೧೩ನೆ ಆಗಸ್ಟ್ ೧೮೮೨, ಶ್ರಾವಣ ಅಮಾವಾಸ್ಯೆ, ಭಾನುವಾರ
ಪರಮಹಂಸರು ಕೇದಾರನೇ ಮೊದಲಾದ ಭಕ್ತರೊಡನೆ ದಕ್ಷಿಣೇಶ್ವರದ ತಮ್ಮ ಕೊಠಡಿಯಲ್ಲಿ ಮಾತುಕತೆಯಾಡುತ್ತಿದ್ದಾರೆ. ಕೇದಾರ ಚಟ್ಟೋಪಾಧ್ಯಾಯ ಢಾಕ್ಕಾದಲ್ಲಿ ಬಹಳ ವರ್ಷಗಳ ಕಾಲ ಅಕೌಂಟೆಂಟ್ ಕೆಲಸ ಮಾಡಿಕೊಂಡಿದ್ದ. ಆಗ ಆತನಿಗೂ ವಿಜಯಕೃಷ್ಣ ಗೋಸ್ವಾಮಿಗೂ ಸ್ನೇಹ ಬೆಳೆಯಿತು. ಇಬ್ಬರೂ ಯಾವಾಗ ನೋಡಿದರೂ ಪರಮಹಂಸರ ವಿಷಯವಾಗಿಯೇ ಮಾತುಕತೆಯಾಡುತ್ತಿದ್ದರು. ಭಗವದ್ವಿಷಯ ಕೇದಾರನ ಕಿವಿಗೆ ಬಿದ್ದಾಗಲೆಲ್ಲ ಆತ ಅಶ್ರುಪೂರ್ಣಲೋಚನನಾಗುತ್ತಿದ್ದ. ಆತ ಹಿಂದೆ ಬ್ರಾಹ್ಮಸಮಾಜದ ಅನುಯಾಯಿಯಾಗಿದ್ದ.
ಘಂಟೆ ಸಾಯಂಕಾಲ ಐದು. ಕೇದಾರ ಇಂದು ಒಂದು ಸಂತೋಷಕೂಟ ಏರ್ಪಡಿಸಿದ್ದಾನೆ. ಆದ್ದರಿಂದ ಆತ ಆನಂದದಿಂದ ತುಂಬಿ ತುಳುಕಾಡುತ್ತಿದ್ದಾನೆ. ರಾಮ ಒಬ್ಬ ಸಂಗೀತ ವಿದ್ವಾಂಸನನ್ನು ಕರೆದುಕೊಂಡು ಬಂದಿದ್ದ. ಇಡೀ ದಿನವೆಲ್ಲ ಆನಂದದಲ್ಲೇ ಕಳೆಯಿತು.
ಪರಮಹಂಸರು ಸಮಾಧಿಯ ಸಂಬಂಧವಾಗಿ ಭಕ್ತರಿಗೆ ವಿವರಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಸಚ್ಚಿದಾನಂದನ ಸಾಕ್ಷಾತ್ಕಾರ ಆಯಿತು ಎಂದರೆ ಸಮಾಧಿ ಉಂಟಾಗುತ್ತದೆ. ಬಳಿಕ ಕರ್ಮತ್ಯಾಗವಾಗಿಬಿಡುತ್ತದೆ. ನಾನು ಸಂಗೀತ ವಿದ್ವಾಂಸನ ಸಂಬಂಧವಾಗಿ ವರ್ಣಿಸುತ್ತಿರುವಾಗ ಆತನೇ ಬಂದುಬಿಟ್ಟರೆ ಇನ್ನು ಆತನ ವಿಷಯವಾಗಿ ವರ್ಣಿಸುವ ಆವಶ್ಯಕತೆಯೇನಿದೆ? ಜೇನುಹುಳು ಎಲ್ಲಿಯವರೆಗೆ ಝೇಂಕರಿಸುತ್ತಿರುತ್ತದೆ? ಹೂವಿನ ಮೇಲೆ ಕೂರದವರೆಗೆ. ಆದರೆ, ಸಾಧಕ ಕರ್ಮತ್ಯಾಗ ಮಾಡಕೂಡದು. ಪೂಜೆ, ಜಪ, ಧ್ಯಾನ, ಸಂಧ್ಯಾವಂದನೆ, ತೀರ್ಥಯಾತ್ರೆ, ಇವನ್ನೆಲ್ಲ ಮಾಡಲೇಬೇಕು.
“ಭಗವಂತನ ಸಾಕ್ಷಾತ್ಕಾರ ದೊರೆತನಂತರವೂ ಯಾರೇ ಆಗಲಿ ವಿಚಾರದಲ್ಲಿ ತೊಡಗಿರುವುದು ಕಂಡುಬಂದರೆ, ಅವರನ್ನು ಜೇನುಹುಳುವಿಗೆ ಹೋಲಿಸಬಹುದು. ಜೇನುಹುಳು ಜೇನು ಕುಡಿಯುತ್ತಿರುವಾಗಲೂ ಒಮ್ಮೊಮ್ಮೆ ‘ಗುಯ್ಞ್, ಗುಯ್ಞ್’ ಅಂತ ಶಬ್ದ ಮಾಡುತ್ತದೆ.”
ಸಂಗೀತ ವಿದ್ವಾಂಸ ಬಹಳ ಚೆನ್ನಾಗಿ ಹಾಡಿದ. ಪರಮಹಂಸರಿಗೆ ಬಹಳವಾಗಿ ಆನಂದ ಆಗಿಬಿಟ್ಟಿದೆ. ಆತನಿಗೆ ಹೇಳುತ್ತಿದ್ದಾರೆ: “ಯಾರಲ್ಲೇ ಆಗಲಿ ಒಂದು ದೊಡ್ಡ ಪ್ರತಿಭೆ, ಉದಾಹರಣೆಗೆ ಸಂಗೀತ ವಿದ್ಯೆ ಇರುವುದಾದರೆ, ಆತನಲ್ಲಿ ಭಗವಂತನ ಶಕ್ತಿ ವಿಶೇಷ ರೂಪದಿಂದ ವ್ಯಕ್ತವಾಗಿರುತ್ತದೆ.”
ಸಂಗೀತ ವಿದ್ವಾಂಸ: “ಮಹಾಶಯರೇ, ಭಗವಂತನ ಸಾಕ್ಷಾತ್ಕಾರ ಪಡೆಯುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಭಕ್ತಿಯೇ ಮುಖ್ಯವಾದ್ದು. ಭಗವಂತನೇನೊ ಎಲ್ಲಾ ಭೂತಗಳಲ್ಲಿಯೂ ಇದ್ದಾನೆ. ಇದರಲ್ಲಿ ಸಂದೇಹವೇನಿಲ್ಲ. ಆದರೆ ಭಕ್ತ ಯಾರು ಅಂತೀಯೊ? ಯಾರ ಮನಸ್ಸು ಸರ್ವದಾ ಭಗವಂತನಲ್ಲಿಯೇ ರತವಾಗಿದೆಯೋ ಆತ. ಅಹಂಕಾರ, ಅಭಿಮಾನ ಇರುವವರೆಗೆ ಮನಸ್ಸು ಹಾಗೆ ಮಾಡಲಾರದು. ‘ಅಹಂ’ ರೂಪದ ದಿಣ್ಣೆ ಮೇಲೆ ಭಗವಂತನ ಕೃಪಾ ರೂಪದ ನೀರು ಶೇಖರವಾಗದು. ಅದು ಕೆಳಕ್ಕೆ ಹರಿದು ಬಂದುಬಿಡುತ್ತದೆ. ನಾನು ಕೇವಲ ಒಂದು ಯಂತ್ರ ಮಾತ್ರ.”
(ಕೇದಾರಾದಿ ಭಕ್ತರಿಗೆ) “ಎಲ್ಲಾ ಮಾರ್ಗಗಳಿಂದಲೂ ಭಗವಂತನ ಸಾಕ್ಷಾತ್ಕಾರ ಪಡೆಯಬಹುದು. ಎಲ್ಲಾ ಧರ್ಮಗಳೂ ಸತ್ಯವಾದುವೆ. ನಮ್ಮ ಮುಖ್ಯವಾದ ಕರ್ತವ್ಯ ಚಾವಣಿಗೆ ಹತ್ತಿ ಹೋಗುವುದು. ಆ ಕಾರ್ಯವನ್ನು ಮೆಟ್ಟಿಲ ಸಾಲಿನಿಂದಾಗಲಿ, ಬೊಂಬಿನ ಏಣಿಯಿಂದಾಗಲಿ ಅಥವಾ ಒಂದು ಹಗ್ಗದಿಂದಾಗಲಿ ಸಾಧಿಸಬಹುದು. ಅಷ್ಟೇ ಅಲ್ಲ, ಕೇವಲ ಬೊಂಬಿನಿಂದಲೇ ಹತ್ತಿಬಿಡಬಹುದು.
“ನೀವು ಹೇಳಬಹುದು. ಪರರ ಧರ್ಮಗಳಲ್ಲಿ ಅನೇಕ ಕುಂದುಕೊರತೆಗಳಿವೆ ಎಂಬುದಾಗಿ. ನನ್ನ ಉತ್ತರ: ಇದ್ದರೆ ತಾನೆ ಏನು? ಪ್ರತಿಯೊಂದು ಧರ್ಮದಲ್ಲೂ ಇದ್ದೇ ಇದೆ. ಎಲ್ಲರೂ ಭಾವಿಸುತ್ತಾರೆ ತಮ್ಮ ಗಡಿಯಾರ ಸರಿಯಾಗಿ ನಡೆದುಕೊಂಡು ಹೋಗುತ್ತಿದೆ ಎಂಬುದಾಗಿ. ಆಂತರ್ಯದಲ್ಲಿ ವ್ಯಾಕುಲತೆ ಇದ್ದರೇ ಯಥೇಷ್ಟ. ಭಗವಂತನಲ್ಲಿ ಪ್ರೀತಿ ಇದ್ದರೇ ಸಾಕು. ಆತ ಅಂತರ್ಯಾಮಿ. ನಮ್ಮ ಆಂತರ್ಯದಲ್ಲಿರುವ ಪ್ರೀತಿ ವ್ಯಾಕುಲತೆ ಏನು ಎಂಬುದನ್ನು ಆತ ಅರಿತುಕೊಳ್ಳಬಲ್ಲ.ಉದಾಹರಣೆಗೆ ಒಬ್ಬನಿಗೆ ಅನೇಕ ಮಕ್ಕಳು ಅಂತ ಇಟ್ಟುಕೊಳ್ಳಿ. ದೊಡ್ಡ ಮಕ್ಕಳು ಆತನನ್ನು ಸ್ಪಷ್ಟವಾಗಿ ‘ಅಪ್ಪ’ ‘ಅಯ್ಯ’ ಎಂಬುದಾಗಿ ಕರೆಯುತ್ತವೆ. ಆದರೆ ಎಳೆಯ ಮಕ್ಕಳು ಅತಿ ಹೆಚ್ಚೆಂದರೆ ‘ಪಾ,’ ‘ಯಾ’ ಎಂಬುದಾಗಿ ಕರೆಯಬಲ್ಲುವು. ಈ ರೀತಿ ಅಸ್ಪಷ್ಟವಾಗಿ ಮಾತನಾಡುವ ಮಕ್ಕಳ ಮೇಲೆ ತಂದೆ ಕೋಪಿಸಿಕೊಳ್ಳುತ್ತಾನೇನು? ತಂದೆಗೂ ಗೊತ್ತಿದೆ ಅವೂ ತನ್ನನ್ನೇ ಕರೆಯುತ್ತಿವೆ, ಆದರೆ ಅವಕ್ಕೆ ತನ್ನ ಹೆಸರನ್ನು ಸ್ಪಷ್ಟವಾಗಿ ಉಚ್ಚರಿಸಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ. ತಂದೆಗೆ ಎಲ್ಲಾ ಮಕ್ಕಳೂ ಒಂದೇ ಸಮ. ಹಾಗೆಯೇ ಭಕ್ತರೂ ಆತನನ್ನೇ ಕರೆಯುತ್ತಾರೆ, ಆದರೆ ವಿವಿಧ ಹೆಸರುಗಳಿಂದ. ಎಲ್ಲರೂ ಆ ಒಬ್ಬನನ್ನೇ ಕರೆಯುತ್ತಿರುವುದು. ಭಗವಂತ ಒಬ್ಬನೇ, ಆದರೆ ಆತನಿಗೆ ಹೆಸರು ಮಾತ್ರ ಅನೇಕ.”
೨೪ನೆ ಆಗಸ್ಟ್ ೧೮೮೨, ಶ್ರಾವಣ ಶುಕ್ಲ ದಶಮಿ, ಗುರುವಾರ
ಮಾಸ್ಟರ್ ದಕ್ಷಿಣೇಶ್ವರಕ್ಕೆ ಬಂದಾಗ ಪರಮಹಂಸರು ಅವರ ಕೊಠಡಿಯಿಂದ ಉತ್ತರ ಪೂರ್ವಕ್ಕೆ ಹಬ್ಬಿರುವ ಉದ್ದ ವರಾಂಡದಲ್ಲಿ ಹಾಜರಾನೊಡನೆ ಮಾತುಕತೆಯಾಡುತ್ತಾ ನಿಂತಿರುವುದು ಆತನ ಕಣ್ಣಿಗೆ ಬಿತ್ತು. ಮಾಸ್ಟರು ಅವರನ್ನು ಸಮೀಪಿಸಿ ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ.
ಶ್ರೀರಾಮಕೃಷ್ಣರು: “ಇನ್ನೊಂದೆರಡು ಸಲ ಈಶ್ವರಚಂದ್ರ ವಿದ್ಯಾಸಾಗರನನ್ನು ನೋಡಬೇಕು ಅಂತ ಅನಿಸುತ್ತಿದೆ. ಚಿತ್ರಗಾರ ಮೊದಲು ಸಾಮಾನ್ಯ ನಕ್ಷೆ ಬರೆದುಕೊಂಡು ಬಳಿಕ ಸಾವಕಾಶವಾಗಿ ರೂಪವನ್ನು ತಿದ್ದಿ ತಿದ್ದಿ ಬಣ್ಣ ಹಚ್ಚುತ್ತಾನೆ. ಮಣ್ಣಿನ ಪ್ರತಿಮೆ ಮಾಡೋನು ಜೇಡಿಮಣ್ಣಿನಿಂದ ಮೊದಲು ಪ್ರತಿಮೆ ಮಾಡಿಕೊಂಡು ಅದಕ್ಕೆ ಒರೆ ಮಣ್ಣುಹಚ್ಚಿ ಬಳಿಕ ಸುಣ್ಣ ತುಂಬಿ ಕೊನೆಗೆ ಬಣ್ಣ ಬಳಿಯುತ್ತಾನೆ. ಈ ಕೆಲಸಗಳನ್ನೆಲ್ಲ ಅನುಕ್ರಮವಾಗಿ ಮಾಡಬೇಕು. ವಿದ್ಯಾಸಾಗರನಲ್ಲಿ ಎಲ್ಲಾ ಸಿದ್ಧವಾಗಿದೆ. ಆದರೆ ಎಲ್ಲೋ ಸ್ವಲ್ಪ ಮಣ್ಣು ಮುಚ್ಚಿಕೊಂಡಿದೆ. ಅನೇಕ ಸತ್ಕಾರ್ಯಗಳನ್ನು ಮಾಡುತ್ತಿದ್ದಾನೆ; ಆದರೆ ತನ್ನ ಆಂತರ್ಯದಲ್ಲಿ ಏನಿದೆ ಎಂಬುದು ಆತನಿಗೆ ಗೊತ್ತಿಲ್ಲ. ಆಂತರ್ಯದಲ್ಲಿರುವ ಚಿನ್ನವನ್ನು ಮಣ್ಣು ಮುಚ್ಚಿಕೊಂಡಿದೆ. ನಮ್ಮ ಪ್ರತಿಯೊಬ್ಬರ ಆಂತರ್ಯದಲ್ಲೂ ಭಗವಂತ ಇದ್ದಾನೆ. ಅದು ಅರಿವಿಗೆ ಬಂತು ಎಂದರೆ, ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಆತನನ್ನು ಕರೆಯಬೇಕು ಅಂತ ನಮಗೆ ಇಚ್ಛೆಯಾಗಿ ಬಿಡುತ್ತದೆ.”
ಪರಮಹಂಸರು ಈ ರೀತಿಯಾಗಿ ಮಾಸ್ಟರೊಡನೆ ಮಾತಾಡುತ್ತಿದ್ದಾರೆ-ಕೆಲವು ವೇಳೆ ನಿಂತುಕೊಂಡು, ಇನ್ನು ಕೆಲವು ವೇಳೆ ನಡೆಯುತ್ತ ಆ ಉದ್ದ ವರಾಂಡದಲ್ಲಿ.
ಶ್ರೀರಾಮಕೃಷ್ಣರು: “ಆಂತರ್ಯದಲ್ಲಿ ಏನಿದೆ ಎಂಬುದನ್ನು ಅರಿತುಕೊಳ್ಳಬೇಕಾದರೆ ಸ್ವಲ್ಪ ಸಾಧನೆ ಮಾಡಬೇಕು.”
ಮಾಸ್ಟರ್: “ಇಡೀ ಜೀವನದಲ್ಲೆಲ್ಲಾ ಸಾಧನೆ ಮಾಡಿಕೊಂಡು ಹೋಗುತ್ತಿರಬೇಕೆ?”
ಶ್ರೀರಾಮಕೃಷ್ಣರು: “ಇಲ್ಲ. ಮೊದಲು ಸ್ವಲ್ಪ ಕಾಲ ಸೊಂಟ ಕಟ್ಟಬೇಕಾಗುತ್ತದೆ. ಬಳಿಕ ಅಷ್ಟು ಶ್ರಮ ತೆಗೆದುಕೊಳ್ಳಬೇಕಾಗಿಲ್ಲ. ಎಲ್ಲಿಯವರೆಗೆ ದೋಣಿ ಅಲೆ, ಬಿರುಮಳೆ, ಬಿರುಗಾಳಿ ಇವುಗಳ ಮೂಲಕ ಅಥವಾ ನದಿಯ ತಿರುವಿನ ಮೂಲಕ ಹಾದುಹೋಗಬೇಕಾಗಿರುವುದೊ ಅಲ್ಲಿಯವರೆಗೆ ದೋಣಿ ನಡೆಸುವ ಎದ್ದು ನಿಂತು ಚುಕ್ಕಾಣಿ ಹಲಗೆಯನ್ನು ಬಿಗಿಯಾಗಿ ಹಿಡಿದುಕೊಂಡಿರಬೇಕಾಗುತ್ತದೆ. ಆದರೆ ಅದನ್ನು ದಾಟಿಯಾದ ನಂತರ ಅಷ್ಟು ಶ್ರಮ ತೆಗೆದುಕೊಳ್ಳಬೇಕಾಗಿಲ್ಲ. ಅದು ತಿರುವನ್ನು ಹಾದ ನಂತರ ಅನುಕೂಲವಾದ ಗಾಳಿ ಬೀಸಲಾರಂಭಿಸಿದರೆ ಚುಕ್ಕಾಣಿ ಹಲಗೆಯನ್ನು ಸುಮ್ಮನೆ ಕೈಯಲ್ಲಿ ಹಿಡಿದುಕೊಂಡು ಹಾಯಾಗಿ ಕುಳಿತುಕೊಳ್ಳುತ್ತಾನೆ. ಬಳಿಕ ಪಟ ಕಟ್ಟಲು ವ್ಯವಸ್ಥೆ ಮಾಡಿ ತಂಬಾಕು ಸೇದಲು ಸಿದ್ಧನಾಗುತ್ತಾನೆ. ಹಾಗೇನೆ ಸಾಧಕ ಕಾಮ-ಕಾಂಚನಗಳ ಬಿರುಗಾಳಿ, ಬಿರುಮಳೆ ಇವನ್ನೆಲ್ಲಾ ದಾಟಿಬಿಟ್ಟ ಅಂದರೆ ಆಗ ಆತನಿಗೆ ಶಾಂತಿ.
“ಕೆಲಕೆಲವರು ಯೋಗಿಯ ಲಕ್ಷಣಗಳಿಂದ ಜನ್ಮತಳೆಯುತ್ತಾರೆ; ಆದರೆ ಅವರೂ ಎಚ್ಚರಿಕೆಯಿಂದಿರಬೇಕು. ಕಾಮಕಾಂಚನವೇ ಯೋಗದ ಪ್ರತಿಬಂಧಕ. ಅದು ಅವರನ್ನು ಯೋಗಭ್ರಷ್ಟರನ್ನಾಗಿ ಮಾಡಿ ಸಂಸಾರಕ್ಕೆ ಎಳೆದುಬಿಡುತ್ತದೆ. ಬಹುಶಃ ಭೋಗಾಸಕ್ತಿ ಅವರಲ್ಲಿ ಸ್ವಲ್ಪ ಇದ್ದಿರಬೇಕು. ಅದು ಮುಗಿಯಿತು ಎಂದರೆ ಮತ್ತೆ ಭಗವಂತನ ಕಡೆಗೆ ಹೊರಟು ಹೋಗುತ್ತಾರೆ. ಮತ್ತೆ ಅವರಿಗೆ ಹಿಂದಿನ ಯೋಗಾವಸ್ಥೆ ಬಂದುಬಿಡುತ್ತದೆ.
“ಮೀನು ಹಿಡಿಯುವುದಕ್ಕೆ ‘ಸಟ್ಕ-ಕಲ್’ ಎಂಬ ಹೆಸರಿನ ಒಂದು ಸಲಕರಣೆ ಇದೆ ನೋಡಿರುವೆಯಾ?”
ಮಾಸ್ಟರ್: “ಇಲ್ಲ, ನೋಡಿಲ್ಲ.”
ಶ್ರೀರಾಮಕೃಷ್ಣರು: “ನಮ್ಮ ಊರಿನ ಕಡೆ ಅದನ್ನು ಉಪಯೋಗಿಸುತ್ತಾರೆ. ಒಂದು ಹಸಿ ಗಳು ತೆಗೆದುಕೊಂಡು ಅದರ ಒಂದು ತುದಿಯನ್ನು ನೆಲಕ್ಕೆ ಹೂಳುತ್ತಾರೆ. ಇನ್ನೊಂದು ತುದಿಯನ್ನು ಬಗ್ಗಿಸಿ ಅದನ್ನು ನೆಪಮಾತ್ರ ಹಿಡಿದುಕೊಳ್ಳುವ ರೀತಿಯಲ್ಲಿ ಒಂದು ವ್ಯವಸ್ಥೆ ಮಾಡುತ್ತಾರೆ. ಆ ತುದಿಗೆ ಒಂದು ದಾರ ಕಟ್ಟಿ ಅದನ್ನು ನೀರಿನ ಮೇಲೆ ಇಳಿಬಿಡುತ್ತಾರೆ. ದಾರದ ಕೊನೆಗೆ ಎರೆಹುಳು ಸಿಕ್ಕಿಸಿದ ಗಾಳ ಕಟ್ಟುತ್ತಾರೆ. ಮೀನು ಗಾಳ ನುಂಗಿದೊಡನೆಯೇ ಗಳು ತಟ್ಟನೆ ಮೇಲಕ್ಕೆದ್ದು ನೆಟ್ಟಗೆ ನಿಂತುಕೊಂಡುಬಿಡುತ್ತದೆ.
“ಮತ್ತೆ ಉದಾಹರಣೆಗೆ ತೂಗುವ ಕಡ್ಡಿ ತೆಗೆದುಕೊ. ಒಂದು ತಟ್ಟೆಗೆ ಭಾರ ಹಾಕಿದರೆ ಕೆಳಗಿನ ಮತ್ತು ಮೇಲಿನ ಮುಳ್ಳು ಒಂದು ಮುಖವಾಗಿರುವುದಿಲ್ಲ. ಕೆಳಗಿನ ಮುಳ್ಳೆ ಮನಸ್ಸು-ಮೇಲಿನ ಮುಳ್ಳೆ ಭಗವಂತ. ಎರಡು ಮುಳ್ಳೂ ಒಂದೇ ಮುಖವಾಗುವುದಕ್ಕೆ ಯೋಗ ಅಂತ ಹೆಸರು.
“ಮನಸ್ಸು ಸ್ಥಿರವಾಗದ ಹೊರತು ಯೋಗಾವಸ್ಥೆ ಬಾರದು. ಸಂಸಾರದ ಗಾಳಿ ಮನಸ್ಸೆಂಬ ದೀಪವನ್ನು ಸರ್ವದಾ ಅಲ್ಲಾಡಿಸುತ್ತಿರುತ್ತದೆ. ಆ ದೀಪ ಸಂಪೂರ್ಣವಾಗಿ ಅಲ್ಲಾಡದೆ ಇತ್ತು ಅಂದರೆ ಆಗ ಅದಕ್ಕೆ ಯೋಗಾವಸ್ಥೆ ಬಂದುಬಿಡುತ್ತದೆ.
“ಕಾಮಕಾಂಚನವೇ ಯೋಗದ ಪ್ರತಿಬಂಧಕ. ಯಾವಾಗಲೂ ವಸ್ತುವಿಚಾರದಲ್ಲಿ ತೊಡಗಿರಬೇಕು. ಹೆಂಗಸಿನ ಶರೀರದಲ್ಲಿ ಏನು ತಾನೆ ಇದೆ-ರಕ್ತ, ಮಾಂಸ, ಕೊಬ್ಬು, ಕರುಳು, ಹೊಟ್ಟೆ, ಕ್ರಿಮಿ, ಮೂತ್ರ ಇತ್ಯಾದಿ. ಇಂಥ ಶರೀರದ ಮೇಲೆ ಯಾಕಪ್ಪ ಪ್ರೀತಿ ಇಡಬೇಕು?
