೨೯ನೇ ಅಕ್ಟೋಬರ್ ೧೮೮೫, ಕಾರ್ತಿಕ ಕೃಷ್ಣ ಷಷ್ಠಿ ಗುರುವಾರ
ಘಂಟೆ ಬೆಳಗಿನ ಹತ್ತು. ಮಾಸ್ಟರ್, ಶ್ರೀರಾಮಕೃಷ್ಣರ ದೇಹಾರೋಗ್ಯದ ವರದಿಯನ್ನು ಒಪ್ಪಿಸಲು ಡಾಕ್ಟರ್ ಸರ್ಕಾರನ ಮನೆಗೆ ಬಂದಿದ್ದಾನೆ. ಈಗ ಮಾಸ್ಟರ್ ಮತ್ತು ಡಾಕ್ಟರ್ ಮಾತುಕತೆಗಳಾಡುತ್ತಿದ್ದಾರೆ.
ಡಾಕ್ಟರ್: “ನೋಡು, ಡಾಕ್ಟರ್ ಬಿಹಾರಿಭಾದುರಿಯ ಬಾಯಲ್ಲಿ ಯಾವಾಗ ನೋಡಿದರೂ ಇದೊಂದೇ ಮಾತು. ಆತ ಹೇಳುತ್ತಿದ್ದಾನೆ: ‘ಗೋತೆಯ ಸೂಕ್ಷ್ಮಶರೀರ ಹೊರಕ್ಕೆ ಬಂದದನ್ನು ಗೋತೆಯೇ ನೋಡಿದ್ದಾನೆ.’ ಇದು ಎಷ್ಟು ಆಶ್ಚರ್ಯಕರವಾದ ವಿಷಯ!”
ಮಾಸ್ಟರ್: “ಪರಮಹಂಸರು ಹೇಳುವ ಹಾಗೆ ಈ ವಿಧದ ಮಾತುಗಳಿಂದ ನಮಗಾಗುವ ಪ್ರಯೋಜನವೇನು? ನಾವು ಈ ಜಗತ್ತಿನಲ್ಲಿ ಜನ್ಮವೆತ್ತಿರುವುದು ಭಗವಂತನ ಪಾದಪದ್ಮಗಳಲ್ಲಿ ಭಕ್ತಿ ಬೆಳೆಸಿಕೊಳ್ಳಲೋಸುಗ. ಮಾವಿನಹಣ್ಣು ತಿನ್ನಬೇಕೆಂದು ಮಾವಿನ ತೋಟಕ್ಕೆ ಬಂದವನ ಕಥೆಯನ್ನು ಅವರು ಹೇಳುತ್ತಿರುತ್ತಾರೆ. ತೋಟಕ್ಕೆ ಬಂದಂಥ ಮನುಷ್ಯ, ಹಣ್ಣು ತಿನ್ನದೆ ಕಾಗದ ಪೆನ್ಸಿಲು ತೆಗೆದುಕೊಂಡು ಆ ತೋಟದಲ್ಲಿ ಎಷ್ಟೊಂದು ಮರಗಳಿವೆ, ಎಷ್ಟೊಂದು ರೆಂಬೆಗಳಿವೆ, ಎಷ್ಟೊಂದು ಎಲೆಗಳಿವೆ ಇವನ್ನೆಲ್ಲ ಎಣಿಸಿ ಎಣಿಸಿ ಬರೆದುಕೊಳ್ಳುತ್ತಾ ಹೋದನಂತೆ. ಇದನ್ನು ನೋಡಿ ಆ ತೋಟದ ಮಾಲಿ ಕೇಳಿದನಂತೆ: ‘ಏನಿದು, ಏನು ಮಾಡುತ್ತಾ ಇದ್ದೀರಿ? ನೀವು ಏಕೆ ಬಂದಿದ್ದೀರಿ ಇಲ್ಲಿಗೆ?’ ಅಂತ. ಆತ ಹೇಳಿದನಂತೆ: ‘ಇಲ್ಲಿಗೆ ಮಾವಿನಹಣ್ಣು ತಿನ್ನುವುದಕ್ಕೆ ಬಂದೆ. ಈಗ ಈ ತೋಟದಲ್ಲಿ ಮರ, ಕೊಂಬೆ, ಎಲೆ ಎಷ್ಟೆಷ್ಟಿವೆ ಎಂಬುದನ್ನು ಲೆಕ್ಕಹಾಕಿ ನೋಡುತ್ತಿದ್ದೇನೆ.’ ಆಗ ಮಾಲಿ ಹೇಳಿದನಂತೆ: ‘ನೀವು ಮಾವಿನಹಣ್ಣು ತಿನ್ನುವುದಕ್ಕೆ ಬಂದಿದ್ದರೆ ತಿಂದು ಆನಂದಪಡಿ. ಮರ, ಕೊಂಬೆ, ಎಲೆ ಎಷ್ಟೆಷ್ಟಿವೆ ಎಂಬುದನ್ನು ಕಂಡು ಹಿಡಿಯುವುದರಿಂದ ನಿಮಗೆ ದೊರಕುವ ಫಲವೇನು?”’
ಡಾಕ್ಟರ್: “ಓಹೋ! ಪರಮಹಂಸರು ಸಾರವನ್ನು ಹಿಂಡಿಕೊಂಡಿದ್ದಾರೆ ಅಂತ ಕಾಣುತ್ತದೆ.”
ಡಾಕ್ಟರ್ ತಮ್ಮ ಹೋಮಿಯೋಪತಿ ಸಂಬಂಧವಾಗಿ ಅನೇಕ ಕಥೆಗಳನ್ನು ಹೇಳಲಾರಂಭಿಸಿದ. ಈಗ ತನ್ನ ಆಸ್ಪತ್ರೆಗೆ ಎಷ್ಟೊಂದು ರೋಗಿಗಳು ನಿತ್ಯವೂ ಬರುತ್ತಿದ್ದಾರೆ ಎಂಬುದರ ಪಟ್ಟಿಯೊಂದನ್ನು ಮಾಸ್ಟರ ಮುಂದೆ ಹಿಡಿದು ಹೇಳುತ್ತಿದ್ದಾನೆ, ಡಾಕ್ಟರ್ ಸಾಲ್ಜಾರ್ ಮೊದಲಾದವರು ತನಗೆ ಹೋಮಿಯೋಪತಿಯ ಸಂಬಂಧವಾಗಿ ನಿರುತ್ಸಾಹ ಕೊಟ್ಟಿದ್ದೂ ಅಲ್ಲದೆ, ವಿರುದ್ಧವಾಗಿ ಮಾಸಪತ್ರಿಕೆಗಳಲ್ಲಿ ಪ್ರಚಾರಮಾಡಿದರು ಎಂಬುದಾಗಿ.
ಡಾಕ್ಟರ್ ಮತ್ತು ಮಾಸ್ಟರ್ ಇಬ್ಬರೂ ಗಾಡಿಯಲ್ಲಿ ಕುಳಿತು ಹೊರಟರು. ಡಾಕ್ಟರ್ ಅನೇಕ ರೋಗಿಗಳ ಮನೆಗೆ ಭೇಟಿಕೊಟ್ಟ. ಪಾಥುರಿಯಾಘಾಟಿನಲ್ಲಿರುವ ಟಾಗೋರರ ಕುಟುಂಬಕ್ಕೆ ಸೇರಿದ ಒಂದು ಮನೆಗೆ ಹೋದಾಗ, ಆ ಮನೆಯ ಯಜಮಾನರು ಆತನನ್ನು ಬಹಳ ಹೊತ್ತಿನವರೆಗೆ ತಡೆದು ನಿಲ್ಲಿಸಿಕೊಂಡುಬಿಟ್ಟರು. ಅಲ್ಲಿಂದ ಗಾಡಿಗೆ ಹಿಂದಿರುಗಿ ಬಂದು ಡಾಕ್ಟರ್ ಸರ್ಕಾರ ಮಾಸ್ಟರೊಡನೆ ಮಾತುಕತೆಗಳಾಡುತ್ತಿದ್ದಾನೆ.
ಡಾಕ್ಟರ್: “ಈ ಮನೆಯ ಯಜಮಾನನೊಡನೆ ಪರಮಹಂಸರ ಸಂಬಂಧವಾಗಿ ಸ್ವಲ್ಪ ಹೊತ್ತು ಮಾತುಕತೆಯಾಡಿ ಬಂದೆ. ಥಿಯಾಸೋಫಿ ಸಂಬಂಧವಾಗಿಯೂ ಮತ್ತು ಕರ್ನಲ್ ಆಲ್ಕಾಟನ ಸಂಬಂಧವಾಗಿಯೂ ಮಾತುಕತೆ ನಡೆಯಿತು. ಪರಮಹಂಸರಿಗೆ ಈತನನ್ನು ಕಂಡರೆ ಸ್ವಲ್ಪ ಕೋಪ. ಕಾರಣ ಗೊತ್ತೆ? ಈತ ಹೇಳುವುದುಂಟು ತನಗೆ ಎಲ್ಲವೂ ಗೊತ್ತಿದೆ ಅಂತ.”
ಮಾಸ್ಟರ್: “ಇಲ್ಲ, ಇಲ್ಲ. ಅವರೇಕೆ ಕೋಪಿಸಿಕೊಳ್ಳುತ್ತಾರೆ? ಆದರೆ ಕೇಳಿದ್ದೇನೆ, ಇವರಿಬ್ಬರಿಗೂ ಒಮ್ಮೆ ಭೇಟಿಯಾಯಿತು ಅಂತ. ಪರಮಹಂಸರು ಭಗವಂತನ ವಿಷಯವಾಗಿ ಮಾತನಾಡುತ್ತಿದ್ದರಂತೆ. ಆಗ ಈ ಮನುಷ್ಯ ಹೇಳಲಾರಂಭಿಸಿದನಂತೆ: ‘ಹೌದು ಅದೆಲ್ಲ ನನಗೆ ಗೊತ್ತಿದೆ!”
ಡಾಕ್ಟರ್: “ಆತ ‘ಸೈನ್ಸ್ ಅಸೋಸಿಯೇಷನ್’ ಗೆ ಮೂವತ್ತೆರಡು ಸಾವಿರದ ಐನೂರು ರೂಪಾಯಿಗಳನ್ನು ದಾನವಾಗಿ ಕೊಟ್ಟಿದ್ದಾನೆ.”
ಅವರಿಬ್ಬರೂ ಪರಮಹಂಸರ ರೋಗದ ಸಂಬಂಧವಾಗಿಯೂ ಮತ್ತು ಅವರಿಗೆ ಯಾವ ರೀತಿಯಾಗಿ ಶುಶ್ರೂಷೆ ಮಾಡಬೇಕು ಎಂಬುದರ ವಿಷಯವಾಗಿಯೂಮಾತಾಡುತ್ತ ಗಾಡಿಯಲ್ಲಿ ಮುಂದುವರಿದರು.
ಡಾಕ್ಟರ್: “ಅವರನ್ನು ಮತ್ತೆ ದಕ್ಷಿಣೇಶ್ವರಕ್ಕೆ ಕರೆದುಕೊಂಡು ಹೋಗಿಬಿಡಬೇಕೆಂದು ನೀವು ಯೋಚಿಸಿದ್ದಿರೇನು?”
ಮಾಸ್ಟರ್: “ಇಲ್ಲ, ಹಾಗೆ ಮಾಡಿದರೆ ಭಕ್ತರಿಗೆ ಬಹಳ ತೊಂದರೆಯಾಗಿಬಿಡುತ್ತದೆ. ಅವರು ಕಲ್ಕತ್ತದಲ್ಲೇ ಇದ್ದರೆ ಯಾವಾಗ ಅಂದರೆ ಆವಾಗ ಬಂದು, ನೋಡಿಹೋಗ ಬಹುದು–ಅವರ ಯೋಗಕ್ಷೇಮ ನೋಡಿಕೊಳ್ಳಬಹುದು.”
ಡಾಕ್ಟರ್: “ಆದರೆ ಇಲ್ಲೇ ಇದ್ದರೆ ಖರ್ಚು ಜಾಸ್ತಿಯಾಗಿಬಿಡುತ್ತದೆಯಲ್ಲ.”
ಮಾಸ್ಟರ್: “ಭಕ್ತರು ಅದಕ್ಕಾಗಿ ಚಿಂತಿಸುತ್ತಿಲ್ಲ. ಯಾವ ರೀತಿಯಲ್ಲಾದರೂ ಸರಿಯೆ ಅವರಿಗೆ ಸೇವೆ ಮಾಡಬೇಕೆಂಬುದೇ ಅವರೆಲ್ಲರ ಏಕಮಾತ್ರ ಇಚ್ಛೆ. ಖರ್ಚು ಇಲ್ಲಿದ್ದರೂ ಆಗುತ್ತೆ, ಅಲ್ಲಿಗೆ ಹೋದರೂ ಆಗುತ್ತೆ. ಅಲ್ಲಿಗೆ ಹೋಗಿಬಿಟ್ಟರೆ ಭಕ್ತರು ಅವರನ್ನು ಸರ್ವದಾ ನೋಡಿಕೊಳ್ಳಲಾಗುವುದಿಲ್ಲ. ಎಲ್ಲರಿಗೂ ಅನಾನುಕೂಲ ಕಲ್ಪಿಸಿದಂತಾಗುತ್ತದೆ.”
ಡಾಕ್ಟರ್ ಸರ್ಕಾರ ಮತ್ತು ಮಾಸ್ಟರ್ ಪರಮಹಂಸರ ಕೊಠಡಿಯನ್ನು ಪ್ರವೇಶಿಸಿ ನೋಡಿದಾಗ, ಭಕ್ತರೊಡನೆ ಕುಳಿತು ನಗುಮುಖರಾಗಿ ಮಾತುಕತೆಯಾಡುತ್ತಿದ್ದ ದೃಶ್ಯ ಅವರ ಕಣ್ಣಿಗೆ ಬಿತ್ತು. ಡಾಕ್ಟರ್ ಭಾದುರಿಯೂ ಅವರ ಹತ್ತಿರ ಕುಳಿತಿದ್ದ.
ಡಾಕ್ಟರ್ ಸರ್ಕಾರ ಪರಮಹಂಸರ ನಾಡಿಯನ್ನು ಹಿಡಿದುನೋಡಿ ಅವರ ದೇಹಾರೋಗ್ಯವನ್ನು ಕೇಳಿ ತಿಳಿದುಕೊಂಡ. ಈಗ ಮಾತುಕತೆ ಭಗವಂತನ ಸಂಬಂಧವಾಗಿ ಆರಂಭವಾಯಿತು.
ಡಾಕ್ಟರ್ ಭಾದುರಿ: “ಸತ್ಯ ಏನೆಂಬುದು ಗೊತ್ತೆ? ಎಲ್ಲವೂ ಸ್ವಪ್ನದ ಹಾಗೆ.”
ಡಾಕ್ಟರ್ ಸರ್ಕಾರ: “ಎಲ್ಲವೂ ಭ್ರಮೆಯೊ? ಈ ಭ್ರಮೆ ಯಾರಿಗೆ ಸೇರಿದ್ದು, ಏಕೆ ಬಂದಿದೆ?ಇದೆಲ್ಲ ಕೇವಲ ಭ್ರಮೆ ಅಂತ ತಿಳಿದೂ ತಿಳಿದೂ ಜನ ಏಕೆ ಮಾತು ಕತೆಗಳಲ್ಲಿ ತೊಡಗುತ್ತಾರೆ? ಕೇವಲ ಭಗವಂತ ಮಾತ್ರ ಸತ್ಯ; ಆತನ ಸೃಷ್ಟಿ ಮಿಥ್ಯಾ ಎಂಬುದರಲ್ಲಿ ನನಗೆ ವಿಶ್ವಾಸವಿಲ್ಲ.”
ಶ್ರೀರಾಮಕೃಷ್ಣರು: “ ‘ನೀನು ಪ್ರಭು, ನಾನು ದಾಸ’ ಎಂಬ ಭಾವ ಬಹಳ ಒಳ್ಳೆ ಭಾವ. ಎಲ್ಲಿಯವರೆಗೆ ದೇಹ ಸತ್ಯವಾದ್ದು ಎಂಬ ಬೋಧೆ ಇರುವುದೊ, ಎಲ್ಲಿಯವರೆಗೆ ‘ನಾನು’, ‘ನೀನು’ ಎಂಬ ಭೇದಬುದ್ಧಿ ಇರುವುದೊ ಅಲ್ಲಿಯವರೆಗೆ ‘ಸೇವ್ಯ-ಸೇವಕ’ ಭಾವ ಬಹಳ ಒಳ್ಳೆಯದು; ‘ನಾನೇ ಆತ’ ಎಂಬ ಭಾವ ಒಳ್ಳೆಯದಲ್ಲ.
“ಇನ್ನೊಂದು ವಿಷಯ ತಿಳಿಸುತ್ತೇನೆ. ಕೊಠಡಿಯ ಮೂಲೆಯಲ್ಲಿ ನಿಂತುಕೊಂಡು ಕೊಠಡಿಯನ್ನು ನೋಡಿದರೆ ಏನು ಕಾಣುತ್ತದೆಯೊ ಅದರ ಮಧ್ಯೆ ನಿಂತುಕೊಂಡು ನೋಡಿದರೂ ಅದೇ ಕಾಣುತ್ತದೆ.”
ಡಾಕ್ಟರ್ ಭಾದುರಿ (ಡಾಕ್ಟರ್ ಸರ್ಕಾರನಿಗೆ): “ಈಗ ನಾನು ಹೇಳಿದ ವಿಷಯವೆಲ್ಲ ವೇದಾಂತದಲ್ಲಿ ಇವೆ. ಶಾಸ್ತ್ರ ಓದಬೇಕು; ಆಗ ಇವೆಲ್ಲ ಅರ್ಥವಾಗುತ್ತವೆ.”
ಡಾಕ್ಟರ್ ಸರ್ಕಾರ: “ಏಕೆ? ಇವರು (ಪರಮಹಂಸರು) ಶಾಸ್ತ್ರ ಓದಿ ಸಂಪಾದಿಸಿ ಕೊಂಡಿದ್ದಾರೇನು? ಇವರೂ ನನ್ನ ಗುಂಪಿಗೆ ಸೇರಿದವರೆ. ಶಾಸ್ತ್ರ ಓದದೆ ಜ್ಞಾನ ದೊರಕದೊ?”
ಶ್ರೀರಾಮಕೃಷ್ಣರು: “ಆದರೆ ಎಷ್ಟೊಂದನ್ನು ನಾನು ಕಿವಿಯಲ್ಲಿ ಕೇಳಿದ್ದೇನೆ ಏನು ಕತೆ?”
ಡಾಕ್ಟರ್ ಸರ್ಕಾರ: “ಸುಮ್ಮನೆ ಕೇಳಿಬಿಟ್ಟರೆ ತಪ್ಪಾಗಿ ತಿಳಿದುಕೊಳ್ಳಲು ಎಷ್ಟೊಂದು ಅವಕಾಶ. ನೀವು ಬರಿದೆ ಕೇಳಿದವರಲ್ಲ.”
ಶ್ರೀರಾಮಕೃಷ್ಣರು (ಡಾಕ್ಟರ್ ಸರ್ಕಾರನಿಗೆ): “ನೀನು ನನ್ನನ್ನು ಒಮ್ಮೆ ಹುಚ್ಚ ಅಂತ ಕರೆದೆಯಂತೆ. ಅದಕ್ಕಾಗಿ ಇವರು (ಮಾಸ್ಟರ್ ಮತ್ತು ಉಳಿದವರನ್ನು ತೋರಿಸಿ) ನಿನ್ನ ಹತ್ತಿರಕ್ಕೆ ಬರಲಿಚ್ಛಿಸುತ್ತಿಲ್ಲ.
ಡಾಕ್ಟರ್ ಸರ್ಕಾರ (ಮಾಸ್ಟರ ಕಡೆ ತಿರುಗಿ): “ಹಾಗೆಲ್ಲಿ ಹೇಳಿದೆ? ಆದರೆ ಅಹಂಕಾರ ಇದೆ ಎಂದು ಮಾತ್ರ ಹೇಳಿದೆ. ನೀವು ನಿಮ್ಮ ಪಾದಧೂಳಿ ತೆಗೆದುಕೊಳ್ಳಲು ಜನರಿಗೆ ಏಕೆ ಅವಕಾಶ ಕೊಡುತ್ತಿದ್ದೀರಿ?”
ಮಾಸ್ಟರ್: “ಅವರು ಹಾಗೆ ಅವಕಾಶವೀಯದಿದ್ದರೆ ಜನ ಸುಮ್ಮನೆ ಅಳಲಾರಂಭಿಸುತ್ತಾರೆ.”
ಡಾಕ್ಟರ್ ಸರ್ಕಾರ: “ಅದು ಅವರ ತಪ್ಪು. ಅದನ್ನು ಅವರಿಗೆ ತಿಳಿಸಿಕೊಟ್ಟು ಬಿಡಬೇಕು.”
ಮಾಸ್ಟರ್: “ಅವರ ಪಾದಧೂಳಿಯನ್ನು ತೆಗೆದುಕೊಳ್ಳಕೂಡದು ಅಂತ ನೀವೇಕೆ ಹೇಳುತ್ತಿದ್ದೀರಿ? ಸರ್ವಭೂತಗಳಲ್ಲಿಯೂ ಭಗವಂತನಿಲ್ಲವೇನು?”
ಡಾಕ್ಟರ್ ಸರ್ಕಾರ: “ಆ ದೃಷ್ಟಿಯಿಂದ ನನ್ನ ಅಭ್ಯಂತರವೇನಿಲ್ಲ. ಹಾಗಾದರೆ, ಎಲ್ಲರ ಪಾದಧೂಳಿಯನ್ನು ತೆಗೆದುಕೊಳ್ಳಲು ಸಿದ್ಧನಾಗಿರಬೇಕು.”
ಮಾಸ್ಟರ್: “ಕೆಲವರಲ್ಲಿ ಭಗವಂತ ವಿಶೇಷವಾಗಿ ವ್ಯಕ್ತವಾಗಿದ್ದಾನೆ. ನೀರೇನೊ ಎಲ್ಲೆಲ್ಲೂ ಇದೆ; ಆದರೆ ಅದು ವಿಶೇಷವಾಗಿ ಸರೋವರದಲ್ಲಿ, ನದಿಯಲ್ಲಿ ಸಮುದ್ರದಲ್ಲಿ ಹೆಚ್ಚು ಪ್ರಮಾಣದಿಂದಿದೆ. ನೀವು ಫ್ಯಾರಡೆಗೆ ತೋರಿಸುವ ಗೌರವವನ್ನು ಈಗತಾನೆ ಬಿ.ಎಸ್.ಸಿ. ಪಾಸು ಮಾಡಿರುವ ವಿದ್ಯಾರ್ಥಿಗೆ ತೋರಿಸುವಿರೇನು?”
ಡಾಕ್ಟರ್ ಸರ್ಕಾರ: “ಇದಕ್ಕೆ ನನ್ನ ಸಮ್ಮತಿ. ಆದರೆ ಭಗವಂತ ಅಂತ ಏಕೆ ಕರೆಯುತ್ತಿದ್ದೀರಿ?”
ಮಾಸ್ಟರ್: “ನಾವು ಒಬ್ಬರಿಗೊಬ್ಬರು ನಮಸ್ಕಾರ ಮಾಡುತ್ತೇವಲ್ಲ ಏಕೆ? ಪ್ರತಿಯೊಬ್ಬರ ಆಂತರ್ಯದಲ್ಲೂ ಭಗವಂತನಿರುವುದರಿಂದ. ನೀವು ಈ ವಿಷಯವಾಗಿ ಸ್ವಲ್ಪ ಆಳವಾಗಿ ಆಲೋಚಸಿಲ್ಲ ಅಷ್ಟೆ.”
ಶ್ರೀರಾಮಕೃಷ್ಣರು (ಡಾಕ್ಟರ್ ಸರ್ಕಾರನಿಗೆ): “ನಾನಾಗಲೆ ನಿನಗೆ ತಿಳಿಸಿದ್ದೇನೆ, ಭಗವಂತ ಕೆಲವರಲ್ಲಿ ಕೆಲವರಿಗಿಂತ ವಿಶೇಷವಾಗಿ ವ್ಯಕ್ತವಾಗಿದ್ದಾನೆ ಅಂತ. ಸೂರ್ಯನ ರಶ್ಮಿಯನ್ನು ಭೂಮಿ ಒಂದು ವಿಧವಾಗಿ, ಮರಗಿಡಗಳು ಇನ್ನೊಂದು ವಿಧವಾಗಿ, ಕನ್ನಡಿ ಮತ್ತೊಂದು ವಿಧವಾಗಿ ಪ್ರತಿಬಿಂಬಿಸುತ್ತವೆ. ಕನ್ನಡಿಯಲ್ಲಿ ವಿಶೇಷ ರೀತಿಯಾಗಿ ಪ್ರತಿಬಿಂಬಿತವಾಗಿರುವುದನ್ನು ನಾವು ನೋಡಬಹುದು. ಅಷ್ಟು ದೂರ ಏಕೆ? ಇಲ್ಲೇ ನೋಡು, ಇಲ್ಲಿರುವ ಭಕ್ತರು ಪ್ರಹ್ಲಾದನೇ ಮೊದಲಾದವರಿಗೆ ಸರಿಸಮಾನರೇನು? ಪ್ರಹ್ಲಾದನ ಮನಸ್ಸು, ಪ್ರಾಣ ಎಲ್ಲವೂ ಭಗವಂತನಿಗೆ ಅರ್ಪಿತವಾಗಿ ಹೋಗಿತ್ತು.”
ಡಾಕ್ಟರ್ ಸರ್ಕಾರ ಸುಮ್ಮನೆ ಕುಳಿತುಕೊಂಡ. ಉಳಿದವರೂ ಸುಮ್ಮನೆ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ಡಾಕ್ಟರ್ ಸರ್ಕಾರನಿಗೆ): “ನೋಡು, ನಿನ್ನ ಹೃದಯದಲ್ಲಿ ಇದರ (ತಮ್ಮನ್ನು ತೋರಿಸಿ) ಕಡೆಗೆ ಸ್ವಲ್ಪ ಪ್ರೀತಿ ಇದೆ. ನೀನೂ ಒಮ್ಮೆ ಹಾಗೇ ಹೇಳಿದೆ.”
ಡಾಕ್ಟರ್ ಸರ್ಕಾರ: “ನೀವು ಆದರ್ಶ ಪುರುಷರು. ಅದಕ್ಕಾಗಿಯೇ ನಾನು ಅಷ್ಟೊಂದು ನಿಮಗೆ ಹೇಳುತ್ತಿರುವುದು. ಜನ ನಿಮ್ಮ ಪಾದ ಮುಟ್ಟಿ ನಮಸ್ಕಾರ ಮಾಡುತ್ತಿದ್ದಾರೆ. ಅದು ನನಗೆ ವ್ಯಥೆಯನ್ನು ತರುತ್ತಿದೆ. ನನಗೆ ನಾನೇ ಹೇಳಿಕೊಳ್ಳುತ್ತೇನೆ: ‘ಅಯ್ಯೋ! ಇಂಥ ಒಳ್ಳೆ ಮನುಷ್ಯರನ್ನು ಜನ ಕೆಡಿಸಿಬಿಡುತ್ತಾರಲ್ಲ!’ ಕೇಶವಸೇನನೊಡನೆಯೂ ಆತನ ಭಕ್ತರು ಹೀಗೆ ವ್ಯವಹರಿಸಿ ಆತನನ್ನು ಕೆಡಿಸಿಬಿಟ್ಟರು. ದಯವಿಟ್ಟು ಕೇಳಿ–”
ಶ್ರೀರಾಮಕೃಷ್ಣರು: “ನಿನ್ನ ಮಾತಿಗೆ ನಾನು ಕಿವಿಕೊಡಬೇಕೊ? ನೀನು ಒಬ್ಬ ಲೋಭಿ, ಕಾಮಿ, ಅಹಂಕಾರಿ.”
ಡಾಕ್ಟರ್ ಭಾದುರಿ (ಡಾಕ್ಟರ್ ಸರ್ಕಾರನಿಗೆ): “ಎಂದರೆ ನಿಮ್ಮಲ್ಲಿ ಇನ್ನೂ ಜೀವತ್ವವಿದೆ ಅಂತ ಅರ್ಥ. ಹೆಸರುಕೀರ್ತಿಗಾಗಿ, ಧನಕನಕಾದಿಗಳಿಗಾಗಿ ಲೋಭಪಡುವುದು; ಕಾಮ ಪಡುವುದು, ಅಹಂಕಾರಪಡುವುದು ಇವೆಲ್ಲ ಜೀವಿಯ ಧರ್ಮ. ಎಲ್ಲಾ ಜೀವಿಗಳ ಧರ್ಮವೂ ಇದೇನೆ.”
ಡಾಕ್ಟರ್ ಸರ್ಕಾರ (ಶ್ರೀರಾಮಕೃಷ್ಣರಿಗೆ): “ನೀವು ಹೀಗೆಲ್ಲ ಮಾತಾಡುವುದಾದರೆ ಕೇವಲ ನಿಮ್ಮ ಗಂಟಲು ಪರೀಕ್ಷಿಸಿ ಹೊರಟುಹೋಗುತ್ತೇನೆ. ಬೇರೆ ಯಾವ ಮಾತುಕತೆ ಗಳನ್ನೂ ನೀವು ಎತ್ತಲೇ ಕೂಡದು. ವಾದಿಸಬೇಕಾಗಿ ಬಂತು ಅಂದರೆ, ಸರಿ ಎಂದು ತೋರುವುದನ್ನು ಹೇಳಿಯೇ ಬಿಡುತ್ತೇನೆ.”
ಎಲ್ಲರೂ ಸುಮ್ಮನೆ ಕುಳಿತಿದ್ದಾರೆ.
ಸ್ವಲ್ಪ ಹೊತ್ತಾದನಂತರ ಪರಮಹಂಸರು ಡಾಕ್ಟರ್ ಭಾದುರಿಯೊಡನೆ ಮಾತುಕತೆ ಗಳಾಡಲು ಆರಂಭಿಸಿದರು.
ಶ್ರೀರಾಮಕೃಷ್ಣರು: “ನಿಜಾಂಶವನ್ನು ಹೇಳುತ್ತೇನೆ. ಇವನು (ಡಾಕ್ಟರ್ ಸರ್ಕಾರ) ‘ನೇತಿ’ ‘ನೇತಿ’ ಮಾರ್ಗವನ್ನು ಅನುಸರಿಸಿಕೊಂಡು ಹೋಗುತ್ತಿದ್ದಾನೆ. ಭಗವಂತ ಜೀವ ಜಗತ್ತು ಯಾವುದೂ ಅಲ್ಲ; ಆತ ಈ ಸೃಷ್ಟಿಗೆ ಅತೀತ ಅಂತ ವಿಚಾರಮಾಡುತ್ತ ಮುಂದುವರಿಯುತ್ತಿದ್ದಾನೆ. ಆದರೆ ಯಾವಾಗ ಈತ ‘ಇತಿ’, ‘ಇತಿ’ ಮಾರ್ಗವನ್ನು ಅನುಸರಿಸಬೇಕಾಗಿ ಬರುವುದೊ ಆತ ಎಲ್ಲವನ್ನೂ ಒಪ್ಪಿಕೊಳ್ಳುತ್ತಾನೆ.
