೨೩ನೆ ಅಕ್ಟೋಬರ್ ೧೮೮೫, ಆಶ್ವೀಜ ಶುಕ್ಲ ಪೂರ್ಣಿಮೆ, ಶುಕ್ರವಾರ
ಘಂಟೆ ಬೆಳಗಿನ ಹತ್ತು. ಪರಮಹಂಸರು ಶ್ಯಾಮಪುಕುರದ ಬಾಡಿಗೆ ಮನೆಯಲ್ಲಿ ಮಾಸ್ಟರೊಡನೆ ಮಾತುಕತೆಯಾಡುತ್ತಿದ್ದಾರೆ. ಆತ ಅವರ ಕಾಲಿಗೆ ಮೋಟುಕಾಲುಚೀಲವನ್ನು ಹಾಕುತ್ತಿದ್ದಾನೆ.
ಶ್ರೀರಾಮಕೃಷ್ಣರು (ನಗುತ್ತ): “ನನ್ನ ಮಫ್ಲರನ್ನು ಎರಡು ಭಾಗಮಾಡಿ, ಅದನ್ನೇ ಏಕೆ ಮೋಟುಕಾಲುಚೀಲದ ಹಾಗೆ ಸುತ್ತಬಾರದು? ಅದು ಒಳ್ಳೆ ಶಾಖ ಕೊಡುತ್ತದೆ.”
ಮಾಸ್ಟರ್ ನಕ್ಕ. ಪರಮಹಂಸರು ಹಿಂದಿನ ರಾತ್ರಿ ಬಹಳ ಹೊತ್ತಿನವರೆಗೆ ಡಾಕ್ಟರ್ ಸರ್ಕಾರನೊಡನೆ ಮಾತನಾಡಿದರು. ಅವರು ಅವನ ಮಾತೆತ್ತಿ ನಗುತ್ತ ನಗುತ್ತ ಹೇಳುತ್ತಿದ್ದಾರೆ: “ನಿನ್ನೆ ಯಾವ ರೀತಿಯಾಗಿ ‘ತುಹ್ಞೂ, ತುಹ್ಞೂ’ ಎಂಬ ವಿಷಯವಾಗಿ ಆತನಿಗೆ ತಿಳಿಸಿದೆ!”
ನಿನ್ನೆ ಪರಮಹಂಸರು ಡಾಕ್ಟರಿಗೆ ಹೇಳಿದ್ದರು, ಜನರು ತ್ರಿತಾಪಗಳಿಂದ ನರಳುತ್ತಿದ್ದರೂ ತಾವು ಆನಂದದಿಂದ ಇದ್ದೇವೆ ಎಂದು ಹೇಳಿಕೊಳ್ಳುತ್ತಾರೆ ಅಂತ. ಅದನ್ನು ಚಿಕ್ಕ ನರೇನ್ ಪರಮಹಂಸರಿಗೆ ಜ್ಞಾಪಕಪಡಿಸಿದ. ಆತ ಹೇಳಿದ: “ನೀವು ಕೈಗೆ ಮುಳ್ಳು ಗೀರಿ ರಕ್ತ ಸುರಿಯುತ್ತಿರುವುದರ ವಿಷಯ ಮತ್ತು ಆ ಮುಳ್ಳನ್ನು ಜ್ಞಾನಾಗ್ನಿಯಲ್ಲಿ ಸುಡಬೇಕು ಎಂಬ ವಿಷಯ ಹೇಳಿದ್ದೀರಲ್ಲ ಅವು ಬಹಳ ಸೊಗಸಾದ ವಿಷಯಗಳು.”
ಶ್ರೀರಾಮಕೃಷ್ಣರು: “ಇವೆಲ್ಲ ನನ್ನ ಪ್ರತ್ಯಕ್ಷ ಅನುಭವಕ್ಕೆ ಬಂದ ವಿಷಯಗಳು. ಒಮ್ಮೆ ನಾನು ಕುಟೀರದ ಹಿಂಭಾಗದಲ್ಲಿ ನಡೆದುಹೋಗುತ್ತಿದ್ದೆ. ನನ್ನ ದೇಹವೆಲ್ಲ ಹೋಮಾಗ್ನಿಜ್ವಾಲೆಯ ಹಾಗೆ ಪ್ರಜ್ವಲಿಸಲಾರಂಭಿಸಿತು. ಪದ್ಮಲೋಚನ ಒಮ್ಮೆ ನನಗೆ ‘ಪಂಡಿತರ ಒಂದು ಸಭೆ ಸೇರಿಸಿ, ಅದರಲ್ಲಿ ನಿಮ್ಮ ಆಧ್ಯಾತ್ಮಿಕ ಅನುಭವಗಳನ್ನೆಲ್ಲ ಡಂಗುರ ಹೊಡೆಯಲು ಹೋಗುತ್ತೇನೆ’ ಅಂತ ಹೇಳಿದ. ಆದರೆ ಹಾಗೆಂದ ಸ್ವಲ್ಪ ದಿವಸಗಳಲ್ಲೇ ದೇಹತ್ಯಾಗಮಾಡಿಬಿಟ್ಟ.”
ಘಂಟೆ ಹನ್ನೊಂದು. ಪರಮಹಂಸರ ದೇಹಾರೋಗ್ಯದ ವರದಿ ಒಪ್ಪಿಸಲು ಮಾಸ್ಟರ್, ಡಾಕ್ಟರ್ ಸರ್ಕಾರನ ಮನೆಗೆ ಬಂದಿದ್ದಾನೆ. ಆತ ಬಹಳ ಉತ್ಸುಕತೆಯಿಂದ ವರದಿಯನ್ನೆಲ್ಲಾ ಕೇಳಲಾರಂಭಿಸಿದ.
ಡಾಕ್ಟರ್ (ನಗುತ್ತ): “ನಿನ್ನೆ ಹೇಗೆ ನಾನು ಸರಿಯಾಗಿ ಹೇಳಿದೆ. ‘ತುಹ್ಞೂ! ತುಹ್ಞೂ!’ ಅಂತ ಹೇಳಬೇಕಾದರೆ ಒಳ್ಳೆ ನಿಪುಣ ಹತ್ತಿ ಬಿಡಿಸುವವರ ಕೈಗೆ ಬೀಳಬೇಕಾಗುತ್ತದೆ ಅಂತ!”
ಮಾಸ್ಟರ್: “ಹೌದು ನಿಜ. ಸಮರ್ಥ ಗುರುವಿನ ಕೈಗೆ ಬೀಳದೆ ಇದ್ದರೆ ಅಹಂಕಾರ ಹೋಗುವುದಿಲ್ಲ. ಅವರು ಭಕ್ತಿಯ ಸಂಬಂಧವಾಗಿ ಎಷ್ಟು ಚೆನ್ನಾಗಿ ಮಾತನಾಡಿದರು! ಭಕ್ತಿ, ಹೆಂಗಸಿನಂತೆ ಅಂತಃಪುರಕ್ಕೆ ಹೋಗಬಲ್ಲುದು.”
ಡಾಕ್ಟರ್: “ಹೌದು, ಅದು ಬಹಳ ಸೊಗಸಾದ ಮಾತು. ಆದರೆ ಹಾಗೆಂದು ಜ್ಞಾನವನ್ನು ವರ್ಜಿಸಿಬಿಡುವುದಕ್ಕಾಗುವುದಿಲ್ಲ.”
ಮಾಸ್ಟರ್: “ಅವರೂ ಅದನ್ನು ವರ್ಜಿಸಿಬಿಡಬೇಕು ಅಂತಲೇನೂ ಹೇಳುತ್ತಿಲ್ಲವಲ್ಲ. ಅವರು ಜ್ಞಾನ, ಭಕ್ತಿ, ಸಾಕಾರ, ನಿರಾಕಾರ ಎಲ್ಲವನ್ನೂ ಸ್ವೀಕರಿಸುತ್ತಾರೆ. ಅವರು ಹೇಳುತ್ತಿದ್ದಾರೆ, ಭಕ್ತಿಯ ಶೈತ್ಯದಿಂದ ಒಂದು ಕಿಂಚಿತ್ ಭಾಗ ಸಾಕಾರರೂಪವನ್ನು ತಾಳುತ್ತದೆ; ಜ್ಞಾನಸೂರ್ಯ ಉದಯಿಸಿದೊಡನೆಯೆ ಆ ಸಾಕಾರರೂಪು ಕರಗಿ ನಿರಾಕಾರವಾಗುತ್ತದೆ. ಅಂದರೆ ಭಕ್ತಿಯೋಗದಿಂದ ಸಾಕಾರದ ಅನುಭವ, ಜ್ಞಾನಯೋಗದಿಂದ ನಿರಾಕಾರದ ಅನುಭವ.
“ಭಗವಂತ ತಮ್ಮ ಹತ್ತಿರವೇ ಇರುವಂತೆ ಅವರು ಸತತ ಆತನೊಡನೆ ಮಾತನಾಡು ತ್ತಿರುವುದು ನಿಮ್ಮ ಗಮನಕ್ಕೆ ಆಗಲೇ ಬಂದಿರಬೇಕು. ಗಂಟಲು ನೊಂದಾಗ ಅವರು ಚಿಕ್ಕ ಮಕ್ಕಳ ಹಾಗೆ ‘ತಾಯೆ, ಬಹಳವಾಗಿ ನೋಯುತ್ತಿದೆ’ ಅಂತ ಹೇಳುತ್ತಾರೆ.
“ಅವರ ಬುದ್ಧಿ ಎಷ್ಟು ಸೂಕ್ಷ್ಮವಾದ್ದು! ಮ್ಯೂಸಿಯಂನಲ್ಲಿ ಒಂದು ಮಮ್ಮಿಯನ್ನು ನೋಡಿದರು, ಒಡನೆಯೇ ಸಾಧುಸಂಗದಿಂದಾಗುವ ಫಲವೇನು ಎಂಬುದಕ್ಕೆ ಅದನ್ನು ಉದಾಹರಣೆಯಾಗಿ ಕೊಟ್ಟುಬಿಟ್ಟರು. ಜೀವಿ ಕಲ್ಲಿನ ಸಂಪರ್ಕದಿಂದ ಯಾವ ರೀತಿಯಾಗಿ ಕಲ್ಲಾಗಿಬಿಟ್ಟಿದೆಯೊ, ಅದೇ ರೀತಿಯಾಗಿ ಮನುಷ್ಯ ಸಾಧುಸಂಪರ್ಕದಿಂದ ಸಾಧು ಆಗಿ ಬಿಡುತ್ತಾನೆ.”
ಡಾಕ್ಟರ್: “ನಿನ್ನೆ ಈಶಾನಬಾಬು ಅವತಾರ ಅವತಾರ ಅಂತಲೇ ಇದ್ದ. ಏನದು? ಮನುಷ್ಯನನ್ನು ಭಗವಂತ ಅಂತ ಕರೆಯುವುದು!”
ಮಾಸ್ಟರ್: “ಪ್ರತಿಯೊಬ್ಬನಿಗೂ ಒಂದೊಂದರಲ್ಲಿ ವಿಶ್ವಾಸ. ಅದನ್ನೇಕೆ ಕೆಣಕುವುದಕ್ಕೆ ಹೋಗಬೇಕು?”
ಡಾಕ್ಟರ್: “ಹೌದು, ಅದರಿಂದೇನು ಪ್ರಯೋಜನ?”
ಮಾಸ್ಟರ್: “ಒಬ್ಬ, ತನ್ನ ಸ್ನೇಹಿತ ಹೇಳಿದ ಹಾಗೆ ಪೇಪರಿನಲ್ಲಿ ಮನೆ ‘ದಿಢೀರ್’ ಎಂಬುದಾಗಿ ಮುರಿದು ಬಿದ್ದ ಸಮಾಚಾರ ಇಲ್ಲದಿರುವುದನ್ನು ನೋಡಿ ಆತನನ್ನು ನಂಬದೆ ಹೋದುದರ ವಿಷಯವಾಗಿ ನಮಗೆ ತಿಳಿಸಿ ನಮ್ಮನ್ನೆಲ್ಲ ಎಷ್ಟೊಂದಾಗಿ ನಗಿಸಿದರು!”
ಡಾಕ್ಟರ್ ಸರ್ಕಾರ ಬಾಯಿ ತೆರೆಯದೆ ಸುಮ್ಮನೆ ಕುಳಿತಿದ್ದಾನೆ. ಪರಮಹಂಸರು ಆತನಿಗೆ ಹೇಳಿದ್ದರು, “ನಿನ್ನ ಸೈನ್ಸ್ ಪುಸ್ತಕದಲ್ಲಿ ಅವತಾರದ ವಿಷಯವಾಗಿ ಏನೂ ಬರೆದಿಲ್ಲ; ಆದ್ದರಿಂದ ಅವತಾರ ಎಂಬುದು ಇಲ್ಲ ಎಂದು ನೀನು ಹೇಳುತ್ತಿದ್ದೀಯೆ” ಅಂತ.
ಸಮಯ ನಡುಹಗಲು. ಡಾಕ್ಟರ್ ಸರ್ಕಾರ ಮಾಸ್ಟರೊಡನೆ ಗಾಡಿಯಲ್ಲಿ ಕುಳಿತು ಕೊಂಡ. ಕೆಲವು ರೋಗಿಗಳನ್ನು ನೋಡಿದ ಬಳಿಕ ಪರಮಹಂಸರನ್ನು ನೋಡುತ್ತಾನೆ.
ಡಾಕ್ಟರ್ ಅಂದು ಗಿರೀಶನ ಆಹ್ವಾನಕ್ಕನುಗುಣವಾಗಿ ಬುದ್ಧಲೀಲೆಯ ಅಭಿನಯವನ್ನು ನೋಡಿ ಬಂದಿದ್ದ. ಆತ ಮಾಸ್ಟರಿಗೆ ಹೇಳಿದ: “ಬುದ್ಧನನ್ನು ದಯೆಯ ಅವತಾರ ಅಂತ ಹೇಳಿದ್ದರೆ ಚೆನ್ನಾಗಿತ್ತು. ಅದಕ್ಕೆ ಬದಲು ವಿಷ್ಣುವಿನ ಅವತಾರ ಅಂತ ಗಿರೀಶ ಏಕೆ ಹೇಳಿದ?”
ಡಾಕ್ಟರ್, ಮಾಸ್ಟರನ್ನು ಕಾರನ್ವಾಲೀಸ್ ಚೌಕದ ಹತ್ತಿರ ಇಳಿಸಿಬಿಟ್ಟ.
ಘಂಟೆ ಅಪರಾಹ್ನ ಮೂರು. ಪರಮಹಂಸರು ಮಗುವಿನಂತೆ ಆಗಾಗ “ಡಾಕ್ಟರ್ ಎಷ್ಟು ಹೊತ್ತಿಗೆ ಬರುತ್ತಾನೆ? ಘಂಟೆ ಎಷ್ಟಾಯಿತು?” ಎಂಬುದಾಗಿ ಕೇಳುತ್ತಿದ್ದಾರೆ. ಡಾಕ್ಟರ್, ಇಂದು ಸಾಯಂಕಾಲದ ಮೇಲೆ ಬರುತ್ತಾನೆ.
ಇದ್ದಕ್ಕಿದ್ದ ಹಾಗೆ ಪರಮಹಂಸರಿಗೆ ಬಾಲಕನ ಅವಸ್ಥೆ ಬಂದುಬಿಟ್ಟಿದೆ. ತಲೆದಿಂಬನ್ನು ತಮ್ಮ ತೋಳುಗಳ ಮೇಲೆ ಇಟ್ಟುಕೊಂಡಿದ್ದಾರೆ. ವಾತ್ಸಲ್ಯ ಪ್ರೇಮದಿಂದ ತುಂಬಿತುಳುಕಾಡುತ್ತ ತಾಯಿ ಮಗುವಿಗೆ ಹಾಲು ಕೊಡುವ ರೀತಿಯಲ್ಲಿ ಈಗ ಆ ದಿಂಬನ್ನು ಎದೆಗಪ್ಪಿಕೊಂಡು ಭಾವಾವಿಷ್ಟರಾಗಿದ್ದಾರೆ. ಮಕ್ಕಳ ಹಾಗೆ ನಗುತ್ತಿದ್ದಾರೆ. ಮೈಮೇಲೆ ಬಟ್ಟೆಯನ್ನು ಯಾವುದೊ ರೀತಿಯಾಗಿ ಹಾಕಿಕೊಂಡಿದ್ದಾರೆ. ಭಕ್ತರು ಆಶ್ಚರ್ಯಚಕಿತರಾಗಿ ಅವರ ಕಡೆ ನೋಡುತ್ತಿದ್ದಾರೆ.
ಸ್ವಲ್ಪ ಹೊತ್ತಾದನಂತರ ಅವರ ಭಾವ ಇಳಿಮುಖವಾಯಿತು. ಈಗ ಅವರ ಆಹಾರದ ಸಮಯವಾಯಿತು. ಅವರು ಸ್ವಲ್ಪ ರವೆಪಾಯಸ ಕುಡಿದರು.
ಪರಮಹಂಸರು ಮಾಸ್ಟರೊಡನೆ ಅತಿ ಗುಹ್ಯ ವಿಷಯಗಳನ್ನು ಈಗ ಮಾತನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು (ಏಕಾಂತವಾಗಿ ಮಾಸ್ಟರಿಗೆ): “ಈಗತಾನೆ ಬಂದಿದ್ದ ಭಾವಾವಸ್ಥೆಯಲ್ಲಿ ನಾನು ಏನೇನನ್ನು ನೋಡಿದೆ ಎಂಬುದು ನಿನಗೆ ಗೊತ್ತೆ? ಸಿಹೋರಿಗೆ ಹೋಗುವ ರಸ್ತೆಯಲ್ಲಿ ಸಿಗುವ ಏಳೆಂಟು ಮೈಲಿ ವಿಸ್ತಾರದ ಮೈದಾನ ಕಾಣಿಸಿಕೊಂಡಿತು. ಅಲ್ಲಿ ನಾನೊಬ್ಬನೇ ವಿನಾ ಬೇರೆ ಯಾರೂ ಇರಲಿಲ್ಲ. ನಾನು ಒಮ್ಮೆ ಪಂಚವಟಿಯಲ್ಲಿ ಹದಿನಾರು ವರ್ಷದ ಒಬ್ಬ ಪರಮಹಂಸನನ್ನು ನೋಡಿದ್ದೆನಲ್ಲ, ಆತನ ಹಾಗೆಯೇ ಒಬ್ಬ ಅಲ್ಲಿ ಕಾಣಿಸಿಕೊಂಡ.
“ಸುತ್ತುಮುತ್ತಲೂ ಆನಂದದ ಮುಗಿಲು ಕವಿದಿದ್ದಿತು. ಅದರೊಳಗಿನಿಂದ ಹದಿಮೂರೊ ಹದಿನಾಲ್ಕೊ ವಯಸ್ಸಿನ ಹುಡುಗ ಹೊರಕ್ಕೆ ಬಂದ. ಆತನ ಮುಖದ ಕಡೆ ನೋಡಿದೆ. ಪೂರ್ಣನದರ ಹಾಗಿತ್ತು. ನಾವಿಬ್ಬರೂ ದಿಗಂಬರರಾಗಿರುವಂತೆ ಕಂಡಿತು. ಬಳಿಕ ಇಬ್ಬರೂ ಆನಂದದಿಂದ ಮೈದಾನದಲ್ಲಿ ಓಡಾಡಲು ಮತ್ತು ಆಟವಾಡಲು ಆರಂಭಿಸಿದೆವು. ಓಡಾಡಿ ಓಡಾಡಿ ಪೂರ್ಣನಿಗೆ ಬಾಯಾರಿಕೆ ಆಗಿಬಿಟ್ಟಿತು. ಆತ ಒಂದು ಪಾತ್ರೆಯಲ್ಲಿ ನೀರು ತಂದು ತಾನೂ ಕುಡಿದು ನನಗೂ ಕೊಡಲು ಬಂದ. ನಾನು ಹೇಳಿದೆ, ‘ನಿನ್ನ ಉಚ್ಛಿಷ್ಟವನ್ನು ನಾನು ಕುಡಿಯಲಾರೆ’. ಆತ ನಗುತ್ತ ನಗುತ್ತ ಗ್ಲಾಸನ್ನು ತೊಳೆದು ಬೇರೊಂದು ಗ್ಲಾಸು ನೀರನ್ನು ತಂದುಕೊಟ್ಟ.”
ಪರಮಹಂಸರು ಮತ್ತೆ ಸಮಾಧಿಸ್ಥರಾಗಿದ್ದಾರೆ. ಸ್ವಲ್ಪ ಹೊತ್ತು ಕಳೆದನಂತರ ಪ್ರಕೃತಿಸ್ಥರಾಗಿ ಮತ್ತೆ ಮಾಸ್ಟರೊಡನೆ ಮಾತಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನನ್ನ ಮನಸ್ಸು ಬದಲಾವಣೆಯನ್ನು ಹೊಂದುತ್ತಿದೆ. ಪ್ರಸಾದಕ್ಕೆ ಮನ್ನಣೆ ತೋರಿಸುವ ಅವಸ್ಥೆ ನನ್ನನ್ನು ಬಿಟ್ಟು ಹೊರಟುಹೋಗಿಬಿಟ್ಟಿದೆ. ಸತ್ಯ, ಮಿಥ್ಯ ಎರಡೂ ಒಂದಾಗಿ ತೋರುತ್ತಿವೆ. ಈ ಸ್ವಲ್ಪ ಹೊತ್ತಿನ ಹಿಂದಿನ ಅವಸ್ಥೆಯಲ್ಲಿ ನಾನು ಇನ್ನೂ ಏನು ನೋಡಿದೆ ಗೊತ್ತೆ? ಭಗವದ್ರೂಪವನ್ನು–ಭಗವತಿಯ ಮೂರ್ತಿಯನ್ನು. ಆಕೆ ಗರ್ಭಿಣಿಯಾಗಿದ್ದಳು. ಮಗುವನ್ನು ಹೆತ್ತು ಅದನ್ನು ನುಂಗಲಾರಂಭಿಸಿದಳು. ಆಕೆಯ ಬಾಯ ಒಳಕ್ಕೆ ಹೋಗುತ್ತಿದ್ದ ಆ ಮಗುವಿನ ಭಾಗವೆಲ್ಲ ಶೂನ್ಯವಾಗಿ ಬಿಡುತ್ತಿತ್ತು. ಎಲ್ಲವೂ ಶೂನ್ಯ ಅಂತ ಆಕೆ ತೋರಿಸಲಾರಂಭಿಸಿದಳು. ಆಕೆ ಹೇಳುತ್ತಿರುವ ಹಾಗೆ ಕಂಡಿತು, ‘ಬಾ! ಬಾ! ಮಾಯಾ ಮಂತ್ರವೆ ಬಾ! ಬಾ!’ ಅಂತ.”
