೧೨ನೆ ಏಪ್ರಿಲ್ ೧೮೮೫, ಚೈತ್ರ ಕೃಷ್ಣ ತ್ರಯೋದಶಿ, ಭಾನುವಾರ
ಪರಮಹಂಸರು ಕಲ್ಕತ್ತದಲ್ಲಿರುವ ಬಲರಾಮನ ಮನೆಯಲ್ಲಿ ಭಕ್ತರೊಡನೆ ಕುಳಿತಿ ದ್ದಾರೆ. ಮಾಸ್ಟರ್ ಅಲ್ಲಿಗೆ ಅಪರಾಹ್ನ ಮೂರು ಘಂಟೆಯ ಸಮಯಕ್ಕೆ ಬಂದಿದ್ದಾನೆ. ಗಿರೀಶ, ಬಲರಾಮ, ಚಿಕ್ಕ ನರೇನ, ಪಲ್ಟು, ದ್ವಿಜ, ಪೂರ್ಣ, ಮಹೇಂದ್ರಮುಖರ್ಜಿ ಮತ್ತು ಇನ್ನೂ ಕೆಲವು ಮಂದಿ ಭಕ್ತರು ನೆರೆದಿದ್ದಾರೆ. ಕ್ರಮೇಣ ಬ್ರಾಹ್ಮಸಮಾಜದ ತ್ರೈಲೋಕ್ಯ ಸನ್ಯಾಲ, ಜಯಗೋಪಾಲಸೇನ, ಇನ್ನೂ ಕೆಲವು ಮಂದಿ ಬ್ರಾಹ್ಮ ಸಮಾಜದ ಭಕ್ತರು ಅಲ್ಲಿಗೆ ಬಂದರು. ಅನೇಕ ಮಂದಿ ಭಕ್ತೆಯರೂ ಬಂದಿದ್ದಾರೆ. ಅವರು ಪರದೆ ಹಿಂದೆ ಕುಳಿತು ಪರಮಹಂಸರ ದರ್ಶನ ಪಡೆಯುತ್ತಿದ್ದಾರೆ. ಮೋಹಿನಿಯ ಹೆಂಡತಿಯೂ ಬಂದಿದ್ದಾಳೆ. ಆಕೆ ಪುತ್ರಶೋಕದಿಂದ ಬಹುಮಟ್ಟಿಗೆ ಹುಚ್ಚಿಯಂತೆಯೇ ಆಗಿಬಿಟ್ಟಿದ್ದಾಳೆ. ಆಕೆಯಂತೆ ದುಃಖಕ್ಕೀಡಾದ ಇನ್ನೂ ಕೆಲವರು ಮನಶ್ಶಾಂತಿಯನ್ನು ಪಡೆಯಲೋಸುಗ ಅಲ್ಲಿಗೆ ಬಂದಿದ್ದಾರೆ.
ಪರಮಹಂಸರು ತಮ್ಮ ಸಾಧನೆ ಮತ್ತು ಆಧ್ಯಾತ್ಮಿಕ ಅನುಭವಗಳ ಸಂಬಂಧವಾಗಿ ವರ್ಣನೆ ಮಾಡಲಾರಂಭಿಸಿದ್ದಾರೆ.
ಶ್ರೀರಾಮಕೃಷ್ಣರು: “ನನ್ನ ಸಾಧನೆಯ ಸಮಯದಲ್ಲಿ ನಾನು ಧ್ಯಾನಕ್ಕೆ ಕುಳಿತಾಗ ನಿಜವಾಗಿಯೂ ಅಸ್ಥಿಮಾಂಸಗಳಿಂದ ಕೂಡಿದ ಮತ್ತು ತ್ರಿಶೂಲಧಾರಿಯಾದ ಒಬ್ಬ ಅಪರಿಚಿತ ನನ್ನ ಪಕ್ಕದಲ್ಲಿಯೇ ಕುಳಿತುಕೊಂಡಿರುವುದನ್ನು ನಾನು ನೋಡುತ್ತಿದ್ದೆ. ನಾನೇನಾದರೂ ಭಗವಂತನ ಪಾದಪದ್ಮಗಳಲ್ಲಿ ನನ್ನ ಮನಸ್ಸನ್ನು ಇಡದೇ ಹೋಗಿಬಿಟ್ಟಿತು ಎಂದರೆ ನನ್ನನ್ನು ತ್ರಿಶೂಲದಿಂದ ತಿವಿದುಬಿಡುತ್ತೇನೆಂದೂ, ನನ್ನ ಮನಸ್ಸೇನಾದರೂ ಭಗವಂತನನ್ನು ಬಿಟ್ಟು ಅಲುಗಿತು ಎಂದರೆ ಎದೆಯನ್ನು ಸೀಳಿಯೇಬಿಡುತ್ತೇನೆಂದೂ ಆತ ಹೆದರಿಸುತ್ತಿದ್ದ.
“ಭಗವತಿ ನನ್ನನ್ನು ಅಂತಹ ಅವಸ್ಥೆಯಲ್ಲಿ ಇಡುತ್ತಿದ್ದಳು. ಅದರ ದೆಸೆಯಿಂದ ಮನಸ್ಸು ನಿತ್ಯದಿಂದ ಲೀಲೆಗೆ ಇಳಿದುಬರುತ್ತಿತ್ತು; ಮತ್ತೆ ಕೆಲವು ವೇಳೆ ಅದು ಲೀಲೆಯಿಂದ ನಿತ್ಯಕ್ಕೆ ಹೋಗುತ್ತಿತ್ತು.
“ನನ್ನ ಮನಸ್ಸು ಲೀಲೆಗೆ ಇಳಿದುಬಂದಾಗ ಒಮ್ಮೊಮ್ಮೆ ಹಗಲಿರುಳೂ ಸೀತಾರಾಮರ ಚಿಂತನೆ ಮಾಡುತ್ತಿದ್ದೆ. ಆಗ ನನಗೆ ಸರ್ವದಾ ಸೀತಾರಾಮನ ದರ್ಶನ ಆಗುತ್ತಿತ್ತು. ಆಗ ರಾಮಲಾಲ 1 ನನ್ನ ಎಡೆಬಿಡದ ಸಂಗಾತಿಯಾಗುತ್ತಿದ್ದ. ನಾನು ಆತನಿಗೆ ಕೆಲವು ವೇಳೆ ಸ್ನಾನ ಮಾಡಿಸುತ್ತಿದ್ದೆ. ಇನ್ನು ಕೆಲವು ವೇಳೆ ಅನ್ನಪಾನಾದಿಗಳನ್ನು ಕೊಡುತ್ತಿದ್ದೆ.
“ಕೆಲವು ವೇಳೆ ರಾಧಾಕೃಷ್ಣರ ಭಾವದಲ್ಲಿ ಇರುತ್ತಿದ್ದೆ. ಅವರ ದರ್ಶನವೂ ನನಗೆ ಸತತ ಆಗುತ್ತಿತ್ತು. ಮತ್ತೆ ಕೆಲವು ವೇಳೆ ಗೌರಾಂಗನ ಭಾವದಲ್ಲಿ ಇರುತ್ತಿದ್ದೆ. ಆತ ಈ ಎರಡು ಭಾವಗಳ –– ಪ್ರಕೃತಿ ಪುರುಷರ ಭಾವಗಳ ಸಮನ್ವಯ. ಆ ಅವಸ್ಥೆಯಲ್ಲಿ ಸರ್ವದಾ ನನಗೆ ಗೌರಾಂಗನ ದರ್ಶನವಾಗುತ್ತಿತ್ತು.
“ತರುವಾಯ ನನ್ನ ಅವಸ್ಥೆ ಬದಲಾವಣೆಯನ್ನು ಹೊಂದಿತು. ಆಗ ನನ್ನ ಮನಸ್ಸು ಲೀಲೆಯನ್ನು ಬಿಟ್ಟು ನಿತ್ಯಕ್ಕೆ ಹತ್ತಿಬಿಟ್ಟಿತು. ತುಳಸಿದಳ ಮತ್ತು ನುಗ್ಗೆ ಎಲೆ ಪವಿತ್ರತೆಯಲ್ಲಿ ಒಂದೇ ಸಮನಾಗಿ ತೋರಿದುವು. ಭಗವಂತನ ಸಾಕಾರ ರೂಪು ಆ ಬಳಿಕ ಹಿಡಿಸದೆ ಹೋಯಿತು. ಆಗ ನನಗೆ ನಾನೇ ಹೇಳಿಕೊಂಡೆ : ‘ಇವೆಲ್ಲಾ ಬಂದು ಹೋಗುತ್ತವೆ.’ ನನ್ನ ಮನಸ್ಸನ್ನು ಇವುಗಳಿಂದ ಮೇಲಕ್ಕೆ ಎತ್ತಿದೆ. ಕೊಠಡಿಯಲ್ಲಿ ಇದ್ದ ದೇವದೇವಿಯರ ಪಟ ಫೋಟೋ ಎಲ್ಲವನ್ನೂ ತೆಗೆದುಹಾಕಿಬಿಟ್ಟೆ. ಬಳಿಕ ದಾಸೀಭಾವವನ್ನು ಆರೋಪಿಸಿಕೊಂಡು– –ಆದಿಪುರುಷನ ದಾಸಿ ಎಂದು ಭಾವಿಸಿಕೊಂಡು ಕೇವಲ ಆ ಅಖಂಡ ಸಚ್ಚಿದಾನಂದನ, ಆ ಆದಿಪುರುಷನ ಚಿಂತನೆಯಲ್ಲಿಯೇ ಕಾಲ ಕಳೆಯಲಾರಂಭಿಸಿದೆ.
“ನಾನು ಎಲ್ಲಾ ವಿಧದ ಸಾಧನೆಗಳನ್ನೂ ಮಾಡಿದ್ದೇನೆ. ಸಾಧನೆಗಳಲ್ಲಿ ಮೂರು ವಿಧ; ಸಾತ್ತ್ವಿಕ, ರಾಜಸಿಕ, ತಾಮಸಿಕ. ಸಾತ್ತ್ವಿಕ ಸಾಧನೆಯಲ್ಲಿ ಭಕ್ತ ಭಗವಂತನನ್ನು ವ್ಯಾಕುಲಚಿತ್ತ ದಿಂದ ಕರೆಯುತ್ತಾನೆ. ಅಥವಾ ಕೇವಲ ಆತನ ನಾಮಜಪದಲ್ಲೇ ನಿರತನಾಗಿರುತ್ತಾನೆ; ಆತನ ಹೃದಯದಲ್ಲಿ ಯಾವ ಫಲಾಕಾಂಕ್ಷೆಯೂ ಇರದು. ರಾಜಸಿಕ ಸಾಧನೆಯಲ್ಲಿ ಹಲವಾರು ವಿಧದ ಪ್ರಕ್ರಿಯೆಗಳನ್ನು––ಇಷ್ಟು ಸಲ ಪುರಶ್ಚರಣೆ, ಇಷ್ಟು ಸಲ ತೀರ್ಥಯಾತ್ರೆ, ಇಷ್ಟು ಸಲ ಪಂಚತಪ, ಇಷ್ಟು ಸಲ ಷೋಡಶೋಪಚಾರ ಪೂಜೆ ಇವೇ ಮೊದಲಾದುವನ್ನು ಮಾಡಬೇಕು ಎಂಬ ನಿಯಮವಿದೆ. ತಾಮಸಿಕ ಸಾಧನೆ ಅಂದರೆ ತಮಸ್ಸಿನ ಸಾಧನೆಯಿಂದ ಭಗವಂತನ ಪೂಜೆ ಮಾಡುವುದು. ತಾಮಸಿಕ ಭಕ್ತನ ಭಾವನೆ : ‘ಜೈ ಕಾಳಿ ! ಏನು, ನೀನು ನನಗೆ ದರ್ಶನ ಕೊಡಲೊಲ್ಲೆಯಾ ? ನೋಡು, ನೀನು ದರ್ಶನ ಕೊಡದೆ ಇದ್ದರೆ, ಇಗೋ ಕುತ್ತಿಗೆಗೆ ಚೂರಿ ಹಾಕಿಕೊಂಡುಬಿಡುತ್ತೇನೆ !’ ಅಂತ. ಯಾವ ರೀತಿಯಾಗಿ ತಾಂತ್ರಿಕ ಸಾಧನೆಗಳಲ್ಲಿ ಶುದ್ಧಾಚಾರಗಳೇನೂ ಇಲ್ಲವೊ, ಅದೇ ರೀತಿಯಾಗಿ ಇದರಲ್ಲೂ ಕೂಡ.
“ನನ್ನ ಸಾಧನೆಯ ಸಮಯದಲ್ಲಿ ನನಗೆ ಅದ್ಭುತ ದರ್ಶನಗಳಾಗುತ್ತಿದ್ದುವು. ನಾನು ಆತ್ಮನ ವಿಲಾಸವನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ. ನನ್ನಂಥ ರೂಪಿನವನೇ ಒಬ್ಬ ನನ್ನ ಶರೀರವನ್ನು ಪ್ರವೇಶಿಸಿ ಸುಷುಮ್ನೆಯಲ್ಲಿ ಆರು ಪದ್ಮಗಳೊಡನೆಯೂ ಕ್ರೀಡಿಸಲು ಆರಂಭಿಸಿದ, ಆ ಆರು ಪದ್ಮಗಳೂ ಮುಚ್ಚಿಕೊಂಡಿದ್ದುವು; ಆದರೆ ಆತ ಪ್ರತಿಯೊಂದ ರೊಡನೆ, ಕ್ರೀಡಿಸಿದೊಡನೆಯೇ, ಸೊರಗಿ ಬಾಗಿದ್ದ ಪ್ರತಿಯೊಂದೂ ಅರಳಿ ಅರಳಿ ಊರ್ಧ್ವಮುಖವಾಗಿ ಎದ್ದುನಿಂತುವು. ಈ ರೀತಿಯಾಗಿ ಮೂಲಾಧಾರ, ಸ್ವಾಧಿಷ್ಠಾನ, ಅನಾಹತ, ವಿಶುದ್ಧ, ಆಜ್ಞಾ, ಸಹಸ್ರಾರ ಚಕ್ರಗಳಲ್ಲಿದ್ದ ಪದ್ಮಗಳೆಲ್ಲವೂ ಅರಳಿದುವು. ಅಧೋಮುಖವಾಗಿದ್ದ ಇವೆಲ್ಲವೂ ಊರ್ಧ್ವಮುಖವಾಗಿ ಎದ್ದುನಿಂತವು. ಇವನ್ನೆಲ್ಲಾ ಪ್ರತ್ಯಕ್ಷವಾಗಿ ನೋಡಿದ್ದೇನೆ.
“ನಾನು ನನ್ನ ಸಾಧನೆಯ ಸಮಯದಲ್ಲಿ ಧ್ಯಾನ ಮಾಡುತ್ತಿದ್ದಾಗ ಒಂದು ಕಿಂಚಿತ್ತೂ ಗಾಳಿಯೇ ಇಲ್ಲದ ಜಾಗದಲ್ಲಿ ಸ್ವಲ್ಪವೂ ಅಲುಗದೆ ಉರಿಯುತ್ತಿರೋ ದೀಪದ ಕುಡಿಯ ಭಾವನೆಯನ್ನು ಆರೋಪಿಸಿಕೊಳ್ಳುತ್ತಿದ್ದೆ.
“ಧ್ಯಾನ ಗಾಢವಾದಾಗ ಸಾಧಕನ ಬಾಹ್ಯಜ್ಞಾನ ಶೂನ್ಯವಾಗಿಬಿಡುತ್ತದೆ. ಒಬ್ಬ ವ್ಯಾಧ ಒಂದು ಹಕ್ಕಿಗೆ ಗುರಿಯಿಟ್ಟು ನಿಂತಿದ್ದ. ವರನ ಸಂಬಂಧಿಗಳು, ಆತನ ಸ್ನೇಹಿತರು, ಸಾರೋಟು ಕುದುರೆಗಳು, ಸಂಗೀತ ಇವುಗಳಿಂದ ಕೂಡಿದ ಒಂದು ಮದುವೆಯ ಮೆರವಣಿಗೆ ಆತನ ಪಕ್ಕದಲ್ಲಿಯೇ ಮುಂದುವರಿಯಿತು. ಆ ವ್ಯಾಧನನ್ನು ದಾಟಿಹೋಗಲು ಆ ಮೆರವಣಿಗೆಗೆ ಬಹಳ ಸಮಯವೇ ಹಿಡಿಯಿತು. ಆದರೂ ವ್ಯಾಧನಿಗೆ ಅದು ಗೊತ್ತೇ ಆಗಲಿಲ್ಲ. ತನ್ನ ಪಕ್ಕದಲ್ಲಿಯೇ ಒಂದು ಮೆರವಣಿಗೆ ನಡೆದುಹೋದುದು ಆತನಿಗೆ ಗೊತ್ತೇ ಆಗಲಿಲ್ಲ.
“ಒಬ್ಬ ಒಂಟಿಯಾಗಿ ಒಂದು ಕೆರೆಯ ದಡದಲ್ಲಿ ಕುಳಿತು ಮೀನು ಹಿಡಿಯುತ್ತಿದ್ದ. ಗಾಳವನ್ನು ಬೀಸಿದ ಎಷ್ಟೋ ಹೊತ್ತಿನ ಮೇಲೆ ಗಾಳದ ಬೆಂಡು ಅಲುಗಲಾರಂಭಿಸಿತು. ಒಮ್ಮೊಮ್ಮೆ ಆ ಬೆಂಡು ನೀರಿನೊಳಕ್ಕೆ ಸ್ವಲ್ಪ ಸ್ವಲ್ಪ ಮುಳುಗುತ್ತಿತ್ತು. ಅದನ್ನು ನೋಡಿ ಮೀನು ಹಿಡಿಯುತ್ತಿದ್ದವ ಗಾಳದ ಕಡ್ಡಿಯನ್ನು ಎತ್ತಲು ಸಿದ್ಧನಾಗುತ್ತಿದ್ದ. ಆ ಸಮಯಕ್ಕೆ ಸರಿಯಾಗಿ ಒಬ್ಬ ದಾರಿಹೋಕ ಆತನ ಹತ್ತಿರಕ್ಕೆ ಬಂದು ಕೇಳಿದ, ‘ಮಹಾಶಯ, ಶ್ರೀಮಾನ್ ಬ್ಯಾನರ್ಜಿಯ ಮನೆ ಎಲ್ಲಿದೆ ಎಂಬುದು ನಿಮಗೆ ಗೊತ್ತೆ?’ ಅಂತ. ಆಗ ಆತ ಗಾಳದ ಕಡ್ಡಿಯನ್ನು ಮೇಲಕ್ಕೆ ಎತ್ತೋ ಕಾರ್ಯದಲ್ಲಿ ತನ್ಮಯನಾಗಿದ್ದುದರಿಂದ ಆತನಿಗೆ ಯಾವ ಉತ್ತರವನ್ನೂ ಕೊಡಲಾಗಲಿಲ್ಲ. ಮತ್ತೆ ಮತ್ತೆ ಆ ದಾರಿಹೋಕ ತಾರಸ್ವರದಿಂದ ಕೇಳಿದ ‘ಶ್ರೀಮಾನ್ ಬ್ಯಾನರ್ಜಿಯ ಮನೆ ಎಲ್ಲಿದೆ ಎಂಬುದು ನಿಮಗೆ ಗೊತ್ತೆ?’ ಅಂತ. ಆ ಮೀನು ಹಿಡಿಯುವವನಿಗೆ ಬೇರೆ ಯಾವುದರ ಮೇಲೂ ಪ್ರಜ್ಞೆಯೇ ಇಲ್ಲ. ಆತನ ಕೈ ಸುಮ್ಮನೆ ನಡುಗುತ್ತಿತ್ತು. ಆತನ ದೃಷ್ಟಿಯೆಲ್ಲಾ ಆ ಬೆಂಡಿನ ಕಡೆಗೇ ಇತ್ತು. ಅದನ್ನು ನೋಡಿ ದಾರಿಹೋಕ ಬೇಸರಗೊಂಡು ಹೊರಟುಹೋದ. ಆತ ಸ್ವಲ್ಪ ಹೆಚ್ಚು ದೂರವೇ ಮುಂದುವರಿದ ನಂತರ ಆ ಬೆಂಡು ಸಂಪೂರ್ಣವಾಗಿ ನೀರೊಳಕ್ಕೆ ಮುಳುಗಿತು. ಒಡನೆಯೇ ಆ ಮೀನು ಹಿಡಿಯುವವ ಗಾಳದ ಕಡ್ಡಿಯನ್ನು ಮೇಲಕ್ಕೆ ಎತ್ತಿ ಮೀನನ್ನು ಹಿಡಿದು ದಡಕ್ಕೆ ಹಾಕಿದ. ಬಳಿಕ ಕರವಸ್ತ್ರದಿಂದ ಮುಖದ ಬೆವರು ಒರೆಸಿಕೊಂಡು ಆ ದಾರಿಹೋಕನನ್ನು ಕೂಗಲಾರಂಭಿಸಿದ: ‘ಏನ್ರೀ! ಯಾರಲ್ಲಿ ಹೋಗುತ್ತಾ ಇರೋದು! ಬನ್ರೀ! ಇಲ್ಲಿಗೆ ಸ್ವಲ್ಪ ಬಂದುಹೋಗಿ!’ ದಾರಿಹೋಕನಿಗೆ ಹಿಂದಿರುಗಿ ಬರಲು ಇಚ್ಛೆ ಇಲ್ಲ. ಮೀನು ಹಿಡಿಯುವವ ಬಹಳವಾಗಿ ಕೂಗಿ ಕರೆದ ನಂತರ ಆತ ಹಿಂದಿರುಗಿ ಬಂದು, ‘ಏಕೆ ಸುಮ್ಮನೆ ಗಂಟಲು ಕಿತ್ತುಕೊಳ್ಳುತ್ತಾ ಇದ್ದೀಯೆ?’ ಅಂತ ಕೇಳಿದ. ಆಗ ಮೀನು ಹಿಡಿಯುವವ, ‘ನನ್ನನ್ನು ಏನು ಕೇಳುತ್ತಿದ್ದೀರಿ?’ ಅಂತ ಕೇಳಿದ. ದಾರಿಹೋಕ ‘ಆಗ ನಿನ್ನನ್ನು ಎಷ್ಟೊಂದು ಸಲ ಕೇಳಿದೆ. ಈಗ ನೀನು ನನಗೇನು ಬೇಕು ಅಂತ ಕೇಳುತ್ತಾ ಇದ್ದೀಯಲ್ಲ!’ ಅಂತ ಹೇಳಿದ. ಬಳಿಕ ಮೀನು ಹಿಡಿಯುವವ ಹೇಳಿದ : ‘ಆಗ ನನ್ನ ಗಾಳದ ಬೆಂಡು ಇನ್ನೇನು ಮುಳುಗುವುದರಲ್ಲಿತ್ತು; ಆ ಕಾರಣದಿಂದ ನೀವು ಕೇಳಿದ ಪ್ರಶ್ನೆಯ ಒಂದು ಪದವೂ ನನ್ನ ಕಿವಿಗೆ ಬೀಳಲಿಲ್ಲ.’
“ಧ್ಯಾನದ ಸಮಯದಲ್ಲಿ ಮನಸ್ಸು ಅಂಥ ಏಕಾಗ್ರತೆಯನ್ನು ಹೊಂದಿರುತ್ತದೆ. ಆಗ ಏನನ್ನು ನೋಡುವುದಕ್ಕೂ ಆಗುವುದಿಲ್ಲ. ಕೇಳುವುದಕ್ಕೂ ಆಗುವುದಿಲ್ಲ. ಸ್ಪರ್ಶದ ಬೋಧೆ ಕೂಡ ಆಗುವುದಿಲ್ಲ. ಹಾವು ಮೈಮೇಲೆ ಹರಿದುಹೋದರೂ ಅದು ಗೊತ್ತಾಗುವುದೇ ಇಲ್ಲ. ಧ್ಯಾನಸ್ಥನಿಗೆ ಹಾವು ತನ್ನ ಮೈಮೇಲೆ ಹರಿದುಹೋದುದು ಗೊತ್ತಾಗದು. ಅದೇ ರೀತಿಯಾಗಿ ಹಾವಿಗೂ ತಾನು ಮನುಷ್ಯನ ದೇಹದ ಮೇಲೆ ಹರಿದುಹೋಗುತ್ತಿದ್ದೇನೆ ಎಂಬ ಭಾವನೆಯೇ ಉಂಟಾಗದು.
“ಗಾಢಧ್ಯಾನದಲ್ಲಿ ಇಂದ್ರಿಯವ್ಯಾಪಾರ ಸಂಪೂರ್ಣವಾಗಿ ನಿಂತುಹೋಗಿಬಿಡುತ್ತದೆ. ಆಗ ಮನಸ್ಸು ಬಹಿರ್ಮುಖವಾಗಿರದು. ಇದು ಬೀದಿ ಬಾಗಿಲನ್ನು ಹಾಕಿ ಒಳಗೆ ಕುಳಿತಂತೆ. ಇಂದ್ರಿಯಗಳ ಐದೂ ವಸ್ತುಗಳೂ ರೂಪ, ರಸ, ಗಂಧ, ಸ್ಪರ್ಶ, ಶಬ್ದ – ಜಗಲಿ ಮೇಲೆ ಬಿದ್ದಿರಬೇಕಾಗುತ್ತದೆ.
