೨೩ನೆ ಡಿಸೆಂಬರ್ ೧೮೮೫, ಪುಷ್ಯ ಕೃಷ್ಣ ದ್ವಿತೀಯ, ಬುಧವಾರ
ಭಕ್ತರೆಲ್ಲರೂ ಕೂಡಿ ಇದೇ ತಿಂಗಳ ೧೧ನೆ ತಾರೀಕು ಶುಕ್ರವಾರ “ಕಾಶೀಪುರ” ಎಂಬ ಹೆಸರಿನ ಕಲ್ಕತ್ತದ ಉಪನಗರದಲ್ಲಿ ಒಂದು ಸುಂದರವಾದ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಪರಮಹಂಸರನ್ನು ಅಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಆ ಮನೆಯ ಸುತ್ತಲೂ ಹಣ್ಣು ಹಂಪಲುಗಳ, ಹೂವುಗಳ ಗಿಡಮರಗಳು ತುಂಬಿವೆ. ಮನೆಯನ್ನು ಐದು ಎಕರೆ ಜಮೀನಿನ ಮಧ್ಯದಲ್ಲಿ ಕಟ್ಟಿದ್ದಾರೆ. ಇದೇ ಪರಮಹಂಸರ ಐಹಿಕ ಜೀವನದ ಕೊನೆಯ ಅಂಕ.
ಪರಮಹಂಸರು ಬಹಳ ಹಿಂದೆಯೇ ದಕ್ಷಿಣೇಶ್ವರದಲ್ಲಿ ತಮ್ಮ ಭಕ್ತರ ಆಧ್ಯಾತ್ಮಿಕ ಜೀವನದ ಪೋಷಣೆಯ ಕಾರ್ಯವನ್ನು ಕೈಗೊಂಡಿದ್ದರು. ಈಗ ಕಾಶೀಪುರಕ್ಕೆ ಬಂದಮೇಲೆ ಆ ಕಾರ್ಯವನ್ನು ಪೂರ್ಣಗೊಳಿಸಲು ಅಪರಿಮಿತ ಉತ್ಸಾಹದಿಂದ ಕೆಲಸಮಾಡಲಾರಂಭಿ ಸಿದರು. ತಮ್ಮ ಐಹಿಕ ಜೀವನ ಕೊನೆಗಾಣಲು ಬಂದಿದೆ ಎಂಬುದನ್ನು ಅರಿತು ತಾವು ಸಂಪಾದಿಸಿದ್ದ ಆಧ್ಯಾತ್ಮಿಕ ಜೀವನದ ರತ್ನಗಳನ್ನೆಲ್ಲಾ ಯಾವ ಪಕ್ಷಪಾತವನ್ನೂ ಮಾಡದೆ ಎಲ್ಲರಿಗೂ ಹಂಚಲಾರಂಭಿಸಿದರು. ಸಂತೆಗೆ ಹಣ್ಣನ್ನು ತಂದು, ಮೊದಲು ಮೊದಲು ಅದನ್ನು ಚೌಕಾಸಿಮಾಡಿ ಮಾರುತ್ತಿದ್ದು, ಸೂರ್ಯಾಸ್ತ ಸಮಯದಲ್ಲಿ ಇನ್ನೇನು ಸಂತೆ ಮುಗಿದು ಹೋಯಿತು ಎನ್ನುವಾಗ ದೊರೆತ ಬೆಲೆಗೆ ಅದನ್ನು ಮಾರಿಬಿಡುವ ವ್ಯಾಪಾರಿಯ ಹಾಗೆ ಪರಮಹಂಸರು ಈಗ ಇಲ್ಲಿ ನಡೆದುಕೊಳ್ಳಲಾರಂಭಿಸಿದರು. ಇಲ್ಲಿ ಅವರ ಆಧ್ಯಾತ್ಮಿಕ ಜೀವನದ ಶಕ್ತಿಯ ಪ್ರಕಾಶ ಅತ್ಯಂತ ಹೆಚ್ಚಾಗಿ ವ್ಯಕ್ತವಾಗುತ್ತ ಬಂದುದನ್ನು ಭಕ್ತರೆಲ್ಲರೂ ಅನುಭವಿಸಿ ನೋಡಿದರು. ತಮ್ಮ ಐಹಿಕ ಜೀವನದ ಅಂತ್ಯ ಸಮೀಪಿಸಿದಾಗ ಏನೇನು ಆಗುವುದು ಎಂದು ಪರಮಹಂಸರು ತಿಳಿಸಿದ್ದರೊ, ಅವೆಲ್ಲಾ ಘಟಿಸುತ್ತಿರುವುದನ್ನು ಭಕ್ತರೆಲ್ಲರೂ ನೋಡಲಾರಂಭಿಸಿದರು: “ನಾನು ಎಲ್ಲವನ್ನೂ ಬಹಿರಂಗಪಡಿಸಿಬಿಟ್ಟು ಹೋಗುತ್ತೇನೆ.” “ಈ ಶರೀರದ (ತಮ್ಮ) ಮಹತ್ತಿನ ಸಂಬಂಧವಾಗಿ ಯಾವಾಗ ಅತ್ಯಂತ ಹೆಚ್ಚು ಮಂದಿ ತಮ್ಮೊಳಗೆ ತಾವೇ ಮಾತನಾಡಿಕೊಳ್ಳುವರೊ, ಆಗ ಭಗವತಿ ಇದನ್ನು ಹಿಂದಕ್ಕೆ ತೆಗೆದುಕೊಂಡುಬಿಡುತ್ತಾಳೆ.” “ಇದರ ಐಹಿಕ ಜೀವನದ ಅಂತ್ಯ ಸಮೀಪಿಸಿದಾಗ, ಭಕ್ತರಲ್ಲಿ ಯಾರು ಅಂತರಂಗಕ್ಕೆ ಸೇರಿದ್ದಾರೆ, ಯಾರು ಬಹಿರಂಗಕ್ಕೆ ಸೇರಿದ್ದಾರೆ ಎಂಬುದರ ವರ್ಗೀಕರಣವಾಗಿಬಿಡುತ್ತದೆ.” ಇವೇ ಮೊದಲಾದುವು. ಒಂದು ತಂಡ ಯುವಕರು ನರೇಂದ್ರನನ್ನು ತಮ್ಮ ನಾಯಕನನ್ನಾಗಿ ಮಾಡಿಕೊಂಡು ಸಕಾಲಕ್ಕೆ ಸಂಸಾರವನ್ನು ತ್ಯಜಿಸಿ ತಮ್ಮ ಉಳಿದ ಜೀವನವನ್ನೆಲ್ಲ ಭಗವಂತನ ಸಾಕ್ಷಾತ್ಕಾರಕ್ಕಾಗಿಯೂ ಮತ್ತು ಲೋಕಹಿತಕ್ಕಾಗಿಯೂ ಧಾರೆ ಎರೆಯುವರು ಎಂದು ಅವರು ಭವಿಷ್ಯ ಹೇಳಿದ್ದೂ ಇಲ್ಲೇ.
ಕಾಶೀಪುರದ ಈ ಮನೆ ಎರಡು ಅಂತಸ್ತಿನದು. ಮೇಲಿನ ಅಂತಸ್ತಿನಲ್ಲಿ ಎರಡು ಕೊಠಡಿಗಳು. ನೆಲ ಅಂತಸ್ತಿನಲ್ಲಿ ಮೂರು ಕೊಠಡಿಗಳು ಇದ್ದುವು. ಪರಮಹಂಸರು ಮೇಲಿನ ಅಂತಸ್ತಿನಲ್ಲಿದ್ದ ನಡು ಅಂಗಳದಲ್ಲಿ ವಾಸವಾಗಿದ್ದರು. ಅದರ ಎಡಭಾಗದಲ್ಲಿದ್ದ ಒಂದು ಚಿಕ್ಕ ಕೊಠಡಿಯನ್ನು ಪರಮಹಂಸರಿಗೆ ಶುಶ್ರೂಷೆ ಮಾಡುತ್ತಿದ್ದವರು ತಮ್ಮ ರಾತ್ರಿಯ ಉಪಯೋಗಕ್ಕಾಗಿ ಉಪಯೋಗಿಸುತ್ತಿದ್ದರು. ಅದರ ಬಲಭಾಗದಲ್ಲಿ ಒಂದು ಮೊಗಸಾಲೆ ಇದ್ದಿತು. ಒಮ್ಮೊಮ್ಮೆ ಪರಮಹಂಸರು ಕುಳಿತುಕೊಳ್ಳುವುದಕ್ಕಾಗಿಯೂ ಮತ್ತು ಸುಮ್ಮನೆ ಅಡ್ಡಾಡುವುದಕ್ಕಾಗಿಯೂ ಇದು ಉಪಯೋಗವಾಗುತ್ತಿತ್ತು. ನೆಲ ಅಂತಸ್ತಿನಲ್ಲಿದ್ದ ಹಾಗೆ ಒಂದು ನಡು ಅಂಗಳವಿತ್ತು. ಅದನ್ನು ಮತ್ತು ಅದರ ಬಲಪಕ್ಕದಲ್ಲಿದ್ದ ಒಂದು ಚಿಕ್ಕ ಕೊಠಡಿಯನ್ನು ಭಕ್ತರು ಉಪಯೋಗಿಸುತ್ತಿದ್ದರು. ಆ ಅಂಗಳದ ಒಂದು ಕೊನೆಯಲ್ಲಿದ್ದ ಒಂದು ಚಿಕ್ಕ ಕೊಠಡಿಯನ್ನು ಶ್ರೀಶಾರದಾದೇವಿಯವರು ಉಪಯೋಗಿಸುತ್ತಿದ್ದರು. ಈ ಪ್ರಧಾನ ಕಟ್ಟಡವೇ ಅಲ್ಲದೆ, ಆ ತೋಟದಲ್ಲಿ ಇನ್ನೂ ಕೆಲವು ಉಪಗೃಹಗಳಿದ್ದುವು ಮತ್ತು ಎರಡು ಕೊಳಗಳೂ ಇದ್ದುವು. ಸುತ್ತಾಡಲು ಬಹಳ ಚೆನ್ನಾದ ರಸ್ತೆಗಳಿದ್ದುವು. ಈ ಹೊಸ ಜಾಗದಲ್ಲಿ ಪರಮಹಂಸರು ಸ್ವಚ್ಛವಾದ ಗಾಳಿಯನ್ನು ಸೇವಿಸುತ್ತ ಬಹಳ ಆನಂದದಿಂದ ಇರಲಾರಂಭಿಸಿದರು.
ಯಾರನ್ನು ಪರಮಹಂಸರ ಭಕ್ತರಾಗಿ ಆಗಬೇಕು ಅಂತ ಭಗವಂತ ವಿಧಿಸಿದ್ದನೊ, ಅವರೆಲ್ಲರೂ ಬಹುಮಟ್ಟಿಗೆ ಆಗಲೇ ಬಂದುಬಿಟ್ಟಿದ್ದರು. ಅವರು ಬರಲು ಆರಂಭ ಮಾಡಿದ್ದು ೧೮೮೧ನೆಯ ಇಸವಿಯಲ್ಲಿ. ೧೮೮೪ರ ಕೊನೆಯಲ್ಲಿ ಶಶಿ ಮತ್ತು ಶರಚ್ಚಂದ್ರ ಪರಮಹಂಸರ ಪರಿಚಯವನ್ನು ಮಾಡಿಕೊಂಡರು. ೧೮೮೫ನೆಯ ಇಸವಿಯಲ್ಲಿ ಅವರ ಕಾಲೇಜು ಪರೀಕ್ಷೆ ಮುಗಿದನಂತರ ಪ್ರಾಯಶಃ ದಿವಸವೂ ಪರಮಹಂಸರ ದರ್ಶನ ಪಡೆಯಲು ಅವರು ಬರುತ್ತಿದ್ದರು. ೧೮೮೪ರ ಸೆಪ್ಟೆಂಬರದಲ್ಲಿ ಗಿರೀಶಘೋಷ ಪರಮಹಂಸರನ್ನು ಸ್ಟಾರ್ ಥಿಯೇಟರಿನಲ್ಲಿ ಸಂಧಿಸಿದ. ೧೮೮೪ರ ಕೊನೇ ದಿವಸಗಳಲ್ಲಿ ಶಾರದಾಪ್ರಸನ್ನ ಪರಮಹಂಸರನ್ನು ದಕ್ಷಿಣೇಶ್ವರದಲ್ಲಿ ಪ್ರಪ್ರಥಮವಾಗಿ ದರ್ಶನಮಾಡಿದ. ಸುಬೋಧ ಮತ್ತು ಕ್ಷಿರೋದ ಇವರಿಗೆ ಪರಮಹಂಸರ ಪ್ರಥಮ ದರ್ಶನ ದೊರೆತದ್ದು ೧೮೮೫ರ ಆಗಸ್ಟ್ ತಿಂಗಳಲ್ಲಿ.
ಪರಮಹಂಸರ ಯುವಕ ಭಕ್ತರಲ್ಲನೇಕರು ಪರಮಹಂಸರಿಗೆ ಶುಶ್ರೂಷೆ ಮಾಡಲು ಈಗ ಕಾಶೀಪುರದ ಮನೆಯಲ್ಲೇ ವಾಸಿಸಲಾರಂಭಿಸಿದ್ದಾರೆ. ಆದರೆ ಆಗಾಗ ತಮ್ಮ ತಮ್ಮ ಮನೆಗಳಿಗೂ ಹೋಗಿಬರುತ್ತಿದ್ದಾರೆ. ಗೃಹಸ್ಥ ಭಕ್ತರು ಬಹುಮಟ್ಟಿಗೆ ಪ್ರತಿದಿನವೂ ಬಂದು ಪರಮಹಂಸರನ್ನು ನೋಡಿ ಹೋಗುತ್ತಿದ್ದಾರೆ. ಅವರಲ್ಲಿ ಕೆಲವರು ಮಾತ್ರ ಎಲ್ಲೊ ಅಪರೂಪವಾಗಿ ಬಂದು ತಮ್ಮ ರಾತ್ರಿಯನ್ನು ಕಾಶೀಪುರದ ಮನೆಯಲ್ಲೇ ಕಳೆಯುತ್ತಿದ್ದಾರೆ.
ಇಂದು ಪ್ರಾತಃಕಾಲ ಪರಮಹಂಸರು ಬಿಚ್ಚುಗೈಯಿಂದ ತಮ್ಮ ಪ್ರೀತಿಯನ್ನು ಹಂಚ ಲಾರಂಭಿಸಿದರು. ನಿರಂಜನನಿಗೆ ಹೇಳುತ್ತಿದ್ದಾರೆ: “ನೀನು ನನ್ನ ತಂದೆ; ನಿನ್ನ ತೊಡೆಯ ಮೇಲೆ ಕುಳಿತುಕೊಳ್ಳುತ್ತೇನೆ.” ಕಾಳೀಪದನ ಎದೆಯನ್ನು ಸ್ಪರ್ಶಿಸಿ ಹೇಳುತ್ತಿದ್ದಾರೆ: “ನಿನಗೆ ಆತ್ಮಜಾಗ್ರತಿಯುಂಟಾಗಲಿ.” ಆತನ ಗಲ್ಲವನ್ನು ಹಿಡಿದು ಆದರ ತೋರಿಸುತ್ತ ಹೇಳುತ್ತಿದ್ದಾರೆ: “ಭಗವಂತನ ಸಾಕ್ಷಾತ್ಕಾರಕ್ಕಾಗಿ ಯಾರು ಹೃತ್ಪೂರ್ವಕವಾಗಿ ವ್ಯಾಕುಲವಾಗಿದ್ದಾನೊ, ಅಥವಾ ಯಾರು ಸಂಧ್ಯಾ ಆಹ್ನಿಕಾದಿಗಳನ್ನು ಮಾಡುತ್ತಿದ್ದಾನೊ ಅಂಥವನು ಇಲ್ಲಿಗೆ ಬರಲೇಬೇಕಾಗುತ್ತದೆ.” ಇಂದು ಪ್ರಾತಃಕಾಲ ಇಬ್ಬರು ಸ್ತ್ರೀಯರಿಗೆ ತಮ್ಮ ಕೃಪಾಕಟಾಕ್ಷವನ್ನು ಬೀರಿದರು; ಸಮಾಧಿಸ್ಥರಾಗಿ ತಮ್ಮ ಪಾದಗಳಿಂದ ಅವರ ಎದೆಯ ಭಾಗವನ್ನು ಸ್ಪರ್ಶ ಮಾಡಿದರು. ತಮಗೆ ಇಂಥ ಸೌಭಾಗ್ಯ ಒದಗಿದುದಕ್ಕಾಗಿ ಆ ಹೆಂಗಸರು ಪ್ರೇಮಾಶ್ರುವನ್ನು ಸುರಿಸಲಾರಂಭಿಸಿದ್ದಾರೆ. ಒಬ್ಬಳು ಅಳುತ್ತ ಅಳುತ್ತ ಹೇಳುತ್ತಿದ್ದಾಳೆ: “ನೀವು ಅತ್ಯಂತ ದಯಾಮಯಿಗಳು!” ಇಂದು ಅವರ ಪ್ರೀತಿ ಎಲ್ಲಾ ಹದ್ದುಬಸ್ತುಗಳನ್ನು ಮೀರಿ ಉಕ್ಕಿಉಕ್ಕಿ ಹರಿಯುತ್ತಿದೆ. ಸಿಂಥಿಯ ಗೋಪಾಲನಿಗೆ ಆಶೀರ್ವಾದ ಮಾಡಬೇಕೆಂದು ಒಬ್ಬ ಭಕ್ತನಿಗೆ ಹೇಳಿದರು: “ಗೋಪಾಲನನ್ನು ಕರೆದುಕೊಂಡು ಬಾ ಇಲ್ಲಿಗೆ.”
ಸಾಯಂಕಾಲವಾಗಿದೆ. ಪರಮಹಂಸರು ಭಗವತಿಯ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಸ್ವಲ್ಪ ಹೊತ್ತಾದನಂತರ ಒಬ್ಬಿಬ್ಬರು ಭಕ್ತರೊಡನೆ ಬಹಳ ಮೆತ್ತಗೆ ಮಾತನಾಡುತ್ತಿದ್ದಾರೆ. ಕೊಠಡಿಯಲ್ಲಿ ಕಾಳಿ, ಚುಣಿಲಾಲ, ಮಾಸ್ಟರ್, ನವಗೋಪಾಲ, ಶಶಿ, ನಿರಂಜನ ಇವರೇ ಮೊದಲಾದವರು ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ನನಗೊಂದು ಸ್ಟೂಲು ಕೊಂಡುಕೊಂಡು ಬಾ. ಅದಕ್ಕೆ ಬೆಲೆ ಏನಾಗಬಹುದು?”
ಮಾಸ್ಟರು: “ಎರಡು ಮೂರು ರೂಪಾಯಿಗಳೊಳಗೆ.”
ಶ್ರೀರಾಮಕೃಷ್ಣರು: “ಸ್ನಾನದ ಮಣೆಗೆ ಹನ್ನೆರಡಾಣೆ. ಆದರೆ ಇದಕ್ಕೇಕೆ ಇಷ್ಟೊಂದು ಬೆಲೆ?”
ಮಾಸ್ಟರ್: “ಬಹುಶಃ ಅಷ್ಟಾಗಲಾರದು ಅಂತ ಕಾಣುತ್ತೆ.”
ಶ್ರೀರಾಮಕೃಷ್ಣರು: “ನಾಳೆ ಗುರುವಾರ. ಅಪರಾಹ್ನದ ಕೊನೆಯ ಭಾಗ ಅಮಂಗಳಕರ. ಆದ್ದರಿಂದ ಮೂರು ಘಂಟೆಗೆ ಮುನ್ನವೇ ಇಲ್ಲಿಗೆ ಬರಬಲ್ಲೆಯಾ?”
ಮಾಸ್ಟರ್: “ಆಗಲಿ, ಬರುತ್ತೇನೆ.”
ಶ್ರೀರಾಮಕೃಷ್ಣರು: “ಒಳ್ಳೇದು, ಈ ನನ್ನ ರೋಗ ಇನ್ನೆಷ್ಟು ದಿನದಲ್ಲಿ ಗುಣವಾಗಿ ಬಿಡುತ್ತದೆ?”
ಮಾಸ್ಟರ್: “ಸ್ವಲ್ಪ ಹೆಚ್ಚಾಗಿ ಕೆರಳಿಕೊಂಡಿದೆ. ಆದ್ದರಿಂದ ಸ್ವಲ್ಪ ಕಾಲ ಹಿಡಿಯುತ್ತದೆ.”
ಶ್ರೀರಾಮಕೃಷ್ಣರು: “ಇನ್ನೆಷ್ಟು ಕಾಲ?”
ಮಾಸ್ಟರ್: “ಬಹುಶಃ ಐದಾರು ತಿಂಗಳು.”
