೨೪ನೆ ಏಪ್ರಿಲ್ ೧೮೮೫, ವೈಶಾಖ ಶುಕ್ಲ ದಶಮಿ, ಶುಕ್ರವಾರ
ಪರಮಹಂಸರು ಇಂದು ಕಲ್ಕತ್ತಕ್ಕೆ ಬಂದಿದ್ದಾರೆ. ಸುಮಾರು ಅಪರಾಹ್ನ ಒಂದು ಘಂಟೆಯ ಸಮಯದಲ್ಲಿ ಮಾಸ್ಟರ್ ಬಲರಾಮನ ಮನೆಯ ಬೈಠಕ್ಖಾನೆಗೆ ಹೋಗಿ ನೋಡುತ್ತಾನೆ, ಪರಮಹಂಸರು ನಿದ್ರೆ ಮಾಡುತ್ತಿದ್ದಾರೆ. ಒಬ್ಬಿಬ್ಬರು ಭಕ್ತರು ಅವರ ಹತ್ತಿರದಲ್ಲೆ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಮಾಸ್ಟರ್ ಪರಮಹಂಸರ ಒಂದು ಪಾರ್ಶ್ವದಲ್ಲಿ ಕುಳಿತು ಆ ಸುಪ್ತ ಬಾಲಕಮೂರ್ತಿಯನ್ನು ಎವೆಯಿಕ್ಕದೆ ನೋಡುತ್ತಿದ್ದಾನೆ. ಭಾವಿಸುತ್ತಿದ್ದಾನೆ; ‘ಏನಾಶ್ಚರ್ಯ! ಇವರು ಮಹಾಪುರುಷರು! ಇವರೂ ಸಾಮಾನ್ಯ ಜನರೋಪಾದಿಯಲ್ಲಿ ನಿದ್ರಾಪರವಶರಾಗಿ ಮಲಗಿದ್ದಾರಲ್ಲ! ಇವರೂ ಜೀವಕೋಟಿಗಳ ಧರ್ಮಗಳಿಂದ ಆವೃತರಾಗಿದ್ದಾರಲ್ಲ!’ ಅಂತ. ಆತ ಒಂದು ಬೀಸಣಿಗೆಯನ್ನು ತೆಗೆದುಕೊಂಡು ಪರಮಹಂಸರಿಗೆ ಮೆತ್ತಮೆತ್ತಗೆ ಬೀಸಲಾರಂಭಿಸಿದ. ಸ್ವಲ್ಪ ಹೊತ್ತಿನ ಮೇಲೆ ಪರಮಹಂಸರು ನಿದ್ರೆಯಿಂದ ಎಚ್ಚೆತ್ತರು. ಅವರು ಉಟ್ಟಿದ್ದ ಪಂಚೆ ಸಿಕ್ಕಿಸಿಕ್ಕಿದ್ದ ಕಡೆ ಹರಡಿದ್ದ ರೀತಿಯಲ್ಲೇ ಎದ್ದು ಕುಳಿತುಕೊಂಡರು. ಮಾಸ್ಟರ್ ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಅವರ ಪಾದಧೂಳಿಯನ್ನು ಸ್ವೀಕರಿಸಿದ.
ಶ್ರೀರಾಮಕೃಷ್ಣರು ಪ್ರೇಮದೃಷ್ಟಿಯಿಂದ ಮಾಸ್ಟರಿಗೆ: ‘ ‘ಸೌಖ್ಯವೆ? ನನ್ನ ಗಂಟಲು ಹುಣ್ಣಾಗಿದೆ. ಇದು ಏಕೋ ಏನೋ ಯಾರಿಗೆ ಗೊತ್ತು? ಬೆಳಗಿನ ಜಾವ ಬಹಳ ಕಷ್ಟ ಕೊಡುತ್ತಿದೆ. ಹೇಗಪ್ಪ ಇದರಿಂದ ಪಾರಾಗುವುದು? (ಚಿಂತಿತರಾಗಿ) ಅವರು ಮಾವಿನಕಾಯಿ ಚಟ್ನಿ ಮಾಡಿದ್ದರು. ಅದನ್ನು ಸ್ವಲ್ಪ ತಿಂದುಬಿಟ್ಟೆ.
‘ ‘ನಿನ್ನ ಹೆಂಡತಿಯ ಆರೋಗ್ಯ ಹೇಗೆ? ಅಂದು ಆಕೆ ಬಹಳ ಇಳಿದುಹೋಗಿಬಿಟ್ಟ ಹಾಗೆ ಕಂಡಳು. ಆಕೆಗೆ ಸ್ವಲ್ಪ ತಂಪಾದ ಆಹಾರವನ್ನು ಕೊಡುತ್ತಿರು.”
ಮಾಸ್ಟರ್: ‘ ‘ಒಳ್ಳೆಯದು, ಎಳನೀರು?”
ಶ್ರೀರಾಮಕೃಷ್ಣರು: ‘ ‘ಹೌದು, ಅಂಥವು. ಕಲ್ಲುಸಕ್ಕರೆ ಪಾನಕವೂ ಒಳ್ಳೆಯದೆ.”
ಮಾಸ್ಟರ್: ‘ ‘ನಾನು ಕಳೆದ ಭಾನುವಾರ ಸ್ವಂತ ಮನೆಗೇ ಬಂದುಬಿಟ್ಟೆ.”
ಶ್ರೀರಾಮಕೃಷ್ಣರು: ‘ ‘ಬಹಳ ಒಳ್ಳೇದು ಮಾಡಿದೆ. ಇದರಿಂದ ನಿನಗೆ ಅನುಕೂಲ ಹೆಚ್ಚಾಗುತ್ತದೆ. ಮನೆಯಲ್ಲಿ ತಂದೆತಾಯಿಗಳಿರುತ್ತಾರೆ. ನೀನು ನಿನ್ನ ಸಂಸಾರದ ಕಡೆ ಅಷ್ಟೊಂದು ಗಮನಕೊಡುವ ಆವಶ್ಯಕತೆಯೇನೂ ಇರುವುದಿಲ್ಲ.”
ಪರಮಹಂಸರು ಹೀಗೆ ಮಾತಾಡುತ್ತ ಇದ್ದ ಹಾಗೆ ಅವರ ಗಂಟಲು ಒಣಗಲಾರಂಭಿಸಿತು. ಆಗ ಒಂದು ಮಗುವಿನೋಪಾದಿಯಲ್ಲಿ ಮಾಸ್ಟರನ್ನು ಕೇಳುತ್ತಿದ್ದಾರೆ, ‘ ‘ನನ್ನ ಬಾಯಿ ಒಣಗಲಾರಂಭಿಸಿದೆ. ನಿಮ್ಮೆಲ್ಲರಿಗೂ ಹಾಗೇ ಆಗುತ್ತಿರುವುದೇನು?” ಅಂತ.
ಮಾಸ್ಟರ್ (ಯೋಗೀಂದ್ರನಿಗೆ): ‘ ‘ಏನು, ನಿನಗೂ ಬಾಯಿ ಒಣಗುತ್ತಿರುವ ಹಾಗೆ ಆಗುತ್ತಿದೆಯೇನು?”
ಯೋಗೀಂದ್ರ: ‘ ‘ಇಲ್ಲ. ನನಗೆ ಹಾಗಾಗುತ್ತಿಲ್ಲ. ಬಿಸಿಲಿನ ಝಳಕ್ಕಾಗಿ ಹಾಗಾಗುತ್ತಿರಬಹುದು.”
ಆರಿಯಾದಹದ ಯೋಗೀಂದ್ರ ಪರಮಹಂಸರ ಭಕ್ತರಲ್ಲಿ ಒಬ್ಬ. ಆತ ಒಬ್ಬ ತ್ಯಾಗೀ ಭಕ್ತ.
ಪರಮಹಂಸರು ಇನ್ನೂ ತಮ್ಮ ಮೈಮೇಲಿನ ಬಟ್ಟೆಯನ್ನು ಸರಿಪಡಿಸಿಕೊಂಡಿಲ್ಲ. ಅದನ್ನು ನೋಡಿ ಭಕ್ತರಲ್ಲಿ ಕೆಲಕೆಲವರು ನಗುತ್ತಿದ್ದಾರೆ.
ಶ್ರೀರಾಮಕೃಷ್ಣರು: ‘ ‘ನಾನು ತಾಯಿ ಮಗುವಿಗೆ ಹಾಲು ಕೊಡುವ ಹಾಗೆ ಕುಳಿತಿದ್ದೇನೆ (ಎಲ್ಲರೂ ನಗುತ್ತಿದ್ದಾರೆ). ಒಳ್ಳೇದು, ನನ್ನ ಬಾಯಿ ಒಣಗಿಬರುತ್ತಾ ಇದೆ. ನಾನು ಪೇರುಹಣ್ಣನ್ನು ತಿನ್ನಲೊ ಅಥವಾ ಜಾಮ್ರೂಲು ಹಣ್ಣನ್ನು ತಿನ್ನಲೋ?”
ಬಾಬುರಾಮ: ‘ ‘ನಾನು ಹೋಗಿ ಜಾಮ್ರೂಲು ಹಣ್ಣನ್ನು ಕೊಂಡುಕೊಂಡು ಬರುತ್ತೇನೆ.”
ಶ್ರೀರಾಮಕೃಷ್ಣರು: ‘ ‘ಈ ಬಿಸಿಲಿನಲ್ಲಿ ಹೊರಕ್ಕೆ ಹೋಗಬೇಡ.”
ಮಾಸ್ಟರ್ ಅವರಿಗೆ ಇನ್ನೂ ಗಾಳಿ ಬೀಸುತ್ತಲೇ ಇದ್ದಾನೆ.
ಶ್ರೀರಾಮಕೃಷ್ಣರು: ‘ ‘ಈಗ ಸಾಕು. ಬಹಳ ಹೊತ್ತಿನಿಂದ ಬೀಸುತ್ತಲೇ ಇದ್ದೀಯೆ.”
ಮಾಸ್ಟರ್: ‘ ‘ನನಗೇನು ಆಯಾಸವಾಗಿಲ್ಲ.”
ಶ್ರೀರಾಮಕೃಷ್ಣರು (ಪ್ರೇಮದೃಷ್ಟಿಯಿಂದ): ‘ ‘ಸುಸ್ತಾಗಿಲ್ಲವೇ?”
ಮಾಸ್ಟರ್ ಬಲರಾಮನ ಮನೆಯ ಹತ್ತಿರವೆ ಇರುವ ಸ್ಕೂಲಿನಲ್ಲಿ ಅಧ್ಯಾಪಕನಾಗಿದ್ದಾನೆ. ಆತನಿಗೆ ಮಧ್ಯಾಹ್ನ ಒಂದು ಘಂಟೆಯ ಸಮಯದಲ್ಲಿ ವಿರಾಮವಿದೆ. ಈಗ ಮತ್ತೆ ಆತ ಸ್ಕೂಲಿಗೆ ಹಿಂದಿರುಗಿ ಹೋಗಬೇಕಾಗಿದೆ. ಆತ ಪರಮಹಂಸರಿಗೆ ಪ್ರಣಾಮ ಮಾಡುತ್ತಿದ್ದಾನೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): ‘ ‘ಈಗಲೆ ಹೋಗಬೇಕೇನು?”
ಒಬ್ಬ ಭಕ್ತ: ‘ ‘ಸ್ಕೂಲು ಇನ್ನೂ ಮುಗಿದಿಲ್ಲ, ವಿರಾಮಕಾಲದಲ್ಲಿ ಇಲ್ಲಿಗೆ ಬಂದಿದ್ದಾನೆ.”
ಶ್ರೀರಾಮಕೃಷ್ಣರು (ನಗುತ್ತ): ‘ ‘ಈತ ಏಳೆಂಟು ಮಕ್ಕಳ ತಾಯಿಯ ಹಾಗಿದ್ದಾನೆ. ಆಕೆಗೆ ಹಗಲೂ ಇರುಳೂ ಮನೆಗೆಲಸ ಇದ್ದೇ ಇರುತ್ತದೆ. ಆದರೂ ಒಮ್ಮೊಮ್ಮೆ ಬಂದು ತನ್ನ ಪತಿಸೇವೆ ಮಾಡಿಹೋಗುತ್ತಾಳೆ.” (ಎಲ್ಲರೂ ನಗುತ್ತಾರೆ.)
ಮಾಸ್ಟರನ ಸ್ಕೂಲು ನಾಲ್ಕು ಘಂಟೆಗೆ ಮುಗಿಯಿತು. ಆತ ಮತ್ತೆ ಬಲರಾಮನ ಮನೆಗೆ ಬಂದು ನೋಡಿದಾಗ ಪರಮಹಂಸರು ನಗುಮುಖರಾಗಿ ಬೈಠಕ್ಖಾನೆಯಲ್ಲಿ ಕುಳಿತಿರುವುದನ್ನು ಕಂಡ. ಭಕ್ತರು ಒಬ್ಬೊಬ್ಬರಾಗಿ ಬಂದು ಸೇರುತ್ತಿದ್ದಾರೆ. ಚಿಕ್ಕ ನರೇನ ಮತ್ತು ರಾಮ ಬಂದಿದ್ದಾರೆ. ನರೇಂದ್ರನೂ ಬಂದಿದ್ದಾನೆ. ಮಾಸ್ಟರ್ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡ. ಬಲರಾಮ ಪರಮಹಂಸರಿಗಾಗಿ ಕೇಸರಿಬಾತನ್ನು ತಯಾರು ಮಾಡಿಸಿ ತಟ್ಟೆಯಲ್ಲಿ ಹಾಕಿಕೊಂಡು ತಂದಿದ್ದಾನೆ. ಗಂಟಲು ಹುಣ್ಣಾಗಿರುವುದರಿಂದ ಅವರು ಬೇರೆ ಯಾವ ಗಟ್ಟಿಯಾದ ಆಹಾರವನ್ನೂ ತಿನ್ನಲಾರರು.
ಶ್ರೀರಾಮಕೃಷ್ಣರು (ನರೇಂದ್ರನಿಗೆ): ‘ ‘ಒಳ್ಳೆ ಸೊಗಸಾದ ಪದಾರ್ಥವೇ ಬಂದಿದೆ! ಬಹಳ ಒಳ್ಳೆಯ ಸೊಗಸಾದ ಪದಾರ್ಥ! ತಿನ್ನು ಅಪ್ಪಳಿಸು!” (ಎಲ್ಲರೂ ನಗುತ್ತಾರೆ.)
ಮುಸ್ಸಂಜೆ ಭೂಮಿಗೆ ಕಾಲಿಕ್ಕುತ್ತಿದೆ. ಪರಮಹಂಸರು ಇಂದು ತಮ್ಮ ಮನೆಗೆ ಬರುವರು ಎಂದು ಗಿರೀಶ ಒಂದು ದೊಡ್ಡ ಔತಣವನ್ನೇ ಏರ್ಪಡಿಸಿದ್ದಾನೆ. ಪರಮಹಂಸರು ಇನ್ನೇನು ಗಿರೀಶನ ಮನೆಗೆ ಹೊರಡುವುದರಲ್ಲಿದ್ದಾರೆ. ಈಗ ಅವರು ಬಲರಾಮನ ಮನೆಯ ಎರಡನೆಯ ಅಂತಸ್ತಿನಿಂದ ಮಾಸ್ಟರ್ ಮತ್ತು ಇನ್ನೂ ಕೆಲವು ಭಕ್ತರೊಡನೆ ಕೆಳಕ್ಕೆ ಇಳಿಯುತ್ತಿದ್ದಾರೆ. ಗೇಟಿನ ಹತ್ತಿರಕ್ಕೆ ಬಂದು ನೋಡಿದಾಗ, ಒಬ್ಬ ಹಿಂದೂಸ್ತಾನಿ ಭಿಕ್ಷುಕ ರಾಮನಾಮ ಹಾಡುತ್ತಿರುವುದನ್ನು ಕಂಡು, ಅವರು ಅಲ್ಲೇ ಸ್ವಲ್ಪ ಹೊತ್ತು ನಿಂತು ಕೇಳಿದರು. ಅವರ ಮನಸ್ಸು ಅಂತರ್ಮುಖವಾಗುತ್ತಿರುವಂತೆ ಕಂಡಿತು. ಬಳಿಕ ಅವರು ಮಾಸ್ಟರಿಗೆ ಹೇಳಿದರು, ‘ ‘ಈತನ ಕಂಠ ಬಹಳ ಚೆನ್ನಾಗಿದೆ.” ಒಬ್ಬ ಭಕ್ತ ಆತನಿಗೆ ಒಂದಾಣೆ ಕೊಟ್ಟ.
ಪರಮಹಂಸರು ವಸುಪಾರಾ ಗಲ್ಲಿಯನ್ನು ಪ್ರವೇಶಿಸಿದರು. ಅವರು ನಗುನಗುತ್ತ ಮಾಸ್ಟರಿಗೆ ಹೇಳಿದರು, ‘ ‘ಇವರು ಏನು ಹೇಳುತ್ತಿದ್ದಾರೆ ನೋಡು! ‘ಪರಮಹಂಸರ ದಂಡು ಬರುತ್ತಿದೆ’ ಅಂತ ಹೇಳೋದು ನೋಡು! ಇವರ ಎದೆಕೆಚ್ಚು ಎಷ್ಟು ಇರಬೇಕು ಎಂಬುದನ್ನು ನೋಡು!” ಅಂತ. (ಎಲ್ಲರೂ ನಗುತ್ತಾರೆ.)
ಪರಮಹಂಸರು ಗಿರೀಶನ ಮನೆಯನ್ನು ಮುಟ್ಟಿದರು. ಆತ ಅನೇಕ ಮಂದಿ ಭಕ್ತರಿಗೆ ಆಹ್ವಾನವಿತ್ತಿದ್ದಾನೆ. ಅವರಲ್ಲಿ ಅನೇಕರು ಆಗಲೇ ಬಂದು ಸೇರಿದ್ದಾರೆ. ಅವರೆಲ್ಲರೂ ಎದ್ದು ನಿಂತು ಪರಮಹಂಸರನ್ನು ಎದುರುಗೊಂಡರು. ಅವರು ಮಂದಹಾಸವನ್ನು ಬೀರುತ್ತ ತಮಗಾಗಿ ಅಣಿಮಾಡಿದ್ದ ಆಸನದಲ್ಲಿ ಕುಳಿತುಕೊಂಡರು. ಭಕ್ತರು ಅವರ ಸುತ್ತಲೂ ಕುಳಿತುಕೊಂಡರು. ಅಲ್ಲಿ ಗಿರೀಶ, ಮಹಿಮಚರಣ, ಭವನಾಥ ಇವರೇ ಮೊದಲಾದವರು ಅಲ್ಲದೆ ಪರಮಹಂಸರೊಡನೆ ಬಂದ ಬಾಬುರಾಮ, ನರೇಂದ್ರ, ಯೋಗೀಂದ್ರ, ಚಿಕ್ಕ ನರೇನ, ಚುಣಿಲಾಲ, ಬಲರಾಮ, ಮಾಸ್ಟರ್ ಇವರೇ ಮೊದಲಾದವರೂ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ಮಹಿಮಚರಣನಿಗೆ): ‘ ‘ನಾನು ಗಿರೀಶನಿಗೆ ನಿನ್ನ ಸಂಬಂಧವಾಗಿ ಹೇಳಿದ್ದೇನೆ, ‘ಒಬ್ಬ ಇದ್ದಾನೆ. ಆತನ ಆಳ ಬಹಳ ವಿಪರೀತ. ಆದರೆ ನಿನ್ನ ಆಳ ಒಂದು ಮೊಣಕಾಲುದ್ದವೆ’ ಅಂತ. ನನ್ನ ಮಾತನ್ನು ನೀನು ಉಳಿಸಿಬಿಡು ನೋಡೋಣ. ನೀವಿಬ್ಬರೂ ವಿಚಾರ ಮಾಡುವುದನ್ನು ನಾನು ನೋಡಬೇಕೆಂದಿದ್ದೇನೆ. ನೋಡು, ಬಡಪಟ್ಟಿಗೆ ಬಗ್ಗಬೇಡ.” (ಎಲ್ಲರೂ ನಗುತ್ತಾರೆ.)
ಗಿರೀಶ ಮತ್ತು ಮಹಿಮಚರಣ ವಿಚಾರದಲ್ಲಿ ತೊಡಗಿದ್ದಾರೆ. ಚರ್ಚೆ ಆರಂಭ ವಾಯಿತೊ ಇಲ್ಲವೊ ಎನ್ನುವಷ್ಟರಲ್ಲಿಯೆ ರಾಮ ಹೇಳಿದ, ‘ ‘ಓ, ಇದೆಲ್ಲ ಬೇಡಿ, ಕೀರ್ತನೆ ನಡೆಯಲಿ” ಅಂತ.
ಶ್ರೀರಾಮಕೃಷ್ಣರು (ರಾಮನಿಗೆ): ‘ ‘ಬೇಡ, ಇದೇ ನಡೆಯಲಿ. ಇದರಲ್ಲಿ ಒಂದು ಉದ್ದೇಶವಿದೆ. ಇವರು ‘ಇಂಗ್ಲೀಷ್ ಮ್ಯಾನ್’. ಇವರು ಹೇಗೆ ಮಾತಾಡುತ್ತಾರೆ ನೋಡೋಣ.”
ಸಾಧನೆಯ ಮೂಲಕ ಎಲ್ಲರೂ ಶ್ರೀಕೃಷ್ಣನಾಗಬಹುದು ಎಂಬುದು ಮಹಿಮಚರಣನ ಅಭಿಪ್ರಾಯ. ಆದರೆ ಗಿರೀಶನ ಅಭಿಪ್ರಾಯ, ಶ್ರೀಕೃಷ್ಣ ಅವತಾರಪುರುಷ; ಮನುಷ್ಯ ಎಷ್ಟೇ ಸಾಧನೆಮಾಡಿದರೂ ಅವತಾರಪುರುಷನಾಗಲಾರ ಅಂತ.
ಮಹಿಮಚರಣ: ‘ ‘ಇದು ಹೇಗೆ ಗೊತ್ತೆ? ಉದಾಹರಣೆಗಾಗಿ, ಇರುವ ಪ್ರತಿಬಂಧಕ ಗಳನ್ನು ತೆಗೆದುಹಾಕಿಬಿಟ್ಟಿತು ಎಂದರೆ ಬಿಲ್ವಮರ ಮಾವಿನ ಮರವಾಗಿಬಿಡಬಲ್ಲದು. ಯೋಗಾಭ್ಯಾಸದ ಮೂಲಕ ಪ್ರತಿಬಂಧಕ ಹೊರಟುಹೋಗುತ್ತದೆ.”
ಗಿರೀಶ: ‘ ‘ಮಹಾಶಯ, ನೀನು ಏನು ಬೇಕಾದರೂ ಹೇಳಿಕೊ, ಯೋಗದಿಂದಲೂ ಸಾಧ್ಯವಿಲ್ಲ. ಕೃಷ್ಣ ಮಾತ್ರನೆ ಕೃಷ್ಣನಾಗಬಲ್ಲ. ಯಾರೆ ಆಗಲಿ, ಬೇರೊಬ್ಬರ ಸಕಲ ಗುಣಗಳೆಲ್ಲ, ಉದಾಹರಣೆಗೆ ರಾಧೆಯ ಗುಣಗಳೆಲ್ಲ ಇರುವುದಾದರೆ, ಆ ವ್ಯಕ್ತಿ ಸ್ವಯಂ ರಾಧೆಯೇ ಅಲ್ಲದೆ ಬೇರೆ ಯಾರೂ ಅಲ್ಲ. ಯಾರಲ್ಲೆ ಆಗಲಿ ಶ್ರೀಕೃಷ್ಣನ ಸಮಸ್ತ ಗುಣಗಳೆಲ್ಲ ಕಂಡುಬರುವುದಾದರೆ, ನನ್ನ ಸಿದ್ಧಾಂತ, ನಾನು ನೋಡುತ್ತಿರುವುದು ಸಾಕ್ಷಾತ್ ಶ್ರೀಕೃಷ್ಣನನ್ನೇ ಅಂತ.”
ಮಹಿಮಚರಣ ಮುಂದಕ್ಕೆ ವಾದಿಸಲಾರದೆ ಹೋದ. ಕೊನೆಗೆ ಆತ ಒಂದು ವಿಧವಾಗಿ ಗಿರೀಶನ ಅಭಿಪ್ರಾಯವನ್ನೇ ಒಪ್ಪಿಕೊಳ್ಳಬೇಕಾಗಿ ಬಂತು.
