೨೬ನೆ ಅಕ್ಟೋಬರ್ ೧೮೮೫. ಕಾರ್ತಿಕ ಕೃಷ್ಣ ತೃತೀಯ, ಸೋಮವಾರ
ಪರಮಹಂಸರ ಗಂಟಲ ವ್ಯಾಧಿ ಗುಣವಾಗದ ರೋಗ ಅಂತ ಡಾಕ್ಟರ್ ಸರ್ಕಾರ್ ಹೇಳಿಬಿಟ್ಟಿದ್ದಾನೆ. ಈ ಸಮಾಚಾರ ಪರಮಹಂಸರ ಶಿಷ್ಯರ ಮತ್ತು ಭಕ್ತರ ಮನಸ್ಸನ್ನೆಲ್ಲ ಕಗ್ಗತ್ತಲೆಯೋಪಾದಿಯಲ್ಲಿ ಆವರಿಸಿಕೊಂಡುಬಿಟ್ಟಿದೆ. ಅವರೆಲ್ಲರು ನಿಶ್ಚಲವಾದ ಶ್ರದ್ಧಾಭಕ್ತಿಯಿಂದ ಪರಮಹಂಸರ ಸೇವೆ ಮಾಡುತ್ತಿದ್ದಾರೆ. ಯುವಕ ಶಿಷ್ಯರು ನರೇಂದ್ರನನ್ನು ತಮ್ಮ ನಾಯಕನನ್ನಾಗಿ ಮಾಡಿಕೊಂಡು ತಮ್ಮ ಇಡೀ ಜೀವನವನ್ನೇ ಭಗವಂತನ ಸಾಕ್ಷಾತ್ಕಾರಕ್ಕಾಗಿಯೂ ಮತ್ತು ಲೋಕಸೇವೆಗಾಗಿಯೂ ಮುಡಿಪಾಗಿಡಲು ಸಿದ್ಧರಾಗುತ್ತಿದ್ದಾರೆ. ಗಂಟಲು ಅತ್ಯಂತವಾಗಿ ನೋಯುತ್ತಿದ್ದರೂ ಅವರನ್ನೆಲ್ಲ ಅವರು ನಗುಮೊಗದಿಂದ ಸ್ವಾಗತಿಸುತ್ತಿದ್ದಾರೆ. ಅವರೆಲ್ಲರ ಹಿತಚಿಂತನೆಗಾಗಿ ಅವರು ಪಡುತ್ತಿರುವ ಹಂಬಲಕ್ಕೆ ಮಿತಿಯೇ ಇಲ್ಲದುದಾಗಿದೆ. ಅವರು ಭಕ್ತರೊಡನೆ ಭಗವಂತನ ವಿಷಯವಾಗಿ ಮಾತನಾಡುವಾಗ ಅವರ ಮುಖದಿಂದ ಆನಂದ ಎಂಬುದು ಸುಮ್ಮನೆ ಚಿಮ್ಮುತ್ತಿರುತ್ತದೆ. ಪರಮಹಂಸರ ಗಂಟಲ ರೋಗವನ್ನು ಗಮನಿಸುತ್ತಿರುವ ಡಾಕ್ಟರ್ ಅವರಿಗೆ ಹೇಳಿದ್ದಾನೆ, ಮಾತುಕತೆಯಾಡಕೂಡದು ಅಂತ. ಆದರೆ ತನ್ನ ವಿಷಯವಾಗಿ ಮಾತ್ರ ಪರಮಹಂಸರಿಗೆ ಹೇಳಿದ್ದ, “ನೀವು ಜನಗಳೊಡನೆ ಮಾತುಕತೆಯಾಡಕೂಡದು, ಆದರೆ ನನ್ನೊಡನೆ ಮಾತ್ರ ನೀವು ಹಾಗೆ ಮಾಡಬೇಕಾಗಿಲ್ಲ.” ಪರಮಹಂಸರ ಬಾಯಿಂದ ಬೀಳುವ ಮಾತಿನ ಮುತ್ತುಗಳನ್ನು ಆರಿಸಿಕೊಳ್ಳಲು ಆತ ಅಲ್ಲಿಗೆ ಬಂದಾಗಲೆಲ್ಲ ತನ್ನ ಏಳು ಘಂಟೆಗಳ ಕಾಲವನ್ನು ಪರಮಹಂಸರೊಡನೆಯೇ ಕಳೆದುಬಿಡುತ್ತಿದ್ದ.
ಘಂಟೆ ಬೆಳಗಿನ ಹತ್ತು. ಪರಮಹಂಸರ ದೇಹಾರೋಗ್ಯದ ವರದಿಯನ್ನು ದಿವಸವೂ ಡಾಕ್ಟರ್ ಸರ್ಕಾರನಿಗೆ ತಿಳಿಸಬೇಕಾಗಿದೆ. ಅದಕ್ಕಾಗಿ ಮಾಸ್ಟರ್ ಪರಮಹಂಸರನ್ನು ಅವರ ದೇಹಾರೋಗ್ಯದ ಸಂಬಂಧವಾಗಿ ಕೇಳುತ್ತಿದ್ದಾನೆ.
ಶ್ರೀರಾಮಕೃಷ್ಣರು: “ನನ್ನ ರೋಗ ಈಗ ಎಷ್ಟೋ ಕಡಿಮೆಯಾಗಿಬಿಟ್ಟಿದೆ. ಬಹಳ ಆನಂದದಿಂದ ಇದ್ದೇನೆ. ಒಳ್ಳೇದು; ನನ್ನನ್ನು ಹೀಗೆ ಮಾಡಿದ್ದು ಈ ಔಷಧವೇನು? ಹಾಗಾದರೆ ಇದನ್ನೇ ಏಕೆ ಮುಂದುವರಿಸಬಾರದು?”
ಮಾಸ್ಟರ್: “ಈಗ ನಾನು ಡಾಕ್ಟರ್ ಮನೆಗೆ ಹೋಗುತ್ತಿದ್ದೇನೆ. ಎಲ್ಲವನ್ನೂ ತಿಳಿಸುತ್ತೇನೆ. ಯಾವುದು ಒಳ್ಳೆಯದು ಎಂಬುದನ್ನು ಅವನು ತಿಳಿಸುತ್ತಾನೆ.”
ಶ್ರೀರಾಮಕೃಷ್ಣರು: “ನೋಡು, ಪೂರ್ಣ ಎರಡು ಮೂರು ದಿನದಿಂದ ಬರಲೇ ಇಲ್ಲ. ಮನಸ್ಸಿಗೆ ಆತನ ಚಿಂತನೆ ಹತ್ತಿಬಿಟ್ಟಿದೆ.”
ಮಾಸ್ಟರ್ (ಕಾಳಿಗೆ): “ನೀನು ಹೋಗಿ ಏಕೆ ಪೂರ್ಣನನ್ನು ಕರೆದುಕೊಂಡು ಬರಬಾರದು?”
ಕಾಳಿ: “ಇಗೋ ಹೊರಟೆ.”
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಡಾಕ್ಟರ್ ಮಗ ಬಹಳ ಒಳ್ಳೆ ಹುಡುಗ. ಒಮ್ಮೆ ಇಲ್ಲಿಗೆ ಬಂದುಹೋಗುವಂತೆ ಹೇಳು.”
ಮಾಸ್ಟರ್, ಡಾಕ್ಟರ್ ಮನೆಗೆ ಬಂದು ನೋಡಿದಾಗ, ಆತ ಒಬ್ಬಿಬ್ಬರು ಸ್ನೇಹಿತರೊಡನೆ ಮಾತುಕತೆಯಾಡುತ್ತಿದ್ದುದು ಆತನ ಕಣ್ಣಿಗೆ ಬಿತ್ತು.
ಡಾಕ್ಟರ್ (ಮಾಸ್ಟರಿಗೆ): “ನಿನ್ನ ವಿಷಯವಾಗಿಯೇ ಈಗೊಂದು ನಿಮಿಷದ ಹಿಂದೆ ಮಾತಾಡುತ್ತಿದ್ದೆ. ನೀನು ಹತ್ತು ಘಂಟೆಗೆ ಬರುತ್ತೇನೆ ಅಂತ ಹೇಳಿದ್ದೆ; ನಿನಗಾಗಿ ಈಗ ಒಂದೂವರೆ ಘಂಟೆಯಿಂದಲೂ ಕಾದು ಕುಳಿತಿದ್ದೇನೆ. ನೀನು ತಡಮಾಡಿದುದನ್ನು ನೋಡಿ ಅವರಿಗೆ (ಪರಮಹಂಸರಿಗೆ) ಏನೊ ಎತ್ತಲೊ ಅಂತ ಭಾವಿಸುತ್ತಿದ್ದೆ.
(ಒಬ್ಬ ಸ್ನೇಹಿತನಿಗೆ) “ನೀನು ಆ ಹಾಡನ್ನು ಹಾಡು.”
ಸ್ನೇಹಿತ ಹಾಡುತ್ತಿದ್ದಾನೆ:
ಯಾರ ಮಹಿಮಾಜ್ಯೋತಿ ಜಗವನು
ಅಮೃತದಂದದಿ ಎಲ್ಲರೆದೆಯನು
ತುಂಬಿ ರೋಮಾಂಚನವ ಗೈವುದೊ
ಅಂಥ ಪ್ರೇಮ ಜಲಧಿಯ,
ಜೀವ ನಿನ್ನೊಳಗಿರುವವರೆಗೂ
ಸಾರು ಆತನ ಮಹಿಮೆಯ!
ಯಾರ ಶ್ರೀ ಶುಭನಾಮ ಹೃದಯದ
ಕೊರಗನೆಲ್ಲವ ಕಳೆವುದೋ,
ಯಾರು ನೆಲ ಜಲ ಗಗನ ದೇಶವ-
ನೆಲ್ಲ ವ್ಯಾಪಿಸಿ ನಿಲುವರೋ,
ಯಾರ ಅನ್ವೇಷಣೆಯಲೀ ಜಗ
ಬರಿದೆ ತೊಳಲುತಲಿರುವುದೋ,
ಅಂಥ ದೇವನ ತಿಳಿದು ಬಣ್ಣಿಪ
ಶಕ್ತಿ ಯಾರಿಗೆ ಲಭಿಸಿದೆ?
ಅವನ ಮಹಿಮೆಗೆ ಪಾರವೆಲ್ಲಿದೆ?
ಆದಿ ಅಂತ್ಯಗಳೆಲ್ಲಿದೆ?
ನಿಜದ ತಿಳಿವಿನ ತವರು ಅವನು
ನಿತ್ಯಜೀವನ ಚೇತನನಿತ್ಯಜಾಗ್ರತ ನಿರ್ನಿಮೇಷನು
ದಿವ್ಯ ಶುದ್ಧ ನಿರಂಜನ,
ಅವನ ದರುಶನ ಕಿಲುಬನು
ತೊಳೆದು ಗೈವುದು ಪಾವನ!
ಡಾಕ್ಟರ್ (ಮಾಸ್ಟರಿಗೆ): “ಅದು ಬಹಳ ಒಳ್ಳೆಯ ಹಾಡು, ಅಲ್ಲವೇನು? ‘ಅವನ ಮಹಿಮೆಗೆ ಪಾರವೆಲ್ಲಿದೆ? ಆದಿ ಅಂತ್ಯಗಳೆಲ್ಲಿದೆ?’ ಎಂಬ ಚರಣಗಳು ನಿನಗೆ ಹೇಗೆ ತೋರುತ್ತಿವೆ?”
ಮಾಸ್ಟರ್: “ಹೌದು, ಅವು ಬಹಳ ಒಳ್ಳೆಯ ಚರಣಗಳು. ಭಗವಂತನ ಅನಂತತೆಯ ಭಾವನೆಯನ್ನು ಮನಸ್ಸಿಗೆ ತರುತ್ತವೆ.”
ಡಾಕ್ಟರ್ (ಸ್ನೇಹದಿಂದ ಮಾಸ್ಟರಿಗೆ): “ಆಗಲೇ ಬಹಳ ಹೊತ್ತು ಮುಂದುವರಿದಿದೆ. ಊಟಮಾಡಿ ಬಂದಿದ್ದೀಯೆ ತಾನೆ? ಹತ್ತು ಘಂಟೆಯ ಒಳಗೆ ನನ್ನ ಊಟ ಮುಗಿದು ಹೋಗುತ್ತದೆ, ಬಳಿಕ ರೋಗಿಗಳನ್ನು ನೋಡಿಬರಲು ಹೊರಡುತ್ತೇನೆ. ಊಟ ಮಾಡದೆ ಹೊರಕ್ಕೆ ಹೊರಟೆನೆಂದರೆ, ಕಾಯಿಲೆ ಬೀಳುತ್ತೇನೆ. ನೋಡು ಒಂದು ದಿನ ನಿಮ್ಮೆಲ್ಲರಿಗೂ ಊಟಕ್ಕೆ ಏರ್ಪಾಡು ಮಾಡಬೇಕು ಅಂತ ಭಾವಿಸಿದ್ದೇನೆ.”
ಮಾಸ್ಟರ್: “ಮಹಾಶಯರೆ, ಅದು ಬಹಳ ಒಳ್ಳೆಯದೆ.”
ಡಾಕ್ಟರ್: “ಹಾಗಾದರೆ, ಇಲ್ಲೊ ಅಲ್ಲೊ? ನೀವು ಹೇಳಿದ ಹಾಗೆ.”
ಮಾಸ್ಟರ್: “ಇಲ್ಲೊ ಎಲ್ಲೊ, ಎಲ್ಲಾದರೂ ಸರಿಯೇ. ಎಲ್ಲರೂ ನಿಮ್ಮೊಡನೆ ಆನಂದ ಪಡುತ್ತೇವೆ.”
ಈಗ ಭಗವತಿ ಕಾಳಿಯ ಮಾತು ಆರಂಭವಾಯಿತು.
ಡಾಕ್ಟರ್: “ಕಾಳಿಯು ಸಂತಾಲರ (ಸಂತಾಲ ಜಾತಿಗೆ ಸೇರಿದ) ಹೆಂಗಸು.”
ಮಾಸ್ಟರ್ (ಗಟ್ಟಿಯಾಗಿ ನಗುತ್ತ): “ಅದನ್ನು ನೀವು ಎಲ್ಲಿ ಓದಿದಿರಿ?”
ಡಾಕ್ಟರ್: “ಓ, ಹಾಗೆಂದು ಯಾರೋ ಹೇಳಿದರು.” (ಮಾಸ್ಟರ್ ನಗುತ್ತಿದ್ದಾನೆ.)
ನಿನ್ನೆ ವಿಜಯನೆ ಮೊದಲಾದ ಭಕ್ತರಿಗೆ ಪರಮಹಂಸರ ಕೊಠಡಿಯಲ್ಲಿ ಭಾವ-ಸಮಾಧಿ ಉಂಟಾಗಿತ್ತು. ಆಗ ಡಾಕ್ಟರೂ ಅಲ್ಲಿ ಇದ್ದ. ಈಗ ಅದರ ಸಂಬಂಧವಾಗಿ ಮಾತುಕತೆ ಆರಂಭವಾಯಿತು.
ಡಾಕ್ಟರ್: “ನಿನ್ನೆ ಭಾವಾವೇಶ ಎಂದರೆ ಏನು ಎಂಬುದನ್ನು ನೋಡಿದೆ. ಅಧಿಕವಾದ ಭಾವಾವೇಶ ಒಳ್ಳೆಯದೇನು?”
ಮಾಸ್ಟರ್: “ಪರಮಹಂಸರು ಹೇಳುತ್ತಾರೆ, ಭಗವಚ್ಚಿಂತನೆಯಿಂದ ಯಾವ ಭಾವಾವೇಶ ಉಂಟಾಗುವುದೊ ಅದು ಹೆಚ್ಚಾಗಿ ಆದರೂ ಯಾವ ತೊಂದರೆಯೂ ಬಾರದು. ಹೇಳುತ್ತಾರೆ, ವಜ್ರದ ಪ್ರಭೆ ಬೆಳಕನ್ನು ಕೊಡುತ್ತದೆ. ಅದು ತಂಪಾಗಿರುವುದೇ ವಿನಾ ಸುಡದು.”
ಡಾಕ್ಟರ್: “ವಜ್ರದ ಬೆಳಕೆ! ಅದು ಪ್ರತಿಬಿಂಬಿತ ಬೆಳಕು ಮಾತ್ರ.”
ಮಾಸ್ಟರ್: “ಅವರು ಇನ್ನೂ ಹೇಳುತ್ತಾರೆ, ಮನುಷ್ಯ ಅಮೃತ ಸರೋವರದಲ್ಲಿ ಮುಳುಗಿದನೆಂದರೆ ಸಾಯುವುದಿಲ್ಲ. ಭಗವಂತನೇ ಆ ಅಮೃತ ಸರೋವರ. ಅದರಲ್ಲಿ ಮುಳುಗಿದರೆ ಮನುಷ್ಯನಿಗೆ ಯಾವ ಅನಿಷ್ಟವೂ ಬರದು; ಅದಕ್ಕೆ ಬದಲು ಆತ ಅಮರನಾಗಿ ಬಿಡುತ್ತಾನೆ. ಭಗವಂತನಲ್ಲಿ ವಿಶ್ವಾಸವಿದ್ದದ್ದೇ ಆದರೆ ನಿಸ್ಸಂದೇಹವಾಗಿ ಆತ ಅಮರನಾಗಿ ಬಿಡುತ್ತಾನೆ.”
ಡಾಕ್ಟರ್: “ಹೌದು, ಅದೇನೋ ನಿಜ.”
ಡಾಕ್ಟರ್ ಮಾಸ್ಟರೊಡನೆ ಗಾಡಿಯನ್ನು ಹತ್ತಿದ. ಶ್ಯಾಮಪುಕುರಕ್ಕೆ ಹೋಗುವ ಮುನ್ನ ಡಾಕ್ಟರ್ ನಾಲ್ಕೈದು ರೋಗಿಗಳನ್ನು ನೋಡಿ ಹೋಗಬೇಕಾಗಿದೆ. ಗಾಡಿಯಲ್ಲಿ ಮಾತುಕತೆ ಆರಂಭವಾಯಿತು. ಡಾಕ್ಟರ್, ಮಹಿಮಚರಣನ ಅಹಂಕಾರದ ಸಂಬಂಧವಾಗಿ ಮಾತೆತ್ತಿದ.
ಮಾಸ್ಟರ್: “ಆತ ಪರಮಹಂಸರ ಹತ್ತಿರಕ್ಕೆ ಬಂದುಹೋಗುವುದು ಮಾಡುತ್ತಾ ಇದ್ದಾನೆ. ಆತನಲ್ಲಿ ಈಗ ಸ್ವಲ್ಪ ಅಹಂಕಾರವಿದ್ದರೂ ಅದು ಹೆಚ್ಚು ದಿನ ಉಳಿಯುವ ಹಾಗಿಲ್ಲ. ಅವರ ಹತ್ತಿರ ಕುಳಿತರೇ ಮನುಷ್ಯನ ಅಹಂಕಾರ ಕಾಲಿಗೆ ಬುದ್ಧಿ ಹೇಳುತ್ತದೆ. ಅದು ಚೂರ್ಣವಾಗಿ ಹೋಗುತ್ತದೆ. ಪರಮಹಂಸರಲ್ಲಿ ಅಹಂಕಾರವೆಂಬುದೇ ಇಲ್ಲವಲ್ಲ ಅದಕ್ಕಾಗಿ. ಅಹಂಕಾರ ನಿರಹಂಕಾರದ ಹತ್ತಿರ ನಿಲ್ಲಲಾರದು. ನೋಡಿ, ವಿದ್ಯಾಸಾಗರ ಎಂಥ ಪ್ರಖ್ಯಾತ ಪುರುಷ, ಆತನೂ ಅವರನ್ನು ವಿನಯನಮ್ರತೆಯಿಂದ ಆದರಿಸಿದ, ಪರಮಹಂಸರು ಆತನನ್ನು ನೋಡಲು ಆತನ ಮನೆಗೆ ಹೋಗಿದ್ದರು. ಅವನಿಂದ ಬೀಳ್ಕೊಂಡಾಗ ರಾತ್ರಿ ಒಂಬತ್ತಾಗಿತ್ತು. ವಿದ್ಯಾಸಾಗರ ತನ್ನ ವಾಚನಾಲಯದಿಂದ ಹಿಡಿದು ಗೇಟಿನವರೆಗೆ ತಾನೇ ಕೈಯಲ್ಲಿ ದೀಪವನ್ನು ಹಿಡಿದು ದಾರಿ ತೋರಿಸುತ್ತಾ ಪರಮಹಂಸರನ್ನು ಗಾಡಿಗೆ ಹತ್ತಿಸಿದ. ಮತ್ತೆ ಆತನಿಂದ ಬೀಳ್ಕೊಂಡಾಗ ಆತ ಕೈಮುಗಿದು ನಿಂತುಕೊಂಡಿದ್ದ.”
ಡಾಕ್ಟರ್: “ಒಳ್ಳೇದು. ಪರಮಹಂಸರ ಸಂಬಂಧವಾಗಿ ವಿದ್ಯಾಸಾಗರನ ಅಭಿಪ್ರಾಯವೇನು?”
ಮಾಸ್ಟರ್: “ಅಂದು ಆತ ಅವರಿಗೆ ವಿಶೇಷವಾದ ಶ್ರದ್ಧಾಭಕ್ತಿಯನ್ನು ತೋರಿಸಿದ. ಆದರೆ ಮಾತುಕತೆಯಾಡಿದ ಮೇಲೆ ಗೊತ್ತಾಯಿತು, ವೈಷ್ಣವರು ಭಾವ ಅಂತ ಹೇಳುತ್ತಾರಲ್ಲ, ಅದು ಆತನಿಗೆ ಹಿಡಿಸುತ್ತಿಲ್ಲವೆಂಬುದು. ಅಂಥ ವಿಷಯಗಳಲ್ಲಿ ಆತನೂ ನಿಮ್ಮ ಹಾಗೇ.”
ಡಾಕ್ಟರ್: “ಕೈಮುಗಿದು ನಿಲ್ಲುವುದು, ಕಾಲಿಗೆ ಅಡ್ಡಬೀಳುವುದು, ಇವೆಲ್ಲ ನನಗೆ ರುಚಿಸುತ್ತಿಲ್ಲ. ತಲೆ ಎಷ್ಟು ಮಹತ್ತಾದುದೊ, ಅಷ್ಟೆ ಮಹತ್ತಾದುದು ಕಾಲು ಕೂಡ. ಆದರೆ ಯಾರು ಕಾಲಿಗೆ ಬೇರೆ ಬೆಲೆ ಕಟ್ಟುತ್ತಾರೊ, ಅವರು ಹಾಗೆ ಮಾಡಲಿ.”
ಮಾಸ್ಟರ್: “ನಿಮಗೆ ಭಾವ ಹಿಡಿಸುತ್ತಿಲ್ಲ. ಪರಮಹಂಸರು ನಿಮ್ಮನ್ನು ಆಗಾಗ ‘ಗಂಭೀರಾತ್ಮ’ ಅಂತ ಕರೆಯುವುದು ನಿಮಗೆ ಜ್ಞಾಪಕದಲ್ಲಿರಬೇಕು. ನಿನ್ನೆ ಅವರು ನಿಮಗೆ ಹೇಳಿದರು, ಆನೆ ಒಂದು ಚಿಕ್ಕ ಕುಂಟೆಗೆ ಇಳಿದರೆ ಅದರ ನೀರು ಅಲ್ಲೋಲಕಲ್ಲೋಲವಾಗಿ ದಡಕ್ಕೆ ಬಡಿಯುತ್ತದೆ, ಆದರೆ ಅದು ದೊಡ್ಡ ಸರೋವರಕ್ಕೆ ಇಳಿದರೆ ಸಣ್ಣ ಕಿರಿದೆರೆಯೂ ಏಳದು. ‘ಗಂಭೀರಾತ್ಮ’ ಎಂಬ ಸರೋವರಕ್ಕೆ ‘ಭಾವ’ ಎಂಬ ಆನೆ ಇಳಿದರೆ, ಅದು ಅದರಲ್ಲಿ ಯಾವ ವ್ಯತ್ಯಾಸವನ್ನೂ ತರಲಾರದು. ಅವರು ಹೇಳುತ್ತಿದ್ದಾರೆ, ನೀವು ಒಬ್ಬ ‘ಗಂಭೀರಾತ್ಮ.”’
ಡಾಕ್ಟರ್: “ಆ ಗೌರವಕ್ಕೆ ನಾನು ಅರ್ಹನಲ್ಲ. ಭಾವ ಎಂಬುದು ಮತ್ತೆ ಬೇರೆ ತಾನೆ ಏನು? ಅದು ಒಂದು ವಿಧವಾದ ಮನೋವೃತ್ತಿ ಮಾತ್ರ. ಭಕ್ತಿ ಎಂಬ ಮನೋವೃತ್ತಿ ಮತ್ತು ಇನ್ನೂ ವಿವಿಧ ಮನೋವೃತ್ತಿಗಳು ಅಧಿಕವಾದವು ಎಂದರೆ ಕೆಲವರ ಕೈಯಲ್ಲಿ ಅವನ್ನು ಒಂದು ನಿರೋಧದಲ್ಲಿ ಇಡಲು ಸಾಧ್ಯ, ಇನ್ನು ಕೆಲವರ ಕೈಯಲ್ಲಿ ಸಾಧ್ಯವಿಲ್ಲ.”
ಮಾಸ್ಟರ್: “ಭಾವಾವೇಶ ಎಂದರೆ ಏನು ಎಂಬುದನ್ನು ವಿವರಿಸಲು ಸಾಧ್ಯವಾದರೂ ಆಗಬಹುದು ಅಥವಾ ಆಗದೆಯೂ ಹೋಗಬಹುದು. ಆದರೆ ಮಹಾಶಯ, ಭಕ್ತಿ ಅಥವಾ ಭಾವಾವೇಶ ಒಂದು ಅಪೂರ್ವ ವಸ್ತು. ಸ್ಟೆಬಿಂಗ್ ಎಂಬುವನು ಡಾರ್ವಿನ್ನನ ಸಿದ್ಧಾಂತಗಳ ಮೇಲೆ ಬರೆದಿರುವ ಒಂದು ಪುಸ್ತಕವನ್ನು ನಿಮ್ಮ ವಾಚನಾಲಯದಲ್ಲಿ ನೋಡಿದೆ. ಆತ ಅದರಲ್ಲಿ ಹೇಳುತ್ತಾನೆ, ಮಾನವನ ಮನಸ್ಸು ಎಂಬುದು ವಿಕಾಸದಿಂದ ಉದ್ಭವವಾಯಿತೊ ಅಥವಾ ಭಗವಂತನೇ ಅದನ್ನು ತನ್ನ ಕೈಯಿಂದ ಸೃಷ್ಟಿಸಿದನೋ, ಅದು ಯಾವ ರೀತಿಯಾಗಿ ಬೇಕಾದರೂ ಉದ್ಭವವಾಗಿರಲಿ, ನಿಜವಾಗಿಯೂ ಅದು ಒಂದು ಅದ್ಭುತ ವಸ್ತು. ಆತ ಬಹಳ ಯುಕ್ತವಾದ ಒಂದು ದೃಷ್ಟಾಂತವನ್ನು–ಬೆಳಕಿನ ವಾದವನ್ನು-ಕೊಟ್ಟಿದ್ದಾನೆ. ಬೆಳಕಿನ ತರಂಗದ ತತ್ತ್ವ ನಮಗೆ ಗೊತ್ತಿದ್ದರೂ ಸರಿಯೆ, ಇಲ್ಲದಿದ್ದರೂ ಸರಿಯೆ, ನಿಜವಾಗಿಯೂ ಬೆಳಕು ಎಂಬುದು ಒಂದು ಅದ್ಭುತವಾದ ವಸ್ತು.”
ಡಾಕ್ಟರ್: “ಹೌದು, ನಿಜ. ಆತ ಡಾರ್ವಿನ್ನನ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವುದಲ್ಲದೆ ಭಗವಂತನನ್ನೂ ಒಪ್ಪಿಕೊಳ್ಳುವುದನ್ನು ನೀನು ಅದರಲ್ಲಿ ನೋಡಿದೆಯಲ್ಲವೆ?”
ಈಗ ಮಾತುಕತೆ ಪರಮಹಂಸರ ಸಂಬಂಧವಾಗಿ ಆರಂಭವಾಯಿತು.
ಡಾಕ್ಟರ್: “ನನಗೆ ತೋರಿಬರುತ್ತಿದೆ, ಪರಮಹಂಸರು ಕಾಳಿಯ ಉಪಾಸಕರು ಎಂಬುದಾಗಿ.”