ಇದನ್ನು ಕೇಳಿ ಪರಮಹಂಸರು ಮಗುವಿನೋಪಾದಿಯಲ್ಲಿ ಸಹಿಸಲಾರದವರ ಹಾಗೆ ಹೇಳುತ್ತಿದ್ದಾರೆ: “ಇನ್ನೂ ಅಷ್ಟೊಂದು ಕಾಲ?”
ಮಾಸ್ಟರ್: “ಪೂರ್ಣವಾಗಿ ಗುಣವಾಗುವುದಕ್ಕೆ.”
ಶ್ರೀರಾಮಕೃಷ್ಣರು: “ಓ, ಹಾಗೆ ಹೇಳು! ಒಳ್ಳೇದು, ನನಗೆ ಎಷ್ಟೊಂದು ಭಗವದ್ರೂಪ ದರ್ಶನಗಳು, ಭಾವ, ಸಮಾಧಿ ಆಗಿವೆ ಏನು ಕತೆ! ಆದರೂ ನನಗೆ ಇಂಥ ರೋಗ ಏಕೆ ಬಂದಿದೆ ಹೇಳಬಲ್ಲೆಯಾ?”
ಮಾಸ್ಟರ್: “ಹೌದು, ಈ ರೋಗದಿಂದ ನಿಮಗೆ ಅತ್ಯಂತ ಕಷ್ಟವಾಗುತ್ತಿರುವುದೇನೋ ನಿಜ. ಆದರೆ ಇದಕ್ಕೂ ಒಂದು ಉದ್ದೇಶವಿದೆ.”
ಶ್ರೀರಾಮಕೃಷ್ಣರು: “ಏನದು?”
ಮಾಸ್ಟರ್: “ನಿಮ್ಮ ಈಗಿನ ಮಾನಸಿಕ ಅವಸ್ಥೆ ಪರಿವರ್ತನೆ ಹೊಂದುವುದರಲ್ಲಿದೆ. ನಿರಾಕಾರದ ಕಡೆಗೆ ವಾಲುತ್ತಿದೆ. ನಿಮ್ಮ ‘ವಿದ್ಯೆಯ ಅಹಂ’ ಕೂಡ ನಾಶಹೊಂದುವುದರಲ್ಲಿದೆ.”
ಶ್ರೀರಾಮಕೃಷ್ಣರು: “ಹೌದು ನಿಜ, ನಾನು ಮಾಡಬೇಕಾಗಿದ್ದ ಲೋಕಶಿಕ್ಷಣ ಮುಗಿಯುವುದರಲ್ಲಿದೆ. ಮತ್ತೆ ಆ ಕಾರ್ಯ ನನ್ನ ಕೈಯಲ್ಲಿ ಸಾಧ್ಯವಿಲ್ಲ. ಎಲ್ಲವೂ ರಾಮ ಮಯವಾಗಿ ಕಾಣಬರುತ್ತಿದೆ. ಒಮ್ಮೊಮ್ಮೆ ನಾನೇ ನನಗೆ ಹೇಳಿಕೊಳ್ಳುತ್ತೇನೆ: ‘ಇನ್ನು ಯಾರಿಗೆ ತಾನೆ ಉಪದೇಶ ಕೊಡುವುದು?’ ನೋಡು, ಈ ಮನೆಯನ್ನು ನಾವು ಬಾಡಿಗೆಗೆ ತೆಗೆದುಕೊಂಡಿರುವುದರಿಂದ, ಅನೇಕ ವಿಧದ ಭಕ್ತರು ಇಲ್ಲಿಗೆ ಬರಲಾರಂಭಿಸಿದ್ದಾರೆ. ಇಲ್ಲಿ ಕೃಷ್ಣಪ್ರಸನ್ನಸೇನನ ಮತ್ತು ಶಶಧರನ ಹಾಗೆ-ಇಂಥ ಸಮಯದಲ್ಲಿ ಇಂಥ ಉಪನ್ಯಾಸ ಅಂತ-ಸೈನ್ ಬೋರ್ಡೇನು ಹಾಕಬೇಕಾಗಿಲ್ಲವಲ್ಲ!” (ಶ್ರೀರಾಮಕೃಷ್ಣರು ಮತ್ತು ಮಾಸ್ಟರ್ ನಗುತ್ತಿದ್ದಾರೆ.)
ಮಾಸ್ಟರ್: “ನಿಮಗೆ ಈ ರೋಗ ಬಂದಿರುವುದು, ಇನ್ನೂ ಒಂದು ಉದ್ದೇಶಕ್ಕಾಗಿ. ಶಿಷ್ಯರನ್ನು ಆಯ್ದು ತೆಗೆಯಲೋಸುಗ. ಐದು ವರ್ಷ ತಪಸ್ಸು ಮಾಡಿಯೂ ಯಾವುದನ್ನು ಭಕ್ತರು ಗಳಿಸಿಕೊಳ್ಳಲಾರದವರಾಗುತ್ತಿದ್ದರೊ ಅದನ್ನು ಅವರು ಈ ಕೆಲವು ದಿವಸಗಳಲ್ಲೇ ಗಳಿಸಿಕೊಂಡುಬಿಟ್ಟಿದ್ದಾರೆ. ಅವರ ಪ್ರೇಮ, ಭಕ್ತಿ ಹೆಮ್ಮರದಂತೆ ಬೆಳೆಯುತ್ತಿವೆ.”
ಶ್ರೀರಾಮಕೃಷ್ಣರು: “ಹೌದು, ಅದೇನೊ ನಿಜ; ಆದರೆ ನಿರಂಜನನು ಮನೆಗೆ ಹೋಗಿಬಿಟ್ಟಿದ್ದನಲ್ಲ, (ನಿರಂಜನನಿಗೆ) ಆದರೆ, ಹೇಳು ನೋಡೋಣ, ನಿನಗೇನನಿಸುತ್ತದೆ?”
ನಿರಂಜನ: “ಹಿಂದೆ ನಿಮ್ಮನ್ನು ಪ್ರೀತಿಸುತ್ತಲೇನೋ ಇದ್ದೆ. ಈಗ ನಿಮ್ಮನ್ನು ಬಿಟ್ಟು ಒಂದು ಅರೆಘಳಿಗೆಯೂ ಇರಲಾಗುತ್ತಿಲ್ಲ.”
ಮಾಸ್ಟರ್: “ಈ ಯುವಕರೆಲ್ಲರೂ ಬಹಳ ಅದ್ಭುತಶಾಲಿಗಳು ಎಂಬುದನ್ನು ಒಂದು ದಿನ ಅರಿತುಕೊಂಡೆ.”
ಶ್ರೀರಾಮಕೃಷ್ಣರು: “ಎಲ್ಲಿ?”
ಮಾಸ್ಟರ್: “ಒಂದು ದಿನ ಹಾಗೇ ಶ್ಯಾಮಪುಕುರದ ಮನೆಯಲ್ಲಿ ಒಂದು ಕಡೆ ನಿಂತು ಭಕ್ತರನ್ನೆಲ್ಲ ಗಮನಿಸಿ ನೋಡುತ್ತಿದ್ದೆ. ಆಗ ಆ ಯುವಕರಲ್ಲಿ ಪ್ರತಿಯೊಬ್ಬನೂ ಎಷ್ಟೊಂದು ದುಸ್ತರ ವಿಘ್ನಗಳಿಂದ ಪಾರಾಗಿ ತಮ್ಮ ಸೇವೆಯಲ್ಲಿ ನಿರತನಾಗಿದ್ದಾನೆ ಎಂಬುದು ಮೂರ್ತಿಮತ್ತಾಗಿ ನನ್ನ ಮನಸ್ಸಿಗೆ ಗೋಚರವಾಯಿತು.”
ಈ ಮಾತುಗಳನ್ನು ಕೇಳುತ್ತ ಇದ್ದ ಹಾಗೆ ಪರಮಹಂಸರು ಭಾವಾವಿಷ್ಟರಾಗಲಾರಂಭಿ ಸಿದರು. ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದವರು ಈಗ ಸಮಾಧಿಸ್ಥರಾಗಿಬಿಟ್ಟಿದ್ದಾರೆ.
ಸಮಾಧಿಯಿಂದಿಳಿದ ಮೇಲೆ ಮಾಸ್ಟರಿಗೆ ಹೇಳುತ್ತಿದ್ದಾರೆ: “ಎಲ್ಲವೂ ಸಾಕಾರದಿಂದ ನಿರಾಕಾರದ ಕಡೆಗೆ ಹೋಗುತ್ತಿರುವುದನ್ನು ಕಂಡೆ, ಇನ್ನೂ ಮುಂದಕ್ಕೆ ಹೇಳಬೇಕು ಎಂದೇನೋ ಇಚ್ಛೆ, ಆದರೆ ಸಾಧ್ಯವಾಗುತ್ತಿಲ್ಲ. ಒಳ್ಳೇದು, ಈಗ ನನ್ನ ಮನಸ್ಸು ನಿರಾಕಾರದ ಕಡೆಗೆ ಬಾಗಿರುವುದು, ನನ್ನ ಅಂತಿಮ ಲಯಕ್ಕಾಗಿ. ಅಲ್ಲವೇನು?”
ಮಾಸ್ಟರ್ (ಚಕಿತನಾಗಿ): “ಬಹುಶಃ ಇರಬಹುದು.”
ಶ್ರೀರಾಮಕೃಷ್ಣರು: “ಈಗಲೂ ನಾನು ಅಖಂಡ ಸಚ್ಚಿದಾನಂದವನ್ನು ನೋಡುತ್ತಾ ಇದ್ದೇನೆ–ಅದು ಈ ರೀತಿಯಾಗಿ… ಆದರೆ ಬಹಳ ಪ್ರಯಾಸಪಟ್ಟು ನನ್ನ ಭಾವನೆಯನ್ನು ತಡೆದು ನಿಲ್ಲಿಸಿದ್ದೇನೆ.
“ಶಿಷ್ಯರನ್ನು ಆಯ್ದು ತೆಗೆಯುವುದಕ್ಕೆ ಅಂತ ನೀನು ಹೇಳಿದೆಯಲ್ಲ, ಅದು ನಿಜ. ಈ ರೋಗ ಬಂದದ್ದರಿಂದ ಅಂತರಂಗಕ್ಕೆ ಸೇರಿದವರಾರು, ಬಹಿರಂಗಕ್ಕೆ ಸೇರಿದವರಾರು ಎಂಬುದು ಗೊತ್ತಾಗಿಬಿಡುತ್ತಾ ಇದೆ. ಯಾರು ಸಂಸಾರವನ್ನು ತ್ಯಜಿಸಿ ಇಲ್ಲಿಗೆ ಬಂದಿದ್ದಾರೊ, ಅವರು ಅಂತರಂಗಿಗಳು; ಒಮ್ಮೊಮ್ಮೆ ಬಂದು: ‘ಮಹಾಶಯರೆ, ನಿಮ್ಮ ಆರೋಗ್ಯ ಹೇಗಿದೆ?’ ಅಂತ ಹೇಳಿ ಹೋಗುವವರು ಬಹಿರಂಗಿಗಳು.
“ನೀನು ಭವನಾಥನ ನಡತೆಯನ್ನು ನೋಡಿಲ್ಲವೇನು? ಶ್ಯಾಮಪುಕುರಕ್ಕೆ ವರನಂತೆ ಉಡುಪು ಹಾಕಿಕೊಂಡು ಬಂದು ನನ್ನನ್ನು ಕೇಳಿದ: ‘ಈಗ ನಿಮಗೆ ಹೇಗಿದೆ?’ ಅಂದಿನಿಂದ ಆತನ ಮುಖವೇ ಕಂಡುಬಂದಿಲ್ಲ. ನರೇಂದ್ರನಿಗೋಸ್ಕರ ನಾನು ಆತನಿಗೆ ಆದರ ತೋರಿಸುತ್ತಿದ್ದೇನೆ. ಆದರೆ ನನ್ನ ಮನಸ್ಸಿನಲ್ಲಿ ಆತನಿಗೆ ಸ್ಥಾನವಿಲ್ಲ.
(ಮಾಸ್ಟರಿಗೆ) “ಭಗವಂತ ಭಕ್ತರ ಸಲುವಾಗಿ ದೇಹಧಾರಣೆ ಮಾಡಿಕೊಂಡು ಬಂದಾಗ ಆತನೊಡನೆ ಭಕ್ತರೂ ಹಿಂಬಾಲಕರಾಗಿ ಬರುತ್ತಾರೆ. ಅದರಲ್ಲಿ ಕೆಲವರು ಅಂತರಂಗಿಗಳು, ಇನ್ನು ಕೆಲವರು ಬಹಿರಂಗಿಗಳು, ಮತ್ತೆ ಕೆಲವರು ಸರಬರಾಯಿ ಮಾಡುವವರು.
“ನನಗೆ ಹತ್ತೊ ಹನ್ನೊಂದೊ ಆಗಿರುವಾಗ ನಮ್ಮ ಊರಿನ ಹತ್ತಿರ ಇರುವ ವಿಶಾಲಾಕ್ಷಿ ದೇವಾಲಯಕ್ಕೆ ಮೈದಾನದ ಮೂಲಕ ನಡೆದುಹೋಗುತ್ತಿದ್ದೆ. ಆಗ ನನಗೆ ಭಾವಾವಸ್ಥೆಯ ಮೊಟ್ಟಮೊದಲ ಅನುಭವವಾಯಿತು. ಅದು ಎಂಥ ಅದ್ಭುತವಾದ ದರ್ಶನ! ಒಮ್ಮೆಗೇ ಬಾಹ್ಯಜ್ಞಾನಶೂನ್ಯನಾಗಿಬಿಟ್ಟೆ.
“ನನಗೆ ಇಪ್ಪತ್ತೆರಡೊ ಇಪ್ಪತ್ತಮೂರೊ ವಯಸ್ಸಾಗಿದ್ದಾಗ, ಕಾಳೀದೇವಾಲಯದಲ್ಲಿ (ದಕ್ಷಿಣೇಶ್ವರದಲ್ಲಿ) ಭಗವತಿ ನನ್ನನ್ನು ಕೇಳಿದಳು: ‘ನಿನಗೆ ಅಕ್ಷರನಾಗಬೇಕು ಅಂತ ಇಚ್ಛೆಯಿದೆಯೇನು?’ ‘ಅಕ್ಷರ’ ಎಂಬ ಪದದ ಅರ್ಥ ನನಗೆ ಗೊತ್ತಿರಲಿಲ್ಲ. ಅದಕ್ಕಾಗಿ ನಾನು ಹಲಧಾರಿಯನ್ನು ಕೇಳಿದೆ. ಆತ ಹೇಳಿದ: “ ‘ಕ್ಷರ” ಎಂದರೆ “ಜೀವಾತ್ಮ” : “ಅಕ್ಷರ” ಎಂದರೆ “ಪರಮಾತ್ಮ.”’
“ದೇವಾಲಯದಲ್ಲಿ ಸಾಯಂಕಾಲ ಮಂಗಳಾರತಿ ನಡೆಯುತ್ತಿದ್ದಾಗ, ನಾನು ಕುಟೀರದ ಮೇಲಕ್ಕೆ ಹತ್ತಿ ಉಚ್ಚ ಕಂಠದಿಂದ ಕೂಗಿಕೊಳ್ಳುತ್ತಿದ್ದೆ: ‘ಓ ಭಕ್ತರಿರಾ! ಎಲ್ಲಿದ್ದೀರಿ ನೀವು? ಬೇಗ ಬನ್ನಿ! ಐಹಿಕರ ಸಹವಾಸದಿಂದ ನನ್ನ ಪ್ರಾಣ ಹೋಗುತ್ತಿದೆ!’ ನಾನು ಇದನ್ನೆಲ್ಲ ‘ಇಂಗ್ಲಿಷ್ ಮೆನ್’ ಗೆ ತಿಳಿಸಿದೆ. ಅವರು ಹೇಳಿಬಿಟ್ಟರು, ಇದೆಲ್ಲ ನಿಮ್ಮ ಮಾನಸಿಕ ಭ್ರಾಂತಿ ಅಂತ. ಬಹುಶಃ ಹಾಗೇ ಇರಬೇಕು ಎಂದು ಭಾವಿಸಿ ತೆಪ್ಪಗಾದೆ. ಆದರೆ ಈಗ ಅದೆಲ್ಲ ಸತ್ಯವಾದುದಾಗಿ ಕಂಡುಬರುತ್ತಾ ಇದೆ; ಭಕ್ತರು ಬರುತ್ತಾ ಇದ್ದಾರೆ.
“ಭಗವತಿ ಭಾವಾವಸ್ಥೆಯಲ್ಲಿ ನನಗೆ ಸೇವೆ ಮಾಡತಕ್ಕ ಐದು ಜನರನ್ನು ತೋರಿಸಿದಳು. ಮೊದಲನೆಯವನು ಮಥುರಬಾಬು. ಎರಡನೆಯವನು ಶಂಭುಮಲ್ಲಿಕ. ನಾನು ಆತನನ್ನು ಹಿಂದೆ ಎಂದೂ ನೋಡಿರಲಿಲ್ಲ. ಭಾವದಲ್ಲಿ ನೋಡಿದಾಗ ಆತನ ಮೈ ಹೊಂಬಣ್ಣವಾಗಿ ಕಂಡಿತು; ತಲೆಗೆ ಟೋಪಿ ಹಾಕಿಕೊಂಡಿದ್ದ. ಬಹಳ ದಿವಸಗಳ ನಂತರ ನಾನು ವಾಸ್ತವಿಕವಾಗಿ ಶಂಭುಮಲ್ಲಿಕನನ್ನು ಸಂಧಿಸಿದಾಗ ನನಗನಿಸಿತು, ಈತನನ್ನು ಆಗಲೇ ನಾನು ಭಾವಾವಸ್ಥೆಯಲ್ಲಿ ನೋಡಿದ್ದೆನಲ್ಲ ಎಂದು. ಉಳಿದ ಮೂವರು ಯಾರು ಎಂಬುದು ನನ್ನ ಅರಿವಿಗೆ ಇನ್ನೂ ಬಂದಿಲ್ಲ. ಆದರೆ ಅವರದೂ ಗೌರವರ್ಣವೆ. ಬಹುಶಃ ಸುರೇಂದ್ರ ಅವರಲ್ಲಿ ಒಬ್ಬನಾಗಿರಬಹುದೆಂದು ತೋರುತ್ತಿದೆ.
“ನನಗೀ ಭಗವದವಸ್ಥೆ ಬಂದನಂತರ ನನ್ನ ಹಾಗೇ ಇರತಕ್ಕ ಇನ್ನೊಬ್ಬ ಬಂದು ನನ್ನ ಇಡಾ, ಪಿಂಗಳಾ, ಸುಷುಮ್ನಾ ನಾಡಿಗಳನ್ನು ಚೆನ್ನಾಗಿ ಅಲ್ಲಾಡಿಸಿಬಿಟ್ಟ. ಷಟ್ ಚಕ್ರಗಳಲ್ಲಿರುವ ಪ್ರತಿಯೊಂದು ಪದ್ಮದೊಡನೆಯೂ ತನ್ನ ನಾಲಗೆಯಿಂದ ವಿಲಾಸಿಸಲಾರಂಭಿಸಿದ. ಅಧೋಮುಖವಾಗಿದ್ದ ಪದ್ಮಗಳು ಊರ್ಧ್ವಮುಖವಾಗಿ ನಿಂತುಕೊಂಡವು. ಕೊನೆಯಲ್ಲಿ ಸಹಸ್ರಾರಪದ್ಮ ಪೂರ್ಣವಾಗಿ ಅರಳಿಬಿಟ್ಟಿತು.
“ಭಕ್ತರು ನನ್ನನ್ನು ನೋಡಲು ಬರುವ ಮುನ್ನವೇ ಅವರ ಸ್ವಭಾವ ಏನು ಎಂಬುದನ್ನು ನನಗೆ ಭಗವತಿ ತೋರಿಸಿಬಿಡುತ್ತಿದ್ದಳು. ಚೈತನ್ಯದೇವನ ಸಂಕೀರ್ತನೆ ಪಾರ್ಟಿ ಪಂಚವಟಿಯ ವಟವೃಕ್ಷದ ಕಡೆಯಿಂದ ಬಕುಲ ವೃಕ್ಷದ ಕಡೆಗೆ ಹೋದುದನ್ನು ಭಾವದಲ್ಲಲ್ಲ, ಈ ಎರಡು ಸ್ಥೂಲ ಕಣ್ಣುಗಳಿಂದಲೇ ನೋಡಿದ್ದೇನೆ. ಆ ಪಾರ್ಟಿಯಲ್ಲಿ ಬಲರಾಮನನ್ನು ನೋಡಿದೆ; ಬಹುಶಃ ನಿನ್ನನ್ನೂ (ಮಾಸ್ಟರನ್ನು). ನೀನು ಮತ್ತು ಚುಣಿಲಾಲ ಆಗಾಗ ಬಂದು ನನ್ನನ್ನು ನೋಡಿಹೋಗುತ್ತಿರುವುದರಿಂದ ನಿಮ್ಮಿಬ್ಬರಲ್ಲೂ ಆತ್ಮಜಾಗೃತಿ ಉಂಟಾಗಿಬಿಟ್ಟಿದೆ. ಶಶಿ ಮತ್ತು ಶರಚ್ಚಂದ್ರ ಯೇಸುಕ್ರಿಸ್ತನ ಪಾರ್ಟಿಯಲ್ಲಿದ್ದುದನ್ನು ಭಾವದಲ್ಲಿದ್ದಾಗ ನೋಡಿದೆ.