ಮಹಿಮಚರಣ (ಗಿರೀಶನಿಗೆ): ‘ ‘ಹೌದು, ನಮ್ಮಿಬ್ಬರ ಅಭಿಪ್ರಾಯವೂ ಸರಿಯಾದುದೆ. ಭಗವಂತ ಜ್ಞಾನಮಾರ್ಗವನ್ನೂ ಸೃಷ್ಟಿಸಿದ್ದಾನೆ, ಭಕ್ತಿಮಾರ್ಗವನ್ನೂ ಸೃಷ್ಟಿಸಿದ್ದಾನೆ. ಇವರು (ಪರಮಹಂಸರು) ಹೇಳುವ ಹಾಗೆ ವಿವಿಧ ಪಥಗಳಿಂದ ಒಂದೇ ಜಾಗವನ್ನು ಮುಟ್ಟಬಹುದು.”
ಶ್ರೀರಾಮಕೃಷ್ಣರು ಮಹಿಮಚರಣನನ್ನು ಒಂದು ಕಡೆಗೆ ಕರೆದು: ‘ ‘ನೋಡಿದೆಯಾ, ನಾನು ಹೇಳಿದ್ದು ಸರಿಯಲ್ಲವೆ?” ಎಂದು ಹೇಳಿದರು.
ಮಹಿಮಚರಣ: ‘ ‘ಹೌದು, ನೀವು ಹೇಳಿರುವ ಹಾಗೆ ಎರಡು ಮಾರ್ಗವೂ ಸರಿಯಾದುವೆ.”
ಶ್ರೀರಾಮಕೃಷ್ಣರು (ಗಿರೀಶನನ್ನು ತೋರಿಸಿ): ‘ ‘ಈತನ ವಿಶ್ವಾಸ ಎಷ್ಟು ಗಾಢವಾದುದು ಎಂಬುದನ್ನು ಈಗ ನೀನೆ ನೋಡಿದೆ ತಾನೆ? ಫಲಾಹಾರ ತೆಗೆದುಕೊಳ್ಳುವುದನ್ನೂ ಮರೆತುಬಿಟ್ಟ! ಆತ ಹೇಳುವುದನ್ನು ಒಂದು ಪಕ್ಷ ನೀನೇನಾದರೂ ಒಪ್ಪಿಕೊಳ್ಳದೆ ಹೋಗಿಬಿಟ್ಟಿದ್ದರೆ, ನಾಯಿಯ ಹಾಗೆ ನಿನ್ನ ಕುತ್ತಿಗೆ ಹಿಡಿದು ಅಲುಗಿಸಿಬಿಡುತ್ತಿದ್ದ. ಚರ್ಚೆ ಬಹಳ ಚೆನ್ನಾಗಿಯೇ ಆಯಿತು, ಇದರಿಂದ ನಿಮ್ಮಿಬ್ಬರಿಗೂ ಒಬ್ಬರಿಗೊಬ್ಬರ ಪರಿಚಯವಾದ ಹಾಗಾಯಿತು. ಮತ್ತು ನನಗೂ ಅನೇಕ ವಿಷಯ ಗೊತ್ತಾದ ಹಾಗಾಯಿತು.”
ಕೀರ್ತನಕಾರ ತನ್ನ ಪಾರ್ಟಿಯೊಡನೆ ಬಂದು ಕೊಠಡಿಯ ಮಧ್ಯಪ್ರದೇಶದಲ್ಲಿ ಕುಳಿತುಕೊಂಡ. ಪರಮಹಂಸರು ಅನುಜ್ಞೆಕೊಡುವುದೆ ತಡ ಕೀರ್ತನೆ ಆರಂಭವಾಗಿ ಬಿಡುತ್ತದೆ, ಅವರು ಅನುಮತಿ ಕೊಟ್ಟರು.
ರಾಮ (ಶ್ರೀರಾಮಕೃಷ್ಣರಿಗೆ): ‘ ‘ಇವರು ಏನು ಹಾಡಬೇಕೆಂಬುದನ್ನು ದಯವಿಟ್ಟು ತಿಳಿಸಿ.”
ಶ್ರೀರಾಮಕೃಷ್ಣರು: ‘ ‘ಯಾವುದನ್ನು ಹಾಡು ಅಂತ ಹೇಳಲಿ? (ಸ್ವಲ್ಪ ಹೊತ್ತು ಯೋಚಿಸಿ) ಒಳ್ಳೆಯದು, ಅನುರಾಗವನ್ನು (ಶ್ರೀಕೃಷ್ಣನನ್ನು ಸಂಧಿಸುವ ಮುನ್ನ ರಾಧೆಗೆ ಇದ್ದ ಮಾನಸಿಕ ಸ್ಥಿತಿಯನ್ನು ವರ್ಣಿಸುವ ಕೀರ್ತನೆಯನ್ನು) ಹಾಡಲಿ.”
ಕೀರ್ತನಕಾರ ಪೂರ್ವರಾಗವನ್ನು ಹಾಡುತ್ತಿದ್ದಾನೆ:
ನನ್ನ ನಿಧಿ ಗೌರಾಂಗ, ದ್ವಿಜಶಿರೋಮಣಿ, ಎಂತು
ರಾಧೆಯನು ನೆನೆನೆನೆದು ಅಳುತಿರುವನು!
ಪ್ರೇಮಪೂರಿತ ನಯನದಿಂದಿಳಿಯುತಿದೆ ಕಣ್ಣೀರು;
ರಾಧೆಯೊಲವನು ಜಪಿಸಿ ಹೊರಳುತಿಹನು.
‘ರಾಧಾ’ – ಎನ್ನುತ ಒಂದೊಂದು ಸಲ ಅವನು
ಮೈ ಮರೆತು ಉರುಳುವನು ನೆಲದ ಮೇಲೆ,
ಪುಲಕ ಗದ್ಗದದಲ್ಲಿ ‘ರಾಧಾ’ ಎಂಬುದ ಹೊರತು
ಮತ್ತೇನನೂ ಅವನು ನುಡಿಯಲಾರ!
ಕೀರ್ತನೆ ಮುಂದುವರಿಯುತ್ತಿದೆ.
ಶ್ರೀಮತಿ (ರಾಧೆ) ಯಮುನಾತಟದಲ್ಲಿರುವ ಕದಂಬ ವೃಕ್ಷದ ಕೆಳಗೆ ಮೊಟ್ಟಮೊದಲು ಶ್ರೀಕೃಷ್ಣನನ್ನು ಸಂಧಿಸಿದಾಗ ಆಕೆಯ ಮಾನಸಿಕ ಸ್ಥಿತಿ ಹೇಗಿತ್ತು ಎಂಬುದನ್ನು ಆಕೆಯ ಸಖಿಯರು ವರ್ಣಿಸುತ್ತಿದ್ದಾರೆ:
ಘಳಿಗೆ ಘಳಿಗೆಗೆ ನೂರು ಸಲ, ಮನೆ
ಯೊಳಗು ಹೊರಗು ಅಲೆವಳು,
ಕಾತರದ ನಿಟ್ಟುಸಿರಿಟ್ಟು ನೋಟವ
ಕದಂಬವನದೆಡೆ ಸಲಿಪಳು,
ಮನೆಯ ಹಿರಿಯರಿಗಂಜಿಹಳೊ, ಮೇಣ್
ಭೂತಗ್ರಸ್ತಳೊ ತಿಳಿಯದು!
ಉಡುಪು ಅಸ್ತವ್ಯಸ್ತವಾದರು, ಸರಿ-
ಪಡಿಸಿಕೊಳ್ಳದ ಕಾತರ!
ಒಡವೆಗಿಡವೆಗಳೆಲ್ಲೊ ಉದುರಿವೆ
ನಡುಗುತಿಹಳಿದೊ ತರತರ!
ಅಯ್ಯೊ, ನೋಡಿರಿ, ಅವಳು ಇನ್ನೂ
ಎಳೆಯಳು!
ಹುಟ್ಟುರಾಜಕುಮಾರಿ, ಅಲ್ಲದೆ ಮದುವೆ-
ಯಾಗಿಹ ಗರತಿಯು!
ಆದರೂ ಇಂದೇತಕೀತೆರ ನಡೆವಳು?
ಅವಳ ನಡೆನುಡಿ ರೀತಿನೀತಿಗ-
ಳೊಂದು ನಮಗೂ ತಿಳಿಯದು
ಚಂದ್ರನೆಡೆ ಕೈ ಚಾಚುತಿರುವೀ
ಸುಂದರಿಯು ಶ್ರೀಕೃಷ್ಣನ
ಬಲೆಗೆ ಬಿದ್ದಾ ರಾಧೆಯಲ್ಲವೆ
ಎಂದು ಊಹಿಪುದೀ ಮನ!
ಕೀರ್ತನೆ ಮುಂದುವರಿಯುತ್ತಿದೆ. ರಾಧೆಯ ಸಖಿಯರು ಆಕೆಗೆ ಹೇಳುತ್ತಿದ್ದಾರೆ:
ಏಕೀ ವಿಷಾದವು ರಾಧೆ, ಓ ಸೌಮ್ಯ ಶಶಿವದನೆ,
ಏಕೆ ಮರುಳನ ತೆರದಿ ಹೊರಳುತಿರುವೆ?
ಕನಕವರ್ಣದ ಕಾಯ ಬೂದಿಯೊಲು ಮಂಕಾಯ್ತು;
ಹೊದ್ದ ಸೆರಗೂ ಜಾರಿದರಿವಿಲ್ಲವೆ?
ಹಗಲು ಇರುಳೂ ಅತ್ತು ಕೆಂಪಗಾಗಿವೆ ಕಣ್ಣು;
ಬಾಡಿಹುದು ಸುಕುಮಾರ ಕಮಲವದನ.
ನಮ್ಮ ಎದೆಯೂ ಕೂಡ ಒಡೆಯಬಹುದೋ ಏನೋ;
ನೀನು ಹೇಳದೆ ಇರಲು ನಿನ್ನ ವ್ಯಸನ!
ರಾಧೆ ತನ್ನ ಸಖಿಯರಿಗೆ ಹೇಳುತ್ತಾಳೆ:
ಯದುನಂದನ ಮುಖದರ್ಶನ ಕಾತರೆ ನಾ.
ಕೀರ್ತನಕಾರ ಮತ್ತೆ ಹಾಡಲು ಆರಂಭಿಸಿದ:
ಶ್ರೀಮತಿ ಶ್ರೀಕೃಷ್ಣನ ವೇಣುನಾದವನ್ನು ಕೇಳಿ ತೀರ ಹುಚ್ಚಿಯಂತೆ ಆಗಿಬಿಟ್ಟಿದ್ದಾಳೆ. ಆಕೆ ತನ್ನ ಸಖಿಯರಿಗೆ ಹೇಳುತ್ತಾಳೆ:
ಯಾರು ಈ ಗಾರುಡಿಗ, ಕದಂಬವನದಲ್ಲಿ ಕುಳಿತು
ಕೊಳಲನೂದುತ ಮನವ ಮರುಳು ಮಾಡಿ,
ಎದೆಯೊಳಗನೇ ಕಡೆದು, ಆತ್ಮವನೆ ಕೊರೆಕೊರೆದು
ಕೊಳಲಿನುಲಿಯೊಳೆ ಗೈವನೆಂಥ ಮೋಡಿ!
ತುಡಿತುಡಿವ ಎದೆಯಲ್ಲಿ, ಸುರಿವ ಕಂಬನಿಯಲ್ಲಿ
ಉಸಿರಿಡದ ಮೌನದಲಿ ಆಲಿಸಿಹೆನು!
ಆಃ, ಅದೊ ಕೊಳಲದನಿ! ಮಿಂಚುವೊಳೆ ಎದೆಯೊಳಗೆ!
ಮನೆಯೊಳಿರಲಾರೆ ನಾ; ಎಲ್ಲಿ ಅವನು?
ಎದೆಯು ಹಂಬಲಿಸಿಹುದು, ನನ್ನ ಆ ಪ್ರಿಯತಮನ
ಮತ್ತೊಮ್ಮೆ ಕಾಣದಿರೆ ಬದುಕಲಾರೆ,
ನುಡಿವನುದ್ಧವದಾಸ: ಓ ರಾಧೆ ನೀನವನ
ಕಂಡ ಮರುಚಣದಲ್ಲೆ ಬದುಕಲಾರೆ!
ಕೀರ್ತನೆ ಮುಂದುವರಿಯಿತು.
ಶ್ರೀಕೃಷ್ಣನ ದರ್ಶನಕ್ಕಾಗಿ ರಾಧೆಯ ಹೃದಯ ಸುಮ್ಮನೆ ತವಕಪಡುತ್ತಿದೆ. ಆಕೆ ತನ್ನ ಸಖಿಯರಿಗೆ ಹೇಳುತ್ತಾಳೆ:
ಮೊದಲು ಕೇಳಿದೆನವನ ಮಾಟದ
ಕೊಳಲಿನುಲಿಯನು ದೂರದಿ,
ಬಳಿಕ ಆತನ ಹಾಡು ಮನವನು
ತಟ್ಟಿ ಆತನ ವಿಷಯವೆಲ್ಲವ-
ನೊರೆದುದೆನ್ನೀ ಕಿವಿಯಲಿ.
ಮತ್ತೆ ನೀನೇ ಬಂದು ಓ ಸಖಿ,
ಹೆಸರನುಸುರಿದೆ ಕಿವಿಯಲಿ.
‘ಕೃಷ್ಣ’ –ಎನ್ನುವ ಹೆಸರು ಜೇನನು
ಕರೆವುದೆನ್ನೀ ಎದೆಯಲಿ.
ಅವನ ಅಗಣಿತ ಗುಣವನೊರೆದರು
ಅವನನರಿತಿಹ ಹಿರಿಯರು.
ನಾನು ಅಬಲೆಯು, ಮತ್ತೆ ಕುಲವಧು;
ಕಠಿಣರೆನ್ನೀ ಹಿರಿಯರು.
ದಿನವು ದಿನವೂ ಪ್ರಿಯನ ಒಲವಿಗೆ
ಇಂತು ತುಡಿದರೆ ನನ್ನೆದೆ
ನಾನು ಜೀವವ ಬಿಡುವುದೊಳಿತು,
ಬೇರೆ ಹಾದಿಯು ಏನಿದೆ?
ಹೇಳು ಕೆಳದೀ ನನ್ನ ಕೃಷ್ಣನ
ಕಾಣಲಾವುದು ಪಥವಿದೆ?
‘ ‘ ‘ಕೃಷ್ಣ’ -ಎನ್ನುವ ಹೆಸರು ಜೇನನ್ನು ಕರೆವುದೆನ್ನೀ ಎದೆಯಲಿ!” ಎಂಬ ಚರಣವನ್ನು ಪರಮಹಂಸರು ಕೇಳಿದೊಡನೆಯೇ, ಅವರ ಕೈಯಲ್ಲಿ ಸುಮ್ಮನೆ ಕುಳಿತಿರಲಾಗಲಿಲ್ಲ. ಎದ್ದು ನಿಂತು ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಚಿಕ್ಕ ನರೇನ ಅವರ ಬಲಭಾಗದಲ್ಲಿ ನಿಂತಿದ್ದಾನೆ.
ಕಿಂಚಿತ್ ಪ್ರಕೃತಿಸ್ಥರಾಗಿ ತಮ್ಮ ಮಧುರ ಕಂಠದಿಂದ ‘ ‘ಕೃಷ್ಣ”, ‘ ‘ಕೃಷ್ಣ” ಅಂತ ಹೇಳುತ್ತಿದ್ದಾರೆ. ಕಣ್ಣಿನಿಂದ ಪ್ರೇಮಾಶ್ರು ಸುರಿಯುತ್ತಿದೆ. ಅವರು ಮತ್ತೆ ಕೆಳಗೆ ಕುಳಿತು ಕೊಂಡರು. ಕೀರ್ತನಕಾರ ಕೀರ್ತನೆಯನ್ನು ಮುಂದುವರಿಸುತ್ತಿದ್ದಾನೆ.
ರಾಧೆಯ ಸಖಿ ವಿಶಾಖೆ ಎಂಬುವಳು ಓಡಿಹೋಗಿ ಶ್ರೀಕೃಷ್ಣನ ಪಟವೊಂದನ್ನು ತಂದು ರಾಧೆಯ ಮುಂದೆ ಹಿಡಿಯುತ್ತಾಳೆ. ರಾಧೆ ಅದನ್ನು ನೋಡಿ ಹೇಳುತ್ತಾಳೆ: ‘ ‘ಈ ಪಟದಲ್ಲಿ ಯಾರು ಕಾಣುತ್ತಿದ್ದಾನೊ, ಆತನನ್ನು ಯಮುನಾದಡದಲ್ಲಿ ನೋಡಿದಂದಿನಿಂದ ನನಗೆ ಈ ದಶೆ ಬಂದುಬಿಟ್ಟಿದೆ” ಅಂತ.
ಯಮುನಾ ನದಿ ತಟದಿ ನಾ ಕಂಡ ಸುಂದರನ
ಚಿತ್ರಪಟವಿದು ನೋಡು ಎನಿತು ಚೆಲುವು
ಯಾರ ಶುಭನಾಮವನು ಸಖಿ ವಿಶಾಖೆಯು ಅಂದು
ಹೇಳಿದಳೋ, ಆತನೇ ಇಲ್ಲಿರುವನು!
ಕೊಳಲನೂದುತ ನನ್ನ ಹೃದಯವನು ಸೆರೆಗೊಂಡ
ನನ್ನ ಮೋಹದ ಮೂರ್ತಿ ಇಲ್ಲಿರುವನೇ.
ಯಾರ ಗುಣಗಣಗಳನು ಚಾರಣರು ಹಾಡಿದರೊ
ಆ ನಿನ್ನ ಪ್ರಿಯತಮನು ಇವನಲ್ಲವೆ?
ಹೀಗೆನುತ ಮೈಮರೆತು ತಿರೆಗೆ ಉರುಳಿದ ರಾಧೆ,
ಸಖಿಯರುಪಚಾರದಲಿ ಎಚ್ಚರಾಗಿ,
ನನ್ನ ಹೃದಯದೊಳಿಂತು ಮಾರ್ಪೊಳೆವ ಮೂರುತಿಯ
ತೋರಿರೇ ಸಖಿ, –ಎಂದು ಬೇಡಲಾಗಿ
ಅವಳ ಇರವಿಗೆ ಮರುಗಿ ಭಾಷೆಯಿತ್ತರು ಅವರು
ಅವಳ ನಲ್ಲನ ಬಳಿಗೆ ಒಯ್ವುದಾಗಿ
ಈಗ ಶ್ರೀರಾಮಕೃಷ್ಣರು ನರೇಂದ್ರಾದಿ ಭಕ್ತರೊಡನೆ ಉಚ್ಚಕಂಠದಿಂದ ಸಂಕೀರ್ತನೆ ಮಾಡಲಾರಂಭಿಸಿದ್ದಾರೆ. ಅವರು ಹಾಡಿದರು:
ಹರಿನಾಮವನು ನುತಿಸಿ, ಆನಂದ ಬಾಷ್ಪವನು
ಕರೆವಣ್ಣತಮ್ಮದಿರು ಇವರು ನೋಡು!…..
ಅವರು ಹಾಡುವುದನ್ನು ಮುಂದುವರಿಸಿದರು:
ಗೌರಾಂಗನು ಹುಟ್ಟಿದೂರು
ಅವನ ಪ್ರೇಮ ಹಿಲ್ಲೋಲದಿ
ಸ್ಪಂದಿಸುತಿದೆ ಮೋದದಿ!
ಮತ್ತೆ ಪರಮಹಂಸರು ಸಮಾಧಿಸ್ಥರಾದರು, ಬಾಹ್ಯಪ್ರಜ್ಞೆಯನ್ನು ಪಡೆದನಂತರ ತಮ್ಮ ಸ್ವಸ್ಥಾನಕ್ಕೆ ಬಂದು ಕುಳಿತುಕೊಂಡರು. ಅವರು ಮಾಸ್ಟರನ ಕಡೆಗೆ ತಿರುಗಿ ಹೇಳಿದರು, ‘ ‘ನಾನು ಮೊದಲು ಯಾವ ಕಡೆಗೆ ಮುಖ ಹಾಕಿಕೊಂಡು ಕುಳಿತಿದ್ದೆ ಎಂಬುದನ್ನು ಈಗ ಮರೆತುಬಿಟ್ಟಿದ್ದೇನೆ.” ಬಳಿಕ ಭಕ್ತರೊಡನೆ ಮಾತುಕತೆಯಾಡಲು ಆರಂಭಿಸಿದರು.
ನರೇಂದ್ರ (ಶ್ರೀರಾಮಕೃಷ್ಣರಿಗೆ): ‘ ‘ಹಾಜರಾ ಈಗ ಒಳ್ಳೆಯವನಾಗಿಬಿಟ್ಟಿದ್ದಾನೆ.”
ಶ್ರೀರಾಮಕೃಷ್ಣರು: ‘ ‘ಆತನ ನಿಜಸ್ವರೂಪ ಎಂಥದು ಎಂಬುದು ನಿನಗೆ ಗೊತ್ತಿಲ್ಲ. ಕೈಯಲ್ಲಿ ಶರಣಾಗತಿಯನ್ನು ತೋರಿಸುತ್ತ ಕಂಕುಳಲ್ಲಿ ದೊಣ್ಣೆ ಇಟ್ಟುಕೊಂಡಿರುವ ಜನರೂ ಈ ಜಗತ್ತಿನಲ್ಲಿದ್ದಾರೆ.”
ನರೇಂದ್ರ: ‘ ‘ಅಲ್ಲ, ಅಲ್ಲ. ಆತ ಅಂಥವನಲ್ಲ. ಜನರು ಆತನ ಮೇಲೆ ಮಾಡುವ ದೋಷಾರೋಪಣೆಯ ಸಂಬಂಧವಾಗಿ ಆತನನ್ನು ಕೇಳಿದೆ. ಅದೆಲ್ಲ ಶುದ್ಧ ಸುಳ್ಳು ಅಂತ ಆತ ಹೇಳಿದ.”
ಶ್ರೀರಾಮಕೃಷ್ಣರು: ‘ ‘ಆತ ನಿಷ್ಠಾವಂತನೇ; ಸ್ವಲ್ಪ ಜಪತಪ ಮಾಡುತ್ತಾನೆ. ಆದರೆ ವಕ್ರತೆಯೂ ಇದೆ. ಗಾಡಿಯವನಿಗೆ ಬಾಡಿಗೆ ಕೊಡುವುದಿಲ್ಲ.”
ನರೇಂದ್ರ: ‘ ‘ಇಲ್ಲವಂತೆ ಕೊಟ್ಟಿದ್ದಾನಂತೆ.”
ಶ್ರೀರಾಮಕೃಷ್ಣರು: ‘ ‘ದುಡ್ಡು ಎಲ್ಲಿಂದ ದೊರೆಯಿತು?”
ನರೇಂದ್ರ: ‘ ‘ಬಹುಶಃ ರಾಮಲಾಲ ಗೀಮಲಾಲ ಕೊಟ್ಟಿರಬೇಕು ಎಂದು ಕಾಣುತ್ತದೆ.”
ಶ್ರೀರಾಮಕೃಷ್ಣರು: ‘ ‘ಇವುಗಳ ಸಂಬಂಧವಾಗಿ ಆತನನ್ನು ವಿಶದವಾಗಿ ಕೇಳಿದೆಯೇನು? ಒಮ್ಮೆ ನಾನು ಭಗವತಿಗೆ ಪ್ರಾರ್ಥನೆಮಾಡಿದೆ, ‘ತಾಯೆ, ಹಾಜರಾ ಒಬ್ಬ ಆಷಾಢಭೂತಿಯಾಗಿದ್ದರೆ ಆತನನ್ನು ಇಲ್ಲಿಂದ ತೆಗೆದುಬಿಡು’ ಅಂತ. ಬಳಿಕ ನಾನು ಮಾಡಿದ ಪ್ರಾರ್ಥನೆಯನ್ನು ಆತನಿಗೆ ತಿಳಿಸಿಬಿಟ್ಟೆ. ಆತ ಕೆಲವು ದಿವಸಗಳಾದ ಮೇಲೆ ಬಂದು ನನ್ನ ಹತ್ತಿರ ಹೇಳಿದ. ‘ನೋಡಿ, ನಾನು ಇಲ್ಲೇ ಇದ್ದೇನೆ’ ಅಂತ. (ಪರಮಹಂಸರೂ ಮತ್ತೆಲ್ಲರೂ ನಗುತ್ತಿದ್ದಾರೆ.) ಆದರೆ ಆ ಬಳಿಕ ಕೆಲವು ದಿವಸಗಳಲ್ಲೇ ಆ ಸ್ಥಳವನ್ನು ಬಿಟ್ಟುಹೋದ.
