೫ನೆ ಆಗಸ್ಟ್ ೧೮೮೨, ಶ್ರಾವಣ ಕೃಷ್ಣ ಷಷ್ಠೀ, ಶನಿವಾರ
ಪರಮಹಂಸರ ಜನ್ಮಭೂಮಿ ಹುಗ್ಲಿ ಜಿಲ್ಲೆಯಲ್ಲಿರುವ ಕಾಮಾರಪುಕುರ. ಅದರ ಹತ್ತಿರದಲ್ಲಿರುವ ವೀರಸಿಂಗ್ ಎಂಬ ಗ್ರಾಮದಲ್ಲೇ ಈಶ್ವರಚಂದ್ರ ವಿದ್ಯಾಸಾಗರ ಜನ್ಮತಳೆದುದು. ಒಳ್ಳೆ ದೊಡ್ಡ ವಿದ್ಯಾವಂತ, ಶಿಕ್ಷಣ ಸಮರ್ಥ, ಬರಹಗಾರ, ಪರೋಪಕಾರಿ ಎಂಬುದಾಗಿ ಹೆಸರು ಪಡೆದಿದ್ದಾನೆ. ಆಧುನಿಕ ಬಂಗಾಳಿಯನ್ನು ಪೋಷಿಸಿದವರಲ್ಲಿ ಆತನೂ ಒಬ್ಬ. ಸಂಸ್ಕೃತ ವ್ಯಾಕರಣದಲ್ಲಿ ಮತ್ತು ಪದ್ಯಕಾವ್ಯದಲ್ಲಿ ಮಹಾಪಂಡಿತ. ಆತನ ಔದಾರ್ಯ ಆತನ ಹೆಸರನ್ನು ಮನೆಮಾತಾಗಿ ಮಾಡಿಬಿಟ್ಟಿದೆ. ಆತನ ಆದಾಯದ ಬಹುಭಾಗ ವಿಧವೆಯರ, ಅನಾಥರ, ದಿಕ್ಕಿಲ್ಲದವರ, ದರಿದ್ರರ, ಇನ್ನೂ ಬೇರೆ ಬೇರೆ ಕಷ್ಟದಲ್ಲಿರುವವರ ಕಣ್ಣೀರು ಒರಸಲು ಹೋಗುತ್ತದೆ. ಆತನ ಸಹಾನುಭೂತಿ ಮಾನವ ಕುಲದ ಎಲ್ಲೆಯೊಳಗೇ ನಿಂತಿರಲಿಲ್ಲ; ಕರುಗಳಿಗೆ ಹಾಲು ದೊರೆಯಲಿ ಎಂಬುದಾಗಿ ಅನೇಕ ವರ್ಷಗಳ ಕಾಲ ಆತ ಹಾಲನ್ನೇ ಕುಡಿಯಲಿಲ್ಲ, ಕುದುರೆಗಳಿಗೆ ಕಷ್ಟ ಕೊಡಬೇಕಾಗುತ್ತದೆಂದು ಗಾಡಿಯನ್ನೇ ಹತ್ತುತ್ತಿರಲಿಲ್ಲ. ಆತ ಸ್ವಾತಂತ್ರ್ಯಪ್ರೇಮಿ; ಮೇಲಧಿಕಾರಿಗಳೊಡನೆ ಭಿನ್ನಾಭಿಪ್ರಾಯ ಬೆಳೆದುದರಿಂದ ಸಂಸ್ಕೃತ ಕಾಲೇಜಿನ ಪ್ರಿನ್ಸಿಪಾಲ್ ಪದವಿಯನ್ನೇ ತ್ಯಾಗಮಾಡಿಬಿಟ್ಟ. ತನ್ನ ತಾಯನ್ನು ಕಂಡರೆ ಆತನಿಗೆ ಬಹಳ ಪ್ರೀತಿ. ತಾನು ತನ್ನ ತಮ್ಮನ ವಿವಾಹ ಸಮಯದಲ್ಲಿ ಹಾಜರಿರುವೆನೆಂಬುದಾಗಿ ಆತ ಆಕೆಗೆ ವಾಗ್ದಾನ ಮಾಡಿದ್ದುದರಿಂದ ಯಾವ ಪ್ರಾಣಾಪಾಯಕ್ಕೂ ಹೆದರದೆ, ದೋಣಿ ಸಿಕ್ಕದೆ ಹೋದುದರಿಂದ ಹುಚ್ಚುಪ್ರವಾಹ ಬಂದಿದ್ದ ದಾಮೋದರ ನದಿಯನ್ನು ಈಜಿ ದಾಟಿ ತನ್ನ ಮಾತನ್ನು ಉಳಿಸಿಕೊಂಡ. ಆತ ಸರಳತೆಯ ಮೂರ್ತಿಯಾಗಿದ್ದ. ವಿದ್ಯಾಸಾಗರ ಎಂಬ ಹೆಸರಿಗೆ ತಕ್ಕಂತೆ ಆತ ವಿದ್ಯೆಯ ಸಾಗರವೇ ಆಗಿದ್ದ.
ಪರಮಹಂಸರು ಬಹಳ ಕಾಲದಿಂದ ವಿದ್ಯಾಸಾಗರನನ್ನು ನೋಡಬೇಕು ಎಂದು ಕಾತರರಾಗಿದ್ದರು. ವಿದ್ಯಾಸಾಗರನ ಶಾಲೆಯಲ್ಲಿ ಮಾಸ್ಟರ್ ಅಧ್ಯಾಪಕನಾಗಿರುವುದನ್ನು ತಿಳಿದು ಅವರು ಆತನನ್ನು ಕೇಳಿದರು “ನನ್ನನ್ನು ವಿದ್ಯಾಸಾಗರನ ಹತ್ತಿರಕ್ಕೆ ಕರೆದುಕೊಂಡು ಹೋಗುತ್ತೀಯಾ? ಆತನನ್ನು ನೋಡಬೇಕು ಎಂಬುದಾಗಿ ಬಹಳವಾಗಿ ಇಚ್ಛೆ ಆಗುತ್ತಿದೆ.” ವಿದ್ಯಾ ಸಾಗರನಿಗೆ ಮಾಸ್ಟರ್ ಈ ಸಮಾಚಾರ ತಿಳಿಸಿದ. ಆತ ಬಹಳ ಹರ್ಷಗೊಂಡು ಒಂದು ಶನಿವಾರ ನಾಲ್ಕು ಘಂಟೆ ಸಮಯಕ್ಕೆ ಅವರನ್ನು ಕರೆದುಕೊಂಡು ಬರುವ ಹಾಗೆ ಮಾಸ್ಟರಿಗೆ ತಿಳಿಸಿದ. ಒಮ್ಮೆ ಮಾತ್ರ ಕೇಳಿದ: “ಅವರು ಯಾವ ವಿಧದ ಪರಮಹಂಸರು? ಕಾಷಾಯವಸ್ತ್ರ ಉಡುತ್ತಾರೆಯೆ?” ಮಾಸ್ಟರ್ ಹೇಳಿದ: “ಇಲ್ಲ, ಅವರು ಒಬ್ಬ ಅದ್ಭುತ ಪುರುಷರು, ಕೆಂಪು ಅಂಚಿನ ಪಂಚೆ ಉಡುತ್ತಾರೆ; ಷರಟು ತೊಟ್ಟುಕೊಳ್ಳುತ್ತಾರೆ, ಪಾಲಿಷ್ ಹಾಕಿದ ಸ್ಲಿಪ್ಪರ್ ಮೆಟ್ಟುತ್ತಾರೆ. ರಾಣಿ ರಾಸಮಣಿಯ ಕಾಳೀದೇವಾಲಯದ ಒಂದು ಕೊಠಡಿಯಲ್ಲಿ ವಾಸವಾಗಿದ್ದಾರೆ. ಅವರ ಕೊಠಡಿಯಲ್ಲಿ ಮಂಚ ಹಾಕಿದೆ. ಅದರ ಮೇಲೆ ಸುಪ್ಪತ್ತಿಗೆ ಎಲ್ಲಾ ಇವೆ. ಸೊಳ್ಳೆಪರದೆ ಕಟ್ಟಿದೆ. ಅದರ ಮೇಲೇ ಅವರು ಮಲಗುವುದು. ಸಂನ್ಯಾಸಿಯ ಯಾವ ಬಾಹ್ಯ ಚಿಹ್ನೆಯೂ ಕಾಣಬರುತ್ತಿಲ್ಲ. ಆದರೆ ಅವರಿಗೆ ಭಗವಂತನೊಬ್ಬನ ಹೊರತು ಬೇರೆ ಏನೂ ಗೊತ್ತಿಲ್ಲ. ಅಹರ್ನಿಶಿ ಭಗವಂತನ ಚಿಂತನೆಯಲ್ಲೇ ಕಾಲಕಳೆಯುತ್ತಾರೆ.”
ಪರಮಹಂಸರು ಆಗಸ್ಟ್ ಐದನೆಯ ತಾರೀಖು ಅಪರಾಹ್ನ ಭವನಾಥ, ಮಾಸ್ಟರ್, ಹಾಜರಾ ಇವರೊಡನೆ ಗಾಡಿಯಲ್ಲಿ ಕುಳಿತು ದಕ್ಷಿಣೇಶ್ವರ ಬಿಟ್ಟು ಹೊರಟಿದ್ದಾರೆ. ವಿದ್ಯಾಸಾಗರನ ಮನೆ ಇರುವುದು ಕಲ್ಕತ್ತದ ಮಧ್ಯಪ್ರದೇಶದಲ್ಲಿರುವ ಬಾದುರಬಾಗಾನಿನಲ್ಲಿ. ದಕ್ಷಿಣೇಶ್ವರದಿಂದ ಅಲ್ಲಿಗೆ ಆರು ಮೈಲಿ. ಗಾಡಿಯಲ್ಲಿ ಆನಂದದಿಂದ ಬಾಲಕನ ಹಾಗೆ ಮಾತುಕತೆ ಆಡಿಕೊಂಡೇ ಬರುತ್ತಿದ್ದಾರೆ. ಆದರೆ ವಿದ್ಯಾಸಾಗರನ ಮನೆಯ ಹತ್ತಿರಕ್ಕೆ ಬಂದಾಗ ಇದ್ದಕ್ಕಿದ್ದ ಹಾಗೆ ಅವರ ಭಾವ ಪರಿವರ್ತನೆ ಹೊಂದಿಬಿಟ್ಟಿತು. ಭಗವದಾವೇಶ ಬಂದು ಬಿಟ್ಟಿದೆ. ಮಾಸ್ಟರಿಗೆ ಇದು ಗೊತ್ತಾಗದೆ ಆತ ರಾಜಾ ರಾಮಮನೋಹನರಾಯನ ತೋಟದ ಮನೆಯನ್ನು ಅವರಿಗೆ ತೋರಿಸಿದ. ಪರಮಹಂಸರು ಅಸಮಾಧಾನಗೊಂಡು ಹೇಳುತ್ತಿದ್ದಾರೆ: “ಈಗ ಅದೆಲ್ಲ ನನಗೆ ರುಚಿಸುತ್ತಿಲ್ಲ.” ಭಾವಾವಿಷ್ಟರಾಗುತ್ತಿದ್ದಾರೆ.
ವಿದ್ಯಾಸಾಗರನ ಮನೆಮುಂದೆ ಗಾಡಿ ಬಂದು ನಿಂತಿತು. ಪರಮಹಂಸರು ಗಾಡಿಯಿಂದಿಳಿದು ಮಾಸ್ಟರನ್ನು ಹಿಡಿದುಕೊಂಡು ಮುಂದುವರಿಯುತ್ತಿದ್ದಾರೆ. ಅಂಗಳದಲ್ಲಿ ವಿವಿಧ ಹೂವಿನ ಗಿಡಗಳು ಬೆಳೆದಿವೆ. ಅವರು ಮನೆಯ ಒಳಕ್ಕೆ ಹೋಗುತ್ತ ಹೋಗುತ್ತ ತಮ್ಮ ಷರಟನ್ನು ತೋರಿಸಿ ಮಾಸ್ಟರನ್ನು ಮಗುವಿನ ಹಾಗೆ ಕೇಳುತ್ತಿದ್ದಾರೆ: “ನಾನು ಗುಂಡಿ ಹಾಕಿಕೊಂಡಿಲ್ಲ, ಇದು ವಿದ್ಯಾಸಾಗರನ ಮನಸ್ಸನ್ನು ನೋಯಿಸುವುದೇ?” ಮಾಸ್ಟರ್ ಹೇಳಿದ: “ಏನಿಲ್ಲ! ಅದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ. ಹೇಗೆ ನಡೆದುಕೊಂಡರೂ ನೀವು ತಪ್ಪು ಮಾಡಿದ ಹಾಗಾಗುವುದಿಲ್ಲ, ನೀವು ಗುಂಡಿ ಹಾಕಿಕೊಳ್ಳುವ ಆವಶ್ಯಕತೆಯೇನಿಲ್ಲ.” ಅವರು ಮಗುವಿನ ಹಾಗೆ ಅದನ್ನು ಒಪ್ಪಿಕೊಂಡು ನಿಶ್ಚಿಂತರಾಗಿಬಿಟ್ಟರು.
ವಿದ್ಯಾಸಾಗರನ ವಯಸ್ಸು ಅರವತ್ತೆರಡು ಇರಬೇಕು. ಪರಮಹಂಸರಿಗಿಂತ ಹದಿನಾರೋ ಹದಿನೇಳೋ ವರ್ಷ ಜಾಸ್ತಿ. ಆತನ ಮನೆ ಎರಡು ಅಂತಸ್ತಿನದು. ಆಂಗ್ಲರ ಬಂಗ್ಲೆ ಹಾಗೆ ಕಟ್ಟಲ್ಪಟ್ಟಿದೆ. ಸುತ್ತಲೂ ಹುಲ್ಲು ಮೈದಾನ. ಎತ್ತರವಾದ ಕಾಂಪೌಂಡು. ಪರಮಹಂಸರು ಮತ್ತು ಅವರೊಡನೆ ಬಂದಿದ್ದವರು ಮೆಟ್ಟಿಲು ಹತ್ತಿ ಎರಡನೆ ಅಂತಸ್ತಿಗೆ ಹೋಗಿ ಅಲ್ಲಿ ಒಂದು ಕೊಠಡಿಯನ್ನು ಪ್ರವೇಶಿಸಿದರು. ಅದರ ಒಂದು ಕೊನೆಯಲ್ಲಿ ವಿದ್ಯಾಸಾಗರ ಕುರ್ಚಿ ಮೇಜು ಹಾಕಿಕೊಂಡು ಕುಳಿತಿದ್ದ. ಆ ಮೇಜಿನ ಬಲಭಾಗಕ್ಕೆ ಒಂದು ಬೆಂಚು ಹಾಕಿತ್ತು. ಬಾಕಿ ಎರಡು ಕಡೆಗಳಲ್ಲಿ ಆತನ ಸ್ನೇಹಿತರು ಕುರ್ಚಿ ಹಾಕಿಕೊಂಡು ಕುಳಿತಿದ್ದರು.
