ಮಾಸ್ಟರ್ ಸುಮ್ಮನೆ ಕುಳಿತಿರುವುದನ್ನು ನೋಡಿ ಪರಮಹಂಸರು ಆತನಿಗೆ ಹೇಳಿದರು: “ನರೇಂದ್ರ ಇಲ್ಲೇ ಇದ್ದಾನೇನು? ಹೋಗಿ ಕರೆದುಕೊಂಡು ಬಾ.”
ನರೇಂದ್ರ ಕೊಠಡಿಗೆ ಬಂದು ಪರಮಹಂಸರ ಹತ್ತಿರ ಕುಳಿತುಕೊಂಡ.
ಶ್ರೀರಾಮಕೃಷ್ಣರು (ನರೇಂದ್ರ ಮತ್ತು ಹೀರಾನಂದನಿಗೆ): “ನೀವಿಬ್ಬರೂ ಒಂದು ಸ್ವಲ್ಪ ಹೊತ್ತು ಮಾತಾಡಿ ನೋಡೋಣ.”
ಹೀರಾನಂದ ಸುಮ್ಮನೆ ಕುಳಿತಿದ್ದಾನೆ. ಬಹಳವಾಗಿ ಹಿಂದು ಮುಂದು ನೋಡಿ ಮಾತಾಡಲಾರಂಭಿಸಿದ.
ಹೀರಾನಂದ (ನರೇಂದ್ರನಿಗೆ): “ಒಳ್ಳೇದು, ಭಕ್ತನಿಗೆ ದುಃಖ ಬರಲು ಕಾರಣವೇನು?”
ಹೀರಾನಂದನ ಮಾತುಗಳು ಮಧುರವಾಗಿದ್ದುವು. ಕೊಠಡಿಯಲ್ಲಿ ಪ್ರತಿಯೊಬ್ಬನಿಗೂ ಅನಿಸಿತು, ಆತನ ಹೃದಯ ಪ್ರೇಮದಿಂದ ತುಳುಕಾಡುತ್ತಿದೆ ಎಂಬುದಾಗಿ.
ನರೇಂದ್ರ: “ಈ ಜಗತ್ತಿನ ಸೃಷ್ಟಿ ರಚನೆ ಪೈಶಾಚಿಕವಾದ್ದು. ನಾನು ಇದಕ್ಕಿಂತಲೂ ಮೇಲಾದ ಜಗತ್ತನ್ನು ಸೃಷ್ಟಿಮಾಡಿಬಿಡುತ್ತಿದ್ದೆ.”
ಹೀರಾನಂದ: “ದುಃಖ ಇಲ್ಲದೆ ಇತ್ತು ಎಂದರೆ ಸುಖದ ಬೋಧ ಆಗುವುದೆ?”
ನರೇಂದ್ರ: “ಈ ಜಗತ್ತನ್ನು ಯಾವ ರೀತಿಯಾಗಿ ಸೃಷ್ಟಿಸಬೇಕು ಎಂಬುದರ ವಿಷಯವಾಗಿ ನಾನು ಹೇಳುತ್ತಿಲ್ಲ. ಆದರೆ ಆಗಿರುವುದರ ರಚನೆಯ ಸಂಬಂಧವಾಗಿ ಹೇಳುತ್ತಿದ್ದೇನೆ.
“ಆದರೆ ವಿಶ್ವದೇವೈಕ್ಯವಾದದಲ್ಲಿ ವಿಶ್ವಾಸವಿದ್ದುದೇ ಆದರೆ, ಎಲ್ಲಾ ಸಮಸ್ಯೆಗಳ ಬಗೆಯೂ ಪರಿಹಾರ ದೊರೆತುಬಿಡುತ್ತದೆ. ಎಲ್ಲವೂ ಭಗವಂತನೆ ಎಂಬುದರಲ್ಲಿ ವಿಶ್ವಾಸವಿದ್ದುದೇ ಆದರೆ ಸಕಲ ಸಂದೇಹಗಳೂ ನಿವೃತ್ತಿಯಾಗಿ ಹೋಗುತ್ತವೆ. ಎಲ್ಲಕ್ಕೂ ಭಗವಂತನೊಬ್ಬನೇ ಕಾರಣ.”
ಹೀರಾನಂದ: “ಹಾಗೆಂದೇನೋ ಬಾಯಲ್ಲಿ ಸುಲಭವಾಗಿ ಹೇಳಿಬಿಡಬಹುದು.”
ಈಗ ನರೇಂದ್ರ ಶ್ರೀ ಶಂಕರಾಚಾರ್ಯರ ನಿರ್ವಾಣಷಟ್ಕವನ್ನು ಸ್ವರಹಾಕಿಕೊಂಡು ಹೇಳುತ್ತಿದ್ದಾನೆ.:
ನಿರ್ವಾಣಷಟ್ಕಮ್
ಮನೋಬುದ್ಧ್ಯಹಂಕಾರ ಚಿತ್ತಾನಿ ನಾಹಂ
ನ ಚ ಶ್ರೋತ್ರಜಿಹ್ವೇ ನ ಚ ಘ್ರಾಣನೇತ್ರೇ ।
ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯು-
ಶ್ಚಿದಾನಂದರೂಪಃ ಶಿವೋಠ್ಹಂ ಶಿವೋಠ್ಹಂ ॥ ೧ ॥
ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯು-
ರ್ನ ವಾ ಸಪ್ತಧಾತುರ್ನ ವಾ ಪಂಚಕೋಶಃ ।
ನ ವಾಕ್ಪಾಣಿಪಾದಂ ನ ಚೋಪಸ್ಥಪಾಯೂ
ಚಿದಾನಂದರೂಪಃ ಶಿವೋಠ್ಹಂ ಶಿವೋಠ್ಹಂ ॥ ೨ ॥
ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ
ಮದೋ ನೈವ ಮೇ ನೈವ ಮಾತ್ಸರ್ಯಭಾವಃ ।
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷ-
ಶ್ಚಿದಾನಂದರೂಪಃ ಶಿವೋಹಂ ಶಿವೋಹಂ ॥ ೩ ॥
ನ ಪುಣ್ಯಂ ನ ಪಾಪಂನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಥೋ ನ ವೇದಾ ನ ಯಜ್ಞಾಃ ।
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದರೂಪಃ ಶಿವೋಠ್ಹಂ ಶಿವೋಠ್ಹಂ ॥ ೪ ॥
ನ ಮೃತ್ಯುರ್ನ ಶಂಕಾ ನ ಮೇ ಜಾತಿಭೇದಃ
ಪಿತಾ ನೈವ ಮೇ ನೈವ ಮಾತಾ ನ ಜನ್ಮ ।
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯ-
ಶ್ಚಿದಾನಂದರೂಪಃ ಶಿವೋಠ್ಹಂ ಶಿವೋಠ್ಹಂ ॥ ೫ ॥
ಅಹಂ ನಿರ್ವಿಕಲ್ಪೋ ನಿರಾಕಾರರೂಪೋ
ವಿಭುತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್ ।
ನ ವಾಸಂಗತಂ ನೈವ ಮುಕ್ತಿರ್ನ ಬಂಧ-
ಶ್ಚಿದಾನಂದರೂಪಃ ಶಿವೋಠ್ಹಂ ಶಿವೋಠ್ಹಂ ॥ ೬ ॥
ಹೀರಾನಂದ: “ಭೇಷ್!”
ಶ್ರೀರಾಮಕೃಷ್ಣರು (ಸಂಜ್ಞೆಯ ಮೂಲಕ ಹೀರಾನಂದನಿಗೆ): “ಆತನಿಗೆ ಈಗ ಉತ್ತರ ಕೊಡು.”
ಹೀರಾನಂದ: “ಕೊಠಡಿಯನ್ನು ಅದರ ಒಂದು ಮೂಲೆಯಲ್ಲಿ ನಿಂತುಕೊಂಡು ನೋಡಿದರೆ, ಏನು ಕಾಣುತ್ತದೊ, ಅದರ ಮಧ್ಯೆ ನಿಂತುಕೊಂಡು ನೋಡಿದರೂ ಅದೇ ಕಾಣುತ್ತದೆ. ‘ಹೇ ಭಗವಂತ, ನಾನು ನಿನ್ನ ದಾಸ’ ಅಂತ ಹೇಳಿದರೂ ಆತನ ಸಾಕ್ಷಾತ್ಕಾರ ದೊರೆಯುತ್ತದೆ. ಅಥವಾ, ‘ಸೋಠ್ಹಮ್’ ಅಂತ ಹೇಳಿದರೂ ಆತನ ಸಾಕ್ಷಾತ್ಕಾರ ದೊರೆಯುತ್ತದೆ. ಮನೆಯನ್ನು ಅದರ ಅನೇಕ ಬಾಗಿಲುಗಳಿಂದ ಪ್ರವೇಶಿಸಬಹುದು.”
