೨೩ನೆ ಮೇ ೧೮೮೫, ಜ್ಯೇಷ್ಠ ಶುಕ್ಲ ದಶಮಿ, ಶನಿವಾರ
ಪರಮಹಂಸರು ರಾಮಚಂದ್ರದತ್ತನ ಮನೆಯ ನೆಲದಂತಸ್ತಿನಲ್ಲಿರುವ ಬೈಠಕ್ಖಾನೆ ಯಲ್ಲಿ ಕುಳಿತುಕೊಂಡು ಭಕ್ತರೊಡನೆ ಆನಂದದಿಂದ ಮಾತುಕತೆಗಳನ್ನಾಡುತ್ತಿದ್ದಾರೆ. ಅವರ ಮುಂದುಗಡೆ ಮಹಿಮಚರಣ, ಪಕ್ಕದಲ್ಲಿ ಮಾಸ್ಟರ್ ಕುಳಿತುಕೊಂಡಿದ್ದಾರೆ. ಅವರ ಸುತ್ತ ಮುತ್ತಲೂ ಪಲ್ಟು, ಭವನಾಥ, ನಿತ್ಯಗೋಪಾಲ, ಹರಮೋಹನ ಮತ್ತು ಇನ್ನೂ ಕೆಲವು ಭಕ್ತರು ಕುಳಿತಿದ್ದಾರೆ. ಸಮಯ ಆಗ ಸಾಯಂಕಾಲ ಐದು. ಪರಮಹಂಸರು ಭಕ್ತರ ಕ್ಷೇಮಸಮಾಚಾರವನ್ನು ವಿಚಾರಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಇನ್ನೂ ಚಿಕ್ಕ ನರೇನ ಬರಲಿಲ್ಲವೇನು?”
ಕೆಲವು ನಿಮಿಷಗಳಾದ ನಂತರ ಚಿಕ್ಕ ನರೇನ ಬಂದು ಪರಮಹಂಸರಿಗೆ ಪ್ರಣಾಮ ಮಾಡಿ ಒಂದು ಕಡೆ ಕುಳಿತುಕೊಂಡ.
ಶ್ರೀರಾಮಕೃಷ್ಣರು: “ಅವನು ಬರಲಿಲ್ಲವೇನು?”
ಮಾಸ್ಟರ್: “ಯಾರು?”
ಶ್ರೀರಾಮಕೃಷ್ಣರು: “ಕಿಶೋರಿ, ಗಿರೀಶಘೋಷ ಬರುವುದಿಲ್ಲವೇನು? ನರೇಂದ್ರನ ಸಮಾಚಾರವೇನು?”
ಕೆಲವು ನಿಮಿಷಗಳಾದ ನಂತರ ನರೇಂದ್ರ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮ ಮಾಡಿದ.
ಶ್ರೀರಾಮಕೃಷ್ಣರು (ಭಕ್ತರಿಗೆ): “ಕೇದಾರ ಇಲ್ಲಿ ಇದ್ದಿದ್ದರೆ ಬಹಳ ಚೆನ್ನಾಗಿತ್ತು. ಗಿರೀಶನಿಗೂ ಆತನಿಗೂ ಒಳ್ಳೇ ಹೊಂದಿಕೆ. (ನಗುತ್ತ ಮಹಿಮಚರಣನಿಗೆ) ಆತನೂ ಹಾಗೇ ಹೇಳುತ್ತಾನೆ.”1
ಕೊಠಡಿಯಲ್ಲಿ ಕೀರ್ತನೆ ನಡೆಯುವ ಹಾಗೆ ರಾಮ ವ್ಯವಸ್ಥೆ ಮಾಡಿದ್ದಾನೆ. ಕೀರ್ತನಕಾರ ಅಂಜಲಿಬದ್ಧನಾಗಿ ಪರಮಹಂಸರಿಗೆ ತಿಳಿಸಿದ, “ತಾವು ಅಪ್ಪಣೆ ಕೊಡಿಸುವುದಾದರೆ ಕೀರ್ತನೆ ಆರಂಭ ಮಾಡುತ್ತೇನೆ.”
ಪರಮಹಂಸರು ಸ್ವಲ್ಪ ನೀರನ್ನು ಕುಡಿದ ಬಳಿಕ ತಮ್ಮ ಮಸಾಲೆ ಚೀಲದಿಂದ ಕಿಂಚಿತ್ ಮಸಾಲೆಯನ್ನು ತೆಗೆದುಕೊಂಡರು. ಅನಂತರ ಮಾಸ್ಟರಿಗೆ ಆ ಚೀಲವನ್ನು ಕಟ್ಟಿಡುವಂತೆ ಹೇಳಿದರು.
ಕೀರ್ತನೆ ನಡೆಯುತ್ತದೆ. ಮೃದಂಗದ ಶಬ್ದವನ್ನು ಕೇಳಿ ಪರಮಹಂಸರು ಭಾವಾವಿಷ್ಟ ರಾಗಿದ್ದಾರೆ. ಪೀಠಿಕೆಯನ್ನು ಕೇಳುತ್ತ ಕೇಳುತ್ತ ಇದ್ದ ಹಾಗೆ ಅವರು ಗಾಢಸಮಾಧಿಸ್ಥರಾಗಿ ಬಿಟ್ಟಿದ್ದಾರೆ. ಹತ್ತಿರವೆ ಕುಳಿತಿದ್ದ ನಿತ್ಯಗೋಪಾಲನ ತೊಡೆಯ ಮೇಲೆ ತಮ್ಮ ಕಾಲನ್ನು ನೀಡಿ ಬಿಟ್ಟಿದ್ದಾರೆ. ನಿತ್ಯಗೋಪಾಲನೂ ಭಾವೋನ್ಮತ್ತನಾಗಿ ಅಳುತ್ತಿದ್ದಾನೆ. ಭಕ್ತರೆಲ್ಲರೂ ಆಶ್ಚರ್ಯ ಚಕಿತರಾಗಿ ನೆಟ್ಟದೃಷ್ಟಿಯಿಂದ ಪರಮಹಂಸರ ಸಮಾಧ್ಯವಸ್ಥೆಯನ್ನು ನೋಡುತ್ತಿದ್ದಾರೆ.
ಪರಮಹಂಸರು ಕಿಂಚಿತ್ ಪ್ರಕೃತಿಸ್ಥರಾಗಿ ಮಾತಾಡುತ್ತಿದ್ದಾರೆ, ಅವರು ಹೇಳುತ್ತಿದ್ದಾರೆ, “ನಿತ್ಯದಿಂದ ಲೀಲೆಗೆ, ಲೀಲೆಯಿಂದ ನಿತ್ಯಕ್ಕೆ. (ನಿತ್ಯಗೋಪಾಲನಿಗೆ) ನಿನ್ನ ಆದರ್ಶ ಯಾವುದು?”
ನಿತ್ಯಗೋಪಾಲ (ವಿನಯದಿಂದ): “ಎರಡೂ ಒಳ್ಳೆಯವೆ.”
ಶ್ರೀರಾಮಕೃಷ್ಣರು (ತಮ್ಮ ಕಣ್ಣನ್ನು ಮುಚ್ಚಿ): “ಇದು ಸತ್ಯವೇ? ಕಣ್ಣನ್ನು ಮುಚ್ಚಿದಾಗ ಮಾತ್ರ ಭಗವಂತ ಇರುತ್ತಾನೆ, ತೆರೆದಾಗ ಇಲ್ಲ ಅಂತಲೇನು? ಯಾರದು ನಿತ್ಯವೊ, ಆತನದೆ ಲೀಲೆ; ಯಾರದು ಲೀಲೆಯೊ, ಆತನದೆ ನಿತ್ಯ. (ಮಹಿಮಚರಣನಿಗೆ) ನೋಡು, ನಿನಗೆ ಒಂದು ವಿಷಯ ತಿಳಿಸಬೇಕು ಅಂತ ಇದ್ದೇನೆ.”
ಮಹಿಮಚರಣ: “ಮಹಾಶಯರೆ, ಎರಡೂ ಆತನ ಇಚ್ಛೆಗೆ ಅನುಸಾರವಾದುವೆ.”
ಶ್ರೀರಾಮಕೃಷ್ಣರು: “ಕೆಲವರು ಮನೆಯ ಏಳನೆಯ ಅಂತಸ್ತಿನವರೆಗೆ ಹತ್ತಿಬಿಡಬಲ್ಲರು. ಆದರೆ ಕೆಳಗೆ ಇಳಿಯಲಾರರು. ಆದರೆ ಕೆಲವರು ಅಲ್ಲಿಯವರೆಗೆ ಹತ್ತಿದ ನಂತರ ಇಚ್ಛೆ ಬಂದಾಗ ಕೆಳಗಿನ ಅಂತಸ್ತುಗಳಿಗೆ ಬಂದುಹೋಗಿ ಮಾಡಬಲ್ಲರು.
“ಉದ್ಧವ ಗೋಪಿಯರಿಗೆ ಹೇಳಿದ, ‘ನೀವು ಯಾರನ್ನು ಕೃಷ್ಣ ಅಂತ ಕರೆಯುತ್ತೀರೊ ಆತ ಸರ್ವಭೂತಗಳಲ್ಲಿಯೂ ಅಂತರ್ಯಾಮಿಯಾಗಿ ಇದ್ದಾನೆ; ಆತನೇ ಜೀವಜಗತ್ತೂ ಆಗಿದ್ದಾನೆ’ ಅಂತ.
“ಅದಕ್ಕಾಗಿಯೇ ನಾನು ಹೇಳುವುದು ಕಣ್ಣು ಮುಚ್ಚಿಕೊಂಡಿರುವಾಗ ಮಾತ್ರ ಆತನ ಧ್ಯಾನ ಸಾಧ್ಯ, ತೆರೆದಾಗ ಇಲ್ಲ ಅಂತಲೇನು?”
ಮಹಿಮಚರಣ: “ನನ್ನದೊಂದು ಪ್ರಶ್ನೆ; ಭಕ್ತನಿಗೆ ಒಂದಲ್ಲ ಒಂದು ದಿನ ನಿರ್ವಾಣ ಬೇಕಾಗುತ್ತದೆ. ಅಲ್ಲವೇ?”
ಶ್ರೀರಾಮಕೃಷ್ಣರು: “ಆತನಿಗೆ ನಿರ್ವಾಣ ಬೇಕೇಬೇಕಾಗುತ್ತದೆ ಎಂಬ ನಿಯಮವೇನಿಲ್ಲ. ನಿತ್ಯ-ಕೃಷ್ಣನಿದ್ದಾನೆ, ಆತನೊಡನೆ ನಿತ್ಯ -ಭಕ್ತರೂ ಇದ್ದಾರೆ ಅಂತ ಕೆಲವರ ಅಭಿಮತ. ಆತ ಚಿನ್ಮಯ ಶ್ಯಾಮ, ಆತನದು ಚಿನ್ಮಯ ಧಾಮ ಅಂತ. ಚಂದ್ರನೊಡನೆಯೇ ನಕ್ಷತ್ರಗಳೂ ಇರುವಂತೆ ನಿತ್ಯ-ಕೃಷ್ಣನೊಡನೆ ನಿತ್ಯ-ಭಕ್ತರೂ ಇದ್ದಾರೆ. ನೀನೇ ಹೇಳುತ್ತೀಯೆ, ‘ಒಳಗೂ ಹೊರಗೂ ಆತನ ಕಾಣದ ಈ ಜಪತಪದಿಂದೇನು?’ ಅಂತ. ನಾನು ನಿನಗಾಗಲೆ ತಿಳಿಸಿದ್ದೇನೆ, ವಿಷ್ಣುವಿನ ಅಂಶದಿಂದ ಜನ್ಮವೆತ್ತಿರುವವರ ಹೃದಯವನ್ನು ಭಕ್ತಿ ಸಮೂಲಾಗ್ರವಾಗಿ ಬಿಟ್ಟು ಹೋಗದು ಅಂತ. ನಾನು ಒಮ್ಮೆ ಒಬ್ಬ ಜ್ಞಾನಿಯ (ತೋತಾಪುರಿಯ) ಕೈಗೆ ಸಿಕ್ಕಿಬಿದ್ದೆ. ಆತನು ನನಗೆ ಹನ್ನೊಂದು ತಿಂಗಳ ಕಾಲ ವೇದಾಂತ ಶ್ರವಣ ಮಾಡಿಸಿದ. ಆದರೂ ಭಕ್ತಿಯ ಬೀಜ ಮಾತ್ರ ನನ್ನ ಹೃದಯವನ್ನು ಬಿಟ್ಟು ಹೋಗಲಿಲ್ಲ. ನನ್ನ ಮನಸ್ಸನ್ನು ಯಾವ ಕಡೆಗೆ ಒಯ್ದರೂ ಅದು ಮತ್ತೆ ಮತ್ತೆ ಭಗವತಿಯ ಪಾದಪದ್ಮಗಳ ಕಡೆಗೆ ಓಡಿ ಓಡಿ ಬರುತ್ತಿತ್ತು. ನಾನು ಭಗವತಿಯ ಸಂಬಂಧವಾಗಿ ಹಾಡಿದಾಗಲೆಲ್ಲ, ಆತ ಪ್ರೇಮಾಶ್ರುವನ್ನು ಸುರಿಸುತ್ತ ಹೇಳುತ್ತಿದ್ದ, ‘ಆಃ! ಏನಿದು?’ ಅಂತ. ನೋಡಿ, ಆತ ಬಹಳ ಉಚ್ಚಮಟ್ಟದ ಜ್ಞಾನಿ; ಆದರೂ ಅತ್ತುಬಿಡುತ್ತಿದ್ದನಲ್ಲ! (ಚಿಕ್ಕ ನರೇನ ಮೊದಲಾದವರಿಗೆ) ‘ಅಲೇಕ’ ಎಂಬ ಬಳ್ಳಿಯ ರಸವನ್ನು ಕುಡಿದರೆ ಅದು ಹೊಟ್ಟೆಯಲ್ಲಿ ಗಿಡವಾಗಿ ಬೆಳೆಯುತ್ತದೆ ಎಂಬ ನಾಣ್ಣುಡಿಯನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳಿ. ಒಮ್ಮೆ ಭಕ್ತಿಯ ಬೀಜ ಹೃದಯಕ್ಕೆ ಬಿತ್ತು ಎಂದರೆ, ಅದು ಫಲಕಾರಿ ಆಗಲೇಬೇಕು. ಕ್ರಮೇಣ ಅದು ಮರವಾಗಿ ಬೆಳೆದು ಹೂಬಿಟ್ಟು ಫಲ ಕೊಡುತ್ತದೆ.
“ನೀನು ಯಥೇಷ್ಟವಾಗಿ ಜ್ಞಾನವಿಚಾರದಲ್ಲಿ ತೊಡಗಬಹುದು, ಆದರೆ ನಿನ್ನ ಆಂತರ್ಯದಲ್ಲಿ ಭಕ್ತಿಯ ಬೀಜವಿರುವುದಾದರೆ, ಮತ್ತೆ ಮತ್ತೆ ನಿನ್ನ ಮನಸ್ಸು ಹರಿಯ ಪಾದಪದ್ಮಗಳ ಕಡೆಗೆ ಓಡಿ ಓಡಿ ಬಂದುಬಿಡುತ್ತದೆ.”
ಭಕ್ತರು ಪರಮಹಂಸರ ಬಾಯಿಂದ ಬಂದುದನ್ನೆಲ್ಲ ಕಿವಿಗೊಟ್ಟು ಕೇಳಿದರು. ಶ್ರೀರಾಮಕೃಷ್ಣರು ನಗುತ್ತ ನಗುತ್ತ ಮಹಿಮಚರಣನನ್ನು, “ನಿನಗೆ ಅತ್ಯಂತವಾಗಿ ರುಚಿಸುವುದು ಯಾವುದು?” ಅಂತ ಕೇಳುತ್ತಿದ್ದಾರೆ.
ಮಹಿಮಚರಣ (ನಗುತ್ತ): “ಬೇರೆ ಯಾವುದೂ ಇಲ್ಲ; ಮಾವಿನ ಹಣ್ಣು ಮಾತ್ರ ಚೆನ್ನಾಗಿ ರುಚಿಸುತ್ತದೆ.”
ಶ್ರೀರಾಮಕೃಷ್ಣರು (ನಗುತ್ತ): “ಎಲ್ಲವನ್ನೂ ನೀನು ಒಬ್ಬನೇ ತಿಂದುಬಿಡುವೆಯೊ ಅಥವಾ ಉಳಿದವರಿಗೂ ಹಂಚಿ ತಿನ್ನುವೆಯೊ?”
ಮಹಿಮಚರಣ (ನಗುತ್ತ): “ಎಲ್ಲರಿಗೂ ಹಂಚಿ ತಿನ್ನಬೇಕು ಎಂಬ ಆಕಾಂಕ್ಷೆ ಅಷ್ಟೊಂದೇನಿಲ್ಲ. ಒಬ್ಬನೇ ಎಲ್ಲವನ್ನೂ ತಿಂದುಬಿಟ್ಟರೂ ತಿಂದುಬಿಟ್ಟೆ.”
ಶ್ರೀರಾಮಕೃಷ್ಣರು: “ನನ್ನ ಮನೋಭಾವವೇನು ಗೊತ್ತೆ? ನಾನು ನಿತ್ಯ ಲೀಲೆ ಎರಡನ್ನೂ ಸ್ವೀಕರಿಸುತ್ತೇನೆ. ಕಣ್ಣು ತೆರೆದು ನೋಡಿದರೆ ಭಗವಂತ ಹಾರಿಹೋಗಿಬಿಡುತ್ತಾನೆ ಅಂತಲೇನು? ಆತನ ಸಾಕ್ಷಾತ್ಕಾರ ದೊರೆತ ನಂತರ ಗೊತ್ತಾಗುತ್ತದೆ, ಆತನೇ ಸ್ವರಾಟನೂ ಹೌದು, ವಿರಾಟನೂ ಹೌದು ಅಂತ. ಆತನೇ ಅಖಂಡ ಸಚ್ಚಿದಾನಂದನೂ ಆಗಿದ್ದಾನೆ, ಮತ್ತೆ ಆತನೇ ಜೀವಜಗತ್ತೂ ಆಗಿದ್ದಾನೆ.
“ಬರೀ ಶಾಸ್ತ್ರಾಧ್ಯಯನವೇ ಸಾಕಾಗದು, ಸಾಧನೆಯನ್ನೂ ಮಾಡಬೇಕು. ವಿದ್ಯಾಸಾಗರನ ಆಂತರ್ಯವನ್ನು ಒಳಹೊಕ್ಕು ನೋಡಿದೆ. ಆತ ದೊಡ್ಡ ವಿದ್ವಾಂಸನೇನೋ ಆಗಿದ್ದ, ಆದರೆ ತನ್ನ ಆಂತರ್ಯದಲ್ಲಿ ಏನಿದೆ ಎಂಬುದನ್ನು ಅರಿತುಕೊಂಡಿರಲಿಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದರಲ್ಲೆ ಉತ್ಸಾಹಭರಿತನಾಗಿದ್ದ. ಭಗವದಾನಂದದ ಆಸ್ವಾದನೆ ಆತನಿಗೆ ದೊರೆತಿರಲಿಲ್ಲ. ಬರೀ ಪಾಂಡಿತ್ಯದಿಂದಲೇ ಆಗುವುದೇನು? ಶಾಸ್ತ್ರಗಳ ಅನುಷ್ಠಾನವೆಲ್ಲಿ? ಪಂಚಾಂಗದಲ್ಲಿ ಬರೆದಿದೆ ಇಪ್ಪತ್ತು ಕೊಳಗ ಮಳೆ ಆಗುತ್ತದೆ ಅಂತ. ಆದರೆ ಅದರ ಪುಟಗಳನ್ನು ಹಿಂಡಿ ನೋಡಿತು ಅಂದರೆ ಒಂದು ತೊಟ್ಟು ನೀರೂ ಕೆಳಕ್ಕೆ ಬೀಳದು.”
ಮಹಿಮಚರಣ: “ಸಂಸಾರಿಗಳಿಗೆ ಅನೇಕ ಕೆಲಸಕಾರ್ಯಗಳು. ಸಾಧನೆಗೆ ಸಮಯವೆಲ್ಲಿ?”
ಶ್ರೀರಾಮಕೃಷ್ಣರು: “ಹಾಗೇಕೆ ಹೇಳುತ್ತೀಯೆ? ಈ ಜಗತ್ತು ಸ್ವಪ್ನವತ್ ಅಂತ ನೀನೇ ಹೇಳುತ್ತೀಯಲ್ಲ.”
“ತಮಗೆ ತಡೆಯಾಗಿ ಸಮುದ್ರ ನಿಂತಿರುವುದನ್ನು ನೋಡಿ, ಲಕ್ಷ್ಮಣ ಕುಪಿತನಾಗಿ ಕೈಯಲ್ಲಿ ಬಿಲ್ಲು ಬಾಣಗಳನ್ನು ಹಿಡಿದು ರಾಮನಿಗೆ ಹೇಳಿದ: ‘ಈ ಸಮುದ್ರ ನಮ್ಮನ್ನು ಲಂಕೆಗೆ ಬಿಟ್ಟುಕೊಡುತ್ತಿಲ್ಲ. ನಾನು ವರುಣನನ್ನು ಕೊಂದೇಹಾಕಿಬಿಡುತ್ತೇನೆ.’ ರಾಮ ಆತನಿಗೆ ಬುದ್ಧಿವಾದವಿತ್ತ, ‘ಹೇ ಲಕ್ಷ್ಮಣ, ನಿನ್ನ ದೃಷ್ಟಿಗೆ ಗೋಚರವಾಗುತ್ತಿರುವುದೆಲ್ಲ ಸ್ಪಪ್ನವತ್ ಅನಿತ್ಯ. ಸಮುದ್ರವೂ ಅನಿತ್ಯ; ನಿನ್ನ ಕೋಪವೂ ಅನಿತ್ಯ; ಮಿಥ್ಯವನ್ನು ಮಿಥ್ಯದ ಮೂಲಕ ಕೊಂದುಹಾಕುವುದೂ ಮಿಥ್ಯವೆ.”’
ಮಹಿಮಚರಣ ಸುಮ್ಮನೆ ಕುಳಿತುಕೊಂಡ. ಆತನಿಗೆ ಅನೇಕ ಕೆಲಸಕಾರ್ಯಗಳು. ಪರೋಪಕಾರಾರ್ಥವಾಗಿ ಒಂದು ಹೊಸ ಸ್ಕೂಲನ್ನು ತೆರೆದಿದ್ದಾನೆ.
ಶ್ರೀರಾಮಕೃಷ್ಣರು (ಮಹಿಮಚರಣನಿಗೆ): “ಒಮ್ಮೆ ಶಂಭುಮಲ್ಲಿಕ ನನಗೆ ಹೇಳಿದ: ‘ನನ್ನಲ್ಲಿರುವ ಹಣವನ್ನು ಸತ್ಕಾರ್ಯಗಳಿಗೆ ಉಪಯೋಗಿಸಬೇಕೆಂದು ಸಂಕಲ್ಪಿಸಿದ್ದೇನೆ. ಸ್ಕೂಲು, ಡಿಸ್ಪೆನ್ಸರಿ, ರಸ್ತೆ, ಸ್ನಾನಘಟ್ಟ ಇವೇ ಮೊದಲಾದವುಗಳನ್ನು ನಿರ್ಮಿಸಬೇಕೆಂದಿದ್ದೇನೆ.’ ನಾನು ಹೇಳಿದೆ, ‘ನೀನು ಈ ಕಾರ್ಯಗಳನ್ನೆಲ್ಲ ನಿಷ್ಕಾಮಭಾವನೆಯಿಂದ ಮಾಡುವುದಾದರೇನೊ ಅದು ಬಹಳ ಒಳ್ಳೆಯದೆ, ಆದರೆ ಹಾಗೆ ಮಾಡುವುದು ಬಹಳ ಕಷ್ಟ. ಯಾವ ಕಡೆಯಿಂದಲೊ ಕಾಮನೆ ನಮ್ಮ ಹೃದಯವನ್ನು ಹೊಕ್ಕುಬಿಡುತ್ತದೆ. ನಿನಗೊಂದು ಪ್ರಶ್ನೆ ಹಾಕಬೇಕೆಂದಿದ್ದೇನೆ. ಒಂದು ಪಕ್ಷ ನಿನ್ನ ಎದುರು ಭಗವಂತ ಬಂದು ನಿಂತರೆ, ಆತನನ್ನು ಕೆಲವು ಸ್ಕೂಲು, ಡಿಸ್ಪೆನ್ಸರಿ, ಆಸ್ಪತ್ರೆ ಇವುಗಳಿಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತೀಯಾ?”
ಒಬ್ಬ ಭಕ್ತ: “ಮಹಾಶಯರೆ, ಸಂಸಾರಿಗಳಿಗೆ ಉಪಾಯವೇನು?”
ಶ್ರೀರಾಮಕೃಷ್ಣರು: “ಸಾಧುಸಂಗ ಮಾಡುತ್ತಿರಬೇಕು; ಆಧ್ಯಾತ್ಮಿಕ ವಿಷಯಗಳನ್ನು ಸತತ ಕೇಳುತ್ತಿರಬೇಕು. ಅವರು ಕಾಮಕಾಂಚನದ ಮತ್ತಿನಿಂದ ಉನ್ಮತ್ತರಾಗಿದ್ದಾರೆ. ಉನ್ಮತ್ತನಿಗೆ ಅಕ್ಕಿ ತೊಳೆದ ನೀರನ್ನು ಸ್ವಲ್ಪಸ್ವಲ್ಪವಾಗಿ ಕೊಡುತ್ತ ಕೊಡುತ್ತ ಬಂದ ಹಾಗೆ ಕ್ರಮಕ್ರಮೇಣ ಸರಿಯಾದ ಪ್ರಜ್ಞೆ ಉಂಟಾಗಿಬಿಡುತ್ತದೆ.
“ಸಂಸಾರಿಯು ಸದ್ಗುರುವಿನಿಂದ ಉಪದೇಶ ಪಡೆಯಬೇಕು. ಸದ್ಗುರುವಿಗೆ ಲಕ್ಷಣಗಳಿವೆ. ಯಾರು ಕಾಶಿಗೆ ಹೋಗಿ ಅದನ್ನು ಚೆನ್ನಾಗಿ ನೋಡಿ ಬಂದಿರುವರೊ, ಅವರಿಂದ ಕಾಶಿ ವಿಷಯವಾಗಿ ತಿಳಿದುಕೊಳ್ಳಬೇಕು. ಬರೀ ಪುಸ್ತಕಪಾಂಡಿತ್ಯ ಯಾವಪ್ರಯೋಜನಕ್ಕೂ ಬಾರದು. ಯಾರಿಗೆ ಈ ಸಂಸಾರ ಅನಿತ್ಯ ಎಂಬ ಬೋಧೆಯಾಗಿಲ್ಲವೊ, ಅಂಥ ಪಂಡಿತನ ಉಪದೇಶ ಸ್ವೀಕರಿಸುವುದು ಯುಕ್ತವಾದುದಲ್ಲ. ಪಂಡಿತನು ವಿವೇಕ-ವೈರಾಗ್ಯಸಂಪನ್ನನಾಗಿದ್ದರೆ ತಾನೆ ಆತ ಉಪದೇಶ ಕೊಡಲು ಅರ್ಹನಾಗುತ್ತಾನೆ?