“ಬಾಳೆ ಗಿಡದ ಪಟ್ಟೆಗಳನ್ನು ಎಡೆಯುತ್ತಾ ಎಡೆಯುತ್ತಾ ಹೋದರೆ ಕೊನೆಗೆ ದಿಂಡು ಸಿಗುತ್ತದೆ. ಪಟ್ಟೆ ಒಂದು ವಿಧವಾದ ವಸ್ತು, ದಿಂಡು ಇನ್ನೊಂದು ವಿಧವಾದ ವಸ್ತು; ಪಟ್ಟೆ ದಿಂಡಲ್ಲ, ದಿಂಡು ಪಟ್ಟೆಯಲ್ಲ ಎಂಬ ಬೋಧೆಯಾಗುತ್ತದೆ. ಆದರೆ ಕಟ್ಟಕಡೆಗೆ ಮನುಷ್ಯನಿಗೆ ಗೊತ್ತಾಗುತ್ತದೆ. ಪಟ್ಟೆಗಳಿಲ್ಲದಿದ್ದರೆ ದಿಂಡು ಇರದು, ದಿಂಡು ಇಲ್ಲದಿದ್ದರೆ ಪಟ್ಟೆಗಳಿರವು; ಅವೆರಡೂ ಬಾಳೆಗಿಡದ ಅಂಗಪ್ರತ್ಯಂಗಗಳು ಎಂಬ ಅನುಭವವಾಗುತ್ತದೆ. ಅದೇ ರೀತಿಯಾಗಿ ಭಗವಂತನೇ ಚತುರ್ವಿಂಶತಿ ತತ್ತ್ವಗಳಾಗಿದ್ದಾನೆ; ಮನುಷ್ಯನಾಗಿದ್ದಾನೆ.
(ಡಾಕ್ಟರ್ ಸರ್ಕಾರನಿಗೆ): “ಭಕ್ತರಲ್ಲಿ ಮೂರು ವಿಧ: ಉತ್ತಮ, ಮಧ್ಯಮ, ಅಧಮ. ಅಧಮ ಭಕ್ತ ಹೇಳುತ್ತಾನೆ: ‘ಭಗವಂತನನ್ನು ನೋಡು ಅಲ್ಲಿ.’ ಆತನ ದೃಷ್ಟಿಯಲ್ಲಿ ಭಗವಂತ ಆತನ ಸೃಷ್ಟಿಯಿಂದ ಪ್ರತ್ಯೇಕ. ಮಧ್ಯಮ ಭಕ್ತ ಹೇಳುತ್ತಾನೆ: ‘ಭಗವಂತ ಅಂತರ್ಯಾಮಿ; ಎಲ್ಲರ ಹೃದಯದಲ್ಲೂ ಇದ್ದಾನೆ.’ ಆತ ಭಗವಂತನನ್ನು ತನ್ನ ಆಂತರ್ಯದಲ್ಲಿ ನೋಡುತ್ತಾನೆ. ಆದರೆ ಉತ್ತಮ ಭಕ್ತನಿಗೆ ಕಂಡುಬರುತ್ತದೆ, ಆತನೇ ಚತುರ್ವಿಂಶತಿ ತತ್ತ್ವಗಳಾಗಿ ಇರುವುದಾಗಿ. ಭಗವಂತ ಮೇಲೆ, ಕೆಳಗೆ, ಎಲ್ಲೆಲ್ಲೂ ಪರಿಪೂರ್ಣನಾಗಿರುವುದನ್ನು ಆತ ನೋಡುತ್ತಾನೆ.
“ನೀನು ಗೀತೆ, ಭಾಗವತ, ವೇದಾಂತ ಇವನ್ನೆಲ್ಲ ಓದು. ಆಗ ಇದೆಲ್ಲ ನಿನಗೆ ಅರ್ಥವಾಗುತ್ತದೆ. ಭಗವಂತ ತನ್ನ ಸೃಷ್ಟಿಯಲ್ಲಿ ಹಾಸುಹೊಕ್ಕಾಗಿ ಇಲ್ಲವೇನು?”
ಡಾಕ್ಟರ್ ಸರ್ಕಾರ: “ಆತ ಯಾವುದಾದರೂ ಒಂದು ನಿರ್ದಿಷ್ಟ ವಸ್ತುವಿನಲ್ಲಿ ಮಾತ್ರವೇ ಅಲ್ಲ, ಎಲ್ಲೆಲ್ಲೂ ಎಲ್ಲದರಲ್ಲೂ ಇದ್ದಾನೆ. ಆತ ಎಲ್ಲೆಲ್ಲೂ ಇರುವುದರಿಂದ ಆತನನ್ನು ಹುಡುಕುವುದಕ್ಕೆ ಹೋಗುವ ಹಾಗೆಯೇ ಇಲ್ಲ.”
ಸ್ವಲ್ಪ ಹೊತ್ತಾದ ಮೇಲೆ ಬೇರೆ ವಿಷಯವಾಗಿ ಮಾತುಕತೆ ಆರಂಭವಾಯಿತು. ಶ್ರೀರಾಮಕೃಷ್ಣರು ಆಗಾಗ ಭಾವಸ್ಥರಾಗುತ್ತಿದ್ದುದರಿಂದ ಅದು ಅವರ ರೋಗವನ್ನು ಹೆಚ್ಚಿಸಿ ಬಿಡಬಹುದೆಂದು ಡಾಕ್ಟರ್ ಸರ್ಕಾರ ಒಮ್ಮೆ ತಿಳಿಸಿದ್ದ. ಈಗ ಆತ ಪರಮಹಂಸರಿಗೆ ಹೇಳುತ್ತಿದ್ದಾನೆ: “ನೀವು ನಿಮ್ಮ ಭಾವವನ್ನು ತಡೆದಿಟ್ಟುಕೊಳ್ಳಬೇಕು. ನನಗೂ ಬಹಳವಾಗಿ ಭಾವೋದ್ರೇಕವಾಗುತ್ತೆ. ನಿಮಗಿಂತಲೂ ಒಂದು ಕೈ ಮೇಲಾಗಿ ನಾನು ನರ್ತಿಸಬಲ್ಲೆ.”
ಚಿಕ್ಕ ನರೇನ (ನಗುತ್ತ): “ನಿಮ್ಮ ಭಾವವು ಇನ್ನೂ ಅಧಿಕವಾಗಿ ಉದ್ರೇಕಗೊಂಡು ಬಿಟ್ಟರೆ ಆಗೇನು ಮಾಡುತ್ತೀರಿ?”
ಡಾಕ್ಟರ್ ಸರ್ಕಾರ: “ನನ್ನಲ್ಲಿ ದಮನಶಕ್ತಿಯೂ ಬೆಳೆಯಲಾರಂಭಿಸುತ್ತದೆ.”
ಶ್ರೀರಾಮಕೃಷ್ಣರು ಮತ್ತು ಮಾಸ್ಟರ್: “ಈಗಲೇನೊ ಸುಲಭವಾಗಿ ಹಾಗೆ ಹೇಳಿಬಿಡಬಹುದು.”
ಮಾಸ್ಟರ್: “ಭಾವಾವಸ್ಥೆಯಲ್ಲಿ ಏನಾಗುತ್ತದೆ ಎಂಬುದರ ಅನುಭವ ನಿಮಗಾಗಿದೆಯೇನು?”
ಹಣದ ಸಂಬಂಧವಾಗಿ ಮಾತುಕತೆ ಆರಂಭವಾಯಿತು.
ಶ್ರೀರಾಮಕೃಷ್ಣರು (ಡಾಕ್ಟರ್ ಸರ್ಕಾರನಿಗೆ): “ನನಗೆ ಅದರ ಕಡೆ ಮನಸ್ಸೇ ಹೋಗುತ್ತಿಲ್ಲ. ಇದು ನಿನ್ನ ಅನುಭವಕ್ಕೆ ಬಂದಿರಬೇಕು. ಅಲ್ಲವೇನು? ನಾನೇನೂ ನಟಿಸುತ್ತಿಲ್ಲ.”
ಡಾಕ್ಟರ್ ಸರ್ಕಾರ: “ನನ್ನ ಮನಸ್ಸೇ ಹೋಗದಿರುವಾಗ, ಇನ್ನು ನಿಮ್ಮನ್ನು ಕೇಳಬೇಕೆ! ನನ್ನ ದುಡ್ಡಿನ ಸಂದೂಕ ಯಾವಾಗ ನೋಡಿದರೂ ತೆರೆದೇ ಬಿದ್ದಿರುತ್ತದೆ.”
ಶ್ರೀರಾಮಕೃಷ್ಣರು: “ಯದುಮಲ್ಲಿಕನಿಗೂ ಅನ್ಯಮನಸ್ಕನಾಗಿರುವ ಅಭ್ಯಾಸ.ಊಟಕ್ಕೆ ಕುಳಿತಾಗ ಆತ ಅಷ್ಟೊಂದು ಅನ್ಯಮನಸ್ಕನಾಗಿರುತ್ತಿದ್ದ, ಒಳ್ಳೇದು ಕೆಟ್ಟದು ಯಾವುದನ್ನು ಎಲೆಗೆ ಹಾಕಿದರೂ ಸುಮ್ಮನೆ ತಿಂದುಬಿಡುತ್ತಿದ್ದ. ಒಂದು ಪಕ್ಷ ಯಾರಾದರೂ, ‘ಅದನ್ನು ತಿನ್ನಬೇಡ, ಅದು ಕೆಟ್ಟುಹೋಗಿದೆ’ ಅಂತ ಹೇಳಿದರೆ, ಆಗ ಆತ ಹೇಳುತ್ತಿದ್ದ: ‘ಓಹೋ! ಅದು ಹಾಗೇನು? ಹೌದು, ನಿಜವಾಗಿಯೂ ಕೆಟ್ಟುಹೋಗಿದೆಯಲ್ಲ!”’
ಭಗವಚ್ಚಿಂತನೆಯಿಂದ ಅನ್ಯಮನಸ್ಕನಾಗಿರುವುದಕ್ಕೂ ವಿಷಯಚಿಂತನೆಯಿಂದ ಅನ್ಯ ಮನಸ್ಕನಾಗಿರುವುದಕ್ಕೂ ಅಜಗಜಾಂತರ ವ್ಯತ್ಯಾಸ ಎಂಬುದನ್ನು ಪರಮಹಂಸರುಸೂಚಿಸಿರಬಹುದೆ?
ಶ್ರೀರಾಮಕೃಷ್ಣರು ಡಾಕ್ಟರ್ ಸರ್ಕಾರನನ್ನು ತೋರಿಸಿ ನಗುತ್ತ ಭಕ್ತರಿಗೆ: “ನೋಡಿ, ಯಾವುದೆ ಆಗಲಿ, ಬೆಂದಿತು ಎಂದರೆ ಮೃದುವಾಗುತ್ತದೆ. ಈತ (ಡಾಕ್ಟರ್) ಬಹಳ ಗಟ್ಟಿಯಾಗಿದ್ದ. ಈಗ ಒಳಗಿನಿಂದ ಮೃದು ಆಗುತ್ತಾ ಇದ್ದಾನೆ.”
ಡಾಕ್ಟರ್ ಸರ್ಕಾರ: “ಯಾವ ವಸ್ತುವನ್ನೇ ಆಗಲಿ, ಬೇಯಿಸಿದಾಗ ಅದು ಹೊರಗಿನಿಂದ ಮೃದುವಾಗಲು ಆರಂಭಿಸುತ್ತದೆ. ಬಹುಶಃ ಈ ಜನ್ಮದಲ್ಲಿ ನನಗೆ ಹಾಗೆ ಆಗುವ ಮಟ್ಟಿಗೆ ಕಾಣೆ.” (ಎಲ್ಲರೂ ನಗುತ್ತಾರೆ.)
ಈಗ ಡಾಕ್ಟರ್ ಸರ್ಕಾರ ಪರಮಹಂಸರೊಡನೆ ಮಾತುಕತೆಯಾಡುತ್ತಿದ್ದಾನೆ. ಆತ ಇನ್ನೇನು ಹೊರಡುವುದರಲ್ಲಿದ್ದಾನೆ.
ಡಾಕ್ಟರ್ ಸರ್ಕಾರ: “ಜನ ನಿಮ್ಮ ಪಾದಧೂಳಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಬೇಡ ಅಂತ ಹೇಳುವುದಕ್ಕೆ ಆಗುವುದಿಲ್ಲವೊ?”
ಶ್ರೀರಾಮಕೃಷ್ಣರು: “ಎಲ್ಲರೂ ಅಖಂಡ ಸಚ್ಚಿದಾನಂದನನ್ನು ಗ್ರಹಿಸಬಲ್ಲರೇನು?”
ಡಾಕ್ಟರ್: “ಅದು ಹಾಗೆಂದು ಯಥಾರ್ಥವಾದ್ದನ್ನು ಜನರಿಗೆ ನಾವು ಹೇಳ ಬೇಡವೇ?”
ಶ್ರೀರಾಮಕೃಷ್ಣರು: “ರುಚಿ-ಭೇದ, ಅಧಿಕಾರ-ಭೇದ ಇವೆಲ್ಲಾ ಇವೆ.”
ಡಾಕ್ಟರ್ ಸರ್ಕಾರ: “ಏನು ಅವೆಲ್ಲ?”
ಶ್ರೀರಾಮಕೃಷ್ಣರು: “ಒಬ್ಬೊಬ್ಬರ ರುಚಿ ಒಂದೊಂದು ತರ ಎಂಬುದು ನಿನಗೆ ಗೊತ್ತಿಲ್ಲವೇನು? ಕೆಲವರಿಗೆ ಮೀನಿನ ಸಾರು ಬೇಕು; ಇನ್ನು ಕೆಲವರಿಗೆ ಮೀನಿನ ಬಜ್ಜಿ ಕಂಡರೆ ಇಷ್ಟ; ಮತ್ತೆ ಕೆಲವರಿಗೆ ಮೀನನ ಚಟ್ನಿ ಬೇಕು; ಮತ್ತೂ ಕೆಲವರಿಗೆ ಮೀನಿನ ಪಲಾವು ಕಂಡರೆ ಇಷ್ಟ. ಹಾಗೆ ಅಧಿಕಾರಿ-ಭೇದವೂ ಇದೆ. ನಾನು ಜನರಿಗೆ ಹೇಳುತ್ತೇನೆ. ಮೊದಲು ಬಾಳೆಗಿಡಕ್ಕೆ ಗುರಿ ಇಡುವುದನ್ನು ಕಲಿತುಕೊಳ್ಳಿ; ಬಳಿಕ ದೀಪದ ಕುಡಿ, ಹಾರುವ ಹಕ್ಕಿ ಇವಕ್ಕೆ ಗುರಿಯಿಡುವಿರಂತೆ ಎಂಬುದಾಗಿ.”
ಮುಸ್ಸಂಜೆಯಾಗಿದೆ. ಪರಮಹಂಸರು ಭಗವಚ್ಚಿಂತನೆಯಲ್ಲಿ ಮಗ್ನರಾಗಿದ್ದಾರೆ. ಅವರು ಎಷ್ಟೊಂದು ರೋಗಗ್ರಸ್ತರಾಗಿದ್ದಾರೆ! ಆದರೂ ಅದನ್ನು ಅವರು ಒಂದು ಮೂಲೆಗೆ ಒತ್ತರಿಸಿಬಿಟ್ಟಿದ್ದಾರೆ. ನಾಲ್ಕೈದು ಜನ ಅಂತರಂಗಭಕ್ತರು ಅವರ ಹತ್ತಿರ ಕುಳಿತು ಅವರನ್ನು ದೃಷ್ಟಿಸಿ ನೋಡುತ್ತಿದ್ದಾರೆ. ಭಗವಚ್ಚಿಂತನೆಯಲ್ಲೇ ಬಹಳ ಹೊತ್ತನ್ನು ಕಳೆದನಂತರ ಪರಮಹಂಸರು ಮಾಸ್ಟರಿಗೆ ಪಿಸುಗುಟ್ಟಿ ಹೇಳುತ್ತಿದ್ದಾರೆ: “ನೋಡು, ನನ್ನ ಮನಸ್ಸು ಅಖಂಡದಲ್ಲಿ ಸಂಪೂರ್ಣವಾಗಿ ಲಯವಾಗಿ ಹೋಗಿತ್ತು. ಆ ಬಳಿಕ ಅನೇಕ ವಿಷಯಗಳು ಅನುಭವಕ್ಕೆ ಬಂದುವು. ಡಾಕ್ಟರ್ ಸರ್ಕಾರನಿಗೂ ಆತ್ಮಜಾಗೃತಿಯುಂಟಾಗುತ್ತದೆ ಎಂಬುದನ್ನು ಅರಿತುಕೊಂಡೆ; ಆದರೆ ಇನ್ನು ಸ್ವಲ್ಪ ಕಾಲ ಕಳೆದನಂತರ, ನಾನು ಆತನಿಗೆ ವಿಶೇಷವಾಗಿ ಇನ್ನು ಮೇಲೆ ಏನೂ ಉಪದೇಶ ಕೊಡಬೇಕಾಗಿರುವುದಿಲ್ಲ. ಆ ಅವಸ್ಥೆಯಲ್ಲಿ ನಾನು ಇನ್ನೊಬ್ಬನನ್ನೂ ನೋಡಿದೆ. ‘ಆತನನ್ನೂ ಆಕರ್ಷಿಸು’ ಅಂತ ಮನಸ್ಸು ಹೇಳಿತು. ಆತನ ವಿಷಯವಾಗಿ ಮುಂದೆ ನಾನು ತಿಳಿಸುತ್ತೇನೆ.”
ಶ್ಯಾಮಬಸು, ಡಾಕ್ಟರ್ ದೊಕರಿ ಮತ್ತು ಇನ್ನೂ ಕೆಲವು ಭಕ್ತರು ಬಂದು ಕುಳಿತುಕೊಂಡಿದ್ದಾರೆ. ಪರಮಹಂಸರು ಅವರೊಡನೆ ಮಾತುಕತೆಗಳಾಡುತ್ತಿದ್ದಾರೆ.
ಶ್ಯಾಮಬಸು: “ಆಹ! ನೀವು ಅಂದು ಹೇಳಿದಿರಲ್ಲ, ಆ ವಿಷಯ, ಅದು ಎಷ್ಟು ಸುಂದರವಾದ್ದು!”
ಶ್ರೀರಾಮಕೃಷ್ಣರು (ನಗುತ್ತ): “ಯಾವ ವಿಷಯ?”
ಶ್ಯಾಮಬಸು: “ಹೇಳಿದಿರಲ್ಲ, ಜ್ಞಾನಾಜ್ಞಾನಗಳನ್ನು ದಾಟಿಹೋದರೆ ಏನು ದೊರೆಯುತ್ತದೆ ಎಂಬ ವಿಷಯವಾಗಿ.”
ಶ್ರೀರಾಮಕೃಷ್ಣರು (ನಗುತ್ತ): “ಬಳಿಕ ದೊರೆಯುವುದು ‘ವಿಜ್ಞಾನ’, ನಾನಾತ್ವದ ಜ್ಞಾನವೇ ಅಜ್ಞಾನ. ಸರ್ವಭೂತಗಳಲ್ಲಿಯೂ ಭಗವಂತನಿದ್ದಾನೆ ಎಂಬ ಜ್ಞಾನವೇ ‘ಜ್ಞಾನ.’ ಭಗವಂತನನ್ನು ವಿಶೇಷ ರೂಪದಿಂದ–ಆತನೊಡನೆ ಮಾತುಕತೆಯಾಡುವುದು, ಆತನನ್ನು ಆತ್ಮೀಯನೆಂಬ ಬೋಧೆಯಿಂದ ನೋಡುವುದು ಇವೇ ಮೊದಲಾದ ರೀತಿಯಿಂದ–ಅರಿತುಕೊಳ್ಳುವುದಕ್ಕೆ ‘ವಿಜ್ಞಾನ’ ಆಂತ ಹೆಸರು.
“ಸೌದೆಯಲ್ಲಿ ಬೆಂಕಿ ಇದೆ, ಎಂದರೆ ಅಗ್ನಿತತ್ತ್ವವಿದೆ ಎಂದು ಅರಿತುಕೊಳ್ಳುವುದಕ್ಕೆ ‘ಜ್ಞಾನ’ ಅಂತ ಹೆಸರು. ಆ ಸೌದೆಯನ್ನು ಉರಿಯಿಸಿ, ಅನ್ನ ಬೇಯಿಸಿ, ಅದನ್ನು ತಿಂದು ತುಷ್ಟ-ಪುಷ್ಟನಾಗುವುದಕ್ಕೆ ‘ವಿಜ್ಞಾನ’ ಅಂತ ಹೆಸರು.
ಶ್ಯಾಮಬಸು: “ಆ ಮುಳ್ಳಿನ ವಿಷಯ.”
ಶ್ರೀರಾಮಕೃಷ್ಣರು (ನಗುತ್ತ): “ಅದೆ, ಆಗಲಿ. ಕಾಲಿಗೆ ಮುಳ್ಳು ಚುಚ್ಚಿಕೊಂಡರೆ ಬೇರೊಂದು ಮುಳ್ಳನ್ನು ಹುಡುಕಿ ತರಬೇಕಾಗುತ್ತದೆ. ಬಳಿಕ ಕಾಲಿಗೆ ಚುಚ್ಚಿಕೊಂಡಿರೋ ಮುಳ್ಳನ್ನು ಅದರ ಸಹಾಯದಿಂದ ತೆಗೆದು, ಅನಂತರ ಎರಡು ಮುಳ್ಳನ್ನೂ ಹೊರಕ್ಕೆ ಬಿಸಾಡಬೇಕಾಗುತ್ತದೆ. ಅದೇ ರೀತಿ ಅಜ್ಞಾನವೆಂಬ ಮುಳ್ಳನ್ನು ತೆಗೆದುಹಾಕಲು ಜ್ಞಾನವೆಂಬ ಮುಳ್ಳನ್ನು ಸಂಪಾದಿಸಿಕೊಂಡು, ಅಜ್ಞಾನ ನಾಶವಾದ ಮೇಲೆ ಜ್ಞಾನ ಅಜ್ಞಾನ ಈ ಎರಡನ್ನೂ ವರ್ಜಿಸಿಬಿಡಬೇಕು. ಬಳಿಕ ದೊರೆಯುತ್ತದೆ ವಿಜ್ಞಾನ.”
ಶ್ಯಾಮಬಸುವಿನ ನಡೆನುಡಿ ನೋಡಿ ಪರಮಹಂಸರಿಗೆ ಬಹಳ ಆನಂದವಾಗಿಬಿಟ್ಟಿದೆ. ಆಗಲೆ ಆತನಿಗೆ ವಯಸ್ಸಾಗಿಬಿಟ್ಟಿದೆ. ತನ್ನ ಜೀವನದ ಉಳಿದ ಸಮಯವನ್ನು ಭಗವಂತನ ಧ್ಯಾನದಲ್ಲಿ ಕಳೆಯಬೇಕೆಂದು ಇಚ್ಛಿಸಿದ್ದಾನೆ. ಪರಮಹಂಸರ ಹೆಸರನ್ನು ಕೇಳಿ ಆತ ಇಲ್ಲಿಗೆ ಬಂದಿದ್ದಾನೆ. ಇದಕ್ಕೆ ಹಿಂದೆ ಒಮ್ಮೆ ಆತ ಇಲ್ಲಿಗೆ ಬಂದಿದ್ದ.
ಶ್ರೀರಾಮಕೃಷ್ಣರು (ಶ್ಯಾಮಬಸುವಿಗೆ): “ಪ್ರಾಪಂಚಿಕ ಮಾತುಕತೆಗಳನ್ನು ಒಮ್ಮೆಗೆ ತ್ಯಜಿಸಿಬಿಡು. ಭಗವದ್ವಿಷಯವಾಗಿ ಹೊರತು ಬೇರೆ ಯಾವುದರ ವಿಷಯವಾಗಿಯೂ ಮಾತಾಡಬೇಡ. ಪ್ರಾಪಂಚಿಕರು ಕಣ್ಣಿಗೆ ಬಿದ್ದರು ಎಂದರೆ, ಮೆಲ್ಲಮೆಲ್ಲಗೆ ಅಲ್ಲಿಂದ ಸರಿದು ಬಿಡು. ಇದುವರೆಗೆ ನೀನು ಸಂಸಾರದಲ್ಲಿದ್ದು, ಅದು ಸಂಪೂರ್ಣವಾಗಿ ನಿರರ್ಥಕವಾದ್ದು ಅಂತ ಅರಿತಿದ್ದೀಯೆ. ಭಗವಂತನೊಬ್ಬನೇ ವಸ್ತು, ಉಳಿದುದೆಲ್ಲಾ ಅವಸ್ತು. ಸತ್ಯವಾದವನು ಭಗವಂತನೊಬ್ಬನೇ, ಉಳಿದುದೆಲ್ಲಾ ಒಂದೆರಡು ದಿನದ ಬಾಳಿನವು. ಸಂಸಾರದಲ್ಲಿ ಇರುವುದು ತಾನೆ ಏನು? ಅದನ್ನು ಅಮಟೆಕಾಯಿ ಚಟ್ನಿಗೆ ಹೋಲಿಸಬಹುದು; ಮನಸ್ಸಿಗೆ ಅದನ್ನು ತಿನ್ನಬೇಕು ಅನ್ನಿಸುತ್ತದೆ. ಆದರೆ ಅಮಟೆಕಾಯಲ್ಲಿ ಏನಿದೆ? ಕೇವಲ ಬೀಜ ಮತ್ತು ಸಿಪ್ಪೆ; ತಿಂದರೆ ಹೊಟ್ಟೆನುಲಿತ.”
ಶ್ಯಾಮಬಸು: “ನಿಜ, ನೀವು ಹೇಳಿದ್ದೆಲ್ಲ ಸತ್ಯ.”
ಶ್ರೀರಾಮಕೃಷ್ಣರು: “ಬಹಳ ಕಾಲದಿಂದ ಹಿಡಿದು ಅನೇಕ ಪ್ರಾಪಂಚಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೀಯೆ. ಈ ಸಂಸಾರದ ಗದ್ದಲ ಗೊಂದಲದಲ್ಲಿ ಭಗವಂತನ ಧ್ಯಾನ ಮತ್ತು ಚಿಂತನೆ ಸಾಧ್ಯವಿಲ್ಲ. ನಿನಗೆ ಸ್ವಲ್ಪ ನಿರ್ಜನವಾಸ ಆವಶ್ಯಕ; ಇಲ್ಲದಿದ್ದರೆ ನಿನ್ನ ಮನಸ್ಸು ಸ್ಥಿರವಾಗದು. ಆದ್ದರಿಂದ ಕನಿಷ್ಠಪಕ್ಷ ನಿನ್ನ ಮನೆಗೆ ಒಂದು ಅರ್ಧ ಮೈಲಿ ದೂರದಲ್ಲಿರುವ ಪ್ರದೇಶದಲ್ಲಿ ನಿನ್ನ ಧ್ಯಾನಕ್ಕಾಗಿ ಒಂದು ಸ್ಥಳವನ್ನು ಏರ್ಪಾಡುಮಾಡಿಕೊಳ್ಳಬೇಕು.”
ಶ್ಯಾಮಬಸು ಕೆಲವು ನಿಮಿಷಗಳು ಕುಳಿತುಕೊಂಡ. ಯೋಚನಾಪರನಾಗಿರುವಂತೆ ತೋರಿಬರುತ್ತಿದ್ದಾನೆ.
ಶ್ರೀರಾಮಕೃಷ್ಣರು (ನಗುತ್ತ): “ನೋಡು, ನಿನ್ನ ಹಲ್ಲುಗಳೇ ಒಂದೂ ಇಲ್ಲದ ಹಾಗೆ ಬಿದ್ದುಹೋಗಿವೆ. ಇನ್ನೇಕೆ ನಿನಗೆ ದುರ್ಗಾಪೂಜೆ? (ಎಲ್ಲರೂ ನಗುತ್ತಾರೆ.) ಒಬ್ಬ ತನ್ನ ಸ್ನೇಹಿತನನ್ನು ಕೇಳಿದ: ‘ಏನಯ್ಯ, ಈಗೇಕೆ ನೀನು ದುರ್ಗಾಪೂಜೆ ಮಾಡುತ್ತಿಲ್ಲವಲ್ಲ?’ ಸ್ನೇಹಿತ ಹೇಳಿದ: ‘ಅಣ್ಣಾ, ಈಗ ಎಲ್ಲಾ ಹಲ್ಲು ಬಿದ್ದುಹೋಗಿವೆ. ಆಡಿನ ಮಾಂಸ ತಿನ್ನುವುದಕ್ಕಾಗುವುದಿಲ್ಲ.”’
ಶ್ಯಾಮಬಸು: “ಆಹ! ಸವಿಸವಿಯಾದ ಮಾತುಗಳು!”
ಶ್ರೀರಾಮಕೃಷ್ಣರು (ನಗುತ್ತ): “ಈ ಪ್ರಪಂಚದಲ್ಲಿ ಮರಳು, ಸಕ್ಕರೆ ಎರಡೂ ಬೆರೆತು ಕೊಂಡಿವೆ. ಇರುವೆಯೋಪಾದಿಯಲ್ಲಿ ಮರಳು ಕಣಗಳನ್ನು ತ್ಯಜಿಸಿ ಸಕ್ಕರೆ ಕಣಗಳನ್ನು ಆರಿಸಿಕೊಳ್ಳಬೇಕು. ಯಾರು ಕೇವಲ ಸಕ್ಕರೆ ಕಣಗಳನ್ನೇ ಆರಿಸಿಕೊಳ್ಳಬಲ್ಲನೋ ಆತನೇ ಚತುರ. ಭಗವಚ್ಚಿಂತನೆಗಾಗಿ ಒಂದು ನಿರ್ಜನಪ್ರದೇಶವನ್ನು ಮೀಸಲಾಗಿ ಇಟ್ಟುಕೊ. ನೀನು ಮೊದಲು ಹಾಗೆ ಮಾಡು. ನಾನೂ ಅಲ್ಲಿಗೆ ಬಂದು ಹೋಗುತ್ತೇನೆ.”
ಶ್ಯಾಮಬಸು: “ಮಹಾಶಯರೆ, ಜನ್ಮಾಂತರವೆಂಬುದು ಉಂಟೆ? ನಾವು ಮತ್ತೆ ಜನ್ಮವೆತ್ತಬೇಕಾಗುವುದೆ?”
ಶ್ರೀರಾಮಕೃಷ್ಣರು: “ಈ ಪ್ರಶ್ನೆಯನ್ನು ಭಗವಂತನಿಗೆ ಹಾಕು. ವ್ಯಾಕುಲಚಿತ್ತದಿಂದ ಆತನಿಗೆ ಪ್ರಾರ್ಥನೆ ಮಾಡು. ಆತ ಎಲ್ಲವನ್ನೂ ತಿಳಿಸಿಕೊಟ್ಟುಬಿಡುತ್ತಾನೆ. ಮೊದಲು ಯದು ಮಲ್ಲಿಕನೊಡನೆ ಸ್ನೇಹ ಬೆಳೆಸಿಕೊ. ಬಳಿಕ ಆತನೇ ನಿನಗೆ ತಿಳಿಸಿಬಿಡುತ್ತಾನೆ; ತನಗೆ ಮನೆಮಠಗಳೆಷ್ಟಿವೆ, ಲೇವಾದೇವಿ ಪತ್ರಗಳೆಷ್ಟಿವೆ, ಎಂಬುದನ್ನು. ಮೊದಲು ಅವುಗಳ ಕಡೆಗೆ ಮನಸ್ಸು ಕೊಡುವುದು ಒಳ್ಳೆಯದಲ್ಲ. ಮೊದಲು ಆತನ ಸಾಕ್ಷಾತ್ಕಾರವನ್ನು ಪಡೆದುಕೊ; ಬಳಿಕ ನಿನಗೆ ಏನೇನು ಬೇಕೊ ಅವೆಲ್ಲವನ್ನೂ ಆತನೆ ತಿಳಿಸಿಕೊಡುತ್ತಾನೆ.”
