೧ನೇ ಮಾರ್ಚಿ ೧೮೮೫, ಫಾಲ್ಗುಣ ಪೂರ್ಣಿಮೆ, ಭಾನುವಾರ
ಪರಮಹಂಸರು ತಮ್ಮ ಕೊಠಡಿಯಲ್ಲಿ ಚಿಕ್ಕ ಮಂಚದ ಮೇಲೆ ಕುಳಿತು ಸಮಾಧಿಸ್ಥ ರಾಗಿದ್ದಾರೆ. ಮಹಿಮಚರಣ, ರಾಮದತ್ತ, ಮನಮೋಹನ, ನವಾಯಿಚೈತನ್ಯ, ಮಾಸ್ಟರ್ ಇವರೇ ಮೊದಲಾದ ಅನೇಕ ಭಕ್ತರು ನೆಲದ ಮೇಲೆ ಹಾಸಿದ್ದ ಮಂದಲಿಗೆ ಮೇಲೆ ಕುಳಿತಿದ್ದಾರೆ. ಇವರೆಲ್ಲರೂ ಶ್ರೀರಾಮಕೃಷ್ಣರನ್ನು ದೃಷ್ಟಿಸಿ ನೋಡುತ್ತಿದ್ದಾರೆ.
ಇಂದು ದೋಲ್-ಪೂರ್ಣಿಮಾ, ಚೈತನ್ಯದೇವ ಹುಟ್ಟಿದ ದಿನ.
ಪರಮಹಂಸರು ಸಮಾಧಿ ಅವಸ್ಥೆಯಿಂದ ಕೆಳಗೆ ಇಳಿಯುತ್ತಾರೆ. ಈಗ ಇನ್ನೂ ಭಾವಾವಿಷ್ಟರಾಗಿಯೇ ಇದ್ದಾರೆ.
ಶ್ರೀರಾಮಕೃಷ್ಣರು ಮಹಿಮಚರಣನಿಗೆ ಹೇಳಿದರು : “ಭಗವಂತನ ವಿಷಯವಾಗಿ ಏನಾದರೂ ಸ್ವಲ್ಪ ಹೇಳು ನಮಗೆ.”
ಮಹಿಮಚರಣ ನಾರದಪಂಚರಾತ್ರದಿಂದ ಕೆಲವು ಚರಣಗಳನ್ನು ಎತ್ತಿ ಹೇಳಿದ:
ಪ್ರೇಮದೊಳಾರಾಧಿಸೆ ದೇವರ, ಈ ಜಪತಪವಿನ್ನೇಕೆ?
ಪ್ರೇಮದೊಳಾರಾಧಿಸದಿದ್ದರೆ ಈ ಜಪತಪವಿನ್ನೇಕೆ?
ಒಳ ಹೊರಗೂ ಆತನೆ ಕಾಣಲು ಈ ಜಪತಪದಿಂದೇನು?
ಒಳ ಹೊರಗೂ ಆತನ ಕಾಣದ ಈ ಜಪತಪದಿಂದೇನು?
ಓ ಮಗು ಪರಬ್ರಹ್ಮಾ, ನಿನ್ನೀ ಜಪತಪವನು ನಿಲಿಸೋ!
ಜ್ಞಾನಸಿದ್ಧ ಶ್ರೀ ದ್ವಿಜವರ ಶಂಕರನೆಡೆ ನಡೆಯೋ,
ಭವನಿಗಳನಿಬಂಧಚ್ಛೇದನಕಾರಣಶಕ್ತಿಯನು
ಪಡೆ ಅವನಿಂ ವೈಷ್ಣವೋಕ್ತ ಹರಿಭಕ್ತಿಯನು!
ಮಹಿಮಚರಣ ಹೇಳಿದ : “ಒಮ್ಮೆ ನಾರದ ತಪಸ್ಸು ಮಾಡುತ್ತಿದ್ದಾಗ ದೈವವಾಣಿ ಮೇಲಿನ ಚರಣಗಳನ್ನು ಎತ್ತಿ ಹೇಳಿತು ಎಂಬುದಾಗಿ ನಾರದಪಂಚರಾತ್ರದಲ್ಲಿ ಹೇಳಿದೆ.”