“ಸಮಾಧ್ಯಾಯಿ ಹೇಳಿದ, ‘ಭಗವಂತ ನೀರಸ’ ಅಂತ. ಯಾರು ರಸಸ್ವರೂಪನೊ ಆತನನ್ನು ನೀರಸ ಅಂತ ಹೇಳುವುದು! ಒಬ್ಬ ಹೇಳಿದನಂತೆ, ‘ನಮ್ಮ ಸೋದರಮಾವನ ಕೊಟ್ಟಿಗೆ ತುಂಬ ಕುದುರೆಗಳು ಇವೆ’ ಅಂತ. ಇದೂ ಹಾಗೇನೆ. (ಎಲ್ಲರೂ ನಗುತ್ತಿದ್ದಾರೆ.)
“ಸಂಸಾರಿಯು ಉನ್ಮಾದಾವಸ್ಥೆಯಲ್ಲಿ ಇರುತ್ತಾನೆ. ಯಾವಾಗ ನೋಡಿದರೂ ತನಗೆ ತಾನೇ ಹೇಳಿಕೊಳ್ಳುತ್ತಿರುತ್ತಾನೆ. ‘ಪ್ರತಿಯೊಂದನ್ನೂ ಮಾಡುವವನು ನಾನೆ. ಮನೆ ಮಠ ಕುಟುಂಬ ಎಲ್ಲವೂ ನನಗೆ ಸೇರಿದುವೆ.’ ಹಲ್ಲು ಬಿಟ್ಟುಕೊಂಡು ಹೇಳುತ್ತಾನೆ: ‘ಇವರ (ಹೆಂಡತಿ, ಮಕ್ಕಳ) ಗತಿಯೇನು? ನಾನಿಲ್ಲದಿದ್ದರೆ ಇವರನ್ನು ನೋಡಿಕೊಳ್ಳುವವರು ಯಾರು? ಇವರ ಜೀವನ ನಡೆಯುವ ಬಗೆ ಹೇಗೆ?’ ಒಂದು ದಿನ ರಾಖಾಲ ಹೇಳಿದ, ‘ನನ್ನ ಹೆಂಡತಿಯ ಗತಿಯೇನು?”’
ಹರಮೋಹನ: “ರಾಖಾಲ ಹಾಗೆ ಹೇಳಿದನೇನು?”
ಶ್ರೀರಾಮಕೃಷ್ಣರು: “ಆತ ಹಾಗೆ ಹೇಳದೆ ಮತ್ತೇನು ಮಾಡಿಯಾನು? ಯಾರಲ್ಲಿ ಜ್ಞಾನವಿರುತ್ತದೆಯೋ, ಅವರಲ್ಲಿ ಅಜ್ಞಾನವೂ ಇರುತ್ತದೆ. ಲಕ್ಷ್ಮಣ ರಾಮನಿಗೆ ಹೇಳಿದ: ‘ಹೇ ರಾಮ, ಏನಾಶ್ಚರ್ಯ! ಪುತ್ರಶೋಕದಿಂದ ಅಂಥ ವಸಿಷ್ಠ ಋಷಿಯೂ ನರಳುತ್ತಿದ್ದಾನಲ್ಲ!’ ರಾಮ ಹೇಳಿದ : ‘ತಮ್ಮ, ಯಾರಲ್ಲಿ ಜ್ಞಾನವಿರುವುದೊ ಅವರಲ್ಲಿ ಅಜ್ಞಾನವೂ ಇರುತ್ತದೆ. ಆದ್ದರಿಂದ ನೀನು ಜ್ಞಾನಾಜ್ಞಾನಗಳನ್ನು ದಾಟಿಹೋಗು.’
“ಯಾರ ಕಾಲಿಗೇ ಆಗಲಿ, ಒಂದು ಮುಳ್ಳು ಚುಚ್ಚಿಕೊಂಡರೆ, ಅದನ್ನು ತೆಗೆದುಹಾಕಲು ಅವರು ಬೇರೊಂದು ಮುಳ್ಳನ್ನು ಹುಡುಕಿ ತಂದು, ಅದರ ಸಹಾಯದಿಂದ ಮುಳ್ಳನ್ನು ತೆಗೆದುಹಾಕಿ, ಬಳಿಕ ಎರಡು ಮುಳ್ಳುಗಳನ್ನೂ ಬಿಸಾಡಿಬಿಡುತ್ತಾರೆ. ಅಜ್ಞಾನವೆಂಬ ಮುಳ್ಳನ್ನು ತೆಗೆದುಹಾಕಲು ಜ್ಞಾನವೆಂಬ ಮುಳ್ಳನ್ನು ಉಪಯೋಗಿಸಬೇಕು. ಬಳಿಕ ಎರಡು ಮುಳ್ಳುಗಳನ್ನೂ ಬಿಸಾಡಿಬಿಟ್ಟರೆ ವಿಜ್ಞಾನ ದೊರೆಯುತ್ತದೆ. ಭಗವಂತನಿದ್ದಾನೆ ಎಂಬುದನ್ನು ತಿಳಿದು, ಆತನನ್ನು ವಿಶೇಷ ರೂಪದಿಂದ ಸಾಕ್ಷಾತ್ಕಾರ ಮಾಡಿಕೊಂಡು ಆತನೊಡನೆ ವಿಶೇಷರೂಪದಿಂದ ಬೆರೆಯಬೇಕು. ಇದಕ್ಕೇನೆ ‘ವಿಜ್ಞಾನ’ ಅಂತ ಹೆಸರು. ಈ ಕಾರಣದಿಂದಲೇ ಶ್ರೀಕೃಷ್ಣ ಅರ್ಜುನನಿಗೆ ಹೇಳಿದುದು, ‘ತ್ರಿಗುಣಾತೀತನಾಗು’ ಅಂತ.
“ಈ ವಿಜ್ಞಾನವನ್ನು ಪಡೆಯಲೋಸುಗ ವಿದ್ಯಾಮಾಯೆಯನ್ನು ಆಶ್ರಯಿಸ ಬೇಕಾಗುತ್ತದೆ. ಭಗವಂತನೊಬ್ಬನೇ ಸತ್ಯ, ಜಗತ್ತು ಅನಿತ್ಯ ಎಂಬ ವಿಚಾರ-ಅಂದರೆ ವೈರಾಗ್ಯ. ಭಗವಂತನ ನಾಮಗುಣಕೀರ್ತನೆ, ಧ್ಯಾನ, ಸಾಧುಸಂಗ, ಪ್ರಾರ್ಥನೆ ಇವೆಲ್ಲ ವಿದ್ಯಾಮಾಯೆಯ ಎಲ್ಲೆಯೊಳಗೇ ಇವೆ. ಚಾವಣಿಯನ್ನು ಮುಟ್ಟುವ ಮುನ್ನ ಸಿಕ್ಕುವ ಕೊನೆಯ ಕೆಲವು ಮೆಟ್ಟಲುಗಳಿಗೆ ವಿದ್ಯಾಮಾಯೆಯನ್ನು ಹೋಲಿಸಬಹುದು. ಅವನ್ನು ಹತ್ತಿದೊಡನೆಯೇ ಚಾವಣಿ-ಭಗವಂತನ ಸಾಕ್ಷಾತ್ಕಾರ.
“ಪ್ರಾಪಂಚಿಕರು ಕಾಮಕಾಂಚನದಿಂದ ಮತ್ತರಾಗಿದ್ದಾರೆ; ಆಧ್ಯಾತ್ಮಿಕ ಭಾವನೆಗಳು ಅವರ ತಲೆಗೆ ಹೋಗವು. ಅದಕ್ಕಾಗಿಯೆ ನನಗೆ ಯುವಕರನ್ನು ಕಂಡರೆ ಬಲು ಪ್ರೀತಿ. ಅವರ ಆಂತರ್ಯವನ್ನು ಕಾಮಕಾಂಚನ ಇನ್ನೂ ಹೊಕ್ಕಿರುವುದಿಲ್ಲ. ಅವರು ಒಳ್ಳೆಯ ಪಾತ್ರೆ; ಭಗವಂತನ ಕೆಲಸಕಾರ್ಯಗಳಿಗೆ ಒದಗಬಹುದು. ಆದರೆ ಪ್ರಾಪಂಚಿಕರ ಆಂತರ್ಯದಲ್ಲಿರುವ ಕೆಲಸಕ್ಕೆ ಬಾರದ ವಸ್ತುಗಳನ್ನು ಬೇರ್ಪಡಿಸುತ್ತಾ ಹೋಯಿತು ಅಂದರೆ ಕೊನೆಗೆ ಅವರ ಆಂತರ್ಯವೇ ಖಾಲಿಯಾಗಿಬಿಡುತ್ತದೆ. ಕೊನೆಗೆ ಅವರನ್ನು ಒಂದು ವಿಧದ ಮೂಳೆಪ್ರಾಧಾನ್ಯವಾಗಿರುವ ಮೀನಿಗೆ ಹೋಲಿಸಬಹುದು. ಅದರಲ್ಲಿರುವ ಮಾಂಸದ ಭಾಗ ಅಷ್ಟು ಅಲ್ಪ, ಮಾಂಸ ಇಲ್ಲ ಅಂತಲೇ ಬೇಕಾದರೆ ಹೇಳಬಹುದು.
“ಇದು ಹೇಗೆಂದರೆ ಆಲಿಕಲ್ಲಿನ ಪೆಟ್ಟು ತಗುಲಿದ ಮಾವಿನಹಣ್ಣನ್ನು ಗಂಗಾಜಲದಿಂದ ತೊಳೆದು ಉಪಯೋಗಿಸಬೇಕು. ಪ್ರಾಯಶಃ ಅದನ್ನು ದೇವರ ನೈವೇದ್ಯಕ್ಕೆ ಉಪಯೋಗಿಸುವುದಿಲ್ಲ. ಉಪಯೋಗಿಸಲೇಬೇಕು ಎಂದಿದ್ದರೆ, ಬ್ರಹ್ಮಜ್ಞಾನ ಪ್ರಯೋಗಿಸಿ, ಎಂದರೆ, ಸರ್ವವೂ ಬ್ರಹ್ಮ ಎಂದು ಮನಸ್ಸು ಮಾಡಿ ಉಪಯೋಗಿಸಬೇಕು.”
ಒಬ್ಬ ಥಿಯೋಸೊಫಿ ಅನುಯಾಯಿ, ಅಶ್ವಿನಿ ಕುಮಾರದತ್ತ ಮತ್ತು ಬಿಹಾರಿ ಬಾದೂರಿಯ ಮಗ ಇವರೊಡನೆ ಅಲ್ಲಿಗೆ ಬಂದ. ಮುಖರ್ಜಿ ಸೋದರರು ಬಂದು ಪರಮಹಂಸರಿಗೆ ಪ್ರಣಾಮ ಮಾಡಿದರು. ಸಂಕೀರ್ತನೆ ಅಂಗಳದಲ್ಲಿ ನಡೆಯುವ ಹಾಗೆ ವ್ಯವಸ್ಥೆ ಆಗಿದೆ. ಮೃದಂಗದ ಶಬ್ದ ಕೇಳಿದೊಡನೆಯೆ ಪರಮಹಂಸರು ಅಂಗಳಕ್ಕೆ ಹೋಗಿ ಕುಳಿತುಕೊಂಡರು. ಭಕ್ತರು ಅವರ ಸುತ್ತಲೂ ಕುಳಿತುಕೊಂಡಿದ್ದಾರೆ.
ಭವನಾಥ ಪರಮಹಂಸರಿಗೆ ಅಶ್ವಿನಿಕುಮಾರನ ಪರಿಚಯ ಮಾಡಿಕೊಟ್ಟ. ಪರಮ ಹಂಸರು ಮಾಸ್ಟರಿಗೆ ಆತನ ಪರಿಚಯ ಮಾಡಿಕೊಟ್ಟರು. ಬಳಿಕ ಮಾಸ್ಟರ್ ಮತ್ತು ಅಶ್ವಿನಿ ಕುಮಾರದತ್ತ ಮಾತುಕತೆಗಳಾಡಲಾರಂಭಿಸಿದರು. ಈಗ ನರೇಂದ್ರನೂ ಅಲ್ಲಿಗೆ ಬಂದು ಕುಳಿತುಕೊಂಡಿದ್ದಾನೆ. ಪರಮಹಂಸರು ಅಶ್ವಿನಿಕುಮಾರನಿಗೆ ಹೇಳಿದರು, “ಈತನ ಹೆಸರೇ ನರೇಂದ್ರ.”
೧೩ನೆ ಜೂನ್ ೧೮೮೫, ಜ್ಯೇಷ್ಠ ಶುಕ್ಲ ಪಾಡ್ಯಮಿ, ಶನಿವಾರ
ಘಂಟೆ ಮೂರರ ಹತ್ತಿರ. ಮಧ್ಯಾಹ್ನದ ಊಟ ಮುಗಿಸಿಕೊಂಡು ಪರಮಹಂಸರು ತಮ್ಮ ಕೊಠಡಿಯಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಒಬ್ಬ ಪಂಡಿತ ನೆಲದ ಮೇಲೆ ಹಾಸಿದ್ದ ಮಂದಲಿಗೆ ಮೇಲೆ ಕುಳಿತಿದ್ದಾನೆ. ತನ್ನ ಏಕಮಾತ್ರ ಪುತ್ರಿಯನ್ನು ಕಳೆದುಕೊಂಡು ಶೋಕಾನ್ವಿತಳಾಗಿರುವ ಒಬ್ಬ ಹೆಂಗಸು ಕೊಠಡಿಯ ಉತ್ತರದ ಬಾಗಿಲ ಹತ್ತಿರ ನಿಂತುಕೊಂಡಿದ್ದಾಳೆ. ಕಿಶೋರಿ ಕೊಠಡಿಯಲ್ಲಿ ಕುಳಿತಿದ್ದಾನೆ. ಮಾಸ್ಟರ್, ದ್ವಿಜ ಮೊದಲಾದವರೊಡನೆ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿದ.
ಪರಮಹಂಸರಿಗೆ ದೇಹಾರೋಗ್ಯ ಸರಿಯಾಗಿಲ್ಲ. ಅವರು ಗಂಟಲುನೋವಿನಿಂದ ನರಳುತ್ತಿದ್ದಾರೆ, ಬೇಸಿಗೆಕಾಲವಾಗಿರುವುದರಿಂದ ಮಾಸ್ಟರನ ದೇಹಾರೋಗ್ಯವೂ ಸರಿಯಾಗಿಲ್ಲ. ಈಗ ಸ್ವಲ್ಪ ದಿವಸಗಳಿಂದ ಆಗಾಗ ಬಂದು ಪರಮಹಂಸರ ದರ್ಶನ ಪಡೆಯಲು ಆತನಿಗೆ ಸಾಧ್ಯವಾಗುತ್ತಿಲ್ಲ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಓ, ಬಂದೆಯಾ, ನೀನು ಕಳುಹಿಸಿದ ಬಿಲ್ವದ ಹಣ್ಣು ಬಹಳ ಚೆನ್ನಾಗಿತ್ತು. ಈಗ ನಿನ್ನ ಆರೋಗ್ಯ ಹೇಗಿದೆ?”
ಮಾಸ್ಟರ್: “ಈಗ ಸ್ವಲ್ಪ ಮೇಲು.”
ಶ್ರೀರಾಮಕೃಷ್ಣರು: “ಸೆಕೆ ಹೆಚ್ಚಿಬಿಟ್ಟಿದೆ. ಆಗಾಗ ಸ್ವಲ್ಪ ಐಸನ್ನು ತಿನ್ನು. ಸೆಕೆ ಹೆಚ್ಚಾಗಿರುವುದರಿಂದ ನನಗೂ ಕಷ್ಟವಾಗುತ್ತಿದೆ; ಅದಕ್ಕಾಗಿಯೇ ಐಸ್ಕ್ರೀಮನ್ನು ತಿಂದೆ. ಅದರ ಫಲವಾಗಿ ನನಗೆ ಗಂಟಲಿನಲ್ಲಿ ಹುಣ್ಣು ಆಗಿಬಿಟ್ಟಿದೆ. ಉಗುಳು ದುರ್ವಾಸನೆ ಕೊಡುತ್ತಿದೆ.
“ಭಗವತಿಗೆ ಹೇಳಿದೆ, ‘ನನ್ನ ಆರೋಗ್ಯವನ್ನು ಸರಿಪಡಿಸಿಬಿಡು. ಇನ್ನು ಮುಂದೆ ಐಸ್ಕ್ರೀಮನ್ನು ತಿನ್ನುವುದಿಲ್ಲ’ ಅಂತ. ಮತ್ತೆ ಐಸನ್ನೂ ತಿನ್ನುವುದಿಲ್ಲ ಅಂತ ಹೇಳಿಬಿಟ್ಟೆ. ನಾನು ಈ ರೀತಿ ತಾಯಿಗೆ ವಾಗ್ದಾನ ಮಾಡಿಬಿಟ್ಟಿರುವುದರಿಂದ ನಾನು ಇನ್ನೆಂದಿಗೂ ಅದನ್ನು ತಿನ್ನಲು ಹೋಗೆನು. ಆದರೆ ಕೆಲವು ವೇಳೆ ನನಗೆ ಮರೆವು ಬಂದುಬಿಡುತ್ತದೆ. ಭಾನುವಾರ ಮೀನು ತಿನ್ನುವುದಿಲ್ಲ ಅಂತ ನಾನು ತಿಳಿಸಿದ್ದೆ; ಆದರೆ ಒಂದು ಭಾನುವಾರ ಮರೆತು ತಿಂದುಬಿಟ್ಟೆ. ಉದ್ದೇಶಪೂರ್ವಕವಾಗಿ ಹಾಗೆಂದಿಗೂ ಮಾಡಲಾರೆ. ಅಂದು ನಾನು ಒಬ್ಬನಿಗೆ ದೇವದಾರು ವೃಕ್ಷಗಳ ಕಡೆಗೆ ಕಾಲು ತಂಬಿಗೆ ತರುವಂತೆ ಹೇಳಿದೆ, ಆತ ಎಲ್ಲಿಗೋ ಹೋಗಿದ್ದುದರಿಂದ ಬೇರೊಬ್ಬ ಅಲ್ಲಿಗೆ ತಂದ. ನಾನು ಅದನ್ನು ಉಪಯೋಗಿಸಲಾಗಲಿಲ್ಲ. ಬೇರೆ ವಿಧಿಯೇ ಇಲ್ಲದೆ ನಾನು ಯಾರಿಗೆ ಮೊದಲು ಹೇಳಿದ್ದೆನೋ ಆತನೇ ಬಂದು ನೀರು ತರುವವರೆಗೆ ಹಾಗೆಯೇ ನಿಂತಿದ್ದೆ.
“ಭಗವತಿಯ ಪಾದಪದ್ಮಗಳಿಗೆ ಹೂವನ್ನು ಅರ್ಪಿಸುವುದರ ಮೂಲಕ ನಾನು ನನ್ನ ಸರ್ವಸ್ವವನ್ನು ಭಗವತಿಗೆ ಅರ್ಪಿಸಿಬಿಟ್ಟಾಗ ಆಕೆಗೆ ಪ್ರಾರ್ಥನೆ ಮಾಡಿದೆ, ‘ಹೇ ತಾಯಿ, ಇಗೋ ತೆಗೆದುಕೋ ನಿನ್ನ ಶುಚಿಯನ್ನು, ಇಗೋ ತೆಗೆದುಕೋ ನಿನ್ನ ಅಶುಚಿಯನ್ನು; ಇಗೋ ತೆಗೆದುಕೋ ನಿನ್ನ ಧರ್ಮವನ್ನು, ಇಗೋ ತೆಗೆದುಕೊ ನಿನ್ನ ಅಧರ್ಮವನ್ನು; ಇಗೋ ತೆಗೆದುಕೋ ನಿನ್ನ ಪಾಪವನ್ನು, ಇಗೋ ತೆಗೆದುಕೋ ನಿನ್ನ ಪುಣ್ಯವನ್ನು; ಇಗೋ ತೆಗೆದುಕೋ ನಿನ್ನ ಒಳ್ಳೆಯದನ್ನು, ಇಗೋ ತೆಗೆದುಕೋ ನಿನ್ನ ಕೆಟ್ಟದ್ದನ್ನು. ನನಗೆ ಶುದ್ಧ ಭಕ್ತಿಯನ್ನು ಕೊಡು’ ಅಂತ. ಆದರೆ, ‘ಹೇ ತಾಯಿ, ಇಗೋ ನಿನ್ನ ಸತ್ಯವನ್ನು ತೆಗೆದುಕೋ, ಇಗೋ ನಿನ್ನ ಮಿಥ್ಯವನ್ನು ತೆಗೆದುಕೋ’ ಅಂತ ಪ್ರಾರ್ಥನೆ ಮಾಡಲಾಗಲಿಲ್ಲ.”
ಒಬ್ಬ ಭಕ್ತ ಐಸ್ ತಂದಿದ್ದಾನೆ. ಮತ್ತೆ ಮತ್ತೆ ಪರಮಹಂಸರು ಮಾಸ್ಟರನ್ನು ಕೇಳಿದರು “ತಿನ್ನಲೇನು?” ಅಂತ.
ಮಾಸ್ಟರ್ ವಿನಯದಿಂದ ಹೇಳಿದ “ಭಗವತಿಯ ಅನುಜ್ಞೆಯನ್ನು ಪಡೆಯದೆ ತಿನ್ನಬೇಡಿ.” ಕಟ್ಟಕಡೆಗೆ ಪರಮಹಂಸರಿಗೆ ಅದನ್ನು ತಿನ್ನಲಾಗಲಿಲ್ಲ.
ಶ್ರೀರಾಮಕೃಷ್ಣರು: “ಇದು ಶುಚಿ ಅದು ಅಶುಚಿ ಅಂತ ವಿವೇಚಿಸುವವರು ಭಕ್ತರೇ ವಿನಾ ಜ್ಞಾನಿಗಳಲ್ಲ. ವಿಜಯನ ಅತ್ತೆ ನನಗೆ ಹೇಳಿದಳು: ‘ಎಲ್ಲಿ, ನಾನು ಅಧ್ಯಾತ್ಮಜೀವನದಲ್ಲಿ ಮುಂದುವರೆದಿರುವುದೆಲ್ಲಿ? ಈಗಲೂ ಎಲ್ಲರ ಕೈಯಿಂದಲೂ ಊಟಮಾಡಲಾರೆ!’ ನಾನು ಹೇಳಿದೆ: ‘ಎಲ್ಲರ ಕೈಯಿಂದಲೂ ಅನ್ನ ತಿಂದಾಕ್ಷಣ ಜ್ಞಾನ ದೊರೆತು ಬಿಡುವುದೇ?’ ನಾಯಿ ಸಿಕ್ಕಿಸಿಕ್ಕಿದುದನ್ನೆಲ್ಲ ತಿಂದುಬಿಡುತ್ತದೆ; ಹಾಗೆಂದು ಅದು ಜ್ಞಾನಿಯಾಗಿಬಿಡುವುದೆ.’
(ಮಾಸ್ಟರಿಗೆ) “ನಾನು ವಿವಿಧ ಭೋಜ್ಯಗಳನ್ನು ತಿನ್ನುತ್ತಿರುವುದೇಕೆ? ಒಂದೇ ರಾಗವನ್ನು ಊದುವವನ ಹಾಗೆ ಆಗದೆ ಇರಲು, ಅಂಥವನಾದರೆ ಭಕ್ತರು ನನ್ನನ್ನು ಸೇವಿಸುವ ಹಾಗೆಯೇ ಇಲ್ಲದಂತಾಗುತ್ತದೆ.
“ನಾನು ಕೇಶವಸೇನನಿಗೆ ಹೇಳಿದೆ, ‘ಇನ್ನೂ ಉಚ್ಚಮಟ್ಟದ ದೃಷ್ಟಿಯಿಂದ ನಿನಗೆ ತಿಳುವಳಿಕೆ ಕೊಡುವುದಾದರೆ, ನಿನ್ನ ಸಂಸ್ಥೆಗಳೊಂದೂ ಬದುಕವು. ಜ್ಞಾನಾವಸ್ಥೆಯ ದೃಷ್ಟಿಯಿಂದ ಅವುಗಳೆಲ್ಲ ಸ್ವಪ್ನದೋಪಾದಿಯಲ್ಲಿ ಮಿಥ್ಯ.’
“ಒಂದು ಕಾಲದಿಂದ ನಾನು ಮೀನು ತಿನ್ನುವುದನ್ನು ಬಿಟ್ಟುಬಿಟ್ಟೆ. ಮೊದಲು ಮೊದಲು ಸ್ವಲ್ಪ ಕಾಲ ಕಷ್ಟವಾಗಿ ಕಂಡಿತು; ಬಳಿಕ ಅಷ್ಟು ಕಷ್ಟವಾಗಿ ಏನೂ ತೋರಿಬರಲಿಲ್ಲ. ಹಕ್ಕಿಯ ಗೂಡನ್ನು ಸುಟ್ಟುಹಾಕಿಬಿಟ್ಟರೆ ಅದು ಅದರ ಸುತ್ತಲೂ ಸ್ವಲ್ಪ ಹೊತ್ತು ಹಾರಾಡುತ್ತದೆ; ಆ ಬಳಿಕ ಅದು ಆಕಾಶಕ್ಕೆ ಹಾರಿಹೋಗುತ್ತದೆ. ದೇಹ ಜಗತ್ತು ಮಿಥ್ಯಾ ಎಂಬ ಬೋಧೆ ಬಂದುಬಿಟ್ಟರೆ, ಆಗ ಆತ್ಮ ಸಮಾಧಿಸ್ಥವಾಗುತ್ತದೆ.
