೧೩ನೆ ಜುಲೈ ೧೮೮೫, ಆಷಾಢ ಶುಕ್ಲ ಪಾಡ್ಯ, ಸೋಮವಾರ
ಪರಮಹಂಸರು ಬಲರಾಮನ ಬೈಠಕ್ಕೋಣೆಯಲ್ಲಿ ಭಕ್ತರೊಡನೆ ಕುಳಿತಿದ್ದಾರೆ. ಘಂಟೆ ಪ್ರಾತಃಕಾಲ ಒಂಭತ್ತು. ಮಾರನೆ ದಿನ ಬಲರಾಮನ ಮನೆಯಲ್ಲಿ ಜಗನ್ನಾಥ ರಥೋತ್ಸವ ನಡೆಯಲಿದೆ. ಆತನ ಮನೆದೇವರಾದ ಶ್ರೀಜಗನ್ನಾಥನಿಗೆ ನಿತ್ಯವೂ ಪೂಜೆ ಪುರಸ್ಕಾರಗಳು ನಡೆಯಲಿದೆ. ಆತನು ಒಂದು ಪುಟ್ಟ ರಥವನ್ನೂ ಮಾಡಿಸಿಟ್ಟಿದ್ದಾನೆ. ರಥೋತ್ಸವದ ದಿನ ಅದನ್ನು ಆತನ ಮನೆಯ ಹೊರಗಿನ ವರಾಂಡದಲ್ಲಿ ಎಳೆಯುತ್ತಾರೆ. ಬಲರಾಮ ಪರಮಹಂಸರಿಗೆ ವಿಶೇಷವಾದ ಆಹ್ವಾನವಿತ್ತು ಅವರನ್ನು ತನ್ನ ಮನೆಯ ರಥೋತ್ಸವಕ್ಕೆ ಕರೆದುಕೊಂಡು ಬಂದಿದ್ದಾನೆ.
ಪರಮಹಂಸರು ಮತ್ತು ಮಾಸ್ಟರ್ ಮಾತುಕತೆಯಾಡುತ್ತಿದ್ದಾರೆ. ನಾರಾಯಣ, ತೇಜ ಚಂದ್ರ ಮತ್ತು ಇನ್ನೂ ಕೆಲವು ಮಂದಿ ಭಕ್ತರು ಕೊಠಡಿಯಲ್ಲಿ ಕುಳಿತಿದ್ದಾರೆ. ಪರಮಹಂಸರು ಪೂರ್ಣನ ಸಂಬಂಧವಾಗಿ ಮಾತುಕತೆಯಾಡುತ್ತಿದ್ದಾರೆ. ಬಹುಶಃ ಆತನಿಗೆ ಈಗ ಹದಿನೈದಿರಬೇಕು. ಆತನನ್ನು ನೋಡಬೇಕೆಂದು ಅವರು ಬಹಳ ಉತ್ಸುಕರಾಗಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಒಳ್ಳೆಯದು, ಪೂರ್ಣ ಯಾವ ರಸ್ತೆಯಿಂದ ನನ್ನನ್ನು ನೋಡಲು ಬರುತ್ತಾನೆ? ಪೂರ್ಣನಿಗೂ ಮತ್ತು ದ್ವಿಜನಿಗೂ ನೀನು ಒಬ್ಬರಿಗೊಬ್ಬರ ಪರಿಚಯ ಮಾಡಿಕೊಡು.
“ಒಂದೇ ಆಂತರಿಕ ಪ್ರಕೃತಿಯ ಮತ್ತು ಒಂದೇ ವಯಸ್ಸಿನ ಹುಡುಗರನ್ನು ಕಂಡರೆ, ನಾನು ಆವರನ್ನು ಜೊತೆಮಾಡಿಸಿಬಿಡುತ್ತೇನೆ. ಇದರಲ್ಲಿ ಒಂದು ಉದ್ದೇಶವಿದೆ. ಅದರಿಂದ ಇಬ್ಬರೂ ಉನ್ನತಿಯನ್ನು ಹೊಂದಿಬಿಡುತ್ತಾರೆ. ಪೂರ್ಣನ ಅನುರಾಗ ಎಷ್ಟು ಅದ್ಭುತವಾದ್ದು ಎಂಬುದನ್ನು ನೋಡಿದ್ದೀಯೇನು?”
ಮಾಸ್ಟರ್: “ಹೌದು, ನೋಡಿದ್ದೇನೆ. ಒಂದು ದಿನ ನಾನು ಟ್ರ್ಯಾಮ್ ಬಂಡಿಯಲ್ಲಿ ಕುಳಿತು ಹೋಗುತ್ತಿದ್ದೆ. ಆತ ತನ್ನ ಮನೆಯ ಚಾವಣಿಯಿಂದ ನನ್ನನ್ನು ನೋಡಿ, ರಸ್ತೆಗೆ ಓಡಿ ಬಂದು, ಅಲ್ಲಿಂದಲೇ ನನಗೆ ನಮಸ್ಕಾರ ಹಾಕಿದ.”
ಶ್ರೀರಾಮಕೃಷ್ಣರು ಪ್ರೇಮಾಶ್ರುನಯನರಾಗಿ: “ಆಹ! ಆಹ! ಈತ ತನ್ನ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಸಹಾಯಕನಾಗಿದ್ದಾನೆ ಅಂತ ಆತ ನಿನಗೆ ಎಷ್ಟೊಂದು ಗೌರವ ತೋರಿಸುತ್ತಿದ್ದಾನೆ. ಭಗವಂತನಿಗಾಗಿ ತೀವ್ರ ವ್ಯಾಕುಲತೆ ಇಲ್ಲದಿದ್ದರೆ ಈ ರೀತಿಯಾಗಿ ವರ್ತಿಸಲಾಗುವುದಿಲ್ಲ.
“ನರೇಂದ್ರ, ಚಿಕ್ಕ ನರೇನ, ಪೂರ್ಣ ಈ ಮೂರು ಮಂದಿಗಳದೂ ಪುರುಷಸ್ವಭಾವ. ಭವನಾಥನು ಹಾಗಿಲ್ಲ. ಆತನದು ಸ್ತ್ರೀಸ್ವಭಾವ.
“ಪೂರ್ಣ ಅಂಥ ಉಚ್ಚಸ್ಥಿತಿಯಲ್ಲಿದ್ದಾನೆ, ಆತ ಇಲ್ಲವೇ ಶೀಘ್ರದಲ್ಲಿಯೇ ದೇಹತ್ಯಾಗ ಮಾಡಿಬಿಡುತ್ತಾನೆ-ಭಗವಂತನ ಸಾಕ್ಷಾತ್ಕಾರ ದೊರೆತ ಮೇಲೆ ಈ ಶರೀರ ಇದ್ದರೇನು ಹೋದರೇನು-ಇಲ್ಲದಿದ್ದರೆ ಆತನ ಆಂತರ್ಯಸ್ವರೂಪ ಕೆಲವು ದಿನಗಳಲ್ಲೇ ಚಿಮ್ಮಿ ಹೊರಹೊಮ್ಮಿ ಬಿಡುತ್ತದೆ.
“ಆತನದು ದೈವಿಕ ಸ್ವಭಾವ-ದೇವಪ್ರಕೃತಿ. ಇದು ಲೋಕಭಯವನ್ನು ಕಡಿಮೆ ಮಾಡುತ್ತದೆ. ಇಂಥವರ ಕೊರಳಿಗೆ ಹೂವಿನ ಹಾರ ಹಾಕಿದರೆ ಅಥವಾ ಶರೀರಕ್ಕೆ ಚಂದನ ಸವರಿದರೆ ಅಥವಾ ಮುಂದೆ ಸಾಂಬ್ರಾಣಿ ಅಥವಾ ಧೂಪದ ಹೊಗೆ ಹಾಕಿದರೆ ಇವರು ಸಮಾಧಿಸ್ಥರಾಗಿ ಬಿಡುತ್ತಾರೆ. ಆಗ ಇಂಥವರ ದೇಹದಲ್ಲಿ ಭಗವಂತ ಸ್ವಯಂ ಇದ್ದಾನೆ. ಆತನೇ ಇವರ ದೇಹವನ್ನು ಧರಿಸಿ ಬಂದಿದ್ದಾನೆ ಎಂಬುದು ಸ್ಪಷ್ಟವಾಗಿ ಹೋಗುತ್ತದೆ. ನಾನು ಈತ ಯಾರು ಎಂಬುದನ್ನು ಪತ್ತೆಹಚ್ಚಿಬಿಟ್ಟಿದ್ದೇನೆ.
“ನನಗೆ ಮೊಟ್ಟಮೊದಲು ದೈವೋನ್ಮಾದಾವಸ್ಥೆ ಬಂದನಂತರ ಸದ್ವಂಶಕ್ಕೆ ಸೇರಿದ ಒಬ್ಬ ಬ್ರಾಹ್ಮಣ ಹೆಂಗಸು ದಕ್ಷಿಣೇಶ್ವರಕ್ಕೆ ಬಂದಿದ್ದಳು. ಒಳ್ಳೆ ಸುಗುಣಿ ಮತ್ತು ಸುಲಕ್ಷಣೆ. ಆಕೆಯ ಕೊರಳಿಗೆ ಹೂವಿನ ಹಾರ ಹಾಕಿ ಆಕೆಯ ಮುಂದೆ ಸಾಂಬ್ರಾಣಿ ಧೂಪದ ಹೊಗೆ ಹಾಕಿದೊಡನೆಯೇ ಆಕೆ ಸಮಾಧಿಸ್ಥಳಾಗಿಬಿಟ್ಟಳು. ಕೆಲವು ನಿಮಿಷಗಳೊಳಗಾಗಿಯೇ ಆನಂದಸಾಗರದಲ್ಲಿ ಈಜಾಡಲಾರಾಂಭಿಸಿದಳು. ಕಣ್ಣುಗಳಿಂದ ಪ್ರೇಮಾಶ್ರು ಸುರಿಯಲಾರಂಭಿಸಿತು. ಆಗ ನಾನು ಆಕೆಗೆ ಪ್ರಣಾಮ ಮಾಡಿ ಕೇಳಿಕೊಂಡೆ, ‘ತಾಯೆ, ನನಗೆ ದೊರಕುವುದೆ?’ ಅಂತ. ಆಕೆ ಹೇಳಿದಳು ‘ದೊರಕುವುದು’ ಎಂದು.
“ಪೂರ್ಣನನ್ನು ಇನ್ನೊಮ್ಮೆ ನೋಡಬೇಕು ಆಂತ ಇಚ್ಛೆಯಾಗುತ್ತಿದೆ. ಆದರೆ ಅವಕಾಶ ವೆಲ್ಲಿ? ಆತ ಭಗವದ್ಕಲಾ ಅಂತ ಬೋಧೆಯಾಗುತ್ತಿದೆ. ಏನಾಶ್ಚರ್ಯ! ಆತ ಕೇವಲ ಅಂಶವಲ್ಲ, ಕಲಾ! ಆತನೆಷ್ಟು ಚತುರ! ವ್ಯಾಸಂಗದಲ್ಲಿ ಬಹಳ ಬುದ್ಧಿವಂತ ಅಂತ ಕೇಳಿದ್ದೇನೆ. ನಾನು ಸರಿಯಾಗಿ ಗುರುತಿಸಿಬಿಟ್ಟಿದ್ದೇನೆ.”
“ಮನುಷ್ಯನ ತಪಃಪ್ರಭಾವಕ್ಕೆ ಸಿಕ್ಕ ಭಗವಂತ ಆತನ ಪುತ್ರನಾಗಿ ಜನ್ಮತಾಳುತ್ತಾನೆ. ಕಾಮಾರಪುಕುರಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ರಣಜಿತರಾಯನ ಕೆರೆ ಸಿಗುತ್ತದೆ. ಭಗವತಿ ಸ್ವಯಂ ಆತನ ಪುತ್ರಿಯಾಗಿ ಜನಿಸಿದ್ದಳು. ಈಗಲೂ ಆಕೆಯ ಹೆಸರಿನಲ್ಲಿ ಚೈತ್ರಮಾಸದಲ್ಲಿ ಅಲ್ಲಿ ಜಾತ್ರೆ ನಡೆಯುತ್ತದೆ. ಅಲ್ಲಿಗೆ ಹೋಗಬೇಕೆಂದು ಬಹಳ ಇಚ್ಛೆಯಾಗುತ್ತಿದೆ. ಆದರೆ ಈಗ ಸಾಧ್ಯವಿಲ್ಲ.
“ರಣಜಿತರಾಯ ಅಲ್ಲಿನ ಒಬ್ಬ ಜಮೀನುದಾರ. ಆತ ತನ್ನ ತಪಃಪ್ರಭಾವದಿಂದ ಸ್ವಯಂ ಭಗವತಿಯನ್ನೇ ತನ್ನ ಪುತ್ರಿಯಾಗಿ ಪಡೆದ. ಮಗಳನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಆಕೆಯೂ ಆತನನ್ನು ಬಹಳವಾಗಿ ಪ್ರೀತಿಸುತ್ತಿದ್ದಳು ಮತ್ತು ಒಂದು ಘಳಿಗೆಯೂ ಆತನನ್ನು ಬಿಟ್ಟು ಇರುತ್ತಿರಲಿಲ್ಲ. ಒಂದು ದಿನ ಆತ ತನ್ನ ಜಮೀನುದಾರಿಯ ಸಂಬಂಧವಾಗಿ ಯಾವುದೋ ಒಂದು ಕಾರ್ಯದಲ್ಲಿ ಬಹಳ ವ್ಯಸ್ತನಾಗಿದ್ದ. ಬಾಲಕಿ ಮಗುವಿನ ಸ್ವಭಾವಕ್ಕನುಗುಣವಾಗಿ ತಂದೆಯನ್ನು ಕೇಳಲಾರಂಭಿಸಿದಳು, ‘ಅಪ್ಪ, ಇದು ಏನು, ಇದು ಏನು?’ ಆಂತ. ತಂದೆ ವಾತ್ಸಲ್ಯಜನ್ಯ ನಯನುಡಿಗಳಿಂದ ಆಕೆಗೆ ಹೇಳಿದ, ‘ಮಗು, ಈಗ ನನಗೆ ಯಾವ ತೊಂದರೆಯನ್ನೂ ಕೊಡಬೇಡ. ಒಂದು ದೊಡ್ಡ ಕೆಲಸದಲ್ಲಿ ನಿರತನಾಗಿದ್ದೇನೆ. ಹೊರಗೆ ಒಂದು ಸ್ವಲ್ಪ ಹೊತ್ತು ಆಡುತ್ತಿರು’ ಅಂತ. ಬಾಲಕಿ ಏನುಮಾಡಿದರೂ ಆತನನ್ನು ಬಿಟ್ಟು ಹೋಗಲಿಲ್ಲ. ಕೊನೆಗೆ ತಂದೆ ಅನ್ಯಮನಸ್ಕನಾಗಿ ಆಕೆಯನ್ನು ಗದರಿಸಿದ, ‘ಹೋಗು ಇಲ್ಲಿಂದ ಹೊರಕ್ಕೆ!’ ಅಂತ. ಇದನ್ನೆ ಒಂದು ನಿಮಿತ್ತವಾಗಿ ಮಾಡಿಕೊಂಡು ಆಕೆ ಮನೆಯನ್ನು ಬಿಟ್ಟು ಹೊರಟೇಹೋದಳು. ರಸ್ತೆಯಲ್ಲಿ ಒಬ್ಬ ಶಂಖದ ಸಾಮಾನು ಮಾರುವವನನ್ನು ಕಂಡಳು. ಆತನಿಂದ ಒಂದು ಜೊತೆ ಶಂಖಬಳೆಗಳನ್ನು ಕೊಂಡುಕೊಂಡು, ಅದರ ದುಡ್ಡಿನ ಸಂಬಂಧವಾಗಿ ಆತನಿಗೆ ಹೇಳಿದಳು, ‘ನಮ್ಮ ಮನೆಯಲ್ಲಿ ಇಂಥ ಜಾಗದಲ್ಲಿ, ಇಂಥ ಪೆಟ್ಟಿಗೆಯಲ್ಲಿ ದುಡ್ಡು ಇದೆ. ನೀನು ಅಲ್ಲಿಗೆ ಹೋಗಿ ಕೇಳಿ ತೆಗೆದುಕೊ’ ಅಂತ. ಹೀಗೆಂದು ಹೇಳಿ ಆಕೆ ಅಲ್ಲಿಂದ ಮುಂದುವರಿದು ಕಣ್ಮರೆಯಾದಳು. ಮತ್ತೆ ಆಕೆ ಯಾರ ಕಣ್ಣಿಗೂ ಬೀಳಲಿಲ್ಲ. ಆ ಶಂಖದ ಸಾಮಾನು ಮಾರುವವನು ರಣಜಿತರಾಯನ ಮನೆಗೆ ಬಂದು ದುಡ್ಡು ಕೇಳಿದ. ಮನೆಯಲ್ಲಿ ಬಾಲಕಿ ಇಲ್ಲದಿರುವುದನ್ನು ಕೇಳಿ ಎಲ್ಲರೂ ಆಕೆಯನ್ನು ಕಾತುರದಿಂದ ಹುಡುಕಲಾರಂಭಿಸಿದರು. ಆಕೆಯನ್ನು ಪತ್ತೆಮಾಡಲು ರಣಜಿತರಾಯ ಎಲ್ಲಾ ದಿಕ್ಕುಗಳಿಗೂ ಜನರನ್ನು ಕಳುಹಿಸಿದ. ಶಂಖದ ಸಾಮಾನು ಮಾರುವವನಿಗೆ ಬರಬೇಕಿದ್ದ ಹಣ ಒಂದು ಕಾಸೂ ಹೆಚ್ಚು ಕಡಿಮೆಯಿಲ್ಲದೆ ಆಕೆ ತಿಳಿಸಿದ ಪೆಟ್ಟಿಗೆಯಲ್ಲಿ ದೊರೆಯಿತು. ರಣಜಿತರಾಯ ಬಹಳವಾಗಿ ರೋದಿಸುತ್ತ ಅಲೆದಾಡುತ್ತಿರುವಾಗ, ಯಾರೊ ಬಂದು ಆತನಿಗೆ ಹೇಳಿದರು, ಏನೊ ಒಂದು ವಸ್ತು ಕೆರೆಯಲ್ಲಿ ಕಾಣುತ್ತಿದೆ ಅಂತ. ಎಲ್ಲರೂ ಅಲ್ಲಿಗೆ ಹೋಗಿ ನೋಡಲಾಗಿ, ಶಂಖದ ಬಳೆಗಳನ್ನು ತೊಟ್ಟುಕೊಂಡಿದ್ದ ಕೈಗಳು ನೀರಿನ ಮೇಲೆ ಕಂಡವು. ಒಂದು ಕ್ಷಣದ ನಂತರ ಅವೂ ಅದೃಶ್ಯವಾದುವು. ಈಗಲೂ ಜಾತ್ರೆ ಸಮಯದಲ್ಲಿ ಒಂದು ಪವಿತ್ರದಿನ-ಅಲ್ಲಿ ಭಗವತಿಯ ಪೂಜೆ ನಡೆಯುತ್ತದೆ. (ಮಾಸ್ಟರಿಗೆ) ಇವೆಲ್ಲ ಸತ್ಯ.”
ಮಾಸ್ಟರ್: “ಹೌದು, ನಿಜ.”
ಶ್ರೀರಾಮಕೃಷ್ಣರು: “ನರೇಂದ್ರನಿಗೆ ಈಗ ಇಂಥವುಗಳಲ್ಲೆಲ್ಲಾ ನಂಬಿಕೆ ಹುಟ್ಟುತ್ತಿದೆ.
“ಪೂರ್ಣ, ವಿಷ್ಣುವಿನ ಅಂಶದಿಂದ ಜನ್ಮವೆತ್ತಿದ್ತಾನೆ. ಆತನನ್ನು ಮಾನಸಿಕವಾಗಿ ಬಿಲ್ವ ದಳಗಳಿಂದ ಪೂಜಿಸಿದೆ. ಅದನ್ನು ಆತ ಸ್ವೀಕರಿಸಲಿಲ್ಲ. ಬಳಿಕ ತುಳಸೀದಳ ಮತ್ತು ಚಂದನದಿಂದ ಪೂಜಿಸಿದೆ. ಅವನ್ನು ಸ್ವೀಕರಿಸಿದ. ಭಗವಂತ ವಿವಿಧ ರೂಪುಗಳಿಂದ ಕಾಣಿಸಿಕೊಳ್ಳುತ್ತಿದ್ದಾನೆ; ಕೆಲವು ವೇಳೆ ನರರೂಪದಿಂದ, ಕೆಲವು ವೇಳೆ ಚಿನ್ಮಯ ಭಗವದ್ರೂಪದಿಂದ, ಭಗವದ್ರೂಪದಲ್ಲಿ ವಿಶ್ವಾಸವಿಡಬೇಕು. ನೀನು ಏನು ಹೇಳುತ್ತೀಯೆ?”
ಮಾಸ್ಟರ್: “ಹೌದು, ನಿಜ.”
ಶ್ರೀರಾಮಕೃಷ್ಣರು: “ಕಾಮಾರಹಾಟಿಯ ಬ್ರಾಹ್ಮಣಿಗೆ (ಗೋಪಾಲನ ತಾಯಿ) ಅನೇಕ ಅಲೌಕಿಕ ದರ್ಶನಗಳಾಗುತ್ತಿವೆ. ಗಂಗಾನದಿ ದಡದಲ್ಲಿರುವ ಒಂದು ತೋಟದಲ್ಲಿ ಒಂದು ಕುಟೀರ ಕಟ್ಟಿಕೊಂಡು ಏಕಾಂಗಿನಿಯಾಗಿ ವಾಸವಾಗಿದ್ದಾಳೆ. ಆಕೆ ತನ್ನ ಸಮಯವನ್ನೆಲ್ಲ ಜಪತಪಾದಿಗಳಲ್ಲೇ ಕಳೆಯುತ್ತಾಳೆ. ಗೋಪಾಲ ಆಕೆಯ ಮಗ್ಗುಲಿನಲ್ಲೇ ಮಲಗುತ್ತಾನೆ. (ಹೀಗೆಂದು ಹೇಳುತ್ತ ಹೇಳುತ್ತ ಹಾಗೆಯೇ ಪರಮಹಂಸರು ಬೆಚ್ಚಿಬಿದ್ದರು.) ಇದು ಕಲ್ಪನೆಯಲ್ಲ, ವಾಸ್ತವ. ಗೋಪಾಲನ ಅಂಗೈ ಕೆಂಪಾಗಿರುವುದನ್ನು ಆಕ್ಲ ನೋಡಿದ್ದಾಳೆ. ಆಕೆಯೊಡನೆ ಆತ ಓಡಾಡುತ್ತಾನೆ. ಆಕೆ ಆತನಿಗೆ ತನ್ನ ಸ್ತನ್ಯಪಾನ ಮಾಡಿಸುತ್ತಾಳೆ. ಪರಸ್ಪರ ಮಾತುಕತೆಗಳಾಡುತ್ತಾರೆ. ನರೇಂದ್ರ ಇದನ್ನು ಕೇಳಿ ಸುಮ್ಮನೆ ಅತ್ತುಬಿಟ್ಟ. ಹಿಂದೆ ನನಗೂ ಅನೇಕ ಅಲೌಕಿಕ ದರ್ಶನಗಳಾಗುತ್ತಿದ್ದುವು. ಈಗ ನಾನು ಭಾವಸ್ಥನಾಗಿರುವುದರಿಂದ ಅಷ್ಟೊಂದು ದರ್ಶನಗಳಾಗುತ್ತಿಲ್ಲ. ಈಗ ನನ್ನಲ್ಲಿ ಪ್ರಕೃತಿಯ ಸ್ವಭಾವ ಕಡಿಮೆ ಕಡಿಮೆಯಾಗುತ್ತಾ ಬರುತ್ತಿವೆ; ಪುರುಷನ ಸ್ವಭಾವ ಅಧಿಕಾಧಿಕವಾಗಿ ಬೆಳೆಯುತ್ತಿದೆ. ಅದಕ್ಕಾಗಿ ನನ್ನ ಭಾವಗಳು ಆಂತರ್ಯದಲ್ಲೇ ಇರುತ್ತಿವೆ; ಅಷ್ಟೊಂದು ಹೊರಗಡೆ ವ್ಯಕ್ತವಾಗುತ್ತಿಲ್ಲ.
“ಚಿಕ್ಕ ನರೇಂದ್ರನದು ಪುರುಷಭಾವ. ಅದಕ್ಕಾಗಿ ಆತನ ಮನಸ್ಸು ಧ್ಯಾನದ ಸಮಯದಲ್ಲಿ ಸಂಪೂರ್ಣವಾಗಿ ಇಷ್ಟದೇವತೆಯಲ್ಲಿ ಲೀನವಾಗಿಬಿಡುತ್ತವೆ. ಆತ ತನ್ನ ಭಾವಗಳನ್ನು ಹೊರಗೆಡವುತ್ತಿಲ್ಲ. ನಿತ್ಯಗೋಪಾಲನದು ಪ್ರಕೃತಿಭಾವ. ಅದಕ್ಕಾಗಿ ಆತ ಭಾವಸ್ಥನಾದಾಗ ಆತನ ದೇಹ ಮುರುಚುಗೊಳ್ಳುತ್ತದೆ.