ಶ್ರೀರಾಮಕೃಷ್ಣರು: “ಎರಡು ವಿಧದ ಸಾಧಕರಿದ್ದಾರೆ, ಜೀವಕೋಟಿಗಳು, ಈಶ್ವರ ಕೋಟಿಗಳು. ಜೀವಕೋಟಿಗಳ ಭಕ್ತಿ ವೈಧೀಭಕ್ತಿ. ಇದರಲ್ಲಿ ಇಷ್ಟು ಉಪಚಾರಗಳಿಂದ ಪೂಜೆ ಮಾಡಬೇಕು, ಇಷ್ಟು ಸಲ ಜಪ ಮಾಡಬೇಕು, ಇಷ್ಟು ಸಲ ಪುರಶ್ಚರಣೆ ಮಾಡಬೇಕು ಎಂಬ ವಿಧಿ ನಿಯಮಗಳಿವೆ. ಈ ವಿಧವಾದ ಭಕ್ತಿ ಪಕ್ವವಾಯಿತು ಅಂದರೆ ಜ್ಞಾನ ದೊರೆಯುತ್ತದೆ. ಜ್ಞಾನ ದೊರೆಯಿತು ಅಂದರೆ ಜೀವ ಪರಮಾತ್ಮನಲ್ಲಿ ಲಯವಾಗಿ ಬಿಡುತ್ತದೆ. ಜೀವ ಪರಮಾತ್ಮನಲ್ಲಿ ಲಯವಾಯಿತು ಅಂದರೆ ಮತ್ತೆ ಅದು ಹಿಂದಿರುಗಿ ಬರುವುದಿಲ್ಲ.
“ಆದರೆ ಈಶ್ವರಕೋಟಿಗಳ ಸಮಾಚಾರವೇ ಬೇರೆ. ಅವರು ಅನುಲೋಮ ವಿಲೋಮ ಕ್ರಮವನ್ನು ಅನುಸರಿಸುತ್ತಾರೆ. ‘ನೇತಿ ನೇತಿ’ ಕ್ರಮವನ್ನು ಅನುಸರಿಸುತ್ತಾರೆ. ಚಾವಣಿಯನ್ನು ಮುಟ್ಟಿದಾಗ ಇವರಿಗೆ ಅನುಭವವಾಗುತ್ತದೆ, ‘ಚಾವಣಿ ಯಾವುದರಿಂದ- ಇಟ್ಟಿಗೆ, ಸುಣ್ಣ, ಇಟ್ಟಿಗೆ ಪುಡಿ-ನಿರ್ಮಿತವಾಗಿರುವುದೊ, ಮೆಟ್ಟಲೂ ಅದೇ ವಸ್ತುಗಳಿಂದ ಉಂಟಾಗಿದೆ’ ಅಂತ. ಬಳಿಕ ಇವರು ಇಚ್ಛೆಬಂದಂತೆ ಚಾವಣಿಯ ಮೇಲೂ ಇರಬಲ್ಲರು ಅಥವಾ ಮೆಟ್ಟಲುಗಳನ್ನು ಹತ್ತಿಳಿಯುತ್ತಲೂ ಇರಬಲ್ಲರು.
