೯ನೆ ಏಪ್ರಿಲ್ ೧೮೮೬, ಚೈತ್ರ ಶುಕ್ಲ ಪಂಚಮಿ, ಶುಕ್ರವಾರ
ಘಂಟೆ ಸಾಯಂಕಾಲ ಐದು. ಕಾಶೀಪುರದ ತೋಟದ ಮನೆಯ ನೆಲ ಅಂತಸ್ತಿನಲ್ಲಿ ನರೇಂದ್ರ, ಕಾಳಿ, ನಿರಂಜನ, ಮಾಸ್ಟರ್ ಕುಳಿತು ಮಾತುಕತೆಗಳಾಡುತ್ತಿದ್ದಾರೆ.
ನಿರಂಜನ (ಮಾಸ್ಟರಿಗೆ): “ವಿದ್ಯಾಸಾಗರ ಇನ್ನೊಂದು ಹೊಸ ಸ್ಕೂಲನ್ನು ತೆರೆಯುತ್ತಾ ನಂತಲ್ಲ, ನಿಜವೇನು? ನರೇಂದ್ರನಿಗೆ ಅಲ್ಲಿ ಒಂದು ಕೆಲಸಕ್ಕಾಗಿ ಏಕೆ ನೀವು ಪ್ರಯತ್ನ ಮಾಡಬಾರದು?”
ನರೇಂದ್ರ: “ವಿದ್ಯಾಸಾಗರನ ಕೈಕೆಳಗೆ ಕೆಲಸಮಾಡಿ ಸಾಕಾಗಿದೆ.”
ಕಾಳಿ ಮತ್ತು ತಾರಕ ಇವರೊಡನೆ ಬುದ್ಧ-ಗಯೆಗೆ ಹೋಗಿದ್ದು ನರೇಂದ್ರ ಈಗತಾನೆ ಬಂದಿದ್ದಾನೆ. ಅಲ್ಲಿ ಆತ ಬುದ್ಧಮೂರ್ತಿಯ ದರ್ಶನಮಾಡಿದ ನಂತರ, ಅದರ ಹತ್ತಿರವೇ ಕುಳಿತು ಗಂಭೀರ ಧ್ಯಾನದಲ್ಲಿ ಮುಳುಗಿಹೋಗಿದ್ದ. ಯಾವ ಅಶ್ವತ್ಥವೃಕ್ಷದ ಕೆಳಗೆ ಬುದ್ಧ ದೇವ ತಪಸ್ಸುಮಾಡಿ ನಿರ್ವಾಣವನ್ನು ಹೊಂದಿದ್ದನೋ, ಅದೇ ಸ್ಥಾನದಲ್ಲಿ ಅದರ ಕೊಂಬೆಯಿಂದ ಇನ್ನೊಂದು ಹೊಸ ಅಶ್ವತ್ಥ ವೃಕ್ಷ ಎದ್ದಿದೆ. ಅದನ್ನು ನೋಡಿ ಬಂದಿದ್ದಾನೆ.
ಕಾಳಿ: “ಒಂದು ದಿನ ನರೇಂದ್ರ ಗಯೆಯ ಉಮೇಶಬಾಬುವಿನ ಮನೆಯಲ್ಲಿ ಮೃದಂಗದೊಡನೆ ಶಾಸ್ತ್ರೀಯ ಸಂಗೀತವನ್ನು ಹಾಡಿದ.”
ಪರಮಹಂಸರು ಎರಡನೆಯ ಅಂತಸ್ತಿನಲ್ಲಿ ತಮ್ಮ ಕೊಠಡಿಯಲ್ಲಿ ಹಾಸಿಗೆ ಮೇಲೆ ಕುಳಿತಿದ್ದಾರೆ. ರಾತ್ರಿಯಾಗಿದೆ. ಮಾಸ್ಟರ್ ಒಬ್ಬನೇ ನಿಂತು ಪರಮಹಂಸರಿಗೆ ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದಾನೆ. ಲಾಟು ಈಗ ಅಲ್ಲಿಗೆ ಬಂದು ಕುಳಿತುಕೊಂಡಿದ್ದಾನೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ನನಗೊಂದು ಉತ್ತರೀಯವನ್ನು ಮತ್ತು ಒಂದು ಜೊತೆ ಪಾದರಕ್ಷೆಗಳನ್ನು ಕೊಂಡುಕೊಂಡು ಬಾ.”
ಮಾಸ್ಟರ್: “ಆಗಲಿ.”
ಶ್ರೀರಾಮಕೃಷ್ಣರು (ಲಾಟುವಿಗೆ): “ಉತ್ತರೀಯಕ್ಕೆ ಹತ್ತಾಣೆ ಮತ್ತು ಒಂದು ಜೊತೆ ಪಾದರಕ್ಷೆ, ಇವಕ್ಕೆ ಒಟ್ಟು ಬೆಲೆ ಎಷ್ಟಾಯಿತು?”
ಲಾಟು: “ಒಂದು ರೂಪಾಯಿ ಹತ್ತಾಣೆ.”
ಪರಮಹಂಸರು ಬೆಲೆಯನ್ನು ಗುರುತುಮಾಡಿಕೊಳ್ಳುವ ಹಾಗೆ ಸಂಜ್ಞೆಯ ಮೂಲಕ ಮಾಸ್ಟರಿಗೆ ತಿಳಿಸಿದರು.
ನರೇಂದ್ರ, ಕೊಠಡಿಯನ್ನು ಪ್ರವೇಶಿಸಿ ಒಂದು ಕಡೆ ಕುಳಿತುಕೊಂಡ. ಬಳಿಕ ಶಶಿ, ರಾಖಾಲ–ಇನ್ನೂ ಒಬ್ಬಿಬ್ಬರು ಭಕ್ತರು ಬಂದು ಕುಳಿತುಕೊಂಡರು. ಪರಮಹಂಸರು ತಮ್ಮ ಕಾಲನ್ನು ಒತ್ತುವಂತೆ ನರೇಂದ್ರನಿಗೆ ಹೇಳಿದರು. ಊಟವಾಗಿದೆಯೆ ಅಂತ ಆತನನ್ನು ಸಂಜ್ಞೆಯ ಮೂಲಕ ಕೇಳಿದರು.
ಶ್ರೀರಾಮಕೃಷ್ಣರು (ನಗುತ್ತ ಮಾಸ್ಟರಿಗೆ): “ಈತ ಅಲ್ಲಿಗೆ (ಬುದ್ಧ-ಗಯೆಗೆ) ಹೋಗಿದ್ದ.”
ಮಾಸ್ಟರ್ (ನರೇಂದ್ರನಿಗೆ): “ಬುದ್ಧನ ತತ್ತ್ವವೇನು?”
ನರೇಂದ್ರ: “ಆತ ತನ್ನ ತಪಸ್ಸಿನ ಅಂತ್ಯದಲ್ಲಿ ಏನನ್ನು ಸಾಕ್ಷಾತ್ಕಾರ ಮಾಡಿಕೊಂಡನೊ ಅದನ್ನು ಬಾಯಿಂದ ಹೇಳಲು ಆತನಿಗೆ ಸಾಧ್ಯವಾಗಲಿಲ್ಲ. ಅದಕ್ಕಾಗಿ ಜನ ಆತನನ್ನು ನಾಸ್ತಿಕ ಅಂತ ಕರೆದರು.”
ಶ್ರೀರಾಮಕೃಷ್ಣರು (ಸಂಜ್ಞೆಯ ಮೂಲಕ): “ಅವನೇಕೆ ನಾಸ್ತಿಕನಾಗುತ್ತಾನೆ? ನಾಸ್ತಿಕನಲ್ಲ; ತಾನು ಪಡೆದ ಅನುಭವಗಳನ್ನು ವ್ಯಕ್ತಪಡಿಸಲು ಆಗಲಿಲ್ಲ. ಅಷ್ಟೆ. ‘ಬುದ್ಧ’ ಎಂದರೆ ಏನು ಗೊತ್ತೆ? ಬೋಧಸ್ವರೂಪನ ಚಿಂತನೆ ಮಾಡುತ್ತ ಮಾಡುತ್ತ ಆತನೇ ಆಗುವಿಕೆ; ಬೋಧಸ್ವರೂಪನಾಗುವಿಕೆ.”
ನರೇಂದ್ರ: “ಹೌದು, ನಿಶ್ಚಯ. ಇವರಲ್ಲಿ ಮೂರು ಅಂತಸ್ತಿನವರಿದ್ದಾರೆ: ಬುದ್ಧ, ಅರ್ಹತ್, ಬೋಧಿಸತ್ತ್ವ.”
ಶ್ರೀರಾಮಕೃಷ್ಣರು: “ಇದೂ ಆತನ ಆಟವೆ; ಒಂದು ಹೊಸ ಲೀಲೆ.
“ಬುದ್ಧ ಹೇಗೆ ನಾಸ್ತಿಕನಾಗುತ್ತಾನೆ? ಸ್ವಸ್ವರೂಪದ ಬೋಧೆಯಾದನಂತರ ಅಸ್ತಿನಾಸ್ತಿ ಇವುಗಳ ಮಧ್ಯದಲ್ಲಿ ಇರಬೇಕಾಗುತ್ತದೆ.”
ನರೇಂದ್ರ (ಮಾಸ್ಟರಿಗೆ): “ಆ ಅವಸ್ಥೆಯಲ್ಲಿ ಅಸಂಗತವಾದುದು ಸಂಗತವಾಗುತ್ತದೆ. ಯಾವ ಆಮ್ಲಜನಕ ಜಲಜನಕ ಸಂಯೋಗದಿಂದ ತಣ್ಣಗಿರುವ ನೀರು ಉತ್ಪನ್ನವಾಗುತ್ತದೆಯೋ, ಅದೇ ಆಮ್ಲಜನಕ ಜಲಜನಕಗಳಿಂದ ಅತ್ಯಂತವಾಗಿ ತಪಿಸುವ ಅಗ್ನಿಶಿಖೆ ಉತ್ಪನ್ನವಾಗುತ್ತದೆ.
“ಆ ಅವಸ್ಥೆಯಲ್ಲಿ ಕರ್ಮ, ಕರ್ಮತ್ಯಾಗ ಎರಡೂ ಸಾಧ್ಯ; ಅಂದರೆ ನಿಷ್ಕಾಮಕರ್ಮ ಸಾಧ್ಯ.
“ಇಂದ್ರಿಯಸುಖಗಳಲ್ಲೇ ಮುಳುಗಿರುವ ಸಾಂಸಾರಿಕರು ಹೇಳುತ್ತಾರೆ, ಎಲ್ಲವೂ ‘ಅಸ್ತಿ.’ ಆದರೆ ಮಾಯಾವಾದಿಗಳು ಹೇಳುತ್ತಾರೆ, ಎಲ್ಲವೂ ‘ನಾಸ್ತಿ’. ಬುದ್ಧ ಪಡೆದಂಥ ಅನುಭವ ಈ ‘ಅಸ್ತಿ’, ‘ನಾಸ್ತಿ’ ಇವುಗಳಿಗತೀತವಾದ್ದು.”
ಶ್ರೀರಾಮಕೃಷ್ಣರು: “ಈ ‘ಅಸ್ತಿ’, ‘ನಾಸ್ತಿ’ ಪ್ರಕೃತಿಯ ಗುಣಗಳು. ಆದರೆ ಸತ್ಯ ಇವೆರಡಕ್ಕೂ ಅತೀತವಾದ್ದು.”
ಭಕ್ತರು ಕೆಲವು ನಿಮಿಷಗಳು ಸುಮ್ಮನೆ ಕುಳಿತುಕೊಂಡರು.
ಶ್ರೀರಾಮಕೃಷ್ಣರು (ನರೇಂದ್ರನಿಗೆ): “ಬುದ್ಧದೇವನು ಕೊಟ್ಟ ಉಪದೇಶಗಳೇನು?”
ನರೇಂದ್ರ: “ಭಗವಂತ ಇದ್ದಾನೆಯೆ, ಇಲ್ಲವೆ ಎಂಬುದರ ವಿಷಯವಾಗಿ ಆತ ಮಾತನಾಡುತ್ತಲೇ ಇರಲಿಲ್ಲ. ಆದರೆ ತನ್ನ ಇಡೀ ಜೀವಮಾನವನ್ನೆಲ್ಲ ದಯಾಮೂರ್ತಿಯೇ ಆಗಿ ಕಳೆದ.
“ಒಂದು ಗಿಡುಗ ಹಕ್ಕಿಯೊಂದನ್ನು ಹಿಡಿದು ಇನ್ನೇನು ಅದನ್ನು ತಿನ್ನುವುದರಲ್ಲಿತ್ತು. ಆ ಹಕ್ಕಿಯನ್ನು ಉಳಿಸಲು ಬುದ್ಧ ತನ್ನ ದೇಹದಿಂದ ಮಾಂಸವನ್ನು ಕತ್ತರಿಸಿಕೊಟ್ಟ.”
ಶ್ರೀರಾಮಕೃಷ್ಣರು ಸುಮ್ಮನೆ ಕುಳಿತಿದ್ದಾರೆ. ನರೇಂದ್ರ ಬುದ್ಧನ ಸಂಬಂಧವಾಗಿ ಇನ್ನೂ ಹೆಚ್ಚು ಉತ್ಸಾಹಗೊಂಡು ಆತನ ವಿಷಯವಾಗಿ ಮಾತನಾಡಲಾರಂಭಿಸಿದ್ದಾನೆ.
ನರೇಂದ್ರ: “ಎಂಥ ವೈರಾಗ್ಯ! ರಾಜಕುಮಾರನಾಗಿಯೂ ಎಲ್ಲವನ್ನೂ ತ್ಯಜಿಸಿದ. ಯಾರಿಗೆ ಏನೆಂದರೆ ಏನೂ ಇಲ್ಲವೊ, ಧನಕನಕಾದಿಗಳು ಒಂದು ಕಿಂಚಿತ್ತೂ ಇಲ್ಲವೋ, ಅವರು ತ್ಯಜಿಸುವುದು ತಾನೆ ಏನನ್ನು? ಬುದ್ಧನಾದ ಮೇಲೆ, ನಿರ್ವಾಣವನ್ನು ಹೊಂದಿದ ಮೇಲೆ ಆತ ತನ್ನ ಮನೆಗೆ ಹಿಂದಿರುಗಿ ಬಂದಾಗ, ಹೆಂಡತಿಗೆ, ಮಗನಿಗೆ, ರಾಜಮನೆತನದ ಇನ್ನೂ ಅನೇಕರಿಗೆ ವೈರಾಗ್ಯವನ್ನು ಅವಲಂಬಿಸುವಂತೆ ಉಪದೇಶವಿತ್ತ. ಎಂಥ ಅದ್ಭುತ ವೈರಾಗ್ಯ ಆತನದು! ಹಾಗೇನೆ ವ್ಯಾಸದೇವನ ವರ್ತನೆಯನ್ನು ನೋಡಿ, ಆತ ತನ್ನ ಮಗ ಶುಕದೇವನಿಗೆ ಹೇಳಿದ: ‘ಮಗು, ಸಂಸಾರದಲ್ಲಿದ್ದೇ ಧಾರ್ಮಿಕ ಕಾರ್ಯಗಳನ್ನು ಮಾಡು.’ ಸಂಸಾರವನ್ನು ತ್ಯಜಿಸಲು ಆತನಿಗೆ ಅನುಮತಿ ಕೊಡಲಿಲ್ಲ.”
ಪರಮಹಂಸರು ಸುಮ್ಮನೆ ಕುಳಿತಿದ್ದಾರೆ. ಇನ್ನೂ ಯಾವ ಮಾತೂ ಅವರ ಬಾಯಿಂದ ಹೊರಬೀಳುತ್ತಿಲ್ಲ.
ನರೇಂದ್ರ: “ಬುದ್ಧನು, ಶಕ್ತಿ ಮುಂತಾದುವನ್ನು ಒಪ್ಪುತ್ತಿರಲಿಲ್ಲ. ಆತನ ಗುರಿ ನಿರ್ವಾಣ. ಆತನದು ಎಂಥ ಅದ್ಭುತ ವೈರಾಗ್ಯ! ಅಶ್ವತ್ಥವೃಕ್ಷದ ಕೆಳಗೆ ತಪಸ್ಸಿಗೆ ಕುಳಿತುಕೊಂಡು ಹೇಳಿದ: ‘ಇಹೈವ ಶುಷ್ಯತು ಮೇ ಶರೀರಮ್ –ನನಗೆ ನಿರ್ವಾಣ ದೊರೆಯದೆ ಇತ್ತು ಎಂದರೆ ಈ ಶರೀರ ಇಲ್ಲೇ ಒಣಗಿ ಬತ್ತಿಹೋಗಲಿ.’ ಎಂಥಾ ದೃಢ ಪ್ರತಿಜ್ಞೆ ಆತನದು!
“ಈ ಶರೀರವೇ ನಮ್ಮ ದೊಡ್ಡ ಶತ್ರು. ಅದನ್ನು ಅಂಕೆಯಲ್ಲಿ ಇಟ್ಟುಕೊಳ್ಳದಿದ್ದರೆ ಏನಾದರೂ ದೊರಕುವುದೆ?”
ಶಶಿ: “ಆದರೆ ನೀನೆ ತಾನೆ ಹೇಳುತ್ತಾ ಇರುವವನು ಮಾಂಸ ತಿಂದರೆ ಸತ್ತ್ವಗುಣ ವೃದ್ಧಿಯಾಗುತ್ತದೆ ಅಂತ. ಮಾಂಸವನ್ನು ತಿನ್ನಲೇಬೇಕು ಅಂತ ಹೇಳುವವನು ನೀನೇ ತಾನೆ.”
ನರೇಂದ್ರ: “ನಾನು ಮಾಂಸ ತಿನ್ನುತ್ತಿರುವುದೇನೋ ನಿಜ. ಆದರೆ ನಾನು ಬರೀ ಅನ್ನ ತಿಂದೂ, ಉಪ್ಪಿಲ್ಲದ ಅನ್ನ ತಿಂದೂ ಇರಬಲ್ಲೆ.”
ಕೆಲವು ನಿಮಿಷಗಳಾದ ನಂತರ ಪರಮಹಂಸರು ತಮ್ಮ ಬಾಯನ್ನು ತೆರೆದರು. ಅವರು ನರೇಂದ್ರನನ್ನು ಸನ್ನೆಯ ಮೂಲಕ ಕೇಳುತ್ತಿದ್ದಾರೆ: “ಬುದ್ಧನ ತಲೆಜುಟ್ಟನ್ನು ನೋಡಿದ್ದೀಯೇನು?”
ನರೇಂದ್ರ: “ಅದು ಜುಟ್ಟಲ್ಲ, ಕಿರೀಟವಿರಬೇಕು. ಅದು ಅನೇಕ ರುದ್ರಾಕ್ಷಿಗಳನ್ನು ಸೇರಿಸಿ ಮಾಡಿದ ಕಿರೀಟದ ಹಾಗೆ ಕಾಣುತ್ತದೆ.”
ಶ್ರೀರಾಮಕೃಷ್ಣರು: “ಆತನ ಕಣ್ಣು?”
ನರೇಂದ್ರ: “ಸಮಾಧಿಯಲ್ಲಿ ಇದ್ದ ಹಾಗೆ.”
ಪರಮಹಂಸರು ಮತ್ತೆ ಸುಮ್ಮನೆ ಕುಳಿತುಕೊಂಡರು. ನರೇಂದ್ರ ಮತ್ತು ಉಳಿದ ಭಕ್ತರು ಅವರನ್ನು ದೃಷ್ಟಿಸಿ ನೋಡುತ್ತಿದ್ದಾರೆ. ಇದ್ದಕ್ಕಿದ್ದಹಾಗೆ ಸ್ವಲ್ಪ ನಕ್ಕು ಈಗ ನರೇಂದ್ರನೊಡನೆ ಮಾತಾಡುತ್ತಿದ್ದಾರೆ. ಮಾಸ್ಟರ್ ಅವರಿಗೆ ಗಾಳಿ ಬೀಸುತ್ತಿದ್ದಾನೆ.
ಶ್ರೀರಾಮಕೃಷ್ಣರು (ನರೇಂದ್ರನಿಗೆ): “ಒಳ್ಳೇದು, ಇಲ್ಲಿ ಎಲ್ಲಾ ದೊರೆಯುತ್ತಿದೆ, ಅಲ್ಲವೇ?–ತೊಗರಿಬೇಳೆ, ಕಡಲೆಬೇಳೆ, ಹುಣಸೆಹಣ್ಣು ಕೂಡ.”