ಮಾಸ್ಟರ್: “ಅವರು ‘ಕಾಳಿ’ ಎಂಬ ಪದಕ್ಕೆ ಕೊಡುವ ಅರ್ಥವೇ ಬೇರೆ. ವೇದಗಳು ಯಾರನ್ನು ‘ಪರಬ್ರಹ್ಮ’ ಅಂತ ಕರೆಯುವುವೊ, ಆತನನ್ನೇ ಅವರು ‘ಕಾಳಿ’ ಅಂತ ಕರೆಯುತ್ತಾರೆ. ಯಾರನ್ನು ಮಹಮದೀಯರು ‘ಅಲ್ಲಾ’ ಅಂತ ಕರೆಯುತ್ತಾರೊ, ಕ್ರಿಶ್ಚಿಯನ್ನರು ‘ಗಾಡ್’ ಅಂತ ಕರೆಯುತ್ತಾರೊ, ಅವರು ಆತನನ್ನೇ ‘ಕಾಳಿ’ ಅಂತ ಕರೆಯುತ್ತಾರೆ. ಅವರ ದೃಷ್ಟಿಯಿಂದ ಅನೇಕ ಭಗವಂತರು ಇಲ್ಲ; ಇರುವವನು ಒಬ್ಬನೇ ಒಬ್ಬ. ಪುರಾತನ ಬ್ರಹ್ಮಜ್ಞಾನಿಗಳು ಯಾರನ್ನು ‘ಬ್ರಹ್ಮ’ ಅಂತ ಕರೆದಿದ್ದಾರೋ ಯೋಗಿಗಳು ಯಾರನ್ನು ‘ಆತ್ಮ’ ಅಂತ ಕರೆಯುತ್ತಾರೊ, ಭಕ್ತರು ಯಾರನ್ನು ‘ಭಗವಂತ’ ಅಂತ ಕರೆಯುತ್ತಾರೊ, ಆತನನ್ನೇ ಅವರು ‘ಕಾಳಿ’ ಅಂತ ಕರೆಯುತ್ತಾರೆ.
“ಪರಮಹಂಸರಲ್ಲಿ ನಾವು ಎಲ್ಲ ವಿಧದ ಭಾವಗಳನ್ನೂ ನೋಡಬಹುದು. ಎಲ್ಲಾ ಧರ್ಮಗಳ, ಎಲ್ಲಾ ಸಂಪ್ರದಾಯಗಳ ಜನರು ಅವರೊಡನೆ ಬೆರೆತು ಆನಂದ ಮತ್ತು ಶಾಂತಿಯನ್ನು ಪಡೆಯುತ್ತಿದ್ದಾರೆ. ಅವರ ಭಾವಗಳು ಏನೇನು, ಅವು ಎಷ್ಟು ಗಂಭೀರವಾದವು ಎಂಬವುಗಳ ಸಂಬಂಧವಾಗಿ ಯಾರು ತಾನೆ ಅವರ ಆಂತರ್ಯವನ್ನು ಒಳಹೊಕ್ಕು ನೋಡಬಲ್ಲರು?”
ಡಾಕ್ಟರ್: “ಸಂತ ಪಾಲ, ‘ಎಲ್ಲವೂ ಎಲ್ಲರಿಗೂ’ ಅಂತ ಹೇಳಿರುವುದಾದರೂ, ನಾನು ಅದನ್ನು ಒಪ್ಪುತ್ತಿಲ್ಲ.”
ಮಾಸ್ಟರ್: “ಪರಮಹಂಸರ ಮಾನಸಿಕ ಅವಸ್ಥೆಯನ್ನು ಯಾರು ತಾನೆ ಅರಿತುಕೊಳ್ಳಬಲ್ಲರು? ಅವರ ಬಾಯಿಂದಲೇ ಕೇಳಿದ್ದೇನೆ, ನೂಲಿನ ವ್ಯಾಪಾರ ಮಾಡದೆ ಇರತಕ್ಕವನಿಗೆ, ನಲವತ್ತನೆಯ ನಂಬರಿನ ನೂಲಿಗೂ ಮತ್ತು ನಲವತ್ತೊಂದನೆ ನಂಬರಿನ ನೂಲಿಗೂ ಯಾವ ಭೇದವೂ ಗೊತ್ತಾಗದು. ಚಿತ್ರಗಾರನಲ್ಲದವ ಚಿತ್ರಗಾರನ ಕಲಾಕೌಶಲ್ಯವನ್ನು ಅರಿಯಲಾರ. ಮಹಾಪುರುಷರ ಭಾವ ಬಹಳ ಗಂಭೀರವಾದುದು. ಏಸುವಿನಂತಾಗದೆ ಏಸುವಿನ ಎಲ್ಲಾ ಭಾವಗಳನ್ನು ಅರಿಯಲಾಗವುದಿಲ್ಲ. ಪರಮಹಂಸರ ಈ ಗಂಭೀರ ಭಾವ, ಏಸು ಹೇಳಿದ್ದಾನಲ್ಲ, ‘ಸ್ವರ್ಗದಲ್ಲಿರುವ ನಿಮ್ಮ ತಂದೆ ಪೂರ್ಣನಾಗಿರುವ ರೀತಿಯಲ್ಲಿ ನೀನೂ ಪೂರ್ಣನಾಗು’ ಅಂತ, ಅದೇ ರೀತಿಯಿಂದ ಬಹುಶಃ ಆಗಿರಬೇಕು.”
ಡಾಕ್ಟರ್: “ಒಳ್ಳೇದು, ಅವರ ಆರೈಕೆಗೆ ನೀವು ಏನು ವ್ಯವಸ್ಥೆ ಮಾಡಿದ್ದೀರಿ?”
ಮಾಸ್ಟರ್: “ಪ್ರಸ್ತುತ ಸ್ವಲ್ಪ ವಯಸ್ಸಾಗಿರುವ ಭಕ್ತರು ಒಬ್ಬಿಬ್ಬರು ಒಂದೊಂದು ದಿನ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ ಇದ್ದಾರೆ. ಈ ದಿನ ಗಿರೀಶಬಾಬುವಿನದು; ಅದರ ಮಾರನೆ ದಿನ ಸುರೇಶಬಾಬುವಿನದು; ಅದರ ಮಾರನೆ ದಿನ ನವಗೋಪಾಲನದು; ಅದರ ಮಾರನೆ ದಿನ ಕಾಳೀಬಾಬುವಿನದು; ಈ ರೀತಿಯಾಗಿ.”
ಮಾಸ್ಟರ್ ಮತ್ತು ಡಾಕ್ಟರ್ ಎರಡನೆ ಅಂತಸ್ತಿನಲ್ಲಿದ್ದ ಶ್ರೀರಾಮಕೃಷ್ಣರ ಕೊಠಡಿಯನ್ನು ಪ್ರವೇಶಿಸಿದಾಗ ಮಧ್ಯಾಹ್ನ ಒಂದು ಘಂಟೆ. ಪರಮಹಂಸರು ತಮ್ಮ ಪ್ರಾಣಾಂತಿಕ ರೋಗವನ್ನು ಮರೆತು, ಎಂದಿನಂತೆ ಹಸನ್ಮುಖರಾಗಿ ಕುಳಿತುಕೊಂಡಿದ್ದಾರೆ. ಗಿರೀಶಘೋಷ, ಚಿಕ್ಕ ನರೇನ, ಶರಚ್ಚಂದ್ರ ಇವರೇ ಮೊದಲಾದ ಅನೇಕ ಭಕ್ತರು ಅವರ ಸುತ್ತಲೂ ಕುಳಿತುಕೊಂಡಿದ್ದಾರೆ. ಪ್ರತಿಯೊಬ್ಬನ ದೃಷ್ಟಿಯೂ ಆ ಮಹಾಯೋಗಿ ಸದಾನಂದ ಮಹಾಪುರುಷರ (ಪರಮಹಂಸರ) ಕಡೆ ನೆಟ್ಟುಕೊಂಡಿದೆ. ಕೆಲವು ವೇಳೆ ಭಕ್ತರು, ಹಾವು ಮಾಂತ್ರಿಕನ ಎದುರು ನರ್ತಿಸುವ ರೀತಿಯಲ್ಲಿ ಮಂತ್ರಮುಗ್ಧರಾಗಿ ಕುಳಿತಿರುತ್ತಾರೆ. ಇನ್ನು ಕೆಲವು ವೇಳೆ ವರನ ಗುಂಪಿನವರು ವರನೊಡನೆ ಆನಂದಪಡುವ ರೀತಿಯಲ್ಲಿ ಆನಂದ ಪಡುತ್ತಿದ್ದಾರೆ. ಡಾಕ್ಟರ್ ಮತ್ತು ಮಾಸ್ಟರ್ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡರು. ಡಾಕ್ಟರನ್ನು ನೋಡಿದೊಡನೆ ಪರಮಹಂಸರು ನಗುತ್ತ ಆತನೊಡನೆ ಹೇಳಿದರು: “ಈ ದಿನ ನನ್ನ ದೇಹಾರೋಗ್ಯ ಬಹಳ ಚೆನ್ನಾಗಿದೆ.”
ಬಳಿಕ ಭಕ್ತರೊಡನೆ ಭಗವತ್ಸಂಬಂಧವಾಗಿ ಮಾತುಕತೆ ಆರಂಭವಾಯಿತು.
ಶ್ರೀರಾಮಕೃಷ್ಣರು: “ವಿವೇಕವೈರಾಗ್ಯವಿಲ್ಲದ ಬರೀ ಪಾಂಡಿತ್ಯ ಯಾವುದಕ್ಕೆ ಬಂದೀತು? ಭಗವಂತನ ಪಾದಪದ್ಮಗಳ ಮೇಲೆ ಧ್ಯಾನಮಾಡಿದೆನೆಂದರೆ ನನಗೊಂದು ಅವಸ್ಥೆ ಬರುತ್ತದೆ. ಉಟ್ಟಿದ್ದ ಬಟ್ಟೆ ಹಾಗೇ ಕಳಚಿ ಬಿದ್ದುಹೋಗುತ್ತದೆ. ಏನೊ ಒಂದು ನನ್ನ ಪಾದಗಳಿಂದ ತಲೆಯ ಕಡೆಗೆ ಹತ್ತಿಹೋದಂತೆ ಅನುಭವವಾಗುತ್ತದೆ. ಆಗ ಎಲ್ಲರೂ ಒಂದು ತೃಣವಾಗಿ ಕಂಡು ಬರುತ್ತಾರೆ. ವಿವೇಕವಿಲ್ಲದ, ಭಗವಂತನಲ್ಲಿ ಭಕ್ತಿಯಿಲ್ಲದ ಪಂಡಿತನೇನಾದರೂ ನನ್ನ ಕಣ್ಣಿಗೆ ಬಿದ್ದನೆಂದರೆ, ಆಗ ಆತ ಒಂದು ತೃಣದೋಪಾದಿಯಲ್ಲಿ ಕಂಡುಬರುತ್ತಾನೆ.
“ಒಮ್ಮೆ ಡಾಕ್ಟರ್ ರಾಮನಾರಾಯಣ ನನ್ನೊಡನೆ ತರ್ಕಿಸುತ್ತಿದ್ದ. ಇದ್ದಕ್ಕಿದ್ದ ಹಾಗೆ ಆ ಅವಸ್ಥೆ ಬಂತು. ಆಗ ಆತನಿಗೆ ಹೇಳಿದೆ: ‘ಏನು ನಿನ್ನ ಮಾತು? ತರ್ಕದಿಂದ ಭಗವಂತನ ಸಂಬಂಧವಾಗಿ ನೀನು ಏನನ್ನು ಅರಿಯಬಲ್ಲೆ? ಆತನ ಸೃಷ್ಟಿಯ ವಿಷಯವಾಗಿ ತಾನೆ ನಿನಗೇನು ಅರ್ಥವಾದೀತು! ನಿನ್ನದು ನೇಯ್ಗೆಯವನ ಕೀಟಲೆ ಬುದ್ಧಿಯಂತ ಬುದ್ಧಿ!’ ನನ್ನ ಮುಖಮುದ್ರೆ ನೋಡಿ ಆತ ಅಳಲಾರಂಭಿಸಿದ. ಬಳಿಕ ನನ್ನ ಕಾಲು ಒತ್ತಲಾರಂಭಿಸಿದ.”
ಡಾಕ್ಟರ್: “ಡಾಕ್ಟರ್ ರಾಮನಾರಾಯಣ ಹಿಂದೂ ಅಲ್ಲವೆ, ಅದಕ್ಕಾಗಿ ಆತ ಹಾಗೆ ಮಾಡಿದ. ಆತನಿಗೆ ಪೂಜೆ ಪುರಸ್ಕಾರಗಳಲ್ಲಿ ಆಸಕ್ತಿ; ಒಬ್ಬ ಗೊಡ್ಡು ಹಿಂದೂ.”
ಮಾಸ್ಟರ್ (ತನಗೆ ತಾನೆ): “ಡಾಕ್ಟರ್ ಸರ್ಕಾರನ ಭಾವನೆ, ತನಗೆ ಶಂಖ-ಜಾಗಟೆಯ ತಂಟೆಯೇ ಬೇಡ ಅಂತ.”
ಶ್ರೀರಾಮಕೃಷ್ಣರು: “ಬಂಕಿಮಚಂದ್ರ ನಿಮ್ಮ ಗುಂಪಿಗೆ ಸೇರಿದ ಒಬ್ಬ ಪಂಡಿತ. ಒಮ್ಮೆ ನಾನು ಆತನನ್ನು ಭೇಟಿಮಾಡಿದೆ. ಆತನನ್ನು ಕೇಳಿದೆ, ‘ಮನುಷ್ಯನ ಕರ್ತವ್ಯವೇನು?’ ಎಂದು. ಆತ ಹೇಳಿದ, ‘ಆಹಾರ, ನಿದ್ರೆ, ಮೈಥುನ ಇವುಗಳಲ್ಲಿ ನಿರತರಾಗಿರುವುದು’ ಅಂತ. ಆತನ ಈ ಮಾತು ಕೇಳಿ ನನಗೆ ಒಂದು ವಿಧವಾಗಿ ಖೇದವುಂಟಾಯಿತು. ಆತನಿಗೆ ಹೇಳಿದೆ: ‘ಏನು ಮಾತು ನಿನ್ನ ಬಾಯಿಂದ? ನಿನ್ನದು ಅತ್ಯಂತ ನೀಚ ಸ್ವಭಾವ. ನೀನು ಹಗಲಿರುಳು ಯಾವುದರ ವಿಷಯವಾಗಿ ಚಿಂತಿಸುತ್ತಿದ್ದೀಯೊ, ಯಾವ ವಿಧವಾದ ಕೆಲಸಕಾರ್ಯಗಳಲ್ಲಿ ತೊಡಗಿದ್ದೀಯೊ, ಅದೇ ಈಗ ನಿನ್ನ ಬಾಯಿಂದ ಹೊರಬರುತ್ತಿದೆ. ಮೂಲಂಗಿ ತಿಂದವನಿಗೆ ಮೂಲಂಗಿ ವಾಸನೆಯ ತೇಗು ಬರುತ್ತದೆ.’ ಬಳಿಕ ಭಗವಂತನ ವಿಷಯವಾಗಿ ಬಹಳ ಹೊತ್ತಿನವರೆಗೆ ಮಾತುಕತೆ ನಡೆಯಿತು. ಕೊಠಡಿಯಲ್ಲಿ ಕೀರ್ತನೆ ನಡೆಯಿತು. ಆಗ ನಾನು ನರ್ತನ ಮಾಡಿದೆ. ಬಳಿಕ ಆತ ಹೇಳಿದ: ‘ಮಹಾಶಯರೆ, ದಯವಿಟ್ಟು ಒಮ್ಮೆ ನಮ್ಮ ಮನೆಗೆ ದಯಮಾಡಿ.’ ನಾನು ಹೇಳಿದೆ: ‘ಭಗವಂತನ ಇಚ್ಛೆಯಿದ್ದರೆ,’ ಆತ ಹೇಳಿದ ‘ಅಲ್ಲಿಯೂ ಭಕ್ತರಿದ್ದಾರೆ, ನೋಡುವಿರಂತೆ.’ ನಾನು ನಗುತ್ತ ಹೇಳಿದೆ: ‘ಎಂಥ ಭಕ್ತರು? “ಗೋಪಾಲ! ಗೋಪಾಲ!” ಅಂತ ಹೇಳುತ್ತಿದ್ದರಲ್ಲ ಅಂಥ ಭಕ್ತರೇನು?”’
ಡಾಕ್ಟರ್: “ಏನದು, ‘ಗೋಪಾಲ! ಗೋಪಾಲ’ ಎಂಬ ಕಥೆ?”
ಶ್ರೀರಾಮಕೃಷ್ಣರು (ನಗುತ್ತ): “ಒಂದು ಸ್ಥಳದಲ್ಲಿ ಒಂದು ಅಕ್ಕಸಾಲಿಗನ ಅಂಗಡಿ ಇತ್ತು. ಆತ ದೊಡ್ಡ ಭಕ್ತ; ಪರಮ ವೈಷ್ಣವ. ಕೊರಳಿಗೆ ತುಳಸಿಮಣಿ ಹಾಕಿಕೊಳ್ಳುತ್ತಿದ್ದ, ಹಣೆಗೆ ತಿಲಕ ಇಟ್ಟುಕೊಳ್ಳುತ್ತಿದ್ದ, ಕೈಯಲ್ಲಿ ಜಪಮಾಲೆ ತಿರುಗಿಸುತ್ತಿದ್ದ, ಎಲ್ಲರೂ ವಿಶ್ವಾಸವಿಟ್ಟು ಆತನ ಅಂಗಡಿಗೇ ಬರುತ್ತಿದ್ದರು; ಅವರು ಭಾವಿಸುತ್ತಿದ್ದರು, ಆತ ಇಂಥ ಪರಮಭಕ್ತನಾಗಿರುವುದರಿಂದ ಎಂದಿಗೂ ತಮಗೆ ಮೋಸಮಾಡುವುದಿಲ್ಲ ಅಂತ. ಗಿರಾಕಿ ಆತನ ಅಂಗಡಿಗೆ ಕಾಲುಹಾಕಿದೊಡನೆಯೇ ಅವನ ಕಿವಿಗೆ ಬೀಳುತ್ತಿತ್ತು, ಒಬ್ಬ ಕೆಲಸಗಾರ, ‘ಕೇಶವ! ಕೇಶವ!’ ಅಂತ ಹೇಳುವುದು, ಮತ್ತೊಬ್ಬ ಒಂದು ಕ್ಷಣದ ನಂತರ, ‘ಗೋಪಾಲ! ಗೋಪಾಲ!’ ಅಂತ ಹೇಳುವುದು. ಮತ್ತೊಬ್ಬ ಆ ಬಳಿಕ, ‘ಹರಿ! ಹರಿ!’ ಅಂತ ಹೇಳುವುದು, ಕೊನೆಯಲ್ಲಿ ಒಬ್ಬ ‘ಹರ! ಹರ!’ ಅಂತ ಹೇಳುವುದು. ಆತನ ಅಂಗಡಿಯಲ್ಲಿ ಇಷ್ಟೊಂದು ಭಗವನ್ನಾಮೋಚ್ಚಾರಣೆ ಆಗುತ್ತಿರುವುದನ್ನು ನೋಡಿ ಗಿರಾಕಿಗಳು ಸ್ವಾಭಾವಿಕವಾಗಿಯೇ ಭಾವಿಸುತ್ತಿದ್ದರು ಆತ ಬಹಳ ಒಳ್ಳೆಯವನೆ ಇರಬೇಕು ಅಂತ. ಆದರೆ ನಿಜಸ್ಥಿತಿ ಏನು ಗೊತ್ತೆ? ಯಾರು ಹೇಳಿದನೊ, ‘ಕೇಶವ! ಕೇಶವ!’ ಅಂತ, ಆತನ ಭಾವನೆ, ‘ಬಂದಿರುವ ಗಿರಾಕಿಗಳು ಎಂಥವರಿರಬೇಕು?’ ಎಂಬುದಾಗಿ. ಯಾರು ಹೇಳಿದನೊ, ‘ಗೋಪಾಲ! ಗೋಪಾಲ!’ ಅಂತ, ಆತನ ಇಂಗಿತಾರ್ಥ, ‘ನಾನು ಇವರೊಡನೆ ಮಾತುಕತೆಯಾಡಿ ನೋಡಿದೆ. ಇವರು ಹಸುವಿನ ಮಂದೆಗೆ ಸಮಾನರು’ ಎಂಬುದಾಗಿ. ಯಾರು ಹೇಳಿದನೊ, ‘ಹರಿ! ಹರಿ!’ ಅಂತ, ಆತನ ಸಂಜ್ಞಾರ್ಥ, ‘ಇವರು ಹಸುವಿನ ಮಂದೆಗೆ ಸರಿಸಮಾನರಾಗಿರುವುದಾದರೆ, ಇವರಿಂದ ಕದಿಯಬಹುದೆ?’ ಎಂಬುದಾಗಿ. ಯಾರು ಹೇಳಿದನೊ, ‘ಹರ! ಹರ!’ ಅಂತ, ಆತನ ಇಂಗಿತಾರ್ಥ, ‘ಇವರು ಗೋವಿನ ಮಂದೆಗೆ ಸರಿಸಮಾನರಾಗಿರುವುದರಿಂದ, “ಕದಿಯಿರಿ, ಕದಿಯಿರಿ” ಎಂಬುದಾಗಿ’ (ಎಲ್ಲರೂ ನಗುತ್ತಿದ್ದಾರೆ.)
“ಒಮ್ಮೆ ನಾನು ಮಥುರಬಾಬುವಿನೊಡನೆ ಒಂದು ಜಾಗಕ್ಕೆ ಹೋಗಿದ್ದೆ. ಅನೇಕ ಮಂದಿ ಪಂಡಿತರು ನನ್ನೊಡನೆ ವಾದಿಸಲು ಅಲ್ಲಿಗೆ ಬಂದು ಸೇರಿದ್ದರು. ನಿಮಗೆ ಗೊತ್ತೇ ಇದೆ, ನಾನೊಬ್ಬ ಪೆದ್ದು ಎಂಬುದು. (ಎಲ್ಲರೂ ನಗುತ್ತಿದ್ದಾರೆ). ನನ್ನ ಆ ಅವಸ್ಥೆ ಅವರಿಗೂ ಪರಿಚಯವಾಯಿತು. ನನ್ನೊಡನೆ ಮಾತುಕತೆಯಾಡಿದ ಮೇಲೆ ‘ನಮ್ಮ ವಿದ್ಯೆ, ನಮ್ಮ ಪಾಂಡಿತ್ಯ, ನಮ್ಮ ವ್ಯಾಸಂಗ ಇವೆಲ್ಲ ಯಾವುದಕ್ಕೂ ಬಂದುದಲ್ಲ ಅಂತ ತೋರುತ್ತಿದೆ. ಈಗ ನಮಗೆ ಅರ್ಥವಾಗುತ್ತಿದೆ ಭಗವಂತನ ಕೃಪೆಯೊಂದೊದಗಿತೆಂದರೆ ನಮ್ಮಲ್ಲಿ ಜ್ಞಾನಾಭಾವವೇನೂ ಇರುವುದಿಲ್ಲ. ಆಗ ಮೂರ್ಖ ಮಹಾಪಂಡಿತನಾಗಿಬಿಡುತ್ತಾನೆ. ಮೂಕ ಮಹಾವಾಗ್ಮಿಯಾಗಿಬಿಡುತ್ತಾನೆ.’ ಎಂದರು. ಅದಕ್ಕಾಗಿಯೇ ನಾನು ಹೇಳುವುದು, ವ್ಯಕ್ತಿ ಕೇವಲ ಪುಸ್ತಕಪಾಂಡಿತ್ಯದಿಂದಲೇ ಪಂಡಿತನಾಗಲಾರ ಎಂದು.
“ಹೌದು, ನಿಜ, ಇದು ಎಷ್ಟು ಸತ್ಯವಾದುದು! ಭಗವಂತನ ಕೃಪೆಯೊಂದು ದೊರೆತುದೇ ಆದರೆ ಜ್ಞಾನಾಭಾವವಿರುವುದೆ? ನನ್ನ ಕಡೆ ನೋಡಿ. ನಾನೊಬ್ಬ ನಿರಕ್ಷರಕುಕ್ಷಿ. ‘ಓ!’ ಅಂದರೆ ‘ಠೊ!’ ಅನ್ನುವುದಕ್ಕೆ ಬರುವುದಿಲ್ಲ. ಆದರೂ ನನ್ನ ಮೂಲಕ ಇಷ್ಟೊಂದು ಮಾತುಕತೆಗಳನ್ನಾಡುತ್ತಿರುವವರು ಯಾರು? ನೋಡಿ, ಭಗವಂತನ ಜ್ಞಾನ-ಭಂಡಾರ ಅಕ್ಷಯವಾದ್ದು! ಕಾಮಾರಪುಕುರದ ವ್ಯಾಪಾರಿಗಳು ದಿನಸಿ ಅಳೆಯುತ್ತಾರೆ, ‘ರಾಮೇ ರಾಮ! ರಾಮೇ ರಾಮ!’ ಅಂತ ಹೇಳುತ್ತ, ಒಬ್ಬ ಅಳೆಯುತ್ತಾ ಹೋಗುತ್ತಾನೆ. ಇನ್ನೊಬ್ಬ ಪಕ್ಕದ ರಾಶಿಯಿಂದ ತಳ್ಳಿಕೊಡುತ್ತಲೇ ಇರುತ್ತಾನೆ. ಅಳೆಯುವವನು ತನ್ನ ಎದುರಿಗಿರುವ ರಾಶಿಯನ್ನು ಅಳೆದು ಮುಗಿಸಿದ ಅನ್ನುವಷ್ಟರಲ್ಲಿಯೇ ಪಕ್ಕದ ರಾಶಿಯಿಂದ ತಳ್ಳಿಕೊಡುವುದೇ ಈ ಎರಡನೆಯವನ ಕೆಲಸ. ನನ್ನ ಮಾತುಗಳ ಸಂಬಂಧವಾಗಿಯೂ ಹೀಗೇ ಆಗುತ್ತದೆ. ನನ್ನ ಜ್ಞಾನ-ಭಂಡಾರ ಇನ್ನೇನು ಬರಿದಾಗುತ್ತಾ ಬಂತು ಅನ್ನುವಷ್ಟರಲ್ಲಿಯೇ ಭಗವತಿ ತನ್ನ ಅಕ್ಷಯ ಜ್ಞಾನ-ಭಂಡಾರದಿಂದ ಜ್ಞಾನವನ್ನು ನನ್ನ ಕಡೆಗೆ ನೂಕಿಕೊಟ್ಟುಬಿಡುತ್ತಾಳೆ.
“ನನ್ನ ಬಾಲ್ಯಾವಸ್ಥೆಯಲ್ಲಿ ಭಗವಂತ ನನ್ನಲ್ಲಿ ಆವಿರ್ಭಾವನಾದ. ಆಗ ನನಗೆ ಹನ್ನೊಂದು ವಯಸ್ಸು. ಗದ್ದೆ ಬಯಲಿನಲ್ಲಿ ನಡೆದು ಹೋಗುತ್ತಿದ್ದಾಗ ಏನೋ ಒಂದು ದೃಶ್ಯ ಕಂಡೆ. ಬಳಿಕ ಜನರು ನನಗೆ ಹೇಳಿದರು, ಆಗ ನಾನು ಬಾಹ್ಯಪ್ರಜ್ಞೆಯಿಲ್ಲದವನಾಗಿ ಹೋಗಿದ್ದೆ, ಒಂದು ಮರದ ತುಂಡಿನೋಪಾದಿಯಲ್ಲಿ ನನ್ನ ದೇಹ ಸ್ಥಿರವಾಗಿಬಿಟ್ಟಿತು ಅಂತ. ಅಂದಿನಿಂದ ನಾನು ಬೇರೊಬ್ಬ ವ್ಯಕ್ತಿಯಾಗಿಬಿಟ್ಟೆ. ನನ್ನ ಆಂತರ್ಯದಲ್ಲಿ ಬೇರೊಬ್ಬ ವ್ಯಕ್ತಿ ಇರುವುದನ್ನು ನೋಡಲಾರಂಭಿಸಿದೆ. ಪೂಜೆ ಮಾಡುವ ಸಮಯದಲ್ಲಿ ನನ್ನ ಕೈ ಅನೇಕ ವೇಳೆ ದೇವರ ಕಡೆಗೆ ಹೋಗದೆ ನನ್ನ ತಲೆಯ ಕಡೆಗೇ ಬರುತ್ತಿತ್ತು. ಆಗ ನನ್ನ ತಲೆಯ ಮೇಲೆ ಹೂವನ್ನು ಹಾಕುತ್ತಿದ್ದೆ. ನನ್ನೊಡನೆ ಆಗ ಇರುತ್ತಿದ್ದ ಒಬ್ಬ ಹುಡುಗ ನನ್ನನ್ನು ಸಮೀಪಿಸಲು ಹೆದರುತ್ತಿದ್ದ. ಆತ ಹೇಳುತ್ತಿದ್ದ: ‘ನಿಮ್ಮ ಮುಖದ ಮೇಲೆ ಏನೋ ಒಂದು ಜ್ಯೋತಿ ಇದೆ. ನಿಮ್ಮ ಹತ್ತಿರ ಬರುವುದಕ್ಕೆ ಹೆದರಿಕೆಯಾಗುತ್ತಿದೆ.’