“ಶುಕದೇವ ಸಮಾಧಿಯಲ್ಲಿ-ನಿರ್ವಿಕಲ್ಪ ಸಮಾಧಿಯಲ್ಲಿ, ಜಡಸಮಾಧಿಯಲ್ಲಿ ಇದ್ದ. ಆತ ಪರೀಕ್ಷಿತ್ ರಾಜನಿಗೆ ಭಾಗವತ ಶ್ರವಣ ಮಾಡಿಸಬೇಕಾಗಿದ್ದುದರಿಂದ ಭಗವಂತ ನಾರದನನ್ನು ಆತನ ಹತ್ತಿರಕ್ಕೆ ಕಳುಹಿಸಿದ. ನಾರದ ಬಂದು ನೋಡುತ್ತಾನೆ, ಶುಕದೇವ ಜಡದಂತೆ ಬಾಹ್ಯ ಜ್ಞಾನಶೂನ್ಯನಾಗಿ ಕುಳಿತುಬಿಟ್ಟಿದ್ದಾನೆ. ಆಗ ನಾರದ ವೀಣೆಯನ್ನು ನುಡಿಸುತ್ತ ಹರಿಯ ರೂಪಿನ ಸಂಬಂಧವಾಗಿ ನಾಲ್ಕು ಶ್ಲೋಕಗಳನ್ನು ಹಾಡಿದ. ಮೊದಲನೆ ಶ್ಲೋಕವನ್ನು ಹಾಡುತ್ತಿದ್ದ ಹಾಗೆ ಶುಕದೇವನಿಗೆ ರೋಮಾಂಚವಾಯಿತು. ಬಳಿಕ ಪ್ರೇಮಾಶ್ರು ಸುರಿಯಲಾರಂಭಿಸಿತು; ಆತ ತನ್ನ ಆಂತರ್ಯದಲ್ಲಿ-ಹೃದಯ ಮಧ್ಯದಲ್ಲಿ ಭಗವಂತನ ಚಿನ್ಮಯ ರೂಪವನ್ನು ದರ್ಶನ ಮಾಡಲಾರಂಭಿಸಿದ. ಜಡಸಮಾಧಿ ದೊರೆತ ನಂತರ ಮತ್ತೆ ಆತನಿಗೆ ರೂಪದರ್ಶನವಾಯಿತು. ಶುಕದೇವ ಈಶ್ವರಕೋಟಿ.
“ಹನುಮಂತ ಸಾಕಾರ ಮತ್ತು ನಿರಾಕಾರ ಸಾಕ್ಷಾತ್ಕಾರ ಮಾಡಿಕೊಂಡು ಚಿದ್ಘನ ಆನಂದಮೂರ್ತಿಯಲ್ಲೇ, ನಿಷ್ಠಾವಂತನಾಗಿ ಇದ್ದ.”
“ಪ್ರಹ್ಲಾದ ಕೆಲವು ವೇಳೆ ‘ಸೋಠ್ಹಮ್’, ‘ನಾನೇ ಆತನು’ ಎಂಬ ಭಾವದಲ್ಲಿ ಇರುತ್ತಿದ್ದ! ಮತ್ತೆ ಕೆಲವು ವೇಳೆ ದಾಸ್ಯಭಾವದಲ್ಲಿ ಇರುತ್ತಿದ್ದ. ಭಕ್ತಿಯ ಆಶ್ರಯವನ್ನು ಹೊಂದದೆ ಇದ್ದರೆ ಬೇರೆ ಏನನ್ನು ತಾನೆ ಆಶ್ರಯಿಸಿ ಇರಲಾದೀತು? ಅದಕ್ಕಾಗಿಯೇ ಸೇವ್ಯ-ಸೇವಕಭಾವವನ್ನು-ನೀನು ಪ್ರಭು ನಾನು ದಾಸ ಎಂಬ ಭಾವವನ್ನು ಆರೋಪಿಸಿ ಕೊಳ್ಳಬೇಕಾಗುತ್ತದೆ. ಹರಿ-ರಸವನ್ನು ಪಾನಮಾಡಬೇಕಾದರೆ ರಸ-ರಸಿಕನ ಭಾವವನ್ನು-ಹೇ ಭಗವಂತ ನೀನು ರಸ, ನಾನು ರಸಿಕ ಎಂಬ ಭಾವವನ್ನು ಆರೋಪಿಸಿಕೊಳ್ಳ ಬೇಕಾಗುತ್ತದೆ.
