೧೧ನೇ ಮಾರ್ಚಿ ೧೮೮೫, ಫಾಲ್ಗುಣ ಕೃಷ್ಣ ದಶಮಿ, ಬುಧವಾರ
ಇಂದು ಸುಮಾರು ಬೆಳಗಿನ ಹತ್ತು ಘಂಟೆ ಸಮಯದಲ್ಲಿ ಶ್ರೀರಾಮಕೃಷ್ಣರು ದಕ್ಷಿಣೇಶ್ವರದಿಂದ ಬಂದು ಭಕ್ತಗೃಹ ಬಲರಾಮವಸುಮಂದಿರದಲ್ಲಿ ಶ್ರೀಜಗನ್ನಾಥನ ಪ್ರಸಾದವನ್ನು ಸ್ವೀಕರಿಸಿದರು. ಅವರೊಡನೆ ಲಾಟು ಮೊದಲಾದವರು ಬಂದಿದ್ದಾರೆ.
ಹೇ, ಬಲರಾಮ! ನೀನೇ ಧನ್ಯ! ನಿನ್ನ ಮನೆಯೇ ಈಗ ಪರಮಹಂಸರ ಪ್ರಧಾನ ಕಾರ್ಯಕ್ಷೇತ್ರವಾಗಿಬಿಟ್ಟಿದೆ. ಎಷ್ಟೊಂದು ಮಂದಿ ಹೊಸ ಹೊಸ ಭಕ್ತರನ್ನು ಇಲ್ಲಿಗೆ ಆಕರ್ಷಿಸಿ ಅವರನ್ನು ಪ್ರೇಮವೆಂಬ ಹಗ್ಗದಿಂದ ಕಟ್ಟಿ ಹಾಕಿಬಿಟ್ಟಿದ್ದಾರೆ! ಇಲ್ಲಿ ಭಕ್ತರೊಡನೆ ಎಷ್ಟೊಂದು ಸಲ ನರ್ತಿಸಿದ್ದಾರೆ! ಇಲ್ಲಿಯೂ, ಶ್ರೀವಾಸನ ಮನೆಯಲ್ಲಿ ಶ್ರೀಗೌರಾಂಗನ ಪ್ರೇಮದ ಸಂತೆಯನ್ನು ಕಟ್ಟಿದಂತೆ ತೋರಿಬರುತ್ತಿದೆಯಲ್ಲ!
ದಕ್ಷಿಣೇಶ್ವರದಲ್ಲಿ ಕಾಳೀದೇವಾಲಯದಲ್ಲೆ ಪರಮಹಂಸರು ಸುಮ್ಮನೆ ಕುಳಿತು ತಮ್ಮ ಅಂತರಂಗ ಭಕ್ತರನ್ನು ನೋಡಬೇಕೆಂಬ ವ್ಯಾಕುಲತೆಯಿಂದ ಅಳುತ್ತಿದ್ದಾರೆ. ಅವರಿಗೆ ರಾತ್ರಿ ವೇಳೆ ನಿದ್ದೆ ಬರುತ್ತಿಲ್ಲ. ಭಗವತಿಗೆ ಹೇಳುತ್ತಾರೆ, “ಹೇ ತಾಯೆ, ಆತನಲ್ಲಿ ವಿಶೇಷ ವಾದ ಭಕ್ತಿ ಇದೆ, ಆತನನ್ನು ಆಕರ್ಷಿಸಿಬಿಡು; ತಾಯೆ, ಆತನನ್ನು ಇಲ್ಲಿಗೆ ಕರೆದುಕೊಂಡು ಬಂದುಬಿಡು; ತಾಯೆ, ಹೋಗಿ ನೋಡಿ ಬರುತ್ತೇನೆ” ಅಂತ. ಅದಕ್ಕಾಗಿಯೇ ಬಲರಾಮನ ಮನೆಗೆ ಓಡಿ ಓಡಿ ಬರುತ್ತಾರೆ. ಜನರೊಡನೆ ಬರಿದೆ ಹೇಳುತ್ತಾರೆ, “ಬಲರಾಮನ ಮನೆಯಲ್ಲಿ ಶ್ರೀಜಗನ್ನಾಥನ ಪೂಜೆ ಪುರಸ್ಕಾರಗಳು ನಡೆಯುತ್ತಿವೆ; ಆತನ ಮನೆ ಅನ್ನ ಬಹಳ ಶುದ್ಧ ಅನ್ನ ಅಂತ. ಇಲ್ಲಿಗೆ ಬಂದಾಗಲೆಲ್ಲ ಬಲರಾಮನ ಮೂಲಕ ತಮ್ಮ ಭಕ್ತರಿಗೆ ನಿಮಂತ್ರಣ ಕಳುಹಿಸುತ್ತಾರೆ. ಬಲರಾಮನಿಗೆ ಹೇಳುತ್ತಾರೆ, ‘ಹೋಗು- ನರೇಂದ್ರ, ಭವನಾಥ, ರಾಖಾಲ ಇವರಿಗೆಲ್ಲ ನಿಮಂತ್ರಣ ಕೊಟ್ಟು ಬಾ. ಇವರಿಗೆ ಅನ್ನ ಹಾಕಿದರೆ ಶ್ರೀಮನ್ನಾರಾಯಣನಿಗೇ ಅನ್ನ ಹಾಕಿದಂತೆ. ಇವರು ಸಾಮಾನ್ಯ ಪುರುಷರಲ್ಲ. ಇವರು ಭಗವದಂಶಸಂಭೂತರು. ಇವರಿಗೆ ಅನ್ನ ಹಾಕಿದರೆ ನಿನಗೆ ಬಹಳ ಶ್ರೇಯಸ್ಸಾಗುತ್ತದೆ’ ಅಂತ.
ಬಲರಾಮನ ಮನೆಯಲ್ಲಿಯೇ ಗಿರೀಶಘೋಷ ಪರಮಹಂಸರ ಪ್ರಪ್ರಥಮ ದರ್ಶನ ಪಡೆದು ಮತ್ತು ಅವರೊಡನೆ ಮಾತುಕತೆಯಾಡಿದುದು. ಇಲ್ಲೇ ರಥಜಾತ್ರೆಯ ಸಮಯದಲ್ಲಿ ಕೀರ್ತನಾನಂದದ ಲಹರಿ ಏಳುತ್ತಿರುತ್ತದೆ. ಇಲ್ಲೇ ಲೆಕ್ಕವಿಲ್ಲದಷ್ಟು ಸಾರಿ ಪ್ರೇಮದ ದರ್ಬಾರಿನಲ್ಲಿ ಆನಂದದ ಮೇಳ ನಡೆಯುತ್ತಿರುತ್ತದೆ.
ಮಾಸ್ಟರ್ ಈ ಮನೆಯ ಹತ್ತಿರವೆ ಇರುವ ವಿದ್ಯಾಸಾಗರನ ಶಾಲೆಯಲ್ಲಿ ಅಧ್ಯಾಪಕ ನಾಗಿದ್ದಾನೆ. ಇಂದು ಬೆಳಗಿನ ಹತ್ತು ಘಂಟೆ ಸಮಯಕ್ಕೆ ಪರಮಹಂಸರು ಬಲರಾಮನ ಮನೆಗೆ ಬರುತ್ತಾರೆ ಎಂಬುದಾಗಿ ಕೇಳಿದ್ದ. ತನಗೆ ಕ್ಲಾಸು ಇಲ್ಲದ ಸಮಯದಲ್ಲಿ – ಮಧ್ಯಾಹ್ನದ ಸಮಯದಲ್ಲಿ ಬಲರಾಮನ ಮನೆಗೆ ಬಂದಿದ್ದಾನೆ. ಬಂದ ಒಡನೆಯೆ ಪರಮಹಂಸರಿಗೆ ಪ್ರಣಾಮ ಮಾಡಿದ. ಅವರು ಊಟವಾದ ನಂತರ ಬೈಠಕ್ಖಾನೆಯಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಆಗಾಗ ತಟ್ಟೆಯಲ್ಲಿಟ್ಟಿದ್ದ ಮಸಾಲೆಗಳನ್ನು––ಲವಂಗ ಏಲಕ್ಕಿ ಮುಂತಾದುವುಗಳನ್ನು ತಿನ್ನುತ್ತಿದ್ದಾರೆ. ಅಲ್ಪ ವಯಸ್ಕ ಭಕ್ತರು ಅವರ ಸುತ್ತಲೂ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ದಯಾರ್ದ್ರಹೃದಯದಿಂದ) : “ಏನು ಈಗಲೆ ಬಂದುಬಿಟ್ಟೆ ? ಸ್ಕೂಲಿಲ್ಲವೇನು ?”
ಮಾಸ್ಟರ್ : “ಈಗ ನಾನು ಸ್ಕೂಲಿನಿಂದಲೆ ಬರುತ್ತಿದ್ದೇನೆ––ಈಗ ಅಲ್ಲಿ ನನಗೆ ವಿಶೇಷ ಕೆಲಸವೇನೂ ಇಲ್ಲ.”
ಒಬ್ಬ ಭಕ್ತ : “ಮಹಾಶಯರೆ, ಅದು ಹಾಗಲ್ಲ. ಸ್ಕೂಲಿಗೆ ಚಕ್ಕರ್ ಹೊಡೆದು ಬಂದಿದ್ದಾನೆ.” (ಎಲ್ಲರೂ ನಗುತ್ತಾರೆ).
ಮಾಸ್ಟರ್ ತನಗೆ ತಾನೇ ಹೇಳಿಕೊಂಡ, “ಹೌದು, ನನ್ನನ್ನು ಇಲ್ಲಿಗೆ ಯಾವುದೋ ಒಂದು ಅನಿರ್ವಚನೀಯ ಶಕ್ತಿ ಕರೆದುಕೊಂಡು ಬಂದುಬಿಟ್ಟಿದೆ.”
ಪರಮಹಂಸರು ಏನನ್ನೋ ಯೋಚಿಸುತ್ತಿರುವಂತೆ ತೋರಿತು. ಬಳಿಕ ಅವರು ಮಾಸ್ಟರನ್ನು ಹತ್ತಿರ ಕೂರಿಸಿಕೊಂಡು ಬಹಳ ಹೊತ್ತು ಮಾತನಾಡಿದರು. ಅವರು ಮಾಸ್ಟರಿಗೆ ಹೇಳಿದರು, “ನನ್ನ ಸ್ನಾನದ ಚೌಕವನ್ನು ಹಿಂಡಿ ಬಿಸಿಲಿಗೆ ಹಾಕು. ನನ್ನ ಷರಟನ್ನೂ ಬಿಸಿಲಿಗೆ ಹಾಕು” ಎಂದು. ಮತ್ತೆ ಕೇಳಿದರು : “ನನ್ನ ಕಾಲು ಸ್ವಲ್ಪ ನೋಯುತ್ತಿದೆ. ಅವುಗಳ ಮೇಲೆ ಒಂದು ಸ್ವಲ್ಪ ಮೆಲ್ಲಗೆ ಕೈಯಾಡಿಸಲಾಗುವುದೆ ?”
ಈ ರೀತಿಯಾಗಿ ಸೇವೆ ಮಾಡಲು ಪರಮಹಂಸರು ತನಗೆ ಅವಕಾಶ ಕೊಟ್ಟಿರುವುದ ಕ್ಕಾಗಿ ಮಾಸ್ಟರಿಗೆ ಬಹಳ ಆನಂದವಾಗಿಬಿಟ್ಟಿದೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ) : “ಈಗ ಕೆಲವು ಕಾಲದಿಂದ ನನಗೆ ಈ ವಿಧದ ಅವಸ್ಥೆ ಬಂದಿದೆಯಲ್ಲ ಏಕೆ ಹೇಳು ನೋಡೋಣ ? ಲೋಹದ್ದು ಯಾವುದನ್ನೂ ಮುಟ್ಟುವುದಕ್ಕೆ ಆಗುತ್ತಿಲ್ಲ. ಒಮ್ಮೆ ಒಂದು ಪಾತ್ರೆಯನ್ನು ಮುಟ್ಟಿದೆ; ––ಮುಳ್ಳಿರೋ ಮೀನು ನನ್ನನ್ನು ಚುಚ್ಚಿದಂತಾಗಿ ಕೈ ‘ಜುಮ್, ಜುಮ್’ ಎನ್ನಲಾರಂಭಿಸಿತು. ಕಾಲುತಂಬಿಗೆಯನ್ನು ಉಪಯೋಗಿಸದೆ ಇರುವುದಕ್ಕೆ ಆಗುವುದಿಲ್ಲ. ಅದಕ್ಕಾಗಿ ಅದನ್ನು ಒಂದು ಬಟ್ಟೆಯಿಂದ ಹಿಡಿದು ಉಪಯೋಗಿಸೋಣ ಅಂತ ಪ್ರಯತ್ನಮಾಡಿದೆ. ಹಾಗೆ ಅದನ್ನು ಹಿಡಿಯಲು ಪ್ರಯತ್ನಮಾಡಿದುದೇ ತಡ, ಒಡನೆಯೇ ಕೈ ‘ಜುಮ್, ಜಮ್’ ಎನ್ನಲು ಆರಂಭವಾಯಿತು; ತಡೆಯಲಾರದ ವೇದನೆ. ಕೊನೆಗೆ ತಾಯಿಗೆ ಪ್ರಾರ್ಥನೆ ಮಾಡಿದೆ, ‘ನಾನು ಮತ್ತೆ ಎಂದಿಗೂ ಹಾಗೆ ಮಾಡುವುದಕ್ಕೆ ಹೋಗುವುದಿಲ್ಲ. ದಯವಿಟ್ಟು ಈ ಸಲ ಕ್ಷಮಿಸು’ ಅಂತ.
“ಚಿಕ್ಕ ನರೇನ ಆಗಾಗ ಅಲ್ಲಿಗೆ ಬಂದು ಹೋಗುತ್ತಿದ್ದಾನೆ. ಅವನ ಮನೆಯವರು ಆಕ್ಷೇಪಣೆ ಮಾಡುವ ಸಂಭವ ಇದೆಯೇನು ? ಆತನದು ಬಹಳ ಶುದ್ಧ ಹೃದಯ. ಹೆಂಗಸಿನ ಸಂಗ ಎಂದೂ ಆಗಿಲ್ಲ.”
ಮಾಸ್ಟರ್ : “ಆತ ಒಂದು ದೊಡ್ಡ ನಿಧಿ.”
ಶ್ರೀರಾಮಕೃಷ್ಣರು : “ಹೌದು ವಾಸ್ತವ. ‘ಭಗವಂತನ ವಿಷಯವಾಗಿ ಏನನ್ನಾದರೂ ಒಮ್ಮೆ ಕಿವಿಯಿಂದ ಕೇಳಿದರೂ ಅದು ಹೋಗಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದ ಹಾಗೆ ನೆಟ್ಟುಕೊಂಡುಬಿಟ್ಟಿರುತ್ತದೆ’ ಅಂತ ಆತ ಹೇಳಿದ. ಆತ ಮತ್ತೆ ಹೇಳಿದ, ‘ಭಗವಂತ ನನಗೆ ದರ್ಶನ ಕೊಡುತ್ತಿಲ್ಲವಲ್ಲ ಅಂತ, ಚಿಕ್ಕ ವಯಸ್ಸಿನಲ್ಲಿ ನಾನು ಸುಮ್ಮನೆ ಅಳುತ್ತಿದ್ದೆ.”’
ಈ ರೀತಿಯಾಗಿ ಪರಮಹಂಸರು ಚಿಕ್ಕ ನರೇನನ ಸಂಬಂಧವಾಗಿ ಮಾಸ್ಟರೊಡನೆ ಮಾತನಾಡುತ್ತಿರುವಾಗ, ಅಲ್ಲಿ ಕುಳಿತಿದ್ದ ಭಕ್ತರಲ್ಲಿ ಒಬ್ಬ ಮಾಸ್ಟರಿಗೆ ಸ್ಕೂಲಿನ ಜ್ಞಾಪಕವನ್ನು ತಂದ.
ಶ್ರೀರಾಮಕೃಷ್ಣರು: “ಈಗ ಘಂಟೆ ಎಷ್ಟು?”
ಭಕ್ತ: “ಒಂದು ಘಂಟೆಗೆ ಹತ್ತು ನಿಮಿಷ ಬಾಕಿ.”
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಒಳ್ಳೆಯದು, ಹೋಗಿ ಬಾ. ಇಲ್ಲದಿದ್ದರೆ ನಿನಗೆ ಹೊತ್ತಾಗುತ್ತದೆ. ನೀನು ನಿನ್ನ ಕೆಲಸ ಬಿಟ್ಟು ಬಂದಿದ್ದೀಯ. (ಲಾಟುವಿಗೆ) ರಾಖಾಲನೆಲ್ಲಿ?”
ಲಾಟು: “ಆತ ಮನೆಗೆ ಹೋಗಿಬಿಟ್ಟಿದ್ದಾನೆ.”
ಶ್ರೀರಾಮಕೃಷ್ಣರು: “ನನ್ನನ್ನು ಹೇಳದೆ ಕೇಳದೆ?”
ಮಾಸ್ಟರ್ ಸ್ಕೂಲನ್ನು ಮುಗಿಸಿಕೊಂಡು ಮತ್ತೆ ಬಂದು ನೋಡಿದಾಗ, ಪರಮಹಂಸರು ಭಕ್ತರ ಮಧ್ಯೆ ಬಲರಾಮನ ಬೈಠಕ್ಖಾನೆಯಲ್ಲಿ ಕುಳಿತಿರುವುದನ್ನು ಕಂಡ. ಗಿರೀಶ, ಸುರೇಶ, ಬಲರಾಮ, ಲಾಟು, ಚುನಿಲಾಲ ಇವರೂ ಅಲ್ಲಿ ಕುಳಿತಿದ್ದಾರೆ. ಪರಮಹಂಸರ ಮುಖದಿಂದ ಮಂದಹಾಸ ಹೊರಸೂಸುತ್ತಿದೆ. ಆ ಮಂದಹಾಸ ಭಕ್ತರ ಮುಖದಲ್ಲೂ ಪ್ರತಿಬಿಂಬಿತವಾಗುತ್ತಿದೆ. ಪರಮಹಂಸರು ಮಾಸ್ಟರಿಗೆ ತಮ್ಮ ಹತ್ತಿರ ಕುಳಿತುಕೊಳ್ಳುವಂತೆ ಸನ್ನೆಮಾಡಿದರು.
ಶ್ರೀರಾಮಕೃಷ್ಣರು (ಗಿರೀಶನಿಗೆ): “ನೀನು ಏನೋ ಹೇಳುತ್ತೀಯಲ್ಲ, ಅದನ್ನು ನರೇಂದ್ರನೊಡನೆ ವಿಚಾರಮಾಡಿನೋಡು. ಆತ ಏನು ಹೇಳುತ್ತಾನೆ ಎಂಬುದನ್ನು ತಿಳಿ.”
ಗಿರೀಶ (ನಗುತ್ತ): “ನರೇಂದ್ರ ಹೇಳುತ್ತಾನೆ, ‘ಭಗವಂತ ಅನಂತ; ನಾವು ಏನೇನನ್ನು ಕಣ್ಣಿನಿಂದ ನೋಡುವೆವೊ ಕಿವಿಯಿಂದ ಕೇಳುವೆವೊ-ವ್ಯಕ್ತಿ ಆದರೂ ಸರಿಯೆ, ವಸ್ತು ಆದರೂ ಸರಿಯೆ-ಅವೆಲ್ಲವೂ ಆತನ ಅಂಶ ಅಂತ ಹೇಳುವುದಕ್ಕೂ ಕೂಡ ನಮಗೆ ಸಾಧ್ಯವಾಗುವ ಹಾಗಿಲ್ಲ. ಅನಂತ ಅಂಶವಾಗುವುದೆಲ್ಲಿಂದ ಬಂತು? ಎಂದಿಗೂ ಆಗದು’ ಅಂತ.”
ಶ್ರೀರಾಮಕೃಷ್ಣರು: “ಭಗವಂತ ಅನಂತನೇ ಆಗಿರಲಿ ಅಥವಾ ಎಷ್ಟು ದೊಡ್ಡವ ಬೇಕಾದರೂ ಆಗಿರಲಿ, -ಆತ ಇಚ್ಛೆಪಟ್ಟರೆ, ಆತನ ಆಂತರ್ಯದ ಸಾರವಸ್ತು ಮಾನವನ ಮೂಲಕ ವ್ಯಕ್ತವಾಗಿರಬಲ್ಲದು ಮತ್ತು ಆಗಿಯೂ ಆಗಿದೆ. ಆತ ಮಾನವನ ಮೂಲಕ ಅವತರಿಸುತ್ತಾನೆ ಎಂಬುದನ್ನು ಉಪಮಾನದ ಮೂಲಕ ಅರಿಯಲಾಗುವುದಿಲ್ಲ. ಅದನ್ನು ತಾನೇ ಸ್ವತಃ ಅನುಭವಿಸಿಬೇಕು; ಅದರ ಪ್ರತ್ಯಕ್ಷ ಅನುಭವವಾಗಬೇಕು. ಉಪಮಾನದ ಮೂಲಕ ಅದರ ಒಂದು ಕಿಂಚಿತ್ ಆಭಾಸವನ್ನು ಮಾತ್ರ ಪಡೆಯಬಹುದು. ಹಸುವಿನ ಕೊಂಬು ಮುಟ್ಟಿದರೂ ಹಸುವನ್ನು ಮುಟ್ಟಿದ ಹಾಗೆಯೆ. ಅದರ ಬಾಲ ಅದರ ಕಾಲು ಯಾವುದನ್ನು ಮುಟ್ಟಿದರೂ ಹಸುವನ್ನು ಮುಟ್ಟಿದ ಹಾಗೆಯೆ; ಆದರೆ ನಮಗೆ ಬೇಕಾಗಿರುವುದು ಹಸುವಿನ ಆಂತರ್ಯದಲ್ಲಿರುವ ಸಾರವಸ್ತು-ಹಾಲು. ಅದು ಅದರ ಕೆಚ್ಚಲಿನ ಮೂಲಕ ಹೊರಕ್ಕೆ ಬರುತ್ತದೆ. ಅವತಾರಪುರುಷನನ್ನೇ ಭಗವಂತನ ಕೆಚ್ಚಲು ಅಂತ ಹೇಳಬಹುದು. ಜನರ ಹೃದಯದಲ್ಲಿ ಪ್ರೇಮ, ಭಕ್ತಿಯನ್ನು ಉಂಟುಮಾಡ ಲೋಸುಗ ಭಗವಂತನು ಮಾನವ ದೇಹಧಾರಣೆ ಮಾಡಿಕೊಂಡು ಆಗಾಗ ಅವತರಿಸುತ್ತಾನೆ.”
ಗಿರೀಶ: “ನರೇಂದ್ರ ಹೇಳುತ್ತಾನೆ, ‘ಆತನನ್ನು ಪೂರ್ಣವಾಗಿ ಎಂದಿಗಾದರೂ ಅರಿಯಲಾಗುವುದೆ? ಆತ ಅನಂತ’ ಅಂತ.”
ಶ್ರೀರಾಮಕೃಷ್ಣರು (ಗಿರೀಶನಿಗೆ): “ಭಗವಂತನನ್ನು ಯಾರು ತಾನೆ ಸಂಪೂರ್ಣವಾಗಿ ಅರಿಯಬಲ್ಲರು? ಆತನ ವ್ಯಕ್ತತೆ, ದೊಡ್ಡದೇ ಆಗಲಿ ಚಿಕ್ಕದೇ ಆಗಲಿ, ಯಾವುದನ್ನೂ ಮನುಷ್ಯ ಅರಿಯಲಾರ. ಒಂದು ವಿಷಯ, ಆತನನ್ನು ಸಂಪೂರ್ಣವಾಗಿ ಅರಿಯುವುದರ ಆವಶ್ಯಕತೆ ತಾನೆ ಏನಿದೆ? ಆತನನ್ನು ಪ್ರತ್ಯಕ್ಷಮಾಡಿಕೊಂಡುಬಿಟ್ಟರೆಯೇ ಕಾರ್ಯ ಮುಗಿದ ಹಾಗೆ. ಆತನ ಅವತಾರದ ದರ್ಶನ ಮಾಡಿತು ಅಂದರೆ ಆತನ ದರ್ಶನ ಮಾಡಿದ ಹಾಗೆ. ಯಾರೇ ಆಗಲಿ, ಗಂಗೆಯ ಬಳಿ ಹೋಗಿ ಅದನ್ನು ಸ್ಪರ್ಶಮಾಡಿ ಬಂದರೆ ಆತ ಹೇಳುತ್ತಾನೆ, ‘ನಾನು ಗಂಗೆಯ ದರ್ಶನ ಸ್ಪರ್ಶನ ಮಾಡಿ ಬಂದೆ; ಹೀಗೆಂದು ಆತ ಇಡೀ ಗಂಗೆಯನ್ನು-ಹರಿದ್ವಾರದಿಂದ ಹಿಡಿದು ಗಂಗಾಸಾಗರದವರೆಗೆಮುಟ್ಟಬೇಕಾಗಿಲ್ಲ.’ (ನಗು.)
“ನಿನ್ನ ಪಾದವನ್ನು ಯಾರಾದರು ಮುಟ್ಟಿದರು ಅಂದರೆ ಅವರು ನಿನ್ನನ್ನು ಮುಟ್ಟಿದ ಹಾಗೆಯೆ. (ನಗು.) ಸಮುದ್ರದ ಹತ್ತಿರ ಹೋಗಿ ಒಂದಿಷ್ಟು ನೀರು ತೆಗೆದುಕೊಂಡಿತು ಎಂದರೆ ಇಡೀ ಸಮುದ್ರವನ್ನೇ ಮುಟ್ಟಿದಂತಾಗುತ್ತದೆ. ಅಗ್ನಿತತ್ತ್ವ ಎಲ್ಲಾ ಎಡೆಯಲ್ಲಿಯೂ ಇದೆ. ಆದರೆ ಕಟ್ಟಿಗೆಯಲ್ಲಿ ವಿಶೇಷ ಪ್ರಮಾಣದಲ್ಲಿದೆ.”
ಗಿರೀಶ ನಗುತ್ತ: “ಎಲ್ಲಿ ವಿಶೇಷ ಪ್ರಮಾಣದಲ್ಲಿ ಬೆಂಕಿ ದೊರಕುವುದೊ ಅಲ್ಲಿಗೇನೆ ನಾನು ಹೋಗಬೇಕೆಂದಿರುವುದು.”