“ಹಿಂದೆ ನನಗೆ ಜ್ಞಾನಿಯ ಅವಸ್ಥೆ ಬಂದಿತ್ತು. ಜನರ ಸಹವಾಸ ಆಗ ನನಗೆ ರುಚಿಸುತ್ತಿರಲಿಲ್ಲ. ಹಾಟ್ಖೊಲ ಎಂಬ ಜಾಗದಲ್ಲಿ ಯಾರೊ ಒಬ್ಬ ಜ್ಞಾನಿ, ಯಾರೊ ಒಬ್ಬ ಭಕ್ತ ಇದ್ದಾರೆ ಅಂತ ಆಗ ಕೇಳಿದ್ದೆ; ಆದರೆ ಸ್ವಲ್ಪ ದಿವಸಗಳೊಳಗಾಗಿಯೆ ಯಾರೊ ಹೇಳಿದರು ಅವರು ಸತ್ತುಹೋದರು ಅಂತ. ಎಲ್ಲವೂ ಅನಿತ್ಯವಾಗಿ ಕಂಡುಬಂದಿತು; ಅದಕ್ಕಾಗಿ ಜನರ ಸಹವಾಸ ಆಗ ರುಚಿಸುತ್ತಿರಲಿಲ್ಲ. ಬಳಿಕ ಭಗವತಿ ನನ್ನ ಮನಸ್ಸನ್ನು ಕೆಳಗಿನ ಅಂತಸ್ತಿಗೆ ಇಳಿಸಿದಳು; ಭಕ್ತಿ ಭಕ್ತರ ಕಡೆ ಮನಸ್ಸು ಹರಿಯುವಂತೆ ಮಾಡಿದಳು.”
ಈಗ ಪರಮಹಂಸರು ಭಗವಂತ ಮಾನವನ ರೂಪವನ್ನು ಧರಿಸಿ ಏಕೆ ಅವತರಿಸಿ ಬರುತ್ತಾನೆ ಎಂಬುದರ ವಿಷಯವಾಗಿ ಮಾತನಾಡಲಾರಂಭಿಸಿದ್ದಾರೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಭಗವಂತ ಮಾನವ ರೂಪಿನಲ್ಲಿ ಏಕೆ ಅವತರಿಸಿ ಬರುತ್ತಾನೆ ಎಂಬುದು ನಿನಗೆ ಗೊತ್ತೆ? ಭಗವದ್ವಾಣಿಯನ್ನು ಈ ಮಾನವ ಶರೀರದ ಮೂಲಕ ಕೇಳಲು ಸಾಧ್ಯವಾಗಲಿ ಎಂದು. ಅವತಾರದ ಮೂಲಕ ಆತ ವಿಲಾಸದಲ್ಲಿ ತೊಡಗುತ್ತಾನೆ. ಅವರ ಮೂಲಕ ಆತ ರಸಾಸ್ವಾದನೆ ಮಾಡುತ್ತಾನೆ. ಆದರೆ ಆತ ತನ್ನ ಉಳಿದ ಭಕ್ತರ ಮೂಲಕ ಎಲ್ಲೋ ಅಲ್ಪವಾಗಿ ಮಾತ್ರ ತನ್ನ ವೈಭವವನ್ನು ಪ್ರಕಾಶಗೊಳಿಸುತ್ತಾನೆ. ಬಹಳವಾಗಿ ಚೀಪಿದ ನಂತರ ಒಂದು ತೊಟ್ಟು ರಸ ಸಿಕ್ಕುವ ವಸ್ತುಗಳಿಗೆ ಇವರನ್ನು ಹೋಲಿಸಬಹುದು. ಉದಾಹರಣೆಗೆ ಹೂವು: ಎಷ್ಟೋ ಚೀಪಿದ ನಂತರ ಒಂದು ತೊಟ್ಟು ಮಧು ದೊರೆಯುತ್ತದೆ. (ಮಾಸ್ಟರಿಗೆ) ಅರ್ಥವಾಯಿತೇನು?”
ಮಾಸ್ಟರ್: “ಬಹಳ ಚೆನ್ನಾಗಿ.”
ಪರಮಹಂಸರು ದ್ವಿಜನೊಡನೆ ಮಾತುಕತೆಯಾಡಲಾರಂಭಿಸಿದರು. ಆತನಿಗೆ ವಯಸ್ಸು ಹದಿನೈದೋ ಅಥವಾ ಹದಿನಾರೋ. ಆತನ ತಂದೆ ಎರಡನೆಯ ಸಲ ಮದುವೆ ಯಾಗಿದ್ದಾನೆ. ದ್ವಿಜ ಆಗಿಂದಾಗ್ಗೆ ಮಾಸ್ಟರೊಡನೆ ದಕ್ಷಿಣೇಶ್ವರಕ್ಕೆ ಬರುವ ವಾಡಿಕೆ. ಪರಮ ಹಂಸರು ಆತನನ್ನು ಬಹಳವಾಗಿ ಪ್ರೀತಿಸುತ್ತಿದ್ದಾರೆ. ಆ ಹುಡುಗ ಹೇಳಿದ, ಅವನು ದಕ್ಷಿಣೇಶ್ವರಕ್ಕೆ ಬರುವುದು ಆತನ ತಂದೆಗೆ ಇಚ್ಛೆಯಿಲ್ಲ ಅಂತ.
ಶ್ರೀರಾಮಕೃಷ್ಣರು: “ನಿನ್ನ ಸಹೋದರರಿಗೂ? ಅವರೂ ನನ್ನನ್ನು ತಿರಸ್ಕಾರ ದೃಷ್ಟಿಯಿಂದ ನೋಡುತ್ತಿರುವರೇನು?”
ದ್ವಿಜ ಯಾವ ಉತ್ತರವನ್ನೂ ಕೊಡದೆ ಸುಮ್ಮನೆ ಕುಳಿತಿದ್ದ.
ಮಾಸ್ಟರ್ (ಶ್ರೀರಾಮಕೃಷ್ಣರಿಗೆ): “ಸಂಸಾರದ ಒಂದೆರಡು ಬಲವಾದ ಪೆಟ್ಟು ಬಿದ್ದಿತೆಂದರೆ ಅವರು ನೇರ ಆಗಿಬಿಡುತ್ತಾರೆ.”
ಶ್ರೀರಾಮಕೃಷ್ಣರು ದ್ವಿಜನ ಸಹೋದರನ ಸಂಬಂಧವಾಗಿ: “ಅವರ ಯೋಗಕ್ಷೇಮ ನೋಡಿಕೊಳ್ಳುವವಳು ಅವರ ಮಲತಾಯಿ. ಆದ್ದರಿಂದ ಅವರಿಗೆ ಏಟು ಆಗಲೇ ಬೀಳುತ್ತಿದೆ.”
ಸ್ವಲ್ಪ ಎಲ್ಲರೂ ಸುಮ್ಮನೆ ಕುಳಿತಿದ್ದರು.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಈತನಿಗೆ (ದ್ವಿಜನಿಗೆ) ಒಮ್ಮೆ ಪೂರ್ಣನ ಪರಿಚಯ ಮಾಡಿಸಿಕೊಡು.”
ಮಾಸ್ಟರ್: “ಆಗಲಿ. (ದ್ವಿಜನಿಗೆ) ನೀನು ಪಾನಿಹಾಟಿಗೆ ಹೋಗಿ ಬಾ.”
ಶ್ರೀರಾಮಕೃಷ್ಣರು: “ಇವನನ್ನು ಅಲ್ಲಿಗೆ ಕಳುಹಿಸು. ಅವನನ್ನೂ ಅಲ್ಲಿಗೆ ಕಳುಹಿಸು ಅಂತ ನಾನು ಪ್ರತಿಯೊಬ್ಬರಿಗೂ ಹೇಳುತ್ತಲಿದ್ದೇನೆ. (ಮಾಸ್ಟರಿಗೆ) ನೀನು ಅಲ್ಲಿಗೆ ಹೋಗುವುದಿಲ್ಲವೇನು?”
ಪರಮಹಂಸರು ಪಾನಿಹಾಟಿಯ ಮಹೋತ್ಸವಕ್ಕೆ ಹೋಗಲಿದ್ದಾರೆ; ಅದಕ್ಕಾಗಿಯೇ ಭಕ್ತರಿಗೂ ಅಲ್ಲಿಗೆ ಹೋಗಲು ಹೇಳುತ್ತಿದ್ದಾರೆ.
ಮಾಸ್ಟರ್: “ಹೋಗಬೇಕು ಅಂತ ಇಚ್ಛೆ ಇದೆ.”
ಶ್ರೀರಾಮಕೃಷ್ಣರು: “ಒಂದು ದೊಡ್ಡ ದೋಣಿಯನ್ನೇ ಗೊತ್ತುಮಾಡೋಣ; ಅದು ಕೆಳಕ್ಕೂ ಮೇಲಕ್ಕೂ ಹೊಯ್ದಾಡದು. ಗಿರೀಶಘೋಷ ಅಲ್ಲಿಗೆ ಬರುವನೇ?”
ಪರಮಹಂಸರು ದ್ವಿಜನ ಕಡೆಗೆ ದೃಷ್ಟಿಸಿ ನೋಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಈ ನಗರದಲ್ಲಿ ಬೇಕಾದಷ್ಟು ಯುವಕರಿದ್ದಾರೆ; ಆದರೆ ಈತ ಮಾತ್ರ ಇಲ್ಲಿಗೆ ಬರಲು ಕಾರಣವೇನು? (ಮಾಸ್ಟರಿಗೆ) ಹೇಳು ನೋಡೋಣ. ಹಿಂದಿನ ಜನ್ಮದ ಸುಸಂಸ್ಕಾರ ಸ್ವಲ್ಪ ಇದ್ದೇ ಇರಬೇಕು.”
ಮಾಸ್ಟರ್: “ಹೌದು, ಇದ್ದೇ ಇರಬೇಕು.”
ಶ್ರೀರಾಮಕೃಷ್ಣರು: “ಸಂಸ್ಕಾರವೆಂಬುದಿದೆ. ಹಿಂದಿನ ಜನ್ಮಗಳಲ್ಲಿ ಸತ್ಕಾರ್ಯಗಳನ್ನು ಮಾಡಿದ್ದರೆ ಕೊನೆಯ ಜನ್ಮದಲ್ಲಿ ಮನುಷ್ಯ ಸರಳ ಸ್ವಭಾವಿಯಾಗುತ್ತಾನೆ. ಕೊನೆಯ ಜನ್ಮದಲ್ಲಿ ಹತ್ತಿರ ಹತ್ತಿರ ಹುಚ್ಚನ ಹಾಗೆ ವರ್ತಿಸುತ್ತಾನೆ.
“ಸತ್ಯವೇನೆಂದರೆ, ಎಲ್ಲವೂ ಆತನ ಇಚ್ಛೆಗನುಸಾರವಾಗಿ ನಡೆಯುತ್ತಿದೆ. ಆತ ‘ಹ್ಞೂ’ ಎಂದೊಡನೆಯೆ ಜಗತ್ತಿನ ಪ್ರತಿಯೊಂದೂ ಸಂಭವಿಸಲಾರಂಭಿಸುತ್ತದೆ. ಆತ ‘ಉಹ್ಞೂ’ ಎಂದೊಡನೆಯೆ ಪ್ರತಿಯೊಂದೂ ನಿಂತಲ್ಲಿಯೇ ನಿಂತುಬಿಡುತ್ತದೆ.
“ಮನುಷ್ಯ ಆಶೀರ್ವಾದ ಮಾಡಕೂಡದು ಎಂಬುದಕ್ಕೆ ಕಾರಣವೇನು? ಆತನ ಇಚ್ಛೆಯಂತೆ ಏನೂ ಘಟಿಸದು; ಆದರೆ ಭಗವಂತನ ಇಚ್ಛೆಯಂತೆ ಎಲ್ಲವೂ ಘಟಿಸುತ್ತವೆ ಮತ್ತು ನಶಿಸುತ್ತವೆ.
“ಅಂದು ನಾನು ಕ್ಯಾಪ್ಟನ್ನನ ಮನೆಗೆ ಹೋಗಿದ್ದಾಗ ರಸ್ತೆಯಲ್ಲಿ ಕೆಲವು ಯುವಕರು ಹೋಗುತ್ತಿದ್ದುದನ್ನು ನೋಡಿದೆ. ಅವರು ಬೇರೆಯ ಶ್ರೇಣಿಗೆ ಸೇರಿದವರಾಗಿ ಕಂಡರು. ಅವರಲ್ಲೊಬ್ಬ-ಹತ್ತೊಂಬತ್ತೊ ಇಪ್ಪತ್ತೊ ವಯಸ್ಸು ಇರಬೇಕು-ಕ್ರಾಪು ಬಿಡಿಸಿಕೊಂಡಿರುವುದನ್ನು ನೋಡಿದೆ. ಆತ ಸಿಳ್ಳು ಹಾಕುತ್ತ ಮುಂದುವರಿಯುತ್ತಿದ್ದ.
“ಕೆಲವರು ಘೋರ ತಮೋಗುಣಿಗಳು. ಒಂದಷ್ಟು ಕೊಳಲನ್ನು ಊದುವುದಕ್ಕೆ ಬಂತು ಅಂದರೆ, ಅಷ್ಟಕ್ಕೇ ಅಹಂಕಾರ.
(ದ್ವಿಜನಿಗೆ) “ಯಾರು ಜ್ಞಾನಸಂಪನ್ನರೊ ಅವರು ಪರರ ನಿಂದನೆಗಾಗಿ ಏಕೆ ಭಯ ಪಡಬೇಕು? ಕಮ್ಮಾರನ ಅಡಿಗಲ್ಲಿನಂತೆ ಅವರದು ಕೂಟಸ್ಥ ಬುದ್ಧಿ. ಅದರ ಮೇಲೆ ಎಷ್ಟೊಂದು ಕೊಡತಿಯ ಏಟುಗಳು ಬೀಳುತ್ತವೆ. ಆದರೂ ಅದು ಕಿಂಚಿತ್ತೂ ಜಗ್ಗದು. ನಿರ್ವಿಕಾರಿ.
“ಆ ವ್ಯಕ್ತಿಯ ತಂದೆ ರಸ್ತೆಯಲ್ಲಿ ಹೋಗುತ್ತಿದ್ದುದನ್ನು ಕಂಡೆ.”
ಮಾಸ್ಟರ್: “ಆತ ಬಹಳ ಸರಳಜೀವಿ.”
ಶ್ರೀರಾಮಕೃಷ್ಣರು: “ಆದರೆ ಕಣ್ಣುಗಳು ಕೆಂಪಾಗಿವೆ.”
ಪರಮಹಂಸರು ಕ್ಯಾಪ್ಟನ್ನನ ಮನೆಗೆ ಹೋಗಿದ್ದರು. ಅದರ ಸಂಬಂಧವಾಗಿ ಮಾತ ನಾಡುತ್ತಿದ್ದಾರೆ. ಪರಮಹಂಸರ ಹತ್ತಿರಕ್ಕೆ ಬರುತ್ತಿದ್ದ ಯುವಕರನ್ನು ಆತ ನಿಂದಿಸುತ್ತಿದ್ದ. ಬಹುಶಃ ಹಾಜರಾ ಆತನ ಮನಸ್ಸನ್ನು ಕೆಡಿಸಿರಬೇಕು.
ಶ್ರೀರಾಮಕೃಷ್ಣರು: “ಕ್ಯಾಪ್ಟನ್ನನೊಡನೆ ಮಾತುಕತೆಗಳನ್ನಾಡಿದೆ. ನಾನು ಹೇಳಿದೆ, ‘ಈ ಜಗತ್ತಿನಲ್ಲಿ ಪ್ರಕೃತಿಪುರುಷರ ವಿನಾ ಬೇರೊಂದೂ ಇಲ್ಲ. ನಾರದ ಶ್ರೀರಾಮನಿಗೆ ಹೇಳಿದ, ‘ಹೇ ರಾಮ, ಈ ಜಗತ್ತಿನಲ್ಲಿರುವ ಸಕಲ ಪುರುಷರೂ ನಿನ್ನ ಅಂಶದಿಂದ ಜನ್ಮವೆತ್ತಿದ್ದಾರೆ.’
“ಕ್ಯಾಪ್ಟನ್ನನಿಗೆ ಬಹಳ ಆನಂದವಾಗಿಬಿಟ್ಟಿತು. ಆತ ಹೇಳಿದ, ‘ನಿಮಗೆ ಮಾತ್ರವೆ ಯಥಾರ್ಥಜ್ಞಾನ ದೊರೆತಿದೆ. ಎಲ್ಲಾ ಪುರುಷರೂ ರಾಮನ ಅಂಶದಿಂದ ಜನ್ಮತಾಳಿರುವುದ ರಿಂದ ನಿಜವಾಗಿ ಎಲ್ಲರೂ ರಾಮರೇ; ಎಲ್ಲಾ ಸ್ತ್ರೀಯರೂ ಸೀತಾದೇವಿಯ ಅಂಶದಿಂದ ಜನ್ಮತಾಳಿರುವುದರಿಂದ ನಿಜವಾಗಿ ಎಲ್ಲರೂ ಸೀತಾದೇವಿಯರೆ.’
“ಹೀಗೆಂದು ಹೇಳಿದ ಮರುಕ್ಷಣದಲ್ಲಿಯೇ ಯುವಕನನ್ನು ನಿಂದಿಸಲಾರಂಭಿಸಿ ಹೇಳಿದ, ‘ಅವರು ಇಂಗ್ಲೀಷು ಕಲಿಸುತ್ತಿದ್ದಾರೆ. ಸಿಕ್ಕಿಸಿಕ್ಕಿದುದನ್ನೆಲ್ಲ ತಿನ್ನುತ್ತಾರೆ. ಅಂಥ ಯುವಕರು ಸರ್ವದಾ ನಿಮ್ಮೊಡನೆ ಬೆರೆಯುತ್ತಿದ್ದಾರೆ. ಅದು ಒಳ್ಳೆಯದಲ್ಲ; ಅದರಿಂದ ನಿಮ್ಮ ಮನಸ್ಸು ಕೆಟ್ಟುಹೋಗಬಹುದು. ಹಾಜರಾ ಒಬ್ಬ ಗಣ್ಯವ್ಯಕ್ತಿ. ಆತ ಬಹಳ ಒಳ್ಳೆಯವ. ಈ ಯುವಕರು ಬಂದು ನಿಮ್ಮೊಡನೆ ಅಷ್ಟೊಂದಾಗಿ ಬೆರೆಯಲು ಬಿಟ್ಟುಕೊಡಬೇಡಿ.’ ಮೊದಲು ಅದಕ್ಕೆ ಹೇಳಿದೆ, ‘ತಾವಾಗೇ ಬರುತ್ತಾರಲ್ಲಾ ಅದಕ್ಕೆ ನಾನೇನು ಮಾಡಲಿ?’ ಬಳಿಕ ಚೆನ್ನಾಗಿ ಕೊಟ್ಟೆ. ಅದನ್ನು ನೋಡಿ ಆತನ ಮಗಳು ನಕ್ಕುಬಿಟ್ಟಳು. ನಾನು ಆತನಿಗೆ ಹೇಳಿದೆ, ‘ಯಾರಲ್ಲಿ ವಿಷಯಬುದ್ಧಿ ಇರುವುದೊ ಅವರಿಂದ ಬಹಳ ದೂರದಲ್ಲಿಯೇ ಭಗವಂತ ನಿಲ್ಲುತ್ತಾನೆ. ಆದರೆ ಯಾರಲ್ಲಿ ವಿಷಯಬುದ್ಧಿ ಇಲ್ಲವೊ ಅವರ ಅತ್ಯಂತ ಹತ್ತಿರವೇ, ಅಂದರೆ ಮೂರು ಮೊಳದೊಳಗೆಯೇ ನಿಲ್ಲುತ್ತಾನೆ.’ ಕ್ಯಾಪ್ಟನ್ ರಾಖಾಲನ ಮಾತೆತ್ತಿ ಹೇಳಿದ, ‘ಆತ ಎಲ್ಲರ ಮನೆಯಲ್ಲಿಯೂ ಊಟ ಮಾಡುತ್ತಾನೆ.’ ಬಹುಶಃ ಇದನ್ನು ಹಾಜರಾನ ಮೂಲಕ ಕೇಳಿರಬೇಕು. ಆಗ ಹೇಳಿದೆ, ‘ಜನರು ಬೇಕಾದಷ್ಟು ಜಪತಪ ಮಾಡಲಿ, ಆದರೆ ಅವರಲ್ಲಿ ವಿಷಯಬುದ್ಧಿ ಇನ್ನೂ ನೆಲೆಸಿರುವುದಾದರೆ ಅವರಿಗೂ ಏನೂ ದೊರೆಯದು. ಆದರೆ ಯಾರೇ ಆಗಲಿ, ಹಂದಿಮಾಂಸ ತಿನ್ನುತ್ತಿದ್ದರೂ ಭಗವಂತನಲ್ಲಿ ಮನಸ್ಸನ್ನಿಟ್ಟಿರುವುದಾದರೆ, ಆತನೇ ಧನ್ಯ. ಆತನಿಗೆ ಕ್ರಮೇಣ ಭಗವಂತನ ಸಾಕ್ಷಾತ್ಕಾರ ದೊರೆತೇ ದೊರೆಯುತ್ತದೆ. ಹಾಜರಾ ಬಹಳವಾಗಿ ಜಪತಪ ಮಾಡುತ್ತಾನೆ. ಆದರೆ ಯಾವ ದಳ್ಳಾಳಿಯ ಕೆಲಸವೂ ತನ್ನಿಂದ ತಪ್ಪಿಸಿಕೊಳ್ಳದ ಹಾಗೆ ನೋಡಿಕೊಳ್ಳುತ್ತಿರುತ್ತಾನೆ.’
“ಅದಕ್ಕೆ ಕ್ಯಾಪ್ಟನ್ ಹೇಳಿದ, ‘ಹೌದು, ಹೌದು! ನೀವು ಹೇಳುವುದು ಸರಿ.’ ಬಳಿಕ ನಾನು ಹೇಳಿದೆ, ‘ಈಗತಾನೇ ನೀನೇ ಹೇಳಿದೆ ಎಲ್ಲ ಪುರುಷರೂ ರಾಮನ ಅಂಶ, ಸ್ತ್ರೀಯರೆಲ್ಲರೂ ಸೀತಾದೇವಿಯ ಅಂಶ ಅಂತ. ಈಗ ನೀನು ಹೀಗೆ ಮಾತಾಡುತ್ತಿರುವೆಯಲ್ಲ!’
“ಕ್ಯಾಪ್ಟನ್ ಹೇಳಿದ, ‘ಹೌದು, ಅದು ನಿಜ. ಆದರೆ ನೀವು ಎಲ್ಲರನ್ನೂ ಪ್ರೀತಿಸುತ್ತಿಲ್ಲ ವಲ್ಲ’ ಅಂತ.
“ನಾನು ಹೇಳಿದೆ, ‘ಆಪೋ ನಾರಾಯಣಃ’ ನೀರನ್ನು ನಾವು ಎಲ್ಲೆಲ್ಲಿಯೂ ನೋಡುತ್ತೇವೆ. ಆದರೆ ಕೆಲವು ಕುಡಿಯಲು ಯೋಗ್ಯವಾಗಿವೆ. ಕೆಲವು ಶೌಚಕ್ಕೆ ಯೋಗ್ಯ ವಾಗಿವೆ. ಇಲ್ಲಿ ನೋಡು, ಇಲ್ಲಿ ನಿನ್ನ ಹೆಂಡತಿ ಮತ್ತು ಮಗಳು ಕುಳಿತಿದ್ದಾರೆ. ನನ್ನ ಕಣ್ಣಿಗೆ ಇವರು ಸಾಕ್ಷಾತ್ ಆನಂದಮಯಿಯರೇ ಆಗಿ ಕಾಣುತ್ತಿದ್ದಾರೆ.
“ಆಗ ಆತ ಹೇಳಿದ, ‘ಹೌದು, ಹೌದು! ಅದು ಸತ್ಯ.’ ಬಳಿಕ ಮತ್ತೆ ನನ್ನ ಪಾದಗಳನ್ನು ಸ್ಪರ್ಶಿಸಿ ಕ್ಷಮೆ ಬೇಡಲು ಬಂದ.”
ಹೀಗೆಂದು ಹೇಳಿ ಪರಮಹಂಸರು ನಗಲಾರಂಭಿಸಿದರು. ಬಳಿಕ ಕ್ಯಾಪ್ಟನ್ನನ ಸದ್ಗುಣಗಳ ಸಂಬಂಧವಾಗಿ ಮಾತನಾಡಲಾರಂಭಿಸಿದರು.
ಶ್ರೀರಾಮಕೃಷ್ಣರು: “ಕ್ಯಾಪ್ಟನ್ನನಲ್ಲಿ ಅನೇಕ ಸದ್ಗುಣಗಳಿವೆ, ಪ್ರತಿದಿನವೂ ನಿತ್ಯಕರ್ಮ ಗಳಲ್ಲಿ ನಿರತನಾಗಿರುತ್ತಾನೆ. ತಾನೇ ಮನೆದೇವರ ಪೂಜೆ ಮಾಡುತ್ತಾನೆ. ಅಭಿಷೇಕದ ಸಮಯದಲ್ಲಿ ಎಷ್ಟೊಂದು ಮಂತ್ರಗಳನ್ನು ಪಠಿಸುತ್ತಾನೆ ಏನು ಕತೆ! ದೊಡ್ಡ ಕರ್ಮಠ. ಪೂಜೆ, ಜಪ ಮಂಗಳಾರತಿ, ಶಾಸ್ತ್ರಪಾಠ, ಸ್ತೋತ್ರಗಳ ಪಠನ ಇವೇ ಮೊದಲಾದ ನಿತ್ಯಕರ್ಮಗಳನ್ನು ಮಾಡುತ್ತಿದ್ದಾನೆ.
“ನಾನು ಆತನಿಗೆ ಗದರಿಸಿ, ‘ನೀನು ಅತಿಯಾಗಿ ಓದಿಬಿಟ್ಟು ತಲೆ ಕೆಡಿಸಿ ಕೊಂಡಿದ್ದೀಯೆ. ಇನ್ನು ಮುಂದಕ್ಕೆ ಓದುವುದನ್ನು ನಿಲ್ಲಿಸು’ ಎಂದು ಹೇಳಿದೆ.
“ನನ್ನ ಆಧ್ಯಾತ್ಮಿಕ ಉನ್ನತಿಯ ಸಂಬಂಧವಾಗಿ ಕ್ಯಾಪ್ಟನ್ ಹೇಳಿದ, ‘ನಿಮ್ಮ ಜೀವಾತ್ಮ ರೆಕ್ಕೆಯನ್ನು ಬಿಚ್ಚಿಕೊಂಡು ಮೇಲಕ್ಕೆ ಹಾರಿಹೋಗಲು ಸತತ ಸಿದ್ಧವಾಗಿದೆ.’ ಜೀವಾತ್ಮ ಮತ್ತು ಪರಮಾತ್ಮ ಎಂಬ ಎರಡು ಅಸ್ತಿತ್ವಗಳಿವೆ, ಜೀವಾತ್ಮನನ್ನು ಪಕ್ಷಿಗೆ ಮತ್ತುಪರಮಾತ್ಮನನ್ನು ಆಕಾಶಕ್ಕೆ-ಚಿದಾಕಾಶಕ್ಕೆ-ಹೋಲಿಸಬಹುದು. ಕ್ಯಾಪ್ಟನ್, ‘ನಿಮ್ಮ ಜೀವಾತ್ಮ ಚಿದಾಕಾಶಕ್ಕೆ ಹಾರಿಹೋಗಿಬಿಡುತ್ತದೆ. ಅದಕ್ಕಾಗಿಯೇ ನೀವು ಸಮಾಧಿಸ್ಥರಾಗುವುದು’ ಅಂತ ಹೇಳಿದ.
