೨೮ನೇ ಜುಲೈ ೧೮೮೫, ಆಷಾಢ ಕೃಷ್ಣ ಪಾಡ್ಯಮಿ, ಮಂಗಳವಾರ
ಪರಮಹಂಸರು ಬಲರಾಮನ ಬೈಠಕ್ಖಾನೆಯಲ್ಲಿ ಭಕ್ತರೊಡನೆ ಕುಳಿತುಕೊಂಡಿದ್ದಾರೆ. ವಿನೋದ, ರಾಖಾಲ, ಚಿಕ್ಕ ನರೇನ, ಮಾಸ್ಟರ್ ಇವರು ಅವರ ಹತ್ತಿರ ಕುಳಿತುಕೊಂಡಿದ್ದಾರೆ. ಈಗ ಘಂಟೆ ಸುಮಾರು ಅಪರಾಹ್ನ ಮೂರು. ಪರಮಹಂಸರು ಬೆಳಗ್ಗೇನೆ ಬಲರಾಮನ ಮನೆಗೆ ಬಂದು ಅಲ್ಲೇ ತಮ್ಮ ಮಧ್ಯಾಹ್ನದ ಊಟವನ್ನು ಮುಗಿಸಿಕೊಂಡಿದ್ದಾರೆ. ಬಲರಾಮನ ಮನೆಯಲ್ಲಿ ಶ್ರೀಜಗನ್ನಾಥನ ನಿತ್ಯಪೂಜೆ ನಡೆಯುತ್ತಿದೆ. ಅದಕ್ಕಾಗಿಯೇ ಪರಮಹಂಸರು ಹೇಳುತ್ತಿದ್ದರು, ಆತನ ಮನೆಯ ಅನ್ನ ಶುದ್ಧ ಅನ್ನ ಅಂತ.
ನಂದಬಸುವಿನ ಮನೆಯಲ್ಲಿ ಭಗವಂತನ ಅನೇಕ ಪಟಗಳು ಇವೆ ಎಂಬುದಾಗಿ ನಾರಾಯಣನೇ ಮೊದಲಾದ ಭಕ್ತರು ಪರಮಹಂಸರಿಗೆ ತಿಳಿಸಿದ್ದರು. ನಂದಬಸು ಒಬ್ಬ ಕಲೋಪಾಸಕ. ಆತನ ಮನೆ ಇದ್ದುದು ಬಾಗ್ಬಜಾರಿನಲ್ಲಿ. ಪರಮಹಂಸರು ಇಂದಿನ ಅಪರಾಹ್ನ ಆತನ ಮನೆಗೆ ಹೋಗಿ ಆ ಪಟಗಳನ್ನೆಲ್ಲಾ ನೋಡಿಬರುತ್ತಾರೆ. ಒಬ್ಬ ಬ್ರಾಹ್ಮಣ ಭಕ್ತೆ ನಂದವಸುವಿನ ಮನೆಯ ಹತ್ತಿರವೆ ವಾಸಿಸುತ್ತಾಳೆ. ಪರಮಹಂಸರ ದರ್ಶನ ಪಡೆಯಲು ಆಕೆ ಆಗಾಗ ದಕ್ಷಿಣೇಶ್ವರಕ್ಕೆ ಬರುತ್ತಿದ್ದಳು. ತನ್ನ ಏಕಮಾತ್ರ ಪುತ್ರಿಯನ್ನು ಕಳೆದುಕೊಂಡಿರುವುದರಿಂದ ಅತ್ಯಂತ ದುಃಖಪೀಡಿತಳಾಗಿದ್ದಾಳೆ. ಆಕೆ ಅತ್ಯಂತ ವ್ಯಾಕುಲತೆಯಿಂದ ಪರಮಹಂಸರು ತನ್ನ ಮನೆಗೆ ಪಾದಾರ್ಪಣೆ ಮಾಡಿ ಹೋಗಬೇಕೆಂದು ಅವರನ್ನು ಬಹಳವಾಗಿ ಪ್ರಾರ್ಥನೆ ಮಾಡಿಕೊಂಡಿದ್ದಳು. ಇಂದು ಆಕೆಯ ಮನೆಗೆ ಹೋಗಬೇಕಾಗಿದೆ, ಇನ್ನೊಬ್ಬ ಭಕ್ತೆ, ಗಣುವಿನ ತಾಯಿ. ಆಕೆಯ ಮನೆಗೂ ಹೋಗಬೇಕಾಗಿದೆ.
ತನ್ನ ಪರೀಕ್ಷೆ ಹತ್ತಿರಬಂದಿರುವುದರಿಂದ ಆಗಾಗ ಬಂದು ಪರಮಹಂಸರನ್ನು ನೋಡಲಾಗುವುದಿಲ್ಲವೆಂದು ಚಿಕ್ಕ ನರೇನ ಪರಮಹಂಸರಿಗೆ ತಿಳಿಸಿದ್ದ.
ಶ್ರೀರಾಮಕೃಷ್ಣರು (ಚಿಕ್ಕ ನರೇನನಿಗೆ): “ನಿನ್ನನ್ನು ಕರೆಯಲು ನಾನು ಯಾರನ್ನೂ ಕಳುಹಿಸಿರಲಿಲ್ಲವಲ್ಲ!”
ಚಿಕ್ಕ ನರೇನ (ನಗುತ್ತ): “ಏನೋ ಬಂದದ್ದಾಯಿತು. ಈಗ ಮಾಡುವುದೇನು?”
ಶ್ರೀರಾಮಕೃಷ್ಣರು: “ನೋಡಪ್ಪ, ನಿನ್ನ ವ್ಯಾಸಂಗಕ್ಕೆ ತೊಂದರೆ ಮಾಡಲು ನನಗೆ ಇಚ್ಛೆಯಿಲ್ಲ. ಸಮಯ ದೊರೆತಾಗ ಮಾತ್ರ ಬಂದು ನನ್ನನ್ನು ನೋಡು.”
ಪರಮಹಂಸರು ಈ ಮಾತುಗಳನ್ನು ಸ್ವಲ್ಪ ಮುನಿಸಿಕೊಂಡವರ ಹಾಗೆ ಮಾತನಾಡಿದರು.
ಪರಮಹಂಸರು ನಂದಬಸುವಿನ ಮನೆಗೆ ಹೊರಡಲು ಸಿದ್ಧರಾಗಿದ್ದಾರೆ. ಪಲ್ಲಕ್ಕಿ ಬಂದು ನಿಂತಿತು. ಭಗವಂತನ ಹೆಸರನ್ನು ಜಪಿಸುತ್ತ ಪಲ್ಲಕ್ಕಿಯನ್ನು ಹತ್ತಿದರು. ಅವರು ಕಪ್ಪು ಮೆರಗು ಹಾಕಿರುವ ಪಾದರಕ್ಷೆಗಳನ್ನು ಹಾಕಿಕೊಂಡಿದ್ದರು. ಕೆಂಪು ಅಂಚಿನ ಪಂಚೆಯನ್ನು ಉಟ್ಟಿದ್ದರು. ಮೈಮೇಲೆ ಉತ್ತರೀಯವಿರಲಿಲ್ಲ. ಮಾಸ್ಟರ್ ಅವರ ಪಾದರಕ್ಷೆಗಳನ್ನು ಪಲ್ಲಕ್ಕಿಯಲ್ಲಿ ಒಂದು ಕಡೆ ಇಟ್ಟ. ಆತ ಕಾಲುನಡಿಗೆಯಲ್ಲಿ ಪಲ್ಲಕ್ಕಿಯ ಹಿಂದೆಯೇ ಹೊರಟ. ಪರೇಶನೂ ಪಲ್ಲಕ್ಕಿಯನ್ನು ಹಿಂಬಾಲಿಸಿದ.
ಪಲ್ಲಕ್ಕಿ ನಂದಬಸುವಿನ ಮನೆಯ ಗೇಟಿನೊಳಕ್ಕೆ ಬಂದಿತು. ಬಳಿಕ ಮನೆಯ ಮುಂದಿನ ವಿಶಾಲ ಪ್ರದೇಶವನ್ನು ದಾಟಿ ಮನೆಯನ್ನು ತಲುಪಿತು. ಮನೆಯವರೆಲ್ಲರೂ ಪರಮಹಂಸರನ್ನು ಎದುರುಗೊಂಡು ಅವರಿಗೆ ಪ್ರಣಾಮಮಾಡಿದರು. ತಮ್ಮ ಪಾದರಕ್ಷೆಗಳನ್ನು ತೆಗೆದುಕೊಡುವಂತೆ ಮಾಸ್ಟರಿಗೆ ಹೇಳಿ, ಅವರು ಪಲ್ಲಕ್ಕಿಯಿಂದ ಕೆಳಕ್ಕೆ ಇಳಿದು, ಮೇಲುಗಡೆ ಇದ್ದ ಒಂದು ವಿಸ್ತಾರವಾದ ಹಾಲಿಗೆ ಬಂದರು. ಅದನ್ನು ಬಹಳ ವಿಸ್ತಾರವಾದ ಒಂದು ಕೊಠಡಿ ಅಂತಲೇ ಹೇಳಬಹುದು. ಅದರ ನಾಲ್ಕು ಕಡೆಯಲ್ಲಿಯೂ ದೇವದೇವಿಯರ ಪಟಗಳನ್ನು ತೂಗುಹಾಕಿದ್ದರು.
ನಂದಬಸು ಮತ್ತು ಆತನ ಸೋದರ ಪಶುಪತಿ ಪರಮಹಂಸರಿಗೆ ಪ್ರಣಾಮ ಮಾಡಿದರು. ಪಲ್ಲಕ್ಕಿಯ ಹಿಂದೆ ಬರುತ್ತಿದ್ದ ಪರಮಹಂಸರ ಭಕ್ತರೂ ಆ ಹಾಲಿಗೆ ಹತ್ತಿ ಬಂದರು. ಗಿರೀಶನ ಸಹೋದರ ಅತುಲ ಬಂದಿದ್ದಾನೆ. ಪ್ರಸನ್ನನು ಶ್ರೀರಾಮಕೃಷ್ಣರ ಭಕ್ತ. ಆತನು ಹಿಂದೆ ಆಗಾಗ ನಂದಬಸುವಿನ ಮನೆಗೆ ಬಂದು ಹೋಗುವ ವಾಡಿಕೆ. ಆತನೂ ಅಲ್ಲಿಗೆ ಬಂದಿದ್ದಾನೆ.
ಈಗ ಪರಮಹಂಸರು ಪಟಗಳನ್ನು ನೋಡಲು ಮೇಲಕ್ಕೆ ಎದ್ದರು. ಮಾಸ್ಟರ್ ಮತ್ತು ಇನ್ನು ಕೆಲವು ಭಕ್ತರು ಅವರ ಸುತ್ತಲೂ ನಿಂತಿದ್ದಾರೆ. ಪಶುಪತಿ ಅವರೆಲ್ಲರಿಗೂ ಯಾವ ಯಾವ ಪಟ ಏನೇನು ಎಂಬುದನ್ನು ವಿವರಿಸುತ್ತಿದ್ದಾನೆ.
ಮೊದಲನೆಯದು ಚತುರ್ಭುಜ ಮಹಾವಿಷ್ಣುವಿನ ಪಟ. ಅದರ ಕಡೆ ದೃಷ್ಟಿ ಹಾಕಿದೊಡನೆಯೇ ಪರಮಹಂಸರು ಭಾವಾವಿಷ್ಟರಾಗಿಬಿಟ್ಟಿದ್ದಾರೆ. ನಿಂತುಕೊಂಡಿದ್ದವರು ಹಾಗೆಯೇ ಕೆಳಗೆ ಕುಳಿತುಕೊಂಡರು.
ಎರಡನೆಯದು, ಭಕ್ತವತ್ಸಲ ಶ್ರೀರಾಮಚಂದ್ರನ ಪಟ. ಶ್ರೀರಾಮನು ಹನುಮಂತನ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡುತ್ತಿದ್ದಾನೆ. ಹನುಮಂತನ ದೃಷ್ಟಿ ಶ್ರೀರಾಮಚಂದ್ರನ ಪಾದಪದ್ಮಗಳ ಕಡೆಗೆ ತಿರುಗಿದೆ. ಪರಮಹಂಸರು ಬಹಳ ಹೊತ್ತಿನವರೆಗೆ ಈ ಪಟವನ್ನು ನೋಡಿದರು. ಅವರು ಭಾವದಲ್ಲಿ ಹೇಳುತ್ತಿದ್ದಾರೆ, “ಆಹ! ಆಹ!” ಅಂತ.
ಮೂರನೆಯದು ಶ್ರೀಕೃಷ್ಣ ಕೊಳಲನ್ನು ಊದುತ್ತ ಕದಂಬ ಮರದ ಕೆಳಗೆ ನಿಂತು ಕೊಂಡಿರುವ ಪಟ.
ನಾಲ್ಕನೆಯದು ವಾಮನಾವತಾರದ ಪಟ. ಛತ್ರಿಯನ್ನು ತಲೆಯ ಮೇಲೆ ಹಿಡಿದು ಕೊಂಡು ವಾಮನ ಬಲಿಯ ಯಜ್ಞಕ್ಕೆ ಹೋಗುತ್ತಿದ್ದಾನೆ. ಪರಮಹಂಸರು ಅಂದರು, “ವಾಮನ!” ಅಂತ. ಇದರ ಕಡೆಯೂ ನೆಟ್ಟದೃಷ್ಟಿಯಿಂದ ನೋಡುತ್ತಿದ್ದಾರೆ.
ಬಳಿಕ ಪರಮಹಂಸರು ನೃಸಿಂಹನ ಪಟದ ಕಡೆ ದೃಷ್ಟಿಹಾಕಿದ ನಂತರ ಗೋವಿನ ಮಂದೆಯ ಮಧ್ಯೆ ನಿಂತಿರುವ ಶ್ರೀಕೃಷ್ಣನ ಪಟವನ್ನು ನೋಡುತ್ತಿದ್ದಾರೆ. ಅದರಲ್ಲಿ ಶ್ರೀಕೃಷ್ಣ ತನ್ನ ಗೋಪಾಲಕ ಗೆಳೆಯರೊಡನೆ ಬೃಂದಾವನದ ಹತ್ತಿರ ಹರಿಯುವ ಯಮುನಾದಡದಲ್ಲಿ ಗೋವುಗಳನ್ನು ಮೇಯಿಸುತ್ತಿದ್ದಾನೆ. ಮಾಸ್ಟರ್ ಸಂಭ್ರಮದಿಂದ ಹೇಳಿದ, “ಇದು ಬಹಳ ಸುಂದರವಾದ ಪಟ!” ಅಂತ.
ಪರಮಹಂಸರು ಬಳಿಕ ಧೂಮವತಿ, ಷೋಡಶಿ, ಭುವನೇಶ್ವರಿ, ತಾರೆ, ಕಾಳಿ ಪಟಗಳನ್ನು ಒಂದೊಂದಾಗಿ ನೋಡಿ ಹೇಳುತ್ತಿದ್ದಾರೆ, “ಇವೆಲ್ಲ ಉಗ್ರಮೂರ್ತಿಗಳು. ಇವನ್ನು ಮನೆಯಲ್ಲಿ ಇಡಕೂಡದು. ಇವನ್ನು ಮನೆಯಲ್ಲಿ ಇಟ್ಟರೆ ನಿತ್ಯಪೂಜೆ ಮಾಡಬೇಕಾಗುತ್ತದೆ. ಬರಿದೆ ಇವನ್ನು ಗೋಡೆಗೆ ತೂಗುಹಾಕಿ ಇಟ್ಟುಕೊಂಡಿರಬೇಕಾದರೆ, ನೀವು ಒಳ್ಳೆ ಆದೃಷ್ಟಶಾಲಿಗಳೇ ಆಗಿರಬೇಕು” ಅಂತ.
ಬಳಿಕ ಅನ್ನಪೂರ್ಣೆಯ ಪಟವನ್ನು ನೋಡಿದೊಡನೆಯೆ ಪರಮಹಂಸರು ಭಾವಾವೇಶರಾಗಿ ಹೇಳುತ್ತಿದ್ದಾರೆ, “ಭೇಷ್! ಭೇಷ್!” ಅಂತ.