“ನಾನು ರಾಜಸಿಕ ಭಾವ ಆರೋಪಿಸಿಕೊಳ್ಳುತ್ತಿದ್ದೆ-ತ್ಯಾಗಮಾಡಲೋಸುಗ. ಒಮ್ಮೆ ಇಚ್ಛೆ ಬಂತು, ಚಿನ್ನದ ಜರಿ ಹಾಕಿರುವ ಪೋಷಾಕು ಉಡಬೇಕು, ಬೆರಳಿಗೆ ಉಂಗುರ ಹಾಕಿಕೊಳ್ಳಬೇಕು, ಉದ್ದವಾದ ಕೊಳವೆಯುಳ್ಳ ಗುಡುಗುಡಿಯಿಂದ ತಂಬಾಕು ಸೇದಬೇಕು ಎಂಬುದಾಗಿ. ಮಥುರಬಾಬು ಎಲ್ಲವನ್ನೂ ತಂದೊದಗಿಸಿದ. ಚಿನ್ನದ ಜರಿ ಹಾಕಿರುವ ಪೋಷಾಕು ಉಟ್ಟುಕೊಂಡೆ. ಸ್ವಲ್ಪ ಹೊತ್ತಿನ ಮೇಲೆ ಮನಸ್ಸಿಗೆ ಹೇಳಿದೆ: ‘ಹೇ ಮನಸ್ಸೆ! ಚಿನ್ನದ ಜರಿಯ ಪೋಷಾಕು ಎಂಬುದು ಇದೇ.’ ಬಳಿಕ ಎಲ್ಲವನ್ನೂ ಬಿಚ್ಚಿ ಒಂದು ಕಡೆ ಬಿಸಾಡಿಬಿಟ್ಟೆ. ಮತ್ತೆ ಅದರ ಮೇಲೆ ಇಚ್ಛೆಯಾಗಲಿಲ್ಲ. ಮತ್ತೆ ನಾನು ಮನಸ್ಸಿಗೆ ಹೇಳಿದೆ: ‘ಮನಸ್ಸೆ! ಇದಕ್ಕೇ ಶಾಲು ಅಂತ ಹೆಸರು. ಉದ್ದವಾದ ಕೊಳವೆಯಿರುವ ಗುಡುಗುಡಿಯಿಂದ ತಂಬಾಕು ಸೇದುವುದು ಇದೇನೆ.’ ಬಳಿಕ ಎಲ್ಲವನ್ನೂ ಬಿಸಾಡಿಬಿಟ್ಟೆ. ಮತ್ತೆ ಅವು ಬೇಕೆಂದು ಮನಸ್ಸು ಕೇಳಲಿಲ್ಲ.”
ಇನ್ನೇನು ಮುಸ್ಸಂಜೆಯಾಗುವುದರಲ್ಲಿದೆ. ಕೊಠಡಿಯ ಆಗ್ನೇಯ ವರಾಂಡದಲ್ಲಿ ಬಾಗಿಲ ಹತ್ತಿರ ಪರಮಹಂಸರು ಮಾಸ್ಟರೊಡನೆ ಏಕಾಂತದಲ್ಲಿ ಮಾತನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಯೋಗಿಗಳ ಮನಸ್ಸು ಸರ್ವದಾ ಭಗವಂತನ ಅಡಿದಾವರೆಗಳಲ್ಲಿ ನೆಲಸಿರುತ್ತದೆ-ಸರ್ವದಾ ಆತ್ಮಸ್ಥವಾಗಿರುತ್ತದೆ. ಮುಖ ನೋಡಿದರೇ ಗೊತ್ತಾಗಿಬಿಡುತ್ತದೆ. ಕಣ್ಣೇನೋ ತೆರೆದಿರುತ್ತದೆ, ದೃಷ್ಟಿ ಮಾತ್ರ ಬಹಿರ್ಜಗತ್ತಿನ ಕಡೆಗೇ ಇರುವುದಿಲ್ಲ. ಹಕ್ಕಿ ಕಾವಿಗೆ ಕುಳಿತಿರುವಾಗ ಅದರ ಇಡೀ ಮನಸ್ಸು ಮೊಟ್ಟೆಯ ಮೇಲೆ ನೆಲಸಿ ಅದರ ಕಣ್ಣು ಮಾತ್ರ ಸುಮ್ಮನೆ ಮೇಲಕ್ಕೆ ನೋಡುತ್ತಿರುವ ಹಾಗೆ ಕಾಣಿಸುತ್ತದೆ. ಒಳ್ಳೆಯದು, ಹಕ್ಕಿ ಕಾವಿಗೆ ಕುಳಿತಿರುವುದರ ಒಂದು ಚಿತ್ರ ತಂದು ತೋರಿಸುತ್ತೀಯಾ?”
ಮಾಸ್ಟರ್: “ಆಗಲಿ, ಪ್ರಯತ್ನಮಾಡಿ ನೋಡುತ್ತೇನೆ.”
ಸಾಯಂಕಾಲವಾಗಿದೆ. ಕಾಳೀ ದೇವಾಲಯದಲ್ಲಿ, ರಾಧಾಕಾಂತ ದೇವಾಲಯದಲ್ಲಿ ಉಳಿದ ಕೊಠಡಿಗಳಲ್ಲಿಯೂ ದೀಪ ಹಚ್ಚಿದ್ದಾರೆ. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತು ಜಗನ್ಮಾತೆಯ ಧ್ಯಾನ ಮಾಡುತ್ತಿದ್ದಾರೆ. ಈಗ ಭಗವಂತನ ನಾಮಗಳನ್ನು ಹೇಳುತ್ತಿದ್ದಾರೆ. ಕೊಠಡಿಗೆ ಧೂಪ ಹಾಕಿ ದೀಪ ಹಚ್ಚಲಾಯಿತು. ಸ್ವಲ್ಪ ಹೊತ್ತಿನಲ್ಲೆ ಶಂಖ, ಜಾಗಟೆ, ಗಂಟೆಗಳ ಶಬ್ದ ಕೇಳಿಬರಲಾರಂಭಿಸಿತು. ಕಾಳೀ ದೇವಾಲಯದಲ್ಲಿ ಮಂಗಳಾರತಿ ನಡೆಯುತ್ತಿದೆ. ಚಂದ್ರನ ಬೆಳಕು ನಾಲ್ಕು ಕಡೆಗೂ ಹಬ್ಬಿದೆ. ಪರಮಹಂಸರು ಮತ್ತೆ ಈಗ ಮಾಸ್ಟರರೊಡನೆ ಮಾತನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನಿಷ್ಕಾಮಕರ್ಮ ಮಾಡುತ್ತಿರು. ಈಶ್ವರಚಂದ್ರ ವಿದ್ಯಾಸಾಗರ ಮಾಡುತ್ತಿರುವ ಕೆಲಸಗಳೆಲ್ಲ ಒಳ್ಳೆಯವೆ. ನಿಷ್ಕಾಮಕರ್ಮ ಮಾಡುತ್ತಿರಲು ಸತತ ಪ್ರಯತ್ನ ಮಾಡುತ್ತಿರು.”
ಮಾಸ್ಟರ್: “ಆಗಲಿ; ಒಳ್ಳೇದು, ಕರ್ಮಗಳ ಕಡೆ ಮನಸ್ಸು ಕೊಡುತ್ತಾ ಇದ್ದರೆ ಭಗವಂತನ ಸಾಕ್ಷಾತ್ಕಾರ ಪಡೆಯಲಾಗುವುದೆ? ರಾಮ ಕಾಮ ಇಬ್ಬರೂ ಒಟ್ಟಿಗೆ ಇರಲಾಗುವುದೆ? ಹಿಂದಿಯಲ್ಲಿ ಒಂದು ದ್ವಿಪದಿ ಓದಿದೆ: ‘ರಾಮನಿರುವ ಕಡೆ ಕಾಮನಿಲ್ಲ; ಕಾಮನಿರುವ ಕಡೆ ರಾಮನಿಲ್ಲ’.”
ಶ್ರೀರಾಮಕೃಷ್ಣರು: “ಒಬ್ಬೊಬ್ಬರೂ ತಪ್ಪದೆ ಎಲ್ಲರೂ ಕರ್ಮ ಮಾಡುತ್ತಲೇ ಇದ್ದಾರೆ. ಭಗವಂತನ ನಾಮಗುಣಕೀರ್ತನೆ ಮಾಡುವುದೂ ಕರ್ಮವೆ. ಸೋಖಹಮ್ ವಾದಿಗಳ ‘ನಾನೇ ಅವನು’ ಎಂಬುದರ ಮೇಲಿನ ಧ್ಯಾನವೂ ಕರ್ಮವೆ. ಉಸಿರಾಡುವುದೂ ಕರ್ಮವೇ. ಕರ್ಮವನ್ನು ತ್ಯಾಗಮಾಡುವ ಹಾಗೇ ಇಲ್ಲ. ಆದ್ದರಿಂದ ಕರ್ಮ ಮಾಡು, ಅದರ ಫಲವನ್ನು ಭಗವಂತನಿಗೆ ಸಮರ್ಪಿಸಿಬಿಡು.”
ಮಾಸ್ಟರ್: “ಒಳ್ಳೆಯದು. ಹೆಚ್ಚಾಗಿ ಹಣ ಸಂಪಾದಿಸಲು ನಾನು ಪ್ರಯತ್ನಿಸಬಹುದೆ?”
ಶ್ರೀರಾಮಕೃಷ್ಣರು: “ವಿದ್ಯಾಸಂಸಾರದ ಸಲುವಾಗಿ ಬೇಕಾದರೆ ಹಾಗೆ ಮಾಡಬಹುದು. ಹೆಚ್ಚಾಗಿ ಧನಾರ್ಜನೆ ಮಾಡು, ಆದರೆ ಒಳ್ಳೆಯ ರೀತಿಯಿಂದ. ಜೀವನದ ಉದ್ದೇಶ ಧನಾರ್ಜನೆಯಲ್ಲ, ಭಗವಂತನ ಸೇವೆ. ಧನಾರ್ಜನೆಯಿಂದ ಭಗವಂತನ ಸೇವೆ ನಡೆಯುವುದಾದರೆ, ಅದು ದೋಷವಾದುದೇನೂ ಅಲ್ಲ.”
ಮಾಸ್ಟರ್: “ಹೆಂಡತಿ ಮಕ್ಕಳನ್ನು ಎಲ್ಲಿಯವರೆಗೆ ಸಾಕಿ ಸಲಹಬೇಕು?”
ಶ್ರೀರಾಮಕೃಷ್ಣರು: “ಅವರ ಅನ್ನಬಟ್ಟೆಗೆ ತೊಂದರೆಯಾಗುತ್ತಿರುವವರೆಗೆ. ಆದರೆ ಮಕ್ಕಳು ತಮ್ಮ ಕಾಲಮೇಲೆ ತಾವೇ ನಿಂತುಕೊಳ್ಳಲು ಸಮರ್ಥರಾದರು ಎಂದರೆ ಮತ್ತೆ ಅವರ ಹೊರೆಯನ್ನು ಹೊತ್ತುಕೊಳ್ಳುವ ಆವಶ್ಯಕತೆಯೇನೂ ಇರುವುದಿಲ್ಲ. ಹಕ್ಕಿಯ ಮರಿ ಮೇವು ಹುಡುಕಲು ಕಲಿತುಕೊಂಡ ಬಳಿಕ, ಅದೇನಾದರೂ ತಾಯ ಹತ್ತಿರಕ್ಕೆ ಗುಟುಕಿಗಾಗಿ ಬಂತು ಎಂದರೆ ತಾಯಿಹಕ್ಕಿ ಅದನ್ನು ಕುಟುಕಿ ಓಡಿಸಿಬಿಡುತ್ತದೆ.”
ಮಾಸ್ಟರ್: “ಎಲ್ಲಿಯವರೆಗೆ ಕರ್ಮ ಮಾಡುತ್ತಿರಬೇಕು?”
ಶ್ರೀರಾಮಕೃಷ್ಣರು: “ಫಲ ಬಿಟ್ಟೊಡನೆ ಹೂವು ಉದುರಿಹೋಗುತ್ತದೆ. ಭಗವಂತನ ಸಾಕ್ಷಾತ್ಕಾರವಾದನಂತರ ಕರ್ಮಮಾಡುವುದರ ಆವಶ್ಯಕತೆಯೇನೂ ಇರುವುದಿಲ್ಲ. ಮಾಡಲು ಇಚ್ಛೆಯೂ ಆಗುವುದಿಲ್ಲ.
“ಕುಡುಕ ಹೆಚ್ಚಾಗಿ ಮದ್ಯ ಕುಡಿದ ಎಂದರೆ ಆತ ಪ್ರಜ್ಞೆ ಇಟ್ಟುಕೊಂಡಿರಲಾಗುವುದಿಲ್ಲ. ಎಲ್ಲೊ ಒಂದೆರಡಾಣೆಯನ್ನು ಮಾತ್ರ ಕುಡಿದರೆ ತನ್ನ ಕೆಲಸಕಾರ್ಯಗಳನ್ನು ಮಾಡಿಕೊಂಡು ಹೋಗಬಲ್ಲ. ಭಗವಂತನ ಕಡೆಗೆ ನಾವು ಮುಂದುವರಿದಷ್ಟೂ ಆತ ನಮ್ಮ ಕೆಲಸಕಾರ್ಯಗಳನ್ನು ಕಡಿಮೆ ಮಾಡಿಕೊಟ್ಟುಬಿಡುತ್ತಾನೆ. ಹೆದರಿಕೊಳ್ಳಬೇಡ.
“ಸದ್ಯ ಮಾಡಬೇಕಾಗಿರುವ ಕೆಲಸಗಳನ್ನು ಮಾಡಿ ಮುಗಿಸಿಬಿಡು. ಬಳಿಕ ನಿಶ್ಚಿಂತೆಯಿಂದ ಇರಬಲ್ಲೆ. ಗೃಹಿಣಿ ಅಡಿಗೆಕೆಲಸಗಳನ್ನೆಲ್ಲಾ ಮಾಡಿ ಮುಗಿಸಿ ಸ್ನಾನಕ್ಕೆ ಹೋದಳು ಎಂದರೆ ಮತ್ತೆ ಕರೆದರೆ ಹಿಂದಿರುಗಿ ಬರುವುದಿಲ್ಲ-ಗಂಟಲು ಕಿತ್ತುಕೊಂಡರೂ ಹಿಂದಿರುಗಿ ಬರುವುದಿಲ್ಲ.”
ಮಾಸ್ಟರ್: “ಭಗವಂತನ ಸಾಕ್ಷಾತ್ಕಾರ ಎಂದರೆ ಏನು? ಭಗವಂತನ ದರ್ಶನ ಎಂಬುದು ಏನು? ಅದನ್ನು ಪಡೆದುಕೊಳ್ಳುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ವೈಷ್ಣವರು ಹೇಳುತ್ತಾರೆ, ಮುಮುಕ್ಷುಗಳಲ್ಲಿ ಮತ್ತು ಮುಕ್ತರಲ್ಲಿ ವಿವಿಧ ಅಂತಸ್ತಿನವರು ಇದ್ದಾರೆ. ಅವರೇ ಪ್ರವರ್ತಕರು, ಸಾಧಕರು, ಸಿದ್ಧರು, ಸಿದ್ಧರ ಸಿದ್ಧರು. ಯಾರು ಈಗತಾನೇ ಮಾರ್ಗಕ್ಕೆ ಇಳಿದಿದ್ದಾನೊ, ಆತನೇ ಪ್ರವರ್ತಕ. ಯಾರು ಸಾಧನೆ, ಭಜನೆ ಮಾಡುತ್ತಿದ್ದಾನೊ-ಪೂಜೆ, ಜಪ, ಧ್ಯಾನ, ಭಗವನ್ನಾಮ ಗುಣಕೀರ್ತನೆ ಮಾಡುತ್ತಿದ್ದಾನೊ, ಆತನೇ ಸಾಧಕ. ಯಾರು ಭಗವಂತನಿದ್ದಾನೆ ಎಂಬುದನ್ನು ತನ್ನ ಸ್ವಂತ ಅನುಭವದಿಂದ ಅರಿತುಕೊಂಡಿದ್ದಾನೊ, ಆತನೇ ಸಿದ್ಧ. ಇದನ್ನು ವಿವರಿಸಲು ವೇದಾಂತದಲ್ಲಿ ಒಂದು ಉಪಮೆ ಇದೆ. ಮನೆಯ ಯಜಮಾನ ಕತ್ತಲೆ ಕೊಠಡಿಯಲ್ಲಿ ಮಲಗಿದ್ದಾನೆ. ಒಬ್ಬ ಆತನನ್ನು ಕತ್ತಲೆಯಲ್ಲೇ ತಡವರಿಸಿಕೊಂಡು ಹುಡುಕುತ್ತಿದ್ದಾನೆ. ಒಂದು ಸೋಫಾಕ್ಕೆ ಕೈಹಾಕಿ ಹೇಳುತ್ತಾನೆ. ‘ಇದಲ್ಲ.’ ಕಿಟಕಿಗೆ ಕೈ ಹಾಕಿ ಹೇಳುತ್ತಾನೆ: ‘ಇದಲ್ಲ’. ಬಾಗಿಲಿಗೆ ಕೈ ಹಾಕಿ ಹೇಳುತ್ತಾನೆ. ‘ಇದಲ್ಲ’. ‘ನೇತಿ, ನೇತಿ,’ ಅಂತಲೇ ಮುಂದುವರಿಯುತ್ತಿದ್ದಾನೆ. ಕೊನೆಗೆ ಯಜಮಾನನ ಶರೀರ ಕೈಗೆ ತಾಗುತ್ತದೆ. ಆಗ ಹೇಳುತ್ತಾನೆ: ‘ಓ, ಇಲ್ಲೆ ಯಜಮಾನರು!’ ಎಂದರೆ ಯಜಮಾನ ಇರುವುದರ ಅನುಭವ ಆತನಿಗೆ ಬಂತು. ಯಜಮಾನನೇನೋ ಆತನ ಕೈಗೆ ಸಿಕ್ಕಿದ. ಆದರೆ ಆತನನ್ನು ವಿಶೇಷವಾಗಿ ಇನ್ನೂ ಅರಿತಿಲ್ಲ.
“ಇನ್ನೊಂದು ಅಂತಸ್ತಿನವರಿದ್ದಾರೆ, ಅವರಿಗೆ ‘ಸಿದ್ಧರ ಸಿದ್ಧರು’ ಎಂಬುದಾಗಿ ಹೆಸರು. ಯಜಮಾನನೊಡನೆ ವಿಶೇಷ ರೀತಿಯಾಗಿ ಮಾತುಕತೆ ಆಡಿದರೆ, ಭಗವಂತನೊಡನೆ ವಿಶೇಷ ರೀತಿಯಾಗಿ ಭಕ್ತಿ ಪ್ರೇಮ ಇವುಗಳಿಂದ ಮಾತುಕತೆ ಆಡಿದರೆ, ಆಗ ಅನುಭವ ಆಗಿಬಿಡುತ್ತದೆ. ಸಿದ್ಧ ಭಗವಂತನ ಸಾಕ್ಷಾತ್ಕಾರವನ್ನೇನೊ ಮಾಡಿಕೊಂಡಿದ್ದಾನೆ. ಆದರೆ ‘ಸಿದ್ಧರ ಸಿದ್ಧ’ ಭಗವಂತನೊಡನೆ ವಿಶೇಷ ರೀತಿಯಾಗಿ ಮಾತುಕತೆ ಆಡಿದ್ದಾನೆ.
“ಆದರೆ ಆತನ ಸಾಕ್ಷಾತ್ಕಾರಮಾಡಿಕೊಳ್ಳಬೇಕಾದರೆ ಯಾವುದಾದರೂ ಒಂದು ಭಾವವನ್ನು ಆಶ್ರಯಿಸಿಕೊಳ್ಳಬೇಕಾಗುತ್ತದೆ-ಶಾಂತ, ದಾಸ್ಯ, ಸಖ್ಯ, ವಾತ್ಸಲ್ಯ, ಮಧುರ ಇವುಗಳಲ್ಲಿ ಯಾವುದಾದರೂ ಒಂದನ್ನು.”
“ಶಾಂತ-ಋಷಿಗಳು ಅನುಸರಿಸಿದುದು. ಅವರಿಗೆ ಭಗವಂತನ ಹೊರತು ಬೇರೆ ಯಾವುದರ ಮೇಲಿನ ಕಾಮನೆಯೂ ಇರಲಿಲ್ಲ. ಇದು ಸತಿ ಪತಿಯ ಮೇಲೆ ಇಟ್ಟಿರುವ ನಿಷ್ಠೆಯ ಹಾಗೆ. ಆಕೆಗೆ ಗೊತ್ತಿದೆ ತನ್ನ ಪತಿ ಕಂದರ್ಪನೇ ಎಂಬುದಾಗಿ.
“ದಾಸ್ಯ-ಹನುಮಂತನದು. ರಾಮನ ಕೆಲಸ ಮಾಡುತ್ತಿರುವಾಗ ಸಿಂಹಪರಾಕ್ರಮಿಯಾಗುತ್ತಿದ್ದ. ಸತಿಯಲ್ಲೂ ಈ ಭಾವ ಇರುತ್ತದೆ-ಪ್ರಾಣಾಪಾಯವನ್ನು ಲೆಕ್ಕಿಸದೆ ಪತಿಸೇವೆ ಮಾಡುತ್ತಾಳೆ. ತಾಯಿಯಲ್ಲೂ ಇದು ಅಲ್ಪಸ್ವಲ್ಪ ಇರುತ್ತದೆ-ಯಶೋದೆಯಲ್ಲಿ ಇದ್ದ ಹಾಗೆ.
“ಸಖ್ಯ-ಸ್ನೇಹಭಾವ. ಸ್ನೇಹಿತರು ಒಬ್ಬರನೊಬ್ಬರು ಆದರಿಸುತ್ತಾರೆ: ‘ಬಾ, ಹತ್ತಿರ ಬಂದು ಕುಳಿತುಕೊ’ ಎಂಬುದಾಗಿ. ಸುದಾಮನೇ ಮೊದಲಾದ ಸ್ನೇಹಿತರು ಕೆಲವು ವೇಳೆ ತಾವು ಎಂಜಲು ಮಾಡಿದ ಹಣ್ಣುಗಳನ್ನು ಶ್ರೀಕೃಷ್ಣನಿಗೆ ತಿನ್ನಿಸುತ್ತಿದ್ದರು. ಇನ್ನು ಕೆಲವು ವೇಳೆ ಆತನ ಹೆಗಲಮೇಲೂ ಹತ್ತಿಬಿಡುತ್ತಿದ್ದರು.
“ವಾತ್ಸಲ್ಯ-ಯಶೋದೆಯದು. ಸತಿಯಲ್ಲೂ ಇದು ಸ್ವಲ್ಪ ಇರುತ್ತದೆ. ಆಕೆ ಪತಿಗೆ ತನ್ನ ಪ್ರಾಣ ಕೊಡಲೂ ಸಿದ್ಧಳಾಗಿರುತ್ತಾಳೆ. ಮಗು ಗಂಟಲವರೆಗೂ ತಿಂದರೆ ಆಗ ತಾಯಿಗೆ ತೃಪ್ತಿ. ಯಶೋದೆ ಕೃಷ್ಣನಿಗೆ ಬೆಣ್ಣೆ ತಿನ್ನಿಸಲೋಸುಗ ಅದನ್ನು ಕೈಯಲ್ಲಿ ಹಿಡಿದುಕೊಂಡು ಆತನೊಡನೆ ಸುತ್ತಾಡುತ್ತಿದ್ದಳು.”
“ಮಧುರ-ಶ್ರೀಮತಿಯದು (ರಾಧೆಯದು). ಸತಿಯಲ್ಲೂ ಈ ಭಾವ ಇದೆ. ಅದರಲ್ಲಿ ಉಳಿದ ನಾಲ್ಕೂ ಅಡಕವಾಗಿದೆ.”
ಮಾಸ್ಟರ್: “ಭಗವಂತನ ದರ್ಶನ ಈ ಕಣ್ಣುಗಳಿಂದ ಸಾಧ್ಯವೇ?”
ಶ್ರೀರಾಮಕೃಷ್ಣರು: “ಆತನನ್ನು ಈ ಸ್ಥೂಲ ಕಣ್ಣುಗಳಿಂದ ನೋಡಲಾಗುವುದಿಲ್ಲ. ಸಾಧನೆ ಮುಂದುವರಿಸುತ್ತ ಮುಂದುವರಿಸುತ್ತ ಸಾಧಕನಿಗೆ ಪ್ರೇಮದ ಶರೀರ ಉಂಟಾಗುತ್ತದೆ. ಅದಕ್ಕೆ ಪ್ರೇಮದ ಕಣ್ಣು, ಪ್ರೇಮದ ಕಿವಿ ಇರುತ್ತದೆ. ಆ ಕಣ್ಣುಗಳಿಂದ ಆತ ನೋಡುತ್ತಾನೆ. ಆ ಕಿವಿಗಳಿಂದ ಭಗವಂತನ ವಾಣಿಯನ್ನು ಕೇಳುತ್ತಾನೆ. ಅದಕ್ಕೆ ಪ್ರೇಮದ ಜನನೇಂದ್ರಿಯವೂ ಇರುತ್ತದೆ.”
ಇದನ್ನು ಕೇಳಿ ಮಾಸ್ಟರ್ “ಹೊ, ಹೊ, ಹೊ!” ಅಂತ ನಗಲಾರಂಭಿಸಿದ. ಪರಮಹಂಸರು ಕೋಪಗೊಳ್ಳದೆ ಮಾತು ಮುಂದುವರಿಸುತ್ತಿದ್ದಾರೆ: “ಆ ಪ್ರೇಮ ಶರೀರದಿಂದ ಪರಮಾತ್ಮನೊಡನೆ ವಿಲಾಸಿಸಬಹುದು.”
ಈಗ ಮಾಸ್ಟರ್ ಗಂಭೀರಮುದ್ರೆ ತಾಳಿದ್ದಾನೆ.
ಶ್ರೀರಾಮಕೃಷ್ಣರು: “ಭಗವಂತನಲ್ಲಿ ಪ್ರೀತಿ ಬಹಳವಾಗಿ ಉಂಟಾಗದವರೆಗೆ ಇದು ಸಾಧ್ಯವಿಲ್ಲ. ಬಹಳ ಪ್ರೀತಿ ಉಂಟಾಯಿತು ಎಂದರೆ, ಎಲ್ಲವೂ ಭಗವನ್ಮಯವಾಗಿ ಕಾಣುತ್ತದೆ. ಇದು ಕಾಮಾಲೆ ರೋಗ ಅಧಿಕವಾದರೆ ಎಲ್ಲವೂ ಹಳದಿಯಾಗಿ ಕಾಣುವ ಹಾಗೆ. ಆಗ ಅನುಭವವಾಗುತ್ತದೆ, ‘ನಾನೇ ಅವನು’ ಎಂಬುದಾಗಿ.
“ಕುಡುಕನಿಗೆ ಅಧಿಕವಾಗಿ ನಿಶಾ ಹತ್ತಿಬಿಟ್ಟಿತು ಎಂದರೆ, ಆತ ಹೇಳುತ್ತಾನೆ: ‘ನಾನೇ ಕಾಳಿ!’ ಗೋಪಿಯರು ಪ್ರೇಮೋನ್ಮತ್ತರಾಗಿ ಹೇಳಲಾರಂಭಿಸಿದರು: ‘ನಾನೇ ಕೃಷ್ಣ !’ ನಾನೇ ಕೃಷ್ಣ!’