“ಧ್ಯಾನಜೀವನಕ್ಕೆ ಕಾಲಿಟ್ಟಾಗ ಮೊದಲು ಮೊದಲು ವಿಷಯವಸ್ತುಗಳೆಲ್ಲವೂ ಸಾಧಕನ ಎದುರಿಗೆ ಬಂದು ನಿಲ್ಲುವುವು. ಧ್ಯಾನ ಗಾಢವಾಯಿತು ಅಂದರೆ ಮತ್ತೆ ಅವು ಎದುರಿಗೆ ಬಂದು ನಿಲ್ಲವು; -ಎಲ್ಲೋ ಒಂದು ಕಡೆ ಹೊರಗೆ ಬಿದ್ದಿರುತ್ತವೆ. ಧ್ಯಾನವನ್ನು ಮುಂದುವರಿಸುತ್ತ ಮುಂದುವರಿಸುತ್ತ ಹೋಗುತ್ತಿದ್ದ ಹಾಗೆ ನನಗೆ ಏನೇನೂ ದರ್ಶನ ಗಳಾದುವು. ಒಮ್ಮೆ ನಾನು ಪ್ರತ್ಯಕ್ಷವಾಗಿ ನನ್ನ ಮುಂದೆ ಒಂದು ಹಣದ ರಾಶಿ, ಒಂದು ಶಾಲು, ಒಂದು ತಟ್ಟೆ ಲಾಡು ಇಟ್ಟಿರುವದನ್ನು ಮತ್ತು ಮುಕುರ ಇಟ್ಟುಕೊಂಡಿದ್ದ ಇಬ್ಬರು ಹೆಂಗಸರು ನಿಂತಿರುವುದನ್ನು ನೋಡಿದೆ. ಆಗ ನನ್ನ ಮನಸ್ಸನ್ನು ಕೇಳಿದೆ, ‘ಹೇ ಮನಸ್ಸೆ, ನಿನಗೇನಾದರೂ ಆಸೆಯಿದೆಯೇ? ಇವುಗಳಲ್ಲಿ ಯಾವುದನ್ನಾದರೂ ಅನುಭೋಗಿಸಬೇಕು ಅಂತ ಇಚ್ಛೆ ಇದೆಯೆ?’ ಅಂತ. ಮನಸ್ಸು ಹೇಳಿತು, ‘ಬೇಡ, ಇದೊಂದೂ ಬೇಡ. ಭಗವಂತನ ಪಾದಪದ್ಮವೊಂದು ಹೊರತು ಬೇರೆ ಏನೂ ಬೇಡ’ ಅಂತ. ಯಾವ ರೀತಿಯಾಗಿ ಗಾಜಿನ ಮನೆಯೊಳಗೆ ಇರವುದನ್ನು ಅದರ ಹೊರಗೆ ನಿಂತೇ ನೋಡ ಬಹುದೊ, ಹಾಗೇನೆ ಹೆಂಗಸಿನ ಒಳಗೆ ಹೊರಗೆ ಇರುವುದೆಲ್ಲವನ್ನೂ ನೋಡಲಾ ರಂಭಿಸಿದೆ. ಅವರ ದೇಹದೊಳಗಿರುವ ಕರುಳು, ಜಠರ, ರಕ್ತ, ಮಲ, ಮೂತ್ರ, ಕ್ರಿಮಿ, ಕಫ-ಇವೇ ಮೊದಲಾದುವುಗಳನ್ನೆಲ್ಲಾ ನೋಡಿದೆ.”
ಗಿರೀಶಚಂದ್ರಘೋಷ ಆಗಾಗ “ತಾನು ಪರಮಹಂಸರ ನಾಮಬಲದಿಂದ ರೋಗ ಗಳನ್ನು ಗುಣಮಾಡಬಲ್ಲೆ” ಅಂತ ಹೇಳುತ್ತಿದ್ದ.
ಶ್ರೀರಾಮಕೃಷ್ಣರು ಗಿರೀಶ ಮೊದಲಾದವರಿಗೆ: “ಯಾರದು ಕ್ಷುದ್ರಬುದ್ಧಿಯೊ ಅವರು ರೋಗವನ್ನು ಗುಣಪಡಿಸುವ, ಮೊಕದ್ದಮೆಯಲ್ಲಿ ಜಯಶೀಲನಾಗುವ, ನೀರಿನ ಮೇಲೆ ನಡೆಯುವ ಇವೇ ಮೊದಲಾದ ಸಿದ್ಧಿಗಳನ್ನು ಪಡೆಯಲು ಆಶಿಸುತ್ತಾರೆ. ಆದರೆ ಯಾರು ಶುದ್ಧ ಭಕ್ತರೊ ಅವರು ಭಗವಂತನ ಪಾದಪದ್ಮಗಳನ್ನು ಹೊರತು ಬೇರೆ ಏನನ್ನೂ ಆಶಿಸರು. ಒಂದು ದಿನ ಹೃದೆ ನನಗೆ ಹೇಳಿದ: ‘ಮಾವ, ಭಗವತಿಯ ಕೆಲವು ಶಕ್ತಿಗಳಿಗಾಗಿ, ಕೆಲವು ಸಿದ್ಧಿಗಳಿಗಾಗಿ ಪ್ರಾರ್ಥನೆಮಾಡಿ.’ ನನ್ನದು ಮಗುವಿನ ಸ್ವಭಾವ. ಕಾಳೀದೇವಾಲಯದಲ್ಲಿ ಜಪ ಮಾಡುತ್ತ ಕುಳಿತಿದ್ದಾಗ ತಾಯಿಗೆ ಹೇಳಿದೆ, ‘ಹೇ ತಾಯೆ, ಹೃದೆ ನಾನು ನಿನ್ನನ್ನು ಕೆಲವು ಶಕ್ತಿಗಳಿಗಾಗಿ ಕೆಲವು ಸಿದ್ಧಿಗಳಿಗಾಗಿ ಪ್ರಾರ್ಥನೆಮಾಡಿಕೊಳ್ಳ ಬೇಕು ಅಂತ ಹೇಳಿದ್ದಾನೆ’ ಭಗವತಿ ಒಡನೆಯೆ ನನಗೆ ಒಂದು ದೃಶ್ಯವನ್ನು ತೋರಿಸಿ ಬಿಟ್ಟಳು. ಹತ್ತಿರ ನಲವತ್ತು ವರ್ಷ ವಯಸ್ಸಿನ ಒಬ್ಬ ವೇಶ್ಯೆ ನನ್ನ ಕಡೆಗೆ ಬೆನ್ನುಹಾಕಿ ನನ್ನ ಮುಂದೆಯೇ ಕುಕ್ಕರಗಾಲಿನಲ್ಲಿ ಕುಳಿತುಕೊಂಡಳು. ಆಕೆಗೆ ಬಹಳ ಅಗಲವಾದ ಕುಂಡೆ ಗಳಿದ್ದುವು. ಕರಿ ಅಂಚಿನ ಸೀರೆ ಉಟ್ಟುಕೊಂಡಿದ್ದಳು. ‘ಬಡ, ಬಡ’ ಅಂತ ಮಲವಿಸರ್ಜನೆ ಮಾಡಲಾರಂಭಿಸಿದಳು. ಸಿದ್ಧಿ ಎಂಬುದು ಈ ಮುಪ್ಪಿನ ವೇಶ್ಯೆಯ ಮಲಕ್ಕೆ ಸರಿಸಮಾನ ಅಂತ ಭಗವತಿ ನನಗೆ ತೋರಿಸಿಕೊಟ್ಟಳು. ತರುವಾಯ ನಾನು ಹೃದೆಯನ್ನು ಸಂಧಿಸಿ ಆತನನ್ನು ಗದರಿಸಿ ಹೇಳಿದೆ: ‘ನೀನು ನನಗೇಕೆ ಈ ವಿಧವಾದ ಸಲಹೆಯನ್ನಿತ್ತೆ? ನಿನ್ನ ದೆಸೆಯಿಂದ ನನ್ನ ಮುಖಕ್ಕೆ ಈ ವಿಧವಾದ ಮಂಗಳಾರತಿ ದೊರೆಯಿತು’.
“ಯಾರಿಗೆ ಒಂದು ಕಿಂಚಿತ್ ಸಿದ್ಧಿ ದೊರೆತಿರುವುದೊ ಅವರಿಗೆ ಹೆಸರು, ಕೀರ್ತಿ ಇವೆಲ್ಲ ಬಂದುಬಿಡುತ್ತವೆ. ಅಂಥವರಲ್ಲಿ ಅನೇಕರಿಗೆ ಗುರುಗಿರಿಯನ್ನು ಮಾಡಲು, ಒಂದು ಹತ್ತಾರು ಜನಗಳಿಂದ ಹೊಗಳಿಸಿಕೊಳ್ಳಲು, ಶಿಷ್ಯರನ್ನು ಮತ್ತು ಭಕ್ತರನ್ನು ಸಂಪಾದಿಸಿ ಕೊಳ್ಳಲು ಇಚ್ಛೆಯಾಗುತ್ತದೆ. ಜನರು ಇಂಥ ಗುರುವಿನ ಸಂಬಂಧವಾಗಿ ಹೇಳುತ್ತಾರೆ, ‘ಆಹಾ! ಇವರು ಎಂಥ ಆನಂದದ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ! ಇವರನ್ನು ನೋಡಲು ಎಷ್ಟೊಂದು ಜನ ಬಂದು ಹೋಗುತ್ತಿದ್ದಾರೆ: ಇವರಿಗೆ ಎಷ್ಟೊಂದು ಜನ ಭಕ್ತರು ಆಗಿ ಬಿಟ್ಟಿದ್ದಾರೆ! ಇವರ ಆಶ್ರಮ ಎಷ್ಟೊಂದು ಕುರ್ಚಿ ಮೇಜುಗಳಿಂದ, ಪಾತ್ರೆ-ಪದಾರ್ಥಗಳಿಂದ ತುಂಬಿಹೋಗಿದೆ! ಜನ ಇವರಿಗೆ ಎಷ್ಟೊಂದು ಕಾಣಿಕೆ ಕೊಡುತ್ತಾರೆ! ಇವರೇನಾದರೂ ಇಚ್ಛೆಪಟ್ಟುಬಿಟ್ಟರೆ-ಇವರಿಗೆ ಅಂಥಾ ಶಕ್ತಿಯೂ ಇದೆ-ಬೇಕಾದಷ್ಟು ಜನಕ್ಕೆ ಅನ್ನ ಹಾಕಬಲ್ಲರು’ ಅಂತ.
“ಗುರುಗಿರಿ ವೇಶ್ಯಾವೃತ್ತಿಗೆ ಸರಿಸಮಾನವಾದದ್ದು. ಇದು ಒಂದೆರಡು ಕಾಸು, ಹೆಸರು, ಕೀರ್ತಿ, ದೈಹಿಕ ಸುಖ ಇವುಗಳಿಗಾಗಿ ತನ್ನನ್ನು ತಾನೇ ಮಾರಿಕೊಂಡ ಹಾಗೆ. ಯಾವ ಶರೀರ, ಮನಸ್ಸು, ಆತ್ಮ ಇವುಗಳಿಂದ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಬಹುದೊ, ಅದನ್ನು ತೆಗೆದುಕೊಂಡು ಹೋಗಿ ಈ ಸಾಮಾನ್ಯ ಐಹಿಕ ವಸ್ತುಗಳಿಗಾಗಿ ಮಾರುವುದು ಒಳ್ಳೆಯದಲ್ಲ. ಒಬ್ಬ ಹೆಂಗಸಿನ ಸಂಬಂಧವಾಗಿ ಒಬ್ಬ ಹೇಳಿದ, ‘ಆಹ! ಈಗ ಆಕೆಯ ಜೀವನ ಬಹಳ ಆನಂದದಿಂದ ತುಂಬಿ ತುಳುಕಾಡುತ್ತಿದೆ. ಈಗ ಆಕೆಗೆ ದೆಸೆ ಖುಲಾಯಿಸಿ ಬಿಟ್ಟಿದೆ. ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದಾಳೆ. ಅದನ್ನು ಮಂಚ, ಸುಪತ್ತಿಗೆ, ದಿಂಬು ಇವೇ ಮೊದಲಾದುವುಗಳಿಂದ ಬಹಳ ಚೆನ್ನಾಗಿ ಸಜ್ಜುಗೊಳಿಸಿದ್ದಾಳೆ. ಆಕೆ ಎಷ್ಟೊಂದು ಜನರನ್ನು ವಶ ಮಾಡಿಕೊಂಡು ಬಿಟ್ಟಿದ್ದಾಳೆ. ಏನು ಕತೆ! ಅವರು ಬಂದು ಹೋಗುತ್ತಲೇ ಇದ್ದಾರೆ!’ ಅಂತ. ಅಂದರೆ ನೇರವಾಗಿ ಹೇಳುವುದಾದರೆ ಆಕೆ ವೇಶ್ಯಾವೃತ್ತಿ ಯನ್ನು ಕೈಗೊಂಡಿದ್ದಾಳೆ; ಆದ್ದರಿಂದ ಆಕೆಯ ಆನಂದಕ್ಕೆ ಪಾರವೇ ಇಲ್ಲ ಅಂತ. ಹಿಂದೆ ಆಕೆ ಒಬ್ಬ ದೊಡ್ಡ ಮನುಷ್ಯನ ಮನೆಯಲ್ಲಿ ದಾಸಿ ಕೆಲಸ ಮಾಡಿಕೊಂಡಿದ್ದಳು; ಈಗ ವೇಶ್ಯೆ ಆಗಿದ್ದಾಳೆ! ಸಾಮಾನ್ಯ ಸುಖಗಳಿಗಾಗಿ ತನ್ನನ್ನು ತಾನೇ ನಾಶಪಡಿಸಿಕೊಂಡಿದ್ದಾಳೆ.
“ನಾನು ನನ್ನ ಸಾಧನಾವಸ್ಥೆಯಲ್ಲಿ ಧ್ಯಾನಮಾಡುತ್ತ ಧ್ಯಾನಮಾಡುತ್ತ ಇನ್ನೂ ಏನೇನೊ ದರ್ಶನಗಳನ್ನು ಕಂಡೆ, ನಾನು ಒಮ್ಮೆ ಬಿಲ್ವವೃಕ್ಷದ ಕೆಳಗೆ ಧ್ಯಾನಮಾಡುತ್ತಿದ್ದಾಗ ಪಾಪಪುರುಷ ನನ್ನ ಎದುರಿಗೆ ಬಂದು ಹಲವಾರು ವಿಧದಿಂದ ನನ್ನನ್ನು ಲೋಭಪಡಿಸಲು ಪ್ರಯತ್ನಿಸಿದ. ಆತ ಆಂಗ್ಲ ಸಿಪಾಯಿಯ ವೇಷ ಧರಿಸಿ ಬಂದಿದ್ದ. ಆತ ನನಗೆ ಹಣ, ಕೀರ್ತಿ, ಹೆಂಗಸಿನ ಸುಖ, ಅನೇಕ ವಿಧವಾದ ಶಕ್ತಿಗಳು ಮೊದಲಾದವುಗಳನ್ನು ದೊರಕಿಸಿಕೊಡಲಿಚ್ಛಿಸಿದ. ಆಗ ಭಗವತಿಯನ್ನು ಪ್ರಾರ್ಥನೆ ಮಾಡಲಾರಂಭಿಸಿದೆ. ಇವೆಲ್ಲ ಬಹಳ ಗೋಪ್ಯವಾದ ವಿಷಯಗಳು. ಭಗವತಿ ಕಾಣಿಸಿಕೊಂಡಳು. ‘ತಾಯೆ, ಆತನನ್ನು ಕತ್ತರಿಸಿಹಾಕು!’ ಅಂತ ನಾನು ಆಕೆಗೆ ಹೇಳಿದೆ. ಭಗವತಿಯ ಆ ರೂಪು- ಆ ಭುವನಮೋಹನ ರೂಪು ನನ್ನ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಆಕೆ ಜಗನ್ಮಾತೆಯ ರೂಪವನ್ನು ಧರಿಸಿ ನನ್ನ ಎದುರಿಗೆ ಬಂದಿದ್ದಳು. ಆಕೆಯ ದೃಷ್ಟಿ ಈ ಜಗತ್ತನ್ನೇ ನಡುಗಿಸುತ್ತಿರುವಂತೆ ತೋರುತ್ತಿತ್ತು.”
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು ಮತ್ತೆ ಹೇಳಿದರು: “ಇನ್ನೂ ಎಷ್ಟೋ ಬೇರೆ ಬೇರೆಯ ದರ್ಶನಗಳನ್ನು ಕಂಡೆ! ಆದರೆ ಹೇಳಲು ಆಗುತ್ತಿಲ್ಲ – ಯಾರೋ ನನ್ನ ಬಾಯನ್ನು ಮುಚ್ಚಿ ಹಿಡಿದಂತೆ ಅನುಭವವಾಗುತ್ತದೆ. ನುಗ್ಗೆ ಎಲೆ ತುಳಸಿ ಪತ್ರೆ ಪವಿತ್ರತೆಯಲ್ಲಿ ಸರಿಸಮನಾಗಿ ತೋರುತ್ತಿದ್ದುವು. ಭೇದಬುದ್ಧಿ ಸಂಪೂರ್ಣವಾಗಿ ನಾಶವಾಗಿ ಬಿಟ್ಟಿತು. ಒಮ್ಮೆ ನಾನು ಆಲದ ಮರದ ಕೆಳಗೆ ಕುಳಿತು ಧ್ಯಾನಮಾಡುತ್ತಿದ್ದಾಗ, ಭಗವತಿ ನನಗೆ ಉದ್ದವಾದ ಗಡ್ಡವಿದ್ದ ಒಬ್ಬ ಮುಸಲ್ಮಾನನನ್ನು ತೋರಿಸಿದಳು. ಆತ ಒಂದು ಮಣ್ಣಿನ ತಟ್ಟೆಯಲ್ಲಿ ಅನ್ನ ತುಂಬಿಕೊಂಡು ನನ್ನ ಹತ್ತಿರಕ್ಕೆ ಬಂದ. ಅದನ್ನು ಕೆಲವು ಮುಸಲ್ಮಾನರಿಗೆ ಹಂಚಿ ನನಗೂ ಸ್ವಲ್ಪ ಕೊಟ್ಟು ಹೋದ. ಭಗವತಿ ನನಗೆ ತೋರಿಸಿದಳು ನಿಜವಾಗಿ ಇರುವುದು ಒಂದಲ್ಲದೆ ಎರಡಲ್ಲ ಅಂತ- ಕೇವಲ ಸಚ್ಚಿದಾನಂದನೇ ಈ ಎಲ್ಲಾ ರೂಪುಗಳನ್ನೂ ಧರಿಸಿದ್ದಾನೆ; ಆತನೇ ಈ ಜೀವಜಗತ್ತಾಗಿದ್ದಾನೆ; ಆತನೇ ಅನ್ನ ಆಗಿದ್ದಾನೆ ಅಂತ.
(ಗಿರೀಶ, ಮಾಸ್ಟರ್ ಮೊದಲಾದವರಿಗೆ): “ನನ್ನದು ಬಾಲಕನ ಸ್ವಭಾವ. ಹೃದೆ ಹೇಳಿದ, ‘ಮಾವ, ಭಗವತಿಯನ್ನು ಸ್ವಲ್ಪ ಶಕ್ತಿಗಾಗಿ ಪ್ರಾರ್ಥಿಸಿಕೊಳ್ಳಿ’ ಅಂತ. ಒಡನೆಯೆ ಅವನ್ನು ಬೇಡಲು ತಾಯ ಹತ್ತಿರ ಹೋದೆ. ಭಗವತಿ ನನ್ನನ್ನು ಅಂಥಾ ಅವಸ್ಥೆಯಲ್ಲಿ ಇಟ್ಟಿದ್ದಾಳೆ. ಯಾರು ನನ್ನ ಹತ್ತಿರ ಇರುತ್ತಾನೊ ಆತ ಹೇಳಿದಂತೆ ನಡೆದುಕೊಂಡು ಬಿಡಬೇಕಾಗುತ್ತದೆ. ಯಾವ ರೀತಿಯಾಗಿ ಚಿಕ್ಕಮಕ್ಕಳ ಹತ್ತಿರ ಯಾರೂ ಇಲ್ಲದೆ ಇದ್ದರೆ ಅವಕ್ಕೆ ದಿಕ್ಕೇ ತೋರದಂತಾಗುತ್ತದೆಯೊ, ನನಗೂ ಹಾಗೆಯೇ ಆಗುತ್ತಿತ್ತು. ಹೃದೆ ನನ್ನ ಬಳಿಯಲ್ಲಿ ಇಲ್ಲದೆ ಇದ್ದರೆ ಪ್ರಾಣ ಇನ್ನೇನು ಹೊರಟುಹೋಗುವುದೊ ಏನೊ ಎಂಬಂತಾಗುತ್ತಿತ್ತು. ಅಗೋ ನೋಡು, ಮತ್ತೆ ನನಗೆ ಆ ಅವಸ್ಥೆ ಬಂದು ಬಿಡುತ್ತಾ ಇದೆ -ನಿಮ್ಮೊಡನೆ ಮಾತಾಡುತ್ತ ಮಾತಾಡುತ್ತ ಇದ್ದ ಹಾಗೆಯೇ ನನಗೆ ಭಗವಂತನ ಸಂಬಂಧವಾಗಿ ಉದ್ದೀಪನೆ ಆಗಿಬಿಡುತ್ತಾ ಇದೆ.”
ಪರಮಹಂಸರು ಹೀಗೆ ಹೇಳುತ್ತ ಹೇಳುತ್ತ ಇದ್ದ ಹಾಗೆಯೆ ಭಾವಾವಿಷ್ಟರಾಗುತ್ತಿದ್ದಾರೆ. ದೇಶಕಾಲದ ಭಾವನೆ ಅವರನ್ನು ಬಿಟ್ಟು ಹೋಗುತ್ತಾ ಇದೆ. ಬಹಳ ಪ್ರಯಾಸದಿಂದ ತಮ್ಮ ಭಾವವನ್ನು ತಮ್ಮ ಹತೋಟಿಯಲ್ಲಿಡಲು ಪ್ರಯತ್ನ ಮಾಡುತ್ತಾ ಇದ್ದಾರೆ. ಭಾವಾವಸ್ಥೆ ಯಲ್ಲಿಯೇ, “ಇನ್ನೂ ನೀವೆಲ್ಲರೂ ನನ್ನ ಕಣ್ಣಿಗೆ ಕಾಣಿಸಿಕೊಳ್ಳುತ್ತಾ ಇದ್ದೀರಿ; -ಆದರೆ ನೀವು ಚಿರಕಾಲದಿಂದಲೂ ಇಲ್ಲೇ ಕುಳಿತಿದ್ದಂತೆ ಬೋಧೆಯಾಗುತ್ತಿದೆ; -ನೀವು ಯಾವಾಗ ಬಂದಿರಿ, ಎಲ್ಲಿಗೆ ಬಂದಿದ್ದೀರಿ ಇವೇ ಮೊದಲಾದ ಭಾವನೆಗಳು ನನ್ನ ಮನಸ್ಸನ್ನು ಬಿಟ್ಟು ತೊಲಗಿಹೋಗಿಬಿಟ್ಟಿವೆ” ಅಂತ ಹೇಳುತ್ತಿದ್ದಾರೆ.
ಪರಮಹಂಸರು ಸ್ವಲ್ಪ ಹೊತ್ತು ಯಾವ ಚಲನೆಯೂ ಇಲ್ಲದೆ ಕುಳಿತಿದ್ದರು. ಈಗ ಕಿಂಚಿತ್ ಪ್ರಕೃತಿಸ್ಥರಾಗಿ, “ನನಗೆ ಕುಡಿಯೋ ನೀರು ಬೇಕು” ಅಂತ ಹೇಳುತ್ತಿದ್ದಾರೆ. ಸಮಾಧಿ ಇಳಿಮುಖವಾದ ನಂತರ ತಮ್ಮ ಮನಸ್ಸನ್ನು ಬಾಹ್ಯ ಜಗತ್ತಿನ ಅಂತಸ್ತಿಗೆ ತೆಗೆದುಕೊಂಡು ಬರಲು ಪ್ರಾಯಶಃ ಹೀಗೆ ಹೇಳುತ್ತಿದ್ದರು. ಗಿರೀಶ ಹೊಸದಾಗಿ ಬಂದಿದ್ದಾನೆ. ಇದೆಲ್ಲ ಆತನಿಗೆ ಗೊತ್ತಿಲ್ಲ. ಎದ್ದು ನೀರು ತರಲು ಹೊರಟ. ಪರಮಹಂಸರು ತರಬೇಡವೆಂದು ಆತನಿಗೆ ಸಂಜ್ಞೆ ಮಾಡಿ “ಬೇಡಪ್ಪ, ಈಗ ಕುಡಿಯುವುದಕ್ಕೆ ಆಗುವುದಿಲ್ಲ” ಅಂತ ಹೇಳಿದರು.
ಶ್ರೀರಾಮಕೃಷ್ಣರ ಜೀವನಸ್ಮೃತಿ ೨೮೫ ೨೮೪ ಶ್ರೀರಾಮಕೃಷ್ಣ ವಚನವೇದ ಪರಮಹಂಸರು ಮತ್ತು ಭಕ್ತರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದರು. ಈಗ ಪರಮಹಂಸರು ಮಾತನಾಡಲಾರಂಭಿಸಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಏನು, ಈ ಗೋಪ್ಯ ವಿಷಯಗಳನ್ನೆಲ್ಲ ನಿಮಗೆ ತಿಳಿಸಿಬಿಟ್ಟಿದ್ದರಿಂದ ನಾನು ತಪ್ಪು ಮಾಡಿದ ಹಾಗಾಯಿತೇನು?”
ಮಾಸ್ಟರ್ ಇದಕ್ಕೆ ಏನು ಉತ್ತರವನ್ನು ತಾನೆ ಕೊಡಬಲ್ಲ, ಸುಮ್ಮನೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು: “ಇಲ್ಲ, ತಪ್ಪು ಮಾಡಿದಂತೆ ಏಕೆ ಆದೀತು? ಜನರ ಹೃದಯದಲ್ಲಿ ಭಗವಂತನ ಸಂಬಂಧವಾಗಿ ನಂಬಿಕೆ ಹುಟ್ಟಲಿ ಅಂತ ನಾನು ಇವನ್ನೆಲ್ಲ ಹೇಳುತ್ತಿರುವುದು.”
ಸ್ವಲ್ಪ ಹೊತ್ತಾದ ಮೇಲೆ ಪರಮಹಂಸರು ಬಹಳ ನಮ್ರತೆಯಿಂದ ಮಾಸ್ಟರಿಗೆ ಹೇಳುತ್ತಿದ್ದಾರೆ: “ಆತನನ್ನು ದಯವಿಟ್ಟು ಇಲ್ಲಿಗೆ ಕರೆದುಕೊಂಡು ಬರುತ್ತೀಯಾ?” ಆತನನ್ನು ಎಂದರೆ ಪೂರ್ಣನನ್ನು.