ನರೇಂದ್ರ: “ನೀವು ಎಲ್ಲಾ ಹಂತಗಳನ್ನು ಹತ್ತಿ, ಈಗ ಕೆಳಗಿನ ಹಂತದಲ್ಲಿ ಓಡಾಡುತ್ತಿದ್ದೀರಿ.”
ಮಾಸ್ಟರ್ (ತನಗೆ ತಾನೇ): “ಹೌದು, ಎಲ್ಲಾ ಸ್ಥಿತಿಗಳನ್ನು ನೋಡಿ ಈಗ ಭಕ್ತನ ಸ್ಥಿತಿಯಲ್ಲಿ.”
ಶ್ರೀರಾಮಕೃಷ್ಣರು: “ಯಾರೋ ನನ್ನನ್ನು ಈ ಕೆಳಗಿನ ಅಂತಸ್ತಿನಲ್ಲಿ ಹಿಡಿದು ನಿಲ್ಲಿಸಿರುವ ಹಾಗೆ ಅನುಭವವಾಗುತ್ತಿದೆ.”
ಹೀಗೆ ಹೇಳಿ ಮಾಸ್ಟರ್ ಕೈಯಿಂದ ಬೀಸಣಿಗೆಯನ್ನು ತೆಗೆದುಕೊಂಡು ಹೇಳುತ್ತಿದ್ದಾರೆ: “ಈ ಬೀಸಣಿಗೆಯನ್ನು ಪ್ರತ್ಯಕ್ಷವಾಗಿ ನೋಡುವ ರೀತಿಯಲ್ಲಿ ಭಗವಂತನನ್ನು ನೋಡಿದ್ದೇನೆ. ಮತ್ತೂ ನೋಡಿದ್ದೇನೆ–”
ಹೀಗೆಂದು ಹೇಳಿ ತಮ್ಮ ಹೃದಯಸ್ಥಳದಲ್ಲಿ ಕೈಯಿಟ್ಟು ಸನ್ನೆಯ ಮೂಲಕ ನರೇಂದ್ರನಿಗೆ ಹೇಳುತ್ತಿದ್ದಾರೆ: “ನಾನು ಹೇಳಿದ್ದು ಏನು ಹೇಳು ನೋಡೋಣ?”
ನರೇಂದ್ರ: “ತಿಳಿದುಕೊಂಡುಬಿಟ್ಟೆ.”
ಶ್ರೀರಾಮಕೃಷ್ಣರು: “ಏನು ತಿಳಿದುಕೊಂಡೆ ಹೇಳು ನೋಡೋಣ?”
ನರೇಂದ್ರ: “ಚೆನ್ನಾಗಿ ಕಿವಿಗೆ ಬೀಳಲಿಲ್ಲ.”
ಶ್ರೀರಾಮಕೃಷ್ಣರು ಮತ್ತೆ ಸಂಜ್ಞೆಯ ಮೂಲಕ ಹೇಳಿದರು: “ಕಂಡಿದ್ದೇನೆ, ಭಗವಂತ ಮತ್ತು ನನ್ನ ಹೃದಯದಲ್ಲಿ ವಾಸಿಸುತ್ತಿರುವವನು ಇಬ್ಬರೂ ಒಬ್ಬನೇ ಒಬ್ಬ ವ್ಯಕ್ತಿ ಎಂಬುದಾಗಿ.”
ನರೇಂದ್ರ: “ಹೌದು, ಹೌದು: ‘ಸೋಠ್ಹಮ್.”’
ಶ್ರೀರಾಮಕೃಷ್ಣರು: “ಇಬ್ಬರಿಗೂ ಒಂದು ಗೆರೆಯ ಅಂತರ ಮಾತ್ರ ಇದೆ– ‘ಭಕ್ತನ ಅಹಂ’ ಇದೆ- ಭಗವದಾನಂದವನ್ನು ಪಡೆಯಲೋಸುಗ.”
ನರೇಂದ್ರ (ಮಾಸ್ಟರಿಗೆ): “ಮಹಾಪುರುಷರು ತಮಗೆ ಆತ್ಮಸಾಕ್ಷಾತ್ಕಾರ ದೊರೆತ ನಂತರವೂ ಜೀವರ ಉದ್ಧಾರಕ್ಕಾಗಿ ‘ಅಹಂ’ ಎಂಬುದನ್ನು ಉಳಿಸಿಕೊಂಡು, ದೇಹದ ಸುಖದುಃಖವನ್ನು ಅನುಭವಿಸುತ್ತಾ ಬದುಕಿಕೊಂಡಿರುತ್ತಾರೆ.
“ಇದು ಕೂಲಿ ಕೆಲಸವಿದ್ದ ಹಾಗೆ. ನಾವು ಚಾವಟಿ ಏಟಿನಿಂದ ಮಾಡುತ್ತೇವೆ; ಅವರು ಸ್ವೇಚ್ಛೆಯಿಂದ ಮಾಡುತ್ತಾರೆ.”
ಮತ್ತೆ ಕೊಠಡಿಯಲ್ಲಿ ನಿಶ್ಶಬ್ದ. ಈಗ ಪರಮಹಂಸರು ಮಾತಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು (ನರೇಂದ್ರನೇ ಮೊದಲಾದವರಿಗೆ): “ಮೇಲ್ಚಾವಣಿಯೇನೊ ಕಣ್ಣಿಗೆ ಕಾಣುತ್ತದೆ. ಆದರೆ ಅದರ ಮೇಲಕ್ಕೆ ಹತ್ತಿಹೋಗಬೇಕಾದರೆ ಬಹಳ ಪ್ರಯಾಸಪಡಬೇಕು.”
ನರೇಂದ್ರ: “ಹೌದು, ನಿಜ.”
ಶ್ರೀರಾಮಕೃಷ್ಣರು: “ಆದರೆ ಯಾರಾದರೂ ಆಗಲೆ ಮೇಲಕ್ಕೆ ಹತ್ತಿಬಿಟ್ಟಿದ್ದರೆ, ಆತ ಕೆಳಕ್ಕೆ ಹಗ್ಗ ಬಿಟ್ಟು ಬೇರೊಬ್ಬನನ್ನು ಮೇಲಕ್ಕೆ ಎಳೆದುಕೊಳ್ಳಬಲ್ಲ.
“ಒಮ್ಮೆ ಹೃಷೀಕೇಶದ ಒಬ್ಬ ಸಾಧು ಇಲ್ಲಿಗೆ ಬಂದಿದ್ದ. ಆತ ನನಗೆ ಹೇಳಿದ: ‘ಏನಾಶ್ಚರ್ಯ! ನಿಮ್ಮಲ್ಲಿ ಐದು ವಿಧವಾದ ಸಮಾಧಿಗಳೂ ವ್ಯಕ್ತವಾಗಿರವುದಲ್ಲ!’
“ಕೆಲವು ವೇಳೆ ಕಪಿಯಂತೆ–ಯಾವ ರೀತಿ ಕಪಿ ಕೊಂಬೆಯಿಂದ ಕೊಂಬೆಗೆ ನೆಗೆಯುತ್ತ ಹೇಗೆ ಮರವನ್ನು ಹತ್ತುವುದೊ, ಅದೇ ರೀತಿ ಮಹಾವಾಯು ದೇಹದಲ್ಲಿರುವ ಚಕ್ರದಿಂದ ಚಕ್ರಕ್ಕೆ ನೆಗೆಯುತ್ತಾ ಮುಂದುವರಿಯುತ್ತದೆ. ಕೊನೆಗೆ ಸಮಾಧಿ.
“ಕೆಲವು ವೇಳೆ ಮೀನಿನಂತೆ–ಯಾವ ರೀತಿ ಮೀನು ನೀರಿನಲ್ಲಿ ‘ಸಳಕ್, ಸಳಕ್’ ಅಂತ ಚಲಿಸುತ್ತ ಆನಂದದಿಂದ ಈಜಾಡುವುದೊ, ಅದೇ ರೀತಿಯಾಗಿ ಮಹಾವಾಯು ದೇಹದಲ್ಲಿ ಚಲಿಸಲಾರಂಭಿಸುತ್ತದೆ. ಕೊನೆಗೆ ಸಮಾಧಿ.
“ಕೆಲವು ವೇಳೆ ಪಕ್ಷಿಯಂತೆ–ಯಾವ ರೀತಿ ಹಕ್ಕಿ ರೆಂಬೆಯಿಂದ ರೆಂಬೆಗೆ ಹಾರಿ ಹಾರಿ ಮುಂದುವರಿಯವುದೊ, ಅದೇ ರೀತಿ ಮಹಾವಾಯು ದೇಹವೆಂಬ ವೃಕ್ಷದಲ್ಲಿ ಮುಂದುವರಿಯುತ್ತದೆ.
“ಕೆಲವು ವೇಳೆ ಪಿಪೀಲಿಕದಂತೆ–ಮಹಾವಾಯು ಇರುವೆಯೋಪಾದಿಯಲ್ಲಿ ದೇಹದಲ್ಲಿ ಸ್ವಲ್ಪಸ್ವಲ್ಪವಾಗಿ ಮುಂದುವರಿಯುತ್ತಾ ಇರುತ್ತದೆ. ಅದು ಸಹಸ್ರಾರವನ್ನು ಮುಟ್ಟುವುದೇ ತಡ, ಸಮಾಧಿ.
“ಕೆಲವು ವೇಳೆ ಸರ್ಪದಂತೆ–ಮಹಾವಾಯು ಸರ್ಪದ ಹಾಗೆ ಸೊಟ್ಟಸೊಟ್ಟವಾಗಿ ಮುಂದುವರಿಯುತ್ತದೆ. ಸಹಸ್ರಾರವನ್ನು ಮುಟ್ಟಿದಾಗ ಸಮಾಧಿ.”
ರಾಖಾಲ (ಭಕ್ತರಿಗೆ): “ಇನ್ನು ಮಾತುಕತೆ ಇಲ್ಲಿಗೆ ಸಾಕು. ಬಹಳವಾಗಿ ಮಾತಾಡಿ ಬಿಟ್ಟಿದ್ದಾರೆ. ಹೆಚ್ಚು ಮಾತನಾಡಿದರೆ ಗಂಟಲುರೋಗ ಅಧಿಕವಾಗಿಬಿಡುತ್ತದೆ.”
೧೨ನೆ ಏಪ್ರಿಲ್ ೧೮೮೬, ಚೈತ್ರ ಶುಕ್ಲ ಅಷ್ಟಮಿ, ಸೋಮವಾರ
ಘಂಟೆ ಸಾಯಂಕಾಲ ಐದು. ಪರಮಹಂಸರು ಕಾಶೀಪುರದ ತೋಟದ ಮನೆಯಲ್ಲಿ ತಮ್ಮ ಹಾಸಿಗೆಯ ಮೇಲೆ ಕುಳಿತಿದ್ದಾರೆ. ಹತ್ತಿರವೆ ಮಾಸ್ಟರ್ ಮತ್ತು ಶಶಿ ಕುಳಿತುಕೊಂಡಿದ್ದಾರೆ. ಪರಮಹಂಸರು ಮಾಸ್ಟರಿಗೆ ತಮಗೆ ಗಾಳಿ ಬೀಸಬೇಕೆಂದು ಸಂಜ್ಞೆ ಮಾಡಿದರು. ಇಂದು ಬಂಗಾಳಿ ವರ್ಷದ ಕೊನೆಯ ದಿನವಾದ್ದರಿಂದ ಹತ್ತಿರದಲ್ಲೆ ಒಂದು ಜಾತ್ರೆಯು ನಡೆಯುತ್ತಿತ್ತು. ಪರಮಹಂಸರು ಜಾತ್ರೆಗೆ ಹೋಗಿ ಕೆಲವು ಸಾಮಾನುಗಳನ್ನು ಕೊಂಡುಕೊಂಡು ಬರುವಂತೆ ಒಬ್ಬ ಭಕ್ತನನ್ನು ಅಲ್ಲಿಗೆ ಕಳುಹಿಸಿದ್ದರು. ಆತ ಈಗ ಹಿಂದಿರುಗಿ ಬಂದಿದ್ದಾನೆ.
ಪರಮಹಂಸರು ಆತನನ್ನು ಕೇಳಿದರು: “ಏನೇನು ಕೊಂಡುಕೊಂಡು ಬಂದೆ?”
ಭಕ್ತ: “ಒಂದೂಕಾಲಾಣೆಗೆ ಬತ್ತಾಸು, ಅರ್ಧಾಣೆಗೆ ಸೌಟು, ಅರ್ಧಾಣೆಗೆ ಈಳಿಗೆ ಮಣೆ.”
ಶ್ರೀರಾಮಕೃಷ್ಣರು: “ಚೂರಿ ಎಲ್ಲಿ?”
ಭಕ್ತ: “ಅರ್ಧಾಣೆಗೆ ಕೊಡದೆ ಹೋದ.”
ಶ್ರೀರಾಮಕೃಷ್ಣರು (ಆಕಾಂಕ್ಷಿತರಾಗಿ) “ಹೋಗು, ಹೋಗು! ಬೇಗ ಕೊಂಡುಕೊಂಡು ಬಾ ಒಂದನ್ನು.”
ಮಾಸ್ಟರ್ ತೋಟದಲ್ಲಿ ಅಡ್ಡಾಡುತ್ತಿದ್ದಾನೆ. ನರೇಂದ್ರ ಮತ್ತು ತಾರಕ ಕಲ್ಕತ್ತದಿಂದ ಹಿಂದಿರುಗಿ ಬಂದಿದ್ದಾರೆ. ಅವರು ಗಿರೀಶಘೋಷನ ಮನೆಗೆ ಮತ್ತು ಇನ್ನೂ ಬೇರೆ ಬೇರೆ ಸ್ಥಳಗಳಿಗೆ ಹೋಗಿದ್ದರು.
ತಾರಕ: “ಇಂದು ನಾವು ಏನೇನೋ ತಿಂದುಬಂದೆವು.”
ನರೇಂದ್ರ: “ಇಂದು ನಮ್ಮ ಮನಸ್ಸು ಕೆಳಗಿನ ಅಂತಸ್ತಿಗೆ ಇಳಿದುಬಿಟ್ಟಿದೆ. ಸ್ವಲ್ಪ ಅಧಿಕವಾಗಿ ತಪಸ್ಸುಮಾಡೋಣ. (ಮಾಸ್ಟರಿಗೆ) ನಾವು ಈ ಶರೀರ, ಮನಸ್ಸು ಇವುಗಳಿಗೆ ಎಷ್ಟೊಂದು ದಾಸರಾಗಿಬಿಟ್ಟಿದ್ದೇವೆ! ನಾವು ಕೂಲಿಗಳ ಹಾಗೆ ವರ್ತಿಸುತ್ತಿದ್ದೇವೆ. ನಮ್ಮ ಭಾವನೆ ಈ ಶರೀರ, ಮನಸ್ಸು ನಮ್ಮದಲ್ಲ ಬೇರೆ ಯಾರದೊ ಅಂತ.”
ಸಾಯಂಕಾಲವಾಗಿದೆ. ಮೇಲೆ, ಕೆಳಗೆ, ಎಲ್ಲೆಲ್ಲೂ ದೀಪ ಹಚ್ಚಲಾಗಿದೆ. ಪರಮ ಹಂಸರು ತಮ್ಮ ಹಾಸಿಗೆ ಮೇಲೆ ಉತ್ತರಾಭಿಮುಖರಾಗಿ ಕುಳಿತು ಭಗವಚ್ಚಿಂತನೆ ಮಾಡು ತ್ತಿದ್ದಾರೆ. ಕೆಲವು ನಿಮಿಷಗಳಾದನಂತರ ಬಲರಾಮನ ಪುರೋಹಿತನ ವಂಶಸ್ಥ ಫಕೀರ ಎಂಬುವನು ಅಪರಾಧಭಂಜನ ಸ್ತೋತ್ರವನ್ನು ಪಠಿಸಲಾರಂಭಿಸಿದ:
ಪ್ರಾಗ್ದೇಹಸ್ಥೋ ಯದಾಸಂ ತವ ಚರಣಯುಗಂ ನಾಶ್ರಿತೋ ನಾರ್ಚಿತೋಠ್ಹಂ
ತೇನಾದ್ಯೇಕೀರ್ತಿರ್ವೆಗೈರ್ಜಠರಜ ದಹನೈರ್ಭೋಧ್ಯಮಾನೋ ಬಲಿಷ್ಠೈಃ ।
ಸ್ಥಿತ್ವಾ ಜನ್ಮಾಂತರೇ ನೋ ಪುನರಿಹ ಭವಿತಾಕ್ಕಾಶ್ರಯಃ ಕ್ವಾಪಿ ಸೇವಾ,
ಕ್ಷಂತವೇರ್ ಮೇಪರಾಧಃ ಪ್ರಕಟಿತವದನೇ ಕಾಮರೂಪೇ ಕರಾಲೇ ॥
ಕೊಠಡಿಯಲ್ಲಿ ಶಶಿ, ಮಾಸ್ಟರ್ ಮತ್ತು ಇನ್ನೂ ಕೆಲವು ಭಕ್ತರು ಕುಳಿತಿದ್ದಾರೆ. ಸ್ತೋತ್ರಪಠನೆ ಮುಗಿದ ನಂತರ ಪರಮಹಂಸರು ಕೈಮುಗಿದು ಅತ್ಯಂತ ಶ್ರದ್ಧಾಭಕ್ತಿಯಿಂದ ದೇವಿಗೆ ನಮಸ್ಕಾರ ಮಾಡಿದರು.
ಮಾಸ್ಟರ್ ಶ್ರೀರಾಮಕೃಷ್ಣರಿಗೆ ಗಾಳಿ ಬೀಸುತ್ತಿದ್ದಾನೆ. ಅವರು ಸನ್ನೆಯ ಮೂಲಕ ಆತನಿಗೆ ಹೇಳುತ್ತಿದ್ದಾರೆ:ಽ “ನನಗಾಗಿ ಒಂದು ಪಾವು ಹಾಲು ಹಿಡಿಯುವ ಬಿಳಿ ಕಲ್ಲಿನ ಒಂದು ಬಟ್ಟಲನ್ನು ಕೊಂಡುಕೊಂಡು ಬಾ.” ಆ ಬಟ್ಟಲಿನ ಆಕಾರವನ್ನು ಅವರು ಬೆರಳಿನಿಂದ ಬರೆದು ತೋರಿಸುತ್ತಿದ್ದಾರೆ.
ಮಾಸ್ಟರ್: “ಆಗಲಿ, ತರುತ್ತೇನೆ.”
ಶ್ರೀರಾಮಕೃಷ್ಣರು: “ಉಳಿದ ಬಟ್ಟಲುಗಳಲ್ಲಿ ನನಗೆ ಮೀನಿನ ವಾಸನೆ ಬರುತ್ತಿದೆ.”
೧೩ನೆ ಏಪ್ರಿಲ್ ೧೮೮೬, ಚೈತ್ರ ಶುಕ್ಲ ನವಮಿ, ಮಂಗಳವಾರ
ಘ೦ಟೆ ಪ್ರಾತಃಕಾಲ ಎಂಟು. ಪರಮಹಂಸರು ಕಾಶೀಪುರದ ತೋಟದ ಮನೆಯಲ್ಲಿ ತಮ್ಮ ಹಾಸಿಗೆ ಮೇಲೆ ಕುಳಿತಿದ್ದಾರೆ. ಮಾಸ್ಟರ್ ರಾತ್ರಿ ಇಲ್ಲೆ ಇದ್ದ. ಬೆಳಿಗ್ಗೆ ಎದ್ದು ಹೋಗಿ ಗಂಗಾಸ್ನಾನ ಮಾಡಿಬಂದು ಪರಮಹಂಸರಿಗೆ ಪ್ರಣಾಮಮಾಡಿದ. ರಾಮನೂ ಕೊಠಡಿಗೆ ಬಂದು ಪರಮಹಂಸರಿಗೆ ಪ್ರಣಾಮಮಾಡಿ, ತಾನು ಕಲ್ಕತ್ತದಿಂದ ತಂದಿದ್ದ ಹೂವಿನ ಮಾಲೆಯನ್ನು ಅವರಿಗೆ ಅರ್ಪಿಸಿ ಒಂದು ಕಡೆ ಕುಳಿತುಕೊಂಡ. ಭಕ್ತರಲ್ಲನೇಕರು ಕೆಳಗಿನ ಅಂತಸ್ತಿನಲ್ಲೇ ಕುಳಿತಿದ್ದಾರೆ. ಎಲ್ಲೊ ಒಬ್ಬಿಬ್ಬರು ಮಾತ್ರ ಕೊಠಡಿಯಲ್ಲಿ ಕುಳಿತಿದ್ದಾರೆ.
