೧೮ನೆ ಅಕ್ಟೋಬರ್ ೧೮೮೫, ವಿಜಯದಶಮಿ, ಭಾನುವಾರ
ಪರಮಹಂಸರ ಗಂಟಲಹುಣ್ಣು ಕ್ಯಾನ್ಸರ್ ಎಂಬುದಾಗಿ ಡಾಕ್ಟರೆಲ್ಲರು ಒಂದು ಖಚಿತ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ. ಅವರಿಗೆ ಬೇಕಾಗುವ ಔಷಧೋಪಚಾರಗಳನ್ನು ದಕ್ಷಿಣೇಶ್ವರಕ್ಕೆ ತಂದೊದಗಿಸುವುದು ಭಕ್ತರಿಗೆ ಕಷ್ಟವಾಗಿ ಕಂಡಿತು. ಆಗಾಗ ಡಾಕ್ಟರುಗಳು ಬಂದು ಅವರನ್ನು ನೋಡಿಹೋಗಬೇಕಾಗಿತ್ತು. ಅವರಿಗೆ ಕಲ್ಕತ್ತದಿಂದ ಇಷ್ಟು ದೂರ ಬಂದು ಪರಮಹಂಸರನ್ನು ನೋಡಿಹೋಗಲು ಅಸಾಧ್ಯವಾಗಿ ಕಂಡುಬಂದಿತು. ದಿವಸವೂ ಅಷ್ಟು ದೂರ ಕಲ್ಕತ್ತದಿಂದ ಬಂದುಹೋಗುವುದು ಭಕ್ತರಿಗೂ ಕಷ್ಟವಾಗಿ ಕಂಡಿತು. ಆ ಕಾರಣದಿಂದ ಭಕ್ತರೆಲ್ಲರೂ ಸೇರಿ ಬಾಗ್ಬಜಾರಿನಲ್ಲಿ ಎರಡು ಅಂತಸ್ತಿನ ಒಂದು ಚಿಕ್ಕ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಪರಮಹಂಸರನ್ನು ಕರೆದುಕೊಂಡು ಬಂದರು. ಪರಮಹಂಸರಿಗೆ ಆ ಮನೆ ಹಿಡಿಸಲಿಲ್ಲ. ಬಲರಾಮನ ಮನೆಗೆ ಹೋಗಿ ಇದ್ದುಬಿಟ್ಟರು. ಕೆಲವು ದಿನಗಳೊಳಗಾಗಿಯೆ ಭಕ್ತರು ಶ್ಯಾಮಪುಕುರ ಎಂಬ ಹೆಸರಿನ ಕಲ್ಕತ್ತದ ಉಪನಗರದಲ್ಲಿ ಒಂದು ಬಾಡಿಗೆ ಮನೆಯನ್ನು ಗೊತ್ತುಮಾಡಿ ಅಲ್ಲಿಗೆ ಪರಮಹಂಸರನ್ನು ಕರೆದುಕೊಂಡು ಬಂದಿದ್ದಾರೆ. ಚಿಕಿತ್ಸೆಗಾಗಿ ಮಹೇಂದ್ರಲಾಲ ಸರ್ಕಾರನನ್ನು ನೇಮಿಸಿದ್ದಾರೆ. ಈ ಕಟ್ಟಡದ ಎರಡನೆ ಅಂತಸ್ತಿನಲ್ಲಿ ಎರಡು ದೊಡ್ಡ ಕೊಠಡಿಗಳು, ಎರಡು ಚಿಕ್ಕ ಕೊಠಡಿಗಳು ಇದ್ದುವು. ದೊಡ್ಡ ಕೊಠಡಿಗಳಲ್ಲೊಂದು ಪರಮಹಂಸರ ಕೊಠಡಿಯಾಯಿತು, ಇನ್ನೊಂದು ಬೈಠಕ್ಖಾನೆಯಾಯಿತು. ಚಿಕ್ಕ ಕೊಠಡಿಗಳಲ್ಲಿ, ಒಂದು ಭಕ್ತರು ಮಲಗುವ ಕೊಠಡಿಯಾಯಿತು. ಇನ್ನೊಂದು ಶಾರದಾದೇವಿಯವರ ಕೊಠಡಿಯಾಯಿತು.ಮೇಲ್ಚಾವಣಿಗೆ ಹೋಗುವ ಹಂತದ ಹತ್ತಿರ ಒಂದು ಚಚ್ಚೌಕ ಒಪ್ಪಾರು ಇತ್ತು. ಇಲ್ಲಿ ಹಗಲು ವೇಳೆ ಶ್ರೀಶಾರದಾದೇವಿಯವರು ಪರಮಹಂಸರಿಗೆ ಅಡುಗೆ ಮಾಡುತ್ತಿದ್ದರು.
ಪ್ರಾತಃಕಾಲ ಎಂಟು. ಚಳಿಗಾಲದ ತಂಗಾಳಿ ಬೀಸುತ್ತಿತ್ತು. ಪರಮಹಂಸರು ತಮ್ಮ ಹಾಸಿಗೆ ಮೇಲೆ ಕುಳಿತಿದ್ದಾರೆ. ತನ್ನ ತಾಯನ್ನಲ್ಲದೆ ಬೇರೆ ಏನನ್ನೂ ಅರಿಯದ ಐದು ವರ್ಷದ ಮಗುವಿನಂತೆ ಕುಳಿತಿದ್ದಾರೆ. ನವಗೋಪಾಲ, ಮಾಸ್ಟರ್, ಇನ್ನೂ ಕೆಲವು ಮಂದಿ ಭಕ್ತರು ಅಲ್ಲಿ ಕುಳಿತಿದ್ದಾರೆ. ಸುರೇಂದ್ರನೂ ಬಂದಿದ್ದಾನೆ. ಆತನ ಮನೆಯಲ್ಲಿ ಕಳೆದ ಮೂರು ದಿನಗಳಿಂದ ದುರ್ಗಾಪೂಜೆ ನಡೆಯುತ್ತಿದೆ. ಪರಮಹಂಸರಿಗೆ ಶರೀರಾರೋಗ್ಯ ಸರಿಯಾಗಿಲ್ಲದೆ ಇರುವುದರಿಂದ ಅವರಿಗೆ ಆತನ ಮನೆಗೆ ಹೋಗಲಾಗಲಿಲ್ಲ. ಅವರು ತಮ್ಮ ಭಕ್ತರನ್ನು ಅಲ್ಲಿಗೆ ಕಳುಹಿಸಿದ್ದರು. ಇಷ್ಟು ದಿನ ಆನಂದದಿಂದ ಪೂಜೆ ಮಾಡಿದ ದುರ್ಗಾಪ್ರತಿಮೆಯನ್ನು ಇಂದು ವಿಸರ್ಜನೆ ಮಾಡಬೇಕಾಗಿರುವುದರಿಂದ ಸುರೇಂದ್ರನ ಮನಸ್ಸಿಗೆ ತುಂಬಾ ವ್ಯಥೆಯಾಗುತ್ತಿದೆ.
ಸುರೇಂದ್ರ: “ಮನೆಯಲ್ಲಿರುವುದಕ್ಕೆ ಆಗದೆ ಇಲ್ಲಿಗೆ ಓಡಿಬಂದುಬಿಟ್ಟೆ.”
ಶ್ರೀರಾಮಕೃಷ್ಣರು: “ಅದಕ್ಕೇಕೆ ವ್ಯಥೆಪಡಬೇಕು? ಆಕೆಯನ್ನು ಹೃದಯದಲ್ಲಿ ಇಟ್ಟುಕೊಂಡರೆ ಆಯಿತಲ್ಲ!”
ಸುರೇಂದ್ರ ದುಃಖಾಕ್ರಾಂತನಾಗಿದ್ದಾನೆ. “ತಾಯಿ! ತಾಯಿ!” ಎಂದು ಅಳುತ್ತ ಆ ಪರಮೇಶ್ವರಿಯ ಸಂಬಂಧವಾಗಿ ಏನೇನೊ ಮಾತನಾಡಿಕೊಳ್ಳುತ್ತಿದ್ದಾನೆ. ಆತನ ವ್ಯಾಕುಲತೆ ಯನ್ನು ನೋಡಿ ಪರಮಹಂಸರೂ ಪ್ರೇಮಾಶ್ರುವನ್ನು ಸುರಿಸುತ್ತಿದ್ದಾರೆ. ಮಾಸ್ಟರ್ ಕಡೆಗೆ ತಿರುಗಿ ಗದ್ಗದ ಸ್ವರದಿಂದ ಹೇಳುತ್ತಿದ್ದಾರೆ: “ಎಂಥ ಭಕ್ತಿ! ಭಗವತಿಯಲ್ಲಿ ಈತನಿಗೆ ಎಷ್ಟೊಂದು ಭಕ್ತಿ!”
ಶ್ರೀರಾಮಕೃಷ್ಣರು (ಸುರೇಂದ್ರನಿಗೆ): “ನಿನ್ನೆ ರಾತ್ರಿ ಸುಮಾರು ಏಳೂವರೆ ಸಮಯದಲ್ಲಿ ನಿನ್ನ ಪೂಜಾಂಗಣವನ್ನು ಭಾವದಲ್ಲಿ ನೋಡಿದೆ. ಪ್ರತಿಮೆ ಜ್ಯೋತಿರ್ಮಯವಾಗಿತ್ತು. ಇಲ್ಲಿಂದ ನಿನ್ನ ಮನೆಯವರೆಗೂ ಒಂದು ಬೆಳಕಿನ ಪ್ರವಾಹ ಹರಿದುನಿಂತಿತ್ತು.”
ಸುರೇಂದ್ರ: “ಆ ಸಮಯದಲ್ಲಿ ನಾನು ಪೂಜಾಂಗಣದಲ್ಲಿ, ‘ತಾಯಿ! ತಾಯಿ’ ಅಂತ ಅಳುತ್ತಿದ್ದೆ. ಹಿರಿಯ ಸೋದರರೆಲ್ಲ ಮೇಲಿನ ಅಂತಸ್ತಿಗೆ ಹೋಗಿಬಿಟ್ಟಿದ್ದರು. ಮನಸ್ಸಿಗೆ ಅನ್ನಿಸಿತು–ಭಗವತಿ ಹೇಳುತ್ತಿದ್ದಾಳೆ, ‘ನಾನು ಮತ್ತೆ ಬರುತ್ತೇನೆ ಅಂತ’ ಎಂಬುದಾಗಿ.”
ಘಂಟೆ ಹನ್ನೊಂದು. ಪರಮಹಂಸರು ಊಟ ಮುಗಿಸಿದ್ದಾರೆ. ಮಾಸ್ಟರ್ ಅವರ ಕೈಗೆ ನೀರು ಹಾಕುತ್ತಿದ್ದಾನೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಕಡಲೆಬೇಳೆ ತಿಂದು ರಾಖಾಲನಿಗೆ ಅಗ್ನಿಮಾಂದ್ಯ ವಾಗಿದೆ. ಆತ ಸಾತ್ತ್ವಿಕ ಆಹಾರವನ್ನು ತೆಗೆದುಕೊಳ್ಳುವುದು ಮೇಲು, ಇದರ ಸಂಬಂಧವಾಗಿ ನೀನು ಗೀತೆಯಲ್ಲಿ ಓದಿಲ್ಲವೇನು? ನೀನು ಗೀತಾಪಾರಾಯಣ ಇಟ್ಟುಕೊಂಡಿಲ್ಲವೇನು?”
ಮಾಸ್ಟರ್: “ಹೌದು, ಇಟ್ಟುಕೊಂಡಿದ್ದೇನೆ. ಅದರಲ್ಲಿ ಯುಕ್ತಾಹಾರದ ವಿಷಯ ಇದೆ. ಸಾತ್ತ್ವಿಕ ಆಹಾರ, ರಾಜಸಿಕ ಆಹಾರ, ತಾಮಸಿಕ ಆಹಾರ; ಸಾತ್ತ್ವಿಕ ದಯೆ, ರಾಜಸಿಕ ದಯೆ, ತಾಮಸಿಕ ದಯೆ; ಸಾತ್ತ್ವಿಕ ಅಹಂ, ರಾಜಸಿಕ ಅಹಂ, ಇವೇ ಮೊದಲಾದವುಗಳ ವಿಷಯವೆಲ್ಲಾ ಅದರಲ್ಲಿ ಇವೆ.”
ಶ್ರೀರಾಮಕೃಷ್ಣರು: “ನಿನ್ನ ಹತ್ತಿರ ಗೀತಾಪ್ರತಿ ಇದೆಯೇನು?”
ಮಾಸ್ಟರ್: “ಹೌದು, ಇದೆ.”
ಶ್ರೀರಾಮಕೃಷ್ಣರು: “ಅದು ಎಲ್ಲಾ ಶಾಸ್ತ್ರಗಳ ಸಾರವನ್ನು ಒಳಗೊಂಡಿದೆ.”
ಮಾಸ್ಟರ್: “ಅದು ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲು ವಿವಿಧ ಮಾರ್ಗಗಳನ್ನು ತೋರಿಸಿಕೊಡುತ್ತದೆ. ನೀವು ಸಹ ಆತನನ್ನು ವಿವಿಧ ಪಥಗಳಿಂದ, ಜ್ಞಾನ, ಭಕ್ತಿ, ಕರ್ಮ, ಧ್ಯಾನ, ಇವುಗಳಿಂದ ಮುಟ್ಟಬಹುದು ಅಂತ ಹೇಳುತ್ತಿದ್ದೀರಲ್ಲ ಹಾಗೆ.”
ಶ್ರೀರಾಮಕೃಷ್ಣರು: “ಕರ್ಮಯೋಗದ ಅರ್ಥ ನಿನಗೆ ಗೊತ್ತೇ? ಸಕಲ ಕರ್ಮಗಳ ಫಲವನ್ನು ಭಗವಂತನಿಗೆ ಅರ್ಪಿಸಿಬಿಡಬೇಕು ಎಂದು.”
ಮಾಸ್ಟರ್: “ಹೌದು, ಹಾಗೆಂದು ಗೀತೆಯಲ್ಲಿ ಓದಿದ್ದೇನೆ. ಅದು ಹೇಳುತ್ತದೆ, ಕರ್ಮಗಳನ್ನು ಮೂರು ವಿಭಾಗವಾಗಿ ಮಾಡಬಹುದು ಎಂಬುದಾಗಿ.”
ಶ್ರೀರಾಮಕೃಷ್ಣರು: “ಯಾವ ಯಾವ ವಿಧವಾಗಿ?”
ಮಾಸ್ಟರ್: “ಮೊದಲನೆಯದು ಬ್ರಹ್ಮಜ್ಞಾನದ ಸಲುವಾಗಿ; ಎರಡನೆಯದು ಲೋಕ ಶಿಕ್ಷಣಾರ್ಥಕ್ಕಾಗಿ; ಮೂರನೆಯದು ತನ್ನ ಸ್ವಭಾವಕ್ಕನುಗುಣವಾಗಿ.”
ಪರಮಹಂಸರು ಬಾಯಿ ತೊಳೆದುಕೊಂಡು ತಾಂಬೂಲ ಹಾಕಿಕೊಳ್ಳುತ್ತಿದ್ದಾರೆ.
ಪರಮಹಂಸರು ಮಾಸ್ಟರೊಡನೆ ಡಾಕ್ಟರ್ ಸರ್ಕಾರನ ಸಂಬಂಧವಾಗಿ ಮಾತುಕತೆ ಯಾಡುತ್ತಿದ್ದಾರೆ. ನಿನ್ನೆ ಪರಮಹಂಸರ ಕ್ಷೇಮಸಮಾಚಾರ ತಿಳಿಸಲು ಡಾಕ್ಟರ್ ಸರ್ಕಾರನ ಮನೆಗೆ ಮಾಸ್ಟರ್ ಹೋಗಿದ್ದ.
ಶ್ರೀರಾಮಕೃಷ್ಣರು: “ನಿನ್ನೊಡನೆ ಏನೇನು ಮಾತಕತೆ ನಡೆಯಿತು?”
ಮಾಸ್ಟರ್: “ಡಾಕ್ಟರನ ಕೊಠಡಿಯಲ್ಲಿ ಅನೇಕ ಪುಸ್ತಕಗಳಿವೆ. ನಾನು ಒಂದು ಪುಸ್ತಕ ತೆಗೆದುಕೊಂಡು ಓದುತ್ತ ಆಗಾಗ ಅದರ ಕೆಲವು ಭಾಗಗಳನ್ನು ಡಾಕ್ಟರ್ ಸರ್ಕಾರನಿಗೆ ಓದಿ ಹೇಳುತ್ತಿದ್ದೆ. ಅದರ ಗ್ರಂಥಕರ್ತ ಸರ್ ಹಂಫ್ರಿಡೇವಿ. ಆತ ಅವತಾರದ ಆವಶ್ಯಕತೆಯ ಸಂಬಂಧವಾಗಿ ಬರೆದಿದ್ದಾನೆ.”
ಶ್ರೀರಾಮಕೃಷ್ಣರು: “ನಿಜವಾಗಿಯೂ! ನೀನು ಏನು ಓದಿ ಹೇಳಿದೆ?”
ಮಾಸ್ಟರ್: “ಅದರಲ್ಲಿ ಒಂದು ಕಡೆ ಹೇಳಿದೆ, ಭಗವದ್ವಾಣಿ ಮಾನವನ ಮೂಲಕ ವ್ಯಕ್ತವಾಗದ ಹೊರತು ಅದು ನಮಗೆ ಅರ್ಥವಾಗುವಂತೆ ಇಲ್ಲ; ಅದಕ್ಕಾಗಿಯೇ ಭಗವಂತನ ಅವತಾರದ ಆವಶ್ಯಕತೆ ಅಂತ.”
ಶ್ರೀರಾಮಕೃಷ್ಣರು: “ಆಹ! ಇದು ಬಹಳ ಒಳ್ಳೆಯ ವಿಷಯ.”
ಮಾಸ್ಟರ್: “ಆತ ಉದಾಹರಣೆಗೆ ಸೂರ್ಯನನ್ನು ತೆಗೆದುಕೊಂಡಿದ್ದಾನೆ. ನಾವು ಆತನನ್ನು ನೇರವಾಗಿ ನೋಡಲಾಗುವುದಿಲ್ಲ. ಆದರೆ ಆತನ ಪ್ರತಿಬಿಂಬದ ಕಡೆ ನೋಡಬಲ್ಲೆವು.”
ಶ್ರೀರಾಮಕೃಷ್ಣರು: “ಬಹಳ ಒಳ್ಳೆಯದು! ಬೇರೇನಾದರು?”
ಮಾಸ್ಟರ್: “ಇನ್ನೊಂದು ಕಡೆ ಬರೆದಿದೆ, ಯಥಾರ್ಥಜ್ಞಾನವೇ ವಿಶ್ವಾಸ ಅಂತ.”
ಶ್ರೀರಾಮಕೃಷ್ಣರು: “ಇದೂ ಬಹಳ ಒಳ್ಳೆಯ ವಿಷಯ. ವಿಶ್ವಾಸ ಹೃದಯದಲ್ಲಿ ಮೂಡಿತು ಎಂದರೆ ಎಲ್ಲಾ ದೊರೆತ ಹಾಗೆಯೇ.”
ಮಾಸ್ಟರ್: “ಗ್ರಂಥಕರ್ತ ತನ್ನ ಸ್ಪಪ್ನದಲ್ಲಿ ರೋಮನ್ನರ ದೇವ ದೇವಿಯರನ್ನು ನೋಡಿದನಂತೆ.”
ಶ್ರೀರಾಮಕೃಷ್ಣರು: “ಈ ತರದ ಪುಸ್ತಕಗಳೂ ಇವೆಯೇನು? ಆತನಿಗೆ ನಿಜವಾಗಿ ಭಗವತ್ಪ್ರೇರಣೆ ಆಗಿರಲೇಬೇಕು. ಇನ್ನು ಬೇರೆ ಏನಾದರೂ ಮಾತುಕತೆಗಳು ನಡೆದುವೇನು?”
ಮಾಸ್ಟರ್: “ಡಾಕ್ಟರ್ ಸರ್ಕಾರ, ಇವರೇ ಮೊದಲಾದವರು ಜಗತ್ತಿಗೆ ಉಪಕಾರ ಮಾಡಬೇಕು ಅಂತ ಹೇಳುವುದುಂಟು. ಅದಕ್ಕಾಗಿ ನಾನು ತಾವು ತಿಳಿಸಿರುವುದನ್ನು ಹೇಳಿದೆ.”
ಶ್ರೀರಾಮಕೃಷ್ಣರು (ನಗುತ್ತ): “ಏನನ್ನು?”
ಮಾಸ್ಟರ್: “ಶಂಭುಮಲ್ಲಿಕನ ವಿಷಯವನ್ನು. ಆತ ನಿಮಗೆ ಹೇಳಿದ್ದ, ‘ನನ್ನ ಹಣ ಖರ್ಚುಮಾಡಿ ಕೆಲವು ಹಾಸ್ಪಿಟಲ್ ಡಿಸ್ಪೆನ್ಸರಿ, ಸ್ಕೂಲು ಇವೇ ಮೊದಲಾದವುಗಳನ್ನು ಕಟ್ಟಿಸಬೇಕು ಎಂದು ಇಚ್ಛೆ ಇದೆ; ಹಾಗೆ ಮಾಡಿದರೆ, ಅನೇಕರಿಗೆ ಉಪಕಾರವಾಗುತ್ತದೆ’ ಅಂತ. ಅದಕ್ಕೆ ನೀವು ಹೇಳುತ್ತಿದ್ದಿರಿ, ‘ಒಂದು ಪಕ್ಷ ಭಗವಂತ ನಿನಗೆ ದರ್ಶನಕೊಟ್ಟರೆ, ಆಗ ನೀನು ಆತನನ್ನು ಕೆಲವು ಡಿಸ್ಪೆನ್ಸರಿ ಹಾಸ್ಪಿಟಲು, ಸ್ಕೂಲು ಇವನ್ನು ಕಟ್ಟಿಸಿಕೊಡು ಅಂತ ಕೇಳಿಕೊಳ್ಳುತ್ತೀಯೇನು?’ ಎಂದು. ಸರ್ಕಾರನಿಗೆ ನಾನು ಇನ್ನೊಂದು ವಿಷಯವನ್ನೂ ತಿಳಿಸಿಬಿಟ್ಟೆ.”
ಶ್ರೀರಾಮಕೃಷ್ಣರು: “ಕರ್ಮಮಾಡಲು ಜನ್ಮವೆತ್ತಿರುವ ಗುಂಪೇ ಬೇರೆ. ಇನ್ನು ಏನು ಹೇಳಿದೆ?”
ಮಾಸ್ಟರ್: “ಡಾಕ್ಟರಿಗೆ ಹೇಳಿದೆ, ‘ಕಾಳೀಮೂರ್ತಿಯ ದರ್ಶನಮಾಡಿ ಬರುವುದು ನಿನ್ನ ಉದ್ದೇಶವಾಗಿದ್ದರೆ, ರಸ್ತೆ ಪಕ್ಕದಲ್ಲಿರುವ ಭಿಕ್ಷುಕರಿಗೆ ಭಿಕ್ಷೆ ನೀಡುವುದರಲ್ಲೇ ನಿನ್ನ ಸಮಯವೆಲ್ಲಾ ಕಳೆದುಹೋಗಿಬಿಟ್ಟರೆ ನಿನ್ನ ಉದ್ದೇಶ ಪೂರ್ಣವಾಗುವ ಬಗೆ ಹೇಗೆ? ಅದಕ್ಕೆ ಬದಲು ಮೊದಲು ಹೇಗೋ ಮಾಡಿ ಕಾಳಿಯ ದರ್ಶನ ಮಾಡಿಕೊಂಡುಬಿಡು. ಬಳಿಕ ಎಷ್ಟು ಹೊತ್ತು ಬೇಕಾದರೂ ಭಿಕ್ಷುಕರಿಗೆ ಭಿಕ್ಷೆ ನೀಡುತ್ತಿರಬಹುದು’ ಎಂದು.”
ಶ್ರೀರಾಮಕೃಷ್ಣರು: “ಮತ್ತೆ ಏನಾದರು?”
ಮಾಸ್ಟರ್: “ನಿಮ್ಮ ಹತ್ತಿರಕ್ಕೆ ಯಾರು ಬರುತ್ತಾ ಇದ್ದಾರೊ ಅವರಲ್ಲಿ ಅನೇಕರು ಕಾಮಜಯಿಗಳು ಅಂತ ತಿಳಿಸಿದೆ. ಅದಕ್ಕೆ ಡಾಕ್ಟರ್ ಹೇಳಿದ, ‘ನನಗೂ ಕಾಮ ಏನಿಲ್ಲ’ ಎಂದು. ನಾನು ಹೇಳಿದೆ: ‘ನೀವು ಉಚ್ಚಶ್ರೇಣಿಯವರು. ನೀವು ಕಾಮಜಯಿಗಳಾಗುವುದರಲ್ಲಿ ವಿಶೇಷತೆಯೇನಿಲ್ಲ. ಆದರೆ ಅವರ ಸಹವಾಸದಿಂದ ಸಾಮಾನ್ಯರೂ ಕಾಮಜಯಿಗಳಾಗಿಬಿಡುತ್ತಿದ್ದಾರಲ್ಲ, ಇದು ಎಷ್ಟು ಮಹತ್ತಾದುದು!’ –ಬಳಿಕ ನೀವು ಗಿರೀಶಘೋಷನಿಗೆ ತಿಳಿಸಿದುದನ್ನು ತಿಳಿಸಿದೆ.”
ಶ್ರೀರಾಮಕೃಷ್ಣರು: “ನಾನು ಏನು ಹೇಳಿದ್ದೆ?”
ಮಾಸ್ಟರ್: “ನೀವು ಗಿರೀಶಘೋಷನಿಗೆ ಹೇಳಿದ್ದೀರಿ, ‘ಡಾಕ್ಟರ್ ಸರ್ಕಾರನಿಗೆ ನಿನ್ನನ್ನು ಮೀರಿಸುವುದಕ್ಕೆ ಆಗಲಿಲ್ಲ’ ಎಂದು–ಅವತಾರದ ಮಾತಿನ ಸಂಬಂಧವಾಗಿ.”
ಶ್ರೀರಾಮಕೃಷ್ಣರು: “ನೀನು ಡಾಕ್ಟರೊಡನೆ ಅವತಾರದ ಸಂಬಂಧವಾಗಿ ಮಾತುಕತೆ ಯಾಡು. ಯಾರು ಪರರನ್ನು ಮುಕ್ತರನ್ನಾಗಿ ಮಾಡುತ್ತಾನೊ ಆತನೇ ಅವತಾರಪುರುಷ. ಅದಕ್ಕಾಗಿಯೇ ಶಾಸ್ತ್ರಗಳು ಹೇಳುತ್ತಿರುವುದು, ಹತ್ತು, ಇಪ್ಪತ್ತನಾಲ್ಕು, ಅಸಂಖ್ಯ ಅವತಾರ ಗಳೂ ಇವೆ ಅಂತ.”
ಮಾಸ್ಟರ್: “ಗಿರೀಶಘೋಷನ ಕ್ಷೇಮಸಮಾಚಾರದ ಸಂಬಂಧವಾಗಿ ಡಾಕ್ಟರು ಬಹಳ ಉತ್ಸುಕನಾಗಿದ್ದಾನೆ. ಗಿರೀಶ ಕುಡಿಯುವುದನ್ನು ಬಿಟ್ಟುಬಿಟ್ಟಿದ್ದಾನೆಯೆ ಅಂತ ಆಗಾಗ ನನ್ನನ್ನು ಕೇಳುತ್ತಲೇ ಇರುತ್ತಾನೆ. ಆತ ಅವನ ಕಡೆಗೆ ಬಹಳ ತೀಕ್ಷ್ಣ ಕಣ್ಣಿಟ್ಟಿದ್ದಾನೆ.”
ಶ್ರೀರಾಮಕೃಷ್ಣರು: “ಈ ಸಮಾಚಾರವನ್ನು ನೀನು ಗಿರೀಶನಿಗೆ ತಿಳಿಸಿದ್ದೀಯೇನು?”
ಮಾಸ್ಟರ್: “ಹೌದು, ತಿಳಿಸಿದ್ದೇನೆ, ಕುಡಿಯುವುದನ್ನು ಬಿಡುವ ವಿಷಯವಾಗಿಯೂ.”
ಶ್ರೀರಾಮಕೃಷ್ಣರು: “ಅದಕ್ಕೆ ಆತ ಏನು ಹೇಳಿದ?”
ಮಾಸ್ಟರ್: “ನೀವೆಲ್ಲರೂ ಹೀಗೆ ಹೇಳುತ್ತಿರುವುದರಿಂದ, ಇದು ಪರಮಹಂಸರ ಆಜ್ಞೆಯೇ ಎಂದು ನಾನು ಭಾವಿಸುತ್ತೇನೆ. ಆದರೆ ಮಾತ್ರ ನಾನು ಯಾವ ವಾಗ್ದಾನವನ್ನೂ ಮಾಡುವುದಿಲ್ಲ.”
