೯ನೇ ಆಗಸ್ಟ್ ೧೮೮೫, ಕೃಷ್ಣ ಚತುರ್ದಶಿ, ಭಾನುವಾರ
ಪರಮಹಂಸರು ದಕ್ಷಿಣೇಶ್ವರದ ತಮ್ಮ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ರಾಖಾಲ, ದ್ವಿಜ, ದ್ವಿಜನ ತಂದೆ, ಮಾಸ್ಟರ್ ಮತ್ತು ಇನ್ನೂ ಕೆಲವು ಮಂದಿ ಭಕ್ತರು ಅಲ್ಲಿ ಕುಳಿತಿದ್ದಾರೆ. ಘಂಟೆ ಅಪರಾಹ್ನ ನಾಲ್ಕರ ಸಮಯ.
ರಾಖಾಲ ಬೃಂದಾವನದಿಂದ ಹಿಂದಿರುಗಿ ಬಂದ ಮೇಲೆ ತನ್ನ ಮನೆಯಲ್ಲೆ ಕೆಲವು ದಿನಗಳನ್ನು ಕಳೆದು, ಈಗ ಪರಮಹಂಸರೊಡನೆಯೆ ಇದ್ದಾನೆ. ಲಾಟು, ಹರೀಶ, ರಾಮಲಾಲ ಇವರೂ ಪರಮಹಂಸರೊಡನೆ ಇದ್ದಾರೆ.
ಪರಮಹಂಸರ ಆರೋಗ್ಯ ಚೆನ್ನಾಗಿಲ್ಲ. ಕ್ರಮೇಣ ಕ್ಯಾನ್ಸರ್ ಎಂದು ಗೊತ್ತಾದ ಆ ಪ್ರಾಣಾಂತ ರೋಗದ ಆರಂಭ. ಆದರೆ ಇದು ಅವರ ಮಾನಸಿಕ ಶಾಂತತೆಗೆ ಯಾವ ಭಂಗವನ್ನೂ ತಂದಿಲ್ಲ. ಅವರು ಹಗಲೂ ಇರುಳು ಒಂದೇ ಭಾವನೆಯಲ್ಲೇ, ತಮ್ಮ ಶಿಷ್ಯರನ್ನು ಆಧ್ಯಾತ್ಮಿಕ ಜೀವನದಲ್ಲಿ ಮುಂದುವರೆಸುವ ಯೋಚನೆಯಲ್ಲಿಯೇ ಮಗ್ನರಾಗಿ ಹೋಗಿದ್ದಾರೆ. ಜ್ಞಾನ ಮತ್ತು ಭಕ್ತಿಯನ್ನು ಬೆಳೆಸಿಕೊಳ್ಳಲು ಸತತ ಪ್ರೋತ್ಸಾಹವೀಯುತ್ತಿದ್ದರು. ಕಾಮಕಾಂಚನದ ಸಂಬಂಧವಾಗಿ ಎಚ್ಚರಿಕೆಯನ್ನೀಯುತ್ತಿದ್ದಾರೆ. ತಮ್ಮ ರೋಗದ ಸಂಬಂಧವಾಗಿ ಒಂದು ಕಿಂಚಿತ್ತೂ ಮನಸ್ಸಿಗೆ ಹಚ್ಚಿಕೊಳ್ಳದೆ ತಮ್ಮ ಜೀವನೋದ್ದೇಶದ ಪೂರ್ಣತೆಗಾಗಿ ತಮ್ಮ ಇಡೀ ಮನಸ್ಸನ್ನೆಲ್ಲ ವಿನಿಯೋಗಿಸುತ್ತಿದ್ದಾರೆ.
ದ್ವಿಜನಿಗೆ ವಯಸ್ಸು ಹದಿನಾರು ಇರಬಹುದು. ಆತನ ತಾಯಿ ಪರಲೋಕವನ್ನು ಪಡೆದ ನಂತರ, ಆತನ ತಂದೆ ಎರಡನೆ ಹೆಂಡತಿಯನ್ನು ಮದುವೆಯಾಗಿದ್ದಾನೆ. ದ್ವಿಜ ಆಗಾಗ ಮಾಸ್ಟರೊಡನೆ ದಕ್ಷಿಣೇಶ್ವರಕ್ಕೆ ಬರುತ್ತಲೇ ಇದ್ದ; ದ್ವಿಜನ ತಂದೆಗೆ ಇದು ರುಚಿಸುತ್ತಿರಲಿಲ್ಲ.
ಪರಮಹಂಸರನ್ನು ನೋಡಬೇಕೆಂಬ ಇಚ್ಛೆ ತನಗಿದೆಯೆಂದು ದ್ವಿಜನ ತಂದೆ ಬಹಳ ಕಾಲದಿಂದಲೂ ಹೇಳುತ್ತಲೇ ಇದ್ದ. ಇಂದು ಆತ ದಕ್ಷಿಣೇಶ್ವರಕ್ಕೆ ಬಂದಿದ್ದಾನೆ. ಆತ ಕಲ್ಕತ್ತ ದಲ್ಲಿಯೇ ಒಂದು ವ್ಯಾಪಾರ ಸಂಸ್ಥೆಯ ಮ್ಯಾನೇಜರ್. ಲಾ ಓದಿದ್ದಾನೆ.
ಶ್ರೀರಾಮಕೃಷ್ಣರು ದ್ವಿಜನ ತಂದೆಗೆ: “ನಿಮ್ಮ ಮಕ್ಕಳು ಇಲ್ಲಿಗೆ ಬಂದುಹೋಗುತ್ತಿರುವುದನ್ನು ನೋಡಿ ನೀವು ಹೆದರಬೇಕಾಗಿಲ್ಲ.
“ನಾನು ಜನರಿಗೆ ಹೇಳುತ್ತೇನೆ, ಆತ್ಮಜಾಗ್ರತಿಯಾದನಂತರ ಬೇಕಾದರೆ ಸಂಸಾರದಲ್ಲಿ ಹೋಗಿ ಇರಿ ಅಂತ. ಬಹಳ ಕಷ್ಟಪಟ್ಟು ಕೆಲಸಮಾಡಿ ಚಿನ್ನವನ್ನು ಸಂಗ್ರಹಿಸಿಕೊಂಡ ನಂತರ ಅದನ್ನು ಭೂಮಿಯೊಳಗೆ ಬೇಕಾದರೂ ಹೂತಿಡಬಹುದು, ಪೆಟ್ಟಿಗೆಯಲ್ಲಿ ಬೇಕಾದರೂ ಇಡಬಹುದು; ಅಥವಾ ನೀರಿನಲ್ಲಿ ಬೇಕಾದರೂ ಮುಳುಗಿಸಿಡಬಹುದು. ಅದಕ್ಕೇನೂ ಆಗದು.
“ನಾನು ಜನರಿಗೆ ಹೇಳುತ್ತೇನೆ, ಅನಾಸಕ್ತರಾಗಿ ಸಂಸಾರದಲ್ಲಿರಿ ಅಂತ. ಕೈಗೆ ಎಣ್ಣೆ ಹಚ್ಚಿಕೊಂಡು ಹಲಸಿನ ಹಣ್ಣು ಬಿಡಿಸಿದರೆ ಅದರ ಅಂಟು ಕೈಗೆ ಅಂಟಿಕೊಳ್ಳದು.
“ಅಪಕ್ವ ಮನಸ್ಸನ್ನು ಸಂಸಾರದಲ್ಲಿ ಇಟ್ಟದ್ದೇ ಆದರೆ ಅದು ಮಲಿನವಾಗಿ ಹೋಗಿ ಬಿಡುತ್ತದೆ. ಮೊದಲು ಬ್ರಹ್ಮಜ್ಞಾನವನ್ನು ಪಡೆದುಕೊಂಡು ಆ ಬಳಿಕ ಬೇಕಾದರೆ ಸಂಸಾರದಲ್ಲಿ ವಾಸಿಸಬೇಕು.
“ಹಾಲನ್ನು ನೀರಿಗೆ ಬೆರಸಿದರೆ ಹಾಲು ಕೆಟ್ಟುಹೋಗುತ್ತದೆ. ಆದರೆ ಹಾಲಿನಿಂದ ಬೆಣ್ಣೆ ತೆಗೆದು ಅದನ್ನು ನೀರಿನಲ್ಲಿ ಇಟ್ಟರೆ ಅದು ಕೆಟ್ಟುಹೋಗದು.”
ದ್ವಿಜನ ತಂದೆ: “ಹೌದು, ಅದೇನೋ ನಿಜ.”
ಶ್ರೀರಾಮಕೃಷ್ಣರು (ನಗುತ್ತ): “ನೀವು ನಿಮ್ಮ ಮಕ್ಕಳನ್ನು ಏಕೆ ಗದರಿಸುತ್ತೀರಿ ಎಂಬುದು ನನಗೆ ಗೊತ್ತಿದೆ. ನೀವು ಸುಮ್ಮನೆ ಹೆದರಿಸುತ್ತೀರಿ ಅಷ್ಟೆ. ಬ್ರಹ್ಮಚಾರಿ ಹಾವಿಗೆ ಹೇಳಿದ, ‘ನೀನೊಬ್ಬ ದೊಡ್ಡ ದಡ್ಡ! ಕಚ್ಚಕೂಡದು ಎಂದು ಹೇಳಿದೆನೇ ವಿನಾ ಬುಸುಗುಟ್ಟಬೇಡ ಅಂತಲೇನು ಹೇಳಲಿಲ್ಲವಲ್ಲ. ನೀನು ಬುಸುಗುಟ್ಟಿದರೆ ನಿನ್ನನ್ನು ಹಿಡಿದು ಅಪ್ಪಳಿಸಲು ನಿನ್ನ ಶತ್ರುಗಳಿಗೆ ಧೈರ್ಯವಿರುತ್ತಿರಲಿಲ್ಲ’ ಅಂತ. ನೀವು ನಿಮ್ಮ ಮಕ್ಕಳನ್ನು ಬಯ್ಯುವುದು ಅವೆಲ್ಲ ಬುಸುಗುಟ್ಟುವಿಕೆ ಮಾತ್ರವೆ. (ದ್ವಿಜನ ತಂದೆ ನಗುತ್ತಿದ್ದಾನೆ.)
“ಒಳ್ಳೆ ಮಕ್ಕಳು ಹುಟ್ಟಿದರು ಅಂದರೆ, ಅದು ತಂದೆಯ ಪುಣ್ಯ ಎಂಥದು ಎಂಬುದನ್ನು ತೋರಿಸುತ್ತದೆ. ಕೊಳದಲ್ಲಿ ಒಳ್ಳೆ ನೀರು ಬಂತು ಅಂದರೆ ತೋಡಿಸಿದವ ಎಂಥ ಪುಣ್ಯಶಾಲಿಯಾಗಿರಬೇಕು ಎಂಬುದನ್ನು ಅದು ತೋರಿಸುತ್ತದೆ.
“ಪುತ್ರನನ್ನು ಆತ್ಮಜ ಎಂದು ಕರೆಯುತ್ತಾರೆ. ನಿನಗೂ ನಿನ್ನ ಪುತ್ರನಿಗೂ ಯಾವ ಭೇದವೂ ಇಲ್ಲ. ನೀನೇ ಒಂದು ವಿಧದಲ್ಲಿ ಪುತ್ರನಾಗಿ ಹುಟ್ಟಿದ್ದೀಯೆ. ಒಂದು ದೃಷ್ಟಿಯಿಂದ ನೀನೇ ಒಬ್ಬ ಆಫೀಸರ್ ಆಗಿ ಸಾಂಸಾರಿಕ ಸುಖದುಃಖಗಳನ್ನು ಅನುಭವಿಸುತ್ತಿರುವ ಸಂಸಾರಿಯಾಗಿದ್ದೀಯೆ; ಇನ್ನೊಂದು ದೃಷ್ಟಿಯಿಂದ ನೀನೇ ನಿನ್ನ ಪುತ್ರನ ರೂಪದಿಂದ ಭಗವದ್ಭಕ್ತನಾಗಿದ್ದೀಯೆ. ಯಾರೋ ಹೇಳಿದರು, ನೀನೊಬ್ಬ ದೊಡ್ಡ ಪ್ರಾಪಂಚಿಕ ಅಂತ. ಆದರೆ ನೀನು ಅಂಥವನೇನಲ್ಲ. (ನಗುತ್ತ) ಇದೆಲ್ಲ ನಿನಗೆ ಗೊತ್ತಿರುವ ವಿಷಯವೆ. ಆದರೆ ನೀನೊಬ್ಬ ಬಹಳ ಜಾಗರೂಕನಾಗಿರುವ ಮನುಷ್ಯ. ಬಹುಶ: ಅದಕ್ಕಾಗಿಯೇ ಇರಬೇಕು ನಾನು ಹೇಳುತ್ತಿರುವುದಕ್ಕೆ ‘ಹ್ಞೂ’ ಗುಟ್ಟಿಕೊಂಡು ಹೋಗುತ್ತಿರುವುದು ನೀನು ಅಂತ ಕಾಣುತ್ತದೆ. (ದ್ವಿಜನ ತಂದೆ ನಗುತ್ತಿದ್ದಾನೆ.)
“ನಿನ್ನ ಮಕ್ಕಳು ಇಲ್ಲಿಗೆ ಬಂದುಹೋಗುತ್ತಿದ್ದರೆ ನೀನು ಎಂಥ ವಸ್ತು ಎಂಬುದು ಅವರ ಅರಿವಿಗೆ ಬರುತ್ತದೆ. ತಂದೆ ಎಂಬುವನು ಎಂಥ ಅಮೂಲ್ಯವಾದ ವಸ್ತು! ತಂದೆ ತಾಯಿಯರನ್ನು ವಂಚಿಸಿ ಧಾರ್ಮಿಕರಾಗಬೇಕೆಂದು ಯಾರು ಪ್ರಯತ್ನಿಸುತ್ತಾರೊ ಅವರಿಗೆ ದೊರೆಯುವುದು ಅದರ ಹೊಟ್ಟು ಮಾತ್ರ.
“ಮನುಷ್ಯನಿಗೆ ಅನೇಕ ಋಣಗಳಿವೆ: ಪಿತೃ-ಋಣ, ದೇವ-ಋಣ, ಋಷಿ-ಋಣ, ಇವೂ ಅಲ್ಲದೆ ಮಾತೃ-ಋಣವೂ ಇದೆ. ಜೊತೆಗೆ ಪರಿವಾರದ-ಋಣವೂ ಇದೆ. ಪತ್ನಿಯನ್ನೂ ಪರಿಪಾಲಿಸಿಕೊಂಡು ಬರಬೇಕು. ಆಕೆ ಪತಿವ್ರತೆಯಾಗಿದ್ದರೆ ತಾನು ಸತ್ತನಂತರ ಆಕೆಗೆ ಬೇಕಾಗುವ ಅನುಕೂಲತೆಗಳನ್ನು ಮಾಡಿಡಬೇಕು.
“ನನಗೆ ತಾಯಿಯ ಸಲುವಾಗಿ ಬೃಂದಾವನದಲ್ಲಿ ವಾಸಿಸಲಾಗಲಿಲ್ಲ. ನನ್ನ ತಾಯಿ ಒಬ್ಬಳೆ ದಕ್ಷಿಣೇಶ್ವರದ ಕಾಳೀದೇವಾಲಯದಲ್ಲಿ ಇದ್ದಾಳೆ ಎಂಬ ಭಾವನೆ ನನ್ನ ಮನಸ್ಸಿನಲ್ಲಿ ಬಂದೊಡನೆಯೇ, ಅದು ಬೃಂದಾವನದಲ್ಲಿ ನಿಲ್ಲದೆ ಹೋಯಿತು.
“ನಾನು ಇವರಿಗೆಲ್ಲ ಹೇಳುತ್ತಿದ್ದೇನೆ, ಸಂಸಾರವನ್ನೂ ಮಾಡಿ, ಭಗವಂತನಲ್ಲೂ ಮನಸ್ಸನ್ನಿಡಿ ಅಂತ. ಸಂಸಾರವನ್ನು ಬಿಟ್ಟುಬಿಡಿ ಅಂತ ಹೇಳುತ್ತಿಲ್ಲ. ಇದನ್ನೂ ಮಾಡಿ, ಅದನ್ನೂ ಮಾಡಿ ಅಂತ ಹೇಳುತ್ತಿದ್ದೇನೆ.”
ದ್ವಿಜನ ತಂದೆ: “ಓದುವುದು ಬರೆಯುವುದರ ಕಡೆ ಗಮನವೀಯಬೇಕು ಅಂತ ನನ್ನ ಮಕ್ಕಳಿಗೆ ನಾನು ಹೇಳುತ್ತಿದ್ದೇನೆ ವಿನಾ ಇಲ್ಲಿಗೆ ಬರಬಾರದು ಅಂತಲೇನು ಹೇಳುತ್ತಿಲ್ಲ. ಆದರೆ ಹುಡುಗರೊಡನೆ ಬೆರೆತು ಹುಡುಗಾಟವಾಡುತ್ತಲೇ ಕಾಲಕಳೆಯದಿರಲೆಂಬುದೇ ನನ್ನ ಆಶಯ.”
ಶ್ರೀರಾಮಕೃಷ್ಣರು ದ್ವಿಜನ ಮಾತೆತ್ತಿ: “ಈ ಹುಡುಗ ಒಳ್ಳೆ ಸಂಸ್ಕಾರಗಳಿಂದಲೇ ಜನ್ಮವೆತ್ತಿರಬೇಕು. ಕೇವಲ ಇವನ ಮನಸ್ಸು ಭಗವಂತನ ಕಡೆಗೆ ತಿರುಗಿ, ಈತನ ಸಹೋದರರಿಬ್ಬರಿಗೂ ಹಾಗಾಗದಿರಲು ಕಾರಣವೇನು? ಬಲಾತ್ಕಾರದಿಂದ ಯಾರನ್ನೇ ಆಗಲಿ ತಡೆಗಟ್ಟಿ ನಿಲ್ಲಿಸಲಾಗುವುದೆ? ಯಾರಾರಿಗೆ ಏನೇನು ಸಂಸ್ಕಾರವಿದೆಯೊ ಅವರವರು ಅದರಂತೆ ಆಗುತ್ತಾರೆ.”
ದ್ವಿಜನ ತಂದೆ: “ಅದೇನೊ ನಿಜ.”
ಪರಮಹಂಸರು ದ್ವಿಜನ ತಂದೆಯ ಹತ್ತಿರ ಬಂದು ಮಂದಲಿಗೆ ಮೇಲೆ ಕುಳಿತುಕೊಂಡಿದ್ದಾರೆ. ಮಾತನಾಡುತ್ತ ಇದ್ದ ಹಾಗೆಯೇ ಒಮ್ಮೊಮ್ಮೆ ಆತನ ಶರೀರವನ್ನು ಸವರುತ್ತಿದ್ದಾರೆ.
ಇನ್ನೇನು ಸಾಯಂಕಾಲವಾಗುವುದರಲ್ಲಿದೆ. ಪರಮಹಂಸರು ಮಾಸ್ಟರ್ ಮೊದಲಾದವರಿಗೆ ಹೇಳುತ್ತಿದ್ದಾರೆ, “ಇವರೆಲ್ಲರನ್ನೂ ಕರೆದುಕೊಂಡು ಹೋಗಿ ದೇವಾಲಯಗಳನ್ನು ತೋರಿಸಿಕೊಂಡು ಬನ್ನಿ. ನನ್ನ ಆರೋಗ್ಯ ಸರಿಯಾಗಿದ್ದರೆ ನಾನೇ ಆ ಕಾರ್ಯವನ್ನು ಮಾಡುತ್ತಿದ್ದೆ.” ಮಕ್ಕಳಿಗೆಲ್ಲ ಸಂದೇಶವನ್ನು (ಸಿಹಿತಿಂಡಿಯನ್ನು) ಕೊಡಲು ಹೇಳಿದರು. ದ್ವಿಜನ ತಂದೆಗೆ ಹೇಳುತ್ತಿದ್ದಾರೆ, “ಈ ಹುಡುಗರ ಬಾಯಿ ಸ್ವಲ್ಪ ಸಿಹಿಯಾಗಲಿ. ಇದು ಇಲ್ಲಿನ ರೂಢಿ” ಅಂತ. ದ್ವಿಜನ ತಂದೆ ದೇವಾಲಯಗಳನ್ನೆಲ್ಲ ನೋಡಿ ಬಂದು ತೋಟದಲ್ಲಿ ಅಡ್ಡಾಡುತ್ತಿದ್ದಾನೆ.
ಪರಮಹಂಸರು ಭೂಪೇನ, ದ್ವಿಜ, ಮಾಸ್ಟರ್ ಇವರೇ ಮೊದಲಾದವರೊಡನೆ ತಮ್ಮ ಕೊಠಡಿಗೆ ಆಗ್ನೇಯ ದಿಕ್ಕಿನಲ್ಲಿರುವ ವರಾಂಡದಲ್ಲಿ ಆನಂದದಿಂದ ಮಾತುಕತೆಗಳನ್ನಾಡುತ್ತಿದ್ದಾರೆ. ತಮಾಷೆಗಾಗಿ ಅವರು ಮಾಸ್ಟರ್ ಮತ್ತು ಭೂಪೇನನ ಬೆನ್ನಿನ ಮೇಲೆ ಒಂದೆರಡು ಏಟು ಹಾಕಿದರು. ನಗುತ್ತ ದ್ವಿಜನಿಗೆ ಹೇಳುತ್ತಿದ್ದಾರೆ, “ನೋಡಿದೆಯಾ, ನಿನ್ನ ತಂದೆಯೊಡನೆ ನಾನು ಹೇಗೆ ಮಾತನಾಡಿದೆ!”
ಮುಸ್ಸಂಜೆಯಾದ ನಂತರ ದ್ವಿಜನ ತಂದೆ ಮತ್ತೆ ಪರಮಹಂಸರ ಕೊಠಡಿಗೆ ಬಂದಿದ್ದಾನೆ. ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಅವರಿಂದ ಬೀಳ್ಕೊಳ್ಳುವುದರಲ್ಲಿದ್ದಾನೆ. ಆತನಿಗೆ ಸ್ವಲ್ಪ ಸೆಕೆಯಾಗಿರುವಂತೆ ಕಂಡುಬಂದುದನ್ನು ನೋಡಿ ಪರಮಹಂಸರೇ ಆತನಿಗೆ ಬೀಸಣಿಗೆಯಿಂದ ಬೀಸಲಾರಂಭಿಸಿದರು. ಈಗ ಆತ ಅವರಿಂದ ಬೀಳ್ಕೊಂಡ. ಆತನಿಗೆ ಗೌರವ ತೋರಿಸಲು ತಾವಾಗಿಯೇ ಎದ್ದು ನಿಂತುಕೊಂಡಿದ್ದಾರೆ.
ಘಂಟೆ ರಾತ್ರಿ ಎಂಟು. ಪರಮಹಂಸರು ಮಹಿಮಚರಣನೊಡನೆ ಮಾತಾಡುತ್ತಿದ್ದಾರೆ. ರಾಖಾಲ, ಮಾಸ್ಟರ್, ಮಹಿಮಚರಣನ ಒಬ್ಬಿಬ್ಬರು ಭಕ್ತರು ಇವರೇ ಮೊದಲಾದವರು ಕೊಠಡಿಯಲ್ಲಿ ಕುಳಿತಿದ್ದಾರೆ. ಮಹಿಮಚರಣ ಇಂದಿನ ರಾತ್ರಿ ಇಲ್ಲೇ ಇರುತ್ತಾನೆ.
ಶ್ರೀರಾಮಕೃಷ್ಣರು ಮಹಿಮಚರಣನಿಗೆ: “ಒಳ್ಳೇದು, ಕೇದಾರನ ಸಂಬಂಧವಾಗಿ ನಿನ್ನ ಅಭಿಪ್ರಾಯವೇನು? ಆತ ಹಾಲನ್ನು ನೋಡಿರೋದಷ್ಟೆಯೋ, ಅಥವಾ ಕುಡಿದಿದ್ದಾನೋ?”
ಮಹಿಮಚರಣ: “ಹೌದು, ಆತ ಆನಂದವನ್ನು ಸವಿಯುತ್ತಿದ್ದಾನೆ.”
ಶ್ರೀರಾಮಕೃಷ್ಣರು: “ನಿತ್ಯಗೋಪಾಲನೊ?”
ಮಹಿಮಚರಣ: “ಬಹಳವಾಗಿ!-ಬಹಳ ಒಳ್ಳೆ ಅವಸ್ಥೆಯಲ್ಲಿದ್ದಾನೆ.”
ಶ್ರೀರಾಮಕೃಷ್ಣರು: “ಹೌದು ನಿಜ, ಒಳ್ಳೆಯದು, ಗಿರೀಶಘೋಷನ ಅವಸ್ಥೆ ಹೇಗೆ?”
ಮಹಿಮಚರಣ: “ಆತನು ಚೆನ್ನಾಗಿ ಮುಂದುವರಿದಿದ್ದಾನೆ, ಆದರೆ ಆತನ ಶ್ರೇಣಿಯೇ ಪ್ರತ್ಯೇಕ.”
ಶ್ರೀರಾಮಕೃಷ್ಣರು: “ನರೇಂದ್ರ?”
ಮಹಿಮಚರಣ: “ನನಗೆ ಹದಿನೈದು ವರ್ಷಗಳ ಹಿಂದೆ ಏನವಸ್ಥೆ ಬಂದಿತ್ತೊ ಆ ಅವಸ್ಥೆಯಲ್ಲಿದ್ದಾನೆ ಆತ ಈಗ.”
ಶ್ರೀರಾಮಕೃಷ್ಣರು: “ಚಿಕ್ಕ ನರೇನನೊ? ಆತ ಎಷ್ಟು ಸರಳ!”
ಮಹಿಮಚರಣ: “ಹೌದು, ಅತ್ಯಂತ ಸರಳಸ್ವಭಾವಿ.”
ಶ್ರೀರಾಮಕೃಷ್ಣರು: “ಖಂಡಿತ ಸರಿ. (ಸ್ವಲ್ಪ ಹೊತ್ತು ಆಲೋಚಿಸಿ) ಇನ್ನು ಯಾರು ಉಳಿದುಕೊಂಡಿದ್ದಾರೆ? ಇಲ್ಲಿಗೆ ಅನೇಕ ಯುವಕರು ಬರುತ್ತಿದ್ದಾರಲ್ಲ. ಅವರು ಈ ಎರಡು ವಿಷಯಗಳನ್ನು ತಿಳಿದುಕೊಂಡುಬಿಟ್ಟರೇ ಬೇಕಾದಷ್ಟು. ಆಗ ಅವರು ಅಧಿಕವಾಗಿ ಸಾಧನೆ ಭಜನೆಯಲ್ಲಿ ತೊಡಗಬೇಕಾದ ಅವಶ್ಯಕತೆಯೇನಿರುವುದಿಲ್ಲ. ಮೊದಲನೆಯದಾಗಿ ನಾನು ಯಾರು ಎಂಬುದನ್ನು; ಎರಡನೆಯದಾಗಿ ತಾವು ಯಾರು ಎಂಬುದನ್ನು. ಅವರಲ್ಲಿ ಅನೇಕರು ಅಂತರಂಗಿಗಳು.
“ಯಾರು ಅಂತರಂಗಿಗಳೊ ಅವರಿಗೆ ಮುಕ್ತಿ ದೊರಕುವುದಿಲ್ಲ. ವಾಯವ್ಯದಿಕ್ಕಿನಲ್ಲಿ ನಾನು ಮತ್ತೆ ದೇಹಧಾರಣೆ ಮಾಡಬೇಕಾಗಿದೆ.
“ಯುವಕರನ್ನು ಕಂಡರೆ ನನ್ನ ಮನಸ್ಸಿಗೆ ಒಂದು ವಿಧದಲ್ಲಿ ಶಾಂತಿ. ಯಾರು ಮಕ್ಕಳನ್ನು ಪಡೆದುಕೊಂಡಿದ್ದಾರೊ, ಮೊಕದ್ದಮೆಯಲ್ಲಿ ನಿರತರಾಗಿದ್ದಾರೊ, ಕಾಮಕಾಂಚನಾ ಸಕ್ತರಾಗಿದ್ದಾರೊ ಅಂಥವರನ್ನು ನೋಡಿ ನಾನು ಆನಂದಪಡುವ ಬಗೆ ಹೇಗೆ? ಶುದ್ಧ ಆತ್ಮರನ್ನು ನೋಡದೆ ನಾನು ಹೇಗೆ ಬದುಕಲಿ?”
ಮಹಿಮಚರಣ ಶಾಸ್ತ್ರಗ್ರಂಥಗಳಿಂದ ಕೆಲವು ಶ್ಲೋಕಗಳನ್ನು ಪಠಿಸಲಾರಂಭಿಸಿದ್ದಾನೆ. ಈಗ ಭೂಚರಿ, ಖೇಚರಿ, ಶಾಂಭವಿ ಇವೇ ಮೊದಲಾದ ತಂತ್ರೋಕ್ತ ಮುದ್ರೆಗಳ ಸಂಬಂಧವಾಗಿ ಹೇಳುತ್ತಿದ್ದಾನೆ.