ಮುಂದಿನದು ರಾಧಿಕೆ ದೊರೆತನ ಮಾಡುತ್ತಿರುವುದು. ಅವಳು ನಿಕುಂಜವನದಲ್ಲಿ ಸಖಿಯರನ್ನು ಸುತ್ತುಗಟ್ಟಿಕೊಂಡು ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾಳೆ. ಶ್ರೀಕೃಷ್ಣ ಆ ವನದ ಮಹಾದ್ವಾರದಲ್ಲಿ ದ್ವಾರಪಾಲಕನಾಗಿ ಕುಳಿತಿದ್ದಾನೆ.
ಮುಂದಿನದು ರಾಧಾಕೃಷ್ಣರು ಉಯ್ಯಾಲೆಯಾಡುತ್ತಿರುವ ಪಟ. ಅದರ ಮುಂದಿನದು ಗ್ಲಾಸ್ ಕೇಸಿನ ಒಳಗಿಟ್ಟಿರುವ ಸರಸ್ವತಿಯ ಪಟ. ಸರಸ್ವತಿಯು ಕೈಯಲ್ಲಿ ವೀಣೆ ಹಿಡಿದು ಭಾವಾವಿಷ್ಟಳಾಗಿ ರಾಗರಾಗಿಣಿಗಳನ್ನು ಹಾಡುತ್ತಿದ್ದಾಳೆ. ಪರಮಹಂಸರು ಇದನ್ನೂ ಬಹಳ ಹೊತ್ತಿನವರೆಗೆ ನಿಂತು ನೋಡಿದರು.
ಪಟಗಳನ್ನೆಲ್ಲ ನೋಡಿಯಾದ ನಂತರ ಪರಮಹಂಸರು ನಂದಬಸುವಿನ ಹತ್ತಿರಕ್ಕೆ ಬಂದು, ಅಲ್ಲಿ ನಿಂತುಕೊಂಡಿದ್ದ ಹಾಗೇ ಆತನಿಗೆ ಹೇಳುತ್ತಿದ್ದಾರೆ, “ಇಂದು ನನಗೆ ಬಹಳ ಆನಂದವಾಗಿಬಿಟ್ಟಿತು. ಭೇಷ್! ನೀನು ನಿಜವಾಗಿಯೂ ಹಿಂದು! ಐರೋಪ್ಯರ ಪಟಗಳನ್ನಿಡದೆ ಇವನ್ನೇ ಇಟ್ಟಿದ್ದೀಯೆ, ಬಹಳ ಆಶ್ಚರ್ಯ!”
ನಂದಬಸು ಇನ್ನೂ ಕುಳಿತೇ ಇದ್ದ. ಆತ “ದಯವಿಟ್ಟು ಕುಳಿತುಕೊಳ್ಳಿ. ನಿಂತುಕೊಂಡೇ ಇದ್ದೀರಲ್ಲ ಏಕೆ?” ಅಂತ ಹೇಳಿದ.
ಶ್ರೀರಾಮಕೃಷ್ಣರು (ಕುಳಿತುಕೊಂಡು): “ಈ ಪಟಗಳೆಲ್ಲ ಬಹಳ ದೊಡ್ಡ ದೊಡ್ಡವು. ನೀನು ಒಳ್ಳೆ ಹಿಂದು.”
ನಂದಬಸು: “ನನ್ನ ಹತ್ತಿರ ಐರೋಪ್ಯರ ಪಟಗಳೂ ಇವೆ.”
ಶ್ರೀರಾಮಕೃಷ್ಣರು (ನಗುತ್ತ): “ಅವು ಇಂಥವುಗಳಲ್ಲದಿರಬೇಕು. ಅವುಗಳ ಕಡೆ ನಿನ್ನ ಮನಸ್ಸು ಅಷ್ಟೊಂದಾಗಿ ಎಳೆಯುತ್ತಿಲ್ಲ.”
ಕೇಶವಸೇನನ ನವವಿಧಾನ ಸಂಬಂಧವಾದ ಒಂದು ಪಟವನ್ನು ಗೋಡೆಯ ಮೇಲೆ ನೇತು ಹಾಕಿತ್ತು. ಅದನ್ನು ಸುರೇಶಮಿತ್ರ ಬರೆಯಿಸಿದ್ದ. ಆತ ಪರಮಹಂಸರ ಒಬ್ಬ ಪ್ರಿಯಭಕ್ತ, ಅದರಲ್ಲಿ ಪರಮಹಂಸರು ಕೇಶವಸೇನನಿಗೆ ತೋರಿಸುತ್ತಿದ್ದಾರೆ: ಭಿನ್ನ ಭಿನ್ನ ಮತಾವಲಂಬಿಗಳು ಭಿನ್ನ ಭಿನ್ನ ಮಾರ್ಗದ ಮೂಲಕ ಆ ಒಂದೇ ಭಗವಂತನ ಕಡೆ ಮುಂದುವರಿಯುತ್ತಿದ್ದಾರೆ: ಮುಟ್ಟುವ ಗುರಿ ಒಂದೇ, ಆದರೆ ಪಥಗಳು ಮಾತ್ರ ವಿವಿಧ ಅಂತ.
ಶ್ರೀರಾಮಕೃಷ್ಣರು: “ಅದು ಸುರೇಂದ್ರ ಬರೆಯಿಸಿದ ಪಟ.”
ಪ್ರಸನ್ನನ ತಂದೆ (ನಗುತ್ತ): “ನೀವೂ ಅದರೊಳಗಿದ್ದೀರಿ.”
ಶ್ರೀರಾಮಕೃಷ್ಣರು (ನಗುತ್ತ): “ಅದು ಒಂದು ತರದ್ದು; ಅದರೊಳಗೆ ಎಲ್ಲಾ ಇದೆ. ಅದು ನವೀನ ಕಾಲದ ಭಾವವನ್ನು ಸೂಚಿಸುತ್ತದೆ.”
ಹೀಗೆ ಮಾತಾಡುತ್ತ ಮಾತಾಡುತ್ತ ಇದ್ದ ಹಾಗೆಯೇ ಪರಮಹಂಸರು ಭಾವಾವಿಷ್ಟರಾಗಿ ಜಗನ್ಮಾತೆಯೊಡನೆ ಮಾತಾಡುತ್ತಿದ್ದಾರೆ. ಕೆಲವು ನಿಮಿಷಗಳಾದ ನಂತರ ಉನ್ಮತ್ತರಂತೆ ಹೇಳುತ್ತಿದ್ದಾರೆ, “ನನಗೆ ಪ್ರಜ್ಞೆ ತಪ್ಪಿಹೋಗಿಲ್ಲ” ಅಂತ. ಮನೆಯ ಕಡೆ ನೋಡುತ್ತ ಹೇಳುತ್ತಿದ್ದಾರೆ, “ಇದೇನೊ ಒಂದು ದೊಡ್ಡ ಭವನ. ಇದರೊಳಗೆ ಏನಿದೆ? ಇಟ್ಟಿಗೆ, ಮರ, ಮಣ್ಣು!” ಅಂತ.
ಸ್ವಲ್ಪ ಹೊತ್ತಾದ ನಂತರ ಹೇಳುತ್ತಿದ್ದಾರೆ, “ದೇವದೇವಿಯರ ಈ ಪಟಗಳನ್ನೆಲ್ಲ ನೋಡಿ ನನಗೆ ಬಹಳ ಆನಂದವಾಗಿಬಿಟ್ಟಿದೆ” ಅಂತ. ಮತ್ತೆ ಹೇಳುತ್ತಿದ್ದಾರೆ, “ಕಾಳಿ, ತಾರಾ ಇವರೇ ಮೊದಲಾದ ಉಗ್ರಮೂರ್ತಿಗಳ ಪಟಗಳನ್ನು ಸುಮ್ಮನೆ ಮನೆಯಲ್ಲಿ ಇಟ್ಟುಕೊಂಡಿರುವುದು ಒಳ್ಳೆಯದಲ್ಲ; ಇಟ್ಟುಕೊಂಡರೆ ಅವಕ್ಕೆ ನಿತ್ಯಪೂಜೆಯನ್ನು ಮಾಡಬೇಕಾಗುತ್ತದೆ” ಅಂತ.
ಪಶುಪತಿ (ನಗುತ್ತ): “ಆಕೆ ಎಷ್ಟು ಕಾಲದವರೆಗೆ ಅವುಗಳನ್ನೆಲ್ಲ ನಡೆಯಿಸಿಕೊಂಡು ಹೋಗುವಳೊ, ಅಷ್ಟು ಕಾಲದವರೆಗೆ ಅವು ನಡೆದುಕೊಂಡು ಹೋಗುತ್ತವೆ.”
ಶ್ರೀರಾಮಕೃಷ್ಣರು: “ಅದೇನೊ ನಿಜ. ಆದರೆ ಭಗವಂತನಲ್ಲಿ ಮನಸ್ಸನ್ನಿಡುವುದು ಮೇಲು. ಆತನನ್ನು ಮರೆಯುವುದು ಒಳ್ಳೆಯದಲ್ಲ.”
ನಂದಬಸು: “ಹಾಗೆ ಮಾಡಬೇಕೆಂಬ ಬುದ್ಧಿ ಎಲ್ಲಿ ನಮಗೆ?”
ಶ್ರೀರಾಮಕೃಷ್ಣರು: “ಆತನ ಕೃಪೆ ಒದಗಿತು ಅಂದರೆ ಅದು ತಾನಾಗಿ ಬರುತ್ತದೆ.”
ನಂದಬಸು: “ಆತನ ಕೃಪೆ ಎಲ್ಲಿ ಬಂದೊದಗುತ್ತದೆ? ಕೃಪೆ ಮಾಡುವ ಶಕ್ತಿ ನಿಜವಾಗಿ ಆತನಿಗಿದೆಯೇ?”
ಶ್ರೀರಾಮಕೃಷ್ಣರು: “ಓಹೋ, ನೀನೂ ಪಂಡಿತರ ಹಾಗೆ ಯೋಚಿಸುತ್ತಿದ್ದೀಯ: ಕರ್ಮಕೆ ತಕ್ಕಂತೆ ಫಲ ಅಂತ. ಈ ಭಾವನೆಗಳನ್ನು ತ್ಯಜಿಸಿಬಿಡು. ಭಗವಂತನಲ್ಲಿ ಶರಣಾಗತನಾದರೆ ಕರ್ಮ ಕ್ಷಯವಾಗಿ ಬಿಡುತ್ತದೆ. ನಾನು ಕೈಯಲ್ಲಿ ಹೂವನ್ನು ಹಿಡಿದು ಭಗವತಿಗೆ ಪ್ರಾರ್ಥನೆಮಾಡುತ್ತಿದ್ದೆ. ‘ತಾಯೆ, ಇಗೋ ತೆಗೆದಿಕೊ ನಿನ್ನ ಪಾಪವನ್ನು, ಇಗೋ ತೆಗೆದುಕೊ ನಿನ್ನ ಪುಣ್ಯವನ್ನು. ನನಗೆ ಯಾವುದೂ ಬೇಡ; ಶುದ್ಧಭಕ್ತಿಯನ್ನು ಮಾತ್ರ ಕರುಣಿಸು. ಇಗೋ ತೆಗೆದುಕೊ ನಿನ್ನ ಒಳ್ಳೆಯದನ್ನು; ಇಗೋ ತೆಗೆದುಕೊ ನಿನ್ನ ಕೆಟ್ಟದ್ದನ್ನು. ನನಗೆ ಒಳ್ಳೆಯದು ಕೆಟ್ಟದು ಯಾವುದೂ ಬೇಡ; ಶುದ್ಧ ಭಕ್ತಿಯನ್ನು ಮಾತ್ರ ನೀಡು. ಇಗೋ ತೆಗೆದುಕೋ ನಿನ್ನ ಧರ್ಮವನ್ನು; ಇಗೋ ತೆಗೆದುಕೋ ನಿನ್ನ ಅಧರ್ಮವನ್ನು. ನನಗೆ ಧರ್ಮಾಧರ್ಮ ಯಾವುದೂ ಬೇಡ; ಶುದ್ಧಭಕ್ತಿಯನ್ನು ಮಾತ್ರ ಕರುಣಿಸು. ಇಗೋ ತೆಗೆದುಕೋ ನಿನ್ನ ಜ್ಞಾನವನ್ನು; ಇಗೋ ತೆಗೆದುಕೋ ನಿನ್ನ ಅಜ್ಞಾನವನ್ನು. ನನಗೆ ಜ್ಞಾನಾಜ್ಞಾನ ಯಾವುದೂ ಬೇಕಾಗಿಲ್ಲ; ಕೇವಲ ಶುದ್ಧಭಕ್ತಿಯನ್ನು ಕೃಪೆ ಮಾಡು. ಇಗೋ ನಿನ್ನ ಶುಚಿ; ಇಗೋ ನಿನ್ನ ಅಶುಚಿ. ನನಗೆ ಶುದ್ಧಭಕ್ತಿಯನ್ನು ಮಾತ್ರ ನೀಡು’ ಅಂತ.”
ನಂದಬಸು: “ಭಗವಂತ ಶಾಸನವನ್ನು ಉಲ್ಲಂಘನೆ ಮಾಡಬಲ್ಲನೆ?”
ಶ್ರೀರಾಮಕೃಷ್ಣರು: “ಏನು ನೀನು ಹೇಳುವುದು? ಭಗವಂತ ಎಲ್ಲಕ್ಕೂ ಒಡೆಯ. ಆತನ ಕೈಯಲ್ಲಿ ಎಲ್ಲವೂ ಸಾಧ್ಯ. ಯಾರು ಶಾಸನ ಮಾಡಿದ್ದಾನೊ, ಆತ ಅವನ್ನು ಬದಲಾಯಿಸಲೂ ಬಲ್ಲ.
“ನೀನು ಬೇಕಾದರೆ ಹಾಗೆ ಹೇಳಬಹುದು. ಬಹುಶಃ ಸಾಂಸಾರಿಕ ಸುಖವನ್ನು ಅನುಭವಿಸುವ ಇಚ್ಛೆ ನಿನಗಿರಬಹುದು, ಅದಕ್ಕಾಗಿ ನೀನು ಹೀಗೆ ಮಾತನಾಡುತ್ತಿರುವೆ. ಭೋಗಪಡುವುದೆಲ್ಲ ಮುಗಿಯದ ಹೊರತು ಆತ್ಮಜಾಗೃತಿಯುಂಟಾಗುವುದಿಲ್ಲ ಎಂಬ ಅಭಿಪ್ರಾಯವೊಂದಿರುವುದೇನೊ ನಿಜ. ಆದರೆ ಭೋಗಪಡಲೇನಿದೆ? ಕಾಮಕಾಂಚನದಲ್ಲಿರುವುದು ತಾನೆ ಏನು? ಅದೊಂದು ಅಮಟೆಕಾಯಿ-ಬರೀ ಬೀಜ ಮತ್ತು ತೊಗಟೆ; ತಿಂದರೆ ಹೊಟ್ಟೆ ನೋವು. ಅದು ಸಂದೇಶದ (ಸಿಹಿತಿಂಡಿ) ಹಾಗೆ. ಗಂಟಲಿನೊಳಕ್ಕೆ ಹೋಯಿತೆಂದರೆ ಮತ್ತೆ ಅದರ ರುಚಿ ಸಿಕ್ಕುವ ಹಾಗಿಲ್ಲ.”
ನಂದಬಸು ಕೆಲವು ನಿಮಿಷ ಸುಮ್ಮನೆ ಕುಳಿತಿದ್ದು, ಈಗ ಹೇಳುತ್ತಿದ್ದಾನೆ, “ನೀವು ಹೇಳುವ ಹಾಗೆ ಜನ ಹೇಳುವುದುಂಟು. ಆದರೆ ಭಗವಂತ ಪಕ್ಷಪಾತಿಯೇನು? ಆತನ ಕೃಪೆಯಿಂದ ಎಲ್ಲವೂ ಘಟಿಸಿದರೆ, ಆತನೊಬ್ಬ ಪಕ್ಷಪಾತಿ ಅಂತಲೇ ಹೇಳಬೇಕಾಗುತ್ತದೆ.”