ಪರಮಹಂಸರು ಕೊಠಡಿಯನ್ನು ಪ್ರವೇಶಿಸಿದೊಡನೆಯೇ ವಿದ್ಯಾಸಾಗರ ಅವರನ್ನು ಎದುರುಗೊಳ್ಳಲು ಎದ್ದು ನಿಂತುಕೊಂಡ. ಪರಮಹಂಸರು ಆ ಬೆಂಚಿನ ಹತ್ತಿರ ಹೋಗಿ ಒಂದು ಕೈಯನ್ನು ಆ ಮೇಜಿನ ಮೇಲೆ ಊರಿ ನಿಂತುಕೊಂಡರು. ವಿದ್ಯಾಸಾಗರ ಪೂರ್ವ ಪರಿಚಿತನೊ ಏನೊ ಎಂಬಂತೆ ಆತನನ್ನು ಏಕದೃಷ್ಟಿಯಿಂದ ನೋಡುತ್ತ ಭಾವದಲ್ಲಿ ಕಿರುನಗೆ ನಗುತ್ತಿದ್ದಾರೆ. ಆ ಅವಸ್ಥೆಯಲ್ಲೇ ಕೆಲವು ನಿಮಿಷಗಳು ಹಾಗೇ ನಿಂತುಕೊಂಡರು. ಪ್ರಕೃತಿಸ್ಥರಾಗಲೋಸುಗ ಆಗಾಗ ಹೇಳುತ್ತಿದ್ದಾರೆ: “ನೀರು ಕುಡಿಯಬೇಕು, ನೀರು ಕುಡಿಯಬೇಕು.”
ಇಷ್ಟರಲ್ಲೇ ಮನೆಮಕ್ಕಳು, ಆತನ ಸ್ನೇಹಿತರು, ಬಂಧುಗಳು ಇವರೆಲ್ಲಾ ಅಲ್ಲಿಗೆ ಬಂದು ನೆರೆದುಬಿಟ್ಟರು. ಪರಮಹಂಸರು ಇನ್ನೂ ಭಾವಾವಿಷ್ಟರಾಗಿಯೇ ಬೆಂಚಿನ ಮೇಲೆ ಕುಳಿತುಕೊಂಡಿದ್ದಾರೆ. ಹದಿನೇಳೊ ಹದಿನೆಂಟೊ ವಯಸ್ಸಿನ ಒಬ್ಬ ಹುಡುಗನೂ ಅದೇ ಬೆಂಚಿನ ಮೇಲೆ ಕುಳಿತಿದ್ದಾನೆ. ವಿದ್ಯಾಭ್ಯಾಸ ಮುಂದುವರಿಸಲು ಸಹಾಯ ಕೇಳಲು ಆತ ಅಲ್ಲಿಗೆ ಬಂದಿದ್ದಾನೆ. ಪರಮಹಂಸರು ಆತನಿಂದ ಸ್ವಲ್ಪ ದೂರದಲ್ಲಿ ಸರಿದು ಕುಳಿತುಕೊಂಡು ಭಾವದಲ್ಲೇ ಹೇಳುತ್ತಿದ್ದಾರೆ: “ತಾಯೇ, ಈ ಹುಡುಗನಿಗೆ ಅತ್ಯಂತ ಸಂಸಾರಾಸಕ್ತಿ. ನಿನ್ನ ಅವಿದ್ಯಾ ಸಂಸಾರಕ್ಕೆ ಸೇರಿದವ.”
ವಿದ್ಯಾಸಾಗರ ಯಾರೊ ಒಬ್ಬನಿಗೆ ನೀರು ತರುವಂತೆ ಹೇಳಿದ. ಆತ ಮಾಸ್ಟರನ್ನು ಕೇಳುತ್ತಿದ್ದಾನೆ, ಏನಾದರೂ ಫಲಾಹಾರ ತರಿಸಿದರೆ ಇವರು ಸ್ವೀಕರಿಸುವರೆ? ಆತ ಬೇಡವೆಂದು ಹೇಳದಿರುವುದನ್ನು ನೋಡಿ ವಿದ್ಯಾಸಾಗರನೇ ಮನೆಯೊಳಕ್ಕೆ ಹೋಗಿ ಸ್ವಲ್ಪ ಸಿಹಿತಿಂಡಿಗಳನ್ನು ತೆಗೆದುಕೊಂಡು ಬಂದು ಪರಮಹಂಸರ ಮುಂದೆ ಇಟ್ಟ. ಬಳಿಕ ಹಾಜರಾ ಮತ್ತು ಭವನಾಥ ಇವರಿಗೂ ತಿಂಡಿ ದೊರಕಿತು. ಮಾಸ್ಟರಿಗೆ ತಂದುಕೊಟ್ಟಾಗ ವಿದ್ಯಾಸಾಗರ ಹೇಳುತ್ತಿದ್ದಾನೆ: “ಈತ ನಮ್ಮ ಮನೆ ಹುಡುಗ. ಈತನಿಗೆ ಕೊಡದೆ ಇದ್ದರೂ ಚಿಂತೆಯಿಲ್ಲ.” ಪರಮಹಂಸರು ಅಲ್ಲಿದ್ದ ಒಬ್ಬ ಯುವಕ ಭಕ್ತನ ಮಾತೆತ್ತಿ ವಿದ್ಯಾಸಾಗರನಿಗೆ ಹೇಳುತ್ತಿದ್ದಾರೆ: “ಆ ಹುಡುಗ ಬಹಳ ಒಳ್ಳೆ ಹುಡುಗ; ಆಂತರ್ಯದಲ್ಲಿ ಒಳ್ಳೆ ಸಾರವಿದೆ. ಫಲ್ಗು ನದಿಯ ಹಾಗಿದ್ದಾನೆ. ನೋಡುವುದಕ್ಕೆ ಮೇಲೆ ಬರೀ ಮರಳೇ. ಸ್ವಲ್ಪ ಬಗೆದರೆ ಸಾಕು, ಒಳಗೆ ನೀರು ಹರಿಯುವುದು ಕಾಣಬರುತ್ತದೆ.”
ಸಿಹಿತಿಂಡಿಗಳನ್ನು ತಿಂದನಂತರ ಪರಮಹಂಸರು ನಗುನಗುತ್ತ ವಿದ್ಯಾಸಾಗರನೊಡನೆ ಮಾತನಾಡಲಾರಂಭಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಕೊಠಡಿ ಜನರಿಂದ ತುಂಬಿಬಿಟ್ಟಿತು. ಕೆಲವರು ಕುಳಿತಿದ್ದಾರೆ, ಕೆಲವರು ನಿಂತಿದ್ದಾರೆ.
ಶ್ರೀರಾಮಕೃಷ್ಣರು: “ಆಹ! ಇಂದು ಸಾಗರಕ್ಕೆ ಬಂದು ಸೇರಿಬಿಟ್ಟಿದ್ದೇನೆ. ಇಲ್ಲಿಯವರೆಗೆ ಕಾಲುವೆ, ಜೌಗು ಭೂಮಿ, ಅತಿ ಹೆಚ್ಚೆಂದರೆ ನದಿ ಇವನ್ನು ನೋಡಿದ್ದೆ. ಆದರೆ ಇಂದು ಸಾಗರವೇ ನನ್ನ ಕಣ್ಣೆದುರಿಗೆ!” (ಎಲ್ಲರೂ ನಗುತ್ತಿದ್ದಾರೆ.)
ವಿದ್ಯಾಸಾಗರ ನಗುತ್ತ: “ಹಾಗಾದರೆ, ಇಲ್ಲಿಂದ ತೆಗೆದುಕೊಂಡು ಹೋಗಿ ಸ್ವಲ್ಪ ಉಪ್ಪು ನೀರನ್ನು.” (ನಗು.)
ಶ್ರೀರಾಮಕೃಷ್ಣರು: “ಇಲ್ಲ, ಇಲ್ಲ ! ಏಕೆ ಉಪ್ಪು ನೀರು ತೆಗೆದುಕೊಂಡು ಹೋಗಲಿ? ನೀನು ಅವಿದ್ಯೆಯ ಸಾಗರವೇನಲ್ಲ, ವಿದ್ಯೆಯ ಸಾಗರ. ನೀನು ಕ್ಷೀರಸಮುದ್ರ.” (ಎಲ್ಲರೂ ನಗುತ್ತಿದ್ದಾರೆ.)
ವಿದ್ಯಾಸಾಗರ: “ನೀವು ಸುಮ್ಮನೆ ಬೇಕಾದರೆ ಹಾಗೆ ಹೇಳಬಹುದು.”
ವಿದ್ಯಾಸಾಗರ ಈಗ ಸುಮ್ಮನೆ ಕುಳಿತುಕೊಂಡಿದ್ದಾನೆ. ಪರಮಹಂಸರು ಹೇಳುತ್ತಿದ್ದಾರೆ: “ನಿನ್ನ ಕರ್ಮ ಸಾತ್ತ್ವಿಕ ಕರ್ಮ; ಸತ್ತ್ವಪ್ರಧಾನ ರಾಜಸಿಕ ಕರ್ಮ; ಸತ್ತ್ವಗುಣದಿಂದ ದಯೆ ಉಂಟಾಗುತ್ತದೆ. ದಯಾಪ್ರೇರಿತ ಕರ್ಮಗಳು ರಾಜಸಿಕ ಕರ್ಮಗಳೇನೋ ನಿಜ. ಆದರೆ ಅವುಗಳಲ್ಲಿನ ರಜಸ್ಸು ಸತ್ತ್ವಪ್ರಧಾನ ರಜಸ್ಸು. ಅದರಿಂದ ಯಾವ ತೊಂದರೆಯೂ ಬಾರದು. ಶುಕದೇವಾದಿಗಳು ಲೋಕಶಿಕ್ಷಣಕ್ಕಾಗಿ, ಭಗವದ್ವಿಷಯವನ್ನು ತಿಳಿಸುವುದಕ್ಕಾಗಿ ದಯೆ ಇಟ್ಟುಕೊಂಡಿದ್ದರು. ನೀನು ವಿದ್ಯಾದಾನ, ಅನ್ನದಾನ ಮಾಡುತ್ತಿದ್ದೀಯೆ. ಇವೂ ಒಳ್ಳೆಯವೇ. ನಿಷ್ಕಾಮ ಭಾವನೆಯಿಂದ ಮಾಡಿದರೆ ಇವುಗಳಿಂದಲೂ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ. ಕೆಲವರು ಇವನ್ನು ಕೀರ್ತಿಗಾಗಿ, ಪುಣ್ಯಕ್ಕಾಗಿ ಮಾಡುತ್ತಾರೆ. ಇವರದು ನಿಷ್ಕಾಮ ಕರ್ಮ ಅಲ್ಲವೇ ಅಲ್ಲ. ಜೊತೆಗೆ ನೀನಾಗಲೇ ಸಿದ್ಧಪುರುಷ.”
ವಿದ್ಯಾಸಾಗರ: “ಅದು ಹೇಗೆ?”
ಶ್ರೀರಾಮಕೃಷ್ಣರು ನಗುತ್ತ: “ಆಲೂಗೆಡ್ಡೆ, ಪಡವಲಕಾಯಿ ಸಿದ್ಧವಾದರೆ (ಬೆಂದರೆ) ಮೃದು ಆಗುತ್ತವೆ. ನೀನು ಬಹಳ ಮೃದು! ನಿನ್ನಲ್ಲಿ ಬಹಳ ದಯೆ!” (ನಗು.)
ವಿದ್ಯಾಸಾಗರ ನಗುತ್ತ: “ತಿರುವಿದ ಉದ್ದಿನಬೇಳೆಯನ್ನು ಬೇಯಿಸಿತು ಎಂದರೆ ಅದು ಇನ್ನೂ ಅಧಿಕವಾಗಿ ಗಟ್ಟಿಯಾಗುತ್ತದೆ.”
ಶ್ರೀರಾಮಕೃಷ್ಣರು: “ಆದರೆ ನೀನು ಆ ಗುಂಪಿಗೆ ಸೇರಿದವನಲ್ಲ. ಬರಿಯ ಪಂಡಿತ ರೋಗ ಹಿಡಿದ ಹಣ್ಣಿನ ಹಾಗೆ. ಕಾಯಿಗೆ ಕಾಯೂ ಅಲ್ಲ, ಹಣ್ಣಿಗೆ ಹಣ್ಣೂ ಅಲ್ಲ. ಎಡಬಿಡಂಗಿ. ರಣಹದ್ದು ಬಹಳ ಎತ್ತರಕ್ಕೇನೋ ಹಾರಿಹೋಗುತ್ತದೆ, ಆದರೆ ಅದರ ದೃಷ್ಟಿ ಮಾತ್ರ ಸತ್ತ ಪ್ರಾಣಿಗಳ ಕಡೆ. ಬರಿಯ ಪಂಡಿತರು ಹೆಸರಿಗೇನೋ ಪಂಡಿತರು, ಆದರೆ ಕಾಮಕಾಂಚನಾಸಕ್ತರು. ರಣಹದ್ದುಗಳ ಹಾಗೆ ಕೊಳೆತು ನಾರುವ ಮಾಂಸಕ್ಕಾಗಿ ಹುಡುಕುತ್ತಾರೆ.ಆಸಕ್ತಿ ಅವಿದ್ಯಾಸಂಸಾರಕ್ಕೆಸೇರಿದ್ದು.ದಯೆ, ಭಕ್ತಿ, ವೈರಾಗ್ಯ ಇವು ವಿದ್ಯೆಯ ಐಶ್ವರ್ಯ.”
ವಿದ್ಯಾಸಾಗರ ಸುಮ್ಮನೆ ಕುಳಿತು ಕೇಳುತ್ತಿದ್ದಾನೆ. ಉಳಿದವರೂ ಏಕಾಗ್ರದೃಷ್ಟಿಯಿಂದ ಆ ಆನಂದಮಯ ಪುರುಷರನ್ನು ದರ್ಶನಮಾಡುತ್ತ ಅವರ ಬಾಯಿಂದ ಬರುತ್ತಿದ್ದ ವೇದ ವಚನಾಮೃತವನ್ನು ಪಾನಮಾಡುತ್ತಿದ್ದಾರೆ.
ವಿದ್ಯಾಸಾಗರ ಧಾರ್ಮಿಕ ವಿಷಯವಾಗಿ ಯಾರಿಗೂ ಒಂದು ಮಾತೂ ಆಡುತ್ತಿರಲಿಲ್ಲ. ಆತ ಹಿಂದೂ ದರ್ಶನಾದಿಗಳನ್ನು ಓದಿದ್ದಾನೆ. ಒಮ್ಮೆ ಅವುಗಳ ಸಂಬಂಧವಾಗಿ ಮಾಸ್ಟರ್ ಆತನಿಗೆ ಪ್ರಶ್ನೆ ಹಾಕಿದಾಗ ಆತ ಹೇಳಿದ: “ನನಗನಿಸುತ್ತದೆ, ದಾರ್ಶನಿಕರ ಮನಸ್ಸಿನಲ್ಲಿ ಏನಿತ್ತೊ ಅದನ್ನು ಅವರು ವ್ಯಕ್ತಪಡಿಸಲು ಆಗಲಿಲ್ಲ ಎಂಬುದಾಗಿ.” ಆದರೆ ಆತ ವೈದಿಕರಂತೆ ಶ್ರಾದ್ಧಾದಿ ಧರ್ಮಕರ್ಮಗಳನ್ನು ಮಾಡುತ್ತಿದ್ದ; ಕೊರಳಿಗೆ ಉಪವೀತ ಹಾಕಿಕೊಳ್ಳುತ್ತಿದ್ದ. ಬಂಗಾಳಿಯಲ್ಲೆ ಎಲ್ಲಾ ಪತ್ರ ಬರೆಯುತ್ತಿದ್ದ. ಅವುಗಳಲ್ಲಿ “ಶ್ರೀಶ್ರೀಹರಿಶರಣಂ” ಎಂಬುದಾಗಿ ಮೊದಲು ಬರೆಯುತ್ತಿದ್ದ. ಭಗವಂತನ ವಿಷಯವಾಗಿ ಒಮ್ಮೆ ಆತ ಹೇಳಿದ್ದ: “ಭಗವಂತನನ್ನು ಅರಿತುಕೊಳ್ಳಲಂತೂ ಮಾರ್ಗವೇ ಇಲ್ಲ. ಆದ್ದರಿಂದ ನಾವು ಮಾಡಬೇಕಾದಕರ್ತವ್ಯವೇನು? ನನ್ನ ದೃಷ್ಟಿಯಿಂದ ನಾವು ಮಾಡಬೇಕಾದ ಕರ್ತವ್ಯ, ನಾವು ಈ ರೀತಿಯಾಗಿ ಬದುಕಿ ಬಾಳಬೇಕು, ಇತರರೂ ಅದನ್ನು ಅನುಸರಿಸುವುದಾದರೆ ಈ ಭೂಮಂಡಲವೇ ಸ್ವರ್ಗವಾಗಿ ಹೋಗಿಬಿಡಬೇಕು. ಈ ಜಗತ್ತಿಗೆ ಶ್ರೇಯಸ್ಸು ತರಲು ಪ್ರತಿಯೊಬ್ಬನೂ ಪ್ರಯತ್ನಿಸಬೇಕು.”