ಶ್ರೀರಾಮಕೃಷ್ಣರು: “ನೋಡು ನಾನು ಸಮಾಧಿಸ್ಥನಾದ ನಂತರ ನನ್ನ ಆತ್ಮ ಹಕ್ಕಿಯೋ ಪಾದಿಯಲ್ಲಿ ಮಹಾಕಾಶದಲ್ಲಿ ಹಾರಾಡುತ್ತಿರುತ್ತದೆ ಅಂತ ಕೆಲವರು ಹೇಳುತ್ತಿದ್ದಾರೆ.
“ಒಮ್ಮೆ ಋಷಿಕೇಶದ ಸಾಧುವೊಬ್ಬ ಇಲ್ಲಿಗೆ ಬಂದಿದ್ದ. ಆತ ಹೇಳಿದ, ‘ಸಮಾಧಿಗಳಲ್ಲಿ ಐದು ವಿಧ. ಇವನ್ನೆಲ್ಲ ನೀವು ಅನುಭವಿಸುತ್ತಿರುವಂತೆ ಕಾಣುತ್ತಿದೆ. ಇವುಗಳಲ್ಲಿ ಮಹಾವಾಯು, ಇರುವೆ, ಮೀನು, ಮರ್ಕಟ, ಹಕ್ಕಿ, ಹಾವು ಇವುಗಳ ಗತಿಯಂತೆ ಸಹಸ್ರಾರದ ಕಡೆ ಮುಂದುವರಿಯುವುದರ ಅನುಭವವಾಗುತ್ತದೆ.’ ಅಂತ.
“ಕೆಲವು ವೇಳೆ ನನ್ನಲ್ಲಿ ಮಹಾವಾಯು ಇರುವೆಯೋಪಾದಿಯಲ್ಲಿ ಮೇಲಕ್ಕೆ ಹತ್ತುತ್ತದೆ.
“ಇನ್ನು ಕೆಲವು ವೇಳೆ ನಾನು ಮಗ್ಗುಲಾಗಿ ಮಲಗಿಕೊಂಡಿರುವಾಗ ಮಹಾವಾಯು ಮರ್ಕಟದೋಪಾದಿಯಲ್ಲಿ ನನ್ನನ್ನು ನೂಕಿ ನನ್ನೊಡನೆ ಕ್ರೀಡಿಸಲಾರಂಭಿಸುತ್ತದೆ. ನಾನು ಮಾತ್ರ ಸುಮ್ಮನೆ ಇರುವುದುಂಟು. ಮತ್ತೆ ಆ ಮಹಾವಾಯು ಮರ್ಕಟದೋಪಾದಿಯಲ್ಲಿ ಒಂದೇ ನೆಗೆತಕ್ಕೆ ಸಹಸ್ರಾರವನ್ನು ತಲುಪಿಬಿಡುತ್ತದೆ. ಅದಕ್ಕಾಗಿಯೇ ಆಗ ನಾನು ಧಡಾರನೆ ಮೇಲಕ್ಕೆ ಎದ್ದುಬಿಡುವುದು.
“ಮತ್ತೂ ಕೆಲವು ವೇಳೆ ಹಕ್ಕಿ ಆ ರೆಂಬೆಯಿಂದ ಈ ರೆಂಬೆಗೆ, ಈ ರೆಂಬೆಯಿಂದ ಆ ರೆಂಬೆಗೆ ಹಾರುವ ರೀತಿಯಲ್ಲಿ ಮಹಾವಾಯು ಮೇಲಕ್ಕೆ ಹತ್ತುತ್ತಿರುತ್ತದೆ. ಅದು ಯಾವ ರೆಂಬೆಯಲ್ಲಿ ಕುಳಿತುಕೊಳ್ಳುವುದೊ ಆ ಸ್ಥಾನ ಒಂದು ಅಗ್ನಿಕುಂಡವೊ ಏನೊ ಎಂಬಂತೆ ಅನುಭವವಾಗುತ್ತದೆ. ಅದು ಬಹುಶಃ ಮೂಲಾಧಾರದಿಂದ ಸ್ವಾಧಿಷ್ಠಾನಕ್ಕೆ, ಸ್ವಾಧಿಷ್ಠಾನದಿಂದ ಹೃದಯಕ್ಕೆ ಈ ರೀತಿಯಾಗಿ ಕ್ರಮಕ್ರಮೇಣ ತಲೆಗೆ ಹತ್ತಿಹೋಗುತ್ತದೆ.
“ಮತ್ತೆ ಇನ್ನು ಕೆಲವು ವೇಳೆ ಆ ಮಹಾವಾಯು ಹಾವಿನೋಪಾದಿಯಲ್ಲಿ ಸೊಟ್ಟು ಸೊಟ್ಟಾಗಿ ಹರಿಯಲಾರಂಭಿಸುತ್ತದೆ. ಈ ರೀತಿಯಾಗಿ ಹರಿದು ಹರಿದು ಕಡೆಗೆ ತಲೆಯನ್ನು ಮುಟ್ಟಿದಾಗ ನಾನು ಸಮಾಧಿಸ್ಥನಾಗುತ್ತೇನೆ.
“ಕುಲಕುಂಡಲಿನಿ ಜಾಗೃತವಾಗದ ಹೊರತು ಆತ್ಮಜಾಗೃತಿಯುಂಟಾಗದು.
“ಕುಲಕುಂಡಲಿನಿ ಮೂಲಾಧಾರದಲ್ಲಿ ಸುಪ್ತವಾಗಿದೆ. ಅದು ಎಚ್ಚರಗೊಂಡರೆ, ಸುಷುಮ್ನಾ ನಾಡಿಯ ಮೂಲಕ ಹರಿಯಲಾರಂಭಿಸಿ ಸ್ವಾಧಿಷ್ಠಾನ, ಮಣಿಪೂರ ಇವೇ ಮೊದಲಾದ ಚಕ್ರಗಳನ್ನು ಭೇದಿಸಿ ಕೊನೆಗೆ ಶಿರಸ್ಸಿನ ಮಧ್ಯಪ್ರದೇಶವನ್ನು ಮುಟ್ಟುತ್ತದೆ. ಇದಕ್ಕೇನೆ ಮಹಾವಾಯುವಿನ ಗತಿ ಅಂತ ಹೆಸರು. ಕೊನೆಗೆ ಇದು ಸಮಾಧಿಯಲ್ಲಿ ಪರಿಸಮಾಪ್ತಿಯಾಗುತ್ತದೆ.
“ಕೇವಲ ಪುಸ್ತಕಪಾಂಡಿತ್ಯದಿಂದಲೇ ಆತ್ಮಜಾಗೃತಿಯುಂಟಾಗದು. ಆತನನ್ನು ಕರೆಯಬೇಕು. ವ್ಯಾಕುಲರಾದಾಗ ಮಾತ್ರ ಕುಲಕುಂಡಲಿನಿ ಜಾಗೃತಿಗೊಳ್ಳುತ್ತದೆ. ಅವರಿವರ ಬಾಯಿಂದ ಕೇಳಿ, ಪುಸ್ತಕ ಓದಿ ಬ್ರಹ್ಮಜ್ಞಾನದ ಸಂಬಂಧವಾಗಿ ಹರಟುವುದೆ! ಅದರಿಂದಾಗುವ ಪ್ರಯೋಜನವೇನು?
“ನನಗೆ ಈ ಮಾನಸಿಕ ಅವಸ್ಥೆ ಬರುವುದಕ್ಕೆ ಕಿಂಚಿತ್ ಮುನ್ನವೇ, ಯಾವ ರೀತಿ ಕುಲಕುಂಡಲಿನಿ ಎಚ್ಚರಗೊಳ್ಳುತ್ತದೆ, ಯಾವ ರೀತಿ ಕ್ರಮಕ್ರಮೇಣ ಎಲ್ಲಾ ಪದ್ಮಗಳು ಅರಳಲಾರಂಭಿಸುತ್ತವೆ, ಕೊನೆಗೆ ಯಾವ ರೀತಿ ಸಮಾಧಿಯುಂಟಾಗುತ್ತದೆ ಇವನ್ನೆಲ್ಲ ಭಗವತಿ ನನಗೆ ತೋರಿಸಿದಳು. ಇದು ಬಹಳ ಗುಹ್ಯವಾದ ವಿಷಯ. ನನ್ನ ಹಾಗೆಯೇ ತದ್ವತ್ ಇದ್ದ ಇಪ್ಪತ್ತೆರಡೊ ಇಪ್ಪತ್ತಮೂರೊ ವಯಸ್ಸಿನ ಯುವಕ ಸುಷುಮ್ನಾ ನಾಡಿಯನ್ನು ಪ್ರವೇಶಿಸಿ ತನ್ನ ನಾಲಗೆಯಿಂದ ಯೋನಿರೂಪದ ಪದ್ಮಗಳೊಡನೆ ವಿಲಾಸಿಸುವುದನ್ನು ನೋಡಿದೆ. ಆತ ಮೊದಲು ಗುಹ್ಯದ ಹತ್ತಿರವಿರುವ ಪದ್ಮದೊಡನೆ ವಿಲಾಸಿಸಲು ಆರಂಭಿಸಿ, ಬಳಿಕ ಲಿಂಗ, ನಾಭಿ ಮೊದಲಾದುವುಗಳ ಹತ್ತಿರವಿರುವ ಪದ್ಮಗಳೊಡನೆ ವಿಲಾಸಿಸಿದ. ನಾಲ್ಕು ದಳ, ಆರು ದಳ, ಹತ್ತು ದಳ ಇವೇ ಮೊದಲಾದ ದಳಗಳುಳ್ಳ ಆ ಪದ್ಮಗಳು ಮೊದಲು ತಮ್ಮ ತಲೆಯನ್ನು ಬಾಗಿಸಿಕೊಂಡಿದ್ದುವು. ಆದರೆ ಅವು ಆತನ ಸ್ಪರ್ಶಮಾತ್ರದಿಂದಲೇ ತಲೆಯನ್ನು ಮೇಲಕ್ಕೆ ಎತ್ತಿ, ನೆಟ್ಟಗೆ ನಿಂತುಕೊಂಡವು.
“ಆತ ಹೃದಯಸ್ಥಾನಕ್ಕೆ ಬಂದು-ನನ್ನ ಕಣ್ಣಿಗೆ ಕಟ್ಟಿದ ಹಾಗೆಯೇ ಇದೆ-ಅಲ್ಲಿನ ಪದ್ಮದೊಡನೆ ತನ್ನ ನಾಲಗೆಯಿಂದ ವಿಲಾಸಿಸಿದೊಡನೆಯೇ ಅಧೋಮುಖವಾಗಿದ್ದ ಆ ಹನ್ನೆರಡು ದಳದ ಪದ್ಮ ಊರ್ಧ್ವಮುಖವಾಗಿ ನಿಂತು ಅರಳಲಾರಂಭಿಸಿತು. ಬಳಿಕ ಆತ ಕಂಠದ ಹತ್ತಿರವಿರುವ ಹದಿನಾರು ದಳದ ಪದ್ಮದ ಹತ್ತಿರಕ್ಕೆ, ಅನಂತರ ಕಪಾಲದಲ್ಲಿರುವ ಎರಡು ದಳದ ಪದ್ಮದ ಹತ್ತಿರಕ್ಕೆ ಬಂದ. ಕಟ್ಟಕಡೆಯಲ್ಲಿ ಸಹಸ್ರದಳದ ಪದ್ಮ ಅರಳಿ ನಿಂತಿತು. ಅಂದಿನಿಂದ ನಾನು ಈ ಅವಸ್ಥೆಯಲ್ಲಿದ್ದೇನೆ.”
ಪರಮಹಂಸರು ಹೀಗೆ ಮಾತಾಡುತ್ತ ಆಡುತ್ತ ಇದ್ದಹಾಗೆಯೇ ತಮ್ಮ ಮಂಚದಿಂದ ಇಳಿದು ಬಂದು ಮಹಿಮಚರಣನ ಹತ್ತಿರ ನೆಲದ ಮೇಲೆ ಕುಳಿತುಕೊಂಡರು. ಅವರ ಹತ್ತಿರ ಮಾಸ್ಟರ್ ಮತ್ತು ಇನ್ನೂ ಒಬ್ಬಿಬ್ಬರು ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ಮಹಿಮಚರಣನಿಗೆ): “ಬಹಳಕಾಲದಿಂದ ನಾನು ನಿನಗೆ ನನ್ನ ಅನುಭವಗಳನ್ನು ತಿಳಿಸಬೇಕೆಂದಿದ್ದೆ, ಆದರೆ ಸಾಧ್ಯವಾಗಲಿಲ್ಲ. ಇಂದು ಹೇಳಲು ಇಚ್ಛೆಯಾಗುತ್ತಿದೆ.
“ನನಗೆ ಬಂದಿರುವ ಅವಸ್ಥೆ ಕೇವಲ ಸಾಧನೆಯಿಂದಲೇ ಎಲ್ಲರಿಗೂ ದೊರೆತು ಬಿಡುತ್ತದೆ ಅಂತ ನೀನು ಹೇಳುತ್ತೀಯಲ್ಲ, ಅದು ಆ ರೀತಿಯಾದುದಲ್ಲ, ಇದರಲ್ಲಿ (ಪರಮಹಂಸರಲ್ಲಿ) ಒಂದು ವಿಶೇಷತೆ ಇದೆ.”
ಮಾಸ್ಟರ್, ರಾಖಾಲ ಇವರೇ ಮೊದಲಾದ ಭಕ್ತರು ಆಶ್ಚರ್ಯಚಕಿತರಾಗಿ ಅವರ ಬಾಯಿಂದ ಬರುವುದನ್ನೆಲ್ಲ ಚಾಚೂ ತಪ್ಪದೆ ಕೇಳಲು ಬಹಳ ಉತ್ಸುಕರಾಗಿ ಕುಳಿತ್ತಿದ್ದಾರೆ.
ಶ್ರೀರಾಮಕೃಷ್ಣರು: “ಭಗವಂತ ನನ್ನೊಡನೆ ಮಾತನಾಡಿದ. ನನಗೆ ದೊರೆತದ್ದು ಕೇವಲ ಆತನ ದರ್ಶನ ಮಾತ್ರವೇ ಅಲ್ಲ, ಆತ ನಿಜವಾಗಿಯೂ ನನ್ನೊಡನೆ ಮಾತನಾಡಿದ. ನಾನು ಆಲದ ಮರದ ಕೆಳಗೆ ಇದ್ದಾಗ ಆತ ಗಂಗೆಯಿಂದ ಎದ್ದು ಬಂದ, ಬಳಿಕ ನಾವು ಎಷ್ಟೊಂದು ನಕ್ಕೆವು ಏನು ಕತೆ! ನನ್ನೊಡನೆ ತಮಾಷೆಮಾಡುತ್ತ ನನ್ನ ಬೆರಳುಗಳ ನಟಿಕೆ ತೆಗೆದ. ಬಳಿಕ ಮಾತುಕತೆಯಾಡಿದ, ಹೌದು ನನ್ನೊಡನೆ ಮಾತುಕತೆಯಾಡಿದ!
“ಮೂರು ದಿನಗಳು ಒಂದೇ ಸಮನೆ ಕುಳಿತು ಅತ್ತೆ. ತರುವಾಯ ಆತ ವೇದ, ಪುರಾಣ ತಂತ್ರ ಇವೇ ಮೊದಲಾದ ಶಾಸ್ತ್ರಗಳಲ್ಲಿ ಏನೇನು ಇದೆಯೋ ಅವನ್ನೆಲ್ಲ ತೋರಿಸಿಕೊಟ್ಟುಬಿಟ್ಟ.
“ಮಹಾಮಾಯೆಯ ಮಾಯೆ ಏನು ಎಂಬುದನ್ನು ಒಂದು ದಿನ ತೋರಿಸಿದ. ಕೊಠಡಿಯಲ್ಲಿದ್ದ ಒಂದು ಚಿಕ್ಕ ಬೆಳಕು ದೊಡ್ಡದಾಗುತ್ತಾ ಬಂದು ಕೊನೆಗೆ ಅದು ಇಡೀ ಬ್ರಹ್ಮಾಂಡವನ್ನೇ ಆವರಿಸಿಕೊಂಡುಬಿಟ್ಟಿತು.
“ಮತ್ತೆ ಆತ ಪಾಚಿ ಕಟ್ಟಿಕೊಂಡಿದ್ದ ಒಂದು ದೊಡ್ಡ ಸರೋವರವನ್ನು ತೋರಿಸಿದ. ಗಾಳಿ ಅದರ ಪಾಚಿಯನ್ನು ಸ್ವಲ್ಪ ಸರಿಸಿತು. ಒಡನೆಯೇ ನೀರು ಕಣ್ಣಿಗೆ ಕಾಣಿಸಿಕೊಂಡಿತು. ರೆಪ್ಪೆ ಹೊಡೆಯುವುದರೊಳಗಾಗಿ ಪಾಚಿ ಎಲ್ಲಾ ಕಡೆಯಿಂದಲೂ ಕುಣಿಯುತ್ತ ಕುಣಿಯುತ್ತ ಬಂದು ಮತ್ತೆ ಕಟ್ಟಿಕೊಂಡುಬಿಟ್ಟಿತು. ಆತ ತೋರಿಸಿದ, ನೀರೇ ಸಚ್ಚಿದಾನಂದ, ಪಾಚಿಯೇ ಮಾಯೆ ಅಂತ. ಮಾಯೆಯ ದೆಸೆಯಿಂದ ಸಚ್ಚಿದಾನಂದನನ್ನು ನೋಡಲಾಗುತ್ತಿಲ್ಲ. ಆತನ ನಸುನೋಟ ನಮಗೆ ಒಮ್ಮೊಮ್ಮೆ ದೊರೆತರೂ ಮತ್ತೆ ಆತನನ್ನು ಮಾಯೆ ಮುಚ್ಚಿಕೊಂಡು ಬಿಡುತ್ತದೆ.
“ಯಾವ ರೀತಿಯಾದ ಭಕ್ತರು ಇಲ್ಲಿಗೆ ಬರುತ್ತಾರೆ ಎಂಬುದನ್ನು ಅವರು ಬರುವುದಕ್ಕೆ ಮುನ್ನವೇ ನನಗೆ ತೋರಿಸಿಕೊಟ್ಟುಬಿಡುತ್ತಾನೆ. ಪಂಚವಟಿಯಲ್ಲಿ ಆಲದ ಮರದಿಂದ ಹಿಡಿದು ಬಕುಳದ ಮರದವರೆಗೆ ನಿಂತಿದ್ದ ಚೈತನ್ಯದೇವನ ಸಂಕೀರ್ತನೆ ಪಾರ್ಟಿಯನ್ನು ನನಗೆ ತೋರಿಸಿದ. ಅದರಲ್ಲಿ ಬಲರಾಮ ಇದ್ದುದನ್ನು ಕಂಡೆ. ಅವನೊಬ್ಬನಿಲ್ಲದಿದ್ದರೆ ನನಗೆ ಕಲ್ಲುಸಕ್ಕರೆಯನ್ನು ಯಾರು ತಂದುಕೊಡುತ್ತಿದ್ದರು? (ಮಾಸ್ಟರನ್ನು ತೋರಿಸಿ) ಈತನನ್ನೂ ಅದರಲ್ಲಿ ಕಂಡೆ.
“ನಾನು ಕೇಶವಸೇನನನ್ನು ಪ್ರತ್ಯಕ್ಷವಾಗಿ ನೋಡುವ ಮುನ್ನವೇ ಪರೋಕ್ಷವಾಗಿ ಆತನನ್ನು ನೋಡಿದ್ದೆ. ನಾನು ನನ್ನ ಸಮಾಧಿ ಅವಸ್ಥೆಯಲ್ಲಿ ಕೇಶವಸೇನನನ್ನು ಮತ್ತು ಆತನ ಮಂಡಲಿಯವರನ್ನು ನೋಡಿದ್ದೆ. ಕೊಠಡಿಯಲ್ಲಿ ನನ್ನ ಸುತ್ತಲೂ ಜನ ಕಿಕ್ಕಿರಿದು ತುಂಬಿದ್ದರು. ಪುಕ್ಕವನ್ನು ಕೆದರಿ ಕುಳಿತಿರುವ ನವಿಲಿನೋಪಾದಿಯಲ್ಲಿ ಕೇಶವಸೇನ ನನ್ನ ಕಣ್ಣಿಗೆ ತೋರಿದ. ಪುಕ್ಕ ಎಂದರೆ ಸಮಾಜ. ಆತನ ತಲೆಯ ಮೇಲೆ ಒಂದು ಕೆಂಪು ವಜ್ರವಿತ್ತು. ಅದು ರಜೋಗುಣದ ಚಿಹ್ನೆ. ಕೇಶವಸೇನ ತನ್ನ ಶಿಷ್ಯರಿಗೆ ಹೇಳಿದ, ‘ಇವರು (ಶ್ರೀರಾಮಕೃಷ್ಣರು) ಏನು ಹೇಳುತ್ತಾರೊ ಅವನ್ನೆಲ್ಲ ನೀವು ಕೇಳಿ’ ಅಂತ. ನಾನು ಭಗವತಿಗೆ ಹೇಳಿದೆ, ‘ಹೇ ತಾಯೆ, ಇವರ ದೃಷ್ಟಿ ಇಂಗ್ಲೀಷಿನವರ ಹಾಗೆ. ಇಂಥವರಿಗೇಕೆ ನಾನು ಬುದ್ಧಿವಾದವೀಯಲು ಹೋಗಬೇಕು?’ ಅಂತ. ಆಗ ಭಗವತಿ ಕಲಿಯುಗದಲ್ಲಿ ಹೀಗೆಯೆ ನಡೆಯುತ್ತದೆ ಅಂತ ನನಗೆ ತಿಳಿಸಿಕೊಟ್ಟಳು.
“ಕೇಶವಸೇನ ಮತ್ತು ಆತನ ಅನುಯಾಯಿಗಳು ಇಲ್ಲಿಂದ (ಪರಮಹಂಸರಿಂದ) ಹರಿಯ ಮತ್ತು ಭಗವತಿಯ ನಾಮವನ್ನು ತೆಗೆದುಕೊಂಡು ಹೋದರು. ಅದಕ್ಕಾಗಿಯೇ ಭಗವತಿ ವಿಜಯನನ್ನು ಕೇಶವಸೇನನ ಸಮಾಜದಿಂದ ಪ್ರತ್ಯೇಕಮಾಡಿದಳು. ಆದರೆ ವಿಜಯ ಹೋಗಿ ಮತ್ತೆ ಆದಿ ಸಮಾಜವನ್ನು ಸೇರಲಿಲ್ಲ.
(ತಮ್ಮ ಕಡೆಗೆ ಬೆರಳು ಮಾಡಿ) “ಇದರಲ್ಲಿ ಏನೋ ಒಂದು ವಿಶೇಷ ಇರಬೇಕು. ಗೋಪಾಲಸೇನ ಎಂಬ ಹುಡುಗ ಬಹಳ ದಿವಸಗಳಿಂದ ಇಲ್ಲಿಗೆ ಬರುತ್ತಿದ್ದ. ಇದರೊಳಗೆ ಯಾವನಿದ್ದಾನೊ ಆತ ಗೋಪಾಲನ ಎದೆಯ ಮೇಲೆ ತನ್ನ ಪಾದವನ್ನಿಟ್ಟಿದ್ದ. ಆತ ಭಾವಸ್ಥನಾಗಿ ಹೇಳಲಾರಂಭಿಸಿದ, ‘ನಿಮಗೆ ಸಮಯ ಇನ್ನೂ ಬಂದಿಲ್ಲ. ನನಗೆ ಈಗ ಐಹಿಕ ಜನರೊಡನೆ ಇರಲು ಸಾಧ್ಯವಾಗುತ್ತಿಲ್ಲ’ ಅಂತ. ಬಳಿಕ ಆತ ನನ್ನಿಂದ ಬೀಳ್ಕೊಂಡ. ಕೆಲವು ದಿವಸಗಳಾದ ಮೇಲೆ ಕೇಳಿದೆ, ಆತ ದೇಹತ್ಯಾಗ ಮಾಡಿಬಿಟ್ಟ ಎಂದು. ಬಹುಶಃ ಆತನೇ ನಿತ್ಯಗೋಪಾಲನಾಗಿರಬೇಕು.
“ನನಗೆ ಆಶ್ಚರ್ಯಕರವಾದ ದರ್ಶನಗಳೆಲ್ಲ ಆದುವು. ಅಖಂಡ ಸಚ್ಚಿದಾನಂದ ದರ್ಶನವಾಯಿತು. ಅದರಲ್ಲಿ ಬೇಲಿಯಿಂದ ಪ್ರತ್ಯೇಕಮಾಡಿರುವ ಎರಡು ಗುಂಪನ್ನು ನೋಡಿದೆ. ಆ ಬೇಲಿಯ ಒಂದು ಪಾರ್ಶ್ವದಲ್ಲಿ ಕೇದಾರ, ಚುಣಿ ಮತ್ತು ಇನ್ನೂ ಯಾರೊ ಸಾಕಾರವಾದಿ ಭಕ್ತರಿದ್ದರು. ಆದರೆ ಇನ್ನೊಂದು ಪಾರ್ಶ್ವದಲ್ಲಿ ಕೆಂಪು ಇಟ್ಟಿಗೆ ಪುಡಿಯ ರಾಶಿಯಾಕಾರದಲ್ಲಿ ಧಗಧಗಿಸುತ್ತಿರುವ ಒಂದು ಜ್ಯೋತಿಯನ್ನು ಕಂಡೆ. ಅದರ ಒಳಗೆ ನರೇಂದ್ರ ಸಮಾಧಿಸ್ಥನಾಗಿ ಕುಳಿತಿದ್ದ.
“ಆತ ಧ್ಯಾನಸ್ಥನಾಗಿರುವುದನ್ನು ನೋಡಿ ಗಟ್ಟಿಯಾಗಿ ಕೂಗಿದೆ ‘ಓ ನರೇಂದ್ರ!’ ಅಂತ. ಸ್ವಲ್ಪ ಕಣ್ಣು ಬಿಟ್ಟು ನೋಡಿದ. ಆತನೇ ಸಿಮ್ಲಾದಲ್ಲಿರುವ (ಕಲ್ಕತ್ತದ ಒಂದು ಭಾಗ) ಒಬ್ಬ ಕಾಯಸ್ಥನ ಮನೆಯಲ್ಲಿ ಜನ್ಮವೆತ್ತಿರುವುದಾಗಿ ನನಗೆ ಕಂಡುಬಂದಿತು. ಒಡನೆಯೆ ನಾನು ಭಗವತಿಗೆ ಹೇಳಿದೆ, ‘ಹೇ ತಾಯೆ, ಈತನನ್ನು ಮಾಯಾಬಲೆಗೆ ಸಿಕ್ಕಿಸು; ಇಲ್ಲದಿದ್ದರೆ ಈತ ಸಮಾಧಿಯಲ್ಲಿ ತನ್ನ ದೇಹವನ್ನು ತ್ಯಜಿಸಿಬಿಡುತ್ತಾನೆ’ ಅಂತ. ಕೇದಾರ ಸಾಕಾರವಾದಿ. ಆತ ಆ ಕಡೆ ಸ್ವಲ್ಪ ಇಣುಕಿ ನೋಡಿದೊಡನೆಯೆ ಹೆದರಿ ಓಡಿಹೋದ.
“ಈ ಕಾರಣದಿಂದಲೇ ನಾನು ಭಾವಿಸುತ್ತಿರುವುದು, ಇದರಲ್ಲಿ ಸ್ವಯಂ ಭಗವತಿಯೆ ವಾಸಿಸುತ್ತ ಭಕ್ತರೊಡನೆ ಕ್ರೀಡಿಸುತ್ತಿದ್ದಾಳೆ ಅಂತ. ಮೊಟ್ಟಮೊದಲು ನನಗೆ ಈ ಅವಸ್ಥೆ ಬಂದಾಗ ನನ್ನ ಶರೀರ ಜ್ಯೋತಿಯನ್ನು ಸುಮ್ಮನೆ ಚೆಲ್ಲುತ್ತಿತ್ತು. ಎದೆ ಕೆಂಪಾಗಿ ಹೋಗಿತ್ತು. ಆಗ ಭಗವತಿಯನ್ನು ಪ್ರಾರ್ಥಿಸಿದೆ : ‘ತಾಯೆ, ಬಾಹ್ಯದಲ್ಲಿ ವ್ಯಕ್ತವಾಗಬೇಡ, ದಯವಿಟ್ಟು ಆಂತರ್ಯಕ್ಕೆ ಹೋಗು’ ಅಂತ. ಅದಕ್ಕಾಗಿಯೇ ನನ್ನ ಶರೀರ ಕಾಂತಿವಿಹೀನವಾಗಿರುವುದು. ಭಗವತಿ ಹೀಗೆ ಮಾಡದಿದ್ದರೆ ಜನರು ನನ್ನನ್ನು ಸುಮ್ಮನೆ ಕಾಡಿಸಿಬಿಡುತ್ತಿದ್ದರು; ಜನ ಇಲ್ಲಿ ಸತತವಾಗಿ ಸುಮ್ಮನೆ ಕಿಕ್ಕಿರಿದು ನೆರೆದುಬಿಡುತ್ತಿದ್ದರು. ಈಗ ಬಾಹ್ಯ ಪ್ರಕಾಶವೇನಿಲ್ಲ. ಇದು ಜಳ್ಳುಗಳನ್ನು ತೂರಿಬಿಡುತ್ತದೆ. ಯಾರು ನಿಜವಾಗಿಯೂ ಶುದ್ಧಭಕ್ತರೊ ಕೇವಲ ಅವರು ಮಾತ್ರವೇ ನನ್ನೊಡನೆ ಬಂದು ಇರುತ್ತಾರೆ. ನನಗೆ ಈ ರೋಗ ಬಂದಿರುವುದಕ್ಕೆ ಕಾರಣ ಗೊತ್ತೆ? ಇದರಲ್ಲೊಂದು ಅರ್ಥವಿದೆ. ಯಾರ ಭಕ್ತಿ ಸಕಾಮವಾದುದೊ ಅವರು ನನಗೆ ಬಂದಿರುವ ಈ ರೋಗವನ್ನು ನೋಡಿ ಇಲ್ಲಿಂದ ಹೊರಟುಹೋಗಿಬಿಡುತ್ತಾರೆ.