“ಹಗಲೂ ಇರುಳೂ ಯಾರು ಭಗವಂತನ ಧ್ಯಾನದಲ್ಲೇ ಇರುತ್ತಾನೊ ಆತ ಭಗವಂತನನ್ನು ಎಲ್ಲೆಲ್ಲೂ ನೋಡುತ್ತಾನೆ. ಇದು ಸ್ವಲ್ಪ ಹೊತ್ತಿನವರೆಗೆ ದೀಪದ ಕುಡಿಯ ಕಡೆ ದಿಟ್ಟಿಸಿ ನೋಡುತ್ತಿದ್ದ ಬಳಿಕ ಯಾವ ಕಡೆ ತಿರುಗಿ ನೋಡಿದರೂ ಎಲ್ಲೆಲ್ಲೂ ದೀಪದ ಕುಡಿಯೇ ಕಾಣುವ ಹಾಗೆ.”
ಮಾಸ್ಟರಿಗೆ ಅನಿಸಿತು: ‘ಅದು ನಿಜವಾದ ದೀಪದ ಕುಡಿ ಅಲ್ಲವಲ್ಲ.’
ಪರಮಹಂಸರು ಅಂತರ್ಯಾಮಿ. ಹೇಳುತ್ತಿದ್ದಾರೆ: “ಚೈತನ್ಯನ ಧ್ಯಾನಮಾಡಿ ಮನುಷ್ಯ ಅಚೈತನ್ಯವಾಗುವುದಿಲ್ಲ. ಶಿವನಾಥ ಒಮ್ಮೆ ಹೇಳಿದ, ಬಹುವಾಗಿ ಭಗವಂತನ ಧ್ಯಾನ ಮಾಡಿದರೆ, ತಲೆ ಕೆಟ್ಟುಹೋಗಿಬಿಡುತ್ತದೆ ಎಂಬುದಾಗಿ. ಅದಕ್ಕೆ ನಾನು ಹೇಳಿದೆ: “ಚೈತನ್ಯನ ಧ್ಯಾನಮಾಡಿದರೆ, ಮನುಷ್ಯ ಅಚೈತನ್ಯನಾಗಲು ಸಾಧ್ಯವೆ?”
ಮಾಸ್ಟರ್: “ಹೌದು, ಈಗ ಅರ್ಥವಾಯಿತು. ಇದು ಅನಿತ್ಯವಸ್ತುವಿನ ಮೇಲೆ ಧ್ಯಾನ ಮಾಡಿದಂತೇನಾಗುವುದಿಲ್ಲವಲ್ಲ? ನಿತ್ಯಚೈತನ್ಯ ಸ್ವರೂಪದ ಮೇಲೆ ಮನಸ್ಸಿಟ್ಟರೆ ಮನುಷ್ಯ ಅಚೈತನ್ಯ ಏಕಾಗಬೇಕು?”
ಶ್ರೀರಾಮಕೃಷ್ಣರು ಸಂತೋಷದಿಂದ: “ಈ ನಿನ್ನ ಭಾವನೆ ಭಗವಂತನ ಕೃಪೆಯಿಂದ. ಆತನ ಕೃಪೆ ಇಲ್ಲದೆ ಇದ್ದರೆ ಸಂದೇಹ ನಿವೃತ್ತಿಯಾಗುವುದಿಲ್ಲ. ಆತ್ಮಸಾಕ್ಷಾತ್ಕಾರವಾಗದೆ ಸಂದೇಹ ನಿವೃತ್ತಿಯಾಗುವುದಿಲ್ಲ.
“ಆತನ ಕೃಪೆ ದೊರಕಿತು ಎಂದರೆ ಇನ್ನು ಭಯಪಡಬೇಕಾಗಿಲ್ಲ. ಮಗು ತಂದೆಯ ಕೈಯನ್ನು ಹಿಡಿದುಕೊಂಡಿದ್ದರೆ ಅದು ಬೀಳಬಹುದಾದ ಸಂಭವ. ಆದರೆ ತಂದೆಯೇ ಅದರ ಕೈಯನ್ನು ಹಿಡಿದುಕೊಂಡರೆ ಇನ್ನು ಅದು ಹೆದರಬೇಕಾಗಿಲ್ಲ. ಭಗವಂತನೇ ಕೃಪೆ ಮಾಡಿ ಸಂದೇಹ ನಿವೃತ್ತಿಮಾಡಿಕೊಟ್ಟರೆ, ತಾನೇ ತೋರಿಸಿಕೊಂಡರೆ, ಇನ್ನು ಕಷ್ಟಪಡಬೇಕಾಗಿರುವುದಿಲ್ಲ. ಆದರೆ ಆತನ ಸಾಕ್ಷಾತ್ಕಾರಕ್ಕಾಗಿ ವ್ಯಾಕುಲರಾಗಿ, ಆತನನ್ನು ಕರೆಯುತ್ತ ಸಾಧನೆ ಮಾಡುತ್ತ ಮಾಡುತ್ತ ಇದ್ದರೆ, ಆತನ ಕೃಪೆ ಒದಗುತ್ತದೆ. ಮಗು ತನಗಾಗಿ ಬಹಳ ಸುತ್ತಿ ಬಳಸಾಡುತ್ತಿರುವುದನ್ನು ನೋಡಿದರೆ ತಾಯಿಗೆ ಮರುಕ ಹುಟ್ಟಿಬಿಡುತ್ತದೆ. ಅವಿತುಕೊಂಡಿದ್ದ ತಾಯಿ ಹೊರಕ್ಕೆ ಬಂದು ತೋರಿಸಿಕೊಂಡುಬಿಡುತ್ತಾಳೆ.”
ಮಾಸ್ಟರಿಗೆ ಯೋಚನೆ ಬಂತು: “ಭಗವಂತ ನಮ್ಮ ಕೈಯಲ್ಲಿ ಸುತ್ತಿ ಬಳಸಾಡುವ ಹಾಗೆ ಏಕೆ ಮಾಡಿಸಬೇಕು?”
ಪರಮಹಂಸರು ಒಡನೆಯೇ ಹೇಳಿದರು: “ನಾವು ಒಂದು ಸ್ವಲ್ಪ ಸುತ್ತಿ ಬಳಸಾಡಬೇಕು ಎಂಬುದು ಆತನ ಇಚ್ಛೆ. ಆಗ ಒಂದು ತಮಾಷೆ ನಡೆದ ಹಾಗೆ ಆಗುತ್ತದೆ. ಆತ ತನ್ನ ಲೀಲೆಯಿಂದ ಈ ಸಂಸಾರ ಸೃಷ್ಟಿಸಿದ್ದಾನೆ. ಆತನ ಈ ಲೀಲಾಶಕ್ತಿಗೇ ಮಹಾಮಾಯೆ ಅಂತ ಹೆಸರು. ಅದಕ್ಕಾಗಿ ಆ ಶಕ್ತಿರೂಪಿಣಿ ತಾಯಿಯಲ್ಲಿ ಶರಣಾಗತಿ ಪಡೆಯಬೇಕು. ಆಕೆ ಮಾಯಾಪಾಶದಿಂದ ನಮ್ಮನ್ನು ಬಂಧಿಸಿ ಇಟ್ಟುಬಿಟ್ಟಿದ್ದಾಳೆ. ಈ ಪಾಶಗಳನ್ನು ಕತ್ತರಿಸಿಹಾಕಲು ಶಕ್ತರಾದರೆ ಮಾತ್ರ ನಮಗೆ ಭಗವಂತನ ದರ್ಶನ ದೊರೆಯುತ್ತದೆ.”
ಶ್ರೀರಾಮಕೃಷ್ಣರು ಮಾತು ಮುಂದುವರಿಸುತ್ತಿದ್ದಾರೆ: “ಭಗವಂತನ ಕೃಪೆ ದೊರಕಿಸಿಕೊಳ್ಳಬೇಕಾದರೆ ಆದ್ಯಾಶಕ್ತಿರೂಪಿಣಿಯನ್ನು ಪ್ರಸನ್ನಳನ್ನಾಗಿ ಮಾಡಿಕೊಳ್ಳಬೇಕು. ಭಗವಂತನೇ ಒಂದು ರೂಪದಲ್ಲಿ ಮಹಾಮಾಯೆಯಾಗಿದ್ದಾನೆ. ಆಕೆ ಈ ಜಗತ್ತನ್ನು ಮುಗ್ಧಮಾಡಿ ಸೃಷ್ಟಿ ಸ್ಥಿತಿ ಪ್ರಳಯ ಮಾಡುತ್ತಿದ್ದಾಳೆ. ಆಕೆ ನಮ್ಮ ಕಣ್ಣಿಗೆ ಅಜ್ಞಾನವೆಂಬ ಮುಸುಕು ಹಾಕಿದ್ದಾಳೆ. ಆ ಮಹಾಮಾಯೆ ಬಾಗಿಲು ಬಿಟ್ಟುಕೊಟ್ಟರೆ ಮಾತ್ರ ಒಳಕ್ಕೆ ಪ್ರವೇಶ. ಹೊರಗಡೆಯೇ ಇದ್ದರೆ ಹೊರಗಿನ ವಸ್ತುಗಳನ್ನು ಮಾತ್ರ ನೋಡಬಹುದೇ ಹೊರತು ಒಳಗಿರುವ ಆ ಸಚ್ಚಿದಾನಂದ ಪುರುಷನನ್ನು ನೋಡಲಾಗುವುದಿಲ್ಲ. ಅದಕ್ಕಾಗಿಯೇ ಚಂಡೀಪುರಾಣದಲ್ಲಿ ಹೇಳಿದೆ, ಮಧುಕೈಟಭರ ವಧೆಯಾದಾಗ ಬ್ರಹ್ಮಾದಿ ದೇವತೆಗಳು ಮಹಾಮಾಯೆಯನ್ನು ಸ್ತೋತ್ರ ಮಾಡಿದರು ಎಂಬುದಾಗಿ.
“ಶಕ್ತಿಯೇ ಜಗತ್ತಿನ ಮೂಲಾಧಾರ. ಆ ಆದ್ಯಾಶಕ್ತಿಯಲ್ಲಿ ವಿದ್ಯೆ ಅವಿದ್ಯೆ ಎರಡೂ ಇವೆ. ಅವಿದ್ಯೆ ಮುಗ್ಧಕಾರಿ. ಅವಿದ್ಯೆ ಕಾಮಕಾಂಚನವನ್ನು ಸೃಷ್ಟಿಸಿ ಅದರಿಂದ ಮೋಹಗೊಳಿಸುತ್ತದೆ. ವಿದ್ಯೆ ಭಕ್ತಿ, ದಯೆ, ಜ್ಞಾನ, ಪ್ರೇಮ ಇವನ್ನು ಉಂಟುಮಾಡುತ್ತದೆ. ಇವು ನಮ್ಮನ್ನು ಭಗವಂತನ ಕಡೆಗೆ ಕರೆದೊಯ್ಯುತ್ತವೆ. ಅವಿದ್ಯೆಯನ್ನು ಪ್ರಸನ್ನಗೊಳಿಸಿಕೊಳ್ಳಬೇಕು. ಅದಕ್ಕಾಗಿಯೇ ಶಕ್ತಿಪೂಜಾ ಪದ್ಧತಿ ರೂಢಿಗೆ ಬಂದಿರುವುದು.
“ಆಕೆಯನ್ನು ಪ್ರಸನ್ನಗೊಳಿಸಲೋಸುಗ ಭಕ್ತ ಅನೇಕ ಭಾವಗಳಿಂದ-ದಾಸೀಭಾವ, ವೀರಭಾವ, ಸಂತಾನಭಾವ, ಇವುಗಳಿಂದ ಆಕೆಯನ್ನು ಪೂಜಿಸುತ್ತಾನೆ. ವೀರಭಾವ ಎಂದರೆ, ಆಕೆಯನ್ನು ಪ್ರಸನ್ನಗೊಳಿಸಿಕೊಳ್ಳುವುದು.
“ಶಕ್ತಿಸಾಧನೆ ಬಹಳ ಕಠಿಣವಾದ್ದು. ಅದೇನೂ ಹುಡುಗಾಟವಲ್ಲ. ನಾನು ದಾಸೀಭಾವದಿಂದ, ಸಖೀಭಾವದಿಂದ ಎರಡು ವರ್ಷ ಕಳೆದೆ. ಆದರೆ ನನ್ನ ಸ್ವಾಭಾವಿಕ ಭಾವ ಸಂತಾನ ಭಾವ-ಹೆಂಗಸರ ಸ್ತನ ನನ್ನ ಕಣ್ಣಿಗೆ ಮಾತೃ ಸ್ತನ.”
“ಪ್ರತಿಯೊಂದು ಹೆಂಗಸೂ ಶಕ್ತಿಯ ಒಂದೊಂದು ರೂಪು. ಪಶ್ಚಿಮ ಭಾರತದಲ್ಲಿ ವಿವಾಹ ಸಮಯದಲ್ಲಿ ವಧು ತನ್ನ ಕೈಯಲ್ಲಿ ಒಂದು ಕತ್ತಿ ಹಿಡಿದುಕೊಳ್ಳುತ್ತಾಳೆ; ಬಂಗಾಳದಲ್ಲಿ ಅಡಿಕೆ ಕತ್ತರಿಯನ್ನು. ಇದರ ಅರ್ಥ ಆ ಶಕ್ತಿರೂಪಿಣಿಕನ್ಯೆಯ ಸಹಾಯದಿಂದ ವರ ಮಾಯಾಪಾಶವನ್ನು ಕತ್ತರಿಸುತ್ತಾನೆ ಎಂಬುದಾಗಿ. ಇದೇ ವೀರಭಾವ. ನಾನು ಈ ಭಾವದಿಂದ ಪೂಜೆಮಾಡಲಿಲ್ಲ. ನನ್ನದು ಸಂತಾನಭಾವ.
“ಕನ್ಯೆ ಶಕ್ತಿರೂಪಿಣಿ. ವಿವಾಹ ಸಮಯದಲ್ಲಿ ನೋಡಿಲ್ಲವೆ ವರ ಪೆದ್ದನ ಹಾಗೆ ಹಿಂದುಗಡೆ ಕುಳಿತುಕೊಳ್ಳುವುದನ್ನು? ಆದರೆ ಕನ್ಯೆ ನಿರ್ಭಯಳಾಗಿ ಕುಳಿತಿರುತ್ತಾಳೆ!”
“ಭಗವಂತನ ಸಾಕ್ಷಾತ್ಕಾರ ಪಡೆದುಕೊಂಡದ್ದೇ ಆದರೆ ಆತನ ಹೊರಗಿನ ಐಶ್ವರ್ಯ, ಆತನ ಜಗತ್ತಿನ ಐಶ್ವರ್ಯ ಮರೆತುಹೋಗಿಬಿಡುತ್ತದೆ. ಆತನ ದರ್ಶನ ಪಡೆದನಂತರ ಆತನ ಐಶ್ವರ್ಯದ ಭಾವನೆ ಮನಸ್ಸಿನಲ್ಲಿ ನಿಲ್ಲದು. ಭಕ್ತ ಭಗವದಾನಂದದಲ್ಲಿ ಒಮ್ಮೆ ಮುಗ್ಧನಾಗಿ ಬಿಟ್ಟ ಎಂದರೆ ಆತನಿಗೆ ಇನ್ನು ಬೇರೆ ಯಾವುದರ ಭಾವನೆಯೂ ಇರದು. ನರೇಂದ್ರನನ್ನು ನೋಡಿದರೆ ನಾನು ಕೇಳಬೇಕಾಗಿರುವುದಿಲ್ಲ: ‘ನಿನ್ನ ಹೆಸರೇನು? ನಿನ್ನ ಮನೆ ಎಲ್ಲಿದೆ? ಎಂಬುದಾಗಿ. ಹಾಗೆಲ್ಲ ಪ್ರಶ್ನೆ ಹಾಕಲು ಸಮಯ ತಾನೆ ಎಲ್ಲಿರುತ್ತದೆ? ಒಮ್ಮೆ ಒಬ್ಬ ಹನುಮಂತನನ್ನು ಕೇಳಿದನಂತೆ: ‘ಇಂದು ಯಾವ ತಿಥಿ?’ ಆತ ಅದಕ್ಕೆ ಹೇಳಿದನಂತೆ: ‘ತಮ್ಮ, ನನಗೆ ತಿಥಿ, ವಾರ, ನಕ್ಷತ್ರ ಇವು ಯಾವುದೂ ಗೊತ್ತಿಲ್ಲ. ನಾನು ಕೇವಲ ರಾಮಚಿಂತನೆಯನ್ನು ಮಾತ್ರ ಮಾಡುತ್ತಿದ್ದೇನೆ.”
೧೬ನೆ ಅಕ್ಟೋಬರ್ ೧೮೮೨, ಆಶ್ವೀಜ ಶುಕ್ಲ ಚತುರ್ಥಿ, ಸೋಮವಾರ
ದುರ್ಗಾಪೂಜೆ ಬರುವ ಗುರುವಾರದಿಂದ ಆರಂಭವಾಗುತ್ತದೆ. ಪರಮಹಂಸರು ಇಂದು ಬಹಳ ಆನಂದದಿಂದ ಇದ್ದಾರೆ. ದಕ್ಷಿಣೇಶ್ವರಕ್ಕೆ ನರೇಂದ್ರ ಬಂದಿದ್ದಾನೆ. ಆತ ಬ್ರಾಹ್ಮಸಮಾಜದ ಒಬ್ಬಿಬ್ಬರು ಸ್ನೇಹಿತರನ್ನೂ ಕರೆದುಕೊಂಡು ಬಂದಿದ್ದಾನೆ. ರಾಖಾಲ, ರಾಮಲಾಲ, ಹಾಜರಾ ಪರಮಹಂಸರೊಡನೆಯೇ ಇದ್ದಾರೆ. ಮಾಸ್ಟರೂ ಅಲ್ಲಿಗೆ ಬಂದಿದ್ದಾನೆ.
ನರೇಂದ್ರನ ಮಧ್ಯಾಹ್ನದ ಊಟ ಪರಮಹಂಸರೊಡನೆಯೇ ಆಯಿತು. ಭಕ್ತರೆಲ್ಲರೂ ವಿಶ್ರಾಂತಿ ಪಡೆಯಲು ಸಾಮಾನ್ಯವಾದ ಹಾಸಿಗೆಯನ್ನು ಪರಮಹಂಸರ ಕೊಠಡಿಯಲ್ಲಿಯೇ ಹಾಕಲಾಗುತ್ತಿದೆ. ಮಂದಲಿಗೆ ಮೇಲೆ ಮೆತ್ತೆ ಹಾಸಿ ಬಿಳಿ ಬಟ್ಟೆ ಹಾಕಿಯಾಯಿತು. ಕೆಲವು ದಿಂಬುಗಳನ್ನೂ ಅಲ್ಲಿ ಇಲ್ಲಿ ಹಾಕಿಯಾಯಿತು. ಪರಮಹಂಸರು ನರೇಂದ್ರನ ಹತ್ತಿರ ಹಾಸಿಗೆ ಮೇಲೆ ಬಾಲಕನ ಹಾಗೆ ಕುಳಿತುಕೊಂಡಿದ್ದಾರೆ. ಭಕ್ತರೊಡನೆ, ವಿಶೇಷತಃ ನರೇಂದ್ರನೊಡನೆ ನಗುಮುಖರಾಗಿ ಬಹಳ ಆನಂದದಿಂದ ಮಾತುಕತೆ ಆಡುತ್ತಿದ್ದಾರೆ. ತಮ್ಮ ಮಾನಸಿಕ ಅವಸ್ಥೆಗಳನ್ನು ಜೀವನದ ಘಟನಾವಳಿಗಳನ್ನೂ ಕಥೆ ರೂಪದಲ್ಲಿ ಹೇಳುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನನಗೆ ಸಮಾಧಿ ದೊರೆತನಂತರ ನನ್ನ ಮನಸ್ಸು ಕೇವಲ ಭಗವಂತನ ಸಂಬಂಧವಾಗಿ ಶ್ರವಣಮಾಡಲು ಮಾತ್ರವೇ ತವಕಪಡುತ್ತಿತ್ತು. ಎಲ್ಲಿ ಭಾಗವತ, ಎಲ್ಲಿ ಆಧ್ಯಾತ್ಮರಾಮಾಯಣ, ಎಲ್ಲಿ ಮಹಾಭಾರತ ಅಂತಲೇ ಸುತ್ತಾಡುತ್ತಿದ್ದೆ. ಏಡೇದಾರ್ ಕೃಷ್ಣಕಿಶೋರನ ಮನೆಗೆ ಅಧ್ಯಾತ್ಮರಾಮಾಯಣ ಕೇಳಲು ಹೋಗುತ್ತಿದ್ದೆ.
“ಕೃಷ್ಣಕಿಶೋರನದು ಎಂಥಾ ಅದ್ಭುತ ಶ್ರದ್ಧೆ! ಆತ ಬೃಂದಾವನಕ್ಕೆ ಹೋಗಿದ್ದ. ಒಂದು ದಿನ ನೀರಡಿಕೆಯಾಯಿತು. ಬಾವಿಯ ಹತ್ತಿರಕ್ಕೆ ಹೋದಾಗ ಅಲ್ಲಿ ಯಾರೊ ಒಬ್ಬ ನಿಂತುಕೊಂಡಿದ್ದ. ಆತನನ್ನು ಸ್ವಲ್ಪ ನೀರು ಸೇದಿಕೊಡು ಎಂದು ಕೇಳಲಾಗಿ, ಆತ ಹೇಳಿದ: ‘ನಾನು ನೀಚಕುಲಕ್ಕೆ ಸೇರಿದವ, ನೀವು ಬ್ರಾಹ್ಮಣರು. ನಿಮಗೆ ಹೇಗೆ ನಾನು ನೀರು ಸೇದಿಕೊಡಲಿ?’ ಕೃಷ್ಣಕಿಶೋರ ಹೇಳಿದ: ‘ನೀನು “ಶಿವ, ಶಿವ” ಅಂತ ಹೇಳು. “ಶಿವ, ಶಿವ” ಅಂತ ಹೇಳಿದೊಡನೆಯೇ ನೀನು ಶುದ್ಧನಾಗಿಬಿಡುತ್ತೀಯೆ.’ ಆತ ಹಾಗೇ ಮಾಡಿ ನೀರು ಸೇದಿಕೊಟ್ಟ. ಆತ ಬಹಳ ಆಚಾರವಂತ ಬ್ರಾಹ್ಮಣ, ಆದರೂ ಆ ನೀರನ್ನು ಕುಡಿದುಬಿಟ್ಟ. ಎಂಥ ಶ್ರದ್ಧೆ ಆತನದು!
“ಏಡೇದಾರ್ ಸ್ನಾನಘಟ್ಟದಲ್ಲಿ ಒಬ್ಬ ಸಾಧು ಬಂದು ಇಳಿದುಕೊಂಡಿದ್ದ. ಅಲ್ಲಿಗೆ ಒಂದು ದಿನ ಹೋಗಬೇಕು ಅಂತ ನಾವು ಮಾಡಿಕೊಂಡೆವು. ನಾನು ಹಲಧಾರಿಗೆ ತಿಳಿಸಿದೆ: ನಾನು, ಕೃಷ್ಣಕಿಶೋರ, ಇಬ್ಬರೂ ಆ ಸಾಧುವನ್ನು ನೋಡಲು ಹೋಗುತ್ತಿದ್ದೇವೆ. ನೀನೂ ಬರುತ್ತೀಯಾ?’ ಹಲಧಾರಿ ಹೇಳಿದ: ‘ಹೋಗಿ ಆ ಮಣ್ಣಿನ ಗೂಡು ನೋಡಿಕೊಂಡು ಬರುವುದರಿಂದ ಯಾವ ಪದವಿ ಸಿಕ್ಕೀತು?’ ಹಲಧಾರಿ ಗೀತೆ, ವೇದಾಂತ ಓದುತ್ತಿದ್ದಾನಲ್ಲ, ಅದಕ್ಕಾಗಿ ಆ ಸಾಧುವನ್ನು ಮಣ್ಣಿನ ಗೂಡು ಎಂಬುದಾಗಿ ಕರೆದ. ಈ ಮಾತನ್ನು ನಾನು ಕೃಷ್ಣಕಿಶೋರನಿಗೆ ತಿಳಿಸಿದೆ. ಆತನಿಗೆ ಬಹಳವಾಗಿ ಕೋಪ ಬಂದುಬಿಟ್ಟಿತು. ಹೇಳಿದ: “ಏನು ಹಲಧಾರಿ ಹೀಗೆಂದು ಹೇಳಿದನೆ? ಯಾರು ಭಗವಚ್ಚಿಂತನೆ ಮಾಡುತ್ತಿದ್ದಾನೆಯೊ, ಯಾರು ರಾಮಚಿಂತನೆ ಮಾಡುತ್ತಿದ್ದಾನೆಯೊ, ಯಾರು ಭಗವಂತನಿಗಾಗಿ ಎಲ್ಲವನ್ನೂ ತ್ಯಾಗಮಾಡಿದ್ದಾನೆಯೊ ಅಂಥವನ ದೇಹ ಮಣ್ಣಿನ ಗೂಡೆ? ಆತನಿಗೆ ಗೊತ್ತಿಲ್ಲ, ಭಕ್ತನ ದೇಹ ಚಿನ್ಮಯ ದೇಹ ಎಂಬುದು.’ ಆತ ಆಗಾಗ ಕಾಳೀ ದೇವಾಲಯಕ್ಕೆ ಹೂವು ಕೊಯ್ಯಲು ಬರುತ್ತಿದ್ದ. ಆತನಿಗೆ ಅಷ್ಟೊಂದು ಕೋಪ ಹಲಧಾರಿಯನ್ನು ಕಂಡರೆ, ಆತನೇನಾದರೂ ಕಣ್ಣಿಗೆ ಬಿದ್ದ ಅಂದರೆ ಮುಖ ತಿರುಗಿಸಿಕೊಂಡು ಬಿಡುತ್ತಿದ್ದ. ಕೊನೆಗೆ ಆತನೊಡನೆ ಮಾತುಕತೆಯಾಡುವುದನ್ನೇ ನಿಲ್ಲಿಸಿಬಿಟ್ಟ.