ಈಗ ಪರಮಹಂಸರ ಮಾತುಕತೆ ಬ್ರಹ್ಮಜ್ಞಾನದ ಸಂಬಂಧವಾಗಿ ಆರಂಭವಾಯಿತು.
ಶ್ರೀರಾಮಕೃಷ್ಣರು: “ಬ್ರಹ್ಮ ವಿದ್ಯೆ-ಅವಿದ್ಯೆಗಳಿಗೆ ಅತೀತ. ಆತ ಮಾಯಾತೀತ.”
“ಈ ಜಗತ್ತಿನಲ್ಲಿ ವಿದ್ಯಾಮಾಯೆ, ಅವಿದ್ಯಾಮಾಯೆ ಎರಡೂ ಇವೆ. ಜ್ಞಾನಭಕ್ತಿಯೂ ಇವೆ, ಕಾಮಕಾಂಚನವೂ ಇವೆ; ಸತ್ ಕೂಡಾ ಇದೆ, ಅಸತ್ ಕೂಡಾ ಇದೆ; ಒಳ್ಳೇದೂ ಇದೆ, ಕೆಟ್ಟದ್ದೂ ಇದೆ. ಆದರೆ ಬ್ರಹ್ಮ ಮಾತ್ರ ನಿರ್ಲಿಪ್ತ. ಒಳ್ಳೇದು-ಕೆಟ್ಟದ್ದು, ಸತ್-ಅಸತ್ ಇವು ಜೀವಿಗಳ ಪಕ್ಷಕ್ಕೆ ಮಾತ್ರ; ಆದರೆ ಬ್ರಹ್ಮನಿಗೆ ಅವುಗಳಿಂದ ಏನೂ ಆಗದು.
“ಒಬ್ಬ ದೀಪದ ಬೆಳಕಿನಲ್ಲಿ ಭಾಗವತ ಓದುತ್ತಿರಬಹುದು, ಇನ್ನೊಬ್ಬ ಅದೇ ಬೆಳಕಿನಲ್ಲಿ ಸುಳ್ಳು ಪತ್ರ ಬರೆಯುತ್ತಿರಬಹುದು; ಆದರೆ ದೀಪ ಮಾತ್ರ ನಿರ್ಲಿಪ್ತವಾದ್ದು. ಸೂರ್ಯ ತನ್ನ ಬೆಳಕನ್ನು ಒಳ್ಳೆಯವರ ಮೇಲೂ ಬಿಡುತ್ತಾನೆ, ಕೆಟ್ಟವರ ಮೇಲೂ ಬಿಡುತ್ತಾನೆ.
“ನೀನು ಕೇಳಬಹುದು: ‘ಹಾಗಾದರೆ ದುಃಖ, ಪಾಪ, ಅಶಾಂತಿ ಇವುಗಳಿಗೆಲ್ಲ ಸಮಂಜಸ ಉತ್ತರ ಎಲ್ಲಿ?’ ಇವೆಲ್ಲ ಜೀವಕ್ಕೆ ಸಂಬಂಧಪಟ್ಟವು ಎಂಬುದೇ ಉತ್ತರ. ಬ್ರಹ್ಮ ಇವುಗಳಿಂದ ನಿರ್ಲಿಪ್ತ. ಹಾವಿನಲ್ಲಿ ವಿಷವಿದೆ, ಅದು ಪರರನ್ನು ಕಡಿದಾಗ ಮಾತ್ರ ಅವರು ಸತ್ತುಹೋಗುತ್ತಾರೆ. ಆದರೆ ಹಾವಿಗೆ ಮಾತ್ರ ಅದರಿಂದ ಏನೂ ಆಗದು.
“ಬ್ರಹ್ಮ ಏನು ಎಂಬುದನ್ನು ಬಾಯಿಂದ ವರ್ಣನೆ ಮಾಡಲಾಗುವುದಿಲ್ಲ, ಎಲ್ಲವೂ ಉಚ್ಛಿಷ್ಟವಾಗಿ ಹೋಗಿವೆ-ವೇದ, ಪುರಾಣ, ತಂತ್ರ, ಷಡ್ದರ್ಶನ ಎಲ್ಲಾ. ಇವೆಲ್ಲಾ ಬಾಯಿಂದ ಹೊರಹೊಮ್ಮಿರುವುದರಿಂದ, ನಾಲಗೆ ಉಚ್ಚರಿಸಿರುವುದರಿಂದ ಉಚ್ಛಿಷ್ಟವಾಗಿದೆ. ಆದರೆ ಕೇವಲ ಒಂದು ವಸ್ತು ಮಾತ್ರ ಉಚ್ಛಿಷ್ಟವಾಗಿಲ್ಲ. ಅದೇ ಬ್ರಹ್ಮ. ಬ್ರಹ್ಮ ಎಂದರೆ ಏನು ಎಂಬುದನ್ನು ಯಾರೂ ಇದುವರೆಗೆ ವರ್ಣನೆ ಮಾಡಲಾಗಿಲ್ಲ.”
ವಿದ್ಯಾಸಾಗರ ತನ್ನ ಸ್ನೇಹಿತರಿಗೆ: “ಆಹಾ! ಇದು ಬಹಳ ಒಳ್ಳೆ ದಿವ್ಯವಾದ ಮಾತು, ಇಂದು ಒಂದು ಹೊಸ ವಿಷಯವನ್ನೇ ಕಲಿತುಕೊಂಡ ಹಾಗಾಯಿತು.”
ಶ್ರೀರಾಮಕೃಷ್ಣರು: “ಒಬ್ಬನಿಗೆ ಇಬ್ಬರು ಮಕ್ಕಳಿದ್ದರು. ಆ ಇಬ್ಬರು ಮಕ್ಕಳಿಗೂ ಬ್ರಹ್ಮವಿದ್ಯೆ ಕಲಿಸಬೇಕೆಂದು ತಂದೆ ಅವರನ್ನು ಒಬ್ಬ ಗುರುವಿನ ಹತ್ತಿರಕ್ಕೆ ಕಳುಹಿಸಿದ. ಕೆಲವು ವರ್ಷಗಳ ನಂತರ ಅವರಿಬ್ಬರೂ ಗುರುಗೃಹದಿಂದ ಹಿಂದಿರುಗಿ ಬಂದು ತಂದೆಗೆ ಪ್ರಣಾಮ ಮಾಡಿದರು. ತಂದೆಗೆ ಕುತೂಹಲವುಂಟಾಯಿತು. ತನ್ನ ಮಕ್ಕಳ ಬ್ರಹ್ಮಜ್ಞಾನ ಎಷ್ಟು ಆಳದ್ದು ಎಂಬುದನ್ನು ಕಂಡುಹಿಡಿಯಲು ಆತ ದೊಡ್ಡವನಿಗೆ ಪ್ರಶ್ನೆ ಹಾಕಿದ: ‘ಮಗು, ನೀನು ಎಲ್ಲವನ್ನೂ ಓದಿಬಂದಿದ್ದೀಯೆ. ಬ್ರಹ್ಮನ ಸ್ವರೂಪ ಏನು ತಿಳಿಸು ನೋಡೋಣ?’ ಆ ಹುಡುಗ ವೇದಗಳಿಂದ ಅನೇಕ ಶ್ಲೋಕಗಳನ್ನು ಎತ್ತಿ ಎತ್ತಿ ಹೇಳಿ ಬ್ರಹ್ಮನ ಸ್ವರೂಪ ಏನು ಎಂಬುದನ್ನು ವಿವರಿಸಲಾರಂಭಿಸಿದ. ತಂದೆ ಎಲ್ಲವನ್ನೂ ಸಾವಧಾನದಿಂದ ಕೇಳಿದ. ಬಳಿಕ ತಂದೆ ಅದೇ ಪ್ರಶ್ನೆಯನ್ನು ಕಿರಿಯ ಮಗನಿಗೆ ಹಾಕಿದ. ಆತ ತನ್ನ ದೃಷ್ಟಿಯನ್ನು ನೆಲದ ಕಡೆಗೆ ತಿರುಗಿಸಿ ಸುಮ್ಮನೆ ನಿಂತುಕೊಂಡ. ಬಾಯಿಂದ ಒಂದು ಮಾತೂ ಹೊರಡಲಿಲ್ಲ. ತಂದೆ ಬಹಳ ಸಂತುಷ್ಟನಾಗಿ ಆತನಿಗೆ ಹೇಳಿದ: ‘ಮಗು, ನಿನಗೆ ಬ್ರಹ್ಮ ಎಂದರೆ ಏನು ಎಂಬುದು ಸ್ವಲ್ಪ ಅರ್ಥವಾಗಿದೆ. ಬ್ರಹ್ಮ ಏನು ಎಂಬುದನ್ನು ಬಾಯಿಂದ ಹೇಳಲಾಗುವುದಿಲ್ಲ.’
“ಜನ ಅನೇಕ ವೇಳೆ ಭಾವಿಸುತ್ತಾರೆ, ತಮಗೆ ಬ್ರಹ್ಮನ ಸ್ವರೂಪ ಏನು ಎಂಬುದು ಅರ್ಥವಾಗಿಬಿಟ್ಟಿದೆ ಎಂಬುದಾಗಿ. ಒಂದು ಇರುವೆ ಸಕ್ಕರೆ ಬೆಟ್ಟಕ್ಕೆ ಹೋಗಿತ್ತು. ಅದರ ಒಂದು ಕಣ ತಿನ್ನುವುದರೊಳಗೇ ಅದಕ್ಕೆ ಹೊಟ್ಟೆ ತುಂಬಿಕೊಂಡುಬಿಟ್ಟಿತು. ಇನ್ನೊಂದು ಕಣವನ್ನು ಬಾಯಲ್ಲಿ ಕಚ್ಚಿಕೊಂಡು ತನ್ನ ಗೂಡಿಗೆ ಹೊರಟಿತು. ಹೋಗುತ್ತಾ ಇರುವಾಗ ಭಾವಿಸುತ್ತಿದೆ: ‘ಮುಂದಿನ ಸಲ ಬಂದಾಗ ಈ ಬೆಟ್ಟವನ್ನೇ ಹೊತ್ತುಕೊಂಡು ಹೋಗುತ್ತೇನೆ.’ ಸಾಮಾನ್ಯರೂ ಹೀಗೇ ಭಾವಿಸುತ್ತಾರೆ. ಅವರಿಗೆ ಗೊತ್ತಿಲ್ಲ, ಬ್ರಹ್ಮ ವಾಙ್ಮನಾತೀತ ಎಂಬುದು. ಮನುಷ್ಯ ಎಷ್ಟೇ ದೊಡ್ಡವನಾಗಿದ್ದರೂ ಭಗವಂತನ ವಿಷಯವಾಗಿ ಏನು ತಾನೆ ಅರಿತುಕೊಳ್ಳಬಲ್ಲ? ಶುಕದೇವಾದಿಗಳು ಬಹುಶಃ ದೊಡ್ಡ ಇರುವೆ; ಸಕ್ಕರೆಯ ಎಂಟೊ ಹತ್ತೊ ಕಣ ಕಚ್ಚಿಕೊಂಡು ಹೋಗುವಷ್ಟು ಶಕ್ತರಾಗಿದ್ದರು.
“ವೇದ ಪುರಾಣ ಇವುಗಳಲ್ಲಿ ವರ್ಣಿತವಾಗಿದೆಯಲ್ಲ, ಅದು ಯಾವ ರೀತಿಯದು ಗೊತ್ತೆ? ಬಹುಶಃ ಒಬ್ಬ ಸಮುದ್ರ ನೋಡಿ ಬಂದಿದ್ದಾನೆ ಅಂತ ಇಟ್ಟುಕೊ, ಆತನನ್ನು ಯಾರಾದರೂ ಕೇಳಿದರೆ, ‘ಏನಪ್ಪ ಸಮುದ್ರ ಹೇಗಿದೆ?’ ಅಂತ, ಆತ ಆಕಾಶಕ್ಕೂ ಭೂಮಿಗೂ ತನ್ನ ಬಾಯಿ ತೆರೆದು ಹೇಳುತ್ತಾನೆ: ‘ಆಹಾ, ಎಂಥಾ ಅದ್ಭುತವಾದ ದೃಶ್ಯ! ಎಂಥಾ ಭಯಂಕರವಾದ ಅಲ್ಲೋಲಕಲ್ಲೋಲ ಅದರಲ್ಲಿ!’ ಬ್ರಹ್ಮನ ವಿಷಯವೂ ಅದೇ ರೀತಿಯದು. ವೇದದಲ್ಲಿ ಹೇಳಿದೆ, ಬ್ರಹ್ಮ ಆನಂದಸ್ವರೂಪ-ಸಚ್ಚಿದಾನಂದ ಎಂಬುದಾಗಿ.
“ಶುಕದೇವಾದಿಗಳು ಈ ಬ್ರಹ್ಮಸಾಗರದ ದಡದಲ್ಲಿ ನಿಂತು ಅದರ ದರ್ಶನ ಸ್ಪರ್ಶನ ಮಾತ್ರ ಮಾಡಿದ್ದರು. ಕೆಲವರು ಹೇಳುತ್ತಾರೆ, ಅವರು ಈ ಸಾಗರಕ್ಕೆ ಇಳಿಯಲೇ ಇಲ್ಲ ಎಂಬುದಾಗಿ. ಈ ಸಾಗರಕ್ಕೆ ಇಳಿದದ್ದೇ ಆದರೆ ಹಿಂದಿರುಗಿ ಬರುವ ಹಾಗೇ ಇಲ್ಲ.
“ಸಮಾಧಿಯಲ್ಲಿ ಬ್ರಹ್ಮಜ್ಞಾನ ದೊರೆಯುತ್ತದೆ-ಬ್ರಹ್ಮದರ್ಶನ ದೊರೆಯುತ್ತದೆ. ಆ ಅವಸ್ಥೆಯಲ್ಲಿ ವಿಚಾರ ಪೂರ್ತಿಯಾಗಿ ನಿಂತುಹೋಗುತ್ತದೆ, ಮನುಷ್ಯ ಮೂಕನಾಗಿಬಿಡುತ್ತಾನೆ. ಬ್ರಹ್ಮನ ಸ್ವರೂಪವೇನು ಎಂಬುದನ್ನು ವರ್ಣಿಸಲು ಶಕ್ತಿ ಇರುವುದಿಲ್ಲ.