“ನಾನೊಬ್ಬ ನಿರಕ್ಷರಕುಕ್ಷಿ. ಏನು ಅಂದರೆ ಏನೂ ಗೊತ್ತಿಲ್ಲ. ಹಾಗಾದರೆ ಈ ಮಾತುಗಳನ್ನೆಲ್ಲ ಆಡುವವರು ಯಾರು? ನಾನು ಭಗವತಿಗೆ ಹೇಳುತ್ತೇನೆ: ‘ಹೇ ತಾಯೆ, ನಾನು ಯಂತ್ರ, ನೀನು ಯಂತ್ರಿ; ನಾನು ಗೃಹ, ನೀನು ಗೃಹಿಣಿ; ನಾನು ರಥ, ನೀನು ರಥಿ; ನೀನು ಮಾಡಿಸಿದಂತೆ ಮಾಡುತ್ತೇನೆ. ನಾನಲ್ಲ! ನಾನಲ್ಲ! ಎಲ್ಲವೂ ನೀನೆ! ಎಲ್ಲವೂ ನೀನೆ!’ ಎಲ್ಲಾ ವೈಭವವೂ ಆಕೆಗೆ ಸೇರಿದುದೆ. ನಾನು ಕೇವಲ ಆಕೆಯ ಯಂತ್ರ ಮಾತ್ರ. ಒಮ್ಮೆ ರಾಧೆ ಸಹಸ್ರ ರಂಧ್ರಗಳುಳ್ಳ ಕಳಸಕ್ಕೆ ನೀರು ತುಂಬಿ ತಲೆಯ ಮೇಲಿಟ್ಟುಕೊಂಡು ಹೋಗುತ್ತಿದ್ದಾಗ, ಒಂದು ತೊಟ್ಟು ನೀರೂ ಕೆಳಕ್ಕೆ ಬೀಳಲಿಲ್ಲ. ಅದನ್ನು ನೋಡಿ ಜನರೆಲ್ಲರೂ ಆಕೆಯನ್ನು ಹೊಗಳಲಾರಂಭಿಸಿದರು. ಅವರು ಹೇಳಿದರು: ‘ಇಂಥಾ ಪತಿವ್ರತಾಶಿರೋಮಣಿಯನ್ನು ಮತ್ತೆ ಜಗತ್ತು ಇನ್ನೆಂದಿಗೂ ನೋಡದು!’ ಆಗ ರಾಧೆ ಹೇಳಿದಳು: ‘ನೀವು ನನ್ನನ್ನೇಕೆ ಹೊಗಳುತ್ತಾ ಇದ್ದೀರಿ? ಹೇಳಿ, “ಶ್ರೀಕೃಷ್ಣನಿಗೆ ಜಯವಾಗಲಿ! ಶ್ರೀಕೃಷ್ಣನಿಗೆ ಜಯವಾಗಲಿ!” ಅಂತ. ನಾನು ಆತನ ದಾಸಿ ಮಾತ್ರ.’
“ಒಮ್ಮೆ ನಾನು ಆ ಮಾನಸಿಕ ಅವಸ್ಥೆಯಲ್ಲಿ ವಿಜಯನ ಎದೆಯ ಮೇಲೆ ಕಾಲಿಟ್ಟೆ. ವಿಜಯನನ್ನು ನಾನು ಬಹಳವಾಗಿ ಗೌರವಿಸುತ್ತಿರುವುದು ನಿನಗೆ ಗೊತ್ತೇ ಇದೆ–ಆದರೂ ನಾನು ಆತನ ಎದೆಯ ಮೇಲೆ ಕಾಲಿಟ್ಟುಬಿಟ್ಟೆನಲ್ಲ! ಏಕೆ ಹೀಗಾಯಿತು ಹೇಳು ನೋಡೋಣ?”
ಡಾಕ್ಟರ್: “ಇನ್ನು ಮೇಲೆ ನೀವು ಎಚ್ಚರಿಕೆಯಿಂದ ಇರಬೇಕು.”
ಶ್ರೀರಾಮಕೃಷ್ಣರು (ಕೈಮುಗಿದುಕೊಂಡ): “ನಾನೇನು ಮಾಡಲಿ? ಆ ಅವಸ್ಥೆ ಬಂತು ಎಂದರೆ ಬಾಹ್ಯಜ್ಞಾನಶೂನ್ಯನಾಗಿಬಿಡುತ್ತೇನೆ. ಆಗ ನಾನು ಏನೇನು ಮಾಡುತ್ತೇನೆ ಅದೊಂದೂ ನನಗೆ ಗೊತ್ತಾಗುವುದಿಲ್ಲ.”
ಡಾಕ್ಟರ್: “ಎಚ್ಚರಿಕೆಯಿಂದಿರಬೇಕು. ಈಗ ನೀವು ಸುಮ್ಮನೆ ಕೈಮುಗಿದುಕೊಂಡು ಬಿಟ್ಟರೆ ಆಯಿತೇ?”
ಶ್ರೀರಾಮಕೃಷ್ಣರು: “ಆಗ ನನ್ನ ಮನಸ್ಸು ನನ್ನ ಸ್ವಾಧೀನದಲ್ಲಿ ಇರುತ್ತದೆಯೇನು? ನನ್ನ ಆ ಅವಸ್ಥೆಯ ಸಂಬಂಧವಾಗಿ ನಿನ್ನ ಅಭಿಪ್ರಾಯವೇನು? ಅದು ಕೇವಲ ನಟನೆ ಅಂತ ನೀನು ಭಾವಿಸುವುದಾದರೆ, ನೀನು ಸೈನ್ಸು ಓದಿರುವುದೆಲ್ಲ ಕೇವಲ ವ್ಯರ್ಥ ಅಂತ ಹೇಳಬೇಕಾಗುತ್ತದೆ.”
ಡಾಕ್ಟರ್: “ಮಹಾಶಯರೆ, ಇದೆಲ್ಲ ಕೇವಲ ಬೂಟಾಟಿಕೆ ಅಂತ ಭಾವಿಸಿದ್ದರೆ, ನಾನು ಇಲ್ಲಿಗೆ ಇಷ್ಟೊಂದು ಸಲ ಬರುತ್ತಿದ್ದೆನೇನು? ನಿಮಗೆ ಗೊತ್ತಿದೆ ನಾನು ಅನೇಕ ಕೆಲಸಕಾರ್ಯಗಳನ್ನು ಬಿಟ್ಟು ಇಲ್ಲಿಗೆ ಬರುತ್ತಿದ್ದೇನೆ ಎಂಬುದು. ಅನೇಕ ರೋಗಿಗಳ ಮನೆಗೆ ಹೋಗಲು ಸಮಯ ಸಿಕ್ಕುತ್ತಿಲ್ಲ. ಇಲ್ಲಿಗೆ ಬಂದೆನೆಂದರೆ ಆರೇಳು ಘಂಟೆಗಳ ಕಾಲವನ್ನು ಇಲ್ಲೇ ಕಳೆದು ಬಿಡುತ್ತಾ ಇದ್ದೇನೆ.”
ಶ್ರೀರಾಮಕೃಷ್ಣರು: “ಒಮ್ಮೆ ನಾನು ಮಥುರಬಾಬುವಿಗೆ ಹೇಳಿದೆ: ‘ದೊಡ್ಡ ಮನುಷ್ಯ ನಾದ ನೀನು ನನ್ನನ್ನು ಗೌರವಿಸುತ್ತಿರುವುದರಿಂದ ನಾನು ಕೃತಾರ್ಥನಾಗಿಹೋಗಿಬಿಟ್ಟಿದ್ದೇನೆ ಎಂದು ನೀನು ಎಂದಿಗೂ ಭಾವಿಸಕೂಡದು. ನೀನು ನನ್ನನ್ನು ಗೌರವಿಸಿದರೂ ಒಂದೇ ಇಲ್ಲದಿದ್ದರೂ ಒಂದೇ.’ ಆದರೆ ಒಂದು ವಿಷಯ. ಮನುಷ್ಯನ ಕೈಯಲ್ಲಿ ಏನುತಾನೆ ಸಾಧ್ಯ? ಭಗವಂತನೇ ಹಾಗೆ ಮಾಡಿಸುತ್ತಾನೆ. ಭಗವಂತನ ಶಕ್ತಿಯ ಎದುರು ಮನುಷ್ಯ ಕೇವಲ ಹುಲ್ಲುಕಡ್ಡಿ.”
ಡಾಕ್ಟರ್: “ಕೆಲವು ಮಂದಿ ಬೆಸ್ತರು (ಮಥುರಬಾಬು ಮೊದಲಾದವರು) ನಿಮ್ಮನ್ನು ಗೌರವಿಸುತ್ತಿದ್ದಾರೆ ಅಂತ ನಾನು ನಿಮ್ಮನ್ನು ಗೌರವಿಸುತ್ತಿದ್ದೇನೆ ಅಂತ ನೀವು ಭಾವಿಸುತ್ತಿರುವಿ ರೇನು?….. ನಾನು ನಿಮಗೆ ಗೌರವ ತೋರಿಸುವುದೇನೊ ನಿಜ; ಮನುಷ್ಯನಿಗೆ ಗೌರವ ತೋರಿಸಬೇಕಾದ ರೀತಿಯಲ್ಲಿ ನಿಮಗೆ ಗೌರವ ತೋರಿಸುತ್ತಿದ್ದೇನೆ.”
ಶ್ರಿರಾಮಕೃಷ್ಣರು: “ನನಗೆ ಗೌರವ ತೋರಿಸು ಅಂತ ನಾನು ನಿನಗೆ ಒತ್ತಾಯ ಪಡಿಸುತ್ತಿರುವೆನೇ?”
ಗಿರೀಶಘೋಷ: “ತಮಗೆ ಗೌರವ ತೋರಿಸಬೇಕೆಂದು ಅವರು ನಿಮ್ಮನ್ನು ಬಲಾತ್ಕರಿಸುತ್ತಿರುವರೇನು?”
ಡಾಕ್ಟರ್ (ಶ್ರೀರಾಮಕೃಷ್ಣರಿಗೆ): “ಏನು ಹೇಳುತ್ತಾ ಇದ್ದೀರಿ ನೀವು? ಇದೂ ಭಗವಂತನ ಇಚ್ಛೆ ಅಂಥ ನೀವು ಹೇಳುವಿರೇನು?”
ಶ್ರೀರಾಮಕೃಷ್ಣರು: “ಅದಲ್ಲದೆ ಮತ್ತೆ ಇನ್ನೇನು? ಭಗವಂತನ ಇಚ್ಛೆಗೆ ಎದುರಾಗಿ ಮನುಷ್ಯ ಏನನ್ನು ತಾನೆ ಮಾಡಬಲ್ಲ? ಕುರುಕ್ಷೇತ್ರದ ಯುದ್ಧರಂಗದಲ್ಲಿ ಅರ್ಜುನ ಶ್ರೀಕೃಷ್ಣನಿಗೆ ಹೇಳಿದ: ‘ನಾನು ಯುದ್ಧ ಮಾಡಲಾರೆ, ಜ್ಞಾತಿಗಳನ್ನು ಕೊಂದುಹಾಕಲಾರೆ.’ ಆಗ ಶ್ರೀಕೃಷ್ಣ ಹೇಳಿದ: ‘ಅರ್ಜುನಾ, ನೀನು ಯುದ್ಧವನ್ನು ಮಾಡಿಯೇತೀರಬೇಕು. ನಿನ್ನ ಸ್ವಭಾವವೇ ನಿನ್ನ ಕೈಯಲ್ಲಿ ಯುದ್ಧವನ್ನು ಮಾಡಿಸಿಬಿಡುತ್ತದೆ.’ ಬಳಿಕ ಶ್ರೀಕೃಷ್ಣ ಅರ್ಜುನನಿಗೆ ಅಪೌರುಷೇಯವಾಗಿ ತೋರಿಸಿದ, ರಣರಂಗದಲ್ಲಿರುವವರೆಲ್ಲ ಆಗಲೇ ಸತ್ತುಹೋಗಿಬಿಟ್ಟಿದ್ದಾರೆ ಎಂಬುದನ್ನು.
“ಒಮ್ಮೆ ಸಿಖ್ ಪಂಥದ ಕೆಲವು ಮಂದಿ ಅನುಯಾಯಿಗಳು ಕಾಳಿಯ ದರ್ಶನಕ್ಕಾಗಿ ಬಂದಿದ್ದರು. ಅವರ ದೃಷ್ಟಿಯ ಪ್ರಕಾರ, ನೋಡು ಅಶ್ವತ್ಥದ ಎಲೆಗಳು ಅಲ್ಲಾಡುತ್ತವೆಯಲ್ಲ ಅದು ಭಗವಂತನ ಇಚ್ಛೆಯಂತೆ ಅಂತ. ಆತನ ಇಚ್ಛೆಯಿಲ್ಲದೆ ಒಂದು ಎಲೆಯೂ ಅಲ್ಲಾಡಲಾರದು.”
ಡಾಕ್ಟರ್: “ಎಲ್ಲವೂ ಭಗವಂತನ ಇಚ್ಛೆಗನುಸಾರವಾಗಿ ನಡೆಯುತ್ತಿರುವುದಾದರೆ ನೀವು ಮಾತನಾಡುತ್ತಿರುವುದೇಕೆ? ಜನರಲ್ಲಿ ಜ್ಞಾನೋದಯವನ್ನುಂಟುಮಾಡುವುದಕ್ಕೆ ನೀವು ಇಷ್ಟೊಂದೇಕೆ ಮಾತುಕತೆಯಾಡುತ್ತಾ ಇದ್ದೀರಿ?”
ಶ್ರೀರಾಮಕೃಷ್ಣರು: “ಆತ ಮಾತಾಡಿಸುತ್ತಾ ಇದ್ದಾನೆ, ಅದಕ್ಕಾಗಿ ಮಾತಾಡುತ್ತಾ ಇದ್ದೇನೆ. ‘ನಾನು ಯಂತ್ರ, ಆತ ಯಂತ್ರಿ.”’
ಡಾಕ್ಟರ್: “ನೀವು ಆತನ ಯಂತ್ರ ಅಂತ ಹೇಳುತ್ತಿದ್ದೀರಿ. ಹಾಗೆ ಹೇಳುವುದೇನೋ ಸರಿ. ಹಾಗೆ ಮಾಡಲಾಗದಿದ್ದರೆ ಎಲ್ಲವೂ ಭಗವಂತನೇ ಎಂದು ಸದ್ದಿಲ್ಲದೆ ಇದ್ದುಬಿಡಿ.”
ಗಿರೀಶ (ಡಾಕ್ಟರಿಗೆ): “ಮಹಾಶಯರೆ, ನಿಮಗೆ ಇಚ್ಛೆಯಿದ್ದಂತೆ ನೀವು ಭಾವಿಸಬಹುದು. ಆದರೆ ಸತ್ಯವೇನೆಂದರೆ, ಆತ ನಮ್ಮ ಕೈಯಿಂದ ಮಾಡಿಸುತ್ತಾ ಇರುವುದರಿಂದ ನಾವು ಮಾಡುತ್ತಾ ಇದ್ದೇವೆ. ಆತನ ಇಚ್ಛೆಯಿಲ್ಲದೆ ನಾವು ಒಂದು ಹೆಜ್ಜೆಯನ್ನಾದರೂ ಮುಂದಕ್ಕೆ ಇಡಲಾಗುವುದೇನು?”
ಡಾಕ್ಟರ್: “ಸ್ವತಂತ್ರ ಇಚ್ಛೆ ಎಂಬುದನ್ನು ಆತ ಕೊಟ್ಟಿದ್ದಾನೆ. ಇಚ್ಛೆ ಬಂದರೆ ಆತನ ಚಿಂತನೆ ಮಾಡಬಲ್ಲೆ. ಇಲ್ಲದಿದ್ದರೆ ಸುಮ್ಮನೆ ಇರಬಲ್ಲೆ.”
ಗಿರೀಶ: “ಭಗವಂತನ ಚಿಂತನೆಯೇ ಆಗಲಿ, ಅಥವಾ ಬೇರೆ ಯಾವ ಸತ್ಕಾರ್ಯವೇ ಆಗಲಿ ನಿಮಗೆ ರುಚಿಸುವುದರಿಂದ ಅವನ್ನು ನೀವು ಮಾಡುತ್ತೀರಿ. ಆದ್ದರಿಂದ ಅವನ್ನು ಮಾಡುವವರು ನೀವಲ್ಲ. ರುಚಿಸುತ್ತದೆಯಲ್ಲ, ಅದು ನಿಮ್ಮ ಕೈಯಿಂದ ಮಾಡಿಸುತ್ತದೆ.”
ಡಾಕ್ಟರ್: “ಅದು ಹೇಗೆ? ನನ್ನ ಕರ್ತವ್ಯ ಅಂತ ಅವನ್ನು ಮಾಡುತ್ತೇನೆ.”
ಗಿರೀಶ: “ಆದರೂ ಅವು ರುಚಿಸುತ್ತಿರವುದರಿಂದ ನೀವು ಅವನ್ನು ಮಾಡುತ್ತಿರುವಿರಿ.”
ಡಾಕ್ಟರ್: “ಭಾವಿಸಿಕೊ, ಉರಿಗೆ ಬಿದ್ದು ಒಂದು ಮಗು ಬೆಂದುಹೋಗಿಬಿಡುತ್ತಾ ಇದೆ ಅಂತ. ಕರ್ತವ್ಯದೃಷ್ಟಿಯಿಂದ ಅದನ್ನು ರಕ್ಷಿಸಲು ಮುನ್ನುಗ್ಗುವೆನು.”
ಗಿರೀಶ: “ಆ ಮಗುವನ್ನು ರಕ್ಷಿಸುವುದರಿಂದ ನಿಮಗೆ ಆನಂದ ದೊರೆಯುತ್ತದೆ. ಅದಕ್ಕಾಗಿ ಉರಿಯ ಕಡೆಗೆ ನುಗ್ಗುವಿರಿ. ಆ ಆನಂದ ನಿಮ್ಮನ್ನು ಆ ಕಡೆಗೆ ಎಳೆದುಕೊಂಡು ಹೋಗಿಬಿಡುತ್ತದೆ. ಇದು, ಕೂಡಲೇ ದೊರೆಯುವ ಚೌಚೌಗಾಗಿ ಲೋಭಪಟ್ಟು ಮೊದಲು ಅಫೀಮನ್ನು ನುಂಗಿದ ಹಾಗೆ.” (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು: “ಮನುಷ್ಯ ಕೆಲಸಕ್ಕೆ ಕೈಹಚ್ಚಬೇಕಾದರೆ ಮೊದಲು ಅದರಲ್ಲಿ ಒಂದು ವಿಧವಾದ ವಿಶ್ವಾಸವಿರಬೇಕು. ಜೊತೆಗೆ ಅದರ ಯೋಚನೆ ಬಂದಾಗಲೆಲ್ಲ ಆತನಿಗೆ ಆನಂದವಾಗುತ್ತದೆ. ಆಗ ಮಾತ್ರವೇ ಆತ ಕಾರ್ಯಕ್ಕೆ ಕೈಹಚ್ಚುತ್ತಾನೆ. ಮೊದಲು, ನೆಲದಲ್ಲಿ ಗಡಿಗೆ ಮೊಹರನ್ನು ಹೂತಿಟ್ಟಿದೆ ಎಂಬ ಅರಿವು, ವಿಶ್ವಾಸ ಉಂಟಾಗಬೇಕು. ಆ ಗಡಿಗೆಯ ಯೋಚನೆ ಬಂದಾಗಲೆಲ್ಲ, ಆನಂದವಾಗುತ್ತದೆ. ಬಳಿಕ ಆತ ಅಗೆಯಲು ಶುರು ಮಾಡುತ್ತಾನೆ. ಅಗೆಯುತ್ತ ಅಗೆಯುತ್ತ ಇದ್ದ ಹಾಗೆ ‘ಠಂ’ ಅಂತ ಶಬ್ದ ಕೇಳಿತು ಅಂದರೆ ಆತನ ಆನಂದ ಬೆಳೆಯಲಾರಂಭಿಸುತ್ತದೆ. ಆ ಗಡಿಗೆಯ ಅಂಚು ಏನಾದರೂ ಕಂಡುಬಂತು ಅಂದರೆ ಆನಂದ ಇನ್ನೂ ಅಧಿಕವಾಗುತ್ತದೆ. ಈ ರೀತಿಯಾಗಿ ಆತ ಕಾರ್ಯದಲ್ಲಿ ಮುಂದುವರಿದಂತೆಲ್ಲ ಆತನ ಆನಂದ ಅಧಿಕಾಧಿಕವಾಗುತ್ತಾ ಹೋಗುತ್ತದೆ. ಸಾಧುಗಳ ಬಂಗಿಚಿಲುಮೆಗಳನ್ನು ತಯಾರುಮಾಡುವುದನ್ನು ಕಾಳೀ ದೇವಾಲಯದ ವರಾಂಡದಲ್ಲಿ ನಿಂತು ನಾನು ಅನೇಕ ವೇಳೆ ನೋಡಿದ್ದೇನೆ. ಚಿಲುಮೆಯನ್ನು ಸಿದ್ಧಮಾಡಿಕೊಳ್ಳುತ್ತಕೊಳ್ಳುತ್ತ ಇರುವಾಗಲೇ ಅವರ ಮುಖದಿಂದ ಆನಂದ ಹೊರಸೂಸಲಾರಂಭಿಸುತ್ತದೆ.”
ಡಾಕ್ಟರ್: “ಉದಾಹರಣೆಗೆ ಬೆಂಕಿಯನ್ನು ತೆಗೆದುಕೊಳ್ಳಿ. ಅದು ಕಾವನ್ನೂ ಕೊಡುತ್ತದೆ, ಬೆಳಕನ್ನೂ ಕೊಡುತ್ತದೆ. ಬೆಳಕಿನಿಂದಲೇನೊ ವಸ್ತುಗಳನ್ನು ನೋಡಬಹುದು, ಆದರೆ ಕಾವು ಶರೀರವನ್ನು ಸುಟ್ಟುಬಿಡುತ್ತದೆ. ಅದೇ ರೀತಿಯಾಗಿ ಕರ್ತವ್ಯಕರ್ಮಗಳನ್ನು ಮಾಡಲು ಹೋದೆವು ಎಂದರೆ, ಕೇವಲ ಆನಂದವೇ ದೊರೆಯುತ್ತದೆ ಅಂತಲೇನಲ್ಲ. ಕಷ್ಟವನ್ನೂ ಅನುಭವಿಸಬೇಕಾಗುತ್ತದೆ.”
ಮಾಸ್ಟರ್ (ಗಿರೀಶನಿಗೆ): “ಒಂದು ನಾಣ್ಣುಡಿ ಹೇಳುತ್ತದೆ, ‘ಹೊಟ್ಟೆಗೆ ಅನ್ನ ದೊರೆಯುವ ಹಾಗಿದ್ದರೆ, ಬೆನ್ನು ಒಂದೆರಡು ಏಟು ತಿನ್ನಲೂ ಸಿದ್ಧವಾಗಿರುತ್ತದೆ’ ಎಂದು. ಕಷ್ಟದಲ್ಲೂ ಆನಂದವಿದೆ.”
ಗಿರೀಶ (ಡಾಕ್ಟರಿಗೆ): “ಕರ್ತವ್ಯಕರ್ಮ ಶುಷ್ಕವಾದ್ದು.”
ಡಾಕ್ಟರ್: “ಏಕೆ ಹಾಗೆ?”
ಗಿರೀಶ: “ಹಾಗಾದರೆ, ರಸವತ್ತಾದ್ದು.” (ಎಲ್ಲರೂ ನಗುತ್ತಿದ್ದಾರೆ.)
ಮಾಸ್ಟರ್: “ಭೇಷ್! ಈಗ, ‘ಕೂಡಲೇ ದೊರೆಯುವ ಚೌಚೌಗಾಗಿ ಲೋಭಪಟ್ಟು ಮನುಷ್ಯ ಮೊದಲು ಅಫೀಮನ್ನು ನುಂಗುತ್ತಾನೆ.’ ಎಂಬ ನಾಣ್ಣುಡಿಯನ್ನು ದೃಢೀಕರಿಸಿದ ಹಾಗಾಯಿತು.”
ಗಿರೀಶ (ಡಾಕ್ಟರಿಗೆ): “ರಸವತ್ತಾದ್ದೆ; ಇಲ್ಲದಿದ್ದರೆ ಕರ್ತವ್ಯಕರ್ಮಗಳನ್ನು ನೀವು ಏಕೆ ಮಾಡಲು ಹೋಗುವಿರಿ?”
ಡಾಕ್ಟರ್: “ಮನಸ್ಸಿನ ಪ್ರವೃತ್ತಿ ಆ ಕಡೆಗೆ.”
ಮಾಸ್ಟರ್ (ಗಿರೀಶನಿಗೆ): “ಪ್ರವೃತ್ತಿ ಎಂಬ ಕೆಟ್ಟ ವಸ್ತು ಮನಸ್ಸನ್ನು ಆ ಕಡೆಗೆ ಎಳೆಯುತ್ತದೆ. ಪ್ರವೃತ್ತಿ ಎಂಬುದು ಅಷ್ಟು ಬಲಯುತವಾದುದೇ ಆಗಿದ್ದರೆ ಇನ್ನು ಸ್ವತಂತ್ರ ಇಚ್ಛೆ ಎಂಬುದಕ್ಕೆ ಸ್ಥಳವೆಲ್ಲಿ?”
ಡಾಕ್ಟರ್: “ಇಚ್ಛೆ ಸಂಪೂರ್ಣ ಸ್ವತಂತ್ರದ್ದು ಅಂತಲೇನು ನಾನು ಹೇಳುತ್ತಿಲ್ಲವಲ್ಲ. ಉದಾಹರಣೆಗೆ, ಹಸುವನ್ನು ಹಗ್ಗದಿಂದ ಕಟ್ಟಿಹಾಕಿದೆ ಅಂತ ಇಟ್ಟುಕೊಳ್ಳಿ. ಆ ಹಗ್ಗದ ಉದ್ದದಷ್ಟು ಜಾಗದೊಳಗೆ ಅದು ಸ್ವತಂತ್ರವಾಗಿ ಇರಬಲ್ಲುದು. ಅದು ಆ ಹಗ್ಗದ ಮಿತಿಯಿಂದಾಚೆಗೆ ಹೋಗಬೇಕೆಂದರೆ.”
ಶ್ರೀರಾಮಕೃಷ್ಣರು: “ಯದುಮಲ್ಲಿಕನೂ ಈ ಉದಾಹರಣೆಯನ್ನು ಕೊಟ್ಟ. (ಚಿಕ್ಕ ನರೇನನಿಗೆ) ಇದು ಯಾವುದಾದರೂ ಒಂದು ಇಂಗ್ಲೀಷು ಪುಸ್ತಕದಲ್ಲಿದೆಯೇನು?”