ಎಲ್ಲರೂ ನಿಶ್ಶಬ್ದರಾಗಿ ಕುಳಿತಿದ್ದಾರೆ. ಹೀರಾನಂದ ನರೇಂದ್ರನಿಗೆ ಹೇಳಿದ: “ಇನ್ನಾವು ದಾದರೂ ಹಾಡು.” ನರೇಂದ್ರ ಶಂಕರಾಚಾರ್ಯ ವಿರಚಿತ ಕೌಪೀನಪಂಚಕವನ್ನು ಸ್ವರ ಕೊಟ್ಟು ಹಾಡುತ್ತಿದ್ದಾನೆ:
ವೇದಾಂತವಾಕ್ಯೇಷು ಸದಾ ರಮಂತೋ
ಭಿಕ್ಷಾನ್ನಮಾತ್ರೇಣ ಚ ತುಷ್ಟಿಮಂತಃ ।
ವಿಶೋಕಮಂತಃಕರಣೇ ಚರಂತಃ
ಕೌಪೀನವಂತಃ ಖಲು ಭಾಗ್ಯವಂತಃ ॥
ಮೂಲಂ ತರೋಃ ಕೇವಲಮಾಶ್ರಯಂತಃ
ಪ್ರಾಣಿದ್ವಯಂ ಭೋಕ್ತುಮಮಂತ್ರಯಂತಃ ।
ಕಂಥಾಮಿವ ಶ್ರೀಮಪಿ ಕುತ್ಸಯಂತಃ
ಕೌಪೀನವಂತಃ ಖಲು ಭಾಗ್ಯವಂತಃ ॥
ಸ್ವಾನಂದಭಾವೇ ಪರಿತುಷ್ಟಿಮಂತಃ
ಸುಶಾಂತಸರ್ವೇಂದ್ರಿಯವೃತ್ತಿಮಂತಃ ।
ಅಹರ್ನಿಶಂ ಬ್ರಹ್ಮಸುಖೇ ರಮಂತಃ
ಕೌಪೀನವಂತಃ ಖಲು ಭಾಗ್ಯವಂತಃ ॥
ಪರಮಹಂಸರು, ‘ಅಹರ್ನಿಶಂ ಬ್ರಹ್ಮಸುಖೇ ರಮಂತಃ’ ಎಂಬ ಪಾದವನ್ನು ಕೇಳಿ ದೊಡನೆಯೇ ಅವರು ಮೆತ್ತಗೆ ಹೇಳಿದರು: “ಆಹ!” ತರುವಾಯ ಸಂಜ್ಞೆಯ ಮೂಲಕ ಭಕ್ತರಿಗೆ ಹೇಳುತ್ತಿದ್ದಾರೆ: “ಇದು ಯೋಗಿಯ ಲಕ್ಷಣ.”
ನರೇಂದ್ರ ಮುಂದುವರಿಸುತ್ತಿದ್ದಾನೆ:
ದೇಹಾದಿಭಾವಂ ಪರಿವರ್ತಯಂತಃ
ಸ್ವಾತ್ಮಾನಮಾತ್ಮನ್ಯವಲೋಕಯಂತಃ ।
ನಾಂತಂ ನ ಮಧ್ಯಂ ನ ಬಹಿಃಸ್ಮರಂತಃ
ಕೌಪೀನವಂತಃ ಖಲು ಭಾಗ್ಯವಂತಃ ॥
ಬ್ರಹ್ಮಾಕ್ಷರಂ ಪಾವನಮುಚ್ಚರಂತೋ
ಬ್ರಹ್ಮಾಹಮಸ್ಮೀತಿ ವಿಭಾವಯಂತಃ ।
ಭಿಕ್ಷಾಶಿನೋ ದಿಕ್ಷು ಪರಿಭ್ರಮಂತಃ
ಕೌಪೀನವಂತಃ ಖಲು ಭಾಗ್ಯವಂತಃ ॥
ಮತ್ತೆ ನರೇಂದ್ರ ಹಾಡಿದ:
ಪರಿಪೂರ್ಣಮಾನಂದಮ್
ಅಂಗವಿಹೀನಂ ಸ್ಮರ ಜಗನ್ನಿಧಾನಮ್ ।
ಶ್ರೋತ್ರಸ್ಯ ಶ್ರೋತ್ರಂ ಮನಸೋ ಮನೋ
ಯದ್ವಾಚೋ ಹ ವಾಚಂ ವಾಗತೀತಂ
ಪ್ರಾಣಸ್ಯ ಪ್ರಾಣಂ ಪರಂ ವರೇಣ್ಯಮ್ ॥
ಪರಮಹಂಸರು ನರೇಂದ್ರನಿಗೆ: “ಹಾಡು– ‘ಇರುವುದೆಲ್ಲವು ನೀನೆ ಈ ಜಗದಲಿ!’ ಎಂಬುದನು.”
ನರೇಂದ್ರ ಹಾಡುತ್ತಿದ್ದಾನೆ:
ನನ್ನ ಮನವನು ನಿನಗೆ ಅರ್ಪಿಸಿರುವೆನು ಗುರುವೆ
ಇರುವುದೆಲ್ಲವು ನೀನೆ ಈ ಜಗದಲಿ!
ನಿನ್ನೊಬ್ಬನನೆ ಕಂಡೆ; ಮತ್ತೆ ಯಾರೂ ಇಲ್ಲ;
ನನ್ನಾತ್ಮಬಂಧು ನೀ ಸರ್ವಾಶ್ರಯ.
ನೀನಿರದ ಎದೆಯಿಲ್ಲ; ಎಲ್ಲರೆದೆಯೊಳು ನೀನೆ…..
ಪರಮಹಂಸರು, ‘ನೀನಿರದ ಎದೆಯಿಲ್ಲ; ಎಲ್ಲರೆದೆಯೊಳು ನೀನೆ’ ಎಂಬ ಚರಣವನ್ನು ಕೇಳಿದೊಡನೆಯೇ, ಸಂಜ್ಞೆಯ ಮೂಲಕ ಹೇಳುತ್ತಿದ್ದಾರೆ:
“ಭಗವಂತ ಪ್ರತಿಯೊಬ್ಬರ ಹೃದಯದಲ್ಲೂ ಇದ್ದಾನೆ. ಆತ ಅಂತರ್ಯಾಮಿ.”
ನರೇಂದ್ರ ‘ಇರುವುದೆಲ್ಲವು ನೀನೆ ಈ ಜಗದಲಿ! ನಿನ್ನೊಬ್ಬನನೆ ಕಂಡೆ, ಮತ್ತೆ ಯಾರೂ ಇಲ್ಲ” ಎಂಬುದಾಗಿ ಹಾಡಿದಾಗ, ಹೀರಾನಂದ ನರೇಂದ್ರನಿಗೆ ಹೇಳಿದ: “ಹೌದು, ‘ಇರುವುದೆಲ್ಲವು ನೀನೆ.’ ಈಗ ನೀನು ಹೇಳುತ್ತಿದ್ದೀಯೆ: ‘ನೀನು! ನೀನು! ನಾನಲ್ಲ, ನೀನು!”’
ನರೇಂದ್ರ: “ನನಗೆ ಒಂದನ್ನು ಕೊಡು, ನಿನಗೆ ಕೋಟಿಯನ್ನು ಕೊಡುತ್ತೇನೆ. ನೀನೆ ನಾನು ನಾನೇ ನೀನು. ನಾನು ವಿನಾ ಬೇರೆ ಏನೂ ಇಲ್ಲ.”
ಈಗ ನರೇಂದ್ರ ಅಷ್ಟಾವಕ್ರಸಂಹಿತೆಯಿಂದ ಕೆಲವು ಶ್ಲೋಕಗಳನ್ನು ಪಠಿಸಲಾರಂಭಿ ಸಿದ್ದಾನೆ. ಕೊಠಡಿ ಮತ್ತೆ ನಿಶ್ಶಬ್ದತೆಯಿಂದ ಕೂಡಿದೆ.
ಶ್ರೀರಾಮಕೃಷ್ಣರು ಹೀರಾನಂದನಿಗೆ ನರೇಂದ್ರನನ್ನು ತೋರಿಸಿ: “ಆತ ಒರೆಯಿಂದ ತೆಗೆದ ಕತ್ತಿಯನ್ನು ಹಿಡಿದು ತಿರುಗಾಡುತ್ತಿರುವವನಂತಿದ್ದಾನೆ. (ಹೀರಾನಂದನನ್ನು ಮಾಸ್ಟರಿಗೆ ತೋರಿಸಿ) ಎಷ್ಟು ಶಾಂತನಾಗಿದ್ದಾನೆ! ನಾಗರಹಾವು ಹೆಡೆಬಿಚ್ಚಿ ಹಾವಾಡಿಗನ ಎದುರು ಸುಮ್ಮನೆ ಕುಳಿತಿರುವ ಹಾಗೆ.”
ಪರಮಹಂಸರು ಅಂತರ್ಮುಖರಾಗಿದ್ದಾರೆ. ಅವರ ಹತ್ತಿರ ಹೀರಾನಂದ ಮತ್ತು ಮಾಸ್ಟರ್ ಕುಳಿತಿದ್ದಾರೆ. ಕೊಠಡಿ ನಿಶ್ಶಬ್ದವಾಗಿದೆ. ಪರಮಹಂಸರಿಗೆ ಬಂದಿರುವ ರೋಗ ಅವರಿಗೆ ತಡೆಯಲಾರದ ವೇದನೆಯನ್ನುಂಟುಮಾಡುತ್ತಿದೆ. ಭಕ್ತರ ಕೈಯಲ್ಲಿ ಈ ರೋಗದ ದಾರುಣತೆಯನ್ನು ನೋಡಿ ಸಹಿಸಲಾಗುತ್ತಿಲ್ಲ; ಆದರೂ ಪರಮಹಂಸರು ಹೇಗೋ ಮಾಡಿ ಅವರೆಲ್ಲರೂ ಅದನ್ನು ಮರೆಯುವಂತೆ ಮಾಡಿದ್ದಾರೆ. ಯಾವ ರೋಗವೂ ಇಲ್ಲದವರಂತೆ ಹಸನ್ಮುಖರಾಗಿ ಕುಳಿತಿದ್ದಾರೆ.