(ಮಾಸ್ಟರಿಗೆ) “ಒಳ್ಳೆಯದು, ಜನರು ಕಿಂಚಿತ್ ತ್ಯಾಗಮಾಡುವುದುಂಟು, ಆದರೆ ಈ ಯುವಕರ ಅವಸ್ಥೆ ಎಷ್ಟು ಅದ್ಭುತವಾದದ್ದು!
“ವಿನೋದ ಹೇಳಿದ, ‘ನಾನು ನನ್ನ ಹೆಂಡತಿಯೊಡನೆ ಮಲಗಿ ನಿದ್ರಿಸಬೇಕಾಗಿದೆ. ಅದು ನನ್ನ ಮನಸ್ಸು ಕೆಡಿಸುತ್ತಿದೆ’ ಅಂತ. ಸತಿಯೊಡನೆ ಸಹವಾಸವಿರಲಿ, ಆಕೆಯೊಡನೆ ನಿದ್ರಿಸುವುದೂ ಸಾಧಕನಿಗೆ ಒಳ್ಳೆಯದಲ್ಲ. ಶರೀರಘರ್ಷಣೆಯ ಮತ್ತು ದೇಹಶಾಖದ ಅನುಭವಗಳನ್ನು ಹೊಂದಲೇಬೇಕಾಗುತ್ತದೆ.
“ದ್ವಿಜ ಎಂತಹ ಅದ್ಭುತ ಅವಸ್ಥೆಯಲ್ಲಿದ್ದಾನೆ! ಶರೀರವನ್ನು ತೂಗಾಡಿಸುತ್ತ ಕೇವಲ ನನ್ನ ಕಡೆಗೆ ದೃಷ್ಟಿಸಿ ನೋಡುತ್ತಿರುತ್ತಾನೆ. ಇದೇನು ಕಡಿಮೆಯಾದುದೆ? ಯಾರೆ ಆಗಲಿ, ತಮ್ಮ ಇಡೀ ಮನಸ್ಸನ್ನು ಕೇಂದ್ರಿಕರಿಸಿ ನನ್ನ ಕಡೆಗೆ ತಿರುಗಿಸುವುದಾದರೆ, ಅಂಥವರಿಗೆ ನಿಜವಾಗಿಯೂ ಎಲ್ಲವೂ ದೊರಕಿಬಿಡುತ್ತದೆ.”
“ನಾನು ಯಾರು, ಎಲ್ಲವೂ ಆತನೆ, ನಾನು ಯಂತ್ರ, ಆತ ಯಂತ್ರಿ, ಇದರಲ್ಲಿ (ಪರಮಹಂಸರಲ್ಲಿ) ಕೇವಲ ಭಗವಂತನ ಸತ್ ಇದೆ. ಅದಕ್ಕಾಗಿ ಇದರ ಕಡೆ ಜನರ ಆಕರ್ಷಣೆ ಅಧಿಕಾಧಿಕವಾಗುತ್ತಾ ಬರುತ್ತಿದೆ. ಸ್ಪರ್ಶಮಾತ್ರದಿಂದಲೇ ಜನರ ಆಧ್ಯಾತ್ಮಿಕ ಜೀವನ ಚೇತನಗೊಳ್ಳುತ್ತಿದೆ. ಈ ಎಳೆತ, ಈ ಆಕರ್ಷಣೆ ಭಗವಂತನದೇ.
“ಬೇಲಘರದ ತಾರಕ ದಕ್ಷಿಣೇಶ್ವರದಿಂದ ತನ್ನ ಮನೆಗೆ ಹಿಂದಿರುಗುತ್ತಿದ್ದ. ಇದರಿಂದ (ಪರಮಹಂಸರ ಶರೀರದಿಂದ) ಜ್ವಾಲೆಯೋಪಾದಿಯ ಒಂದು ವಸ್ತು ಹೊರಕ್ಕೆ ಬಂದು ಆತನನ್ನು ಹಿಂಬಾಲಿಸಿದುದನ್ನು ನಾನು ಸ್ಪಷ್ಟವಾಗಿ ನೋಡಿದೆ. ಕೆಲವು ದಿನಗಳಾದನಂತರ ಮತ್ತೆ ತಾರಕ ದಕ್ಷಿಣೇಶ್ವರಕ್ಕೆ ಬಂದ. ಇದರೊಳಗಿರೋನು 1 ಸಮಾಧಿಸ್ಥನಾಗಿ ಆತನ ಎದೆ ಮೇಲೆ ತನ್ನ ಪಾದಗಳನ್ನಿಟ್ಟ.
“ಒಳ್ಳೆಯದು, ಈ ರೀತಿಯ ಯುವಕರು ಇದ್ದಾರೇನು?”
ಮಾಸ್ಟರ್: “ಮೋಹಿತ್ ಬಹಳ ಒಳ್ಳೆಯವ; ನಿಮ್ಮನ್ನು ಒಂದೆರಡು ಸಲ ನೋಡಿದ್ದಾನೆ. ಒಂದೇ ಸಲಕ್ಕೆ ವಿಶ್ವವಿದ್ಯಾನಿಲಯದ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವಷ್ಟು ಪುಸ್ತಕಗಳನ್ನು ಓದುತ್ತಿದ್ದಾನೆ. ಆತನಿಗೆ ಭಗವಂತನಲ್ಲಿ ಅತ್ಯಂತ ಅನುರಾಗ.”
ಶ್ರೀರಾಮಕೃಷ್ಣರು: “ಅದೆಲ್ಲಾ ಸರಿಯೆ; ಆದರೆ ಆತ ಉಚ್ಚ ಅಂತಸ್ತಿಗೆ ಸೇರಿದವನಲ್ಲ. ಆತನ ಶಾರೀರಿಕ ಲಕ್ಷಣಗಳು ಅಷ್ಟು ಒಳ್ಳೆಯವಲ್ಲ. ಆತನದು ಗೂಳಿನಾಯಿಯಂಥ ಮುಖ. ಆದರೆ ಉಳಿದ ಈ ಯುವಕರು ಉಚ್ಚ ಅಂತಸ್ತಿಗೆ ಸೇರಿದವರು.
“ಶರೀರಧಾರಣೆ ಮಾಡಿತು ಅಂದರೆ ಅನೇಕ ಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಯಾರೇ ಆಗಲಿ, ಶಪಿತನಾದರಂತೂ ಆತ ಏಳು ಜನ್ಮಗಳನ್ನು ಎತ್ತಬೇಕಾಗುತ್ತದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಬದುಕಿರಬೇಕು, ಕಾಮನೆ ಇತ್ತು ಅಂದರೆ ಶರೀರಧಾರಣೆ ಮಾಡಬೇಕಾಗಿ ಬರುತ್ತದೆ.”
ಒಬ್ಬ ಭಕ್ತ: “ಯಾರು ಅವತಾರಪುರುಷರೊ, ಎಂದರೆ ಮಾನವ ದೇಹಧಾರಣೆ ಮಾಡಿಕೊಂಡು ಬಂದಿದ್ದಾರೊ, ಅವರಲ್ಲೇನು ಕಾಮನೆಗಳಿರುತ್ತವೆ?”
ಶ್ರೀರಾಮಕೃಷ್ಣರು (ನಗುತ್ತ): “ಎಲ್ಲಾ ಆಸೆಗಳೂ ನನ್ನನ್ನು ಪೂರ್ಣವಾಗಿ ಬಿಟ್ಟು ಹೋಗಿಲ್ಲ, ಒಬ್ಬ ಸಾಧು ಒಂದು ವಿಧದ ಶಾಲನ್ನು ಹೊದ್ದುಕೊಂಡಿದ್ದುದನ್ನು ನೋಡಿ, ನನಗೂ ಅಂಥದೊಂದನ್ನು ಹೊದ್ದುಕೊಳ್ಳಬೇಕು ಅಂತ ಭಾವನೆಯಾಯಿತು. ಆ ಆಸೆ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಅದಕ್ಕಾಗಿ ನಾನು ಮತ್ತೆ ಜನ್ಮವೆತ್ತಬೇಕಾಗಿ ಬರುವುದೊ ಏನೊ ನನಗೆ ಗೊತ್ತಿಲ್ಲ.”
ಬಲರಾಮ (ನಗುತ್ತ): “ಕೇವಲ ಒಂದು ಶಾಲಿಗಾಗಿ ಮಾತ್ರವೇ ನೀವು ಮತ್ತೆ ಜನ್ಮವೆತ್ತುವಿರೇನು?” (ಎಲ್ಲರೂ ನಗುತ್ತಾರೆ).
ಶ್ರೀರಾಮಕೃಷ್ಣರು (ನಗುತ್ತ): “ದೇಹತ್ಯಾಗವಾಗುವ ಸಮಯದಲ್ಲಿ ಚಿಂತನೆ ಮಾಡಲು ಯಾವುದಾದರೂ ಒಂದು ಸತ್ಕಾಮನೆಯನ್ನು ಉಳಿಸಿಕೊಂಡಿರಬೇಕು. ಸಾಧುಗಳು ನಾಲ್ಕುಧಾಮಗಳಲ್ಲಿ ಒಂದು ಧಾಮಕ್ಕೆ ಮಾತ್ರ ಹೋಗದೆ ಉಳಿದು ಕೊಳ್ಳುತ್ತಾರೆ, ಜಗನ್ನಾಥನ ಚಿಂತನೆ ಮಾಡುತ್ತ ಮಾಡುತ್ತ ದೇಹತ್ಯಾಗವಾಗಬೇಕೆಂದು ಅನೇಕ ಸಾಧುಗಳು ಜಗನ್ನಾಥ ಕ್ಷೇತ್ರಕ್ಕೆ ಹೋಗುವುದಿಲ್ಲ.”
ಕಾಷಾಯವಸ್ತ್ರಧಾರಿಯಾದ ಒಬ್ಬ ವ್ಯಕ್ತಿ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿದ. ಪರಮಹಂಸರನ್ನು ಆತ ಅವರ ಹಿಂದೆ ಅಲ್ಲಗೆಳೆಯುತ್ತಿದ್ದ; ಅದಕ್ಕಾಗಿ ಬಲರಾಮ ನಗುತ್ತಿದ್ದಾನೆ. ಪರಮಹಂಸರು ಅಂತರ್ಯಾಮಿ. ಬಲರಾಮನಿಗೆಹೇಳುತ್ತಿದ್ದಾರೆ, “ಚಿಂತೆ ಇಲ್ಲ; ನಾನು ಒಬ್ಬ ಠಕ್ಕ ಅಂತ ಬೇಕಾದರೂ ಹೇಳಲಿ” ಎಂದು.
ಪರಮಹಂಸರು ತೇಜಚಂದ್ರನೊಡನೆ ಮಾತುಕತೆಗಳಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನಿನಗೆ ಅನೇಕ ಸಲ ಕರೆಕಳುಹಿಸಿದ್ದೇನೆ, ಆದರೂ ನೀನು ಬರುತ್ತಿಲ್ಲವಲ್ಲ ಏಕೆ? ಒಳ್ಳೆಯದು, ನೀನು ಸಾಧನೆ ಮಾಡುತ್ತಿರುವುದಾದರೆ ನನಗೆ ಬಹಳ ಆನಂದ. ನೀನು ನನಗೆ ಸೇರಿದವನು; ಅದಕ್ಕಾಗಿಯೇ ನಾನು ನಿನಗಾಗಿ ಕರೆಕಳುಹಿಸುತ್ತಿರುವುದು.”
ತೇಜಚಂದ್ರ: “ನನಗೆ ಆಫೀಸಿನ ಕೆಲಸ ಇದೆ. ಅಲ್ಲಿ ಬಹಳ ಹೆಚ್ಚು ಕೆಲಸ.”
ಮಾಸ್ಟರ್ (ನಗುತ್ತ): “ಈತನ ಮನೆಯಲ್ಲಿ ಮದುವೆ ನಡೆಯಿತು. ಆಫೀಸಿನಿಂದ ಹತ್ತು ದಿನ ರಜೆ ತೆಗೆದುಕೊಂಡಿದ್ದ.”
ಶ್ರೀರಾಮಕೃಷ್ಣರು: “ಹಾಗಾದರೆ! ಸಮಯವಿಲ್ಲ! ಸಮಯವಿಲ್ಲ! ಈಗತಾನೆ ಸಂಸಾರವನ್ನು ತ್ಯಾಗಮಾಡಿಬಿಡುತ್ತೇನೆ ಅಂತ ಹೇಳಿದ?”
ನಾರಾಯಣ: “ಮಾಸ್ಟರ್ ಮಹಾಶಯ ಒಂದು ದಿನ ನಮಗೆ ಹೇಳಿದರು, ಈ ‘ಸಂಸಾರ ಒಂದು ಘೋರಾರಣ್ಯ’.”
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಒಬ್ಬ ಶಿಷ್ಯ ಔಷಧಿಯನ್ನು ಸೇವಿಸಿ ಪ್ರಜ್ಞೆಯಿಲ್ಲದೆ ತನ್ನ ಮನೆಯಲ್ಲಿ ಮಲಗಿರುವಾಗ, ಅಲ್ಲಿಗೆ ಆತನ ಗುರು ಬಂದು ತಾನು ಕೊಡುವ ಗುಳಿಗೆಯನ್ನು ರೋಗಿಯ ಬಂಧುಗಳಲ್ಲಿ ಯಾರಾದರೊಬ್ಬರು ತೆಗೆದುಕೊಳ್ಳುವುದಾದರೆ ತಾನು ರೋಗಿಯನ್ನು ಬದುಕಿಸಬಲ್ಲೆನೆಂದೂ ಮತ್ತು ಆತನೇನೊ ಬದುಕಿಕೊಳ್ಳುತ್ತಾನೆ; ಆದರೆ ಆ ಗುಳಿಗೆಯನ್ನು ತಿಂದವರು ಮಾತ್ರ ಸತ್ತುಹೋಗುತ್ತಾರೆ ಎಂಬುದಾಗಿ ತಿಳಿಸಿದ ಆ ಕಥೆಯನ್ನು ಇವರಿಗೆ ಹೇಳು.
“ತನ್ನ ಪರಿವಾರದವರೇ ತನ್ನ ಪರಮ ಆಪ್ತರೆಂದು ತಿಳಿದುಕೊಂಡಿದ್ದ ಒಬ್ಬ ಹಠ ಯೋಗಿ ತನ್ನ ಕೈಕಾಲುಗಳನ್ನು ತಿರುಚುಮುರುಚಾಗಿ ಮಾಡಿ ಕುಳಿತುಕೊಂಡು ಸತ್ತವನ ಹಾಗೆ ನಟಿಸಿದ ಕಥೆಯನ್ನೂ ಇವರಿಗೆ ಹೇಳು. ಈ ಕಥೆಗಳನ್ನು ಕೇಳುವುದರಿಂದ ಇವರಿಗೆ ಪ್ರಯೋಜನವಾಗುತ್ತದೆ.”
ಈಗ ಮಧ್ಯಾಹ್ನ, ಪರಮಹಂಸರು ಬಲರಾಮನ ಮನೆದೇವರಾದ ಶ್ರೀಜಗನ್ನಾಥನ ಪ್ರಸಾದವನ್ನು ಸ್ವೀಕರಿಸಿದರು. ಪರಮಹಂಸರು ಆಗಾಗ ಹೇಳುತ್ತಲೇ ಇರುತ್ತಿದ್ದರು, ಆತನ ಮನೆಯ ಅನ್ನ ಬಹಳ ಶುದ್ಧವಾದುದು ಅಂತ. ಊಟವಾದ ನಂತರ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡರು.
ಸಾಯಂಕಾಲವಾಗಿದೆ. ಪರಮಹಂಸರು ಭಕ್ತರೊಡನೆ ಅದೇ ಬಲರಾಮನ ಬೈಠಕ್ ಖಾನೆಯಲ್ಲಿ ಕುಳಿತಿದ್ದಾರೆ. ಕರ್ತಾಭಜಾ ಸಂಪ್ರದಾಯದ ಚಂದ್ರಬಾಬು ಮತ್ತು ಒಬ್ಬ ಬ್ರಾಹ್ಮಣ ವಿಕಟಕವಿ ಇವರಿಬ್ಬರೂ ಅಲ್ಲಿಗೆ ಬಂದಿದ್ದಾರೆ. ಆ ಬ್ರಾಹ್ಮಣ ಕೋಡಂಗಿ ಹಾಗೆ ಮಾತುಕತೆಗಳಾಡುತ್ತಿದ್ದ; ಆತನ ಒಂದೊಂದು ಮಾತೂ ಎಲ್ಲರನ್ನೂ ನಗುವಂತೆ ಮಾಡುತ್ತಿತ್ತು.
ಘಂಟೆ ಆರು. ಗಿರೀಶನ ಸೋದರ ಅತುಲ ಮತ್ತು ತೇಜಚಂದ್ರನ ಸೋದರ ಬಂದಿದ್ದಾರೆ. ಪರಮಹಂಸರು ಭಾವಸಮಾಧಿಸ್ಥರಾಗಿದ್ದಾರೆ. ಕೆಲವು ನಿಮಿಷಗಳಾದ ನಂತರ ಇನ್ನೂ ಭಾವಾವಿಷ್ಟರಾಗಿಯೇ ಹೇಳುತ್ತಿದ್ದಾರೆ, “ಚೈತನ್ಯನ ಧ್ಯಾನ ಮಾಡಿದರೆ ಮಿದುಳು ಕೆಟ್ಟುಹೋಗುವುದುಂಟೆ? ಆತ ನಿತ್ಯಶುದ್ಧ ಬುದ್ಧ ಬೋಧಸ್ವರೂಪ” ಅಂತ.
ಆಗಂತುಕರಲ್ಲಿ ಯಾರಾದರೂ ಭಗವಂತನ ಧ್ಯಾನ ಮಾಡಿ ಪರಮಹಂಸರ ತಲೆ ಕೆಟ್ಟುಹೋಗಿಬಿಟ್ಟಿದೆ ಅಂತ ಭಾವಿಸಿದ್ದರೇನು?
ಶ್ರೀರಾಮಕೃಷ್ಣರು (ಆ ವಿಕಟಕವಿಗೆ): “ನೀನು ಸಾಮಾನ್ಯ ಐಹಿಕ ವಿಷಯಗಳಲ್ಲಿಯೇ ನಿರತನಾಗಿ, ಹಗಲಿರುಳೆನ್ನದೆ ಸುಮ್ಮನೆ ತಮಾಷೆಮಾಡುತ್ತ ಏಕೆ ನಿನ್ನ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವೆ? ನಿನ್ನ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸು. ಯಾರು ಉಪ್ಪಿನ ಸಂಬಂಧವಾಗಿ ಲೆಕ್ಕ ಇಡಬಲ್ಲನೋ, ಆತ ಸಕ್ಕರೆಯ ಸಂಬಂಧವಾಗಿಯೂ ಸರಿಯಾದ ಲೆಕ್ಕ ಇಡಬಲ್ಲ.”
ವಿಕಟಕವಿ (ನಗುತ್ತ): “ನನ್ನನ್ನೂ ಆಕರ್ಷಿಸಿಬಿಡಿ.”
ಶ್ರೀರಾಮಕೃಷ್ಣರು: “ನನ್ನ ಕೈಯಲ್ಲಿ ಏನು ತಾನೆ ಸಾಧ್ಯ? ಎಲ್ಲವೂ ನಿನ್ನ ಸ್ವಪ್ರಯತ್ನದ ಮೇಲೆ ನಿಂತಿದೆ. ನಿನ್ನ ಮನಸ್ಸು ನಿನ್ನದೇ ವಿನಾ ನನ್ನದಲ್ಲ. ಈ ಕೋಡಂಗಿ ಚೇಷ್ಟೆಯನ್ನು ಬಿಟ್ಟು ಭಗವಂತನ ಕಡೆಗೆ ಮುಂದುವರೆ. ಮುಂದುವರಿದಂತೆಲ್ಲ ಇನ್ನೂ ಒಳ್ಳೊಳ್ಳೆಯ ವಸ್ತುಗಳು ದೊರೆಯುತ್ತವೆ. ಒಬ್ಬ ಬ್ರಹ್ಮಚಾರಿ ಒಬ್ಬ ಸೌದೆ ಕಡಿಯುವವನಿಗೆ ಕಾಡಿನಲ್ಲಿ ಮುಂದು ಮುಂದಕ್ಕೆ ಹೋಗುವಂತೆ ಹೇಳಿದ. ಆತ ಸ್ವಲ್ಪ ಮುಂದಕ್ಕೆ ಹೋಗಿ ನೋಡುತ್ತಾನೆ, ಎಲ್ಲಿ ನೋಡಿದರೂ ಬರೀ ಚಂದನದ ಮರಗಳೆ. ಬಳಿಕ ಆತನಿಗೆ ಕ್ರಮಕ್ರಮವಾಗಿ ಬೆಳ್ಳಿಯ ಗಣಿ, ಚಿನ್ನದ ಗಣಿ, ಹೀರ ಮಾಣಿಕ್ಯಗಳ ಗಣಿ ಕಂಡು ಬರುತ್ತದೆ.”
ವಿಕಟಕವಿ: “ಈ ಮಾರ್ಗದಲ್ಲಿ ಕೊನೆ ಎಂಬುದೇ ಇಲ್ಲ.”
ಶ್ರೀರಾಮಕೃಷ್ಣರು: “ಎಲ್ಲಿ ಶಾಂತಿ ದೊರೆಯುತ್ತದೆಯೋ ಅದೇ ಅದರ ಕೊನೆ.”
ಒಬ್ಬ ಆಗಂತುಕನ ಸಂಬಂಧವಾಗಿ ಪರಮಹಂಸರು ಹೇಳುತ್ತಿದ್ದಾರೆ: “ಆತನಲ್ಲಿ ಒಂದು ಕಿಂಚಿತ್ ಸತ್ವವೂ ಇರಲಿಲ್ಲ. ಅವನು ಯಾವುದಕ್ಕೂ ಬಾರದವನಾಗಿ ಕಂಡುಬಂದ.”
ಸಾಯಂಕಾಲವಾಗಿದೆ. ಕೊಠಡಿಗೆ ದೀಪ ಹಚ್ಚಿದ್ದಾರೆ. ಪರಮಹಂಸರು ತಮ್ಮ ಸುಮಧುರ ಕಂಠದಿಂದ ಜಗನ್ಮಾತೆಯ ನಾಮಜಪಮಾಡುತ್ತ ಆಕೆಯ ಧ್ಯಾನ ಮಾಡುತ್ತಿದ್ದಾರೆ. ಭಕ್ತರು ಸುತ್ತಲೂ ಕುಳಿತಿದ್ದಾರೆ, ಬಲರಾಮನ ಮನೆಯಲ್ಲಿ ನಾಳೆ ಬೆಳಿಗ್ಗೆ ರಥೋತ್ಸವ ಇರುವುದರಿಂದ ಪರಮಹಂಸರು ಇಂದಿನ ರಾತ್ರಿಯನ್ನು ಆತನ ಮನೆಯಲ್ಲೇ ಕಳೆಯುತ್ತಿದ್ದಾರೆ.
ಮನೆಯ ಒಳಕ್ಕೆ ಹೋಗಿ ಸ್ವಲ್ಪ ಫಲಾಹಾರವನ್ನು ಸ್ವೀಕರಿಸಿದ ನಂತರ ಪರಮಹಂಸರು ಮತ್ತೆ ಬೈಠಕ್ಖಾನೆಗೆ ಹಿಂದಿರುಗಿದರು. ಆಗ ಘಂಟೆ ರಾತ್ರಿ ಹತ್ತು. ಪರಮಹಂಸರು ಮಾಸ್ಟರಿಗೆ ಹೇಳಿದರು, “ದಯವಿಟ್ಟು ಆ ಕೊಠಡಿಯಿಂದ ನನ್ನ ಚೌಕ ತೆಗೆದುಕೊಂಡು ಬಾ.”
ಪಕ್ಕದ ಒಂದು ಚಿಕ್ಕ ಕೊಠಡಿಯಲ್ಲಿ ಪರಮಹಂಸರಿಗಾಗಿ ಹಾಸಿಗೆಯನ್ನು ಸಿದ್ಧಪಡಿಸಿದ್ದಾರೆ. ಹತ್ತೂವರೆ ಘಂಟೆಗೆ ಸರಿಯಾಗಿ ಪರಮಹಂಸರು ಹಾಸಿಗೆಯಲ್ಲಿ ಮಲಗಿಕೊಂಡರು. ಆಗ ಬೇಸಿಗೆಕಾಲ. ಮಾಸ್ಟರಿಗೆ ಹೇಳಿದರು, “ಒಂದು ಬೀಸಣಿಗೆ ತೆಗೆದುಕೊಂಡು ಬಂದರೆ ಒಳ್ಳೆಯದು” ಅಂತ. ತಮಗೆ ಸ್ವಲ್ಪ ಗಾಳಿ ಬೀಸುವಂತೆ ಆತನಿಗೆ ಹೇಳಿದರು. ಪರಮಹಂಸರು ಅರ್ಧರಾತ್ರಿಯಲ್ಲಿ ಎಚ್ಚರಗೊಂಡರು. ಆಗ ಅವರು ಮಾಸ್ಟರಿಗೆ ಹೇಳಿದರು, “ಈಗ ನಿಲ್ಲಿಸು, ಚಳಿಯಾಗುತ್ತಿದೆ.”