(ಡಾಕ್ಟರಿಗೆ)): “ನೋಡು, ಯಾರಿಗೆ ಆಗಲಿ, ಭಗವಂತನೇ ಎಲ್ಲವನ್ನೂ ಮಾಡುತ್ತಾನೆ, ತಾನು ಯಂತ್ರ, ಆತ ಯಂತ್ರಿ, ಎಂಬ ದೃಢವಿಶ್ವಾಸವಿರುವುದಾದರೆ, ಆತ ಆಗಲೇ ಜೀವನ್ಮುಕ್ತ. ‘ಹೇ ಭಗವಂತ, ನಿನ್ನ ಕಾರ್ಯವನ್ನು ನೀನು ಮಾಡಿಕೊಂಡು ಹೋಗುತ್ತಿದ್ದೀಯೆ; ಜನ ಭಾವಿಸಿಕೊಳ್ಳುತ್ತಾರೆ, ತಾವು ಮಾಡುತ್ತಿದ್ದೇವೆ ಅಂತ.’ ಇದು ಹೇಗೆ ಗೊತ್ತೆ? ವೇದಾಂತದಲ್ಲಿ ಇದಕ್ಕೆ ಒಂದು ಉದಾಹರಣೆ ಇದೆ. ಒಲೆ ಮೇಲೆ ಅನ್ನದ ಪಾತ್ರೆ ಇಟ್ಟು ಅದಕ್ಕೆ ಬೇಯಲು ಆಲೂಗಡ್ಡೆ, ಬದನೆಕಾಯಿ ಇವನ್ನು ಹಾಕಿದೆ ಅಂತ ಇಟ್ಟುಕೊ. ಉರಿ ಹಾಕಿದ ಸ್ವಲ್ಪ ಹೊತ್ತಿನ ಮೇಲೆ ಅಕ್ಕಿ, ಆಲೂಗಡ್ಡೆ, ಬದನೆಕಾಯಿ ಇವೆಲ್ಲ ನೀರಿನಲ್ಲಿ ಕುಣಿದಾಡಲು ಆರಂಭಿಸುತ್ತವೆ. ತೋರುತ್ತದೆ, ಅವು ಒಂದು ವಿಧವಾದ ಅಭಿಮಾನದಿಂದ, ‘ನಾವು ಕುಣಿಯುತ್ತಿದ್ದೇವೆ! ನಾವು ಚಲಿಸುತ್ತಿದ್ದೇವೆ!’ ಅಂತ ಹೇಳುತ್ತಿರುವುವೊ ಏನೊ ಎಂಬಂತೆ. ಚಿಕ್ಕಮಕ್ಕಳು ಅದನ್ನು ನೋಡಿ ಭಾವಿಸುತ್ತವೆ, ಆಲೂಗಡ್ಡೆ ಬದನೆಕಾಯಿ ಇವೆಲ್ಲ ಜೀವಂತವಾಗಿರುವುದರಿಂದ ಅವು ಕುಣಿದಾಡುತ್ತಿವೆ ಅಂತ. ಆದರೆ ದೊಡ್ಡವರು ಅವರಿಗೆ ತಿಳಿಸಿಕೊಡುತ್ತಾರೆ, ಅವು ಜೀವಂತವಾದವುಗಳಲ್ಲ; ಅವು ತಾವಾಗಿಯೇ ಚಲಿಸುತ್ತಿಲ್ಲ, ಪಾತ್ರೆ ಕೆಳಗಿರುವ ಉರಿಯ ದೆಸೆಯಿಂದ ಹಾಗೆ ಮಾಡುತ್ತಿವೆ; ಉರಿ ತೆಗೆದುಬಿಟ್ಟದ್ದೇ ಆದರೆ, ಅವುಗಳ ಚಲನೆ ಎಲ್ಲ ನಿಂತುಹೋಗುತ್ತದೆ ಎಂಬುದಾಗಿ. ಮನುಷ್ಯನ ‘ನಾನು ಕರ್ತ’ ಎಂಬ ಅಭಿಮಾನ ಅಜ್ಞಾನಜನ್ಯ. ಭಗವಂತನ ಶಕ್ತಿಯಿಂದ ಎಲ್ಲರೂ ಶಕ್ತಿಯುತರಾಗಿ ತೋರುತ್ತಾರೆ. ಉರಿ ತೆಗೆದುಹಾಕಿತು ಎಂದರೆ, ಎಲ್ಲವೂ ಶಾಂತವಾಗಿಬಿಡುತ್ತದೆ. ತಂತಿ ಹಿಡಿದು ಎಳೆಯುತ್ತಿದ್ದರೆ ಆಟದ ಬೊಂಬೆಗಳು ನರ್ತಿಸಲು ಆರಂಭಿಸುತ್ತವೆ. ಮಧ್ಯೆ ತಂತಿಯೇನಾದರೂ ಕಿತ್ತುಹೋಯಿತು ಎಂದರೆ ಅವು ತೆಪ್ಪಗಾಗುತ್ತವೆ–ನರ್ತನ ಎಲ್ಲ ನಿಂತುಹೋಗುತ್ತದೆ.
“ಭಗವಂತನ ದರ್ಶನ ದೊರೆಯುವ ತನಕ, ಸ್ಪರ್ಶಮಣಿಯನ್ನು ಮುಟ್ಟುವತನಕ, ‘ನಾನು ಕರ್ತ’ ಎಂಬ ಭ್ರಾಂತಿ ಮನುಷ್ಯನ ಮೇಲೆ ಕವಿದುಕೊಂಡಿರುತ್ತದೆ. ‘ಸತ್ಕಾರ್ಯವನ್ನು ಮಾಡಿದ್ದೇನೆ; ಅಸತ್ಕಾರ್ಯವನ್ನು ಮಾಡಿದ್ದೇನೆ’ ಎಂಬ ಭೇದ ಬೋಧೆ ಆತನಿಗೆ ಅಲ್ಲಿಯವರೆಗೆ ಇದ್ದೇ ಇರುತ್ತದೆ. ಈ ಭೇದ ಬೋಧೆ ಭಗವಂತನ ಮಾಯಾರಾಜ್ಯಕ್ಕೆ ಸೇರಿದ್ದೆ–ಆತನ ಮಾಯಾ ಸಂಸಾರ ಮುಂದುವರಿಯಲು ಆತ ಮಾಡಿರುವ ವ್ಯವಸ್ಥೆ. ವಿದ್ಯಾಮಾಯೆಯನ್ನು ಆಶ್ರಯಿಸಿದರೆ ಸನ್ಮಾರ್ಗವನ್ನು ಹಿಡಿದರೆ ಆತನ ಸಾಕ್ಷಾತ್ಕಾರವನ್ನು ಪಡೆಯಬಹುದು. ಯಾರು ಆತನ ಸಾಕ್ಷಾತ್ಕಾರವನ್ನು ಪಡೆಯುತ್ತಾನೊ, ಯಾರು ಆತನ ದರ್ಶನ ಪಡೆಯುತ್ತಾನೊ ಆತ ಮಾಯಾರಾಜ್ಯವನ್ನು ಮೀರಿಹೋಗಬಲ್ಲ. ಆತನೇ ಏಕಮಾತ್ರ ಕರ್ತ, ತಾನು ಅಕರ್ತ ಎಂಬ ದೃಢವಿಶ್ವಾಸ ಯಾರಿಗುಂಟಾಗಿದೆಯೊ ಆತನೇ ಜೀವನ್ಮುಕ್ತ. ಒಮ್ಮೆ ಹೀಗೆಂದು ಕೇಶವಸೇನನಿಗೆ ತಿಳಿಸಿದ್ದೆ.”
ಗಿರೀಶ (ಡಾಕ್ಟರಿಗೆ): “ಸ್ವತಂತ್ರ ಇಚ್ಛೆ ಎಂಬುದು ಇದೆ ಅಂತ ನಿಮಗೆ ಹೇಗೆ ಗೊತ್ತು?”
ಡಾಕ್ಟರ್: “ವಿಚಾರದ ಮೂಲಕ ಅಲ್ಲ; ಸುಮ್ಮನೆ ಅನಿಸುತ್ತದೆ ಇದೆ ಅಂತ.”
ಗಿರೀಶ: “ಹಾಗಾದರೆ, ನನಗೆ ಮತ್ತೆ ಉಳಿದವರಿಗೆ ಬೇರೆ ವಿಧವಾಗಿ ಅನಿಸುತ್ತಿದೆ. ನಾವು ಪರತಂತ್ರರು ಅಂತ ನಮಗೆ ಬೋಧೆಯಾಗುತ್ತಿದೆ.” (ಎಲ್ಲರೂ ನಗುತ್ತಿದ್ದಾರೆ.)
ಡಾಕ್ಟರ್: “ಕರ್ತವ್ಯಕರ್ಮದಲ್ಲಿ ಎರಡು ಮೂಲಾಂಶಗಳಿವೆ; ಮೊದಲನೆಯದು ಕರ್ತವ್ಯ ಬದ್ಧತೆ; ಎರಡನೆಯದು, ಬಳಿಕ ದೊರೆಯುವ ಆನಂದ. ಪ್ರಾರಂಭದಲ್ಲೇ ಆನಂದ ದೊರೆಯುತ್ತದೆ ಅಂತ ಹೇಳಲಾಗುವುದಿಲ್ಲ. ನಾನು ಚಿಕ್ಕವನಾಗಿದ್ದಾಗ ಅನೇಕ ವೇಳೆ ನೋಡಿದ್ದೇನೆ, ನೈವೇದ್ಯಕ್ಕೆ ಇಟ್ಟಿರುವ ಸಂದೇಶಕ್ಕೆ (ಸಿಹಿ ತಿಂಡಿಗೆ) ಇರುವೆ ಬಂದು ಮುತ್ತಿಕೊಂಡಿತು ಅಂದರೆ ಅರ್ಚಕನ ಮುಖ ಹೇಗಾಗುತ್ತಿತ್ತು ಎಂಬುದನ್ನು. ಪ್ರಾರಂಭದಲ್ಲೇ ಸಂದೇಶದ ಭಾವನೆ ಆತನಿಗೆ ಆನಂದವನ್ನು ತರಲಿಲ್ಲ. ಅದಕ್ಕೆ ಬದಲು ಆತನಿಗೆ ಬಂದದ್ದು ಅವುಗಳ ರಕ್ಷಣೆಯ ಮಹಾ ಚಿಂತನೆ.”
ಮಾಸ್ಟರ್ (ತನಗೆ ತಾನೆ): “ಕೆಲಸದ ಸಮಯದಲ್ಲಿ ಆನಂದ ಉಂಟಾಗುತ್ತದೆಯೊ ಅಥವಾ ಆಮೇಲೆ ಉಂಟಾಗುತ್ತದೆಯೊ ಎಂಬುದನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಹೇಳಲಾಗುವುದಿಲ್ಲ. ಆನಂದಕ್ಕಾಗಿ ಕಾರ್ಯದಲ್ಲಿ ಕೈಹಚ್ಚುವುದು ನಿಜವಾದರೆ, ಆತ ‘ಸ್ವತಂತ್ರ ಇಚ್ಛೆ’ ಎಂಬುದಕ್ಕೆ ಸ್ಥಳವೆಲ್ಲಿ?”
ಶ್ರೀರಾಮಕೃಷ್ಣರು: “ಡಾಕ್ಟರ್ ಹೇಳುತ್ತಿರುವುದಕ್ಕೆ ‘ಅಹೇತುಕ ಭಕ್ತಿ’ ಅಂತ ಹೆಸರು. ಡಾಕ್ಟರ್ ಮಹೇಂದ್ರಸರ್ಕಾರನಿಂದ ನನಗೆ ಏನೂ ಬೇಕಾಗಿಲ್ಲ; ಯಾವ ಉಪಕಾರವೂ ಆಗಬೇಕಾಗಿಲ್ಲ, ಆದರೂ ನಾನು ಆತನನ್ನು ಪ್ರೀತಿಸುತ್ತೇನೆ. ಇದಕ್ಕೇ ‘ಅಹೇತುಕ ಭಕ್ತಿ’ ಅಂತ ಹೆಸರು. ಇದರಿಂದ ಒಂದು ಕಿಂಚಿತ್ ಆನಂದ ದೊರೆಯುವುದಾದರೆ, ಅದಕ್ಕೇನು ಮಾಡಬೇಕು ಅಂತ?
“ಒಮ್ಮೆ ಅಹಲ್ಯೆ ರಾಮನಿಗೆ ಹೇಳಿದಳು: ‘ಹೇ ರಾಮ, ನಾನು ಹಂದಿಯ ಹೊಟ್ಟೆಯಲ್ಲಿ ಹುಟ್ಟಬೇಕಾಗಿ ಬಂದರೂ, ಅದಕ್ಕೆ ನನ್ನ ಯಾವ ಆಕ್ಷೇಪಣೆಯೂ ಇಲ್ಲ. ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧ ಭಕ್ತಿ ಉಂಟಾಗುವಂತೆ ಮಾತ್ರ ವರ ಕರುಣಿಸು. ನನಗೆ ಇನ್ನು ಏನೂ ಬೇಕಾಗಿಲ್ಲ.’
“ರಾವಣನು ವಧೆಯಾಗಬೇಕಾಗಿರುವುದನ್ನು ಶ್ರೀರಾಮಚಂದ್ರನ ಸ್ಮರಣೆಗೆ ತರಲೋಸುಗ ನಾರದ ಅಯೋಧ್ಯೆಗೆ ಹೋದ. ಅಲ್ಲಿ ಸೀತಾರಾಮರ ದರ್ಶನ ಪಡೆದು ಅವರನ್ನು ಸ್ತುತಿಸಲಾರಂಭಿಸಿದ. ಶ್ರೀರಾಮಚಂದ್ರ ಆತನ ಸ್ತುತಿಯನ್ನು ಕೇಳಿ ಸಂತುಷ್ಟನಾಗಿ ಹೇಳಿದ: ‘ಓ ನಾರದ, ನಿನ್ನ ಸ್ತುತಿಯನ್ನು ಕೇಳಿ ನನಗೆ ಬಹಳ ಆನಂದವಾಗಿದೆ. ನನ್ನಿಂದ ನೀನು ಯಾವುದಾದರೂ ಒಂದು ವರ ಬೇಡಿಕೊ.’ ನಾರದ ಹೇಳಿದ: ‘ಹೇ ರಾಮ, ನೀನು ನನಗೆ ವರ ಕರುಣಿಸಬೇಕೆಂದಿದ್ದರೆ, ನನಗೆ ನಿನ್ನ ಪಾದಪದ್ಮಗಳಲ್ಲಿ ಶುದ್ಧ ಭಕ್ತಿಯುಂಟಾಗುವಂತೆಯೂ ಮತ್ತು ನಿನ್ನ ಭುವನಮೋಹಿನಿ ಮಾಯೆಯಿಂದ ಮುಗ್ಧನಾಗದೆ ಇರುವಂತೆಯೂ ವರಪ್ರಸಾದ ಮಾಡು.’ ಶ್ರೀರಾಮ ಹೇಳಿದ: ‘ಇದೂ ಅಲ್ಲದೆ, ಇನ್ನು ಬೇರೆ ಯಾವ ವರವನ್ನಾದರೂ ಬೇಡಿಕೊ.’ ನಾರದ ಹೇಳಿದ: ‘ಇನ್ನು ನನಗೆ ಏನೂ ಬೇಕಾಗಿಲ್ಲ. ಕೇವಲ ಭಕ್ತಿಯುಂಟಾಗುವುದೊಂದು ಮಾತ್ರ ಬೇಕು.’
“ಡಾಕ್ಟರ್ ಸರ್ಕಾರನ ಭಾವವೂ ಅದೇ ರೀತಿಯದು. ಇದು ಕೇವಲ ಭಗವಂತನ ಸಾಕ್ಷಾತ್ಕಾರಕ್ಕಾಗಿ ವಿನಾ ಬೇರೆ ಯಾವುದಕ್ಕೂ–ಧನ, ಮಾನ, ದೇಹಸುಖ ಇವುಗಳಿಗೆ ಪ್ರಾರ್ಥಿಸದ ಹಾಗೆ. ಇದಕ್ಕೇ ‘ಶುದ್ಧ ಭಕ್ತಿ’ ಅಂತ ಹೆಸರು.
“ಇದರಲ್ಲಿ ಕಿಂಚಿತ್ ಆನಂದ ದೊರೆಯುವುದೇನೊ ನಿಜ. ಆದರೆ ಅದು ವಿಷಯಾನಂದವಲ್ಲ; ಭಕ್ತಿಯ ಪ್ರೇಮದ ಆನಂದ. ನಾನು ಆಗಾಗ ಶಂಭುಮಲ್ಲಿಕನ ಮನೆಗೆ ಹೋಗುತ್ತಿದ್ದುದುಂಟು. ಒಮ್ಮೆ ಆತ ನನಗೆ ಹೇಳಿದ: ‘ನೀವು ಆಗಾಗ ಇಲ್ಲಿಗೆ ಬರುತ್ತಿದ್ದೀರಿ. ನನ್ನೊಡನೆ ಮಾತುಕತೆಯಾಡುವುದರಿಂದ ವಾಸ್ತವವಾಗಿ ನಿಮಗೆ ಆನಂದ ದೊರೆಯುತ್ತಿರಬೇಕು. ಅದಕ್ಕಾಗಿ ನೀವು ಇಲ್ಲಿಗೆ ಬರುತ್ತಾ ಇದ್ದೀರಿ.’ ಹೌದು, ಇದರಲ್ಲಿ ಅದೊಂದಷ್ಟು ಆನಂದ ಇದೆ.
“ಆದರೆ ಇದಕ್ಕಿಂತಲೂ ಉಚ್ಚವಾದ ಬೇರೊಂದು ಅವಸ್ಥೆ ಇದೆ. ಆ ಅವಸ್ಥೆಯಲ್ಲಿ ಮನುಷ್ಯ ಮಗುವಿನ ಹಾಗೆ ದಿಕ್ಕು ದಿವಾಳಿ ಇಲ್ಲದೆ ತಿರುಗಾಡುತ್ತಾನೆ, ಮಗು ದಾರಿಯಲ್ಲಿ ಹೋಗುತ್ತಾ ಇದ್ದ ಹಾಗೆ, ಚಿಟ್ಟೆ ಹಿಡಿಯುವ ಹಾಗೆ, ಆತನೂ ಯಾವ ಉದ್ದೇಶವೂ ಇಲ್ಲದೆ ಸುಮ್ಮನೆ ಸುತ್ತಾಡುತ್ತಿರುತ್ತಾನೆ.
(ಭಕ್ತರಿಗೆ) “ಡಾಕ್ಟರ್ನ ಆಂತರಿಕ ಭಾವ ಏನು ಎಂಬುದು ನಿಮಗೆ ಗೊತ್ತಾಯಿತೇನು? ಇದು ಭಕ್ತ ಭಗವಂತನನ್ನು, ‘ಹೇ ಭಗವಂತ, ನನಗೆ ಸದಿಚ್ಛೆಯನ್ನು ಕೊಡು, ಅಸತ್ಕಾರ್ಯಗಳ ಕಡೆಗೆ ಬುದ್ಧಿ ಪ್ರೇರಿತವಾಗದ ಹಾಗೆ ಮಾಡು’ ಎಂದು ಪ್ರಾರ್ಥಿಸಿದ ಹಾಗೆ.
“ನನಗೂ ಒಮ್ಮೆ ಈ ಅವಸ್ಥೆ ಬಂದಿತ್ತು. ಇದಕ್ಕೇ ‘ದಾಸ್ಯ ಭಾವ’ ಅಂತ ಹೆಸರು. ನಾನು ‘ತಾಯಿ! ತಾಯಿ!’ ಅಂತ ಕೂಗುತ್ತ ಅಷ್ಟೊಂದು ಅಳುತ್ತಿದ್ದೆ, ಜನ ಗುಂಪುಕಟ್ಟಿ ನನ್ನ ಸುತ್ತಲೂ ನಿಲ್ಲುತ್ತಿದ್ದರು. ನನಗೆ ಈ ಅವಸ್ಥೆ ಬಂದನಂತರ, ಕೆಲವರು ನನ್ನನ್ನು ಪರೀಕ್ಷಿಸಲು ಮತ್ತು ನನ್ನ ಆ ಹುಚ್ಚನ್ನು ಇಳಿಸಲು ಒಬ್ಬ ವೇಶ್ಯೆಯನ್ನು ಕರೆದುಕೊಂಡು ಬಂದು ನನ್ನ ಕೊಠಡಿಗೆ ಬಿಟ್ಟರು. ಆಕೆ ಒಳ್ಳೆ ರೂಪವತಿ. ಕಣ್ಣು ಬಹಳ ಸುಂದರವಾಗಿದ್ದುವು. ನಾನು ‘ತಾಯಿ! ತಾಯಿ!’ ಎಂದು ಕೂಗುತ್ತ ಕೊಠಡಿಯಿಂದ ಹೊರಕ್ಕೆ ಓಡಿ ಬಂದೆ. ಬಳಿಕ ಹಲಧಾರಿಯನ್ನು ಕರೆದು ಹೇಳಿದೆ: ‘ಬಾ, ನನ್ನ ಕೊಠಡಿಗೆ ಯಾರು ಬಂದಿದ್ದಾಳೆ ಎಂಬುದನ್ನು ನೋಡುವೆಯಂತೆ ಬಾ!’ ಹಲಧಾರಿಗೆ ಮತ್ತೆಲ್ಲರಿಗೂ ಆಕೆ ಯಾರು ಎಂಬುದನ್ನು ತಿಳಿಸಿದೆ. ಈ ಅವಸ್ಥೆಯಲ್ಲಿ ಇದ್ದಾಗ, ‘ತಾಯಿ! ತಾಯಿ!’ ಅಂತ ಅಳುತ್ತಿದ್ದೆ. ಹಾಗೆ ಅಳುತ್ತ ಪ್ರಾರ್ಥನೆ ಮಾಡುತ್ತಿದ್ದೆ: ‘ತಾಯಿ, ನನ್ನನ್ನು ರಕ್ಷಿಸು! ದಯವಿಟ್ಟು ನನ್ನನ್ನು ದೋಷರಹಿತನನ್ನಾಗಿ ಮಾಡು. ದಯವಿಟ್ಟು ನನ್ನ ಮನಸ್ಸು ಸತ್ಯವನ್ನು ಬಿಟ್ಟು ಅಸತ್ಯದ ಕಡೆ ಹೋಗದೆ ಇರುವ ಹಾಗೆ ಕೃಪೆ ಮಾಡು.’ (ಡಾಕ್ಟರಿಗೆ) ನಿನ್ನ ಈ ಭಾವ ಒಳ್ಳೆಯದೆ. ಇದೇ ಭಕ್ತನ ಭಾವ. ದಾಸನ ಭಾವ.
“ಯಾರಲ್ಲೆ ಆಗಲಿ, ಶುದ್ಧ ಸತ್ತ್ವ ಉಂಟಾದರೆ, ಆ ವ್ಯಕ್ತಿ ಕೇವಲ ಭಗವಚ್ಚಿಂತನೆಯನ್ನು ಮಾತ್ರ ಮಾಡುತ್ತಿರುತ್ತಾನೆ. ಆತನಿಗೆ ಬೇರೇನೂ ರುಚಿಸದು. ಕೆಲವರು ತಮ್ಮ ಪ್ರಾರಬ್ಧದ ದೆಸೆಯಿಂದ ಶುದ್ಧ ಸತ್ತ್ವಾನ್ವಿತರಾಗಿಯೇ ಜನ್ಮ ತಳೆಯುತ್ತಾರೆ. ಕಾಮನಾಶೂನ್ಯರಾಗಿ ಕರ್ಮಗಳನ್ನು ಮಾಡಲು ಪ್ರಯತ್ನಿಸಿದರೆ ಕೊನೆಯಲ್ಲಿ ಶುದ್ಧ ಸತ್ತ್ವದೊರೆಯುತ್ತದೆ. ರಜೋಮಿಶ್ರಿತ ಸತ್ತ್ವಗುಣ ಮನಸ್ಸನ್ನು ವಿವಿಧ ವಸ್ತುಗಳ ಕಡೆಗೆ ತಿರುಗಿಸಿಬಿಡುತ್ತದೆ. ಜಗತ್ತಿಗೆ ಉಪಕಾರ ಮಾಡಬೇಕು ಎಂಬೀ ವಿಧದ ಅಹಂಕಾರ ಬಂದುಬಿಡುತ್ತದೆ. ಮನುಷ್ಯನಂಥ ಈ ಸಾಮಾನ್ಯ ಜೀವಿ ಜಗತ್ತಿಗೆ ಉಪಕಾರವನ್ನು ಮಾಡಿ ಜಯಶೀಲನಾಗುವುದು ದುಸ್ಸಾಧ್ಯವಾದುದೆ. ಆದರೆ ಪರೋಪಕಾರಾರ್ಥವಾಗಿಕಾಮಶೂನ್ಯನಾಗಿ ಕೆಲಸ ಮಾಡುವುದಾದರೆ, ಅದು ಯಾವ ತೊಂದರೆಯನ್ನೂ ತರದು. ಅದಕ್ಕೆ ‘ನಿಷ್ಕಾಮ ಕರ್ಮ’ ಅಂತ ಹೆಸರು. ಈ ವಿಧದ ಕರ್ಮಗಳನ್ನು ಮಾಡಲು ಪ್ರಯತ್ನಿಸುವುದು ಬಹಳ ಒಳ್ಳೆಯದು. ಆದರೆ ಇದು ಎಲ್ಲರ ಕೈಯಲ್ಲೂ ಸಾಗದ ಮಾತು. ಬಹಳ ಕಠಿಣ. ಎಲ್ಲರೂ ಕೆಲಸವನ್ನು ಮಾಡಲೇಬೇಕು. ಎಲ್ಲೋ ಒಬ್ಬಿಬ್ಬರು ಮಾತ್ರ ಅದನ್ನು ತ್ಯಜಿಸಬಲ್ಲರು. ಎಲ್ಲೊ ಅಲ್ಲಿ ಇಲ್ಲಿ ಒಬ್ಬಿಬ್ಬರು ಶುದ್ಧಸತ್ತ್ವಾನ್ವಿತರಾಗಿರುವುದನ್ನು ನೋಡಬಹುದು. ನಿಷ್ಕಾಮಕರ್ಮವನ್ನು ಮಾಡುತ್ತ ಮಾಡುತ್ತ, ರಜೋಮಿಶ್ರಿತ ಸತ್ತ್ವಗುಣ ಕ್ರಮೇಣ ಶುದ್ಧ ಸತ್ತ್ವವಾಗಿ ಪರಿಣಮಿಸುತ್ತದೆ.
“ಭಗವಂತನ ಕೃಪೆಯಿಂದ ಶುದ್ಧ ಸತ್ತ್ವ ಹೃದಯದಲ್ಲಿ ಅಂಕುರವಾಯಿತು ಅಂದರೆ ಆತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ.
“ ‘ಶುದ್ಧಸತ್ತ್ವ’ ಎಂದರೆ ಏನು ಎಂಬುದು ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಹೇಮ ಒಮ್ಮೆ ನನಗೆ ಹೇಳಿದ: ‘ಏನು ಭಟ್ಟಾಚಾರ್ಯರೆ! ಜಗತ್ತಿನಲ್ಲಿ ಕೀರ್ತಿ ಸಂಪಾದಿಸುವುದೆ ಮಾನವಜನ್ಮದ ಏಕಮಾತ್ರ ಉದ್ದೇಶ, ಅಲ್ಲವೇನು?”’
೨೭ನೇ ಅಕ್ಟೋಬರ್ ೧೮೮೫, ಕಾರ್ತಿಕ ಕೃಷ್ಣ ಚೌತಿ, ಮಂಗಳವಾರ
ಪರಮಹಂಸರು ಶ್ಯಾಮಪುಕುರದ ತಮ್ಮ ಕೊಠಡಿಯಲ್ಲಿ ನರೇಂದ್ರನೇ ಮೊದಲಾದವರೊಡನೆ ಮಾತುಕತೆಯಾಡುತ್ತ ಕುಳಿತುಕೊಂಡಿದ್ದಾರೆ. ಘಂಟೆ ಬೆಳಗಿನ ಹತ್ತು.
ನರೇಂದ್ರ: “ನಿನ್ನೆ ಡಾಕ್ಟರ್ ಹೇಗೆ ನಡೆದುಕೊಂಡುಬಿಟ್ಟ ಏನು ಕತೆ?”
ಒಬ್ಬ ಭಕ್ತ: “ಮೀನು ಗಾಳವನ್ನೇನೊ ನುಂಗಿತು, ಆದರೆ ಗಾಳದ ದಾರ ಕಿತ್ತು ಹೋಗಿಬಿಟ್ಟಿತು.”
ಶ್ರಿರಾಮಕೃಷ್ಣರು (ನಗುತ್ತ): “ಗಾಳದ ಕೊಕ್ಕೆ ಅದರ ಗಂಟಲಿಗೆ ಸಿಕ್ಕಿಕೊಂಡಿದೆ. ಆದ್ದರಿಂದ ಅದು ಸತ್ತು ನೀರಿನ ಮೇಲೆ ತೇಲಲೇಬೇಕು.”
ನರೇಂದ್ರ ಕೆಲವು ನಿಮಿಷಗಳ ಮಟ್ಟಿಗೆ ಎದ್ದು ಹೊರಗಡೆ ಹೋಗಿದ್ದಾನೆ. ಪರಮಹಂಸರು ಮಾಸ್ಟರೊಡನೆ ಪೂರ್ಣನ ಸಂಬಂಧವಾಗಿ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ತಾನೇ ಪ್ರಕೃತಿ, ಭಗವಂತನೇ ಪುರುಷ ಎಂದು ಭಾವಿಸಿಕೊಂಡು ಭಕ್ತ ಆತನನ್ನು ಅಪ್ಪಿಕೊಳ್ಳಲು ಮತ್ತು ಚುಂಬಿಸಲು ಇಚ್ಛೆಪಡುತ್ತಾನೆ. ಇದನ್ನು ಕೇವಲ ನಿನಗೆ ಮಾತ್ರ ಹೇಳುತ್ತಿದ್ದೇನೆ. ಸಾಮಾನ್ಯರ ಕಿವಿಗೆ ಇದು ಬೀಳಕೂಡದು.”
ಮಾಸ್ಟರ್: “ಭಗವಂತ ಹಲವಾರು ವಿಧದಲ್ಲಿ ಕ್ರೀಡಿಸುತ್ತಾನೆ. ನಿಮ್ಮ ಕಾಯಿಲೆಯೂ ಆತನ ಕ್ರೀಡೆಯಲ್ಲಿ ಒಂದು. ನಿಮಗೆ ಈ ಕಾಯಿಲೆ ಬಂದಿರುವುದರಿಂದ ಹೊಸ ಭಕ್ತರು ಇಲ್ಲಿಗೆ ಬರುತ್ತಿದ್ದಾರೆ.”