“ವಟವೃಕ್ಷದ ಕೆಳಗೆ ಭಾವದಲ್ಲಿ ಒಂದು ಮಗುವನ್ನು ನೋಡಿದೆ. ಹೃದೆ ಹೇಳಿದ: ‘ಶೀಘ್ರದಲ್ಲೇ ನಿಮಗೊಂದು ಮಗು ಆಗುತ್ತದೆ.’ ನಾನು ಹೇಳಿದೆ: ‘ಎಲ್ಲಾ ಹೆಂಗಸರು ನನ್ನ ತಾಯಿಯರೆ. ಆದ್ದರಿಂದ ನನಗೆ ಮಗು ಆಗುವ ಬಗೆ ಹೇಗೆ?’ ರಾಖಾಲನೇ ಆ ಮಗು.
“ನಾನು ಭಗವತಿಯನ್ನು ಕೇಳಿಕೊಂಡೆ: ‘ಹೇ ತಾಯೆ, ನೀನು ನನ್ನನ್ನು ಈ ಅವಸ್ಥೆಯಲ್ಲಿ ಇಟ್ಟಿರುವುದರಿಂದ, ಒಬ್ಬ ಧನಿಕ ನನ್ನ ಸಹಾಯಕನಾಗುವಂತೆ ಮಾಡು.’ ಅದಕ್ಕಾಗಿಯೇ ಮಥುರಬಾಬು ಹದಿನಾಲ್ಕು ವರ್ಷಕಾಲ (೧೮೫೮ರಿಂದ ೧೮೭೧ರವರೆಗೆ) ನನ್ನ ಸೇವೆ ಮಾಡಿದ. ಎಷ್ಟೊಂದು ವಿಧವಾಗಿ ಅಂತ! ನನ್ನ ಇಚ್ಛೆಗನುಸಾರ ಸಾಧುಗಳಿಗೆ ಪ್ರತ್ಯೇಕ ಉಗ್ರಾಣವನ್ನು ಏರ್ಪಡಿಸಿದ. ಬೇಕಾದಾಗಲೆಲ್ಲ ಬಂಡಿ, ಪಲ್ಲಕ್ಕಿ ಇವನ್ನು ಒದಗಿಸುತ್ತಿದ್ದ. ಯಾರಾರಿಗೆ ಏನೇನು ಕೊಡಬೇಕು ಅಂತ ಹೇಳಿದರೂ ಆತ ಹಾಗೇ ಮಾಡುವುದು ಸಾಮಾನ್ಯವಾದುದೆ! ಭೈರವಿ ಬ್ರಾಹ್ಮಣಿ ಆತನನ್ನು ಪ್ರತಾಪರುದ್ರ 1 ಅಂತ ಕರೆಯುತ್ತಿದ್ದಳು.
“ವಿಜಯ ಪರೋಕ್ಷವಾಗಿ ಈ ರೂಪವನ್ನು (ತಮ್ಮನ್ನು) ದರ್ಶನಮಾಡಿದ್ದಾನೆ. ಇದಕ್ಕೆ ನಿನ್ನ ವಿವರಣೆಯೇನು? ವಿಜಯ ಹೇಳಿದ: ‘ಈಗ ನಿಮ್ಮನ್ನು ಮುಟ್ಟುತ್ತಿರುವ ಹಾಗೆ ಆಗಲೂ ಮುಟ್ಟಿದ್ದೇನೆ.’
“ಒಮ್ಮೆ ಲಾಟು (ಪರಮಹಂಸರ ಭಕ್ತರ) ಎಣಿಕೆ ಹಾಕಿ ಒಟ್ಟು ಮೂವತ್ತೊಂದು ಜನ ಭಕ್ತರಿದ್ದಾರೆ ಅಂತ ಹೇಳಿದ. ಅದೇನೂ ಹೆಚ್ಚಲ್ಲ. ಆದರೆ ವಿಜಯ ಮತ್ತು ಕೇದಾರ ಇನ್ನೂ ಕೆಲವರನ್ನು ಮಾಡಿಕೊಡುತ್ತಾ ಇದ್ದಾರೆ.
“ಭಗವತಿ ಭಾವದಲ್ಲಿ ನನಗೆ ತೋರಿಸಿದಳು. ನನ್ನ ಜೀವನದ ಕೊನೆಯನ್ನು ನಾನು ಕೇವಲ ಪಾಯಸ ಕುಡಿದು ಕಳೆಯಬೇಕಾಗುತ್ತದೆ ಅಂತ. ನನಗೆ ಈ ರೋಗ ಬಂದ ನಂತರ ನನ್ನ ಪರಿವಾರ (ಶ್ರೀಶಾರದಾದೇವಿಯವರು) ಒಂದು ದಿನ ರವೆಪಾಯಸ ಮಾಡಿಕೊಟ್ಟರು. ಆಗ ಗಟ್ಟಿಯಾಗಿ ಅಳುತ್ತ ಹೇಳಿದೆ: ‘ನಾನು ಪಾಯಸ ಕುಡಿದಿರಬೇಕಾದ ನನ್ನ ಅಂತಿಮಕಾಲ ಇದೇ ಏನು? ಇಷ್ಟು ಕಷ್ಟದಿಂದ!”’
೪ನೆ ಜನವರಿ, ೧೮೮೬, ಪುಷ್ಯ ಕೃಷ್ಣ ಚತುರ್ದಶಿ, ಸೋಮವಾರ
ಘಂಟೆ ಅಪರಾಹ್ನ ನಾಲ್ಕು. ಪರಮಹಂಸರು ತಮ್ಮ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ಪರಮಹಂಸರ ಕ್ಷೇಮಸಮಾಚಾರವನ್ನು ವಿಚಾರಿಸಿಕೊಂಡು ಹೋಗಲು ರಾಮ ಚಟ್ಟೋಪಾಧ್ಯಾಯ ದಕ್ಷಿಣೇಶ್ವರದಿಂದ ಬಂದಿದ್ದಾನೆ. ಪರಮಹಂಸರು ಆ ವಿಷಯವನ್ನು ಮಾಸ್ಟರಿಗೆ ತಿಳಿಸುತ್ತ ಆತನನ್ನು ಕೇಳಿದರು: “ಏನು, ದಕ್ಷಿಣೇಶ್ವರದಲ್ಲಿ ಈಗ ಬಹಳ ಚಳಿಯೊ?”
ನರೇಂದ್ರ ಬಂದಿದ್ದಾನೆ. ಪರಮಹಂಸರು ಆಗಾಗ ಆತನ ಕಡೆ ನೋಡಿ ನಗುತ್ತಿದ್ದಾರೆ. ಇಂದು ಪರಮಹಂಸರ ಪ್ರೀತಿ ಆತನ ಕಡೆಗೆ ಉಕ್ಕಿ ಉಕ್ಕಿ ಹರಿಯುತ್ತಿರುವುದೊ ಏನೊ ಎಂಬಂತೆ ತೋರುತ್ತಿತ್ತು. ನರೇಂದ್ರ ಈ ದಿನ ಅತ್ತಿದ್ದಾನೆ ಎಂಬುದನ್ನು ಮಾಸ್ಟರಿಗೆ ಸಂಜ್ಞೆಯ ಮೂಲಕ ತಿಳಿಸಿ, ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡರು. ನರೇಂದ್ರ ಮನೆಯಿಂದ ಇಲ್ಲಿಯವರೆಗೆ ಅಳುತ್ತಲೇ ಬಂದಿದ್ದಾನೆ ಎಂಬುದನ್ನು ಮತ್ತೆ ಸಂಜ್ಞೆಯ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲರೂ ಸುಮ್ಮನೆ ಕುಳಿತಿದ್ದಾರೆ. ಈಗ ನರೇಂದ್ರ ಬಾಯಿಬಿಟ್ಟ.
ನರೇಂದ್ರ: “ಇಂದು ಅಲ್ಲಿಗೆ ಹೋಗಲು ಮನಸ್ಸು ಮಾಡಿಕೊಂಡಿದ್ದೇನೆ.”
ಶ್ರೀರಾಮಕೃಷ್ಣರು: “ಎಲ್ಲಿಗೆ?”
ನರೇಂದ್ರ: “ದಕ್ಷಿಣೇಶ್ವರಕ್ಕೆ. ಇಂದಿನ ರಾತ್ರಿ ಬಿಲ್ವಮರದ ಕೆಳಗಿ ಧುನಿ (ಅಗ್ನಿಕುಂಡ) ಹೊತ್ತಿಸಿ ಧ್ಯಾನಮಾಡಬೇಕೆಂದಿದ್ದೇನೆ.”
ಶ್ರೀರಾಮಕೃಷ್ಣರು: “ಬೇಡ. ಮದ್ದಿನ ಕಾರ್ಖಾನೆಯವರು ಅಲ್ಲಿ ಧುನಿ ಹೊತ್ತಿಸಲು ಬಿಟ್ಟುಕೊಡರು. ಪಂಚವಟಿ ಬಹಳ ಒಳ್ಳೆ ಜಾಗ. ಅಲ್ಲಿ ಅನೇಕ ಸಾಧು ಸಂನ್ಯಾಸಿಗಳು ಜಪತಪಾದಿಗಳನ್ನು ಮಾಡಿದ್ದಾರೆ. ಆದರೆ ಈಗ ಅಲ್ಲಿ ವಿಪರೀತ ಚಳಿ; ಜೊತೆಗೆ ಅಂಧಕಾರ ಬೇರೆ.”
ಮತ್ತೆ ಎಲ್ಲರೂ ನಿಶ್ಶಬ್ದರಾಗಿ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ನಗುತ್ತ ನರೇಂದ್ರನಿಗೆ): “ವ್ಯಾಸಂಗ ಮುಂದುವರಿಸುವುದಿಲ್ಲವೆ?”
ನರೇಂದ್ರ ಪರಮಹಂಸರ ಮತ್ತು ಮಾಸ್ಟರ ಕಡೆ ನೋಡಿ: “ಇದುವರೆಗೆ ಏನೇನನ್ನು ನಾನು ಓದಿರುವೆನೊ ಅದನ್ನೆಲ್ಲ ಮರೆಸಿಬಿಡತಕ್ಕ ಒಂದು ಔಷಧ ದೊರಕಿಬಿಟ್ಟಿತು ಎಂದರೆ ಬದುಕಿಕೊಂಡೆ.”
ಕೊಠಡಿಯಲ್ಲಿ ಕುಳಿತಿದ್ದ ಹಿರಿಯ ಗೋಪಾಲ: “ನಾನೂ ನರೇಂದ್ರನೊಡನೆ ಹೋಗಿ ಬರುತ್ತೇನೆ.”
ಕಾಳೀಪದಘೋಷ ಪರಮಹಂಸರಿಗೆಂದು ಒಂದು ಪೆಟ್ಟಿಗೆ ದ್ರಾಕ್ಷಿ ಹಣ್ಣುಗಳನ್ನು ತಂದಿದ್ದಾನೆ. ಪರಮಹಂಸರು ಅದನ್ನು ಭಕ್ತರಿಗೆ ಹಂಚುತ್ತಿದ್ದಾರೆ. ಮೊದಲು ನರೇಂದ್ರನಿಗೆ ಸ್ವಲ್ಪ ಕೊಟ್ಟು ಉಳಿದುದನ್ನೆಲ್ಲ ನೆಲದ ಮೇಲೆ ಸುರಿದುಬಿಟ್ಟರು. ಭಕ್ತರೆಲ್ಲರೂ ತಮಗೆ ದಕ್ಕಿದಷ್ಟನ್ನು ಆರಿಸಿಕೊಳ್ಳುತ್ತಿದ್ದಾರೆ.
ಸಾಯಂಕಾಲವಾಗಿದೆ. ನರೇಂದ್ರ ನೆಲ ಅಂತಸ್ತಿನಲ್ಲಿ ಕುಳಿತು ಹುಕ್ಕ ಸೇದುತ್ತ, ಮಾಸ್ಟರೊಡನೆ ತನ್ನ ಹೃದಯ ಯಾವ ರೀತಿಯಾಗಿ ಭಗವಂತನ ಸಾಕ್ಷಾತ್ಕಾರಕ್ಕೆ ವ್ಯಾಕುಲ ಪಡುತ್ತಿದೆ ಎಂಬ ವಿಷಯವಾಗಿ ಮಾತುಕತೆ ಆಡುತ್ತಿದ್ದಾನೆ. ಅಲ್ಲಿ ಇನ್ನು ಬೇರೆ ಯಾರೂ ಇಲ್ಲ.
ನರೇಂದ್ರ: “ಕಳೆದ ಶನಿವಾರ ಇಲ್ಲಿ ಕುಳಿತು ಧ್ಯಾನಮಾಡುತ್ತಿದ್ದೆ. ಇದ್ದಕ್ಕಿದ್ದ ಹಾಗೆ ನನ್ನ ಹೃದಯದಲ್ಲಿ ಏನೋ ಒಂದು ತರಹದ ಅನುಭವವಾಯಿತು.”
ಮಾಸ್ಟರ್: “ಕುಂಡಲಿನಿ ಜಾಗ್ರತವಾಗುತ್ತಿರಬೇಕು.”
ನರೇಂದ್ರ: “ಬಹುಶಃ ಅದೇ ಇರಬೇಕು. ಇಡಾ, ಪಿಂಗಳಾ ನರಗಳನ್ನು ಸ್ಪಷ್ಟವಾಗಿ ನೋಡಿದೆ. ಆಗ ಹಾಜರಾನಿಗೆ ನನ್ನ ಎದೆ ಮುಟ್ಟಿ ನೋಡುವಂತೆ ಹೇಳಿದೆ. ನಿನ್ನೆ ಮೇಲಕ್ಕೆ ಹತ್ತಿಹೋಗಿ ಅವರಿಗೆ (ಪರಮಹಂಸರಿಗೆ) ನನ್ನ ಹೃದಯವನ್ನು ಬಿಚ್ಚಿ ಹೇಳಿದೆ. ಅವರಿಗೆ ಹೇಳಿದೆ ‘ಎಲ್ಲರೂ ಆಧ್ಯಾತ್ಮಿಕ ಜೀವನದಲ್ಲಿ ಮುಂದುವರಿಯುತ್ತಿದ್ದಾರೆ; ನನಗೂ ಸ್ವಲ್ಪ ಕೃಪೆ ಮಾಡಿ. ಎಲ್ಲರೂ ಜಯಶೀಲರಾಗುತ್ತಿರುವಾಗ ನಾನೊಬ್ಬ ಹಾಗೇ ಉಳಿದುಕೊಳ್ಳಬೇಕೆ?”’
ಮಾಸ್ಟರ್: “ಅವರು ನಿನಗೆ ಏನು ಉತ್ತರ ಕೊಟ್ಟರು?”
ನರೇಂದ್ರ: “ಅವರು ಹೇಳಿದರು: ‘ಮೊದಲು ನೀನು ನಿನ್ನ ಮನೆಯವರಿಗೆ ಒಂದು ಸುವ್ಯವಸ್ಥೆ ಮಾಡಿ ಬಾ, ಎಲ್ಲಾ ದೊರೆಯುತ್ತದೆ. ನಿನಗೇನು ಬೇಕು ಹೇಳು?’ ನಾನು ಕೇಳಿಕೊಂಡೆ: ‘ಒಂದೇ ಸಮನೆ ಮೂರು ನಾಲ್ಕು ದಿನಗಳವರೆಗೆ ಸಮಾಧಿಸ್ಥನಾಗಿದ್ದು, ಕೇವಲ ಊಟದ ಸಮಯದಲ್ಲಿ ಮಾತ್ರ ಪ್ರಕೃತಿಸ್ಥನಾಗಬೇಕು.’ ಅದಕ್ಕೆ ಅವರು ಹೇಳಿದರು: ‘ನಿನ್ನದು ಅತ್ಯಂತ ಹೀನಬುದ್ಧಿ. ಅದಕ್ಕಿಂತಲೂ ಉಚ್ಚವಾಗಿರತಕ್ಕ ಅವಸ್ಥೆ ಬೇರೊಂದಿದೆ. “ಇರುವುದೆಲ್ಲ ನೀನೆ” ಅಂತ ನೀನೇ ಹಾಡುತ್ತೀಯಲ್ಲ.”’
ಮಾಸ್ಟರ್: “ಅವರು ಸತತ ಹೇಳುತ್ತಿದ್ದಾರೆ, ಯಾರು ಸಮಾಧಿಸ್ಥಿತಿಯಿಂದ ಕೆಳಕ್ಕೆ ಇಳಿದುಬರುತ್ತಾರೊ, ಅವರಿಗೆ ಭಗವಂತನೇ ಈ ಸಮಸ್ತ ಜೀವಜಗತ್ತಾಗಿ ಆಗಿರುವುದು ಕಂಡುಬರುತ್ತದೆ. ಈ ಬಗೆಯ ಅನುಭವ ಈಶ್ವರಕೋಟಿಗಳಿಗೆ ಮಾತ್ರ ಸಾಧ್ಯ. ಜೀವಕೋಟಿಗಳಿಗೆ ಸಮಾಧಿ ದೊರೆಯಿತು ಎಂದರೆ, ಅವರು ಆ ಸ್ಥಿತಿಯಿಂದ ಕೆಳಕ್ಕೆ ಇಳಿದು ಬರಲಾರರು.”
ನರೇಂದ್ರ: “ಅವರು (ಪರಮಹಂಸರು) ಹೇಳಿದರು: ‘ನಿನ್ನ ಮನೆಯವರಿಗೆ ಒಂದು ವ್ಯವಸ್ಥೆ ಮಾಡಿ ಬಂದುಬಿಡು. ಸಮಾಧಿಗಿಂತಲೂ ಉಚ್ಚವಾಗಿರತಕ್ಕ ಸ್ಥಿತಿ ನಿನಗೆ ದೊರೆತು ಬಿಡುತ್ತದೆ.’ ಇಂದು ಬೆಳಗ್ಗೆ ಮನೆಗೆ ಹೋಗಿದ್ದೆ. ಎಲ್ಲರೂ ನನಗೆ ಬೈದು ಹೇಳಿದರು: ‘ನೀನು ಸುಮ್ಮನೆ ಅಲೆಯುತ್ತಿರುವೆಯಲ್ಲ ಏಕೆ? “ಲಾ” ಪರೀಕ್ಷೆ ಹತ್ತಿರ ಬರುತ್ತಿದೆ. ಓದದೆ ಸುಮ್ಮನೆ ಅಲೆದಾಡುತ್ತಾ ಇದ್ದೀಯಲ್ಲಾ!”’
ಮಾಸ್ಟರ್: “ನಿಮ್ಮ ತಾಯಿ ಏನಾದರೂ ಬೈದರೇನು?”
ನರೇಂದ್ರ: “ಇಲ್ಲ, ನನಗೆ ತಿಂಡಿ ಕೊಡಲು ಆಕಾಂಕ್ಷಿತಳಾಗಿದ್ದಳು. ಜಿಂಕೆ ಮಾಂಸವನ್ನು ಕೊಟ್ಟಳು. ತಿನ್ನುವುದಕ್ಕೇನು ಇಚ್ಛೆಯಿರಲಿಲ್ಲ. ಆದರೂ ಸ್ವಲ್ಪ ತಿಂದೆ.”
ಮಾಸ್ಟರ್: “ಬಳಿಕ?”