(ನಗುತ್ತ) “ಆತ ಬಂಗಾಳಿಗಳನ್ನು ಖಂಡಿಸಲಾರಂಭಿಸಿದ. ಆತ ಹೇಳಿದ, ‘ಬಂಗಾಳಿ ಗಳು ತಿಳಿಗೇಡಿಗಳು. ಅವರ ಹತ್ತಿರವೇ ಮಾಣಿಕ್ಯ (ಶ್ರೀರಾಮಕೃಷ್ಣರು) ಇದೆ, ಆದರೆ ಅದು ಅವರಿಗೆ ಗೊತ್ತೇ ಇಲ್ಲವಲ್ಲ.’
“ಕ್ಯಾಪ್ಟನ್ನನ ತಂದೆ ಒಬ್ಬ ದೊಡ್ಡ ಭಕ್ತ. ಆಂಗ್ಲ ಸೈನ್ಯದಲ್ಲಿ ಸುಬೇದಾರನಾಗಿದ್ದ, ರಣರಂಗದಲ್ಲಿಯೂ ಸಕಾಲಕ್ಕೆ ಸರಿಯಾಗಿ ಪೂಜೆಮಾಡುತ್ತಿದ್ದನಂತೆ. ಒಂದು ಕೈಯಿಂದ ಶಿವಪೂಜೆಯನ್ನು ಮಾಡುತ್ತ ಇನ್ನೊಂದರಿಂದ ಕತ್ತಿ ಬಂದೂಕುಗಳನ್ನು ಹಿಡಿದು ಯುದ್ಧ ಮಾಡುತ್ತಿದ್ದನಂತೆ.
(ಮಾಸ್ಟರಿಗೆ) “ಆದರೆ ಕ್ಟಾಪ್ಟನ್ ಹಗಲೂ ಇರುಳೂ ಪ್ರಾಪಂಚಿಕ ಕೆಲಸಕಾರ್ಯಗಳಲ್ಲಿ ತೊಡಗಿರುತ್ತಾನೆ. ನಾನು ಆತನ ಮನೆಗೆ ಹೋದಾಗಲೆಲ್ಲ ಆತನ ಹೆಂಡತಿ ಮಕ್ಕಳು ಆತನನ್ನು ಸುತ್ತುಗಟ್ಟಿಕೊಂಡಿರುವುದು ನನ್ನ ಕಣ್ಣಿಗೆ ಬೀಳುತ್ತಿರುತ್ತದೆ. ಇವೂ ಅಲ್ಲದೆ ಆತನ ಜನರು ಆಗಾಗ ಲೆಕ್ಕದ ಪುಸ್ತಕಗಳನ್ನು ತಂದು ತೋರಿಸುತ್ತಲೇ ಇರುತ್ತಾರೆ. ಆದರೂ ಒಮ್ಮೊಮ್ಮೆ ಆತನ ಮನಸ್ಸು ಭಗವಚ್ಚಿಂತನೆಯನ್ನೂ ಮಾಡುತ್ತಿರುತ್ತದೆ. ಆತನನ್ನು ಒಬ್ಬ ವಿಷಮಜ್ವರದ ರೋಗಿಗೆ ಹೋಲಿಸಬಹುದು. ಸನ್ನಿ ಯಾವಾಗ ನೋಡಿದರೂ ಆತನನ್ನು ಮುಚ್ಚಿಕೊಂಡಿರುತ್ತದೆ. ಆದರೆ ಆಗಾಗ ಆತನಿಗೆ ಥಟ್ಟನೆ ಪ್ರಜ್ಞೆ ಬಂದು ಕೂಗಿಕೊಳ್ಳುತ್ತಾನೆ, ‘ನೀರು ಕುಡಿಯಬೇಕು! ನೀರು ಕುಡಿಯಬೇಕು!’ ಅಂತ. ಆತನಿಗೆ ನೀರನ್ನು ಕುಡಿಸುತ್ತಿದ್ದ ಹಾಗೆಯೇ ಮತ್ತೆ ಆತನನ್ನು ಸನ್ನಿ ಮುಚ್ಚಿ ಕೊಂಡುಬಿಡುತ್ತದೆ: ಬಾಹ್ಯಪ್ರಜ್ಞೆಯೇ ಇಲ್ಲದಂತಾಗುತ್ತದೆ. ನಾನು ಕ್ಯಾಪ್ಟನ್ನನಿಗೆ ಹೇಳಿದೆ, ‘ನೀನು ಒಬ್ಬ ಕರ್ಮಕಾಂಡಿ.’ ಆತ ಹೇಳಿದ, ‘ಹೌದು, ನಿಜ. ನನಗೆ ಪೂಜೆಪುರಸ್ಕಾರಗಳು ಅಂದರೆ ಬಹಳ ಉತ್ಸಾಹ. ಜೀವನಿಗೆ ಕರ್ಮಮಾರ್ಗ ವಿನಾ ಬೇರೆ ವಿಧಿಯೇ ಇಲ್ಲ.’
“ನಾನು ಹೇಳಿದೆ, ‘ಹಾಗೆಂದು ಚಿರಕಾಲವೂ ಈ ವಿಧವಾದ ಕರ್ಮಗಳಲ್ಲಿಯೇ ತೊಡಗಿರಬೇಕೆ? ದುಂಬಿಯು ಎಲ್ಲಿಯವರೆಗೆ ಝೇಂಕರಿಸುತ್ತದೆ? ಹೂವಿನ ಮೇಲೆ ಕೂರದವರೆಗೆ. ಜೇನು ಕುಡಿಯುವಾಗ ಅದರ ಝೇಂಕೃತಿಯೆಲ್ಲ ನಿಂತುಹೋಗಿಬಿಡುತ್ತದೆ’ ಅಂತ. ಆತ ಹೇಳಿದ, ‘ಆದರೆ ನಿಮ್ಮ ಹಾಗೆ ನಾವು ಪೂಜೆಪುರಸ್ಕಾರಗಳನ್ನೆಲ್ಲ ಬಿಟ್ಟುಬಿಡ ಲಾಗುವುದೇನು?’ ಆದಾಗ್ಯೂ ಆತನ ಮಾತುಗಳಲ್ಲಿ ಒಂದು ಸ್ತಿಮಿತ ಎಂಬುದು ಇಲ್ಲ. ಆತನು ಕೆಲವು ವೇಳೆ ಇದೆಲ್ಲ ಜಡ ಎಂದೂ, ಇನ್ನು ಕೆಲವು ವೇಳೆ ಇದೆಲ್ಲ ಚೈತನ್ಯ ಎಂದೂ ಹೇಳುತ್ತಾನೆ. ನಾನು ಹೇಳುತ್ತೇನೆ, ‘ಜಡ ಎಂಬತಕ್ಕದ್ದೆಲ್ಲಿದೆ? ಎಲ್ಲವೂ ಚೈತನ್ಯವೇ.”
ಪೂರ್ಣನ ಯೋಗಕ್ಷೇಮದ ಸಂಬಂಧವಾಗಿ ಪರಮಹಂಸರು ಮಾಸ್ಟರನ್ನು ಕೇಳುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನಾನು ಇನ್ನೊಮ್ಮೆ ಪೂರ್ಣನನ್ನು ನೋಡಲು ಸಾಧ್ಯವಾದರೆ, ಆತನಿಗಾಗಿ ನನಗಿರುವ ವ್ಯಾಕುಲತೆ ಸ್ವಲ್ಪ ಕಡಿಮೆಯಾಗುತ್ತದೆ. ಆತನೆಷ್ಟು ಚತುರ! ನನ್ನ ಮೇಲೆ ಆತನಿಗೆ ಬಹಳ ಪ್ರೀತಿ. ಆತ ಹೇಳುತ್ತಾನೆ, ‘ನಿಮ್ಮನ್ನು ನೋಡಬೇಕೆಂದು ನನ್ನ ಹೃದಯ ಸುಮ್ಮನೆ ತಲ್ಲಣಿಸುತ್ತಿರುತ್ತದೆ.’ (ಮಾಸ್ಟರಿಗೆ) ಆತನ ಮನೆಯವರು ಆತನನ್ನು ನಿನ್ನ ಸ್ಕೂಲಿನಿಂದ ಬಿಡಿಸಿಬಿಟ್ಟಿದ್ದಾರೆ. ಅದರಿಂದ ನಿನಗೇನಾದರೂ ತೊಂದರೆಯಾಗಬಹುದೆ?”
ಮಾಸ್ಟರ್: “ನನ್ನ ದೆಸೆಯಿಂದ ಆತನ ಮನೆಯವರು ಪೂರ್ಣನನ್ನು ನಮ್ಮ ಸ್ಕೂಲಿಗೆ ಕಳುಹಿಸುತ್ತಿಲ್ಲ ಅಂತ ಒಂದು ಪಕ್ಷ ವಿದ್ಯಾಸಾಗರನೇನಾದರೂ ನನ್ನನ್ನು ಆಕ್ಷೇಪಿಸುವುದಾದರೆ, ನಾನು ಆತನಿಗೆ ಸರಿಯಾದ ಉತ್ತರ ಕೊಡಬಲ್ಲೆ.”
ಶ್ರೀರಾಮಕೃಷ್ಣರು: “ನಿನ್ನ ಉತ್ತರವೇನು?”
ಮಾಸ್ಟರ್: “ಉತ್ತರ ಕೊಡುತ್ತೇನೆ, ಸಾಧು ಸತ್ಪುರುಷರ ಸಹವಾಸ ಮಾಡಿದರೆ ಭಗವದ್ಭಾವನೆಯ ಉದ್ದೀಪನೆಯಾಗುತ್ತದೆ; ಅದು ಕೆಟ್ಟದ್ದೇನಲ್ಲ. ಮತ್ತೆ ನಾನು ಆತನಿಗೆ ಹೇಳುತ್ತೇನೆ, ಸ್ಕೂಲಿಗೆ ಇಟ್ಟಿರುವ ಟೆಕ್ಸ್ಟ ಬುಕ್ಕಿನಲ್ಲಿಯೂ ಹೃತ್ಪೂರ್ವಕವಾಗಿ ಭಗವಂತನನ್ನು ಪ್ರೀತಿಸಬೇಕು ಎಂದು ಹೇಳಿದೆ ಅಂತ.” (ಪರಮಹಂಸರು ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು: “ನಾನು ಕ್ಯಾಪ್ಟನ್ನನ ಮನೆಗೆ ಹೋಗಿದ್ದಾಗ ಅಲ್ಲಿಗೆ ಚಿಕ್ಕ ನರೇನನನ್ನು ಕರೆಸಿದೆ. ಆತನಿಗೆ ಹೇಳಿದೆ, ‘ನಿನ್ನ ಮನೆ ಎಲ್ಲಿದೆ? ನಡಿ ಹೋಗೋಣ’ ಅಂತ. ಆತ ಹೇಳಿದ, ‘ದಯವಿಟ್ಟು ಬನ್ನಿ’ ಅಂತ. ನಾವು ಅಲ್ಲಿಗೆ ಹೋಗುತ್ತಿರುವುದು ತನ್ನ ತಂದೆಗೆ ಗೊತ್ತಾಗಿಬಿಡುವುದೆಂದು ಹೆದರುತ್ತ ಹೆದರುತ್ತ ನಮ್ಮನ್ನು ಕರೆದುಕೊಂಡು ಹೋದ. (ಎಲ್ಲರೂ ನಗುತ್ತಾರೆ.)
(ಒಬ್ಬ ಅಭ್ಯಾಗತನಿಗೆ) “ನೀನು ಬಹಳ ಕಾಲದಿಂದ ಬರಲೇ ಇಲ್ಲವಲ್ಲ! ಬಹುಶಃ ಏಳೆಂಟು ತಿಂಗಳೇ ಆಗಿರಬೇಕು.”
ಅಭ್ಯಾಗತ: “ಒಂದು ವರ್ಷವಾಗಿ ಹೋಯಿತು.”
ಶ್ರೀರಾಮಕೃಷ್ಣರು: “ನಿನ್ನ ಜೊತೆಯಲ್ಲಿ ಇನ್ನೊಬ್ಬ ಬರುತ್ತಿದ್ದನಲ್ಲವೆ?”
ಅಭ್ಯಾಗತ: “ಹೌದು, ಆತನ ಹೆಸರು ನೀಲಮಣಿಬಾಬು ಅಂತ.”
ಶ್ರೀರಾಮಕೃಷ್ಣರು: “ಆತನೇಕೆ ಬರುತ್ತಿಲ್ಲ? ಒಮ್ಮೆ ಇಲ್ಲಿಗೆ ಬರುವಂತೆ ಆತನಿಗೆ ಹೇಳು. ನನಗೆ ಆತನನ್ನು ನೋಡಬೇಕು ಅಂತ ಇಚ್ಛೆಯಾಗುತ್ತಿದೆ. ನಿನ್ನೊಡನೆ ಬಂದಿರುವ ಈ ಹುಡುಗನು ಯಾರು?”
ಅಭ್ಯಾಗತ: “ಈತ ಅಸ್ಸಾಮಿನಿಂದ ಬಂದಿದ್ದಾನೆ.”
ಶ್ರೀರಾಮಕೃಷ್ಣರು: “ಅಸ್ಸಾಮು ಎಲ್ಲಿದೆ? ಯಾವ ದಿಕ್ಕಿನಲ್ಲಿದೆ?”
ಆಶುವಿನ ಯೋಗಕ್ಷೇಮದ ಸಂಬಂಧವಾಗಿ ದ್ವಿಜ ಪರಮಹಂಸರಿಗೆ ತಿಳಿಸಲು ಆರಂಭಿಸಿದ. ಆಶುವಿನ ತಂದೆ ಆತನ ಮದುವೆಗೆ ಏರ್ಪಾಡು ನಡೆಸುತ್ತಿದ್ದಾನೆ, ಆದರೆ ಆತನಿಗೆ ಮಾತ್ರ ವಿವಾಹವಾಗಲು ಇಚ್ಛೆಯಿಲ್ಲ.
ಶ್ರೀರಾಮಕೃಷ್ಣರು: “ನೋಡಿ, ನೋಡಿ! ಆತನಿಗೆ ಇಚ್ಛೆಯಿಲ್ಲ, ಆದರೂ ಬಲಾತ್ಕರಿಸಿ ವಿವಾಹ ಮಾಡುತ್ತಿದ್ದಾರೆ!”
ಹಿರಿಯ ಅಣ್ಣನನ್ನು ಪೂಜ್ಯದೃಷ್ಟಿಯಿಂದ ನೋಡಬೇಕು ಅಂತ ಪರಮಹಂಸರು ಒಬ್ಬ ಭಕ್ತನಿಗೆ ಹೇಳುತ್ತಿದ್ದಾರೆ. ಆತನಿಗೆ ಹೇಳಿದರು, “ಹಿರಿಯ ಅಣ್ಣ ತಂದೆಗೆ ಸಮಾನ. ಆತನನ್ನು ಗೌರವದಿಂದ ಕಾಣಬೇಕು.”
ಭಕ್ತರ ಮಧ್ಯದಲ್ಲಿ ಒಬ್ಬ ಪಂಡಿತ ಕುಳಿತಿದ್ದಾನೆ. ಆತ ಉತ್ತರಭಾರತವಾಸಿ.
ಶ್ರೀರಾಮಕೃಷ್ಣರು ನಗುತ್ತ ಮಾಸ್ಟರಿಗೆ: “ಈತ ಒಬ್ಬ ದೊಡ್ಡ ಭಾಗವತ ಪಂಡಿತ.”
ಮಾಸ್ಟರ್ ಮತ್ತು ಉಳಿದ ಭಕ್ತರು ಪಂಡಿತನ ಕಡೆ ಏಕದೃಷ್ಟಿಯಿಂದ ನೋಡ ಲಾರಂಭಿಸಿದರು.
ಶ್ರೀರಾಮಕೃಷ್ಣರು ಪಂಡಿತನಿಗೆ: “ಒಳ್ಳೆಯದು, ಯೋಗಮಾಯೆ ಅಂದರೇನು?”
ಪಂಡಿತ ಒಂದು ಅಸಮರ್ಪಕ ಉತ್ತರ ಕೊಟ್ಟ.
ಶ್ರೀರಾಮಕೃಷ್ಣರು: “ರಾಧಿಕೆಯನ್ನು ಏಕೆ ಯೋಗಮಾಯೆ ಅಂತ ಕರೆಯುತ್ತಿಲ್ಲ?”
ಪಂಡಿತ ಇದಕ್ಕೂ ಒಂದು ವಿಧವಾದ ಉತ್ತರ ಕೊಟ್ಟ.
ಶ್ರೀರಾಮಕೃಷ್ಣರು: “ರಾಧಿಕೆ ವಿಶುದ್ಧ ಸತ್ತ್ವಸ್ವರೂಪಳು; ಆಕೆ ಪ್ರೇಮಮಯಿ. ಯೋಗಮಾಯೆಯಲ್ಲಿ ಸತ್ತ್ವ, ರಜಸ್ಸು, ತಮಸ್ಸು ಈ ಮೂರು ಗುಣಗಳೂ ಇವೆ; ಶ್ರೀಮತಿಯ (ರಾಧಿಕೆ) ಆಂತರ್ಯದಲ್ಲಿ ವಿಶುದ್ಧ ಸತ್ತ್ವ ವಿನಾ ಬೇರೆ ಏನೂ ಇಲ್ಲ.
(ಮಾಸ್ಟರಿಗೆ) “ನರೇಂದ್ರ ಈಗ ಶ್ರೀಮತಿಯನ್ನು ಅತ್ಯಂತ ಪೂಜ್ಯದೃಷ್ಟಿಯಿಂದ ನೋಡುತ್ತಿದ್ದಾನೆ. ಆತ ಹೇಳುತ್ತಾನೆ, ಯಾರೇ ಆಗಲಿ, ಸಚ್ಚಿದಾನಂದನನ್ನು ಯಾವ ರೀತಿಯಾಗಿ ಪ್ರೀತಿಸಬೇಕು ಎಂಬುದನ್ನು ಅರಿಯಬೇಕಾದರೆ, ಅದನ್ನು ಶ್ರೀಮತಿಯಿಂದ ಅರಿತುಕೊಳ್ಳಬೇಕು ಎಂದು.
“ಸಚ್ಚಿದಾನಂದ ರಸಾಸ್ವಾದನೆ ಮಾಡಲೋಸುಗ ತಾನೇ ರಾಧಿಕೆಯನ್ನು ಸೃಷ್ಟಿಸಿದ್ದಾನೆ. ಸಚ್ಚಿದಾನಂದ ಕೃಷ್ಣನ ಅಂಗದಿಂದ ರಾಧಿಕೆ ಹೊರಹೊಮ್ಮಿದ್ದಾಳೆ. ಸಚ್ಚಿದಾನಂದ ಕೃಷ್ಣನೇ ‘ಆಧಾರ’, ಮತ್ತೆ ಆತನೇ ರಾಧಿಕೆಯ ರೂಪಿನಲ್ಲಿ ಆಧೇಯ.’ ಸಚ್ಚಿದಾನಂದ ತನ್ನ ರಸವನ್ನು ತಾನೇ ಆಸ್ವಾದಿಸಲು, ಅಂದರೆ ತನ್ನನ್ನೇ ತಾನು ಪ್ರೀತಿಸಿ ಆನಂದಪಡಲು ರಾಧಿಕೆಯ ರೂಪದಿಂದ ವ್ಯಕ್ತವಾಗಿದ್ದಾನೆ.
“ಅದಕ್ಕಾಗಿಯೇ ವೈಷ್ಣವ ಶಾಸ್ತ್ರದಲ್ಲಿ ಬರೆದಿದೆ, ರಾಧಿಕೆ ಜನ್ಮತಾಳಿದ ನಂತರ ಕಣ್ಣು ಬಿಡಲಿಲ್ಲ. ಇದರ ಇಂಗಿತ ಆಕೆಗೆ ಬೇರೆ ಯಾವ ಮನುಷ್ಯನನ್ನೂ ನೋಡಲಿಚ್ಛೆಯಾಗಲಿಲ್ಲ ಅಂತ. ಯಶೋದೆ ಕಂಕುಳಿನಲ್ಲಿ ಶ್ರೀಕೃಷ್ಣನನ್ನು ಎತ್ತಿಕೊಂಡು ರಾಧಿಕೆಯನ್ನು ನೋಡಲು ಬಂದಾಗ ಮಾತ್ರ ಶ್ರೀಕೃಷ್ಣನ ದರ್ಶನ ಪಡೆಯಲು ರಾಧಿಕೆ ಕಣ್ಣು ತೆರೆದಳು. ಶ್ರೀಕೃಷ್ಣ ಆಟವಾಡುತ್ತಾ ಹೋಗಿ ರಾಧಿಕೆಯ ಕಣ್ಣನ್ನು ಮುಟ್ಟಿದ. (ಅಸ್ಸಾಮಿನ ಹುಡುಗನಿಗೆ) ಎಳೆ ಮಕ್ಕಳು ಪರಸ್ಪರ ಕಣ್ಣು ಮುಟ್ಟುವುದನ್ನು ನೀನು ನೋಡಿಲ್ಲವೇನು?”
ಪಂಡಿತ ಪರಮಹಂಸರಿಂದ ಬೀಳ್ಕೊಳ್ಳಲು ಉದ್ಯುಕ್ತನಾಗಿದ್ದಾನೆ.
ಪಂಡಿತ: “ನಾನು ಮನೆಗೆ ಹೋಗಿಬರುತ್ತೇನೆ.”
ಶ್ರೀರಾಮಕೃಷ್ಣರು (ಪ್ರೀತಿಯಿಂದ): “ಏನಾದರೂ ಒಂದು ಸ್ವಲ್ಪ ಸಂಪಾದನೆ ಆಯಿತೆ?”
ಪಂಡಿತ: “ಧಾರಣೆವಾಸಿ ಇಳಿದುಹೋಗಿಬಿಟ್ಟಿದೆ. ಏನೂ ದೊರೆಯಲಿಲ್ಲ.”
ಕೆಲವು ನಿಮಿಷಗಳ ಬಳಿಕ ಪರಮಹಂಸರಿಗೆ ಪಂಡಿತ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಯುವಕರಿಗೂ ಸಂಸಾರಿಗಳಿಗೂ ಇರುವ ಅಂತರವನ್ನು ನೀನೇ ನೋಡು. ಈ ಪಂಡಿತ ಹಗಲೂ ಇರುಳೂ ದುಡ್ಡು ಅನ್ನುತ್ತಲೇ ಇದ್ದಾನೆ. ಹೊಟ್ಟೆಗಾಗಿ ಕಲ್ಕತ್ತಕ್ಕೆ ಬಂದಿದ್ದಾನೆ; ಇಲ್ಲದೆ ಇದ್ದರೆ ಈತನ ಮನೆಯವರ ಹೊಟ್ಟೆ ತಾಳ ಹಾಕಬೇಕಾಗುತ್ತದೆ. ಅದಕ್ಕಾಗಿ ಈತ ಹಾಗೂ ಹೀಗೂ ಮಾಡಿ ಸಂಪಾದಿಸಬೇಕಾಗುತ್ತದೆ. ಮನಸ್ಸನ್ನು ಏಕಾಗ್ರಮಾಡಿ ಭಗವಚ್ಚಿಂತನೆ ಮಾಡುವುದಕ್ಕೆ ಈತನಿಗೆ ಸಮಯವೆಲ್ಲಿ? ಆದರೆ ಯುವಕರ ಹೃದಯವನ್ನು ಕಾಮಕಾಂಚನ ಇನ್ನೂ ಸ್ಪರ್ಶಮಾಡಿಲ್ಲ; ಇಚ್ಛೆಪಟ್ಟರೆ ಅವರು ಭಗವಂತನ ಕಡೆ ಮನಸ್ಸನ್ನು ತಿರುಗಿಸಬಲ್ಲರು.
“ಯುವಕರಿಗೆ ಪ್ರಾಪಂಚಿಕರ ಸಹವಾಸ ರುಚಿಸದು. ರಾಖಾಲ ಆಗಾಗ ಹೇಳುತ್ತಿದ್ದ, ‘ಪ್ರಾಪಂಚಿಕರನ್ನು ನೋಡಿದೊಡನೆಯೇ ನನಗೆ ಒಂದು ವಿಧವಾದ ಭಯ ಉಂಟಾಗುತ್ತದೆ.’ ನನಗೆ ಮೊದಲು ಆಧ್ಯಾತ್ಮಿಕ ಅನುಭವಗಳು ಆಗಲು ಆರಂಭವಾದಾಗ ಪ್ರಾಪಂಚಿಕರು ನನ್ನನ್ನು ನೋಡಲು ಬಂದರು ಅಂದರೆ ಕಿಟಕಿ ಬಾಗಿಲು ಹಾಕಿ ಒಳಗೆ ಕುಳಿತುಬಿಡುತ್ತಿದ್ದೆ.