‘ಐಂದ್ರಜಾಲಿಕನೆ ಸತ್ಯ, ಉಳಿದುದೆಲ್ಲ ಅನಿತ್ಯ’ ಎಂಬ ಪರಮಹಂಸರ ಮಾತು ಮಾಸ್ಟರ ಜ್ಞಾಪಕಕ್ಕೆ ಬಂತು.
ಶ್ರೀರಾಮಕೃಷ್ಣರು: “ಒಳ್ಳೇದು, ಆ ಸಲ ನಾನು ಪೂರ್ಣನನ್ನು ಆಕರ್ಷಿಸಲು ಪ್ರಯತ್ನ ಮಾಡಿದೆ. ಆದರೆ ಜಯಶೀಲನಾಗಲಿಲ್ಲವಲ್ಲ ಏಕೆ? ಇದು ನನ್ನ ಶಕ್ತಿಯ ಸಂಬಂಧವಾಗಿ ಸಂದೇಹವನ್ನು ತರುತ್ತಿದೆ.”
ಮಾಸ್ಟರ್: “ಅವೆಲ್ಲ ಪವಾಡಗಳು.”
ಶ್ರೀರಾಮಕೃಷ್ಣರು: “ಪಕ್ಕಾ ಪವಾಡಗಳೆ.”
ಮಾಸ್ಟರ್: “ನಾವು ನಿಮ್ಮೊಡನೆ ಅಧರಸೇನನ ಮನೆಯಿಂದ ಹೊರಟು ಬಂಡಿಯಲ್ಲಿ ಕುಳಿತು ಬರುತ್ತಿದ್ದಾಗ ಒಂದು ಸೀಸೆ ಒಡೆದು ಹೋದುದು ನಿಮಗೆ ಜ್ಞಾಪಕದಲ್ಲಿರಬೇಕು. ಆಗ ನಮ್ಮಲ್ಲಿ ಒಬ್ಬರು ನಿಮ್ಮನ್ನು ಕೇಳಿದೆವು: ‘ಹೀಗಾದ್ದರಿಂದ ನಮಗೇನಾದರೂ ತೊಂದರೆ ಬರುವುದೆ? ನಿಮ್ಮ ಅಭಿಪ್ರಾಯವೇನು?’ ನೀವು ಹೇಳಿದಿರಿ: ‘ಬೇಕಾದ್ದು ಬರಲಿ. ಅದಕ್ಕೇಕೆ ನಾನು ಮನಸ್ಸು ಕೊಡಲು ಹೋಗಲಿ. ಹಾಗೆಲ್ಲ ಮಾಡಲು ಹೋದರೆ ಪವಾಡ ತೋರಿಸಿದಂತಾಗುತ್ತದೆ.”’
ಶ್ರೀರಾಮಕೃಷ್ಣರು: “ಹೌದು, ಜನರು ತಮ್ಮ ಮಕ್ಕಳ ರೋಗ ಗುಣವಾಗಲೆಂದು ಅವನ್ನು ಹರಿನಾಮ ಕೀರ್ತನೆ ನಡೆಯುವ ಸ್ಥಳದಲ್ಲಿ ಉರುಳಿಸುತ್ತಾರೆ; ಅಥವಾ ಮಂತ್ರ ತಂತ್ರಗಳಿಂದಲೂ ರೋಗವನ್ನು ಗುಣಪಡಿಸಲು ಪ್ರಯತ್ನಿಸುತ್ತಾರೆ. ಇವೆಲ್ಲ ಪವಾಡಗಳೆ. ಯಾರು ಇನ್ನೂ ಆಧ್ಯಾತ್ಮಿಕ ಜೀವನದ ಅತ್ಯಂತ ಕೆಳ ಹಂತದಲ್ಲಿದ್ದಾರೊ, ಕೇವಲ ಅವರು ಮಾತ್ರವೇ ರೋಗ ಗುಣಪಡಿಸುವಂತೆ ಭಗವಂತನಿಗೆ ಮೊರೆಯಿಟ್ಟುಕೊಳ್ಳುತ್ತಾರೆ.”
ಸಾಯಂಕಾಲವಾಗಿದೆ. ಪರಮಹಂಸರು ತಮ್ಮ ಹಾಸಿಗೆಯ ಮೇಲೆ ಕುಳಿತು ಭಗವತಿಯ ಧ್ಯಾನ ಮತ್ತು ನಾಮ ಜಪ ಮಾಡುತ್ತಿದ್ದಾರೆ. ಭಕ್ತರಲ್ಲನೇಕರು ಅವರ ಹತ್ತಿರ ನಿಶ್ಶಬ್ದರಾಗಿ ಕುಳಿತಿದ್ದಾರೆ. ಲಾಟು, ಶಶಿ, ಶರಚ್ಚಂದ್ರ, ಚಿಕ್ಕ ನರೇನ್, ಪಲ್ಟು, ಭೂಪತಿ, ಗಿರೀಶ ಮತ್ತು ಇನ್ನೂ ಕೆಲವರು ಅಲ್ಲಿ ಕುಳಿತಿದ್ದಾರೆ. ಸ್ಟಾರ್ ಥಿಯೇಟರಿನ ರಾಮತಾರಣ ಎಂಬುವನು ಗಿರೀಶನೊಡನೆ ಬಂದಿದ್ದಾನೆ. ಆತ ಹಾಡುವುದರಲ್ಲಿದ್ದಾನೆ. ಕೆಲವು ನಿಮಿಷಗಳ ನಂತರ ಡಾಕ್ಟರ್ ಸರ್ಕಾರನೂ ಬಂದು ಒಂದು ಕಡೆ ಕುಳಿತುಕೊಂಡ.
ಡಾಕ್ಟರ್ ಸರ್ಕಾರ (ಪರಮಹಂಸರಿಗೆ): “ನಿನ್ನೆ ರಾತ್ರಿ ಮೂರು ಘಂಟೆ ಸಮಯದಲ್ಲಿ ನನಗೆ ನಿಮ್ಮ ಯೋಚನೆ ಹತ್ತಿಬಿಟ್ಟಿತು. ಆಗ ಮಳೆಯಾಗುತ್ತಿತ್ತು; ಯೋಚಿಸಲಾರಂಭಿಸಿದೆ, ‘ಅವರ (ಪರಮಹಂಸರ) ಕೊಠಡಿಯ ಕಿಟಿಕಿ ಬಾಗಿಲುಗಳು ಮುಚ್ಚಿವೆಯೋ ಇಲ್ಲವೋ ಏನೊ ಯಾರಿಗೆ ಗೊತ್ತು?”’
ಶ್ರೀರಾಮಕೃಷ್ಣರು: “ನಿಜವಾಗಿಯೂ!”
ತಮ್ಮ ಸಂಬಂಧವಾಗಿ ಡಾಕ್ಟರಿಗೆ ಇರುವ ಪ್ರೀತಿ ಮತ್ತು ಯೋಚನಾಪರತೆಯನ್ನು ನೋಡಿ ಪರಮಹಂಸರಿಗೆ ಬಹಳ ಆನಂದವಾಗಿಬಿಟ್ಟಿದೆ.
ಶ್ರೀರಾಮಕೃಷ್ಣರು: “ಶರೀರವಿರುವವರೆಗೆ ಅದರ ಗಮನವನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ನನಗೆ ಕಂಡುಬರುತ್ತದೆ ಈ ಶರೀರ ಆತ್ಮಕ್ಕಿಂತ ಪ್ರತ್ಯೇಕ ಅಂತ. ಕಾಮಕಾಂಚನಾಸಕ್ತಿ ಒಮ್ಮೆಗೇ ನಮ್ಮನ್ನು ಬಿಟ್ಟು ತೊಲಗಿಹೋಯಿತು ಅಂದರೆ, ಆಗ ಆತ್ಮ ಪ್ರತ್ಯೇಕ, ದೇಹ ಪ್ರತ್ಯೇಕ ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ತೆಂಗಿನಕಾಯಿಯ ನೀರು ಸಂಪೂರ್ಣವಾಗಿ ಇಂಗಿಹೋಯಿತು ಅಂದರೆ, ಆಗ ತಿರುಳು ಪ್ರತ್ಯೇಕವಾಗಿ ಬಿಡುತ್ತದೆ; ಕರಟ ಗಿರಟವೆಲ್ಲ ಪ್ರತ್ಯೇಕವಾಗಿಬಿಡುತ್ತವೆ; ಆಗ ತೆಂಗಿನಕಾಯನ್ನು ಅಲ್ಲಾಡಿಸಿದರೆ ತಿರುಳು ಅದರೊಳಗೆ ‘ಟಕಟಕ’ ಅಂತ ಶಬ್ದ ಮಾಡುತ್ತದೆ. ಅಥವಾ ಇದು ಕತ್ತಿ ಮತ್ತು ಅದರ ಒರೆಯ ಹಾಗೆ. ಒರೆ ಒಂದು ಪ್ರತ್ಯೇಕ ವಸ್ತು. ಕತ್ತಿ ಇನ್ನೊಂದು ಪ್ರತ್ಯೇಕ ವಸ್ತು.
“ಅದಕ್ಕಾಗಿಯೇ ನಾನು ವಿಶೇಷವಾಗಿ ಈ ದೇಹದ ಅಸ್ವಸ್ಥತೆಯ ಸಂಬಂಧವಾಗಿ ಭಗವತಿಗೆ ಏನೂ ಹೇಳಿಕೊಳ್ಳಲಾರೆ.”
ಗಿರೀಶ (ಭಕ್ತರಿಗೆ): ಪಂಡಿತ ಶಶಧರ ಇವರಿಗೆ (ಪರಮಹಂಸರಿಗೆ) ಹೇಳಿದ, ‘ನೀವು ಸಮಾಧಿಯಲ್ಲಿರುವಾಗ ಮನಸ್ಸನ್ನು ದೇಹದ ಕಡೆಗೆ ತಿರುಗಿಸಿಬಿಡಿ. ಹಾಗೆ ಮಾಡಿದರೆ ನಿಮ್ಮ ರೋಗ ಗುಣವಾಗಿಬಿಡುತ್ತದೆ.’ ಆದರೆ ಇವರು ಭಾವಾವಸ್ಥೆಯಲ್ಲಿ ಕಂಡರು, ಈ ದೇಹ ಎಂಬುದು ಮೂಳೆ ಮಾಂಸಗಳ ಕೇವಲ ಒಂದು ಮೂಟೆ ಮಾತ್ರ ಆಗಿರುವುದನ್ನು.”
ಶ್ರೀರಾಮಕೃಷ್ಣರು: “ಒಮ್ಮೆ, ಬಹಳ ಕಾಲದ ಹಿಂದೆ ನನಗೆ ದೊಡ್ಡ ಕಾಯಿಲೆ ಬಂದಿತ್ತು. ಕಾಳೀ ದೇವಾಲಯದಲ್ಲಿ ಕುಳಿತುಕೊಂಡಿದ್ದೆ, ರೋಗ ಗುಣಪಡಿಸಿಕೊಡು ಎಂಬುದಾಗಿ ಭಗವತಿಗೆ ಪ್ರಾರ್ಥನೆಮಾಡಿಕೊಳ್ಳಬೇಕು ಎಂಬ ಇಚ್ಛೆಯುಂಟಾಯಿತು. ಆದರೆ ನನಗಾಗಿ ನಾನೇ ಪ್ರಾರ್ಥನೆ ಮಾಡಿಕೊಳ್ಳಲಾಗಲಿಲ್ಲ. ನಾನು ಆಕೆಗೆ ಹೇಳಿಕೊಂಡೆ, ‘ಹೇ ತಾಯೆ, ನನ್ನ ರೋಗದ ಸಂಬಂಧವಾಗಿ ನಿನಗೆ ತಿಳಿಸುವ ಹಾಗೆ ಹೃದೆ ನನಗೆ ಹೇಳಿದ್ದಾನೆ’ ಅಂತ. ಇನ್ನು ಬೇರೆ ಏನೂ ಹೇಳಿಕೊಳ್ಳಲಾಗಲಿಲ್ಲ. ಹಾಗೆ ಆಕೆಗೆ ಹೇಳುತ್ತ ಹೇಳುತ್ತಾ ಇದ್ದಹಾಗೆಯೆ ಒಡನೆಯೇ ಏಷ್ಯಾಟಿಕ್ ಸೊಸೈಟಿಯ ಮ್ಯೂಜಿಯಮ್ಮಿನಲ್ಲಿ ತಂತಿಯಿಂದ ಬಿಗಿದು ನಿಲ್ಲಿಸಿದ್ದ ಮನುಷ್ಯನ ಎಲುಬುಗೂಡಿನ ಚಿತ್ರ ನನ್ನ ಜ್ಞಾಪಕಕ್ಕೆ ಬಂತು. ಒಡನೆಯೆ ಆಕೆಗೆ ಪ್ರಾರ್ಥನೆ ಮಾಡಿದೆ ‘ಹೇ ತಾಯೆ, ನಿನ್ನ ನಾಮಗುಣ ಕೀರ್ತನೆ ಮಾಡುತ್ತಾ ಕಾಲ ಕಳೆಯಬೇಕೆಂಬ ಇಚ್ಛೆ ಇದೆ. ಆದ್ದರಿಂದ ನನ್ನ ಈ ಶರೀರದ ತಂತಿಗಳನ್ನು ಸ್ವಲ್ಪ ಅದರ ಹಾಗೆ ಬಲವಾಗಿ ಬಿಗಿ’ ಅಂತ. ನನ್ನ ಕೈಯಲ್ಲಿ ಸಿದ್ಧಿಗಳಿಗಾಗಿ ಪ್ರಾರ್ಥಿಸಲಾಗುವುದೇ ಇಲ್ಲ.
“ಒಮ್ಮೆ ಹೃದೆ ನನಗೆ ಹೇಳಿದ, -ಆಗ ನಾನು ಆತನ ಅಂಕೆಯಲ್ಲಿದ್ದೆ–ನಾನು ಹೋಗಿ ಭಗವತಿಯ ಹತ್ತಿರ ಶಕ್ತಿಗಳಿಗಾಗಿ ಪ್ರಾರ್ಥನೆಮಾಡಬೇಕು ಅಂತ. ಆತನ ಇಚ್ಛೆಯಂತೆ ನಾನು ದೇವಾಲಯಕ್ಕೆ ಹೋದೆ. ಮೂವತ್ತೊ ಅಥವಾ ಮೂವತ್ತೈದೊ ವಯಸ್ಸಿನ ಒಬ್ಬ ವೇಶ್ಯೆ ಅಗ್ನಿಮಾಂದ್ಯವಾದವಳ ಹಾಗೆ ಮಲವಿಸರ್ಜನೆ ಮಾಡುತ್ತಿರುವ ಒಂದು ಆಲೌಕಿಕ ದರ್ಶನವಾಯಿತು. ಸಿದ್ಧಿ ಆಕೆಯ ಮಲಕ್ಕೆ ಸರಿಸಮಾನ ಅಂತ ಭಗವತಿ ನನಗೆ ತಿಳಿಸಿದಳು. ನನಗೆ ಈ ವಿಧವಾದ ಸಲಹೆಯನ್ನು ಇತ್ತುದಕ್ಕೋಸ್ಕರ ಹೃದಯನ ಮೇಲೆ ನನಗೆ ಸ್ವಲ್ಪ ಕೋಪ ಬಂತು.”
ಈಗ ರಾಮತಾರಣ ಹಾಡಲಾರಂಭಿಸಿದ್ದಾನೆ:
ನೋಡಿದುವೆ ನನ್ನ ಸುಮಧುರ ವೀಣೆ,
ನುಡಿಸು ಒಲವೇ.
ನಿನ್ನ ಕೋಮಲ ಕರದ ಸ್ಪರ್ಶಕ್ಕೆ ಈ ವೀಣೆ
ಹೊಮ್ಮಿಸುವುದಪೂರ್ವರಾಗಗಳನೆ!
ಸಡಿಲವಾದರೆ ಶ್ರುತಿಯು ಮೂಕವಪ್ಪುವು ತಂತಿ
ಬಿಗಿಯಾದರವು ಮುರಿದು ಸಿಡಿಯಬಹುದು.
ಸಮಶ್ರುತಿಯಲಿದ ನುಡಿಸು; ಆಗ ರಾಗದ ಹೊನಲು
ನೂರಾರು ರೀತಿಯಲಿ ಹರಿಯಬಹುದು.
ಡಾಕ್ಟರ್ (ಗಿರೀಶನಿಗೆ): “ಇದು ಒಂದು ಹೊಸ ಹಾಡೇನು?”
ಗಿರೀಶ: “ಅಲ್ಲ, ಎಡ್ವಿನ್ ಆರ್ನಾಲ್ಡನ ಭಾವನೆಯನ್ನು ಹೊಂದಿಸಿಕೊಂಡು ರಚಿಸಿದ ಹಾಡು.” ರಾಮತಾರಣ ಬುದ್ಧಚರಿತೆಯಿಂದ ಹಾಡಲಾರಂಭಿಸಿದ:
ಹಾ! ಸುತ್ತುತಿರುವೆವು ನಾವು, ವಿಶ್ರಾಂತಿಯಿನಿತಿಲ್ಲ
ಬಂದುದೆಲ್ಲಿಂದಲೋ, ನಡೆವುದೆಲ್ಲೋ?
ಸುಖದುಃಖಗಳ ಸುಳಿಯ ಎನಿತೊ ಸಲ ಸುತ್ತಿದೆವು
ನಮ್ಮ ಹಾದಿಯ ನೆಲೆಯನರಿಯದೆಯೆ ಬಳಸಿದೆವು
ಈ ನಿರರ್ಥಕ ಲೀಲೆಯರ್ಥವೇನೊ?
ಎಚ್ಚರಿದ್ದರು ನಾವು ನಿದ್ರಸ್ಥರಂತಿಹೆವು
ಯಾವ ಮಾಯೆಗೊ ನಾವು ಸಿಲುಕಿರುವೆವು!
ಈ ಕತ್ತಲೆಂದಿಗೂ ಒಡೆದು ಮೂಡಣ ಕಿರಣ
ನಮ್ಮ ಬಾಳಿಗೆ ಇನ್ನು ಬಾರದೇನು?
ಗುರಿಯಿಲ್ಲದಲೆಯುತಿಹ ಗಾಳಿಯಂದದಿ ಜೀವ
ತೊಳಲುವೀ ಕರ್ಮಕ್ಕೆ ಕಡೆಯಿಲ್ಲವೇನು?
ನಾವು ಯಾರೊ ಏನೊ! ಏಕೆ ಬಂದೆವೊ ಇಲ್ಲಿ
ಕೊರೆವ ನೋವಿನ ಗಾಳಿ ಬೀಸುವಲ್ಲಿ!
ಎಷ್ಟು ಜನ ತೇಲುವರು! ಒಂದು ಚಣ ಸಂತೋಷ, ಮರುಚಣವೆ ನೋವು
ಒಂದು ಚಣವಿದ್ದವರು ಮರುಚಣವೆ ಇಲ್ಲ!
ನಾವೇಕೆ ಬಂದೆವೊ ನಾವು ಮಾಡುವುದೇನೊ
ತಿಳಿಯಲಿಲ್ಲ.
ಕಳೆದ ಜನುಮದ ಪರಿಯ ತಿಳಿಯದಿರುವೆವು ನಾವು
ಹರಿವ ನೀರಿನ ತೆರದಿ ಇನಿತಾದರೂ ನಮಗೆ ವಿಶ್ರಾಂತಿಯಿಲ್ಲ?
ಓ ಏಳಿರೋ ಏಳಿ!
ಸುತ್ತುವರಿದಿಹ ತಮದ ಪಂಜರದ ಕಂಬಿಗಳ ಕೀಳಿರೊ ಕೀಳಿ
ಎಷ್ಟು ದಿನ ಈ ಬಗೆಯ ಕನಸಿನಲ್ಲಿ ತೇಲುವಿರೊ, ಏಳಿ ಮೇಲೇಳಿ
ಒಮ್ಮೆ ಎದ್ದವರೆಲ್ಲ ಮಲಗಬೇಡಿ.
ನೂರು ನೋವಿನ ನಿಬಿಡ ಹೊರೆಯ ಕೊಡವಿರಿ ಇನ್ನು
ಏಳುವರು ಏಳಿ.
ಎದ್ದವರು ಮತ್ತೊಮ್ಮೆ ಮಲಗಬೇಡಿ!
ಓ ಸ್ವಪ್ರಕಾಶನೆ ಬಾರ.
ನಿನ್ನ ಬೆಳಕಿನ ಶೂಲವನು ಮೇಲಕೆತ್ತಿ ಗಾಢಾಂಧಕಾರ
ಕಳೆಯಬಾರ.
ನೀನೆ ಭವತಾರಕನು; ನಮ್ಮೆದೆಯ ಶಕ್ತಿ,
ನಿನ್ನಡಿಯ ಗುಡಿಯಲ್ಲಿ ನಮಗಿನ್ನು ಮುಕ್ತಿ;
ಈ ಹಾಡನ್ನು ಕೇಳುತ್ತ ಕೇಳುತ್ತ ಇದ್ದ ಹಾಗೇ ಪರಮಹಂಸರು ಸಮಾಧಿಸ್ಥರಾದರು. ರಾಮತಾರಣ ಮತ್ತೆ ಹಾಡಿದ:
ಬೀಸಲಿ ಬುಸುಗುಟ್ಟಲಿ ಬಿರುಗಾಳಿ…..
ರಾಮತಾರಣ ಈ ಹಾಡನ್ನು ಹಾಡಿ ಮುಗಿಸಿದ. ಬಳಿಕ ಪರಮಹಂಸರು ಹೇಳುತ್ತಿದ್ದಾರೆ: “ಇದು ಏನಿದು? ಪಾಯಸ ಬಡಿಸಿದ ಮೇಲೆ ಬೇವಿನ ಸೊಪ್ಪಿನ ಸಾರು ಬಡಿಸುವುದೆ? ನೀನು–
ಓ ಸ್ವಪ್ರಕಾಶನೆ ಬಾರ,
ನಿನ್ನ ಬೆಳಕಿನ ಶೂಲವನು ಮೇಲಕೆತ್ತಿ ಗಾಢಾಂಧಕಾರ
ಕಳೆಯಬಾರ.