ಶ್ಯಾಮಬಸು: “ಮಹಾಶಯರೆ, ಈ ಜಗತ್ತಿನಲ್ಲಿ ಮನುಷ್ಯ ಎಷ್ಟೊಂದು ಅನ್ಯಾಯ ಗಳನ್ನು ಎಷ್ಟೊಂದು ಪಾಪಕೃತ್ಯಗಳನ್ನು ಮಾಡುತ್ತಿದ್ದಾನೆ! ಅಂಥ ಈ ಮನುಷ್ಯ ಎಂದಿಗಾದರೂ ಭಗವಂತನ ಸಾಕ್ಷಾತ್ಕಾರ ಪಡೆಯಬಲ್ಲನೆ?”
ಶ್ರೀರಾಮಕೃಷ್ಣರು: “ಯಾರೇ ಆಗಲಿ, ದೇಹತ್ಯಾಗವಾಗುವ ಮುನ್ನ ಸಾಧನೆಯಲ್ಲಿ ತೊಡಗಿದ್ದು, ಮರಣಕಾಲದಲ್ಲಿ ಭಗವಂತನ ಚಿಂತನೆ ಮಾಡುತ್ತ ಮಾಡುತ್ತ, ಆತನನ್ನು ಕರೆಯುತ್ತ ಕರೆಯುತ್ತ ದೇಹತ್ಯಾಗ ಮಾಡಿದರೆ, ಆತನನ್ನು ಸ್ಪರ್ಶಿಸುವುದಕ್ಕೆ ಪಾಪಕ್ಕೆ ಅವಕಾಶವೆಲ್ಲಿ? ಮೈಯನ್ನು ತೊಳೆದನಂತರವೂ ಆನೆಗೆ, ಬೂದಿ ಧೂಳು ಇವನ್ನು ಮೈಮೇಲೆ ಎರಚಿಕೊಳ್ಳುವ ಸ್ವಭಾವ. ಆದರೆ ಮಾವಟಿಗ ಅದರ ಮೈಯನ್ನು ತೊಳೆದ ನಂತರ ಅದನ್ನು ಎಳೆದುಕೊಂಡುಹೋಗಿ ಗಜಶಾಲೆಯಲ್ಲಿ ಕಟ್ಟಿಹಾಕಿಬಿಟ್ಟ ಅಂದರೆ ಅದಕ್ಕೆ ಮತ್ತೆ ಧೂಳು, ಬೂದಿ ಇವನ್ನು ಮೈಗೆ ಬಳಿದುಕೊಳ್ಳುವುದಕ್ಕೆ ಆಸ್ಪದವೇ ಇಲ್ಲದಂತಾಗುತ್ತದೆ.”
ಪರಮಹಂಸರು ಅಷ್ಟೊಂದು ರೋಗಗ್ರಸ್ತರಾಗಿದ್ದರೂ ಜೀವಿಗಳ ದುಃಖದುರಿತಗಳು ಅವರ ಹೃದಯಕ್ಕೆ ಬಹಳವಾಗಿ ತಾಗುತ್ತಿವೆ. ಹಗಲೂ, ಇರುಳೂ ಅವರಿಗೆ ಭಕ್ತರ ಯೋಗ ಕ್ಷೇಮದ ಚಿಂತನೆಯೇ. ಅವರ ಅಪಾರ ದಯೆಯನ್ನು ನೋಡಿ ಭಕ್ತರೆಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ. ಯಾರೆ ಆಗಲಿ ಭಗವಂತನ ಚಿಂತನೆ ಮಾಡುತ್ತ ಮಾಡುತ್ತ ಆತನನ್ನು ಕರೆಯುತ್ತ ಕರೆಯುತ್ತ ದೇಹತ್ಯಾಗಮಾಡಿದರೆ, ಆತನನ್ನು ಪಾಪ ಸ್ಪರ್ಶಿಸದು ಎಂಬುದಾಗಿ ಪರಮಹಂಸರ ಬಾಯಿಂದ ಬಂದ ಅಭಯವಚನ ಭಕ್ತರ ಹೃದಯದ ಅಂತರಾಳವನ್ನು ಹೊಕ್ಕಿದೆ.
೩೦ನೆ ಅಕ್ಟೋಬರ್ ೧೮೮೫. ಕಾರ್ತಿಕ ಕೃಷ್ಣ ಸಪ್ತಮಿ, ಶುಕ್ರವಾರ
ಘಂಟೆ ಬೆಳಗಿನ ಒಂಬತ್ತು. ಪರಮಹಂಸರು ತಮ್ಮ ಕೊಠಡಿಯಲ್ಲಿ ಕುಳಿತು ಮಾಸ್ಟರೊಡನೆ ಮಾತಾಡುತ್ತಿದ್ದಾರೆ. ಅಲ್ಲಿ ಇನ್ನು ಬೇರೆ ಯಾರೂ ಇರಲಿಲ್ಲ. ಪರಮಹಂಸರ ದೇಹಸ್ಥಿತಿಯ ವರದಿಯನ್ನು ಡಾಕ್ಟರ್ ಸರ್ಕಾರನಿಗೆ ಒಪ್ಪಿಸಲು ಮತ್ತು ಆತನನ್ನು ಜೊತೆಯಲ್ಲಿ ಕರೆದುಕೊಂಡು ಬರಲು ಮಾಸ್ಟರ್ ಇನ್ನೇನು ಡಾಕ್ಟರ್ ಮನೆಗೆ ಹೊರಡುವುದರಲ್ಲಿದ್ದಾನೆ.
ಶ್ರೀರಾಮಕೃಷ್ಣರು (ನಗುತ್ತ ಮಾಸ್ಟರಿಗೆ): “ಪ್ರಾತಃಕಾಲ ಇಲ್ಲಿಗೆ ಪೂರ್ಣ ಬಂದಿದ್ದ. ಆತನದು ಬಹಳ ಒಳ್ಳೆ ಸ್ವಭಾವ! ಮಣೀಂದ್ರ ಇದ್ದಾನಲ್ಲ, ಆತನದು ಪ್ರಕೃತಿಯ ಭಾವ. ಏನಾಶ್ಚರ್ಯ! ಆತ ಚೈತನ್ಯ ಚರಿತಾಮೃತವನ್ನು ಓದಿದಷ್ಟಕ್ಕೆ ಗೋಪೀಭಾವ, ಸಖೀಭಾವ ಏನೆಂಬುದನ್ನು ಅರಿತುಕೊಂಡುಬಿಟ್ಟಿದ್ದಾನಲ್ಲ! ಇದೂ ಅಲ್ಲದೆ ಭಗವಂತ ಪುರುಷ, ಮನುಷ್ಯ ಪ್ರಕೃತಿ; ಮನುಷ್ಯ ಭಗವಂತನನ್ನು ಆತನ ದಾಸಿ ಎಂಬ ಭಾವದಿಂದ ಪೂಜೆ ಮಾಡಬೇಕು ಎಂಬುದನ್ನೂ ಅರಿತಿದ್ದಾನೆ. ಈ ರೀತಿಯಾದ ತಿಳಿವು ಎಷ್ಟು ಅದ್ಭುತವಾದ್ದು!”
ಮಾಸ್ಟರ್: “ಹೌದು, ನಿಜ.”
ಪೂರ್ಣನ ವಯಸ್ಸು ಹದಿನೈದೊ ಹದಿನಾರೊ. ಪೂರ್ಣನನ್ನು ನೋಡಬೇಕು ಎಂಬುದಾಗಿ ಪರಮಹಂಸರು ಆಗಾಗ ವ್ಯಾಕುಲರಾಗುವುದುಂಟು. ಆದರೆ ಆತನ ಮನೆಯವರು ಆತನನ್ನು ಬಿಟ್ಟುಕೊಡುತ್ತಿಲ್ಲ. ಮೊದಲು ಮೊದಲು ಆತನನ್ನು ನೋಡ ಬೇಕೆಂದು ಅವರು ಅಷ್ಟೊಂದು ವ್ಯಾಕುಲರಾಗುತ್ತಿದ್ದರು. ಒಂದು ದಿನ ರಾತ್ರಿವೇಳೆಯಲ್ಲಿ ದಕ್ಷಿಣೇಶ್ವರದಿಂದ ಹೊರಟು ಕಲ್ಕತ್ತದಲ್ಲಿರುವ ಮಾಸ್ಟರ ಮನೆಗೆ ಬಂದುಬಿಟ್ಟಿದ್ದರು. ಆಗ ಮಾಸ್ಟರ್ ಪೂರ್ಣನ ಮನೆಗೆ ಹೋಗಿ ಆತನನ್ನು ಜೊತೆಯಲ್ಲೇ ಕರೆದುಕೊಂಡು ಬಂದು ಪರಮಹಂಸರೆದುರಿಗೆ ನಿಲ್ಲಿಸಬೇಕಾಯಿತು. ಭಗವಂತನನ್ನು ಯಾವ ರೀತಿಯಾಗಿ ಕರೆಯ ಬೇಕು ಎಂಬ ವಿಷಯವಾಗಿ ಆತನಿಗೆ ಉಪದೇಶ ಕೊಟ್ಟನಂತರ ಪರಮಹಂಸರು ದಕ್ಷಿಣೇಶ್ವರಕ್ಕೆ ಹಿಂದಿರುಗಿದರು. ಮಣೀಂದ್ರನ ವಯಸ್ಸೂ ಪೂರ್ಣನಷ್ಟೆ. ಭಕ್ತರೆಲ್ಲರು ಆತನನ್ನು “ಪಾಪ’ ಅಂತ ಕರೆಯುತ್ತಿದ್ದರು. ಭಗವಂತನ ನಾಮಗುಣಕೀರ್ತನೆ ಕಿವಿಗೆ ಬಿದ್ದೊಡನೆ ಆತ ಭಾವೋನ್ಮತ್ತನಾಗಿ ನರ್ತಿಸಲು ಆರಂಭಿಸುತ್ತಿದ್ದ.
ಮಾಸ್ಟರ್ ಹತ್ತೂವರೆ ಸಮಯಕ್ಕೆ ಡಾಕ್ಟರ್ ಸರ್ಕಾರನ ಮನೆಗೆ ಬಂದು, ಎರಡನೆ ಅಂತಸ್ತಿಗೆ ಹತ್ತಿ ಬೈಠಕ್ಖಾನೆಯ ಮುಖಮಂಟಪದಲ್ಲಿದ್ದ ಒಂದು ಕುರ್ಚಿಯ ಮೇಲೆ ಕುಳಿತುಕೊಂಡ. ಡಾಕ್ಟರ್ ಎದುರಿಗೆ ಒಂದು ಗಾಜಿನಬೋಗುಣಿಯಲ್ಲಿ ನೀರನ್ನು ಇಟ್ಟಿತ್ತು, ಅದರಲ್ಲಿ ಕೆಂಪು ಮೀನುಗಳು ಆನಂದದಿಂದ ಆಟವಾಡುತ್ತಿದ್ದವು. ಡಾಕ್ಟರ್ ಆ ಬೋಗುಣಿಯ ಒಳಕ್ಕೆ ಆಗಾಗ ಏಲಕ್ಕಿಯ ಸಿಪ್ಪೆಯನ್ನು ಹಾಕುತ್ತಿದ್ದ. ಜೊತೆಗೆ ಆತ ಹತ್ತಿರ ಹಾರಾಡುತ್ತಿದ್ದ ಗುಬ್ಬಚ್ಚಿಗಳಿಗೆ ಗೋಧಿಹಿಟ್ಟಿನ ಗೋಲಿಗಳನ್ನು ಬಿಸಾಡುತ್ತಿದ್ದ. ಮಾಸ್ಟರ್ ಇದನ್ನೆಲ್ಲ ನೋಡುತ್ತ ಸುಮ್ಮನೆ ಕುಳಿತುಕೊಂಡಿದ್ದಾನೆ.
ಡಾಕ್ಟರ್ (ನಗುತ್ತ ಮಾಸ್ಟರಿಗೆ): “ಇಗೋ ನೋಡು, ಭಕ್ತರು ಭಗವಂತನನ್ನು ದಿಟ್ಟಿಸಿ ನೋಡುವಂತೆ, ಇವು (ಕೆಂಪು ಮೀನುಗಳು) ನನ್ನ ಕಡೆ ಎವೆಯಿಕ್ಕದೆ ನೋಡುತ್ತಾ ಇವೆ. ನಾನು ಹಾಕಿರುವ ಏಲಕ್ಕಿ ಸಿಪ್ಪೆಗಳ ಕಡೆಗೆ ಇವುಗಳ ದೃಷ್ಟಿಯೇ ಹೋಗಿಲ್ಲ. ಇದಕ್ಕಾಗಿಯೇ ನಾನು ಹೇಳುವುದು, ಕೇವಲ ಭಕ್ತಿ ಯಾವ ಪ್ರಯೋಜನಕ್ಕೂ ಬಾರದು, ಜ್ಞಾನವೂ ಬೇಕು ಅಂತ. (ಮಾಸ್ಟರ್ ನಗುತ್ತಿದ್ದಾನೆ.) ನೋಡು ಆ ಕಡೆ, ಆ ಗುಬ್ಬಚ್ಚಿಗಳ ಕಡೆ! ನಾನು ಗೋಧಿಹಿಟ್ಟಿನ ಗೋಲಿಗಳನ್ನು ಬಿಸಾಡಿದ ಒಡನೆಯೇ ಅವು ಹೆದರಿ ಹಾರಿಹೋಗಿಬಿಟ್ಟುವು. ಅವುಗಳಿಗೆ ಜ್ಞಾನವಿಲ್ಲದೆ ಇರುವುದರಿಂದ ಭಕ್ತಿಯೂ ಉಂಟಾಗಲಿಲ್ಲ. ಆ ಗೋಲಿಗಳು ತಮ್ಮ ಆಹಾರ ಅಂತ ಅವುಗಳಿಗೆ ಗೊತ್ತಾಗಲಿಲ್ಲ.”
ಡಾಕ್ಟರ್ ಸರ್ಕಾರ ಮತ್ತು ಮಾಸ್ಟರ್ ಇಬ್ಬರೂ ಬೈಠಕ್ಖಾನೆಗೆ ಬಂದರು. ಅಲ್ಲಿ ಸುತ್ತಲು ಇಟ್ಟಿದ್ದ ಬೀರುಗಳಲ್ಲಿ ಪುಸ್ತಕ ಭರ್ತಿಯಾಗಿದೆ. ಈಗ ಡಾಕ್ಟರ್ ವಿಶ್ರಮಿಸಿಕೊಳ್ಳುತ್ತಿದ್ದಾನೆ, ಮಾಸ್ಟರ್ ಪುಸ್ತಕಗಳನ್ನು ನೋಡುತ್ತಿದ್ದಾನೆ. ಯೇಸುವಿನ ಜೀವನಚರಿತ್ರೆಯ ವಿಷಯವಾಗಿ ಕ್ಯಾನನ್ ಫ್ಯಾರರ್ ಎಂಬುವನು ಬರೆದಿರುವ ಪುಸ್ತಕವನ್ನು ಮಾಸ್ಟರ್ ಕೈಗೆ ತೆಗೆದುಕೊಂಡು ಅದನ್ನು ಸ್ವಲ್ಪ ಹೊತ್ತು ಓದಿದ. ಡಾಕ್ಟರ್ ಹೇಳಲಾರಂಭಿಸಿದ, ತಾನು ಎಷ್ಟು ಕಷ್ಟಪಟ್ಟು ಎದುರಾಳಿಗಳ ಸದ್ದನ್ನೆಲ್ಲಾ ಅಡಗಿಸಿ ಪ್ರಪ್ರಥಮ ಹೋಮಿಯೋಪತಿ ಆಸ್ಪತ್ರೆಯನ್ನು ತೆರೆಯಬೇಕಾಯಿತು ಎಂಬುದರ ವಿಷಯವಾಗಿ. ಆ ಆಸ್ಪತ್ರೆಯ ಸಂಬಂಧವಾಗಿ ನಡೆದ ಪತ್ರವ್ಯವಹಾರಗಳಿಗಾಗಿ ೧೮೭೬ನೆಯ ಇಸವಿಯ “ಕಲ್ಕತ್ತದ ವೈದ್ಯಕೀಯ ಮಾಸಪತ್ರಿಕೆ” ಎಂಬುದನ್ನು ಓದುವಂತೆ ಆತ ಮಾಸ್ಟರಿಗೆ ಹೇಳಿದ. ಡಾಕ್ಟರ್ ಸರ್ಕಾರನಿಗೆ ಹೋಮಿಯೋಪತಿಯ ಮೇಲೆ ಬಹಳ ಅನುರಾಗ.
ಮುಂಗರ್ ಎಂಬುವನು ಬರೆದಿರುವ ‘ಹೊಸ ಪರಮಾರ್ಥ ವಿದ್ಯೆ’ ಎಂಬ ಪುಸ್ತಕವನ್ನು ಮಾಸ್ಟರ್ ಕೈಗೆ ತೆಗೆದುಕೊಂಡಿದ್ದನ್ನು ಡಾಕ್ಟರ್ ನೋಡಿದ.
ಡಾಕ್ಟರ್: “ಮುಂಗರ್ ಎಂಬುವನು ತನ್ನ ಸಿದ್ಧಾಂತಗಳನ್ನು ಯುಕ್ತಿಯ ಮತ್ತು ವಿಚಾರದ ಅಡಿಗಲ್ಲಿನ ಮೇಲೆ ಕಟ್ಟಿದ್ದಾನೆ. ಇದು ಚೈತನ್ಯ ಹೇಳಿದ್ದು, ಅದು ಬುದ್ಧ ಹೇಳಿದ್ದು, ಬೇರೊಂದು ಯೇಸು ಹೇಳಿದ್ದು, –ಆದ್ದರಿಂದ ವಿಶ್ವಾಸವಿಡಬೇಕು–ಅಂತ ನೀವು ಹೇಳುತ್ತೀರಲ್ಲ, ಆ ರೀತಿಯವಲ್ಲ ಅವು.”
ಮಾಸ್ಟರ್ (ನಗುತ್ತ): “ಹೌದು, ನಾವು ಚೈತನ್ಯನಲ್ಲೇ ಆಗಲಿ ಅಥವಾ ಬುದ್ಧನಲ್ಲೇ ಆಗಲಿ ವಿಶ್ವಾಸವಿಡಕೂಡದು; ಇವನಲ್ಲಿ (ಮುಂಗರ್) ವಿಶ್ವಾಸವಿಡಬೇಕು!”
ಡಾಕ್ಟರ್: “ನೀನು ಯಾರಿಗೆ ಶಿಫಾರಸು ಮಾಡುತ್ತೀಯೊ ಅವರಲ್ಲಿ.”
ಮಾಸ್ಟರ್: “ನಾವು ಹೇಳುವುದನ್ನು ಪ್ರಮಾಣೀಕರಿಸಲು ನಮಗೆ ಯಾರಾದರೂ ಒಬ್ಬರ ಆಧಾರ ಬೇಕೇಬೇಕು; ಅದಕ್ಕಾಗಿ ಮುಂಗರ್!” (ಡಾಕ್ಟರ್ ನಗುತ್ತಿದ್ದಾನೆ.)
ಡಾಕ್ಟರ್ ಸರ್ಕಾರ ತನ್ನ ಬಂಡಿ ಹತ್ತಿದ. ಮಾಸ್ಟರೂ ಅದಕ್ಕೆ ಹತ್ತಿದ. ಅದು ಶ್ಯಾಮಪುಕುರದ ಕಡೆ ಮುಂದುವರಿಯಿತು. ಆಗಲೇ ಮಧ್ಯಾಹ್ನ. ಇಬ್ಬರೂ ಏನೇನೊ ಮಾತುಕತೆಗಳಾಡುತ್ತ ಬಂಡಿಯಲ್ಲಿ ಮುಂದುವರಿಯುತ್ತಿದ್ದಾರೆ. ಡಾಕ್ಟರ್ ಭಾದುರಿ ಆಗಾಗ ಬಂದು ಪರಮಹಂಸರನ್ನು ನೋಡಿ ಹೋಗುತ್ತಿದ್ದ. ಈಗ ಮಾತು ಆತನ ಸಂಬಂಧವಾಗಿ ಆರಂಭವಾಗಿದೆ.
ಮಾಸ್ಟರ್ (ನಗುತ್ತ): “ಭಾದುರಿ ತಮ್ಮ ಸಂಬಂಧವಾಗಿ ಹೇಳಿದ, ತಾವು ಮಣ್ಣುಕಲ್ಲಿನ ಅವಸ್ಥೆಗೆ ಹೋಗಬೇಕಾಗಿದೆ.”
ಡಾಕ್ಟರ್: “ಹಾಗೆಂದರೆ?”
ಮಾಸ್ಟರ್: “ಮಹಾತ್ಮರು, ಸೂಕ್ಷ್ಮಶರೀರ, ಇವನ್ನೆಲ್ಲ ನೀನು ಒಪ್ಪುತ್ತಿಲ್ಲ. ಬಹುಶಃ ಡಾಕ್ಟರ್ ಭಾದುರಿ ಥಿಯಾಸೋಫಿಯ ಅನುಯಾಯಿಯಾಗಿ ಇರಬೇಕು. ಜೊತೆಗೆ ನೀವು ಅವತಾರವನ್ನು ಬೇರೆ ಒಪ್ಪಿಕೊಳ್ಳುತ್ತಿಲ್ಲ. ಅದಕ್ಕಾಗಿ ಬಹುಶಃ ಆತ ನಿಮ್ಮನ್ನು ಹಾಸ್ಯ ಮಾಡಿ ಹೇಳಿದ ಅಂತ ಕಾಣುತ್ತದೆ–ಈ ಸಲ ಸತ್ತನಂತರ ನಿಮಗೆ ಮಾನವಜನ್ಮ ದೊರೆಯುವ ಹಾಗೇ ಇಲ್ಲ; ಪಶು-ಪಕ್ಷಿ, ಕ್ರಿಮಿಕೀಟ, ಗಿಡ-ಮರ ಇವುಗಳ ಜನ್ಮವೂ ದೊರೆಯುವ ಹಾಗೆ ಇಲ್ಲ. ನೀವು ಮೊದಲು ಕಲ್ಲು ಮಣ್ಣಾಗಿ ಜನ್ಮತಳೆದು, ಎಷ್ಟೋ ಜನ್ಮಗಳ ನಂತರ ಮತ್ತೆ ಮನುಷ್ಯನಾಗಿ ಹುಟ್ಟಬೇಕಾಗಿ ಬರುತ್ತದೆ.”
ಡಾಕ್ಟರ್ ಸರ್ಕಾರ: “ಅಬ್ಬಬ್ಬ!”
ಮಾಸ್ಟರ್: “ಮತ್ತೆ ಭಾದುರಿ ಹೇಳಿದ, ನಿಮ್ಮ ಭೌತಿಕ ವಿಜ್ಞಾನ ಮಿಥ್ಯಾಜ್ಞಾನ; ಅದು ಕ್ಷಣಿಕವಾದ್ದು. ಅದನ್ನು ಉದಾಹರಿಸಲು ಆತ ಬಾವಿಯ ಸಾಮ್ಯ ಕೊಟ್ಟ. ಎರಡು ಬಾವಿ ಇವೆ ಅಂತ ಇಟ್ಟುಕೊಳ್ಳಿ. ಮೊದಲನೆಯದರಲ್ಲಿ ನೀರು ಜಲದ ಕಣ್ಣಿನಿಂದ ಉಕ್ಕಿ ಬಂದು ತುಂಬಿದೆ. ಎರಡನೆಯದರಲ್ಲಿ ಆ ರೀತಿಯ ಜಲದ ಕಣ್ಣು ಏನೂ ಇಲ್ಲದೆ ಕೇವಲ ಮಳೆ ನೀರಿನಿಂದ ತುಂಬಿದೆ. ಈ ಎರಡನೆಯದರ ನೀರು ಹೆಚ್ಚು ಕಾಲ ನಿಲ್ಲದು. ನಿಮ್ಮ ಭೌತಿಕ ವಿಜ್ಞಾನವೂ ಈ ಎರಡನೆಯದರ–ಮಳೆಗಾಲದ–ಬಾವಿಯ ಹಾಗೆ ಬೇಗ ಬತ್ತಿಹೋಗುತ್ತದೆ.”
ಡಾಕ್ಟರ್ (ಕಿಂಚಿತ್ ನಕ್ಕು): “ಹಾಗೇನು?”
ಡಾಕ್ಟರ್ ಸರ್ಕಾರ್ ಕಾರ್ನವಾಲೀಸ್ ಬೀದಿಯನ್ನು ಮುಟ್ಟಿ, ಅಲ್ಲಿ ಪ್ರತಾಪ ಮಜುಮದಾರನನ್ನೂ ಬಂಡಿಗೆ ಹತ್ತಿಸಿಕೊಂಡು ಮುಂದಕ್ಕೆ ಪ್ರಯಾಣ ಬೆಳೆಸಿದ. ಆತ ನಿನ್ನೆ ದಿನ ಪರಮಹಂಸರ ದೇಹಾರೋಗ್ಯವನ್ನು ಪರೀಕ್ಷಿಸಲು ಬಂದಿದ್ದ. ಗಾಡಿ ಬೇಗ ಶ್ಯಾಮಪುಕುರವನ್ನು ತಲುಪಿಬಿಟ್ಟಿತು.
ಪರಮಹಂಸರು ಅನೇಕ ಭಕ್ತರೊಡನೆ ಎರಡನೆ ಅಂತಸ್ತಿನಲ್ಲಿರುವ ತಮ್ಮ ಕೊಠಡಿಯಲ್ಲಿ ಕುಳಿತುಕೊಂಡಿದ್ದರು.
ಡಾಕ್ಟರ್ ಸರ್ಕಾರ (ಶ್ರೀರಾಮಕೃಷ್ಣರಿಗೆ): “ಓಹೊ, ನಿಮಗೆ ‘ಕಾಶಿ’ (ಕೆಮ್ಮುಲು) ಬಂದಿದೆಯೇನು? (ನಗುತ್ತ) ಕಾಶಿಗೆ ಹೋಗುವುದು ಒಳ್ಳೆಯದು.” (ಎಲ್ಲರೂ ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು(ನಗುತ್ತ): “ಹಾಗೆ ಮಾಡಿದರೆ ನನಗೆ ಮುಕ್ತಿ ದೊರೆತುಬಿಡುತ್ತದೆ. ನನಗೆ ಮುಕ್ತಿ ಬೇಕಾಗಿಲ್ಲ; ಭಕ್ತಿ ಬೇಕು!” (ಎಲ್ಲರೂ ನಗುತ್ತಿದ್ದಾರೆ.)
ಡಾಕ್ಟರ್ ಪ್ರತಾಪ ಮಜುಮದಾರ್, ಡಾಕ್ಟರ್ ಭಾದುರಿಯ ಅಳಿಯ. ಪರಮ ಹಂಸರು ಡಾಕ್ಟರ್ ಪ್ರತಾಪನ ಎದುರಿಗೆ ಡಾಕ್ಟರ್ ಭಾದುರಿಯ ಗುಣಗಳನ್ನು ಎತ್ತಿ ಹೊಗಳುತ್ತಿದ್ದಾರೆ.
ಶ್ರೀರಾಮಕೃಷ್ಣರು (ಡಾಕ್ಟರ್ ಪ್ರತಾಪನಿಗೆ): “ಆಹ, ಆತ ಎಷ್ಟು ಒಳ್ಳೆ ಮನುಷ್ಯನಾಗಿ ಬಿಟ್ಟಿದ್ದಾನೆ! ಭಗವಚ್ಚಿಂತನೆ ಮಾಡುತ್ತಿದ್ದಾನೆ; ಒಳ್ಳೆ ನಿಯಮನಿಷ್ಠಾವಂತನಾಗಿದ್ದಾನೆ. ಜೊತೆಗೆ ಸಾಕಾರ, ನಿರಾಕಾರ ಎರಡನ್ನೂ ಒಪ್ಪುತ್ತಾನೆ.”
ಡಾಕ್ಟರ್ ಸರ್ಕಾರ ಕಲ್ಲುಮಣ್ಣಾಗಿ ಜನ್ಮವೆತ್ತಬೇಕಾಗುತ್ತದೆ ಎಂಬುದಾಗಿ ಡಾಕ್ಟರ್ ಭಾದುರಿ ಹೇಳಿದ ಮಾತನ್ನು ಎತ್ತಲೋಸುಗ ಮಾಸ್ಟರ್ ಬಹಳ ಕುತೂಹಲನಾಗಿದ್ದಾನೆ, ಡಾಕ್ಟರ್ ಭಾದುರಿ, ಡಾಕ್ಟರ್ ಸರ್ಕಾರನ ಸಂಬಂಧವಾಗಿ ಆಡಿದ ಆ ಮಾತುಗಳು ಜ್ಞಾಪಕದಲ್ಲಿರುವುವೇ ಎಂಬುದಾಗಿ ಮಾಸ್ಟರ್ ಚಿಕ್ಕ ನರೇನನನ್ನು ಮೆಲ್ಲಗೆ ಕೇಳಿದ. ಈ ಮಾತು ಪರಮಹಂಸರ ಕಿವಿಗೂ ಬಿತ್ತು.
ಶ್ರೀರಾಮಕೃಷ್ಣರು (ನಗುತ್ತ ಸರ್ಕಾರನಿಗೆ): “ನಿನ್ನ ಸಂಬಂಧವಾಗಿ ಡಾಕ್ಟರ್ ಭಾದುರಿ ಏನು ಹೇಳಿದ್ದಾನೆ ಎಂಬುದು ನಿನಗೆ ಗೊತ್ತೇನು? ನೀನು ಅವತಾರ ಒಪ್ಪದೆ ಇರುವುದರಿಂದ, ಈ ಮನ್ವಂತರ ಮುಗಿದ ನಂತರ ಜೀವನವನ್ನು ನೀನು ಮತ್ತೆ ಮಣ್ಣು ಕಲ್ಲಿನಿಂದ ಆರಂಭಮಾಡಬೇಕಾಗುತ್ತದೆ.” (ಎಲ್ಲರೂ ನಗುತ್ತಿದ್ದಾರೆ.)
ಡಾಕ್ಟರ್ (ನಗುತ್ತ): “ನಾನು ನನ್ನ ಜೀವನವನ್ನು ಮಣ್ಣು ಕಲ್ಲಿನಿಂದ ಆರಂಭ ಮಾಡಿ, ಅನೇಕ ಜನ್ಮಗಳಾದನಂತರ ಮಾನವದೇಹವನ್ನು ಪಡೆದು ಇಲ್ಲಿಗೆ ಬಂದೆನೆಂದರೆ ಮತ್ತೆ ನಾನು ನನ್ನ ಜೀವನವನ್ನು ಕಲ್ಲುಮಣ್ಣಿನಿಂದ ಆರಂಭಮಾಡಬೇಕಾಗಿ ಬಂದು ಬಿಡುತ್ತದೆ. ಅಲ್ಲವೇನು!” (ಡಾಕ್ಟರ್ ಮತ್ತು ಎಲ್ಲರೂ ನಗುತ್ತಿದ್ದಾರೆ.)
ಪರಮಹಂಸರು ಅಷ್ಟೊಂದು ರೋಗಗ್ರಸ್ತರಾಗಿದ್ದರೂ ಅವರು ಭಾವಸ್ಥರಾಗು ತ್ತಿರುವುದರ ಸಂಬಂಧವಾಗಿ ಮಾತುಕತೆ ಆರಂಭವಾಯಿತು.
ಪ್ರತಾಪ: “ನಿನ್ನೆ ನೀವು ಭಾವಸ್ಥರಾಗುವುದನ್ನು ನೋಡಿ ಹೋದೆ.”
ಶ್ರೀರಾಮಕೃಷ್ಣರು: “ಅದು ತಾನಾಗೇ ಬಂದಿತ್ತು; ಗಾಢವಾದ್ದೇನಲ್ಲ.”