“ನನ್ನ ಬಾಲ್ಯದಲ್ಲಿ ನಾನು ಕಾಮಾರಪುಕುರಿನಲ್ಲಿದ್ದಾಗ, ಜೊತೆಗಾರ ರಾಮಮಲ್ಲಿಕನನ್ನು ಬಹಳವಾಗಿ ಪ್ರೀತಿಸುತ್ತಿದ್ದೆ. ಆದರೆ ಕೆಲವು ವರ್ಷಗಳ ನಂತರ ಆತ ಇಲ್ಲಿಗೆ ಬಂದಾಗ ಆತನನ್ನು ಸ್ಪರ್ಶಿಸಲೂ ನನಗಾಗಲಿಲ್ಲ. ನಾವಿಬ್ಬರೂ ಬಾಲ್ಯದಲ್ಲಿ ಒಬ್ಬರಿಗೊಬ್ಬರು ಅಚ್ಚು ಮೆಚ್ಚಿನ ಸ್ನೇಹಿತರಾಗಿದ್ದೆವು. ಹಗಲೂ ಇರುಳೂ ಒಟ್ಟಿಗೆ ಇರುತ್ತಿದ್ದೆವು. ಆಗ ನಮಗೆ ಹದಿನಾರೊ ಹದಿನೇಳೊ ವಯಸ್ಸು. ಜನ ಹೇಳುತ್ತಿದ್ದರು, ‘ಇವರಿಬ್ಬರಲ್ಲಿ ಒಬ್ಬ ಹೆಂಗಸಾಗಿದ್ದರೆ, ಇಬ್ಬರಿಗೂ ವಿವಾಹವಾಗಿಬಿಡುತ್ತಿತ್ತು’ ಅಂತ. ಇಬ್ಬರೂ ಅವನ ಮನೆಯಲ್ಲಿಯೇ ಆಟವಾಡುತ್ತಿದ್ದೆವು. ಆಗ ನಡೆದುದೆಲ್ಲ ನನಗೆ ಚೆನ್ನಾಗಿ ಜ್ಞಾಪಕದಲ್ಲಿದೆ. ಆತನ ಬಂಧುಗಳು ಪಲ್ಲಕ್ಕಿಯಲ್ಲಿ ಕುಳಿತು ಬರುತ್ತಿದ್ದರು. ಅದನ್ನು ಹೊತ್ತು ಬರುತ್ತಿದ್ದವರು ‘ಓಹೋ! ಓಹೋ!’ ಎಂದು ಕೂಗುತ್ತಾ ಮುಂದುವರಿಯುತ್ತಿದ್ದರು. ರಾಮಮಲ್ಲಿಕನನ್ನು ನೋಡಬೇಕೆಂದು ಅನೇಕ ವೇಳೆ ಜನರ ಕೈಯಲ್ಲೆ ಹೇಳಿ ಕಳುಹಿಸಿದ್ದೆ. ಈಗ ಆತ ‘ಚಾನಕ್’ ಎಂಬ ಊರಿನಲ್ಲಿ ಅಂಗಡಿ ಇಟ್ಟಿದ್ದಾನೆ. ಅಂದು ಇಲ್ಲಿಗೆ ಬಂದು ಎರಡು ದಿನ ಇದ್ದು ಹೋದ. ರಾಮಮಲ್ಲಿಕ ನನಗೆ ಹೇಳಿದ, ‘ನನಗೆ ಮಕ್ಕಳಾಗಲಿಲ್ಲ. ನನ್ನ ಅಣ್ಣನ ಮಗನನ್ನು ದತ್ತು ತೆಗೆದುಕೊಂಡಿದ್ದೆ. ಆತನೂ ಸತ್ತುಹೋಗಿಬಿಟ್ಟ.’ ಆ ಮಾತನ್ನು ಹೇಳುತ್ತಾ ಹೇಳುತ್ತ ರಾಮಮಲ್ಲಿಕ ನಿಟ್ಟುಸಿರುಬಿಟ್ಟ. ಕಣ್ಣಿನಿಂದ ನೀರು ಸುರಿಯಲಾರಂಭಿಸಿತು. ತನ್ನ ದತ್ತು ಮಗನಿಗಾಗಿ ಆತ ಬಹಳವಾಗಿ ಶೋಕಾಕ್ರಾಂತನಾಗಿರುವಂತೆ ಕಂಡುಬಂದ. ಮತ್ತೆ ಹೇಳಿದ, ‘ನಮಗೆ ಮಕ್ಕಳಿಲ್ಲದುದರಿಂದ ನನ್ನ ಹೆಂಡತಿಯ ವಾತ್ಸಲ್ಯ ಪ್ರೇಮವೆಲ್ಲ ಆ ಹುಡುಗನ ಕಡೆ ತಿರುಗಿತ್ತು. ಈಗ ಆಕೆ ಶೋಕದಿಂದ ಕಂಗೆಟ್ಟುಹೋಗಿದ್ದಾಳೆ. ನಾನು ಆಕೆಗೆ ಹೇಳಿದೆ, “ಹುಚ್ಚಿ, ಸುಮ್ಮನೆ ಶೋಕಪಟ್ಟರೆ ದೊರೆಯುವುದೇನು? ಕಾಶಿಯಾತ್ರೆ ಮಾಡಿಕೊಂಡು ಬರುವೆಯಾ?” ಅಂತ. ನೋಡು, ತನ್ನ ಹೆಂಡತಿಯನ್ನು ಆತ ಹುಚ್ಚಿಯೆಂದು ಸಂಬೋಧಿಸಿದ. ಆತ ದುಃಖದಿಂದ ಕರಗಿ ನೀರಾಗಿಹೋಗಿದ್ದಾನೆ. ಸತ್ತ್ವವೇ ಇಲ್ಲದವನಂತಾಗಿದ್ದಾನೆ. ಆತನನ್ನು ಸ್ಪರ್ಶಿಸುವುದಕ್ಕೂ ನನ್ನ ಕೈಯಲ್ಲಾಗಲಿಲ್ಲ.”
ಆ ಬ್ರಾಹ್ಮಣ ಹೆಂಗಸು 2 ಇನ್ನೂ ಉತ್ತರದ ಬಾಗಿಲಿನ ಹತ್ತಿರವೇ ನಿಂತಿದ್ದಳು. ಆಕೆ ವಿಧವೆ. ತನ್ನ ಏಕಮಾತ್ರ ಪುತ್ರಿಯನ್ನು ‘ರಾಜ’ ಎಂಬ ಬಿರುದುಳ್ಳ ಒಬ್ಬ ಕಲ್ಕತ್ತದ ಜಮೀನುದಾರನಿಗೆ ಕೊಟ್ಟು ವಿವಾಹಮಾಡಿದ್ದಳು. ಆ ಹುಡುಗಿ ತೌರುಮನೆಗೆ ಬರುತ್ತಿದ್ದಾಗ ಸಿಪಾಯಿಗಳ ಸಿಬ್ಬಂದಿಯೊಡನೆ ಬರುತ್ತಿದ್ದಳು. ಅದನ್ನು ನೋಡಿದಾಗ ಆ ವಿಧವೆಯ ಹೃದಯ ಹತ್ತು ಮೊಳ ಮೇಲಕ್ಕೆ ನೆಗೆಯುತ್ತಿತ್ತು. ಆಕೆಯ ಆ ಕನ್ಯಾರತ್ನ ಕೆಲವು ದಿವಸಗಳ ಹಿಂದೆ ಇಹಲೋಕವನ್ನು ತ್ಯಜಿಸಿ ಹೊರಟುಹೋದಳು. ಇದು ಆ ವಿಧವೆಗೆ ಅತ್ಯಂತ ದುಃಖವನ್ನು ತಂದುಬಿಟ್ಟಿದೆ.
ಆ ವಿಧವೆಯು ರಾಮಮಲ್ಲಿಕನು ತನ್ನ ಸುಕುಮಾರನಿಗಾಗಿ ದುಃಖಪಡುತ್ತಿದ್ದ ವಿಷಯವನ್ನು ಕೇಳಿದಳು. ಆಕೆ ಕೆಲವು ದಿನಗಳಿಂದ ತೀರ ಹುಚ್ಚಿಯೋಪಾದಿಯಲ್ಲಿ ಪರಮಹಂಸರ ದರ್ಶನ ಪಡೆಯಲು ಅಲ್ಲಿಗೆ ಬಾಗ್ಬಜಾರಿನಿಂದ ಓಡಿ ಓಡಿ ಬರುತ್ತಿದ್ದಳು. ತನ್ನ ಈ ಕಡುದುಃಖದಿಂದ ಪಾರಾಗಲು ಪರಮಹಂಸರು ಯಾವುದಾದರೂ ಒಂದು ಮಾರ್ಗವನ್ನು ತೋರಿಸಿಕೊಡಬಹುದೆಂದು ಆಕೆ ಅತ್ಯಂತ ಆಕಾಂಕ್ಷಿತಳಾಗಿದ್ದಳು. ಪರಮಹಂಸರು ಮಾತು ಮುಂದುವರಿಸಿದರು.
ಶ್ರೀರಾಮಕೃಷ್ಣರು: “ಅಂದು ಇಲ್ಲಿಗೆ ಒಬ್ಬ ಬಂದಿದ್ದ. ಬಂದು ಸ್ವಲ್ಪ ಹೊತ್ತು ಕುಳಿತಿದ್ದು ಹೇಳಿದ, ‘ಹೋಗಿ ನನ್ನ ಮುದ್ದು ಮಗುವಿನ ಚಂದ್ರಾನನ ನೋಡಿಬರುತ್ತೇನೆ.’ ನನಗೆ ಸುಮ್ಮನೆ ಕುಳಿತುಕೊಳ್ಳಲಾಗಲಿಲ್ಲ. ರೇಗಿದೆ, ‘ಎಲೋ ನೀಚ, ಭಗವಂತನ ಚಂದ್ರಾನನಕ್ಕಿಂತ ನಿನ್ನ ಮಗನ ಚಂದ್ರಾನನ ನಿನಗೆ ಪ್ರಿಯವಾಗಿ ತೋರುತ್ತಿರುವುದೆ? ಹೊರಡು ಇಲ್ಲಿಂದ!’
(ಮಾಸ್ಟರಿಗೆ) “ಸತ್ಯವೇನೆಂದರೆ, ಭಗವಂತನೇ ಸತ್ಯ, ಉಳಿದುದೆಲ್ಲ ಅನಿತ್ಯ. ಜೀವ, ಜಗತ್ತು, ಮನೆ, ಮಠ, ಮಕ್ಕಳು ಇವೆಲ್ಲ ಐಂದ್ರಜಾಲಿಕನ ಇಂದ್ರಜಾಲ. ಐಂದ್ರಜಾಲಿಕ ತನ್ನ ಯಕ್ಷಿಣಿ ದಂಡವನ್ನು ಸುತ್ತುತ್ತ ಹೇಳುತ್ತಾನೆ, ‘ಬಾ! ಬಾ!’ ಅಂತ. ಬಳಿಕ ಪ್ರೇಕ್ಷಕರಿಗೆ ಹೇಳುತ್ತಾನೆ, ‘ಮಡಕೆ ಮುಚ್ಚಳ ತೆಗೆದು ನೋಡಿ, ನೋಡಿ, ಅದರಿಂದ ಎಷ್ಟೊಂದು ಹಕ್ಕಿಗಳು ಆಕಾಶಕ್ಕೆ ಹಾರಿಹೋಗುತ್ತಿವೆ!’ ಆದರೆ ವಾಸ್ತವವಾಗಿ ಐಂದ್ರಜಾಲಿಕನೇ ಸತ್ಯ. ಉಳಿದುದೆಲ್ಲಾ ಅನಿತ್ಯ. ಈಗಿದ್ದುದು ಈಗಿರುವುದಿಲ್ಲ.
“ಕೈಲಾಸದಲ್ಲಿ ಶಿವ ಕುಳಿತುಕೊಂಡಿದ್ದ. ಪಕ್ಕದಲ್ಲಿ ನಂದಿ ಕುಳಿತಿದ್ದ. ಇದ್ದಕ್ಕಿದ್ದ ಹಾಗೆ ಒಂದು ಭಾರಿ ಶಬ್ದ ಕೇಳಿಸಿತು. ಆಗ ನಂದಿ ಶಿವನನ್ನು ಕೇಳಿದ, ‘ಇದು ಏತರ ಶಬ್ದ?’ ಶಿವ ಹೇಳಿದ ‘ರಾವಣ ಈಗ ಜನ್ಮತಾಳಿದ್ದಾನೆ ಅದಕ್ಕಾಗಿ ಈ ಶಬ್ದ.’ ಕೆಲವು ಕ್ಷಣಗಳೊಳಗಾಗಿಯೆ ಇನ್ನೊಂದು ಭಯಾನಕ ಶಬ್ದ ಕೇಳಿಬಂತು. ನಂದಿ ಕೇಳಿದ, ‘ಇದು ಏತರ ಶಬ್ದ?’ ಶಿವ ನಗುತ್ತ ಹೇಳಿದ, ‘ಈಗ ರಾವಣ ಸತ್ತುಹೋದ.’ ಜನ್ಮ-ಮೃತ್ಯು- ಎಂಬುವು ಇಂದ್ರಜಾಲದ ಹಾಗೆ; ಈಗಿದ್ದುದು ಈಗಿರುವುದಿಲ್ಲ. ಭಗವಂತನೊಬ್ಬನೇ ಸತ್ಯ, ಉಳಿದುದೆಲ್ಲ ಅನಿತ್ಯ. ನೀರೇ ಸತ್ಯ; ನೀರಿನ ಗುಳ್ಳೆ ಈಗಿದ್ದುದು ಈಗಿರುವುದಿಲ್ಲ. ಗುಳ್ಳೆ ನೀರಿನೊಡನೆ ಬೆರೆತುಹೋಗುತ್ತದೆ.
“ಭಗವಂತನನ್ನು ಒಂದು ಮಹಾಸಮುದ್ರಕ್ಕೂ, ಜೀವಗಳನ್ನು ಅದರಲ್ಲಿ ತೇಲುವ ಗುಳ್ಳೆಗಳಿಗೂ ಹೋಲಿಸಬಹುದು. ಅವು ಆತನಲ್ಲಿಯೇ ಉದ್ಭವಿಸಿ ಆತನಲ್ಲಿಯೇ ಲಯ ವಾಗುತ್ತವೆ ಮಕ್ಕಳು ಮರಿಗಳೆಂಬುವುಗಳನ್ನು ದೊಡ್ಡ ಗುಳ್ಳೆಯ ಸುತ್ತಲೂ ಸೇರಿಕೊಂಡಿರುವ ಚಿಕ್ಕ ಗುಳ್ಳೆಗಳಿಗೆ ಹೋಲಿಸಬಹುದು.
“ಭಗವಂತನೊಬ್ಬನೇ ಕೇವಲ ಸತ್ಯ, ಆತನ ಪಾದಪದ್ಮಗಳಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುವ ಬಗೆ ಹೇಗೆ, ಆತನ ಸಾಕ್ಷಾತ್ಕಾರವನ್ನು ಹೊಂದಲು ಉಪಾಯವೇನು ಎಂಬುವುಗಳ ಕಡೆ ನಿನ್ನ ಮನಸ್ಸನ್ನು ತಿರುಗಿಸು. ಸುಮ್ಮನೆ ಶೋಕಪಟ್ಟರೆ ಏನು ದೊರೆಯುತ್ತದೆ?”
ಎಲ್ಲರೂ ನಿಶ್ಶಬ್ದರಾಗಿ ಕುಳಿತಿದ್ದಾರೆ. ಆ ವಿಧವೆ ಹೇಳಿದಳು, “ನಾನು ಹೋಗಿಬರು ತ್ತೇನೆ” ಅಂತ. ಪರಮಹಂಸರು ಆಕೆಯ ಕಡೆಗೆ ತಮ್ಮ ಪ್ರೇಮದೃಷ್ಟಿಯನ್ನು ಬೀರಿ ಹೇಳಿದರು, “ನೀನು ಈಗಲೇ ಹೋಗಬೇಕು ಅನ್ನುತ್ತೀಯಾ? ಬಹಳ ಬಿಸಿಲಲ್ಲ; ಸ್ವಲ್ಪ ಹೊತ್ತಾದ ಮೇಲೆ ಭಕ್ತರೊಡನೆ ಗಾಡಿಯಲ್ಲಿ ಕುಳಿತು ಹೋಗು.”
ಹಗಲು ಬಹಳ ಬಿಸಿಲಾಗಿದ್ದುದರಿಂದ ಒಬ್ಬ ಭಕ್ತ ಪರಮಹಂಸರಿಗೆ ಚಂದನ ಮರ ದಿಂದ ಮಾಡಿದ್ದ ಒಂದು ಹೊಚ್ಚ ಹೊಸ ಬೀಸಣಿಗೆ ತಂದು ಕೊಟ್ಟ. ಪರಮಹಂಸರಿಗೆ ಬಹಳ ಆನಂದವಾಗಿಬಿಟ್ಟಿತು. “ಅಬ್ಬ! ಅಬ್ಬ! ಓಂ ತತ್-ಸತ್ ಕಾಳಿ!” ಅಂತ ಹೇಳಿದರು. ಮೊದಲು ಅದರಿಂದ ದೇವ ದೇವಿಯರ ಪಟಗಳಿಗೆ ಗಾಳಿ ಬೀಸಿದರು. ಬಳಿಕ ತಮಗೆ ಬೀಸಿಕೊಳ್ಳುತ್ತಾ ಮಾಸ್ಟರಿಗೆ ಹೇಳಿದರು, “ನೋಡು, ನೋಡು! ಎಂಥ ಸೊಗಸಾದ ಹವಾ ಬರುತ್ತಿದೆ!” ಮಾಸ್ಟರೂ ಆನಂದದಿಂದ ಪರಮಹಂಸರ ಕಡೆ ನೋಡುತ್ತಿದ್ದಾನೆ.
ಕ್ಯಾಪ್ಟನ್ ತನ್ನ ಮಕ್ಕಳೊಡನೆ ಅಲ್ಲಿಗೆ ಬಂದ.
ಶ್ರೀರಾಮಕೃಷ್ಣರು ಕಿಶೋರಿಗೆ ಹೇಳಿದರು, “ಈ ಮಕ್ಕಳಿಗೆ ದೇವಾಲಯಗಳನ್ನು ತೋರಿಸಿ ಬಾ” ಅಂತ. ಪರಮಹಂಸರು ಕ್ಯಾಪ್ಟನ್ನನೊಡನೆ ಮಾತುಕತೆಯಾಡಲಾರಂಭಿ ಸಿದರು. ಮಾಸ್ಟರ್, ದ್ವಿಜ ಇವರೇ ಮೊದಲಾದ ಭಕ್ತರು ನೆಲದ ಮೇಲೆ ಕುಳಿತಿದ್ದಾರೆ. ದಮ್ದಮ್ನ ಮಾಸ್ಟರೂ ಬಂದಿದ್ದಾನೆ. ಪರಮಹಂಸರು ತಮ್ಮ ಚಿಕ್ಕಮಂಚದ ಮೇಲೆ ಉತ್ತರಾಭಿಮುಖವಾಗಿ ಕುಳಿತಿದ್ದಾರೆ. ಅವರು ಕ್ಯಾಪ್ಟನ್ನನಿಗೆ ತಮ್ಮ ಚಿಕ್ಕಮಂಚದ ಮೇಲೆಯೇ ತಮ್ಮ ಎದುರಿಗೆ ಕುಳಿತುಕೊಳ್ಳುವಂತೆ ಹೇಳಿದರು.
ಶ್ರೀರಾಮಕೃಷ್ಣರು: “ನಾನು ಇಂದು ನಿನ್ನ ವಿಷಯವಾಗಿ ಮಾತಾಡುತ್ತ, ನಿನ್ನ ಅತಿಶಯವಾದ ಭಕ್ತಿ, ಪೂಜೆ ಮತ್ತು ವಿವಿಧ ಮಂಗಳಾರತಿಗಳು ಇವುಗಳ ಸಂಬಂಧವಾಗಿ ವರ್ಣನೆ ಮಾಡುತ್ತಿದ್ದೆ.”
ಕ್ಯಾಪ್ಟನ್ ಲಜ್ಜಿತನಾಗಿ: “ಪೂಜೆ ಮತ್ತು ಮಂಗಳಾರತಿ ಇವುಗಳ ಸಂಬಂಧವಾಗಿ ನನಗೇನು ಗೊತ್ತಿದೆ? ನಾನು ಹತ್ತರಲ್ಲಿ ಹನ್ನೊಂದು.”
ಶ್ರೀರಾಮಕೃಷ್ಣರು: “ಕಾಮಕಾಂಚನದಲ್ಲಿ ಆಸಕ್ತವಾಗಿರುವ ‘ಅಹಂ’ ಮಾತ್ರ ಕೆಟ್ಟ ‘ಅಹಂ’. ನಾನು ಭಗವಂತನ ದಾಸ ಎಂಬ ‘ಅಹಂ’ ಕೆಟ್ಟದೇನಲ್ಲ. ಬಾಲಕನ ‘ಅಹಂ’ ಕೂಡ ಕೆಟ್ಟದಲ್ಲ. ಆತ ಯಾವ ಗುಣಗಳಿಗೂ ವಶನಲ್ಲ. ಮಕ್ಕಳು ಈ ನಿಮಿಷ ಪರಸ್ಪರ ಜಗಳ ಕಾಯುತ್ತವೆ; ಮರುನಿಮಿಷ ಒಂದಾಗುತ್ತವೆ. ಈ ಕ್ಷಣದಲ್ಲಿ ಬಹಳ ಕಷ್ಟಪಟ್ಟು ಆಟದ ಮನೆ ಕಟ್ಟುತ್ತವೆ; ಮರುಕ್ಷಣ ತಾವೇ ಅದನ್ನು ತುಳಿದುಹಾಕಿಬಿಡುತ್ತವೆ. ದಾಸನ ‘ಅಹಂ’ ಬಾಲಕನ ‘ಅಹಂ’ ಇವುಗಳಿಂದ ಯಾವ ಕೆಡುಕೂ ಸಂಭವಿಸದು. ಯಾವ ರೀತಿಯಾಗಿ ಕಲ್ಲುಸಕ್ಕರೆ ಸಿಹಿ ಪದಾರ್ಥಗಳ ಗುಂಪಿಗೆ ಸೇರಿಲ್ಲವೊ, ಅದೇ ರೀತಿಯಾಗಿ ಈ ವಿಧದ ‘ಅಹಂ’, ‘ಅಹಂ’ ಗುಂಪಿಗೆ ಸೇರಿಲ್ಲ. ಉಳಿದ ಸಿಹಿಪದಾರ್ಥಗಳು ಅನಾರೋಗ್ಯವನ್ನು ತರುತ್ತವೆ; ಆದರೆ ಕಲ್ಲುಸಕ್ಕರೆ ಆಮ್ಲಹಾರಿ. ಅಥವಾ ಇದು ಓಂಕಾರದ ಹಾಗೆ. ಅದು ಶಬ್ದಗಳ ಗುಂಪಿಗೆ ಸೇರಿಲ್ಲ.
“ಈ ‘ಅಹಂ’ ನಿಂದ ಸಚ್ಚಿದಾನಂದನನ್ನು ಪ್ರೀತಿಸಲು ಸಾಧ್ಯ. ‘ಅಹಂ’ ಎಂಬುದು ಬಡಪೆಟ್ಟಿಗೆ ನಮ್ಮನ್ನು ಬಿಟ್ಟು ತೊಲಗಲೊಲ್ಲದು. ಆದ್ದರಿಂದ ಅದು ತಾನು ‘ಭಕ್ತನ ಅಹಂ’ ‘ದಾಸನ ಅಹಂ’ ಎಂದು ಭಾವಿಸುವಂತೆ ಒತ್ತಾಯಪಡಿಸಬೇಕು. ಇಲ್ಲದಿದ್ದರೆ ಏನನ್ನು ತಾನೆ ಆಶ್ರಯಿಸಿ ಬದುಕಿರಲಾದೀತು? ಗೋಪಿಯರು ಶ್ರೀಕೃಷ್ಣನಲ್ಲಿಟ್ಟಿದ್ದ ಪ್ರೇಮ ಎಷ್ಟು ಅಗಾಧವಾದದ್ದು! (ಕ್ಯಾಪ್ಟನ್ನನಿಗೆ) ನೀನು ಭಾಗವತವನ್ನು ಬಹಳವಾಗಿ ಓದುತ್ತಿದ್ದೀಯೆ. ಗೋಪಿಯರ ಸಂಬಂಧವಾಗಿ ನಮಗೇನಾದರೂ ಸ್ವಲ್ಪ ಹೇಳು.”
ಕ್ಯಾಪ್ಟನ್: “ಶ್ರೀಕೃಷ್ಣ ಯಾವ ರಾಜವೈಭವವೂ ಇಲ್ಲದೆ ಬೃಂದಾನವನದಲ್ಲಿ ವಾಸಿಸು ತ್ತಿದ್ದಾಗಲೂ, ಗೋಪಿಯರು ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಆತನನ್ನು ಆದರಿಸಿ ಪ್ರೀತಿಸಿದರು. ಅದಕ್ಕಾಗಿ ಶ್ರೀಕೃಷ್ಣ ಹೇಳಿದ, ‘ತಮ್ಮ ಸರ್ವಸ್ವವನ್ನೂ-ದೇಹ, ಮನಸ್ಸು, ಚಿತ್ತ-ನನಗೆ ಸಮರ್ಪಿಸಿಬಿಟ್ಟಿರುವ ಗೋಪಿಯರ ಋಣವನ್ನು ನಾನು ತೀರಿಸುವ ಬಗೆ ಹೇಗೆ?”
ಕ್ಯಾಪ್ಟನ್ನನ ಈ ಮಾತು ಪರಮಹಂಸರ ಹೃದಯದಲ್ಲಿ ಶ್ರೀಕೃಷ್ಣನಿಗಾಗಿ ಅತ್ಯಂತ ತೀವ್ರವಾದ ಪ್ರೇಮೋದ್ದೀಪನೆಯನ್ನು ಮಾಡಿಬಿಟ್ಟಿತು. “ಗೋವಿಂದ! ಗೋವಿಂದ!” ಅಂತ ಹೇಳುತ್ತ ಭಾವಾವಿಷ್ಟರಾಗುತ್ತಿದ್ದಾರೆ. ಪ್ರಾಯಶಃ ಬಾಹ್ಯಶೂನ್ಯರಾಗಿಬಿಟ್ಟಿದ್ದಾರೆ. ಕ್ಯಾಪ್ಟನ್ ವಿಸ್ಮಯಗೊಂಡು ಹೇಳುತ್ತಿದ್ದಾನೆ, “ಧನ್ಯರು! ಧನ್ಯರು!”
ಕ್ಯಾಪ್ಟನ್ ಮತ್ತು ಉಳಿದ ಭಕ್ತರು ಪರಮಹಂಸರ ಈ ಅದ್ಭುತ ಪ್ರೇಮಾವಸ್ಥೆಯನ್ನು ನೋಡುತ್ತಿದ್ದಾರೆ. ಪರಮಹಂಸರು ಪ್ರಕೃತಿಸ್ಥರಾಗುವವರೆಗೆ ಭಕ್ತರು ಅವರನ್ನೇ ದೃಷ್ಟಿಸಿ ನೋಡುತ್ತ ಕುಳಿತುಕೊಂಡಿದ್ದರು.
ಶ್ರೀರಾಮಕೃಷ್ಣರು: “ಮುಂದುವರಿಸು.”
ಕ್ಯಾಪ್ಟನ್: “ಶ್ರೀಕೃಷ್ಣ ಯೋಗಿಗಳಿಗೆ ಅಗಮ್ಯ, ನಿಮ್ಮಂಥ ಯೋಗಿಗಳಿಗೆ ಅಗಮ್ಯ; ಆದರೆ ಗೋಪಿಯರಿಗೆ ಗಮ್ಯ. ಆತನ ದರ್ಶನ ಪಡೆಯಲು ಯೋಗಿಗಳು ಎಷ್ಟೊಂದು ವರ್ಷಗಳ ಕಾಲ ತಪಸ್ಸು ಮಾಡಿದರು! ಆದರೂ ಅವರಿಗೆ ಆತನ ದರ್ಶನ ದೊರೆಯಲಿಲ್ಲ. ಆದರೆ ಗೋಪಿಯರು ಅನಾಯಾಸವಾಗಿ ಆತನನ್ನು ಪಡೆದುಕೊಂಡರು!”