ಶ್ರೀರಾಮಕೃಷ್ಣರು (ಆನಂದದಿಂದ): “ಕಾಳೀಪದ ಹೇಳಿದ, ತಾನು ಕುಡಿಯುವುದನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದೇನೆ ಅಂತ.”
ಅಪರಾಹ್ನವಾಗಿದೆ. ಡಾಕ್ಟರ್ ಸರ್ಕಾರ್ ಬಂದಿದ್ದಾನೆ. ಆತನೊಡನೆ ಆತನ ಮಗ ಅಮೃತ ಸರ್ಕಾರ ಮತ್ತು ಬೇರೊಬ್ಬ ಹೇಮ ಎಂಬ ಯುವಕ ಬಂದಿದ್ದಾನೆ. ನರೇಂದ್ರಾದಿ ಭಕ್ತರೂ ಅಲ್ಲಿ ಕುಳಿತಿದ್ದಾರೆ.
ಪರಮಹಂಸರು ಏಕಾಂತವಾಗಿ ಅಮೃತನೊಡನೆ ಮಾತಾಡುತ್ತಿದ್ದಾರೆ. ಅವನನ್ನು ಕೇಳುತ್ತಿದ್ದಾರೆ, “ನೀನು ಧ್ಯಾನಮಾಡುವುದುಂಟೇನು?” ಬಳಿಕ ಆತನಿಗೆ ಹೇಳುತ್ತಿದ್ದಾರೆ: “ಧ್ಯಾನಾವಸ್ಥೆಯಲ್ಲಿ ಏನು ಅನುಭವವಾಗುತ್ತದೆ ಎಂಬುದು ನಿನಗೆ ಗೊತ್ತೆ? ಮನಸ್ಸು ತೈಲಧಾರೆಯಂತೆ ಇರುತ್ತದೆ. ಆಗ ಅದರಲ್ಲಿ ಕೇವಲ ಒಂದೇ ಒಂದು ಭಾವನೆ–ಭಗವದ್ಭಾವನೆ — ಹೊರತು ಬೇರೆ ಏನೂ ಏಳದು.”
ಈಗ ಪರಮಹಂಸರು ಭಕ್ತರೊಡನೆ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು (ಡಾಕ್ಟರಿಗೆ): “ನಿನ್ನ ಮಗನಿಗೆ ಭಗವಂತನ ಅವತಾರದಲ್ಲಿ ವಿಶ್ವಾಸವಿಲ್ಲ. ಒಳ್ಳೆಯದೆ. ನಂಬಿಕೆಯಿಲ್ಲದಿದ್ದರೆ ತಾನೆ ಏನು?
“ನಿನ್ನ ಮಗ ಬಹಳ ಒಳ್ಳೆಯವ. ಹಾಗೇಕೆ ಆಗಬಾರದು? ‘ಬೊಂಬಾಯಿ’ ಎಂಬ ಮಾವಿನ ಗಿಡ ಎಂದಿಗಾದರೂ ಹುಳಿ ಹಣ್ಣು ಬಿಡುವುದೆ? ಆತನಿಗೆ ಭಗವಂತನಲ್ಲಿ ಎಂಥ ದೃಢ ವಿಶ್ವಾಸ! ಯಾರ ಮನಸ್ಸು ಭಗವಂತನ ಅಡಿದಾವರೆಗಳಲ್ಲಿರುವುದೊ ಆತನೇ ನಿಜವಾಗಿ ಮನುಷ್ಯ. ‘ಮಾನುಷ್’ ಮತ್ತು ‘ಮಾನ್ಹುಷ್’ ಯಾರಲ್ಲಿ ‘ಹುಷ್’ ಆಗಿದೆಯೊ, ಎಂದರೆ ಆತ್ಮಜಾಗೃತಿಯುಂಟಾಗಿದೆಯೊ, ಅವರಿಗೆ ಚೆನ್ನಾಗಿ ಗೊತ್ತಿದೆ — ಭಗವಂತನೊಬ್ಬನೆ ಸತ್ಯ, ಉಳಿದುದೆಲ್ಲ ಅನಿತ್ಯ ಅಂತ. ಆತನೇ ‘ಮಾನ್ಹುಷ್’. ನಿನ್ನ ಮಗ ಅವತಾರಗಳನ್ನು ನಂಬದಿದ್ದರೆ ಮುಳುಗಿಹೋಗುವುದೇನು? ದೊಡ್ಡ ಮನುಷ್ಯ ಮತ್ತು ಆತನ ತೋಟತುಡಿಕೆಗಳ ಹಾಗೆ, ಭಗವಂತನೊಬ್ಬನಿದ್ದಾನೆ–ಈ ಜೀವಜಗತ್ತೆಲ್ಲವೂ ಆತನ ಐಶ್ವರ್ಯ ಎಂಬುದನ್ನು ಆತ ಒಪ್ಪಿಕೊಂಡುಬಿಟ್ಟರೇ ಯಥೇಷ್ಟ.
“ಕೆಲವರು ಹೇಳುತ್ತಾರೆ ಅವತಾರಗಳು ಹತ್ತು ಎಂದು; ಇನ್ನು ಕೆಲವರು ಇಪ್ಪತ್ತನಾಲ್ಕು ಎಂದು; ಮತ್ತೆ ಕೆಲವರು ಅಸಂಖ್ಯ ಎಂದು. ಎಲ್ಲಿ ಭಗವಂತ ವಿಶೇಷವಾಗಿ ವ್ಯಕ್ತವಾಗಿದ್ದಾನೊ ಅಲ್ಲಿ ಆತ ಅವತರಿಸಿದ್ದಾನೆ ಎಂದು ಅರಿತುಕೊಳ್ಳಬೇಕು. ನನ್ನ ಅಭಿಮತವೂ ಅದೇನೆ.
“ಕಣ್ಣಿಗೆ ಕಾಣುವುದೆಲ್ಲವೂ ಆತನೇ ಆಗಿದ್ದಾನೆ ಎಂಬುದು ಬೇರೆ ಕೆಲವರ ದೃಷ್ಟಿ. ಅದು ಬೀಜ, ತಿರುಳು, ಓಟೆ ಇವು ಮೂರೂ ಕೂಡಿ ಬೇಲದ ಹಣ್ಣು ಆಗಿರುವ ಹಾಗೆ. ನಿತ್ಯ ಯಾರದೊ ಆತನದೇ ಲೀಲೆ; ಲೀಲೆ ಯಾರದೊ, ಆತನದೇ ನಿತ್ಯ. ನಿತ್ಯವನ್ನು ಗಣನೆಗೆ ತೆಗೆದುಕೊಳ್ಳದೆ ಲೀಲೆಯನ್ನು ಅರಿತುಕೊಳ್ಳಲಾಗುವುದಿಲ್ಲ. ಲೀಲೆ ಎಂಬುದು ಇರುವುದರಿಂದಲೇ ಸ್ವಲ್ಪ ಸ್ವಲ್ಪವಾಗಿ ಅದನ್ನು ದಾಟಿ ನಿತ್ಯವನ್ನು ಮುಟ್ಟಬಹುದು.
“ ‘ಅಹಂ’ ಬುದ್ಧಿ ಇರುವವರೆಗೆ, ಲೀಲೆಯನ್ನು ದಾಟಿಹೋಗುವ ಹಾಗೆ ಇಲ್ಲ. ‘ನೇತಿ, ನೇತಿ’ ಮಾರ್ಗದಿಂದ ಲೀಲೆಯನ್ನು ತ್ಯಜಿಸಿ ಧ್ಯಾನಯೋಗದ ಮೂಲಕ ನಿತ್ಯವನ್ನು ಮುಟ್ಟಬಹುದು; ಆದರೆ ಯಾವುದನ್ನೂ ನಿರಾಕರಿಸಲಾಗುವುದಿಲ್ಲ. ಉದಾಹರಣೆಗೆ ಬೇಲದ ಹಣ್ಣು.”
ಡಾಕ್ಟರ್: “ಖಂಡಿತ ನಿಜ.”
ಶ್ರೀರಾಮಕೃಷ್ಣರು: “ಕಚ್ ಎಂಬವನಿಗೆ ನಿರ್ವಿಕಲ್ಪ ಸಮಾಧಿ ಉಂಟಾಗಿತ್ತು. ಆತನ ಮನಸ್ಸು ಮತ್ತೆ ಲೀಲೆಯ ಅವಸ್ಥೆಗೆ ಇಳಿದು ಬರುತ್ತಿದ್ದಾಗ ಒಬ್ಬ ಕೇಳಿದ, ‘ಈಗ ನಿನಗೇನು ಕಾಣಿಸುತ್ತಿದೆ?’ ಎಂದು. ಆಗ ಆತ ಹೇಳಿದ, ‘ಈ ಜಗತ್ತೆಲ್ಲವೂ ಆತನಲ್ಲಿ ಊರಿಹೋಗಿರುವಂತೆ ಕಾಣುತ್ತಿದೆ. ಆತನೇ ಎಲ್ಲದರಲ್ಲಿಯೂ ತುಂಬಿತುಳುಕಾಡುತ್ತಾ ಇದ್ದಾನೆ; ಕಣ್ಣಿಗೆ ಬೀಳುತ್ತಿರುವುದೆಲ್ಲವೂ ಆತನೇ ಆಗಿದ್ದಾನೆ. ಅವುಗಳಲ್ಲಿ ಯಾವುದನ್ನು ಸ್ವೀಕರಿಸುವುದು ಯಾವುದನ್ನು ಬಿಡುವುದು ಎಂಬುದು ನನಗೆ ಗೊತ್ತಾಗುತ್ತಿಲ್ಲ’ ಎಂದು.
“ನನ್ನ ಅಭಿಪ್ರಾಯವೇನೆಂದರೆ, ನಿತ್ಯ ಮತ್ತು ಲೀಲೆ ಇವರೆಡರ ಸಾಕ್ಷಾತ್ಕಾರವನ್ನು ಪಡೆದು, ಬಳಿಕ ಈ ಜಗತ್ತಿನಲ್ಲಿ ದಾಸ್ಯಭಾವದಿಂದ ಇರಬೇಕು ಎಂಬುದು. ಹನುಮಂತನು ಸಾಕಾರ ನಿರಾಕಾರ ಎರಡರ ಸಾಕ್ಷಾತ್ಕಾರವನ್ನೂ ಪಡೆದು ದಾಸ್ಯಭಾವದಿಂದ- ಭಕ್ತನ ಭಾವ ದಿಂದ ಇದ್ದುಕೊಂಡಿದ್ದ.”
ಮಾಸ್ಟರ್ (ತನಗೆ ತಾನೆ): “ನಿತ್ಯ, ಲೀಲೆ ಎರಡನ್ನೂ ಸ್ವೀಕರಿಸಬೇಕು! ವೇದಾಂತ ಜರ್ಮನಿಯಲ್ಲಿ ಕಾಲಿಟ್ಟ ನಂತರ ಐರೋಪ್ಯ ತತ್ತ್ವಶಾಸ್ತ್ರಜ್ಞರೂ ಈ ರೀತಿಯಾಗಿಯೇ ಭಾವಿಸುತ್ತಿದ್ದಾರೆ. ಆದರೆ ಪರಮಹಂಸರು ಹೇಳುತ್ತಿದ್ದಾರೆ, ಎಲ್ಲದರ- ಎಂದರೆ ಕಾಮ ಕಾಂಚನದ- ತ್ಯಾಗಮಾಡುವ ತನಕ ನಿತ್ಯದ ಮತ್ತು ಲೀಲೆಯ ಸಾಕ್ಷಾತ್ಕಾರ ದೊರೆಯುವುದಿಲ್ಲ ಅಂತ. ಎಂದರೆ ನಿಜವಾದ ತ್ಯಾಗಿಯಾಗಬೇಕು; ಸಂಪೂರ್ಣ ಅನಾಸಕ್ತನಾಗಬೇಕು. ಇದರಲ್ಲೇನೆ ಪರಮಹಂಸರಿಗೂ ಮತ್ತು ಹೆಗಲ್ಲನೇ ಮೊದಲಾದ ಐರೋಪ್ಯ ತತ್ತ್ವ ಶಾಸ್ತ್ರಜ್ಞರಿಗೂ ಇರುವ ಅಜಗಜಾಂತರ ತಾರತಮ್ಯ.”
ಡಾಕ್ಟರ್ ಸರ್ಕಾರನ ಅಭಿಪ್ರಾಯ, ಭಗವಂತ ನಮ್ಮನ್ನು ಸೃಷ್ಟಿಸಿದ್ದಾನೆ; ಪ್ರತಿಯೊಂದು ಆತ್ಮವೂ ಅನಂತ ಉನ್ನತಿಯನ್ನು ಹೊಂದುತ್ತದೆ ಎಂಬುದು. ಒಬ್ಬ ಇನ್ನೊಬ್ಬನಿಗಿಂತ ದೊಡ್ಡವ ಎಂಬುದನ್ನು ಆತ ನಂಬುತ್ತಿಲ್ಲ. ಇದಕ್ಕಾಗಿಯೇ ಆತನಿಗೆ ಅವತಾರದಲ್ಲಿ ನಂಬಿಕೆ ಇಲ್ಲ.
ಡಾಕ್ಟರ್: “ನನಗೆ ಅನಂತ ಉನ್ನತಿಯಲ್ಲಿ ನಂಬಿಕೆ. ಅದು ಹಾಗಲ್ಲದಿದ್ದರೆ, ಐದಾರು ವರ್ಷದ ಈ ಜಗತ್ತಿನ ಬಾಳುವೆ ಯಾವುದಕ್ಕೆ ಬಂದದ್ದು? ಅದಕ್ಕೆ ಬದಲು ಹಗ್ಗದಿಂದ ನೇಣು ಹಾಕಿಕೊಂಡುಬಿಡುತ್ತೇನೆ.
“ಅವತಾರವೆ! ಏನದು? ಗೊಣ್ಣೆ-ಸುರಕ ಮನುಷ್ಯನ ಕಾಲಿಗೆ ಹೋಗಿ ಬೀಳುವುದು! ಆದರೆ ಭಗವಂತನ ಜ್ಯೋತಿ ಮನುಷ್ಯನಲ್ಲಿ ವ್ಯಕ್ತವಾಗುತ್ತಾ ಇದೆ ಎಂದು ಹೇಳಿದರೆ, ಅದನ್ನು ನಾನು ಒಪ್ಪುತ್ತೇನೆ.”
ಗಿರೀಶ (ನಗುತ್ತ): “ಆದರೆ, ನೀವು ಭಗವಂತನ ಬೆಳಕನ್ನು ನೋಡಿಲ್ಲವಲ್ಲ.”
ಡಾಕ್ಟರ್ ಸರಿಯಾದ ಉತ್ತರಕ್ಕಾಗಿ ಬಹಳವಾಗಿ ಯೋಚಿಸುತ್ತಿದ್ದಾನೆ. ಹತ್ತಿರವೇ ಕುಳಿತಿದ್ದ ಆತನ ಸ್ನೇಹಿತ ಆತನ ಕಿವಿಯಲ್ಲಿ ಏನನ್ನೋ ಹೇಳಿದ.
ಡಾಕ್ಟರ್: “ನೀವೂ ಪ್ರತಿಬಿಂಬವನ್ನಲ್ಲದೆ ಬೇರೆ ಏನನ್ನೂ ನೋಡಿಲ್ಲವಲ್ಲ.”
ಗಿರೀಶ: “ನಾನು ಪ್ರತ್ಯಕ್ಷವಾಗಿ ನೋಡುತ್ತಿದ್ದೇನೆ! ಪ್ರತ್ಯಕ್ಷವಾಗಿ ಬೆಳಕನ್ನು ನೋಡು ತ್ತಿದ್ದೇನೆ! ಶ್ರೀಕೃಷ್ಣ ಅವತಾರಪುರುಷ ಎಂಬುದನ್ನು ಪ್ರಮಾಣೀಕರಿಸುತ್ತೇನೆ– ಆಗದಿದ್ದರೆ ನನ್ನ ನಾಲಗೆ ಕತ್ತರಿಸಿಕೊಂಡುಬಿಡುತ್ತೇನೆ!”
ಶ್ರೀರಾಮಕೃಷ್ಣರು: “ಈ ಮಾತುಕತೆಗಳೆಲ್ಲ ಯಾವ ಪ್ರಯೋಜನಕ್ಕೂ ಬಾರದವು. ಇವೆಲ್ಲ ವಿಷಮಶೀತ ಜ್ವರದ ರೋಗಿಯ ವಿಕಾರಗಳು. ಆತ ಹೇಳುವುದುಂಟು, ‘ಇಡೀ ಕೆರೆಯ ನೀರನ್ನೆಲ್ಲ ಕುಡಿದುಬಿಡುತ್ತೇನೆ. ಇಡೀ ತಪ್ಪಲೆಯ ಅನ್ನವನ್ನೆಲ್ಲ ತಿಂದುಬಿಡುತ್ತೇನೆ’ ಎಂದು. ಅದಕ್ಕೆ ಡಾಕ್ಟರ್ ಹೇಳುವುದುಂಟು, ‘ಆಗಲಿ, ಆಗಲಿ, ತಿನ್ನುವೆಯಂತೆ, ಆರೋಗ್ಯಮುಖನಾದಾಗ ನೀನು ಕೇಳುವುದನ್ನೆಲ್ಲ ಕೊಡುತ್ತೇವೆ’ ಅಂತ.
“ಬೆಣ್ಣೆ ಕಾಯಿಸಿದಾಗ ಅದು ‘ಕಲಕಲ’ ಅಂತ ಶಬ್ದ ಮಾಡುತ್ತಿರುತ್ತದೆ. ಅದು ತುಪ್ಪವಾಯಿತು ಎಂದೊಡನೆಯೇ ಶಬ್ದ ಎಲ್ಲ ಅಡಗಿ ಹೋಗುತ್ತದೆ. ಯಾರ ಮನಸ್ಸು ಯಾವ ರೀತಿಯದೊ ಅದಕ್ಕನುಗುಣವಾಗಿ ಅವರು ಭಗವಂತನನ್ನು ಭಾವಿಸುತ್ತಾರೆ. ಶ್ರೀಮಂತರ ಮನೆಗಳಲ್ಲಿ ರಾಣಿ ರಾಜ ಇವರ ಪಟ ಇಟ್ಟಿರುವುದನ್ನು ನೋಡಿದ್ದೇನೆ. ಆದರೆ ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ದೇವದೇವಿಯರ ಪಟ ಇಟ್ಟುಕೊಂಡಿರುತ್ತಾರೆ.
“ಲಕ್ಷ್ಮಣ ರಾಮನನ್ನು ಕೇಳಿದ, ‘ಹೇ ರಾಮ, ಏನಿದು, ವಸಿಷ್ಠದೇವನಂಥ ಮಹಾ ಋಷಿಗೂ ಪುತ್ರಶೋಕವೇ!’ ಅದಕ್ಕೆ ರಾಮ ಹೇಳಿದ, ‘ತಮ್ಮ, ಯಾರಲ್ಲಿ ಜ್ಞಾನ ಇರುತ್ತದೊ ಅವರಲ್ಲಿ ಅಜ್ಞಾನವೂ ಇರುತ್ತದೆ. ಯಾರಿಗೆ ಬೆಳಕಿನ ಬೋಧೆ ಇರುವುದೊ ಅವರಿಗೆ ಕತ್ತಲೆಯ ಬೋಧೆಯೂ ಇರುತ್ತದೆ. ಆದ್ದರಿಂದ ನೀನು ಜ್ಞಾನಾಜ್ಞಾನಗಳಿಗತೀತನಾಗು.’ ಭಗವಂತನನ್ನು ವಿಶೇಷರೂಪದಿಂದ ಅರಿತುಕೊಂಡಾಗ ಆ ಅವಸ್ಥೆ ಉಂಟಾಗುತ್ತದೆ. ಆಗ ದೊರೆಯುವ ಜ್ಞಾನಕ್ಕೆ ವಿಜ್ಞಾನ ಎಂದು ಹೆಸರು.
“ಕಾಲಿಗೆ ಮುಳ್ಳು ಚುಚ್ಚಿಕೊಂಡರೆ ಇನ್ನೊಂದು ಮುಳ್ಳನ್ನು ಹುಡುಕಿತಂದು ಮೊದಲನೆಯದನ್ನು ಎರಡನೆಯದರಿಂದ ತೆಗೆದುಹಾಕಿ ಬಳಿಕ ಎರಡನ್ನೂ ಬಿಸಾಡಿ ಬಿಡುತ್ತೇವೆ. ಅದೇ ರೀತಿ ಜ್ಞಾನ ಎಂಬ ಮುಳ್ಳಿನಿಂದ ಅಜ್ಞಾನವೆಂಬ ಮುಳ್ಳನ್ನು ತೆಗೆದುಹಾಕಿ, ಬಳಿಕ ಎರಡನ್ನೂ ಬಿಸಾಡಿಬಿಡಬೇಕು.”
“ಪೂರ್ಣಜ್ಞಾನಕ್ಕೆ ಚಿಹ್ನೆಗಳಿವೆ. ಅಲ್ಲಿ ವಿಚಾರಮಾಡುವುದು ನಿಂತುಹೋಗುತ್ತದೆ. ನಾನು ಈಗತಾನೆ ಹೇಳಿದ ಹಾಗೆ, ಬೆಣ್ಣೆ ತುಪ್ಪವಾಗದವರೆಗೆ ಮಾತ್ರ ಅದು ‘ಕಲಕಲ’ ಎಂದು ಶಬ್ದಮಾಡುತ್ತಿರುತ್ತದೆ.”
ಡಾಕ್ಟರ್: “ಪೂರ್ಣಜ್ಞಾನ ಅಚ್ಚಳಿಯದೆ ಉಳಿದುಕೊಳ್ಳುತ್ತದೆಯೆ? ಎಲ್ಲವೂ ಭಗವಂತನೇ! ಹಾಗಾದರೆ ನೀವೇಕೆ ಪರಮಹಂಸಗಿರಿ ಕೆಲಸಮಾಡುತ್ತೀರಿ? ಇವರೆಲ್ಲ್ಲಾ ಬಂದು ನಿಮ್ಮ ಸೇವೆ ಮಾಡುವುದು ತಾನೆ ಏಕೆ? ನೀವು ಸುಮ್ಮನೆ ಗಪ್ಚಿಪ್ಪಾಗಿ ಇದ್ದುಬಿಡಬಾರದೆ?”
ಶ್ರೀರಾಮಕೃಷ್ಣರು (ನಗುತ್ತ): “ನೀರು ಸುಮ್ಮನೆ ನಿಂತಿದ್ದರೂ ನೀರೆ, ಅಲ್ಲೋಲ ಕಲ್ಲೋಲವಾಗಿದ್ದರೂ ನೀರೆ, ಅಲೆಯಾಗಿ ಏಳುತ್ತಿದ್ದರೂ ನೀರೆ.
“ನಿನಗೊಂದು ವಿಷಯ ತಿಳಿಸಬೇಕಾಗಿದೆ. ಮಾವಟಿಗ-ಭಗವಂತನ ಮಾತನ್ನು ನಾನು ಏಕೆ ಕೇಳಕೂಡದು? ಗುರು ತನ್ನ ಶಿಷ್ಯನಿಗೆ ಬೋಧೆ ಮಾಡಿದ, ಎಲ್ಲವೂ ಭಗವಂತನೇ ಅಂತ. ಮದಿಸಿದ ಆನೆಯೊಂದು ಎದುರಿಗೆ ಬರುತ್ತಿತ್ತು. ಶಿಷ್ಯ ಗುರುವಾಕ್ಯದಲ್ಲಿ ವಿಶ್ವಾಸವಿಟ್ಟು ಅಲ್ಲಿಂದ ಸರಿದುಹೋಗಲಿಲ್ಲ. ಏಕೆಂದರೆ ಆನೆಯೂ ಭಗವಂತನೆ. ಆದರೆ ಮಾವಟಿಗ ಗಟ್ಟಿಯಾಗಿ ಕೂಗಿ ಹೇಳಿದ, ‘ಓಡಿಹೋಗಿ! ಓಡಿಹೋಗಿ’ ಎಂದು. ಆದರೆ ಶಿಷ್ಯ ಆ ಸ್ಥಳವನ್ನು ಬಿಟ್ಟು ಕದಲಲೇ ಇಲ್ಲ. ಆನೆ ಬಂದು ಆತನನ್ನು ಹಿಡಿದೆತ್ತಿ ‘ರೊಂಯ್’ ಅಂತ ಒಂದು ಕಡೆಗೆ ಬಿಸಾಡಿ ಹೊರಟು ಹೋಯಿತು. ಶಿಷ್ಯ ಇನ್ನೂ ಸತ್ತಿರಲಿಲ್ಲ; ಮುಖಕ್ಕೆ ನೀರು ಚಿಮುಕಿಸುತ್ತಾ ಇದ್ದ ಹಾಗೆ ಪ್ರಜ್ಞೆ ಬಂತು. ಬಳಿಕ ಆತನನ್ನು ಏಕೆ ನೀನು ಅಲ್ಲಿಂದ ಸರಿದುಹೋಗಲಿಲ್ಲ ಎಂದು ಪ್ರಶ್ನಿಸಿದಾಗ ಆತ ‘ಏಕೆ ಸರಿದುಹೋಗಬೇಕಾಗಿತ್ತು? ಗುರು ಹೇಳಿದರು, “ಎಲ್ಲವೂ ಭಗವಂತ” ಅಂತ ಹೇಳಿದ.’ ಆಗ ಗುರು ಹೇಳಿದ: ‘ಅದೇನೂ ನಿಜ. ಆದರೆ ಮಾವಟಿಗ-ಭಗವಂತನ ಮಾತಿಗೆ ಏಕೆ ನೀನು ಬೆಲೆ ಕೊಡಲಿಲ್ಲ?’
“ಭಗವಂತನೇ ಶುದ್ಧ-ಮನಸ್ಸು, ಶುದ್ಧ-ಬುದ್ಧಿಯಾಗಿ ನಮ್ಮ ಆಂತರ್ಯದಲ್ಲಿ ವಾಸಿಸುತ್ತಿದ್ದಾನೆ. ನಾನು ಯಂತ್ರ, ಆತ ಯಂತ್ರಿ, ನಾನು ಗೃಹ, ಆತ ಗೃಹೀ; ಆತನೇ ಮಾವಟಿಗ-ನಾರಾಯಣ.”
ಡಾಕ್ಟರ್: “ನಿಮಗೊಂದು ಪ್ರಶ್ನೆ ಹಾಕಬೇಕೆಂದಿದ್ದೇನೆ. ಅದು ಹಾಗಿದ್ದರೆ, ನಿಮಗೆ ಬಂದಿರುವ ರೋಗವನ್ನು ಗುಣಪಡಿಸು ಎಂಬುದಾಗಿ ಏಕೆ ಕೇಳಿಕೊಳ್ಳುತ್ತಾ ಇದ್ದೀರಿ?”
ಶ್ರೀರಾಮಕೃಷ್ಣರು: “ಎಲ್ಲಿಯವರೆಗೆ ‘ಅಹಂ’ ಎಂಬ ಘಟಜ್ಞಾನವಿರುವುದೊ ಅಲ್ಲಿಯವರೆಗೆ ಈ ರೀತಿಯಾಗಿ ವ್ಯವಹರಿಸಬೇಕಾಗುತ್ತದೆ. ಸಕಲ ದಿಕ್ಕುಗಳನ್ನು ಆವರಿಸಿಕೊಂಡಿರುವ ಒಂದು ಮಹಾ ಸಮುದ್ರವಿದೆ. ಅದರೊಳಗೆ ಒಂದು ಘಟ ಮುಳುಗಿಕೊಂಡಿದೆ ಅಂತ ಭಾವಿಸಿಕೊ. ನೀರು ಆ ಘಟದ ಒಳಗೂ ಇದೆ ಹೊರಗೂ ಇದೆ; ಆದರೆ ಆ ಘಟವನ್ನು ಒಡೆದುಹಾಕದ ಹೊರತು ಅವೆರೆಡು ನೀರೂ ಒಂದಾಗಲಾರವು. ಆತನೇ ಈ ‘ಅಹಂ’ ಎಂಬ ಘಟವನ್ನು ಇಟ್ಟಿದ್ದಾನೆ.”
ಡಾಕ್ಟರ್: “ಈ ‘ಅಹಂ’ ಅಂತ ಏನೇನೊ ಹೇಳುತ್ತಿದ್ದೀರಲ್ಲ ಇವೆಲ್ಲ ಏನು? ಇವುಗಳ ಅರ್ಥ ಏನು ಎಂಬುದನ್ನು ನೀವು ನನಗೆ ತಿಳಿಸಬೇಕಾಗಿದೆ. ಏನು ಆತ ನಮ್ಮ ಮೇಲೆ ಮಂಕುಬೂದಿ ಎರಚುತ್ತಿದ್ದಾನೇನು?”