“ಉಪ್ಪಿನ ಬೊಂಬೆ ಒಮ್ಮೆ ಸಮುದ್ರದ ಆಳ ಕಂಡುಹಿಡಿಯಲು ಹೋಯಿತು. (ಎಲ್ಲರೂ ನಗುತ್ತಿದ್ದಾರೆ.) ಅದರ ಆಳ ಎಷ್ಟಿದೆ ಎಂಬುದನ್ನು ಪರರಿಗೆ ತಿಳಿಸಬೇಕು ಅಂತ ಅದು ಮನಸ್ಸು ಮಾಡಿಕೊಂಡಿತ್ತು. ಆದರೆ ಅದಕ್ಕೆ ಹಾಗೆ ಮಾಡಲು ಸಾಧ್ಯವೇ ಆಗಲಿಲ್ಲ. ಇಳಿಯೋದೇ ತಡ ಕರಗಿಹೋಯಿತು. ಸಮುದ್ರದ ಆಳ ಎಷ್ಟು ಎಂಬುದನ್ನು ತಿಳಿಸುವುದಕ್ಕೆ ಉಳಿದುಕೊಂಡಿರುವವರು ಯಾರು?”
ಒಬ್ಬ ಭಕ್ತ: “ಒಬ್ಬನಿಗೆ ಸಮಾಧಿಯಲ್ಲಿ ಬ್ರಹ್ಮಜ್ಞಾನ ದೊರೆಯಿತು ಅಂತ ಇಟ್ಟುಕೊಳ್ಳಿ, ಮತ್ತೆ ಆತನ ಬಾಯಿಂದ ಮಾತೇ ಹೊರಡುವುದಿಲ್ಲವೆ?”
ಶ್ರೀರಾಮಕೃಷ್ಣರು: “ಶಂಕರಾಚಾರ್ಯರು ಲೋಕಶಿಕ್ಷಣಕ್ಕಾಗಿ ‘ವಿದ್ಯೆಯ ಅಹಂ’ ಇಟ್ಟುಕೊಂಡಿದ್ದರು. ಬ್ರಹ್ಮದರ್ಶನ ದೊರೆತನಂತರ ಮನುಷ್ಯ ಮೂಕನಾಗಿಬಿಡುತ್ತಾನೆ. ದರ್ಶನ ದೊರೆಯದವರೆಗೆ ಮಾತ್ರ ವಿಚಾರ. ತುಪ್ಪ ಇನ್ನೂ ಹಸಿಯಾಗಿರುವವರೆಗೆ ಮಾತ್ರ ಅದು ‘ಕಲ ಕಲ’ ಅಂತ ಶಬ್ದಮಾಡುತ್ತಿರುತ್ತದೆ. ಚೆನ್ನಾಗಿ ಕಾದಿರುವ ತುಪ್ಪದಲ್ಲಿ ಯಾವ ಶಬ್ದವೂ ಇರದು. ಆದರೆ ಹಸಿಯಾಗಿರುವ ಪೂರಿ ಅದಕ್ಕೆ ಬಿತ್ತು ಎಂದರೆ ಅದು ಮತ್ತೆ ‘ಕಲ ಕಲ’ ಅಂತ ಶಬ್ದ ಮಾಡಲಾರಂಭಿಸುತ್ತದೆ. ಪೂರಿ ಬೆಂದೊಡನೆಯೇ ಮತ್ತೆ ಶಬ್ದ ನಿಂತು ಹೋಗುತ್ತದೆ. ಅದೇ ರೀತಿಯಾಗಿ ಸಮಾಧಿ ಪಡೆದ ಮನುಷ್ಯ ಲೋಕಶಿಕ್ಷಣಕ್ಕಾಗಿ ಮತ್ತೆ ಕೆಳಕ್ಕೆ ಇಳಿದು ಬಂದು ಮಾತುಕತೆಯಾಡಲು ಆರಂಭಿಸುತ್ತಾನೆ.
ಕೊಳದಲ್ಲಿ ಬಿಂದಿಗೆಗೆ ನೀರು ತುಂಬುವಾಗ ಅದು ಬಕ್, ಬಕ್ ಅಂತ ಶಬ್ದ ಮಾಡುತ್ತದೆ. ಪೂರ್ಣವಾಗಿ ತುಂಬಿದ ನಂತರ ಅದು ಯಾವ ಶಬ್ದವನ್ನೂ ಮಾಡದು. (ಎಲ್ಲರೂ ನಗುತ್ತಿದ್ದಾರೆ.) ಆದರೆ, ಅದರಿಂದ ಇನ್ನೊಂದು ಬಿಂದಿಗೆಗೆ ನೀರು ಸುರಿಯುವಾಗ ಮತ್ತೆ ಅದು ಶಬ್ದ ಮಾಡುತ್ತದೆ. (ನಗು.)
“ಹಿಂದಿನ ಋಷಿಗಳಿಗೆ ಬ್ರಹ್ಮ ಜ್ಞಾನ ದೊರೆತಿತ್ತು. ವಿಷಯಬುದ್ಧಿ ಲೇಶಮಾತ್ರವಿದ್ದರೂ ಬ್ರಹ್ಮಜ್ಞಾನ ದೊರಕುವುದಿಲ್ಲ. ಋಷಿಗಳು ಎಷ್ಟು ಕಷ್ಟ ತೆಗೆದುಕೊಳ್ಳುತ್ತಿದ್ದರು ಏನು ಕತೆ! ಬೆಳಗಾಗೆದ್ದು ಆಶ್ರಮ ಬಿಟ್ಟು ಹೊರಟುಹೋಗುತ್ತಿದ್ದರು. ಇಡೀ ದಿನವೆಲ್ಲಾ ಏಕಾಂಗಿಯಾಗಿ ಭಗವಂತನ ಧ್ಯಾನಚಿಂತನೆಯಲ್ಲೇ ಕಳೆಯುತ್ತಿದ್ದರು. ರಾತ್ರಿವೇಳೆ ಆಶ್ರಮಕ್ಕೆ ಹಿಂತಿರುಗಿ ಬಂದು ಎಲ್ಲೊ ಸ್ವಲ್ಪ ಫಲಮೂಲಾದಿಗಳನ್ನು ತಿನ್ನುತ್ತಿದ್ದರು. ರೂಪ, ಶಬ್ದ, ಸ್ಪರ್ಶ ಇವೇ ಮೊದಲಾದ ವಿಷಯವಸ್ತುಗಳ ಕಡೆ ಮನಸ್ಸು ಹೋಗದ ಹಾಗೆ ನೋಡಿಕೊಳ್ಳುತ್ತಿದ್ದರು. ಅಷ್ಟು ಕಷ್ಟ ತೆಗೆದುಕೊಳ್ಳುತ್ತಿದ್ದುದರಿಂದಲೇ ಅವರು ಬ್ರಹ್ಮ ತಮ್ಮ ಅಂತರ್ಯಾಮಿ ಎಂಬ ಅನುಭವ ಪಡೆಯುತ್ತಿದ್ದರು.
“ಕಲಿಯುಗದಲ್ಲಿ ಅನ್ನಗತಪ್ರಾಣ; ದೇಹಬುದ್ಧಿ ಸುಲಭವಾಗಿ ಹೋಗದು. ಮನುಷ್ಯ ಈ ಅವಸ್ಥೆಯಲ್ಲಿರುವಾಗ ‘ಸೋಹಮ್’ ಎಂಬುದಾಗಿ ಹೇಳುವುದು ಒಳ್ಳೆಯದಲ್ಲ. ಪ್ರಾಪಂಚಿಕ ಎಲ್ಲಾ ಕೆಲಸಗಳಲ್ಲೂ ತೊಡಗುತ್ತಾ ‘ನಾನೇ ಬ್ರಹ್ಮ’ ಅಂತ ಹೇಳಿಕೊಳ್ಳುವುದು ಸರಿಯಲ್ಲ. ಯಾರ ಕೈಯಲ್ಲಿ ವಿಷಯವಸ್ತುಗಳನ್ನು ತ್ಯಾಗಮಾಡಲು ಸಾಧ್ಯವಿಲ್ಲವೊ, ಯಾರ ‘ಅಹಂ’ ಬಡಪೆಟ್ಟಿಗೆ ಜಗ್ಗಲೊಲ್ಲದೊ, ಅವರು ‘ನಾನು ದಾಸ,’ ‘ನಾನು ಭಕ್ತ’ ಎಂಬ ಭಾವನೆಯನ್ನು ಇಟ್ಟುಕೊಂಡಿರುವುದು ಒಳ್ಳೆಯದು. ಭಕ್ತಿಮಾರ್ಗದಲ್ಲಿ ಹೋದರೂ ಆತನ ಸಾಕ್ಷಾತ್ಕಾರವನ್ನು ಪಡೆಯಬಹುದು.
ಜ್ಞಾನಿ ‘ನೇತಿ’ ‘ನೇತಿ’ ಮಾರ್ಗ ಅನುಸರಿಸಿ ವಿಷಯಬುದ್ಧಿಯನ್ನು ಪೂರ್ಣವಾಗಿ ತ್ಯಾಗ ಮಾಡುತ್ತಾನೆ. ಆಗ ಮಾತ್ರವೇ ಅವನಿಗೆ ಬ್ರಹ್ಮನ ಸಾಕ್ಷಾತ್ಕಾರ. ಇದು ಮೆಟ್ಟಿಲ ಸಾಲಿನ ಹಂತಗಳನ್ನು ಒಂದೊಂದಾಗಿ ಹಿಂದೆಬಿಟ್ಟು ಚಾವಣಿ ಮುಟ್ಟುವ ಹಾಗೆ. ಆದರೆ ವಿಜ್ಞಾನಿ ವಿಶೇಷ ರೀತಿಯಾಗಿ ಬ್ರಹ್ಮನೊಡನೆ ಬೆರೆತು ಇನ್ನೂ ವಿಶೇಷವಾದ ಅನುಭವ ಪಡೆಯುತ್ತಾನೆ. ಆತ ಅನುಭವ ಪಡೆದುಕೊಳ್ಳುತ್ತಾನೆ-ಚಾವಣಿ ಯಾವ್ಯಾವ ವಸ್ತುಗಳಿಂದ ಅಂದರೆ, ಇಟ್ಟಿಗೆ, ಸುಣ್ಣ, ಇಟ್ಟಿಗೆಚೂರು ಇವುಗಳಿಂದ ನಿರ್ಮಿತವಾಗಿವೆಯೊ, ಅದೇ ವಸ್ತುಗಳಿಂದ ಮೆಟ್ಟಿಲ ಸಾಲೂ ನಿರ್ಮಿತವಾಗಿದೆ ಎಂಬುದಾಗಿ. ‘ನೇತಿ’ ‘ನೇತಿ’ ಮಾರ್ಗವನ್ನು ಅನುಸರಿಸಿ ಯಾವ ವಸ್ತುವನ್ನು ಬ್ರಹ್ಮ ಎಂಬುದಾಗಿ ಅರಿತುಕೊಂಡನೊ, ಅದೇ ವಸ್ತುವೇ ಜೀವ ಜಗತ್ತಾಗಿಯೂ ಇರುವುದು ಎಂದು ಆತನ ಅರಿವಿಗೆ ಬರುತ್ತದೆ. ಯಾರು ನಿರ್ಗುಣನೊ ಆತನೇ ಸಗುಣ ಎಂಬುದಾಗಿ ವಿಜ್ಞಾನಿಗೆ ಕಂಡುಬರುತ್ತದೆ.
“ಜನರಿಗೆ ಹೆಚ್ಚು ಹೊತ್ತು ಚಾವಣಿ ಮೇಲೆ ಇರಲಾಗುವುದಿಲ್ಲ, ಮತ್ತೆ ಕೆಳಕ್ಕೆ ಇಳಿದು ಬರುತ್ತಾರೆ. ಸಮಾಧಿಯಲ್ಲಿ ಬ್ರಹ್ಮದರ್ಶನವನ್ನು ಪಡೆದಂಥವರು ಕೆಳಕ್ಕೆ ಇಳಿದುಬಂದು ನೋಡುತ್ತಾರೆ, ಆತನೇ ಜೀವ ಜಗತ್ತು ಕೂಡ ಆಗಿಬಿಟ್ಟಿದ್ದಾನೆ! ಸ, ರಿ, ಗ, ಮ, ಪ, ದ, ನಿ: ‘ನಿ’ ಯಲ್ಲಿ ಹೆಚ್ಚು ಹೊತ್ತು ಕಂಠ ಇಟ್ಟುಕೊಂಡಿರಲಾಗುವುದಿಲ್ಲ. ‘ಅಹಂ’ ಎಂಬುದು ಸಂಪೂರ್ಣವಾಗಿ ಹೋಗದು. ಸಮಾಧಿಯಿಂದ ಇಳಿದು ಬಂದು ನೋಡುತ್ತಾನೆ, ಬ್ರಹ್ಮನೇ ಈ ‘ಅಹಂ’ ಆಗಿಬಿಟ್ಟಿದ್ದಾನೆ, ಆತನೇ ಈ ಜೀವಜಗತ್ತೆಲ್ಲವೂ ಆಗಿಬಿಟ್ಟಿದ್ದಾನೆ! ಇದಕ್ಕೇ ‘ವಿಜ್ಞಾನ’ ಅಂತ ಹೆಸರು.
“ಜ್ಞಾನಮಾರ್ಗವೂ ಭಗವಂತನ ಸಾಕ್ಷಾತ್ಕಾರಕ್ಕೆ ಮಾರ್ಗ. ಹಾಗೇನೆ ಭಕ್ತಿಮಾರ್ಗ ಕೂಡ. ಜ್ಞಾನಮಾರ್ಗವೂ ಸರಿಯಾದ್ದೇ, ಭಕ್ತಿಮಾರ್ಗವೂ ಸರಿಯಾದ್ದೇ. ಎಲ್ಲಾ ಮಾರ್ಗಗಳಿಂದಲೂ ಆತನನ್ನು ಮುಟ್ಟಬಹುದು. ಆದರೆ ಆತ ನಮ್ಮಲ್ಲಿ ‘ಅಹಂ’ ಎಂಬುದನ್ನು ಇಟ್ಟಿರುವವರೆಗೆ ಭಕ್ತಿಮಾರ್ಗವೇ ಸರಾಗವಾದ್ದು.
“ವಿಜ್ಞಾನಿಗೆ ಕಂಡುಬರುತ್ತದೆ ಬ್ರಹ್ಮ ಸುಮೇರುವಿನ ಹಾಗೆ, ಅಚಲನಾಗಿ, ನಿಷ್ಕ್ರಿಯನಾಗಿ ಇರುವುದು. ಈ ಜಗತ್ತು ಈ ಮೂರು ಗುಣಗಳಿಂದ, ಎಂದರೆ ಸತ್ತ್ವ, ರಜಸ್ಸು, ತಮಸ್ಸು ಇವುಗಳಿಂದ ಉದ್ಭವವಾಗಿದೆ. ಇವು ಮೂರೂ ಬ್ರಹ್ಮನಲ್ಲಿವೆ. ಆದರೆ ಆತ ಮಾತ್ರ ನಿರ್ಲಿಪ್ತ.
“ವಿಜ್ಞಾನಿಗೆ ಮತ್ತೆ ಕಂಡುಬರುತ್ತದೆ, ಬ್ರಹ್ಮನೇ ಸಾಕಾರನಾಗಿರುವುದು. ಯಾರು ಗುಣಾತೀತನೋ ಆತನೇ ಷಡೈಶ್ವರ್ಯಪೂರ್ಣ ಭಗವಂತನಾಗಿದ್ದಾನೆ. ಈ ಜೀವ, ಜಗತ್ತು, ಮನಸ್ಸು, ಬುದ್ಧಿ, ಭಕ್ತಿ, ವೈರಾಗ್ಯ, ಜ್ಞಾನ-ಇವೆಲ್ಲಾ ಆತನ ಐಶ್ವರ್ಯ. (ನಗುತ್ತ) ಯಾವ ಸಾಹುಕಾರನಿಗೆ ಮನೆ ಮಠ ಏನೂ ಇಲ್ಲವೊ ಅಥವಾ ಇದ್ದರೂ ಮಾರಿಹಾಕಬೇಕಾಗಿ ಬಂದುಬಿಟ್ಟಿತೊ ಆ ಸಾಹುಕಾರ ಇನ್ನೆಂಥ ಸಾಹುಕಾರ! (ಎಲ್ಲರೂ ನಗುತ್ತಿದ್ದಾರೆ.) ಭಗವಂತ ಷಡೈಶ್ವರ್ಯಪೂರ್ಣ. ಅದು ಹಾಗಿಲ್ಲದಿದ್ದರೆ ಆತನನ್ನು ಯಾರುತಾನೆ ಲೆಕ್ಕಕ್ಕಿಡುತ್ತಿದ್ದರು? (ಎಲ್ಲರೂ ನಗುತ್ತಿದ್ದಾರೆ.)”