ಶ್ರೀರಾಮಕೃಷ್ಣರು (ನಗುತ್ತ): “ಅಗ್ನಿತತ್ತ್ವ ಕಟ್ಟಿಗೆಯಲ್ಲಿ ವಿಶೇಷ ಪ್ರಮಾಣದಲ್ಲಿದೆ. ಈಶ್ವರ ತತ್ತ್ವಕ್ಕಾಗಿ ಹುಡುಕುತ್ತಿದ್ದರೆ ಅದನ್ನು ಮಾನವನಲ್ಲಿ ಹುಡುಕು. ಆತ ಮಾನವನಲ್ಲಿ ವಿಶೇಷವಾಗಿ ವ್ಯಕ್ತನಾಗಿದ್ದಾನೆ. ಯಾವ ಮನುಷ್ಯನಲ್ಲಿ ನೀನು ಊರ್ಜಿತಭಕ್ತಿಯನ್ನು, ಎಂದರೆ ಪ್ರೇಮ- ಭಕ್ತಿಯು ಉಕ್ಕಿ ಹರಿಯುತ್ತಿರುವುದನ್ನು ನೋಡುವೆಯೋ ಯಾರು ಭಗವಂತನಿಗಾಗಿ ಹುಚ್ಚನಾಗಿ ಹೋಗಿದ್ದಾನೊ, ಯಾರು ಆತನ ಪ್ರೇಮದಿಂದ ಮತ್ತನಾಗಿದ್ದಾನೊ ಆತನ ಮೂಲಕ ನಿಸ್ಸಂದೇಹವಾಗಿ ಭಗವಂತ ಅವತರಿಸಿದ್ದಾನೆ ಎಂಬುದನ್ನು ತಿಳಿದುಕೊ.
(ಮಾಸ್ಟರಿಗೆ) “ಭಗವಂತ ಪ್ರತಿಯೊಂದರಲ್ಲಿಯೂ ಇದ್ದಾನೆ. ಆದರೆ ಆತನ ಶಕ್ತಿ ಕೆಲವೆಡೆ ಅಧಿಕವಾಗಿ, ಕೆಲವೆಡೆ ಕಡಿಮೆಯಾಗಿ ವ್ಯಕ್ತವಾಗಿದೆ, ಅಷ್ಟೆ. ಅವತಾರದ ಮೂಲಕ ಆತನ ಶಕ್ತಿ ವಿಶೇಷ ಪ್ರಮಾಣದಲ್ಲಿ ವ್ಯಕ್ತವಾಗುತ್ತದೆ; ಕೆಲವು ಅವತಾರಗಳಲ್ಲಿ ಒಮ್ಮೊಮ್ಮೆ ಆತನ ಶಕ್ತಿ ಪೂರ್ಣ ಪ್ರಮಾಣದಲ್ಲಿ ವ್ಯಕ್ತವಾಗುತ್ತದೆ; ಅದು ಇಡೀ ಶಕ್ತಿಯ ಅವತಾರವೇ.”
ಗಿರೀಶ: “ನರೇಂದ್ರ ಹೇಳುತ್ತಾನೆ, ‘ಭಗವಂತ ಅವಾಙ್ಮನಸಗೋಚರ’ ಅಂತ.”
ಶ್ರೀರಾಮಕೃಷ್ಣರು: “ಅದು ಪೂರ್ಣ ಸತ್ಯವಲ್ಲ. ಆತ ಮನಸ್ಸಿಗೆ ಅಗೋಚರನೇನೊ ನಿಜ-ಆದರೆ ಶುದ್ಧ ಮನಸ್ಸಿನಲ್ಲಿ ಗೋಚರನಾಗುತ್ತಾನೆ. ಈ ಬುದ್ಧಿಗೇನೊ ಆತ ಗೋಚರ ನಲ್ಲ-ಆದರೆ ಶುದ್ಧ ಬುದ್ಧಿಗೆ ಗೋಚರನಾಗುತ್ತಾನೆ. ಕಾಮಕಾಂಚನಾಸಕ್ತಿ ನಮ್ಮನ್ನು ಬಿಟ್ಟು ತೊಲಗಿತು ಎಂದರೆ, ಮನಸ್ಸು ಮತ್ತು ಬುದ್ಧಿ ಶುದ್ಧವಾಗಿಬಿಡುತ್ತದೆ. ಆಗ ಶುದ್ಧ ಮನಸ್ಸು ಶುದ್ಧ ಬುದ್ಧಿ ಅನನ್ಯವಾಗಿಬಿಡುತ್ತದೆ. ಆತ ಶುದ್ಧ ಮನಸ್ಸಿಗೆ ಗೋಚರನಾಗುತ್ತಾನೆ. ಋಷಿಗಳು ಮುನಿಗಳು ಆತನ ದರ್ಶನ ಪಡೆಯಲಿಲ್ಲವೇನು? ಅವರು ತಮ್ಮ ವ್ಯಕ್ತಿಚೈತನ್ಯದ ಮೂಲಕ ವಿಭುಚೈತನ್ಯದ ಸಾಕ್ಷಾತ್ಕಾರ ಪಡೆದುಕೊಂಡರು.”
ಗಿರೀಶ (ನಗುತ್ತ): “ನರೇಂದ್ರ ನನ್ನೊಡನೆ ವಾದಿಸಿ ಸೋತುಬಿಟ್ಟ.”
ಶ್ರೀರಾಮಕೃಷ್ಣರು: “ಇಲ್ಲ ಸೋಲಲಿಲ್ಲ. ಆತ ನನಗೆ ಹೇಳಿದ, ‘ಗಿರೀಶಘೋಷನಿಗೆ ಮಾನವ ರೂಪಿನಲ್ಲಿ ಭಗವಂತ ಅವತರಿಸುತ್ತಾನೆ ಎಂಬುದರಲ್ಲಿ ಬಹಳವಾಗಿ ವಿಶ್ವಾಸವಿರು ವಾಗ ಆತನಿಗೆ ಮತ್ತೆ ಬೇರೆ ಏನನ್ನು ತಾನೆ ಹೇಳಲಿ? ಅಂಥ ವಿಶ್ವಾಸವನ್ನು ಕದಲಿಸುವುದು ಒಳ್ಳೆಯದಲ್ಲ’ ಅಂತ.”
ಗಿರೀಶ (ನಗುತ್ತ): “ಮಹಾಶಯರೆ, ನಾವೆಲ್ಲರು ಸುಮ್ಮನೆ ‘ಗಳ ಗಳ’ ಅಂತ ಮಾತನಾಡುತ್ತಿದ್ದೇವೆ. ಆದರೆ ಮಾಸ್ಟರ್ ಮಾತ್ರ ಬಾಯಿಮುಚ್ಚಿ ಸುಮ್ಮನೆ ಕುಳಿತಿದ್ದಾನಲ್ಲ! ಏನನ್ನು ಅಳೆದು ಸುರಿಯುತ್ತಿರಬಹುದು? ಏಕೆ ಹೀಗೆ ಹೇಳಿ ನೋಡೋಣ!”
ಶ್ರೀರಾಮಕೃಷ್ಣರು (ನಗುತ್ತ): “ಒಂದು ಲೋಕೋಕ್ತಿ ಹೇಳುತ್ತದೆ ‘ಮಾತಾಳಿ, ಗುಮ್ಮನಗುಸುಕ, ಕಿವಿಗೆ ತುಳಸಿ ಸಿಕ್ಕಿಸಿಕೊಳ್ಳುವವ, ದೊಡ್ಡ ಮುಸುಕು ಹಾಕಿಕೊಂಡಿರುವ ಹೆಂಗಸು, ಪಾಚಿಕಟ್ಟಿಕೊಂಡಿರುವ ಕೊಳದ ತಣ್ಣೀರು-ಇವೆಲ್ಲ ಅನರ್ಥಕರವಾದುವು’ (ನಗುತ್ತ) ಆದರೆ ಈತ ಅವುಗಳ ಗುಂಪಿಗೆ ಸೇರಿದವನಲ್ಲ, ಈತ ಕೇವಲ ಗಂಭೀರಾತ್ಮ ಮಾತ್ರ.” (ಎಲ್ಲರೂ ನಗುತ್ತಾರೆ.)
ಗಿರೀಶ: “ಈ ಲೋಕೋಕ್ತಿಯ ಸರಿಯಾದ ಅರ್ಥವೇನು?”
ಶ್ರೀರಾಮಕೃಷ್ಣರು: “ಈ ಕೆಲವು ವಸ್ತುಗಳ ಸಂಬಂಧವಾಗಿ ಬಹಳ ಎಚ್ಚರಿಕೆಯಿಂದ ಇರಬೇಕು; ಮೊದಲನೆಯದಾಗಿ ಮಾತಾಳಿ-ಲಂಗುಲಗಾಮಿಲ್ಲದೆ ಮಾತನಾಡತಕ್ಕವನು; ಎರಡನೆಯದಾಗಿ ಗುಮ್ಮನಗುಸುಕ-ಯಾವ ವ್ಯಕ್ತಿಯ ಮನಸ್ಸಿನ ಉದ್ದ ಆಳವನ್ನು ಕಂಡು ಹಿಡಿಯಲು ಯಾವ ನಿಪುಣ ಮುಳುಗುಗಾರನಿಗೂ ಸಾಧ್ಯವಿಲ್ಲವೊ ಅಂಥವನು; ಮೂರನೆ ದಾಗಿ ಕಿವಿಗೆ ತುಳಸಿ ಸಿಕ್ಕಿಸಿಕೊಳ್ಳುವವನು-ತಾನೂ ಒಬ್ಬ ಭಕ್ತ ಅಂತ ತೋರಿಸಿಕೊಳ್ಳು ವವನು; ನಾಲ್ಕನೆಯದಾಗಿ ದೊಡ್ಡ ಮುಸುಕು ಹಾಕಿಕೊಂಡಿರುವ ಹೆಂಗಸು- ಜನರೇನೊ ಭಾವಿಸುತ್ತಾರೆ, ಆಕೆ ಒಬ್ಬ ಮಹಾ ಪತಿವ್ರತೆ ಅಂತ. ಆದರೆ ಅದು ಸತ್ಯವಲ್ಲ; ಐದನೆಯದಾಗಿ ಪಾಚಿ ಬೆಳೆದಿರೋ ಕೊಳದ ನೀರು-ಅದರಲ್ಲಿ ಸ್ನಾನ ಮಾಡಿತು ಅಂದರೆ, ಒಡನೆಯೆ ವಿಷಮಶೀತ ಜ್ವರ ಬಂದುಬಿಡುತ್ತದೆ.” (ನಗು).
ಚುನಿಲಾಲ: “ಈತನ (ಮಾಸ್ಟರ) ಮೇಲೆ ದೂರು ಎದ್ದಿದೆ. ಚಿಕ್ಕ ನರೇನ, ಬಾಬುರಾಮ ಈತನ ವಿದ್ಯಾರ್ಥಿಗಳು; ಅದೇ ರೀತಿಯಾಗಿ ನಾರಾಯಣ, ಪಲ್ಟು, ಪೂರ್ಣ, ತೇಜಚಂದ್ರ ಕೂಡ. ಈತ ಅವರನ್ನೆಲ್ಲ ಆಗಾಗ ಇಲ್ಲಿಗೆ ಕರೆದುಕೊಂಡು ಬರುತ್ತಿದ್ದಾನೆ. ಅವರ ಓದುಬರಹಕ್ಕೆಲ್ಲ ಕಲ್ಲುಬೀಳುತ್ತದೆ, ಈತನೇ ಅದಕ್ಕೆಲ್ಲ ಹೊಣೆ ಎಂಬುದಾಗಿ ಈತನ ಮೇಲೆ ಜನ ದೂರು ಹೊರಿಸುತ್ತಿದ್ದಾರೆ.”
ಶ್ರೀರಾಮಕೃಷ್ಣರು: “ಅವರ ಮಾತಿಗೆ ಯಾರು ತಾನೆ ಬೆಲೆ ಕೊಡುತ್ತಾರೆ?”
ಈ ರೀತಿಯಾಗಿ ಮಾತುಕತೆಗಳಾಡುತ್ತಿರುವಾಗ, ನಾರಾಯಣ ಬಂದು ಪರಮಹಂಸ ರಿಗೆ ಪ್ರಣಾಮಮಾಡಿದ. ಆತನ ಮೈ ಹೊಂಬಣ್ಣ, ವಯಸ್ಸು ಹದಿನೇಳೊ ಹದಿನೆಂಟೊ ಇರಬಹುದು. ಸ್ಕೂಲಿನಲ್ಲಿ ಓದುತ್ತಿದ್ದಾನೆ. ಆತನನನ್ನು ಪರಮಹಂಸರು ಬಹಳವಾಗಿ ಪ್ರೀತಿಸುತ್ತಾರೆ. ಆತನನ್ನು ನೋಡಲು ಮತ್ತು ಆತನಿಗೆ ತಿಂಡಿ ತೀರ್ಥ ಕೊಡಲು ಅವರಿಗೆ ಬಹಳ ಇಷ್ಟ. ಆತನನ್ನು ನೋಡಬೇಕೆಂದು ಪರಮಹಂಸರು ಅನೇಕ ವೇಳೆ ದಕ್ಷಿಣೇಶ್ವರದ ದೇವಾಲಯದಲ್ಲಿ ಕುಳಿತು ಅತ್ತಿದ್ದಾರೆ. ಅವರು ಆತನನ್ನು ಸಾಕ್ಷಾತ್ ನಾರಾಯಣನೇ ಅಂತ ಭಾವಿಸುತ್ತಾರೆ.
ಗಿರೀಶ ನಾರಾಯಣನನ್ನು ನೋಡಿ: “ಯಾರಪ್ಪ ಇವನಿಗೆ ಈ ಸಮಾಚಾರ ಕೊಟ್ಟವರು? ಇದಕ್ಕೆಲ್ಲ ಮೂಲಕಾರಣ ಮಾಸ್ಟರೇ ಅಂತ ಕಾಣುತ್ತೆ.” (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು (ನಗುತ್ತ): “ನಿಲ್ಲಿಸು! ಬಾಯಿಮುಚ್ಚಿ ಕುಳಿತುಕೊ! ಈಗಲೆ ಇವನಿಗೆ (ಮಾಸ್ಟರಿಗೆ) ಕೆಟ್ಟ ಹೆಸರು ಬಂದಿದೆ.”
ಈಗ ನರೇಂದ್ರನ ಸಂಬಂಧವಾಗಿ ಮಾತುಕತೆ ಆರಂಭವಾಯಿತು.
ಒಬ್ಬ ಭಕ್ತ: “ಈಗ ಆತ ಇಲ್ಲಿಗೆ ಅಷ್ಟೊಂದಾಗಿ ಬರುತ್ತಿಲ್ಲವಲ್ಲ ಏಕೆ?”
ಶ್ರೀರಾಮಕೃಷ್ಣರು: “ಅನ್ನಚಿಂತನೆ ಬಹಳ ಚಮತ್ಕಾರವಾದ್ದು. ಅದನ್ನು ವರ್ಣಿಸಲು ಕಾಳಿದಾಸನಿಗೂ ಸಾಧ್ಯವಿಲ್ಲ.” (ಎಲ್ಲರೂ ನಗುತ್ತಾರೆ.)
ಬಲರಾಮ: “ಆತ ಶಿವಗುಹನ ಮಗ ಅನ್ನದಾಗುಹನ ಹತ್ತಿರಕ್ಕೆ ಬಹಳವಾಗಿ ಬಂದು ಹೋಗುತ್ತಿದ್ದಾನೆ.”
ಶ್ರೀರಾಮಕೃಷ್ಣರು: “ಹೌದು, ಒಬ್ಬ ಆಫೀಸರನ ಮನೆಗೆ ನರೇಂದ್ರ, ಅನ್ನದಾ ಇವರೆಲ್ಲ ಹೋಗುತ್ತಿದ್ದಾರೆ ಮತ್ತು ಅಲ್ಲಿ ಅವರೆಲ್ಲರೂ ಕೂಡಿ ಒಂದು ಬ್ರಾಹ್ಮ ಸಮಾಜವನ್ನು ನಡೆಸುತ್ತಿದ್ದಾರೆ ಎಂಬ ಸಮಾಚಾರ ನನ್ನ ಕಿವಿಗೆ ಬಂದು ಬಿದ್ದಿದೆ.”
ಒಬ್ಬ ಭಕ್ತ: “ಆ ಆಫೀಸರನ ಹೆಸರು ತಾರಾಪದ ಅಂತ.”
ಬಲರಾಮ (ನಗುತ್ತ): “ಅಗ್ರಹಾರದ ಬ್ರಾಹ್ಮಣರು ಹೇಳುತ್ತಿದ್ದಾರೆ, ‘ಅನ್ನದಾಗುಹ ಒಬ್ಬ ದುರಹಂಕಾರಿ’ ಅಂತ.”
ಶ್ರೀರಾಮಕೃಷ್ಣರು: “ಬ್ರಾಹ್ಮಣರ ಆ ಮಾತಿಗೆಲ್ಲ ಬೆಲೆ ಕೊಡಬೇಡ. ಅವರ ವಿಷಯ ನಿನಗೆ ಚೆನ್ನಾಗಿ ಗೊತ್ತೇ ಇದೆ. ಅವರ ದೃಷ್ಟಿಯಿಂದ, ಯಾರು ಅವರಿಗೆ ದುಡ್ಡು ಕಾಸು ಕೊಡುತ್ತಾನೊ ಆತ ಒಳ್ಳೆಯವ, ಕೊಡದವ ಕೆಟ್ಟವ. (ಎಲ್ಲರೂ ನಗುತ್ತಾರೆ.) ನನಗೆ ಅನ್ನದಾಗುಹನ ಪರಿಚಯವಿದೆ. ಆತ ಬಹಳ ಒಳ್ಳೆಯವ.”
ಬಲರಾಮನ ಬೈಠಕ್ಖಾನೆಯಲ್ಲಿ ಜನ ತುಂಬಿದ್ದಾರೆ. ಕೆಲವು ಹಾಡುಗಳನ್ನು ಕೇಳ ಬೇಕೆಂದು ಪರಮಹಂಸರು ಇಚ್ಛೆಪಟ್ಟರು. ಅವರ ಇಚ್ಛೆಗನುಸಾರ ತಾರಾಪದ ಶ್ರೀಕೃಷ್ಣನ ಮೇಲಿನ ಹಾಡನ್ನು ಹಾಡಲಾರಂಭಿಸಿದ:
ರಾಗ : ದೇವಮಿಶ್ರ, ಏಕತಾಳ
ದೀನರೊಳು ದಯೆತೋರೊ ಕೇಶವ, ಕುಂಜಕಾನನಚಾರೀ
ಮಾಧವ ಮನಮೋಹನ, ಮೋಹನ ಮುರಲೀಧಾರಿ….
ವ್ರಜಕಿಶೋರ, ಕಾಲೀಯಹರ, ಕಾತರಭಯಭಂಜನಾ
ನಯನ ಬಾಣದಲಿ ನವಿಲುಗರಿಯೊಳಗೆ ರಾಧಿಕಾಹೃದಿರಂಜನಾ
ಗೋವರ್ಧನಧಾರಣ-ವನಕುಸುಮಭೂಷಣ-ದಾಮೋದರ
ಕಂಸದರ್ಪಹಾರೀ, ಶ್ಯಾಮ ರಾಸರಸವಿಹಾರೀ….
ಶ್ರೀರಾಮಕೃಷ್ಣರು (ಗಿರೀಶನಿಗೆ): “ಆಹಾ! ಇದು ಬಹಳ ಒಳ್ಳೇ ಹಾಡು. ಇದನ್ನು ಕಟ್ಟಿದವರು ಯಾರು, ನೀನೊ?”
ಒಬ್ಬ ಭಕ್ತ: “ಹೌದು, ಈತನೆ ಚೈತನ್ಯಲೀಲೆಯ ಎಲ್ಲಾ ಹಾಡುಗಳನ್ನು ಕಟ್ಟಿದ್ದಾನೆ.”
ಶ್ರೀರಾಮಕೃಷ್ಣರು (ಗಿರೀಶನಿಗೆ): “ಈ ಹಾಡು ಬಹಳ ಚೆನ್ನಾಗಿ ಬಂದುಬಿಟ್ಟಿದೆ.”
ಶ್ರೀರಾಮಕೃಷ್ಣರು (ಗಾಯಕನಿಗೆ): ‘ನಿತಾಯಿಯ ಹಾಡನ್ನು ಹಾಡಬಲ್ಲೆಯಾ?”
ತಾರಾಪದನು ನಿತಾಯಿ ಹಾಡಿದ ಎರಡು ಹಾಡುಗಳನ್ನು ಹಾಡಿದ. ಮೊದಲನೆಯ ದರಲ್ಲಿ ರಾಧೆ ಶ್ರೀಕೃಷ್ಣನಲ್ಲಿ ಇಟ್ಟಿರುವ ಪ್ರೇಮದಲ್ಲಿ ಭಾಗಿಗಳಾಗಲು ಜನರನ್ನು ಹುರಿದುಂಬಿಸುತ್ತಿದ್ದಾನೆ:
ಓ ಬನ್ನಿ, ಎಲ್ಲರು ಬನ್ನಿ
ರಾಧಾಪ್ರೇಮದ ಹೊಳೆ ಹರಿಯುತಿದೆ !
ಅತ್ತಲು ಇತ್ತಲು ಸುತ್ತಲು ಮುತ್ತಲು
ಶತಧಾರೆಯೊಳದು ಹರಿಯುತಿದೆ !
ಓ ಬನ್ನಿ, ಎಲ್ಲರು ಬನ್ನಿ
ತಡಮಾಡಿದರದು ಬತ್ತುವುದು.
ಈಗಲೆ ಬಂದರೆ ಬಿಂದಿಗೆ ತಂದರೆ
ಬಯಸಿದಷ್ಟು ಅದು ದೊರಕುವುದು.
ಓ ಬನ್ನಿ, ಎಲ್ಲರು ಬನ್ನಿ
ತಡಮಾಡದೆ ಬನ್ನಿ,
ಎಲ್ಲರಿಗಾಗಿಯೆ ಹರಿದಿದೆ ಬನ್ನಿ
ಈ ರಾಧೆಯ ಹೃದಯ!
ಬ್ರಹ್ಮಾನಂದದಿ ಮೀಯಲು ಬನ್ನಿ
ಎಲ್ಲಾ ಅವಳ ದಯ!
ಓ ಬನ್ನಿ, ಎಲ್ಲರು ಬನ್ನಿ
ಹರಿನಾಮವ ನುತಿಸಲು ಬನ್ನಿ,
ರಾಧಾಪ್ರೇಮದ ಹೊಳೆ ಹರಿಯುತಿದೆ
ಶತಧಾರೆಯೊಳದು ಹರಿಯುತಿದೆ!
ಬಳಿಕ ತಾರಾಪದನು ಗೌರಾಂಗನ ಸಂಬಂಧವಾದ ಹಾಡನ್ನು ಹಾಡಿದ.
ಯಾರೊ ನೀ ಗೌರಾಂಗವೇಷಿಯೆ, ತಪ್ತಕಾಂಚನ ಬಂಧುರ
ನನ್ನ ಎದೆಗೀ ಸುಧೆಯ ಕರೆಯುವ ದಿವ್ಯಮೋಹನ ಸುಂದರ?
ಪ್ರೇಮಸಿಂಧುವಿನಲ್ಲಿ ನೀನೇ ಚಂಡಮರುತನ ಎಬ್ಬಿಸಿ
ನನ್ನ ದೋಣಿಯನೇತಕೀತರ ಕಾಡಿಸಿಹೆಯೊ ನೋಯಿಸಿ?
ಹಿಂದೆ ಬೃಂದಾವನದಿ ಗೋವನು ಕಾದವನು ನೀನಲ್ಲವೆ?
ಕೊಳಲನೂದುತ ಗೋಪಿಯರ ನೀ ಮರುಳುಗೊಳಿಸಿದೆಯಲ್ಲವೆ?
ಅಂದು ಗೋವರ್ಧನವೆತ್ತುತ ವ್ರಜರ ಕೇಡನು ತವಿಸಿದೆ
ನೊಂದ ಗೋಪಿವೃಂದ ಪದತಲದಲ್ಲಿ ಪ್ರೇಮದಿ ಕರಗಿದೆ!
ಎಲ್ಲರೂ ಮಾಸ್ಟರಿಗೆ ಒಂದು ಹಾಡು ಹಾಡುವಂತೆ ಕೇಳಿಕೊಂಡರು. ಆತನಿಗೆ ಒಂದು ಸ್ವಲ್ಪ ನಾಚಿಕೆ. ಆತ ಪಿಸುಗುಟ್ಟುತ್ತ ಕ್ಷಮಾಪಣೆ ಬೇಡುತ್ತಿದ್ದಾನೆ.
ಗಿರೀಶ (ನಗುತ್ತ ಶ್ರೀರಾಮಕೃಷ್ಣರಿಗೆ): “ಮಹಾಶಯರೆ, ನಾವು ಎಷ್ಟೇ ಬಲಾತ್ಕರಿ ಸಿದರೂ ಈತ ಮಾತ್ರ ಹಾಡುತ್ತಿಲ್ಲ.”
ಶ್ರೀರಾಮಕೃಷ್ಣರು (ವಿರಕ್ತರಾಗಿ): “ಸ್ಕೂಲಿಗೆ ಹೋಯಿತು ಅಂದರೆ ತನ್ನ ಮೂವತ್ತೆರಡು ಹಲ್ಲುಗಳನ್ನೂ ಬಿಡುತ್ತಾನೆ. ಹಾಡು ಅಂದಾಗ ಮಾತ್ರ ಎಲ್ಲೂ ಇಲ್ಲದ ನಾಚಿಕೆ!”
ಮಾಸ್ಟರ್ ತಲೆತಗ್ಗಿಸಿ ಸ್ವಲ್ಪ ಹೊತ್ತು ಹಾಗೆಯೇ ಕುಳಿತುಕೊಂಡ.
ಸುರೇಶಮಿತ್ರ ಸ್ವಲ್ಪ ದೂರದಲ್ಲಿ ಕುಳಿತುಕೊಂಡಿದ್ದಾನೆ. ಪರಮಹಂಸರು ತಮ್ಮ ಪ್ರೇಮ ದೃಷ್ಟಿಯನ್ನು ಆತನ ಕಡೆಗೆ ಬೀರಿ ಆತನಿಗೆ ಗಿರೀಶನನ್ನು ತೋರಿಸಿ ನಗುತ್ತ ಹೇಳುತ್ತಿದ್ದಾರೆ, “ನಿನ್ನದು ಏನು? ಈತ (ಗಿರೀಶ) ನಿನಗಿಂತ-!”