೧೪ನೇ ಜುಲೈ ೧೮೮೫, ಆಷಾಢ ಶುಕ್ಲ ಬಿದಿಗೆ, ಮಂಗಳವಾರ
ಇಂದು ಪುರಿಯಲ್ಲಿ ಶ್ರೀಜಗನ್ನಾಥ ರಥೋತ್ಸವ. ಪರಮಹಂಸರು ಮುಂಜಾನೆಯೇ ಹಾಸಿಗೆಯಿಂದ ಎದ್ದುಬಿಟ್ಟಿದ್ದಾರೆ. ಕೊಠಡಿಯಲ್ಲಿ ಒಬ್ಬರೆ ಏಕಾಕಿಯಾಗಿ ಭಗವನ್ನಾಮ ಜಪ ಮಾಡುತ್ತಾ ನರ್ತಿಸುತ್ತಿದ್ದಾರೆ. ಮಾಸ್ಟರ್ ಕೊಠಡಿಗೆ ಬಂದು ಅವರಿಗೆ ಪ್ರಣಾಮ ಮಾಡಿದ. ಉಳಿದ ಭಕ್ತರೂ ಕ್ರಮೇಣ ಒಬ್ಬೊಬ್ಬರಾಗಿ ಅಲ್ಲಿಗೆ ಬಂದು ಅವರಿಗೆ ಪ್ರಣಾಮಮಾಡಿ ಅವರ ಹತ್ತಿರ ಕುಳಿತುಕೊಂಡರು. ಪರಮಹಂಸರು ಪೂರ್ಣನಿಗಾಗಿ ಬಹಳ ವ್ಯಾಕುಲರಾಗಿದ್ದಾರೆ. ಅವರು ಮಾಸ್ಟರೊಡನೆ ಆತನ ಸಂಬಂಧವಾಗಿ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೀನು ಪೂರ್ಣನಿಗೆ ಏನಾದರೂ ಹೇಳಿದೆಯೇನು?”
ಮಾಸ್ಟರ್: “ಹೌದು, ಚೈತನ್ಯನ ಜೀವನಚರಿತ್ರೆ ಓದುವಂತೆ ಹೇಳಿದ್ದೇನೆ. ಆತನ ಜೀವನದ ಸಂಬಂಧವಾಗಿ ಆತನಿಗೆ ಅನೇಕ ವಿಷಯಗಳು ಗೊತ್ತಿವೆ. ಜನರು ಸತ್ಯಸಂಧರಾಗ ಬೇಕು ಎಂಬುದಾಗಿ ನೀವು ಹೇಳುವುದನ್ನು ನಾನು ಆತನಿಗೆ ತಿಳಿಸಿದ್ದೇನೆ.”
ಶ್ರೀರಾಮಕೃಷ್ಣರು: “ಒಳ್ಳೆಯದು, ನನ್ನ ಸಂಬಂಧವಾಗಿ ನೀನು, ‘ಅವರು ಒಬ್ಬ ಅವತಾರ ಪುರುಷರು’ ಎಂದು ಹೇಳಿದಾಗ ಅದನ್ನು ಹೇಗೆ ಸ್ವೀಕರಿಸಿದ?”
ಮಾಸ್ಟರ್: “ನಾನು ಆತನಿಗೆ ಹೇಳಿದೆ, ‘ಚೈತನ್ಯದೇವನಂಥ ಒಬ್ಬ ವ್ಯಕ್ತಿಯನ್ನು ನೋಡಬೇಕೆಂದಿದ್ದರೆ ಬಾ ನನ್ನೊಡನೆ’ ಅಂತ.”
ಶ್ರೀರಾಮಕೃಷ್ಣರು: “ಇನ್ನೇನಾದರೂ?”
ಮಾಸ್ಟರ್: “ನಿಮ್ಮ ಆ ಮಾತು; ಆನೆ ಚಿಕ್ಕ ಕಟ್ಟೆಗೆ ಇಳಿಯಿತು ಅಂದರೆ ನೀರು ಅಲ್ಲೋಲ ಕಲ್ಲೋಲವಾಗಿ ದಡದ ಸುತ್ತಲೂ ಬಂದು ಅಪ್ಪಳಿಸುತ್ತದೆ; ಅದೇ ರೀತಿಯಾಗಿ ‘ಚಿಕ್ಕ ಪಾತ್ರ’ ದಿಂದಲೂ ಭಾವ ಉಕ್ಕಿ ಹೊರಹೊಮ್ಮಿಬಿಡುತ್ತದೆ.
“ಆತ ಮೀನು ತಿನ್ನುವುದನ್ನು ಬಿಟ್ಟಿರುವುದಕ್ಕಾಗಿ ನಾನು ಆತನಿಗೆ ಹೇಳಿದೆ, ‘ಹಾಗೇಕೆ ಮಾಡಿದೆ? ಅದಕ್ಕಾಗಿ ನಿನ್ನ ಮನೆಯವರು ಒಂದು ಗಲಾಟೆಯನ್ನೇ ಎಬ್ಬಿಸಿಬಿಡುತ್ತಾರೆ’ ಅಂತ.”
ಶ್ರೀರಾಮಕೃಷ್ಣರು: “ಅದು ಸರಿ, ಭಾವಗಳನ್ನು ಆಂತರ್ಯದಲ್ಲಿ ಇಟ್ಟುಕೊಳ್ಳುವುದೇ ಒಳ್ಳೆಯದು.”
ಘಂಟೆ ಪ್ರಾತಃಕಾಲ ಆರೂವರೆ. ಬಲರಾಮನ ಮನೆಯಿಂದ ಹೊರಟು ಮಾಸ್ಟರ್ ಗಂಗಾಸ್ನಾನಕ್ಕೆ ಹೋಗುತ್ತಿದ್ದಾನೆ. ಆಗ ಇದ್ದಕ್ಕಿದ್ದ ಹಾಗೆ ಭೂಮಿ ಕಂಪಿಸಲಾರಂಭಿಸಿತು. ಒಡನೆಯೇ ಆತ ಪರಮಹಂಸರಿದ್ದ ಕೊಠಡಿಗೆ ಹಿಂದಿರುಗಿ ಬಂದುಬಿಟ್ಟ. ಅವರು ಬೈಠಕ್ಖಾನೆಯಲ್ಲಿ ನಿಂತಿದ್ದರು. ಭಕ್ತರು ಅವರ ಸುತ್ತಲೂ ನಿಂತಿದ್ದರು. ಅವರೆಲ್ಲರೂ ಭೂಕಂಪದ ವಿಷಯವಾಗಿ ಮಾತನಾಡುತ್ತಿದ್ದರು. ಇಂದಿನ ಭೂಮಿಯ ಕಂಪನ ಸ್ವಲ್ಪ ಬಲವಾದ್ದೆ ಆಗಿತ್ತು. ಭಕ್ತರಲ್ಲಿ ಅನೇಕರು ಹೆದರಿಬಿಟ್ಟಿದ್ದರು.
ಮಾಸ್ಟರ್: “ನಾವೆಲ್ಲರೂ ನೆಲ ಅಂತಸ್ತಿಗೆ ಇಳಿದುಬಂದುಬಿಡಬೇಕಾಗಿತ್ತು.”
ಶ್ರೀರಾಮಕೃಷ್ಣರು: “ನಮ್ಮ ವಾಸಸ್ಥಾನ ಇಂಥ ದುರ್ದಶೆಗೆ ತುತ್ತಾಗುವ ಸಂಭವವಿದೆ; ಆದರೂ ಜನ ಮಾತ್ರ ಅಹಂಕಾರ ಬಿಡುವ ಹಾಗಿಲ್ಲ. (ಮಾಸ್ಟರಿಗೆ) ಆ ಆಶ್ವೀಜ ಮಾಸದ ೫ನೇ ಅಕ್ಟೋಬರ್ ೧೮೬೪-ಚಂಡಮಾರುತ ನಿನ್ನ ಜ್ಞಾಪಕದಲ್ಲಿದೆಯೇನು?”
ಮಾಸ್ಟರ್: “ಹೌದು, ಜ್ಞಾಪಕದಲ್ಲಿದೆ. ಆಗ ನಾನು ಬಹಳ ಚಿಕ್ಕ ಹುಡುಗನಾಗಿದ್ದೆ. ಒಂಬತ್ತೊ ಹತ್ತೊ ವಯಸ್ಸು. ಆಗ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ನಾನೊಬ್ಬನೆ ಇದ್ದೆ. ಭಗವಂತನನ್ನು ಕರೆಯಲಾರಂಭಿಸಿದೆ.”
ಮಾಸ್ಟರ್ ಆಶ್ಚರ್ಯಚಕಿತನಾಗಿ ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೆ, “ಪರಮಹಂಸರು ಇದ್ದಕ್ಕಿದ್ದ ಹಾಗೆ ಆ ಚಂಡಮಾರುತದ ವಿಷಯವಾಗಿ ನನಗೇಕೆ ಪ್ರಶ್ನೆಹಾಕಿದರು? ನಾನೊಬ್ಬನೆ ಏಕಾಂಗಿಯಾಗಿ ಕೊಠಡಿಯಲ್ಲಿ ಕುಳಿತು ಕಣ್ಣೀರಿಡುತ್ತ ಅತ್ಯಂತ ವ್ಯಾಕುಲನಾಗಿ ಭಗವಂತನಿಗೆ ಮೊರೆಯಿಡುತ್ತಿದ್ದುದು ಇವರ ದಿವ್ಯದೃಷ್ಟಿಗೆ ಗೋಚರವಾಗಿಬಿಟ್ಟಿದೆಯೇನು? ಅದನ್ನು ನನಗೆ ಜ್ಞಾಪಿಸುತ್ತಿರುವರೇ? ಹುಟ್ಟಿನಿಂದಲೇ ಇವರು ನನ್ನ ಗುರುವಾಗಿ ನನ್ನನ್ನು ರಕ್ಷಿಸುತ್ತಾ ಬಂದಿದ್ದಾರೇನು?”
ಶ್ರೀರಾಮಕೃಷ್ಣರು: “ದಕ್ಷಿಣೇಶ್ವರದಲ್ಲಿ ಆ ಚಂಡಮಾರುತ ಎದ್ದಾಗ ಆಗಲೇ ಹಗಲು ಬಹಳವಾಗಿ ಮುಂದುವರಿದಿತ್ತು. ಜನರು ಹೇಗೋ ಮಾಡಿ ಅನ್ನ ಬೇಯಿಸಿಕೊಂಡರು. ಮರಗಿಡಗಳೆಲ್ಲ ಬೇರು ಸಹಿತ ಉರುಳಿಕೊಂಡವು. ನೋಡು, ನಾವು ವಾಸಿಸುವ ಮನೆಗೆ ಈ ದುರ್ದಶೆ!
“ಆದರೆ ಪೂರ್ಣಜ್ಞಾನ ದೊರೆತನಂತರ ಸ್ವಾಭಾವಿಕ ಮರಣಕ್ಕೂ ಮತ್ತು ಕೊಲೆಯ ಮರಣಕ್ಕೂ ಯಾವ ಭೇದವೂ ತೋರದಂತಾಗುತ್ತದೆ; ಆದರೆ ಎರಡೂ ಮಿಥ್ಯಾ. ಮನುಷ್ಯ ಸತ್ತರೂ ಆತನ ನಿಜಸ್ವರೂಪ ಸಾಯುವುದಿಲ್ಲ. ಆತನನ್ನು ಕೊಂದುಹಾಕಿದರೂ ಆತನ ನಿಜ ಸ್ವರೂಪ ಸಾಯುವುದಿಲ್ಲ. ಯಾರದು ನಿತ್ಯವೊ, ಆತನದೇ ಲೀಲೆ. ಆತನೇ ಒಂದು ರೂಪದಲ್ಲಿ ನಿತ್ಯವಾಗಿದ್ದಾನೆ, ಇನ್ನೊಂದು ರೂಪದಲ್ಲಿ ಲೀಲೆಯಾಗಿದ್ದಾನೆ. ಲೀಲೆ ಕೊನೆಗೊಂಡಿತು ಅಂದರೆ ನಿತ್ಯ ಇದ್ದೇ ಇರುತ್ತದೆ. ನೀರು ಅಲೆಯ ರೂಪಿನಲ್ಲಿದ್ದರೂ, ನೀರೆ; ಸುಮ್ಮನೆ ನಿಂತಿದ್ದರೂ ನೀರೆ; ಅಲೆ ನಿಂತುಹೋಯಿತು ಅಂದರೆ ಅದು ಮತ್ತೆ ಎಂದಿನ ನೀರೆ.”
ಪರಮಹಂಸರು ಭಕ್ತರೊಡನೆ ಬೈಠಕ್ಖಾನೆಯಲ್ಲಿ ಕುಳಿತುಕೊಂಡಿದ್ದಾರೆ. ಮಹೇಂದ್ರ ಮುಖರ್ಜಿ, ಹರಿ, ಚಿಕ್ಕ ನರೇನ ಮತ್ತು ಇನ್ನೂ ಕೆಲವು ಯುವಭಕ್ತರು ಅಲ್ಲಿ ಕುಳಿತು ಕೊಂಡಿದ್ದಾರೆ. ಹರಿ ಏಕಾಂಗಿಯಾಗಿ ವೇದಾಂತಾಧ್ಯಯನ ಮಾಡುತ್ತಿದ್ದಾನೆ. ಆತನಿಗೆ ವಯಸ್ಸು ಇಪ್ಪತ್ತುಮೂರೊ, ಇಪ್ಪತ್ತುನಾಲ್ಕೊ; ವಿವಾಹವಾಗಿಲ್ಲ. ಪರಮಹಂಸರು ಆತನನ್ನು ಬಹಳವಾಗಿ ಪ್ರೀತಿಸುತ್ತಿದ್ದಾರೆ. ಆತ ಆಗಾಗ ಬಂದು ತಮ್ಮನ್ನು ನೋಡಿಹೋಗಬೇಕು ಅಂತ ಅವರ ಇಚ್ಛೆ. ಆತನಿಗೆ ಏಕಾಂತವಾಸ ರುಚಿಸುತ್ತಿರುವುದರಿಂದ ಆಗಾಗ ಬಂದು ಪರಮಹಂಸರನ್ನು ನೋಡಿಹೋಗಲು ಆತನಿಗಾಗುತ್ತಿರಲಿಲ್ಲ.
ಶ್ರೀರಾಮಕೃಷ್ಣರು (ಹರಿಗೆ): “ಏನು ಸಮಾಚಾರ, ಬಹಳ ದಿವಸದಿಂದ ಬರಲೇ ಇಲ್ಲವಲ್ಲ?
“ನೋಡು, ಭಗವಂತನೇ ಒಂದು ರೂಪದಲ್ಲಿ ನಿತ್ಯ, ಇನ್ನೊಂದು ರೂಪದಲ್ಲಿ ಲೀಲೆ. ಎಲ್ಲಿಯವರೆಗೆ ಭಗವಂತ ನಮ್ಮ ಹೃದಯದಲ್ಲಿ ‘ಭಕ್ತನ ಅಹಂ’ ಎಂಬುದನ್ನು ಇಟ್ಟಿರುತ್ತಾನೊ, ಅಲ್ಲಿಯವರೆಗೆ ಲೀಲೆಯೂ ಸತ್ಯ. ಯಾವಾಗ ಆತ ನಮ್ಮ ‘ಅಹಂ’ ಎಂಬುದನ್ನು ಸಂಪೂರ್ಣವಾಗಿ ತೆಗೆದುಹಾಕಿಬಿಡುವನೋ, ಆಗ ಯಾವುದು ಇದೆಯೋ ಅದೇ ಬರುತ್ತದೆ. ಅದು ಏನು ಅಂತ ಹೇಳಲಾಗುವುದಿಲ್ಲ. ಎಲ್ಲಿಯವರೆಗೆ ಆತ ನಮ್ಮಲ್ಲಿ ‘ಅಹಂ’ ಎಂಬುದನ್ನು ಇಟ್ಟಿರುವನೊ, ಅಲ್ಲಿಯವರೆಗೆ ಎಲ್ಲವನ್ನೂ ಸ್ವೀಕರಿಸಬೇಕು. ಬಾಳೆಪಟ್ಟೆಗಳನ್ನು ಬೇರ್ಪಡಿಸಿದರೆ ದಿಂಡು ಸಿಗುತ್ತದೆ. ಬಾಳೆ ಗಿಡದಲ್ಲಿ ಪಟ್ಟೆಗಳಿರುವವರೆಗೆ, ಅದರೊಳಗೆ ದಿಂಡೂ ಇದ್ದೇ ಇರುತ್ತದೆ; ದಿಂಡು ಇರುವವರೆಗೆ ಪಟ್ಟೆಗಳೂ ಇದ್ದೇ ಇರುತ್ತವೆ. ಪಟ್ಟೆಗಳೊಡನೆ ದಿಂಡು, ದಿಂಡಿನೊಡನೆ ಪಟ್ಟೆಗಳು ಇದ್ದೇ ಇರುತ್ತವೆ. ನಿತ್ಯ ಎಂದೊಡನೆ, ಅದರೊಡನೆ ಲೀಲೆ ಇದ್ದೇ ಇದೆ ಅಂತ ಅರ್ಥ. ಲೀಲೆ ಎಂದೊಡನೆ ಅದರೊಡನೆ ನಿತ್ಯ ಇದ್ದೇ ಇದೆ ಅಂತ ಅರ್ಥ.
“ಆತನೇ ಜೀವಜಗತ್ತಾಗಿದ್ದಾನೆ; ಚತುರ್ವಿಂಶತಿ ತತ್ತ್ವಗಳಾಗಿದ್ದಾನೆ. ಯಾವಾಗ ಆತ ನಿಷ್ಕ್ರಿಯನೊ ಆಗ ಆತನಿಗೆ ಬ್ರಹ್ಮ ಅಂತಲೂ, ಯಾವಾಗ ಆತ ಸೃಷ್ಟಿ ಸ್ಥಿತಿಪ್ರಳಯಕಾರ್ಯಗಳನ್ನು ಮಾಡುತ್ತಾನೊ ಆಗ ಆತನಿಗೆ ಶಕ್ತಿ ಅಂತಲೂ ಕರೆಯುತ್ತೇವೆ. ಬ್ರಹ್ಮ ಶಕ್ತಿ ಅಭೇದ. ನೀರು ಸ್ಥಿರವಾಗಿ ನಿಂತಿದ್ದರೂ ನೀರೆ, ಚಲಿಸುತ್ತಿದ್ದರೂ ನೀರೆ.
“ ‘ಅಹಂ’ ಎಂಬ ಬೋಧೆ ಸುಲಭವಾಗಿ ನಮ್ಮನ್ನು ಬಿಟ್ಟುಹೋಗುವುದಿಲ್ಲ. ಎಲ್ಲಿಯವರೆಗೆ ‘ಅಹಂ’ ಎಂಬ ಬೋಧೆ ಇರುವುದೊ, ಅಲ್ಲಿಯವರೆಗೆ ಜಗತ್ತು ಮಿಥ್ಯ ಅಂತ ಹೇಳುವ ಹಾಗೇ ಇಲ್ಲ. ಬೇಲದ ಹಣ್ಣಿನ ಓಟೆ ಮತ್ತು ಬೀಜಗಳನ್ನು ಬಿಸುಟು ಬರೀ ತಿರುಳನ್ನು ಮಾತ್ರ ತೂಗಿನೋಡಿದರೆ, ಬೇಲದ ಹಣ್ಣಿನ ನಿಜವಾದ ತೂಕ ಸಿಕ್ಕುವುದಿಲ್ಲ.
“ಯಾವ ಇಟ್ಟಿಗೆ, ಸುಣ್ಣ, ಮರಳು ಇವುಗಳಿಂದ ಮೆಟ್ಟಲಸಾಲು ನಿರ್ಮಿತವಾಗಿರು ವುದೊ, ಅದೇ ಇಟ್ಟಿಗೆ, ಸುಣ್ಣ, ಮರಳು ಇವುಗಳಿಂದ ಮೇಲ್ಚಾವಣಿಯೂ ನಿರ್ಮಿತವಾಗಿದೆ. ಬ್ರಹ್ಮ ಯಾರೊ ಆತನ ಸತ್ತ್ವದಿಂದಲೇ ಈ ಜೀವಜಗತ್ತು ಬದುಕಿಕೊಂಡಿದೆ.
“ಭಕ್ತರು-ಎಂದರೆ ವಿಜ್ಞಾನಿಗಳು-ಸಾಕಾರ ನಿರಾಕಾರ ಎರಡನ್ನೂ, ರೂಪ ಅರೂಪ ಎರಡನ್ನೂ ಸ್ವೀಕರಿಸುತ್ತಾರೆ. ಅಪಾರವಾದ ಮಹಾ ಸಾಗರದಲ್ಲಿ ಅನಂತ ಜಲರಾಶಿಯಲ್ಲಿ ಶೈತ್ಯದ ದೆಸೆಯಿಂದ ನೀರು ಅಲ್ಲಿ ಇಲ್ಲಿ ಹಿಮಗಡ್ಡೆಗಳಾಗಿ ಪರಿವರ್ತನೆ ಹೊಂದಿರುವುದನ್ನು ನಾವು ನೋಡಬಹುದು. ಅದೇ ರೀತಿಯಾಗಿ ಭಕ್ತನ ಭಕ್ತಿ ಎಂಬ ಶೈತ್ಯದ ದೆಸೆಯಿಂದ ಆ ಅನಂತ ಸಾಂತವಾಗಿ, ಎಂದರೆ ಸಾಕಾರ ರೂಪವನ್ನು ತಾಳಿ ಭಕ್ತನಿಗೆ ಗೋಚರವಾಗುತ್ತದೆ. ಯಾವ ರೀತಿಯಾಗಿ ಸೂರ್ಯೋದಯವಾದನಂತರ ಹಿಮಗಡ್ಡೆ ಕರಗಿ ನೀರಾಗುವುದೊ, ಅದೇ ರೀತಿಯಾಗಿ ಜ್ಞಾನಸೂರ್ಯೋದಯವಾದ ನಂತರ ಸಾಕಾರ ರೂಪವು ಕರಗಿ ಎಂದಿನ ನಿರಾಕಾರ ಸ್ಥಿತಿಗೆ-ಅನಂತ ಸ್ಥಿತಿಗೆ ಹಿಂದಿರುಗುತ್ತದೆ.
“ಎಲ್ಲಿಯವರೆಗೆ ಮನುಷ್ಯ ತನ್ನ ಮನಸ್ಸಿನ ಮೂಲಕ ವಿಚಾರದಲ್ಲಿ ತೊಡಗಿರುತ್ತಾನೊ, ಅಲ್ಲಿಯವರೆಗೆ ಆತ ನಿತ್ಯವನ್ನು ಮುಟ್ಟಲಾರ. ಮನಸ್ಸಿನ ಮೂಲಕ ವಿಚಾರ ಮಾಡಲು ಹೊರಟರೆ ಜಗತ್ತಿನ ಎಲ್ಲೆಯನ್ನು ಬಿಟ್ಟು ಮುಂದುವರಿಯುವ ಹಾಗಿಲ್ಲ-ರೂಪ, ರಸ, ಗಂಧ, ಸ್ಪರ್ಶ, ಶಬ್ದ ಈ ಇಂದ್ರಿಯವಸ್ತುಗಳ ಎಲ್ಲೆಯನ್ನು ಬಿಟ್ಟು ಮುಂದುವರಿಯುವ ಹಾಗಿಲ್ಲ. ವಿಚಾರ ನಿಂತ ನಂತರವೇ ಬ್ರಹ್ಮಜ್ಞಾನ ದೊರೆಯುವುದು. ಮೇಲೇನೆ ಈ ಮನಸ್ಸಿನ ಮೂಲಕ ಆತ್ಮನ ಸಾಕ್ಷಾತ್ಕಾರವನ್ನು ಪಡೆಯಲಿಕ್ಕಾಗುವುದಿಲ್ಲ. ಆತ್ಮನ ಮೂಲಕ ಮಾತ್ರವೇ ಆತ್ಮನ ಸಾಕ್ಷಾತ್ಕಾರ ಸಾಧ್ಯ. ಶುದ್ಧ-ಮನಸ್ಸು, ಶುದ್ಧ-ಬುದ್ಧಿ, ಶುದ್ಧ-ಆತ್ಮ-ಇವು ಮೂರೂ ಒಂದೇ.
“ನಾವು ಯಾವುದಾದರೂ ಒಂದು ವಸ್ತುವನ್ನು ನೋಡಬೇಕಾದರೆ ನಮಗೆ ಎಷ್ಟೊಂದು ಉಪಕರಣಗಳ ಅವಶ್ಯಕತೆ ಇದೆ ಎಂಬುದನ್ನು ಸ್ವಲ್ಪ ಯೋಚಿಸಿ ನೋಡಿ. ನಮಗೆ ಕಣ್ಣು ಬೇಕು; ಬೆಳಕು ಬೇಕು; ಮನಸ್ಸು ಬೇಕು; ಈ ಮೂರರಲ್ಲಿ ಯಾವುದೊಂದು ಇಲ್ಲದಿದ್ದರೂ ವಸ್ತುವನ್ನು ನೋಡಲಿಕ್ಕಾಗುವುದಿಲ್ಲ. ಈ ಮನಸ್ಸೆಂಬುದು ಎಲ್ಲಿಯವರೆಗೆ ಕೆಲಸಮಾಡಿಕೊಂಡು ಮುಂದುವರಿಯುತ್ತಿರುವುದೊ, ಅಲ್ಲಿಯವರೆಗೆ ಈ ಜಗತ್ತೆಂಬುದು ಇಲ್ಲ, ನಾನು ಎಂಬುದು ಇಲ್ಲ ಅಂತ ಹೇಳಲಾದೀತೆ?