“ಹಾಗೇ ನೋಡು, ಈ ಜಗತ್ತು ಎಷ್ಟು ವಿಚಿತ್ರ, ಎಷ್ಟು ಬಗೆಯ ವಸ್ತುಗಳು!- ಚಂದ್ರ, ಸೂರ್ಯ, ನಕ್ಷತ್ರ ಇತ್ಯಾದಿ. ಎಷ್ಟು ಬಗೆಯ ಜೀವಿಗಳು!-ದೊಡ್ಡದು, ಪುಟ್ಟದು, ಒಳ್ಳೆಯದು, ಕೆಟ್ಟದ್ದು, ಬಲವಾದ್ದು, ದುರ್ಬಲವಾದ್ದು; ಕೆಲವಕ್ಕೆ ಜಾಸ್ತಿ ಶಕ್ತಿ, ಕೆಲವಕ್ಕೆ ಕಡಿಮೆ ಶಕ್ತಿ.”
ವಿದ್ಯಾಸಾಗರ: “ಏನು! ಆತ ಕೆಲವಕ್ಕೆ ಹೆಚ್ಚು ಶಕ್ತಿ ಕೆಲವಕ್ಕೆ ಕಡಿಮೆ ಶಕ್ತಿ ಕೊಟ್ಟಿದ್ದಾನೆಯೇ?”
ಶ್ರೀರಾಮಕೃಷ್ಣರು: “ಭಗವಂತ ವಿಭುರೂಪದಲ್ಲಿ ಎಲ್ಲ ಭೂತಗಳಲ್ಲಿಯೂ ಇದ್ದಾನೆ, ಇರುವೆಯಲ್ಲಿ ಕೂಡ; ಆದರೆ ಮಾತ್ರ ಶಕ್ತಿ ವಿಶೇಷತೆಯಿಂದ. ಹಾಗಿಲ್ಲದಿದ್ದರೆ ಒಬ್ಬ ಹತ್ತು ಜನರನ್ನು ಬಡಿದೋಡಿಸಿಬಿಡುವುದಕ್ಕೂ, ಇನ್ನೊಬ್ಬ ಒಬ್ಬನನ್ನೂ ಕೂಡ ಎದುರಿಸಲಾಗದಿರುವುದಕ್ಕೂ ಎಲ್ಲಾಗುತ್ತಿತ್ತು? ಇಲ್ಲದಿದ್ದರೆ ನಿನ್ನನ್ನು ಏಕೆ ಎಲ್ಲಾ ಗೌರವಿಸುತ್ತಿದ್ದಾರೆ? ನಿನಗೇನು ಎರಡು ಕೊಂಬುಗಳು ಬೆಳೆದಿವೆಯೆ? (ನಗು.) ನಿನ್ನಲ್ಲಿ ವಿದ್ಯೆ, ದಯೆ, ಬೇರೆಯವರಿಗಿಂತ ಅಧಿಕವಾಗಿ ಇದೆ. ಅದಕ್ಕಾಗಿ ಜನ ನಿನ್ನನ್ನು ಗೌರವಿಸುತ್ತಾರೆ, ನೋಡುವುದಕ್ಕೆ ಬರುತ್ತಾರೆ. ಏನು, ನಾನು ಹೇಳುವುದು ಸರಿ ತಾನೆ?”
ವಿದ್ಯಾಸಾಗರ ಕಿರುನಗೆ ನಗುತ್ತಿದ್ದಾನೆ.
ಶ್ರೀರಾಮಕೃಷ್ಣರು ಮಾತು ಮುಂದುವರಿಸುತ್ತಿದ್ದಾರೆ: “ಕೇವಲ ಪಾಂಡಿತ್ಯ ಯಾವುದಕ್ಕೂ ಬಾರದು. ಭಗವಂತನ ಸಾಕ್ಷಾತ್ಕಾರ ಪಡೆದುಕೊಳ್ಳುವುದಕ್ಕಾಗಿಯೇ, ಆತನನ್ನು ಅರಿತುಕೊಳ್ಳುವುದಕ್ಕಾಗಿಯೇ ಪುಸ್ತಕಗಳ ವ್ಯಾಸಂಗ. ಒಬ್ಬ ಸಾಧುವಿನ ಹತ್ತಿರ ಒಂದು ಪುಸ್ತಕ ಇತ್ತು. ಅದರಲ್ಲಿ ಏನು ಬರೆದಿದೆ ಎಂದು ಕೇಳಲಾಗಿ ಆತ ಅದನ್ನು ಬಿಚ್ಚಿ ತೋರಿಸಿದ. ಹಾಳೆ ಹಾಳೆಯಲ್ಲೂ ‘ಓಂ ರಾಮಃ’, ‘ಓಂ ರಾಮಃ’, ಎಂದು ಬರೆದಿತ್ತು-ಇನ್ನು ಏನೂ ಬರೆದಿರಲಿಲ್ಲ.
“ಗೀತೆಯ ಸಂಚಿತಾರ್ಥವೇನು? ಹತ್ತು ಸಲ ಉಚ್ಚರಿಸಿದರೆ ಅದು ಏನಾಗಿ ಕೇಳಿ ಬರುತ್ತದೆಯೊ ಅದೇ ಅದು. ‘ಗೀತಾ’, ‘ಗೀತಾ’ ಎಂಬುದಾಗಿ ಹತ್ತು ಸಲ ಉಚ್ಚರಿಸಿದರೆ ಅದು ‘ತ್ಯಾಗಿ’, ‘ತ್ಯಾಗಿ’ ಎಂಬುದಾಗಿ ಕೇಳಿಬರುತ್ತದೆ. ಎಂದರೆ ಗೀತೆಯ ಉಪದೇಶ: ‘ಹೇ ಜೀವ, ಎಲ್ಲವನ್ನು ತ್ಯಾಗಮಾಡಿ ಭಗವಂತನ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸು’ ಎಂಬುದಾಗಿ. ಸಾಧುವೇ ಆಗಲಿ, ಸಂಸಾರಿಯೇ ಆಗಲಿ, ಎಲ್ಲರೂ ಆಸಕ್ತಿಗಳನ್ನು ಮನಸ್ಸಿನಿಂದ ತೊಡೆದುಹಾಕಬೇಕು.
“ಚೈತನ್ಯದೇವ ದಕ್ಷಿಣಭಾರತದಲ್ಲಿ ತೀರ್ಥಯಾತ್ರೆ ಮಾಡುತ್ತಿದ್ದಾಗ, ಒಬ್ಬ ಗೀತೆ ಓದುತ್ತಿರುವುದನ್ನು ನೋಡಿದ. ಇನ್ನೊಬ್ಬ ಸ್ವಲ್ಪ ದೂರದಲ್ಲೇ ಕುಳಿತು ಅದನ್ನು ಕೇಳುತ್ತ ಅಳುತ್ತಿದ್ದ. ಆತನ ಕಣ್ಣುಗಳಲ್ಲಿ ನೀರು ಸುಮ್ಮನೆ ತುಂಬಿಕೊಂಡಿತ್ತು. ಚೈತನ್ಯದೇವ ಆತನನ್ನು ಕೇಳಿದ: ‘ಏನು, ಇದೆಲ್ಲಾ ನಿನಗೆ ಅರ್ಥವಾಗುತ್ತದೆಯೇ?’ ಆತ ಹೇಳಿದ: ‘ಇಲ್ಲ, ಈ ಶ್ಲೋಕ ಎಳ್ಳಷ್ಟೂ ಅರ್ಥವಾಗುವುದಿಲ್ಲ.’ ಚೈತನ್ಯದೇವ ಕೇಳಿದ: ‘ಹಾಗಾದರೆ ಏಕೆ ಅಳುತ್ತಾ ಇದ್ದೀಯೆ?’ ಭಕ್ತ ಹೇಳಿದ : ‘ನಾನು ಅರ್ಜುನನ ರಥ ನೋಡುತ್ತಾ ಇದ್ದೇನೆ. ಶ್ರೀಕೃಷ್ಣ ಮತ್ತು ಅರ್ಜುನ ಅದರಲ್ಲಿ ಕುಳಿತು ಮಾತುಕತೆಯಾಡುತ್ತಿರುವುದು ನನ್ನ ಕಣ್ಣಿಗೆ ಕಾಣುತ್ತಿದೆ. ಅದನ್ನು ನೋಡಿ ಅಳುತ್ತಾ ಇದ್ದೇನೆ.’
“ವಿಜ್ಞಾನಿ ಏಕೆ ಭಕ್ತಿಯನ್ನು ಆಶ್ರಯಿಸಿಕೊಂಡಿರುತ್ತಾನೆ ಗೊತ್ತೆ? ಈ ‘ಅಹಂ’ ಎಂಬುದು ಹೋಗದೆ ಇರುವುದರಿಂದ. ಸಮಾಧಿಯ ಅವಸ್ಥೆಯಲ್ಲಿ ಅದು ಹೊರಟು ಹೋಗುವುದೇನೋ ನಿಜ. ಆದರೆ ಅದು ಮತ್ತೆ ಬಂದುಬಿಡುತ್ತದೆ. ಸಾಧಾರಣ ಜೀವರ ‘ಅಹಂ’ ಎಂದಿಗೂ ಹೋಗುವುದೇ ಇಲ್ಲ. ಅಶ್ವತ್ಥ ವೃಕ್ಷವನ್ನು ಇಂದು ಕತ್ತರಿಸು, ಮಾರನೇ ದಿನವೇ ಅದು ಚಿಗುರುತ್ತದೆ. (ಎಲ್ಲರೂ ನಗುತ್ತಿದ್ದಾರೆ.)
“ಜ್ಞಾನ ದೊರೆತನಂತರವೂ ಎಲ್ಲಿಂದಲೊ ಈ ‘ಅಹಂ’ ಬಂದುಬಿಡುತ್ತದೆ. ಸ್ವಪ್ನದಲ್ಲಿ ನೀನುಹುಲಿ ಕಾಣುತ್ತಿದ್ದೆ, ಬಳಿಕ ಎಚ್ಚೆತ್ತೆ; ಆದರೂ ನಿನ್ನ ಹೃದಯ ಮಾತ್ರ ‘ಡಬ ಡಬ’ ಅಂತ ಹೊಡೆದು ಕೊಳ್ಳುತ್ತಲೇ ಇರುತ್ತದೆ! ಜೀವರ ಎಲ್ಲಾ ದುಃಖದುರಿತಗಳಿಗೂ ಈ ‘ಅಹಂ’ ಎಂಬುದೇ ಮೂಲ. ಹಸು ಕೂಗುತ್ತದೆ, ‘ಹಂಬಾ’ ‘ಹಂಬಾ!’ ಎಂದರೆ, ‘ನಾನು! ನಾನು!’ ಎಂಬುದಾಗಿ. ಅದಕ್ಕಾಗಿಯೇ ಅದು ಅಷ್ಟು ಕಷ್ಟಕ್ಕೀಡಾಗುವುದು. ನೇಗಿಲಿಗೆ ಕಟ್ಟಿ ಮಳೆಬಿಸಿಲೆನ್ನದೆ ಉಳುತ್ತಾರೆ. ಬಳಿಕ ಕಟುಕ ಅದನ್ನು ಕತ್ತರಿಸಿಹಾಕುತ್ತಾನೆ. ಅದರ ಚರ್ಮದಿಂದ ಮೆಟ್ಟುಮಾಡುತ್ತಾನೆ; ನಗಾರಿ ತಯಾರಾಗುತ್ತದೆ. ನಗಾರಿಯನ್ನು ಯಾವ ದಯೆದಾಕ್ಷಿಣ್ಯವೂ ಇಲ್ಲದೆ ಚೆನ್ನಾಗಿ ಬಡಿಯುತ್ತಾರೆ. (ನಗು.) ಅಷ್ಟಾದರೂ ಅವಕ್ಕೆ ಇನ್ನೂ ಕಷ್ಟ ತಪ್ಪುವ ಹಾಗಿಲ್ಲ ಕೊನೆಗೆ ಅದರ ಚಿಕ್ಕ ಕರುಳಿನಿಂದ ಹುರಿ ತಯಾರುಮಾಡುತ್ತಾರೆ. ಆ ಹುರಿಯನ್ನು ಹತ್ತಿ ಎಕ್ಕುವ ಯಂತ್ರಕ್ಕೆ ಕಟ್ಟುತ್ತಾರೆ. ಆಗ ಅದು ‘ಹಂಬಾ! ಹಂಬಾ!’ ‘ನಾನು! ನಾನು!’ ಎಂದು ಶಬ್ದಮಾಡದೆ, ‘ತುಹ್ಞೂ ! ತುಹ್ಞೂ !’ ಎಂದರೆ ‘ನೀನು! ನೀನು!’ ಎಂಬುದಾಗಿ ಶಬ್ದ ಮಾಡುತ್ತದೆ. ‘ನೀನು ! ನೀನು !’ ಎಂಬುದಾಗಿ ಶಬ್ದಮಾಡಲು ಶುರು ಮಾಡಿದಮೇಲೆ ಅದರ ಕಷ್ಟಪರಂಪರೆಗಳೆಲ್ಲಾ ಕೊನೆಗಾಣುತ್ತವೆ.
“ಹೇ ಭಗವಂತ, ನಾನು ದಾಸ, ನೀನು ಪ್ರಭು; ನಾನು ಮಗು, ನೀನು ತಾಯಿ.”
“ಒಮ್ಮೆ ರಾಮ ಹನುಮಂತನನ್ನು ಕೇಳಿದ: ‘ನನ್ನನ್ನು ನೀನು ಯಾವ ದೃಷ್ಟಿಯಿಂದ ನೋಡುತ್ತ ಇದ್ದೀಯೇ?’ ಹನುಮಂತ ಹೇಳಿದ: ‘ಹೇ ರಾಮ, ನನ್ನಲ್ಲಿ ‘ಅಹಂ’ ಎಂಬ ಬೋಧೆ ಇರುವವರೆಗೆ ನನಗೆ ಕಂಡುಬರುತ್ತದೆ, ನೀನು ಪೂರ್ಣ, ನಾನು ಅಂಶ; ನೀನು ಪ್ರಭು, ನಾನು ದಾಸ ಎಂಬುದಾಗಿ. ಆದರೆ ರಾಮ, ತತ್ತ್ವಜ್ಞಾನ ಬಂದೊಡನೆಯೇ ಕಂಡುಬರುತ್ತದೆ, ನೀನೇ ನಾನು, ನಾನೇ ನೀನು ಎಂಬುದಾಗಿ.
“ಸೇವ್ಯ-ಸೇವಕ ಭಾವವೇ ಒಳ್ಳೆಯದು, ‘ಅಹಂ’ ಎಂಬುದು ಪೂರ್ಣವಾಗಿ ಹೋಗದೆ ಇರುವುದರಿಂದ ಆ ನೀಚಮುಂಡೇದು ‘ದಾಸ ಅಹಂ’ ಆಗಿ ಉಳಿದುಕೊಂಡಿರಲಿ.