ಗಿರೀಶ: “ಆತ ಹಾಗೆ ಮಾಡುತ್ತಿಲ್ಲ ಅಂತ ನೀವು ಹೇಗೆ ಅರಿತಿರಿ?”
ಶ್ರೀರಾಮಕೃಷ್ಣರು (ನಗುತ್ತ): “ಈ ‘ಅಹಂ’ ಎಂಬುದನ್ನು ಆತನೇ ನಮ್ಮಲ್ಲಿ ಇಟ್ಟಿದ್ದಾನೆ. ಇದೆಲ್ಲಾ ಆತನ ಆಟ-ಆತನ ಲೀಲೆ. ಒಬ್ಬ ದೊರೆಗೆ ನಾಲ್ಕು ಮಕ್ಕಳು ಎಂದು ಇಟ್ಟುಕೊ. ಎಲ್ಲರೂ ರಾಜನ ಮಕ್ಕಳೇ ಆಗಿದ್ದರೂ ಆಟದ ಸಮಯದಲ್ಲಿ ಒಬ್ಬ ಹುಡುಗ ಮಂತ್ರಿಯ ಪಾರ್ಟನ್ನು, ಇನ್ನೊಬ್ಬ ದಳವಾಯಿಯ ಪಾರ್ಟನ್ನು, ಉಳಿದವರು ಬೇರೆ ಬೇರೆ ಪಾರ್ಟನ್ನು ತೆಗೆದುಕೊಳ್ಳುತ್ತಾರೆ. ನೋಡಿ, ರಾಜನ ಮಗನಾಗಿದ್ದರೂ ದಳವಾಯಿಯ ಪಾರ್ಟನ್ನು ಆಡುವುದನ್ನು!
(ಡಾಕ್ಟರಿಗೆ) “ಕೇಳಿಲ್ಲಿ. ನಿನಗೆ ಆತ್ಮಸಾಕ್ಷಾತ್ಕಾರವಾದಾಗ ನೀನು ಇವನ್ನೆಲ್ಲ ಒಪ್ಪಬೇಕಾಗುತ್ತದೆ. ಆತನ ದರ್ಶನ ದೊರೆಯಿತು ಎಂದರೆ ಸಕಲ ಸಂಶಯಗಳೂ ನಿವೃತ್ತಿಯಾಗುತ್ತವೆ.”
ಡಾಕ್ಟರ್: “ಎಂದಿಗಾದರೂ ಎಲ್ಲಾ ಸಂದೇಹಗಳೂ ನಿವೃತ್ತಿಯಾಗಿ ಹೋಗುವು ದುಂಟೆ?”
ಶ್ರೀರಾಮಕೃಷ್ಣರು: “ನಾನು ಇದುವರೆಗೆ ಹೇಳಿದುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸು. ಬಳಿಕ ಇದಕ್ಕಿಂತಲೂ ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂದು ಇಚ್ಛೆಯಾದರೆ ಏಕಾಂತದಲ್ಲಿ ಆತನಿಗೆ ಪ್ರಾರ್ಥನೆ ಮಾಡು. ಏಕೆ ಹೀಗೆಲ್ಲ ವ್ಯವಸ್ಥೆ ಮಾಡಿದ್ದೀಯೆ ಅಂತ ನೀನೆ ಆತನನ್ನು ಪ್ರಶ್ನಿಸಿ ಕೇಳು.
“ಮನೆ ಹುಡುಗ ಭಿಕ್ಷುಕನಿಗೆ ಒಂದು ಹಿಡಿ ಅಕ್ಕಿಯನ್ನೇನೊ ಹಾಕಬಲ್ಲ. ರೈಲ್ವೆ ಛಾರ್ಜು ಕೊಡಬೇಕಾಗಿ ಬಂತು ಅಂದರೆ ಆತ ಮನೆ ಯಜಮಾನನಿಗೆ ತಿಳಿಸಬೇಕಾಗುತ್ತದೆ.”
ಡಾಕ್ಟರ್ ಸದ್ದಿಲ್ಲದೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು: “ನೀನು ವಿಚಾರಪ್ರೇಮಿ. ಅದು ಒಳ್ಳೆಯದೆ. ಆಗಲಿ, ಸ್ವಲ್ಪ ಹೊತ್ತು ವಿಚಾರದಲ್ಲಿ ತೊಡಗೋಣ. ಇಲ್ಲಿ ಕೇಳು, ಜ್ಞಾನಿಗಳ ದೃಷ್ಟಿಯಿಂದ ಅವತಾರ ಎಂಬುದು ಏನೂ ಇಲ್ಲ. ಶ್ರೀಕೃಷ್ಣ ಅರ್ಜುನನಿಗೆ ಹೇಳಿದ, ‘ನೀನು ನನ್ನನ್ನು ಭಗವಂತನ ಅವತಾರ ಅಂತ ಕರೆಯುತ್ತಿದ್ದೀಯೆ. ನಿನಗೊಂದು ದೃಶ್ಯ ತೋರಿಸುತ್ತೇನೆ ಬಾ ನೋಡುವೆಯಂತೆ.’ ಅರ್ಜುನ ಆತನ ಹಿಂದೆಯೇ ಹೋದ. ಸ್ವಲ್ಪ ದೂರ ಮುಂದುವರಿದ ನಂತರ ಶ್ರೀಕೃಷ್ಣ ಅರ್ಜುನನನ್ನು ಕೇಳಿದ, ‘ಅಗೋ, ಅಲ್ಲಿ ನಿನಗೇನು ಕಾಣುತ್ತಿದೆ?’ ಅರ್ಜುನ ಹೇಳಿದ, ‘ಒಂದು ದೊಡ್ಡ ಮರ ಕಾಣುತ್ತಿದೆ; ಅದರಲ್ಲಿ ನೇರಳೆ ಹಣ್ಣುಗಳು ಗೊಂಚಲು ಗೊಂಚಲಾಗಿ ನೇತಾಡುತ್ತಿವೆ.’ ಶ್ರೀಕೃಷ್ಣ ಹೇಳಿದ, ‘ಅವು ನೇರಳೆ ಹಣ್ಣುಗಳಲ್ಲ; ಹತ್ತಿರ ಹೋಗಿ ನೋಡು.’ ಅರ್ಜುನ ಹತ್ತಿರ ಹೋಗಿ ನೋಡುತ್ತಾನೆ! ಅವೆಲ್ಲ ಕೇವಲ ಶ್ರೀಕೃಷ್ಣರ ಗೊಂಚಲುಗಳು. ಆಗ ಶ್ರೀಕೃಷ್ಣ ಹೇಳಿದ, ‘ಈಗ ನೋಡಿದೆಯಾ, ಅಲ್ಲಿ ನನ್ನಂಥ ಶ್ರೀಕೃಷ್ಣರು ಎಷ್ಟೊಂದು ಜನ ಇದ್ದಾರೆ ಎಂಬುದನ್ನು?’
“ಕಬೀರ ಶ್ರೀಕೃಷ್ಣನ ಸಂಬಂಧವಾಗಿ ‘ಆತ ಕಪಿಯ ಹಾಗೆ ಗೋಪಿಯರ ಕೈತಾಳಕ್ಕೆ ಅನುಗುಣವಾಗಿ ಕುಣಿದ!’ ಎಂದು ಹೇಳಿದ್ದಾನೆ.
“ಭಗವಂತನ ಕಡೆಗೆ ಮುಂದುವರಿದಂತೆಲ್ಲ ಆತನ ಉಪಾಧಿಗಳೂ ಕಡಮೆ ಕಡಮೆ ಯಾಗುವುದು ನಮ್ಮ ಕಣ್ಣಿಗೆ ಕಾಣಬರುತ್ತದೆ. ಒಬ್ಬ ಭಕ್ತನಿಗೆ ಮೊಟ್ಟಮೊದಲು ಭಗವಂತನ ದರ್ಶನದೊರೆತಾಗ ಆತನಿಗೆ ಹತ್ತು ಭುಜಗಳಿರುವಂತೆ ದರ್ಶನವಾಯಿತು. ಇನ್ನು ಸ್ವಲ್ಪ ಹತ್ತಿರಕ್ಕೆ ಹೋಗಿ ನೋಡುತ್ತಾನೆ, ಆರೇ ಭುಜ. ಇನ್ನೂ ಹತ್ತಿರಕ್ಕೆ ಹೋಗಿ ನೋಡುತ್ತಾನೆ ಆತ ಎರಡು ಭುಜದ ಗೋಪಾಲಮೂರ್ತಿಯಂತೆ ಕಾಣುತ್ತಿದ್ದಾನೆ. ಹತ್ತಿರ ಹತ್ತಿರಕ್ಕೆ ಹೋದ ಹಾಗೆಲ್ಲ ಆತನ ಐಶ್ವರ್ಯಗಳೂ ಕಡಮೆ ಕಡಮೆಯಾಗಿ ಕಾಣಿಸಿಕೊಳ್ಳುತ್ತವೆ. ಮತ್ತೂ ಹತ್ತಿರಕ್ಕೆ ಹೋಗಿ ನೋಡಿದಾಗ ಕೇವಲ ನಿರುಪಾಧಿಕ ಜ್ಯೋತಿಯ ದರ್ಶನ ದೊರೆಯುತ್ತದೆ.
“ಸ್ವಲ್ಪ ವೇದಾಂತವಿಚಾರವನ್ನು ಕೇಳು. ಒಬ್ಬ ತನ್ನ ಮ್ಯಾಜಿಕ್ನ್ನು ತೋರಿಸಲು ದೊರೆಯನ್ನು ಸಮೀಪಿಸಿದ. ಆತ ಒಂದು ಕಡೆಗೆ ಸ್ವಲ್ಪ ಸರಿದೊಡನೆಯೆ ಒಬ್ಬ ಸವಾರ ಕುದುರೆಯ ಮೇಲೆ ಕುಳಿತು ತನ್ನನ್ನು ಸಮೀಪಿಸುತ್ತಿರುವಂತೆ ದೊರೆಯ ಕಣ್ಣಿಗೆ ಕಾಣಿಸಿ ಕೊಂಡಿತು. ಸವಾರ ಬಹಳ ಸೊಗಸಾದ ವಸ್ತ್ರಾಭರಣಗಳನ್ನು ಹಾಕಿಕೊಂಡಿದ್ದ ಮತ್ತು ಕೈಯಲ್ಲಿ ವಿವಿಧ ಅಸ್ತ್ರಶಸ್ತ್ರಗಳನ್ನು ಹಿಡಿದುಕೊಂಡಿದ್ದ. ರಾಜನ ಇಡೀ ಸಭಿಕರು ಮತ್ತು ರಾಜನು ವಿಚಾರದಲ್ಲಿ ತೊಡಗಿದ್ದಾರೆ, ತಮ್ಮೆದುರು ಕಾಣಿಸಿಕೊಳ್ಳುತ್ತಿರುವ ದೃಶ್ಯದಲ್ಲಿ ಸತ್ಯವಾದದ್ದು ಯಾವುದು ಎಂಬುದರ ಸಂಬಂಧವಾಗಿ. ಕುದುರೆಯಂತು ಸತ್ಯವೆಂದು ಕಾಣಬರಲಿಲ್ಲ. ಹಾಗೆಯೇ ಆತನ ವಸ್ತ್ರಾಭರಣಗಳೂ ಮತ್ತು ಅಸ್ತ್ರಶಸ್ತ್ರಗಳೂ ಸತ್ಯವೆಂದು ಕಂಡುಬರಲಿಲ್ಲ. ಕೊನೆಗೆ ಸವಾರನೊಬ್ಬನೆ ತಮ್ಮೆದುರು ನಿಂತಿರುವುದು ಅವರ ಕಣ್ಣಿಗೆ ಬಿತ್ತು. ಇದರ ಇಂಗಿತ ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಅಂತ. ವಿಚಾರ ಮಾಡಿತು ಎಂದರೆ ಕೊನೆಗೆ ಏನೂ ಉಳಿಯದು.”
ಡಾಕ್ಟರ್: “ಇದಕ್ಕೆ ನನ್ನ ಆಕ್ಷೇಪಣೆಯೇನಿಲ್ಲ.”
ಶ್ರೀರಾಮಕೃಷ್ಣರು: “ಆದರೆ ಭ್ರಮೆ ಸಹಜವಾಗಿ ಹೋಗದು. ಜ್ಞಾನ ದೊರೆತ ನಂತರವೂ ಉಳಿದುಕೊಂಡಿರುತ್ತದೆ. ಯಾರೊ ಒಬ್ಬ ಸ್ವಪ್ನದಲ್ಲಿ ಹುಲಿಯನ್ನು ಕಂಡ. ಎಚ್ಚರಗೊಂಡನಂತರವೂ ಆತನ ಎದೆ ‘ಡಬ್, ಡಬ್’ ಅಂತ ಹೊಡೆದುಕೊಳ್ಳುತ್ತಿತ್ತು.
“ಕೆಲವು ಮಂದಿ ಕಳ್ಳರು ಬೆಳೆ ಕದಿಯಲು ಒಂದು ಹೊಲದ ಹತ್ತಿರಕ್ಕೆ ಬಂದರು. ಅಕ್ರಮ ಪ್ರವೇಶಿಗಳನ್ನು ಹೆದರಿಸಲು ಆ ಹೊಲದವರು ಮನುಷ್ಯಾಕಾರದ ನೆಲ್ಲುಹುಲ್ಲಿನ ಬೊಂಬೆಯನ್ನು ಅಲ್ಲಿ ನಿಲ್ಲಿಸಿದ್ದರು. ಕಳ್ಳರಿಗೆ ಭಯವಾಗಿ ಆ ಹೊಲಕ್ಕೆ ನುಗ್ಗಲು ಅಂಜಿದರು. ಅವರಲ್ಲಿ ಒಬ್ಬ ಸಾಹಸ ಮಾಡಿ ಹತ್ತಿರ ಹೋಗಿ ನೋಡುತ್ತಾನೆ, ಅದು ಕೇವಲ ನೆಲ್ಲುಹುಲ್ಲಿನ ಬೊಂಬೆ. ಆತ ಹಿಂದಿರುಗಿ ಬಂದು ತನ್ನ ಜೊತೆಗಾರರಿಗೆ ಹೇಳಿದ, ‘ಭಯಪಡಬೇಕಾಗೇನಿಲ್ಲ, ಬನ್ನಿ’. ಎಂದು. ಆದರೂ ಉಳಿದವರಿಗೆ ಧೈರ್ಯ ಬರಲಿಲ್ಲ. ಅವರು ಹೇಳಿದರು, ತಮ್ಮ ಎದೆ ‘ಲಬ್, ಡಬ್’ ಅಂತ ಹೊಡೆದುಕೊಳ್ಳುತ್ತಾ ಇದೆ ಎಂಬುದಾಗಿ. ಆಗ ಆ ಸಾಹಸಿ ಕಳ್ಳಬೊಂಬೆಯನ್ನು ನೆಲಕ್ಕೆ ಉರುಳಿಸಿ ಹೇಳಿದ, ‘ಇದಕ್ಕೇಕೆ ಹೆದರಿಕೊಳ್ಳಬೇಕು!’ ಅಂತ. ಇದೇ ‘ನೇತಿ, ನೇತಿ’ ಮಾರ್ಗ.”
ಡಾಕ್ಟರ್: “ಇವೆಲ್ಲ ಬಹಳ ಸೊಗಸಾದ ಮಾತುಗಳು.”
ಶ್ರೀರಾಮಕೃಷ್ಣರು ನಗುತ್ತ: “ಎಂಥಾ ಮಾತುಗಳು?”
ಡಾಕ್ಟರ್: “ಬಹಳ ಸೊಗಸಾದ.”
ಶ್ರೀರಾಮಕೃಷ್ಣರು: “ಹಾಗಾದರೆ ಒಮ್ಮೆ ‘ಥ್ಯಾಂಕ್ ಯು’ ಅಂತ ಹೇಳು.”
ಡಾಕ್ಟರ್: “ನನ್ನ ಭಾವ ನಿಮಗರ್ಥವಾಗುತ್ತಿಲ್ಲವೇನು? ಎಷ್ಟು ಕಷ್ಟ ತೆಗೆದುಕೊಂಡು ನಿಮ್ಮನ್ನು ನೋಡಲು ನಾನಿಲ್ಲಿಗೆ ಬರುತ್ತಿದ್ದೇನೆ ಏನು ಕತೆ!”
ಶ್ರೀರಾಮಕೃಷ್ಣರು (ನಗುತ್ತ): “ಅಲ್ಲ, ಅದಲ್ಲ. ಮೂರ್ಖರಿಗಾಗಿ ಏನಾದರೂ ಕಿಂಚಿತ್ ಬೋಧೆ ಮಾಡು. ರಾವಣವಧೆಯಾದ ನಂತರ ವಿಭೀಷಣ ಲಂಕೆಗೆ ರಾಜನಾಗಲು ಇಷ್ಟಪಡಲಿಲ್ಲ. ಆತ ಹೇಳಿದ, ‘ಹೇ ರಾಮ, ನೀನೆ ನನಗೆ ದೊರೆತಿರುವಾಗ, ಇನ್ನು ರಾಜ್ಯ ತೆಗೆದುಕೊಂಡು ಏನು ಮಾಡಲಿ?’ ಅಂತ. ಶ್ರೀರಾಮಚಂದ್ರ ಹೇಳಿದ, ‘ವಿಭೀಷಣ, ನೀನು ಮೂರ್ಖರ ಸಲುವಾಗಿ, ಎಂದರೆ ನನ್ನ ಸೇವೆಯನ್ನು ನೀನು ಇಷ್ಟೊಂದು ಮಾಡಿದುದಕ್ಕಾಗಿ ನಿನಗೆ ದೊರೆತ ಫಲವೇನು?–ಅಂತ ಕೇಳುವವರ ಸಲುವಾಗಿ ರಾಜ್ಯಭಾರವನ್ನು ವಹಿಸಿಕೊ. ಅವರ ಶಿಕ್ಷಣಕ್ಕಾಗಿ ರಾಜನಾಗು’ ಎಂದು.”
ಡಾಕ್ಟರ್: “ಅಂಥ ಮೂರ್ಖರಾರಾದರೂ ಇಲ್ಲಿ ಇದ್ದಾರೇನು?”
ಶ್ರೀರಾಮಕೃಷ್ಣರು (ನಗುತ್ತ): “ನಿಸ್ಸಂದೇಹವಾಗಿ! ಇಲ್ಲಿ ಮುತ್ತಿನ ಹುಳು, ಬಸವನ ಹುಳು, ಶಂಖದ ಹುಳು ಎಲ್ಲಾ ಉಂಟು.” (ಎಲ್ಲರೂ ನಗುತ್ತಾರೆ.)
ಡಾಕ್ಟರ್ ಸರ್ಕಾರ್ ಒಬ್ಬ ಹೋಮಿಯೋಪತ್. ಆತ ಪರಮಹಂಸರಿಗೆ ಎರಡು ಮಾತ್ರೆ ಕೊಟ್ಟು ಹೇಳಿದ, “ನಿಮಗೆ ಈ ಎರಡು ಮಾತ್ರೆ ಕೊಟ್ಟಿದ್ದೇನೆ. ಅವುಗಳಲ್ಲಿ ಒಂದು ಪುರುಷ, ಇನ್ನೊಂದು ಪ್ರಕೃತಿ.” (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು (ನಗುತ್ತ): “ಹೌದು, ಇವರು ಯಾವಾಗಲೂ ಜೊತೆಯಾಗಿಯೇ ಇರುತ್ತಾರೆ. ನೀನು ಪಾರಿವಾಳಗಳನ್ನು ಗಮನಿಸಿ ನೋಡಿಲ್ಲವೇನು? ಒಂದನ್ನು ಅಗಲಿ ಇನ್ನೊಂದು ಇರಲಾರದು. ಪುರುಷನೆಲ್ಲಿ ಇರುತ್ತಾನೊ ಅಲ್ಲೇ ಪ್ರಕೃತಿಯೂ ಇರುತ್ತಾಳೆ. ಪ್ರಕೃತಿಯೆಲ್ಲಿ ಇರುತ್ತಾಳೋ, ಅಲ್ಲೇ ಪುರುಷನೂ ಇರುತ್ತಾನೆ.”
ಇಂದು ವಿಜಯದಶಮಿ. ಬಾಯನ್ನು ಸಿಹಿಮಾಡಿಕೊಳ್ಳುವಂತೆ ಪರಮಹಂಸರು ಡಾಕ್ಟರಿಗೆ ಹೇಳಿದರು. ಭಕ್ತರು ಆತನಿಗೆ ಸ್ವಲ್ಪ ಸಿಹಿತಿಂಡಿಯನ್ನು ತಂದುಕೊಟ್ಟರು.
ಡಾಕ್ಟರ್ (ತಿನ್ನುತ್ತ): “ನೀವು ಉಪದೇಶ ಕೊಟ್ಟಿರಲ್ಲ ಅದಕ್ಕಲ್ಲ, ಈ ತಿಂಡಿಗಳಿಗಾಗಿ ನಿಮಗೆ ‘ಥ್ಯಾಂಕ್ ಯು’ ಕೊಡುತ್ತೇನೆ. ಅದಕ್ಕೆ ಬರೀ ಮಾತಿಂದ ಏಕೆ ‘ಥ್ಯಾಂಕ್ ಯು’ ಕೊಡಲಿ?”
ಶ್ರೀರಾಮಕೃಷ್ಣರು (ನಗುತ್ತ): “ಮುಖ್ಯವಾಗಿ ಬೇಕಾಗಿರುವುದು ಭಗವಂತನಲ್ಲಿ ಮನಸ್ಸನ್ನಿಡುವುದು ಮತ್ತು ಅಲ್ಪಸ್ವಲ್ಪವಾಗಿ ಆತನ ಧ್ಯಾನಮಾಡುವುದು. (ಚಿಕ್ಕ ನರೇನನ ಕಡೆ ಬೆರಳುಮಾಡಿ) ನೋಡು, ನೋಡು. ಒಮ್ಮೆಗೇ ಆತನ ಮನಸ್ಸು ಭಗವಂತನಲ್ಲಿ ಲೀನವಾಗಿ ಹೋಗಿಬಿಡುತ್ತದೆ. ನಿನಗೆ ಆ ವಿಷಯಗಳನ್ನೆಲ್ಲ ಹೇಳುತ್ತಿದ್ದೆನಲ್ಲ–”
ಡಾಕ್ಟರ್: “ಇವರೆಲ್ಲರಿಗೂ ಎಲ್ಲವನ್ನೂ ತಿಳಿಸಿ.”
ಶ್ರೀರಾಮಕೃಷ್ಣರು: “ಜೀರ್ಣಶಕ್ತಿಗನುಗುಣವಾಗಿ ಆಹಾರ ಕೊಡಬೇಕು. ನಿನಗೆ ತಿಳಿಸಿದುದನ್ನು ಅರ್ಥಮಾಡಿಕೊಳ್ಳಲು ಎಲ್ಲರಿಗೂ ಸಾಧ್ಯವೇ? ನಿನಗೇನೊ ತಿಳಿಸಿದೆ. ಆಗ ಅದು ಬೇರೆ ಸಮಾಚಾರ. ತಾಯಿ ಮನೆಗೆ ಮೀನು ಕೊಂಡುಕೊಂಡು ಬಂದಿದ್ದಾಳೆ ಅಂತ ಇಟ್ಟುಕೊ. ಎಲ್ಲಾ ಮಕ್ಕಳ ಜೀರ್ಣಶಕ್ತಿಯೂ ಒಂದೇ ಸಮನಾಗಿ ಇಲ್ಲ. ಕೆಲವಕ್ಕೆ ಪಲಾವು ಮಾಡಿಕೊಡುತ್ತಾಳೆ, ಇನ್ನೂ ಕೆಲವಕ್ಕೆ ಮೀನಿನ ಸಾರು ಮಾಡಿ ಬಡಿಸುತ್ತಾಳೆ. ಈ ಎರಡನೆಯದಕ್ಕೆ ಜೀರ್ಣಶಕ್ತಿ ಕಡಿಮೆ.” (ಎಲ್ಲರೂ ನಗುತ್ತಾರೆ.)
ಡಾಕ್ಟರ್ ಸರ್ಕಾರ್ ಪರಮಹಂಸರಿಂದ ಬೀಳ್ಕೊಂಡು ಹೊರಟುಹೋದ. ಇಂದು ವಿಜಯದಶಮಿ. ಭಕ್ತರೆಲ್ಲರೂ ಪರಮಹಂಸರಿಗೆ ಪ್ರಣಾಮಮಾಡಿ ಅವರ ಪಾದಧೂಳಿಯನ್ನು ಸ್ವೀಕರಿಸಿದರು. ಈಗ ಭಕ್ತರು ಪರಸ್ಪರ ಆಲಿಂಗನಮಾಡಿಕೊಳ್ಳುತ್ತಾ ಇದ್ದಾರೆ. ಅವರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಪರಮಹಂಸರ ಆರೋಗ್ಯ ಸರಿಯಾಗಿಲ್ಲದಿದ್ದರೂ, ಎಲ್ಲವನ್ನೂ ಮರೆತುಬಿಟ್ಟಿದ್ದಾರೆ. ಪ್ರೇಮಾಲಿಂಗನ ಮತ್ತು ಬಾಯನ್ನು ಸಿಹಿ ಮಾಡುವಿಕೆ ಬಹಳ ಹೊತ್ತಿನವರೆಗೆ ನಡೆಯಿತು. ಪರಮಹಂಸರ ಹತ್ತಿರ ಚಿಕ್ಕ ನರೇನ, ಮಾಸ್ಟರ್, ಇನ್ನೂ ನಾಲ್ಕೈದು ಮಂದಿ ಭಕ್ತರು ಕುಳಿತಿದ್ದಾರೆ. ಪರಮಹಂಸರು ಆನಂದದಿಂದ ಮಾತುಕತೆಯಾಡುತ್ತಿದ್ದಾರೆ. ಡಾಕ್ಟರ್ ಸರ್ಕಾರನ ಸಂಬಂಧವಾಗಿ ಮಾತು ಆರಂಭವಾಯಿತು.
ಶ್ರೀರಾಮಕೃಷ್ಣರು: “ನಾನು ಡಾಕ್ಟರ್ ಸರ್ಕಾರನಿಗೆ ವಿಶೇಷವಾಗಿ ಉಪದೇಶ ಮಾಡುವ ಆವಶ್ಯಕತೆಯೇನಿಲ್ಲ. ಮರವನ್ನು ಇನ್ನೇನು ಕತ್ತರಿಸಿ ಆಯಿತು ಅನ್ನುವಷ್ಟರಲ್ಲಿಯೇ, ಕತ್ತರಿಸುತ್ತಿದ್ದವನು ಸ್ವಲ್ಪ ದೂರಕ್ಕೆ ಹೋಗಿ ನಿಂತುಕೊಳ್ಳುತ್ತಾನೆ. ಸ್ವಲ್ಪ ಹೊತ್ತಿನೊಳಗಾಗಿಯೇ ಮರ ತಾನಾಗಿಯೇ ಉರುಳಿಕೊಳ್ಳುತ್ತದೆ.”
ಚಿಕ್ಕ ನರೇನ್ (ನಗುತ್ತ): “ಇಲ್ಲೆಲ್ಲಾ ಮೂಲತತ್ತ್ವದ ಅನುಷ್ಠಾನವೆ!”
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಡಾಕ್ಟರ್ ಆಗಲೇ ಬಹಳ ಬದಲಾಯಿಸಿ ಬಿಟ್ಟಿದ್ದಾನೆ, ಅಲ್ಲವೇ?”
ಮಾಸ್ಟರ್: “ಹೌದು ನಿಜ. ಇಲ್ಲಿಗೆ ಬಂದ ಅಂದರೆ, ಆತನಿಗೆ ಸ್ವಲ್ಪ ಮಂಕು ಕವಿದುಕೊಳ್ಳುತ್ತದೆ. ನಿಮಗೇನು ಔಷಧ ಕೊಡಬೇಕು ಏನು ಎತ್ತಲು ಎಂಬುದನ್ನು ಸಂಪೂರ್ಣವಾಗಿ ಮರೆತೇಬಿಡುತ್ತಾನೆ. ಜ್ಞಾಪಕಪಡಿಸಿದಾಗ ಹೇಳಲಾರಂಭಿಸುತ್ತಾನೆ, ‘ಓ ಹೌದು! ಹೌದು! ಔಷಧ ಕೊಡಬೇಕು’ ಅಂತ.”