ಮಾಸ್ಟರ್ ಸ್ವಲ್ಪ ಹೊತ್ತು ಯೋಚಿಸಿ: “ಆಗಲಿ, ಈಗಲೇ ಹೇಳಿ ಕಳುಹಿಸುತ್ತೇನೆ.”
ಶ್ರೀರಾಮಕೃಷ್ಣರು ಉತ್ಸುಕತೆಯಿಂದ: “ಪೂರ್ಣನಲ್ಲಿ ನಾನು ನನ್ನ ಗುರಿಯನ್ನು ಮುಟ್ಟಿ ಬಿಟ್ಟಿದ್ದೇನೆ.”
ತಮ್ಮ ಅಂತರಂಗ ಭಕ್ತರಲ್ಲಿ ಪೂರ್ಣನೇ ಕೊನೆಯವನು, ಇನ್ನು ಬೇರೆ ಯಾರೂ ಇಲ್ಲ ಅಂತ ಸೂಚಿಸಿದರೇನು?
ಬಳಿಕ ಪರಮಹಂಸರು ಗಿರೀಶ, ಮಾಸ್ಟರ್ ಮೊದಲಾದವರನ್ನು ಸಂಬೋಧಿಸಿ ತಮ್ಮ ಮಹಾಭಾವದ ಅವಸ್ಥೆಯ ಸಂಬಂಧವಾಗಿ ವರ್ಣಿಸಲಾರಂಭಿಸಿದರು.
ಶ್ರೀರಾಮಕೃಷ್ಣರು ಭಕ್ತರಿಗೆ: “ಆ ಅನುಭವವನ್ನು ಪಡೆದ ಮೇಲೆ ದೊರೆತ ಆನಂದ ನಾನು ಹಿಂದೆ ಪಟ್ಟಿದ್ದ ಕಷ್ಟಕ್ಕೆ ಸರಿಸಮನಾಗಿತ್ತು. ಮಹಾಭಾವ ಎಂಬುದು ಭಗವಂತನ ಭಾವ; ಅದು ದೇಹ ಮತ್ತು ಮನಸ್ಸನ್ನು ಬುಡಮಟ್ಟ ಅಲುಗಾಡಿಸಿಬಿಡುತ್ತದೆ. ಒಂದು ಭಾರಿ ಆನೆ ಒಂದು ಪುಟ್ಟ ಗುಡಿಸಲನ್ನು ಹೊಕ್ಕರೆ ಹೇಗೊ ಹಾಗೆ ಇದು. ಆ ಗುಡಿಸಲಿನ ಅಸ್ತಿಭಾರವೆಲ್ಲ ಸುಮ್ಮನೆ ಅದುರಲಾರಂಭಿಸುತ್ತದೆ. ಬಹುಶಃ ಆ ಗುಡಿಸಲು ಕೆಳಕ್ಕೆ ಬಿದ್ದು ಪುಡಿಪುಡಿಯಾದರೂ ಆಗಿಬಿಡಬಹುದು.
“ಭಗವಂತನ ವಿರಹದಿಂದುಂಟಾಗುವ ತಾಪ ಸಾಮಾನ್ಯವಾದುದೇನಲ್ಲ. ಯಾವ ಮರದ ಕೆಳಗೆ ರೂಪ ಮತ್ತು ಸನಾತನ ಕುಳಿತುಕೊಳ್ಳುತ್ತಿದ್ದರೊ, ಆ ಮರದ ಎಲೆ ಅವರ ವಿರಹತಾಪದಿಂದ ಸೀದು ಕಪ್ಪಾಗಿ ಹೋಗುತ್ತಿದ್ದಿತಂತೆ. ನನ್ನ ಆ ಅವಸ್ಥೆಯಲ್ಲಿ ಮೂರು ದಿನಗಳವರೆಗೆ ಪ್ರಜ್ಞೆಯೇ ಇಲ್ಲದವನ ಹಾಗೆ ಬಿದ್ದಿದ್ದೆ. ಕೈಕಾಲು ಅಲ್ಲಾಡಿಸಲೂ ಸಹ ಆಗುತ್ತಿರಲಿಲ್ಲ. ಬಿದ್ದ ಜಾಗದಲ್ಲಿಯೇ ಸುಮ್ಮನೆ ಬಿದ್ದಿರುತ್ತಿದ್ದೆ. ಪ್ರಜ್ಞೆ ಬಂದ ನಂತರ ಭೈರವಿ ಬ್ರಾಹ್ಮಣಿ ನನಗೆ ಸ್ನಾನ ಮಾಡಿಸುವುದಕ್ಕೆ ಕೈಹಿಡಿದು ಕರೆದುಕೊಂಡು ಹೋದಳು. ಆದರೆ ತಾಪದ ದೆಸೆಯಿಂದ ನೇರವಾಗಿ ಆಕೆ ನನ್ನ ಕೈಯನ್ನು ಹಿಡಿದುಕೊಳ್ಳಲಾಗಲಿಲ್ಲ. ಅದಕ್ಕಾಗಿ ಆಕೆ ನನ್ನ ಶರೀರವನ್ನು ಮಂದವಾದ ಬಟ್ಟೆಯಿಂದ ಹೊದ್ದಿಸಿ, ಅದರ ಮೇಲೆ ತನ್ನ ಕೈಯನ್ನಿಟ್ಟು ನನ್ನನ್ನು ಹಿಡಿದುಕೊಂಡು ಸ್ನಾನಘಟ್ಟಕ್ಕೆ ಕರೆದುಕೊಂಡು ಹೋದಳು. ನನ್ನ ಶರೀರಕ್ಕೆ ಅಂಟಿಕೊಂಡಿದ್ದ ಮಣ್ಣು ಸುಟ್ಟು ಹೋಗಿತ್ತು.
“ಆ ಅವಸ್ಥೆಯಲ್ಲಿ ನನ್ನ ಬೆನ್ನುಹುರಿಯ ಮೂಲಕ ನೇಗಿಲು ಹರಿದುಹೋಗು ತ್ತಿರುವಂತೆ ಅನುಭವವಾಗುತ್ತಿತ್ತು. ಆಗ ಕೂಗಿಕೊಳ್ಳುತ್ತಿದೆ, ‘ನನ್ನ ಪ್ರಾಣ ಹೋಗುತ್ತಿದೆ! ನನ್ನ ಪ್ರಾಣ ಹೋಗುತ್ತಿದೆ!’ ಅಂತ. ಆದರೆ, ಬಳಿಕ ಬಹಳ ಆನಂದದಿಂದ ಇದ್ದೆ.”
ಭಕ್ತರೆಲ್ಲರೂ ಪರಮಹಂಸರು ಅನುಭವಿಸಿದ ಮಹಾಭಾವಾವಸ್ಥೆಯ ವರ್ಣನೆಯನ್ನು ಉಸಿರೇ ನಿಂತುಹೋದವರಂತೆ ಕೇಳಿದರು.
ಶ್ರೀರಾಮಕೃಷ್ಣರು (ಗಿರೀಶನಿಗೆ): “ನೀವೆಲ್ಲ ಅಷ್ಟು ದೂರ ಹೋಗಬೇಕಾದ ಅವಶ್ಯಕತೆಯೇನಿಲ್ಲ. ನನ್ನ ಅನುಭವಗಳು ಒಂದು ಆದರ್ಶಕ್ಕಾಗಿ ಮಾತ್ರವೆ. ನಿಮ್ಮ ಮನಸ್ಸು ಹತ್ತಾರು ವಸ್ತುಗಳ ಕಡೆ ಹರಿದು ಹೋಗುತ್ತಿದೆ, ನನ್ನದು ಒಂದರ ಕಡೆಗೇನೆ. ನನಗೆ ಭಗವಂತನೊಬ್ಬನ ವಿನಾ ಬೇರೆ ಏನೂ ಬೇಕಾಗಿಲ್ಲ. ಇದೆಲ್ಲಾ ಆತನ ಕೃಪೆ ಮಾತ್ರ. (ನಗುತ್ತ) ಕಾಡಿನಲ್ಲಿ ಕೊಂಬೆಯನ್ನೇ ಒಡೆಯದೆ ನೇರವಾಗಿ ಬೆಳೆದುಕೊಂಡು ಹೋಗಿರುವ ಮರಗಳೂ ಇವೆ, ಹತ್ತಾರು ಕೊಂಬೆಗಳಿಂದ ಕೂಡಿದ ಮರಗಳೂ ಇವೆ. (ಎಲ್ಲರೂ ನಗುತ್ತಿದ್ದಾರೆ.)
“ಹೌದು, ನನ್ನ ಅನುಭವಗಳು ಒಂದು ಆದರ್ಶಕ್ಕಾಗಿ ಮಾತ್ರವೇ. ಆದರೆ ನೀವು ಮಾತ್ರ ಸಂಸಾರದಲ್ಲಿ ಅನಾಸಕ್ತರಾಗಿ ಇರಬೇಕು. ಸಂಸಾರದ ಬಗ್ಗಡ ಶರೀರಕ್ಕೇನೊ ತಾಗಿಯೇ ತಾಗುತ್ತದೆ. ಆದರೆ ಬದಿಯಲ್ಲಿ ವಾಸಿಸುವ ಮೀನಿನೋಪಾದಿಯಲ್ಲಿ ಅದನ್ನು ತೊಳೆದುಕೊಂಡುಬಿಡಬೇಕು. ಇಚ್ಛೆಯಾದರೆ ಈ ಸಂಸಾರವೆಂಬ ಕಳಂಕಸಾಗರದಲ್ಲಿ ಈಜಾಡಿ. ಆದರೆ ಆ ಕಳಂಕ ನಿಮ್ಮ ಶರೀರವನ್ನು ಕರೆಮಾಡದ ಹಾಗೆ ಮಾತ್ರ ನೋಡಿಕೊಳ್ಳಿ.’
ಗಿರೀಶ (ನಗುತ್ತ): “ನೀವು ವಿವಾಹವಾಗಬೇಕಾಗಿ ಬಂದಿತಲ್ಲ.” (ನಗು.)
ಶ್ರೀರಾಮಕೃಷ್ಣರು (ನಗುತ್ತ): “ಸಂಸ್ಕಾರ ಪಡೆಯುವುದಕ್ಕಾಗಿ ವಿವಾಹವಾಗಬೇಕಾಗು ತ್ತದೆ, ಆದರೆ ನಾನು ಸಂಸಾರಿಯ ಜೀವನವನ್ನು ನಡೆಸುವ ಬಗೆ ಹೇಗೆ? ಭಗವದ್ಭಾವನೆ ಅಂಥದು. ಎಷ್ಟೊಂದು ಸಲ ಯಜ್ಞೋಪವೀತವನ್ನು ಹಾಕಿಕೊಂಡರೂ ಅದು ಬಿದ್ದು ಬಿದ್ದು ಹೋಗುತ್ತಲೇ ಇರುತ್ತಿತ್ತು. ಸಂಸ್ಕಾರಾರ್ಥವಾಗಿ ಶುಕದೇವನಿಗೂ ಕೂಡ ವಿವಾಹವಾಗಿತ್ತು. ಆತನಿಗೆ ಒಬ್ಬ ಮಗಳು ಕೂಡ ಇದ್ದಳು ಅಂತ ಅವರು ಹೇಳುವುದುಂಟು. (ಎಲ್ಲರೂ ನಗುತ್ತಾರೆ.)
“ಕಾಮಕಾಂಚನವೇ ಸಂಸಾರ. ಅವು ಭಗವಂತನನ್ನು ಮರೆಯುವಂತೆ ಪ್ರೇರೇಪಿ ಸುತ್ತವೆ.”
ಗಿರೀಶ: “ಎಲ್ಲಿ, ಕಾಮಕಾಂಚನ ನಮ್ಮನ್ನು ಬಿಡಲೊಲ್ಲದಲ್ಲ?”
ಶ್ರೀರಾಮಕೃಷ್ಣರು. “ವ್ಯಾಕುಲಚಿತ್ತದಿಂದ ಆತನನ್ನು ಪ್ರಾರ್ಥಿಸು. ವಿವೇಕಕ್ಕಾಗಿ ಆತನಿಗೆ ಪ್ರಾರ್ಥನೆ ಮಾಡಿಕೊ. ‘ಭಗವಂತನೊಬ್ಬನೇ ಸತ್ಯ, ಉಳಿದುದೆಲ್ಲ ಅನಿತ್ಯ’ – ವಿವೇಕ ಎಂಬುದು ಇದೇನೆ. ನೀರು ಸೋಸೋ ಯಂತ್ರದಿಂದ ನೀರನ್ನು ಶೋಧಿಸಿ ತೆಗೆದುಕೊಳ್ಳಬೇಕು. ಕೊಳೆಯನ್ನು ಹಿಂದೆ ಬಿಟ್ಟು ಶುದ್ಧವಾದ ನೀರು ಈ ಯಂತ್ರದಿಂದ ಹೊರಕ್ಕೆ ಬರುತ್ತದೆ. ವಿವೇಕವೆಂಬ ನೀರು ಸೋಸೋ ಯಂತ್ರವನ್ನು ಈ ಸಂಸಾರ ಸಾಗರದಲ್ಲಿ ಉಪಯೋಗಿಸು. ಮೊದಲು ಆತನ ಸಾಕ್ಷಾತ್ಕಾರವನ್ನು ಪಡೆದು, ಬಳಿಕ ಬೇಕಾದರೆ ಸಂಸಾರದಲ್ಲಿ ಇರು. ಆಗ ಅದು ವಿದ್ಯೆಯ ಸಂಸಾರವಾಗುತ್ತದೆ.
“ಹೆಂಗಸರು ಎಂದರೆ ಅವಿದ್ಯಾರೂಪಿಣಿ ಹೆಂಗಸರ, ಮೋಹಿನೀಶಕ್ತಿಯನ್ನು ನೋಡು! ಅವರು ಪುರುಷರ ಮೇಲೆ ಮಂಕುಬೂದಿ ಎರಚಿ, ಅವರ ಸತ್ತ್ವವನ್ನೆಲ್ಲಾ ಹೀರಿ, ಅವರನ್ನು ಯಾವ ಕೆಲಸಕ್ಕೂ ಬಾರದವರನ್ನಾಗಿ ಮಾಡಿಬಿಡುತ್ತಾರೆ. ಗಂಡಸು ಹೆಂಗಸು ಇಬ್ಬರು ಒಟ್ಟಿಗೆ ಕುಳಿತಿರುವುದನ್ನು ನೋಡಿದೊಡನೆಯೇ, ಆಗ ನನಗೆ ನಾನೇ ಹೇಳಿಕೊಳ್ಳುತ್ತೇನೆ, ‘ಹಾ! ದೇವರೆ, ಇವರ ಗತಿ ಮುಗಿಯಿತು!’ ಅಂತ. (ಮಾಸ್ಟರ್ ಕಡೆ ನೋಡುತ್ತ) ಹಾರು ಎಂಥ ಒಳ್ಳೆಯ ಹುಡುಗ. ಆತನನ್ನು ಒಂದು ಹೆಣ್ಣು ದೆವ್ವ ಮೆಟ್ಟಿಕೊಂಡು ಬಿಟ್ಟಿದೆ. ಹಾರು ಎಲ್ಲಿ, ಹಾರು ಎಲ್ಲಿ ಅಂತ ಹುಡುಕಿ ನೋಡಿದಾಗ ಅವನು ಇನ್ನು ಬೇರೆ ಎಲ್ಲಿ ಇರುತ್ತಾನೆ! ಹೋಗಿ ನೋಡಿದರೆ ಆತ ಆ ಆಲದ ಮರದ ಕೆಳಗೆ ಸುಮ್ಮನೆ ಕುಳಿತಿದ್ದಾನೆ. ಆತನ ಮುಖದಲ್ಲಿ ಹಿಂದಿನ ತೇಜಸ್ಸಿಲ್ಲ, ಆನಂದವಿಲ್ಲ, ರೂಪಿಲ್ಲ. ಹಾ! ದೇವರೆ, ಆತನನ್ನು ಆ ಆಲದ ಮರದಲ್ಲಿ ವಾಸಿಸೋ ಹೆಣ್ಣು ದೆವ್ವ ಮೆಟ್ಟಿಕೊಂಡು ಬಿಟ್ಟಿದೆಯಲ್ಲ!
“ಹೆಂಗಸೇನಾದರೂ ತನ್ನ ಪತಿಗೆ ‘ಅಲ್ಲಿಗೆ ಹೋಗಿಬನ್ನಿ’ ಅಂತ ಹೇಳಿದರೆ, ಆತ ಎದ್ದು ಒಡನೆಯೇ ಅಲ್ಲಿಗೆ ಹೊರಡಲು ಸಿದ್ಧನಾಗುತ್ತಾನೆ. ಆಕೆ, ‘ಇಲ್ಲಿ ಕುಳಿತಿರಿ’ ಅಂತ ಹೇಳಿದರೆ, ಒಡನೆಯೆ ಅಲ್ಲಿ ಕುಳಿತಿರಲು ಪ್ರಯತ್ನಿಸುತ್ತಾನೆ.
“ಯಾರೊ ಒಬ್ಬ ಯಾವುದಾದರೂ ಒಂದು ಕೆಲಸಕ್ಕಾಗಿ ಒಬ್ಬ ಆಫೀಸರನ ಹತ್ತಿರಕ್ಕೆ ಅಲೆದು ಅಲೆದು ಸಾಕಾಗಿಹೋಗಿಬಿಟ್ಟಿದೆ. ಆದರೂ ಆತನಿಗೆ ಯಾವ ಉದ್ಯೋಗವೂ ದೊರೆಯುತ್ತಿಲ್ಲ. ಆತ ಆಫೀಸರನ್ನು ಸಂಧಿಸಿದಾಗಲೆಲ್ಲ ಆ ಆಫೀಸರು ಹೇಳುತ್ತಿದ್ದ, ‘ಈಗ ಇಲ್ಲಿ ಯಾವ ಕೆಲಸವೂ ಖಾಲಿ ಇಲ್ಲ; ಆದರೆ ಆಗಾಗ ಬಂದು ನನ್ನನ್ನು ನೋಡಿ ಹೋಗುತ್ತಿರು’ ಅಂತ. ಈ ರೀತಿಯಾಗಿಯೇ ಬಹಳ ಕಾಲ ಉರುಳಿಹೋಯಿತು. ಕೊನೆಗೆ ಅವನು ಅತ್ಯಂತ ನಿರಾಶನಾಗಿಬಿಟ್ಟ. ಒಂದು ದಿನ ಆತ ತನ್ನ ಸ್ನೇಹಿತನ ಮುಂದೆ ಕುಳಿತು ತನ್ನ ದುಃಖವನ್ನು ಹೇಳಿಕೊಂಡ. ಆಗ ಸ್ನೇಹಿತ, ‘ನೀನು ಎಂಥ ಮಂಕುದಿಣ್ಣೆ! ಆತನ ಹತ್ತಿರಕ್ಕೆ ಅಲೆದು ಅಲೆದು ಏಕೆ ಕಾಲನ್ನು ಸವೆಯಿಸಿಕೊಂಡೆ? ಹೋಗಿ ಗುಲಾಬಮ್ಮನ ಕಾಲು ಹಿಡಿ. ನಿನಗೆ ನಾಳೆ ದಿನವೇ ಅಲ್ಲಿ ಕೆಲಸ ದೊರೆಕಿಬಿಡುತ್ತದೆ’ ಅಂತ ಹೇಳಿದ. ಉಮೇದುವಾರ, ‘ಹಾಗೇನು! ನೋಡು, ಈಗಲೇ ಹೊರಟೆ’ ಅಂತ ಹೇಳಿದ. ಗುಲಾಬಮ್ಮ ಆ ಆಫೀಸರನ ಉಪಪತ್ನಿ. ಅವನು ಆಕೆಯನ್ನು ಕಂಡು ಹೇಳಿದ, ‘ತಾಯೆ, ನಾನು ಮಹಾ ವಿಪತ್ತಿಗೆ ಸಿಕ್ಕಿಕೊಂಡಿದ್ದೇನೆ. ತಾವು ಹೇಗಾದರೂ ಮಾಡಿ ನನ್ನನ್ನು ಅದರಿಂದ ಪಾರು ಮಾಡಿಸಬೇಕು. ನಾನು ಒಬ್ಬ ಬಡ ಬ್ರಾಹ್ಮಣ. ಬೇರೆಲ್ಲಿಗೆ ತಾನೆ ನಾನು ಸಹಾಯಕ್ಕಾಗಿ ಹೋಗಲಿ? ಬಹಳ ದಿನಗಳಿಂದ ಯಾವ ಕೆಲಸ ಕಾರ್ಯವೂ ಸಿಕ್ಕದೆ ಸುಮ್ಮನೆ ಅಲೆಯುತ್ತಿದ್ದೇನೆ. ಮಕ್ಕಳುಮರಿಗಳು ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆ. ತಾವು ಒಂದು ಮಾತು ಹೇಳಿಬಿಟ್ಟರೆಯೇ ಸಾಕು, ನನಗೆ ಉದ್ಯೋಗ ದೊರೆತು ಬಿಡುತ್ತದೆ’. ಗುಲಾಬಮ್ಮ ‘ಮಗು, ನಾನು ಯಾರಿಗೆ ಹೇಳಬೇಕು?’ ಅಂತ ಕೇಳಿದಳು. ‘ಅಯ್ಯೋ ಪಾಪ, ಬಡ ಬ್ರಾಹ್ಮಣ! ಬಹಳ ಕಷ್ಟದಲ್ಲಿ ಸಿಕ್ಕಿಕೊಂಡಿದ್ದಾನೆ’ ಅಂತ ಆಕೆ ತನಗೆ ತಾನೇ ಹೇಳಿಕೊಂಡಳು. ಉಮೇದುವಾರ ಹೇಳಿದ: ‘ತಾವು ಆಫೀಸರ ಕಿವಿಗೆ ಒಂದು ಮಾತು ಹಾಕಿದರೇ ಸಾಕು, ನನಗೆ ಕೆಲಸ ನಿಶ್ಚಯವಾಗಿ ದೊರೆತುಬಿಡುತ್ತದೆ’ ಅಂತ. ಗುಲಾಬಮ್ಮ ‘ನಾನು ಇಂದೇ ಆಫೀಸರಿಗೆ ಹೇಳಿ ನಿನಗೊಂದು ಕೆಲಸ ಮಾಡಿಸಿ ಕೊಟ್ಟುಬಿಡುತ್ತೇನೆ’ ಅಂತ ಹೇಳಿದಳು. ಆ ಮಾರನೇ ದಿನವೇ ಆತನ ಮನೆಗೆ ಆಫೀಸಿನಿಂದ ಒಬ್ಬ ಜವಾನ ಬಂದು ಹೇಳಿದ, ‘ನೀನು ಇಂದಿನಿಂದಲೇ ಆಫೀಸಿನಲ್ಲಿ ಕೆಲಸ ಮಾಡಬೇಕಾಗಿದೆ’ ಅಂತ. ಆ ಆಫೀಸರು ತನ್ನ ಆಂಗ್ಲ ಧಣಿಗೆ ಹೇಳಿದ: ‘ಈ ಮನುಷ್ಯ ಬಹಳ ಸಮರ್ಥ ನಾದ ಕೆಲಸಗಾರ, ನಾನು ಈತನನ್ನು ಕೆಲಸಕ್ಕೆ ತೆಗೆದುಕೊಂಡಿದ್ದೇನೆ, ನಮ್ಮ ಕಂಪನಿ ಈತನಿಂದ ಬಹಳ ಮೇಲ್ಮೆಗೆ ಬರುತ್ತದೆ.’
“ಎಲ್ಲರೂ ಕಾಮಕಾಂಚನದಿಂದ ಮೋಹಿತರಾಗಿ ಹೋಗಿದ್ದಾರೆ. ಆದರೆ ನನಗೆ ಮಾತ್ರ ಅವೆಲ್ಲ ಒಂದು ಕಿಂಚಿತ್ತೂ ರುಚಿಸುತ್ತಿಲ್ಲ. ಬೇಕಾದರೆ ನಾನು ಆಣೆಯಿಟ್ಟು; ಭಗವಂತನೊಬ್ಬನ ವಿನಾ ನನಗೆ ಬೇರೆ ಏನೂ ಗೊತ್ತಿಲ್ಲ ಅಂತ ಹೇಳುತ್ತೇನೆ.”
ಒಬ್ಬ ಭಕ್ತ: “ಮಹಾಶಯರೆ, ‘ನವ ಹುಲ್ಲೋಲ’ ಎಂಬ ಹೆಸರಿನ ಒಂದು ಮತ ಈಗ ಹುಟ್ಟಿದೆ, ಲಲಿತ ಚಟ್ಟೋಪಾಧ್ಯಾಯ ಅದರ ಸದಸ್ಯ.”
ಶ್ರೀರಾಮಕೃಷ್ಣರು: “ಮತಗಳು ಅನೇಕ ಇವೆ. ಮತವಿದ್ದಂತೆ ಪಥ. ಆದರೆ ಪ್ರತಿ ಯೊಬ್ಬನೂ ಭಾವಿಸುತ್ತಾನೆ ತನ್ನ ಮತವೇ ಸರಿ, ತನ್ನ ಗಡಿಯಾರವೇ ಸರಿಯಾಗಿ ನಡೆದುಕೊಂಡು ಹೋಗುತ್ತಿದೆ ಅಂತ.”
ಗಿರೀಶ ಮಾಸ್ಟರಿಗೆ: “ಇದರ ಸಂಬಂಧವಾಗಿ ಪೋಪ್ ಏನು ಹೇಳುತ್ತಾನೆ ಎಂಬುದು ನಿನಗೆ ಗೊತ್ತೇನು?”
“ ‘This with our judgements as our watches, none
Go just alike, yet each believes his own.”
ಶ್ರೀರಾಮಕೃಷ್ಣರು, ಮಾಸ್ಟರಿಗೆ: “ಇದರ ಅರ್ಥವೇನು?”