“ನಾನು,” ‘ನನ್ನದು’ -ಇವೆರಡೇ ಅಜ್ಞಾನಕ್ಕೆ ಮೂಲ. ‘ನನ್ನ ಮನೆ’, ‘ನನ್ನ ಹಣ’, ‘ನನ್ನ ಪಾಂಡಿತ್ಯ’, ‘ನನ್ನ ಐಶ್ವರ್ಯ’ -ಎಂಬ ಈ ಭಾವ ಇದೆಯಲ್ಲ, ಇದು ಅಜ್ಞಾನದಿಂದ ಜನಿಸುತ್ತದೆ. ಇದಕ್ಕೆ ಬದಲು ‘ಹೇ ಭಗವಂತ, ನೀನು ಕರ್ತ, ಇವೆಲ್ಲವೂ ನಿನಗೆ ಸೇರಿದವೆ-ಮನೆ ಮಠ, ಹೆಂಡತಿ, ಮಕ್ಕಳು ಮರಿ, ಆಳುಕಾಳು, ಬಂಧುಬಾಂಧವರು ಎಲ್ಲವೂ ನಿನಗೆ ಸೇರಿದವೆ’ -ಈ ಭಾವ ಜ್ಞಾನದಿಂದ ಜನಿಸುತ್ತದೆ.
‘ಮೃತ್ಯುವನ್ನು ಸರ್ವದಾ ನೆನಸಿಕೊಳ್ಳುವುದು ಒಳ್ಳೆಯದು. ಸತ್ತ ಮೇಲೆ ಯಾವುದೂ ಹಿಂದೆ ಬಾರದು. ಹಳ್ಳಿಗಳಿಂದ ಜನರು ಕಲ್ಕತ್ತಕ್ಕೆ ಕೆಲಸಮಾಡಲು ಬರುವ ಹಾಗೆ ಈ ಜಗತ್ತಿಗೆ ಬಂದಿದ್ದೇವೆ-ಕೆಲವು ಕೆಲಸಗಳನ್ನು ಮಾಡಿ ಹೋಗಲು. ಯಾರಾದರೂ ದೊಡ್ಡಮನುಷ್ಯನ ತೋಟ ನೋಡಲು ಬಂದರೆ ಮೇನೇಜರ್ ಅವರಿಗೆ ಹೇಳುತ್ತಾನೆ: ‘ಈ ತೋಟ ನಮ್ಮದು’, ‘ಈ ಕೊಳ ನಮ್ಮದು’, ಇತ್ಯಾದಿ. ಆದರೆ ಏನೋ ತಪ್ಪಿಗಾಗಿ ಯಜಮಾನ ಮೇನೇಜರನನ್ನು ಕೆಲಸದಿಂದ ತೆಗೆದುಹಾಕಿಬಿಟ್ಟ ಅಂದರೆ, ಆತ ತನ್ನ ಮಾವಿನ ಮರದ ಸಂದೂಕ ತೆಗೆದುಕೊಂಡು ಹೋಗುವುದಕ್ಕೂ ಸಾಧ್ಯವಾಗುವುದಿಲ್ಲ; ಮಾಲಿಯ ಮೂಲಕ ಅದನ್ನು ರಹಸ್ಯವಾಗಿ ಹೊರಕ್ಕೆ ತರಿಸಿಕೊಳ್ಳಬೇಕಾಗುತ್ತದೆ. (ನಗು.)
“ಭಗವಂತ ಈ ಎರಡು ಸಂದರ್ಭಗಳಲ್ಲಿ ನಗುತ್ತಾನೆ. ಕವಿರಾಜ (ಅಳಲೆಕಾಯಿ ಪಂಡಿತ) ರೋಗಿಯ ತಾಯಿಗೆ, ‘ತಾಯೆ, ನಿನಗೇಕೆ ಹೆದರಿಕೆ? ನಿನ್ನ ಮಗನನ್ನು ನಾನು ಗುಣಪಡಿಸಿಬಿಡುತ್ತೇನೆ’ ಎಂಬುದಾಗಿ ಹೇಳಿದಾಗ ಒಮ್ಮೆ ನಗುತ್ತಾನೆ. ಆಗ ಭಗವಂತ ಅಂದುಕೊಳ್ಳುತ್ತಾನೆ: ನಾನು ಈತನನ್ನು ಸಾಯಿಸುವುದರಲ್ಲಿದ್ದೇನೆ. ಈ ಪಂಡಿತ ಹೇಳುತ್ತಾ ಇದ್ದಾನಲ್ಲ, ತಾನು ಬದುಕಿಸಿಕೊಡುತ್ತೇನೆ ಅಂತ!’ ಕವಿರಾಜ ಭಾವಿಸುತ್ತಾನೆ, ತಾನು ಕರ್ತ ಎಂಬುದಾಗಿ; ಆತ ಮರೆತುಬಿಟ್ಟಿದ್ದಾನೆ, ಭಗವಂತನೇ ಕರ್ತ ಎಂಬುದನ್ನು. ಬಳಿಕ ಅಣ್ಣ ತಮ್ಮಂದಿರು ಹಗ್ಗ ಹಿಡಿದುಕೊಂಡು ಜಮೀನು ಭಾಗಮಾಡಿಕೊಳ್ಳುವಾಗ ‘ಈ ಭಾಗ ನನ್ನದು, ಆ ಭಾಗ ನಿನ್ನದು’ ಎಂದು ಹೇಳುತ್ತಾರಲ್ಲ, ಆಗ ಮತ್ತೆ ಭಗವಂತ ನಗುತ್ತಾನೆ. ಆಗ ಆತ ಅಂದುಕೊಳ್ಳುತ್ತಾನೆ: ‘ಏನಿದು! ಈ ಬ್ರಹ್ಮಾಂಡವೇ ನನ್ನದು. ಅಂಥಾದ್ದರಲ್ಲಿ ಇವರು ಹೇಳುತ್ತಾ ಇದ್ದಾರಲ್ಲ, “ಈ ಭಾಗ ನನ್ನದು, ಆ ಭಾಗ ನಿನ್ನದು” ಎಂಬುದಾಗಿ!’
“ಭಗವಂತನನ್ನು ವಿಚಾರದ ಮೂಲಕ ಅರಿಯಲು ಸಾಧ್ಯವೆ ? ಆತನಿಗೆ ದಾಸನಾಗಿ ಆತನಿಗೆ ಶರಣಾಗತನಾಗಿ ಆತನನ್ನು ಕರೆ.”
(ವಿದ್ಯಾಸಾಗರನಿಗೆ, ನಗುತ್ತ) “ಒಳ್ಳೇದು, ನಿನ್ನ ಭಾವ ಎಂಥದು?”
ವಿದ್ಯಾಸಾಗರ ಕಿರುನಗೆ ನಗುತ್ತ: “ಆ ವಿಷಯವಾಗಿ ಒಂದು ದಿನ ನಿಮಗೆ ರಹಸ್ಯವಾಗಿ ತಿಳಿಸುತ್ತೇನೆ.” (ಎಲ್ಲರೂ ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು ನಗುತ್ತ: “ಭಗವಂತನನ್ನು ಕೇವಲ ಪಾಂಡಿತ್ಯಪೂರ್ಣ ವಿಚಾರದಿಂದಲೇ ಪಡೆಯಲಾಗುವುದಿಲ್ಲ.”
ಪರಮಹಂಸರು ಪ್ರೇಮೋನ್ಮತ್ತರಾಗಿ ಹಾಡುತ್ತಿದ್ದಾರೆ :
ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು!
ಆರು ದರುಶನ ವೇದ ಶಾಸ್ತ್ರ ಪುರಾಣವರಿಯದು ಅವಳನು
ಯೋಗಿಹೃದಯದ ದಿವ್ಯ ನಿತ್ಯಾನಂದರೂಪಿಣಿ-ಆಕೆಯು,
ತನ್ನ ಆನಂದದಲಿ ತಾನೇ ಜೀವರೆದೆಯೊಳಗಿರುವಳು.
ಸಕಲ ಬ್ರಹ್ಮಾಂಡವನ್ನು ಬಸಿರಲಿ ಧರಿಸಿ ನಿತ್ಯವು ಪೊರೆವಳು,
ಮೂಲಾಧಾರ ಸಹಸ್ರಾರದಲ್ಲಿಯೆ ಮುನಿಗಳವಳನು ನೆನೆವರು.
ಶಿವನ ಹೊರತಿನ್ನಾರು ಅರಿಯಲು ಅವಳ ದಿವ್ಯಸ್ವರೂಪವ,
ಪದ್ಮವನದಲಿ ಹಂಸರೂಪನ ಜೊತೆಗೆ ನಲಿಯುವ ಮಾಟವ!
ಕಡಲನೀಜುವೆನೆಂಬ ಮರುಳನ ಕಲ್ಪನೆಗೆ ನಗುವಂದದಿ
ಇಂಥ ತಾಯಿಯ ತಿಳಿದೆನೆಂದರೆ ಪ್ರಸಾದರಾಮನು ನಗುವನು!
ಕುಬ್ಜನಾದವ ಮುಗಿಲ ಚಂದ್ರನ ಹಿಡಿವ ಯತ್ನದ ತೆರದಲಿ,
ಬುದ್ಧಿಯರಿತರು ಹೃದಯವರಿಯದು ತಾಯಿ ದುರ್ಗೆಯ ನಿಜವನು!
ಪರಮಹಂಸರು ಮಾತು ಮುಂದುವರಿಸುತ್ತ ಹೇಳುತ್ತಿದ್ದಾರೆ: “ನೋಡಿದೆಯೋ?
ಸಕಲ ಬ್ರಹ್ಮಾಂಡವನು ಬಸಿರಲಿ ಧರಿಸಿ ನಿತ್ಯವು ಪೊರೆವಳು.
“ಕವಿ ಮತ್ತೆ ಹೇಳುತ್ತಿದ್ದಾನೆ:
ಆರು ದರುಶನ ವೇದ ಶಾಸ್ತ್ರ ಪುರಾಣವರಿಯದು ಅವಳನು.
“ಕೇವಲ ಪಾಂಡಿತ್ಯದಿಂದಲೆ ಆಕೆಯನ್ನು ಪಡೆಯಲಾಗುವುದಿಲ್ಲ.
“ಶ್ರದ್ಧೆ ಮತ್ತು ಭಕ್ತಿ ಬೇಕು. ವಿಶ್ವಾಸಕ್ಕೆ ಎಷ್ಟು ಬಲ ಎಂಬುದನ್ನು ಕೇಳು.ಒಬ್ಬ ಸಮುದ್ರ ದಾಟಿ ಲಂಕೆಯಿಂದ ಭಾರತಕ್ಕೆ ಬರಬೇಕಾಗಿತ್ತು. ವಿಭೀಷಣ ಆತನಿಗೆ ಹೇಳಿದ, ‘ಈ ವಸ್ತುವನ್ನು ನಿನ್ನ ಪಂಚೆಯ ಕೊನೆಗೆ ಕಟ್ಟಿಕೊ, ನಿರ್ವಿಘ್ನವಾಗಿ ಸಮುದ್ರ ದಾಟಿಬಿಡುತ್ತೀಯೆ. ನೀರಿನ ಮೇಲೆ ನಡೆದುಹೋಗಲು ಸಾಧ್ಯವಾಗುತ್ತದೆ. ಆದರೆ ಅದನ್ನು ಮಾತ್ರ ಬಿಚ್ಚಿ ನೋಡಬೇಡ; ನೋಡಿದೆಯೋ ಮುಳುಗಿಹೋಗುತ್ತೀಯೆ.’ ಶ್ರದ್ಧೆಯ ಬಲ ಅಂಥಾದ್ದು, ಆ ಮನುಷ್ಯ ಸುಲಭವಾಗಿ ಸಮುದ್ರದ ಮೇಲೆ ನಡೆದುಹೋಗುತ್ತಿದ್ದ. ಸ್ವಲ್ಪದೂರ ಹಾಗೇ ನಡೆದುಹೋದ ಮೇಲೆ ಆತನಿಗೆ ಯೋಚನೆ ಬಂತು: ‘ವಿಭೀಷಣ ನನ್ನ ಪಂಚೆ ತುದಿಗೆ ಎಂಥ ಅದ್ಭುತ ವಸ್ತುವನ್ನು ಕಟ್ಟಿರಬೇಕು, ನಾನು ಇಷ್ಟು ಸುಲಭವಾಗಿ ನೀರಿನ ಮೇಲೆ ನಡೆದುಕೊಂಡು ಹೋಗಬೇಕಾದರೆ?’ ಹೀಗೆಂದು ಯೋಚಿಸಿ ಗಂಟು ಬಿಚ್ಚಿ ನೋಡುತ್ತಾನೆ, ಕೇವಲ ರಾಮನಾಮ ಬರೆದಿರುವ ಒಂದು ಎಲೆ ಮಾತ್ರ ಅದರಲ್ಲಿದೆ! ‘ಓ, ಇದೇನೆ ಇದರೊಳಗಿರುವುದು!’ ಎಂಬ ಭಾವನೆ ಬಂದೊಡನೆಯೇ ಆತ ಮುಳುಗಿ ಹೋದ.
“ಜನ ಹೇಳುತ್ತಾರೆ, ಹನುಮಂತನಿಗೆ ರಾಮನಾಮದ ಮಹಿಮೆಯಲ್ಲಿ ಅಂಥ ವಿಶ್ವಾಸ, ಅದರ ಬಲದಿಂದ ಆತ ಸಮುದ್ರವನ್ನೇ ಲಂಘನೆಮಾಡಿಬಿಟ್ಟ! ಆದರೆ ಸ್ವಯಂ ರಾಮ ಸೇತುವೆ ಕಟ್ಟಬೇಕಾಯಿತು.
“ಭಗವಂತನಲ್ಲಿ ಶ್ರದ್ಧೆಯುಂಟಾಗಿಬಿಟ್ಟಿದ್ದೇ ಆದರೆ ಮನುಷ್ಯ ಪಾಪಕಾರ್ಯಗಳನ್ನು ಮಾಡಿರಲಿ ಅಥವಾ ಮಹಾಪಾತಕಕಾರ್ಯಗಳನ್ನೇ ಮಾಡಿರಲಿ, ಆತ ಯಾವುದಕ್ಕೂ ಹೆದರಬೇಕಾಗಿಲ್ಲ.”
ಈಗ ಪರಮಹಂಸರು ಶ್ರದ್ಧೆಯ ಮಹಿಮೆಯನ್ನು ಕೊಂಡಾಡುವ ಒಂದು ಹಾಡನ್ನು ಹಾಡುತ್ತಿದ್ದಾರೆ,
ನಾ ಪಾಪಿಯಾದರೂ ನನ್ನ ಕಡೆಗಾಲದಲಿ
ನಿನ್ನ ಶ್ರೀನಾಮವನು ಜಪಿಸುತಿರಲು…….
ಪರಮಹಂಸರು ಮಾತು ಮುಂದುವರಿಸುತ್ತಿದ್ದಾರೆ: “ಶ್ರದ್ಧೆ ಮತ್ತು ಭಕ್ತಿ: ಭಕ್ತಿಯಿಂದ ಭಗವಂತನನ್ನು ಸಹಜವಾಗಿ ಸಾಕ್ಷಾತ್ಕಾರಮಾಡಿಕೊಳ್ಳಬಹುದು. ಆತ ಭಾವಕ್ಕೆ ವಶನಾಗುತ್ತಾನೆ.