“ಒಮ್ಮೆ ಕೃಷ್ಣಕಿಶೋರ ನನ್ನನ್ನು ಕೇಳಿದ: ‘ಯಜ್ಞೋಪವೀತವನ್ನು ಏಕೆ ಬಿಸಾಡಿ ಬಿಟ್ಟಿದ್ದೀರಿ?’ ನನಗೆ ಹಿಂದೆ ಭಗವದವಸ್ಥೆ ಉಂಟಾದಾಗ ಆಶ್ವೀಜದ ಬಿರುಗಾಳಿ ಮಳೆ ಹಾಗೆ ಏನೊ ಒಂದು ಬಂದು ನನ್ನ ಹತ್ತಿರ ಏನೇನು ಇತ್ತೊ ಎಲ್ಲವನ್ನೂ ಹೊಡೆದುಕೊಂಡು ಹೋಗಿಬಿಟ್ಟಿತು. ನನ್ನ ಹಿಂದಿನ ಸ್ವರೂಪವೇ ಬದಲಾವಣೆ ಹೊಂದಿಬಿಟ್ಟಿತು. ಬಾಹ್ಯಪ್ರಜ್ಞೆ ಇರುತ್ತಿರಲಿಲ್ಲ. ಉಟ್ಟಿದ್ದ ಬಟ್ಟೆಯೇ ಮೈಮೇಲೆ ನಿಲ್ಲದೆ ಹೋಗುವಾಗ ಇನ್ನು ಯಜ್ಞೋಪವೀತದ ಪಾಡು ಕೇಳಬೇಕೆ? ನಾನು ಕೃಷ್ಣಕಿಶೋರನಿಗೆ ಹೇಳಿದೆ: “ನಿನಗೂ ಒಮ್ಮೆ ಭಗವದುನ್ಮಾದ ಉಂಟಾಗಲಿ, ಆಗ ನಿನಗೇ ಅದು ಅರ್ಥವಾಗುತ್ತದೆ.’
“ಹಾಗೇ ಆಯಿತು. ಆತನಿಗೂ ಭಗವದುನ್ಮಾದ ಒಮ್ಮೆ ಬಂತು. ಆಗ ‘ಓಂ, ಓಂ’ ಎಂಬುದಾಗಿ ಹೇಳುತ್ತ ತನ್ನ ಕೊಠಡಿಯೊಳಗೆ ಸುಮ್ಮನೆ ಸೇರಿಕೊಂಡುಬಿಡುತ್ತಿದ್ದ. ಆತನ ಸಂಬಂಧಿಗಳು ಬುದ್ಧಿ ಕೆಟ್ಟುಹೋಗಿದೆ ಎಂಬುದಾಗಿ ಕವಿರಾಜನನ್ನು ಕರೆಸಿದರು. ನಾಟಗೋರಿನ ರಾಮಕವಿರಾಜ ಆತನನ್ನು ನೋಡಲು ಬಂದ. ಕೃಷ್ಣಕಿಶೋರ ಆತನಿಗೆ ಹೇಳಿದ: ‘ನನ್ನ ರೋಗ ಏನಿದ್ದರೂ ಗುಣಪಡಿಸಿಬಿಡಿ; ಆದರೆ ನನ್ನ ಓಂಕಾರದ ತಂಟೆಗೆ ಮಾತ್ರ ಬರಬೇಡಿ.’ (ಎಲ್ಲರೂ ನಗುತ್ತಿದ್ದಾರೆ.)
“ಒಂದು ದಿನ ಹೋಗಿ ನೋಡುತ್ತೇನೆ, ಕುಳಿತುಕೊಂಡು ಏನೋ ಯೋಚಿಸುತ್ತಾ ಇದ್ದಾನೆ. ಕೇಳಿದೆ: ‘ಏನು ನಡೆಯುತ್ತಾ ಇದೆ ಮನಸ್ಸಿನಲ್ಲಿ?’ ಹೇಳಿದ: ‘ಕಂದಾಯದವರು ಬಂದಿದ್ದರು. ಹೆದರಿಸಿದರು, ‘ಕಂದಾಯ ಕೊಡದಿದ್ದರೆ ಮನೆಯ ಪಾತ್ರೆ ಪದಾರ್ಥಗಳನ್ನೆಲ್ಲಾ ಹರಾಜು ಹಾಕಿಸಿಬಿಡುತ್ತೇವೆ’ ಎಂಬುದಾಗಿ. ಅದಕ್ಕಾಗಿ ಯೋಚಿಸುತ್ತಾ ಇದ್ದೇನೆ.’ ನಾನು ಹೇಳಿದೆ: ‘ಅದಕ್ಕಾಗಿ ಏಕೆ ನೀನು ಇಷ್ಟೊಂದು ಯೋಚಿಸಬೇಕು? ಅವರು ಬೇಕಾದರೆ ನಿನ್ನ ಪಾತ್ರೆ ಪದಾರ್ಥಗಳನ್ನು ತೆಗೆದುಕೊಂಡು ಹೋಗಲಿ. ಇನ್ನೂ ಬೇಕಾದರೆ ನಿನ್ನ ಶರೀರವನ್ನೂ ಕಟ್ಟಿ ಹೊತ್ತುಕೊಂಡು ಹೋಗಿಬಿಡಲಿ. ಆದರೆ ನಿನ್ನನ್ನು ಮಾತ್ರ ಅವರು ಎಂದಿಗೂ ಕಟ್ಟಿ ಹೊತ್ತುಕೊಂಡು ಹೋಗಲಾರರು ತಾನೆ? ನೀನು “ಆಕಾಶ” ಅಲ್ಲವೆ!’ (ನರೇಂದ್ರನೇ ಮೊದಲಾದವರು ನಗಲಾರಂಭಿಸಿದ್ದಾರೆ.) ಆತ ತಾನು ಆಕಾಶವತ್ ಎಂಬುದಾಗಿ ಹೇಳಿಕೊಳ್ಳುತ್ತಿದ್ದ. ಅಧ್ಯಾತ್ಮರಾಮಾಯಣ ಓದುತ್ತಿದ್ದುದರಿಂದ ಆ ಭಾವನೆ ಆತನಿಗೆ ಬಂದಿತ್ತು. ಆಗಾಗ ಆತನನ್ನು ‘ಖ’ ಎಂದು ಸಂಬೋಧಿಸಿ ನಾನು ತಮಾಷೆಮಾಡುತ್ತಿದ್ದೆ. ಅಂದು ನಾನು ನಗುತ್ತ ಆತನಿಗೆ ಹೇಳಿದೆ: ‘ನೀನು “ಖ”. ಕಂದಾಯದವರು ನಿನ್ನನ್ನು ಎತ್ತಿಕೊಂಡು ಹೋಗಲಾರರು!’
“ಆ ಭಗವದವಸ್ಥೆಯಲ್ಲಿ ನನ್ನ ಆಂತರ್ಯಕ್ಕೆ ಹೊಳೆಯುತ್ತಿದ್ದುದನ್ನೆಲ್ಲಾ ಹೊರಗೆಡಹಿಬಿಡುತ್ತಿದ್ದೆ. ಮುಖ ನೋಡಿ ಮಣೆ ಹಾಕುತ್ತಿರಲಿಲ್ಲ. ದೊಡ್ಡ ಪದವಿಯಲ್ಲಿ ಇರತಕ್ಕವರನ್ನು ಕಂಡರೂ ಯಾವ ಹೆದರಿಕೆಯೂ ಇಲ್ಲದೆ ಯಥಾರ್ಥ ಹೇಳಿಬಿಡುತ್ತಿದ್ದೆ.
“ಯದುಮಲ್ಲಿಕನ ತೋಟಕ್ಕೆ ಒಮ್ಮೆ ಯತೀಂದ್ರ (ದೊಡ್ಡ ಧನಿಕ) ಬಂದಿದ್ದ. ನಾನೂ ಅಲ್ಲಿ ಕುಳಿತಿದ್ದೆ. ನಾನು ಆತನನ್ನು ಕೇಳಿದೆ: “ಮನುಷ್ಯನ ಕರ್ತವ್ಯವೇನು? ಭಗವಚ್ಚಿಂತನೆ ಮಾಡುತ್ತಿರುವುದೇ ನಮ್ಮ ಕರ್ತವ್ಯವಲ್ಲವೆ?’ ಯತೀಂದ್ರ ಹೇಳಿದ: ‘ನಾವು ಸಂಸಾರಿಗಳು. ನಮಗೆಲ್ಲಿ ಮುಕ್ತಿ ದೊರೆತೀತು? ರಾಜ ಯುಧಿಷ್ಠಿರನೂ ನರಕದರ್ಶನ ಮಾಡಬೇಕಾಗಿ ಬಂತು.’ ಇದನ್ನು ಕೇಳಿ ಅಧಿಕವಾಗಿಯೇ ನನ್ನಲ್ಲಿ ಕೋಪ ಕೆರಳಿತು. ಛೀಮಾರಿ ಮಾಡಿದೆ, ‘ನೀನು ಎಂಥಾ ಮನುಷ್ಯ! ಎಲ್ಲವನ್ನೂ ಬಿಟ್ಟು ಯುಧಿಷ್ಠಿರ ನರಕದರ್ಶನ ಮಾಡಿದ್ದನ್ನು ಮಾತ್ರ ಇಟ್ಟುಕೊಂಡಿದ್ದೀಯಲ್ಲ? ಆತನ ಸತ್ಯವಚನ, ಕ್ಷಮೆ, ಧೈರ್ಯ, ವಿವೇಕ, ವೈರಾಗ್ಯ, ಭಗವದ್ಭಕ್ತಿ ಇವೊಂದೂ ನಿನ್ನ ಮನಸ್ಸಿಗೆ ಬರುತ್ತಿಲ್ಲ!, ಇನ್ನೂ ಏನೇನೋ ಹೇಳಬೇಕು ಅಂತ ಇದ್ದೆ. ಅಷ್ಟರಲ್ಲಿ ಹೃದೆ ಬಂದು ನನ್ನ ಬಾಯನ್ನು ಬಿಗಿಯಾಗಿ ಹಿಡಿದುಕೊಂಡ. ಕೆಲವು ನಿಮಿಷಗಳೊಳಗೇ ತನಗೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ಯತೀಂದ್ರ ಅಲ್ಲಿಂದ ಎದ್ದು ಹೊರಟು ಹೋದ.
“ಬಹುದಿನಗಳಾದ ಮೇಲೆ ಕ್ಯಾಪ್ಟನ್ನಿನೊಡನೆ ರಾಜ ಸೌರೀಂದ್ರ ಠಾಕೂರನನ್ನು ನೋಡಲು ಹೋಗಿದ್ದೆ. ಆತ ನನ್ನ ಕಣ್ಣಿಗೆ ಬಿದ್ದೊಡನೆಯೇ ಆತನಿಗೆ ಹೇಳಿದೆ: ‘ನಿನ್ನನ್ನು ನಾನು ರಾಜ ಅಂತಲೇನು ಕರೆಯುವುದಕ್ಕೆ ಹೋಗುವುದಿಲ್ಲ. ಏಕೆಂದರೆ ಅದು ಸುಳ್ಳುಮಾತು ಆಡಿದ ಹಾಗೆ ಆಗುತ್ತದೆ.’ ನನ್ನೊಡನೆ ಸ್ವಲ್ಪ ಹೊತ್ತು ಮಾತುಕತೆಯಾಡಿದ. ಅಷ್ಟರಲ್ಲೇ ಅನೇಕ ಮಂದಿ ಸಾಹೇಬರು ಬಂದು ಹೋಗಲಾರಂಭಿಸಿದರು. ರಾಜಸಿಕ ಮನುಷ್ಯ, ಅನೇಕ ವಿಧದ ಕೆಲಸಕಾರ್ಯಗಳಿಗೆ ಮನಸ್ಸು ಕೊಡಬೇಕಾಗಿದೆ. ಆತನ ಅಣ್ಣ ಯತೀಂದ್ರನಿಗೆ ಹೇಳಿಕಳುಹಿಸಲಾಯಿತು. ಆತ ಉತ್ತರ ಕಳುಹಿಸಿದ, ತನ್ನ ಗಂಟಲು ನೋಯುತ್ತಿರುವುದರಿಂದ ತಾನು ಎಲ್ಲೂ ಹೊರಕ್ಕೆ ಬರುವುದಕ್ಕೆ ಆಗುವುದಿಲ್ಲ ಎಂಬುದಾಗಿ.
“ಒಂದು ದಿನ ನನ್ನ ಆ ಭಗವದವಸ್ಥೆಯಲ್ಲಿ ವರಾಹನಗರದ ಗಂಗಾಘಟ್ಟಕ್ಕೆ ಹೋಗಿದ್ದೆ. ಅಲ್ಲಿ ಜಯಮುಖ್ಯೋಪಾಧ್ಯಾಯ ನನ್ನ ಕಣ್ಣಿಗೆ ಬಿದ್ದ. ಜಪಮಾಡುತ್ತ ಕುಳಿತಿದ್ದಾನೆ, ಆದರೆ ಅನ್ಯಮನಸ್ಕನಾಗಿ. ಆಗ ಆತನ ಹತ್ತಿರಕ್ಕೆ ಹೋಗಿ ಕೆನ್ನಗೆ ಎರಡು ಅಪ್ಪಳಿಸಿದೆ.”
“ಒಮ್ಮೆ ರಾಣಿ ರಾಸಮಣಿ ಕೆಲವು ದಿನಗಳ ಮಟ್ಟಿಗೆ ಕಾಳೀದೇವಾಲಯದಲ್ಲಿರುವ ತನ್ನ ಕುಟೀರದಲ್ಲಿ ಇಳಿದುಕೊಂಡಿದ್ದಳು. ದಿನವೂ ಪೂಜೆ ಸಮಯದಲ್ಲಿ ಕಾಳೀದೇವಾಲಯಕ್ಕೆ ಬಂದು ನನ್ನನ್ನು ಒಂದೆರಡು ಹಾಡು ಹೇಳುವಂತೆ ಕೇಳಿಕೊಳ್ಳುತ್ತಿದ್ದಳು. ಒಂದು ದಿನ ಎಂದಿನಂತೆ ಆಕೆ ಬಂದಿದ್ದಾಳೆ. ನಾನೂ ಅವಳೆದುರಿಗೆ ಹಾಡುತ್ತಾ ಇದ್ದೇನೆ. ನೋಡುತ್ತೇನೆ, ಅವಳು ಅನ್ಯಮನಸ್ಕಳಾಗಿ ಪೂಜೆಗೆ ಹೂವು ಅಣಿಮಾಡುತ್ತಿದ್ದಾಳೆ. ಒಡನೆಯೆ ಎರಡು ಕೊಟ್ಟೆ ಕೆನ್ನೆಗೆ. ಆಗ ಆಕೆ ದಡಬಡನೆ ಕೈಜೋಡಿಸಿ ಕುಳಿತುಕೊಂಡಳು.
“ನನ್ನ ಮನಸ್ಸಿನ ಈ ಅವಸ್ಥೆಯನ್ನು ನೋಡಿ, ಹೆದರಿ ಹಲಧಾರಿಗೆ ಹೇಳಿದೆ: ‘ನನಗೇನು ಸ್ವಭಾವ ಬಂದುಬಿಟ್ಟಿದೆ ನೋಡು! ನಾನು ಇದರಿಂದ ಹೇಗೆ ಪಾರಾಗಲಿ?’ ಬಳಿಕ ಭಗವತಿಗೆ ಪ್ರಾರ್ಥನೆ ಮಾಡುತ್ತ ಮಾಡುತ್ತ ಆ ಸ್ವಭಾವ ನನ್ನನ್ನು ಬಿಟ್ಟು ತೊಲಗಿತು.
“ಆ ಅವಸ್ಥೆಯಲ್ಲಿ ಭಗವದ್ವಿಷಯ ಹೊರತು ಬೇರೆ ಏನೂ ರುಚಿಸದು. ಪ್ರಾಪಂಚಿಕ ಮಾತುಕತೆ ಕಿವಿಗೆ ಬಿತ್ತು ಎಂದರೇ ಒಂದು ಕಡೆ ಕುಳಿತು ಅಳುತ್ತಿದ್ದೆ. ಮಥುರಬಾಬು, ನನ್ನನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋದಾಗ ನಾವು ಕಾಶಿಯಲ್ಲಿ ಕೆಲವು ದಿನಗಳನ್ನು ರಾಜಬಾಬುವಿನ ಮನೆಯಲ್ಲಿ ಕಳೆದೆವು. ಒಂದು ದಿನ ನಾನು ಮಥುರಬಾಬು, ರಾಜಬಾಬುಗಳೊಡನೆ ಬೈಠಕ್ ಖಾನೆಯಲ್ಲಿ ಕುಳಿತುಕೊಂಡಿದ್ದೆ. ಶುರುಮಾಡಿದರು ಪ್ರಾಪಂಚಿಕ ಮಾತುಕತೆಗಳನ್ನು. ‘ಇಷ್ಟು ಹಣ ನಷ್ಟವಾಯಿತು. ಹೀಗಾಯಿತು, ಹಾಗಾಯಿತು.’ ಇನ್ನೂ ಏನೇನೊ. ನಾನು ಅಳಲು ಶುರುಮಾಡಿದೆ. ಹೇಳಿದೆ ಭಗವತಿಗೆ: ‘ತಾಯೆ, ಎಲ್ಲಿಗೆ ಕರೆದುಕೊಂಡು ಬಂದಿದ್ದೀಯೆ ನನ್ನನ್ನು? ರಾಸಮಣಿಯ ದೇವಾಲಯದಲ್ಲಿ ಆನಂದದಿಂದ ಇದ್ದೆನಲ್ಲ. ತೀರ್ಥಯಾತ್ರೆಗೆ ಬಂದೂ ಅದೇ ಕಾಮಕಾಂಚನಗಳ ಮಾತು ಕೇಳಬೇಕಾಗಿದೆಯಲ್ಲ ! ಆದರೆ ಅಲ್ಲಿ (ದಕ್ಷಿಣೇಶ್ವರದಲ್ಲಿ) ಇವುಗಳಿಂದ ತಪ್ಪಿಸಿಕೊಳ್ಳಬಹುದಾಗಿತ್ತು.”
ಪರಮಹಂಸರು ಭಕ್ತರೆಲ್ಲರಿಗೂ ವಿಶೇಷತಃ ನರೇಂದ್ರನಿಗೆ ವಿಶ್ರಮಿಸಿಕೊಳ್ಳುವಂತೆ ಹೇಳಿ, ತಾವೂ ಚಿಕ್ಕಮಂಚದ ಮೇಲೆ ಮಲಗಿ ವಿಶ್ರಮಿಸಿಕೊಳ್ಳುತ್ತಿದ್ದಾರೆ.
ಸಾಯಂಕಾಲವಾಗಿದೆ. ನರೇಂದ್ರ ಹಾಡುತ್ತಿದ್ದಾನೆ. ರಾಖಾಲ, ಲಾಟು, ಮಾಸ್ಟರ್, ನರೇಂದ್ರನ ಗೆಳೆಯ ಬ್ರಾಹ್ಮಸಮಾಜದ ಪ್ರಿಯನಾಥ, ಹಾಜರಾ ಮೊದಲಾದವರೆಲ್ಲ ಕುಳಿತಿದ್ದಾರೆ. ಹಾಡಿನೊಡನೆ ಮೃದಂಗ ಬಾಜನವಾಗುತ್ತಿದೆ.
ನಿರಂಜನ ಹರಿಚಿದ್ಛನ ಮೂರುತಿಯನು ನೆನೆಯೊ
ನಿರಂತರ-ಮೋಹನ ಮೂರುತಿಯನು ನೆನೆಯೊ….
ನರೇಂದ್ರ ಮತ್ತೆ ಹಾಡುತ್ತಿದ್ದಾನೆ:
ಸತ್ಯ ಶಿವಸುಂದರನ ರೂಪ ಹೃದಯಮಂದಿರದಿ
ಹೊಳೆವುದೆಂದೋ,
ನಿತ್ಯದರುಶನದಿಂದ ಆ ರೂಪಸಾಗರದಿ
ನಾನಿಳಿವುದೆಂದೋ,
ಆ ದಿವ್ಯ ಶುಭದಿನದ ಉದಯವೆಂದೋ!
ಬಾರಯ್ಯ ಓ ಪ್ರಭುವೆ, ಅನಂತಜ್ಞಾನದೊಳು
ನನ್ನೆದೆಯಲಿ,
ಮೂಕವಿಸ್ಮಿತಗೈದು ನನ್ನ ಚಂಚಲ ಮತಿಗೆ
ತೋರಯ್ಯ ಸಗ್ಗವನು ನಿನ್ನಡಿಯಲಿ!
ಆನಂದದಮೃತಕರನಾಗಿ ನೀ ಮೂಡಯ್ಯ
ನನ್ನ ಹೃದಯಾಕಾಶದೇಶದಲ್ಲಿ!
ಆ ಪ್ರಕಾಶದಿ ನನ್ನ ಮನ ಚಕೋರನ ತೆರದಿ
ನಲಿದಾಡಲಿ,
ಸಗ್ಗಸುಖ ಅವತರಿಸಿ ನನ್ನ ಹೃದಯವ ತುಂಬಿ
ತುಳುಕಾಡಲಿ!
ರಾಜರಾಜೇಶ್ವರನೆ, ಓ ನನ್ನ ಪ್ರಾಣಸಖ,
ಅದ್ವಿತೀಯನು ನೀನು ಶಾಂತಶಿವನು;
ನಿನ್ನ ಶ್ರೀಚರಣದಲಿ ನನ್ನೆಲ್ಲವನು ಮುಡಿಪು-
ಗೈದೆನ್ನ ಗುರಿಯನ್ನು ಸಾಧಿಸುವೆನು.
ಆ ಅನಂತರ ನಾನು ನಿನ್ನ ನಿರ್ಮಲ ಶುದ್ಧ
ರೂಪವನು ಎಲ್ಲೆಲ್ಲು ದರ್ಶಿಸುವೆನು,
ಬೆಳಕು ಬಂದೊಡನೆಯೇ ಕತ್ತಲೋಡುವ ತೆರದಿ
ನಿನ್ನ ಪ್ರಭೆಯುದಯದಲಿ ನನ್ನ ದುರಿತಗಳೆಲ್ಲ
ತೊಲಗವೇನು?
ನಿನ್ನ ಶ್ರೀ ಧ್ರುವತಾರೆಗೆದೆಯು ತುಡಿವಂದದಲಿ
ವಿಶ್ವಾಸದಗ್ನಿಯನು ದೀಪ್ತಗೊಳಿಸು.
ಓ ದೀನಬಾಂಧವನೆ ದಿನರಾತ್ರಿಯೂ ನಿನ್ನ
ಪ್ರೇಮದಾನಂದದಲಿ ಮಗ್ನಗೊಳಿಸು;
ನೀನೆ ನನ್ನೊಳು ನೆಲಸು, ನನ್ನನಳಿಸು!
ನರೇಂದ್ರ ಮತ್ತೆ ಹಾಡುತ್ತಿದ್ದಾನೆ:
ಮಧುರ ಬ್ರಹ್ಮನಾಮವನ್ನು ಜಪಿಸು ಹರುಷಮುಖದಲಿ
ಸುಧಾಸಿಂಧು ಉಕ್ಕಿ ಬರಲಿ ತುಂಬಿದಂಥ ಎದೆಯಲಿ
ಎಲ್ಲರೊಡನೆ ಅದನು ಹೀರಿ ಸುಖಿಸು ನೀನು ಜಗದಲಿ.
ಶುಷ್ಕವಾದರೇನು ಎದೆಯು ವಿಷಯಜ್ವಾಲೆ ತಟ್ಟಲು?
ಮರೆಯಬೇಡ ಹರಿಯ ಮಧುರನಾಮವನ್ನು ನೆನೆಯಲು,
ಅವನ ನೆನೆಯೆ ಸಗ್ಗದೊಲವು ಇಳಿದು ತೊಳೆವುದೆದೆಯನು.
ಹಿರಿಯೆಡರುಗಳಡ್ಡ ಬರಲು ಕರೆದು ಕೂಗು ಅವನನು.
ಕರುಣಾಮಯನವನ ಹೆಸರು ದುರಿತಂಗಳ ಕಟ್ಟನು
ಸಿಡಿಲಿನಂತೆ ಬಡಿದು ಹರಿದು ಬಿಡುಗಡೆಯನು ಕೊಡುವುದು.
ಓ ಬನ್ನಿರಿ ನಿಮ್ಮೆದೆಗಳ ಅರಕೆಗಳನು ತುಂಬಿರಿ,
ಆನಂದದ ರಸವ ಕುಡಿದು ತೃಪ್ತಿಯನ್ನು ಪಡೆಯಿರಿ
ಪ್ರೇಮಯೋಗದಲ್ಲಿ ನೀವು ಪೂರ್ಣಕಾಮರಾಗಿರಿ.
ಈಗ ಮೃದಂಗ ಕರತಾಲಗಳೊಡನೆ ಕೀರ್ತನೆ ನಡೆಯುತ್ತಿದೆ. ನರೇಂದ್ರಾದಿ ಭಕ್ತರು ಪರಮಹಂಸರ ಸುತ್ತಲೂ ಸುತ್ತುತ್ತ ಸುತ್ತುತ್ತ ಹಾಡುತ್ತಿದ್ದಾರೆ:
ಪ್ರೇಮಾನಂದ ರಸ ಪೂರದಿ
ನೀನಾಗಿರು ಚಿರಮಗ್ನ.