“ಮನಸ್ಸು ನಾಶವಾಗಿ ಹೋದರೆ, ಸಂಕಲ್ಪ ವಿಕಲ್ಪ ನಿಂತುಹೋದರೆ, ಸಮಾಧಿ ಯುಂಟಾಗುತ್ತದೆ. ಬ್ರಹ್ಮಜ್ಞಾನ ದೊರೆಯುತ್ತದೆ. ಸ, ರಿ, ಗ, ಮ, ಪ, ದ, ನಿ ಎಂಬ ಸ್ವರಗಳನ್ನು ಹಾಡುವಾಗ ‘ನಿ’ ಯಲ್ಲಿ ಕಂಠವನ್ನು ಹೆಚ್ಚು ಹೊತ್ತು ಇಡಲಾಗುವುದಿಲ್ಲ.”
ಚಿಕ್ಕ ನರೇನನ ಕಡೆ ತಿರುಗಿ ಪರಮಹಂಸರು ಹೇಳುತ್ತಿದ್ದಾರೆ, “ಭಗವಂತನಿದ್ದಾನೆ ಎಂಬುದಾಗಿ ಕೇವಲ ಅಂತರ್ಬೋಧೆಯನ್ನು ಹೊಂದಿಬಿಟ್ಟ ಮಾತ್ರಕ್ಕೆ ಏನು ಆಯಿತು? ಆತನ ಅಲೌಕಿಕ ದರ್ಶನ ದೊರೆತರೆ ಎಲ್ಲಾ ದೊರೆತಂತಾಗುವುದಿಲ್ಲ. ಆತನನ್ನು ಹೃದಯ ಮಂದಿರಕ್ಕೆ ಕರೆದುಕೊಂಡು ಬಂದು ಆತನೊಡನೆ ಮಾತುಕತೆಯಾಡಬೇಕು.
“ಕೆಲವರು ಹಾಲಿನ ಸಂಬಂಧವಾಗಿ ಕೇಳಿದ್ದಾರೆ, ಇನ್ನು ಕೆಲವರು ಅದನ್ನು ನೋಡಿ ದ್ದಾರೆ, ಮತ್ತೆ ಕೆಲವರು ಅದನ್ನು ಕುಡಿದಿದ್ದಾರೆ. ಜನರಲ್ಲಿ ಕೆಲಕೆಲವರೇನೊ ದೊರೆಯನ್ನು ನೋಡಿದ್ದಾರೆ, ಆದರೆ ಅವರಲ್ಲಿ ಒಬ್ಬಿಬ್ಬರು ಮಾತ್ರ ಆತನನ್ನು ತಮ್ಮ ಮನೆಗೆ ಕರೆತಂದು ಅತಿಥಿಸತ್ಕಾರ ಮಾಡಬಲ್ಲರು.”
ಮಾಸ್ಟರ್ ಸ್ನಾನಮಾಡಲು ಮತ್ತೆ ಗಂಗಾನದಿಗೆ ಹೊರಟ. ಘಂಟೆ ಹತ್ತಾಗಿದೆ. ಪರಮಹಂಸರು ಇನ್ನೂ ಭಕ್ತರೊಡನೆ ಮಾತುಕತೆಗಳನ್ನಾಡುತ್ತಿದ್ದಾರೆ. ಮಾಸ್ಟರ್ ಸ್ನಾನ ಮುಗಿಸಿಕೊಂಡು ಮತ್ತೆ ಬಲರಾಮನ ಮನೆಗೆ ಹಿಂದಿರುಗಿ ಬಂದು ಪರಮಹಂಸರಿಗೆ ಪ್ರಣಾಮಮಾಡಿ ಅವರ ಹತ್ತಿರ ಕುಳಿತುಕೊಂಡ.
ಪರಮಹಂಸರು ಭಾವಪರವಶರಾಗಿದ್ದಾರೆ, ಅವರ ಮುಖದಿಂದ ಜ್ಞಾನವಾಹಿನಿ ನಿರರ್ಗಳವಾಗಿ ಹರಿಯುತ್ತಿದೆ. ಆಗಾಗ ತಮ್ಮ ಅತಿ ಗುಹ್ಯ ಆಧ್ಯಾತ್ಮಿಕ ಅನುಭವಗಳ ಸಂಬಂಧವಾಗಿ ಭಕ್ತರಿಗೆ ತಿಳಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನಾನು ಮಥುರಬಾಬುವಿನೊಡನೆ ಕಾಶಿಗೆ ಹೋಗಿದ್ದೆ. ನಾವು ಕುಳಿತಿದ್ದ ದೋಣಿ ಮಣಿಕರ್ಣಿಕ ಘಟ್ಟದ ಹತ್ತಿರ ಹೋಗುತ್ತಿತ್ತು. ಆಗ ಇದ್ದಕ್ಕಿದ್ದ ಹಾಗೆ ನನಗೆ ಶಿವನ ದರ್ಶನವಾಯಿತು. ನಾನು ಆ ದೋಣಿಯ ಅಂಚಿಗೆ ಬಂದು ನಿಂತುಕೊಂಡು ಸಮಾಧಿಸ್ಥನಾಗಿಬಿಟ್ಟೆ. ನಾನು ನದಿಗೆ ಬಿದ್ದುಹೋಗಿಬಿಡಬಹುದೆಂದು ಅಂಬಿಗ, ಹೃದಯನಿಗೆ ಕೂಗಿ ಹೇಳಿದ, ‘ಹಿಡಿಯಿರಿ! ಹಿಡಿಯಿರಿ!’ ಅಂತ. ಈ ಜಗತ್ತಿನ ಜವಾಬ್ದಾರಿಯೇ ಮೂರ್ತಿಮತ್ತಾದಂತೆ ಶಿವ ಆ ಘಟ್ಟದ ಮೇಲೆ ನಿಂತುಕೊಂಡಿದ್ದ, ಮೊದಲು ಆತ ಸ್ವಲ್ಪ ದೂರದಲ್ಲಿ ನಿಂತಿರುವಂತೆ ಕಂಡೆ; ಬಳಿಕ ಆತ ನನ್ನ ಹತ್ತಿರ ಬರಲಾರಂಭಿಸಿದ. ಕೊನೆಗೆ ನನ್ನಲ್ಲಿ ಐಕ್ಯನಾಗಿಬಿಟ್ಟ.
“ಒಮ್ಮೆ ಒಬ್ಬ ಸಂನ್ಯಾಸಿ, ನನ್ನ ಕೈ ಹಿಡಿದುಕೊಂಡು ಹೋಗುತ್ತಿದ್ದ ಹಾಗೆ ಭಾವದಲ್ಲಿ ಕಂಡೆ. ಇಬ್ಬರೂ ಒಂದು ದೇವಾಲಯಕ್ಕೆ ಹೋದೆವು. ಅಲ್ಲಿ ಸುವರ್ಣನಿರ್ಮಿತ ಅನ್ನಪೂರ್ಣೆಯ ದರ್ಶನವಾಯಿತು.”
“ಭಗವಂತನೇ ಈ ಎಲ್ಲವೂ ಆಗಿದ್ದಾನೆ; ಆದರೆ ಕೆಲಕೆಲವರಲ್ಲಿ ಆತ ಹೆಚ್ಚು ವ್ಯಕ್ತ ವಾಗಿದ್ದಾನೆ.
(ಮಾಸ್ಟರಿಗೆ) “ಬಹುಶ: ನಿಮಗೆ ಸಾಲಿಗ್ರಾಮದಲ್ಲಿ ನಂಬಿಕೆ ಇಲ್ಲ ಅಂತ ಕಾಣುತ್ತದೆ, ಇಂಗ್ಲಿಷ್ಮೆನ್ಗಳು ಅದನ್ನು ನಂಬುವುದಿಲ್ಲ. ನೀವು ಬೇಕಾದರೆ ನಂಬಿ, ಸಾಕಾದರೆ ಬಿಡಿ. ಅದರಿಂದೇನು ಆಕಾಶ ಕಳಚಿ ಬಿದ್ದು ಹೋಗುವುದಿಲ್ಲ. ಒಳ್ಳೆ ಸಾಲಿಗ್ರಾಮದಲ್ಲಿ ಸ್ಪಷ್ಟವಾದ ಚಕ್ರ ಇವೇ ಮೊದಲಾದವುಗಳ ಚಿಹ್ನೆ ಇದ್ದೇ ತೀರಬೇಕು; ಆಗ ಮಾತ್ರವೇ ಅದನ್ನು ಒಂದು ಭಗವಂತನ ಪ್ರತೀಕ ಅಂತ ಪೂಜಿಸಲು ಸಾಧ್ಯ.”
ಮಾಸ್ಟರ್: “ನಿಜ, ಇದು ಭಗವಂತನು ಸುಲಕ್ಷಣ ಮನುಷ್ಯನಲ್ಲಿ ವಿಶೇಷವಾಗಿ ವ್ಯಕ್ತವಾಗಿರುವ ಹಾಗೆ.”
ಶ್ರೀರಾಮಕೃಷ್ಣರು: “ಹಿಂದೆ ನರೇಂದ್ರ, ಇವೆಲ್ಲ ಮಾನಸಿಕ ಭ್ರಾಂತಿ ಅಂತ ಹೇಳುತ್ತಿದ್ದ; ಆದರೆ ಈಗ ಎಲ್ಲವನ್ನೂ ಒಪ್ಪಿಕೊಳ್ಳುತ್ತಿದ್ದಾನೆ.”
ಭಗವದ್ದರ್ಶನ ಸಂಬಂಧವಾಗಿ ಮಾತನಾಡುತ್ತಿದ್ದ ಹಾಗೆಯೆ ಪರಮಹಂಸರು ಭಾವ ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಭಕ್ತರೆಲ್ಲರು ನೆಟ್ಟ ದೃಷ್ಟಿಯಿಂದ ಅವರ ಕಡೆ ನೋಡುತ್ತಿದ್ದಾರೆ. ಬಹಳ ಹೊತ್ತಾದ ಮೇಲೆ ಅವರು ಪ್ರಕೃತಿಸ್ಥರಾದರು. ಈಗ ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ನಾನು ಏನನ್ನು ಕಂಡೆ ಎಂಬುದನ್ನು ನೀನು ಊಹಿಸಬಲ್ಲೆಯಾ? ಇಡಿಯ ಬ್ರಹ್ಮಾಂಡವೇ ಒಂದು ಸಾಲಿಗ್ರಾಮವಾಗಿರುವಂತೆಯೂ, ಅದರೊಳಗೆ ನಿನ್ನ ಎರಡು ಕಣ್ಣುಗಳು ಇರುವಂತೆಯೂ ಕಂಡೆ.”
ಪರಮಹಂಸರು ತಮ್ಮ ಈ ಅದ್ಭುತ ದರ್ಶನದ ಸಂಬಂಧವಾಗಿ ಕೊಟ್ಟ ವರ್ಣನೆಯನ್ನು ಮಾಸ್ಟರ್ ಮತ್ತು ಭಕ್ತರು ಆಶ್ಚರ್ಯಚಕಿತರಾಗಿ ಕೇಳುತ್ತಿದ್ದಾರೆ. ಆ ಸಮಯಕ್ಕೆ ಸರಿಯಾಗಿ ಇನ್ನೊಬ್ಬ ಯುವಕಭಕ್ತ ಶಾರದಾಪ್ರಸನ್ನ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮ ಮಾಡಿ ಒಂದು ಕಡೆ ಕುಳಿತುಕೊಂಡ.
ಶ್ರೀರಾಮಕೃಷ್ಣರು (ಶಾರದಾಪ್ರಸನ್ನನಿಗೆ): “ನೀನು ದಕ್ಷಿಣೇಶ್ವರಕ್ಕೆ ಏಕೆ ಬರುತ್ತಿಲ್ಲ? ನಾನು ಕಲ್ಕತ್ತಕ್ಕೆ ಬಂದಾಗ ಏಕೆ ಬಂದು ನನ್ನನ್ನು ನೋಡಬಾರದು?”
ಶಾರದಾಪ್ರಸನ್ನ: “ನನಗೆ ಸಮಾಚಾರ ಗೊತ್ತಾಗುತ್ತಿಲ್ಲ.”
ಶ್ರೀರಾಮಕೃಷ್ಣರು: “ಮುಂದಿನ ಸಲ ಬರುವಾಗ ಮೊದಲೇ ನಿನಗೆ ತಿಳಿಸುತ್ತೇನೆ. (ನಗುತ್ತ ಮಾಸ್ಟರಿಗೆ) ಈ ಯುವಕರ ಒಂದು ಪಟ್ಟಿಮಾಡು.” (ಮಾಸ್ಟರ್ ಮತ್ತು ಭಕ್ತರು ನಗುತ್ತಾರೆ.)
ಶಾರದಾಪ್ರಸನ್ನ: “ಮನೆಯಲ್ಲಿ ನನಗೆ ವಿವಾಹಮಾಡಬೇಕು ಅಂತ ಇದ್ದಾರೆ. (ಮಾಸ್ಟರನ್ನು ತೋರಿಸಿ) ವಿವಾಹದ ಸಂಬಂಧವಾಗಿ ಇವರು ಎಷ್ಟೊಂದಾಗಿ ನಮಗೆ ಎಚ್ಚರಿಕೆ ಕೊಟ್ಟಿದ್ದಾರೆ!”
ಶ್ರೀರಾಮಕೃಷ್ಣರು: “ಈಗ ಏಕೆ ನಿನಗೆ ಮದುವೆ? (ಮಾಸ್ಟರಿಗೆ) ಶಾರದಾಪ್ರಸನ್ನ ಈಗ ಮಾನಸಿಕವಾಗಿ ಒಳ್ಳೆ ಅವಸ್ಥೆಯಲ್ಲಿದ್ದಾನೆ. ಹಿಂದೆ ಈತನ ಮುಖದಲ್ಲಿ ಒಂದು ವಿಧವಾದ ಶಂಕೆ ಕಾಣುತ್ತಿತ್ತು; ಈಗ ಆನಂದದಿಂದ ನಲಿಯುತ್ತಿದೆ.”
ಪರಮಹಂಸರು ಒಬ್ಬ ಭಕ್ತನಿಗೆ ಹೇಳಿದರು, “ನೀನು ಹೋಗಿ ಪೂರ್ಣನನ್ನು ಕರೆದು ಕೊಂಡುಬರುವೆಯಾ?” ಅಂತ.
ಈಗ ನರೇಂದ್ರ ಬಂದ. ಪರಮಹಂಸರು ಒಬ್ಬ ಭಕ್ತನಿಗೆ ಹೇಳಿದರು ಆತನಿಗೆ ಸ್ವಲ್ಪ ಫಲಾಹಾರವನ್ನು ಕೊಡು ಅಂತ. ಆತನನ್ನು ನೋಡಿ ಪರಮಹಂಸರಿಗೆ ಬಹಳ ಆನಂದವಾಗಿ ಬಿಟ್ಟಿದೆ. ನರೇಂದ್ರನಿಗೆ ತಿಂಡಿತೀರ್ಥಗಳನ್ನು ಕೊಟ್ಟಾಗ ತಾವು ಸಾಕ್ಷಾತ್ ನಾರಾಯಣನ ಸೇವೆಯನ್ನೇ ಮಾಡುತ್ತಿರುವಂತೆ ಅವರು ಭಾವಿಸುತ್ತಿದ್ದರು. ಅವರು ನರೇಂದ್ರನ ಮೈಕೈಗಳನ್ನು ಆದರದಿಂದ ಸವರುತ್ತಿದ್ದಾರೆ.
ಗೋಪಾಲನ ತಾಯಿ ಕೊಠಡಿಯನ್ನು ಪ್ರವೇಶಿಸಿದಳು. ಆಕೆ ಬಾಲಗೋಪಾಲನ ಪರಮಭಕ್ತೆ. ಕಾಮಾರಹಾಟಿನಿಂದ ಆಕೆಯನ್ನು ಕರೆಸುವಂತೆ ಪರಮಹಂಸರು ಬಲರಾಮನಿಗೆ ಹೇಳಿದ್ದರು; ಆಕೆ ಬಂದಿದ್ದಾಳೆ. ಆಕೆ ಕೊಠಡಿಯನ್ನು ಪ್ರವೇಶಿಸಿದೊಡನೆಯೇ ಹೇಳುತ್ತಿದ್ದಾಳೆ, “ಆನಂದದಿಂದ ನನ್ನ ಕಣ್ಣಿನಲ್ಲಿ ಪ್ರೇಮಾಶ್ರು ಸುರಿಯುತ್ತಿದೆ” ಅಂತ. ಹೀಗೆಂದು ಹೇಳುತ್ತ ತನ್ನ ಹಣೆಯನ್ನು ಭೂಮಿಗೆ ಮುಟ್ಟಿಸಿ ಪರಮಹಂಸರಿಗೆ ಪ್ರಣಾಮ ಮಾಡಿದಳು.
ಶ್ರೀರಾಮಕೃಷ್ಣರು: “ಏನು ನೀನು ಮಾಡುತ್ತಾ ಇರುವುದು? ನೀನು ನನ್ನನ್ನು ಗೋಪಾಲ ಅಂತ ಕರೆಯುತ್ತಿರುವೆ ಮತ್ತು ನನಗೆ ಪ್ರಣಾಮಮಾಡುತ್ತಿರುವೆಯಲ್ಲ! ಹೋಗಲಿ, ಈಗ ಅಡುಗೆಮನೆಗೆ ಹೋಗಿ ನನಗೊಂದು ಒಳ್ಳೆ ಪಲ್ಯ ತಯಾರುಮಾಡು. ಅದಕ್ಕೆ ಅಂಥ ಸೊಗಸಾದ ಒಗ್ಗರಣೆ ಹಾಕಬೇಕು, ಅದರ ಘಾಟು ಇಲ್ಲಿಯವರೆಗೂ ಬಂದುಬಿಡಬೇಕು.” (ಎಲ್ಲರೂ ನಗುತ್ತಾರೆ.)
ಗೋಪಾಲನ ತಾಯಿ: “ಇವರು (ಈ ಮನೆಯವರು) ಅನ್ಯಥಾ ಭಾವಿಸಬಹುದು.”
ತಾನು ಹೊಸದಾಗಿ ಇಲ್ಲಿಗೆ ಬಂದಿದ್ದೇನೆ. ಪ್ರತ್ಯೇಕವಾಗಿ ಆಡಿಗೆ ಮಾಡುತ್ತೇನೆ ಅಂದರೆ ಮನೆಯವರಿಗೆ ಅಸಮಾಧಾನವಾಗಬಹುದು ಅಂತ ಭಾವಿಸಿರಬಹುದು.
ಆಕೆ ಮನೆಯ ಒಳಕ್ಕೆ ಹೋಗುವ ಮುನ್ನ ಕಾತರಸ್ವರದಿಂದ ನರೇಂದ್ರನನ್ನು ಸಂಬೋಧಿಸಿ, “ಮಗು, ನಾನು ಗುರಿಯನ್ನು ಮುಟ್ಟಿರುವೆನೆ ಅಥವಾ ಮುಟ್ಟಬೇಕಾಗಿದೆಯೆ?” ಅಂತ ಕೇಳಿದಳು.
ಇಂದೇ ರಥೋತ್ಸವ; ಆದ್ದರಿಂದ ಪೂಜೆ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡಿತು. ಈಗ ಪರಮಹಂಸರನ್ನು ಊಟಕ್ಕೆ ಏಳಿಸಿದ್ದಾರೆ. ಅವರು ಮನೆಯ ಒಳಕ್ಕೆ ಹೋಗುತ್ತಿದ್ದಾರೆ. ಅವರಿಗೆ ಪ್ರಣಾಮಮಾಡಲು ಮತ್ತು ದರ್ಶನ ಪಡೆಯಲು ಭಕ್ತೆಯರು ಬಹಳ ಉತ್ಸುಕರಾಗಿದ್ದಾರೆ.
ಪರಮಹಂಸರಿಗೆ ಅನೇಕ ಮಂದಿ ಭಕ್ತೆಯರಿದ್ದಾರೆ. ಆದರೆ ಅವರ ಸಂಬಂಧವಾಗಿ ಭಕ್ತರೊಡನೆ ಏನೂ ಹೆಚ್ಚಾಗಿ ಪ್ರಸ್ತಾಪಮಾಡುತ್ತಿರಲಿಲ್ಲ. ಯಾರಾದರೂ ಭಕ್ತೆಯರೊಡನೆ ಹೆಚ್ಚಾಗಿ ಬೆರೆಯುತ್ತಿದ್ದರೆ ಅವರಿಗೆ ಎಚ್ಚರಿಕೆ ಕೊಡುತ್ತಿದ್ದರು, “ಅತಿಯಾಗಿ ಬೆರೆಯಬೇಡಿ, ಹಳ್ಳಕ್ಕೆ ಬೀಳುವಿರಿ” ಅಂತ. ಕೆಲವು ವೇಳೆ ಹೇಳುತ್ತಿದ್ದರು, “ಹೆಂಗಸು ಭಕ್ತಿಪರವಶಳಾಗಿ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದರೂ ಆಕೆಯೊಡನೆ ಬೆರೆಯಬೇಡಿ” ಅಂತ. ಭಕ್ತರು ಮತ್ತೆ ಭಕ್ತೆಯರು ದೂರದೂರವಾಗಿರಬೇಕು; ಇದರಿಂದ ಇಬ್ಬರಿಗೂ ಮಂಗಳ ಎಂಬುದು ಪರಮಹಂಸರ ಅಭಿಮತವಾಗಿತ್ತು. ಮತ್ತೆ “ಭಕ್ತೆಯರ ‘ಗೋಪಾಲಭಾವ’ ಎಂದರೆ ‘ವಾತ್ಸಲ್ಯಭಾವ’ ಅಷ್ಟು ಒಳ್ಳೆಯದಲ್ಲ. ಈ ‘ವಾತ್ಸಲ್ಯಭಾವ’ ಕೊನೆಗೆ ಒಂದು ದಿನ ‘ಗೀತ್ಸಲ್ಯಭಾವ’ ಆಗಿಬಿಡುವ ಸಂಭವವಿದೆ” ಅಂತ ಹೇಳುತ್ತಿದ್ದರು.
ಘಂಟೆ ಒಂದು. ಊಟವಾದ ನಂತರ ಪರಮಹಂಸರು ಮತ್ತೆ ಭಕ್ತರೊಡನೆ ಬೈಠಕ್ಖಾನೆಯಲ್ಲಿ ಕುಳಿತುಕೊಂಡಿದ್ದಾರೆ. ಒಬ್ಬ ಭಕ್ತ ಹೋಗಿ ಪೂರ್ಣನನ್ನು ಕರೆದುಕೊಂಡು ಬಂದಿದ್ದಾನೆ. ಪರಮಹಂಸರು ಮಹದಾನಂದದಿಂದ ಮಾಸ್ಟರಿಗೆ ಹೇಳುತ್ತಿದ್ದಾರೆ, “ಇಗೋ ನೋಡು! ಪೂರ್ಣ ಬಂದುಬಿಟ್ಟ!” ಅಂತ. ನರೇಂದ್ರ, ಚಿಕ್ಕನರೇನ, ನಾರಾಯಣ, ಹರಿಪದ ಮತ್ತು ಕೆಲವು ಭಕ್ತರು ಅವರ ಹತ್ತಿರ ಕುಳಿತು ಮಾತುಕತೆಯಾಡುತ್ತಿದ್ದಾರೆ.
ಚಿಕ್ಕ ನರೇನ: “ಒಳ್ಳೆಯದು, ನಮಗೆ ಸ್ವಾಧೀನ-ಇಚ್ಛೆ ಎಂಬುದು ಇದೆಯೇನು?”
ಶ್ರೀರಾಮಕೃಷ್ಣರು: “ಈ ‘ನಾನು’ ಎಂಬುವವನು ಯಾರು ಎಂಬುದನ್ನು ಸ್ವಲ್ಪ ಹುಡುಕಿ ನೋಡು, ಈ ‘ನಾನು’ ಎಂಬುವವನಿಗಾಗಿ ಹುಡುಕುತ್ತಾ ಹುಡುಕುತ್ತಾ ಹೋದ ಹಾಗೆ ‘ಅವನು’ ಎಂಬುವವನು ಹೊರಹೊಮ್ಮಿಬಿಡುತ್ತಾನೆ. ‘ನಾನು ಯಂತ್ರ, ನೀನು ಯಂತ್ರಿ’ ಎಂಬ ಜ್ಞಾನೋದಯವಾಗಿಬಿಡುತ್ತದೆ. ಚೀನಾದೇಶದಲ್ಲಿ ನಿರ್ಮಿತವಾಗಿರುವ ಒಂದು ವಿಧದ ಕೈಗೊಂಬೆ ಕೈಯಲ್ಲಿ ಸಾಮಾನಿನ ಪಟ್ಟಿಹಿಡಿದುಕೊಂಡು ಅಂಗಡಿಗೆ ಹೋಗುತ್ತದೆಯೆಂಬುದನ್ನು ನೀನು ಕೇಳಿದ್ದೀಯೇನು? ನೀನೂ ಅಂಥ ಒಂದು ಕೈಗೊಂಬೆ, ಭಗವಂತನೇ ನಿಜವಾಗಿ ಕರ್ತ. ನಿಜವಾಗಿ ಭಗವಂತನೇ ಕರ್ತ; ನೀನು ಅಕರ್ತ ಎಂಬುದನ್ನು ಚೆನ್ನಾಗಿ ತಿಳಿದುಕೊಂಡು ಕರ್ತನೋಪಾದಿಯಲ್ಲಿ ಈ ಜಗತ್ತಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗು.