ಡಾಕ್ಟರ್ ಸರ್ಕಾರ್: “ಭಾವ ಮತ್ತು ಮಾತುಕತೆ, ನೀವು ಈಗಿರುವ ಸ್ಥಿತಿಯಲ್ಲಿ ನಿಮಗೆ ಒಳ್ಳೆಯದಲ್ಲ.”
ಶ್ರೀರಾಮಕೃಷ್ಣರು (ಡಾಕ್ಟರ್ ಸರ್ಕಾರನಿಗೆ): “ನಿನ್ನೆ ಉಂಟಾಗಿದ್ದ ಭಾವಾವಸ್ಥೆಯಲ್ಲಿ ನಾನು ನಿನ್ನನ್ನೂ ನೋಡಿದೆ. ನೀನು ಒಂದು ಜ್ಞಾನದ ಗಣಿಯೇ ಆಗಿರುವುದನ್ನು ನೋಡಿದೆ. ಆದರೆ ಕೇವಲ ಅದು ಒಣ ಜ್ಞಾನದ್ದು, ಆನಂದರಸ ದೊರೆತಿರಲಿಲ್ಲ. (ಪ್ರತಾಪನಿಗೆ, ಡಾಕ್ಟರ್ ಸರ್ಕಾರನ ಸಂಬಂಧವಾಗಿ) ಈತನಿಗೇನಾದರೂ ಒಮ್ಮೆ ಭಗವದಾನಂದರಸದ ರುಚಿ ದೊರೆತುಬಿಟ್ಟುದೇ ಆದರೆ, ಮೇಲೆ ಕೆಳಗೆ ಎಲ್ಲೆಲ್ಲೂ ಆ ರಸವೇ ತುಂಬಿತುಳುಕಾಡುತ್ತಿರುವಂತೆ ಈತನಿಗೆ ಅನುಭವವಾಗುತ್ತದೆ. ಬಳಿಕ ತಾನು ಹೇಳುವುದೇ ಸರಿ ಉಳಿದವರದೆಲ್ಲ ತಪ್ಪು ಎಂಬುದಾಗಿ ಎಂದಿಗೂ ಈತ ಹೇಳುವುದಿಲ್ಲ. ಲಂಗು-ಲಗಾಮಿಲ್ಲದ ಮಾತುಕತೆಗಳು ಈತನ ಬಾಯಿಂದ ಬಳಿಕ ಎಂದಿಗೂಹೊರಡವು.”
ಭಕ್ತರೆಲ್ಲರು ಸುಮ್ಮನೆ ಕುಳಿತಿದ್ದಾರೆ. ಇದ್ದಕ್ಕಿದ್ದ ಹಾಗೆ ಪರಮಹಂಸರು ಭಾವಾವಿಷ್ಟರಾಗಿ ಡಾಕ್ಟರ್ ಸರ್ಕಾರನಿಗೆ ಹೇಳುತ್ತಿದ್ದಾರೆ: “ಮಹೇಂದ್ರಬಾಬೂ, ನಿನ್ನನ್ನು ದುಡ್ಡಿನ ಪಿಶಾಚಿ ಹಿಡಿದುಕೊಂಡುಬಿಟ್ಟಿದೆಯಲ್ಲ ಏಕೆ? ಹೆಂಡತಿಯ ಮೇಲೇಕೆ ಇಷ್ಟೊಂದು ವ್ಯಾಮೋಹ, ಹೆಸರಿಗಾಗಿ ಏಕೆ ಸುಮ್ಮನೆ ಸತ್ತು ಸುಣ್ಣವಾಗುತ್ತಿದ್ದೀಯೆ? ಈಗ ಇದನ್ನೆಲ್ಲ ಒಮ್ಮೆಗೇ ತ್ಯಜಿಸಿ ಏಕಾಗ್ರಚಿತ್ತನಾಗಿ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸು. ಆ ಆನಂದವನ್ನು ಅನುಭವಿಸು.”
ಡಾಕ್ಟರ್ ಸರ್ಕಾರ್ ಸುಮ್ಮನೆ ಕುಳಿತಿದ್ದಾನೆ. ಭಕ್ತರೂ ಸುಮ್ಮನೆ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು: “ಜ್ಞಾನಿ ಯಾವ ರೀತಿ ಧ್ಯಾನ ಮಾಡುತ್ತಾನೆ ಎಂಬುದರ ವಿಷಯವಾಗಿ ತೋತಾಪುರಿ ನನಗೆ ಹೇಳುತ್ತಿದ್ದ: ಮೇಲೆ, ಕೆಳಗೆ, ಎಲ್ಲೆಲ್ಲಿಯೂ ನೀರಿನಮಯ; ಜೀವ ಮೀನಿನೋಪಾದಿಯಲ್ಲಿ ಆನಂದದಿಂದ ಅದರಲ್ಲಿ ಈಜಾಡುತ್ತಿರುತ್ತದೆ. ಧ್ಯಾನ ಪರಿಪಕ್ವವಾದಾಗ ಇದನ್ನೆಲ್ಲ ನಿಜವಾಗಿಯೂ ನೋಡಬಹುದು.
“ಅನಂತ ಸಾಗರವನ್ನು ತೆಗೆದುಕೊಳ್ಳಿ. ಅದಕ್ಕೆ ಮಿತಿ ಎಂಬುದೇ ಇಲ್ಲ. ಅದರೊಳಗೆ ಒಂದು ಘಟ ಮುಳುಗಿಕೊಂಡಿದೆ ಅಂತ ಭಾವಿಸಿಕೊಳ್ಳಿ. ಅದರ ಒಳಗೂ ನೀರಿದೆ, ಹೊರಗೂ ನೀರಿದೆ. ಹಾಗೇನೆ ಜ್ಞಾನಿ ತನ್ನ ಆಂತರ್ಯದಲ್ಲೂ ಪರಮಾತ್ಮನನ್ನು ನೋಡುತ್ತಾನೆ, ಹೊರಗೂ ಪರಮಾತ್ಮನನ್ನು ನೋಡುತ್ತಾನೆ. ಈ ಘಟ ಎಂಬುದು ಏನು? ಅದೇ ‘ಅಹಂ’ ಎಂಬುದು. ಈ ಘಟವೆಂಬುದೊಂದು ಇರುವುದರಿಂದ ನೀರು ಇಬ್ಭಾಗವಾಗಿ ಕಾಣಬರುತ್ತದೆ; ಇದು ಒಳಗು, ಅದು ಹೊರಗು ಎಂಬ ಬೋಧೆಯಾಗುತ್ತದೆ. ‘ಅಹಂ’ ಎಂಬ ಘಟವಿರುವವರೆಗೆ ಈ ಭೇದ ಬೋಧೆಯ ಅನುಭವ ಆಗಿಯೇ ಆಗುತ್ತದೆ. ‘ಅಹಂ’ ಎಂಬುದು ನಾಶವಾಯಿತು ಅಂದರೆ ಏನಿದೆಯೊ ಅದೇ ಇರುತ್ತದೆ. ಇದನ್ನು ಬಾಯಿಂದ ವರ್ಣನೆ ಮಾಡಲಾಗುವುದಿಲ್ಲ.
“ಜ್ಞಾನಿ ಮತ್ತಾವ ರೀತಿಯಾಗಿ ಧ್ಯಾನಮಾಡುತ್ತಾನೆ ಎಂಬುದು ನಿನಗೆ ಗೊತ್ತೆ? ಅನಂತ ಆಕಾಶದಲ್ಲಿ ಹಕ್ಕಿ ತನ್ನ ರೆಕ್ಕೆಯನ್ನು ಬಿಚ್ಚಿ ಆನಂದದಿಂದ ಹಾರಾಡುತ್ತದೆ ಅಂತ ಭಾವಿಸಿಕೊ. ಚಿದಾಕಾಶವೆ ಆ ಅನಂತ ಆಕಾಶ. ಆತ್ಮವೇ ಆ ಹಕ್ಕಿ. ಆ ಹಕ್ಕಿ ಪಂಜರದಲ್ಲಿ ಕಟ್ಟುಬಿದ್ದಿಲ್ಲ; ಚಿದಾಕಾಶದಲ್ಲಿ ಹಾರಾಡುತ್ತಿದೆ; ಅದರ ಆನಂದಕ್ಕೆ ಪಾರವೇ ಇಲ್ಲ.”
ಭಕ್ತರೆಲ್ಲರು ಆಶ್ಚರ್ಯಚಕಿತರಾಗಿ ಈ ಧ್ಯಾನಯೋಗದ ಸಂಬಂಧವಾಗಿ ಪರಮಹಂಸರ ಬಾಯಿಂದ ಬಂದುದನ್ನೆಲ್ಲ ಕೇಳಿದರು. ಸ್ವಲ್ಪ ಹೊತ್ತಾದ ನಂತರ ಪ್ರತಾಪ ಮಾತುಕತೆಯಾಡಲು ಆರಂಭಿಸಿದ.
ಪ್ರತಾಪ (ಡಾಕ್ಟರ್ ಸರ್ಕಾರನಿಗೆ): “ಸ್ವಲ್ಪ ಹಾಗೆಯೇ ಆಲೋಚಿಸಿ ನೋಡಿದರೆ, ಎಲ್ಲವೂ ನೆರಳೋಪಾದಿಯಲ್ಲಿ ಕಂಡುಬರುತ್ತವೆ.”
ಡಾಕ್ಟರ್ ಸರ್ಕಾರ್: “ನೆರಳು ಎಂದೊಡನೆಯೆ ಈ ಮೂರು ವಸ್ತು ಜ್ಞಾಪಕಕ್ಕೆ ಬರುತ್ತವೆ: ಸೂರ್ಯ, ವಸ್ತು, ನೆರಳು. ವಸ್ತುವೇ ಇಲ್ಲದಿದ್ದರೆ ನೆರಳೆಲ್ಲಿಂದ ಬಂದೀತು? ನೀವು ಹೇಳುತ್ತಿದ್ದೀರಿ, ಭಗವಂತ ಮಾತ್ರ ಸತ್ಯ ಆತನ ಸೃಷ್ಟಿ ಮಿಥ್ಯಾ. ಆದರೆ ಆತನ ಸೃಷ್ಟಿಯೂ ಸತ್ಯ.”
ಪ್ರತಾಪ: “ಬಹಳ ಒಳ್ಳೆಯದು. ಕನ್ನಡಿಯಲ್ಲಿ ಪ್ರತಿಬಿಂಬ ಕಾಣಬರುವ ಹಾಗೆ ಮನಸ್ಸೆಂಬ ಕನ್ನಡಿಯಲ್ಲಿ ಈ ಜಗತ್ತು ಕಾಣಬರುತ್ತದೆ.”
ಡಾಕ್ಟರ್ ಸರ್ಕಾರ್: “ಯಾವ ವಸ್ತುವೂ ಇಲ್ಲದೆ ಪ್ರತಿಬಿಂಬ ಬೀಳುವ ಬಗೆ ಹೇಗೆ?”
ನರೇನ್: “ಏಕೆ ಭಗವಂತನೇ ವಸ್ತುವಾಗಿದ್ದಾನಲ್ಲ?”
ಡಾಕ್ಟರ್ ಸರ್ಕಾರ್ ಸುಮ್ಮನೆ ಕುಳಿತುಕೊಂಡಿದ್ದಾನೆ.
ಶ್ರೀರಾಮಕೃಷ್ಣರು (ಡಾಕ್ಟರ್ ಸರ್ಕಾರನಿಗೆ): “ಒಂದು ವಿಷಯವನ್ನು ನೀನು ಚೆನ್ನಾಗಿ ಹೇಳಿದೆ, ಭಾವಾವಸ್ಥೆಯಲ್ಲಿ ಮನಸ್ಸು ಭಗವಂತನೊಡನೆ ಲೀನವಾಗಿಬಿಡುತ್ತದೆ ಅಂತ. ಇದುವರೆಗೆ ಯಾರೂ ಹಾಗೆ ಹೇಳಿರಲಿಲ್ಲ. ಹಾಗೆ ಹೇಳಿದವನು ನೀನೊಬ್ಬನೇ.
“ಶಿವನಾಥ ಒಮ್ಮೆ ಹೇಳಿದ, ‘ಅಧಿಕವಾಗಿ ಭಗವಚ್ಚಿಂತನೆ ಮಾಡಿದರೆ, ಹುಚ್ಚನಾಗುವ ಸಂಭವ ಇದೆ’ ಅಂತ. ಅವನ ಭಾವನೆ, ವಿಶ್ವವ್ಯಾಪಿ ಚೈತನ್ಯ ವಸ್ತುವಿನ ಚಿಂತನೆ ಮಾಡಿದರೆ ಮನುಷ್ಯ ಅಚೈತನ್ಯನಾಗಿಬಿಡುತ್ತಾನೆ ಅಂತ. ಸ್ವಲ್ಪ ಯೋಚಿಸಿ ನೋಡು! ಯಾರು ಬೋಧಸ್ವರೂಪನೊ, ಯಾರ ಬೋಧೆಯಿಂದ ಈ ಜಗತ್ತು ಬೋಧಮಯವಾಗಿ ಕಾಣುವುದೊ, ಅಂಥವನ ಧ್ಯಾನದಿಂದ ಅಬೋಧನಾಗುವುದು!
“ನಿನ್ನ ‘ಸೈನ್ಸ್’ ಏನು ಹೇಳುತ್ತದೆ? ಇದರೊಡನೆ ಅದನ್ನು ಬೆರೆಸಿದರೆ ಅದಾಗುತ್ತದೆ; ಅದರೊಡನೆ ಇದನ್ನು ಬೆರೆಸಿದರೆ ಇದಾಗುತ್ತದೆ. ಕೇವಲ ಇವುಗಳ-ಜಡವಸ್ತುಗಳ-ಚಿಂತನೆಯಿಂದ ಮನುಷ್ಯ ಅಬೋಧನಾಗುವ ಸಂಭವ ಅಧಿಕ.”
ಡಾಕ್ಟರ್ ಸರ್ಕಾರ್: “ಅವುಗಳಲ್ಲಿ ಭಗವಂತನನ್ನು ನೋಡಬಹುದು.”
ಮಾಸ್ಟರ್: “ಮನುಷ್ಯನಲ್ಲಿ ಆತನನ್ನು ಇನ್ನೂ ಸ್ಪಷ್ಟವಾಗಿ ನೋಡಬಹುದು. ಮಹಾಪುರುಷರಲ್ಲಿ ಅತ್ಯಂತ ಸ್ಪಷ್ಟವಾಗಿ ನೋಡಬಹುದು. ಮಹಾಪುರುಷರಲ್ಲಿ ಭಗವಂತ ಅತ್ಯಂತ ಹೆಚ್ಚಾಗಿ ವ್ಯಕ್ತವಾಗಿದ್ದಾನೆ.”
ಡಾಕ್ಟರ್ ಸರ್ಕಾರ: “ಹೌದು, ಮನುಷ್ಯನಲ್ಲೇನೊ ನಿಜ.”
ಶ್ರೀರಾಮಕೃಷ್ಣರು: “ಯಾರ ಚೇತನದಿಂದ ಜಡವಸ್ತುಗಳು ಕೂಡ ಚೇತನ ಮಯವಾಗಿ ಕಾಣುವುವೊ, ಕೈ, ಕಾಲು, ಶರೀರ ಚಲಿಸುವುವೊ ಅಂಥವನ ಧ್ಯಾನದಿಂದ ಅಚೈತನ್ಯನಾಗುವೆನೆ! ಜನ ಹೇಳುತ್ತಾರೆ, ನೀರಿನಿಂದ ಕೈ ಸುಟ್ಟುಹೋಯಿತು ಅಂತ. ನೀರು ಯಾವುದನ್ನೂ ಸುಡುವುದಿಲ್ಲ; ನೀರಿನಲ್ಲಿರುವ ಕಾವಿನಿಂದ, ನೀರಿನಲ್ಲಿರುವ ಅಗ್ನಿಯಿಂದ ಕೈಸುಟ್ಟು ಹೋಗುತ್ತದೆ.
“ತಪ್ಪಲೆಯಲ್ಲಿ ಅನ್ನ ಕುದಿಯುತ್ತದೆ ಅಂತ ಇಟ್ಟುಕೊ. ಅದರಲ್ಲಿ ಬೇಯಲು ಹಾಕಿರುವ ಉರುಳುಗಡ್ಡೆ, ಬದನೆಕಾಯಿ ಇವೂ ಅದರಲ್ಲಿ ನಾಟ್ಯವಾಡುತ್ತಿರುತ್ತವೆ. ಎಳೆಯ ಮಕ್ಕಳು ಹೇಳುತ್ತವೆ. ಉರುಳುಗಡ್ಡೆ, ಬದನೆಕಾಯಿ ತಾವಾಗೇ ನೆಗೆದಾಡುತ್ತವೆ ಅಂತ; ತಪ್ಪಲೆ ಕೆಳಗೆ ಬೆಂಕಿ ಇರುವುದು ಅವುಗಳಿಗೆ ಗೊತ್ತಿಲ್ಲ. ಮನುಷ್ಯ ಹೇಳುತ್ತಾನೆ, ಇಂದ್ರಿಯಗಳು ತಾವಾಗೇ ತಮ್ಮ ತಮ್ಮ ಕೆಲಸಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಾ ಇವೆ ಅಂತ. ಆದರೆ ಅವುಗಳ ಆಂತರ್ಯದಲ್ಲಿದ್ದಾನಲ್ಲ, ಆತ ಚೈತನ್ಯ ಸ್ವರೂಪನೇ ಎಂಬುದು ಆತನಿಗೆ ಗೊತ್ತಿಲ್ಲ.”
ಡಾಕ್ಟರ್ ಸರ್ಕಾರ್ ಎದ್ದು ನಿಂತುಕೊಂಡ. ಇನ್ನೇನು ಹೊರಡುವುದರಲ್ಲಿದ್ದಾನೆ. ಪರಮಹಂಸರೂ ಎದ್ದು ನಿಂತುಕೊಂಡಿದ್ದಾರೆ.
ಡಾಕ್ಟರ್: “ಜನರಿಗೆ ‘ಸಂಕಟ ಬಂದಾಗ ವೆಂಕಟರಮಣ’, ಸ್ವಪ್ರೇರಣೆಯಿಂದ ಹೇಳುತ್ತಾರೇನು, ‘ಹೇ ಭಗವಂತ ಎಲ್ಲವೂ ನೀನೆ! ಎಲ್ಲವೂ ನೀನೆ’ ಅಂತ? ನಿಮ್ಮ ಗಂಟಲಿನಲ್ಲಿ ಗಾಯ ಆಗಿರವುದರಿಂದ ನೀವು ಭಗವದ್ವಿಷಯವಾಗಿ ಮಾತಾಡುತ್ತಿದ್ದೀರಿ. ನೀವು ಈಗ ಹತ್ತಿ ಬಿಡಿಸುವವನ ಕೈಗೆ ಸಿಕ್ಕಿಬಿಟ್ಟಿದ್ದೀರಿ. ಅವನಿಗೇ ನಿಮ್ಮ ಕಷ್ಟಸುಖಗಳನ್ನೆಲ್ಲ ಹೇಳಿಕೊಳ್ಳಿ. ನಿಮ್ಮ ಮಂತ್ರವನ್ನು ನಿಮಗೆ ಹಾಕುತ್ತಿದ್ದೇನೆ.”
ಶ್ರೀರಾಮಕೃಷ್ಣರು: “ನಾನು ಆತನಿಗೆ ಹೇಳಿಕೊಳ್ಳಬೇಕಾದ್ದು ಏನೂ ಇಲ್ಲ.”
ಡಾಕ್ಟರ್ ಸರ್ಕಾರ್: “ಏಕೆ ಹೇಳಿಕೊಳ್ಳಬಾರದು? ನಾವು ಆತನ ತೊಡೆ ಮೇಲೆ ನರ್ತಿಸುತ್ತಿದ್ದೇವೆ; ಎಲ್ಲಕ್ಕೂ ಆತನನ್ನು ಅವಲಂಬಿಸಿದ್ದೇವೆ. ಆದ್ದರಿಂದ ನಮಗೆ ರೋಗ ಬಂದರೆ ಆತನಿಗೆ ಹೇಳಿಕೊಳ್ಳದೆ ಬೇರೆ ಇನ್ನಾರಿಗೆ ತಾನೆ ಹೇಳಿಕೊಳ್ಳಬೇಕು?”
ಶ್ರೀರಾಮಕೃಷ್ಣರು: “ನಿನ್ನ ಈ ಮಾತನ್ನು ಒಪ್ಪಿದೆ. ಒಮ್ಮೊಮ್ಮೆ ಹಾಗೆ ಆತನಿಗೆ ಹೇಳಿಕೊಳ್ಳಲು ಪ್ರಯತ್ನ ಮಾಡಿರುವುದುಂಟು, ಆದರೆ ಜಯಶೀಲನಾಗುತ್ತಿಲ್ಲ.”
ಡಾಕ್ಟರ್: “ಹಾಗೆ ಹೋಗಿ ಹೇಳಿಕೊಳ್ಳುವುದರ ಆವಶ್ಯಕತೆ ತಾನೆ ಏನಿದೆ? ಅದು ಆತನಿಗೆ ಗೊತ್ತಿಲ್ಲವೇನು?”
ಶ್ರೀರಾಮಕೃಷ್ಣರು: “ಒಬ್ಬ ಮುಸಲ್ಮಾನ ನಮಾಜು ಮಾಡುತ್ತ ಮಾಡುತ್ತ ಗಂಟಲು ಒಡೆದು ಹೋಗುವಂತೆ ಕೂಗಿಕೊಳ್ಳುತ್ತಿದ್ದ: ‘ಓ ಅಲ್ಲಾ! ಓ ಅಲ್ಲಾ!’ ಇದನ್ನು ನೋಡಿ ಇನ್ನೊಬ್ಬ ಆತನಿಗೆ ಹೇಳಿದ: ‘ನೀನು ಅಲ್ಲಾನನ್ನು ಕರೆಯುತ್ತಿರುವುದೇನೂ ಸರಿ, ಆದರೆ ಇಷ್ಟೊಂದು ಗಂಟಲನ್ನು ಏಕೆ ಒಡೆದುಕೊಳ್ಳುತ್ತಿದ್ದೀಯೆ? ಆತ ಇರುವೆ ಕಾಲಿನ ಸಪ್ಪಳವನ್ನೂ ಕೇಳಬಲ್ಲ ಎಂಬುದು ನಿಮಗೆ ಗೊತ್ತಿಲ್ಲವೇನು?’
“ಯಾವಾಗ ಮನಸ್ಸು ಭಗವಂತನಲ್ಲಿ ಲೀನವಾಗಿಬಿಡುವುದೊ ಆಗ ಆತನನ್ನು ಬಹಳ ಹತ್ತಿರದಲ್ಲೇ, ಹೃದಯಮಧ್ಯದಲ್ಲೇ ನೋಡಬಹುದು. ಆದರೆ ಒಂದು ವಿಷಯ, ಈ ಲೀನವಾಗುವಿಕೆ ಗಾಢವಾದಂತೆಲ್ಲ, ಮನಸ್ಸೂ ಬಾಹ್ಯವಸ್ತುಗಳನ್ನು ತ್ಯಜಿಸಿ ಬರಲಾರಂಭಿಸು ತ್ತದೆ. ‘ಭಕ್ತಮಾಲೆ’ ಎಂಬ ಪುಸ್ತಕದಲ್ಲಿ ಒಬ್ಬ ಭಕ್ತನ (ಬಿಲ್ವಮಂಗಳನ) ಕಥೆ ಇದೆ. ಆತನಿಗೆ ವೇಶ್ಯೆಯ ಮನೆಗೆ ಹೋಗುವ ಅಭ್ಯಾಸ. ಒಂದು ರಾತ್ರಿ ಆತ ಆಕೆಯ ಮನೆಗೆ ಹೊರಡಲು ಆಗಲೇ ಬಹಳ ಹೊತ್ತಾಗಿಬಿಟ್ಟಿತ್ತು. ಮನೆಯಲ್ಲಿ ಆತನ ತಾಯಿ ತಂದೆಗಳ ಶ್ರಾದ್ಧವಿದ್ದುದರಿಂದ ಆತ ಅಲ್ಲಿಗೆ ಹೊರಡಲು ತಡವಾಗಿಬಿಟ್ಟಿತು. ಶ್ರಾದ್ಧದ ಭಕ್ಷ್ಯಭೋಜ್ಯಗಳನ್ನೆಲ್ಲ ಗಂಟುಕಟ್ಟಿ ಕೈಯಲ್ಲಿ ಹಿಡಿದುಕೊಂಡು ಆಕೆಯ ಮನೆಗೆ ಹೊರಟಿದ್ದಾನೆ. ಆತನ ಮನಸ್ಸು ಆಕೆಯ ಮೇಲೆ ಅಷ್ಟೊಂದು ಏಕಾಗ್ರವಾಗಿಬಿಟ್ಟಿತ್ತು. ತಾನು ಯಾವ ಯಾವ ಮಾರ್ಗವಾಗಿ ಮತ್ತು ಯಾವು ಯಾವುದರ ಮೇಲೆ ನಡೆದುಕೊಂಡು ಹೋಗುತ್ತಾ ಇದ್ದೇನೆ ಎಂಬ ಪ್ರಜ್ಞೆಯೆ ಆತನಿಗೆ ಇರಲಿಲ್ಲ. ಒಂದು ಕಡೆ ಒಬ್ಬ ಯೋಗಿ ಕಣ್ಣು ಮುಚ್ಚಿ ಕುಳಿತು ಭಗವಚ್ಚಿಂತನೆ ಮಾಡುತ್ತಿದ್ದ. ಈ ಮಹಾನುಭಾವ ಆತನ ಮೇಲೆಯೇ ನಡೆದುಹೋಗಿಬಿಟ್ಟ. ಯೋಗಿ ಕಣ್ಣು ಕೆರಳಿಸಿ ಕೂಗಿಕೊಂಡ: ‘ಏನಿದು? ನಿನಗೇನು ಕಣ್ಣಿಲ್ಲವೆ? ನಾನು ಭಗವಚ್ಚಿಂತನೆಯಲ್ಲಿ ಕುಳಿತಿದ್ದೇನೆ. ನೀನು ನನ್ನ ಮೇಲೆ ನಡೆದುಕೊಂಡು ಹೋಗಿಬಿಡುತ್ತಾ ಇದ್ದೀಯಲ್ಲ!’ ಆಗ ಆತ ಹೇಳಿದ: ‘ದಯವಿಟ್ಟು ಕ್ಷಮಿಸಿ. ನಿಮಗೊಂದು ಪ್ರಶ್ನೆ ಹಾಕಲೇನು? ವೇಶ್ಯಾ ಚಿಂತನೆಯಿಂದ ನನಗೆ ಬಾಹ್ಯಪ್ರಜ್ಞೆಯೇ ಇರಲಿಲ್ಲ. ನೀವು ಭಗವಚ್ಚಿಂತನೆಯನ್ನು ಮಾಡುತ್ತಿದ್ದರೂ ನಿಮಗೆ ಬಾಹ್ಯ ಪ್ರಜ್ಞೆ ಇದೆಯಲ್ಲ, ಅದು ಹೇಗೆ? ಆದ್ದರಿಂದ ನಿಮ್ಮದು ಎಂಥ ಭಗವಚ್ಚಿಂತನೆ?’ ಬಿಲ್ವ ಮಂಗಳ ಕಟ್ಟ ಕಡೆಗೆ ಸಂಸಾರ ತ್ಯಜಿಸಿ ಭಗವದಾರಾಧನೆಗೆ ಮನೆಯನ್ನು ಬಿಟ್ಟು ಹೊರಟು ಹೋದ. ಆತ ವೇಶ್ಯೆಗೆ ಹೇಳಿದ: ‘ನೀನೇ ನನ್ನ ಗುರು, ಭಗವಂತನನ್ನು ಯಾವ ರೀತಿಯಾಗಿ ಪ್ರೀತಿಸಬೇಕು ಎಂಬುದನ್ನು ನೀನು ನನಗೆ ಕಲಿಸಿಕೊಟ್ಟಿದ್ದೀಯೆ.’ ವೇಶ್ಯೆಯನ್ನು ತನ್ನ ತಾಯಿ ಅಂತ ಭಾವಿಸಿ ಆಕೆಯ ಸಹವಾಸವನ್ನು ತ್ಯಜಿಸಿಬಿಟ್ಟ.”
ಡಾಕ್ಟರ್ ಸರ್ಕಾರ್: “ಯಾವ ಹೆಂಗಸನ್ನೇ ಆಗಲಿ, ತಾಯಿ ಅಂತ ಭಾವಿಸುವುದು; ಇದು ತಾಂತ್ರಿಕ ಉಪಾಸನೆಗೆ ಸಂಬಂಧಪಟ್ಟದು.”
ಶ್ರೀರಾಮಕೃಷ್ಣರು: “ಒಂದು ಕಥೆ ಕೇಳು. ಒಬ್ಬ ಪಂಡಿತ ರಾಜನೊಬ್ಬನಿಗೆ ದಿನವೂ ಭಾಗವತಶ್ರವಣ ಮಾಡಿಸುತ್ತಿದ್ದ. ಭಾಗವತವನ್ನು ವಿವರಿಸಿ ಓದಿದನಂತರ ದಿನವೂ ಪಂಡಿತ ರಾಜನನ್ನು ಕೇಳುತ್ತಿದ್ದ; ‘ಏನು ಅರ್ಥವಾಯಿತೇನು?’ ರಾಜ ದಿನವೂ ಉತ್ತರವೀಯುತ್ತಿದ್ದ ‘ಮೊದಲು ನೀವೇ ಅರ್ಥಮಾಡಿಕೊಳ್ಳಿ.’ ಪಂಡಿತ ಮನೆಗೆ ಹಿಂದಿರುಗಿ ಬಂದು ಯೋಚಿಸುತ್ತಿದ್ದ: ‘ರಾಜ ದಿನವೂ ಹೀಗೆ ಉತ್ತರ ಕೊಡುತ್ತಿದ್ದಾನಲ್ಲ, ಏಕೆ? ನಾನು ಭಾಗವತವನ್ನು ಅಷ್ಟು ಚೆನ್ನಾಗಿ ವಿವರಿಸಿ ಹೇಳುತ್ತಾ ಇದ್ದೇನೆ. ಆದರೂ ಆತ ಹೇಳುತ್ತಿದ್ದಾನೆ, “ನೀವೇ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ” ಅಂತ. ಏನಾಶ್ಚರ್ಯ ಇದು! ಆತನ ಹೃಯದಲ್ಲಿ ಏನಿದೆ?’ ಪಂಡಿತ ಸಾಧನೆಮಾಡುತ್ತಿದ್ದ. ಕೆಲವು ಕಾಲಾನಂತರ ಆತನಿಗೆ ಜ್ಞಾನೋದಯವಾಯಿತು, ಭಗವಂತೊಬ್ಬನೇ ಕೇವಲ ವಸ್ತು, ಉಳಿದುದೆಲ್ಲ–ಗೃಹ, ಪರಿವಾರ, ಧನ, ಜನ, ಮಾನ, ಸಂಭ್ರಮ-ಅವಸ್ತು. ಈ ಜಗತ್ತಿನದೆಲ್ಲಾ ಮಿಥ್ಯಾ ಎಂಬ ಬೋಧೆಯಾದನಂತರ ಆತ ಸಂಸಾರವನ್ನು ತ್ಯಜಿಸಿಬಿಟ್ಟ. ಮನೆ ಬಿಟ್ಟು ಹೋಗು ವಾಗ ಇಷ್ಟು ಮಾತ್ರವನ್ನು ಒಬ್ಬನಿಗೆ ಹೇಳಿಹೋದ, ‘ನೀನು ಹೋಗಿ ದೊರೆಗೆ ಹೇಳಿ ಬಿಡು, “ಈಗ ನನಗೆ ಭಾಗವತ ಅರ್ಥವಾಗಿದೆ” ಎಂಬುದಾಗಿ ನಾನು ಹೇಳಿದೆ’ ಎಂದು.