ಬಳಿಕ ಹಾಡುತ್ತಿದ್ದಾರೆ :
ಸತ್ಯ ಶಿವಸುಂದರನ ರೂಪ ಹೃದಿಮಂದಿರದಿ
ಹೊಳೆವುದೆಂದೋ………………
ಈಗ ನರೇಂದ್ರನೇ ಮೃದಂಗ ಬಾಜಿಸುತ್ತ ಮತ್ತನಾಗಿ ಪರಮಹಂಸರೊಡನೆ ಹಾಡುತ್ತಿದ್ದಾನೆ:
ಮಧುರ ಬ್ರಹ್ಮನಾಮವನ್ನು ಜಪಿಸು ಹರುಷಮುಖದಲಿ
ಸುಧಾಸಿಂಧು ಉಕ್ಕಿಬರಲಿ ತುಂಬಿದಂಥ ಎದೆಯಲಿ………
ಕೀರ್ತನೆ ಮುಗಿದನಂತರ ಪರಮಹಂಸರು ನರೇಂದ್ರನನ್ನು ಹಿಡಿದು ಆಗಾಗ ಆಲಿಂಗನೆ ಮಾಡಿಕೊಳ್ಳುತ್ತ ಹೇಳುತ್ತಿದ್ದಾರೆ: “ನೀನು ನಮ್ಮನ್ನು ಬಹಳವಾಗಿ ಆನಂದಪಡಿಸಿಬಿಟ್ಟೆ!” ಇಂದು ಪರಮಹಂಸರ ಹೃದಯದಲ್ಲಿ ಪ್ರೇಮದ ಬುಗ್ಗೆ ಸುಮ್ಮನೆ ಉಕ್ಕುತ್ತಿದೆ. ಆಗಲೆ ರಾತ್ರಿ ಎಂಟು ಘಂಟೆಯಾಗಿಬಿಟ್ಟಿದೆ. ಆದರೂ ಅವರು ಪ್ರೇಮೋನ್ಮತ್ತರಾಗಿ ಏಕಾಕಿಯಾಗಿ ಉತ್ತರ ವರಾಂಡದಲ್ಲಿ ತಿರುಗಾಡುತ್ತಿದ್ದಾರೆ. ಆಗಾಗ ಭಗವತಿಯೊಡನೆ ಏನೇನೊ ಮಾತಾಡಿಕೊಳ್ಳುತ್ತಿದ್ದಾರೆ. ಇದ್ದಕ್ಕಿದ್ದ ಹಾಗೆ ಆವೇಶಗೊಂಡು ಹೇಳುತ್ತಿದ್ದಾರೆ: “ನನಗೇನು ನೀನು ಮಾಡಬಲ್ಲೆ?” ಭಗವತಿ ಯಾರ ಸಹಾಯಕಳಾಗಿದ್ದಳೊ ಆತನನ್ನು ಆಕೆಯ ಮಾಯೆ ಏನುತಾನೆ ಮಾಡಬಲ್ಲದು ಎಂಬುದಾಗಿ ಪರಮಹಂಸರು ಸೂಚಿಸುತ್ತಿದ್ದಾರೇನು?
ನರೇಂದ್ರ, ಮಾಸ್ಟರ್, ಪ್ರಿಯ ಮೂವರೂ ತಮ್ಮ ರಾತ್ರಿಯನ್ನು ಅಲ್ಲೇಕಳೆಯುವುದಾಗಿ ನಿಶ್ಚಯಿಸಿದ್ದಾರೆ. ರಾತ್ರಿಯನ್ನು ನರೇಂದ್ರನು ತಮ್ಮೊಡನೆ ಕಳೆಯುತ್ತಾನೆ ಎಂಬುದನ್ನು ಕೇಳಿ ಪರಮಹಂಸರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಶ್ರೀಶಾರದಾದೇವಿಯವರು ನಹಬತ್ಖಾನೆಯಲ್ಲಿ ವಾಸವಾಗಿದ್ದಾರೆ. ಅವರು ಅಡಿಗೆ ಮಾಡಿ ಪರಮಹಂಸರ ಕೊಠಡಿಯ ನೈಋತ್ಯ ದಿಕ್ಕಿನಲ್ಲಿರುವ ವರಾಂಡಕ್ಕೆ ಕಳುಹಿಸಿಕೊಟ್ಟರು. ಭಕ್ತರು ಇಂದಿನ ಹಾಗೆ ಆಗಾಗ ಪರಮಹಂಸರೊಡನೆ ಉಳಿದುಕೊಳ್ಳುತ್ತಿದ್ದರು. ಸುರೇಂದ್ರ ಪರಮಹಂಸರ ಖರ್ಚುವೆಚ್ಚದ ಸ್ವಲ್ಪಭಾಗವನ್ನು ಹೊರುತ್ತಿದ್ದ.
ಪರಮಹಂಸರ ಕೊಠಡಿಯ ಪೂರ್ವಬಾಗಿಲಿನ ಹತ್ತಿರ ನರೇಂದ್ರನೇ ಮೊದಲಾದವರು ಕುಳಿತು ಹರಟುತ್ತಿದ್ದಾರೆ.
ನರೇಂದ್ರ: “ಈಗಿನ ಕಾಲದ ಹುಡುಗರು ನಿಮಗೆ ಹೇಗೆ ಕಾಣುತ್ತಾರೆ?”
ಮಾಸ್ಟರ್: “ಕೆಟ್ಟವರೇನಲ್ಲ; ಆದರೆ ಅವರಿಗೆ ಧರ್ಮೋಪದೇಶ ದೊರೆಯುತ್ತಿಲ್ಲ.”
ನರೇಂದ್ರ: “ನನ್ನ ಕಣ್ಣಿಗೆ ಬೀಳುತ್ತಿರುವುದನ್ನು ನೋಡಿದರೆ, ನನಗನಿಸುತ್ತಿದೆ ಅವರು ಹಾಳಾಗಿ ಹೋಗುತ್ತಿದ್ದಾರೆ. ಸಿಗರೇಟು ಸೇದುತ್ತಿದ್ದಾರೆ; ಗುರುಹಿರಿಯರಿಗೆ ಗೌರವ ತೋರಿಸುತ್ತಿಲ್ಲ. ದುಂದು ಪೋಷಾಕು ಹಾಕುತ್ತಾರೆ. ಸ್ಕೂಲಿಗೆ ಚಕ್ಕರ್ ಕೊಡುತ್ತಾರೆ. ಇನ್ನೂ ಏನೇನೊ ಮಾಡುತ್ತಾರೆ. ಇಷ್ಟೇ ಅಲ್ಲ, ಕೆಟ್ಟ ಸ್ಥಳಗಳಿಗೆ ಅವರು ಹೋಗಿಬರುವುದನ್ನೂ ನೋಡಿದ್ದೇನೆ.”
ಮಾಸ್ಟರ್: “ನಾವು ಓದುತ್ತಿದ್ದಾಗ ಈ ರೀತಿಯಾಗೆಲ್ಲ ಕಂಡದ್ದೂ ಇಲ್ಲ, ಕೇಳಿಯೂ ಇಲ್ಲ.”
ನರೇಂದ್ರ: “ಬಹುಶಃ ನೀವು ಹೆಚ್ಚಾಗಿ ಹುಡುಗರೊಡನೆ ಬೆರೆಯುತ್ತಿರಲಿಲ್ಲ ಅಂತ ಕಾಣುತ್ತದೆ. ನೀತಿಬಾಹಿರರು ಕೂಡ ಹುಡುಗರ ಹೆಸರು ಹಿಡಿದು ಕರೆಯುವುದನ್ನು ನೋಡಿದ್ದೇನೆ. ಹಿಂದೆ ಅವರೊಡನೆ ಅವರು ಯಾವಾಗ ಬೆರೆತಿದ್ದರೊ ಏನೊ ಯಾರಿಗೆ ಗೊತ್ತು?”
ಮಾಸ್ಟರ್: “ಏನು ವಿಚಿತ್ರ ನಡವಳಿಕೆ ಇದು?”
ನರೇಂದ್ರ: “ನನಗೆ ಗೊತ್ತಿದೆ ಅನೇಕರು ನೀತಿಬಾಹಿರರಾಗಿಬಿಟ್ಟಿದ್ದಾರೆ. ಸ್ಕೂಲಿನ ಮುಖ್ಯಾಧಿಕಾರಿಗಳು ಮತ್ತು ತಂದೆತಾಯಿಗಳು ಈ ಕಡೆಗೆ ಒಂದಿಷ್ಟು ಕಣ್ಣಿಟ್ಟರೆ ಬಹಳ ಒಳ್ಳೆಯದಾಗುತ್ತದೆ.”
ಈ ರೀತಿಯಾಗಿ ಮಾತುಕತೆ ನಡೆಯುತ್ತಿರುವಾಗ ಪರಮಹಂಸರು ಅವರ ಹತ್ತಿರಕ್ಕೆ ಬಂದು ನಗುತ್ತ ನಗುತ್ತ ಕೇಳುತ್ತಿದ್ದಾರೆ: “ಏನು ಸಮಾಚಾರ? ಯಾವ ರಾಜ್ಯವನ್ನು ಗೆಲ್ಲುತ್ತಿದ್ದೀರಿ?”
ನರೇಂದ್ರ: “ಏನಿಲ್ಲ; ಇವರೊಡನೆ ಸ್ಕೂಲಿನ ಸಂಬಂಧವಾಗಿ ಮಾತುಕತೆ ಆಡುತ್ತಿದ್ದೆ. ಈಗಿನ ಕಾಲದ ಹುಡುಗರ ನಡತೆ ಅಷ್ಟು ಸಮರ್ಪಕವಾಗಿಲ್ಲ.”
ಪರಮಹಂಸರು ಗಂಭೀರಮುದ್ರೆ ತಾಳಿ ಸ್ವಲ್ಪ ರೇಗಿಯೇ ಮಾಸ್ಟರಿಗೆ ಹೇಳುತ್ತಿದ್ದಾರೆ: “ಈ ವಿಧವಾದ ಮಾತುಕತೆ ಒಳ್ಳೆಯದಲ್ಲ. ಭಗವಂತನ ಸಂಬಂಧವಾಗಿ ಆಡುವ ಮಾತುಕತೆ ಬಿಟ್ಟರೆ ಉಳಿದುದು ಯಾವುದೂ ಶ್ರೇಯಸ್ಕರವಲ್ಲ. ನೀನು ಇವರೆಲ್ಲರಿಗಿಂತ ವಯಸ್ಸಿನಲ್ಲಿ ದೊಡ್ಡವನು; ಬುದ್ಧಿ ಬಂದಿದೆ. ಈ ವಿಧವಾದ ಮಾತುಕತೆ ಎತ್ತಲೂ ಅವಕಾಶ ಕೊಡಬಾರದಾಗಿತ್ತು.”
ನರೇಂದ್ರನಿಗೆ ವಯಸ್ಸು ಹದಿನೆಂಟೊ ಹತ್ತೊಂಬತ್ತೊ, ಮಾಸ್ಟರಿಗೆ ಇಪ್ಪತ್ತೇಳೊ ಇಪ್ಪತ್ತೆಂಟೊ. ಮಾಸ್ಟರ್ ದಿಗ್ಭ್ರಮೆ ಹಿಡಿದಂತವನಾದ. ಉಳಿದವರೂ ಸುಮ್ಮನೆ ಕುಳಿತುಕೊಂಡರು.
ಭಕ್ತರೆಲ್ಲರೂ ಊಟ ಮಾಡುತ್ತಿರುವಾಗ ಪರಮಹಂಸರು ಅವರ ಹತ್ತಿರ ನಿಂತು ಅವರನ್ನು ಆನಂದಪಡಿಸುತ್ತಿದ್ದಾರೆ. ಪರಮಹಂಸರು ಇಂದು ಮಹಾ ಆನಂದದಲ್ಲಿದ್ದಾರೆ.
ನರೇಂದ್ರನೇ ಮೊದಲಾದವರು ಊಟ ಮುಗಿಸಿಕೊಂಡ ನಂತರ ಪರಮಹಂಸರ ಕೊಠಡಿಯಲ್ಲಿ ಮಂದಲಿಗೆ ಮೇಲೆ ಕುಳಿತು ವಿಶ್ರಮಿಸಿಕೊಳ್ಳುತ್ತಿದ್ದಾರೆ. ಪರಮಹಂಸರೂ ಅವರ ಹತ್ತಿರ ಕುಳಿತು ಮಾತುಕತೆ ಆಡುತ್ತಿದ್ದಾರೆ. ಆನಂದದ ಕೂಟವೇ ಸೇರಿದಂತಿದೆ. ಮಾತು ಆಡುತ್ತ ಆಡುತ್ತ ಪರಮಹಂಸರು ನರೇಂದ್ರನಿಗೆ ಹೇಳಿದರು: ‘ಉದಯಿಪನದೊ ಚಿದಾಕಾಶದಲ್ಲಿ ಪೂರ್ಣ ಇಂದು’ ಎಂಬ ಹಾಡನ್ನು ಹಾಡು.”
ನರೇಂದ್ರ ಹಾಡುತ್ತಿದ್ದಾನೆ; ಉಳಿದವರು ಮೃದಂಗ, ಕರತಾಳ ಬಾಜಿಸುತ್ತಿದ್ದಾರೆ:
ಉದಯಿಪನದೊ ಚಿದಾಕಾಶದಲ್ಲಿ ಪೂರ್ಣ ಇಂದು
ಪ್ರೇಮಸಿಂಧು ಉಕ್ಕಿ ಹರಿದು ಲೋಕಗಳೇ ನಾಂದು!…..
ಪರಮಹಂಸರೂ ನರೇಂದ್ರನೊಡನೆ ಕೂಡಿ ಹಾಡುತ್ತ ನರ್ತಿಸಲಾರಂಭಿಸಿದ್ದಾರೆ. ಭಕ್ತರೂ ಅವರ ಸುತ್ತ ಸುತ್ತುತ್ತ ನರ್ತಿಸುತ್ತಿದ್ದಾರೆ.
ಕೀರ್ತನೆ ಮುಗಿದನಂತರ ಪರಮಹಂಸರು ಈಶಾನ್ಯ ವರಾಂಡದಲ್ಲಿ ತಿರುಗಾಡುತ್ತಿದ್ದಾರೆ. ಹಾಜರಾ ಮತ್ತು ಮಾಸ್ಟರ್ ಅದರ ಉತ್ತರ ಕೊನೆಯಲ್ಲಿ ಕುಳಿತು ಮಾತುಕತೆ ಆಡುತ್ತಿದ್ದಾರೆ. ಈಗ ಪರಮಹಂಸರೂ ಅಲ್ಲಿಗೆ ಬಂದು ಕುಳಿತುಕೊಂಡರು. ಒಬ್ಬ ಭಕ್ತನನ್ನು ಕೇಳುತ್ತಿದ್ದಾರೆ: “ನಿನಗೆ ಸ್ವಪ್ನ ಬೀಳುತ್ತದೆಯೆ?”
ಭಕ್ತ: “ಹೌದು. ಅಂದು ಒಂದು ವಿಚಿತ್ರ ಸ್ವಪ್ನ ಕಂಡೆ. ಈ ಜಗತ್ತು ಯಾವ ಕಡೆಗೆ ನೋಡಿದರೂ ನೀರೇ ನೀರಾಗಿ ಅನಂತ ಜಲರಾಶಿಯಾಗಿ ಕಂಡಿತು. ಕೆಲವು ದೋಣಿಗಳು ತೇಲಾಡುತ್ತಿದ್ದುವು. ಇದ್ದಕ್ಕಿದ್ದ ಹಾಗೆ ಅಲೆಗಳು ಬಂದು ಅವನ್ನು ಮುಳುಗಿಸಿಬಿಟ್ಟವು. ನಾನೂ ಇನ್ನು ಕೆಲವರೂ ಒಂದು ಜಹಜಿನಲ್ಲಿ ಇದ್ದೆವು. ಒಬ್ಬ ಬ್ರಾಹ್ಮಣರು ಆ ವಿಶಾಲವಾದ ಜಲರಾಶಿಯ ಮೇಲೆ ಸುಮ್ಮನೆ ನಡೆದು ಹೋಗುತ್ತಿರುವುದು ಕಣ್ಣಿಗೆ ಬಿತ್ತು. ನಾನು ಅವರನ್ನು ಕೇಳಿದೆ: ‘ತಾವು ನೀರಿನ ಮೇಲೆ ನಡೆದು ಹೋಗುತ್ತಿದ್ದೀರಲ್ಲ, ಅದು ಹೇಗೆ?’ ಆ ಬ್ರಾಹ್ಮಣ ಸ್ವಲ್ಪ ನಕ್ಕು ಹೇಳಿದರು: ‘ಕಷ್ಟವೇನಿಲ್ಲ; ನೀರಿನ ಕೆಳಗೆ ಸೇತುವೆ ಇದೆ.’ ಮತ್ತೆ ಕೇಳಿದೆ: ‘ತಾವು ಎಲ್ಲಿಗೆ ಹೋಗುತ್ತಿದ್ದೀರಿ?’ ಅವರು ಉತ್ತರ ಕೊಟ್ಟರು. “ಭವಾನೀಪುರಕ್ಕೆ.’ ನಾನು ಬೇಡಿಕೊಂಡೆ : ‘ಹಾಗಾದರೆ ಸ್ವಲ್ಪ ತಾಳಿ; ನಾನೂ ನಿಮ್ಮೊಡನೆ ಬರುತ್ತೇನೆ.”’
ಶ್ರೀರಾಮಕೃಷ್ಣರು: “ಇದನ್ನು ಕೇಳಿ ನನಗೆ ರೋಮಾಂಚನವಾಗುತ್ತಿದೆ.”
ಭಕ್ತ: “ಆ ಬ್ರಾಹ್ಮಣರು ಹೇಳಿದರು: ‘ನಾನು ಬಹಳ ಆತುರದಲ್ಲಿದ್ದೇನೆ. ಅಲ್ಲಿಂದ ಇಳಿದು ಬರುವುದಕ್ಕೆ ನಿನಗೆ ಸಮಯ ಹಿಡಿಯುತ್ತದೆ. ನಾನು ಹೋಗಿಬರುತ್ತೇನೆ. ಈ ದಾರಿಯನ್ನು ನೋಡಿಕೊಂಡಿರು, ಆಮೇಲೆ ಬರುವೆಯಂತೆ.”’
ಶ್ರೀರಾಮಕೃಷ್ಣರು: “ರೋಮಾಂಚನವಾಗುತ್ತಿದೆ. ನೀನು ಬೇಗ ಮಂತ್ರೋಪದೇಶ ಪಡೆದುಕೊ.”
ಘಂಟೆ ರಾತ್ರಿ ಹನ್ನೊಂದು. ನರೇಂದ್ರನೇ ಮೊದಲಾದವರು ಪರಮಹಂಸರ ಕೊಠಡಿಯಲ್ಲಿ ಹಾಸಿಗೆ ಹಾಕಿಕೊಂಡು ಮಲಗಿಕೊಂಡರು.
ಭಕ್ತರಲ್ಲಿ ಕೆಲವರು ನಿದ್ದೆಯಿಂದ ಎಚ್ಚರಗೊಂಡು ನೋಡುತ್ತಾರೆ. ಆಗಲೆ ಬೆಳಗಾಗಿ ಬಿಟ್ಟಿದೆ. ಪರಮಹಂಸರು ಮಗುವಿನ ಹಾಗೆ ದಿಗಂಬರರಾಗಿ ಭಗವನ್ನಾಮ ಜಪಿಸುತ್ತ ಕೊಠಡಿಯಲ್ಲಿ ತಿರುಗಾಡುತ್ತಿದ್ದಾರೆ. ಒಮ್ಮೊಮ್ಮೆ ಗಂಗಾದರ್ಶನ ಮಾಡುತ್ತ ಒಮ್ಮೊಮ್ಮೆ ದೇವದೇವಿಯರ ಪಟಗಳ ಹತ್ತಿರ ಹೋಗಿ ಪ್ರಣಾಮ ಮಾಡುತ್ತ, ಒಮ್ಮೊಮ್ಮೆ ತಮ್ಮ ಮಧುರಕಂಠದಿಂದ ಭಗವನ್ನಾಮ ಕೀರ್ತನೆ ಮಾಡುತ್ತ ಸುತ್ತಾಡುತ್ತಿದ್ದಾರೆ. ಇನ್ನು ಕೆಲವು ವೇಳೆ ಹೇಳುತ್ತಿದ್ದಾರೆ: “ವೇದ, ಪುರಾಣ, ಮಂತ್ರ, ಗೀತೆ, ಗಾಯತ್ರಿ, ಭಾಗವತ, ಭಕ್ತ, ಭಗವಾನ್” ಎಂಬುದಾಗಿ. ಗೀತೆಯನ್ನು ಉದ್ದೇಶಿಸಿ ಪದೇಪದೇ ಹೇಳುತ್ತಿದ್ದಾರೆ: “ತ್ಯಾಗಿ, ತ್ಯಾಗಿ, ತ್ಯಾಗಿ” ಎಂಬುದಾಗಿ. ಮತ್ತೆ ಕೆಲವು ವೇಳೆ ಹೇಳುತ್ತಿದ್ದಾರೆ: “ತಾಯೆ, ನೀನೇ ಬ್ರಹ್ಮ, ನೀನೇ ಶಕ್ತಿ, ಪ್ರಕೃತಿ, ನೀನೇ ಲೀಲಾಮಯಿ, ನೀನೇ ಚತುರ್ವಿಂಶತಿ ತತ್ತ್ವಗಳು.”
ಇಷ್ಟರಲ್ಲೆ ಕಾಳೀದೇವಾಲಯದಲ್ಲಿ ಮತ್ತು ರಾಧಾಕಾಂತ ದೇವಾಲಯದಲ್ಲಿ ಮಂಗಳಾರತಿ ಆರಂಭವಾಗಿಬಿಟ್ಟಿತು. ಶಂಖ ಗಂಟೆ ಜಾಗಟೆಗಳ ಶಬ್ದ ಕೇಳಿಬರುತ್ತಿದೆ. ಭಕ್ತರು ಹಾಸಿಗೆಯಿಂದ ಎದ್ದು ಹೊರಗೆ ಬಂದು ನೋಡುತ್ತಾರೆ, ಆಗಲೇ ಪೂಜಾರಿಗಳು ಮತ್ತು ಸೇವಕರು ಪೂಜೆಗಾಗಿ ತೋಟದಲ್ಲಿ ಹೂವು ಕೊಯ್ಯುತ್ತಿದ್ದಾರೆ. ನಹಬತ್ಖಾನೆಯಿಂದ ಉದಯರಾಗ ಹೊರಹೊಮ್ಮುತ್ತಿದೆ.
ನರೇಂದ್ರಾದಿ ಭಕ್ತರು ಪ್ರಾತಃಕೃತ್ಯಗಳನ್ನೆಲ್ಲ ಮುಗಿಸಿಕೊಂಡು ಪರಮಹಂಸರ ಹತ್ತಿರ ಬಂದು ನಿಂತುಕೊಂಡಿದ್ದಾರೆ. ಪರಮಹಂಸರು ನಗುಮುಖರಾಗಿ ಈಶಾನ್ಯದಿಕ್ಕಿನ ವರಾಂಡದ ಪಶ್ಚಿಮ ಕೊನೆಯಲ್ಲಿ ನಿಂತುಕೊಂಡಿದ್ದಾರೆ.
ನರೇಂದ್ರ: “ಪಂಚವಟಿಗೆ ಕೆಲವು ಮಂದಿ ನಾನಕ್ಪಂಥದ ಸಾಧುಗಳು ಬಂದಿದ್ದಾರೆ.”
ಶ್ರೀರಾಮಕೃಷ್ಣರು: “ಹೌದು, ಬಂದಿದ್ದಾರೆ. ಅವರು ನಿನ್ನೆ ಬಂದರು. (ನರೇಂದ್ರನಿಗೆ) ನೀವೆಲ್ಲರೂ ಒಟ್ಟಿಗೆ ಮಂದಲಿಗೆ ಮೇಲೆ ಕುಳಿತುಕೊಳ್ಳಿ ನೋಡೋಣ.”
ಎಲ್ಲರೂ ಮಂದಲಿಗೆ ಮೇಲೆ ಕುಳಿತುಕೊಂಡರು. ಪರಮಹಂಸರು ತಮ್ಮ ಆನಂದದ ದೃಷ್ಟಿಯನ್ನು ಅವರ ಕಡೆ ಬೀರುತ್ತ ಅವರೊಡನೆ ಮಾತುಕತೆ ಆಡುತ್ತಿದ್ದಾರೆ. ನರೇಂದ್ರ ಸಾಧನೆಯ ಸಂಬಂಧವಾಗಿ ಮಾತು ಎತ್ತಿದ.
ಶ್ರೀರಾಮಕೃಷ್ಣರು: “ಭಕ್ತಿಯೇ ಸಾರ. ಭಗವಂತನನ್ನು ಪ್ರೀತಿಸಿದ್ದೇ ಆದರೆ ವಿವೇಕ ವೈರಾಗ್ಯ ಹೇಳದೆ ಕೇಳದೆ ಬಂದುಬಿಡುತ್ತದೆ.”
ನರೇಂದ್ರ: “ಒಳ್ಳೇದು, ಹೆಂಗಸಿನ ಸಹಾಯದಿಂದ ಸಾಧನೆಯಲ್ಲಿ ತೊಡಗುವುದರ ವಿಷಯವಾಗಿ ತಂತ್ರದಲ್ಲಿ ಹೇಳಿದೆಯಲ್ಲವೆ?”
ಶ್ರೀರಾಮಕೃಷ್ಣರು: “ಅಂಥವೆಲ್ಲ ಒಳ್ಳೆ ಮಾರ್ಗವಲ್ಲ. ಬಹಳ ಕಠಿಣ ಮಾರ್ಗ. ಅನೇಕ ವೇಳೆ ಅಧಃಪತನವಾಗುವ ಸಂಭವ. ವೀರಭಾವ, ದಾಸೀಭಾವ, ಮಾತೃಭಾವ, ಇವುಗಳಿಂದ ಸಾಧನೆಯಲ್ಲಿ ತೊಡಗಬಹುದು. ನನ್ನದು ಮಾತೃಭಾವ. ದಾಸೀಭಾವವೂ ಒಳ್ಳೆಯದೆ. ವೀರಭಾವದ ಸಾಧನೆ ಬಹಳ ಕಠಿನವಾದ್ದು. ಸಂತಾನಭಾವ ಶುದ್ಧವಾದ ಭಾವ.”