ಎಂಬುದಾಗಿ ಹಾಡಿದೊಡನೆಯೆ ನನಗೆ ಸೂರ್ಯನ ದರ್ಶನವಾಯಿತು. ಆತನ ಉದಯವಾದೊಡನೆ ನಾಲ್ಕು ಕಡೆಗೂ ಹಬ್ಬಿದ್ದ ಕಗ್ಗತ್ತಲು ಅದೃಶ್ಯವಾಗಿಬಿಟ್ಟಿತು; ಎಲ್ಲರೂ ಆತನ ಪಾದಪದ್ಮಗಳಲ್ಲಿ ಶರಣುಹೋದರು.”
ರಾಮತಾರಣ ಮತ್ತೆ ಹಾಡಲಾರಂಭಿಸಿದ್ದಾನೆ:
ದೀನತಾರಿಣಿ ನೀನು ದುರಿತಹಾರಿಣಿ ನೀನು
ಸತ್ತ್ವರಜತಮಗಳಿಗೆ ಆಧಾರೆ ನೀನು.
ಸೃಷ್ಟಿ ಸ್ಥಿತಿಯ ರೂಪಿ
ಸಗುಣ ನಿರ್ಗುಣ ರೂಪಿ
ಸರ್ವ ಸ್ವರೂಪಿ!
ನೀ ಕಾಳಿ, ನೀ ತಾರ, ನೀ ಪರಮಪ್ರಕೃತಿ
ಮತ್ಸ್ಯ ಕೂರ್ಮ ವರಾಹ ಅವತಾರಮೂರ್ತಿ
ಪಂಚಭೂತವು ನೀನೆ
ವ್ಯೋಮಕೇಶನ ಹಡೆದ ತಾಯಿ ನೀನೆ!
ಸಾಂಖ್ಯಮೀಮಾಂಸಾದಿ ದರ್ಶನಗಳೆಲ್ಲ
ನಿನ್ನನಳೆಯಲು ತೊಡಗಿ ಸೋತಿರುವುವಲ್ಲ!
ವೇದವೇದಾಂತಗಳು ಹುಡುಕಾಡುತಿರಲು
ಅವಕೆ ನಿಲುಕದೆ ದೂರ ನಿಂತಿರುವೆಯಲ್ಲ!
ನಿರುಪಾಧಿ, ಆದ್ಯಂತರಹಿತಳು ನೀನು
ಆದರೂ ಸಾಧಕರು ತಮ್ಮ ಕಲ್ಪನೆಯಂತೆ
ಸತ್ಯದಾರಾಧನೆಗೆ ತೊಡಗುತಿರಲು
ಅವರವರ ಭಾವಕ್ಕೆ ತಕ್ಕಂಥ ರೂಪಗಳ
ತಾಳಿ ದರ್ಶನವೀವ ತಾಯಿ ನೀನು.
ಭವಭಯವ ಕೊಂದು ತ್ರಿಕಾಲದಲ್ಲಿಯೂ
ಚರಿಸುವಳು ನೀನು.
ಬಣ್ಣನೆಗೆ ನಿಲುಕದಾ ತುರೀಯದಲಿ ನಿಂತು
ಮೂಜಗವ ತುಂಬಿರುವ ಬ್ರಹ್ಮಮಯಿ ನೀನು.
ಆತ ಮತ್ತೆ ಹಾಡಿದ:
ಧರ್ಮ ಕರ್ಮಗಳೆಲ್ಲ ಕೊನೆಕಂಡಿತೆನ್ನೊಳಗೆ.
ಘನಶ್ಯಾಮೆಯನು ನಾನು ನೆನೆಯಲಾರೆ.
ನನ್ನ ಇರವನು ಕಂಡು ನಾನೇ ನಾಚುತಲಿಹೆನು
ನನ್ನ ಮನವನು ನಾನೆ ತಡೆಯಲಾರೆ.
ಕರವಾಲವನು ಹಿಡಿದು ರುಂಡಮಾಲಿಯ ಕುರಿತು
ನಾನಿಲ್ಲಿ ಪೂಜೆಯಲ್ಲಿ ತೊಡಗಿದಾಗ
ಕೊಳಲನೂದುತಲಿರುವ ವನಮಾಲಿಯಾಕೃತಿಯು
ಬಂದು ನಿಲ್ಲುವುದಲ್ಲ; ಮಾಳ್ಪುದೇನು?
ಶ್ರೀ ತ್ರಿನೇತ್ರೆಯ ಕುರಿತು ನಾನು ಧ್ಯಾನಿಸುತಿರಲು
ಕಮಲನೇತ್ರನು ಬಂದು ನಿಲ್ಲುವನು ಮುಂದೆ!
ತಾಯ ಶ್ರೀಪಾದದಲಿ ಹೂವನರ್ಪಿಸುವಾಗ
ಘನಶ್ಯಾಮಸುಂದರಗೆ ಮರುಳುಗೊಂಡೆ!
ಪ್ರತಿಸಲವು ಪೂಜೆಯಲಿ ಘನಶ್ಯಾಮೆಯನು ಕುರಿತು
ನಾನು ಆರಾಧಿಸುವ ಹೊತ್ತಿನಲ್ಲಿ,
ಘನಶ್ಯಾಮ ಸುಂದರನು ಎಲ್ಲ ಪೂಜೆಯ ಮರೆಸಿ
ಬಂದು ನಿಲುವನು ಹೊನ್ನ ಕಾಂತಿಯಲ್ಲಿ!
ಈ ಹಾಡನ್ನು ಕೇಳಿ ಪರಮಹಂಸರು ಮತ್ತೆ ಭಾವಾವಿಷ್ಟರಾಗಿದ್ದಾರೆ. ಮತ್ತೆ ರಾಮತಾರಣ ಹಾಡಲಾರಂಭಿಸಿದ್ದಾನೆ:
ರಂಗುರಂಗಿನ ಹೂವನಾರಿಟ್ಟರಮ್ಮಯ್ಯ ನಿನ್ನ ಅಡಿಗೆ?
ಅವುಗಳೆರಡನ್ನು ಇಡಬಾರದೇ ನೀನು ನನ್ನ ಮುಡಿಗೆ!
ಆತ ನಿನ್ನವನು ನಾನು ‘ಓ ತಾಯಿ’ ಎನ್ನುತ
ನಿನ್ನ ಸುತ್ತಲು ಕುಣಿದು ಚಪ್ಪಾಳೆ ತಟ್ಟಿ
ನಲಿಯುತಿರೆ, ನೀ ನಲಿವೆ ಎಲ್ಲ ಹೂವನು ನನ್ನ
ಮುಡಿಗೆ ಕಟ್ಟಿ!
ಹಾಡುವುದು ಕೊನೆಗೊಂಡಿತು. ಭಕ್ತರಲ್ಲನೇಕರು ಭಾವಾವಿಷ್ಟರಾಗಿದ್ದಾರೆ. ನಿಶ್ಶಬ್ದರಾಗಿ ಕುಳಿತಿದ್ದಾರೆ. ಚಿಕ್ಕ ನರೇನ್ ಧ್ಯಾನಮಗ್ನನಾಗಿದ್ದಾನೆ. ಆತ ಮರದ ದಿಮ್ಮಿಯೋ ಪಾದಿಯಲ್ಲಿ ಕುಳಿತಿದ್ದಾನೆ. ಪರಮಹಂಸರು ಆತನನ್ನು ಡಾಕ್ಟರಿಗೆ ತೋರಿಸಿ ಹೇಳಿದರು: “ಈತನದು ಅತ್ಯಂತ ಶುದ್ಧ ಹೃದಯ. ವಿಷಯಬುದ್ಧಿ ಈತನ ಹೃದಯವನ್ನು ಒಂದು ಕಿಂಚಿತ್ತೂ ಸ್ಪರ್ಶ ಮಾಡಿಲ್ಲ.”
ಡಾಕ್ಟರ್, ನರೇನನ ಕಡೆ ನೋಡುತ್ತಿದ್ದಾನೆ. ಆತ ಇನ್ನೂ ಧ್ಯಾನಸ್ಥನಾಗಿಯೇ ಇದ್ದಾನೆ.
ಮನಮೋಹನ (ಡಾಕ್ಟರಿಗೆ): “ಇವರು (ಪರಮಹಂಸರ ಕಡೆ ಬೆರಳುಮಾಡಿ) ನಿಮ್ಮ ಮಗನ ವಿಷಯವಾಗಿ ಹೇಳುತ್ತಿದ್ದಾರೆ. ‘ಮಗ ದೊರೆತುಬಿಟ್ಟ ಅಂದರೆ, ತಂದೆ ಬೇಡವೇ ಬೇಡ.”’
ಡಾಕ್ಟರ್: “ಈಗ ಸಿಕ್ಕಿಬಿಟ್ಟಿರಿ! ಅದಕ್ಕಾಗಿಯೇ ನಾನು ಹೇಳುತ್ತಿರುವುದು, ಮಗ ಹತ್ತಿರ ಇದ್ದ ಅಂದರೆ ನೀವು ಎಲ್ಲವನ್ನೂ ಮರೆತು ಬಿಡುತ್ತೀರಿ.” (ತಂದೆ ಅಥವಾ ದೇವರನ್ನು ಬಿಟ್ಟು ಮಗ ಎಂದರೆ ಅವತಾರ ನಲ್ಲಿಯೇ ಮಗ್ನನಾಗು.)
ಶ್ರೀರಾಮಕೃಷ್ಣರು (ನಗುತ್ತ): “ತಂದೆ ಬೇಡವೇ ಬೇಡ ಅಂತಲೇನು ನಾನು ಹೇಳುತ್ತಿಲ್ಲವಲ್ಲ.”
ಡಾಕ್ಟರ್: “ನಿಮ್ಮ ಹೃದಯದಲ್ಲಿ ಏನು ಇದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಹೀಗೆ ಒಂದೆರಡು ಮಾತು ಆಡಿ ತಲೆ ಸವರದೆ ಇದ್ದರೆ ಆಗುತ್ತದೆಯೆ?”
ಶ್ರೀರಾಮಕೃಷ್ಣರು: “ನಿನ್ನ ಮಗ ಬಹಳ ಸರಳ, ಒಮ್ಮೆ ಶಂಭುಮಲ್ಲಿಕ ಮುಖ ಕೆಂಪಗೆ ಮಾಡಿಕೊಂಡು ಹೇಳಿದ, ‘ಸರಳ ಹೃದಯದಿಂದ ಭಗವಂತನನ್ನು ಕರೆದರೆ, ಆತ ಅದನ್ನು ಕೇಳಿಯೇ ಕೇಳುತ್ತಾನೆ.’
“ಹುಡುಗರನ್ನು ನಾನು ಅಷ್ಟೊಂದು ಪ್ರೀತಿಸುತ್ತೇನಲ್ಲ ಏಕೆ ಗೊತ್ತೆ? ಅವರು ಶುದ್ಧ ಹಾಲು; ಒಂದು ಸ್ವಲ್ಪ ಮರಳಿಸಿಬಿಟ್ಟರೇ ಸಾಕು ದೇವರಿಗೆ ಅರ್ಪಿಸಬಹುದು. ಆದರೆ ನೀರುಹಾಲನ್ನು ಬಹಳ ಹೊತ್ತು ಮರಳಿಸಬೇಕಾಗುತ್ತದೆ; ಅದು ಸೌದೆಯನ್ನೂ ಬಹಳವಾಗಿ ನುಂಗಿ ಬಿಡುತ್ತದೆ.
“ಹುಡುಗರು ಹೊಸ ಮಡಕೆಯ ಹಾಗೆ ಒಳ್ಳೆ ಪಾತ್ರೆಗಳು. ನಿಶ್ಚಿಂತೆಯಿಂದ ಅವುಗಳಲ್ಲಿ ಹಾಲಿಡಬಹುದು. ಅವರಿಗೆ ಜ್ಞಾನೋಪದೇಶ ಕೊಟ್ಟರೆ ಬಹುಬೇಗ ಆತ್ಮಜಾಗೃತಿಯುಂಟಾಗಿ ಬಿಡುತ್ತದೆ. ವಿಷಯಾಸಕ್ತರಿಗೆ ಬೇಗ ಆಗುವುದಿಲ್ಲ. ಮೊಸರಿನ ಮಡಕೆಯಲ್ಲಿ ಹಾಲಿಡಲು ಭಯವಾಗುತ್ತದೆ. ಏಕೆಂದರೆ ಒಡೆದುಹೋಗುವ ಸಂಭವ.
“ನಿನ್ನ ಮಗನ ಆಂತರ್ಯವನ್ನು ವಿಷಯಬುದ್ಧಿ, ಎಂದರೆ ಕಾಮಕಾಂಚನ ಹೊಕ್ಕಿಲ್ಲ.”
ಡಾಕ್ಟರ್: “ತಂದೆಯ ಸಂಪಾದನೆಯನ್ನು ಕರಗಿಸುತ್ತಾ ಇರುವುದರಿಂದ ಹಾಗೆ ಕಾಣುತ್ತಿದ್ದಾನೆ. ತಾನೇ ಸಂಪಾದಿಸಿ ತಿನ್ನುತ್ತಿದ್ದರೆ ನೋಡಬಹುದಾಗಿತ್ತು ವಿಷಯಬುದ್ಧಿ ಪ್ರವೇಶಿಸುತ್ತೊ ಇಲ್ಲವೊ ಎಂಬುದನ್ನು!”
ಶ್ರೀರಾಮಕೃಷ್ಣರು: “ಅದೇನೊ ನಿಜ, ಖಂಡಿತ ನಿಜ. ಆದರೆ ಇದು ಗೊತ್ತೆ? ವಿಷಯಾಸಕ್ತರಿಂದ ಭಗವಂತ ಬಹು ದೂರದೂರದಲ್ಲಿ ಇರುತ್ತಾನೆ. ವಿಷಯಾಸಕ್ತರಲ್ಲದವರ ಕೈಯಲ್ಲಿ ಆತ ಅಂಗೈ ಮೇಲೇನೆ.
(ಡಾಕ್ಟರ್ ಸರ್ಕಾರನಿಗೆ ಮತ್ತು ಡಾಕ್ಟರ್ ದುಕಾರಿಗೆ) “ಕಾಮಕಾಂಚನ ತ್ಯಾಗ ನಿಮ್ಮಂಥವರಿಗಲ್ಲ. ನೀವು ಮಾನಸಿಕವಾಗಿ ತ್ಯಾಗಮಾಡಬೇಕು. ಅದಕ್ಕಾಗಿಯೇ ಗೋಸ್ವಾಮಿಗಳಿಗೆ ಹೇಳಿದೆ, ‘ನಿಮಗೇಕೆ ತ್ಯಾಗದ ಯೋಚನೆ? ಅದು ನಿಮಗೆ ಸರಿಹೋಗದು. ನೀವು ಶ್ಯಾಮಸುಂದರನ ಸೇವೆ ಮಾಡಬೇಕಾಗಿದೆ’ ಅಂತ.
“ಸಂನ್ಯಾಸಿಗಳಿಗೆ ತ್ಯಾಗ. ಅವರು ಸ್ತ್ರೀವ್ಯಕ್ತಿಯ ಚಿತ್ರಪಟವನ್ನೂ ನೋಡಕೂಡದು. ಹೆಂಗಸು ಅವರಿಗೆ ವಿಷವಿದ್ದ ಹಾಗೆ. ಕನಿಷ್ಠ ಪಕ್ಷ ಅವರು ಹೆಂಗಸರಿಂದ ಹತ್ತು ಮೊಳ ದೂರದಲ್ಲೇ ಇರಬೇಕು; ಸಾಧ್ಯವಾಗದಿದ್ದರೆ ಒಂದು ಮೊಳ ದೂರದ ಅಂತರವಾದರೂ ಇದ್ದೇ ಇರಬೇಕು. ಆಕೆ ಎಂಥಾ ಭಕ್ತಿಮತಿಯಾದರೂ, ಆಕೆಯೊಡನೆ ಹೆಚ್ಚು ಮಾತುಕತೆ ಆಡಕೂಡದು. ಅದಷ್ಟೇ ಅಲ್ಲ, ಯಾವ ಸ್ಥಳದಲ್ಲಿ ಹೆಂಗಸಿನ ಮುಖವೇ ಕಾಣುವುದಿಲ್ಲವೊ-ಅಥವಾ ಕಂಡುಬಂದರೂ ಎಲ್ಲೊ ಅಪರೂಪವಾಗಿ ಕಂಡುಬರಬೇಕು-ಅಂಥಾ ಸ್ಥಳದಲ್ಲಿ ಸಂನ್ಯಾಸಿಗಳು ಇರಬೇಕು.
“ಹಣವೂ ಸಂನ್ಯಾಸಿಗೆ ವಿಷಪ್ರಾಯವಾದ್ದು. ಹಣ ಹತ್ತಿರ ಇತ್ತು ಅಂದರೆ, ಅದರ ಮೇಲಿನ ಚಿಂತನೆ, ಅಹಂಕಾರ, ದೇಹಸುಖಕ್ಕಾಗಿ ಪ್ರಯತ್ನ, ಕ್ರೋಧ ಇವೆಲ್ಲಾ ಬಂದು ಬಿಡುತ್ತವೆ; ರಜೋಗುಣ ವೃದ್ಧಿಯಾಗಿಬಿಡುತ್ತದೆ. ರಜೋಗುಣ ಇತ್ತು ಅಂದರೆ ತಮೋಗುಣ ಅದರ ಹಿಂಬಾಲಕ. ಅದಕ್ಕಾಗಿಯೇ ಸಂನ್ಯಾಸಿ ಕಾಂಚನವನ್ನು ಮುಟ್ಟಕೂಡದು. ಕಾಮಕಾಂಚನ ಭಗವಂತನನ್ನು ಮರೆಸಿಬಿಡುತ್ತವೆ.
“ಗೃಹಸ್ಥರಿಗೆ ಅನ್ನ, ಬಟ್ಟೆ, ಮನೆ-ಇವನ್ನು ಹಣ ದೊರಕಿಸಿಕೊಡುತ್ತದೆ. ಭಗವಂತನ ಸೇವೆ ಮತ್ತು ಸಾಧು ಭಕ್ತರ ಸೇವೆಯೂ ಅದರಿಂದ ನಡೆಯುತ್ತದೆ.
“ಬರಿದೆ ಕೂಡಿಡುವುದು ವ್ಯರ್ಥ. ಜೇನುಹುಳು ಬಹಳ ಕಷ್ಟಪಟ್ಟು ಗೂಡನ್ನು ಕಟ್ಟಿ ಜೇನನ್ನು ಶೇಖರಿಸಿಬಿಡುತ್ತದೆ; ಮನುಷ್ಯ ಬಂದು ಅದನ್ನು ಕಿತ್ತು ಜೇನನ್ನು ಅಪಹರಿಸಿಕೊಂಡು ಬಿಡುತ್ತಾನೆ.”
ಡಾಕ್ಟರ್: “ಕೂಡಿಡುವುದು ಯಾರಿಗೆ?-ದುಷ್ಟ ಮಗನಿಗೆ.”
ಶ್ರೀರಾಮಕೃಷ್ಣರು: “ಕೆಟ್ಟ ಮಗನಿಗೇ ಅಲ್ಲ, ಕೆಟ್ಟ ಹೆಂಡತಿಗೂ, ಆಕೆಗೆ ಒಬ್ಬ ಉಪಪತಿ ಇದ್ದ ಎಂದರೆ, ನಿನ್ನ ಗಡಿಯಾರವನ್ನೇ ನಿನ್ನ ಚೈನನ್ನೇ ಆತನಿಗೆ ಕೊಟ್ಟುಬಿಡುತ್ತಾಳೆ!
“ನೀವು ಒಮ್ಮೆಗೇ ಹೆಂಗಸನ್ನು ತ್ಯಾಗಮಾಡಬೇಕಾಗಿಲ್ಲ. ಸ್ವಪತ್ನಿಯ ಸಹವಾಸ ದೋಷವಾದ್ದೇನಲ್ಲ. ಆದರೆ ಒಂದೆರಡು ಮಕ್ಕಳಾದನಂತರ ಸತಿಪತಿಯರು ಅಣ್ಣತಂಗಿಯ ರೋಪಾದಿಯಲ್ಲಿ ವಾಸಿಸಬೇಕು.
“ಕಾಮಕಾಂಚನಾಸಕ್ತಿ ಇತ್ತು ಅಂದರೆ, ವಿದ್ಯೆಯ ಅಹಂಕಾರ, ಹಣದ ಅಹಂಕಾರ, ಉಚ್ಚ ಪದವಿಯ ಅಹಂಕಾರ ಇವೆಲ್ಲಾ ಬಂದುಬಿಡುತ್ತವೆ.
“ಅಹಂಕಾರ ಬಿಟ್ಟು ತೊಲಗಲಿಲ್ಲ ಅಂದರೆ, ಬ್ರಹ್ಮಜ್ಞಾನವನ್ನು ದೊರಕಿಸಿ ಕೊಳ್ಳಲಾಗುವುದಿಲ್ಲ. ದಿಣ್ಣೆ ಮೇಲೆ ನೀರು ಶೇಖರವಾಗದು; ಆದರೆ ತಗ್ಗುಪ್ರದೇಶಕ್ಕೆ ನೀರು ನಾಲ್ಕು ಕಡೆಗಳಿಂದಲೂ ಮೊರಗುಟ್ಟಿಕೊಂಡು ನುಗ್ಗುತ್ತದೆ.”
ಡಾಕ್ಟರ್: “ತಗ್ಗುಪ್ರದೇಶಕ್ಕೆ ನಾಲ್ಕು ಕಡೆಯಿಂದಲೂ ನೀರೇನೋ ನುಗ್ಗಿಬರುತ್ತದೆ. ಆದರೆ ಆ ನೀರಿನಲ್ಲಿ ಒಳ್ಳೆ ನೀರು ಮತ್ತೆ ಕೆಟ್ಟ ನೀರು–ಎಂದರೆ ಬಗ್ಗಡದ ನೀರು, ಚರಂಡಿ ನೀರು–ಇವೆಲ್ಲ ಬೆರೆತುಕೊಂಡಿರುತ್ತವೆ. ಆದರೆ ಬೆಟ್ಟಗಳ ಮೇಲೆ ನೈನಿತಾಲ್, ಮಾನಸಸರೋವರ ಇಂಥ ತಗ್ಗುಪ್ರದೇಶಗಳಿವೆ. ಅವುಗಳಲ್ಲಿ ಆಕಾಶದಿಂದ ಬಿದ್ದ ಶುದ್ಧನೀರು ಮಾತ್ರ ಶೇಖರವಾಗುತ್ತದೆ.”