“ಉಪಾಧಿ ಇರುವವರೆಗೆ ಅಜ್ಞಾನ ಇದ್ದೇ ಇರುತ್ತದೆ. ‘ನಾನೊಬ್ಬ ಪಂಡಿತ’, ‘ನಾನೊಬ್ಬ ಜ್ಞಾನಿ’, ‘ನಾನೊಬ್ಬ ದಾನಿ’, ‘ನಾನೊಬ್ಬ ದೊಡ್ಡವ’, ‘ನಾನೊಬ್ಬ ಕರ್ತ’, ‘ನಾನೊಬ್ಬ ತಂದೆ’, ‘ನಾನೊಬ್ಬ ಗುರು’ ಇವೆಲ್ಲಾ ಅಜ್ಞಾನಜನ್ಯ. ‘ನಾನು ಯಂತ್ರ, ನೀನು ಯಂತ್ರಿ’ ಎಂಬುದೇ ಜ್ಞಾನಜನ್ಯ. ಬ್ರಹ್ಮಜ್ಞಾನ ದೊರೆತಾಗ ಎಲ್ಲಾ ಉಪಾಧಿಗಳೂ ನಾಶವಾಗಿಬಿಡುತ್ತವೆ. ಸೌದೆ ಉರಿದು ಮುಗಿಯಿತು ಎಂದರೆ ಶಬ್ದವಿರದು; ಕಾವೂ ಇರದು. ಎಲ್ಲವೂ ತಣ್ಣಗಾಗಿ ಬಿಡುತ್ತದೆ-ಶಾಂತಿಃ! ಶಾಂತಿಃ! ಶಾಂತಿಃ! (ನರೇಂದ್ರನಿಗೆ) ಸ್ವಲ್ಪ ಹೆರ್ತ್ತು ಹಾಡು.”
ನರೇಂದ್ರ: “ಮನೆಗೆ ಹೋಗಬೇಕಾಗಿದೆ. ಬಹಳ ಕೆಲಸ ಉಳಿದುಕೊಂಡಿದೆ.”
ಶ್ರೀರಾಮಕೃಷ್ಣರು: “ಹೌದು, ಹೌದು, ಕೆಲಸವಿದೆ! ನಮ್ಮ ಮಾತಿಗೆ ನೀನು ಏಕೆ ಬೆಲೆ ಕೊಡಬೇಕು? ‘ಯಾರ ಕಿವಿಯಲ್ಲಿ ಚಿನ್ನದ ಆಭರಣ ಇದೆಯೊ ಅವರ ಮಾತಿಗೆ ಬೆಲೆ; ಯಾರಿಗೆ ಸೊಂಟಕ್ಕೆ ಕಟ್ಟುವುದಕ್ಕೆ ಚಿಂದಿ ಬಟ್ಟೆಗೂ ಗತಿಯಿಲ್ಲವೊ ಅವರ ಮಾತನ್ನು ಯಾರೂ ಕೇಳುವುದಿಲ್ಲ.’ (ಎಲ್ಲರೂ ನಗುತ್ತಿದ್ದಾರೆ.) ನೀನು ಗುಹರ ಉದ್ಯಾನದ ಮನೆಗೆ ಆಗಾಗ ಹೋಗುತ್ತಿರುವೆಯಂತೆ. ಬಹುಮಟ್ಟಿಗೆ ನೀನು ಅಲ್ಲಿಯೇ ಇರುತ್ತೀಯೆ ಅಂತ ಕೇಳಿದ್ದೇನೆ. ‘ಇಂದು ನರೇಂದ್ರನೆಲ್ಲಿ?’ ಎಂದು ಕೇಳಿದಾಗ ನನಗೆ ದೊರೆಯುವ ಉತ್ತರ ‘ಓ, ಆತನೇ! ಗುಹರ ಮನೆಗೆ ಹೋಗಿದ್ದಾನೆ’ ಅಂತ. ನಾನು ಇದನ್ನೆಲ್ಲ ನಿನಗೆ ಹೇಳುತ್ತಿರಲಿಲ್ಲ, ಆದರೆ ನೀನು ಇದನ್ನೆಲ್ಲ ನನ್ನ ಬಾಯಿಂದ ಹೊರಡಿಸಿಬಿಟ್ಟೆ.”
ನರೇಂದ್ರ ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡಿದ್ದ. ಬಳಿಕ ಹೇಳಿದ, “ಇಲ್ಲಿ ಯಾವ ಪಕ್ಕವಾದ್ಯವೂ ಇಲ್ಲವಲ್ಲ. ಬರಿದೆ ಹಾಡಲೇನು?” ಅಂತ-
ಶ್ರೀರಾಮಕೃಷ್ಣರು: “ಇಲ್ಲಿರುವ ವ್ಯವಸ್ಥೆ ಇಂಥದು. ಇರುವುದರಲ್ಲೆ ತೃಪ್ತನಾಗಿ ಹಾಡುವುದಾದರೆ ಹಾಡು. ಬಲರಾಮನ ವ್ಯವಸ್ಥೆ ಎಂಥದು ಎಂಬುದು ನಿನಗಾಗಲೇ ಗೊತ್ತೇ ಇದೆ.
“ಬಲರಾಮ ನನಗೆ ಹೇಳುತ್ತಾನೆ, ‘ಕಲ್ಕತ್ತಕ್ಕೆ ಬರುವಾಗಲೆಲ್ಲ ದೋಣಿಯಲ್ಲೆ ಬನ್ನಿ; ವಿಧಿಯಿಲ್ಲದಿದ್ದರೆ ಮಾತ್ರ ಬಂಡಿಯಲ್ಲಿ ಬನ್ನಿ’. (ಎಲ್ಲರೂ ನಗುತ್ತಾರೆ.) ನೋಡಿ, ಇಂದು ಆತ ನಮ್ಮೆಲ್ಲರಿಗೂ ಹಬ್ಬದೂಟ ಹಾಕಿದ್ದಾನೆ; ಅದಕ್ಕಾಗಿ ಸಾಯಂಕಾಲವೆಲ್ಲಾ ನಮ್ಮ ಕೈಯಿಂದ ಕುಣಿಯಿಸಿಕೊಂಡುಬಿಡುತ್ತಾನೆ! (ಎಲ್ಲರೂ ನಗುತ್ತಾರೆ.) ಇಲ್ಲಿಂದ ದಕ್ಷಿಣೇಶ್ವರಕ್ಕೆ ನನಗೊಂದು ದಿನ ಗಾಡಿಯನ್ನು ಮಾಡಿಕೊಟ್ಟ. ಅದಕ್ಕೆ ಹನ್ನೆರಡು ಅಣೆ ಬಾಡಿಗೆ ಅಂತ ಹೇಳಿದ. ನಾನು ಕೇಳಿದೆ, ‘ಹನ್ನೆರಡು ಆಣೆಗೆ ದಕ್ಷಿಣೇಶ್ವರಕ್ಕೆ ಬರುತ್ತಾನೇನು?’ ಅಂತ. ಆತ ಹೇಳಿದ, ‘ಒಮ್ಮೊಮ್ಮೆ ಹಾಗೆ ಬರುವುದುಂಟು’ ಅಂತ. ರಸ್ತೆಯಲ್ಲಿ ಹೋಗುತ್ತ ಹೋಗುತ್ತ ಇದ್ದ ಹಾಗೆಯೇ ಅದರ ಒಂದು ಪಕ್ಕ ಮುರಿದು ಬಿದ್ದುಹೋಯಿತು. (ಎಲ್ಲರೂ ಗೊಳ್ಳೆಂದು ನಗುತ್ತಾರೆ.) ಕುದುರೆ ಅಲ್ಲಲ್ಲಿ ನಿಂತುಕೊಂಡುಬಿಡುತ್ತಿತ್ತು. ಹೊಡೆದರೂ ಮುಂದಕ್ಕೆ ಕಾಲಿಡಲೊಲ್ಲೆ ಅನ್ನುತ್ತಿತ್ತು. ಗಾಡಿಯವನು ಅದನ್ನು ಒಮ್ಮೊಮ್ಮೆ ಬಹಳವಾಗಿ ಬಾರಿಸುತ್ತಿದ್ದ. ಆಗ ಅದು ಸ್ವಲ್ಪ ದೂರ ಓಡುತ್ತಿತ್ತು. (ಎಲ್ಲರೂ ಗಟ್ಟಿಯಾಗಿ ನಗುತ್ತಾರೆ.) ಇಂದಿನ ಸಾಯಂಕಾಲದ ಕಾರ್ಯಕ್ರಮವೇನೆಂದರೆ, ರಾಮ ಮೃದಂಗ ಬಾರಿಸುವುದು, ನಾವೆಲ್ಲರೂ ನರ್ತಿಸುವುದು. ರಾಮನ ತಾಳಜ್ಞಾನವನ್ನಂತು ನೀವು ಕೇಳಲೇಬೇಡಿ. ಅಷ್ಟು ಚೆನ್ನು! (ಎಲ್ಲರೂ ನಗುತ್ತಾರೆ.) ಬಲರಾಮನ ಭಾವನೆಯೆಂದರೆ, ನೀವೇ ಹಾಡಬೇಕು, ನೀವೇ ನರ್ತಿಸಬೇಕು, ನೀವೇ ಆನಂದಪಡಬೇಕು ಅಂತ!” (ಎಲ್ಲರೂ ನಗುತ್ತಾರೆ.)
ಭಕ್ತರು ತಮ್ಮ ತಮ್ಮ ಮನೆಗಳಿಂದ ಕ್ರಮಕ್ರಮೇಣ ಬಂದು ಸೇರುತ್ತಿದ್ದಾರೆ. ಮಹೇಂದ್ರ ಮುಖರ್ಜಿ ದೂರದಿಂದಲೇ ತಮಗೆ ಪ್ರಣಾಮಮಾಡಿದುದನ್ನು ನೋಡಿ ಪರಮಹಂಸರೂ ಆತನಿಗೆ ಪ್ರತಿಪ್ರಣಾಮ ಮಾಡಿದರು. ಮತ್ತೆ ಆತನಿಗೆ ಸಲಾಮು ಮಾಡುತ್ತಿದ್ದಾರೆ. ಅವರು ತಮ್ಮ ಪಕ್ಕದಲ್ಲಿಯೇ ಕುಳಿತಿದ್ದ ಒಬ್ಬ ಯುವಕ ಭಕ್ತನಿಗೆ ಹೇಳುತ್ತಿದ್ದಾರೆ, “ನಾನು ಆತನಿಗೆ ಸಲಾಮು ಮಾಡಿದೆ ಅಂತ ಆತನಿಗೆ ತಿಳಿಸು. ಆತ ಅದನ್ನು ಬಹಳವಾಗಿ ಮೆಚ್ಚುತ್ತಾನೆ.” (ಎಲ್ಲರೂ ನಗುತ್ತಾರೆ.)
ಗೃಹಸ್ಥ ಭಕ್ತರಲ್ಲಿ ಅನೇಕರು ತಮ್ಮ ತಮ್ಮ ಪರಿವಾರದೊಡನೆ ಬಂದಿದ್ದಾರೆ. ಪರಮ ಹಂಸರ ದರ್ಶನ ಪಡೆಯಲೋಸುಗವಾಗಿಯೂ ಮತ್ತು ಅವರು ರಥದ ಮುಂದೆ ನರ್ತಿಸುವುದನ್ನು ನೋಡಲೋಸುಗವಾಗಿಯೂ ಬಂದಿದ್ದಾರೆ. ರಾಮ, ಗಿರೀಶ ಮೊದಲಾದ ಭಕ್ತರು ಕ್ರಮಕ್ರಮೇಣ ಅಲ್ಲಿಗೆ ಬಂದು ಸೇರಿದರು. ಯುವಭಕ್ತರಲ್ಲಿ ಅನೇಕರು ಬಂದಿದ್ದಾರೆ.
ಈಗ ನರೇಂದ್ರ ಹಾಡಲಾರಂಭಿಸಿದ್ದಾನೆ:
ಓ, ಎಂದಿಗೊ ಇನ್ನೆಂದಿಗೋ,
ಎದೆಯೊಳೊಲವಿನ ಕಿಡಿಯ ಜ್ವಲಿಸುವ
ದಿವ್ಯ ಶುಭದಿನವೆಂದಿಗೋ-
ಹರಿಯ ನೆನೆದರೆ ಸಾಕು, ಕಂಬನಿ
ಕೋಡಿವರಿಯುವುದೆಂದಿಗೋ
ಹೃದಯಶುದ್ಧಿಯು ಎಂದಿಗೋ
ಮತ್ತೆ ಬೃಂದಾವನದ ತೋಪಿಗೆ
ನಾನು ನಡೆಯುವುದೆಂದಿಗೋ
ಮರ್ತ್ಯ ಬಂಧನವೆಲ್ಲ ಕಳಚುತ
ತಿಳಿವಿನಂಜನದಿಂದ ದೃಷ್ಟಿಯು
ಶುದ್ಧಿಯಾಗುವುದೆಂದಿಗೋ!
ಪರುಶಮಣಿ ಸ್ಪರ್ಶಕ್ಕೆ ದೇಹದ
ಲೋಹ ಕಾಂಚನವಾಗಿ ಕಾಂತಿಯ
ಪಡೆವ ಶುಭದಿನವೆಂದಿಗೋ!
ಸಕಲ ಸಚರಾಚರವು ಹರಿಮಯ-
ವೆಂದು ದರ್ಶಿಪುದೆಂದಿಗೋ
ಧರ್ಮಕರ್ಮವ ಜಾತಿಗೀತಿಯ
ಅಭಿಮಾನ ಲೋಕಾಚಾರವ
ತೊರೆದು ನಿರ್ಭಯವಾಗಿ ಪ್ರೇಮದಿ
ನಾನು ನಡೆಯುವುದೆಂದಿಗೋ!
ಅಂಥ ಶುಭದಿನ ಬರಲಿ ಬಾಳಿಗೆ;
ದಿವ್ಯ ಮರುಳನ ತೆರದಲಿ
ಹಾಡಿ ನಲಿಯುವೆ, ಈಜಿ ನಲಿಯುವೆ
ಪ್ರೇಮಸಾಗರದಲೆಯಲಿ
ಸಕಲಜಗವನು ನನ್ನ ತೆರದಲಿ
ಆಡಿಸುವೆ ಹರಿಪದದಲಿ!
ಆತ ಮತ್ತೆ ಹಾಡುತ್ತಿದ್ದಾನೆ:
ಮಿರುಗುತಿದೆ ನಿನ್ನ ಅಪರೂಪ ರಾಶಿ ನಿಬಿಡಾಂಧಕಾರದಲ್ಲಿ
ನಿನ್ನನದರಿಂದಲೇ ನೆನೆವರೌ ಯೋಗಿಗಳು ಗಿರಿಗುಹೆಗಳಲ್ಲಿ!….
ವೈಷ್ಣವಚರಣ ಇಂದು ಕೀರ್ತನೆ ಮಾಡುವ ಹಾಗೆ ಬಲರಾಮ ವ್ಯವಸ್ಥೆ ಮಾಡಿದ್ದಾನೆ. ಈಗ ವೈಷ್ಣವಚರಣ ಹಾಡಲಾರಂಭಿಸಿದ:
ಶ್ರದ್ಧೆಯ ಸರೋವರದಿ ತಾಯನಾಮದ ನೌಕೆ
ತೇಲುತಿದೆ ನೋಡು…….
ಪರಮಹಂಸರು ಈ ಹಾಡಿನ ಒಂದೆರಡು ನುಡಿಗಳನ್ನು ಕೇಳಿದೊಡನೆಯೇ ನಿಂತು ಕೊಂಡೇ ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಚಿಕ್ಕ ನರೇನ ಅವರನ್ನು ಹಿಡಿದು ನಿಂತಿದ್ದಾನೆ. ಅವರ ಮುಖದಿಂದ ಮಂದಹಾಸ ಹೊರಚೆಲ್ಲುತ್ತಿದೆ. ಕ್ರಮೇಣ ಅವರ ದೇಹ ಸ್ಥಿರವಾಗಲಾರಂಭಿಸಿತು. ಅವರ ಮನಸ್ಸು ಬೇರೊಂದು ರಾಜ್ಯಕ್ಕೆ ಹೋಗಿರುವಂತೆ ಕಾಣುತ್ತಿದೆ, ಭಕ್ತರೆಲ್ಲರೂ ಆಶ್ಚರ್ಯಚಕಿತರಾಗಿ ಅವರ ಕಡೆ ನೋಡುತ್ತಿದ್ದಾರೆ. ಭಕ್ತೆಯರು ಪರದೆ ಹಿಂದಿನಿಂದ ಈ ಅತ್ಯದ್ಭುತ ಅವಸ್ಥೆಯನ್ನು ನೋಡುತ್ತಿದ್ದಾರೆ. ಯಾವ ರೀತಿಯಾಗಿ ಭಗವಂತನನ್ನು ಪ್ರೀತಿಸಬೇಕು ಎಂಬುದನ್ನು ಭಕ್ತರಿಗೆ ತೋರಿಸಲೋಸುಗ ಸಾಕ್ಷಾತ್ ಭಗವಂತನೇ ದೇಹಧಾರಣೆ ಮಾಡಿಕೊಂಡು ಬಂದಿರಬೇಕು ಅಂತ ಭಾವಿಸುತ್ತಿದ್ದಾರೆ. ಭಕ್ತರು ಬಹಳ ಹೊತ್ತು ಭಗವನ್ನಾಮೋಚ್ಚಾರಣೆ ಮಾಡಿದ ನಂತರ ಪರಮಹಂಸರು ಪ್ರಕೃತಿಸ್ಥರಾದರು. ಪರಮಹಂಸರು ಈಗ ಕುಳಿತುಕೊಂಡರು. ವೈಷ್ಣವಚರಣ ಮತ್ತೆ ಹಾಡಲಾರಂಭಿಸಿದ:
ಹರಿನಾಮವನು ನುಡಿಸು ಓ ನನ್ನ ವೀಣೆ
ಹರಿಚರಣವಲ್ಲದೆಯೆ ಪರಮಪದ ಕಾಣೆ.
ಹರಿ-ಕೃಷ್ಣ ಎಂದು ನೀ ನಿತ್ಯವೂ ನೆನೆಯೆ
ಹರಿನಾಮ ಪರಿಹರಿಪುದೆಲ್ಲ ವ್ಯಥೆಯ.
ಒಮ್ಮೆ ನೆನೆದರೆ ಸಾಕು-ನಿರ್ಭೀತಿ ನನಗೆ
ಅದಕಿಂತ ಮಿಗಿಲಿಲ್ಲ ಈ ಲೋಕದೊಳಗೆ!
ನುಡಿವನೀ ಗೋವಿಂದ : ನನ್ನ ದಿನವೆಲ್ಲ
ವ್ಯರ್ಥ ಪರ್ಯಟನದಲಿ ಕಳೆಯುತಿಹವಲ್ಲ
ಭವಜಲಧಿಯಲಿ ಇನ್ನು ನಾನಲೆವುದಿಲ್ಲ.
ಆತ ಮತ್ತೆ ಹಾಡಿದ:
ವಿಫಲ ವಿಫಲದಿನ ಸಾಗಿವೆ ಕೊಳಲೇ
ಶ್ರೀಹರಿ ಸಾಧನೆಯಿಲ್ಲದೆಲೇ-…….
ಈಗ ಅಪರಾಹ್ನವಾಗಿದೆ. ಇಷ್ಟರೊಳಗಾಗಿ ಶ್ರೀಜಗನ್ನಾಥನ ಆ ಚಿಕ್ಕ ರಥವನ್ನು ಧ್ವಜ ಪತಾಕೆಗಳಿಂದ ಅಲಂಕರಿಸಿ ಒಳ-ವರಾಂಡಕ್ಕೆ ಎಳೆದು ತಂದಿಟ್ಟಿದ್ದಾರೆ. ಶ್ರೀಜಗನ್ನಾಥ, ಸುಭದ್ರೆ, ಬಲರಾಮ ಈ ವಿಗ್ರಹಗಳನ್ನು ಚಂದನ, ವಸ್ತ್ರ, ಆಭರಣ ಹೂವಿನಹಾರ ಇವುಗಳಿಂದ ಚೆನ್ನಾಗಿ ಅಲಂಕಾರಮಾಡಿ ಇಟ್ಟಿದ್ದಾರೆ. ಪರಮಹಂಸರು ಕೀರ್ತನೆ ನಡೆಯುತ್ತಿದ್ದ ಜಾಗವನ್ನು ಬಿಟ್ಟು ರಥವನ್ನಿಟ್ಟಿದ್ದ ವರಾಂಡಕ್ಕೆ ಬಂದರು. ಭಕ್ತರೂ ಅವರನ್ನು ಹಿಂಬಾಲಿಸಿದರು. ಪರಮಹಂಸರು ರಥದ ಹಗ್ಗ ಹಿಡಿದು ಸ್ವಲ್ಪ ದೂರ ಎಳೆದರು. ಬಳಿಕ ರಥದ ಮುಂಭಾಗದಲ್ಲಿ ಭಕ್ತರೊಡನೆ ಹಾಡುತ್ತ ನರ್ತಿಸುತ್ತಿದ್ದಾರೆ.
ಪರಮಹಂಸರು ಹಾಡುತ್ತಿದ್ದಾರೆ:
ಹರಿನಾಮವನು ನುತಿಸಿ, ಆನಂದಬಾಷ್ಪವನು
ಕರೆವಣ್ಣತಮ್ಮಂದಿರು, ಇವರು ನೋಡು!…..
ಅವರು ಮತ್ತೆ ಹಾಡುತ್ತಿದ್ದಾರೆ:
ಗೌರಾಂಗನು ಹುಟ್ಟಿದೂರು
ಅವನ ಪ್ರೇಮ ಹಿಲ್ಲೋಲದಿ
ಸ್ಪಂದಿಸುತಿದೆ ಮೋದದಿ!
ಆ ಚಿಕ್ಕ ವರಾಂಡದಲ್ಲಿ ರಥವನ್ನು ಹಿಂದಕ್ಕೂ ಮುಂದಕ್ಕೂ ಎಳೆದಂತೆಲ್ಲ ಅದ ರೊಡನೆಯೆ ಹಾಡುವುದು ಮತ್ತು ನರ್ತಿಸುವುದೂ ಮುಂದುವರಿಯಿತು. ಉಚ್ಚಸಂಕೀರ್ತ ನೆಯ ಮತ್ತು ತಾಳ ಮೃದಂಗಗಳ ಶಬ್ದವನ್ನು ಕೇಳಿ ಬೀದಿಯಲ್ಲಿ ಹೋಗುತ್ತಿದ್ದವರೆಲ್ಲಾ ಮನೆಗೆ ನುಗ್ಗಿದರು. ಭಕ್ತರಿಗೂ ಅದರ ಸೋಂಕು ತಾಗಿ ಅವರೂ ಪ್ರೇಮೋನ್ಮತ್ತರಾಗಿ ಪರಮಹಂಸರೊಡನೆ ನರ್ತಿಸುತ್ತಿದ್ದಾರೆ.
ರಥದ ಮುಂದೆ ಕೀರ್ತನೆ ಮತ್ತು ನರ್ತನ ಮಾಡುತ್ತಿದ್ದುದು ನಿಂತು ನಂತರ ಪರಮ ಹಂಸರು ಮತ್ತೆ ಬೈಠಕ್ಖಾನೆಗೆ ಬಂದು ಕುಳಿತುಕೊಂಡರು. ಮಾಸ್ಟರ್ ಮೊದಲಾದ ಭಕ್ತರು ಅವರ ಪಾದಗಳನ್ನು ಒತ್ತುತ್ತಿದ್ದಾರೆ.
ನರೇಂದ್ರ ಭಾವಾವೇಶನಾಗಿ ತಂಬೂರಿ ನುಡಿಸುತ್ತ ಹಾಡಲಾರಂಭಿಸಿದ್ದಾನೆ:
ದಯಮಾಡಿಸು ದಯಮಾಡಿಸು
ಹೃದಯಕಮಲ ಪೀಠದಿ…..
ಬಳಿಕ ಹಾಡುತ್ತಿದ್ದಾನೆ:
ನೀನೆ ತಾರಕ ಶಕ್ತಿ ಓ ನನ್ನ ಜಗದಂಬ
ತ್ರಿಗುಣಾಧಾರ ಪರಾತ್ಪರಾ
ಓ ದುರ್ಗೇ, ಕರುಣಾಪೂರ್ಣೆ
ನೊಂದ ಜೀವಕ್ಕೆಲ್ಲ ನೀನೇ ಆಧಾರಾ.