“ನನಗೊಂದು ಆಸೆಯಿತ್ತು. ನಾನು ಭಗವತಿಗೆ ಪ್ರಾರ್ಥನೆಮಾಡಿಕೊಂಡಿದ್ದೆ, ‘ಹೇ ತಾಯೆ, ಭಕ್ತರ ರಾಜನಾಗಬೇಕು ಎಂಬ ಆಸೆ ಇದೆ ನನಗೆ’ ಅಂತ.
“ಮತ್ತೆ ನನ್ನ ಮನಸ್ಸಿನಲ್ಲಿ, ‘ಯಾರು ಹೃತ್ಪೂರ್ವಕವಾಗಿ ಭಗವಂತನನ್ನು ಕರೆಯುತ್ತಾರೊ ಅವರು ಇಲ್ಲಿಗೆ ಬಂದೇ ತೀರಬೇಕು’ ಎಂಬ ಭಾವನೆ ಉದಯವಾಯಿತು. ನೋಡು ಈಗ ಆ ರೀತಿಯಾಗಿಯೇ ಆಗುತ್ತಿದೆ. ಆ ವಿಧದ ಜನರೇ ಇಲ್ಲಿ ಬರುತ್ತಿದ್ದಾರೆ.
“ಈ ದೇಹದಲ್ಲಿ ಯಾರು ವಾಸಿಸುತ್ತಾನೆ ಎಂಬುದು ನನ್ನ ತಂದೆತಾಯಿಯರಿಗೆ ಗೊತ್ತಿತ್ತು. ನನ್ನ ತಂದೆಗೆ ಗಯೆಯಲ್ಲಿ ಒಂದು ಸ್ವಪ್ನವಾಯಿತು. ಅದರಲ್ಲಿ ರಘುವೀರ ಹೇಳಿದನಂತೆ, ‘ನಾನು ನಿನ್ನ ಪುತ್ರನಾಗಿ ಜನ್ಮವೆತ್ತುತ್ತೇನೆ’ ಅಂತ.
“ಇದರೊಳಗೆ ಭಗವಂತನೇ ಸ್ವಯಂ ಇದ್ದಾನೆ. ಇಂಥಾ ಕಾಮಕಾಂಚನತ್ಯಾಗ ಸ್ವಪ್ರಯತ್ನದಿಂದ ಸಾಧ್ಯವಾಗುತ್ತಿತ್ತೆ? ಸ್ವಪ್ನದಲ್ಲೂ ನಾನು ಹೆಂಗಸಿನ ಸುಖವನ್ನು ಅನುಭವಿಸಿಲ್ಲ.
“ತೋತಾಪುರಿ ವೇದಾಂತೋಪದೇಶವನ್ನು ಮಾಡಿದ. ಮೂರು ದಿನದೊಳಗೇ ನನಗೆ ಸಮಾಧಿ (ನಿರ್ವಿಕಲ್ಪ ಸಮಾಧಿ) ದೊರೆಯಿತು. ಮಾಧವೀಲತೆಯ ಕೆಳಗೆ ನಾನು ಸಮಾಧಿಸ್ಥನಾಗಿರುವುದನ್ನು ನೋಡಿ, ಆತ ಬೆರಗಾಗಿ ಕೂಗಿಕೊಂಡನಂತೆ, ‘ಆ! ಏನಾಶ್ಚರ್ಯ!’ ಅಂತ. ಇದರೊಳಗೆ ಯಾರಿದ್ದಾರೆ ಎಂಬುದು ಆತನಿಗೆ ಆ ಬಳಿಕ ಅರ್ಥವಾಯಿತು. ಆತ ಕೇಳಿದ, ‘ಹೋಗಲು ಅನುಮತಿ ಕೊಡು.’ ಆತ ಹೀಗೆಂದೊಡನೆಯೇ ನಾನು ಭಾವಸ್ಥನಾಗಿ ಹೇಳಿದೆ, ‘ನನಗೆ ವೇದಾಂತಬೋಧೆಯಾಗದ ಹೊರತು ನೀನು ಇಲ್ಲಿಂದ ಹೋಗುವ ಹಾಗಿಲ್ಲ’ ಅಂತ.
“ಆಗ ನಾನು ಹಗಲೂ ಇರುಳೂ ಆತನೊಡನೆಯೇ ಇರುತ್ತಿದ್ದೆ. ಕೇವಲ ವೇದಾಂತದ ವಿಷಯವಾಗಿಯೇ ಮಾತನಾಡುತ್ತಿದ್ದೆವು. ಬ್ರಾಹ್ಮಣಿ ಹೇಳುತ್ತಿದ್ದಳು, ‘ಮಗು ವೇದಾಂತ ಕೇಳಬೇಡ. ಅದು ನಿನ್ನ ಭಕ್ತಿಯನ್ನು ಒಣಗಿಸಿಬಿಡುತ್ತದೆ’ ಅಂತ.
“ನಾನು ಭಗವತಿಗೆ ಪ್ರಾರ್ಥನೆಮಾಡಿದೆ, ‘ತಾಯೆ, ಒಬ್ಬ ಧನಿಕನನ್ನು ನನ್ನ ಕೈಯಲ್ಲಿಡು. ಇಲ್ಲದೆ ಇದ್ದರೆ ನಾನು ಈ ಶರೀರವನ್ನು ರಕ್ಷಿಸಿಡುವ ಬಗೆ ಹೇಗೆ? ಸಾಧುಗಳನ್ನು ಮತ್ತು ಭಕ್ತರನ್ನು ಹೇಗೆ ನಾನು ಹತ್ತಿರ ಇಟ್ಟುಕೊಳ್ಳಲಿ?’ ಅಂತ. ಅದಕ್ಕಾಗಿಯೇ ಮಥುರಬಾಬು ಒಂದೇ ಸಮನೆ ಹದಿನಾಲ್ಕು ವರ್ಷಗಳ ಕಾಲ ನನ್ನ ಸೇವೆ ಮಾಡಿದ.
“ಯಾರು ಇದರೊಳಗಿದ್ದಾನೊ ಆತ, ಯಾವ ಯಾವ ಬಗೆಯ ಭಕ್ತರು ಇಲ್ಲಿಗೆ ಬರುತ್ತಾರೆ ಎಂಬುದನ್ನು ಅವರು ಬರುವುದಕ್ಕೆ ಮುನ್ನವೇ ತಿಳಿಸಿಕೊಟ್ಟುಬಿಡುತ್ತಾನೆ. ಗೌರಾಂಗನ ದರ್ಶನವಾಯಿತು. ಎಂದರೆ, ನನಗೆ ಗೊತ್ತು ಈಗ ಗೌರಾಂಗನ ಭಕ್ತರು ಬರಲಾರಂಭಿಸುತ್ತಾರೆ. ನನಗೆ ಶಕ್ತಿಯ ಎಂದರೆ ಕಾಳಿಯ ದರ್ಶನವಾಯಿತು ಎಂದರೆ ಶಾಕ್ತರು ಬರಲಾರಂಭಿಸುತ್ತಾರೆ.
“ಕುಟೀರದ ಮೇಲಕ್ಕೆ ಹೋಗಿ ಸಾಯಂಕಾಲದ ಮಂಗಳಾರತಿಯ ಸಮಯದಲ್ಲಿ ಗಟ್ಟಿಯಾಗಿ ಕೂಗುತ್ತಿದ್ದೆ, ‘ಏನ್ರೋ, ಎಲ್ಲಿದ್ದೀರೋ? ಬೇಗ ಬನ್ನಿ!’ ಅಂತ. ನೋಡು, ಈಗ ಅವರೆಲ್ಲ ಒಬ್ಬೊಬ್ಬರಾಗಿ ಬಂದು ಜೊತೆ ಸೇರುತ್ತಿದ್ದಾರೆ.
“ಇದರೊಳಗೆ ಭಗವಂತನು ಸ್ವಯಂ ಇದ್ದಾನೆ. ಆತ ತನ್ನಷ್ಟಕ್ಕೆ ತಾನೇ ಈ ಭಕ್ತರನ್ನೆಲ್ಲ ಸಹಾಯಕರನ್ನಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾನೆ.
“ಇಲ್ಲಿನ ಭಕ್ತರಲ್ಲಿ ಕೆಲವರು ಎಂಥ ಅದ್ಭುತ ಅವಸ್ಥೆಯಲ್ಲಿದ್ದಾರೆ! ಯಾವ ಪ್ರಯಾಸವೂ ಇಲ್ಲದೆ ಚಿಕ್ಕ ನರೇನನಿಗೆ ಕುಂಭಕವಾಗುತ್ತಿದೆ; ಸಮಾಧಿ ಕೂಡ! ಒಮ್ಮೊಮ್ಮೆ ಎರಡೂವರೆ ಘಂಟೆಗಳ ಕಾಲ ಭಾವಾವಿಷ್ಟನಾಗಿ ಇದ್ದುಬಿಡುತ್ತಾನೆ. ಇನ್ನು ಕೆಲವು ವೇಳೆ ಇದಕ್ಕಿಂತಲೂ ಹೆಚ್ಚು ಹೊತ್ತು. ಏನಾಶ್ಚರ್ಯ!
“ಇಲ್ಲಿ ಎಲ್ಲಾ ವಿಧದ ಸಾಧನೆಗಳು ನಡೆದುಕೊಂಡುಬಿಟ್ಟಿವೆ. ಜ್ಞಾನಯೋಗ, ಭಕ್ತಿ ಯೋಗ, ಕರ್ಮಯೋಗ, ದೀರ್ಘಾಯುಸ್ಸಿಗಾಗಿ ಹಠಯೋಗ ಕೂಡ. ಇದರೊಳಗೆ ಬೇರೊಬ್ಬ ಇದ್ದಾನೆ. ಹಾಗಿಲ್ಲದೆ ಇದ್ದರೆ ಸಮಾಧಿಯನ್ನು ಪಡೆದನಂತರ ಭಕ್ತರೊಡನೆ ಬೆರೆಯಲು ಮತ್ತು ಭಗವಂತನ ಪ್ರೇಮದಲ್ಲಿ ತಲ್ಲೀನವಾಗಿರಲು ನನಗೆ ಹೇಗೆ ಸಾಧ್ಯವಾಗುತ್ತಿತ್ತು? ಕೋಯರ್ಸಿಂಗ್ ಹೇಳುತ್ತಿದ್ದ, ‘ಸಮಾಧಿ ದೊರೆತನಂತರ ಈ ಜಗತ್ತಿಗೆ ಹಿಂದಿರುಗಿ ಬಂದವರನ್ನು ನಾನು ಎಂದಿಗೂ ನೋಡಿರಲಿಲ್ಲ. ನೀವು ಗುರುನಾನಕ್ಕೇ ಆಗಿರಬೇಕು’ ಅಂತ.
“ಸುತ್ತಲೂ ಪ್ರಾಪಂಚಿಕರೆ; ಯಾವ ಕಡೆಗೆ ಕಣ್ಣು ಹಾಕಿದರೂ ಕಾಮಕಾಂಚನದ ದರ್ಶನವೆ. ಸುತ್ತಮುತ್ತಲಿನ ಸ್ಥಿತಿ ಹೀಗಿದ್ದರೂ ನನ್ನ ಮನಸ್ಸು ಸತತ ಭಾವ ಮತ್ತು ಸಮಾಧಿಯಲ್ಲಿ ಮುಳುಗಿ ಹೋಗಿದೆ. ಇದಕ್ಕಾಗಿಯೇ ಪ್ರತಾಪಚಂದ್ರ ಮಜುಮದಾರ ನನ್ನ ಸಮಾಧಿ ಅವಸ್ಥೆಯನ್ನು ನೋಡಿ ಹೇಳಿದ, ‘ಏನಪ್ಪ ಇದು! ಇವರನ್ನು ಪಿಶಾಚಿಯ ಹಾಗೆ ಹಿಡಿದುಕೊಂಡಿದೆಯಲ್ಲ!’ ಅಂತ.”
ರಾಖಾಲ, ಮಾಸ್ಟರ್, ಇವರೇ ಮೊದಲಾದವರು ಪರಮಹಂಸರ ಬಾಯಿಂದಲೇ ಬಂದ ಅವರ ಈ ಅದ್ಭುತ ಅನುಭವಗಳನ್ನೆಲ್ಲ ಸ್ತಂಭೀಭೂತರಾಗಿ ಕೇಳುತ್ತಿದ್ದಾರೆ.
ಪರಮಹಂಸರ ಇಂಗಿತವೇನೆಂಬುದು ಮಹಿಮಚರಣನಿಗೆ ಅರ್ಥವಾಯಿತೇನು? ಅವರ ಈ ಅನುಭವಗಳನ್ನೆಲ್ಲ ಕೇಳಿದ ನಂತರ ಆತ ಹೇಳುತ್ತಿದ್ದಾನೆ, “ನಿಮ್ಮ ಪ್ರಾರಬ್ಧದ ದೆಸೆಯಿಂದ ನಿಮಗೆ ಈ ಆನುಭವಗಳೆಲ್ಲ ದೊರೆತವು.” ಆತನ ಭಾವನೆ, ಪರಮಹಂಸರು ಕೇವಲ ಒಬ್ಬ ಸಾಧು, ಅಥವಾ ಭಕ್ತ ಅಂತ ಮಾತ್ರವೆ. ಪರಮಹಂಸರು ಆತ ಹೇಳಿದುದನ್ನು ಒಪ್ಪಿಕೊಂಡವರ ಹಾಗೆ ತಲೆಯಲ್ಲಾಡಿಸಿ ಹೇಳುತ್ತಿದ್ದಾರೆ, “ಹೌದು ಪ್ರಾರಬ್ಧ ಫಲ. ಭಗವಂತನನ್ನು ಅನೇಕ ಭವನಗಳುಳ್ಳ ಒಬ್ಬ ಶ್ರೀಮಂತನಿಗೆ ಹೋಲಿಸಬಹುದು. ಇಲ್ಲಿ (ತಮ್ಮಲ್ಲಿ) ಆತನ ಬೈಠಕ್ಖಾನೆಯೊಂದಿದೆ. ಭಕ್ತ ಭಗವಂತನ ಬೈಠಕ್ಖಾನೆ.”
ಘಂಟೆ ರಾತ್ರಿ ಒಂಭತ್ತು. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತಿದ್ದಾರೆ. ಮಹಿಮಚರಣನ ಇಚ್ಛೆ ಪರಮಹಂಸರು ಕೊಠಡಿಯಲ್ಲಿ ಕುಳಿತಿರುವಾಗಲೇ ಬ್ರಹ್ಮಚಕ್ರವನ್ನು (ತಾಂತ್ರಿಕ ಪ್ರತೀಕವನ್ನು) ರಚಿಸಬೇಕೆಂಬುದು. ಆತ ರಾಖಾಲ, ಮಾಸ್ಟರ್ ಕಿಶೋರಿ ಮತ್ತು ಇನ್ನೂ ಒಬ್ಬಿಬ್ಬರು ಭಕ್ತರ ಸಹಾಯದಿಂದ ನೆಲದ ಮೇಲೆ ಅದನ್ನು ರಚಿಸಿದ. ಎಲ್ಲರಿಗೂ ಧ್ಯಾನ ಮಾಡುವಂತೆ ಹೇಳಿದ. ರಾಖಾಲನಿಗೆ ಭಾವಾವಸ್ಥೆ ಬಂದು ಬಿಟ್ಟಿದೆ. ಪರಮಹಂಸರು ಮಂಚದಿಂದ ಕೆಳಗೆ ಇಳಿದುಬಂದು ಆತನ ಎದೆಯ ಮೇಲೆ ತಮ್ಮ ಕೈಯನ್ನಿಟ್ಟು ಭಗವತಿಯ ನಾಮವನ್ನು ಜಪಿಸಲಾರಂಭಿಸಿದರು. ರಾಖಾಲನ ಭಾವ ಕೆಳಕ್ಕೆ ಇಳಿಯಿತು.
ಈಗ ಬಹುಶಃ ರಾತ್ರಿ ಒಂದು ಘಂಟೆಯಾಗಿರಬಹುದು. ಇಂದು ಕೃಷ್ಣ ಚತುರ್ದಶಿ, ಎಲ್ಲೆಲ್ಲೂ ಗಾಢಾಂಧಕಾರ. ಒಬ್ಬಿಬ್ಬರು ಭಕ್ತರು ಗಂಗೆಯ ದಡದಲ್ಲಿ ಏಕಾಂಗಿಯಾಗಿ ತಿರುಗಾಡುತ್ತಿದ್ದಾರೆ. ಪರಮಹಂಸರು ಆಗಲೆ ಹಾಸಿಗೆಯಿಂದ ಎದ್ದುಬಿಟ್ಟಿದ್ದಾರೆ. ಅವರೂ ಹೊರಕ್ಕೆ ಬಂದು ಭಕ್ತರಿಗೆ ಹೇಳುತ್ತಿದ್ದಾರೆ, “ಈ ಸಮಯದಲ್ಲಿ, ಈ ಗಂಭೀರ ರಾತ್ರಿಯಲ್ಲಿ ಅನಾಹತ ಶಬ್ದವನ್ನು ಕೇಳಬಹುದು ಎಂದು ತೋತಾಪುರಿ ಹೇಳುತ್ತಿದ್ದ” ಅಂತ.
ರಾತ್ರಿಯ ಕೊನೆ ಭಾಗವನ್ನು ಮಾಸ್ಟರ್ ಮತ್ತು ಮಹಿಮಚರಣ ಪರಮಹಂಸರ ಕೊಠಡಿಯಲ್ಲೇ ನೆಲದ ಮೇಲೆ ಮಲಗಿಕೊಂಡು ಕಳೆಯುತ್ತಿದ್ದಾರೆ. ರಾಖಾಲ ಕ್ಯಾಂಪ್ಕಾಟಿನ ಮೇಲೆ ಮಲಗಿಕೊಂಡಿದ್ದಾನೆ. ಐದು ವರ್ಷದ ಬಾಲಕನೋಪಾದಿಯಲ್ಲಿ ಪರಮಹಂಸರು ದಿಗಂಬರರಾಗಿ ಆಗಾಗ ಕೊಠಡಿಯೊಳಗೆ ಸುತ್ತಾಡುತ್ತಿದ್ದಾರೆ.
೧೦ನೇ ಆಗಸ್ಟ್ ೧೮೮೫ ಅಮಾವಾಸ್ಯೆ, ಸೋಮವಾರ
ಅರುಣೋದಯವಾಗಿದೆ. ಪರಮಹಂಸರು ಭಗವತಿಯ ನಾಮವನ್ನು ಜಪಿಸುತ್ತಿದ್ದಾರೆ. ಪಶ್ಚಿಮ ವರಾಂಡಕ್ಕೆ ಹೋಗಿ ಗಂಗಾದರ್ಶನ ಮಾಡುತ್ತಿದ್ದಾರೆ. ಕೊಠಡಿಯಲ್ಲಿದ್ದ ಎಲ್ಲಾ ದೇವದೇವಿಯರ ಪಟಗಳ ಹತ್ತಿರಕ್ಕೂ ಹೋಗಿ ನಮಸ್ಕಾರ ಮಾಡುತ್ತಿದ್ದಾರೆ. ಭಕ್ತರು ಹಾಸಿಗೆಯಿಂದೆದ್ದು ಪರಮಹಂಸರಿಗೆ ಪ್ರಣಾಮಾದಿಗಳನ್ನು ಮಾಡಿ ಪ್ರಾತಃಕೃತ್ಯಗಳಲ್ಲಿ ನಿರತರಾಗಿದ್ದಾರೆ.
ಪರಮಹಂಸರು ಪಂಚವಟಿಯಲ್ಲಿ ಒಬ್ಬ ಭಕ್ತನೊಡನೆ ಮಾತುಕತೆಗಳನ್ನಾಡುತ್ತಿದ್ದಾರೆ. ಆತ ಸ್ವಪ್ನದಲ್ಲಿ ಚೈತನ್ಯದೇವನ ದರ್ಶನ ಪಡೆದಿದ್ದ.
ಶ್ರೀರಾಮಕೃಷ್ಣರು ಭಾವಾವಿಷ್ಟರಾಗಿ: “ಆಹ! ಆಹ!”
ಭಕ್ತ: “ಮಹಾಶಯರೆ, ಅದು ಕೇವಲ ಸ್ವಪ್ನದ ಅನುಭವ.”
ಶ್ರೀರಾಮಕೃಷ್ಣರು: “ಸ್ವಪ್ನದ ಅನುಭವವೇನು ಕಡಿಮೆಯಾದ್ದೇ?”
ಪರಮಹಂಸರ ಕಣ್ಣುಗಳಿಂದ ಪ್ರೇಮಾಶ್ರು ಸುರಿಯುತ್ತಿದೆ. ಕಂಠದಿಂದ ಗದ್ಗದ ಸ್ವರ ಹೊರಬರುತ್ತಿದೆ.
ಇನ್ನೊಬ್ಬ ಭಕ್ತನಿಗೆ ಜಾಗ್ರದವಸ್ಥೆಯಲ್ಲಿಯೂ ಈಶ್ವರನ ದರ್ಶನಗಳಾಗುವುದನ್ನು ಕೇಳಿ ಪರಮಹಂಸರು ಹೇಳುತ್ತಿದ್ದಾರೆ. “ಅದೇನು ಅಷ್ಟು ಆಶ್ಚರ್ಯವಾದದ್ದು! ಈಗೀಗ ನರೇಂದ್ರನೂ ಈಶ್ವರೀಯ ರೂಪುಗಳನ್ನು ನೋಡುತ್ತಿದ್ದಾನೆ.” ಅಂತ.
ಮಹಿಮಚರಣ ತನ್ನ ಪ್ರಾತಃಕೃತ್ಯಗಳನ್ನು ಮುಗಿಸಿಕೊಂಡು ಪ್ರಾಂಗಣದ ಪಶ್ಚಿಮ ದಿಕ್ಕಿನಲ್ಲಿರುವ ಶಿವದೇವಾಲಯವೊಂದರಲ್ಲಿ ಏಕಾಂತವಾಗಿ ಕುಳಿತು ವೇದಮಂತ್ರೋಚ್ಚಾರಣೆಯನ್ನು ಮಾಡುತ್ತಿದ್ದಾನೆ.
ಘಂಟೆ ಎಂಟಾಗಿದೆ. ಮಾಸ್ಟರ್ ಗಂಗಾಸ್ನಾನ ಮಾಡಿ ಪರಮಹಂಸರ ಹತ್ತಿರ ಬಂದಿದ್ದಾನೆ. ತನ್ನ ಏಕಮಾತ್ರ ಪುತ್ರಿಯ ಮರಣದಿಂದ ಶೋಕಾನ್ವಿತಳಾದ ಬ್ರಾಹ್ಮಣಿಯೂ ಪರಮಹಂಸರ ದರ್ಶನ ಪಡೆಯಲು ಬಂದಿದ್ದಾಳೆ.
ಮಾಸ್ಟರಿಗೆ ಸ್ವಲ್ಪ ಪ್ರಸಾದವನ್ನು ಕೊಡುವಂತೆ ಪರಮಹಂಸರು ಆ ಬ್ರಾಹ್ಮಣಿಗೆ ಹೇಳಿದರು.
ಬ್ರಾಹ್ಮಣಿ: “ಮೊದಲು ನೀವು ಸ್ವಲ್ಪ ತೆಗೆದುಕೊಳ್ಳಿ; ಬಳಿಕ ಆತನಿಗೆ ಕೊಡುತ್ತೇನೆ.”
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಮೊದಲು ಜಗನ್ನಾಥನ ಪ್ರಸಾದವನ್ನು ತೆಗೆದುಕೊಂಡು ಬಳಿಕ ಅದನ್ನು ತಿನ್ನು.”
ಪ್ರಸಾದವನ್ನು ಸ್ವೀಕರಿಸಿದ ನಂತರ ಮಾಸ್ಟರ್ ಶಿವಮಂದಿರಗಳಿಗೆ ಹೋಗಿ, ಶಿವನ ದರ್ಶನ ಪಡೆದು, ಬಳಿಕ ಪರಮಹಂಸರ ಕೊಠಡಿಗೆ ಹಿಂದಿರುಗಿ ಬಂದು ಅವರಿಗೆ ಪ್ರಣಾಮ ಮಾಡಿ ಅವರಿಂದ ಬೀಳ್ಕೊಂಡ.
ಶ್ರೀರಾಮಕೃಷ್ಣರು ಪ್ರೀತಿಯಿಂದ: “ಈಗ ಹೋಗಿ ಬಾ, ಮತ್ತೆ ನೀನು ಕೆಲಸಕ್ಕೆ ಬೇರೆ ಹೋಗಬೇಕಾಗಿದೆ.”
೧೧ನೇ ಆಗಸ್ಟ್ ೧೮೮೫, ಮಂಗಳವಾರ
ಪರಮಹಂಸರು ದಕ್ಷಿಣೇಶ್ವರದಲ್ಲಿ ತಮ್ಮ ಕೊಠಡಿಯೊಳಗೆ ಕುಳಿತುಕೊಂಡಿದ್ದಾರೆ. ಬೆಳಗಿನ ಎಂಟು ಘಂಟೆಯಿಂದ ಮೌನವ್ರತವನ್ನು ಕೈಗೊಂಡಿದ್ದಾರೆ. ತಮ್ಮ ಈ ರೋಗ ಪ್ರಾಣಾಂತಿಕವಾದದ್ದು. ತಾವು ಈ ಇಹಲೋಕವನ್ನು ಶೀಘ್ರವಾಗಿಯೇ ಬಿಡಬೇಕಾಗಿ ಬರುತ್ತದೆ ಅಂತ ಅವರಿಗೆ ಗೊತ್ತಿತ್ತೇನು? ಮತ್ತೆ ಅವರು ಜಗದಂಬೆಯ ತೊಡೆಯ ಮೇಲೆ ಹೋಗಿ ಕುಳಿತುಕೊಳ್ಳಲು ಸಿದ್ಧವಾಗುತ್ತಿರುವರೇನು? ಅದಕ್ಕಾಗಿಯೇನು ಅವರು ಮೌನವನ್ನು ಕೈಗೊಂಡಿರುವುದು? ಅವರು ಮಾತನಾಡದೆ ಇರುವುದನ್ನು ನೋಡಿ ಶ್ರೀಶಾರದಾದೇವಿಯವರು ಅಳಲಾರಂಭಿಸಿದ್ದಾರೆ. ರಾಖಾಲ ಲಾಟು ಇವರೂ ಅಳುತ್ತಿದ್ದಾರೆ. ಬಾಗ್ಬಜಾರಿನ ಬ್ರಾಹ್ಮಣಿಯೂ ಕೊಠಡಿಗೆ ಬಂದು ಅಳಲಾರಂಭಿಸಿದ್ದಾಳೆ. ಭಕ್ತರು ಆಗಾಗ ಪರಮಹಂಸರನ್ನು ಕೇಳುತ್ತಿದ್ದಾರೆ, ಏನು ತಾವು ಇನ್ನು ಮೌನಿಗಳಾಗಿಯೇ ಇದ್ದುಬಿಡುವಿರೇನು ಅಂತ. ಅವರು ಸನ್ನೆಯ ಮೂಲಕ ಇಲ್ಲ ಅಂತ ತಿಳಿಸಿದರು.
ಘಂಟೆ ಅಪರಾಹ್ನ ಮೂರು. ನಾರಾಯಣ ಬಂದಿದ್ದಾನೆ. ಪರಮಹಂಸರು ಆತನಿಗೆ ಹೇಳಿದರು, “ಭಗವತಿ ನಿನ್ನ ಮೇಲೆ ಶುಭವನ್ನು ಕರೆಯುವಳು” ಅಂತ. ಪರಮಹಂಸರು ತನ್ನೊಡನೆ ಮಾತನಾಡಿದರು ಅಂತ ನಾರಾಯಣ ಆನಂದದಿಂದ ಎಲ್ಲರಿಗೂ ತಿಳಿಸಿಬಿಟ್ಟ. ರಾಖಾಲಾದಿ ಭಕ್ತರಿಗೆ ತಮ್ಮ ಎದೆ ಮೇಲಿದ್ದ ದೊಡ್ಡ ಚಪ್ಪಡಿಯನ್ನೇ ಕೆಳಕ್ಕೆ ಇಳಿಸಿದಂತೆ ಆಯಿತು. ಎಲ್ಲರೂ ಪರಮಹಂಸರ ಹತ್ತಿರ ಬಂದು ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು (ರಾಖಾಲಾದಿ ಭಕ್ತರಿಗೆ): “ಭಗವತಿ ನನಗೆ ತೋರಿಸುತ್ತಿದ್ದಳು, ಇದೆಲ್ಲ ಬರೀ ಮಾಯೆ ಅಂತ. ಆಕೆಯೊಬ್ಬಳೇ ಸತ್ಯ, ಉಳಿದುದೆಲ್ಲ ಕೇವಲ ಮಾಯೆಯ ಐಶ್ವರ್ಯ ಮಾತ್ರ.