ನರೇಂದ್ರ: “ಅಜ್ಜಿಯ ಮನೆಯಲ್ಲಿ ಓದುವ ಕೊಠಡಿಗೆ ಹೋಗಿ ಓದಲು ಕುಳಿತೆ. ಒಡನೆಯೆ ವ್ಯಾಸಂಗ ಬಹಳ ಭಯಂಕರವಾದದ್ದೊ ಏನೊ ಎಂಬ ಭಯ ನನ್ನ ಹೃದಯವನ್ನು ಹೊಕ್ಕಿ ಬಿಟ್ಟಿತು. ಹೃದಯ ಸುಮ್ಮನೆ ಸಂಕಟದಿಂದ ಚಡಪಡಿಸಲಾರಂಭಿಸಿತು. ಗೊಳೋ ಅಂತ ಅಳಲಾರಂಭಿಸಿದೆ; ಆ ರೀತಿಯಾಗಿ ಹಿಂದೆ ನಾನು ಎಂದೂ ಅತ್ತವನಲ್ಲ. ಪುಸ್ತಕವನ್ನೆಲ್ಲ ಒಂದು ಕಡೆಗೆ ಬಿಸುಟು ಸುಮ್ಮನೆ ಅಲ್ಲಿಂದ ಓಡಲಾರಂಭಿಸಿದೆ. ರಸ್ತೆ ಉದ್ದಕ್ಕೂ ಓಡಿದೆ. ಪಾದರಕ್ಷೆಗಳು ಎಲ್ಲೊ ಕಳಚಿ ಬಿದ್ದುಹೋದುವು. ಹುಲ್ಲುಬಣವೆಗಳ ಸಂದಿ-ಗೊಂದಿಗಳಲ್ಲಿ ನುಗ್ಗಿ ಓಡಲಾರಂಭಿಸಿದೆ. ಮೈಗೆಲ್ಲ ಹುಲ್ಲುಗರಿ ಸಿಕ್ಕಿಕೊಂಡು ಬಿಟ್ಟಿತು. ಕಾಶೀಪುರದ ರಸ್ತೆಯಲ್ಲಿ ಸುಮ್ಮನೆ ಓಡುತ್ತಲೇ ಬಂದೆ.”
ನರೇಂದ್ರ ಸ್ವಲ್ಪ ಹೊತ್ತು ಸುಮ್ಮನೆ ಇದ್ದು ಮತ್ತೆ ಮಾತು ಮುಂದುವರಿಸಿದ.
ನರೇಂದ್ರ: “ವಿವೇಕಚೂಡಾಮಣಿಯನ್ನು ಓದಿದ ಮೇಲಂತೂ ನನ್ನ ಮನಸ್ಸು ಇನ್ನೂ ಅಧಿಕವಾಗಿ ಕಲಕಿಹೋಗಿಬಿಟ್ಟಿದೆ. ಅದರಲ್ಲಿ ಶಂಕರಾಚಾರ್ಯರು ಹೇಳಿದ್ದಾರೆ, ಇವು ಮೂರು–ಮನುಷ್ಯತ್ವ, ಮುಮುಕ್ಷುತ್ವ, ಮಹಾಪುರುಷ ಸಂಶ್ರಯ–ಅನೇಕ ತಪಸ್ಸಿನ ಮತ್ತು ಅನೇಕ ಪೂರ್ವಜನ್ಮದ ಸುಕೃತಕರ್ಮಗಳ ಫಲದಿಂದ ದೊರೆಯುತ್ತವೆ ಎಂಬುದಾಗಿ. ನನಗೆ ನಾನೇ ಹೇಳಿಕೊಂಡೆ; ‘ನನಗೆ ಇವು ಮೂರು ದೊರೆತಿವೆ–ಮಹಾತಪಸ್ಸಿನ ಬಲದಿಂದ ನನಗೆ ಮನುಷ್ಯಜನ್ಮ ದೊರೆತಿದೆ; ನನ್ನ ಹೃದಯ ಮುಕ್ತಿಗಾಗಿ ತವಕಪಡುತ್ತಿದೆ; ಇಂಥ ಮಹಾಪುರುಷರ ಸಂಶ್ರಯ ದೊರೆತಿದೆ.”
ಮಾಸ್ಟರ್: “ಆಹಾ!”
ನರೇಂದ್ರ: “ಸಂಸಾರದ ಜೀವನ ನನಗೆ ರುಚಿಸುತ್ತಿಲ್ಲ. ಒಬ್ಬಿಬ್ಬರು ಭಕ್ತರನ್ನು ಬಿಟ್ಟರೆ ಉಳಿದ ಸಂಸಾರಿಗಳ ಸಹವಾಸವೂ ನನಗೆ ಹಿಡಿಸುತ್ತಿಲ್ಲ.”
ನರೇಂದ್ರ ಮತ್ತೆ ಸುಮ್ಮನೆ ಕುಳಿತುಕೊಂಡಿದ್ದಾನೆ. ತೀವ್ರ ವೈರಾಗ್ಯದಿಂದ ಆತನ ಹೃದಯ ಉರಿಯುತ್ತಿದೆ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಆತನ ಹೃದಯ ಸುಮ್ಮನೆ ತವಕಪಡುತ್ತಿದೆ. ಈಗ ನರೇಂದ್ರ ಮತ್ತೆ ತನ್ನ ಮಾತು ಮುಂದುವರಿಸುತ್ತಿದ್ದಾನೆ.
ನರೇಂದ್ರ: “ನಿಮಗೆ ಶಾಂತಿ ದೊರೆತುಬಿಟ್ಟಿದೆ. ಆದರೆ ನನ್ನ ಪ್ರಾಣ ಸುಮ್ಮನೆ ತಳಮಳಗುಟ್ಟುತ್ತಿದೆ, ನೀವೇ ಧನ್ಯರು.”
ಮಾಸ್ಟರ್ ಯಾವ ಉತ್ತರವನ್ನೂ ಕೊಡದೆ ಸುಮ್ಮನೆ ಕುಳಿತಿದ್ದಾನೆ. ಆತ ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೆ: “ಪರಮಹಂಸರು ಹೇಳುತ್ತಿದ್ದಾರೆ, ಭಗವಂತನಿಗಾಗಿ ವ್ಯಾಕುಲನಾಗ ಬೇಕು, ಆಗ ಮಾತ್ರವೇ ಆತನ ಸಾಕ್ಷಾತ್ಕಾರ ದೊರೆಯುತ್ತದೆ.”
ಮುಸ್ಸಂಜೆಯಾದೊಡನೆ ಮಾಸ್ಟರ್ ಮಹಡಿ ಮೇಲಕ್ಕೆ ಹತ್ತಿ ಹೋದ. ನೋಡುತ್ತಾನೆ, ಪರಮಹಂಸರು ನಿದ್ದೆ ಮಾಡುತ್ತಿದ್ದಾರೆ.
ಘಂಟೆ ರಾತ್ರಿ ಒಂಬತ್ತು. ನಿರಂಜನ ಮತ್ತು ಶಶಿ ಪರಮಹಂಸರ ಹತ್ತಿರ ಕುಳಿತಿದ್ದಾರೆ. ಈಗ ಅವರು ಎಚ್ಚರಗೊಂಡಿದ್ದಾರೆ. ಅಡಿಗಡಿಗೆ ನರೇಂದ್ರನ ವಿಷಯವಾಗಿ ಮಾತಾಡುತ್ತಲೇ ಇದ್ದಾರೆ.
ಶ್ರೀರಾಮಕೃಷ್ಣರು: “ನೋಡಿ, ಈಗ ನರೇಂದ್ರನಿಗೆ ಎಂಥ ಆಶ್ಚರ್ಯಕರ ಅವಸ್ಥೆ ಬಂದುಬಿಟ್ಟಿದೆ. ಹಿಂದೆ ಇದೇ ನರೇಂದ್ರನಿಗೆ ಸಾಕಾರದಲ್ಲಿ ವಿಶ್ವಾಸವಿರಲಿಲ್ಲ. ನೋಡಿದಿರಾ, ಈಗ ಆತನ ಪ್ರಾಣ ಭಗವಂತನ ಸಾಕ್ಷಾತ್ಕಾರಕ್ಕಾಗಿ ಹೇಗೆ ಸುಮ್ಮನೆ ತವಕಪಡುತ್ತಿದೆ! ಭಗವಂತನ ಸಾಕ್ಷಾತ್ಕಾರವನ್ನು ಪಡೆಯುವ ಬಗೆ ಹೇಗೆ ಎಂಬುದಾಗಿ, ಒಬ್ಬ ಶಿಷ್ಯ ತನ್ನ ಗುರುವನ್ನು ಕೇಳಿದ ಕಥೆ ನಿಮಗೆ ಗೊತ್ತಿದೆಯಲ್ಲ. ಗುರು ಶಿಷ್ಯನಿಗೆ ಹೇಳಿದ: ‘ಬಾ ನನ್ನೊಡನೆ. ಯಾವ ರೀತಿಯಾಗಿ ನಡೆದುಕೊಂಡರೆ, ಭಗವಂತನ ಸಾಕ್ಷಾತ್ಕಾರವನ್ನು ಪಡೆಯಬಹುದು ಎಂಬುದನ್ನು ತೋರಿಸಿಕೊಡುತ್ತೇನೆ.’ ಹೀಗೆಂದು ಹೇಳಿ ಒಂದು ಕೊಳದ ಹತ್ತಿರಕ್ಕೆ ಕರೆದುಕೊಂಡು ಹೋಗಿ ಆತನನ್ನು ನೀರಿನೊಳಗೆ ಮುಳುಗಿಸಿ ಮೇಲೇಳದ ಹಾಗೆ ಹಿಡಿದುಕೊಂಡ. ಸ್ವಲ್ಪ ಹೊತ್ತಾದ ನಂತರ ಆತನನ್ನು ಮೇಲಕ್ಕೆ ಎತ್ತಿ ಗುರು ಕೇಳಿದ: ‘ನೀನು ನೀರೊಳಗೆ ಇದ್ದಾಗ ನಿನ್ನ ಪ್ರಾಣ ಏನು ಕೇಳುತ್ತಿತ್ತು?’ ಆತ ಹೇಳಿದ: ‘ನಾನು ಒಂದು ಗುಟುಕು ಉಸಿರಿಗಾಗಿ ಸುಮ್ಮನೆ ಒದ್ದಾಡುತ್ತಿದ್ದೆ.’
“ಭಗವಂತನ ಸಾಕ್ಷಾತ್ಕಾರಕ್ಕಾಗಿ ಆ ರೀತಿಯಾಗಿ ಪ್ರಾಣ ಚಟಪಟಗುಟ್ಟುತ್ತಿದ್ದರೆ, ಆಗ ಅರಿತುಕೊಳ್ಳಬೇಕು, ಭಗವಂತನ ಸಾಕ್ಷಾತ್ಕಾರಕ್ಕಾಗಿ ಇನ್ನು ಹೆಚ್ಚು ಕಾಲ ಕಾಯಬೇಕಾಗೇನಿಲ್ಲ. ಅರುಣೋದಯವಾಯಿತು ಎಂದರೆ–ಪೂರ್ವ ದಿಗಂತ ಕೆಂಪೇರಿತು ಎಂದರೆ–ಅರಿತುಕೊಳ್ಳಬೇಕು, ಸೂರ್ಯೋದಯಕ್ಕೆ ಇನ್ನು ಹೆಚ್ಚು ಕಾಲ ವಿಳಂಬವೇನಿಲ್ಲ.”
ಪರಮಹಂಸರ ಗಂಟಲುರೋಗ ಇಂದು ಹೆಚ್ಚಾಗಿಬಿಟ್ಟಿದೆ. ಅವರ ಗಂಟಲು ಅಷ್ಟೊಂದು ನೋಯುತ್ತಿದ್ದರೂ ನರೇಂದ್ರನ ಸಂಬಂಧವಾಗಿ ಈ ಮಾತುಕತೆಗಳನ್ನೆಲ್ಲ ಸಂಜ್ಞೆಯ ಮೂಲಕ ತಿಳಿಸಿದರು.
ರಾತ್ರಿಯಾದ ನಂತರ ನರೇಂದ್ರ ದಕ್ಷಿಣೇಶ್ವರಕ್ಕೆ ಹೊರಟ. ಅಮಾವಾಸ್ಯೆಯಾದ್ದರಿಂದ ಎಲ್ಲೆಲ್ಲೂ ಗಾಢಾಂಧಕಾರ. ಒಬ್ಬಿಬ್ಬರು ಭಕ್ತರೂ ಅವನನ್ನು ಹಿಂಬಾಲಿಸಿದರು. ಇಂದಿನ ರಾತ್ರಿಯನ್ನು ಮಾಸ್ಟರ್ ಕಾಶೀಪುರದಲ್ಲೇ ಕಳೆದ. ತಾನು ಸಂನ್ಯಾಸಿಗಳ ಮಧ್ಯೆ ಕುಳಿತಿರುವ ಹಾಗೆ ರಾತ್ರಿಯಲ್ಲಿ ಮಾಸ್ಟರಿಗೆ ಸ್ವಪ್ನ ಬಿತ್ತು.
೫ನೆ ಜನವರಿ ೧೮೮೬, ಪುಷ್ಯ ಶುಕ್ಲ ಪಾಡ್ಯಮಿ, ಮಂಗಳವಾರ
ಪರಮಹಂಸರು ತಮ್ಮ ಹಾಸಿಗೆಯ ಮೇಲೆ ಕುಳಿತು ಮಾಸ್ಟರೊಡನೆ ಮಾತುಕತೆ ಆಡುತ್ತಿದ್ದಾರೆ. ಕೊಠಡಿಯಲ್ಲಿ ಇನ್ನು ಬೇರೆ ಯಾರೂ ಇಲ್ಲ. ಘಂಟೆ ಅಪರಾಹ್ನ ನಾಲ್ಕು.
ಶ್ರೀರಾಮಕೃಷ್ಣರು: “ಕ್ಷೀರೋದ ಗಂಗಾಸಾಗರಕ್ಕೆ ಹೋಗುವುದಾದರೆ ಆತನಿಗೊಂದು ಕಂಬಳಿಯನ್ನು ಕೊಂಡುಕೊಡು.”
ಮಾಸ್ಟರ್: “ಆಗಲಿ.”
ಪರಮಹಂಸರು ಈಗ ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡರು. ಈಗ ಮತ್ತೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಒಳ್ಳೇದು. ಈ ಯುವಕರಿಗೆ ಏನು ಆಗುತ್ತಿದೆ ಹೇಳು ನೋಡೋಣ. ಕೆಲವರು ಪುರಿಗೆ, ಇನ್ನು ಕೆಲವರು ಗಂಗಾಸಾಗರಕ್ಕೆ ಯಾತ್ರೆ ಹೋಗುತ್ತಿದ್ದಾರೆ. ಮನೆಯನ್ನು ತ್ಯಜಿಸಿ ಎಲ್ಲರೂ ಬಂದುಬಿಡುತ್ತಾ ಇದ್ದಾರೆ. ನರೇಂದ್ರನನ್ನು ನೋಡು. ತೀವ್ರ ವೈರಾಗ್ಯ ಉಂಟಾಯಿತು ಎಂದರೆ, ಸಂಸಾರ ಆಳವಾದ ಬಾವಿಯ ಹಾಗೆ, ಬಂಧುಬಾಂಧವರು ಕಾಳಸರ್ಪಗಳ ಹಾಗೆ ಕಂಡುಬರುತ್ತಾರೆ.”
ಮಾಸ್ಟರ್: “ಹೌದು ನಿಜ, ಸಂಸಾರದಲ್ಲಿ ಯಾತನೆ ತುಂಬಿದೆ.”
ಶ್ರೀರಾಮಕೃಷ್ಣರು: “ಹೌದು, ನರಕಯಾತನೆ–ಹುಟ್ಟಿದಂದಿನಿಂದಲೇ! ಹೆಂಡತಿ ಮಕ್ಕಳನ್ನು ಕಟ್ಟಿಕೊಂಡರೆ ಏನು ಹೊಡಬಾಳು ಎಂಬುದನ್ನು ನೀನು ನೋಡುತ್ತಿಲ್ಲವೇನು?”
ಮಾಸ್ಟರ್: “ಹೌದು ನಿಜ, ನೀವೇ ಹೇಳಿದ್ದೀರಲ್ಲ; ‘ಈ ಯುವಕರ (ಪರಮಹಂಸರ ಬಾಲ ಶಿಷ್ಯರ) ಹೃದಯವನ್ನು ಸಂಸಾರಾಸಕ್ತಿ ಸ್ವಲ್ಪವೂ ಸ್ಪರ್ಶಿಸಿಲ್ಲ. ಈ ಜಗತ್ತಿನೊಡನೆ ಅವರು ಯಾವ ವ್ಯವಹಾರವನ್ನೂ ಇಟ್ಟುಕೊಂಡಿಲ್ಲ. ಜನರನ್ನು ಈ ಜಗತ್ತಿಗೆ ಕಟ್ಟಿಹಾಕುವುದು ಅದರೊಡನೆ ಅವರು ಇಟ್ಟುಕೊಂಡಿರೋ ಸಂಬಂಧವೇ.”’
ಶ್ರೀರಾಮಕೃಷ್ಣರು: “ನೀನು ನಿರಂಜನನನ್ನು ನೋಡುತ್ತಿಲ್ಲವೇನು? ಆತನ ದೃಷ್ಟಿ ಈ ಜಗತ್ತಿನ ಕಡೆ ಈ ರೀತಿಯದು: ‘ನಿನ್ನದು ಇಷ್ಟು; ತೆಗೆದುಕೊಂಡುಬಿಡು. ನನ್ನದು ಅಷ್ಟು; ಕೊಟ್ಟುಬಿಡು.’ ಮತ್ತೆ ಉಸಿರೇ ಎತ್ತುವ ಹಾಗಿಲ್ಲ. ಈ ಜಗತ್ತಿಗೂ ಆತನಿಗೂ ಬೇರೆ ಯಾವ ಸಂಪರ್ಕವೂ ಇಲ್ಲ. ಆತನ ಜುಟ್ಟು ಹಿಡಿದು ಎಳೆಯತಕ್ಕುದಾವುದೂ ಇಲ್ಲ.
“ಕಾಮಕಾಂಚನವೇ ಸಂಸಾರ, ನಿನಗನುಭವವಾಗಿಲ್ಲವೆ, ಹತ್ತಿರ ಹಣ ಇತ್ತು ಎಂದರೆ ಅದನ್ನು ಗಂಟುಹಾಕಿಬಿಡಬೇಕು ಅಂತ ಬುದ್ಧಿ ಬರುವುದು?”
ಮಾಸ್ಟರ್ ಗಹಗಹಿಸಿ ನಕ್ಕ. ಪರಮಹಂಸರೂ ನಕ್ಕರು.
ಮಾಸ್ಟರ್: “ಗಂಟು ಬಿಚ್ಚಬೇಕಾದರೆ ಈ ಜಗತ್ತನ್ನೆಲ್ಲ ಅಳೆದು ಸುರಿದು ಮಾಡ ಬೇಕಾಗುತ್ತದೆ. (ಇಬ್ಬರೂ ನಕ್ಕರು.) ಆದರೆ ಒಮ್ಮೆ ನೀವು ದಕ್ಷಿಣೇಶ್ವರದಲ್ಲಿ ಹೇಳಿದಿರಿ: ‘ಮನುಷ್ಯ ತ್ರಿಗುಣಾತೀತನಾಗಿ ಸಂಸಾರದಲ್ಲಿರುವುದಾದರೆ, ಅದು ಬೇರೆ ವಿಷಯ.”’
ಶ್ರೀರಾಮಕೃಷ್ಣರು: “ಹೌದು ಬಾಲಕನ ಹಾಗೆ.”
ಮಾಸ್ಟರ್: “ಹೌದು, ಅದೇನೋ ನಿಜ. ಅದು ಸುಲಭಸಾಧ್ಯವಾದ್ದೇನಲ್ಲ; ತುಂಬ ಮಾನಸಿಕ ಶಕ್ತಿ ಬೇಕು.”
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡರು.
ಮಾಸ್ಟರ್: “ನಿನ್ನೆ ಅವರು ದಕ್ಷಿಣೇಶ್ವರಕ್ಕೆ ಧ್ಯಾನಮಾಡಲು ಹೋದರಲ್ಲ, ಅದರ ಸಂಬಂಧವಾಗಿ ನನಗೊಂದು ಸ್ವಪ್ನ ಬಿತ್ತು.”
ಶ್ರೀರಾಮಕೃಷ್ಣರು: “ಸ್ವಪ್ನದಲ್ಲಿ ಏನು ಕಂಡೆ?”
ಮಾಸ್ಟರ್: “ನೋಡಿದೆ; ನರೇಂದ್ರ ಮೊದಲಾದವರೆಲ್ಲ ಸಂನ್ಯಾಸಿಗಳಾಗಿರುವುದನ್ನು. ಅಗ್ನಿಕುಂಡವನ್ನು ಹೊತ್ತಿಸಿ ಬಳಿಯಲ್ಲಿ ಕುಳಿತುಕೊಂಡಿದ್ದರು. ಅವರ ಮಧ್ಯದಲ್ಲಿ ನಾನೂ ಕುಳಿತಿದ್ದೆ. ಅವರು ಚಿಲುಮೆ ಸೇದುತ್ತ ಹೊಗೆಯನ್ನು ಹೊರಗೆ ಬಿಡುತ್ತಿದ್ದರು. ನಾನು ಹೇಳಿದೆ, ಏನು ಬಂಗಿ ಹೊಗೆಯ ವಾಸನೆ ಬರುತ್ತಿದೆಯಲ್ಲ.”