ನಾನಕ್ಪಂಥದ ಸಾಧುಗಳು ಕೊಠಡಿಗೆ ಬಂದು “ನಮೋ ನಾರಾಯಣ” ಎಂಬುದಾಗಿ ಪರಮಹಂಸರಿಗೆ ಅಭಿವಂದನೆ ಅರ್ಪಿಸಿದರು. ಪರಮಹಂಸರು ಅವರಿಗೆ ಕುಳಿತುಕೊಳ್ಳುವಂತೆ ಹೇಳುತ್ತಿದ್ದಾರೆ. ಶ್ರೀರಾಮಕೃಷ್ಣರು: “ಭಗವಂತನಿಗೆ ಯಾವುದೂ ಅಸಾಧ್ಯವಲ್ಲ. ಅವನ ಸ್ವರೂಪ ಏನೆಂಬುದನ್ನು ಯಾರಿಂದಲೂ ಬಾಯಿಂದ ವರ್ಣಿಸಲಾಗುವುದಿಲ್ಲ. ಭಗವಂತನ ಕೈಯಲ್ಲಿ ಎಲ್ಲವೂ ಸಾಧ್ಯ. ಒಂದು ಕಡೆ ಇಬ್ಬರು ಯೋಗಿಗಳು ಸಾಧನೆಯಲ್ಲಿ ತೊಡಗಿದ್ದರು. ನಾರದ ಋಷಿ ಆ ಮಾರ್ಗವಾಗಿ ಒಂದು ದಿನ ಮುಂದುವರಿಯುತ್ತಿದ್ದರು. ಒಬ್ಬ ಯೋಗಿ ನಾರದರ ಪರಿಚಯ ಮಾಡಿಕೊಂಡು ಅವರನ್ನು ಕೇಳಿದ: ‘ನೀವು ನಾರಾಯಣನ ಸಾನ್ನಿಧ್ಯದಿಂದ ಬರುತ್ತಾ ಇದ್ದೀರಲ್ಲವೆ? ಆತ ಏನು ಮಾಡುತ್ತಾ ಇದ್ದಾನೆ?’ ನಾರದರು ಹೇಳಿದರು: ‘ಈಗ ತಾನೆ ನೋಡಿಕೊಂಡು ಬಂದೆ. ಆತ ಸೂಜಿಯ ಕಣ್ಣಿನ ಮೂಲಕ ಆನೆ ಮತ್ತು ಒಂಟೆಗಳನ್ನು ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ಹುಗಿಸುತ್ತಾ ಇರುವುದನ್ನು.’ ಅವರಲ್ಲಿ ಒಬ್ಬ ಹೇಳಿದ: ‘ಅದರಲ್ಲಿ ಆಶ್ಚರ್ಯಪಡುವುದೇನಿದೆ? ಆತನಿಗೆ ಎಲ್ಲವೂ ಸಾಧ್ಯ.’ ಆದರೆ ಇನ್ನೊಬ್ಬ ವಿಸ್ಮಯದಿಂದ ಕೇಳಿದ: ‘ಏನು! ಅದು ಎಂದಿಗಾದರೂ ಸಾಧ್ಯವೆ? ನೀವು ಅಲ್ಲಿಗೆ ಹೋಗಲೇ ಇಲ್ಲ ಅಂತ ಕಾಣುತ್ತದೆ!”’
ಘಂಟೆ ಸುಮಾರು ಒಂಬತ್ತು. ಪರಮಹಂಸರು ತಮ್ಮ ಕೊಠಡಿಯಲ್ಲಿ ಕುಳಿತಿದ್ದಾರೆ. ಮನಮೋಹನ ತನ್ನ ಮನೆಯವರೊಡನೆ ಕೊನ್ನಗರದಿಂದ ಬಂದು ಪರಮಹಂಸರಿಗೆ ಪ್ರಣಾಮ ಮಾಡಿ ಹೇಳುತ್ತಿದ್ದಾನೆ: ‘ನಾನು ಇವರನ್ನೆಲ್ಲ ಕಲ್ಕತ್ತಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ.’ ಪರಮಹಂಸರು ಆತನ ಕ್ಷೇಮಸಮಾಚಾರ ವಿಚಾರಿಸಿ ಹೇಳುತ್ತಿದ್ದಾರೆ: “ಇಂದು ಶುಭದಿವಸವಲ್ಲ. ಆದರೂ ಕಲ್ಕತ್ತಕ್ಕೆ ಕರೆದುಕೊಂಡು ಹೋಗುತ್ತಲಿದ್ದೀಯೆ; ಏನಾಗುತ್ತೊ?” ಹೀಗೆಂದು ಹೇಳಿ ಸ್ವಲ್ಪ ನಕ್ಕು ಈಗ ಬೇರೆ ವಿಷಯವಾಗಿ ಮಾತುಕತೆ ಆಡುತ್ತಿದ್ದಾರೆ.
ನರೇಂದ್ರ ಮತ್ತು ಆತನ ಸ್ನೇಹಿತರು ಸ್ನಾನ ಮಾಡಿ ಬಂದರು. ಪರಮಹಂಸರು ನರೇಂದ್ರನಿಗೆ ಅಕ್ಕರೆಯಿಂದ ಹೇಳುತ್ತಿದ್ದಾರೆ: “ಹೋಗು, ಆಲದ ಮರದ ಕೆಳಗೆ ಕುಳಿತು ಧ್ಯಾನಮಾಡು ಹೋಗು. ಆಸನ ಬೇಕೆ?”
ಘಂಟೆ ಹತ್ತೂವರೆ. ನರೇಂದ್ರ ತನ್ನ ಸ್ನೇಹಿತರೊಡನೆ ಪಂಚವಟಿಯಲ್ಲಿ ಧ್ಯಾನಮಾಡುತ್ತಿದ್ದಾನೆ. ಪರಮಹಂಸರು ಸ್ವಲ್ಪ ಹೊತ್ತಾದ ಮೇಲೆ ಅಲ್ಲಿಗೆ ಬಂದರು. ಮಾಸ್ಟರೂ ಅಲ್ಲಿ ಕುಳಿತಿದ್ದಾನೆ. ಈಗ ಅವರು ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಬ್ರಾಹ್ಮಭಕ್ತರಿಗೆ ಹೇಳುತ್ತಿದ್ದಾರೆ: “ಧ್ಯಾನದ ಸಮಯದಲ್ಲಿ ಭಗವದ್ಭಾವನೆಯಲ್ಲೇ ಮಗ್ನರಾಗಿಬಿಡಬೇಕು. ಮೇಲೆಮೇಲೆ ತೇಲಿದರೆ ನೀರಿನ ತಳದಲ್ಲಿರುವ ರತ್ನ ದೊರೆಯುವುದೆ?”
ಹೀಗೆಂದು ಹೇಳಿ ಪರಮಹಂಸರು ಹಾಡುತ್ತಾರೆ:
ಜೈ ಕಾಳಿ ಎನ್ನುತ್ತ ಹೃದಯರತ್ನಾಕರನ
ಅಗಾಧ ಆಳಕ್ಕೆ ಮುಳುಗು ಮನವೇ,
ಮೊದಲೆರಡು ಸಲ ನೀನು ವಿಫಲನಾದರೆ ಒಳಗೆ
ಬರಿ ಶೂನ್ಯವೆಂದಿದನು ತೆಗಳಬೇಡ,
ದೃಢಮನದ ಸಂಯಮದಿ ಕುಲಕುಂಡಲಿನಿ ಕೂಲ-
ದೊಳಗಿಳಿದು ಅನುಭವವ ಪಡೆದು ನೋಡ!
ಜ್ಞಾನಸಾಗರದೊಳಗೆ ಶಾಂತಿ ಮುಕ್ತಾಫಲದ
ಭಂಡಾರವಿದೆ ಹೋಗು ಅದನು ಗಳಿಸು.
ಆಹಾರ ಲೋಭದಲಿ ಅಲೆವ ಅರಿವರ್ಗಗಳ
ವಿವೇಕ ಲೇಪನದಿ ದೂರಗೊಳಿಸು.
ರಾಮಪ್ರಸಾದನನು ಕೇಳು ಹೇಳುವನವನು;
ಅಂತರಂಗದೊಳಿರುವ ಅನಂತ ರತ್ನವನು
ಮುಳುಗಿ ಮೇಲಕೆ ತಂದು ನೀನು ಧರಿಸು.
ನರೇಂದ್ರ ಮತ್ತು ಆತನ ಸ್ನೇಹಿತರು ತಮ್ಮ ತಮ್ಮ ಆಸನಗಳಿಂದ ಕೆಳಕ್ಕೆ ಇಳಿದು ಬಂದು ಪರಮಹಂಸರ ಹತ್ತಿರ ನಿಂತುಕೊಂಡರು. ಪರಮಹಂಸರು ಅವರೊಡನೆ ಮಾತುಕತೆಯಾಡುತ್ತ ತಮ್ಮ ಕೊಠಡಿ ಕಡೆಗೆ ನಡೆದುಬರುತ್ತಿದ್ದಾರೆ. ಅವರು ಹೇಳುತ್ತಿದ್ದಾರೆ ‘ಸಾಗರದಲ್ಲಿ ಮುಳುಗುಹಾಕಿದರೆ ಮೊಸಳೆ ಹಿಡಿದುಕೊಂಡುಬಿಡಬಹುದು. ಆದರೆ ಮೈಗೆ ಅರಸಿನ ಹಚ್ಚಿಕೊಂಡರೆ ಅದು ಹತ್ತಿರವೇ ಬರುವುದಿಲ್ಲ. ನಿಜ, ಹೃದಯರತ್ನಾಕರದ ಅಂತರಾಳದಲ್ಲಿ ಕಾಮಾದಿ ಷಡ್ರಿಪುಗಳು ಇವೆ. ಆದರೆ ವಿವೇಕ-ವೈರಾಗ್ಯ ಎಂಬ ಅರಸಿನವನ್ನು ಹಚ್ಚಿಕೊಂಡು ಬಿಟ್ಟದ್ದೇ ಆದರೆ ಅವು ಹತ್ತಿರಕ್ಕೇ ಸುಳಿಯವು.
“ವಿವೇಕ-ವೈರಾಗ್ಯಗಳಿಸಿಕೊಳ್ಳದೆ, ಪಾಂಡಿತ್ಯಗಳಿಸಿಕೊಂಡರೆ, ಉಪನ್ಯಾಸ ಕೊಟ್ಟರೆ ಏನು ಪ್ರಯೋಜನ ? ಭಗವಂತನೊಬ್ಬನೇ ಸತ್ಯ; ಉಳಿದುದೆಲ್ಲಾ ಅನಿತ್ಯ; ಆತನೊಬ್ಬನೇ ವಸ್ತು, ಉಳಿದುದೆಲ್ಲಾ ಅವಸ್ತು. ಇದಕ್ಕೇ ವಿವೇಕ ಅಂತ ಹೆಸರು.
“ಮೊದಲು ಹೃದಯಮಂದಿರದಲ್ಲಿ ಭಗವಂತನನ್ನು ಪ್ರತಿಷ್ಠಾಪನೆ ಮಾಡಿಕೊಳ್ಳಿ. ಬಳಿಕ ಇಚ್ಛೆಯಾದರೆ ಲೆಕ್ಚರ್ ಕೊಡಿ. ವಿವೇಕ-ವೈರಾಗ್ಯ ಗಳಿಸಿಕೊಳ್ಳದೆ ಕೇವಲ ‘ಬ್ರಹ್ಮ, ಬ್ರಹ್ಮ’ ಅಂತ ಹೇಳುತ್ತಿದ್ದರೆ ಏನು ದೊರೆತೀತು? ಅದು ಬರೀ ಶಂಖಧ್ವನಿ ಮಾತ್ರ.
“ಒಂದು ಹಳ್ಳಿಯಲ್ಲಿ ಪದ್ಮಲೋಚನ ಎಂಬ ಒಬ್ಬ ಹುಡುಗ ಇದ್ದ. ಜನರು ಆತನನ್ನು ‘ಪೋದೊ, ಪೋದೊ’ ಎಂಬುದಾಗಿ ಕರೆಯುತ್ತಿದ್ದರು. ಅದೇ ಹಳ್ಳಿಯಲ್ಲಿ ಒಂದು ಶಿಥಿಲವಾದ ದೇವಾಲಯ ಇತ್ತು. ಒಳಗೆ ವಿಗ್ರಹವೇ ಇರಲಿಲ್ಲ. ಅದರ ಗೋಡೆಗಳ ಮೇಲೆ ಅಶ್ವತ್ಥವೃಕ್ಷ ಮತ್ತು ಇನ್ನೂ ಏನೇನೊ ಗಿಡಮರಗಳು ಬೆಳೆದುಕೊಂಡಿದ್ದುವು. ದೇವಾಲಯದ ಒಳಗೆ ಬಾವಲಿ ಹಕ್ಕಿಗಳು ವಾಸವಾಗಿದ್ದುವು. ನೆಲ ಅವುಗಳ ಹಿಕ್ಕೆ ಮತ್ತು ಧೂಳಿನಿಂದ ತುಂಬಿತ್ತು. ಅಲ್ಲಿಗೆ ಯಾರೂ ಹೋಗುತ್ತಿರಲಿಲ್ಲ. ಒಂದು ದಿನ ಮುಸ್ಸಂಜೆಯಾದ ಮೇಲೆ ಆ ದೇವಾಲಯದ ಕಡೆಯಿಂದ ಶಂಖಧ್ವನಿ ಬರಲಾರಂಭಿಸಿತು. ಹಳ್ಳಿಯ ಜನರು ಭಾವಿಸಿದರು, ಬಹುಶಃ ದೇವಾಲಯದಲ್ಲಿ ಯಾರೊ ದೇವರನ್ನು ಪ್ರತಿಷ್ಠೆಮಾಡಿರಬೇಕು, ಸಾಯಂ ಮಂಗಳಾರತಿ ನಡೆಯುತ್ತಿದೆ. ಮಕ್ಕಳುಮರಿ, ಗಂಡಸರು, ಹೆಂಗಸರು, ದೊಡ್ಡವರು, ಚಿಕ್ಕವರು ಎಲ್ಲರೂ ದೇವಾಲಯದ ಕಡೆಗೆ ಓಡಿಬಂದರು. ಅವರಲ್ಲಿ ಒಬ್ಬ ಮೆತ್ತಗೆ ಬಾಗಿಲು ತಳ್ಳಿ ನೋಡುತ್ತಾನೆ, ಪದ್ಮಲೋಚನ ಒಂದು ಕಡೆ ನಿಂತುಕೊಂಡು ‘ಭ್ಞೋ! ಭ್ಞೋ!’ ಅಂತ ಶಂಖ ಊದುತ್ತಿದ್ದಾನೆ. ದೇವರನ್ನು ಪ್ರತಿಷ್ಠೆಮಾಡಿಲ್ಲ, ನೆಲವನ್ನು ಗುಡಿಸಿಲ್ಲ, ಸಾರಿಸಿಲ್ಲ. ಹೇರಳವಾಗಿ ಬಾವಲಿ ಹಿಕ್ಕೆ ಬಿದ್ದಿದೆ. ಆಗ ಅವನು ಗಟ್ಟಿಯಾಗಿ ಕೂಗಿ ಪದ್ಮಲೋಚನನಿಗೆ ಹೇಳಿದ:
ಮೂರ್ತಿಯನು ನಿಲಿಸಿಲ್ಲ
ಗುಡಿಯ ಪೀಠದಲಿ
ಆದರೂ ಶಂಖವನು ಊದುತಿರುವೆ!
ಈ ಶಂಖನಾದಕ್ಕೆ ಹೆದರಿ ಬಾವಲಿ ಮಾತ್ರ
ಹಗಲು ಇರುಳೂ ಸುತ್ತ ಹಾರಾಡಿವೆ!
“ಹೃದಯಮಂದಿರದಲ್ಲಿ ಭಗವಂತನನ್ನು ಪ್ರತಿಷ್ಠಾಪಿಸಬೇಕು ಎಂಬುದಾಗಿ ಇಚ್ಛೆಪಡುತ್ತಿದ್ದರೆ, ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು ಎಂಬುದಾಗಿ ಇಚ್ಛೆಪಡುತ್ತಿದ್ದರೆ, ಕೇವಲ ‘ಭ್ಞೋ! ಭ್ಞೋ!’ ಅಂತ ಶಂಖ ಊದಿದರೆ ಏನಾಗುತ್ತದೆ? ಮೊದಲು ಚಿತ್ತಶುದ್ಧಿ ಆಗಬೇಕು. ಮನಸ್ಸು ಶುದ್ಧವಾಯಿತು ಎಂದರೆ, ಭಗವಂತ ಆ ಪವಿತ್ರ ಆಸನದ ಮೇಲೆ ಬಂದು ಕುಳಿತುಕೊಳ್ಳುತ್ತಾನೆ. ಬಾವಲಿಯ ಹಿಕ್ಕೆ ಸುಮ್ಮನೆ ಬಿದ್ದಿದ್ದರೆ ಭಗವಂತನನ್ನು ಪ್ರತಿಷ್ಠಾಪನೆ ಮಾಡಲಾಗುವುದಿಲ್ಲ. ಹನ್ನೊಂದು ಬಾವಲಿ ಎಂಬುವು ನಮ್ಮ ಹನ್ನೊಂದು ಇಂದ್ರಿಯಗಳು. ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ ಮತ್ತು ಮನಸ್ಸು.
“ಮೊದಲು ಭಗವಂತನ ಪ್ರತಿಷ್ಠಾಪನೆ, ಅನಂತರ ಇಚ್ಛೆ ಬಂದರೆ ಉಪನ್ಯಾಸ ಮುಂತಾದವು. ಮೊದಲು ಆಳಕ್ಕೆ ಮುಳುಗು. ಆಳಕ್ಕೆ ಮುಳುಗಿ ರತ್ನ ಆರಿಸಿಕೊ. ಅನಂತರ ಏನು ಬೇಕಾದರೂ ಮಾಡು. ಜನರಿಗೆ ಆಳಕ್ಕೆ ಮುಳುಗಲು ಇಚ್ಛೆ ಇಲ್ಲ. ಸಾಧನೆಯೆ, ಭಜನೆಯೆ, ವಿವೇಕ-ವೈರಾಗ್ಯವೆ, ಯಾವುದನ್ನೂ ಕೇಳಲೇಬೇಡಿ. ಒಂದೆರಡು ಮಾತು ಕಲಿತುಕೊಂಡು ಲೆಕ್ಚರ್ ಹೊಡಿಯುವುದು! ಲೋಕಶಿಕ್ಷಣ ಬಹಳ ಕಠಿಣವಾದ ಕಾರ್ಯ. ಭಗವಂತ ಸಾಕ್ಷಾತ್ಕಾರ ಪಡೆದುಕೊಂಡ ನಂತರ, ಆತನಿಂದ ಆದೇಶ ಪಡೆದುಕೊಂಡದ್ದೇ ಆದರೆ ಆಗ ಲೋಕಶಿಕ್ಷಣ ಕಾರ್ಯ ಸಾಧ್ಯ.”
ಹಾಗೇ ಮಾತಾಡುತ್ತ ಮಾತಾಡುತ್ತ ಪರಮಹಂಸರು ಉತ್ತರ ವರಾಂಡದ ಪಶ್ಚಿಮ ಅಂಚಿನ ಹತ್ತಿರ ಬಂದು ನಿಂತಿದ್ದಾರೆ. ಮಾಸ್ಟರೂ ಅವರ ಹತ್ತಿರ ನಿಂತಿದ್ದಾನೆ. ಪರಮಹಂಸರು ಪದೇಪದೇ ಹೇಳುತ್ತಿದ್ದಾರೆ: “ವಿವೇಕ-ವೈರಾಗ್ಯ ಗಳಿಸಿಕೊಳ್ಳದೆ ಭಗವಂತನನ್ನ ಪಡೆಯಲಾಗುವುದಿಲ್ಲ.” ಮಾಸ್ಟರ್ ವಿವಾಹ ಮಾಡಿಕೊಂಡಿದ್ದಾನೆ. ಆದ್ದರಿಂದ ಆತ ವ್ಯಾಕುಲನಾಗಿ ತನಗೇನು ಗತಿ ಎಂಬುದಾಗಿ ಯೋಚಿಸುತ್ತಿದ್ದಾನೆ. ಆತನಿಗೆ ವಯಸ್ಸು ಇಪ್ಪತ್ತೆಂಟು. ಕಾಲೇಜಿನಲ್ಲಿ ಆಂಗ್ಲ ವಿದ್ಯಾಭ್ಯಾಸ ಮಾಡಿದ್ದಾನೆ. ಯೋಚಿಸುತ್ತಿದ್ದಾನೆ: “ವಿವೇಕ-ವೈರಾಗ್ಯ ಗಳಿಸಿಕೊಳ್ಳುವುದು ಎಂದರೆ ಕಾಮಕಾಂಚನ ತ್ಯಾಗಮಾಡುವುದೆ?”
ಮಾಸ್ಟರ್ ಶ್ರೀರಾಮಕೃಷ್ಣರಿಗೆ: “ಹೆಂಡತಿ ಹೇಳಿದರೆ: ‘ನೀನು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆತ್ಮಹತ್ಯೆಮಾಡಿಕೊಂಡುಬಿಡುತ್ತೇನೆ’ ಅಂತ, ಆಗೇನು ಮಾಡುವುದು?”
ಶ್ರೀರಾಮಕೃಷ್ಣರು ಗಂಭೀರಸ್ವರದಿಂದ: “ಭಗವಂತನ ಸಾಕ್ಷಾತ್ಕಾರಕ್ಕೆ ಅಡ್ಡಬರುವ ಹೆಂಡತಿಯನ್ನು ಬಿಟ್ಟುಬಿಡಬೇಕು. ಅವಳು ಆತ್ಮಹತ್ಯೆಯನ್ನಾದರೂ ಮಾಡಿಕೊಳ್ಳಲಿ, ಏನನ್ನು ಬೇಕಾದರೂ ಮಾಡಿಕೊಳ್ಳಲಿ, ಭಗವಂತನ ಸಾಕ್ಷಾತ್ಕಾರಕ್ಕೆ ಅಡ್ಡಬರುವ ಹೆಂಡತಿ ಅವಿದ್ಯಾ ಸ್ವರೂಪಿಣಿ ಹೆಂಗಸು.”
ಮಾಸ್ಟರ್ ಅತ್ಯಂತ ಚಿಂತೆಯಲ್ಲಿ ಮುಳುಗಿದವನಾಗಿ ಗೋಡೆಗೆ ಒರಗಿಕೊಂಡು ಒಂದು ಕಡೆ ನಿಂತಿದ್ದಾನೆ. ನರೇಂದ್ರನೇ ಮೊದಲಾದ ಭಕ್ತರು ಆಶ್ಚರ್ಯಚಕಿತರಾಗಿ ಸ್ವಲ್ಪ ಹೊತ್ತು ಸುಮ್ಮನೆ ಇದ್ದರು. ಪರಮಹಂಸರು ಅವರೊಡನೆ ಮತ್ತೆ ಮಾತನಾಡುತ್ತಿದ್ದರು, ಇದ್ದಕ್ಕಿದ್ದ ಹಾಗೆ ಮಾಸ್ಟರ್ ಹತ್ತಿರ ಬಂದು ಆತನ ಕಿವಿಗೆ ಹೇಳುತ್ತಿದ್ದಾರೆ: “ಯಾರಿಗೆ ಭಗವಂತನಲ್ಲಿ ಹೃತ್ಪೂರ್ವಕವಾದ ಭಕ್ತಿ ಇದೆಯೊ, ಆತನಿಗೆ ರಾಜ, ಹೆಂಡತಿ, ದುಷ್ಟರು, ಎಲ್ಲರೂ ವಶರಾಗಿ ಬಿಡುತ್ತಾರೆ. ಪತಿಯಲ್ಲಿ ಹೃತ್ಪೂರ್ವಕ ಭಗವದ್ಭಕ್ತಿ ಇತ್ತು ಎಂದರೆ ಹೆಂಡತಿಯೂ ಕ್ರಮೇಣ ಭಗವದಭಿಮುಖಳಾಗಿಬಿಡುತ್ತಾಳೆ. ಪತಿ ಒಳ್ಳೆಯವನಾಗಿದ್ದರೆ ಭಗವಂತನ ಕೃಪೆಯಿಂದ ಸತಿಯೂ ಒಳ್ಳೆಯವಳಾಗಲು ಸಾಧ್ಯವಾಗಬಹುದು.”
ಈ ಮಾತು ಮಾಸ್ಟರನ ಚಿಂತಾಗ್ನಿಯ ಮೇಲೆ ನೀರನ್ನು ಚಿಮುಕಿಸಿದಂತಾಯಿತು. ಆತ ಇದುವರೆಗೆ ಭಾವಿಸುತ್ತಿದ್ದ: ‘ಬೇಕಾದರೆ ಅವಳು ಆತ್ಮಹತ್ಯೆಮಾಡಿಕೊಳ್ಳಲಿ. ಅದಕ್ಕೆ ನಾನೇನು ಮಾಡಲಿ?’
ಮಾಸ್ಟರ್ ಶ್ರೀರಾಮಕೃಷ್ಣರಿಗೆ: “ಸಂಸಾರ ಬಹಳ ಭಯಂಕರ.”
ಶ್ರೀರಾಮಕೃಷ್ಣರು ಭಕ್ತರಿಗೆ: “ಇದಕ್ಕಾಗಿಯೇ ಚೈತನ್ಯದೇವ ನಿತ್ಯಾನಂದನಿಗೆ ಹೇಳಿದ್ದು: ‘ತಮ್ಮ, ಕೇಳು, ಸಾಂಸಾರಿಕ ಪ್ರವೃತ್ತಿಯುಳ್ಳ ಜೀವರಿಗೆ ಮುಕ್ತಿ ದೊರಕುವ ಹಾಗೇ ಇಲ್ಲ.”
ಬೇರೊಂದು ದಿನ ಪರಮಹಂಸರು ಮಾಸ್ಟರಿಗೆ ಏಕಾಂತದಲ್ಲಿ ಹೇಳಿದ್ದರು: “ಭಗವಂತನಲ್ಲಿ ಶುದ್ಧಭಕ್ತಿಗಳಿಸಿಕೊಳ್ಳದೆ ಇದ್ದರೆ, ಮುಕ್ತಿ ದೊರಕುವ ಹಾಗೇ ಇಲ್ಲ. ಭಗವಂತನ ಸಾಕ್ಷಾತ್ಕಾರ ಪಡೆದು ಸಂಸಾರದಲ್ಲಿದ್ದರೆ ಹೆದರಿಕೊಳ್ಳಬೇಕಾಗಿಲ್ಲ. ಆಗಾಗ ನಿರ್ಜನ ಪ್ರದೇಶದಲ್ಲಿದ್ದು ಸಾಧನೆ ಮಾಡಿ ಶುದ್ಧಭಕ್ತಿಗಳಿಸಿಕೊಂಡದ್ದೇ ಆದರೆ, ಸಂಸಾರದಲ್ಲಿದ್ದರೂ ಹೆದರಿಕೊಳ್ಳಬೇಕಾಗಿಲ್ಲ. ಚೈತನ್ಯದೇವನಿಗೆ ಸಂಸಾರಸ್ಥ ಭಕ್ತರೂ ಇದ್ದರು. ಅವರು ಸಂಸಾರದಲ್ಲಿ ಹೆಸರಿಗೆ ಮಾತ್ರ ಇರುತ್ತಿದ್ದರು, ಅನಾಸಕ್ತರಾಗಿ ಇರುತ್ತಿದ್ದರು.”
ದೇವಾಲಯದಲ್ಲಿ ನೈವೇದ್ಯ ಅರ್ಪಿತವಾದ ನಂತರ ಮಂಗಳಾರತಿ ನಡೆಯಿತು. ಈಗ ಶಯನೋತ್ಸವ ನಡೆಯಲಿದೆ. ನಹಬತ್ಖಾನೆಯಿಂದ ಮಂಗಳಾರತಿ ಕೇಳಿಬರುತ್ತಿದೆ. ಪರಮಹಂಸರು ಭೋಜನಕ್ಕೆ ಕುಳಿತುಕೊಂಡಿದ್ದಾರೆ. ನರೇಂದ್ರನೇ ಮೊದಲಾದ ಭಕ್ತರೂ ಪರಮಹಂಸರ ಹತ್ತಿರವೇ ಕುಳಿತು ಭಗವತಿಯ ಪ್ರಸಾದ ಸ್ವೀಕರಿಸುತ್ತಿದ್ದಾರೆ.