‘ ‘ಹಾಜರಾ ತನ್ನ ಊರಿಗೆ ಹೋಗಿಬರುವಂತೆ ನಾನು ಆತನಿಗೆ ಹೇಳಬೇಕೆಂದು ಆತನ ತಾಯಿ ರಾಮಲಾಲನ ಮೂಲಕ ನನಗೆ ಹೇಳಿಕಳುಹಿಸಿದ್ದಳು. ಆಕೆ ಆತನಿಗಾಗಿ ಅತ್ತು ಅತ್ತು ಬಹುಮಟ್ಟಿಗೆ ಕುರುಡಿಯೇ ಆಗಿಬಿಟ್ಟಿದ್ದಳು. ಆಕೆಯನ್ನು ಆತ ನೋಡಿಬರಲೆಂದು ನಾನು ನನ್ನ ಕೈಯಲ್ಲಾದ ಪ್ರಯತ್ನಗಳನ್ನೆಲ್ಲಾ ಮಾಡಿ ನೋಡಿಬಿಟ್ಟೆ. ಆತನಿಗೆ ಹೇಳಿದೆ, ‘ನಿನ್ನ ತಾಯಿ ಮುದುಕಿಯಾಗಿದ್ದಾಳೆ. ಹೋಗಿ ಆಕೆಯನ್ನು ಒಮ್ಮೆ ನೋಡಿಕೊಂಡು ಬಾ’ ಅಂತ. ನನ್ನ ಪ್ರಯತ್ನವೆಲ್ಲಾ ವಿಫಲವಾಯಿತು. ಕೊನೆಗೆ ಆತನ ತಾಯಿ ಅತ್ತು ಅತ್ತೇ ಸತ್ತುಹೋದಳು.”
ನರೇಂದ್ರ: ‘ ‘ಈ ಸಲ ಆತ ಊರಿಗೆ ಹೋಗುತ್ತಾನೆ.”
ಶ್ರೀರಾಮಕೃಷ್ಣರು: ‘ ‘ಹೌದು, ಹೌದು! ಈಗ ಊರಿಗೆ ಹೋಗುತ್ತಾನೆ! ಆತ ಒಬ್ಬ ನೀಚ. ಆತನ ಸ್ವರೂಪ ನಿನಗೆ ಗೊತ್ತಿಲ್ಲ. ಹಾಜರಾ ಕೆಲವು ದಿನಗಳನ್ನು ಸಿಂಥಿಯಲ್ಲಿ ಕಳೆದ ಅಂತ ಗೋಪಾಲ ಹೇಳಿದ. ಅಲ್ಲಿನ ಜನರು ಆತನಿಗೆ ಅಕ್ಕಿ, ಬೇಳೆ, ತುಪ್ಪ ಇವೇ ಮೊದಲಾದ ಆಹಾರ ಪದಾರ್ಥಗಳನ್ನು ಕೊಡುತ್ತಿದ್ದರಂತೆ. ಆತ ಹೇಳುತ್ತಿದ್ದನಂತೆ, ಇಂಥ ದಪ್ಪಕ್ಕಿಯನ್ನು ಇಂಥ ಕೆಟ್ಟ ತುಪ್ಪವನ್ನು ನನ್ನ ಕೈಯಲ್ಲಿ ತಿನ್ನಲಾಗುವುದೆ ಅಂತ. ನೋಡು, ಆತನ ದುರಹಂಕಾರವನ್ನು! ಅವನೊಡನೆ ಅಲ್ಲಿಗೆ ಭಾಟಪಾರಾದ ಈಶಾನ ಹೋಗಿದ್ದನಂತೆ. ಹಾಜರಾ ಆತನಿಗೆ ಕಾಲುತಂಬಿಗೆಯಲ್ಲಿ ನೀರು ತರುವಂತೆ ಆಜ್ಞೆ ಮಾಡಿದನಂತೆ. ಆತನ ಈ ವರ್ತನೆ ಉಳಿದ ಬ್ರಾಹ್ಮಣರಿಗೆ ಕೋಪವನ್ನುಂಟುಮಾಡಿತಂತೆ.”
ನರೇಂದ್ರ: ‘ ‘ಈ ವಿಷಯವಾಗಿಯೂ ನಾನು ಆತನನ್ನು ಕೇಳಿದೆ. ಇಲ್ಲವಂತೆ, ಈಶಾನ ಬಾಬು ತಾನಾಗಿಯೇ ಮುಂದೆ ಬಂದು ನೀರು ತಂದುಕೊಟ್ಟನಂತೆ. ಜೊತೆಗೆ ಭಾಟಪಾರಾದ ಬ್ರಾಹ್ಮಣರು ಆತನಿಗೆ ಸನ್ಮಾನ ತೋರಿಸಿದರಂತೆ.”
ಶ್ರೀರಾಮಕೃಷ್ಣರು (ನಗುತ್ತ ನಗುತ್ತ): ‘ ‘ಇದೊಂದಿಷ್ಟು ಆತನ ಜಪತಪದ ಫಲ. ನೋಡು, ದೈಹಿಕ ಲಕ್ಷಣಗಳೂ ತಮ್ಮ ಸ್ವಭಾವವನ್ನು ಬೀರುತ್ತವೆ. ಗಿಡ್ಡುಗಿಡ್ಡಾಗಿರುವ, ಗಂಟುಗಂಟಾಗಿರುವ ದೇಹ ಒಳ್ಳೆಯ ಲಕ್ಷಣವಲ್ಲ. ಇಂಥವರ ಆತ್ಮಜಾಗೃತಿ ಬಹಳ ಸಾವಕಾಶವಾಗಿ ಆಗುತ್ತದೆ.”
ಭವನಾಥ: ‘ ‘ಇಂಥ ಮಾತುಕತೆಗಳು ಇಲ್ಲಿಗೇ ಸಾಕು.”
ಶ್ರೀರಾಮಕೃಷ್ಣರು: ‘ ‘ನನ್ನನ್ನು ತಪ್ಪಾಗಿ ತಿಳಿದುಕೊಳ್ಳಬೇಡ. (ನರೇಂದ್ರನಿಗೆ) ಜನರು ಎಂಥವರು ಎಂಬುದು ನಿನಗೆ ಗೊತ್ತಾಗಿಬಿಡುತ್ತದೆ ಅಂತ ನೀನು ಹೇಳುತ್ತಿದ್ದೀಯೆ; ಅದಕ್ಕಾಗಿಯೇ ನಾನು ಇದನ್ನೆಲ್ಲ ನಿನಗೆ ತಿಳಿಸುತ್ತಿರುವುದು. ಹಾಜರಾನಂಥ ಜನರನ್ನು ನಾನು ಯಾವ ದೃಷ್ಟಿಯಿಂದ ನೋಡುತ್ತೇನೆ ಎಂಬುದು ನಿನಗೆ ಗೊತ್ತೆ? ನನಗೆ ಗೊತ್ತಾಗಿದೆ, ಭಗವಂತ ಸಾಧು-ಸತ್ಪುರುಷರ ರೂಪವನ್ನು ಧರಿಸಿರುವಂತೆ, ಆಷಾಡಭೂತಿಗಳ ಮತ್ತು ನೀಚರ ರೂಪವನ್ನೂ ಧರಿಸಿದ್ದಾನೆ ಅಂತ. (ಮಹಿಮಚರಣನಿಗೆ) ನೀನು ಏನು ಹೇಳುತ್ತೀಯೆ? ಎಲ್ಲರೂ ಭಗವಂತನೆ.”
ಮಹಿಮಚರಣ: ‘ ‘ಹೌದು, ಎಲ್ಲರೂ ಭಗವಂತನೆ.”
ಗಿರೀಶ (ಶ್ರೀರಾಮಕೃಷ್ಣರಿಗೆ): ‘ ‘ಮಹಾಶಯರೆ, ಯಾವುದಕ್ಕೆ ಏಕಾಂತಿಕ ಪ್ರೇಮ ಅಂತ ಹೇಳುತ್ತಾರೆ?”
ಶ್ರೀರಾಮಕೃಷ್ಣರು: ‘ ‘ಏಕಾಂತಿಕ ಪ್ರೇಮ ಅಂದರೆ ಒಂದೇ ಕಡೆಯ ಪ್ರೇಮ. ಉದಾಹರಣೆಗೆ ಬಾತು ನೀರನ್ನು ಅರಸಿಕೊಂಡು ಹೋಗುತ್ತದೆಯೇ ವಿನಾ, ನೀರು ಬಾತನ್ನು ಅರಸಿಕೊಂಡು ಹೋಗುವುದಿಲ್ಲ. ಜೊತೆಗೆ ಸಾಧಾರಣ, ಸಮಂಜಸ, ಸಮರ್ಥ ಪ್ರೇಮಗಳೂ ಇವೆ. ಮೊದಲನೆಯದರಲ್ಲಿ ನಿನಗೆ ಸುಖ ಸಿಗಲಿ ಬಿಡಲಿ, ನನಗೆ ಸಿಕ್ಕಿಬಿಟ್ಟರೆ ಸಾಕು ಎಂಬ ಮನೋವೃತ್ತಿ. ಉದಾಹರಣೆಗೆ ಚಂದ್ರಾವಳಿಯ ಭಾವ. ಎರಡನೆಯದರಲ್ಲಿ ನಿನಗೂ ಸುಖ ದೊರಕಲಿ ನನಗೂ ಸುಖ ದೊರಕಲಿ ಎಂಬ ಭಾವ. ಇದು ಬಹಳ ಒಳ್ಳೆಯ ಮಾನಸಿಕ ಸ್ಥಿತಿ. ಇವೆಲ್ಲಕ್ಕಿಂತಲೂ ಉತ್ತಮವಾದುದು ಮೂರನೆಯದು. ಉದಾಹರಣೆಗೆ ಶ್ರೀಮತಿ (ರಾಧೆ) ಭಾವ. ಕೃಷ್ಣಸುಖೇ ಸುಖೀ ಎಂಬ ಭಾವ. ನನಗೇನಾದರೂ ಆಗಲಿ, ನಿನಗೆ ಸುಖ ದೊರೆತರೆ ಸಾಕು ಎಂಬ ಭಾವ. ಗೋಪಿಯರದು ಈ ಅತ್ಯಂತ ಉಚ್ಚಭಾವ.
‘ ‘ಗೋಪಿಯರು ಯಾರು ಎಂಬುದು ನಿನಗೆ ಗೊತ್ತೆ? ಶ್ರೀರಾಮಚಂದ್ರ ಕಾಡು ವನ ಇವುಗಳಲ್ಲೆಲ್ಲಾ ಅಲೆಯುತ್ತಿದ್ದಾಗ ಅಲ್ಲೆಲ್ಲಾ ಅರುವತ್ತು ಸಾವಿರ ಋಷಿಗಳು ವಾಸವಾಗಿದ್ದರು. ಅವರೆಲ್ಲರೂ ಶ್ರೀರಾಮಚಂದ್ರನ ದರ್ಶನ ಪಡೆಯಲು ಕಾತರರಾಗಿದ್ದರು. ಅವರೆಲ್ಲರ ಕಡೆಗೂ ಆತ ತನ್ನ ಪ್ರೇಮದೃಷ್ಟಿಯನ್ನು ಬೀರಿದ್ದ. ಅವರೇ ಗೋಪಿಯರು ಎಂಬುದಾಗಿ ಯಾವುದೋ ಒಂದು ಪುರಾಣ ಹೇಳುತ್ತದೆ.”
ಒಬ್ಬ ಭಕ್ತ: ‘ ‘ಮಹಾಶಯರೆ, ಯಾರನ್ನು ಅಂತರಂಗ ಭಕ್ತ ಅಂತ ಕರೆಯಬಹುದು?”
ಶ್ರೀರಾಮಕೃಷ್ಣರು: ‘ ‘ಉದಾಹರಣೆಗೆ ನಾಟ್ಯಮಂದಿರವನ್ನು ತೆಗೆದುಕೊ. ಅದರ ಒಳಗಡೆ ಮತ್ತು ಹೊರಗಡೆ ಕಂಬಗಳಿವೆ. ಅಂತರಂಗ ಎಂಬುವವನು ಒಳಗಿನ ಕಂಬ ಇದ್ದ ಹಾಗೆ. ಯಾರು ಸರ್ವದಾ ಗುರುವಿನೊಡನೆಯೇ ಇರುವರೊ, ಅವರೇ ಅಂತರಂಗ ಭಕ್ತರು.
(ಮಹಿಮಚರಣನಿಗೆ) ‘ ‘ಭಗವಂತ ಸಾಕಾರ ರೂಪವೇ ಆಗಲಿ ಅಥವಾ ಆತನ ಅವತಾರವೇ ಆಗಲಿ ಜ್ಞಾನಿಗೆ ಬೇಕಾಗಿಲ್ಲ. ಶ್ರೀರಾಮಚಂದ್ರ ಕಾಡಿನಲ್ಲಿ ಗೊತ್ತುಗುರಿಯಿಲ್ಲದೆ ಅಲೆಯುತ್ತಿದ್ದಾಗ ಆತ ಅನೇಕ ಋಷಿಗಳನ್ನು ಸಂಧಿಸಿದ. ಅವರೆಲ್ಲರೂ ಆತನನ್ನು ತಮ್ಮ ತಮ್ಮ ಆಶ್ರಮಗಳಿಗೆ ಕರೆದುಕೊಂಡು ಹೋಗಿ ಬಹಳವಾಗಿ ಆದರ ಸತ್ಕಾರ ಮಾಡಿದರು. ಆಗ ಅವರು ಹೇಳಿದರು, ‘ಹೇ ರಾಮ, ಇಂದು ನಾವು ನಿನ್ನ ದರ್ಶನ ಪಡೆದು ಧನ್ಯರಾದೆವು. ನೀನು ದಶರಥನ ಮಗ ಎಂಬುದು ನಮಗೆ ಗೊತ್ತಿದೆ. ಆದರೆ ಭಾರದ್ವಾಜಾದಿ ಋಷಿಗಳು ನಿನ್ನನ್ನು ಅವತಾರಪುರುಷನೆಂದು ಕರೆಯುತ್ತಾರೆ; ನಾವು ಮಾತ್ರ ಹಾಗೆ ಭಾವಿಸುವುದಿಲ್ಲ. ನಾವು ಅಖಂಡ ಸಚ್ಚಿದಾನಂದನ ಧ್ಯಾನ ಮಾಡುತ್ತಿದ್ದೇವೆ’ ಅಂತ. ರಾಮ ಪ್ರಸನ್ನಚಿತ್ತನಾಗಿ ನಗಲಾರಂಭಿಸಿದ.
‘ ‘ನನಗೆ ಎಂಥೆಂಥ ಮಾನಸಿಕ ಅವಸ್ಥೆಗಳು ಬಂದಿದ್ದುವು! ಏನು ಕತೆ ! ಮನಸ್ಸು ಅಖಂಡದಲ್ಲಿ ಲಯವಾಗಿಬಿಡುತ್ತಿತ್ತು. ಆ ರೀತಿಯಾಗಿಯೇ ಎಷ್ಟೊಂದು ದಿವಸಗಳನ್ನು ಕಳೆದಿದ್ದೇನೆ! ಆಗ ಭಕ್ತಿ, ಭಕ್ತರನ್ನು ತ್ಯಾಗಮಾಡಿಬಿಟ್ಟಿದ್ದೆ. ಜಡನಂತಾಗಿಬಿಟ್ಟಿದ್ದೆ. ಶಿರಸ್ಸಿನ ಅರಿವೇ ನನಗಿರುತ್ತಿರಲಿಲ್ಲ. ಪ್ರಾಣ ಹೋಗುವಂತಾಗುತ್ತಿತ್ತು. ಹಾಸಿಗೆ ಬಳಿ ರಾಮಲಾಲನ ಚಿಕ್ಕಮ್ಮ ಇರುವುದು ಒಳ್ಳೆಯದು ಅಂತ ಅನ್ನಿಸಿಬಿಟ್ಟಿತ್ತು.
‘ ‘ಕೊಠಡಿಯಲ್ಲಿ ಪಟ ಏನಿತ್ತೊ ಅವೆಲ್ಲವನ್ನೂ ಹೊರಕ್ಕೆ ತೆಗೆದುಹಾಕಿಬಿಡುವಂತೆ ಹೇಳಿದೆ. ನನಗೆ ಬಾಹ್ಯಪ್ರಜ್ಞೆ ಬಂದಾಗ, ನನ್ನ ಮನಸ್ಸು ಈ ಜಗತ್ತಿನ ಅಂತಸ್ತಿಗೆ ಇಳಿದಾಗ, ನನ್ನ ಪ್ರಾಣ ನೀರಿನಲ್ಲಿ ಮುಳುಗಿ ಸಾಯುತ್ತಿರುವ ಮನುಷ್ಯನೋಪಾದಿಯಲ್ಲಿ ಚಟಪಟ ಗುಟ್ಟುತ್ತಿತ್ತು. ಕೊನೆಗೆ ನನಗೆ ನಾನೇ ಹೇಳಿಕೊಂಡೆ, ‘ಜನ ನನ್ನೊಡನೆ ಬೆರೆಯಲು ನಾನು ಬಿಟ್ಟುಕೊಡದಿದ್ದರೆ, ನಾನು ಬದುಕಿಕೊಂಡಿರುವ ಬಗೆ ಹೇಗೆ?’ ಅಂತ. ಆ ಬಳಿಕ ಮನಸ್ಸು ಭಕ್ತಿ ಭಕ್ತರ ಕಡೆ ಹರಿಯಲಾರಂಭಿಸಿತು. ಆಗ ಜನರನ್ನೆಲ್ಲಾ ಕೇಳುತ್ತಾ ಹೋದೆ, ‘ನನಗೇನವಸ್ಥೆ ಬಂದುಬಿಟ್ಟಿದೆ?’ ಅಂತ. ಬೋಲಾನಾಥ 1 ಹೇಳಿದ, ‘ಈ ವಿಧವಾದ ಅವಸ್ಥೆ ಮಹಾಭಾರತದಲ್ಲಿ ವರ್ಣಿತವಾಗಿದೆ’ ಅಂತ. ಸಮಾಧಿಯಿಂದ ಕೆಳಕ್ಕೆ ಇಳಿದುಬಂದ ನಂತರ ಮನುಷ್ಯ ಯಾವುದರ ಆಶ್ರಯವೂ ಇಲ್ಲದೆ ಹೇಗೆ ಬದುಕಿರಬಲ್ಲ? ಅದಕ್ಕಾಗಿ ಆತನಿಗೆ ಭಕ್ತಿ, ಭಕ್ತರು ಬೇಕೇಬೇಕು. ಇಲ್ಲದೆ ಇದ್ದರೆ ಆತನ ಮನಸ್ಸು ಬೇರೆ ಯಾವುದರ ಮೇಲೆ ತಾನೆ ನಿಲ್ಲಬಲ್ಲುದು?”
ಮಹಿಮಚರಣ (ಶ್ರೀರಾಮಕೃಷ್ಣರಿಗೆ): ‘ ‘ಮಹಾಶಯರೆ, ಸಮಾಧಿಸ್ಥ ಪುರುಷ ಹಿಂತಿರುಗಿ ಬರಬಲ್ಲನೆ?”
ಶ್ರೀರಾಮಕೃಷ್ಣರು (ಮಹಿಮಚರಣನಿಗೆ ಮೆತ್ತಗೆ): ‘ ‘ನೀನು ಒಬ್ಬನೆ ಇರುವಾಗ ಅದನ್ನು ನಿನಗೆ ತಿಳಿಸುತ್ತೇನೆ. ಅದಕ್ಕೆ ತಕ್ಕ ಅಧಿಕಾರಿ ನೀನು ಒಬ್ಬನೆ.
‘ ‘ಕುವರಸಿಂಗನೂ ನನಗೆ ಇದೇ ಪ್ರಶ್ನೆಯನ್ನು ಹಾಕಿದ. ನೋಡು, ಜೀವನಿಗೂ– ಮತ್ತು ಭಗವಂತನಿಗೂ ಅಜಗಜಾಂತರ ವ್ಯತ್ಯಾಸ. ಜೀವ ಅತಿ ಹೆಚ್ಚೆಂದರೆ ಸಾಧನೆ ಭಜನೆ ಮೂಲಕ ಸಮಾಧಿಯನ್ನು ಪಡೆಯಬಲ್ಲ; ಆದರೆ ಆತ ಆ ಸ್ಥಿತಿಯಿಂದ ಕೆಳಕ್ಕೆ ಇಳಿದು ಬರಲಾರ. ಅದಕ್ಕೆ ವ್ಯತಿರಿಕ್ತವಾಗಿ ಭಗವಂತ ಅವತರಿಸಿದ ಅಂದರೆ, ಆತ ಸಮಾಧಿಯಿಂದ ಹಿಂತಿರುಗಿ ಬರಬಲ್ಲ. ಜೀವನನ್ನು ಅರಮನೆಯ ಉದ್ಯೋಗಸ್ಥನಿಗೆ ಹೋಲಿಸಬಹುದು. ಆತ ಅರಮನೆಯ ಹೊರ ಅಂಗಳದವರೆಗೆ ಮಾತ್ರ ಹೋಗಬಲ್ಲ. ಆದರೆ ರಾಜಕುಮಾರ ಅರಮನೆಯ ಏಳು ಅಂತಸ್ತುಗಳಲ್ಲಿ ಎಲ್ಲಿಗೆ ಅಂದರೆ ಅಲ್ಲಿಗೆ ಹೋಗಬಲ್ಲ; ಮತ್ತೆ ಇಚ್ಛೆ ಬಂದಾಗ ಹೊರಕ್ಕೂ ಬರಬಲ್ಲ. ಪ್ರತಿಯೊಬ್ಬರೂ ಹೇಳುತ್ತಾರೆ ಸಮಾಧಿಯನ್ನು ಪಡೆದ ನಂತರ ಯಾರೂ ಹಿಂದಿರುಗಿ ಬರಲಾರರು ಅಂತ. ಇದು ಸತ್ಯವಾಗಿದ್ದರೆ, ಶಂಕರಾಚಾರ್ಯರು, ರಾಮಾನುಜಾಚಾರ್ಯರು ಇವರೆಲ್ಲ ಯಾರು ಮತ್ತೆ? ಇವರು ‘ವಿದ್ಯೆಯ ಅಹಂ’ ಎಂಬುದನ್ನು ಇಟ್ಟುಕೊಂಡಿದ್ದರು.”
ಮಹಿಮಚರಣ: ‘ ‘ನೀವು ಹೇಳುವುದೆ ಸರಿ, ಇಲ್ಲದೆ ಇದ್ದರೆ ಅವರು ಪುಸ್ತಕಗಳನ್ನು ಬರೆದ ಬಗೆ ಹೇಗೆ?”
ಶ್ರೀರಾಮಕೃಷ್ಣರು: ‘ ‘ಮತ್ತೆ ಪ್ರಹ್ಲಾದ, ನಾರದ, ಹನುಮಂತ ಇವರ ಕಡೆ ನೋಡು. ಇವರೂ ಸಮಾಧಿ ದೊರೆತನಂತರ ಭಕ್ತಿ ಇಟ್ಟುಕೊಂಡಿದ್ದರು.”
ಮಹಿಮಚರಣ: ‘ ‘ಮಹಾಶಯರೆ, ಅದೇನೋ ನಿಜ.”