ಶ್ರೀರಾಮಕೃಷ್ಣರು: “ಆತ, ತಾನೇ ಎಲ್ಲವೂ ಆಗಿದ್ದಾನೆ-ಎಂದರೆ ಜೀವಜಗತ್ತಾಗಿದ್ದಾನೆ. ಪೂರ್ಣಜ್ಞಾನ ದೊರೆತಾಗ ಈ ಅನುಭವವಾಗುತ್ತವೆ. ಆತನೇ ಚತುರ್ವಿಂಶತಿ ತತ್ತ್ವಗಳಾಗಿದ್ದಾನೆ-ಎಂದರೆ ಮನಸ್ಸು, ಬುದ್ಧಿ, ದೇಹ ಇವೇ ಮೊದಲಾದುವುಗಳಾಗಿದ್ದಾನೆ. ಆತನೊಬ್ಬನಲ್ಲದೆ ಬೇರೆ ಯಾರಾದರೂ ಇರುವರೇನು ಆತ ಪಕ್ಷಪಾತ ತೋರಿಸುವುದಕ್ಕೆ?”
ನಂದಬಸು: “ಆತ ನಾನಾ ರೂಪಗಳನ್ನು ಏಕೆ ಧರಿಸಿದ್ದಾನೆ? ಕೆಲವರು ಬುದ್ಧಿವಂತರಾಗಿಯೂ, ಕೆಲವರು ದಡ್ಡರಾಗಿಯೂ ಇರುವುದಕ್ಕೆ ಕಾರಣವೇನು?”
ಶ್ರೀರಾಮಕೃಷ್ಣರು: “ಆತನ ಖುಷಿ.”
ಅತುಲ: “ಕೇದಾರಬಾಬು ಇದನ್ನು ಬಹಳ ಚೆನ್ನಾಗಿ ಹೇಳುತ್ತಾನೆ. ಒಬ್ಬ ಆತನನ್ನು ಕೇಳಿದ, ‘ಭಗವಂತನು ಈ ಜಗತ್ತನ್ನು ಏಕೆ ಸೃಷ್ಟಿಸಿದ?’ ಅಂತ. ಅದಕ್ಕೆ ಆತ ಹೇಳಿದ, ‘ಯಾವ ಮೀಟಿಂಗಿನಲ್ಲಿ ಭಗವಂತ ಸೃಷ್ಟಿಯ ಸಂಬಂಧವಾಗಿ ಆಲೋಚನೆ ಮಾಡಿದನೊ, ಅದರಲ್ಲಿ ನಾನು ಇರಲಿಲ್ಲ’ ಅಂತ.” (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು: “ಆತನ ಖುಷಿ.”
ಹೀಗೆಂದು ಹೇಳಿ ಪರಮಹಂಸರು ಹಾಡಲಾರಂಭಿಸಿದರು :
ಎಲ್ಲವೂ ನಿನ್ನಿಚ್ಛೆಯಂತೆ ನಡೆದಿರಲು
ನೀನೆ ಭವಸಾಗರವ ದಾಟಿಸುವ ಹಡಗು
ನಿನ್ನ ಇಚ್ಛೆಯ ನೀನು ಪೂರೈಸುತಿರಲು
ತಮ್ಮ ಗೈಮೆಯಿದೆಂದು ತಿಳಿವರೀ ಜನರು!
ಕೆಸರಿನಲಿ ಸಲಗವನು ಹಿಡಿಯುವಳು ನೀನು
ಹೆಳವನನು ಗಿರಿಯ ತುದಿಗೊಯ್ಯುವಳು ನೀನು
ಹಲವರಿಗೆ ಬ್ರಹ್ಮಪದವಿತ್ತು ಹಲವರನು
ಭವಜಲದಿ ಸುಳಿಯೊಳಗೆ ಎಳೆಯುವಳು ನೀನು!
ನೀನು ಚಾಲಕ ಶಕ್ತಿ, ನಾನೊಂದು ಯಂತ್ರ!
ನಾನೊಂದು ಬರಿಯ ಮನೆ, ನೀನದರ ಮಂತ್ರ!
ನಾನೊಂದು ರಥವಾಗೆ, ನೀನದರ ರಥಿಕ!
ನೀ ನಡೆಸೆ ನಾ ನಡೆವೆ; ನಿನ್ನದೀ ಲೋಕ!
ಅವರು ತಮ್ಮ ಮಾತನ್ನು ಮುಂದುವರಿಸಿದರು: ಆಕೆ ಆನಂದಮಯಿ, ಈ ಸೃಷ್ಟಿ ಸ್ಥಿತಿ ಪ್ರಳಯ ಆಕೆಯ ಲೀಲೆಯ ಅಲೆಗಳು. ಆಕೆ ಸೃಷ್ಟಿಸಿರುವ ಅಸಂಖ್ಯ ಜೀವಗಳಲ್ಲಿ ಎಲ್ಲೋ ಒಂದೆರಡು ಮುಕ್ತವಾಗಿಬಿಡುತ್ತವೆ. ಅಷ್ಟಕ್ಕೇ ಆಕೆಗೆ ಆನಂದ.
ಬಾನೊಳಾಡುವ ನೂರು ಸಾವಿರ ಪಟದಲ್ಲಿ
ಒಂದೋ ಎರಡೋ ಕಿತ್ತು ಬಿಡುಗಡೆ
ಪಡೆಯುತಿರಲಾ ಕಡೆಯಲಿ…..
ಕೆಲವು ಸಂಸಾರದಲ್ಲೆ ಬದ್ಧವಾಗಿ ಉಳಿದುಕೊಂಡಿರುತ್ತವೆ. ಕೆಲವು ಮುಕ್ತವಾಗುತ್ತಿರುತ್ತವೆ.
ಜಗದ ಕಡಲಿನ ಮೇಲೆ ಎನಿತೊಂದು ದೋಣಿಗಳು
ತೇಲುತಿಹವೊ!
ಮತ್ತೆನಿತು ದೋಣಿಗಳು ಮುಳುಗಲಿಹವೊ!
ನಂದಬಸು: “ಆಕೆಗೇನೊ ಚೆಲ್ಲಾಟ, ಆದರೆ ನಮಗೆಲ್ಲ ಮರಣಸಂಕಟ.”
ಶ್ರೀರಾಮಕೃಷ್ಣರು: “ನೀವು ಅನ್ನಿಸಿಕೊಳ್ಳುವವರು ಎಲ್ಲಿದ್ದೀರಿ? ಎಲ್ಲವೂ ಆಕೆಯೇ ಆಗಿದ್ದಾಳೆ. ಎಲ್ಲಿಯವರೆಗೆ ಆಕೆ ಯಾರು ಎಂಬುದರ ಅರಿವು ನಿನಗಾಗಿಲ್ಲವೊ, ಅಲ್ಲಿಯವರೆಗೆ ‘ನಾನು’, ‘ನಾನು’ ಅಂತ ಹೇಳಿಕೊಳ್ಳುತ್ತಿರುವೆ.
“ಆಕೆ ಯಾರು ಎಂಬುದನ್ನು ಅರಿತುಕೊಳ್ಳಲು ಎಲ್ಲರಿಗೂ ಸಾಧ್ಯ. ಎಲ್ಲರ ಉದ್ಧಾರವೂ ಆಗಿಯೇ ಆಗುತ್ತದೆ. ಕೆಲವರಿಗೆ ಪ್ರಾತಃಕಾಲವೇ ಊಟ ದೊರೆಯುತ್ತದೆ. ಇನ್ನು ಕೆಲವರಿಗೆ ಮಧ್ಯಾಹ್ನ ಮತ್ತು ಕೆಲವರಿಗೆ ಸಾಯಂಕಾಲ. ಆಹಾರವಿಲ್ಲದೆ ಉಳಿದುಕೊಳ್ಳುವವರು ಮಾತ್ರ ಯಾರೂ ಇಲ್ಲ. ಎಲ್ಲರಿಗೂ ತಮ್ಮ ತಮ್ಮ ಸ್ವರೂಪವನ್ನು ಅರಿತುಕೊಳ್ಳಲು ಅವಕಾಶ ದೊರೆತೇ ದೊರೆಯುತ್ತದೆ.”
ಪಶುಪತಿ: “ನಿಶ್ಚಯ. ಭಗವಂತನೇ ಎಲ್ಲವೂ ಆಗಿದ್ದಾನೆ ಎಂಬ ಬೋಧೆಯಾಗುತ್ತದೆ.”
ಶ್ರೀರಾಮಕೃಷ್ಣರು: “ಈ ‘ನಾನು’ ಎಂಬುದು ಯಾರು ಎಂಬುದನ್ನು ಮೊದಲು ಪತ್ತೆ ಮಾಡಿ ನೋಡು. ಈ ‘ನಾನು’ ಎಂಬುದು ಎಲುಬೆ, ಮಾಂಸವೆ, ರಕ್ತವೆ ಅಥವಾ ಕರುಳೆ? ‘ನಾನು’ ಎಂಬುದು ಯಾರು ಎಂಬುದನ್ನು ಪತ್ತೆಮಾಡಲು ಹೋಗಿ ‘ನೀನು’ ಎಂಬುದು ಪತ್ತೆಯಾಗಿಬಿಡುತ್ತದೆ. ಅಂದರೆ, ನಮ್ಮ ಆಂತರ್ಯದಲ್ಲಿ ಭಗವಂತನ ಶಕ್ತಿ ಹೊರತು ಇನ್ನು ಬೇರೆ ಏನೂ ಇಲ್ಲ ಅಂತ. ‘ನಾನು’ ಎಂಬುದು ಇಲ್ಲವೇ ಇಲ್ಲ, ಇರುವವನು ಆತ ಮಾತ್ರವೇ. (ಪಶುಪತಿಗೆ) ನಿನಗೆ ಯಥೇಷ್ಟವಾದ ಐಶ್ವರ್ಯವಿದೆ, ಆದರೂ ನಿನ್ನಲ್ಲಿ ಅಹಂಕಾರವೆಂಬುದು ಇಲ್ಲ. ಈ ‘ಅಹಂ’ ಎಂಬುದು ಒಮ್ಮೆಗೆ ನಮ್ಮನ್ನು ಬಿಟ್ಟು ತೊಲಗಲೊಲ್ಲದು; ಆದ್ದರಿಂದ ಅದು ತೊಲಗದೆ ಉಳಿದುಕೊಂಡಿದ್ದರೆ, ಆ ನೀಚ ‘ಅಹಂ’ ಭಗವಂತನ ದಾಸನಾಗಿ ಉಳಿದುಕೊಳ್ಳಲಿ. (ಎಲ್ಲರೂ ನಗುತ್ತಾರೆ.) ನಾನು ಭಗವಂತನ ಭಕ್ತ, ಭಗವಂತನ ಮಗು ಅಥವಾ ಭಗವಂತನ ದಾಸ ಎಂಬತಕ್ಕ ಅಹಂಕಾರ ಶ್ರೇಯಸ್ಕರವಾದ್ದು. ಯಾವ ‘ಅಹಂ’ ಎಂಬುದು ನಮ್ಮನ್ನು ಕಾಮಕಾಂಚನಾಸಕ್ತರನ್ನಾಗಿ ಮಾಡುತ್ತದೆಯೊ, ಅದು ಅಪಕ್ವ ‘ಅಹಂ’. ಅದನ್ನು ತ್ಯಾಗಮಾಡಿಬಿಡಬೇಕು.”
ಅಹಂಕಾರದ ಸಂಬಂಧವಾಗಿ ಪರಮಹಂಸರ ಬಾಯಿಂದ ಬಂದ ಈ ವಿವರಣೆಯನ್ನು ಕೇಳಿ ನಂದಬಸುವಿಗೆ ಮತ್ತು ಉಳಿದವರೆಲ್ಲರಿಗೂ ಬಹಳ ಸಂತೋಷವಾಯಿತು.
ಶ್ರೀರಾಮಕೃಷ್ಣರು ಪಶುಪತಿಗೆ: “ಬ್ರಹ್ಮಜ್ಞಾನದ ಲಕ್ಷಣಗಳು ಎರಡು; ಮೊದಲನೆಯದು ಅಹಂಕಾರಶೂನ್ಯತೆ; ಎರಡನೆಯದು ಶಾಂತತೆ. ನಿನಗೆ ಎರಡೂ ಇವೆ. ಆದ್ದರಿಂದ ನಿನಗೆ ಭಗವದನುಗ್ರಹ ಒದಗಿದೆ.
“ಅಧಿಕವಾದ ಐಶ್ವರ್ಯ ಭಗವಂತನನ್ನು ಮರೆಯುವಂತೆ ಮಾಡುತ್ತದೆ. ಅದರ ಸ್ವಭಾವವೇ ಹಾಗೆ. ಯದುಮಲ್ಲಿಕನಿಗೆ ಐಶ್ವರ್ಯ ಬಹಳವಾಗಿ ಹೆಚ್ಚಿದೆ. ಆದ್ದರಿಂದ ಆತ ಈಗ ಭಗವಂತನ ಮಾತನ್ನೇ ಎತ್ತುವುದಿಲ್ಲ. ಹಿಂದೆ ಭಗವದ್ವಿಚಾರದಲ್ಲಿ ಆತ ಬಹಳ ಅನುರಕ್ತನಾಗಿರುತ್ತಿದ್ದ.
“ಕಾಮಕಾಂಚನವೆಂಬುದು ಒಂದು ವಿಧದ ಮದ್ಯ. ಅತಿಯಾಗಿ ಮದ್ಯವನ್ನು ಕುಡಿದು ಬಿಟ್ಟರೆ ಈತ ದೊಡ್ಡಪ್ಪ, ಆತ ಚಿಕ್ಕಪ್ಪ ಎಂಬ ಭೇದಬೋಧೆಯೇ ಇರದು. ಅನೇಕ ವೇಳೆ ಅವರನ್ನೂ ಸಿಕ್ಕಾಪಟ್ಟೆ ಬೈದುಬಿಡುತ್ತಾನೆ. ಕುಡುಕನಿಗೆ ಇವರು ಗುರುಹಿರಿಯರು, ಅವರು ಚಿಕ್ಕಪುಟ್ಟವರು ಎಂಬ ಭೇದಜ್ಞಾನವೇ ಇರದು.”
ನಂದಬಸು: “ಅದೇನೊ ನಿಜ.”
ಪಶುಪತಿ: “ಮಹಾಶಯರೆ, ಥಿಯಾಸೊಫಿ, ಸ್ಪಿರಿಚುಯಲಿಸಮ್ ಇವಗಳ ಸಂಬಂಧ ವಾಗಿ ನಿಮ್ಮ ಅಭಿಪ್ರಾಯವೇನು? ಇವು ಸರಿಯಾದ ಮಾರ್ಗಗಳೇನು? ಸೂರ್ಯಲೋಕ, ಚಂದ್ರಲೋಕ, ನಕ್ಷತ್ರಲೋಕ ಇವುಗಳ ಸಂಬಂಧವಾಗಿ ನಿಮ್ಮ ಅಭಿಪ್ರಾಯವೇನು?”
ಶ್ರೀರಾಮಕೃಷ್ಣರು: “ಇವುಗಳ ವಿಷಯವಾಗಿ ನನಗೆ ಏನೂ ಗೊತ್ತಿಲ್ಲ. ಇವನ್ನೆಲ್ಲ ಏಕೆ ಅಷ್ಟೊಂದು ತಲೆಗೆ ಹಚ್ಚಿಕೊಳ್ಳಬೇಕು? ತೋಟಕ್ಕೆ ಬಂದಿರುವುದು ಮಾವಿನಹಣ್ಣು ತಿನ್ನುವುದಕ್ಕೆ. ತಿಂದು ಆನಂದಪಡು. ತೋಟದಲ್ಲಿ ಎಷ್ಟು ಮಾವಿನ ಮರಗಳಿವೆ, ಅವಕ್ಕೆ ಎಷ್ಟು ಲಕ್ಷ ಕೊಂಬೆರೆಂಬೆಗಳಿವೆ, ಅವುಗಳಲ್ಲಿ ಎಷ್ಟು ಕೋಟಿ ಎಲೆಗಳಿವೆ ಇವೇ ಮೊದಲಾದವುಗಳ ಲೆಕ್ಕಾಚಾರ ಹಾಕುವುದರ ಆವಶ್ಯಕತೆಯೇನಿದೆ? ತೋಟಕ್ಕೆ ಬಂದದ್ದು ಮಾವಿನಹಣ್ಣು ತಿನ್ನುವುದಕ್ಕೆ. ತಿಂದು ಆನಂದಪಡೋಣ.