“ಇನ್ನೊಂದು ಅನುಭವವಾಯಿತು. ಯಾವ ಯಾವ ಭಕ್ತರು ಎಷ್ಟೆಷ್ಟು ದೂರ ಮುಂದುವರಿದ್ದಾರೆ ಎಂಬುದರ ಅನುಭವ.”
ಭಕ್ತರು: “ಒಳ್ಳೆಯದು, ದಯವಿಟ್ಟು ಅದರ ವಿಷಯವಾಗಿ ತಿಳಿಸಿ.”
ಶ್ರೀರಾಮಕೃಷ್ಣರು: “ನಿತ್ಯ ಗೋಪಾಲ, ರಾಖಾಲ, ನಾರಾಯಣ, ಪೂರ್ಣ, ಮಹಿಮ ಚಕ್ರವರ್ತಿ ಇವರೇ ಮೊದಲಾದವರ ಸಂಬಂಧವಾಗಿ ಎಲ್ಲ ತಿಳಿದುಕೊಂಡೆ.”
೧೬ನೇ ಆಗಸ್ಟ್ ೧೮೮೫, ಭಾನುವಾರ
ಪರಮಹಂಸರ ರೋಗದ ಸಮಾಚಾರ ಕಲ್ಕತ್ತದ ಭಕ್ತರ ಕಿವಿಯನ್ನು ಮುಟ್ಟಿಬಿಟ್ಟಿತು. ಅದು ಏನೊ ಒಂದು ಸಾಮಾನ್ಯ ಗಂಟಲಹುಣ್ಣು ಎಂದು ಅವರು ಭಾವಿಸಿದ್ದರು. ಅವರಲ್ಲಿ ಅನೇಕರು ಇಂದು ಪರಮಹಂಸರನ್ನು ನೋಡಲು ಬಂದಿದ್ದಾರೆ. ಗಿರೀಶ, ರಾಮ, ನಿತ್ಯ ಗೋಪಾಲ, ಮಹಿಮಚಕ್ರವರ್ತಿ, ಕಿಶೋರಿ, ಪಂಡಿತ ಶಶಧರ ಇವರೇ ಮೊದಲಾದವರು ಬಂದಿದ್ದಾರೆ.
ಪರಮಹಂಸರು ಎಂದಿನ ಆನಂದಮೂರ್ತಿಯೆ. ಭಕ್ತರೊಡನೆ ಮಾತುಕತೆಗಳನ್ನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನನ್ನ ರೋಗದ ಸಂಬಂಧವಾಗಿ ನಾನು ತಾಯಿಗೆ ಹೇಳಿಕೊಳ್ಳಲಾರೆ. ನಾಚಿಕೆಯಾಗುತ್ತಿದೆ.”
ಗಿರೀಶ: “ಭಗವಂತ ಗುಣಪಡಿಸುತ್ತಾನೆ.”
ರಾಮ: “ಗುಣವಾಗಿ ಹೋಗಿಬಿಡುತ್ತದೆ.”
ಶ್ರೀರಾಮಕೃಷ್ಣರು (ನಗುತ್ತ): “ಒಳ್ಳೆಯದು, ಆಶೀರ್ವಾದ ಮಾಡು.” (ಎಲ್ಲರೂ ನಗುತ್ತಾರೆ.)
ಗಿರೀಶಘೋಷ ಮೊನ್ನೆ ಮೊನ್ನೆ ತಾನೆ ಪರಮಹಂಸರೊಡನೆ ಪರಿಚಯಮಾಡಿಕೊಂಡಿದ್ದಾನೆ. ಅವರು ಆತನಿಗೆ ಹೇಳುತ್ತಿದ್ದಾರೆ, “ನಿನಗೆ ಅನೇಕ ಕೆಲಸಕಾರ್ಯಗಳಿವೆ; ತಾಪತ್ರಯ ಹೆಚ್ಚು. ಇಲ್ಲಿಗೆ ಇನ್ನೂ ಮೂರು ಸಲ ಬಂದುಬಿಡು.”
(ಶಶಧರನಿಗೆ) “ಆದ್ಯಾಶಕ್ತಿಯ ಸಂಬಂಧವಾಗಿ ಒಂದು ಸ್ವಲ್ಪ ಮಾತನಾಡು.”
ಶಶಧರ: “ನನಗೆ ಏನು ತಾನೆ ಗೊತ್ತು?”
ಶ್ರೀರಾಮಕೃಷ್ಣರು ನಗುತ್ತ: “ಒಬ್ಬ ವ್ಯಕ್ತಿ ಒಬ್ಬನನ್ನು ಬಹಳವಾಗಿ ಗೌರವಿಸುತ್ತಿದ್ದ. ಆ ಎರಡನೆಯವ ‘ಹೋಗಿ ಒಂದು ಸ್ವಲ್ಪ ಬೆಂಕಿ ತೆಗೆದುಕೊಂಡು ಬಾ, ಹುಕ್ಕ ತಯಾರು ಮಾಡಬೇಕಾಗಿದೆ’ ಅಂತ ಹೇಳಿದ. ಆತ ‘ಮಹಾಶಯರೆ, ನಿಮಗೆ ಬೇಕಾಗಿರುವ ಬೆಂಕಿಯನ್ನು ತರುವ ಯೋಗ್ಯತೆ ನನಗಿದೆಯೇ?’ ಅಂತ ಹೇಳಿದ. ಕೊನೆಗೂ ತಂದುಕೊಡದೇನೇ ಹೋದ.” (ಎಲ್ಲರೂ ನಗುತ್ತಾರೆ.)
ಶಶಧರ: “ಆಕೆಯೇ ನಿಮಿತ್ತ ಕಾರಣ, ಆಕೆಯೇ ಉಪಾದಾನ ಕಾರಣ. ಆಕೆಯೇ ಈ ಜೀವಜಗತ್ತನ್ನು ಸೃಷ್ಟಸಿದ್ದಾಳೆ, ಆಕೆಯೇ ಈ ಜಗತ್ತಾಗಿದ್ದಾಳೆ. ಉದಾಹರಣೆಗೆ ಜೇಡರಹುಳು. ಅದು ತಾನೇ ತನ್ನ ಬಲೆಯನ್ನು ನಿರ್ಮಿಸುತ್ತದೆ (ನಿಮಿತ್ತ ಕಾರಣ), ಆ ಬಲೆಗೆ ಬೇಕಾಗುವ ತಂತುವನ್ನು ತನ್ನ ದೇಹದಿಂದಲೇ ಅದು ಹೊರಗೆಡಹುತ್ತದೆ (ಉಪಾದಾನ ಕಾರಣ).”
ಶ್ರೀರಾಮಕೃಷ್ಣರು: “ಯಾರು ಪುರುಷನೊ ಆತನೇ ಪ್ರಕೃತಿ; ಯಾರು ಬ್ರಹ್ಮನೊ ಆತನೇ ಶಕ್ತಿ ಅಂತ ಶಾಸ್ತ್ರದಲ್ಲಿ ಹೇಳಿದೆ. ಯಾವಾಗ ಆತ ನಿಷ್ಕ್ರಿಯನೋ, ಎಂದರೆ ಸೃಷ್ಟಿ ಸ್ಥಿತಿ ಪ್ರಳಯ ಕಾರ್ಯಗಳನ್ನು ಮಾಡುವುದಿಲ್ಲವೊ ಆಗ ಆತನಿಗೆ ಪುರುಷ ಅಥವಾ ಬ್ರಹ್ಮ ಅಂತ ಹೆಸರು; ಯಾವಾಗ ಆತ ಈ ಎಲ್ಲಾ ಕಾರ್ಯಗಳನ್ನು ಮಾಡುತ್ತಾನೊ ಆಗ ಆತನಿಗೆ ಶಕ್ತಿ ಅಥವಾ ಪ್ರಕೃತಿ ಅಂತ ಹೆಸರು. ಆದರೆ, ಯಾರು ಬ್ರಹ್ಮನಾಗಿದ್ದಾನೊ, ಆತನೇ ಶಕ್ತಿಯಾಗಿಯೂ, ಯಾರು ಪುರುಷನಾಗಿದ್ದಾನೊ ಆತನೇ ಪ್ರಕೃತಿಯಾಗಿಯೂ ಆಗಿದ್ದಾನೆ. ನೀರು ಸ್ಥಿರವಾಗಿ ನಿಂತಿದ್ದರೂ ನೀರೆ ಅಥವಾ ಅಲ್ಲೋಲಕಲ್ಲೋಲವಾಗುತ್ತಿದ್ದರೂ ನೀರೆ. ಹಾವು ಸೊಟ್ಟಗೆ ಮುಂದವರಿಯುತ್ತಿದ್ದರೂ ಹಾವೆ, ಸುಮ್ಮನೆ ಸುರುಳಿ ಸುತ್ತಿಕೊಂಡು ಒಂದು ಕಡೆ ಬಿದ್ದಿದ್ದರೂ ಹಾವೆ.
“ಬ್ರಹ್ಮನ ಸ್ವರೂಪವೇನೆಂಬುದನ್ನು ಬಾಯಿಂದ ಹೇಳಲಾಗುವುದಿಲ್ಲ. ಮಾತು ನಿಂತು ಹೋಗುತ್ತದೆ. ಕೀರ್ತನೆಯ ಸಮಯದಲ್ಲಿ ಗಾಯಕರು ಮೊದಲು ಮೊದಲು ಹಾಡುತ್ತಿದ್ದಾರೆ, ‘ನಮ್ಮ ನಿತಾಯಿ ಮದದ ಹಸ್ತಿ!’ ಅಂತ. ಈ ನುಡಿಯನ್ನು ಅವರು ಆವೃತ್ತಿ ಮಾಡುತ್ತ ಮುಂದುಮುಂದುವರಿದ ಹಾಗೆ ಕೊನೆಯಲ್ಲಿ ಅವರಿಗೆ ಇನ್ನು ಬೇರೆ ಏನನ್ನೂ ಹೇಳಲಾಗುವುದಿಲ್ಲ; ಕೇವಲ ಹೇಳುತ್ತಿರುತ್ತಾರೆ, ‘ಹಸ್ತಿ! ಹಸ್ತಿ!’ ಅಂತ. ಮತ್ತೆ ಅವರಿಗೆ ಹಾಗೂ ಹೇಳುವುದಕ್ಕೆ ಆಗದೆ ಕೇವಲ ‘ಹಾ! ಹಾ!’ ಅಂತ ಹೇಳಲಾರಂಭಿಸುತ್ತಾರೆ. ಕಟ್ಟಕಡೆಗೆ ಅದೂ ಸಾಧ್ಯವಿಲ್ಲದವರಾಗಿ ಬಾಹ್ಯಜ್ಞಾನಶೂನ್ಯರಾಗಿಬಿಡುತ್ತಾರೆ.”
ಪರಮಹಂಸರು ಈ ರೀತಿಯಾಗಿ ಮಾತನಾಡುತ್ತ ಆಡುತ್ತ ಇದ್ದ ಹಾಗೆಯೇ ನಿಂತು ನಿಂತೇ ಸಮಾಧಿಸ್ಥರಾಗಿಬಿಟ್ಟಿದ್ದಾರೆ.
ಅವರು ಪ್ರಕೃತಿಸ್ಥರಾದ ಸ್ವಲ್ಪ ಹೊತ್ತಿನ ಮೇಲೆ ಹೇಳುತ್ತಿದ್ದಾರೆ, “ಕ್ಷರಾಕ್ಷರಗಳಿಗೆ ಅತೀತವಾಗಿ ಏನಿದೆಯೊ ಅದನ್ನು ಬಾಯಿಂದ ವರ್ಣಿಸಲಾಗುವುದಿಲ್ಲ” ಅಂತ.
ಭಕ್ತರೆಲ್ಲ ಸುಮ್ಮನೆ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು: “ಎಲ್ಲಿಯವರೆಗೆ ಈ ಜಗತ್ತಿನಲ್ಲಿ ಭೋಗಿಸಬೇಕಾದದ್ದು ಇನ್ನೂ ಉಳಿದುಕೊಂಡಿದೆಯೊ, ಎಲ್ಲಿಯವರೆಗೆ ಮಾಡಬೇಕಾದ ಕಾರ್ಯಗಳು ಇನ್ನೂ ಉಳಿದುಕೊಂಡಿವೆಯೊ ಅಲ್ಲಿಯವರೆಗೆ ಸಮಾಧಿ ದೊರೆಯದು.
(ಶಶಧರನಿಗೆ) “ಉಪನ್ಯಾಸ ಇವೇ ಮೊದಲಾದ ಕರ್ಮಗಳನ್ನು ಭಗವಂತ ನಿನ್ನ ಕೈಯಿಂದ ಮಾಡಿಸಿಕೊಳ್ಳುತ್ತಿದ್ದಾನೆ; ಈಗ ನೀನು ಅವನ್ನು ಮಾಡಲೇಬೇಕು. ಅವು ಮುಗಿದುವು ಅಂದರೆ ಬಳಿಕ ನಿನಗೆ ಶಾಂತಿ. ಯಜಮಾನಿ ಮನೆ ಕೆಲಸಕಾರ್ಯಗಳನ್ನೆಲ್ಲ ಮುಗಿಸಿ, ಸ್ನಾನಕ್ಕೆ ಹೋದಳು ಎಂದರೆ, ಕೂಗಿ ಗಂಟಲು ಕಿತ್ತುಕೊಂಡರೂ ಹಿಂದಿರುಗಳು.”
೨೭ನೇ ಆಗಸ್ಟ್ ೧೮೮೫, ಶ್ರಾವಣ ಕೃಷ್ಣ ದ್ವಿತೀಯ, ಗುರುವಾರ
ಪರಮಹಂಸರು ಒಬ್ಬಿಬ್ಬರು ಭಕ್ತರೊಡನೆ ತಮ್ಮ ದಕ್ಷಿಣೇಶ್ವರದ ಕೊಠಡಿಯಲ್ಲಿ ಕುಳಿತಿದ್ದಾರೆ. ಘಂಟೆ ಸಾಯಂಕಾಲ ಐದು. ಕ್ಯಾನ್ಸರ್ ಎಂಬ ಪ್ರಾಣಾಂತ ರೋಗ ಆಗಲೆ ಪರಮಹಂಸರ ಶರೀರವನ್ನು ಹೊಕ್ಕುಬಿಟ್ಟಿದೆ. ಆದರೂ ಭಕ್ತರೇನಾದರೂ ಅವರನ್ನು ನೋಡಲು ಬಂದರೆ ಆ ರೋಗವನ್ನು ಕಿಂಚಿತ್ತೂ ಲೆಕ್ಕಿಸದೆ, ಒಮ್ಮೊಮ್ಮೆ ಇಡೀ ದಿನವನ್ನೆಲ್ಲ ಅವರೊಡನೆ ಮಾತುಕತೆಗಳಾಡುವುದು, ಹಾಡುವುದು ಇವೇ ಮೊದಲಾದ ರೀತಿಯಲ್ಲಿ ಕಳೆದುಬಿಡುತ್ತಿದ್ದಾರೆ.
ಡಾಕ್ಟರ್ ಮಧು ಪರಮಹಂಸರಿಗೆ ಚಿಕಿತ್ಸೆ ಮಾಡುತ್ತಿದ್ದಾನೆ. ಆಗಾಗ ಆತ ಇಲ್ಲಿಗೆ ಬಂದು ಹೋಗುತ್ತಿದ್ದಾನೆ. ಬರುವಾಗಲೆಲ್ಲಾ ಪ್ರಾಯಶಃ ದೋಣಿಯಲ್ಲೇ ಬರುವ ಅಭ್ಯಾಸ. ಭಕ್ತರೆಲ್ಲರು ಪರಮಹಂಸರ ಸಂಬಂಧವಾಗಿ ಬಹಳ ಚಿಂತಾಕ್ರಾಂತರಾಗಿದ್ದಾರೆ. ಡಾಕ್ಟರ್ ಪ್ರತಿದಿವಸವೂ ಬಂದು ಅವರನ್ನು ನೋಡಿಹೋಗುವುದು ಶ್ರೇಯಸ್ಕರ ಎಂಬುದಾಗಿ ಅವರು ಯೋಚಿಸುತ್ತಿದ್ದಾರೆ. ಮಾಸ್ಟರ್ ಪರಮಹಂಸರಿಗೆ ಹೇಳುತ್ತಿದ್ದಾನೆ, “ಡಾಕ್ಟರ್ ಮಧು ಒಳ್ಳೆ ಅನುಭವಶಾಲಿ. ಆತ ಬಂದು ಪ್ರತಿನಿತ್ಯವು ನಿಮ್ಮನ್ನು ನೋಡಿ ಹೋಗುವುದಾದರೆ ಬಹಳ ಒಳ್ಳೆಯದು.”
ಆಂಟಪುರದ ಪಂಡಿತ ಶ್ಯಾಮಾಪದ ಭಟ್ಟಾಚಾರ್ಯ ಬಂದು ಪರಮಹಂಸರ ದರ್ಶನ ಪಡೆದು ಒಂದು ಕಡೆ ಕುಳಿತುಕೊಂಡ. ಇನ್ನೇನು ಮುಸ್ಸಂಜೆಯಾಗುತ್ತಿರುವುದನ್ನು ನೋಡಿ, ಸಾಯಂ ಸಂಧ್ಯೆಯನ್ನು ಮಾಡಿ ಬರುತ್ತೇನೆ ಅಂತ ಹೇಳಿ ಗಂಗಾದಡಕ್ಕೆ ಹೋದ, ಸಂಧ್ಯಾವಂದನೆಯನ್ನು ಮಾಡುತ್ತಿದ್ದ ಹಾಗೆಯೇ ಆತನಿಗೆ ಅನೇಕ ದರ್ಶನಗಳಾದುವು. ಸಂಧ್ಯೆಯನ್ನು ಮುಗಿಸಿ ಮತ್ತೆ ಪರಮಹಂಸರ ಕೊಠಡಿಗೆ ಬಂದು ನೆಲದ ಮೇಲೆ ಕುಳಿತುಕೊಂಡ. ಪರಮಹಂಸರು ಭಗವತಿಯ ಜಪ ಮತ್ತು ಧ್ಯಾನವನ್ನು ಮುಗಿಸಿ ತಮ್ಮ ಆಸನದ ಮೇಲೆ ಕುಳಿತುಕೊಂಡಿದ್ದಾರೆ. ಮಾಸ್ಟರ್ ಫುಟ್ರಗ್ಗಿನ ಮೇಲೆ ಕುಳಿತಿದ್ದಾನೆ. ರಾಖಾಲ, ಲಾಟು ಇವರೇ ಮೊದಲಾದವರು ಆಗಾಗ ಕೊಠಡಿಗೆ ಬಂದು ಹೋಗುತ್ತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ ಪಂಡಿತನನ್ನು ತೋರಿಸಿ: “ಈತ ಒಳ್ಳೆ ನಿಯಮ ನಿಷ್ಠಾವಂತ. (ಪಂಡಿತನಿಗೆ) ‘ನೇತಿ, ನೇತಿ’, ಮಾರ್ಗದಲ್ಲಿ ಮುಂದುವರಿದ ಮೇಲೆ ಎಲ್ಲಿ ಮನಸ್ಸು ಶಾಂತಿಯನ್ನು ಪಡೆಯುವುದೊ, ಅಲ್ಲಿಯೇ ಬ್ರಹ್ಮನಿದ್ದಾನೆ.
“ರಾಜ ದೊರೆಯಬೇಕಾದರೆ ಅರಮನೆಯ ಏಳು ಹೆಬ್ಬಾಗಿಲುಗಳನ್ನು ದಾಟಿ ಮುಂದಕ್ಕೆ ಹೋಗಬೇಕು. ಒಬ್ಬ ಅಭ್ಯಾಗತ ಮೊದಲನೆ ಬಾಗಿಲ ಹತ್ತಿರ ಹೋಗಿ ನೋಡುತ್ತಾನೆ, ಒಬ್ಬ ಐಶ್ವರ್ಯವಂತ ತನ್ನ ಅನುಯಾಯಿಗಳೊಡನೆ ಬಹಳ ಠೀವಿಯಿಂದ ಕುಳಿತುಕೊಂಡಿದ್ದಾನೆ. ಆಗ ಅಭ್ಯಾಗತ ತನ್ನ ಸ್ನೇಹಿತನನ್ನು ಕೇಳಿದ. ‘ಈತನೆ ರಾಜನೇನು?’ ಅಂತ. ಆತ ಕಿಂಚಿತ್ ನಕ್ಕು ಹೇಳಿದ, ‘ಅಲ್ಲ’ ಎಂದು. ಎರಡನೆ ಮತ್ತು ಉಳಿದ ಬಾಗಿಲುಗಳ ಹತ್ತಿರವೂ ಅಭ್ಯಾಗತನಿಗೆ ತನ್ನ ಸ್ನೇಹಿತನಿಂದ ಇದೇ ಉತ್ತರ ದೊರೆಯಿತು. ಆದರೆ ಆ ಅಭ್ಯಾಗತ ನೋಡುತ್ತಾನೆ, ತಾನು ಒಳಒಳಕ್ಕೆ ಹೋದಹೋದಂತೆಲ್ಲ ಐಶ್ವರ್ಯ ಸಂಪತ್ತುಗಳೂ ಹೆಚ್ಚು ಹೆಚ್ಚಾಗಿ ಕಣ್ಣಿಗೆ ಬೀಳಲಾರಂಭಿಸುತ್ತವೆ. ಏಳು ಬಾಗಿಲುಗಳನ್ನು ದಾಟಿದ ನಂತರ ಕಣ್ಣಿಗೆ ಕಾಣಿಸಿಕೊಂಡ ದೃಶ್ಯವನ್ನು ನೋಡಿ, ಮತ್ತೆ ಆತ ತನ್ನ ಸ್ನೇಹಿತನಿಗೆ ಎಂದಿನ ಪ್ರಶ್ನೆಯನ್ನು ಹಾಕಲಿಲ್ಲ. ರಾಜನ ಅತುಲ ಐಶ್ವರ್ಯವನ್ನು ನೋಡಿ ಮಂತ್ರಮುಗ್ಧನಾಗಿ ಸುಮ್ಮನೆ ನಿಂತುಕೊಂಡುಬಿಟ್ಟ. ಆಗ ಆತನಿಗೆ ಹೊಳೆಯಿತು ಈತನೇ ರಾಜ ಅಂತ. ಮತ್ತೆ ಆತನ ಹೃದಯದಲ್ಲಿ ಯಾವ ಸಂದೇಹವೂ ಉಳಿಯಲಿಲ್ಲ.”
ಪಂಡಿತ: “ಮಾಯಾರಾಜ್ಯದ ಎಲ್ಲೆಯನ್ನು ದಾಟಿಹೋದರೆ ಮಾತ್ರವೇ ಆತನ ದರ್ಶನ ಪಡೆಯಬಹುದು.”
ಶ್ರೀರಾಮಕೃಷ್ಣರು: “ಆತನ ಸಾಕ್ಷಾತ್ಕಾರವನ್ನು ಪಡೆದ ನಂತರ ಅನುಭವವಾಗುತ್ತದೆ, ಆತನೇ ಈ ಜೀವಜಗತ್ತು, ಮಾಯೆ ಆಗಿದ್ದಾನೆ, ಎಂಬುದಾಗಿ. ‘ನೇತಿ, ನೇತಿ’ ಮಾರ್ಗಗಾಮಿಗಳಿಗೆ ಈ ಜಗತ್ತು ನಿಸ್ಸಂದೇಹವಾಗಿ ‘ಮಾಯೆಯ ಕ್ರೀಡಾಗೃಹ’, ಸ್ವಪ್ನದೋಪಾದಿಯಲ್ಲಿ ಮಿಥ್ಯವಾದ್ದು ಎಂಬ ಅನುಭವವಾಗುತ್ತದೆ. ಆದರೆ ಆತನ ಸಾಕ್ಷಾತ್ಕಾರ ದೊರೆತ ನಂತರ ಈ ಜಗತ್ತೇ ‘ಆನಂದದ ಕ್ರೀಡಾಗೃಹ’ ಆಗುತ್ತದೆ.
“ಬರೀ ಶಾಸ್ತ್ರಾಧ್ಯಯನದಿಂದ ದೊರಕುವ ಫಲವೇನು? ಪಂಡಿತರು ಕೇವಲ ವಿಚಾರದಲ್ಲೇ ಮಗ್ನರಾಗಿರುತ್ತಾರೆ.”
ಪಂಡಿತ: “ನನ್ನನ್ನು ಯಾರಾದರೂ ಪಂಡಿತ ಅಂತ ಕರೆದರೆ ಏನೋ ಒಂದು ತರ ಹೇವರಿಕೆ ಆಗುತ್ತದೆ.”
ಶ್ರೀರಾಮಕೃಷ್ಣರು: “ಹೀಗಾಗುವುದು ಆತನ ಕೃಪೆಯಿಂದ ಮಾತ್ರವೆ. ಪಂಡಿತರು ಕೇವಲ ವಿಚಾರದಲ್ಲೇ ತೊಡಗುತ್ತಾರೆ. ಕೆಲವರು ಹಾಲಿನ ವಿಷಯವಾಗಿ ಕೇಳಿದ್ದಾರೆ, ಇನ್ನು ಕೆಲವರು ಅದನ್ನು ನೋಡಿದ್ದಾರೆ. ಸಾಕ್ಷಾತ್ಕಾರವಾದ ನಂತರ ಎಲ್ಲವೂ ಭಗವನ್ಮಯವಾಗಿ ಕಾಣಬರುತ್ತದೆ. ಭಗವಂತನೇ ಎಲ್ಲವೂ ಆಗಿದ್ದಾನೆ.”
ಪಂಡಿತ, ನಾರಾಯಣ ಸ್ತ್ರೋತ್ರವನ್ನು ಪಠಿಸಲಾರಂಭಿಸಿದ್ದಾನೆ. ಪರಮಹಂಸರು ಭಾವಪರವಶರಾಗಿ ಬಿಟ್ಟಿದ್ದಾರೆ.
ಪಂಡಿತ ಗೀತೆಯಿಂದ ಒಂದು ಶ್ಲೋಕವನ್ನು ಪಠಿಸಿದ:
ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾತ್ಮನಿ ।
ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ ॥ (ಭ.ಗೀ. ೬-೨೯)
ಶ್ರೀರಾಮಕೃಷ್ಣರು: “ನೀನು ಅಧ್ಯಾತ್ಮರಾಮಾಯಣವನ್ನು ಓದಿದ್ದಿಯೇನು?”
ಪಂಡಿತ: “ಹೌದು, ಒಂದು ಸ್ವಲ್ಪ ಓದಿದ್ದೇನೆ.”
ಶ್ರೀರಾಮಕೃಷ್ಣರು: “ಅದು ಜ್ಞಾನ, ಭಕ್ತಿ ಇವುಗಳಿಂದ ತುಂಬಿದೆ. ಶಬರಿಯ ಉಪಾಖ್ಯಾನ, ಅಹಲ್ಯೆಯ ಸ್ತೋತ್ರ ಇವು ಭಕ್ತಿರಸದಿಂದ ತುಂಬಿತುಳುಕಾಡುತ್ತಿವೆ.
“ಆದರೆ ಒಂದು ವಿಷಯ, ಭಗವಂತ ವಿಷಯಬುದ್ಧಿಯ ಎಲ್ಲೆಯಿಂದ ಬಹಳ ದೂರದಲ್ಲೇ ಉಳಿಯುತ್ತಾನೆ.”
ಪಂಡಿತ: “ಎಲ್ಲಿ ವಿಷಯಬುದ್ಧಿ ತಾಂಡವವಾಡುತ್ತಿವೆಯೊ, ಅಲ್ಲಿಂದ ಆತ ಬಹಳ ದೂರದಲ್ಲಿಯೇ ಉಳಿಯುತ್ತಾನೆ. ಆದರೆ ಎಲ್ಲಿ ಅದು ಇಲ್ಲವೊ, ಅಲ್ಲಿ ಆತ ಬಹಳ ಸಮೀಪದಲ್ಲೇ ಇರುತ್ತಾನೆ. ಉತ್ತರಪಾರಾದ ಒಬ್ಬ ಜಮೀನುದಾರನನ್ನು-ಆತನ ಹೆಸರು ಏನೋ ಒಂದು ಮುಖ್ಯೋಪಾಧ್ಯಾಯನಂತೆ-ನೋಡಿ ಬಂದೆ. ವಯಸ್ಸಾಗಿಬಿಟ್ಟಿದೆ. ಆದರೂ ಆತನಿಗೆ ಕೇವಲ ಕಾದಂಬರಿಗಳಲ್ಲೇ ಮನಸ್ಸು.”
ಶ್ರೀರಾಮಕೃಷ್ಣರು: “ಅಧ್ಯಾತ್ಮರಾಮಾಯಣ ಒಂದು ಕಡೆ ಹೇಳುತ್ತದೆ, ಆತನೇ ಜೀವಜಗತ್ತಾಗಿದ್ದಾನೆ ಅಂತ.”