ಶ್ರೀರಾಮಕೃಷ್ಣರು: “ಕೇವಲ ಆಕಾಶದಿಂದ ಬಿದ್ದ ನೀರು ಮಾತ್ರವೇ ಭೇಷ್!”
ಡಾಕ್ಟರ್: “ಜೊತೆಗೆ ಎತ್ತರ ಪ್ರದೇಶದಲ್ಲಿರುವ ನೀರನ್ನು ನಾಲ್ಕು ಕಡೆಗೂ ಹಂಚಬಹುದು.”
ಶ್ರೀರಾಮಕೃಷ್ಣರು (ನಗುತ್ತ): “ಒಬ್ಬನಿಗೆ ಒಂದು ಸಿದ್ಧಮಂತ್ರದ ಸಾಕ್ಷಾತ್ಕಾರವಾಯಿತು. ಆತ ಬೆಟ್ಟದ ಮೇಲಕ್ಕೆ ಹತ್ತಿಹೋಗಿ ಗಟ್ಟಿಯಾಗಿ ಕೂಗಲಾರಂಭಿಸಿದ. ‘ನೀವೆಲ್ಲರೂ ಈ ಮಂತ್ರವನ್ನು ಜಪಿಸಿ; ನಿಮಗೆ ಭಗವಂತನ ಸಾಕ್ಷಾತ್ಕಾರ ದೊರೆತು ಬಿಡುತ್ತದೆ’ ಅಂತ.”
ಡಾಕ್ಟರ್: “ಹ್ಞೂ.”
ಶ್ರೀರಾಮಕೃಷ್ಣರು: “ಆದರೆ ಒಂದು ವಿಷಯ. ಯಾವಾಗ ಪ್ರಾಣ ಭಗವಂತನ ಸಾಕ್ಷಾತ್ಕಾರಕ್ಕಾಗಿ ತೀವ್ರವಾಗಿ ವ್ಯಾಕುಲಪಡುವುದೊ, ಆಗ ಇದು ಒಳ್ಳೆ ನೀರು, ಅದು ಕೆಟ್ಟ ನೀರು–ಎಂದರೆ ಚರಂಡಿ ನೀರು ಎಂಬ ವಿವೇಚನೆಯೇ ಇರದು. ಮುಮುಕ್ಷು ಆತನ ಸಾಕ್ಷಾತ್ಕಾರ ಪಡೆಯಲೋಸುಗ ಕೆಲವು ವೇಳೆ ಒಳ್ಳೆಯವರನ್ನೂ ಸಮೀಪಿಸುತ್ತಾನೆ, ಇನ್ನು ಕೆಲವು ವೇಳೆ ದೋಷಯುಕ್ತರನ್ನೂ ಸಮೀಪಿಸುತ್ತಾನೆ. ಆದರೆ ಭಗವಂತನ ಕೃಪೆ ಬಂದೊದಗಿತು ಅಂದರೆ ಕೆಟ್ಟನೀರು ಯಾವ ಹಾನಿಯನ್ನೂ ತರಲಾರದು. ಯಾವಾಗ ಭಗವಂತ ಜ್ಞಾನವೀಯುತ್ತಾನೊ, ಆಗ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ಆತನೇ ತಿಳಿಸಿಕೊಡುತ್ತಾನೆ.
“ಬೆಟ್ಟದ ಮೇಲೆ ತಗ್ಗುಪ್ರದೇಶವಿರಲೇನೊ ಸಾಧ್ಯ. ಆದರೆ ‘ದುಷ್ಟ ಅಹಂ’ ಎಂಬ ಬೆಟ್ಟದ ಮೇಲೆ ತಗ್ಗುಪ್ರದೇಶವೆಂಬುದೇ ಇಲ್ಲ. ‘ವಿದ್ಯೆಯ ಅಹಂ’, ‘ಭಕ್ತನ ಅಹಂ’ ಎಂಬುವುಗಳ ಮೇಲೆ ಆಕಾಶದಿಂದ ಬಿದ್ದು ನೀರು ಶೇಖರವಾಗುತ್ತದೆ.
“ಎತ್ತರ ಜಾಗದಲ್ಲಿ ಶೇಖರವಾಗಿರುವ ನೀರನ್ನು ನಾಲ್ಕು ಕಡೆಗೂ ಹಂಚಲೇನೊ ಸಾಧ್ಯ; ಆದರೆ ಅದು ‘ವಿದ್ಯೆಯ ಅಹಂ’ ಎಂಬ ಬೆಟ್ಟದಿಂದ ಮಾತ್ರ ಸಾಧ್ಯ.
“ಭಗವಂತನಿಂದ ಆದೇಶ ಪಡೆಯದೆ ಲೋಕಶಿಕ್ಷಣ ಸಾಧ್ಯವಿಲ್ಲ. ಶ್ರೀ ಶಂಕರಾಚಾರ್ಯರು ಲೋಕಶಿಕ್ಷಣಕ್ಕಾಗಿ ‘ವಿದ್ಯೆಯ ಅಹಂ’ ಅನ್ನು ಇಟ್ಟುಕೊಂಡಿದ್ದರು. ಆತನ ಸಾಕ್ಷಾತ್ಕಾರ ಪಡೆಯದೇ ಉಪನ್ಯಾಸ ಕೊಡುವುದು! ಅದರಿಂದ ಜಗತ್ತಿಗೆ ಉಪಕಾರವಾದೀತೆ?
“ನಾನು ನಂದನವನದ ಬ್ರಾಹ್ಮಸಮಾಜಕ್ಕೆ ಹೋಗಿದ್ದೆ. ಉಪಾಸನೆ ಮುಗಿದ ನಂತರ, ಅವರ ಆಚಾರ್ಯ ವೇದಿಕೆಯ ಮೇಲೆ ಕುಳಿತು, ಉಪನ್ಯಾಸ ಕೊಟ್ಟ. ಆತ ಅದನ್ನು ಮನೆಯಲ್ಲಿ ಬರೆದುಕೊಂಡು ಬಂದಿದ್ದ. ಅದನ್ನು ಓದುವಾಗ ಸುತ್ತಲೂ ನೋಡುತ್ತಿದ್ದ. ಧ್ಯಾನ ಮಾಡುತ್ತ ಮಾಡುತ್ತ ಆಗಾಗ ಕಣ್ತೆರೆದು ಸಭಿಕರ ಕಡೆ ದೃಷ್ಟಿಹಾಕುತ್ತಿದ್ದ.
“ಯಾರು ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಂಡಿಲ್ಲವೊ ಅವರ ಉಪದೇಶ ಸರಿಯಾದ ಪರಿಣಾಮವನ್ನು ತರಲಾರದು. ಅವರು ಒಂದನ್ನೇನೊ ಸರಿಯಾಗಿ ಹೇಳಿದರೂ, ಇನ್ನೊಂದರಲ್ಲಿ ದಿಙ್ಮೂಢರಾಗುತ್ತಾರೆ.
“ಸಮಾಧ್ಯಾಯಿ ಒಂದು ಉಪನ್ಯಾಸ ಕೊಟ್ಟ. ಅದರಲ್ಲಿ ಆತ ಹೇಳಿದ, ‘ಭಗವಂತ ವಾಙ್ಮನಾತೀತ; ಆತನಲ್ಲಿ ರಸ ಎಂಬುದೇ ಇಲ್ಲ, ಆತನನ್ನು ನಿಮ್ಮ ಪ್ರೇಮಭಕ್ತಿ ಎಂಬ ರಸದಿಂದ ಪೂಜೆಮಾಡಿ’ ಅಂತ. ನೋಡು ನೀನೆ, ಯಾರು ರಸಸ್ವರೂಪನೊ, ಆನಂದ ಸ್ವರೂಪನೊ, ಅಂಥ ಭಗವಂತನನ್ನು ಈ ರೀತಿಯಾಗಿ ವರ್ಣಿಸಿದ್ದನ್ನು! ಇಂಥ ಉಪನ್ಯಾಸದಿಂದ ಏನು ಪ್ರಯೋಜನ? ಇದರಿಂದ ಲೋಕಶಿಕ್ಷಣ ಆಗುತ್ತದೆಯೆ? ಒಬ್ಬ ಹೇಳಿದ, ‘ನಮ್ಮ ಸೋದರಮಾವನ ಕೊಟ್ಟಿಗೆ ತುಂಬ ಕುದುರೆಗಳು ಇವೆ’ ಅಂತ. ಕೊಟ್ಟಿಗೆಯಲ್ಲಿ ಕುದುರೆ! (ಎಲ್ಲರೂ ನಗುತ್ತಾರೆ.) ಇದರಿಂದ ಅರ್ಥಮಾಡಿಕೊಳ್ಳಬೇಕು, ಆತ ಬರೀ ಬುರುಡೆಬಿಟ್ಟ ಅಂತ.”
ಡಾಕ್ಟರ್ (ನಗುತ್ತ): “ಅಲ್ಲಿ ಹಸುಗಳೂ ಇಲ್ಲ! (ಎಲ್ಲರೂ ನಗುತ್ತಾರೆ.)
ಭಕ್ತರಲ್ಲಿ ಯಾರಾರು ಭಾವಾವಿಷ್ಟರಾಗಿದ್ದರೊ ಅವರೆಲ್ಲರೂ ಈಗ ಪ್ರಕೃತಿಸ್ಥರಾಗಿದ್ದಾರೆ. ಅವರನ್ನೆಲ್ಲ ನೋಡಿ ಡಾಕ್ಟರಿಗೆ ಬಹಳ ಆನಂದವಾಗಿಬಿಟ್ಟಿದೆ. ಆತ ಮಾಸ್ಟರನ್ನು, “ಇವನು ಯಾರು? ಅವನು ಯಾರು?” ಎಂದು ಕೇಳಲಾರಂಭಿಸಿದ. ಪಲ್ಟು, ಚಿಕ್ಕ ನರೇನ, ಭೂಪತಿ, ಶರಚ್ಚಂದ್ರ ಇವರೇ ಮೊದಲಾದ ಯುವಕ ಭಕ್ತರ ಪರಿಚಯವನ್ನು ಮಾಸ್ಟರ್ ಡಾಕ್ಟರರಿಗೆ ಮಾಡಿಕೊಟ್ಟ. ಶಶಿಯ ಸಂಬಂಧವಾಗಿ ಮಾಸ್ಟರ್ ಹೇಳಿದ, “ಈತ ಬಿ.ಎ. ಗೆ ಓದುತ್ತಿದ್ದಾನೆ” ಅಂತ.
ಡಾಕ್ಟರ್ ಸ್ವಲ್ಪ ಅನ್ಯಮನಸ್ಕನಾಗಿ ತೋರಿಬಂದ.
ಶ್ರೀರಾಮಕೃಷ್ಣರು (ಡಾಕ್ಟರಿಗೆ): “ನೋಡಲ್ಲಿ! ಆತ ಏನು ಹೇಳುತ್ತಿದ್ದಾನೆ ಎಂಬುದನ್ನು ಕೇಳು.”
ಡಾಕ್ಟರ್ ಶಶಿಯ ಸಂಬಂಧವಾಗಿ ಮಾಸ್ಟರಿಂದ ಕೇಳಿ ತಿಳಿದುಕೊಂಡ.
ಶ್ರೀರಾಮಕೃಷ್ಣರು (ಡಾಕ್ಟರಿಗೆ ಮಾಸ್ಟರನ್ನು ತೋರಿಸಿ): “ಈತ ಸ್ಕೂಲಿನ ಹುಡುಗರಿಗೆಲ್ಲ ಉಪದೇಶ ಕೊಡುತ್ತಾ ಇದ್ದಾನೆ.”
ಡಾಕ್ಟರ್: “ಹಾಗೆ ಮಾಡುತ್ತಿದ್ದಾನೆ ಅಂತ ಕೇಳಿದ್ದೇನೆ.”
ಶ್ರೀರಾಮಕೃಷ್ಣರು: “ನಾನೊಬ್ಬ ನಿರಕ್ಷರಕುಕ್ಷಿ. ಆದರೂ ವಿದ್ಯಾವಂತರೆಲ್ಲ ಇಲ್ಲಿಗೆ ಬರುತ್ತಾರಲ್ಲ ಏನಾಶ್ಚರ್ಯ! ಇದೆಲ್ಲ ಭಗವಂತನ ಲೀಲೆ ಅಂತ ಹೇಳಲೇಬೇಕಾಗುತ್ತದೆ.”
ಈಗ ರಾತ್ರಿ ಒಂಭತ್ತು. ಡಾಕ್ಟರ್ ಸಾಯಂಕಾಲ ಆರು ಘಂಟೆಗೆ ಬಂದವನು ಇಲ್ಲಿ ನಡೆಯುವುದನ್ನೆಲ್ಲ ನೋಡುತ್ತ ಇನ್ನೂ ಕುಳಿತೇ ಇದ್ದಾನೆ.
ಗಿರೀಶ (ಡಾಕ್ಟರಿಗೆ): “ಒಳ್ಳೆಯದು, ನಿಮಗೇನಾದರೂ ಹೀಗಾಗುತ್ತದೆಯೆ? ನೋಡಿ. ನಾನು ಇಲ್ಲಿಗೆ ಬರಲೊ ಬೇಡವೊ ಅಂತ ಯೋಚಿಸುತ್ತಾ ಇರುತ್ತೇನೆ. ಯಾವುದೊ ಒಂದು ಶಕ್ತಿ ನನ್ನನ್ನು ಇಲ್ಲಿಗೆ ಎಳೆದು ತಂದುಬಿಡುತ್ತದೆ. ನನಗೆ ಹೀಗೆ ಆಗುತ್ತಲೇ ಇದೆ. ಅದಕ್ಕಾಗಿಯೇ ನಾನು ನಿಮ್ಮನ್ನು ಕೇಳುತ್ತಿರುವುದು.”
ಡಾಕ್ಟರ್: “ಹಾಗೇನೂ ಆಗುತ್ತಿಲ್ಲ. ಆದರೆ ಹೃದಯ ಮಾತ್ರವೇ ಹೃದಯವನ್ನು ಅರಿತುಕೊಳ್ಳಬಹುದು. (ಶ್ರೀರಾಮಕೃಷ್ಣರಿಗೆ) ಇದನ್ನೆಲ್ಲ ಕೇಳಿಕೊಳ್ಳುವುದರಿಂದ ವಿಶೇಷವಾದ ಪ್ರಯೋಜನವೇನೂ ಇಲ್ಲ.”
೨೪ನೆ ಅಕ್ಟೋಬರ್ ೧೮೮೫. ಕಾರ್ತಿಕ ಕೃಷ್ಣ ಪಾಡ್ಯಮಿ, ಶನಿವಾರ
ಘಂಟೆ ಅಪರಾಹ್ನ ಒಂದು. ಪರಮಹಂಸರು ಶ್ಯಾಮಪುಕುರದ ಬಾಡಿಗೆ ಮನೆಯ ಎರಡನೆ ಅಂತಸ್ತಿನಲ್ಲಿ ಕುಳಿತಿದ್ದಾರೆ. ಡಾಕ್ಟರ್ ಸರ್ಕಾರ, ನರೇಂದ್ರ, ಮಹಿಮಚರಣ, ಮಾಸ್ಟರ್ ಇನ್ನೂ ಕೆಲವು ಮಂದಿ ಭಕ್ತರು ಕೊಠಡಿಯಲ್ಲಿ ಕುಳಿತಿದ್ದಾರೆ. ಹೋಮಿಯೋಪತಿ ಚಿಕಿತ್ಸೆಯ ಮಾತೆತ್ತಿ ಪರಮಹಂಸರು ಡಾಕ್ಟರ್ ಸರ್ಕಾರನಿಗೆ ಹೇಳುತ್ತಿದ್ದಾರೆ, “ನನಗೆ ಈ ವಿಧದ ಚಿಕಿತ್ಸೆ ಬಹಳ ಒಳ್ಳೆಯದು” ಅಂತ.
ಡಾಕ್ಟರ್: “ಇದರಲ್ಲಿ ರೋಗಿಯ ಪರಿಸ್ಥಿತಿಯನ್ನು ವೈದ್ಯಕೀಯ ಪುಸ್ತಕದೊಡನೆ ತಾಳೆ ಮಾಡಿ ನೋಡಿಕೊಳ್ಳಬೇಕಾಗುತ್ತದೆ. ಇದು ಪಾಶ್ಚಾತ್ಯರ ಸಂಗೀತವಿದ್ದ ಹಾಗೆ. ಗಾಯಕ ಕೊಟ್ಟಿರುವ ಚಿಹ್ನೆಗಳನ್ನು ನೋಡಿಕೊಂಡು ಹಾಡುತ್ತಾನೆ.
“ಗಿರೀಶಘೋಷನೆಲ್ಲಿ? ಏಳಿಸಬೇಡಿ, ಈಗ ಏಳಿಸಬೇಡಿ. ನಿನ್ನೆ ರಾತ್ರಿ ಆತ ನಿದ್ದೆ ಗೆಟ್ಟಿದ್ದಾನೆ.”
ಶ್ರೀರಾಮಕೃಷ್ಣರು: “ಒಳ್ಳೆಯದು, ಭಾವಾವಸ್ಥೆಯಲ್ಲಿ ಬಂಗಿಸೊಪ್ಪಿನ ನೆಶಾದ ಹಾಗೆ ನೆಶಾ ಬರುತ್ತದೆಯಲ್ಲ, ಏಕೆ?”
ಡಾಕ್ಟರ್ (ಮಾಸ್ಟರಿಗೆ): “ಆ ಅವಸ್ಥೆಯಲ್ಲಿ ನರಗಳ ಕೇಂದ್ರಗಳು ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತವೆ. ಅದಕ್ಕಾಗಿಯೇ ಕೈಕಾಲುಗಳಿಗೆ ಜೋಮು ಹಿಡಿಯೋದು. ಒಮ್ಮೊಮ್ಮೆ ಕೈಕಾಲುಗಳು ಒದರಲಾರಂಭಿಸುತ್ತವೆ, ಏಕೆಂದರೆ, ಆ ಕೇಂದ್ರಗಳಲ್ಲಿದ್ದ ಶಕ್ತಿಯೆಲ್ಲ ಒಮ್ಮೆಗೇ ತಲೆಯ ಕಡೆಗೆ ನುಗ್ಗಲಾರಂಭಿಸುತ್ತದೆ. ನಮ್ಮ ಶರೀರದಲ್ಲಿ ನರಗಳ ರಚನೆ ಇರುವುದರಿಂದಲೆ ನಾವು ಜೀವಿಸಿರುವುದು. ಹೆಕ್ಕತ್ತಿನಲ್ಲಿ ‘ಮೆಡುಲ್ಲ ಅಬ್ಲಾಂಗೇಟ’ ಎಂಬ ಹೆಸರಿನ ನರಗಳ ಒಂದು ಕೇಂದ್ರವಿದೆ. ಅದಕ್ಕೆ ಪೆಟ್ಟು ತಗಲಿದರೆ ಮನುಷ್ಯ ಸಾಯುವ ಸಂಭವವಿದೆ.”
ಮಹಿಮಚರಣ ಚಕ್ರವರ್ತಿ ಕುಂಡಲಿನಿಯ ಸಂಬಂಧವಾಗಿ ವಿವರಿಸಲಾರಂಭಿಸಿದ. ಆತ ಹೇಳಿದ: “ಸುಷುಮ್ನಾ ನಾಡಿ ಬೆನ್ನುಹುರಿಯಲ್ಲಿ ಸೂಕ್ಷ್ಮರೂಪಿನಿಂದ ಇದೆ. ಅದನ್ನು ಯಾರೂ ಕಣ್ಣಿನಿಂದ ನೋಡುವುದಕ್ಕೂ ಆಗುವುದಿಲ್ಲ. ಹೀಗೆಂದು ಮಹಾದೇವ ಹೇಳಿದ್ದಾನೆ.”
ಡಾಕ್ಟರ್: “ಮಹಾದೇವ ಪೂರ್ಣವಾಗಿ ಬೆಳೆದ ಮನುಷ್ಯನನ್ನು ಮಾತ್ರ ಪರೀಕ್ಷಿಸಿ ನೋಡಿದ್ದಾನೆ. ಆದರೆ ಐರೋಪ್ಯರು ಮನುಷ್ಯನನ್ನು ಆತನ ಭ್ರೂಣದೆಶೆಯಿಂದ ಹಿಡಿದು ಪ್ರೌಢದೆಶೆಯವರೆಗೆ ಎಲ್ಲಾ ಹಂತದಲ್ಲೂ ಆತನನ್ನು ಪರೀಕ್ಷಿಸಿ ನೋಡಿಬಿಟ್ಟಿದ್ದಾರೆ. ತುಲನಾತ್ಮಕ ಚರಿತ್ರೆಯನ್ನು ಪೂರ್ಣವಾಗಿ ಅರಿತುಕೊಳ್ಳುವುದು ಮೇಲು. ಸಂತಾಲರ ಚರಿತ್ರೆಯನ್ನು ಓದಿದರೆ ಗೊತ್ತಾಗುತ್ತದೆ, ಕಾಳಿ ಒಬ್ಬಳು ಸಂತಾಲಿ ಅಂತ. ಆಕೆ ಒಬ್ಬ ರಣಶೂರೆ. (ಎಲ್ಲರೂ ನಗುತ್ತಾರೆ.)