ಭಕ್ತರು ಹೂವುಗಳನ್ನು ಮತ್ತು ಹೂವಿನ ಹಾರಗಳನ್ನು ತೆಗೆದುಕೊಂಡು ಬಂದು ಪರಮಹಂಸರಿಗೆ ಅರ್ಪಿಸಿದ್ದಾರೆ. ಅವರು ಆದರಿಂದ ಒಂದು ಹೂವನ್ನು ತೆಗೆದುಕೊಂಡು ಅದನ್ನು ತಮ್ಮ ತಲೆ, ಗಂಟಲು, ಹೃದಯ, ನಾಭಿ ಇವುಗಳಿಗೆ ಮುಟ್ಟಿಸುತ್ತಿದ್ದಾರೆ. ಚಿಕ್ಕ ಹುಡುಗ ಹೂವಿನೊಡನೆ ಆಟವಾಡುತ್ತಿರುವನೊ ಏನೊ ಎಂಬಂತೆ ಭಕ್ತರಿಗೆ ತೋರಿಬಂತು.
ಪರಮಹಂಸರು ತಮ್ಮ ಭಕ್ತರಿಗೆ ಹೇಳಿದ್ದರು, ತಮಗೆ ಭಗವದ್ಭಾವ, ಭಗವದ್ದರ್ಶನ ಉಂಟಾದಾಗಲೆಲ್ಲ ಮಹಾವಾಯು ಊರ್ಧ್ವಗಾಮಿಯಾಗುತ್ತದೆ ಎಂಬುದಾಗಿ.
ಈಗ ಅವರು ಮಾಸ್ಟರೊಡನೆ ಮಾತುಗಳಾಡಲು ಆರಂಭಿಸಿದ್ದಾರೆ.
ಶ್ರೀರಾಮಕೃಷ್ಣರು: “ಮಹಾವಾಯು ಯಾವಾಗ ಊರ್ಧ್ವಗಾಮಿಯಾಗಿಬಿಟ್ಟಿತು ಎಂಬುದನ್ನು ನಾನು ಹೇಳಲಾರೆ. ಈಗ ನನಗೆ ಬಾಲಭಾವ ಬಂದುಬಿಟ್ಟಿದೆ. ಅದಕ್ಕಾಗಿಯೇ ಹೂವುಗಳನ್ನು ತೆಗೆದುಕೊಂಡು ಈ ರೀತಿಯಾಗಿ ಆಟವಾಡುತ್ತಿದ್ದೇನೆ. ಈಗ ನನಗೆ ಏನು ಕಾಣುತ್ತಿದೆ ಗೊತ್ತೆ? ಈ ಶರೀರ ಬಿದಿರು ದಬ್ಬೆಗಳಿಂದ ಬಿಗಿದ ಒಂದು ಆಕಾರವಾಗಿರುವ ಹಾಗೆಯೂ, ಇದಕ್ಕೆ ಬಟ್ಟೆ ಹೊದಿಸಿರುವ ಹಾಗೆಯೂ ಕಾಣುತ್ತಿದೆ. ಇದರೊಳಗೆ ಒಬ್ಬ ವಾಸಿಸುತ್ತಿರುವುದರಿಂದ, ಇದು ಚಲಿಸುತ್ತಿದೆ.
“ಮತ್ತೆ ಈ ಶರೀರ ಬೀಜಗಳನ್ನೆಲ್ಲಾ ತೋಡಿಹಾಕಿಬಿಟ್ಟ ಕುಂಬಳಕಾಯಿಯೋಪಾದಿಯಲ್ಲಿ ಕಾಣುತ್ತಿದೆ. ಇದರ ಆಂತರ್ಯದಲ್ಲಿ ಕಾಮಾದಿ ಆಸಕ್ತಿ ಒಂದು ಎಳ್ಳಿನ ಮೊನೆಯಷ್ಟೂ ಇಲ್ಲ. ಒಳಗೆ ಸಂಪೂರ್ಣವಾಗಿ ಚೊಕ್ಕಟವಾಗಿದೆ. ಮತ್ತು-”
ಪರಮಹಂಸರಿಗೆ ಮಾತಾಡಲು ಕಷ್ಟವಾಗುತ್ತಿದೆ. ಅತ್ಯಂತ ದುರ್ಬಲರಾಗಿದ್ದಾರೆ. ಪರಮಹಂಸರು ಮತ್ತೆ ಭಕ್ತರಿಗೆ ಏನು ಹೇಳಬೇಕೆಂದಿದ್ದಾರೆ ಎಂಬುದನ್ನು ಊಹಿಸಿಕೊಂಡು ಮಾಸ್ಟರ್ ಅವರಿಗೆ ಹೇಳಿದ: “ಮತ್ತೆ ನೀವು ನಿಮ್ಮ ಆಂತರ್ಯದಲ್ಲಿ ಭಗವಂತನನ್ನು ನೋಡುತ್ತಾ ಇದ್ದೀರಿ.”
ಶ್ರೀರಾಮಕೃಷ್ಣರು: “ಆಂತರ್ಯದಲ್ಲೂ ಮತ್ತು ಹೊರಗೂ ಅಖಂಡ ಸಚ್ಚಿದಾನಂದ ಒಳಗೆ, ಹೊರಗೆ ಎರಡು ಕಡೆಯಲ್ಲೂ ಇದ್ದಾನೆ. ಆತ ನೆಪಮಾತ್ರಕ್ಕೆ ಈ ಚೀಲವನ್ನು (ತಮ್ಮ ಶರೀರವನ್ನು ತೋರಿಸಿ) ಆಶ್ರಯಿಸಿ ಇದರ ಒಳಗೆ ಮತ್ತು ಹೊರಗೆ ಇದ್ದಾನೆ. ಇದು ನನಗೆ ಸ್ಪಷ್ಟವಾಗಿ ಕಾಣುತ್ತಿದೆ.”
ಮಾಸ್ಟರ್ ಮತ್ತು ಹೀರಾನಂದ ಪರಮಹಂಸರ ಈ ಮಹಾನುಭವಗಳನ್ನು ಏಕಚಿತ್ತ ದಿಂದ ಆಲಿಸುತ್ತಿದ್ದಾರೆ. ಕೆಲವು ನಿಮಿಷಗಳ ನಂತರ ಪರಮಹಂಸರು ಮತ್ತೆ ಅವರ ಕಡೆ ದೃಷ್ಟಿ ಹಾಕಿ ತಮ್ಮ ಮಾತನ್ನು ಮುಂದುವರಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೀವೆಲ್ಲರೂ ನನ್ನ ಸ್ವಬಾಂಧವರಾಗಿ ಕಾಣುತ್ತಿದ್ದೀರಿ. ನೀವು ಯಾರೂ ಹೊರಗಿನವರಾಗಿ ತೋರಿಬರುತ್ತಿಲ್ಲ.
“ನೀವೆಲ್ಲರೂ ಒಂದೊಂದು ಚೀಲಗಳಾಗಿ ತಲೆ ಅಲ್ಲಾಡಿಸುತ್ತಿರುವಂತೆ ಕಾಣುತ್ತಿದೆ.
“ನನ್ನ ಮನಸ್ಸು ಭಗವಂತನೊಡನೆ ಐಕ್ಯವಾದಾಗಲೆಲ್ಲ ಈ ಶರೀರದ ಕಷ್ಟಗಳೆಲ್ಲ ಎಲ್ಲೋ ಒಂದು ಮೂಲೆಯಲ್ಲಿ ಮುದುರಿಬಿದ್ದಿರುವುದು ನನ್ನ ಗಮನಕ್ಕೆ ಬರುತ್ತಿದೆ.
“ಈಗ ನನಗೆ ಸ್ಪಷ್ಟವಾಗಿ ಕಾಣಬರುತ್ತಿದೆ ಆ ಅಖಂಡ ಸಚ್ಚಿದಾನಂದ ಈ ಚರ್ಮದ ಹೊದ್ದಿಕೆಯನ್ನು ಹೊದ್ದುಕೊಂಡಿರುವುದು; ಈ ಗಂಟಲಹುಣ್ಣು ಇದರ ಒಂದು ಭಾಗದಲ್ಲಿ ಮುದುರಿಕೊಂಡಿರುವುದು.”
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡರು. ಕೆಲವು ನಿಮಿಷಗಳಾದ ನಂತರ ಅವರು ಹೇಳಿದರು: “ಜಡದ ಸತ್ತ್ವವನ್ನು ಚೈತನ್ಯವಸ್ತು ಆರೋಪಿಸಿಕೊಳ್ಳುತ್ತದೆ. ಚೈತನ್ಯದ ಸತ್ತ್ವವನ್ನು ಜಡವಸ್ತು ಆರೋಪಿಸಿಕೊಳ್ಳುತ್ತದೆ. ಅದಕ್ಕಾಗಿಯೇ ದೇಹ ರೋಗಗ್ರಸ್ತ ವಾದಾಗ ಮನುಷ್ಯ ಹೇಳುತ್ತಾನೆ: ‘ನನಗೆ ರೋಗ ಬಂದಿದೆ.”’
ಪರಮಹಂಸರು ಈಗತಾನೆ ಆಡಿದ ಮಾತುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಹೀರಾನಂದ ಆಕಾಂಕ್ಷೆ ತೋರಿಸಿದ; ಅದಕ್ಕಾಗಿಯೇ ಮಾಸ್ಟರ್ ಹೇಳುತ್ತಿದ್ದಾನೆ: “ಬಿಸಿನೀರು ಕೈಯನ್ನು ಸುಟ್ಟಾಗ ಜನ ಹೇಳುತ್ತಾರೆ: ನೀರು ಕೈಯನ್ನು ಸುಟ್ಟಿತು ಎಂದು; ಆದರೆ ಸತ್ಯವೇನೆಂದರೆ, ಅದರಲ್ಲಿನ ಕಾವು ಕೈಯನ್ನು ಸುಡುತ್ತದೆ.”