ಹೀಗೆಂದು ಹೇಳಿ ಮತ್ತೆ ಪರಮಹಂಸರು ಹಾಡುತ್ತಿದ್ದಾರೆ:
ದೇವದೇವನ ನಿಜವನರಿಯಲು
ಮನವು ತೊಳಲುತ ಬಳಲಿದೆ……
ಹಾಡನ್ನು ಹಾಡುತ್ತಿದ್ದ ಹಾಗೇ ಪರಮಹಂಸರು ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಕೈ ಮುಗಿದುಕೊಂಡಿದ್ದಾರೆ. ದೇಹ ನೆಟ್ಟಗೆ ಸ್ಥಿರವಾಗಿ ಕುಳಿತಿದೆ. ನೇತ್ರಗಳೆರಡೂ ಸ್ಪಂದಹೀನವಾಗಿವೆ. ಆ ಬೆಂಚಿನ ಮೇಲೆ ಪಶ್ಚಿಮಾಭಿಮುಖರಾಗಿ ಕುಳಿತು ಕಾಲನ್ನು ಕೆಳಕ್ಕೆ ಬಿಟ್ಟುಕೊಂಡಿದ್ದಾರೆ. ಎಲ್ಲರೂ ಕತ್ತು ಎತ್ತಿ ಈ ಅದ್ಭುತ ಅವಸ್ಥೆಯನ್ನು ನೋಡುತ್ತಿದ್ದಾರೆ. ಪಂಡಿತ ವಿದ್ಯಾಸಾಗರ ಸ್ತಬ್ಧನಾಗಿ ಏಕದೃಷ್ಟಿಯಿಂದ ನೋಡುತ್ತಿದ್ದಾನೆ.
ಪರಮಹಂಸರು ಈಗ ಪ್ರಕೃತಿಸ್ಥರಾಗುತ್ತಿದ್ದಾರೆ. ದೀರ್ಘ ನಿಃಶ್ವಾಸ ಬಿಟ್ಟು ನಸುನಗೆ ನಗುತ್ತ ಹೇಳುತ್ತಿದ್ದಾರೆ: “ಭಗವಂತನ ಸಾಕ್ಷಾತ್ಕಾರಕ್ಕೆ ಭಾವಭಕ್ತಿ ಬೇಕು-ಎಂದರೆ ಆತನನ್ನು ಪ್ರೀತಿಸಬೇಕು. ಬ್ರಹ್ಮನನ್ನೇ ತಾಯಿಯೆಂದು ಪ್ರಸಾದ ಕರೆಯುತ್ತಾನೆ:
ಶ್ರೀಪ್ರಸಾದನು ನುಡಿವನೀತೆರ:
“ಮಾತೃಭಾವದಿ ನೆನೆವೆನು;
ಈ ರಹಸ್ಯವ ಜಗದ ಸಂತೆಯ
ಜನದ ಜಂಗುಳಿಗೊರೆಯೆನು;
ನನ್ನ ಸೂಚನೆಯರಿತು ನೀವೇ
ತಿಳಿಯಿರಾತನ ನಿಜವನು!”
“ಭಗವಂತನ ಸ್ವರೂಪವನ್ನು ಊಹಿಸುವಂತೆ ರಾಮಪ್ರಸಾದ ತನ್ನ ಮನಸ್ಸಿಗೆ ಆಜ್ಞೆ ಮಾಡುತ್ತಿದ್ದಾನೆ. ವೇದದಲ್ಲಿ ಯಾವುದನ್ನು ಬ್ರಹ್ಮ ಅಂತ ಕರೆಯುತ್ತಾರೊ ಅದನ್ನೆ ತಾಯಿ ಎಂಬುದಾಗಿ ಕರೆಯುತ್ತಾ ಇರುವುದನ್ನು ಅದು ಅರಿತುಕೊಳ್ಳಬೇಕು ಎಂಬುದಾಗಿ ಆತ ಇಚ್ಛಿಸಿದ್ದಾನೆ. ಯಾರು ನಿರ್ಗುಣನೊ ಆತನೇ ಸಗುಣ. ಯಾರು ಬ್ರಹ್ಮನೊ ಆತನೇ ಶಕ್ತಿ. ಭಗವಂತ ನಿಷ್ಕ್ರಿಯ ಎಂಬ ಬೋಧೆಯಾದಾಗ ಆತನನ್ನು ಬ್ರಹ್ಮ ಅಂತ ಕರೆಯುತ್ತೇವೆ; ಸೃಷ್ಟಿ-ಸ್ಥಿತಿ-ಪ್ರಳಯಕಾರ್ಯಗಳನ್ನು ಮಾಡುತ್ತಿದ್ದಾನೆ ಎಂಬ ಬೋಧೆಯಾದಾಗ ಆತನನ್ನೇ ಆದ್ಯಾಶಕ್ತಿ, ಕಾಳಿ ಎಂಬುದಾಗಿ ಕರೆಯುತ್ತೇವೆ.
“ಬ್ರಹ್ಮನಿಗೂ ಶಕ್ತಿಗೂ ಅಭೇದ. ಉದಾಹರಣೆಗೆ ಅಗ್ನಿ ಮತ್ತು ಅದರ ಸುಡುವ ಶಕ್ತಿ. ಅಗ್ನಿಯ ಭಾವನೆಯೊಡನೆ ಅದರ ಸುಡುವ ಶಕ್ತಿಯ ಭಾವನೆಯೂ ಬಂದುಬಿಡುತ್ತದೆ. ಹಾಗೇನೆ ಸುಡುವ ಶಕ್ತಿ ಎಂದೊಡನೆಯೇ ಅಗ್ನಿಯ ಭಾವನೆಯೂ ಬಂದುಬಿಡುತ್ತದೆ. ಒಂದನ್ನು ಭಾವಿಸಿದೊಡನೆ ಇನ್ನೊಂದನ್ನೂ ಭಾವಿಸಲೇಬೇಕಾಗುತ್ತದೆ.
“ಬ್ರಹ್ಮನನ್ನೇ ತಾಯಿ ಎಂಬುದಾಗಿ ಕರೆಯುತ್ತಿದ್ದೇವೆ. ಏಕೆಂದರೆ ತಾಯಿ ಬಹಳ ಪ್ರೀತಿಯ ವಸ್ತು ಅಲ್ಲವೆ. ಭಗವಂತನನ್ನು ಪ್ರೀತಿಸಿದೆವು ಎಂದರೆ ಆತ ದೊರೆತುಬಿಡುತ್ತಾನೆ. ಭಾವ, ಭಕ್ತಿ, ಪ್ರೀತಿ, ಶ್ರದ್ಧೆ-ಇವು ಸಲಕರಣೆಗಳು. ಇನ್ನೊಂದು ಹಾಡನ್ನು ಕೇಳು:
ಭಾವುಕನ ಭಾವದೊಲು ಅವನೊಳುದಿಸುವ ಒಲವು,
ಆ ಒಲವಿಗನುಸಾರ ಅವನು ಪಡೆಯುವ ಫಲವು;
ಶ್ರದ್ಧೆ ಎಲ್ಲಕು ಮೂಲ; ತಾಯ ಶ್ರೀಪಾದ ಮಧು-
ಸರಸಿಯಲಿ ಮುಳುಗಿರುವ ನನಗೇಕೆ ಮತ್ತೆ ಜಪ-
ತಪ ಹೋಮಹವನಾದಿ ಕರ್ಮಗಳ ರಗಳೆ ?
ಭಗವಂತನನ್ನು ಅತ್ಯಂತವಾಗಿ ಪ್ರೀತಿಸುವುದೇ, ಆತನಲ್ಲಿ ಚಿತ್ತವನ್ನು ತದ್ಗತಮಾಡುವುದೇ ಬೇಕಾಗಿರುವುದು. ಅಮೃತತ್ತ್ವಸರೋವರ ತಾನೆ ಸುಧಾ ಸರೋವರ? ಅದರಲ್ಲಿ ಮುಳುಗಿದರೆ ಮನುಷ್ಯ ಸಾಯುವುದಿಲ್ಲ; ಅಮರನಾಗಿಬಿಡುತ್ತಾನೆ. ಕೆಲಕೆಲವರು ಭಾವಿಸುತ್ತಾರೆ, ಹೆಚ್ಚಾಗಿ ‘ಭಗವಂತ! ಭಗವಂತ! ಅಂತ ಶುರುಮಾಡಿದರೆ ಕೊನೆಗೆ ಹುಚ್ಚು ಹಿಡಿದುಬಿಡುತ್ತದೆ ಎಂಬುದಾಗಿ. ಅದು ಸತ್ಯವಲ್ಲ. ಭಗವಂತ ಸುಧೆಯ ಸರೋವರ, ಅಮೃತಸಾಗರ. ವೇದದಲ್ಲಿ ಆತನನ್ನು ‘ಅಮೃತಸ್ವರೂಪ’ ಎಂಬುದಾಗಿ ವರ್ಣಿಸಿದೆ. ಅದರಲ್ಲಿ ಮುಳುಗಿದರೆ ಮನುಷ್ಯ ಸಾಯುವುದಿಲ್ಲ-ಅದಕ್ಕೆ ಬದಲು ಅಮರನಾಗಿಬಿಡುತ್ತಾನೆ.
ಜಪತಪ ಹೋಮಹವನಾದಿ ಕರ್ಮಗಳ ರಗಳೆ ಏಕೆ?
“ಭಗವಂತನಲ್ಲಿ ಅನುರಾಗ ಉಂಟಾಯಿತು ಎಂದರೆ, ಈ ಕರ್ಮಗಳ ವಿಷಯವಾಗಿ ಅತಿಯಾಗೇನು ತಲೆಗೆ ಹಚ್ಚಿಕೊಳ್ಳಬೇಕಾಗಿಲ್ಲ. ಗಾಳಿ ಬೀಸದವರೆಗೆ ಮಾತ್ರವೇ ಬೀಸಣಿಗೆಯ ಆವಶ್ಯಕತೆ. ತಂಗಾಳಿ ಬೀಸಲಾರಂಭಿಸಿತು ಎಂದರೆ ಬೀಸಣಿಗೆಯನ್ನು ಕೆಳಕ್ಕೆ ಇಟ್ಟುಬಿಡಬಹುದು, ಬಳಿಕ ಬೀಸಣಿಗೆಯ ಅವಶ್ಯಕತೆಯೇನಿದೆ?”
(ವಿದ್ಯಾಸಾಗರನಿಗೆ) “ನೀನು ಮಾಡುತ್ತಿರುವ ಕರ್ಮಗಳೆಲ್ಲ ಸತ್ಕರ್ಮಗಳು. ನಾನು ಕರ್ತ ಎಂಬ ಅಹಂಕಾರ ತೊರೆದು ನಿಷ್ಕಾಮ ಭಾವನೆಯಿಂದ ಮಾಡುವುದಾದರೆ ಬಹಳ ಒಳ್ಳೆಯದು. ಈ ರೀತಿಯಾಗಿ ನಿಷ್ಕಾಮ ಕರ್ಮ ಮಾಡುತ್ತ ಮಾಡುತ್ತ ಮುಂದುವರಿದರೆ, ಕೊನೆಗೆ ಭಗವಂತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ.
“ಭಗವಂತನಲ್ಲಿ ನಿನಗೆ ಭಕ್ತಿಪ್ರೇಮ ದೊರೆತಷ್ಟೂ ನಿನ್ನ ಕರ್ಮ ಕಡಿಮೆ ಕಡಿಮೆಯಾಗುತ್ತಾ ಬಂದುಬಿಡುತ್ತದೆ. ಸೊಸೆ ಗರ್ಭಿಣಿಯಾದರೆ ಅತ್ತೆ ಆಕೆಯ ಕೆಲಸವನ್ನು ಕಡಿಮೆ ಮಾಡಿಕೊಡುತ್ತಾಳೆ. ತಿಂಗಳು ಆದಷ್ಟೂ ಆಕೆಯ ಪಾಲಿನ ಕೆಲಸ ಕಡಿಮೆ ಕಡಿಮೆಯಾಗುತ್ತಾ ಹೋಗುತ್ತದೆ. ಒಂಭತ್ತು ತಿಂಗಳು ತುಂಬಿತು ಎಂದರೆ, ಹೊಟ್ಟೆಯಲ್ಲಿ ಮಗುವಿಗೆ ಏನಾದರೂ ಅಪಾಯ ಸಂಭವಿಸಬಹುದೊ, ಹೆರಿಗೆ ಸಮಯದಲ್ಲಿ ಏನಾದರೂ ತೊಂದರೆಯಾಗಬಹುದೊ ಏನೊ ಎಂದು ಹೆದರಿ ಆಕೆಯ ಕೈಯಲ್ಲಿ ಯಾವ ಕೆಲಸವನ್ನೂ ಮಾಡಿಸುವುದೇ ಇಲ್ಲ. (ನಗು.)
“ನೀನು ಈ ಕೆಲಸಗಳನ್ನೆಲ್ಲ ಮಾಡುತ್ತಾ ಇದ್ದೀಯಲ್ಲ, ಇದರಿಂದ ನಿಜವಾಗಿ ನೀನು ನಿನಗೇ ಉಪಕಾರ ಮಾಡಿಕೊಳ್ಳುತ್ತಾ ಇದ್ದೀಯೆ. ನಿಷ್ಕಾಮ ಭಾವನೆಯಿಂದ ಕೆಲಸಮಾಡಲು ಸಾಧ್ಯವಾದರೆ ಚಿತ್ತಶುದ್ಧಿ ಉಂಟಾಗುತ್ತದೆ, ಭಗವಂತನಲ್ಲಿ ನಿನಗೆ ಪ್ರೀತಿ ಉಂಟಾಗುತ್ತದೆ. ಪ್ರೀತಿ ಉಂಟಾಯಿತು ಎಂದರೆ ಆತನ ಸಾಕ್ಷಾತ್ಕಾರ ಪಡೆದುಕೊಳ್ಳುತ್ತೀಯೆ.
“ಮನುಷ್ಯ ಜಗತ್ತಿಗೆ ನಿಜವಾಗಿ ಉಪಕಾರ ಮಾಡಲಾರ; ಭಗವಂತ ಮಾಡಬಲ್ಲ. ಯಾರು ಚಂದ್ರಸೂರ್ಯರನ್ನು ಸೃಷ್ಟಿಸಿದ್ದಾನೊ, ಯಾರು ತಂದೆತಾಯಿಗಳ ಆಂತರ್ಯದಲ್ಲಿ ಪ್ರೀತಿ ಇಟ್ಟಿದ್ದಾನೊ, ಯಾರು ಮಹಾಪುರುಷರಲ್ಲಿ ದಯೆ ಬೆಳೆಸಿದ್ದಾನೊ, ಯಾರು ಸಾಧು ಭಕ್ತರ ಹೃದಯದಲ್ಲಿ ಭಕ್ತಿ ಮೂಡುವಂತೆ ಮಾಡಿದ್ದಾನೊ ಆತ ಆ ಕಾರ್ಯ ಮಾಡುತ್ತಾನೆ. ಯಾರು ಕಾಮನಾಶೂನ್ಯನಾಗಿ ಕೆಲಸಮಾಡುತ್ತಾನೊ ಆತ ತನಗೇ ತಾನು ಶ್ರೇಯಸ್ಸು ತಂದುಕೊಳ್ಳುತ್ತಾನೆ.