ಶ್ರೀರಾಮಕೃಷ್ಣರು: ‘ ‘ಕೆಲವರು ತಾವು ಜ್ಞಾನಚರ್ಚೆಯನ್ನು ಮಾಡುತ್ತಿರುವುದರಿಂದಲೇ ತೃಪ್ತರಾಗಿ, ತಮಗೆಂಥ ಅದ್ಭುತಾವಸ್ಥೆ ಬಂದುಬಿಟ್ಟಿದೆ ಅಂತ ಭಾವಿಸಿಕೊಳ್ಳುತ್ತಾರೆ. ಬಹುಶಃ ಅವರು ಎಲ್ಲೋ ಒಂದು ಕಿಂಚಿತ್ ವೇದಾಧ್ಯಯನವನ್ನು ಮಾಡಿರಬಹುದು. ಆದರೆ ನಿಜವಾದ ಜ್ಞಾನ ದೊರೆತರೆ ವ್ಯಕ್ತಿ ಅಹಂಕಾರಿಯಾಗಲಾರ. ಅದಕ್ಕೆ ಬದಲು ವ್ಯಕ್ತಿಗೆ ನಿಜವಾದ ಸಮಾಧಿ ದೊರೆತುದೇ ಆದರೆ, ಆಗ ವ್ಯಕ್ತಿ ಭಗವಂತನೊಡನೆ ಏಕತೆಯನ್ನು ಹೊಂದಿ ತನ್ನ ಅಹಂಕಾರವನ್ನು ಕಳೆದುಕೊಂಡುಬಿಡುತ್ತಾನೆ. ಸಮಾಧಿ ದೊರಕದ ಹೊರತು ಸರಿಯಾದ ಜ್ಞಾನ ದೊರೆಯುವ ಹಾಗಿಲ್ಲ. ಸಮಾಧಿ ದೊರೆತಾಗ ವ್ಯಕ್ತಿ ಭಗವಂತನೊಡನೆ ಐಕ್ಯನಾಗಿ ಬಿಡುತ್ತಾನೆ. ಬಳಿಕ ‘ಅಹಂ’ ಎಂಬುದು ಇರದು.
‘ ‘ಇದು ಹೇಗೆ ಎಂಬುದು ನಿನಗೆ ಗೊತ್ತೇನು? ಮಟ್ಟಮಧ್ಯಾಹ್ನಕ್ಕೆ ಸರಿಯಾಗಿ ಸೂರ್ಯ ನೆತ್ತಿಯ ಮೇಲಕ್ಕೆ ಬರುತ್ತಾನೆ. ಆಗ ಯಾವ ಕಡೆಗೆ ದೃಷ್ಟಿ ಹಾಕಿದರೂ ಮನುಷ್ಯನಿಗೆ ಆತನ ನೆರಳೇ ಕಾಣಿಸದು. ಅದೇ ರೀತಿಯಾಗಿ ಬ್ರಹ್ಮಜ್ಞಾನ ದೊರೆಯಿತು ಎಂದರೆ, ಸಮಾಧಿ ದೊರೆಯಿತು ಎಂದರೆ, ಅಹಂರೂಪದ ನೆರಳು ಕಾಣಿಸಿಕೊಳ್ಳದು.
‘ ‘ನಿಜವಾದ ಜ್ಞಾನ ದೊರೆತ ಮೇಲೂ ‘ಅಹಂ’ ಎಂಬುದು ಉಳಿದುಕೊಂಡಿರುವು ದಾದರೆ, ಅದು ಕೇವಲ ‘ವಿದ್ಲ್ಯಯ ಅಹಂ’, ‘ಭಕ್ತಿಯ ಅಹಂ’, ‘ದಾಸನ ಅಹಂ’ ಮಾತ್ರವೆ. ಅದು ‘ಅವಿದ್ಯೆಯ ಅಹಂ’ ಅಲ್ಲ.
‘ ‘ಜ್ಞಾನ ಭಕ್ತಿ ಎರಡೂ ಮಾರ್ಗಗಳೇ. ಯಾವ ಮಾರ್ಗದಿಂದ ಹೋದರೂ ಭಗವಂತನನ್ನು ಪಡೆಯಬಹುದು. ಭಗವಂತನನ್ನು ಜ್ಞಾನಿ ಒಂದು ದೃಷ್ಟಿಯಿಂದ ನೋಡುತ್ತಾನೆ. ಭಕ್ತ ಇನ್ನೊಂದು ದೃಷ್ಟಿಯಿಂದ ನೋಡುತ್ತಾನೆ. ಜ್ಞಾನಿಯ ಭಗವಂತ ತೇಜೋಮಯ, ಭಕ್ತನ ಭಗವಂತ ರಸಮಯ.”
ಪರಮಹಂಸರ ಹತ್ತಿರ ಕುಳಿತು ಭವನಾಥ ಈ ಮಾತುಗಳನ್ನೆಲ್ಲ ಕೇಳುತ್ತಿದ್ದ.
ಭವನಾಥ (ಶ್ರೀರಾಮಕೃಷ್ಣರಿಗೆ): ‘ ‘ಮಹಾಶಯರೆ, ನನ್ನದೊಂದು ಪ್ರಶ್ನೆ. ನನಗೆ ‘ಚಂಡಿ’ ಸರಿಯಾಗಿ ಅರ್ಥವಾಗುತ್ತಿಲ್ಲ. ಅದರಲ್ಲಿ ಬರೆದಿದೆ, ಚಂಡಿ ಎಲ್ಲಾ ಜೀವಿಗಳನ್ನು ‘ಛಟ್, ಛಟ್’ ಅಂತ ಕೊಂದುಹಾಕುತ್ತಾಳೆ ಎಂಬುದಾಗಿ, ಇದರ ಸರಿಯಾದ ಅರ್ಥವೇನು?”
ಶ್ರೀರಾಮಕೃಷ್ಣರು: ‘ ‘ಇದೆಲ್ಲಾ ಆಕೆಯ ಲೀಲೆ. ಇದೇ ಸಂದೇಹ ನನ್ನನ್ನೂ ಸ್ವಲ್ಪ ಕಾಲ ಬಾಧಿಸಿತು. ಬಳಿಕ ನನಗೆ ಗೊತ್ತಾಯಿತು, ಇದೆಲ್ಲಾ ಬರೀ ಮಾಯೆ ಅಂತ. ಆಕೆಯ ಸೃಷ್ಟಿಯೂ ಮಾಯೆ, ಆಕೆಯ ಸಂಹಾರವೂ ಮಾಯೆ.”
ಮನೆಯ ಪಶ್ಚಿಮ ದಿಕ್ಕಿನ ಚಾವಣಿ ಮೇಲೆ ಎಲೆ ಹಾಕಲಾಗಿದೆ. ಈಗ ಗಿರೀಶ ಪರಮಹಂಸರನ್ನೂ ಮತ್ತು ಭಕ್ತರನ್ನೂ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾನೆ. ಇಂದು ವೈಶಾಖ ಶುಕ್ಲ ದಶಮಿಯ ಚಂದ್ರ ಉದಯಿಸಿರುವನು. ಇಡೀ ಜಗತ್ತೇ ಆತನ ಬೆಳಕಿನಿಂದ ನಗುತ್ತಿದೆ. ಭಕ್ತರೆಲ್ಲರೂ ಬಹಳ ಆನಂದದಿಂದ ಕೂಡಿದವರಾಗಿ ಪರಮಹಂಸರನ್ನು ತಮ್ಮ ಮುಂದೆ ಕೂರಿಸಿ ತಾವೂ ಕುಳಿತುಕೊಂಡು ಪ್ರಸಾದ ಸ್ವೀಕರಿಸುತ್ತಾ ಇದ್ದಾರೆ.
ನರೇಂದ್ರನನ್ನು ಕಂಡರೆ ಪರಮಹಂಸರಿಗೆ ಬಹಳ ಆನಂದ. ಆತ ಎದುರು ಪಂಕ್ತಿಯಲ್ಲಿ ಕುಳಿತು ಭಕ್ತರೊಡನೆ ಪ್ರಸಾದ ಸ್ವೀಕರಿಸುತ್ತಿದ್ದಾನೆ. ನರೇಂದ್ರನ ಊಟ ಯಾವ ರೀತಿಯಾಗಿ ಮುಂದುವರಿಯುತ್ತಿದೆ ಅಂತ ಆಗಾಗ ಕೇಳುತ್ತಲೇ ಇದ್ದಾರೆ. ಅರ್ಧ ಊಟ ಮುಗಿಯಿತೊ ಇಲ್ಲವೊ ಎನ್ನುವಷ್ಟರಲ್ಲಿಯೇ ಪರಮಹಂಸರು ಇದ್ದಕ್ಕಿದ್ದ ಹಾಗೆ ಎದ್ದು, ತಮ್ಮ ಎಲೆಯ ಹತ್ತಿರ ಇದ್ದ ಕಲ್ಲಂಗಡಿ ಹಣ್ಣಿನ ಷರಬತ್ತು ಮತ್ತು ಮೊಸರಿನ ದೊನ್ನೆ ಇವನ್ನು ತಂದು ನರೇಂದ್ರನ ಹತ್ತಿರ ಇಟ್ಟು ಹೇಳಿದರು, ‘ ‘ಇದೊಂದಿಷ್ಟನ್ನೂ ತೆಗೆದುಕೊ.” ಬಳಿಕ ಚಿಕ್ಕ ಮಗುವಿನೋಪಾದಿಯಲ್ಲಿ ಮತ್ತೆ ಹೋಗಿ ತಮ್ಮ ಎಲೆಯ ಮುಂದೆ ಕುಳಿತುಕೊಂಡರು.
೯ನೆ ಮೇ ೧೮೮೫, ವೈಶಾಖ ಕೃಷ್ಣ ದಶಮಿ, ಶನಿವಾರ
ಅಪರಾಹ್ನ ಮೂರರ ಸಮಯ. ಪರಮಹಂಸರು ನಗುಮುಖರಾಗಿ ಬಲರಾಮನ ಮನೆಯ ಎರಡನೆಯ ಅಂತಸ್ತಿನಲ್ಲಿರುವ ಬೈಠಕ್ಖಾನೆಯಲ್ಲಿ ಕುಳಿತು ಮಾತುಕತೆಯಾಡು ತ್ತಿದ್ದಾರೆ. ನರೇಂದ್ರ, ಮಾಸ್ಟರ್, ಭವನಾಥ, ಪೂರ್ಣ, ಪಲ್ಟು, ಚಿಕ್ಕ ನರೇನ, ಗಿರೀಶ, ರಾಮಬಾಬು, ದ್ವಿಜ, ವಿನೋದ ಮತ್ತೆ ಇನ್ನೂ ಅನೇಕ ಭಕ್ತರು ಪರಮಹಂಸರ ಸುತ್ತಲೂ ಕುಳಿತಿದ್ದಾರೆ.
ಬಲರಾಮ ಮನೆಯಲ್ಲಿ ಇಲ್ಲ. ಶರೀರಾರೋಗ್ಯ ಸರಿಯಿಲ್ಲದೆ ಇದ್ದುದರಿಂದ ಹವಾ ಬದಲಾವಣೆಗಾಗಿ ಮಾಂಗೇರಿ ಎಂಬ ಸ್ಥಳಕ್ಕೆ ಹೋಗಿದ್ದಾನೆ. ಆತನ ಹಿರಿಯ ಮಗಳು ಪರಮಹಂಸರನ್ನು ಮತ್ತು ಭಕ್ತರನ್ನು ಆಹ್ವಾನಿಸಿ ಅವರೆಲ್ಲರಿಗೂ ಒಂದು ಔತಣವನ್ನು ಏರ್ಪಡಿಸಿದಳು. ಪರಮಹಂಸರು ಊಟೋಪಚಾರಗಳಾದ ನಂತರ ವಿಶ್ರಮಿಸಿಕೊಳ್ಳುತ್ತಿದ್ದಾರೆ.
ಪರಮಹಂಸರು ಪುನಃ ಪುನಃ ಮಾಸ್ಟರಿಗೆ ಈ ಪ್ರಶ್ನೆ ಹಾಕುತ್ತಿದ್ದಾರೆ: ‘ ‘ಏನು, ನಾನೊಬ್ಬ ಉದಾರಿಯೆ? ನಿನ್ನ ಅಭಿಪ್ರಾಯವೇನು?” ಅಂತ.
ಭವನಾಥ (ನಗುತ್ತ) : ‘ ‘ಅವನಿಗೇಕೆ ಈಪ್ರಶ್ನೆ ಹಾಕುತ್ತೀರಿ? ಆತ ಸುಮ್ಮನೆ ಬಾಯಿಮುಚ್ಚಿ ಕುಳಿತಿರುತ್ತಾನೆ.”
ಒಬ್ಬ ಹಿಂದೂಸ್ತಾನಿ ಭಿಕ್ಷುಕ ಕೊಠಡಿಯನ್ನು ಪ್ರವೇಶಿಸಿದ. ಆತನಿಗೆ ಹಾಡಲು ಇಚ್ಛೆ. ಭಕ್ತರು ಆತನ ಒಂದೆರಡು ಹಾಡುಗಳನ್ನು ಆಲಿಸಿದರು. ನರೇಂದ್ರನಿಗೆ ಆತನ ಹಾಡುಗಳು ಬಹಳವಾಗಿ ಹಿಡಿಸಿದುವು, ಅದಕ್ಕಾಗಿ ಆತ ಆ ಭಿಕ್ಷುಕನಿಗೆ ಹೇಳಿದ, ಇನ್ನೂ ಒಂದೆರಡು ಹಾಡುಗಳನ್ನು ಹಾಡು ಅಂತ.
ಶ್ರೀರಾಮಕೃಷ್ಣರು: ‘ ‘ಬೇಡ! ಬೇಡ! ಇನ್ನು ಹಾಡುವುದು ಬೇಡ. ದುಡ್ಡೆಲ್ಲಿದೆ? (ನರೇಂದ್ರನಿಗೆ) ನೀನೇನೋ ಹಾಡಿಸಿಬಿಡಬಹುದು. ಆದರೆ ದುಡ್ಡು ಕೊಡುವವರು ಯಾರು?”
ಒಬ್ಬ ಭಕ್ತ (ನಗುತ್ತ): ‘ ‘ನೀವು ಆ ದೊಡ್ಡ ಒರಗುದಿಂಬನ್ನು ಒರಗಿಕೊಂಡಿರುವ ಠೀವಿಯನ್ನು ನೋಡಿ, ಆ ಭಿಕ್ಷುಕ ನಿಮ್ಮನ್ನು ಒಬ್ಬ ಅಮೀರನೆಂದೇ ಭಾವಿಸಬಹುದು.” (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು (ನಗುತ್ತ): ‘ ‘ಕಾಯಿಲೆಯಾಗಿರಬೇಕೆಂತಲೂ ಭಾವಿಸಬಹುದು.”
ಹಾಜರಾನ ಅಹಂಕಾರದ ಸಂಬಂಧವಾಗಿ ಮಾತು ಆರಂಭವಾಯಿತು. ಆತ ಯಾವುದೋ ಕಾರಣದಿಂದ ದಕ್ಷಿಣೇಶ್ವರವನ್ನು ಬಿಟ್ಟುಬಿಡಬೇಕಾಗಿ ಬಂದು, ಆಗಲೇ ಹೊರಟುಹೋಗಿದ್ದಾನೆ.
ನರೇಂದ್ರ: ‘ ‘ಹಾಜರಾ ಈಗ ಒಪ್ಪಿಕೊಳ್ಳುತ್ತಿದ್ದಾನೆ, ತಾನು ಹಿಂದೆ ಅಹಂಕಾರಿಯಾಗಿದ್ದೆ” ಅಂತ.
ಶ್ರೀರಾಮಕೃಷ್ಣರು: ‘ ‘ಆತನನ್ನು ನಂಬಬೇಡ. ಮತ್ತೆ ದಕ್ಷಿಣೇಶ್ವರಕ್ಕೆ ಹಿಂದಿರುಗಿ ಬರಲು ಆತ ಹಾಗೆ ಹೇಳುತ್ತಿದ್ದಾನೆ. (ಭಕ್ತರಿಗೆ) ನರೇಂದ್ರ ಯಾವಾಗ ನೋಡಿದರೂ ಹೇಳುತ್ತಿದ್ದಾನೆ ಆತ ಬಹಳ ಒಳ್ಳೆಯವ ಅಂತ.”
ನರೇಂದ್ರ: ‘ ‘ಈಗಲೂ ನಾನು ಹಾಗೆಯೇ ಹೇಳುತ್ತೇನೆ.”
ಶ್ರೀರಾಮಕೃಷ್ಣರು: ‘ ‘ಏಕೆ? ಆತನ ಸಂಬಂಧವಾಗಿ ಇಷ್ಟೊಂದು ಕೇಳಿಯೂ?”
ನರೇಂದ್ರ: ‘ ‘ಆತನಲ್ಲಿ ದೋಷಗಳು ಎಲ್ಲೋ ಅಲ್ಪ, ಆದರೆ ಸುಗುಣಗಳು ಅನೇಕ.”
ಶ್ರೀರಾಮಕೃಷ್ಣರು: ‘ ‘ಆತ ನಿಷ್ಠಾವಂತನೆಂಬುದನ್ನೇನೋ ನಾನು ಒಪ್ಪಿಕೊಳ್ಳುತ್ತೇನೆ. ಒಮ್ಮೆ ಆತ ನನಗೆ ಹೇಳಿದ, ‘ಈಗೇನೋ ನಿಮಗೆ ನನ್ನನ್ನು ಕಂಡರೆ ಆಗುತ್ತಿಲ್ಲ, ಆದರೆ ಮುಂದೆ ನೀವು ನನ್ನ ಸಹಾಯವನ್ನು ಕೋರಬೇಕಾಗಿ ಬರುತ್ತದೆ.’ ಅಂತ. ಅದ್ವೈತ ಗೋಸ್ವಾಮಿಯ ವಂಶಜರಲ್ಲೊಬ್ಬ ಶ್ರೀರಾಮಪುರದಿಂದ ದಕ್ಷಿಣೇಶ್ವರಕ್ಕೆ ಬಂದಿದ್ದ. ಆತನಿಗೆ ಇಚ್ಛೆ ಇತ್ತು ಅಲ್ಲಿ ಒಂದೆರಡು ದಿನಗಳನ್ನು ಕಳೆಯಬೇಕೆಂದು. ನಾನು ಸಂತೋಷದಿಂದ ಇರಲು ಹೇಳಿದೆ. ಆಗ ಹಾಜರಾ ನನಗೆ ಕೊಟ್ಟ ಸಲಹೆ ಏನು ಗೊತ್ತೆ? ಆತ ಹೇಳಿದ, ‘ಆತನನ್ನು ಖಜಾಂಚಿಯ ಹತ್ತಿರಕ್ಕೆ ಕಳುಹಿಸಿಬಿಡಿ’ ಅಂತ. ಆತನ ಮನಸ್ಸಿನಲ್ಲಿದ್ದುದೇನೆಂದರೆ, ಗೋಸ್ವಾಮಿ ಹಾಲು ಬೇಕು ಅಂತ ಕೇಳಿದರೆ, ಆಗ ತನಗೆ ಬರುವ ಪಾಲು ಕಡಿಮೆಯಾಗಿಬಿಡುತ್ತದೆಯಲ್ಲ ಅಂತ ಸಂಕಟ. ಆಗ ನಾನು ಹೇಳಿದೆ, ‘ಎಲೋ ನೀಚ! ಆತ ಅದ್ವೈತ ಗೋಸ್ವಾಮಿಯ ವಂಶಿಕನಾಗಿರುವುದರಿಂದ ನಾನೂ ಆತನಿಗೆ ಪ್ರಣಾಮ ಮಾಡಲು ಸಿದ್ಧನಾಗಿದ್ದೇನೆ. ನೀನು ಸಂಸಾರಿಯಾಗಿದ್ದು ಕಾಮಕಾಂಚನರಾಜ್ಯದಲ್ಲಿ ಬಹಳವಾಗಿ ವಿಹರಿಸಿದ ಬಳಿಕವೂ, ಈಗ ಎಲ್ಲೋ ಒಂದು ಕಿಂಚಿತ್ ಜಪಮಾಡುತ್ತಿರುವುದರ ದೆಸೆಯಿಂದ ಇಷ್ಟು ದುರಹಂಕಾರಿಯಾಗುವುದೆ! ಏನು ನಿನಗೆ ನಾಚಿಕೆಯಾಗುವುದಿಲ್ಲವೆ?’ ಅಂತ.
‘ ‘ಸತ್ತ್ವಗುಣ ಭಗವಂತನ ಸಾಕ್ಷಾತ್ಕಾರವನ್ನು ದೊರಕಿಸಿಕೊಡುತ್ತದೆ. ಆದರೆ ರಜಸ್ಸು ಮತ್ತು ತಮಸ್ಸು ಮನುಷ್ಯನನ್ನು ಭಗವದ್ವಿಮುಖನನ್ನಾಗಿ ಮಾಡಿಬಿಡುತ್ತದೆ. ಶಾಸ್ತ್ರಗಳು ಸತ್ತ್ವಗುಣವನ್ನು ಬಿಳಿಯ ಬಣ್ಣಕ್ಕೂ, ರಜೋಗುಣವನ್ನು ಕೆಂಪು ಬಣ್ಣಕ್ಕೂ, ತಮೋಗುಣವನ್ನು ಕಪ್ಪು ಬಣ್ಣಕ್ಕೂ ಹೋಲಿಸಿವೆ. ಒಂದು ದಿನ ನಾನು ಹಾಜರಾನನ್ನು ಕೇಳಿದೆ, ‘ಇಲ್ಲಿಗೆ ಬರುತ್ತಿರುವ ಜನರಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಮಟ್ಟಿನ ಸತ್ತ್ವಗುಣ ಉಂಟಾಗಿದೆ ಹೇಳು ನೋಡೋಣ?’ ಅಂತ. ಆತ ಹೇಳಿದ, ‘ನರೇಂದ್ರನಿಗೆ ಶೇಕಡ ನೂರರಷ್ಟು, ನನಗೆ ನೂರಹತ್ತರಷ್ಟು’ ಅಂತ. ಮತ್ತೆ ಕೇಳಿದೆ, ‘ನನಗೆ?’ ಅಂತ. ಆಗ ಆತ ಹೇಳಿದ, ‘ನಿಮ್ಮಲ್ಲಿ ಇನ್ನೂ ಸ್ವಲ್ಪ ಕೆಂಪು ಇದೆ. ನಿಮಗೆ ಶೇಕಡ ಎಪ್ಪತ್ತೈದರಷ್ಟು’ ಅಂತ. (ಎಲ್ಲರೂ ನಗುತ್ತಾರೆ.)
‘ ‘ಹಾಜರಾ ದಕ್ಷಿಣೇಶ್ವರದಲ್ಲಿ ಕುಳಿತು ಜಪಮಾಡುತ್ತಿದ್ದ. ಮಾಲೆ ತಿರುಗಿಸುತ್ತಲೆ ದಳ್ಳಾಳಿ ಕೆಲಸವನ್ನೂ ಮಾಡುತ್ತಿದ್ದ. ಆತನಿಗೆ ಕೆಲವು ಸಾವಿರ ರೂಪಾಯಿಗಳ ಸಾಲವಿದೆ, ಅದನ್ನು ಆತ ಹೇಗೊ ಮಾಡಿ ತೀರಿಸಬೇಕಾಗಿದೆ. ಕಾಳೀದೇವಾಲಯದ ಬ್ರಾಹ್ಮಣರ ಅಡುಗೆಯವರ ಸಂಬಂಧವಾಗಿ ಆತ ಹೇಳುತ್ತಿದ್ದ, ‘ಈ ವಿಧದ ಜನರೊಡನೆ ನಾವು ಮಾತುಕತೆಯಾಡುವುದೆ?’ ಅಂತ.
‘ ‘ಸತ್ಯವೇನೆಂದರೆ, ಕಾಮನೆ ಒಂದು ಕಿಂಚಿತ್ತು ಇದ್ದರೂ ಭಗವಂತನನ್ನು ಪಡೆಯಲು ಆಗುವುದಿಲ್ಲ. ಧಾರ್ಮಿಕ ಗತಿ ಸೂಕ್ಷ್ಮವಾದದ್ದು. ದಾರವನ್ನು ಸೂಜಿಗೆ ಪೋಣಿಸುವಾಗ, ದಾರದ ಮೊನೆಗೆ ಕೇವಲ ಒಂದೆರಡು ಎಳೆ ಅಂಟಿಕೊಂಡಿದ್ದರೂ ಅದನ್ನು ಸೂಜಿಗೆ ಪೋಣಿಸಲಾಗುವುದಿಲ್ಲ.