ಸುರೇಂದ್ರ (ನಗುತ್ತ): “ಹೌದು, ನಿಜ. ಇದರಲ್ಲಿ ಆತ ನನ್ನ ದೊಡ್ಡಣ್ಣ.” (ಎಲ್ಲರೂ ನಗುತ್ತಾರೆ)
ಗಿರೀಶ (ಶ್ರೀರಾಮಕೃಷ್ಣರಿಗೆ): “ಹೋಗಲಿ ಬಿಡಿ. ಮಹಾಶಯರೆ, ನಾನು ಚಿಕ್ಕವನಾಗಿದ್ದಾಗ ಸ್ವಲ್ಪವೂ ಓದುವುದರ ಅಥವಾ ಬರೆಯುವುದರ ತಂಟೆಗೇ ಹೋಗಲಿಲ್ಲ; ಆದರೂ ಜನ ಹೇಳುತ್ತಿದ್ದಾರಲ್ಲ: ನಾನೊಬ್ಬ ಘನ ವಿದ್ಯಾವಂತ ಅಂತ!”
ಶ್ರೀರಾಮಕೃಷ್ಣರು: “ಮಹಿಮಚರಣ ಚಕ್ರವರ್ತಿ ಬಹಳವಾಗಿ ಶಾಸ್ತ್ರ-ಗೀಸ್ತ್ರ ಓದಿದ್ದಾನೆ ಮತ್ತು ಕೇಳಿದ್ದಾನೆ; ಒಬ್ಬ ದೊಡ್ಡ ಮನುಷ್ಯನೆ. (ಮಾಸ್ಟರಿಗೆ) ಅಲ್ಲವೇನು?”
ಮಾಸ್ಟರ್: “ಹೌದು, ನಿಜ.”
ಗಿರೀಶ: “ಏನು? ಪುಸ್ತಕಪಾಂಡಿತ್ಯವೆ? ಅದರ ಅನುಭವ ನನಗೆ ಬೇಕಾದಷ್ಟು ಆಗಿದೆ. ಇನ್ನು ನಾನು ಮೋಸಹೋಗುವವನಲ್ಲ.”
ಶ್ರೀರಾಮಕೃಷ್ಣರು (ನಗುತ್ತ ನಗುತ್ತ): “ನನ್ನ ಅಭಿಪ್ರಾಯವೇನು ಗೊತ್ತೆ? ಶಾಸ್ತ್ರ, ಗ್ರಂಥ ಇವೆಲ್ಲ ಭಗವಂತನನ್ನು ಪಡೆಯುವ ಮಾರ್ಗವನ್ನು ಮಾತ್ರ ತೋರಿಸಿ ಬಿಡುತ್ತವೆ. ಮಾರ್ಗವನ್ನು-ಉಪಾಯವನ್ನು ಅರಿತುಕೊಂಡ ಮೇಲೆ ಶಾಸ್ತ್ರ ಮತ್ತು ಗ್ರಂಥಗಳ ಆವಶ್ಯಕತೆಯೇನಿದೆ? ಆಗ, ತಾನೇ ಸ್ವತಃ ಕಾರ್ಯೋನ್ಮುಖನಾಗಬೇಕು.
“ಇಂಥಿಂಥ ಕೆಲವು ವಸ್ತುಗಳನ್ನು ತಮ್ಮ ಬಂಧುಗಳಿಗೆ ಬಳುವಳಿಯಾಗಿ ಕಳುಹಿಸಿ ಕೊಡಬೇಕಾಗಿದೆ ಅಂತ ಯಾರೊ ಒಬ್ಬನಿಗೆ ಆತನ ಸ್ವಂತ ಊರಿನಿಂದ ಒಂದು ಪತ್ರ ಬಂದಿತ್ತು. ಆ ವಸ್ತುಗಳನ್ನು ಕೊಂಡುಕೊಂಡು ಬರಲು ಹೊರಟಾಗ ಹುಡುಕುತ್ತಾನೆ, ಆ ಪತ್ರ ಎಲ್ಲೋ ಸೇರಿಕೊಂಡುಬಿಟ್ಟಿದೆ. ಆತ ಬಹಳ ವ್ಯಸ್ತನಾಗಿ ಅದನ್ನು ಹುಡುಕಲು ಆರಂಭಿಸಿದ. ಬಹಳ ಹೊತ್ತಿನವರೆಗೆ ಅವನ ಮನೆಯವರೆಲ್ಲರೂ ಸೇರಿಕೊಂಡು ಹುಡುಕಿದರು. ಕೊನೆಗೆ ಅದು ದೊರೆತುಬಿಟ್ಟಿತು. ಆಗ ಆತನ ಆನಂದಕ್ಕೆ ಪಾರವೇ ಇಲ್ಲ. ಬಹಳ ಕುತೂಹಲದಿಂದ ಆ ಪತ್ರವನ್ನು ತೆರೆದು ಓದಿದ. ಐದು ಸೇರು ಸಂದೇಶವನ್ನು (ಸಿಹಿತಿಂಡಿ), ಒಂದು ಪಂಚೆಯನ್ನು ಮತ್ತು ಇನ್ನೂ ಏನೇನೋ ಬೇಕು ಅಂತ ಅದರಲ್ಲಿ ಬರೆದಿತ್ತು. ಓದಿ ತಿಳಿದುಕೊಂಡಾದ ಮೇಲೆ ಇನ್ನು ಆ ಪತ್ರದ ಆವಶ್ಯಕತೆಯೇನಿದೆ? ಆತ ಅದನ್ನು ಕಸದ ಬುಟ್ಟಿಗೆ ಬಿಸಾಡಿ, ಸಂದೇಶ, ಪಂಚೆ ಇನ್ನೂ ಕೆಲವು ವಸ್ತುಗಳನ್ನು ಕೊಂಡುಕೊಂಡು ಬರಲು ಹೊರಟ. ಪತ್ರದ ಆವಶ್ಯಕತೆ ಎಲ್ಲಿಯವರೆಗೆ? ಅದರಲ್ಲಿ ಏನು ಬರೆದಿದೆ ಎಂಬುದನ್ನು ಅರಿಯುವವರೆಗೆ. ಬಳಿಕ ಅದನ್ನು ಪಡೆಯುವ ಪ್ರಯತ್ನ.
“ಶಾಸ್ತ್ರದಲ್ಲಿ ಆತನನ್ನು ಪಡೆಯುವುದಕ್ಕೆ ಮಾರ್ಗವೇನು ಎಂಬ ವಿಷಯವನ್ನು ಹೇಳಿದೆ. ಆದರೆ, ಅದನ್ನು ಸವಿಸ್ತಾರವಾಗಿ ತಿಳಿದು ಕಾರ್ಯಕ್ಕೆ ಕೈಹಚ್ಚಬೇಕು. ಆಗ ಮಾತ್ರವೇ ವಸ್ತುಲಾಭ.
“ಬರಿಯ ಪಾಂಡಿತ್ಯದಿಂದ ಏನು ಪ್ರಯೋಜನ? ಪಂಡಿತನಿಗೆ ಅನೇಕ ಶಾಸ್ತ್ರಗಳು, ಅನೇಕ ಶ್ಲೋಕಗಳು ಗೊತ್ತಿರಬಹುದು; ಆದರೆ ಆತನಿಗೆ ಇನ್ನೂ ಸಂಸಾರದಲ್ಲಿ ಆಸಕ್ತಿ ನೆಲೆಸಿದ್ದರೆ, ಆತ ತನ್ನ ಆಂತರ್ಯದಲ್ಲಿ ಕಾಮಕಾಂಚನವನ್ನು ಇನ್ನೂ ಪ್ರೀತಿಸುತ್ತಾ ಇದ್ದರೆ, ಆತ ಶಾಸ್ತ್ರಗಳನ್ನು ಸ್ವಲ್ಪವೂ ಜೀರ್ಣಮಾಡಿಕೊಂಡಿಲ್ಲ ಎಂಬುದು ಎದ್ದುಕಾಣುತ್ತದೆ. ಆತನ ಪಾಂಡಿತ್ಯ ಬರಿದೆ ವ್ಯರ್ಥ.
“ಪಂಚಾಂಗದಲ್ಲಿ ಬರೆದಿದೆ ಈ ವರ್ಷ ಇಪ್ಪತ್ತು ಕೊಳಗ ಮಳೆಯಾಗುತ್ತದೆ ಅಂತ. ಆದರೆ ಅದನ್ನು ಹಿಂಡಿದರೆ ಒಂದು ತೊಟ್ಟೂ ನೀರು ಕೆಳಕ್ಕೆ ಬೀಳದು. ಹೋಗಲಿ, ಒಂದೇ ಒಂದು ತೊಟ್ಟಾದರೂ ಹೇಳು-ಇಲ್ಲ. ಒಂದು ತೊಟ್ಟೂ ಬೀಳದು.” (ಎಲ್ಲರೂ ನಗುತ್ತಾರೆ.)
ಗಿರೀಶ: “ಮಹಾಶಯರೆ, ಏನು ಹೇಳುತ್ತೀರಿ ನೀವು? ಪಂಚಾಂಗ ಹಿಂಡಿದರೆ ಒಂದು ತೊಟ್ಟೂ ಬೀಳದೆ!” (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು (ನಗುತ್ತಾ): “ಪಂಡಿತರೇನೊ ದೊಡ್ಡ ದೊಡ್ಡ ವಿಷಯಗಳ ವಿಷಯವಾಗಿ ಮಾತಾಡುತ್ತಾರೆ. ಆದರೆ ಅವರ ದೃಷ್ಟಿ ಯಾವ ಕಡೆಗಿದೆ ಗೊತ್ತೆ? ಕಾಮಕಾಂಚನದ ಕಡೆಗೆ, ದೇಹಸುಖ ಮತ್ತು ಹಣದ ಕಡೆಗೆ. ರಣಹದ್ದು ಬಹಳ ಮೇಲಕ್ಕೇನೊ ಹಾರಿಹೋಗುತ್ತದೆ. ಆದರೆ ಅದರ ದೃಷ್ಟಿ ಮಾತ್ರ ಹೆಣದ ಗುಂಡಿಗಳ ಕಡೆಗೇ ಇರುತ್ತದೆ. ಅದು ಕೇವಲ ಹುಡುಕುತ್ತಿರುತ್ತದೆ ಎಲ್ಲಿ ಸತ್ತ ಪ್ರಾಣಿ ಬಿದ್ದಿದೆ, ಎಲ್ಲಿ ಹೆಣದ ಗುಂಡಿ ಇದೆ, ಎಲ್ಲಿ ಶವ ಬಿದ್ದಿದೆ ಅಂತ.
(ಗಿರೀಶನಿಗೆ) “ನರೇಂದ್ರ ಬಹಳ ಉಚ್ಚಶ್ರೇಣಿಗೆ ಸೇರಿದವ. ಆತ ಪ್ರತಿಯೊಂದ ರಲ್ಲಿಯೂ ನಿಪುಣ; ಹಾಡುವುದರಲ್ಲಿ, ಬಾಜಿಸುವುದರಲ್ಲಿ, ಬರೆಯುವುದರಲ್ಲಿ, ವಿದ್ಯಾರ್ಜನೆ ಯಲ್ಲಿ; -ಜೊತೆಗೆ ಜೀತೆಂದ್ರಿಯ, ಸತ್ಯವಾದಿ. ವಿವೇಕವೈರಾಗ್ಯವೂ ಇದೆ. ಇಷ್ಟೊಂದು ಗುಣಗಳು ಒಬ್ಬನಲ್ಲಿಯೇ! (ಮಾಸ್ಟರಿಗೆ) ಏನು? ನಿನ್ನ ಅಭಿಪ್ರಾಯವೇನು? ಏನು ಆತ ಬಹಳ ಉಚ್ಚಶ್ರೇಣಿಗೆ ಸೇರಿದವನಲ್ಲವೆ?”
ಮಾಸ್ಟರ್: “ಹೌದು, ನಿಜ. ಬಹಳ ಉಚ್ಚಶ್ರೇಣಿಗೆ ಸೇರಿದವ.”
ಶ್ರೀರಾಮಕೃಷ್ಣರು (ಮಾಸ್ಟರನ ಕಿವಿಯಲ್ಲಿ): “ನೋಡು, ಈತನಿಗೆ (ಗಿರೀಶನಿಗೆ) ಭಗವಂತನಲ್ಲಿ ಬಹಳ ವಿಶೇಷವಾದ ಅನುರಾಗ ಮತ್ತು ವಿಶ್ವಾಸ ಇದೆ.”
ಮಾಸ್ಟರ್ ಆಶ್ಚರ್ಯಚಕಿತನಾಗಿ ಗಿರೀಶನ ಕಡೆ ನೋಡುತ್ತಿದ್ದಾನೆ. ಗಿರೀಶ ಶ್ರೀರಾಮ ಕೃಷ್ಣರ ಹತ್ತಿರವೇ ಎಲ್ಲೋ ಕೆಲವು ದಿನಗಳಿಂದ ಮಾತ್ರ ಬರುತ್ತಿದ್ದಾನೆ. ಆದರೆ ಮಾಸ್ಟರ ಕಣ್ಣಿಗೆ ಆತ ಪೂರ್ವಪರಿಚಿತ ವ್ಯಕ್ತಿಯ ಹಾಗೆ, ಪರಮ ಆತ್ಮೀಯನ ಹಾಗೆ, ಒಂದೇ ಸೂತ್ರದಲ್ಲಿ ಪೋಣಿಸಿರುವ ಮಣಿಯ ಹಾಗೆ, ಪರಮಹಂಸರ ಭಕ್ತಮಣಿಗಣದಲ್ಲಿ ಒಂದು ಮಣಿ ಇರುವ ಹಾಗೆ ಕಂಡುಬರುತ್ತಿದ್ದಾನೆ.
ನಾರಾಯಣನು ಪರಮಹಂಸರನ್ನು ತಾವು ಹಾಡುವುದಿಲ್ಲವೆ ಅಂತ ಕೇಳಿದ.
ಪರಮಹಂಸರು ತಮ್ಮ ಮಧುರ ಕಂಠದಿಂದ ಭಗವತಿಯ ಸಂಬಂಧವಾಗಿ ಹಾಡಲು ಆರಂಭಿಸಿದರು:
ಅಂತರಂಗದಲ್ಲಿ ಶ್ರೀಘನಶ್ಯಾಮೆಯ
ಆದರಿಸೆಲೆ ಮನವೇ.
ನಮ್ಮಿಬ್ಬರ ಹೊರತಿನ್ನಾರೂ ತಿಳಿಯದ
ರೀತಿಯೊಳವಳೆಡೆ ಸಾಗುವೆವೇ !
ಬಯಕೆ ಸಂಕುಲವ ಬಾಗಿಲಾಚೆಗೇ
ನಿಲಿಸಿಬಾರೊ ಮನವೇ.
ಏಕಾಂತದಿ ನೀನಾಕೆಯ ಕಾಣಲು
‘ಓ ತಾಯೀ’ ಎಂದೆನ್ನುವ ರಸನೆಯ
ಜೊತೆಗೆ ಮಾತ್ರ ಕರೆತಾರೊ !
ಕುರುಚಿ ಕುಮಂತ್ರವ ದೂರತಳ್ಳಿ ನೀ
ಬಾ ನಮ್ಮನು ನೋಡು.
ಜ್ಞಾನ ನಯನವನು ಪಹರೆ ನಿಲ್ಲಿಸಿ ನೀ
ಒಳಗೆ ಬಳಿಗೆ ಬಂದು ಕೂಡು !
ಪರಮಹಂಸರು ತ್ರಿತಾಪದಿಂದ ತಪಿತರಾದ ಸಂಸಾರೀಜೀವರ ಭಾವವನ್ನು ಆರೋಪಿಸಿಕೊಂಡು ಭಗವತಿಯನ್ನು ಒಂದು ವಿಧವಾದ ಅಭಿಮಾನದೃಷ್ಟಿಯಿಂದ ನೋಡು ತ್ತಿರುವಂತೆ ಹಾಡಲಾರಂಭಿಸಿದರು:
ನಿನ್ನ ನಿತ್ಯಾನಂದದಾಚೆಗೆ ತಳ್ಳದಿರು ನೀನೆನ್ನನು
ನಿನ್ನ ಪಾದವನಲ್ಲದೀತನು ಬೇರೆ ಏನೂ ಕಾಣನು….
ಬಳಿಕ ನಿತ್ಯಾನಂದಮಯಿಯ ಬ್ರಹ್ಮಾನಂದದ ಸಂಬಂಧವಾಗಿ ಹಾಡಲಾರಂಭಿಸಿದರು:
ಶಿವಸಂಗದೊಳಾನಂದದಿ ತಾಯಿ ಕುಣಿಯುತಿರುವಳು
ದಿವ್ಯಮಧುವ ಕುಡಿದು ಕೂಡ, ಹೆಜ್ಜೆತಪ್ಪದಿರುವಳು….
ಭಕ್ತರು ನಿಶ್ಶಬ್ದರಾಗಿ ಕುಳಿತು ಹಾಡುಗಳನ್ನು ಕೇಳಿದರು. ಕೆಲವು ನಿಮಿಷಗಳಾದ ಮೇಲೆ ಪರಮಹಂಸರು ಹೇಳಿದರು, “ಇಂದು ನಾನು ಚೆನ್ನಾಗಿ ಹಾಡುವುದಕ್ಕೆ ಆಗಲಿಲ್ಲ. ನನಗೆ ನೆಗಡಿಯಾಗಿದೆ.”
ಕ್ರಮೇಣ ಸಾಯಂಕಾಲವಾಗುತ್ತ ಬಂದಿತು. ಯಾವಾಗ ಮಹಾಸಾಗರಗಳ ವಕ್ಷಸ್ಥಳಗಳ ಮೇಲೆ, ಅಂಬರಸ್ಪರ್ಶಿ ಪರ್ವತಶಿಖರಗಳ ಮೇಲೆ, ವಾಯುವಿಕಂಪಿತ ನದೀತೀರದ ಮೇಲೆ, ದಿಗ್ದಿಗಂತರವ್ಯಾಪಿ ಭೂಮಂಡಲದ ಮೇಲೆ, ಅನಂತ ನೀಲಾಕಾಶದ ಛಾಯೆ ಬೀಳಲಾರಂಭಿ ಸಿತೊ, ಆಗ ಕ್ಷುದ್ರ ಮಾನವನ ಹೃದಯ ಸಹಜವಾಗಿಯೇ ಪರಿವರ್ತನೆಯನ್ನು ಹೊಂದ ಲಾರಂಭಿಸಿತು. ಈಗತಾನೆ ಚರಾಚರ ವಿಶ್ವವನ್ನೆಲ್ಲ ಬೆಳಗುತ್ತಿದ್ದ ಸೂರ್ಯ ಎಲ್ಲಿಗೆ ಹೊರಟು ಹೋದ ಎಂಬುದಾಗಿ ಬಾಲಕನು ಭಾವಿಸುತ್ತಿದ್ದಾನೆ. ಅದೇ ರೀತಿಯಾಗಿ, ಬಾಲಕ ಸ್ವಭಾವ ವನ್ನು ಹೊಂದಿದ ಮಹಾಪುರುಷನೂ ಭಾವಿಸುತ್ತಿದ್ದಾನೆ. ಸಾಯಂಕಾಲವಾಗಿ ಬಿಟ್ಟಿತು. ಏನಾಶ್ಚರ್ಯ ಇದು! ಯಾರು ಸಾಯಂಕಾಲವಾಗುವಂತೆ ಮಾಡಿದರು? ಹಕ್ಕಿಗಳು ಗಿಡಮರಗಳ ಮೇಲೆ ಗುಂಪುಗೂಡಿ ಚಿಲಿಪಿಲಿಗುಟ್ಟುತ್ತಿವೆ. ಯಾವ ಮಾನವರ ಹೃದಯವೆಲ್ಲ ಚೈತನ್ಯವಾಗಿದೆಯೋ, ಅವರು ಆದಿಕವಿಯಾದ, ಕಾರಣಕ್ಕೆ ಕಾರಣನಾದ ಪುರುಷೋತ್ತಮನ ನಾಮಸ್ಮರಣೆ ಮಾಡಲಾರಂಭಿಸಿದ್ದಾರೆ.
ಪರಮಹಂಸರು ದೇವದೇವಿಯರ ನಾಮಸಂಕೀರ್ತನೆ ಮಾಡುತ್ತಿದ್ದಾರೆ. ಭಕ್ತರೆಲ್ಲರೂ ತಾವು ಕುಳಿತಲ್ಲಿಯೇ ಕುಳಿತು ಉದ್ಗ್ರೀವರಾಗಿ ಉತ್ಕರ್ಣರಾಗಿ ಅದನ್ನು ಕೇಳುತ್ತಿದ್ದಾರೆ. ಅವರು ಇಂದಿನಂಥ ಮಧುಮಯ ನಾಮಸಂಕೀರ್ತನೆಯನ್ನೂ ಎಂದು ಕೇಳಿರಲಿಲ್ಲ. ಅಮೃತದ ವರ್ಷಧಾರೆಯಾಗುತ್ತಿದೆಯೊ ಏನೊ ಎಂಬಂತಿತ್ತು. ಪರಮಹಂಸರು ನಾಮ ಸಂಕೀರ್ತನೆಯನ್ನು ಮುಗಿಸಿ ಪ್ರಾರ್ಥನೆ ಮಾಡಲಾರಂಭಿಸಿದ್ದಾರೆ. ಸಾಕ್ಷಾತ್ ಭಗವಂತನೇ ಪ್ರೇಮವನ್ನೇ ದೇಹವನ್ನಾಗಿ ಮಾಡಿಕೊಂಡು ಯಾವ ರೀತಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಪರಮಹಂಸರ ಮೂಲಕ ತೋರಿಸುತ್ತಿರುವನೊ ಏನೊ ಎಂಬಂತಿತ್ತು. ಪರಮಹಂಸರು ಪ್ರಾರ್ಥಿಸುತ್ತಿದ್ದಾರೆ, “ಹೇ ತಾಯೆ, ನಾನು ನಿನ್ನಲ್ಲಿ ಶರಣಾಗತನಾಗಿದ್ದೇನೆ, ನಾನು ನಿನ್ನಲ್ಲಿ ಶರಣಾಗತನಾಗಿದ್ದೇನೆ. ನನಗೆ ದೇಹಸುಖ ಬೇಡ ತಾಯೆ; ಲೋಕಮಾನ್ಯತೆ ಬೇಡ ತಾಯೆ; ಅಣಿಮಾದಿ ಅಷ್ಟಸಿದ್ಧಿಗಳು ಬೇಡ ತಾಯೆ; ಕೇವಲ ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧಭಕ್ತಿ ಉಂಟಾಗುವಂತೆ ಕೃಪೆಮಾಡು. ನಿಷ್ಕಾಮ ಅಮಲ, ಅಹೇತುಕ ಭಕ್ತಿ ಉಂಟಾಗುವಂತೆ ಕೃಪೆಮಾಡು.”
ಪರಮಹಂಸರ ಆಂತರ್ಯದಿಂದ ಬಂದ ಈ ಪ್ರಾರ್ಥನೆಯ ಪ್ರತಿಯೊಂದು ಪದವೂ ಭಕ್ತಿಯ ಮನಗಳನ್ನು ಬಹಳವಾಗಿ ಕುಲುಕಿಸಿ ಅವರನ್ನು ಪುನರುಜ್ಜೀವನಗೊಳಿಸಿಬಿಟ್ಟಿತು. ಅವರ ಕಂಠದ ಮಾಧುರ್ಯತೆ ಮತ್ತು ಅವರ ಮುಖದ ಶಿಶುಸಹಜ ಸರಳತೆ ಭಕ್ತರ ಹೃದಯದ ಅಂತರಾಳವನ್ನು ಮುಟ್ಟಿಬಿಟ್ಟಿತು.
ಇಂದೇ ಪರಮಹಂಸರು ತನ್ನ ಮನೆಗೆ ಬರಬೇಕೆಂದು ಗಿರೀಶ ಅವರನ್ನು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾನೆ.
ಶ್ರೀರಾಮಕೃಷ್ಣರು: “ರಾತ್ರಿಯಾಗಿ ಬಿಡುವುದಿಲ್ಲವೆ?”
ಗಿರೀಶ: “ಇಲ್ಲ. ನೀವು ಅಲ್ಲಿಗೆ ಕಾಲು ಹಾಕಿದ ನಂತರ ಯಾವಾಗ ಬೇಕು ಅಂದರೆ ಆವಾಗ ಹೊರಡಬಹುದು. ನಾನು ಇಂದೇ ಥಿಯೇಟರಿಗೆ ಹೋಗಬೇಕಾಗಿದೆ-ಅಲ್ಲಿ ಒಂದು ಜಗಳವನ್ನು ಇತ್ಯರ್ಥ ಮಾಡಬೇಕಾಗಿದೆ.”
ಶ್ರೀರಾಮಕೃಷ್ಣರು ಗಿರೀಶನ ಮನೆಗೆ ಹೊರಡುವುದರಲ್ಲಿ ರಾತ್ರಿ ಒಂಬತ್ತು ಘಂಟೆಯಾಗಿ ಬಿಟ್ಟಿತು. ಬಲರಾಮ ಪರಮಹಂಸರ ರಾತ್ರಿಯ ಫಲಾಹಾರವನ್ನು ಆಗಲೇ ತಯಾರು ಮಾಡಿದ್ದುದರಿಂದ ಆತನಿಗೆ ಹೇಳಿದರು, “ನೀನು ಗಿರೀಶನ ಮನೆಗೇ ಅದನ್ನು ಕಳುಹಿಸಿಬಿಡು. ನಾನು ಅಲ್ಲೇ ಅದನ್ನು ತೆಗೆದುಕೊಳ್ಳುತ್ತೇನೆ.” ಅಂತ. ಬಲರಾಮನ ಮನಸ್ಸನ್ನು ನೋಯಿಸಲು ಅವರಿಗೆ ಇಚ್ಛೆಯಾಗಲಿಲ್ಲ.