ಶ್ರೀರಾಮಕೃಷ್ಣರು (ನಗುತ್ತ): “ಭೂಪತಿ ಹೇಳಿದ: ‘ನಿಮಗೆ ಈ ಕಾಯಿಲೆ ಬರದೆ ಸುಮ್ಮನೆ ನೀವು ಈ ಮನೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದರೆ ಜನ ಏನಂದು ಬಿಡುತ್ತಿದ್ದರೊ ಏನೊ?’ ಒಳ್ಳೆಯದು, ಡಾಕ್ಟರ ಸಮಾಚಾರ ಏನು?”
ಮಾಸ್ಟರ್: “ಭಗವಂತನ ಸಂಬಂಧವಾಗಿ ತನ್ನದು ‘ದಾಸ್ಯ ಭಾವ’ ಅಂತ ಆತ ಒಪ್ಪಿಕೊಳ್ಳುತ್ತಾನೆ. ಆತ ಹೇಳುತ್ತಾನೆ, ‘ಹೇ ಭಗವಂತ, ನಾನು ದಾಸ, ನೀನು ಪ್ರಭು’ ಅಂತ. ಆದರೂ ಮತ್ತೆ ನನ್ನನ್ನು ಕೇಳುತ್ತಾನೆ, ‘ಭಗವದ್ಭಾವನೆಯನ್ನು ಮನುಷ್ಯನ ಮೇಲೆ ಏಕೆ ಆರೋಪಿಸುತ್ತೀಯೆ’ ಎಂದು.”
ಶ್ರೀರಾಮಕೃಷ್ಣರು: “ನೀನೇ ನೋಡು! ಇಂದು ಆತನ ಮನೆಗೆ ಹೋಗಿ ಬರುತ್ತೀಯೇನು?”
ಮಾಸ್ಟರ್: “ಏನಾದರೂ ಹೇಳಬೇಕಾಗಿದ್ದರೆ ಹೋಗಿಬರುತ್ತೇನೆ.”
ಶ್ರೀರಾಮಕೃಷ್ಣರು: “ಬಂಕಿಮ ಎಂಥ ಹುಡುಗ? ಆತ ಇಲ್ಲಿಗೆ ಬರಲಾಗದಿದ್ದರೆ ನೀನೇ ಆತನಿಗೆ ಸ್ವಲ್ಪ ಉಪದೇಶ ಕೊಡು. ಆತ್ಮಜಾಗೃತಿ ಉಂಟಾಗುತ್ತದೆ.”
ನರೇಂದ್ರ ಹಿಂದಿರುಗಿ ಬಂದು ಪರಮಹಂಸರ ಹತ್ತಿರ ಕುಳಿತುಕೊಂಡ. ತಂದೆಗೆ ಪರಲೋಕ ಪ್ರಾಪ್ತಿಯಾದನಂತರ ನರೇಂದ್ರ ಬಹಳವಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಕ್ಕಿಕೊಂಡಿದ್ದಾನೆ. ತಾಯಿ ಮತ್ತು ಸೋದರ ಸೋದರಿಯರಿದ್ದಾರೆ. ಅವರ ಭರಣಪೋಷಣೆ ಮಾಡಬೇಕಾಗಿದೆ. ಜೊತೆಗೆ ‘ಲಾ’ ಪರೀಕ್ಷೆಗೆ ಬೇರೆ ಓದುತ್ತಿದ್ದಾನೆ. ಇತ್ತೀಚೆಗೆ ಕೆಲವು ತಿಂಗಳ ಕಾಲ ವಿದ್ಯಾಸಾಗರನ ಮನೆಯಲ್ಲಿ ಅಧ್ಯಾಪಕನಾಗಿದ್ದ. ತನ್ನ ಮನೆಯವರ ಜೀವನೋಪಾಯಕ್ಕೆ ಯಾವುದಾದರೂ ಒಂದು ವ್ಯವಸ್ಥೆ ಕಲ್ಪಿಸಿ ಬಳಿಕ ನಿಶ್ಚಿಂತನಾಗಿರಬೇಕೆಂದು ಪ್ರಯತ್ನಮಾಡುತ್ತಿದ್ದಾನೆ. ಆತನ ಸ್ಥಿತಿಗತಿಯೆಲ್ಲ ಪರಮಹಂಸರಿಗೆ ಚೆನ್ನಾಗಿ ಗೊತ್ತಿದೆ. ಅವರು ನರೇಂದ್ರನನ್ನು ಅತ್ಯಂತ ಅಕ್ಕರೆಯಿಂದ ಕಾಣುತ್ತಿದ್ದಾರೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಒಳ್ಳೆಯದು, ನಾನು ಕೇಶವಸೇನನಿಗೆ ಹೇಳಿದೆ, ‘ಯದೃಚ್ಛಾಲಾಭ ಸಂತುಷ್ಟಿಯೇ ಒಳ್ಳೆಯದು’ ಅಂತ. ನೋಡು ಶ್ರೀಮಂತನ ಮಗ ಅನ್ನಾಹಾರಾದಿಗಳಿಗೇ ಉಡಿಗೆತೊಡಿಗೆಗಳಿಗೇ ಆಗಲಿ ಚಿಂತಿಸಬೇಕಾಗಲ್ಲ. ಮಾಸಾಶನ ತಪ್ಪದೆ ದೊರೆಯುತ್ತದೆ. ನರೇಂದ್ರನೂ ಉಚ್ಚ ಅಂತಸ್ತಿಗೆ ಸೇರಿದವ. ಆದರೂ ಆತ ಅಷ್ಟೊಂದು ಬಿಕ್ಕಟ್ಟಿಗೆ ಸಿಕ್ಕಿಕೊಂಡಿದ್ದಾನಲ್ಲ ಏಕೆ? ಭಗವಂತನಿಗೆ ಮನಸ್ಸನ್ನು ಸಂಪೂರ್ಣವಾಗಿ ಸಮರ್ಪಿಸಿ ಬಿಟ್ಟುದೇ ಆದರೆ, ಆತ ಎಲ್ಲವನ್ನೂ ಒದಗಿಸಿಕೊಟ್ಟುಬಿಡುತ್ತಾನೆ.”
ಮಾಸ್ಟರ್: “ನರೇಂದ್ರನಿಗೂ ಎಲ್ಲಾ ಬಂದೊದಗುತ್ತವೆ. ಇನ್ನೂ ಆ ಸಮಯವೆಲ್ಲ ಕಳೆದುಹೋಗಿಬಿಟ್ಟಿಲ್ಲವಲ್ಲ.”
ಶ್ರೀರಾಮಕೃಷ್ಣರು: “ತೀವ್ರ ವೈರಾಗ್ಯ ಉಂಟಾಯಿತು ಅಂದರೆ ಮನುಷ್ಯ ಏನು ಎತ್ತ ಅಂತ ಲೆಕ್ಕಾಚಾರ ಹಾಕುವುದಿಲ್ಲ. ಆತ ‘ಮನೆಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಬಳಿಕ ಸಾಧನೆಯಲ್ಲಿ ತೊಡಗುವೆನು’ ಅಂತ ಹೇಳಿಕೊಳ್ಳುವುದಿಲ್ಲ. ತೀವ್ರ ವೈರಾಗ್ಯ ಉಂಟಾಯಿತು ಅಂದರೆ ಈ ವಿಧದ ಭಾವನೆಗಳು ಬರುವುದೇ ಇಲ್ಲ. (ನಗುತ್ತ) ತನ್ನ ಉಪನ್ಯಾಸದ ಸಮಯದಲ್ಲಿ ಒಬ್ಬ ಗೋಸ್ವಾಮಿ ಹೇಳಿದ: ‘ಕೈಯಲ್ಲಿ ಒಂದು ಹತ್ತು ಸಾವಿರ ರೂಪಾಯಿ ಇತ್ತು ಅಂದರೆ, ಅದರಿಂದ ಬರುವ ಬಡ್ಡಿಯಿಂದಲೇ ಊಟೋಪಚಾರಗಳೆಲ್ಲ ನಡೆದುಹೋಗಿ ಬಿಡುತ್ತವೆ. ಆತ ನಿಶ್ಚಿಂತೆಯಿಂದ ಭಗವಂತನನ್ನು ಕರೆಯಬಹುದು!’
“ಕೇಶವಸೇನನೂ ಆ ರೀತಿಯಾಗಿ ಏನೊ ಒಂದು ಹೇಳಿದ. ಆತ ಕೇಳಿದ: ‘ಮಹಾಶಯರೆ, ಯಾರೆ ಆಗಲಿ ತನ್ನ ಸ್ವತ್ತು ಇವಕ್ಕೆಲ್ಲ ಒಂದು ಸುವ್ಯವಸ್ಥೆ ಮಾಡಿ ಬಳಿಕ ಭಗವಚ್ಚಿಂತನೆ ಮಾಡಬೇಕು ಅಂತ ಯೋಚಿಸುತ್ತಾನೆ ಎಂದು ಇಟ್ಟುಕೊಳ್ಳಿ; ಹಾಗೆ ಮಾಡು ವುದು ಸರಿ ತಾನೆ? ಇಲ್ಲ, ಆತನೇನಾದರೂ ತಪ್ಪು ದಾರಿ ಹಿಡಿದಂತಾಗುತ್ತದೆಯೆ?’ ನಾನು ಆತನಿಗೆ ಹೇಳಿದೆ: ‘ಹೃದಯದಲ್ಲಿ ತೀವ್ರ ವೈರಾಗ್ಯ ಉದಯಿಸಿತು ಅಂದರೆ, ಸಂಸಾರ ನರಕಕೂಪದಂತೆ ತೋರುತ್ತದೆ; ಸ್ವಬಾಂಧವರು ಕೃಷ್ಣಸರ್ಪಗಳಂತೆ ಕಾಣಬರುತ್ತಾರೆ. ಬಳಿಕ ಆತ ದುಡ್ಡು ಕಾಸು ಶೇಖರಿಸಿಕೊಡಬೇಕೆಂದಾಗಲಿ, ತನ್ನ ಆಸ್ತಿಪಾಸ್ತಿಗಳಿಗೆ ಸರಿಯಾದ ವ್ಯವಸ್ಥೆ ಮಾಡಬೇಕೆಂದಾಗಲಿ ಯೋಚಿಸಲಾರ.’ ಭಗವಂತನೇ ವಸ್ತು, ಉಳಿದುದೆಲ್ಲ ಅವಸ್ತು. ಭಗವಂತನನ್ನು ಬಿಟ್ಟು ಪ್ರಾಪಂಚಿಕ ವಸ್ತುಗಳ ಚಿಂತನೆ ಮಾಡುವುದೇ!
“ಒಬ್ಬ ಹೆಂಗಸು ಏನೊ ಒಂದು ಅತ್ಯಂತ ದೊಡ್ಡ ದುಃಖಕ್ಕೆ ಈಡಾಗಿದ್ದಳು. ಆಕೆ ಮೊದಲು ತನ್ನ ಮುಕುರವನ್ನು ಸೀರೆಯ ಸೆರಗಿನಿಂದ ಭದ್ರವಾಗಿ ಕಟ್ಟಿಟ್ಟು, ಬಳಿಕ ನೆಲಕ್ಕೆ ಬಿದ್ದು ರೋದಿಸಲಾರಂಭಿಸಿದಳು: ‘ಗೆಳತಿಯರಿರಾ, ನನಗೆ ಬಂದುಬಿಟ್ಟಿತು, ಅಯ್ಯೋ!’ ಹಾಗೆ ಅಳುತ್ತಿದ್ದರೂ ಮುಕುರ ಮುರಿಯದ ಹಾಗೆ ನೋಡಿಕೊಳ್ಳುತ್ತಲೇ ಇದ್ದಳು.”
ಎಲ್ಲರೂ ನಗಲಾರಂಭಿಸಿದ್ದಾರೆ. ಈ ಮಾತುಗಳನ್ನು ಕೇಳಿ ನರೇಂದ್ರ ಬಾಣ ತಗುಲಿದವನ ಹಾಗೆ ನೆಲದ ಮೇಲೆ ಬಿದ್ದುಕೊಂಡ. ನರೇಂದ್ರನ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಊಹಿಸಿ ಮಾಸ್ಟರ್ ನಗುತ್ತ ಆತನಿಗೆ ಹೇಳುತ್ತಿದ್ದಾನೆ: “ಏನು, ಮಲಗಿಬಿಟ್ಟೆಯಲ್ಲ?”
ಶ್ರೀರಾಮಕೃಷ್ಣರು (ನಗುತ್ತ ಮಾಸ್ಟರಿಗೆ): “ಒಬ್ಬ ಹೆಂಗಸು ತಾನು ತನ್ನ ಭಾವನೊಡನೆ ಸಹವಾಸ ಮಾಡಿದುದಕ್ಕಾಗಿಯೇ ತನಗೆ ಅಷ್ಟೊಂದು ನಾಚಿಕೆ ಆಗುತ್ತಿರುವಾಗ, ಉಳಿದ ಹೆಂಗಸರು ನಾಚಿಕೆ ಹೇಸಿಗೆ ಇಲ್ಲದೆ ಪರಪುರುಷನೊಡನೆ ಹೇಗೆ ಸಹವಾಸ ಮಾಡುತ್ತಾರೊ ಅದು ತನಗೆ ಗೊತ್ತಾಗದ ವಿಷಯ ಅಂತ ಹೇಳಿದುದು ನನ್ನ ಜ್ಞಾಪಕಕ್ಕೆ ಬರುತ್ತಿದೆ. ಆಕೆ ತನ್ನ ತಪ್ಪನ್ನು ಮುಚ್ಚಲು ಹೇಳಿದಳು: ‘ಎಷ್ಟೇ ಆಗಲಿ, ಭಾವ ಆತ್ಮೀಯ. ಆತನ ಸಹವಾಸ ಮಾಡಿದುದಕ್ಕಾಗಿಯೇ ಲಜ್ಜೆ ನನ್ನನ್ನು ಸುಮ್ಮನೆ ಕೊಲ್ಲುತ್ತಿದೆ. ಹಾಗಿರುವಾಗ ಉಳಿದ ಸ್ತ್ರೀಯರು ಪರಪುರುಷನೊಡನೆ ಸಹವಾಸಮಾಡುತ್ತಾರಲ್ಲ, ಯಾವ ಧೈರ್ಯದಿಂದ!”’
ಮಾಸ್ಟರ್ ತಾನೇ ಗೃಹಸ್ಥ. ತನ್ನ ನಡತೆಗೆ ತಾನೇ ಲಜ್ಜಿತನಾಗುವುದಕ್ಕೆ ಬದಲು ನರೇಂದ್ರನ ಕಡೆ ನಕ್ಕ. ಅದಕ್ಕಾಗಿಯೇ ಪರಮಹಂಸರು, ತಾನೇ ತನ್ನ ಭಾವನೊಡನೆ ಖಂಡನೀಯವಾದ ರೀತಿಯಲ್ಲಿ ವ್ಯವಹರಿಸುತ್ತಿದ್ದರೂ ನೀತಿಬಾಹಿರರಾಗಿದ್ದ ಹೆಂಗಸರನ್ನು ನಿಂದಿಸಿದ ಹೆಂಗಸಿನ ವಿಷಯವನ್ನು ಹೇಳಿದುದು.
ಕೆಳಗಡೆ ಒಬ್ಬ ವೈಷ್ಣವ ಭಿಕ್ಷುಕ ಹಾಡುತ್ತಿದ್ದ. ಅದನ್ನು ಕೇಳಿ ಪರಮಹಂಸರಿಗೆ ಮಹತ್ತಾದ ಆನಂದವಾಗಿಬಿಟ್ಟಿದೆ. ಆತನಿಗೆ ಒಂದೆರಡು ಕಾಸು ಕೊಡುವಂತೆ ಭಕ್ತರಿಗೆ ಹೇಳಿದರು. ಒಬ್ಬ ಭಕ್ತ ಆ ಭಿಕ್ಷುಕನಿಗೆ ಕಾಸು ಕೊಡಲು ಕೆಳಕ್ಕೆ ಇಳಿದುಹೋದ. ಪರಮಹಂಸರು ಕೇಳಿದರು, “ಎಷ್ಟು ಕೊಟ್ಟ?” ಅಂತ. ಅರ್ಧಾಣೆಯನ್ನು ಮಾತ್ರ ಕೊಟ್ಟ ಅಂತ ತಿಳಿಸಿದಾಗ ಅವರು ಹೇಳಿದರು: “ಅಷ್ಟೇಕೆ? ಅದು ಮೈಮೂಳೆ ಮುರಿದು ಸಂಪಾದಿಸಿದ ದುಡ್ಡಲ್ಲವೆ. ಅದನ್ನು ಸಂಪಾದಿಸಲು ಆತ ತನ್ನ ಯಜಮಾನನನ್ನು ಎಷ್ಟೊಂದು ಹೊಗಳಿರಬೇಕು, ಎಷ್ಟು ಕಷ್ಟಪಟ್ಟಿರಬೇಕು! ಕನಿಷ್ಠಪಕ್ಷ ನಾಲ್ಕಾಣೆಯನ್ನಾದರೂ ಕೊಡುತ್ತಾನೆ ಅಂತ ಭಾವಿಸಿದ್ದೆ.”
ಚಿಕ್ಕ ನರೇನ ಪರಮಹಂಸರಿಗೆ ವಾಗ್ದಾನಮಾಡಿದ್ದ. ತಾನು ಯಾವುದೊ ಒಂದು ಯಂತ್ರ ತಂದು ಅದರ ಸಹಾಯದಿಂದ ವಿದ್ಯುಚ್ಛಕ್ತಿಯ ಸ್ವಭಾವವೇನೆಂಬುದನ್ನು ಅವರಿಗೆ ತಿಳಿಸುತ್ತೇನೆ ಅಂತ. ಈಗ ಅದನ್ನು ತಂದು ತೋರಿಸುತ್ತಿದ್ದಾನೆ.
ಸಮಯ ಅಪರಾಹ್ನ ಎರಡು. ಪರಮಹಂಸರು ಭಕ್ತರೊಡನೆ ಕೊಠಡಿಯಲ್ಲಿ ಕುಳಿತಿದ್ದಾರೆ. ಅತುಲ ಒಬ್ಬ ಸ್ನೇಹಿತನನ್ನು ಕರೆದುಕೊಂಡು ಬಂದಿದ್ದಾನೆ. ಶಿಕದಾರ್ಕೇರಿಯ ಪ್ರಸಿದ್ಧ ಚಿತ್ರಕಾರ ‘ಬಗ್ಚಿ’ ಎಂಬುವನು ಬಂದಿದ್ದಾನೆ. ಆತ ಅನೇಕ ಚಿತ್ರಪಟಗಳನ್ನು ಪರಮಹಂಸರಿಗೆ ಕಾಣಿಕೆಯಾಗಿ ಒಪ್ಪಿಸಿದ. ಅವರು ಬಹಳ ಆನಂದದಿಂದ ಅವನ್ನು ನೋಡುತ್ತಿದ್ದಾರೆ. ಷಡ್ಭುಜಮೂರ್ತಿಯ ಪಟವನ್ನು ನೋಡಿ ಭಕ್ತರಿಗೆ ಹೇಳುತ್ತಿದ್ದಾರೆ: “ನೋಡಿ, ನೋಡಿ, ಇದು ಎಷ್ಟು ಚೆನ್ನಾಗಿ ಬಂದುಬಿಟ್ಟಿದೆ!” ಅಹಲ್ಯೆ ಕಲ್ಲಾಗಿರುವ ಚಿತ್ರಪಟವನ್ನು ಭಕ್ತರಿಗೆ ತೋರಿಸಲೋಸುಗ ಅದನ್ನು ತಮ್ಮ ಹತ್ತಿರಕ್ಕೆ ತರುವಂತೆ ಬಗ್ಚಿಗೆ ಹೇಳಿದರು. ಅದರಲ್ಲಿ ಶ್ರೀರಾಮಚಂದ್ರಮೂರ್ತಿಯನ್ನು ನೋಡಿ ಆನಂದಪಡುತ್ತಿದ್ದಾರೆ.
ಬಗ್ಚಿಗೆ ಹೆಂಗಸರ ಹಾಗೆ ಉದ್ದವಾದ ಕೂದಲಿತ್ತು. ಅದನ್ನು ನೋಡಿ ಪರಮಹಂಸರು ಹೇಳುತ್ತಿದ್ದಾರೆ: “ಒಂಭತ್ತು ಮೊಳ ಕೂದಲಿದ್ದ ಒಬ್ಬ ಸಂನ್ಯಾಸಿ ಕೆಲವು ವರ್ಷಗಳ ಹಿಂದೆ ದಕ್ಷಿಣೇಶ್ವರಕ್ಕೆ ಬಂದಿದ್ದ. ಯಾವಾಗಲೂ ರಾಧಾನಾಮವನ್ನು ಜಪಿಸುತ್ತಿದ್ದ. ಕಪಟಿಯಲ್ಲ.”
ಈಗ ನರೇಂದ್ರ ಹಾಡುಗಳನ್ನು ಹಾಡಲಾರಂಭಿಸಿದ್ದಾನೆ. ಅವು ವೈರಾಗ್ಯದಿಂದ ತುಂಬಿತುಳುಕಾಡುತ್ತಿವೆ.
ಇನ್ನೆಷ್ಟು ದಿನ ನಾನು ಬರಿಯ ವಿಫಲತೆಯಲ್ಲಿ
ತೊಳಲಬೇಕೋ
ಇನ್ನೆಷ್ಟು ದಿನ ರಾತ್ರಿ ಭರವಸೆಯ ಹಾದಿಯಲಿ
ಮೈಯೆಲ್ಲ ಕಣ್ಣಾಗಿ ಕಾಯಬೇಕೋ?
ನೀನೊ ತ್ರಿಭುವನದೊಡೆಯ, ನಾನೊ ಭಿಕ್ಷುಕನಯ್ಯ
ನೀನು ನನ್ನೆದೆಯಲ್ಲಿ ನೆಲೆಸೆನ್ನಲೆ?
ನನ್ನೆದೆಯ ಜೋಪಡಿಯ ಬಾಗಿಲನು ತೆರೆದಿರುವೆನು
ಒಂದು ಸಲವಾದರೂ ಬಂದು ಹಿಂಗಿಸು ತೃಷೆಯ
ನನ್ನ ವರಗುರುವೇ!
ಆತ ಮತ್ತೆ ಹಾಡುತ್ತಿದ್ದಾನೆ:
ನನ್ನ ಹೃದಯದ ದಿವ್ಯ ಸೂತ್ರಧಾರಿಣಿ ನೀನು;
ತೊಡೆಯ ತೊಟ್ಟಿಲೊಳಿಟ್ಟು ಪಾಲಿಸಿರುವೆ!……
ಬಳಿಕ ಹಾಡಿದ:
ನಿನ್ನಡಿಯ ತಾವರೆಯ ಮಧು ಕುಡಿವ ದುಂಬಿಯೊಲು
ನನ್ನ ಮನವಾಗದಿರಲೇನು ಸುಖವೊ!
ಪರಮನಿಧಿಯಾಗಿರುವ ನಿನ್ನ ತೊರೆದರೆ ನಾನು
ಮತ್ತಾವ ಸಂಪದವ ಪಡೆಯಬಹುದೊ.
ನಿನ್ನ ಸೊಬಗನು ಇನಿತು ತನ್ನಲ್ಲಿ ಬಿಂಬಿಸದ
ಯಾವ ಶಿಶುವದನವೂ ರುಚಿಸದೆನಗೆ.
ನನ್ನ ಎದೆಯಾಗಸದಿ ನಿನ್ನ ಚಂದ್ರೋದಯವ
ಮೂಡಿಸದ ತಿಂಗಳೂ ಕತ್ತಲೆನಗೆ!
ದಿವ್ಯಪ್ರೇಮದ ಮಣಿಯನೆದೆಯಲ್ಲಿ ಬೆಳಗದಿಹ
ಯಾವ ಸತಿ ಪ್ರೇಮವೂ ಮಲಿನವೆನಗೆ!
ಆದರೂ ಒಮ್ಮೊಮ್ಮೆ ಮೋಹ ಪ್ರಮಾದದಲಿ
ಸಂದೇಹದಲಿ ನಾನು ಸಿಕ್ಕಿಬಿಡುವೆ!
ಸರ್ಪದಷ್ಟನ ತೆರದಿ ತಪಿಸುತಿರುವೆ!
ಏನು ಹೇಳಲಿ ನಿನಗೆ? ನನ್ನ ಎದೆಯಲಿ ಕುಳಿತು
ನನ್ನ ಹೊಯ್ದಾಟವನು ನೋಡುತಿರುವೆ!
ಘಂಟೆ ಸಾಯಂಕಾಲ ಐದೂವರೆ. ಡಾಕ್ಟರ್ ಸರ್ಕಾರ ಬಂದಿದ್ದಾನೆ. ಆತನು ಪರಮಹಂಸರ ನಾಡಿ ಹಿಡಿದುನೋಡಿ ಔಷಧದ ವ್ಯವಸ್ಥೆ ಮಾಡಿದ. ನರೇಂದ್ರ, ಗಿರೀಶ, ಡಾಕ್ಟರ್ ದುಕಾರಿ, ಚಿಕ್ಕ ನರೇನ, ರಾಖಾಲ, ಮಾಸ್ಟರ್, ಶರಚ್ಚಂದ್ರ, ಶ್ಯಾಮಬಸು ಇವರೇ ಮೊದಲಾದ ಭಕ್ತರು ಕೊಠಡಿಯಲ್ಲಿ ಕುಳಿತಿದ್ದಾರೆ.
ಪರಮಹಂಸರ ಕಾಯಿಲೆ ಸಂಬಂಧವಾಗಿ ಡಾಕ್ಟರ್ ಸರ್ಕಾರ ಸ್ವಲ್ಪ ಹೊತ್ತು ಮಾತಾಡಿದ. ಪರಮಹಂಸರು ಔಷಧ ತೆಗೆದುಕೊಂಡು ಶ್ಯಾಮಬಸುವಿನೊಡನೆ ಮಾತುಕತೆ ಯಾಡಲಾರಂಭಿಸಿದರು. ಡಾಕ್ಟರ್ ಸರ್ಕಾರ ಪರಮಹಂಸರಿಗೆ ಹೇಳಿದ: “ನೀವು ಈಗ ಶ್ಯಾಮಬಸುವಿನೊಡನೆ ಮಾತುಕತೆಯಾಡುತ್ತಿದ್ದೀರಿ. ಹಾಗಾದರೆ ನಾನು ಹೋಗಿ ಬರುತ್ತೇನೆ.”
ಹಾಡು ಕೇಳಬೇಕು ಎಂಬ ಇಚ್ಛೆಯಿದೆಯೆ ಎಂಬುದಾಗಿ ಪರಮಹಂಸರೂ ಮತ್ತು ಒಬ್ಬ ಭಕ್ತನೂ ಡಾಕ್ಟರನ್ನು ಕೇಳಿದರು.
ಡಾಕ್ಟರ್ (ಪರಮಹಂಸರಿಗೆ): “ನನಗೇನೊ ಇಚ್ಛೆ. ಆದರೆ ನೀವು ಹಾಡು ಕೇಳಿದೊಡನೆ ಜಿಂಕೆಮರಿಯ ಹಾಗೆ ನಡೆಯಲಾರಂಭಿಸಿಬಿಡುತ್ತೀರಲ್ಲ. ಅದಕ್ಕೇನು ಮಾಡುವುದು! ನೀವು ನಿಮ್ಮ ಭಾವವನ್ನು ಒಂದು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು.”
ಡಾಕ್ಟರ್ ಸರ್ಕಾರ ಮತ್ತೆ ಕುಳಿತುಕೊಂಡ. ನರೇಂದ್ರ ತಾಳಮೇಳಗಳೊಡನೆ ತನ್ನ ಸುಮಧುರಕಂಠದಿಂದ ಹಾಡಲಾರಂಭಿಸಿದ:
ಮನವ ಬೆರಗುಗೊಳಿಪಾನಂತ ವಿಶ್ವರಚನೆ ನಿನ್ನದೇ.
ನಿನ್ನ ಪ್ರೇಮ ಚೆಲುವುಗಳಲಿ ಜಗವೆಲ್ಲವು ತುಂಬಿದೆ…..
ಆತ ಮತ್ತೆ ಹಾಡಿದ:
ಮಿರುಗುತಿದೆ ನಿನ್ನ ಅಪರೂಪರಾಶಿ ನಿಬಿಡಾಂಧಕಾರದಲ್ಲಿ
ನಿನ್ನನದರಿಂದಲೇ ನೆನೆವರೌ ಯೋಗಿಗಳು ಗಿರಿಗುಹೆಗಳಲ್ಲಿ!…..