‘ ‘ಒಮ್ಮೊಮ್ಮೆ ಮೂವತ್ತು ವರ್ಷಗಳ ಕಾಲ ಜಪತಪ ಮಾಡಿಯೂ ಯಾವ ಉನ್ನತಿ ಯನ್ನೂ ಹೊಂದದವರಿದ್ದಾರೆ. ಇದಕ್ಕೆ ಕಾರಣ? ಏಡಿಹುಣ್ಣಿಗೆ ಉಗ್ರಚಿಕಿತ್ಸೆ ಮಾಡ ಬೇಕಾಗುತ್ತದೆ. ಸಾಮಾನ್ಯ ಔಷಧಕ್ಕೆ ಅದು ಬಗ್ಗದು.
‘ ‘ಹೃದಯದಲ್ಲಿ ಕಾಮನೆ ಇತ್ತು ಎಂದರೆ, ಎಷ್ಟೇ ಸಾಧನೆ ಮಾಡಿದರೂ ಭಗವಂತನ ಸಾಕ್ಷಾತ್ಕಾರ ಖಂಡಿತ ದೊರೆಯದು. ಆದರೆ ಒಂದು ವಿಷಯ, ಆತನ ಕೃಪೆಯೊಂದು ದೊರೆತುಬಿಟ್ಟಿದ್ದೇ ಆದರೆ, ಆತ ಮಾತ್ರ ಕರುಣಿಸುವುದೇ ಆದರೆ, ಈ ಕ್ಷಣವೇ ಆತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ಉದಾಹರಣೆಗೆ, ಸಹಸ್ರಾರು ವರ್ಷಗಳಿಂದ ಕತ್ತಲೆಯಾಗಿದ್ದ ಕೊಠಡಿಗೆ, ಹಠಾತ್ತಾಗಿ ಯಾರಾದರೂ ದೀಪ ತಂದರು ಅಂದರೆ, ಅದು ಒಡನೆಯೇ ಬೆಳಕಾಗಿಬಿಡುತ್ತದೆ.
‘ ‘ಒಂದು ಪಕ್ಷ ಒಬ್ಬ ಹುಡುಗನ ಮೇಲೆ ಶ್ರೀಮಂತನೊಬ್ಬನ ಕಣ್ಣು ಬಿದ್ದು, ಆತ ಆ ಹುಡುಗನಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಿದ ಅಂತ ಇಟ್ಟುಕೊಳ್ಳಿ. ಒಡನೆಯೆ ಆ ಹುಡುಗನಿಗೆ ಎತ್ತುಗಾಡಿ, ದಾಸ ದಾಸಿ, ಬಟ್ಟೆಬರೆ, ಮನೆಮಠ ಎಲ್ಲ ದೊರೆತು ಬಿಡುತ್ತವೆ.”
ಒಬ್ಬ ಭಕ್ತ: ‘ ‘ಮಹಾಶಯರೆ, ಭಗವಂತನ ಕೃಪೆಯನ್ನು ದೊರಕಿಸಿಕೊಳ್ಳುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: ‘ ‘ಭಗವಂತನದು ಬಾಲಕನ ಸ್ವಭಾವ. ಉದಾಹರಣೆಗೆ, ಒಬ್ಬ ಬಾಲಕ ತನ್ನ ಷರಟಿನ ಮಡಲಿನಲ್ಲಿ ರತ್ನಗಳನ್ನು ಹಾಕಿಕೊಂಡು ಕುಳಿತಿದ್ದಾನೆ ಅಂತ ಇಟ್ಟು ಕೊಳ್ಳಿ. ಆತನ ಪಕ್ಕದಲ್ಲಿ ಹೋದವರಲ್ಲನೇಕರು ಅವುಗಳಿಗಾಗಿ ಆತನನ್ನು ಬೇಡಬಹುದು. ಆದರೆ ಆ ಬಾಲಕ ಅದನ್ನು ಬಟ್ಟೆಯಿಂದ ಮುಚ್ಚಿ, ಮುಖವನ್ನು ಬೇರೆ ಕಡೆಗೆ ತಿರುಗಿಸಿ ಹೇಳುತ್ತಾನೆ, ‘ಇಲ್ಲ, ನಾನು ಒಂದನ್ನೂ ಕೊಡುವುದಿಲ್ಲ’ ಅಂತ. ಆದರೆ ಇನ್ನೊಬ್ಬ ಅದೇ ಮಾರ್ಗವಾಗಿ ಬಂದು ರತ್ನಗಳನ್ನು ಯಾಚಿಸದೆ ಸುಮ್ಮನೆ ನೇರವಾಗಿ ಹೊರಟುಹೋಗುತ್ತಿರ ಬಹುದು. ಬಾಲಕ ಆತನ ಹಿಂದೆ ಓಡಿಹೋಗಿ ಬಲಾತ್ಕರಿಸಿ ಆತನಿಗೆ ಅವನ್ನು ಕೊಟ್ಟು ಬಿಡುತ್ತಾನೆ.
‘ ‘ತ್ಯಾಗಮಾಡದ ಹೊರತು ಭಗವಂತನನ್ನು ಪಡೆಯುವುದಕ್ಕೆ ಆಗುವುದಿಲ್ಲ. ನನ್ನ ಮಾತಿಗೆ ಕಿವಿಗೊಡುವವರು ಯಾರು? ನನ್ನ ಭಾವಕ್ಕನುಗುಣನಾದ ಒಬ್ಬ ಜೊತೆಗಾರನಿಗಾಗಿ ನಾನು ಹುಡುಕುತ್ತಿದ್ದೇನೆ. ಒಳ್ಳೆ ಭಕ್ತನನ್ನು ನೋಡಿ ಬಹುಶಃ ಈತ ನನ್ನ ಭಾವಕ್ಕನುಗುಣನಾದವನಾಗಬಹುದು ಎಂದು ಭಾವಿಸುತ್ತೇನೆ. ಆಮೇಲೆ ನೋಡಿದರೆ ಅವನು ಬೇರೆ ರೀತಿಯವನಾಗಿರುತ್ತಾನೆ.
‘ ‘ಒಂದು ಭೂತ ಒಬ್ಬ ಜೊತೆಗಾರನಿಗಾಗಿ ಹುಡುಕುತ್ತಿತ್ತು. ಶನಿವಾರ, ಮಂಗಳವಾರ ಅಪಮೃತ್ಯುವನ್ನು ಹೊಂದಿದವರು ಭೂತವಾಗುತ್ತಾರೆ. ಈ ಎರಡು ವಾರ ಯಾರಾದರೂ ಅಪಘಾತಕ್ಕೆ ಈಡಾದರು ಎಂದರೆ, ಒಡನೆಯೇ ಈ ಭೂತ ತನಗೊಬ್ಬ ಸಂಗಾತಿ ದೊರೆಯಬಹುದೆಂದು ಅವರ ಹತ್ತಿರ ಓಡಿಹೋಗುತ್ತಿತ್ತು. ಆದರೆ ಅದು ಅವರ ಹತ್ತಿರ ಹೋಗುವುದೇ ತಡ, ಅವರು ಬದುಕಿ ಏಳುತ್ತಿದ್ದರು. ಅವರು ಒಂದು ಪಕ್ಷ ಮೇಲ್ಚಾವಣಿಯ ಮೇಲಿಂದ ಬಿದ್ದು ಮೂರ್ಛಿತರಾಗಿದ್ದರೂ ಮತ್ತೆ ಬದುಕಿ ಎದ್ದು ಬಿಡುತ್ತಿದ್ದರು.
‘ ‘ಮಥುರಬಾಬುವಿಗೆ ಒಮ್ಮೆ ಭಾವಾವಸ್ಥೆ ಬಂದಿತ್ತು, ಆಗ ಯಾವಾಗ ನೋಡಿದರೂ ಉನ್ಮತ್ತನಂತೆ ವರ್ತಿಸುತ್ತಿದ್ದ; ಯಾವ ಕೆಲಸ ಕಾರ್ಯಗಳ ಕಡೆಗೂ ಮನಸ್ಸು ಕೊಡಲಾಗುತ್ತಿರ ಲಿಲ್ಲ. ಇದನ್ನು ನೋಡಿ ಜನ ಹೇಳಲಾರಂಭಿಸಿದರು, ‘ಈತನ ಗತಿ ಹೇಗಾಗಿಬಿಟ್ಟಿತು ಅಂದರೆ! ಈತನ ಭೂಮಿಕಾಣಿಕೆಗಳನ್ನು ನೋಡಿಕೊಳ್ಳುವವರು ಯಾರು? ಆಚಿಕ್ಕ ಪೂಜಾರಿ (ಶ್ರೀರಾಮಕೃಷ್ಣರು) ನಿಶ್ಚಯವಾಗಿಯೂ ಏನೋ ಮಂತ್ರಹಾಕಿರಬೇಕು’ ಅಂತ.
‘ ‘ನರೇಂದ್ರ ಮೊದಲು ಮೊದಲು ಇಲ್ಲಿಗೆ ಬರುತ್ತಿದ್ದಾಗ, ಒಂದು ದಿನ ನಾನು ಆತನ ಎದೆಯನ್ನು ಮುಟ್ಟಿದೊಡನೆಯೆ ಬಾಹ್ಯಜ್ಞಾನಶೂನ್ಯನಾಗಿಬಿಟ್ಟ. ಪ್ರಜ್ಞೆ ಬಂದ ನಂತರ ಅಳುತ್ತ ‘ಅಯ್ಯೋ! ನನಗೇಕೆ ನೀವು ಹಾಗೆ ಮಾಡಿಬಿಟ್ಟಿರಿ? ನನಗೆ ತಂದೆ ಇದ್ದಾನೆ! ತಾಯಿ ಇದ್ದಾಳೆ!’ ಅಂತ ಹೇಳಲಾರಂಭಿಸಿದ. ‘ಅಹಂಕಾರ’, ‘ಮಮಕಾರ’ ಅಜ್ಞಾನಜನ್ಯ.
‘ ‘ಒಬ್ಬ ಗುರು ತನ್ನ ಶಿಷ್ಯನಿಗೆ ಹೇಳಿದ, ‘ಸಂಸಾರ ಎಂಬುದು ಮಿಥ್ಯಾ. ನೀನು ನನ್ನೊಡನೆ ಬಂದುಬಿಡು’ ಅಂತ. ಶಿಷ್ಯ ಹೇಳಿದ, ‘ಪೂಜ್ಯರೆ, ನನ್ನ ತಂದೆ ತಾಯಿ, ಹೆಂಡತಿ ಇವರೆಲ್ಲ ನನ್ನನ್ನು ಬಹಳವಾಗಿ ಪ್ರೀತಿಸುತ್ತಿದ್ದಾರೆ, ಇವರನ್ನು ತ್ಯಜಿಸಿಬಿಟ್ಟು ನಾನು ಹೇಗೆ ಬರಲಿ’ ಅಂತ. ಗುರು ಹೇಳಿದ, ‘ಈಗ ನೀನು ‘ ‘ನಾನು”, ‘ ‘ನನ್ನದು” ಅಂತಲೇನೊ ಹೇಳುತ್ತಿದ್ದೀಯೆ ಮತ್ತು ಭಾವಿಸುತ್ತಿದ್ದೀಯೆ, ಅವರು ನಿನ್ನನ್ನು ಬಹಳವಾಗಿ ಪ್ರೀತಿಸುತ್ತಾರೆ ಅಂತ; ಆದರೆ ಇದೆಲ್ಲ ಕೇವಲ ನಿನ್ನ ಮಾನಸಿಕ ಭ್ರಾಂತಿ ಮಾತ್ರ. ನಾನು ನಿನಗೊಂದು ಯುಕ್ತಿ ಹೇಳಿಕೊಡುತ್ತೇನೆ. ಅದರಿಂದ ನಿನಗೆ ಗೊತ್ತಾಗುತ್ತದೆ ಅವರು ನಿನ್ನನ್ನು ನಿಜವಾಗಿ ಪ್ರೀತಿಸುತ್ತಾರೊ ಇಲ್ಲವೊ ಎಂಬುದು’ ಅಂತ. ಹೀಗೆಂದು ತಿಳಿಸಿ ಒಂದು ಔಷಧದ ಗುಳಿಗೆಯನ್ನು ಆತನ ಕೈಯಲ್ಲಿಟ್ಟು ಹೇಳಿದ, ‘ನೀನು ಮನೆಗೆ ಹೋಗಿ ಇದನ್ನು ನುಂಗಿ ಮಲಗಿಕೊ. ನೋಡುವುದಕ್ಕೆ ಸತ್ತವನ ಹಾಗೆ ಕಂಡುಬರುತ್ತೀಯೆ, ಆದರೆ ನಿನಗೆ ಪ್ರಜ್ಞೆ ಮಾತ್ರ ತಪ್ಪಿಹೋಗೋದಿಲ್ಲ. ನೀನು ಎಲ್ಲವನ್ನೂ ಕೇಳಬಲ್ಲೆ. ಆ ಬಳಿಕ ನಿನ್ನ ಮನೆಗೆ ನಾನು ಬರುತ್ತೇನೆ, ಕ್ರಮಕ್ರಮೇಣ ನೀನು ನಿನ್ನ ಪೂರ್ಣಾವಸ್ಥೆಗೆ ಬಂದುಬಿಡುತ್ತೀಯೆ’ ಅಂತ.
‘ ‘ಗುರು ಹೇಳಿದ ಹಾಗೆಯೆ ಶಿಷ್ಯ ನಡೆದುಕೊಂಡ. ಆತನ ಮನೆಯಲ್ಲೆಲ್ಲಾ ಗೊಳೋ ಎಂಬ ಶಬ್ದವೇ. ಆತನ ತಾಯಿ, ಹೆಂಡತಿ ಎಲ್ಲರೂ ನೆಲದ ಮೇಲೆ ಬಿದ್ದು ಹೊರಳಾಡುತ್ತಾ ಅಳುತ್ತಿದ್ದಾರೆ. ಆ ಸಮಯಕ್ಕೆ ಸರಿಯಾಗಿ ಒಬ್ಬ ಬ್ರಾಹ್ಮಣ ಆ ಮನೆಗೆ ಬಂದು ಕೇಳಿದ, ‘ಏನು ಸಮಾಚಾರ?’ ಅಂತ. ಅಲ್ಲಿದ್ದವರೆಲ್ಲಾ ಹೇಳಿದರು, ‘ಈ ಯುವಕ ಸತ್ತುಹೋಗಿ ಬಿಟ್ಟಿದ್ದಾನೆ’ ಅಂತ. ಆ ಬ್ರಾಹ್ಮಣ ಆ ಯುವಕನ ನಾಡಿ ನೋಡಿ ಹೇಳಿದ, ‘ನೀವು ಏನು ಹೇಳುತ್ತಿರುವುದು? ಈತ ಸತ್ತಿಲ್ಲ. ನಾನು ಒಂದು ಔಷಧ ಕೊಡುತ್ತೇನೆ. ಅದನ್ನು ತಿಂದೊಡನೆಯೆ ಈತನಿಗೆ ಪೂರ್ಣ ಗುಣವಾಗಿಬಿಡುತ್ತದೆ’ ಅಂತ. ಆಗ ಮನೆಯವರಿಗೆಲ್ಲಾ ಸ್ವರ್ಗವೇ ಕೈಗೆ ಸಿಲುಕಿದಂತಾಯಿತು. ಆ ಬ್ರಾಹ್ಮಣ ಅವರಿಗೆ ಮತ್ತೆ ಹೇಳಿದ, ‘ಆದರೆ ಒಂದು ವಿಷಯ, ಮೊದಲು ನಿಮ್ಮಲ್ಲಿ ಯಾರಾದರೂ ಆ ಔಷಧದ ಸ್ವಲ್ಪ ಭಾಗವನ್ನು ತಿಂದು, ಉಳಿದುದನ್ನು ಈತನಿಗೆ ಕೊಡಬೇಕು. ಆದರೆ ಯಾರು ಅದರ ಅಗ್ರಭಾಗವನ್ನು ತಿನ್ನುತ್ತಾರೊ ಅವರು ಮಾತ್ರ ಸತ್ತುಹೋಗಿಬಿಡುತ್ತಾರೆ. ಇಲ್ಲಿ ಈತನ ಅನೇಕ ಆಪ್ತಬಂಧುಗಳಿರುವುದು ನನ್ನ ಕಣ್ಣಿಗೆ ಬೀಳುತ್ತಿದೆ; ಒಬ್ಬರಲ್ಲ ಒಬ್ಬರು ಮುಂದೆ ಬಂದು ಅದರ ಭಾಗವನ್ನು ತಿಂದೇಬಿಡುವಿರಿ ಎಂದು ಭಾವಿಸುತ್ತೇನೆ. ಈ ಹುಡುಗನ ಹೆಂಡತಿ ಮತ್ತು ತಾಯಿ ಬಹಳವಾಗಿ ಅಳುತ್ತಿದ್ದಾರೆ. ಇವರಿಗೆ ಅದನ್ನು ತಿನ್ನಲು ಖಂಡಿತ ಸಾಧ್ಯ ಎಂಬುದಾಗಿ ಕಾಣುತ್ತಿದೆ’ ಅಂತ.
‘ ‘ಒಡನೆಯೆ ಎಲ್ಲರೂ ಅಳುವುದನ್ನು ಬಿಟ್ಟು ಸುಮ್ಮನೆ ಕುಳಿತುಕೊಂಡರು. ತಾಯಿ ಆ ಬ್ರಾಹ್ಮಣನಿಗೆ ಹೇಳಿದಳು, ‘ನಮ್ಮದು ಒಂದು ದೊಡ್ಡ ಕುಟುಂಬ; ನಾನು ಸತ್ತೆನೆಂದರೆ ಅದನ್ನು ನೋಡಿಕೊಳ್ಳುವವರು ಯಾರು?’ ಅಂತ. ಬಳಿಕ ಚಿಂತಾಕ್ರಾಂತಳಾಗಿ ಯೋಚಿಸಲಾರಂಭಿಸಿದಳು. ಆತನ ಹೆಂಡತಿ ಈಗೊಂದು ನಿಮಿಷದ ಹಿಂದೆ ಅಳುತ್ತ ಹೇಳುತ್ತಿದ್ದಳು, ‘ಅಯ್ಯೋ! ನನ್ನ ಹಣೆಯಲ್ಲಿ ಏನು ಬರೆದು ಕಳುಹಿಸಿದನಪ್ಪ ಬ್ರಹ್ಮ!’ ಅಂತ. ಆಕೆ ಹೇಳಿದಳು, ‘ಅವರೇನೋ ಮರ್ತ್ಯನ ದಾರಿ ಹಿಡಿದುಬಿಟ್ಟರು. ನನಗೆ ಈ ಎರಡು ಮೂರು ಎಳೆ ಗಂಡು ಹೆಣ್ಣು ಮಕ್ಕಳಿವೆ. ನಾನು ಸತ್ತು ಹೋಗಿಬಿಟ್ಟರೆ ಇವರನ್ನು ನೋಡಿಕೊಳ್ಳುವವರು ಯಾರು?’ ಅಂತ.
‘ ‘ಶಿಷ್ಯ ನಡೆದುದನ್ನೆಲ್ಲ ಕಣ್ಣಾರೆ ನೋಡಿದ, ಕಿವಿಯಾರೆ ಕೇಳಿದ. ಆತ ಥಟ್ಟನೆ ಹಾಸಿಗೆಯಿಂದ ಎದ್ದು ಗುರುವಿಗೆ ಹೇಳಿದ, ‘ಪೂಜ್ಯರೆ, ಬನ್ನಿ ಹೊರಡೋಣ. ನಾನು ನಿಮ್ಮನ್ನು ಹಿಂಬಾಲಿಸುತ್ತೇನೆ’ ಅಂತ. (ಎಲ್ಲರೂ ನಗುತ್ತಿದ್ದಾರೆ.)
‘ ‘ಇನ್ನೊಬ್ಬ ಶಿಷ್ಯ ತನ್ನ ಗುರುವಿಗೆ ಹೇಳಿದ, ‘ನನ್ನ ಹೆಂಡತಿ ನನ್ನನ್ನು ಬಹಳವಾಗಿ ಆದರಿಸಿ ಪ್ರೀತಿಸುತ್ತಿದ್ದಾಳೆ. ಆಕೆಗಾಗಿ ನಾನು ಈ ಸಂಸಾರವನ್ನು ತ್ಯಜಿಸಲಾಗುತ್ತಿಲ್ಲ’ ಅಂತ. ಶಿಷ್ಯ ಹಠಯೋಗಾಭ್ಯಾಸ ಮಾಡುತ್ತಿದ್ದ. ಗುರು ಆತನಿಗೂ ತನ್ನ ಹೆಂಡತಿಯ ಪ್ರೇಮ ಎಂಥದು ಎಂಬುದನ್ನು ಅರಿತುಕೊಳ್ಳಲು ಒಂದು ಉಪಾಯವನ್ನು ಹೇಳಿಕೊಟ್ಟ. ಒಂದು ದಿನ ಆ ಶಿಷ್ಯನ ಮನೆಯಲ್ಲಿಯೂ ಒಂದು ದೊಡ್ಡ ಗೋಳಾಟ. ನೆರೆಹೊರೆಯವರೆಲ್ಲಾ ಅಲ್ಲಿಗೆ ಬಂದು ನೋಡುತ್ತಾರೆ, ಆ ಹಠಯೋಗಿ ಯಾವುದೊ ಒಂದು ಆಸನದಲ್ಲಿ ಕುಳಿತಿದ್ದಾನೆ; ಆತನ ಅಂಗಾಂಗಗಳೆಲ್ಲ ವಕ್ರವಕ್ರವಾಗಿ ತಿರುಗಿ ನಿಸ್ಸತ್ವಗೊಂಡಿವೆ. ಅವರು ಭಾವಿಸಿದರು ಆತನ ಪ್ರಾಣಪಕ್ಷಿ ಹಾರಿ ಹೊರಟುಹೋಗಿಬಿಟ್ಟಿದೆ ಅಂತ. ಆತನ ಹೆಂಡತಿ ಆರ್ತನಾದವನ್ನು ಮಾಡುತ್ತ ನೆಲದ ಮೇಲೆ ಬಿದ್ದು ಹೊರಳಾಡುತ್ತಾ ಅಳುತ್ತಿದ್ದಾಳೆ, ‘ಅಯ್ಯೋ ದೈವವೇ! ನನ್ನ ಹಣೆಯಲ್ಲಿ ಏನು ಬರೆದೆ! ಮುಂದಿನ ಗತಿಯೇನು? ಗೆಳತಿಯರಾ, ನನ್ನ ಹಣೆಯಲ್ಲಿ ಹೀಗೆ ಬರೆದಿದೆ ಎಂಬುದನ್ನು ನಾನು ಸ್ವಪ್ನದಲ್ಲಿಯೂ ಕಾಣಲಿಲ್ಲವಲ್ಲ. ಅಯ್ಯೋ!’ ಅಂತ.
‘ ‘ಇಷ್ಟರಲ್ಲಿ ಆತನ ಬಂಧುಗಳು ಚಟ್ಟ ತಯಾರಿಸಿ ಆತನ ಶವವನ್ನು ಮನೆಯಿಂದ ಹೊರಕ್ಕೆ ತೆಗೆಯುವ ಪ್ರಯತ್ನದಲ್ಲಿದ್ದಾರೆ. ಅದನ್ನು ಬಾಗಿಲ ಹತ್ತಿರಕ್ಕೆ ತಂದಾಗ ಒಂದು ಸಮಸ್ಯೆ ಏಳುತ್ತದೆ. ಶವದ ಕೈಕಾಲುಗಳು ವಕ್ರವಕ್ರವಾಗಿ ತಿರುಗಿಕೊಂಡು ಸೆಟೆದುಕೊಂಡಿರುವುದರಿಂದ ಶವ ಬಾಗಿಲನ್ನು ಬಿಟ್ಟು ಹೊರಕ್ಕೆ ಬರುತ್ತಿಲ್ಲ. ಆಗ ನೆರೆಮನೆಯವ ಓಡಿಹೋಗಿ ಒಂದು ಕೊಡಲಿ ತಂದು ನಿಲುವನ್ನು ಕತ್ತರಿಸಲಾರಂಭಿಸಿದ. ಇದುವರೆಗೆ ಬಹಳವಾಗಿ ಅಳುತ್ತಿದ್ದ ಆತನ ಹೆಂಡತಿ ಕೊಡಲಿಯ ‘ಧಪ್ ಧಪ್’ ಎಂಬ ಶಬ್ದವನ್ನು ಕೇಳಿದೊಡನೆಯೆ ಬಾಗಿಲ ಹತ್ತಿರಕ್ಕೆ ಓಡಿಬಂದು ಇನ್ನೂ ಅಳುತ್ತಲೆ ಕೇಳಿದಳು, ‘ಏನು ಸಮಾಚಾರ? ಅಂತ. ಪಕ್ಕದ ಮನೆಯವ ಹೇಳಿದ ‘ಶವ ಹೊರಕ್ಕೆ ಬರುತ್ತಿಲ್ಲ; ಅದಕ್ಕಾಗಿ ನಿಲುವನ್ನು ಕತ್ತರಿಸಿಹಾಕುತ್ತಿದ್ದೇವೆ’ ಅಂತ.