“ಇನ್ನೊಂದು ಕಥೆ ಕೇಳು. ಒಬ್ಬನಿಗೆ ಮನೆಗೆ ದಿನವೂ ಬಂದು ಭಾಗವತ ವಿವರಿಸಿ ಹೇಳಬಲ್ಲ ಒಬ್ಬ ಭಾಗವತ ಪಂಡಿತ ಬೇಕಾಗಿತ್ತು. ಆದರೆ ಅಂಥವರು ಸಿಕ್ಕುವುದು ಸ್ವಲ್ಪ ಕಷ್ಟವೇ ಆಗಿತ್ತು. ಬಹಳ ಹುಡುಕುತ್ತಿದ್ದಾಗ, ಒಬ್ಬ ಬಂದು ಈತನಿಗೆ ಹೇಳಿದ: ‘ಮಹಾಶಯ, ಇಲ್ಲೊಬ್ಬ ಬಹಳ ಒಳ್ಳೆಯ ಭಾಗವತ ಪಂಡಿತನಿದ್ದಾನೆ.’ ಈತ ಹೇಳಿದ: ‘ಬಹಳ ಒಳ್ಳೆಯದೆ ಆಯಿತು; ಕರೆದುಕೊಂಡು ಬಾ ಆತನನ್ನು.’ ಆತ ಹೇಳಿದ: ‘ಆದರೆ ಒಂದು ವಿಷಯ. ಆತನ ಹತ್ತಿರ ಕೆಲವು ನೇಗಿಲು ಎತ್ತುಗಳು ಇವೆ. ಇಡೀ ದಿನವೆಲ್ಲ ಆತ ಅವುಗಳ ಹಿಂದೆಯೇ ಇರಬೇಕಾಗಿದೆ. ಜಮೀನು ಬಹಳ ದೊಡ್ಡದು; ಅದರ ವ್ಯವಸಾಯ ಮಾಡಿಸಬೇಕಾಗಿದೆ. ಆತನಿಗೆ ಎಳ್ಳಷ್ಟೂ ಸಮಯವೇ ದೊರೆಯುವುದಿಲ್ಲ.’ ಆಗ ಈತ ಹೇಳಿದ: ‘ಎಲೋ ಅಯ್ಯಾ, ಯಾರು ನೇಗಿಲು, ಎತ್ತು ಇವುಗಳಲ್ಲೇ ನಿರತನಾಗಿದ್ದಾನೊ ಅಂಥ ಭಾಗವತ ಪಂಡಿತ ನನಗೆ ಬೇಕಾಗಿಲ್ಲ. ಯಾರಿಗೆ ಸಮಯವಿದೆಯೊ, ಯಾರು ಮನೆಗೆ ಬಂದು ಭಗವತ್ಕಥಾಶ್ರವಣ ಮಾಡಿಸಬಲ್ಲನೊ ಅಂಥ ಭಾಗವತ ಪಂಡಿತ ನನಗೆ ಬೇಕು.’ (ಡಾಕ್ಟರ್ ಸರ್ಕಾರನಿಗೆ) ಅರ್ಥವಾಯಿತೇನು?”
ಡಾಕ್ಟರ್ ಸರ್ಕಾರ್ ಸುಮ್ಮನೆ ನಿಂತಿದ್ದಾನೆ.
ಶ್ರೀರಾಮಕೃಷ್ಣರು: “ಸತ್ಯ ಏನು ಎಂಬುದನ್ನು ತಿಳಿಸಲೆ? ಕೇವಲ ಪಾಂಡಿತ್ಯ ಯಾವುದಕ್ಕೆ ಬಂದದ್ದು? ಪಂಡಿತರು ವೇದ, ಪುರಾಣ, ತಂತ್ರ ಇವುಗಳ ವಿಷಯವಾಗಿ ಕೇಳಿದ್ದಾರೆ, ಬಹಳ ತಿಳಿದುಕೊಂಡಿದ್ದಾರೆ. ಆದರೆ ಬರೀ ಪಾಂಡಿತ್ಯ ತೆಗೆದುಕೊಂಡು ಏನು ಮಾಡುವುದು? ವಿವೇಕ ವೈರಾಗ್ಯಬೇಕು. ಅವರಲ್ಲಿ ವಿವೇಕ ವೈರಾಗ್ಯ ಇದ್ದರೆ ಮಾತ್ರ ಅವರ ಮಾತಿಗೆ ಬೆಲೆ ಕೊಡಬಹುದು. ಯಾರು ಸಂಸಾರವೇ ಸರ್ವಸ್ವ ಅಂತ ಭಾವಿಸುತ್ತಾರೊ, ಅವರ ಮಾತು ಯಾವ ಪ್ರಯೋಜನಕ್ಕೆ ಬಂದದ್ದು?
“ಗೀತೆ ಹೇಳಿಕೊಡುವ ಪಾಠವೇನು? ಒಂದು ಹತ್ತು ಸಲ ‘ಗೀತಾ’, ‘ಗೀತಾ’ ಅಂತ ಉಚ್ಚರಿಸಿದರೆ ಅದು ಏನಾಗಿ ಕೇಳಿಬರುತ್ತದೆಯೊ ಅದೇ ಅದು ಹೇಳಿಕೊಡುವ ಪಾಠ. ‘ಗೀತಾ’ ಅಂತ ಉಚ್ಚರಿಸುತ್ತಲೇ ಇದ್ದರೆ ಅದು ‘ತ್ಯಾಗಿ’, ‘ತ್ಯಾಗಿ’ ಅಂತ ಕೇಳಿಬರಲಾರಂಭಿಸುತ್ತದೆ–ಎಂದರೆ ತ್ಯಾಗಿಯಾಗು ಅಂತ ಹೇಳುತ್ತದೆ. ಯಾರು ಕಾಮಕಾಂಚನಾಸಕ್ತಿಯನ್ನು ತ್ಯಜಿಸಿ ಬಿಟ್ಟಿದ್ದಾನೊ, ಯಾರು ತನ್ನ ಹದಿನಾರಾಣೆ ಮನಸ್ಸನ್ನೂ ಭಗವಂತನಿಗೆ ಅರ್ಪಿಸಿ ಬಿಟ್ಟಿದ್ದಾನೊ, ಕೇವಲ ಆತ ಮಾತ್ರ ಗೀತೆಯ ಮರ್ಮವನ್ನು ಅರಿತುಕೊಂಡಿದ್ದಾನೆ. ಇಡೀ ಗೀತೆಯನ್ನು ಓದಬೇಕಾದ ಆವಶ್ಯಕತೆಯೇನಿಲ್ಲ. ಮನುಷ್ಯ ತ್ಯಾಗಿಯಾಗಿಬಿಟ್ಟ ಅಂದರೆ ಅದರ ಉದ್ದೇಶ ಪೂರ್ಣವಾದ ಹಾಗೆಯೇ.”
ಡಾಕ್ಟರ್: “ಒಮ್ಮೆ ನನಗೊಬ್ಬ ‘ರಾಧೆ’ ಎಂದರೆ ಏನು ಎಂಬುದನ್ನು ವಿವರಿಸಿ ಹೇಳಿದ. ಆತ ಹೇಳಿದ: ‘ನಿನಗೆ “ರಾಧೆ” ಎಂಬ ಪದದ ಅರ್ಥ ಗೊತ್ತೆ? ಅದನ್ನು ತಿರುಗಿಸಿ ಹೇಳು. ಆಗ ಅದು “ಧೆರಾ” 1 ಎಂದಾಗುತ್ತದೆ. ಅದೇ ಅದರ ಅರ್ಥ!’ (ಎಲ್ಲರೂ ನಗುತ್ತಿದ್ದಾರೆ.) ಈ ದಿನ ‘ಧೆರಾ’ ದವರೆಗೇ ಸಾಕು.”
ಡಾಕ್ಟರ್ ಸರ್ಕಾರ ಹೊರಟುಹೋದ. ಮಾಸ್ಟರ್ ಪರಮಹಂಸರ ಹತ್ತಿರ ಕುಳಿತು ಕೊಂಡಿದ್ದಾನೆ. ಡಾಕ್ಟರ್ ಸರ್ಕಾರನ ಮನೆಯಲ್ಲಿ ನಡೆದ ಮಾತುಕತೆಗಳನ್ನೆಲ್ಲ ಪರಮಹಂಸರಿಗೆ ತಿಳಿಸುತ್ತಿದ್ದಾನೆ.
ಮಾಸ್ಟರ್: “ನಾನು ಆತನ ಮನೆಗೆ ಹೋದಾಗ, ಆತ ಕೆಂಪು ಮೀನುಗಳಿಗೆ ಏಲಕ್ಕಿ ಸಿಪ್ಪೆಯನ್ನು, ಗುಬ್ಬಚ್ಚಿಗಳಿಗೆ ಗೋಧಿಹಿಟ್ಟಿನ ಗೋಲಿಗಳನ್ನು ಹಾಕುತ್ತಿದ್ದ. ನನಗೆ ಹೇಳಿದ: ‘ನೋಡಿದೆಯೇನು? ನಾನು ಬಿಸಾಡಿದ ಏಲಕ್ಕಿ ಸಿಪ್ಪೆಗಳ ಕಡೆ ಅವುಗಳ ಕಣ್ಣೇ ಹೋಗಲಿಲ್ಲ. ಅದಕ್ಕಾಗಿ ಅವು ಸುಮ್ಮನೆ ಹೊರಟುಹೋದವು. ಮೊದಲು ನಮಗೆ ಬೇಕಾಗಿರೋದು ಜ್ಞಾನ, ಬಳಿಕ ಭಕ್ತಿ. ಆ ಗುಬ್ಬಚ್ಚಿಗಳು ಮಾಡಿದ ಕೆಲಸವನ್ನು ನೋಡಿದೆಯಾ? ನಾನು ಗೋಧಿಹಿಟ್ಟಿನ ಗೋಲಿಗಳನ್ನು ಇವುಗಳ ಕಡೆಗೆ ಬಿಸಾಡಿದಾಗ ಅವೂ ಹಾರಿಹೋಗಿಬಿಟ್ಟುವು. ಅವುಗಳಿಗೆ ಜ್ಞಾನ ಇಲ್ಲ; ಆದ್ದರಿಂದ ಭಕ್ತಿ ಉಂಟಾಗಲಿಲ್ಲ.”’
ಶ್ರೀರಾಮಕೃಷ್ಣರು (ನಗುತ್ತ): “ಆತ ಹೇಳುವುದು ಐಹಿಕ ಜ್ಞಾನ, ಭೌತಿಕ ವಿಜ್ಞಾನದ ಜ್ಞಾನ.”
ಮಾಸ್ಟರ್: “ಡಾಕ್ಟರ್ ಮತ್ತೆ ಹೇಳಿದ: ‘ಯಾವುದನ್ನೊ ಚೈತನ್ಯನೊ, ಬುದ್ಧನೊ ಅಥವಾ ಯೇಸುಕ್ರಿಸ್ತನೊ ಹೇಳಿಹೋಗಿದ್ದಾನೆ ಅಂತ ಅದನ್ನು ಸುಮ್ಮನೆ ನಾನು ನಂಬಿ ಬಿಡಬೇಕೋ? ಹಾಗೆ ಮಾಡುವುದು ಸರಿಯಲ್ಲ.’ ಆತನಿಗೆ ಒಬ್ಬ ಮೊಮ್ಮಗನಾಗಿದ್ದಾನೆ. ತನ್ನ ಸೊಸೆಯನ್ನು ಆತ ಬಹಳವಾಗಿ ಹೊಗಳಿದ. ಹೇಳಿದ: ‘ಆಕೆ ಮನೆಯಲ್ಲಿ ಇರುವಂತೆಯೇ ತೋರಿಬರುವುದಿಲ್ಲ; ಆಕೆ ಒಳ್ಳೆ ಶಾಂತಸ್ವರೂಪಳು ಮತ್ತು ಲಜ್ಜಾಶೀಲಳು.”’
ಶ್ರೀರಾಮಕೃಷ್ಣರು: “ಆತ ಇಲ್ಲಿನ (ತಮ್ಮ) ಸಂಬಂಧವಾಗಿ ಚಿಂತಿಸುತ್ತಿದ್ದಾನೆ. ಕ್ರಮೇಣ ಶ್ರದ್ಧೆ ಬೆಳೆಯುತ್ತಿದೆ. ಒಮ್ಮೆಗೇ ಅಹಂಕಾರ ಹೊರಟುಹೋಗಿಬಿಡುವುದೇ? ಆತನಿಗೆ ಬೇಕಾದಷ್ಟು ವಿದ್ಯೆ, ಕೀರ್ತಿ, ಐಶ್ವರ್ಯ ಎಲ್ಲಾ ಇವೆ! ಆದರೆ ಇಲ್ಲಿನ ಮಾತುಕತೆಗಳಿಗೆ ಆತ ಅಶ್ರದ್ಧೆಯನ್ನು ತೋರಿಸುತ್ತಿಲ್ಲ.”
ಘಂಟೆ ಸಾಯಂಕಾಲ ಐದು. ಭಕ್ತರು ಪರಮಹಂಸರ ಕೊಠಡಿಯಲ್ಲಿ ಸುಮ್ಮನೆ ಕುಳಿತಿದ್ದಾರೆ. ಪರಮಹಂಸರ ದರ್ಶನ ಪಡೆಯಲು ಹೊರಗಿನವರೂ ಅನೇಕ ಮಂದಿ ಬಂದಿದ್ದಾರೆ. ಅವರೂ ನಿಶ್ಶಬ್ದವಾಗಿ ಕುಳಿತಿದ್ದಾರೆ.
ಮಾಸ್ಟರ್ ಶ್ರೀರಾಮಕೃಷ್ಣರ ಹತ್ತಿರ ಕುಳಿತಿದ್ದಾನೆ. ಆತ ಅವರೊಡನೆ ಮೃದುಕಂಠದಿಂದ ಆಗಾಗ ಒಂದೆರಡು ಮಾತು ಆಡುತ್ತಿದ್ದಾನೆ. ಪರಮಹಂಸರು ತಮ್ಮ ಕೋಟನ್ನು ತೊಟ್ಟುಕೊಳ್ಳಲು ಇಚ್ಛೆಪಟ್ಟರು. ಮಾಸ್ಟರ್ ಅವರಿಗೆ ಅದನ್ನು ತೊಡಿಸುತ್ತಿದ್ದಾನೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ನೋಡು, ಈಗ ಕೆಲಕಾಲದಿಂದ ಅತಿಯಾಗಿ ಧ್ಯಾನದಲ್ಲಿ ತೊಡಗಬೇಕಾದ ಆವಶ್ಯಕತೆಯೇನಿಲ್ಲ. ಇದ್ದಕಿದ್ದಹಾಗೇ ಅಖಂಡ ಸಚ್ಚಿದಾನಂದ ಬೋಧೆಯಾಗಿಬಿಡುತ್ತಾ ಇದೆ, ಈಗ ಸ್ವಲ್ಪ ಕಾಲದಿಂದ ಕೇವಲ ಆತನ ದರ್ಶನವೇ.”
ಮಾಸ್ಟರ್ ಸುಮ್ಮನೆ ಕುಳಿತಿದ್ದಾನೆ. ಕೊಠಡಿಯೂ ನಿಶ್ಶಬ್ದವಾಗಿದೆ.
ಪರಮಹಂಸರು ಮಾತಾಡಲಾರಂಭಿಸಿದ್ದಾರೆ.
ಶ್ರೀರಾಮಕೃಷ್ಣರು: “ಒಳ್ಳೇದು, ಇವರೆಲ್ಲ ಕುಳಿತವರು ಕುಳಿತ ಹಾಗೇ ಕುಳಿತು ಯಾವ ಮಾತನ್ನೂ ಆಡದೆ ನನ್ನ ಕಡೆಗೇ ದೃಷ್ಟಿಸಿ ನೋಡುತ್ತಾ ಇದ್ದಾರಲ್ಲ ಏಕೆ? ಇವರ ಬಾಯಿಂದ ಮಾತುಕತೆ ಏನು ಇಲ್ಲ; ಹಾಡುತ್ತಲೂ ಇಲ್ಲ. ಇವರು ಇದರಲ್ಲಿ (ತಮ್ಮಲ್ಲಿ) ಏನನ್ನು ನೋಡುತ್ತಿರಬಹುದು?”
ಭಗವಂತನ ಶಕ್ತಿ ತಮ್ಮಲ್ಲಿ ವ್ಯಕ್ತವಾಗಿರುವುದರಿಂದ ಇಷ್ಟೊಂದು ಜನರು ತಮ್ಮ ಕಡೆಗೆ ಆಕರ್ಷಿತರಾಗಿದ್ದಾರೆ ಮತ್ತು ಅದಕ್ಕಾಗಿಯೇ ಭಕ್ತರೆಲ್ಲರು ಏಕದೃಷ್ಟಿಯಿಂದ ನೋಡುತ್ತಿದ್ದಾರೆ ಅಂತ ಸೂಚಿಸಿದರೇನು?
ಮಾಸ್ಟರ್ (ಪರಮಹಂಸರಿಗೆ ಹೇಳಿದ): “ನಿಮ್ಮ ವಿಷಯವಾಗಿ ಇವರು ಮೊದಲೇ ಎಲ್ಲವನ್ನೂ ಕೇಳಿ ತಿಳಿದುಕೊಂಡಿದ್ದಾರೆ. ಈಗ ಅವರು ತಾವು ಬೇರೆಲ್ಲಿಯೂ ನೋಡಲಾಗದ ದೃಶ್ಯವನ್ನು ಸದಾನಂದಿಯಾಗಿರುವ, ಬಾಲಕನಂತಿರುವ, ನಿರಹಂಕಾರಿಯಾಗಿರುವ, ಭಗವತ್ಪ್ರೇಮದಿಂದ ಉನ್ಮತ್ತನಾಗಿರುವ ನಿಮ್ಮನ್ನು ನೋಡುತ್ತಾ ಕುಳಿತಿದ್ದಾರೆ. ನೀವು ಅಂದು ಈಶಾನ ಮುಖ್ಯೋಪಾಧ್ಯಾಯನ ಮನೆಗೆ ಹೋಗಿದ್ದಿರಿ. ಅಲ್ಲಿ ಹೊರಗಿನ ಕೊಠಡಿಯಲ್ಲಿ ಅಡ್ಡಾಡುತ್ತಿದ್ದಿರಿ. ನಾವೂ ಅಲ್ಲಿಗೆ ಬಂದಿದ್ದೆವು. ಒಬ್ಬ ತಮ್ಮ ಹತ್ತಿರಕ್ಕೆ ಬಂದು ಹೇಳಿದ, ತಮ್ಮಂಥ ಸದಾನಂದ ಪುರುಷರನ್ನು ನಾನು ಎಂದೂ ಹಿಂದೆ ನೋಡಿರಲಿಲ್ಲ ಅಂತ.”
ಮಾಸ್ಟರ್ ಸುಮ್ಮನೆ ಕುಳಿತಿದ್ದಾನೆ, ಕೊಠಡಿ ನಿಶ್ಶಬ್ದವಾಗಿದೆ. ಕೆಲವು ನಿಮಿಷಗಳಾದ ನಂತರ ಪರಮಹಂಸರು ಮೃದುಸ್ವರದಿಂದ ಮಾಸ್ಟರೊಡನೆ ಮಾತನಾಡಲಾರಂಭಿಸಿದರು.
ಶ್ರೀರಾಮಕೃಷ್ಣರು: “ಒಳ್ಳೇದು, ಈಗ ಡಾಕ್ಟರ್ ಸರ್ಕಾರ್ ಹೇಗೆ ಮುಂದುವರಿಯುತ್ತಿದ್ದಾನೆ ? ಇಲ್ಲಿನ ಭಾವನೆಗಳು ಈಗ ಆತನಿಗೆ ಚೆನ್ನಾಗಿ ರುಚಿಸುತ್ತಿವೆಯೇನು?”
ಮಾಸ್ಟರ್: “ಒಳ್ಳೇ ಬೀಜ ಮೊಳೆಯದೆ ಇರುವುದುಂಟೆ? ಹಾಗೂ ಹೀಗೂ ಮಾಡಿ ಕೊಂಡು ಮೊಳೆತೇಬಿಡುತ್ತದೆ. ನೀವು ಅಂದು ಹೇಳಿದ ಮಾತನ್ನು ನೆನಸಿದಾಗಲೆಲ್ಲ ನನಗೆ ನಗು ಬರುತ್ತದೆ.”
ಶ್ರೀರಾಮಕೃಷ್ಣರು: “ಏನದು?”
ಮಾಸ್ಟರ್: “ನೀವು ಹೇಳಿದಿರಿ, ಯದುಮಲ್ಲಿಕನಿಗೆ ಅಷ್ಟೊಂದು ಅನ್ಯಮನಸ್ಕನಾಗಿರುವ ಸ್ವಭಾವ, ತಾನು ತಿನ್ನುತ್ತಿರುವ ಆಹಾರದಲ್ಲಿ ಉಪ್ಪು ಇದೆಯೊ ಇಲ್ಲವೊ ಎಂಬುದೇ ಆತನಿಗೆ ಗೊತ್ತಾಗುತ್ತಿಲ್ಲ, ಯಾರಾದರೂ ಆತನಿಗೆ ಯಾವುದೋ ಒಂದು ಪಲ್ಯದಲ್ಲಿ ಉಪ್ಪೇ ಇಲ್ಲವಲ್ಲ ಅಂತ ಹೇಳಿದರೆ, ಆಗ ಆತ ಚಕಿತನಾಗಿ ಹೇಳುವುದುಂಟು: ‘ಹೌದು! ಹೌದು! ಉಪ್ಪು ಹಾಕೇ ಇಲ್ಲವಲ್ಲ!’ ತನಗೂ ಅನ್ಯಮನಸ್ಕನಾಗುವ ಸ್ವಭಾವ ಇದೆ ಎಂಬುದಾಗಿ ಡಾಕ್ಟರ್ ಸರ್ಕಾರ್ ನಿಮಗೆ ತಿಳಿಸಿದಾಗ ನೀವು ಇದನ್ನು ಆತನಿಗೆ ಹೇಳಿದಿರಿ. ಡಾಕ್ಟರ್ ಅನ್ಯಮನಸ್ಕನಾಗುತ್ತಿರುವುದು ಭಗವಚ್ಚಿಂತನೆಯಿಂದಲ್ಲ, ವಿಷಯ ಚಿಂತನೆಯಿಂದ ಎಂಬುದನ್ನು ನೀವು ಆತನಿಗೆ ತಿಳಿಸಿದಿರಿ.”
ಶ್ರೀರಾಮಕೃಷ್ಣರು: “ನಾನು ಹೇಳುತ್ತಿರುವುದಕ್ಕೆ ಆತ ಮನಸ್ಸು ಕೊಡುತ್ತಿಲ್ಲವೇನು?”
ಮಾಸ್ಟರ್: “ಕೊಡದೆ ಇನ್ನೇನು ಮಾಡಿಯಾನು. ಆತನಿಗೆ ಅನೇಕ ಕೆಲಸಕಾರ್ಯ ಗಳಿರುವುದರಿಂದ ನಿಮ್ಮ ಉಪದೇಶದ ಬಹುಭಾಗವನ್ನು ಮರೆತೇಬಿಡುತ್ತಾನೆ. ಇಂದೂ ಆತನ ಬಾಯಿಂದ ಒಂದು ಬಹಳ ಒಳ್ಳೆ ಮಾತು ಹೊರಬಿತ್ತು. ಆತ ಹೇಳಿದ: ‘ಹೆಂಗಸನ್ನು ತಾಯಿ ಅಂತ ಭಾವಿಸುವುದು ತಾಂತ್ರಿಕ ಸಾಧನೆಯ ಅಂಗ.”’
ಶ್ರೀರಾಮಕೃಷ್ಣರು: “ನಾನು ಅವನಿಗೆ ಏನೇನು ಹೇಳಿದೆ?”
ಮಾಸ್ಟರ್: “ನೀವು ಆತನಿಗೆ ಹೇಳಿದಿರಿ, ನೇಗಿಲು ಮತ್ತು ಎತ್ತು ಇವುಗಳ ಹಿಂದೆಯೇ ಇರುತ್ತಿದ್ದ ಭಾಗವತ ಪಂಡಿತನ ಕಥೆಯನ್ನು.(ಪರಮಹಂಸರು ನಗುತ್ತಿದ್ದಾರೆ.) ಮತ್ತೆ ಹೇಳಿದಿರಿ, ಒಬ್ಬ ದೊರೆ ಭಾಗವತ ಪಂಡಿತನೊಬ್ಬನಿಗೆ, ‘ಮೊದಲು ನೀನೇ ಅರ್ಥಮಾಡಿಕೊ’ ಎಂಬುದಾಗಿ ಹೇಳಿದ ಕಥೆಯನ್ನು.
(ಶ್ರಿರಾಮಕೃಷ್ಣರು ಮತ್ತೆ ನಗುತ್ತಿದ್ದಾರೆ.)
“ಬಳಿಕ ನೀವು ಗೀತೆಯ ಮಾತೆತ್ತಿ ಹೇಳಿದಿರಿ: ‘ಗೀತೆಯ ಸಾರವಿಷಯ, ಕಾಮಕಾಂಚನ ತ್ಯಾಗ–ಕಾಮಕಾಂಚನಾಸಕ್ತಿಯ ತ್ಯಾಗ.’ ಅನಂತರ ನೀವು ಆತನಿಗೆ ಹೇಳಿದಿರಿ: ‘ಸಂಸಾರಿಯಾದವ, ಅಂದರೆ ಕಾಮಕಾಂಚನ ತ್ಯಜಿಸದವ ಜನರಿಗೆ ಏನು ತಾನೆ ಶಿಕ್ಷಣ ಕೊಡಬಲ್ಲ?’ ಬಹುಶಃ ಇದರ ಇಂಗಿತ ಆತನಿಗೆ ಅರ್ಥವಾಗದೆ ಹೋಗಿರಬೇಕು. ಕೊನೆಗೆ ಆತ ‘ಧೆರಾ’, ‘ಧೆರಾ’ ಅಂತ ಹೇಳಿ ಮಾತನ್ನು ನಿಲ್ಲಿಸಿದ.”
ಪರಮಹಂಸರು ಭಕ್ತರ ಶ್ರೇಯಸ್ಸಿಗಾಗಿ ಚಿಂತಿಸುತ್ತಿದ್ದಾರೆ. ಅವರ ಭಕ್ತಗಣದಲ್ಲಿ ಪೂರ್ಣ ಮತ್ತು ಮಣೀಂದ್ರ ಬಹಳ ಚಿಕ್ಕ ವಯಸ್ಸಿನವರು. ಪೂರ್ಣನೊಡನೆ ಮಾತುಕತೆಯಾಡಿ ಬರುವಂತೆ ಮಣೀಂದ್ರನನ್ನು ಪ್ರೇರೇಪಿಸಿ ಕಳುಹಿಸಿದರು.
ಸಾಯಂಕಾಲವಾಗಿದೆ. ಪರಮಹಂಸರ ಕೊಠಡಿಯಲ್ಲಿ ದೀಪ ಉರಿಯುತ್ತಿದೆ. ಭಕ್ತರು ಮತ್ತು ಅಭ್ಯಾಗತರು ಪರಮಹಂಸರನ್ನು ಬಿಟ್ಟು ಒಂದು ಸ್ವಲ್ಪ ದೂರದಲ್ಲಿ ಕುಳಿತು ಕೊಂಡಿದ್ದಾರೆ. ಪರಮಹಂಸರು ಅಂತರ್ಮುಖರಾಗಿದ್ದಾರೆ. ಉಳಿದವರೂ ಭಗವಚ್ಚಿಂತನೆ ಮಾಡುತ್ತ ಸುಮ್ಮನೆ ಕುಳಿತಿದ್ದಾರೆ.
ಸ್ವಲ್ಪ ಹೊತ್ತಾದ ನಂತರ ನರೇಂದ್ರ ತನ್ನ ಸ್ನೇಹಿತನೊಬ್ಬನೊಡನೆ ಕೊಠಡಿಯನ್ನು ಪ್ರವೇಶಿಸಿದ. ಈಗ ನರೇಂದ್ರ ತನ್ನ ಸ್ನೇಹಿತನ ಪರಿಚಯವನ್ನು ಮಾಡಿಕೊಡುತ್ತಾ ಇದ್ದಾನೆ. ನರೇಂದ್ರ ಹೇಳಿದ: “ಈತ ನನ್ನ ಸ್ನೇಹಿತ. ಕೆಲವು ಗ್ರಂಥಗಳನ್ನು ಬರೆದಿದ್ದಾನೆ. ರಾಧಾಕೃಷ್ಣರ ಸಂಬಂಧವಾಗಿಯೂ ಬರೆದಿದ್ದಾನೆ.”
ಶ್ರೀರಾಮಕೃಷ್ಣರು (ಗ್ರಂಥಕರ್ತನಿಗೆ): “ರಾಧಾಕೃಷ್ಣರ ಸಂಬಂಧವಾಗಿ ಏನು ಬರೆದಿದ್ದೀಯೆ ಹೇಳು ನೋಡೋಣ.”
ಗ್ರಂಥಕರ್ತ: “ರಾಧಾಕೃಷ್ಣನೇ ಪರಬ್ರಹ್ಮ. ಆತನೆ ಓಂಕಾರದ ಬಿಂದುಸ್ವರೂಪ. ರಾಧಾಕೃಷ್ಣ ಪರಬ್ರಹ್ಮನಿಂದ ಮಹಾವಿಷ್ಣು, ಮಹಾವಿಷ್ಣುವಿನಿಂದ ಪುರುಷ ಪ್ರಕೃತಿ, –ಶಿವ ದುರ್ಗೆ ಜನ್ಮ ತಾಳಿದ್ದಾರೆ.”
ಶ್ರೀರಾಮಕೃಷ್ಣರು: “ಭೇಷ್! ನಿತ್ಯರಾಧೆಯನ್ನು ನಂದಘೋಷ ದರ್ಶನಮಾಡಿದ್ದ. ಪ್ರೇಮರಾಧೆ ಶ್ರೀಕೃಷ್ಣನ ಬೃಂದಾವನ ಲೀಲೆಯಲ್ಲಿ ಭಾಗವಹಿಸಿದ್ದಳು. ಕಾಮರಾಧೆಯೇ ಚಂದ್ರಾವಳಿ.
“ಮೊದಲು ಕಾಮರಾಧೆಯ, ಅನಂತರ ಪ್ರೇಮರಾಧೆಯ, ಇನ್ನೂ ಮುಂದುವರಿದ ನಂತರ ನಿತ್ಯರಾಧೆಯ ದರ್ಶನ. ಇದು ಈರುಳ್ಳಿ ಸಿಪ್ಪೆಯನ್ನು ಒಂದೊಂದಾಗಿ ಬಿಡಿಸಿದ ಹಾಗೆ. ಮೊದಲು ಕೆಂಪಾಗಿರುವ ಸಿಪ್ಪೆ, ಬಳಿಕ ಎಳೆಗೆಂಪಿನ ಪದರಗಳು, ಅನಂತರ ಬಿಳಿಯ ಪದರುಗಳು. ಬಳಿಕ ಅದರಲ್ಲಿ ಯಾವ ಪದರವೂ ಇರುವುದಿಲ್ಲ. ಅದೇ ನಿತ್ಯರಾಧೆಯ ಸ್ವರೂಪ. ಅಲ್ಲಿ ‘ನೇತಿ’, ‘ನೇತಿ’ ಎಂಬ ವಿಚಾರ ಕೊನೆಮುಟ್ಟುತ್ತದೆ.