ಪಂಡಿತ ಆನಂದಿತನಾಗಿ ಶ್ರೀಮದ್ಭಾಗವತದ ಹತ್ತನೆ ಸ್ಕಂದದಿಂದ ಇದೇ ಭಾಗವನ್ನು ತೋರಿಸುತ್ತಿರುವ ಯಮಳಾರ್ಜುನರ ಸ್ತೋತ್ರವನ್ನು ಪಠಿಸುತ್ತಿದ್ದಾನೆ:
ಕೃಷ್ಣ ಕೃಷ್ಣ ಮಹಾಯೋಗಿನ್ ತ್ವಮಾದ್ಯಃ ಪುರುಷಃ ಪರಃ ॥
ವ್ಯಕ್ತಾವ್ಯಕ್ತಮಿದಂ ವಿಶ್ವಂ ರೂಪಂ ತೇ ಬ್ರಾಹ್ಮಣಾ ವಿದುಃ ॥ ೨೯ ॥
ತ್ವಮೇಕಃ ಸರ್ವಭೂತಾನಾಂ ದೇಹಾ ಸ್ವಾತ್ಮೇಂದ್ರಿಯೇಶ್ವರಃ ॥
ತ್ವಮೇವ ಕಾಲೋ ಭಗವಾನ್ ವಿಷ್ಣುರವ್ಯಯ ಈಶ್ವರಃ ॥ ೩೦ ॥
ತ್ವಂ ಮಹಾನ್ ಪ್ರಕೃತಿಃ ಸೂಕ್ಷ್ಮಾ ರಜಸ್ಸತ್ತ್ವತಮೋ ಮಯೀ ॥
ತ್ವಮೇವ ಪುರುಷೋಠ್ಧ್ಯಕ್ಷಃ ಸರ್ವಕ್ಷೇತ್ರವಿಕಾರವಿತ್ ॥ ೩೧ ॥
ಪರಮಹಂಸರು ಈ ಸ್ತೋತ್ರವನ್ನು ಕೇಳುತ್ತಿದ್ದ ಹಾಗೆಯೇ ನಿಂತುಕೊಂಡೇ ಸಮಾಧಿಸ್ಥ ರಾಗಿಬಿಟ್ಟಿದ್ದಾರೆ. ಪಂಡಿತ ಕುಳಿತುಕೊಂಡಿದ್ದಾನೆ. ಪರಮಹಂಸರು ತಮ್ಮ ಒಂದು ಪಾದವನ್ನು ಆತನ ತೊಡೆಯ ಮೇಲೆ ಇಟ್ಟಿದ್ದಾರೆ; ಅದು ಆತನೆದೆಯನ್ನೂ ಮುಟ್ಟುತ್ತಿದೆ. ಮುಖದಲ್ಲಿ ಮಂದಹಾಸ ಸುಮ್ಮನೆ ಚಿಮ್ಮುತ್ತಿದೆ.
ಪಂಡಿತ ಅವರ ಪಾದಪದ್ಮವನ್ನು ಹಿಡಿದುಕೊಂಡೇ ಪ್ರಾರ್ಥಿಸುತ್ತಿದ್ದಾನೆ, “ಹೇ ಗುರೂ! ನನ್ನ ಅಧ್ಯಾತ್ಮ ಜೀವನವನ್ನು ಚೈತನ್ಯಗೊಳಿಸು” ಅಂತ.
ಪಂಡಿತ ಹಿಂದಿರುಗಿ ಮನೆಗೆ ಹೊರಟುಹೋದ. ಪರಮಹಂಸರು ಮಾಸ್ಟರಿಗೆ ಹೇಳುತ್ತಿದ್ದಾರೆ, “ನಾನು ಹಿಂದೆ ಹೇಳಿದಂತೆ ಈಗ ಘಟಿಸುತ್ತಿರುವುದು ನಿನ್ನ ಕಣ್ಣಿಗೆ ಬೀಳುತ್ತಿದೆಯೇನು? ಯಾರು ಹೃತ್ಪೂರ್ವಕವಾಗಿ ಧ್ಯಾನ ಜಪ ಇವನ್ನೆಲ್ಲ ಮಾಡಿದ್ದಾರೊ ಅವರು ಇಲ್ಲಿಗೆ ಬರಲೇಬೇಕು” ಅಂತ.
ರಾತ್ರಿ ಹತ್ತು, ಪರಮಹಂಸರು ಸ್ವಲ್ಪ ರವೆ ಪಾಯಸ ಕುಡಿದು ಸುಮ್ಮನೆ ಹಾಸಿಗೆ ಮೇಲೆ ಮಲಗಿಕೊಂಡಿದ್ದಾರೆ. ಮಾಸ್ಟರಿಗೆ ಹೇಳುತ್ತಿದ್ದಾರೆ, ತಮ್ಮ ಕಾಲನ್ನು ಸ್ವಲ್ಪ ಮೃದುವಾಗಿ ಒತ್ತುವಂತೆ. ಮತ್ತೆ ಕೆಲವು ನಿಮಿಷಗಳಾದ ನಂತರ ಹೇಳುತ್ತಿದ್ದಾರೆ, ತಮ್ಮ ಶರೀರವನ್ನು-ವಿಶೇಷತಃ ಎದೆಯ ಭಾಗವನ್ನು-ಒತ್ತುವಂತೆ. ಒಂದು ಕಿಂಚಿತ್ ನಿದ್ರೆ ಮಾಡಿದ ನಂತರ ಮಾಸ್ಟರಿಗೆ ಹೇಳುತ್ತಿದ್ದಾರೆ, “ಈಗ ನೀನು ಹೋಗಿ ನಿದ್ರೆ ಮಾಡು. ನಾನು ಒಬ್ಬನೆ ಇದ್ದರೆ ನಿದ್ರೆ ಬರುತ್ತದೆಯೆ ನೋಡೋಣ.” ಅವರು ರಾಮಲಾಲನಿಗೆ ಹೇಳುತ್ತಿದ್ದಾರೆ, “ಈತ (ಮಾಸ್ಟರ್) ಮತ್ತು ರಾಖಾಲ ಮನೆಯೊಳಗೇ ಮಲಗಿಕೊಳ್ಳಬಹುದಲ್ಲ” ಎಂದು.
೨೮ನೆ ಆಗಸ್ಟ್ ೧೮೮೫, ಶ್ರಾವಣ ಕೃಷ್ಣ ತೃತೀಯ, ಶುಕ್ರವಾರ
ಬೆಳಗಾಯಿತು. ಪರಮಹಂಸರು ಹಾಸಿಗೆಯಿಂದೆದ್ದು ಭಗವತಿಯ ಧ್ಯಾನ ಮಾಡುತ್ತಿದ್ದಾರೆ. ಅವರಿಗೆ ಗಂಟಲ ರೋಗ ಬಂದಿರುವುದರಿಂದ ಅವರ ಶ್ರೀಮುಖದಿಂದ ಭಗವತಿಯ ಮಧುರ ನಾಮವನ್ನು ಕೇಳುವ ಸುಯೋಗ ಭಕ್ತರಿಗೆ ಈಗ ತಪ್ಪಿಹೋಗಿದೆ.
ಪರಮಹಂಸರು ಪ್ರಾತಃಕೃತ್ಯಗಳನ್ನೆಲ್ಲ ಮುಗಿಸಿಕೊಂಡು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಅವರು ಮಾಸ್ಟರನ್ನು ಕೇಳುತ್ತಿದ್ದಾರೆ, “ಒಳ್ಳೇದು, ನನಗೆ ಈಗ ರೋಗ ಏಕೆ ಬಂತು?”
ಮಾಸ್ಟರ್: “ಎಲ್ಲರಿಗೂ ಆಗುವ ಹಾಗೆ ನಿಮಗೂ ಆಗದೆ ಇದ್ದರೆ, ಜೀವರಿಗೆ ಸಾಹಸ ಉಂಟಾಗದು. ಅವರು ನೋಡುತ್ತಾ ಇದ್ದಾರೆ, ನಿಮ್ಮ ದೇಹ ಇಷ್ಟೊಂದು ರೋಗಗ್ರಸ್ತವಾಗಿದ್ದರೂ ನಿಮ್ಮ ಮನಸ್ಸು ಭಗವಂತನೊಬ್ಬನನ್ನು ವಿನಾ ಬೇರೆ ಏನನ್ನೂ ಚಿಂತಿಸುತ್ತಿಲ್ಲವಲ್ಲ ಎಂಬುದನ್ನು!”
ಶ್ರೀರಾಮಕೃಷ್ಣರು (ನಗುತ್ತ): “ಬಲರಾಮ ಹೇಳಿದ, ‘ನಿಮಗೂ ಹೀಗಾಗುವುದಾದರೆ, ನಾವು ರೋಗಗ್ರಸ್ತರಾಗಿರುವುದರಲ್ಲಿ ಆಶ್ಚರ್ಯಪಡುವುದೇನಿದೆ?’ ಸೀತಾವಿಯೋಗದಿಂದ ರಾಮ ತನ್ನ ಧನುಸ್ಸನ್ನು ಎತ್ತಲಾಗದಿರುವುದನ್ನು ನೋಡಿ ಲಕ್ಷ್ಮಣನಿಗೆ ಬಹಳ ಆಶ್ಚರ್ಯವಾಗಿಬಿಟ್ಟಿತು. ಬ್ರಹ್ಮನೂ ಪಂಚಭೂತಗಳ ಬಲೆಗೆ ಬಿದ್ದು ಸುಮ್ಮನೆ ಅಳುತ್ತಿ ದ್ದಾನೆ.”
ಮಾಸ್ಟರ್: “ಯೇಸುವೂ ತನ್ನ ಭಕ್ತರ ದುಃಖವನ್ನು ನೋಡಿ ಸಹಿಸಲಾರದೆ ಸಾಮಾನ್ಯರಂತೆ ಅತ್ತನಂತೆ.”
ಶ್ರೀರಾಮಕೃಷ್ಣರು: “ಅವರಿಗೇನಾಗಿತ್ತು?”
ಮಾಸ್ಟರ್: “ಮೇರಿ ಮತ್ತು ಮಾರ್ಥ ಎಂಬ ಸೋದರಿಯರಿಗೆ ಲ್ಯಾಸರಸ್ ಎಂಬ ಸೋದರನಿದ್ದ. ಇವರು ಮೂವರೂ ಯೇಸುವಿನ ಭಕ್ತರು. ಲ್ಯಾಸರಸ್ ಸತ್ತುಹೋಗಿ ಬಿಡುತ್ತಾನೆ. ಯೇಸು ಅವರ ಮನೆಗೆ ಹೊರಟು ದಾರಿಯಲ್ಲಿ ಮುಂದುವರಿಯುತ್ತಿದ್ದನಂತೆ. ಮೇರಿ ಓಡಿಹೋಗಿ ಆತನನ್ನು ದಾರಿಯಲ್ಲೇ ಸಂಧಿಸಿ ಆತನ ಪಾದಗಳಿಗೆ ಅಡ್ಡ ಬಿದ್ದು ಅಳುತ್ತ ಹೇಳಿದಳಂತೆ, ‘ಪ್ರಭು, ನೀನು ಇನ್ನು ಸ್ವಲ್ಪ ಮುಂಚೆ ಬಂದಿದ್ದರೆ ಆತ ಸಾಯುತ್ತಿರಲಿಲ್ಲ’ ಅಂತ. ಆಕೆಯ ಅಳುವನ್ನು ನೋಡಿ, ಯೇಸುವೂ ಅಳಲಾರಂಭಿಸಿದನಂತೆ.
“ಬಳಿಕ ಯೇಸು ಲ್ಯಾಸರಸ್ಸನ ಗೋರಿಯ ಹತ್ತಿರ ಹೋಗಿ ಆತನ ಹೆಸರು ಹಿಡಿದು ಕೂಗಿದನಂತೆ. ಒಡನೆಯೇ ಲ್ಯಾಸರಸ್ಸನಿಗೆ ಪ್ರಾಣ ಬಂದು ಹೊರಕ್ಕೆ ಎದ್ದುಬಂದನಂತೆ.”
ಶ್ರೀರಾಮಕೃಷ್ಣರು: “ಆದರೆ ನನ್ನ ಕೈಯಲ್ಲಿ ಅದೆಲ್ಲ ಸಾಧ್ಯವಿಲ್ಲ.”
ಮಾಸ್ಟರ್: “ಬೇಕೂ ಅಂತ ನೀವು ಅವನ್ನೆಲ್ಲ ಮಾಡಿ ತೋರಿಸುತ್ತಿಲ್ಲ. ಅವೆಲ್ಲ ಪವಾಡಗಳು; ಅದಕ್ಕಾಗಿಯೇ ನೀವು ಅವನ್ನು ಮಾಡಿ ತೋರಿಸುತ್ತಿಲ್ಲ. ಅವನ್ನೆಲ್ಲ ಮಾಡಿ ತೋರಿಸಿದರೆ ಜನರ ಮನಸ್ಸು ದೇಹದ ಕಡೆಗೆ ಹೋಗುತ್ತದೆಯೇ ವಿನಾ ಶುದ್ಧಭಕ್ತಿಯ ಕಡೆಗಲ್ಲ. ಅದಕ್ಕಾಗಿಯೇ ನೀವು ಅವನ್ನು ಮಾಡಿ ತೋರಿಸುತ್ತಿಲ್ಲ. ನಿಮಗೂ ಯೇಸುವಿಗೂ ಅನೇಕ ಸಾದೃಶ್ಯಗಳಿವೆ.”
ಶ್ರೀರಾಮಕೃಷ್ಣರು (ನಗುತ್ತ): “ಏನೇನು ಸಾದೃಶ್ಯಗಳಪ್ಪ ಅವು!”
ಮಾಸ್ಟರ್: “ನೀವು ಭಕ್ತರಿಗೆ ಉಪವಾಸ ಮಾಡಬೇಕೆಂದಾಗಲಿ ಅಥವಾ ಕಠೋರ ಸಾಧನೆ ಮಾಡಬೇಕೆಂದಾಗಲಿ ಹೇಳುತ್ತಿಲ್ಲ. ಊಟೋಪಚಾರಗಳ ಸಂಬಂಧವಾಗಿ ಅಂಥ ಕಟ್ಟುನಿಟ್ಟಿನ ನಿಯಮಗಳನ್ನೇನೂ ನೀವು ಎಣಿಸುತ್ತಿಲ್ಲ. ಯೇಸುವಿನ ಶಿಷ್ಯರು ಶಾಸ್ತ್ರೋಲ್ಲಂಘನೆ ಮಾಡಿ ಭಾನುವಾರ ಊಟಮಾಡಿದರಂತೆ: ಅದಕ್ಕಾಗಿ ಕರ್ಮಠರು ಅವರನ್ನು ತರಾಟೆಗೆ ತೆಗೆದುಕೊಂಡರಂತೆ. ಆಗ ಯೇಸು ಹೇಳಿದನಂತೆ, ‘ಅವರು ಉಂಡು ತಿಂದು ಆನಂದಪಡಲೇಬೇಕು. ಎಲ್ಲಿಯವರೆಗೆ ವರ ಜೊತೆಯಲ್ಲಿದ್ದಾನೋ, ಅಲ್ಲಿಯವರೆಗೆ ವರನ ಅನುಯಾಯಿಗಳು ಆನಂದಪಡಲೇಬೇಕು’.”
ಶ್ರೀರಾಮಕೃಷ್ಣರು: “ಇದರ ಅರ್ಥವೇನು?”
ಮಾಸ್ಟರ್: “ಅಂದರೆ ಎಲ್ಲಿಯವರೆಗೆ ಅವತಾರಪುರುಷ ಜೊತೆಯಲ್ಲಿದ್ದಾನೊ, ಅಲ್ಲಿಯವರೆಗೆ ಆತನ ಸಾಂಗೋಪಾಂಗಿಗಳು ಆನಂದಪಟ್ಟೇ ಪಡಬೇಕು. ಅವರೇಕೆ ನಿರಾನಂದಿಗಳಾಗಬೇಕು? ಆದರೆ ಯಾವಾಗ ಆತ ತನ್ನ ಸ್ವಧಾಮಕ್ಕೆ ಹೊರಟು ಹೋಗುತ್ತಾನೊ, ಆಗ ಅವರು ನಿರಾನಂದರಾಗಿರಬೇಕಾದ ದಿನ ಬರುತ್ತದೆ.”
ಶ್ರೀರಾಮಕೃಷ್ಣರು (ನಗುತ್ತ): “ಇನ್ನೇನಾದರೂ ಸಾಮ್ಯಗಳು?”
ಮಾಸ್ಟರ್: “ಹೌದು, ಇವೆ. ನೀವು ಹೇಳುತ್ತೀರಲ್ಲ, ‘ಹುಡುಗರ ಹೃದಯವನ್ನು ಕಾಮಕಾಂಚನ ಇನ್ನೂ ಹೊಕ್ಕಿಲ್ಲ; ಅವರು ಉಪದೇಶವನ್ನು ಗ್ರಹಿಸಬಲ್ಲರು; ಅದು ಹೊಸ ಮಡಕೆಯಲ್ಲಿ ಹಾಲು ಹಾಕಿಡಬಹುದಲ್ಲ ಹಾಗೆ; ಮೊಸರಿನ ಮಡಕೆಯಲ್ಲಿ ಹಾಕಿಟ್ಟರೆ ಅದು ಕೆಟ್ಟು ಹೋಗುವ ಸಂಭವ’ ಅಂತ. ಆತನೂ ಇದೇ ರೀತಿಯಾಗಿ ಹೇಳುತ್ತಿದ್ದ.”
ಶ್ರೀರಾಮಕೃಷ್ಣರು: “ಏನು ಹೇಳುತ್ತಿದ್ದ?”
ಮಾಸ್ಟರ್: “ಹಳೆ ಸೀಸೆಯಲ್ಲಿ ಹೊಸ ಮದ್ಯ ಹಾಕಿಟ್ಟರೆ, ಅದು ಒಡೆದುಬಿಡುವ ಸಂಭವ. ಹಳೆ ಬಟ್ಟೆಗೆ ಹೊಸ ಬಟ್ಟೆ ತೇಪೆಹಾಕಿದರೆ ಹಳೇದು ಬೇಗ ಹರಿದುಹೋಗಿ ಬಿಡುತ್ತದೆ.
“ಮತ್ತೆ ನೀವು ಹೇಳುತ್ತೀರಲ್ಲ, ‘ನೀವು ಮತ್ತು ತಾಯಿ ಒಂದೇ’ ಅಂತ. ಹಾಗೆಯೇ ಯೇಸು ಕೂಡ ಹೇಳುತ್ತಿದ್ದ, ‘ನಾನು ಮತ್ತು ನನ್ನ ತಂದೆ ಒಂದೇ’ ಎಂದು.”
ಶ್ರಿರಾಮಕೃಷ್ಣರು ನಗುತ್ತ: “ಇನ್ನೇನಾದರು?”
ಮಾಸ್ಟರ್: “ನೀವು ಹೇಳುತ್ತೀರಲ್ಲ, ‘ವ್ಯಾಕುಲರಾಗಿ ಆತನನ್ನು ಕರೆದರೆ ಆತ ಆಲಿಸಿಯೇ ಆಲಿಸುತ್ತಾನೆ’ ಅಂತ. ಹಾಗೆಯೇ ಯೇಸು ಹೇಳುತ್ತಿದ್ದ, ‘ವ್ಯಾಕುಲನಾಗಿ ಬಾಗಿಲನ್ನು ತಟ್ಟಿ, ಆಗ ಅದು ತೆರೆದು ನಿಲ್ಲುತ್ತದೆ’ ಅಂತ.”
ಶ್ರೀರಾಮಕೃಷ್ಣರು: “ಒಳ್ಳೆಯದು, ಭಗವಂತ ಮತ್ತೆ ಅವತರಿಸಿರುವುದಾದರೆ, ಅದು ಆತನ ಪೂರ್ಣಾವತಾರವೊ, ಅಂಶಾವತಾರವೊ ಅಥವಾ ಲೇಶಾವತಾರವೊ? ಕೆಲವರು ಹೇಳುತ್ತಿದ್ದಾರೆ, ಪೂರ್ಣಾವತಾರ ಅಂತ.”
ಮಾಸ್ಟರ್: “ಪೂರ್ಣವತಾರ, ಅಂಶಾವತಾರ, ಲೇಶಾವತಾರ ಇವುಗಳ ಅರ್ಥ ನನಗೆ ಸರಿಯಾಗಿ ಆಗುತ್ತಿಲ್ಲ. ಅವತಾರಪುರುಷ ಗೋಡೆಯೊಳಗಿರುವ ಒಂದು ಕಂಡಿಯ ಹಾಗೆ ಅಂತ ಒಮ್ಮೆ ಹೇಳಿದ್ದೀರಲ್ಲ, ಅದು ನನಗೆ ಅರ್ಥವಾಗಿದೆ.”
ಶ್ರೀರಾಮಕೃಷ್ಣರು: “ಅದು ಹೇಗೆ ಹೇಳು ನೋಡೋಣ?”
ಮಾಸ್ಟರ್: “ಗೋಡೆಯೊಳಗೆ ಒಂದು ಗುಂಡಾದ ಕಂಡಿಯಿದೆ. ಅದರ ಮೂಲಕ ಗೋಡೆಯ ಆ ಪಕ್ಕದಲ್ಲಿರುವ ವಿಶಾಲ ಮೈದಾನದ ಒಂದು ಭಾಗವನ್ನು ನೋಡಬಹುದು. ಅದೇ ರೀತಿಯಾಗಿ ನಿಮ್ಮ ಮೂಲಕ ಆ ಅನಂತ ಭಗವಂತನ ಒಂದು ಕಿಂಚಿತ್ ಭಾಗವನ್ನು ನಾವು ನೋಡುತ್ತಿದ್ದೇವೆ.”
ಶ್ರೀರಾಮಕೃಷ್ಣರು: “ಹೌದು, ಒಂದೇ ಸಲಕ್ಕೆ ಐದಾರು ಮೈಲಿ ವಿಸ್ತೀರ್ಣದ ಪ್ರದೇಶವನ್ನು ನೋಡಬಹುದು.”
ಮಾಸ್ಟರ್ ಗಂಗೆಗೆ ಹೋಗಿ ಸ್ನಾನ ಮುಗಿಸಿ ಮತ್ತೆ ಪರಮಹಂಸರ ಕೊಠಡಿಯಲ್ಲಿ ಕುಳಿತುಕೊಂಡಿದ್ದಾನೆ. ಘಂಟೆ ಬೆಳಗಿನ ಎಂಟು. ಆತ ತನಗೆ ಜಗನ್ನಾಥನ ಅನ್ನಪ್ರಸಾದಬೇಕೆಂದು ಲಾಟುವನ್ನು ಕೇಳಿದ. ಪರಮಹಂಸರು ಮಾಸ್ಟರ್ ಹತ್ತಿರ ಬಂದು ನಿಂತುಕೊಂಡು ಹೇಳುತ್ತಿದ್ದಾರೆ, “ನೀನು ಹೀಗೆಯೇ ಮಾಡು. ಯಾರು ಭಕ್ತರೊ ಅವರು ಮೊದಲು ಪ್ರಸಾದವನ್ನು ತಿನ್ನದೆ ಬೇರೆ ಏನನ್ನೂ ತಿನ್ನುವುದಿಲ್ಲ” ಅಂತ.
ಮಾಸ್ಟರ್: “ನಾನು ಬಲರಾಮನ ಮನೆಯಿಂದ ಸ್ವಲ್ಪ ಜಗನ್ನಾಥನ ಅನ್ನಪ್ರಸಾದವನ್ನು ತೆಗೆದುಕೊಂಡು ಬಂದಿದ್ದೇನೆ. ಒಂದೆರಡು ಕಾಳನ್ನು ದಿನಾ ತಿನ್ನುತ್ತಿದ್ದೇನೆ.”
ಮಾಸ್ಟರ್ ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮಮಾಡಿ ಅವರಿಂದ ಬೀಳ್ಕೊಳ್ಳುತ್ತಿದ್ದಾನೆ. ಅವರು ಪ್ರೀತಿಯಿಂದ ಅವನಿಗೆ ಹೇಳುತ್ತಿದ್ದಾರೆ, “ಬೆಳಗಿನ ಹೊತ್ತಿನಲ್ಲೇ ಬಂದು ಬಿಡು; ಭಾದ್ರಪದದ ಬಿಸಿಲು ಬಹಳ ಕೆಟ್ಟದ್ದು.”
೩೧ನೇ ಆಗಸ್ಟ್ ೧೮೮೫, ಶ್ರಾವಣ ಕೃಷ್ಣ ಷಷ್ಠಿ, ಸೋಮವಾರ
ಪರಮಹಂಸರು ತಮ್ಮ ಕೊಠಡಿಯಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಘಂಟೆ ರಾತ್ರಿ ಎಂಟು. ಗಂಟಲಿನಲ್ಲಿ ಹುಣ್ಣು ಆಗಿ ಅವರು ಅಸ್ವಸ್ಥರಾಗಿದ್ದಾರೆ. ಆದರೂ ಹಗಲೂ ಇರುಳೂ ಭಕ್ತರಿಗೆ ಯಾವ ರೀತಿಯ ಮಂಗಳವನ್ನು ತರುವುದು ಎಂಬ ಏಕಮಾತ್ರ ಚಿಂತನೆಯೇ ಅವರ ಹೃದಯದಲ್ಲಿ. ಒಂದೊಂದು ಸಲ ಬಾಲಕನೋಪಾದಿಯಲ್ಲಿ ತಮ್ಮ ರೋಗದ ಸಂಬಂಧವಾಗಿ ಆಕಾಂಕ್ಷಿತರಾಗುತ್ತಾರೆ; ಮರುಕ್ಷಣವೇ ಎಲ್ಲವನ್ನೂ ಮರೆತು ಪ್ರೇಮೋನ್ಮತ್ತರಾಗಿಬಿಡುತ್ತಾರೆ. ಭಕ್ತರ ಕಡೆ ಇರುವ ಅವರ ಪ್ರೀತಿ ವಾತ್ಸಲ್ಯಭಾವದಿಂದ ಸುಮ್ಮನೆ ತುಂಬಿತುಳುಕಾಡುತ್ತಿದೆ.
ಎರಡು ದಿನಗಳ ಹಿಂದೆ-ಶನಿವಾರ ರಾತ್ರಿ ಪೂರ್ಣ ಬರೆದಿದ್ದ ಪತ್ರ ಪರಮಹಂಸರಿಗೆ ಬಂದಿದೆ. ಪೂರ್ಣ ಬರೆದಿದ್ದ, “ನನಗೆ ಅತ್ಯಂತ ಆನಂದವಾಗುತ್ತಿದೆ, ಆ ಆನಂದದ ದೆಸೆಯಿಂದ ಒಮ್ಮೊಮ್ಮೆ ನನಗೆ ರಾತ್ರಿ ವೇಳೆ ನಿದ್ದೆ ಹತ್ತುತ್ತಿಲ್ಲ” ಅಂತ. ಆ ಪತ್ರವನ್ನು ಓದಿಸಿ ಕೇಳಿದ ನಂತರ ಪರಮಹಂಸರು ಅನ್ನುತ್ತಿದ್ದಾರೆ, “ನನ್ನ ಶರೀರದಲ್ಲಿ ರೋಮಾಂಚನವಾಗುತ್ತಿದೆ. ಈ ಆನಂದಾವಸ್ಥೆ ಇನ್ನು ಮುಂದೆಯೂ ಆತನಲ್ಲಿ ಅಳಿಯದೆ ಉಳಿದುಕೊಳ್ಳುತ್ತದೆ. ಎಲ್ಲಿ, ಆ ಕಾಗದ ನೋಡೋಣ” ಅಂತ. ಆ ಕಾಗದವನ್ನು ತಮ್ಮ ಎರಡು ಕೈಗಳಿಂದಲೂ ಒತ್ತಿ ಹೇಳುತ್ತಿದ್ದಾರೆ, “ಬೇರೆಯವರ ಪತ್ರಗಳನ್ನು ನಾನು ಮುಟ್ಟಲೂ ಆರೆ; ಆದರೆ ಇದು ಬಹಳ ಒಳ್ಳೆ ಪತ್ರ” ಅಂತ. ಇಂದು ಅವರು ನಿದ್ರೆಮಾಡುತ್ತಿದ್ದ ಹಾಗೆಯೇ ಅತ್ಯಂತ ಬೆವರಲಾರಂಭಿಸಿದರು. ಥಟ್ಟನೆ ಹಾಸಿಗೆಯಿಂದೆದ್ದು ಹೇಳುತ್ತಿದ್ದಾರೆ, “ನನಗನಿಸುತ್ತದೆ, ಈ ರೋಗ ನನ್ನನ್ನು ಬಿಟ್ಟು ಹೋಗುವುದಿಲ್ಲ” ಅಂತ. ಅವರ ಬಾಯಿಂದ ಈ ಮಾತನ್ನು ಕೇಳಿ ಭಕ್ತರೆಲ್ಲ ಚಿಂತಾಕ್ರಾಂತರಾಗಿದ್ದಾರೆ. ಪರಮಹಂಸರಿಗೆ ಉಪಚಾರ ಮಾಡಲು ಶ್ರೀಶಾರದಾದೇವಿಯವರು ತೌರುಮನೆಯಿಂದ ದಕ್ಷಿಣೇಶ್ವರಕ್ಕೆ ಬಂದಿದ್ದಾರೆ; ನಹಬತ್ಖಾನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಬಂದು ಅಲ್ಲಿ ವಾಸಿಸುತ್ತಿರುವುದು ಭಕ್ತರಲ್ಲಿ ಅನೇಕರಿಗೆ ಬಹಳ ಕಾಲದವರಿಗೆ ಗೊತ್ತೇ ಆಗಲಿಲ್ಲ. ಒಬ್ಬ ಭಕ್ತೆಯು (ಗೋಲಾಪ್ ಮಾ) ಈಗ ಕೆಲವು ದಿನಗಳಿಂದ ಶಾರದಾದೇವಿಯವರೊಡನೆ ಇದ್ದಾಳೆ. ಆಕೆ ಆಗಾಗ ಬಂದು ಪರಮಹಂಸರನ್ನು ನೋಡಿ ಹೋಗುತ್ತಿದ್ದಾಳೆ. ಅವರು ಆಕೆಗೆ ಹೇಳುತ್ತಿದ್ದಾರೆ, “ನೀನು ಅನೇಕ ದಿನಗಳಿಂದ ಇಲ್ಲೇ ಇದ್ದುಬಿಟ್ಟಿದ್ದೀಯೆ. ಜನಗಳೇನೆಂದು ಕೊಂಡಾರು? ಹತ್ತು ಹದಿನೈದು ದಿನಗಳ ಮಟ್ಟಿಗಾದರೂ ಮನೆಗೆ ಹೋಗಿ ಬಾ” ಅಂತ.