‘ ‘ಆಗ ಆ ಹೆಂಗಸು ಹೇಳಿದಳು, ‘ದಯವಿಟ್ಟು ಹಾಗೇನು ಮಾಡಬೇಡಿ. ಈಗ ನಾನು ವಿಧವೆಯಾಗಿಬಿಟ್ಟಿದ್ದೇನೆ; ನನ್ನ ಯೋಗಕ್ಷೇಮ ನೋಡಿಕೊಳ್ಳುವವರು ಬೇರೆ ಯಾರೂ ಇಲ್ಲ. ಈ ಎಳೆ ಮಕ್ಕಳನ್ನು ಬೆಳೆಸಬೇಕಾಗಿದೆ. ಈ ನಿಲುವನ್ನು ಕತ್ತರಿಸಿಹಾಕಿಬಿಟ್ಟರೆ, ಹೊಸದನ್ನು ಮಾಡಿಸಲು ನನಗೆ ಶಕ್ತಿಯಿಲ್ಲ. ಒಂದಲ್ಲ ಒಂದು ದಿವಸ ಎಲ್ಲರೂ ಸಾಯಲೇಬೇಕು. ನನ್ನ ಪತಿ ಮತ್ತೆ ಜೀವಂತನಾಗುವ ಹಾಗೆ ಇಲ್ಲ. ಕೈಕಾಲುಗಳನ್ನು ಕತ್ತರಿಸಿಯೇ ಹೊರಕ್ಕೆ ತೆಗೆಯಿರಿ’ ಅಂತ. ಅಷ್ಟರಲ್ಲಿ ಆ ಹಠಯೋಗಿ ತೆಗೆದುಕೊಂಡಿದ್ದ ಔಷಧದ ಮತ್ತು ಇಳಿದುಹೋಗಿತ್ತು. ಆತ ಒಡನೆಯೆ ಎದ್ದು ನಿಂತು ತನ್ನ ಸತಿಗೆ ಹೇಳಿದ, ‘ಪಿಶಾಚಿ! ನನ್ನ ಕೈಕಾಲು ಕತ್ತರಿಸಿಹಾಕಲು ಯೋಚಿಸಿದೆಯಲ್ಲವೆ ನೀನು?’ ಹೀಗೆ ಹೇಳಿ ಮನೆಯನ್ನು ತ್ಯಜಿಸಿ ಗುರುವಿನೊಡನೆ ಹೊರಟುಹೋದ. (ಎಲ್ಲರೂ ನಗುತ್ತಾರೆ.)
‘ ‘ಅನೇಕ ಹೆಂಗಸರು ಬಹಳ ಶೋಕಾನ್ವಿತರಾಗಿರುವ ಹಾಗೆ ಸುಮ್ಮನೆ ನಟಿಸುತ್ತಾರೆ. ಇಂಥ ಸಂದರ್ಭಗಳಲ್ಲಿ ನಾವು ಅಳಲೇಬೇಕಾಗಿದೆ ಎಂದು ಮೊದಲೇ ಯೋಚಿಸಿ, ತಮ್ಮ ಮುಕುರ ಮತ್ತು ಉಳಿದ ನಗಗಳನ್ನೆಲ್ಲಾ ಕಳೆದು ಭದ್ರವಾಗಿ ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿ, ಬಳಿಕ ಬಂದು ನೆಲದ ಮೇಲೆ ಬಿದ್ದು ಹೊರಳಾಡುತ್ತಾ ಅಳುತ್ತಾರೆ, ‘ಗೆಳತಿಯಿರಾ, ಬ್ರಹ್ಮ ನನ್ನ ಹಣೆಯಲ್ಲಿ ಏನು ಬರೆದುಬಿಟ್ಟಿದ್ದ ಹಾಳಾದವನು! ಅಯ್ಯೋ, ನನಗೆ ಹೀಗಾಗಿ ಬಿಟ್ಟಿತಲ್ಲ!’ ಅಂತ.”
ನರೇಂದ್ರ: ‘ ‘ಯಾವ ಪ್ರಮಾಣವೂ ಇಲ್ಲದೆ ಭಗವಂತ ಮಾನವ ದೇಹಧಾರಣೆ ಮಾಡಿಕೊಂಡು ಬರುತ್ತಾನೆ ಎಂಬುದರಲ್ಲಿ ವಿಶ್ವಾಸವಿಡುವ ಬಗೆ ಹೇಗೆ?”
ಗಿರೀಶ: ‘ ‘ವಿಶ್ವಾಸವೇ ಯಥೇಷ್ಟ ಪ್ರಮಾಣ. ಈ ವಸ್ತುಗಳು ಇಲ್ಲಿ ಇವೆ ಎಂಬುದಕ್ಕೆ ಇರುವ ಪ್ರಮಾಣವೇನು? ವಿಶ್ವಾಸವೇ ಪ್ರಮಾಣ.”
ಒಬ್ಬ ಭಕ್ತ: ‘ ‘ಈ ಬಹಿರ್ಜಗತ್ತೆಂಬುದು ನಮ್ಮಿಂದ ಹೊರಗೆ ಇದೆ ಎಂಬುದನ್ನು ಯಾವ ದಾರ್ಶನಿಕನೆ ಆಗಲಿ ಪ್ರಮಾಣೀಕರಿಸಿರುವನೇನು? ಆದರೆ ಅದರ ಇರುವಿಕೆಯಲ್ಲಿ ನಮಗೆ ದೃಢವಿಶ್ವಾಸವಿದೆ ಎಂದು ಮಾತ್ರ ಅವರು ಹೇಳಿದ್ದಾರೆ.”
ಗಿರೀಶ (ನರೇಂದ್ರನಿಗೆ): ‘ ‘ಭಗವಂತನೇ ಪ್ರತ್ಯಕ್ಷವಾಗಿ ನಿನ್ನೆದುರು ನಿಂತರೂ ನೀನು ಆತನನ್ನು ನಂಬುವುದಿಲ್ಲ. ಆತನೇ ನಿನಗೆ ಹೇಳಬಹುದು, ತಾನು ಭಗವಂತ, ಮನುಷ್ಯ ದೇಹಧಾರಣೆ ಮಾಡಿಕೊಂಡು ಬಂದಿದ್ದೇನೆ ಅಂತ. ಆದರೂ ನೀನು ಹೇಳಿಬಿಡಬಹುದು, ನೀನು ಒಬ್ಬ ಮಿಥ್ಯಾವಾದಿ, ಕಪಟಿ ಅಂತ.”
ದೇವತೆಗಳ ಅಮರತ್ವದ ಸಂಬಂಧವಾಗಿ ಈಗ ಮಾತುಕತೆ ಆರಂಭವಾಯಿತು.
ನರೇಂದ್ರ: ‘ ‘ಅವರು ಅಮರರು ಎಂಬುದಕ್ಕೆ ಪ್ರಮಾಣವೇನು?”
ಗಿರೀಶ: ‘ ‘ಅವರೇ ನಿನ್ನ ಎದುರಿಗೆ ಬಂದು ನಿಂತರೂ, ನೀನು ಅವರನ್ನು ನಂಬುವುದಿಲ್ಲ.”
ನರೇಂದ್ರ: ‘ ‘ಅಮರರು ಅನಾದಿಕಾಲದಿಂದ ಇದ್ದರು ಎಂಬುದಕ್ಕೆ ನನಗೆ ಪ್ರಮಾಣ ಬೇಕು.”
ಮಾಸ್ಟರ್ ಪಲ್ಟುವಿನ ಕಿವಿಯಲ್ಲಿ ಏನನ್ನೋ ಪಿಸುಗುಟ್ಟುತ್ತಿದ್ದಾನೆ.
ಪಲ್ಟು (ನಗುತ್ತ ನರೇಂದ್ರನಿಗೆ): ‘ ‘ಅವರು ಅನಾದಿಕಾಲದಿಂದ ಇರಬೇಕಾಗಿರುವ ಆವಶ್ಯಕತೆಯೇನಿದೆ? ಅಮರರೆಂದರೆ ಅವರು ಅನಂತಕಾಲದವರೆಗೆ ಇರುವುದೇ ಬೇಕಾಗಿರುವುದು.”
ಶ್ರೀರಾಮಕೃಷ್ಣರು (ನಗುತ್ತ): ‘ ‘ನರೇಂದ್ರ ವಕೀಲನ ಮಗ, ಆದರೆ ಪಲ್ಟು ಡೆಪ್ಯುಟಿ ಮ್ಯಾಜಿಸ್ಟ್ರೇಟನ ಮಗ.” (ಎಲ್ಲರೂ ನಗುತ್ತಾರೆ.)
ಎಲ್ಲರೂ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದರು.
ಯೋಗೀಂದ್ರ (ನಗುತ್ತ ಗಿರೀಶಾದಿ ಭಕ್ತರಿಗೆ): ‘ ‘ಇವರು (ಪರಮಹಂಸರು) ಇನ್ನು ಮುಂದೆ ನರೇಂದ್ರನ ಮಾತುಗಳಿಗೆ ಬೆಲೆ ಕೊಡಲು ಹೋಗರು.”
ಶ್ರೀರಾಮಕೃಷ್ಣರು (ನಗುತ್ತ): ‘ ‘ಒಂದು ದಿನ ನಾನು ಹೇಳಿದ್ದೆ, ಚಾತಕಪಕ್ಷಿ ಆಕಾಶದಿಂದ ಬೀಳುವ ಮಳೆನೀರನ್ನು ವಿನಾ ಬೇರೆ ಏನನ್ನೂ ಕುಡಿಯುವುದಿಲ್ಲ ಅಂತ. ನರೇಂದ್ರ ಹೇಳಿದ, ‘ಅದು ಸಾಮಾನ್ಯ ನೀರನ್ನೂ ಕುಡಿಯುತ್ತದೆ’ ಅಂತ. ಆಗ ಭಗವತಿಯನ್ನು ಕೇಳಿದೆ, ‘ಹಾಗಾದರೆ ಇದು ಸತ್ಯವಲ್ಲವೇನು?’ ಅಂತ. ನರೇಂದ್ರನ ಮಾತು ಕೇಳಿ ನನಗೆ ಬಹಳ ಯೋಚನೆ ಹತ್ತಿಬಿಟ್ಟಿತು. ಇನ್ನೊಂದು ದಿನ ನರೇಂದ್ರ ಅಲ್ಲಿಗೆ ಬಂದಿದ್ದಾಗ, ಕೆಲವು ಹಕ್ಕಿಗಳು ಕೊಠಡಿಯಲ್ಲಿ ಹಾರಾಡುತ್ತಿದ್ದವು. ಆಗ ನರೇಂದ್ರ ಕೂಗಿಕೊಂಡ, ‘ನೋಡಿ, ಅಲ್ಲಿ ಹಾರಾಡುತ್ತಿದೆ. ಅದು! ಅದು!’ ಅಂತ. ನಾನು ಕೇಳಿದೆ ‘ಏನು?’ ಅಂತ. ಆತ ಹೇಳಿದ, ‘ನಿಮ್ಮ ಆ ಚಾತಕಪಕ್ಷಿ!’ ಅಂತ. ನೋಡುತ್ತೇನೆ, ಅವೆಲ್ಲ ತೊಲೆ (ಬಾವಲಿ) ಹಕ್ಕಿಗಳು! ಅಂದಿನಿಂದ ನಾನು ಆತನ ಮಾತಿಗೆ ಬೆಲೆ ಕೊಡುತ್ತಿಲ್ಲ. (ಎಲ್ಲರೂ ನಗುತ್ತಾರೆ.)
‘ ‘ಯದುಮಲ್ಲಿಕನ ತೋಟದಲ್ಲಿ ನರೇಂದ್ರ ನನಗೆ ಹೇಳಿದ, ‘ನೀವು ನೋಡುತ್ತಿರುವ ಭಗವಂತನ ರೂಪಗಳೆಲ್ಲ ನಿಮ್ಮ ಮಾನಸಿಕ ಭ್ರಾಂತಿ ಮಾತ್ರ’ ಅಂತ. ಆಶ್ಚರ್ಯಚಕಿತನಾಗಿ ಆತನಿಗೆ ಹೇಳಿದೆ, ‘ಆದರೆ ಮಾತೂ ಆಡುತ್ತವಲ್ಲ?’ ಅಂತ. ನರೇಂದ್ರ ಹೇಳಿದ, ‘ಹಾಗೆ ಭಾವನೆ ಆಗುತ್ತದೆ’ ಅಂತ. ಆಗ ನಾನು ಭಗವತಿಯನ್ನು ಸಮೀಪಿಸಿ ಅಳುತ್ತ ಆಕೆಗೆ ಹೇಳಿದೆ, ‘ಹೇ ತಾಯೆ, ಏನು ಸಮಾಚಾರ? ಹಾಗಾದರೆ ಇವೆಲ್ಲ ಮಿಥ್ಯವೇ? ನರೇಂದ್ರ ಹಾಗೆ ಹೇಳಿಬಿಟ್ಟನಲ್ಲ?’ ಅಂತ. ಒಡನೆಯೇ ಭಗವತಿ ನನಗೆ ಒಂದು ಅಲೌಕಿಕ ದರ್ಶನ ತೋರಿಸಿದಳು. ನಾನು ಚೈತನ್ಯವನ್ನು–ಅಖಂಡಚೈತನ್ಯವನ್ನು ಮತ್ತು ಆತನಿಂದ ಉದ್ಭವಿಸಿದ ಒಂದು ಚೈತನ್ಯಮಯ ಮೂರ್ತಿಯನ್ನು ಕಂಡೆ. ಬಳಿಕ ಹೇಳಿದಳು, ‘ಅವೆಲ್ಲ ಮಿಥ್ಯವಾಗಿದ್ದರೆ, ನಿಜಸ್ಥಿತಿಯೊಡನೆ ಅವು ತಾಳೆಯಾಗುವುದೆಂತು?’ ಅಂತ. ಬಳಿಕ ನಾನು ನರೇಂದ್ರನಿಗೆ ಹೇಳಿದೆ, ‘ತುಂಟ! ನೀನು ನನ್ನ ಹೃದಯದಲ್ಲಿ ಅವಿಶ್ವಾಸದ ಬೀಜ ಬಿತ್ತಲು ಪ್ರಯತ್ನಿಸಿದೆಯಾ! ನೀನು ಇಲ್ಲಿಗೆ ಮತ್ತೆ ಬರಬೇಡ’ ಅಂತ.”
ಮತ್ತೆ ವಿಚಾರ ಮುಂದುವರಿಯಿತು. ನರೇಂದ್ರ ಚರ್ಚಿಸುತ್ತಿದ್ದಾನೆ. ಈಗ ನರೇಂದ್ರನಿಗೆ ಇಪ್ಪತ್ತೆರಡು ವರ್ಷ ನಾಲ್ಕು ತಿಂಗಳು.
ನರೇಂದ್ರ (ಗಿರೀಶ, ಮಾಸ್ಟರ್ ಮೊದಲಾದವರಿಗೆ): ‘ ‘ನಾನು ಶಾಸ್ತ್ರಗಳಲ್ಲಿ ಹೇಗೆ ತಾನೆ ವಿಶ್ವಾಸವಿಡಲಿ? ಮಹಾನಿರ್ವಾಣ ತಂತ್ರದಲ್ಲಿ ಒಂದು ಕಡೆ ಹೇಳಿದೆ, ಬ್ರಹ್ಮಜ್ಞಾನ ದೊರೆಯದೆ ಇದ್ದರೆ, ನರಕ ಪ್ರಾಪ್ತಿಯಾಗುತ್ತದೆ ಅಂತ. ಅದರಲ್ಲೆ ಇನ್ನೊಂದು ಕಡೆ ಹೇಳಿದೆ, ಪಾರ್ವತಿಯ ಉಪಾಸನೆ ಬಿಟ್ಟರೆ ಮುಕ್ತಿಗೆ ಬೇರೆ ಮಾರ್ಗವೇ ಇಲ್ಲ ಅಂತ. ಮನುಸಂಹಿತೆಯಲ್ಲಿ ಮನು ತನ್ನ ವಿಷಯವಾಗಿಯೇ ಬರೆದುಕೊಂಡಿದ್ದಾನೆ. ಮೋಸೆಸ್ ‘ಪೆಂಟಟ್ಯೂಕ್’ ನಲ್ಲಿ ತನ್ನ ಮರಣದ ವರ್ಣನೆ ಮಾಡಿದ್ದಾನೆ.
‘ ‘ಸಾಂಖ್ಯಶಾಸ್ತ್ರ ಹೇಳುತ್ತದೆ, ‘ಈಶ್ವರಾಸಿದ್ಧೇಃ’ ಅಂತ. ಅಂದರೆ ಭಗವಂತನ ಇರುವಿಕೆಗೆ ಯಾವ ಪ್ರಮಾಣವೂ ಇಲ್ಲದೆ ಇರುವುದರಿಂದ ಆತ ಇಲ್ಲ ಅಂತ. ಮತ್ತೆ ಅದೇ ಹೇಳುತ್ತದೆ, ವೇದಗಳನ್ನು ಒಪ್ಪಬೇಕು, ಅವು ನಿತ್ಯ ಅಂತ.
‘ ‘ಹಾಗೆಂದು ಇವೆಲ್ಲ ಸತ್ಯವಲ್ಲ ಅಂತ ನಾನು ಹೇಳುತ್ತಿಲ್ಲ. ನನಗೆ ಇವು ಅರ್ಥವಾಗುತ್ತಿಲ್ಲ; ಅರ್ಥವಾಗುವಂತೆ ನನಗೆ ವಿವರಿಸಿ ಹೇಳಿ. ಶಾಸ್ತ್ರಗಳನ್ನು ಜನ ತಮ್ಮ ತಮ್ಮ ದೃಷ್ಟಿಯಿಂದ ವಿವರಿಸಿ ಹೇಳಿದ್ದಾರೆ. ಆದ್ದರಿಂದ ಯಾವುದನ್ನು ಸರಿ ಅಂತ ಒಪ್ಪಿಕೊಳ್ಳೋಣ? ಬೆಳಕು ಕೆಂಪು ಗ್ಲಾಸಿನ ಮೂಲಕ ಕೆಂಪಾಗಿಯೂ, ಹಸುರು ಗ್ಲಾಸಿನ ಮೂಲಕ ಹಸುರಾಗಿಯೂ ಕಾಣಿಸಿಕೊಳ್ಳುತ್ತದೆ.”
ಒಬ್ಬ ಭಕ್ತ: ‘ ‘ಗೀತೆ ಭಗವದುಕ್ತಿಗಳನ್ನು ಒಳಗೊಂಡಿದೆ.”
ಶ್ರೀರಾಮಕೃಷ್ಣರು: ‘ ‘ಗೀತೆ ಎಲ್ಲಾ ಶಾಸ್ತ್ರಗಳ ಸಾರ. ಸಂನ್ಯಾಸಿಯ ಹತ್ತಿರ ಇನ್ನು ಬೇರೆ ಯಾವ ಪುಸ್ತಕವಿಲ್ಲದಿದ್ದರೂ, ಗೀತೆಯ ಪುಟ್ಟ ಪ್ರತಿಯೊಂದಾದರೂ ಇದ್ದೇ ಇರುತ್ತದೆ.”
ಒಬ್ಬ ಭಕ್ತ: ‘ ‘ಗೀತೆ ಶ್ರೀಕೃಷ್ಣನ ಉಕ್ತಿಗಳನ್ನು ಒಳಗೊಂಡಿದೆ.”
ನರೇಂದ್ರ: ‘ ‘ಶ್ರೀಕೃಷ್ಣನದನ್ನೊ ಅಥವಾ ಬೇರೆ ಯಾರದನ್ನೊ!”
ನರೇಂದ್ರನ ಈ ಮಾತುಗಳನ್ನು ಕೇಳಿ ಪರಮಹಂಸರು ಆಶ್ಚರ್ಯಚಕಿತರಾದರು.
ಶ್ರೀರಾಮಕೃಷ್ಣರು: ‘ ‘ಈ ವಿಧವಾದ ಚರ್ಚೆ ಬಹಳ ಒಳ್ಳೆಯದು. ಶಾಸ್ತ್ರಗಳಿಗೆ ಎರಡು ವಿಧವಾದ ಅರ್ಥಗಳಿವೆ; ಶಬ್ದಾರ್ಥ ಮತ್ತು ಮರ್ಮಾರ್ಥ. ನಾವು ಮರ್ಮಾರ್ಥವನ್ನು, ಎಂದರೆ ಭಗವದುಕ್ತಿಗಳೊಡನೆ ತಾಳೆಯಾಗುವುದನ್ನು ಸ್ವೀಕರಿಸಬೇಕು, ಏನನ್ನೇ ಆಗಲಿ ಬರವಣಿಗೆಯ ಮೂಲಕ ವ್ಯಕ್ತಪಡಿಸುವುದಕ್ಕೂ, ಬಾಯಿಂದ ನೇರವಾಗಿ ಹೇಳುವುದಕ್ಕೂ ಬಹಳ ವ್ಯತ್ಯಾಸವಿದೆ. ಶಾಸ್ತ್ರಗಳು ಬರವಣಿಗೆ ಮೂಲಕ ವ್ಯಕ್ತವಾದ ಮಾತು. ಭಗವದ್ವಾಣಿ ನೇರವಾಗಿ ಭಗವನ್ಮುಖದಿಂದ ಬಂದ ಮಾತು. ಭಗವತಿಯ ಉಕ್ತಿಗಳೊಡನೆ ತಾಳೆಯಾಗದ ಯಾವುದನ್ನೂ ನಾನು ಸ್ವೀಕರಿಸುವುದಿಲ್ಲ.”
ಈಗ ಅವತಾರಪುರುಷರ ಸಂಬಂಧವಾಗಿ ಮಾತುಕತೆ ಆರಂಭವಾಯಿತು.
ನರೇಂದ್ರ: ‘ ‘ಭಗವಂತನೆಂಬುವವನೊಬ್ಬನಿದ್ದಾನೆ ಎಂಬುದರಲ್ಲಿ ನಂಬಿಕೆ ಇದ್ದರೆ ಬೇಕಾದಷ್ಟು. ಬಳಿಕ ಆತ ಎಲ್ಲಿ ಉಯ್ಯಾಲೆಯಾಡುತ್ತಾನೆ, ಏನು ಮಾಡುತ್ತಾನೆ ಎಂಬುದನ್ನು ಕಟ್ಟಿಕೊಂಡು ನಮಗೇನು? ಈ ಬ್ರಹ್ಮಾಂಡ ಅನಂತವಾದದ್ದು; ಅವತಾರಗಳೂ ಅನಂತವೇ.”
ಪರಮಹಂಸರ ಕಿವಿಗೆ, ‘ಈ ಬ್ರಹ್ಮಾಂಡ ಅನಂತವಾದದ್ದು; ಅವತಾರಗಳೂ ಅನಂತವೇ’ ಎಂಬ ಮಾತು ಬಿದ್ದೊಡನೆಯ ಅವರು ಕೈಮುಗಿದು, ‘ ‘ಆಹಾ!” ಅಂತ ಹೇಳಿದರು.
ಮಾಸ್ಟರ್ ಏನನ್ನೋ ಭವನಾಥನ ಕಿವಿಯಲ್ಲಿ ಹೇಳುತ್ತಿದ್ದಾನೆ.
ಭವನಾಥ: ‘ ‘ಮಾಸ್ಟರ್ ಹೇಳುತ್ತಿದ್ದಾನೆ, ‘ನಾನು ಆನೆಯನ್ನೇ ಎಂದೂ ನೋಡದೆ ಇರುವಾಗ, ಅದು ಸೂಜಿಯ ಕಣ್ಣಿನ ಮೂಲಕ ಹಾದುಹೋಗಬಲ್ಲುದೊ ಇಲ್ಲವೊ ಎಂಬು ದನ್ನು ಹೇಳುವ ಬಗೆ ಹೇಗೆ? ಭಗವಂತನಾರು ಎಂಬುದು ನನಗೆ ಗೊತ್ತಿಲ್ಲ; ಅಂಥಾದ್ದರಲ್ಲಿ ಆತ ಮಾನವ ರೂಪಿನಲ್ಲಿ ಅವತರಿಸಬಲ್ಲನೆ ಎಂಬುದನ್ನು ವಿಚಾರದ ಮೂಲಕ ಅರಿಯುವ ಬಗೆ ಹೇಗೆ?’ ಅಂತ.”