ಮಾಸ್ಟರ್: “ಪ್ರತಿಯೊಬ್ಬನೂ ಭಾವಿಸುತ್ತಾನೆ; ತನ್ನ ಗಡಿಯಾರ ಸರಿಯಾಗಿ ನಡೆದುಕೊಂಡು ಹೋಗುತ್ತಿದೆ ಅಂತ. ಆದರೆ ಯಾವ ಎರಡು ಗಡಿಯಾರ ತೆಗೆದು ಕೊಂಡು ನೋಡಿದರೂ ಅವು ತೋರಿಸುವ ಸಮಯದಲ್ಲಿ ಪರಸ್ಪರ ಭೇದ ಇದ್ದೇ ಇರುತ್ತದೆ.”
ಶ್ರೀರಾಮಕೃಷ್ಣರು: “ಗಡಿಯಾರಗಳು ಎಷ್ಟೇ ತಪ್ಪಾಗಿ ನಡೆದುಕೊಂಡು ಹೋದರೂ ಸೂರ್ಯ ಮಾತ್ರ ಸಮಯಕ್ಕೆ ಸರಿಯಾಗಿ ಚಲಿಸುತ್ತಾನೆ. ಆದ್ದರಿಂದ ಪ್ರತಿಯೊಬ್ಬನೂ ಸೂರ್ಯನನ್ನು ಅನುಸರಿಸಿ ತನ್ನ ಗಡಿಯಾರವನ್ನು ಸರಿಪಡಿಸಿಕೊಳ್ಳಬೇಕು.”
ಒಬ್ಬ ಭಕ್ತ: “ಆ ಆಸಾಮಿ ಬಹಳವಾಗಿ ಸುಳ್ಳು ಹೇಳುತ್ತಾನೆ.”
ಶ್ರೀರಾಮಕೃಷ್ಣರು: “ಸತ್ಯವಚನವೇ ಕಲಿಯುಗದ ತಪಸ್ಸು. ಈ ಯುಗದಲ್ಲಿ ಬೇರೆ ವಿಧದ ತಪಸ್ಸುಗಳನ್ನು ಮಾಡಲು ಬಹಳ ಕಠಿಣ. ಸತ್ಯಾರ್ಥಿಗೆ ಭಗವಂತ ದೊರೆತು ಬಿಡುತ್ತಾನೆ. ತುಳಸೀದಾಸ ಹೇಳುತ್ತಾನೆ, ‘ಸತ್ಯವಚನ, ಭಗವದಧೀನತೆ, ಪರಸ್ತ್ರೀಯರಲ್ಲಿ ಮಾತೃದರ್ಶನ ಇವು ಮೂರು ಮಹಾ ಸದ್ಗುಣಗಳು. ಇವುಗಳ ಅನುಷ್ಠಾನದಿಂದ ಒಂದು ಪಕ್ಷ ಭಗವಂತನ ಸಾಕ್ಷಾತ್ಕಾರ ದೊರೆಯದೆ ಇದ್ದರೆ ತುಳಸೀದಾಸನನ್ನು ಮಿಥ್ಯಾವಾದಿ ಅಂತ ಕರೆಯಿರಿ.’
“ಕೇಶವಸೇನ ಯಾವ ಆಧಾರಪ್ರಮಾಣಗಳಿಲ್ಲದಿದ್ದರೂ ತಂದೆಯ ಸಾಲವನ್ನು ಹೊತ್ತುಕೊಂಡ; ಬೇರೆಯವರಾಗಿದ್ದರೆ ಹಾಗೆ ಮಾಡುತ್ತಿರಲಿಲ್ಲ. ನಾನು ಒಮ್ಮೆ ಜೊರಾಸಂಕೊ ಎಂಬ ಸ್ಥಳದಲ್ಲಿರುವ ದೇವೇಂದ್ರನ ಸಮಾಜಕ್ಕೆ ಹೋಗಿದ್ದೆ. ಅಲ್ಲಿ ಶ್ರೀರಾಮಕೃಷ್ಣರ ಜೀವನಸ್ಮೃತಿ ೨೮೯ ೨೮೮ ಶ್ರೀರಾಮಕೃಷ್ಣ ವಚನವೇದ ಕೇಶವಸೇನ ವೇದಿಕೆಯ ಮೇಲೆ ಕುಳಿತು ಧ್ಯಾನಮಾಡುತ್ತಿದ್ದ. ಆಗ ಆತ ಇನ್ನೂ ಯುವಕ. ನಾನು ಮಥುರಬಾಬುವಿಗೆ, ‘ಇಲ್ಲಿ ಧ್ಯಾನಮಾಡುತ್ತ ಕುಳಿತಿರುವವರಲ್ಲಿ ಈತನ ಗಾಳದ ಬೆಂಡು ನೀರಲ್ಲಿ ಮುಳುಗಿಬಿಟ್ಟಿದೆ. ಗಾಳದ ಹುಳುವನ್ನು ಮೀನು ತಿನ್ನುತ್ತಾ ಇದೆ’ ಅಂತ ಹೇಳಿದೆ.
“ಒಬ್ಬ- ಆತನ ಹೆಸರು ಹೇಳುವುದಿಲ್ಲ- ಹತ್ತು ಸಾವಿರ ರೂಪಾಯಿಗಳಿಗಾಗಿ ಸುಳ್ಳು ಸಾಕ್ಷಿ ಕೊಟ್ಟಿದ್ದಾನೆ. ಆ ವ್ಯಾಜ್ಯದಲ್ಲಿ ಗೆಲ್ಲಲು ನನ್ನ ಮುಖಾಂತರ ಭಗವತಿ ಕಾಳಿಗೆ ಅರ್ಘ್ಯ ಕೊಡಿಸಿದ್ದಾನೆ. ಆತ ಬಂದು, ‘ದಯವಿಟ್ಟು ಈ ಅರ್ಘ್ಯವನ್ನು ಭಗವತಿಗೆ ಅರ್ಪಿಸಿಬಿಡಿ’ ಅಂತ ನನಗೆ ಹೇಳಿದ. ನಾನು ಬಾಲಕನ ಹಾಗೆ ಆತ ಹೇಳಿದ ಹಾಗೆ ಕೇಳಿಬಿಟ್ಟೆ.”
ಭಕ್ತ: “ಆತ ಒಳ್ಳೆ ಮನುಷ್ಯ ?”
ಶ್ರೀರಾಮಕೃಷ್ಣರು: “ಆದರೆ ಆತನಿಗೆ ನನ್ನಲ್ಲಿ ಅಂಥಾ ವಿಶ್ವಾಸ ನಾನು ಅರ್ಘ್ಯವನ್ನು ಕೊಟ್ಟರೆ ಭಗವತಿ ತನ್ನ ಮನೋರಥವನ್ನು ಈಡೇರಿಸಿಬಿಡುತ್ತಾಳೆ ಎಂಬುದಾಗಿ ಆತ ದೃಢವಾಗಿ ನಂಬಿದ್ದ.”
ಲಲಿತಬಾಬುವಿನ ಮಾತು ಎತ್ತಿ ಪರಮಹಂಸರು ಹೇಳುತ್ತಿದ್ದಾರೆ, “ಅಹಂಕಾರ ಬಡಪಟ್ಟಿಗೆ ನಮ್ಮನ್ನು ಬಿಟ್ಟು ತೊಲಗುವುದೆ? ಎಲ್ಲೊ ಅಲ್ಲಿ ಇಲ್ಲಿ ಒಬ್ಬಿಬ್ಬರನ್ನು ಮಾತ್ರ ನೋಡಬಹುದು. ಬಲರಾಮನಿಗೆ ಅಹಂಕಾರ ಇಲ್ಲ. (ಒಬ್ಬ ಭಕ್ತನನ್ನು ತೋರಿಸಿ) ಈತನಿಗೂ ಇಲ್ಲ. ಈತನಿಗೆ ದೊರೆತಿರುವ ಸ್ಥಿತಿ ಬೇರೆ ಯಾರಿಗಾದರೂ ದೊರೆತಿದ್ದರೆ, ಇಷ್ಟರಲ್ಲಿ ಅವರು ಅಹಂಕಾರದಿಂದ ಕೊಬ್ಬಿ ಹೋಗುತ್ತಿದ್ದರು. ಕ್ರಾಪು-ಗೀಪನ್ನು ಬಿಡಿಸಿ ಇನ್ನೂ ಏನೇನೊ ತಮಃಪ್ರಧಾನ ಕಾರ್ಯಗಳಲ್ಲಿ ತೊಡಗಿಬಿಡುತ್ತ ಇದ್ದರು. ತಮ್ಮ ಪಾಂಡಿತ್ಯದ ಪ್ರತಿಭೆಯನ್ನು ತೋರಿಸಿಬಿಡುತ್ತಿದ್ದರು. ಆ ದಪ್ಪ ಬ್ರಾಹ್ಮಣನಲ್ಲಿ (ಪ್ರಾಣಕೃಷ್ಣ ನಲ್ಲಿ) ಇನ್ನೂ ಸ್ವಲ್ಪ ಇದೆ. (ಮಾಸ್ಟರಿಗೆ) ಮಹಿಮಚಕ್ರವರ್ತಿ ಹೆಚ್ಚು ಓದಿದ್ದಾನೆ ಅಲ್ಲವೆ?”
ಮಾಸ್ಟರ್: “ಹೌದು, ಸ್ವಾಮಿ.”
ಶ್ರೀರಾಮಕೃಷ್ಣರು (ನಗುತ್ತ): “ಆತ ಗಿರೀಶನೊಡನೆ ಸಂಭಾಷಣೆ ಮಾಡಿದರೆ ಎಷ್ಟು ಚೆನ್ನ! ಆಗ ಸ್ವಲ್ಪ ವಿಚಾರ ವಿಮರ್ಶೆ ಆಗುತ್ತದೆ.”
ಗಿರೀಶ: “ಸಾಧನೆಯ ಮೂಲಕ ಎಲ್ಲರೂ ಶ್ರೀಕೃಷ್ಣನಂತೆ ಆಗಿಬಿಡಬಹುದು ಎಂದು ಆತ ಹೇಳುತ್ತಿದ್ದಾನಲ್ಲವೆ?”
ಶ್ರೀರಾಮಕೃಷ್ಣರು: “ತದ್ವತ್ ಅಲ್ಲ; ಆದರೆ ಅದರ ಹಾಗೆ.”
ಭಕ್ತ: “ಒಳ್ಳೇದು, ಎಲ್ಲರೂ ಶ್ರೀಕೃಷ್ಣನಂತಾಗಲು ಆಗುವುದೆ?”
ಶ್ರೀರಾಮಕೃಷ್ಣರು: “ಅವತಾರಪುರುಷನನ್ನು ಅಥವಾ ಅವತಾರಾಂಶ ಸಂಭೂತನನ್ನು ಈಶ್ವರಕೋಟಿ ಅಂತ ಕರೆಯುತ್ತಾರೆ. ಸಾಮಾನ್ಯ ಮನುಷ್ಯನನ್ನು ಜೀವ ಅಥವಾ ಜೀವಕೋಟಿ ಅಂತ ಕರೆಯುತ್ತಾರೆ. ಯಾರು ಜೀವಕೋಟಿಗಳೊ ಅವರು ಸಾಧನೆಯ ಮೂಲಕ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಬಲ್ಲರು; ಆದರೆ ಸಮಾಧಿ ದೊರೆತ ನಂತರ ಮತ್ತೆ ಹಿಂದಿರುಗಿ ಬರಲಾರರು.
“ಈಶ್ವರಕೋಟಿಗಳನ್ನು ರಾಜಕುಮಾರನಿಗೆ ಹೋಲಿಸಬಹುದು. ಅರಮನೆಯ ಏಳು ಅಂತಸ್ತಿನ ಬೀಗದ ಕೈಗಳೂ ಆತನ ಹತ್ತಿರ ಇವೆ. ಆತ ಆ ಏಳು ಅಂತಸ್ತುಗಳಿಗೂ ಹತ್ತಿ ಹೋಗಬಲ್ಲ ಮತ್ತು ಇಚ್ಛೆ ಬಂದಾಗ ಕೆಳಕ್ಕೂ ಇಳಿದು ಬರಬಲ್ಲ. ಜೀವಕೋಟಿಯನ್ನು ಒಬ್ಬ ಸಾಮಾನ್ಯ ಉದ್ಯೋಗಸ್ಥನಿಗೆ ಹೋಲಿಸಬಹುದು. ಆತ ಅರಮನೆಯ ಎಲ್ಲೋ ಕೆಲವು ಕೊಠಡಿಗಳಿಗೆ ಮಾತ್ರ ಹೋಗಿ ಬರಬಲ್ಲ; ಅವನಿಗಿರುವ ಅವಕಾಶ ಅಷ್ಟು ಮಾತ್ರವೇ.
“ಜನಕ ಜ್ಞಾನಿ, ಸಾಧನೆಯ ಮೂಲಕ ಬ್ರಹ್ಮಜ್ಞಾನವನ್ನು ಪಡೆದ. ಆದರೆ ಶುಕದೇವ ಜ್ಞಾನದ ಮೂರ್ತಿಯೇ.”
ಗಿರೀಶ: “ಆಹಾ!”
ಶ್ರೀರಾಮಕೃಷ್ಣರು: “ಶುಕದೇವ ಸಾಧನೆಯ ಮೂಲಕ ಬ್ರಹ್ಮಜ್ಞಾನವನ್ನು ಪಡೆಯ ಬೇಕಾಗಿ ಏನೂ ಬರಲಿಲ್ಲ. ಶುಕದೇವನ ಹಾಗೆ ನಾರದನಿಗೂ ಬ್ರಹ್ಮಜ್ಞಾನವಿತ್ತು. ಆದರೆ ಆತ ಲೋಕಶಿಕ್ಷಣಾರ್ಥವಾಗಿ ಭಕ್ತನಾಗಿಯೇ ಉಳಿದಿದ್ದ. ಪ್ರಹ್ಲಾದ ಕೆಲವು ವೇಳೆ ‘ಸೋಠ್ಹಮ್’ ಭಾವದಲ್ಲಿ, ಕೆಲವು ವೇಳೆ ದಾಸ್ಯಭಾವದಲ್ಲಿ, ಕೆಲವು ವೇಳೆ ಸಂತಾನಭಾವ ದಲ್ಲಿ ಇರುತ್ತಿದ್ದ. ಹನುಮಂತನದೂ ಅದೇ ಅವಸ್ಥೆ.
“ಕೇವಲ ಇಚ್ಛೆಪಟ್ಟರೆ ಈ ಅವಸ್ಥೆ ಎಲ್ಲರಿಗೂ ದೊರೆಯದು. ಕೆಲವು ಬೊಂಬುಗಳು ಇನ್ನೂ ಕೆಲವಕ್ಕಿಂತ ಹೆಚ್ಚು ಟೊಳ್ಳಾಗಿರುತ್ತದೆ; ಇನ್ನು ಕೆಲವು ಬೊಂಬುಗಳು ಮತ್ತೆ ಕೆಲವಕ್ಕಿಂತ ಹೆಚ್ಚು ಗಟ್ಟಿಯಾಗಿರುತ್ತವೆ.”
ಒಬ್ಬ ಭಕ್ತ: “ನಿಮ್ಮ ಆಧ್ಯಾತ್ಮಿಕ ಅನುಭವಗಳೆಲ್ಲ ಇತರರ ಆದರ್ಶಕ್ಕಾಗಿ ಎಂದು ತಾವು ತಿಳಿಸಿದ್ದೀರಿ, ಆದ್ದರಿಂದ ನಾವು ಏನು ಮಾಡಬೇಕು ಎಂಬುದನ್ನು ದಯವಿಟ್ಟು ತಿಳಿಸಿ.”
ಶ್ರೀರಾಮಕೃಷ್ಣರು: “ಭಗವಂತನ ಸಾಕ್ಷಾತ್ಕಾರ ದೊರೆಯಬೇಕಾದರೆ ತೀವ್ರ ವೈರಾಗ್ಯ ಅತ್ಯಂತ ಆವಶ್ಯಕ. ಯಾವುದು ಭಗವಂತನ ಸಾಕ್ಷಾತ್ಕಾರಕ್ಕೆ ತಡೆಯಾಗಿ ತೋರಿ ಬರುವುವೊ ಅವನ್ನೆಲ್ಲ ಒಡನೆಯೇ ತ್ಯಾಗಮಾಡಿಬಿಡಬೇಕು. ಮುಂದೆ ನೋಡೋಣ ಅಂತ ಸುಮ್ಮನೆ ಕೈಕಟ್ಟಿ ಕುಳಿತಿರಬಾರದು. ಕಾಮಕಾಂಚನವೇ ಭಗವಂತನ ಸಾಕ್ಷಾತ್ಕಾರಕ್ಕೆ ಅಡ್ಡಲಾಗಿ ಬಿದ್ದಿರುವ ತಡೆ. ಮನಸ್ಸನ್ನು ಅವುಗಳ ಕಡೆಯಿಂದ ಎಳೆದುಕೊಂಡು ಬಿಡಬೇಕು.
“ಮೈಗಳ್ಳತನವಿದ್ದರೆ ಆಗದು. ಒಬ್ಬ ಹೆಗಲ ಮೇಲೆ ಒಂದು ಚೌಕ ಹಾಕಿಕೊಂಡು ಸ್ನಾನಕ್ಕೆ ಹೋಗುತ್ತಿದ್ದ. ಆತನ ಹೆಂಡತಿ ಹೇಳಿದಳು, ‘ನೀವು ಯಾವ ಕೆಲಸಕ್ಕೂ ಬರುವವರಲ್ಲ. ದಿವಸ ದಿವಸಕ್ಕೂ ಮುಪ್ಪಾಗುತ್ತಾ ಬರುತ್ತಿದ್ದೀರಿ. ಆದರೂ ನೀವು ನಿಮ್ಮ ಹಿಂದಿನ ಚಾಳಿಗಳನ್ನು ಇನ್ನೂ ಬಿಟ್ಟಿಲ್ಲ. ನನ್ನನ್ನು ಅಗಲಿ ಒಂದು ದಿನವೂ ನೀವು ಜೀವಸಹಿತ ಬದುಕಿರಲಾರಿರಿ. ಆದರೆ ಅವನನ್ನು ನೋಡಿ, ಎಂಥ ತ್ಯಾಗಿ!’ ಅಂತ.
ಪತಿ: “ಅದು ಹೇಗೆ? ಆತ ಅಂಥ ತ್ಯಾಗದ ಕೆಲಸ ಏನು ಮಾಡಿದ್ದಾನೆ?”
ಪತ್ನಿ: “ಆತನಿಗೆ ಹದಿನಾರು ಜನ ಹೆಂಡತಿಯರು. ಒಬ್ಬೊಬ್ಬಳನ್ನಾಗಿ ತ್ಯಜಿಸುತ್ತಾ ಬರುತ್ತಿದ್ದಾನೆ. ನಿಮ್ಮ ಕೈಯಲ್ಲಿ ಆ ಕೆಲಸ ಎಂದಿಗೂ ಆಗದ ಮಾತು.”
ಪತಿ: ‘ಒಬ್ಬೊಬ್ಬಳನ್ನಾಗಿ ತ್ಯಜಿಸೋದು! ನಿನಗೆಲ್ಲೊ ಹುಚ್ಚು. ಅವನ ಕೈಯಲ್ಲಿ ತ್ಯಜಿಸುವುದಕ್ಕೆ ಆಗುವ ಹಾಗೇ ಇಲ್ಲ. ಯಾರು ತ್ಯಾಗಿಯಾಗಬೇಕೆಂದು ಬಯಸುತ್ತಾನೊ ಆತ ಕಿಂಚಿತ್ ಕಿಂಚಿತ್ತಾಗಿ ತ್ಯಜಿಸುತ್ತಾ ಹೋಗುತ್ತಾನೇನು?”
ಪತ್ನಿ (ನಗುತ್ತ): “ಆದರೂ ಆತ ನಿಮಗಿಂತ ಎಷ್ಟೋ ಮೇಲು.”
ಪತಿ: “ನೀನೊಬ್ಬಳು ಮಂಕು; ನಿನಗೆ ಅರ್ಥವಾಗುತ್ತಿಲ್ಲ. ಅವನ ಕೈಯಲ್ಲಿ ತ್ಯಜಿಸುವುದಕ್ಕೆ ಆಗುವುದಿಲ್ಲ. ಆದರೆ ನಾನು ತ್ಯಜಿಸಬಲ್ಲೆ. ಇಗೋ ನೋಡು! ಹೊರಟೇಬಿಟ್ಟೆ!”
ಪರಮಹಂಸರು ಮತ್ತೆ ಮಾತು ಮುಂದುವರಿಸಿದರು: “ತೀವ್ರ ವೈರಾಗ್ಯ ಎಂಬುದು ಇದೇನೆ. ವಿವೇಕ ಬಂದೊಡನೆಯೇ ತ್ಯಜಿಸಿಬಿಟ್ಟ. ಹೆಗಲ ಮೇಲೆ ಬರೀ ಒಂದು ಚೌಕ ಹಾಕಿಕೊಂಡಿದ್ದವನು ಹಾಗೆಯೇ ಹೊರಟುಹೋದ. ಸಂಸಾರದ ವ್ಯವಸ್ಥೆ ಮಾಡಿ ಹೋಗುವುದಕ್ಕೂ ಮನೆಗೆ ಹಿಂದಿರುಗಿ ಕಾಲುಹಾಕಲಿಲ್ಲ. ಹಿಂದಕ್ಕೆ ತಿರುಗಿ ಒಮ್ಮೆ ಯಾದರೂ ಮನೆಯ ಕಡೆಗೆ ದೃಷ್ಟಿಹಾಕಲಿಲ್ಲ.
“ಯಾರು ತ್ಯಾಗಿಯಾಗಬೇಕು ಅನ್ನುತ್ತಾನೊ ಆತನಿಗೆ ಬಲವಾದ ಮನಸ್ಸು ಬೇಕು, ಡಕಾಯಿತರ ಹಾಗೆ ಯಾವುದಕ್ಕೂ ಅಂಜದ ಧೈರ್ಯವಿರಬೇಕು. ಅವರು ಮನೆಯನ್ನು ಲೂಟಿ ಮಾಡುವ ಮುನ್ನ ಅಬ್ಬರಿಸುತ್ತಾರೆ, ‘ಹೊಡಿ! ಬಡಿ! ಕಡಿ!’ ಅಂತ.
“ಆತನ ಪಾದಪದ್ಮಗಳಲ್ಲಿ ಭಕ್ತಿ, ಪ್ರೇಮ ಉಂಟಾಗುವಂತೆ ವ್ಯವಹರಿಸುತ್ತಾ ಕಾಲ ಕಳೆಯಿರಿ. ಮತ್ತೆ ಬೇರೆ ಇನ್ನೇನು ತಾನೆ ಸಾಧ್ಯ ನಿಮ್ಮ ಕೈಯಲ್ಲಿ? ಶ್ರೀಕೃಷ್ಣ ಮಥುರೆಗೆ ಹೊರಟುಹೋದಮೇಲೆ ಆತನ ದರ್ಶನ ದೊರೆಯದೆ ಹೋದುದರಿಂದ ಯಶೋದೆ ತೀರ ಹುಚ್ಚಿಯಂತೆಯೇ ಆಗಿ ಶ್ರೀಮತಿಯ ಹತ್ತಿರಕ್ಕೆ ಹೋದಳು. ಯಶೋದೆಯ ದುಃಖವನ್ನು ನೋಡಿ ಶ್ರೀಮತಿಯು ಆದ್ಯಾಶಕ್ತಿಯ ರೂಪವನ್ನು ಧರಿಸಿ ಆಕೆಗೆ ದರ್ಶನ ಕೊಟ್ಟು, ‘ಮಗು, ನನ್ನಿಂದ ಒಂದು ವರವನ್ನು ಬೇಡಿಕೊ’ ಅಂತ ಹೇಳಿದಳು. ಯಶೋದೆ ಹೇಳಿದಳು : ‘ಹೇ ತಾಯೆ, ನಾನು ಮತ್ತೆ ಬೇರೆ ಯಾವುದಕ್ಕೆ ಪ್ರಾರ್ಥಿಸಲಿ? ಆದರೆ, ನಾನು ಕಾಯಾವಾಚಾಮನಸಾ ಶ್ರೀಕೃಷ್ಣನ ಸೇವೆಯನ್ನು ಮಾಡುವಂತೆಯೂ, ಆ ಕಣ್ಣುಗಳಿಂದ ಆತನ ಭಕ್ತರ ದರ್ಶನ ಮಾಡುವಂತೆಯೂ, ಎಲ್ಲೆಲ್ಲಿ ಆತ ಕ್ರೀಡಿಸುವನೊ ಅಲ್ಲಿಗೆ ಈ ಪಾದಗಳಿಂದ ನಡೆದುಹೋಗುವಂತೆಯೂ, ಈ ಕೈಗಳಿಂದ ಆತನ ಮತ್ತು ಆತನ ಭಕ್ತರ ಸೇವೆಯನ್ನು ಮಾಡುವಂತೆಯೂ, ಪ್ರತಿಯೊಂದು ಇಂದ್ರಿಯವೂ ಕೇವಲ ಆತನ ಕೆಲಸದಲ್ಲಿಯೇ ನಿರತವಾಗಿರುವಂತೆಯೂ ಕರುಣಿಸು.”’