ಶ್ರೀರಾಮಕೃಷ್ಣರು (ನಗುತ್ತ): “ನಿಜ, ಗೋಪಿಯರ ಕೈಯಿಂದ ಆತ ತಿಂಡಿತೀರ್ಥಗಳನ್ನು ತಿಂದ, ಅವರಿಗಾಗಿ ಅತ್ತ, ಅವರೊಡನೆ ಆಟವಾಡಿದ, ಅವರಿಂದ ಇನ್ನೂ ಏನೇನನ್ನೋ ಪಡೆದ.”
ಒಬ್ಬ ಭಕ್ತ: “ಬಂಕಿಮಚಂದ್ರ ಶ್ರೀಕೃಷ್ಣ ಚರಿತ್ರೆಯನ್ನೂ ಬರೆದಿದ್ದಾನೆ.”
ಶ್ರೀರಾಮಕೃಷ್ಣರು: “ಬಂಕಿಮ ಶ್ರೀಕೃಷ್ಣನನ್ನು ಸ್ವೀಕರಿಸುತ್ತಾನೆ, ರಾಧಿಕೆಯನ್ನು ಸ್ವೀಕರಿಸುತ್ತಿಲ್ಲ.”
ಕ್ಯಾಪ್ಟನ್: “ಶ್ರೀಕೃಷ್ಣ ಗೋಪಿಯರೊಡನೆ ನಡೆಸಿದ ಲೀಲೆಯನ್ನು ಆತ ಒಪ್ಪಿಕೊಳ್ಳುತ್ತಿಲ್ಲ ಅಂತ ಕಾಣುತ್ತೆ.”
ಶ್ರೀರಾಮಕೃಷ್ಣರು: “ಕಾಮಾದಿಗಳು ಆವಶ್ಯಕ ಅಂತ ಹೇಳುತ್ತಾನಂತೆ.”
ದಮ್ದಮ್ನ ಮಾಸ್ಟರ್: “ಬಂಕಿಮ ‘ನವಜೀವನ’ ಎಂಬ ತನ್ನ ಮಾಸಪತ್ರಿಕೆಯಲ್ಲಿ ಬರೆದಿದ್ದಾನೆ- ಧರ್ಮವು, ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಇವೇ ಮೊದಲಾದ ಪ್ರವೃತ್ತಿಗಳಿಗೆ ಸ್ಫೂರ್ತಿಯನ್ನು ಕೊಡುತ್ತದೆ. ಇದೇ ಅದರಿಂದಾಗುವ ಪ್ರಯೋಜನ.”
ಕ್ಯಾಪ್ಟನ್: “ಆತನ ದೃಷ್ಟಿಯಿಂದ ಕಾಮಾದಿಗಳು ಆವಶ್ಯಕ. ಆದರೆ ಆತ ಲೀಲೆಯನ್ನು ಒಪ್ಪುತ್ತಿಲ್ಲ. ಭಗವಂತ ಮನುಷ್ಯದೇಹಧಾರಣೆ ಮಾಡಿಕೊಂಡು ಬೃಂದಾವನಕ್ಕೆ ಬಂದಿದ್ದ, ಅಲ್ಲಿ ರಾಧೆ ಮತ್ತು ಗೋಪಿಯರೊಡನೆ ಆತ ಕ್ರೀಡಿಸಿದ ಎಂಬುದನ್ನು ಆತ ಒಪ್ಪುತ್ತಿಲ್ಲ.”
ಶ್ರೀರಾಮಕೃಷ್ಣರು: “ಆ ವಿಷಯಗಳನ್ನೆಲ್ಲ ವಾರ್ತಾಪತ್ರಿಕೆಯಲ್ಲಿ ಹಾಕಿಲ್ಲ. ಆದ್ದರಿಂದ ಆತ ಅವನ್ನು ನಂಬುವ ಬಗೆ ಹೇಗೆ?
“ಒಬ್ಬ ತನ್ನ ಸ್ನೇಹಿತನಿಗೆ ಹೇಳಿದ, ‘ನೋಡು, ನಿನ್ನೆ ಆ ಕೇರಿಯಲ್ಲಿ ಬರುತ್ತಿದ್ದೆ. ಆ ಮನೆ “ಚಟ ಚಟ” ಅಂತ ಮುರಿದುಬಿತ್ತು.’ ಸ್ನೇಹಿತ ಹೇಳಿದ, ‘ಒಂದು ನಿಮಿಷ ತಾಳು, ಪೇಪರಿನಲ್ಲಿ ಹಾಕಿದೆಯೆ ನೋಡಿಬರುತ್ತೇನೆ.’ ಆ ಮನೆ ‘ಚಟ ಚಟ’ ಅಂತ ಮುರಿದು ಬಿದ್ದ ಸಮಾಚಾರವನ್ನು ಪೇಪರಿನಲ್ಲಿ ಹಾಕಿರಲಿಲ್ಲ. ಆಗ ಆ ಸ್ನೇಹಿತ ಹೇಳಿದ, ‘ಎಲ್ಲಿ, ಪೇಪರಿನಲ್ಲಿ ಅದರ ಸುದ್ದಿ ಸಮಾಚಾರವೇ ಇಲ್ಲವಲ್ಲ! ಬಹುಶಃ ಸತ್ಯವಲ್ಲ ಅಂತ ಕಾಣುತ್ತೆ.’ ಆಗ ಮೊದಲನೆ ವ್ಯಕ್ತಿ ಹೇಳಿದ, ‘ಏನು ಇದು ನೀನು ಹೇಳುವುದು? ನಾನೇ ಕಣ್ಣಾರೆ ನೋಡಿ ಬಂದಿದ್ದೇನೆ.’ ಅದಕ್ಕೆ ಸ್ನೇಹಿತ ಹೇಳಿದ, ‘ನೋಡಿದ್ದರೆ ನೋಡಿರು, ಪೇಪರಿನಲ್ಲಿ ಬರುವವರೆಗೆ ನಾನು ಅದನ್ನು ನಂಬುವುದಿಲ್ಲ.
“ಭಗವಂತ ಮಾನವ ದೇಹಧಾರಣೆ ಮಾಡಿ ಲೀಲೆ ನಡೆಸುತ್ತಾನೆ ಎಂಬುದನ್ನು ಬಂಕಿಮ ನಂಬುವ ಬಗೆ ಹೇಗೆ? ಇಂಗ್ಲೀಷ್ ವಿದ್ಯಾಭ್ಯಾಸಕ್ರಮದಲ್ಲಿ ಈ ವಿಷಯ ಎಲ್ಲೂ ಬಂದಿಲ್ಲ. ಪೂರ್ಣ ಅವತಾರ ಏನೆಂಬುದನ್ನು ಜನರಿಗೆ ಅರಿವಾಗುವಂತೆ ಜನರಿಗೆ ವಿವರಿಸಿ ಹೇಳುವುದು ಬಹಳ ಕಠಿನ; ಏನು ಹೇಳುತ್ತೀಯೆ? ಈ ಮೂರೂವರೆ ಮೊಳ ಉದ್ದವಿರುವ ಮಾನವ ದೇಹದಲ್ಲಿ ಅನಂತ ವ್ಯಕ್ತವಾಗುವಿಕೆ!”
ಕ್ಯಾಪ್ಟನ್: “ ‘ಕೃಷ್ಣಸ್ತು ಭಗವಾನ್ ಸ್ವಯಂ.’ ಆದರೆ ಆತನ ಸಂಬಂಧವಾಗಿ ವಿವರಿಸಿ ಹೇಳುವಾಗ ಮಾತ್ರ ‘ಪೂರ್ಣ’, ‘ಅಂಶ’ ಎಂಬ ಈ ಪದಗಳನ್ನು ಉಪಯೋಗಿಸ ಬೇಕಾಗುತ್ತದೆ.”
ಶ್ರೀರಾಮಕೃಷ್ಣರು: “ಪೂರ್ಣ ಮತ್ತು ಅಂಶ ಎಂಬುವು ಬೆಂಕಿ ಮತ್ತು ಅದರ ಕಿಡಿ ಇದ್ದ ಹಾಗೆ. ಭಗವಂತ ಅವತರಿಸುವುದು ಭಕ್ತರಿಗಾಗಿ, ಜ್ಞಾನಿಗಳಿಗಾಗಿ ಅಲ್ಲ. ಅಧ್ಯಾತ್ಮ ರಾಮಾಯಣದಲ್ಲಿ ಹೇಳಿದೆ, ರಾಮನೇ ವ್ಯಾಪ್ಯ, ರಾಮನೇ ವ್ಯಾಪಕ ಅಂತ. ‘ವಾಚ್ಯ ವಾಚಕಭೇದೇನ ತ್ವಮೇವ ಪರಮೇಶ್ವರಃ.”’
ಕ್ಯಾಪ್ಟನ್: “ ‘ವಾಚ್ಯ-ವಾಚಕ’ ಅಂದರೆ ‘ವ್ಯಾಪ್ಯ-ವ್ಯಾಪಕ’ ಅಂತ.”
ಶ್ರೀರಾಮಕೃಷ್ಣರು: “ಇಲ್ಲಿ ವ್ಯಾಪಕ ಅಂದರೆ ಒಂದು ಮಿತಿಯುಳ್ಳ ಆಕಾರ. ಭಗವಂತನೇ ಮಾನವದೇಹಧಾರಣೆ ಮಾಡಿಕೊಂಡು ಬರುವಿಕೆ.”
ಈ ರೀತಿಯಾಗಿ ಪರಮಹಂಸರು ಕ್ಯಾಪ್ಟನ್ನನೊಡನೆ ಮತ್ತು ಭಕ್ತರೊಡನೆ ಮಾತುಕತೆ ಗಳನ್ನಾಡುತ್ತಿದ್ದಾಗ, ಬ್ರಾಹ್ಮಸಮಾಜದ ಅನುಯಾಯಿಗಳು ತ್ರೈಲೋಕ್ಯ ಮತ್ತು ಜಯಸೇನ ಗೋಪಾಲ ಕೊಠಡಿಯನ್ನು ಪ್ರವೇಶಿಸಿದರು. ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡರು. ಪರಮಹಂಸರು ನಗುಮುಖದಿಂದ ತ್ರೈಲೋಕ್ಯನ ಕಡೆ ನೋಡುತ್ತ ತಮ್ಮ ಮಾತು ಮುಂದುವರಿಸಿದರು.
ಶ್ರೀರಾಮಕೃಷ್ಣರು: “ಅಹಂಕಾರವೆಂಬುದೊಂದು ಇರುವುದರ ದೆಸೆಯಿಂದ ಮನುಷ್ಯ ನಿಗೆ ಭಗವಂತನ ದರ್ಶನ ಆಗುತ್ತಿಲ್ಲ. ಭಗವದಾಲಯದ ದ್ವಾರಪ್ರದೇಶದಲ್ಲೆ ಈ ಅಹಂಕಾರವೆಂಬ ದೊಡ್ಡ ದಿಮ್ಮಿ ಬಿದ್ದುಕೊಂಡಿದೆ. ಇದನ್ನು ದಾಟಿ ಹೋಗದೆ ಇದ್ದರೆ ಆತನ ಆಲಯವನ್ನು ಪ್ರವೇಶಮಾಡಲಾಗುವುದಿಲ್ಲ.
“ಒಬ್ಬನಿಗೆ ಭೂತಸಿದ್ಧಿ ದೊರೆತಿತ್ತು. ಒಂದು ದಿನ ಆತನ ಇಚ್ಛೆಗನುಸಾರ ಒಂದು ಭೂತ ಆತನ ಹತ್ತಿರಕ್ಕೆ ಬಂತು. ಅದು ಹೇಳಿತು, ‘ನಾನು ಏನು ಕೆಲಸ ಮಾಡಬೇಕಾಗಿದೆ ಎಂಬುದನ್ನು ದಯವಿಟ್ಟು ತಿಳಿಸು. ನನಗೆ ನೀನು ಸಾಕಾದಷ್ಟು ಕೆಲಸ ಕೊಡಲಾರದೆ ಹೋದೆ ಅಂದರೆ, ನಿನ್ನ ಕತ್ತು ಮುರಿದುಹಾಕಿಬಿಡುತ್ತೇನೆ’ ಅಂತ. ಏನೇನು ಕೆಲಸ ಆಗಬೇಕಾಗಿತ್ತೊ, ಆ ಕೆಲಸಗಳನ್ನೆಲ್ಲ ಆ ವ್ಯಕ್ತಿ ಆ ಭೂತದ ಕೈಯಿಂದ ಒಂದೊಂದನ್ನಾಗಿ ಮಾಡಿಸಿಬಿಟ್ಟ. ಬಳಿಕ ಭೂತಕ್ಕೆ ಬೇರೆ ಯಾವ ಕೆಲಸವೂ ದೊರೆಯಲಿಲ್ಲ. ಆಗ ಆ ಭೂತ ಆತನಿಗೆ ಹೇಳಿತು, ‘ಈಗ ನಿನ್ನ ಕತ್ತು ಮುರಿದುಹಾಕಿಬಿಡುತ್ತೇನೆ.’ ಆ ವ್ಯಕ್ತಿ ಹೇಳಿದ, ‘ಒಂದುನಿಮಿಷ ನಿಲ್ಲು, ಈಗಲೇ ಬರುತ್ತೇನೆ’. ಆತ ತನ್ನ ಗುರುವಿನ ಹತ್ತಿರಕ್ಕೆ ಹೋಗಿ ‘ಪೂಜ್ಯರೆ, ನಾನು ಒಂದು ದೊಡ್ಡ ವಿಪತ್ತಿಗೆ ಒಳಗಾಗಿದ್ದೇನೆ. ಸಮಾಚಾರ ಇದು. ನಾನು ಈಗ ಏನು ಮಾಡಲಿ?’ ಎಂದು ಕೇಳಿದ. ಗುರು ಆಗ ಸಲಹೆ ಇತ್ತ, ‘ನೀನು ಒಂದು ಕೆಲಸಮಾಡು. ಈ ತಿರುಚುಮುರುಚು ಕೂದಲನ್ನು ನೆಟ್ಟಗೆ ಮಾಡುವಂತೆ ಅದಕ್ಕೆ ಹೇಳು’. ಆ ಭೂತ ಹಗಲಿರುಳೆನ್ನದೆ ಆ ಕೂದಲನ್ನು ನೆಟ್ಟಗೆ ಮಾಡುವ ಕಾರ್ಯದಲ್ಲಿ ತೊಡಗಿತು. ಕೂದಲು ಎಂದಿಗಾದರೂ ನೆಟ್ಟಗಾಗುವುದೆ? ಅದು ಯಾವ ರೀತಿಯಾಗಿ ತಿರುಚಿಕೊಂಡಿತ್ತೊ ಹಾಗೆಯೇ ಅದು ಉಳಿದುಕೊಂಡಿತು.
“ಅದೇ ರೀತಿಯಾಗಿ ಅಹಂಕಾರ ಈಗ ನಾಶವಾಗಿಹೋದಂತಾಗಿ ಮತ್ತೆ ತಲೆ ಎತ್ತುತ್ತದೆ. ಅಹಂಕಾರ ತ್ಯಾಗವಾಗಿ ಹೋಗದ ಹೊರತು, ಭಗವಂತನ ಕೃಪೆ ಬಂದೊದಗದು.
“ಒಬ್ಬನ ಮನೆಯಲ್ಲಿ ಒಂದು ಔತಣ ಏರ್ಪಾಟು ನಡೆದಿದೆ, ಆ ಮನೆಯ ಯಜಮಾನ ಒಬ್ಬನನ್ನು ಉಗ್ರಾಣದಲ್ಲಿ ನೇಮಿಸಿದ್ದಾನೆ ಅಂತ ಇಟ್ಟುಕೊಳ್ಳಿ. ಎಲ್ಲಿಯವರೆಗೆ ಆತ ಆ ಕೆಲಸವನ್ನು ನಿರ್ವಹಿಸಿಕೊಂಡು ಹೋಗುತ್ತಿರುತ್ತಾನೊ ಅಲ್ಲಿಯವರೆಗೆ ಯಜಮಾನ ಆ ಕಡೆಗೆ ಸುಳಿಯುವುದೇ ಇಲ್ಲ. ಆದರೆ ಉಗ್ರಾಣಿಕ ತಾನೇ ಆ ಕಾರ್ಯವನ್ನು ತ್ಯಜಿಸಿಬಿಟ್ಟು ಹೊರಟು ಹೋದಾಗ ಮಾತ್ರ, ಯಜಮಾನ ಒಡನೆಯೇ ಅಲ್ಲಿಗೆ ಬಂದು ಉಗ್ರಾಣಕ್ಕೆ ಬೀಗ ಹಾಕಿ ಅದರ ಸ್ವಾಮ್ಯವನ್ನು ತಾನೇ ವಹಿಸಿಕೊಳ್ಳುತ್ತಾನೆ.
“ಅಪ್ರಾಪ್ತ ವಯಸ್ಕನಿಗೆ ಮಾತ್ರ ರಕ್ಷಕನನ್ನು ನಿಯಮಿಸುತ್ತಾರೆ. ಹುಡುಗ ತಾನೇ ತನ್ನ ಸ್ವತ್ತನ್ನು ಕಾಪಾಡಿಕೊಳ್ಳಲಾರ; ಆದ್ದರಿಂದ ದೊರೆ ಆತನ ಸಂರಕ್ಷಣೆಯ ಭಾರವನ್ನು ಹೊತ್ತು ಕೊಳ್ಳುತ್ತಾನೆ. ನಾವು ನಮ್ಮ ಅಹಂಕಾರವನ್ನು ತ್ಯಜಿಸದ ಹೊರತು ಭಗವಂತ ನಮ್ಮಗಳ ಭಾರವನ್ನು ಹೊತ್ತುಕೊಳ್ಳಲೊಲ್ಲ.
“ವೈಕುಂಠದಲ್ಲಿ ಲಕ್ಷ್ಮಿ ಮತ್ತು ನಾರಾಯಣ ಕುಳಿತುಕೊಂಡಿದ್ದರು. ಇದ್ದಕ್ಕಿದ್ದ ಹಾಗೆ, ನಾರಾಯಣ ಎದ್ದು ನಿಂತುಕೊಂಡ. ಲಕ್ಷ್ಮಿ ಆತನ ಪಾದವನ್ನು ಒತ್ತುತ್ತಿದ್ದವಳು ಕೇಳಿದಳು, ‘ಪ್ರಭು, ಎಲ್ಲಿಗೆ ಹೊರಟಿರಿ?.’ ನಾರಾಯಣ ಹೇಳಿದ, ‘ನನ್ನ ಒಬ್ಬ ಭಕ್ತ ದೊಡ್ಡ ವಿಪತ್ತಿಗೊಳಗಾಗಿದ್ದಾನೆ. ಆತನಿಗೆ ರಕ್ಷಣೆ ನೀಡಲು ಹೊರಟಿದ್ದೇನೆ’ ಅಂತ. ಹೀಗೆಂದು ಹೇಳಿ ನಾರಾಯಣ ವೈಕುಂಠವನ್ನು ಬಿಟ್ಟು ಹೊರಟ. ಆದರೆ ಒಡನೆಯೆ ಹಿಂತಿರುಗಿ ಬಂದು ಬಿಟ್ಟ. ಆಗ ಲಕ್ಷ್ಮಿ ಕೇಳಿದಳು, ‘ಏನು ಸಮಾಚಾರ, ಇಷ್ಟು ಬೇಗ ಹಿಂದಿರುಗಿ ಬಂದು ಬಿಟ್ಟಿರಲ್ಲ?’ ಅಂತ. ನಾರಾಯಣ ನಗುತ್ತ ಹೇಳಿದ, ‘ಆ ಭಕ್ತ ನನ್ನನ್ನು ಧ್ಯಾನಿಸುತ್ತ ಭಾವಪರವಶನಾಗಿ ದಾರಿಯಲ್ಲಿ ನಡೆದುಹೋಗುತ್ತಿದ್ದ. ಪಕ್ಕದಲ್ಲಿಯೇ ಇದ್ದ ಗರಿಕೆಯ ಮೇಲೆ ಅಗಸರು ಬಟ್ಟೆಗಳನ್ನು ಒಣಗುಹಾಕಿದ್ದರು. ಭಕ್ತ ಆ ಅವಸ್ಥೆಯಲ್ಲಿ ಬೊಟ್ಟೆಯ ಮೇಲೆ ನಡೆದುಹೋಗಿಬಿಟ್ಟ. ಅದನ್ನು ನೋಡಿ ಅಗಸರು ದೊಡ್ಡ ದೊಣ್ಣೆ ತೆಗೆದುಕೊಂಡು ಆತನನ್ನು ಹೊಡೆಯಲು ಹೋಗುತ್ತಿದ್ದರು. ನಾನು ಹೊರಟಿದ್ದುದು ಆತನನ್ನು ಅವರಿಂದ ರಕ್ಷಿಸುವುದಕ್ಕಾಗಿ.’ ಲಕ್ಷ್ಮಿ ಮತ್ತೆ ಕೇಳಿದಳು, ‘ಹಾಗಾದರೆ ಮತ್ತೆ ಏಕೆ ಹಿಂತಿರುಗಿ ಬಂದುಬಿಟ್ಟಿರಿ?.’ ನಾರಾಯಣ ನಗುನಗುತ್ತ ಹೇಳಿದ, ‘ಆ ಭಕ್ತ ತಾನೇ ಆ ಅಗಸರನ್ನು ಹೊಡೆಯಲು ಇಟ್ಟಿಗೆ ಚೂರನ್ನು ಕೈಯಲ್ಲಿ ತೆಗೆದುಕೊಂಡಿದ್ದುದನ್ನು ನೋಡಿದೆ. (ಎಲ್ಲರೂ ನಗುತ್ತಿದ್ದಾರೆ). ಅದಕ್ಕಾಗಿ ನಾನು ಹಿಂತಿರುಗಿ ಬಂದುಬಿಟ್ಟೆ’ ಅಂತ.
“ನಾನು ಕೇಶವಸೇನನಿಗೆ ಹೇಳಿದೆ, “ ‘ಅಹಂ” ಎಂಬುದನ್ನು ನೀನು ತ್ಯಾಗಮಾಡ ಬೇಕು’ ಅಂತ. ಅದಕ್ಕೆ ಆತ ಹೇಳಿದ, ‘ಮಹಾಶಯರೆ, ನಾನು ಹಾಗೆ ಮಾಡಿಬಿಟ್ಟರೆ ನನ್ನ ಸಮಾಜ ನಡೆದುಕೊಂಡು ಹೋಗುವ ಬಗೆ ಹೇಗೆ?’
“ನಾನು ಹೇಳಿದೆ, ‘ನಿನ್ನದು ಎಂಥಾ ಬುದ್ಧಿ! ನಾನು ನಿನಗೆ “ಅಪಕ್ವ ಅಹಂ” ಅಂದರೆ ಕಾಮಕಾಂಚನಾಸಕ್ತ “ಅಹಂ” ಅನ್ನು ತ್ಯಾಗಮಾಡು ಅಂತ ಹೇಳುತ್ತಿರುವೆನೇ ವಿನಾ, “ಪಕ್ವ ಅಹಂ” ಅಂದರೆ “ದಾಸ ಅಹಂ” ಅನ್ನು ತ್ಯಾಗಮಾಡು ಅಂತ ಹೇಳುತ್ತಿಲ್ಲ. ನಾನು ಭಗವಂತನ ದಾಸ, ನಾನು ಭಗವಂತನ ಸಂತಾನ ಎಂಬ “ಅಹಂ” ಗೇ “ಪಕ್ವ ಅಹಂ” ಅಂತ ಹೆಸರು. ಈ “ಅಹಂ” ನಿಂದ ಯಾವ ತೊಂದರೆಯೂ ಉಂಟಾಗದು.”’
ತ್ರೈಲೋಕ್ಯ: “ಅಹಂಕಾರದಿಂದ ಮುಕ್ತನಾಗುವುದು ಬಹಳ ಕಠಿಣ. ಜನ ಸುಮ್ಮನೆ ಭಾವಿಸುತ್ತಾರೆ, ತಾವು ಅದರಿಂದ ಮುಕ್ತರಾಗಿಬಿಟ್ಟಿದ್ದೇವೆ ಅಂತ.”
ಶ್ರೀರಾಮಕೃಷ್ಣರು: “ತನಗೆ ಅಹಂಕಾರ ಬಂದುಬಿಡಬಹುದೆಂದು ಹೆದರಿ ಗೌರಿಪಂಡಿತ ತನ್ನ ಸಂಬಂಧವಾಗಿ ‘ನಾನು’ ಎಂಬ ಪದವನ್ನು ಉಪಯೋಗಿಸದೆ ‘ಇದು’ ಎಂಬ ಪದವನ್ನು ಉಪಯೋಗಿಸುತ್ತಿದ್ದ. ನಾನೂ ಆತನನ್ನು ಅನುಸರಿಸಿದೆ. ‘ನಾನು ಊಟ ಮಾಡಿದೆ’ ಅಂತ ಹೇಳುವುದಕ್ಕೆ ಬದಲು, ‘ಇದು ಊಟ ಮಾಡಿತು’ ಅಂತ ಹೇಳಲಾರಂಭಿಸಿದೆ. ಅದನ್ನು ನೋಡಿ ಮಥುರಬಾಬು ಒಂದು ದಿನ ನನಗೆ ಹೇಳಿದ, ‘ಇದೇನಿದು? ನೀವೂ ಏಕೆ ಹಾಗೆ ಹೇಳುತ್ತಿದ್ದೀರಿ? ಅವರು ಬೇಕಾದರೆ ಹಾಗೆ ಹೇಳಿಕೊಳ್ಳಲಿ, ಅವರಲ್ಲಿ ಅಹಂಕಾರ ಇದೆ. ನೀವು ಅಹಂಕಾರಶೂನ್ಯರು; ನಿಮಗೇನು ಅಂಥದರ ಆವಶ್ಯಕತೆ ಇಲ್ಲ.’