ಪರಮಹಂಸರು ಬಲರಾಮನ ಮನೆಯ ಎರಡನೆಯ ಅಂತಸ್ತಿನಿಂದ ಕೆಳಕ್ಕೆ ಇಳಿಯುತ್ತಿದ್ದ ಹಾಗೆಯೆ ಭಾವಾವಿಷ್ಟರಾಗಿದ್ದಾರೆ. ಅವರ ಪಕ್ಕದಲ್ಲಿ ನಾರಾಯಣ ಮತ್ತು ಮಾಸ್ಟರ್ ಇಳಿದುಬರುತ್ತಿದ್ದಾರೆ. ಅವರ ಹಿಂದೆ ರಾಮ, ಚುನಿಲಾಲ ಮತ್ತು ಉಳಿದ ಭಕ್ತರು ಇಳಿಯುತ್ತಿದ್ದಾರೆ. ನೆಲದ ಅಂತಸ್ತನ್ನು ಮುಟ್ಟುವುದರೊಳಗಾಗಿಯೇ ಪರಮಹಂಸರು ಸಂಪೂರ್ಣವಾಗಿ ಭಾವೋನ್ಮತ್ತರಾಗಿಬಿಟ್ಟಿದ್ದಾರೆ. ಕೆಳಕ್ಕೆ ಬಿದ್ದುಬಿಡಬಹುದೆಂದು ಭಾವಿಸಿ ನಾರಾಯಣ ಅವರ ಕೈಯನ್ನು ಹಿಡಿದುಕೊಳ್ಳಲು ಹೋದ. ಅದನ್ನು ನೋಡಿ ಪರಮಹಂಸರಿಗೆ ಸ್ವಲ್ಪ ಅಸಮಾಧಾನವಾಯಿತು, ಕೆಲವು ನಿಮಿಷಗಳ ನಂತರ ನಾರಾಯಣನಿಗೆ ಪ್ರೀತಿಯಿಂದ ಹೇಳಿದರು, “ಹಾಗೆ ಬಂದು ನೀನು ಕೈ ಹಿಡಿದುಕೊಂಡರೆ ನಾನೊಬ್ಬ ಕುಡುಕ ಅಂತ ಜನ ಭಾವಿಸುತ್ತಾರೆ. ಆದ್ದರಿಂದ ನಾನೇ ನಡೆದು ಹೋಗುತ್ತೇನೆ.”
ಗಿರೀಶನ ಮನೆ ಅಲ್ಲಿಂದೇನೂ ಅಷ್ಟು ದೂರದಲ್ಲಿರಲಿಲ್ಲ. ಪರಮಹಂಸರು ಬೋಸಪಾರಾದ ಕ್ರಾಸ್ ರೋಡನ್ನು ದಾಟಿ, ಇದ್ದಕ್ಕಿದ್ದ ಹಾಗೆ ವೇಗವಾಗಿ ನಡೆಯಲಾ ರಂಭಿಸಿದರು. ಭಕ್ತರೆಲ್ಲರೂ ಹಿಂದೆ ಬಿದ್ದರು. ನರೇಂದ್ರ ಪರಮಹಂಸರ ಕಡೆಗೆ ಸ್ವಲ್ಪ ದೂರದಲ್ಲಿ ಬರುತ್ತಿದ್ದುದು ಕಂಡಿತು, ಉಳಿದ ಸಮಯಗಳಲ್ಲಿ ನರೇಂದ್ರನ ಯೋಚನೆಯೇ ನರೇಂದ್ರನ ಹೆಸರೆ ಅವರಿಗೆ ಅಷ್ಟೊಂದು ಆನಂದವನ್ನು ತರುತ್ತಿತ್ತು; ಈಗ ಅದೇ ನರೇಂದ್ರ ಅವರ ಎದುರಿಗೇ ಬಂದು ನಿಂತಿದ್ದಾನೆ, ಆದರೂ ಆತನೊಡನೆ ಅವರು ಒಂದು ಮಾತನ್ನೂ ಆಡಲಿಲ್ಲ. ಬಹುಶಃ ಪರಮಹಂಸರು ಬೇರೆ ಭಾವದಲ್ಲಿ ಇದ್ದರು ಅಂತ ಕಾಣುತ್ತದೆ.
ಪರಮಹಂಸರು ಮತ್ತು ಭಕ್ತರೆಲ್ಲರು ಗಿರೀಶ ವಾಸಮಾಡುತ್ತಿದ್ದ ಗಲ್ಲಿಯನ್ನು ಪ್ರವೇಶಿಸಿ ದೊಡನೆಯೆ ಪರಮಹಂಸರು ಮಾತನಾಡಲು ಆರಂಭಿಸಿದರು. ಅವರು ನರೇಂದ್ರನಿಗೆ ಹೇಳಿದರು, “ಏನು, ಆರೋಗ್ಯವೆ? ನೀನು ನನ್ನೆದುರಿಗೆ ಬಂದಾಗ ನಿನ್ನೊಡನೆ ಮಾತನಾಡ ಲಾಗಲಿಲ್ಲ.” ಅವರ ಈ ಮಾತಿನ ಪ್ರತಿಯೊಂದು ಪದದಿಂದಲೂ ಮಧು ತೊಟ್ಟಿಕ್ಕುತ್ತಿತ್ತು. ಪರಮಹಂಸರು ಇನ್ನೂ ಗಿರೀಶನ ಮನೆಯ ಹತ್ತಿರಕ್ಕೆ ಬಂದಿರಲಿಲ್ಲ. ಆಗ ತಟ್ಟನೆ ನಿಂತು ನರೇಂದ್ರನ ಕಡೆ ತಿರುಗಿ ಹೇಳಿದರು, “ನಾನು ನಿನಗೊಂದು ವಿಷಯ ತಿಳಿಸಬೇಕೆಂದಿದ್ದೇನೆ. ‘ಇದು’ ಒಂದು, ‘ಅದು’ ಬೇರೊಂದು.” ಆ ಸಮಯದಲ್ಲಿ ಅವರ ಆಂತರ್ಯದ ಭಾವನೆ ಏನಾಗಿದ್ದಿತು ಎಂಬುದನ್ನು ಯಾರು ತಾನೆ ಹೇಳಬಲ್ಲರು?
ಗಿರೀಶನು ಶ್ರೀರಾಮಕೃಷ್ಣರನ್ನು ಎದುರುಗೊಳ್ಳಲು ತನ್ನ ಮನೆಯ ಬಾಗಿಲ ಹತ್ತಿರ ಬಂದು ನಿಂತಿದ್ದಾನೆ. ಪರಮಹಂಸರು ಅತನ ಮನೆಯ ಬಾಗಿಲನ್ನು ಮುಟ್ಟುವುದೇ ತಡ, ಒಡನೆಯೇ ಗಿರೀಶನು ಸಾಷ್ಟಾಂಗ ಪ್ರಣಾಮ ಮಾಡಿ ಒಂದು ಮರದ ದಿಮ್ಮಿಯೋಪಾದಿ ಯಲ್ಲಿ ಅವರ ಪಾದಗಳ ಮೇಲೆ ಬಿದ್ದಿದ್ದಾನೆ. ಅವರು ಏಳು ಎಂದ ಮೇಲೆ ಎದ್ದು ಅವರ ಪಾದಧೂಳಿಯನ್ನು ಸ್ವೀಕರಿಸಿದ. ಬಳಕ ತನ್ನ ಮನೆಯ ಎರಡನೆ ಅಂತಸ್ತಿನಲ್ಲಿದ್ದ ತನ್ನ ಬೈಠಕ್ಖಾನೆಗೆ ಅವರನ್ನು ಕರೆದುಕೊಂಡು ಹೋದ. ಭಕ್ತರು ಅವರನ್ನು ಹಿಂಬಾಲಿಸಿ ಅವರ ಮುಖ ತಮಗೆ ಕಾಣುವ ರೀತಿಯಲ್ಲಿಯೂ ಮತ್ತು ಅವರ ಬಾಯಿಂದ ಬರುವುದನ್ನೆಲ್ಲ ಚೆನ್ನಾಗಿ ಕೇಳಲೋಸುಗ ಅವರ ಸಮೀಪದಲ್ಲಿ ಎಷ್ಟು ಹತ್ತಿರ ಕುಳಿತುಕೊಳ್ಳಲು ಸಾಧ್ಯವೋ ಅಷ್ಟೂ ಹತ್ತಿರ ಕುಳಿತುಕೊಳ್ಳಲು ಪ್ರಯತ್ನಪಟ್ಟರು.
ತಮಗಾಗಿ ಮೀಸಲಾಗಿಟ್ಟಿದ್ದ ಆಸನದ ಮೇಲೆ ಕುಳಿತುಕೊಳ್ಳಲು ಪರಮಹಂಸರು ಹೋದಾಗ ಅದರ ಹತ್ತಿರವೇ ಒಂದು ವಾರ್ತಾಪತ್ರಿಕೆ ಬಿದ್ದಿರುವುದು ಅವರ ಕಣ್ಣಿಗೆ ಬಿತ್ತು. ಅದನ್ನು ಬೇರೆ ಕಡೆಗೆ ತೆಗೆದಿಡುವಂತೆ ಒಬ್ಬನಿಗೆ ಸಂಜ್ಞೆ ಮಾಡಿದರು. ವಾರ್ತಾಪತ್ರಿಕೆ ಪ್ರಾಪಂಚಿಕ ವಿಷಯಗಳನ್ನು-ಪರನಿಂದೆ, ಪರಚರ್ಚೆ ಇವುಗಳನ್ನು ಒಳಗೊಂಡಿರುವುದ ರಿಂದ ಅವರ ದೃಷ್ಟಿಯಿಂದ ಅದೊಂದು ಅಪವಿತ್ರ ವಸ್ತುವೇ ಆಗಿತ್ತು. ಆ ಪತ್ರಿಕೆಯನ್ನು ಅಲ್ಲಿಂದು ತೆಗೆದುಕೊಂಡು ಹೋದ ನಂತರವೇ ಅವರು ಆ ಆಸನದಲ್ಲಿ ಮಂಡಿಸಿದರು. ನಿತ್ಯಗೋಪಾಲ ಅಲ್ಲಿಗೆ ಬಂದು ಪರಮಹಂಸರಿಗೆ ಪ್ರಣಾಮಮಾಡಿದ.
ಶ್ರೀರಾಮಕೃಷ್ಣರು: “ಏನು ಸಮಾಚಾರ? ಬಹಳ ದಿವಸಗಳಿಂದ ನೀನು ದಕ್ಷಿಣೇಶ್ವರಕ್ಕೆ ಬರಲೇ ಇಲ್ಲವಲ್ಲ?”
ನಿತ್ಯಗೋಪಾಲ: “ಹೌದು, ಬಹಳ ದಿವಸಗಳಿಂದ ಅಲ್ಲಿಗೆ ಬರಲಾಗಲಿಲ್ಲ. ನನ್ನ ಆರೋಗ್ಯ ಸರಿಯಾಗಿಲ್ಲ. ಮೈ ಕೈಯಲ್ಲೆಲ್ಲ ನೋವು.”
ಶ್ರೀರಾಮಕೃಷ್ಣರು: “ಈಗ ಹೇಗಿದೆ?”
ನಿತ್ಯಗೋಪಾಲ: “ಇನ್ನೂ ಗುಣವಾಗಿಲ್ಲ.”
ಶ್ರೀರಾಮಕೃಷ್ಣರು: “ನಿನ್ನ ಮನಸ್ಸನ್ನು ಒಂದೆರಡು ಹಂತ ಕೆಳಕ್ಕೆ ಇಳಿಸು.”
ನಿತ್ಯಗೋಪಾಲ: “ಜನರ ಸಹವಾಸ ನನಗೆ ರುಚಿಸುತ್ತಿಲ್ಲ. ಅವರು ನನ್ನ ವಿಷಯ ವಾಗಿ ಏನೇನೊ ಮಾತನಾಡಿಕೊಳ್ಳುತ್ತಾರೆ. ಅದನ್ನು ಕೇಳಿದಾಗ ಸ್ವಲ್ಪ ಭಯವಾಗುತ್ತದೆ; ಆದರೆ ಒಮ್ಮೊಮ್ಮೆ ನನ್ನ ಹೃದಯಕ್ಕೆ ಬಹಳ ಧೈರ್ಯವೂ ಬಂದುಬಿಡುತ್ತದೆ.”
ಶ್ರೀರಾಮಕೃಷ್ಣರು: “ಹಾಗಾಗುವುದು ಸ್ವಾಭಾವಿಕ. ನಿನ್ನ ಜೊತೆಗಾರನಾರು?”
ನಿತ್ಯಗೋಪಾಲ: “ತಾರಕ. ಆತ ಯಾವಾಗ ನೋಡಿದರೂ ನನ್ನೊಡನೆಯೇ ಇರುತ್ತಾನೆ. ಒಮ್ಮೊಮ್ಮೆ ಆತನ ಸಹವಾಸವೂ ನನಗೆ ರುಚಿಸುತ್ತಿಲ್ಲ.”
ಶ್ರೀರಾಮಕೃಷ್ಣರು: “ತೋತಾಪುರಿ ಒಮ್ಮೆ ನನಗೆ ಹೇಳಿದ, ‘ನಮ್ಮ ಮಠದಲ್ಲಿ ಸಿದ್ಧಿಗಳನ್ನು ಪಡೆದ ಒಬ್ಬ ಸಿದ್ಧ ಇದ್ದ. ಆತ ಯಾವಾಗ ನೋಡಿದರೂ ಆಕಾಶದ ಕಡೆಗೇ ತನ್ನ ದೃಷ್ಟಿಯನ್ನಿಟ್ಟು ಸಂಚರಿಸುತ್ತಿದ್ದ. ಆದರೂ ಆತನ ಸಂಗಾತಿಗಳೊಬ್ಬರು ಆತನನ್ನು ಬಿಟ್ಟು ಹೋಗಲು ಆತನಿಗೆ ಬಹಳ ದುಃಖವಾಯಿತು-ಮನಶ್ಶಾಂತಿ ಇಲ್ಲದೆ ಹೋಯಿತು’ ಎಂದು.”
ಹೀಗೆ ಮಾತನಾಡುತ್ತಿದ್ದ ಹಾಗೆಯೇ ಅವರಿಗೆ ಭಾವಾಂತರವಾಯಿತು. ಏನನ್ನೋ ಯೋಚಿಸುತ್ತ ನಿಶ್ಶಬ್ದರಾಗಿ ಕುಳಿತಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಹೇಳಿದರು, “ನೀನು ಇಲ್ಲಿಗೆ ಬಂದಿದ್ದೀಯೇನು? ನಾನೂ ಇಲ್ಲಿಗೆ ಬಂದಿದ್ದೇನೆ.” ಅವರು ಆಡಿದ ಈ ಮಾತು ಗಳು ತಮಗೆ ಅರ್ಥವಾಯಿತು ಎಂದು ಯಾರು ತಾನೆ ನಟಿಸಬಲ್ಲರು? ಇದು ದೇವಭಾಷೆ ಯೇನು?
ನರೇಂದ್ರ, ಗಿರೀಶ, ರಾಮ, ಹರಿಪದ, ಚುನಿಲಾಲ, ಬಲರಾಮ, ಮಾಸ್ಟರ್ ಇವರೇ ಮೊದಲಾದವರು ಗಿರೀಶನ ದಿವಾನ್ಖಾನೆಯಲ್ಲಿ ಕುಳಿತಿದ್ದಾರೆ. ಮನುಷ್ಯ ರೂಪಿನಲ್ಲಿ ಭಗವಂತ ಅವತರಿಸುತ್ತಾನೆ ಎಂಬುದರಲ್ಲಿ ನರೇಂದ್ರನಿಗೆ ವಿಶ್ವಾಸವಿಲ್ಲ. ಆದರೆ ಅದಕ್ಕೆ ವ್ಯತಿರಿಕ್ತವಾಗಿ, ಪ್ರತಿಯೊಂದು ಯುಗದಲ್ಲಿಯೂ ಭಗವಂತ ಮನುಷ್ಯದೇಹಧಾರಣೆ ಮಾಡಿ ಕೊಂಡು ಈ ಮರ್ತ್ಯಲೋಕಕ್ಕೆ ಅವತರಿಸಿ ಬರುತ್ತಾನೆ ಎಂಬುದರಲ್ಲಿ ಗಿರೀಶನಿಗೆ ಉಜ್ಜ್ವಲ ವಿಶ್ವಾಸ.
ಶ್ರೀರಾಮಕೃಷ್ಣರು ಗಿರೀಶನಿಗೆ ಹೇಳಿದರು, “ನೀನು ಮತ್ತು ನರೇಂದ್ರ ಇದರ ಸಂಬಂಧವಾಗಿ ಇಂಗ್ಲೀಷಿನಲ್ಲಿ ವಾದಿಸುವುದನ್ನು ಕೇಳಬೇಕೆಂದಿದ್ದೇನೆ” ಅಂತ.
ವಾದ ವಿವಾದ ಆರಂಭವಾಯಿತು. ಅವರು ಇಂಗ್ಲೀಷಿನಲ್ಲಿ ಮಾತನಾಡುವುದಕ್ಕೆ ಬದಲು ಬಂಗಾಳಿಯಲ್ಲಿ ಮಾತನಾಡುತ್ತಿದ್ದಾರೆ. ಎಲ್ಲೊ ಅಲ್ಲಿ ಇಲ್ಲಿ ಮಾತ್ರ ಒಂದೊಂದು ಇಂಗ್ಲೀಷ್ ಪದವನ್ನು ಉಪಯೋಗಿಸುತ್ತಿದ್ದಾರೆ. ನರೇಂದ್ರ ಹೇಳಿದ, “ಭಗವಂತ ಅನಂತ. ಆತನನ್ನು ಗ್ರಹಿಸಲು ನಮ್ಮಿಂದ ಸಾಧ್ಯವೇ? ಆತ ಎಲ್ಲರ ಆಂತರ್ಯದಲ್ಲಿಯೂ ಇದ್ದಾನೆ. ಆತ ಕೇವಲ ಯಾರೊ ಒಬ್ಬನ ಮೂಲಕ ಮಾತ್ರವೇ ಆವಿರ್ಭವಿಸುತ್ತಾನೆ ಅಂತಲೇನೂ ಭಾವಿಸಬೇಕಾಗಿಲ್ಲ.” ಅಂತ.
ಶ್ರೀರಾಮಕೃಷ್ಣರು ಕೃಪಾದೃಷ್ಟಿಯಿಂದ: “ನರೇಂದ್ರ ಹೇಳುವುದನ್ನು ನ್ಯಾಯಪೂರ್ಣ ವಾಗಿ ಒಪ್ಪುತ್ತೇನೆ. ನಿಜ, ಭಗವಂತ ಸರ್ವತ್ರವೂ ಇದ್ದಾನೆ. ಆದರೆ ಒಂದು ವಿಷಯ; ಶಕ್ತಿವಿಶೇಷತೆ ಇದೆ. ಕೆಲವೆಡೆ ಆತನ ಅವಿದ್ಯಾಶಕ್ತಿಯ ವ್ಯಕ್ತತೆ, ಇನ್ನು ಕೆಲವೆಡೆ ಆತನ ವಿದ್ಯಾಶಕ್ತಿಯ ವ್ಯಕ್ತತೆ. ಕೆಲವರಲ್ಲಿ ಶಕ್ತಿ ವಿಶೇಷವಾಗಿ ವ್ಯಕ್ತವಾಗುತ್ತದೆ, ಇನ್ನು ಕೆಲವರಲ್ಲಿ ಅದು ಕಡಿಮೆಯಾಗಿ ವ್ಯಕ್ತವಾಗಿರುತ್ತದೆ. ಆದ್ದರಿಂದ ಶಕ್ತಿ ವಿಶೇಷತೆಯ ದೃಷ್ಟಿಯಿಂದ ಎಲ್ಲಾ ಮನುಷ್ಯರೂ ಸರಿಸಮಾನರಲ್ಲ.”
ರಾಮ: “ಈ ವಿಧವಾದ ನಿರರ್ಥಕ ತರ್ಕದಿಂದ ಏನು ಪ್ರಯೋಜನ?”
ಶ್ರೀರಾಮಕೃಷ್ಣರು ತಟಕ್ಕನೆ: “ಇಲ್ಲ! ಇಲ್ಲ! ಇದರಲ್ಲಿ ಒಂದು ಪ್ರಯೋಜನವಿದೆ.”
ಗಿರೀಶ: “ಆತ ಮಾನವ ದೇಹಧಾರಣೆ ಮಾಡಿಕೊಂಡು ಬರುವುದಿಲ್ಲ ಎಂಬುದು ನಿನಗೆ ಗೊತ್ತಾದ ಬಗೆ ಹೇಗೆ?”
ನರೇಂದ್ರ: “ಆತ ಅವಾಙ್ಮನಸಗೋಚರ.”
ಶ್ರೀರಾಮಕೃಷ್ಣರು: “ಅಲ್ಲ, ಅದು ಸರಿಯಲ್ಲ. ಆತ ಶುದ್ಧ ಬುದ್ಧಿಗೆ ಗೋಚರ. ಶುದ್ಧ-ಬುದ್ಧಿ ಎಂದರೂ ಒಂದೇ, ಶುದ್ಧ-ಆತ್ಮ ಎಂದರೂ ಒಂದೇ, ಋಷಿಗಳು ಶುದ್ಧ- ಬುದ್ಧಿ-ಶುದ್ಧ-ಆತ್ಮದ ಮೂಲಕ ಶುದ್ಧ ಆತ್ಮನ ಸಾಕ್ಷಾತ್ಕಾರವನ್ನು ಪಡೆದರು.”
ಗಿರೀಶ ನರೇಂದ್ರನಿಗೆ: “ಭಗವಂತ ಮಾನವರೂಪಿನಲ್ಲಿ ಅವತರಿಸಿ ಬರದೇ ಇದ್ದರೆ ಅಧ್ಯಾತ್ಮ ವಿಷಯಗಳನ್ನು ಜನರಿಗೆ ತಿಳಿಸಿಕೊಡತಕ್ಕವರು ಬೇರೆ ಎಲ್ಲಿ ದೊರೆಯುತ್ತಾರೆ? ಮನುಷ್ಯನಿಗೆ ಜ್ಞಾನ ಭಕ್ತಿ ಇವನ್ನು ಉಪದೇಶಿಸಲೋಸುಗವೇ ದೇಹಧಾರಣೆಮಾಡಿ ಬರುತ್ತಾನೆ. ಆತ ಹಾಗೆ ಮಾಡದೆ ಇದ್ದರೆ ಬೇರೆ ಶಿಕ್ಷಕರೆಲ್ಲಿ ದೊರೆಯುತ್ತಾರೆ?”
ನರೇಂದ್ರ: “ಬೇರೆ ಯಾರು ಬೇಕು? ಆತ ನಮ್ಮ ಹೃದಯದಲ್ಲೇ ವಾಸಿಸುತ್ತಾನೆ. ಆತ ಆಂತರ್ಯದಿಂದಲೇ ನಮಗೆ ತಿಳಿಸಿಕೊಡುತ್ತಾನೆ.”
ಶ್ರೀರಾಮಕೃಷ್ಣರು ಅಕ್ಕರೆಯಿಂದ : “ಹೌದು, ಹೌದು, ಆತ ನಮ್ಮ ಆಂತರ್ಯ ರೂಪದಿಂದ ತಿಳಿಸಿಕೊಡುತ್ತಾನೆ.”
ಬಳಿಕ ನರೇಂದ್ರನಿಗೂ ಗಿರೀಶನಿಗೂ ಒಂದು ದೊಡ್ಡ ವಾಗ್ಯುದ್ಧವೇ ಆರಂಭವಾಗಿ ಬಿಟ್ಟಿತು. ಅನಂತದಲ್ಲಿ ಅಂಶವಿರಲು ಸಾಧ್ಯವೆ? ಹ್ಯಾಮಿಲ್ಟನ್ ಏನು ಹೇಳಿದ್ದಾನೆ. ಹರ್ಬರ್ಟ ಸ್ಪೆನ್ಸರ್ ಏನು ಹೇಳಿದ್ದಾನೆ? ಟಿಂಡಲ್, ಹಕ್ಸಲಿ ಇವರೇ ಮೊದಲಾದವರ ಅಭಿಪ್ರಾಯವೇನು? ಈ ರೀತಿಯಾಗಿ ವಾದ ಬೆಳೆಯುತ್ತಾ ಹೋಯಿತು.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ನೋಡು, ನನಗೆ ಈ ವಿಧವಾದ ವಾದ ಹಿಡಿಸವುದಿಲ್ಲ. ನನಗೆ ಎಲ್ಲವೂ ಆತನೆ ಆಗಿ ತೋರಿಬರುತ್ತಿದ್ದಾನೆ. ಆದ್ದರಿಂದ ಇನ್ನು ನನಗೆ ವಿಚಾರದ ಅವಶ್ಯಕತೆಯೇನಿದೆ? ಎಲ್ಲವೂ ಆತನೇ ಆಗಿರುವುದು ನನ್ನ ಕಣ್ಣಿಗೆ ಕಾಣಬರುತ್ತಿದೆ. ಎಲ್ಲವೂ ಆತನೇ ಆಗಿದ್ದಾನೆ. ಪ್ರತಿಯೊಂದೂ ಆತನೇ ಆಗಿದ್ದಾನೆ; ಮತ್ತೆ ಅದೇ ಸಮಯದಲ್ಲಿ ಇವುಗಳೆಲ್ಲಕ್ಕೂ ಅತೀತನೂ ಆಗಿದ್ದಾನೆ. ಒಂದು ಅವಸ್ಥೆಯಲ್ಲಿ ನನ್ನ ಮನಸ್ಸು ಬುದ್ಧಿ ಅಖಂಡದಲ್ಲಿ ಲಯವಾಗಿಬಿಡುತ್ತದೆ. ನರೇಂದ್ರನನ್ನು ನೋಡಿ ಒಡನೆಯೆ ನನ್ನ ಮನಸ್ಸು ಅಖಂಡದಲ್ಲಿ ಲಯವಾಗಿಬಿಡುತ್ತದೆ. (ಗಿರೀಶನಿಗೆ) ಇದಕ್ಕೆ ನಿನ್ನ ಉತ್ತರವೇನು ಹೇಳು ನೋಡೋಣ?”