ಪರಮಹಂಸರು ಈ ಮಾತುಗಳನ್ನು ಆಡುತ್ತ ಇದ್ದ ಹಾಗೆಯೇ ಮತ್ತೆ ಭಾವಾವಿಷ್ಟರಾಗುತ್ತಿದ್ದಾರೆ. ಇದ್ದಕ್ಕಿದ್ದ ಹಾಗೆ ತಮ್ಮಷ್ಟಕ್ಕೆ ತಾವೇ ಹೇಳಿಕೊಳ್ಳುತ್ತಿದ್ದಾರೆ, “ಸಂಹಾರಮೂರ್ತಿ ಕಾಳಿ! ಅಲ್ಲ, ನಿತ್ಯಕಾಳಿ!”. ಬಹಳ ಪ್ರಯಾಸಪಟ್ಟು ತಾವು ಭಾವಾವಿಷ್ಟರಾಗುತ್ತಿದ್ದುದನ್ನು ತಡೆದು ನಿಲ್ಲಿಸಿದರು. ಈಗ ಸ್ವಲ್ಪ ನೀರು ಕುಡಿದರು. ಮತ್ತೆ ಯಶೋದೆಯ ಮಾತನ್ನು ಎತ್ತಿದರು. ಅಷ್ಟರಲ್ಲಿ ಮಹೇಂದ್ರಮುಖರ್ಜಿ ಕೊಠಡಿಯನ್ನು ಪ್ರವೇಶಿಸಿದನು. ಈತ ಮತ್ತು ಈತನ ತಮ್ಮ ಪ್ರಿಯಮುಖರ್ಜಿ ಈಗ ತಾನೆ ಕೆಲವು ಕಾಲದಿಂದ ಪರಮಹಂಸರ ಹತ್ತಿರ ಬಂದುಹೋಗುತ್ತಿದ್ದಾರೆ. ಮಹೇಂದ್ರನಿಗೆ ಒಂದು ಹಿಟ್ಟಿನ ಮಿಲ್ಲು ಇದೆ ಮತ್ತು ಬೇರೆ ವ್ಯಾಪಾರಗಳೂ ಇವೆ. ಪ್ರಿಯಮುಖರ್ಜಿಗೆ ಎಂಜಿನಿಯರ್ ಕೆಲಸ ಇದೆ. ಇವರ ಕೈಕೆಳಗಿನವರು ಬಹಳ ದಕ್ಷರಾಗಿದ್ದುದರಿಂದ ಇವರಿಗೆ ಹೆಚ್ಚು ವಿರಾಮ ದೊರೆಯುತ್ತಿದ್ದಿತು. ಮಹೇಂದ್ರನ ವಯಸ್ಸು ಮೂವತ್ತಾರೋ ಮೂವತ್ತೇಳೊ ಆಗಿದ್ದಿತು. ಪ್ರಿಯಮುಖರ್ಜಿಯ ವಯಸ್ಸು ಈತನಿಗಿಂತ ಎರಡು ವರ್ಷ ಕಡಿಮೆ. ಇವರ ಸ್ವಂತ ಮನೆ ಕೇದೇಟಿ ಎಂಬ ಗ್ರಾಮದಲ್ಲಿದೆ. ಇವರಿಗೆ ಕಲ್ಕತ್ತದ ಬಾಗ್ಬಜಾರಿನಲ್ಲಿಯೂ ಒಂದು ವಾಸದ ಮನೆ ಇದೆ. ಇವರು ಪರಮಹಂಸರನ್ನು ನೋಡಲು ಬಂದಾಗಲೆಲ್ಲ ಹರಿ ಎಂಬ ಹೆಸರಿನ ಒಬ್ಬ ಯುವಕನೂ ಇವರನ್ನು ಹಿಂಬಾಲಿಸುತ್ತಿದ್ದಾನೆ. ಆತನಿಗೆ ವಿವಾಹವಾಗಿದೆ. ಪರಮಹಂಸರನ್ನು ವಿಶೇಷವಾದ ಶ್ರದ್ಧಾಭಕ್ತಿಯಿಂದ ಕಾಣುತ್ತಿದ್ದಾನೆ. ಮಹೇಂದ್ರನಿಗೆ ಬಹಳ ದಿನಗಳಿಂದ ದಕ್ಷಿಣೇಶ್ವರಕ್ಕೆ ಬಂದು ಪರಮಹಂಸರನ್ನು ನೋಡಲಾಗಲಿಲ್ಲ. ಅವರು ಬಾರದೆ ಇದ್ದುದರಿಂದ ಹರಿಗೂ ಬರುವುದಕ್ಕಾಗಲಿಲ್ಲ. ಇಂದು ಅವರಿಬ್ಬರೂ ಬಂದು ಪರಮಹಂಸರಿಗೆ ಪ್ರಣಾಮ ಮಾಡಿ ಒಂದು ಕಡೆ ಕುಳಿತುಕೊಂಡರು.
ಶ್ರೀರಾಮಕೃಷ್ಣರು: “ಏನು ಸಮಾಚಾರ, ಬಹಳ ದಿವಸಗಳಿಂದ ದಕ್ಷಿಣೇಶ್ವರಕ್ಕೆ ಬರಲೇ ಇಲ್ಲವಲ್ಲ?”
ಮಹೇಂದ್ರ: “ಕಲ್ಕತ್ತದಲ್ಲಿ ಇರಲಿಲ್ಲ. ಕೇದೇಟಿಗೆ ಹೋಗಿದ್ದೆ.”
ಶ್ರೀರಾಮಕೃಷ್ಣರು: “ಏನಪ್ಪ ಇದು! ನಿನಗೆ ಮಕ್ಕಳೂ ಇಲ್ಲ, ಮರಿಯೂ ಇಲ್ಲ. ನೀನು ಬೇರೆಯವರ ಕೈಕೆಳಗೆ ಕೆಲಸ ಮಾಡಬೇಕಾಗಿಯೂ ಇಲ್ಲ. ಆದರೂ ನಿನಗೆ ಸಮಯವಿಲ್ಲವಲ್ಲ! ಹಾ ಭಗವಂತ, ಏನು ನಿನ್ನ ಸೃಷ್ಟಿ!”
ಭಕ್ತರೆಲ್ಲರೂ ಸುಮ್ಮನೆ ಕುಳಿತಿದ್ದಾರೆ. ಮಹೇಂದ್ರನಿಗೆ ಕಿಂಚಿತ್ ದಿಗ್ಭ್ರಮೆ ಹಿಡಿದಂತೆ ಆಗಿದೆ.
ಶ್ರೀರಾಮಕೃಷ್ಣರು (ಮಹೇಂದ್ರನಿಗೆ): “ಇದನ್ನೆಲ್ಲ ನಿನಗೆ ನಾನೇಕೆ ಹೇಳುತ್ತಿದ್ದೇನೆ ಗೊತ್ತೆ? ನಿನ್ನದು ಸರಳ ಹೃದಯ ಮತ್ತು ಉದಾರ ಸ್ವಭಾವ. ಜೊತೆಗೆ ನೀನು ಭಗವದ್ಭಕ್ತ.”
ಮಹೇಂದ್ರ: “ಹೌದು, ತಾವು ಇದನ್ನೆಲ್ಲ ನಮ್ಮ ಶ್ರೇಯಸ್ಸಿಗಾಗಿಯೇ ಹೇಳು ತ್ತಿರುವುದು.”
ಶ್ರೀರಾಮಕೃಷ್ಣರು (ನಗುತ್ತ): “ನಮ್ಮ ಜಾಗದಲ್ಲಿ (ದಕ್ಷಿಣೇಶ್ವರದಲ್ಲಿ) ನಡೆಯುವ ಬಯಲುನಾಟಕಕ್ಕೆ ಯಾರೂ ದುಡ್ಡು ಕೊಟ್ಟು ಒಳಕ್ಕೆ ಬರಬೇಕಾಗಿಲ್ಲ. ಅದಕ್ಕಾಗಿಯೇ ಯದುಮಲ್ಲಿಕನ ತಾಯಿ, ‘ಉಳಿದ ಸಾಧುಗಳ ಹತ್ತಿರ ಹೋದರೆ ಅವರು ಯಾವಾಗ ನೋಡಿದರೂ ಕೊಡು ಕೊಡು ಅಂತಲೇ ಇರುತ್ತಾರೆ; ಆದರೆ ನಿಮ್ಮ ಹತ್ತಿರ ಬಂದರೆ ಅಂಥ ತೊಂದರೆಯೇನಿಲ್ಲ’ ಅಂತ ಹೇಳಿದಳು. ಪ್ರಾಪಂಚಿಕರಿಗೆ ದುಡ್ಡಿನ ಚೀಲ ಬಿಚ್ಚಬೇಕಾಗಿ ಬಂತು ಅಂದರೆ ಒಂದು ವಿಧವಾದ ಸಂಕಟ.
“ಒಂದು ಜಾಗದಲ್ಲಿ ಒಂದು ಬಯಲುನಾಟಕ ನಡೆಯುತ್ತಿತ್ತು. ಒಬ್ಬನಿಗೆ ಅದನ್ನು ನೋಡಬೇಕು ಅಂತ ಬಹಳ ಇಚ್ಛೆ. ಇಣಕಿ ನೋಡುತ್ತಾನೆ, ದುಡ್ಡು ಕೊಟ್ಟು ಒಳಕ್ಕೆ ಹೋಗಬೇಕಾಗಿದೆ. ಆದ್ದರಿಂದ ಅಲ್ಲಿಂದ ಮೆತ್ತಗೆ ಸರಿದು ಬಂದುಬಿಟ್ಟ. ಇನ್ನೊಂದು ಜಾಗದಲ್ಲಿಯೂ ಒಂದು ಬಯಲುನಾಟಕ ನಡೆಯುತ್ತಿತ್ತು. ಅಲ್ಲಿ ವಿಚಾರ ಮಾಡಿ ನೋಡಲಾಗಿ ಅವನಿಗೆ ಗೊತ್ತಾಯಿತು, ಅಲ್ಲಿ ಒಳಕ್ಕೆ ಹೋಗಲು ದುಡ್ಡು ಏನೂ ಕೊಡಬೇಕಾಗಿಲ್ಲ ಅಂತ. ಜನ ಕಿಕ್ಕಿರಿದು ತುಂಬಿದ್ದರು. ಆತ ಜನರನ್ನು ನೂಕಿ ನುಗ್ಗಿ ಗುಂಪಿನ ಮಧ್ಯಕ್ಕೆ ಹೋಗಿ ಒಂದು ಒಳ್ಳೇ ಜಾಗವನ್ನು ಪತ್ತೆ ಮಾಡಿ ಕುಳಿತು ಮೀಸೆ ಹುರಿಮಾಡುತ್ತ ನಾಟಕ ನೋಡಲಾರಂಭಿಸಿದ. (ಎಲ್ಲರೂ ನಗುತ್ತಾರೆ.)
“ನಿನ್ನ ಮನಸ್ಸನ್ನು ವಿಕ್ಷೇಪಗೊಳಿಸಲು ನಿನಗೆ ಮಕ್ಕಳು ಮರಿ ಯಾವುವೂ ಇಲ್ಲ. ತಿಂಗಳಿಗೆ ಎಂಟುನೂರು ಸಂಬಳ ಬರುವ ಒಬ್ಬ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ನನಗೆ ಗೊತ್ತುಂಟು. ಆತ ಕೇಶವಸೇನನ ಮನೆಯಲ್ಲಿ ನಡೆದ ‘ನವಬೃಂದಾವನ’ ಎಂಬ ನಾಟಕ ನೋಡಲು ಬಂದಿದ್ದ. ನಾನೂ ಅಲ್ಲಿಗೆ ಹೋಗಿದ್ದೆ. ನನ್ನೊಡನೆ ರಾಖಾಲ ಮತ್ತು ಇನ್ನೂ ಕೆಲವರು ಬಂದಿದ್ದರು. ಅವರು ನನ್ನ ಪಕ್ಕದಲ್ಲಿಯೇ ಕುಳಿತಿದ್ದರು. ರಾಖಾಲ ಯಾವುದಕ್ಕೋ ಎದ್ದು ಸ್ವಲ್ಪ ಹೊರಕ್ಕೆ ಹೋದ. ಆ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಅಲ್ಲಿಗೆ ಬಂದು ತನ್ನ ಮಗನನ್ನು ರಾಖಾಲ ಕುಳಿತಿದ್ದ ಜಾಗದಲ್ಲಿ ಕೂರಿಸಿ ತಾನೂ ಹತ್ತಿರ ಕುಳಿತುಕೊಂಡ. ನಾನು ಆತನಿಗೆ ಹೇಳಿದೆ, ‘ಇಲ್ಲಿ ಆತನನ್ನು ಕೂರಿಸಬೇಡ’ ಅಂತ. ಆಗ ನನ್ನ ಅವಸ್ಥೆ ಅಂಥದು, ಹತ್ತಿರ ಇರುವವರು ಏನು ಹೇಳಿದರೂ ನಾನೂ ಅದರಂತೆ ಮಾಡಬೇಕಾಗಿ ಬರುತ್ತಿತ್ತು. ಅದಕ್ಕಾಗಿ ನಾನು ರಾಖಾಲನನ್ನು ಹತ್ತಿರ ಕೂರಿಸಿಕೊಂಡಿದ್ದೆ. ನಾಟಕ ಮುಗಿಯುವವರೆಗೆ ಆ ಡೆಪ್ಯುಟಿ ತನ್ನ ಮಗನೊಡನೆ ಕಿಚಿಪಿಚಿಗುಟ್ಟುತ್ತಲೇ ಇದ್ದ. ಆ ನೀಚ ಒಮ್ಮೆಯೂ ಕೂಡ ನಾಟಕದ ಕಡೆ ಕಣ್ಣುಹಾಕಲೇ ಇಲ್ಲ. ಬಳಿಕ ಆತ ತನ್ನ ಹೆಂಡತಿಯ ದಾಸನೂ ಆಗಿದ್ದಾನೆ ಅಂತ ಗೊತ್ತಾಯಿತು. ಆಕೆ ಏಳು ಅಂದರೆ ಏಳುತ್ತಾನಂತೆ. ಕೂರು ಅಂದರೆ ಕೂರುತ್ತಾ ನಂತೆ. ಆ ಕೋತಿಮುಖದ ಹುಡುಗನ ದೆಸೆಯಿಂದ ಆತನಿಗೆ ನಾಟಕ ನೋಡುವುದಕ್ಕೆ ಆಗಲೇ ಇಲ್ಲ.
(ಮಹೇಂದ್ರನಿಗೆ) “ನೀನು ಧ್ಯಾನಮಾಡುತ್ತ ಇದ್ದೀಯೇನು?”
ಮಹೇಂದ್ರ: “ಹೌದು ಎಲ್ಲೋ ಅಲ್ಪಸ್ವಲ್ಪ.”
ಶ್ರೀರಾಮಕೃಷ್ಣರು: “ಒಮ್ಮೆ ಅಲ್ಲಿಗೆ ಬಾ.”
ಮಹೇಂದ್ರ ನಗುತ್ತ: “ಆಗಲಿ, ಬರುತ್ತೇನೆ. ನನ್ನಲ್ಲಿ ತಂಗುತಡೆಗಳು, ತಿರುಚು- ಮುರುಚುಗಳು ಎಲ್ಲೆಲ್ಲಿವೆ ಎಂಬುದು ನಿಮಗೆ ಗೊತ್ತು. ದಯವಿಟ್ಟು ನೀವು ಅವನ್ನು ಸರಿಪಡಿಸುವಿರಂತೆ.”
ಶ್ರೀರಾಮಕೃಷ್ಣರು (ನಗುತ್ತ): “ಮೊದಲು ನೀನು ಅಲ್ಲಿಗೆ ಬಾ; ತರುವಾಯ ಅವು ಎಲ್ಲೆಲ್ಲಿ ಇವೆ ಎಂಬುದನ್ನು ನಿನ್ನ ಅಂಗಾಂಗಗಳನ್ನೆಲ್ಲ ಹಿಸುಕಿ ಪತ್ತೆ ಮಾಡುತ್ತೇನೆ. ಹಾಗಾದರೆ, ಏಕೆ ಅಲ್ಲಿಗೆ ಬರುತ್ತಿಲ್ಲ?”
ಮಹೇಂದ್ರ: “ಕೆಲಸಕಾರ್ಯಗಳ ಒತ್ತಡದಿಂದ ಬರುವುದಕ್ಕೆ ಆಗಲಿಲ್ಲ. ಜೊತೆಗೆ ನಾನು ಆಗಾಗ ಕೇದೇಟಿಯಲ್ಲಿರುವ ಮನೆಗೆ ಹೋಗಿಬರಬೇಕಾಗಿದೆ.”
ಶ್ರೀರಾಮಕೃಷ್ಣರು ಭಕ್ತರ ಕಡೆ ಬೆರಳುಮಾಡಿ ಮಹೇಂದ್ರನಿಗೆ: “ಇವರಿಗೆಲ್ಲ ಮನೆ ಮಠಗಳೇ ಆಗಲಿ, ಕೆಲಸಕಾರ್ಯಗಳೇ ಆಗಲಿ ಇಲ್ಲವೇನು? ಇವರು ಬರುತ್ತಾ ಇದ್ದಾರಲ್ಲ, ಅದು ಹೇಗೆ?”
(ಹರಿಗೆ) “ನೀನೇಕೆ ದಕ್ಷಿಣೇಶ್ವರಕ್ಕೆ ಬರುತ್ತಿಲ್ಲ? ಬಹುಶಃ ಮನೆಗೆ ಹೆಂಡತಿ ಬಂದಿರಬಹುದೆಂದು ಕಾಣುತ್ತೆ?”
ಹರಿ: “ಇಲ್ಲ, ಇಲ್ಲ.”
ಶ್ರೀರಾಮಕೃಷ್ಣರು: “ಹಾಗಾದರೆ ನನ್ನನ್ನು ಏಕೆ ಮರೆತುಬಿಟ್ಟೆ?”
ಹರಿ: “ದೇಹಾರೋಗ್ಯ ಸರಿಯಾಗಿರಲಿಲ್ಲ.”
ಶ್ರೀರಾಮಕೃಷ್ಣರು (ಭಕ್ತರಿಗೆ) : “ದುರ್ಬಲನಾಗಿ ಕಾಣುತ್ತಿದ್ದಾನೆ. ಈತನ ಭಕ್ತಿ ಕಡಿಮೆ ದರ್ಜೆಯದೇನಲ್ಲ; ಸುಮ್ಮನೆ ಉಕ್ಕಿ ಹರಿಯುತ್ತಿದೆ. ಆದರೆ ಅದು ಉತ್ಪಾತಭಕ್ತಿ.” (ನಗು.)
ಪರಮಹಂಸರು ತಮ್ಮ ಒಬ್ಬ ಭಕ್ತನ ಹೆಂಡತಿಯನ್ನು ‘ಹಾಬೀತಾಯಿ’ ಅಂತ ಕರೆಯುತ್ತಿದ್ದರು. ಆಕೆಯ ತಮ್ಮ ಬಂದಿದ್ದಾನೆ. ಕಾಲೇಜಿನಲ್ಲಿ ಓದುತ್ತಿದ್ದಾನೆ. ವಯಸ್ಸು ಸುಮಾರು ಇಪ್ಪತ್ತು. ಕ್ರಿಕೆಟ್ಟು ಆಟಕ್ಕೆ ಹೋಗಲು ಎದ್ದುನಿಂತ. ಆತನ ತಮ್ಮ ದ್ವಿಜ ಪರಮಹಂಸರ ಭಕ್ತ. ಆತನೂ ಅಣ್ಣನೊಡನೆ ಎದ್ದುನಿಂತ. ಸಹೋದರರಿಬ್ಬರೂ ಕೊಠಡಿಯನ್ನು ಬಿಟ್ಟು ಹೊರಕ್ಕೆ ಹೋದರು. ಕೆಲವು ನಿಮಿಷಗಳಾದ ನಂತರ ದ್ವಿಜ ಹಿಂದಿರುಗಿ ಕೊಠಡಿಗೆ ಬಂದುಬಿಟ್ಟ. ಪರಮಹಂಸರು, “ಏಕೆ ಹಿಂದಿರುಗಿ ಬಂದುಬಿಟ್ಟೆ?” ಅಂತ ಆತನನ್ನು ಕೇಳಿದರು. ಆಗ ಒಬ್ಬ ಭಕ್ತ ಹೇಳಿದ, “ಬಹುಶಃ ಈತನಿಗೆ ಸಂಗೀತ ಕೇಳಲು ಇಚ್ಛೆಯಾಗಿರಬೇಕು. ಅದಕ್ಕಾಗಿ ಹಿಂದಿರುಗಿ ಬಂದಿದ್ದಾನೆ ಅಂತ ಕಾಣುತ್ತೆ.”
ಇಂದು ಇಲ್ಲಿ ಬ್ರಾಹ್ಮ ಸಮಾಜದ ತ್ರೈಲೋಕ್ಯ ಹಾಡುವನು. ಪಲ್ಟು ಕೂಡ ಬಂದು ಬಿಟ್ಟ. ಪರಮಹಂಸರು ಹೇಳಿದರು “ಯಾರಿವನು? ಓಹೋ ಪಲ್ಟು!”
ಇನ್ನೊಬ್ಬ ಯುವಕಭಕ್ತ ಪೂರ್ಣನೂ ಬಂದುಬಿಟ್ಟ. ಪರಮಹಂಸರು ಬಹಳ ಕಷ್ಟ ತೆಗೆದುಕೊಂಡು ಆತನನ್ನು ಬರಮಾಡಿಕೊಂಡಿದ್ದಾರೆ. ಪೂರ್ಣನ ಮನೆಯವರು ಆತನನ್ನು ಪರಮಹಂಸರ ಹತ್ತಿರ ಕಳುಹಿಸುವುದಕ್ಕೆ ಸ್ವಲ್ಪವೂ ಇಚ್ಛೆಪಡುತ್ತಿಲ್ಲ. ಮಾಸ್ಟರ್ ಅಧ್ಯಾಪಕ ನಾಗಿರುವ ಸ್ಕೂಲಿನಲ್ಲಿ ಆತ ಐದನೆ ತರಗತಿಯಲ್ಲಿ ಓದುತ್ತಿದ್ದಾನೆ. ಬಂದೊಡನೆಯೇ ಪೂರ್ಣ ಪರಮಹಂಸರಿಗೆ ಪ್ರಣಾಮ ಮಾಡಿದ. ಅವರು ಆತನನ್ನು ತಮ್ಮ ಹತ್ತಿರ ಕೂರಿಸಿಕೊಂಡು ಆತನೊಡನೆ ಮೆತ್ತಮೆತ್ತಗೆ ಮಾತನಾಡುತ್ತಿದ್ದಾರೆ. ಮಾಸ್ಟರ್ ಮಾತ್ರ ಅವರ ಹತ್ತಿರ ಕುಳಿತಿ ದ್ದಾನೆ. ಉಳಿದ ಭಕ್ತರು ಅನ್ಯಮನಸ್ಕರಾಗಿದ್ದಾರೆ. ಗಿರೀಶ ಕೊಠಡಿಯಲ್ಲಿ ಒಂದು ಕಡೆ ಕುಳಿತು ಕೇಶವನ ಜೀವನಚರಿತ್ರೆಯನ್ನು ಓದುತ್ತಿದ್ದಾನೆ.
ಶ್ರೀರಾಮಕೃಷ್ಣರು ಪೂರ್ಣನಿಗೆ: “ಇನ್ನೂ ಹತ್ತಿರ ಬಂದು ಕುಳಿತುಕೊ.”
ಗಿರೀಶ ಮಾಸ್ಟರಿಗೆ: “ಈ ಹುಡುಗ ಯಾರು?”
ಗಿರೀಶನಿಗೆ ನೇರವಾಗಿ ಉತ್ತರ ಕೊಟ್ಟರೆ, ಪರರ ಮೂಲಕ ಪೂರ್ಣ ಇಲ್ಲಿಗೆ ಬಂದಿದ್ದುದು ಆತನ ಮನೆಯವರಿಗೆ ಗೊತ್ತಾಗಬಹುದು ಎಂಬ ಭಯ ಮಾಸ್ಟರಿಗೆ. ಅದಕ್ಕಾಗಿ ಆತ ಗಿರೀಶನಿಗೆ ಹೇಳಿದ : “ಆತನೆ? ಒಬ್ಬ ಹುಡುಗ.”
ಗಿರೀಶ (ನಗುತ್ತ): “ಅದನ್ನು ಹೇಳುವುದಕ್ಕೆ ಒಂದು ಭೂತ ಪಿಶಾಚಿ ಏನೂ ಬೇಕಾಗಿಲ್ಲ.”
ಪರಮಹಂಸರು ಮತ್ತು ಪೂರ್ಣ ಮೆಲ್ಲಮೆಲ್ಲಗೆ ಮಾತನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನಾನು ಹೇಳಿದ ಹಾಗೆಲ್ಲ ನಡೆದುಕೊಳ್ಳುತ್ತ ಇದ್ದೀಯೇನು?”
ಪೂರ್ಣ: “ಹೌದು, ನಡೆದುಕೊಳ್ಳುತ್ತಾ ಇದ್ದೇನೆ.”
ಶ್ರೀರಾಮಕೃಷ್ಣರು: “ನಿನಗೆ ಸ್ಪಪ್ನ ಬೀಳುತ್ತದೆಯೇನು? ಅದರಲ್ಲಿ ನೀನು ಬೆಂಕಿಯ ಜ್ವಾಲೆ, ಪಂಜಿನ ಬೆಳಕು, ಮುತ್ತೈದೆ, ಸ್ಮಶಾನ ಇವನ್ನೆಲ್ಲ ಕಂಡಿದ್ದೀಯೇನು? ಇವನ್ನೆಲ್ಲ ಸ್ವಪ್ನದಲ್ಲಿ ಕಾಣುವುದು ಶುಭಸೂಚಕವಾದದ್ದು.
ಪೂರ್ಣ: “ನಿಮ್ಮನ್ನು ನೋಡಿದ್ದೇನೆ. ನೀವು ಕುಳಿತುಕೊಂಡು ನನಗೆ ಏನೋ ಹೇಳುತ್ತಿದ್ದಿರಿ.”
ಶ್ರೀರಾಮಕೃಷ್ಣರು: “ಏನು, ಉಪದೇಶವೇನು? ಎಲ್ಲಿ ಸ್ವಲ್ಪ ಹೇಳು ನೋಡೋಣ.”
ಪೂರ್ಣ: “ಜ್ಞಾಪಕದಲ್ಲಿಲ್ಲ.”
ಶ್ರೀರಾಮಕೃಷ್ಣರು: “ಹೋಗಲಿ ಬಿಡು. ಅದು ಬಹಳ ಒಳ್ಳೆಯ ಸ್ವಪ್ನ. ನೀನು ಮುಂದುವರಿಯುತ್ತೀಯೆ. ನನ್ನ ಕಡೆಗೆ ತಾನೆ ನಿನ್ನ ಮನಸ್ಸು ಎಳೆಯುತ್ತಿರೋದು?”