ಹೀರಾನಂದ (ಶ್ರೀರಾಮಕೃಷ್ಣರಿಗೆ): “ದಯವಿಟ್ಟು ಹೇಳಿ, ಭಕ್ತನಿಗೆ ಏಕೆ ಕಷ್ಟ ಬರುತ್ತದೆ?”
ಶ್ರೀರಾಮಕೃಷ್ಣರು : “ಕಷ್ಟಪಡುವುದು ದೇಹ.”
ಪರಮಹಂಸರ ಬಾಯಿಂದ ಇನ್ನೇನು ಬರುವುದೊ ಎಂಬುದನ್ನು ಕೇಳಲು ಅವರಿಬ್ಬರೂ ಉತ್ಸುಕತೆಯಿಂದ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು ಕೇಳಿದರು : “ಅರ್ಥವಾಯಿತೇನು?”
ಮಾಸ್ಟರ್ (ಹೀರಾನಂದನಿಗೆ ಮೆತ್ತಗೆ ಮೆತ್ತಗೆ): “ಭಕ್ತನ ಶರೀರ ಕಷ್ಟಪಡುತ್ತದೆ ಲೋಕ ಶಿಕ್ಷಣಕ್ಕಾಗಿ. ಆತನ ಜೀವನ ಆದರ್ಶಪ್ರಾಯ. ಇಷ್ಟೊಂದು ದೈಹಿಕ ಕಷ್ಟಗಳ ಮಧ್ಯೆ ಇದ್ದರೂ ಆತನ ಮನಸ್ಸು ಮಾತ್ರ ಶೇಕಡಾ ನೂರು ಭಾಗ ಭಗವಂತನಲ್ಲಿ ಐಕ್ಯವಾಗಿರುತ್ತದೆ.”
ಹಿರಾನಂದ : “ಹೌದು, ಇದು ಯೇಸುವನ್ನು ಶಿಲುಬೆಗೆ ಏರಿಸಿದ ಹಾಗೆ. ಆದರೂ ರಹಸ್ಯ ಬಗೆಹರಿಯದೆ ಉಳಿದುಕೊಂಡಿದೆ-ಎಲ್ಲರನ್ನೂ ಬಿಟ್ಟು ಇವರು ಏಕೆ ಕಷ್ಟಪಡಬೇಕು ?”
ಮಾಸ್ಟರ್ : “ಪರಮಹಂಸರೆ ಹೇಳುತ್ತಾರಲ್ಲ ಇದೆಲ್ಲ ಭಗವತಿಯ ಇಚ್ಛೆ ಅಂತ. ಇವರ ಶರೀರದಲ್ಲಿ ಆತ ಈ ರೀತಿಯಾಗಿ ಕ್ರೀಡಿಸುತ್ತಿದ್ದಾನೆ.”
ಈಗ ಈ ಭಕ್ತರಿಬ್ಬರೂ ಮೆತ್ತಮೆತ್ತಗೆ ಮಾತಾಡಿಕೊಳ್ಳುತ್ತಿದ್ದಾರೆ. ಪರಮಹಂಸರು ಹೀರಾನಂದನನ್ನು ಸನ್ನೆಯ ಮೂಲಕ ಕೇಳುತ್ತಿದ್ದಾರೆ: “ಏನು ಹೇಳುತ್ತಿದ್ದಾನೆ?” ತಾವು ಮೊದಲು ಮಾಡಿದ ಸನ್ನೆಯನ್ನು ಹೀರಾನಂದ ಅರ್ಥಮಾಡಿಕೊಳ್ಳದಿರುವುದನ್ನು ನೋಡಿ ಮತ್ತೆ ಅದನ್ನೇ ಆವೃತ್ತಿಮಾಡಿದರು.
ಹೀರಾನಂದ: “ಈತ ಹೇಳುತ್ತಿದ್ದಾನೆ, ‘ನಿಮಗೆ ಕಾಯಿಲೆ ಬಂದಿರುವುದು ಲೋಕ ಶಿಕ್ಷಣಕ್ಕಾಗಿ’ ಎಂದು.”
ಶ್ರೀರಾಮಕೃಷ್ಣರು: “ಆದರೆ ಅದು ಆತನ ಊಹೆ ಮಾತ್ರ.”
(ಮಾಸ್ಟರಿಗೆ ಮತ್ತು ಹೀರಾನಂದನಿಗೆ) “ನನ್ನ ಅವಸ್ಥೆ ಬದಲಾಯಿಸುತ್ತಿದೆ. ‘ಆತ್ಮಜಾಗೃತಿಯುಂಟಾಗಲಿ’ ಎಂದು ಎಲ್ಲರಿಗೂ ನಾನು ಹೇಳಬಾರದು ಎಂಬುದಾಗಿ ಮನಸ್ಸಿಗೆ ಅನಿಸುತ್ತಿದೆ. ಕಲಿಯುಗದಲ್ಲಿ ಪಾಪ ಜಾಸ್ತಿಯಾಗಿದೆ; ನಾನು ಜನರ ಆತ್ಮಜಾಗೃತಿಯನ್ನುಂಟುಮಾಡಿದರೆ, ಅವರ ಪಾಪದ ಹೊರೆಯೆಲ್ಲ ನನ್ನ ತಲೆ ಮೇಲೆ ಬಂದು ಬೀಳುತ್ತದೆ.”
ಮಾಸ್ಟರ್ (ಹೀರಾನಂದನಿಗೆ): “ಕಾಲ ಬಾರದೆ ಇದ್ದರೆ ಅವರು ಜನರ ಆತ್ಮಜಾಗೃತಿ ಯನ್ನು ಉಂಟುಮಾಡುವುದಿಲ್ಲ. ವ್ಯಕ್ತಿ ಸಿದ್ಧನಾಗಿದ್ದನೆಂದರೆ ಆಗ ಅವರು ಆತ್ಮಜಾಗೃತಿಯನ್ನು ಉಂಟುಮಾಡುತ್ತಾರೆ.”
೨೩ನೆ ಏಪ್ರಿಲ್ ೧೮೮೬, ಚೈತ್ರ ಕೃಷ್ಣ ಪಂಚಮಿ, ಶುಕ್ರವಾರ
ಹೀರಾನಂದ ಇಂದು ಮಧ್ಯಾಹ್ನ ಇಲ್ಲೇ ಊಟಮಾಡಿದ. ಸಮಯ ಅಪರಾಹ್ನ ಒಂದು. ಈಗ ಆತ ಪರಮಹಂಸರ ಪಾದಗಳನ್ನು ಒತ್ತುತ್ತಿದ್ದಾನೆ. ಮಾಸ್ಟರೂ ಪರಮಹಂಸರ ಹತ್ತಿರ ಕುಳಿತಿದ್ದಾನೆ. ಲಾಟು ಮತ್ತು ಇನ್ನೂ ಒಬ್ಬಿಬ್ಬರು ಆಗಾಗ ಕೊಠಡಿಗೆ ಬಂದು ಹೋಗುತ್ತಾ ಇದ್ದಾರೆ. ಹೀರಾನಂದ ಸ್ವಲ್ಪಕಾಲ ಕಾಶೀಪುರದಲ್ಲೇ ಇದ್ದುಬಿಡಲಿ ಅಂತ ಪರಮಹಂಸರ ಇಚ್ಛೆ.
ಹೀರಾನಂದ ಪರಮಹಂಸರ ಪಾದಗಳನ್ನು ಒತ್ತುತ್ತ ಒತ್ತುತ್ತ ಮಗುವನ್ನು ಸಂತೈಸುವ ರೀತಿಯಲ್ಲಿ ಅವರೊಡನೆ ತನ್ನ ಮಧುರ ಕಂಠದಿಂದ ಮಾತಾಡುತ್ತಿದ್ದಾನೆ.
ಹೀರಾನಂದ: “ನೀವೇಕೆ ಇಷ್ಟೊಂದು ನಿಮ್ಮ ರೋಗದ ವಿಷಯವಾಗಿ ತಲೆಗೆ ಹಚ್ಚಿಕೊಳ್ಳಬೇಕು? ನೀವು ಡಾಕ್ಟರರ ಮೇಲೆ ಭಾರಹಾಕಿಬಿಟ್ಟಿರಿ ಅಂದರೆ ನಿಶ್ಚಿಂತರಾಗಬಹುದು. ನೀವು ಒಂದು ಮಗು ಮಾತ್ರ.”
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಡಾಕ್ಟರರ ಮೇಲೆ ಭಾರ ಹಾಕುವ ಬಗೆ ಹೇಗೆ? ಡಾಕ್ಟರ್ ಸರ್ಕಾರ್ ಹೇಳಿಬಿಟ್ಟಿದ್ದಾನೆ, ಗುಣವಾಗುವುದಿಲ್ಲ ಅಂತ?”
ಹೀರಾನಂದ: “ಆದಕ್ಕಾಗಿ ನೀವು ಇಷ್ಟೊಂದು ಚಿಂತಿಸುವುದೇಕೆ? ಏನಾಗಬೇಕೊ ಅದು ಆಗುತ್ತದೆ.”
ಮಾಸ್ಟರ್ (ಹೀರಾನಂದನನ್ನು ಒಂದು ಕಡೆ ಕರೆದು): “ಅವರು ತಮಗಾಗಿ ಭಾವಿಸುತ್ತಿಲ್ಲ. ಅವರು ಶರೀರವನ್ನು ಇಟ್ಟುಕೊಂಡಿರುವುದು ಭಕ್ತರ ಸಲುವಾಗಿ.”