“ನಿತ್ಯರಾಧಾಕೃಷ್ಣ ಮತ್ತು ಲೀಲಾರಾಧಾಕೃಷ್ಣ, ಇವರ ಸಂಬಂಧ ಸೂರ್ಯನಿಗೂ ಆತನ ರಶ್ಮಿಗೂ ಇರುವ ಹಾಗೆ. ನಿತ್ಯ ಸೂರ್ಯನ ಸ್ವರೂಪ; ಲೀಲೆ ರಶ್ಮಿಯ ಸ್ವರೂಪ.
“ಶುದ್ಧಭಕ್ತ ಕೆಲವು ವೇಳೆ ನಿತ್ಯದಲ್ಲಿ, ಇನ್ನು ಕೆಲವು ವೇಳೆ ಲೀಲೆಯಲ್ಲಿ ತನ್ನ ಮನಸ್ಸನ್ನಿಡುತ್ತಾನೆ. ನಿತ್ಯ ಯಾರದೊ, ಆತನದೇ ಲೀಲೆ. ಆತ ಎರಡಾಗಲಿ ಅಥವಾ ಬಹುವಾಗಲಿ ಅಲ್ಲವೇ ಅಲ್ಲ.”
ಗ್ರಂಥಕರ್ತ: “ಒಳ್ಳೆಯದು, ಈತ ‘ಬೃಂದಾವನದ ಕೃಷ್ಣ’, ಆತ ‘ಮಥುರೆಯ ಕೃಷ್ಣ’ ಅಂತ ಹೇಳುತ್ತಾರಲ್ಲ ಏಕೆ?”
ಶ್ರೀರಾಮಕೃಷ್ಣರು: “ಇದು ಗೋಸ್ವಾಮಿಗಳ ಮತ. ಉತ್ತರ ಭಾರತದಲ್ಲಿನ ಪಂಡಿತರ ಅಭಿಪ್ರಾಯವೇ ಬೇರೆ. ಅವರ ಕೃಷ್ಣ ಒಬ್ಬನೇ ಒಬ್ಬ. ಆತನೊಡನೆ ರಾಧೆ ಇರಲಿಲ್ಲ. ಆತನೇ ದ್ವಾರಕಾಧೀಶ ಕೃಷ್ಣ.”
ಗ್ರಂಥಕರ್ತ: “ರಾಧಾಕೃಷ್ಣನೇ ಪರಬ್ರಹ್ಮ.”
ಶ್ರೀರಾಮಕೃಷ್ಣರು: “ಈ ಭಾವನೆ ಬಹಳ ಒಳ್ಳೆಯದು. ಆದರೆ ಆತನ ಕೈಯಲ್ಲಿ ಎಲ್ಲವೂ ಸಾಧ್ಯ. ಆತ ನಿರಾಕಾರನೂ ಹೌದು, ಸಾಕಾರನೂ ಹೌದು. ಆತ ಸ್ವರಾಟನೂ ಹೌದು, ವಿರಾಟನೂ ಹೌದು. ಆತನೇ ಬ್ರಹ್ಮ, ಆತನೇ ಶಕ್ತಿ, ಆತನಿಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಆತನಿಗೆ ಸಾಧ್ಯವಿಲ್ಲದ್ದೇ ಇಲ್ಲ, ರಣಹದ್ದು ಎಷ್ಟು ಎತ್ತರಕ್ಕೆ ಬೇಕಾದರೂ ಹಾರಿ ಹೋಗಲಿ, ಅದು ಆಕಾಶದ ಮೇಲ್ಚಾವಣಿಯನ್ನು ಮುಟ್ಟುವ ಹಾಗೇ ಇಲ್ಲ. ಯಾರೆ ಆಗಲಿ, ಬ್ರಹ್ಮನ ಸ್ವರೂಪ ಏನು ಎಂಬುದಾಗಿ ಕೇಳಿದರೆ, ಅದಕ್ಕೆ ಉತ್ತರ ಕೊಡಲಾಗುವುದಿಲ್ಲ. ಆತನ ಸಾಕ್ಷಾತ್ಕಾರ ದೊರೆತಿದ್ದರೂ ಬಾಯಿಂದ ವರ್ಣಿಸಲಾಗುವುದಿಲ್ಲ. ಯಾರೆ ಆಗಲಿ, ತುಪ್ಪ ಯಾವ ರೀತಿಯಾಗಿದೆ ಅಂತ ಕೇಳಿದರೆ, ಅದಕ್ಕೆ ಉತ್ತರ, ‘ತುಪ್ಪ, ತುಪ್ಪದ ಹಾಗೆ ಇದೆ’ ಅಂತ. ಬ್ರಹ್ಮನಿಗೆ ಉಪಮೆ ಬ್ರಹ್ಮನೇ. ಅದು ಹೊರತು ಬೇರೆ ಯಾವುದೂ ಇಲ್ಲ.”
ಘಂಟೆ ಬೆಳಗಿನ ಒಂಬತ್ತು. ಬಲರಾಮಬಸುವಿನ ಅಣ್ಣನ ಮಗ ಹರಿವಲ್ಲಭಬಸು ಪರಮಹಂಸರನ್ನು ನೋಡಲು ಬಂದಿದ್ದಾನೆ. ಆತ ಕೊಠಡಿಯನ್ನು ಪ್ರವೇಶಿಸಿ ಶ್ರದ್ಧಾಭಕ್ತಿಗಳಿಂದ ಪರಮಹಂಸರಿಗೆ ಪ್ರಣಾಮ ಮಾಡಿದ.
ಹರಿವಲ್ಲಭಬಸು ಕಟಕ್ಕಿನ ಒಬ್ಬ ಪ್ರಧಾನ ವಕೀಲ. ಬಲರಾಮಬಸು ಪರಮಹಂಸರ ಹತ್ತಿರಕ್ಕೆ ಆಗಾಗ ಬಂದು ಹೋಗುತ್ತಾ ಇರುವುದನ್ನು ಜೊತೆಗೆ ಮನೆ ಹೆಂಗಸರನ್ನೂ ಕರೆದುಕೊಂಡು ಹೋಗುತ್ತಾ ಇರುವುದನ್ನು ಕೇಳಿ ಹರಿವಲ್ಲಭಬಸು ಕಿಡಿಕಿಡಿಯಾಗಿದ್ದ. ಬಲರಾಮಬಸು ಆತನಿಗೆ ಹೇಳಿದ: “ನೀನು ಒಮ್ಮೆ ಹೋಗಿ ಪರಮಹಂಸರನ್ನು ದರ್ಶನ ಮಾಡಿ ಬಾ. ಅನಂತರ ಬೇಕಾದರೆ ಉಪನ್ಯಾಸ ಕೊಡುವಿಯಂತೆ.”
ಈಗ ಪರಮಹಂಸರು ಹರಿವಲ್ಲಭನೊಡನೆ ಮಾತುಕತೆಗಳಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಏನು ಮಾಡಿದರೆ ನನ್ನ ಗಂಟಲಿನ ಈ ರೋಗ ಗುಣವಾಗಿ ಬಿಡುತ್ತದೆ? ಇದ ಬಹಳ ಕಠಿಣವಾದ ಕಾಯಿಲೆಯೇನು?”
ಹರಿವಲ್ಲಭ: “ಮಹಾಶಯರೆ, ಇದರ ಸಂಬಂಧವಾಗಿ ಹೇಳಲು ಡಾಕ್ಟರುಗಳ ಕೈಯಲ್ಲಿ ಸಾಧ್ಯ.”
ಶ್ರೀರಾಮಕೃಷ್ಣರು: “ಹೆಂಗಸರು ನನ್ನ ಪಾದಧೂಳಿಯನ್ನು ತೆಗೆದುಕೊಳ್ಳುವಾಗ ನಾನು ಭಾವನೆ ಮಾಡುತ್ತೇನೆ, ಇವರು ನನ್ನ ಆಂತರ್ಯದಲ್ಲಿರುವ ಭಗವಂತನಿಗೆ ಪ್ರಣಾಮ ಮಾಡುತ್ತಿದ್ದಾರೆ ಅಂತ. ನಾನು ಇದನ್ನು ಆ ದೃಷ್ಟಿಯಿಂದ ನೋಡುತ್ತಿದ್ದೇನೆ.”
ಹರಿವಲ್ಲಭ: “ನೀವು ಸಾಧುಪುರುಷರು, ಎಲ್ಲರೂ ನಿಮಗೆ ಪ್ರಣಾಮ ಮಾಡಬೇಕು. ಇದರಲ್ಲಿ ತಪ್ಪೇನು?”
ಶ್ರೀರಾಮಕೃಷ್ಣರು: “ಪ್ರಹ್ಲಾದ, ಧ್ರುವ, ನಾರದ, ಕಪಿಲ ಇವರ ಸಂಬಂಧವಾಗಿ ಬೇಕಾದರೆ ನೀನು ಹಾಗೆ ಹೇಳಬಹುದು. ಆದರೆ ನಾನು ಏತರ ಕಂತೆ! ದಯವಿಟ್ಟು ಇನ್ನೊಮ್ಮೆ ಇಲ್ಲಿಗೆ ಬಂದುಹೋಗು.”
ಹರಿವಲ್ಲಭ: “ನನ್ನ ಹೃದಯದ ಆಕರ್ಷಣೆಯಿಂದಲೇ ಇಲ್ಲಿಗೆ ಬರುತ್ತೇನೆ. ನೀವಾಗಿ ಹಾಗೆ ಕೇಳಿಕೊಳ್ಳಬೇಕಾದ ಆವಶ್ಯಕತೆಯೇನಿಲ್ಲ.”
ಹರಿವಲ್ಲಭ ಇನ್ನೇನು ಹೊರಡುವುದರಲ್ಲಿದ್ದಾನೆ. ಆತ ಪರಮಹಂಸರಿಗೆ ಪ್ರಣಾಮ ಮಾಡಿದನಂತರ ಅವರ ಪಾದಧೂಳಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ. ಆದರೆ ಪರಮ ಹಂಸರು ತಮ್ಮ ಪಾದಗಳನ್ನು ಬೇರೆ ಕಡೆಗೆ ತೆಗೆದಿಟ್ಟುಕೊಂಡುಬಿಟ್ಟರು. ಕೊನೆಗೂ ಹರಿವಲ್ಲಭ ಬಿಡಲೇ ಇಲ್ಲ. ಹೇಗೊ ಮಾಡಿ ಅವರ ಪಾದಧೂಳಿಯನ್ನು ತೆಗೆದುಕೊಂಡ.
ಆತ ಹೊರಡಲು ಎದ್ದು ನಿಂತಾಗ, ಆತನಿಗೆ ಗೌರವ ತೋರಿಸಲು ಪರಮಹಂಸರೂ ಎದ್ದುನಿಂತುಕೊಂಡರು. ಅವರು ಆತನಿಗೆ ಹೇಳುತ್ತಿದ್ದಾರೆ: “ನಾನು ಬಲರಾಮನ ಮನೆಗೆ ಈಗ ಸ್ವಲ್ಪ ಕಾಲದಿಂದ ಹೋಗದೆ ಇರುವುದರಿಂದ ಆತನಿಗೆ ತುಂಬ ವ್ಯಥೆಯಾಗಿಬಿಟ್ಟದೆ. ಒಮ್ಮೆ ಅಲ್ಲಿಗೆ ಬಂದು ನಿಮ್ಮನ್ನೆಲ್ಲ ನೋಡಿ ಬರೋಣವೆಂದು ಭಾವಿಸಿದೆ. ಆದರೆ ಭಯ ಬಂತು. ನೀವೇನಾದರೂ ಹೇಳಿಬಿಟ್ಟರೆ, ‘ಯಾರಪ್ಪ ಇವರನ್ನು ಇಲ್ಲಿಗೆ ಕರೆಸಿದವರು?’ ಅಂತ.”
ಹರಿವಲ್ಲಭ: “ಹಾಗೆಲ್ಲ ಯಾರು ಹೇಳುತ್ತಾರೆ? ನೀವು ಹಾಗೆಲ್ಲ ಯೋಚಿಸಬೇಡಿ.”
ಹರಿವಲ್ಲಭ ಹೊರಟುಹೋದ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಆತನ ಹೃದಯದಲ್ಲಿ ಭಕ್ತಿ ಇದೆ. ಇಲ್ಲದಿದ್ದರೆ ಹಠ ಹಿಡಿದು ಪಾದಧೂಳಿಯನ್ನು ಏಕೆ ತೆಗೆದುಕೊಳ್ಳುತ್ತಿದ್ದ? ಅಂದು ನಾನು ನನ್ನ ಭಾವಾವಸ್ಥೆಯಲ್ಲಿ ಡಾಕ್ಟರ್ ಸರ್ಕಾರನನ್ನು ಮತ್ತು ಇನ್ನೊಬ್ಬನನ್ನು ನೋಡಿದೆನೆಂದು ಹೇಳಿದೆನಲ್ಲ, ಆ ಇನ್ನೊಬ್ಬನೇ ಇವನು. ನೋಡು ಅದಕ್ಕಾಗಿಯೇ ಬಂದುಬಿಟ್ಟ.”
ಮಾಸ್ಟರ್: “ನಿಸ್ಸಂದೇಹವಾಗಿ ಭಕ್ತನೇ.”
ಶ್ರೀರಾಮಕೃಷ್ಣರು: “ಎಷ್ಟು ಸರಳ!”
ಪರಮಹಂಸರ ದೇಹಾರೋಗ್ಯದ ವರದಿಯನ್ನು ಒಪ್ಪಿಸಲು ಮಾಸ್ಟರ್ ಡಾಕ್ಟರ್ ಸರ್ಕಾರನ ಮನೆಗೆ ಬಂದಿದ್ದಾನೆ. ಈಗ ಸರ್ಕಾರ್ ಮಾಸ್ಟರೊಡನೆ ಪರಮಹಂಸರ, ಮಹಿಮಚರಣನೇ ಮೊದಲಾದ ಭಕ್ತರ ಸಂಬಂಧವಾಗಿ ಮಾತುಕತೆ ಆಡುತ್ತಿದ್ದಾನೆ.
ಡಾಕ್ಟರ್: “ನೋಡು, ಆ ಪುಸ್ತಕ ತಂದು ನನಗೆ ತೋರಿಸುತ್ತೇನೆ ಅಂತ ಮಹಿಮಚರಣ ಹೇಳಿದ್ದನಲ್ಲ, ಅದನ್ನು ಆತ ತಂದು ತೋರಿಸಲೇ ಇಲ್ಲ. ಕೇಳಿದ್ದಕ್ಕೆ ಮರೆತುಹೋಯಿತು ಅಂತ ಹೇಳಿಬಿಟ್ಟ. ಬಹುಶಃ ಹಾಗೆಯೇ ಆಗಿರಬೇಕು. ನನಗೂ ಹಾಗಾಗುವುದುಂಟು.”
ಮಾಸ್ಟರ್: “ಆತ ಬಹಳವಾಗಿ ಓದುತ್ತಾನೆ.”
ಡಾಕ್ಟರ್: “ಆದರೂ ಈ ಅವಸ್ಥೆಯೇ?”
ಪರಮಹಂಸರ ಮಾತೆತ್ತಿ ಹೇಳಿದ: “ಜ್ಞಾನ ಇಲ್ಲದೆ ಇತ್ತು ಎಂದರೆ ಕೇವಲ ಭಕ್ತಿ ಯಾವ ಪ್ರಯೋಜನಕ್ಕೆ ಬಂದದ್ದು?”
ಮಾಸ್ಟರ್: “ಏಕೆ, ಅವರೂ ಜ್ಞಾನದ ನಂತರ ಭಕ್ತಿ ಅಂತ ತಾನೆ ಹೇಳುತ್ತಿರುವುದು. ಆದರೆ ಅವರ ಜ್ಞಾನ, ಭಕ್ತಿ ಇವುಗಳ ಭಾವನೆಗೂ ಮತ್ತು ನಿಮ್ಮದಕ್ಕೂ ಬಹಳ ತಾರತಮ್ಯ. ಅವರ ಭಾವನೆ–ತತ್ತ್ವದ ನಂತರ ಭಕ್ತಿ, ಬ್ರಹ್ಮಜ್ಞಾನದ ನಂತರ ಭಕ್ತಿ–ಮೊದಲು ದೊರೆಯುವುದು ಭಗವಂತನ ಜ್ಞಾನ, ಬಳಿಕ ಭಕ್ತಿ ಅಂತ. ನಿಮ್ಮ ದೃಷ್ಟಿಯಿಂದ ಜ್ಞಾನ ಅಂದರೆ ಇಂದ್ರಿಯಜನಿತ ಜ್ಞಾನ. ಶ್ರೀರಾಮಕೃಷ್ಣರು ಹೇಳುತ್ತಿರುವುದು ಜ್ಞಾನವನ್ನು ನಮ್ಮ ಗಜಕಡ್ಡಿಯಿಂದ ಅಳೆದು ಸುರಿದು ನೋಡಲಾಗುವುದಿಲ್ಲ. ತತ್ತ್ವಜ್ಞಾನವನ್ನು ಇಂದ್ರಿಯ ಜನಿತ ಜ್ಞಾನದಿಂದ ಪರೀಕ್ಷಿಸಲಾಗುವುದಿಲ್ಲ. ನಿಮ್ಮ ಜ್ಞಾನ ಇಂದ್ರಿಯಲಭ್ಯಜ್ಞಾನವಾದ್ದರಿಂದ ಅದನ್ನು ಬೇಕಾದರೆ ಅಳೆದು ಸುರಿದು ನೋಡಬಹುದು.”
ಡಾಕ್ಟರ್ ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡ. ಈಗ ಮತ್ತೆ ಅವತಾರಾದಿಗಳ ಸಂಬಂಧವಾಗಿ ಮಾತು ಎತ್ತಿದ.
ಡಾಕ್ಟರ್: “ಅವತಾರ ಅನ್ನುವುದು ಏನು? ಮನುಷ್ಯನ ಪಾದಧೂಳಿ ತೆಗೆದುಕೊಳ್ಳುವುದಂತೆ ಏನಿದೆಲ್ಲ?”
ಮಾಸ್ಟರ್: “ಏಕೆ, ನೀವೇ ಹೇಳುತ್ತೀರಲ್ಲ ನೀವು ಪ್ರಯೋಗಶಾಲೆಯಲ್ಲಿ ವಿಜ್ಞಾನ ಪ್ರಯೋಗ ಮಾಡುತ್ತಿರುವಾಗಲೂ ಭಗವಂತನ ಸೃಷ್ಟಿರಚನೆಯನ್ನು ನೋಡಿ ನಿಮಗೆ ಭಾವ ಉಂಟಾಗಿಬಿಡುತ್ತದೆ; ಮನುಷ್ಯನ ಸಂಬಂಧವಾಗಿ ಆಲೋಚಿಸುವಾಗಲೂ ನಿಮಗೆ ಭಾವ ಉಂಟಾಗಿಬಿಡುತ್ತದೆ ಅಂತ. ಅದು ಹಾಗಿರುವುದಾದರೆ, ನಾವು ಭಗವಂತನಿಗೆ ಏಕೆ ತಲೆಯನ್ನು ಮಣಿಯಬಾರದು? ಮಾನವನ ಹೃದಯದಲ್ಲಿ ಭಗವಂತ ವಾಸಿಸುತ್ತಾ ಇದ್ದಾನಲ್ಲ.
“ಹಿಂದೂಧರ್ಮ ಸರ್ವಭೂತಗಳಲ್ಲಿಯೂ ಭಗವಂತನನ್ನು ನೋಡುತ್ತದೆ. ಈ ವಿಷಯವಾಗಿ ನೀವು ಹೆಚ್ಚಾಗಿ ಓದಿಲ್ಲ. ಭಗವಂತ ಸರ್ವಭೂತಗಳಲ್ಲಿಯೂ ಇದ್ದರೆ, ಮನುಷ್ಯನಿಗೆ ಏಕೆ ಪ್ರಣಾಮಮಾಡಕೂಡದು?
“ಪರಮಹಂಸರು ಹೇಳುತ್ತಾರಲ್ಲ, ಕೆಲ ವಸ್ತುಗಳಲ್ಲಿ ಆತ ವಿಶೇಷವಾಗಿ ವ್ಯಕ್ತವಾಗಿ ದ್ದಾನೆ ಅಂತ. ಸೂರ್ಯ, ನೀರಿನಲ್ಲಿ ಮತ್ತು ಕನ್ನಡಿಯಲ್ಲಿ ವಿಶೇಷ ರೀತಿಯಾಗಿ ವ್ಯಕ್ತವಾಗುತ್ತಾನೆ. ನೀರು ಎಲ್ಲೆಲ್ಲಿಯೂ ಇದೆ; ಆದರೆ ಅದು ನದಿಯಲ್ಲಿ, ಸರೋವರದಲ್ಲಿ ಒಂದು ವಿಶೇಷ ರೀತಿಯಲ್ಲಿ ಇರುತ್ತದೆ. ನಾವು ಭಗವಂತನಿಗೆ ನಮಸ್ಕಾರ ಮಾಡುವೆವೇ ವಿನಾ ಮನುಷ್ಯನಿಗಲ್ಲ. ಭಗವಂತ ಭಗವಂತನಾಗಬಲ್ಲನೇ ವಿನಾ, ಮನುಷ್ಯ ಭಗವಂತನಾಗಲಾರ.
“ವಿಚಾರದ ಮೂಲಕ ಭಗವಂತನನ್ನು ಅರಿಯಲಾಗುವುದಿಲ್ಲ. ಎಲ್ಲವೂ ವಿಶ್ವಾಸವನ್ನು ಅವಲಂಬಿಸಿದೆ, ಇವೆಲ್ಲ ಪರಮಹಂಸರ ಬಾಯಿಂದ ಬಂದ ಮಾತುಗಳೆ.”
ಇಂದು ಡಾಕ್ಟರ್ ಸರ್ಕಾರ್ ತಾನೇ ಬರೆದಿದ್ದ ‘ಮನೋವಿಜ್ಞಾನದ ಶಾರೀರಕ ಭಿತ್ತಿ’ ಎಂಬ ಪುಸ್ತಕವನ್ನು ಮಾಸ್ಟರಿಗೆ ಬಹುಮಾನವಾಗಿ ಕೊಟ್ಟ. ಅದರ ಮೊದಲನೆಯ ಪುಟದ ಮೇಲೆ ಬರೆದಿದ್ದ: “ಸೋದರನಿಗೆ ಪ್ರೀತಿವಿಶ್ವಾಸ ಪೂರ್ವಕವಾಗಿ.”
ಘಂಟೆ ಬೆಳಗಿನ ಹನ್ನೊಂದು. ಪರಮಹಂಸರು ಭಕ್ತರೊಡನೆ ತಮ್ಮ ಕೊಠಡಿಯಲ್ಲಿ ಕುಳಿತಿದ್ದಾರೆ. ಮಿಶ್ರ ಎಂಬ ಹೆಸರಿನ ಒಬ್ಬ ಕ್ರಿಶ್ಚಿಯನ್ ಭಕ್ತನೊಡನೆ ಮಾತುಕತೆಯಾಡು ತ್ತಿದ್ದಾರೆ. ಪಶ್ಚಿಮ ಭಾರತದಲ್ಲಿ ವಾಸವಾಗಿದ್ದ ಕ್ವೇಕರ್ ಸಂಪ್ರದಾಯದ ಒಂದು ಕುಟುಂಬದಲ್ಲಿ ಆತ ಜನ್ಮ ತಳೆದಿದ್ದಾನೆ. ವಯಸ್ಸು ಮೂವತ್ತೈದು ಇರಬಹುದು. ಆತ ಹೊರಗೆ ಪಾಶ್ಚಾತ್ಯರಂತೆ ಉಡಿಗೆತೊಡಿಗೆ ಹಾಕಿಕೊಳ್ಳುತ್ತಿದ್ದು, ಒಳಗೆ ಕಾಷಾಯ-ಉಡುಪನ್ನು ಧರಿಸಿಕೊಳ್ಳುತ್ತಿದ್ದ. ಆತನ ಒಬ್ಬ ಸೋದರನಿಗೆ ವಿವಾಹವಾಗಬೇಕಿದ್ದ ದಿನವೇ, ಆ ವಿವಾಹವಾಗಬೇಕಾಗಿದ್ದ ಸಹೋದರ, ಆತನೊಡನೆ ಇನ್ನೊಬ್ಬ ಸಹೋದರ ಇಬ್ಬರೂ ಅಕಸ್ಮಾತ್ತಾಗಿ ಸತ್ತುಹೋಗಿಬಿಟ್ಟಿದ್ದರು. ಅಂದೇ ಮಿಶ್ರನೂ ಸಂಸಾರವನ್ನು ತ್ಯಾಗಮಾಡಿಬಿಟ್ಟ.
ಮಿಶ್ರ: “ಎಲ್ಲಾ ಭೂತಗಳಲ್ಲಿಯೂ ಇರತಕ್ಕವನು ಕೇವಲ ರಾಮನೊಬ್ಬನೇ.”
ಶ್ರೀರಾಮಕೃಷ್ಣರು ಮೆಲ್ಲಗೆ, ಆದರೆ ಮಿಶ್ರನ ಕಿವಿಗೆ ಬೀಳುವ ಹಾಗೆ ಚಿಕ್ಕ ನರೇನನಿಗೆ: “ರಾಮನೇನೊ ಒಬ್ಬನೆ, ಆದರೆ ಆತನಿಗೆ ಸಾವಿರಾರು ಹೆಸರುಗಳಿವೆ. ಯಾರನ್ನು ಕ್ರಿಶ್ಚಿಯನ್ನರು ‘ಭಗವಂತ’ ಅಂತ ಕರೆಯುತ್ತಾರೊ ಆತನನ್ನೇ ಹಿಂದೂಗಳು ರಾಮ, ಕೃಷ್ಣ, ಈಶ್ವರ ಇವೇ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಸರೋವರಕ್ಕೆ ಅನೇಕ ಸೋಪಾನಗಳಿವೆ. ಒಂದು ಸೋಪಾನದಲ್ಲಿ ಹಿಂದೂಗಳು ನೀರು ಕುಡಿಯುತ್ತಾರೆ. ಅವರು ಅದನ್ನು ‘ಜಲ’ ಅಂತ ಕರೆಯುತ್ತಾರೆ. ಕ್ರಿಶ್ಚಿಯನ್ನರು ಇನ್ನೊಂದು ಸೋಪಾನದಲ್ಲಿ ನೀರು ಕುಡಿಯುತ್ತಾರೆ. ಅವರು ಅದನ್ನು ‘ವಾಟರ್’ ಅಂತ ಕರೆಯುತ್ತಾರೆ. ಮುಸಲ್ಮಾನರು ಮತ್ತೊಂದು ಸೋಪಾನದಲ್ಲಿ ನೀರು ಕುಡಿಯುತ್ತಾರೆ. ಅವರು ಅದನ್ನು ‘ಪಾನಿ’ ಅಂತ ಕರೆಯುತ್ತಾರೆ. ಅದೇ ರೀತಿಯಾಗಿ ಯಾರನ್ನು ಕ್ರಿಶ್ಚಿಯನ್ನರು ‘ಗಾಡ್’ ಅಂತ ಕರೆಯುತ್ತಾರೊ, ಆತನನ್ನೇ ಮುಸಲ್ಮಾನರು ‘ಅಲ್ಲಾ’ ಅಂತ ಕರೆಯುತ್ತಾರೆ.”
ಮಿಶ್ರ: “ಏಸು, ಮೇರಿಯ ಪುತ್ರನಲ್ಲ, ಸ್ವಯಂ ಭಗವಂತನೇ. (ಭಕ್ತರಿಗೆ) ಇವರು (ಪರಮಹಂಸರನ್ನು ತೋರಿಸಿ) ಈಗ ನಿಮಗೆ ಈ ರೀತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ–ಆದರೆ ಇವರು ಸಾಕ್ಷಾತ್ ಭಗವಂತನೇ. ಅದನ್ನು ಅರಿತುಕೊಳ್ಳಲು ನಿಮಗೆ ಇನ್ನೂ ಕಣ್ಣು ಬಂದಿಲ್ಲ. ನಾನು ಹಿಂದೆ ಇವರನ್ನು ಧ್ಯಾನದಲ್ಲಿ ದರ್ಶನಮಾಡಿದ್ದೇನೆ. ಈಗ ಇವರನ್ನು ಪ್ರತ್ಯಕ್ಷವಾಗಿ ನೋಡುತ್ತಿದ್ದೇನೆ. ಆಗ ಇವರು ಒಂದು ತೋಟದಲ್ಲಿ ಒಂದು ಉನ್ನತ ಆಸನದಲ್ಲಿ ಕುಳಿತಿರುವ ಹಾಗೂ ಇನ್ನೊಬ್ಬ ನೆಲದ ಮೇಲೆ ಕುಳಿತಿರುವ ಹಾಗೂ ದರ್ಶನ ಮಾಡಿದೆ. ನೆಲದ ಮೇಲೆ ಕುಳಿತಿದ್ದವ ಅಧ್ಯಾತ್ಮ ಜೀವನದಲ್ಲಿ ಅಷ್ಟೊಂದು ಮುಂದುವರೆದಿರಲಿಲ್ಲ.
“ಭಾರತದಲ್ಲಿ ನಾಲ್ಕು ಜನ ಭಗವಂತನ ದ್ವಾರಪಾಲಕರಿದ್ದಾರೆ: ಬೊಂಬಾಯಿಯಲ್ಲಿ ತುಕಾರಾಮ, ಕಾಶ್ಮೀರದಲ್ಲಿ ರಾಬರ್ಟ್ ಮೈಕೇಲ್, ಇಲ್ಲಿ ಇವರು (ಶ್ರೀರಾಮಕೃಷ್ಣರು), ಪೂರ್ವ ಬಂಗಾಳದಲ್ಲಿ ಇನ್ನೊಬ್ಬ.”
ಶ್ರೀರಾಮಕೃಷ್ಣರು: “ಹಾಗಾದರೆ ನಿನಗೆ ದರ್ಶನಗಳಾಗುತ್ತಿವೆಯೊ?”
ಮಿಶ್ರ: “ಹೌದು, ನಾನು ಮನೆಯಲ್ಲಿ ಇದ್ದಾಗಲೆ ನನಗೆ ಜ್ಯೋತಿಯ ದರ್ಶನ ವಾಗುತ್ತಿತ್ತು. ಬಳಿಕ ಏಸುವಿನ ದರ್ಶನ ದೊರೆಯಿತು. ಆ ರೂಪವನ್ನು ವರ್ಣಿಸುವುದು ಹೇಗೆ ತಾನೆ ಸಾಧ್ಯ? ಆ ಸೌಂದರ್ಯದೆದುರು ಹೆಂಗಸಿನ ಸೌಂದರ್ಯವೆ!”
ಸ್ವಲ್ಪ ಹೊತ್ತಾದ ನಂತರ ಮಿಶ್ರ ತನ್ನ ಕೋಟು ಷರಾಯಿ ಎಲ್ಲವನ್ನೂ ಬಿಚ್ಚಿ ತಾನು ಹಾಕಿಕೊಳ್ಳುತ್ತಿದ್ದ ಕಾಷಾಯ ಉಡುಪನ್ನು ಭಕ್ತರಿಗೆ ತೋರಿಸಿದ.
ಪರಮಹಂಸರು ವರಾಂಡಕ್ಕೆ ಹೋಗಿದ್ದು ಹಿಂದಿರುಗಿ ಬಂದು ಹೇಳುತ್ತಿದ್ದಾರೆ: “ಈತ (ಮಿಶ್ರ) ವೀರಾಸನದಲ್ಲಿ ನಿಂತಿರುವ ಹಾಗೆ ನನಗೆ ದರ್ಶನವಾಯಿತು.”
ಪರಮಹಂಸರು ಹೀಗೆ ಹೇಳುತ್ತಿರುವಾಗಲೇ ಸಮಾಧಿಮುಖರಾಗುತ್ತಿದ್ದಾರೆ. ಈಗ ಪಶ್ಚಿಮಾಭಿಮುಖರಾಗಿ ನಿಂತು ಸಮಾಧಿಸ್ಥರಾಗಿಯೇಬಿಟ್ಟಿದ್ದಾರೆ.