ಗಿರೀಶ (ನಗುತ್ತ): “ಇದೊಂದನ್ನು ಬಿಟ್ಟು ಉಳಿದುದೆಲ್ಲ ಪ್ರಾಯಶಃ ನಾನು ಅರೆದು ಕುಡಿದುಬಿಟ್ಟಿದ್ದೇನಲ್ಲ, ಅದಕ್ಕಾಗಿ ಈ ಪ್ರಶ್ನೆ! (ಎಲ್ಲರೂ ನಗುತ್ತಾರೆ.)
ಶ್ರೀರಾಮಕೃಷ್ಣರು: “ಸಮಾಧಿಯ ಅವಸ್ಥೆಯಿಂದ ಒಂದೆರಡು ಹಂತ ಕೆಳಕ್ಕೆ ಇಳಿದು ಬಾರದೇ ಇದ್ದರೆ ನನ್ನ ಬಾಯಿಂದ ಮಾತೇ ಹೊರಡದು. ವೇದಾಂತದಲ್ಲಿ ಶಂಕರಾ ಚಾರ್ಯರು ಬೋಧಿಸಿರುವ ಅದ್ವೈತವನ್ನೂ ನೋಡಬಹುದು. ರಾಮಾನುಜಾಚಾರ್ಯರು ಬೋಧಿಸಿರುವ ವಿಶಿಷ್ಟಾದ್ವೈತವನ್ನೂ ನೋಡಬಹುದು.”
ನರೇಂದ್ರ: “ವಿಶಿಷ್ಟಾದ್ವೈತವಾದ ಎಂಬುದು ಏನು?”
ಶ್ರೀರಾಮಕೃಷ್ಣರು: “ಅದು ರಾಮಾನುಜಾಚಾರ್ಯರ ಮತ. ಅವರ ದೃಷ್ಟಿಯಿಂದ ತುತ್ತತುದಿಯ ಸತ್ಯ, ಜೀವ-ಜಗತ್ ವಿಶಿಷ್ಟ ಬ್ರಹ್ಮ-ಇವು ಮೂರು ಸೇರಿ ಒಂದಾಗಿರುವುದು. ಉದಾಹರಣೆಗೆ ಬೇಲದ ಹಣ್ಣು ತೆಗೆದುಕೊಳ್ಳಿ. ಒಬ್ಬನಿಗೆ ಒಂದು ಬೇಲದ ಹಣ್ಣಿನ ತೂಕವನ್ನು ಕಂಡುಹಿಡಿಯಲು ಇಚ್ಛೆಯಾಯಿತು. ಆತ ಅದನ್ನು ಒಡೆದು, ಅದರ ಓಟೆ, ತಿರುಳು, ಬೀಜ ಇವನ್ನು ಪ್ರತ್ಯೇಕ ಮಾಡಿದ. ಈಗ ಬರೀ ತಿರುಳನ್ನು ಮಾತ್ರವೇ ತೂಗಿ ನೋಡಿದರೆ ಬೇಲದ ಹಣ್ಣಿನ ನಿಜವಾದ ತೂಕ ಸಿಕ್ಕುವುದೇ? ಓಟೆ, ಬೀಜ, ತಿರುಳು ಇವು ಮೂರನ್ನೂ ಒಟ್ಟಿಗೆ ಸೇರಿಸಿ ತೂಗಬೇಕು. ಯೋಚಿಸಿನೋಡಿದ ಮೊಟ್ಟಮೊದಲು ನಮಗನಿಸುತ್ತದೆ ಬೇಲದ ಹಣ್ಣಿನ ಸಾರಪದಾರ್ಥ ಓಟೆಯೂ ಅಲ್ಲ, ಬೀಜವೂ ಅಲ್ಲ, ಬರೀ ತಿರುಳು ಮಾತ್ರವೇ ಅಂತ. ಆದರೆ ಇನ್ನೂ ಸ್ವಲ್ಪ ಪರಿಶೀಲಿಸಿ ನೋಡಿದರೆ ತೋರುತ್ತದೆ-ಯಾವ ವಸ್ತುವಿನಿಂದ ತಿರುಳು ಉತ್ಪನ್ನವಾಗಿರುವುದೊ, ಅದೇ ವಸ್ತುವಿನಿಂದ ಓಟೆ ಮತ್ತು ಬೀಜವೂ ಉತ್ಪನ್ನವಾಗಿದೆ ಅಂತ, ಆಧ್ಯಾತ್ಮಿಕ ಜೀವನದ ಮೊದಲ ಹಂತಗಳಲ್ಲಿ ‘ನೇತಿ ನೇತಿ’ ; ‘ಇದಲ್ಲ, ಇದಲ್ಲ’ ಅಂತ ಮುಂದುವರಿಯಬೇಕು. ನಿಜವಾದ ವಸ್ತು ಜೀವವೂ ಅಲ್ಲ, ಜಗತ್ತೂ ಅಲ್ಲ; ನಿಜವಾದ ವಸ್ತು ಕೇವಲ ಬ್ರಹ್ಮನೇ, ಉಳಿದುದೆಲ್ಲ ಅವಸ್ತು ಅಂತ ವಿಚಾರ ಮಾಡಬೇಕು. ಬಳಿಕ ಅನುಭವವಾಗುತ್ತದೆ, ತಿರುಳು ಯಾರದೊ ಆತನದೇ ಓಟೆ ಮತ್ತು ಬೀಜ ಅಂತ; ಯಾವುದರಿಂದ ಬ್ರಹ್ಮನ ಭಾವನೆ ಉತ್ಪನ್ನವಾಗಿದೆಯೊ, ಅದರಿಂದಲೇ ಜೀವಜಗತ್ತಿನ ಭಾವನೆ ಉತ್ಪನ್ನವಾಗಿದೆ ಅಂತ; ನಿತ್ಯ ಯಾರದೋ, ಆತನದೇ ಲೀಲೆ ಅಂತ. ಅದಕ್ಕಾಗಿಯೇ ರಾಮಾನುಜಾಚಾರ್ಯರು ಹೇಳುವುದು, ಬ್ರಹ್ಮ, ಜೀವ-ಜಗತ್ ವಿಶಿಷ್ಟ ಅಂತ. ಇದಕ್ಕೆ ವಿಶಿಷ್ಟಾದ್ವೈತ ಅಂತ ಹೆಸರು.
(ಮಾಸ್ಟರಿಗೆ): “ನಾನು ಸಾಕ್ಷಾತ್ತಾಗಿ ಆತನನ್ನು ನೋಡುತ್ತಿದ್ದೇನೆ. ಹಾಗಿರುವಾಗ ಇನ್ನು ನನಗೆ ವಿಚಾರದ ಆವಶ್ಯಕತೆಯೇನಿದೆ? ಆತನೇ ಎಲ್ಲವೂ ಆಗಿರುವುದನ್ನು ಸಾಕ್ಷಾತ್ತಾಗಿ ನೋಡುತ್ತಿದ್ದೇನೆ.
“ಆದರೆ ಆತ್ಮಜಾಗೃತಿ ಆಗದೆ ಇದ್ದರೆ ಆತನ ಸ್ವರೂಪವನ್ನು ಅರಿಯಲಾಗುವುದಿಲ್ಲ. ವಿಚಾರದ ಅವಶ್ಯಕತೆ ಎಲ್ಲಿಯವರೆಗೆ? ಆತನ ಸಾಕ್ಷಾತ್ಕಾರವಾಗದವರೆಗೆ. ಎಲ್ಲವೂ ಆತನೇ ಆಗಿರುವುದನ್ನು ನಾನೂ ಪ್ರತ್ಯಕ್ಷವಾಗಿ ನೋಡುತ್ತಿದ್ದೇನೆ ಅಂತ ಬರೀ ಬಾಯಿಮಾತಿ ನಲ್ಲಿ ಹೇಳಿಬಿಟ್ಟರಾಗುವುದಿಲ್ಲ; ಆತನ ಕೃಪೆಯಿಂದ ಆತ್ಮಜಾಗ್ರತಿ ಉಂಟಾಗಬೇಕು. ಆತ್ಮಜಾಗ್ರತಿಗೊಂಡಿತು ಅಂದರೆ ಸಮಾಧಿಯುಂಟಾಗುತ್ತದೆ; ಆಗ ದೇಹಭಾವನೆ ಹೊರಟು ಹೋಗುತ್ತದೆ; ಕಾಮಕಾಂಚನಾಸಕ್ತಿ ಇರದು; ಭಗವದ್ವಿಷಯ ವಿನಾ ಬೇರೆ ಏನೂ ರುಚಿಸದು; ಪ್ರಾಪಂಚಿಕ ಮಾತುಕತೆಗಳು ಕಿವಿಗೆ ಬಿತ್ತು ಅಂದರೆ ಯಾತನೆಯುಂಟಾಗುತ್ತದೆ. ಆತ್ಮಜಾಗ್ರತಿಗೊಂಡರೇನೇ ಭಗವಂತನನ್ನು ಅರಿಯಲು ಸಾಧ್ಯವಾಗುತ್ತದೆ.”
ನರೇಂದ್ರ ಮತ್ತು ಗಿರೀಶರ ವಾಗ್ವಾದ ಕೊನೆಗೊಂಡಿತು. ಬಳಿಕ ಪರಮಹಂಸರು ಮಾಸ್ಟರಿಗೆ ಹೇಳಿದರು, “ನೋಡು, ಭಗವಂತನ ಸಂಬಂಧವಾಗಿ ವಿಚಾರದ ಮೂಲಕ ಒಂದು ವಿಧವಾದ ಅನುಭವ ದೊರೆಯುತ್ತದೆ, ಧ್ಯಾನದ ಮೂಲಕ ಬೇರೊಂದು ವಿಧವಾದ ಅನುಭವ ದೊರೆಯುತ್ತದೆ; ಆದರೆ ಆತ ತಾನಾಗಿಯೇ ಪ್ರತ್ಯಕ್ಷನಾಗಿಬಿಟ್ಟಾಗ, ಆಗ ದೊರೆಯುವ ಅನುಭವವೇ ಬೇರೆ. ಆತ ತಾನಾಗಿಯೇ ಪ್ರತ್ಯಕ್ಷನಾಗಿಬಿಟ್ಟ ಅಂದರೆ-ಅವತಾರ ಎಂಬುದು ಇದೇನೇ, -ಆತ ತನ್ನ ಮಾನವಲೀಲೆಯನ್ನು ವ್ಯಕ್ತಗೊಳಿಸಿಕೊಂಡು ಬಿಟ್ಟ ಅಂದರೆ, ಮತ್ತೆ ಭಕ್ತನಿಗೆ ವಿಚಾರದಲ್ಲಿ ತೊಡಗಿರಬೇಕಾದ ಆವಶ್ಯಕತೆಯೇನು ಇರುವುದಿಲ್ಲ; ಆಗ ಆತನಿಗೆ ಯಾವ ವಿಚಾರಣೆಯೂ ಬೇಕಾಗಿರುವುದಿಲ್ಲ. ಇದು ಹೇಗೆ ಎಂಬುದು ನಿನಗೆ ಗೊತ್ತೆ? ಯಾರೊ ಒಬ್ಬ ಕತ್ತಲೆ ಕೊಠಡಿಯಲ್ಲಿ ಇದ್ದಾನೆ ಅಂತ ಭಾವಿಸಿಕೊ. ಬೆಂಕಿಕಡ್ಡಿಯನ್ನು ಗೀಚುತ್ತ ಗೀಚುತ್ತ ಇದ್ದಹಾಗೆ ಅದು ಥಟ್ಟನೆ ‘ಧಗ್’ ಎಂದು ಹೊತ್ತಿಕೊಂಡುಬಿಡುತ್ತದೆ. ಅದೇ ರೀತಿಯಾಗಿ ಭಗವಂತ ಇದ್ದಕ್ಕಿದ್ದ ಹಾಗೆ ‘ಥಟ್’ ಅಂತ ತೋರಿಸಿಕೊಳ್ಳುವುದಾದರೆ, ಆಗ ಸಕಲ ಸಂದೇಹಗಳೂ ನಿವೃತ್ತಿಯಾಗಿ ಹೋಗುತ್ತವೆ. ಬರೀ ವಿಚಾರದಿಂದ ಆತನನ್ನು ಅರಿಯಲಾಗುವುದೆ?”
ಪರಮಹಂಸರು ನರೇಂದ್ರನನ್ನು ತಮ್ಮ ಹತ್ತಿರಕ್ಕೆ ಕೂರಿಸಿಕೊಂಡು ಆತನ ಕ್ಷೇಮ ಸಮಾಚಾರವನ್ನೆಲ್ಲ ವಿಚಾರಿಸಿ ಬಹಳವಾಗಿ ಅಕ್ಕರೆ ತೋರಿಸುತ್ತಿದ್ದಾರೆ.
ನರೇಂದ್ರ, ಶ್ರೀರಾಮಕೃಷ್ಣರಿಗೆ: “ಏಕೆ ಹೀಗಾಯಿತು? ನಾನು ಕಾಳಿಯ ಧ್ಯಾನವನ್ನು ಮೂರು ನಾಲ್ಕು ದಿವಸ ಮಾಡಿದೆ. ಆದರೆ ಯಾವ ಫಲವೂ ನನಗೆ ದೊರೆಯಲೇ ಇಲ್ಲವಲ್ಲ!”
ಶ್ರೀರಾಮಕೃಷ್ಣರು: “ಕ್ರಮೇಣ ದೊರೆಯುತ್ತದೆ. ಕಾಳಿ ಎಂಬುವವಳು ಮತ್ತೆ ಬೇರೆ ಏನೂ ಅಲ್ಲ, ಯಾರು ಬ್ರಹ್ಮನೊ ಆತನೇ ಕಾಳಿ. ಕಾಳಿ ಎಂಬುವವಳೇ ಆ ಶಕ್ತಿ. ಯಾವಾಗ ಭಗವಂತ ನಿಷ್ಕ್ರಿಯನೊ ಆಗ ಆತನಿಗೆ ಬ್ರಹ್ಮ ಅಂತ ಹೆಸರು. ಯಾವಾಗ ಆತ ಸೃಷ್ಟಿ ಸ್ಥಿತಿ ಪ್ರಳಯ ಕಾರ್ಯಗಳನ್ನು ಮಾಡುತ್ತಾನೊ ಆಗ ಆತನಿಗೇ ಶಕ್ತಿ ಅಂತ ಹೆಸರು. ಯಾರನ್ನು ನೀನು ಬ್ರಹ್ಮ ಅಂತ ಕರೆಯುತ್ತೀಯೋ, ಆತನನ್ನೇ ನಾನು ಕಾಳಿ ಅಂತ ಕರೆಯುತ್ತೇನೆ.
“ಬ್ರಹ್ಮ ಕಾಳಿ ಅಭೇದ. ಇವರಿಗಿರುವ ಸಂಬಂಧ ಅಗ್ನಿಗೂ ಮತ್ತು ಅದರ ದಾಹಕ ಶಕ್ತಿಗೂ ಇರುವ ಸಂಬಂಧದ ಹಾಗೆ. ಅಗ್ನಿಯ ಭಾವನೆಯೊಡನೆ ಅದರ ದಾಹಕಶಕ್ತಿಯ ಭಾವನೆಯನ್ನೂ ಮಾಡಲೇಬೇಕಾಗುತ್ತದೆ. ಬ್ರಹ್ಮನನ್ನು ಸ್ವೀಕರಿಸಿತು ಎಂದರೆ ಕಾಳಿಯನ್ನು ಸ್ವೀಕರಿಸಲೇಬೇಕು; ಕಾಳಿಯನ್ನು ಸ್ವೀಕರಿಸಿತು ಎಂದರೆ ಬ್ರಹ್ಮನನ್ನು ಸ್ವೀಕರಿಸಲೇಬೇಕು. ಶಕ್ತಿ ಬ್ರಹ್ಮ ಅಭೇದ. ಬ್ರಹ್ಮನನ್ನೇ ಶಕ್ತಿ ಅಥವಾ ಕಾಳಿ ಅಂತ ನಾನು ಕರೆಯುವುದು.”
ಆಗಲೇ ರಾತ್ರಿ ಬಹಳವಾಗಿ ಮುಂದುವರಿದಿದೆ. ಥಿಯೇಟರಿಗೆ ಹೋಗಬೇಕಾಗಿರುವು ದರಿಂದ ಒಂದು ಕುದುರೆಗಾಡಿ ತರಲು ಗಿರೀಶ ಹರಿಪದನಿಗೆ ಹೇಳಿದ. ಹರಿಪದ ಇನ್ನೇನು ಕೊಠಡಿಯನ್ನು ಬಿಟ್ಟು ಹೊರಡುವುದರಲ್ಲಿದ್ದ. ಆಗ ಪರಮಹಂಸರು ನಗುತ್ತ, ಹೇಳಿದರು: “ನೋಡಿಕೊ, ಗಾಡಿ ತರುವುದನ್ನು ಮರೆತುಬಿಟ್ಟೀಯೆ!” ಅಂತ. (ಎಲ್ಲರೂ ನಗುತ್ತಾರೆ.)
ಹರಿಪದ ನಗುತ್ತ: “ನಾನು ಹೋಗುತ್ತಿರುವುದೇ ಅದಕ್ಕಾಗಿ. ಅದನ್ನು ತರುವುದನ್ನು ಮರೆಯುವೆನೆ?”
ಗಿರೀಶ: “ನಿಮ್ಮನ್ನು ಬಿಟ್ಟು ನಾನು ಥಿಯೇಟರಿಗೆ ಹೋಗಬೇಕಾಗಿದೆಯಲ್ಲ!”
ಶ್ರೀರಾಮಕೃಷ್ಣರು: “ಅದು ಸರಿ. ನೀನು ಆ ಕಡೆಗೆ ಮತ್ತು ಈ ಕಡೆಗೆ ಎರಡೂ ಕಡೆಗೂ ಮನಸ್ಸನ್ನಿಡಬೇಕು. ‘ಜನಕರಾಜ ಅದನ್ನೂ-ಇದನ್ನೂ ಎರಡನ್ನೂ ಹಿಡಿದು ಕುಡಿದನು ತುಂಬಿದ ಹಾಲು ಬಟ್ಟಲನ್ನು!’” (ಎಲ್ಲರೂ ನಗುತ್ತಾರೆ.)
ಗಿರೀಶ: “ಥಿಯೇಟರನ್ನು ಯುವಕರಿಗೆ ವಹಿಸಿಬಿಡಲು ಯೋಚಿಸಿದ್ದೇನೆ.”
ಶ್ರೀರಾಮಕೃಷ್ಣರು: “ಬೇಡ, ಬೇಡ. ಹಾಗೆ ಮಾಡಬೇಡ. ನೀನು ನೋಡಿಕೊಳ್ಳು ವುದೇ ಮೇಲು. ಅದರಿಂದ ಅನೇಕರಿಗೆ ಉಪಕಾರವಾಗುತ್ತಿದೆ.”
ನರೇಂದ್ರ (ಮೆಲ್ಲಗೆ): “ಈಗ ತಾನೆ ಈತ (ಗಿರೀಶ) ಇವರನ್ನು (ಪರಮಹಂಸರನ್ನು) ಭಗವಂತ, ಅವತಾರ ಅಂತ ಹೇಳುತ್ತಿದ್ದ; ಈಗಲೇ ಈತನಿಗೆ ಥಿಯೇಟರ್ ಕಡೆ ಎಳೆತ!”
ಪರಮಹಂಸರು ನರೇಂದ್ರನನ್ನು ತಮ್ಮ ಹತ್ತಿರ ಕೂರಿಸಿಕೊಂಡು ಆತನ ಕಡೆಗೇ ದೃಷ್ಟಿಸಿ ನೋಡುತ್ತಿದ್ದಾರೆ. ಇದ್ದಕ್ಕಿದ್ದ ಹಾಗೆ ಇನ್ನೂ ಮುಂದಕ್ಕೆ ಸರಿದು ಆತನ ಪಕ್ಕದಲ್ಲಿಯೇ ಕುಳಿತುಕೊಂಡರು. ನರೇಂದ್ರನಿಗೆ ಭಗವಂತ ಅವತರಿಸುತ್ತಾನೆ ಎಂಬುದರಲ್ಲಿ ವಿಶ್ವಾಸವಿಲ್ಲ-ಅದರಿಂದೇನು ಆಕಾಶ ಕಳಚಿ ಬಿದ್ದುಹೋಗಿಬಿಡುತ್ತದೆಯೇನು? ಪರಮಹಂಸರ ಪ್ರೀತಿ ಆತನ ಕಡೆ ಇನ್ನೂ ಹೆಚ್ಚು ಪ್ರಮಾಣದಲ್ಲಿ ಹರಿದು ಉಕ್ಕಿ ಉಕ್ಕಿ ಬರುತ್ತದೆ. ಆತನ ಮೈಯನ್ನು ಸವರಿ ಒಂದು ಹಾಡಿನ ಚರಣವನ್ನು ಹಾಡಿದರು:
ನಮ್ಮಿಂದ ನಿನ್ನ ಬಿಂಕಕೆ ಭಂಗ ಬಂದಿತೇನು?
ಅಂತಾದರಂತೆ ಸರಿ; ನಮಗು ಕೂಡ ಬಿಂಕ
ಉಂಟೆಂಬುದನು ನೀನು ತಿಳಿದಿಲ್ಲವೇನು!
ಬಳಿಕ ಶ್ರೀರಾಮಕೃಷ್ಣರು ನರೇಂದ್ರನಿಗೆ: “ಎಲ್ಲಿಯವರೆಗೆ ಮನುಷ್ಯ ವಿಚಾರದಲ್ಲಿಯೇ ಆಸಕ್ತನಾಗಿರುತ್ತಾನೊ ಅಲ್ಲಿಯವರೆಗೆ ಭಗವಂತ ಆತನ ಹತ್ತಿರವೇ ಸುಳಿಯಲೊಲ್ಲ. ನೀವಿಬ್ಬರು ವಿಚಾರದಲ್ಲಿ ತೊಡಗಿದ್ದಿರಿ, ಅದು ನನಗೆ ಸರಿದೋರಲಿಲ್ಲ.
“ಔತಣದ ಮನೆಯ ಜನಸಂದಣಿ ಗದ್ದಲ ಎಲ್ಲಿಯವರೆಗೆ ಕೇಳಿಬರುತ್ತದೆ? ಊಟಕ್ಕೆ ಕೂರಿಸದವರೆಗೆ. ಯಾವಾಗ ಎಲೆಗೆ ಅನ್ನ ಸಾರು ಬೀಳುವುದೊ, ಆಗ ಮುಕ್ಕಾಲು ಭಾಗ ಶಬ್ದ ಅಡಗಿ ಹೋಗುತ್ತದೆ. (ಎಲ್ಲರೂ ನಗುತ್ತಾರೆ.) ಉಳಿದ ಭಕ್ಷ್ಯಭೋಜ್ಯಗಳು ಬಿದ್ದ ನಂತರ ಇನ್ನೂ ಕಡಿಮೆಯಾಗಿ ಬಿಡುತ್ತದೆ. ಮಜ್ಜಿಗೆ ಹಾಕುತ್ತಾ ಇರುವಾಗ, ಕೇವಲ ‘ಸುಪ್, ಸುಪ್’ ಎಂಬ ಶಬ್ದ ಕೇಳಿ ಬರಲಾರಂಭಿಸುತ್ತದೆ. ಊಟ ಮುಗಿಯಿತು ಅಂದರೆ ನಿದ್ರೆ.
“ಭಗವಂತನ ಕಡೆಗೆ ಮುಂದುಮುಂದುವರಿದಂತೆಲ್ಲ, ಆತನ ಸಂಬಂಧವಾಗಿ ವಿಚಾರ ಮಾಡುವುದೆಲ್ಲ ಕಡಿಮೆಯಾಗಿಬಿಡುತ್ತದೆ. ಆತನ ಸಾಕ್ಷಾತ್ಕಾರ ದೊರೆಯಿತು ಅಂದರೆ ಮತ್ತೆ ಶಬ್ದ, ವಿಚಾರ ಏನೂ ಇರುವುದಿಲ್ಲ. ಆಗ ನಿದ್ರೆ-ಸಮಾಧಿ.”
ಪರಮಹಂಸರು ನರೇಂದ್ರನ ಮೈಯನ್ನು ಮೆದುವಾಗಿ ತಡವಿ, ಆತನ ಗಲ್ಲವನ್ನು ಅಕ್ಕರೆಯಿಂದ ಮುಟ್ಟಿ ಹೇಳಿದರು, “ಹರಿಃ ಓಂ! ಹರಿಃ ಓಂ! ಹರಿಃ ಓಂ!” ಅಂತ. ಕ್ರಮಕ್ರಮೇಣ ಅವರಿಗೆ ಬಾಹ್ಯ ಜಗತ್ತಿನ ಪ್ರಜ್ಞೆ ಕಡಿಮೆಯಾಗುತ್ತಾ ಬರಲಾರಂಭಿಸಿದೆ. ಅವರ ಕೈ ಇನ್ನೂ ನರೇಂದ್ರನ ಮೇಲೆಯೇ ಇದೆ. ಮತ್ತೆ ಅದೇ ಅವಸ್ಥೆಯಲ್ಲಿ ನರೇಂದ್ರನ ಮೈಕೈಯನ್ನೆಲ್ಲಾ ತಡವಲಾರಂಭಿಸಿದರು. ಕ್ರಮೇಣ ಅವರ ಅವಸ್ಥೆ ಭಾವಾಂತರವನ್ನು ಹೊಂದಿತು. ಅವರು ಕೈ ಮುಗಿದುಕೊಂಡು ನರೇಂದ್ರನಿಗೆ ಹೇಳುತ್ತಿದ್ದಾರೆ: “ದಯವಿಟ್ಟು ಒಂದು ಹಾಡನ್ನು ಹಾಡು; ಆಗ ನನಗೆ ಸರಿಹೋಗಿ ಬಿಡುತ್ತದೆ. ಇಲ್ಲದೆ ಇದ್ದರೆ ನನ್ನ ಕಾಲಿನ ಮೇಲೆ ಎದ್ದು ನಿಲ್ಲೋ ಬಗೆ ಹೇಗೆ?” ಮತ್ತೆ ಸ್ವಲ್ಪ ಹೊತ್ತು ಅವರ ಬಾಯಿಂದ ಯಾವ ಮಾತೂ ಹೊರಡಲಿಲ್ಲ. ಪ್ರತಿಮೆಯೋಪಾದಿಯಲ್ಲಿ ಸುಮ್ಮನೆ ಕುಳಿತಿದ್ದಾರೆ. ಬಳಿಕ ಭಾವೋನ್ಮತ್ತರಾಗಿ ಹೇಳುತ್ತಿದ್ದಾರೆ: “ಕೃಷ್ಣ ಪ್ರೇಮದಿಂದ ಉನ್ಮತ್ತಳಾಗಿರೋ ಹೇ ರಾಧೆಯೇ! ನೋಡಿಕೋ, ಯಮುನೆಗೇನಾದರೂ ಕಾಲುತಪ್ಪಿ ಬಿದ್ದುಬಿಟ್ಟೀಯೇ!”