“ನಗಬೇಡಿ, ತುಲನಾತ್ಮಕ ಅಂಗರಚನಶಾಸ್ತ್ರದಿಂದ (ಅನಾಟಮಿ) ಎಷ್ಟು ಉಪಕಾರವಾಗಿದೆ ಎಂಬುದನ್ನು ಕೇಳಿ. ಮೊದಲು ಮೊದಲು ಮೇದೋಜೀರಕ ಮತ್ತು ಪಿತ್ತರಸಗಳ ಕೆಲಸಕಾರ್ಯಗಳ ತಾರತಮ್ಯವೇನು ಎಂಬುದು ಗೊತ್ತಿರಲಿಲ್ಲ. ಸ್ವಲ್ಪ ಕಾಲಾನಂತರ ‘ಕ್ಲಾಡೆ ಬರ್ನಾರ್ಡ’ ಎಂಬುವನು ಜಠರ, ಪಿತ್ತಕೋಶ ಇವೇ ಮೊದಲಾದುವನ್ನು ಪರೀಕ್ಷಿಸಿ ಪತ್ತೆ ಮಾಡಿದ, ಮೇದೋಜೀರಕ ಮತ್ತು ಪಿತ್ತರಸದ ಕೆಲಸಕಾರ್ಯಗಳು ಪ್ರತ್ಯೇಕ ಪ್ರತ್ಯೇಕ ಅಂತ. ಆದ್ದರಿಂದ ನಾವು ಚಿಕ್ಕ ಪುಟ್ಟ ಪ್ರಾಣಿಗಳನ್ನೂ ಪರೀಕ್ಷಿಸಿ ನೋಡಬೇಕೆಂಬುದು ವಿಚಾರಾರ್ಹವಾಗಿಯೇ ಇದೆ. ಕೇವಲ ಮನುಷ್ಯನನ್ನು ಪರೀಕ್ಷಿಸಿ ನೋಡಿದರೇ ಸಾಕಾಗದು.
“ಹಾಗೇನೆ ತುಲನಾತ್ಮಕ ಧರ್ಮವೂ ಅತ್ಯಂತ ಆವಶ್ಯಕ.
“ನೋಡಿ, ಇವರು (ಪರಮಹಂಸರು) ಇದ್ದಾರಲ್ಲ, ಇವರ ಮಾತು ನೇರವಾಗಿ ಹೋಗಿ ನಮ್ಮ ಹೃದಯದಲ್ಲಿ ನಾಟಿಕೊಂಡುಬಿಡುತ್ತದೆಯಲ್ಲ ಏಕೆ? ಇವರು ಎಲ್ಲಾ ಧರ್ಮಗಳ-ಹಿಂದೂ, ಮುಸಲ್ಮಾನ, ಕ್ರಿಸ್ತ, ಶಾಕ್ತ, ವೈಷ್ಣವ ಇವೇ ಮೊದಲಾದ ಧರ್ಮಗಳ ಆಂತರ್ಯವನ್ನು ಒಳಹೊಕ್ಕು ನೋಡಿದ್ದಾರೆ; ಸಾಧನೆ ಮಾಡಿ ಅನುಭವ ಪಡೆದಿದ್ದಾರೆ. ಜೇನುಹುಳು ವಿವಿಧ ಹೂವುಗಳಿಂದ ಮಧುವನ್ನು ತಂದು ಶೇಖರಿಸಿಟ್ಟರೆ ತಾನೆ ಅದು ಸೊಗಸಾದ ಜೇನುತುಪ್ಪವಾಗುತ್ತದೆ.”
ಮಾಸ್ಟರ್ (ಡಾಕ್ಟರಿಗೆ): “ಇವರು (ಮಹಿಮಚರಣನನ್ನು ತೋರಿಸಿ) ಸೈನ್ಸನ್ನು ಬಹಳವಾಗಿ ಓದಿದ್ದಾರೆ.”
ಡಾಕ್ಟರ್ (ನಗುತ್ತ): “ಏನು ಮ್ಯಾಕ್ಸಮುಲ್ಲರರ ಧಾರ್ಮಿಕ ಸೈನ್ಸನ್ನೇನು?”
ಮಹಿಮಚರಣ (ಶ್ರೀರಾಮಕೃಷ್ಣರಿಗೆ): “ನೀವು ಅಸ್ವಸ್ಥರಾಗಿದ್ದೀರಿ. ಡಾಕ್ಟರುಗಳ ಕೈಯಲ್ಲಿ ಪಾಪ ಏನು ತಾನೆ ಸಾಧ್ಯ. ನಿಮಗೆ ದೇಹಸೌಖ್ಯವಿಲ್ಲ ಎಂಬುದಾಗಿ ಕೇಳಿದೊಡನೆ ನಾನು ಭಾವಿಸಿದೆ ತಾವು ಡಾಕ್ಟರುಗಳ ಅಹಂಕಾರವನ್ನು ಹೆಚ್ಚಿಸಲು ಕಾರಣರಾಗುತ್ತೀರಿ ಅಂತ.”
ಶ್ರೀರಾಮಕೃಷ್ಣರು: “ಈತ ಬಹಳ ಒಳ್ಳೇ ಡಾಕ್ಟರ್. ಜೊತೆಗೆ ಒಳ್ಳೇ ವಿದ್ಯಾವಂತ.”
ಮಹಿಮಚರಣ: “ಹೌದು, ನಿಜ. ಈತ ಒಂದು ದೊಡ್ಡ ಜಹಜು, ನಾವೆಲ್ಲರೂ ಒಂದೊಂದು ಪುಟ್ಟ ದೋಣಿ.”
ಡಾಕ್ಟರ್ ವಿನಯಪೂರ್ವಕವಾಗಿ ಕೈ ಮುಗಿಯುತ್ತಾನೆ.
ಮಹಿಮಚರಣ: “ಆದರೆ ಇಲ್ಲಿ, ಪರಮಹಂಸರೆದುರಿನಲ್ಲಿ ಎಲ್ಲರೂ ಸರಿಸಮಾನರೆ.”
ಹಾಡುವಂತೆ ಪರಮಹಂಸರು ನರೇಂದ್ರನಿಗೆ ಹೇಳಿದರು. ನರೇಂದ್ರ ಹಾಡುತ್ತಿದ್ದಾನೆ:
ಜೀವನದ ಜಲಧಿಯಲಿ ಪಯಣಗೈಯುವ ನನಗೆ
ನೀನೊಂದು ಧ್ರುವತಾರೆ ನನ್ನ ಗುರುವೆ…..
ಮತ್ತೆ ಆತ ಹಾಡಿದ:
ಅಹಂಕಾರಮತ್ತ ಸದಾ, ಮೇಣಪಾರವಾಸನಾ…..
ಆತ ಮತ್ತೆ ಹಾಡಿದ:
ಮನವ ಬೆರಗುಗೊಳಿಪನಂತ ವಿಶ್ವರಚನೆ ನಿನ್ನದೆ.
ನಿನ್ನ ಪ್ರೇಮ ಚೆಲುವುಗಳಲಿ ಜಗವೆಲ್ಲವು ತುಂಬಿದೆ…..
ನರೇಂದ್ರ ಮುಂದುವರಿಸಿದ:
ಭವ್ಯ ಸಿಂಹಾಸನದಿ ಕುಳಿತು ನೀನಾಲಿಸಿಹೆ
ನೀನೇ ರಚಿಸಿದ ವಿಶ್ವಗೀತೆಗಳನು!
ನಿನ್ನ ಮನೆವಾಗಿಲಲಿ, ಮರ್ತ್ಯಸಂಭವ ನಾನು
ನನ್ನ ಆರ್ತ ಸ್ವರದಿ ಹಾಡುತಿಹೆನು!
ಸೂರ್ಯಚಂದ್ರರು ನಿಂತು ಹಾಡುವೀ ಸಭೆಯಲ್ಲಿ
ನಾನು ಕೂಡಾ ನಿನ್ನ ನುತಿಗೈವೆನು.
ನಿನ್ನ ದರುಶನವೊಂದೆ ನನ್ನ ಬಾಳಿನ ಬಯಕೆ;
ಕರುಣೆಯಲಿ ಸಲಿಸೆನ್ನ ಬೇಡಿಕೆಯನು.
ಆತ ಇನ್ನೊಂದು ಹಾಡು ಹಾಡಿದ:
ದರುಶನವ ನೀಡಯ್ಯ ರಾಜರಾಜೇಶ್ವರನೆ
ನಿನ್ನ ಕರುಣೆಯ ಬೇಡಿ ಬಂದಿರುವೆನು.
ನಿನ್ನಪಾಂಗವೆ ಸಾಕು; ಜಗದ ಕುಂಡದಿ ಬೆಂದು
ನಿನ್ನ ಪದಕಮಲದೆಡೆ ನಿಂದಿರುವೆನು.
ಪಾಪ ಕಲುಷಿತವೆದೆಯು. ಮೋಹಬಂಧಿತ ನಾನು
ಬದುಕಿದ್ದರೂ ಸತ್ತ ಹಾಗಿರುವೆನು.
ಓ ದಯಾಮಯ ನಿನ್ನ ದಿವ್ಯ ಸಂಜೀವಿನಿಯ
ಸ್ಪರ್ಶದಲ್ಲಿ ಮೇಲೆತ್ತು ನನ್ನೆದೆಯನು!
ಮತ್ತೆ:
ಹರಿರಸಮದಿರೆಯಕುಡಿದು ನಿರಂತರ
ಉನ್ಮತ್ತನ ತೆರೆ ನೀನಿರುತ…..
ಶ್ರೀರಾಮಕೃಷ್ಣರು: “ಆ ಹಾಡನ್ನು– ‘ನನ್ನ ಮನವನು ನಿನಗೆ ಅರ್ಪಿಸಿರುವೆನು ಗುರುವೆ’ ಎಂಬ ಹಾಡನ್ನು ಹಾಡು.”
ಡಾಕ್ಟರ್: “ಆಹಾ!”
ನರೇಂದ್ರ ಹಾಡುತ್ತಿದ್ದಾನೆ:
ನನ್ನ ಮನವನು ನಿನಗೆ ಅರ್ಪಿಸಿರುವೆನು ಗುರುವೆ
ಇರುವುದೆಲ್ಲವು ನೀನೆ ಈ ಜಗದಲಿ!…..
ಹಾಡುವುದು ಮುಗಿಯಿತು. ಡಾಕ್ಟರ್ ಸರ್ಕಾರ ಮುಗ್ಧನಾಗಿ ಕುಳಿತಿದ್ದಾನೆ. ಸ್ವಲ್ಪ ಹೊತ್ತಾದ ನಂತರ ಆತ ಬಹಳ ಭಕ್ತಿಯಿಂದ ಕೈಗಳನ್ನು ಜೋಡಿಸಿ ಪರಮಹಂಸರಿಗೆ ಹೇಳುತ್ತಿದ್ದಾನೆ: “ನಾನು ಹೋಗಿಬರಲೆ? ಮತ್ತೆ ನಾಳೆ ಬರುತ್ತೇನೆ.”
ಶ್ರೀರಾಮಕೃಷ್ಣರು: “ಒಂದು ಸ್ವಲ್ಪ ಹೊತ್ತು ಇರು. ಗಿರೀಶಘೋಷನನ್ನು ಕರೆಯಲು ಕಳುಹಿಸಿದ್ದೇನೆ. (ಮಹಿಮಚರಣನನ್ನು ತೋರಿಸಿ) ಈತ ಒಬ್ಬ ದೊಡ್ಡ ವಿದ್ಯಾವಂತ, ಆದರೂ ಹರಿನಾಮವನ್ನು ಹಾಡುತ್ತ ನರ್ತಿಸುತ್ತಿದ್ದಾನೆ; ಅಹಂಕಾರವಿಲ್ಲ. ನಾವು ಕೊನ್ನಗರಕ್ಕೆ ಹೋಗಿದ್ದುದರಿಂದ ಈತನೂ ಅಲ್ಲಿಗೆ ಬಂದುಬಿಟ್ಟಿದ್ದ. ಈತ ಐಶ್ವರ್ಯವಂತ; ಸ್ವತಂತ್ರಜೀವನ ನಡೆಸುತ್ತಿದ್ದಾನೆ: ಯಾರ ದಾಸನೂ ಆಗಿಲ್ಲ. (ನರೇಂದ್ರನನ್ನು ತೋರಿಸಿ) ಇವನು ಹೇಗೆ?”
ಡಾಕ್ಕರ್: “ಬಹಳ ಒಳ್ಳೆಯವ.”
ಶ್ರೀರಾಮಕೃಷ್ಣರು ಒಬ್ಬ ಭಕ್ತನನ್ನು ತೋರಿಸಿ: “ಇವನು?”
ಡಾಕ್ಟರ್: “ಆಹಾ!”
ಮಹಿಮಚರಣ: “ಹಿಂದೂಗಳ ದರ್ಶನಶಾಸ್ತ್ರಗಳನ್ನು ಓದಲಿಲ್ಲ ಅಂದರೆ, ದರ್ಶನವನ್ನೇ ಓದಿದ ಹಾಗಾಗುವುದಿಲ್ಲ. ಸಾಂಖ್ಯಶಾಸ್ತ್ರದ ಚತುರ್ವಿಂಶತಿ ತತ್ತ್ವಗಳು ಪಾಶ್ಚಾತ್ಯ ದಾರ್ಶನಿಕನಿಗೆ ತಿಳಿದಿರುವುದಿಲ್ಲ. ಅದನ್ನು ಅವರು ಅರ್ಥಮಾಡಿಕೊಳ್ಳಲೂ ಆರರು.”
ಶ್ರೀರಾಮಕೃಷ್ಣರು (ನಗುತ್ತ): “ಏನೊ ಮೂರು ಮಾರ್ಗಗಳು ಅಂತ ಹೇಳುತ್ತೀಯಲ್ಲ, ಅವು ಯಾವುವು?”
ಮಹಿಮಚರಣ: “ಸತ್ ಮಾರ್ಗ–ಎಂದರೆ ಜ್ಞಾನ ಮಾರ್ಗ, ಚಿತ್ ಮಾರ್ಗ–ಎಂದರೆ ಯೋಗ ಮಾರ್ಗ, ಎಂದರೆ ಕರ್ಮಯೋಗ. ಅದಕ್ಕಾಗಿಯೇ ಇದರಲ್ಲಿ ನಾಲ್ಕು ಆಶ್ರಮಗಳಲ್ಲಿಯೂ ಏನೇನು ಕ್ರಿಯೆಗಳನ್ನು ಮಾಡಬೇಕು ಎಂಬುದು ವರ್ಣಿತವಾಗಿದೆ. ಆನಂದ ಮಾರ್ಗ–ಎಂದರೆ ಭಕ್ತಿಪ್ರೇಮದ ಮಾರ್ಗ. ನೀವು ಇವು ಮೂರು ಮಾರ್ಗಗಳಲ್ಲಿಯೂ ಅಭಿಜ್ಞರು; ಇವುಗಳ ಸಂಬಂಧವಾಗಿ ಅಧಿಕಾರವಾಣಿಯಿಂದ ಮಾತಾಡಬಲ್ಲಿರಿ.”
ಪರಮಹಂಸರು ನಗುತ್ತಿದ್ದಾರೆ.
ಡಾಕ್ಟರ್ ಸರ್ಕಾರ ಪರಮಹಂಸರಿಂದ ಬೀಳ್ಕೊಂಡ. ಇಂದು ಪೂರ್ಣಿಮೆಯಾದ ಮಾರನೆ ದಿನ. ಈಗತಾನೆ ಚಂದ್ರ ಉದಯಿಸುತ್ತಿದ್ದಾನೆ. ಪರಮಹಂಸರು ನಿಂತುಕೊಂಡೇ ಸಮಾಧಿಸ್ಥರಾಗಿದ್ದಾರೆ. ನಿತ್ಯಗೋಪಾಲ ಅವರ ಹತ್ತಿರ ಭಕ್ತಿಭಾವದಿಂದ ನಿಂತುಕೊಂಡಿದ್ದಾನೆ.
ಈಗ ಪರಮಹಂಸರು ಕುಳಿತುಕೊಂಡಿದ್ದಾರೆ. ನಿತ್ಯಗೋಪಾಲ ಅವರ ಪಾದಗಳನ್ನು ಒತ್ತುತ್ತಿದ್ದಾನೆ. ದೇವೇಂದ್ರ, ಕಾಳೀಪದ ಇವರೇ ಮೊದಲಾದ ಭಕ್ತರು ಅವರ ಹತ್ತಿರ ಕುಳಿತು ಕೊಂಡಿದ್ದಾರೆ.
ಶ್ರೀರಾಮಕೃಷ್ಣರು (ಭಕ್ತರಿಗೆ): “ನನ್ನ ಮನಸ್ಸು, ಹೇಳುತ್ತಿದೆ, ನಿತ್ಯಗೋಪಾಲನ ಈಗಿನ ಮಾನಸಿಕ ಅವಸ್ಥೆ ಪರಿವರ್ತನೆ ಹೊಂದಿಬಿಡುತ್ತದೆ ಅಂತ. ಆತನ ಇಡೀ ಮನಸ್ಸೆಲ್ಲ ನನ್ನ ಮೇಲೆ–ಎಂದರೆ ಇದರೊಳಗಿರುವವನ ಮೇಲೆ–ಕೇಂದ್ರಿಕೃತವಾಗಿರುತ್ತದೆ. ನರೇಂದ್ರನಲ್ಲಿ ನೀವು ನೋಡುತ್ತಿಲ್ಲವೇನು? ಆತನ ಇಡೀ ಮನಸ್ಸೆಲ್ಲ ನನ್ನ ಮೇಲೆ ಏಕಾಗ್ರವಾಗಿದೆ.”
ಭಕ್ತರಲ್ಲಿ ಅನೇಕರು ಪರಮಹಂಸರನ್ನು ಬೀಳ್ಕೊಂಡರು. ಅವರು ನಿಂತುಕೊಂಡಿದ್ದಾರೆ. ಜಪದ ಸಂಬಂಧವಾಗಿ ಒಬ್ಬ ಭಕ್ತನಿಗೆ ಹೇಳುತ್ತಿದ್ದಾರೆ: “ನಿರ್ಜನಪ್ರದೇಶದಲ್ಲಿ ಯಾವ ಶಬ್ದವನ್ನೂ ಮಾಡದೆ ಭಗವನ್ನಾಮೋಚ್ಚಾರಣೆ ಮಾಡುವುದಕ್ಕೆ ಜಪ ಅಂತ ಹೆಸರು. ಏಕಾಗ್ರಚಿತ್ತದಿಂದ ಆತನ ನಾಮೋಚ್ಚಾರಣೆ ಮಾಡುತ್ತ ಮಾಡುತ್ತ ಎಂದರೆ–ಜಪ ಮಾಡುತ್ತ ಮಾಡುತ್ತ ಮುಂದುವರಿದರೆ ಆತನ ರೂಪ ದರ್ಶನವಾಗುತ್ತದೆ, ಎಂದರೆ ಆತನ ಸಾಕ್ಷಾತ್ಕಾರ ದೊರೆಯುತ್ತದೆ. ಒಂದು ಮರದ ದಿಮ್ಮಿಗೆ ಸರಪಣಿಯ ಒಂದು ಕೊನೆಯನ್ನು ಕಟ್ಟಿ ಆ ದಿಮ್ಮಿಯನ್ನು ಗಂಗಾನದಿಯಲ್ಲಿ ಮುಳುಗಿಸಿ ಅದೇ ಸರಪಣಿಯ ಕೊಂಡಿಯಾದ ಮೇಲೆ ಕೊಂಡಿಯನ್ನು ಒಂದೊಂದನ್ನಾಗಿ ಹಿಡಿದು ಹಿಡಿದು ನೀರಿಗಿಳಿದು ಮುಂದುವರಿಯುತ್ತಿದ್ದರೆ ಕೊನೆಗೆ ಹೋಗಿ ಆ ದಿಮ್ಮಿಯನ್ನು ಮುಟ್ಟಬಹುದು. ಅದೇ ರೀತಿ ಜಪ ಮಾಡುತ್ತ ಮಾಡುತ್ತ ಆತನಲ್ಲೇ ಮಗ್ನವಾಗಿಬಿಟ್ಟರೆ, ಕೊನೆಗೆ ಆತನ ಸಾಕ್ಷಾತ್ಕಾರ ದೊರೆಯುತ್ತದೆ.”
ಕಾಳೀಪದ ನಗುತ್ತ ಭಕ್ತರಿಗೆ: “ನಮ್ಮ ಇವರು (ಪರಮಹಂಸರು) ಎಷ್ಟು ಅದ್ಭುತ ವ್ಯಕ್ತಿಗಳು! ಜಪ, ಧ್ಯಾನ, ತಪಸ್ಸು ಇವುಗಳ ಹೊರೆಯನ್ನು ನಮ್ಮ ಮೇಲೆ ಹೊರಿಸುತ್ತಿಲ್ಲ.”
ಇದ್ದಕ್ಕಿದ್ದ ಹಾಗೆ ಪರಮಹಂಸರು ಹೇಳುತ್ತಿದ್ದಾರೆ: “ನೋಡು, ಇದು ಹೇಗೆ ತೊಂದರೆ ಕೊಡುತ್ತಿದೆ.” ಪರಮಹಂಸರ ಗಂಟಲು ನೋಯುತ್ತಿತ್ತು. ದೇವೇಂದ್ರ ಹೇಳುತ್ತಿದ್ದಾನೆ: “ನಿಮ್ಮ ಈ ಮಾತುಗಳಿಂದ ನಾವು ಮೋಸಹೋಗುವವರಲ್ಲ.” ಭಕ್ತರ ಕಣ್ಣಿಗೆ ಮಂಕುಬೂದಿ ಎರಚಲು ಪರಮಹಂಸರು ಈ ರೀತಿಯಾಗಿ ತಮಗೆ ರೋಗ ಬಂದಿದೆ ಅಂತ ನಟಿಸುತ್ತಾರೆ ಎಂಬುದು ಆತನ ಭಾವನೆ.
ಭಕ್ತರಲ್ಲಿ ಹಲವು ಮಂದಿ ಪರಮಹಂಸರಿಂದ ಬೀಳ್ಕೊಂಡು ಮನೆಗೆ ಹಿಂದಿರುಗಿದರು. ರಾತ್ರಿಯಲ್ಲಿ ಪರಮಹಂಸರ ಸೇವೆಗಾಗಿ ಕೆಲವು ಯುವಕ ಭಕ್ತರನ್ನು ಕಾವಲಾಗಿರಿಸಲು ವ್ಯವಸ್ಥೆಯಾಗಿದೆ. ಮಾಸ್ಟರೂ ಇಂದಿನ ರಾತ್ರಿಯನ್ನು ಇಲ್ಲಿಯೇ ಕಳೆಯುತ್ತಾನೆ.