ಈಗ ಪರಮಹಂಸರು ಮಾತುಕತೆಗಳಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನನ್ನ ಸಂಬಂಧವಾಗಿ ನಿನ್ನ ಅಭಿಪ್ರಾಯವೇನು?”
ರಾಮ: “ನಿಮ್ಮಲ್ಲಿ ಎಲ್ಲವೂ ಇದೆ.
“ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ನಿಮ್ಮ ರೋಗದ ಸಂಬಂಧವಾಗಿ ಒಂದು ಚರ್ಚೆ ನಡೆಯುವುದರಲ್ಲಿದೆ.”
ಪರಮಹಂಸರು ಮುಗುಳುನಕ್ಕು ರಾಮನನ್ನು ಸನ್ನೆಯ ಮೂಲಕ ಕೇಳುತ್ತಿದ್ದಾರೆ: “ನನ್ನ ರೋಗದ ಸಂಬಂಧವಾಗಿ ನಿಜವಾಗಿಯೂ ಚರ್ಚೆ ನಡೆಯುವುದೆ?”
ಪರಮಹಂಸರಿಗೆಂದು ತಂದ ಪಾದರಕ್ಷೆಗಳು ಅವರ ಕಾಲಿಗೆ ಸರಿಯಾಗಿ ಹಿಡಿಸಲಿಲ್ಲ. ಡಾಕ್ಟರ್ ರಾಜೇಂದ್ರದತ್ತ ಅವರಿಗೆ ಬೇರೊಂದು ಜತೆಯನ್ನು ತಂದುಕೊಡಲು ಇಚ್ಛೆಪಟ್ಟ. ಈಗ ಪರಮಹಂಸರ ಪಾದಗಳ ಅಳತೆಯನ್ನು ತೆಗೆದುಕೊಳ್ಳಲಾಯಿತು. ರಾಜೇಂದ್ರದತ್ತ ತಂದ ಈ ಪಾದರಕ್ಷೆಗಳು ಈಗ ಬೇಲೂರು ಮಠದಲ್ಲಿದ್ದು ನಿತ್ಯಪೂಜೆಗೊಳ್ಳುತ್ತಲಿವೆ.
ಪರಮಹಂಸರು ಸನ್ನೆಯ ಮೂಲಕ ಮಾಸ್ಟರನ್ನು ಕಲ್ಲುಬಟ್ಟಲಿನ ಸಂಬಂಧವಾಗಿ ಕೇಳಿದರು. ಮಾಸ್ಟರ್ ಮೇಲಕ್ಕೆ ಎದ್ದ. ಅದನ್ನು ಕೊಂಡುಕೊಂಡು ಬರಲು ಕಲ್ಕತ್ತೆಗೆ ಹೊರಡುವುದರಲ್ಲಿದ್ದಾನೆ.
ಶ್ರೀರಾಮಕೃಷ್ಣರು: “ಈಗೇನು ಅದಕ್ಕಾಗಿ ಹೋಗಬೇಡ.”
ಮಾಸ್ಟರ್: “ಇವರೆಲ್ಲ ಹೋಗುತ್ತಿದ್ದಾರೆ. ಇವರೊಡನೆ ಹೋಗಿ ಕೊಂಡುಕೊಂಡು ಬರುತ್ತೇನೆ.”
ಮಾಸ್ಟರ್ ಕಲ್ಕತ್ತೆಗೆ ಹೋಗಿ ಆ ಬಟ್ಟಲನ್ನು ಕೊಂಡುಕೊಂಡು ಮಧ್ಯಾಹ್ನದ ವೇಳೆಗೆ ಕಾಶೀಪುರಕ್ಕೆ ಹಿಂದಿರುಗಿದ. ಬಳಿಕ ಪರಮಹಂಸರಿಗೆ ಪ್ರಣಾಮಮಾಡಿ ಆ ಬಟ್ಟಲನ್ನು ಅವರ ಹತ್ತಿರ ಇಟ್ಟ. ಅವರು ಅದನ್ನು ಈಗ ತಮ್ಮ ಕೈಗೆ ತೆಗೆದುಕೊಂಡು ತಿರುಗಿಸಿ ತಿರುಗಿಸಿ ನೋಡುತ್ತಾ ಇದ್ದಾರೆ. ಡಾಕ್ಟರ್ ರಾಜೇಂದ್ರದತ್ತ, ಡಾಕ್ಟರ್ ಶ್ರೀನಾಥ, ಡಾಕ್ಟರ್ ರಾಖಾಲ ಹಾಲದಾರ ಮತ್ತು ಇನ್ನೂ ಕೆಲವರು ಕೊಠಡಿಯನ್ನು ಪ್ರವೇಶಿಸಿದರು. ರಾಖಾಲ, ಶಶಿ, ಚಿಕ್ಕ ನರೇನ ಕೊಠಡಿಯಲ್ಲಿದ್ದಾರೆ. ಡಾಕ್ಟರುಗಳು ರೋಗದ ವರದಿಯನ್ನೆಲ್ಲ ವಿಸ್ತಾರವಾಗಿ ಕೇಳಿದರು. ಡಾಕ್ಟರ್ ಶ್ರೀನಾಥ ಕೈಯಲ್ಲಿ ಗೀತಾ ಪ್ರತಿಯನ್ನು ಹಿಡಿದುಕೊಂಡಿದ್ದ.
ಡಾಕ್ಟರ್ ಶ್ರೀನಾಥ (ತನ್ನ ಸ್ನೇಹಿತರಿಗೆ): “ಎಲ್ಲವೂ ಪ್ರಕೃತಿಯ ಅಧೀನದಲ್ಲಿದೆ. ಕರ್ಮಫಲಗಳಿಂದ ಯಾರೂ ತಪ್ಪಿಸಿಕೊಳ್ಳಲಾಗುವುದಿಲ್ಲ. ಇದಕ್ಕೇನೆ ‘ಪ್ರಾರಬ್ಧ’ ಅಂತ ಹೆಸರು.”
ಶ್ರೀರಾಮಕೃಷ್ಣರು: “ಏಕೆ, –ಭಗವಂತನ ನಾಮವನ್ನು ಜಪಿಸಿದ್ದೇ ಆದರೆ, ಆತನ ಚಿಂತನೆಯನ್ನು ಮಾಡಿದ್ದೇ ಆದರೆ, ಆತನಲ್ಲಿ ಶರಣಾಗತ ಆದದ್ದೇ ಆದರೆ–”
ಡಾಕ್ಟರ್ ಶ್ರೀನಾಥ: “ಆದರೆ, ಮಹಾಶಯರೆ, ಪ್ರಾರಬ್ಧದಿಂದ ತಪ್ಪಿಸಿಕೊಳ್ಳುವುದು ಹೇಗೆ ಸಾಧ್ಯ?”
ಶ್ರೀರಾಮಕೃಷ್ಣರು: “ಅದರ ಕಿಂಚಿತ್ ಭಾಗವನ್ನೇನೋ ಅನುಭವಿಸಬೇಕಾಗುತ್ತದೆ.
ಆದರೆ ಆತನ ನಾಮಬಲದಿಂದ ಪ್ರಾರಬ್ಧದ ಬಹುಭಾಗ ರದ್ದಾಗಿ ಹೋಗುತ್ತದೆ. ಒಬ್ಬ ತನ್ನ ಪ್ರಾರಬ್ಧ ಫಲವಾಗಿ ಏಳು ಜನ್ಮಗಳವರೆಗೆ ಕುರುಡನಾಗಿ ಹುಟ್ಟಬೇಕಾಗಿತ್ತು. ಆದರೆ ಆತ ಗಂಗಾಸ್ನಾನ ಮಾಡಿದ. ಗಂಗಾಸ್ನಾನ ಮಾಡಿದರೆ ಮುಕ್ತಿ ದೊರೆಯುತ್ತದೆ. ಈ ಜನ್ಮದಲ್ಲೇನೊ ಆತ ಕುರುಡನಾಗಿಯೇ ಉಳಿದುಕೊಂಡ. ಆದರೆ ಉಳಿದ ಆರು ಜನ್ಮಗಳನ್ನು ಆತ ಎತ್ತಬೇಕಾಗಿ ಬರಲಿಲ್ಲ.”
ಡಾಕ್ಟರ್ ಶ್ರೀನಾಥ: “ಆದರೆ ಮಹಾಶಯರೆ, ಯಾರೂ ಪ್ರಾರಬ್ಧದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಅಂತ ಶಾಸ್ತ್ರಗಳು ಹೇಳುತ್ತಿವೆಯಲ್ಲ.”
ಡಾಕ್ಟರ್ ಶ್ರೀನಾಥ ಈ ವಿಷಯವಾಗಿ ತರ್ಕಮಾಡಲು ಉತ್ಸುಕನಾಗಿದ್ದ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಈಶ್ವರಕೋಟಿಗೂ, ಜೀವಕೋಟಿಗೂ ಅಜಗಜಾಂತರ ವ್ಯತ್ಯಾಸ ಎಂಬುದನ್ನು ಏಕೆ ನೀನು ಅವರಿಗೆ ಹೇಳಬಾರದು? ಈಶ್ವರ ಕೋಟಿ ಎಂದಿಗೂ ಪಾಪಕೃತ್ಯಗಳನ್ನು ಮಾಡುವುದಿಲ್ಲ ಎಂಬುದನ್ನು ಏಕೆ ನೀನು ಆತನಿಗೆ ಹೇಳಕೂಡದು?”
ಮಾಸ್ಟರ್ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು ರಾಖಾಲನಿಗೆ ಹೇಳುತ್ತಿದ್ದಾನೆ: “ನೀನು ಹೇಳು.”
ಕೆಲವು ನಿಮಿಷಗಳಾದ ನಂತರ ಡಾಕ್ಟರುಗಳು ಹೊರಟುಹೋದರು. ಈಗ ಪರಮಹಂಸರು ರಾಖಾಲ ಹಾಲದಾರನೊಡನೆ ಮಾತುಕತೆ ಆಡುತ್ತಿದ್ದಾರೆ.
ರಾಖಾಲ ಹಾಲದಾರ: “ಡಾಕ್ಟರ್ ಶ್ರೀನಾಥ ವೇದಾಂತ ಚರ್ಚೆ ಮಾಡುತ್ತಿರುತ್ತಾನೆ. ಆತ ಯೋಗವಾಸಿಷ್ಠವನ್ನು ಓದುತ್ತಿದ್ದಾನೆ.”
ಶ್ರೀರಾಮಕೃಷ್ಣರು: “ಸಂಸಾರಿಯಾಗಿದ್ದು, ‘ಎಲ್ಲವೂ ಸ್ವಪ್ನವತ್’ ಅಂತ ಹೇಳುವುದು ಸರಿಯಲ್ಲ.”
ಒಬ್ಬ ಭಕ್ತ, ಕಾಳಿದಾಸ ಎಂಬುವನ ಮಾತೆತ್ತಿ: “ಆತನೂ ವೇದಾಂತ ಚರ್ಚೆ ಮಾಡುತ್ತಾನೆ; ಆದರೆ ಆತ ಮೊಕದ್ದಮೆಗಳಲ್ಲಿ ತನ್ನ ಸ್ವತ್ತನ್ನೆಲ್ಲಾ ಕಳೆದುಕೊಂಡುಬಿಟ್ಟಿದ್ದಾನೆ.”
ಶ್ರೀರಾಮಕೃಷ್ಣರು (ನಗುತ್ತ): “ಹೌದು, ಎಲ್ಲವೂ ಮಾಯೆ, ಅಂತ ಹೇಳುವುದು, ಕೋರ್ಟಿಗೂ ಅಲೆಯುತ್ತಿರುವುದು! (ರಾಖಾಲನಿಗೆ) ಜನಾಯಿಯ ಮುಖ್ಯೋಪಾಧ್ಯಾಯನೂ ಮೊದಲು ಮೊದಲು ಜಂಭ ಕೊಚ್ಚಿಕೊಳ್ಳುತ್ತಿದ್ದ. ಆದರೆ ಕೊನೆಗೆ ಆತನಿಗೆ ಬುದ್ಧಿ ಬಂತು. ನನ್ನ ಶರೀರಾರೋಗ್ಯ ಚೆನ್ನಾಗಿದ್ದರೆ ಡಾಕ್ಟರ್ ಶ್ರೀನಾಥನೊಡನೆ ಇನ್ನೂ ಸ್ವಲ್ಪ ಮಾತಾಡಬಹುದಾಗಿತ್ತು. ಜ್ಞಾನದ ಸಂಬಂಧವಾಗಿ ಮಾತಾಡುವುದರಿಂದಲೇ ಜ್ಞಾನಿಯಾಗಲು ಸಾಧ್ಯವೆ?”
ರಾಖಾಲ ಹಾಲಾದಾರ: “ನೀವು ಹೇಳುವುದು ಸರಿ, ಜ್ಞಾನದ ಸಂಬಂಧವಾಗಿ ಬಹಳವಾಗಿ ನೀರು ಕುಡಿದಿದ್ದೇನೆ. ಈಗ ನನಗೆ ಕಿಂಚಿತ್ ಭಕ್ತಿ ದೊರೆತುಬಿಟ್ಟಿದ್ದೇ ಆದರೆ ಬದುಕಿಕೊಂಡೆ. ಅಂದು ನಾನು ಒಂದು ವಿಷಯ ಕೇಳಬೇಕು ಅಂತ ಬಂದಿದ್ದೆ. ನೀವಾಗಿಯೇ ಅದರ ಮೀಮಾಂಸೆಯನ್ನು ಮಾಡಿಕೊಟ್ಟುಬಿಟ್ಟಿರಿ.”
ಶ್ರೀರಾಮಕೃಷ್ಣರು: “ಏನದು?”
ರಾಖಾಲ ಹಾಲದಾರ: “ಮಹಾಶಯರೆ, ಅಂದು ಆ ಹುಡುಗ (ಚಿಕ್ಕ ನರೇನನನ್ನು ತೋರಿಸಿ) ಒಳಕ್ಕೆ ಬಂದೊಡನೆಯೆ ಆತ ‘ಜಿತೇಂದ್ರಿಯ’ ಅಂತ ಹೇಳಿದಿರಿ.”
ಶ್ರೀರಾಮಕೃಷ್ಣರು: “ಹೌದು, ನಿಜ. ಆತನ ಹೃದಯದಲ್ಲಿ ಕಾಮಪ್ರವೃತ್ತಿ ಲೇಶ ಮಾತ್ರವೂ ಇಲ್ಲ. ಕಾಮ ಎಂಬುದು ಏನು ಎಂದು ತನಗೆ ಗೊತ್ತಿಲ್ಲವಲ್ಲ ಅಂತ ಆತ ಹೇಳುತ್ತಿದ್ದಾನೆ. (ಮಾಸ್ಟರಿಗೆ) ನನ್ನ ಶರೀರ ಮುಟ್ಟಿನೋಡು. ನನಗೆ ರೋಮಾಂಚನ ವಾಗುತ್ತಿದೆ.
ಕಾಮಹೀನವಾದ ಶುದ್ಧ ಮನಸ್ಸಿನ ಭಾವನೆ ಪರಮಹಂಸರ ಮನಸ್ಸಿಗೆ ಬಂದೊಡ ನೆಯೇ ಅವರಿಗೆ ರೋಮಾಂಚನವಾಗಿಬಿಟ್ಟಿದೆ. ಅವರು ಯಾವಾಗಲೂ ಹೇಳುವುದುಂಟು, ಕಾಮಹೀನವಾದ ಹೃದಯದಲ್ಲಿ ಭಗವಂತ ವ್ಯಕ್ತವಾಗುತ್ತಾನೆ ಅಂತ.
ರಾಖಾಲ ಹಾಲಾದಾರ ಪರಮಹಂಸರಿಂದ ಬೀಳ್ಕೊಂಡ.
ಪರಮಹಂಸರು ಇನ್ನೂ ಭಕ್ತರೊಡನೆ ಕುಳಿತೇ ಇದ್ದಾರೆ. ಒಬ್ಬಳು ಹುಚ್ಚಿ ಪರಮ ಹಂಸರನ್ನು ನೋಡಬೇಕೆಂದು ಬಹಳವಾಗಿ ಭಕ್ತರನ್ನೆಲ್ಲ ಪೀಡಿಸುತ್ತಿದ್ದಾಳೆ. ಆಕೆಯದು ಮಧುರ ಭಾವ. ಆಗಾಗ ತೋಟಕ್ಕೆ ಬಂದು ಓಡಿಓಡಿ ಹೋಗಿ ಪರಮಹಂಸರ ಕೊಠಡಿಯನ್ನು ಹೊಕ್ಕಿಬಿಡುತ್ತಿದ್ದಳು. ಹಾಗೆ ಮಾಡಕೂಡದೆಂದು ಭಕ್ತರು ಆಕೆಗೆ ಪ್ರಹಾರವನ್ನೂ ಕೊಟ್ಟಿದ್ದಾರೆ. ಆದರೂ ಹಾಗೆ ಮಾಡುವುದನ್ನು ಬಿಡುತ್ತಿಲ್ಲ.
ಶಶಿ: “ಆ ಹುಚ್ಚಿ ಮತ್ತೇನಾದರೂ ಬಂದರೆ ನೂಕಿ ಹೊರಗಟ್ಟಿಬಿಡುತ್ತೇನೆ.”
ಶ್ರೀರಾಮಕೃಷ್ಣರು ಕರುಣಾಮಯ ಕಂಠದಿಂದ: “ಬೇಡ, ಬೇಡ. ಹಾಗೆಲ್ಲ ಮಾಡ ಬಾರದು! ತಾನಾಗೆ ಬಂದು ತಾನಾಗೆ ಹೊರಟುಹೋಗುತ್ತಾಳೆ.”
ರಾಖಾಲ: “ಮೊದಲು ಒಂದು ಹತ್ತಾರು ಜನ ಇವರನ್ನು ನೋಡಲು ಬಂದರೆಂದರೆ ನನಗೊಂದು ವಿಧವಾದ ಅಸೂಯೆ ಉಂಟಾಗುತ್ತಿತ್ತು. ಆದರೆ ಇವರು ಕೃಪೆಮಾಡಿ ಬುದ್ಧಿ ಕಲಿಸಿದರು ‘ಮದ್ಗುರು ಜಗದ್ಗುರು’ ಎಂಬುದನ್ನು. ಇವರು ಕೇವಲ ನಮ್ಮ ಕೆಲವರಿಗಾಗಿ ಮಾತ್ರವೇ ಬಂದಿದ್ದಾರೇನು?”
ಶಶಿ: “ಅದೇನೊ ನಿಜ, ಆದರೆ ಇವರು ರೋಗಗ್ರಸ್ತರಾಗಿರುವಾಗ ಏಕೆ? ಆಕೆ ಒಂದು ದೊಡ್ಡ ಪೀಡೆ!”
ರಾಖಾಲ: “ನಾವೆಲ್ಲ ಅವರಿಗೆ ಒಂದಲ್ಲ ಒಂದು ವಿಧದಲ್ಲಿ ತೊಂದರೆಯನ್ನು ಕೊಡುತ್ತಲೇ ಇದ್ದೇವೆ. ನಾವೆಲ್ಲರೂ ಪೂರ್ಣತೆಯನ್ನು ಪಡೆದು ಅವರ ಹತ್ತಿರ ಬಂದೆವೇನು? ನಾವು ಅವರಿಗೆ ಕಷ್ಟಕೊಡಲಿಲ್ಲವೇನು? ನರೇಂದ್ರ-ಗಿರೀಂದ್ರ ಅವರೊಡನೆ ಹಿಂದೆ ಹೇಗೆ ವ್ಯವಹರಿಸಿದರು ಏನು ಕತೆ! ಅವರು ಅವರೊಡನೆ ಅಷ್ಟೊಂದು ವಾದಿಸುತ್ತಿದ್ದರು!”
ಶಶಿ: “ನರೇಂದ್ರ ಬಾಯಲ್ಲಿ ಆಡಿದ್ದನ್ನು ಕೈಯಲ್ಲಿ ಮಾಡಿ ತೋರಿಸುತ್ತಿದ್ದ.”
ರಾಖಾಲ: “ಡಾಕ್ಟರ್ ಸರ್ಕಾರ್ಣಿ ಎಷ್ಟೊಂದು ಒರಟು ಒರಟಾಗಿ ಅವರೊಡನೆ ವ್ಯವಹರಿಸಿದ್ದಾನೆ! ಹಾಗೆ ನೋಡಲು ಹೋದರೆ ಯಾರೂ ನಿರ್ದೋಷಿಗಳಲ್ಲ.”
ಶ್ರೀರಾಮಕೃಷ್ಣರು ಪ್ರೀತಿಯಿಂದ ರಾಖಾಲನಿಗೆ: “ಏನಾದರೂ ತಿನ್ನುತ್ತೀಯಾ?”