“ನಾನು ಕೇಶವಸೇನನಿಗೆ ಹೇಳಿದೆ, “ ‘ಅಹಂ” ಎಂಬುದು ನಿಮ್ಮನ್ನು ಬಿಟ್ಟು ತೊಲಗಲೊಲ್ಲದು. ಆದ್ದರಿಂದ ಅದು ದಾಸನ “ಅಹಂ” ಆಗಿ ಉಳಿದುಕೊಂಡಿರಲಿ.’ ಪ್ರಹ್ಲಾದನಿಗೆ ಎರಡು ಭಾವಗಳಿದ್ದುವು. ಕೆಲವು ವೇಳೆ ‘ಸೋಠ್ಹಮ್’ ಭಾವ, ಎಂದರೆ, ‘ನಾನೇ ನೀನು, ನೀನೇ ನಾನು’ ಎಂಬ ಭಾವದಲ್ಲಿರುತ್ತಿದ್ದ. ಮತ್ತೆ ಆತನಲ್ಲಿ ಅಹಂಬುದ್ಧಿ ತಲೆಯೆತ್ತಿದಾಗ, ಆತ ‘ದಾಸ್ಯ’ ಭಾವದಲ್ಲಿ, ಎಂದರೆ, ‘ನಾನು ದಾಸ, ನೀನು ಪ್ರಭು’ ಎಂಬ ಭಾವದಲ್ಲಿರುತ್ತಿದ್ದ. ‘ಸೋಠ್ಹಮ್’ ಭಾವದಲ್ಲಿ ಪರಿಪಕ್ವತೆಯನ್ನು ಹೊಂದಿದ ನಂತರ, ‘ದಾಸ್ಯ’ ಭಾವದಲ್ಲಿ ಇರಲು ಸಾಧ್ಯ.
(ಕ್ಯಾಪ್ಟನ್ನನಿಗೆ) “ಬ್ರಹ್ಮಜ್ಞಾನವನ್ನು ಪಡೆದ ವ್ಯಕ್ತಿಗಳಲ್ಲಿ ಕೆಲವು ಲಕ್ಷಣಗಳನ್ನು ಕಾಣ ಬಹುದು. ಅವರು ಬಾಲಕವತ್, ಜಡವತ್, ಉನ್ಮಾದವತ್, ಪಿಶಾಚವತ್ ಕಂಡು ಬರುತ್ತಾರೆ, ಅಂತ ಭಾಗವತದಲ್ಲಿ ಹೇಳಿದೆ. ಕೆಲವು ವೇಳೆ ಅವರಿಗೆ ಐದು ವರ್ಷದ ಮಗುವಿನ ಅವಸ್ಥೆ ಬರುತ್ತದೆ. ಇನ್ನು ಕೆಲವು ವೇಳೆ ಅವರು ಉನ್ಮತ್ತರಂತೆ ವ್ಯವಹರಿಸುತ್ತಾರೆ. ಮತ್ತೆ ಕೆಲವು ವೇಳೆ ಜಡವಸ್ತುವಿನೋಪಾದಿಯಲ್ಲಿ ಸುಮ್ಮನೆ ಒಂದು ಕಡೆ ಬಿದ್ದಿರುತ್ತಾರೆ. ಈ ಅವಸ್ಥೆಯಲ್ಲಿ ಅವರು ಯಾವ ಕರ್ಮವನ್ನೂ ಮಾಡಲಾರರು. ಎಲ್ಲಾ ಕರ್ಮಗಳೂ ಅವರನ್ನು ಬಿಟ್ಟು ತೊಲಗುತ್ತವೆ. ಜನಕಾದಿಗಳಂತಹ ಜ್ಞಾನಿಗಳು ಕರ್ಮಗಳನ್ನು ಮಾಡುತ್ತಿದ್ದರಲ್ಲ. ಅದು ಹೇಗೆ ಅಂತ ನೀನು ಕೇಳಬಹುದು. ಸತ್ಯವೇನೆಂದರೆ, ಹಿಂದಿನ ಕಾಲದ ಜನರು ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ವಹಿಸಿ ತಾವು ನಿಶ್ಚಿಂತರಾಗಿ ಇದ್ದುಬಿಡುತ್ತಿದ್ದರು. ಅದೂ ಅಲ್ಲದೆ ಆಗಿನ ಕಾಲದ ಜನರು ಭಗವದ್ವಿಶ್ವಾಸಿಗಳಾಗಿದ್ದರು.”
ಪರಮಹಂಸರು ಕರ್ಮತ್ಯಾಗದ ಸಂಬಂಧವಾಗಿ ಮಾತಾಡಲಾರಂಭಿಸಿದರು. ಯಾರು ಕರ್ಮಾಸಕ್ತರೊ ಅವರು ಅನಾಸಕ್ತಿಯಿಂದ ಕರ್ಮ ಮಾಡಬೇಕು ಅಂತ ತಿಳಿಸಿದರು.
ಶ್ರೀರಾಮಕೃಷ್ಣರು: “ಬ್ರಹ್ಮಜ್ಞಾನ ದೊರೆತ ಮೇಲೆ ಅಧಿಕವಾಗಿ ಕರ್ಮಗಳಲ್ಲಿ ತೊಡಗಿರಲಾಗುವುದಿಲ್ಲ.”
ತ್ರೈಲೋಕ್ಯ: “ಏಕೆ ಆಗುವುದಿಲ್ಲ? ಪವಹಾರಿಬಾಬ ಬಹಳ ದೊಡ್ಡ ಯೋಗಿ. ಆದರೂ ಆತ ಜನರ ಜಗಳವನ್ನು ಫೈಸಲುಮಾಡಿಕೊಡುತ್ತಾನೆ; ಅಷ್ಟೇ ಅಲ್ಲ, ಮೊಕದ್ದಮೆ ಯನ್ನೂ ಕೂಡ.”
ಶ್ರೀರಾಮಕೃಷ್ಣರು: “ಹೌದು, ಹೌದು. ಅದೇನೋ ನಿಜ. ಡಾಕ್ಟರ್ ದುರ್ಗಾಚರಣ ಒಬ್ಬ ದೊಡ್ಡ ಕುಡುಕ. ಇಪ್ಪತ್ತನಾಲ್ಕು ಘಂಟೆಗಳ ಕಾಲವೂ ಮದ್ಯಸೇವನೆ ಮಾಡುತ್ತಲೇ ಇರುತ್ತಿದ್ದ. ಆದರೆ ಕೆಲಸದ ಸಮಯದಲ್ಲಿ, ಎಂದರೆ ಚಿಕಿತ್ಸೆ ಮಾಡುವಾಗ ಅತಿ ಕಟ್ಟುನಿಟ್ಟಿ ನಿಂದ ವರ್ತಿಸುತ್ತಿದ್ದ; ಯಾವ ವಿಧದಿಂದಲೂ ತಪ್ಪು ಮಾಡುತ್ತಿರಲಿಲ್ಲ. ಭಕ್ತಿಯನ್ನು ಪಡೆದು ಕೊಂಡ ನಂತರ ಕರ್ಮಗಳನ್ನು ಮಾಡಿದರೆ ಯಾವ ತೊಂದರೆಯೂ ಬಾರದು. ಆದರೆ ಅದು ಬಹಳ ಕಠಿಣ. ಕಠೋರ ಸಾಧನೆ ಆವಶ್ಯಕ.
“ಭಗವಂತನೇ ಪ್ರತಿಯೊಂದನ್ನೂ ಮಾಡುತ್ತಿದ್ದಾನೆ. ನಾವು ಆತನ ಕೈಯ ಯಂತ್ರಗಳು ಮಾತ್ರ. ಕಾಳೀದೇವಾಲಯದ ಎದುರಿಗೆ ಕೆಲವು ಸಿಖ್ ಮತದವರು ನನಗೆ ಹೇಳಿದರು, ‘ಭಗವಂತ ದಯಾಮಯ’ ಅಂತ. ನಾನು ಕೇಳಿದೆ, ‘ಯಾರಿಗೆ ಆತ ದಯಾಮಯ?’ ಅಂತ. ಅವರು ಹೇಳಿದರು, ‘ಏಕೆ ಪೂಜ್ಯರೆ, ನಮ್ಮೆಲ್ಲರಿಗೂ’ ಅಂತ. ನಾನು ಹೇಳಿದೆ, ‘ನಾವೆಲ್ಲರೂ ಆತನ ಮಕ್ಕಳು. ಮಕ್ಕಳ ಮೇಲೆ ದಯೆ ತೋರಿಸುವುದು ಎಂದರೇನು? ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವುದು ತಂದೆಯ ಕರ್ತವ್ಯ; ಆತ ನೋಡಿಕೊಳ್ಳದೆ, ಪಕ್ಕದ ಕೇರಿಯವರು ಬಂದು ನೋಡಿಕೊಳ್ಳುತ್ತಾರೇನು? ಒಳ್ಳೆಯದು, ಯಾರು ಭಗವಂತ ದಯಾಮಯ ಅಂತ ಹೇಳುತ್ತಾರೊ ಅವರ ತಲೆಗೆ, ತಾವು ಭಗವಂತನ ಮಕ್ಕಳೇ ವಿನಾ ಬೇರೆ ಯಾರ ಮಕ್ಕಳೂ ಅಲ್ಲ ಎಂಬ ಭಾವನೆ ಬರುತ್ತಿಲ್ಲವೇನು?”’
ಕ್ಟಾಪ್ಟನ್: “ನಿಜ, ಅವರು ಭಗವಂತನನ್ನು ತಮ್ಮವ ಎಂದು ಭಾವಿಸುತ್ತಿಲ್ಲ.”
ಶ್ರೀರಾಮಕೃಷ್ಣರು: “ಹಾಗೆಂದು ನಾವು ಭಗವಂತನನ್ನು ದಯಾಮಯ ಅಂತ ಸಂಬೋಧಿಸಬಾರದೇನು? ನಾವು ಸಾಧನಾವಸ್ಥೆಯಲ್ಲಿ ಇರುವವರೆಗೆ ಬೇಕಾದರೆ ಹಾಗೆ ಕರೆಯಬಹುದು. ಆದರೆ ಆತನ ಸಾಕ್ಷಾತ್ಕಾರವನ್ನು ಪಡೆದುಕೊಂಡ ಒಡನೆಯೇ, ಆತನೇ ನಮ್ಮ ಸ್ವಂತ ತಂದೆ ತಾಯಿ ಅಂತ ಬೋಧೆಯಾಗುತ್ತದೆ. ನಮಗೆ ಆತನ ಸಾಕ್ಷಾತ್ಕಾರವಾಗದವರೆಗೆ ನಮಗನಿಸುತ್ತದೆ, ನಮಗೂ ಆತನಿಗೂ ಯಾವ ಸಂಬಂಧವೂ ಇಲ್ಲ, ನಾವು ಪರರ ಮಕ್ಕಳು ಅಂತ.
“ಸಾಧನಾವಸ್ಥೆಯಲ್ಲಿ ಆತನ ಎಲ್ಲಾ ಗುಣಗಳಿಂದಲೂ ಭಗವಂತನನ್ನು ಸಂಬೋಧಿಸ ಬೇಕು. ಹಾಜರಾ ಒಂದು ದಿನ ನರೇಂದ್ರನಿಗೆ ಹೇಳಿದ, ‘ಭಗವಂತ ಅನಂತ, ಆತನ ಐಶ್ವರ್ಯ ಅನಂತ, ಆತ ನಾವು ಅರ್ಪಿಸಿದ ಬಾಳೆಹಣ್ಣು, ತೆಂಗಿನಕಾಯಿ ಇವನ್ನು ತಿನ್ನಲು ಹೋಗುತ್ತಾನೇನು? ನಾವು ಹಾಡುವ ಹಾಡುಗಳನ್ನು ಆಲಿಸಲು ಹೋಗುತ್ತಾನೇನು? ಇವೆಲ್ಲ ನಮ್ಮ ಮಾನಸಿಕ ಭ್ರಾಂತಿ’ ಅಂತ. ಇದನ್ನು ಕೇಳಿದೊಡನೆಯೇ ನರೇಂದ್ರ ಒಂದು ಹತ್ತು ಮೊಳ ಕೆಳಕ್ಕೆ ಇಳಿದುಹೋದ. ಅದನ್ನು ನೋಡಿ ನಾನು ಹಾಜರಾನಿಗೆ ಹೇಳಿದೆ, ‘ನೀನು ಎಂಥ ದುರುಳ! ಹುಡುಗರೊಂದಿಗೆಲ್ಲ ನೀನು ಹೀಗೆ ಮಾತನಾಡಿದರೆ ಅವರ ಮುಂದಿನ ಗತಿಯೇನು?’ ಅಂತ. ಭಕ್ತಿಯನ್ನು ಕಳೆದುಕೊಂಡುಬಿಟ್ಟರೆ ಮನುಷ್ಯ ಬದುಕಿರುವ ಬಗೆ ಹೇಗೆ? ಭಗವಂತ ಅನಂತ ಐಶ್ವರ್ಯಸಂಪನ್ನನಾಗಿದ್ದರೂ ಭಕ್ತಪರಾಧೀನ. ಒಬ್ಬ ದೊಡ್ಡ ಮನುಷ್ಯನ ಮನೆ ದ್ವಾರಪಾಲಕ ತನ್ನ ಯಜಮಾನನ ಬೈಠಕ್ಖಾನೆಗೆ ಬಂದು ಅತಿ ಸಂಕೋಚಭಾವದಿಂದ ಒಂದು ಕಡೆ ನಿಂತುಕೊಂಡಿದ್ದಾನೆ. ಬಟ್ಟೆಯಿಂದ ಮುಚ್ಚಿದ್ದ ಏನೋ ಒಂದು ವಸ್ತುವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಯಜಮಾನ ಕೇಳುತ್ತಾನೆ, ‘ದ್ವಾರಪಾಲಕ, ಏನು ಸಮಾಚಾರ? ಕೈಯಲ್ಲಿ ಏನು ಹಿಡಿದುಕೊಂಡಿದ್ದೀಯೆ?’ ಅಂತ. ದ್ವಾರಪಾಲಕ ಅಂಜುತ್ತ ಒಂದು ಸೀತಾಫಲದ ಹಣ್ಣನ್ನು ಹೊರಕ್ಕೆ ತೆಗೆದು ಯಜಮಾನನ ಮುಂದಿಟ್ಟು ಹೇಳುತ್ತಾನೆ, ‘ತಾವು ಇದನ್ನು ದಯವಿಟ್ಟು ಸೇವಿಸಬೇಕು’ ಅಂತ. ತನ್ನ ಸೇವಕನ ಭಕ್ತಿಯನ್ನು ನೋಡಿ ಯಜಮಾನ ಬಹಳವಾಗಿ ಆನಂದಪಡುತ್ತಾನೆ. ಆತ ಆ ಹಣ್ಣನ್ನು ಬಹಳ ಪ್ರೀತಿಯಿಂದ ತೆಗೆದುಕೊಂಡು ಹೇಳುತ್ತಾನೆ, ‘ಆಃ! ಬಹಳ ಒಳ್ಳೆಯ ಸೀತಾಫಲದ ಹಣ್ಣು. ನೀನು ಎಲ್ಲಿಂದ ಇಷ್ಟು ಶ್ರಮವಹಿಸಿ ತಂದೆ?’ ಅಂತ.
“ಭಗವಂತ ಭಕ್ತಾಧೀನ. ಬಹಳವಾಗಿ ಆದರ ಸತ್ಕಾರ ತೋರಿಸಿ ದುರ್ಯೋಧನ ಶ್ರೀಕೃಷ್ಣನಿಗೆ ಹೇಳಿದ, ‘ತಾವು ಇಲ್ಲಿಯೇ ಊಟೋಪಚಾರಗಳನ್ನು ಮಾಡಿ’ ಅಂತ. ಆದರೆ ಶ್ರೀಕೃಷ್ಣ ಊಟಕ್ಕೆ ವಿದುರನ ಕುಟೀರಕ್ಕೆ ಹೋದ. ಆತ ಭಕ್ತವತ್ಸಲ. ವಿದುರ ಬಡಿಸಿದ ಅನ್ನ ಸೊಪ್ಪನ್ನು ಅಮೃತವೆಂದೇ ತಿಂದ.
“ಕೆಲವು ವೇಳೆ ಪೂರ್ಣಜ್ಞಾನಿ ಪಿಶಾಚಿಯ ಹಾಗೆ ವರ್ತಿಸುತ್ತಾನೆ. ಅನ್ನಪಾನಾದಿಗಳ ಸಂಬಂಧವಾಗಿ ಆತನಿಗೆ ಯಾವ ಭೇದಭಾವನೆಯೂ ಇರದು. ಶುಚಿ, ಅಶುಚಿಗಳ ವಿಚಾರವೇ ಇಲ್ಲ. ಪೂರ್ಣಜ್ಞಾನಿ, ಪೂರ್ಣಮೂರ್ಖ ಇವರಿಬ್ಬರ ಬಾಹ್ಯಲಕ್ಷಣಗಳು ಒಂದೇ ತರ. ಪೂರ್ಣಜ್ಞಾನಿ ಗಂಗೆಯಲ್ಲಿ ಸ್ನಾನ ಮಾಡುವಾಗ ಯಾವ ಮಂತ್ರವನ್ನೂ ಜಪಿಸದೆ ಸ್ನಾನ ಮಾಡಿಬಿಡಬಹುದು. ಪೂಜೆ ಮಾಡುವಾಗ ಯಾವ ಮಂತ್ರ-ತಂತ್ರದ ಗೋಜಿಗೂ ಹೋಗದೆ ಭಗವಂತನ ಅಡಿದಾವರೆಗಳಲ್ಲಿ ಎಲ್ಲಾ ಹೂವುಗಳನ್ನೂ ಒಟ್ಟಿಗೆ ಅರ್ಪಿಸಿ ಬಂದುಬಿಡಬಹುದು.
“ಎಲ್ಲಿಯವರೆಗೆ ಸಂಸಾರಸುಖಗಳನ್ನು ಅನುಭವಿಸಬೇಕೆಂಬ ಇಚ್ಛೆಯಿರುವುದೊ, ಅಲ್ಲಿಯವರೆಗೆ ಕರ್ಮತ್ಯಾಗಮಾಡಲು ಆಗುವುದಿಲ್ಲ. ಭೋಗಾಸಕ್ತಿ ಇರುವವರೆಗೆ ಕರ್ಮ ಮಾಡಬೇಕಾಗುತ್ತದೆ.
“ಒಂದು ಹಕ್ಕಿ ಅನ್ಯಮನಸ್ಕವಾಗಿ ಗಂಗಾನದಿಯಲ್ಲಿ ಬಿಟ್ಟಿದ್ದ ಒಂದು ಜಹಜಿನ ಧ್ವಜ ಸ್ತಂಭದ ಮೇಲೆ ಕುಳಿತುಕೊಂಡಿತ್ತು. ಕ್ರಮೇಣ ಆ ಜಹಜು ಸಾಗರದ ಮಧ್ಯಪ್ರದೇಶಕ್ಕೆ ಮುಂದುವರಿದುಬಿಟ್ಟಿತು. ಆ ಹಕ್ಕಿ ಎಚ್ಚೆತ್ತಾಗ ಅದಕ್ಕೆ ಯಾವ ದಿಕ್ಕಿನಲ್ಲೂ ತೀರವೇ ಕಾಣಬರಲಿಲ್ಲ. ಭೂಪ್ರದೇಶಕ್ಕೆ ಬರಲೋಸುಗ ಅದು ಉತ್ತರ ದಿಕ್ಕಿಗೆ ಹಾರಿಹೋಯಿತು. ಬಹಳ ದೂರದವರೆಗೆ ಹಾರಿ ಹಾರಿ ಅದರ ರೆಕ್ಕೆ ಸೋತುಹೋಗಿಬಿಟ್ಟಿತು. ಆದರೂ ದಡವೇ ಅದರ ಕಣ್ಣಿಗೆ ಬೀಳಲಿಲ್ಲ. ಪಾಪ ಇನ್ನೇನು ತಾನೆ ಮಾಡೀತು? ಹಿಂದಿರುಗಿ ಹಾರಿ ಬಂದು ಧ್ವಜಸ್ತಂಭದ ಮೇಲೆ ಕುಳಿತುಕೊಂಡಿತು. ಬಹಳ ಹೊತ್ತು ವಿಶ್ರಮಿಸಿಕೊಂಡು, ಅದು ಮತ್ತೆ ಈ ಸಲ ಪೂರ್ವ ದಿಕ್ಕಿನ ಕಡೆ ಹಾರಿಹೋಯಿತು. ಆ ದಿಕ್ಕಿನಲ್ಲಿಯೂ ಅದಕ್ಕೆ ದಡ ಏನೂ ಕಾಣಬರಲಿಲ್ಲ. ನಾಲ್ಕು ದಿಕ್ಕಿಗೂ ಅನಂತ ಸಾಗರವೇ ಹರಡಿಕೊಂಡಿರುವುದು ಕಂಡುಬಂದಿತು. ಬಹಳವಾಗಿ ಆಯಾಸಗೊಂಡು ಹಿಂತಿರುಗಿ ಹಾರಿ ಬಂದು ಜಹಜಿನ ಧ್ವಜಸ್ತಂಭದ ಮೇಲೆ ಕುಳಿತುಕೊಂಡಿತು. ಮತ್ತೆ ಬಹಳ ಹೊತ್ತು ವಿಶ್ರಮಿಸಿಕೊಂಡು, ಒಮ್ಮೆ ಪಶ್ಚಿಮ ದಿಕ್ಕಿಗೆ ಇನ್ನೊಮ್ಮೆ ದಕ್ಷಿಣ ದಿಕ್ಕಿಗೆ ಹಾರಿ ನೋಡಿತು. ಯಾವ ದಿಕ್ಕಿನಲ್ಲಿಯೂ ಅದಕ್ಕೆ ದಡ ಎಂಬುದೇ ಕಾಣಬರದೆ ಹೋಗಲು ಅದು ಹಿಂದಿರುಗಿ ಹಾರಿಬಂದು ಅದೇ ಧ್ವಜಸ್ತಂಭದ ಮೇಲೆ ಕುಳಿತುಕೊಂಡಿತು. ಮತ್ತೆ ಅದು ಆ ಸ್ಥಳವನ್ನು ಬಿಟ್ಟು ಕದಲಲಿಲ್ಲ. ಹಾರಿಹೋಗುವ ಪ್ರಯತ್ನವನ್ನೇ ಬಿಟ್ಟು ಅಲ್ಲೇ ಸುಮ್ಮನೆ ಕುಳಿತುಬಿಟ್ಟಿತು. ಬಳಿಕ ಅದರ ಮನಸ್ಸಿನಲ್ಲಿ ಯಾವ ವಿಧವಾದ ಅಶಾಂತಿಯೇ ಆಗಲಿ ವ್ಯಸ್ತತೆಯೇ ಆಗಲಿ ಇರಲಿಲ್ಲ. ನಿಶ್ಚಿಂತೆಯಿಂದ ಕುಳಿತುಕೊಂಡಿದ್ದರಿಂದ, ಅದು ಮತ್ತೆ ಬೇರೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ.”
ಕ್ಯಾಪ್ಟನ್: “ಅಹ, ಇದು ಎಂಥ ದೃಷ್ಟಾಂತ!”
ಶ್ರೀರಾಮಕೃಷ್ಣರು: “ಸಂಸಾರಿಗಳು ಸುಖ ಬೇಕೆಂದು ಈ ಜಗತ್ತಿನ ಮೂಲೆ ಮೂಲೆ ಗಳನ್ನೆಲ್ಲಾ ಹುಡುಕಿ ನೋಡಿಬರುತ್ತಾರೆ. ಅದು ಅವರಿಗೆ ಎಲ್ಲಿಯೂ ದೊರೆಯದು; ಬರಿದೇ ದಣಿದು ಸುಸ್ತಾಗುತ್ತಾರೆ. ಯಾವಾಗ ಅವರು ತಮ್ಮ ಕಾಮಕಾಂಚನಾಸಕ್ತಿಯ ದೆಸೆಯಿಂದ ಕೇವಲ ದುಃಖದಲ್ಲಿಯೇ ಮುಳುಗಿಹೋಗುವರೊ, ಆಗ ಅವರ ಮನಸ್ಸು ತ್ಯಾಗದ ಕಡೆಗೆ ವೈರಾಗ್ಯದ ಕಡೆಗೆ, ಹರಿಯಲಾರಂಭಿಸುತ್ತದೆ. ಅನೇಕರಿಗೆ ಕಾಮಕಾಂಚನವನ್ನು ಭೋಗಿಸದೆ ಅವನ್ನು ತ್ಯಜಿಸುವುದಕ್ಕೆ ಆಗುವುದಿಲ್ಲ. ಸಾಧಕರಲ್ಲಿ ಎರಡು ವಿಧ-ಕುಟೀಚಕ, ಬಹೂದಕ. ಸಾಧಕರಲ್ಲಿ ಕೆಲವರು ಇದ್ದಾರೆ, ಅವರು ಬಹಳವಾಗಿ ತೀರ್ಥಯಾತ್ರೆ ಮಾಡುತ್ತಾರೆ. ಅವರು ಒಂದೇ ಜಾಗದಲ್ಲಿ ಬಹಳ ಕಾಲ ಇರಲಾರರು; ಅವರು ಅನೇಕ ತೀರ್ಥಸ್ಥಾನಗಳ ನೀರನ್ನು ಕುಡಿಯಲೇಬೇಕು. ತೀರ್ಥಸ್ಥಾನಗಳನ್ನೆಲ್ಲ ಸುತ್ತಿ ಸುತ್ತಿ ತುಷ್ಟರಾದಾಗ, ಅವರು ಯಾವುದಾದರೂ ಒಂದು ಪ್ರದೇಶದಲ್ಲಿ ಕುಟೀರವನ್ನು ಕಟ್ಟಿಕೊಂಡು ವಾಸಿಸಲಾರಂಭಿಸುತ್ತಾರೆ. ಬಳಿಕ ನಿಶ್ಚಿಂತರಾಗಿ, ಚೇಷ್ಟಾಶೂನ್ಯರಾಗಿ ಭಗವಚ್ಚಿಂತನೆ ಮಾಡಲು ಆರಂಭಿಸುತ್ತಾರೆ.
“ಈ ಸಂಸಾರದಲ್ಲಿ ಸುಖಪಡಲು ಅಲ್ಲಿ ಏನಿದೆ? ಕಾಮಕಾಂಚನವೆ? ಅದು ಈಗಿದ್ದುದು ಈಗಿರದು.”
“ಈ ಸಂಸಾರದ ಆಗಸ ಯಾವಾಗ ನೋಡಿದರೂ ಮೋಡಗಟ್ಟಿಕೊಂಡು ಸತತ ಮಳೆ ಸುರಿಸುತ್ತಲೇ ಇರುತ್ತದೆ; ಸೂರ್ಯನ ಮುಖ ನೋಡುವುದಕ್ಕೇ ಆಗುವುದಿಲ್ಲ. ಅದರಲ್ಲಿ ದುಃಖದ ಭಾಗವೇ ಅಧಿಕ. ಕಾಮಕಾಂಚನದ ಮೋಡ ಸೂರ್ಯನನ್ನು ನೋಡಲು ಬಿಟ್ಟು ಕೊಡಲೊಲ್ಲದು. ಕೆಲಕೆಲವರು ನನ್ನನ್ನು ಕೇಳುತ್ತಾರೆ, ‘ಮಹಾಶಯರೆ, ಭಗವಂತ ಏಕೆ ಈ ವಿಧವಾದ ಸಂಸಾರವನ್ನು ಸೃಷ್ಟಿಸಿದ? ನಮಗಾವ ಮಾರ್ಗವೂ ಇಲ್ಲವೇನು?’ ನಾನು ಅವರಿಗೆ ಹೇಳುತ್ತೇನೆ, ‘ಮಾರ್ಗವಿಲ್ಲದೆ ಏನು? ಆತನಿಗೆ ಶರಣಾಗತರಾಗಿ ಅನುಕೂಲವಾದ ಹವಾ ಬೀಸುವಂತೆ, ಶುಭಯೋಗ ಘಟಿಸುವಂತೆ ಆತನಿಗೆ ವ್ಯಾಕುಲಚಿತ್ತದಿಂದ ಪ್ರಾರ್ಥನೆ ಸಲ್ಲಿಸಿ. ವ್ಯಾಕುಲಚಿತ್ತದಿಂದ ಕರೆದರೆ ಆತ ನಿಮ್ಮ ಪ್ರಾರ್ಥನೆಯನ್ನು ಕೇಳಿಯೇ ಕೇಳುತ್ತಾನೆ.’