೨೫ನೆ ಅಕ್ಟೋಬರ್ ೧೮೮೫, ಕಾರ್ತಿಕ ಕೃಷ್ಣ ದ್ವಿತೀಯ, ಭಾನುವಾರ
ಪ್ರಾತಃಕಾಲ ಆರೂವರೆ. ಮಾಸ್ಟರ್ ಪರಮಹಂಸರ ಕೊಠಡಿಗೆ ಬಂದು ಅವರಿಗೆ ಪ್ರಣಾಮ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸಿದ. ಅವರ ಆರೋಗ್ಯಸ್ಥಿತಿಯ ವರದಿಯನ್ನು ಡಾಕ್ಟರ್ ಸರ್ಕಾರನಿಗೆ ಒಪ್ಪಿಸಲು ಆತ ಆತನ ಮನೆಗೆ ಹೊರಡುವುದರಲ್ಲಿದ್ದಾನೆ. ಪರಮಹಂಸರು ಆತನಿಗೆ ಹೇಳಿದರು: “ಬೆಳಗಿನ ಜಾವದಲ್ಲಿ ನನ್ನ ಬಾಯಿ ನೀರಿನಿಂದ ತುಂಬಿಹೋಗುತ್ತದೆ ಮತ್ತು ಕೆಮ್ಮು ಬರುತ್ತದೆ ಎಂಬುದಾಗಿ ಡಾಕ್ಟರಿಗೆ ತಿಳಿಸು. ನಾನು ಸ್ನಾನ ಮಾಡಬಹುದೇ ಎಂಬುದನ್ನೂ ಕೇಳಿ ತಿಳಿದುಕೊಂಡು ಬಾ.”
ಮಾಸ್ಟರ್ ಏಳು ಘಂಟೆಯಾದನಂತರ ಡಾಕ್ಟರ್ ಸರ್ಕಾರನ ಮನೆಗೆ ತಲುಪಿ ಪರಮಹಂಸರ ದೇಹಾರೋಗ್ಯದ ವರದಿಯನ್ನೆಲ್ಲ ಆತನಿಗೆ ಒಪ್ಪಿಸಿದ. ಡಾಕ್ಟರ್, ಆತನ ಹಳೆಯ ಉಪಾಧ್ಯಾಯರು ಮತ್ತು ಒಬ್ಬಿಬ್ಬರು ಸ್ನೇಹಿತರು ಕೊಠಡಿಯಲ್ಲಿದ್ದರು. ಡಾಕ್ಟರ್ ಸರ್ಕಾರ್ ತನ್ನ ಉಪಾಧ್ಯಾಯನಿಗೆ ಹೇಳುತ್ತಿದ್ದಾನೆ: “ಮಹಾಶಯರೆ, ರಾತ್ರಿ ಮೂರು ಘಂಟೆಯಿಂದ ನನಗೆ ಪರಮಹಂಸರ ಯೋಚನೆ ಹತ್ತಿಬಿಟ್ಟಿದೆ. ನಿದ್ದೆಯೇ ಬರಲಿಲ್ಲ. ಈಗಲೂ ನನ್ನ ತಲೆಯಲ್ಲಿ ಅವರ ಯೋಚನೆಯೇ.” (ಎಲ್ಲರೂ ನಗುತ್ತಾರೆ.)
ಡಾಕ್ಟರನ ಒಬ್ಬ ಸ್ನೇಹಿತ, ಡಾಕ್ಟರಿಗೆ ಹೇಳುತ್ತಿದ್ದಾನೆ: “ಮಹಾಶಯ, ಕೆಲಕೆಲವರು, ಪರಮಹಂಸರು ಅವತಾರಪುರುಷರು ಅಂತ ಹೇಳುತ್ತಿರುವುದನ್ನು ಕೇಳಿದ್ದೇನೆ. ನೀವು ದಿವಸವೂ ಅಲ್ಲಿಗೆ ಹೋಗುತ್ತಿದ್ದೀರಿ. ಅವರ ಸಂಬಂಧವಾಗಿ ನಿಮ್ಮ ಅಭಿಪ್ರಾಯವೇನು?”
ಡಾಕ್ಟರ್: “ಮಾನವ ವ್ಯಕ್ತಿಯ ದೃಷ್ಟಿಯಿಂದ ನಾನು ಅವರನ್ನು ಬಹಳವಾಗಿ ಗೌರವಿಸುತ್ತೇನೆ.”
ಮಾಸ್ಟರ್ (ಡಾಕ್ಟರ್ ಸ್ನೇಹಿತನಿಗೆ): “ಡಾಕ್ಟರು ಅನುಗ್ರಹಮಾಡಿ ಅವರಿಗೆ ಚಿಕಿತ್ಸೆ ಮಾಡುತ್ತಿದ್ದಾರೆ.”
ಡಾಕ್ಟರ್: “ಅನುಗ್ರಹವೇ? ನೀವು ಏನು ಮಾತಾಡುತ್ತಿರುವುದು?”
ಮಾಸ್ಟರ್: “ಪರಮಹಂಸರ ಮೇಲಲ್ಲ, ನಮ್ಮ ಮೇಲೆ.”
ಡಾಕ್ಟರ್: “ಅನುಗ್ರಹವೂ ಇಲ್ಲ, ಏನೂ ಇಲ್ಲ. ನಿಮಗಾರಿಗೂ ಗೊತ್ತಿಲ್ಲ, ನಿಮ್ಮ ಪರಮಹಂಸರ ದೆಸೆಯಿಂದ ನನಗೆಷ್ಟೊಂದು ನಷ್ಟ ಆಗುತ್ತಿದೆ ಎಂಬುದು. ದಿನವೂ ಎರಡು ಮೂರು ಕರೆಗಳಿಗೆ ಹೋಗುವುದಕ್ಕೆ ಆಗುತ್ತಿಲ್ಲ. ಮಾರನೇ ದಿನ ನಾನೇ ಅವರ ಮನೆಗೆ ಹೋಗುತ್ತೇನೆ. ನಾನಾಗಿಯೇ ಹೋಗುವುದರಿಂದ ಅವರಿಂದ ಫೀಯನ್ನು ಸ್ವೀಕರಿಸುವುದಿಲ್ಲ. ನಾನಾಗಿಯೇ ಹೋಗಿ ಫೀ ತೆಗೆದುಕೊಳ್ಳುವ ಬಗೆ ಹೇಗೆ?”
ಮಹಿಮಚರಣನ ಸಂಬಂಧವಾಗಿ ಮಾತುಕತೆ ಆರಂಭವಾಯಿತು. ಡಾಕ್ಟರ್ ಸರ್ಕಾರ ನಿನ್ನೆ ಪರಮಹಂಸರನ್ನು ನೋಡಲು ಶ್ಯಾಮಪುಕುರಕ್ಕೆ ಹೋದಾಗ, ಮಹಿಮಚರಣನೂ ಅಲ್ಲಿಗೆ ಬಂದಿದ್ದ. ಆತ ಡಾಕ್ಟರನ್ನು ತೋರಿಸಿ ಪರಮಹಂಸರಿಗೆ ಹೇಳಿದ್ದ, ‘ಮಹಾಶಯರೆ, ನೀವು ಡಾಕ್ಟರ್ರ ಆಹಂಕಾರವನ್ನು ಪೋಷಿಸಲೋಸುಗ ಈ ರೋಗವನ್ನು ನಿಮ್ಮ ಮೇಲೆ ಬರಿಸಿಕೊಂಡಿದ್ದೀರಿ.’
ಮಾಸ್ಟರ್ (ಡಾಕ್ಟರಿಗೆ): “ಮಹಿಮಚರಣ ಹಿಂದೆ ಇಲ್ಲಿಗೆ ಬರುತ್ತಿದ್ದ. ನೀವು ಇಲ್ಲೇ ವೈದ್ಯಕೀಯ ಸಂಬಂಧವಾಗಿ ಉಪನ್ಯಾಸ ಕೊಡುತ್ತಿದ್ದಾಗ, ಅದನ್ನು ಕೇಳಲು ಆತ ಬರುತ್ತಿದ್ದ.”
ಡಾಕ್ಟರ್: “ಹಾಗೇನು? ಆತನದು ಎಂಥಾ ತಾಮಸಿಕ ಪ್ರವೃತ್ತಿ ! ಭಗವಂತನ ಸೃಷ್ಟಿರಚನೆಯಲ್ಲಿ ಮೂರನೆ ಗುಂಪಿಗೆ ಸೇರಿದವನು ಅಂತ ನಾನು ಆತನಿಗೆ ನಮಸ್ಕಾರ ಮಾಡಿದ್ದನ್ನು ನೀವು ಗಮನಿಸಲಿಲ್ಲವೇನು? ಭಗವಂತನಲ್ಲಿ ಸತ್ತ್ವ, ರಜಸ್ಸು, ತಮಸ್ಸು–ಈ ಮೂರು ಗುಣಗಳು ಇದ್ದೇ ಇವೆಯಲ್ಲ. ಆತ ಪರಮಹಂಸರಿಗೆ, ‘ನೀವು ಡಾಕ್ಟರನ ಅಹಂಕಾರವನ್ನು ಪೋಷಿಸಲೋಸುಗ ಈ ರೋಗವನ್ನು ನಿಮ್ಮ ಮೇಲೆ ಬರಿಸಿಕೊಂಡಿದ್ದೀರಿ’ ಅಂತ ಹೇಳಿದ್ದನ್ನು ನೀವು ಗಮನಿಸಲಿಲ್ಲವೇನು?”
ಮಾಸ್ಟರ್: “ಮಹಿಮಚರಣ ನಂಬಿದ್ದಾನೆ, ಇಚ್ಛೆಪಟ್ಟರೆ ಪರಮಹಂಸರೇ ತಮ್ಮ ರೋಗವನ್ನು ಗುಣಪಡಿಸಿಕೊಳ್ಳಬಲ್ಲರು ಎಂಬುದಾಗಿ.”
ಡಾಕ್ಟರ್: “ಏನು? ತಾವೇ ಗುಣಪಡಿಸಿಕೊಳ್ಳುವುದೇ? ಎಂದಿಗಾದರೂ ಸಾಧ್ಯವೇ? ನಾವು ಡಾಕ್ಟರುಗಳು. ಕ್ಯಾನ್ಸರ್ ಏನು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಅದನ್ನು ಗುಣಪಡಿಸಲು ನಮ್ಮ ಕೈಯಲ್ಲೇ ಸಾಧ್ಯವಾಗುವುದಿಲ್ಲ. ಅವರಿಗೆ ಅದು ಏನು ಎಂಬುದು ಸ್ವಲ್ಪವೂ ಗೊತ್ತಿಲ್ಲ. ಅಂಥಾದ್ದರಲ್ಲಿ ಅವರೇ ಹೇಗೆ ಅದನ್ನು ಗುಣಪಡಿಸಿಕೊಳ್ಳಬಲ್ಲರು! (ಸ್ನೇಹಿತನಿಗೆ) ಈ ರೋಗವನ್ನು ಗುಣಪಡಿಸುವುದಕ್ಕೆ ಆಗುವುದಿಲ್ಲ, ಆದರೂ ಇವರೆಲ್ಲ ಅತ್ಯಂತ ಶ್ರದ್ಧಾಭಕ್ತಿಯಿಂದ ಅವರ ಸೇವೆ ಮಾಡುತ್ತಿದ್ದಾರೆ.”
ಪರಮಹಂಸರನ್ನು ನೋಡಿಹೋಗಬೇಕೆಂದು ಡಾಕ್ಟರಿಗೆ ಹೇಳಿ ಮಾಸ್ಟರ್ ತನ್ನ ಮನೆಗೆ ಹಿಂದಿರುಗಿದ.
ಮಾಸ್ಟರ್ ತನ್ನ ಮನೆಯಲ್ಲಿ ಊಟೋಪಚಾರಗಳನ್ನು ಮುಗಿಸಿಕೊಂಡು, ಸುಮಾರು ಮೂರು ಘಂಟೆ ಸಮಯಕ್ಕೆ ಪರಮಹಂಸರಿದ್ದ ಸ್ಥಳಕ್ಕೆ ಬಂದು, ಅವರಿಗೆ ಡಾಕ್ಟರೊಡನೆ ನಡೆಸಿದ ಸಂಭಾಷಣೆಗಳನ್ನೆಲ್ಲ ತಿಳಿಸಿದ. ಆತ ಅವರಿಗೆ ಹೇಳಿದ: “ಇಂದು ಡಾಕ್ಟರ್ ನನಗೆ ದಿಗ್ಭ್ರಮೆ ಹಿಡಿಸಿಬಿಟ್ಟ.”
ಶ್ರೀರಾಮಕೃಷ್ಣರು: “ಏನು ಸಮಾಚಾರ?”
ಮಾಸ್ಟರ್: “ಡಾಕ್ಟರ ಅಹಂಕಾರವನ್ನು ಪೋಷಿಸಲು ನೀವಾಗಿಯೇ ನಿಮಗೆ ಈ ರೋಗವನ್ನು ಬರಿಸಿಕೊಂಡಿದ್ದೀರಿ ಎಂಬುದಾಗಿ ನಿನ್ನೆ ಇಲ್ಲಿ ನಡೆದ ಮಾತನ್ನು ಆತ ಮನಸ್ಸಿಗೆ ಹಚ್ಚಿಕೊಂಡು ಹೋಗಿದ್ದಾನೆ.”
ಶ್ರೀರಾಮಕೃಷ್ಣರು: “ಹಾಗೆಂದು ಹೇಳಿದವರಾರು?”
ಮಾಸ್ಟರ್: “ಮಹಿಮಚರಣ.”
ಶ್ರೀರಾಮಕೃಷ್ಣರು: “ಅದಕ್ಕೆ ಡಾಕ್ಟರ್ ಏನು ಹೇಳಿದ?”
ಮಾಸ್ಟರ್: “ಮಹಿಮಚರಣನನ್ನು ‘ತಮೋಗುಣ ಭಗವಂತ’ ಅಂತ ವರ್ಣನೆ ಮಾಡಿದ. ಈಗ ಆತ ಭಗವಂತನಲ್ಲಿ ಸತ್ತ್ವ, ರಜಸ್ಸು, ತಮಸ್ಸು–ಈ ಮೂರು ಗುಣಗಳೂ ಇವೆ ಅಂತ ಹೇಳುತ್ತಿದ್ದಾನೆ. (ಪರಮಹಂಸರು ನಗುತ್ತಿದ್ದಾರೆ.) ಮತ್ತೆ ಹೇಳಿದ, ‘ನನಗೆ ರಾತ್ರಿ ಮೂರು ಘಂಟೆಗೆ ಎಚ್ಚರವಾಗಿಬಿಟ್ಟು, ಆವಾಗಿನಿಂದ ಪರಮಹಂಸರ ಯೋಚನೆಯೇ ನನ್ನ ತಲೆಯಲ್ಲಿ.’ ನಾನು ಆತನನ್ನು ನೋಡಿದಾಗ ಘಂಟೆ ಎಂಟಾಗಿತ್ತು. ಆಗ ಆತ ಹೇಳಿದ: ‘ಈಗಲೂ ನನ್ನ ತಲೆಯಲ್ಲಿ ಕೇವಲ ಪರಮಹಂಸರ ಭಾವನೆಯೇ ನರ್ತನಮಾಡುತ್ತಿದೆ.”’
ಶ್ರೀರಾಮಕೃಷ್ಣರು (ನಗುತ್ತ): “ನೋಡು, ಆತ ಇಂಗ್ಲಿಷು ಓದಿದವ, ನಾನಾಗಿಯೇ ಆತನಿಗೆ ನನ್ನ ಮೇಲೆ ಧ್ಯಾನಮಾಡು ಅಂತ ಹೇಳಲಾಗುವುದಿಲ್ಲ; ಅದನ್ನು ಆತ ತಾನಾಗಿಯೇ ಮಾಡುತ್ತಿದ್ದಾನೆ.”
ಮಾಸ್ಟರ್: “ಆತ ಮತ್ತೆ ನಿಮ್ಮ ಸಂಬಂಧವಾಗಿ ಹೇಳಿದ: ‘ಮಾನವ ವ್ಯಕ್ತಿಯೆಂಬ ದೃಷ್ಟಿಯಿಂದ ನಾನು ಅವರನ್ನು ಬಹಳವಾಗಿ ಗೌರವಿಸುತ್ತೇನೆ.”’
ಶ್ರೀರಾಮಕೃಷ್ಣರು: “ಬೇರೆ ಏನಾದರೂ ಮಾತು ನಡೆಯಿತೇನು?”
ಮಾಸ್ಟರ್: “ನಾನು ಆತನನ್ನು ಕೇಳಿದೆ: ‘ಈ ದಿನದ ಔಷಧದ ವ್ಯವಸ್ಥೆ ಏನು?’ ಆತ ಹೇಳಿದ: ‘ಇನ್ನು ಬೇರೆ ಏನು ವ್ಯವಸ್ಥೆ-ತಲೆಕಾಯಿ! ಇಂದು ನಾನೇ ಅಲ್ಲಿಗೆ ಹೋಗಬೇಕು. ಅದೇ ವ್ಯವಸ್ಥೆ.’ (ಪರಮಹಂಸರು ನಗುತ್ತಿದ್ದಾರೆ). ಮತ್ತೆ ಹೇಳಿದ: ‘ನಿಮಗೆ ಗೊತ್ತಿಲ್ಲ. ನನಗೆಷ್ಟೊಂದು ದುಡ್ಡು ನಷ್ಟವಾಗುತ್ತಿದೆ ಅಂತ. ದಿವಸವೂ ಎರಡು ಮೂರು ಕರೆಗಳಿಗೆ ಹೋಗಿಬರಲು ಸಮಯವೇ ದೊರೆಯುತ್ತಿಲ್ಲ.”’
ಕೊಠಡಿಯಲ್ಲಿ ನರೇಂದ್ರ ಮತ್ತು ಇನ್ನೂ ಅನೇಕ ಮಂದಿ ಭಕ್ತರು ಕುಳಿತಿದ್ದಾರೆ. ವಿಜಯಕೃಷ್ಣ ಗೋಸ್ವಾಮಿ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮ ಮಾಡಿದ. ಆತನೊಡನೆ ಕೆಲವು ಮಂದಿ ಬ್ರಾಹ್ಮಭಕ್ತರು ಬಂದಿದ್ದಾರೆ. ಆತ ಅನೇಕ ಕಾಲ ಢಾಕಾದಲ್ಲಿ ಇದ್ದ. ಈಗತಾನೆ ಅನೇಕ ಉತ್ತರಭಾರತದ ತೀರ್ಥಸ್ಥಾನಗಳಿಗೆಲ್ಲ ಹೋಗಿ ಹಿಂತಿರುಗಿ ಬಂದಿದ್ದಾನೆ.
ಮಹಿಮಚರಣ (ವಿಜಯನಿಗೆ): “ನೀವು ತೀರ್ಥಯಾತ್ರೆಗೆ ಹೋಗಿ ಅನೇಕ ಸ್ಥಳಗಳನ್ನು ನೋಡಿಬಂದಿದ್ದೀರಿ. ಅಲ್ಲೆಲ್ಲ ವಿಶೇಷವಾಗಿ ಏನು ನೋಡಿದಿರಿ ಎಂಬುದನ್ನು ದಯವಿಟ್ಟು ತಿಳಿಸಿ.”
ವಿಜಯ: “ಬೇರೆ ವಿಶೇಷವೇನಿದೆ? ಈಗ ನಾವು ಕುಳಿತಿರುವ ಸ್ಥಳದಲ್ಲೇ ಎಲ್ಲಾ ಇದೆ. ಅಲೆಯುವುದು ಬರಿದೆ ವ್ಯರ್ಥ. ಕೆಲ ಜಾಗದಲ್ಲಿ ಈ ಜಾಗದ ಒಂದಾಣೆ ಅಥವಾ ಎರಡಾಣೆ ಭಾಗದ ವ್ಯಕ್ತತೆ. ಇನ್ನೂ ಬೇರೆ ಜಾಗದಲ್ಲಿ ಬಹು ಹೆಚ್ಚೆಂದರೆ ನಾಲ್ಕು ಆಣೆ ಭಾಗದ ವ್ಯಕ್ತತೆ ಮಾತ್ರ. ಕೇವಲ ಇಲ್ಲೇ ಹದಿನಾರಾಣೆ ಭಾಗದ ವ್ಯಕ್ತತೆ.”
ಮಹಿಮಚರಣ: “ಸರಿಯಾಗಿ ಹೇಳಿದಿರಿ. ನಮ್ಮನ್ನು ಸುತ್ತುವಂತೆ ಮಾಡುವವರು ಮತ್ತು ಒಂದೇ ಕಡೆ ಇರುವಂತೆ ಮಾಡುವವರು ಎಲ್ಲಾ ಇವರೇ (ಪರಮಹಂಸರು).”
ಶ್ರೀರಾಮಕೃಷ್ಣರು (ನರೇಂದ್ರನಿಗೆ): “ನೋಡು, ವಿಜಯನ ಮನಸ್ಸು ಯಾವ ರೀತಿಯಾಗಿ ಪರಿವರ್ತನೆಹೊಂದಿಬಿಟ್ಟಿದೆ. ಈಗ ಆತ ಒಬ್ಬ ತೀರ ಹೊಸ ಮನುಷ್ಯನಾಗಿ ಬಿಟ್ಟಿದ್ದಾನೆ. ಕಾಯಿಸಿ ಸಂಪೂರ್ಣವಾಗಿ ನೀರನ್ನು ಇಂಗಿಸಿರುವ ಗಟ್ಟಿ ಹಾಲಿನಂತಾಗಿದ್ದಾನೆ, ಮನುಷ್ಯನ ಕತ್ತು ಮತ್ತು ಹಣೆ ನೋಡಿ, ಆತ ಪರಮಹಂಸ ಹೌದೊ ಆಲ್ಲವೊ ಎಂಬುದನ್ನು ಹೇಳಿಬಿಡಬಲ್ಲೆ.”
ಮಹಿಮಚರಣ (ವಿಜಯನಿಗೆ): “ಮಹಾಶಯರೆ, ಈಗ ನಿಮ್ಮ ಆಹಾರ ಕಡಿಮೆಯಾಗಿಬಿಟ್ಟಿದೆ ಅಂತ ಕಾಣುತ್ತದೆ, ಅಲ್ಲವೇನು?”