ಕೆಲವು ನಿಮಿಷಗಳ ನಂತರ ಪರಮಹಂಸರು ಪೂರ್ಣನಿಗೆ ಹೇಳಿದರು, “ಏನು ನೀನು ಅಲ್ಲಿಗೆ ಹೋಗುವುದಿಲ್ಲ? ಅಲ್ಲಿಗೆ ಎಂದರೆ ದಕ್ಷಿಣೇಶ್ವರಕ್ಕೆ.” ಪೂರ್ಣ ಹೇಳಿದ, “ನಾನು ಮಾತು ಕೊಡಲಾರೆ.”
ಶ್ರೀರಾಮಕೃಷ್ಣರು: “ಏಕೆ? ಅಲ್ಲಿ ನಿನ್ನ ಸಂಬಂಧಿಗಳು ಯಾರೊ ಒಬ್ಬರು ಇದ್ದಾರೆ, ಅಲ್ಲವೆ?”
ಪೂರ್ಣ: “ಹೌದು, ಇದ್ದಾರೆ. ಆದರೆ ಅಲ್ಲಿಗೆ ಹೋಗುವುದು ಸರಿಯಲ್ಲ.”
ಗಿರೀಶ ಕೇಶವಸೇನನ ಜೀವನಚರಿತ್ರೆ ಓದುತ್ತಿದ್ದಾನೆ. ಅದನ್ನು ಬ್ರಾಹ್ಮ ಸಮಾಜದ ತ್ರೈಲೋಕ್ಯ ಬರೆದಿದ್ದಾನೆ. ಅದರಲ್ಲಿ ತ್ರೈಲೋಕ್ಯ ಒಂದು ಕಡೆ ಬರೆದಿದ್ದಾನೆ: ‘ಹಿಂದೆ ಪರಮಹಂಸರು ಸಂಸಾರವನ್ನು ಒಂದು ವಿಶೇಷವಾದ ವಿರಕ್ತದೃಷ್ಟಿಯಿಂದ ನೋಡುತ್ತಿದ್ದರು; ಆದರೆ ಕೇಶವಸೇನನೊಡನೆ ಬೆರೆತು ಅವರು ತಮ್ಮ ದೃಷ್ಟಿಯನ್ನು ಬದಲಾಯಿಸಿ ಕೊಂಡಿದ್ದಾರೆ, ಸಂಸಾರದಲ್ಲಿ ಇದ್ದರೂ ಆಧ್ಯಾತ್ಮಿಕ ಜೀವನದಲ್ಲಿ ಮುಂದುವರಿಯಬಹುದು, ಅಂತ, ತ್ರೈಲೋಕ್ಯ ಹೀಗೆ ಬರೆದಿರುವುದನ್ನು ಅನೇಕರು ಓದಿ ಅದನ್ನು ಪರಮಹಂಸರಿಗೆ ತಿಳಿಸಿದ್ದರು. ಇಂದು ಅದನ್ನು ಪರಮಹಂಸರ ಮುಂದೆಯೂ ಭಕ್ತರು ಓದಿದರು. ಭಕ್ತರು ಇಚ್ಛೆಪಟ್ಟಿದ್ದಾರೆ, ಇಂದು ಆ ವಿಷಯವಾಗಿ ತ್ರೈಲೋಕ್ಯನೊಡನೆ ಮಾತುಕತೆಯಾಡ ಬೇಕೆಂದು.
ಆ ಪುಸ್ತಕ ಗಿರೀಶನ ಕೈಯಲ್ಲಿ ಇರುವುದನ್ನು ನೋಡಿ ಪರಮಹಂಸರು ಗಿರೀಶ, ಮಾಸ್ಟರ್, ರಾಮ ಮೊದಲಾದ ಭಕ್ತರಿಗೆ ಹೇಳುತ್ತಿದ್ದಾರೆ, “ಇವರು ಸಂಸಾರದಲ್ಲಿಯೇ ನಿರತರಾಗಿದ್ದಾರೆ. ಅದಕ್ಕಾಗಿಯೇ ಇವರು ‘ಸಂಸಾರ, ಸಂಸಾರ’ ಅಂತ ಹೊಡೆದುಕೊಳ್ಳು ತ್ತಿರುವುದು. ಇವರು ಕಾಮಕಾಂಚನದಲ್ಲಿಯೇ ಮುಳುಗಿಹೋಗಿದ್ದಾರೆ. ಆದರೆ ಭಗವಂತನ ಸಾಕ್ಷಾತ್ಕಾರ ದೊರೆತ ಮೇಲೆ ಈ ವಿಧವಾದ ಮಾತುಗಳು ಅವರ ಬಾಯಿಂದ ಬರುವುದಿಲ್ಲ. ಭಗವದಾನಂದ ದೊರೆತ ಮೇಲೆ ಸಂಸಾರದ ಆನಂದ ಕಾಕಪಿಷ್ಟದೋಪಾದಿ ಯಲ್ಲಿ ತೋರಿಬರುತ್ತದೆ. ನಾನು ಪ್ರಾರಂಭದಲ್ಲಿಯೇ ಎಲ್ಲವನ್ನೂ ತ್ಯಜಿಸಿಬಿಟ್ಟೆ. ಪ್ರಾಪಂಚಿಕರ ಸಹವಾಸವನ್ನೇನೊ ತ್ಯಜಿಸಿಯೇಬಿಟ್ಟೆ. ಆದರೆ ಒಮ್ಮೆ ಭಕ್ತರ ಸಂಗವನ್ನೂ ತ್ಯಜಿಸಿಬಿಟ್ಟಿದ್ದೆ. ಆಗ ನೋಡುತ್ತೇನೆ, ಭಕ್ತರು ಒಬ್ಬೊಬ್ಬರಾಗಿ ಸತ್ತುಹೋಗುತ್ತಿದ್ದಾರೆ. ಅದನ್ನು ನೋಡಿ ನನಗೆ ತಾಳಲಾರದ ದುಃಖವಾಯಿತು. ಆದರೆ ಈಗ ಕೆಲವು ಮಂದಿ ಭಕ್ತರೊಡನೆ ಬೆರೆಯುತ್ತಿದ್ದೇನೆ.”
ಹಿಂದಿರುಗಿ ಬರುತ್ತೇನೆ ಎಂದು ಹೇಳಿ ಗಿರೀಶ ಮನೆಗೆ ಹೋದ.
ಜಯಗೋಪಾಲಸೇನನನ್ನು ಕರೆದುಕೊಂಡು ತ್ರೈಲೋಕ್ಯ ಬಂದಿದ್ದಾನೆ. ಅವರು ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡರು. ಪರಮಹಂಸರು ಅವರ ಕ್ಷೇಮ ಸಮಾಚಾರವನ್ನು ವಿಚಾರಿಸಿದರು. ಚಿಕ್ಕ ನರೇನ ಕೊಠಡಿಗೆ ಬಂದು ಪರಮಹಂಸರಿಗೆ ಪ್ರಣಾಮಮಾಡಿದ. ಅವರು, “ನೀನು ಕಳೆದ ಶನಿವಾರ ಏಕೆ ಬರಲಿಲ್ಲ?” ಅಂತ ಆತನನ್ನು ಕೇಳಿದರು.
ತ್ರೈಲೋಕ್ಯ ಹಾಡಲು ಸಿದ್ಧನಾಗುತ್ತಿದ್ದಾನೆ.
ಶ್ರೀರಾಮಕೃಷ್ಣರು: “ಆಹ! ಅಂದು ನೀನು ಆನಂದಮಯಿ ಹಾಡನ್ನು ಹಾಡಿದೆ. ಎಷ್ಟು ಮಧುರವಾಗಿತ್ತು! ಉಳಿದವರು ಹಾಡುವಾಗ ಅವರದು ನನಗೆ ಸಪ್ಪೆಯಾಗಿ ತೋರುತ್ತದೆ. ಅಂದು ನರೇಂದ್ರನ ಹಾಡೂ ಸಪ್ಪೆಯಾಗಿ ಕಂಡಿತು. ಅದೇ ಹಾಡುಗಳು ಇಂದೂ ನಡೆಯಲಿ.”
ತ್ರೈಲೋಕ್ಯ ಹಾಡುತ್ತಿದ್ದಾನೆ:
ಜಯ ಶಚಿನಂದನ ಗೌರ ಗುಣಾಕರ
ಪ್ರೇಮ ಪರಶುಮಣಿ ರಸಜಲಧಿ.
ಕನಕವರ್ಣದಲಿ ಕಣ್ಗಳ ಮೋಹಿಪ
ಸುಂದರ ಮೂರುತಿ ಪರಮನಿಧಿ.
ಆಜಾನುಲಂಬಿತ ಮೃಣಾಲ ಕೋಮಲ
ಪ್ರೇಮ ಪ್ರಸಾದ ಕರಯುಗಲ.
ಅನುಪಮ ತೇಜದಿ ಅಮೃತ ಸೂಸುವ
ಪ್ರೇಮಪೂರ್ಣವೀ ಮುಖಕಮಲ.
ತುಂಬುಗೆನ್ನೆಯಲಿ ಇಳಿದ ಕುಂತಲದಿ
ಪ್ರೇಮ ವಿಹ್ವಲನು ಶೋಭಿಪನು.
ಮಹಾಭಾವದಲಿ ನಿತ್ಯಮಂಡಿತನು
ಹರಿನುತಿಯಲಿ ಮುಳುಗೇಳುವನು.
ಮದಿಸಿದಾನೆಯೊಲು ನರ್ತಿಸುವೀತನು
ಸಾಧುಗಳೆದೆಯಲಿ ರಂಜಿಪನು.
ಹರಿಗುಣಗಾಯಕ ಪ್ರೇಮಾಬ್ಧಿ ನಾಯಕ
ಅಲೋಕಸಾಮಾನ್ಯ ಚೈತನ್ಯನು.
ಹರಿಹರಿ ಎನ್ನುತ ಇರವನೆ ಮರೆಯುತ
ಅಸ್ಪೃಶ್ಯರನೆದೆಗಪ್ಪುವನು.
‘ನನ್ನ ಹೃದಯನಿಧಿ ಎಲ್ಲಿರುವನು ಹರಿ?’
ಎನ್ನುತ ಅಳುವನು ಹೊರಳುವನು!
ಕದಂಬಕುಸುಮಗಳರಳಿದಂತೆ, ಅದೊ
ರೋಮರೋಮವೂ ನಿಂತಿಹುದು!
ತನ್ನ ಇರವನೆ ಮರೆತಾ ದೇಹವು
ಧೂಳಿಯೊಳೆಂತಹ ಹೊರಳುವುದು!
ಜಯ ಗೌರಾಂಗನೆ, ಹರಿಲೀಲಾಸ್ಪದ,
ಪ್ರೇಮದೂಟೆ ನೀನಾಗಿರುವೆ.
ದೀನಜನಾಶ್ರಿತ, ಭಕ್ತ ಹೃದಯದಲಿ
ಚಂದಿರನಂದದಿ ರಾಜಿಸುವೆ!
ಪರಮಹಂಸರು ಒಂದೆರಡು ನಿಮಿಷಗಳ ಮಟ್ಟಿಗೆ ಎದ್ದು ಕೊಠಡಿಯಿಂದ ಹೊರಕ್ಕೆ ಹೋದರು. ಪರದೆಯ ಹಿಂದೆ ಕುಳಿತಿದ್ದ ಭಕ್ತೆಯರು ಪರಮಹಂಸರ ದರ್ಶನ ಪಡೆಯಲು ಬಹಳ ಕಾತರರಾಗಿದ್ದಾರೆ. ಅವರಿಗೆ ದರ್ಶನಕೊಟ್ಟು ಬರುತ್ತಾರೆ. ತ್ರೈಲೋಕ್ಯನ ಹಾಡುಗಾರಿಕೆ ಮುಂದುವರಿಯುತ್ತದೆ.
ಪರಮಹಂಸರು ಮತ್ತೆ ಕೊಠಡಿಗೆ ಹಿಂದಿರುಗಿ ಬಂದು ತ್ರೈಲೋಕ್ಯನಿಗೆ ಹೇಳಿದರು, “ಸ್ವಲ್ಪ ಹೊತ್ತು ಆನಂದಮಯಿಯ ಮೇಲಿನ ಹಾಡನ್ನು ಹಾಡು.”
ತ್ರೈಲೋಕ್ಯ ಹಾಡುತ್ತಿದ್ದಾನೆ:
ಮಾನವ ಸಂತಾನದೆಡೆಗೆ ಎನಿತು ಕರುಣೆ ನಿನ್ನದು!
ಅದು ನೆನೆಯಲು ಕಂಬನಿಯೇ ಕೋಡಿಯೊಡೆದು ಹರಿವುದು!
ಹಾಡನ್ನು ಕೇಳುತ್ತ ಕೇಳುತ್ತ ಇದ್ದ ಹಾಗೆಯೇ ಚಿಕ್ಕ ನರೇನ ಗಾಢ ಧ್ಯಾನದಲ್ಲಿ ಮುಳುಗಿ ಹೋಗಿದ್ದಾನೆ. ಆತ ಒಂದು ಮರದ ದಿಮ್ಮಿಯೋಪಾದಿಯಲ್ಲಿ ಅಲುಗಾಡದೆ ಕುಳಿತಿದ್ದಾನೆ. ಪರಮಹಂಸರು ಮಾಸ್ಟರಿಗೆ ಹೇಳುತ್ತಿದ್ದಾರೆ, “ನೋಡು ಆತನದು ಎಂಥ ಗಾಢವಾದ ಧ್ಯಾನ! ಸಂಪೂರ್ಣ ಬಾಹ್ಯಜ್ಞಾನಶೂನ್ಯನಾಗಿದ್ದಾನೆ!” ಅಂತ.
ತ್ರೈಲೋಕ್ಯ ಆ ಹಾಡನ್ನು ಹಾಡಿ ಮುಗಿಸಿದ. ಪರಮಹಂಸರ ಇಚ್ಛೆಗನುಸಾರ ತ್ರೈಲೋಕ್ಯ ಈಗ ಈ ಹಾಡನ್ನು ಹಾಡಲಾರಂಭಿಸಿದ್ದಾನೆ:
ನನ್ನನೂ ಉನ್ಮತ್ತನಾಗಿಸೆಲೆ ತಾಯೆ,
ನಿನ್ನ ಭಕ್ತಿಯ ಮಧುರ ಮಧುಪಾನದಿಂದ!…..
ರಾಮ ಹೇಳಿದ, “ಒಂದು ಸ್ವಲ್ಪ ಹೊತ್ತು ಹರಿನಾಮ ಭಜನೆ ನಡೆಯಲಿ” ಅಂತ. ತ್ರೈಲೋಕ್ಯ ಹಾಡುತ್ತಿದ್ದಾನೆ:
ಹರಿನಾಮವ ಜಪಿಸೊ ಮನ
ಹರಿನಾಮವ ನುತಿಸೊ ಮನ
ಹರಿನಾಮವ ಗಾನಗೈ ಓ ಮನವೆ.
ನೆಲದಲಿ ಜಲದಲಿ
ಗಾಳಿ ಬೆಂಕಿಯಲಿ
ಸೂರ್ಯಚಂದ್ರರಲಿ
ಅಖಂಡ ವಿಶ್ವದಿ ಹರಿಯಿರಲು,
ಹರಿನಾಮವ ನುತಿಸುತ ನೀ
ಭವಸಾಗರವನು ದಾಟೋ ಮನವೆ.
ಮಾಸ್ಟರ್ ಮೆತ್ತಮೆತ್ತಗೆ ತ್ರೈಲೋಕ್ಯನಿಗೆ ಹೇಳುತ್ತಿದ್ದಾನೆ, “ದಯವಿಟ್ಟು- ‘ಗೌರಾಂಗ ನಿತ್ಯಾನಂದರೆನ್ನುವ’ ಹಾಡನ್ನು ಹಾಡು” ಅಂತ.
ಪರಮಹಂಸರು ಕೂಡ ತ್ರೈಲೋಕ್ಯನಿಗೆ ಅದೇ ಹಾಡನ್ನು ಹಾಡುವಂತೆ ಹೇಳಿದರು. ತ್ರೈಲೋಕ್ಯ ಮತ್ತು ಭಕ್ತರೆಲ್ಲರೂ ಕೂಡಿ ಆ ಹಾಡನ್ನು ಹಾಡುತ್ತಿದ್ದಾರೆ. ಪರಮಹಂಸರೂ ಕೂಡ ಅವರೊಡನೆ ಸೇರಿಕೊಂಡು ಹಾಡಿದರು. ಆ ಹಾಡನ್ನು ಹಾಡಿ ಮುಗಿಸಿದ ನಂತರ ಪರಮಹಂಸರು ಹಾಡಲಾರಂಭಿಸಿದ್ದಾರೆ :
ಹರಿನಾಮವ ನುತಿಸಿ ಆನಂದಬಾಷ್ಪವನು
ಕರೆವಣ್ಣತಮ್ಮದಿರು, ಇವರು ನೋಡು!…..
ಪರಮಹಂಸರು ಮತ್ತೆ ಹಾಡಿದರು:
ಗೌರಾಂಗನು ಹುಟ್ಟಿದೂರು
ಅವನ ಪ್ರೇಮ ಹಿಲ್ಲೋಲದಿ
ಸ್ಪಂದಿಸುತಿದೆ ಮೋದದಿ!
ಮತ್ತೆ:
ಯಾರವರು? ಹರಿನಾಮವನು ನುತಿಸುತ್ತ
ಬೀದಿಯಲ್ಲಿ ನಡೆಯುವವರು!
ಓ, ನೋಡು; ಗೌರಾಂಗ ನಿತ್ಯಾನಂದರೆನ್ನುವ
ದಿವ್ಯ ಸೋದರವರ್ಯರು!
ಮಂಡೆ ಬೋಳಿಸಿಕೊಂಡು ತುಂಡು ಅರಿವೆಯನುಟ್ಟು
ಹುಚ್ಚರಂದದಿ ಅವರು ಅಲೆಯುತಿಹರು.
ಚಿಕ್ಕ ನರೇನ ಇನ್ನೇನು ಹೊರಡುವುದರಲ್ಲಿದ್ದಾನೆ.
ಶ್ರೀರಾಮಕೃಷ್ಣರು: “ನೀನು ನಿನ್ನ ತಂದೆತಾಯಿಗಳಿಗೆ ವಿಶೇಷವಾದ ರೀತಿಯಲ್ಲಿ ಶ್ರದ್ಧಾ ಭಕ್ತಿಯನ್ನು ತೋರಿಸು; ಆದರೆ ಅವರು ನಿನ್ನ ಭಗವಂತನ ದಾರಿಗೆ ಅಡ್ಡಲಾಗಿ ಬಂದರು ಅಂದರೆ, ಅವರ ಮಾತನ್ನು ನೀನು ಸ್ವಲ್ಪವೂ ಕೇಳಬೇಕಾಗಿಲ್ಲ. ಆಗ ಧೈರ್ಯ ವಾಗಿ ಎದ್ದುನಿಂತು ಸೊಂಟ ಕಟ್ಟಿ, ‘ಈ ನೀಚ ತಂದೆ!’ -ಅಂತ ಹೇಳಲೂ ಸಿದ್ಧನಾಗಿರ ಬೇಕು.”
ಚಿಕ್ಕ ನರೇನ: “ನಿಜವಾಗಿಯೂ ನನಗೆ ಭಯ ಎಂಬುದೇ ಇಲ್ಲ.”
ಗಿರೀಶ ಮತ್ತೆ ಹಿಂದಿರುಗಿ ಬಂದಿದ್ದಾನೆ. ಪರಮಹಂಸರು ತ್ರೈಲೋಕ್ಯನಿಗೆ ಆತನ ಪರಿಚಯವನ್ನು ಮಾಡಿಕೊಟ್ಟರು. ಬಳಿಕ ಅವರಿಬ್ಬರಿಗೂ, “ನೀವಿಬ್ಬರೂ ಸ್ವಲ್ಪ ಹೊತ್ತು ಮಾತುಕತೆಗಳಾಡುತ್ತಿರಿ” ಅಂತ ಹೇಳಿದರು. ಒಂದು ಸ್ವಲ್ಪ ಹೊತ್ತಾದ ಮೇಲೆ ತ್ರೈಲೋಕ್ಯ ನಿಗೆ ಹೇಳಿದರು, “ದಯವಿಟ್ಟು ಆ ಹಾಡನ್ನು ಮತ್ತೆ ಹಾಡು.”
ತ್ರೈಲೋಕ್ಯ ಹಾಡುತ್ತಿದ್ದಾನೆ:
ಜಯ ಶಚಿನಂದನ ಗೌರ ಗುಣಾಕರ
ಪ್ರೇಮಪರುಷಮಣಿ ರಸಜಲಧಿ.
ಪರಮಹಂಸರು ಆ ಹಾಡನ್ನು ಕೇಳುತ್ತಿದ್ದ ಹಾಗೆಯೇ ಭಾವಾವಿಷ್ಟರಾಗಿ ಎದ್ದು ನಿಂತು ಸಮಾಧಿಸ್ಥರಾಗಿಬಿಟ್ಟಿದ್ದಾರೆ.
ಕಿಂಚಿತ್ ಪ್ರಕೃತಿಸ್ಥರಾಗಿ ತ್ರೈಲೋಕ್ಯನನ್ನು ವಿನಯದಿಂದ ಕೇಳಿಕೊಳ್ಳುತ್ತಿದ್ದಾರೆ. “ದಯವಿಟ್ಟು- ‘ಓ! ಎಂಥ ನೋಟವ ಕಂಡೆನು!’ ಎಂಬ ಹಾಡನ್ನು ಹಾಡು.”
ತ್ರೈಲೋಕ್ಯ ಹಾಡುತ್ತಿದ್ದಾನೆ:
ಓ! ಎಂಥ ನೋಟವ ಕಂಡೆನು!
ಕೇಶವ ಭಾರತಿಯ ಕುಟಿಯೊಳಗೆ ನಾ
ನೆಂಥ ನೋಟವ ಕಂಡೆನು……
ಹಾಡುವುದು ಮುಗಿಯಿತು. ಸಾಯಂಕಾಲವಾಗಿದೆ. ಭಕ್ತರು ಇನ್ನೂ ಪರಮಹಂಸ ರನ್ನು ಸುತ್ತುಗಟ್ಟಿ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ರಾಮನಿಗೆ): “ಇಂದು ಯಾವ ಪಕ್ಕವಾದ್ಯವೂ ಇರಲಿಲ್ಲ. ಒಳ್ಳೆಯ ಪಕ್ಕವಾದ್ಯಗಳಿದ್ದರೆ, ಆಗ ಸಂಗೀತ ಬಹಳವಾಗಿ ಕಳೆಗೂಡುತ್ತದೆ. (ನಗುತ್ತ) ಬಲರಾಮ ಯಾವ ರೀತಿಯಾಗಿ ಉತ್ಸವದ ವ್ಯವಸ್ಥೆ ಮಾಡುತ್ತಾನೆ ಎಂಬುದು ಗೊತ್ತೆ? ಆತನನ್ನು ಬ್ರಾಹ್ಮಣನ ಹಸುವಿಗೆ ಹೋಲಿಸಬಹುದು; ಅದು ಕಡಿಮೆ ತಿಂದು ಧಾರಾಕಾರ ವಾಗಿ ಹಾಲು ಕರೆಯಬೇಕು. (ಎಲ್ಲರೂ ನಗುತ್ತಿದ್ದಾರೆ). ಬಲರಾಮನ ಭಾವನೆ, ಗಾಯಕನೇ ಡೋಲನ್ನು ಬಾರಿಸಿಕೊಳ್ಳಬೇಕು ಮತ್ತು ಹಾಡಲೂ ಬೇಕು ಅಂತ! (ಎಲ್ಲರೂ ನಗುತ್ತಿದ್ದಾರೆ.)
ಸಾಯಂಕಾಲವಾಗಿದೆ. ಬಲರಾಮನ ಬೈಠಕ್ಖಾನೆಗೂ ಮತ್ತು ವರಾಂಡಕ್ಕೂ ದೀಪ ಹಚ್ಚಿ ಇಟ್ಟಿದ್ದಾರೆ. ಪರಮಹಂಸರು ಜಗನ್ಮಾತೆಗೆ ಪ್ರಣಾಮಮಾಡಿ ಭಗವಂತನ ನಾಮಜಪ ಮಾಡಲಾರಂಭಿಸಿದ್ದಾರೆ. ಭಕ್ತರೆಲ್ಲರೂ ಅವರ ಸುತ್ತ ಕುಳಿತು ಅವರು ಮಾಡುತ್ತಿದ್ದ ಮಧುರ ನಾಮಜಪವನ್ನು ಕೇಳುತ್ತಿದ್ದಾರೆ. ಪ್ರಾಪಂಚಿಕ ಜೀವನದ ಸಂಬಂಧವಾಗಿ ಪರಮಹಂಸರ ಭಾವನೆ ಪರಿವರ್ತನೆ ಹೊಂದಿರುವುದರ ವಿಷಯವಾಗಿ ತ್ರೈಲೋಕ್ಯನೊಡನೆ ಮಾತುಕತೆ ಯಾಡಬೇಕೆಂದು ಭಕ್ತರು ನಿರ್ಧರಿಸಿದ್ದಾರೆ, ಗಿರೀಶ ಆ ಮಾತು ಎತ್ತಿದ.
ಗಿರೀಶ (ತ್ರೈಲೋಕ್ಯನಿಗೆ): “ಪರಮಹಂಸರು ಕೇಶವಚಂದ್ರಸೇನನೊಡನೆ ಪರಿಚಯ ಮಾಡಿಕೊಂಡ ನಂತರ ಸಂಸಾರ ಸಂಬಂಧವಾಗಿ ಅವರಿಗಿದ್ದ ಭಾವನೆ ಪರಿವರ್ತನೆ ಹೊಂದಿತು ಎಂಬುದಾಗಿ ನೀನು ಕೇಶವಚಂದ್ರಸೇನನ ಜೀವನಚರಿತ್ರೆಯಲ್ಲಿ ಬರೆದಿದ್ದೀಯೆ; ಆದರೆ ಅದು ಸತ್ಯವಾದುದಲ್ಲ.”