ಕೆಲವು ಮಂದಿ ಭಕ್ತರು ಬೈಠಕ್ಖಾನೆಯಲ್ಲಿ ಹಾಡುತ್ತಿದ್ದರು. ಅವರು ಈಗ ಪರಮ ಹಂಸರ ಕೊಠಡಿಗೆ ಬಂದು ಕುಳಿತುಕೊಂಡಿದ್ದಾರೆ. ಪರಮಹಂಸರು ಅವರಿಗೆ ಹೇಳುತ್ತಿದ್ದಾರೆ, “ನಿಮ್ಮ ಹಾಡನ್ನು ಕೇಳಿದೆ; ಆದರೆ ತಾಳ ಸರಿಯಾಗಿ ಬೀಳುತ್ತಿರಲಿಲ್ಲವಲ್ಲ ಏಕೆ? ತಾಳವಿಲ್ಲದೆ ಹಾಡುವುದರಲ್ಲಿ ಒಬ್ಬ ನಿಪುಣ ಇದ್ದಾನೆ ಅಂತ ಕೇಳಿದ್ದೇನೆ. ನೀವು ಅದರಲ್ಲಿ ಪ್ರವೀಣರು.” (ಎಲ್ಲರೂ ನಗುತ್ತಿದ್ದಾರೆ.)
ಚಿಕ್ಕ ನರೇನನ ಒಬ್ಬ ಯುವಕಬಂಧು ಬಂದಿದ್ದಾನೆ. ಬಹಳ ಚೆನ್ನಾದ ಉಡಿಗೆತೊಡಿಗೆ ಹಾಕಿಕೊಂಡಿದ್ದಾನೆ, ಕಣ್ಣಿಗೆ ಕನ್ನಡಕ ಹಾಕಿಕೊಂಡಿದ್ದಾನೆ. ಪರಮಹಂಸರು ಚಿಕ್ಕ ನರೇನನೊಡನೆ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೋಡು, ಈ ರಸ್ತೆಯಲ್ಲಿ ಒಬ್ಬ ಯುವಕ ಹೋಗುತ್ತಿದ್ದ. ಮಡಿಕೆಮಡಿಕೆಯಾಗಿ ಹೊಲಿದಿದ್ದ ಶರಟು ಹಾಕಿಕೊಂಡಿದ್ದ. ಹೇಗೆ ವರ್ಣಿಸಲಿ ಆತನ ಬಿಂಕದ ನಡಿಗೆಯನ್ನು! ಆಗಾಗ ತನ್ನ ಉತ್ತರೀಯವನ್ನು ಸರಿಸಿ ಆ ಷರ್ಟನ್ನು ಪ್ರದರ್ಶಿಸುತ್ತಿದ್ದ. ಯಾರಾದರು ತನ್ನ ಉಡುಪನ್ನು ಮೆಚ್ಚುತ್ತಿರುವರೇ ಇಲ್ಲವೇ ಎಂಬುದನ್ನು ಅರಿಯಲು ಆಗಾಗ ಸುತ್ತಲೂ ನೋಡುತ್ತಿದ್ದ. ಆದರೆ ಆತ ನಡೆಯುತ್ತಿದ್ದಾಗ ಆತನ ಸೊತ್ತುಗಾಲುಗಳು ಒಂದನ್ನೊಂದು ಬಡಿಯುತ್ತಿದ್ದುದು ಚೆನ್ನಾಗಿ ಕಾಣುತ್ತಿತ್ತು. (ಎಲ್ಲರೂ ನಗುತ್ತಿದ್ದಾರೆ.) ನವಿಲು ತನ್ನ ಪುಕ್ಕವನ್ನು ಬಹಳ ಚೆನ್ನಾಗಿ ಪ್ರದರ್ಶಿಸುತ್ತದೆ; ಆದರೆ ಅದರ ಕಾಲುಗಳು ನೋಡಲು ಅಸಹ್ಯವಾಗಿವೆ. (ಎಲ್ಲರೂ ನಗುತ್ತಿದ್ದಾರೆ.) ಒಂಟೆ ಕುರೂಪಿಯಾದ ಪ್ರಾಣಿ. ಅದರ ಪ್ರತಿಯೊಂದು ಅಂಗವೂ ಕುರೂಪವಾದುದೆ.”
ಯುವಕ: “ಆದರೆ ಅದರ ನಡವಳಿಕೆ ಒಳ್ಳೆಯದು.”
ಶ್ರೀರಾಮಕೃಷ್ಣರು: “ನಿಜ, ಆದರೆ ಅದು ಮುಳ್ಳುಗಿಡ ತಿನ್ನುತ್ತದೆ. ಅದನ್ನು ತಿಂದು ಬಾಯಿಂದ ರಕ್ತ ಸುರಿದರೂ ಅದು ಮುಳ್ಳು ತಿನ್ನುವುದನ್ನು ಮಾತ್ರ ಬಿಡದು. ಸಂಸಾರಿ ಮಕ್ಕಳನ್ನು ಕಳೆದುಕೊಳ್ಳುತ್ತಲೇ ಇರುತ್ತಾನೆ. ಆದರೂ ಮಕ್ಕಳಿಗಾಗಿ ಹಾತೊರೆಯುತ್ತಲೇ ಇರುತ್ತಾನೆ!”
೨೨ನೆ ಅಕ್ಟೋಬರ್ ೧೮೮೫, ಆಶ್ವೀಜ ಶುಕ್ಲ ಚತುರ್ದಶಿ, ಗುರುವಾರ
ಘಂಟೆ ರಾತ್ರಿ ಏಳು. ಪರಮಹಂಸರು ಶ್ಯಾಮಪುಕುರದ ತಮ್ಮ ಕೊಠಡಿಯಲ್ಲಿ ಹಾಸಿಗೆ ಮೇಲೆ ಕುಳಿತಿದ್ದಾರೆ. ಡಾಕ್ಟರ್ ಸರ್ಕಾರ, ಈಶಾನ ಮತ್ತು ಇನ್ನೂ ಕೆಲವು ಮಂದಿ ಭಕ್ತರು ಅವರ ಸುತ್ತಲೂ ಕುಳಿತಿದ್ದಾರೆ. ಡಾಕ್ಟರ್ ಸರ್ಕಾರನಿಗೆ ಹೆಚ್ಚು ಕೆಲಸವಿದ್ದರೂ ಕೆಲವು ವೇಳೆ ಆರು ಏಳು ಘಂಟೆಗಳ ಕಾಲವನ್ನೂ ಪರಮಹಂಸರೊಡನೆಯೇ ಕಳೆದುಬಿಡುತ್ತಾ ಇದ್ದಾನೆ. ಪರಮಹಂಸರಲ್ಲಿ ಆತನಿಗೆ ಅತ್ಯಂತ ಶ್ರದ್ಧಾಭಕ್ತಿ. ಅವರ ಭಕ್ತರನ್ನು ತನ್ನ ಸ್ವಬಾಂಧವರೇ ಅಂತ ಭಾವಿಸುತ್ತಿದ್ದಾನೆ. ಕೊಠಡಿಯಲ್ಲಿ ದೀಪ ಉರಿಯುತ್ತಿದೆ. ಹೊರಗೆ ಚಂದ್ರನ ಬೆಳಕು ಹಾಲು ಚೆಲ್ಲಿದಂತೆ ಹರಡಿದೆ.
ಶ್ರೀರಾಮಕೃಷ್ಣರು (ಈಶಾನನಿಗೆ): “ಯಾವ ಸಾಂಸಾರಿಕ ಭಗವಂತನ ಪಾದಪದ್ಮಗಳಲ್ಲಿ ಭಕ್ತಿಯನ್ನಿಟ್ಟು ಸಂಸಾರವನ್ನು ನಡೆಸಿಕೊಂಡು ಹೋಗುತ್ತಾನೊ ಆತನೇ ಧನ್ಯ. ಆತನೇ ವೀರಪುರುಷ. ಎರಡು ಮಣ ಭಾರದ ಹೊರೆಯನ್ನು ಹೊತ್ತುಕೊಂಡಿದ್ದರೂ, ನಿಂತು ಮದುವೆ ಮೆರವಣಿಗೆ ನೋಡುವವನಿಗೆ ಆತನನ್ನು ಹೋಲಿಸಬಹುದು. ಅತ್ಯಧಿಕ ಶಕ್ತಿವಂತನಾಗದಿದ್ದರೆ ಹಾಗೆ ಮಾಡಲಾಗುವುದಿಲ್ಲ. ಮತ್ತೆ ಆತನನ್ನು ಕೆಸರಿನ ಮೀನಿಗೆ ಹೋಲಿಸಬಹುದು. ಅದು ಕೆಸರಿನಲ್ಲೇ ವಾಸಿಸುತ್ತಿದ್ದರೂ ಕೆಸರನ್ನು ಮಾತ್ರ ಮೈಗೆ ಅಂಟಿಸಿಕೊಳ್ಳುವುದಿಲ್ಲ. ಇನ್ನೂ ಮತ್ತೆ ಆತನನ್ನು ನೀರುಕೋಳಿಗೆ ಹೋಲಿಸಬಹುದು. ಅದು ಸತತ ನೀರಿನೊಳಕ್ಕೆ ಮುಳುಗುತ್ತಲೇ ಇರುತ್ತದೆ; ಆದರೆ ಅದು ಒಮ್ಮೆ ರೆಕ್ಕೆಯನ್ನು ಕೊಡಹಿಬಿಟ್ಟಿತು ಅಂದರೆ ಒಂದು ನೀರಿನ ತೊಟ್ಟೂ ಅದರ ಮೈಮೇಲೆ ನಿಲ್ಲದು.
“ಆದರೆ ಸಂಸಾರದಲ್ಲಿ ನಿರ್ಲಿಪ್ತತೆಯಿಂದ ಇರಬೇಕಾದರೆ ಕಿಂಚಿತ್ ಸಾಧನೆಯನ್ನು ಮಾಡಲೇಬೇಕಾಗುತ್ತದೆ. ಸ್ವಲ್ಪ ಕಾಲವನ್ನು ನಿರ್ಜನಪ್ರದೇಶದಲ್ಲಿ ಕಳೆಯಬೇಕಾಗುತ್ತದೆ– ಒಂದು ವರ್ಷವನ್ನೊ, ಆರು ತಿಂಗಳನ್ನೊ, ಮೂರು ತಿಂಗಳನ್ನೊ, ಕೊನೆಗೆ ಒಂದು ತಿಂಗಳನ್ನಾದರೂ ಸರಿಯೆ. ಆ ಏಕಾಂತವಾಸದಲ್ಲಿ ಭಗವಂತನ ಕಡೆ ಮನಸ್ಸನ್ನು ತಿರುಗಿಸಿ, ಅತ್ಯಂತ ವ್ಯಾಕುಲಚಿತ್ತದಿಂದ ಆತನ ಪಾದಪದ್ಮಗಳಲ್ಲಿ ತನಗೆ ಭಕ್ತಿಯುಂಟಾಗುವಂತೆ ಆತನಿಗೆ ಸರ್ವದಾ ಪ್ರಾರ್ಥನೆಮಾಡಿಕೊಳ್ಳುತ್ತಿರಬೇಕು. ಮನಸ್ಸಿನಲ್ಲೇ ಹೇಳಿಕೊಳ್ಳುತ್ತಿರಬೇಕು, ‘ನನ್ನವರು ಎಂಬುವವರು ಈ ಸಂಸಾರದಲ್ಲಿ ಯಾರೂ ಇಲ್ಲ. ಯಾರನ್ನು ನಾನು ನನ್ನವರು ಅಂತ ಭಾವಿಸುತ್ತಿದ್ದೇನೊ ಅವರ ಬಾಳುವೆ ಒಂದೆರಡು ದಿವಸದ್ದು ಮಾತ್ರವೆ. ಭಗವಂತನೊಬ್ಬನೇ ಏಕಮಾತ್ರ ನನ್ನ ಸ್ವಂತದವ, ಆತನೇ ನನ್ನ ಸರ್ವಸ್ವ. ಅಯ್ಯೋ! ಆತನನ್ನು ನಾನು ಪಡೆದುಕೊಳ್ಳುವ ಬಗೆ ಹೇಗೆ?’ ಅಂತ.
“ಭಕ್ತಿಯನ್ನು ಪಡೆದುಕೊಂಡ ನಂತರ ಬೇಕಾದರೆ ಸಂಸಾರದಲ್ಲಿ ಇರಬಹುದು. ಇದು ಕೈಗೆ ಎಣ್ಣೆ ಸವರಿಕೊಂಡು ಹಲಸಿನ ಹಣ್ಣನ್ನು ಬಿಡಿಸಿದ ಹಾಗೆ. ಅದರ ಅಂಟು ಕೈಗೆ ಅಂಟದು. ಸಂಸಾರವೇ ನೀರು; ಮನಸ್ಸೇ ಹಾಲು. ಹಾಲನ್ನು ನೀರಿಗೆ ಹೊಯ್ದರೆ, ಅದು ನೀರಿನಲ್ಲಿ ಬೆರೆತುಹೋಗಿಬಿಡುತ್ತದೆ. ಅದಕ್ಕಾಗಿಯೇ ಮೊದಲು ಹಾಲಿಗೆ ಹೆಪ್ಪು ಹಾಕಿ ಅದನ್ನು ನಿರ್ಜನಪ್ರದೇಶದಲ್ಲಿ ಇಡಬೇಕಾಗುತ್ತದೆ. ಮೊಸರಾದ ನಂತರ ಅದನ್ನು ಕಡೆದು ಬೆಣ್ಣೆ ತೆಗೆಯಬೇಕು. ಬೆಣ್ಣೆ ತೆಗೆದು ಅದನ್ನು ನೀರಿನಲ್ಲಿ ಇಟ್ಟರೆ, ಆಗ ಅದು ನೀರಿನೊಡನೆ ಬೆರೆತುಕೊಳ್ಳದು; ನಿರ್ಲಿಪ್ತವಾಗಿ ನೀರಿನ ಮೇಲೆ ತೇಲುತ್ತಿರುತ್ತದೆ.
“ಬ್ರಾಹ್ಮಸಮಾಜದ ಕೆಲವು ಮಂದಿ ಸದಸ್ಯರು ನನಗೆ ಹೇಳಿದರು, ‘ಮಹಾಶಯರೆ, ನಮ್ಮದು ಜನಕರಾಜನ ಮಾರ್ಗ. ಆತನಂತೆ ನಿರ್ಲಿಪ್ತತೆಯಿಂದ ನಾವು ಸಂಸಾರದಲ್ಲಿರ ಬೇಕೆಂದಿದ್ದೇವೆ.’ ನಾನು ಹೇಳಿದೆ: ನಿರ್ಲಿಪ್ತತೆಯಿಂದ ಸಂಸಾರದಲ್ಲಿರುವುದು ಬಹಳ ಕಠಿಣ. ಬಾಯಿಮಾತಿನಿಂದ ಜನಕರಾಜನಾಗುವುದಕ್ಕೆ ಆಗುವುದಿಲ್ಲ. ಜನಕ ಶೀರ್ಷಾಸನದಲ್ಲಿ ನಿಂತು ಎಷ್ಟೊಂದು ಕಾಲ ತಪಸ್ಸುಮಾಡಿದ ಏನು ಕತೆ! ನೀವೇನು ಅಂಥ ಕಠೋರ ತಪಸ್ಸು ಮಾಡಬೇಕಾಗೇನಿಲ್ಲ. ಆದರೆ ನಿಮಗೆ ಸಾಧನೆ ಆವಶ್ಯಕ, ಏಕಾಂತವಾಸ ಆವಶ್ಯಕ. ಏಕಾಂತವಾಸ ಮಾಡಿ, ಜ್ಞಾನ ಪಡೆದುಕೊಂಡು, ಭಕ್ತಿ ಪಡೆದುಕೊಂಡು, ಬಳಿಕ ಬೇಕಾದರೆ ಸಂಸಾರದಲ್ಲಿ ಇರಬಹುದು. ನಿರ್ಜನ ಪ್ರದೇಶದಲ್ಲಿ ಹೆಪ್ಪು ಹಾಕಿದ ಹಾಲನ್ನು ಇಟ್ಟು ಮೊಸರುಮಾಡಿಕೊಳ್ಳಬೇಕಾಗುತ್ತದೆ. ಸ್ಥಳ ಬದಲಾಯಿಸುತ್ತಲೊ ಅಥವಾ ಆಗಾಗ ಅಲ್ಲಾಡಿ ಸುತ್ತಲೊ ಇದ್ದರೆ ಅದು ಮೊಸರಾಗದು.
“ಜನಕ ನಿರ್ಲಿಪ್ತನಾಗಿದ್ದುದರಿಂದ ಆತನನ್ನು ವಿದೇಹಿ ಅಂತಲೂ ಜನ ಕರೆಯು ತ್ತಿದ್ದರು–ಅಂದರೆ ದೇಹಾತ್ಮಬುದ್ಧಿರಹಿತ ಎಂದು. ಸಂಸಾರದಲ್ಲಿದ್ದರೂ ಜೀವನ್ಮುಕ್ತನಾಗಿ ಓಡಾಡುತ್ತಿದ್ದ. ದೇಹಬುದ್ಧಿ ಹೋಗುವುದು ಅಂದರೆ ಅದು ಬಹಳ ದೂರದ ಮಾತು. ಬಹಳ ಸಾಧನೆ ಮಾಡಬೇಕಾಗುತ್ತದೆ.
“ಜನಕ ದೊಡ್ಡ ವೀರಪುರುಷ. ಎರಡು ಕತ್ತಿಗಳನ್ನು ತಿರುಗಿಸುತ್ತಿದ್ದ–ಒಂದು ಜ್ಞಾನದ್ದು, ಇನ್ನೊಂದು ಕರ್ಮದ್ದು.
“ಸಂಸಾರಾಶ್ರಮದ ಜ್ಞಾನಿ, ಸಂನ್ಯಾಸಾಶ್ರಮದ ಜ್ಞಾನಿ, ಇವರಿಗೆ ದೊರಕುವ ಜ್ಞಾನದಲ್ಲಿ ಏನಾದರೂ ತಾರತಮ್ಯವಿದೆಯೆ ಎಂದು ನೀವು ಕೇಳಬಹುದು. ಉತ್ತರ ‘ಇಲ್ಲ’ ಅಂತ. ಇಬ್ಬರದೂ ಒಂದೇ ತರದ್ದು. ಇಬ್ಬರೂ ಜ್ಞಾನಿಗಳೆ: ಇಬ್ಬರಿಗೂ ಒಂದೇ ತರದ ಅನುಭವ. ಆದರೆ ಸಂಸಾರಾಶ್ರಮದ ಜ್ಞಾನಿ ಸ್ವಲ್ಪ ಭಯದಿಂದಿರಬೇಕಾಗುತ್ತದೆ. ಕಾಮಕಾಂಚನದ ಮಧ್ಯದಲ್ಲಿ ಇರುವುದು ಅಂದರೆ ಸ್ವಲ್ಪ ಭಯದಿಂದಲೇ ಇರಬೇಕಾಗುತ್ತದೆ. ಕಾಡಿಗೆ ಹಚ್ಚಿರುವ ಮನೆಯಲ್ಲಿ ವಾಸಿಸಲುಹೋದರೆ, ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಅಲ್ಪಸ್ವಲ್ಪವಾಗಿಯಾದರೂ ಅದು ಮೈಗೆ ಹತ್ತಿಕೊಂಡೇ ಬಿಡುತ್ತದೆ.
“ಬೆಣ್ಣೆ ತೆಗೆದು ಹೊಸ ಮಡಕೆಯಲ್ಲಿ ಇಟ್ಟರೆ ಅದು ಕೆಟ್ಟುಹೋಗುವ ಸಂಭವವೇ ಇಲ್ಲ. ಆದರೆ ಅದನ್ನು ಮೊಸರಿನ ಮಡಕೆಯಲ್ಲಿ ಇಟ್ಟರೆ ಸ್ವಲ್ಪ ಸಂದೇಹಪಡಬೇಕಾಗುತ್ತದೆ. (ಎಲ್ಲರೂ ನಗುತ್ತಾರೆ.)
“ಬತ್ತವನ್ನು ಹುರಿದಾಗ ‘ಟಪ್ ಟಪ್’ ಅಂತ ಒಂದೆರಡು ಅರಳುಗಳು ಬಾಣಲೆ ಯಿಂದ ಹೊರಕ್ಕೆ ಹಾರಿಹೋಗುತ್ತವೆ. ಅಂಥವು ಮಲ್ಲಿಗೆ ಹೂವಿನೋಪಾದಿಯಲ್ಲಿ ಬೆಳ್ಳಗಿರು ತ್ತವೆ; ಒಂದು ಕಿಂಚಿತ್ತೂ ಕಪ್ಪಾಗಿರುವುದಿಲ್ಲ. ಬಾಣಲೆಯಲ್ಲೇ ಉಳಿದುಕೊಳ್ಳುವ ಅರಳುಗಳೂ ಒಳ್ಳೆಯ ಅರಳುಗಳೇ. ಆದರೆ ಅವು ಸ್ವಲ್ಪ ಕಪ್ಪಾಗಿಹೋಗುತ್ತವೆ. ಸಂಸಾರ ತ್ಯಾಗಿ- ಸಂನ್ಯಾಸಿ ಬ್ರಹ್ಮಜ್ಞಾನ ಪಡೆದುಕೊಂಡರೆ, ಆತ ಮಲ್ಲಿಗೆ ಹೂವಿನೋಪಾದಿಯಲ್ಲಿ ಯಾವ ಕರೆಯೂ ಇಲ್ಲದವನಾಗಿ ಕಾಣುತ್ತಾನೆ; ಆದರೆ ಬ್ರಹ್ಮಜ್ಞಾನ ಪಡೆದು ಸಂಸಾರವೆಂಬ ಬಾಣಲೆಯಲ್ಲಿ ಇದ್ದ ಅಂದರೆ ಆತನ ಮೈಗೆ ಒಂದು ಸ್ವಲ್ಪ ಕರೆ ಹತ್ತಬಹುದು. (ಎಲ್ಲರೂ ನಗುತ್ತಾರೆ.)
“ಜನಕರಾಜನ ಸಭೆಗೆ ಭೈರವಿಯೊಬ್ಬಳು ಬಂದಿದ್ದಳು. ಸ್ತ್ರೀವ್ಯಕ್ತಿಯನ್ನು ಕಂಡೊಡನೆಯೇ ಜನಕ ಮಹಾರಾಜ ತನ್ನ ತಲೆಯನ್ನು ತಗ್ಗಿಸಿ ದೃಷ್ಟಿಯನ್ನು ನೆಲದ ಕಡೆ ಹಾಕಲಾರಂಭಿಸಿದ. ಅದನ್ನು ಕಂಡು ಭೈರವಿ ಹೇಳಿದಳು: ‘ಹೇ ಜನಕ ಮಹಾರಾಜ, ಸ್ತ್ರೀ ವ್ಯಕ್ತಿಯನ್ನು ಕಂಡರೆ ಇನ್ನೂ ನಿನಗೆ ಭಯವೆ? ಪೂರ್ಣಜ್ಞಾನ ದೊರೆಯಿತು ಅಂದರೆ ಐದು ವರ್ಷದ ಹಸುಳೆಯ ಸ್ವಭಾವ ಬಂದುಬಿಡುತ್ತದೆ. ಆಗ ಸ್ತ್ರೀಪುರುಷರೆಂಬ ಭೇದಬುದ್ಧಿ ಇರದು.’
“ಸಂಸಾರಾಶ್ರಮ–ಜ್ಞಾನಿಯ ಮೈಗೆ ಸ್ವಲ್ಪ ಕರೆಯೇನೊ ಹತ್ತಬಹುದು. ಆದರೆ ಆ ಕರೆಯಿಂದ ಅವರಿಗೆ ಯಾವ ಹಾನಿಯೂ ತಟ್ಟದು. ಚಂದ್ರನಲ್ಲಿ ಕಳಂಕವೇನೋ ಇದೆ. ಆದರೆ ಅದು ಆತನ ಬೆಳಕಿಗೆ ಯಾವ ತೊಂದರೆಯನ್ನೂ ತರದು.
“ಕೆಲವರು ಬ್ರಹ್ಮಜ್ಞಾನ ದೊರೆತ ನಂತರ ಲೋಕಶಿಕ್ಷಣಾರ್ಥವಾಗಿ ಕರ್ಮ ಮಾಡುತ್ತಾರೆ. ಉದಾಹರಣೆಗೆ–ಜನಕ, ನಾರದ ಮೊದಲಾದವರು. ಲೋಕಶಿಕ್ಷಣ ಮಾಡಬೇಕಾದರೆ ಶಕ್ತಿ ಬೇಕು. ಋಷಿಗಳು ತಮ್ಮ ತಮ್ಮ ಜ್ಞಾನಕ್ಕಾಗಿಯೇ ವ್ಯಸ್ತರಾಗಿದ್ದರು. ಆದರೆ ನಾರದಾದಿ ಆಚಾರ್ಯರು ಜನರಿಗೆ ಹಿತವನ್ನುಂಟುಮಾಡುತ್ತಾ ಚಲಿಸುತ್ತಿದ್ದರು. ಅವರು ವೀರಪುರುಷರು.
“ನೀರಿನ ಮೇಲೆ ತೇಲುತ್ತಿರುವ ಒಂದು ಕ್ಷುದ್ರ ಕಡ್ಡಿಯ ಮೇಲೆ ಒಂದು ಪುಟ್ಟ ಹಕ್ಕಿಯೇನಾದರು ಬಂದು ಕುಳಿತುಕೊಂಡರೂ ಅದು ಮುಳುಗಿಹೋಗುತ್ತದೆ. ಆದರೆ ನೀರಿನ ಮೇಲೆ ತೇಲುತ್ತಿರುವ ಒಂದು ದೊಡ್ಡ ದಿಮ್ಮಿ ಹಸುವನ್ನು, ಮನುಷ್ಯನನ್ನು, ಅಷ್ಟೇಕೆ ಒಂದು ಆನೆಯನ್ನೂ ಹೊತ್ತು ತೇಲಬಲ್ಲದು. ಜಹಜು ತಾನೂ ಆಚೆ ದಡವನ್ನು ಮುಟ್ಟುವುದಲ್ಲದೆ ಜೊತೆಗೆ ಎಷ್ಟೋ ಜನರನ್ನೂ ಅಲ್ಲಿಗೆ ತಲುಪಿಸಿಬಿಡುತ್ತದೆ. ನಾರದಾದಿ ಆಚಾರ್ಯರನ್ನು ದೊಡ್ಡ ದೊಡ್ಡ ಮರದ ದಿಮ್ಮಿಗಾಗಲಿ ಅಥವಾ ಜಹಜಿಗಾಗಲಿ ಹೋಲಿಸಬಹುದು.
“ಕೆಲವರು ತಿಂಡಿ ತಿಂದು ಅದು ಬೇರೆಯವರಿಗೆ ಗೊತ್ತಾಗಿಬಿಡಬಹುದೆಂದು ಚೌಕದಿಂದ ಚೆನ್ನಾಗಿ ಬಾಯಿ ಒರೆಸಿಕೊಂಡುಬಿಡುತ್ತಾರೆ. (ಎಲ್ಲರೂ ನಗುತ್ತಾರೆ.) ಇನ್ನು ಕೆಲವರು ತಮಗೇನಾದರೂ ಮಾವಿನಹಣ್ಣು ದೊರೆತರೆ ಕೊಯ್ದು ಎಲ್ಲರಿಗೂ ಒಂದೊಂದು ಚೂರು ಕೊಟ್ಟು ತಾವೂ ತಿನ್ನುತ್ತಾರೆ.
“ನಾರದಾದಿ ಆಚಾರ್ಯರು ಜ್ಞಾನವನ್ನು ಪಡೆದನಂತರವೂ ಎಲ್ಲರ ಮಂಗಳಕ್ಕಾಗಿ ಭಕ್ತರಾಗಿಯೇ ಉಳಿದುಕೊಂಡಿದ್ದರು.”
ಡಾಕ್ಟರ್: “ಜ್ಞಾನ ಮನುಷ್ಯನನ್ನು ಮೂಕನನ್ನಾಗಿ ಮಾಡಿಬಿಡುತ್ತದೆ. ಕಣ್ಣು ಮುಚ್ಚಿ ಕೊಂಡು ಅದರಿಂದ ನೀರು ಸುರಿಯಲಾರಂಭಿಸುತ್ತದೆ, ಆಗ ಆತನಿಗೆ ಭಕ್ತಿ ಬೇಕಾಗುತ್ತದೆ.”
ಶ್ರೀರಾಮಕೃಷ್ಣರು: “ಭಕ್ತಿ ಹೆಂಗಸು; ಅದಕ್ಕಾಗಿ ಅದು ಅಂತಃಪುರದವರೆಗೆ ಹೋಗಬಲ್ಲದು. ಜ್ಞಾನ ಹೊರಗಿನ ಆವರಣದವರೆಗೆ ಮಾತ್ರ.” (ಎಲ್ಲರೂ ನಗುತ್ತಾರೆ.)