ಶ್ರೀರಾಮಕೃಷ್ಣರು: “ಅತಿ ಮುಖ್ಯವಾದ್ದು ಮಾನಸಿಕ ತ್ಯಾಗ. ಅದು ದೊರೆತುಬಿಟ್ಟಿದ್ದರೆ, ಸಂನ್ಯಾಸಿಯಾದಂತೆಯೆ.”
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡಿದ್ದರು. ಈಗ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಆದರೆ ನಮ್ಮ ವಾಸನೆಗಳಿಗೆಲ್ಲ ಬೆಂಕಿ ಇಡಬೇಕಾಗುತ್ತದೆ. ಆಗ ಮಾತ್ರವೇ ಸಾಧ್ಯ.”
ಮಾಸ್ಟರ್: “ನೀವು ಒಮ್ಮೆ ಬಡೋಬಜಾರಿನ ಮಾರ್ವಾಡಿ ಪಂಡಿತನಿಗೆ ಹೇಳಿದಿರಿ, ತಮಗೆ ಭಕ್ತಿ-ಕಾಮನೆ ಇದೆ ಅಂತ. ಭಕ್ತಿಕಾಮನೆ, ಕಾಮನೆಗಳ ಗುಂಪಿಗೆ ಸೇರಿಲ್ಲ ಅಂತ ಕಾಣುತ್ತೆ, ಅಲ್ಲವೇನು?”
ಶ್ರೀರಾಮಕೃಷ್ಣರು: “ಹೌದು, ಇಲ್ಲ. ಹಿಂಚೆಸೊಪ್ಪು ಸೊಪ್ಪುಗಳ ಗುಂಪಿಗೆ ಸೇರದಿರುವ ಹಾಗೆ. ಹಿಂಚೆ ಸೊಪ್ಪು ಪಿತ್ತಹಾರಿ.
“ಒಳ್ಳೇದು, ನನಗಷ್ಟೊಂದು ಆನಂದ, ಭಾವ, ಇವೆಲ್ಲ ಆಗುತ್ತಿದ್ದವಲ್ಲ, ಅವೆಲ್ಲ ಎಲ್ಲಿಗೆ ಹೋಗಿವೆ?”
ಮಾಸ್ಟರ್: “ಗೀತೆಯಲ್ಲಿ ಹೇಳಿದೆಯಲ್ಲ, ತ್ರಿಗುಣಾತೀತಾವಸ್ಥೆ, ಬಹುಶಃ ಅದು ನಿಮಗೆ ಬಂದಿರಬೇಕು. ಸತ್ತ್ವ ರಜಸ್ಸು ತಮಸ್ಸು ಇವು ತಾವೇ ತಾವಾಗೇ ತಮ್ಮ ತಮ್ಮ ಕೆಲಸಕಾರ್ಯಗಳನ್ನು ಮಾಡಿಕೊಂಡು ಹೋಗಿಬಿಡುತ್ತವೆ. ನೀವು ನಿರ್ಲಿಪ್ತರು– ಸತ್ತ್ವಗುಣ ದಿಂದಲೂ ನಿರ್ಲಿಪ್ತರು.”
ಶ್ರೀರಾಮಕೃಷ್ಣರು: “ಹೌದು, ಭಗವತಿ ನನ್ನನ್ನು ಬಾಲಕನ ಅವಸ್ಥೆಯಲ್ಲಿ ಇಟ್ಟಿದ್ದಾಳೆ. ಒಳ್ಳೇದು ಈ ದೇಹ ಈಗ ಬಂದಿರುವ ರೋಗದಿಂದ ಪಾರಾಗಿ ಬದುಕಿಕೊಳ್ಳಬಹುದೆ?”
ಪರಮಹಂಸರು ಮತ್ತೆ ಮಾಸ್ಟರ್ ಇಬ್ಬರೂ ಸ್ವಲ್ಪ ಹೊತ್ತು ಸುಮ್ಮನೆ ಕುಳಿತು ಕೊಂಡರು. ನರೇಂದ್ರ ಕೊಠಡಿಯನ್ನು ಪ್ರವೇಶಿಸಿದ. ಆತ ತನ್ನ ಮನೆಗೆ ಹೋಗಿ, ಎಲ್ಲಾ ವ್ಯವಸ್ಥೆಯನ್ನು ಮಾಡಿ ಹಿಂದಿರುಗಿ ಬಂದುಬಿಡುವನು.
ನರೇಂದ್ರನ ತಂದೆ ಸ್ವರ್ಗಪ್ರಾಪ್ತಿಯನ್ನು ಪಡೆದ ನಂತರ ಆತನ ತಾಯಿ ಮತ್ತು ತಮ್ಮಂದಿರು ಅತ್ಯಂತ ಕಷ್ಟಜೀವನವನ್ನು ನಡೆಯಿಸಿಕೊಂಡು ಹೋಗುತ್ತಿದ್ದಾರೆ. ಆಗಾಗ ಅನ್ನಾಭಾವ. ನರೇಂದ್ರನೇ ಅವರ ಏಕಮಾತ್ರ ಆಶಾಕಿರಣ. ಆತ ಸಂಸಾರವನ್ನು ನೀಗಿಸಿ ಕೊಂಡು ಹೋಗುತ್ತಾನೆ ಅಂತ ಅವರು ಭಾವಿಸಿದ್ದಾರೆ. ಆದರೆ ಆತನಿಗೆ ತೀವ್ರ ವೈರಾಗ್ಯ ಬಂದಿರುವುದರಿಂದ “ಲಾ” ಪರೀಕ್ಷೆ ಕುಳಿತುಕೊಳ್ಳಲಾಗಲಿಲ್ಲ. ಇಂದು ಆತ ತನ್ನ ಮನೆಗೆ ಹೋಗಿ ಅಲ್ಲಿ ಏನಾದರೂ ವ್ಯವಸ್ಥೆ ಮಾಡಿ ಬರಲು ಕಲ್ಕತ್ತಕ್ಕೆ ಹೋಗುತ್ತಿದ್ದಾನೆ. ಆತನ ಒಬ್ಬ ಸ್ನೇಹಿತ ಆತನಿಗೆ ಒಂದು ನೂರು ರೂಪಾಯಿ ಸಾಲ ಕೊಡುವುದಾಗಿ ಒಪ್ಪಿಕೊಂಡಿದ್ದಾನೆ. ಆ ಹಣದಿಂದ ಮನೆಗೆ ಮೂರು ತಿಂಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಕೊಂಡು ತಂದಿಟ್ಟು ಬಂದುಬಿಡುತ್ತಾನೆ.
ನರೇಂದ್ರ: “ಒಮ್ಮೆ ನಾನು ಮನೆಗೆ ಹೋಗಿಬರುತ್ತೇನೆ. (ಮಾಸ್ಟರಿಗೆ) ಮಹಿಮ ಚಕ್ರವರ್ತಿಯ ಮನೆಗೆ ಹೋಗಿಬರುತ್ತೇನೆ. ನೀವೂ ಬರುವಿರೇನು?”
ಮಾಸ್ಟರಿಗೆ ಇಚ್ಛೆಯಿಲ್ಲ. ಪರಮಹಂಸರು ಆತನ ಕಡೆ ನೋಡಿ ನರೇಂದ್ರನನ್ನು ಕೇಳುತ್ತಿದ್ದಾರೆ: “ಏಕೆ?”
ನರೇಂದ್ರ: “ನಾನು ಆ ಮಾರ್ಗವಾಗಿ ಹೋಗುತ್ತಿದ್ದೇನೆ; ಆದ್ದರಿಂದ ಮಹಿಮಚರಣನ ಮನೆಗೆ ಹೋಗಿ, ಆತನೊಡನೆ ಸ್ವಲ್ಪ ಹರಟೆಹೊಡೆದು ಹೋಗುವೆನು.”
ಪರಮಹಂಸರು ನರೇಂದ್ರನನ್ನು ದಿಟ್ಟಿಸಿ ನೋಡುತ್ತಿದ್ದಾರೆ.
ನರೇಂದ್ರ: “ಇಲ್ಲಿಗೆ ಬರುತ್ತಿರುವ ನನ್ನ ಸ್ನೇಹಿತ ನನಗೆ ನೂರು ರೂಪಾಯಿ ಸಾಲ ಕೊಡುತ್ತೇನೆ ಅಂತ ಹೇಳಿದ್ದಾನೆ. ಆ ಹಣದಿಂದ ಮನೆಯ ಮೂರು ತಿಂಗಳ ಖರ್ಚುವೆಚ್ಚದ ವ್ಯವಸ್ಥೆಯನ್ನು ಮಾಡಿ ಬರುತ್ತೇನೆ.”
ಪರಮಹಂಸರು ಯಾವ ಮಾತನ್ನೂ ಆಡದೆ ಮಾಸ್ಟರ ಕಡೆ ನೋಡುತ್ತಿದ್ದಾರೆ.
ಮಾಸ್ಟರ್ (ನರೇಂದ್ರನಿಗೆ): “ಈಗ ನೀನು ಮುಂದುವರಿಯುತ್ತಿರು. ನಾನು ಆಮೇಲೆ ಬರುತ್ತೇನೆ.”
೧೧ನೆ ಮಾರ್ಚ್ ೧೮೮೬, ಫಾಲ್ಗುಣ ಶುಕ್ಲ ಷಷ್ಠಿ, ಗುರುವಾರ
ಘಂಟೆ ರಾತ್ರಿ ಎಂಟು. ಪರಮಹಂಸರು ಕೊಠಡಿಯಲ್ಲಿ ಸುಮ್ಮನೆ ಮಲಗಿಕೊಂಡಿದ್ದಾರೆ. ನರೇಂದ್ರ, ಶಶಿ, ಮಾಸ್ಟರ್, ಹಿರಿಯ ಗೋಪಾಲ ಕುಳಿತಿದ್ದಾರೆ. ಶರಚ್ಚಂದ್ರ ಪರಮಹಂಸರ ಪಕ್ಕದಲ್ಲಿ ನಿಂತು ಅವರಿಗೆ ಬೀಸಣಿಗೆಯಿಂದ ಗಾಳಿ ಬೀಸುತ್ತಿದ್ದಾನೆ. ಪರಮಹಂಸರು ತಮ್ಮ ರೋಗದ ಸಂಬಂಧವಾಗಿ ಮಾತನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನಿಮ್ಮಲ್ಲಿ ಯಾರಾದರೂ ಒಬ್ಬರು ದಕ್ಷಿಣೇಶ್ವರಕ್ಕೆ ಹೋಗಿ ಭೋಲಾನಾಥನನ್ನು ಕಾಣುವುದಾದರೆ, ಆತ ನಿಮಗೆ ಒಂದು ವಿಧದ ಎಣ್ಣೆ ಕೊಡುತ್ತಾನೆ ಮತ್ತು ಅದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನೂ ಹೇಳಿಕೊಡುತ್ತಾನೆ.”
ಹಿರಿಯ ಗೋಪಾಲ: “ನಾನು ನಾಳೆ ಪ್ರಾತಃಕಾಲವೆ ಅಲ್ಲಿಗೆ ಹೋಗಿ ತೆಗೆದುಕೊಂಡು ಬರುತ್ತೇನೆ.”
ಮಾಸ್ಟರ್: “ಈಗ ಹೋದರೂ ತಂದುಬಿಡಬಹುದು.”
ಶಶಿ: “ನಾನು ಹೋಗಿಬರುತ್ತೇನೆ.”
ಶ್ರೀರಾಮಕೃಷ್ಣರು ಶರಚ್ಚಂದ್ರನನ್ನು ತೋರಿಸಿ “ಇವನು ಹೋಗಿಬರಲಿ.”
ಸ್ವಲ್ಪ ಹೊತ್ತಾದನಂತರ, ಭೋಲಾನಾಥನಿಂದ ಎಣ್ಣೆಯನ್ನು ತೆಗೆದುಕೊಂಡು ಬರಲು ಶರಚ್ಚಂದ್ರ ದಕ್ಷಿಣೇಶ್ವರಕ್ಕೆ ಹೊರಟ.
ಪರಮಹಂಸರು ಮಲಗಿಯೆ ಇದ್ದಾರೆ, ಭಕ್ತರೆಲ್ಲರೂ ಅವರ ಸುತ್ತಲೂ ನಿಶ್ಶಬ್ದವಾಗಿ ಕುಳಿತಿದ್ದಾರೆ. ಪರಮಹಂಸರು ಇದ್ದಕ್ಕಿದ್ದ ಹಾಗೆ ಎದ್ದು ಕುಳಿತು ನರೇಂದ್ರನೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಬ್ರಹ್ಮ ನಿರ್ಲಿಪ್ತ. ಮೂರು ಗುಣಗಳೂ ಆತನಲ್ಲಿವೆ; ಆದರೆ ಆತ ಮಾತ್ರ ನಿರ್ಲಿಪ್ತ.
“ಗಾಳಿಯಲ್ಲಿ ಸುಗಂಧ, ದುರ್ಗಂಧ ಎರಡೂ ಇವೆ. ಆದರೆ ಗಾಳಿ ಮಾತ್ರ ನಿರ್ಲಿಪ್ತವಾದದ್ದು.
“ಶಂಕರಾಚಾರ್ಯರು ಕಾಶಿಯ ಬೀದಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಮಾಂಸ ಹೊತ್ತುಹೋಗುತ್ತಿದ್ದ ಒಬ್ಬ ಚಂಡಾಲ ಅವರನ್ನು ಅಕಸ್ಮಾತ್ತಾಗಿ ಮುಟ್ಟಿಬಿಟ್ಟ. ಶಂಕರಾಚಾರ್ಯರು ರೇಗಿದರು: ‘ಏನಿದು! ನನ್ನನ್ನು ಮುಟ್ಟಿಬಿಟ್ಟೆಯಲ್ಲ!’ ಚಂಡಾಲ ಹೇಳಿದ: ‘ಪೂಜ್ಯರೆ, ನೀವೂ ನನ್ನನ್ನು ಮುಟ್ಟಲಿಲ್ಲ. ನಾನೂ ನಿಮ್ಮನ್ನು ಮುಟ್ಟಲಿಲ್ಲ. ಆತ್ಮ ನಿರ್ಲಿಪ್ತವಾದದ್ದು. ನೀವು ಆ ಶುದ್ಧ ಆತ್ಮ.’
“ಬ್ರಹ್ಮ ಮತ್ತು ಮಾಯೆ. ಜ್ಞಾನಿ ಮಾಯೆಯನ್ನು ನಿರಾಕರಿಸುತ್ತಾನೆ.
“ಮಾಯೆ ಒಂದು ಪರದೆ ಇದ್ದ ಹಾಗೆ. ಇಲ್ಲಿ ನೋಡು, ಈ ಚೌಕವನ್ನು ನಿನ್ನ ಕಣ್ಣೆದುರಿಗೆ ಹಿಡಿಯುತ್ತೇನೆ. ಈಗ ನಿನಗೆ ದೀಪದ ಬೆಳಕು ಕಾಣುತ್ತಿಲ್ಲ.”
ಪರಮಹಂಸರು ತಮಗೂ ಮತ್ತು ಭಕ್ತರಿಗೂ ಮಧ್ಯೆ ಆ ಚೌಕವನ್ನು ಹಿಡಿದರು.
ಶ್ರೀರಾಮಕೃಷ್ಣರು: “ಇಗೋ ನೋಡಿ, ಈಗ ನಿಮಗೆ ನನ್ನ ಮುಖ ಕಾಣಿಸುತ್ತಿಲ್ಲ. ರಾಮಪ್ರಸಾದ ಹೇಳಿರುವ ಹಾಗೆ, ‘ಪರದೆಯನ್ನು ಮೇಲಕ್ಕೆ ಎತ್ತಿ, ಬಳಿಕ ನೋಡಿ!’
“ಆದರೆ ಭಕ್ತ ಮಾಯೆಯನ್ನು ನಿರಾಕರಿಸುವುದಿಲ್ಲ. ಆತ ಮಹಾಮಾಯೆಯ ಪೂಜೆ ಮಾಡುತ್ತಾನೆ. ಆಕೆಯಲ್ಲಿ ಶರಣಾಗತನಾಗಿ ಪ್ರಾರ್ಥಿಸುತ್ತಾನೆ: ‘ಹೇ ತಾಯಿ, ದಾರಿಯನ್ನು ಬಿಟ್ಟು ನಿಲ್ಲು. ಕೃಪೆಮಾಡಿ ನೀನು ದಾರಿಬಿಟ್ಟು ನಿಂತರೆ ಮಾತ್ರವೇ ನನಗೆ ಬ್ರಹ್ಮಜ್ಞಾನ ಸಾಧ್ಯ.’ ಜಾಗ್ರತ್, ಸ್ವಪ್ನ, ಸುಷುಪ್ತಿ ಈ ಮೂರು ಅವಸ್ಥೆಗಳನ್ನೂ ಜ್ಞಾನಿಗಳು ಸುಮ್ಮನೆ ಗಾಳಿಯಲ್ಲಿ ತೂರಿಬಿಡುವರು. ಆದರೆ ಭಕ್ತರು ಅವನ್ನು ಅನುಮೋದಿಸುವರು. ಎಲ್ಲಿಯವರೆಗೆ ‘ಅಹಂ’ ಎಂಬುದು ಇರುವುದೊ ಅಲ್ಲಿಯವರೆಗೆ ಎಲ್ಲವೂ ಇರುತ್ತದೆ. ‘ಅಹಂ’ ಎಂಬುದು ಇರುವವರೆಗೆ ಭಕ್ತನ ಕಣ್ಣಿಗೆ ಭಗವಂತನೇ ಈ ಮಾಯೆ, ಜೀವ ಜಗತ್ತು, ಚತುರ್ವಿಂಶತಿತತ್ತ್ವ ಆಗಿರುವುದಾಗಿ ಕಂಡುಬರುತ್ತಾನೆ.”
ನರೇಂದ್ರ ಮತ್ತು ಉಳಿದವರೆಲ್ಲರೂ ಇದನ್ನೆಲ್ಲ ಕೇಳುತ್ತ ಸುಮ್ಮನೆ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು: “ಮಾಯಾವಾದ ಶುಷ್ಕ. (ನರೇಂದ್ರನಿಗೆ) ನಾನು ಏನು ಹೇಳಿದೆ ಹೇಳು ನೋಡೋಣ.”
ನರೇಂದ್ರ: “ಮಾಯೆ ಶುಷ್ಕ.”
ಪರಮಹಂಸರು ಅಕ್ಕರೆಯಿಂದ ನರೇಂದ್ರನ ಕೈಮೈಗಳನ್ನು ಸವರುತ್ತ ಹೇಳುತ್ತಿದ್ದಾರೆ: “ನಿನ್ನ ಮುಖಮುದ್ರೆ ಕೈ ಮೈಗಳನ್ನು ನೋಡಿದರೆ ನೀನು ಒಬ್ಬ ಭಕ್ತನ ಹಾಗೆ ಕಾಣುತ್ತೀಯೆ. ಜ್ಞಾನಿಗಳ ಮುಖಮುದ್ರೆಯೆ ಬೇರೆ; ಅವರದ್ದು ಶುಷ್ಕವಾದ್ದು.
“ಜ್ಞಾನಿ ಬ್ರಹ್ಮಜ್ಞಾನವನ್ನು ಪಡೆದುಕೊಂಡ ನಂತರವೂ ವಿದ್ಯಾಮಾಯೆಯ –ಭಕ್ತಿ, ದಯೆ, ವೈರಾಗ್ಯ ಇವುಗಳ–ಆಶ್ರಯವನ್ನು ಹೊಂದಿ ಇರಬಲ್ಲ. ಇದರಿಂದ ಎರಡು ವಿಧದ ಉಪಕಾರವಾಗುತ್ತದೆ. ಮೊದಲನೆಯದಾಗಿ ಲೋಕಶಿಕ್ಷಣವಾಗುತ್ತದೆ. ಎರಡನೆಯದಾಗಿ ಆತ ಬ್ರಹ್ಮಾನಂದವನ್ನು ಸವಿಯುತ್ತಾ ಇರಲೂ ಸಾಧ್ಯವಾಗುತ್ತದೆ. ಜ್ಞಾನಿ ಸಮಾಧಿಸ್ಥನಾಗಿ ಸುಮ್ಮನೆ ಇದ್ದುಬಿಟ್ಟದ್ದೇ ಆದರೆ, ಅದರಿಂದ ಲೋಕಶಿಕ್ಷಣ ಆಗದು. ಅದಕ್ಕಾಗಿಯೇ ಶಂಕರಾಚಾರ್ಯರು ‘ವಿದ್ಯೆಯ ಅಹಂ’ ಅನ್ನು ಇಟ್ಟುಕೊಂಡಿದ್ದರು. ಜ್ಞಾನಿ ಭಗವದಾನಂದವನ್ನು ಸವಿಯಲೋಸುಗ–ಕಂಠದವರೆಗೆ ಆತನೊಡನೆ ವಿಲಾಸಿಸಲೋಸುಗ–ಭಕ್ತರೊಡನೆ ಇರುತ್ತಾನೆ.