ರಾಖಾಲ: “ಈಗ ಬೇಡ, ಆಮೇಲೆ.”
ಪರಮಹಂಸರು ಮಾಸ್ಟರಿಗೆ ಸನ್ನೆಯ ಮೂಲಕ ತಿಳಿಸುತ್ತಿದ್ದಾರೆ: “ಇಂದು ನೀನು ಇಲ್ಲೇ ಊಟಮಾಡುವಿಯೇನು?”
ರಾಖಾಲ (ಮಾಸ್ಟರಿಗೆ): “ಇಂದು ನೀವು ಇಲ್ಲೇ ಊಟಮಾಡಿ. ಅವರೂ ಹಾಗೆ ಹೇಳುತ್ತಿದ್ದಾರೆ.”
ಪರಮಹಂಸರು ಐದು ವರ್ಷದ ಹಸುಳೆಯ ಹಾಗೆ ದಿಗಂಬರರಾಗಿ ಕುಳಿತಿದ್ದಾರೆ. ಆ ಸಮಯಕ್ಕೆ ಸರಿಯಾಗಿಯೇ ಆ ಹುಚ್ಚಿ ಮೆಟ್ಟಲುಗಳನ್ನು ಹತ್ತಿಬಂದು ಪರಮಹಂಸರ ಕೊಠಡಿಯ ಬಾಗಿಲ ಹತ್ತಿರ ನಿಂತುಕೊಂಡಳು.
ಮಾಸ್ಟರ್ (ಮೆಲ್ಲಗೆ ಶಶಿಗೆ): “ನಮಸ್ಕಾರ ಮಾಡಿ ಹೊರಟುಹೋಗುವ ಹಾಗೆ ಹೇಳಿಬಿಡು. ಬೇರೆ ಯಾವ ನಾಟಕವನ್ನೂ ನಡೆಸಬೇಡ.”
ಶಶಿ ಆಕೆಯನ್ನು ಕೆಳಕ್ಕೆ ಇಳಿಸಿಬಿಟ್ಟ.
ಇಂದು ಬಂಗಾಳಿ ವರ್ಷಾರಂಭ. ಅನೇಕ ಮಂದಿ ಭಕ್ತೆಯರು ಬಂದಿದ್ದಾರೆ. ಪರಮ ಹಂಸರಿಗೆ ಮತ್ತು ಶ್ರೀಶಾರದಾದೇವಿಯವರಿಗೆ ಪ್ರಣಾಮಮಾಡಿ ಅವರಿಂದ ಆಶೀರ್ವಾದ ವನ್ನು ಪಡೆಯುತ್ತಿದ್ದಾರೆ. ಬಲರಾಮನ ಮತ್ತು ಮೋಹನನ ಮನೆಯ ಹೆಂಗಸರು, ಬಾಗ್ಬಜಾರಿನ ಬ್ರಾಹ್ಮಣಿ, ಇನ್ನೂ ಅನೇಕ ಹೆಂಗಸರು ಬಂದಿದ್ದಾರೆ. ಅವರಲ್ಲಿ ಕೆಲವರು ತಮ್ಮ ಮಕ್ಕಳನ್ನೂ ಕರೆದುಕೊಂಡು ಬಂದಿದ್ದಾರೆ.
ಭಕ್ತೆಯರಲ್ಲಿ ಕೆಲವರು ಪರಮಹಂಸರ ಪಾದಪದ್ಮಗಳಿಗೆ ಹೂವು ಮತ್ತು ಕುಂಕುಮ ವನ್ನು ಅರ್ಪಿಸುತ್ತಿದ್ದಾರೆ. ಒಂಬತ್ತೊ ಹತ್ತೊ ವಯಸ್ಸಿನ ಇಬ್ಬರು ಹುಡುಗಿಯರು ಹಾಡುಗಳನ್ನು ಹಾಡಲಾರಂಭಿಸಿದ್ದಾರೆ:
ಹಾ! ಸುತ್ತುತ್ತಿರುವೆವು ನಾವು, ವಿಶ್ರಾಂತಿಯಿನಿತಿಲ್ಲ
ಬಂದುದೆಲ್ಲಿಂದಲೋ, ನಡೆವುದೆಲ್ಲೋ?….
ಬಳಿಕ ಹಾಡುತ್ತಿದ್ದಾರೆ:
ಅವನೆ ಶ್ಯಾಮ ಅವಳೆ ರಾಧೆ
ಬರುವರಿತ್ತ ಧಾವಿಸಿ,
ಕೊಳಲನೂದಿ ನಯನ ಬಾಣ-
ದಿಂದ ಜಗವ ಮೋಹಿಸಿ!
ಮತ್ತೆ ಹಾಡುತ್ತಿದ್ದಾರೆ:
ಶ್ರದ್ಧೆಯ ಸರೋವರದಿ ತಾಯನಾಮದ ನೌಕೆ
ತೇಲುತಿದೆ ನೋಡು!……
ಶ್ರೀರಾಮಕೃಷ್ಣರು ಸನ್ನೆಯ ಮೂಲಕ ಹೇಳುತ್ತಿದ್ದಾರೆ: “ಬಹಳ ಒಳ್ಳೆಯದೆ! ಭಗವತಿಯ ಸಂಬಂಧವಾಗಿ ಹಾಡುತ್ತಿದ್ದಾರೆ.”
ಬಾಗ್ಬಜಾರಿನ ಬ್ರಾಹ್ಮಣಿಗೆ ಮಗುವಿನಂಥ ಸ್ವಭಾವ. ಪರಮಹಂಸರು ಸಂಜ್ಞೆಯ ಮೂಲಕ ರಾಖಾಲನಿಗೆ ಹೇಳುತ್ತಿದ್ದಾರೆ: “ಆಕೆಗೆ ಹಾಡುವಂತೆ ಹೇಳು.”
ಬ್ರಾಹ್ಮಣಿ ಹಾಡುತ್ತಿದ್ದಾಳೆ. ಭಕ್ತರು ನಗುತ್ತಿದ್ದಾರೆ.
ಆಕೆ ಹಾಡುತ್ತಿದ್ದಾಳೆ:
ನಿಧುವನದಲಿ ಅಪರೂಪಕೆ
ನೀನೊಬ್ಬನೆ ಸಿಕ್ಕಿದೆ ಎಂದು
ಓ ಪ್ರಿಯತಮ ನಾನೊಬ್ಬಳೆನಿನ್ನೊಡನಾಡುವೆನೆಂದು!…..
ಭಕ್ತೆಯರೆಲ್ಲರು ಕೆಳಕ್ಕೆ ಇಳಿದುಹೋದರು.
ಮಧ್ಯಾಹ್ನವಾಗಿದೆ. ಮಾಸ್ಟರ್ ಮತ್ತು ಇನ್ನೂ ಕೆಲವು ಭಕ್ತರು ಪರಮಹಂಸರ ಹತ್ತಿರ ಕುಳಿತಿದ್ದಾರೆ. ನರೇಂದ್ರ ಕೊಠಡಿಯನ್ನು ಪ್ರವೇಶಿಸಿದ. ಪರಮಹಂಸರು ಹೇಳುತ್ತಿರುವ ಹಾಗೆ ಆತ ಒರೆಯಿಂದ ತೆಗೆದ ಕತ್ತಿಯಂತೆ ಕಾಣುತ್ತಿದ್ದಾನೆ.
ಈಗ ನರೇಂದ್ರ ಪರಮಹಂಸರ ಹತ್ತಿರ ಕುಳಿತುಕೊಂಡು ಅವರ ಕಿವಿಗೆ ಬೀಳುವ ಹಾಗೆ ಹೆಂಗಸರ ಸಂಬಂಧವಾಗಿ ತನಗಿರುವ ಜಿಗುಪ್ಸೆಯನ್ನು ವ್ಯಕ್ತಪಡಿಸುತ್ತಿದ್ದಾನೆ. ಭಕ್ತರಿಗೆ ಹೇಳುತ್ತಿದ್ದಾನೆ: “ಹೆಂಗಸರು ಭಗವಂತನ ಸಾಕ್ಷಾತ್ಕಾರಕ್ಕೆ ಎಂಥ ದೊಡ್ಡ ವಿಘ್ನ!”
ಪರಮಹಂಸರು ಯಾವ ಮಾತನ್ನೂ ಆಡದೆ ಆತ ಹೇಳುತ್ತಿರುವುದನ್ನೆಲ್ಲ ಕೇಳುತ್ತ ಸುಮ್ಮನೆ ಕುಳಿತಿದ್ದಾರೆ.
ನರೇಂದ್ರ ಮತ್ತೆ ಹೇಳುತ್ತಿದ್ದಾನೆ: “ನನಗೆ ಬೇಕಾಗಿರುವುದು ಶಾಂತಿ; ಭಗವಂತ ಕೂಡ ಬೇಕಾಗಿಲ್ಲ.”
ಪರಮಹಂಸರು ನರೇಂದ್ರನನ್ನು ದಿಟ್ಟಿಸಿ ನೋಡುತ್ತಿದ್ದಾರೆ. ಅವರ ಬಾಯಿಂದ ಒಂದು ಮಾತೂ ಹೊರಡುತ್ತಿಲ್ಲ. ಆಗಾಗ ನರೇಂದ್ರ ಸ್ವರ ಹಾಕಿಕೊಂಡು ಪಠಿಸುತ್ತಿದ್ದಾನೆ, “ಸತ್ಯಂ ಜ್ಞಾನಮನಂತಮ್” ಎಂಬುದಾಗಿ.
ಘಂಟೆ ರಾತ್ರಿ ಎಂಟು. ಪರಮಹಂಸರು ತಮ್ಮ ಹಾಸಿಗೆಯ ಮೇಲೆ ಕುಳಿತಿದ್ದಾರೆ. ಒಬ್ಬಿಬ್ಬರು ಭಕ್ತರು ಅವರ ಸಮ್ಮುಖದಲ್ಲಿ ಕುಳಿತಿದ್ದಾರೆ. ಸುರೇಂದ್ರ ತನ್ನ ಆಫೀಸಿನ ಕೆಲಸ ಮುಗಿಸಿಕೊಂಡು ಕೈಯಲ್ಲಿ ನಾಲ್ಕು ಕಿತ್ತಲೆ ಹಣ್ಣು, ಎರಡು ಹೂವಿನಮಾಲೆ ಹಿಡಿದುಕೊಂಡು ಪರಮಹಂಸರ ಕೊಠಡಿಯನ್ನು ಪ್ರವೇಶಿಸಿದ. ಆತ ಭಕ್ತರ ಕಡೆ ಒಮ್ಮೊಮ್ಮೆ, ಪರಮಹಂಸರ ಕಡೆ ಒಮ್ಮೊಮ್ಮೆ ದೃಷ್ಟಿಹಾಕುತ್ತ ಪರಮಹಂಸರಿಗೆ ತನ್ನ ಹೃದಯದಲ್ಲಿನ ಕಷ್ಟ ಸುಖಗಳನ್ನು ಬಸಿದುಕೊಳ್ಳುತ್ತಿದ್ದಾನೆ.
ಸುರೇಂದ್ರ (ಮಾಸ್ಟರ್ ಮೊದಲಾದವರ ಕಡೆಗೆ ತಿರುಗಿ): “ನಾನು ನನ್ನ ಆಫೀಸ್ ಕೆಲಸ ಮುಗಿಸಿಕೊಂಡು ಇಲ್ಲಿಗೆ ಬಂದೆ. ಭಾವಿಸಿದೆ: ‘ಎರಡು ದೋಣಿಗಳ ಮೇಲೆ ಕಾಲಿಟ್ಟು ಏಕೆ ನಿಂತುಕೊಳ್ಳಲಿ?’ ಅದಕ್ಕಾಗಿ ಮೊದಲು ಕೆಲಸವನ್ನೆಲ್ಲ ಮುಗಿಸಿಕೊಂಡು ಬಂದೆ. ಇಂದು ಹೊಸ ವರ್ಷಾರಂಭ: ಜೊತೆಗೆ ಮಂಗಳವಾರ ಬೇರೆ. ಕಾಳೀಘಟ್ಟಕ್ಕೆ ಹೋಗಲಾಗಲಿಲ್ಲ. ನನಗೆ ನಾನೇ ಹೇಳಿಕೊಂಡೆ: ‘ಇವರು (ಪರಮಹಂಸರೇ) ಕಾಳಿ ಸ್ವರೂಪರು. ಕಾಳಿ ಯಾರು ಎಂಬುದನ್ನು ಇವರು ಚೆನ್ನಾಗಿ ಅರಿತುಕೊಂಡಿದ್ದಾರೆ. ಇವರ ದರ್ಶನ ಮಾಡಿಬಿಟ್ಟರೆ ಸಾಕು.”’
ಪರಮಹಂಸರು ಕಿರುನಗೆಯನ್ನು ವ್ಯಕ್ತಗೊಳಿಸಿದರು.
ಸುರೇಂದ್ರ: “ಗುರು, ಸಾಧು ಇವರ ದರ್ಶನಕ್ಕೆ ಹೋಗುವಾಗ ಕೈಯಲ್ಲಿ ಫಲ ಪುಷ್ಪಾದಿಗಳನ್ನು, ಹಣ್ಣುಹಂಪಲುಗಳನ್ನು ತೆಗೆದುಕೊಂಡು ಹೋಗಬೇಕು ಅಂತ ಕೇಳಿದ್ದೇನೆ. ಅದಕ್ಕಾಗಿಯೇ ನಾನು ಇವನ್ನೆಲ್ಲ ತೆಗೆದುಕೊಂಡು ಬಂದಿದ್ದೇನೆ….(ಪರಮಹಂಸರಿಗಾಗಿ) ನಿಮಗಾಗಿ ನಾನು ಇಷ್ಟು ಹಣ ಖರ್ಚುಮಾಡುತ್ತಾ ಇದ್ದೇನೆ. ನನ್ನ ಹೃದಯದಲ್ಲಿ ಏನಿದೆ ಎಂಬುದು ಭಗವಂತನಿಗೇ ಗೊತ್ತು. ಕೆಲವರು ಒಂದು ದಮ್ಮಡಿ ಖರ್ಚು ಮಾಡುವುದಕ್ಕೂ ಬಹಳ ಯೋಚಿಸುತ್ತಿದ್ದಾರೆ. ಆದರೆ ಅಂಥವರೂ ಇದ್ದಾರೆ, ಸಾವಿರಗಟ್ಟಲೆ ಖರ್ಚಾದರೂ ಒಂದು ಕಿಂಚಿತ್ತೂ ಚಿಂತಿಸರು. ಭಗವಂತ ಆಂತರ್ಯದಲ್ಲಿರುವ ಭಕ್ತಿಯನ್ನು ನೋಡಿ ಅರ್ಪಣೆಯನ್ನು ಸ್ವೀಕರಿಸುತ್ತಾನೆ.”
ಪರಮಹಂಸರು ತಮ್ಮ ತಲೆಯನ್ನು ಅಲ್ಲಾಡಿಸಿ, ಸುರೇಂದ್ರ ಹೇಳುತ್ತಿರುವುದು ಸರಿ ಯೆಂಬುದಾಗಿ ಸೂಚಿಸಿದರು.
ಸುರೇಂದ್ರ: “ನಾನು ನಿನ್ನೆ ಇಲ್ಲಿಗೆ ಬರಲಾಗಲಿಲ್ಲ. ನಿಮ್ಮ ಭಾವಚಿತ್ರಕ್ಕೆ ಹೂವು ಮುಡಿಸಿ ಅಲಂಕಾರಮಾಡಿದೆ.”
ಶ್ರೀರಾಮಕೃಷ್ಣರು (ಸನ್ನೆಯ ಮೂಲಕ ಮಾಸ್ಟರಿಗೆ) : “ಆಹ! ಎಂಥ ಭಕ್ತಿ!”
ಸುರೇಂದ್ರ: “ಇಲ್ಲಿಗೆ ಬರುತ್ತಿದ್ದಾಗ ನಾಲ್ಕು ಆಣೆ ಕೊಟ್ಟು ಈ ಎರಡು ಹೂವಿನ ಮಾಲೆಗಳನ್ನು ಕೊಂಡುಕೊಂಡೆ.”
ಭಕ್ತರಲ್ಲಿ ಅನೇಕರು ತಮ್ಮ ಮನೆಗೆ ಹೊರಟುಹೋಗಿದ್ದಾರೆ. ಪರಮಹಂಸರು ಮಾಸ್ಟರಿಗೆ ಹೇಳುತ್ತಿದ್ದಾರೆ, ತಮ್ಮ ಕೈಕಾಲುಗಳನ್ನು ಒತ್ತುವಂತೆ ಮತ್ತೆ ಗಾಳಿ ಬೀಸುವಂತೆ.
೧೬ನೆ ಏಪ್ರಿಲ್ ೧೮೮೬, ಚೈತ್ರ ಶುಕ್ಲ ತ್ರಯೋದಶಿ, ಶುಕ್ರವಾರ
ಚಂದ್ರೋದಯವಾಗಿದೆ. ಬೆಳದಿಂಗಳು ಎಲ್ಲೆಲ್ಲೂ ಹಾಲು ಚೆಲ್ಲಿದ ಹಾಗೆ ಕಾಣುತ್ತಿದೆ. ಕಾಶೀಪುರದ ಮನೆಯ ಉದ್ಯಾನಮಾರ್ಗ, ಮರಗಳು, ಪುಷ್ಕರಿಣಿ ಇವೆಲ್ಲ ಚಂದ್ರನ ಬೆಳಕಿ ನಿಂದ ಬಹಳ ಚೆನ್ನಾಗಿ ಬೆಳಗುತ್ತಿವೆ. ಗಿರೀಶ, ಮಾಸ್ಟರ್, ಲಾಟು ಮತ್ತು ಇನ್ನೂ ಕೆಲವು ಭಕ್ತರು ಪುಷ್ಕರಿಣಿಯ ಹಂತಗಳ ಮೇಲೆ ಕುಳಿತಿದ್ದಾರೆ. ಮನೆ ಇರುವುದು ಪುಷ್ಕರಣಿಯ ಪಶ್ಚಿಮಕ್ಕೆ. ಪರಮಹಂಸರ ಕೊಠಡಿಯಲ್ಲಿ ದೀಪ ಉರಿಯುತ್ತಿದೆ. ಅವರು ತಮ್ಮ ಹಾಸಿಗೆಯ ಮೇಲೆ ಕುಳಿತಿದ್ದಾರೆ. ಕೊಠಡಿಯಲ್ಲಿ ಅನೇಕ ಮಂದಿ ಭಕ್ತರು ಕುಳಿತಿದ್ದಾರೆ.
ಕೆಲವು ನಿಮಿಷಗಳಾದ ನಂತರ ಮಾಸ್ಟರ್ ಮತ್ತು ಗಿರೀಶ ಹಣ್ಣುಹಂಪಲು ವೃಕ್ಷಗಳಿಂದ ಕೂಡಿದ ಒಂದು ಉದ್ಯಾನಮಾರ್ಗದಲ್ಲಿ ಒಮ್ಮೊಮ್ಮೆ ಮಾತುಕತೆಯಾಡುತ್ತಾ ಅಡ್ಡಾಡುತ್ತಿದ್ದಾರೆ.
ಮಾಸ್ಟರ್: “ಚಂದ್ರನ ಬೆಳಕು ಎಷ್ಟು ಸುಂದರವಾದ್ದು; ಎಷ್ಟು ಅನಂತಕಾಲದಿಂದ ಪ್ರಕೃತಿಯಲ್ಲಿ ಈ ನಿಯಮ ನಡೆದುಬರುತ್ತಿದೆ!”
ಗಿರೀಶ: “ಅದು ನಿನಗೆ ಹೇಗೆ ಗೊತ್ತು?”
ಮಾಸ್ಟರ್: “ಪ್ರಕೃತಿಯ ನಿಯಮ ಬದಲಾವಣೆಯಾಗುವುದಿಲ್ಲ. ಪಾಶ್ಚಾತ್ಯ ವಿಜ್ಞಾನಿಗಳು ದೂರದರ್ಶಕ ಯಂತ್ರದ ಸಹಾಯದಿಂದ ಹೊಸ ಹೊಸ ನಕ್ಷತ್ರಗಳನ್ನು ಕಂಡುಹಿಡಿದಿದ್ದಾರೆ. ಚಂದ್ರನಲ್ಲಿ ಪರ್ವತಗಳಿವೆ; ಅವರು ಅದನ್ನು ನೋಡಿದ್ದಾರೆ.”
ಗಿರೀಶ: “ಅದು ವಾಸ್ತವಿಕವಾದುದೇ ಎಂದು ಹೇಳುವ ಬಗೆ ಹೇಗೆ? ನನಗಂತೂ ಅದರಲ್ಲಿ ವಿಶ್ವಾಸವಿಲ್ಲ.”