ನೀ ಸಂಧ್ಯೆ, ಗಾಯತ್ರಿ
ನೀ ಜಗದ್ಧಾತ್ರಿ.
ಶರ್ವಪ್ರಿಯೆ, ಜಗದೆಲ್ಲ
ದುಃಖಿಗಳ ತಾಯಿ
ನೆಲದಲ್ಲಿ ಜಲದಲ್ಲಿ ಸರ್ವಭೂತದ ಮೂಲ
ಚೈತನ್ಯವಾಗಿ
ನನ್ನಲ್ಲಿ, ಜಗದಲ್ಲಿ, ಸಕಲ ಸಚರಾಚರದ
ಎದೆ ಎದೆಗಳಲ್ಲಿ
ಮನೆಮಾಡಿ ನೆಲಸಿರುವೆ; ಸಾಕಾರವಾದರೂ
ನಿನ್ನ ಮೂಲ ಸ್ಥಿತಿಯು ನಿರಾಕಾರದಲ್ಲಿ!
ಆತ ಮತ್ತೊಂದು ಹಾಡನ್ನು ಹಾಡುತ್ತಿದ್ದಾನೆ:
ಜೀವನದ ಜಲಧಿಯಲ್ಲಿ ಪಯಣಗೈಯುವ ನನಗೆ
ನೀನೊಂದು ಧ್ರುವತಾರೆ ನನ್ನ ಗುರುವೆ.
ಕಡೆಯಿಲ್ಲದೇ ಕಡಲ ಬಳಸುದಾರಿಯೊಳಾನು
ದಿಕ್ಕು ತಪ್ಪದೆ ಇನ್ನು ಪಯಣಗೈವೆ.
ಇಲ್ಲಿ ನಾನಲೆವಾಗ ಎಂದಾದರೂ ನನ್ನ
ಎದೆಯು ಮಿಡುಕಾಡುತಿರೆ ನೋವಿನಲ್ಲಿ
ಮೇಲೆ ನಿನ್ನಯ ಕರುಣ ಕಾಂತಿಯುಜ್ವಲ ತಾರೆ
ಬೆಳಗಿ ಸಂತೈಸುವುದು ಹಾದಿಯಲ್ಲಿ.
ನನ್ನಂತರಂಗದಲ್ಲಿ ನಿನ್ನ ಮುಖವೆಂದಿಗೂ
ಚಿರಮಧುರ ಕಾಂತಿಯಲ್ಲಿ ಶೋಭಿಸಿಹುದು.
ಒಂದೆ ಚಣ ನಾ ನಿನ್ನ ಕಾಣದಿದ್ದರೆ ಎದೆಯು
ಅತುಲ ವೇದನೆಯಲ್ಲಿ ತುಡಿಯುತಿಹುದು.
ಅನ್ಯ ಚಿಂತೆಯ ಪಥದಿ ಮನವಲೆದು ಸಾಗಿರಲು
ನಿನ್ನ ದರ್ಶನ ನನ್ನ ನಾಚಿಸುವುದು!
ಒಬ್ಬ ಭಕ್ತ ನರೇಂದ್ರನನ್ನು ಕೇಳಿಕೊಂಡ, “ ‘ನನ್ನ ಹೃದಯದ ದಿವ್ಯ ಸೂತ್ರಧಾರಿಣಿ ನೀನು’ ಎಂಬ ಹಾಡನ್ನು ಹಾಡುವೆಯಾ?”
ಶ್ರೀರಾಮಕೃಷ್ಣರು: “ಛೆ! ಈಗ ಏಕೆ ಅಂಥ ಹಾಡು? ಈಗ ಭಗವದಾನಂದದ ಹಾಡುಗಳು- ‘ದಿವ್ಯ ಮಧುಪಾನದಲಿ ಉನ್ಮತ್ತಳಾಗಿರುವ ನಿನ್ನ ಈ ಲೀಲೆಯನು ತಿಳಿವರಾರು?’ ಎಂಬೀತರದ ಹಾಡುಗಳು.”
ನರೇಂದ್ರ ಅದನ್ನು ಹಾಡುತ್ತಿದ್ದಾನೆ:
ದಿವ್ಯ ಮಧುಪಾನದಲಿ ಉನ್ಮತ್ತಳಾಗಿರುವ
ನಿನ್ನ ಈ ಲೀಲೆಯನು ತಿಳಿವರಾರು?
ನಿನ್ನಂಗಭಂಗಿಗಳ ವಿಲಾಸಭ್ರಮದೆದುರು
ಅನಂಗನೇ ನಾಚಿ ಕುಗ್ಗಿರುವನು!
ಕರವಾಳವನು ಹಿಡಿದು ನರ್ತಿಸುವೆ ರಣಚಂಡಿ
ನಿನ್ನ ಪದಘಾತಕೆ ನೆಲ ನಡುಗಿದೆ!
ಓ ತತ್ಪರೆ ಸರ್ವಗುಣಗಣಗಳಾಧಾರೆ
ಶಿವಮನೋರಮೆಯಾಗಿ ನಲಿಯುತಿರುವೆ!
ಅವರವರ ಭಾವಕ್ಕೆ ತಕ್ಕಂತೆ ರೂಪದಲಿ
ಭಕ್ತರಿಗೆ ದರ್ಶನವ ನೀಡುತಿರುವೆ
ನಿತ್ಯಲೀಲೆಯೊಳಿರುವ ಓ ಬ್ರಹ್ಮಮಯಿ ಕಾಳಿ
ನನ್ನ ಹೃದಿಪದ್ಮದಲಿ ರಾಜಿಸಿರುವೆ.
ನರೇಂದ್ರ ಭಾವೋನ್ಮತ್ತನಾಗಿ ಈ ಚರಣವನ್ನು ಮತ್ತೆ ಮತ್ತೆ ಹಾಡಲಾರಂಭಿಸಿದ:
ನಿತ್ಯಲೀಲೆಯೊಳಿರುವ ಓ ಬ್ರಹ್ಮಮಯಿ ಕಾಳಿ
ನನ್ನ ಹೃದಿಪದ್ಮದಲಿ ರಾಜಿಸಿರುವೆ.
ಪರಮಹಂಸರು ಪ್ರೇಮೋನ್ಮತ್ತರಾಗಿ, “ನಿತ್ಯಲೀಲೆಯೊಳಿರುವ ಓ ಬ್ರಹ್ಮಮಯಿ ಕಾಳಿ” ಎಂಬ ನುಡಿಯನ್ನು ಹಾಡುತ್ತ ನರ್ತಿಸುತ್ತಿದ್ದಾರೆ. ಬಹಳ ಹೊತ್ತು ಆ ರೀತಿಯಾಗಿ ನರ್ತಿಸಿದ ನಂತರ ಕೆಳಗೆ ಕುಳಿತುಕೊಂಡರು. ನರೇಂದ್ರ ಪ್ರೇಮೋನ್ಮತ್ತನಾಗಿ ಪ್ರೇಮಾಶ್ರುವನ್ನು ಸುರಿಸುತ್ತ ಹಾಡಿದುದನ್ನು ನೋಡಿ ಪರಮಹಂಸರಿಗೆ ಬಹಳ ಆನಂದವಾಗಿಬಿಟ್ಟಿದೆ.
ಈಗ ರಾತ್ರಿ ಒಂಭತ್ತು. ಭಕ್ತರು ಇನ್ನೂ ಪರಮಹಂಸರ ಸುತ್ತಲೂ ಕುಳಿತುಕೊಂಡಿದ್ದಾರೆ. ವೈಷ್ಣವಚರಣನು ಗೌರಾಂಗನ ಸಂಬಂಧವಾಗಿ ಹಾಡುತ್ತಿದ್ದಾನೆ:
ಶ್ರೀ ಗೌರಾಂಗ ಸುಂದರ ನವ ನಟವರ,
ತಪ್ತಕಾಂಚನ ಕಾಯಬಂಧುರ ನರವರ-
ಬಳಿಕ ಆತ ಶ್ರೀಕೃಷ್ಣನ ಸಂಬಂಧವಾಗಿ ಹಾಡಿದ. ಶ್ರೀಕೃಷ್ಣ ಬೃಂದಾವನದಲ್ಲಿ ತನ್ನ ಹಳ್ಳಿಗಾಡಿನ ಜೀವನವನ್ನು ತ್ಯಜಿಸಿ ಮಥುರೆಯಲ್ಲಿ ರಾಜನಾಗಿದ್ದಾನೆ. ಒಬ್ಬ ಗೋಪ ಆತನನ್ನು ಮಥುರೆಯಲ್ಲಿ ಸಂಧಿಸಿ ಹೇಳಿದನು:
ನೀ ಮಥುರೆಯೊಳು ರಾಜವೈಭವದಿ ಮುಳುಗಿರಲು
ನಾವು ನಿನ್ನನು ಈಗ ಅರಿವುದೆಂತು?
ಅರಸಿನುಡಿಗೆಯನುಟ್ಟು ಆನೆಯಂಬಾರಿಯಲಿ
ನಡೆವೆ ನಿನಗೆಂತಹುದು ನಮ್ಮ ನೆನಪು!
ಹಿಂದೆ ಬೃಂದಾವನದಿ ಎಂತು ಗೋವನು ಕಾದು
ನಲಿದೆ ನೀನೆಂಬುದನು ಮರೆತೆಯೇನೊ!
ವ್ರಜಗೋಪಿಯರ ಮನೆಯೊಳಂದು ಹಾಲ್ಬೆಣ್ಣೆಗಳ
ಕದ್ದುಮೆದ್ದಾ ಸೊಗವು ನೆನಪಿಲ್ಲವೇನೊ!
ರಾತ್ರಿ ಹನ್ನೊಂದು ಘಂಟೆಯ ಸಮಯ, ಒಬ್ಬೊಬ್ಬರಾಗಿ ಭಕ್ತರು ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಳ್ಳುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಒಳ್ಳೆಯದು, ಈಗ ನೀವೆಲ್ಲರೂ ಮನೆಗೆ ಹೊರಡಿ. (ನರೇಂದ್ರ ಮತ್ತು ಚಿಕ್ಕ ನರೇನನ ಕಡೆಗೆ ಬೆರಳು ಮಾಡಿ) ಸದ್ಯಕ್ಕೆ ಇವರಿಬ್ಬರೂ ಇಲ್ಲಿ ಉಳಿದುಕೊಂಡರೆ ಸಾಕು. (ಗಿರೀಶನಿಗೆ) ಈಗ ನೀನು ಮನೆಗೆ ಹೋಗಿ ಊಟ ಮಾಡುತ್ತೀಯ? ಸಾಧ್ಯವಾದರೆ ಒಂದು ಸ್ವಲ್ಪ ಹೊತ್ತು ಇಲ್ಲಿರು. ಹುಕ್ಕ ಬೇಕೇನು! ಬಲರಾಮನ ಸೇವಕರೂ ಅವನಂತೆಯೆ. ಕೇಳಿ ನೋಡು; ಅವನು ಕೊಡುವುದಿಲ್ಲ. (ಎಲ್ಲರೂ ನಗುತ್ತಾರೆ.) ಆದರೆ ನೀನು ಹುಕ್ಕ ಸೇದಿಯೇ ಹೋಗು.”
ಗಿರೀಶನೊಡನೆ ಆತನ ಕನ್ನಡಕ ಹಾಕಿಕೊಂಡಿರುವ ಒಬ್ಬ ಸ್ನೇಹಿತ ಬಂದಿದ್ದಾನೆ. ಆತ ಎಲ್ಲವನ್ನೂ ನೋಡಿ ಕೇಳಿ ಹೊರಟುಹೋದ. ಪರಮಹಂಸರು ಗಿರೀಶನಿಗೆ ಹೇಳುತ್ತಿದ್ದಾರೆ, “ನಾನು ಇದನ್ನು ನಿನಗೆ ಮತ್ತು ಎಲ್ಲರಿಗೂ ಹೇಳುತ್ತಿದ್ದೇನೆ. ಯಾರನ್ನೂ ಬಲಾತ್ಕರಿಸಿ ಇಲ್ಲಿಗೆ ಕರೆದುಕೊಂಡು ಬರಬೇಡಿ. ಸಕಾಲ ಬರದೆ ಏನೂ ಆಗದು” ಅಂತ.
ಇನ್ನೊಬ್ಬ ಭಕ್ತ ತಾನು ಹೊರಡುವ ಮುನ್ನ ಪರಮಹಂಸರಿಗೆ ಪ್ರಣಾಮಮಾಡಿದ. ಆತನೊಡನೆ ಒಬ್ಬ ಚಿಕ್ಕ ಹುಡುಗನಿದ್ದ. ಅವರು ಆತನಿಗೆ ಪ್ರೀತಿಯಿಂದ ಹೇಳುತ್ತಿದ್ದಾರೆ, “ನಿನಗೆ ಹೊತ್ತಾಗುತ್ತಿದೆ. ಜೊತೆಗೆ ನಿನ್ನ ಜೊತೆಯಲ್ಲಿ ಚಿಕ್ಕ ಹುಡುಗ ಬೇರೆ ಇದ್ದಾನೆ. ಹೋಗಿ ಬಾ” ಅಂತ. ನರೇಂದ್ರ, ಚಿಕ್ಕ ನರೇನ, ಇನ್ನೂ ಒಬ್ಬಿಬ್ಬರು ಭಕ್ತರು ಇನ್ನೂ ಸ್ವಲ್ಪ ಹೊತ್ತು ಇದ್ದು ಬಳಿಕ ಮನೆಗೆ ಹಿಂದಿರುಗಿದರು.
೧೫ನೆ ಜುಲೈ ೧೮೮೫. ಆಷಾಢ ಶುಕ್ಲ ತದಿಗೆ, ಬುಧವಾರ
ಶ್ರೀರಾಮಕೃಷ್ಣರು ಬಲರಾಮನ ಬೈಠಕ್ಖಾನೆಯ ಪಕ್ಕದ ಕೊಠಡಿಯಲ್ಲಿ ಮಲಗಿ ಕೊಂಡಿದ್ದಾರೆ. ಘಂಟೆ ಬೆಳಗಿನ ಝಾವ ನಾಲ್ಕು. ಆ ಕೊಠಡಿಯ ದಕ್ಷಿಣ ವರಾಂಡದಲ್ಲಿದ್ದ ಒಂದು ಬೆಂಚಿನ ಮೇಲೆ ಮಾಸ್ಟರ್ ಕುಳಿತಿದ್ದಾನೆ. ಸ್ವಲ್ಪಹೊತ್ತಿನೊಳಗಾಗಿಯೇ ಪರಮ ಹಂಸರು ಅಲ್ಲಿಗೆ ಬಂದರು. ಮಾಸ್ಟರ್ ಅವರಿಗೆ ಸಾಷ್ಟಾಂಗ ಪ್ರಣಾಮಮಾಡಿದ.
ಶ್ರೀರಾಮಕೃಷ್ಣರು: “ನಾನು ಆಗಲೆ ಒಮ್ಮೆ ಎದ್ದಿದ್ದೆ. ನಾವು ಬೆಳಿಗ್ಗೆಯೇ ದಕ್ಷಿಣೇಶ್ವರಕ್ಕೆ ಹೊರಟುಹೋಗೋಣವೇನು?”
ಮಾಸ್ಟರ್: “ಒಳ್ಳೆಯದು, ಬೆಳಗಿನ ವೇಳೆ ನದಿಯಲ್ಲಿ ಅಲೆ ಕಡಿಮೆಯಾಗಿರುತ್ತದೆ.”
ಅರುಣೋದಯವಾಗುತ್ತಿದೆ. ಇನ್ನೂ ಭಕ್ತರಾರೂ ಅಲ್ಲಿಗೆ ಬಂದಿಲ್ಲ. ಪರಮಹಂಸರು ಮುಖ ತೊಳೆದುಕೊಂಡು ತಮ್ಮ ಮಧುರ ಕಂಠದಿಂದ ಭಗವತಿಯ ನಾಮಜಪವನ್ನು ಮಾಡುತ್ತಿದ್ದಾರೆ. ಆಗ ಅವರು ಆ ಕೊಠಡಿಯ ಉತ್ತರ ಬಾಗಿಲಿನ ಹತ್ತಿರ ನಿಂತಿದ್ದಾರೆ. ಮಾಸ್ಟರೂ ಹತ್ತಿರ ನಿಂತಿದ್ದಾನೆ. ಕೆಲವು ನಿಮಿಷಗಳ ನಂತರ ಗೋಪಾಲನ ತಾಯಿ ಬಂದು ಸ್ವಲ್ಪ ದೂರದಲ್ಲಿ ನಿಂತುಕೊಂಡಳು. ಒಬ್ಬಿಬ್ಬರು ಭಕ್ತೆಯರು ಅಂತಃಪುರದ ಬಾಗಿಲ ಹಿಂದೆ ನಿಂತು ಪರಮಹಂಸರ ದರ್ಶನವನ್ನು ಪಡೆಯುತ್ತಿದ್ದಾರೆ. ಅದು ಬೃಂದಾವನದ ಗೋಪಿಯರು ಶ್ರೀಕೃಷ್ಣನ ದರ್ಶನ ಪಡೆಯುತ್ತಿರುವರೊ ಅಥವಾ ನವದ್ವೀಪದ ಮಹಿಳೆಯರು ಪರದೆಯ ಹಿಂದೆ ನಿಂತು ಶ್ರೀಚೈತನ್ಯದೇವನ ದರ್ಶನ ಪಡೆಯುತ್ತಿರುವರೊ ಏನೊ ಎಂಬಂತಿತ್ತು.
ಪರಮಹಂಸರು ರಾಮನಾಮವನ್ನು ಸ್ವಲ್ಪ ಹೊತ್ತು ಜಪಿಸಿದ ನಂತರ ಕೃಷ್ಣನಾಮವನ್ನು ಜಪಿಸುತ್ತಿದ್ದಾರೆ: “ಕೃಷ್ಣ! ಕೃಷ್ಣ! ಗೋಪಿಕೃಷ್ಣ! ಗೋಪಿ! ಗೋಪಿ! ರಾಖಾಲ ಜೀವನ ಕೃಷ್ಣ ನಂದನಂದನ ಕೃಷ್ಣ! ಗೋವಿಂದ! ಗೋವಿಂದ!”
ಈಗ ಗೌರಾಂಗನಾಮವನ್ನು ಜಪಿಸುತ್ತಿದ್ದಾರೆ: “ಶ್ರೀಕೃಷ್ಣಚೈತನ್ಯ ಪ್ರಭು ನಿತ್ಯಾನಂದ. ಹರೇ ಕೃಷ್ಣ, ಹರೇ ರಾಮ, ರಾಧೇ ಗೋವಿಂದ!”
ಬಳಿಕ ಹೇಳುತ್ತಿದ್ದಾರೆ, “ಆಲೇಖ್ ನಿರಂಜನ” ಅಂತ. “ನಿರಂಜನ” ಅಂತ ಉಚ್ಚರಿಸಿ ಅಳಲಾರಂಭಿಸಿದ್ದಾರೆ. ಅವರು ಬಿಕ್ಕಿಬಿಕ್ಕಿ ಅಳುತ್ತಿರುವುದನ್ನು ನೋಡಿ ಭಕ್ತರೂ ಅಳಲಾರಂಭಿ ಸಿದ್ದಾರೆ. ಪರಮಹಂಸರು ಪ್ರೇಮಾಶ್ರುವನ್ನು ಸುರಿಸುತ್ತ ಹೇಳುತ್ತಿದ್ದಾರೆ. “ಹೇ ನಿರಂಜನ! ಓ ನನ್ನ ಮುದ್ದು ಮಗು! ಬಾ! ಇದನ್ನು ತಿನ್ನು! ಅದನ್ನು ತೆಗೆದುಕೊ! ನಿನಗೆ ಸೇವೆ ಮಾಡಿ ಧನ್ಯನಾಗುವ ಸುದಿನವೆಂದು ಬರುವುದು? ನೀನು ನನಗಾಗಿ ಮಾನವ ದೇಹಧಾರಣೆ ಮಾಡಿಕೊಂಡು ಬಂದಿದ್ದೀಯೆ.”
ಅವರು ಆರ್ತಸ್ವರದಿಂದ ಶ್ರೀಜಗನ್ನಾಥನಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ, “ಹೇ ಜಗನ್ನಾಥ! ಹೇ ದೀನಬಂಧು! ಹೇ ಜಗದ್ಬಂಧು! ನಾನು ನಿನ್ನ ಜಗತ್ತಿನ ಹೊರಗಿರುವವನಲ್ಲ ಪ್ರಭು. ನನ್ನ ಮೇಲೆ ಕೃಪೆ ಮಾಡು!”
ಪ್ರೇಮೋನ್ಮತ್ತರಾಗಿ ಹಾಡುತ್ತಿದ್ದಾರೆ, “ಒರಿಸ್ಸಾ ಜಗನ್ನಾಥನನ್ನು ಭಜಿಸು” ಅಂತ. ಈಗ ನಾರಾಯಣನ ಜಪಮಾಡುತ್ತ ಹಾಡುತ್ತ ನರ್ತಿಸುತ್ತಿದ್ದಾರೆ.
“ಶ್ರೀಮನ್ನಾರಾಯಣ! ಶ್ರೀಮನ್ನಾರಾಯಣ! ನಾರಾಯಣ! ನಾರಾಯಣ!” ಮತ್ತೆ ಅವರು ಹಾಡಲಾರಂಭಿಸಿದ್ದಾರೆ:
ಯಾರಿಗಾಗಿ ಮರುಳುಗೊಂಡು ಅಲೆಯುತಿರುವೆನೊ
ಆ ನನ್ನ ಮೋಹಮೂರ್ತಿ ಕಾಣನಿನ್ನೂ ಕೆಳದಿಯೇ……
ಈಗ ಪರಮಹಂಸರು ಭಕ್ತರೊಡನೆ ಚಿಕ್ಕ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ಐದು ವರ್ಷದ ಬಾಲಕನೋಪಾದಿಯಲ್ಲಿ ದಿಗಂಬರರಾಗಿಬಿಟ್ಟಿದ್ದಾರೆ. ಮಾಸ್ಟರ್, ಬಲರಾಮ, ಇನ್ನೂ ಒಬ್ಬಿಬ್ಬರು ಭಕ್ತರು ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು: “ಭಗವಂತನ ರೂಪವನ್ನು ನೋಡಲು ಸಾಧ್ಯ. ಯಾವಾಗ ಉಪಾಧಿಗಳೆಲ್ಲ ನಾಶವಾಗಿಬಿಡುವುವೊ, ಯಾವಾಗ ವಿಚಾರಮಾಡುವುದು ನಿಂತುಹೋಗು ವುದೊ, ಆಗ ಆತನ ದರ್ಶನ ದೊರೆಯುತ್ತದೆ. ಬಳಿಕ ಸಾಧಕ ಮೂಕನಂತಾಗಿ ಸಮಾಧಿಸ್ಥ ನಾಗುತ್ತಾನೆ. ಜನ ಥಿಯೇಟರಿಗೆ ಹೋಗಿ ಆ ಮಾತು ಈ ಮಾತು ಹರಟುತ್ತ ಕುಳಿತಿರುತ್ತಾರೆ. ಆದರೆ ಪರದೆ ಮೇಲಕ್ಕೆ ಹೋಗುವುದೇ ತಡ, ಹರಟೆಯೆಲ್ಲ ಒಡನೆಯೇ ನಿಂತು ಹೋಗಿಬಿಡುತ್ತದೆ; ಸ್ಟೇಜಿನಲ್ಲಿ ಬರುವ ದೃಶ್ಯಗಳಲ್ಲಿಯೇ ಮಗ್ನರಾಗಿಬಿಡುತ್ತಾರೆ.
“ನಿಮಗೊಂದು ಅತ್ಯಂತ ಗುಹ್ಯ ವಿಷಯವನ್ನು ತಿಳಿಸುತ್ತೇನೆ. ಪೂರ್ಣ, ನರೇಂದ್ರ ಇವರೇ ಮೊದಲಾದವರನ್ನು ನಾನು ಬಹಳವಾಗಿ ಪ್ರೀತಿಸುವುದಕ್ಕೆ ಕಾರಣ ಗೊತ್ತೆ? ಒಮ್ಮೆ ನಾನು ಮಧುರಭಾವದಲ್ಲಿದ್ದಾಗ ಶ್ರೀಜಗನ್ನಾಥನನ್ನು ಆಲಿಂಗನ ಮಾಡಿಕೊಳ್ಳಲು ಹೋಗಿ ನನ್ನ ಕೈ ಮುರಿದುಕೊಂಡೆ, ಆಗ ಆತ ನನಗೆ ತಿಳಿಸಿದ, ‘ನೀನು ಮಾನವ ದೇಹಧಾರಣೆ ಮಾಡಿಕೊಂಡಿದ್ದೀಯೆ, ಆದ್ದರಿಂದ ಈಗ ನೀನು ಸಖ್ಯ, ವಾತ್ಸಲ್ಯ ಇವೇ ಮೊದಲಾದ ಭಾವಗಳಿಂದ ಮಾನವರೊಡನೆ ಬೆರೆ.’