“ನಿನ್ನ ಆಂತರ್ಯದಲ್ಲಿ ಚಿನ್ನದ ಗಟ್ಟಿ ಇದೆ; ಆದರೆ ಅದು ನಿನಗೆ ಗೊತ್ತಿಲ್ಲ. ಅದರ ಮೇಲೆ ಸ್ವಲ್ಪ ಮಣ್ಣು ಮುಚ್ಚಿಕೊಂಡಿದೆ. ಅದರ ನೆಲೆ ನಿನಗೆ ಸಿಕ್ಕಿಬಿಟ್ಟಿತು ಎಂದರೆ ನಿನ್ನ ಈ ಕೆಲಸ ಕಾರ್ಯಗಳೆಲ್ಲ ಕಡಿಮೆಯಾಗಿ ಹೋಗುತ್ತದೆ. ಸೊಸೆಗೆ ಮಗು ಆದೊಡನೆಯೆ ಆಕೆ ಮಗುವಿನ ಯೋಗಕ್ಷೇಮದಲ್ಲೇ ನಿರತಳಾಗಿರುತ್ತಾಳೆ. ಅದನ್ನು ಎತ್ತಿಕೊಂಡೇ ಸುತ್ತಾಡುತ್ತಾ ಬಳಸಾಡುತ್ತಾ ಇರುತ್ತಾಳೆ. ಆಗ ಅತ್ತೆ ಆಕೆಯ ಕೈಯಲ್ಲಿ ಒಂದು ಕೆಲಸವನ್ನೂ ಮಾಡಿಸುವುದಿಲ್ಲ.
“ಮುಂದೆ ಹೋಗು. ಒಮ್ಮೆ ಒಬ್ಬ ಸೌದೆ ಕಡಿಯುವವ ಸೌದೆ ತರಲು ಕಾಡಿಗೆ ಹೋದ. ಅಲ್ಲೊಬ್ಬ ಬ್ರಹ್ಮಚಾರಿ ಹೇಳಿದ: ‘ಮುಂದೆ ಹೋಗು.’ ಮುಂದೆ ಹೋಗಿ ನೋಡುತ್ತಾನೆ, ಚಂದನದ ಕಾಡು. ಕೆಲವು ದಿನಗಳಾದ ಮೇಲೆ ಯೋಚನೆ ಬಂತು: ‘ಬ್ರಹ್ಮಚಾರಿ ನನಗೆ ಮುಂದೆ ಹೋಗುವಂತೆ ಹೇಳಿದನೇ ವಿನಾ, ಈ ಚಂದನದ ಕಾಡಿನವರೆಗೆ ಮಾತ್ರ ಹೋಗು ಅಂತಲೇನು ಹೇಳಲಿಲ್ಲವಲ್ಲ.’ ಅಲ್ಲಿಂದ ಮುಂದೆ ಹೋಗಿ ನೋಡುತ್ತಾನೆ, ಬೆಳ್ಳಿ ಗಣಿ. ಇನ್ನು ಕೆಲವು ದಿನಗಳಾದ ಮೇಲೆ ಇನ್ನೂ ಮುಂದಕ್ಕೆ ಹೋಗಿ ನೋಡುತ್ತಾನೆ, ಚಿನ್ನದ ಗಣಿ. ಅದರಿಂದ ಮುಂದಕ್ಕೆ ಹೀರಕ, ಮಾಣಿಕ್ಯ ಇವುಗಳ ಗಣಿ. ಇವನ್ನೆಲ್ಲಾ ಪಡೆದುಕೊಂಡು ದೊಡ್ಡ ಐಶ್ವರ್ಯವಂತನಾಗಿಬಿಟ್ಟ.
ನಿಷ್ಕಾಮಕರ್ಮ ಮಾಡಿದರೆ ಭಗವಂತನಲ್ಲಿ ಪ್ರೀತಿ ಉಂಟಾಗುತ್ತದೆ. ಬಳಿಕ ಆತನ ಕೃಪೆಯಿಂದ ಆತನ ಸಾಕ್ಷಾತ್ಕಾರ ದೊರೆಯುತ್ತದೆ. ಆತನನ್ನು ನೋಡಲು ಸಾಧ್ಯ. ಆತನೊಡನೆ ಮಾತುಕತೆಯಾಡಬಹುದು, ನಾನು ನಿಮ್ಮೊಡನೆ ಮಾತುಕತೆಯಾಡುತ್ತಿರುವ ಹಾಗೆ.”
ಎಲ್ಲರೂ ಆಶ್ಚರ್ಯಚಕಿತರಾಗಿ ಶಬ್ದದ ಸುಳಿವೇ ಇಲ್ಲದ ಹಾಗೆ ಕುಳಿತು ಪರಮಹಂಸರ ಮಾತುಕತೆಗಳನ್ನೆಲ್ಲ ಕೇಳುತ್ತಿದ್ದಾರೆ. ಸಾಕ್ಷಾತ್ ವಾಗ್ದೇವಿಯೇ ಪರಮಹಂಸರ ನಾಲಿಗೆಯ ಮೇಲೆ ಕುಳಿತು ವಿದ್ಯಾಸಾಗರನನ್ನು ನೆಪಮಾಡಿಕೊಂಡು ಇಡಿಯ ಮಾನವ ಜಗತ್ತಿಗೇ ಉಪದೇಶವೀಯುತ್ತಿದ್ದಾಳೊ ಏನೊ ಎಂಬಂತೆ ತೋರಲಾರಂಭಿಸಿತು.
ಘಂಟೆ ಆಗಲೆ ರಾತ್ರಿ ಒಂಬತ್ತು. ಪರಮಹಂಸರು ಈಗ ಹೊರಡಲು ಅನುವಾಗುತ್ತಿದ್ದಾರೆ.
ಶ್ರೀರಾಮಕೃಷ್ಣರು ವಿದ್ಯಾಸಾಗರನಿಗೆ ನಗುತ್ತ: “ಇಷ್ಟೊಂದು ಹೊತ್ತು ಮಾತಾಡಿದೆನಲ್ಲ, ಅದೆಲ್ಲಾ ಸುಮ್ಮನೆ ಅನಾವಶ್ಯಕ, ಎಲ್ಲಾ ನಿನಗೆ ಗೊತ್ತಿದೆ; ಆದರೆ ಅದರ ಅರಿವೇ ಇರಲಿಲ್ಲ. ವರುಣನ ಭಂಡಾರದಲ್ಲಿ ಎಷ್ಟೊಂದು ರತ್ನಗಳು! ಆದರೆ ಅವು ಆತನಿಗೆ ಗೊತ್ತೇ ಇಲ್ಲ.”
ವಿದ್ಯಾಸಾಗರ ನಗುತ್ತ: “ನೀವು ಸುಮ್ಮನೆ ಬೇಕಾದರೆ ಹಾಗೆ ಹೇಳಬಹುದು.”
ಶ್ರೀರಾಮಕೃಷ್ಣರು ನಗುತ್ತ: “ಹೌದು, ಅನೇಕ ಮಂದಿ ಧನಿಕರಿಗೆ ತಮ್ಮ ಆಳುಕಾಳಿನ ಹೆಸರೇ ಗೊತ್ತಿರುವುದಿಲ್ಲ. ಮನೆಯಲ್ಲಿ ಎಷ್ಟೆಷ್ಟು ಬೆಲೆಯುಳ್ಳ ವಸ್ತು ಎಲ್ಲೆಲ್ಲಿ ಬಿದ್ದಿವೆ ಎಂಬುದೂ ಗೊತ್ತಿರುವುದಿಲ್ಲ.” (ಎಲ್ಲರೂ ನಗುತ್ತಿದ್ದಾರೆ).
ಪರಮಹಂಸರ ಮಾತು ಕೇಳಿ ಎಲ್ಲರಿಗೂ ಆನಂದವಾಗಿಬಿಟ್ಟಿದೆ. ಮತ್ತೆ ವಿದ್ಯಾಸಾಗರನನ್ನು ಸಂಬೋಧಿಸಿ ನಗುತ್ತ ಹೇಳುತ್ತಿದ್ದಾರೆ: “ಒಮ್ಮೆ ತೋಟ ನೋಡುವುದಕ್ಕೆ ಬನ್ನಿ-ರಾಣಿ ರಾಸಮಣಿಯ ತೋಟವನ್ನು, ಬಹಳ ಮನೋಹರವಾದ ಜಾಗ.”
ವಿದ್ಯಾಸಾಗರ: “ಬಾರದೆ ಮತ್ತೆ! ನೀವು ಇಲ್ಲಿಗೆ ಬಂದ ಮೇಲೆ ನಾನು ಅಲ್ಲಿಗೆ ಹೋಗಬೇಡವೆ?”
ಶ್ರೀರಾಮಕೃಷ್ಣರು: “ನಮ್ಮ ಅಲ್ಲಿಗೆ? ಛೆ! ಛೆ!”
ವಿದ್ಯಾಸಾಗರ: “ಏಕೆ? ಏಕೆ ಹೀಗೆ ಹೇಳುತ್ತಿದ್ದೀರಿ? ದಯವಿಟ್ಟು ಕಾರಣ ತಿಳಿಸಿ.”
ಶ್ರೀರಾಮಕೃಷ್ಣರು ನಗುತ್ತ: “ನಾವು ಚಿಕ್ಕ ಮೀನುಹಿಡಿಯುವ ದೋಣಿ. (ಎಲ್ಲರೂ ನಗುತ್ತಿದ್ದಾರೆ) ಚಿಕ್ಕ ಕಾಲುವೆ, ಜೌಗುಪ್ರದೇಶ, ಬೇಕಾದರೆ ದೊಡ್ಡ ನದಿ-ಎಲ್ಲಿಗೆ ಬೇಕಾದರಲ್ಲಿಗೆ ಹೋಗಬಲ್ಲೆವು. ನೀವು ದೊಡ್ಡ ಜಹಜು. ಯಾರಿಗೆ ಗೊತ್ತು, ಅಲ್ಲಿಗೆ ಬರುವುದಕ್ಕೆ ಹೋಗಿ ಆಳ ಸಾಕಾಗದೆ ನೆಲ ಹತ್ತಿಬಿಟ್ಟರೆ!” (ಎಲ್ಲರೂ ನಗುತ್ತಿದ್ದಾರೆ.)
ವಿದ್ಯಾಸಾಗರ ಸುಮ್ಮನೆ ಆದ. ಪರಮಹಂಸರು ಮತ್ತೆ ಹೇಳುತ್ತಿದ್ದಾರೆ: “ಈ ಸಮಯದಲ್ಲಿ ಜಹಜೂ ಅಲ್ಲಿಗೆ ಬರಬಲ್ಲುದು.”
ವಿದ್ಯಾಸಾಗರ ನಗುತ್ತ: “ಹೌದು, ಹೌದು, ಇದು ಮಳೆಗಾಲ ನಿಜ.” (ಎಲ್ಲರೂ ನಗುತ್ತಿದ್ದಾರೆ.)
ಮಾಸ್ಟರ್ ತನಗೆ ತಾನೆ: “ನವಾನುರಾಗದ ಮಳೆಗಾಲ. ನವಾನುರಾಗದ ಸಮಯದಲ್ಲಿ ಮಾನ ಅಪಮಾನ ಇವುಗಳ ಬೋಧೆ ಇರುವುದಿಲ್ಲ, ನಿಜ.”
ಪರಮಹಂಸರು ತಮ್ಮ ಭಕ್ತರೊಡನೆ ವಿದ್ಯಾಸಾಗರನಿಂದ ಬೀಳ್ಕೊಡಲು ಎದ್ದು ನಿಂತರು. ಕೊಠಡಿಯಿಂದ ಹೊರಕ್ಕೆ ಬರುವ ಮುನ್ನ ಭಾವಾವಿಷ್ಟರಾಗಿ ಸ್ವಲ್ಪ ಹೊತ್ತು ವಿದ್ಯಾಸಾಗರನ ಮನೆಯವರ ಮಂಗಳಕ್ಕಾಗಿ ಪ್ರಾರ್ಥನೆಮಾಡಿದರು. ಈಗ ವಿದ್ಯಾಸಾಗರ ತಾನೇ ಕೈಯಲ್ಲಿ ದೀಪ ಹಿಡಿದು ಪರಮಹಂಸರನ್ನು ಗೇಟಿನ ಕಡೆಗೆ ಕರೆದುಕೊಂಡು ಬರುತ್ತಿದ್ದಾನೆ. ಆತನ ನೆಂಟರಿಷ್ಟರೆಲ್ಲರೂ ಪರಮಹಂಸರನ್ನು ಹಿಂಬಾಲಿಸುತ್ತಿದ್ದಾರೆ.
ಪರಮಹಂಸರೂ ಭಕ್ತರೂ ಗೇಟಿನ ಹತ್ತಿರಕ್ಕೆ ಹೋದಾಗ ಒಂದು ಅನಿರೀಕ್ಷಿತ ದೃಶ್ಯ ಅವರ ಕಣ್ಣಿಗೆ ಬಿತ್ತು. ಮೂವತ್ತೈದು ಮೂವತ್ತಾರು ವರ್ಷದ, ಗಡ್ಡ ಬಿಟ್ಟುಕೊಂಡಿರುವ, ಗೌರವರ್ಣದ ಒಬ್ಬ ವ್ಯಕ್ತಿ ನಿಂತಿದ್ದಾನೆ. ಬಂಗಾಳಿಗಳಂತೆ ಬಟ್ಟೆಬರೆ ಹಾಕಿಕೊಂಡಿದ್ದಾನೆ. ಆದರೆ ತಲೆಗೆ ಮಾತ್ರ ಸಿಖ್ಖರಂತೆ ಪೇಟ ಸುತ್ತಿದ್ದಾನೆ. ಪರಮಹಂಸರು ಆತನ ಕಣ್ಣಿಗೆ ಬಿದ್ದೊಡನೇ ಆತ ಅವರಿಗೆ ಪೇಟ ಸಮೇತ ಸಾಷ್ಟಾಂಗ ಪ್ರಣಾಮ ಮಾಡಿದ.
ಆತ ಎದ್ದುನಿಂತ ನಂತರ ಪರಮಹಂಸರು ಕೇಳಿದರು: “ಯಾರಪ್ಪ ಇದು? ಏನು ಬಲರಾಮ! ಏನು ಇಷ್ಟು ಹೊತ್ತಿನಲ್ಲಿ?”
ಬಲರಾಮ: “ನಾನು ಇಲ್ಲಿ ಬಹಳ ಹೊತ್ತಿನಿಂದ ಕಾದಿದ್ದೇನೆ.”
ಶ್ರೀರಾಮಕೃಷ್ಣರು: “ಒಳಗೇಕೆ ಬರಲಿಲ್ಲ?”
ಬಲರಾಮ: “ಎಲ್ಲರೂ ನಿಮ್ಮ ಮಾತುಕತೆ ಕೇಳುತ್ತಿದ್ದರು. ಮಧ್ಯೆ ಬಂದು ತೊಂದರೆ ಮಾಡಲಿಚ್ಛೆಯಾಗಲಿಲ್ಲ.”
ಪರಮಹಂಸರು ಭಕ್ತರೊಡನೆ ಗಾಡಿ ಹತ್ತಿದರು.
ವಿದ್ಯಾಸಾಗರ ಮಾಸ್ಟರಿಗೆ ಮೆತ್ತಗೆ: “ಗಾಡಿ ಬಾಡಿಗೆ ಕೊಡಲೆ?”
ಮಾಸ್ಟರ್: “ಬೇಡಿ, ಕೊಟ್ಟಾಗಿದೆ.”
ವಿದ್ಯಾಸಾಗರ ಮತ್ತು ಉಳಿದವರೆಲ್ಲರೂ ಪರಮಹಂಸರಿಗೆ ಪ್ರಣಾಮಮಾಡುತ್ತಿದ್ದಾರೆ.
ಈಗ ಗಾಡಿ ದಕ್ಷಿಣೇಶ್ವರದ ಕಡೆಗೆ ಹೊರಟಿತು. ವಿದ್ಯಾಸಾಗರ ಮತ್ತು ಉಳಿದವರೆಲ್ಲರೂ, ಗಾಡಿ ಕಣ್ಣಿಗೆ ಬೀಳುವವರೆಗೆ ಗೇಟಿನ ಹತ್ತಿರವೇ ನಿಂತು ಪರಮಹಂಸರ ಕಡೆ ದಿಟ್ಟಿಸಿ ನೋಡುತ್ತಿದ್ದರು.