ಮಾಸ್ಟರ್: “ಏಕೆ, ದೂರದರ್ಶಕ ಯಂತ್ರದಿಂದ ಸ್ಪಷ್ಟವಾಗಿ ನೋಡಬಹುದಲ್ಲ.”
ಗಿರೀಶ: “ಅದು ನಿಜವಾಗಿ ನೋಡುತ್ತಾ ಇದ್ದೇವೆ ಎಂಬುದಾಗಿ ಹೇಳಲು ತಾನೆ ಹೇಗೆ ಸಾಧ್ಯ? ಚಂದ್ರನಿಗೂ ಭೂಮಿಗೂ ಮಧ್ಯೆ ಬೇರೆ ಏನಾದರೂ ಇದ್ದು, ಅದರ ಮೂಲಕ ಬೆಳಕು ಹಾದುಬಂದಾಗ ಈ ರೀತಿಯಾಗಿ ಅದು ಕಂಡುಬಂದರೂ ಬರಬಹುದು.”
ನರೇಂದ್ರ, ರಾಖಾಲ, ನಿರಂಜನ, ಶರಚ್ಚಂದ್ರ, ಶಶಿ, ಬಾಬುರಾಮ, ಕಾಳೀಪ್ರಸಾದ, ಯೋಗಿಂದ್ರ, ಲಾಟು ಇವರೇ ಮೊದಲಾದ ಯುವಕಭಕ್ತರು ಪರಮಹಂಸರ ಶುಶ್ರೂಷೆ ಮಾಡಿಕೊಂಡು ಕಾಶೀಪುರದ ತೋಟದ ಮನೆಯಲ್ಲೇ ಇದ್ದಾರೆ. ರಾತ್ರಿಯನ್ನು ಪಂಚವಟಿಯ ಕೆಳಗೆ ಭಗವಂತನ ಧ್ಯಾನದಲ್ಲಿ ಕಳೆಯುತ್ತಿದ್ದಾರೆ.
ಗಿರೀಶ, ಲಾಟು, ಮಾಸ್ಟರ್ ಇವರು ಪರಮಹಂಸರ ಕೊಠಡಿಗೆ ಹೋಗಿ ನೋಡಿದಾಗ ಅವರು ತಮ್ಮ ಹಾಸಿಗೆಯ ಮೇಲೆ ಕುಳಿತುಕೊಂಡಿದ್ದರು. ಶಶಿ ಮತ್ತು ಇನ್ನೂ ಒಬ್ಬಿಬ್ಬರು ಭಕ್ತರು ಅವರಿಗೆ ಶುಶ್ರೂಷೆ ಮಾಡುತ್ತಿದ್ದಾರೆ. ಬಾಬುರಾಮ, ನಿರಂಜನ, ರಾಖಾಲ ಕೊಠಡಿಗೆ ಬಂದಿದ್ದಾರೆ. ಆ ಕೊಠಡಿ ಸ್ವಲ್ಪ ದೊಡ್ಡದೇ ಆಗಿತ್ತು. ಅದಕ್ಕಾಗಿಯೇ ಪರಮಹಂಸರ ಹಾಸಿಗೆಯ ಹತ್ತಿರವೇ ಅವರಿಗೆ ಅತ್ಯಂತ ಆವಶ್ಯಕವಾಗಿ ಬೇಕಾಗುವ ಔಷಧ ಮತ್ತು ಇನ್ನೂ ಕೆಲವು ವಸ್ತುಗಳನ್ನು ಇಟ್ಟಿದ್ದಾರೆ. ಆ ಕೊಠಡಿಗೆ ಉತ್ತರದಿಕ್ಕಿನಿಂದ ಪ್ರವೇಶ.
ಇಡೀ ರಾತ್ರಿಯೆಲ್ಲ ಪರಮಹಂಸರಿಗೆ ಶುಶ್ರೂಷೆ ಮಾಡಬೇಕಾಗಿದ್ದುದರಿಂದ, ಭಕ್ತರು ಒಬ್ಬರಾದ ಮೇಲೆ ಒಬ್ಬರು ಎಚ್ಚೆತ್ತಿರುವರು. ಪರಮಹಂಸರಿಗೆ ಸೊಳ್ಳೆಪರದೆ ಕಟ್ಟಿ ಅವರನ್ನು ಮಲಗಿಸಿದ ನಂತರ ಯಾರದು ಸರದಿಯೋ ಆತ ಆ ಕೊಠಡಿಯ ಪೂರ್ವ ಭಾಗದಲ್ಲಿ ಒಂದು ಮಂದಲಿಗೆ ಹಾಸಿಕೊಂಡು, ಒಮ್ಮೊಮ್ಮೆ ಸುಮ್ಮನೆ ಕುಳಿತೊ, ಒಮ್ಮೊಮ್ಮೆ ಸುಮ್ಮನೆ ಮಲಗಿಕೊಂಡೊ ಕಾಲ ಕಳೆಯುತ್ತಿದ್ದ. ಪರಮಹಂಸರಿಗೆ ರೋಗದ ದೆಸೆಯಿಂದ ಬಹುಮಟ್ಟಿಗೆ ನಿದ್ದೆಯೇ ಹತ್ತುತ್ತಿರಲಿಲ್ಲ. ಆದ್ದರಿಂದ ಶುಶ್ರೂಷೆ ಮಾಡುವವನು ತನ್ನ ಸರದಿಯ ಕೆಲವು ಘಂಟೆಗಳನ್ನು ಕುಳಿತೇ ಕಳೆಯಬೇಕಾಗುತ್ತದೆ.
ಈ ದಿನ ಪರಮಹಂಸರ ಆರೋಗ್ಯ ಸ್ವಲ್ಪ ಉತ್ತಮಗೊಂಡಿರುವಂತೆ ಕಾಣುತ್ತಿದೆ. ಭಕ್ತರೆಲ್ಲರೂ ಬಂದು ಅವರಿಗೆ ಪ್ರಣಾಮಮಾಡಿ ನೆಲದ ಮೇಲೆ ಕುಳಿತುಕೊಂಡರು. ಬೆಳಕನ್ನು ತಮ್ಮ ಹತ್ತಿರಕ್ಕೆ ತಂದಿಡುವಂತೆ ಪರಮಹಂಸರು ಮಾಸ್ಟರಿಗೆ ಹೇಳುತ್ತಿದ್ದಾರೆ. ಅವರು ಗಿರೀಶನನ್ನು ಅತ್ಯಂತ ಆನಂದದಿಂದ ಬರಮಾಡಿಕೊಂಡರು.
ಶ್ರೀರಾಮಕೃಷ್ಣರು (ಗಿರೀಶನಿಗೆ): “ಆರೋಗ್ಯವೇ? (ಲಾಟುವಿಗೆ) ಈತನಿಗೆ ಹುಕ್ಕ ತಯಾರು ಮಾಡಿಕೊಡು, ಎಲಡಿಕೆ ತಂದುಕೊಡು.” ಸ್ವಲ್ಪ ಹೊತ್ತಾದ ನಂತರ ಅವರು ಮತ್ತೆ ಲಾಟುವಿಗೆ ಗಿರೀಶನಿಗೆ ಸ್ವಲ್ಪ ಉಪಾಹಾರವನ್ನು ತಂದುಕೊಡುವ ಹಾಗೆ ಹೇಳುತ್ತಿದ್ದಾರೆ. ಉಪಾಹಾರವನ್ನುಕೊಂಡುಕೊಂಡು ಬರಲು ಅಂಗಡಿಗೆ ಕಳುಹಿಸಲಾಗಿದೆ ಎಂಬುದಾಗಿ ಲಾಟು ಪರಮಹಂಸರಿಗೆ ತಿಳಿಸಿದ.
ಪರಮಹಂಸರು ತಮ್ಮ ಹಾಸಿಗೆಯ ಮೇಲೆ ಕುಳಿತುಕೊಂಡಿದ್ದಾರೆ. ಒಬ್ಬ ಭಕ್ತ ಅವರಿಗೆ ಕೆಲವು ಹೂವಿನ ಮಾಲೆಗಳನ್ನು ತಂದು ಅರ್ಪಿಸಿದ. ಅವರು ಅದನ್ನು ತಾವಾಗೇ ಒಂದೊಂದನ್ನಾಗಿ ತಮ್ಮ ಕೊರಳಿಗೆ ಹಾಕಿಕೊಳ್ಳುತ್ತಿದ್ದಾರೆ. ಅವರ ಹೃದಯದಲ್ಲಿ ನೆಲಸಿರುವ ಭಗವಂತನನ್ನು ಅವರು ಆ ರೀತಿ ಪೂಜಿಸುತ್ತಿರುವರೇನು? ಭಕ್ತರೆಲ್ಲರೂ ಆಶ್ಚರ್ಯ ಚಕಿತರಾಗಿ ಅವರ ಕಡೆ ನೋಡುತ್ತಿದ್ದಾರೆ. ಪರಮಹಂಸರು ತಮ್ಮ ಕೊರಳಿನಿಂದ ಎರಡು ಹೂವಿನ ಮಾಲೆಗಳನ್ನು ತೆಗೆದು ಗಿರೀಶನಿಗೆ ಕೊಟ್ಟರು.
ಪರಮಹಂಸರು ಉಪಾಹಾರ ಬಂತೇನು ಅಂತ ಆಗಾಗ ಕೇಳುತ್ತಲೇ ಇದ್ದಾರೆ.
ಮಾಸ್ಟರ್ ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದಾನೆ. ಒಬ್ಬ ಭಕ್ತ ತಂದಿದ್ದ ಚಂದನದ ಬೀಸಣಿಗೆ ಅವರ ಹಾಸಿಗೆಯ ಮೇಲೆ ಬಿದ್ದಿತ್ತು. ಪರಮಹಂಸರು ಅದನ್ನು ತೆಗೆದು ಮಾಸ್ಟರ್ ಕೈಗೆ ಕೊಟ್ಟರು. ಈಗ ಮಾಸ್ಟರ್ ಆ ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದಾನೆ. ಪರಮಹಂಸರು ತಮ್ಮ ಕೊರಳಿನಿಂದ ಮಾಸ್ಟರಿಗೂ ಎರಡು ಹೂವಿನ ಮಾಲೆಗಳನ್ನು ತೆಗೆದುಕೊಟ್ಟರು.
ಮಾಸ್ಟರ್ ತನ್ನ ಏಳೋ ಎಂಟೋ ವರ್ಷದ ಹುಡುಗನನ್ನು ಒಂದೂವರೆ ವರ್ಷದ ಹಿಂದೆ ಕಳೆದುಕೊಂಡಿದ್ದ. ಆ ಹುಡುಗ ಪರಮಹಂಸರನ್ನು ಅನೇಕ ವೇಳೆ ದರ್ಶನ ಮಾಡಿದ್ದ. ಈಗ ಲಾಟುವು ಮಾಸ್ಟರ್ ಸಂಬಂಧವಾಗಿ ಪರಮಹಂಸರಿಗೆ ಹೇಳುತ್ತಿದ್ದಾನೆ.
ಲಾಟು: “ಈತ ತನ್ನ ಸತ್ತ ಮಗನ ಕೆಲವು ಪುಸ್ತಕಗಳನ್ನು ನೋಡಿ ನಿನ್ನೆ ರಾತ್ರಿ ಬಹಳವಾಗಿ ಅತ್ತ. ಈತನ ಹೆಂಡತಿಯೂ ಪುತ್ರಶೋಕದಿಂದ ಹುಚ್ಚಿಯಂತೆಯೇ ಆಗಿ ಬಿಟ್ಟಿದ್ದಾಳೆ. ಈಗ ಆಕೆ ತನ್ನ ಮಕ್ಕಳನ್ನು ಹೊಡೆಯುವುದು ಬಡಿಯುವುದು ಹೀಗೆಲ್ಲಾ ಮಾಡುತ್ತಿದ್ದಾಳೆ. ಈತ ಒಮ್ಮೊಮ್ಮೆ ರಾತ್ರಿಯನ್ನು ಇಲ್ಲಿಯೇ ಕಳೆದುಬಿಡುತ್ತಾ ಇರುವುದರಿಂದ ಆಕೆ ಮನೆಯಲ್ಲಿ ಒಂದು ನಾಟಕವನ್ನೇ ನಡೆಸಿಬಿಡುತ್ತಾ ಇದ್ದಾಳೆ.”
ಪರಮಹಂಸರು ಈ ದುಃಖವಾರ್ತೆಯನ್ನು ಕೇಳಿ, ಚಿಂತಾಮಗ್ನರಾಗಿರುವಂತೆ ಸುಮ್ಮನೆ ಕುಳಿತಿದ್ದಾರೆ.
ಗಿರೀಶ: “ಅರ್ಜುನ ಅಷ್ಟೊಂದು ಗೀತೆ ಕೇಳಿಯೂ, ಅಭಿಮನ್ಯುವಿನ ಮರಣಕ್ಕಾಗಿ ಒಮ್ಮೆಗೆ ಮೂರ್ಛಿತನಾಗಿಬಿಟ್ಟ. ಅಂಥಾದರಲ್ಲಿ ಈತ ತನ್ನ ಮಗನಿಗಾಗಿ ಶೋಕಪಡುವುದಲ್ಲಿ ಆಶ್ಚರ್ಯಪಡಬೇಕಾದ್ದೇನಿಲ್ಲ.”
ಗಿರೀಶನಿಗಾಗಿ ಉಪಾಹಾರ ಬಂದಿದೆ. ಬರಾಹನಗರದ ಫಾಗುವಿನ ಅಂಗಡಿಯ ಬಿಸಿಬಿಸಿ ಕಚೋರಿ, ಲೂಚಿ ಮತ್ತು ಅನೇಕ ಸಿಹಿ ತಿಂಡಿಗಳು. ಪರಮಹಂಸರು ಎಲ್ಲವನ್ನು ತಮ್ಮ ಮುಂದೆ ಇರಿಸಿಕೊಂಡು, ಸ್ವಲ್ಪ ಭಾಗವನ್ನು ಸ್ವೀಕರಿಸಿ ಪ್ರಸಾದವನ್ನಾಗಿ ಮಾಡಿ ತಮ್ಮ ಕೈಯಿಂದಲೇ ಗಿರೀಶನಿಗೆ ಕೊಟ್ಟರು. ಪರಮಹಂಸರು ‘ಕಚುರಿ ಉತ್ತಮವಾಗಿದೆ’ ಎಂದರು. ಗಿರೀಶ ಪರಮಹಂಸರ ಮುಂದೆಯೇ ಕುಳಿತು ಅದನ್ನು ತಿನ್ನಲಾರಂಭಿಸಿದ. ಈತನಿಗೆ ಕುಡಿಯಲು ನೀರು ಕೊಡಬೇಕಾಗಿದೆ. ಈಗ ಗ್ರೀಷ್ಮ ಋತು. ಬಿಸಿಲಿನ ಬೇಗೆ ಜಾಸ್ತಿಯಾಗಿದೆ. ಪರಮಹಂಸರು ಹೇಳುತ್ತಿದ್ದಾರೆ: “ಇಲ್ಲಿ ಬಹಳ ಒಳ್ಳೆ ತಣ್ಣೀರಿದೆ.”
ಪರಮಹಂಸರು ಅತ್ಯಂತ ರೋಗಗ್ರಸ್ತರಾಗಿದ್ದಾರೆ. ಎದ್ದು ನಿಂತುಕೊಳ್ಳಲೂ ತ್ರಾಣವಿಲ್ಲ. ಆದರೆ ಭಕ್ತರ ಕಣ್ಣಿಗೆ ಬೀಳುತ್ತಿರುವ ಆಶ್ಚರ್ಯಕರವಾದ ದೃಶ್ಯ ಏನು ಎಂಬುದು ಗೊತ್ತೆ? ಪರಮಹಂಸರೇ ಹುಟ್ಟಿದ ನಿರ್ವಾಣದಲ್ಲಿ ಹಾಸಿಗೆಯಿಂದೆದ್ದು ಆ ಹೂಜಿಯ ಕಡೆ ನಡೆದು ಹೋಗಿ ಅದರಿಂದ ಒಂದು ಲೋಟಕ್ಕೆ ನೀರು ಬಗ್ಗಿಸುತ್ತಾ ಇದ್ದಾರೆ! ಇದನ್ನು ನೋಡಿ ಭಕ್ತರ ನಿಶ್ವಾಸ ಸ್ಥಿರವಾಗಿ ನಿಂತುಬಿಟ್ಟಿತು. ನೀರನ್ನು ಲೋಟಕ್ಕೆ ಬಗ್ಗಿಸಿ ನಂತರ ಅದು ತಣ್ಣಗಾಗಿದೆಯೋ ಇಲ್ಲವೋ ಎಂಬುದನ್ನು ಅರಿಯಲೋಸುಗ ಆ ಲೋಟದಿಂದ ಕಿಂಚಿತ್ ನೀರನ್ನು ತಮ್ಮ ಕೈಯಮೇಲೆ ಸುರಿದುಕೊಂಡು ನೋಡಿದರು. ನೋಡುತ್ತಾರೆ, ಅದು ಅಷ್ಟೇನು ತಣ್ಣಗಿಲ್ಲ. ಅದಕ್ಕಿಂತಲೂ ತಣ್ಣಗಿರುವ ನೀರು ಬೇರೆ ಯಾವುದು ಇಲ್ಲದೆ ಇರುವುದರಿಂದ, ಮನಸ್ಸಿಲ್ಲದ ಮನಸ್ಸಿನಿಂದ ಅದೇ ನೀರನ್ನು ಗಿರೀಶನಿಗೆ ಕೊಟ್ಟರು.
ಗಿರೀಶ ಉಪಾಹಾರವನ್ನು ತಿನ್ನುತ್ತಾ ಇದ್ದಾನೆ. ಭಕ್ತರು ಸುತ್ತಲೂ ಕುಳಿತಿದ್ದಾರೆ. ಮಾಸ್ಟರ್ ಪರಮಹಂಸರಿಗೆ ಬೀಸಣಿಗೆಯಿಂದ ಗಾಳಿ ಬೀಸುತ್ತಾ ಇದ್ದಾನೆ.
ಗಿರೀಶ (ರಾಮಕೃಷ್ಣರಿಗೆ): “ದೇವೇನಬಾಬು ಸಂಸಾರವನ್ನು ತ್ಯಜಿಸಲು ನಿಶ್ಚಯಿಸಿದ್ದಾನೆ.”
ಗಂಟಲ ರೋಗದ ದೆಸೆಯಿಂದ ಮಾತನಾಡುವುದು ಎಂದರೆ ಪರಮಹಂಸರಿಗೆ ಬಹಳ ಕಷ್ಟವಾಗುತ್ತಿದೆ. ಬಾಯಿ ಹತ್ತಿರ ಬೆರಳಿಟ್ಟು ಸನ್ನೆಯ ಮೂಲಕ ತಿಳಿಸುತ್ತಿದ್ದಾರೆ. “ಆತ ತನ್ನ ಪರಿವಾರದವರ ಊಟೋಪಚಾರಗಳಿಗೆ ವ್ಯವಸ್ಥೆ ಏನು ಮಾಡಿದ್ದಾನೆ? ಅವರನ್ನು ನೋಡಿಕೊಳ್ಳುವವರು ಯಾರು?”
ಗಿರೀಶ: “ಆತ ಏನು ಮಾಡಿದ್ದಾನೊ ಅದು ನನಗೆ ಗೊತ್ತಿಲ್ಲ.”
ಭಕ್ತರೆಲ್ಲರು ಸುಮ್ಮನೆ ಕುಳಿತಿದ್ದಾರೆ. ಗಿರೀಶ ಉಪಾಹಾರವನ್ನು ತಿನ್ನುತ್ತಲೇ ಮತ್ತೆ ಮಾತನಾಡಲಾರಂಭಿಸಿದ.
ಗಿರೀಶ: “ಮಹಾಶಯರೆ, ಇವುಗಳಲ್ಲಿ ಯಾವುದು ಸರಿ — ಬಹಳ ವ್ಯಸನದಿಂದ ಸಂಸಾರ ತ್ಯಜಿಸುವುದೊ ಅಥವಾ ಸಂಸಾರದಲ್ಲಿದ್ದೇ ಭಗವಂತನನ್ನು ಕರೆಯುವುದೊ?”
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ನೀನು ಗೀತೆಯನ್ನು ಓದಿಲ್ಲವೇನು? ಸಂಸಾರ ದಲ್ಲಿದ್ದರೂ ಅನಾಸಕ್ತಿಯಿಂದ ಅದರಲ್ಲಿನ ಕೆಲಸಕಾರ್ಯಗಳನ್ನು ಮಾಡುವುದಾದರೆ, ಎಲ್ಲವೂ ಮಿಥ್ಯ ಎಂದು ಅರಿತು ಸಂಸಾರದಲ್ಲಿರುವುದಾದರೆ, ನಿಜವಾಗಿಯೂ ಭಗವಂತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ.