ಈಗ ಕಿಂಚಿತ್ ಪ್ರಕೃತಿಸ್ಥರಾಗಿ ಮಿಶ್ರನನ್ನು ನೋಡುತ್ತಾ ನೋಡುತ್ತಾ ನಗುತ್ತಿದ್ದಾರೆ. ಇನ್ನೂ ಭಾವಾವೇಶರಾಗಿಯೇ ಮಿಶ್ರನಿಗೆ ಹಸ್ತಲಾಘವ ಕೊಡುತ್ತ ಮತ್ತೆ ನಗುತ್ತಿದ್ದಾರೆ. ಆತನ ಕೈಹಿಡಿದು ಹೇಳುತ್ತಿದ್ದಾರೆ: “ನಿನ್ನ ಹೃದಯ ಯಾವುದಕ್ಕೆ ಹಾತೊರೆಯುತ್ತಿರುವುದೊ ಅದು ನಿನಗೆ ದೊರೆತುಬಿಡುತ್ತದೆ.”
ಮಿಶ್ರ ಕೈಮುಗಿದುಕೊಂಡು: “ನಾನು ಅಂದಿನಿಂದಲೇ ನನ್ನ ಮನಸ್ಸು, ಪ್ರಾಣ, ಶರೀರ ಎಲ್ಲವನ್ನೂ ತಮಗೆ ಅರ್ಪಿಸಿಬಿಟ್ಟಿದ್ದೇನೆ.”
ಪರಮಹಂಸರು ಇನ್ನೂ ಭಾವಾವೇಶದಲ್ಲಿಯೇ ನಗುತ್ತಿದ್ದಾರೆ.
ಶ್ರೀರಾಮಕೃಷ್ಣರು ತಮ್ಮ ಸ್ವಸ್ಥಾನಕ್ಕೆ ಹೋಗಿ ಕುಳಿತುಕೊಂಡರು. ಮಿಶ್ರ ತನ್ನ ಪೂರ್ವಾಶ್ರಮದ ಕಥೆಯನ್ನೆಲ್ಲಾ ವರ್ಣಿಸುತ್ತಿದ್ದಾನೆ. ವಿವಾಹದ ಸಮಯದಲ್ಲಿ ಯಾವ ರೀತಿ ವಿವಾಹಮಂಟಪ ಕಳಚಿಕೊಂಡುಬಿದ್ದು ತನ್ನ ಇಬ್ಬರು ಸಹೋದರರು ಮಡಿದರು ಎಂಬುದನ್ನು ಕೂಡ ವಿವರಿಸಿ ಹೇಳಿದ.
ಮಿಶ್ರನನ್ನು ಯತ್ನಪೂರ್ವಕವಾಗಿ ನೋಡಿಕೊಳ್ಳುವ ಹಾಗೆ ಪರಮಹಂಸರು ಭಕ್ತರಿಗೆ ಹೇಳಿದರು. ಡಾಕ್ಟರ್ ಸರ್ಕಾರ್ ಕೊಠಡಿಯನ್ನು ಪ್ರವೇಶಿಸಿದ. ಆತ ಪರಮಹಂಸರ ಕಣ್ಣಿಗೆ ಬಿದ್ದೊಡನೆಯೆ ಅವರು ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಸ್ವಲ್ಪ ಪ್ರಕೃತಿಸ್ಥರಾದನಂತರ ಇನ್ನೂ ಭಾವಾವೇಶದಲ್ಲಿಯೇ ಹೇಳುತ್ತಿದ್ದಾರೆ: “ಮೊದಲು ಕಾರಣಾನಂದ, ಬಳಿಕ ಕಾರಣನಾದ ಸಚ್ಚಿದಾನಂದ.”
ಡಾಕ್ಟರ್: “ಹೌದು.”
ಶ್ರೀರಾಮಕೃಷ್ಣರು: “ಬಾಹ್ಯಪ್ರಜ್ಞೆಯೇನು ನನಗೆ ತಪ್ಪಿಹೋಗಿಲ್ಲ.”
ಪರಮಹಂಸರು ಭಾವಾವೇಶರಾಗಿಬಿಟ್ಟಿದ್ದಾರೆ ಎಂಬುದು ಡಾಕ್ಟರಿಗೆ ಅರ್ಥವಾಯಿತು. ಅದಕ್ಕಾಗಿ ಆತ: “ಇಲ್ಲ, ಇಲ್ಲ! ಚೆನ್ನಾಗಿ ಪ್ರಜ್ಞೆ ಇದೆ ನಿಮಗೆ!”
ಪರಮಹಂಸರು ನಗುತ್ತ ಹೇಳುತ್ತಿದ್ದಾರೆ:
‘ಜಯ್ ಕಾಳಿ’ –ಎಂದು ನಾ ಕುಡಿಯುವೀ ದಿವ್ಯಮಧು
ಸಾಮಾನ್ಯ ಸುರೆಯಲ್ಲವೆಂದರಿಯದೆ,
ನನ್ನ ಇರವನು ಕಂಡು ಭಾವಿಸಿಹರೀ ಜನರು
ನಾನೊಬ್ಬ ಉನ್ಮತ್ತ ಕುಡುಕನೆಂದೇ!
ಮೊದಲೆನ್ನ ಗುರು ಇದರ ಪಾಕವನು ನೀಡುವನು
ಅದನು ಕಾಯಿಸಿ ರಸವ ತೆಗೆದು ನಾನು
ಸುಜ್ಞಾನದೊಡವೆರೆದು ಎಲ್ಲ ಶೋಧಿಸಿ ತೆಗೆದು ಮಂತ್ರಶೀಶೆಯೊಳದನು ತುಂಬಿಡುವೆನು!
ಇಂಥ ಸುರೆಯನು ಮಾಡಿ ತಾಯ ಶ್ರೀನಾಮದಲಿ
ಅದನು ಶುದ್ಧಿಯ ಗೈದು ನೀ ಕುಡಿದರೆ,
ರಾಮಪ್ರಸಾದನಿದೊ ಹೇಳುತ್ತಿರುವನು ಕೇಳು.
ಸಕಲ ಪುರುಷಾರ್ಥವೂ ದೊರೆಯದಿಹುದೆ?
ಈ ಹಾಡನ್ನು ಕೇಳಿ ಬಹುಮಟ್ಟಿಗೆ ಡಾಕ್ಟರೂ ಭಾವಾವಿಷ್ಟನಾಗಿಬಿಟ್ಟಿದ್ದಾನೆ. ಪರಮ ಹಂಸರು ಮತ್ತೆ ಭಾವಾವಿಷ್ಟರಾಗಿ ಡಾಕ್ಟರ ತೊಡೆಯ ಮೇಲೆ ತಮ್ಮ ಪಾದವನ್ನು ಇಟ್ಟುಬಿಟ್ಟರು. ಸ್ವಲ್ಪಹೊತ್ತಾದನಂತರ ಪ್ರಕೃತಿಸ್ಥರಾಗಿ ತಮ್ಮ ಪಾದವನ್ನು ಹಿಂದಕ್ಕೆ ತೆಗೆದುಕೊಂಡು ಹೇಳಿದರು: “ಆಹ! ಅಂದು ನೀನು ಎಂಥ ಸೊಗಸಾಗಿ ಹೇಳಿದೆ! ‘ನಾವು ಭಗವಂತನ ತೊಡೆಯ ಮೇಲೆ ನಲಿದಾಡುತ್ತಿದ್ದೇವೆ. ನಾವು ರೋಗಗ್ರಸ್ತರಾದರೆ, ಆತನಿಗಲ್ಲದೆ ಬೇರೆ ಯಾರಿಗೆ ತಾನೆ ಹೇಳಿಕೊಳ್ಳಬೇಕು?’ ಕರೆಯಬೇಕಾದರೆ, ಆತನನ್ನೇ ಕರೆಯುವೆನು.” ಹೀಗೆಂದು ಹೇಳುತ್ತಿದ್ದ ಹಾಗೆಯೇ ಅವರ ಕಣ್ಣುಗಳಲ್ಲಿ ಪ್ರೇಮಾಶ್ರು ತುಂಬಲಾರಂಭಿಸಿತು. ಅವರು ಮತ್ತೆ ಭಾವಾವಿಷ್ಟರಾಗಿ ಡಾಕ್ಟರಿಗೆ ಹೇಳುತ್ತಿದ್ದಾರೆ: “ನೀನು ಬಹಳ ಶುದ್ಧ ಹೃದಯಿ; ಇಲ್ಲದಿದ್ದರೆ ನನ್ನ ಪಾದಗಳನ್ನು ನಿನ್ನ ತೊಡೆಯ ಮೇಲೆ ಇಡಲಾಗುತ್ತಿರಲಿಲ್ಲ.” ಮತ್ತೆ ಹೇಳುತ್ತಿದ್ದಾರೆ: “ಯಾರು ರಾಮರಸದ ಸವಿಯನ್ನು ಸವಿದಿರುವನೊ, ಆತನಲ್ಲಿ ಮಾತ್ರವೇ ಶಾಂತಿ ನೆಲಸಿರುತ್ತದೆ. ಈ ಸಂಸಾರ ಎಂಬುದು ಏನು? ಅದರಲ್ಲಿ ಇರುವುದು ತಾನೆ ಏನು? ದುಡ್ಡು, ಕಾಸು, ಮಾನ, ಶರೀರಸುಖ ಇವುಗಳಲ್ಲಿ ಏನು ತಾನೆ ಇದೆ? ‘ಹೇ ಮನಸ್ಸೆ, ರಾಮನನ್ನು ಸಾಕ್ಷಾತ್ಕಾರ ಮಾಡಿಕೊ! ಬೇರೆ ಯಾವ ಸಾಕ್ಷಾತ್ಕಾರವನ್ನು ತಾನೆ ನೀನು ಮಾಡಿಕೊಳ್ಳಬೇಕಾಗಿದೆ.”’
ಇಷ್ಟೊಂದು ಅಸ್ವಸ್ಥರಾಗಿದ್ದರೂ ಪರಮಹಂಸರು ಭಾವಾವಿಷ್ಟರಾಗುತ್ತಿರುವುದನ್ನು ನೋಡಿ ಭಕ್ತರಿಗೆ ಚಿಂತೆ ಹತ್ತಿಬಿಟ್ಟಿದೆ. ಪರಮಹಂಸರು ಹೇಳುತ್ತಿದ್ದಾರೆ: “ ‘ಹರಿರಸ ಮದಿರೆಯ ಕುಡಿದು ನಿರಂತರ’ ಎಂಬ ಹಾಡನ್ನು ಹಾಡುವುದಾದರೆ ನಾನು ಶಾಂತನಾಗಿ ಬಿಡುತ್ತೇನೆ.”
ನರೇಂದ್ರ ಬೇರೆ ಕೊಠಡಿಯಲ್ಲಿದ್ದ. ಆತನನ್ನು ಕರೆಸಲಾಯಿತು. ಆತ ತನ್ನ ದೇವ ದುರ್ಲಭ ಮಧುರಕಂಠದಿಂದ ಹಾಡಲಾರಂಭಿಸಿದ:
ಹರಿರಸಮದಿರೆಯ ಕುಡಿದು ನಿರಂತರ
ಉನ್ಮತ್ತನ ತೆರ ನೀನಿರುತ……
ಶ್ರೀರಾಮಕೃಷ್ಣರು: “ಅದು– ‘ಚಿದಾನಂದ ಸಿಂಧುವಿನಲಿ’ ಎಂಬ ಹಾಡು.”
ನರೇಂದ್ರ ಹಾಡುತ್ತಿದ್ದಾನೆ:
ಚಿದಾನಂದಸಿಂಧುವಿನಲಿ ಪ್ರೇಮಾನಂದದಲೆಗಳು
ಮಹಾಭಾವ ರಾಸಲೀಲ ಮಾಧುರ್ಯದೊಳಾಡಿವೆ……
ನರೇಂದ್ರ ಮತ್ತೆ ಹಾಡುತ್ತಿದ್ದಾನೆ:
ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೊ
ನಿರಂತರ–ಮೋಹನ ಮೂರುತಿಯನು ನೆನೆಯೊ….
ಡಾಕ್ಟರ್ ಸರ್ಕಾರ್ ಏಕಾಗ್ರಚಿತ್ತದಿಂದ ಈ ಹಾಡುಗಳನ್ನೆಲ್ಲ ಕೇಳಿದ, ಆತ ಹೇಳಿದ: “ ‘ಚಿದಾನಂದಸಿಂಧುವಿನಲಿ ಪ್ರೇಮಾನಂದದಲೆಗಳು’ ಎಂಬುದು ಬಹಳ ಸೊಗಸಾದ ಹಾಡು.”
ಡಾಕ್ಟರ ಆನಂದವನ್ನು ನೋಡಿ ಪರಮಹಂಸರು ಹೇಳುತ್ತಿದ್ದಾರೆ: “ಮಗ ತಂದೆಗೆ ಹೇಳಿದ: ‘ಅಪ್ಪ, ದಯವಿಟ್ಟು ನೀವೂ ಸ್ವಲ್ಪ ಮದ್ಯವನ್ನು ಸೇವಿಸಿ ನೋಡಿ, ಬಳಿಕ ಕುಡಿಯುವುದನ್ನು ಬಿಟ್ಟುಬಿಡು ಎಂದು ನೀವು ಹೇಳುವುದಾದರೆ, ಖಂಡಿತ ನಾನು ಹಾಗೆಯೇ ಮಾಡುತ್ತೇನೆ.’ ಮದ್ಯವನ್ನು ಸೇವಿಸಿದ ಬಳಿಕ ತಂದೆ ಹೇಳಿದ: ‘ಮಗು, ನೀನು ಬೇಕಾದರೆ ಬಿಟ್ಟುಬಿಡು. ನನ್ನ ಆಕ್ಷೇಪಣೆಯೇನಿಲ್ಲ. ಆದರೆ ನಾನು ಮಾತ್ರ ಬಿಡಲಾರೆ.’ (ಡಾಕ್ಟರ್ ಮತ್ತೆ ಎಲ್ಲರೂ ನಗುತ್ತಿದ್ದಾರೆ.)
“ಅಂದು ಭಾವದಲ್ಲಿ ಭಗವತಿ ಇಬ್ಬರನ್ನು ತೋರಿಸಿದಳು. ಅವರಲ್ಲಿ ಈತ (ಡಾಕ್ಟರ್) ಒಬ್ಬ. ಈತನಿಗೆ ಅಧಿಕವಾಗಿ ಜ್ಞಾನ ಉಂಟಾಗುವುದೆಂದು ತಿಳಿಸಿದಳು. ಆದರೆ ಅದೆಲ್ಲ ಶುಷ್ಕಜ್ಞಾನ. (ನಗುತ್ತ ಡಾಕ್ಟರಿಗೆ) ಆದರೆ ನೀನು ಅದನ್ನು ರಸಮಯವನ್ನಾಗಿ ಮಾಡುವೆ ಯಂತೆ.”
ಡಾಕ್ಟರ್ ಸರ್ಕಾರ್ ಸುಮ್ಮನೆ ಕುಳಿತುಕೊಂಡಿದ್ದಾನೆ.
೬ನೆ ನವೆಂಬರ್ ೧೮೮೫, ಕಾಳೀಪೂಜೆ, ಶುಕ್ರವಾರ
ಘಂಟೆ ಬೆಳಗಿನ ಒಂಬತ್ತು. ಪರಮಹಂಸರು ಹೊಸ ಬಟ್ಟೆಯನ್ನು ಉಟ್ಟುಕೊಂಡು ಶ್ಯಾಮಪುಕುರದ ಮನೆಯ ಎರಡನೆಯ ಅಂತಸ್ತಿನಲ್ಲಿರುವ ದಕ್ಷಿಣ ದಿಕ್ಕಿನ ಕೊಠಡಿಯಲ್ಲಿ ನಿಂತಿದ್ದಾರೆ. ಇಂದು ಪ್ರಾತಃಕಾಲವೇ ಹೋಗಿ ಠಂಠನದಲ್ಲಿರುವ ಸಿದ್ಧೇಶ್ವರಿ ಕಾಳಿಗೆ ಹೂವು, ಎಳನೀರು, ಸಕ್ಕರೆ, ಸಂದೇಶ (ಸಿಹಿತಿಂಡಿ) ಇವನ್ನೆಲ್ಲ ಅರ್ಪಿಸಿ ಬರುವಂತೆ ಪರಮಹಂಸರು ಮಾಸ್ಟರಿಗೆ ಹೇಳಿದ್ದರು. ಮಾಸ್ಟರು ಗಂಗೆಯಲ್ಲಿ ಮಿಂದು ಪರಮಹಂಸರು ಹೇಳಿದ ರೀತಿ ಯಲ್ಲಿಯೇ ದೇವಿಗೆ ಪೂಜೆಯನ್ನು ಸಲ್ಲಿಸಿ, ಪ್ರಸಾದ ತೆಗೆದುಕೊಂಡು ಬರೀ ಕಾಲಿನಲ್ಲೇ ಶ್ಯಾಮಪುಕುರಕ್ಕೆ ನಡೆದುಕೊಂಡು ಬಂದಿದ್ದಾನೆ. ಪರಮಹಂಸರು ತಮ್ಮ ಪಾದರಕ್ಷೆಗಳನ್ನು ಒಂದು ಕಡೆ ಬಿಟ್ಟು ಮಾಸ್ಟರ್ ತಂದಿರುವ ಪ್ರಸಾದದ ಕಿಂಚಿತ್ ಭಾಗವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ತಿಂದು, ಇನ್ನೊಂದು ಕಿಂಚಿತ್ ಭಾಗವನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡರು.
ಪರಮಹಂಸರ ಇಚ್ಛೆಗನುಸಾರ ಮಾಸ್ಟರ್ ಹಾಡಿನ ಎರಡು ಪುಸ್ತಕಗಳನ್ನು–ಒಂದು ರಾಮಪ್ರಸಾದನದು, ಇನ್ನೊಂದು ಕಮಲಾಕಾಂತನದು–ಡಾಕ್ಟರ್ ಸರ್ಕಾರನಿಗೆಂದು ಕೊಂಡುಕೊಂಡು ಬಂದಿದ್ದ.
ಮಾಸ್ಟರ್ (ಶ್ರೀರಾಮಕೃಷ್ಣರಿಗೆ): “ರಾಮಪ್ರಸಾದನ ಮತ್ತು ಕಮಲಾಕಾಂತನ ಹಾಡಿನ ಪುಸ್ತಕಗಳನ್ನು ಕೊಂಡುಕೊಂಡು ಬಂದಿದ್ದೇನೆ.”
ಶ್ರೀರಾಮಕೃಷ್ಣರು: “ಈ ವಿಧದ ಹಾಡುಗಳನ್ನೆಲ್ಲಾ ಆತನ ತಲೆಗೆ ಹಾಕಬೇಕು:
ದೇವದೇವನ ನಿಜವನರಿಯಲು
ಮನವು ತೊಳಲುತ ಬಳಲಿದೆ…..
ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು!
ಆರು ದರುಶನ ವೇದ ಶಾಸ್ತ್ರ ಪುರಾಣವರಿಯದು ಅವಳನು…..
ನಿನ್ನ ಬಾಳಿನ ಹೊಲವು ಪಾಳುಬಿದ್ದಿಹುದಲ್ಲೊ
ಕೃಷಿಗೈಯಲೂ ಕೂಡ ತಿಳಿಯದಿರುವೆ!…..
ಸುಮ್ಮನೆ ತಿರುಗಾಟಕೆ ಬಾ ಮನವೇ
ಶ್ರೀಕಾಳೀ ಸುರತರುವಿರುವೆಡೆಗೆ!…..
ಮಾಸ್ಟರ್: “ಹೌದು, ಹಾಗೆ ಮಾಡಬೇಕು.”
ಪರಮಹಂಸರು ಕಾಲಿಗೆ ಪಾದರಕ್ಷೆಗಳನ್ನು ಹಾಕಿಕೊಂಡು ಮಾಸ್ಟರೊಡನೆ ಕೊಠಡಿಯಲ್ಲಿ ಅಡ್ಡಾಡುತ್ತಿದ್ದಾರೆ. ಅವರು ಅಷ್ಟೊಂದು ಅಸ್ವಸ್ಥರಾಗಿದ್ದಾರೆ. ಆದರೂ ಅವರ ಮುಖ ಸುಮ್ಮನೆ ನಗುತ್ತಿದೆ.
ಶ್ರೀರಾಮಕೃಷ್ಣರು: “ಈ ಹಾಡೂ ಒಳ್ಳೆಯದೆ: ‘ಈ ಸಂಸಾರ ಮಾಯೆಯ ಎಲುಬಿನ ಗೂಡು.”’
ಮಾಸ್ಟರ್: “ಹೌದು, ನಿಜ.”
ಪರಮಹಂಸರು ಇದ್ದಕ್ಕಿದ್ದ ಹಾಗೆ ಬೆಚ್ಚಿಬಿದ್ದರು. ಪಾದರಕ್ಷೆಗಳನ್ನು ಒಂದು ಕಡೆ ಬಿಟ್ಟು ನಿಂತುಕೊಂಡೇ ಸಮಾಧಿಸ್ಥರಾಗಿಬಿಟ್ಟರು. ಇಂದು ಜಗನ್ಮಾತೆಯ ಪೂಜೆ. ಅದಕ್ಕಾಗಿಯೇನು ಇವರು ಪದೇ ಪದೇ ಚಮಕಿತರಾಗಿ ಸಮಾಧಿಸ್ಥರಾಗುತ್ತಿರುವುದು? ಸ್ವಲ್ಪ ಹೆಚ್ಚು ಸಮಯವನ್ನೇ ಈ ಅವಸ್ಥೆಯಲ್ಲಿ ಕಳೆದನಂತರ ತಮ್ಮ ಭಾವವನ್ನು ಬಹಳ ಪ್ರಯಾಸ ಪಟ್ಟು ತಡೆಯುತ್ತಿರುವವರ ಹಾಗೆ ವ್ಯಕ್ತಪಡಿಸುತ್ತ ನಿಟ್ಟುಸಿರುಬಿಟ್ಟರು.
ಘಂಟೆ ಬೆಳಗಿನ ಹತ್ತು. ಪರಮಹಂಸರು ಹಾಸಿಗೆಯ ಮೇಲೆ ದಿಂಬಿಗೆ ಒರಗಿಕೊಂಡು ಕುಳಿತಿದ್ದಾರೆ. ರಾಮ, ರಾಖಾಲ, ನಿರಂಜನ, ಕಾಳೀಪದ, ಮಾಸ್ಟರ್ ಮೊದಲಾದವರು ಅವರ ಸುತ್ತಲೂ ಕುಳಿತಿದ್ದಾರೆ. ಪರಮಹಂಸರು ಈಗ ತಮ್ಮ ಸೋದರಳಿಯ, ಹೃದಯನ ಸಂಬಂಧವಾಗಿ ಮಾತಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಹೃದೆ ಈಗಲೂ ‘ಜಮೀನು! ಜಮೀನು’ ಅಂತ ಹೊಡೆದು ಕೊಳ್ಳುತ್ತಲೇ ಇದ್ದಾನೆ. ನನ್ನೊಡನೆ ದಕ್ಷಿಣೇಶ್ವರದಲ್ಲಿ ಇದ್ದಾಗ, ಆತ ಒಮ್ಮೆ ಹೇಳಿದ: ‘ನನಗೊಂದು ಶಾಲು ಕೊಡಿ, ಇಲ್ಲದಿದ್ದರೆ ನಿಮ್ಮ ಮೇಲೆ ದಾವಾ ಹಾಕುತ್ತೇನೆ.’ ಭಗವತಿ ಅವನನ್ನು ದಕ್ಷಿಣೇಶ್ವರದಿಂದ ತೆಗೆದುಬಿಟ್ಟಳು. ಜನರು ಅಲ್ಲಿಗೆ ಬಂದರು ಎಂದರೆ ಹಣಕ್ಕಾಗಿ ಅವರನ್ನು ಪೀಡಿಸುತ್ತಿದ್ದ. ಆತನೇನಾದರೂ ಇದುವರೆಗೆ ಇದ್ದುದೇ ಆಗಿದ್ದರೆ, ಇವರಾರೂ ಬರಲಾಗುತ್ತಿರಲಿಲ್ಲ. ಅದಕ್ಕಾಗಿಯೇ ಭಗವತಿ ಆತನನ್ನು ದಕ್ಷಿಣೇಶ್ವರದಿಂದ ತೆಗೆದುಬಿಟ್ಟಳು. ಗೋ-ಕೂಡ ಅದೇ ರೀತಿಯಾಗಿ ವರ್ತಿಸಲಾರಂಭಿಸಿದ. ಕ್ರಮೇಣ ಜಗಳಗಂಟಿಯಾಗಿಬಿಟ್ಟ. ಗಾಡಿಯಲ್ಲಿ ಎಲ್ಲಿಯಾದರೂ ನನ್ನೊಡನೆ ಹೋಗಬೇಕಾಗಿದ್ದರೆ ಬೇಕೂ ಅಂತ ಹೊತ್ತು ಮಾಡುತ್ತಿದ್ದ. ಯಾರಾದರೂ ಯುವಕರು ನನ್ನನ್ನು ನೋಡಲು ಬಂದರೆ ಕಿಟಿಪಿಟಿಗುಟ್ಟುತ್ತಿದ್ದ. ನಾನು ಆ ಯುವಕರನ್ನು ನೋಡಲು ಕಲ್ಕತ್ತೆಗೆ ಹೋದೆನೆಂದರೆ, ಆತ ಹೇಳುತ್ತಿದ್ದ: ‘ಅವರು ಸಂಸಾರ ತ್ಯಜಿಸಿ ಬರತಕ್ಕವರೆ, ನೀವು ಇಷ್ಟು ಕಷ್ಟ ತೆಗೆದುಕೊಳ್ಳುವುದಕ್ಕೆ?’ ಯುವಕರಿಗೆ ಫಲಾಹಾರ ಕೊಡುವ ಮುನ್ನ ಹೆದರಿಕೊಂಡೇ ಆತನಿಗೆ ಹೇಳುತ್ತಿದ್ದೆ: ‘ನೀನೂ ತೆಗೆದುಕೊ, ಇವರಿಗೂ ಕೊಡು.’ ಆತ ನನ್ನೊಡನೆ ಇರುವುದಿಲ್ಲ ಎಂಬುದು ನನಗೆ ತಿಳಿದುಬಂತು. ಆಗ ಭಗವತಿಗೆ ಪ್ರಾರ್ಥನೆ ಮಾಡಿದೆ: ‘ಹೇ ತಾಯೇ, ಹೃದಯನೋಪಾದಿಯಲ್ಲಿ ಒಮ್ಮೆಗೇ ಆತನನ್ನು ಇಲ್ಲಿಂದ ತೆಗೆಯಬೇಡ.’ ಬಳಿಕ ಆತ ಬೃಂದಾವನಕ್ಕೆ ಹೊರಡುವುದರಲ್ಲಿದ್ದಾನೆ ಅಂತ ಕೇಳಿದೆ. ಆ ಸಮಯದಲ್ಲಿ ಆತ ನನ್ನೊಡನೆ ಇದ್ದುದೇ ಆಗಿದ್ದರೆ, ಈ ಯುವಕರೂ ನನ್ನ ಹತ್ತಿರ ಸುಳಿಯುತ್ತಿರಲಿಲ್ಲ. ಆತ ಬೃಂದಾವನಕ್ಕೆ ಹೊರಟುಹೋದುದೇ ತಡ, ಈ ಯುವಕರೆಲ್ಲ ಆಗಾಗ ಬಂದು ನನ್ನೊಡನೆ ಬೆರೆಯಲಾರಂಭಿಸಿದರು.”
ಗೋ–(ವಿನಯದಿಂದ): “ಮಹಾಶಯರೆ, ಆ ವಿಧವಾದ ಭಾವನೆಗಳೆಲ್ಲ ನನ್ನ ಮನಸ್ಸಿನಲ್ಲಿರಲಿಲ್ಲ.”
ರಾ (ಗೋ–ಗೆ): “ನಿನ್ನ ಮನಸ್ಸು ಏನು ಎಂಬುದು ಅವರಿಗೆ ಅರ್ಥ ವಾಗುವಷ್ಟು ನಿನಗೆ ಅರ್ಥವಾಗುತ್ತದೆಯೊ?”
ಗೋ–ಸುಮ್ಮನೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು(ಗೋ–ಗೆ): “ನೀನು ಏಕೆ ಹೀಗೆ ವರ್ತಿಸುತ್ತಾ ಇದ್ದೀಯೆ? ತಂದೆಗಿಂತಲೂ ಅಧಿಕವಾಗಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ….. ಈಗ ನೀನು ಬಾಯಿ ಮುಚ್ಚಿ ಕುಳಿತುಕೊ……ನಿನಗೆ ಈಗ ಆ ವಿಧವಾದ ಪ್ರವೃತ್ತಿಯೇನಿಲ್ಲ.”
ಸ್ವಲ್ಪ ಹೊತ್ತಾದ ನಂತರ ಭಕ್ತರೆಲ್ಲರು ಇನ್ನೊಂದು ಕೊಠಡಿಗೆ ತೆರಳಿದರು. ಪರಮ ಹಂಸರು ಗೋ–ಅನ್ನು ಕರೆಸಿಕೊಂಡು ಕೇಳಿದರು: “ನಾನು ಹೀಗೆಲ್ಲ ಹೇಳಿದ್ದಕ್ಕೆ ನಿನಗೆ ವ್ಯಥೆಯಾಗಿ ಬಿಟ್ಟಿರುವುದೆ?”
ಗೋ: “ಇಲ್ಲ.”
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಇಂದು ಕಾಳೀಪೂಜೆ, ಆಕೆಯ ಪೂಜೆಗಾಗಿ ಏನಾದರೂ ಒಂದು ವ್ಯವಸ್ಥೆ ಮಾಡುವುದು ಮೇಲು. ಈ ವಿಷಯವಾಗಿ ಭಕ್ತರೆಲ್ಲರಿಗೂ ಒಮ್ಮೆ ಹೇಳಿ ಬಾ. ಬಂಗಿಸೊಪ್ಪನ್ನು ತಂದಿದ್ದಾರೊ ಇಲ್ಲವೊ ಕೇಳಿ ತಿಳಿದುಕೊಂಡು ಬಾ.”
ಮಾಸ್ಟರ್ ಬೈಠಕ್ಖಾನೆಗೆ ಹೋಗಿ ಪರಮಹಂಸರು ಹೇಳಿದುದನ್ನೆಲ್ಲ ಭಕ್ತರಿಗೆ ತಿಳಿಸಿದ. ಕಾಳೀಪದ ಮತ್ತು ಇನ್ನು ಕೆಲವು ಭಕ್ತರು ಪೂಜೆಗೆ ಸಿದ್ಧತೆಮಾಡಲನುವಾದರು.