“ರಾಮಲಾಲನನ್ನು ನೋಡಿದರೆ ಹಿಂದೆ ನನಗೆ ಯಾವ ಯಾವ ಭಾವಗಳು ಉತ್ಪನ್ನ ವಾಗುತ್ತಿದ್ದುವೊ, ಅದೇ ವಿವಿಧ ಭಾವಗಳು ಈಗ ಪೂರ್ಣನೇ ಮೊದಲಾದವರನ್ನು ನೋಡಿದರೆ ಉತ್ಪನ್ನವಾಗುತ್ತಿವೆ. ಆಗ ನಾನು ರಾಮಲಾಲನಿಗೆ ಸ್ನಾನಮಾಡಿಸುತ್ತಿದ್ದೆ, ಊಟ ಮಾಡಿಸುತ್ತಿದ್ದೆ, ಮಲಗಿಸುತ್ತಿದ್ದೆ, ಎತ್ತಿಕೊಂಡು ತಿರುಗುತ್ತಿದ್ದೆ. ರಾಮಲಾಲನಿಗಾಗಿ ಸುಮ್ಮನೆ ಕುಳಿತು ಅಳುತ್ತಿದ್ದೆ. ಈಗ ಈ ಯುವಕರನ್ನು ಕಂಡರೆ ಅದೇ ವಿಧದ ಭಾವನೆಗಳು ನನಗಾಗುತ್ತಿವೆ. ನಿರಂಜನನನ್ನು ನೋಡು. ಯಾವುದರಿಂದಲೂ ಲಿಪ್ತನಾಗಿಲ್ಲ. ತನ್ನ ಸ್ವಂತ ದುಡ್ಡು ಖರ್ಚುಮಾಡಿ ಬಡವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುತ್ತಾನೆ. ವಿವಾಹದ ಸಂಬಂಧವಾಗಿ ಆತ ಹೇಳುತ್ತಾನೆ, ‘ಹಾ ಭಗವಂತನೇ! ಅದು ವಿಶಾಲಾಕ್ಷಿ ನದಿಯ ಸುಳಿ!’ ಆತ ಒಂದು ಜ್ಯೋತಿಯ ಮೇಲೆ ಕುಳಿತಿರುವಂತೆ ನನಗೆ ಕಾಣುತ್ತಿದೆ.
“ಪೂರ್ಣ ಭಗವಂತನ ಸಾಕಾರ ರಾಜ್ಯಕ್ಕೆ ಸೇರಿದವನು. ವಿಷ್ಣುವಿನ ಅಂಶದಿಂದ ಜನ್ಮವೆತ್ತಿದ್ದಾನೆ. ಆಹ! ಆತನ ಅನುರಾಗ ಎಷ್ಟು ಅದ್ಭುತವಾದದ್ದು!
(ಮಾಸ್ಟರಿಗೆ) “ನೀನು ಆತನ ಗುರುಭಾಯಿಯೋ ಅಥವಾ ಸ್ವಂತದವನೋ ಏನೋ ಎಂಬಂತೆ ಆತ ನಿನ್ನೊಡನೆ ವ್ಯವಹರಿಸಿದುದನ್ನು ನೀನು ಅಂದು ನೋಡಲಿಲ್ಲವೇನು? ಕ್ಯಾಪ್ಟನ್ನನ ಮನೆಗೆ ಬಂದು ನನ್ನನ್ನು ಕಾಣುತ್ತೇನೆ ಅಂತ ಹೇಳಿದ್ದಾನೆ.
“ನರೇಂದ್ರ ಅತ್ಯಂತ ಉಚ್ಚ ಅಂತಸ್ತಿಗೆ ಸೇರಿದವನು-ನಿರಾಕಾರ ರಾಜ್ಯಕ್ಕೆ ಸೇರಿದವನು. ಆತನಲ್ಲಿ ಪುರುಷನ ಸತ್ತ್ವವಿದೆ. ಇಲ್ಲಿಗೆ ಅಷ್ಟೊಂದು ಜನ ಬರುತ್ತಾರೆ, ಅವನಂಥವರು ಬೇರೆ ಯಾರೂ ಇಲ್ಲ.
“ಒಮ್ಮೊಮ್ಮೆ ಹಾಗೆ ಕುಳಿತುಕೊಂಡು ಭಕ್ತರ ಸಂಬಂಧವಾಗಿ ಲೆಕ್ಕಾಚಾರ ಹಾಕುತ್ತೇನೆ. ಕೆಲವರು ಹತ್ತು ದಳದ, ಇನ್ನು ಕೆಲವರು ಹದಿನಾರು ದಳದ, ಮತ್ತೆ ಕೆಲವರು ನೂರು ದಳದ ಪದ್ಮಗಳ ಹಾಗೆ ಕಂಡುಬಂದಿದ್ದಾರೆ. ಆದರೆ ಪದ್ಮಗಳ ಮಧ್ಯೆ ನರೇಂದ್ರ ಎಂಬ ಪದ್ಮ ಸಹಸ್ರದಳದ್ದು.
“ಉಳಿವದರೆಲ್ಲ ಚೊಂಬು, ಕೊಡ ಇವುಗಳಾದರೆ, ನರೇಂದ್ರ ಒಂದು ಭಾರಿ ಹಂಡೆ.
“ಕುಂಟೆ ಕೊಳಗಳ ಮಧ್ಯೆ ನರೇಂದ್ರ ಒಂದು ದೊಡ್ಡ ಕೆರೆ. ಉದಾಹರಣೆಗೆ ಹಾಲದಾರ ಪುಕುರ.
“ಮೀನುಗಳಲ್ಲಿ ನರೇಂದ್ರ ಕೆಂಪು ಕಣ್ಣುಳ್ಳ ‘ರೂಯಿ’ ಎಂಬ ಹೆಸರಿನ ದೊಡ್ಡ ಮೀನು. ಉಳಿದವರು ವಿವಿಧ ಚಿಕ್ಕ ಪುಟ್ಟ ಮೀನುಗಳು.
“ನರೇಂದ್ರ ದೊಡ್ಡ ಪಾತ್ರೆ-ಬೇಕಾದಷ್ಟು ಸಾಮಾನು ಹಿಡಿಸುತ್ತದೆ. ದೊಡ್ಡ ಟೊಳ್ಳಿರುವ ಬಂಬು.
“ನರೇಂದ್ರ ಯಾವುದರ ವಶನೂ ಆಗಿಲ್ಲ. ಆಸಕ್ತಿ ಮತ್ತು ಇಂದ್ರಿಯಸುಖಗಳ ವಶನಾಗಿಲ್ಲ. ಆತ ಒಂದು ಗಂಡು ಪಾರಿವಾಳ. ಅದನ್ನು ಕೊಕ್ಕಿನ ಹತ್ತಿರ ಹಿಡಿದುಕೊಂಡರೆ, ಹಾಗೂ ಹೀಗೂ ಒದರಿ ಬಿಡಿಸಿಕೊಂಡುಬಿಡುತ್ತದೆ; ಆದರೆ ಹೆಣ್ಣು ಪಾರಿವಾಳ ಸುಮ್ಮನೆ ಇದ್ದುಬಿಡುತ್ತದೆ.
“ಬೇಲಘರದ ತಾರಕನನ್ನು ಒಂದು ಜಾತಿಯ ಪುಟ್ಟ ಮೀನಿಗೆ ಹೋಲಿಸಬಹುದು.
“ನರೇಂದ್ರನದು ಪುರುಷಸ್ವಭಾವ; ಬಂಡಿಯಲ್ಲಿ ಅದಕ್ಕಾಗಿ ಆತ ಅದರ ಬಲಭಾಗಕ್ಕೆ ಕುಳಿತುಕೊಳ್ಳುತ್ತಾನೆ. ಭವನಾಥನದು ಹೆಂಗಸಿನ ಸ್ವಭಾವ; ಅದಕ್ಕಾಗಿ ನಾನು ಆತನನ್ನು ಗಾಡಿಯ ಎಡಭಾಗಕ್ಕೆ ಕೂರಿಸುವುದು. ಸಭೆಯ ಮಧ್ಯದಲ್ಲಿ ನರೇಂದ್ರ ನನ್ನೊಡನೆ ಇದ್ದ ಎಂದರೆ ನನಗೆ ಬಹಳ ಧೈರ್ಯ.”
ಮಹೇಂದ್ರ ಮುಖರ್ಜಿ ಕೊಠಡಿಗೆ ಬಂದು ಪರಮಹಂಸರಿಗೆ ಪ್ರಣಾಮಮಾಡಿದ. ಆಗ ಬೆಳಗಿನ ಎಂಟು. ಹರಿಪದ, ತುಳಸೀರಾಮ ಮತ್ತು ಇನ್ನೂ ಕೆಲವರು ಒಬ್ಬೊಬ್ಬರಾಗಿ ಬಂದು ಪರಮಹಂಸರಿಗೆ ಪ್ರಣಾಮಮಾಡಿ ಕೊಠಡಿಯಲ್ಲಿ ಕುಳಿತುಕೊಂಡರು. ಬಾಬುರಾಮನಿಗೆ ಜ್ವರ; ಅದಕ್ಕಾಗಿ ಆತನಿಗೆ ಬರಲು ಆಗಲಿಲ್ಲ.
ಶ್ರೀರಾಮಕೃಷ್ಣರು ಮಾಸ್ಟರ್ ಮೊದಲಾದವರಿಗೆ: “ಚಿಕ್ಕ ನರೇನ ಬರಲಿಲ್ಲವೇನು? ನಾನು ಹೊರಟುಹೋಗಿರಬೇಕು ಅಂತ ಭಾವಿಸಿರಬೇಕು. (ಮುಖರ್ಜಿಗೆ) ಇದು ತುಂಬ ಆಶ್ಚರ್ಯಕರ. ಆತ ಹುಡುಗನಿದ್ದಾಗಲೆ ಸ್ಕೂಲಿನಿಂದ ಬಂದೊಡನೆಯೇ ಭಗವಂತನಿಗಾಗಿ ಅಳುತ್ತಿದ್ದ. ಭಗವಂತನಿಗಾಗಿ ಅಳುವುದು ಏನು ಸಾಮಾನ್ಯವಾದುದೆ? ಜೊತೆಗೆ ಆತ ಬಹಳ ಬುದ್ಧಿಶಾಲಿ. ಬಂಬುಗಳ ಮಧ್ಯೆ ಆತ ದೊಡ್ಡ ಟೊಳ್ಳುಳ್ಳ ಬಂಬು. ಆತನ ಇಡೀ ಮನಸ್ಸೆಲ್ಲ ನನ್ನ ಕಡೆಗೇ ಹರಿಯುತ್ತಿದೆ. ಒಮ್ಮೆ ಗಿರೀಶಘೋಷ ನನಗೆ ಹೇಳಿದ, ‘ನವಗೋಪಾಲನ ಮನೆಯಲ್ಲಿ ಕೀರ್ತನೆ ನಡೆಯುತ್ತಿದ್ದಾಗ, ಚಿಕ್ಕ ನರೇನ ಅಲ್ಲಿಗೆ ಬಂದಿದ್ದ. ಅಲ್ಲಿಗೆ ಕಾಲುಹಾಕಿದೊಡನೆಯೆ ನಿಮ್ಮನ್ನು ವಿಚಾರಿಸಿ ಕೇಳಿದ, “ಅವರು ಎಲ್ಲಿ?” ಅಂತ. ಒಡನೆಯೆ ಅವನು ಬಾಹ್ಯಪ್ರಜ್ಞೆ ಇಲ್ಲದಂಥವನಾಗಿ ಬಹುಮಟ್ಟಿಗೆ ಜನರ ಮೇಲೆಯೆ ನಡೆದುಹೋಗಿಬಿಟ್ಟ ಅಂತ ಹೇಳಬಹುದು’ ಎಂದು. ತಮ್ಮ ಮನೆಯವರು ಬಯ್ಯಬಹುದು ಎಂಬ ಭಯವೇ ಆತನಿಗಿಲ್ಲ. ಕೆಲವು ವೇಳೆ ದಕ್ಷಿಣೇಶ್ವರಕ್ಕೆ ಬಂದು ಒಂದೇ ಸಮನೆ ಮೂರು ರಾತ್ರಿಗಳನ್ನೂ ಕಳೆದುಬಿಡುತ್ತಾನೆ.”
ಮುಖರ್ಜಿ: “ನೀವು ನಿನ್ನೆ ತಿಳಿಸಿದ ವಿಷಯಗಳನ್ನು ಕೇಳಿ ಹರಿ ಸುಮ್ಮನೆ ಮಂತ್ರಮುಗ್ಧನಾಗಿಬಿಟ್ಟಿದ್ದಾನೆ. ಆತ ನನಗೆ ಹೇಳಿದ, ‘ಅಂಥ ಸುಭಾಷಿಗಳನ್ನು ಸಾಂಖ್ಯ, ಪಾತಂಜಲ, ವೇದಾಂತ ಈ ದರ್ಶನಗಳಲ್ಲಿ ಮಾತ್ರ ನೋಡಬಹುದು. ಅವರು ಸಾಮಾನ್ಯ ಮನುಷ್ಯರಲ್ಲ’.”
ಶ್ರೀರಾಮಕೃಷ್ಣರು: “ಎಲ್ಲಿ, ನಾನು ಸಾಂಖ್ಯವನ್ನೇ ಆಗಲಿ, ವೇದಾಂತವನ್ನೇ ಆಗಲಿ ಎಂದೂ ಓದಿದವನಲ್ಲವಲ್ಲ.
“ಪೂರ್ಣಜ್ಞಾನ, ಪೂರ್ಣಭಕ್ತಿ ಎರಡೂ ಒಂದೇ. ‘ನೇತಿ’, ‘ನೇತಿ’, ಮಾರ್ಗವನ್ನು ಅನುಸರಿಸಿ ವಿಚಾರ ಕೊನೆಗೊಂಡಿತು ಅಂದರೆ ಬ್ರಹ್ಮಜ್ಞಾನ. ಬಳಿಕ ಸಾಧಕ ಯಾವುದನ್ನು ತ್ಯಜಿಸಿ ಮುಂದೆ ಹೋಗಿದ್ದನೋ, ಅದನ್ನೇ ಆತ ಬ್ರಹ್ಮ ಅಂತ ಸ್ವೀಕರಿಸುತ್ತಾನೆ. ಮೇಲ್ಚಾವಣಿಗೆ ಹತ್ತಿಹೋಗುವಾಗ ಬಹಳ ಎಚ್ಚರಿಕೆಯಿಂದ ಒಂದಾದ ಮೇಲೊಂದು ಹಂತವನ್ನು ಹತ್ತಿ ಹೋಗಬೇಕು, ಬಳಿಕ ಆತನಿಗೆ ಗೊತ್ತಾಗುತ್ತದೆ, ಯಾವ ವಸ್ತುಗಳಿಂದ-ಅಂದರೆ ಇಟ್ಟಿಗೆ, ಸುಣ್ಣ, ಮರಳು ಇವುಗಳಿಂದ – ಮೇಲ್ಚಾವಣಿ ನಿರ್ಮಿತವಾಗಿದೆಯೊ, ಅದೇ ವಸ್ತುಗಳಿಂದ ಮೆಟ್ಟಲ ಸಾಲೂ ನಿರ್ಮಿತವಾಗಿದೆ ಅಂತ.
“ಯಾರಿಗೆ ಎತ್ತರದ ಬೋಧೆ ಇರುವುದೊ ಅವನಿಗೆ ತಗ್ಗಿನ ಬೋಧೆಯೂ ಇರುತ್ತದೆ. ಜ್ಞಾನ ದೊರೆತನಂತರ ಮೇಲು ಕೀಳು ಎಲ್ಲ ಒಂದೇ ಎಂಬ ಬೋಧೆಯಾಗುತ್ತದೆ.
“ಪ್ರಹ್ಲಾದನಿಗೆ ತತ್ತ್ವಜ್ಞಾನಾವಸ್ಥೆ ಬಂದಾಗ, ಆತ ‘ಸೋಠ್ಹಮ್’ ಭಾವದಲ್ಲಿರುತ್ತಿದ್ದ. ದೇಹಬುದ್ಧಿ ತಲೆಯೆತ್ತಿದಾಗ, ‘ದಾಸೋಠ್ಹಮ್’, ಎಂಬ ಭಾವಗಳು ಬರುತ್ತಿದ್ದುವು.
“ಮನುಷ್ಯ ಭಕ್ತಿಯನ್ನು ಏಕೆ ಆಶ್ರಯಿಸಿಕೊಂಡಿರಬೇಕು? ಹಾಗೆ ಮಾಡದಿದ್ದರೆ ಬೇರೆ ಏನನ್ನು ಆಶ್ರಯಿಸಿಕೊಂಡಿರಲು ಸಾಧ್ಯ? ಬೇರೆ ಇನ್ನಾವ ರೀತಿಯಲ್ಲಿ ಆತ ದಿನಗಳನ್ನು ಕಳೆಯಬಲ್ಲ?
“ ‘ಅಹಂ’ ಎಂಬುದು ಸುಲಭವಾಗಿ ಹೋಗತಕ್ಕುದಲ್ಲ. ‘ಅಹಂ’ ಎಂಬ ಘಟವಿರುವವರೆಗೆ ‘ಸೋಠ್ಹಮ್’ ಎಂಬ ಅನುಭವವನ್ನು ಪಡೆಯಲಾಗುವುದಿಲ್ಲ. ಸಮಾಧಿ ಅವಸ್ಥೆಯಲ್ಲಿ ‘ಅಹಂ’ ಎಂಬುದು ನಿರ್ಮೂಲವಾಗುತ್ತದೆ. ಆಗ ಏನಿದೆಯೋ ಅದೇ ಇರುತ್ತದೆ. ರಾಮಪ್ರಸಾದ ಹೇಳುತ್ತಾನೆ, ‘ಹೇ ತಾಯಿ, ನನಗೆ ಬ್ರಹ್ಮಜ್ಞಾನ ದೊರೆತನಂತರ, ನಾನು ಒಳ್ಳೆಯವನೊ ಅಥವಾ ನೀನು ಒಳ್ಳೆಯವಳೊ ಎಂಬುದು ನಿನಗೇ ಗೊತ್ತಾಗುತ್ತದೆ’ ಅಂತ.
“ಎಲ್ಲಿಯವರೆಗೆ ‘ಅಹಂ’ ಎಂಬುದು ಇರುವುದೊ ಅಲ್ಲಿಯವರೆಗೆ ಭಕ್ತನ ಹಾಗೆ ಬದುಕಿರುವುದೇ ಲೇಸು; ‘ನಾನು ಭಗವಂತ’ ಅಂತ ಭಾವಿಸುವುದು ಶ್ರೇಯಸ್ಕರವಾದುದಲ್ಲ. ‘ಅಹಂ’ ಇರುವವರೆಗೆ ಭಕ್ತನ ತರಹ ಇರಬೇಕೇ ವಿನಾ ಕೃಷ್ಣನ ತರಹ ಅಲ್ಲ. ಆದರೆ ಭಗವಂತನೇ ಆಕರ್ಷಿಸಿ ಎಳೆದುಕೊಂಡುಬಿಟ್ಟರೆ ಅದು ಬೇರೆ ವಿಷಯ. ಇದು ಯಜಮಾನ ತನ್ನ ಸೇವೆಯಲ್ಲೇ ನಿರತನಾಗಿರುವ ಸೇವಕನನ್ನು ಕರೆದು, ‘ಬಾ, ಬಾ ಹತ್ತಿರ ಕುಳಿತುಕೊ. ನಾನು ಏನೊ ಅದೇ ನೀನು’ ಅಂತ ಹೇಳಿದ ಹಾಗೆ.
“ಅಲೆಗಳು ಗಂಗೆಗೆ ಸೇರಿದವೇ ವಿನಾ, ಗಂಗೆ ಅಲೆಗಳಿಗೆ ಸೇರಿದುದಲ್ಲ.
“ಶಿವನಿಗೆ ಎರಡು ಅವಸ್ಥೆ. ಆತ್ಮಾರಾಮನಾದಾಗ ‘ಸೋಠ್ಹಮ್’ ಅವಸ್ಥೆ-ಯೋಗದಲ್ಲಿ ಎಲ್ಲವೂ ಸ್ಥಿರ. ಆದರೆ ‘ಅಹಂ’ ಎಂಬುದು ಪ್ರತ್ಯೇಕವಾದದ್ದು ಎಂಬ ಭಾವನೆ ಉದಯವಾದಾಗ ‘ರಾಮ! ರಾಮ!’ ಅಂತ ನರ್ತಿಸುತ್ತಾನೆ.
“ಯಾರು ಅಚಲನೊ, ಆತ ಚಲನೂ ಹೌದು. ಈಗ ನೀನು ಸ್ಥಿರವಾಗಿ ಕುಳಿತಿರುವೆ.
ಮತ್ತೆ ನೀನೇ ಇನ್ನು ಕೆಲವು ನಿಮಿಷಗಳೊಳಗೆ ಕೆಲಸಕಾರ್ಯಗಳಲ್ಲಿ ಕೈ ಹಚ್ಚುವೆ.
“ಜ್ಞಾನ, ಭಕ್ತಿ ಎರಡೂ ಒಂದೇ ವಸ್ತು. ವ್ಯತ್ಯಾಸ ಇಷ್ಟೆ; ಒಬ್ಬ ಹೇಳುತ್ತಾನೆ, ‘ನೀರು’ ಅಂತ. ಇನ್ನೊಬ್ಬ ಹೇಳುತ್ತಾನೆ, ‘ಹಿಮಗಡ್ಡೆ’ ಅಂತ.
“ಸಾಮಾನ್ಯವಾಗಿ ಸಮಾಧಿಯಲ್ಲಿ ಎರಡು ವಿಧ. ಮೊದಲನೆಯದು ಸ್ಥಿರ, ಜಡ ಅಥವಾ ನಿರ್ವಿಕಲ್ಪ ಸಮಾಧಿ; ಇದು ಜ್ಞಾನಮಾರ್ಗವನ್ನು ಅನುಸರಿಸಿ ವಿಚಾರ ಮಾಡುತ್ತಾ ಮುಂದುವರಿದು ‘ಅಹಂ’ ಎಂಬುದನ್ನು ನಾಶಪಡಿಸಿಕೊಂಡ ಮೇಲೆ ದೊರೆಯುವ ಸಮಾಧಿ. ಎರಡನೆಯದು ಭಾವಸಮಾಧಿ; ಇದು ಭಕ್ತಿಮಾರ್ಗದ ಅನುಯಾಯಿಗಳಿಗೆ ದೊರೆಯುವ ಸಮಾಧಿ. ಇದರಲ್ಲಿ ಭಗವಂತನೊಡನೆ ಆನಂದಪಡಲು, ಆತನ ಆನಂದವನ್ನು ಆಸ್ವಾದಿಸಲು ಗೆರೆಯೋಪಾದಿಯಲ್ಲಿ ಒಂದು ಕಿಂಚಿತ್ ‘ಅಹಂ’ ಉಳಿದುಕೊಂಡಿರುತ್ತದೆ. ಕಾಮಕಾಂಚನಾಸಕ್ತಿ ಹೃದಯದಲ್ಲಿ ಇತ್ತು ಎಂದರೆ, ಇವನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ.
“ಕೇದಾರನಿಗೆ ಹೇಳಿದೆ, ‘ಮನಸ್ಸು ಕಾಮಕಾಂಚನಾಸಕ್ತವಾಗಿದ್ದರೆ ಸಾಧ್ಯವಾಗುವುದಿಲ್ಲ’ ಅಂತ. ಆತನ ಎದೆಯನ್ನು ಒಮ್ಮೆ ಸ್ಪರ್ಶಿಸಲು ಇಚ್ಛೆಯೇನೋ ಬಂತು. ಆದರೆ ಸಾಧ್ಯವಾಗಲಿಲ್ಲ. ಆಂತರ್ಯದಲ್ಲಿ ತಿರುಚು ಮುರುಚುಗಳು ತುಂಬಿದ್ದವು. ಆತನ ಆಂತರ್ಯ ಹೇಸಿಗೆ ವಾಸನೆಯ ಕೊಠಡಿಯಂತಿತ್ತು. ಒಳಕ್ಕೆ ಪ್ರವೇಶಮಾಡಲಾಗಲಿಲ್ಲ. ಸ್ವಯಂಭೂ ಲಿಂಗದ ಮೂಲ ಕಾಶಿಯವರೆಗೆ ಹಬ್ಬಿರುವ ಹಾಗೆ, ಆತನ ಸಂಸಾರಾಸಕ್ತಿ, ಪ್ರಚಂಡವಾದುದಾಗಿತ್ತು. ಸಂಸಾರಾಸಕ್ತಿ, ಕಾಮಕಾಂಚನಾಸಕ್ತಿ ಹೃದಯದಲ್ಲಿ ಇತ್ತು ಎಂದರೆ, ಅದು ದೊರೆಯದು.