ಇಂದು ಬಿಸಿಲಿನ ಬೇಗೆ ಅಧಿಕ. ಜೊತೆಗೆ ಈಗ ಮಧ್ಯಾಹ್ನ. ಲಾವಂಚದ ಪರದೆಗಳನ್ನು ಕಟ್ಟಿದೆ. ಹೀರಾನಂದ ಎದ್ದು ಹೋಗಿ ಅವನ್ನು ಸರಿಯಾಗಿ ಕಟ್ಟುತಿದ್ದಾನೆ. ಪರಮಹಂಸರು ಆತನ ಕಡೆ ನೋಡುತ್ತಿದ್ದಾರೆ.
ಶ್ರೀರಾಮಕೃಷ್ಣರು (ಹೀರಾನಂದನಿಗೆ): “ಆದ್ದರಿಂದ ಪೈಜಾಮಗಳನ್ನು ಕಳುಹಿಸಿ ಕೊಡುವುದನ್ನು ಮರೆಯಬೇಡ.”
ಸಿಂಧೂದೇಶದಲ್ಲಿ ಉಪಯೋಗಿಸುವ ಪೈಜಾಮಗಳನ್ನು ಪರಮಹಂಸರು ಉಪಯೋಗಿಸಿದ್ದೇ ಆದರೆ, ಸೆಕೆ ಕಡಿಮೆಯಾಗಿ ಅವರು ಸುಖದಿಂದ ಇರಬಹುದು ಎಂದು ಹೀರಾನಂದ ಅವರಿಗೆ ಹೇಳಿದ್ದ. ಅದಕ್ಕಾಗಿ ಅವರು ಅದನ್ನು ಆತನ ಜ್ಞಾಪಕಕ್ಕೆ ತರುತ್ತಿದ್ದಾರೆ.
ಹೀರಾನಂದ ಸರಿಯಾಗಿ ಊಟಮಾಡಲಿಲ್ಲ. ಅನ್ನ ಸ್ವಲ್ಪ ಅಕ್ಕಿ ಅಕ್ಕಿಯಾಗಿಯೇ ಇತ್ತು. ಅದನ್ನು ಕೇಳಿ ಪರಮಹಂಸರಿಗೆ ಬಹಳ ದುಃಖವಾಗಿದೆ. ಆಗಾಗ ಹೀರಾನಂದನನ್ನು ಕೇಳುತ್ತಲೇ ಇದ್ದಾರೆ, ಉಪಾಹಾರ ತೆಗೆದುಕೊಳ್ಳುತ್ತೀಯಾ ಅಂತ. ಅವರ ರೋಗ ಅಧಿಕವಾಗಿಬಿಟ್ಟಿರುವುದರಿಂದ ಅವರಿಗೆ ಮಾತಾಡಲು ಬಹಳ ಕಷ್ಟವಾಗುತ್ತಿದೆ. ಆದರೂ ಆಗಾಗ ಆತನನ್ನು ಹಾಗೆ ಕೇಳುತ್ತಲೇ ಇದ್ದಾರೆ. ಅವರು ಲಾಟುವನ್ನು ಕೇಳಿದರು: “ನೀವೆಲ್ಲರೂ ಅದೇ ಅನ್ನವನ್ನು ಊಟಮಾಡಬೇಕಾಯಿತೇನು?”
ಅವರು ಉಡುತ್ತಿದ್ದ ಪಂಚೆ ಅವರ ಸೊಂಟದ ಮೇಲೆ ಇರುತ್ತಿದ್ದುದು ಎಲ್ಲೋ ಅಪರೂಪ. ಬಹುಮಟ್ಟಿಗೆ ಬಾಲಕನ ಹಾಗೆ ದಿಗಂಬರರಾಗಿಯೇ ಇರುತ್ತಿದ್ದರು. ಹೀರಾನಂದ ತನ್ನೊಡನೆ ಇಬ್ಬರು ಬ್ರಾಹ್ಮಭಕ್ತರನ್ನು ಕರೆದುಕೊಂಡು ಬಂದಿದ್ದ. ಅದಕ್ಕಾಗಿಯೇ ಪರಮಹಂಸರು ಆಗಾಗ ಪಂಚೆಯನ್ನು ಸೊಂಟಕ್ಕೆ ಬಿಗಿದುಕೊಳ್ಳುತ್ತಲೇ ಇದ್ದಾರೆ.
ಶ್ರೀರಾಮಕೃಷ್ಣರು (ಹೀರಾನಂದನಿಗೆ): “ಪಂಚೆ ಕಳಚಿ ಬಿದ್ದುಹೋಗಿಬಿಟ್ಟರೆ ನೀವು ಅಸಭ್ಯತೆ ಅಂತ ಭಾವಿಸಬಹುದಲ್ಲವೆ?”
ಹೀರಾನಂದ: “ಅದು ಹಾಗೆ ಕಳಚಿ ಬಿದ್ದುಹೋದರೆ ತಾನೆ ಏನು? ನೀವು ಒಬ್ಬ ಬಾಲಕರು.”
ಶ್ರೀರಾಮಕೃಷ್ಣರು (ಒಬ್ಬ ಬ್ರಾಹ್ಮಭಕ್ತನ ಕಡೆ ಬೆರಳು ಮಾಡಿ): “ಆತನಿಗೆ ಅಸಭ್ಯತೆಯಾಗಿ ತೋರುತ್ತದೆ.”
ಹೀರಾನಂದ ಇನ್ನೇನು ಹೊರಡುವುದರಲ್ಲಿದ್ದಾನೆ. ಆತ ಇನ್ನೂ ಒಂದೆರಡು ದಿನ ಕಲ್ಕತ್ತದಲ್ಲಿ ಇದ್ದು ಬಳಿಕ ಸಿಂಧೂದೇಶಕ್ಕೆ ಹಿಂದಿರುಗುತ್ತಾನೆ.
ಶ್ರೀರಾಮಕೃಷ್ಣರು (ಹೀರಾನಂದನಿಗೆ): “ನೀನು ಅಲ್ಲಿಗೆ ಹಿಂದಿರುಗದೆ ಇಲ್ಲೇ ಇದ್ದು ಬಿಟ್ಟರೆ?”
ಹೀರಾನಂದ (ನಗುತ್ತ): “ಭೇಷ್! ಅಲ್ಲಿ ಯಾರೂ ಬೇರೆ ಇಲ್ಲ. ನಾನೇ ಎಲ್ಲಾ ಕೆಲಸ ಮಾಡಬೇಕಾಗಿದೆ.”
ಶ್ರೀರಾಮಕೃಷ್ಣರು: “ನಿನಗೆ ತಿಂಗಳಿಗೆ ಎಷ್ಟು ಸಂಬಳ?”
ಹೀರಾನಂದ: “ಇಂಥ ಕೆಲಸಗಳಿಗೆಲ್ಲ ಕಡಿಮೆ ಸಂಬಳ.”
ಶ್ರೀರಾಮಕೃಷ್ಣರು: “ಆದರೂ ಎಷ್ಟು?”
ಹೀರಾನಂದ ನಗಲಾರಂಭಿಸಿದ.
ಶ್ರೀರಾಮಕೃಷ್ಣರು: “ನೀನು ಇಲ್ಲೇ ಏಕೆ ಇದ್ದುಬಿಡಬಾರದು?”
ಹೀರಾನಂದ ಸುಮ್ಮನೆ ಕುಳಿತಿದ್ದಾನೆ.
ಇನ್ನೂ ಸ್ವಲ್ಪ ಹೊತ್ತು ಮಾತುಕತೆಯಾಡಿದ ನಂತರ ಹೀರಾನಂದ ಇನ್ನೇನು ಪರಮಹಂಸರಿಂದ ಬೀಳ್ಕೊಳ್ಳುವುದರಲ್ಲಿದ್ದಾನೆ.
ಶ್ರೀರಾಮಕೃಷ್ಣರು: “ಮತ್ತೆ ಯಾವಾಗ ಬರುತ್ತೀಯೆ?”
ಹೀರಾನಂದ: “ನಾಳಿದ್ದು ಸೋಮವಾರ ಊರಿಗೆ ಹೊರಡುತ್ತೇನೆ. ಆಗ ಪ್ರಾತಃ ಕಾಲವೇ ಬಂದು ನಿಮ್ಮ ದರ್ಶನ ಪಡೆದು ಹೋಗುತ್ತೇನೆ.”
ಹೀರಾನಂದ ಪರಮಹಂಸರಿಂದ ಬೀಳ್ಕೊಂಡ.
ಮಾಸ್ಟರ್ ಪರಮಹಂಸರ ಹತ್ತಿರ ಕುಳಿತುಕೊಂಡಿದ್ದಾನೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಬಹಳ ಒಳ್ಳೆಯವ, ಅಲ್ಲವೆ?”
ಮಾಸ್ಟರ್: “ಹೌದು, ಆತನ ಸ್ವಭಾವ ಬಹಳ ಮಧುರವಾದ್ದು.”
ಶ್ರೀರಾಮಕೃಷ್ಣರು: “ಹೇಳಿದ, ಎರಡು ಸಾವಿರದ ಇನ್ನೂರು ಮೈಲಿ ದೂರ ತನ್ನ ಊರು ಅಂತ. ಅಷ್ಟು ದೂರದಿಂದ ನನ್ನನ್ನು ನೋಡುವುದಕ್ಕೆ ಬಂದಿದ್ದಾನಲ್ಲ!”