“ ‘ಭಕ್ತಿಯ ಅಹಂ’, ‘ವಿದ್ಯೆಯ ಅಹಂ,’, ‘ಬಾಲಕನ ಅಹಂ’ – ಇವುಗಳಲ್ಲಿ ಯಾವ ದೋಷವೂ ಇಲ್ಲ. ಶಂಕರಾಚಾರ್ಯರು ಲೋಕಶಿಕ್ಷಣಾರ್ಥವಾಗಿ ‘ವಿದ್ಯೆಯ ಅಹಂ’ ಅನ್ನು ಇಟ್ಟುಕೊಂಡಿದ್ದರು. ‘ಬಾಲಕನ ಅಹಂ’ ನಲ್ಲಿ ಯಾವ ಆಸಕ್ತಿಯೂ ಇಲ್ಲ. ಬಾಲಕ ತ್ರಿಗುಣಾತೀತ, -ಯಾವ ಗುಣಕ್ಕೂ ವಶನಾಗಿಲ್ಲ. ಈ ನಿಮಿಷ ಕೋಪಿಸಿಕೊಳ್ಳು ತ್ತಾನೆ; ಮರುನಿಮಿಷ ನೋಡಿದರೆ ಕೋಪ ಏನೂ ಇಲ್ಲ. ಈ ನಿಮಿಷ ಆಟದ ಮನೆ ಕಟ್ಟುತ್ತಾನೆ; ಮರುನಿಮಿಷ ಅದನ್ನು ಮರೆತೇಬಿಡುತ್ತಾನೆ. ಈಗ ಕಾಣುತ್ತಾನೆ, ತನ್ನ ಗೆಳೆಯ ರನ್ನು ಬಹಳವಾಗಿ ಪ್ರೀತಿಸುತ್ತಿರುವಂತೆ; ಕೆಲವು ದಿನ ಅವರು ಕಣ್ಣಿಗೆ ಬೀಳದೆ ಇದ್ದರು ಅಂದರೆ, ಅವರನ್ನು ಸಂಪೂರ್ಣವಾಗಿ ಮರೆತೇಬಿಡುತ್ತಾನೆ. ಬಾಲಕ, ಸತ್ತ್ವ, ರಜಸ್ಸು, ತಮಸ್ಸು ಇವುಗಳಾವುದಕ್ಕೂ ವಶನಾಗಿಲ್ಲ.
“ ‘ನೀನು ಭಗವಂತ, ನಾನು ಭಕ್ತ’ ಇದು ಭಕ್ತನ ಭಾವ- ‘ಭಕ್ತಿಯ ಅಹಂ’ ಎಂಬುದು ಇದೇನೇ. ಏಕೆ, ಭಕ್ತ ‘ಭಕ್ತಿಯ ಅಹಂ’ ಇಟ್ಟುಕೊಳ್ಳುತ್ತಾನೆ? ಆತನ ಭಾವನೆ, ಈ ‘ಅಹಂ’ ಎಂಬುದು ಹೋಗತಕ್ಕದ್ದಲ್ಲ; ಆದ್ದರಿಂದ ಈ ನೀಚ ‘ಅಹಂ’ ‘ದಾಸ ಅಹಂ’ ಆಗಿ, ‘ಭಕ್ತನ ಅಹಂ’ ಆಗಿ ಇರಲಿ ಅಂತ.
“ಬೇಕಾದಷ್ಟು ವಿಚಾರದಲ್ಲಿ ತೊಡಗು, ‘ಅಹಂ’ ಎಂಬುದು ಹೋಗುವುದಿಲ್ಲ. ‘ಅಹಂ’ ಎಂಬುದೇ ಕುಂಭ, ಬ್ರಹ್ಮನೇ ಎಲ್ಲೆಲ್ಲೂ ನೀರೇನೀರಾಗಿರುವ ಸಮುದ್ರ ಅಂತ ಇಟ್ಟುಕೊಳ್ಳಿ. ಕುಂಭದ ಒಳಗೂ ಹೊರಗೂ ನೀರು ತುಂಬಿದೆ; ಎಲ್ಲೆಲ್ಲೂ ಬರೀ ನೀರೇ ನೀರು; ಆದರೂ ಕುಂಭ ಎಂಬುದು ಮಾತ್ರ ಇದ್ದೇ ಇರುತ್ತದೆ. ಈ ಕುಂಭವೇ ಭಕ್ತನ ‘ಅಹಂ’ ಎಂಬುದರ ಸ್ವರೂಪ. ಎಲ್ಲಿಯವರೆಗೆ ಕುಂಭ ಎಂಬುದು ಇರುವುದೊ, ಅಲ್ಲಿಯವರೆಗೆ ‘ನಾನು’, ‘ನೀನು’, ಎಂಬುದು ಇದ್ದೇ ಇರುತ್ತದೆ; ‘ನೀನು ಪ್ರಭು, ನಾನು ದಾಸ; ನೀನು ಭಗವಂತ, ನಾನು ಭಕ್ತ’ ಎಂಬುವೂ ಇದ್ದೇ ಇರುತ್ತವೆ. ಬೇಕಾದಷ್ಟು ವಿಚಾರದಲ್ಲಿ ತೊಡಗು, ಇದು ಹೋಗತಕ್ಕದಲ್ಲ. ಕುಂಭವೇ ಹೋಗಿಬಿಟ್ಟಿತು ಅಂದರೆ ಆಗ ಅದು ಬೇರೆ ಸಮಾಚಾರ.”