“ಯಾರಿಗೇ ಆಗಲಿ ಒಮ್ಮೆ ಆತ್ಮಜಾಗೃತಿಯುಂಟಾಗಿಬಿಟ್ಟಿತು ಅಂದರೆ, ಒಮ್ಮೆ ಭಗವಂತನ ದರ್ಶನ ದೊರೆತುಬಿಟ್ಟಿತು ಅಂದರೆ, ಈ ಕೆಲಸಕ್ಕೆ ಬಾರದವುಗಳ ವಿಷಯವಾಗಿ ತಿಳಿದುಕೊಳ್ಳಲು ಇಚ್ಛೆಯೇ ಬರುವುದಿಲ್ಲ. ವಿಷಮಶೀತಜ್ವರದಿಂದ ಸನ್ನಿ ಮುಚ್ಚಿಕೊಂಡಿರುವ ರೋಗಿ ಹೇಳುತ್ತಾನೆ, ‘ನಾನು ಐದು ಸೇರು ಅಕ್ಕಿಯ ಅನ್ನ ಊಟಮಾಡಿ ಬಿಡುತ್ತೇನೆ, ಒಂದು ಇಡೀ ಕೆರೆ ನೀರನ್ನೇ ಕುಡಿದು ಬಿಡುತ್ತೇನೆ!’ ಆಗ ಡಾಕ್ಟರ್ ಹೇಳುತ್ತಾನೆ, ‘ಹಾಗೇನು? ಆಗಲಿ! ಬಹಳ ಒಳ್ಳೆಯದು’. ಹೀಗೆಂದು ಹೇಳಿ ಹುಕ್ಕ ಸೇದುತ್ತ ಹರಟೆ ಹೊಡೆಯುತ್ತಿರುತ್ತಾನೆ. ಆದರೆ ಯಾವಾಗ ಸನ್ನಿ ಇಳಿದುಹೋಗಿ ಬಿಡುವುದೋ ಆಗ ರೋಗಿಯ ಕಷ್ಟಸುಖಗಳಿಗೆಲ್ಲ ಕಿವಿಗೊಡಬೇಕಾಗುತ್ತದೆ.”
ಪಶುಪತಿ: “ನಮ್ಮನ್ನು ಮುಚ್ಚಿಕೊಂಡಿರುವ ಸನ್ನಿ ಯಾವಾಗಲೂ ಇರುವಂತೆ ಕಾಣುತ್ತೆ ಅಲ್ಲವೆ?”
ಶ್ರೀರಾಮಕೃಷ್ಣರು: “ಹಾಗೇಕೆ ಯೋಚಿಸುತ್ತೀಯೆ? ಭಗವಂತನ ಕಡೆ ಮನಸ್ಸನ್ನಿಡು, ಆತ್ಮಜಾಗೃತಿಯುಂಟಾಗುತ್ತದೆ.”
ಪಶುಪತಿ (ನಗುತ್ತ): “ನಮ್ಮ ಸಂಯೋಗ ಭಗವಂತನೊಡನೆ ಬಹಳ ಕ್ಷಣಿಕವಾದ್ದು. ಒಂದು ಸಲ ಹುಕ್ಕ ಸೇದಲು ಎಷ್ಟು ಹೊತ್ತು ಹಿಡಿಯುತ್ತದೆಯೊ, ಅಷ್ಟು ಹೊತ್ತು ಮಾತ್ರ.” (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು: “ಅಷ್ಟೇ ಆದರೆ ತಾನೆ ಏನು? ಆತನೊಡನೆ ಸಂಯೋಗ ಒಂದೇ ಒಂದು ಕ್ಷಣಕಾಲ ಮಾತ್ರ ದೊರೆತರೂ ಮುಕ್ತಿ ದೊರೆತುಬಿಡುತ್ತದೆ.
“ಅಹಲ್ಯೆ ರಾಮನಿಗೆ ‘ಹೇ ರಾಮ, ನನ್ನ ಜನ್ಮ ಹಂದಿಹೊಟ್ಟೆಯಲ್ಲಿ ಬೇಕಾದರೂ ಆಗಲಿ ಅಥವಾ ಬೇರೆಲ್ಲಿ ಬೇಕಾದರೂ ಆಗಲಿ, ಆದರೆ ನನ್ನ ಮನಸ್ಸು ಮಾತ್ರ ನಿನ್ನ ಪಾದಪದ್ಮಗಳ ಕಡೆ ಸತತ ಹರಿಯುವಂತೆ, ನಿನ್ನಲ್ಲಿ ನನಗೆ ಶುದ್ಧಭಕ್ತಿಯುಂಟಾಗುವಂತೆ ಆಶೀರ್ವಾದಮಾಡು’ ಎಂದು ಪ್ರಾರ್ಥನೆ ಮಾಡಿದಳು.
“ನಾರದ ಶ್ರೀರಾಮಚಂದ್ರನಿಗೆ ಪ್ರಾರ್ಥನೆಮಾಡಿದ, ‘ಹೇ ರಾಮ, ಇದೊಂದನ್ನು ವಿನಾ ಬೇರೆ ಯಾವ ವರವನ್ನೂ ನಾನು ನಿನ್ನಿಂದ ಕೇಳುವುದಿಲ್ಲ. ನನಗೆ ಶುದ್ಧ ಭಕ್ತಿಯನ್ನು ಕೊಡು ಮತ್ತು ನಿನ್ನ ಭುವನಮೋಹಿನಿ ಮಾಯೆಯಿಂದ ನಾನು ಮುಗ್ಧನಾಗದಂತೆ ನನಗೆ ಆಶೀರ್ವದಿಸು.’
“ಹೃತ್ಪೂರ್ವಕವಾಗಿ ಆತನಿಗೆ ಪ್ರಾರ್ಥನೆ ಸಲ್ಲಿಸಿದರೆ, ಅವನ ಕಡೆ ಮನಸ್ಸು ಹರಿಯಲಾರಂಭಿಸುತ್ತದೆ, ಆತನ ಪಾದಪದ್ಮಗಳಲ್ಲಿ ಶುದ್ಧ ಭಕ್ತಿಯುಂಟಾಗುತ್ತದೆ.
“ ‘ನಮ್ಮನ್ನು ಮುಚ್ಚಿಕೊಂಡಿರುವ ಸನ್ನಿಯಿಂದ ನಾವು ಗುಣಹೊಂದಬಲ್ಲೆವೆ?’, ‘ನಮ್ಮ ಕೈಯಲ್ಲಿ ಇನ್ನೇನು ತಾನೆ ಹರಿದೀತು?’, ‘ನಾವು ಪಾಪಿಗಳು!’ ಈ ವಿಧದ ಭಾವನೆಗಳನ್ನೆಲ್ಲ ತ್ಯಜಿಸಿಬಿಡು. (ನಂದಬಸುವಿಗೆ) ಈ ವಿಧವಾದ ದೃಢವಿಶ್ವಾಸ ಬೇಕು: ‘ಏನು? ಭಗವನ್ನಾಮವನ್ನು ನಾನು ಒಮ್ಮೆ ಉಚ್ಚರಿಸಿದ್ದೇನೆ, ಇನ್ನೂ ನನ್ನಲ್ಲಿ ಪಾಪ ಅಂದರೆ?”
ನಂದಬಸು: “ಪರಲೋಕವೆಂಬುದು ಇದೆಯೆ? ಮಾಡಿರುವ ಪಾಪಕ್ಕೆ ಶಿಕ್ಷೆ ದೊರೆಯುತ್ತದೆಯೇ?”
ಶ್ರೀರಾಮಕೃಷ್ಣರು: “ನೀನು ಸುಮ್ಮನೆ ಮಾವಿನಹಣ್ಣು ತಿನ್ನು. ಪರಲೋಕವೆಂಬುದು ಇದೆಯೊ ಇಲ್ಲವೊ ಎಂಬುದರ ಗುಣಾಕಾರ ಭಾಗಾಕಾರ ನಿನಗೇಕೆ? ಅದರಿಂದ ದೊರೆಯುವುದು ತಾನೆ ಏನು? ನಿನಗೆ ಮಾವಿನಹಣ್ಣು ಬೇಕು. ತಿನ್ನು ಅದನ್ನ. ನಿನಗೆ ಭಗವಂತನಲ್ಲಿ ಭಕ್ತಿ ಬೇಕು.”
ನಂದಬಸು: “ಮಾವಿನ ಮರಗಳೆಲ್ಲಿವೆ? ನಮಗೆಲ್ಲಿ ಮಾವಿನಹಣ್ಣು ದೊರೆಯುತ್ತವೆ?”
ಶ್ರೀರಾಮಕೃಷ್ಣರು: “ಮಾವಿನ ಮರವೆ? ಆತ ಅನಾದಿ ಅನಂತ ಬ್ರಹ್ಮ. ಆತ ನಿಸ್ಸಂದೇಹವಾಗಿ ಇದ್ದಾನೆ. ಆತ ನಿತ್ಯ; ಆದರೆ ಒಂದು ವಿಷಯ: ಆತ ಕಲ್ಪತರು-
ಸುಮ್ಮನೆ ತಿರುಗಾಟಕೆ ಬಾ ಮನವೇ
ಶ್ರೀ ಕಾಳೀ ಸುರತರುವಿರುವೆಡೆಗೆ!
ಪುರುಷಾರ್ಥವ ಕೈಗೂಡಿಸು ಬಾ ಅಲ್ಲಿ
ಕಾಳೀ ಸುರತರುವಿರುವಲ್ಲಿ!
“ಕಲ್ಪತರುವಿನ ಹತ್ತಿರ ಹೋಗಿ ಪ್ರಾರ್ಥನೆಮಾಡಬೇಕು. ಆಗ ಮಾತ್ರವೇ ಹಣ್ಣು ದೊರೆಯುತ್ತದೆ. ಆಗ ಮಾತ್ರವೇ ಹಣ್ಣು ಕೆಳಕ್ಕೆ ಬೀಳುತ್ತದೆ. ಆಗ ಮಾತ್ರವೇ ಅವನ್ನು ಆರಿಸಿ ತರಲು ಸಾಧ್ಯವಾಗುತ್ತದೆ. ಹಣ್ಣುಗಳು ನಾಲ್ಕು: ಧರ್ಮ, ಅರ್ಥ, ಕಾಮ, ಮೋಕ್ಷ. ಜ್ಞಾನಿಗಳು ಮೋಕ್ಷಫಲಾಪೇಕ್ಷಿಗಳು; ಭಕ್ತರಿಗೆ ಭಕ್ತಿ, ಅಹೇತುಕ ಭಕ್ತಿ ಬೇಕು- ಇವರೀರ್ವರೂ ಧರ್ಮ, ಅರ್ಥ, ಕಾಮ, ಇವನ್ನು ಅಪೇಕ್ಷಿಸುವುದಿಲ್ಲ.
“ಪರಲೋಕದ ಸಂಬಂಧವಾಗಿ ನೀನು ಕೇಳಿದೆಯಲ್ಲವೆ. ಸಾಯುವಾಗ ಯಾವ ಭಾವನೆಗಳನ್ನು ನೀನು ಮಾಡುವೆಯೋ ಅದರಂತೆ ನಿನಗೆ ಮುಂದಿನ ಗತಿ ಎಂಬುದು ಗೀತೆಯ ಅಭಿಮತ. ಭರತರಾಜ ‘ಜಿಂಕೆ’, ‘ಜಿಂಕೆ’ ಅಂತ ಶೋಕಿಸುತ್ತ ಪ್ರಾಣತ್ಯಾಗ ಮಾಡಿದ. ಅದಕ್ಕಾಗಿ ಆತ ಜಿಂಕೆಯಾಗಿ ಹುಟ್ಟಬೇಕಾಗಿ ಬಂತು. ಈ ಕಾರಣದಿಂದಲೇ ಮನುಷ್ಯ ಹಗಲು ಇರುಳು ಜಪ, ತಪ, ಧ್ಯಾನ, ಪೂಜೆ ಇವುಗಳಲ್ಲೇ ನಿರತನಾಗಿರಬೇಕು. ಹೀಗೆ ಮಾಡುತ್ತಿದ್ದರೆ ಸಾಯುವ ಸಮಯದಲ್ಲಿ ಭಗವಚ್ಚಿಂತನೆ ಮನಸ್ಸಿಗೆ ಬರುತ್ತದೆ.
“ಕೇಶವಸೇನನೂ ಪರಲೋಕದ ಸಂಬಂಧವಾಗಿ ನನ್ನನ್ನು ಕೇಳಿದ. ನಾನು ಆತನಿಗೂ ಹೇಳಿದೆ, ‘ಈ ಗುಣಾಕಾರ ಭಾಗಾಕಾರಗಳೆಲ್ಲದರ ಆವಶ್ಯಕತೆಯೇನಿದೆ?’ ಮತ್ತೆ ಆತನಿಗೆ ಹೇಳಿದೆ, ‘ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳದವರೆಗೆ ಮತ್ತೆ ಮತ್ತೆ ಜನ್ಮವೆತ್ತುತ್ತಿರ ಬೇಕಾಗುತ್ತದೆ. ಕುಂಬಾರ ತನ್ನ ಮಡಕೆ ಕುಡಿಕೆಗಳನ್ನು ಒಣಗಲು ಬಿಸಿಲಿಗೆ ಇಡುತ್ತಾನೆ. ದನಕರುಗಳು ಅವನ್ನು ತುಳಿದು ಒಡೆದು ಹಾಕಿಬಿಟ್ಟರೆ, ಬೆಂದ ಮಡಕೆ ಚೂರುಗಳನ್ನು ಬಿಸಾಡಿಬಿಡುತ್ತಾನೆ. ಆದರೆ ಹಸಿ ಮಡಕೆಗಳನ್ನೆಲ್ಲ ಆಯ್ದುಕೊಂಡು, ಅವಕ್ಕೆ ಇನ್ನೂ ಸ್ವಲ್ಪ ಜೇಡಿಮಣ್ಣು ಬೆರಸಿ ಹದ ಮಾಡಿ ಮತ್ತೆ ಚಕ್ರದ ಮೇಲೆ ಹಾಕುತ್ತಾನೆ’ ಅಂತ.”
ಪರಮಹಂಸರು ನಂದಬಸುವಿನ ಮನೆಗೆ ಬಂದು ಆಗಲೇ ಬಹಳ ಹೊತ್ತಾಗಿದ್ದರೂ, ಆತ ಅವರಿಗೆ ಫಲಾಹಾರವನ್ನು ಮಾಡಿಸುವ ಯೋಚನೆಯನ್ನೇ ಮಾಡಿದಂತೆ ಕಾಣಲಿಲ್ಲ. ಪರಮಹಂಸರೇ ಮುಂದೆ ಬಂದು ಆತನಿಗೆ ಹೇಳಿದರು, “ನಾನು ಗೃಹಸ್ಥರ ಮನೆಗೆ ಬಂದರೆ ಏನನ್ನಾದರೂ ತಿಂದುಹೋಗಬೇಕಾಗಿದೆ. ಅದಕ್ಕಾಗಿಯೇ ಅಂದು ನಾನು ಯದುಮಲ್ಲಿಕನ ತಾಯಿಗೆ ಹೇಳಿದೆ, ‘ಏನನ್ನಾದರೂ ಒಂದು ಸ್ವಲ್ಪ ತಿನ್ನುವುದಕ್ಕೆ ಕೊಡು’ ಎಂದು. ನಾನು ಹಾಗೆ ಮಾಡದೆ ಇದ್ದರೆ, ಅದು ಗೃಹಸ್ಥರಿಗೆ ಅಮಂಗಳವನ್ನು ತರುತ್ತದೆ.”