ಶ್ರೀರಾಮಕೃಷ್ಣರು: ‘ ‘ಭಗವಂತನಿಗೆ ಎಲ್ಲವೂ ಸಾಧ್ಯ. ಆತ ಮೋಡಿ ಹಾಕಿಬಿಡುತ್ತಾನೆ. ಐಂದ್ರಜಾಲಿಕ ಕತ್ತಿಯನ್ನು ನುಂಗಿಕೊಂಡು ಮತ್ತೆ ಅದನ್ನು ಹೊರಕ್ಕೆ ತೆಗೆದುಬಿಡುತ್ತಾನೆ. ಆತ ಕಲ್ಲು ಇಟ್ಟಿಗೆ ಚೂರು ಇವನ್ನೂ ತಿಂದುಬಿಡುತ್ತಾನೆ.”
ಒಬ್ಬ ಭಕ್ತ: ‘ ‘ಬ್ರಾಹ್ಮಸಮಾಜದವರು ಹೇಳುತ್ತಾರೆ, ‘ಸಾಂಸಾರಿಕ ಕೆಲಸಕಾರ್ಯಗಳು ಕರ್ತವ್ಯಕರ್ಮಗಳು; ಅವನ್ನು ತ್ಯಜಿಸಕೂಡದು’ ಅಂತ.”
ಗಿರೀಶ: ‘ ‘ಈ ರೀತಿಯಾಗಿ ‘ಸುಲಭ ಸಮಾಚಾರ’ ಎಂಬ ಪತ್ರಿಕೆಯಲ್ಲಿ ಅವರು ಬರೆದಿರುವುದನ್ನು ನೋಡಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಮಾಡಬೇಕಾಗಿರುವ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುವುದಕ್ಕೇ ಮನುಷ್ಯನಿಗೆ ಕಷ್ಟವಾಗಿರುವಾಗ, ಅದರ ಜೊತೆಗೆ ಆತ ಸಾಂಸಾರಿಕ ಕೆಲಸಗಳನ್ನೂ ಮಾಡಬೇಕು ಅನ್ನುವುದು!”
ಪರಮಹಂಸರು ಒಂದು ಕಿಂಚಿತ್ ನಕ್ಕು ಮಾಸ್ಟರರ ಕಡೆ ನೋಡಿ ತಮ್ಮ ಕಣ್ಣುಗಳಿಂದ ಸಂಜ್ಞೆ ಮಾಡಿದರು, ‘ ‘ಆತ ಹೇಳುವುದು ಸರಿ” ಎನ್ನುವ ಹಾಗೆ.
ಮಾಸ್ಟರ್ ಅರಿತುಕೊಂಡ, ಕರ್ಮಕಾಂಡ ಬಹಳ ಕಠಿಣವಾದ್ದು ಅಂತ.
ಪೂರ್ಣ ಬಂದಿದ್ದಾನೆ.
ಶ್ರೀರಾಮಕೃಷ್ಣರು: ‘ ‘ನಾವು ಇಲ್ಲಿಗೆ ಬಂದಿರುವ ಸಮಾಚಾರವನ್ನು ನಿನಗೆ ಕೊಟ್ಟವರಾರು?”
ಪೂರ್ಣ: ‘ ‘ಶಾರದಾಪ್ರಸನ್ನ.”
ಶ್ರೀರಾಮಕೃಷ್ಣರು (ಭಕ್ತೆಯರಿಗೆ): ‘ ‘ನೋಡಿ, ಈತನಿಗೆ (ಪೂರ್ಣನಿಗೆ) ಸ್ವಲ್ಪ ಫಲಾಹಾರ ಕೊಡಿ.”
ಈಗ ನರೇಂದ್ರ ಹಾಡಲು ಸಿದ್ಧನಾಗಿದ್ದಾನೆ. ಪರಮಹಂಸರು ಮತ್ತು ಭಕ್ತರು ಆತನ ಹಾಡುಗಳನ್ನು ಕೇಳಲು ಬಹಳ ಕಾತರರಾಗಿದ್ದಾರೆ. ಈಗ ನರೇಂದ್ರ ಹಾಡುತ್ತಿದ್ದಾನೆ:
ಗಿರಿಶಿರದಲ್ಲಿ ವ್ಯೋಮದಲ್ಲಿ
ಹುಲ್ಲುಗಾವಲಲ್ಲಿ
ಎಲ್ಲೆಲ್ಲಿಯು ನಿನ್ನ ವಜ್ರಡಮರು ನಾದದಬ್ಬರ!
ಓವೊ ರುದ್ರ ಮಹಾಕಾಲ ಶಿವಶಂಕರ ಪಾಪಹರ
ದೇವದೇವ ಮಹಾದೇವ ನನ್ನ ಹೃದಯ ತಾಪಹರ!
ಮತ್ತೆ ಹಾಡುತ್ತಿದ್ದಾನೆ:
ಬಲುಮಧುರವೊ ನಿನ್ನ ಹೆಸರು
ಕಿವಿಗೆ ಸುಧೆಯ ಕರೆವುದು!
ದೀನಶರಣ ಪ್ರಾಣರಮಣ
ಅಮೃತಭವನ ಧನವಿದು.
ನಿನ್ನ ಹೆಸರ ಕೀರ್ತಿಸಿದರೆ
ನಾವು ಅಮರರಪ್ಪೆವೊ !
ಚಿಂತೆಗಡಲು ನಿಮಿಷದಲ್ಲಿ
ಬತ್ತುತ ಬಯಲಪ್ಪುದೊ!
ಹೃದಯದಲ್ಲಿ ನಿನ್ನ ಮಧುರ
ಗಾಯನವನೆ ಗೈವೆವು!
ಹೃದಯನಾಥ, ಚಿದಾನಂದ;
ನಿರುತ ನಿನ್ನ ನೆನೆವೆವು.
ಮತ್ತೆ ಹಾಡುತ್ತಿದ್ದಾನೆ:
ಸಕಲಭಯತಲ್ಲಣವ ಪರಿಹರಿಪ ಮಹಿಮನನು
ಒಮ್ಮೆಯಾದರು ಏಕೆ ಕರೆಯದಿರುವೆ?
ಭವಘೋರ ಭ್ರಮೆಯಲ್ಲಿ ನಿನ್ನ ನೀನೇ ಮರೆತೆ!
ಏನೀ ವಿಡಂಬನೆಯು, ನಿನಗೆ ತರವೆ?
ಜನಧನದ ಸಂಗದಲ್ಲಿ ಅವನ ಮರೆಯದ ತೆರದಿ
ಎಚ್ಚರಿರು; ಭ್ರಮೆಯನ್ನ ಅತ್ತದೂಡು.
ನಿಜವನಾರಾಧಿಸಲು ಸರ್ವಪಾಪವಿಮುಕ್ತ;
ನನ್ನ ಮಾತಿನ ನಿಜವನಳೆದುನೋಡು.
ಭವಜಲಧಿಯನು ದಾಟಿ ನಡೆವ ಮನವಿರೆ ನಿನಗೆ
ಅಳಿಯಾಸೆಗಳ ತೊರೆದು ಹರಿಯ ನುತಿಸು.
ದೇಹಮನಪ್ರಾಣಗಳ ಅವನಿಗರ್ಪಿತಮಾಡಿ
ಪ್ರೇಮದಾರಾಧನೆಗೆ ಮನವ ಸಲಿಸು!
ಪಲ್ಟು: ‘ ‘ಆ ಹಾಡನ್ನು ಹಾಡುವುದಿಲ್ಲವೆ?”
ನರೇಂದ್ರ: ‘ ‘ಯಾವುದನ್ನು?”
ಪಲ್ಟು: ‘ ‘ ‘ನಿನ್ನ ಅನುಪಮ ಪ್ರೇಮಕಾಂತಿಯ’ ಎಂಬ ಹಾಡನ್ನು.”
ನರೇಂದ್ರ ಹಾಡುತ್ತಿದ್ದಾನೆ.
ನಿನ್ನ ಅನುಪಮ ಪ್ರೇಮಕಾಂತಿಯ
ವದನ ದರುಶನವಾಗಲು
ಜಗದ ಜಂಜಡ ದುಗುಡಗಳ ಭಯ
ನನ್ನ ಬಳಿಗೇ ಬಾರದು!
ಉದಯ ಸೂರ್ಯನ ಮೊದಲ ಕಿರಣವು
ಕತ್ತಲೆಯ ಕಳೆವಂದದಿ
ನಮ್ಮ ಎದೆಯೊಳು ನಿನ್ನ ಬೆಳಕೇ
ಮೂಡಿ ನೋವನು ನೀಗಿ ಮನದೊಳು
ನಿನ್ನ ಪ್ರೇಮ ನೆರೆವುದು!
ನಿನ್ನ ಕರುಣಾಪ್ರೇಮಗಳ ನಾ
ನನ್ನ ಮನದಲಿ ನೆನೆದರೆ
ಹರ್ಷಬಾಷ್ಪದ ಹೊನಲು ಹರಿವುದು
ಯಾವ ತಡೆಯೂ ಇಲ್ಲದೆ.
ಜಯವು ಕರುಣಾಮಯನೆ ನಿರುತವು
ನಿನ್ನ ಒಲವನೆ ಸಾರುವೆ.
ನಿನ್ನ ಕರ್ಮದಿ ನನ್ನ ಪ್ರಾಣವು
ಸವೆಯಲೆನ್ನುತ ಬೇಡುವೆ!
ಮಾಸ್ಟರನ ಇಚ್ಛೆಗನುಸಾರ ನರೇಂದ್ರ ಮತ್ತೆ ಹಾಡುತ್ತಿದ್ದಾನೆ. ಮಾಸ್ಟರ್ ಮತ್ತು ಉಳಿದ ಭಕ್ತರು ಕೈಮುಗಿದುಕೊಂಡು ಕೇಳುತ್ತಿದ್ದಾರೆ:
ಹರಿರಸಮದಿರೆಯ ಕುಡಿದು ನಿರಂತರ
ಉನ್ಮತ್ತನ ತೆರ ನೀನಿರುತ
ಹರಿಮಧುನಾಮವ ನುತಿಸಿ ಕಂಬನಿಯ
ಕರೆದು ಧೂಳಿನಲಿ ಹೊರಳುತ್ತ.
ಹರಿಕಂಠದ ಹರಿನಾಮದ ನುತಿಯೊಳು
ಗಗನ ದೇಶವನು ತುಂಬಿಸುತ
ಹರಿನುತಿಯಾನಂದದಿ ನರ್ತಿಸಿ
ಜಗಕಾನಂದವ ಸಿಂಪಿಸುತ
ಹಗಲಿರುಳೂ ಹರಿನಾಮದ ಕಡಲಲಿ
ಈಜುತ, ಬಯಕೆಯ ಸೀಳುತ್ತ
ಇರುನೀ ಜೀವನದೊಳ್ಪನು ಸಾಧಿಸುತ!
ನರೇಂದ್ರ ಮತ್ತೆ ಹಾಡುತ್ತಿದ್ದಾನೆ:
ನಿರಂಜನ ಹರಿಚಿದ್ಘನಮೂರುತಿಯನು ನೆನೆಯೊ
ನಿರಂತರ–ಮೋಹನ ಮೂರುತಿಯನು ನೆನೆಯೊ–
ಅನುಪಮ ತೇಜನ, ಸುಂದರರೂಪನ
ಭಕ್ತರ ಎದೆಯಲಿ ರಂಜಿಪನ,
ಕೋಟಿಚಂದ್ರಸಮ ಕಾಂತಿಯ ನಾಚಿಸಿ
ಮಿಂಚಿನಂತೆ ನಮ್ಮೆದೆಯೊಳು ರಂಜಿಸಿ
ಮೋಹಿಪನ–
ನಿರಂಜನ ಹರಿಚಿದ್ಘನಮೂರುತಿಯನು ನೆನೆಯೋ
ನಿರಂತರ–ಮೋಹನ ಮೂರುತಿಯನು ನೆನೆಯೋ!
ಹೃದಯಪದ್ಮದಲಿ ಪೂಜಿಸು ಆತನ
ಶಾಂತಮಾನಸದಿ ಜ್ಞಾನನಯನದಲಿ
ಅಪೂರ್ವದರ್ಶನ ಮೋಹನನ
ಭಕ್ತಿ ಯೋಗದಾವೇಶದಿ ಮುಳುಗಿಪ
ಚಿದಾನಂದ ರಸ ಸಾಗರನ–
ನಿರಂಜನ ಹರಿಚಿದ್ಘನಮೂರುತಿಯನು ನೆನೆಯೊ
ನಿರಂತರ–ಮೋಹನ ಮೂರುತಿಯನು ನೆನೆಯೋ!
ನರೇಂದ್ರ ಇನ್ನೊಂದು ಹಾಡು ಹಾಡುತ್ತಿದ್ದಾನೆ:
ಮನವ ಬೆರಗುಗೊಳಿಪಾನಂತ ವಿಶ್ವರಚನೆ ನಿನ್ನದೇ.
ನಿನ್ನ ಪ್ರೇಮ ಚೆಲುವುಗಳಲಿ ಜಗವೆಲ್ಲವು ತುಂಬಿದೆ.
ಕೊರಳಸರದಿ ಹೊಳೆವ ವಜ್ರದಂತೆ ತಾರೆ ಮೇಲ್ಗಡೆ
ಹೊಳೆಯುತಿಹುವು ಸೂರ್ಯಚಂದ್ರರೊಡನೆ ಲೆಕ್ಕವಿಲ್ಲದೆ.
ನಿರಂತರವು ಧನಧಾನ್ಯದಿ ನೀನು ಜಗವ ತುಂಬುವೆ.
ಧನ್ಯ ಧನ್ಯ ಮಹಾದೇವ ಎಂದು ನಾನು ನುತಿಸುವೆ!
ಮತ್ತೆ ಹಾಡುತ್ತಿದ್ದಾನೆ:
ಬಾನ ತಳಿಗೆಯೊಳಿಟ್ಟ ಹಣತೆಗಳ ರೀತಿಯಲಿ
ರವಿಶಶಿಗಳಾರತಿಯ ಬೆಳಗುತಿರಲು,
ನಿನ್ನ ರೂಪವ ದಿನವು ಸಿಂಗರಿಪ ತೊಡವಿನೊಲು
ಲಕ್ಷ ನಕ್ಷತ್ರಗಳು ರಾಜಿಸಿರಲು
ಮಂದಮಂದಾನಿಲನು ಧೂಪದೊಳು ತೀಡುತಿರೆ,
ಗಾಳಿ ಚಾಮರಸೇವೆ ಗೈಯುತ್ತಿರಲು
ಸಕಲವನರಾಜಿಗಳು ಹೂವಿನಾರತಿ ಎತ್ತಿ
ನಿತ್ಯವೂ ನಿನಗಾಗಿ ಶೋಭಿಸಿರಲು–
ಏನು ಅದ್ಭುತ ಪೂಜೆ ಸಲ್ಲುತಿದೆ ನಿತ್ಯವೂ
ಭವದುಃಖವನು ಕೊಂದ ಗುರುವೆ ನಿನಗೆ!
ಓಂಕಾರನಾದವಿದೊ ಗುಡುಗಿನೊಲು ಮೊಳಗುತಿದೆ
ಸಕಲ ಸಚರಾಚರದ ಎದೆಯ ಒಳಗೆ
ಓ ಅಪೂರ್ವನೆ ನಿನ್ನ ಕರುಣೆಯನು ಕರೆಯಯ್ಯ!
ಬೇಡುವೀ ನಾನಕನ ಹೃದಯದೊಳಗೆ!
ಮತ್ತೆ ಹಾಡುತ್ತಿದ್ದಾನೆ:
ಏಕ ಪುರಾತನ ಪುರುಷ ನಿರಂಜನ
ಪಾದದಿ ಚಿತ್ತವ ನಿಲಿಸೋ….
ನಾರಾಯಣನ ಕೋರಿಕೆಯ ಪ್ರಕಾರ ನರೇಂದ್ರ ಹಾಡುತ್ತಿದ್ದಾನೆ:
ದಯಮಾಡಿಸು ದಯಮಾಡಿಸು
ಹೃದಯಕಮಲಪೀಠದಿ
ಬಂದು ಮೊಗವ ತೋರು ತಾಯೆ
ಹೃದಯ ಪ್ರಾಣ ಪುತ್ಥಲೀ!
ಹುಟ್ಟಿದಂದಿನಿಂದ ನಾನು
ಎನಿತೋ ನೋವ ನುಂಗಿದೆ.
ನೀನು ಬಲ್ಲೆ; ನಿನ್ನ ಬರವಿ-
ಗಾಗಿ ನಾನು ಕಾದಿಹೆ.
ಹೃದಯಕಮಲವರಳಿಸಿ ನೀ
ದಯಮಾಡಿಸು ಬೇಗನೆ.
ನರೇಂದ್ರ ಈಗ ತನ್ನ ಮೆಚ್ಚಿನ ಹಾಡನ್ನು ಹಾಡುತ್ತಿದ್ದಾನೆ:
ಮಿರುಗುತಿದೆ ನಿನ್ನ ಅಪರೂಪ ರಾಶಿ ನಿಬಿಡಾಂಧಕಾರದಲ್ಲಿ
ನಿನ್ನದರಿಂದಲೇ ನೆನೆವರೌ ಯೋಗಿಗಳು ಗಿರಿಗುಹೆಗಳಲ್ಲಿ!……
ಸಮಾಧಿಯ ವರ್ಣನೆಯನ್ನೊಳಗೊಂಡ ಈ ಹಾಡನ್ನು ಕೇಳುತ್ತ ಕೇಳುತ್ತ ಇದ್ದ ಹಾಗೆ ಪರಮಹಂಸರು ಸಮಾಧಿಸ್ಥರಾಗಿದ್ದಾರೆ.
ನರೇಂದ್ರ ಮತ್ತೆ ಹಾಡುತ್ತಿದ್ದಾನೆ:
ಹರಿರಸಮದಿರೆಯ ಕುಡಿದು ನಿರಂತರ
ಉನ್ಮತ್ತನ ತೆರ ನೀನಿರುತ…..
ಪರಮಹಂಸರು ಇನ್ನೂ ಸಮಾಧಿಸ್ಥರಾಗಿಯೇ ಇದ್ದಾರೆ. ಅವರು ಗೋಡೆಗೆ ಒರಗಿ ಕೊಂಡು, ಕಾಲುಗಳನ್ನು ಇಳಿಬಿಟ್ಟುಕೊಂಡು, ಉತ್ತರಾಭಿಮುಖವಾಗಿ ಒಂದು ದಿಂಬಿನ ಮೇಲೆ ಕುಳಿತುಕೊಂಡಿದ್ದಾರೆ. ಭಕ್ತರೆಲ್ಲರೂ ಅವರ ಸುತ್ತಲೂ ಕುಳಿತುಕೊಂಡಿದ್ದಾರೆ.
ಪರಮಹಂಸರು ಭಾವಾವಿಷ್ಟರಾಗಿ ಭಗವತಿಯೊಡನೆ ಮಾತನಾಡುತ್ತಿದ್ದಾರೆ, ‘ ‘ಈಗ ನಾನು ಊಟ ಮಾಡಿ ಹೋಗುತ್ತೇನೆ. ನೀನು ಬಂದೆಯಾ? ನಿನ್ನ ಗಂಟುಮೂಟೆಗಳನ್ನು ಸುಭದ್ರವಾಗಿ ಬಿಡಾರದಲ್ಲಿ ಇಟ್ಟು, ಬಳಿಕ ಹೊರಕ್ಕೆ ಬಂದಿರುವೆಯೇನು?” ಅಂತ. ಮತ್ತೆ ಹೇಳುತ್ತಿದ್ದಾರೆ ‘ ‘ಈಗ ನನಗೆ ಯಾರ ಜೊತೆಯೂ ರುಚಿಸುತ್ತಿಲ್ಲ. ಹೇ ತಾಯೆ, ಈಗ ನಾನು ಹಾಡನ್ನು ಏಕೆ ಆಲಿಸಬೇಕು? ಹಾಗೆ ಮಾಡಿದರೆ ಅದು ನನ್ನ ಮನಸ್ಸಿನ ಕಿಂಚಿತ್ ಭಾಗವನ್ನು ಹೊರಜಗತ್ತಿಗೆ ಎಳೆದು ತಂದುಬಿಡುತ್ತದೆ.”
ಕ್ರಮಕ್ರಮೇಣ ಪರಮಹಂಸರು ಅಧಿಕಾಧಿಕವಾಗಿ ಬಾಹ್ಯಪ್ರಜ್ಞೆಯನ್ನು ಹೊಂದು ತ್ತಿದ್ದಾರೆ. ಭಕ್ತರ ಕಡೆ ದೃಷ್ಟಿಸಿ ಹೇಳುತ್ತಿದ್ದಾರೆ, ‘ ‘ಹಿಂದೆ ಜನರು ಮೀನನ್ನು ನೀರು ತುಂಬಿದ ಮಡಕೆಗಳಲ್ಲಿ ಬೆಳೆಸುತ್ತಿದ್ದುದನ್ನು ನೋಡಿ ಆಶ್ಚರ್ಯಪಡುತ್ತಿದ್ದೆ, ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ, ‘ಇವರು ಎಂಥ ನಿರ್ದಯಿಗಳು? ಕೊನೆಗೆ ಇವರು ಇವನ್ನು ಸಾಯಿಸಿ ಬಿಡುತ್ತಾರೆ’ ಅಂತ. ಆದರೆ ಯಾವಾಗ ನನ್ನ ಮಾನಸಿಕ ಅವಸ್ಥೆ ಪರಿವರ್ತನೆಯನ್ನು ಹೊಂದಲಾರಂಭಿಸಿತೊ ಆಗ ನನಗೆ ಅನುಭವವಾಯಿತು, ಶರೀರಗಳೆಂಬುವು ದಿಂಬಿನ ಚೀಲಗಳಿದ್ದ ಹಾಗೆ, ಅವು ಇದ್ದರೂ ಒಂದೆ, ಸತ್ತರೂ ಒಂದೆ ಅಂತ.”
ಭವನಾಥ: ‘ ‘ಹಾಗಾದರೆ ಮನುಷ್ಯನನ್ನು ಹಿಂಸಿಸಬಹುದಲ್ಲವೆ? ಕೊಂದುಹಾಕಿಬಿಡ ಬಹುದಲ್ಲವೆ?”
ಶ್ರೀರಾಮಕೃಷ್ಣರು: ‘ ‘ಹೌದು, ಆ ಅವಸ್ಥೆ ಬಂದಾಗ ಬಹುಶಃ ಸಾಧ್ಯವಾಗಬಹುದು. ಆ ಅವಸ್ಥೆ ಎಲ್ಲರಿಗೂ ಬರುವುದಿಲ್ಲ. ಅದು ಬ್ರಹ್ಮಜ್ಞಾನಾವಸ್ಥೆ.
‘ ‘ಸಮಾಧ್ಯವಸ್ಥೆಯಿಂದ ಒಂದೆರಡು ಹಂತ ಕೆಳಗೆ ಇಳಿದ ನಂತರವೇ ಭಕ್ತಿ ಭಕ್ತರ ಸಹವಾಸ ರುಚಿಸುತ್ತದೆ.