“ಒಬ್ಬನ ಮಗ ರೋಗಗ್ರಸ್ತನಾಗಿ ಇನ್ನೇನು ಯಮನ ಬಾಯಿಗೆ ತುತ್ತಾಗುವುದರಲ್ಲಿದ್ದ. ತಂದೆ ಅತ್ಯಂತ ವ್ಯಾಕುಲನಾಗಿ ತನ್ನ ಮಗನನ್ನು ಬದುಕಿಸಲು ಇವರ ಅವರ ಸಲಹೆ ಕೇಳುತ್ತಾ ಸುತ್ತಾಡಲು ಆರಂಭಿಸಿದ. ಒಬ್ಬ ಹೇಳಿದ ‘ನೋಡು, ನೀನು ಇವುಗಳನ್ನೆಲ್ಲ ಹವಣಿಸಿಕೊಳ್ಳುವುದಾದರೆ ನಿನ್ನ ಮಗನಿಗೆ ಗುಣವಾಗಿಬಿಡುತ್ತದೆ; ಸ್ವಾತಿ ನಕ್ಷತ್ರದ ಮಳೆ ಹೊಯ್ದು ಅದು ಒಂದು ಕಪಾಲದಲ್ಲಿ ಶೇಖರವಾಗಿರಬೇಕು; ಆ ನೀರನ್ನು ಕುಡಿಯಲು ಒಂದು ಕಪ್ಪೆ ಅಲ್ಲಿಗೆ ಬರಬೇಕು; ಒಂದು ಹಾವು ಅದನ್ನು ಅಟ್ಟಿಸಿಕೊಂಡು ಬರಬೇಕು; ಹಾವು ಆ ಕಪ್ಪೆಯನ್ನು ಇನ್ನೇನು ಕಚ್ಚಿಬಿಟ್ಟಿತು ಅನ್ನುವಷ್ಟರಲ್ಲಿ ಕಪ್ಪೆ ಕಪಾಲದ ಮೇಲೆ ನೆಗೆಯಬೇಕು. ಹಾವಿನ ವಿಷ ಕಪಾಲದೊಳಕ್ಕೆ ಬೀಳಬೇಕು; ಆ ವಿಷಮಿಶ್ರಿತ ನೀರನ್ನು ತಂದು ನಿನ್ನ ಮಗನಿಗೆ ಸ್ವಲ್ಪ ಕುಡಿಸಬೇಕು’ ಅಂತ. ಆ ಮನುಷ್ಯ ಅತ್ಯಂತ ವ್ಯಾಕುಲಚಿತ್ತದಿಂದ ಆ ಔಷಧಕ್ಕಾಗಿ ಸ್ವಾತಿ ನಕ್ಷತ್ರ ಉದಯಿಸಿದೊಡನೆ ಮನೆಬಿಟ್ಟು ಹೊರಟ. ಸ್ವಾತಿ ಮಳೆ ಹೊಯ್ಯಲಾರಂಭಿಸಿತು. ಆತ ತೀವ್ರ ವ್ಯಾಕುಲತೆಯಿಂದ ಭಗವಂತನನ್ನು ಪ್ರಾರ್ಥಿಸಿದ, ‘ಹೇ ಭಗವಂತ, ನನಗೊಂದು ಕಪಾಲವನ್ನು ದೊರಕಿಸಿಕೊಡು’ ಅಂತ. ಹುಡುಕುತ್ತ ಹುಡುಕುತ್ತ ಇದ್ದ ಹಾಗೆ ಮಳೆನೀರಿನಿಂದ ತುಂಬಿದ ಒಂದು ಕಪಾಲ ಆತನಿಗೆ ದೊರಕಿತು. ಮತ್ತೆ ಪ್ರಾರ್ಥನೆ ಮಾಡಿದ, ‘ಹೇ ಭಗವಂತ, ನಿನಗೆ ಜಯವಾಗಲಿ! ಈ ಕೆಲಸಕ್ಕೆ ಹಾವು ಮತ್ತು ಕಪ್ಪೆ-ಹವಣಿಸಿ ಕೊಟ್ಟುಬಿಡು’ ಅಂತ. ಆತನ ಪ್ರಾರ್ಥನೆ ಅಂಥಾ ಹೃತ್ಪೂರ್ವಕವಾಗಿದ್ದು ಎಲ್ಲವೂ ಬಂದೊದಗಿಬಿಟ್ಟವು. ಕಣ್ಣುಮುಚ್ಚಿ ಕಣ್ಣುಬಿಡುವುದರೊಳಗಾಗಿಯೇ ಒಂದು ಹಾವು ಕಪ್ಪೆಯೊಂದನ್ನು ಆ ಕಡೆ ಅಟ್ಟಿಸಿಕೊಂಡು ಬರಲಾರಂಭಿಸಿತು. ಕಪ್ಪೆಯನ್ನು ಕಚ್ಚಲು ಹೋಗಿ ಆ ಹಾವಿನ ವಿಷ ಕಪಾಲದೊಳಕ್ಕೆ ಬಿದ್ದೇ ಹೋಯಿತು!
“ಭಗವಂತನಿಗೆ ಶರಣಾಗತನಾಗಿ, ಆತನನ್ನು ವ್ಯಾಕುಲಚಿತ್ತದಿಂದ ಕರೆದರೆ, ಆತ ನಮ್ಮ ಪ್ರಾರ್ಥನೆಯನ್ನು ಕೇಳಿಯೇ ಕೇಳುತ್ತಾನೆ; ಎಲ್ಲವೂ ಸುಗಮವಾಗುವಂತೆ ಮಾಡಿಕೊಡುತ್ತಾನೆ.”
ಕ್ಯಾಪ್ಟನ್: “ಆಹಾ, ಇದು ಎಂಥಾ ಯುಕ್ತ ದೃಷ್ಟಾಂತ!”
ಶ್ರೀರಾಮಕೃಷ್ಣರು: “ಹೌದು, ಭಗವಂತ ಎಲ್ಲಾ ಸುಯೋಗಗಳನ್ನೂ ಕಲ್ಪಿಸಿಕೊಟ್ಟು ಬಿಡುತ್ತಾನೆ. ಸಾಧಕ ವಿವಾಹವಾಗದೆ ಇರುವ ಹಾಗೆ ಆತ ಅನುಕೂಲತೆಗಳನ್ನು ಕಲ್ಪಿಸಬಹುದು. ಅದರಿಂದ ಸಾಧಕನಿಗೆ ತನ್ನ ಇಡಿಯ ಮನಸ್ಸೆಲ್ಲ ಭಗವಂತನ ಕಡೆಗೆ ತಿರುಗಿಸಲು ಸಾಧ್ಯವಾಗಿಬಿಡುತ್ತದೆ. ಭಗವಂತನ ಕೃಪೆಯಿಂದ ಸಾಧಕನ ಅಣ್ಣತಮ್ಮಂದಿರು ಇಡೀ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಂಡುಬಿಡಬಹುದು. ಆಗ ಸಾಧಕ ತನ್ನ ಸಂಸಾರದ ವಿಷಯವಾಗಿ ಸ್ವಲ್ಪವೂ ಚಿಂತಿಸಬೇಕಾಗಿರುವುದಿಲ್ಲ; ಆತ ತನ್ನ ಮನಸ್ಸಿನ ಶೇಕಡಾ ನೂರು ಭಾಗವನ್ನೂ ಭಗವಂತನಿಗೆ ಅರ್ಪಿಸಿಬಿಡಬಲ್ಲ.
“ಆದರೆ ಕಾಮಕಾಂಚನವನ್ನು ತ್ಯಾಗಮಾಡದ ಹೊರತು ಏನೂ ದೊರೆಯದು. ಅವನ್ನು ತ್ಯಾಗ ಮಾಡಿದ ನಂತರವೇ ಅವಿದ್ಯೆ, ಅಜ್ಞಾನ ನಾಶಹೊಂದುತ್ತದೆ. ಲೆನ್ಸಿನ ಮೇಲೆ ಬೀಳುವ ಸೂರ್ಯನ ಕಿರಣಗಳು ಅನೇಕ ವಸ್ತುಗಳನ್ನು ಸುಟ್ಟುಹಾಕಿಬಿಡಬಲ್ಲವು. ಆದರೆ ಕತ್ತಲೆ ಕೊಠಡಿಗೆ ಅದನ್ನು ತೆಗೆದುಕೊಂಡು ಹೋಗಿ ಇಟ್ಟರೆ ಅಲ್ಲಿ ಅದು ಆ ಫಲ ಕೊಡಲಾರದು. ಲೆನ್ಸನ್ನು ಉಪಯೋಗಿಸಬೇಕಾದರೆ ಕೊಠಡಿಯಿಂದ ಹೊರಕ್ಕೆ ಬಂದು ನಿಲ್ಲಬೇಕು.
“ಆದರೆ ಕೆಲವರು ಬ್ರಹ್ಮಜ್ಞಾನ ದೊರೆತನಂತರವೂ ಸಂಸಾರದಲ್ಲಿ ಇರುವುದುಂಟು. ಕೊಠಡಿಯ ಒಳಗೂ ಹೊರಗೂ ಎಲ್ಲವೂ ಅವರ ಕಣ್ಣಿಗೆ ಕಾಣುತ್ತದೆ. ಭಗವಂತನ ಜ್ಞಾನದ ಬೆಳಕು ಸಂಸಾರದ ಮೇಲೆ ಬೀಳುತ್ತದೆ. ಆ ಬೆಳಕಿನ ಸಹಾಯದಿಂದ ಅವರು ಈ ಸಂಸಾರದಲ್ಲಿ ಒಳ್ಳೆಯದಾವುದು, ಕೆಟ್ಟದ್ದಾವುದು; ನಿತ್ಯವಾವುದು, ಅನಿತ್ಯವಾವುದು ಇವೇ ಮೊದಲಾದುವುಗಳನ್ನು ವಿಮರ್ಶಿಸಿ ನೋಡಬಲ್ಲರು. ಅಜ್ಞಾನಿಗಳಾಗಿದ್ದರೂ, ಅಂದರೆ ಭಗವಂತನ ಇರುವಿಕೆಯಲ್ಲಿ ವಿಶ್ವಾಸವಿಲ್ಲದವರಾಗಿದ್ದರೂ ಯಾರು ಸಂಸಾರಾಸಕ್ತ ರಾಗಿದ್ದಾರೊ ಅವರನ್ನು ನೆಲಮಾಳಿಗೆಯಲ್ಲಿ ವಾಸಿಸುವ ಜನರಿಗೆ ಹೋಲಿಸಬಹುದು. ಅದರಲ್ಲಿರುವ ಕ್ಷೀಣ ಬೆಳಕಿನಿಂದ ಕೇವಲ ಕೊಠಡಿಯ ಒಳಗೆ ಮಾತ್ರ ಅವರು ನೋಡಬಲ್ಲರು. ಆದರೆ ಬ್ರಹ್ಮಜ್ಞಾನವನ್ನು ಪಡೆದ ನಂತರ ಭಗವಂತನ ಸಾಕ್ಷಾತ್ಕಾರವನ್ನು ಪಡೆದನಂತರ ಯಾರು ಸಂಸಾರದಲ್ಲಿ ವಾಸಿಸುತ್ತಾರೊ ಅವರನ್ನು ಗ್ಲಾಸಿನ ಮನೆಯಲ್ಲಿ ವಾಸಿಸುವ ಜನರಿಗೆ ಹೋಲಿಸಬಹುದು. ಅವರು ಮನೆಯ ಒಳಗಿರುವುದನ್ನೆಲ್ಲ ಬಹಳ ಸ್ಪಷ್ಟವಾಗಿ ನೋಡಬಲ್ಲರು. ಒಳ್ಳೆಯದಾವುದು, ಕೆಟ್ಟದ್ದಾವುದು; ನಿತ್ಯವಾವುದು, ಅನಿತ್ಯವಾವುದು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ.
“ಭಗವಂತನೊಬ್ಬನೇ ಕರ್ತ, ನಾವೆಲ್ಲರೂ ಆತನ ಯಂತ್ರಗಳು ಮಾತ್ರ. ಆದ್ದರಿಂದ ಜ್ಞಾನಿಗಳೂ ಅಹಂಕಾರಪಡುವ ಹಾಗಿಲ್ಲ. ಶಿವಮಹಿಮ್ನ ಸ್ತೋತ್ರವನ್ನು ಯಾರು ಬರೆದನೊ ಆತನಿಗೆ ಸ್ವಲ್ಪ ಅಹಂಕಾರವುಂಟಾಗಿತ್ತು. ಆದರೆ ಯಾವಾಗ ಶಿವನ ವಾಹನ ನಂದಿ ತನ್ನ ಬಾಯನ್ನು ತೆರೆದು, ತನ್ನ ಹಲ್ಲನ್ನು ತೋರಿಸಿತೊ, ಆಗ ಆತನ ಅಹಂಕಾರವೆಲ್ಲ ನುಚ್ಚು ನೂರಾಗಿ ಹೋಯಿತು. ಅದರ ಪ್ರತಿಯೊಂದು ಹಲ್ಲೂ ಒಂದೊಂದು ಮಂತ್ರವಾಗಿ ಕಂಡುಬಂದಿತು. ಇದರ ಇಂಗಿತವೇನು ಎಂಬುದು ನಿನಗೆ ಅರ್ಥವಾಯಿತೇನು? ಈ ಮಂತ್ರಗಳೆಲ್ಲ ಅನಾದಿಕಾಲದಿಂದಲೂ ಇದ್ದುಕೊಂಡು ಬಂದಿದ್ದುವು. ಗ್ರಂಥಕರ್ತ ಅದನ್ನು ಕೇವಲ ಪ್ರಕಾಶಕ್ಕೆ ತಂದ.
“ಗುರುಗಿರಿ ಒಳ್ಳೆಯದಲ್ಲ. ಭಗವಂತನ ಆದೇಶವನ್ನು ಪಡೆಯದೆ ಆಚಾರ್ಯ ನಾಗಲಾರ. ಯಾರು ತನಗೆ ತಾನೇ ಗುರುಗಿರಿಯನ್ನು ಆರೋಪಿಸಿಕೊಳ್ಳುತ್ತಾನೊ, ಆತ ಹೀನ ಬುದ್ಧಿಯುಳ್ಳವ. ನೀನು ತಕ್ಕಡಿಯನ್ನು ನೋಡಿಲ್ಲವೇನು? ಅದರ ಹಗುರವಾಗಿರುವ ತಟ್ಟೆ ಮೇಲಕ್ಕೆ ಹೋಗುತ್ತದೆ. ಯಾರು ತಾನೇ ಸ್ವತಃ ದೊಡ್ಡಸ್ತಿಕೆಯನ್ನು ಆರೋಪಿಸಿಕೊಳ್ಳುತ್ತಾನೊ ಆತ ಹಲ್ಕಾ ಮನುಷ್ಯ. ಪ್ರತಿಯೊಬ್ಬನಿಗೂ ಗುರು ಆಗಬೇಕೆಂಬ ಇಚ್ಛೆ; ಶಿಷ್ಯ ದೊರೆಯುತ್ತಿಲ್ಲ.”
ತ್ರೈಲೋಕ್ಯ ಚಿಕ್ಕ ಮಂಚದ ಉತ್ತರ ಅಂಚಿನಲ್ಲಿ ನೆಲದ ಮೇಲೆ ಕುಳಿತಿದ್ದಾನೆ. ಹಾಡಲು ಸಿದ್ಧನಾಗುತ್ತಿದ್ದಾನೆ. ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ, ‘ಆಹ, ನೀನು ಎಷ್ಟು ಇಂಪಾಗಿ ಹಾಡಬಲ್ಲೆ!’
ತ್ರೈಲೋಕ್ಯ ತಂಬೂರಿಯನ್ನು ಮೀಟುತ್ತ ಹಾಡುತ್ತಿದ್ದಾನೆ:
ನನ್ನ ಮನವನು ನಿನಗೆ ಅರ್ಪಿಸುವೆನು ಗುರುವೆ
ಇರುವುದೆಲ್ಲವು ನೀನೆ ಈ ಜಗದಲಿ!
ನಿನ್ನೊಬ್ಬನನೆ ಕಂಡೆ, ಮತ್ತೆ ಯಾರೂ ಇಲ್ಲ;
ನನ್ನಾತ್ಮ ಬಂಧು ನೀ ಸರ್ವಾಶ್ರಯ.
ನೀನಿರದ ಎದೆಯಿಲ್ಲ; ಎಲ್ಲರೆದೆಯೊಳು ನೀನೇ
ಪಂಡಿತನೊ ಪಾಮರನೊ ಎಲ್ಲರಲ್ಲೂ;
ಸ್ವರ್ಗದಲೊ ನರಕದಲೊ, ಕಾಶಿಯಲೊ ಕಾಬದಲೊ
ಎಲ್ಲೆಲ್ಲಿಯೂ ನಿನ್ನ ಕಂಡಿರುವೆನು.
ನಿನ್ನ ನಾ ನೋಡಿರುವೆ, ಸಂದೇಹವಿನಿತಿಲ್ಲ
ನೀನು ಅನುಪಮನಯ್ಯ ನನ್ನ ಗುರುವೆ.
ಭಕ್ತ ಜಾಫರನಿನಿತು ನುಡಿಯುವನು ಕೇಳಯ್ಯ:
ಎಲ್ಲೆಲ್ಲಿಯೂ ನಿನಗೆ ತಲೆಬಾಗುವೆ !
ಆತ ಮತ್ತೆ ಹಾಡಿದ:
ನೀನೆನ್ನ ಸರ್ವಸ್ವ, ನನ್ನ ಜೀವದ ಜೀವ ನನ್ನೊಳಗಿನೊಳಗು…..
ಈ ಹಾಡನ್ನು ಕೇಳಿ ಪರಮಹಂಸರು ಭಾವೋನ್ಮತ್ತರಾಗಿಬಿಟ್ಟಿದ್ದಾರೆ. ಹೇಳುತ್ತಿದ್ದಾರೆ, “ಆಹ! ನೀನೇ ನನ್ನ ಸರ್ವಸ್ವ! ಆಹ! ಆಹ!”
ಹಾಡುವುದು ಮುಗಿಯಿತು. ಘಂಟೆ ಸಾಯಂಕಾಲ ಆರಾಗಿದೆ. ಪರಮಹಂಸರು ದೇವದಾರು ವೃಕ್ಷಗಳ ಕಡೆಗೆ ಹೋಗುತ್ತಿದ್ದಾರೆ. ಮಾಸ್ಟರ್ ಅವರನ್ನು ಹಿಂಬಾಲಿಸುತ್ತಿದ್ದಾನೆ. ಪರಮಹಂಸರು ನಗುತ್ತ ಮಾತುಕತೆಯಾಡುತ್ತ ಹೆಜ್ಜೆ ಹಾಕುತ್ತಿದ್ದಾರೆ. ಅವರು ಹಠಾತ್ತಾಗಿ ಮಾಸ್ಟರಿಗೆ ಹೇಳಿದರು, “ನೀನು ಏಕೆ ಫಲಾಹಾರ ತಿನ್ನಲಿಲ್ಲ? ಅವರೂ ತಿನ್ನಲಿಲ್ಲವಲ್ಲ ಏಕೆ?” ಅಂತ. ಭಕ್ತರಿಗೆ ಪ್ರಸಾದ ಕೊಡಲು ಅವರು ಬಹಳ ಆಕಾಂಕ್ಷಿತರಾಗಿದ್ದರು.
ಪರಮಹಂಸರು ಸಾಯಂಕಾಲವಾದ ಮೇಲೆ ಕಲ್ಕತ್ತಕ್ಕೆ ಹೋಗುವ ಸಂಭವವಿದೆ. ದೇವದಾರು ವೃಕ್ಷಗಳ ಕಡೆಯಿಂದ ಹಿಂದಿರುಗಿ ಬರುತ್ತಿರುವಾಗ ಮಾಸ್ಟರಿಗೆ ಹೇಳುತ್ತಿದ್ದಾರೆ, “ಯಾರ ಗಾಡಿಯಲ್ಲಿ ಕಲ್ಕತ್ತಕ್ಕೆ ಹೋಗುವುದು ಎಂದು ಯೋಚಿಸುತ್ತಿದ್ದೇನೆ.”
ಸಾಯಂಕಾಲವಾಗಿದೆ. ಪರಮಹಂಸರ ಕೊಠಡಿಗೆ ದೀಪ ಹಚ್ಚಿ ಧೂಪ ಹಾಕಿದ್ದಾರೆ. ದೇವಾಲಯಗಳಿಗೆಲ್ಲ ಮತ್ತು ಉಳಿದ ಕಟ್ಟಡಗಳಿಗೆಲ್ಲ ದೀಪ ಹಚ್ಚಿದ್ದಾರೆ. ನಹಬತ್ಖಾನೆಯಿಂದ ವಾದ್ಯಘೋಷ ಕೇಳಿಬರುತ್ತಿದೆ. ದೇವಾಲಯಗಳಲ್ಲಿ ಇನ್ನೇನು ಮಂಗಳಾರತಿ ಆರಂಭವಾಗುವುದರಲ್ಲಿದೆ.
ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ದೇವ ದೇವಿಯರ ನಾಮಜಪ ಮಾಡಿದ ನಂತರ, ಭಗವತಿಯ ಧ್ಯಾನ ಮಾಡುತ್ತಿದ್ದಾರೆ. ಮಂಗಳಾರತಿ ಮುಗಿಯಿತು. ಸ್ವಲ್ಪ ಹೊತ್ತಾದ ಮೇಲೆ ಪರಮಹಂಸರು ತಮ್ಮ ಕೊಠಡಿಯಲ್ಲಿ ಅಡ್ಡಾಡುತ್ತ ಆಗಾಗ ಭಕ್ತರೊಡನೆ ಒಂದೆರಡು ಮಾತು ಆಡುತ್ತಿದ್ದಾರೆ. ತಾವು ಕಲ್ಕತ್ತಕ್ಕೆ ಹೋಗುವುದರ ಸಂಬಂಧವಾಗಿ ಮಾಸ್ಟರೊಡನೆ ಮಾತುಕತೆಯಾಡುತ್ತಿದ್ದಾರೆ.
ಆ ಸಮಯಕ್ಕೆ ಸರಿಯಾಗಿ ಶರಚ್ಚಂದ್ರ ಮತ್ತು ನರೇಂದ್ರ ಒಬ್ಬಿಬ್ಬರು ಭಕ್ತರೊಡನೆ ಅಲ್ಲಿಗೆ ಬಂದರು. ಅವರೆಲ್ಲರೂ ಪರಮಹಂಸರಿಗೆ ಪ್ರಣಾಮಮಾಡಿದರು.
ನರೇಂದ್ರನನ್ನು ನೋಡಿದೊಡನೆಯೇ ಪರಮಹಂಸರ ಪ್ರೀತಿ ಉಕ್ಕಿ ಹರಿಯಲಾರಂಭಿಸಿತು. ಚಿಕ್ಕ ಮಕ್ಕಳನ್ನು ಮುದ್ದಿಸುವ ರೀತಿಯಲ್ಲಿ ಪರಮಹಂಸರು ನರೇಂದ್ರನ ಗಲ್ಲವನ್ನು ಮುಟ್ಟಿ ಪ್ರೇಮಮಯ ಕಂಠದಿಂದ ಹೇಳಿದರು, “ಆಹ! ಬಂದೆಯಾ!”
ಪರಮಹಂಸರು ಗಂಗಾನದಿ ಕಡೆ ನೋಡುತ್ತ ಕೊಠಡಿಯಲ್ಲಿ ನಿಂತಿದ್ದಾರೆ. ನರೇಂದ್ರ ಮತ್ತು ಆತನ ಸ್ನೇಹಿತರು ಪೂರ್ವಾಭಿಮುಖರಾಗಿ ನಿಂತು ಅವರೊಡನೆ ಮಾತುಕತೆಯಾಡುತ್ತಿದ್ದಾರೆ. ಪರಮಹಂಸರು ಮಾಸ್ಟರ್ ಕಡೆ ತಿರುಗಿ ಹೇಳುತ್ತಿದ್ದಾರೆ, “ನರೇಂದ್ರ ಬಂದಿದ್ದಾನೆ. ಈಗ ನಾನು ಕಲ್ಕತ್ತಕ್ಕೆ ಹೇಗೆ ಹೊರಡಲಿ? ಜನರ ಕೈಯಲ್ಲಿ ಹೇಳಿ ಕಳುಹಿಸಿ ಆತನನ್ನು ಕರೆಯಿಸಿದ್ದೇನೆ. ಆದ್ದರಿಂದ ಈಗ ನಾನು ಕಲ್ಕತ್ತಕ್ಕೆ ಹೇಗೆ ಹೋಗಲಿ? ನಿನ್ನ ಸಲಹೆ ಏನು?” ಅಂತ.
ಮಾಸ್ಟರ್: “ತಮ್ಮ ಚಿತ್ತ. ಹಾಗಾದರೆ ಇಂದು ಹೋಗುವುದು ಬೇಡ.”
ಶ್ರೀರಾಮಕೃಷ್ಣರು: “ಒಳ್ಳೆಯದು, ಗಾಡಿಯನ್ನೊ ದೋಣಿಯನ್ನೊ ಮಾಡಿಕೊಂಡು ನಾಳೆ ಹೋಗೋಣ. (ಭಕ್ತರಿಗೆ) ಆಗಲೆ ರಾತ್ರಿಯಾಗಿಬಿಟ್ಟಿದೆ. ನೀವು ಹೋಗಿಬನ್ನಿ.”
ಭಕ್ತರಲ್ಲೆರು ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡರು.
1. ಪರಮಹಂಸರು ಅವತಾರಪುರುಷರು ಎಂದು ಕೇದಾರ ಹೇಳುತ್ತಿದ್ದಾನೆ.
2. ಗೊಲಾಪ್ ಮಾ ಎಂದು ಈಕೆಯನ್ನು ಕರೆಯುತ್ತಾರೆ.