ಪರಮಹಂಸರು ಬಲಮಗ್ಗುಲಾಗಿ ತಮ್ಮ ಮಂಚದ ಮೇಲೆ ಸುಮ್ಮನೆ ಮಲಗಿಕೊಂಡಿದ್ದಾರೆ. ಮುಸ್ಸಂಜೆಯಾಗಿದೆ. ಮಾಸ್ಟರ್ ಮತ್ತು ಗಂಗಾಧರ ಕಲ್ಕತ್ತದಿಂದ ಬಂದಿದ್ದಾರೆ. ಪರಮಹಂಸರು ಮಾಸ್ಟರೊಡನೆ ಮಾತುಕತೆಯಾಡುತ್ತಿದ್ದಾರೆ. ಗಂಗಾಧರ ಅವರ ಪಾದದ ಬಳಿ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು: “ಇಲ್ಲಿಗೆ ಇಬ್ಬರು ಹುಡುಗರು ಬಂದಿದ್ದರು. ಒಬ್ಬನ ಹೆಸರು ‘ಸುಬೋಧ’. ಇನ್ನೊಬ್ಬನ ಹೆಸರು ‘ಕ್ಷಿರೋದ’. ಮೊದಲನೆಯವನು ಶಂಕರಘೋಷನ ಮರಿಮಗ, (ಎರಡನೆಯವನು) ಸುಬೋಧನ ನೆರೆಮನೆಯವ. ಇಬ್ಬರೂ ಬಹಳ ಒಳ್ಳೆ ಹುಡುಗರು. ನಾನು ಅವರಿಗೆ ಹೇಳಿದೆ, ನನಗೆ ಶರೀರಾರೋಗ್ಯ ಸರಿಯಾಗಿಲ್ಲ, ಹೋಗಿ ಮಾಸ್ಟರಿಂದ ಉಪದೇಶ ಪಡೆದುಕೊಳ್ಳಿ ಅಂತ. ನೀನು ಅವರ ಯೋಗಕ್ಷೇಮವನ್ನು ಸ್ವಲ್ಪ ಮನಸ್ಸಿಟ್ಟು ನೋಡಿಕೊ.”
ಮಾಸ್ಟರ್: “ಆಗಲಿ. ಅವರು ನನ್ನ ನೆರೆಯವರೆ.”
ಶ್ರೀರಾಮಕೃಷ್ಣರು: “ಇನ್ನೊಂದು ದಿನವೂ ನನ್ನ ಮೈಯೆಲ್ಲಾ ಬೆವರಿ ನಿದ್ರಾಭಂಗವಾಯಿತು. ಇದು ಎಂಥಾ ರೋಗವೊ ನನಗೆ ಬಗೆಹರಿಯುತ್ತಿಲ್ಲ.”
ಮಾಸ್ಟರ್: “ಭಗವಾನ್ ರುದ್ರನನ್ನು ಇಲ್ಲಿಗೆ ಕರೆತರಲು ನಾವು ಯೋಚಿಸಿದ್ದೇವೆ. ಆತ ಎಮ್.ಡಿ.; ನಿಪುಣ ಡಾಕ್ಟರ್.”
ಶ್ರೀರಾಮಕೃಷ್ಣರು: “ಆತನಿಗೆ ಏನು ಕೊಡಬೇಕು?”
ಮಾಸ್ಟರ್: “ಹೊರಗಡೆ ಹೋದರೆ ಪ್ರತಿ ವಿಸಿಟ್ಟಿಗೂ ಇಪ್ಪತ್ತೋ ಇಪ್ಪತ್ತೈದೋ ತೆಗೆದುಕೊಳ್ಳುತ್ತಾನೆ.”
ಶ್ರೀರಾಮಕೃಷ್ಣರು: “ಹಾಗಾದರೆ ಬೇಡ.”
ಮಾಸ್ಟರ್: “ನಾವು ಎಲ್ಲೋ ನಾಲ್ಕೈದು ರೂಪಾಯಿ ಮಾತ್ರ ಕೊಡಲು ಹೋಗುತ್ತೇವೆ.”
ಶ್ರೀರಾಮಕೃಷ್ಣರು: “ಒಳ್ಳೇದು, ಒಂದು ವಿಷಯ. ‘ದಯವಿಟ್ಟು ಅವರನ್ನು ಒಮ್ಮೆ ನೋಡಿ ಬರುವಿರಂತೆ ಬನ್ನಿ’ ಅಂತ ಕರೆದರೆ? ಇಲ್ಲಿನ ವಿಷಯ ಕಿಂಚಿತ್ತೂ ಆತನ ಕಿವಿಗೆ ಬಿದ್ದೇ ಇಲ್ಲವೇನು?”
ಮಾಸ್ಟರ್: “ಬಿದ್ದಿರಬೇಕು ಅಂತ ಅನ್ನಿಸುತ್ತಿದೆ. ಆತನೇನೊ ಒಂದು ವಿಧವಾಗಿ ಏನೂ ಛಾರ್ಜು ಮಾಡುವುದಿಲ್ಲ ಅಂತ ಹೇಳಿದ್ದಾನೆ. ಆದರೂ ನಾವು ಆತನಿಗೆ ಸ್ವಲ್ಪ ಹಣವನ್ನು ಕೊಡಲು ಹೋಗುತ್ತೇವೆ. ನಾವು ಹಾಗೆ ಮಾಡಿದರೆ ಮತ್ತೆ ಕರೆದಾಗ ಬರುತ್ತಾನೆ.”
ಶ್ರೀರಾಮಕೃಷ್ಣರು: “ನೀನು ಡಾಕ್ಟರ್ ನಿತಾಯಿಯನ್ನು ಕರೆದುಕೊಂಡು ಬಾ. ಆತ ಬಹಳ ಒಳ್ಳೆಯವ. ಅಯ್ಯೋ! ಡಾಕ್ಟರುಗಳು ಬಂದರೂ ಅವರೇನು ತಾನೆ ಮಾಡಿಯಾರು? ಕೇವಲ ನನ್ನ ಗಂಟಲನ್ನು ಹಿಸುಕಿ ಹಿಸುಕಿ ರೋಗವನ್ನು ಜಾಸ್ತಿಮಾಡಿ ಹೋಗುತ್ತಾರೆ.”
ಘಂಟೆ ರಾತ್ರಿ ಒಂಭತ್ತು. ಪರಮಹಂಸರು ರವೆಪಾಯಸ ಕುಡಿಯಲು ಎದ್ದು ಕುಳಿತಿದ್ದಾರೆ. ಅದನ್ನು ಕುಡಿದಾಗ ಗಂಟಲು ಏನು ತೊಂದರೆಯನ್ನೂ ಕೊಡಲಿಲ್ಲ. ಅದಕ್ಕಾಗಿ ಆನಂದದಿಂದ ಹಿಗ್ಗಿ ಹಿಗ್ಗಿ ಮಾಸ್ಟರಿಗೆ ಹೇಳುತ್ತಿದ್ದಾರೆ, “ಇಂದು ಸ್ವಲ್ಪ ಕುಡಿಯುವುದಕ್ಕೆ ಆಯಿತು. ಮನಸ್ಸಿಗೆ ಬಹಳ ಆನಂದವಾಗಿಬಿಟ್ಟಿದೆ” ಎಂದು.
೧ನೆ ಸೆಪ್ಟೆಂಬರ್ ೧೮೮೫, ಮಂಗಳವಾರ
ಪರಮಹಂಸರು ಸ್ನಾನಕ್ಕೆ ಸಿದ್ಧರಾಗುತ್ತಿದ್ದಾರೆ. ಅವರ ಕೊಠಡಿಯ ದಕ್ಷಿಣ ವರಾಂಡದಲ್ಲಿ ಅವರ ಮೈಗೆ ಒಬ್ಬ ಭಕ್ತ ಎಣ್ಣೆ ಹಚ್ಚುತ್ತಿದ್ದಾನೆ. ಮಾಸ್ಟರ್ ಗಂಗಾಸ್ನಾನ ಮುಗಿಸಿಕೊಂಡು ಬಂದು ಪರಮಹಂಸರಿಗೆ ಪ್ರಣಾಮಮಾಡಿದ.
ಪರಮಹಂಸರು ತಮ್ಮ ಸ್ನಾನವಾದ ನಂತರ ಒಂದು ಚೌಕವನ್ನು ಸುತ್ತಿಕೊಂಡೆ ದಕ್ಷಿಣದ ವರಾಂಡಕ್ಕೆ ಹೋಗಿ ಅಲ್ಲಿಂದಲೇ ದೇವಾಲಯಗಳ ಕಡೆ ನಮಸ್ಕಾರ ಹಾಕುತ್ತಿದ್ದಾರೆ. ದೇಹಾರೋಗ್ಯ ಸರಿಯಾಗಿಲ್ಲದೆ ಇದ್ದುದರಿಂದ ಅವರು ದೇವಾಲಯಗಳಿಗೆ ಹೋಗಲಾಗುತ್ತಿಲ್ಲ.
ಇಂದು ಶ್ರೀಕೃಷ್ಣಜನ್ಮಾಷ್ಟಮಿ. ರಾಮನೇ ಮೊದಲಾದ ಭಕ್ತರು ಪರಮಹಂಸರಿಗೆ ಹೊಸ ಉಡುಪನ್ನು ತಂದಿದ್ದಾರೆ. ಅದನ್ನು ಅವರು ಹಾಕಿಕೊಂಡನಂತರ, ಅವರ ಶುದ್ಧ ಅಪಾಪವಿದ್ಧ ದೇಹ ಇನ್ನೂ ಹೆಚ್ಚು ಶೋಭಾಯಮಾನವಾಗಿ ಕಾಣಲಾರಂಭಿಸಿತು. ಮತ್ತೆ ಅವರು ದೇವದೇವಿಯರಿಗೆ ಪ್ರಣಾಮ ಮಾಡುತ್ತಿದ್ದಾರೆ.
ಗೋಪಾಲನ ತಾಯಿ ತನ್ನ ಗೋಪಾಲನಿಗೆಂದು (ಪರಮಹಂಸರಿಗೆಂದು) ಏನೊ ತಿಂಡಿಯನ್ನು ಮಾಡಿಕೊಂಡು ಕಾಮಾರಹಾಟಿಯಿಂದ ಬಂದಿದ್ದಾಳೆ. ಆಕೆ ದುಃಖವನ್ನು ಪ್ರದರ್ಶಿಸುತ್ತ ಹೇಳುತ್ತಿದ್ದಾಳೆ, “ಅದನ್ನು ನೀನು ತಿನ್ನುವ ಹಾಗಿಲ್ಲವಲ್ಲ” ಅಂತ.
ಶ್ರೀರಾಮಕೃಷ್ಣರು: “ಇಲ್ಲಿ ನೋಡು, ನನಗೆ ಗಂಟಲು ಹುಣ್ಣಾಗಿರುವುದನ್ನು.”
ಗೋಪಾಲನ ತಾಯಿ: “ನನ್ನ ದುರದೃಷ್ಟ. ಕೈಯಲ್ಲಾದರೂ ಒಂದು ಸ್ವಲ್ಪ ತೆಗೆದುಕೊ.”
ಶ್ರೀರಾಮಕೃಷ್ಣರು: “ನೀನು ನನಗೆ ಆಶೀರ್ವಾದ ಮಾಡು.”
ಭಕ್ತರು ಸ್ವಲ್ಪ ಕಲ್ಲುಸಕ್ಕರೆ ತಂದಿದ್ದಾರೆ. ಗೋಪಾಲನ ತಾಯಿ ಪರಮಹಂಸರನ್ನು ಕೇಳಿದಳು, “ಇದನ್ನು ತೆಗೆದುಕೊಂಡು ಹೋಗಿ ನಹಬತ್ಖಾನೆಯಲ್ಲಿ ಇಡಲೇನು?” ಅಂತ. ಅದಕ್ಕೆ ಅವರು ಹೇಳಿದರು, “ಬೇಡ, ಇಲ್ಲಿಯೇ ಇಡು. ಭಕ್ತರಿಗೆ ಸಿಹಿಯನ್ನು ಹಂಚುವ ಅಭ್ಯಾಸ ಇಟ್ಟುಕೊಂಡಿದ್ದೇನೆ. ಅದಕ್ಕಾಗಿ ಒಂದು ನೂರಾರು ಸಲ ಅಲ್ಲಿಗೆ ಹೋಗಿಬರುವವರಾರು? ಇಲ್ಲೇ ಇರಲಿ.”
ಘಂಟೆ ಹನ್ನೊಂದು. ಕಲ್ಕತ್ತದಿಂದ ಭಕ್ತರು ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಬಲರಾಮ, ನರೇಂದ್ರ, ಚಿಕ್ಕ ನರೇನ, ನವಗೋಪಾಲ, ಕಾಟೋಯಾದ ಒಬ್ಬ ವೈಷ್ಣವ ಇವರೇ ಮೊದಲಾದವರು ಆಗಲೇ ಬಂದಿದ್ದಾರೆ. ರಾಖಾಲ ಮತ್ತು ಲಾಟು ಪರಮಹಂಸರೊಡನೆಯೇ ಇದ್ದಾರೆ. ಒಬ್ಬ ಪಂಜಾಬಿ ಸಾಧು ಕೆಲವು ದಿವಸಗಳಿಂದ ಪಂಚವಟಿಯಲ್ಲಿ ವಾಸಮಾಡುತ್ತಿದ್ದಾನೆ.
ಚಿಕ್ಕ ನರೇನನ ಹಣೆಮೇಲೆ ಒಂದು ಬಾವು ಎದ್ದಿದೆ. ಪರಮಹಂಸರು ಪಂಚವಟಿಯಲ್ಲಿ ಸುಮ್ಮನೆ ಅಡ್ಡಾಡುತ್ತ ಅಡ್ಡಾಡುತ್ತ ಇದ್ದಾಗ, ಚಿಕ್ಕ ನರೇನನಿಗೆ ಹೇಳಿದರು, “ನಿನ್ನ ಆ ಬಾವನ್ನು ತೆಗೆಯಿಸಿಹಾಕಿಬಿಡು, ಅದು ಎದ್ದಿರುವುದು ಹಣೆಯ ಮೇಲೆ, ಗಂಟಲೊಳಗೇನಲ್ಲ. ಅದಕ್ಕೇಕೆ ಹೆದರಬೇಕು; ಜನ ಬಾತಿರುವ ವೃಷಣ ಕೋಶಗಳ ಮೇಲೂ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರಲ್ಲ” ಅಂತ.
ಆ ಪಂಜಾಬಿ ಸಾಧು ಉದ್ಯಾನಮಾರ್ಗವಾಗಿ ಹೋಗುತ್ತಿದ್ದಾನೆ. ಪರಮಹಂಸರು ಹೇಳುತ್ತಿದ್ದಾರೆ, “ನಾನು ಆತನನ್ನು ಆಕರ್ಷಿಸುತ್ತಿಲ್ಲ. ಆತನದು ಜ್ಞಾನಿಯ ಭಾವ; ಒಣ ಮರದ ಹಾಗಿದ್ದಾನೆ” ಅಂತ.
ಪರಮಹಂಸರು ಭಕ್ತರೊಡನೆ ತಮ್ಮ ಕೊಠಡಿಗೆ ಹಿಂದಿರುಗಿ ಬಂದಿದ್ದಾರೆ. ಶ್ಯಾಮಾಪದ ಭಟ್ಟಾಚಾರ್ಯನ ಸಂಬಂಧವಾಗಿ ಮಾತುಕತೆ ಆರಂಭವಾಯಿತು.
ಬಲರಾಮ: “ಶ್ಯಾಮಾಪದ ಹೇಳುತ್ತಿದ್ದಾನೆ, ‘ಪರಮಹಂಸರು ನರೇಂದ್ರನ ಎದೆಯ ಮೇಲೆ ಕಾಲಿಟ್ಟಾಗ, ಆತ ಭಾವಾವಿಷ್ಟನಾಗಿಬಿಟ್ಟ; ಆದರೆ ನನಗೇನೂ ಆಗಲೇ ಇಲ್ಲವಲ್ಲ!” ಅಂತ.
ಶ್ರೀರಾಮಕೃಷ್ಣರು: “ಕಾರಣ ಗೊತ್ತೆ? ಕಾಮಕಾಂಚನಾಸಕ್ತಿಯಿಂದ ಚೆದರಿ ಹೋಗಿರುವ ಮನಸ್ಸನ್ನು ಏಕೀಕರಿಸುವುದು ಬಹಳ ಕಷ್ಟವಾದ ಕೆಲಸ. ಆತ ನನಗೆ ತಿಳಿಸಿದ್ದಾನೆ ತನಗೆ ಮಧ್ಯಸ್ಥಿಕೆ ಮಾಡುವ ಕೆಲಸ ಇದೆ ಅಂತ. ಜೊತೆಗೆ ಆತ ತನ್ನ ಮಕ್ಕಳ ಸಂಬಂಧವಾಗಿ ಸ್ವಲ್ಪ ಹೆಚ್ಚಾಗಿ ಯೋಚಿಸಬೇಕಾಗಿದೆ. ನರೇಂದ್ರಾದಿಗಳ ಮನಸ್ಸು ಇನ್ನೂ ಚೆದುರಿಹೋಗಿಲ್ಲ; ಕಾಮಕಾಂಚನದ ಗಂಧವೂ ಇವರ ಹತ್ತಿರ ಸುಳಿದಿಲ್ಲ.
“ಆದರೆ, ಶ್ಯಾಮಾಪದ ಬಹಳ ಒಳ್ಳೆಯವ.”
ಈಗ ಕಾಟೋಯಾದ ವೈಷ್ಣವ ಪರಮಹಂಸರಿಗೆ ಪ್ರಶ್ನೆ ಹಾಕಲಾರಂಭಿಸಿದ್ದಾನೆ. ಆತನಿಗೆ ಮಾಲುಗಣ್ಣು.
ವೈಷ್ಣವ: “ಮಹಾಶಯರೆ, ಪುನರ್ಜನ್ಮ ಉಂಟೆ?”
ಶ್ರೀರಾಮಕೃಷ್ಣರು: “ಭಗವದ್ಗೀತೆಯಲ್ಲಿ ಹೇಳಿದೆ, ಮನುಷ್ಯ ಸಾಯುವಾಗ ಯಾವ ಯಾವ ಭಾವನೆಗಳಿಂದ ದೇಹತ್ಯಾಗಮಾಡುತ್ತಾನೊ, ಆಯಾಯ ಭಾವನೆಗಳಿಗನುಗುಣವಾಗಿ ಆತನಿಗೆ ಮುಂದಿನ ಜನ್ಮ ಅಂತ. ಜಿಂಕೆಯ ಚಿಂತನೆ ಮಾಡಿದ್ದರಿಂದ ಭರತರಾಜನಿಗೆ ಜಿಂಕೆ ಜನ್ಮ ಬಂದಿತ್ತು.”
ವೈಷ್ಣವ: “ಹೀಗಾಗುವುದನ್ನು ಯಾರಾದರೂ ಪ್ರತ್ಯಕ್ಷವಾಗಿ ನೋಡಿದರೆ ಮಾತ್ರ ಅದನ್ನು ನಂಬಬಹುದು.”
ಶ್ರೀರಾಮಕೃಷ್ಣರು: “ಇದರ ವಿಷಯವಾಗಿ ಹೆಚ್ಜಾಗಿ ಇನ್ನೇನೂ ನನಗೆ ಗೊತ್ತಿಲ್ಲ. ನನಗೆ ಬಂದಿರುವ ಕಾಯಿಲೆಯನ್ನೇ ನಾನು ಗುಣಪಡಿಸಿಕೊಳ್ಳಲಾರೆ, ಅಂಥವನಿಗೆ ಸತ್ತ ಮೇಲೆ ಏನಾಗುತ್ತದೆ ಎಂಬ ಪ್ರಶ್ನೆ!
“ನಿನ್ನ ಈ ಪ್ರಶ್ನೆ ನಿನ್ನ ತಿಳಿಗೇಡಿತನವನ್ನು ವ್ಯಕ್ತಪಡಿಸುತ್ತಿದೆ. ಯಾವ ರೀತಿಯಾಗಿ ವರ್ತಿಸಿದರೆ ಭಗವಂತನ ಪಾದಪದ್ಮಗಳಲ್ಲಿ ಭಕ್ತಿ ಬೆಳಸಿಕೊಳ್ಳಬಹುದು ಎಂಬುದರ ಕಡೆ ಮನಸ್ಸಿಡು. ಭಕ್ತಿ ಪಡೆದುಕೊಳ್ಳಲೋಸುಗವೇ ನೀನು ಮಾನವ ಜನ್ಮವೆತ್ತಿರುವುದು. ನೀನು ತೋಟಕ್ಕೆ ಬಂದಿರುವುದು ಮಾವಿನ ಹಣ್ಣು ತಿನ್ನುವುದಕ್ಕೆ. ಎಷ್ಟು ಸಾವಿರ ಕೊಂಬೆಗಳಿವೆ, ಎಷ್ಟು ಲಕ್ಷ ಎಲೆಗಳಿವೆ ಎಂಬ ಲೆಕ್ಕಾಚಾರವೇಕೆ? ಜನ್ಮಜನ್ಮಾಂತರದ ವಿಷಯವಂತೆ! ಎಂಥ ತಿಳಿಗೇಡಿತನ!”
ಗಿರೀಶಘೋಷ ತನ್ನ ಒಬ್ಬಿಬ್ಬರು ಮಿತ್ರರೊಡನೆ ಗಾಡಿಯಲ್ಲಿ ಬಂದಿದ್ದಾನೆ. ಪಾನಮತ್ತನಾಗಿದ್ದಾನೆ. ಅಳುತ್ತ ಅಳುತ್ತಲೆ ಕೊಠಡಿಯನ್ನು ಪ್ರವೇಶಿಸಿ, ಪರಮಹಂಸರ ಪಾದಗಳ ಮೇಲೆ ತನ್ನ ತಲೆಯಿಟ್ಟ ಮೇಲೂ ಅಳುತ್ತಲೇ ಇದ್ದಾನೆ.
ಪರಮಹಂಸರು ಪ್ರೀತಿಯಿಂದ ಆತನ ಬೆನ್ನು ತಟ್ಟಿ ಒಬ್ಬ ಭಕ್ತನಿಗೆ ಹೇಳುತ್ತಿದ್ದಾರೆ, “ಈತನಿಗೆ ಹುಕ್ಕ ತಯಾರುಮಾಡಿಕೊಡು.”
ಗಿರೀಶ ತಲೆ ಮೇಲಕ್ಕೆ ಎತ್ತಿ ಕೈಗಳನ್ನು ಜೋಡಿಸಿಕೊಂಡು ಹೇಳುತ್ತಿದ್ದಾನೆ, “ಪೂರ್ಣ ಬ್ರಹ್ಮ ನೀವೇ! ಅದು ಹಾಗಿಲ್ಲದಿದ್ದರೆ ಎಲ್ಲವೂ ಮಿಥ್ಯ.”
“ನಿಮ್ಮ ಸೇವೆ ಮಾಡುವ ಸುಯೋಗ ನನಗೆ ದೊರೆಯಲಿಲ್ಲವಲ್ಲ ಅಂತ ಬಹಳ ದುಃಖವಾಗುತ್ತದೆ.” ಅಂದು ಆತ ಈ ಮಾತುಗಳನ್ನು ಅಂಥಾ ಹೃದಯವಿದ್ರಾವಕ ರೀತಿಯಲ್ಲಿ ಹೇಳಿದ, ಒಬ್ಬಿಬ್ಬರು ಭಕ್ತರು ಅತ್ತೇಬಿಟ್ಟರು.
ಗಿರೀಶ ಮತ್ತೆ ಹೇಳಿದ: “ಹೇ ಭಗವಂತ! ಒಂದು ವರ್ಷಕಾಲ ನಿಮ್ಮ ಸೇವೆ ಮಾಡುವ ಹಾಗೆ ನನಗೆ ಅನುಗ್ರಹ ಮಾಡಿ. ಮುಕ್ತಿ ಯಾರಿಗೆ ಬೇಕು? ಅದು ಎಲ್ಲೆಲ್ಲೂ ದೊರೆಯುವ ಸಾಮಾನ್ಯ ವಸ್ತು. ಅದಕ್ಕೆ ನನ್ನ ಧಿಕ್ಕಾರ. ಒಂದು ವರ್ಷ ಕಾಲ ನನ್ನ ಸೇವೆ ಸ್ವೀಕರಿಸುತ್ತೇನೆ ಅಂತ ದಯವಿಟ್ಟು ನನಗೆ ವಾಗ್ದಾನಮಾಡಿ.”
ಶ್ರೀರಾಮಕೃಷ್ಣರು: “ಇಲ್ಲಿನ ಜನರು ಅಷ್ಟು ಒಳ್ಳೆಯವರೇನಲ್ಲ; ಏನಾದರೂ ಅನ್ನಬಹುದು.”
ಗಿರೀಶ: “ಅವರು ನನ್ನ ಕಿರುಬೆರಳನ್ನೂ ಅಲ್ಲಾಡಿಸಲಾರರು. ದಯವಿಟ್ಟು ವಾಗ್ದಾನ ಮಾಡಿ.”
ಶ್ರೀರಾಮಕೃಷ್ಣರು: “ಒಳ್ಳೆಯದು, ನಾನು ನಿನ್ನ ಮನೆಗೆ ಬಂದಾಗ-”
ಗಿರೀಶ: “ಊಹ್ಞೂ, ಅದಾಗುವುದಿಲ್ಲ. ಇಲ್ಲಿಗೆ ಬಂದು ಮಾಡುತ್ತೇನೆ.”
ಶ್ರೀರಾಮಕೃಷ್ಣರು ಗಿರೀಶನ ಹಠ ನೋಡಿ ಹೇಳಿದರು, “ಒಳ್ಳೆಯದು, ಭಗವಂತನ ಇಚ್ಛೆಯಿದ್ದಂತೆ ಆಗಲಿ” ಅಂತ.
ಪರಮಹಂಸರ ಗಂಟಲ ರೋಗದ ಮಾತೆತ್ತಿ ಗಿರೀಶ ಹೇಳುತ್ತಿದ್ದಾನೆ: “ದಯವಿಟ್ಟು ಹೇಳಿ, ‘ಅದು ಗುಣವಾಗಲಿ’ ಅಂತ. ಆಗಲಿ ನಾನೇ ಅದನ್ನು ಚೆಚ್ಚಿಹಾಕಿಬಿಡುತ್ತೇನೆ. ಕಾಳಿ! ಕಾಳಿ!”
ಶ್ರೀರಾಮಕೃಷ್ಣರು: “ಅದು ನನ್ನನ್ನು ನೋಯಿಸುತ್ತದೆ.”
ಗಿರೀಶ: “ಹೇ ಗಂಟಲೇ ಗುಣವಾಗಿಬಿಡು! (ಫೂ) ನಿಮಗಿನ್ನೂ ಗುಣವಾಗದೆ ಇದ್ದರೆ, ನಿಮ್ಮ ಮೇಲೆ ನನಗೇನಾದರೂ ಭಕ್ತಿ ಇರುವುದೇ ಆದರೆ ಅದರಿಂದಲಾದರೂ ನಿಮಗೆ ಗುಣವಾಗಿಯೇ ಬಿಡುತ್ತದೆ. ಗುಣವಾಗಿಬಿಟ್ಟಿತು ಅಂತ ನಿಮ್ಮ ಬಾಯಿಂದ ಒಮ್ಮೆ ಹೇಳಿ.”
ಶ್ರೀರಾಮಕೃಷ್ಣರು (ವಿರಕ್ತಿಗೊಂಡು): “ನನ್ನನ್ನು ಸುಮ್ಮನೆ ಬಿಟ್ಟುಬಿಡು. ನನ್ನ ಕೈಯಲ್ಲಿ ಅದೆಲ್ಲ ಸಾಧ್ಯವಿಲ್ಲ. ರೋಗ ಗುಣಪಡಿಸೆಂದು ಭಗವತಿಗೆ ಹೇಳಿಕೊಳ್ಳಲಾರೆ.