ಪರಮಹಂಸರು ಭಗವದ್ಭಾವನೆಯಿಂದ ತುಂಬಿತುಳುಕಾಡುತ್ತಿದ್ದಾರೆ. ಅವರು ಹಾಡೊಂದರ ಚರಣವನ್ನು ಹಾಡಿದರು:
ಹೃದಯವಲ್ಲಭನಿರುವ ಕದಂಬವನವೆನ್ನುವುದು
ಇನ್ನೆಷ್ಟು ದೂರವಿದೆ ಹೇಳು ಕೆಳದೀ?
ಕೃಷ್ಣಗಂಧವು ಇದೆಕೊ ಇಲ್ಲಿಗೂ ಬೀಸುತಿದೆ!
ನಡೆಯಲಾರೆನು ಮುಂದೆ; ಸೋತಿರುವೆನು.
ಪರಮಹಂಸರು ಈ ಚರಣವನ್ನು ಹಾಡಿದ ನಂತರ ಬಾಹ್ಯಪ್ರಪಂಚವೆಂಬುದೊಂದು ಇದೆಯೆಂಬುದನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾರೆ. ತಮ್ಮ ಮುಂದೆಯೇ ಕುಳಿತಿರುವ ನರೇಂದ್ರ ಮತ್ತು ಉಳಿದವರು ಯಾರೂ ಆ ಕೊಠಡಿಯಲ್ಲಿ ಇರುವಂತೆ ಅವರಿಗೆ ತೋರಿ ಬರುತ್ತಿಲ್ಲ. ತಾವು ಕುಳಿತಿರುವ ಸ್ಥಳ ಯಾವುದು ಎಂಬುದನ್ನೇ ಮರೆತುಬಿಟ್ಟಿದ್ದಾರೆ. ಅವರ ಪ್ರಾಣ ಭಗವಂತನಲ್ಲಿ ಲಯವಾಗಿಬಿಟ್ಟಿರುವಂತೆ ತೋರುತ್ತಿದೆ-ಮದ್ಗತ ಅಂತರಾತ್ಮ. ಅವರು ಇದ್ದಕ್ಕಿದ್ದಹಾಗೆ ಎದ್ದು ನಿಂತು, “ಗೌರಾಂಗ, ಗಹನ ಪ್ರೇಮದಿಂದ ಉನ್ಮತ್ತ !” ಅಂತ ಕೂಗಿದರು. ಅವರು ಮತ್ತೆ ಕೆಳಕ್ಕೆ ಕುಳಿತುಕೊಂಡು ವಟಗುಟ್ಟುತ್ತಿದ್ದಾರೆ, “ಒಂದು ಬೆಳಕು ಬರುತ್ತಿರುವುದು ನನಗೆ ಕಾಣಬರುತ್ತಿದೆ; ಆದರೆ ಅದು ಯಾವ ದಿಕ್ಕಿನಿಂದ ಬರುತ್ತಿದೆ ಎಂಬುದು ನನಗೆ ಇನ್ನೂ ಬಗೆಹರಿಯುತ್ತಿಲ್ಲ” ಎಂಬುದಾಗಿ.
ಈಗ ನರೇಂದ್ರ ಹಾಡಲಾರಂಭಿಸಿದ:
ಹರಿಯಿತೆನ್ನ ಬವಣೆ, ಪ್ರಭೂ
ಹರಿಯಿತೆನ್ನ ಬವಣೆಯು
ನಿನ್ನ ವದನ ದರುಶನದಲಿ
ಸಕಲಶೋಕ ಹರಿಯಿತು.
ನಿನ್ನ ದಿವ್ಯರೂಪಕಾನು
ಮರುಳುಗೊಂಡು ನಿಂತೆನು
ಬೆರಗುಗೊಂಡು ನಿಂತೆನು!
ಸಪ್ತಲೋಕ ಶೋಕಮುಕ್ತ
ವಹುದು ನಿನ್ನ ಕಾಣಲು.
ನಿನ್ನ ಕಂಡ ದೀನ ನಾನು!
ನನ್ನ ಮನದ ಪರಿಯ ನುಡಿಯ-
ಲೆನಗೆ ಬಾಯಿ ಬಾರದು!
ಪರಮಹಂಸರು ಈ ಹಾಡನ್ನು ಕೇಳುತ್ತ ಕೇಳುತ್ತ ಇದ್ದ ಹಾಗೆಯೇ ಮತ್ತೆ ಗಾಢ ಸಮಾಧಿಸ್ಥರಾಗಿದ್ದಾರೆ. ಅವರ ಕಣ್ಣುಗಳು ಮುಚ್ಚಿವೆ; ದೇಹ ಸ್ಪಂದಹೀನವಾಗಿದೆ.
ಪರಮಹಂಸರು ಪ್ರಕೃತಿಸ್ಥರಾಗಿ ಸುತ್ತಲೂ ದೃಷ್ಟಿಸಿ ನೋಡಿ ಹೇಳಿದರು, “ನನ್ನನ್ನು ಯಾರು ದಕ್ಷಿಣೇಶ್ವರಕ್ಕೆ ಕರೆದುಕೊಂಡು ಹೋಗುತ್ತಾರೆ?” ಅಂತ. ಅವರ ಮುಖ ಜೊತೆಗಾರರು ತನ್ನನ್ನು ಬಿಟ್ಟು ಹೋದ ಮುಖದಂತೆ ಇತ್ತು.
ರಾತ್ರಿ ಬಹಳವಾಗಿ ಮುಂದುವರಿದುಬಿಟ್ಟಿದೆ. ಫಾಲ್ಗುಣ ಕೃಷ್ಣ ದಶಮಿಯ ಕತ್ತಲೆ ಹಬ್ಬಿದೆ. ಪರಮಹಂಸರನ್ನು ದಕ್ಷಿಣೇಶ್ವರಕ್ಕೆ ಕರೆದುಕೊಂಡು ಹೋಗಲು ಗಾಡಿ ಬಂದು ನಿಂತಿದೆ. ಭಕ್ತರು ಗಾಡಿಯ ಸುತ್ತಲೂ ನಿಂತಿದ್ದಾರೆ. ಪರಮಹಂಸರು ಇನ್ನೂ ಭಾವಾವಿಷ್ಟ ರಾಗಿಯೇ ಇರುವುದರಿಂದ ಭಕ್ತರು ಅವರನ್ನು ಬಹಳ ಜಾಗರೂಕತೆಯಿಂದ ಗಾಡಿಯಲ್ಲಿ ಕೂರಿಸಿದರು. ಗಾಡಿ ಮುಂದುವರಿದು ಕಣ್ಮರೆಯಾಯಿತು.
ಭಕ್ತರು ತಮ್ಮ ತಮ್ಮ ಸ್ವಗೃಹಗಳಿಗೆ ಹಿಂದಿರುಗಲಾರಂಭಿಸಿದರು. ದಕ್ಷಿಣ ದಿಕ್ಕಿನಿಂದ ಮಂದಮಾರುತ ಅವರ ಮುಖಕ್ಕೆ ತೀಡುತ್ತಿತ್ತು. ಕೆಲಕೆಲವರು ನರೇಂದ್ರ ಹಾಡಿದ ಹಾಡಿನ ಚರಣವೊಂದನ್ನು ಮೂಗಿನಲ್ಲಿ ಹಾಡುತ್ತ ಮುಂದುವರಿಯುತ್ತಿದ್ದಾರೆ.
ಅವರು ಹಾಡುತ್ತಿದ್ದ ಚರಣ:
ಹರಿಯಿತೆನ್ನ ಬವಣೆ, ಪ್ರಭೂ
ಹರಿಯಿತೆನ್ನ ಬವಣೆಯು,
ನಿನ್ನ ವದನ ದರುಶನದಲಿ
ಸಕಲ ಶೋಕ ಹರಿಯಿತು.
೬ನೆ ಏಪ್ರಿಲ್ ೧೮೮೫, ಚೈತ್ರ ಕೃಷ್ಣ ಸಪ್ತಮಿ, ಸೋಮವಾರ
ಪರಮಹಂಸರು ಬಲರಾಮನ ದಿವಾನಖಾನೆಯಲ್ಲಿ ಕುಳಿತು ಮಾಸ್ಟರೊಡನೆ ಮಾತುಕತೆಯಾಡುತ್ತಿದ್ದಾರೆ. ಸಮಯ ಮೂರಾಗಿದೆ; ಬಹಳ ಬಿಸಿಲು. ಅವರು ತಮ್ಮ ಯುವಕಭಕ್ತರನ್ನು ಸಂಧಿಸಲು ಮತ್ತು ದೇವೇಂದ್ರನ ಮನೆಗೆ ಹೋಗಿಬರಲು ಕಲ್ಕತ್ತಕ್ಕೆ ಬಂದಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಮೂರು ಘಂಟೆಗೆ ಬರುತ್ತೇನೆ ಅಂತ ಹೇಳಿದ್ದೆ; ಆದ್ದರಿಂದ ಬಂದುಬಿಟ್ಟೆ, ಆದರೆ ಬಿಸಿಲು ಬಹಳ.”
ಮಾಸ್ಟರ್: “ಹೌದು, ಬಹಳ ಬಿಸಿಲು. ತಮಗೆ ಬಹಳ ಕಷ್ಟವಾಗಿರಬೇಕು.”
ಭಕ್ತರು ಪರಮಹಂಸರಿಗೆ ಗಾಳಿ ಬೀಸುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನಾನು ಇಲ್ಲಿ ಬಂದಿರುವುದು ಚಿಕ್ಕ ನರೇಂದ್ರನನ್ನು ಮತ್ತು ಬಾಬುರಾಮನನ್ನು ಸಂಧಿಸಲೋಸುಗ. ಪೂರ್ಣನನ್ನು ನೀನು ಏಕೆ ಕರೆದುಕೊಂಡು ಬರಲಿಲ್ಲ?”
ಮಾಸ್ಟರ್: “ನಿಮ್ಮ ಸುತ್ತಲೂ ಹೆಚ್ಚು ಜನರು ನೆರೆದಿರುವಾಗ ಆತ ನಿಮ್ಮನ್ನು ನೋಡಲು ಇಚ್ಛಿಸುತ್ತಿಲ್ಲ. ನೀವು ಎಲ್ಲರ ಎದುರಿಗೂ ಆತನನ್ನು ಹೊಗಳಿಬಿಡಬಹುದು. ಮತ್ತೆ ಅದು ಆತನ ಮನೆಯವರ ಕಿವಿಗೆ ಹೋಗಿ ಬೀಳಬಹುದು ಎಂದು ಹೆದರುತ್ತಿದ್ದಾನೆ.”
ಶ್ರೀರಾಮಕೃಷ್ಣರು: “ಅದೇನೊ ನಿಜ. ಇದುವರೆಗೆ ಹಾಗೆ ಮಾಡಿದ್ದರೂ ಇನ್ನು ಮುಂದೆ ಹಾಗೆ ಮಾಡುವುದಿಲ್ಲ. ನೀನು ಪೂರ್ಣನಿಗೆ ಧಾರ್ಮಿಕ ವಿಷಯಗಳನ್ನು ಬೋಧಿಸುತ್ತಿರುವೆಯಂತೆ; ಅದು ಬಹಳ ಒಳ್ಳೆಯದೆ.”
ಮಾಸ್ಟರ್: “ವಿದ್ಯಾಸಾಗರ ಬರೆದಿರುವ ಪಠ್ಯಪುಸ್ತಕಗಳೊಂದರಲ್ಲಿ ವಸ್ತುತಃ ಇದೇ ವಿಷಯವಾಗಿಯೇ ಬರೆದಿದೆ. ಅದು ಹೇಳುತ್ತದೆ:
ಆತ್ಮಪೂರ್ವಕವಾಗಿ ಈಶನ
ಭಕ್ತಿಯಲಿ ನೀ ಪೂಜಿಸು-ನೆರೆ
ಹೊರೆಯನಂತೆಯೆ ಭಾವಿಸು!
“ಇಂಥ ವಿಷಯಗಳನ್ನು ಮಕ್ಕಳಿಗೆ ಬೋಧಿಸಿತು ಎಂದರೆ, ಅವರ ತಂದೆತಾಯಿಗಳು ನಮ್ಮ ಮೇಲೆ ಕೋಪಿಸಿಕೊಂಡರೆ ಅದಕ್ಕೆ ನಾವೇನು ಮಾಡೋಣ?”
ಶ್ರೀರಾಮಕೃಷ್ಣರು: “ಪಠ್ಯಪುಸ್ತಕಗಳಲ್ಲಿ ಇಂಥ ವಿಷಯಗಳೇನೋ ಯಥೇಚ್ಛವಾಗಿ ಸಿಗುತ್ತವೆ. ಆದರೆ ಯಾರು ಅವನ್ನು ಬರೆದಿರುವರೊ, ಅವರೇ ಅದನ್ನು ರಕ್ತಗತಮಾಡಿ ಕೊಂಡಿರುವುದಿಲ್ಲ. ಸಾಧುಸಂಗ ದೊರೆತರೆ ಅವು ರಕ್ತಗತವಾಗುತ್ತವೆ. ನಿಜವಾದ ತ್ಯಾಗೀಸಾಧು ಉಪದೇಶವೀಯುವುದಾದರೆ, ಆಗ ಜನರು ಆತನ ಉಪದೇಶವನ್ನು ಸ್ವೀಕರಿಸುತ್ತಾರೆ. ಬರೀ ಪಂಡಿತ ಆ ವಿಷಯವಾಗಿ ಪುಸ್ತಕ ಬರೆದರೆ ಅಥವಾ ಉಪನ್ಯಾಸ ಕೊಟ್ಟರೆ ಅದು ಜನರ ಮನಸ್ಸನ್ನು ಆಕರ್ಷಿಸುವುದಿಲ್ಲ. ಯಾರ ಹತ್ತಿರವೇ ಜೋನಿ ಬೆಲ್ಲದ ಗುಡಾಣ ಇರುವುದೊ, ಆತ ರೋಗಿಗೆ ಒಂದು ಪಕ್ಷ ಜೋನಿ ಬೆಲ್ಲ ತಿನ್ನಬೇಡ ಅಂತ ಹೇಳಿದರೆ, ರೋಗಿ ಆತನ ಮಾತಿಗೆ ಅಷ್ಟೊಂದು ಬೆಲೆಯನ್ನು ಕೊಡುವುದಿಲ್ಲ.
“ಒಳ್ಳೇದು, ಪೂರ್ಣನ ಸಂಬಂಧವಾಗಿ ನಿನ್ನ ಅಭಿಪ್ರಾಯವೇನು? ಆತನಿಗೆ ಭಾವ ಬರುತ್ತಿದೆಯೇನು?”
ಮಾಸ್ಟರ್: “ಭಾವಾವಸ್ಥೆಯ ಬಾಹ್ಯಚಿಹ್ನೆಗಳಾವುವೂ ಆತನಲ್ಲಿ ಕಂಡುಬರುವುದಿಲ್ಲ. ಒಂದು ದಿನ ನಿಮ್ಮ ಆ ಮಾತುಗಳನ್ನು ಆತನಿಗೆ ತಿಳಿಸಿದೆ.”
ಶ್ರೀರಾಮಕೃಷ್ಣರು: “ಯಾವ ಮಾತನ್ನು?”
ಮಾಸ್ಟರ್: “ವ್ಯಕ್ತಿ ‘ಚಿಕ್ಕ ಪಾತ್ರೆ’ ಆಗಿದ್ದರೆ, ಆತ ಆಧ್ಯಾತ್ಮಿಕ ಭಾವಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಲಾರ; ಆದರೆ ‘ದೊಡ್ಡ ಪಾತ್ರೆ’ ಆಗಿದ್ದರೆ ಆಂತರ್ಯದಲ್ಲಿ ಅವನ್ನು ಯಥೇಷ್ಟವಾಗಿ ಅನುಭವಿಸುತ್ತಾನೆ, ಆದರೆ ಹೊರಗೆ ಮಾತ್ರ ಅವುಗಳ ಯಾವ ಕುರುಹೂ ಸಿಗುವುದಿಲ್ಲ ಅಂತ ಹೇಳಿದ್ದಿರಿ. ಅದಕ್ಕೆ ಉದಾಹರಣೆಯನ್ನೂ ಕೊಟ್ಟಿದ್ದಿರಿ. ಆನೆ ಒಂದು ದೊಡ್ಡ ಸರೋವರಕ್ಕೆ ಇಳಿದರೆ ಅದು ಅಲ್ಲೋಲಕಲ್ಲೋಲವಾಗದು. ಆದರೆ ಅದೇನಾದರೂ ಒಂದು ಚಿಕ್ಕ ಕಟ್ಟೆಗೆ ಇಳಿಯಿತು ಅಂದರೆ ಅದು ಬಹಳವಾಗಿ ಅಲ್ಲೋಲಕಲ್ಲೋಲವಾಗಿ ಬಿಡುತ್ತದೆ ಮತ್ತು ಅದರ ನೀರು ದಡಕ್ಕೆ ‘ಧಪ್, ಧಪ್’ ಅಂತ ಬಡಿಯಲಾರಂಭಿಸುತ್ತದೆ ಅಂತ ಹೇಳಿದ್ದಿರಿ.”
ಶ್ರೀರಾಮಕೃಷ್ಣರು: “ಪೂರ್ಣನ ಭಾವ ಹೊರಕ್ಕೆ ವ್ಯಕ್ತವಾಗುವುದಿಲ್ಲ; ಆತನ ಮಾನಸಿಕ ಸ್ಥಿತಿ ಪ್ರತ್ಯೇಕವಾದ್ದು. ಆತನ ಉಳಿದ ಲಕ್ಷಣಗಳು ಬಹಳ ಒಳ್ಳೆಯವು. ನಿನ್ನ ಅಭಿಪ್ರಾಯವೇನು?”
ಮಾಸ್ಟರ್: “ಆತನ ಕಣ್ಣುಗಳೆರಡೂ ಬಹಳ ಉಜ್ಜ್ವಲವಾಗಿವೆ ಮತ್ತು ಪ್ರಮುಖ ವಾಗಿದೆ-ನೋಡಿದರೆ, ಕಿತ್ತುಕೊಂಡು ಹೊರಕ್ಕೆ ಬರುತ್ತಿರುವಂತೆ ಇವೆ.”
ಶ್ರೀರಾಮಕೃಷ್ಣರು: “ಕಣ್ಣುಗಳೆರಡೂ ಉಜ್ಜ್ವಲವಾಗಿದ್ದು ಬಿಟ್ಟರೆ ಸಾಕಾಗದು. ಭಗವದ್ಭಕ್ತನ ಕಣ್ಣುಗಳೇ ಪ್ರತ್ಯೇಕ. ಒಳ್ಳೇದು ಆತ ನನ್ನ ಪರಿಚಯ ಮಾಡಿಕೊಂಡ ಮೇಲೆ ಆತನಿಗೆ ಏನೇನು ಅನುಭವವಾಯಿತು ಎಂಬುದನ್ನು ಆತನನ್ನು ಕೇಳಿದಿಯೇನು?”
ಮಾಸ್ಟರ್: “ಹೌದು, ಅದರ ಸಂಬಂಧವಾಗಿ ನಾವು ಮಾತುಕತೆಗಳಾಡಿದೆವು. ಈಗ ಒಂದು ನಾಲ್ಕು ಐದು ದಿವಸಗಳಿಂದಲೂ ಹೇಳುತ್ತಿದ್ದಾನೆ, ‘ಭಗವಂತನ ಧ್ಯಾನ ಮಾಡು ವಾಗ-ಆತನ ನಾಮಕೀರ್ತನೆ ಮಾಡುವಾಗ ನನ್ನ ಕಣ್ಣುಗಳಿಂದ ಪ್ರೇಮಾಶ್ರು ಸುರಿಯೋದು, ಶರೀರ ರೋಮಾಂಚನವಾಗುವುದು ಇವೇ ಮೊದಲಾದವು ಆಗುತ್ತಿರುತ್ತವೆ’ ಅಂತ.”
ಶ್ರೀರಾಮಕೃಷ್ಣರು: “ನಿಜವಾಗಿಯೂ, ಆತನಿಗೆ ಬೇಕಾದದ್ದೂ ಅದೇನೆ.”
ಶ್ರೀರಾಮಕೃಷ್ಣರು ಮತ್ತು ಮಾಸ್ಟರ್ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದರು. ಬಳಿಕ ಮಾಸ್ಟರ್ ಹೇಳಿದ, “ಆತ ನಿಂತುಕೊಂಡಿದ್ದಾನೆ-” ಅಂತ.
ಶ್ರೀರಾಮಕೃಷ್ಣರು: “ಯಾರು?”
ಮಾಸ್ಟರ್: “ಪೂರ್ಣ-ಬಹುಶಃ ತನ್ನ ಮನೆಯ ಬಾಗಿಲ ಹತ್ತಿರ ನಿಂತುಕೊಂಡಿರ ಬಹುದು. ನಾವು ಯಾರಾದರೂ ಆ ಮಾರ್ಗವಾಗಿ ಹೋದರೆ, ಆತ ಓಡಿಬಂದು ನಮಸ್ಕಾರ ಮಾಡಿ ಓಡಿಹೋಗಿಬಿಡುತ್ತಾನೆ.”
ಶ್ರೀರಾಮಕೃಷ್ಣರು: “ಆಹಾ! ಆಹಾ!”
ಪರಮಹಂಸರು ಒರಗುದಿಂಬನ್ನು ಒರಗಿಕೊಂಡು ವಿಶ್ರಮಿಸಿಕೊಳ್ಳುತ್ತಿದ್ದಾರೆ.ಮಾಸ್ಟರ್ ತನ್ನ ಸ್ಕೂಲಿನಲ್ಲಿ ಓದುತ್ತಿರೋ ಕ್ಷೀರೋದ ಎಂಬ ಹನ್ನೆರಡು ವಯಸ್ಸಿನ ಹುಡುಗನನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾನೆ.
ಮಾಸ್ಟರ್: “ಈತ ಬಹಳ ಒಳ್ಳೆಯ ಹುಡುಗ. ಭಗವದ್ವಿಷಯಗಳಲ್ಲಿ ಬಹಳ ಆಸಕ್ತ ನಾಗಿದ್ದಾನೆ.”
ಶ್ರೀರಾಮಕೃಷ್ಣರು (ನಗುತ್ತ): “ಕಣ್ಣುಗಳೆರಡೂ ಜಿಂಕೆ ಕಣ್ಣಿನ ಹಾಗೆ ಇವೆ.”
ಆ ಹುಡುಗ ಪರಮಹಂಸರ ಪಾದಗಳನ್ನು ಸ್ಪರ್ಶಿಸಿ ಸಾಷ್ಟಾಂಗ ಪ್ರಣಾಮ ಮಾಡಿದ. ಅವರ ಪಾದಗಳನ್ನು ವಿಶೇಷವಾದ ಶ್ರದ್ಧಾಭಕ್ತಿಯಿಂದ ಒತ್ತಲು ಆರಂಭಿಸಿದ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ರಾಖಾಲ ಈಗ ಮನೆಯಲ್ಲಿ ಇದ್ದಾನೆ. ಆತನಿಗೆ ಕುರು ಎದ್ದು ದೇಹ ಸೌಖ್ಯವಿಲ್ಲವಂತೆ. ಆತನಿಗೆ ಇನ್ನೇನು ಒಂದು ಮಗು ಆಗುವುದರಲ್ಲಿದೆ ಅಂತ ಯಾರೋ ಹೇಳಿದರು.”
ಪಲ್ಟು ಮತ್ತು ವಿನೋದ ಪರಮಹಂಸರ ಎದುರಿಗೆ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ನಗುತ್ತ ಪಲ್ಟುವಿಗೆ): “ನೀನು ಹೋಗಿ ನಿನ್ನ ತಂದೆಗೆ ಏನು ಹೇಳಿದೆ? (ಮಾಸ್ಟರಿಗೆ) ಈತ ತಾನು ಇಲ್ಲಿಗೆ ಬರುತ್ತಿರುವ ಸಂಬಂಧವಾಗಿ ತಂದೆಗೆ ಏನೊ ಒಂದು ಜವಾಬು ಕೊಟ್ಟಿದ್ದಾನಂತೆ. (ಪಲ್ಟುವಿಗೆ) ನಿಮ್ಮ ತಂದೆಗೆ ಏನು ಜವಾಬು ಕೊಟ್ಟೆ?”
ಪಲ್ಟು: “ಹೌದು, ‘ನಾನು ಪರಮಹಂಸರ ಹತ್ತಿರ ಹೋಗುತ್ತಿದ್ದೇನೆ; ಅದೇನು ಕೆಟ್ಟ ಕೆಲಸವೇನು?’ ಅಂತ ಜವಾಬು ಕೊಟ್ಟೆ. (ಪರಮಹಂಸರು ಮತ್ತು ಮಾಸ್ಟರ್ ನಗುತ್ತಿದ್ದಾರೆ.) ಅಂಥ ಆವಶ್ಯಕತೆ ಏನಾದರೂ ತೋರಿಬಂದರೆ ಇನ್ನೂ ಸ್ವಲ್ಪ ಬಿಸಿಯಾಗಿಯೇ ತಾಗಿಸಿ ಬಿಡುತ್ತೇನೆ.”
ಶ್ರೀರಾಮಕೃಷ್ಣರು (ನಗುತ್ತ ಮಾಸ್ಟರಿಗೆ): “ಅದು ಸರಿಯಲ್ಲ. ಏನು ಮಗು, ಅಷ್ಟು ದೂರ ಹೋಗುವುದು!”
ಮಾಸ್ಟರ್: “ಹೌದು ಅದು ಸರಿಯಲ್ಲ. ಈತ ಅಷ್ಟು ದೂರದವರೆಗೆ ಹೋಗ ಬಾರದು.” (ಪರಮಹಂಸರು ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು (ವಿನೋದನಿಗೆ): “ಏನು ಸೌಖ್ಯವೆ? ನೀನು ದಕ್ಷಿಣೇಶ್ವರಕ್ಕೆ ಬರಲೇ ಇಲ್ಲವಲ್ಲ?”