‘ ‘ಭಗವಂತನಲ್ಲಿ ವಿದ್ಯೆ ಅವಿದ್ಯೆ ಎರಡೂ ಇವೆ. ವಿದ್ಯಾಮಾಯೆ ಮನುಷ್ಯನನ್ನು ಭಗವಂತನ ಕಡೆ ಕರೆದೊಯ್ಯುತ್ತದೆ. ಅವಿದ್ಯಾಮಾಯೆ ಆತನನ್ನು ಭಗವದ್ವಿಮುಖನನ್ನಾಗಿ ಮಾಡುತ್ತದೆ. ಜ್ಞಾನ, ಭಕ್ತಿ, ದಯೆ, ವೈರಾಗ್ಯ-ಇವೆಲ್ಲ ವಿದ್ಯಾರಾಜ್ಯಕ್ಕೆ ಸೇರಿವೆ. ಇವನ್ನು ಆಶ್ರಯಿಸಿದರೆ ಭಗವಂತನ ಹತ್ತಿರಕ್ಕೆ ಹೋಗಬಹುದು. ಅಲ್ಲಿಂದ ಮುಂದಕ್ಕೆ ಒಂದು ಹೆಜ್ಜೆ ಹಾಕಿತು ಎಂದರೆ ಭಗವಂತ ದೊರೆತುಬಿಡುತ್ತಾನೆ. ಬ್ರಹ್ಮಜ್ಞಾನ ದೊರೆತುಬಿಡುತ್ತದೆ. ಆ ಅವಸ್ಥೆಯಲ್ಲಿ ಎಲ್ಲವೂ ಆತನೇ ಆಗಿರುವುದನ್ನು ಅನುಭವಿಸಬಹುದು ಮತ್ತು ನೋಡಬಹುದು. ಆಗ ತ್ಯಾಜ್ಯ ಗ್ರಾಹ್ಯದ ಮಾತೇ ಇಲ್ಲ. ಬೇರೊಬ್ಬರ ಮೇಲೆ ಕೋಪಿಸಿಕೊಳ್ಳುವಂತೆಯೂ ಇಲ್ಲ.
‘ ‘ಒಂದು ದಿನ ನಾನು ಗಾಡಿಯಲ್ಲಿ ಕುಳಿತು ಹೋಗುತ್ತಿದ್ದೆ. ಒಂದು ಜಗಲಿಯ ಮೇಲೆ ಇಬ್ಬರು ವೇಶ್ಯೆಯರು ನಿಂತಿರುವುದು ನನ್ನ ಕಣ್ಣಿಗೆ ಬಿತ್ತು. ಅವರು ಸಾಕ್ಷಾತ್ ಭಗವತಿಯೇ ಆಗಿ ಕಂಡರು. ಅವರಿಗೆ ಪ್ರಣಾಮ ಮಾಡಿದೆ.
‘ ‘ನನಗೆ ಉಚ್ಚ ಅವಸ್ಥೆ ಬಂದನಂತರ ಕಾಳಿಯ ಪೂಜೆ ಮಾಡಲಾಗಲಿ ಅಥವಾ ಆಕೆಗೆ ನೈವೇದ್ಯ ಅರ್ಪಿಸಲಾಗಲಿ ನನ್ನ ಕೈಯಲ್ಲಾಗಲಿಲ್ಲ. ಅದಕ್ಕಾಗಿ ಖಜಾಂಚಿ ನನ್ನನ್ನು ಹೀಯಾಳಿಸಿದ ಎಂದು ಹಲಧಾರಿ ಮತ್ತು ಹೃದೆ ನನಗೆ ತಿಳಿಸಿದರು. ಅದನ್ನು ಕೇಳಿ ನಾನು ಸುಮ್ಮನೆ ನಕ್ಕುಬಿಟ್ಟೆ. ಒಂದು ಕಿಂಚಿತ್ತೂ ಕೋಪ ಬರಲಿಲ್ಲ. ಮೊದಲು ಬ್ರಹ್ಮಜ್ಞಾನ ಪಡೆದುಕೊಂಡು ಬಳಿಕ ಆತನ ಲೀಲಾಸ್ವಾದನೆ ಮಾಡುತ್ತ ಆನಂದಪಡು. ಒಬ್ಬ ಸಾಧು ಒಂದು ಪಟ್ಟಣಕ್ಕೆ ಬಂದು ಅದರ ಸೊಬಗನ್ನು ನೋಡುತ್ತ ಸುತ್ತಾಡುತ್ತಿದ್ದ. ಆತ ತನಗೆ ಗೊತ್ತಿರುವ ಇನ್ನೊಬ್ಬ ಸಾಧುವನ್ನು ಒಂದು ಕಡೆ ನೋಡಿದ. ಆ ಸಾಧು ಈತನನ್ನು ಕೇಳಿದ, ‘ನೀನು ಆನಂದದಿಂದ ಅಲೆದಾಡುತ್ತಿರುವಂತೆ ತೋರುತ್ತದೆ. ನಿನ್ನ ಗಂಟುಮೂಟೆಗಳೆಲ್ಲ ಎಲ್ಲಿ? ಅವನ್ನು ಯಾರೂ ಕದ್ದುಬಿಡಲಿಲ್ಲ ತಾನೆ?’ ಅಂತ. ಮೊದಲನೆಯ ಸಾಧು ಹೇಳಿದ, ‘ಹಾಗೇನು ಆಗಿಲ್ಲ. ಮೊದಲು ಇಳಿದುಕೊಳ್ಳುವ ಜಾಗ ಪತ್ತೆಮಾಡಿ, ಗಂಟು ಮೂಟೆಗಳನ್ನೆಲ್ಲ ಒಂದು ಕೊಠಡಿಯಲ್ಲಿಟ್ಟು, ಅದಕ್ಕೆ ಬೀಗ ಹಾಕಿ, ಈಗ ಆನಂದದಿಂದ ಪಟ್ಟಣದಲ್ಲಿ ಸುತ್ತಾಡುತ್ತಾ ಇದ್ದೇನೆ’ ಅಂತ.” (ಎಲ್ಲರೂ ನಗುತ್ತಿದ್ದಾರೆ.)
ಭವನಾಥ: ‘ ‘ಇವೆಲ್ಲ ಬಹಳ ಗಹನವಾದ ವಿಷಯಗಳು.”
ಮಾಸ್ಟರ್ (ತನಗೆ ತಾನೇ): ‘ ‘ಬ್ರಹ್ಮಜ್ಞಾನ ಪಡೆದ ಮೇಲೆ ಭಗವಂತನ ಲೀಲಾಸ್ವಾದನೆ! ಸಮಾಧ್ಯವಸ್ಥೆಯಿಂದ ಕೆಳಕ್ಕೆ ಇಳಿಯುವುದು!”
ಶ್ರೀರಾಮಕೃಷ್ಣರು (ಮಾಸ್ಟರ್ ಮೊದಲಾದವರಿಗೆ): ‘ ‘ಬ್ರಹ್ಮಜ್ಞಾನ ಸಹಜವಾಗಿ ದೊರೆತುಬಿಡುತ್ತದೆಯೆ? ಮನೋನಾಶವಾಗದ ಹೊರತು ದೊರೆಯದು. ಒಬ್ಬ ಗುರು ತನ್ನ ಶಿಷ್ಯನಿಗೆ ಹೇಳಿದ, ‘ನೀನು ನಿನ್ನ ಮನಸ್ಸನ್ನು ನನಗೆ ಅರ್ಪಿಸಿಬಿಡು, ನಾನು ನಿನಗೆ ಬ್ರಹ್ಮಜ್ಞಾನವನ್ನು ಕೊಟ್ಟುಬಿಡುತ್ತೇನೆ’ ಅಂತ. ತೋತಾಪುರಿ ಹೇಳುತ್ತಿದ್ದ, ‘ಮನಸ್ಸನ್ನು ವಿಕ್ಷೇಪಮಾಡಕೂಡದು’ ಅಂತ. ಬ್ರಹ್ಮಜ್ಞಾನಾವಸ್ಥೆಯಲ್ಲಿ ಕೇವಲ ಭಗವದ್ವಿಷಯ ಮತ್ತು ಭಕ್ತರ ಸಹವಾಸ ಇವು ಮಾತ್ರವೇ ರುಚಿಸುತ್ತದೆ.
(ರಾಮನಿಗೆ) ‘ ‘ನೀನೊಬ್ಬ ಡಾಕ್ಟರ್. ಔಷಧ ರಕ್ತಗತವಾದಾಗ ತಾನೆ ಅದು ಗುಣಕಾರಿಯಾಗುತ್ತದೆ. ಅದೇ ರೀತಿಯಾಗಿ ಬ್ರಹ್ಮಜ್ಞಾನಾವಸ್ಥೆಯಲ್ಲಿ ಒಳಗೆ ಹೊರಗೆ ಎಲ್ಲೆಲ್ಲೂ ಭಗವಂತನೇ ಕಾಣಿಸಿಕೊಳ್ಳುತ್ತಾನೆ. ಆಗ ಆತನೇ ದೇಹ, ಮನಸ್ಸು, ಪ್ರಾಣ, ಜೀವ-ಇವೆಲ್ಲಾ ಆಗಿರುವುದು ಕಂಡುಬರುತ್ತದೆ.”
ಮಾಸ್ಟರ್ (ತನಗೆ ತಾನೆ): ‘ ‘ರಕ್ತಗತವಾಗುವಿಕೆ!”
ಶ್ರೀರಾಮಕೃಷ್ಣರು: ‘ ‘ಮನೋನಾಶವಾದೊಡನೆಯೇ ಬ್ರಹ್ಮಜ್ಞಾನ ದೊರೆತು ಬಿಡುತ್ತದೆ. ಮನೋನಾಶವಾದೊಡನೆಯೆ ‘ನಾನು’, ‘ನಾನು’ ಎಂದು ಹೇಳುವ ‘ಅಹಂ’ ನಾಶವಾಗಿಬಿಡುತ್ತದೆ. ಬ್ರಹ್ಮಜ್ಞಾನ ಭಕ್ತಿಮಾರ್ಗದಿಂದಲೂ ದೊರೆಯುತ್ತದೆ; ಮತ್ತೆ ಜ್ಞಾನ ಮಾರ್ಗದಿಂದಲೂ ಎಂದರೆ ವಿಚಾರಮಾರ್ಗದಿಂದಲೂ ದೊರೆಯುತ್ತದೆ. ಜ್ಞಾನಮಾರ್ಗಿಗಳು ‘ನೇತಿ’, ‘ನೇತಿ’, ಎಂದರೆ ‘ಇದೆಲ್ಲಾ ಮಾಯೆ, ಸ್ವಪ್ನವತ್’ ಎಂಬುದಾಗಿ ವಿಚಾರ ಮಾಡುತ್ತಾರೆ. ಅವರು ‘ನೇತಿ’, ‘ನೇತಿ’, ಮಾರ್ಗದಿಂದ ಈ ಜಗತ್ತನ್ನು ವಿಭಜಿಸಿ ನೋಡಿ ಕೊನೆಗೆ ಅದು ಬರೀ ಮಾಯೆ ಎಂಬ ಅನುಭವವನ್ನು ಪಡೆಯುತ್ತಾರೆ. ಜಗತ್ತು ಮಿಥ್ಯಾ ಎಂಬ ಅನುಭವವಾದ ಮೇಲೆ ಇನ್ನು ಉಳಿದುಕೊಂಡಿರುವುದು ಅಹಂರೂಪ ಘಟ ಮಧ್ಯವರ್ತಿ ಜೀವಿಗಳು ಮಾತ್ರ.
‘ ‘ಇಲ್ಲಿ ನೀರಿನಿಂದ ತುಂಬಿದ ಹತ್ತು ಘಟಗಳಿವೆ, ಅವುಗಳಲ್ಲೆಲ್ಲಾ ಸೂರ್ಯನ ಪ್ರತಿಬಿಂಬ ಬಿದ್ದಿದೆ ಅಂತ ಭಾವಿಸಿಕೊಳ್ಳಿ. ಆಗ ನಾವು ಎಷ್ಟು ಸೂರ್ಯರನ್ನು ನೋಡಬಹುದು?”
ಒಬ್ಬ ಭಕ್ತ: ‘ ‘ಹತ್ತು ಪ್ರತಿಬಿಂಬಗಳು. ಜೊತೆಗೆ ನಿಜವಾದ ಸೂರ್ಯ ಇದ್ದೇ ಇದ್ದಾನೆ.”
ಶ್ರೀರಾಮಕೃಷ್ಣರು: ‘ ‘ನೀನು ಒಂದು ಘಟವನ್ನು ಒಡೆದುಹಾಕಿದೆ ಅಂತ ಇಟ್ಟುಕೊ. ಆಗ ಉಳಿದುಕೊಳ್ಳುವ ಸೂರ್ಯರೆಷ್ಟು?”
ಭಕ್ತ: ‘ ‘ಒಂಬತ್ತು ಪ್ರತಿಬಿಂಬಗಳು. ಆದರೆ ನಿಜವಾದ ಸೂರ್ಯ ಇದ್ದೇ ಇದ್ದಾನಲ್ಲ.”
ಶ್ರೀರಾಮಕೃಷ್ಣರು: ‘ ‘ಒಳ್ಳೇದು, ಒಂಬತ್ತು ಘಟಗಳನ್ನೂ ಒಡೆದುಹಾಕಿಬಿಟ್ಟೆ ಅಂತ ಇಟ್ಟುಕೊ. ಆಗ ಉಳಿದುಕೊಳ್ಳುವ ಸೂರ್ಯರೆಷ್ಟು?”
ಭಕ್ತ: ‘ ‘ಒಂದು ಪ್ರತಿಬಿಂಬ. ನಿಜವಾದ ಸೂರ್ಯನೊಬ್ಬ ಇದ್ದೇ ಇದ್ದಾನೆ.”
ಶ್ರೀರಾಮಕೃಷ್ಣರು (ಗಿರೀಶನಿಗೆ): ‘ ‘ಆ ಕೊನೇ ಘಟವನ್ನೂ ಒಡೆದುಹಾಕಿದ ಮೇಲೆ ಉಳಿದುಕೊಳ್ಳುವುದೇನು?”
ಗಿರೀಶ: ‘ ‘ನಿಜವಾದ ಸೂರ್ಯಮಾತ್ರ.”
ಶ್ರೀರಾಮಕೃಷ್ಣರು: ‘ ‘ಅದು ಸರಿಯಲ್ಲ, ಏನು ಉಳಿದುಕೊಳ್ಳುತ್ತದೆಯೋ ಅದನ್ನು ಬಾಯಿಂದ ವರ್ಣಿಸಲಾಗುವುದಿಲ್ಲ. ಏನಿದೆಯೊ ಅದೇ ಇರುತ್ತದೆ. ಸೂರ್ಯನ ಪ್ರತಿಬಿಂಬ ಇಲ್ಲದೆ ಇದ್ದರೆ, ನಿಜವಾದ ಸೂರ್ಯನೊಬ್ಬನಿದ್ದಾನೆ ಎಂಬುದನ್ನು ಅರಿಯುವ ಬಗೆ ಹೇಗೆ? ಸಮಾಧಿ ದೊರೆತಾಗ ‘ಅಹಂ’ ತತ್ತ್ವ ನಾಶವಾಗಿಬಿಡುತ್ತದೆ. ಸಮಾಧಿಸ್ಥ ವ್ಯಕ್ತಿ ಈ ಬಾಹ್ಯಜಗತ್ತಿನ ಅಂತಸ್ತಿಗೆ ಇಳಿದು ಬಂದಾಗ, ಸಮಾಧಿಯಲ್ಲಿ ಏನು ನೋಡಿದ ಎಂಬುದನ್ನು ಆತ ಬಾಯಿಂದ ವರ್ಣಿಸಲಾರ.”
ಸಾಯಂಕಾಲವಾಗಿ ಆಗಲೆ ಬಹಳ ಹೊತ್ತಾಗಿದೆ. ಬೈಠಕ್ಖಾನೆಯಲ್ಲಿ ದೀಪ ಉರಿಯುತ್ತಿದೆ. ಪರಮಹಂಸರು ಇನ್ನೂ ಭಾವಾವಿಷ್ಟರಾಗಿಯೇ ಇದ್ದಾರೆ. ಭಕ್ತರು ಅವರ ಸುತ್ತಲೂ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ಭಾವಾವಿಷ್ಟರಾಗಿಯೆ): ‘ ‘ಇಲ್ಲಿ ಬೇರೆ ಯಾರೂ ಇಲ್ಲ. ಅದಕ್ಕಾಗಿ ನಾನು ಇದನ್ನು ನಿಮಗೆ ತಿಳಿಸುತ್ತೇನೆ. ಯಾರು ಹೃತ್ಪೂರ್ವಕವಾಗಿ ಭಗವಂತನ ಸಾಕ್ಷಾತ್ಕಾರ ಪಡೆಯಲು ಪ್ರಯತ್ನಿಸುತ್ತಾನೆಯೊ ಆತನಿಗೆ ಆತ ದೊರೆತೇ ದೊರೆಯುತ್ತಾನೆ. ಆತನಿಗೆ ಆತ ದೊರೆತೇ ದೊರೆಯಬೇಕು. ಯಾರಿಗೆ ಭಗವಂತನ ವಿನಾ ಬೇರೆ ಏನೂ ಬೇಕಾಗದೊ, ಯಾರು ಆತನಿಗಾಗಿ ಅತ್ಯಂತ ವ್ಯಾಕುಲನಾಗಿದ್ದಾನೊ, ಆತನಿಗೆ ನಿಸ್ಸಂದೇಹವಾಗಿ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ.
‘ ‘ಇಲ್ಲಿಗೆ ಸೇರಿದವರು (ಅಂತರಂಗ ಭಕ್ತರು) ಆಗಲೇ ಬಂದುಬಿಟ್ಟಿದ್ದಾರೆ. ಮುಂದಕ್ಕೆ ಬರುವವರೆಲ್ಲ ಹೊರಗಿನವರು. ಅವರು ಆಗಾಗ ಬಂದುಹೋಗುತ್ತಾರೆ. ಭಗವತಿ ಅವರಿಗೆ, ‘ಹೀಗೆಹೀಗೆ ಮಾಡಿ, ಹೀಗೆಹೀಗೆ ಭಗವಂತನನ್ನು ಕರೆಯಿರಿ’ ಅಂತ ಹೇಳಿಕೊಡುತ್ತಾಳೆ.
‘ ‘ಜೀವನ ಮನಸ್ಸು ಭಗವಂತನ ಕಡೆ ಏಕೆ ಹರಿಯುತ್ತಿಲ್ಲ? ನೋಡಿ, ಭಗವಂತನಿಗಿಂತ ಆತನ ಮಾಯೆಗೇ ಹೆಚ್ಚು ಬಲ. ಜಡ್ಜಿಗಿಂತ ಆತನ ಜವಾನನಿಗೇ ಹೆಚ್ಚಿನ ಅಧಿಕಾರ. (ಎಲ್ಲರೂ ನಗುತ್ತಿದ್ದಾರೆ.)
‘ ‘ಶ್ರೀರಾಮ ನಾರದನಿಗೆ, ‘ನಾನು ನಿನ್ನ ಪ್ರಾರ್ಥನೆಯನ್ನು ಬಹಳವಾಗಿ ಮೆಚ್ಚಿದ್ದೇನೆ. ನನ್ನಿಂದ ಒಂದು ವರವನ್ನು ಬೇಡಿಕೊ ಅಂತ ಹೇಳಿದ. ನಾರದ, ‘ಹೇ ರಾಮ, ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧಭಕ್ತಿ ಉಂಟಾಗುವಂತೆ ಮಾಡು ಮತ್ತು ನಿನ್ನ ಭುವನ ಮೋಹಿನೀ ಮಾಯೆಯಿಂದ ನಾನು ಮುಗ್ಧನಾಗದಂತೆ ಇರಿಸು.’ ಅಂತ ಹೇಳಿದ. ಶ್ರೀರಾಮ, ‘ತಥಾಸ್ತು, ಬೇರೆ ಇನ್ನಾವುದಾದರೂ ಒಂದು ವರ ಬೇಡಿಕೊ’ ಅಂತ ಹೇಳಿದ. ‘ಹೇ ರಾಮ, ನನಗೆ ಇನ್ನು ಏನೂ ಬೇಡ’ ಅಂತ ನಾರದ ಹೇಳಿದ.
‘ ‘ಈ ಭುವನಮೋಹಿನಿ ಮಾಯೆಯಿಂದ ಎಲ್ಲರೂ ಮುಗ್ಧರಾಗಿ ಹೋಗಿದ್ದಾರೆ. ಭಗವಂತ ಮನುಷ್ಯ ದೇಹಧಾರಣೆ ಮಾಡಿಕೊಂಡು ಬಂದಾಗ ಆತನೂ ಅದರಿಂದ ಮುಗ್ಧನಾಗಿ ಹೋಗಿಬಿಡುತ್ತಾನೆ. ಶ್ರೀರಾಮ ಸೀತಾದೇವಿಗಾಗಿ ಅತ್ತು ಅತ್ತು ಹುಚ್ಚನಂತೆ ಅಲೆದಾಡಿದ. ‘ಬ್ರಹ್ಮ ಪಂಚಭೂತಗಳ ಬಲೆಗೆ ಸಿಕ್ಕಿಕೊಂಡು ಸುಮ್ಮನೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ.’ ಆದರೆ ಒಂದು ವಿಷಯ: ಆತ ತನ್ನ ಇಚ್ಛಾಮಾತ್ರದಿಂದಲೇ ಅದರಿಂದ ಮುಕ್ತನಾಗಿಬಿಡಬಲ್ಲ.”
ಭವನಾಥ: ‘ ‘ರೈಲ್ವೆಗಾರ್ಡು ಇಚ್ಛೆಪಟ್ಟೇ ರೈಲ್ವೆ ಗಾಡಿಯೊಳಗೆ ಬಾಗಿಲು ಹಾಕಿಕೊಂಡು ಕುಳಿತುಕೊಳ್ಳುತ್ತಾನೆ; ಇಚ್ಛೆ ಬಂದಾಗಲೆಲ್ಲಾ ಆತ ಅದರಿಂದ ಹೊರಕ್ಕೆ ಬರಬಲ್ಲ.”
ಶ್ರೀರಾಮಕೃಷ್ಣರು: ‘ ‘ಈಶ್ವರಕೋಟಿಗಳು–ಉದಾಹರಣೆಗೆ, ಅವತಾರಾದಿಗಳು– ಇಚ್ಛೆಪಟ್ಟರೆ ಮುಕ್ತರಾಗಬಲ್ಲರು; ಆದರೆ ಯಾರು ಜೀವಕೋಟಿಗಳೊ ಅವರ ಕೈಯಲ್ಲಿ ಇದು ಸಾಧ್ಯವಿಲ್ಲ. ಜೀವರು ಕಾಮಕಾಂಚನದಿಂದ ಬದ್ಧರಾಗಿದ್ದಾರೆ. ಕೊಠಡಿಯ ಕಿಟಕಿ ಬಾಗಿಲುಗಳೆಲ್ಲ ಸ್ಕ್ರೂ ಮೊಳೆಗಳಿಂದ ಭದ್ರಪಡಿಸಲ್ಪಟ್ಟಿದ್ದರೆ, ಅದರಿಂದ ಹೊರಕ್ಕೆ ಬರುವ ಬಗೆ ಹೇಗೆ?”
ಭವನಾಥ (ನಗುತ್ತ): ‘ ‘ಉದಾಹರಣೆಗೆ, ರೈಲ್ವೆಯ ಮೂರನೆಯ ತರಗತಿಯ ಪ್ರಯಾಣಿಕರನ್ನು ತೆಗೆದುಕೊಳ್ಳಿ. ಅವರ ಗಾಡಿಯ ಬಾಗಿಲಿಗೆ ಬೀಗ ಹಾಕಿಬಿಟ್ಟಿತು ಎಂದರೆ ಹೊರಕ್ಕೆ ಬರುವ ಹಾಗೆಯೆ ಇಲ್ಲ.”
ಗಿರೀಶ: ‘ ‘ಜೀವ ಈ ರೀತಿಯಾಗಿ ಎಲ್ಲಾ ವಿಧದಿಂದಲೂ ಬಿಗಿಯಲ್ಪಟ್ಟಿದ್ದರೆ, ಆತ ಅವುಗಳಿಂದ ಮುಕ್ತನಾಗಲು ಉಪಾಯ?”
ಶ್ರೀರಾಮಕೃಷ್ಣರು: ‘ ‘ಆದರೆ, ಭಗವಂತ ಗುರುವಿನ ರೂಪವನ್ನು ಧರಿಸಿ, ತಾನೇ ಮುಂದೆ ಬಂದು ಜೀವಿಯ ಪಾಶವನ್ನು ಕತ್ತರಿಸಿಹಾಕುವುದಾದರೆ, ಆಗ ಜೀವಿ ಭಯಪಡ ಬೇಕಾದ್ದೇನಿಲ್ಲ.”
1. ದಕ್ಷಿಣೇಶ್ವರದ ದೇವಾಲಯದಲ್ಲಿನ ಒಬ್ಬ ಗುಮಾಸ್ತ.