“ಆಗಲಿ, ಆಕೆಯ ಇಚ್ಛೆಯಿದ್ದರೆ ಗುಣವಾಗುತ್ತದೆ.”
ಗಿರೀಶ: “ನನ್ನ ಕಣ್ಣಿಗೆ ಮಣ್ಣು ಎರಚಬೇಡಿ. ಎಲ್ಲವೂ ನಿಮ್ಮ ಇಚ್ಛೆಯ ಮೇಲೆ ನಿಂತಿದೆ.”
ಶ್ರೀರಾಮಕೃಷ್ಣರು: “ಛಿ! ಹಾಗೆಂದಿಗೂ ಹೇಳಬೇಡ. ನಾನು ಭಕ್ತನೇ ವಿನಾ ಭಗವಂತನಲ್ಲ. ಬೇಕಾದರೆ ನಿನಗಿಚ್ಛೆಯಿದ್ದಂತೆ ನೀನು ಭಾವಿಸಬಹುದು. ನಿನ್ನ ಗುರುವೇನೊ ನಿನಗೆ ಭಗವಂತ. ಹಾಗೆಂದು ಹೀಗೆಲ್ಲಾ ಮಾತಾಡಿದರೆ ಅಪರಾಧ ಮಾಡಿದ ಹಾಗಾಗುತ್ತದೆ. ಹೀಗೆಲ್ಲ ಎಂದಿಗೂ ಮಾತಾಡಬಾರದು.”
ಗಿರೀಶ: “ಬಾಯಿಂದ ಹೇಳಿ ಗುಣವಾಗಿಬಿಡುತ್ತೆ ಅಂತ.”
ಶ್ರೀರಾಮಕೃಷ್ಣರು: “ಒಳ್ಳೆಯದು, ಯಾವುದು ಬಂದಿದೆಯೊ, ಅದು ಹೋಗುತ್ತದೆ.”
ಗಿರೀಶನ ಕುಡಿತದ ಮತ್ತು ಇನ್ನೂ ಇಳಿದಿಲ್ಲ. ಆಗಾಗ ಆತ ಹೇಳುತ್ತಿದ್ದಾನೆ, “ಅದೆಲ್ಲ ಸರಿಯೆ, ಈ ಸಲ ಏಕೆ ನಿಮ್ಮ ಸ್ವರ್ಗೀಯ ವೈಭವದಿಂದ ಜನ್ಮವೆತ್ತಲಿಲ್ಲ?” ಅಂತ.
ಕೆಲವು ನಿಮಿಷಗಳಾದ ನಂತರ ಮತ್ತೆ ಹೇಳುತ್ತಿದ್ದಾನೆ, “ಈ ಸಲ ನೀವು ಜನ್ಮವೆತ್ತಿರುವುದು ವಂಗದೇಶದ ಉದ್ಧಾರಕ್ಕಾಗಿ ಅಂತ ಕಾಣುತ್ತದೆ” ಎಂದು.
ಒಬ್ಬ ಭಕ್ತ ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೆ, “ವಂಗದೇಶದ ಉದ್ಧಾರಕ್ಕೆ ಅಲ್ಲ, ಇಡೀ ಜಗತ್ತಿನ ಉದ್ಧಾರಕ್ಕೆ” ಅಂತ.
ಗಿರೀಶ ಭಕ್ತರನ್ನು ಸಂಬೋಧಿಸಿ: “ಇವರು ಇಲ್ಲಿಗೆ ಬಂದಿರುವುದು ಏಕೆ ಎಂಬುದು ನಿಮಗಾರಿಗಾದರೂ ಅರ್ಥವಾಗಿದೆಯೇನು? ಜೀವರ ದುಃಖವನ್ನು ನೋಡಿ ಸಹಿಸಲಾರದೆ ಅವರ ಉದ್ಧಾರಕ್ಕಾಗಿ ಬಂದಿದ್ದಾರೆ.”
ಗಾಡಿಯವ ಗಿರೀಶನನ್ನು ಕರೆಯುತ್ತಿದ್ದ. ಗಿರೀಶ ಎದ್ದು ಆತನ ಹತ್ತಿರ ಹೋದ. ಪರಮಹಂಸರು ಮಾಸ್ಟರಿಗೆ ಹೇಳುತ್ತಿದ್ದಾರೆ, “ಎಲ್ಲಿಗೆ ಎದ್ದು ಹೋಗುತ್ತಿದ್ದಾನೆ ಸ್ವಲ್ಪ ನೋಡು. ಹೊಡೆಗಿಡಿಯೋಕಲ್ಲ ತಾನೆ!” ಮಾಸ್ಟರೂ ಆತನನ್ನು ಹಿಂಬಾಲಿಸುತ್ತಿದ್ದಾನೆ.
ಒಡನೆಯೆ ಗಿರೀಶ ಹಿಂದಿರುಗಿ ಬಂದು ಪರಮಹಂಸರನ್ನು ಪ್ರಾರ್ಥಿಸಿಕೊಳ್ಳುತ್ತಿದ್ದಾನೆ, “ಹೇ ಭಗವಂತ, ನನ್ನ ಹೃದಯಲ್ಲಿ ಇನ್ನೆಂದಿಗೂ ಪಾಪಚಿಂತನೆ ಎಳ್ಳಷ್ಟೂ ಏಳದಿರಲು ಬೇಕಾಗುವ ಪವಿತ್ರತೆಯನ್ನು ನನಗೆ ನೀಡು” ಅಂತ.
ಶ್ರೀರಾಮಕೃಷ್ಣರು: “ನೀನು ಆಗಲೇ ಪವಿತ್ರನಾಗಿದ್ದೀಯೆ. ನಿನ್ನದು ಅತ್ಯಂತ ಉಜ್ವಲವಾದ ವಿಶ್ವಾಸ, ಭಕ್ತಿ! ನೀನು ಆನಂದದಿಂದಲೇ ಇದ್ದೀಯೆ, ಅಲ್ಲವೆ?”
ಗಿರೀಶ: “ಮಹಾಶಯರೆ ಇಲ್ಲ, ಮನಸ್ಸು ಚೆನ್ನಾಗಿಲ್ಲ-ಅಶಾಂತಿ. ಅದಕ್ಕಾಗಿಯೇ ವಿಪರೀತವಾಗಿ ಕುಡಿದೆ.”
ಕೆಲವು ನಿಮಿಷಗಳಾದ ನಂತರ ಮತ್ತೆ ಗಿರೀಶ ಹೇಳುತ್ತಿದ್ದಾನೆ, “ಹೇ ಭಗವಂತ ಆಶ್ಚರ್ಯವಾಗುತ್ತಿದೆ. ನನಗೆ, ನನ್ನಂಥ ಅಧಮನಿಗೆ ಪೂರ್ಣಬ್ರಹ್ಮ ಭಗವಂತನ ಸೇವೆ ಮಾಡುವ ಸೌಲಭ್ಯ ದೊರೆತಿರುವುದಲ್ಲ! ಈ ಸೌಲಭ್ಯದ ಅಧಿಕಾರಿಯಾಗಲು ನಾನು ಏನು ಸಾಧನೆ ತಾನೆ ಮಾಡಿದ್ದೇನೆ!”
ಪರಮಹಂಸರಿಗೆ ಮಧ್ಯಾಹ್ನದ ಊಟವಾಯಿತು. ಗಂಟಲು ಸರಿಯಾಗಿಲ್ಲದೆ ಇರುವುದರಿಂದ ಎಲ್ಲೋ ಸ್ವಲ್ಪ ಊಟ ಮಾಡಿದರು.
ಪರಮಹಂಸರಿಗೆ ಸತತವೂ ಭಾವಾವಸ್ಥೆ. ಬಲಾತ್ಕರಿಸಿ ಮನಸ್ಸನ್ನು ಶರೀರದ ಕಡೆಗೆ ತರುತ್ತಿದ್ದರು. ಆದರೂ ಮಗುವಿನೋಪಾದಿಯಲ್ಲಿ ತಮ್ಮ ಸ್ವಂತ ಶರೀರ ರಕ್ಷಣೆ ಮಾಡಿಕೊಳ್ಳಲು ಅವರ ಕೈಯಲ್ಲಾಗುತ್ತಿಲ್ಲ. ಅವರು ಮಗುವಿನ ಹಾಗೆ ಹೇಳುತ್ತಿದ್ದಾರೆ, “ಈಗತಾನೆ ಊಟ ಮಾಡಿದೆ- ಸ್ವಲ್ಪ ವಿಶ್ರಮಿಸಿಕೊಳ್ಳುತ್ತೇನೆ. ನೀವೆಲ್ಲ ಹೊರಗೆ ಹೋಗಿ ಕುಳಿತುಕೊಳ್ಳಿ” ಅಂತ. ಪರಮಹಂಸರು ಸ್ವಲ್ಪ ವಿಶ್ರಾಂತಿ ಪಡೆದರು. ಈಗ ಕೊಠಡಿಗೆ ಹಿಂದಿರುಗಿ ಬಂದು ಕುಳಿತುಕೊಂಡಿದ್ದಾರೆ.
ಗಿರೀಶ: “ಗುರು ಮತ್ತು ಇಷ್ಟ. ಗುರುವಿನ ರೂಪು ನನಗೆ ಚೆನ್ನಾಗಿ ಹಿಡಿಸುತ್ತದೆ. ಆತನನ್ನು ಕಂಡರೆ ನನಗೆ ಭಯವಾಗುತ್ತಿಲ್ಲ. ಇದು ಏಕೆ ಹೀಗೆ? ನನಗೆ ಭಾವವನ್ನು ಕಂಡರೆ ಭಯ; ಹತ್ತು ಮೊಳ ಆಚೆಗೆ ಸರಿದುಬಿಡುತ್ತೇನೆ.”
ಶ್ರೀರಾಮಕೃಷ್ಣರು: “ಇಷ್ಟದೇವನೇ ಗುರುವಿನ ರೂಪವನ್ನು ಧರಿಸುತ್ತಾನೆ. ಶವಸಾಧನೆ ಸಿದ್ಧಿಸಿದ ನಂತರ ಇಷ್ಟದೇವನ ದರ್ಶನ ದೊರೆತಾಗ, ಸಾಧಕನ ಗುರುವೇ ಆತನ ಎದುರಿಗೆ ಬಂದು ಹೇಳುತ್ತಾನೆ, ‘ಓ ಶಿಷ್ಯ, ಆತನೇ ನಿನ್ನ ಇಷ್ಟ’ ಅಂತ. ಹೀಗೆಂದು ಹೇಳಿ ಗುರು ಇಷ್ಟದಲ್ಲಿ ಲೀನವಾಗಿಬಿಡುತ್ತಾನೆ. ಶಿಷ್ಯನ ಕಣ್ಣಿಗೆ ಮತ್ತೆ ಗುರು ಬೀಳುವುದಿಲ್ಲ. ಪೂರ್ಣ ಜ್ಞಾನಾವಸ್ಥೆಯಲ್ಲಿ ಗುರು ಎಲ್ಲಿ, ಶಿಷ್ಯ ಎಲ್ಲಿ? ‘ಅದು ವಾ-್ಮನಾತೀತಾವಸ್ಥೆ; ಅಲ್ಲಿ ಗುರುಶಿಷ್ಯರಾರಿಲ್ಲ.”
ಒಬ್ಬ ಭಕ್ತ: “ಗುರುವಿನ ಶಿರಸ್ಸು. ಶಿಷ್ಯನ ಪಾದ.”
ಗಿರೀಶ (ಆನಂದದಿಂದ): “ಹೌದು! ಹೌದು! ನಿಜ.’
ನವಗೋಪಾಲ: “ಅದರ ಅರ್ಥ ಏನು ಎಂಬುದನ್ನು ಕೇಳು. ಶಿಷ್ಯನ ಶಿರಸ್ಸು ಗುರುವಿನ ಸ್ವತ್ತು; ಗುರುವಿನ ಪಾದಗಳು ಶಿಷ್ಯನ ಸ್ವತ್ತು, ಅರ್ಥವಾಯಿತೆ?”
ಗಿರೀಶ: “ಅಲ್ಲ, ಅಲ್ಲ, ಅದರರ್ಥ ಅದಲ್ಲ. ತಂದೆಯ ಹೆಗಲ ಮೇಲೆ ಮಗು ಹತ್ತಿ ಕುಳಿತುಕೊಳ್ಳುವುದಿಲ್ಲವೇನು? ಅದಕ್ಕಾಗಿಯೇ ಶಿಷ್ಯನ ಪಾದಗಳು ಅಂತ ಹೇಳಿರುವುದು.”
ನವಗೋಪಾಲ: “ಶಿಷ್ಯ ಎಳೆ ಮಗುವಿನಂತಿದ್ದರೆ ತಾನೆ ಸಾಧ್ಯ.”
ಶ್ರೀರಾಮಕೃಷ್ಣರು: “ಭಕ್ತರಲ್ಲಿ ಎರಡು ವಿಧ. ಒಬ್ಬರದು ಬೆಕ್ಕಿನ ಮರಿಯ ಸ್ವಭಾವ. ಅದು ಸಂಪೂರ್ಣವಾಗಿ ತಾಯನ್ನು ಅವಲಂಬಿಸಿರುತ್ತದೆ. ತನ್ನ ಹೊರೆಯನ್ನೆಲ್ಲಾ ತಾಯ ಮೇಲೆ ಹೊರಿಸಿಬಿಟ್ಟಿರುತ್ತದೆ. ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಈ ಯಾವುದೂ ಅದಕ್ಕೆ ಗೊತ್ತಿಲ್ಲ. ಕೇವಲ ‘ಮಿಯಾವ್, ಮಿಯಾವ್!’ ಅನ್ನುತ್ತಿರುತ್ತದೆ. ತಾಯಿಬೆಕ್ಕು ಅದನ್ನು ಕೆಲವು ವೇಳೆ ಒಲೆಯ ಹತ್ತಿರ, ಇನ್ನು ಕೆಲವು ವೇಳೆ ಹಾಸಿಗೆಯ ಮೇಲೆ ಇಡುತ್ತದೆ. ಈ ವಿಧದ ಭಕ್ತ ಭಗವಂತನಿಗೆ ತನ್ನ ವಕಾಲತ್ತನ್ನು ವಹಿಸಿ ನಿಶ್ಚಿಂತನಾಗಿದ್ದುಬಿಡುತ್ತಾನೆ. ಸಿಕ್ಖರು ನನಗೆ ಹೇಳಿದರು, ‘ಭಗವಂತ ದಯಾಳು’ ಅಂತ. ನಾನು ಹೇಳಿದೆ. ‘ಆತ ನಮ್ಮ ತಂದೆ, ತಾಯಿ; ದಯಾಳು ಹೇಗೆ? ಮಕ್ಕಳನ್ನು ಹುಟ್ಟಿಸಿಬಿಟ್ಟು ತಂದೆತಾಯಿಯರು ಅವುಗಳ ಲಾಲನೆ, ಪಾಲನೆ ಮಾಡಬೇಡವೆ? ನಿಮ್ಮ ಅಭಿಪ್ರಾಯ ನೆರೆಹೊರೆಯವರು ನೋಡಿಕೊಳ್ಳಬೇಕು ಅಂತಲೇನು?’ ಅಂತ. ಇಂಥ ಭಕ್ತರ ದೃಢವಿಶ್ವಾಸ ಭಗವಂತನೇ ತಮ್ಮ ತಂದೆ, ಭಗವಂತನೇ ತಮ್ಮ ತಾಯಿ ಅಂತ.
“ಇನ್ನೊಂದು ವಿಧದ ಭಕ್ತರಿದ್ದಾರೆ. ಇವರದು ಮರ್ಕಟ ಮರಿಯ ಸ್ವಭಾವ. ಇದು ತನ್ನ ಸ್ವಶಕ್ತಿಯಿಂದಲೇ ತನ್ನ ತಾಯಿಯನ್ನು ಅಪ್ಪಿ ಹಿಡಿದುಕೊಂಡಿರುತ್ತದೆ. ಈ ತರದ ಭಕ್ತರಿಗೆ ಸ್ವಲ್ಪ ಕರ್ತೃತ್ವಬೋಧೆ ಇರುತ್ತದೆ. ಇವರು ಭಾವಿಸುತ್ತಾರೆ, ತಾವು ತೀರ್ಥಯಾತ್ರೆಗೆ ಹೋಗಬೇಕು, ಷೋಡಶೋಪಚಾರ ಪೂಜೆ ಮಾಡಬೇಕು, ಆಗ ಮಾತ್ರವೇ ತಮಗೆ ಭಗವಂತನ ಸಾಕ್ಷಾತ್ಕಾರ ಸಾಧ್ಯ ಅಂತ.
“ಎರಡು ವಿಧದವರೂ ಭಕ್ತರೆ. ಅಧ್ಯಾತ್ಮ ಜೀವನದಲ್ಲಿ ಮುಂದುಮುಂದುವರಿದಂತೆಲ್ಲ ಆತನೇ ಎಲ್ಲವೂ ಆಗಿದ್ದಾನೆ, ಆತನೇ ಎಲ್ಲವನ್ನೂ ಘಟಿಸುತ್ತಿದ್ದಾನೆ ಎಂಬ ವಿಶ್ವಾಸ ದೃಢವಾಗುತ್ತಾ ಬರುತ್ತದೆ. ಆತನೇ ಗುರು, ಆತನೇ ಇಷ್ಟ. ಆತನೇ ಜ್ಞಾನ, ಭಕ್ತಿ ಎಲ್ಲವನ್ನೂ ಕೊಡುತ್ತಾನೆ.
“ ‘ಮುಂದೆ ಹೋಗಿ,’ ಅಂತ ನಾನು ಹೇಳುವುದು ತಾನೆ ಹೇಗೆ! ಸಂಸಾರಿಗಳು ಒಂದು ಸ್ವಲ್ಪ ಹೆಚ್ಚು ದೂರ ಮುಂದುವರಿದರು ಅಂದರೆ, ಅವರ ಸಂಸಾರದ ತಳವೇ ಕಳಚಿ ಬಿದ್ದು ಹೋಗುತ್ತದೆ. ಒಂದು ದಿನ ಕೇಶವಸೇನ ತನ್ನ ಸಮಾಜದಲ್ಲಿ ಉಪಾಸನೆ ನಡೆಸುತ್ತಿದ್ದಾಗ ಹೇಳಿದ, ‘ಹೇ ಭಗವಂತ, ನಿನ್ನ ಭಕ್ತಿನದಿಯಲ್ಲಿ ನಾವೆಲ್ಲರೂ ಒಮ್ಮೆಗೇ ಮುಳುಗಿ ಹೋಗುವ ಹಾಗೆ ಮಾಡು!’ ಅಂತ. ಉಪಾಸನೆ ಮುಗಿದ ನಂತರ ನಾನು ಆತನಿಗೆ ಹೇಳಿದೆ, ‘ಭಕ್ತಿನದಿಯಲ್ಲಿ ನೀವು ಒಮ್ಮೆಗೇ ಮುಳುಗಿಹೋಗಲು ಹೇಗೆ ಸಾಧ್ಯ? ಹಾಗೆ ಮಾಡಿದರೆ, ಪರದೆ ಹಿಂದೆ ಇರುವ ಸ್ತ್ರೀಯರ ಗತಿ ಏನಾಗಬೇಕು? ಆದರೆ ಒಂದು ಕೆಲಸಮಾಡಿ; ಮುಳುಗೇನೋ ಹಾಕಿ, ಆದರೆ ಆಗಾಗ ದಡಕ್ಕೂ ಬಂದು ಹೋಗಿ!”’ (ಎಲ್ಲರೂ ನಗುತ್ತಾರೆ.)
ಕಾಟೋಯಾದ ವೈಷ್ಣವ ತರ್ಕಮಾಡುತ್ತಿದ್ದಾನೆ.
ಶ್ರೀರಾಮಕೃಷ್ಣರು ವೈಷ್ಣವನಿಗೆ: “ನೀನು ಚಿಟಪಟಗುಟ್ಟುವುದನ್ನು ಬಿಟ್ಟುಬಿಡು! ತುಪ್ಪ ಇನ್ನೂ ಹಸಿಯಾಗಿದೆ ಎಂದರೆ ಅದು ಈ ರೀತಿಯ ಶಬ್ದವನ್ನು ಕೊಡುತ್ತದೆ.
“ಒಮ್ಮೆ ಭಗವದಾನಂದ ದೊರೆತುದೇ ಆದರೆ, ವಿಚಾರಬುದ್ಧಿ ಕಾಲಿಗೆ ಬುದ್ಧಿ ಹೇಳುತ್ತದೆ. ಮಧುಪಾನದ ಆನಂದ ದೊರೆತಾಗ ದುಂಬಿಯ ಝೇಂಕೃತಿಯೆಲ್ಲ ಅಡಗಿ ಹೋಗುತ್ತದೆ. ಪುಸ್ತಕ ಓದಿ ಒಂದೆರಡು ಮಾತಾಡುವುದನ್ನು ಕಲಿತುಬಿಟ್ಟರೆ ಏನಾದ ಹಾಗಾಯಿತು? ಪಂಡಿತರು ಕೇವಲ ಶ್ಲೋಕ ಹೇಳುವುದರಲ್ಲೇ ತೃಪ್ತರು.
“ಬಾಯಲ್ಲಿ ಸುಮ್ಮನೆ ‘ಭಂಗಿ ಸೊಪ್ಪು, ಭಂಗಿ ಸೊಪ್ಪು’ ಅಂತ ಹೇಳುತ್ತಿದ್ದರೆ ಏನಾಗುತ್ತದೆ? ಅದರ ರಸವನ್ನು ಬಾಯಿಂದ ಮುಕ್ಕಳಿಸಿದರೂ ಏನೂ ಆಗದು. ಅದು ಹೊಟ್ಟೆಗೆ ಹೋಗಿ ಬೀಳಬೇಕು. ಆಗ ಮಾತ್ರವೇ ನೆಶಾ ಹತ್ತುತ್ತದೆ. ನಿರ್ಜನಪ್ರದೇಶದಲ್ಲಿ ಏಕಾಂಗಿಯಾಗಿ ಇದ್ದು ವ್ಯಾಕುಲಚಿತ್ತದಿಂದ ಭಗವಂತನನ್ನು ಕರೆಯದೆ ಇದ್ದರೆ ಇದೆಲ್ಲ ಅರ್ಥವಾಗುವುದಿಲ್ಲ.”
ಪರಮಹಂಸರನ್ನು ಪರೀಕ್ಷಿಸಲು ಡಾಕ್ಟರ್ ರಾಖಾಲ ಬಂದಿದ್ದಾನೆ. ಅವರು ವ್ಯಸ್ತರಾಗಿ ಆತನಿಗೆ ಹೇಳುತ್ತಿದ್ದಾರೆ, “ಬಾ, ಕುಳಿತುಕೊ” ಅಂತ.
ವೈಷ್ಣವನೊಡನೆ ಮಾತುಕತೆ ಮುಂದುವರಿಯುತ್ತಿದೆ.
ಶ್ರೀರಾಮಕೃಷ್ಣರು: “ಮಾನುಷ್ ಮತ್ತು ಮಾನ್ಹುಷ್. ಯಾರಿಗೆ ಆತ್ಮಜಾಗೃತಿ ಯುಂಟಾಗಿದೆಯೊ, ಆತನೇ ಮಾನ್ಹುಷ್. ಆತ್ಮಜಾಗೃತಿಯನ್ನುಂಟುಮಾಡಿಕೊಳ್ಳಲಿಲ್ಲ ಅಂದರೆ ಮನುಷ್ಯಜನ್ಮವನ್ನು ವೃಥಾ ಕಳೆದಂತೆ.
“ಕಾಮಾರಪುಕುರದಲ್ಲಿ ದೊಡ್ಡ ಹೊಟ್ಟೆಯ ಮತ್ತು ಒಳ್ಳೆ ಜೋರಾದ ಮೀಸೆಯುಳ್ಳ ಜನ ಅನೇಕ ಮಂದಿ ಇದ್ದಾರೆ. ಆದರೂ ತಮ್ಮ ವಾದ-ವಿವಾದ-ಜಗಳ-ಬವರ ಇತ್ಯರ್ಥ ಮಾಡಲು ಅಲ್ಲಿನವರು ಒಂದಿಪ್ಪತ್ತು ಮೈಲು ದೂರದಿಂದ ಧಾರ್ಮಿಕರನ್ನು ಮತ್ತು ಸತ್ಯವಾದಿಗಳನ್ನು ಹುಡುಕಿ ಪಲ್ಲಕ್ಕಿ ಮಾಡಿಸಿಕೊಂಡು ಕರೆತರುತ್ತಾರೆ. ಯಾರು ಕೇವಲ ಪಂಡಿತರೊ ಅವರನ್ನು ಕರೆಯುವುದಿಲ್ಲ.
“ಸತ್ಯವಚನವೇ ಕಲಿಯುಗದ ತಪಸ್ಸು. ‘ಸತ್ಯವಚನ, ನಮ್ರತೆ, ಪರಸ್ತ್ರೀಯನ್ನು ಮಾತೃವತ್ ನೋಡುವಿಕೆ’ -ಇವೆಲ್ಲಾ ಭಗವಂತನ ಸಾಕ್ಷಾತ್ಕಾರಕ್ಕೆ ಸಾಧನಗಳು.”
ಪರಮಹಂಸರು ಬಾಲಕನ ಹಾಗೆ ಡಾಕ್ಟರಿಗೆ ಹೇಳುತ್ತಿದ್ದಾರೆ, “ಬಾಬು, ನನ್ನ ಇದನ್ನು (ಗಂಟಲನ್ನು) ಗುಣಪಡಿಸಿಬಿಡು” ಅಂತ.
ಡಾಕ್ಟರ್: “ಗುಣಪಡಿಸಬೇಕೆ?”
ಶ್ರೀರಾಮಕೃಷ್ಣರು (ನಗುತ್ತ): “ಡಾಕ್ಟರ್, ಭಗವಂತನೇ. ನಾನು ಎಲ್ಲವನ್ನೂ ಸ್ವೀಕರಿಸುತ್ತೇನೆ. ನೀನು ಹೇಳಬಹುದು, ನೀವು ಎಲ್ಲವನ್ನೂ ಭಗವಂತ ಅಂತ ನೋಡುತ್ತಿರುವುದಾದರೆ, ಸ್ವಲ್ಪವೂ ಗೊಣಗುಟ್ಟದೆ ಸುಮ್ಮನೆ ಇದ್ದುಬಿಡಬೇಕು” ಎಂದು. ಆದರೆ ನಾನು ‘ಮಾವಟಿಗ-ಭಗವಂತನ’ ಮಾತಿಗೂ ಬೆಲೆಕೊಡುತ್ತೇನೆ.
“ಶುದ್ಧ-ಮನಸ್ಸು, ಶುದ್ಧ-ಆತ್ಮ ಒಂದೇ. ಶುದ್ಧ ಮನಸ್ಸಿನಲ್ಲಿ ಉದಯವಾಗುವುದೆಲ್ಲ ಆತನ ಭಾವನೆಯೇ. ಆತನೇ ಮಾವಟಿಗ-ಭಗವಂತ.
“ಭಗವದ್ವಾಣಿಗೆ ಏಕೆ ಬೆಲೆ ಕೊಡದೆ ಇರಲಿ? ಆತನೇ ಕರ್ತೃ, ಎಲ್ಲಿಯವರೆಗೆ ಆತ ಈ ‘ಅಹಂ’ ಎಂಬುದನ್ನು ನನ್ನಲ್ಲಿ ಇಟ್ಟಿದ್ದಾನೊ, ಅಲ್ಲಿಯವರೆಗೆ ಆತನ ಆಜ್ಞೆಯನ್ನು ಪರಿಪಾಲಿಸುತ್ತೇನೆ.”
ಪರಮಹಂಸರ ಗಂಟಲನ್ನು ಪರೀಕ್ಷಿಸಲು ಈಗ ಡಾಕ್ಟರ್ ಸಿದ್ಧನಾಗಿದ್ದಾನೆ. ಅವರು ಹೇಳುತ್ತಿದ್ದಾರೆ, “ಡಾಕ್ಟರ್ ಮಹೇಂದ್ರಸರ್ಕಾರ ದನಗಳ ನಾಲಗೆ ಹಿಡಿದು ಅಮುಕಿ ನೋಡುವ ಹಾಗೆ ನನ್ನ ನಾಲಗೆ ಹಿಡಿದು ಅಮುಕಿ ನೋಡಿದ” ಅಂತ.
ಪರಮಹಂಸರು ಬಾಲಕನ ಹಾಗೆ ಡಾಕ್ಟರನ ಷರಟನ್ನು ಹಿಡಿದು ಎಳೆಯುತ್ತಾ ಹೇಳುತ್ತಿದ್ದಾರೆ, “ಬಾಬು! ಬಾಬು! ಇದನ್ನು (ಗಂಟಲನ್ನು) ಗುಣಪಡಿಸಿಬಿಡು” ಅಂತ. ಧ್ವನಿನಾಳದರ್ಶಕ (ಲಾರಿಂಗೊಸ್ಕೋಪ್)ವನ್ನು ನೋಡಿ ನಗುತ್ತ ನಗುತ್ತ ಹೇಳುತ್ತಿದ್ದಾರೆ, “ಗೊತ್ತಾಯಿತು, ಇದರಲ್ಲಿ ಗಂಟಲಿನ ಪ್ರತಿಬಿಂಬ ಬೀಳುತ್ತದೆ” ಅಂತ.