“ಯಾರು ವ್ಯಸನಪಡುತ್ತಾ ಸಂಸಾರವನ್ನು ತ್ಯಜಿಸುತ್ತಾರೋ, ಅವರು ಕೆಳಗಿನ ಅಂತಸ್ತಿಗೆ ಸೇರಿದವರು.
“ಸಂಸಾರೀ-ಜ್ಞಾನಿ ಯಾವ ರೀತಿಯವನು ಎಂಬುದು ಗೊತ್ತೆ? ಆತ ಗ್ಲಾಸಿನ ಮನೆಯಲ್ಲಿ ವಾಸಿಸುವ ವ್ಯಕ್ತಿಯ ಹಾಗೆ. ಒಳಗಿರುವುದನ್ನೂ ಹೊರಗಿರುವುದನ್ನೂ ಎರಡನ್ನೂ ನೋಡಬಲ್ಲ.”
ಮತ್ತೆ ಕೊಠಡಿಯಲ್ಲಿ ನಿಶ್ಶಬ್ದ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಉಪಾಹಾರ ಬಿಸಿಬಿಸಿಯಾಗಿಯೂ ರುಚಿರುಚಿ ಯಾಗಿಯೂ ಇದೆ.”
ಮಾಸ್ಟರು (ಗಿರೀಶನಿಗೆ): “ಫಾಗುವಿನ ಅಂಗಡಿಯಿಂದ ತರಿಸಿದ್ದು. ಆತನ ಅಂಗಡಿ ಬಹಳ ಪ್ರಖ್ಯಾತವಾದ್ದು.”
ಶ್ರೀರಾಮಕೃಷ್ಣರು ನಗುತ್ತ: “ಹೌದು, ಬಹಳ ಪ್ರಖ್ಯಾತವಾದ್ದು.”
ಗಿರೀಶ (ತಿನ್ನುತ್ತ ತಿನ್ನುತ್ತ, ಮತ್ತೆ ನಗುತ್ತ): “ಬಹಳ ರುಚಿಯಾಗಿದೆ.”
(ಶ್ರೀರಾಮಕೃಷ್ಣರಿಗೆ) “ಈಗ ನನ್ನ ಮನಸ್ಸು ಬಹಳ ಉಚ್ಚಸ್ಥಿತಿಯಲ್ಲಿದೆ. ಮತ್ತೆ ಅದು ಕೆಳಕ್ಕೆ ಇಳಿದುಬಿಡುತ್ತದೆಯಲ್ಲ ಏಕೆ?”
ಶ್ರೀರಾಮಕೃಷ್ಣರು: “ಸಂಸಾರಿಯ ಜೀವನ ಕೈಗೊಂಡರೆ ಅದು ಹೀಗೆಯೇ ಆಗುತ್ತದೆ. ಆತನ ಮನಸ್ಸು ಕೆಲವು ವೇಳೆ ಉಚ್ಚ ಅಂತಸ್ತಿಗೆ ಹತ್ತುತ್ತದೆ. ಇನ್ನೂ ಕೆಲವು ವೇಳೆ ಕೆಳ ಅಂತಸ್ತಿಗೆ ಇಳಿದುಬಿಡುತ್ತದೆ. ಕೆಲವು ವೇಳೆ ಭಕ್ತಿ ವಿಶೇಷವಾಗಿ ಉದ್ರೇಕಗೊಂಡುಬಿಡುತ್ತದೆ. ಇನ್ನು ಕೆಲವು ವೇಳೆ ಬಹಳ ಕಡಿಮೆಯಾಗಿಬಿಡುತ್ತದೆ. ಆತ ಕಾಮಕಾಂಚನವನ್ನು ಆಶ್ರಯಿಸಿ ಇರಬೇಕಾಗುತ್ತದೆಯಲ್ಲ, ಅದಕ್ಕಾಗಿ ಆತನಿಗೆ ಹೀಗಾಗುತ್ತದೆ. ಸಂಸಾರಿ ಕೆಲವು ವೇಳೆ ಭಗವತ್ಚಿಂತನೆ, ಭಗವತ್ಕೀರ್ತನೆ ಮಾಡುತ್ತಾನೆ; ಇನ್ನು ಕೆಲವು ವೇಳೆ ಕಾಮಕಾಂಚನಗಳ ಕಡೆ ಮನಸ್ಸನ್ನು ಇಡುತ್ತಾನೆ. ಆತ ಸಾಧಾರಣ ನೊಣದ ಹಾಗೆ–ಅದು ಕೆಲವು ವೇಳೆ ಮಿಠಾಯಿಯ ಮೇಲೆ ಕುಳಿತುಕೊಳ್ಳುತ್ತದೆ; ಇನ್ನು ಕೆಲವು ವೇಳೆ ಕೊಳೆತು ನಾರುವ ಹುಣ್ಣು, ಮಲ ಇವುಗಳ ಮೇಲೂ ಕುಳಿತುಕೊಳ್ಳುತ್ತದೆ.
ಆದರೆ ಸಂನ್ಯಾಸಿಗಳ ಸಮಾಚಾರವೇ ಬೇರೆ. ಅವರು ಕಾಮಕಾಂಚನದಿಂದ ತಮ್ಮ ಮನಸ್ಸನ್ನು ಸೆಳೆದುಕೊಂಡು ಕೇವಲ ಭಗವಂತನಲ್ಲೇ ಅದನ್ನು ಸಂಪೂರ್ಣವಾಗಿ ನೆಟ್ಟು ಬಿಡಬಲ್ಲರು. ಕೇವಲ ಭಗವದ್ರಸವನ್ನು ಮಾತ್ರ ಕುಡಿಯಬಲ್ಲರು. ನಿಜವಾದ ತ್ಯಾಗಿಗೆ ಭಗವಂತನೊಬ್ಬನ ಹೊರತು ಬೇರೆ ಏನೂ ರುಚಿಸದು. ಪ್ರಾಪಂಚಿಕ ಮಾತುಕತೆಗಳು ಆರಂಭವಾದೊಡನೆಯೇ ಆತ ಆ ಸ್ಥಳವನ್ನು ಬಿಟ್ಟು ಎದ್ದುಹೋಗುತ್ತಾನೆ. ಭಗವದ್ ವಿಷಯವಾದ ಮಾತುಕತೆಗಳಾರಂಭವಾದರೆ ಮಾತ್ರ ಕುಳಿತು ಕೇಳುತ್ತಾನೆ. ನಿಜವಾದ ತ್ಯಾಗಿಯ ಬಾಯಿಂದ ಭಗವತ್ಸಂಬಂಧವಾದ ಮಾತು ಹೊರತು ಬೇರೆ ಏನೂ ಹೊರಡದು. ಜೇನುಹುಳು ಮಧುಪಾನ ಮಾಡಲು ಕೇವಲ ಹೂವುಗಳ ಮೇಲೆ ಕುಳಿತುಕೊಳ್ಳುತ್ತದೆ; ಅದಕ್ಕೆ ಬೇರೆ ಯಾವ ವಸ್ತುವೂ ರುಚಿಸದು.”
ಗಿರೀಶ ಕೈ ತೊಳೆಯಲು ದಕ್ಷಿಣ ದಿಕ್ಕಿನಲ್ಲಿರುವ ಚಿಕ್ಕ ಚಾವಣಿಯ ಕಡೆ ಎದ್ದುಹೋದ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಭಗವಂತನ ಅನುಗ್ರಹ ಆಗಬೇಕು; ಆಗ ಮಾತ್ರವೇ ಇಡೀ ಮನಸ್ಸೆಲ್ಲ ಆತನ ಕಡೆ ಹರಿಯಲಾರಂಭಿಸುತ್ತದೆ. ಒಳ್ಳೇದು, ಈಗ ಗಿರೀಶ ಸಾಕಾದಷ್ಟು ಉಪಾಹಾರ ಮಾಡಿದ್ದಾನೆ. ರಾತ್ರಿಗೆ ಏನನ್ನೂ ತಿನ್ನಕೂಡದು ಅಂತ ಆತನಿಗೆ ಹೇಳು.”
ಗಿರೀಶ ಕೊಠಡಿಗೆ ಹಿಂದಿರುಗಿ ಬಂದು ಪರಮಹಂಸರ ಸಮ್ಮುಖದಲ್ಲಿ ಕುಳಿತು ಎಲೆಯಡಿಕೆ ಹಾಕಿಕೊಳ್ಳುತ್ತಿದ್ದಾನೆ.
ಶ್ರೀರಾಮಕೃಷ್ಣರು (ಗಿರೀಶನಿಗೆ): “ಈಗ ರಾಖಾಲ ಮುಂತಾದವರಿಗೆ ಅರ್ಥವಾಗಿದೆ, ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು; ಯಾವುದು ಸತ್ಯ, ಯಾವುದು ಮಿಥ್ಯಾ ಎಂಬುದು. ರಾಖಾಲ ಸಂಸಾರ ಅಂದರೆ ಏನು ಎಂತು ಎಂಬುದನ್ನು ಅರಿತು ಅದರಲ್ಲಿ ಇರುತ್ತಾನೆ. ಆತನಿಗೆ ಹೆಂಡತಿಯೂ ಇದ್ದಾಳೆ, ಒಂದು ಗಂಡುಮಗುವೂ ಆಗಿದೆ — ಆದರೆ ಅರಿತುಕೊಂಡಿದ್ದಾನೆ, ಎಲ್ಲವೂ ಮಿಥ್ಯಾ, ಅನಿತ್ಯ ಅಂತ. ರಾಖಾಲ ಮುಂತಾದವರು ಸಂಸಾರದಿಂದ ಲಿಪ್ತರಾಗುವುದಿಲ್ಲ.
“ಉದಾಹರಣೆಗೆ ಕೆಸರುಮೀನು. ಅದು ಕೆಸರಿನಲ್ಲೇನೋ ವಾಸಿಸುತ್ತದೆ, ಆದರೆ ಕೆಸರನ್ನು ಮಾತ್ರ ಅದು ತನ್ನ ಶರೀರಕ್ಕೆ ಒಂದು ಕಿಂಚಿತ್ತನ್ನೂ ಅಂಟಿಸಿಕೊಳ್ಳದು.”
ಗಿರೀಶ: “ಮಹಾಶಯರೆ, ಇದೆಲ್ಲ ನನಗೆ ಅರ್ಥವಾಗುತ್ತಿಲ್ಲ. ನಿಮಗೆ ಇಚ್ಛೆ ಬಂತು ಎಂದರೆ ಎಲ್ಲರನ್ನೂ ನಿರ್ಲಿಪ್ತರನ್ನಾಗಿಯೂ ಶುದ್ಧರನ್ನಾಗಿಯೂ ಮಾಡಬಲ್ಲಿರಿ. ಸಂಸಾರಿ ತ್ಯಾಗಿ ಎಲ್ಲರಿಗೂ ಮಂಗಳವನ್ನು ಕರೆಯಬಲ್ಲಿರಿ. ಮಲಯಮಾರುತ ಎಲ್ಲಾ ಮರಗಳನ್ನೂ ಚಂದನಮರಗಳನ್ನಾಗಿ ಮಾಡಿಬಿಡುತ್ತದೆ ಎಂಬುದೇ ನನ್ನ ಭಾವನೆ.”
ಶ್ರೀರಾಮಕೃಷ್ಣರು: “ಸತ್ತ್ವವಿಲ್ಲದವು ಚಂದನಮರಗಳಾಗುವುದಿಲ್ಲ. ದೂದಿ ಮರ ಮತ್ತು ಅದೇ ವಿಧದ ಇನ್ನೂ ಕೆಲವು ಚಂದನಮರಗಳಾಗುವುದಿಲ್ಲ.”
ಗಿರೀಶ: “ಆ ಮಾತನ್ನು ನಾನು ಕಿವಿಗೇ ಹಾಕಿಕೊಳ್ಳುವುದಿಲ್ಲ.”
ಶ್ರೀರಾಮಕೃಷ್ಣರು: “ಆದರೆ, ಇರುವ ನಿಯಮ ಇದು.”
ಗಿರೀಶ: “ಆದರೆ ನಿಮ್ಮ ಹತ್ತಿರ ಯಾವ ನಿಯಮದ ಬೇಳೆಯೂ ಬೇಯುವ ಹಾಗಿಲ್ಲ.”
ಭಕ್ತರೆಲ್ಲರೂ ಇವರೀರ್ವರ ಸಂಭಾಷಣೆಯನ್ನು ವಿಸ್ಮಯಗೊಂಡು ಕೇಳುತ್ತಿದ್ದಾರೆ. ಮಾಸ್ಟರು ಗಾಳಿ ಬೀಸುತ್ತಿದ್ದ ಬೀಸಣಿಗೆ ಒಮ್ಮೊಮ್ಮೆ ಹಾಗೆಯೇ ಸ್ಥಿರವಾಗಿ ನಿಂತುಬಿಡುತ್ತದೆ.
ಶ್ರೀರಾಮಕೃಷ್ಣರು: “ಹೌದು, ಅದೇನೋ ನಿಜ ಇದ್ದರೂ ಇರಬಹುದು. ಭಕ್ತಿನದಿ ಉಕ್ಕಿ ಹರಿಯಿತು ಎಂದರೆ ಅಕ್ಕಪಕ್ಕದ ಭೂಮಿಯಲ್ಲೆಲ್ಲಾ ಒಂದು ಗಳುವಿನಾಳದ ನೀರು ನಿಲ್ಲುತ್ತದೆ.
“ಭಕ್ತಿಯ ಉನ್ಮತ್ತತೆ ಬಂದಾಗ ಭಕ್ತನಿಗೆ ವೇದ ವಿಧಿ-ನಿಯಮಗಳ ಕಡೆ ಮನಸ್ಸು ಕೊಡಲಾಗುವುದಿಲ್ಲ. ಪೂಜೆಗೆ ದೂರ್ವೆ ಕೊಯ್ಯುತ್ತಾನೆ; ಆದರೆ ಆರಿಸಿ ಏನಲ್ಲ, ಕೈಗೆ ಬಂದಹಾಗೆ ತುಳಸಿ ಕೊಯ್ಯುತ್ತಾನೆ, ರೆಂಬೆ ರೆಂಬೆಗಳನ್ನೇ ಮುರಿದುಬಿಡುತ್ತಾನೆ. ಆಹ! ನನಗೆ ಎಂಥೆಂಥಾ ಅವಸ್ಥೆಗಳು ಬಂದುಹೋದವು ಏನು ಕತೆ!
(ಮಾಸ್ಟರಿಗೆ) “ಭಕ್ತಿಯೊಂದು ಉಂಟಾಗಿಬಿಟ್ಟಿತು ಎಂದರೆ, ಬೇರೇನೂ ಬೇಕಾಗದು.”
ಮಾಸ್ಟರ್: “ಹೌದು, ನಿಜ.”
ಶ್ರೀರಾಮಕೃಷ್ಣರು: “ಆದರೆ ಯಾವುದಾದರೂ ಒಂದು ಭಾವವನ್ನು ಆಶ್ರಯಿಸ ಬೇಕಾಗುತ್ತದೆ. ಭಗವಂತನು ತನ್ನ ರಾಮಾವತಾರದಲ್ಲಿ ಶಾಂತ, ದಾಸ್ಯ, ವಾತ್ಸಲ್ಯ, ಸಖ್ಯ ಈ ಭಾವಗಳನ್ನು ವ್ಯಕ್ತಪಡಿಸಿದ. ಆದರೆ ಕೃಷ್ಣಾವತಾರದಲ್ಲಿ ಇವುಗಳೆಲ್ಲದರ ಜೊತೆಗೆ ಮಧುರ ಭಾವವನ್ನೂ ವ್ಯಕ್ತಪಡಿಸಿದ.
“ಶ್ರೀಮತಿಯದು (ರಾಧೆಯದು) ಮಧುರಭಾವ. ಅದರಲ್ಲಿ ಭಾವೋದ್ರೇಕವಿದೆ. ಸೀತೆಯದು ಶುದ್ಧ ಸತೀತ್ವ. ಇದರಲ್ಲಿ ಭಾವೋದ್ರೇಕವಿಲ್ಲ.
“ಆದರೆ ಇವೆಲ್ಲವೂ ಆತನ ಲೀಲೆಯೆ. ಕಾಲಕ್ಕೆ ತಕ್ಕಂತೆ ಭಾವ.”
ಹುಚ್ಚಿಯಂಥ ಹೆಂಗಸೊಬ್ಬಳು ವಿಜಯಗೋಸ್ವಾಮಿಯೊಡನೆ ದಕ್ಷಿಣೇಶ್ವರಕ್ಕೆ ಬಂದು ಪರಮಹಂಸರೆದುರು ಹಾಡುವ ಅಭ್ಯಾಸವನ್ನು ಇಟ್ಟುಕೊಂಡಿದ್ದಳು. ಆಕೆ ಕಾಳಿಯ ಮೇಲಿನ ಹಾಡುಗಳನ್ನಲ್ಲದೆ, ಬ್ರಾಹ್ಮಸಮಾಜದ ಹಾಡುಗಳನ್ನೂ ಹಾಡುತ್ತಿದ್ದಳು. ಭಕ್ತರು ಆಕೆಯನ್ನು “ಹುಚ್ಚಿ, ಹುಚ್ಚಿ” ಅಂತ ಕರೆಯುತ್ತಿದ್ದರು. ಆಕೆ ಈಗ ಕಾಶೀಪುರದ ಈ ಮನೆಗೂ ಆಗಾಗ ಬಂದು ಪರಮಹಂಸರ ದರ್ಶನ ಪಡೆಯಬೇಕೆಂದು ಭಕ್ತರನ್ನು ಪೀಡಿಸುತ್ತಿದ್ದಾಳೆ. ಸಾಧ್ಯ ವಾದಷ್ಟು ಮಟ್ಟಿಗೆ ಆಕೆ ಪರಮಹಂಸರ ಹತ್ತಿರ ಹೋಗದಿರುವ ಹಾಗೆ ಭಕ್ತರು ನೋಡಿ ಕೊಳ್ಳುತ್ತಿದ್ದಾರೆ.
ಶ್ರೀರಾಮಕೃಷ್ಣರು (ಗಿರೀಶ ಮೊದಲಾದವರಿಗೆ): “ಆ ಹುಚ್ಚಿಯದು ಮಧುರಭಾವ. ಒಂದು ದಿನ ದಕ್ಷಿಣೇಶ್ವರಕ್ಕೆ ಬಂದಿದ್ದಳು. ಇದ್ದಕ್ಕಿದ್ದ ಹಾಗೆ ಅಳಲಾರಂಭಿಸಿದಳು. ಆಕೆಯನ್ನು ಕೇಳಿದೆ: ‘ಏಕೆ ಅಳುತ್ತಿದ್ದೀ?’ ಅಂತ. ಆಕೆ ಹೇಳಿದಳು: ‘ತಲೆ ನೋಯುತ್ತಿದೆ.’ (ಎಲ್ಲರೂ ನಗುತ್ತಿದ್ದಾರೆ.) ಇನ್ನೊಂದು ದಿನ ದಕ್ಷಿಣೇಶ್ವರಕ್ಕೆ ಬಂದಿದ್ದಳು. ಊಟಕ್ಕೆ ಕುಳಿತಿದ್ದೆ. ಇದ್ದಕ್ಕಿದ್ದ ಹಾಗೆ ಆಕೆ ನನ್ನನ್ನು ಕೇಳಿದಳು: ‘ನನಗೆ ಕೃಪೆ ಮಾಡುವುದಿಲ್ಲವೆ?’ ಆಕೆಯ ಮನಸ್ಸಿನಲ್ಲಿ ಏನೇನು ಭಾವನೆಗಳು ನುಗ್ಗುತ್ತಿವೆ ಎಂಬುದರ ಕಡೆಗೆ ಗಮನವೀಯದೆ, ನನ್ನ ಪಾಡಿಗೆ ನಾನು ಊಟ ಮಾಡಿ ಮುಗಿಸಿದೆ. ಮತ್ತೆ ಆಕೆ ಕೇಳಿದಳು: ‘ನಿಮ್ಮ ಮನಸ್ಸಿನಿಂದ ಏಕೆ ನನ್ನನ್ನು ತಳ್ಳಿಬಿಟ್ಟಿರಿ?’ ಆಗ ನಾನು ಆಕೆಯನ್ನು ಕೇಳಿದೆ: ‘ನಿನ್ನ ಭಾವ ಎಂಥದು?’ ಆಕೆ ಹೇಳಿದಳು: ‘ಮಧುರ ಭಾವ.’ ನಾನು ಹೇಳಿದೆ: ‘ನನ್ನದು ಮಾತೃಭಾವ. ಜಗತ್ತಿನ ಹೆಂಗಸರೆಲ್ಲ ನನಗೆ ತಾಯಿಯರೆ.’ ಅದಕ್ಕೆ ಆಕೆ ಹೇಳಿದಳು: ‘ಅದೆಲ್ಲ ನನಗೆ ಗೊತ್ತಿಲ್ಲ.’ ಬಳಿಕ ರಾಮಲಾಲನನ್ನು ಕರೆದು ಹೇಳಿದೆ: ‘ಆಕೆ ನಾನು ಮನಸ್ಸಿನಿಂದ ತಳ್ಳಿದ್ದು ಅದು ಇದು ಅಂತ ಏನೇನೋ ಮಾತಾಡುತ್ತಿದ್ದಾಳೆ. ಏನು ಸಮಾಚಾರ ಕೇಳಿ ನೋಡು’ ಈಗಲೂ ಆಕೆಯದು ಅದೇ ಭಾವ.”