ನಂದಬಸು ಸ್ವಲ್ಪ ಸಿಹಿತಿಂಡಿ ತರಿಸಿ ಪರಮಹಂಸರಿಗೆ ಅರ್ಪಿಸಿದ. ಅವರು ಅದನ್ನು ತಿನ್ನುತ್ತಿದ್ದಾರೆ. ನಂದಬಸು ಮತ್ತು ಉಳಿದ ಭಕ್ತರು ಅವರ ಕಡೆಗೇ ಏಕದೃಷ್ಟಿಯಿಂದ ನೋಡುತ್ತಿದ್ದಾರೆ. ಅದನ್ನು ತಿಂದ ಮೇಲೆ ಕೈತೊಳೆದುಕೊಳ್ಳಲು ಪರಮಹಂಸರು ಮನೆಯ ಸುತ್ತಲೂ ದೃಷ್ಟಿ ಹಾಕಿದರು. ಜಮಖಾನದ ಮೇಲೆ ಒಂದು ಬಿಳಿ ಬಟ್ಟೆ ಹಾಸಿ, ಅದರ ಮೇಲೆ ಅವರು ತಿನ್ನುತ್ತಿದ್ದ ತಟ್ಟೆಯನ್ನು ಇಟ್ಟಿತ್ತು. ಅದರಲ್ಲಿ ಕೈತೊಳೆದುಕೊಳ್ಳುವುದು ಸರಿ ಅಂತ ಅವರಿಗೆ ತೋರಲಿಲ್ಲ. ಅದನ್ನು ನೋಡಿ, ಒಬ್ಬ ಸೇವಕ ಒಂದು ಹಿತ್ತಾಳೆ ಅರಕಿನಚಟ್ಟಿಯನ್ನು ತೆಗೆದುಕೊಂಡು ಬಂದ. ಅಂಥವುಗಳನ್ನು ರಾಜಸಿಕ ಪ್ರವೃತ್ತಿಯುಳ್ಳ ಜನರು ಉಪಯೋಗಿಸುವ ವಾಡಿಕೆಯಿರುವುದರಿಂದ ಪರಮಹಂಸರು ಅದರಲ್ಲಿ ತಮ್ಮ ಕೈ ತೊಳೆಯಲಿಲ್ಲ. ಆ ಸೇವಕನಿಗೆ ಹೇಳಿದರು, “ತೆಗೆದುಕೊಂಡು ಹೋಗು” ಅಂತ. ನಂದಬಸು ಹೇಳಿದ, “ದಯವಿಟ್ಟು ನಿಮ್ಮ ಕೈಯನ್ನು ತೊಳೆದುಕೊಳ್ಳಿ” ಅಂತ. ಪರಮ ಹಂಸರು ಅನ್ಯಮನಸ್ಕರಾಗಿ ಹೇಳಿದರು, “ಏನು? ಕೈ ತೊಳೆದುಕೊಳ್ಳಬೇಕೆ?” ಅಂತ.
ಪರಮಹಂಸರು ದಕ್ಷಿಣ ವರಾಂಡದ ಕಡೆಗೆ ಹೋದರು. ತಮ್ಮ ಕೈಗೆ ನೀರು ಹಾಕುವಂತೆ ಮಾಸ್ಟರಿಗೆ ಆಜ್ಞೆ ಮಾಡಿದರು. ಮಾಸ್ಟರ್ ಒಂದು ಚೊಂಬಿನಿಂದ ಅವರ ಕೈಗೆ ನೀರು ಹಾಕಿದ. ಅವರು ತಮ್ಮ ಬಟ್ಟೆಯಿಂದಲೇ ಕೈಯನ್ನು ಒರಸಿಕೊಂಡು ಕೊಠಡಿಗೆ ಹಿಂದಿರುಗಿದರು. ಬಳಿಕ ತಾಂಬೂಲದ ತಟ್ಟೆಯನ್ನು ಅವರ ಮುಂದೆ ಇಡಲಾಯಿತು. ಆದರೆ ಆಗಲೇ ಕೆಲವರು ಅದರಿಂದ ತಾಂಬೂಲ ತೆಗೆದುಕೊಂಡುಬಿಟ್ಟಿದ್ದರು. ಆದ್ದರಿಂದ ಪರಮಹಂಸರು ಅದರಿಂದ ತಾಂಬೂಲ ತೆಗೆದುಕೊಳ್ಳಲಿಲ್ಲ.
ನಂದಬಸು (ಪರಮಹಂಸರಿಗೆ): “ಒಂದು ವಿಷಯ ಕೇಳಬೇಕು ಎಂದು ಇದ್ದೇನೆ, ಕೇಳಲೇನು?”
ಶ್ರೀರಾಮಕೃಷ್ಣರು (ನಗುತ್ತ): “ಏನು ಅದು?”
ನಂದಬಸು: “ನೀವು ತಾಂಬೂಲ ಏಕೆ ತೆಗೆದುಕೊಳ್ಳಲಿಲ್ಲ? ನಿಮ್ಮ ಎಲ್ಲಾ ವ್ಯವಹಾರವೂ ಒಪ್ಪತಕ್ಕವೆ; ಆದರೆ ಇದೊಂದು ಮಾತ್ರ ಅಲ್ಲ.”
ಶ್ರೀರಾಮಕೃಷ್ಣರು: ಇಷ್ಟದೇವತೆಗೆ ಅರ್ಪಿಸಿ ನಂತರ ತಿನ್ನುವ ಅಭ್ಯಾಸ. ಇದೊಂದು ನನ್ನ ನಿಷ್ಠೆ.”
ನಂದಬಸು: “ಇದನ್ನೂ ನೀವು ಇಷ್ಟದೇವತೆಗೆ ಅರ್ಪಿಸಬಹುದಾಗಿತ್ತಲ್ಲ?”
ಶ್ರೀರಾಮಕೃಷ್ಣರು: “ಜ್ಞಾನಮಾರ್ಗವೆಂಬುದೊಂದಿದೆ.ಭಕ್ತಿಮಾರ್ಗವೆಂಬುದೊಂದಿದೆ. ಜ್ಞಾನಿಗಳ ಮತ, ಎಲ್ಲವನ್ನೂ ಬ್ರಹ್ಮಜ್ಞಾನದ ದೃಷ್ಟಿಯಿಂದ ನೋಡಿ ಅವನ್ನು ಸ್ವೀಕರಿಸಬಹುದು ಅಂತ. ಭಕ್ತಿಮಾರ್ಗದ ಅನುಯಾಯಿ ಸ್ವಲ್ಪ ಭೇದಬುದ್ಧಿ ಮಾಡಬೇಕಾಗುತ್ತದೆ.”
ನಂದವಸು: “ಇನ್ನೂ ನನಗೆ ಅನ್ನಿಸುತ್ತಿದೆ, ನಿಮ್ಮ ಆ ವರ್ತನೆ ಸರಿಯಾಗಲಿಲ್ಲ ಅಂತ.”
ಶ್ರೀರಾಮಕೃಷ್ಣರು ನಗುತ್ತ: “ಅದು ಕೇವಲ ನನ್ನ ಒಂದು ನಿಷ್ಠೆ ಮಾತ್ರ. ನೀನು ಹೇಳುತ್ತಿರುವುದೂ ಸರಿಯೆ. ಅದಕ್ಕೂ ಶಾಸ್ತ್ರಾಧಾರವಿದೆ.”
ಪರಮಹಂಸರು ಈಗ ನಂದಬಸುವಿಗೆ ಎಚ್ಚರಿಕೆ ಕೊಡುತ್ತಿದ್ದಾರೆ : “ಹೊಗಳುಭಟ್ಟರ ಸಂಬಂಧವಾಗಿ ಬಹಳ ಎಚ್ಚರಿಕೆಯಿಂದಿರಬೇಕು. ಅವರು ಕೇವಲ ತಮ್ಮ ಸ್ವಾರ್ಥಕ್ಕಾಗಿಯೇ ದುಡಿಯುತ್ತಾರೆ. (ಪ್ರಸನ್ನನ ತಂದೆಗೆ) ಈ ಮನೆಯಲ್ಲೆ ನೀನೂ ವಾಸಿಸುತ್ತಿರುವಿಯೇನು?”
ಪ್ರಸನ್ನನ ತಂದೆ: “ಇಲ್ಲ ಈ ಅಗ್ರಹಾರದಲ್ಲೆ; ಹುಕ್ಕ ತರಿಸಲೆ?”
ಶ್ರೀರಾಮಕೃಷ್ಣರು ವಿನಯದಿಂದ: “ದಯವಿಟ್ಟು ಈಗ ಬೇಡ, ನೀನು ತೆಗೆದುಕೊ. ಈಗ ನನಗೆ ಇಚ್ಛೆಯಾಗುತ್ತಿಲ್ಲ.”
ನಂದಬಸುವಿನ ಮನೆ ಅರಮನೆಯೋಪಾದಿಯಲ್ಲಿ ಇತ್ತು. ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ, “ಯದುಮಲ್ಲಿಕನ ಮನೆ ಇಷ್ಟು ದೊಡ್ಡದಾಗಿಲ್ಲ. ಹಾಗೆಂದು ನಾನು ಅಂದು ಆತನಿಗೆ ಹೇಳಿದೆ” ಅಂತ.
ನಂದಬಸು: “ಆತ ಜೊರಾಸಂಕೊ ಎಂಬ ಜಾಗದಲ್ಲಿ ಒಂದು ಹೊಸ ಮನೆ ಕಟ್ಟಿಸಿದ್ದಾನೆ.”
ಈಗ ಪರಮಹಂಸರು ನಂದಬಸುವಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೀನು ಸಂಸಾರದಲ್ಲಿದ್ದರೂ ಭಗವಂತನ ಕಡೆಗೆ ಮನಸ್ಸ ನ್ನಿಟ್ಟಿದ್ದೇಯೆ. ಇದು ಏನು ಸಾಮಾನ್ಯ ವ್ಯಾಪಾರವೆ? ಸಂಸಾರತ್ಯಾಗಿ ಭಗವಂತನನ್ನು ಕರೆದೇ ಕರೆಯುತ್ತಾನೆ. ಅದರಲ್ಲಿ ಹೆಚ್ಚುಗಾರಿಕೆ ಇದೆಯೆ? ಸಂಸಾರದಲ್ಲಿದ್ದೂ ಯಾರು ಭಗವಂತನನ್ನು ಕರೆಯುತ್ತಾನೊ ಆತನೇ ಧನ್ಯ. ಆತ ಒಂದು ಇಪ್ಪತ್ತು ಮಣದ ಕಲ್ಲನ್ನು ಜರುಗಿಸಿ, ಅನಂತರ ಅದರ ಕೆಳಗಿರುವ ವಸ್ತುವನ್ನು ಪಡೆಯುವ ವ್ಯಕ್ತಿಯ ಹಾಗೆ.
“ಯಾವುದಾದರೊಂದು ಭಾವವನ್ನು ಆಶ್ರಯಿಸಿಕೊಂಡು ಆತನನ್ನು ಕರೆಯಬೇಕು. ಹನುಮಂತನದು ಜ್ಞಾನಮಿಶ್ರಿತ ಭಕ್ತಿ; ನಾರದನದು ಶುದ್ಧ ಭಕ್ತಿ.
“ರಾಮ ಪ್ರಶ್ನೆ ಹಾಕಿದ, ‘ಹನುಮಂತ, ನೀನು ಯಾವ ಭಾವದಿಂದ ನನ್ನನ್ನು ಅರ್ಚನೆ ಮಾಡುತ್ತಿದ್ದೀಯೆ?’ ಅಂತ. ಹನುಮಂತ ಹೇಳಿದ, ‘ಕೆಲವು ವೇಳೆ ನೀನು ಪೂರ್ಣ ನಾನು ಅಂಶ ಎಂಬ ಭಾವನೆಯಿಂದ ಅರ್ಚಿಸುತ್ತೇನೆ; ಇನ್ನು ಕೆಲವು ವೇಳೆ ನೀನು ಪ್ರಭು ನಾನು ದಾಸ ಎಂಬ ಭಾವನೆಯಿಂದ ಅರ್ಚಿಸುತ್ತೇನೆ. ಆದರೆ ರಾಮ, ನಾನು ತತ್ತ್ವ ಜ್ಞಾನಾವಸ್ಥೆಯಲ್ಲಿರುವಾಗ ನೀನೇ ನಾನು, ನಾನೇ ನೀನು ಎಂಬ ಅನುಭವವಾಗುತ್ತದೆ’ ಅಂತ.
“ರಾಮ ನಾರದನಿಗೆ ‘ನೀನು ಒಂದು ವರ ಬೇಡಿಕೊ’ ಅಂತ ಹೇಳಿದ. ನಾರದ ಪ್ರಾರ್ಥಿಸಿದ, ‘ಹೇ ರಾಮ, ನನಗೆ ನಿನ್ನ ಪಾದಪದ್ಮಗಳಲ್ಲಿ ಶುದ್ಧಭಕ್ತಿಯುಂಟಾಗುವಂತೆಯೂ ಮತ್ತು ನಾನು ನಿನ್ನ ಭುವನಮೋಹಿನಿ ಮಾಯೆಯಿಂದ ಮುಗ್ಧನಾಗದ ಹಾಗೆ ಶಕ್ತನಾಗಿರುವಂತೆಯೂ ವರ ಕರುಣಿಸು’ ಅಂತ.”
ಈಗ ಪರಮಹಂಸರು ಹೊರಡಲಣಿಯಾಗುತ್ತಿದ್ದಾರೆ.
ಶ್ರೀರಾಮಕೃಷ್ಣರು (ನಂದಬಸುವಿಗೆ): “ಯಾರನ್ನು ಅನೇಕರು ಗೌರವಿಸಿ ಸ್ತುತಿಸುತ್ತಾರೊ ಅಂಥವರಲ್ಲಿ ಭಗವಂತ ವಿಶೇಷವಾಗಿ ವ್ಯಕ್ತವಾಗಿರುತ್ತಾನೆ ಎಂಬುದು ಗೀತೆಯ ಅಭಿಮತ. ನಿನ್ನಲ್ಲೂ ಭಗವಂತ ವಿಶೇಷವಾಗಿ ವ್ಯಕ್ತವಾಗಿದ್ದಾನೆ.”
ನಂದಬಸು “ಆತನ ಶಕ್ತಿ ಎಲ್ಲರಲ್ಲಿಯೂ ಒಂದೇ ಸಮ.”
ಶ್ರೀರಾಮಕೃಷ್ಣರು (ವಿರಕ್ತರಾಗಿ): “ನಿಮ್ಮದೆಲ್ಲ ಒಂದೇ ಕೂಗು, ಎಲ್ಲರಲ್ಲಿಯೂ ಶಕ್ತಿ ಒಂದೇ ಸರಿಸಮವಾಗಿ ಇರಲು ಸಾಧ್ಯವೆ? ಆತ ವಿಭುರೂಪದಿಂದ ಸರ್ವಭೂತಗಳಲ್ಲಿಯೂ ಒಂದೇ ಸಮನಾಗಿ ಇರುವುದೇನೋ ನಿಜ; ಆದರೆ ಪ್ರತಿಯೊಂದರಲ್ಲೂ ಶಕ್ತಿ ವಿಶೇಷತೆ ಇದೆ.
“ವಿದ್ಯಾಸಾಗರನೂ ಹೀಗೆಯೇ ಕೇಳಿದ. ಆತ ಕೇಳಿದ, ‘ಭಗವಂತ ಕೆಲವರಿಗೆ ಹೆಚ್ಚು ಶಕ್ತಿಯನ್ನು ಕೆಲವರಿಗೆ ಕಡಿಮೆ ಶಕ್ತಿಯನ್ನು ಕೊಟ್ಟಿದ್ದಾನೇನು?’ ಅಂತ. ಆಗ ನಾನು ಹೇಳಿದೆ, ‘ಅದು ಹಾಗಿಲ್ಲದೆ ಇದ್ದರೆ, ನಾವೇಕೆ ನಿನ್ನನ್ನು ನೋಡಲು ಬಂದಿದ್ದೇವೆ? ನಿನಗೇನು ಎರಡು ಕೊಂಬು ಬೆಳೆದಿವೆಯೆ?”
ಪರಮಹಂಸರು ಮೇಲಕ್ಕೆ ಎದ್ದು ಹೊರಟರು. ಭಕ್ತರೂ ಅವರನ್ನು ಹಿಂಬಾಲಿಸಿದರು. ಪಶುಪತಿಯು ಬಾಗಿಲಿನವರೆಗೆ ಅವರನ್ನು ಕರೆದೊಯ್ದನು.
ಪರಮಹಂಸರು ಈಗ ತನ್ನ ಏಕಮಾತ್ರಪುತ್ರಿಯನ್ನು ಕಳೆದುಕೊಂಡು ಬಹಳವಾಗಿ ದುಃಖಪಡುತ್ತಿರುವ ಒಬ್ಬ ಬ್ರಾಹ್ಮಣಿಯ (ಗೋಲಾಪ್ ಮಾ) ಮನೆಗೆ ಬಂದಿದ್ದಾರೆ. ಅದು ಒಂದು ಹಳೆ ಇಟ್ಟಿಗೆ ಮನೆ. ಅವರು ಮನೆಯನ್ನು ಪ್ರವೇಶಿಸಿ, ತಮ್ಮ ಎಡಭಾಗದಲ್ಲಿದ್ದ ದನಗಳ ಕೊಟ್ಟಿಗೆಯನ್ನು ಬಿಟ್ಟು ಮುಂದುವರಿದು ಚಾವಣಿಯ ಮೇಲಕ್ಕೆ ಹತ್ತಿಹೋದರು. ಭಕ್ತರೂ ಅವರನ್ನು ಹಿಂಬಾಲಿಸಿದರು. ಅಲ್ಲಿ ಕೆಲವರು ನಿಂತುಕೊಂಡು ಪರಮಹಂಸರು ಎಷ್ಟು ಹೊತ್ತಿಗೆ ಬರುವರೆಂದು ಉತ್ಸುಕತೆಯಿಂದ ಕಾದುಕೊಂಡಿದ್ದರು.