ಡಾಕ್ಟರ್: “ಅಂತಃಪುರದವರೆಗೆ ಸಿಕ್ಕಿಸಿಕ್ಕಿದ ಹೆಂಗಸರನ್ನೆಲ್ಲ ಬಿಡುವುದಕ್ಕಾಗುವುದಿಲ್ಲ ವಲ್ಲ. ಉದಾಹರಣೆಗೆ ವೇಶ್ಯೆಯರು. ಅದಕ್ಕಾಗಿಯೆ ಜ್ಞಾನ ಬೇಕು.”
ಶ್ರೀರಾಮಕೃಷ್ಣರು: “ಕೆಲವರಿಗೆ ಸರಿಯಾದ ಮಾರ್ಗ ಗೊತ್ತಿರುವುದಿಲ್ಲ. ಆದರೆ ಹೃದಯದಲ್ಲಿ ಭಕ್ತಿ ಇದೆ. ಮತ್ತು ಆತನ ಸಾಕ್ಷಾತ್ಕಾರ ಪಡೆಯಬೇಕೆಂಬ ಇಚ್ಛೆ ಇದೆ. ಈ ವಿಧದ ಜನರು ಕೇವಲ ತಮ್ಮ ಭಕ್ತಿಯ ಜೋರಿನಿಂದಲೇ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಬಿಡುತ್ತಾರೆ. ಒಬ್ಬ ದೊಡ್ಡ ಭಕ್ತ ಶ್ರೀಜಗನ್ನಾಥನ ದರ್ಶನಕ್ಕಾಗಿ ಮನೆ ಬಿಟ್ಟು ಹೊರಟ. ಪುರಿಗೆ ಮಾರ್ಗವಾವುದು ಎಂಬುದು ಆತನಿಗೆ ಗೊತ್ತಿರಲಿಲ್ಲ. ದಕ್ಷಿಣ ದಿಕ್ಕಿಗೆ ಬದಲು ಪಶ್ಚಿಮ ದಿಕ್ಕಿಗೆ ಹೋಗುತ್ತಾ ಇದ್ದ. ದಾರಿಯನ್ನೇನೋ ಆತ ತಪ್ಪಿದ್ದ, ಆದರೆ ಆತ ವ್ಯಾಕುಲನಾಗಿ ಜನರನ್ನು ಕೇಳಿ ಕೇಳಿ ಮುಂದುವರಿಯುತ್ತಿದ್ದ. ಅವರು ಹೇಳಿಕೊಡುತ್ತಿದ್ದರು, ‘ಈ ಮಾರ್ಗದಲ್ಲಿ ಬೇಡ, ಆ ಮಾರ್ಗದಲ್ಲಿ ಹೋಗು’ ಅಂತ. ಭಕ್ತ ಕೊನೆಗೆ ಪುರಿಯನ್ನು ತಲುಪಿ ಶ್ರೀಜಗನ್ನಾಥನ ದರ್ಶನ ಪಡೆದ. ನೋಡು, ತಿಳಿಯದೆ ಇದ್ದರೂ ಒಬ್ಬರಿಲ್ಲದಿದ್ದರೆ ಒಬ್ಬರಾದರೂ ದಾರಿ ತೋರಿಸಿಕೊಡುತ್ತಾರೆ.”
ಡಾಕ್ಟರ್: “ಆದರೆ ಆತ ದಾರಿ ತಪ್ಪಿಬಿಟ್ಟಿದ್ದನಲ್ಲ.”
ಶ್ರೀರಾಮಕೃಷ್ಣರು: “ಹೌದು, ಹಾಗಾಗುವುದುಂಟು. ಆದರೆ ಕೊನೆಗೆ ಗುರಿ ಮುಟ್ಟಿ ಬಿಡುತ್ತಾನೆ.”
ಒಬ್ಬ ಭಕ್ತ: “ಭಗವಂತ ಸಾಕಾರನೊ ಅಥವಾ ನಿರಾಕಾರನೊ?”
ಶ್ರೀರಾಮಕೃಷ್ಣರು: “ಆತ ಸಾಕಾರನೂ ಹೌದು, ನಿರಾಕಾರನೂ ಹೌದು. ಒಮ್ಮೆ ಒಬ್ಬ ಸಂನ್ಯಾಸಿ ಪುರಿ ದೇವಾಲಯಕ್ಕೆ ಶ್ರೀಜಗನ್ನಾಥನ ದರ್ಶನಮಾಡಿಬರಲು ಹೋಗಿದ್ದ. ಶ್ರೀಜಗನ್ನಾಥನ ದರ್ಶನವಾದನಂತರ ಆತನಿಗೆ ಸಂದೇಹ ಬಂತು, ಭಗವಂತ ಸಾಕಾರನೊ ಅಥವಾ ನಿರಾಕಾರನೊ ಅಂತ. ಕೈಯಲ್ಲಿ ದಂಡವಿತ್ತು. ಅದರಿಂದ ವಿಗ್ರಹವನ್ನು ಮುಟ್ಟಲು ಪ್ರಯತ್ನಿಸಿದ. ಮೊದಲು ದಂಡವನ್ನು ಎಡದಿಂದ ಬಲಕ್ಕೆ ಆಡಿಸಿದ. ಆಗ ಅದಕ್ಕೆ ಏನೂ ತಾಗಲಿಲ್ಲ. ಆದ್ದರಿಂದ ಅಲ್ಲಿ ವಿಗ್ರಹ ಇಲ್ಲ ಎಂದು ಭಾವಿಸಿ, ಭಗವಂತ ನಿರಾಕಾರ ಎಂಬ ನಿರ್ಧಾರಕ್ಕೆ ಬಂದ. ಮತ್ತೆ ಅದೇ ದಂಡವನ್ನು ಬಲದಿಂದ ಎಡಕ್ಕೆ ಆಡಿಸಿದ. ಆಗ ಅದು ವಿಗ್ರಹಕ್ಕೆ ತಾಗಿತು. ಆಗ ಭಗವಂತ ಸಾಕಾರ ಎಂಬ ಅನುಭವವಾಯಿತು. ಬಳಿಕ ಸಂನ್ಯಾಸಿ ಅರಿತುಕೊಂಡ, ಭಗವಂತ ಸಾಕಾರನೂ ಹೌದು ನಿರಾಕಾರನೂ ಹೌದು ಅಂತ.
“ಇದನ್ನು ಗ್ರಹಿಸುವುದು ಬಹಳ ಕಷ್ಟ. ನಿರಾಕಾರನಾಗಿರುವ ಭಗವಂತ ಮತ್ತೆ ಸಾಕಾರನಾಗುವ ಬಗೆ ಹೇಗೆ? ಈ ಸಂದೇಹ ಮನಸ್ಸಿನಲ್ಲಿ ಉದ್ಭವವಾಗುತ್ತದೆ. ಒಂದು ಪಕ್ಷ ಸಾಕಾರನಾಗಿರುವುದಾದರೆ, ವಿವಿಧ ರೂಪಗಳಿಂದ ಏಕೆ ಆತ ಕಾಣಿಸಿಕೊಳ್ಳುತ್ತಿದ್ದಾನೆ!”
ಡಾಕ್ಟರ್: “ಭಗವಂತ ಈ ಜಗತ್ತಿನ ಎಲ್ಲಾ ಆಕಾರಗಳನ್ನೂ ಸೃಷ್ಟಿಸಿದ್ದಾನೆ. ಆದ್ದರಿಂದ ಆತ ನಿರಾಕಾರ. ಭಗವಂತ ಎಲ್ಲವೂ ಆಗಬಲ್ಲ.”
ಶ್ರೀರಾಮಕೃಷ್ಣರು: “ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳದ ಹೊರತು ಇದನ್ನು ಗ್ರಹಿಸಲಾಗುವುದಿಲ್ಲ, ಆತ ಸಾಧಕರ ಸಲುವಾಗಿ ನಾನಾ ಭಾವಗಳಿಂದ ನಾನಾ ರೂಪಗಳಿಂದ ವ್ಯಕ್ತವಾಗುತ್ತಿದ್ದಾನೆ. ಒಬ್ಬನ ಹತ್ತಿರ ಒಂದು ಕೊಳದಪ್ಪಲೆಯಲ್ಲಿ ಒಂದು ವಿಧದ ಬಣ್ಣದ ನೀರು ಇತ್ತು. ತಮ್ಮ ಬಟ್ಟೆಗಳಿಗೆ ಬಣ್ಣ ಹಾಕಿಕೊಳ್ಳಲು ಅನೇಕರು ಆತನ ಬಳಿಗೆ ಬರುತ್ತಿದ್ದರು. ಆತ ತನ್ನ ಗಿರಾಕಿಗಳನ್ನು ಕೇಳುತ್ತಿದ್ದ, ‘ನಿಮಗೆ ಯಾವ ಬಣ್ಣ ಹಾಕಿಕೊಡಬೇಕು?’ ಒಬ್ಬ ಕೆಂಪು ಬಣ್ಣ ಅಂದರೆ, ಒಡನೆಯ ಆತ ಆ ಕೊಳದಪ್ಪಲೆಯಲ್ಲಿ ಬಟ್ಟೆ ಅದ್ದಿ ಹೇಳುತ್ತಿದ್ದ, ‘ಇಗೋ ತೆಗೆದುಕೋ, ಕೆಂಪು ಬಣ್ಣದಲ್ಲಿ ಅದ್ದಿರುವ ನಿನ್ನ ಬಟ್ಟೆಯನ್ನು.’ ಇನ್ನೊಬ್ಬ ಹಳದಿ ಬಣ್ಣ ಹಾಕಿಕೊಡುವಂತೆ ಕೇಳಿದರೆ, ಆತ ಅದೇ ಕೊಳದಪ್ಪಲೆಯಲ್ಲಿ ಆತನ ಬಟ್ಟೆಯನ್ನೂ ಅದ್ದಿ ಹೇಳುತ್ತಿದ್ದ: ‘ಇಗೋ, ತೆಗೆದುಕೋ, ಹಳದಿ ಬಣ್ಣದಲ್ಲಿ ಅದ್ದಿದ ನಿನ್ನ ಬಟ್ಟೆಯನ್ನು.’ ಮತ್ತೊಬ್ಬ ನೀಲಿ ವರ್ಣ ಹಾಕಿಕೊಡಬೇಕೆಂದು ಕೇಳಿದರೆ, ಆತ ಅದೇ ಕೊಳದಪ್ಪಲೆಯಲ್ಲಿ ಆತನ ಬಟ್ಟೆಯನ್ನೂ ಅದ್ದಿ ಹೇಳುತ್ತಿದ್ದ: ‘ಇಗೋ, ತೆಗೆದುಕೋ, ನಿನ್ನ ನೀಲಿ ವರ್ಣದ ಬಟ್ಟೆಯನ್ನು.’ ಯಾರು ಯಾರು ಯಾವ ಯಾವ ವರ್ಣದಲ್ಲಿ ತಮ್ಮ ಬಟ್ಟೆಯನ್ನು ಅದ್ದಿಕೊಡಬೇಕೆಂದು ಕೇಳುತ್ತಾರೋ ಆತ ಅದೇ ಕೊಳದಪ್ಪಲೆಯಲ್ಲಿ ಅದ್ದಿ ಅದ್ದಿ ಅವರವರಿಗೆ ಆಯಾಯ ವರ್ಣಗಳನ್ನು ಹಾಕಿಕೊಡುತ್ತಿದ್ದ. ಒಬ್ಬ ಈತ ಮಾಡುತ್ತಿರುವ ಸೋಜಿಗವಾದ ಕೆಲಸವನ್ನು ನೋಡುತ್ತಿದ್ದ. ಆ ಬಣ್ಣ ಹಾಕುವವನು ಆತನನ್ನೂ ಕೇಳಿದ: ‘ಏನಯ್ಯಾ, ನಿನ್ನ ಬಟ್ಟೆಗೆ ಎಂಥ ಬಣ್ಣಹಾಕಿಕೊಡಬೇಕು?’ ಆಗ ಆತ ಹೇಳಿದ: ‘ಸಹೋದರನೆ, ನಿನ್ನ ಕೊಳದಪ್ಪಲೆಯಲ್ಲಿರುವ ಬಣ್ಣದ ವರ್ಣ ಹಾಕಿಕೊಡು.’ (ಎಲ್ಲರೂ ನಗುತ್ತಾರೆ.)
“ಒಮ್ಮೆ ಒಬ್ಬ ತೋಪಿನ ಕಡೆಗೆ ಹೋಗಿದ್ದ. ಅಲ್ಲಿ ಮರದ ಮೇಲೆ ಒಂದು ಬಹಳ ಸುಂದರ ಪ್ರಾಣಿಯನ್ನು ಕಂಡ. ಅಲ್ಲಿಂದ ಹಿಂದಿರುಗಿ ಬಂದ ಮೇಲೆ ತನ್ನ ಸ್ನೇಹಿತನಿಗೆ ತಿಳಿಸಿದ: ‘ಸಹೋದರನೆ, ಆ ತೋಪಿನ ಮರದ ಮೇಲೆ ಒಂದು ಕೆಂಪು ಪ್ರಾಣಿಯನ್ನು ನೋಡಿಬಂದೆ.’ ಸ್ನೇಹಿತ ಹೇಳಿದ, ‘ನಾನು ನೋಡಿದ್ದೇನೆ. ಅದರ ಬಣ್ಣ ಹೇಗೆ ಕೆಂಪಾದೀತು? ಅದು ಹಸುರು.’ ಮೂರನೆಯವನೊಬ್ಬ ಹೇಳಿದ: ‘ಅಲ್ಲ, ಅಲ್ಲ. ಅದು ಹೇಗೆ ಹಸುರಾದೀತು? ಅದು ಕಪ್ಪು.’ ಕೊನೆಗೆ ಅದರ ಬಣ್ಣದ ಸಂಬಂಧವಾಗಿ ಜಗಳ ಹತ್ತಿ ಕೊನೆಗೆ ಅವರೆಲ್ಲರೂ ಆ ಮರದ ಹತ್ತಿರಕ್ಕೆ ಹೋದಾಗ, ಒಬ್ಬ ಆ ಮರದ ಕೆಳಗೆ ಕುಳಿತುಕೊಂಡಿದ್ದ. ಅವನನ್ನು ಕೇಳಲಾಗಿ ಆತ ಹೇಳಿದ: ‘ನಾನು ಈ ಮರದ ಕೆಳಗೇ ವಾಸಿಸುತ್ತಿದ್ದೇನೆ. ಆ ಪ್ರಾಣಿಯ ಸ್ವಭಾವ ನನಗೆ ಚೆನ್ನಾಗಿ ಗೊತ್ತಿದೆ. ನೀವು ಹೇಳುವುದೆಲ್ಲ ಸತ್ಯ. ಅದು ಕೆಲವು ವೇಳೆ ಕೆಂಪು, ಕೆಲವು ವೇಳೆ ಹಸುರು, ಕೆಲವು ವೇಳೆ ಹಳದಿ, ಕೆಲವು ವೇಳೆ ನೀಲಿ, ಹೀಗೆ ಇನ್ನೂ ಏನೇನೋ ಬಣ್ಣಗಳನ್ನು ತಾಳುತ್ತದೆ. ಇನ್ನೂ ಕೆಲವು ವೇಳೆ ನೋಡಿದ್ದೇನೆ, ಅದಕ್ಕೆ ಯಾವ ಬಣ್ಣವೂ ಇಲ್ಲದೆ ಇರುವುದನ್ನು.’
“ಯಾರು ಸತತ ಭಗವಂತನ ಧ್ಯಾನದಲ್ಲಿಯೇ ನಿರತನಾಗಿದ್ದಾನೊ ಆತನಿಗೆ ಗೊತ್ತಾಗುತ್ತದೆ, ಭಗವಂತನ ಸ್ವರೂಪ ಎಂಥದು ಎಂಬುದು. ಕೇವಲ ಆ ವ್ಯಕ್ತಿಗೆ ಮಾತ್ರವೇ ಗೊತ್ತಿರುತ್ತದೆ, ಭಗವಂತನು ನಾನಾ ರೂಪುಗಳಿಂದ, ನಾನಾ ಭಾವಗಳಿಂದ ತೋರ್ಪಡಿಸಿಕೊಳ್ಳುತ್ತಾನೆ ಮತ್ತು ಆತ ಸಗುಣನೂ ಹೌದು, ನಿರ್ಗುಣನೂ ಹೌದು ಎಂಬುದು. ಯಾವನು ಮರದ ಕೆಳಗೆ ವಾಸಿಸುವನೊ, ಅವನಿಗೆ ಮಾತ್ರವೇ ಗೊತ್ತಿರುತ್ತದೆ, ಗೋಸುಂಬೆ ಅನೇಕ ಬಣ್ಣಗಳಿಂದ ಕಾಣಿಸಿಕೊಳ್ಳಬಹುದು ಮತ್ತು ಕೆಲವು ವೇಳೆ ಯಾವ ಬಣ್ಣವೂ ಇಲ್ಲದೆ ಇರಬಹುದು ಎಂಬುದು. ಉಳಿದವರು ಯಥಾರ್ಥ ಸತ್ಯವನ್ನರಿಯದೆ ವಾದ-ವಿವಾದ- ಜಗಳ-ಕದನ ಇವುಗಳಲ್ಲಿ ಸತ್ತು ಸುಣ್ಣವಾಗುತ್ತಾರೆ.
“ಹೌದು, ಭಗವಂತ ಸಾಕಾರ ಮತ್ತು ನಿರಾಕಾರ. ಇದು ಹೇಗೆ ಎಂಬುದು ಗೊತ್ತೆ? ಸಚ್ಚಿದಾನಂದಬ್ರಹ್ಮ ತೀರವೇ ಇಲ್ಲದ ಸಾಗರವಿದ್ದ ಹಾಗೆ. ಯಾವ ರೀತಿಯಾಗಿ ಶೈತ್ಯದ ದೆಸೆಯಿಂದ ಸಾಗರದ ನೀರು ಅಲ್ಲಿ ಇಲ್ಲಿ ಸ್ಪಷ್ಟವಾಗಿ ಎದ್ದು ಕಾಣುವ ಹಿಮಗಡ್ಡೆಗಳಾಗಿ ಪರಿವರ್ತನೆ ಹೊಂದುವುದೊ, ಅದೇ ರೀತಿಯಾಗಿ ಭಕ್ತನ ಭಕ್ತಿ ಎಂಬ ಶೈತ್ಯದಿಂದ ಆ ಅನಂತ ಸಾಂತನಾಗಿ, ಅಂದರೆ ಭಕ್ತನಿಗೆ ಬೇಕಾದ ಸಾಕಾರ ರೂಪವನ್ನು ತಾಳಿ ಆತನಿಗೆ ದರ್ಶನವನ್ನು ಕೊಡುತ್ತಾನೆ. ಯಾವ ರೀತಿ ಸೂರ್ಯೋದಯವಾದನಂತರ ಹಿಮಗಡ್ಡೆ ಕರಗಿ ಎಂದಿನ ಸಾಗರವಾಗುವುದೊ ಅದೇ ರೀತಿ ಭಕ್ತನ ಹೃದಯದಲ್ಲಿ ಜ್ಞಾನವೆಂಬ ಸೂರ್ಯನ ಉದಯ ಆಯಿತು ಅಂದರೆ ಆ ಸಾಕಾರ ರೂಪಿನ ಭಗವಂತ ಕರಗಿ ಎಂದಿನ ನಿರಾಕಾರದ ಸ್ಥಿತಿಗೆ, ಸಚ್ಚಿದಾನಂದ ಬ್ರಹ್ಮನ ಸ್ಥಿತಿಗೆ ಹೊರಟುಹೋಗುತ್ತಾನೆ.”
ಡಾಕ್ಟರ್: “ಹೌದು, ನಿಜ. ಸೂರ್ಯೋದಯವಾದನಂತರ ಹಿಮಗಡ್ಡೆ ಕರಗಿ ನೀರಾಗುತ್ತದೆ; ಅದು ಅಷ್ಟೇ ಅಲ್ಲ, ಆತನ ತಾಪದಿಂದ ನೀರು ಕಾದು ಅದು ಆವಿಯಾಗಿ ಬಿಡುತ್ತದೆ, ಅಂದರೆ ನಿರಾಕಾರ ರೂಪವನ್ನು ತಾಳುತ್ತದೆ.”
ಶ್ರೀರಾಮಕೃಷ್ಣರು: “ಹೌದು. ಅದೇನೊ ನಿಜ, ‘ಬ್ರಹ್ಮ ಸತ್ಯಂ ಜಗನ್ಮಿಥ್ಯಾ’ ಎಂಬ ವಿಚಾರದ ಕೊನೆಯಲ್ಲಿ ಸಮಾಧಿ ದೊರೆಯಿತು ಅಂದರೆ ರೂಪು ಒಮ್ಮೆಗೇ ಅದೃಶ್ಯವಾಗಿ ಬಿಡುತ್ತದೆ. ಆಗ ಭಗವಂತ ಒಬ್ಬ ವ್ಯಕ್ತಿ ಎಂಬ ಬೋಧೆ ಆಗುವುದಿಲ್ಲ. ಆತ ಏನು ಎಂಬುದನ್ನು ಬಾಯಿಂದ ವರ್ಣಿಸಲಾಗುವುದಿಲ್ಲ. ವರ್ಣಿಸಲು ಉಳಿದುಕೊಂಡಿರುವುದು ತಾನೆ ಯಾರು? ಯಾವ ವ್ಯಕ್ತಿ ವರ್ಣಿಸಬೇಕಾಗಿತ್ತೊ, ಆತನೇ ಇಲ್ಲದವನಾಗುತ್ತಾನೆ; ತನ್ನ ‘ಅಹಂ’ ಗಾಗಿ ಆತ ಎಷ್ಟು ಹುಡುಕಿದರೂ ಅದು ಆತನಿಗೆ ದೊರಕದೆ ಹೋಗುತ್ತದೆ. ಅಂಥವನಿಗೆ ಬ್ರಹ್ಮ ನಿರ್ಗುಣ. ಆ ಅವಸ್ಥೆಯಲ್ಲಿ ಕೇವಲ ಬೋಧೆಯಿಂದ ಮಾತ್ರವೇ ಬೋಧನಾಗುತ್ತಾನೆ. ಮನಸ್ಸು, ಬುದ್ಧಿ ಇವುಗಳಿಂದ ಆತನನ್ನು ಅರಿಯಲಾಗುವುದಿಲ್ಲ.
“ಅದಕ್ಕಾಗಿಯೇ ಜನರು ಭಕ್ತಿಯನ್ನು ಚಂದ್ರನಿಗೂ, ಜ್ಞಾನವನ್ನು ಸೂರ್ಯನಿಗೂ ಹೋಲಿಸುತ್ತಾರೆ. ಕೇಳಿದ್ದೇನೆ, ಅತ್ಯಂತ ಉತ್ತರ ದಕ್ಷಿಣ ದಿಕ್ಕುಗಳಲ್ಲಿ ಸಮುದ್ರಗಳಿವೆ ಮತ್ತು ಅಲ್ಲಿ ಅಷ್ಟೊಂದು ಚಳಿ, ನೀರು ಅಲ್ಲಲ್ಲಿ ಹೆಪ್ಪುಗಟ್ಟಿಕೊಂಡುಬಿಟ್ಟಿರುತ್ತದೆ ಅಂತ. ಅಲ್ಲಿ ಹಡಗು ಸಂಚಾರ ಸಾಧ್ಯವಿಲ್ಲ; ಐಸ್ಬಂಡೆಗಳು ಅವನ್ನು ತಡೆದುಬಿಡುತ್ತವೆ.”
ಡಾಕ್ಟರ್: “ಆದ್ದರಿಂದ ಮುಮುಕ್ಷುಗಳು ಭಕ್ತಿಮಾರ್ಗದಲ್ಲಿ ಎಡರು-ತೊಡರುಗಳಿಗೆ ಸಿಲುಕಬೇಕಾಗುತ್ತದೆ.”
ಶ್ರೀರಾಮಕೃಷ್ಣರು: “ಹೌದು, ಸಿಲುಕಬೇಕಾಗುತ್ತದೆ. ಆದರೆ ಅದರಿಂದ ಭಕ್ತನಿಗೆ ಯಾವ ತೊಂದರೆಯೂ ಉಂಟಾಗದು. ಏಕೆಂದರೆ ಏನೆಂದರೂ ಆ ಸಚ್ಚಿದಾನಂದ ಸಾಗರದ ನೀರು ಹೆಪ್ಪುಗಟ್ಟಿ ಐಸ್ಬಂಡೆಯಾಗಿರುವುದು. ಇನ್ನೂ ಸ್ವಲ್ಪ ವಿಚಾರಮಾಡಬೇಕೆಂದೆನಿಸಿತು ಅಂದರೆ, ‘ಬ್ರಹ್ಮ ಸತ್ಯಂ ಜಗನ್ಮಿಥ್ಯಾ’ ಎಂಬ ಈ ವಿಚಾರಮಾಡಬೇಕು ಅಂತ ಅನಿಸಿದರೆ, ಅದರಿಂದೇನು ತೊಂದರೆ ಆಗುವುದಿಲ್ಲ. ಜ್ಞಾನ-ಸೂರ್ಯ ಉದಯವಾದೊಡನೆ ಸಚ್ಚಿದಾನಂದದ ಐಸ್ಬಂಡೆ ಕರಗಿಹೋಗಿಬಿಡುತ್ತದೆ. ಬಳಿಕ ಉಳಿದುಕೊಳ್ಳುವುದು ಕೇವಲ ಆ ಸಚ್ಚಿದಾನಂದ ಸಾಗರ ಮಾತ್ರವೇ.
“ಜ್ಞಾನ-ವಿಚಾರದ ಅಂತ್ಯದಲ್ಲಿ ದೊರೆಯುವ ಸಮಾಧಿಯಲ್ಲಿ ‘ಅಹಂ’ ಏನೂ ಉಳಿದುಕೊಂಡಿರದು. ಆದರೆ ಸಮಾಧಿಯನ್ನು ದೊರಕಿಸಿಕೊಳ್ಳುವುದು ಬಹಳ ಪ್ರಯಾಸವೆ. ‘ಅಹಂ’ ಎಂಬುದು ಬಡಪಟ್ಟಿಗೆ ನಮ್ಮನ್ನು ಬಿಟ್ಟು ತೊಲಗಲೊಲ್ಲದು, ಈ ಕಾರಣದಿಂದಲೇ ಮನುಷ್ಯ ಈ ಜಗತ್ತಿನಲ್ಲಿ ಮತ್ತೆ ಮತ್ತೆ ಜನ್ಮವೆತ್ತುತ್ತಿರುವುದು.
“ಗೋವು ‘ಹಂಬಾ! ಹಂಬಾ!’ ಅಂತ ಕೂಗುತ್ತದೆ–ಅಂದರೆ, ‘ನಾನು! ನಾನು!’ ಎಂದು. ಅದಕ್ಕಾಗಿಯೇ ಅದು ಈ ಜಗತ್ತಿನಲ್ಲಿ ಅಷ್ಟೊಂದು ದುಃಖದುರಿತಗಳಿಗೀಡಾಗುತ್ತಿರುವುದು. ಮಳೆಬಿಸಿಲೆನ್ನದೆ ಇಡೀ ದಿನವೆಲ್ಲ ನೇಗಿಲಿಗೆ ಹೆಗಲು ಕೊಡಬೇಕಾಗುತ್ತದೆ. ಜೊತೆಗೆ ಕಟುಕ ಅದನ್ನು ಕತ್ತರಿಸಿ ಹಾಕುತ್ತಾನೆ. ಅದರ ದುಃಖ ಅಲ್ಲಿಗೇ ಕೊನೆಯಾಗದು. ಚಮ್ಮಾರ ಅದರ ಚರ್ಮವನ್ನು ಹದಮಾಡಿ ಅದರಿಂದ ಪಾದರಕ್ಷೆಗಳನ್ನು ತಯಾರು ಮಾಡುತ್ತಾನೆ. ಕಟ್ಟಕಡೆಯಲ್ಲಿ ಅದರ ಚಿಕ್ಕ ಕರುಳಿನಿಂದ ಹುರಿ ಆಗುತ್ತದೆ. ಯಾವಾಗ ಅದು ಹತ್ತಿ ಬಿಡಿಸುವವನ ಕೈಗೆ ಸಿಕ್ಕಿ, ಆತನ ಯಂತ್ರದಲ್ಲಿ, ‘ತುಹ್ಞೂ! ತುಹ್ಞೂ!’ ಅಂತ ! ಅಂದರೆ, ‘ನೀನು! ನೀನು!’ ಅಂತ ಹೇಳಲಾರಂಭಿಸುತ್ತದೆಯೊ ಆಗ ಮಾತ್ರವೇ ಅದರ ದುಃಖದುರಿತಗಳೆಲ್ಲ ಕೊನೆಯಾಗುತ್ತವೆ.