ಗಿರೀಶ: “ಆ ಹುಚ್ಚಿಯೇ ಧನ್ಯಳು! ಹುಚ್ಚಿಯಾಗಿರಲಿ, ಭಕ್ತರ ಕೈಯಲ್ಲಿ ಏಟನ್ನೂ ತಿನ್ನುತ್ತಿರಲಿ. ಆದರೆ ಆಕೆ ಮಾತ್ರ ತನ್ನ ಇಪ್ಪತ್ತನಾಲ್ಕು ಘಂಟೆಗಳನ್ನೂ ನಿಮ್ಮ ಧ್ಯಾನದಲ್ಲೇ ಕಳೆಯುತ್ತಿದ್ದಾಳೆ. ಆಕೆ ಯಾವ ಭಾವದಿಂದ ಬೇಕಾದರೂ ನಿಮ್ಮ ಮೇಲೆ ಚಿಂತನೆಮಾಡಲಿ, ಆಕೆಗೆ ಯಾವ ಕೆಡಕೂ ಸಂಭವಿಸದು.
“ಮಹಾಶಯರೆ, ನಾನು ಏನು ಹೇಳಲಿ! ಹಿಂದೆ ಏನಾಗಿದ್ದೆ, ನಿಮ್ಮ ಮೇಲಿನ ಚಿಂತೆಯಿಂದ ಕೊನೆಗೆ ಈಗ ನಾನು ಏನಾಗಿದ್ದೇನೆ! ಹಿಂದೆ ನಾನು ಆಲಸ್ಯದ ಮುದ್ದೆಯಾಗಿದ್ದೆ. ಈಗ ಅದು ಪರಿವರ್ತನೆಯನ್ನು ಹೊಂದಿ ಆತ್ಮಾರ್ಪಣೆಯ ರೂಪನ್ನು ತಾಳಿದೆ. ಹಿಂದೆ ಪಾಪಿಯಾಗಿದ್ದೆ; ಈಗ ನಿರಹಂಕಾರಿಯಾಗಿದ್ದೇನೆ. ಇನ್ನು ಬೇರೆ ಏನು ಹೇಳಲಿ?”
ಭಕ್ತರು ಸುಮ್ಮನೆ ಕುಳಿತಿದ್ದಾರೆ. ರಾಖಾಲ ಆ ಹುಚ್ಚಿಯ ಸಂಬಂಧವಾಗಿ ಸಹಾನುಭೂತಿ ತೋರಿಸುತ್ತಿದ್ದಾನೆ. ಆತ ಹೇಳಿದ: “ನಮ್ಮೆಲ್ಲರಿಗೂ ಆಕೆಯ ಸಂಬಂಧವಾಗಿ ಸಹಾನುಭೂತಿ ಇದೆ. ಆದರೆ ಆಕೆ ನಮ್ಮನ್ನೆಲ್ಲಾ ಬಹಳವಾಗಿ ಕಾಡಿಸುತ್ತಿದ್ದಾಳೆ; ಆದ್ದರಿಂದ ಆಕೆ ಕಷ್ಟವನ್ನೂ ಅನುಭವಿಸಿದ್ದಾಳೆ.”
ನಿರಂಜನ (ರಾಖಾಲನಿಗೆ): “ಮನೆಯಲ್ಲಿ ನಿನಗೆ ಹೆಂಡತಿ ಇದ್ದಾಳೆ. ಅದಕ್ಕಾಗಿ ನಿನಗೆ ಹಾಗನಿಸುತ್ತದೆ. ನಾವು ಆಕೆಯನ್ನು ಬಲಿಯೆತ್ತಿಬಿಡಬಲ್ಲೆವು.”
ರಾಖಾಲ (ಕೋಪಗೊಂಡು): “ಒಳ್ಳೆ ಗಂಡು! ಇವರ (ಪರಮಹಂಸರ) ಎದುರಿಗೇ ನಿನ್ನ ಬಾಯಿಂದ ಇಂಥ ಮಾತುಗಳೊ?”
ಶ್ರೀರಾಮಕೃಷ್ಣರು (ಗಿರೀಶನಿಗೆ): “ಕಾಮಕಾಂಚನವೇ ಈ ಸಂಸಾರಕ್ಕೆ ಮೂಲಕಾರಣ. ಅನೇಕರಿಗೆ ಹಣ ಎಂಬುದು ದೇಹದ ರಕ್ತದ ಹಾಗೆ ಪ್ರಿಯವಾದ್ದು. ಆದರೆ ಅದನ್ನು ಎಷ್ಟೇ ಪ್ರೀತಿಸಿದರೂ, ಅದು ಒಂದಲ್ಲ ಒಂದು ದಿನ ಕೈಯಿಂದ ಸಂಪೂರ್ಣವಾಗಿ ನುಣುಚಿಕೊಂಡು ಹೋಗಿಬಿಡುತ್ತದೆ.
“ನಮ್ಮ ಊರಕಡೆ ಗದ್ದೆಗೆ ತೆವರಿ ಕಟ್ಟುತ್ತಾರೆ. ತೆವರಿ ಎಂದರೆ ಗೊತ್ತು ತಾನೆ? ಯಾರು ಬಹಳ ಕಷ್ಟ ತೆಗೆದುಕೊಂಡು ಗದ್ದೆಯ ನಾಲ್ಕು ಕಡೆಗೂ ತೆವರಿ ಹಾಕುತ್ತಾರೋ, ಆ ತೆವರಿ ಮಳೆನೀರಿನ ಒತ್ತಡಕ್ಕೆ ಸಿಕ್ಕಿ ಒಡೆದು ಕೊಚ್ಚಿಹೋಗಿಬಿಡುತ್ತದೆ. ಆದರೆ ಯಾರು ತಮ್ಮ ಗದ್ದೆಯ ತೆವರಿಯನ್ನು ಅಲ್ಲಲ್ಲಿ ಕಿತ್ತು ಹೆಪ್ಪು ಹಾಕಿಬಿಡುವರೊ, ಅವರ ಗದ್ದೆಗೆ ವಿಪರೀತ ಮೆಕ್ಕಲುಮಣ್ಣು ಬಂದು ಬೀಳುತ್ತದೆ; ಒಳ್ಳೆ ಸೊಗಸಾದ ಫಸಲು ದೊರೆಯುತ್ತದೆ.
“ಯಾರು ತಮ್ಮ ಹಣವನ್ನು ಸದ್ವ್ಯವಹಾರಗಳಿಗೆ, ಎಂದರೆ ಭಗವಂತನ ಪೂಜೆ ಪುರಸ್ಕಾರಗಳಿಗೆ, ಸಾಧು ಭಕ್ತರ ಸೇವೆಗೆ, ದಾನಧರ್ಮಾದಿ ಕಾರ್ಯಗಳಿಗೆ ಉಪಯೋಗಿ ಸುವರೊ, ಅವರು ಮಾತ್ರವೇ ಅದನ್ನು ಸದುಪಯೋಗಪಡಿಸಿದಂತಾಗುತ್ತದೆ. ಅವರಿಗೆ ಸತ್ಫಲ ದೊರೆಯುತ್ತದೆ.
“ಡಾಕ್ಟರು, ಕವಿರಾಜರು ತಂದುಕೊಡುವ ವಸ್ತುಗಳನ್ನು ನಾನು ತಿನ್ನಲಾರೆ. ಮನುಷ್ಯರು ಕಷ್ಟಕ್ಕೆ ಸಿಕ್ಕಿಕೊಂಡಿರುವುದನ್ನು ನೋಡಿ, ಅವರ ರಕ್ತ ಹೀರಿ ಯಾರು ದುಡ್ಡು ಸಂಪಾದಿಸುವರೊ, ಅವರ ಹಣ ಕೇವಲ ರಕ್ತ ಮತ್ತು ಕೀವು ಅಲ್ಲದೇ ಬೇರೇನೂ ಅಲ್ಲ.”
ಹೀಗೆಂದು ಹೇಳಿ ಪರಮಹಂಸರು ಇಬ್ಬರು ಡಾಕ್ಟರರ ಹೆಸರನ್ನು ಹೇಳಿದರು.
ಗಿರೀಶ: “ಡಾಕ್ಟರ್ ರಾಜೇಂದ್ರದತ್ತ ಒಳ್ಳೆ ಉದಾರಿ. ಯಾರಿಂದಲೂ ಒಂದು ಕಾಸನ್ನು ತೆಗೆದುಕೊಳ್ಳುವುದಿಲ್ಲ. ಆತ ದಾನಧರ್ಮಾದಿ ಕಾರ್ಯಗಳನ್ನು ಮಾಡುವುದುಂಟು.”
೧೭ನೆ ಏಪ್ರಿಲ್ ೧೮೮೬, ಚೈತ್ರ ಶುಕ್ಲ ಚತುರ್ದಶಿ, ಶನಿವಾರ
ಈಗ ಕೆಲವು ದಿನಗಳಿಂದ ನರೇಂದ್ರ ಪ್ರತಿದಿನವೂ ದಕ್ಷಿಣೇಶ್ವರಕ್ಕೆ ಹೋಗಿಬರುತ್ತಾ ಇದ್ದಾನೆ. ಅಲ್ಲಿ ಪಂಚವಟಿಯಲ್ಲಿ ಬಹಳ ಸಮಯವನ್ನು ಧ್ಯಾನ, ಭಜನೆ, ಸಾಧನೆ, ಇವುಗಳಲ್ಲೇ ಕಳೆಯುತ್ತಿದ್ದಾನೆ. ಇಂದು ಸಾಯಂಕಾಲದ ವೇಳೆ ಅಲ್ಲಿಂದ ಹಿಂದಿರುಗಿ ಬಂದಿದ್ದಾನೆ. ತಾರಕ, ಕಾಳೀಪ್ರಸಾದ ಇವರೂ ಆತನ ಜೊತೆಯಲ್ಲೇ ಹಿಂದಿರುಗಿ ಬಂದಿದ್ದಾರೆ.
ಘಂಟೆ ರಾತ್ರಿ ಎಂಟು. ಚಂದ್ರನ ಬೆಳಕು, ಜೊತೆಗೆ ದಕ್ಷಿಣ ಮಾರುತ ಇವೆರಡೂ ಕೂಡಿ ಆಗಲೇ ರಮ್ಯವಾಗಿದ್ದ ತೋಟವನ್ನು ಮತ್ತೂರಮ್ಯವಾಗಿ ಮಾಡಿವೆ. ಭಕ್ತರಲ್ಲನೇಕರು ಕೆಳಗಿನ ಅಂತಸ್ತಿನ ಕೊಠಡಿಯಲ್ಲಿ ಕುಳಿತು ಧ್ಯಾನಮಾಡುತ್ತಿದ್ದಾರೆ. ಅವರ ಮಾತೆತ್ತಿ ನರೇಂದ್ರ ಮಾಸ್ಟರಿಗೆ ಹೇಳುತ್ತಿದ್ದಾನೆ: “ಇವರು ತಮ್ಮ ಉಪಾಧಿಯನ್ನು ಒಂದೊಂದನ್ನಾಗಿ ಕಳೆದು ಕೊಳ್ಳುತ್ತಾ ಇದ್ದಾರೆ.”
ಕೆಲವು ನಿಮಿಷಗಳಾದನಂತರ ಮಾಸ್ಟರ್ ಪರಮಹಂಸರ ಕೊಠಡಿಗೆ ಬಂದು ನೆಲದ ಮೇಲೆ ಕುಳಿತುಕೊಂಡ. ಪರಮಹಂಸರು ಆತನಿಗೆ ತಮ್ಮ ಚೌಕವನ್ನು ಒಗೆದು ತರುವಂತೆಯೂ, ಉಗುಳು-ಪಾತ್ರೆಯನ್ನು ತೊಳೆದು ತರುವಂತೆಯೂ ಹೇಳಿದರು. ಮಾಸ್ಟರ್ ಪುಷ್ಕರಣಿಗೆ ಹೋಗಿ ಅವನ್ನು ತೊಳೆದು ತೆಗೆದುಕೊಂಡು ಬಂದ.
ಮಾರನೆಯ ಪ್ರಾತಃಕಾಲ ಪರಮಹಂಸರು ಮಾಸ್ಟರನ್ನು ಕರೆಯಕಳುಹಿಸಿದರು. ಆತ ಬೆಳಿಗ್ಗೆ ಎದ್ದು ಗಂಗಾಸ್ನಾನ ಮುಗಿಸಿಕೊಂಡು ಪರಮಹಂಸರಿಗೆ ಪ್ರಣಾಮಮಾಡಿದ ನಂತರ ಚಾವಣಿ ಮೇಲಕ್ಕೆ ಹತ್ತಿ ಹೋಗಿದ್ದಾನೆ. ಆತನ ಹೆಂಡತಿ ಪುತ್ರಶೋಕದಿಂದ ಹುಚ್ಚಿಯಂತೆಯೇ ಆಗಿಬಿಟ್ಟಿದ್ದಾಳೆ. ಪರಮಹಂಸರು ಆಕೆಯನ್ನು ತೋಟಕ್ಕೆ ಒಂದೆರಡು ದಿವಸದ ಮಟ್ಟಿಗೆ ಕರೆದುಕೊಂಡು ಬರುವ ವಿಷಯವನ್ನು ಮಾಸ್ಟರಿಗೆ ಹೇಳುತ್ತಿದ್ದಾರೆ.
ಶ್ರೀರಾಮಕೃಷ್ಣರು ಸಂಜ್ಞೆಯ ಮೂಲಕ ಹೇಳುತ್ತಿದ್ದಾರೆ: “ಇಲ್ಲಿಗೆ ಬರುವ ಹಾಗೆ ಹೇಳು. ಒಂದೆರಡು ದಿವಸಗಳ ಮಟ್ಟಿಗೆ ಇಲ್ಲೇ ಇರಲಿ. ಕೈಮಗುವನ್ನು ಜೊತೆಯಲ್ಲಿ ಎತ್ತಿಕೊಂಡು ಬರಲಿ. ಇಲ್ಲೇ ಊಟಮಾಡಲಿ.”
ಮಾಸ್ಟರ್: “ಆಗಲಿ, ಆಕೆಯ ಆಂತರ್ಯದಲ್ಲಿ ವಿಶೇಷವಾಗಿ ಭಕ್ತಿ ಬೆಳೆದುಬಿಟ್ಟಿದ್ದೇ ಆದರೆ, ಬಹಳ ಒಳ್ಳೆಯದಾಗುತ್ತದೆ.”
ಶ್ರೀರಾಮಕೃಷ್ಣರು (ಮತ್ತೆ ಸಂಜ್ಞೆಯ ಮೂಲಕ): “ಊಹ್ಞೂ, ಶೋಕವು ಭಕ್ತಿಯನ್ನು ಒಂದು ಮೂಲೆಗೆ ಒತ್ತರಿಸಿಬಿಡುತ್ತದೆ. ಆ ಹುಡುಗನೋ, ಚೆನ್ನಾಗಿ ಬೆಳೆದಿದ್ದ ಹುಡುಗ!
“ಕೃಷ್ಣಕಿಶೋರನಿಗೆ ಇಬ್ಬರು ಗಂಡು ಮಕ್ಕಳು ಇದ್ದರು. ಭವನಾಥನಷ್ಟೇ ವಯಸ್ಸು. ವಿಶ್ವವಿದ್ಯಾಲಯದ ಎರಡೆರಡು ಪರೀಕ್ಷೆಗಳನ್ನು ಮಾಡಿದ್ದರು. ಇಬ್ಬರೂ ಸತ್ತುಹೋಗಿಬಿಟ್ಟರು. ಆತ ಒಳ್ಳೆ ಜ್ಞಾನಿ. ಆದರೂ ಮೊದಲು ಮೊದಲು ಆತನ ಕೈಯಲ್ಲಿ ಪುತ್ರ ಶೋಕವನ್ನು ಸಹಿಸಿಕೊಳ್ಳಲಾಗಲಿಲ್ಲ. ನನ್ನ ಭಾಗ್ಯೋದಯಕ್ಕೆ ನನಗೆ ಮಕ್ಕಳುಮರಿ ಯಾವುವೂ ಇಲ್ಲ.
“ಅರ್ಜುನ ಬಹಳ ದೊಡ್ಡ ಜ್ಞಾನಿ; ಜೊತೆಗೆ ಶ್ರೀಕೃಷ್ಣ ಆತನ ಎಡೆಬಿಡದ ಸಂಗಾತಿಯಾಗಿದ್ದ. ಆದರೂ ಆತನು ಅಭಿಮನ್ಯುವಿನ ಮರಣದಿಂದ ಸಂಪೂರ್ಣ ಕುಗ್ಗಿಹೋಗಿದ್ದ.
“ಕಿಶೋರಿ ಬರುತ್ತಿಲ್ಲವಲ್ಲ ಏಕೆ?”
ಒಬ್ಬ ಭಕ್ತ: “ಆತ ದಿನಾ ಗಂಗಾಸ್ನಾನಕ್ಕೆ ಬರುತ್ತಿದ್ದಾನೆ.”
ಶ್ರೀರಾಮಕೃಷ್ಣರು: “ಇಲ್ಲಿಗೆ ಏಕೆ ಬರುತ್ತಿಲ್ಲ?”
ಭಕ್ತ: “ಬರುವ ಹಾಗೆ ಹೇಳುತ್ತೇನೆ.”
ಶ್ರೀರಾಮಕೃಷ್ಣರು (ಲಾಟುವಿಗೆ): “ಹರೀಶ ಬರುತ್ತಿಲ್ಲವಲ್ಲ ಏಕೆ?”
ಮಾಸ್ಟರ ಮನೆಯ ಒಂಬತ್ತು, ಹತ್ತು ವರ್ಷದ ಇಬ್ಬರು ಹುಡುಗಿಯರು ಪರಮಹಂಸರ ಎದುರಿಗೆ ಭಗವತಿಯ ಸಂಬಂಧವಾಗಿ ಅನೇಕ ಹಾಡುಗಳನ್ನು ಹಾಡಿದರು. ಪರಮಹಂಸರು ಒಮ್ಮೆ ಶ್ಯಾಮಪುಕುರದಲ್ಲಿ ಮಾಸ್ಟರ ಮನೆಗೆ ಭೇಟಿ ಇತ್ತಿದ್ದಾಗ, ಈ ಹುಡುಗಿಯರು ಅವರ ಎದುರಿಗೆ ಹಾಡಿದ್ದರು. ಇವರ ಹಾಡುಗಳನ್ನು ಕೇಳಿ ಪರಮಹಂಸರು ಬಹಳವಾಗಿ ಆನಂದಪಟ್ಟಿದ್ದರು. ಈಗ ಈ ಹುಡುಗಿಯರು ಪರಮಹಂಸರೆದುರು ಹಾಡಿ ಮುಗಿಸಿದನಂತರ, ಭಕ್ತರೂ ಇವರನ್ನು ನೆಲ ಅಂತಸ್ತಿಗೆ ಕರೆದುಕೊಂಡು ಹೋಗಿ ಇವರಿಂದ ಕೆಲವು ಹಾಡುಗಳನ್ನು ಹಾಡಿಸಿದರು.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ನಿನ್ನ ಈ ಹುಡುಗಿಯರಿಗೆ ಇನ್ನು ಹೆಚ್ಚಾಗಿ ಹಾಡನ್ನು ಕಲಿಸಬೇಡ. ತಮ್ಮಷ್ಟಕ್ಕೇ ತಾವೇ ಹಾಡಿಕೊಂಡರೆ ಅದು ಬೇರೆ ವಿಷಯ. ಸಿಕ್ಕಿಸಿಕ್ಕಿದವರೆದುರಿಗೆಲ್ಲ ಹಾಡಲು ಶುರುಮಾಡಿದರೆ ಕೊನೆಗೆ ಲಜ್ಜೆಯನ್ನು ಕಳೆದುಕೊಂಡು ಬಿಡುತ್ತಾರೆ. ಹೆಂಗಸರಿಗೆ ಲಜ್ಜೆ ಅತ್ಯಂತ ಆವಶ್ಯಕ.”