ಆ ಬ್ರಾಹ್ಮಣಿಗೆ ಒಬ್ಬಳು ಸಹೋದರಿ ಇದ್ದಳು. ಆಕೆಯೂ ವಿಧವೆ. ಆಕೆಯ ಸಹೋದರರು ತಮ್ಮ ಕುಟುಂಬದೊಡನೆ ಆಕೆಯ ಮನೆಯಲ್ಲಿಯೇ ವಾಸವಾಗಿದ್ದಾರೆ. ಪರಮಹಂಸರು ತನ್ನ ಮನೆಗೆ ಬಂದು ಅದನ್ನು ಪಾವನಮಾಡುವರು ಎಂಬ ಉತ್ಸಾಹದಿಂದ ಇಡಿಯ ದಿನವನ್ನೆಲ್ಲ ತಕ್ಕ ಸಿದ್ಧತೆಯನ್ನು ಮಾಡಿಕೊಳ್ಳುವುದರಲ್ಲಿಯೇ ಬ್ರಾಹ್ಮಣಿ ಕಳೆದಿದ್ದಳು. ಪರಮಹಂಸರು ನಂದಬಸುವಿನ ಮನೆಯಲ್ಲಿ ಎಷ್ಟು ಹೊತ್ತನ್ನು ಕಳೆದರೊ, ಅಷ್ಟು ಹೊತ್ತನ್ನು ಆಕೆ ತನ್ನ ಮನೆಯಲ್ಲಿ ಪರಮಹಂಸರಿಗಾಗಿ ಬಹಳ ಕಾತರತೆಯಿಂದ ಕಾಯುತ್ತ, ಆಗಾಗ ಬೀದಿಬಾಗಿಲಿಗೆ ಹೋಗಿ ಹೋಗಿ ನೋಡಿ ಬರುತ್ತಿದ್ದಳು. ನಂದಬಸುವಿನ ಮನೆಯಿಂದ ಹಿಂದಿರುಗುವಾಗ ಆಕೆಯ ಮನೆಗೆ ಬರುವುದಾಗಿ ಅವರು ಆಕೆಗೆ ತಿಳಿಸಿದ್ದರು. ಅವರು ಬಹಳ ಹೊತ್ತಿನವರೆಗೂ ಬಾರದಿದ್ದುದನ್ನು ನೋಡಿ ಬಹುಶಃ ಅವರು ಇಂದು ತನ್ನ ಮನೆಗೆ ಬಾರದೇನೆ ಹೋಗಿಬಿಡುವರೊ ಏನೊ ಅಂತ ಆಕೆ ಭಾವಿಸಿದಳು.
ಪರಮಹಂಸರು ಜಮಖಾನದ ಮೇಲೆ ಕುಳಿತಿದ್ದಾರೆ. ಮಾಸ್ಟರ್, ಯೋಗೀಂದ್ರ, ನಾರಾಯಣ, ದೇವೇಂದ್ರ ಮತ್ತು ಇನ್ನೂ ಕೆಲವರು ಮಂದಲಿಗೆ ಮೇಲೆ ಕುಳಿತಿದ್ದಾರೆ. ಕೆಲವು ನಿಮಿಷಗಳಾದ ನಂತರ ಚಿಕ್ಕ ನರೇನ ಮತ್ತು ಇನ್ನೂ ಕೆಲವು ಮಂದಿ ಭಕ್ತರು ಅಲ್ಲಿಗೆ ಬಂದರು. ಬ್ರಾಹ್ಮಣಿಯ ಸಹೋದರಿ ಪರಮಹಂಸರಿಗೆ ಪ್ರಣಾಮಮಾಡಿ ಹೇಳಿದಳು, “ನೀವು ಇಲ್ಲಿಗೆ ಬರಲು ಏಕೆ ತಡವಾಗುತ್ತಿದೆ ಎಂಬುದನ್ನು ಅರಿಯಲು ಈಗತಾನೆ ನನ್ನ ಅಕ್ಕ ನಂದಬಸುವಿನ ಮನೆಗೆ ಹೋಗಿದ್ದಾಳೆ. ಇನ್ನೇನು ಬಂದುಬಿಡುತ್ತಾಳೆ.”
ಕೆಳಗಡೆ ಏನೊ ಶಬ್ದವಾಯಿತು. ಆಗ ಆಕೆ “ಬಂದುಬಿಟ್ಟಳು” ಅಂತ ಕೂಗಿ ಹೇಳಿದಳು. ಹೀಗೆಂದು ಹೇಳಿ ಆಕೆ ಕೆಳಕ್ಕೆ ಇಳಿದುಹೋಗಿ ನೋಡಲಾಗಿ ಆಕೆ ಇನ್ನೂ ಬಂದಿರಲಿಲ್ಲ.
ಪರಮಹಂಸರು ಭಕ್ತರಿಂದ ಆವೃತರಾಗಿ ಕುಳಿತಿದ್ದಾರೆ.
ಮಾಸ್ಟರ್ (ದೇವೇಂದ್ರನಿಗೆ): “ಇದು ಎಂಥ ಅಸದೃಶದೃಶ್ಯ! ಮಕ್ಕಳು ಮರಿಗಳು, ದೊಡ್ಡವರು, ಚಿಕ್ಕವರು, ಗಂಡಸರು, ಹೆಂಗಸರು ಎಲ್ಲರೂ ಪರಮಹಂಸರ ದರ್ಶನ ಪಡೆಯಲು ಮತ್ತು ಅವರ ಬಾಯಿಂದ ಬರುವ ಅಮೃತವಾಣಿಯನ್ನು ಕೇಳಲು ಎಷ್ಟು ಉತ್ಸುಕತೆಯಿಂದ ಕಾದು ನಿಂತಿದ್ದಾರೆ!”
ದೇವೇಂದ್ರ (ಪರಮಹಂಸರಿಗೆ): “ಮಾಸ್ಟರ್ ಹೇಳುತ್ತಿದ್ದಾನೆ, ಈ ಜಾಗ ನಂದಬಸುವಿನ ಜಾಗಕ್ಕಿಂತ ಎಷ್ಟೋ ಮೇಲು ಅಂತ. ಈ ಮನೆಯವರ ಭಕ್ತಿ ಎಷ್ಟು ಅದ್ಭುತವಾದದ್ದು!”
ಪರಮಹಂಸರು ನಗುತ್ತಿದ್ದಾರೆ.
ಆ ಬ್ರಾಹ್ಮಣಿಯ ಸಹೋದರಿ “ಅಕ್ಕ ಈಗ ಬರುತ್ತಿದ್ದಾಳೆ” ಅಂತ ಕೂಗಿಕೊಂಡಳು.
ಆ ಬ್ರಾಹ್ಮಣಿ ಬಂದು ಪರಮಹಂಸರಿಗೆ ಪ್ರಣಾಮ ಮಾಡಿದಳು. ಆಕೆಯ ಆನಂದಕ್ಕೆ ಪಾರವೇ ಇಲ್ಲದಂತಾಗಿ, ತಾನು ಮುಂದೆ ಏನು ಮಾಡಬೇಕು, ಏನು ಕೇಳಬೇಕು ಎಂಬುದೇ ಆಕೆಗೆ ತೋರದೆ ಹೋಯಿತು. ಅರ್ಧ ಉಸಿರುಗಟ್ಟಿದ ಸ್ವರದಿಂದ ಹೇಳುತ್ತಿದ್ದಾಳೆ, “ಈಗ ನನಗಾಗಿರುವ ಆನಂದವನ್ನು ನನ್ನ ಕೈಯಲ್ಲಿ ತಡೆದುಕೊಳ್ಳಲಾಗುತ್ತಿಲ್ಲ. ಬಹುಶಃ ನಾನು ಇದರಿಂದಲೇ ಸತ್ತುಹೋಗಿಬಿಡಬಹುದು. ಗೆಳತಿಯರಾ, ನಾನು ಈಗ ಬದುಕಿಕೊಳ್ಳುವ ಬಗೆ ಹೇಗೆ ಎಂಬುದನ್ನು ತಿಳಿಸಿ. ನನ್ನ ಮಗಳು ಚಂಡಿ ರಸ್ತೆಯ ಎರಡು ಪಾರ್ಶ್ವಗಳಲ್ಲಿಯೂ ಶಸ್ತ್ರಸಜ್ಜಿತರಾದ ಸಿಪಾಯಿಗಳಿಂದ ಪಹರೆ ಕಾಯಿಸಿಕೊಂಡು ನನ್ನ ಮನೆಗೆ ಬರುತ್ತಿದ್ದಾಗಲೂ ನನಗಿಷ್ಟು ಆನಂದವಾಗಿರಲಿಲ್ಲ. ಆಕೆ ಸತ್ತದ್ದಕ್ಕಾಗಿ ಆಗಿದ್ದ ಶೋಕ ನನ್ನ ಹೃದಯದಲ್ಲಿ ಈಗ ಒಂದು ಕಿಂಚಿತ್ತೂ ಇಲ್ಲ. ಯಾವಾಗ ಇವರು ಇಲ್ಲಿಗೆ ಬರುವುದನ್ನು ತಡಮಾಡಿದರೊ, ಆಗ ಒಂದು ಪಕ್ಷ ಇವರೇನಾದರೂ ಇಲ್ಲಿಗೆ ಬಾರದೆ ಹೋಗಿಬಿಟ್ಟರೆ ಇವರ ಸತ್ಕಾರಕ್ಕಾಗಿ ಮಾಡಿದ್ದ ಅಡುಗೆಯನ್ನು ಗಂಗೆಗೆ ಬಿಸಾಡಿ, ಇವರೊಡನೆ ಇನ್ನೆಂದಿಗೂ ಮಾತನಾಡುವುದಿಲ್ಲ ಅಂತ ಸಂಕಲ್ಪ ಮಾಡಿಕೊಂಡುಬಿಡಬೇಕು ಎಂದು ಭಾವಿಸಿದ್ದೆ, ಇವರು ಈ ಕಡೆ ಒಮ್ಮೆ ಬಂದಾಗ, ಅಲ್ಲಿಗೆ ಹೋಗಿ ದೂರದಿಂದಲೇ ಇವರ ದರ್ಶನ ಮಾಡಿಕೊಂಡು ಹಿಂದಿರುಗಿ ಬಂದುಬಿಡಬೇಕೆಂತಲೂ ಭಾವಿಸಿದ್ದೆ.
“ನಾನು ಎಷ್ಟು ಆನಂದದಿಂದ ತುಂಬಿತುಳುಕಾಡುತ್ತಿದ್ದೇನೆ ಎಂಬುದನ್ನು ಎಲ್ಲರಿಗೂ ಹೋಗಿ ತಿಳಿಸಿಬರುತ್ತೇನೆ. ನನ್ನ ಸೌಭಾಗ್ಯ ಎಂಥದ್ದು ಎಂಬುದನ್ನು ಯೋಗಿನ್ನಳಿಗೆ ಹೇಳಿ ಬರುತ್ತೇನೆ.”
ಆಕೆ ಇನ್ನೂ ಆನಂದಪರವಶಳಾಗಿ ಹೇಳುತ್ತಿದ್ದಾಳೆ, “ಒಬ್ಬ ಕೂಲಿಯವನಿಗೆ ಲಾಟರಿಯಲ್ಲಿ ಒಂದು ರೂಪಾಯಿಯ ಟಿಕೇಟಿಗೆ ಒಂದು ಲಕ್ಷ ರೂಪಾಯಿ ದೊರೆತುಬಿಟ್ಟಿತು. ಆ ಸಮಾಚಾರ ಆತನ ಕಿವಿಗೆ ಬಿದ್ದೊಡನೆಯೆ ಆನಂದೋತ್ಕರ್ಷೆಯಿಂದ ಆತ ಸತ್ತುಹೋದ. ನಿಜವಾಗಿಯೂ ಸತ್ತುಹೋದ. ನನಗೂ ಅದೇ ಅವಸ್ಥೆ ಬಂದಿದೆ. ನೀವೆಲ್ಲರೂ ನನಗೆ ಆಶೀರ್ವಾದ ಮಾಡಿ, ಇಲ್ಲದಿದ್ದರೆ ನಾನು ನಿಜವಾಗಿಯೂ ಸತ್ತೇಹೋಗುವುದರಲ್ಲಿದ್ದೇನೆ.” ಅಂತ.
ಮಾಸ್ಟರ್ ಬ್ರಾಹ್ಮಣಿಯ ವ್ಯಾಕುಲತೆಯನ್ನು ಮತ್ತು ಭಾವಾವಿಷ್ಟತೆಯನ್ನು ನೋಡಿ ಮುಗ್ಧನಾಗಿ ಹೋಗಿಬಿಟ್ಟಿದ್ದಾನೆ. ಆತ ಆಕೆಯ ಪಾದಧೂಳಿಯನ್ನು ಸ್ವೀಕರಿಸಲು ಮುಂದೆ ಹೋದ. ಆಕೆ ಕೂಗಿಕೊಂಡಳು, “ಏನು ನೀವು ಮಾಡುತ್ತಿರುವುದು?” ಬಳಿಕ ಆಕೆ ಮಾಸ್ಟರಿಗೆ ಪ್ರತಿಪ್ರಣಾಮಮಾಡಿದಳು.
ಪರಮಹಂಸರ ಭಕ್ತರು ತನ್ನ ಮನೆಗೆ ಬಂದಿರುವುದನ್ನು ನೋಡಿ ಬ್ರಾಹ್ಮಣಿಗೆ ಬಹಳ ಆನಂದವಾಗಿಬಿಟ್ಟಿದೆ. ಆಕೆ “ನೀವೆಲ್ಲರೂ ಇಲ್ಲಿಗೆ ಬಂದಿರುವುದನ್ನು ನೋಡಿ ನನಗೆ ಬಹಳ ಆನಂದವಾಗಿಬಿಟ್ಟಿದೆ. ನಾನು ಚಿಕ್ಕ ನರೇನನನ್ನು ಇಲ್ಲಿಗೆ ಕರೆತಂದಿದ್ದೇನೆ. ಆತ ಇಲ್ಲಿಲ್ಲದಿದ್ದರೆ, ನಮ್ಮನ್ನೆಲ್ಲ ನಗಿಸುವವರು ಯಾರು?” ಅಂತ ಹೇಳುತ್ತಿದ್ದಾಳೆ.
ಆಕೆ ಈ ರೀತಿಯಾಗಿ ಮಾತುಕತೆಯಾಡುತ್ತಿರುವಾಗ ಆಕೆಯ ಸಹೋದರಿ ಅಲ್ಲಿಗೆ ಬಂದು ವ್ಯಸ್ತಳಾಗಿ ಆಕೆಗೆ ಹೇಳುತ್ತಿದ್ದಾಳೆ, “ಬಾ ಕೆಳಕ್ಕೆ ಇಳಿದು, ನೀನು ಇಲ್ಲಿಯೇ ನಿಂತು ಕೊಂಡು ಬಿಟ್ಟರೆ ಹೇಗಾದೀತು? ನಾನೊಬ್ಬಳೆ ಎಲ್ಲವನ್ನೂ ನಿರ್ವಹಿಸಲು ಸಾಧ್ಯವೆ?”
ಆದರೆ ಬ್ರಾಹ್ಮಣಿ ಆನಂದಪರವಶಳಾಗಿಬಿಟ್ಟಿದ್ದಾಳೆ. ಪರಮಹಂಸರ ಮತ್ತು ಭಕ್ತರ ಕಡೆ ದೃಷ್ಟಿಸಿ ನೋಡುತ್ತಿದ್ದಾಳೆ. ಅವರನ್ನು ಬಿಟ್ಟು ಹೋಗುವುದು ಅಂದರೆ ಮನಸ್ಸಿಗೆ ಬಹಳ ಕಷ್ಟವಾಗಿ ತೋರುತ್ತಿದೆ.