“ಅದೇ ರೀತಿಯಾಗಿ ಯಾವಾಗ ಜೀವ ಹೇಳುತ್ತದೆಯೊ, ‘ನಾಹಂ! ನಾಹಂ! ನಾನು ಏನೂ ಅಲ್ಲ; ಹೇ ಭಗವಂತ; ನೀನೇ ಕರ್ತ; ನಾನು ದಾಸ, ನೀನು ಪ್ರಭು’ ಅಂತ, ಆಗ ಮಾತ್ರವೇ ಅದಕ್ಕೆ ಸಕಲ ದುಃಖದುರಿತಗಳಿಂದ ಬಿಡುಗಡೆ; ಆಗ ಮಾತ್ರವೇ ಅದಕ್ಕೆ ಮುಕ್ತಿ.”
ಡಾಕ್ಟರ್ : “ನಾವು ಹತ್ತಿ ಬಿಡಿಸುವವನ ಕೈಗೆ ಬೀಳಬೇಕಾಗುತ್ತದೆಯಲ್ಲ.” (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು: “ಈ ‘ಅಹಂ’ ಎಂಬುದು ಬಡಪೆಟ್ಟಿಗೆ ಹೋಗದಿದ್ದರೆ, ಇರಲಿ ಆ ನೀಚಮುಂಡೇದು ‘ದಾಸನ ಅಹಂ’ ಆಗಿ (ಎಲ್ಲರೂ ನಗುತ್ತಾರೆ.)
“ಸಮಾಧಿ ದೊರೆತನಂತರವೂ ಕೆಲಕೆಲವರಲ್ಲಿ ‘ಅಹಂ’ ಎಂಬುದು ಉಳಿದು ಕೊಂಡಿರುತ್ತದೆ. ಅದು ಕೇವಲ ‘ದಾಸನ ಅಹಂ’ ಅಥವಾ ‘ಭಕ್ತನ ಅಹಂ’ ಮಾತ್ರವೆ. ಶಂಕರಾಚಾರ್ಯರು ಲೋಕಶಿಕ್ಷಣಾರ್ಥವಾಗಿ ‘ವಿದ್ಯೆಯ ಅಹಂ’ ಅನ್ನು ಇಟ್ಟುಕೊಂಡಿದ್ದರು. ‘ದಾಸನ ಅಹಂ’, ‘ವಿದ್ಯೆಯ ಅಹಂ’, ‘ಭಕ್ತನ ಅಹಂ’ ಇವೆಲ್ಲ ‘ಪಕ್ವ ಅಹಂ’ ಗಳು. ‘ಅಪಕ್ವ ಅಹಂ’ ಎಂಬುದು ಯಾವುದು ಗೊತ್ತೆ? ಅದು ಹೇಳುತ್ತದೆ: ‘ನಾನು ಕರ್ತ, ನಾನು ಅಂಥಾ ದೊಡ್ಡ ಮನುಷ್ಯನ ಮಗ, ವಿದ್ಯಾವಂತ, ನನಗೆದುರಾಗಿ ನಿಲ್ಲುವುದಕ್ಕೆ ಯಾರಿಗೆ ತಾನೆ ಧೈರ್ಯ ಇದೆ?’ ಇತ್ಯಾದಿ. ಅಂಥವನ ಮನೆಯಲ್ಲಿ ಕಳ್ಳತನ ಮಾಡುವಾಗ ಕಳ್ಳ ಕೈಗೆ ಸಿಕ್ಕಿಬಿಟ್ಟ ಅಂದರೆ, ಮೊದಲು ಆತ ಕದ್ದಿದುದನ್ನೆಲ್ಲ ಕಸಿದುಕೊಂಡು ಬಳಿಕ ಆತನಿಗೆ ಉತ್ತಮ ಮಧ್ಯಮ ಪ್ರಹಾರಗಳನ್ನು ಹಾಕುತ್ತಾನೆ, ಅದಕ್ಕೂ ತೃಪ್ತನಾಗದೆ ಆತನನ್ನು ಪೋಲೀಸಿನವರಿಗೆ ಒಪ್ಪಿಸಿ ಬಿಡುತ್ತಾನೆ. ಬಳಿಕ ಹೇಳುತ್ತಾನೆ, ‘ಹ್ಞೂ! ಆತನಿಗೆ ಗೊತ್ತಿಲ್ಲ, ಯಾರ ಮನೆಗೆ ತಾನು ಕನ್ನಹಾಕಿರುವುದು ಎಂಬುದು. ಹುಟ್ಟಡಗಿಸಿಬಿಡುತ್ತೇನೆ ಹ್ಞೂ!’ ಅಂತ.
“ಭಗವಂತನ ಸಾಕ್ಷಾತ್ಕಾರ ದೊರೆಯಿತು ಅಂದರೆ, ಐದು ವರ್ಷದ ಹಸುಳೆಯ ಸ್ವಭಾವ ಬಂದುಬಿಡುತ್ತದೆ. ಅಂಥವನ ‘ಅಹಂ’, ‘ಬಾಲಕನ ಅಹಂ’. ‘ಪಕ್ವ ಅಹಂ’ ಗೆ ಹೋಲಿಸಬಹುದು. ಬಾಲಕ ಯಾವ ಗುಣಕ್ಕೂ ವಶನಾಗಿಲ್ಲ, ಆತ ತ್ರಿಗುಣಾತೀತ. ಸತ್ತ್ವ, ರಜಸ್ಸು, ತಮಸ್ಸು ಈ ಯಾವ ಗುಣಕ್ಕೂ ಕಟ್ಟುಬಿದ್ದಿಲ್ಲ. ಹಾಗೆಯೇ ಸ್ವಲ್ಪ ಕಣ್ಣುಬಿಟ್ಟು ನೋಡು, ಬಾಲಕ ಹೇಗೆ ತಮೋಗುಣಕ್ಕೆ ವಶನಾಗಿಲ್ಲ ಎಂಬುದನ್ನು. ಈಗತಾನೆ ತನ್ನ ಗೆಳೆಯರೊಡನೆ ಹೊಡೆದಾಡಿ ಕಚ್ಚಾಡಿದವ, ಮರುಕ್ಷಣದಲ್ಲಿಯೇ ಅವರನ್ನು ತಬ್ಬಿಕೊಂಡು ಅವರಿಗೆ ಎಷ್ಟೊಂದು ಪ್ರೀತಿ ತೋರಿಸುತ್ತಾನೆ, ಮತ್ತೆ ಹೇಗೆ ಅವರೊಡನೆ ಆಟವಾಡುತ್ತಾನೆ! ಆತ ರಜೋಗುಣಕ್ಕೂ ವಶನಾಗಿಲ್ಲ. ಈಗತಾನೆ ಆಟದ ಮನೆ ಕಟ್ಟಿ ಅದನ್ನು ಸಿಂಗರಿಸಲು ಎಷ್ಟೆಷ್ಟೊ ಪ್ರಯತ್ನಮಾಡುತ್ತಿದ್ದವನು, ಮರುಕ್ಷಣ ಅದನ್ನು ಹಾಗೇ ಬಿಟ್ಟು ತಾಯಿಯ ಹತ್ತಿರಕ್ಕೆ ಓಡುತ್ತಾನೆ. ಬಹುಶಃ ಬೆಲೆಬಾಳುವ ಒಂದು ಸೊಗಸಾದ ವಸ್ತ್ರವನ್ನು ಹೊದ್ದುಕೊಂಡು ಈಗ ಸುತ್ತಾಡುತ್ತಿರಬಹುದು. ಸ್ವಲ್ಪ ಹೊತ್ತಿನೊಳಗಾಗಿಯೇ ಆ ವಸ್ತ್ರ ಮೈಮೇಲಿಂದ ಸರಿದು ಎಲ್ಲೋ ಬಿದ್ದುಹೋಗಬಹುದು. ಅದರ ಜ್ಞಾನವೇ ಆತನಿಗೆ ಆಗದೆ ಆತ ಮರೆತೇಬಿಡಬಹುದು. ಅಥವಾ ಅದನ್ನು ಕಂಕುಳಲ್ಲಿ ಸಿಕ್ಕಿಸಿಕೊಂಡು ಸುತ್ತಾಡಬಹುದು. (ನಗು.) ಆ ಬಾಲಕನನ್ನು, ‘ಆಹ! ಇದು ಬಹಳ ಸೊಗಸಾದ ವಸ್ತ್ರ. ಇದು ಯಾರದು?’ ಅಂತ ಕೇಳಿದರೆ, ಆತ ಹೇಳುತ್ತಾನೆ; ‘ಹ್ಞೂ, ಇದು ನನ್ನ ವಸ್ತ್ರ, ನಮ್ಮಪ್ಪ ತಂದುಕೊಟ್ಟಿದ್ದಾನೆ.’ ಆತನನ್ನು, ‘ಎಲೊ ತುಂಟ ಹುಡುಗ, ಕೊಡೋ ಆ ವಸ್ತ್ರವನ್ನು ನನಗೆ’ ಅಂತ ಕೇಳಿದರೆ, ಆತ ಹೇಳುತ್ತಾನೆ; ‘ಊಹ್ಞೂ, ಕೊಡುವುದಿಲ್ಲ. ಇದು ನನ್ನದು. ನಮ್ಮಪ್ಪ ತಂದುಕೊಟ್ಟಿದ್ದಾನೆ.’ ಕೆಲವು ನಿಮಿಷಗಳಾದನಂತರ ಆತನನ್ನು ಸ್ವಲ್ಪ ಉಬ್ಬಿಸಿ ಆತನ ಕೈಗೆ ಒಂದೊ ಎರಡೊ ಆಣೆ ಬೆಲೆಬಾಳುವ ಒಂದು ಬುಗರಿಯನ್ನೊ ಅಥವಾ ಒಂದು ಶಿಲ್ಪಿಯನ್ನೊ ಹಾಕಿತು ಅಂದರೆ, ಐದು ರೂಪಾಯಿ ಬೆಲೆಬಾಳುವ ಆ ವಸ್ತ್ರವನ್ನು ನಿನಗೆ ಕೊಟ್ಟು ಹೊರಟೇಹೋಗುತ್ತಾನೆ. ಅದೇ ರೀತಿ ಆತ ಸತ್ತ್ವಗುಣಕ್ಕೂ ವಶನಾಗಿಲ್ಲ. ಈಗ ತನ್ನ ನೆರೆಹೊರೆಯ ಗೆಳೆಯರನ್ನು ಬಹಳವಾಗಿ ಪ್ರೀತಿಸುತ್ತಿರಬಹುದು; ಅವರನ್ನು ಕಾಣದೆ ಒಂದು ಘಳಿಗೆಯೂ ಇರಲಾರದವನಾಗಿರಬಹುದು; ಆದರೆ ತಂದೆ ತಾಯಿಯರೊಡನೆ ಬೇರೆ ಸ್ಥಳಕ್ಕೆ ಹೋದ ಅಂದರೆ, ಅಲ್ಲಿ ಹೊಸ ಗೆಳೆಯರನ್ನು ಸಂಪಾದಿಸಿಕೊಳ್ಳುತ್ತಾನೆ. ಅವರ ಕಡೆ ಆತನ ಪ್ರೀತಿಯೆಲ್ಲ ಹರಿಯಲಾರಂಭಿಸುತ್ತದೆ. ಒಂದು ವಿಧದಲ್ಲಿ ತನ್ನ ಹಳೇ ಗೆಳೆಯರನ್ನು ಪೂರ್ಣವಾಗಿ ಮರೆತೇಬಿಡುತ್ತಾನೆ. ಆತನಿಗೆ ಜಾತಿಯ ಮೇಲಿನ ಅಭಿಮಾನವೂ ಇಲ್ಲ. ಯಾವನೋ ಒಬ್ಬನ ಸಂಬಂಧವಾಗಿ ತಾಯಿ ಆತನಿಗೆ, ‘ಈತ ನಿನ್ನ ಅಣ್ಣ’ ಅಂತ ಹೇಳಿಬಿಟ್ಟಳು ಅಂದರೆ, ಅದು ಮಗುವಿಗೆ ವೇದವಾಕ್ಯವೆ. ಈ ಹುಡುಗ ಬ್ರಾಹ್ಮಣಪುತ್ರನಾಗಿರಬಹುದು, ಆ ಹುಡುಗ ಕಮ್ಮಾರನ ಮಗನಾಗಿರಬಹುದು. ಆದರೂ ಒಂದೇ ತಟ್ಟೆ ಮುಂದೆ ಕುಳಿತು ಇಬ್ಬರೂ ಊಟ ಮಾಡಿಬಿಡುತ್ತಾರೆ. ಆತನಿಗೆ ಶುಚಿ ಅಶುಚಿ ಎಂಬ ಭೇದ ಭಾವನೆಯೇ ಇಲ್ಲ. ದೇಹಬಾಧೆ ತೀರಿಸಿಕೊಂಡು ಬಂದು ಕೈ ಬಾಯಿ ತೊಳೆಯದೆ ಊಟಮಾಡಿಬಿಡುತ್ತಾನೆ. ಆತನಿಗೆ ಜನ ಏನನ್ನುತ್ತಾರೆ ಎಂಬ ನಾಚಿಕೆಯೇ ಇಲ್ಲ. ದೇಹಬಾಧೆ ತೀರಿಸಿಕೊಂಡು ಬಂದು ಕುಂಡೆಯನ್ನು ತೊಳೆದುಕೊಂಡ ನಂತರ ಸಿಕ್ಕಿ ಸಿಕ್ಕದವರಿಗೆಲ್ಲ ಕುಂಡೆಯನ್ನು ತೋರಿಸುತ್ತಾನೆ; ‘ನೋಡಿ, ನೋಡಿ! ನಾನು ಸರಿಯಾಗಿ ತೊಳೆದುಕೊಂಡಿದ್ದೇನೊ ಇಲ್ಲವೊ?’
“ ‘ವೃದ್ಧರ ಅಹಂ’ ಎಂಬುದೂ ಇದೆ. (ಡಾಕ್ಟರ್ ನಗುತ್ತಿದ್ದಾನೆ.) ವೃದ್ಧರಿಗೆ ಅನೇಕ ಪಾಶಗಳು- ಜಾತಿ, ಅಭಿಮಾನ, ಲಜ್ಜೆ, ಘೃಣ, ಭಯ ಇವುಗಳಿಂದ ಜನಿತ ಪಾಶಗಳು; ಜೊತೆಗೆ ವಿಷಯ ಬುದ್ಧಿ, ಲೆಕ್ಕಾಚಾರದ ಬುದ್ಧಿ, ಕಪಟತೆ ಇವುಗಳಿಂದ ಜನಿತವಾದ ಪಾಶಗಳು. ಯಾರ ಮೇಲಾದರೂ ಆಕ್ರೋಶ ಉಂಟಾಯಿತು ಅಂದರೆ, ಅದು ಸಹಜವಾಗಿ ಆತನನ್ನು ಬಿಟ್ಟು ತೊಲಗದು; ಬಹುಶಃ ಸಾಯುವವರೆಗೆ ಅದು ಆತನನ್ನು ಬಿಟ್ಟು ತೊಲಗದೆ ಹೋಗಬಹುದು. ಜೊತೆಗೆ ಪಾಂಡಿತ್ಯದ ‘ಅಹಂ’, ‘ಧನದ ಅಹಂ’ ಇವೂ ಇವೆ. ‘ವೃದ್ಧರ ಅಹಂ’ ಎಂಬುದು ‘ಅಪಕ್ವ ಅಹಂ.’
(ಡಾಕ್ಟರಿಗೆ) “ನಾಲ್ಕೈದು ವಿಧದ ಜನರಿಗೆ–ವಿದ್ಯೆಯ ಅಹಂಕಾರವಿರತಕ್ಕವರಿಗೆ, ಪಾಂಡಿತ್ಯದ ಅಹಂಕಾರವಿರತಕ್ಕವರಿಗೆ, ಧನದ ಅಹಂಕಾರವಿರತಕ್ಕವರಿಗೆ ಜ್ಞಾನ ದೊರೆ ಯುವುದಿಲ್ಲ. ಈ ವಿಧದ ಜನರನ್ನು ‘ಇಂಥ ಜಾಗದಲ್ಲಿ ಒಬ್ಬ ದೊಡ್ಡ ಸಾಧುಗಳಿದ್ದಾರೆ, ನೋಡುವುದಕ್ಕೆ ಬರುತ್ತೀರ?’ ಅಂತ ಕೇಳಿದರೆ, ನಾನಾ ನೆವ ತೆಗೆದುಕೊಂಡು, ಅವರು ಅಲ್ಲಿಗೆ ಹೋಗುವುದೇ ಇಲ್ಲ. ಅವರು ತಮಗೆ ತಾವೇ ಹೇಳಿಕೊಳ್ಳುತ್ತಾರೆ; ‘ನಾವೇ ಬಹಳ ದೊಡ್ಡ ದೊಡ್ಡ ಘಟಾನುಘಟಿಗಳು. ಅಂಥಾದ್ದರಲ್ಲಿ ನಾವು ಅವನನ್ನು ನೋಡುವುದಕ್ಕೆ ಹೋಗುತ್ತೇವೆಯೆ?’
“ಅಹಂಕಾರಪಡುವುದು ತಮೋಗುಣದ ಸ್ವಭಾವ. ಅಹಂಕಾರ, ಅಜ್ಞಾನ, ಇವು ತಮೋಗುಣದಿಂದ ಉದ್ಭವವಾಗುತ್ತವೆ.
“ಪುರಾಣದಲ್ಲಿ ಹೇಳಿದೆ, ರಾವಣನದು ರಜೋಗುಣ, ಕುಂಭಕರ್ಣನದು ತಮೋ ಗುಣ, ವಿಭೀಷಣನದು ಸತ್ತ್ವಗುಣ ಅಂತ. ಈ ಕಾರಣದಿಂದಲೇ ವಿಭೀಷಣ ಶ್ರೀರಾಮ ಚಂದ್ರನನ್ನು ಪಡೆದುಕೊಂಡ. ತಮಸ್ಸಿನ ಇನ್ನೊಂದು ಗುಣ ಕ್ರೋಧ. ಕ್ರೋಧ ಉಂಟಾದಾಗ ವಿವೇಚನಾ ಶಕ್ತಿ ಇರುವುದಿಲ್ಲ. ಹನುಮಂತ ಕೋಪೋದ್ರಿಕ್ತನಾಗಿ ಸೀತೆಯ ಗುಡಿಸಲೂ ಸುಟ್ಟುಹೋಗಬಹುದೆಂದು ಒಂದು ಕ್ಷಣವೂ ಯೋಚಿಸದೆ ಲಂಕೆಗೆ ಬೆಂಕಿ ಹಚ್ಚಿಬಿಟ್ಟ.
“ತಮೋಗುಣದ ಮತ್ತೊಂದು ಲಕ್ಷಣ ಕಾಮ. ಒಮ್ಮೆ ಪಾತುರಘಾಟಿನ ಗಿರೀಂದ್ರ ಘೋಷ ‘ಕಾಮಕ್ರೋಧಾದಿಗಳು ನಮ್ಮನ್ನು ಬಿಟ್ಟು ತೊಲಗಿಹೋಗಲೊಲ್ಲದರಿಂದ, ಅವನ್ನು ಹೊಸ ಮಾರ್ಗಕ್ಕೆ ತಿರುಗಿಸಬೇಕು’ ಅಂತ ಹೇಳಿದ. ಅವಶ್ಯವಾಗಿ ಭಗವಂತನನ್ನು ಕಾಮಿಸಿ, ಸಚ್ಚಿದಾನಂದನೊಡನೆ ವಿಲಾಸಪಡಿ, ಕ್ರೋಧ ಹೋಗದೆ ಹೋಯಿತು ಅಂದರೆ, ತಾಮಸಿಕ ಭಕ್ತಿಯನ್ನು ಆರೋಪಿಸಿಕೊಂಡು ಹೇಳಿ, ‘ಏನು? ನಾನು ಶ್ರೀದುರ್ಗೆಯ ಹೆಸರನ್ನು ಜಪಿಸಿದ್ದೇನೆ. ನನ್ನ ಉದ್ಧಾರ ಆಗುವುದಿಲ್ಲವೆ? ನನಗೆ ಇನ್ನು ಪಾಪ ಎಲ್ಲಿಂದ? ಬಂಧನ ಯಾವುದರಿಂದ?’ ಭಗವಂತನ ಸಾಕ್ಷಾತ್ಕಾರ ಪಡೆಯಲು ಲೋಭ ಪಡಿ. ಭಗವಂತನ ರೂಪಿನಿಂದ ಮೋಹಿತರಾಗಿಬಿಡಿ. ಅಹಂಕಾರಪಡಬೇಕಾಗಿದ್ದರೆ, ‘ನಾನು ಭಗವಂತನ ದಾಸ, ನಾನು ಭಗವಂತನ ಸಂತಾನ’ ಎಂಬುದಾಗಿ ಅಹಂಕಾರ ಪಡಿ.’ ಈ ರೀತಿಯಾಗಿ ಈ ರಿಪುಗಳ ಗತಿಯನ್ನು ತಿರುಗಿಸಿಬಿಡಬೇಕು.”
ಡಾಕ್ಟರ್: “ಇಂದ್ರಿಯ ಸಂಯಮ ಬಹಳ ಕಷ್ಟ. ಅವು ಅಂಥಾ ತುಂಟ ಕುದುರೆಗಳು, ಅವುಗಳ ಎರಡು ಕಣ್ಣಿಗೂ ಕಣ್ಕಾಪು ಹಾಕಲೇಬೇಕು. ಕೆಲಕೆಲವು ಕುದುರೆಗಳ ಕಣ್ಣನ್ನು ಪೂರ್ಣವಾಗಿಯೇ ಮುಚ್ಚಿಬಿಡಬೇಕಾಗುತ್ತದೆ.”
ಶ್ರೀರಾಮಕೃಷ್ಣರು: “ಭಗವಂತನ ಕೃಪೆಯೊಮ್ಮೆ ದೊರೆತುದೇ ಆದರೆ, ಆತನ ದರ್ಶನ ಒಮ್ಮೆ ದೊರೆತುದೇ ಆದರೆ, ಒಮ್ಮೆ ಆತ್ಮಸಾಕ್ಷಾತ್ಕಾರ ದೊರೆತುದೇ ಆದರೆ, ಮತ್ತೆ ಯಾವ ಭಯವೂ ಇರದು. ಬಳಿಕ ಆ ಆರು ರಿಪುಗಳೂ ನಮಗೇನನ್ನೂ ಮಾಡಲಾರವು.
“ನಾರದ, ಪ್ರಹ್ಲಾದ ಇವರೇ ಮೊದಲಾದ ನಿತ್ಯಸಿದ್ಧ ಮಹಾಪುರುಷರಿಗೆ ತಮ್ಮ ಕಣ್ಣಿಗೆ ಕಣ್ಕಾಪನ್ನು ಹಾಕಿಕೊಳ್ಳಬೇಕಾದ ಆವಶ್ಯಕತೆಯೇನಿರಲಿಲ್ಲ. ಯಾವ ಮಗು ತಂದೆಯ ಕೈಯನ್ನು ಹಿಡಿದು ಗದ್ದೆ ತೆವರಿನ ಮೇಲೆ ನಡೆದುಹೋಗುತ್ತಿರುವುದೋ ಅದು ಎಚ್ಚರತಪ್ಪಿ ತಂದೆಯ ಕೈಬಿಟ್ಟುಬಿಟ್ಟು ಕಾಲುವೆಗೆ ಬೀಳುವ ಸಂಭವವಿರುತ್ತದೆ. ಆದರೆ ತಂದೆಯೇ ಮಗುವಿನ ಕೈಯನ್ನು ಹಿಡಿದುಕೊಂಡಿದ್ದರೆ ಅದು ಎಂದಿಗೂ ಕಾಲುವೆಗೆ ಬೀಳುವ ಹಾಗೇ ಇಲ್ಲ.”
ಡಾಕ್ಟರ್: “ಆದರೆ ತಂದೆ ಮಗುವಿನ ಕೈ ಹಿಡಿದುಕೊಂಡಿರುವುದು ಒಳ್ಳೆಯದಲ್ಲ.”
ಶ್ರೀರಾಮಕೃಷ್ಣರು: “ನೀನು ಹಾಗೆ ಭಾವಿಸಬೇಕಾಗಿಲ್ಲ. ಮಹಾಪುರುಷರದು ಬಾಲ ಸ್ವಭಾವ. ಭಗವಂತನ ಕಣ್ಣೆದುರಿಗೆ ಅವರು ಸತತ ಮಕ್ಕಳೇ. ಅವರಲ್ಲಿ ಅಹಂಕಾರವೆಂಬುದು ಇಲ್ಲವೇ ಇಲ್ಲ. ಅವರ ಇಡೀ ಶಕ್ತಿ ಭಗವಂತನ ಶಕ್ತಿ, ಅವರ ತಂದೆಯ ಶಕ್ತಿ. ಅವರಿಗೆ ಸ್ವಂತದ್ದು ಎಂಬುದು ಏನೂ ಇಲ್ಲ. ಅದರಲ್ಲಿ ಅವರಿಗೆ ದೃಢ ವಿಶ್ವಾಸ.”
ಡಾಕ್ಟರ್: “ಕುದುರೆಗೆ ಕಣ್ಕಾಪು ಹಾಕದೆ ಇತ್ತು ಅಂದರೆ, ಅದು ಮುಂದುವರಿಯಲು ಇಚ್ಛೆಪಡುವುದೆ? ರಿಪುಗಳು ವಶವಾಗದೆ ಇತ್ತು ಅಂದರೆ, ಭಗವಂತನ ಸಾಕ್ಷಾತ್ಕಾರ ದೊರಕುವುದೆ?”
ಶ್ರೀರಾಮಕೃಷ್ಣರು: “ನೀನು ಹೇಳುತ್ತಿರುವುದು ವಿಚಾರಮಾರ್ಗಕ್ಕನುಗುಣವಾಗಿ. ಇದಕ್ಕೆ ಜ್ಞಾನಮಾರ್ಗ ಅಂತ ಹೆಸರು. ಈ ಮಾರ್ಗದಿಂದಲೂ ಭಗವಂತನನ್ನು ಪಡೆಯಬಹುದು. ಜ್ಞಾನಿಗಳು ಹೇಳುತ್ತಾರೆ, ಮೊದಲು ಚಿತ್ತಶುದ್ಧಿಯಾಗಬೇಕು ಎಂದು. ಮೊದಲು ಸಾಧನೆ ಮಾಡಬೇಕು; ಬಳಿಕ ಜ್ಞಾನ ದೊರೆಯುತ್ತದೆ.
“ಭಕ್ತಿಮಾರ್ಗದಿಂದಲೂ ಆತನನ್ನು ಪಡೆಯಬಹುದು. ಒಮ್ಮೆ ಭಗವಂತನ ಪಾದಪದ್ಮ ಗಳಲ್ಲಿ ಭಕ್ತಿಯುಂಟಾಯಿತು ಅಂದರೆ, ಆತನ ನಾಮಗುಣಕೀರ್ತನೆಯನ್ನು ಮಾಡಲು ಇಚ್ಛೆಯಾಯಿತು ಎಂದರೆ, ಬಳಿಕ ಇಂದ್ರಿಯ ಸಂಯಮಕ್ಕಾಗಿ ಹೆಚ್ಚು ಪ್ರಯತ್ನವನ್ನೇನೂ ಮಾಡಬೇಕಾಗಿರುವುದಿಲ್ಲ. ರಿಪುವಿನ ವಶ ತನ್ನಷ್ಟಕ್ಕೆ ತಾನೇ ಆಗಿಬಿಡುತ್ತದೆ.
“ಒಬ್ಬ ಈಗತಾನೆ ತನ್ನ ಪುತ್ರನನ್ನು ಕಳೆದುಕೊಂಡು ಶೋಕಪಡುತ್ತಿದ್ದಾನೆ ಅಂತ ಇಟ್ಟುಕೊಳ್ಳಿ. ಆ ಸ್ಥಿತಿಯಲ್ಲಿ ಇಂದೇ ಬೇರೆಯವರೊಡನೆ ಜಗಳವಾಡಲೇ ಆಗಲಿ, ಅಥವಾ ಔತಣದ ಮನೆಗೆ ಹೋಗಿ ಊಟಮಾಡಿಬರಲೇ ಆಗಲಿ ಆತನಿಗೆ ಸಾಧ್ಯವಾಗುವುದೆ? ಇಂದೇ ಪರರೆದುರಿಗೆ ತನ್ನ ದರ್ಪವನ್ನು ತೋರಿಸಿಕೊಳ್ಳುವುದೇ ಆಗಲಿ ಅಥವಾ ಇಂದ್ರಿಯ ಸುಖಗಳನ್ನು ಅನುಭವಿಸುವುದೇ ಆಗಲಿ ಸಾಧ್ಯವಾಗುವುದೆ?
“ದೀಪದ ಹುಳು ಒಮ್ಮೆ ಏನಾದರೂ ಬೆಳಕನ್ನು ಕಂಡುಬಿಟ್ಟಿತು ಅಂದರೆ, ಅದು ಇನ್ನು ಕತ್ತಲೆಯಲ್ಲಿ ಇರಬಲ್ಲುದೆ?”