ಮಾಸ್ಟರ್: “ಹೌದು, ನಿಜ. ಒಳ್ಳೆ ಪ್ರೀತಿಯಿಲ್ಲದಿದ್ದರೆ ಇದು ಸಾಧ್ಯವಿಲ್ಲ.”
ಶ್ರೀರಾಮಕೃಷ್ಣರು: “ನನ್ನನ್ನು ತನ್ನ ದೇಶಕ್ಕೆ ಕರೆದುಕೊಂಡು ಹೋಗಬೇಕು ಅಂತ ಆತನಿಗೆ ಬಹಳ ಇಚ್ಛೆ.”
ಮಾಸ್ಟರ್: “ನಾಲ್ಕೈದು ದಿನ ಟ್ರೈನಿನಲ್ಲಿ ಪ್ರಯಾಣಮಾಡಬೇಕಾಗುತ್ತದೆ. ಬಹಳ ಕಷ್ಟಪಡಬೇಕಾಗುತ್ತದೆ.”
ಶ್ರೀರಾಮಕೃಷ್ಣರು: “ಆತನಿಗೆ ವಿಶ್ವವಿದ್ಯಾನಿಲಯದ ಮೂರು ಡಿಗ್ರಿಗಳ ಪಾಸು ಆಗಿದೆ.”
ಮಾಸ್ಟರ್: “ಹೌದು.”
ಪರಮಹಂಸರು ಮಾತಾಡಿ ಮಾತಾಡಿ ಆಯಾಸಗೊಂಡಿದ್ದಾರೆ. ಈಗ ಸ್ವಲ್ಪ ವಿಶ್ರಮಿಸಿ ಕೊಳ್ಳುತ್ತಿದ್ದಾರೆ. ಅವರು ಮಾಸ್ಟರಿಗೆ ಕಿಟಕಿ ಬಾಗಿಲುಗಳನ್ನು ತೆರೆಯುವಂತೆಯೂ ಮತ್ತು ತಮ್ಮ ಹಾಸಿಗೆ ಮೇಲೆ ಮಂದಲಿಗೆ ಹಾಸುವಂತೆಯೂ ಹೇಳಿದರು. ಈಗ ಮಾಸ್ಟರ್ ಅವರಿಗೆ ಗಾಳಿ ಬೀಸಲಾರಂಭಿಸಿದ್ದಾನೆ. ಪರಮಹಂಸರಿಗೆ ನಿದ್ದೆ ಬರುತ್ತಿದೆ.
ಪರಮಹಂಸರು ಒಂದು ತುಸು ಹೊತ್ತು ನಿದ್ರಿಸಿದ ನಂತರ ಮಾಸ್ಟರನ್ನು ಕೇಳಿದರು: “ನನಗೆ ನಿದ್ದೆ ಬಂದಿತ್ತೇನು?”
ಮಾಸ್ಟರ್: “ಹೌದು, ಎಲ್ಲೋ ಸ್ವಲ್ಪ.”
ನರೇಂದ್ರ, ಶರಚ್ಚಂದ್ರ, ಮಾಸ್ಟರ್ ಕೆಳಗಿನ ಅಂತಸ್ತಿನಲ್ಲಿ ಮಾತುಕತೆಯಾಡುತ್ತಿದ್ದಾರೆ.
ನರೇಂದ್ರ: “ಇದು ಎಷ್ಟು ವಿಸ್ಮಯಕರವಾದ್ದು! ಬಹಳ ವರ್ಷಗಳವರೆಗೆ ಓದಿದರೂ ವಿದ್ಯೆ ಮಾತ್ರ ದೊರೆಯುವ ಹಾಗಿಲ್ಲ. ಹಾಗಿರುವಾಗ ಒಂದೆರಡು ದಿನಗಳ ಮಟ್ಟಿಗೆ ಸಾಧನೆ ಮಾಡಿದ್ದಕ್ಕೇನೇ ಭಗವಂತನ ಸಾಕ್ಷಾತ್ಕಾರ ದೊರೆತುಬಿಡಬೇಕಂತಲ್ಲ. ಇದು ಹೇಗೆ? ಭಗವಂತನ ಸಾಕ್ಷಾತ್ಕಾರ ಅಷ್ಟು ಸುಲಭವಾದದ್ದೇನು? (ಶರಚ್ಚಂದ್ರನಿಗೆ) ನಿನಗೆ ಶಾಂತಿ ದೊರೆತಿದೆ. ಆದರೆ ನನಗೆ ಮಾತ್ರ ದೊರೆತಿಲ್ಲವಲ್ಲ.”
ಮಧ್ಯಾಹ್ನವಾಗಿದೆ. ಶರಚ್ಚಂದ್ರ, ಶಶಿ, ಲಾಟು, ನಿತ್ಯಗೋಪಾಲ, ಗಿರೀಶ, ರಾಮ, ಮಾಸ್ಟರ್, ಸುರೇಶ ಇನ್ನೂ ಅನೇಕರು ಪರಮಹಂಸರ ಕೊಠಡಿಯಲ್ಲಿ ಕುಳಿತಿದ್ದಾರೆ.
ಕೇದಾರ ಕೊಠಡಿಯನ್ನು ಪ್ರವೇಶಿಸಿದ. ಬಹಳ ಕಾಲವಾದ ಮೇಲೆ ಪರಮಹಂಸರನ್ನು ನೋಡಲು ಬಂದಿದ್ದಾನೆ. ಢಾಕಾದಲ್ಲಿ ಉದ್ಯೋಗದಲ್ಲಿದ್ದಾನೆ. ಪರಮಹಂಸರಿಗೆ ಕಾಯಿಲೆ ಯಾಗಿರುವುದನ್ನು ಕೇಳಿ ಅವರ ದರ್ಶನ ಪಡೆಯಲು ಬಂದಿದ್ದಾನೆ. ಕೊಠಡಿಯನ್ನು ಪ್ರವೇಶಿಸಿದೊಡನೆಯೆ ಆತ ಪರಮಹಂಸರ ಪಾದಧೂಳಿಯನ್ನು ತೆಗೆದುಕೊಂಡು ತನ್ನ ತಲೆಯ ಮೇಲೆ ಹಾಕಿಕೊಂಡು, ಉಳಿದವರಿಗೂ ಆನಂದದಿಂದ ಹಂಚುತ್ತಿದ್ದಾನೆ. ಎಲ್ಲರೂ ಈಗ ತಮ್ಮ ತಮ್ಮ ತಲೆಗಳನ್ನು ಬಾಗಿಸಿ ಅದನ್ನು ಸ್ವೀಕರಿಸುತ್ತಿದ್ದಾರೆ. ಆತ ಅದನ್ನು ಶರಚ್ಚಂದ್ರನಿಗೆ ಕೊಡಲು ಹೋದಾಗ ಆತ ತಾನೇ ಎದ್ದು ಹೋಗಿ ಪರಮಹಂಸರಿಗೆ ಅಡ್ಡಬಿದ್ದು ಅವರ ಪಾದಧೂಳಿಯನ್ನು ತೆಗೆದುಕೊಂಡ. ಇದನ್ನು ನೋಡಿ ಮಾಸ್ಟರ್ ನಕ್ಕ. ಪರಮಹಂಸರೂ ಮಾಸ್ಟರ ಕಡೆಗೆ ನೋಡಿ ನಕ್ಕರು. ಭಕ್ತರೆಲ್ಲರೂ ನಿಶ್ಶಬ್ದವಾಗಿ ಕುಳಿತಿದ್ದಾರೆ. ಪರಮಹಂಸರು ಭಾವಾವಿಷ್ಟರಾಗುತ್ತಿರುವಂತೆ ಅವರ ಮುಖಮುದ್ರೆ ಸೂಚಿಸುತ್ತಿದೆ. ತಮ್ಮ ಭಾವವನ್ನು ಆದುಮಿ ಇಡುತ್ತಿರುವರೋ ಏನೋ ಎಂಬಂತೆ ಅವರು ಆಗಾಗ ನಿಟ್ಟುಸಿರು ಬಿಡುತ್ತಿದ್ದಾರೆ. ಅವರು ಕೇದಾರನಿಗೆ ಸನ್ನೆಯ ಮೂಲಕ ಹೇಳುತ್ತಿದ್ದಾರೆ: “ಗಿರೀಶನೊಡನೆ ವಾದಿಸು.”
ಗಿರೀಶ (ಕೇದಾರನಿಗೆ): “ನಾನು ನಿಮ್ಮ ಕ್ಷಮೆ ಬೇಡುತ್ತೇನೆ. ನೀವು ಯಾರು ಎಂಬುದು ಹಿಂದೆ ನನಗೆ ಗೊತ್ತಿರಲಿಲ್ಲ. ಅದಕ್ಕಾಗಿ ನಿಮ್ಮೊಡನೆ ವಾದಿಸುತ್ತಿದ್ದೆ. ಆದರೆ ಈಗಿನ ಸ್ಥಿತಿಯೇ ಬೇರೆ.”
ಶ್ರೀರಾಮಕೃಷ್ಣರು ನಗುತ್ತಿದ್ದಾರೆ.