“ಕಾಮಕಾಂಚನಾಸಕ್ತಿ ಯುವಕರ ಹೃದಯವನ್ನು ಇನ್ನೂ ಹೊಕ್ಕಿಲ್ಲ. ಅದಕ್ಕಾಗಿ ನಾನು ಅವರನ್ನು ಅಷ್ಟೊಂದು ಪ್ರೀತಿಸುವುದು. ಹಾಜರಾ ಹೇಳುತ್ತಾನೆ, ‘ಶ್ರೀಮಂತರ ಮನೆ ಮಕ್ಕಳನ್ನು ಅಥವಾ ಸುಂದರವಾಗಿರುವ ಯುವಕರನ್ನು ಕಂಡರೆ ಮಾತ್ರ ಅವರನ್ನು ನೀವು ಪ್ರೀತಿಸುತ್ತೀರಿ’ ಅಂತ. ಅದು ಹಾಗಿರುವುದಾದರೆ, ಹರೀಶ, ಲಾಟು, ನರೇಂದ್ರ ಇವರನ್ನೆಲ್ಲ ಪ್ರೀತಿಸುತ್ತೇನಲ್ಲ ಏಕೆ? ನರೇಂದ್ರನಿಗೆ ಉಪ್ಪು ಕೊಂಡುಕೊಂಡು ಅನ್ನ ತಿನ್ನುವುದಕ್ಕೆ ಒಂದು ಕಾಸಿಗೂ ಗತಿಯಿಲ್ಲವಲ್ಲ.
“ಯುವಕರ ಹೃದಯವನ್ನು ಕಾಮಕಾಂಚನಾಸಕ್ತಿ ಇನ್ನೂ ಹೊಕ್ಕಿಲ್ಲ. ಅದಕ್ಕಾಗಿಯೇ ಅವರ ಆಂತರ್ಯ ಬಹಳ ಶುದ್ಧ. ಅದೂ ಅಲ್ಲದೆ ಇಲ್ಲಿಗೆ ಬರುತ್ತಿರುವ ಯುವಕರಲ್ಲನೇಕರು ನಿತ್ಯಸಿದ್ಧರು; ಆಜನ್ಮದಿಂದಲೇ ಭಗವಂತನ ಕಡೆಗೆ ಮನಸ್ಸು. ಅದು ಉದ್ಯಾನವನವನ್ನು ಚೊಕ್ಕಟಮಾಡುತ್ತಿರುವಾಗ ಇದ್ದಕ್ಕಿದ್ದಹಾಗೆ ದೊರೆಯುವ ನೀರು-ಕೊಳಾಯಿಯ ಹಾಗೆ. ನೀರು ಅದರಿಂದ ಸುಮ್ಮನೆ ‘ಕಲಕಲ’ ಅಂತ ನುಗ್ಗಿ ಬರಲಾರಂಭಿಸುತ್ತದೆ.”
ಬಲರಾಮ: “ಮಹಾಶಯರೆ, ಈ ಸಂಸಾರ ಮಿಥ್ಯಾ ಎಂಬ ಜ್ಞಾನ ಒಮ್ಮೆಗೆ ಪೂರ್ಣನಿಗೆ ಬಂದ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಜನ್ಮಾಂತರದ ಫಲ. ಹಿಂದಿನ ಜನ್ಮಗಳಲ್ಲಿ ಎಲ್ಲಾ ಸಾಧನೆಗಳನ್ನೂ ಮಾಡಿ ಮುಗಿಸಿದ್ದಾನೆ. ಹುಟ್ಟಿ ಸಾಯುವುದು ಶರೀರವೇ ವಿನಾ ಆತ್ಮವಲ್ಲ.
“ಇವರ ಜೀವನ ಯಾವ ರೀತಿಯದು ಗೊತ್ತೆ? ಕೆಲವು ಗಿಡಗಳ ಹಾಗೆ, ಮೊದಲು ಕಾಯಿ ಬಿಡುವುದು ಬಳಿಕ ಹೂ ಬಿಡುವುದು. ಮೊದಲು ಇವರಿಗೆ ಭಗವಂತನ ದರ್ಶನ ದೊರೆಯುತ್ತದೆ; ಬಳಿಕ ಆತನ ಗುಣಮಹಿಮೆಯನ್ನು ಕೇಳುತ್ತಾರೆ; ಕೊನೆಗೆ ಆತನಲ್ಲಿ ಐಕ್ಯವಾಗುತ್ತಾರೆ. ನಿರಂಜನನ ಕಡೆ ನೋಡು. ಆತನಿಗೆ ಸಾಲಸೋಲ ಯಾವುದೂ ಇಲ್ಲ. ಕರೆ ಬಂದೊಡನೆಯೇ ಹೊರಡಲು ಸಿದ್ಧನಾಗಿದ್ದಾನೆ. ಆದರೆ ತಾಯಿ ಬದುಕಿರುವವರೆಗೆ ಆಕೆಯನ್ನು ಸಲಹಬೇಕಾದ್ದೆ. ನಾನು ನನ್ನ ತಾಯಿಯನ್ನು ಹೂವುಚಂದನಗಳಿಂದ ಪೂಜಿಸುತ್ತಿದ್ದೆ. ಜಗಜ್ಜನನಿಯೆ ನಮಗೆ ಜನ್ಮವೀಯುವ ತಾಯಿಯಾಗಿ ಜನ್ಮ ತಾಳುತ್ತಾಳೆ.
“ಎಲ್ಲಿಯವರೆಗೆ ವ್ಯಕ್ತಿ ತನ್ನ ಶರೀರ ರಕ್ಷಣೆಯ ಕಡೆ ಗಮನವೀಯಬೇಕಾಗಿರುವುದೊ ಅಲ್ಲಿಯವರೆಗೆ ಆತ ತನ್ನ ತಾಯಿಯ ಯೋಗಕ್ಷೇಮದ ಕಡೆಗೂ ಗಮನವೀಯಬೇಕು. ಅದಕ್ಕಾಗಿ ನಾನು ಹಾಜರಾನಿಗೆ ಹೇಳಿದೆ, ‘ತನಗೇನಾದರೂ ನೆಗಡಿ ಬಂದಿತು ಅಂದರೆ, ಮನುಷ್ಯ ಮೆಣಸು, ಬೆಲ್ಲ, ಉಪ್ಪಿಗಾಗಿ ಹುಡುಕಿಕೊಂಡು ಹೋಗುತ್ತಾನೆ. ಎಲ್ಲಿಯವರೆಗೆ ತನ್ನ ಸ್ವಂತ ದೇಹರಕ್ಷಣೆ ಎಂಬ ಭಾವನೆ ಇರುವುದೊ, ಅಲ್ಲಿಯವರೆಗೆ ಆತ ತನ್ನ ಸ್ವಂತ ತಾಯಿಯ ಯೋಗಕ್ಷೇಮವನ್ನು ನೋಡಿಕೊಳ್ಳಲೇಬೇಕು’ ಅಂತ.
“ಯಾವಾಗ ತನ್ನ ಶರೀರದ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳಲಾಗದ ಸ್ಥಿತಿ ಬಂದುಬಿಟ್ಟಿತು ಅಂದರೆ, ಆಗ ಅದು ಬೇರೆ ವಿಷಯ. ಆಗ ಭಗವಂತನೇ ಸಕಲ ಭಾರಗಳನ್ನು ಹೊತ್ತುಕೊಂಡುಬಿಡುತ್ತಾನೆ. ಅಪ್ರಾಪ್ತ ವಯಸ್ಕ ತನ್ನ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳಲಾರ; ಅದಕ್ಕಾಗಿಯೇ ಆತನಿಗೊಬ್ಬ ರಕ್ಷಕನನ್ನು ನೇಮಿಸುವುದು. ಚೈತನ್ಯ ದೇವ ಅಪ್ರಾಪ್ತ ವಯಸ್ಕನೋಪಾದಿಯಲ್ಲಿ ತನ್ನ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳಲಾರದವನಾಗಿದ್ದ.”
ಮಾಸ್ಟರ್ ಗಂಗಾಸ್ನಾನಕ್ಕಾಗಿ ಹೊರಟ.
ಪರಮಹಂಸರು ಬಲರಾಮನ ಒಂದು ಚಿಕ್ಕ ಕೊಠಡಿಯಲ್ಲಿ ಭಕ್ತರೊಡನೆ ಮಾತುಕತೆ ಗಳನ್ನಾಡುತ್ತಿದ್ದಾರೆ. ಮಹೇಂದ್ರಮುಖರ್ಜಿ, ಬಲರಾಮ, ತುಳಸಿ, ಹರಿಪದ, ಗಿರೀಶ ಇವರೇ ಮೊದಲಾದ ಭಕ್ತರು ಅಲ್ಲಿ ಕುಳಿತುಕೊಂಡಿದ್ದಾರೆ. ಮಾಸ್ಟರ್ ಗಂಗೆಯಿಂದ ಹಿಂದಿರುಗಿ ಬಂದು ಪರಮಹಂಸರಿಗೆ ಪ್ರಣಾಮಮಾಡಿ ಅವರ ಹತ್ತಿರ ಕುಳಿತುಕೊಂಡ. ಪರಮಹಂಸರು ತಮಗಾಗಿದ್ದ ಕೆಲವು ಅದ್ಭುತ ಭಗವಂತನ ದರ್ಶನಗಳ ಸಂಬಂಧವಾಗಿ ವಿವರಿಸಿ ಹೇಳುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಒಂದು ದಿವಸ ಕಾಳಿಕಾದೇವಾಲಯದಲ್ಲಿ ತೋತಾಪುರಿ ಮತ್ತು ಹಲಧಾರಿ ಅಧ್ಯಾತ್ಮರಾಮಾಯಣವನ್ನು ಓದುತ್ತಿದ್ದರು. ಇದ್ದಕ್ಕಿದ್ದಹಾಗೆ ನಾನು ಒಂದು ನದಿಯನ್ನು ಕಂಡ ಹಾಗಾಯಿತು. ಅದರ ಎರಡು ಪಾರ್ಶ್ವಗಳಲ್ಲಿಯೂ ವನವಿತ್ತು. ಅದರಲ್ಲಿದ್ದ ಗಿಡಮರಗಳೆಲ್ಲ ಹಸುರೇ ಹಸುರಾಗಿದ್ದುವು. ರಾಮಲಕ್ಷ್ಮಣರು ಆ ಮಾರ್ಗವಾಗಿ ಚಡ್ಡಿ ತೊಟ್ಟುಕೊಂಡು ಹೋಗುತ್ತಿದ್ದುದನ್ನು ನೋಡಿದೆ. ಇನ್ನೊಂದು ದಿವಸ ಕುಟೀರದ ಎದುರಿಗೆ ಅರ್ಜುನನ ರಥವನ್ನು ನೋಡಿದೆ. ಶ್ರೀಕೃಷ್ಣ ಅದರಲ್ಲಿ ಸಾರಥಿಯ ವೇಷ ಧರಿಸಿ ಕುಳಿತಿದ್ದ. ಆ ದೃಶ್ಯ ಇನ್ನೂ ನನ್ನ ಕಣ್ಣಿಗೆ ಕಟ್ಟಿದ ಹಾಗೇ ಇದೆ. ಮತ್ತೊಂದು ದಿವಸ ಕಾಮಾರಪುಕುರದಲ್ಲಿ ನಾನು ಕೀರ್ತನೆ ಕೇಳುತ್ತಿದ್ದಾಗ, ನನ್ನ ಎದುರಿಗೇ ಶ್ರೀ ಗೌರಾಂಗದೇವ ನಿಂತಿರುವುದನ್ನು ನೋಡಿದೆ.
“ನನ್ನ ಸಾಧನೆಯ ಸಮಯದಲ್ಲಿ ಈ ಶರೀರದಿಂದಲೇ ಹೊರಕ್ಕೆ ಬಂದು ಒಬ್ಬ ದಿಗಂಬರ ನನ್ನೊಡನೆಯೇ ಸತತ ಇರುತ್ತಿದ್ದ. ನಾನು ಆತನೊಡನೆ ಹುಡುಗಾಟವಾಡುತ್ತಿದ್ದೆ. ಬಾಲಕನಂತೆ ವರ್ತಿಸುತ್ತಿದ್ದೆ. ಆತ ಒಬ್ಬ ಪರಮಹಂಸ. ಆ ಸಮಯದಲ್ಲಿ ಕಂಡುಬಂದ ಎಲ್ಲಾ ಭಗವಂತ ದರ್ಶನಗಳನ್ನೂ ನಿಮಗೆ ವರ್ಣಿಸಿ ಹೇಳಲಾಗುವುದಿಲ್ಲ. ಆಗ ನನಗೆ ಅಜೀರ್ಣ ರೋಗವಿತ್ತು. ಅವು ನನಗಾದ ಹಿನ್ನಲೆಯಲ್ಲಿಯೇ ನನ್ನ ಅಜೀರ್ಣರೋಗವೂ ಪ್ರಬಲವಾಗುತ್ತಿತ್ತು. ಅದಕ್ಕಾಗಿ ಅವು ನನಗಾಗದೆ ಇರಲೆಂದು ಅವನ್ನು ನೋಡಿದೊಡನೆಯೇ ಥೂ! ಥೂ! ಅಂತ ನೆಲದ ಮೇಲೆ ಉಗುಳುತ್ತಿದ್ದೆ. ಆದರೂ ಅವು ಭೂತದೋಪಾದಿಯಲ್ಲಿ ನನ್ನನ್ನು ಹಿಂಬಾಲಿಸಿ ನನ್ನನ್ನು ಮೆಟ್ಟಿಕೊಂಡುಬಿಡುತ್ತಿದ್ದುವು. ಆಗ ಯಾವಾಗ ನೋಡಿದರೂ ಭಾವಾವಿಷ್ಟನಾಗಿಯೇ ಇರುತ್ತಿದ್ದೆ. ಹಗಲೂ ಇರುಳೂ ಯಾವ ರೀತಿಯಾಗಿ ಕಳೆದುಹೋಗುತ್ತಿತ್ತೋ ಅದು ಗೊತ್ತೇ ಆಗುತ್ತಿರಲಿಲ್ಲ. ಆ ರೀತಿಯ ದರ್ಶನವಾದ ಮಾರನೆ ದಿವಸವೇ ಕಡುತರವಾದ ಭೇದಿ ಆರಂಭವಾಗಿಬಿಡುತ್ತಿತ್ತು. ಆಗ ನನಗಾದ ಭಾವಾವೇಶವೆಲ್ಲ ಕರುಳನ್ನು ಕೊರೆದುಕೊಂಡು ಹೊರಕ್ಕೆ ಬರುತ್ತಿರುವುವೊ ಏನೊ ಎಂಬಂತೆ ತೋರುತ್ತಿತ್ತು.
ಗಿರೀಶ ನಗುತ್ತ: “ನಾನು ನಿಮ್ಮ ಜಾತಕವನ್ನು ಪರೀಕ್ಷಿಸಿ ನೋಡುತ್ತಿದ್ದೇನೆ.”
ಶ್ರೀರಾಮಕೃಷ್ಣರು ನಗುತ್ತ: “ನಾನು ಹುಟ್ಟಿದುದು ಫಾಲ್ಗುಣ ಶುಕ್ಲದ್ವಿತೀಯ. ನನ್ನ ಜನ್ಮರಾಶಿಯಲ್ಲಿ ರವಿ, ಚಂದ್ರ, ಬುಧರು ಇರುವುದೊಂದೇ ವಿನಾ ಇನ್ನು ಬೇರೆ ಮಹತ್ತಾದುದು ಏನೂ ಇಲ್ಲ.”
ಗಿರೀಶ: “ನೀವು ಕುಂಭ ರಾಶಿಯಲ್ಲಿ ಜನ್ಮವೆತ್ತಿದ್ದೀರಿ. ಶ್ರೀರಾಮಚಂದ್ರ ಕರ್ಕಾಟಕ ರಾಶಿಯಲ್ಲಿಯೂ, ಶ್ರೀಕೃಷ್ಣ ವೃಷಭರಾಶಿಯಲ್ಲಿಯೂ ಜನ್ಮವೆತ್ತಿದ್ದಾರೆ. ಶ್ರೀಚೈತನ್ಯದೇವ ಸಿಂಹ ರಾಶಿಯಲ್ಲಿ ಜನ್ಮತಾಳಿದ್ದಾನೆ.”
ಶ್ರೀರಾಮಕೃಷ್ಣರು: “ನನಗೆ ಎರಡು ಆಸೆಗಳಿದ್ದುವು; ಭಕ್ತರ ರಾಜನಾಗಬೇಕು ಎಂಬುದು ಮೊದಲನೆಯದು. ಎರಡನೆಯದು ನಾನೊಬ್ಬ ಒಣ ಸಾಧು ಆಗಕೂಡದೆಂಬುದು.”
ಗಿರೀಶ ನಗುತ್ತ: “ನೀವು ಸಾಧನೆ ಮಾಡಬೇಕಾಗಿ ಬಂತಲ್ಲ ಏಕೆ?”
ಶ್ರೀರಾಮಕೃಷ್ಣರು (ನಗುತ್ತ): “ಶಿವನನ್ನು ತನ್ನ ಪತಿಯನ್ನಾಗಿ ಪಡೆಯಲು ಭಗವತಿಯೂ ಅನೇಕ ಕಠೋರ ಸಾಧನೆಗಳನ್ನು ಮಾಡಬೇಕಾಗಿ ಬಂತು. ಆಕೆ ಪಂಚತಪ, ಚಳಿಗಾಲದಲ್ಲಿ ಕುತ್ತಿಗೆವರೆಗೆ ನೀರಿನಲ್ಲಿ ನಿಂತಿರುವುದು, ಎವೆಯಿಕ್ಕದೆ ಸೂರ್ಯನನ್ನೇ ನೋಡುತ್ತಿರುವುದು ಇವೇ ಮೊದಲಾದ ಸಾಧನೆಗಳನ್ನು ಮಾಡಿದಳು. ಭಗವಾನ್ ಶ್ರೀಕೃಷ್ಣನೂ ರಾಧಾಯಂತ್ರವನ್ನು ಆಧಾರವಾಗಿಟ್ಟುಕೊಂಡು ಅನೇಕ ಸಾಧನೆಗಳನ್ನು ಮಾಡಿದನು. ಯಂತ್ರ ಎಂಬುದು ಬ್ರಹ್ಮಯೋನಿಯ ಪ್ರತೀಕ. ಅದರ ಪೂಜೆಯೇ ಭಗವಂತನ ಪೂಜೆ ಮತ್ತು ಧ್ಯಾನ. ಈ ಬ್ರಹ್ಮಯೋನಿಯಿಂದ ಕೋಟಿ ಕೋಟಿ ಬ್ರಹ್ಮಾಂಡಗಳು ಉತ್ಪನ್ನವಾಗುತ್ತವೆ. ಬಹಳ ಗುಹ್ಯವಾದ ವಿಷಯ. ಬಿಲ್ವಮರದ ಕೆಳಗೆ ಅನೇಕ ದರ್ಶನಗಳಾಗುತ್ತಿದ್ದುವು.
“ನಾನು ತಂತ್ರಶಾಸ್ತ್ರಾನುಸಾರ ಆ ಮರದ ಕೆಳಗೆ ಅನೇಕ ಸಾಧನೆಗಳನ್ನು ಮಾಡಿದೆ. ಮನುಷ್ಯನ ತಲೆಬುರುಡೆ ಇವೇ ಮೊದಲಾದುವು ಬೇಕಾಗಿದ್ದುವು. ಭೈರವಿ ಬ್ರಾಹ್ಮಿಣಿ ಎಲ್ಲವನ್ನೂ ನನಗಾಗಿ ಸಂಗ್ರಹಿಸುತ್ತಿದ್ದಳು. ಆಗ ನಾನು ಅನೇಕ ಆಸನಗಳನ್ನೂ ಅಭ್ಯಾಸ ಮಾಡಿದೆ.
“ನನಗೆ ಇನ್ನೊಂದು ವಿಚಿತ್ರವಾದ ಅನುಭವವಾಗುತ್ತಿತ್ತು. ಎಂದಾದರೂ ಸ್ವಲ್ಪ ಅಹಂಕಾರಿಯಾಗಿ ವರ್ತಿಸಿದೆನೆಂದರೆ, ಮಾರನೆ ದಿನವೇ ರೋಗಗ್ರಸ್ತನಾಗುತ್ತಿದ್ದೆ.”
ಪರಮಹಂಸರ ಬಾಯಿಂದ ಬಂದ ಈ ಅಸದೃಶ ಅನುಭವಗಳನ್ನು ಕೇಳಿ ಮಾಸ್ಟರ್ ಆಶ್ಚರ್ಯಚಕಿತನಾಗಿ ತೆರೆಯ ಮೇಲಿನ ಗೊಂಬೆಯೋಪಾದಿಯಲ್ಲಿ ಕುಳಿತುಕೊಂಡಿದ್ದಾನೆ. ಉಳಿದ ಭಕ್ತರೂ ಸ್ತಂಭೀಭೂತರಾಗಿ ಕುಳಿತಿದ್ದಾರೆ. ಕೊಠಡಿಯಲ್ಲಿ ನಿಶ್ಶಬ್ದತೆ ಸುಮ್ಮನೆ ತಾಂಡವವಾಡುತ್ತಿದೆ.
ತುಳಸಿ ಮಾಸ್ಟರನ್ನು ತೋರಿಸಿ: “ಈತ ನಗುವುದೇ ಇಲ್ಲವಲ್ಲ.”
ಶ್ರೀರಾಮಕೃಷ್ಣರು: “ಆಂತರ್ಯದಲ್ಲಿ ನಗುತ್ತಾನೆ. ಫಲ್ಗುನದಿಯ ಮೇಲ್ಭಾಗ ಮರಳಿನಿಂದ ತುಂಬಿಕೊಂಡಿದೆ. ಆದರೆ ಅದನ್ನು ಸ್ವಲ್ಪ ಬಗೆದು ನೋಡಿದರೆ ನೀರು ಬಂದು ಬಿಡುತ್ತದೆ.”
(ಮಾಸ್ಟರಿಗೆ) “ನೀನು ನಾಲಗೆಯನ್ನು ಉಜ್ಜುತ್ತಿಲ್ಲವೇನು? ದಿವಸವೂ ನಾಲಗೆಯನ್ನು ಉಜ್ಜಬೇಕು.”
ಬಲರಾಮ: ‘ಒಂದು ವಿಷಯ. ಪೂರ್ಣನು ನಿಮ್ಮ ವಿಷಯವಾಗಿ ಮಾಸ್ಟರ ಮೂಲಕ ಬಹಳವಾಗಿ ಕೇಳಿದ್ದಾನೆ-”
ಶ್ರೀರಾಮಕೃಷ್ಣರು: “ಬಹುಶಃ ನನ್ನ ಮೊಟ್ಟಮೊದಲ ಆಧ್ಯಾತ್ಮಿಕ ಅನುಭವಗಳ ವಿಷಯವಾಗಿ ಇರಬೇಕು.”
ಬಲರಾಮ: “ಪೂರ್ಣನು ಸ್ವಾಭಾವಿಕವಾಗಿಯೇ ಸಿದ್ಧನಾಗಿರುವುದಾದರೆ, ಮಾಸ್ಟರಿಂದ ಆತನಿಗೆ ದೊರೆಯುವ ಸಹಾಯವೇನು?”
ಶ್ರೀರಾಮಕೃಷ್ಣರು: “ಆತ ಹೇತುಮಾತ್ರ.”
ಈಗ ಘಂಟೆ ಒಂಭತ್ತು. ಪರಮಹಂಸರು ಇನ್ನೇನು ದಕ್ಷಿಣೇಶ್ವರಕ್ಕೆ ಹೊರಡುವುದರಲ್ಲಿದ್ದಾರೆ. ಅದಕ್ಕೆ ತಕ್ಕ ವ್ಯವಸ್ಥೆಗಳಾಗುತ್ತಿವೆ. ಬಾಗ್ಬಜಾರಿನಲ್ಲಿ ಒಂದು ದೋಣಿ ಇವರಿಗಾಗಿ ಸಿದ್ಧವಾಗಿ ನಿಂತಿದೆ. ಭಕ್ತರೆಲ್ಲರೂ ಪರಮಹಂಸರಿಗೆ ಪ್ರಣಾಮಮಾಡಿದರು.
ಪರಮಹಂಸರು ಒಬ್ಬಿಬ್ಬರು ಭಕ್ತರೊಡನೆ ದೋಣಿಯಲ್ಲಿ ಕುಳಿತುಕೊಂಡರು. ಗೋಪಾಲನ ತಾಯಿ ಅದೇ ದೋಣಿಯನ್ನು ಹತ್ತಿದಳು. ಆಕೆ ದಕ್ಷಿಣೇಶ್ವರದಲ್ಲಿ ಮಧ್ಯಾಹ್ನದವರೆಗೆ ಇದ್ದು ಸಾಯಂಕಾಲ ಕಾಮಾರಹಾಟಿಗೆ ಹೋಗುತ್ತಾಳೆ. ಬಹುಮಟ್ಟಿಗೆ ರಾಖಾಲನೇ ದಕ್ಷಿಣೇಶ್ವರದಲ್ಲಿ ಉಪಯೋಗಿಸುತ್ತಿದ್ದ ಒಂದು ಕ್ಯಾಂಪ್ಕಾಟನ್ನು ರಿಪೇರಿಗಾಗಿ ಕಲ್ಕತ್ತಕ್ಕೆ ಕಳುಹಿಸಿತ್ತು. ಆದನ್ನೂ ಈಗ ದೋಣಿಗೆ ತಂದು ಹಾಕಿದರು. ದೋಣಿ ದಕ್ಷಿಣೇಶ್ವರಕ್ಕೆ ಹೊರಟಿತು.
1. ಪರಮಹಂಸರ ಶರೀರದೊಳಗಿರೋನು ?