೨೨ನೆ ಅಕ್ಟೋಬರ್ ೧೮೮೨, ಆಶ್ವೀಜ ಶುಕ್ಲ ದಶಮಿ, ಭಾನುವಾರ
ಇಂದು ವಿಜಯದಶಮಿ. ಘಂಟೆ ಬೆಳಗಿನ ಒಂಬತ್ತು. ಪರಮಹಂಸರು ದಕ್ಷಿಣೇಶ್ವರದ ತಮ್ಮ ಕೊಠಡಿಯಲ್ಲಿ ಚಿಕ್ಕ ಮಂಚದ ಮೇಲೆ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಮಾಸ್ಟರ್ ನೆಲದ ಮೇಲೆ ಕುಳಿತಿದ್ದಾನೆ. ರಾಖಾಲ ಪರಮಹಂಸರೊಡನೆಯೇ ಇದ್ದಾನೆ. ನರೇಂದ್ರ ಮತ್ತ ಭವನಾಥ ಆಗಾಗ ಅಲ್ಲಿಗೆ ಬಂದುಹೋಗುತ್ತಿದ್ದಾರೆ. ಬಾಬುರಾಮ ಪರಮಹಂಸರನ್ನು ಒಂದೆರಡು ಸಲ ದರ್ಶನ ಮಾಡಿದ್ದಾನೆ.
ಶ್ರೀರಾಮಕೃಷ್ಣರು: “ನಿಮಗೆ ದಸರಾ ರಜ ಬಂದಿದೆಯೇ?”
ಮಾಸ್ಟರ್: “ಹೌದು, ಬಂದಿದೆ. ಸಪ್ತಮಿ, ಅಷ್ಟಮಿ, ನವಮಿ ಈ ಮೂರು ದಿನಗಳ ಪೂಜೆಗೂ ಕೇಶವಸೇನನ ಮನೆಗೆ ಹೋಗಿದ್ದೆ.”
ಶ್ರೀರಾಮಕೃಷ್ಣರು: “ಹಾಗೇನು!”
ಮಾಸ್ಟರ್: “ಅಲ್ಲಿ ದುರ್ಗಾಪೂಜೆಯ ಸಂಬಂಧವಾಗಿ ಬಹಳ ಒಳ್ಳೆಯ ವ್ಯಾಖ್ಯಾನ ಕೇಳಿದೆ.”
ಶ್ರೀರಾಮಕೃಷ್ಣರು: “ಅದೇನು ಹೇಳು ನೋಡೋಣ.”
ಮಾಸ್ಟರ್: “ಕೇಶವಸೇನನ ಮನೆಯಲ್ಲಿ ಬೆಳಗಿನಿಂದ ಹಿಡಿದು ಹತ್ತು ಹನ್ನೊಂದು ಘಂಟೆಯವರೆಗೆ ದಿನವೂ ಉಪಾಸನೆ ನಡೆಯಿತು. ಈ ಉಪಾಸನೆಯ ಸಮಯದಲ್ಲಿ ಆತ ದುರ್ಗಾ ಪೂಜೆಯ ಸಂಬಂಧವಾಗಿ ವ್ಯಾಖ್ಯಾನಮಾಡಿದ. ಆತ ಹೇಳಿದ: ‘ಸಾಕ್ಷಾತ್ಕಾರ ಮಾಡಿಕೊಳ್ಳಲು ಸಾಧ್ಯವಾದರೆ, ಅಂದರೆ ಭಗವತಿ ದುರ್ಗೆಯನ್ನು ಹೃದಯ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ಸಾಧ್ಯವಾದರೆ ಲಕ್ಷ್ಮಿ, ಸರಸ್ವತಿ, ಕಾರ್ತಿಕೇಯ, ಗಣೇಶ ಇವರೆಲ್ಲ ತಾವಾಗಿಯೇ ಅಲ್ಲಿಗೆ ಬರುತ್ತಾರೆ. ಲಕ್ಷ್ಮಿ ಎಂದರೆ ಐಶ್ವರ್ಯ, ಸರಸ್ವತಿ ಎಂದರೆ ಜ್ಞಾನ, ಕಾರ್ತಿಕೇಯ ಎಂದರೆ ಪರಾಕ್ರಮ, ಗಣೇಶ ಎಂದರೆ ಸಿದ್ಧಿ. ಭಗವತಿಯನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದೇ ಆದರೆ ಇವೆಲ್ಲ ತಾವಾಗಿಯೇ ದೊರೆತುಬಿಡುತ್ತವೆ.”
ಪರಮಹಂಸರು ಕೇಶವಸೇನನ ಉಪಾಸನೆಯ ಸಂಬಂಧವಾಗಿ ಮಾಸ್ಟರಿಗೆ ಆಗಾಗ ಪ್ರಶ್ನೆ ಹಾಕುತ್ತ ಆತ ಕೊಟ್ಟ ವಿವರಣೆಯನ್ನೆಲ್ಲ ಸಾವಧಾನದಿಂದ ಕೇಳಿ ಕೊನೆಗೆ ಆತನಿಗೆ ಹೇಳುತ್ತಿದ್ದಾರೆ: ‘ನೀನು ಸುಮ್ಮನೆ ಅಲ್ಲಿಗಿಲ್ಲಿಗೆ ಅಲೆಯಬೇಡ, ಇಲ್ಲಿಗೇ ಬರುತ್ತಿರು. ಯಾರು ಅಂತರಂಗಿಗಳೊ ಅವರು ಕೇವಲ ಇಲ್ಲಿಗೇ ಬರುತ್ತಾರೆ. ನರೇಂದ್ರ, ಭವನಾಥ, ರಾಖಾಲ ಇವರು ನನ್ನ ಅಂತರಂಗ ಭಕ್ತರು. ಇವರು ಸಾಮಾನ್ಯ ವ್ಯಕ್ತಿಗಳಲ್ಲ, ನೀನು ಒಂದು ದಿನ ಇವರಿಗೆ ಅನ್ನ ಹಾಕು. ನರೇಂದ್ರ ನಿನ್ನ ಕಣ್ಣಿಗೆ ಹೇಗೆ ಕಾಣುತ್ತಾನೆ?”
ಮಾಸ್ಟರ್: “ಆತ ಬಹಳ ಒಳ್ಳೆಯವ.”
ಶ್ರೀರಾಮಕೃಷ್ಣರು: “ನೋಡು, ನರೇಂದ್ರನಲ್ಲಿ ಎಷ್ಟೊಂದು ಗುಣಗಳಿವೆ-ಹಾಡುವುದರಲ್ಲಿ, ಬಾರಿಸುವುದರಲ್ಲಿ ನೈಪುಣ್ಯಹೊಂದಿರುವುದಲ್ಲದೆ ವಿದ್ಯೆಯಲ್ಲಿ ಕೂಡ. ಇವೂ ಅಲ್ಲದೆ ಜಿತೇಂದ್ರಿಯ, ವಿವಾಹವಾಗುವುದಿಲ್ಲ ಅನ್ನುತ್ತಾನೆ. ಬಾಲ್ಯದಿಂದಲೇ ಭಗವಂತನ ಕಡೆ ಮನಸ್ಸು.
“ಈಗ ನಿನ್ನ ಧ್ಯಾನ ಯಾವ ರೀತಿಯಾಗಿ ನಡೆಯುತ್ತಿದೆ? ನಿನಗೆ ಸಾಕಾರ ಅಧಿಕವಾಗಿ ರುಚಿಸುತ್ತದೆಯೊ-ಅಥವಾ ನಿರಾಕಾರವೊ?”
ಮಾಸ್ಟರ್: “ಈಗ ಸಾಕಾರದ ಕಡೆ ಮನಸ್ಸು ಹೋಗುತ್ತಿಲ್ಲ. ನಿರಾಕಾರದಲ್ಲೂ ಮನಸ್ಸನ್ನು ಸ್ಥಿರವಾಗಿ ಇಡಲಾಗುತ್ತಿಲ್ಲ.”
ಶ್ರೀರಾಮಕೃಷ್ಣರು: “ನೋಡಿದೆಯೊ, ಒಮ್ಮೆಗೇ ನಿರಾಕಾರದಲ್ಲಿ ಮನಸ್ಸು ಸ್ಥಿರಮಾಡಲಾಗುವುದಿಲ್ಲ. ಆದ್ದರಿಂದ ಮೊದಲು ಸಾಕಾರದಲ್ಲಿ ಮನಸ್ಸು ಇಡುವುದೇ ಮೇಲು.”
ಮಾಸ್ಟರ್: “ಈ ಮಣ್ಣಿನ ಮೂರ್ತಿಗಳ ಮೇಲೆ ಧ್ಯಾನಮಾಡಬೇಕು ಅಂತೀರಾ?”
ಶ್ರೀರಾಮಕೃಷ್ಣರು: “ಏಕೆ, ಚಿನ್ಮಯಮೂರ್ತಿಗಳ ಮೇಲೆ.”
ಮಾಸ್ಟರ್: “ಹಾಗಾದರೂ ಕೈ, ಕಾಲು ಇವನ್ನೆಲ್ಲ ಭಾವಿಸಿಕೊಳ್ಳಬೇಕಾಗುತ್ತದೆಯಲ್ಲವೆ? ಆದರೆ ನೀವು ಹೇಳಿದ್ದೀರಲ್ಲ, ಮೊದಲು ಮೊದಲು ಸಾಕಾರದ ಮೇಲೆ ಧ್ಯಾನ ಮಾಡದಿದ್ದರೆ ಮನಸ್ಸು ಸ್ಥಿರವಾಗುವುದಿಲ್ಲ ಎಂಬುದಾಗಿ. ಅದೂ ಸರಿ ಅಂತ ಯೋಚಿಸುತ್ತಿದ್ದೇನೆ. ಒಳ್ಳೇದು. ನೀವು ತಿಳಿಸಿದ್ದೀರಿ, ಭಗವಂತ ವಿವಿಧ ರೂಪುಗಳನ್ನು ಧರಿಸಬಲ್ಲ ಎಂಬುದಾಗಿ. ಆದ್ದರಿಂದ ಹೆತ್ತ ತಾಯಿಯ ಮೇಲೆ ಧ್ಯಾನಮಾಡಬಹುದೆ?”
ಶ್ರೀರಾಮಕೃಷ್ಣರು: “ಮಾಡಬಹುದು. ಆಕೆಯ ಮೇಲೆ ಧ್ಯಾನಮಾಡಬೇಕಾದ್ದೆ. ಆಕೆ ಗುರು; ಬ್ರಹ್ಮಮಯೀ.”
ಮಾಸ್ಟರ್ ಸುಮ್ಮನೆ ಕುಳಿತಿದ್ದಾನೆ. ಈಗ ಪರಮಹಂಸರನ್ನು ಕೇಳುತ್ತಿದ್ದಾನೆ: “ಒಳ್ಳೇದು, ನಿರಾಕಾರದ ಮೇಲೆ ಧ್ಯಾನಮಾಡುವಾಗ ಅದು ಹೇಗೆ ತೋರಿಬರುತ್ತದೆ?ಅದನ್ನು ವರ್ಣನೆ ಮಾಡಲಾಗುವುದಿಲ್ಲವೆ?” ಪರಮಹಂಸರು ಸ್ವಲ್ಪ ಹೊತ್ತು ಆಲೋಚನೆ ಮಾಡಿ ಹೇಳುತ್ತಿದ್ದಾರೆ: “ಅದು ಯಾವ ರೀತಿ ಇದೆ ಗೊತ್ತೆ ನಿನಗೆ?” ಹೀಗೆಂದ ಬಳಿಕ ಸ್ವಲ್ಪ ಹೊತ್ತು ಕುಳಿತಿದ್ದು ತರುವಾಯ ಸಾಕಾರ ನಿರಾಕಾರ ದರ್ಶನಗಳಲ್ಲಿ ಏನೇನು ಅನುಭವ ದೊರಕುತ್ತದೆ ಎಂಬುದರ ವಿಷಯವಾಗಿ ಒಂದೆರಡು ಮಾತಾಡಿ ಮತ್ತೆ ಸುಮ್ಮನೆ ಕುಳಿತುಕೊಂಡರು.
ಶ್ರೀರಾಮಕೃಷ್ಣರು: “ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಸಾಧನೆ ಮಾಡಬೇಕು. ಕಿರುಮನೆಯೊಳಗಿಟ್ಟಿರುವ ರತ್ನ ನೋಡಬೇಕಾಗಿದ್ದರೆ, ಅದನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದರೆ, ಶ್ರಮವಹಿಸಿ ಬೀಗದ ಕೈ ವಿಚಾರಿಸಿ ತಂದು ಬಾಗಿಲು ತೆರೆಯಬೇಕಾಗುತ್ತದೆ. ಬಳಿಕ ರತ್ನವನ್ನು ಹೊರಕ್ಕೆ ತೆಗೆದುಕೊಂಡು ಬರಬೇಕಾಗುತ್ತದೆ. ಹಾಗೆ ಮಾಡದೆ, ಬೀಗ ಹಾಕಿದ ಬಾಗಿಲಿನ ಮುಂದೆ ಸುಮ್ಮನೆ ನಿಂತುಕೊಂಡು ‘ಈಗ ಬೀಗ ತೆಗೆದಿದ್ದೇನೆ. ಸಂದೂಕದ ಬೀಗವನ್ನು ಮುರಿದಿದ್ದಾಯಿತು. ಈಗ ರತ್ನ ಹೊರಕ್ಕೆ ತೆಗೆದಿದ್ದೇನೆ’ ಎಂಬುದಾಗಿ ಭಾವಿಸಿದರೆ ಅದರಿಂದ ಏನು ತಾನೆ ದೊರೆತೀತು? ಸಾಧನೆ ಮಾಡಬೇಕು.
“ಜ್ಞಾನಿಗಳು ನಿರಾಕಾರದ ಮೇಲೆ ಧ್ಯಾನಮಾಡುತ್ತಾರೆ. ಅವರು ಅವತಾರವನ್ನು ಒಪ್ಪುವುದಿಲ್ಲ. ಅರ್ಜುನ ಶ್ರೀಕೃಷ್ಣನನ್ನು ಸ್ತೋತ್ರಮಾಡಿದ : ‘ನೀನು ಪೂರ್ಣಬ್ರಹ್ಮ’ ಎಂಬುದಾಗಿ. ಶ್ರೀಕೃಷ್ಣ ಹೇಳಿದ : ‘ನಾನು ಪೂರ್ಣಬ್ರಹ್ಮ ಹೌದೊ ಅಲ್ಲವೊ ಎಂಬುದನ್ನು ನೋಡುವೆಯಂತೆ ಬಾ ನನ್ನೊಡನೆ.’ ಹೀಗೆಂದು ಹೇಳಿ ಒಂದು ಜಾಗಕ್ಕೆ ಕರೆದುಕೊಂಡು ಹೋಗಿ ಆತನನ್ನು ಕೇಳಿದ : ‘ಅಲ್ಲಿ ಏನನ್ನು ನೋಡುತ್ತಾ ಇದ್ದೀಯೆ ?’ ಅರ್ಜುನ ಹೇಳಿದ : ‘ಅಲ್ಲಿ ನಾನು ಒಂದು ದೊಡ್ಡ ಮರ ನೋಡುತ್ತಿದ್ದೇನೆ, ಅದರಲ್ಲಿ ನೇರಳೆ ಹಣ್ಣಿನಂಥ ಕಪ್ಪು ಹಣ್ಣುಗಳು ಜೊಂಪೆ ಜೊಂಪೆಯಾಗಿ ನೇತಾಡುತ್ತಿವೆ.’ ಬಳಿಕ ಕೃಷ್ಣ ಹೇಳಿದ: ‘ಇನ್ನೂ ಹತ್ತಿರಕ್ಕೆ ಬಂದು ನೋಡು. ಅವು ಕಪ್ಪು ಹಣ್ಣುಗಳ ಜೊಂಪೆಗಳಲ್ಲ, ನನ್ನಂಥ ಕೃಷ್ಣರ ಜೊಂಪೆಗಳು. ಅಸಂಖ್ಯವಾಗಿ ನೇತಾಡುತ್ತಿವೆ.’ ಅಂದರೆ ಆ ಪೂರ್ಣಬ್ರಹ್ಮಸ್ವರೂಪದ ವೃಕ್ಷದಿಂದ ಅಸಂಖ್ಯ ಅವತಾರಗಳು ಬಂದುಹೋಗುತ್ತವೆ.
“ಕಬೀರನ ಮನಸ್ಸು ನಿರಾಕಾರದ ಕಡೆಗೆ ಬಹಳವಾಗಿ ಬಾಗಿತ್ತು. ಕೃಷ್ಣನ ಮಾತು ಎತ್ತಿದರೆ ಆತ ಹೇಳುತ್ತಿದ್ದ : ‘ಅವನನ್ನೇಕೆ ನಾನು ಭಜಿಸಲು ಪ್ರಯತ್ನಿಸಲಿ, ಗೋಪಿಯರು ಕರತಾಳ ಹಾಕುವಾಗ ಆತ ಕಪಿಯ ಹಾಗೆ ಕುಣಿಯುತ್ತಿದ್ದ.’ (ನಗುತ್ತ)ನಾನು ಸಾಕಾರವಾದಿಗಳೊಡನೆ ಸಾಕಾರವಾದಿ, ನಿರಾಕಾರವಾದಿಗಳೊಡನೆ ನಿರಾಕಾರವಾದಿ.”
ಮಾಸ್ಟರ್ ನಗುತ್ತ : “ನಾವು ಯಾರ ವಿಷಯವಾಗಿ ಮಾತಾಡುತ್ತಿದ್ದೆವೊ, ಆತ ಹೇಗೆ ಅನಂತನೋ ಹಾಗೇ ನೀವೂ ಅನಂತರೇ. ನಿಜವಾಗಿಯೂ ಯಾರೂ ನಿಮ್ಮ ಆಳವನ್ನು ಕಂಡುಹಿಡಿಯಲಾರರು.”
ಶ್ರೀರಾಮಕೃಷ್ಣರು ನಗುತ್ತ : “ಓಹೊ ! ನೀನು ಅದನ್ನು ಪತ್ತೆಮಾಡಿಬಿಟ್ಟಿದ್ದೀಯೆ. ನಿನಗೊಂದು ವಿಷಯ ತಿಳಿಸುತ್ತೇನೆ. ವಿವಿಧ ಮಾರ್ಗಗಳನ್ನು ಅನುಸರಿಸಿ ನೋಡಬೇಕು. ಪ್ರತಿಯೊಂದು ಧರ್ಮವನ್ನೂ ಸ್ವಲ್ಪ ಕಾಲ ಆಚರಿಸಿ ನೋಡು. ಪಗಡೆ ಆಟದಲ್ಲಿ ಪಗಡೆಕಾಯಿ ಎಲ್ಲಾ ಮನೆಗಳ ಮೂಲಕ ಹಾದುಹೋಗದೆ ಇದ್ದರೆ ಅದು ಹೇಗೆ ಹಣ್ಣಾಗಬಲ್ಲದು? ಆದರೆ ಒಮ್ಮೆ ಅದು ಹಣ್ಣಾಯಿತು ಎಂದರೆ ಅದನ್ನು ಯಾರೂ ಹೊಡೆಯಲು ಪ್ರಯತ್ನಿಸರು.”
ಮಾಸ್ಟರ್ : “ಅದು ನಿಜ.”
ಶ್ರೀರಾಮಕೃಷ್ಣರು: “ಯೋಗಿಗಳಲ್ಲಿ ಎರಡು ವಿಧ-ಬಹೂದಕ, ಕುಟೀಚಕ. ಯಾವ ಸಾಧು ಇನ್ನೂ ತೀರ್ಥಸ್ಥಾನಗಳಿಗೆ ಹೋಗುತ್ತಲೇ ಇದ್ದಾನೊ, ಯಾರ ಹೃದಯದಲ್ಲಿ ಇನ್ನೂ ಶಾಂತಿ ಎಂಬುದು ನೆಲಸಿಲ್ಲವೋ ಆತನೇ ಬಹೂದಕ. ಆದರೆ ಯಾರು ಎಲ್ಲಾತೀರ್ಥಯಾತ್ರೆಗಳನ್ನು ಮುಗಿಸಿ ಮನಸ್ಸನ್ನು ಪ್ರಶಾಂತವಾಗಿ ಮಾಡಿಕೊಂಡಿದ್ದಾನೊ ಆತನೇ ಕುಟೀಚಕ. ಆತ ಯಾವುದಾದರೂ ಒಂದು ಜಾಗದಲ್ಲಿ ಕುಟೀರ ಕಟ್ಟಿಕೊಂಡು ಇದ್ದುಬಿಡುತ್ತಾನೆ. ಮತ್ತೆ ಅವನು ಸಂಚಾರಕ್ಕೆ ಹೊರಡುವುದಿಲ್ಲ. ಇರುವ ಜಾಗದಲ್ಲೇ ಆತ ಆನಂದದಿಂದಿರುತ್ತಾನೆ. ಆತನಿಗೆ ಇನ್ನು ತೀರ್ಥಯಾತ್ರೆಯ ಆವಶ್ಯಕತೆ ತೋರಿ ಬರುವುದಿಲ್ಲ. ಒಂದು ಪಕ್ಷ ಆತ ತೀರ್ಥಯಾತ್ರೆಗೆ ಹೋದರೂ ಅದು ಕೇವಲ ಉದ್ದೀಪನಕ್ಕಾಗಿಯೇ.”
“ನಾನು ಪ್ರತಿಯೊಂದು ಧರ್ಮವನ್ನೂ-ಹಿಂದೂಧರ್ಮ, ಮಹಮ್ಮದೀಯಧರ್ಮ, ಕ್ರಿಸ್ತಧರ್ಮ-ಅನುಸರಿಸಿ ನೋಡಬೇಕಾಯಿತು. ಜೊತೆಗೆ ಶಾಕ್ತ, ವೈಷ್ಣವ, ವೇದಾಂತ ಈ ಮಾರ್ಗಗಳಲ್ಲೂ ನಡೆಯಬೇಕಾಗಿ ಬಂತು. ಇರತಕ್ಕವನು ಭಗವಂತನೊಬ್ಬನೇ-ಆತನ ಕಡೆ ಎಲ್ಲರೂ ಬರುತ್ತಿದ್ದಾರೆ; ಆದರೆ ವಿವಿಧ ಮಾರ್ಗಗಳಿಂದ ಅಷ್ಟೆ.
“ತೀರ್ಥಯಾತ್ರೆಗೆ ಹೋಗಿದ್ದಾಗ ಒಮ್ಮೊಮ್ಮೆ ನನಗೆ ಬಹಳ ಕಷ್ಟ ಆಗುತ್ತಿತ್ತು. ಕಾಶಿಯಲ್ಲಿ ಮಥುರಬಾಬುವಿನ ಸಂಗಡ ರಾಜಬಾಬುವಿನ ಬೈಠಕ್ಖಾನೆಗೆ ಹೋಗಿದ್ದೆ. ಅಲ್ಲಿ ಅವರು ಪ್ರಾಪಂಚಿಕ ಮಾತುಕತೆ ಶುರುಮಾಡಿದರು-ಹಣ, ಜಮೀನುದಾರಿ ಇತ್ಯಾದಿಗಳ ವಿಷಯವಾಗಿ. ಅವರು ಮಾತು ಕೇಳಿ ಅಳಲಾರಂಭಿಸಿದೆ. ಆಗ ಭಗವತಿಗೆ ಹೇಳಿದೆ: ‘ತಾಯೆ! ನನ್ನನ್ನು ಎಲ್ಲಿಗೆ ಕರೆದುಕೊಂಡು ಬಂದಿದ್ದೀಯೆ? ನಾನು ದಕ್ಷಿಣೇಶ್ವರದಲ್ಲಿ ಸುಖವಾಗಿ ಇದ್ದೆನಲ್ಲ’ ಎಂಬುದಾಗಿ. ಪ್ರಯಾಗದಲ್ಲೂ ಎಲ್ಲೆಲ್ಲೂ ಇರುವ ರೀತಿಯಲ್ಲೇ ನೋಡಿದೆ-ಅದೇ ತರದ ಕೊಳ, ಅದೇ ಬಗೆಯ ಹುಲ್ಲು, ಅದೇ ವಿಧದ ಮರಗಿಡಗಳು, ಅದೇ ರೀತಿಯ ಹುಣಸೆ ಎಲೆ.
“ಆದರೆ ತೀರ್ಥಸ್ಥಾನಗಳಲ್ಲಿ ಉದ್ದೀಪನವುಂಟಾಗುವುದೇನೋ ನಿಜ. ಮಥುರಬಾಬುವಿನೊಡನೆ ಬೃಂದಾವನಕ್ಕೆ ಹೋಗಿದ್ದೆ. ಆತನ ಮನೆಯ ಹೆಂಗಸರೂ ಬಂದಿದ್ದರು. ಹೃದಯನೂ ಬಂದಿದ್ದ. ಕಾಲೀಯದಮನ ಘಟ್ಟವನ್ನು ನೋಡಿದೊಡನೆಯೇ ನನಗೆ ಉದ್ದೀಪನವುಂಟಾಗಿಬಿಡುತ್ತಿತ್ತು. ಸಂಪೂರ್ಣ ಭಾವಪರವಶನಾಗಿಬಿಡುತ್ತಿದ್ದೆ. ಹೃದು ಮಕ್ಕಳನ್ನು ಹಿಡಿದು ಸ್ನಾನ ಮಾಡಿಸುವ ರೀತಿಯಲ್ಲಿ ನನಗೆ ಅಲ್ಲಿ ಸ್ನಾನ ಮಾಡಿಸುತ್ತಿದ್ದ.