ಘಂಟೆ ಸುಮಾರು ಅಪರಾಹ್ನ ಎರಡು. ಡಾಕ್ಟರ್ ಸರ್ಕಾರ್ ಪರಮಹಂಸರನ್ನು ನೋಡಲು ಬಂದಿದ್ದಾನೆ. ಆತನೊಡನೆ ಪ್ರೊಫೆಸರ್ ನೀಲಮಣಿ ಬಂದಿದ್ದಾನೆ. ಗಿರೀಶ, ಕಾಳೀಪದ, ನಿರಂಜನ, ರಾಖಾಲ, ಮಣೀಂದ್ರ, ಲಾಟು, ಮಾಸ್ಟರ್ ಮೊದಲಾದವರು ಪರಮಹಂಸರ ಹತ್ತಿರ ಕುಳಿತಿದ್ದಾರೆ. ಪರಮಹಂಸರು ನಗುಮುಖರಾಗಿದ್ದಾರೆ. ಪರಮ ಹಂಸರ ದೇಹಾರೋಗ್ಯದ ವರದಿಯನ್ನು ಕೇಳಿದ ನಂತರ ಡಾಕ್ಟರ್ ಸರ್ಕಾರ್ ಅವರಿಗೆ ಔಷಧದ ವ್ಯವಸ್ಥೆ ಮಾಡಿದ. ಶ್ರೀರಾಮಕೃಷ್ಣರು ಆತನಿಗೆ ಹೇಳಿದರು: “ನಿನಗಾಗಿ ಹಾಡಿನ ಈ ಎರಡು ಪುಸ್ತಕಗಳನ್ನು ಕೊಂಡುಕೊಂಡು ಬರಲಾಗಿದೆ.” ಮಾಸ್ಟರ್ ಆ ಪುಸ್ತಕಗಳನ್ನು ಡಾಕ್ಟರ್ ಸರ್ಕಾರನ ಕೈಗೆ ಕೊಟ್ಟ.
ಡಾಕ್ಟರ್ ಸರ್ಕಾರನಿಗೆ ಕೆಲವು ಹಾಡುಗಳನ್ನು ಕೇಳಬೇಕೆಂಬ ಇಚ್ಛೆಯಾಯಿತು. ಪರಮಹಂಸರ ಆಜ್ಞಾನುಸಾರ ಮಾಸ್ಟರ್ ಇನ್ನೊಬ್ಬ ಭಕ್ತನೊಡನೆ ರಾಮಪ್ರಸಾದನ ಹಾಡನ್ನು ಹಾಡಲಾರಂಭಿಸಿದ್ದಾನೆ:
ದೇವದೇವನ ನಿಜವನರಿಯಲು
ಮನವು ತೊಳಲುತ ಬಳಲಿದೆ…..
ಬಳಿಕ ಹಾಡುತ್ತಿದ್ದಾನೆ:
ತಾಯಿ ದುರ್ಗೆಯ ನಿಜವರಿಯುವ ಧೀರರಾರೋ ಜಗದೊಳು!
ಆರು ದರುಶನ ವೇದ ಶಾಸ್ತ್ರ ಪುರಾಣವನರಿಯದು ಅವಳನು….
ಮತ್ತೆ ಹಾಡುತ್ತಿದ್ದಾನೆ:
ಕೃಷಿಗೈಯಲೂ ಕೂಡ ತಿಳಿಯದಿರುವೆ!
ಎಂಥ ಹೊನ್ನನು ಬೆಳೆದು ತೆಗೆಯಬಹುದಾಗಿತ್ತೊ
ಕೆಲವು ದಿನ ಮೈಮುರಿದು ದುಡಿದಿದ್ದರೆ!
ಈಗಲಾದರೂ ತಾಯ ಶ್ರೀನಾಮವೆಂತೆಂಬ
ಬೇಲಿಯನು ಕಟ್ಟಿ ನೀ ಕಾಯ್ದುಕೊಳ್ಳೋ.
ಅದಕ್ಕಿಂತ ಬಲವಾದ ಕಾವಲಿನ್ನಾವುದಿದೆ
ಮೃತ್ಯುವೂ ನಿನ್ನ ಬಳಿ ಬರಲಾರನೋ.
ಇಂದೊ ನಾಳೆಯೊ ಹೊಲವ ಹೊಲದೊಡೆಯಗೊಪ್ಪಿಸುವ
ಮುನ್ನವೇ ಎಚ್ಚೆತ್ತು ಬೆಳೆಯ ತೆಗೆಯೋ.
ಗುರುವಿತ್ತ ಮಂತ್ರವನು ಬೀಜವಾಗಿಸಿ ಬಿತ್ತಿ
ಪ್ರೇಮವಾರಿಯ ಹೊಯ್ದು ಹಸನುಗೊಳಿಸೋ.
ನಿನಗೆ ಈ ಕೆಲಸವೂ ಕಷ್ಟವಾದರೆ ಹೇಳು,
ರಾಮಪ್ರಸಾದನಿದೊ ನೆರವಿಗಿಹನೊ!
ಮತ್ತೆ:
ಸುಮ್ಮನೆ ತಿರುಗಾಟಕೆ ಬಾ ಮನವೇ
ಶ್ರೀಕಾಳೀ ಸುರತರುವಿರುವೆಡೆಗೆ!….
ಡಾಕ್ಟರ್ ಸರ್ಕಾರ್ ಗಿರೀಶನಿಗೆ ಹೇಳಿದ: “ನಿನ್ನ ಆ ಹಾಡು–ಬುದ್ಧನ ಚರಿತ್ರೆಯಲ್ಲಿ ವೀಣೆಯ ಸಂಬಂಧವಾಗಿ–ಬಹಳ ಸೊಗಸಾದುದು.”
ಶ್ರೀರಾಮಕೃಷ್ಣರ ಸಂಜ್ಞೆಗನುಸಾರ ಗಿರೀಶ ಮತ್ತು ಕಾಳೀಪದ ಇಬ್ಬರೂ ಕೂಡಿ ಹಾಡಲಾರಂಭಿಸಿದ್ದಾರೆ:
ನೋಡಿದುವೆ ನನ್ನ ಸುಮಧುರ ವೀಣೆ,
ನುಡಿಸು ಬಾ ಒಲವೇ….
ಮತ್ತೆ:
ಹಾ! ಸುತ್ತುತ್ತಿರುವೆವು. ವಿಶ್ರಾಂತಿಯಿನಿತಿಲ್ಲ
ಬಂದುದೆಲ್ಲಿಂದಲೋ! ನಡೆವುದೆಲ್ಲೋ?
ಅವರು ಮತ್ತೆ ಹಾಡುತ್ತಿದ್ದಾರೆ:
ಹರಿಯ ನಾಮದ ಸುಧೆಯನೆರೆಯುತ
ಜಗದ ಸಂತೆಯ ಮಂದಿಗೆ,
ನನ್ನ ಒಲವಿನ ಹೊನಲಿನಲೆಗಳ ನಾನೆ ತಂದೆನು ಮೇಲಕೆ!
ಈಗ ದುಃಖದ ಹೊನಲು ನನ್ನನು ತೇಲಿಸಿಹುದೋ ಸುಮ್ಮನೆ!
ಹರಣ ಹೋಗುವ ತೆರದಿ ನಡುಗಿದೆ ಭೀತಗೊಂಡೀ ನನ್ನೆದೆ
ಯಾರಿಗೊರೆಯಲಿ? ಓವೊ ನಿತ್ಯಾನಂದ ಗುರುವರ ನನ್ನನು!
ಎತ್ತಿ ರಕ್ಷಿಸೊ–ಎಂದು ಬೇಡುವೆ ದೈನ್ಯದಿಂದಲಿ ನಿನ್ನನು!
ಬಳಿಕ ಅವರು ಹಾಡುತ್ತಿದ್ದಾರೆ:
ಬಾ, ಜಗಾಯಿ; ಬಾ ಮಾಧಾಯಿ;
ಹರಿನಾಮವ ಸವಿದಾನಂದದಿ ಕುಣಿಯೋಣ
ಹೊಡೆದರೇನು ಬಿಡಿ ನೀವೆನ್ನ,
ಹರಿಕೀರ್ತನೆಯಲಿ ಮರೆಯೋಣ!
ಓ ಗೆಳೆಯರೆ ಹರಿನಾಮವ
ಹಾಡಿರೊ ಮನದಣಿಯೆ.
ಅವನೇ ಒಲಿದೈತರುವನು ನಿಮ್ಮೆಡೆ;
ಅಪ್ಪುವನೆದೆಯೊಳಗೆ.
ನಾಕನಾಕಕೂ ತಟ್ಟಲಿ ನಿಮ್ಮುಲಿ;
ಚಿಮ್ಮಲಿ ಭಕ್ತಿಯು ಎದೆ ತುಂಬ.
ಅವನಿಗಾಗಿ ನೀ ಕಂಬನಿಗರೆಯಲು
ಮೂಡುವುದೆದೆಯೊಳು ಶಶಿಬಿಂಬ!
ನಿತ್ಯಾನಂದನು ಕರೆವನು ಬನ್ನಿ,
ಹರಿನಾಮವ ನಿಮಗೀಯುವನು.
ಅವನ ಒಲವಿನಲಿ ನಿಮ್ಮ ಪಾಲನೂ
ಸವಿಯಲು ನಿಮ್ಮನು ಕರೆಯುವನು!
ಕೊನೆಯದಾಗಿ ಹಾಡುತ್ತಿದ್ದಾರೆ:
ಓ ಬನ್ನಿ, ಎಲ್ಲರೂ ಬನ್ನಿ
ರಾಧಾಪ್ರೇಮ ಹೊಳೆ ಹರಿಯುತಿದೆ,…
ಈ ಹಾಡುಗಳನ್ನು ಕೇಳುತ್ತ ಕೇಳುತ್ತ ಇದ್ದ ಹಾಗೆ ಇಬ್ಬರು ಮೂವರು ಭಕ್ತರು -ಲಾಟು, ಮಣೀಂದ್ರ, ಇತ್ಯಾದಿ–ಭಾವಸ್ಥರಾಗಿಬಿಟ್ಟಿದ್ದಾರೆ. ಲಾಟು ನಿರಂಜನನ ಪಕ್ಕದಲ್ಲಿ ಕುಳಿತಿದ್ದ. ಈಗ ಡಾಕ್ಟರ್ ಸರ್ಕಾರ್ ಪರಮಹಂಸರೊಡನೆ ಮಾತುಕತೆಗಳನ್ನಾಡುತ್ತಿದ್ದಾನೆ.
ನಿನ್ನೆ ಡಾಕ್ಟರ್ ಪ್ರತಾಪಚಂದ್ರ ಮಜುಮದಾರ ಪರಮಹಂಸರಿಗೆ “ನಕ್ಸ್ ವಾಮಿಕ” ಎಂಬ ಔಷಧವನ್ನು ವಿಧಿಸಿಹೋಗಿದ್ದ. ಅದನ್ನು ಕೇಳಿ ಡಾಕ್ಟರ್ ಸರ್ಕಾರ್ ಕೋಪಗೊಂಡ.
ಡಾಕ್ಟರ್ ಸರ್ಕಾರ್: “ಇವರಿಗೆ ನಕ್ಸ್ ವಾಮಿಕವೆ! ನಾನು ಇನ್ನೂ ಸತ್ತುಹೋಗಿ ಬಿಟ್ಟಿಲ್ಲವಲ್ಲ!”
ಶ್ರೀರಾಮಕೃಷ್ಣರು (ನಗುತ್ತ): “ನೀನೇಕೆ ಸಾಯಬೇಕು? ದೇವರ ದಯೆಯಿಂದ ಹಾಗಾಗದಿರಲಿ! ನಿನ್ನ ಅವಿದ್ಯೆ ಬೇಕಾದರೆ ಸಾಯಲಿ!”
ಡಾಕ್ಟರ್: “ನಾನು ಅವಿದ್ಯೆಯ ತಂಟೆಗೇ ಹೋದವನಲ್ಲವಲ್ಲ.”
ಡಾಕ್ಟರ್ ಸರ್ಕಾರ್ “ಅವಿದ್ಯೆ” ಎಂದರೆ “ಉಪಪತ್ನಿ” ಅಂತ ಅರ್ಥಮಾಡಿಕೊಂಡ.
ಶ್ರೀರಾಮಕೃಷ್ಣರು (ನಗುತ್ತ): “ಓ ಅದಲ್ಲ! ನನ್ನ ಅಭಿಪ್ರಾಯ ಅದಲ್ಲ. ಸಂನ್ಯಾಸಿಯ ಸಂಬಂಧವಾಗಿ ಒಂದು ಹೇಳಿಕೆ ಇದೆ. ಆತನ ತಾಯಿ ‘ಅವಿದ್ಯೆ’ ಎಂಬುವಳು ‘ವಿವೇಕ’ ಎಂಬ ಪುತ್ರನನ್ನು ಹೆತ್ತು, ಆ ಬಳಿಕ ಸತ್ತುಹೋಗಿಬಿಡುತ್ತಾಳೆ ಅಂತ. ‘ಅವಿದ್ಯೆ’ ಎಂಬ ತಾಯಿ ಸತ್ತುಹೋದುದಕ್ಕಾಗಿ ಸಂನ್ಯಾಸಿಗೆ ಸೂತಕ ಬರುತ್ತದೆ. ಅದಕ್ಕಾಗಿಯೇ ಸಂನ್ಯಾಸಿಯನ್ನು ಮುಟ್ಟಕೂಡದು ಅಂತ ಜನ ಹೇಳುವುದು.”
ಹರಿವಲ್ಲಭ ಬಂದಿದ್ದಾನೆ. ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ: “ನಿನ್ನನ್ನು ನೋಡಿದರೇನೇ ನನಗೆ ಆನಂದ.” ಆತನದು ಅತ್ಯಂತ ನಮ್ರಭಾವ. ಮಂದಲಿಗೆ ಮೇಲೆ ಕುಳಿತುಕೊಳ್ಳದೆ ನೆಲದ ಮೇಲೆ ಕುಳಿತು ಬೀಸಣಿಗೆಯಿಂದ ಪರಮಹಂಸರಿಗೆ ಗಾಳಿ ಬೀಸುತ್ತಿದ್ದಾನೆ. ಆತ ಕಟಕ್ಕಿನಲ್ಲಿ ಒಬ್ಬ ದೊಡ್ಡ ವಕೀಲ. ಪ್ರೊಫೆಸರ್ ನೀಲಮಣಿ ಆತನ ಹತ್ತಿರ ಕುಳಿತಿದ್ದಾನೆ. ಆತನನ್ನು ಸಂತುಷ್ಟಗೊಳಿಸಲು ಹೇಳುತ್ತಿದ್ದಾರೆ: “ಇಂದು ಬಹಳ ಒಳ್ಳೆಯ ದಿನ.”
ಕೆಲವು ನಿಮಿಷಗಳಾದ ನಂತರ ಡಾಕ್ಟರ್ ಸರ್ಕಾರ್ ಮತ್ತು ನೀಲಮಣಿ ಪರಮಹಂಸರಿಂದ ಬೀಳ್ಕೊಂಡರು. ಹರಿವಲ್ಲಭನೂ ಅವರಿಂದ ಬೀಳ್ಕೊಂಡ. ಬೀಳ್ಕೊಳ್ಳುವಾಗ ಆತ ಹೇಳಿದ: “ಮತ್ತೆ ಬರುತ್ತೇನೆ.”
ಘಂಟೆ ರಾತ್ರಿ ಏಳು. ಪರಮಹಂಸರ ಕೊಠಡಿಯಲ್ಲೇ ಪೂಜೆ ನಡೆಯುವ ಹಾಗೆ ವ್ಯವಸ್ಥೆ ಆಗಿದೆ. ಕೆಂಪು ದಾಸವಾಳವೇ ಮೊದಲಾದ ಬಗೆಬಗೆಯ ಹೂವುಗಳು, ಚಂದನ, ಬಿಲ್ವಪತ್ರೆ, ಪಾಯಸ, ವಿವಿಧ ಸಿಹಿ ತಿಂಡಿಗಳು ಇವನ್ನೆಲ್ಲ ಭಕ್ತರು ಪರಮಹಂಸರ ಸಮ್ಮುಖಕ್ಕೆ ತಂದು ಇಟ್ಟರು. ಈಗ ಭಕ್ತರೆಲ್ಲರು ಅವರ ಸುತ್ತಲೂ ಕುಳಿತಿದ್ದಾರೆ. ಶರಚ್ಚಂದ್ರ, ಶಶಿ, ರಾಮ, ಗಿರೀಶ, ಚುಣಿಲಾಲ, ಮಾಸ್ಟರ್, ರಾಖಾಲ, ನಿರಂಜನ, ಚಿಕ್ಕ ನರೇನ್, ಬಿಹಾರಿ ಇವರೆಲ್ಲ ಅಲ್ಲಿ ಕುಳಿತಿದ್ದಾರೆ.
ಪರಮಹಂಸರು ಒಬ್ಬ ಭಕ್ತನಿಗೆ ಹೇಳಿದರು, ಕೆಲವು ಗಂಧದಕಡ್ಡಿಗಳನ್ನು ತೆಗೆದು ಕೊಂಡು ಬರುವ ಹಾಗೆ. ಕೆಲವು ನಿಮಿಷಗಳಾದನಂತರ ಪರಮಹಂಸರು ಅವನ್ನೆಲ್ಲ ಜಗನ್ಮಾತೆಗೆ ನಿವೇದನೆ ಮಾಡಿದರು. ಮಾಸ್ಟರ್ ಅವರ ಹತ್ತಿರವೇ ಕುಳಿತಿದ್ದಾನೆ. ಮಾಸ್ಟರ್ ಕಡೆಗೆ ನೋಡುತ್ತ ಭಕ್ತರಿಗೆ ಹೇಳುತ್ತಿದ್ದಾರೆ: “ಸ್ವಲ್ಪ ಹೊತ್ತು ನೀವೆಲ್ಲ ಧ್ಯಾನಮಾಡುತ್ತ ಇರಿ.” ಈಗ ಭಕ್ತರೆಲ್ಲರೂ ಧ್ಯಾನದಲ್ಲಿ ತೊಡಗಿದ್ದಾರೆ.
ಇದ್ದಕ್ಕಿದ್ದ ಹಾಗೆ ಗಿರೀಶ ಪರಮಹಂಸರ ಪಾದಪದ್ಮಗಳಿಗೆ ಹೂವಿನ ಮಾಲೆಯನ್ನು ಅರ್ಪಿಸಿಬಿಟ್ಟ. ಮಾಸ್ಟರೂ ಗಂಧಪುಷ್ಪಗಳನ್ನು ಈಗ ಅರ್ಪಿಸುತ್ತಿದ್ದಾನೆ. ಬಳಿಕ ರಾಖಾಲ, ರಾಮ, ಹಾಗೇನೆ ಉಳಿದವರೆಲ್ಲರೂ ಒಬ್ಬೊಬ್ಬರಾಗಿ ಪರಮಹಂಸರ ಪಾದಪದ್ಮಗಳಿಗೆ ಗಂಧಪುಷ್ಪಗಳನ್ನು ಅರ್ಪಿಸಲಾರಂಭಿಸಿದರು.
ಪರಮಹಂಸರ ಪಾದಗಳಿಗೆ ಗಂಧಪುಷ್ಪಗಳನ್ನು ಅರ್ಪಿಸಿದ ನಂತರ ನಿರಂಜನ ಕೂಗಲಾರಂಭಿಸಿದ: “ಬ್ರಹ್ಮಮಯಿ! ಬ್ರಹ್ಮಮಯಿ!” ಬಳಿಕ ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ. ಅನಂತರ ಭಕ್ತರೆಲ್ಲರೂ ಕೂಡಿ ಘೋಷಿಸಲಾರಂಭಿಸಿದರು: “ಜೈ ಮಾ! ಜೈ ಮಾ!”
ರೆಪ್ಪೆ ಹೊಡೆಯುವುದರೊಳಗಾಗಿ ಪರಮಹಂಸರು ಗಾಢ ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಏನು ಆಶ್ಚರ್ಯ! ಭಕ್ತರ ಕಣ್ಣೆದುರಿಗೇನೆ ಈ ಅದ್ಭುತ ರೂಪಾಂತರ ಪರಮಹಂಸರಲ್ಲಿ ಸಂಭವಿಸಿಬಿಟ್ಟಿತು. ಅವರ ಮುಖ ಜ್ಯೋತಿಯನ್ನು ಸುಮ್ಮನೆ ಚೆಲ್ಲುತ್ತಿದೆ. ಅವರ ಎರಡು ಕೈಗಳು ವರಾಭಯವನ್ನು ಕೊಡುತ್ತಿವೆ. ಶರೀರ ಸ್ಪಂದಹೀನವಾಗಿವೆ; ಬಾಹ್ಯಜ್ಞಾನಶೂನ್ಯ ವಾಗಿದೆ. ಉತ್ತರಾಭಿಮುಖರಾಗಿ ಕುಳಿತಿದ್ದಾರೆ. ಸಾಕ್ಷಾತ್ ಜಗನ್ಮಾತೆಯೇ ಇವರ ಮೂಲಕ ಆವಿರ್ಭಾವಳಾಗಿರಬಹುದೆ? ಎಲ್ಲರೂ ಆಶ್ಚರ್ಯಚಕಿತರಾಗಿ ಪರಮಹಂಸರ ರೂಪಿನಲ್ಲಿ ಆವಿರ್ಭಾವಳಾಗಿರುವ ಈ ಅದ್ಭುತ ವರಾಭಯದಾಯಿನಿ ಜಗನ್ಮಾತೆಯ ದರ್ಶನ ಮಾಡುತ್ತಿದ್ದಾರೆ.
ಈಗ ಭಕ್ತರೆಲ್ಲರೂ ಕೂಡಿ ಆಕೆಯ ಸ್ತೋತ್ರಗಳನ್ನು ಹಾಡಲಾರಂಭಿಸಿದ್ದಾರೆ. ಒಬ್ಬೊಬ್ಬರಾಗಿ ಹಾಡುವುದು, ಅದನ್ನು ಉಳಿದವರೆಲ್ಲರೂ ಅನುಸರಿಸುವುದು, ಈ ರೀತಿಯಾಗಿ ಮುಂದುವರಿಯುತ್ತದೆ.
ಗಿರೀಶ ಹಾಡುತ್ತಿದ್ದಾನೆ:
ಯಾರೀಕೆ? ನಿಬಿಡ ನೀಲ ಕದಂಬಿನಿಯಂತೆ
ಸುರ ಸಮಾಜದ ನಡುವೆ ರಾಜಿಸುವಳುಣ
ಯಾರಿವಳು? ಹರನುದರದಲಿ ತನ್ನ ರಕ್ತಾಂಘ್ರಿ
ಉತ್ಪಲಂಗಳನಿಂತು ಸ್ಥಾಪಿಸಿಹಳು!
ಯಾರವೀ ಪದನಖಗಳಿಂತು ಚಂದ್ರನ ತೆರದಿ ರಾಜಿಸಿಹವು?
ಯಾರವೀ ಪಾದಗಳು ಸೂರ್ಯನಂದದಿ ತಾನೆ ಬೆಳಗುತಿಹವು?
ಯಾರಿವಳು? ಮೃದುಮಧುರಹಾಸಮುಖಿಯಾದರೂ
ಅಟ್ಟಹಾಸದಿ ಜಗವ ತುಂಬುತಿಹಳು!
ಮತ್ತೆ:
ದೀನತಾರಿಣಿ ನೀನು ದುರಿತಹಾರಿಣಿ ನೀನು
ಸತ್ರಜತಮಗಳಿಗೆ ಆಧಾರೆ ನೀನು….
ಬಿಹಾರಿ ಹಾಡುತ್ತಿದ್ದಾನೆ:
ಶವಾಸನದ ಮೇಲಿರುವ ಓ ನನ್ನ ಘನಶ್ಯಾಮೆ,
ನನ್ನೆದುರು ಕರೆಯನ್ನು ಕೇಳು ತಾಯಿ,
ಆಗಲೋ ಈಗಲೋ ಹರಣ ಹಾರುವ ಮುನ್ನ
ನನ್ನಂತರಂಗದಲಿ ಉದಯಿಸಮ್ಮಾ.
ಆಗ ನನ್ನೆದೆಯೊಳಗೆ ತುಂಬಿರುವ ಬನದಿಂದ
ದಿವ್ಯ ಪುಷ್ಪಗಳನ್ನು ಕಿತ್ತು ತಂದು,
ಪ್ರೇಮ ಶ್ರೀಗಂಧದಲಿ ಅದ್ದಿ ನಿನ್ನಡಿಗಳನು
ನಾನು ಪೂಜಿಪೆನಮ್ಮ ಭಕ್ತಿಯಿಂದ.
ಮಾಸ್ಟರ್ ಉಳಿದ ಭಕ್ತರೊಡನೆ ಹಾಡುತ್ತಿದ್ದಾನೆ:
ಎಲ್ಲವೂ ನಿನ್ನಿಚ್ಛೆಯಂತೆ ನಡೆದಿರಲು
ನೀನೆ ಭವಸಾಗರವ ದಾಟಿಸುವ ಹಡಗು….
ಅವರು ಮತ್ತೆ ಹಾಡುತ್ತಿದ್ದಾರೆ:
ನಿನ್ನೊಂದು ಕರುಣೆಯಿಂದಾಗದಿಹುದೇನಿಹುದು?
ಏನನಾದರು ನಾವು ಪಡೆಯಬಹುದು.
ಬೆಟ್ಟದಂತಹ ಕಷ್ಟ ಕರಗಿ ನೀರಾಗುವುದು.
ಮಂಗಳದ ಮನೆ ನೀನೆ, ಸುಖಶಾಂತಿದಾತೆ!
ಆದರೂ ಏಕಿಂತು ನನ್ನ ಬಳಲಿಸುತಿರುವೆ
ಸೋಲುಗೆಲುವಿನ ವಿಫಲ ಲೀಲೆಯೊಳಗೆ?
ಮತ್ತೆ:
ನಿನ್ನ ನಿತ್ಯಾನಂದದಾಚೆಗೆ ತಳ್ಳದಿರು ನೀನೆನ್ನನು.
ನಿನ್ನ ಪಾದವನಲ್ಲದೀತನು ಬೇರೆ ಏನೂ ಕಾಣನು….
ಕೊನೆಯದಾಗಿ:
ಮಿರುಗುತಿದೆ ನಿನ್ನ ಆ ರೂಪರಾಶಿ ನಿಬಿಡಾಂಧಕಾರದಲ್ಲಿ
ನಿನ್ನನದರಿಂದಲೇ ನೆನೆವರೌ ಯೋಗಿಗಳು ಗಿರಿಗುಹೆಗಳಲ್ಲಿ!….
ಶ್ರೀರಾಮಕೃಷ್ಣರು ಕ್ರಮೇಣ ಪ್ರಕೃತಿಸ್ಥರಾಗುತ್ತಿದ್ದಾರೆ. ಅವರು ಭಕ್ತರಿಗೆ: “ದಿವ್ಯ ಮಧುಪಾನದಲಿ ಉನ್ಮತ್ತಳಾಗಿರುವ” ಎಂಬ ಹಾಡನ್ನು ಹಾಡುವಂತೆ ಹೇಳಿದರು.
ಭಕ್ತರು ಹಾಡುತ್ತಿದ್ದಾರೆ:
ದಿವ್ಯ ಮಧುಪಾನದಲಿ ಉನ್ಮತ್ತಳಾಗಿರುವ
ನಿನ್ನ ಈ ಲೀಲೆಯನು ತಿಳಿವರಾರು?….
ಮತ್ತೆ ಪರಮಹಂಸರು ಭಕ್ತರಿಗೆ, “ಶಿವಸಂಗದೊಳಾನಂದದಿ” ಎಂಬ ಹಾಡನ್ನು ಹೇಳುವಂತೆ ಹೇಳಿದರು.
ಭಕ್ತರು ಹಾಡುತ್ತಿದ್ದಾರೆ:
ಶಿವಸಂಗದೊಳಾನಂದದಿ ತಾಯಿ ಕುಣಿಯುತಿರುವಳು.
ದಿವ್ಯ ಮಧುವ ಕುಡಿದು ಕೂಡ, ಹೆಜ್ಜೆತಪ್ಪದಿರುವಳು…
ಪರಮಹಂಸರು ಭಕ್ತವೃಂದವನ್ನು ಆನಂದಪಡಿಸಲು ಕಿಂಚಿತ್ ರವೆಪಾಯಸವನ್ನು ಬಾಯಿಗೆ ಹಾಕುವುದೇ ತಡ, ಒಡನೆಯೇ ಭಾವದಿಂದ ತುಂಬಿತುಳುಕಾಡುತ್ತಾ ಬಾಹ್ಯಜ್ಞಾನ ಶೂನ್ಯರಾಗಿಬಿಟ್ಟಿದ್ದಾರೆ.
ಕೆಲವು ನಿಮಿಷಗಳಾದನಂತರ ಭಕ್ತರೆಲ್ಲರು ಪರಮಹಂಸರಿಗೆ ಪ್ರಣಾಮಮಾಡಿ, ಕೈಯಲ್ಲಿ ಪ್ರಸಾದ ತೆಗೆದುಕೊಂಡು ಬೈಠಕ್ಖಾನೆಗೆ ಹೋದರು. ಅವರೆಲ್ಲರು ಅಲ್ಲಿ ಕುಳಿತು ಆನಂದದಿಂದ ಪ್ರಸಾದವನ್ನು ಸೇವನೆ ಮಾಡುತ್ತಾ ಇದ್ದಾರೆ.
ಘಂಟೆ ರಾತ್ರಿ ಒಂಬತ್ತು. ಪರಮಹಂಸರು ಭಕ್ತರಿಗೆ ಹೇಳಿಕಳುಹಿಸಿದರು, “ಇಂದು ಸುರೇಂದ್ರನ ಮನೆಯಲ್ಲಿ ಕಾಳೀಪೂಜೆ ನಡೆಯುತ್ತಿದೆ. ಆಗಲೆ ರಾತ್ರಿಯಾಗಿಬಿಟ್ಟಿದೆ. ನೀವು ಎಲ್ಲರೂ ಆತನ ಮನೆಗೆ ಹೋಗಿ ಕಾಳೀಪೂಜೆಯಲ್ಲಿ ಭಾಗವಹಿಸಿ” ಎಂಬುದಾಗಿ.
ಭಕ್ತರೆಲ್ಲರು ಅತ್ಯಂತ ಆನಂದದಿಂದ ಸಿಮ್ಲಾ ಬೀದಿಯಲ್ಲಿರುವ ಸುರೇಂದ್ರನ ಮನೆಗೆ ಹೋದರು. ಸುರೇಂದ್ರ ಅವರನ್ನು ಅತ್ಯಂತ ಆದರದಿಂದ ಬರಮಾಡಿಕೊಂಡು ಅವರನ್ನು ತನ್ನ ಮನೆಯ ಎರಡನೆ ಅಂತಸ್ತಿನಲ್ಲಿದ್ದ ಬೈಠಕ್ಖಾನೆಗೆ ಕರೆದುಕೊಂಡು ಹೋಗಿ ಕೂರಿಸಿದ. ಮನೆ ಉತ್ಸವದ ಅಲಂಕಾರಗಳಿಂದ ಶೋಭಿಸುತ್ತಿತ್ತು. ಭಕ್ತರ ಹಾಡುಗಾರಿಕೆ, ಸಂಗೀತ ಇವುಗಳಿಂದ ಆನಂದದ ಸಮ್ಮೇಳನವೇ ಅಲ್ಲಿ ಏರ್ಪಾಡಾಗಿಬಿಟ್ಟಿತು. ಭಕ್ತರೆಲ್ಲರು ಭಗವತಿಯ ಪ್ರಸಾದವನ್ನು ಆನಂದದಿಂದ ತೃಪ್ತಿಕರವಾಗಿ ಭುಂಜಿಸಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವುದರಲ್ಲಿ ರಾತ್ರಿ ಎರಡು ಘಂಟೆಯ ಹತ್ತಿರ ಹತ್ತಿರ ಆಗಿಬಿಟ್ಟಿತು.
1. “ಧೆರಾ” ಎನ್ನುವುದಕ್ಕೆ ಯಾವ ಅರ್ಥವೂ ಇಲ್ಲ. ಸುಮ್ಮನೆ ಸಂಭಾಷಣೆಗಳನ್ನು ಅಷ್ಟಕ್ಕೆ ಸಾಕು ಮಾಡಲು ಡಾಕ್ಟರ್ ಹೀಗೆ ಹೇಳುತ್ತಿದ್ದಾನೆ.