ನರೇಂದ್ರ ಹಾಡಿದ. ಪರಮಹಂಸರಿಗೆ ದೇಹ ಸೌಖ್ಯವಿಲ್ಲವೆಂದು ಹೆಚ್ಚು ಹೊತ್ತು ಹಾಡಲಿಲ್ಲ.
೨ನೆ ಸೆಪ್ಟೆಂಬರ್ ೧೮೮೫, ಶ್ರಾವಣ ಅಷ್ಟಮಿ-ನವಮಿ, ಬುಧವಾರ
ಪರಮಹಂಸರು ಮಧ್ಯಾಹ್ನದ ಊಟ ಮುಗಿಸಿಕೊಂಡು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತು ಡಾಕ್ಟರ್ ಭಗವಾನ್ರುದ್ರ, ಮಾಸ್ಟರ್ ಇವರೊಡನೆ ಮಾತುಕತೆಯಾಡುತ್ತಿದ್ದಾರೆ. ಕೊಠಡಿಯಲ್ಲಿ ರಾಖಾಲ, ಲಾಟು ಮತ್ತು ಇನ್ನೂ ಕೆಲವು ಮಂದಿ ಭಕ್ತರು ಕುಳಿತಿದ್ದಾರೆ. ಪರಮಹಂಸರ ರೋಗ ಆದ್ಯಂತವನ್ನೆಲ್ಲ ಡಾಕ್ಟರ್ ಕೇಳಿ ತಿಳಿದುಕೊಂಡ. ಪರಮಹಂಸರು ತಮ್ಮ ಮಂಚವನ್ನು ಬಿಟ್ಟು ಎದ್ದು ಬಂದು ಡಾಕ್ಟರ್ ಹತ್ತಿರ ನೆಲದ ಮೇಲೆ ಕುಳಿತುಕೊಂಡರು.
ಶ್ರೀರಾಮಕೃಷ್ಣರು: “ನೋಡು, ಔಷಧ ನನಗೆ ಒಗ್ಗುತ್ತಿಲ್ಲ, ನನ್ನ ದೇಹಪ್ರಕೃತಿ ಪ್ರತ್ಯೇಕವಾದದ್ದು.
“ಒಳ್ಳೇದು, ಇದು ನಿನಗೇನನಿಸುತ್ತದೆ? ದುಡ್ಡು ಮುಟ್ಟಿದೆನೆಂದರೆ ಕೈ ವಕ್ರವಕ್ರವಾಗಿ ತಿರುಗಿಕೊಂಡುಬಿಡುತ್ತದೆ; ಉಸಿರಾಡುವುದು ನಿಂತುಹೋಗಿಬಿಡುತ್ತದೆ. ಇದೂ ಅಲ್ಲದೆ ಪಂಚೆ ತುದಿಯಲ್ಲಿ ಗಂಟು ಹಾಕಿದೆನೆಂದರೆ, ಅದನ್ನು ಬಿಚ್ಚುವವರೆಗೆ ಉಸಿರಾಡುವುದಕ್ಕೆ ಆಗುವುದೇ ಇಲ್ಲ.”
ಪರಮಹಂಸರು ಒಬ್ಬ ಭಕ್ತನಿಗೆ ಒಂದು ರೂಪಾಯಿಯನ್ನು ತಮ್ಮ ಕೈಗೆ ಹಾಕುವಂತೆ ಹೇಳಿದರು. ಅದು ಅವರ ಕೈಗೆ ಬೀಳುವುದೇ ತಡ, ಕೈ ಸೊಟ್ಟಸೊಟ್ಟವಾಗಿ ತಿರುಗಿಕೊಂಡುಬಿಟ್ಟಿತು; ಉಸಿರಾಡುವುದೂ ನಿಂತುಹೋಯಿತು. ಅವರ ಕೈಯಿಂದ ಅದನ್ನು ತೆಗೆದುಕೊಂಡುಬಿಟ್ಟ ನಂತರ, ಅವರು ಮೂರು ಸಲ ದೀರ್ಘ ನಿಃಶ್ವಾಸ ಬಿಟ್ಟರು. ಬಳಿಕ ಅವರ ಕೈ ಎಂದಿನಂತೆ ಆಯಿತು. ಇದನ್ನು ನೋಡಿ ಡಾಕ್ಟರ್ ಆಶ್ಚರ್ಯಚಕಿತನಾದ.
ಡಾಕ್ಟರ್ ಮಾಸ್ಟರಿಗೆ ಹೇಳಿದ, “ಇದು ನರಗಳ ಉದ್ರೇಕ” ಅಂತ.
ಶ್ರೀರಾಮಕೃಷ್ಣರು (ಡಾಕ್ಟರಿಗೆ): “ನನಗೆ ಇನ್ನೊಂದು ಅವಸ್ಥೆ ಬಂದುಬಿಟ್ಟಿದೆ. ಏನನ್ನೂ ಸಂಚಯ ಮಾಡುವ ಹಾಗಿಲ್ಲ. ಒಮ್ಮೆ ನಾನು ಶಂಭುಮಲ್ಲಿಕನ ತೋಟದ ಮನೆಗೆ ಹೋಗಿದ್ದೆ. ಆಗ ಭಯಾನಕ ಹೊಟ್ಟೆನೋವು. ಶಂಭು ಹೇಳಿದ, ‘ಒಂದು ಕಿಂಚಿತ್ ಅಫೀಮನ್ನು ತಿನ್ನಿ, ಅದು ನೋವನ್ನು ಕಡಿಮೆ ಮಾಡುತ್ತದೆ.’ ಆತ ನನ್ನ ಪಂಚೆ ಕೊನೆಗೆ ಅದನ್ನು ಕಟ್ಟಿ ಕೊಟ್ಟ. ನಾನು ಹಿಂದಿರುಗಿ ಗೇಟಿನ ಹತ್ತಿರಕ್ಕೆ ಬಂದಾಗ ದಾರಿಗಾಣದವನ ಹಾಗೆ ಸುಮ್ಮನೆ ತಡವರಿಸಲಾರಂಭಿಸಿದೆ. ಬಳಿಕ ಆ ಅಫೀಮನ್ನು ಬಿಸಾಡಿದ ನಂತರ ಎಂದಿನ ಸ್ಥಿತಿ ಬಂದು ಕೊಠಡಿಗೆ ಸುರಕ್ಷಿತವಾಗಿ ಬಂದು ಸೇರಿದೆ.
“ಒಂದು ದಿನ ಕಾಮಾರಪುಕುರದಲ್ಲಿ ಮರದಿಂದ ಮಾವಿನ ಹಣ್ಣು ಕಿತ್ತುಕೊಂಡು ಮನೆಗೆ ಹೋಗುತ್ತಿದ್ದೆ. ಸ್ವಲ್ಪ ದೂರ ನಡೆದ ನಂತರ ಮುಂದಕ್ಕೆ ನಡೆಯಲಾಗಲಿಲ್ಲ. ಹಾಗೆಯೇ ನಿಂತುಬಿಡಬೇಕಾಗಿ ಬಂದಿತು. ಒಂದು ಗುಂಡಿಯೊಳಕ್ಕೆ ಅವನ್ನು ಬಿಸಾಡಿದೆ. ಆಗ ನನಗೆ ನಡೆಯಲು ಸಾಧ್ಯವಾಯಿತು. ಒಳ್ಳೆಯದು, ಇದಕ್ಕೇನು ನಿನ್ನ ಉತ್ತರ?”
ಡಾಕ್ಟರ್: “ಈ ಕಾರ್ಯಗಳ ಹಿಂದೆ ಬೇರೊಂದು ಶಕ್ತಿ, ಇಚ್ಛಾಶಕ್ತಿ ಕೆಲಸ ಮಾಡುತ್ತಿದೆ.”
ಮಾಸ್ಟರ್: “ಇವರು (ಪರಮಹಂಸರು) ಅದು ಭಗವಂತನ ಶಕ್ತಿ ಅಂತ ಹೇಳುತ್ತಾರೆ. ನೀವು ಅದು ಇಚ್ಛಾ ಶಕ್ತಿ ಅಂತ ಹೇಳುತ್ತೀರಿ.”
ಶ್ರೀರಾಮಕೃಷ್ಣರು: “ನನಗೆ ಈಗ ಅಂಥ ಅವಸ್ಥೆ ಬಂದಿದೆ, ಯಾರಾದರೂ ನಿಮಗೆ ಈಗ ಉತ್ತಮವಾಗಿದೆ ಅಂತ ಹೇಳಿಬಿಟ್ಟರೇ ಸಾಕು, ನನಗೂ ಉತ್ತಮವಾದ ಹಾಗೆಯೇ ಕಾಣುತ್ತದೆ. ಅಂದು ಬಾಗ್ಬಜಾರಿನ ಬ್ರಾಹ್ಮಣಿ ಹೇಳಿದಳು, ‘ನಿಮಗೆ ಶೇಕಡ ಐವತ್ತು ಭಾಗ ಗುಣವಾಗಿದೆ’ ಅಂತ. ತತ್ಕ್ಷಣವೇ ನರ್ತಿಸಲಾರಂಭಿಸಿದೆ.”
ಡಾಕ್ಟರನ ನಡೆ ನುಡಿ ನೋಡಿ ಪರಮಹಂಸರಿಗೆ ಬಹಳ ಆನಂದವಾಗಿಬಿಟ್ಟಿದೆ. ಅವರು ಆತನಿಗೆ ಹೇಳುತ್ತಿದ್ದಾರೆ, “ನಿನ್ನದು ಬಹಳ ಒಳ್ಳೆಯ ಸ್ವಭಾವ. ಜ್ಞಾನದ ಲಕ್ಷಣಗಳು ಎರಡು – ಶಾಂತಸ್ವಭಾವ, ಅಭಿಮಾನಶೂನ್ಯತೆ.”
ಮಾಸ್ಟರ್: “ಇವರಿಗೆ (ಡಾಕ್ಟರಿಗೆ) ಪತ್ನೀವಿಯೋಗವಾಗಿದೆ.”
ಶ್ರೀರಾಮಕೃಷ್ಣರು (ಡಾಕ್ಟರಿಗೆ): “ನಾನು ಹೇಳುತ್ತೇನೆ, ಇವು ಮೂರು ಆಕರ್ಷಣೆ ಗಳಿದ್ದರೆ ಭಗವಂತನ ಸಾಕ್ಷಾತ್ಕಾರ ಪಡೆಯಬಹುದು-ತಾಯಿಗೆ ಮಗುವಿನ ಮೇಲಿರುವ ಆಕರ್ಷಣೆ, ಸತಿಗೆ ಪತಿಯ ಮೇಲಿರುವ ಆಕರ್ಷಣೆ, ಪ್ರಾಪಂಚಿಕನಿಗೆ ಪ್ರಾಪಂಚಿಕ ವಸ್ತುಗಳ ಮೇಲಿರುವ ಆಕರ್ಷಣೆ.
“ಅದು ಹೇಗಾದರೂ ಆಗಲಿ, ದಯವಿಟ್ಟು ನನ್ನ ಗಂಟಲನ್ನು ಗುಣಪಡಿಸಿಬಿಡು.”
ಈಗ ಡಾಕ್ಟರ್ ಪರಮಹಂಸರ ಗಂಟಲನ್ನು ಪರೀಕ್ಷಿಸುತ್ತಿದ್ದಾನೆ. ಅವರು ಅರ್ಧಚಂದ್ರಾಕೃತಿಯ ಜಗಲಿಯಲ್ಲಿ ಕುರ್ಚಿಯ ಮೇಲೆ ಕುಳಿತಿದ್ದಾರೆ. ಡಾಕ್ಟರ್ ಸರ್ಕಾರನ ಮಾತೆತ್ತಿ ಹೇಳುತ್ತಿದ್ದಾರೆ, ‘ಆತ ಒರಟು ಮನುಷ್ಯ, ದನವೊ ಏನೊ ಎಂಬಂತೆ ನನ್ನ ನಾಲಿಗೆ ಹಿಡಿದು ಚೆನ್ನಾಗಿ ಅಮುಕಿ ನೋಡಿದ.’
ಡಾಕ್ಟರ್: “ಆತ ಬೇಕೂ ಅಂತ ಹಾಗೆ ಮಾಡಿರಲಾರ.”
ಶ್ರೀರಾಮಕೃಷ್ಣರು: “ಬೇಕೂ ಅಂತಲೇನೂ ಅಲ್ಲ, ಚೆನ್ನಾಗಿ ಪರೀಕ್ಷೆ ಮಾಡಲು ಹಾಗೆ ಅಮುಕಿ ನೋಡಿದ.”
೨೦ನೆ ಸೆಪ್ಟೆಂಬರ್ ೧೮೮೫, ಆಶ್ವೀಜ ಶುಕ್ಲ ಏಕಾದಶಿ, ಭಾನುವಾರ
ಶ್ರೀರಾಮಕೃಷ್ಣರು ಭಕ್ತರೊಡಗೂಡಿ ತಮ್ಮ ಕೊಠಡಿಯಲ್ಲಿ ಕುಳಿತಿದ್ದಾರೆ, ನವ ಗೋಪಾಲ, ಹರಲಾಲ, ರಾಖಾಲ, ಲಾಟು ಇವರೇ ಮೊದಲಾದವರು ಅಲ್ಲಿ ಕುಳಿತಿದ್ದಾರೆ. ಕೀರ್ತನಕಾರ ಗೋಸ್ವಾಮಿಯೂ ಅಲ್ಲಿ ಕುಳಿತಿದ್ದಾನೆ.
ಮಾಸ್ಟರ್ ಬೋಬಜಾರಿನ ಡಾಕ್ಟರ್ ರಾಖಾಲನೊಡನೆ ಕೊಠಡಿಯನ್ನು ಪ್ರವೇಶಿಸಿದ. ಪರಮಹಂಸರನ್ನು ಈಗ ಡಾಕ್ಟರ್ ರಾಖಾಲ ಪರೀಕ್ಷಿಸುತ್ತಿದ್ದಾನೆ. ಆತನದು ದೊಡ್ಡ ಶರೀರ. ಅದಕ್ಕೆ ತಕ್ಕಂತೆ ಬೆರಳೂ ದಪ್ಪ.
ಶ್ರೀರಾಮಕೃಷ್ಣರು (ನಗುತ್ತ ಡಾಕ್ಟರಿಗೆ): “ನಿನ್ನ ಕೈಬೆರಳುಗಳು ಜಟ್ಟಿಯದರಂತಿವೆ. ಡಾಕ್ಟರ್ ಮಹೇಂದ್ರಸರ್ಕಾರನೂ ನನ್ನನ್ನು ಪರೀಕ್ಷಿಸಿದ. ಆತ ನನ್ನ ನಾಲಗೆಯನ್ನು ಅಷ್ಟು ಬಲವಾಗಿ ಒತ್ತಿ ಒತ್ತಿ ನೋಡಿದ- ದನದ್ದೊ ಕರುವಿನದೊ ಏನೊ ಎಂಬಂತೆ. ಅದು ನನಗೆ ನೋವನ್ನು ಉಂಟುಮಾಡಿತು.”
ಡಾಕ್ಟರ್: “ಒಳ್ಳೆಯದು, ನಿಮಗೆ ಸ್ವಲ್ಪವೂ ನೋವಾಗದ ರೀತಿಯಲ್ಲಿ ಪರೀಕ್ಷಿಸುತ್ತೇನೆ.”
ಡಾಕ್ಟರ್ ಔಷಧಿಚೀಟಿ ಬರೆದುಕೊಟ್ಟ. ಪರಮಹಂಸರು ಈಗ ಮಾತನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು (ಭಕ್ತರಿಗೆ): “ಒಳ್ಳೇದು. ಜನ ಕೇಳುತ್ತಾರೆ, ಇವರು ದೊಡ್ಡ ಮಹಾ ಪುರುಷರಾಗಿದ್ದಾರೆ, ಇವರಿಗೆ ರೋಗ ಬರಲು ಕಾರಣವೇನು ಅಂತ.”
ತಾರಕ: “ಭಗವಾನ್ದಾಸ ಬಾಬಾಜಿಯೂ ರೋಗಗ್ರಸ್ತನಾಗಿ ಬಹಳ ಕಾಲದವರೆಗೆ ಹಾಸಿಗೆ ಹಿಡಿದಿದ್ದ.”
ಶ್ರೀರಾಮಕೃಷ್ಣರು: “ಡಾಕ್ಟರ್ ಮಧುವಿನ ಕಡೆ ನೋಡಿ, ವಯಸ್ಸು ಆಗಲೇ ಅರವತ್ತು. ಇನ್ನೂ ತನ್ನ ಉಪಪತ್ನಿ ಮನೆಗೆ ಅನ್ನಾಹಾರಾದಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾನೆ. ಆದರೂ ಅವನಿಗೆ ಯಾವ ರೋಗರುಜಿನವೂ ಇಲ್ಲವಲ್ಲ.”
ಗೋಸ್ವಾಮಿ: “ನಿಮಗೆ ರೋಗ ಬಂದಿರುವುದು ಪರರ ಹಿತಕ್ಕಾಗಿ. ಯಾರು ನಿಮ್ಮ ಹತ್ತಿರಕ್ಕೆ ಬರುತ್ತಾರೊ, ಅವರ ಪಾಪವನ್ನೆಲ್ಲ ನೀವು ತೆಗೆದುಕೊಂಡುಬಿಡುತ್ತೀರಿ. ಅವರ ಪಾಪವನ್ನೆಲ್ಲ ನೀವು ಹೊತ್ತುಕೊಳ್ಳುತ್ತಿರುವುದರಿಂದ ನೀವು ರೋಗಗ್ರಸ್ತರಾಗಿಬಿಟ್ಟಿದ್ದೀರಿ.”
ಒಬ್ಬ ಭಕ್ತ: “ನೀವು ಭಗವತಿಗೆ, ‘ಹೇ ತಾಯಿ, ದಯವಿಟ್ಟು ನನ್ನ ರೋಗವನ್ನು ಗುಣಪಡಿಸು’ ಅಂತ ಹೇಳಿಕೊಂಡರೆ, ಬೇಗನೆ ನಿಮಗೆ ಗುಣವಾಗಿಬಿಡುತ್ತದೆ.”
ಶ್ರೀರಾಮಕೃಷ್ಣರು : “ರೋಗ ಗುಣಪಡಿಸು ಅಂತ ಭಗವತಿಯನ್ನು ಪ್ರಾರ್ಥಿಸಿ ಕೊಳ್ಳಲಾರೆ. ಜೊತೆಗೆ ಈಗ ಕೆಲಕಾಲದಿಂದ ಸೇವ್ಯ-ಸೇವಕ ಭಾವ ಇಳಿಮುಖವಾಗುತ್ತಿದೆ. ಒಮ್ಮೊಮ್ಮೆ ನಾನು ಭಗವತಿಗೆ ಪ್ರಾರ್ಥಿಸುವುದುಂಟು, ‘ಹೇ ತಾಯೆ, ಕತ್ತಿಯ ಒರೆಯನ್ನು (ಪರಮಹಂಸರ ಶರೀರ) ಸ್ವಲ್ಪ ಸರಿಪಡಿಸು’ ಅಂತ. ಆ ವಿಧವಾದ ಪ್ರಾರ್ಥನೆಯೂ ಬಹಳ ವಿರಳವಾಗಿಬಿಟ್ಟಿದೆ. ಈಗ ಕೆಲಕಾಲದಿಂದ ನನ್ನ ‘ಅಹಂ’ ಎಂಬುದು ಎಲ್ಲಿಗೆ ಹೋಗಿಬಿಟ್ಟಿದೆಯೊ ಗೊತ್ತೇ ಇಲ್ಲ; ಹುಡುಕಿದರೂ ಸಿಕ್ಕುತ್ತಿಲ್ಲ. ಕೇವಲ ಭಗವತಿ ಮಾತ್ರ ಈ ಒರೆಯೊಳಗೆ ಇರುವುದು ಕಂಡುಬರುತ್ತಿದೆ.”
ಗೋಸ್ವಾಮಿಯನ್ನು ಕರೆಸಿರುವುದು ಕೀರ್ತನೆಗೋಸ್ಕರ. ಒಬ್ಬ ಭಕ್ತ ಹೇಳಿದ, “ಕೀರ್ತನೆ ಉಂಟೇ?” ಅಂತ. ಪರಮಹಂಸರಿಗೆ ದೇಹ ಸೌಖ್ಯವಿಲ್ಲದೆ ಇರುವುದರಿಂದ, ಕೀರ್ತನೆ ನಡೆದರೆ ಅವರ ಭಾವ ಉದ್ರೇಕಗೊಂಡುಬಿಡುವುದಲ್ಲ ಅಂತ ಭಕ್ತರೆಲ್ಲರೂ ಹೆದರುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಒಂದು ಸ್ವಲ್ಪ ಹೊತ್ತು ನಡೆಯಲಿ. ನನ್ನ ಭಾವ ಉದ್ರೇಕಗೊಂಡು ಬಿಡಬಹುದೆಂದು ಎಲ್ಲರೂ ಹೆದರುತ್ತಿದ್ದಾರೆ. ಭಾವ ಗಂಟಲಿನ ಈ ಭಾಗವನ್ನು (ಗಂಟಲನ್ನು ತೋರಿಸಿ) ನೋಯಿಸಿಬಿಡುತ್ತದೆ.”
ಗೋಸ್ವಾಮಿ ಕೀರ್ತನೆ ಆರಂಭಮಾಡಿದ. ಪರಮಹಂಸರಿಗೆ ತಮ್ಮ ಭಾವವನ್ನು ತಡೆದು ನಿಲ್ಲಿಸಲಾಗಲಿಲ್ಲ. ಎದ್ದು ನಿಂತು ಭಕ್ತರೊಡನೆ ನರ್ತಿಸಲಾರಂಭಿಸಿದ್ದಾರೆ. ಡಾಕ್ಟರ್ ಅಂತ್ಯದವರೆಗೆ ಎಲ್ಲವನ್ನೂ ನೋಡಿದ.
ಒಂದು ಬಾಡಿಗೆ ಗಾಡಿ ಆತನಿಗಾಗಿ ಕಾದುನಿಂತಿದೆ. ಆತ ಮತ್ತು ಮಾಸ್ಟರ್ ಇಬ್ಬರೂ ಕಲ್ಕತ್ತಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಅವರಿಬ್ಬರೂ ಪರಮಹಂಸರಿಗೆ ಪ್ರಣಾಮ ಮಾಡಿದರು. ಪರಮಹಂಸರು ಮಾಸ್ಟರನ್ನು ಪ್ರೇಮಪೂರಿತ ದೃಷ್ಟಿಯಿಂದ ಕೇಳಿದರು, “ಊಟವಾಯಿತೆ?”
೨೪ನೆ ಸೆಪ್ಟೆಂಬರ್ ೧೮೮೫, ಆಶ್ವೀಜ ಪೂರ್ಣಿಮೆ, ಗುರುವಾರ
ಪೂರ್ಣಿಮೆ ರಾತ್ರಿ. ಪರಮಹಂಸರು ತಮ್ಮ ಕೊಠಡಿಯಲ್ಲಿ ಚಿಕ್ಕ ಮಂಚದ ಮೇಲೆ ಕುಳಿತಿದ್ದಾರೆ. ಗಂಟಲಿನ ನೋವು ಬಲಗೊಂಡಿದೆ. ಮಾಸ್ಟರ್ ಮೊದಲಾದವರು ನೆಲದ ಮೇಲೆ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಆಗಾಗ ಭಾವಿಸುತ್ತೇನೆ, ಈ ಶರೀರ ಕೇವಲ ದಿಂಬಿನ ಚೀಲ ಮಾತ್ರ ಅಂತ. ಇದರೊಳಗೆ ಅಖಂಡ ಸಚ್ಚಿದಾನಂದ ಹೊರತು ಬೇರೆ ಏನೂ ಇಲ್ಲ.
“ಭಾವಾವೇಶ ಬಂತು ಅಂದರೆ, ಗಂಟಲ ರೋಗ ಒಂದು ಮೂಲೆಯಲ್ಲಿ ಮುದುರಿಕೊಂಡಿರುತ್ತದೆ. ಈಗ ನಾನು ಸ್ವಲ್ಪಮಟ್ಟಿಗೆ ಆ ಅವಸ್ಥೆಯಲ್ಲಿದ್ದೇನೆ; ಅದಕ್ಕಾಗಿ ಈಗ ನಗು ಬರುತ್ತಿದೆ.”
ದ್ವಿಜನ ಸೋದರಿ ಮತ್ತು ಅಜ್ಜಿ ಪರಮಹಂಸರು ಅಸೌಖ್ಯರಾಗಿದ್ದಾರೆ ಎಂಬುದನ್ನು ಕೇಳಿ ಅವರನ್ನು ನೋಡಲು ಬಂದಿದ್ದಾರೆ. ಅವರು ಪರಮಹಂಸರಿಗೆ ಪ್ರಣಾಮಮಾಡಿ ಕೊಠಡಿಯಲ್ಲಿ ಒಂದು ಕಡೆ ಕುಳಿತುಕೊಂಡರು. ದ್ವಿಜನ ಅಜ್ಜಿಯನ್ನು ನೋಡಿ ಪರಮಹಂಸರು ಕೇಳಿದರು: “ಇವರು ಯಾರು? ಇವರೇ ಏನು ದ್ವಿಜನನ್ನು ಸಾಕಿ ಸಲಹಿದವರು? ಒಳ್ಳೇದು, ದ್ವಿಜ ಏಕೆ ಏಕನಾದವನ್ನು ಕೊಂಡುಕೊಂಡು ಬಂದಿದ್ದಾನೆ?”
ಮಾಸ್ಟರ್: “ಇಲ್ಲ, ಅದಕ್ಕೆ ಎರಡು ತಂತಿಗಳಿವೆ.”
ಶ್ರೀರಾಮಕೃಷ್ಣರು: “ತಂದೆ ಈತನಿಗೆ ವಿರೋಧಿ. ಜನ ಏನೆಂದುಕೊಳ್ಳುತ್ತಾರೆ? ಈತ ಗೋಪ್ಯವಾಗಿ ಭಗವಂತನನ್ನು ಕರೆಯುವುದೇ ಮೇಲು.”
ಪರಮಹಂಸರ ಕೊಠಡಿಯಲ್ಲಿ ಗೌರಾಂಗದೇವ ಮತ್ತು ನಿತಾಯಿ ತಮ್ಮ ಅನುಯಾಯಿಗಳೊಡನೆ ನವದ್ವೀಪದಲ್ಲಿ ಕೀರ್ತನೆಮಾಡುತ್ತಿದ್ದುದರ ಒಂದು ಸುಂದರ ಚಿತ್ರ ತೂಗುಹಾಕಲಾಗಿತ್ತು.
ರಾಮಲಾಲ ಪರಮಹಂಸರಿಗೆ: “ಹಾಗಾದರೆ ಈತನಿಗೆ (ಮಾಸ್ಟರಿಗೆ) ಚಿತ್ರವನ್ನು ಕೊಡಲೆ?”
ಶ್ರೀರಾಮಕೃಷ್ಣರು: “ಬಹಳ ಒಳ್ಳೆಯದು, ಕೊಟ್ಟುಬಿಡು.”
ಪರಮಹಂಸರು ಕೆಲವು ದಿನಗಳಿಂದ ಡಾಕ್ಟರ್ ಪ್ರತಾಪನಿಂದ ಔಷಧ ತೆಗೆದುಕೊಳ್ಳು ತ್ತಿದ್ದಾರೆ. ಮಧ್ಯರಾತ್ರಿಯಲ್ಲಿ ಎಚ್ಚರಗೊಂಡು ನೋವಿನಿಂದ ಸುಮ್ಮನೆ ಹೊರಳಾಡುತ್ತಿದ್ದಾರೆ.ಅವರ ಸೇವಕ ಹರೀಶ ಕೊಠಡಿಯಲ್ಲೇ ಇದ್ದಾನೆ. ರಾಖಾಲನೂ ಇಲ್ಲೇ ಇದ್ದಾನೆ. ರಾಮಲಾಲ ಹೊರಗೆ ಜಗಲಿ ಮೇಲೆ ಮಲಗಿದ್ದಾನೆ. ಆಮೇಲೆ ಪರಮಹಂಸರು ಹೇಳಿದರು: “ಪ್ರಾಣ ತಾನು ಹಾರಿಹೋಗುತ್ತೇನೆ ಅಂತ ಹೇಳುತ್ತಿತ್ತು. ಆಗ ಹರೀಶನನ್ನು ಹಿಡಿದುಕೊಳ್ಳಬೇಕು ಎಂದು ಅನ್ನಿಸುತ್ತಿತ್ತು. ಮಧ್ಯಮ ನಾರಾಯಣ ತೈಲವನ್ನು ತಲೆಗೆ ಹಚ್ಚಿದ ಮೇಲೆ ಗುಣ ಕಂಡುಬಂದಿತು. ಆಗ ನಾನು ನರ್ತಿಸಲಾರಂಭಿಸಿದೆ.”