“ಈ ‘ವಿದ್ಯೆಯ ಅಹಂ’, ‘ಭಕ್ತನ ಅಹಂ’ ಇವುಗಳಿಂದ ಯಾವ ಕೆಡುಕೂ ಸಂಭವಿಸದು; ಕೆಡುಕನ್ನು ತರತಕ್ಕದ್ದು ಕೇವಲ ಆ ‘ನೀಚ ಅಹಂ’. ಭಗವಂತನ ಸಾಕ್ಷಾತ್ಕಾರ ದೊರೆತನಂತರ ಬಾಲಕನ ಸ್ವಭಾವ ಬಂದುಬಿಡುತ್ತದೆ. ‘ಬಾಲಕನ ಅಹಂ’ ನಿಂದ ಯಾವ ಕೆಡುಕೂ ಸಂಭವಿಸದು. ಇದು ಕನ್ನಡಿಯಲ್ಲಿ ಪ್ರತಿಬಿಂಬಿತವಾಗಿರುವ ಮುಖದ ಹಾಗೆ. ಅದು ಯಾರನ್ನೂ ಬಯ್ಯಲಾರದು. ಅಥವಾ ಅದು ಒಂದು ಸುಟ್ಟ ಹಗ್ಗದ ಹಾಗೆ; ನೋಡುವುದಕ್ಕೇನೋ ಹಗ್ಗದ ಹಾಗೇ ಇದೆ, ಆದರೆ ಸ್ವಲ್ಪ ಊದಿದೊಡನೆಯೇ ಧೂಳುಧೂಳಾಗಿ ಹಾರಿಹೋಗುತ್ತದೆ. ಜ್ಞಾನಾಗ್ನಿಯಲ್ಲಿ ಸುಟ್ಟುಹೋದ ‘ಅಹಂ’ ಯಾರಿಗೂ ಯಾವ ವಿಧದ ಕೆಡುಕನ್ನೂ ತರದು. ಅದು ಹೆಸರಿಗೆ ಮಾತ್ರ ‘ಅಹಂ’.
“ಇದು ನಿತ್ಯವನ್ನು ಮುಟ್ಟಿ, ಲೀಲೆಗೆ ಹಿಂದಿರುಗುವಿಕೆ. ನದಿಯ ಆಚೆ ದಡವನ್ನು ಮುಟ್ಟಿ ಈಚೆ ದಡಕ್ಕೆ ಹಿಂದಿರುಗುವಿಕೆ. ಲೋಕಶಿಕ್ಷಣಕ್ಕಾಗಿ, ಲೀಲೆಗಾಗಿ; –ಭಗವಂತನ ಆಟದಲ್ಲಿ ಭಾಗವಹಿಸಲೋಸುಗ ಹಿಂದಿರುಗುವಿಕೆ.”
ಪರಮಹಂಸರು ಬಹಳ ಮೆತ್ತಗೆ ಮಾತಾಡುತ್ತಿದ್ದಾರೆ. ಒಂದು ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡರು. ಮತ್ತೆ ಭಕ್ತರಿಗೆ ಹೇಳುತ್ತಿದ್ದಾರೆ:ಣಿ “ಈ ಶರೀರವೇನೊ ರೋಗಗ್ರಸ್ತವಾಗಿದೆ. ಆದರೆ ಮನಸ್ಸು ಮಾತ್ರ ಅವಿದ್ಯಾಮಾಯೆಯಿಂದ ಮುಕ್ತವಾಗಿಬಿಟ್ಟಿದೆ. ಇಲ್ಲಿ ನೋಡು, ರಾಮಲಾಲನ ಯೊಚನೆಯೇ ಆಗಲಿ, ಮನೆಯ ಯೋಚನೆಯೇ ಆಗಲಿ, ಪರಿವಾರದ ಯೋಚನೆಯೇ ಆಗಲಿ, ನನ್ನ ಮನಸ್ಸಿನಲ್ಲಿ ಇಲ್ಲ. ಆದರೆ ಆ ಕಾಯಸ್ಥರ ಹುಡುಗ ಪೂರ್ಣ, ಆತನ ಯೋಚನೆ ಮಾತ್ರ ನನ್ನನ್ನು ಪೀಡಿಸುತ್ತಿದೆ. ಉಳಿದವರ ವಿಷಯವಾಗಿ ನಾನು ಕಿಂಚಿತ್ತೂ ಯೋಚಿಸುತ್ತಿಲ್ಲ.
“ಜನರಿಗಾಗಿ ಭಕ್ತರಿಗಾಗಿ ಭಗವಂತನೇ ನನ್ನಲ್ಲಿ ವಿದ್ಯಾಮಾಯೆಯನ್ನು ಇಟ್ಟಿದ್ದಾನೆ.”
“ಆದರೆ ವಿದ್ಯಾಮಾಯೆ ಇತ್ತು ಎಂದರೆ ಮತ್ತೆ ಜನ್ಮವೆತ್ತಿ ಬರಬೇಕಾಗುತ್ತದೆ. ಅವತಾರಾದಿಗಳು ವಿದ್ಯಾಮಾಯೆಯನ್ನು ಇಟ್ಟುಕೊಂಡಿರುತ್ತಾರೆ. ಕಿಂಚಿತ್ ಆಸೆ ಇದ್ದರೂ ಮತ್ತೆ ಮತ್ತೆ ಜನ್ಮವೆತ್ತಿ ಬರಬೇಕಾಗುತ್ತದೆ. ಆಸೆಗಳೆಲ್ಲ ಸಂಪೂರ್ಣವಾಗಿ ನಾಶವಾಗಿ ಹೋದ ನಂತರವೇ ಮುಕ್ತಿ. ಆದರೆ ಭಕ್ತರು ಮುಕ್ತರಾಗಲು ಇಚ್ಛಿಸುವುದಿಲ್ಲ.
“ಯಾರೆ ಆಗಲಿ ಕಾಶಿಯಲ್ಲಿ ದೇಹತ್ಯಾಗ ಮಾಡುವುದಾದರೆ ಅವರಿಗೆ ಮುಕ್ತಿ ದೊರೆತುಬಿಡುತ್ತದೆ; ಅವರು ಮತ್ತೆ ಜನ್ಮವೆತ್ತಬೇಕಾಗಿರುವುದಿಲ್ಲ. ಮುಕ್ತಿಯೇ ಜ್ಞಾನಿಗಳ ಗುರಿ.”
ನರೇಂದ್ರ: “ಅಂದು ನಾವು ಮಹಿಮಚರಣನ ಮನೆಗೆ ಹೋಗಿದ್ದೆವು.”
ಶ್ರೀರಾಮಕೃಷ್ಣರು (ನಗುತ್ತ): “ಬಳಿಕ?”
ನರೇಂದ್ರ: “ಅವನಂಥ ಶುಷ್ಕ ಜ್ಞಾನಿಯನ್ನು ನಾನು ಎಂದೂ ನೋಡಿರಲಿಲ್ಲ.”
ಶ್ರೀರಾಮಕೃಷ್ಣರು (ನಗುತ್ತ): “ಏನು ಸಮಾಚಾರ?”
ನರೇಂದ್ರ: “ಆತ ನಮ್ಮನ್ನು ಹಾಡುವಂತೆ ಕೇಳಿಕೊಂಡ. ಗಂಗಾಧರ ಹಾಡಿದ:
ಶ್ಯಾಮನಾಮವ ಕೇಳಿ ರಾಧೆಯು
ಮರಳಿ ಜೀವವ ಪಡೆಯುತ
ಎಂತು ನಿಂತಿಹಳಿತ್ತ ನೋಡೀ
ತಮಾಲ ವೃಕ್ಷವ ನೋಡುತ!
“ಮಹಿಮಚರಣ ಈ ಹಾಡನ್ನು ಕೇಳಿ ಹೇಳಿದ: ‘ಈ ಹಾಡುಗಳೆಲ್ಲ ಇಲ್ಲಿ ಏಕೆ? ನನಗೆ ಪ್ರೇಮ ಇವೆಲ್ಲ ರುಚಿಸುತ್ತಿಲ್ಲ. ಜೊತೆಗೆ ಹೆಂಡತಿ ಮಕ್ಕಳನ್ನು ಕಟ್ಟಿಕೊಂಡಿದ್ದೇನೆ. ಈ ವಿಧದ ಹಾಡುಗಳೆಲ್ಲ ಇಲ್ಲೇಕೆ?”
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ನೋಡಿದೆಯಾ, ಆತನಿಗೆ ಎಷ್ಟೊಂದು ಭಯ?”
೧೪ನೆ ಮಾರ್ಚ್ ೧೮೮೬, ಫಾಲ್ಗುಣ ಶುಕ್ಲ ನವಮಿ, ಭಾನುವಾರ
ಶ್ರೀರಾಮಕೃಷ್ಣರು ಉತ್ತರಾಭಿಮುಖರಾಗಿ ತಮ್ಮ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ.
ಸಾಯಂಕಾಲವಾಗಿದೆ. ಅವರ ಕಾಯಿಲೆ ಈಗ ಜಾಸ್ತಿಯಾಗಿದೆ. ನರೇಂದ್ರ ಮತ್ತು ರಾಖಾಲ ಅವರ ಪಾದಗಳನ್ನು ಒತ್ತುತ್ತಿದ್ದಾರೆ. ಮಾಸ್ಟರ್ ಅವರ ಹತ್ತಿರ ಕುಳಿತಿದ್ದಾನೆ. ಪರಮಹಂಸರು ಸಂಜ್ಞೆಯಿಂದ ತಮ್ಮ ಪಾದಗಳನ್ನು ಒತ್ತುವಂತೆ ಮಾಸ್ಟರಿಗೆ ಹೇಳಿದರು. ಮಾಸ್ಟರ್ ಈಗ ಅವರ ಪಾದಗಳನ್ನು ಒತ್ತುತ್ತಿದ್ದಾನೆ.
ಕಳೆದ ಭಾನುವಾರ ಭಕ್ತರೆಲ್ಲರೂ ಕೂಡಿ ಪೂಜಾಪ್ರಾರ್ಥನೆಗಳಿಂದ ಪರಮಹಂಸರ ಜನ್ಮದಿನವನ್ನು ಆಚರಿಸಿದ್ದರು. ಹಿಂದಿನ ವರ್ಷ ಪರಮಹಂಸರ ಜನ್ಮಮಹೋತ್ಸವ ಬಹಳ ವಿಜೃಂಭಣೆಯಿಂದ ದಕ್ಷಿಣೇಶ್ವರದಲ್ಲಿ ನಡೆದಿತ್ತು; ಆದರೆ ಈ ವರ್ಷ ಅವರ ದೇಹಾರೋಗ್ಯ ಸರಿಯಾಗಿಲ್ಲದೆ ಇರುವುದರಿಂದ, ಭಕ್ತರೆಲ್ಲರೂ ಬಹಳ ದುಃಖಿತರಾಗಿದ್ದಾರೆ. ಈ ಸಲ ಅವರ ಜನ್ಮಮಹೋತ್ಸವ ಹೆಸರಿಗೆ ಮಾತ್ರ ನಡೆಯಿತು.
ಶ್ರೀಶಾರದಾದೇವಿಯವರು ಹಗಲಿರುಳು ಪರಮಹಂಸರ ಸೇವೆಯಲ್ಲಿಯೇ ನಿರತರಾಗಿದ್ದಾರೆ. ನರೇಂದ್ರ, ರಾಖಾಲ, ನಿರಂಜನ, ಶರಚ್ಚಂದ್ರ, ಶಶಿ, ಬಾಬುರಾಮ, ಯೋಗೀಂದ್ರ, ಕಾಳಿ, ಲಾಟು, ಮೊದಲಾದ ಯುವಕಶಿಷ್ಯರು ಪರಮಹಂಸರೊಡನೆಯೇ ವಾಸವಾಗಿದ್ದಾರೆ. ಹಿರಿಯ ಗೃಹಸ್ಥ ಭಕ್ತರು ದಿನವೂ ಬಂದು ಪರಮಹಂಸರ ದರ್ಶನ ಪಡೆದು ಹೋಗುತ್ತಿರುವುದಲ್ಲದೆ, ಅವರಲ್ಲಿ ಕೆಲವರು ರಾತ್ರಿಯನ್ನೂ ಆಗಾಗ ಕಾಶೀಪುರದಲ್ಲೇ ಕಳೆದುಬಿಡುತ್ತಾ ಇದ್ದಾರೆ. ತಾರಕ, ಸಿಂಥಿಯ ಗೋಪಾಲ, ಚಿಕ್ಕ ಗೋಪಾಲ ಇವರೂ ಪರಮಹಂಸರೊಡನೆಯೇ ವಾಸಿಸುತ್ತಿದ್ದಾರೆ.
ಪರಮಹಂಸರ ಕಾಯಿಲೆ ಇಂದು ಇನ್ನೂ ಅಧಿಕವಾಗಿಬಿಟ್ಟಿದೆ. ನಡುರಾತ್ರಿಯಾಗಿದೆ. ಚಂದ್ರನ ಬೆಳಕು ಉದ್ಯಾನವನವನ್ನು ಹಾಲು ಚೆಲ್ಲಿದೋಪಾದಿಯಲ್ಲಿ ಬೆಳಗಿಸುತ್ತಿದೆ. ಆದರೆ ಭಕ್ತರ ಹೃದಯದಲ್ಲಿ ಮಾತ್ರ ಕಗ್ಗತ್ತಲೆ ಕವಿದಿದೆ. ಎಲ್ಲೆಲ್ಲೂ ಸೌಂದರ್ಯ ಮತ್ತು ಸೊಬಗಿನಿಂದ ಕೂಡಿದ ನಗರವನ್ನು ಶತ್ರುಗಳ ಸೈನ್ಯ ಮುತ್ತಿದ ಹಾಗೆ ಭಕ್ತರಿಗೆ ತೋರುತ್ತಿದೆ. ಎಲ್ಲೆಲ್ಲೂ ನಿಶ್ಶಬ್ದತೆ ತಾಂಡವವಾಡುತ್ತಿದೆ. ದಕ್ಷಿಣ ಮಾರುತದ ಸ್ಪರ್ಶಕ್ಕಾಗಿ ಎಲೆಗಳು ಮರ್ಮರ ಶಬ್ದವನ್ನು ಮಾಡುತ್ತಿರುವುದನ್ನು ಬಿಟ್ಟರೆ ಪ್ರಕೃತಿದೇವಿ ಸೌಮ್ಯಳಾಗಿದ್ದಾಳೆ. ಪರಮಹಂಸರು ಎಚ್ಚೆತ್ತು ಮಲಗಿದ್ದಾರೆ. ಒಬ್ಬಿಬ್ಬರು ಭಕ್ತರು ಅವರ ಸಮೀಪದಲ್ಲಿ ನಿಶ್ಶಬ್ದರಾಗಿ ಕುಳಿತಿದ್ದಾರೆ. ಪರಮಹಂಸರು ಒಮ್ಮೊಮ್ಮೆ ತೂಕಡಿಸುತ್ತಿರುವಂತೆ ಕಾಣುತ್ತಿದೆ.
ಮಾಸ್ಟರ್ ಪರಮಹಂಸರ ಹತ್ತಿರ ಕುಳಿತಿದ್ದಾನೆ. ಇನ್ನೂ ಹತ್ತಿರ ಬಂದು ಕುಳಿತು ಕೊಳ್ಳುವಂತೆ ಅವರು ಸಂಜ್ಞೆ ಮಾಡಿದರು. ಅವರು ಪಡುತ್ತಿದ್ದ ಕಷ್ಟ ಕಲ್ಲನ್ನೂ ಸಹ ಕರಗಿಸಿಬಿಡುವಂಥಾದಾಗಿತ್ತು. ಅವರು ಬಹಳ ಕಷ್ಟಪಟ್ಟುಕೊಂಡು ಮೆತ್ತಗೆ ಮಾಸ್ಟರಿಗೆ ಹೇಳುತ್ತಿದ್ದಾರೆ:
“ನೀವೆಲ್ಲರೂ ಅಳಲು ಆರಂಭಮಾಡಿಬಿಡುವಿರಿ ಎಂದು ಹೆದರಿ ನಾನು ಎಷ್ಟೊಂದು ಕಷ್ಟವನ್ನು ಸಹಿಸಿಕೊಂಡು ಹೋಗುತ್ತಿದ್ದೇನೆ. ಆದರೆ ನೀವೆಲ್ಲರೂ ಮನಸ್ಸು ಮಾಡಿ ಹೇಳಿದರೆ, ‘ಇಷ್ಟೊಂದು ಕಷ್ಟಪಡುತ್ತಿದ್ದಾರೆ; ದೇಹತ್ಯಾಗವಾಗಿಬಿಡಲಿ’ ಅಂತ, ಒಡನೆಯೆ ದೇಹತ್ಯಾಗವಾಗಿಬಿಡುತ್ತದೆ.”
ಪರಮಹಂಸರ ಈ ಮಾತುಗಳು ಭಕ್ತರ ಹೃದಯವನ್ನು ಸುಮ್ಮನೆ ಭೇದಿಸಿಬಿಟ್ಟವು. ಯಾರು ಅವರ ತಂದೆ, ತಾಯಿ, ರಕ್ಷಕ ಆಗಿದ್ದರೊ ಅವರ ಬಾಯಿಂದ ಈ ಮಾತುಗಳು! ಯಾವ ಉತ್ತರವನ್ನು ತಾನೆ ಕೊಟ್ಟಾರು? ಎಲ್ಲರೂ ಸುಮ್ಮನೆ ಕುಳಿತಿದ್ದಾರೆ. ಕೆಲವರು ತಮಗೆ ತಾವೇ ಹೇಳಿಕೊಳ್ಳುತ್ತಿದ್ದಾರೆ: “ಶಿಲುಬೆಗೆ ಹಾಕುವುದು–ಭಕ್ತರಿಗಾಗಿ ದೇಹತ್ಯಾಗ ಮಾಡುವುದು ಎಂಬುದರ ಇನ್ನೊಂದು ನಿದರ್ಶನವೇನು ಇದು?”
ಮಧ್ಯರಾತ್ರಿ. ಅವರ ಕಾಯಿಲೆ ಇನ್ನೂ ಅಧಿಕವಾದ ಹಾಗೆ ಕಾಣುತ್ತದೆ. ಏನು ಮಾಡುವುದು ಎಂದು ಭಕ್ತರು ಚಿಂತಿಸುತ್ತಿದ್ದಾರೆ. ಆ ನಡುರಾತ್ರಿಯಲ್ಲೇ ಒಬ್ಬ ಭಕ್ತ ಕಲ್ಕತ್ತಕ್ಕೆ ಹೊರಟ. ಡಾಕ್ಟರ್ ಉಪೇಂದ್ರನನ್ನು ಮತ್ತು ಕವಿರಾಜ ನವಗೋಪಾಲನನ್ನು ಗಿರೀಶ ತನ್ನೊಡನೆಯೇ ಕರೆದುಕೊಂಡು ತತ್ಕ್ಷಣವೆ ಕಾಶೀಪುರಕ್ಕೆ ಬಂದು ಸೇರಿದ.
ಭಕ್ತರು ಪರಮಹಂಸರ ಸುತ್ತಲೂ ಕುಳಿತಿದ್ದಾರೆ. ಈಗ ಸ್ವಲ್ಪ ಉತ್ತಮಗೊಂಡವರಾಗಿ ಭಕ್ತರಿಗೆ ಹೇಳುತ್ತಿದ್ದಾರೆ: “ಈ ರೋಗ ಈ ಶರೀರಕ್ಕೆ ಸೇರಿದ್ದು. ಇದು ಸ್ವಾಭಾವಿಕವಾದದ್ದು; ಏಕೆಂದರೆ, ಈ ದೇಹ ಪಂಚಭೂತಗಳಿಂದ ನಿರ್ಮಿತವಾದ್ದು.”
ಗಿರೀಶನ ಕಡೆ ತಿರುಗಿ ಹೇಳಿದರು: “ನಾನು ಅನೇಕ ಭಗವದ್ರೂಪಗಳನ್ನು ನೋಡು ತ್ತಿದ್ದೇನೆ. ಅವುಗಳಲ್ಲಿ ಇದೂ (ಪರಮಹಂಸರದು) ಒಂದು.”