ಶ್ರೀರಾಮಕೃಷ್ಣರು (ತ್ರೈಲೋಕ್ಯ ಮೊದಲಾದವರಿಗೆ): “ಭಗವದಾನಂದ ದೊರೆಯಿತು ಅಂದರೆ ಸಂಸಾರದ ಆನಂದ ರುಚಿಸದು. ಭಗವದಾನಂದವನ್ನು ಸವಿಯಿತು ಅಂದರೆ, ಸಂಸಾರ ಬಹಳ ಸಪ್ಪೆಯಾಗಿ ತೋರುತ್ತದೆ. ಕಾಶ್ಮೀರದ ಶಾಲು ದೊರೆಯುತ್ತಿರುವಾಗ ಯಾರಿಗೆ ತಾನೆ ದುಪ್ಪಟಿ ಬೇಕು?”
ತ್ರೈಲೋಕ್ಯ: “ಯಾರು ಸಂಸಾರಿಗಳಾಗಬೇಕೆಂದು ಇಚ್ಛೆಪಡುತ್ತಾರೊ ಅವರಿಗಾಗಿ ನಾನು ಹಾಗೆ ಬರೆದಿರುವುದು; ಅದು ತ್ಯಾಗಿಗಳಿಗೆ ಸಂಬಂಧಪಟ್ಟುದುದಲ್ಲ.”
ಶ್ರೀರಾಮಕೃಷ್ಣರು: “ನೀನು ಏನು ಮಾತನಾಡುವುದು? ಸಂಸಾರದಲ್ಲಿ ಇದ್ದುಕೊಂಡು ಆಧ್ಯಾತ್ಮಿಕ ಉನ್ನತಿ ಪಡೆಯಬಹುದು ಅಂತ ಯಾರು ಹೇಳುತ್ತಿದ್ದಾರೆ? ಅವರಿಗೇನಾದರೂ ಒಮ್ಮೆ ಭಗವದಾನಂದ ದೊರೆತುದೇ ಆದರೆ, ಬಳಿಕ ಅವರಿಗೆ ಅದರ ವಿನಾ ಬೇರೆ ಏನೂ ರುಚಿಸದು. ಅವರ ಸಾಂಸಾರಿಕ ಕೆಲಸಕಾರ್ಯಗಳ ಮೇಲಿನ ಆಸಕ್ತಿ ಕಡಿಮೆ ಯಾಗುತ್ತ ಬರಲಾರಂಭಿಸುತ್ತದೆ. ಕ್ರಮೇಣ ಅವರ ಭಗವದಾನಂದ ಆ ರೀತಿಯಾಗಿ ವೃದ್ಧಿವೃದ್ಧಿಯಾಗುತ್ತಾ ಬರುತ್ತದೆ. ಬಳಿಕ ಅವರ ಕೈಯಲ್ಲಿ ಯಾವ ಸಾಂಸಾರಿಕ ಕೆಲಸಕಾರ್ಯ ಗಳೂ ಸಾಗುವ ಹಾಗೇ ಇಲ್ಲ. ಕೇವಲ ಆ ಆನಂದಕ್ಕಾಗಿಯೇ ಹುಡುಕಾಡುತ್ತಿದ್ದಾರೆ. ಭಗವದಾನಂದದ ಎದುರು ವಿಷಯದಾನಂದ, ಸಂಭೋಗಾನಂದವೆ! ಅವರೇನಾದರೂ ಒಮ್ಮೆ ಭಗವದಾನಂದದ ಸವಿಯನ್ನು ಸವಿದರು ಅಂದರೆ ಅವರು ಎಂದೆಂದಿಗೂ ಅದರ ಹಿಂದೆಯೇ ಓಡುತ್ತಿರುತ್ತಾರೆ. ಅಂಥವರಿಗೆ ಈ ಸಂಸಾರ ಇದ್ದರೂ ಒಂದೆ, ಸತ್ತರೂ ಒಂದೆ.
“ಚಾತಕಪಕ್ಷಿಯ ಗಂಟಲು ತೃಷೆಯಿಂದ ಒಣಗಿಹೋಗಿ ಅದು ಇನ್ನೇನು ಸಾಯುವುದರಲ್ಲಿದೆ. ಅದರ ಸುತ್ತಲೂ ಎಷ್ಟೊಂದು ಪುಷ್ಕರಣಿಗಳಿವೆಯೋ, ಎಷ್ಟೊಂದು ನದಿಗಳಿವೆಯೋ, ಅಲ್ಲೆಲ್ಲಾ ಮತ್ತು ಏಳು ಸಮುದ್ರಗಳಲ್ಲೂ ನೀರು ಸುಮ್ಮನೆ ತುಂಬಿದೆ. ಆದರೂ ಅದು ಅವುಗಳ ನೀರನ್ನು ಮುಟ್ಟದು. ಗಂಟಲು ಒಡೆದು ಒಣಗಿಹೋಗುತ್ತಿದೆ, ಆದರೂ ಕುಡಿಯದು. ಸ್ವಾತಿ ನಕ್ಷತ್ರದ ಮಳೆಯ ನೀರಿಗಾಗಿಯೇ ‘ಹಾ’ ಎಂದು ಬಾಯಿ ತೆರೆದುಕೊಂಡು ಕುಳಿತಿರುತ್ತದೆ. ‘ಚಾತಕಪಕ್ಷಿಗೆ ಸ್ವಾತಿ ಮಳೆಯ ನೀರು ವಿನಾ ಉಳಿದ ನೀರೆಲ್ಲಾ ಬರೀ ಧೂಳು ಇದ್ದ ಹಾಗೆ.’
“ಜನರು ತಾವುಸಂಸಾರಮತ್ತು ಭಗವಂತ ಎರಡು ಕಡೆಗೂ ಮನಸ್ಸನ್ನಿಡುತ್ತೇವೆ ಅಂತ ಹೇಳುತ್ತಾರೆ. ಎಲ್ಲೋ ಒಂದು ಚಟಾಕು ಮದ್ಯವನ್ನು ಮಾತ್ರ ಕುಡಿದರೆ ಬಹುಶಃ ಮತ್ತನೂ ಆಗಿ ಜೊತೆಗೆ ಬಾಹ್ಯಪ್ರಜ್ಞೆಯನ್ನೂ ಇಟ್ಟುಕೊಂಡಿರಲು ಮನುಷ್ಯನಿಗೆ ಸಾಧ್ಯ ವಾಗಬಹುದು; ಆದರೆ ಚೆನ್ನಾಗಿ ಕುಡಿದವನಿಗೆ ಈ ಎರಡೂ ಸಾಧ್ಯವಾಗುವುದೆ?
“ಭಗವದಾನಂದ ದೊರೆತ ಮೇಲೆ, ಬೇರೆ ಯಾವುದೂ ರುಚಿಸದು. ಬಳಿಕ ಕಾಮ ಕಾಂಚನದ ಮಾತು ಕಿವಿಗೆ ಬಿತ್ತು ಅಂದರೆ, ಯಾರೊ ಎದೆಯನ್ನು ಗುದ್ದಿದ ಹಾಗೆ ಆಗುತ್ತದೆ. ಪ್ರಾಪಂಚಿಕರ ಸಾಂಸಾರಿಕ ಮಾತು ನನಗೆ ರುಚಿಸುತ್ತಿಲ್ಲ. ಯಾವಾಗ ಮನುಷ್ಯ ಭಗವಂತನ ದರ್ಶನಕ್ಕಾಗಿ ಹುಚ್ಚನಾಗಿಬಿಡುತ್ತಾನೊ ಆಗ ಆತನಿಗೆ ದುಡ್ಡು ಮುಂತಾದುವು ಯಾವುದೂ ಮನಸ್ಸಿಗೆ ಬೇಕಾಗದು.”
ತ್ರೈಲೋಕ್ಯ: “ಮಹಾಶಯರೆ, ಮನುಷ್ಯ ಸಂಸಾರದಲ್ಲಿ ಇರಬೇಕಾದರೆ ಆತನಿಗೆ ದುಡ್ಡು ಬೇಕೇ ಬೇಕು ಮತ್ತು ಸಂಚಯಮಾಡಿಯೂ ಇಟ್ಟುಕೊಳ್ಳಬೇಕು. ಆತ ದಾನ ಧರ್ಮಾದಿ-”
ಶ್ರೀರಾಮಕೃಷ್ಣರು: “ಏನು? ಮೊದಲು ಹಣ ಸಂಚಯ, ಬಳಿಕ ಭಗವಂತನೊ? ಜೊತೆಗೆ ನೀನು ದಾನ ಧರ್ಮ ದಯೆಯ ಕಾರ್ಯಗಳು ಎಂದು ಬೇರೆ ಹೇಳುತ್ತಿದ್ದೀಯೆ! ಸಂಸಾರಿ ತನ್ನ ಮಗಳ ಮದುವೆಗಾಗಿ ಸಹಸ್ರ ಸಹಸ್ರ ರೂಪಾಯಿ ಖರ್ಚುಮಾಡು ತ್ತಿರುತ್ತಾನೆ. ಅದೇ ಸಮಯದಲ್ಲಿ ಪಕ್ಕದ ಮನೆಯವರು ಹೊಟ್ಟೆಗಿಲ್ಲದೆ ಸಾಯುತ್ತಿರ ಬಹುದು. ಅವರಿಗೆ ಒಂದು ಹಿಡಿ ಅಕ್ಕಿ ಕೊಡುವುದಕ್ಕೂ ಆತನಿಗೆ ಬಹಳ ಕಷ್ಟವಾಗಿ ಕಾಣುತ್ತದೆ. ಒಂದು ಪಕ್ಷ ಕೊಟ್ಟರೂ ಬಹಳವಾಗಿ ಲೆಕ್ಕಾಚಾರ ಹಾಕಿ ಕೊಡುತ್ತಾನೆ. ಆತನ ಸುತ್ತಮುತ್ತಲೂ ಇರುವ ಜನರಿಗೆ ಹೊಟ್ಟೆಬಟ್ಟೆಗೆ ಗತಿಯಿಲ್ಲ; ಅದನ್ನು ಕಟ್ಟಿಕೊಂಡು ಇವನಿಗೇನು? ಆತ ತನಗೆತಾನೇ ಹೇಳಿಕೊಳ್ಳುತ್ತಾನೆ, ‘ಈ ಜನಕ್ಕೆಲ್ಲ ಹಾಸಿಗೆ ಹಾಕಲಾಗುವುದೆ? ಈ ದಟ್ಟದರಿದ್ರರು ಸತ್ತರೆ ಸಾಯಲೇಳು, ಇದ್ದರೆ ಇರಲೇಳು. ನಾನು ಮತ್ತು ನನ್ನ ಮನೆಯವರು ಸುಖಸೌಖ್ಯದಿಂದ ಇದ್ದರೆ ಸಾಕು’ ಅಂತ. ಇಂಥವರ ಬಾಯಿಂದ ಸಕಲ ಜೀವಿಗಳ ಹಿತಚಿಂತನೆ ಎಂಬ ಮಾತು!”
ತ್ರೈಲೋಕ್ಯ: “ಸಂಸಾರಿಗಳಲ್ಲಿಯೂ ಒಳ್ಳೆಯವರಿದ್ದಾರೆ. ಉದಾಹರಣೆಗೆ ಚೈತನ್ಯ ದೇವನ ಭಕ್ತ ಪುಂಡರೀಕ ವಿದ್ಯಾನಿಧಿಯನ್ನು ತೆಗೆದುಕೊಳ್ಳಿ. ಸಂಸಾರದಲ್ಲಿ ಇದ್ದನಲ್ಲ.”
ಶ್ರೀರಾಮಕೃಷ್ಣರು: “ಆತ ಭಗವಂತನ ಮದ್ಯವನ್ನು ಗಂಟಲಿನವರೆಗೆ ಮಾತ್ರ ಕುಡಿದಿದ್ದ. ಆತನೇನಾದರೂ ಇನ್ನು ಸ್ವಲ್ಪ ಜಾಸ್ತಿಯಾಗಿ ಕುಡಿದಿದ್ದರೆ ಸಾಂಸಾರಿಕನಾಗಿ ಇರುವುದಕ್ಕೆ ಆಗುತ್ತಿರಲಿಲ್ಲ.”
ತ್ರೈಲೋಕ್ಯ ಒಂದು ಶಬ್ದವನ್ನೂ ಮಾಡದೆ ಸುಮ್ಮನೆ ಕುಳಿತುಕೊಂಡ. ಮಾಸ್ಟರ್ ಗಿರೀಶನಿಗೆ ಗುಟ್ಟಾಗಿ ತಿಳಿಸಿದ. “ಹಾಗಾದರೆ ಆತ ಬರೆದಿರುವುದು ಸರಿಯಲ್ಲ.”
ಗಿರೀಶ (ತ್ರೈಲೋಕ್ಯನಿಗೆ): “ಹಾಗಾದರೆ ನೀನು ಬರೆದಿರುವುದು ಸರಿಯಲ್ಲ ತಾನೆ?”
ತ್ರೈಲೋಕ್ಯ: “ಏಕೆ ಸರಿಯಲ್ಲ? ಸಂಸಾರದಲ್ಲಿದ್ದು ಆಧ್ಯಾತ್ಮಿಕ ಜೀವನದಲ್ಲಿ ಮುಂದು ವರಿಯಬಹುದು. ಇವರು (ಪರಮಹಂಸರು) ಒಪ್ಪುತ್ತಿಲ್ಲವೇನು?”
ಶ್ರೀರಾಮಕೃಷ್ಣರು: “ಹೌದು, ಸಾಧ್ಯ. ಆದರೆ ಮೊದಲು ಜ್ಞಾನವನ್ನು ಪಡೆದು- ಭಗವಂತನ ಸಾಕ್ಷಾತ್ಕಾರವನ್ನು ಪಡೆದು ಕಳಂಕಸಾಗರದಲ್ಲಿ ಈಜಾಡಿದರೂ ಕಳಂಕ ಮಾತ್ರ ಆತನ ಶರೀರಕ್ಕೆ ತಾಗದು. ಬಳಿಕ ಆತ ಬದಿಯಲ್ಲಿ ವಾಸಿಸುವ ಮೀನಿನೋಪಾದಿಯಲ್ಲಿ ವಾಸಿಸಬಲ್ಲ. ಭಗವಂತನ ಸಾಕ್ಷಾತ್ಕಾರವನ್ನು ಪಡೆದ ನಂತರ ಆತ ವಾಸಿಸುವ ಸಂಸಾರ ವಿದ್ಯೆಯ ಸಂಸಾರವಾಗಿ ಪರಿಣಮಿಸುತ್ತದೆ. ಅದರಲ್ಲಿ ಕಾಮಕಾಂಚನದ ಗಂಧವೇ ಇರದು. ಆಗ ಕಣ್ಣಿಗೆ ಕಾಣಿಸಿಕೊಳ್ಳುವುದು ಕೇವಲ ಭಕ್ತಿ, ಭಕ್ತ, ಭಗವಾನ್ ಮಾತ್ರವೇ. ನೋಡು ನನಗೂ ಒಬ್ಬ ಪತ್ನಿ ಇದ್ದಾಳೆ, ಕೆಲವು ಪಾತ್ರೆ ಪದಾರ್ಥಗಳೂ ಇವೆ. ನಾನು ಕೆಲವು ಭಿಕ್ಷು ಭಿಕಾರಿಗಳಿಗೆ ಅನ್ನ ಹಾಕುತ್ತೇನೆ; ನಾನು ಭಕ್ತರಿಗಾಗಿ-ಉದಾಹರಣೆಗಾಗಿ ಹಾಬಿಯ ತಾಯಿ-ಇಲ್ಲಿಗೆ ಬಂದಾಗ ಚಿಂತನೆಮಾಡುತ್ತೇನೆ.
ಒಬ್ಬ ಭಕ್ತ (ತ್ರೈಲೋಕ್ಯನಿಗೆ): “ನಿಮ್ಮ ಪುಸ್ತಕದಲ್ಲಿ ಓದಿದೆ, ತಮಗೆ ಅವತಾರದಲ್ಲಿ ನಂಬಿಕೆ ಇಲ್ಲ ಅಂತ. ನೀವು ಚೈತನ್ಯದೇವನ ಸಂಬಂಧವಾಗಿ ಬರೆಯುವಾಗ ಹಾಗೆ ಬರೆದಿದ್ದೀರಿ.”
ತ್ರೈಲೋಕ್ಯ: “ಚೈತನ್ಯದೇವನೇ ಈ ಭಾವನೆಗೆ ವಿರುದ್ಧವಾಗಿ ಮಾತನಾಡಿದ್ದಾನೆ. ಒಮ್ಮೆ ಪುರಿಯಲ್ಲಿ ಅದ್ವೈತನೇ ಮೊದಲಾದ ಭಕ್ತರು ‘ಚೈತನ್ಯದೇವನೇ ಭಗವಂತ’ ಎಂಬ ಅರ್ಥವನ್ನು ಕೊಡುವ ಹಾಗೆ ಒಂದು ಹಾಡನ್ನು ಚೈತನ್ಯದೇವನ ಮುಂದೆ ಹಾಡಿದರು. ಅದನ್ನು ಕೇಳಿ ಚೈತನ್ಯದೇವ ಕೊಠಡಿಯ ಬಾಗಿಲುಗಳನ್ನೆಲ್ಲ ಹಾಕಿಕೊಂಡು ಒಳಗೆ ಕುಳಿತುಬಿಟ್ಟಿದ್ದ. ಭಗವಂತನ ಐಶ್ವರ್ಯಕ್ಕೆ ಮಿತಿ ಅನ್ನೋದೇ ಇಲ್ಲ. ಇವರೂ (ಪರಮಹಂಸರು) ಹೇಳುತ್ತಾರಲ್ಲ ಭಕ್ತ ಎಂಬುವವನು ಭಗವಂತನ ಬೈಠಕ್ಖಾನೆ ಅಂತ. ಯಾರೊ ಒಬ್ಬರು ತಮ್ಮ ಬೈಠಕ್ಖಾನೆಯನ್ನು ಬಹಳ ಚೆನ್ನಾಗಿ ಸಜ್ಜುಗೊಳಿಸಿದ್ದ ಮಾತ್ರಕ್ಕೆ, ಅವರ ಹತ್ತಿರ ಇನ್ನು ಬೇರೆ ಐಶ್ವರ್ಯ ಇಲ್ಲ ಅಂತ ಅರ್ಥವೇನು?”
ಗಿರೀಶ: “ಇವರು (ಪರಮಹಂಸರು) ಹೇಳುತ್ತಾರೆ, ಪ್ರೇಮವೇ ಭಗವಂತನ ಸಾರ ವಸ್ತು; ಯಾರ ಯಾರ ಮೂಲಕ ಈ ಪ್ರೇಮ ವ್ಯಕ್ತವಾಗುವುದೊ, ಅವರು ಮಾತ್ರವೇ ನಮಗೆ ಬೇಕು ಅಂತ. ಇವರು ಮತ್ತೆ ಹೇಳುತ್ತಾರೆ, ಹಸುವಿನ ಹಾಲು ಅದರ ಕೆಚ್ಚಲಿನ ಮುಖಾಂತರ ಹೊರಕ್ಕೆ ಬರುತ್ತದೆ; ಆದ್ದರಿಂದ ನಮಗೆ ಬೇಕಾಗಿರುವುದು ಕೆಚ್ಚಲು ಮಾತ್ರ; ನಮಗೆ ಹಸುವಿನ ಉಳಿದ ಅಂಗಗಳು-ಕಾಲು, ಬಾಲ, ಕೊಂಬು ಇವೇ ಮೊದಲಾದವು ಗಳು ಬೇಕಾಗಿಲ್ಲ ಅಂತ.”
ತ್ರೈಲೋಕ್ಯ: “ಆತನ ಪ್ರೇಮವೆಂಬ ಹಾಲು ಅನೇಕ ನಾಳಗಳ ಮೂಲಕ ಹರಿದು ಹೊರಕ್ಕೆ ಬರುತ್ತದೆ. ಆತ ಅನಂತ ಶಕ್ತಿಮಾನ್.”
ಗಿರೀಶ: “ಆದರೆ, ಪ್ರೇಮದ ಎದುರು ಬೇರೆ ಯಾವ ಶಕ್ತಿ ತಾನೆ ನಿಲ್ಲಬಹುದು?”
ತ್ರೈಲೋಕ್ಯ: “ಶಕ್ತಿ ಯಾರದೊ, ಆತ ಇಚ್ಛೆಪಟ್ಟರೆ ಸಾಧ್ಯ. ಸಕಲ ಶಕ್ತಿಗಳೂ ಆತನ ಕೈಯಲ್ಲೇ.”
ಗಿರೀಶ: “ಸಕಲ ಶಕ್ತಿಗಳೂ ಆತನ ಕೈಯಲ್ಲೇ ಎಂಬುದನ್ನೇನೊ ನಾನೂ ಒಪ್ಪುತ್ತೇನೆ. ಆದರೆ ಅವಿದ್ಯಾಶಕ್ತಿ ಎಂಬುದೊಂದು ವಸ್ತು ಇದೆಯಲ್ಲ ಅದು?”
ತ್ರೈಲೋಕ್ಯ: “ಅವಿದ್ಯೆ ಎಂಬುದು ಒಂದು ವಸ್ತುವೇನು? ಅವಿದ್ಯೆ ಎಂಬತಕ್ಕಂಥ ಒಂದು ವಸ್ತುವೇನಾದರೂ ಇದೆಯೇನು? ಬೆಳಕಿನ ಅಭಾವವೇ ಕತ್ತಲೆ. ಹಾಗೆ ಇದೂ ಒಂದರ ಅಭಾವ ಮಾತ್ರ. ಆತನ ಪ್ರೇಮಕ್ಕೆ ನಾವು ಹೆಚ್ಚು ಬೆಲೆಯನ್ನು ಕಟ್ಟುತ್ತಿರುವು ದೇನೋ ನಿಜ-ಆತನ ಬಿಂದು ನಮ್ಮ ಸಿಂಧು. ಕೇವಲ ಪ್ರೇಮವೇ ಭಗವಂತನ ಸಾರವಸ್ತು ಅಂತ ಹೇಳುವುದಾದರೆ, ನಾವು ಆತನನ್ನು ಸೀಮಾಬದ್ಧನನ್ನಾಗಿ ಮಾಡಿದ ಹಾಗೆ ಆಗುತ್ತದೆ.”
ಶ್ರೀರಾಮಕೃಷ್ಣರು (ತ್ರೈಲೋಕ್ಯ ಮೊದಲಾದವರಿಗೆ): “ಹೌದು, ಹೌದು ಅದು ನಿಜ. ಆದರೆ ಒಂದು ಚಟಾಕು ಮದ್ಯವೇ ನನ್ನನ್ನು ಮತ್ತನನ್ನಾಗಿ ಮಾಡಿಬಿಡುತ್ತದೆ. ಅಂಥಾದ್ದರಲ್ಲಿ ಸಾರಾಯಿ ಅಂಗಡಿಯಲ್ಲಿ ಎಷ್ಟೊಂದು ಸೇರು ಮದ್ಯ ಇದೆಯೆಂದು ಲೆಕ್ಕ ಹಾಕುವ ಆವಶ್ಯಕತೆಯೇನಿದೆ ನನಗೆ?”
ಗಿರೀಶ (ತ್ರೈಲೋಕ್ಯನಿಗೆ): “ನೀನು ಭಗವಂತ ಅವತರಿಸುತ್ತಾನೆ ಎಂಬುದನ್ನು ಒಪ್ಪಿ ಕೊಳ್ಳುವಿಯೇನು?”
ತ್ರೈಲೋಕ್ಯ: “ಭಕ್ತರ ಮೂಲಕವೇ ಭಗವಂತ ಅವತರಿಸುತ್ತಾನೆ. ಅನಂತಶಕ್ತಿಯ ಆವಿರ್ಭಾವ ಎಂದಿಗೂ ಆಗದು. ಅದು ಸಾಧ್ಯವೇ ಇಲ್ಲ. ಯಾವ ಮಾನವನ ಮೂಲಕವೂ ಆತನ ಅನಂತಶಕ್ತಿ ಎಂದಿಗೂ ಆವಿರ್ಭಾವವಾಗಲಾರದು.”
ಗಿರೀಶ: “ನಿನ್ನ ಮಕ್ಕಳನ್ನು ನೀನು ಬ್ರಹ್ಮ ಗೋಪಾಲ ಅಂತ ಪೂಜಿಸಬಹುದಂತೆ, ಮಹಾಪುರುಷರನ್ನು ಭಗವಂತ ಅಂತ ಪೂಜಿಸುವುದಕ್ಕೆ ಆಗುವುದಿಲ್ಲವೊ?”
ಶ್ರೀರಾಮಕೃಷ್ಣರು (ತ್ರೈಲೋಕ್ಯನಿಗೆ): “ಅನಂತದ ವಿಷಯವಾಗಿ ಏಕೆ ಇಷ್ಟೊಂದು ಮಾತುಕತೆ? ನಾನು ನಿನ್ನನ್ನು ಮುಟ್ಟಬೇಕಾದರೆ, ನಿನ್ನ ಶರೀರವನ್ನೆಲ್ಲ ಮುಟ್ಟಬೇಕೇನು? ನೀನು ಗಂಗೆಯನ್ನು ಮುಟ್ಟಬೇಕಾದರೆ ಹರಿದ್ವಾರದಿಂದ ಹಿಡಿದು ಗಂಗಾಸಾಗರದವರೆಗೂ ಅದನ್ನು ಮುಟ್ಟುತ್ತಲೇ ಹೋಗಬೇಕೇನು?