ಡಾಕ್ಟರ್ ಸರ್ಕಾರ ಮಾಸ್ಟರಿಗೆ ಹೇಳಿದ: “ಈ ಹಾಡು, ಇವರಿಗೆ (ಪರಮಹಂಸರಿಗೆ) ಬಹಳ ಡೇಂಜರಸ್.” ಪರಮಹಂಸರು ಮಾಸ್ಟರನ್ನು ಕೇಳುತ್ತಿದ್ದಾರೆ: “ಡಾಕ್ಟರ್ ಏನು ಹೇಳಿದ?” ಮಾಸ್ಟರ್ ತಿಳಿಸಿದ: “ಈ ಹಾಡು ನಿಮ್ಮನ್ನು ಸಮಾಧಿಸ್ಥರನ್ನಾಗಿ ಮಾಡಿಬಿಡಬಹುದೆಂದು ಆತ ಹೆದರುತ್ತಿದ್ದಾನೆ.”
ಇಷ್ಟರಲ್ಲೆ ಪರಮಹಂಸರು ಅರ್ಧಬಾಹ್ಯಶೂನ್ಯರಾಗಿಬಿಟ್ಟಿದ್ದಾರೆ. ಡಾಕ್ಟರ್ ಕಡೆಗೆ ಕೈಮುಗಿದು ಹೇಳುತ್ತಿದ್ದಾರೆ: “ಇಲ್ಲ, ಇಲ್ಲ. ನಾನೇಕೆ ಸಮಾಧಿಸ್ಥನಾಗುವುದಕ್ಕೆ ಹೋಗಲಿ?” ಆದರೆ ಅವರು ಈ ಮಾತುಗಳನ್ನು ಆಡಿ ಮುಗಿಸುವಷ್ಟರಲ್ಲಿಯೇ ಗಾಢಸಮಾಧಿಸ್ಥರಾಗಿ ಬಿಟ್ಟರು. ಶರೀರ ಸ್ಪಂದಹೀನವಾಗಿದೆ, ಕಣ್ಣು ಸ್ಥಿರವಾಗಿವೆ, ಬಾಯಲ್ಲಿ ಮಾತೇ ಇಲ್ಲ. ಕಲ್ಲಿನ ಪ್ರತಿಮೆಯಂತೆ ಬಾಹ್ಯಶೂನ್ಯರಾಗಿ ಕುಳಿತಿದ್ದಾರೆ. ಅವರ ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಇವೆಲ್ಲ ಅಂತರ್ಮುಖವಾಗಿಬಿಟ್ಟಿವೆ. ಹಿಂದಿನ ಮನುಷ್ಯರೇ ಅಲ್ಲ ಅಂತ ತೋರುತ್ತಿದೆ.
ನರೇಂದ್ರನ ಸುಮಧುರ ಕಂಠದಿಂದ ಮಧುಮಧುರ ಹಾಡುಗಳು ಹೊರಬರುತ್ತಲೇ ಇವೆ. ಈಗ ಆತ ಹಾಡುತ್ತಿದ್ದಾನೆ:
ಏನು ನಿರುಪಮ ಸೊಬಗು! ಓಹೋ ಎಂಥ ಚೆಲುವಿನ ಮೋಹನ!
ನನ್ನ ಹೃದಯದಮೂರ್ತಿ ಬಂದನು ಎದೆಯ ಗುಡಿಸಲಿಗೀದಿನ!
ಎದೆಯೊಳೊಲವಿನ ಚಿಲುಮೆ ಚಿಮ್ಮಿವೆ ಹತ್ತು ಕಡೆಗೂ ಸುಮ್ಮನೆ!
ಯಾವ ಸಂಪದವನ್ನು ಸುರಿಯಲಿ ಹೇಳು ನಿನ್ನೀಪದದೆಡೆ?
ನನ್ನ ಹರಣವೆ ಶರಣು ನಿನಗೆ; ನನ್ನ ಆತ್ಮವೆ ನಿನ್ನದು.
ಮತ್ತೆ ಏನನು ನೀಡಲಯ್ಯಾ? ನನ್ನದೆಲ್ಲವು ನಿನ್ನದು!
ಬಳಿಕ ನರೇಂದ್ರ ಹಾಡುತ್ತಿದ್ದಾನೆ:
ನಿನ್ನಡಿಯ ತಾವರೆಯ ಮಧುಕುಡಿವ ದುಂಬಿಯೊಲು
ನನ್ನ ಮನವಾಗದಿರಲೇನು ಸುಖವೊ!……
ಡಾಕ್ಟರ ಕಿವಿಗೆ, “ದಿವ್ಯಪ್ರೇಮದ ಮಣಿಯನೆದೆಯಲ್ಲಿ ಬೆಳಗದಿಹ ಯಾವ ಸತಿಪ್ರೇಮವೂ ಮಲಿನವೆನಗೆ!” ಎಂಬ ಚರಣ ಬಿದ್ದೊಡನೆಯೆ ಆತ ಅಶ್ರುಪೂರ್ಣ ಲೋಚನನಾದ. ಕೂಗಿಕೊಳ್ಳಲಾರಂಭಿಸಿದ, “ಆಹ! ಆಹ!” ಅಂತ.
ಓ ಎಂದಿಗೋ ಇನ್ನೆಂದಿಗೋ
ಎದೆಯೊಳೊಲವಿನ ಕಿಡಿಯ ಜ್ವಲಿಸುವ
ದಿವ್ಯಶುಭದಿನವೆಂದಿಗೋ–……
ನರೇಂದ್ರ ಹಾಡಿ ಮುಗಿಸುವುದರೊಳಗಾಗಿ ಪರಮಹಂಸರು ಪ್ರಕೃತಿಸ್ಥರಾಗಿ ಬಿಟ್ಟಿದ್ದಾರೆ. ಈಗ ತಮ್ಮ ಮನೋಮುಗ್ಧಕರ ಮಾತುಕತೆಗಳನ್ನು ಮುಂದುವರಿಸುತ್ತಿದ್ದಾರೆ. ಭಕ್ತರೆಲ್ಲರು ನಿಶ್ಶಬ್ದರಾಗಿ ಕುಳಿತುಕೊಂಡು ಅವರ ಕಡೆ ಎವೆಯಿಕ್ಕದೆ ನೋಡುತ್ತಿದ್ದಾರೆ. ಆ ಪ್ರಾಣಾಂತಿಕ ರೋಗದ ತಾಳಲಾಗದ ನೋವಿನ ಚಿಹ್ನೆ ಲೇಶಮಾತ್ರವೂ ಅವರ ಮುಖದಲ್ಲಿ ಕಾಣಬರುತ್ತಿಲ್ಲ. ಅದು ಸ್ವರ್ಗೀಯ ಆನಂದವನ್ನು ಹೊರಸೂಸುತ್ತಿದೆ.
ಡಾಕ್ಟರನ್ನು ಸಂಬೋಧಿಸಿ ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ: “ಲಜ್ಜೆಯನ್ನು ತ್ಯಜಿಸಿಬಿಡು. ಭಗವಂತನ ನಾಮಗುಣಕೀರ್ತನೆ ಮಾಡುವುದಕ್ಕೆ ಲಜ್ಜೆಪಡುವುದು ಅಂದರೇನು? ನಾಚಿಕೆ, ದ್ವೇಷ, ಭಯ ಇವುಗಳಿಗೆ ಹೃದಯದಲ್ಲಿ ಎಡೆಗೊಡಕೂಡದು. ‘ನಾನು ಅಂಥಾ ದೊಡ್ಡ ಮನುಷ್ಯ! ನಾನು ಭಗವನ್ನಾಮವನ್ನು ಹಾಡುತ್ತ ನರ್ತಿಸವುದೇ? ದೊಡ್ಡ ದೊಡ್ಡವರೆಲ್ಲ ನನ್ನ ಈ ವರ್ತನೆಯನ್ನು ನೋಡಿ ಏನೆಂದುಕೊಂಡಾರು? ಏನು ನಾಚಿಕೆಗೇಡಿತನ ಇದು, ಡಾಕ್ಟರೂ ಭಗವನ್ನಾಮೋಚ್ಚಾರಣೆಮಾಡುತ್ತ ನರ್ತಿಸುತ್ತ ಇದ್ದನಲ್ಲ ಅಂದುಬಿಟ್ಟರೆ!’ ಎಂಬೀ ವಿಧದ ಭಾವನೆಗಳನ್ನೆಲ್ಲ ಮನಸ್ಸಿನಿಂದ ತ್ಯಜಿಸಿಬಿಡು.”
ಡಾಕ್ಟರ್: “ಜನರು ಆಡಿಕೊಳ್ಳುವ ಮಾತಿಗೆ ಒಂದು ಕಿಂಚಿತ್ತೂ ನಾನು ಕಿವಿಗೊಡುವುದಿಲ್ಲ. ಅವರ ಅಭಿಪ್ರಾಯಗಳನ್ನು ಕಸಕ್ಕಿಂತಲೂ ಕಡೆಯಾಗಿ ಎಣಿಸುತ್ತೇನೆ.”
ಶ್ರೀರಾಮಕೃಷ್ಣರು: “ಹೌದು, ಅದರ ಸಂಬಂಧವಾಗಿ ನಿನ್ನ ಹೃದಯದಲ್ಲಿ ಏನು ಇದೆ ಎಂಬುದು ನನಗೆ ಚೆನ್ನಾಗಿ ಗೊತ್ತು.” (ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು: “ಜ್ಞಾನಾಜ್ಞಾನಗಳಿಗತೀತನಾಗು; ಆಗ ಮಾತ್ರವೇ ಆತನ ಸಾಕ್ಷಾತ್ಕಾರ ದೊರೆಯುತ್ತದೆ. ನಾನಾತ್ತ್ವದ ಜ್ಞಾನಕ್ಕೆ ‘ಅಜ್ಞಾನ’ ಅಂತ ಹೆಸರು. ಪಾಂಡಿತ್ಯದ ಅಹಂಕಾರವೂ ಅಜ್ಞಾನದ ಗುಂಪಿಗೆ ಸೇರಿದುದೆ. ಒಬ್ಬನೇ ಭಗವಂತ ಸರ್ವಭೂತಗಳಲ್ಲಿಯೂ ಇದ್ದಾನೆ ಎಂಬ ದೃಗ್ಬುದ್ಧಿಗೆ ‘ಜ್ಞಾನ’ ಅಂತ ಹೆಸರು. ಆತನನ್ನು ವಿಶೇಷ ರೂಪದಿಂದ ಅರಿತುಕೊಳ್ಳುವುದಕ್ಕೆ ‘ವಿಜ್ಞಾನ’ ಅಂತ ಹೆಸರು. ಕಾಲಿಗೆ ಮುಳ್ಳು ಚುಚ್ಚಿಕೊಂಡರೆ ಅದನ್ನು ತೆಗೆಯಲು ಬೇರೊಂದು ಮುಳ್ಳು ಬೇಕಾಗುತ್ತದೆ. ಮುಳ್ಳನ್ನು ತೆಗೆದ ನಂತರ ಎರಡು ಮುಳ್ಳನ್ನೂ ಸಾಡಿಬಿಡುತ್ತೇವೆ. ಅದೇ ರೀತಿಯಾಗಿ ಅಜ್ಞಾನ ಎಂಬ ಮುಳ್ಳನ್ನು ತೆಗೆದುಹಾಕಲು ಜ್ಞಾನವೆಂಬ ಮುಳ್ಳನ್ನು ಮೊದಲು ಪಡೆದುಕೊಳ್ಳಬೇಕು. ಬಳಿಕ ಎರಡು ಮುಳ್ಳನ್ನೂ ಬಿಸಾಡಬೇಕಾಗುತ್ತದೆ. ಆತ ಜ್ಞಾನಾಜ್ಞಾನಗಳಿಗತೀತ. ಲಕ್ಷ್ಮಣ ರಾಮನಿಗೆ ಹೇಳಿದ: ‘ರಾಮ ಏನಾಶ್ಚರ್ಯ! ವಸಿಷ್ಠ ಅಂಥ ಮಹಾಜ್ಞಾನಿ. ಆತನೂ ಪುತ್ರಶೋಕಕ್ಕೆ ಒಳಗಾಗಿ ಅಳುತ್ತಿದ್ದಾನಲ್ಲ!’ ರಾಮ ಹೇಳಿದ: ‘ತಮ್ಮ, ಯಾರಲ್ಲಿ ಜ್ಞಾನವಿರುತ್ತದೊ ಅವರಲ್ಲಿ ಅಜ್ಞಾನವೂ ಇರುತ್ತದೆ. ಯಾರಿಗೆ ಒಂದರ ಜ್ಞಾನವಿರುವುದೊ ಅವರಿಗೆ ಅನೇಕದರ ಜ್ಞಾನವೂ ಇರುತ್ತದೆ. ಯಾರಿಗೆ ಬೆಳಕಿನ ಬೋಧೆ ಇರುವುದೊ, ಅವರಿಗೆ ಅಂಧಕಾರದ ಬೋಧೆಯೂ ಇರುತ್ತದೆ.’ ಬ್ರಹ್ಮ ಜ್ಞಾನಾಜ್ಞಾನಗಳಿಗೆ, ಪಾಪಪುಣ್ಯಗಳಿಗೆ, ಧರ್ಮಾಧರ್ಮಗಳಿಗೆ, ಶುಚಿ-ಅಶುಚಿಗಳಿಗೆ ಅತೀತ.”
ಈಗ ಪರಮಹಂಸರು ಈ ಕೆಳಗಿನ ರಾಮಪ್ರಸಾದನ ಹಾಡನ್ನು ಆವೃತ್ತಿಮಾಡುತ್ತಿದ್ದಾರೆ:
ಸುಮ್ಮನೆ ತಿರುಗಾಟಕೆ ಬಾ ಮನವೇ
ಶ್ರೀ ಕಾಳೀ ಸುರತರುವಿರುವೆಡೆಗೆ!
ಪುರುಷಾರ್ಥವ ಕೈಗೂಡಿಸು ಬಾ ಅಲ್ಲಿಕಾಳೀ ಸುರತರುವಿರುವಲ್ಲಿ!
ಪ್ರವೃತ್ತಿ ನಿವೃತ್ತಿ ಎಂಬ ಹೆಂಡಿರಲಿ
ನಿವೃತ್ತಿಯೊಬ್ಬಳೆ ಜೊತೆಗಿರಲಿ
ಆಕೆಯ ಮಗ ಆ ಶುದ್ಧ ವಿವೇಕನ
ಕೇಳಲು ಸತ್ಯವನರಿಯುವೆ ನೀ
ಬಾ ಮನವೇ ತಿರುಗಾಟಕೆ ಬಾ
ಶ್ರೀ ಕಾಳೀ ಸುರತರುವಿರುವೆಡೆಗೆ!
ಶುಚಿ-ಅಶುಚಿಯನೊಂದಾಗಿಸಿ ನೀನೆಂದಿಗೆ
ದಿವ್ಯ ಧಾಮದಲಿ ಮಲಗುವೆಯೋ
ಈ ಇಬ್ಬರು ಹೆಂಡಿರ ನೀನೆಂದೊಟ್ಟಿಗೆ
ತೃಪ್ತಿಯೊಳಾಳಲು ಕಲಿಯುವೆಯೋ
ಆ ಅಂದೆ ಶ್ರೀ ಶ್ಯಾಮೆಯ ದರುಶನವೋ
ಬಾ ಮನವೇ, ತಿರುಗಾಟಕೆ ಬಾ
ಶ್ರೀ ಕಾಳೀ ಸುರತರುವಿರುವೆಡೆಗೆ!
ಅಹಂಕಾರ ಅವಿದ್ಯೆಯರೆನ್ನುವ
ಮಾತಾಪಿತರನು ಹೊರಗಟ್ಟು;
ಪ್ರಳಯ ಬಂದರೂ ಜಗ್ಗದ ತೆರದಲಿ
ಮನವನು ತಾಳ್ಮೆಯ ಕಂಬಕೆ ಕಟ್ಟು
ಧರ್ಮಾಧರ್ಮಗಳೆಂಬ ಹೋತಗಳ
ನಿಷೇಧ ಯೂಪಸ್ತಂಭದಲಿ
ಕಟ್ಟಿ ಬಲಿಯ ಕೊಡು ಕೊಂದು ಅವುಗಳನು
ವಿವೇಕವೆನ್ನುವ ಖಡ್ಗದಲಿ!
ಮೊದಲ ಹೆಂಡತಿಯ, ಮತ್ತಾ ಮಕ್ಕಳ
ಸಂಗವ ತೊರೆ, ಬಾ ಇತ್ತ ಕಡೆ
ಹಿಂದೆ ಬಂದರೂ ಕಟ್ಟಿ ಎಸೆದುಬಿಡು
ಜ್ಞಾನಸಾಗರದ ಅಲೆಗಳೆಡೆ!
“ನಾನು ಹೇಳುವೀ ತೆರದಲಿ ನಡೆದರೆ
ಯಮನಿಗೆ ಉತ್ತರ ಕೊಡಬಹುದು!”
ಪ್ರಸಾದ ರಾಮನು ನುಡಿವನು: “ಓ ಮನ
ನೀನೇ ಪ್ರಿಯಸಖ ಎನ್ನುವೆನು.”
ಶ್ಯಾಮಬಸು: “ಎರಡು ಮುಳ್ಳುಗಳನ್ನೂ ಬಿಸಾಡಿದನಂತರ ಇನ್ನು ಉಳಿದು ಕೊಳ್ಳುವುದೇನು?”
ಶ್ರೀರಾಮಕೃಷ್ಣರು: “ನಿತ್ಯಶುದ್ಧಬೋಧಸ್ವರೂಪ ಮಾತ್ರ. ಅದನ್ನು ನಾನು ವಿವರಿಸಿ ತಿಳಿಸುವ ಬಗೆ ಹೇಗೆ? ಯಾರಾದರೂ ನಿನ್ನನ್ನು ಕೇಳಿದರೆ, ‘ತುಪ್ಪದ ರುಚಿ ಎಂಥದು?’ ಅಂತ, ನೀನು ಅದನ್ನು ಆತನಿಗೆ ವಿಶದಪಡಿಸುವ ಬಗೆ ಹೇಗೆ? ಅತಿ ಹೆಚ್ಚೆಂದರೆ ನೀನು ಆತನಿಗೆ ಹೇಳಬಹುದು, ‘ತುಪ್ಪದ ರುಚಿಯೇ? ತುಪ್ಪದ ಹಾಗೆ!’ ಅಂತ. ಒಬ್ಬ ಚಿಕ್ಕ ಹುಡುಗಿ ತನ್ನ ಗೆಳತಿಯನ್ನು ಕೇಳಿದಳು: ‘ನಿಮ್ಮ ಮನೆಗೆ ನಿಮ್ಮ ಪತಿ ಬಂದಿದ್ದಾನೆ. ಒಳ್ಳೆಯದು ಗೆಳತಿ, ನೀನು ಏನೇನು ಆನಂದವನ್ನು ಆತನೊಡನೆ ಅನುಭವಿಸುತ್ತೀಯೆ ತಿಳಿಸು ನೋಡೋಣ?’ ಆ ಗೆಳತಿ ಹೇಳಿದಳು: ‘ನನ್ನರಗಿಣಿ, ನಿನಗೂ ಪತಿ ದೊರಕಿದನಂತರ ಎಲ್ಲಾ ನಿನಗೇ ಗೊತ್ತಾಗುತ್ತದೆ. ಈಗ ನಾನು ನಿನಗೆ ವಿವರಿಸಿ ತಿಳಿಸುವ ಬಗೆ ಹೇಗೆ?’
“ಪುರಾಣದಲ್ಲಿ ಹೇಳಿದೆ, ಭಗವತಿ ಹಿಮಗಿರಿರಾಜನ ಮನೆಯಲ್ಲಿ ಜನ್ಮತಳೆದಾಗ ಆಕೆ ಆತನಿಗೆ ತನ್ನ ವಿವಿಧ ರೂಪುಗಳ ದರ್ಶನ ಕೊಟ್ಟಳು. ಗಿರಿರಾಜ ಎಲ್ಲಾ ರೂಪಗಳನ್ನೂ ದರ್ಶನಮಾಡಿ ಕೊನೆಗೆ ಆಕೆಗೆ ಹೇಳಿದ: ‘ವೇದಗಳಲ್ಲಿ ವರ್ಣಿತವಾಗಿರುವ ಬ್ರಹ್ಮನ ದರ್ಶನ ನನಗೆ ಆಗುವಂತೆ ಮಾಡು.’ ಆಗ ಭಗವತಿ ಹೇಳಿದಳು: ‘ತಂದೆ, ನಿನಗೆ ಬ್ರಹ್ಮ ಸಾಕ್ಷಾತ್ಕಾರ ದೊರಕಬೇಕಾದರೆ ನೀನು ಸಾಧುಸಂಗ ಮಾಡಬೇಕು.’
“ಬ್ರಹ್ಮ ಏನು ಎಂಬುದನ್ನು ಬಾಯಿಂದ ವರ್ಣಿಸಲಾಗವುದಿಲ್ಲ. ಯಾರೊ ಒಬ್ಬ ಒಮ್ಮೆ ಹೇಳಿದನಂತೆ, ಬ್ರಹ್ಮವಿನಾ ಎಲ್ಲವೂ ಉಚ್ಛಿಷ್ಟ ಅಂತ. ಇದರ ಅರ್ಥ ವೇದ, ಪುರಾಣ, ತಂತ್ರ ಉಳಿದ ಎಲ್ಲಾ ಶಾಸ್ತ್ರಗಳನ್ನು ಬಾಯಿಂದ ಉಚ್ಚರಿಸಲು ಸಾಧ್ಯವಾಗುವುದರಿಂದ ಅವೆಲ್ಲ ಉಚ್ಛಿಷ್ಟವಾಗಿ ಹೋಗಿವೆ. ಆದರೆ ಬ್ರಹ್ಮ ಏನು ಎಂಬುದನ್ನು ಇದುವರೆಗೆ ಯಾರೂ ಬಾಯಿಂದ ವರ್ಣಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಬ್ರಹ್ಮ ಇನ್ನೂ ಉಚ್ಛಿಷ್ಟನಾಗಿಲ್ಲ. ಸಚ್ಚಿದಾನಂದನೊಡನೆ ಕ್ರೀಡಿಸುವುದರಿಂದ, ವಿಲಾಸಿಸುವುದರಿಂದ ದೊರೆಯುವ ಆನಂದ ಏನು ಎಂಬುದನ್ನು ಬಾಯಿಂದ ವರ್ಣಿಸಲಾಗುವುದಿಲ್ಲ. ಯಾರಿಗೆ ದೊರೆತಿದೆಯೋ ಆತನಿಗೆ ಅದು ಗೊತ್ತು.
(ಡಾಕ್ಟರನ್ನು ಸಂಬೋಧಿಸಿ) “ನೋಡು, ಅಹಂಕಾರ ಹೋಗದ ಹೊರತು ಜ್ಞಾನ ದೊರಕದು. ‘ಮುಕ್ತಿ ದೊರೆಯುವುದು ಯಾವಾಗ? “ನಾನು” ಎಂಬುದು ಸತ್ತಾಗ’, ನಾಣ್ಣುಡಿಯೊಂದಿದೆ. ‘ನಾನು’, ‘ನನ್ನದು’ ಎಂಬುದೇ ಅಜ್ಞಾನ. ‘ನೀನು’, ‘ನಿನ್ನದು’ ಎಂಬುದೇ ಜ್ಞಾನ. ಯಾರು ನಿಜವಾದ ಭಕ್ತನೊ ಆತ ಪ್ರಾರ್ಥನೆ ಮಾಡುತ್ತಾನೆ; ‘ಹೇ ಭಗವಂತ ನೀನೇ ಕರ್ತ; ಎಲ್ಲವನ್ನೂ ಮಾಡುವವನು ನೀನೆ. ನಾನು ಕೇವಲ ಯಂತ್ರ ಮಾತ್ರ; ನೀನು ಮಾಡಿಸಿದ ಹಾಗೆ ಮಾಡುತ್ತೇನೆ. ಇವೆಲ್ಲ–ಧನ, ಐಶ್ವರ್ಯ, ಅಷ್ಟೇ ಅಲ್ಲ ಇಡೀ ಜಗತ್ತು–ನಿನಗೆ ಸೇರಿದವೆ. ಈ ಮನೆ, ಪರಿಜನ ಎಲ್ಲರೂ ನಿನಗೆ ಸೇರಿದವರೇ ವಿನಾ ನನಗಲ್ಲ. ನಾನು ನಿನ್ನ ದಾಸ; ನಿನ್ನ ಆಜ್ಞೆಯಂತೆ ನಿನಗೆ ಸೇವೆ ಮಾಡುವ ಅಧಿಕಾರ ಮಾತ್ರ ನನ್ನದು.’
“ಯಾರು ಒಂದಷ್ಟು ಪುಸ್ತಕ ಓದಿದ್ದಾರೊ, ತಾನಾಗಿಯೇ ಅವರಿಗೆ ಅಹಂಕಾರ ಬಂದುಬಿಡುತ್ತದೆ. ಒಮ್ಮೆ ನಾನು ಕಾಳೀಕೃಷ್ಣ ಠಾಕೂರನೊಡನೆ ಭಗವದ್ವಿಷಯವಾಗಿ ಮಾತನಾಡಿದೆ. ಆತ ಹೇಳಿದ: ‘ಅವೆಲ್ಲ ನನಗೆ ಗೊತ್ತಿದೆ’. ನಾನು ಹೇಳಿದೆ: ‘ದೆಹಲಿಗೆ ಹೋಗಿಬಂದ ಮನುಷ್ಯ, ತಾನು ದೆಹಲಿಗೆ ಹೋಗಿ ಬಂದವನು ಅಂತ ಜಂಬ ಕೊಚ್ಚಿಕೊಳ್ಳುತ್ತಾನೇನು? ದೊಡ್ಡ ಮನುಷ್ಯ ತಾನು ದೊಡ್ಡ ಮನುಷ್ಯ ಅಂತ ಹೇಳಿಕೊಳ್ಳುತ್ತಾನೇನು?”’
ಶ್ಯಾಮಬಸು: “ಕಾಳೀಕೃಷ್ಣ ಠಾಕೂರ ನಿಮ್ಮನ್ನು ಬಹಳವಾಗಿ ಗೌರವಿಸುತ್ತಿದ್ದಾನೆ.”
ಶ್ರೀರಾಮಕೃಷ್ಣರು: “ಓ, ಒಣಹೆಮ್ಮೆ ಹೇಗೆ ತಲೆಯನ್ನು ಕೆಡಿಸಿಬಿಡುತ್ತದೆ ಅಂತ! ದಕ್ಷಿಣೇಶ್ವರದ ಕಾಳೀದೇವಾಲಯದಲ್ಲಿ ಒಬ್ಬ ಜಾಡಮಾಲಿ ಹೆಂಗಸು ಕೆಲಸಮಾಡಿಕೊಂಡಿದ್ದಳು. ಆಕೆ ಒಂದೆರಡು ಒಡವೆಗಳನ್ನು ಮೈಮೇಲೆ ಹಾಕಿಕೊಂಡಿದ್ದುದರಿಂದ ಆಕೆಗೆ ಎಷ್ಟೊಂದು ಗರ್ವ ಅಂತ! ಆಕೆ ಬರುತ್ತಿದ್ದ ದಾರಿಯ ಪಕ್ಕದಲ್ಲಿ ಯಾರಾದರೂ ನಡೆದು ಹೋದರು ಅಂದರೆ ಗದರಿಸುತ್ತಿದ್ದಳು: ‘ಏ ದೂರ ಸರಿ!’ ಜಾಡಮಾಲಿ ಹೆಂಗಸೇ ಹೀಗೆ ಮಾತನಾಡುವಾಗ, ಉಳಿದವರ ಅಹಂಕಾರದ ವಿಷಯವಾಗಿ ಇನ್ನು ಹೇಳಬೇಕಾದ್ದೇನಿದೆ?”
ಶ್ಯಾಮಬಸು: “ಮಹಾಶಯರೆ, ಸಕಲ ಕಾರ್ಯಗಳನ್ನು ಭಗವಂತನೇ ಮಾಡುತ್ತಿರುವುದಾದರೆ, ಪಾಪಕೃತ್ಯಗಳಿಗಾಗಿ ಮನುಷ್ಯ ಏಕೆ ಶಿಕ್ಷೆಗೊಳಗಾಗಬೇಕು?”
ಶ್ರೀರಾಮಕೃಷ್ಣರು: “ನಿನ್ನದು ಅಕ್ಕಸಾಲಿಯ ಬುದ್ಧಿ!”
ನರೇಂದ್ರ: “ಅಕ್ಕಸಾಲೆ ಬುದ್ಧಿ ಅಂದರೆ, ಲೆಕ್ಕಾಚಾರದ ಬುದ್ಧಿ.”