೧೫ನೆ ಮಾರ್ಚ್ ೧೮೮೬, ಫಾಲ್ಗುಣ ಶುಕ್ಲ ದಶಮಿ, ಸೋಮವಾರ
ಘಂಟೆ ಪ್ರಾತಃಕಾಲ ಏಳು. ಪರಮಹಂಸರಿಗೆ ಸ್ವಲ್ಪ ಉತ್ತಮವಾಗಿರುವ ಹಾಗೆ ಕಂಡುಬರುತ್ತಿದೆ. ಅವರು ಭಕ್ತರೊಡನೆ ಕೆಲವು ವೇಳೆ ಮೆತ್ತಗೆ, ಇನ್ನು ಕೆಲವು ವೇಳೆ ಸಂಜ್ಞೆಗಳ ಮೂಲಕ ಮಾತಾಡುತ್ತಿದ್ದಾರೆ. ನರೇಂದ್ರ, ರಾಖಾಲ, ಲಾಟು, ಮಾಸ್ಟರ್, ಸಿಂಥಿಯ ಗೋಪಾಲ ಮತ್ತೆ ಇನ್ನೂ ಕೆಲವರು ಕೊಠಡಿಯಲ್ಲಿ ಕುಳಿತಿದ್ದಾರೆ. ಹಿಂದಿನ ರಾತ್ರಿ ಪರಮಹಂಸರು ಕಷ್ಟಪಟ್ಟದ್ದನ್ನು ನೋಡಿ ಅವರೆಲ್ಲರೂ ಚಿಂತಾಕ್ರಾಂತರಾಗಿ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ಭಕ್ತರಿಗೆ): “ನನಗೇನು ಕಾಣುತ್ತಿದೆ ಗೊತ್ತೆ? ಭಗವಂತನೇ ಎಲ್ಲವೂ ಆಗಿರುವುದಾಗಿ ಕಾಣಬರುತ್ತಿದೆ. ಮನುಷ್ಯ ಮತ್ತು ಉಳಿದ ಜೀವಜಂತುಗಳೆಲ್ಲವೂ ಚರ್ಮದಿಂದ ನಿರ್ಮಿತವಾಗಿರುವಂತೆಯೂ, ಭಗವಂತ ಅವುಗಳೊಳಗೆ ಕುಳಿತು ಕೈ, ಕಾಲು, ತಲೆ ಇವನ್ನು ಅಲ್ಲಾಡಿಸುತ್ತಿರುವಂತೆಯೂ ಕಂಡುಬರುತ್ತಿದೆ. ಹಿಂದೆ ನನಗೆ ಒಮ್ಮೆ ಇದೇ ತರದ ಅನುಭವವಾಗಿತ್ತು; ಮನೆ, ರಸ್ತೆ, ತೋಟ, ಮನುಷ್ಯ, ದನ, ಕರು ಎಲ್ಲವೂ ಒಂದೇ ವಸ್ತುವಿನಿಂದ, ಎಂದರೆ ಮೇಣದಿಂದ ನಿರ್ಮಿತವಾದಂತೆ ಕಂಡುಬಂದುವು.
“ಭಗವಂತನೇ ಬಲಿಯಾಗಿಯೂ, ಬಲಿಪೀಠವಾಗಿಯೂ, ಬಲಿಕೊಡತಕ್ಕವನಾಗಿಯೂ ಕಂಡುಬರುತ್ತಿದ್ದಾನೆ.”
ಪರಮಹಂಸರು ತಮಗಾಗುತ್ತಿರುವ ಈ ಅನುಭವಗಳನ್ನು ವರ್ಣಿಸುತ್ತಿದ್ದ ಹಾಗೆಯೆ ಭಾವದಿಂದ ತುಂಬಿತುಳುಕಾಡುತ್ತ ಹೇಳುತ್ತಿದ್ದಾರೆ: “ಆಹ! ಆಹ!”
ಒಡನೆಯೇ ಭಾವಾವಿಷ್ಟರಾಗಿ ಬಾಹ್ಯಜ್ಞಾನಶೂನ್ಯರಾಗಿಬಿಟ್ಟಿದ್ದಾರೆ. ಭಕ್ತರು ಕಿಂಕರ್ತವ್ಯ ವಿಮೂಢರಾಗಿ ಕುಳಿತಿದ್ದಾರೆ.
ಪರಮಹಂಸರು ಕಿಂಚಿತ್ ಪ್ರಕೃತಿಸ್ಥರಾಗಿ ಹೇಳುತ್ತಿದ್ದಾರೆ: “ಈಗ ನನಗೆ ಯಾವ ನೋವು ಇಲ್ಲ; ಮತ್ತೆ ಎಂದಿನಂತೆ ಆಗಿಬಿಟ್ಟಿದ್ದೇನೆ.”
ಪರಮಹಂಸರ ಸುಖದುಃಖಗಳಿಗತೀತವಾದ ಈ ಅವಸ್ಥೆಯನ್ನು ನೋಡಿ ಭಕ್ತರೆಲ್ಲರು ವಿಸ್ಮಿತರಾಗಿ ಕುಳಿತಿದ್ದಾರೆ.
ಪರಮಹಂಸರು ಲಾಟುವಿನ ಕಡೆ ದೃಷ್ಟಿ ಹಾಕಿ ಹೇಳುತ್ತಿದ್ದಾರೆ: “ಅಲ್ಲಿ ನೋಡಿ ಲಾಟೂನ. ತಲೆಗೆ ಕೈಕೊಟ್ಟು ಕುಳಿತಿದ್ದಾನೆ. ಭಗವಂತನೇ ಹಾಗೆ ತಲೆಗೆ ಕೈಕೊಟ್ಟು ಕುಳಿತಿದ್ದಾನೆ.”
ಪರಮಹಂಸರು ಭಕ್ತರ ಕಡೆ ನೋಡುತ್ತಿದ್ದಾರೆ. ಅವರ ವಾತ್ಸಲ್ಯಪ್ರೇಮ ಸಹಸ್ರಮಡಿ ಯಾಗಿ ಉಕ್ಕಿ ಉಕ್ಕಿ ಹರಿಯುತ್ತಿರುವುದೋ ಏನೋ ಎಂಬಂತೆ ಕಾಣುತ್ತಿದೆ. ತಾಯಿ ಶಿಶುವನ್ನು ಆದರಿಸುವ ರೀತಿಯಲ್ಲಿ ಅವರು ನರೇಂದ್ರ ಮತ್ತು ರಾಖಾಲನ ಕೆನ್ನೆ ಮತ್ತು ಗಲ್ಲಗಳನ್ನು ಹಿಡಿದು ಹಿಡಿದು ಆದರ ತೋರಿಸುತ್ತಿದ್ದಾರೆ.
ಕೆಲವು ನಿಮಿಷಗಳಾದ ಮೇಲೆ ಪರಮಹಂಸರು ಮಾಸ್ಟರಿಗೆ ಹೇಳುತ್ತಿದ್ದಾರೆ: “ಈ ಶರೀರ ಇನ್ನೂ ಸ್ವಲ್ಪ ಕಾಲ ಬದುಕಿಕೊಂಡಿರುವುದೇ ಆಗಿದ್ದರೆ, ಇನ್ನೂ ಅನೇಕರ ಆತ್ಮಜಾಗೃತಿ ಉಂಟಾಗಿಬಿಡುತ್ತಿತ್ತು.”
ಈಗ ಒಂದು ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡರು.
ಪರಮಹಂಸರು ಮತ್ತೆ ಹೇಳುತ್ತಿದ್ದಾರೆ: “ಇನ್ನು ಭಗವಂತ ಈ ಶರೀರವನ್ನು ಉಳಿಸುವುದಿಲ್ಲ.”
ಪರಮಹಂಸರ ಬಾಯಿಂದ ಮತ್ತೆ ಏನು ಬರುವುದೋ ಎಂಬುದನ್ನು ಕೇಳಲು ಭಕ್ತರು ಕಾತರರಾಗಿ ಕುಳಿತಿದ್ದಾರೆ.
ಪರಮಹಂಸರು ಮತ್ತೆ ಹೇಳುತ್ತಿದ್ದಾರೆ: “ಇನ್ನು ಈ ಶರೀರವನ್ನು ಭಗವಂತ ಇಡುವುದಿಲ್ಲ. ನಾನು ಸರಳ ಮತ್ತು ಏನೂ ತಿಳಿಯದವನಾಗಿರುವುದನ್ನು ನೋಡಿ ನನ್ನಿಂದ ಎಲ್ಲವನ್ನೂ ಜನರು ಕಸಿದುಕೊಂಡುಬಿಡಬಹುದೆಂದು ಮತ್ತು ಏನೂ ಅರಿಯದವನಾಗಿರುವುದರಿಂದ ನಾನು ಎಲ್ಲವನ್ನೂ ಎಲ್ಲರಿಗೂ ಹಂಚಿಬಿಡಬಹುದೆಂದು ಭಾವಿಸಿ ಈ ಶರೀರವನ್ನು ಆತ ಇನ್ನು ಇಡುವುದಿಲ್ಲ. ನೋಡಿ, ಈ ಕಲಿಯುಗದಲ್ಲಿ ಜನರಿಗೆ ಜಪ, ಧ್ಯಾನ ಹಿಡಿಸುತ್ತಿಲ್ಲ.”
ರಾಖಾಲ (ಪ್ರೀತಿಯಿಂದ): “ನಿಮ್ಮ ಈ ಶರೀರವನ್ನು ಇನ್ನೂ ಸ್ವಲ್ಪ ಕಾಲ ಇಡುವಂತೆ ನೀವು ಭಗವಂತನಿಗೆ ಹೇಳಿ.”
ಶ್ರೀರಾಮಕೃಷ್ಣರು: “ಅದು ಭಗವಂತನ ಇಚ್ಛೆಯನ್ನು ಅವಲಂಬಿಸಿದೆ.”
ನರೇಂದ್ರ: “ನಿಮ್ಮ ಇಚ್ಛೆ, ಭಗವಂತನ ಇಚ್ಛೆ ಎರಡೂ ಒಂದೇ ಆಗಿಹೋಗಿದೆ.”
ಪರಮಹಂಸರು ಏನೋ ಆಲೋಚಿಸುತ್ತಿರುವವರ ಹಾಗೆ ಸುಮ್ಮನೆ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ನರೇಂದ್ರ, ರಾಖಾಲ ಮತ್ತು ಉಳಿದವರಿಗೆ): “ನಾನು ಭಗವಂತನಿಗೆ ಹೇಳಿದರೆ, ಇನ್ನು ಏನೂ ಸಾರ್ಥಕವಾಗುವ ಹಾಗಿಲ್ಲ. ಈಗ ನೋಡುತ್ತಾ ಇದ್ದೇನೆ, ನಾನೂ ಭಗವತಿ ಒಂದೇ ಆಗಿರುವ ಹಾಗೆ. ರಾಧೆ ತನ್ನ ಅತ್ತಿಗೆಯ ಭಯಕ್ಕಾಗಿ ಶ್ರೀಕೃಷ್ಣನಿಗೆ ಹೇಳಿದಳು: ‘ನನ್ನ ಆಂತರ್ಯದಲ್ಲೇ ಇದ್ದುಬಿಡು.’ ಆದರೆ ಮತ್ತೆ ಆಕೆ ಆತನ ದರ್ಶನಕ್ಕಾಗಿ ವ್ಯಾಕುಲಪಟ್ಟಾಗ–ಆಕೆಯ ವ್ಯಾಕುಲತೆ ಅಂಥದು, ಆಕೆಯ ಪ್ರಾಣ ತನ್ನ ಪ್ರಾಣವಲ್ಲಭನ ದರ್ಶನಕ್ಕಾಗಿ ಸುಮ್ಮನೆ ಹೊರಳಾಡುತ್ತಿತ್ತು. ಆತ ಆಕೆಯ ಹೃದಯವನ್ನು ಬಿಟ್ಟು ಹೊರಕ್ಕೆ ಬರಲಿಚ್ಛಿಸಲಿಲ್ಲ.”
ರಾಖಾಲ (ಮೆತ್ತಗೆ ಭಕ್ತರಿಗೆ): “ಇವರು ಗೌರಾಂಗನ ಅವತಾರ ಸಂಬಂಧವಾಗಿ ಹೇಳುತ್ತಿದ್ದಾರೆ.”
ಭಕ್ತರು ನಿಶ್ಶಬ್ದರಾಗಿ ಕುಳಿತಿದ್ದಾರೆ. ಪರಮಹಂಸರು ಭಕ್ತರ ಕಡೆ ಪ್ರೇಮದೃಷ್ಟಿಯಿಂದ ನೋಡುತ್ತಿದ್ದಾರೆ. ಈಗ ಅವರು ತಮ್ಮ ಎದೆಯ ಮೇಲೆ ಕೈಯಿಟ್ಟುಕೊಂಡಿದ್ದಾರೆ. ಬಹುಶಃ ಏನೊ ಹೇಳಬಹುದು ಅಂತ ತೋರುತ್ತಿದೆ.
ಶ್ರೀರಾಮಕೃಷ್ಣರು (ನರೇಂದ್ರಾದಿಗಳಿಗೆ): “ಇದರ ಒಳಗೆ ಇಬ್ಬರಿದ್ದಾರೆ. ಒಬ್ಬ ವ್ಯಕ್ತಿ ಭಗವತಿ, –”
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡರು. ಅವರ ಬಾಯಿಂದ ಇನ್ನೇನು ಹೊರಡುವುದೊ ಎಂದು ಭಕ್ತರು ಆಕಾಂಕ್ಷಿತರಾಗಿ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು: “ಒಬ್ಬ ವ್ಯಕ್ತಿ ಆಕೆ; –ಇನ್ನೊಬ್ಬ ವ್ಯಕ್ತಿ ಆಕೆಯ ಭಕ್ತ. ಕೈ ಮುರಿದುಕೊಂಡಿದ್ದು ಆಕೆಯ ಭಕ್ತ; ಆ ಭಕ್ತನಿಗೆ ಈಗ ಕಾಯಿಲೆ ಆಗಿದೆ, ಅರ್ಥವಾಯಿತೆ?”
ಭಕ್ತರು ಸುಮ್ಮನೆ ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು: “ಅಯ್ಯೋ! ಇದನ್ನೆಲ್ಲ ನಾನು ಯಾರಿಗೆ ತಾನೆ ಹೇಳಲಿ? ಯಾರಿಗೆ ತಾನೆ ಅರ್ಥಮಾಡಿಕೊಳ್ಳಲು ಶಕ್ತಿ ಇದೆ?”
ಒಂದು ಸ್ವಲ್ಪ ಹೊತ್ತು ಸುಮ್ಮನೆ ಇದ್ದು ಹೇಳುತ್ತಿದ್ದಾರೆ:
“ಭಗವಂತ ಮನುಷ್ಯದೇಹಧಾರಣೆಮಾಡಿಕೊಂಡು-ಅವತಾರಪುರುಷನಾಗಿ- ಭಕ್ತರೊಡನೆ ಧರೆಗೆ ಬರುತ್ತಾನೆ. ಆತ ಹಿಂದಿರುಗುವಾಗ ಭಕ್ತರೂ ಆತನೊಡನೆ ಮತ್ತೆ ಹಿಂದಿರುಗಿ ಹೊರಟು ಹೋಗುತ್ತಾರೆ.”
ರಾಖಾಲ: “ಅದಕ್ಕಾಗಿಯೇ ನಾವು ಪ್ರಾರ್ಥನೆಮಾಡಿಕೊಳ್ಳುತ್ತಿದ್ದೇವೆ, ನಮ್ಮನ್ನು ಬಿಟ್ಟು ನೀವು ಹೊರಟುಹೋಗಕೂಡದು ಅಂತ.”
ಪರಮಹಂಸರು ನಸುನಗು ನಕ್ಕು ಹೇಳುತ್ತಿದ್ದಾರೆ:
“ಭಜನೆಯ ಒಂದು ಗುಂಪು ಇದ್ದಕ್ಕಿದ್ದ ಹಾಗೆ ಬಂತು, ನರ್ತಿಸಿತು, ಹಾಡಿತು ಮತ್ತು ಇದ್ದಕ್ಕಿದ್ದ ಹಾಗೆ ಹೊರಟೂ ಹೋಯಿತು. ಅವರು ಬಂದರು, ಹೊರಟೂ ಹೋದರು. ಅವರು ಯಾರು ಏನು ಎಂಬುದು ಯಾರಿಗೂ ಗೊತ್ತಾಗಲಿಲ್ಲ.”
ಪರಮಹಂಸರು ಮತ್ತು ಉಳಿದವರೆಲ್ಲರು ಮುಗುಳುನಗೆ ನಕ್ಕರು.
ಕೆಲವು ನಿಮಿಷಗಳ ನಂತರ ಮತ್ತೆ ಪರಮಹಂಸರು ಹೇಳುತ್ತಿದ್ದಾರೆ:
“ದೇಹಧಾರಣೆಮಾಡಿಕೊಂಡರೆ ಕಷ್ಟವನ್ನು ಅನುಭವಿಸಲೇಬೇಕು. ಅದು ಅದರ ಹಿಂಬಾಲಕ.
“ಒಮ್ಮೊಮ್ಮೆ ನನಗೆ ನಾನೇ ಹೇಳಿಕೊಳ್ಳುತ್ತೇನೆ: ‘ಮತ್ತೆ ನಾನು ಈ ಧರೆಗೆ ಬಾರದೆ ಇರುವಂತಾಗಲಿ!’ ಆದರೆ ಒಂದು ವಿಷಯ. ಔತಣದ ಊಟ ಮಾಡಿ ಮಾಡಿ, ಮನೆಯ ಗೊಡ್ಡುಸಾರು ಅನ್ನ ರುಚಿಸದು.
“ಜೊತೆಗೆ ಈ ದೇಹಧಾರಣೆ ಭಕ್ತರಿಗಾಗಿ.”
ಪರಮಹಂಸರು ನರೇಂದ್ರನ ಕಡೆ ಪ್ರೀತಿಯಿಂದ ನೋಡುತ್ತಾ ಇದ್ದಾರೆ.
ಶ್ರೀರಾಮಕೃಷ್ಣರು (ನರೇಂದ್ರನಿಗೆ): “ಒಬ್ಬ ಚಂಡಾಲ ಮಾಂಸವನ್ನು ಹೊತ್ತುಕೊಂಡು ಹೋಗುತ್ತಿದ್ದ. ಶಂಕರಾಚಾರ್ಯರು ಗಂಗಾಸ್ನಾನ ಮಾಡಿ ಬೀದಿಯಲ್ಲಿ ಹೋಗುತ್ತಿದ್ದರು. ಚಂಡಾಲ ಇದ್ದಕ್ಕಿದ್ದ ಹಾಗೆ ಅವರನ್ನು ಮುಟ್ಟಿಬಿಟ್ಟ. ಅವರು ಕೋಪಿಸಿಕೊಂಡು ಹೇಳಿದರು: ‘ಏನಿದು! ನೀನು ನನ್ನನ್ನು ಮುಟ್ಟಿಬಿಟ್ಟೆಯಲ್ಲ!’ ಆತ ಹೇಳಿದ: ‘ಪೂಜ್ಯರೆ, ನಾನು ನಿಮ್ಮನ್ನು ಮುಟ್ಟಲಿಲ್ಲ, ನೀವೂ ನನ್ನನ್ನು ಮುಟ್ಟಲಿಲ್ಲ. ವಿಚಾರಮಾಡಿ ನೋಡಿ, ನೀವು ದೇಹವೇ, ಮನಸ್ಸೆ, ಬುದ್ಧಿಯೆ? ನೀವು ಏನು ಎಂಬುದನ್ನು ವಿಚಾರಮಾಡಿ ನೋಡಿ. ನೀವು ನಿರ್ಲಿಪ್ತ ಶುದ್ಧ ಆತ್ಮ; ಸತ್ತ್ವ, ರಜಸ್ಸು, ತಮಸ್ಸು—ಈ ಯಾವ ಗುಣಗಳಿಂದಲೂ ಅದು ಲಿಪ್ತವಾಗಿಲ್ಲ.’
“ಬ್ರಹ್ಮ ಯಾವ ರೀತಿಯಾಗಿ ಆಗಿದ್ದಾನೆ ಎಂಬುದು ಗೊತ್ತೆ? ಉದಾಹರಣೆಗೆ ಗಾಳಿ, ಸುಗಂಧ, ದುರ್ಗಂಧ ಎರಡನ್ನೂ ಹೊತ್ತು ತರುತ್ತದೆ. ಆದರೆ ಅದು ಮಾತ್ರ ಅವುಗಳಿಂದ ನಿರ್ಲಿಪ್ತ.”
ನರೇಂದ್ರ: “ಹೌದು, ನಿಜ.”
ಶ್ರೀರಾಮಕೃಷ್ಣರು: “ಆತ ಗುಣಾತೀತ, ಮಾಯಾತೀತ—ವಿದ್ಯಾಮಾಯೆ, ಅವಿದ್ಯಾ ಮಾಯೆ ಇವೆರಡಕ್ಕೂ ಅತೀತ. ಕಾಮಕಾಂಚನವೇ ಅವಿದ್ಯಾಮಾಯೆ. ಜ್ಞಾನ, ವೈರಾಗ್ಯ, ಭಕ್ತಿ ಇವು ವಿದ್ಯಾಮಾಯೆಯ ಸಂಪತ್ತು. ಶಂಕರಾಚಾರ್ಯರು ವಿದ್ಯಾಮಾಯೆಯನ್ನು ಆಶ್ರಯಿಸಿದ್ದರು. ನೀನು ಮತ್ತು ಇವರೆಲ್ಲರೂ ನನಗಾಗಿ ಚಿಂತಿಸುತ್ತಾ ಇದ್ದೀರಿ. ಈ ಭಾವನೆ ವಿದ್ಯಾಮಾಯೆಗೆ ಸೇರಿದ್ದು.