ವಿಜಯ: “ಹೌದು, ನನಗೂ ಹಾಗೇ ಕಾಣುತ್ತಿದೆ. (ಪರಮಹಂಸರಿಗೆ) ನಿಮ್ಮ ರೋಗದ ವಿಷಯ ಕೇಳಿ ನಿಮ್ಮನ್ನು ನೋಡಲು ಬಂದೆ. ಮತ್ತೆ ಢಾಕಾದಲ್ಲಿ–”
ಶ್ರೀರಾಮಕೃಷ್ಣರು: “ಢಾಕಾದಲ್ಲಿ ಏನು?”
ವಿಜಯ ಯಾವ ಉತ್ತರವನ್ನೂ ಕೊಡಲಿಲ್ಲ. ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದ.
ವಿಜಯ: “ತೋರಿಸಿಕೊಳ್ಳದಿದ್ದರೆ ಹಿಡಿಯುವುದು ಕಷ್ಟ. ಇಲ್ಲೇ ಹದಿನಾರಾಣೆ ವ್ಯಕ್ತತೆ.”
ಶ್ರೀರಾಮಕೃಷ್ಣರು: “ಕೇದಾರನೂ ಹೇಳಿದ, ‘ಬೇರೆ ಜಾಗಗಳಿಗೆ ಹೋದರೆ ತಿನ್ನುವುದಕ್ಕೆ ಏನೂ ಸಿಗದು, ಆದರೆ ಇಲ್ಲಿಗೆ ಬಂದರೆ ಹೊಟ್ಟೆತುಂಬ ದೊರೆಯುತ್ತದೆ’ ಅಂತ.”
ಮಹಿಮಚರಣ: “ಹೊಟ್ಟೆತುಂಬ ಮಾತ್ರವೇ ಏಕೆ, ಹೊಟ್ಟೆ ಒಡೆಯುವ ಹಾಗೆ.”
ವಿಜಯ ಕೈಮುಗಿದುಕೊಂಡು (ಪರಮಹಂಸರಿಗೆ): “ತಾವು ಯಾರು ಎಂಬುದನ್ನು ಅರಿತಿದ್ದೇನೆ. ಅದನ್ನು ಇನ್ನೇನು ತಾವು ವ್ಯಕ್ತಪಡಿಸಬೇಕಾಗಿಲ್ಲ.”
ಶ್ರೀರಾಮಕೃಷ್ಣರು (ಭಾವಸ್ಥರಾಗಿ): “ಅದು ಹಾಗಿದ್ದರೆ, ಹಾಗೇ ಆಗಲಿ.”
ವಿಜಯ ಹೇಳಿದ, “ಅರಿತುಕೊಂಡಿದ್ದೇನೆ” ಅಂತ. ಹೀಗೆಂದು ಹೇಳಿಪರಮಹಂಸರಿಗೆ ಸಾಷ್ಟಾಂಗ ಪ್ರಣಾಮಮಾಡಿದ, ಅವರ ಪಾದಗಳನ್ನು ಎತ್ತಿ ತನ್ನ ಎದೆಗೆ ಒತ್ತಿಕೊಂಡ, ಪರಮಹಂಸರು ಭಗವದಾವೇಶದಿಂದ ಬಾಹ್ಯಜ್ಞಾನಶೂನ್ಯರಾಗಿ ಪರದೆ ಮೇಲಿನ ಚಿತ್ರದಂತೆ ಕುಳಿತಿದ್ದಾರೆ. ಈ ಪ್ರೇಮಾವೇಶ, ಈ ಅದ್ಭುತ ದರ್ಶನ ಇವನ್ನು ನೋಡಿ ಅಲ್ಲಿ ಕುಳಿತಿದ್ದ ಭಕ್ತರಲ್ಲಿ ಕೆಲವರು ಪ್ರೇಮಾಶ್ರು ಸುರಿಸುತ್ತಿದ್ದಾರೆ, ಇನ್ನು ಕೆಲವರು ಸ್ತೋತ್ರಪಠನ ಮಾಡಲಾರಂಭಿಸಿದ್ದಾರೆ. ಯಾರಾರ ಭಾವ ಯಾವುದೊ ಆಯಾಯ ಭಾವದಿಂದ ಅವರವರು ಪರಮಹಂಸರನ್ನು ದೃಷ್ಟಿಸಿ ನೋಡುತ್ತಿದ್ದಾರೆ. ಕೆಲವರು ಅವರನ್ನು ಸಾಧು ಎಂದು, ಇನ್ನು ಕೆಲವರು ಪರಮಭಕ್ತ ಎಂದು, ಮತ್ತೆ ಕೆಲವರು ಸಾಕ್ಷಾತ್ ಭಗವಂತನೇ ಇವರ ದೇಹ ಧರಿಸಿ ಬಂದಿದ್ದಾನೆ ಎಂದು, ಹೀಗೆ ಅವರವರ ಭಾವಗಳಿಗನ್ನುಗುಣವಾಗಿ ಅವರನ್ನು ಅವಲೋಕಿಸುತ್ತಿದ್ದಾರೆ.
ಮಹಿಮಚರಣ ಪ್ರೇಮಾಶ್ರುನಯನನಾಗಿ ಹಾಡಲಾರಂಭಿಸಿದ, “ನೋಡು, ನೋಡು, ಈ ಪ್ರೇಮಮೂರ್ತಿಯ!” ಅಂತ.
ಆಗಾಗ ಬ್ರಹ್ಮದರ್ಶನ ಮಾಡುತ್ತಿರುವವನೊ ಏನೋ ಎಂಬಂತೆ ಸ್ತೋತ್ರ ಪಠಿಸುತ್ತಿದ್ದಾನೆ!
ತುರೀಯಂ ಸಚ್ಚಿದಾನಂದಂ ದ್ವೈತಾದ್ವೈತವಿವರ್ಜಿತಮ್ ॥
ನವಗೋಪಾಲ ಪ್ರೇಮಾಶ್ರು ಸುರಿಸುತ್ತಿದ್ದಾನೆ. ಭೂಪತಿ ಹಾಡಲಾರಂಭಿಸಿದ್ದಾನೆ:
ಜಯ ಜಯ ಪರಬ್ರಹ್ಮ
ನೀನಪಾರ ಮೇಣಗಮ್ಯ
ಪರಾತ್ಪರನೆ ಸಾರಭೂತನೇ.
ಸತ್ಯದ ಹೊಂಬೆಳಗು ನೀನು
ಪ್ರೇಮರಸದ ಬುಗ್ಗೆ ನೀನು
ಶುಭ ಮಂಗಳ ರೂಪನೇ.
ನಾನಾರಸ ಗಂಭೀರ ಭಾವ
ಪೂರ್ಣವಾದ ವಿಶ್ವಕವನ
ಶೋಭಿಸುತಿದೆ ನಿತ್ಯವೂ!
ಮಹಾಕವಿ ನೀನಾದಿಶಕ್ತಿ
ನಿನ್ನ ಬಗೆಯ ಚಂದದಲ್ಲಿ
ರವಿಶಶಿಗಳು ಮೂಡಿ ಚಲಿಸಿ
ಮುಳುಗುತಿಹವು ನಿನ್ನಲಿ!
ಕನಕ ರುಚಿಯ ತಾರೆಗಳಲಿ
ನಿನ್ನ ಮಹಿಮೆಯನ್ನು ಬರೆವೆ
ನೀಲಾಂಬರ ಪಟದಲಿ!
ಷಡ್ ಋತುಗಳ ಸಂವತ್ಸರ
ಜಯಗಾಥೆಯ ಮೊಳಗಿಸುತ್ತ
ನಿನ್ನ ಸುತ್ತ ನಲಿದಿದೆ.
ಹೂವುಗಳು ನಿನ್ನ ಕಾಂತಿ
ಸಲಿಲಗಳಲೆ ನಿನ್ನ ಶಾಂತಿ
ಘನರವದಲಿ ನಿನ್ನ ನಿಯತಿ
ಜಗಕೆಲ್ಲವು ಮೊಳಗಿದೆ!
ನಿನ್ನ ಸತ್ತ್ವ ಅತಿ ಅಗಾಧ
ಅದನು ತಿಳಿವೆನೆಂತು ಮೂಢ!
ಕೋಟಿ ಸೂರ್ಯ ಕೋಟಿ ಚಂದ್ರ
ಯುಗಯುಗಗಳ ಮೊದಲಿನಿಂದ
ನಿನ್ನಸೀಮ ಪದತಲದಲಿ
ಬೆರಗಾಗುತ ಬಾಗಿವೆ!
ಈ ಮಹಿಮೆಯ ಕಂಡ ಜನದ
ಕಂಗಳೆಲ್ಲ ಆನಂದದ
ಕಂಬನಿಯನು ಕರೆದಿವೆ!
ದೇವ ದೇವ ನಮಿಪೆ ಪ್ರಭೂ,
ಭಕ್ತಿಯ ಕೊಡು; ಪ್ರೇಮವ ಕೊಡು;
ಅರಿವನು ಕೊಡು; ಶಾಂತಿಯ ಕೊಡು;
ಇದೊ ಪ್ರಣಾಮ, ಓ ವಿಭೂ!
ಭೂಪತಿ ಮತ್ತೆ ಹಾಡುತ್ತಿದ್ದಾನೆ:
ಚಿದಾನಂದ ಸಿಂಧುವಿನಲಿ ಪ್ರೇಮಾನಂದದಲೆಗಳು
ಮಹಾಭಾವ ರಾಸಲೀಲೆ ಮಾಧುರ್ಯದೊಳಾಡಿವೆ!….
ಈಗ ಆತ ಮೂರನೆ ಹಾಡನ್ನು ಹಾಡುತ್ತಿದ್ದಾನೆ:
ಧರ್ಮ ಕರ್ಮ ನೀತಿ ಭೀತಿ ಜಾತಿಯೆಲ್ಲ
ಹರಿಯಿತೋ
ಅಹಂಕಾರ ಕುಲಮದಗಳು ಮುರಿಯಿತೊ,
ಎಲ್ಲಿರುವೆನೊ ನಾನು ಈಗ? ನೀನೆಲ್ಲಿಹೆ ಶ್ರೀಹರೀ,
ನನ್ನ ಎದೆಯ ಕದ್ದೆ ನೀನು, ನಡುದಾರಿಯೊಳೆನ್ನ ನೀನು
ಕೈಬಿಡುವರೆ ಈ ಪರಿ?
ಎಂಥ ಮರುಳ ನಾನು ಬಂದೆ ಪ್ರೇಮಜಲಧಿ ತಟದಲಿ
ಎದೆಯೊಳಗೇ ತುಳುಕುತಿರಲು ನಿನ್ನ ಪ್ರೇಮಮಾಧುರೀ!
ಪ್ರೇಮದಾಸನೊರೆವನಿಂತು; ನೀವೆಲ್ಲರು ಕೇಳಿರಿ
ನಿಜಕು ಇದೇ ದಿವದ ಹಾದಿ, ನೀವೆಲ್ಲರು ನಡೆಯಿರಿ!
ಬಹಳ ಹೊತ್ತಾದ ಮೇಲೆ ಪರಮಹಂಸರು ಪ್ರಕೃತಿಸ್ಥರಾದರು.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ನನಗೆ ಭಾವಾವೇಶ ಬಂದಾಗ ಏನೋ ಒಂದು ಆಗಿ ಬಿಡುತ್ತದೆ. ಈಗ ಅದಕ್ಕಾಗಿ ನಾಚಿಕೆಯಾಗುತ್ತಿದೆ. ಆಗ ನನ್ನನ್ನು ಒಂದು ಭೂತ ಮೆಟ್ಟಿ ಕೊಂಡಂತಾಗುತ್ತದೆ. ಆಗ ನಾನು ನಾನಾಗಿರುವುದಿಲ್ಲ. ಆ ಅವಸ್ಥೆಯಿಂದ ಕೆಳಗಿಳಿಯುವಾಗ ಸಂಖ್ಯೆಗಳನ್ನು ಸರಿಯಾಗಿ ಎಣಿಸುವುದಕ್ಕೆ ಆಗುವುದಿಲ್ಲ. ಎಣಿಸಲು ಪ್ರಯತ್ನಪಟ್ಟರೆ, ‘ಒಂದು, ಏಳು, ಎಂಟು’ ಈ ರೀತಿಯಾದ ಎಣಿಕೆ ಮನಸ್ಸಿಗೆ ಹೊಳೆಯುತ್ತದೆ.”
ನರೇಂದ್ರ; “ಹೇಗೆ ಎಣಿಸಿದರೆ ತಾನೆ ಏನು, ಇರುವುದು ಒಂದೇ ಒಂದು ತಾನೆ.”
ಶ್ರೀರಾಮಕೃಷ್ಣರು: “ಇಲ್ಲ, ಅದು ಒಂದು ಎರಡಕ್ಕೆ ಅತೀತವಾದದ್ದು.”
ಮಹಿಮಚರಣ: “ಹೌದು ನಿಜ. ಅದು ದ್ವೈತಾದ್ವೈತವಿವರ್ಜಿತವಾದ್ದು.”
ಶ್ರೀರಾಮಕೃಷ್ಣರು: “ಅಲ್ಲಿ ವಿಚಾರ ಒಣಗಿ ಸುಂಡುಹೋಗಿ ಬಿಡುತ್ತದೆ. ಪಾಂಡಿತ್ಯದಿಂದ ಭಗವಂತನನ್ನು ಪಡೆಯಲಾಗುವುದಿಲ್ಲ. ಆತ ವೇದ ಪುರಾಣ ತಂತ್ರ, ಈ ಎಲ್ಲ ಶಾಸ್ತ್ರಗಳಿಗೂ ಅತೀತ. ಯಾರೇ ಆಗಲಿ, ಬ್ರಹ್ಮಜ್ಞಾನಿಯಾಗಿದ್ದರೂ ಆತನ ಕೈಯಲ್ಲೇನಾದರೂ ಪುಸ್ತಕ ಒಂದಾದರೂ ಇದ್ದರೂ ಸರಿಯೆ ನಾನು ಆತನನ್ನು ರಾಜರ್ಷಿ ಅಂತ ಕರೆಯುತ್ತೇನೆ. ಆದರೆ ಬ್ರಹ್ಮರ್ಷಿಗಳಲ್ಲಿ ಯಾವ ಬಾಹ್ಯಚಿಹ್ನೆಗಳೂ ಇರವು.
“ಶಾಸ್ತ್ರಗಳ ಉಪಯೋಗವೇನು ಎಂಬುದು ಗೊತ್ತೆ? ಒಬ್ಬ ತನ್ನ ಮಿತ್ರನಿಗೆ ಬರೆದಿದ್ದ, ‘ಐದು ಸೇರು ಸಂದೇಶ (ಸಿಹಿ ತಿಂಡಿ), ಒಂದು ಪಂಚೆ ಇವನ್ನು ಕೊಂಡು ಕಳುಹಿಸು’ ಅಂತ. ಪತ್ರ ಬಂದೊಡನೆಯೇ ಆ ಮಿತ್ರ ಅದನ್ನು ಓದಿ ಸಂದೇಶ ಮತ್ತು ಪಂಚೆಯ ವಿಷಯವನ್ನು ಜ್ಞಾಪಕದಲ್ಲಿಟ್ಟುಕೊಂಡು ಆ ಪತ್ರವನ್ನು ಕಸದ ಬುಟ್ಟಿಗೆ ಬಿಸಾಡಿದ. ಇನ್ನು ಮೇಲೆ ಪತ್ರದ ಆವಶ್ಯಕತೆಯೇನಿದೆ?”
ವಿಜಯ: “ನನಗೆ ಗೊತ್ತಾಗಿಬಿಟ್ಟಿತು, ಆಗಲೆ ಸಂದೇಶವನ್ನು ಕಳುಹಿಸಿಬಿಟ್ಟಿದ್ದಾಗಿದೆ ಎಂಬುದು.”
ಶ್ರೀರಾಮಕೃಷ್ಣರು: “ಭಗವಂತ ಮಾನವ ದೇಹಧಾರಣೆ ಮಾಡಿಕೊಂಡು ಅವತರಿಸುತ್ತಾನೆ. ಆತ ಎಲ್ಲಾ ಸ್ಥಳಗಳಲ್ಲಿಯೂ, ಎಲ್ಲಾ ಭೂತಗಳಲ್ಲಿಯೂ ಇರುವುದೇನೋ ನಿಜ. ಆದರೆ ಆತ ಮಾನವ ದೇಹಧಾರಣೆ ಮಾಡಿಕೊಂಡು ಬಾರದಿದ್ದರೆ ಜೀವರ ಆಕಾಂಕ್ಷೆ ಪೂರ್ಣವಾಗದು; ಆವಶ್ಯಕತೆಗಳು ದೊರಕವು. ಇದು ಹೇಗೆ ಗೊತ್ತೆ? ಹಸುವಿನ ಯಾವ ಭಾಗ ಮುಟ್ಟಿದರೂ ಅದನ್ನು ಮುಟ್ಟಿದ ಹಾಗೇ ಆಗುತ್ತದೆ. ಆದರೆ ಹಾಲು ಬರುವುದು ಅದರ ಕೆಚ್ಚಲಿನಿಂದ ಮಾತ್ರವೇ.” (ಎಲ್ಲರೂ ನಗುತ್ತಿದ್ದಾರೆ.)
ಮಹಿಮಚರಣ: “ಹಾಲು ಬೇಕಾಗಿದ್ದರೆ ಹಸುವಿನ ಕೊಂಬು ಹಿಡಿದು ಚೀಪಿದರೆ ಏನು ದೊರೆಯುತ್ತದೆ? ಕೆಚ್ಚಲನ್ನು ಚೀಪಬೇಕು.” (ಎಲ್ಲರೂ ನಗುತ್ತಿದ್ದಾರೆ.)
ವಿಜಯ: “ಆದರೆ ಕರು ಹಸುವಿನ ಸಿಕ್ಕಿಸಿಕ್ಕಿದ ಭಾಗವನ್ನೆಲ್ಲ ಚೀಪಲು ಪ್ರಯತ್ನ ಮಾಡುತ್ತದೆಯಲ್ಲ.”
ಶ್ರೀರಾಮಕೃಷ್ಣರು (ನಗುತ್ತ): “ಅದೇನೊ ನಿಜ. ಕರು ಹಾಗೆ ಮಾಡುತ್ತಿರುವುದನ್ನು ನೋಡಿ, ಬಹುಶಃ ಹತ್ತಿರ ನಿಂತಿರುವವರು ಅದರ ಬಾಯಿಗೆ ಕೆಚ್ಚಲನ್ನು ಕೊಡಬಹುದು.” (ಎಲ್ಲರೂ ನಗುತ್ತಿದ್ದಾರೆ.)
ಈ ರೀತಿ ಮಾತುಕತೆಗಳು ನಡೆಯುತ್ತಿದ್ದಾಗ ಡಾಕ್ಟರ್ ಸರ್ಕಾರ ಕೊಠಡಿಯನ್ನು ಪ್ರವೇಶಿಸಿ ಒಂದು ಕಡೆ ಕುಳಿತುಕೊಂಡ. ಈಗ ಆತ ಪರಮಹಂಸರಿಗೆ ಹೇಳುತ್ತಿದ್ದಾನೆ, “ನಿನ್ನೆ ರಾತ್ರಿ ಮೂರು ಘಂಟೆಗೇನೇ ನನಗೆ ಎಚ್ಚರವಾಗಿಬಿಟ್ಟಿತು. ಆವಾಗಿನಿಂದ ನಿಮ್ಮ ಯೋಚನೆಯೇ, ನಿಮಗೆ ಶೀತ ಹಿಡಿದುಬಿಡಬಹುದೊ ಏನೊ ಅಂತ ಭಾವಿಸುತ್ತಿದ್ದೆ. ನಿಮ್ಮ ಸಂಬಂಧವಾಗಿ ಇನ್ನೂ ಏನೇನೊ ಭಾವನೆಗಳು ಬಂದುವು.”
ಶ್ರೀರಾಮಕೃಷ್ಣರು: “ಕೆಮ್ಮಲು ಬಂದುಬಿಟ್ಟಿದೆ, ಗಂಟಲೂ ಹೆಚ್ಚಾಗಿ ಹುಣ್ಣಾಗಿ ಬಿಟ್ಟಿದೆ. ಬೆಳಗಿನ ಜಾವದಿಂದ ನನ್ನ ಬಾಯಿ ನೀರಿನಿಂದ ತುಂಬಿಕೊಳ್ಳುತ್ತದೆ. ನನ್ನ ಶರೀರವೆಲ್ಲ ಸುಮ್ಮನೆ ನೋಯುತ್ತಲೇ ಇದೆ.”
ಡಾಕ್ಟರ್: “ಬೆಳಿಗ್ಗೇನೆ ನಿಮ್ಮ ವೃತ್ತಾಂತವೆಲ್ಲ ನನಗೆ ಬಂತು.”
ಮಹಿಮಚರಣ ತನ್ನ ಭಾರತ ಪ್ರವಾಸದ ವಿಷಯವಾಗಿ ಮಾತಾಡುತ್ತ ಹೇಳಿದ, “ಸಿಂಹಳ ದ್ವೀಪದಲ್ಲಿ ಯಾರೂ ನಗುವುದೇ ಇಲ್ಲ.” ಅದಕ್ಕೆ ಡಾಕ್ಟರ್ ಸರ್ಕಾರ ಹೇಳಿದ, “ಇದ್ದರೂ ಇರಬಹುದು; ಆದರೆ ಅದನ್ನು ವಿಚಾರಿಸಿ ತಿಳಿದುಕೊಳ್ಳಬೇಕಾಗಿದೆ” (ಎಲ್ಲರೂ ನಗುತ್ತಿದ್ದಾರೆ.)
ವೈದ್ಯಕೀಯ ವೃತ್ತಿಯ ಸಂಬಂಧವಾಗಿ ಮಾತುಕತೆ ಆರಂಭವಾಯಿತು.