ಶ್ರೀರಾಮಕೃಷ್ಣರು (ನರೇಂದ್ರನ ಕಡೆ ಬೆರಳು ಮಾಡಿ ಕೇದಾರನಿಗೆ): “ಈತ ಎಲ್ಲವನ್ನು ತ್ಯಜಿಸಿಬಿಟ್ಟಿದ್ದಾನೆ. (ಭಕ್ತರಿಗೆ) ಒಮ್ಮೆ ಕೇದಾರ ನರೇಂದ್ರನಿಗೆ ಹೇಳಿದ್ದ: ‘ಈಗ ನೀನು ತರ್ಕ ಮಾಡುತ್ತ ಇದ್ದೀಯೆ; ವಾದಿಸುತ್ತ ಇದ್ದೀಯೆ; ಆದರೆ ಕೊನೆಯಲ್ಲಿ ನೀನು ಭಗವನ್ನಾಮೋಚ್ಚಾರಣೆ ಮಾಡುತ್ತ ನೆಲದ ಮೇಲೆ ಬಿದ್ದು ಹೊರಳಾಡಬೇಕಾಗುತ್ತದೆ.’ (ನರೇಂದ್ರನಿಗೆ) ಕೇದಾರನ ಪಾದಧೂಳಿಯನ್ನು ತೆಗೆದುಕೊ.”
ಕೇದಾರ (ನರೇಂದ್ರನಿಗೆ): “ಹೋಗಿ ಅವರ (ಪರಮಹಂಸರ) ಪಾದಧೂಳಿಯನ್ನು ತೆಗೆದುಕೊ. ಅಷ್ಟೇ ಸಾಕು.”
ಸುರೇಂದ್ರ ಭಕ್ತರ ಹಿಂಭಾಗದಲ್ಲಿ ಕುಳಿತುಕೊಂಡಿದ್ದಾನೆ. ಪರಮಹಂಸರು ಆತನ ಕಡೆಗೆ ಮುಗುಳುನಗೆ ನಕ್ಕು ಕೇದಾರನಿಗೆ ಹೇಳುತ್ತಿದ್ದಾರೆ: “ಆಹ, ಆತನ ಸ್ವಭಾವ ಎಷ್ಟು ಪ್ರಿಯವಾದದ್ದು!” ಕೇದಾರ ಪರಮಹಂಸರ ಇಂಗಿತವನ್ನು ಅರಿತುಕೊಂಡು ಸುರೇಂದ್ರನ ಹತ್ತಿರ ಹೋಗಿ ಕುಳಿತುಕೊಂಡ.
ಸುರೇಂದ್ರನಿಗೆ ಸ್ವಲ್ಪ ಅಭಿಮಾನ ಜಾಸ್ತಿ. ಕಾಶೀಪುರದ ಮನೆಯ ಖರ್ಚಿಗಾಗಿ ಕೆಲವು ಮಂದಿ ಭಕ್ತರು ಹೊರಗಿನ ಭಕ್ತರಿಂದ ಹಣ ಯಾಚಿಸಲು ಹೋಗಿದ್ದರು. ಅದಕ್ಕಾಗಿ ಆತನಿಗೆ ಒಂದು ಸ್ವಲ್ಪ ಅಧಿಕವಾಗಿಯೇ ಅಭಿಮಾನ ಬಂದುಬಿಟ್ಟಿದೆ. ಆತನೊಬ್ಬನೇ ಕಾಶೀಪುರದ ಮನೆಯ ಖರ್ಚಿನ ಅಧಿಕಾಂಶ ಭಾಗವನ್ನು ಹೊರುತ್ತಿದ್ದಾನೆ.
ಸುರೇಂದ್ರ (ಕೇದಾರನಿಗೆ): “ಇಂಥ ಸಾಧುಪುರುಷರ ಹತ್ತಿರ ನಾನು ಹೇಗೆ ತಾನೇ ಕುಳಿತುಕೊಳ್ಳಲಿ. ಕೆಲವು ದಿನಗಳ ಹಿಂದೆ ಇವರಲ್ಲಿ ಕೆಲವರು (ನರೇಂದ್ರನನ್ನು ಊಹಿಸಿ) ಕಾಷಾಯವಸ್ತ್ರ ಧರಿಸಿ ಬುದ್ಧ-ಗಯೆಗೆ ಯಾತ್ರಾರ್ಥಿಗಳಾಗಿ ಹೋಗಿದ್ದರು, ಅಲ್ಲಿ ಇನ್ನೂ ದೊಡ್ಡ ದೊಡ್ಡ ಸಾಧುಗಳನ್ನು ನೋಡುವ ಸಲುವಾಗಿ.”
ಪರಮಹಂಸರು ಸುರೇಂದ್ರನನ್ನು ಸಂತೈಸಲು ಪ್ರಯತ್ನಮಾಡುತ್ತಿದ್ದಾರೆ. ಅವರು ಆತನಿಗೆ ಹೇಳುತ್ತಿದ್ದಾರೆ: “ಹೌದು, ಅವರು ಇನ್ನೂ ಎಳೆ ಹುಡುಗರೆ. ಒಳ್ಳೆಯದಾವುದು ಎಂಬುದು ಗೊತ್ತಿಲ್ಲ.”
ಸುರೇಂದ್ರ (ಕೇದಾರನಿಗೆ): “ಯಾರ ಮನೋಭಾವ ಎಂಥೆಂಥದು ಎಂಬುದು ಗುರುದೇವರಿಗೆ (ಪರಮಹಂಸರಿಗೆ) ಗೊತ್ತಿಲ್ಲವೆ? ಅವರನ್ನು ತುಷ್ಟರನ್ನಾಗಿ ಮಾಡುವುದು ಹಣವಲ್ಲ; ನಮ್ಮ ಮನೋಭಾವ.”
ಪರಮಹಂಸರು ತಮ್ಮ ತಲೆಯನ್ನಾಡಿಸಿ ಆತನ ಮಾತಿಗೆ ತಮ್ಮ ಒಪ್ಪಿಗೆಯನ್ನು ಇತ್ತರು.
ಭಕ್ತರು ತಿಂಡಿತೀರ್ಥಗಳನ್ನು ತೆಗೆದುಕೊಂಡು ಬಂದಿದ್ದಾರೆ. ಅವರು ಅದನ್ನು ಪರಮ ಹಂಸರಿಗೆ ಅರ್ಪಿಸಿದರು. ಪರಮಹಂಸರು ಒಂದು ಸಾಸಿವೆಕಾಳಿನಷ್ಟು ತಮ್ಮ ಬಾಯಿಗೆ ಹಾಕಿಕೊಂಡು, ಉಳಿದುದನ್ನೆಲ್ಲಾ ಸುರೇಂದ್ರನ ಕೈಗೆ ಕೊಟ್ಟು ಎಲ್ಲರಿಗೂ ಹಂಚುವಂತೆ ಹೇಳಿದರು. ಅದನ್ನು ತೆಗೆದುಕೊಂಡು ಸುರೇಂದ್ರ ಕೆಳಗಿನ ಅಂತಸ್ತಿಗೆ ಇಳಿದುಹೋದ. ಅಲ್ಲಿ ಅದನ್ನು ಎಲ್ಲರಿಗೂ ಹಂಚುತ್ತಾನೆ.
ಶ್ರೀರಾಮಕೃಷ್ಣರು (ಕೇದಾರನಿಗೆ): “ನೀನು ಕೆಳಗಿಳಿದು ಹೋಗಿ ಬರಿದೆ ವಾಗ್ವಿವಾದದಲ್ಲಿ ತೊಡಗದೆ ಇರಬೇಕೆಂದು ಸುರೇಂದ್ರನಿಗೆ ಹೇಳಿ ಬಾ.”
ಮಾಸ್ಟರ್ ಪರಮಹಂಸರಿಗೆ ಗಾಳಿ ಬೀಸುತ್ತಿದ್ದಾನೆ. ಅವರು ಆತನನ್ನು ಕೇಳಿದರು: “ಏನು, ನೀನು ತಿನ್ನುವುದಿಲ್ಲವೆ?” ಅವರು ಆತನನ್ನು ಕೆಳಗೆ ಕಳುಹಿಸಿದರು.
ಇನ್ನೇನು ಸಾಯಂಕಾಲವಾಗುವುದರಲ್ಲಿದೆ. ಗಿರೀಶ ಮತ್ತು ಮಾಸ್ಟರ್ ಪುಷ್ಕರಿಣಿ ದಡದ ಮೇಲೆ ಅಡ್ಡಾಡುತ್ತಿದ್ದಾರೆ.
ಗಿರೀಶ: “ಶ್ರೀರಾಮಕೃಷ್ಣರ ವಿಷಯವಾಗಿ ನೀನು ಏನೊ ಬರೆಯುತ್ತಾ ಇದ್ದೀಯಂತೆ?”
ಮಾಸ್ಟರ್: “ಅದರ ಸಂಬಂಧವಾಗಿ ನಿನಗಾರು ತಿಳಿಸಿದರು?”
ಗಿರೀಶ: “ನನ್ನ ಕಿವಿಗೆ ಬಿತ್ತು. ಅದನ್ನು ನನಗೆ ಕೊಡುತ್ತೀಯಾ?”
ಮಾಸ್ಟರ್: “ಅದನ್ನು ನಾನೇ ಸರಿಯಾಗಿ ಅರ್ಥಮಾಡಿಕೊಳ್ಳದ ಹೊರತು ಬೇರೆಯವರಿಗೆ ಕೊಡಲಿಚ್ಛೆಯಿಲ್ಲ. ಅದನ್ನು ನಾನು ಬರೆದುಕೊಂಡದ್ದು ನನಗಾಗಿ ವಿನಾ ಉಳಿದವರಿಗಾಗಿ ಅಲ್ಲ.”
ಗಿರೀಶ : “ಏನು ಹೇಳುತ್ತಿದ್ದೀಯೆ?”
ಮಾಸ್ಟರ್: “ಬಹುಶಃ ನಾನು ಸಾಯುವಾಗ ನಿನಗೆ ದೊರೆಯಬಹುದು.”