“ಸಾಯಂಕಾಲದ ವೇಳೆ ತಿರುಗಾಡಿಕೊಂಡು ಬರಲು ಯಮುನಾ ದಡಕ್ಕೆ ಹೋಗಿ ಬರುತ್ತಿದ್ದೆ. ದನಕರುಗಳು ಹುಲ್ಲುಗಾವಲಿನಿಂದ ಹಿಂದಿರುಗಿ ಬಂದಾಗ ಯಮುನೆಯ ಮರಳು ಗುಡ್ಡೆಗಳ ಮೂಲಕ ಹಾದುಬರುತ್ತಿದ್ದುವು. ಅವು ಕಣ್ಣಿಗೆ ಬಿದ್ದೊಡನೆಯೆ ನನಗೆ ಕೃಷ್ಣನ ಉದ್ದೀಪನವಾಗಿಬಿಡುತ್ತಿತ್ತು. ‘ಕೃಷ್ಣ ಎಲ್ಲಿ? ನನ್ನ ಕೃಷ್ಣ ಎಲ್ಲಿ?’ ಎಂದು ಹುಚ್ಚನ ಹಾಗೆ ಕೂಗಿಕೊಳ್ಳುತ್ತ ಕೂಗಿಕೊಳ್ಳುತ್ತ ಅವುಗಳ ಹಿಂದೆ ಓಡುತ್ತಿದ್ದೆ.
“ನಾನು ಪಲ್ಲಕ್ಕಿಯಲ್ಲಿ ಕುಳಿತು ಶ್ಯಾಮಕುಂಡ ರಾಧಾಕುಂಡಗಳಿಗೆ ಹೋಗುತ್ತಿದ್ದಾಗ ಗೋವರ್ಧನವನ್ನು ನೋಡಬೇಕೆಂದು ಕೆಳಕ್ಕೆ ಇಳಿದೆ. ಗೋವರ್ಧನ ಪರ್ವತ ಕಣ್ಣಿಗೆ ಬಿದ್ದೊಡನೆಯೆ ಸಂಪೂರ್ಣ ಭಗವದುನ್ಮತ್ತನಾಗಿ ನೇರವಾಗಿ ಓಡಿಹೋಗಿಬಿಟ್ಟು ಪರ್ವತದ ಮೇಲೆ ಹತ್ತಿ ನಿಂತುಕೊಂಡು ಬಾಹ್ಯಶೂನ್ಯನಾಗಿಬಿಟ್ಟೆ. ಆಗ ವ್ರಜವಾಸಿಗಳು ಅಲ್ಲಿಗೆ ಬಂದು ನನ್ನನ್ನು ಕೆಳಕ್ಕೆ ಇಳಿಸಿಕೊಂಡು ಬಂದರು. ಶ್ಯಾಮಕುಂಡ ರಾಧಾಕುಂಡಗಳ ಮಾರ್ಗದಲ್ಲಿದ್ದ ಹುಲ್ಲುಗಾವಲು, ಮರಗಿಡಗಳು, ಹಕ್ಕಿಗಳು, ಜಿಂಕೆಗಳು ಇವನ್ನೆಲ್ಲ ನೋಡಿ ನನಗೆ ಭಗವದುದ್ದೀಪನವಾಗಿಬಿಟ್ಟಿತು. ಕಣ್ಣಿನಿಂದ ಪ್ರೇಮಾಶ್ರು ಸುರಿದು ಬಟ್ಟೆಯೆಲ್ಲಾ ನೆನೆದು ಹೋಯಿತು. ಮನಸ್ಸಿಗೆ ಯೋಚನೆ ಬರಲಾರಂಭಿಸಿತು: ‘ಕೃಷ್ಣನ ಕಾಲದ ಎಲ್ಲವೂ ಇವೆ, ಆದರೆ ಕೇವಲ ಆತನನ್ನು ಮಾತ್ರ ನೋಡಲಾಗುತ್ತಿಲ್ಲವಲ್ಲ.’ ಆಗ ಪಲ್ಲಕ್ಕಿಯಲ್ಲಿ ಕುಳಿತುಕೊಂಡಿದ್ದೆ. ಮಾತನಾಡುವ ಶಕ್ತಿಯೇ ಇಲ್ಲದಂತಾಗಿಬಿಟ್ಟಿತ್ತು. ಹೃದೆ ಪಲ್ಲಕ್ಕಿಯ ಹಿಂದುಗಡೆ ಬರುತ್ತಿದ್ದ. ನನ್ನ ಸಂಬಂಧವಾಗಿ ಬಹಳ ಎಚ್ಚರಿಕೆಯಿಂದ ಇರಬೇಕು ಎಂಬುದಾಗಿ ಆತ ಬೋಯಿಗಳಿಗೆ ತಿಳಿಸಿದ್ದ.
“ಬೃಂದಾವನದಲ್ಲಿ ಗಂಗಾಮಾಯಿ ಎಂಬುವಳು ನನ್ನನ್ನು ಬಹಳ ಆದರದಿಂದ ನೋಡಿಕೊಳ್ಳುತ್ತಿದ್ದಳು. ಆಕೆ ಒಬ್ಬ ಮುದುಕಿ. ನಿಧುವನದ ಹತ್ತಿರ ಕುಟೀರ ಕಟ್ಟಿಕೊಂಡು ಒಬ್ಬಳೆ ಇದ್ದಳು. ನನ್ನ ಮಾನಸಿಕ ಅವಸ್ಥೆ ಮತ್ತು ಭಾವ ನೋಡಿ ಹೇಳುತ್ತಿದ್ದಳು: ‘ಇವರು ಸಾಕ್ಷಾತ್ ರಾಧೆಯ ದೇಹವನ್ನು ಧಾರಣೆಮಾಡಿಕೊಂಡು ಬಂದಿದ್ದಾರೆ.’ ನನ್ನನ್ನು ‘ದುಲಾಲಿ’ ಅಂತ ಕರೆಯುತ್ತಿದ್ದಳು. ಆಕೆಯ ಕುಟೀರಕ್ಕೆ ಹೋದೆನೆಂದರೆ ನನ್ನ ಊಟ-ಗೀಟದ ಯೋಚನೆ, ಹಿಂದಿರುಗಬೇಕು ಎಂಬ ಭಾವನೆ ಎಲ್ಲವೂ ಮರೆತುಹೋಗಿಬಿಡುತ್ತಿತ್ತು. ಹೃದೆ ಒಂದೊಂದು ದಿನ ನಾವು ಇಳಿದುಕೊಂಡಿದ್ದ ಮನೆಯಿಂದ ಆಹಾರ ತೆಗೆದುಕೊಂಡು ಬಂದು ಅಲ್ಲೇ ತಿನ್ನಿಸುತ್ತಿದ್ದ. ಆಕೆಯೂ ತಾನು ಮಾಡಿದ ಅಡಿಗೆಯನ್ನು ನನಗೆ ಬಡಿಸುತ್ತಿದ್ದಳು.
“ಗಂಗಾಮಯಿಗೆ ಭಾವ ಬರುತ್ತಿತ್ತು. ಆಕೆ ಭಾವಸ್ಥಳಾಗಿರುವುದನ್ನು ನೋಡಲು, ಜನರ ದೊಡ್ಡ ದೊಡ್ಡ ಗುಂಪೇ ಬಂದುಬಿಡುತ್ತಿತ್ತು. ಒಂದು ದಿನ ಆಕೆ ಭಾವದಲ್ಲಿ ಹೃದಯನ ಹೆಗಲ ಮೇಲೆ ಹತ್ತಿಬಿಟ್ಟಳು.”
“ಆಕೆಯನ್ನು ಬಿಟ್ಟು ಕಲ್ಕತ್ತಕ್ಕೆ ಹಿಂದಿರುಗಿ ಬರಲು ನನಗೆ ಇಚ್ಛೆಯೇ ಇರಲಿಲ್ಲ. ಆಕೆಯೊಡನೆ ಅಲ್ಲಿಯೇ ಇರಲು ಎಲ್ಲಾ ವ್ಯವಸ್ಥೆಯೂ ನಡೆದುಹೋಯಿತು. ನನಗಾಗಿ ಕುದುಪಲಕ್ಕಿಯ ಅನ್ನದ ಏರ್ಪಾಡೂ ಆಯಿತು. ಆ ಕುಟೀರದಲ್ಲಿ ಗಂಗಾಮಾಯಿಯ ಹಾಸಿಗೆ ಯಾವ ಕಡೆ ಇರಬೇಕು, ನನ್ನ ಹಾಸಿಗೆ ಯಾವ ಕಡೆ ಇರಬೇಕು ಎಂಬುದರ ಏರ್ಪಾಡೂ ಆಯಿತು. ಇದನ್ನೆಲ್ಲ ನೋಡಿ ಹೃದೆ ನನಗೆ ಹೇಳಿದ : ‘ನಿಮಗೆ ಅಜೀರ್ಣ ರೋಗ. ನಿಮ್ಮನ್ನು ನೋಡಿಕೊಳ್ಳುವವರು ಯಾರು ಇಲ್ಲಿ ?’ ಗಂಗಾಮಾಯಿ ಹೇಳಿದಳು : ‘ಏಕೆ, ನಾನಿದ್ದೇನಲ್ಲ? ನಾನು ಇವರ ಸೇವೆ ಮಾಡುತ್ತೇನೆ.’ ಹೃದೆ ಒಂದು ಕೈ, ಗಂಗಾಮಾಯಿ ಇನ್ನೊಂದು ಕೈ ಹಿಡಿದುಕೊಂಡು ನನ್ನನ್ನು ಎಳೆಯಲಾರಂಭಿಸಿದರು. ಆ ಸಮಯಕ್ಕೆ ಸರಿಯಾಗಿ ನನಗೆ ನನ್ನ ಹೆತ್ತ ತಾಯ ಜ್ಞಾಪಕ ಬಂತು. ಆಕೆ ಒಬ್ಬಳೆ, ಇಲ್ಲಿನ ನಹಬತ್ಖಾನೆಯಲ್ಲಿ ವಾಸವಾಗಿದ್ದಳು. ಬಳಿಕ ಅಲ್ಲಿ ನಿಲ್ಲಲಾಗಲಿಲ್ಲ. ಆಗ ಗಂಗಾಮಯಿಗೆ ಹೇಳಿದೆ: ‘ಆಗುವುದಿಲ್ಲ. ನಾನು ಹೋಗಲೇಬೇಕು.’ ಬೃಂದಾವನದಲ್ಲಿ ಒಳ್ಳೆ ಉದ್ದೀಪನ ಆಗುತ್ತದೆ.”
ಹನ್ನೊಂದು ಗಂಟೆ ಆಯಿತು. ಪರಮಹಂಸರು ಭಗವತಿ ಕಾಳಿಯ ಪ್ರಸಾದ ಸ್ವೀಕರಿಸುತ್ತಿದ್ದಾರೆ. ಮಧ್ಯಾಹ್ನದ ವಿಶ್ರಾಂತಿಯಾದ ನಂತರ ಪರಮಹಂಸರು ಭಕ್ತರೊಡನೆ ಮಾತುಕತೆ ಆರಂಭಿಸಿದ್ದಾರೆ. ಮಧ್ಯೆಮಧ್ಯೆ ಒಮ್ಮೊಮ್ಮೆ ಪ್ರಣವೋಚ್ಚಾರಣೆಯನ್ನೊ ಅಥವಾ ಭಗವನ್ನಾಮೋಚ್ಚಾರಣೆಯನ್ನೊ ಮಾಡುತ್ತಿದ್ದಾರೆ.
ಮುಸ್ಸಂಜೆಯಾಯಿತು. ದೇವಾಲಯಗಳಲ್ಲಿ ಮಂಗಳಾರತಿ ನಡೆಯುತ್ತಿದೆ. ಪರಮಹಂಸರು ಕಾಳೀದೇವಾಲಯಕ್ಕೆ ಬಂದಿದ್ದಾರೆ. ಇಂದು ವಿಜಯದಶಮಿಯಾದ್ದರಿಂದ ಭಕ್ತರು ಮೊದಲು ಭಗವತಿಗೆ ಪ್ರಣಾಮಮಾಡಿ ಬಳಿಕ ಪರಮಹಂಸರ ಪಾದಧೂಳಿಯನ್ನು ಸ್ವೀಕರಿಸುತ್ತಿದ್ದಾರೆ.
೨೪ನೆ ಅಕ್ಟೋಬರ್ ೧೮೮೨, ಆಶ್ವೀಜ ಶುಕ್ಲ ದ್ವಾದಶಿ, ಮಂಗಳವಾರ
ಘಂಟೆ ಅಪರಾಹ್ನ ಮೂರೊ ನಾಲ್ಕೊ ಇರಬೇಕು. ಪರಮಹಂಸರು ತಿಂಡಿ ಇಟ್ಟಿದ್ದ ಬಡುವಿನ ಹತ್ತಿರ ನಿಂತಿದ್ದಾರೆ. ಬಲರಾಮ ಮತ್ತು ಮಾಸ್ಟರ್ ಕಲ್ಕತ್ತದಿಂದ ಗಾಡಿಯಲ್ಲಿ ಬಂದು ಅವರಿಗೆ ಪ್ರಣಾಮಮಾಡಿದರು. ಪರಮಹಂಸರು ನಗುತ್ತ, ನಗುತ್ತ ಅವರಿಗೆ ಹೇಳುತ್ತಿದ್ದಾರೆ : “ಬಡುವಿನ ಮೇಲೆ ಇಟ್ಟಿದ್ದ ತಿಂಡಿಗೆ ಕೈ ಹಾಕಿದೆನೊ ಇಲ್ಲವೊ, ಒಡನೆಯೆ ಹಲ್ಲಿ ‘ಲೊಚ್, ಲೊಚ್’ ಅಂತ ಶಬ್ದ ಮಾಡಿತು. ತತ್ಕ್ಷಣ ಕೈಯನ್ನು ಹಿಂದಕ್ಕೆ ತೆಗೆದುಕೊಂಡುಬಿಟ್ಟೆ. (ಎಲ್ಲರೂ ನಗುತ್ತಿದ್ದಾರೆ.)
“ನಗಬೇಡಿ ! ಇವುಗಳಿಗೂ ಬೆಲೆ ಕೊಡಬೇಕು. ಇಲ್ಲಿ ನೋಡಿ, ರಾಖಾಲ ಅಸ್ವಸ್ಥನಾಗಿದ್ದಾನೆ. ಅದಕ್ಕಾಗಿ ನನ್ನ ಕೈ ಕಾಲು ಕಡಿಯುತ್ತಿವೆ. ಏನಾಯಿತು ಗೊತ್ತೆ ? ನಾನು ಹಾಸಿಗೆಯಿಂದ ಎದ್ದಾಗ ಯಾರೊ ಒಬ್ಬ ನನ್ನ ಕಣ್ಣಿಗೆ ಬಿದ್ದ. ಆತ ರಾಖಾಲ ಅಂತ ತಪ್ಪು ಭಾವಿಸಿದೆ. (ಎಲ್ಲರೂ ನಗುತ್ತಿದ್ದಾರೆ.) ನಿಜವಾಗಿಯೂ ಶಾರೀರಿಕ ಲಕ್ಷಣಗಳನ್ನೆಲ್ಲಾ ಚೆನ್ನಾಗಿ ನೋಡಬೇಕು. ಅಂದು ನರೇಂದ್ರ ಒಬ್ಬ ಒಕ್ಕಣ್ಣಿನ ಸ್ನೇಹಿತನನ್ನು ಕರೆದುಕೊಂಡು ಬಂದಿದ್ದ. ಆತನ ಇನ್ನೊಂದು ಕಣ್ಣು ಸಂಪೂರ್ಣವಾಗಿ ಕುರುಡಾಗಿರಲಿಲ್ಲ. ನನಗೆ ನಾನೇ ಹೇಳಿಕೊಂಡೆ: ‘ಇದೇನಪ್ಪ ಇದು! ಇನ್ನೇನು ಅನಿಷ್ಟ ಕಾದಿದೆಯೊ?’
“ಇನ್ನೊಬ್ಬ ಇಲ್ಲಿ ಬರುತ್ತಾನೆ. ಆತ ತರುವ ತಿಂಡಿಯನ್ನು ನನ್ನ ಕೈಯಲ್ಲಿ ತಿನ್ನಲಾಗುತ್ತಿಲ್ಲ. ಆತ ಒಂದು ಆಫೀಸಿನಲ್ಲಿ ಕೆಲಸಮಾಡುತ್ತಿದ್ದಾನೆ, ಇಪ್ಪತ್ತು ರೂಪಾಯಿ ಸಂಬಳಕ್ಕೆ. ಇನ್ನೊಂದಿಪ್ಪತ್ತು ರೂಪಾಯಿಯನ್ನು ಸುಳ್ಳು ಲೆಕ್ಕ ಬರೆದು ಸಂಪಾದಿಸುತ್ತಾನೆ. ಆತ ಸುಳ್ಳು ಹೇಳುವ ಅಭ್ಯಾಸ ಇಟ್ಟುಕೊಂಡಿರುವುದರಿಂದ ನಾನು ಆತನೊಡನೆ ಹೆಚ್ಚಾಗಿ ಮಾತುಕತೆ ಆಡುತ್ತಿಲ್ಲ. ಒಮ್ಮೊಮ್ಮೆ ಆತ ಆಫೀಸಿಗೆ ಹೋಗದೆ ಎರಡು ಮೂರು ದಿನಗಳನ್ನು ಇಲ್ಲಿಯೇ ಕಳೆದುಬಿಡುತ್ತಾನೆ. ಏಕೆ ಹಾಗೆ ಮಾಡುತ್ತಾನೆ ಗೊತ್ತೆ? ನಾನು ಬೇರೆ ಯಾರಿಗಾದರೂ ಹೇಳಿ ಬೇರೆ ಕಡೆ ಕೆಲಸ ಮಾಡಿಸಿಕೊಡಲಿ ಅಂತ.
“ಬಲರಾಮ ಒಳ್ಳೆ ವೈಷ್ಣವ ವಂಶಕ್ಕೆ ಸೇರಿದವನು. ಈತನ ತಂದೆ ಈಗ ಬಹಳ ವೃದ್ಧನಾಗಿಬಿಟ್ಟಿದ್ದಾನೆ; ಪರಮವೈಷ್ಣವ, ತಲೆಯಲ್ಲಿ ಜುಟ್ಟು, ಕೊರಳಲ್ಲಿ ತುಳಸಿಮಾಲೆ, ಕೈಯಲ್ಲಿ ಸರ್ವದಾ ಜಪಮಾಲೆ. ಯಾವಾಗ ನೋಡಿದರೂ ಜಪಮಾಡುತ್ತಲೇ ಇರುತ್ತಾನೆ. ಇವನಿಗೆ ಒರಿಸ್ಸಾದಲ್ಲಿ ಬೇಕಾದಷ್ಟು ಜಮೀನು ಇದೆ. ಕೊಠಾರದಲ್ಲಿ, ಬೃಂದಾವನದಲ್ಲಿ ಇನ್ನೂ ಅನೇಕ ಕಡೆ ರಾಧಾಕಾಂತ ದೇವಾಲಯ ಕಟ್ಟಿಸಿ ಅನ್ನಸತ್ರ ಇಟ್ಟಿದ್ದಾನೆ.
(ಬಲರಾಮನಿಗೆ) “ಅಂದು ಇಲ್ಲಿಗೆ ಒಬ್ಬ ಬಂದಿದ್ದ. ನನಗೆ ಗೊತ್ತಾಯಿತು, ಆತ ತನ್ನ ಕರೀ ಹೆಂಡತಿಯ ದಾಸ ಅಂತ. ಜನರಿಗೆ ಭಗವಂತನ ದರ್ಶನ ಏಕೆ ದೊರೆಯುವುದಿಲ್ಲ ಗೊತ್ತೆ ? ಕಾಮಕಾಂಚನವೆಂಬುದು ಮಧ್ಯದಲ್ಲಿ ಅಡ್ಡವಾಗಿ ಬಿದ್ದಿರುವುದರಿಂದ. ಅಂದು ಆತ ‘ನಮ್ಮ ಮನೆಗೆ ಒಬ್ಬ ಪರಮಹಂಸರು ಬಂದಿದ್ದರು, ನಮ್ಮ ತಂದೆ ಅವರಿಗೆ ಕೋಳಿಪಲ್ಯವನ್ನು ಮಾಡಿ ಬಡಿಸಿದರು’ ಎಂಬುದಾಗಿ, ನನ್ನೆದುರಿಗೆ ಹೇಳಬೇಕಾದರೆ, ಆತ ಎಷ್ಟು ದುರುಳನಾಗಿರಬೇಕು!
“ಈಗಿನ ನನ್ನ ಅವಸ್ಥೆಯಲ್ಲಿ ಭಗವತಿಯ ಪ್ರಸಾದವಾಗಿದ್ದರೆ ಮಾತ್ರ ಒಂದು ಕಿಂಚಿತ್ ಮೀನಿನ ಸಾರು ಊಟಮಾಡಬಲ್ಲೆ. ಮಾಂಸ ಪ್ರಸಾದವನ್ನು ತಿನ್ನಲಾಗುತ್ತಿಲ್ಲ. ಆದರೆ ಆಕೆಗೆ ಕೋಪ ಬಾರದಿರಲೆಂದು ಬೆರಳಿನ ತುದಿಯಿಂದ ಮುಟ್ಟಿ ಒಂದು ಸ್ವಲ್ಪ ರುಚಿ ನೋಡುತ್ತೇನೆ. (ನಗು.)
“ಒಳ್ಳೇದು, ಈ ನನ್ನ ಅವಸ್ಥೆ ಇದೇನಿದು ಹೇಳು ನೋಡೋಣ. ಒಮ್ಮೆ ನಾನು ಎತ್ತಿನ ಬಂಡಿಯಲ್ಲಿ ಕುಳಿತು ವರ್ಧಮಾನದಿಂದ ಊರಿಗೆ (ಕಾಮಾರಪುಕುರಕ್ಕೆ) ಹೋಗುತ್ತಿದ್ದೆ. ಆಗ ಬಿರುಮಳೆ ಬಂದಿತು. ಯಾರ್ಯಾರೊ ಗಾಡಿಯ ಹತ್ತಿರಕ್ಕೆ ಬರಲಾರಂಭಿಸಿದರು. ನನ್ನ ಜೊತೆಯಲ್ಲಿದ್ದವರು ಹೇಳಿದರು, ಅವರು ಡಕಾಯಿತರು. ಆಗ ನಾನು ಭಗವನ್ನಾಮ ಜಪಿಸಲು ಶುರುಮಾಡಿದೆ. ಕೆಲವು ವೇಳೆ ‘ರಾಮ, ರಾಮ’ ಎಂಬುದಾಗಿ, ಇನ್ನು ಕೆಲವು ವೇಳೆ ‘ಕಾಳಿ, ಕಾಳಿ’ ಎಂಬುದಾಗಿ. ಮತ್ತೆ ಕೆಲವು ವೇಳೆ ‘ಹನುಮಂತ, ಹನುಮಂತ’ ಎಂಬುದಾಗಿ. ಹೀಗೆ ಇನ್ನೂ ಎಲ್ಲಾ ದೇವರ ಹೆಸರನ್ನೂ ಜಪಿಸಿದೆ. ಏಕೆ ನಾನು ಹೀಗೆ ಮಾಡಿದೆ ಹೇಳು ನೋಡೋಣ.”
ಇರುವವನು ಭಗವಂತನೊಬ್ಬನೇ. ಆದರೆ ಆತನಿಗೆ ಅನಂತ ಹೆಸರು. ಭಿನ್ನ ಭಿನ್ನ ಸಂಪ್ರದಾಯದವರು, ಭಿನ್ನ ಭಿನ್ನ ಧರ್ಮಾವಲಂಬಿಗಳು, ಕೇವಲ ಆತನ ಹೆಸರಿಗಾಗಿ ವಾದ ವಿವಾದದಲ್ಲಿ ತೊಡಗಿ ಸಾಯುತ್ತಿದ್ದಾರೆ ಎಂಬುದನ್ನು ಪರಮಹಂಸರು ಸೂಚಿಸಿದರೇನು?
ಶ್ರೀರಾಮಕೃಷ್ಣರು ಬಲರಾಮನಿಗೆ: “ಕಾಮಕಾಂಚನವೇ ಮಾಯೆ ಎಂಬುದು. ಅದರ ಮಧ್ಯೆ ಬಹಳ ಕಾಲದವರೆಗಿದ್ದರೆ, ಕ್ರಮೇಣ ಎಚ್ಚರಿಕೆ ತಪ್ಪಿಹೋಗುತ್ತದೆ-ಅದೇ ಆನಂದವಾಗಿರುವಂತೆ ತೋರಿಬರುತ್ತದೆ. ಜಾಡಮಾಲಿ ಕಕ್ಕಸ ಹೊರುತ್ತಾನೆ. ಹೊರುತ್ತ ಹೊರುತ್ತ ಕೊನೆಗೆ ಅದನ್ನು ಕಂಡರೆ ಅಸಹ್ಯವೇ ತೋರುವುದಿಲ್ಲ. ಭಗವಂತನ ನಾಮ ಗುಣಕೀರ್ತನೆ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದರೆ ಕ್ರಮೇಣ ಭಕ್ತಿ ಉಂಟಾಗಿಬಿಡುತ್ತದೆ. (ಮಾಸ್ಟರಿಗೆ) ಭಗವಂತನ ಹೆಸರು ಹೇಳಲು ಲಜ್ಜೆಪಟ್ಟುಕೊಳ್ಳಬಾರದು. ‘ಲಜ್ಜೆ, ದ್ವೇಷ, ಭಯ ಇವು ಮೂರು ಇರಬಾರದು.’
“ಆ ದೇಶದಲ್ಲಿ (ಕಾಮಾರಪುಕುರದಲ್ಲಿ) ಒಳ್ಳೆ ಕೀರ್ತನೆ ನಡೆಯುತ್ತದೆ. ಕೀರ್ತನೆಯ ಸಮಯದಲ್ಲಿ ಮೃದಂಗವನ್ನೂ ಬಾಜಿಸುತ್ತಾರೆ. ನಕುಲ ಆಚಾರ್ಯನ ಕೀರ್ತನೆ ಬಹಳ ಸೊಗಸಾದ್ದು.
(ಬಲರಾಮನಿಗೆ) “ನೀವು ಬೃಂದಾವನದಲ್ಲಿ ಭಗವಂತನ ಆರಾಧನೆಯನ್ನು ನಡೆಸುತ್ತಾ ಇದ್ದೀರೇನು?”
ಬಲರಾಮ: “ಹೌದು, ಅಲ್ಲಿ ನಮಗೊಂದು ಕುಂಜ ಇದೆ. ಅದರಲ್ಲಿ ಶ್ಯಾಮಸುಂದರನ ಆರಾಧನೆ ನಡೆಯುತ್ತದೆ.”
ಶ್ರೀರಾಮಕೃಷ್ಣರು: “ನಾನೂ ಬೃಂದಾವನಕ್ಕೆ ಹೋಗಿದ್ದೆ. ನಿಧುವನ ಬಹಳ ಒಳ್ಳೆ ಜಾಗ.”