ಶ್ರೀರಾಮಕೃಷ್ಣರು: “ನಾನು ಜನರಿಗೆ ಹೇಳುವುದುಂಟು: ಎಲಾ ತಿಳಿಗೇಡಿಗಳಾ! ಮಾವಿನ ಹಣ್ಣು ತಿಂದು ಆನಂದಪಡಿ. ತೋಟದಲ್ಲಿ ಎಷ್ಟು ನೂರು ಗಿಡಗಳಿವೆ, ಎಷ್ಟು ಸಹಸ್ರ ಕೊಂಬೆಗಳಿವೆ, ಎಷ್ಟು ಕೋಟಿ ಎಲೆಗಳಿವೆ ಇವೇ ಮೊದಲಾದ ಲೆಕ್ಕಾಚಾರದಿಂದ ನಿಮಗೆ ದೊರೆಯುವ ಫಲವೇನು? ನೀವು ಬಂದದ್ದು ಮಾವಿನ ಹಣ್ಣು ತಿನ್ನುವುದಕ್ಕೆ. ತಿಂದು ಆನಂದಪಡಿ.
(ಶ್ಯಾಮಬಸುವಿಗೆ) “ನೀನು ಈ ಜಗತ್ತಿನಲ್ಲಿ ಮಾನವ ಜನ್ಮ ಎತ್ತಿರುವುದು ಭಗವಂತನ ಸಾಕ್ಷಾತ್ಕಾರಕ್ಕಾಗಿ; ಅದರಿಂದ ಆತನ ಪಾದಪದ್ಮಗಳಲ್ಲಿ ಭಕ್ತಿಯನ್ನು ಗಳಿಸಿಕೊಳ್ಳಲೋಸುಗ ಪ್ರಯತ್ನ ಮಾಡು. ನೂರಾರು ವಿಷಯಗಳ ಕಡೆಗೇಕೆ ನೀನು ನಿನ್ನ ಮನಸ್ಸನ್ನು ಹರಿಸುತ್ತಾ ಇದ್ದೀಯೆ? ತತ್ತ್ವಶಾಸ್ತ್ರದಲ್ಲಿ ಆಸಕ್ತನಾಗಿ ವಿಚಾರದಲ್ಲಿ ತೊಡಗುವುದರಿಂದ ನಿನಗೆ ದೊರೆಯುವ ಲಾಭವೇನು? ಇಲ್ಲಿ ನೋಡು, ನಿನಗೆ ಅಮಲೇರಬೇಕಾದರೆ ಒಂದು ಚಟಾಕು ಮದ್ಯವೇ ಸಾಕಾಗಿರುವಾಗ, ಸೇಂದಿ ಅಂಗಡಿಯಲ್ಲಿ ಎಷ್ಟು ಪೀಪಾಯಿ ಮದ್ಯವಿದೆ ಎಂಬುದರ ಲೆಕ್ಕಾಚಾರ ನಿನಗೇಕೆ?”
ಡಾಕ್ಟರ್: “ಖಂಡಿತ ನಿಜ. ಜೊತೆಗೆ ಅದು ಭಗವಂತನ ಅಂಗಡಿಯಲ್ಲಿರುವ ಮದ್ಯ. ಅದಕ್ಕೆ ಮಿತಿ ಎಂಬುದೇ ಇಲ್ಲ. ಅದು ಬರಿದಾಗುವ ಹಾಗೇ ಇಲ್ಲ.”
ಶ್ರೀರಾಮಕೃಷ್ಣರು (ಶ್ಯಾಮಬಸುವಿಗೆ): “ಭಗವಂತನಿಗೆ ವಕಾಲತ್ತು ವಹಿಸಿಬಿಡು, ನಿನ್ನ ಇಡೀ ಹೊರೆಯನ್ನೆಲ್ಲ ಆತನಿಗೆ ಹೊರಿಸಿಬಿಡು. ನಿನ್ನ ಭಾರವನ್ನೆಲ್ಲ ನೀನು ಒಳ್ಳೆಯವರ ಮೇಲೆ ಹಾಕಿದ್ದರೆ ಅವರು ಎಂದಿಗಾದರೂ ನಿನಗೆ ಕೆಡಕು ಎಣಿಸುವರೇ? ನಿನ್ನ ಪಾಪಕೃತ್ಯಗಳಿಗೆ ನಿನ್ನನ್ನು ಶಿಕ್ಷಿಸಬೇಕೋ ಬೇಡವೋ ಎಂಬುದು ಕೇವಲ ಆತನಿಗೆ ಮಾತ್ರವೇ ಗೊತ್ತು.”
ಡಾಕ್ಟರ್: “ಭಗವಂತನ ಮನಸ್ಸಿನಲ್ಲಿ ಏನಿದೆಯೊ ಅದು ಅವನಿಗೆ ಗೊತ್ತು. ಅದನ್ನು ಮನುಷ್ಯ ಹೇಗೆ ತಾನೆ ಊಹಿಸಬಲ್ಲ? ಆತ ನಮ್ಮ ಲೆಕ್ಕಾಚಾರಕ್ಕೆ ಅತೀತ.”
ಶ್ರೀರಾಮಕೃಷ್ಣರು (ಶ್ಯಾಮಬಸುವಿಗೆ): “ಕಲ್ಕತ್ತೆಯ ಜನರಿಗೆ ಊದುವುದಕ್ಕೆ ಬರುವ ರಾಗ ಕೇವಲ ಇದೊಂದೇ. ನೀನು ಹೇಳುವುದುಂಟು: ‘ಭಗವಂತನಲ್ಲಿ ವೈಷಮ್ಯ ದೋಷ ಇದೆ. ಏಕೆಂದರೆ ಆತ ಕೆಲವರನ್ನು ಸುಖದಲ್ಲಿಯೂ, ಕೆಲವರನ್ನು ದುಃಖದಲ್ಲಿಯೂ ಇಟ್ಟಿದ್ದಾನೆ.’ ಈ ನೀಚರು ತಮ್ಮಲ್ಲೇನು ದೋಷವಿದೆಯೋ ಅದನ್ನೇ ಭಗವಂತನ ಮೇಲೂ ಆರೋಪಿಸುತ್ತಿದ್ದಾರೆ.
“ಹೇಮ ಎಂಬುವನು ದಕ್ಷಿಣೇಶ್ವರದ ದೇವಾಲಯಕ್ಕೆ ಬಂದು ಹೋಗುತ್ತಿದ್ದ. ನನ್ನನ್ನು ನೋಡಿದ ಅಂದರೆ ಆತ ಹೇಳುತ್ತಿದ್ದ: ‘ಏನು ಭಟ್ಟಾಚಾರ್ಯರೆ, ಜಗತ್ತಿನಲ್ಲಿ ಗಳಿಸಿಕೊಳ್ಳ ಬೇಕಾದ್ದು ಒಂದೇ ಒಂದು ವಸ್ತು. ಅದೇ ಗೌರವ ಅಲ್ಲವೇನು?’ ಭಗವಂತನ ಸಾಕ್ಷಾತ್ಕಾರವೇ ಜೀವನದ ಏಕಮಾತ್ರ ಉದ್ದೇಶ ಎಂದು ಹೇಳತಕ್ಕವರು ಬಹಳ ವಿರಳ.”
ಶ್ಯಾಮಬಸು: “ಸೂಕ್ಷ್ಮಶರೀರದ ವಿಷಯವಾಗಿ ಬಹಳ ಕೇಳಿದ್ದೇನೆ. ಯಾರಾದರೂ ಅದನ್ನು ನಮಗೆ ತೋರಿಸಿಕೊಡಬಲ್ಲರೇನು? ಮನುಷ್ಯ ಸತ್ತಾಗ ಸೂಕ್ಷ್ಮಶರೀರ ಸ್ಥೂಲ ಶರೀರದಿಂದ ಹೊರಕ್ಕೆ ಬಂದುಬಿಡುತ್ತದೆ ಎಂಬುದನ್ನು ಯಾರೇ ಆಗಲಿ ಪ್ರದರ್ಶಿಸಿ ತೋರಿಸಬಲ್ಲರೇನು?”
ಶ್ರೀರಾಮಕೃಷ್ಣರು: “ಯಾರು ನಿಜವಾದ ಭಕ್ತರೊ ಅವರಿಗೇನಾದರೂ ಅಂಥ ದರದು ಬಿದ್ದಿದೆಯೇನು ನಿನಗೆ ಇದನ್ನೆಲ್ಲ ತೋರಿಸಿಕೊಡುತ್ತಾ ಕುಳಿತಿರುವುದಕ್ಕೆ? ಯಾವ ನೀಚನೆ ಆಗಲಿ ಅವರಿಗೆ ಗೌರವ ತೋರಿಸಿದರೆ ತಾನೆ ಏನು ಇಲ್ಲದಿದ್ದರೆ ತಾನೆ ಏನು? ಒಬ್ಬ ದೊಡ್ಡ ಮನುಷ್ಯನನ್ನು ತಮ್ಮ ಕೈಗೆ ಹಾಕಿಕೊಳ್ಳಬೇಕು ಅಂತ ಅವರಿಗೆ ಇಚ್ಛೆಯೇ ಉಂಟಾಗದು.”
ಶ್ಯಾಮಬಸು: “ಒಳ್ಳೆಯದು, ಸ್ಥೂಲದೇಹಕ್ಕೂ, ಸೂಕ್ಷ್ಮದೇಹಕ್ಕೂ ಇರುವ ವ್ಯತ್ಯಾಸವೇನು?”
ಶ್ರೀರಾಮಕೃಷ್ಣರು: “ಪಂಚಭೂತಗಳಿಂದ ಕೂಡಿರುವ ಈ ದೇಹಕ್ಕೆ ‘ಸ್ಥೂಲದೇಹ’ ಅಂತ ಹೆಸರು. ಮನಸ್ಸು, ಬುದ್ಧಿ, ಆಹಂಕಾರ, ಚಿತ್ತ ಇವುಗಳಿಂದ ಕೂಡಿರುವ ದೇಹಕ್ಕೆ ‘ಸೂಕ್ಷ್ಮ ಶರೀರ’ ಅಂತ ಹೆಸರು. ಯಾವ ಶರೀರದಿಂದ ಭಗವದಾನಂದವನ್ನು ಪಡೆಯಬಹುದೊ ಮತ್ತು ಆತನೊಡನೆ ವಿಲಾಸಿಸಬಹುದೊ ಅದಕ್ಕೆ ‘ಕಾರಣಶರೀರ’ ಅಂತ ಹೆಸರು. ತಂತ್ರಶಾಸ್ತ್ರ ಅದನ್ನು ‘ಭಗವತಿಯ ತನು’ ಅಂತ ಕರೆಯುತ್ತದೆ. ಇವೆಲ್ಲಕ್ಕೂ ಅತೀತವಾದ್ದು ‘ಮಹಾಕಾರಣ (ತುರೀಯ)’, ಅದನ್ನು ಬಾಯಿಂದ ವರ್ಣನೆ ಮಾಡಲಾಗುವುದಿಲ್ಲ.
“ಇವನ್ನೆಲ್ಲ ಕೇವಲ ಕಿವಿಯಲ್ಲಿ ಕೇಳಿಬಿಟ್ಟರೆ ಆಗುವುದೇನು? ಸಾಧನೆಗೆ ಕೈಹಚ್ಚು! ಬಾಯಲ್ಲಿ ಸುಮ್ಮನೆ ‘ಬಂಗಿಸೊಪ್ಪು ಬಂಗಿಸೊಪ್ಪು’ ಅಂತ ಹೇಳುತ್ತಿದ್ದರೆ ಏನಾಗುತ್ತದೆ? ಅದರಿಂದ ನೆಶಾ ಉಂಟಾಗುತ್ತದೆಯೆ? ಬಂಗಿಸೊಪ್ಪನ್ನು ಅರೆದು ಮುದ್ದೆ ಮಾಡಿ ಅದನ್ನು ಮೈಗೆ ಸವರಿದರೂ ನೆಶಾ ಹತ್ತದು. ಅದನ್ನು ಕಿಂಚಿತ್ತು ತಿನ್ನಬೇಕು. ನಲವತ್ತನೆ ನಂಬರು ನೂಲು ಯಾವುದು, ನಲವತ್ತೊಂದನೆ ನಂಬರು ನೂಲು ಯಾವುದು ಎಂಬುದನ್ನು ನೂಲು ವ್ಯಾಪಾರ ಮಾಡಲಾರದವನ ಕೈಯಲ್ಲಿ ಹೇಳಲಾಗುತ್ತದೆಯೇನು? ಆದರೆ ಯಾರು ಅದರ ವ್ಯಾಪಾರಿಗಳೊ ಅವರಿಗೆ ಯಾವುದು ಎಂಥ ನಂಬರಿನ ನೂಲು ಅಂತ ಪತ್ತೆಹಚ್ಚುವುದಕ್ಕೆ ಸ್ವಲ್ಪವೂ ಕಷ್ಟವಾಗದು. ಅದಕ್ಕಾಗಿಯೇ ಹೇಳುತ್ತಿರುವುದು ಸ್ವಲ್ಪ ಸಾಧನೆ ಮಾಡಬೇಕು ಅಂತ. ಬಳಿಕ ನಿನಗೆ ಯಾವುದಕ್ಕೆ ಸ್ಥೂಲ, ಸೂಕ್ಷ್ಮ, ಕಾರಣ, ಮಹಾಕಾರಣ ಅಂತ ಕರೆಯುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ.ಭಗವಂತನನ್ನು ಪ್ರಾರ್ಥಿಸುವಾಗ, ಆತನ ಪಾದಪದ್ಮಗಳಲ್ಲಿ ನಿನಗೆ ಕೇವಲ ಭಕ್ತಿಯುಂಟಾಗುವಂತೆ ಪ್ರಾರ್ಥನೆ ಮಾಡು.
“ಅಹಲ್ಯೆಯ ಶಾಪವಿಮೋಚನೆಯಾದನಂತರ ಶ್ರೀರಾಮಚಂದ್ರ ಆಕೆಗೆ ಹೇಳಿದ: ‘ನನ್ನಿಂದ ನೀನು ಒಂದು ವರ ಪಡೆದುಕೊ.’ ಅಹಲ್ಯೆ ಪ್ರಾರ್ಥಿಸಿದಳು: ‘ಹೇ ರಾಮ, ನೀನು ನನಗೆ ವರ ಕೊಡುವುದಾದರೆ, ಒಂದು ಪಕ್ಷ ನಾನು ಹಂದಿ ಹೊಟ್ಟೆಯಲ್ಲಿ ಹುಟ್ಟಬೇಕಾಗಿ ಬಂದರೂ ಚಿಂತೆಯಿಲ್ಲ, ನನ್ನ ಮನಸ್ಸು ಮಾತ್ರ ಸತತ ನಿನ್ನ ಪಾದಪದ್ಮಗಳ ಕಡೆಗೆ ಹರಿಯುತ್ತಿರುವಂತೆ ವರ ಕರುಣಿಸು.’
“ನಾನು ಕೇವಲ ಭಕ್ತಿಗಾಗಿ ಮಾತ್ರವೇ ಭಗವತಿಯನ್ನು ಪ್ರಾರ್ಥನೆಮಾಡಿಕೊಂಡೆ. ಭಗವತಿಗೆ ಪುಷ್ಪಾಂಜಲಿಯನ್ನು ಅರ್ಪಿಸಿ ಕೈ ಮುಗಿದು ಪ್ರಾರ್ಥನೆಮಾಡಿಕೊಂಡೆ: ‘ತಾಯೆ, ಇಗೋ ತೆಗೆದುಕೊ ನಿನ್ನ ಅಜ್ಞಾನವನ್ನ, ಇಗೋ ತೆಗೆದುಕೋ ನಿನ್ನ ಜ್ಞಾನವನ್ನ; ನನಗೆ ಶುದ್ಧ ಭಕ್ತಿಯನ್ನು ಕೊಡು. ಇಗೋ ತೆಗೆದುಕೋ ನಿನ್ನ ಶುಚಿಯನ್ನ, ಇಗೋ ತೆಗೆದುಕೊ ನಿನ್ನ ಅಶುಚಿಯನ್ನ; ನನಗೆ ಶುದ್ಧಭಕ್ತಿಯನ್ನು ನೀಡು. ಇಗೋ ತೆಗೆದುಕೊ ನಿನ್ನ ಪಾಪವನ್ನ, ಇಗೋ ತೆಗೆದುಕೊ ನಿನ್ನ ಪುಣ್ಯವನ್ನ; ಇಗೋ ತೆಗೆದುಕೊ ನಿನ್ನ ಒಳ್ಳೆಯದನ್ನು, ಇಗೋ ತೆಗೆದುಕೊ ನಿನ್ನ ಕೆಟ್ಟದ್ದನ್ನ; ನನಗೆ ಶುದ್ಧಭಕ್ತಿಯನ್ನು ಕರುಣಿಸು. ಇಗೋ ತೆಗೆದುಕೊ ನಿನ್ನ ಧರ್ಮವನ್ನ, ಇಗೋ ತೆಗೆದುಕೊ ನಿನ್ನ ಅಧರ್ಮವನ್ನ; ನನಗೆ ಶುದ್ಧ ಭಕ್ತಿಯನ್ನು ಕರುಣಿಸು.’
“ಧರ್ಮ ಎಂದರೆ ದಾನಾದಿ ಸತ್ಕರ್ಮಗಳು. ಧರ್ಮ ಸ್ವೀಕಾರದೊಡನೆ ಅಧರ್ಮವನ್ನೂ ಸ್ವೀಕರಿಸಬೇಕಾಗುತ್ತದೆ. ಪುಣ್ಯ ಸ್ವೀಕಾರದೊಡನೆ ಪಾಪವನ್ನೂ ಸ್ವೀಕರಿಸಬೇಕಾಗುತ್ತದೆ. ಜ್ಞಾನವನ್ನು ಸ್ವೀಕರಿಸಿದರೆ, ಅಜ್ಞಾನವನ್ನು ಸ್ವೀಕರಿಸಬೇಕಾಗುತ್ತದೆ. ಶುಚಿಯನ್ನು ಸ್ವೀಕರಿಸಿದರೆ ಅಶುಚಿಯನ್ನೂ ಸ್ವೀಕರಿಸಬೇಕಾಗುತ್ತದೆ. ಇದು ಯಾರಿಗೆ ಬೆಳಕಿನ ಬೋಧೆ ಇರುವುದೊ, ಆತನಿಗೆ ಅಂಧಕಾರದ ಬೋಧೆಯೂ ಇರುವ ಹಾಗೆ. ಯಾರಿಗೆ ಒಂದರ ಜ್ಞಾನವಿರುವುದೊ ಆತನಿಗೆ ಅನೇಕದರ ಜ್ಞಾನವೂ ಇರುತ್ತದೆ. ಯಾರಿಗೆ ಒಳ್ಳೆಯದರ ಜ್ಞಾನವಿರುವುದೊ ಆತನಿಗೆ ಕೆಟ್ಟದರ ಜ್ಞಾನವೂ ಇರುತ್ತದೆ.
“ಯಾರೇ ಆಗಲಿ ಹಂದಿಮಾಂಸ ತಿನ್ನುತ್ತಿದ್ದರೂ ಭಗವಂತನ ಪಾದಪದ್ಮಗಳಲ್ಲಿ ಭಕ್ತಿ ಇಟ್ಟಿದ್ದರೆ ಆತನೇ ಧನ್ಯ. ಅದಕ್ಕೆ ಬದಲು ಹವಿಷ್ಯಾನ್ನ ತಿನ್ನುತ್ತ ಯಾರೆ ಆಗಲಿ ಸಂಸಾರಾಸಕ್ತನಾಗಿದ್ದರೆ–”
ಡಾಕ್ಟರ್: “ಆತ ಅಧಮಾಧಮ. ಈ ಸಂದರ್ಭದಲ್ಲಿ ನಿಮಗೆ ಒಂದು ವಿಷಯ ತಿಳಿಸಬೇಕಾಗಿದೆ. ಒಮ್ಮೆ ಬುದ್ಧ ಹಂದಿಮಾಂಸ ತಿಂದ. ಅದರ ಪ್ರತಿಫಲ, ತಾಳಲಾಗದ ಹೊಟ್ಟೆನೋವು. ಅದನ್ನು ತಡೆದುಕೊಳ್ಳಲು ಆತ ಅಫೀಮು ತಿನ್ನುತ್ತಿದ್ದ. ಆತನ ನಿರ್ವಾಣ ಎಲ್ಲ ಏನು ಗೊತ್ತೆ? ಅಫೀಮು ತಿಂದು ನೆಶಾ ಬರುತ್ತಿತ್ತು; ಬಾಹ್ಯಜ್ಞಾನಶೂನ್ಯನಾಗಿಬಿಡುತ್ತಿದ್ದ. ಆ ಅವಸ್ಥೆಯೇ ಹೆಸರುವಾಸಿಯಾದ ಆತನ ‘ನಿರ್ವಾಣ.”’
ಬುದ್ಧದೇವನ ನಿರ್ವಾಣದ ಸಂಬಂಧವಾಗಿ ಈ ವ್ಯಾಖ್ಯಾನವನ್ನು ಡಾಕ್ಟರ್ ಬಾಯಿಂದ ಕೇಳಿ ಎಲ್ಲರೂ ಗಹಗಹಿಸಿ ನಗಲಾರಂಭಿಸಿದರು. ಮತ್ತೆ ಮಾತುಕತೆ ಮುಂದುವರಿಯಲಾರಂಭಿಸಿತು.
ಶ್ರೀರಾಮಕೃಷ್ಣರು (ಶ್ಯಾಮಬಸುವಿಗೆ): “ನೀನು ಸಾಂಸಾರಿಕ ಜೀವನವನ್ನು ನಡೆಸಿಕೊಂಡು ಹೋಗುತ್ತಿರುವುದೇನೂ ತಪ್ಪಲ್ಲ. ಆದರೆ ಭಗವಂತನ ಪಾದಪದ್ಮಗಳಲ್ಲಿ ಮನಸ್ಸನ್ನಿಟ್ಟು ಕಾಮನಾಶೂನ್ಯನಾಗಿ ಕೆಲಸಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿರಬೇಕು. ಇಲ್ಲಿ ನೋಡು, ಯಾರಿಗೇ ಆಗಲಿ, ಬೆನ್ನ ಮೇಲೆ ಬೆನ್ನುಫಣಿ ಎದ್ದಿದ್ದರೆ, ಆತ ನೋಡುವುದಕ್ಕೆ ಎಂದಿನಂತೆ ಎಲ್ಲರೊಡನೆಯೂ ಮಾತುಕತೆಗಳಾಡುತ್ತಿರುತ್ತಾನೆ; ಬಹುಶಃ ಎಂದಿನ ಹಾಗೆ ತನ್ನ ಕೆಲಸಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿರಬಹುದು; ಆದರೆ ಮಾತ್ರ ಆತನ ಮನಸ್ಸು ಬೆನ್ನುಫಣಿಯಲ್ಲೇ ನೆಲೆಸಿಬಿಟ್ಟಿರುತ್ತದೆ. ಅದೇ ರೀತಿಯಾಗಿ ಸಂಸಾರದಲ್ಲಿರಬೇಕು.
“ಸಂಸಾರದಲ್ಲಿ ಪತಿತ ಹೆಂಗಸಿನೋಪಾದಿಯಲ್ಲಿ ಇರಬೇಕು. ಆಕೆಯ ಮನಸ್ಸಿರುವುದು ಉಪಪತಿಯ ಕಡೆ. ಆದರೂ ಸಾಂಸಾರಿಕ ಕೆಲಸಕಾರ್ಯಗಳನ್ನೆಲ್ಲ ಮಾಡಿಕೊಂಡು ಹೋಗುತ್ತಿರುತ್ತಾಳೆ. (ಡಾಕ್ಟರಿಗೆ) ಅರ್ಥವಾಯಿತೇನು?”
ಡಾಕ್ಟರ್: “ಆ ತರದ ಅನುಭವವೇ ನನಗಿಲ್ಲದಿರುವಾಗ ನಾನು ಅದನ್ನು ಅರ್ಥ ಮಾಡಿಕೊಳ್ಳುವ ಬಗೆ ಹೇಗೆ?”
ಶ್ಯಾಮಬಸು: “ಓ, ಹಾಗೇನಲ್ಲ! ನಿಮಗೆ ಸ್ವಲ್ಪ ಅರ್ಥ ಆಗೇ ಇದೆ.” (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು (ನಗುತ್ತ): “ವಿಶೇಷತಃ ಆ ವೃತ್ತಿಯಲ್ಲಿ ಆತ ಬಹಳ ಕಾಲದಿಂದ ನುರಿತಿದ್ದಾನೆ. ಅಲ್ಲವೇನು?” (ಎಲ್ಲರೂ ನಗುತ್ತಿದ್ದಾರೆ.)
ಶ್ಯಾಮಬಸು: “ಮಹಾಶಯರೆ, ಥಿಯಾಸೋಫಿ ಸಂಬಂಧವಾಗಿ ನಿಮ್ಮ ಅಭಿಪ್ರಾಯವೇನು?”
ಶ್ರೀರಾಮಕೃಷ್ಣರು: “ಮುಖ್ಯವಾಗಿ ಗಮನಿಸಬೇಕಾದ ವಿಷಯವೇನೆಂದರೆ, ಯಾರು ಶಿಷ್ಯರನ್ನು ಸಂಪಾದಿಸಿಕೊಳ್ಳಲು ಸುತ್ತಾಡುತ್ತಾರೊ, ಅವರು ಕೀಳು ದರ್ಜೆಗೆ ಸೇರಿದವರು. ಹಾಗೇ ಸಿದ್ಧಿಗಾಗಿ, ಅಂದರೆ ಗಂಗಾನದಿಯ ಮೇಲೆ ನಡೆದುಹೋಗುವ ಶಕ್ತಿ, ದೂರ ದೇಶದಲ್ಲಿ ಯಾರಾರು ಏನೇನು ಮಾತಾಡಿಕೊಳ್ಳುತ್ತಾರೆ ಎಂಬುದನ್ನು ಹೇಳುವ ಶಕ್ತಿ ಇವೇ ಮೊದಲಾದ ಸಿದ್ಧಿಗಳನ್ನು ಸಂಪಾದಿಸಿಕೊಳ್ಳಲು ಪ್ರಯತ್ನಮಾಡುವವರೂ ಅದೇ ಕೀಳು ದರ್ಜೆಗೆ ಸೇರಿದವರೆ. ಇಂಥ ಜನರಿಗೆ ಶುದ್ಧಭಕ್ತಿ ದೊರೆಯುವುದು ಬಹಳ ಕಷ್ಟ.”
ಶ್ಯಾಮಬಸು: “ಆದರೆ ಅವರು (ಥಿಯಾಸೋಫಿಗಳು) ಹಿಂದೂಧರ್ಮವನ್ನು ಪುನರುತ್ಥಾನಗೊಳಿಸಲು ಪ್ರಯತ್ನಿಸುತ್ತಿದ್ದಾರಲ್ಲ.”
ಶ್ರೀರಾಮಕೃಷ್ಣರು: “ನನಗೆ ಅವರ ಸಂಬಂಧವಾಗಿ ವಿಶೇಷವಾಗಿ ಏನೂ ಗೊತ್ತಿಲ್ಲ.”
ಶ್ಯಾಮಬಸು: “ಸತ್ತ ಬಳಿಕ ಜೀವಾತ್ಮ ಎಲ್ಲಿಗೆ ಹೋಗುತ್ತದೆ-ಚಂದ್ರಲೋಕಕ್ಕೆ ಅಥವಾ ನಕ್ಷತ್ರಲೋಕಕ್ಕೆ-ಇತ್ಯಾದಿ ಎಂಬುದನ್ನು ಥಿಯಾಸೋಫಿಯಿಂದ ಅರಿತುಕೊಳ್ಳಬಹುದು.”
ಶ್ರೀರಾಮಕೃಷ್ಣರು: “ಅದು ಇರಬಹುದು. ಆದರೆ ನನ್ನ ಭಾವ ಏನು ಗೊತ್ತೆ? ಒಬ್ಬ ಹನುಮಂತನನ್ನು ಕೇಳಿದ: ‘ಈ ದಿನ ಯಾವ ತಿಥಿ?’ ಹನುಮಂತ ಹೇಳಿದ ‘ನನಗೆ ವಾರ, ತಿಥಿ, ನಕ್ಷತ್ರ ಇವು ಯಾವುವೂ ಗೊತ್ತಿಲ್ಲ. ಕೇವಲ ರಾಮಚಿಂತನೆಯನ್ನು ಮಾತ್ರ ಮಾಡುತ್ತಿದ್ದೇನೆ.’ ನನ್ನದೂ ಅದೇ ವಿಧದ ಭಾವ.”
ಶ್ಯಾಮಬಸು: “ಅವರಿಗೆ ಮಹಾತ್ಮರ ಇರುವಿಕೆಯಲ್ಲಿ ವಿಶ್ವಾಸ. ನಿಮಗೂ?”