ಸಾಯಂಕಾಲವಾಗಿದೆ. ಪರಮಹಂಸರ ಕೊಠಡಿಗೆ ದೀಪ ಹಚ್ಚಲಾಗಿದೆ. ಬ್ರಾಹ್ಮ ಸಮಾಜಕ್ಕೆ ಸೇರಿದ ಅಮೃತಬಸು ಕೊಠಡಿಯನ್ನು ಪ್ರವೇಶಿಸಿದ. ಆತನನ್ನು ನೋಡಬೇಕೆಂದು ಪರಮಹಂಸರು ಕಾತರರಾಗಿದ್ದರು. ಮಾಸ್ಟರ್ ಮತ್ತು ಇನ್ನೂ ಕೆಲವು ಮಂದಿ ಭಕ್ತರು ಕೊಠಡಿಯಲ್ಲಿ ಕುಳಿತಿದ್ದಾರೆ. ಪರಮಹಂಸರ ಮುಂದೆ ಬಾಳೆಯ ಎಲೆಯಲ್ಲಿ ಹೂವಿನ ಹಾರವನ್ನು ಭಕ್ತರು ಇಟ್ಟಿದ್ದಾರೆ. ಕೊಠಡಿ ನಿಶ್ಶಬ್ದವಾಗಿದೆ. ಒಬ್ಬ ಮಹಾಯೋಗಿ ಯೋಗದಲ್ಲಿ ನಿಶ್ಶಬ್ದವಾಗಿ ಕುಳಿತಿರುವಂತೆ ಕಾಣುತ್ತಿದೆ. ಪರಮಹಂಸರು ಆ ಮಾಲೆಯನ್ನು ತಮ್ಮ ಕೊರಳಿಗೆ ಹಾಕಿಕೊಳ್ಳಬೇಕೆಂದಿರುವರೊ ಏನೋ ಎಂಬಂತೆ ಆಗಾಗ ಅದನ್ನು ಮೇಲಕ್ಕೆ ಎತ್ತುತ್ತಿದ್ದಾರೆ.
ಅಮೃತ (ಮೃದುವಾಗಿ) : “ಅದನ್ನು ಕೊರಳಿಗೆ ಹಾಕಿಕೊಡಲೆ?”
ಪರಮಹಂಸರು ಒಪ್ಪಿದರು. ಬಳಿಕ ಆತನೊಡನೆ ಬಹಳ ಹೊತ್ತು ಮಾತುಕತೆಗಳನ್ನು ಆಡಿದರು. ಈಗ ಆತ ಅವರಿಂದ ಬೀಳ್ಕೊಳ್ಳುವುದರಲ್ಲಿದ್ದಾನೆ. ಪರಮಹಂಸರು ಆತನಿಗೆ ಹೇಳಿದರು : “ಮತ್ತೆ ಬಾ.”
ಅಮೃತ : “ಬರಬೇಕು ಅಂತಲೇನೋ ಬಹಳ ಇಚ್ಛೆ. ಆದರೆ ಬಹಳ ದೂರ. ಅದಕ್ಕಾಗಿ ಆಗಾಗ ಬರಲಾಗುತ್ತಿಲ್ಲ.”
ಶ್ರೀರಾಮಕೃಷ್ಣರು: “ನೀನು ಬಾ. ಇಲ್ಲಿಂದಲೇ ನಿನಗೆ ಗಾಡಿ ಬಾಡಿಗೆಗೆ ದೊರೆಯುತ್ತದೆ.”
ಪರಮಹಂಸರು ಅಮೃತನಿಗೆ ತೋರಿಸಿದ ಅಕ್ಕರೆಯನ್ನು ನೋಡಿ ಭಕ್ತರೆಲ್ಲರು ಆಶ್ಚರ್ಯಚಕಿತರಾಗಿದ್ದಾರೆ.
ಮಾರನೆಯ ದಿನ, ೨೪ನೆ ಏಪ್ರಿಲ್ ೧೮೮೬. ಮಾಸ್ಟರ್ ತನ್ನ ಹೆಂಡತಿ ಮತ್ತು ಒಬ್ಬ ಮಗನನ್ನು ಕಾಶೀಪುರದ ಮನೆಗೆ ಕರೆದುಕೊಂಡು ಬಂದ. ಆ ಹುಡುಗನಿಗೆ ವಯಸ್ಸು ಏಳು. ಎಂಟು ವರ್ಷದ ಇನ್ನೊಬ್ಬ ಮಗ ಒಂದು ವರ್ಷದ ಹಿಂದೆ ಸತ್ತುಹೋದ. ಪುತ್ರವಿಯೋಗದಿಂದ ಬಹುಮಟ್ಟಿಗೆ ಹುಚ್ಚಿಯೇ ಆಗಿಬಿಟ್ಟಿರುವ ತನ್ನ ಹೆಂಡತಿಯನ್ನು ಪರಮಹಂಸರ ಇಚ್ಛೆಗನುಸಾರ ಮಾಸ್ಟರ್ ಇಂದು ಇಲ್ಲಿಗೆ ಕರೆದುಕೊಂಡು ಬಂದಿದ್ದಾನೆ.
ಇಂದು ಮಾಸ್ಟರನ ಹೆಂಡತಿ ತಮಗೆ ಶುಶ್ರೂಷೆ ಮಾಡಲು ಪರಮಹಂಸರು ಆಕೆಗೆ ಅನೇಕ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಆಕೆಯ ಯೋಗಕ್ಷೇಮವೇ ಪರಮಹಂಸರ ಮನಸ್ಸಿನ ಬಹುಭಾಗವನ್ನು ಸೆಳೆದುಬಿಟ್ಟಿರುವಂತೆ ಕಾಣುತ್ತಿತ್ತು. ರಾತ್ರಿಯಾದ ಮೇಲೆ ಶ್ರೀಶಾರದಾದೇವಿಯವರು ಪರಮಹಂಸರಿಗೆ ಊಟಕ್ಕೆ ಬಡಿಸಲು ಅವರ ಕೊಠಡಿಗೆ ಬಂದರು. ಮಾಸ್ಟರ ಹೆಂಡತಿ ದೀಪ ಹಿಡಿದುಕೊಂಡು ಅವರನ್ನು ಹಿಂಬಾಲಿಸಿದಳು. ಪರಮ ಹಂಸರು ಬಹಳ ಅಕ್ಕರೆಯಿಂದ ಆಕೆಗೆ ಆಕೆಯ ಮನೆಯ ಸಂಬಂಧವಾಗಿ ಅನೇಕ ಪ್ರಶ್ನೆಗಳನ್ನು ಹಾಕಿದರು. ತನ್ನ ಹೆಣ್ಣು ಶಿಶುವಿನೊಡನೆ ಮತ್ತೊಮ್ಮೆ ಬಂದು ಶ್ರೀಶಾರದಾದೇವಿಯವರೊಡನೆ ಕೆಲವು ಕಾಲವನ್ನು ಕಳೆಯಬೇಕೆಂದು ಆಕೆಗೆ ತಿಳಿಸಿದರು. ಪರಮಹಂಸರು ಊಟಮಾಡಿ ಮುಗಿಸಿದ ಮೇಲೆ, ಆಕೆ ಅವರು ಉಪಯೋಗಿಸಿದ ತಟ್ಟೆಬಟ್ಟಲುಗಳನ್ನೆಲ್ಲ್ಲ ತೆಗೆದು ಆ ಸ್ಥಳವನ್ನು ಚೊಕ್ಕಟಮಾಡಿದಳು. ಬಳಿಕ ಅವರು ಆಕೆಯೊಡನೆ ಕೆಲವು ನಿಮಿಷಗಳವರೆಗೆ ಏನೇನೊ ಮಾತುಕತೆಯಾಡಿದರು.
ಘಂಟೆ ರಾತ್ರಿ ಒಂಬತ್ತು. ಪರಮಹಂಸರು ಭಕ್ತರೊಡನೆ ತಮ್ಮ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ಕೊರಳಿಗೆ ಹೂವಿನ ಹಾರ ಹಾಕಿಕೊಂಡಿದ್ದಾರೆ. ಅವರು ಮಾಸ್ಟರಿಗೆ ಹೇಳುತ್ತಿದ್ದಾರೆ: “ನಾನು ನಿನ್ನ ಹೆಂಡತಿಗೆ ಮತ್ತೆ ಇಲ್ಲಿ ಕೆಲವು ದಿನಗಳ ಮಟ್ಟಿಗೆ ರಾಮಲಾಲನ ಚಿಕ್ಕಮ್ಮನೊಡನೆ ಕಳೆಯಬೇಕೆಂದು ಹೇಳಿದ್ದೇನೆ.” ಪರಮಹಂಸರು ತನಗೆ ಮಾಡಿದ ಕೃಪೆಯನ್ನು ನೋಡಿ ಮಾಸ್ಟರ ಹೃದಯ ಕರಗಿ ನೀರಾಗಿ ಹೋಯಿತು.
ಮಾಸ್ಟರ್ ಪರಮಹಂಸರಿಗೆ ಗಾಳಿ ಬೀಸುತ್ತಿದ್ದಾನೆ. ಅವರು ತಮ್ಮ ಕೊರಳಲ್ಲಿದ್ದ ಹಾರವನ್ನು ಕೈಗೆ ತೆಗೆದುಕೊಂಡು ಏನನ್ನೊ ತಮ್ಮೊಳಗೆ ತಾವೇ ವಟಗುಟ್ಟುತ್ತಿದ್ದಾರೆ. ಬಳಿಕ ಪ್ರಸನ್ನಚಿತ್ತತೆಯಿಂದ ಆಹಾರವನ್ನು ಮಾಸ್ಟರಿಗೆ ಕೊಟ್ಟರು.