ವಿನೋದ: “ಬರಬೇಕಂತಲೇನೊ ಯೋಚಿಸಿದೆ, ಆದರೆ ಮತ್ತೆ ಕಾಯಿಲೆ ಬಿದ್ದು ಬಿಡುವೆನೊ ಏನೊ ಎಂದು ಹೆದರಿ ಬರಲಿಲ್ಲ. ನನಗೆ ಸ್ವಲ್ಪ ಕಾಯಿಲೆ ಆಗಿತ್ತು. ಇನ್ನೂ ದೇಹಾರೋಗ್ಯ ಸರಿಯಾಗಿಲ್ಲ.”
ಶ್ರೀರಾಮಕೃಷ್ಣರು: “ನನ್ನೊಡನೆ ದಕ್ಷಿಣೇಶ್ವರಕ್ಕೆ ಬಂದುಬಿಡು, ಅಲ್ಲಿ ಒಳ್ಳೇ ಹವ; ಬೇಗ ಗುಣವಾಗಿಬಿಡುತ್ತದೆ.”
ಚಿಕ್ಕ ನರೇನ ಕೊಠಡಿಯನ್ನು ಪ್ರವೇಶಿಸಿದ. ಪರಮಹಂಸರು ಕೈಕಾಲು ತೊಳೆದು ಕೊಳ್ಳಲು ಹೊರಗಡೆ ಹೋಗುತ್ತಿದ್ದಾರೆ. ಚಿಕ್ಕ ನರೇನ ಕೈ ಒರೆಸೋ ಚೌಕ ತೆಗೆದುಕೊಂಡು ಪರಮಹಂಸರ ಕೈಗೆ ನೀರು ಹಾಕಲು ಅವರ ಹಿಂದೆ ಹೋಗುತ್ತಿದ್ದಾನೆ. ಮಾಸ್ಟರೂ ಅವರನ್ನು ಹಿಂಬಾಲಿಸುತ್ತಿದ್ದಾನೆ.
ಶ್ರೀರಾಮಕೃಷ್ಣರು: “ಇಂದು ಬಹಳ ಬಿಸಿಲು.”
ಮಾಸ್ಟರ್: “ಹೌದು, ನಿಜ.”
ಶ್ರೀರಾಮಕಷ್ಣರು: “ನೀನು ನಿನ್ನ ಆ ಇಷ್ಟಗಲ ಜಾಗದೊಳಗೆ ಹೇಗೆ ವಾಸಿಸುತ್ತಿ ದ್ದೀಯೆ? ಮೇಲ್ಮಹಡಿ ಬಹಳವಾಗಿ ಕಾದುಹೋಗೋದಿಲ್ಲವೆ?”
ಮಾಸ್ಟರ್: “ಹೌದು, ಬಹಳವಾಗಿ ಕಾದುಬಿಡುತ್ತದೆ.”
ಶ್ರೀರಾಮಕೃಷ್ಣರು: “ಇದರ ಜೊತೆಗೆ ನಿನ್ನ ಹೆಂಡತಿಗೆ ಬುದ್ಧಿಭ್ರಮಣೆ ಬೇರೆ ಇದೆ. ಆದ್ದರಿಂದ ಆಕೆಗೆ ಸ್ವಲ್ಪ ತಣ್ಣಗಿರೋ ಕೊಠಡಿಯನ್ನು ಕೊಡು.”
ಮಾಸ್ಟರ್: “ನೀವು ಹೇಳುವುದು ಸರಿ, ಕೆಳಗಿನ ಕೊಠಡಿಯಲ್ಲಿ ಮಲಗುವಂತೆ ಹೇಳಿದ್ದೇನೆ.”
ಪರಮಹಂಸರು ಮತ್ತೆ ಬಂದು ಬೈಠಕ್ಖಾನೆಯಲ್ಲಿ ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಕಳೆದ ಭಾನುವಾರ ನೀನು ಏಕೆ ದಕ್ಷಿಣೇಶ್ವರಕ್ಕೆ ಬರಲಿಲ್ಲ?”
ಮಾಸ್ಟರ್: “ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಆಕೆಗೆ ದೇಹ ಸರಿಯಾಗಿರ ಲಿಲ್ಲ. ಆಕೆಯನ್ನು ನೋಡಿಕೊಳ್ಳುವುದಕ್ಕೆ ಬೇರೆ ಯಾರೂ ಇರಲಿಲ್ಲ.”
ಪರಮಹಂಸರು ನಿಮುಗೋಸ್ವಾಮಿಯ ಗಲ್ಲಿಯಲ್ಲಿರುವ ದೇವೇಂದ್ರನ ಮನೆಗೆ ಗಾಡಿ ಯಲ್ಲಿ ಹೋಗುತ್ತಿದ್ದಾರೆ. ಅವರೊಡನೆ ಚಿಕ್ಕ ನರೇನ, ಮಾಸ್ಟರ್, ಇನ್ನೂ ಒಬ್ಬಿಬ್ಬರು ಭಕ್ತರು ಇದ್ದಾರೆ. ಅವರು ಪೂರ್ಣನ ಸಂಬಂಧವಾಗಿ ಮಾತುಕತೆಯಾಡುತ್ತಿದ್ದಾರೆ. ಆತನನ್ನು ನೋಡಬೇಕೆಂದು ಬಹಳವಾಗಿ ಕಾತರರಾಗಿದ್ದಾರೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಆತ ಒಬ್ಬ ಮಹಾವ್ಯಕ್ತಿ! ಅದು ಹಾಗಲ್ಲದೆ ಇದ್ದರೆ ಆತನ ಶ್ರೇಯಸ್ಸಿಗಾಗಿ ಆತ ನನ್ನ ಕೈಯಿಂದ ಜಪಮಾಡಿಸಲು ಎಲ್ಲಿ ಸಾಧ್ಯವಾಗುತ್ತಿತ್ತು? ಆದರೆ ಆತನಿಗೆ ನಾನು ಹಾಗೆ ಮಾಡಿರುವುದರ ವಿಚಾರ ಗೊತ್ತಿಲ್ಲ.”
ಪರಮಹಂಸರು ಪೂರ್ಣನಿಗೋಸ್ಕರ ಬೀಜಮಂತ್ರವನ್ನು ಜಪಿಸಿದರು ಎಂಬುದನ್ನು ಕೇಳಿ ಮಾಸ್ಟರ್ ಮತ್ತು ಉಳಿದ ಭಕ್ತರು ಆಶ್ಚರ್ಯಚಕಿತರಾದರು.
ಶ್ರೀರಾಮಕೃಷ್ಣರು: “ಇಂದು ನೀನು ಆತನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದರೆ ಚೆನ್ನಾಗಿತ್ತು. ಏಕೆ ಕರೆದುಕೊಂಡು ಬರದೆ ಹೋದೆ?”
ಚಿಕ್ಕ ನರೇನ ನಗುತ್ತಿರುವುದನ್ನು ನೋಡಿ ಪರಮಹಂಸರೂ ನಗುತ್ತಿದ್ದಾರೆ. ಉಳಿದ ಭಕ್ತರೂ ನಗುತ್ತಿದ್ದಾರೆ. ಪರಮಹಂಸರು ಆನಂದಭರಿತರಾಗಿ ಚಿಕ್ಕ ನರೇನನ ಕಡೆಗೆ ಬೆರಳು ಮಾಡಿ ಮಾಸ್ಟರಿಗೆ ಹೇಳುತ್ತಿದ್ದಾರೆ, “ನೋಡು, ಅಲ್ಲಿ ನೋಡು! ಏನೂ ಅರಿಯದ ಹಸುಳೆಯಂತೆ ಆತ ನಗುತ್ತಿರುವುದನ್ನು ನೋಡು! ಇವು ಮೂರರ ಆಸಕ್ತಿ-ಆಸ್ತಿ, ಹೆಂಡತಿ, ಹಣ-ಆತನ ಹೃದಯದಲ್ಲಿ ಒಂದು ಕಿಂಚಿತ್ತೂ ಇಲ್ಲ. ಕಾಮಕಾಂಚನಾಸಕ್ತಿ ಒಮ್ಮೆಗೆಯೆ ಹೃದಯವನ್ನು ಬಿಟ್ಟು ತೊಲಗಿಹೋಗದೆ ಇದ್ದರೆ ಭಗವಂತನ ಸಾಕ್ಷಾತ್ಕಾರ ದೊರೆಯದು” ಎಂದು.
ಗಾಡಿ ದೇವೇಂದ್ರನ ಮನೆಯ ಕಡೆ ಮುಂದುವರಿಯುತ್ತಿದೆ. ಒಮ್ಮೆ ಪರಮಹಂಸರು ದಕ್ಷಿಣೇಶ್ವರದಲ್ಲಿ ದೇವೇಂದ್ರನಿಗೆ, “ಒಂದು ದಿನ ನಿನ್ನ ಮನೆಗೆ ಬರಬೇಕೆಂದಿದ್ದೇನೆ” ಅಂತ ಹೇಳಿದ್ದರು. ಆಗ ದೇವೇಂದ್ರ “ತಾವು ನಮ್ಮ ಮನೆಗೆ ಒಂದು ದಿನ ದಯಮಾಡಿಸ ಬೇಕೆಂದು ಪ್ರಾರ್ಥನೆಮಾಡಿಕೊಳ್ಳಲೋಸುಗವಾಗಿಯೇ ನಾನು ಇಲ್ಲಿಗೆ ಬಂದೆ. ಮುಂದಿನ ಭಾನುವಾರ ತಾವೇ ಕೃಪೆಮಾಡಬೇಕು” ಅಂತ ಹೇಳಿದ್ದ. ಅದಕ್ಕೆ ಪರಮಹಂಸರು ಹೇಳಿದ್ದರು, “ಆದರೆ ಒಂದು ವಿಷಯ, ನಿನಗೆ ಬರುವ ವರಮಾನ ಬಹಳ ಕಡಿಮೆ. ಹೆಚ್ಚು ಜನರನ್ನು ಊಟಕ್ಕೆ ಕರೆಯಬೇಡ. ಗಾಡಿ ಬಾಡಿಗೆ ಕೂಡ ಅಧಿಕವಾಗಿಬಿಡುತ್ತದೆ” ಅಂತ ಹೇಳಿದರು. ಆಗ ದೇವೇಂದ್ರ ನಗುತ್ತ “ವರಮಾನ ಕಡಿಮೆಯಾಗಿದ್ದರೂ ಹೆದರುವುದು ಏಕೆ?’ ‘ಋಣಂ ಕೃತ್ವಾ ಘೃತಂ ಪಿಬೇತ್’. ಸಾಲಮಾಡಿ ಹಾಲು ತುಪ್ಪ ಕುಡಿದರಾಯಿತು” ಅಂತ ಹೇಳಿದ. ಆತನ ಈ ಮಾತನ್ನು ಕೇಳಿ ಪರಮಹಂಸರು ಅಂದು ಬಹಳ ಹೊತ್ತು ನಕ್ಕಿದ್ದರು.
ಗಾಡಿ ದೇವೇಂದ್ರನ ಮನೆಯನ್ನು ಮುಟ್ಟಿತು. ಗಾಡಿಯಿಂದ ಇಳಿದೊಡನೆಯೆ ಪರಮ ಹಂಸರು ದೇವೇಂದ್ರನಿಗೆ ಹೇಳಿದರು, “ನನಗಾಗಿ ವಿಶೇಷವಾಗಿ ಏನೂ ತಯಾರು ಮಾಡುವುದು ಬೇಡ; ಸಾಮಾನ್ಯ ಅಡಿಗೆಯೆ ಯಥೇಷ್ಟ. ಇಂದು ನನ್ನ ಶರೀರಾರೋಗ್ಯ ಅಷ್ಟು ಚೆನ್ನಾಗಿಲ್ಲ” ಅಂತ.
ಪರಮಹಂಸರು ದೇವೇಂದ್ರನ ಮನೆಯ ನೆಲದ ಅಂತಸ್ತಿನಲ್ಲಿದ್ದ ದಿವಾನ್ಖಾನೆಯಲ್ಲಿ ಕುಳಿತಿದ್ದಾರೆ. ಭಕ್ತರು ಅವರ ಸುತ್ತಲೂ ಕುಳಿತಿದ್ದಾರೆ. ಆಗಲೆ ಸಾಯಂಕಾಲವಾಗಿಬಿಟ್ಟಿದೆ. ಕೊಠಡಿಯಲ್ಲಿ ದೀಪ ಉರಿಯುತ್ತಿದೆ. ಚಿಕ್ಕ ನರೇನ, ರಾಮ, ಮಾಸ್ಟರ್, ಗಿರೀಶ, ದೇವೇಂದ್ರ, ಅಕ್ಷಯ, ಉಪೇಂದ್ರ ಮತ್ತು ಇನ್ನೂ ಕೆಲವರು ಕೊಠಡಿಯಲ್ಲಿ ಕುಳಿತಿದ್ದಾರೆ. ಅವರ ದೃಷ್ಟಿ ಒಬ್ಬ ಯುವಕನ ಮೇಲೆ ಬಿದ್ದೊಡನೆಯೆ ಅವರ ಮುಖದಿಂದ ಆನಂದ ಹೊರಸೂಸಲಾರಂಭಿಸಿತು. ಆತನ ಕಡೆ ಬೆರಳುಮಾಡಿ ಪರಮಹಂಸರು ಭಕ್ತರಿಗೆ ಹೇಳುತ್ತಿ ದ್ದಾರೆ : “ಮನುಷ್ಯನನ್ನು ಸಂಸಾರಕ್ಕೆ ಕಟ್ಟಿಹಾಕುವ ಇವು ಮೂರು-ಜಮೀನು, ಹೆಂಡತಿ, ಹಣದ ಆಸಕ್ತಿ ಈತನಲ್ಲಿ ಒಂದು ಕಿಂಚಿತ್ತೂ ಇಲ್ಲ. ಇವು ಮೂರರ ಮೇಲೆ ಮನಸ್ಸನ್ನು ಇಟ್ಟಿತು ಅಂದರೆ, ಅದನ್ನು ಮತ್ತೆ ಭಗವಂತನ ಕಡೆ ತಿರುಗಿಸಿಡಲಾಗುವುದಿಲ್ಲ. ಈತನಿಗೆ ಒಂದು ಅಲೌಕಿಕ ದರ್ಶನ ಕೂಡ ದೊರೆತಿರುವುದಂತೆ! (ಆ ಯುವಕ ಭಕ್ತನಿಗೆ) ಹೇಳು, ಏನನ್ನು ಕಂಡೆ?”
ಯುವಕ ಭಕ್ತ: “ನಾನು ಗೊಬ್ಬರದ ರಾಶಿಯೊಂದನ್ನು ಕಂಡೆ. ಕೆಲವರು ಅದರ ಮೇಲೆ ಕುಳಿತುಕೊಂಡಿದ್ದರು. ಇನ್ನು ಕೆಲವರು ಅದನ್ನು ಬಿಟ್ಟು ಸ್ವಲ್ಪ ದೂರದಲ್ಲಿ ಕುಳಿತುಕೊಂಡಿದ್ದರು.”
ಶ್ರೀರಾಮಕೃಷ್ಣರು: “ಈತ ಕಂಡದ್ದು ಭಗವಂತನನ್ನು ಮರೆತ ಸಂಸಾರಿಗಳು ದುರ್ದಶೆಗೆ ಇಳಿಯುತ್ತಾರೆ ಎಂಬುದನ್ನು ಮತ್ತು ಸಂಸಾರಸಕ್ತಿ ಈತನ ಮನಸ್ಸನ್ನು ಬಿಟ್ಟು ಹೊರ ಹೋಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಕಾಮಕಾಂಚನಾಸಕ್ತಿ ಮನಸ್ಸನ್ನು ಬಿಟ್ಟು ತೊಲಗಿ ಹೋಗಿಬಿಟ್ಟಿತು ಅಂದರೆ ಇನ್ನು ಯೋಚನೆ ಏಕೆ? ಏನಾಶ್ಚರ್ಯ ಇದು! ನಾನು ಇಷ್ಟೊಂದು ಜಪತಪ ಮಾಡಿದ ಮೇಲೆ ಆಸಕ್ತಿ ನನ್ನನ್ನು ಬಿಟ್ಟು ತೊಲಗಿತು; ಈತ ಅದರಿಂದ ಎಷ್ಟು ಬೇಗ ಮುಕ್ತನಾಗಿಹೋಗಿಬಿಟ್ಟಿದ್ದಾನೆ! ಕಾಮಾಸಕ್ತಿ ಒಮ್ಮೆಗೆಯೇ ಬಿಟ್ಟು ತೊಲಗಿಹೋಗುವುದು ಏನು ಸಾಮಾನ್ಯ ವ್ಯಾಪಾರವೆ? ನಾನು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದ ಆರು ತಿಂಗಳ ನಂತರ ನನಗೂ ಇದರ ಸಂಬಂಧ ಒಂದು ವಕ್ರಭಾವನೆ ಬಂದಿತು. ಆಗ ಒಂದು ಮರದ ಕೆಳಗೆ ಮಲಗಿ ಸುಮ್ಮನೆ ಅಳಲಾರಂಭಿಸಿದೆ; ನಾನು ಭಗವತಿಗೆ ಮೊರೆಯಿಟ್ಟೆ, ‘ನೋಡು ತಾಯೆ, ನನಗೇನಾದರೂ ಈ ದುಃಸ್ಥಿತಿ ಬಂದರೆ ಕತ್ತಿ ತೆಗೆದುಕೊಂಡು ಕತ್ತು ಕತ್ತರಿಸಿಕೊಂಡು ಬಿಡುತ್ತೇನೆ.’
(ಭಕ್ತರಿಗೆ) “ಕಾಮಕಾಂಚನಾಸಕ್ತಿ ಮನಸ್ಸನ್ನು ಬಿಟ್ಟು ತೊಲಗಿಹೋಯಿತು ಅಂದರೆ ಇನ್ನು ತಡೆಯಾಗಿ ಉಳಿದುಕೊಂಡಿರುವುದು ಬೇರೆ ಏನಿದೆ? ಬಳಿಕ ಕೇವಲ ಬ್ರಹ್ಮಾನಂದ, ಬ್ರಹ್ಮಾನಂದ.”
ಶಶಿ ಈಗತಾನೆ ಕೆಲವು ದಿವಸಗಳಿಂದ ಪರಮಹಂಸರ ಹತ್ತಿರ ಬರುವುದು ಹೋಗುವುದು ಮಾಡುತ್ತಿದ್ದಾನೆ. ಆತ ವಿದ್ಯಾಸಾಗರನ ಕಾಲೇಜಿನಲ್ಲಿ ಬಿ.ಎ. ಪರೀಕ್ಷೆಯ ಮೊದಲನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಪರಮಹಂಸರು ಈಗ ಆತನ ಸಂಬಂಧವಾಗಿ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು (ಭಕ್ತರಿಗೆ): “ನೋಡಿ, ಅಲ್ಲಿ ಹೋಗುತ್ತಿದ್ದಾನಲ್ಲ, ಆ ಹುಡುಗ, ಆತನಿಗೆ ಇನ್ನೂ ಸ್ವಲ್ಪ ಕಾಲ ಹಣದ ಮೇಲಿನ ಆಸಕ್ತಿ ಇರುತ್ತದೆ. ಆದರೆ ಬೇರೆ ಕೆಲವರು ಇದ್ದಾರೆ, ಅವರಿಗೆ ಈ ಭಾವನೆಯೇ ಇಲ್ಲ. ಇಲ್ಲಿಗೆ ಬರುವ ಕೆಲವು ಯುವಕರು ವಿವಾಹವಾಗುವುದಿಲ್ಲ.”
ಭಕ್ತರು ಪರಮಹಂಸರ ಈ ಮಾತುಗಳನ್ನು ನಿಶ್ಶಬ್ದರಾಗಿ ಕುಳಿತು ಕೇಳುತ್ತಿದ್ದಾರೆ.
ಶ್ರೀರಾಮಕೃಷ್ಣರು (ಭಕ್ತರಿಗೆ): “ಮನಸ್ಸಿನಿಂದ ಕಾಮಕಾಂಚನಾಸಕ್ತಿ ಸಂಪೂರ್ಣವಾಗಿ ಬಿಟ್ಟು ತೊಲಗಿ ಹೋಗದೆ ಇದ್ದರೆ, ಅವತಾರಪುರುಷರನ್ನು ಗುರುತಿಸಲು ಮನಸ್ಸಿಗೆ ಬಹಳ ಕಷ್ಟವಾಗಿ ತೋರುತ್ತದೆ. ಯಾರೊ ಒಬ್ಬ ಒಂದು ವಜ್ರವನ್ನು ತೆಗೆದುಕೊಂಡು ಹೋಗಿ ಒಬ್ಬ ಬದನೆಕಾಯಿ ಮಾರುವವನನ್ನು ಕೇಳಿದ ‘ಇದಕ್ಕೆ ಬೆಲೆ ಎಷ್ಟು?’ ಅಂತ. ಆತ ಹೇಳಿದ, ‘ಇದಕ್ಕೆ ನಾನು ಒಂಬತ್ತು ಸೇರು ಬದನೆಕಾಯಿ ಮಾತ್ರ ಕೊಡಬಲ್ಲೆ. ಅದರ ಮೇಲೆ ಒಂದು ಕಾಯನ್ನೂ ಅಧಿಕವಾಗಿ ಕೊಡಲಾರೆ’.”
ಇದನ್ನು ಕೇಳಿ ಭಕ್ತರೆಲ್ಲರೂ ನಗಲಾರಂಭಿಸಿದರು. ಚಿಕ್ಕ ನರೇನ ಬಹಳ ಗಟ್ಟಿಯಾಗಿ ನಗಲಾರಂಭಿಸಿದ. ಚಿಕ್ಕ ನರೇನ ಇದರ ಅರ್ಥವನ್ನು ಒಡನೆಗೆ ಗ್ರಹಿಸಿಬಿಟ್ಟಿದ್ದಾನೆ ಎಂಬ ಭಾವನೆ ಪರಮಹಂಸರಿಗೆ ಬಂದಿತು.
ಶ್ರೀರಾಮಕೃಷ್ಣರು: “ಈತನದು ಎಂಥಾ ಚುರುಕುಬುದ್ಧಿ! ತೋತಾಪುರಿ ಕೂಡ ಇದೇ ರೀತಿಯಾಗಿ ವಿದ್ಯುದ್ವೇಗದಲ್ಲಿ ಗೀತೆ, ಭಾಗವತ ಮತ್ತಿತರ ಶಾಸ್ತ್ರಗಳ ಸಾರವನ್ನು ಗ್ರಹಿಸಿ ಬಿಡುತ್ತಿದ್ದ.
“ಬಾಲ್ಯದಿಂದಲೆ ಕಾಮಕಾಂಚನ ತ್ಯಾಗ! ಬಹಳ ಅದ್ಭುತವಾದದ್ದೆ! ಇದು ಎಲ್ಲೊ ಕೆಲವರಿಗೆ ದೊರೆಯುವ ಭಾಗ್ಯ ಮಾತ್ರ. ಈ ರೀತಿಯಾದ ತ್ಯಾಗವಿಲ್ಲದವನನ್ನು ಆಲಿಕಲ್ಲು ತಾಕಿದ ಮಾವಿನಹಣ್ಣಿಗೆ ಹೋಲಿಸಬಹುದು. ಅದನ್ನು ದೇವರಿಗಂತು ಅರ್ಪಿಸುವುದಕ್ಕೆ ಆಗುವುದೇ ಇಲ್ಲ. ಜನರೂ ಕೂಡ ಅದನ್ನು ತಿನ್ನುವುದಕ್ಕೆ ಹಿಂಜರಿಯುತ್ತಾರೆ.
“ಯೌವ್ವನದಲ್ಲಿ ಅನೇಕ ದುಷ್ಕಾರ್ಯಗಳನ್ನು ಮಾಡಿ ವೃದ್ಧಾಪ್ಯದಲ್ಲಿ ಭಗವನ್ನಾಮ ಜಪದಲ್ಲಿ ಕಾಲ ಕಳೆಯುವ ಜನರೂ ಈ ಜಗತ್ತಿನಲ್ಲಿ ಇದ್ದಾರೆ. ಅವರು ಅಧಮರಲ್ಲಿ ಮೇಲು.
“ಮಲ್ಲಿಕನೆಂಬುವ ವ್ಯಕ್ತಿಯ ತಾಯಿ ಒಂದು ದೊಡ್ಡ ಮನೆತನಕ್ಕೆ ಸೇರಿದವಳು. ಆಕೆ ವೇಶ್ಯೆಯರ ಸಂಬಂಧವಾಗಿ ನನ್ನನ್ನು ಕೇಳಿದಳು, ‘ಏನು ಮುಕ್ತರಾಗಲು ಅವರಿಗೆ ಯಾವ ಮಾರ್ಗವೂ ಇಲ್ಲವೇನು?’ ಅಂತ. ಆಕೆ ಹಿಂದೆ ತಾನೇ ಆ ವಿಧವಾದ ಜೀವನವನ್ನು ನಡೆಸಿದ್ದಳು; ಅದಕ್ಕಾಗಿಯೆ ಅವಳ ಬಾಯಿಂದ ಆ ಪ್ರಶ್ನೆ. ನಾನು ಆಕೆಗೆ ಹೇಳಿದೆ, ‘ಹೌದು, ಸಾಧ್ಯ. ಅವರಿಗೂ ದೊರೆಯುತ್ತದೆ. ಆದರೆ, ಅವರು ಮತ್ತೆ ಇಂಥ ಕಾರ್ಯಗಳನ್ನು ಇನ್ನೆಂದಿಗೂ ಮಾಡುವುದಿಲ್ಲ ಅಂತ ಶಪಥಮಾಡಿ ಹೃತ್ಪೂರ್ವಕವಾದ ವ್ಯಾಕುಲತೆಯಿಂದ ಆತನ ಸಾಕ್ಷಾತ್ಕಾರಕ್ಕಾಗಿ ಅತ್ತರೆ ಮಾತ್ರ. ಬರಿದೆ ಹರಿನಾಮವನ್ನು ಜಪಿಸಿದರೆ ಏನಾಗುತ್ತದೆ? ಹೃತ್ಪೂರ್ವಕವಾಗಿ ಅಳಬೇಕು.’”