ಈ ರೀತಿಯಾದ ಮಾತುಕತೆಗಳಾದ ನಂತರ ಬ್ರಾಹ್ಮಣಿ ಅತಿಶಯವಾದ ಶ್ರದ್ಧಾಭಕ್ತಿಗಳಿಂದ ಪರಮಹಂಸರನ್ನು ಬೇರೊಂದು ಕೊಠಡಿಗೆ ಕರೆದುಕೊಂಡು ಹೋಗಿಮೃಷ್ಟಾನ್ನಾದಿಗಳನ್ನು ಅರ್ಪಿಸಿದಳು. ಭಕ್ತರೆಲ್ಲರೂ ಚಾವಣಿ ಮೇಲೆ ಕುಳಿತು ಫಲಾಹಾರವನ್ನು ಸ್ವೀಕರಿಸಲಾರಂಭಿಸಿದರು.
ಸಮಯ ರಾತ್ರಿ ಎಂಟಾಗಿದೆ. ಪರಮಹಂಸರು ಹೊರಡಲು ಸಿದ್ಧರಾಗಿದ್ದಾರೆ. ಅವರು ಬಾಗಿಲ ಹತ್ತಿರಕ್ಕೆ ಬಂದಾಗ ಬ್ರಾಹ್ಮಣಿ ಪರಮಹಂಸರಿಗೆ ಪ್ರಣಾಮಮಾಡುವಂತೆ ತನ್ನ ಮನೆಯವರಿಗೆ ಕೂಗಿ ಹೇಳಿದಳು. ತರುವಾಯ ಆಕೆಯ ಸಹೋದರನೂ ಅವರ ಪಾದಧೂಳಿಯನ್ನು ತೆಗೆದುಕೊಂಡ. ಆತನನ್ನು ಪರಮಹಂಸರಿಗೆ ತೋರಿಸಿ ಆಕೆ ಹೇಳುತ್ತಿದ್ದಾಳೆ, “ಈತನೂ ನನ್ನ ಒಬ್ಬ ಸಹೋದರ, ಆದರೆ ಮೂರ್ಖ” ಪರಮಹಂಸರು ಹೇಳುತ್ತಿದ್ದಾರೆ, “ಇಲ್ಲ, ಎಲ್ಲರೂ ಒಳ್ಳೆಯವರೇ.”
ಒಬ್ಬ ಕೈಯಲ್ಲಿ ದೀಪ ಹಿಡಿದು ಅವರಿಗೆ ದಾರಿ ತೋರಿಸುತ್ತಿದ್ದ. ಆದರೆ ಕೆಲವೆಡೆಗಳಲ್ಲಿ ಸಾಕಾದಷ್ಟು ಬೆಳಕು ಬೀರುತ್ತಿರಲಿಲ್ಲ. ಅವರು ದನದ ಕೊಟ್ಟಿಗೆ ಹತ್ತಿರ ಬಂದು ಒಮ್ಮೆಗೆ ಸುಮ್ಮನೆ ನಿಂತುಕೊಂಡುಬಿಟ್ಟರು. ಭಕ್ತರೆಲ್ಲರೂ ಅವರ ಸುತ್ತಲೂ ಬಂದು ನೆರೆದರು. ಮಾಸ್ಟರ್ ಅವರಿಗೆ ಪ್ರಣಾಮಮಾಡಿ ಅವರ ಪಾದಧೂಳಿಯನ್ನು ತೆಗೆದುಕೊಂಡ. ಪರಮಹಂಸರು ಈಗ ಗಣುವಿನ ತಾಯಿಯ ಮನೆಯ ಕಡೆ ಹೋಗುತ್ತಿದ್ದಾರೆ.
ಪರಮಹಂಸರು ಗಣುವಿನ ತಾಯಿಯ ಮನೆಯ ಬೈಠಕ್ಖಾನೆಯಲ್ಲಿ ಕುಳಿತಿದ್ದಾರೆ. ಮನೆ ಒಂದೇ ಅಂತಸ್ತಿನದು; ರಸ್ತೆಯ ಮೇಲೆ ಇದೆ. ಆ ಕೊಠಡಿಯನ್ನು ಗಾನಗೋಷ್ಠಿಯವರು ಉಪಯೋಗಿಸುತ್ತಿದ್ದರು. ಪರಮಹಂಸರ ಪ್ರೀತ್ಯರ್ಥವಾಗಿ ಆಗಾಗ ಕೆಲವು ಯುವಕರು ತಮ್ಮ ತಮ್ಮ ವಾದ್ಯಯಂತ್ರಗಳನ್ನು ಬಾಜಿಸಲಾರಂಭಿಸಿದರು.
ಆಗ ಘಂಟೆ ರಾತ್ರಿ ಎಂಟೂವರೆ. ಆಕಾಶ, ಮನೆ, ಬೀದಿ ಇವೆಲ್ಲ ಚಂದ್ರನ ಬೆಳಕಿನಿಂದ ಸುಮ್ಮನೆ ನಗುತ್ತಿವೆ; ಇಂದು ಆಷಾಢ ಕೃಷ್ಣ ಪ್ರಥಮ.
ಬ್ರಾಹ್ಮಣಿಯೂ ಪರಮಹಂಸರೊಡನೆ ಅಲ್ಲಿಗೆ ಬಂದಿದ್ದಳು. ಆಕೆ ಒಮ್ಮೊಮ್ಮೆ ಬೈಠಕ್ಖಾನೆಯ ಬಾಗಿಲ ಹತ್ತಿರ ಬಂದು ನಿಂತುಕೊಳ್ಳುವುದು, ಮತ್ತೆ ಮತ್ತೆ ಮನೆಯ ಒಳಕ್ಕೆ ಹೋಗುವುದು, ಹೀಗೆಯೇ ಶತಪಥ ಮಾಡುತ್ತಿದ್ದಾಳೆ. ಪಕ್ಕದ ಮನೆಯ ಹುಡುಗರು ಬೈಠಕ್ಖಾನೆಯ ಕಿಟಕಿಯ ಮೇಲೆ ಹತ್ತಿ ಪರಮಹಂಸರ ದರ್ಶನ ಪಡೆಯುತ್ತಿದ್ದಾರೆ. ಪರಮಹಂಸರು ಅಲ್ಲಿಗೆ ಬಂದಿದ್ದಾರೆ ಎಂಬ ವಾರ್ತೆಯನ್ನು ಕೇಳಿದೊಡನೆಯೆ ಆ ವಠಾರದ ದೊಡ್ಡವರು, ಚಿಕ್ಕವರು ಎಲ್ಲರೂ ಅವರ ದರ್ಶನ ಪಡೆಯಲು ಗುಂಪುಕಟ್ಟಿ ಬರಲಾರಂಭಿಸಿದ್ದಾರೆ.
ಬೀದಿಹುಡುಗರು ಕಿಟಕಿಯ ಮೇಲೆ ಹತ್ತಿ ನಿಂತಿರುವುದನ್ನು ನೋಡಿ ಚಿಕ್ಕ ನರೇನ ಹೇಳುತ್ತಿದ್ದಾನೆ, “ನಿಮಗೇನೊ ಕೆಲಸ ಇಲ್ಲಿ? ಹೋಗಿ, ಹೋಗಿ! ಮನೆಗೆ ಹೋಗಿ!” ಅಂತ. ಪರಮಹಂಸರು ಪ್ರೀತಿಯಿಂದ ಹೇಳುತ್ತಿದ್ದಾರೆ, “ನಿಂತಿರಲಿ ಬಿಡು” ಅಂತ. ಆಗಾಗ ಅವರು “ಹರಿಃ ಓಂ! ಹರಿಃ ಓಂ!” ಅಂತ ಹೇಳುತ್ತಲೇ ಇದ್ದಾರೆ.
ಬೈಠಕ್ಖಾನೆಗೆ ಜಮಖಾನ ಹಾಸಿತ್ತು. ಯುವಕ ಗಾಯಕರು ಅದರ ಮೇಲೆ ಕುಳಿತು ಹಾಡಲಾರಂಭಿಸಿದ್ದಾರೆ:
ದೀನರೊಳು ದಯೆ ತೋರೊ ಕೇಶವ, ಕುಂಜಕಾನನಚಾರೀ
ಮಾಧವ ಮನಮೋಹನ, ಮೋಹನ ಮುರಲಿಧಾರೀ……
ಶ್ರೀರಾಮಕೃಷ್ಣರು: “ಆಹ! ಎಂಥ ಸೊಗಸಾದ ಹಾಡುಗಾರಿಕೆ! ಪಿಟೀಲಿನ ಶಬ್ದ್ಧ ಎಷ್ಟು ಮಧುರವಾಗಿದೆ! ಎಂಥ ಸೊಗಸಾದ ಪಕ್ಕವಾದ್ಯಗಳು ಇವು! (ಒಬ್ಬ ಯುವಕ ಕೊಳಲು ಊದುತ್ತಿದ್ದ. ಆತನ ಕಡೆ ಮತ್ತು ಇನ್ನೊಬ್ಬ ಯುವಕನ ಕಡೆ ಬೆರಳುಮಾಡಿ) ಇವರಿಬ್ಬರೂ ಒಂದು ಒಳ್ಳೇ ಜೋಡಿ.”
ಈಗ ಕೇವಲ ವಾದ್ಯಮೇಳ ಮುಂದುವರಿಯುತ್ತಿದೆ. ಅದು ಮುಗಿದನಂತರ ಪರಮಹಂಸರು ಆನಂದದಿಂದ ಹೇಳುತ್ತಿದ್ದಾರೆ, “ಭೇಷ್, ಎಷ್ಟು ಚೆನ್ನಾಗಿ ನಡೆಯಿತು!” ಅಂತ. ಒಬ್ಬ ಯುವಕನನ್ನು ನಿರ್ದೇಶಿಸಿ ಹೇಳುತ್ತಿದ್ದಾರೆ, “ಈತ ಪ್ರತಿಯೊಂದು ವಾದ್ಯವನ್ನೂ ಬಾಜಿಸಬಲ್ಲ” ಎಂದು. ಮಾಸ್ಟರಿಗೆ ಹೇಳುತ್ತಿದ್ದಾರೆ, “ಇವರೆಲ್ಲರೂ ಒಳ್ಳೆಯವರೆ” ಅಂತ.
ಯುವಕರ ಹಾಡುಗಾರಿಕೆ ಮತ್ತು ವಾದ್ಯಮೇಳ ಮುಗಿದನಂತರ ಆ ಯುವಕರು ಭಕ್ತರಿಗೆ ಪ್ರಾರ್ಥನೆ ಮಾಡಿಕೊಂಡರು, “ನಿಮ್ಮಲ್ಲಿ ದಯವಿಟ್ಟು ಯಾರಾದರೂ ಸ್ವಲ್ಪ ಹಾಡಿ” ಅಂತ. ಬ್ರಾಹ್ಮಣಿ ಬಾಗಿಲಿನ ಹತ್ತಿರ ನಿಂತುಕೊಂಡಿದ್ದಳು. ಆಕೆ ಹೇಳಿದಳು, “ಇವರಲ್ಲಿ ಯಾರಿಗೂ ಹಾಡುವುದಕ್ಕೆ ಬರುವುದಿಲ್ಲ. ಬಹುಶ: ಮಹಿಮಬಾಬು ಸ್ವಲ್ಪ ಹಾಡಬಲ್ಲ ಅಂತ ಕಾಣುತ್ತದೆ. ಆತನಿಗೆ ಪರಮಹಂಸರ ಎದುರಿಗೆ ಹಾಡುವಷ್ಟು ಧೈರ್ಯವಿಲ್ಲ” ಅಂತ.
ಒಬ್ಬ ಯುವಕ: “ಏಕೆ ಹೆದರಿಕೊಳ್ಳಬೇಕು? ನಾನು ನಮ್ಮ ತಂದೆಯ ಎದುರಿಗೂ ಹಾಡಿಬಿಡಬಲ್ಲೆ.”
ಚಿಕ್ಕ ನರೇನ (ಗಟ್ಟಿಯಾಗಿ ನಗುತ್ತ): “ಈತ ಇನ್ನೂ ಅಲ್ಲಿಯವರೆಗೆ ಮುಂದುವರಿದಿಲ್ಲ.”
ಎಲ್ಲರೂ ನಗುತ್ತಿದ್ದಾರೆ. ಕೆಲವು ನಿಮಿಷಗಳಾದನಂತರ ಬ್ರಾಹ್ಮಣಿ ಪರಮಹಂಸರಿಗೆ ಹೇಳಿದಳು, “ದಯವಿಟ್ಟು ಒಳಗೆ ಬನ್ನಿ” ಅಂತ.
ಶ್ರೀರಾಮಕೃಷ್ಣರು: “ಏಕೆ ಒಳಕ್ಕೆ?”
ಬ್ರಾಹ್ಮಣಿ: “ಒಳಗೆ ಫಲಾಹಾರವನ್ನು ಅಣಿಮಾಡಿಟ್ಟಿದೆ; ದಯವಿಟ್ಟು ಒಳಕ್ಕೆ ಬನ್ನಿ.”
ಶ್ರೀರಾಮಕೃಷ್ಣರು: “ಇಲ್ಲಿಗೆ ಏಕೆ ತಂದುಕೊಡಬಾರದು?”
ಬ್ರಾಹ್ಮಣಿ: “ನಿಮ್ಮ ಪಾದಧೂಳಿ ಆ ಕೊಠಡಿಯಲ್ಲಿ ಬೀಳಬೇಕು ಅಂತ ಗಣುವಿನ ತಾಯಿ ನಿಮ್ಮನ್ನು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾಳೆ. ಆಗ ಅದು ಕಾಶಿಯೇ ಆಗಿಬಿಡುತ್ತದೆ. ಮುಂದೆ ಯಾರಾದರೂ ಆ ಕೊಠಡಿಯಲ್ಲಿ ಮೃತಪಟ್ಟರೆ ಮತ್ತೆ ಅವರಿಗೆ ಪುನರ್ಜನ್ಮದ ಕೋಟಲೆ ಯಾವುದೂ ಇರದು ಅಂತ ಆಕೆ ಭಾವಿಸುತ್ತಿದ್ದಾಳೆ.”
ಪರಮಹಂಸರು ಬ್ರಾಹ್ಮಣಿಯೊಡನೆ ಮತ್ತು ಆ ಮನೆಯ ಯುವಕರೊಡನೆ ಮನೆಯ ಒಳಕ್ಕೆ ಹೋದರು. ಭಕ್ತರು ಮನೆಯ ಹೊರಗೆ ಬೆಳದಿಂಗಳಿನಲ್ಲಿ ತಿರುಗಾಡಲಾರಂಭಿಸಿದರು. ಮಾಸ್ಟರ್ ಮತ್ತು ವಿನೋದ ಆ ಮನೆಯ ದಕ್ಷಿಣ ದಿಕ್ಕಿನಲ್ಲಿರುವ ಬೀದಿಯಲ್ಲಿ ಮೆತ್ತಗೆ ನಡೆಯುತ್ತ ಪರಮಹಂಸರ ಜೀವನದ ಘಟನೆಗಳನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.
ಪರಮಹಂಸರು ಬಲರಾಮನ ಮನೆಗೆ ಹಿಂದಿರುಗಿ ಬಂದು ಆತನ ಬೈಠಕ್ಖಾನೆಯ ಪಶ್ಚಿಮ ದಿಕ್ಕಿನಲ್ಲಿರುವ ಒಂದು ಚಿಕ್ಕ ಕೊಠಡಿಯಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಆಗಲೇ ಸಮಯ ರಾತ್ರಿ ಹತ್ತೂಮುಕ್ಕಾಲರ ಹತ್ತಿರ.
ಪರಮಹಂಸರು ಯೋಗೀಂದ್ರನಿಗೆ ಹೇಳಿದರು, “ನನ್ನ ಪಾದಗಳನ್ನು ಸ್ವಲ್ಪ ಮಿದುವಾಗಿ ಒತ್ತು” ಅಂತ. ಅವರ ಹತ್ತಿರ ಮಾಸ್ಟರ್ ಕುಳಿತಿದ್ದಾನೆ. ಯೋಗೀಂದ್ರ ಅವರ ಪಾದಗಳನ್ನು ಒತ್ತುತ್ತಿದ್ದ ಹಾಗೆಯೇ ಅವರು ಥಟ್ಟನೆ ಹೇಳಿದರು, “ನನಗೆ ಹಸಿವಾಗುತ್ತಿದೆ. ನನಗೆ ರವೆಪಾಯಸ ಬೇಕು” ಅಂತ.