ಡಾಕ್ಟರ್ (ನಗುತ್ತ): “ಇಲ್ಲ, ಸಾಧ್ಯವಿಲ್ಲ. ಉರಿಯಿಂದ ಸುಟ್ಟುಹೋಗಿ ಸಾಯಬೇಕಾಗಿ ಬಂದರೂ ಅದಕ್ಕೆ ಬೆಳಕೇ ಬೇಕು.”
ಶ್ರೀರಾಮಕೃಷ್ಣರು: “ಓ, ಅಲ್ಲ. ಅದು ಹಾಗಲ್ಲ. ಭಕ್ತ ದೀಪದ ಹುಳುವಿನಂತೆ ಸುಟ್ಟು ಸತ್ತುಹೋಗುವುದಿಲ್ಲ. ಭಕ್ತ ಯಾವ ಬೆಳಕಿನ ಕಡೆ ಓಡಾಡುತ್ತಾನೊ ಅದು ವಜ್ರದ ಬೆಳಕಿನಂತಿದೆ. ವಜ್ರದ ಬೆಳಕು ಉಜ್ಜ್ವಲವಾದುದೇನೊ ನಿಜ. ಆದರೆ ಅದು ತಂಪಾಗಿಯೂ ಹಿತವಾಗಿಯೂ ಇರುತ್ತದೆ. ಆ ಬೆಳಕಿನಿಂದ ಶರೀರ ಸುಟ್ಟುಹೋಗದು; ಶಾಂತಿ ದೊರೆಯುತ್ತದೆ; ಆನಂದ ದೊರೆಯುತ್ತದೆ.
“ವಿಚಾರದ ಮೂಲಕ, ಜ್ಞಾನಯೋಗದ ಮೂಲಕ ಆತನನ್ನು ಪಡೆಯಬಹುದು– ಆದರೆ ಇದು ಬಹಳ ಕಠಿಣ ಮಾರ್ಗ. ಬಾಯಲ್ಲಿ ಬೇಕಾದರೆ ಸುಲಭವಾಗಿ ಹೇಳಿಬಿಡ ಬಹುದು, ‘ನಾನು ಶರೀರ, ಬುದ್ಧಿ, ಮನಸ್ಸು ಅಲ್ಲ; ನನಗೆ ರೋಗ, ಶೋಕ, ಅಶಾಂತಿ ಇಲ್ಲ; ನಾನು ಸಚ್ಚಿದಾನಂದ ಸ್ವರೂಪ; ನಾನು ಸುಖದುಃಖಗಳಿಗತೀತ; ನಾನು ಇಂದ್ರಿಯಗಳ ವಶನಲ್ಲ’ ಅಂತ. ಆದರೆ ಅವನ್ನು ಅಂತರ್ಗತಮಾಡಿಕೊಂಡು ಅನುಷ್ಠಾನಕ್ಕೆ ತರುವುದು ಬಹಳ ಕಠಿನ. ಮುಳ್ಳಿನಿಂದ ಕೈಗೀರಿ ಹೋಗಿಬಿಟ್ಟಿದೆ, ‘ಬಳಬಳ’ ಅಂತ ರಕ್ತ ಸುರಿಯುತ್ತಿದೆ, ಆದರೂ ‘ಎಲ್ಲಿ, ಯಾವ ಮುಳ್ಳೂ ನನ್ನ ಕೈಯನ್ನು ಗೀರಿಲ್ಲವಲ್ಲ, ನಾನು ಚೆನ್ನಾಗಿದ್ದೇನಲ್ಲ’ ಅಂತ ಹೇಳುತ್ತಿದ್ದೇನೆ. ಹೀಗೆ ಹೇಳುವುದು ಸರಿಯಾದುದಲ್ಲ. ಹಾಗೆ ಹೇಳಬೇಕಾದರೆ ಮೊದಲು ಆ ಮುಳ್ಳನ್ನು ಜ್ಞಾನಾಗ್ನಿಯಲ್ಲಿ ಸುಡಬೇಕು.
“ಪುಸ್ತಕ ಓದದೆ ಜ್ಞಾನ ದೊರೆಯದು, ವಿದ್ಯೆ ದೊರೆಯದು ಅಂತ ಅನೇಕರು ಭಾವಿಸುತ್ತಾರೆ. ಆದರೆ ಓದುವುದಕ್ಕಿಂತ ಕೇಳುವುದು ಮೇಲು. ಕೇಳುವುದಕ್ಕಿಂತ ನೋಡುವುದು ಮೇಲು. ಕಾಶಿಯ ವಿಷಯವಾಗಿ ಓದುವುದಕ್ಕೂ, ಕಾಶಿಯ ವಿಷಯವಾಗಿ ಕೇಳುವುದಕ್ಕೂ, ಕಾಶಿಯ ದರ್ಶನ ಮಾಡುವುದಕ್ಕೂ ಒಂದೊಂದಕ್ಕೂ, ಇರುವ ತಾರತಮ್ಯ ಬಹಳ ಹೆಚ್ಚು.
“ಯಾರು ಚದುರಂಗದಾಟದಲ್ಲಿ ತೊಡಗಿದ್ದಾರೊ, ಅವರಿಗೆ ಕಾಯಿಗಳನ್ನು ಹೇಗೆ ನಡೆಸಬೇಕೆಂದು ಅಷ್ಟು ಸ್ಪಷ್ಟವಾಗಿ ಮನಸ್ಸಿಗೆ ಹೊಳೆಯದು. ಆದರೆ ಪ್ರೇಕ್ಷಕರಿಗೆ ಅನೇಕ ವೇಳೆ ಬಹಳ ಚೆನ್ನಾಗಿ ಹೊಳೆಯುತ್ತದೆ. ಸಂಸಾರಿಗಳು ಭಾವಿಸುತ್ತಾರೆ, ತಾವು ಬಹಳ ಬುದ್ಧಿವಂತರು ಅಂತ. ಆದರೆ ಅವರು ವಿಷಯಾಸಕ್ತರು; ಆಟದಲ್ಲಿ ತೊಡಗಿದ್ದಾರೆ. ತಮಗೆ ನಿಜವಾದ ಶ್ರೇಯಸ್ಸನ್ನು ತರುವುದು ಯಾವುದು ಎಂಬುದನ್ನು ಅವರು ಸರಿಯಾಗಿ ಅರಿತುಕೊಳ್ಳಲಾರರು. ಆದರೆ ಸಂಸಾರಾಶ್ರಮತ್ಯಾಗಿ ಸಾಧುಗಳು ವಿಷಯವಸ್ತುಗಳಲ್ಲಿ ಅನಾಸಕ್ತರಾಗಿದ್ದಾರೆ; ಸಂಸಾರಿಗಳಿಗಿಂತ ಬುದ್ಧಿವಂತರು. ತಾವು ಆಡದೆ ಇರುವುದರಿಂದ ಸಂಸಾರಿಗಳಿಗೆ ಯಾವುದು ಶ್ರೇಯಸ್ಸನ್ನು ತರುತ್ತದೆ ಎಂಬುದು ಇವರಿಗೆ ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ.”
ಡಾಕ್ಟರ್ (ಭಕ್ತರಿಗೆ): “ಪುಸ್ತಕ ಓದಿದರೆ ಇವರಿಗೆ (ಪರಮಹಂಸರಿಗೆ) ಇಷ್ಟೊಂದು ಜ್ಞಾನ ದೊರೆಯುತ್ತಿರಲಿಲ್ಲ. ಫ್ಯಾರಡೆ ಪ್ರಕೃತಿಯ ಅಂತರಾಳವನ್ನು ಹೊಕ್ಕು ನೋಡುತ್ತಿದ್ದ; ಅದಕ್ಕಾಗಿಯೇ ಆತನಿಗೆ ಅನೇಕ ವೈಜ್ಞಾನಿಕ ಸತ್ಯಗಳನ್ನು ಆವಿಷ್ಕಾರಮಾಡಲು ಸಾಧ್ಯವಾಯಿತು. ಕೇವಲ ಪುಸ್ತಕಜ್ಞಾನದಿಂದಲೇ ಆ ಕಾರ್ಯ ಸಾಧ್ಯವಾಗುತ್ತಿರಲಿಲ್ಲ. ಗಣಿತದ ಸೂತ್ರಗಳು ಸುಮ್ಮನೆ ತಲೆಯನ್ನು ಹದಗೆಡಿಸಿಬಿಡುತ್ತವೆ; ಸ್ವತಂತ್ರ ಆಲೋಚನಾಶಕ್ತಿಗೆ ಬಹಳವಾಗಿ ಅಡಚಣೆಗಳನ್ನು ತಂದೊಡ್ಡಿಬಿಡುತ್ತವೆ.”
ಶ್ರೀರಾಮಕೃಷ್ಣರು: “ಪಂಚವಟಿಯ ನೆಲದ ಮೇಲೆ ಬಿದ್ದು ಹೊರಳಾಡುತ್ತ ಭಗವತಿ ಯನ್ನು ಅತ್ಯಂತ ವ್ಯಾಕುಲತೆಯಿಂದ ಕರೆಯುತ್ತಿದ್ದಾಗ, ನಾನು ಭಗವತಿಗೆ ಪ್ರಾರ್ಥನೆ ಮಾಡಿದೆ, ‘ತಾಯೆ, ಕರ್ಮಿಗಳು ಕರ್ಮಕಾಂಡವನ್ನು ಅನುಸರಿಸಿ ಏನನ್ನು ಪಡೆದುಕೊಳ್ಳುತ್ತಾರೊ, ಯೋಗಿಗಳು ಯೋಗಾಭ್ಯಾಸವನ್ನು ಮಾಡಿ ಏನನ್ನು ಸಾಕ್ಷಾತ್ಕಾರಮಾಡಿಕೊಳ್ಳುತ್ತಾರೊ, ಜ್ಞಾನಿಗಳು ವಿಚಾರದಲ್ಲಿ ತೊಡಗಿ ಏನನ್ನು ಅರಿತುಕೊಳ್ಳುತ್ತಾರೊ ಅವೆಲ್ಲವನ್ನೂ ನನಗೆ ಅಪೌರುಷೇಯವಾಗಿ ತಿಳಿಸಿಕೊಡು’ ಅಂತ. ಆಗ ಇನ್ನೂ ಏನೇನು ನಡೆಯಿತು! ಅವನ್ನೆಲ್ಲ ನಾನು ನಿಮಗೆ ಏನು ಹೇಳಲಿ?
“ಅಹ, ನನಗೇನು ಅವಸ್ಥೆ ಬಂದುಹೋದುವು! ನಿದ್ರೆ ಸಂಪೂರ್ಣವಾಗಿ ನನ್ನನ್ನು ಬಿಟ್ಟುಬಿಟ್ಟಿತ್ತು.”
ಪರಮಹಂಸರು ಹಾಡುತ್ತಿದ್ದಾರೆ:
ಅರಿತೆ ನಾನು ಅರಿತೆ ನಾನು– ನಿಜದನೆಲೆಯನರಿತೆನು
ಭಾವದಂತರಂಗವರಿತ ವ್ಯಕ್ತಿಯೊಬ್ಬ ದೊರೆತನು!
ಎಂದೆಂದೂ ಇರುಳಿಲ್ಲದ ಬೆಳಕಿನೂರಿನಿಂದ ಅವನು
ನಮ್ಮಲ್ಲಿಗೆ ಬಂದನು.
ಅವನ ಸಂಗದಿಂದ ನಾನು ಹಗಲಾವುದು ಇರುಳಾವುದು
ಎಂಬುದನ್ನೂ ತಿಳಿಯೆನು!
ಜಪತಪಾದಿ ಕರ್ಮಗಳೂ ನೀರಸವೆಂದರಿತೆ ನಾನು,
ಹಳೆಯ ನಿದ್ರೆ ಹರಿಯಿತು.
ತೂಕಡಿಸುವುದೆಲ್ಲಿ ಬಂತು? — ನಿರಂತರವು ಯೋಗದಲ್ಲಿ
ಎಚ್ಚರಿರುವುದಾಯಿತು!
ಅವರು ಮಾತು ಮುಂದುವರಿಸಿದರು: “ನಾನು ಪುಸ್ತಕ ಏನನ್ನೂ ಓದಿದವನಲ್ಲ. ಆದರೆ ಭಗವತಿಯ ನಾಮಜಪ ಮಾಡುತ್ತಿರುವುದರಿಂದ ಎಲ್ಲರೂ ನನ್ನನ್ನು ಗೌರವಿಸುತ್ತಿದ್ದಾರೆ. ಶಂಭುಮಲ್ಲಿಕ ನನ್ನ ವಿಷಯವಾಗಿ ಹೇಳಿದ, ‘ಕೈಯಲ್ಲಿ ಕತ್ತಿಯೂ ಇಲ್ಲ, ಗುರಾಣಿಯೂ ಇಲ್ಲ; ಆದರೂ ವೀರಸಿಂಗ್’ ಅಂತ.” (ಎಲ್ಲರೂ ನಗುತ್ತಿದ್ದಾರೆ.)
ಗಿರೀಶಘೋಷ ಬುದ್ಧಚರಿತೆಯ ನಾಟಕದಲ್ಲಿ ಅಭಿನಯಿಸಿದುದರ ಸಂಬಂಧವಾಗಿ ಮಾತುಕತೆ ಆರಂಭವಾಯಿತು. ಗಿರೀಶಘೋಷ ಡಾಕ್ಟರಿಗೆ ಆಹ್ವಾನವಿತ್ತಿದ್ದ. ಡಾಕ್ಟರ್ ಅದನ್ನು ನೋಡಿ ಬಹಳ ಆನಂದಪಟ್ಟ.
ಡಾಕ್ಟರ್ (ಗಿರೀಶನಿಗೆ): “ನೀನು ಬಹಳ ಕೆಟ್ಟ ಮನುಷ್ಯ. ನಾನು ಪ್ರತಿದಿನವೂ ನಾಟಕಕ್ಕೆ ಹೋಗಿಬರಬೇಕಾಗಿ ಬಂದುಬಿಟ್ಟಿದೆ.”
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ನನಗೇನೂ ಅರ್ಥವಾಗುತ್ತಿಲ್ಲವಲ್ಲ.ಅವನು ಏನು ಹೇಳುತ್ತಿದ್ದಾನೆ?”
ಮಾಸ್ಟರ್: “ಅವನ ನಾಟಕ ಡಾಕ್ಟರಿಗೆ ಬಹಳವಾಗಿ ಹಿಡಿಸಿಬಿಟ್ಟಿದೆ.”
ಶ್ರೀರಾಮಕೃಷ್ಣರು (ಈಶಾನನಿಗೆ): “ನೀನೇಕೆ ಬಾಯಿ ತೆರೆಯಬಾರದು?(ಡಾಕ್ಟರನ್ನು ತೋರಿಸಿ) ಈತ ಅವತಾರವನ್ನು ಒಪ್ಪುತ್ತಿಲ್ಲವಲ್ಲ.”
ಈಶಾನ: “ನಾನು ಏನನ್ನು ತಾನೆ ಹೇಳಲಿ? ವಾದ ವಿವಾದ ನನಗೆ ರುಚಿಸುತ್ತಿಲ್ಲ.”
ಶ್ರೀರಾಮಕೃಷ್ಣರು (ವಿರಕ್ತರಾಗಿ): “ಏಕೆ? ಸರಿ ಎಂದು ತೋರಿದುದನ್ನು ಏಕೆ ಹೇಳಬಾರದು?”
ಈಶಾನ (ಡಾಕ್ಟರಿಗೆ) : “ನೋಡಿ, ಅಹಂಕಾರದ ದೆಸೆಯಿಂದ ನಮ್ಮಲ್ಲಿ ವಿಶ್ವಾಸ ಎಂಬುದು ಬಹಳ ಕಡಿಮೆ. ಕಾಕಭೂಷಂಡಿ ಮೊದಲು ಮೊದಲು ಶ್ರೀರಾಮಚಂದ್ರ ಅವತಾರಪುರುಷ ಎಂಬುದನ್ನು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಚಂದ್ರಲೋಕ, ದೇವಲೋಕ ಕೈಲಾಸ ಇವುಗಳಿಗೆಲ್ಲ ಓಡಿಹೋದರೂ ರಾಮನ ಬಾಣದಿಂದ ತಪ್ಪಿಸಿಕೊಳ್ಳಲಾಗದಿರುವುದನ್ನು ನೋಡಿ, ತಾನೇ ಆತನ ಕೈಗೆ ಸಿಕ್ಕಿಬಿದ್ದು ಆತನಲ್ಲಿ ಶರಣಾಗತಿಯನ್ನು ಪಡೆಯಿತು. ಶ್ರೀರಾಮಚಂದ್ರ ಅದನ್ನು ಹಿಡಿದುಕೊಂಡು ನುಂಗಿಬಿಟ್ಟ. ಆಗ ತಾನು ತನ್ನ ಎಂದಿನ ಮರದ ಮೇಲೆ ಕುಳಿತಿರುವ ಹಾಗೆ ಭೂಷಂಡಿಗೆ ಅನುಭವವಾಯಿತು. ಈ ರೀತಿಯಾಗಿ ಅದರ ಅಹಂಕಾರ ಪೂರ್ಣವಾಗಿ ಹೋದ ಮೇಲೆ ಅದರ ಅನುಭವಕ್ಕೆ ಬಂತು, ಶ್ರೀರಾಮಚಂದ್ರ ನೋಡುವುದಕ್ಕೇನೋ ನಮ್ಮಂಥ ಒಬ್ಬ ಸಾಮಾನ್ಯ ಮನುಷ್ಯನೆ, ಆದರೆ ಆತನ ಹೊಟ್ಟೆಯೊಳಗೇನೇ ಇಡೀ ಬ್ರಹ್ಮಾಂಡವೇ–ಆಕಾಶ, ಚಂದ್ರ, ಸೂರ್ಯ, ನಕ್ಷತ್ರ, ಸಮುದ್ರ, ಪರ್ವತ, ಜೀವ, ಜಂತು, ಗಿಡ, ಮರ ಇತ್ಯಾದಿ — ಇದೆ ಅಂತ.”
ಶ್ರೀರಾಮಕೃಷ್ಣರು (ಡಾಕ್ಟರಿಗೆ): “ಇದೊಂದಿಷ್ಟನ್ನು — ಆತನೇ ಅಣುವು ಹೌದು, ವಿಭುವೂ ಹೌದು ಎಂಬುದನ್ನು ಅರಿತುಕೊಳ್ಳುವುದು ಬಹಳ ಕಷ್ಟ. ನಿತ್ಯ ಯಾರದೋ ಆತನದೇ ಲೀಲೆ. ಮನುಷ್ಯದೇಹಧಾರಣೆ ಮಾಡಿಕೊಂಡು ಭಗವಂತ ಬರಲಾರ ಅಂತ ಕ್ಷುದ್ರಬುದ್ಧಿಯುಳ್ಳವರಾದ ನಾವು ಖಡಾಖಂಡಿತವಾಗಿ ಹೇಳುವ ಬಗೆ ಹೇಗೆ? ನಮ್ಮ ಅಲ್ಪಮತಿ ಇವನ್ನೆಲ್ಲ ಗ್ರಹಿಸಬಲ್ಲುದೆ? ಒಂದು ಸೇರಿನ ಗಡಿಗೆ ನಾಲ್ಕು ಸೇರು ಹಾಲನ್ನು ಹಿಡಿಸುವುದೆ?
“ಇದಕ್ಕಾಗಿಯೇ ಯಾರು ಭಗವಂತನ ಸಾಕ್ಷಾತ್ಕಾರ ಪಡೆದಿದ್ದಾರೊ ಅಂಥ ಸಾಧು ಮಹಾತ್ಮರ ವಾಕ್ಯಗಳಲ್ಲಿ ವಿಶ್ವಾಸವಿಡಬೇಕು. ವಕೀಲರು ಮೊಕದ್ದಮೆಯಲ್ಲೇ ನಿರತರಾಗಿರುವ ಹಾಗೆ, ಸಾಧುಗಳು ಭಗವಚ್ಚಿಂತನೆಯಲ್ಲೇ ನಿರತರಾಗಿರುತ್ತಾರೆ. ಕಾಕಭೂಷಂಡಿ ಕಥೆಯಲ್ಲಿ ನಿನಗೆ ವಿಶ್ವಾಸವಿದೆಯೇ?”
ಡಾಕ್ಟರ್: “ಅದರಲ್ಲಿ ಯಾವುದು ಸರಿ ಅಂತ ತೋರಿತೊ ಅದನ್ನು ಒಪ್ಪಿಕೊಂಡು ಬಿಟ್ಟೆ. ಭಗವಂತನೇ ತನ್ನ ನಿಜಸ್ವರೂಪವನ್ನು ಮುಮುಕ್ಷುವಿಗೆ ತೋರಿಸಿಕೊಟ್ಟುಬಿಟ್ಟದ್ದೇ ಆದರೆ, ಎಲ್ಲಾ ತೊಂದರೆಗಳೂ ಕೊನೆಗಾಣುತ್ತವೆ. ಬಳಿಕ, ಯಾವ ಗೊಂದಲವೂ ಇರದು. ರಾಮನನ್ನು ಅವತಾರ ಪುರುಷ ಅಂತ ನಾನು ಯಾವ ಬಾಯಿಂದ ಹೇಳಲಿ? ಮೊದಲನೆಯದಾಗಿ ವಾಲಿಯ ವಧೆ ಕಡೆ ನೋಡಿ. ಕಳ್ಳನ ಹಾಗೆ ಮರದ ಹಿಂದೆ ಅವಿತುಕೊಂಡು ಬಾಣಬಿಟ್ಟು ಆತನನ್ನು ಕೊಂದುಹಾಕಿದ. ಇದು ಮನುಷ್ಯಸಹಜವಾದುದೇ ವಿನಾ ದೇವಸಹಜವಾದುದಲ್ಲ.”
ಗಿರೀಶ: “ಮಹಾಶಯರೆ, ಇಂಥ ಕೆಲಸ ಭಗವಂತನಿಗೊಬ್ಬನಿಗೇ ಸಾಧ್ಯ.”
ಡಾಕ್ಟರ್: “ಬಳಿಕ ಸೀತೆಯನ್ನು ವನವಾಸಕ್ಕೆ ಕಳುಹಿಸಿದುದರ ಕಡೆ ನೋಡು.”
ಗಿರೀಶ: “ಮಹಾಶಯರೆ, ಈ ಕಾರ್ಯವೂ ಭಗವಂತನೊಬ್ಬನಿಗೇ ಸಾಧ್ಯ ಹೊರತು ಮನುಷ್ಯರಿಗೆ ಸಾಧ್ಯವಿಲ್ಲ.”
ಈಶಾನ (ಡಾಕ್ಟರಿಗೆ): “ನೀವು ಅವತಾರವನ್ನು ಏಕೆ ಒಪ್ಪುತ್ತಿಲ್ಲ? ಈಗತಾನೆ ನೀವು ಹೇಳಿದಿರಿ, ಭಗವಂತನೇ ಈ ಆಕಾರಗಳನ್ನೆಲ್ಲ ಸೃಷ್ಟಿಸಿರುವುದರಿಂದ ಆತನಿಗೂ ಒಂದು ಆಕಾರವಿದೆ; ಮನಸ್ಸನ್ನು ಸೃಷ್ಟಿಸಿರುವುದರಿಂದ ಆತ ನಿರಾಕಾರ ಅಂತ. ಈಗೊಂದು ಕ್ಷಣದ ಹಿಂದೆ ಹೇಳಿದಿರಿ ಭಗವಂತನ ಕೆಲಸವನ್ನು ಏನು ಅಂತ ಹೇಳೋಣ, ಆತನ ಕೈಯಲ್ಲಿ ಎಲ್ಲವೂ ಸಾಧ್ಯ ಎಂದು.”
ಶ್ರೀರಾಮಕೃಷ್ಣರು (ನಗುತ್ತ): “ಭಗವಂತ ಅವತರಿಸಬಲ್ಲನೆಂಬ ವಿಷಯವನ್ನು ಇವರ ಸೈನ್ಸ ಪುಸ್ತಕದಲ್ಲಿ ಬರೆದಿಲ್ಲವಲ್ಲ; ಆದ್ದರಿಂದ ಈತ ನಂಬುವ ಬಗೆ ಹೇಗೆ? (ಎಲ್ಲರೂ ನಗುತ್ತಾರೆ.)
“ಒಂದು ಕಥೆ ಕೇಳಿ. ಒಮ್ಮೆ ಒಬ್ಬ ತನ್ನ ಸ್ನೇಹಿತನಿಗೆ ಹೇಳಿದ: ‘ನೋಡು, ಈಗ ತಾನೆ ನಾನು ನೋಡಿ ಬಂದೆ. ಆ ಅಗ್ರಹಾರದಲ್ಲಿ ಆತನ ಮನೆ “ಢಬಾರ್’ ಅಂತ ಕುಸಿದುಬಿತ್ತು.’ ಆ ಸ್ನೇಹಿತ ಇಂಗ್ಲೀಷು ವಿದ್ಯಾಭ್ಯಾಸ ಪಡೆದಿದ್ದ. ಆತ ಹೇಳಿದ, ‘ಒಂದು ನಿಮಿಷ ತಾಳು. ಪೇಪರ್ ನೋಡಿ ಬರುತ್ತೇನೆ.’ ಪೇಪರಿನಲ್ಲಿ ಹುಡುಕಿ ನೋಡುತ್ತಾನೆ, ಮನೆ ಮುರಿದು ಬಿದ್ದುದರ ಸುದ್ದಿಸಮಾಚಾರವೇ ಇಲ್ಲ. ಆಗ ಆತ ಹೇಳಿದ, ‘ನೀನು ಹೇಳಿದುದನ್ನು ನಾನು ನಂಬುವುದಿಲ್ಲ. ಏಕೆ ಮತ್ತೆ, ಮನೆ ಮುರಿದುಬಿದ್ದ ಸಮಾಚಾರವನ್ನು ಪೇಪರಿನಲ್ಲಿ ಹಾಕಲೇ ಇಲ್ಲವಲ್ಲ. ನಿನ್ನ ಮಾತು ಬರೀ ಸುಳ್ಳು”’ (ಎಲ್ಲರೂ ನಗುತ್ತಾರೆ.)
ಗಿರೀಶ (ಡಾಕ್ಟರಿಗೆ): “ಶ್ರೀ ಕೃಷ್ಣ ಭಗವಂತ ಎಂಬುದನ್ನು ನೀವು ಒಪ್ಪಲೇಬೇಕು. ಆತ ಕೇವಲ ಮನುಷ್ಯ ಮಾತ್ರ ಅಂತ ಹೇಳಲು ನಾನು ಬಿಟ್ಟುಕೊಡುವುದಿಲ್ಲ. ಆತ ಒಬ್ಬ ರಾಕ್ಷಸ, ಇಲ್ಲದಿದ್ದರೆ ಭಗವಂತ ಎಂಬುದಾಗಿ ಒಪ್ಪಲೇಬೇಕು.”
ಶ್ರೀರಾಮಕೃಷ್ಣರು: “ಸರಳನಲ್ಲದವನಿಗೆ ಅಷ್ಟು ಬೇಗ ಭಗವಂತನಲ್ಲಿ ವಿಶ್ವಾಸ ಹುಟ್ಟದು. ವಿಷಯಾಸಕ್ತರಿಂದ ಬಹಳ ದೂರದಲ್ಲೇ ಭಗವಂತ ನಿಲ್ಲುತ್ತಾನೆ. ವಿಷಯ ಬುದ್ಧಿ ಇತ್ತು ಎಂದರೆ ಹೃದಯದಲ್ಲಿ ಸಂಶಯ ಮನೆಮಾಡಿಕೊಳ್ಳುತ್ತದೆ ಮತ್ತು ನಾನಾವಿಧದ ಅಹಂಕಾರಗಳು- ಪಾಂಡಿತ್ಯದ ಅಹಂಕಾರ, ಧನದ ಅಹಂಕಾರ ಇವೇ ಮೊದಲಾದುವು ಬಂದುಬಿಡುತ್ತವೆ. ಆದರೆ ಈತ ಸರಳ.”
ಗಿರೀಶ (ಡಾಕ್ಟರಿಗೆ): “ಮಹಾಶಯರೆ, ನಿಮ್ಮ ಅಭಿಪ್ರಾಯವೇನು? ಕಪಟಿಗಳಿಗೆ ಜ್ಞಾನ ದೊರಕುವುದೆ?”
ಡಾಕ್ಟರ್: “ರಾಮ, ರಾಮ! ಎಂದಿಗಾದರೂ ದೊರಕುವುದೆ?”