“ ‘ಅಹಂ’ ಎಂಬುದು ಸತ್ತಿತು ಎಂದರೆ, ಎಲ್ಲಾ ತೊಂದರೆಗಳು ಕೊನೆಯಾಗುವುವು. ಎಲ್ಲಿಯವರೆಗೆ ‘ಅಹಂ’ ಎಂಬುದು ಇರುವುದೊ, ಅಲ್ಲಿಯವರೆಗೆ ಭೇದಬುದ್ಧಿ ಇರುತ್ತದೆ. ‘ಅಹಂ’ ಎಂಬುದು ಸತ್ತ ಬಳಿಕ ಏನಿರುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ; ಅದನ್ನು ಬಾಯಿಂದ ವರ್ಣನೆ ಮಾಡುವುದಕ್ಕೆ ಆಗುವುದಿಲ್ಲ. ಯಾವುದು ಇದೆಯೊ ಅದು ಇದ್ದೇ ಇರುತ್ತದೆ. ‘ಅಹಂ’ ಎಂಬುದು ಸತ್ತ ಬಳಿಕ, ಏನಿದೆಯೊ ಅದರ ಒಂದು ಭಾಗ ಈತನ ಮೂಲಕ ಆತನ ಮೂಲಕ, ವ್ಯಕ್ತವಾಗಿದೆ ಅಂತ ಬಾಯಿಂದ ಹೇಳುವುದಕ್ಕೆ ಆಗುವುದಿಲ್ಲ. ಸಚ್ಚಿದಾನಂದ ಎಂಬುದು ಒಂದು ಮಹಾ ಸಾಗರವಿದ್ದ ಹಾಗೆ. ಅದರೊಳಗೆ ‘ಅಹಂ’ ಎಂಬ ಘಟ ಮುಳುಗಿಕೊಂಡಿದೆ. ಘಟ ಎಂಬುದು ಎಲ್ಲಿಯವರೆಗೆ ಇರುವುದೊ, ಅಲ್ಲಿಯವರೆಗೆ ನೀರು ಇಬ್ಭಾಗವಾಗಿರುವಂತೆ ಕಾಣುತ್ತದೆ; ನೀರಿನ ಒಂದು ಭಾಗ ಘಟದೊಳಗೆ, ಇನ್ನೊಂದು ಭಾಗ ಘಟದ ಹೊರಗೆ. ಆದರೆ, ಘಟ ಎಂಬುದು ಒಡೆದು ಪುಡಿಪುಡಿಯಾಯಿತು ಎಂದರೆ ಆಗ ಉಳಿಯುವುದು ಒಂದೇ ಒಂದು ಅನಂತ ಜಲರಾಶಿ. ಅದು ಒಂದೇ ಒಂದು ಅನಂತ ಜಲರಾಶಿ ಅಂತಲೂ ಹೇಳುವುದಕ್ಕೆ ಆಗುವುದಿಲ್ಲ. ಹಾಗೆ ಹೇಳಲು ಯಾರು ತಾನೆ ಉಳಿದುಕೊಂಡಿರುತ್ತಾರೆ?”
ಈ ರೀತಿಯಾಗಿ ಸಂಭಾಷಣೆ ಮುಗಿದ ನಂತರ ಪರಮಹಂಸರು ತ್ರೈಲೋಕ್ಯನೊಡನೆ ಆನಂದದಿಂದ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೀನು ಆನಂದದಿಂದ ಇದ್ದೀಯೆ ಅಲ್ಲವೆ?”
ತ್ರೈಲೋಕ್ಯ: “ಆದರೆ ಈ ಸ್ಥಳವನ್ನು ಬಿಟ್ಟು ಹೊರಟೆ ಅಂದರೆ ಮತ್ತೆ ಎಂದಿನ ಮೂರ್ತಿಯೇ ಆಗಿಬಿಡುತ್ತೇನೆ. ಇಲ್ಲಿ ನನಗೆ ಬಹಳವಾಗಿ ಭಗವದ್ಭಾವನೆಯ ಉದ್ದೀಪನೆ ಯಾಗುತ್ತದೆ.”
ಶ್ರೀರಾಮಕೃಷ್ಣರು: “ಕಾಲಿಗೆ ಮೆಟ್ಟುಹಾಕಿಕೊಂಡರೆ ಮುಳ್ಳಿನ ಕಾಡಿನಲ್ಲಿ ನಡೆಯಲು ಹೆದರಬೇಕಾದ್ದೇನಿಲ್ಲ. ‘ಭಗವಂತನೊಬ್ಬನೆ ಸತ್ಯ, ಉಳಿದುದೆಲ್ಲ ಅನಿತ್ಯ’ ಎಂಬ ಬೋಧೆಯಿತ್ತು ಅಂದರೆ ಕಾಮಕಾಂಚನಕ್ಕೆ ಹೆದರಬೇಕಾಗಿಲ್ಲ.”
ತ್ರೈಲೋಕ್ಯನಿಗೆ ಫಲಾಹಾರ ಮಾಡಿಸಲೋಸುಗ ಬಲರಾಮ ಆತನನ್ನು ಬೇರೊಂದು ಕೊಠಡಿಗೆ ಕರೆದುಕೊಂಡು ಹೋದ. ಪರಮಹಂಸರು ತ್ರೈಲೋಕ್ಯನ ಮತ್ತು ಆತನಂಥವರ ಮಾನಸಿಕ ಅವಸ್ಥೆಯ ಸಂಬಂಧವಾಗಿ ಭಕ್ತರೆದುರು ವರ್ಣನೆ ಮಾಡುತ್ತಿದ್ದಾರೆ. ಈಗ ಘಂಟೆ ರಾತ್ರಿ ಒಂಬತ್ತು.
ಶ್ರೀರಾಮಕೃಷ್ಣರು (ಗಿರೀಶ, ಮಾಸ್ಟರ್ ಮತ್ತು ಉಳಿದ ಭಕ್ತರಿಗೆ): “ಇವರು ಯಾವ ರೀತಿಯ ಮನುಷ್ಯರು ಎಂಬುದು ಗೊತ್ತೆ? ಇವರನ್ನು ಎಂದೂ ನೆಲವನ್ನೇ ಕಾಣದ ಬಾವಿಕಪ್ಪೆಗೆ ಹೋಲಿಸಬಹುದು. ಬಾವಿಕಪ್ಪೆಗೆ ತನ್ನ ಬಾವಿ ಇರುವುದು ಮಾತ್ರವೇ ಗೊತ್ತಿದೆ; ಅದಕ್ಕಾಗಿ ಅದು ನೆಲ ಎಂಬುದೊಂದು ಇದೆ ಎಂಬುದನ್ನು ನಂಬುವುದೇ ಇಲ್ಲ. ಇದೇ ರೀತಿಯಾಗಿ ಇವರಿಗೆ ಭಗವದಾನಂದವನ್ನು ಸವಿಯುವ ಸೌಲಭ್ಯವೇ ದೊರೆಯದೆ ಇರುವುದರಿಂದ ‘ಸಂಸಾರ’ ಅಂತ ತಲೆ ಚಚ್ಚಿಕೊಳ್ಳುತ್ತಿದ್ದಾರೆ.
(ಗಿರೀಶನಿಗೆ) “ನೀನು ಇಂಥವರೊಡನೆ ಏಕೆ ಇಷ್ಟೊಂದು ಚರ್ಚಿಸುತ್ತಿದ್ದೀಯೆ? ಇವರಿಗೆ ಎರಡೂ- ಸಂಸಾರ ಮತ್ತು ಭಗವಂತ ಬೇಕು. ಭಗವದಾನಂದವನ್ನು ಸವಿಯದ ಹೊರತು ಅದರ ಸಂಬಂಧವಾದ ಮಾತುಕತೆ ಯಾರಿಗೂ ಅರ್ಥವಾಗದು. ಐದು ವರ್ಷದ ಬಾಲಕನಿಗೆ ಪತ್ನಿಯ ಸಹವಾಸದ ಸುಖ ಏನು ಎಂಬುದನ್ನು ವರ್ಣಿಸಲಾಗುವುದೆ? ಪ್ರಾಪಂಚಿಕರ ಭಗವಂತನ ಸಂಬಂಧವಾದ ಮಾತುಕತೆಗಳೆಲ್ಲ ಬರೀ ಕೇಳಿಕೆಯ ಮಾತುಗಳೇ. ಇವು ಮನೆಯಲ್ಲಿ ಚಿಕ್ಕಮ್ಮ ದೊಡ್ಡಮ್ಮ ಪರಸ್ಪರ ಜಗಳಕಾಯುವಾಗ ಉಪಯೋಗಿಸುವ ಮಾತುಗಳನ್ನು ಕೇಳಿಕೊಂಡಿದ್ದು, ತಾವೂ ಜಗಳವಾಡುವಾಗ, ‘ನಮ್ಮ ದೇವರಿದ್ದಾನೆ’, ‘ದೇವರಾಣೆಯಾಗಿಯೂ’ ಎಂಬಿವೇ ಮೊದಲಾದ ಮಾತುಗಳನ್ನು ಮಕ್ಕಳು ಉಪಯೋಗಿಸುವ ಹಾಗೆ.
“ಚಿಂತೆಯಿಲ್ಲ. ಇದು ಅವರ ತಪ್ಪಲ್ಲ. ಎಲ್ಲರೂ ಆ ಅಖಂಡ ಸಚ್ಚಿದಾನಂದವನ್ನು ಅರಿತುಕೊಳ್ಳುವ ಸ್ಥಿತಿಯಲ್ಲಿದ್ದಾರೇನು? ರಾಮಚಂದ್ರ ಯಾರು ಎಂಬುದು ಕೇವಲ ಹನ್ನೆರಡು ಜನ ಋಷಿಗಳಿಗೆ ಮಾತ್ರ ಗೊತ್ತಿತ್ತು. ಅವತಾರಪುರುಷನನ್ನು ಗುರುತಿಸಲು ಎಲ್ಲರ ಕೈಯಿಂದಲೂ ಸಾಧ್ಯವಿಲ್ಲ. ಕೆಲವರು ಆತನನ್ನು ಸಾಮಾನ್ಯ ಮನುಷ್ಯನೆಂದೂ, ಇನ್ನು ಕೆಲವರು ಸಾಧು ಎಂದು ಎಣಿಸುತ್ತಾರೆ. ಆದರೆ ಎಲ್ಲೊ ಕೆಲವರು ಮಾತ್ರವೇ ಆತನನ್ನು ಒಬ್ಬ ಅವತಾರ ಪುರುಷನೆಂದು ಗುರುತಿಸಬಲ್ಲರು.
“ಯಾರದು ಯಾವ ತರದ ಬಂಡವಾಳವೊ ಅದಕ್ಕನುಗುಣವಾಗಿ ಅವರು ವಸ್ತುಗಳಿಗೆ ಬೆಲೆಕಟ್ಟುತ್ತಾರೆ. ಒಬ್ಬ ಧನಿಕ ತನ್ನ ಸೇವಕನಿಗೆ ಹೇಳಿದ, ‘ನೀನು ಈ ವಜ್ರವನ್ನು ಪೇಟೆಗೆ ತೆಗೆದುಕೊಂಡು ಹೋಗಿ ಇದಕ್ಕೆ ಯಾರ್ಯಾರು ಎಷ್ಟೆಷ್ಟು ಬೆಲೆ ಕಟ್ಟುತ್ತಾರೆ ಎಂಬುದನ್ನು ತಿಳಿದುಕೊಂಡು ಬಾ. ಮೊದಲು ಇದನ್ನು ಬದನೆಕಾಯಿ ಮಾರುವವನ ಹತ್ತಿರ ತೆಗೆದು ಕೊಂಡು ಹೋಗು’ ಅಂತ. ಆ ಸೇವಕ ಮೊದಲು ಆ ವಜ್ರವನ್ನು ಬದನೆಕಾಯಿ ಮಾರುವವನ ಹತ್ತಿರಕ್ಕೆ ತೆಗೆದುಕೊಂಡು ಹೋದ. ಆತ ಆ ವಜ್ರವನ್ನು ತಿರುಗಿಸಿ-ತಿರುಗಿಸಿ ನೋಡಿ- ಮಾಡಿ ಹೇಳಿದ, ‘ನೋಡು, ನಾನು ಇದಕ್ಕೆ ಒಂಬತ್ತು ಸೇರು ಬದನೆಕಾಯನ್ನು ಕೊಡಬಲ್ಲೆ’ ಅಂತ. ಸೇವಕ ಹೇಳಿದ, ‘ಅದಕ್ಕಿಂತ ಇನ್ನೂ ಸ್ವಲ್ಪ ಜಾಸ್ತಿಯಾಗಿ-ಹೋಗಲಿ ಹತ್ತು ಸೇರು’ ಅಂತ. ಅಂಗಡಿಯವ ಹೇಳಿದ, ‘ಇಲ್ಲ, ನಾನು ಆಗಲೆ ಪೇಟೆಧಾರಣೆಗಿಂತ ಸ್ವಲ್ಪ ಅಧಿಕವಾಗಿಯೇ ಹೇಳಿಬಿಟ್ಟೆ. ನಿನಗೆ ಸಮ್ಮತವಾದರೆ ಕೊಟ್ಟು ಹೋಗು, ಇಲ್ಲದಿದ್ದರೆ ಹಾಗೇ ಹೋಗು’ ಅಂತ. ಸೇವಕ ನಗುತ್ತ ನಗುತ್ತ ಆ ವಜ್ರವನ್ನು ವಾಪಸ್ಸು ತೆಗೆದುಕೊಂಡು ಬಂದು ಯಜಮಾನನಿಗೆ ತಿಳಿಸಿದ, ‘ಸ್ವಾಮಿ, ಬದನೆಕಾಯಿ ಮಾರುವವನು ಒಂಬತ್ತು ಸೇರು ಕಾಯಿಗಿಂತ ಅಧಿಕವಾಗಿ ಏನನ್ನೂ ಕೊಡಲಾಗುವುದಿಲ್ಲವಂತೆ ಮತ್ತು ಆತ ಪೇಟೆಧಾರಣೆಗಿಂತ ಅಧಿಕವಾಗಿಯೇ ಹೇಳಿಬಿಟ್ಟಿದ್ದಾನಂತೆ’ ಅಂತ. ಯಜಮಾನ ನಕ್ಕು ಹೇಳಿದ, ‘ಹೋಗಲಿ, ಈಗ ಜವಳಿ ವ್ಯಾಪಾರಿಯ ಹತ್ತಿರ ಹೋಗಿ ಬಾ. ಈಗ ನೀನು ತೋರಿಸಿ ಬಂದವನು ಬರೀ ಬದನೆಕಾಯಿ ವ್ಯಾಪಾರಿ. ಆತನಿಗೆ ವಜ್ರದ ಬೆಲೆ ಏನು ಗೊತ್ತು? ಜವಳಿ ವ್ಯಾಪಾರಿಯ ಬಂಡವಾಳ ಈತನದಕ್ಕಿಂತ ಸ್ವಲ್ಪ ಹೆಚ್ಚಿನದು. ನೋಡೋಣ, ಆತ ಇದಕ್ಕೆ ಏನು ಬೆಲೆಕಟ್ಟುತ್ತಾನೆ’ ಅಂತ. ಸೇವಕ ಜವಳಿ ವ್ಯಾಪಾರಿಯ ಹತ್ತಿರ ಹೋಗಿ ಕೇಳಿದ, ‘ಏನು, ನಿನಗೆ ಇದು ಬೇಕೇನು? ಇದಕ್ಕೆ ಏನು ಕೊಡಬಲ್ಲೆ?’ ಅಂತ. ಆತ ಹೇಳಿದ ‘ಹೌದು, ಇದು ಸ್ವಲ್ಪ ಬೆಲೆ ಬಾಳೋದೆ. ಇದರಿಂದ ಒಳ್ಳೆ ಒಡವೆ ಮಾಡಿಸಬಹುದು. ನಾನು ಇದಕ್ಕೆ ಒಂಬೈನೂರು ರೂಪಾಯಿ ಕೊಡಬಲ್ಲೆ.’ ಸೇವಕ, ‘ನೀನು ಇನ್ನು ಸ್ವಲ್ಪ ಜಾಸ್ತಿಯಾಗಿ ಏನಾದರೂ ಕೊಡುವುದಾದರೆ ನಿನಗೆ ಮಾರಿಬಿಟ್ಟು ಹೋಗುತ್ತೇನೆ, ಹೋಗಲಿ, ಒಂದು ಸಾವಿರ ರೂಪಾಯಿ ಕೊಡಬಲ್ಲೆಯಾ?’ ಎಂದು ಕೇಳಿದ. ಜವಳಿ ವ್ಯಾಪಾರಿ ಉತ್ತರ ಕೊಟ್ಟ, ‘ಇನ್ನೂ ಹೆಚ್ಚಾಗಿ ಆಸೆಪಡಬೇಡ. ನಾನು ಆಗಲೆ ಪೇಟೆಧಾರಣೆಗಿಂತ ಸ್ವಲ್ಪ ಅಧಿಕವಾಗಿಯೇ ಬೆಲೆ ಕಟ್ಟಿಬಿಟ್ಟಿದ್ದೇನೆ. ಇದರ ಮೇಲೆ ಒಂದು ರೂಪಾಯಿಯನ್ನೂ ಕೂಡ ಜಾಸ್ತಿಯಾಗಿ ಕೊಡಲಾರೆ. ಇಚ್ಛೆಯಿದ್ದರೆ ಕೊಟ್ಟು ಹೋಗು’ ಅಂತ. ಸೇವಕ ಆ ವಜ್ರವನ್ನು ಹಿಂದಕ್ಕೆ ತೆಗೆದುಕೊಂಡು ನಗುತ್ತ ನಗುತ್ತ ಯಜಮಾನನ ಹತ್ತಿರಕ್ಕೆ ಬಂದು ಹೇಳಿದ, ‘ಈತ ಒಂಬೈನೂರಿಗಿಂತ ಜಾಸ್ತಿಯಾಗಿ ಒಂದು ರೂಪಾಯಿಯನ್ನೂ ಕೊಡಲಾರನಂತೆ ಮತ್ತು ಈತನೂ ಆಗಲೇ ಪೇಟೆ ಧಾರಣೆಗಿಂತ ಜಾಸ್ತಿ ಬೆಲೆಯನ್ನು ಕಟ್ಟಿಬಿಟ್ಟಿದ್ದಾನಂತೆ.’ ಯಜಮಾನ ನಗುತ್ತ ಹೇಳಿದ, ‘ಈಗ ಇದನ್ನು ಒಬ್ಬ ರತ್ನವ್ಯಾಪಾರಿಯ ಹತ್ತಿರ ತೆಗೆದುಕೊಂಡು ಹೋಗು. ಆತ ಏನು ಬೆಲೆಕಟ್ಟುತ್ತಾನೆ ನೋಡೋಣ.’ ಸೇವಕ ರತ್ನ ವ್ಯಾಪಾರಿಯ ಹತ್ತಿರಕ್ಕೆ ಬಂದು ತೋರಿಸಿದ. ಆತ ಅದರ ಕಡೆಗೆ ಕಣ್ಣು ಹಾಯಿಸಿದೊಡನೆಯೇ ಹೇಳಿದ, ‘ಇದಕ್ಕೆ ನಾನು ಒಂದು ಲಕ್ಷ ರೂಪಾಯಿ ಕೊಡುತ್ತೇನೆ.’
“ಇವರೆಲ್ಲ ಸಂಸಾರದಲ್ಲಿದ್ದು ಅಧ್ಯಾತ್ಮಜೀವನದಲ್ಲಿ ಮುಂದುವರಿಯುವುದರ ಸಂಬಂಧ ವಾಗಿ ಮಾತುಕತೆಯಾಡುತ್ತಿದ್ದಾರೆ. ಒಬ್ಬ ಒಂದು ಕೊಠಡಿಯಲ್ಲಿದ್ದಾನೆ ಅಂತ ಇಟ್ಟುಕೊಳ್ಳಿ. ಕಿಟಕಿ ಬಾಗಿಲುಗಳೆಲ್ಲ ಮುಚ್ಚಿವೆ; ಚಾವಣಿಯಲ್ಲಿರುವ ಒಂದು ಪುಟ್ಟ ಕಿಂಡಿಯಿಂದ ಎಲ್ಲೋ ಕಿಂಚಿತ್ ಸೂರ್ಯನ ಬೆಳಕು ಬರುತ್ತಿದೆ ಅಂತ ಇಟ್ಟುಕೊಳ್ಳಿ. ಆತನ ತಲೆಯ ಮೇಲೆ ಆ ಚಾವಣಿ ಇರುವವರೆಗೆ ಆತ ಸೂರ್ಯನನ್ನು ನೋಡಲಾಗುವುದೆ? ಆ ಕಿಂಚಿತ್ ಬೆಳಕು ಯಾವ ಪ್ರಯೋಜನಕ್ಕೆ ಬಂದದ್ದು? ಕಾಮಕಾಂಚನವೇ ಮೇಲ್ಚಾವಣಿ. ಮೇಲ್ಚಾವಣಿಯನ್ನು ಕಿತ್ತು ಬಿಸಾಡಿದ ಹೊರತು ಸೂರ್ಯನನ್ನು ನೋಡಲು ಸಾಧ್ಯ ವಾಗುವುದೆ? ಸಂಸಾರಿಗಳು ಇಂಥ ಕೊಠಡಿಗಳಲ್ಲಿ ಬಂಧಿಸಲ್ಪಟ್ಟವರ ಹಾಗೆ ವಾಸಿಸುತ್ತಿ ರುತ್ತಾರೆ.
“ಅವತಾರಾದಿಗಳು ಈಶ್ವರಕೋಟಿಗಳು. ಅವರು ತೆರೆದ ಪ್ರದೇಶಗಳಲ್ಲಿ ಸುತ್ತಾಡು ತ್ತಿರುತ್ತಾರೆ. ಅವರು ಎಂದಿಗೂ ಈ ಸಂಸಾರದ ಬಲೆಗೆ ಬಿದ್ದವರಲ್ಲ; ಅದರ ಕೈಗೆ ಎಂದೂ ಸಿಕ್ಕಿದವರಲ್ಲ. ಅವರ ‘ಅಹಂ’ ಸಂಸಾರಿಗಳ ಹಾಗೆ ಘನೀಭೂತವಾದುದಲ್ಲ. ಸಂಸಾರಿಗಳ ‘ಅಹಂ’, ಸಂಸಾರಿಗಳ ‘ನಾನು’ ಎಂಬುದು ನಾಲ್ಕು ಕಡೆಗೂ ಗೋಡೆ ಹಾಕಿ ಮೇಲೆ ಚಾವಣಿ ಹೊದಿಸಿದ ಹಾಗೆ; ಅದರೊಳಗಿರುವವನಿಗೆ ಬಹಿರ್ಜಗತ್ತಿನದು ಏನೂ ಕಾಣುವುದಿಲ್ಲ. ಅವತಾರಾದಿಗಳ ‘ಅಹಂ’ ಎಂಬುದು ಬಹಳ ಶಿಥಿಲವಾದದ್ದು. ಅದರ ಮೂಲಕ ಸರ್ವದಾ ಭಗವಂತನನ್ನು ನೋಡಲು ಸಾಧ್ಯ. ಗೋಡೆಯ ಎರಡು ಕಡೆಗೂ ಅನಂತ ವಿಸ್ತೀರ್ಣದ ಬಯಲುಳ್ಳ ಒಂದು ಗೋಡೆಯ ಪಕ್ಕದಲ್ಲಿ ನಿಂತಿರುವ ಒಬ್ಬ ಮನುಷ್ಯನನ್ನು ಉದಾಹರಣೆಗೆ ತೆಗೆದುಕೊಳ್ಳಿ. ಆ ಗೋಡೆಯಲ್ಲಿ ಒಂದು ಕಿಂಡಿ ಇರುವುದಾದರೆ, ಆತ ಗೋಡೆಯ ಆ ಪಕ್ಕದಲ್ಲಿರುವುದನ್ನೆಲ್ಲ ಅದರ ಮೂಲಕ ನೋಡಬಲ್ಲ. ಆ ಕಿಂಡಿ ಏನಾದರೂ ಒಂದು ಸ್ವಲ್ಪ ಅಗಲವಾದುದೇ ಆಗಿದ್ದರೆ ಅದರ ಮೂಲಕ ಆ ಪಕ್ಕಕ್ಕೆ ಹೋಗಿಬರಬಲ್ಲ. ಅವತಾರಾದಿಗಳ ‘ಅಹಂ’ ಎಂಬುದನ್ನು ಈ ರೀತಿಯಾಗಿ ಕಿಂಡಿಯಿರುವ ಗೋಡೆಗೆ ಹೋಲಿಸಬಹುದು. ಅವರು ಗೋಡೆಯ ಈ ಕಡೆ ಇದ್ದರೂ, ಅದರ ಆ ಕಡೆಯಲ್ಲೂ ಇರುವ ಅನಂತ ವಿಸ್ತೀರ್ಣದ ಬಯಲನ್ನು ನೋಡಬಲ್ಲರು. ಅಂದರೆ, ಅವರು ದೇಹಧಾರಣೆ ಮಾಡಿಕೊಂಡಿದ್ದರೂ ಸರ್ವದಾ ಭಗವಂತನೊಡನೆ ಐಕ್ಯವಾಗಿಯೆ ಇರುತ್ತಾರೆ. ಇಚ್ಛೆಯಾದರೆ, ಆ ದೊಡ್ಡ ಕಿಂಡಿಯ ಮೂಲಕ ಈ ಪಕ್ಕಕ್ಕೆ ಹೋಗಿ ಸಮಾಧಿಸ್ಥರಾಗುತ್ತಾರೆ. ಆ ಕಿಂಡಿ ಸಾಕಾದಷ್ಟು ದೊಡ್ಡ ದಾಗಿದ್ದರೆ ಆ ಪಕ್ಕಕ್ಕೆ ಹೋಗಿ ಬರುತ್ತಲೂ ಇರುತ್ತಾರೆ. ಅಂದರೆ, ಸಮಾಧಿಯನ್ನು ಪಡೆದ ಮೇಲೂ ಮತ್ತೆ ಈ ಜಗತ್ತಿನ ಅಂತಸ್ತಿಗೆ ಇಳಿದು ಬರಬಲ್ಲರು.”
ಭಕ್ತರು ಆಶ್ಚರ್ಯಚಕಿತರಾಗಿ ಪರಮಹಂಸರ ಬಾಯಿಂದ ಬಂದ ಈ ಅವತಾರ ತತ್ತ್ವವನ್ನು ಕೇಳಿದರು.
1. ಅಷ್ಟಧಾತುವಿನಿಂದ ನಿರ್ಮಿತವಾದ ಬಾಲಕ ರಾಮಚಂದ್ರನ ವಿಗ್ರಹ. ಪರಮಹಂಸರು ಸಾಧನಾವಸ್ಥೆಯಲ್ಲಿದ್ದಾಗ ಒಬ್ಬ ವೈಷ್ಣವ ಬೈರಾಗಿ ಅದನ್ನು ಅವರಿಗೆ ಕೊಟ್ಟು ಹೋಗಿದ್ದ.