ಶ್ರೀರಾಮಕೃಷ್ಣರು (ಡಾಕ್ಟರಿಗೆ): “ವೈದ್ಯಕೀಯ ವೃತ್ತಿ ಒಂದು ಉಚ್ಚಮಟ್ಟದ ವೃತ್ತಿ ಅಂತ ಅನೇಕರ ಭಾವನೆ. ಅಂತೂ ಬಿಡಿಕಾಸನ್ನೂ ತೆಗೆದುಕೊಳ್ಳದೆ ಪರರ ದುಃಖಕ್ಕಾಗಿ ಮರುಗಿ ಕನಿಕರ ಹೃದಯದಿಂದ ಯಾರೇ ಆಗಲಿ ಚಿಕಿತ್ಸೆ ಮಾಡುವುದಾದರೆ ಆತ ಬಹಳ ಉತ್ತಮನೆ. ಆತನ ಕಾರ್ಯವೂ ಉತ್ತಮವಾದದ್ದೇ ಆಗುತ್ತದೆ. ಆದರೆ ಹಣ ತೆಗೆದುಕೊಂಡು ಇಂಥ ಕಾರ್ಯಗಳನ್ನೆಲ್ಲ ಮಾಡುವುದಕ್ಕೆ ಹೋದರೆ, ಮನುಷ್ಯ ಕೊನೆಗೆ ನಿರ್ದಯಿಯಾಗಿ ಬಿಡುತ್ತಾನೆ. ವ್ಯಾಪಾರ ಬುದ್ಧಿಯಿಂದ ಕೇವಲ ದುಡ್ಡಿಗಾಗಿಯೇ ಮಲಮೂತ್ರ ಇವನ್ನೆಲ್ಲ ಪರೀಕ್ಷೆ ಮಾಡುವುದು ಒಂದು ನೀಚ ವೃತ್ತಿಯಾಗಿಬಿಡುತ್ತದೆ.”
ಡಾಕ್ಟರ್: “ನೀವು ಹೇಳುವುದು ಸರಿ. ಆ ದೃಷ್ಟಿಯಿಂದ ಕೆಲಸ ಮಾಡಿದರೆ ಅದು ಕೆಟ್ಟದೇನೆ. ಆದರೆ ನಾನು ನಿಮ್ಮ ಎದುರಿಗೆ ಜಂಬಕೊಚ್ಚಿಕೊಳ್ಳಬೇಕೆಂದೇನಲ್ಲ–”
ಶ್ರೀರಾಮಕೃಷ್ಣರು: “ನಿಃಸ್ವಾರ್ಥ ದೃಷ್ಟಿಯಿಂದ ಪರರಿಗೆ ಉಪಕಾರ ಮಾಡುವುದಾದರೆ ವೈದ್ಯಕೀಯ ವೃತ್ತಿ ನಿಜವಾಗಿಯೂ ಬಹಳ ಉತ್ತಮವಾದುದೆ.
“ಸಂಸಾರಿ ಯಾವ ಕೆಲಸದಲ್ಲಿ ಬೇಕಾದರೂ ತೊಡಗಿರಲಿ, ಆತನಿಗೆ ಸಾಧುಸಂಗ ಅತ್ಯಂತ ಆವಶ್ಯಕ. ವ್ಯಕ್ತಿಗೆ ಭಗವಂತನಲ್ಲಿ ಭಕ್ತಿ ಇತ್ತು ಅಂದರೆ, ಆತ ತಾನಾಗಿಯೇ ಸಾಧು ಸಂಗಕ್ಕಾಗಿ ಹುಡುಕಿಕೊಂಡು ಹೋಗುತ್ತಾನೆ. ನಾನು ಬಂಗಿ ಸೇದುವವನನ್ನು ಉದಾಹರಣೆಗಾಗಿ ಕೊಡುವುದುಂಟು. ಬಂಗಿ ಸೇದುವವನಿಗೆ ಬಂಗಿ ಸೇದುವವನನ್ನು ಕಂಡರೆ ಬಹಳ ಇಷ್ಟ. ಬೇರೆಯವರು ಕಣ್ಣಿಗೆ ಬಿದ್ದಾಗ ತಲೆ ತಗ್ಗಿಸಿಕೊಂಡು ಹೋಗಿಬಿಡುತ್ತಾನೆ. ಅಥವಾ ಒಂದು ಮೂಲೆಯಲ್ಲಿ ಮರೆಯಾಗಿದ್ದುಬಿಡುತ್ತಾನೆ; ಆದರೆ ಬಂಗಿ ಸೇದುವವನು ಸಿಕ್ಕಿಬಿಟ್ಟ ಅಂದರೆ ಮಹಾದಾನಂದವಾಗಿಬಿಡುತ್ತದೆ. ಬಹುಶಃ ಅವರು ಒಬ್ಬರನ್ನೊಬ್ಬರು ತಬ್ಬಿ ತಕ್ಕೈಸಿ ಹೊರಳಾಡಬಹುದು. (ಎಲ್ಲರೂ ನಗುತ್ತಾರೆ.) ಉದಾಹರಣೆಗೆ, ರಣಹದ್ದು ರಣಹದ್ದಿನೊಡನೆ ಇರಲು ಇಚ್ಛೆಪಡುತ್ತದೆ.”
ಡಾಕ್ಟರ್: “ಕಾಗೆಗೆ ಹೆದರಿ ರಣಹದ್ದು ತಲೆತಪ್ಪಿಸಿಕೊಳ್ಳುವುದನ್ನು ನಾನು ನೋಡಿದ್ದೇನೆ. ನನ್ನ ದೃಷ್ಟಿಯಿಂದ, ಏಕೆ ಕೇವಲ ಮನುಷ್ಯನಿಗೆ ಮಾತ್ರ, ಎಲ್ಲಾ ಜೀವಜಂತುಗಳಿಗೂ ಸೇವೆ ಮಾಡಬೇಕು. ನಾನು ಅನೇಕ ವೇಳೆ ಗುಬ್ಬಚ್ಚಿಗಳಿಗೆ ಮೈದಾಹಿಟ್ಟನ್ನು ತಿನ್ನಿಸುತ್ತೇನೆ, ಮೈದಾಹಿಟ್ಟನ್ನು ಕಲಸಿ ಚಿಕ್ಕ ಚಿಕ್ಕ ಗೋಲಿಗಳನ್ನಾಗಿ ಮಾಡಿ ಗುಬ್ಬಚ್ಚಿಗಳಿಗೆ ಎಸೆಯುತ್ತೇನೆ. ಅವು ಹಿಂಡುಹಿಂಡಾಗಿ ಬಂದು ಅವನ್ನು ತಿನ್ನುತ್ತವೆ.”
ಶ್ರೀರಾಮಕೃಷ್ಣರು: “ಭೇಷ್! ಬಹಳ ಒಳ್ಳೆಯ ಕೆಲಸ. ಜೀವಕ್ಕೆ ಆಹಾರ ಕೊಡುವುದು ಸಾಧುಗಳ ಕೆಲಸ. ಅವರು ಇರುವೆ ಗೂಡಿನ ಸುತ್ತ ಸಕ್ಕರೆ ಸುರಿಯುತ್ತಾರೆ.”
ಡಾಕ್ಟರ್: “ಈ ದಿನ ಭಜನೆ ಏನೂ ಇಲ್ಲವೇನು?”
ಶ್ರೀರಾಮಕೃಷ್ಣರು (ನರೇಂದ್ರನಿಗೆ): “ಏಕೆ ನೀನು ಒಂದು ಸ್ವಲ್ಪ ಹೊತ್ತು ಹಾಡಬಾರದು?”
ನರೇಂದ್ರ ತಂಬೂರಿ ಮತ್ತು ಇತರ ಪಕ್ಕವಾದ್ಯಗಳೊಡನೆ ಹಾಡಲಾರಂಭಿಸಿದ.
ಬಲುಮಧುರವೊ ನಿನ್ನ ಹೆಸರು
ಕಿವಿಗೆ ಸುಧೆಯ ಕರೆವುದು!…..
ನರೇಂದ್ರ ಮತ್ತೆ ಹಾಡಿದ:
ನನ್ನನೂ ಉನ್ಮತ್ತನಾಗಿಸೆಲೆ ತಾಯೆ,
ನಿನ್ನ ಭಕ್ತಿಯ ಮಧುರ ಮಧುಪಾನದಿಂದ!
ಹಾಡುವುದು ಮುಗಿದನಂತರ ಒಂದು ಅದ್ಭುತ ದೃಶ್ಯ ಕಾಣಬರುತ್ತಿದೆ. ಎಲ್ಲರೂ ಭಾವೋನ್ಮತ್ತರಾಗಿದ್ದಾರೆ. ಪಂಡಿತ ಪಾಂಡಿತ್ಯಾಭಿಮಾನವನ್ನು ತ್ಯಜಿಸಿ ಎದ್ದು ನಿಂತು ಕೂಗಿಕೊಳ್ಳುತ್ತಾನೆ.
ನನ್ನನ್ನೂ ಉನ್ಮತ್ತನಾಗಿಸೆಲೆ ತಾಯೆ,
ನಿನ್ನ ಭಕ್ತಿಯ ಮಧುರ ಮಧುಪಾನದಿಂದ!
ಪ್ರೇಮೋನ್ಮತ್ತರಾಗಿ ಎದ್ದುನಿಂತವರಲ್ಲಿ ವಿಜಯನೆ ಮೊದಲನೆಯವನು. ಬಳಿಕ ತಮ್ಮ ಪ್ರಾಣಾಂತಿಕ ರೋಗವನ್ನು ಸಂಪೂರ್ಣವಾಗಿ ಮರೆತು ಪರಮಹಂಸರು ಎದ್ದು ನಿಂತಿದ್ದಾರೆ. ಅವರ ಮುಂದೆ ಕುಳಿತಿದ್ದ ಡಾಕ್ಟರನೂ ಎದ್ದು ನಿಂತಿದ್ದಾನೆ. ರೋಗಿಗೂ ಬಾಹ್ಯ ಪ್ರಜ್ಞೆಯಿಲ್ಲ; ಡಾಕ್ಟರಿಗೂ ಬಾಹ್ಯಪ್ರಜ್ಞೆಯಿಲ್ಲ; ಚಿಕ್ಕ ನರೇನ ಭಾವಸಮಾಧಿಸ್ಥನಾಗಿದ್ದಾನೆ. ಲಾಟೂಗೂ ಭಾವಸಮಾಧಿ ಉಂಟಾಗಿದೆ. ಸರ್ಕಾರ ಸೈನ್ಸ್ ಓದಿದ್ದಾನೆ. ಆತ ಆಶ್ಚರ್ಯಚಕಿತನಾಗಿ ಈ ಅದ್ಭುತ ದೃಶ್ಯವನ್ನು ನೋಡುತ್ತಿದ್ದಾನೆ. ನೋಡುತ್ತಾನೆ, ಯಾರಾರಿಗೆ ಭಾವಸಮಾಧಿಯುಂಟಾಗಿದೆಯೊ ಅವರೆಲ್ಲರಿಗೂ ಬಾಹ್ಯಪ್ರಜ್ಞೆ ಎಂಬುದು ಇಲ್ಲ; ಸ್ಥಿರವಾಗಿ ಸ್ತಂಭೀಭೂತರಾಗಿ ಕುಳಿತಿದ್ದಾರೆ. ಭಾವ ಇಳಿಮುಖವಾದ ನಂತರ ಕೆಲವರು ಅಳುತ್ತಿದ್ದಾರೆ, ಕೆಲವರು ನಗುತ್ತಿದ್ದಾರೆ. ಅನೇಕ ಮಂದಿ ಕುಡುಕರು, ಒಂದು ಕಡೆ ಏಕತ್ರವಾಗಿದ್ದಾರೊ ಏನೊ ಎಂಬಂತಿತ್ತು.
ಸ್ವಲ್ಪ ಹೊತ್ತಾದನಂತರ ಪರಮಹಂಸರು ಮಾತುಕತೆಗಳಾಡಲು ಆರಂಭಿಸಿದ್ದಾರೆ. ಭಕ್ತರು ಅವರ ಸುತ್ತಲೂ ಕುಳಿತಿದ್ದಾರೆ. ಘಂಟೆ ರಾತ್ರಿ ಎಂಟು.
ಶ್ರೀರಾಮಕೃಷ್ಣರು (ಡಾಕ್ಟರಿಗೆ): “ಈಗತಾನೆ ನೀನು ನೋಡಿದ ಭಾವದ ಸಂಬಂಧವಾಗಿ ನಿನ್ನ ಸೈನ್ಸ್ ಏನು ಹೇಳುತ್ತದೆ? ಇದೆಲ್ಲ ಬರೀ ಬೂಟಾಟಿಕೆ ಅಂತ ನಿನಗೆ ಬೋಧೆಯಾಗುತ್ತಿದೆಯೇನು?”
ಡಾಕ್ಟರ್ (ಶ್ರೀರಾಮಕೃಷ್ಣರಿಗೆ): “ಇಷ್ಟೊಂದು ಜನ ಅದನ್ನು ಅನುಭವಿಸಿರುವಾಗ ಅದು ಸ್ವಾಭಾವಿಕವಾದುದೇ ಆಗಿರಬೇಕೆ ವಿನಾ ಬೂಟಾಟಿಕೆಯದಲ್ಲ. (ನರೇಂದ್ರನಿಗೆ) ನೀನು ಈ ಚರಣಗಳನ್ನು ಹಾಡಿದಾಗ ನನ್ನ ಕೈಯಲ್ಲಿ ಸುಮ್ಮನೆ ಕುಳಿತಿರಲಾಗಲಿಲ್ಲ:
ನನ್ನನೂ ಉನ್ಮತ್ತನಾಗಿಸೆಲೆ ತಾಯೆ,
ನಿನ್ನ ಭಕ್ತಿಯ ಮಧುರ ಮಧುಪಾನದಿಂದ!…..
ನಾನೂ ಎದ್ದು ನಿಲ್ಲುವುದರಲ್ಲಿದ್ದೆ. ಬಳಿಕ ಬಹಳ ಕಷ್ಟಪಟ್ಟು ನನ್ನ ಭಾವವನ್ನು ಒಂದು ನಿರೋಧದಲ್ಲಿ ಇಟ್ಟುಕೊಂಡೆ. ನನಗೇ ನಾನು ಹೇಳಿಕೊಂಡೆ, ‘ಆಗದು ನನ್ನ ಭಾವವನ್ನು ನಾನು ಪ್ರದರ್ಶಿಸಿಕೊಳ್ಳಕೂಡದು’ ಅಂತ.”
ಶ್ರೀರಾಮಕೃಷ್ಣರು (ನಗುತ್ತ ಡಾಕ್ಟರಿಗೆ): “ನೀನು ಸುಮೇರುವಿನಂತೆ ಅಚಲ ಮತ್ತು ಸ್ಥಿರ (ಎಲ್ಲರೂ ನಗುತ್ತಾರೆ.) ನೀನು ಗಂಭೀರಾತ್ಮ. ರೂಪಸನಾತನರ ಭಾವದ ಸುಳಿವು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆನೆ ಒಂದು ಚಿಕ್ಕ ಕುಂಟೆಗೆ ಇಳಿಯಿತು ಅಂದರೆ, ನೀರು ಅಲ್ಲೋಲಕಲ್ಲೋಲವಾಗಿ ಎಲ್ಲಾ ಕಡೆಗೂ ಬಂದು ಹೊಡೆಯುತ್ತದೆ. ಆದರೆ ಒಂದೇ ಒಂದು ಆನೆ ದೊಡ್ಡ ಸರೋವರಕ್ಕೆ ಇಳಿಯಿತು ಅಂದರೆ, ನೀರು ಹಾಗಾಗದು; ಅದು ಇಳಿದಿರುವುದೇ ಬಹುಶಃ ಗೊತ್ತಾಗುವುದಿಲ್ಲ. ಒಮ್ಮೆ ರಾಧೆ ಸಖಿಗೆ ಹೇಳಿದಳು: ‘ಗೆಳತಿ, ನೀನು ಕೃಷ್ಣನ ವಿರಹದಿಂದ ಎಷ್ಟೊಂದು ಅಳುತ್ತಿದ್ದೀಯೆ. ಆದರೆ ನೋಡು ನನ್ನ ಹೃದಯವನ್ನು. ಅದು ಎಷ್ಟು ಕಠಿನವಾದುದು! ‘ನನ್ನ ಕಣ್ಣಲ್ಲಿ ಒಂದು ತೊಟ್ಟೂ ನೀರು ಬರುತ್ತಾ ಇಲ್ಲವಲ್ಲ!’ ಆಕೆಯ ಸಖಿ ಬೃಂದೆ ಹೇಳಿದಳು: ನಿನ್ನ ಕಣ್ಣಲ್ಲಿ ನೀರು ಕಾಣಿಸಿಕೊಳ್ಳದಿರುವುದಕ್ಕೆ ಕಾರಣವಿದೆ. ನಿನ್ನ ಹೃದಯದಲ್ಲಿ ಜಾಜ್ವಲ್ಯಮಾನವಾದ ವಿರಹಾಗ್ನಿ ಉರಿಯುತ್ತಿದೆ. ನಿನ್ನ ಕಣ್ಣಲ್ಲಿ ನೀರು ಬರುವುದೇ ತಡ, ಆ ಅಗ್ನಿಯ ತಾಪದಿಂದ ಅದು ಆವಿಯಾಗಿ ಹೋಗಿ ಬಿಡುತ್ತದೆ.”’
ಡಾಕ್ಟರ್: “ಮಾತಿನಲ್ಲಿ ಯಾರೂ ನಿಮ್ಮನ್ನು ಮೀರಿಸಲಾರರು !” (ನಗು.)
ಈಗ ಬೇರೆ ವಿಷಯವಾಗಿ ಮಾತುಕತೆ ಆರಂಭವಾಯಿತು. ಪರಮಹಂಸರು ತಾವು ದಕ್ಷಿಣೇಶ್ವರದಲ್ಲಿ ಅನುಭವಿಸಿದ ಭಾವಗಳ ಸಂಬಂಧವಾಗಿ ಡಾಕ್ಟರಿಗೆ ಹೇಳಲಾರಂಭಿಸಿದರು. ಕಾಮಕ್ರೋಧಾದಿಗಳನ್ನು ಯಾವ ರೀತಿಯಾಗಿ ವಶಮಾಡಿಕೊಳ್ಳಬಹುದು ಎಂಬುದರ ವಿಷಯವಾಗಿಯೂ ತಿಳಿಸಿದರು.
ಡಾಕ್ಟರ್: “ನೀವು ಭಾವಸ್ಥರಾಗಿ ನೆಲದ ಮೇಲೆ ಬಿದ್ದಿದ್ದಾಗ, ಯಾರೊ ದುಷ್ಟ ನಿಮ್ಮನ್ನು ಬೂಟ್ಸ್ಕಾಲಿನಿಂದ ಒದೆದ ಕತೆಯನ್ನು ಕೇಳಿದ್ದೇನೆ.”
ಶ್ರೀರಾಮಕೃಷ್ಣರು: “ಹಾಗೆ ಮಾಡಿದವನು ಕಾಳೀಘಟ್ಟದ ಪೂಜಾರಿ ಚಂದ್ರಹಾಲ ದಾರ ಎಂಬುವನು; ಆಗಾಗ ಮಥುರಬಾಬುವನ್ನು ನೋಡಲು ಬರುತ್ತಿದ್ದ. ಒಂದು ದಿನ ನಾನು ಭಗವದಾವೇಶದಿಂದ ನೆಲದ ಮೇಲೆ ಬಿದ್ದಿದ್ದೆ. ಕೊಠಡಿಯಲ್ಲಿ ಕತ್ತಲೆ. ಮಥುರಬಾಬುವಿನ ಪ್ರೀತಿಗಳಿಸಿಕೊಳ್ಳಲು ನಾನು ಈ ರೀತಿಯಾಗಿ ನಟಿಸುತ್ತಿದ್ದೇನೆ ಅಂತ ಆತ ಭಾವಿಸಿದ. ಆತ ಕೊಠಡಿಯನ್ನು ಪ್ರವೇಶಿಸಿ ತನ್ನ ಬೂಟ್ಸ್ ಕಾಲಿನಿಂದ ನನ್ನನ್ನು ಚೆನ್ನಾಗಿ ಒದ್ದ. ಶರೀರ ನೀಲಿ ಬಣ್ಣ ಕಟ್ಟಿತು. ಆ ಮನೆಯವರೆಲ್ಲ ಅದನ್ನು ಮಥುರಬಾಬುವಿಗೆ ತಿಳಿಸಬೇಕೆಂದಿದ್ದರು. ನಾನು ಬೇಡ ಅಂತ ಹೇಳಿದೆ.”
ಡಾಕ್ಟರ್: “ಇದೂ ಭಗವಂತನ ಇಚ್ಛೆಗನುಸಾರ. ಇದರಿಂದ ನೀವು ಜನರಿಗೆ ತೋರಿಸಿಕೊಟ್ಟಿರಿ ಯಾವ ರೀತಿಯಾಗಿ ಕೋಪವನ್ನು ಗೆಲ್ಲಬೇಕು, ಯಾವ ರೀತಿಯಾಗಿ ಕ್ಷಮೆ ತೋರಿಸಬೇಕು ಎಂಬುದನ್ನು.”
ಈಗ ಭಕ್ತರು ವಿಜಯನೊಡನೆ ಮಾತುಕತೆಗಳಾಡುತ್ತಿದ್ದಾರೆ.
ವಿಜಯ: “ಯಾರೊ ನನ್ನೊಡನೆ ಸತತ ಇರುತ್ತಿರುವಂತೆ ಅನುಭವವಾಗುತ್ತಿದೆ. ದೂರದಲ್ಲಿ ನಡೆಯುವುದನ್ನು ಆತ ನನಗೆ ತಿಳಿಸಿಕೊಟ್ಟುಬಿಡುತ್ತಾನೆ.”
ನರೇಂದ್ರ: “ದೇವದೂತನ ಹಾಗೆ.”
ವಿಜಯ: “ಢಾಕಾದಲ್ಲಿ ಇವರನ್ನು (ಪರಮಹಂಸರನ್ನು) ನೋಡಿದ್ದೇನೆ; ಶರೀರವನ್ನು ಮುಟ್ಟಿ ಕೂಡ.”
ಶ್ರೀರಾಮಕೃಷ್ಣರು (ನಗುತ್ತ): “ಆತ ಬೇರೊಬ್ಬ ಇರಬೇಕು.”
ನರೇಂದ್ರ: “ನಾನೂ ಇವರನ್ನು ಅನೇಕ ವೇಳೆ ನೋಡಿದ್ದೇನೆ. (ವಿಜಯನಿಗೆ) ಆದ್ದರಿಂದ ನಿಮ್ಮ ಮಾತಿನಲ್ಲಿ ನನಗೆ ವಿಶ್ವಾಸವಿಲ್ಲ ಅಂತ ಹೇಳುವ ಬಗೆ ಹೇಗೆ?”