ಶ್ರೀರಾಮಕೃಷ್ಣರು: “ಕೇಶವಸೇನ ಎಂಥಾ ಸರಳಜೀವಿ! ಒಂದು ದಿನ ಕಾಳೀ ದೇವಾಲಯಕ್ಕೆ ಬಂದಿದ್ದ, ಅಪರಾಹ್ನ ನಾಲ್ಕು ಘಂಟೆಯ ಸಮಯದಲ್ಲಿ ಹಾಗೆಯೆ ಸುತ್ತಿಕೊಂಡು ಅತಿಥಿಶಾಲೆಗೆ ಬಂದು ಅಲ್ಲಿದ್ದವರನ್ನು ಕೇಳಿದ, ‘ಒಳ್ಳೇದು, ಅತಿಥಿಗಳಿಗೆ ಮತ್ತು ಭಿಕ್ಷುಕರಿಗೆ ನೀವು ಇನ್ನು ಎಷ್ಟು ಹೊತ್ತಿಗೆ ಅನ್ನ ಹಾಕುವುದು?’ ಎಂದು. ವಿಶ್ವಾಸ ಹೆಚ್ಚಿದಂತೆಲ್ಲ ಜ್ಞಾನವೂ ಹೆಚ್ಚುತ್ತಾ ಬರುತ್ತದೆ. ಯಾವ ಹಸು ಆರಿಸಿ ಆರಿಸಿಕೊಂಡು ಮೇವು ಮೇಯುವುದೊ ಅದು ತೊಟ್ಟುತೊಟ್ಟಾಗಿ ಹಾಲು ಕರೆಯುತ್ತದೆ. ಆದರೆ ಯಾವುದು ಹುಲ್ಲು, ಸೊಪ್ಪು, ಎಲೆ, ಗರಿಕೆ, ತವುಡು ಮತ್ತು ಯಾವುದು ಸಿಕ್ಕಿದರೂ ಅವನ್ನೆಲ್ಲ ‘ಗಬಕ್, ಗಬಕ್’ ಅಂತ ತಿನ್ನುವುದೊ, ಅದು ‘ಸೊರ್, ಸೊರ್’ ಅಂತ ಧಾರಾಕಾರವಾಗಿ ಹಾಲು ಕರೆಯುತ್ತದೆ. (ಎಲ್ಲರೂ ನಗುತ್ತಾರೆ.)
“ಬಾಲಕನಂಥ ವಿಶ್ವಾಸ ಇಲ್ಲದೆ ಇತ್ತು ಅಂದರೆ ಭಗವಂತನನ್ನು ಪಡೆದುಕೊಳ್ಳಲಾಗು ವುದಿಲ್ಲ. ತಾಯಿ ಒಬ್ಬ ಹುಡುಗನನ್ನು ತೋರಿಸಿ ಮಗುವಿಗೆ ಹೇಳುತ್ತಾಳೆ: ‘ಅಗೋ ನೋಡು, ಆತ ನಿನ್ನ ಅಣ್ಣ’ ಅಂತ. ಒಡನೆಯೆ ಮಗು ಆತ ಶೇಕಡ ನೂರು ಭಾಗ ತನ್ನ ಅಣ್ಣ ಅಂತ ನಂಬಿಬಿಡುತ್ತದೆ. ತಾಯಿ ಮಗುವಿಗೆ ಹೇಳುತ್ತಾಳೆ: ‘ನೋಡಲ್ಲಿ, ಈ ಕೊಠಡಿಯಲ್ಲಿ ಗೊಗ್ಗಯ್ಯನಿದ್ದಾನೆ’ ಎಂದು. ಆ ಕೊಠಡಿಯಲ್ಲಿ ಗೊಗ್ಗಯ್ಯನಿದ್ದಾನೆ ಎಂಬುದನ್ನು ಮಗು ನೂರಕ್ಕೆ ನೂರು ಭಾಗ ನಂಬಿಬಿಡುತ್ತದೆ. ಯಾರಲ್ಲೆ ಆಗಲಿ ಈ ವಿಧವಾದ ಬಾಲಕನಂಥ ವಿಶ್ವಾಸ ಕಂಡು ಬಂದದ್ದೇ ಆದರೆ, ಅವರ ಮೇಲೆ ಭಗವಂತ ಕೃಪೆಮಾಡಿ ಬಿಡುತ್ತಾನೆ. ಸಾಂಸಾರಿಕ ಬುದ್ಧಿಯಿಂದ ಆತನನ್ನು ಪಡೆಯಲಾಗುವುದಿಲ್ಲ.”
ಡಾಕ್ಟರ್ (ಭಕ್ತರಿಗೆ): “ಹಸುವಿಗೆ ಸಿಕ್ಕಿದುದನ್ನೆಲ್ಲ ತಿನ್ನಿಸಿ ಹೆಚ್ಚಾಗಿ ಹಾಲು ಹಿಂಡುವುದು ಒಳ್ಳೆಯದಲ್ಲ. ನಮ್ಮ ಮನೆಯ ಒಂದು ಹಸುವಿಗೆ ಸಿಕ್ಕಿಸಿಕ್ಕಿದುದನ್ನೆಲ್ಲ ತಿನ್ನಿಸಿ ಕೊನೆಗೆ ನನಗೆ ಒಂದು ಭಾರಿ ಕಾಯಿಲೆಯೆ ಬಂದುಬಿಟ್ಟಿತು. ಆಗ ಯೋಚಿಸಲಾರಂಭಿಸಿದೆ ಇದಕ್ಕೆ ಕಾರಣ ಏನು ಅಂತ. ಅದನ್ನು ಪತ್ತೆಮಾಡಲು ಬಹಳ ಪ್ರಯತ್ನಪಟ್ಟ ನಂತರ ಗೊತ್ತಾಯಿತು, ಹಸು ಏನೇನನ್ನೋ ತಿನ್ನುತ್ತಿತ್ತು ಅಂತ. ಆಗ ಬಹಳ ಕಷ್ಟಕ್ಕಿಟ್ಟುಕೊಂಡಿತು. ಚಿಕಿತ್ಸೆಗೆ ಲಕ್ನೋವಿಗೆ ಹೋಗಬೇಕಾಗಿ ಬಂತು. ಕೊನೆಗೆ ಏನಿಲ್ಲ ಅಂದರೂ ಹನ್ನೆರಡು ಸಾವಿರ ರೂಪಾಯಿ ಖರ್ಚು ಮಾಡಬೇಕಾಯಿತು (ಎಲ್ಲರೂ ಗಟ್ಟಿಯಾಗಿ ನಗುತ್ತಿದ್ದಾರೆ.)
“ಯಾವುದರಿಂದ ಏನಾಗುತ್ತದೆ ಎಂಬುದನ್ನು ಸರಿಯಾಗಿ ಹೇಳಲಾಗುವುದಿಲ್ಲ. ಒಬ್ಬ ಶ್ರೀಮಂತರ ಮನೆಯಲ್ಲಿ ಏಳು ತಿಂಗಳ ಹೆಣ್ಣುಮಗುವೊಂದಕ್ಕೆ ನಾಯಿ-ಕೆಮ್ಮಲು ಬಂದು ಬಿಟ್ಟಿತು. ನನ್ನನ್ನು ಕರೆಸಿದ್ದರು. ಏನು ಮಾಡಿದರೂ ಅದರ ಕಾರಣ ನನಗೆ ಹೊಳೆಯಲಿಲ್ಲ. ಕೊನೆಗೆ ತಿಳಿದುಬಂತು, ಆ ಮಗುವಿಗೆ ಕತ್ತೆಹಾಲು ಕೊಡುತ್ತಿದ್ದರು, ಅದು ಒಂದು ದಿನ ಮಳೆಯಲ್ಲಿ ನೆಂದುಬಿಟ್ಟಿತು ಅಂತ.” (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು (ಭಕ್ತರಿಗೆ): “ಏನು ಹೇಳುತ್ತೀರಾ! ಒಬ್ಬನ ಗಾಡಿ ಹುಣಸೆಮರದ ತೋಪಿಗೆ ಹೋಗಿಬಂತಂತೆ, ಅದಕ್ಕಾಗಿ ಆತನ ಹೊಟ್ಟೆಯಲ್ಲಿ ಆಮ್ಲ ಹೆಚ್ಚಾಗಿ ವೃದ್ಧಿಯಾಗಿಬಿಟ್ಟಿತಂತೆ!” (ಡಾಕ್ಟರ್ ಮತ್ತು ಎಲ್ಲರೂ ನಗುತ್ತಿದ್ದಾರೆ.)
ಡಾಕ್ಟರ್ (ನಗುತ್ತ ನಗುತ್ತ): “ಒಮ್ಮೆ ಒಂದು ಜಹಜಿನ ಕ್ಯಾಪ್ಟನ್ನನಿಗೆ ತೀವ್ರ ತಲೆಶೂಲೆ ಬಂದಿತಂತೆ. ಜಹಜಿನ ಡಾಕ್ಟರುಗಳು ಕಲೆತು ಆಲೋಚಿಸಿ ಜಹಜಿನ ಒಂದು ಪಕ್ಕಕ್ಕೆ ಅಗ್ನಿಪ್ಲಾಸ್ತ್ರಿಯನ್ನು ಅಂಟಿಸಿದರಂತೆ.” (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು (ಡಾಕ್ಟರಿಗೆ): “ಸಾಧು ಸಂಗ ಸರ್ವದಾ ಆವಶ್ಯಕ. ರೋಗ ಹತ್ತಿ ಕೊಂಡೇ ಇದೆ. ಸಾಧುಗಳು ಹೇಳಿದ ಹಾಗೆ ನಡೆದುಕೊಳ್ಳಲೇಬೇಕು; ಬರಿದೆ ಕಿವಿಯಲ್ಲಿ ಕೇಳಿಬಿಟ್ಟರೆ ಏನು ಆದ ಹಾಗಾಯಿತು? ಔಷಧಿ ಕುಡಿಯಬೇಕು; ಪಥ್ಯದಿಂದಲೂ ಇರಬೇಕು. ಪಥ್ಯ ಅತ್ಯಂತ ಆವಶ್ಯಕ.”
ಡಾಕ್ಟರ್: “ಪಥ್ಯದಿಂದಲೇ ಗುಣವಾಗಿಬಿಡುತ್ತದೆ.”
ಶ್ರೀರಾಮಕೃಷ್ಣರು: “ವೈದ್ಯರಲ್ಲಿ ಮೂರು ವಿಧ–ಉತ್ತಮ ವೈದ್ಯ, ಮಧ್ಯಮ ವೈದ್ಯ, ಅಧಮ ವೈದ್ಯ. ರೋಗಿಯ ನಾಡಿಯನ್ನು ಪರೀಕ್ಷಿಸಿ, ಇಂಥ ಔಷಧಿ ಕುಡಿ ಅಂತ ರೋಗಿಗೆ ಹೇಳಿಬಿಟ್ಟು ಹೊರಟುಹೋಗುವವನು ಅಧಮ ವೈದ್ಯ. ರೋಗಿ ತಾನು ಹೇಳಿದ ಹಾಗೆ ನಡೆದುಕೊಂಡನೆ ಇಲ್ಲವೆ ಎಂಬುದರ ಕಡೆ ಈತ ಮನಸ್ಸು ಕೊಡುವುದಿಲ್ಲ. ಮಧ್ಯಮ ವೈದ್ಯ ಸವಿಮಾತುಗಳಿಂದ ಔಷಧ ಕುಡಿಯುವಂತೆ ರೋಗಿಯನ್ನು ಪ್ರೇರೇಪಿಸಿ ಆತನಿಗೆ ಹೇಳುತ್ತಾನೆ, ‘ನೋಡಪ್ಪ, ಔಷಧಿ ಕುಡಿಯದಿದ್ದರೆ ನಿನಗೆ ಗುಣವಾಗುವ ಬಗೆ ಹೇಗೆ? ದಯವಿಟ್ಟು ಕುಡಿಯಪ್ಪ. ನಾನೇ ಔಷಧಿ ತಯಾರುಮಾಡಿ ಕೊಡುತ್ತೇನೆ. ಕುಡಿಯಪ್ಪ’ ಅಂತ. ಉತ್ತಮ ವೈದ್ಯ ರೋಗಿ ಯಾವ ವಿಧದಿಂದಲೂ ಔಷಧ ಕುಡಿಯದಿರುವುದನ್ನು ನೋಡಿ ಆತನ ಎದೆಯ ಮೇಲೆ ಮಂಡಿಯೂರಿ ಕುಳಿತು ಬಲಾತ್ಕಾರದಿಂದ ಔಷಧವನ್ನು ಕುಡಿಸಿಯೆಬಿಡುತ್ತಾನೆ.”
ಡಾಕ್ಟರ್: “ಈಗ ಅಂಥ ಔಷಧದ ಆವಿಷ್ಕಾರವಾಗಿದೆ; ಅದನ್ನು ಕುಡಿಸುವುದಕ್ಕೆ ರೋಗಿಯ ಎದೆಯ ಮೇಲೆ ಮಂಡಿಯೂರಿ ಕುಳಿತುಕೊಳ್ಳುವ ಆವಶ್ಯಕತೆಯೇನಿಲ್ಲ. ಉದಾಹರಣೆಗೆ ಹೋಮಿಯೋಪತಿ ಔಷಧ.”
ಶ್ರೀರಾಮಕೃಷ್ಣರು: “ಉತ್ತಮ ವೈದ್ಯ ರೋಗಿಯ ಎದೆಯ ಮೇಲೆ ಮಂಡಿಯೂರಿ ಕುಳಿತುಕೊಂಡರೆ ಹೆದರಬೇಕಾದ್ದೇನಿಲ್ಲ.
“ವೈದ್ಯರ ಹಾಗೆ ಆಚಾರ್ಯರೂ ಮೂರು ವಿಧ. ಅಧಮ ಆಚಾರ್ಯ ಶಿಷ್ಯರಿಗೆ ಉಪದೇಶ ಕೊಟ್ಟಷ್ಟರಲ್ಲೇ ತೃಪ್ತನಾಗಿಬಿಡುತ್ತಾನೆ. ಬಳಿಕ ಅವರ ಯೋಚನೆಯನ್ನೇ ಮಾಡುವುದಿಲ್ಲ. ಮಧ್ಯಮ ಆಚಾರ್ಯ ತನ್ನ ಶಿಷ್ಯರ ಶ್ರೇಯಸ್ಸನ್ನು ಕೋರಿ ತಾನು ಕೊಟ್ಟ ಉಪದೇಶ ಸರಿಯಾಗಿ ಹಿಡಿಯಲೆಂದು ಅವರಿಗೆ ಮತ್ತೆಮತ್ತೆ ಉಪದೇಶವೀಯುತ್ತಾನೆ; ನಯವಿನಯ ಪ್ರೇಮದಿಂದ ಅದನ್ನು ಅನುಷ್ಠಾನಕ್ಕೆ ತರಲು ಅವರನ್ನು ಪ್ರೇರೇಪಿಸುತ್ತಾನೆ. ಆದರೆ ಉತ್ತಮ ಆಚಾರ್ಯ ಆವಶ್ಯಕತೆ ತೋರಿಬಂದರೆ ತನ್ನ ಹಠಮಾರಿ ಶಿಷ್ಯರಿಗೆ ಬಲಪ್ರಯೋಗವನ್ನೂ ಮಾಡಿಬಿಡುತ್ತಾನೆ.
(ಡಾಕ್ಟರಿಗೆ) “ಕಾಮಕಾಂಚನ ತ್ಯಾಗ ಸಂನ್ಯಾಸಿಗೆ ಮಾತ್ರ. ಹೆಂಗಸಿನ ಪಟವನ್ನೂ ಆತ ನೋಡಕೂಡದು. ಹೆಂಗಸು ಹೇಗೆ ಎಂಬುದು ಗೊತ್ತೆ? ಹುಣಸೆಕಾಯಿ ಉಪ್ಪಿನಕಾಯಿ. ಅದನ್ನು ಹತ್ತಿರ ತೆಗೆದುಕೊಂಡು ಬರುವ ಆವಶ್ಯಕತೆಯೇ ಇಲ್ಲ; ಭಾವಿಸಿದರೇನೇ ಬಾಯಿಂದ ನೀರು ಊರಿಬರುತ್ತದೆ.
“ಈ ವಿಧದ ತ್ಯಾಗ ನಿಮ್ಮಂಥ ಗೃಹಸ್ಥರಿಗಲ್ಲ, ಸಂನ್ಯಾಸಿಗಳಿಗೆ. ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೊ ಅಷ್ಟು ಮಟ್ಟಿಗೆ ಹೆಂಗಸಿನೊಡನೆ ಅನಾಸಕ್ತಿಯಿಂದ ಇರಲು ಪ್ರಯತ್ನಮಾಡಿ. ಆಗಾಗ ನಿರ್ಜನಪ್ರದೇಶಕ್ಕೆ ಹೋಗಿ ಭಗವಚ್ಚಿಂತನೆ ಮಾಡಬೇಕು. ಜೊತೆಯಲ್ಲಿ ಹೆಂಗಸರಾರೂ ಇರಕೂಡದು. ಭಗವಂತನ ಪಾದಪದ್ಮಗಳಲ್ಲಿ ವಿಶ್ವಾಸಭಕ್ತಿ ಉಂಟಾಗಿಬಿಟ್ಟಿತು ಅಂದರೆ ಬಹುಮಟ್ಟಿಗೆ ಅನಾಸಕ್ತತೆಯಿಂದ ಇರಲು ಸಾಧ್ಯ. ಒಂದೆರಡು ಮಕ್ಕಳಾದನಂತರ ಪತಿ ಪತ್ನಿಯರು ಅಣ್ಣತಂಗಿಯರೋಪಾದಿಯಲ್ಲಿ ವಾಸಿಸಬೇಕು; ಬಳಿಕ ಅವರು ಭಗವಂತನಿಗೆ ಸರ್ವದಾ ಪ್ರಾರ್ಥನೆ ಮಾಡುತ್ತಿರಬೇಕು, ತಮ್ಮ ಮನಸ್ಸು ಇಂದ್ರಿಯಸುಖಗಳ ಕಡೆಗೆ ಹೋಗದಿರಲೆಂದು, ಎಂದರೆ ಮಕ್ಕಳು-ಮರಿ ಆಗದಿರಲೆಂದು.”
ಗಿರೀಶ (ನಗುತ್ತ ಡಾಕ್ಟರಿಗೆ): “ನೀವು ಇಲ್ಲಿಗೆ ಬಂದು ಆಗಲೆ ಮೂರು ನಾಲ್ಕು ಘಂಟೆಯಾಯಿತು. ನಿಮ್ಮ ರೋಗಿಗಳ ಗತಿಯೇನು?”
ಡಾಕ್ಟರ್: “ಇನ್ನು, ಡಾಕ್ಟರ್ಗಿರಿ, ರೋಗಿಗಳು! ನಿಮ್ಮ ಪರಮಹಂಸ ಸಿಕ್ಕಿಬಿಟ್ಟು ನಾವು ಎಲ್ಲವನ್ನೂ ಕಳಕೊಳ್ಳಬೇಕಾಗಿ ಬಂದಿದೆ!” (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು: “ನೋಡು, ‘ಕರ್ಮನಾಶ’ ಎಂಬ ಒಂದು ನದಿ ಇದೆ. ಅದರಲ್ಲಿ ಮುಳುಗುಹಾಕುವುದು ಎಂದರೆ ಮಹಾ ವಿಪತ್ತಿಗೆ ಒಳಗಾಗಬೇಕಾಗುತ್ತದೆ. ಕರ್ಮ ನಾಶವಾಗಿಬಿಡುತ್ತದೆ. ಆ ವ್ಯಕ್ತಿಯಿಂದ ಬೇರೆ ಯಾವ ಕರ್ಮವೂ ಸಾಧ್ಯವಿಲ್ಲ.” (ಡಾಕ್ಟರ್ ಮತ್ತು ಉಳಿದವರೂ ನಗುತ್ತಾರೆ).
ಡಾಕ್ಟರ್ (ಗಿರೀಶ, ಮಾಸ್ಟರ್ ಮತ್ತು ಉಳಿದವರಿಗೆ): “ನೋಡಿ, ನಾನು ನಿಮ್ಮವನಾಗಿ ಬಿಡುತ್ತೇನೆ; ನಿಮ್ಮ ಡಾಕ್ಟರ್ ಎಂಬ ದೃಷ್ಟಿಯಿಂದಲ್ಲ, ನನ್ನನ್ನು ನಿಮ್ಮಲ್ಲಿ ಒಬ್ಬ ಎಂದು ಭಾವಿಸುವುದಾದರೆ, ನಾನೂ ನಿಮ್ಮವನೆ.”
ಶ್ರೀರಾಮಕೃಷ್ಣರು (ಡಾಕ್ಟರಿಗೆ): “ಅಹೇತುಕ ಭಕ್ತಿಯೆಂಬುದು ಒಂದಿದೆ. ಅದು ಹೃದಯದಲ್ಲಿ ಅಂಕುರವಾಗಿಬಿಟ್ಟಿತು ಅಂದರೆ ಬಹಳ ಒಳ್ಳೆಯದು. ಪ್ರಹ್ಲಾದನಲ್ಲಿ ಅಹೇತುಕ ಭಕ್ತಿ ಉಂಟಾಗಿತ್ತು. ಆ ವಿಧದ ಭಕ್ತ ಹೇಳುತ್ತಾನೆ; ‘ಹೇ ಭಗವಂತ, ನನಗೆ ಧನ, ಮಾನ, ದೇಹಸುಖ ಇವುಗಳಾವುವೂ ಬೇಡ. ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧಭಕ್ತಿ ಉಂಟಾಗುವಂತೆ ಮಾಡು.”’
ಡಾಕ್ಟರ್: “ನೀವು ಹೇಳುವುದು ಸರಿ. ಜನರು ಕಾಳಿಯ ಮುಂದೆ ಅಡ್ಡ ಬೀಳುವುದನ್ನು ನಾನು ನೋಡಿದ್ದೇನೆ; ಆಂತರ್ಯದಲ್ಲಿ ಕಾಮನೆಗಳು ತುಂಬಿರುತ್ತವೆ. ಉದಾಹರಣೆಗೆ– ನನಗೊಂದು ಕೆಲಸಮಾಡಿಸಿಕೊಡು; ನನ್ನ ರೋಗವನ್ನು ಗುಣಪಡಿಸು; ಇವೇ ಮೊದಲಾದುವು.
(ಪರಮಹಂಸರಿಗೆ) “ನಿಮ್ಮ ರೋಗ ಅಂಥಾದ್ದು; ನೀವು ಜನರೊಡನೆ ಮಾತುಕತೆ ಯಾಡಕೂಡದು. ಆದರೆ ನಾನು ಬಂದಾಗ ಕೇವಲ ನನ್ನೊಡನೆ ಮಾತ್ರ ನೀವು ಮಾತಾಡಬೇಕು.” (ಎಲ್ಲರೂ ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು: “ಈ ರೋಗದಿಂದ ನನ್ನನ್ನು ಗುಣಪಡಿಸಿಬಿಡು. ನಾನು ಭಗವತಿಯ ನಾಮಗುಣಕೀರ್ತನೆ ಮಾಡಲಾಗುತ್ತಿಲ್ಲ.”
ಡಾಕ್ಟರ್: “ಧ್ಯಾನಮಾಡಿದರೇ ಸಾಕಲ್ಲ.”
ಶ್ರೀರಾಮಕೃಷ್ಣರು: “ಇದೆಂಥ ಮಾತು? ನಾನು ಒಂದೇ ಸ್ವರ ಊದುವವನು ಏಕಾಗಲಿ? ನಾನು ಮೀನನ್ನು ಒಂದು ಹತ್ತಾರು ವಿಧದ ಭಕ್ಷ್ಯಗಳನ್ನಾಗಿ ಮಾಡಿ ತಿನ್ನುತ್ತೇನೆ — ಕೆಲವು ವೇಳೆ ಮೀನಿನ ಪಲ್ಯ, ಇನ್ನು ಕೆಲವು ವೇಳೆ ಮೀನಿನ ಬಜ್ಜಿ, ಮತ್ತೆ ಕೆಲವು ವೇಳೆ ಮೀನಿನ ಉಪ್ಪಿನಕಾಯಿ ಇವೇ ಮೊದಲಾದುವುಗಳನ್ನಾಗಿ ಮಾಡಿ ತಿನ್ನುತ್ತೇನೆ. ಕೆಲವು ವೇಳೆ ಪೂಜೆ, ಇನ್ನು ಕೆಲವು ವೇಳೆ ಜಪ, ಮತ್ತೆ ಕೆಲವು ವೇಳೆ ಧ್ಯಾನ, ಮತ್ತೂ ಕೆಲವು ವೇಳೆ ಭಗವತಿಯ ನಾಮಗುಣಕೀರ್ತನೆ, ಮತ್ತೂ ಕೆಲವು ವೇಳೆ ಆಕೆಯ ನಾಮವನ್ನು ಜಪಿಸುತ್ತ ನರ್ತಿಸುವುದು ಇವೇ ಮೊದಲಾದುವುಗಳನ್ನು ಮಾಡುತ್ತೇನೆ.”
ಡಾಕ್ಟರ್: “ನಾನೂ ಒಂದೇ ಸ್ವರ ಹಿಡಿದು ಊದುವವನಲ್ಲ.”
ಶ್ರೀರಾಮಕೃಷ್ಣರು: “ನಿನ್ನ ಮಗ ಅಮೃತ ಅವತಾರವನ್ನು ಒಪ್ಪುತ್ತಿಲ್ಲ. ಅದೇನು ತಪ್ಪಲ್ಲ; ಭಗವಂತ ನಿರಾಕಾರ ಎಂಬ ವಿಶ್ವಾಸವಿದ್ದರೂ ಆತನ ಸಾಕ್ಷಾತ್ಕಾರ ದೊರೆಯುತ್ತದೆ, ಸಾಕಾರ ಎಂಬ ವಿಶ್ವಾಸವಿದ್ದರೂ ಆತನ ಸಾಕ್ಷಾತ್ಕಾರ ದೊರೆಯುತ್ತದೆ. ಆತನ ಸಾಕ್ಷಾತ್ಕಾರಕ್ಕೆ ಆತನಲ್ಲಿ ವಿಶ್ವಾಸವಿರುವುದು ಮತ್ತು ಆತನಿಗೆ ಶರಣಾಗತನಾಗುವುದು ಇವೆರಡೂ ಆವಶ್ಯಕ. ಸ್ವಾಭಾವಿಕವಾಗಿ ಮನುಷ್ಯ ಅಜ್ಞಾನಿ. ತಪ್ಪುವುದು ಸ್ವಾಭಾವಿಕ. ಒಂದು ಸೇರಿನ ಗಡಿಗೆ ನಾಲ್ಕು ಸೇರು ಹಾಲು ಹಿಡಿಯಬಲ್ಲುದೆ? ಆದರೆ ಯಾವ ಮಾರ್ಗ ಅನುಸರಿಸಿದರೂ ಸರಿಯೆ. ವ್ಯಾಕುಲ ಚಿತ್ತದಿಂದ ಆತನನ್ನು ಕರೆಯಬೇಕು. ಆತ ಅಂತರ್ಯಾಮಿ. ಹೃತ್ಪೂರ್ವಕವಾದ ಕರೆಗೆ ಆತ ಕಿವಿಗೊಟ್ಟೇಗೊಡುತ್ತಾನೆ. ವ್ಯಾಕುಲನಾಗಿ ಸಾಕಾರವಾದಿಗಳ ಮಾರ್ಗದಲ್ಲಾದರೂ ಹೋಗು, ನಿರಾಕಾರವಾದಿಗಳ ಮಾರ್ಗದಲ್ಲಾದರೂ ಹೋಗು, ಆತನೇ ದೊರೆಯುತ್ತಾನೆ. ಕಜ್ಜಾಯವನ್ನು ಉದ್ದುದ್ದವಾಗಿ ಕಡಿದು ತಿಂದರೂ ಸಿಹಿ, ಅಡ್ಡಡ್ಡಲಾಗಿ ಕಡಿದು ತಿಂದರೂ ಸಿಹಿ.
“ನಿನ್ನ ಮಗ ಅಮೃತ ಬಹಳ ಒಳ್ಳೆ ಹುಡುಗ.”
ಡಾಕ್ಟರ್: “ಆತ ನಿಮ್ಮ ಶಿಷ್ಯ.”
ಶ್ರಿರಾಮಕೃಷ್ಣರು (ನಗುತ್ತ ಡಾಕ್ಟರಿಗೆ): “ನನ್ನ ಶಿಷ್ಯ ಅನ್ನಿಸಿಕೊಳ್ಳುವವನು ಈ ಭೂಮಂಡಲದಲ್ಲೇ ಇಲ್ಲ. ಅದಕ್ಕೆ ಮೊದಲು ನಾನೇ ಎಲ್ಲರ ಶಿಷ್ಯ. ಎಲ್ಲರೂ ಭಗವಂತನ ಮಕ್ಕಳು. ಎಲ್ಲರೂ ಆತನ ದಾಸರು. ನಾನೂ ಭಗವಂತನ ಒಂದು ಮಗು. ನಾನೂ ಆತನ ಒಬ್ಬ ದಾಸ. ‘ಚಂದಮಾಮ’ ಎಲ್ಲಾ ಮಕ್ಕಳ ಮಾಮ!”