ಶ್ರೀರಾಮಕೃಷ್ಣರು: “ನನ್ನ ಮಾತಿನಲ್ಲಿ ನಿನಗೆ ನಂಬಿಕೆ ಇರುವುದಾದರೆ ಹೇಳುತ್ತೇನೆ, ಇದ್ದಾರೆ ಅಂತ. ಸದ್ಯಕ್ಕೆ ಈ ವಿಧದ ಮಾತುಗಳೆಲ್ಲ ಇಲ್ಲಿಗೆ ಸಾಕು. ನನಗೆ ಸ್ವಲ್ಪ ಗುಣವಾದ ನಂತರ ನೀನು ಮತ್ತೆ ಬಾ. ನನ್ನಲ್ಲಿ ನಿನಗೆ ನಂಬಿಕೆ ಇರುವುದಾದರೆ, ಶಾಂತಿಯನ್ನು ಪಡೆಯಲು ನಿನಗೂ ಒಂದು ಮಾರ್ಗವನ್ನು ತೋರಿಸಿಕೊಡಲಾಗುತ್ತದೆ. ನಾನು ಹಣ, ವಸ್ತ್ರ, ಇವು ಯಾವನ್ನೂ ಪರಿಗ್ರಹಿಸದಿರುವುದು ನಿನ್ನ ಕಣ್ಣಿಗೆ ಬಿದ್ದೇ ಇರುತ್ತದೆ. ನಾವು ಇಲ್ಲಿಗೆ ಬರುವವರ ಹತ್ತಿರದಿಂದ ಚಂದಾ ಎತ್ತುವುದಿಲ್ಲ. ಅದಕ್ಕಾಗಿಯೇ ಇಲ್ಲಿಗೆ ಬಹಳ ಜನರು ಬರುತ್ತಿರೋದು! (ಎಲ್ಲರೂ ನಗುತ್ತಿದ್ದಾರೆ.)
(ಡಾಕ್ಟರಿಗೆ) “ನೀನು ಕೋಪಿಸಿಕೊಳ್ಳದಿದ್ದರೆ, ನಿನಗೆ ಕೆಲವು ವಿಷಯ ತಿಳಿಸ ಬೇಕೆಂದಿದ್ದೇನೆ. ಧನಾರ್ಜನೆ, ಗೌರವ ಸಂಪಾದನೆ, ಉಪನ್ಯಾಸ ಕೊಡುವುದು ಇವನ್ನೆಲ್ಲ ಸಾಕಾದಷ್ಟು ಮಾಡಿದ್ದೀಯೆ, ಈಗ ಕೆಲವು ಕಾಲ ನಿನ್ನ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಿಡು; ಆಗಾಗ ಇಲ್ಲಿಗೆ ಬಂದುಹೋಗುತ್ತಿರು. ಭಗವದ್ವಿಷಯಗಳನ್ನು ಕೇಳುತ್ತಿದ್ದರೆ ಉದ್ದೀಪನೆಯಾಗುತ್ತದೆ.”
ಡಾಕ್ಟರ್ ತನ್ನ ಮನೆಗೆ ಹಿಂದಿರುಗಲು ಮೇಲಕ್ಕೆ ಎದ್ದು ನಿಂತುಕೊಳ್ಳುತ್ತಿದ್ದ ಹಾಗೆಯೇ ಗಿರೀಶಘೋಷ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡ. ಆತನನ್ನು ಕಂಡು ಡಾಕ್ಟರಿಗೆ ಬಹಳ ಆನಂದವಾಗಿಬಿಟ್ಟು ಆತನೂ ಮತ್ತೆ ಕುಳಿತುಕೊಂಡ.
ಡಾಕ್ಟರ್ (ಗಿರೀಶನನ್ನು ತೋರಿಸಿ): “ನೋಡಿ, ನಾನು ಇಲ್ಲಿ ಇರುವಾಗ ಈತ ಇಲ್ಲಿಗೆ ಬರುವುದಿಲ್ಲ. ಇನ್ನೇನು ಹೊರಡುವುದರಲ್ಲಿದ್ದೇನಲ್ಲ, ಅದಕ್ಕಾಗಿ ಬಂದುಬಿಟ್ಟಿದ್ದಾನೆ!” (ಎಲ್ಲರೂ ನಗುತ್ತಿದ್ದಾರೆ.)
ಡಾಕ್ಟರ್ ತನ್ನ ವಿಜ್ಞಾನ ಸಭೆಯ ಸಂಬಂಧವಾಗಿ ಗಿರೀಶನೊಡನೆ ಮಾತುಕತೆಯಾಡಲು ಆರಂಭಿಸಿದ.
ಶ್ರೀರಾಮಕೃಷ್ಣರು: “ಅಲ್ಲಿಗೆ ನನ್ನನ್ನೂ ಒಂದು ದಿನ ಕರೆದುಕೊಂಡು ಹೋಗುತ್ತೀಯ?”
ಡಾಕ್ಟರ್: “ನೀವೇನಾದರೂ ಅಲ್ಲಿಗೆ ಬಂದಿರಿ ಅಂದರೆ ಭಗವಂತನ ಅತ್ಯದ್ಭುತ ಕೆಲಸಕಾರ್ಯಗಳನ್ನೆಲ್ಲ ನೋಡಿಬಿಟ್ಟು ಬಾಹ್ಯಶೂನ್ಯರಾಗಿಬಿಡುತ್ತೀರಿ.”
ಶ್ರೀರಾಮಕೃಷ್ಣರು: “ನಿಜವಾಗಿಯೂ!”
ಡಾಕ್ಟರ್ (ಗಿರೀಶನಿಗೆ): “ನೀನು ಇನ್ನು ಬೇರೆ ಏನು ಬೇಕಾದರೂ ಮಾಡಿಕೊ, ಆದರೆ ಮಾತ್ರ ಭಗವಂತ ಅಂತ ಇವರನ್ನು (ಪರಮಹಂಸರನ್ನು) ಪೂಜೆಮಾಡಬೇಡ. ಇಂಥ ಒಳ್ಳೆ ಮನುಷ್ಯರ ತಲೆಯನ್ನು ನೀನು ಕೆಡಿಸಿಬಿಡುತ್ತಾ ಇದ್ದೀಯ.”
ಗಿರೀಶ: “ಮಹಾಶಯ, ನಾನು ಇನ್ನು ಬೇರೆ ಏನು ತಾನೆ ಮಾಡಲಿ? ಯಾರು ನನ್ನನ್ನು ಈ ಸಂಸಾರಸಾಗರದಿಂದ, ವಿಶೇಷತಃ ಸಂದೇಹಸಾಗರದಿಂದ ಪಾರುಮಾಡಿದರೊ ಅವರನ್ನು ಇನ್ನು ಬೇರೆ ಯಾವ ದೃಷ್ಟಿಯಿಂದ ನೋಡಲಿ? ಇವರ ಮಲ ನನಗೆ ಮಲ ಅಂತ ಅನ್ನಿಸುತ್ತದೆಯೆ?”
ಡಾಕ್ಟರ್: “ಮಲದ ಸಂಬಂಧವಾಗಿ ನಾನೂ ಕ್ಲೇಶಪಟ್ಟುಕೊಳ್ಳುತ್ತಿಲ್ಲ. ನನಗೂ ಅದನ್ನು ಕಂಡರೆ ಅಸಹ್ಯ ತೋರುತ್ತಿಲ್ಲ. ಒಮ್ಮೆ ಕಿರಾಣಿ ಅಂಗಡಿಯವ ತನ್ನ ಮಗುವನ್ನು ಚಿಕಿತ್ಸೆಗೆಂದು ನನ್ನ ಆಫೀಸಿಗೆ ಕರೆದುಕೊಂಡು ಬಂದಿದ್ದ. ಆ ಮಗು ಅಲ್ಲೇ ಮಲವಿಸರ್ಜನೆ ಮಾಡಿಬಿಟ್ಟಿತು, ಎಲ್ಲರೂ ಮೂಗನ್ನು ತಮ್ಮ ತಮ್ಮ ಬಟ್ಟೆಯಿಂದ ಮುಚ್ಚಿಕೊಂಡುಬಿಟ್ಟರು. ಆದರೆ ನಾನು ಮಾತ್ರ ನನ್ನ ಕರವಸ್ತ್ರವನ್ನೂ ಮೂಗಿನ ಹತ್ತಿರಕ್ಕೆ ಹಿಡಿಯದೆ ಅರ್ಧ ಘಂಟೆ ಹೊತ್ತು ಅದರ ಬಳಿಯಲ್ಲೇ ಕುಳಿತಿದ್ದೆ. ಇದೂ ಅಲ್ಲದೆ ಜಾಡಮಾಲಿ ತೊಟ್ಟಿ ಹೊತ್ತುಕೊಂಡು ನನ್ನ ಬಳಿಯಲ್ಲಿ ಹಾದು ಹೋಗುವಾಗಲೂ ನಾನು ಮೂಗಿಗೆ ಬಟ್ಟೆ ಹಾಕುವುದಿಲ್ಲ. ಏಕೆಂದರೆ ನನಗೆ ಚೆನ್ನಾಗಿ ಗೊತ್ತು ನಾನು ಏನೊ ಆತನೂ ಅದೇ ಅಂತ. ಆದ್ದರಿಂದ ಆತನನ್ನೇಕೆ ಒಂದು ಕೀಳು ದೃಷ್ಟಿಯಿಂದ ನೋಡಲಿ? ಹಾಗಾದರೇನು, ನನ್ನ ಕೈಯಲ್ಲಿ ಇವರ (ಪರಮಹಂಸರ) ಪಾದಧೂಳಿ ತೆಗೆದುಕೊಳ್ಳಲಾಗುವುದಿಲ್ಲ ಅನ್ನುತ್ತೀಯ? ನೋಡಿಲ್ಲಿ, ಈಗಲೇ ತೆಗೆದುಕೊಳ್ಳುತ್ತೇನೆ.”
ಡಾಕ್ಟರ್ ಸರ್ಕಾರ ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮಮಾಡಿ ಅವರ ಪಾದ ಧೂಳಿಯನ್ನು ತೆಗೆದುಕೊಂಡ.
ಗಿರೀಶ: “ದೇವತೆಗಳು ಹೇಳುತ್ತಿದ್ದಾರೆ, ‘ಈ ಶುಭಮುಹೂರ್ತ ಪವಿತ್ರವಾದ್ದು! ಪರಮಪವಿತ್ರವಾದ್ದು!’ ಅಂತ.”
ಡಾಕ್ಟರ್: “ಮನುಷ್ಯನ ಪಾದಧೂಳಿಯನ್ನು ಸ್ವೀಕರಿಸುವುದರಲ್ಲಿ ಆಶ್ಚರ್ಯಪಡು ವುದೇನಿದೆ? ನಾನು ಎಲ್ಲರ ಪಾದಧೂಳಿಯನ್ನು ಸ್ವೀಕರಿಸಬಲ್ಲೆ. ನೀವೆಲ್ಲರೂ ನಿಮ್ಮ ನಿಮ್ಮ ಪಾದಧೂಳಿಯನ್ನು ನನಗೆ ಕರುಣಿಸಿ.”
ಡಾಕ್ಟರ್ ಎಲ್ಲರ ಪಾದಧೂಳಿಯನ್ನೂ ಸ್ವೀಕರಿಸುತ್ತಾನೆ.
ನರೇಂದ್ರ (ಡಾಕ್ಟರಿಗೆ): “ನಾವು ಇವರನ್ನು (ಪರಮಹಂಸರನ್ನು) ಭಗವತ್ಸದೃಶ ಮನುಷ್ಯರು ಅಂತ ಭಾವಿಸುತ್ತಿದ್ದೇವೆ. ಅದು ಹೇಗೆ ಎಂಬುದು ನಿಮಗೆ ಗೊತ್ತೆ? ನೋಡಿ ಸಸ್ಯವಲಯಕ್ಕೂ ಪ್ರಾಣಿವಲಯಕ್ಕೂ ಮಧ್ಯೆ ಒಂದು ಸ್ಥಾನವಿದೆ. ಅದರ ವಸ್ತು ಸಸ್ಯವಲಯದ್ದೆ ಅಥವಾ ಪ್ರಾಣಿವಲಯದ್ದೆ ಅಂತ ನಿರ್ಧರಿಸುವುದು ಬಹಳ ಕಷ್ಟ. ಅದೇ ರೀತಿಯಾಗಿ ಮಾನವ ಪ್ರಪಂಚಕ್ಕೂ ದೈವಪ್ರಪಂಚಕ್ಕೂ ಮಧ್ಯೆ ಒಂದು ಸ್ಥಾನವಿದೆ. ಅದರ ವ್ಯಕ್ತಿ ಮನುಷ್ಯನೇ ಅಥವಾ ಭಗವಂತನೇ ಅಂತ ನಿರ್ಧರಿಸಿ ಹೇಳುವುದು ಬಹಳ ಕಷ್ಟ.”
ಡಾಕ್ಟರ್: “ಓ ನನ್ನ ಯುವಕ ಗೆಳೆಯ, ಭಗವದ್ವಿಷಯವಾಗಿ ಸಾದೃಶ್ಯಗಳನ್ನು ತರುವುದು ಸರಿಹೊಂದುವುದಿಲ್ಲ.”
ನರೇಂದ್ರ: “ನಾನು ಇವರೇ ಭಗವಂತ ಅಂತ ಹೇಳುತ್ತಿಲ್ಲ.ಇವರು ಭಗವತ್ಸದೃಶರು ಅಂತ ಮಾತ್ರ ಹೇಳುತ್ತಾ ಇದ್ದೇನೆ.”
ಡಾಕ್ಟರ್: “ಇಂಥ ವಿಷಯಗಳ ಸಂಬಂಧವಾಗಿ ಪ್ರತಿಯೊಬ್ಬನೂ ತನ್ನ ತನ್ನ ಭಾವ ಗಳನ್ನು ಬಚ್ಚಿಟ್ಟುಕೊಂಡಿರಬೇಕು. ಅವನ್ನು ಬೆಳಕಿಗೆ ತರುವುದು ಒಳ್ಳೆಯದಲ್ಲ. ಏನು ಮಾಡಲಿ! ನಮ್ಮ ಮನಸ್ಸಿನಲ್ಲಿ ಏನಿದೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ! ನನ್ನ ಪರಮ ಆಪ್ತ ಬಂಧುಗಳೂ ನನ್ನನ್ನು ಕಠಿಣಹೃದಯಿ, ನಿರ್ದಯಿ ಅಂತ ಭಾವಿಸುತ್ತಿದ್ದಾರಲ್ಲ! ನೀವೂ ಒಂದು ದಿನ ಜೋಡಿನ ಏಟು ತಿನ್ನಿಸಿ ನನ್ನನ್ನು ಹೊರಗಟ್ಟಬಹುದು!”
ಶ್ರೀರಾಮಕೃಷ್ಣರು: “ಹಾಗೆಲ್ಲ ಎಂದಿಗೂ ಹೇಳಬಾರದು! ಇವರೆಲ್ಲರು ನಿನ್ನನ್ನು ಎಷ್ಟೊಂದು ಪ್ರೀತಿಸುತ್ತಿದ್ದಾರೆ! ವರ ಎಷ್ಟು ಹೊತ್ತಿಗೆ ಬರುವನು ಎಂದು ಸಖಿಯರು ವಧುವಿನ ಕೊಠಡಿಯಲ್ಲಿ ಆಕಾಂಕ್ಷಿತರಾಗಿ ಕುಳಿತಿರುವ ಹಾಗೆ, ಇವರು ನಿನ್ನ ಬರುವಿಕೆಗಾಗಿ ಕಾದುಕೊಂಡಿರುತ್ತಾರೆ.”
ಗಿರೀಶ: “ಇಲ್ಲಿ ಎಲ್ಲರೂ ನಿಮ್ಮನ್ನು ಬಹಳ ಗೌರವದೃಷ್ಟಿಯಿಂದ ನೋಡುತ್ತಿದ್ದೇವೆ.”
ಡಾಕ್ಟರ್: “ನನ್ನ ಮಗ, ಜೊತೆಗೆ ನನ್ನ ಹೆಂಡತಿ ಕೂಡ ನಾನೊಬ್ಬ ಕಠಿಣಹೃದಯಿ ಅಂತ ಭಾವಿಸುತ್ತಿದ್ದಾರೆ. ನಾನು ಮಾಡುತ್ತಿರುವ ತಪ್ಪೇನೆಂದರೆ, ನಾನು ನನ್ನ ಭಾವನೆಗಳನ್ನು ಯಾರೊಡನೆಯೂ ವ್ಯಕ್ತಗೊಳಿಸುತ್ತಿಲ್ಲ.”
ಗಿರೀಶ: “ಆದ್ದರಿಂದ ನೀವು ನಿಮ್ಮ ಬಂಧುಗಳ ಮೇಲಾದರೂ ಕೃಪೆಯಿಟ್ಟು ನಿಮ್ಮ ಹೃದಯದ ಬಾಗಿಲುಗಳನ್ನು ತೆಗೆದಿಡುವುದು ಮೇಲು; ಇಲ್ಲದಿದ್ದರೆ ನೀವೇ ನೋಡಿ, ನಿಮ್ಮ ಹೃದಯದಲ್ಲಿ ಏನಿದೆ ಎಂಬುದನ್ನು ಅವರು ಅರಿತುಕೊಳ್ಳಲಾರರು.”
ಡಾಕ್ಟರ್: “ನನ್ನ ಹೃದಯದಲ್ಲಿರುವುದನ್ನು ನಾನು ಹೇಗೆ ವಿವರಿಸಿ ಹೇಳಲಿ! ನಿಮಗಿಂತಲೂ ಅಧಿಕವಾಗಿ ನನ್ನಲ್ಲಿ ಭಾವೋದ್ರೇಕವಾಗಿಬಿಡುತ್ತದೆ. (ನರೇಂದ್ರನಿಗೆ) ಒಬ್ಬನೆ ಏಕಾಂತದಲ್ಲಿ ಕುಳಿತು ಸುಮ್ಮನೆ ಅಳುತ್ತೇನೆ.
(ಶ್ರೀರಾಮಕೃಷ್ಣರಿಗೆ) “ಒಳ್ಳೇದು ನಾನು ನಿಮಗೊಂದು ವಿಷಯ ತಿಳಿಸಲೇನು? ನೀವು ಭಾವಸ್ಥರಾದಾಗ ಬೇರೆಯವರ ಶರೀರದ ಮೇಲೆ ನಿಮ್ಮ ಕಾಲನ್ನು ಇಡುತ್ತೀರಿ. ಅದು ಒಳ್ಳೆಯದಲ್ಲ.”
ಶ್ರೀರಾಮಕೃಷ್ಣರು: “ಆ ಅವಸ್ಥೆಯಲ್ಲಿ ನಾನು ಬೇರೊಬ್ಬರ ಶರೀರವನ್ನು ನನ್ನ ಕಾಲಿನಿಂದ ಮುಟ್ಟುತ್ತಿದ್ದೇನೆ ಅಂತ ನನಗೆ ಗೊತ್ತಾಗುತ್ತದೆಯೇನು?”
ಡಾಕ್ಟರ್: “ಹಾಗೆ ಮಾಡುವುದು ಸರಿಯಲ್ಲ ಅಂತ ನಿಮಗೆ ಅನಿಸುತ್ತಿದೆ ತಾನೆ?”
ಶ್ರೀರಾಮಕೃಷ್ಣರು: “ನನಗೆ ಭಾವಾವಸ್ಥೆ ಬಂದಾಗ ನನ್ನ ಆಂತರ್ಯದಲ್ಲಿ ಏನಾಗುತ್ತದೆ ಎಂಬುದನ್ನು ನಾನು ನಿನಗೆ ತಿಳಿಸುವ ಬಗೆ ಹೇಗೆ? ಆ ಅವಸ್ಥೆಯಿಂದ ಕೆಳಗೆ ಇಳಿದ ನಂತರ ಒಮ್ಮೊಮ್ಮೆ ಯೋಚನೆ ಮಾಡುತ್ತೇನೆ. ಬಹುಶಃ ಈ ರೋಗ ನನ್ನ ಅವಸ್ಥೆಯ ದೆಸೆಯಿಂದ ಇರಬಹುದೇ ಅಂತ. ಸತ್ಯವೇನೆಂದರೆ, ಭಗವದ್ಭಾವನೆ ನನ್ನನ್ನು ಉನ್ಮತ್ತನನ್ನಾಗಿ ಮಾಡಿ ಬಿಡುತ್ತದೆ. ಆ ಅವಸ್ಥೆಯಲ್ಲಿ ಈ ಕಾರ್ಯವೆಲ್ಲ ನಡೆದುಹೋಗಿಬಿಡುತ್ತದೆ. ಅದಕ್ಕೆ ನಾನೇನು ಮಾಡಲಿ?”
ಡಾಕ್ಟರ್: “ಈಗ ಇವರು ನಾನು ಹೇಳುವುದು ಸರಿ ಅಂತ ಒಪ್ಪಿಕೊಳ್ಳುತ್ತಾ ಇದ್ದಾರೆ. ತಾವು ಮಾಡುತ್ತಿರುವುದಕ್ಕೆ ವ್ಯಥೆ ಸೂಚಿಸುತ್ತಾ ಇದ್ದಾರೆ. ಅದು ಪಾಪಕರ ಎಂಬ ಬೋಧೆ ಇವರಿಗೆ ಇದೆ.”
ಶ್ರೀರಾಮಕೃಷ್ಣರು (ನರೇಂದ್ರನಿಗೆ): “ನಿನಗೆ ಬಹಳ ಚುರುಕುಬುದ್ಧಿ ಇದೆ. ನೀನೇಕೆ ಈತನಿಗೆ ಸರಿಯಾದ ಉತ್ತರ ಕೊಡಬಾರದು? ಈತನಿಗೆ ಎಲ್ಲಾ ಗೊತ್ತಾಗುವ ಹಾಗೆ ವಿವರಿಸಿ ತಿಳಿಸು.”
ಗಿರೀಶ (ಡಾಕ್ಟರಿಗೆ): “ಮಹಾಶಯರೆ, ನೀವು ತಪ್ಪಾಗಿ ತಿಳಿದುಕೊಂಡಿದ್ದೀರಿ. ಇವರು ಅದಕ್ಕಾಗಿ ದುಃಖಿತರಾಗಿಲ್ಲ. ಇವರದು ಶುದ್ಧ ಅಪಾಪವಿದ್ಧ ದೇಹ. ಜೀವರ ಮಂಗಳಕ್ಕಾಗಿ ಇವರು ಹಾಗೆ ಸ್ಪರ್ಶಮಾಡುತ್ತಿದ್ದಾರೆ. ಕೆಲವು ವೇಳೆ ಇವರು ಭಾವಿಸುತ್ತಿದ್ದಾರೆ, ಜನರ ಪಾಪಗಳನ್ನೆಲ್ಲ ತಾವು ಹೊತ್ತುಕೊಳ್ಳುತ್ತಿರುವುದರಿಂದ ತಮಗೆ ಈ ರೋಗ ಬಂದಿರಬೇಕೆಂದು.
“ನಿಮ್ಮ ವಿಷಯವಾಗಿಯೇ ತೆಗೆದುಕೊಳ್ಳಿ. ಒಮ್ಮೆ ನೀವು ಅತಿಯಾದ ಹೊಟ್ಟೆನೋವಿನಿಂದ ನರಳಿದಿರಿ. ಆಗ ನೀವು ರಾತ್ರಿ ಬಹಳ ಹೊತ್ತಿನವರೆಗೆ ಕುಳಿತು ಓದುತ್ತಿದ್ದುದಕ್ಕಾಗಿ ವ್ಯಥೆಪಡಲಿಲ್ಲವೇನು? ಹಾಗೆಂದು ರಾತ್ರಿ ಬಹಳ ಹೊತ್ತಿನವರೆಗೆ ಓದುವುದು ನಿಜವಾಗಿ ದುಷ್ಕಾರ್ಯವೇನು? ಇವರೂ (ಪರಮಹಂಸರು) ತಾವು ರೋಗಗ್ರಸ್ತರಾಗಿರುವುದಕ್ಕೆ ವ್ಯಥೆ ಪಡಬಹುದು. ಹಾಗೆಂದು ತಾವು ಜೀವರ ಮಂಗಳಕ್ಕಾಗಿ ಅವರ ಶರೀರವನ್ನು ಸ್ಪರ್ಶಿಸುತ್ತಿರುವುದು ದುಷ್ಕಾರ್ಯ ಎಂದೇನೂ ಇವರು ಭಾವಿಸುತ್ತಿಲ್ಲ.”
ಡಾಕ್ಟರ್ ಸರ್ಕಾರ್ (ದಿಗ್ಭ್ರಮೆ ಹಿಡಿದವನಾಗಿ, ಗಿರೀಶನಿಗೆ): “ಒಪ್ಪಿಕೊಳ್ಳುತ್ತೇನೆ ನನ್ನ ಸೋಲನ್ನು, ಕೊಡು ನಿನ್ನ ಪಾದಧೂಳಿಯನ್ನು.”
ಡಾಕ್ಟರ್ ಗಿರೀಶನ ಪಾದಧೂಳಿಯನ್ನು ಸ್ವೀಕರಿಸಿದ.
ಡಾಕ್ಟರ್ (ನರೇಂದ್ರನಿಗೆ): “ಜನರು ಆತನ (ಗಿರೀಶನ) ವಿಷಯವಾಗಿ ಏನೇ ಹೇಳಿದರೂ, ಆತನ ಬುದ್ಧಿಶಕ್ತಿಯನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.”
ನರೇಂದ್ರ (ಡಾಕ್ಟರಿಗೆ): “ನೋಡಿ ನೀವು ಶರೀರಸುಖದ ಕಡೆ ಒಂದು ಕಿಂಚಿತ್ತೂ ಗಮನವೀಯದೆ ಜಡ-ವಿಜ್ಞಾನದ ಒಂದು ತತ್ತ್ವವನ್ನು ಕಂಡುಹಿಡಿಯಲು ನಿಮ್ಮ ಇಡೀ ಜೀವವನ್ನೇ ಅರ್ಪಿಸಿಬಿಡಬಲ್ಲಿರಿ. ಆದರೆ ಭಗವದ್ವಿಜ್ಞಾನ ಎಲ್ಲಾ ವಿಜ್ಞಾನಗಳಿಗಿಂತಲೂ ಮಿಗಿಲಾದುದು. ಆದ್ದರಿಂದ ಅದನ್ನು ಪಡೆದುಕೊಳ್ಳುವುದಕ್ಕಾಗಿ ಈ ಶರೀರ ಮಡಿಯ ಬೇಕಾದರೂ ಮಡಿಯಲಿ ಎಂಬ ಭಾವನೆ ಇವರಿಗೆ ಬರಲೊಲ್ಲದೇನು?”
ಡಾಕ್ಟರ್: “ಇಲ್ಲಿಯವರೆಗೆ ಜನ್ಮವೆತ್ತಿದ ಎಲ್ಲಾ ಧಾರ್ಮಿಕ ಆಚಾರ್ಯರೂ ಅಂದರೆ ಯೇಸು, ಚೈತನ್ಯದೇವ, ಬುದ್ಧ, ಮಹಮದ್ ಇವರೆಲ್ಲರೂ ಕಟ್ಟಕಡೆಯಲ್ಲಿ ಅಹಂಕಾರದಿಂದ ಪರಿಪೂರ್ಣರಾಗಿದ್ದರು. ಇವರಲ್ಲಿ ಪ್ರತಿಯೊಬ್ಬರೂ ಏಕಕಂಠದಿಂದ ಹೇಳಿದ್ದಾರೆ: ‘ನಾನು ಏನು ಹೇಳುತ್ತೇನೊ ಅದೇ ಸತ್ಯ.’ ಇದು ಎಷ್ಟು ನಿಂದನೀಯವಾದ್ದು!”
ಗಿರೀಶ (ಡಾಕ್ಟರಿಗೆ): “ಮಹಾಶಯರೆ, ನೀವೂ ಅದೇ ತಪ್ಪನ್ನು ಮಾಡುತ್ತಿದ್ದೀರಿ. ಅವರೆಲ್ಲರೂ ಅಹಂಕಾರಿಗಳು ಅಂತ ಅವರಲ್ಲಿ ನೀವು ದೋಷ ಕಂಡುಹಿಡಿಯುತ್ತಾ ಇದ್ದೀರಿ. ಅದಷ್ಟೆ ಸಾಕು ನೀವೂ ಅಹಂಕಾರಿಗಳು ಅಂತ ತೋರಿಸುವುದಕ್ಕೆ.”
ಡಾಕ್ಟರ್ ಸರ್ಕಾರ ತೆಪ್ಪಗಾದ.
ನರೇಂದ್ರ (ಡಾಕ್ಟರಿಗೆ): “ನಾವು ಇವರನ್ನು ಪೂಜಿಸುತ್ತಾ ಇದ್ದೇವೆ. ಅದು ಹತ್ತಿರ ಹತ್ತಿರ ಭಗವಂತನನ್ನು ಪೂಜಿಸಿದ ಹಾಗೇ.”
ಈ ಮಾತುಗಳನ್ನೆಲ್ಲ ಕೇಳಿ ಪರಮಹಂಸರು ಮಕ್ಕಳೋಪಾದಿಯಲ್ಲಿ ನಗುತ್ತಾ ಇದ್ದಾರೆ.