ಬ್ರಾಹ್ಮಣಿ ಇಲ್ಲಿಗೂ ಬಂದಿದ್ದಳು. ಆಕೆಯ ತಮ್ಮ ಬಹಳ ಚೆನ್ನಾಗಿ ತಬಲ ಬಾರಿಸ ಬಲ್ಲ. ಪರಮಹಂಸರು ಬ್ರಾಹ್ಮಣಿಯನ್ನು ತೋರಿಸಿ ಹೇಳುತ್ತಿದ್ದಾರೆ, “ಇನ್ನು ಮೇಲೆ ನರೇಂದ್ರನೇ ಆಗಲಿ ಅಥವಾ ಬೇರೆ ಯಾರೇ ಆಗಲಿ ಹಾಡಲು ಬಂದಾಗ, ಈಕೆಯ ಸಹೋದರನನ್ನು ಕರೆಯಿಸಿಬಿಟ್ಟರೇ ಆಯಿತಲ್ಲ” ಅಂತ.
ಪರಮಹಂಸರು ಸ್ವಲ್ಪ ರವೆಪಾಯಸ ಕುಡಿದರು. ಕ್ರಮೇಣ ಯೋಗೀಂದ್ರ ಮೊದಲಾದ ಭಕ್ತರು ಕೊಠಡಿಯಿಂದ ಎದ್ದು ಹೊರಟುಹೋದರು. ಮಾಸ್ಟರ್ ಅವರ ಪಾದವನ್ನು ಒತ್ತುತ್ತಿದ್ದಾನೆ. ಅವರು ಆತನೊಡನೆ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಬ್ರಾಹ್ಮಣಿಯ ಮತ್ತು ಆಕೆಯ ಬಂಧುಗಳ ಸಂಬಂಧವಾಗಿ ಮಾತೆತ್ತಿ: “ಆಹ, ಅವರು ಎಷ್ಟು ಆನಂದಪಟ್ಟರು!”
ಮಾಸ್ಟರ್: “ಏನಾಶ್ಚರ್ಯ! ಯೇಸುಕ್ರಿಸ್ತ ಬದುಕಿದ್ದಾಗ ಇಬ್ಬರು ಸಹೋದರಿಯರು, ಮಾರ್ಥ ಮತ್ತು ಮೇರಿ ಎಂಬುವರು ಇದೇ ವಿಧವಾಗಿ ಆತನೊಡನೆ ವ್ಯವಹರಿಸಿದ್ದರು.”
ಶ್ರೀರಾಮಕೃಷ್ಣರು ಉತ್ಸುಕತೆಯಿಂದ: “ಅವರ ವಿಚಾರ ಏನು ಹೇಳು ನೋಡೋಣ.”
ಮಾಸ್ಟರ್: “ನಿಮ್ಮ ಹಾಗೆಯೇ ಯೇಸುಕ್ರಿಸ್ತ ಭಕ್ತರೊಡನೆ ಒಮ್ಮೆ ಅವರ ಮನೆಗೆ ಹೋಗಿದ್ದ. ಒಬ್ಬ ಸಹೋದರಿ ಆತನ ದರ್ಶನಮಾತ್ರದಿಂದಲೇ ಭಾವೋಲ್ಲಾಸದಿಂದ ತುಂಬಿ ತುಳುಕಾಡಲಾರಂಭಿಸಿದಳು. ಅದು ಗೌರಾಂಗದೇವನ ಒಂದು ಹಾಡನ್ನು ನನ್ನ ಜ್ಞಾಪಕಕ್ಕೆ ತರುತ್ತದೆ:
ಪರಮಹಂಸರು ಒಂದು ಹಾಡಿನ ಚರಣವನ್ನು ಹಾಡುತ್ತಿದ್ದಾರೆ.
ಶ್ರೀ ಗೌರಾಂಗನ ರೂಪಸಾಗರದಿ
ಮುಳುಗಿದ ನನ್ನೀ ಕಣ್ಣುಗಳು
ಹೊರಬರದಾದವು, ಮನವೂ ಮುಳುಗಿತು
ಈಜುವುದನ್ನೂ ಮರೆಮರೆತು!
“ಇನ್ನೊಬ್ಬ ಸಹೋದರಿ ಒಬ್ಬಳೇ ಊಟೋಪಚಾರಗಳಿಗಾಗಿ ಅಣಿಮಾಡುತ್ತಿದ್ದಳು. ಆಕೆ ಯೇಸುವಿನ ಹತ್ತಿರ ಬಂದು ದೂರು ಹೇಳಿದಳು, ‘ಪ್ರಭು, ನೀವೇ ನೋಡಿ, ಅಕ್ಕ ಏನನ್ಯಾಯ ಮಾಡುತ್ತಿದ್ದಾಳೆ. ನಾನೊಬ್ಬಳೆ ಅಲ್ಲಿ ಸಾಯುತ್ತಾ ಇದ್ದೇನೆ, ಈಕೆ ಇಲ್ಲಿ ಸುಮ್ಮನೆ ಕುಳಿತಿದ್ದಾಳಲ್ಲ!’ ಅಂತ. ಆಗ ಯೇಸು ಹೇಳಿದ, ‘ನಿನ್ನ ಅಕ್ಕ ನಿಜವಾಗಿಯೂ ಧನ್ಯೆ. ಆಕೆ ಜೀವನದ ಏಕಮಾತ್ರ ಅವಶ್ಯಕತೆಯನ್ನು-ಭಗವಂತನಲ್ಲಿ ಪ್ರೇಮವನ್ನು-ಬೆಳೆಯಿಸಿಕೊಂಡಿದ್ದಾಳೆ’ ಅಂತ.”
ಶ್ರೀರಾಮಕೃಷ್ಣರು: “ಒಳ್ಳೆಯದು ಇದನ್ನೆಲ್ಲ ನೋಡಿ ನಿನಗೇನನಿಸುತ್ತಿದೆ?”
ಮಾಸ್ಟರ್: “ನನಗನಿಸುತ್ತಿದೆ ನೀವು, ಯೇಸು, ಚೈತನ್ಯದೇವ-ಮೂವರೂ ಒಂದೇ; ಒಬ್ಬನೇ ಈ ಮೂರು ರೂಪವನ್ನು ತಾಳಿದ್ದಾನೆ ಅಂತ.”
ಶ್ರೀರಾಮಕೃಷ್ಣರು: “ಹೌದು, ಹೌದು! ಒಬ್ಬನೆ! ಒಬ್ಬನೆ! ನಿಜವಾಗಿಯೂ ಒಬ್ಬನೆ! ಭಗವಂತನೇ ಇಲ್ಲಿ ಈ ರೀತಿಯಾಗಿ ವಾಸಿಸುತ್ತಿದ್ದಾನೆ ಎಂಬುದು ನಿನ್ನ ಕಣ್ಣಿಗೆ ಕಾಣಿಸುತ್ತಿಲ್ಲವೇನು?”
ಪರಮಹಂಸರು ಹೀಗೆಂದು ಹೇಳಿದಾಗ ತಮ್ಮ ಬೆರಳನ್ನು ಶರೀರದ ಕಡೆ ತೋರಿಸಿದರು.
ಮಾಸ್ಟರ್: “ನೀವು ಅಂದು ಭಗವಂತನು ಅವತೀರ್ಣನಾಗುವ ಬಗೆ ಹೇಗೆ ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿ ಹೇಳಿದಿರಿ.”
ಶ್ರೀರಾಮಕೃಷ್ಣರು: “ಏನು ಹೇಳಿದೆ ಹೇಳು ನೋಡೋಣ?”
ಮಾಸ್ಟರ್: “ದಿಕ್ದಿಗಂತದವರೆಗೆ ವ್ಯಾಪಕವಾಗಿರುವ ಒಂದು ಮೈದಾನವಿದೆ ಅಂತ ಭಾವಿಸಿಕೊಳ್ಳಿ. ಅದು ಯಾವ ತಡೆಯೂ ಇಲ್ಲದೆ ಸುಮ್ಮನೆ ಹರಡಿಕೊಂಡಿದೆ. ನಮಗೆ ಅಡ್ಡಲಾಗಿ ಎದ್ದಿರುವ ಗೋಡೆಯ ದೆಸೆಯಿಂದ ನಾವು ಆ ಮೈದಾನವನ್ನು ನೋಡಲಾಗುತ್ತಿಲ್ಲ. ಆದರೆ ಆ ಗೋಡೆಯಲ್ಲಿ ಕೇವಲ ಒಂದೇ ಒಂದು ರಂಧ್ರವಿದೆ. ಅದರ ಮೂಲಕ ಆ ಅನಂತ ಮೈದಾನದ ಸ್ವಲ್ಪ ಭಾಗವನ್ನು ನೋಡಲು ಸಾಧ್ಯವಾಗುತ್ತಿದೆ.”
ಶ್ರೀರಾಮಕೃಷ್ಣರು: “ಆ ರಂಧ್ರ ಎಂಬುದು ಏನು ಹೇಳು ನೋಡೋಣ?”
ಮಾಸ್ಟರ್: “ನೀವೇ ಆ ರಂಧ್ರ. ನಿಮ್ಮ ಮೂಲಕ ಎಲ್ಲವನ್ನೂ ನೋಡಲು ಸಾಧ್ಯ; ಆ ದಿಕ್ದಿಗಂತದ ಮೈದಾನವನ್ನು ನೋಡಬಹುದು.”
ಪರಮಹಂಸರು ಅತ್ಯಂತ ಸಂತುಷ್ಟರಾಗಿ ಬೆನ್ನು ತಟ್ಟುತ್ತ ಹೇಳಲಾರಂಭಿಸಿದರು, “ಬಹಳ ಒಳ್ಳೆಯದು! ನೀನು ಸರಿಯಾಗಿ ಅರಿತುಕೊಂಡುಬಿಟ್ಟಿದ್ದೀಯೆ!” ಅಂತ.
ಮಾಸ್ಟರ್: “ಆತ ಪೂರ್ಣಬ್ರಹ್ಮನಾಗಿದ್ದು ಈ ಶರೀರದೊಳಗೆ ಹೇಗೆ ಇರಬಲ್ಲ ಎಂಬುದನ್ನು ಸರಿಯಾಗಿ ಗ್ರಹಿಸುವುದು ಬಹಳ ಕಷ್ಟ.”
ಅವನು ಯಾರೆಂಬುದನ್ನು ಒಬ್ಬರೂ ತಿಳಿಯರು
ಉನ್ಮತ್ತನಂತೆ ದರಿದ್ರ ಭಿಕ್ಷುಕನಂತೆ
ಮನೆಮನೆಯ ಬಾಗಿಲಲಿ ಸುತ್ತುವನು ಅವನು!
ಮಾಸ್ಟರ್: “ನೀವು ಯೇಸುವಿನ ವಿಷಯವಾಗಿಯೂ ಹೇಳಿದಿರಿ.”
ಶ್ರೀರಾಮಕೃಷ್ಣರು: “ಏನು ಹೇಳಿದೆ?”
ಮಾಸ್ಟರ್: “ಯದುಮಲ್ಲಿಕನ ತೋಟದ ಮನೆಯಲ್ಲಿ ಯೇಸುವಿನ ಪಟ ನೋಡಿ ನಿಮಗೆ ಭಾವಸಮಾಧಿಯಾಗಿಬಿಟ್ಟಿತು. ಯೇಸುಕ್ರಿಸ್ತನು ಆ ಪಟದಿಂದ ಕೆಳಕ್ಕೆ ಇಳಿದು ಬಂದು ನಿಮ್ಮಲ್ಲಿ ಐಕ್ಯವಾಗಿಬಿಟ್ಟ.”
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದರು. ಬಳಿಕ ಮಾಸ್ಟರಿಗೆ ಹೇಳುತ್ತಿದ್ದಾರೆ, “ನೋಡು ನನಗೆ ಗಂಟಲಿನಲ್ಲಿ ಹುಣ್ಣು ಆಗಿಬಿಟ್ಟಿದೆಯಲ್ಲ. ಅದರಲ್ಲಿ ಬಹುಶಃ ಒಂದು ಅರ್ಥವಿದೆ. ಎಲ್ಲರೊಡನೆಯೂಹುಡುಗಾಟವಾಡದಿರಲೆಂದು; ಸಿಕ್ಕಿಸಿಕ್ಕಿದ ಕಡೆಯಲ್ಲೆಲ್ಲ ನರ್ತಿಸಿ ಹಾಡದಿರಲೆಂದು ಅಂತ ಕಾಣುತ್ತದೆ.”
ಪರಮಹಂಸರು ದ್ವಿಜನ ಸಂಬಂಧವಾಗಿ ಮಾತನಾಡಲಾರಂಭಿಸಿದ್ದಾರೆ.
ಶ್ರೀರಾಮಕೃಷ್ಣರು: “ಇಂದು ದ್ವಿಜ ಬರಲಿಲ್ಲವೆ?”
ಮಾಸ್ಟರ್: “ಬರುವುದಕ್ಕೆ ಹೇಳಿದ್ದೆ. ಬರುತ್ತೇನೆ ಅಂತಲೂ ಹೇಳಿದ್ದ. ಆದರೂ ಏಕೆ ಬರಲಿಲ್ಲವೊ ಗೊತ್ತಾಗಲಿಲ್ಲ.”
ಶ್ರೀರಾಮಕೃಷ್ಣರು: “ಆತನಿಗೆ ಭಗವಂತನಲ್ಲಿರುವ ಅನುರಾಗ ಬಹಳ ವಿಶೇಷವಾದದ್ದು. ಆತ ಇಲ್ಲಿಗೆ (ಪರಮಹಂಸರ ಅಂತರಂಗ ಭಕ್ತರ ಗುಂಪಿಗೆ) ಸೇರಿದವನೊಬ್ಬನಾಗುತ್ತಾನೆ, ಅಲ್ಲವೆ?”
ಮಾಸ್ಟರ್: “ಹೌದು, ಹಾಗೆ ಆಗಬಹುದು. ಇಲ್ಲದಿದ್ದರೆ ಆತನಲ್ಲಿರುವ ಅಷ್ಟೊಂದು ಅನುರಾಗಕ್ಕೆ ಕಾರಣ?”
ಪರಮಹಂಸರ ಸೊಳ್ಳೆಪರದೆಯೊಳಕ್ಕೆ ನುಗ್ಗಿ ಈಗ ಮಾಸ್ಟರ್ ಅವರಿಗೆ ಗಾಳಿ ಬೀಸುತ್ತಿದ್ದ. ಅವರು ಮಗ್ಗುಲಾಗಿ ಮಲಗಿಕೊಂಡು ಭಗವಂತ ಅವತರಿಸುವ ಬಗೆ ಹೇಗೆ ಎಂಬ ವಿಷಯವಾಗಿ ಮಾಸ್ಟರಿಗೆ ತಿಳಿಸುತ್ತಿದ್ದಾರೆ. ಮತ್ತೆ ಅವರು ಆತನ ಆಧ್ಯಾತ್ಮಿಕ ಜೀವನದ ಆದರ್ಶದ ಸಂಬಂಧವಾಗಿ ತಿಳಿಸಲಾರಂಭಿಸಿದರು.
ಶ್ರೀರಾಮಕೃಷ್ಣರು: “ನೀನು ಆ ಅಂತಸ್ತಿಗೆ ಸೇರಿದವನು. ಮೊದಲು ಮೊದಲು ನನಗೆ ಭಗವಂತನ ರೂಪ-ದರ್ಶನವಾಗುತ್ತಿರಲಿಲ್ಲ. ಈಗ ಮತ್ತೆ ಅವು ಕಡಮೆಯಾಗಿ ಬಿಟ್ಟಿವೆ.
ಮಾಸ್ಟರ್: “ಭಗವಂತನ ಲೀಲೆಯಲ್ಲಿ ಆತನ ನರಲೀಲೆ ನನಗೆ ಬಹಳವಾಗಿ ರುಚಿಸುತ್ತಿದೆ.”
ಶ್ರೀರಾಮಕೃಷ್ಣರು: “ಅದೇ ಯಥೇಷ್ಟ; ಜೊತೆಗೆ ನನ್ನನ್ನೂ ನೀನು ನೋಡುತ್ತಿದ್ದೀಯೆ.”