“ವಿದ್ಯಾಮಾಯೆಯನ್ನು ಹಿಡಿದು ಹಿಡಿದು ಮುಂದುವರಿದರೆ ಬ್ರಹ್ಮಜ್ಞಾನ ದೊರೆಯು ತ್ತದೆ. ವಿದ್ಯಾಮಾಯೆಯೇ ಮೆಟ್ಟಲಸಾಲ ಕೊನೆಯ ಹಂತಗಳು. ಅವನ್ನು ಹತ್ತಿದೊಡನೆಯೇ ಚಾವಣಿ. ಕೆಲವರು ಚಾವಣಿಗೆ ಹತ್ತಿದ ಮೇಲೆ, ಅಲ್ಲಿಂದ ಮೆಟ್ಟಲ ಸಾಲ ಮೂಲಕ ಇಳಿದುಹತ್ತಿ ಮಾಡುತ್ತಲೇ ಇರುತ್ತಾರೆ. ಬ್ರಹ್ಮಜ್ಞಾನ ದೊರೆತನಂತರವೂ ‘ವಿದ್ಯೆಯ ಅಹಂ’ ಅನ್ನು ಇಟ್ಟುಕೊಂಡಿರುತ್ತಾರೆ. ಅವರು ಅದನ್ನು ಲೋಕಶಿಕ್ಷಣಕ್ಕಾಗಿಯೂ, ಭಕ್ತಿಯನ್ನು ಆಸ್ವಾದಿಸಲೋಸುಗವಾಗಿಯೂ, ಭಕ್ತರೊಡನೆ ಆನಂದಪಡಲೋಸುಗವಾಗಿಯೂ ಇಟ್ಟುಕೊಂಡಿರುತ್ತಾರೆ.”
ನರೇಂದ್ರ: “ತ್ಯಾಗದ ವಿಷಯವನ್ನು ಎತ್ತಿದೆನೆಂದರೆ, ಕೆಲವರು ನನ್ನ ಮೇಲೆ ಸುಮ್ಮನೆ ಕೋಪಿಸಿಕೊಂಡುಬಿಡುತ್ತಾರೆ.”
ಶ್ರೀರಾಮಕೃಷ್ಣರು (ಮೃದುಸ್ವರದಿಂದ): “ತ್ಯಾಗ ಅವಶ್ಯಕ. (ತಮ್ಮ ಶರೀರದ ಅಂಗ ಪ್ರತ್ಯಂಗಗಳ ಕಡೆ ತೋರಿಸಿ) ಇವುಗಳಲ್ಲಿ ಒಂದನ್ನು ಇನ್ನೊಂದರ ಮೇಲೆ ಇಟ್ಟಿದ್ದರೆ, ಮೊದಲನೆಯದು ಬೇಕಾಗಿದ್ದರೆ ಎರಡನೆಯದನ್ನು ಸರಿಸಬೇಡವೆ? ಒಂದನ್ನು ತೆಗೆದಿಡದೆ ಇನ್ನೊಂದು ದೊರೆಯುವುದೆ?”
ನರೇಂದ್ರ: “ಹೌದು, ನಿಶ್ಚಯ.”
ರಾಮಕೃಷ್ಣರು (ಮೃದುಸ್ವರದಿಂದ ನರೇಂದ್ರನಿಗೆ): “ಎಲ್ಲವೂ ಭಗವನ್ಮಯವಾಗಿ ಕಾಣುವಾಗ ಬೇರೆ ಏನನ್ನಾದರೂ ನೋಡಲಾಗುವುದೆ?”
ನರೇಂದ್ರ: “ಸಂಸಾರವನ್ನು ತ್ಯಾಗಮಾಡಲೇಬೇಕಾಗುತ್ತದೆ, ಅಲ್ಲವೇನು?”
ಶ್ರೀರಾಮಕೃಷ್ಣರು: “ಈಗ ತಾನೆ ಹೇಳಿದೆನಲ್ಲ; ‘ಎಲ್ಲವೂ ಭಗವನ್ಮಯವಾಗಿ ಕಾಣುವಾಗ ಬೇರೆ ಏನನ್ನಾದರೂ ನೋಡಲಾಗುವುದೇ?’ ಆಗ ಸಂಸಾರ ಮುಂತಾದುವನ್ನು ನೋಡಲಾಗುವುದೇ?
“ಆದರೆ, ಮಾನಸಿಕವಾಗಿ ತ್ಯಜಿಸಬೇಕು. ಇಲ್ಲಿಗೆ ಯಾರು ಬರುತ್ತಾರೋ, ಅವರಲ್ಲಿ ಯಾರೂ ಸಂಸಾರಿಗಳಲ್ಲ. ಹೆಂಗಸಿನ ಸಹವಾಸ ಮಾಡಬೇಕು ಅಂತ ಎಲ್ಲೊ ಕೆಲವರಿಗೆ ಒಂದು ಕಿಂಚಿತ್ ಇಚ್ಛೆ ಇತ್ತು. (ರಾಖಾಲ, ಮಾಸ್ಟರ್ ಮೊದಲಾದವರು ಸ್ವಲ್ಪ ಮುಗುಳುನಗೆ ನಕ್ಕರು.)
“ಅದೊಂದಿಷ್ಟು ಇಚ್ಛೆ ಆಗಲೆ ಅವರಿಗೂ ಪೂರ್ಣವಾಗಿ ಹೋಗಿದೆ.”
ಪರಮಹಂಸರು ನರೇಂದ್ರನ ಕಡೆ ನೋಡುತ್ತಿದ್ದಾರೆ. ಆತನನ್ನು ನೋಡುತ್ತಾ ನೋಡುತ್ತಾ ಇದ್ದ ಹಾಗೆ ಆನಂದದಿಂದ ತುಂಬಿತುಳುಕಾಡಲಾರಂಭಿಸಿದ್ದಾರೆ. ಭಕ್ತರ ಕಡೆ ನೋಡಿ ಹೇಳುತ್ತಿದ್ದಾರೆ: “ಭೇಷ್!”
ನರೇಂದ್ರ ಮುಗುಳುನಗೆ ನಗುತ್ತ ಪರಮಹಂಸರನ್ನು ಕೇಳುತ್ತಿದ್ದಾನೆ: “ಯಾವುದು ಭೇಷ್ ಅದು?”
ಶ್ರೀರಾಮಕೃಷ್ಣರು (ನಸುನಗೆ ನಕ್ಕು): “ಮಹಾತ್ಯಾಗಕ್ಕೆ ಸಿದ್ಧತೆ ನಡೆಯುತ್ತಿದೆ.”
ನರೇಂದ್ರ ಮತ್ತು ಉಳಿದವರೆಲ್ಲರು ಸುಮ್ಮನೆ ಕುಳಿತುಕೊಂಡು ಪರಮಹಂಸರ ಕಡೆ ನೋಡುತ್ತಿದ್ದಾರೆ. ಈಗ ರಾಖಾಲ ಮಾತನಾಡಲು ಆರಂಭಿಸಿದ.
ರಾಖಾಲ (ನಗುತ್ತ ಪರಮಹಂಸರಿಗೆ): “ನರೇಂದ್ರನಿಗೆ ನೀವು ಹೇಳುವುದೆಲ್ಲ ಈಗ ಆತನಿಗೆ ಬಹಳ ಚೆನ್ನಾಗಿ ಅರ್ಥವಾಗುತ್ತಿದೆ.”
ಶ್ರೀರಾಮಕೃಷ್ಣರು (ನಗುತ್ತ): “ಹೌದು, ನರೇಂದ್ರನೊಬ್ಬನಿಗೇ ಏಕೆ ಉಳಿದವರಿಗೂ. (ಮಾಸ್ಟರಿಗೆ) ಅಲ್ಲವೇನು?”
ಮಾಸ್ಟರ್: “ಹೌದು.”
ಪರಮಹಂಸರು ನರೇಂದ್ರನ ಮತ್ತು ಮಾಸ್ಟರ್ ಕಡೆ ದೃಷ್ಟಿ ಹಾಕಿ ಕೈಸನ್ನೆಯ ಮೂಲಕ ಉಳಿದ ಭಕ್ತರನ್ನು ಅವರ ಕಡೆ ಎಳೆದರು. ಮೊದಲು ನರೇಂದ್ರನನ್ನು ತೋರಿಸಿ ಬಳಿಕ ಮಾಸ್ಟರನ್ನು ತೋರಿಸಿದರು. ರಾಖಾಲ ಪರಮಹಂಸರ ಸನ್ನೆಯನ್ನು ಅರ್ಥಮಾಡಿಕೊಂಡು ಅವರಿಗೆ ನಗುತ್ತ ಹೇಳುತ್ತಿದ್ದಾನೆ: “ನರೇಂದ್ರನದು ವೀರಭಾವ. ಈತನದು (ಮಾಸ್ಟರ್) ಸಖೀಭಾವ ಅಂತ ನಿಮ್ಮ ಅಭಿಪ್ರಾಯವಲ್ಲವೇ?”
ಶ್ರೀರಾಮಕೃಷ್ಣರು ನಕ್ಕರು.
ನರೇಂದ್ರ (ನಗುತ್ತ): “ಇವರಿಗೆ (ಮಾಸ್ಟರಿಗೆ) ಹೆಚ್ಚಾಗಿ ಮಾತನಾಡುವ ಸ್ವಭಾವವಿಲ್ಲ; ಜೊತೆಗೆ ನಾಚಿಕೆ ಬೇರೆ. ಅದಕ್ಕಾಗಿಯೇ ಏನು ನೀವು ಹಾಗೆ ಹೇಳುತ್ತಿರುವದು?”
ಶ್ರೀರಾಮಕೃಷ್ಣರು (ನಗುತ್ತ ನರೇಂದ್ರನಿಗೆ): “ಒಳ್ಳೆಯದು, ನನ್ನದು ಎಂಥ ಭಾವ?”
ನರೇಂದ್ರ: “ನಿಮ್ಮದು ವೀರಭಾವ, ಸಖೀಭಾವ, —ಮತ್ತೆ ಎಲ್ಲಾ ಭಾವಗಳೂ.”
ನರೇಂದ್ರನ ಈ ಮಾತುಗಳನ್ನು ಕೇಳಿ ಪರಮಹಂಸರು ಭಾವದಿಂದ ತುಂಬಿತುಳುಕಾಡ ಲಾರಂಭಿಸಿದ್ದಾರೆ. ಈಗ ಅವರು ತಮ್ಮ ಎದೆಯ ಮೇಲೆ ಕೈಯಿಟ್ಟುಕೊಂಡು ಏನೊ ಹೇಳುವುದರಲ್ಲಿದ್ದಾರೆ.
ಶ್ರೀರಾಮಕೃಷ್ಣರು (ನರೇಂದ್ರನಿಗೆ ಮತ್ತು ಉಳಿದ ಭಕ್ತರಿಗೆ): “ನೋಡುತ್ತಾ ಇದ್ದೇನೆ ಎಲ್ಲಾ–ಇರುವುದೆಲ್ಲಾ–ಇದರಿಂದ ಬಂದಿರುವುದಾಗಿ.”
ಪರಮಹಂಸರು (ಸಂಜ್ಞೆಯ ಮೂಲಕ ನರೇಂದ್ರನಿಗೆ): “ನೀನು ಏನು ಅರ್ಥಮಾಡಿ ಕೊಂಡೆ ಹೇಳು ನೋಡೋಣ?”
ನರೇಂದ್ರ: “ಸೃಷ್ಟಿಯಾಗಿರುವುದೆಲ್ಲವೂ ನಿಮ್ಮಿಂದಲೇ ಬಂದಿದೆ.”
ಅವರ ಮುಖ ಆನಂದದಿಂದ ಬೆಳಗಲಾರಂಭಿಸಿತು. ಅವರು ರಾಖಾಲನಿಗೆ ಹೇಳು ತ್ತಿದ್ದಾರೆ “ನರೇಂದ್ರ ಹೇಳಿದ್ದನ್ನು ಕೇಳಿದೆಯಾ?”
ಪರಮಹಂಸರು ನರೇಂದ್ರನಿಗೆ ಹಾಡುವಂತೆ ಹೇಳಿದರು. ನರೇಂದ್ರ ಒಂದು ಸ್ತೋತ್ರಕ್ಕೆ ಸ್ವರ ಕೊಟ್ಟು ಹಾಡಲಾರಂಭಿಸಿದ್ದಾನೆ. ಆತನ ಮನಸ್ಸು ತ್ಯಾಗಭರಿತವಾಗಿದೆ. ಆತ ಹಾಡುತ್ತಿದ್ದಾನೆ:
ನಲಿನೀದಲಗತಜಲಮತಿತರಲಂ ತದ್ವಜ್ಜೀವಿತಮತಿಶಯಚಪಲಮ್ ।
ಕ್ಷಣಮಿಹ ಸಜ್ಜನಸಂಗತಿರೇಕಾ ಭವತಿ ಭರ್ವಣಾವತರಣೇ ನೌಕಾ ॥
ನರೇಂದ್ರ ಒಂದೆರಡು ಚರಣಗಳನ್ನು ಹಾಡುವುದರೊಳಗಾಗಿಯೇ ಪರಮಹಂಸರು ಆತನಿಗೆ ಸನ್ನೆಯ ಮೂಲಕ ಹೇಳುತ್ತಿದ್ದಾರೆ: “ಏನು ನೀನು ಹಾಡುತ್ತಿರುವುದು? ಇದು ಬಹಳ ಸಾಮಾನ್ಯವಾದ್ದು.”
ನರೇಂದ್ರ ಈಗ ಸಖೀಭಾವದ ಸಂಬಂಧವಾಗಿ ಹಾಡಲಾರಂಭಿಸಿದ್ದಾನೆ:
ಉಳಿವು-ಅಳಿವಿನ ಪರಿಯದೆಂತೋ ಬಲು ವಿಚಿತ್ರವೆ, ಪ್ರಿಯ ಸಖಿ!
ನನ್ನ ಒಲವಿನ ವ್ರಜ ಕಿಶೋರನು
ಹೋದಮೇಲಿನ್ನೆಂತು ಜೀವವ
ನಾನು ಧರಿಸಿರಬಲ್ಲೆನು?
ನನ್ನ ಮೀರಿದ ಚೆಲುವೆಯರ ಜೊತೆಗೆನ್ನಮಾಧವ ಹೋದನು.
ರೂಪವಿಲ್ಲದ ನನ್ನನೀತೆರ ಅವನು ಮರೆತೇಬಿಟ್ಟನು!
ಯಾರು ಊಹಿಸಬಲ್ಲರೇ ಸಖಿ-ಯಾರು ಊಹಿಸಬಲ್ಲರು?
ದಿವ್ಯ ಪ್ರೇಮಿಯು ಕೂಡ ಈ ತೆರ
ಬಾಹ್ಯ ರೂಪಕೆ ಮಾರುಹೋಗುತ
ತಿರುಕನಂದದಿ ನಡೆವನೆಂಬುದ ಯಾರು ಊಹಿಸಬಲ್ಲರು?
ಅವನು ಇಂಥವನೆಂದು ಮೊದಲೇ ನಾನು ಕಾಣದೆಹೋದೆನು.
ಅವನ ರೂಪಕೆ ಮರುಳುಗೊಂಡೆನು; ಅವನ ಪಾದವನೆನ್ನ ಎದೆಯಲಿ
ಹಿಡಿವ ಒಂದೇ ಒಂದು ಬಯಕೆಯ
ನಾನು ಪೋಷಿಸಿಕೊಂಡೆನು!
ಕಡೆಗೆ ಉಳಿದಿಹುದೊಂದೆ ದಾರಿಯು: ಯಮುನೆಯಲಿ ನಾ ಮುಳುಗುವೆ
ಅಥವಾ ಗರಳವ ಕುಡಿಯುವೆ,
ಇಲ್ಲದಿರಲೀ ತಮಾಲ ತರುವೊಳು
ಬಳ್ಳಿಯೊಂದನು ಉರುಳುಗೈದೀ
ನನ್ನ ಜೀವವ ತೊರೆಯುವೆ.
ಕಡೆಗೆ ಓ ಸಖಿ–ಇನಿತು ಯತ್ನಗಳೆಲ್ಲ ನನ್ನನು ಕೊಲದಿರೆ.
ಶ್ಯಾಮನಾಮವ ಜಪಿಸಿ ಜಪಿಸೀ ಕಡೆಗೆ ಹರಣವ ನೀಗುವೆ!
ಈ ಹಾಡನ್ನು ಕೇಳಿ ಪರಮಹಂಸರು ಮತ್ತು ಭಕ್ತರು ಬಹಳವಾಗಿ ಅನುಕಂಪಿತ ರಾಗಿದ್ದಾರೆ. ಪರಮಹಂಸರ ಮತ್ತು ರಾಖಾಲನ ಕಣ್ಣುಗಳಲ್ಲಿ ಪ್ರೇಮಾಶ್ರು ಸುರಿಯುತ್ತಿದೆ. ನರೇಂದ್ರ ವ್ರಜಗೋಪಿಯರ ಭಾವದಿಂದ ಉನ್ಮತ್ತನಾಗಿ ಕೀರ್ತನ ಸ್ವರದಿಂದ ಹಾಡಲಾರಂಭಿಸಿದ್ದಾನೆ:
ಓ ನನ್ನ ಪ್ರಿಯತಮನೆ ಘನಶ್ಯಾಮಸುಂದರನೆ
ಏನು ಹೇಳಲಿ ನಿನಗೆ ಮತ್ತೆ ನಾನು?
ನಾನೋರ್ವ ನಿರ್ಭಾಗ್ಯ ಅಬಲೆಯಾದುದರಿಂದ
ಏನ ಹೇಳಲು ನನಗೆ ತೋರದಿಹುದು.
ಅಂಗೈ ಕನ್ನಡಿಯ ರೀತಿಯಲಿ ನೀನಿರುವೆ
ನನ್ನ ಮುಡಿಗಿಡುವಂಥ ಹೂವಿನಂತಿರುವೆ!
ಓವೊ ಸಖ ನಾ ನಿನ್ನ
ಒಂದು ಹೂವನು ಮಾಡಿ ಮುಡಿಯೊಳಿಡುವೆ.
ನಿನ್ನನಾರೂ ಮತ್ತೆ ಕಾಣದಿಹ ರೀತಿಯಲಿ
ನನ್ನ ಜಡೆಯೊಳು ನಿನ್ನ ಅಡಗಿಸಿಡುವೆ!
ತಾಂಬೂಲದಂತಿರುವೆ, ಎಲೆ ಇನಿಯ ನೀನೆನಗೆ
ಕಣ್ಣಿಗಂಜನದಂತೆ ತೋರುತಿರುವೆ.
ಓವೊ ಸಖ ನಿನ್ನ ನಾ ತುಟಿಗೆ ಲೇಪಿಸಿಕೊಳುವೆ
ನನ್ನ ಕಣ್ಣಿಗೆ ನಿನ್ನ ಬಳಿದುಕೊಳುವೆ!
ಗಮಗಮಿಪ ಶ್ರೀಗಂಧದಂತಿರುವೆ ಓ ನನ್ನ ನಲ್ಲ,
ಕೊರಳ ಕಂಠೀಹಾರದಂತೆ ಇರುವೆ!
ನಿನ್ನ ನಾ ಮೈಗೆಲ್ಲ ಬಳಿದು ದೇಹಾತ್ಮಗಳ
ಸಂತವಿಡುವೆ.
ಕೊರಳ ಹಾರವ ಮಾಡಿ ಹಾಕಿಕೊಳುವೆ.
ತುಡಿತುಡಿವ ನನ್ನೆದೆಯ
ಮೇಲಿರುತ ನಿತ್ಯವೂ
ಅದರ ತುಡಿತವ ನೀನು ಕೇಳುತಿರುವೆ!
ನನ್ನೆದೆಯ ನಿಧಿ ನೀನು
ನನ್ನ ಮನೆ ದೈವ ನೀ
ರೆಕ್ಕೆ ಎಂತೋ ಹಕ್ಕಿಗಂತೆ ನನಗೆ
ಮೀನ್ಗೆ ನೀರೆಂತೊ ನೀನಂತೆ ನನಗೆ!
1. ಆತ ಒರಿಸ್ಸಾ ದೇಶದ ದೊರೆ. ಚೈತನ್ಯದೇವನ ಪರಮಭಕ್ತ. ಆತ ಚೈತನ್ಯದೇವನ ಸೇವೆಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಮಾಡುತ್ತಿದ್ದ.