ಈಗ ತಾಳಮೃದಂಗಗಳೊಡನೆ ಸಂಕೀರ್ತನೆ ಆರಂಭವಾಯಿತು. ಕೇಶವ ಭಾರತಿ ಯಿಂದ ಗೌರಾಂಗ ಸಂನ್ಯಾಸ ಸ್ವೀಕರಿಸಿದುದರ ಸಂಬಂಧವಾಗಿ ಕೀರ್ತನಕಾರ ಹಾಡು ತ್ತಿದ್ದಾನೆ:
ಓ ಎಂಥ ನೋಟವ ಕಂಡೆನು!
ಕೇಶವ ಭಾರತಿಯ ಕುಟಿಯೊಳಗೆ ನಾ –
ನೆಂಥ ನೋಟವ ಕಂಡೆನು!
ಅಲ್ಲಿ ಶ್ರೀ ಗೌರಾಂಗದೇವನು
ಮತ್ತ ಮಾತಂಗದೊಲು ನರ್ತಿಸಿ
ದಿವ್ಯ ಮಧುವನು ಕುಡಿದು ಮರುಳಾ-
ಗುತ್ತ ಕಂಬನಿಗರೆಯುತ,
ಹೊರಳಿ, ಕಂಠೀರವದಿ ಹರಿಯನು
ನುತಿಸಿ ದಿನವನು ಸವಿಯುತ
ದಿವ್ಯಲೀಲೆಯೊಳಿದ್ದನು!
ಇಂಥ ಪದವನು ಪಡೆದರೂ, ಅವ-
ನೆಂತು ಮನೆಮನೆ ಬಾಗಿಲಲಿ, ಅದೊ
ಮನುಜರೊಲ್ಮೆಯ ಬೇಡಿ ನಡೆವನು
ತಾನು ದೇವರ ದಾಸನೆನ್ನುವ
ಅರಿವ ಪಡೆಯುವ ಬಗೆಯಲಿ!
ಎಂಥ ನಿಷ್ಠುರವಾದ ಎದೆಯೂ
ಕರಗಿಹೋಗಿದೆ, ಯೋಗಿವೇಷದೊ-
ಳಿರುವ ಶ್ರೀ ಗೌರಾಂಗ ದೇವನ
ಮುಖವ ಕಂಡಾಕ್ಷಣದಲಿ!
ಇಂಥ ಶ್ರೀ ಗೌರಾಂಗ ದೇವನ
ದಾಸನಾಗುವ ಪುಣ್ಯವೆಂದಿಗೆ,
ಎನುವನಿದೊ ಈ ಪ್ರೇಮದಾಸನು
ಗೌರಾಂಗದೇವನ ಭಕ್ತನು!
ಪರಮಹಂಸರು ಈ ಹಾಡನ್ನು ಕೇಳುತ್ತ ಕೇಳುತ್ತಿದ್ದಹಾಗೆಯೇ ಭಾವಾವಿಷ್ಟ ರಾಗಿದ್ದಾರೆ. ಶ್ರೀಕೃಷ್ಣನ ವಿರಹದಿಂದ ಬಹಳವಾಗಿ ದುಃಖಕ್ಕೀಡಾಗಿರುವ ಒಬ್ಬ ವ್ರಜ ಗೋಪಿಯ ಮಾನಸಿಕ ಅವಸ್ಥೆಯನ್ನು ಗಾಯಕ ವರ್ಣಿಸುತ್ತಿದ್ದಾನೆ. ಆಕೆ ಮಾಧವಿ ಲತಾಗೃಹದಲ್ಲಿ ಶ್ರೀಕೃಷ್ಣನನ್ನು ಹುಡುಕುತ್ತಿದ್ದಾಳೆ.
ನನ್ನಾ ಮಾಧವನನು ಕೊಡು ಮಾಧವಿ ನನಗೆ
ನನ್ನೊಲವನು ನನ್ನಿನಿಯನ ಕೊಡು ನನಗೆ
ನೀನವನನು ಕೊಟ್ಟರೆ ದಾಸಿಯವೋಲಿರುವೆನು, ನಾ
ನಿನ್ನಯ ಮನೆಯೊಳಗೆ !
ನಿನ್ನೆದೆಯೊಳಗವನನ್ನೇತಕೆ ಬಚ್ಚಿಟ್ಟಿಹೆ ಮಾಧವಿ?
ಕೊಡು ನನ್ನಿನಿಯನ ನನಗೆ,
ನಾ ಮುಗ್ಧಳು, ನನ್ನೊಳಗೇತಕೆ
ನಿನಗೀತೆರದ ಹಗೆ?
ಮೀನಿಗೆ ನೀರೆಂತಂತೆಯೆ
ನನಗವನೇ ಆಧಾರ!
ಅವನಿಲ್ಲದೆ ಜೀವಿಸೆ ನಾ,
ಜೀವನವೇ ನಿಸ್ಸಾರ!
ಓ ಕೊಡು ಮಾಧವಿ, ಬೇಡುವೆ
ನನ್ನಾ ಮಾಧವನನು ನನಗೆ
ಕೊಡು ಹಿಂದಕೆ
ನನ್ನಿನಿಯನ ನನಗೆ!
ಆಗಾಗ ಪರಮಹಂಸರು ಆಶುಕವಿತೆಗಳನ್ನು ಮಾಡುತ್ತ ಗಾಯಕನೊಡನೆ ಹಾಡಿದರು:
ಪ್ರಾಣವಲ್ಲಭ ಶ್ಯಾಮಸುಂದರನು ನೆಲೆಸಿರುವ
ಆ ಮಧುರೆಗಿಲ್ಲಿಂದ ಎನಿತು ದೂರ?
ಪರಮಹಂಸರು ಸಮಾಧಿಸ್ಥರಾಗಿದ್ದಾರೆ. ಅವರ ದೇಹ ಸ್ಪಂದಹೀನವಾಗಿದೆ. ಆ ಸ್ಥಿತಿಯಲ್ಲೇ ಅವರು ಬಹಳ ಹೊತ್ತು ಇದ್ದರು.
ಈಗ ಪರಮಹಂಸರು ಕಿಂಚಿತ್ ಪ್ರಕೃತಿಸ್ಥರಾಗಿದ್ದಾರೆ. ಇನ್ನೂ ಭಾವಾವಿಷ್ಟ ರಾಗಿಯೇ, ಕೆಲವು ವೇಳೆ ಭಕ್ತರನ್ನು ಸಂಬೋಧಿಸಿ ಮಾತನಾಡುತ್ತಿದ್ದಾರೆ. ಮಧ್ಯೆ ಮಧ್ಯೆ ತಾಯಿಯೊಡನೆ ಮಾತನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಹೇ ತಾಯೆ, ನೀನು ಆತನನ್ನು ಆಕರ್ಷಿಸಿಬಿಡು. ನಾನು ಆತನಿಗಾಗಿ ಇನ್ನು ಹೆಚ್ಚು ಶ್ರಮಪಡಲಾರೆ. (ಮಾಸ್ಟರಿಗೆ) ನನ್ನ ಮನಸ್ಸು ನಿನ್ನ ಬಂಧುವಿನ ಕಡೆ ಸ್ವಲ್ಪ ಎಳೆಯುತ್ತಿದೆ.”
(ಗಿರೀಶನಿಗೆ) : “ನೀನು ಬಹಳವಾಗಿ ಬಯ್ಯುವುದು ಮತ್ತು ನಿಂದನೀಯವಾದ ಮಾತುಗಳನ್ನು ಆಡುವುದು ಉಂಟು. ಆದಕ್ಕಾಗಿ ನೀನೇನು ಚಿಂತಿಸಬೇಕಾಗಿಲ್ಲ. ಅವೆಲ್ಲ ಹೊರಕ್ಕೆ ಬಂದುಬಿಡುವುದೇ ಮೇಲು. ಕೆಲಕೆಲವರ ದೇಹಕ್ಕೆ ಕೆಟ್ಟ ರಕ್ತ ಸೇರಿಕೊಂಡು ಅದು ಅವರಿಗೆ ಏನೇನೊ ರೋಗವನ್ನು ತರುತ್ತದೆ. ಅದು ಹೊರಕ್ಕೆ ಬಂದಷ್ಟೂ ಮೇಲು. ಸೌದೆ ಉರಿಯುವಾಗ ‘ಚಟಪಟ’ ಅಂತ ಶಬ್ದ ಮಾಡುತ್ತದೆ; ಉರಿದು ಮುಗಿದ ಮೇಲೆ ಯಾವ ಶಬ್ದವೂ ಇರದು, ಹಾಗೇನೆ ಮನುಷ್ಯನ ಉಪಾಧಿ ನಾಶವಾಗುವಾಗ ಅದೂ ಒಂದು ಸ್ವಲ್ಪ ಗಲಾಟೆ, ಶಬ್ದಮಾಡುತ್ತದೆ; ಬಳಿಕ ಶಾಂತಿ.
“ನೀನು ದಿವಸ ದಿವಸಕ್ಕೂ ಶುದ್ಧ ಶುದ್ಧನಾಗುತ್ತಾ ಮುಂದುವರಿಯುವೆ. ದಿನಕಳೆ ದಂತೆ ನೀನು ಮುಂದುವರಿಯುತ್ತಾ ಹೋಗುವೆ. ಇದನ್ನು ನೋಡಿ ಜನರು ಸುಮ್ಮನೆ ಅಚ್ಚರಿಗೊಳ್ಳುತ್ತಾರೆ.
“ನಾನು ಇನ್ನು ಅನೇಕ ವೇಳೆ ಬರಲಾರೆ; ಅದಕ್ಕಾಗಿ ನೀನು ಯೋಚಿಸಬೇಕಾಗಿಲ್ಲ. ಯಾರ ಸಹಾಯವೂ ಇಲ್ಲದೆ ನಿನಗೆ ದೊರೆತುಬಿಡುತ್ತದೆ.”
ಪರಮಹಂಸರ ಭಾವ ಮತ್ತೆ ಗಾಢವಾಯಿತು. ಮತ್ತೆ ಭಗವತಿಯೊಡನೆ ಮಾತನಾಡು ತ್ತಿದ್ದಾರೆ.
ಶ್ರೀರಾಮಕೃಷ್ಣರು: “ಹೇ ತಾಯೆ, ಯಾರು ಆಗಲೆ ಒಳ್ಳೆಯವನಾಗಿರುವನೊ, ಆತನನ್ನು ಒಳ್ಳೆಯವನನ್ನಾಗಿ ಮಾಡುವುದರಲ್ಲಿ ವಿಶೇಷತೆ ಏನಿದೆ? ಆಗಲೇ ಸತ್ತವನನ್ನು ಕೊಲ್ಲುವುದರಿಂದ ದೊರಕುವ ಫಲವೇನು? ಯಾರು ಗಟ್ಟಿಮುಟ್ಟಾಗಿ ನಿಂತುಕೊಂಡಿ ದ್ದಾನೊ ಆತನನ್ನು ನೀನು ಕೊಲ್ಲುವುದಾದರೆ, ಆಗತಾನೆ ನಿನ್ನ ಶೌರ್ಯ ಏನು ಎಂಬುದು ಗೊತ್ತಾಗುವುದು.”
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಇದ್ದು ಥಟ್ಟನೆ ಉಚ್ಚಕಂಠದಿಂದ ಹೇಳು ತ್ತಿದ್ದಾರೆ, “ದಕ್ಷಿಣೇಶ್ವರದಿಂದ ಬಂದಿದ್ದೇನೆ. ಹೋಗುತ್ತೇನೆ ತಾಯೇ!” ಅಂತ. ಇದು, ಒಂದು ಚಿಕ್ಕ ಮಗು ದೂರದಿಂದ ಬಂದ ತನ್ನ ತಾಯ ಕರೆಗೆ ಉತ್ತರ ಕೊಟ್ಟಂತೆ ಇತ್ತು. ಮತ್ತೆ ಅವರ ದೇಹ ಸ್ಪಂದಹೀನವಾಗಿ ಸಮಾಧಿಸ್ಥರಾಗಿದ್ದಾರೆ. ಭಕ್ತರೆಲ್ಲಾ ಎವೆಯಿಕ್ಕದೆ ಅವರನ್ನು ನೋಡುತ್ತಾ ಕುಳಿತಿದ್ದಾರೆ. ಇನ್ನೂ ಭಾವಾವಿಷ್ಟರಾಗಿಯೇ ಪರಮಹಂಸರು, “ನನಗೆ ಇನ್ನು ಪೂರಿ ಬೇಡ” ಅಂತ ಹೇಳುತ್ತಿದ್ದಾರೆ. ಅಕ್ಕಪಕ್ಕದಿಂದ ಬಂದಿದ್ದ ಒಬ್ಬಿಬ್ಬರು ಗೋಸ್ವಾಮಿಗಳು ಈಗ ಎದ್ದು ಹೊರಟುಹೋದರು.
ಪರಮಹಂಸರು ಭಕ್ತರೊಡನೆ ಬಹಳ ಆನಂದದಿಂದ ಮಾತುಕತೆಗಳಾಡುತ್ತಿದ್ದಾರೆ. ಇದು ಚೈತ್ರಮಾಸವಾಗಿದ್ದುದರಿಂದ ಬಹಳ ಧಗೆ. ದೇವೇಂದ್ರ ಕುಲ್ಛಿ ಐಸ್ಕ್ರೀಮ್ ತಯಾರಿಸಿದ್ದಾನೆ. ಅದನ್ನು ಆತ ಪರಮಹಂಸರಿಗೂ ಮತ್ತು ಭಕ್ತರಿಗೂ ಹಂಚಿದ. ಭಕ್ತರೆಲ್ಲಾ ಅದನ್ನು ಬಹಳ ಆನಂದದಿಂದ ತಿನ್ನುತ್ತಿದ್ದಾರೆ. ಮಾಸ್ಟರ್ ಮೆತ್ತಗೆ “ಇನ್ನು ಸ್ವಲ್ಪ ಇದ್ದರೆ” ಅಂತ ಹೇಳಿದ. ಎಲ್ಲರೂ ನಗಲಾರಂಭಿಸಿದರು. ಪರಮಹಂಸರಿಗೆ ಐಸ್ಕ್ರೀಮ್ನ್ನು ನೋಡಿಯೆ ಬಾಲಕನ ಹಾಗೆ ಆನಂದ ಉಂಟಾಯಿತು.
ಶ್ರೀರಾಮಕೃಷ್ಣರು: “ಕೀರ್ತನೆ ಬಹಳ ಚೆನ್ನಾಗಿ ಆಯಿತು. ಗೋಪಿಯರ ಮಾನಸಿಕ ಅವಸ್ಥೆಯ ಭಾಗವನ್ನು ಆತ ಬಹಳ ಚೆನ್ನಾಗಿ ಹಾಡಿದ: ‘ನನ್ನಾ ಮಾಧವನನು ಕೊಡು ಮಾಧವಿ ನನಗೆ!’ ಗೋಪಿಯರದು ಪ್ರೇಮೋನ್ಮಾದ ಅವಸ್ಥೆ. ಏನಾಶ್ಚರ್ಯ ಇದು, ಕೃಷ್ಣನಿಗಾಗಿ ಪ್ರೇಮೋನ್ಮತ್ತರಾಗುವುದು!”
ಒಬ್ಬ ಭಕ್ತ ಇನ್ನೊಬ್ಬ ಭಕ್ತನನ್ನು ತೋರಿಸಿ ಹೇಳಿದ, “ಈತನದು ಸಖೀಭಾವ – ಗೋಪಿಯರ ಭಾವ” ಅಂತ.
ರಾಮ: “ಇಲ್ಲ, ಈತನಿಗೆ ಎರಡೂ ಉಂಟು-ಮಧುರ ಭಾವ ಮತ್ತು ಜ್ಞಾನದ ಕಠೋರಭಾವ.”
ಶ್ರೀರಾಮಕೃಷ್ಣರು: “ಏನು ನೀವು ಮಾತಾಡಿಕೊಳ್ಳುತ್ತಿರುವುದು?”
ಪರಮಹಂಸರು ಈಗ ಸುರೇಂದ್ರನ ಮಾತು ಎತ್ತಿದರು,
ರಾಮ: “ನಾನು ಆತನಿಗೆ ತಿಳಿಸಿದ್ದೆ, ಆದರೆ ಏಕೋ ಬರಲಿಲ್ಲ.”
ಶ್ರೀರಾಮಕೃಷ್ಣರು: “ಆಫೀಸಿನಿಂದ ಹಿಂದಿರುಗುವುದರಲ್ಲಿಯೆ ಆತ ಸುಸ್ತಾಗಿ ಬಿಟ್ಟಿರುತ್ತಾನೆ.”
ಒಬ್ಬ ಭಕ್ತ : “ರಾಮಬಾಬು ತಮ್ಮ ವಿಷಯವಾಗಿ ಬರೆಯುತ್ತಿದ್ದಾನೆ.”
ಶ್ರೀರಾಮಕೃಷ್ಣರು (ನಗುತ್ತ): “ಏನು ಬರೆಯುತ್ತಿದ್ದಾನೆ?”
ಭಕ್ತ: “ ‘ಪರಮಹಂಸರ ಭಕ್ತಿ’ ಅಂತ ಒಂದು ಲೇಖನ ಬರೆಯುತ್ತಿದ್ದಾನೆ.”
ಶ್ರೀರಾಮಕೃಷ್ಣರು (ನಗುತ್ತ): “ಮತ್ತೆ ಇನ್ನೇನು ಬೇಕು! ಅದು ರಾಮನನ್ನು ಸುಪ್ರಸಿದ್ಧನನ್ನಾಗಿ ಮಾಡಿಬಿಡುತ್ತದೆ.”
ಗಿರೀಶ (ನಗುತ್ತ): “ಆತ ತಮ್ಮ ಶಿಷ್ಯ ಅಂತ ಹೇಳಿಕೊಳ್ಳುತ್ತಿದ್ದಾನೆ.”
ಶ್ರೀರಾಮಕೃಷ್ಣರು: “ನನಗೆ ಶಿಷ್ಯ-ಗಿಷ್ಯ ಯಾರೂ ಇಲ್ಲ! ನಾನು ರಾಮನ ದಾಸಾನುದಾಸ.”
ಅಕ್ಕಪಕ್ಕದವರು ಯಾರೋ ಕೆಲವರು ಬಂದಿದ್ದರು; ಅವರ ನಡೆನುಡಿ ವ್ಯವಹಾರ ಪರಮಹಂಸರಿಗೆ ಸರಿದೋರಿಬರಲಿಲ್ಲ. ಆಗ ಅವರು ‘ಇದೆಂಥ ಜಾಗ ಇದು? ಒಬ್ಬ ಧಾರ್ಮಿಕನೂ ನನ್ನ ಕಣ್ಣಿಗೆ ಬೀಳುತ್ತಿಲ್ಲವಲ್ಲ!” ಅಂತ ಹೇಳಿದರು.
ಪರಮಹಂಸರಿಗೆ ಫಲಾಹಾರ ಮಾಡಿಸಲು ದೇವೇಂದ್ರ ಅವರನ್ನು ಮನೆಯ ಒಳಕ್ಕೆ ಕರೆದುಕೊಂಡು ಹೋದ. ಸ್ವಲ್ಪ ಹೊತ್ತಾದ ಮೇಲೆ ಪರಮಹಂಸರು ಹಸನ್ಮುಖರಾಗಿ ಮತ್ತೆ ದಿವಾನ್ಖಾನೆಗೆ ಹಿಂದಿರುಗಿ ಬಂದು ಕುಳಿತುಕೊಂಡರು. ಭಕ್ತರೆಲ್ಲ ಅವರ ಸುತ್ತಲೂ ಕುಳಿತುಕೊಂಡರು. ಉಪೇಂದ್ರ ಮತ್ತು ಅಕ್ಷಯ ಅವರ ಎರಡು ಪಾರ್ಶ್ವಗಳಲ್ಲಿಯೂ ಕುಳಿತು ಅವರ ಪಾದಗಳನ್ನು ಒತ್ತಲಾರಂಭಿಸಿದರು. ಪರಮಹಂಸರು ದೇವೇಂದ್ರನ ಮನೆಯ ಹೆಂಗಸರ ಸಂಬಂಧವಾಗಿ, “ಒಳ್ಳೆ ಗುಣಶಾಲಿ ಹೆಂಗಸರು ಇವರು, ಹಳ್ಳಿಯ ಹೆಂಗಸರಲ್ಲವೆ; ಆದ್ದರಿಂದ ಅತ್ಯಂತ ಒಳ್ಳೆಯ ಭಕ್ತಿಮತಿಯರು!” ಅಂತ ಹೇಳುತ್ತಿದ್ದಾರೆ.
ಪರಮಹಂಸರ ಆತ್ಮಾರಾಮರು. ಆನಂದದಿಂದ ತುಂಬಿತುಳುಕಾಡುತ್ತ ಹಾಡ ಲಾರಂಭಿಸಿದ್ದಾರೆ.
ಸಹಜ ಮಾನಸನಾಗದಿರೆ ನೀ
ಸಹಜ ಸುಂದರ ದೇವನೊಲುಮೆಯ
ಗಳಿಪುದೆಂತೀ ಲೋಕದಿ?
ಮತ್ತೆ ಹಾಡಿದರು:
ಭಿಕ್ಷಾಪಾತ್ರೆಯ ಹಿಡಿದು ಸುತ್ತುತಿಹ
ಓ ಪರಿವ್ರಾಜಕ ನಿಲ್ಲು ಒಂದು ಚಣ ಬಾಗಿಲಲಿ.
ನಿನ್ನ ಕಾಂತಿಯುತ ಮುಖಮಂಡಲವನು
ನೋಡುವೆನೊಮ್ಮೆಗೆ ಸನಿಹದಲಿ.
ಮತ್ತೆ ಹಾಡಿದರು:
ನಿರಂತರವು ಹಿರಿಯೊಲವಿನೊಳದ್ದಿದ
ಫಕೀರನೊಬ್ಬನು ಬಂದಿಹನು.
ಹಿಂದೂಮುಸ್ಲಿಮರೊಂದೇ ಎನ್ನುವ
ಪವಿತ್ರಭಾವದಿ ನೋಡುವನು.
ಗಿರೀಶ ಪರಮಹಂಸರಿಗೆ ಪ್ರಣಾಮ ಮಾಡಿ ಅವರಿಂದ ಬೀಳ್ಕೊಂಡ. ಪರಮಹಂಸರೂ ಗಿರೀಶನಿಗೆ ನಮಸ್ಕಾರ ಮಾಡಿದರು. ದೇವೇಂದ್ರಾದಿ ಭಕ್ತರು ಪರಮಹಂಸರನ್ನು ಗಾಡಿಗೆ ಹತ್ತಿಸಿದರು. ತನ್ನ ಮನೆಯ ಅಂಗಳದಲ್ಲಿ ಹಾಕಿದ್ದ ಒಂದು ಬೆಂಚಿನ ಮೇಲೆ ನೆರೆಮನೆಯವನೊಬ್ಬ ಇನ್ನೂ ನಿದ್ರಿಸುತ್ತಿರುವುದನ್ನು ನೋಡಿ ದೇವೇಂದ್ರ ಆತನನ್ನು ಎಬ್ಬಿಸಿದನು. ಆತ ಕಣ್ಣುಗಳನ್ನು ಒರೆಸಿಕೊಳ್ಳುತ್ತ ಕೇಳಿದ, “ಏನು, ಪರಮಹಂಸರು ಬಂದರೇನು?” ಅಂತ. ಎಲ್ಲರೂ ಗಹಗಹಿಸಿ ಹೊಟ್ಟೆ ಹುಣ್ಣಾಗುವವರೆಗೆ ನಕ್ಕರು. ಆತ ಪರಮಹಂಸರನ್ನು ನೋಡಬೇಕೆಂದು ಬಹಳ ಹೊತ್ತಿಗೆ ಮುಂಚೆಯೇ ಅಲ್ಲಿಗೆ ಬಂದಿದ್ದ. ಬಹಳ ಸೆಖೆಯಾಗಿದ್ದುದರಿಂದ ಬೆಂಚಿನ ಮೇಲೆ ಒಂದು ಮಂದಲಿಗೆ ಹಾಸಿ ಅದರ ಮೇಲೆ ಸುಮ್ಮನೆ ಮಲಗಿಕೊಂಡಿದ್ದ. ಆದರೆ ನಿದ್ರಾದೇವಿ ಅವನನ್ನು ಒಲಿದುಕೊಂಡುಬಿಟ್ಟಿದ್ದಳು.
ಪರಮಹಂಸರ ಗಾಡಿ ದಕ್ಷಿಣೇಶ್ವರದ ಕಡೆ ಮುಂದುವರಿಯಿತು. ಅವರು ಆನಂದ ದಿಂದ ಮಾಸ್ಟರಿಗೆ ಹೇಳುತ್ತಿದ್ದಾರೆ, “ನಾನು ಇಂದು ಬಹಳವಾಗಿ ಕುಲ್ಛಿ ತಿಂದುಬಿಟ್ಟೆ. ನೀನು ಮತ್ತೆ ದಕ್ಷಿಣೇಶ್ವರಕ್ಕೆ ಬರುವಾಗ ಒಂದು ನಾಲ್ಕೈದು ತುಂಡು ಕುಲ್ಛಿಯನ್ನು ನನಗೋಸ್ಕರ ತೆಗೆದುಕೊಂಡು ಬಾ.” ಅವರು ಮತ್ತೆ ಮಾಸ್ಟರಿಗೆ ಹೇಳಿದರು, “ಈ ಕೆಲವು ಯುವಕರ ಕಡೆ ನನ್ನ ಮನಸ್ಸು ಎಳೆಯುತ್ತಿದೆ; ಚಿಕ್ಕ ನರೇನ, ಪೂರ್ಣ ಮತ್ತು ನಿನ್ನ ಆ ಸಂಬಂಧಿ ಇವರ ಕಡೆ” ಅಂತ.
ಮಾಸ್ಟರ್: “ಏನು ದ್ವಿಜನೇನು?”
ಶ್ರೀರಾಮಕೃಷ್ಣರು: “ಅಲ್ಲ, ಆತನೇನೂ ನನ್ನ ಮನಸ್ಸಿನಲ್ಲಿ ಇದ್ದೇ ಇದ್ದಾನೆ; ಆತನ ಅಣ್ಣ.”
ಮಾಸ್ಟರ್: “ಓ, ಆತನೇ?”
ಪರಮಹಂಸರು ಆನಂದದಿಂದ ಗಾಡಿಯಲ್ಲಿ ಮುಂದುವರಿಯುತ್ತಿದ್ದಾರೆ.