ಪರಮಹಂಸರ ಹತ್ತಿರ ಹೂವು, ಚಂದನ ಇವನ್ನೆಲ್ಲ ಇಟ್ಟಿದ್ದ ಒಂದು ಪುಷ್ಪಪಾತ್ರೆಯನ್ನು ಇಡಲಾಯಿತು. ಈಗ ಪರಮಹಂಸರು ಹಾಸಿಗೆ ಮೇಲೆ ಕುಳಿತೇ ಹೂವು, ಚಂದನ ಇವುಗಳಿಂದ ತಮ್ಮನ್ನು ತಾವೇ ಪೂಜೆಮಾಡಿಕೊಳ್ಳುತ್ತಾ ಇದ್ದಾರೆ. ಸಚಂದನಪುಷ್ಪವನ್ನು ಕೈಯಲ್ಲಿ ತೆಗೆದುಕೊಂಡು, ಕೆಲವು ವೇಳೆ ತಲೆಯನ್ನು, ಇನ್ನು ಕೆಲವು ವೇಳೆ ಕಂಠವನ್ನು, ಮತ್ತೆ ಕೆಲವು ವೇಳೆ ಹೃದಯವನ್ನು, ಮತ್ತೆ ಇನ್ನೂ ಕೆಲವು ವೇಳೆ ನಾಭಿಸ್ಥಳವನ್ನು ಸ್ಪರ್ಶಮಾಡಿಕೊಳ್ಳುತ್ತಿದ್ದಾರೆ.
ಕೊನ್ನಗರದ ಮನಮೋಹನ ಶ್ರೀರಾಮಕೃಷ್ಣರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡ. ಪರಮಹಂಸರು ಇನ್ನೂ ತಮ್ಮನ್ನು ಪೂಜೆಮಾಡಿಕೊಳ್ಳುತ್ತಾ ಇದ್ದಾರೆ. ಈಗ ತಮ್ಮ ಕೊರಳಿಗೆ ತಾವೇ ಹೂವಿನ ಮಾಲೆಯನ್ನು ಹಾಕಿಕೊಳ್ಳುತ್ತಾ ಇದ್ದಾರೆ. ಸ್ವಲ್ಪ ಹೊತ್ತಾದ ನಂತರ ಪ್ರಸನ್ನರಾಗಿ ಮನಮೋಹನನಿಗೆ ಒಂದು ಕಿಂಚಿತ್ ಪುಷ್ಪಪ್ರಸಾದವನ್ನು ಕೊಟ್ಟರು. ಮಾಸ್ಟರಿಗೆ ಒಂದು ಸಂಪಿಗೆ ಹೂವನ್ನು ಕೊಟ್ಟರು.
ಘಂಟೆ ಒಂಬತ್ತು. ಪರಮಹಂಸರು ಮಾಸ್ಟರೊಡನೆ ಮಾತುಕತೆ ಆಡುತ್ತಿದ್ದಾರೆ. ಕೊಠಡಿಯಲ್ಲಿ ಶಶಿಯೂ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ನರೇಂದ್ರ ಮತ್ತು ಶಶಿ ಮಾತಾಡುತ್ತಿದ್ದರಲ್ಲ ಏನನ್ನು? ಯಾವ ವಿಷಯವಾಗಿ ಅವರು ಚರ್ಚೆಮಾಡುತ್ತಿದ್ದರು?”
ಮಾಸ್ಟರ್ (ಶಶಿಗೆ): “ಏನು ಮಾಡುತ್ತಿದ್ದಿರಿ?”
ಶಶಿ: “ಬಹುಶಃ ನಿರಂಜನ ಹೇಳಿರಬೇಕು.”
ಶ್ರೀರಾಮಕೃಷ್ಣರು: “ ‘ಭಗವಂತ’, ‘ಅಸ್ತಿ’, ‘ನಾಸ್ತಿ’ ಹೀಗೆ ಏನೇನೊ ಮಾತುಕತೆ ನಡೆಯುತ್ತಿತ್ತಲ್ಲ ಏನದು?”
ಶಶಿ (ನಗುತ್ತ): “ನರೇಂದ್ರನನ್ನು ಕರೆಯಲೆ?”
ಶ್ರೀರಾಮಕೃಷ್ಣರು: “ಕರೆ.”
ನರೇಂದ್ರ ಬಂದು ಒಂದು ಕಡೆ ಕುಳಿತುಕೊಂಡ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಆತನಿಗೆ ಏನಾದರೂ ಪ್ರಶ್ನೆ ಹಾಕು. (ನರೇಂದ್ರನಿಗೆ) ಏನು ಮಾತಾಡುತ್ತಿದ್ದಿರೊ ಹೇಳು ಅದನ್ನು.”
ನರೇಂದ್ರ: “ನನಗೆ ಸ್ವಲ್ಪ ಅಗ್ನಿಮಾಂದ್ಯವಾಗಿದೆ. ನಿಮಗೆ ನಾನು ಹೇಳಬೇಕಾದ್ದು ತಾನೆ ಏನಿದೆ?”
ಶ್ರೀರಾಮಕೃಷ್ಣರು: “ಅಗ್ನಿಮಾಂದ್ಯ ಹೋಗಿಬಿಡುತ್ತದೆ.”
ಮಾಸ್ಟರ್ (ನಗುತ್ತ): “ಬುದ್ಧನ ಅನುಭವದ ಸಂಬಂಧವಾಗಿ ಹೇಳು.”
ನರೇಂದ್ರ: “ನಾನಾಗಲೇ ಬುದ್ಧನಾಗಿಬಿಟ್ಟಿರುವೆನೆ, ಆತನ ಸಂಬಂಧವಾಗಿ ಮಾತನಾಡುವುದಕ್ಕೆ?”
ಮಾಸ್ಟರ್: “ಭಗವಂತನ ಇರುವಿಕೆಯ ಸಂಬಂಧವಾಗಿ ಆತನ ಅಭಿಪ್ರಾಯವೇನು?”
ನರೇಂದ್ರ: “ಭಗವಂತನಿದ್ದಾನೆ ಅಂತ ನೀವು ತಾನೆ ಹೇಗೆ ಹೇಳಬಲ್ಲಿರಿ? ಈ ಜಗತ್ತನ್ನು ಸೃಷ್ಟಿಮಾಡಿರುವವರು ನೀವೇ. ಇದರ ಸಂಬಂಧವಾಗಿ ‘ಬರ್ಕ್ಲೆ’ ಏನು ಹೇಳಿದ್ದಾನೆ ಎಂಬುದು ನಿಮಗೆ ಗೊತ್ತಿಲ್ಲವೆ?”
ಮಾಸ್ಟರ್: “ಹೌದು, ಗೊತ್ತಿದೆ. ಬಾಹ್ಯವಸ್ತುಗಳ ಇರುವಿಕೆಯು ಇಂದ್ರಿಯಾನುಭವಗಳ ಮೇಲೆಯೇ ನಿಂತಿದೆ. ಇಂದ್ರಿಯ ಕಾರ್ಯಗಳು ನಡೆದುಕೊಂಡು ಹೋಗುವವರೆಗೆ ಮಾತ್ರವೇ ಈ ಜಗತ್ತು ಉಳಿದುಕೊಂಡಿರುತ್ತದೆ.”
ಶ್ರೀರಾಮಕೃಷ್ಣರು: “ತೋತಾಪುರಿ ಹೇಳುತ್ತಿದ್ದ: ‘ಈ ಜಗತ್ತು ಮನಸ್ಸಿನಿಂದಲೇ ಉದ್ಭವವಾಗಿ ಮನಸ್ಸಿನಲ್ಲೇ ಲಯವಾಗುತ್ತದೆ.’ ಆದರೆ ಎಲ್ಲಿಯವರೆಗೆ ‘ಅಹಂ’ ಎಂಬುದು ಇರುವುದೊ, ಅಲ್ಲಿಯವರೆಗೆ ಸೇವ್ಯ-ಸೇವಕ ಭಾವವೇ ಶ್ರೇಯಸ್ಕರವಾದ್ದು.”
ನರೇಂದ್ರ (ಮಾಸ್ಟರಿಗೆ): “ವಿಚಾರಮಾಡಿ ನೋಡುವುದಾದರೆ, ಭಗವಂತನಿದ್ದಾನೆ ಎಂಬುದನ್ನು ಸಮರ್ಥಿಸುವ ಬಗೆ ಹೇಗೆ? ಆದರೆ ವಿಶ್ವಾಸವನ್ನು ಆಶ್ರಯಿಸುವುದಾದರೆ ಸೇವ್ಯ-ಸೇವಕ ಭಾವವನ್ನು ಒಪ್ಪಲೇಬೇಕಾಗುತ್ತದೆ. ಅದನ್ನು ಒಪ್ಪಿಕೊಳ್ಳುವುದಾದರೆ –ಬೇರೆ ವಿಧಿಯಿಲ್ಲದೆ–ಆತ ದಯಾಮಯ ಅಂತ ಹೇಳಲೇಬೇಕಾಗುತ್ತದೆ.
“ನೀವು ಕೇವಲ ಈ ಜಗತ್ತಿನ ದುಃಖದ ಕಡೆಗೇ ದೃಷ್ಟಿ ಇಟ್ಟಿದ್ದೀರಿ. ಭಗವಂತ ಬೇಕಾದಷ್ಟು ಸುಖಗಳನ್ನು ಕೊಟ್ಟಿದ್ದಾನೆ ಎಂಬುದನ್ನು ಏಕೆ ನೀವು ಮರೆತುಬಿಡುತ್ತಾ ಇದ್ದೀರಿ? ಆತನ ಕೃಪೆ ಎಷ್ಟು ಅಪರಿಮಿತವಾದ್ದು! ಆತ ಅತ್ಯಂತ ಮಹತ್ತಾದ ಈ ಮೂರನ್ನು ಕೊಟ್ಟಿದ್ದಾನೆ–
‘ಮನುಷ್ಯತ್ವಂ, ಮುಮುಕ್ಷತ್ವಂ, ಮಹಾಪುರುಷಸಂಶ್ರಯಃ”’
ಎಲ್ಲರೂ ಸುಮ್ಮನೆ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ನರೇಂದ್ರನಿಗೆ): “ನನ್ನ ಆಂತರ್ಯದಲ್ಲಿ ಬೇರೆ ಯಾರೊ ಒಬ್ಬ ಇದ್ದಾನೆ ಎಂಬುದರ ಬೋಧೆ ನನಗೆ ಸ್ಪಷ್ಟವಾಗಿ ಆಗುತ್ತಾ ಇದೆ.”
ಡಾಕ್ಟರ್ ರಾಜೇಂದ್ರದತ್ತ ಒಂದು ಕಡೆ ಕುಳಿತುಕೊಂಡ. ಆತ ಪರಮಹಂಸರಿಗೆ ಹೋಮಿಯೋಪತಿ ಔಷಧವನ್ನು ಕೊಡುತ್ತಿದ್ದಾನೆ. ಔಷಧದ ಸಂಬಂಧವಾಗಿ ಮಾತುಕತೆ ಎಲ್ಲಾ ಮುಗಿದ ಮೇಲೆ ಪರಮಹಂಸರು ಮನಮೋಹನನ ಕಡೆ ಬೆರಳುಮಾಡಿ ಆತನನ್ನು ಡಾಕ್ಟರಿಗೆ ತೋರಿಸುತ್ತಿದ್ದಾರೆ.
ಡಾಕ್ಟರ್ ರಾಜೇಂದ್ರದತ್ತ: “ಆತ ನನ್ನ ದೂರದ ಸಂಬಂಧಿ.”
ನರೇಂದ್ರ ಕೆಳಗಿನ ಅಂತಸ್ತಿಗೆ ಇಳಿದುಹೋದ. ಅಲ್ಲಿ ಆತ ತನಗೆ ತಾನೇ ಹಾಡಿ ಕೊಳ್ಳುತ್ತಿದ್ದಾನೆ:
ಹರಿಯಿತೆನ್ನ ಬವಣೆ, ಪ್ರಭೂ
ಹರಿಯಿತೆನ್ನ ಬವಣೆಯು….
ನರೇಂದ್ರನಿಗೆ ಅಗ್ನಿಮಾಂದ್ಯವಾಗಿದೆ. ಮಾಸ್ಟರಿಗೆ ಹೇಳುತ್ತಿದ್ದಾನೆ: “ಭಕ್ತಿಮಾರ್ಗವನ್ನು ಅನುಸರಿಸಿದರೆ ಮನಸ್ಸು ಒಂದು ಸ್ವಲ್ಪ ದೇಹದ ಅಂತಸ್ತಿಗೆ ಇಳಿಯುತ್ತದೆ. ಇಲ್ಲದೆ ಇತ್ತು ಎಂದರೆ, ನಾನು ಯಾರು? ನಾನು ಮನುಷ್ಯನೂ ಅಲ್ಲ, ದೇವರೂ ಅಲ್ಲ. ನನಗೆ ಸುಖವೂ ಇಲ್ಲ, ದುಃಖವೂ ಇಲ್ಲ.”
ಘಂಟೆ ರಾತ್ರಿ ಒಂಬತ್ತು. ಸುರೇಂದ್ರ ಮತ್ತು ಇನ್ನೂ ಕೆಲವರು ಹೂವಿನ ಮಾಲೆಗಳನ್ನು ತಂದು ಪರಮಹಂಸರಿಗೆ ಅರ್ಪಿಸಿದರು. ಬಾಬುರಾಮ, ಲಾಟು, ಮಾಸ್ಟರ್ ಇವರೂ ಕೊಠಡಿಯಲ್ಲಿ ಕುಳಿತಿದ್ದಾರೆ.
ಪರಮಹಂಸರು ಸುರೇಂದ್ರ ತಂದಿದ್ದ ಹೂವಿನ ಮಾಲೆಯನ್ನು ತಾವೇ ಹಾಕಿಕೊಳ್ಳು ತ್ತಿದ್ದಾರೆ. ಎಲ್ಲರೂ ನಿಶ್ಶಬ್ದರಾಗಿ ಕುಳಿತಿದ್ದಾರೆ. ಇದ್ದಕ್ಕಿದ್ದ ಹಾಗೆ ಪರಮಹಂಸರು ತಮ್ಮ ಹತ್ತಿರಕ್ಕೆ ಬರುವ ಹಾಗೆ ಸುರೇಂದ್ರನಿಗೆ ಸಂಜ್ಞೆಮಾಡಿದರು. ಆತ ಅವರ ಹಾಸಿಗೆ ಹತ್ತಿರ ಹೋದೊಡನೆಯೇ, ಅವರು ತಮ್ಮ ಕೊರಳಿನಿಂದ ಆ ಹೂವಿನ ಹಾರವನ್ನು ತೆಗೆದು ಆತನ ಕೊರಳಿಗೆ ಹಾಕಿಬಿಟ್ಟರು. ಸುರೇಂದ್ರ ಬಳಿಕ ಅವರಿಗೆ ಪ್ರಣಾಮಮಾಡಿದ. ಅವರು ಮತ್ತೆ ಸನ್ನೆಯ ಮೂಲಕ ತಮ್ಮ ಕಾಲನ್ನು ಒತ್ತುವಂತೆ ಆತನಿಗೆ ಹೇಳಿದರು. ಸುರೇಂದ್ರ ಒಂದು ಸ್ವಲ್ಪ ಹೊತ್ತು ಮೃದುವಾಗಿ ಒತ್ತಿದ.
ಭಕ್ತರಲ್ಲನೇಕರು ಪುಷ್ಕರಿಣಿಯ ಹಂತಗಳ ಮೇಲೆ ಕುಳಿತು ತಾಳ-ಮೃದಂಗಗಳೊಡನೆ ಹಾಡುತ್ತಿದ್ದಾರೆ. ಪರಮಹಂಸರು ಲಾಟುವಿನ ಮೂಲಕ ಅವರಿಗೆ ಹರಿನಾಮಕೀರ್ತನೆಯನ್ನು ಮಾಡುವಂತೆ ಹೇಳಿ ಕಳುಹಿಸಿದರು.
ಮಾಸ್ಟರ್, ಬಾಬುರಾಮ ಇವರು ಮೊದಲಾದವರು ಇನ್ನೂ ಪರಮಹಂಸರ ಹತ್ತಿರವೇ ಕುಳಿತಿದ್ದಾರೆ. ಭಕ್ತರು ಹಾಡುತ್ತಿದ್ದ ಹಾಡು ಅವರ ಕಿವಿಗೆ ಬಿತ್ತು. ಅವರು ಹಾಡುತ್ತಿದ್ದಾರೆ:
ಹರಿನಾಮವ ನುತಿಸಿ ಅದೋ
ಕುಣಿವನು ಗೌರಾಂಗ….
ಪರಮಹಂಸರು ಆ ಹಾಡನ್ನು ಕೇಳುತ್ತ ಕೇಳುತ್ತ ಇದ್ದ ಹಾಗೆಯೇ ಬಾಬುರಾಮ, ಮಾಸ್ಟರ್ ಮೊದಲಾದವರಿಗೆ ಸನ್ನೆಯ ಮೂಲಕ ಹೇಳುತ್ತಿದ್ದಾರೆ: “ನೀವೂ ಕೆಳಕ್ಕೆ ಇಳಿದು ಹೋಗಿ, ಅವರೊಡನೆ ಹಾಡಿ ಮತ್ತು ನರ್ತಿಸಿ.”
ಕೆಲವು ನಿಮಿಷಗಳಾದನಂತರ ಒಬ್ಬ ಭಕ್ತನ ಕೈಯಲ್ಲಿ ಕೆಲವರಿಗೆ ಈ ಕೆಲವು ಆಶುಕವಿತೆಗಳನ್ನು ಹಾಡುವಂತೆ ಹೇಳಿಕಳುಹಿಸಿದರು: “ಆಹ! ನರ್ತನ ನನ್ನ ಮುದ್ದು ಗೌರನಿಗೂ ಬರುತ್ತದೆ!” “ಗೌರನ ಭಾವಗಳನ್ನು ಬಣ್ಣಿಸುವುದೆಂತು?” “ಗೌರ ಎರಡೂ ಬಾಹುಗಳನ್ನು ಮೇಲಕ್ಕೆತ್ತಿ ನರ್ತಿಸುತಿಹನು.”
ಹಾಡುವುದು ಮುಗಿಯಿತು. ಸುರೇಂದ್ರ ಬಹುಮಟ್ಟಿಗೆ ಭಾವಾವಿಷ್ಟನಾಗಿದ್ದ. ಆತ ಹಾಡಲಾರಂಭಿಸಿದ್ದಾನೆ:
ನನ್ನ ತಂದೆಯು ಮರುಳು
ನನ್ನ ತಾಯಿಯು ಮರುಳು
ಅವರ ಮಗನಾಗಿರುವ ನನಗೂ ಮರಳು.
ಘನಶ್ಯಾಮೆ–ಎನ್ನುವುದು ತಾಯ ಹೆಸರು!
ನನ್ನ ತಂದೆಯೊ ತನ್ನ ಕೆನ್ನೆಗಳ ಬಡಿಬಡಿದು
ಬಲು ವಿಚಿತ್ರದ ದನಿಯ ಹೊಮ್ಮಿಸುವನು!
ನನ್ನ ತಾಯಿಯೊ ಸುರೆಯ ಕುಡಿದು ತೂರಾಡುತ್ತ
ನನ್ನ ತಂದೆಯ ಮೇಲೆ ಬೀಳುತಿಹಳು!
ಅವಳ ಅಸ್ತವ್ಯಸ್ತ ಕೇಶರಾಶಿಯ ಹೊನಲು
ದಿಕ್ಕುದಿಕ್ಕಿಗು ಹರಿದು ಹೋಗುತ್ತಿರಲು,
ಅವಳ ಪದಕಮಲದೆಡೆ ಲೆಕ್ಕವಿಲ್ಲದ ಭ್ರಮರ
ತಮ್ಮ ಝೇಂಕೃತಿಯಲ್ಲಿ ಸುತ್ತುತಿರಲು
ಆಃ ಅದೋ ನೂಪುರದ ದನಿಯಾಲಿಸಿ ನೋಡು;
ಎಂತು ಶ್ರೀ ಘನಶ್ಯಾಮೆ ನರ್ತಿಸುವಳು!