ನರೇಂದ್ರ ಕೊಠಡಿಗೆ ಬಂದು ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡ. ಪರಮಹಂಸರು ಆತನೊಡನೆ ಮಾತುಕತೆಯಾಡುತ್ತಿದ್ದಾರೆ. ಹಾಗೆ ಮಾತ ನಾಡುತ್ತಿದ್ದ ಹಾಗೆಯೆ ಅವರು ಮಂಚದಿಂದ ಕೆಳಕ್ಕೆ ಇಳಿದು ಬಂದು ನೆಲದ ಮೇಲೆ ಹಾಸಿದ್ದ ಮಂದಲಿಗೆಯ ಮೇಲೆ ಕುಳಿತುಕೊಂಡರು. ಅಷ್ಟರೊಳಗಾಗಿ ಕೊಠಡಿ-ಜನರಿಂದ ಭಕ್ತರಿಂದ ಮತ್ತು ಹೊರಗಿನವರಿಂದ ತುಂಬಿಹೋಗಿದೆ.
ಶ್ರೀರಾಮಕೃಷ್ಣರು (ನರೇಂದ್ರನಿಗೆ): “ಸೌಖ್ಯವೇ? ನೀನು ಆಗಾಗ ಗಿರೀಶಘೋಷನ ಮನೆಗೆ ಹೋಗುತ್ತಲೇ ಇದ್ದೀಯಂತೆ ನಿಜವೇನು?”
ನರೇಂದ್ರ: “ಹೌದು, ಆಗಾಗ ಅಲ್ಲಿಗೆ ಹೋಗುತ್ತಿದ್ದೇನೆ.”
ಗಿರೀಶ ಈಗ ಕೆಲವು ತಿಂಗಳಿಂದ ಶ್ರೀರಾಮಕೃಷ್ಣರ ಹತ್ತಿರ ಬಂದು ಹೋಗುತ್ತಿದ್ದಾನೆ. ಒಮ್ಮೆ ಪರಮಹಂಸರು ಹೇಳಿದರು, “ಗಿರೀಶಘೋಷನ ವಿಶ್ವಾಸದ ಆಳವನ್ನು ಕಂಡುಹಿಡಿ ಯಲು ಯಾರಿಗೂ ಸಾಧ್ಯವಿಲ್ಲ.” ಅಂತ. ಆತನ ವಿಶ್ವಾಸ ಎಂಥದೊ, ಆತನ ಅನುರಾಗವೂ ಅಂಥದೆ. ಮನೆಯಲ್ಲಿ ಸರ್ವದಾ ಪರಮಹಂಸರ ಚಿಂತನೆಯಲ್ಲಿಯೇ ಮುಳುಗಿರುತ್ತಾನೆ. ನರೇಂದ್ರ ಆಗಾಗ ಆತನ ಮನೆಗೆ ಹೋಗುತ್ತಾನೆ. ಹರಿಪದ, ದೇವೇಂದ್ರ ಮತ್ತು ಇನ್ನೂ ಅನೇಕ ಭಕ್ತರು ಆತನ ಮನೆಗೆ ಆಗಾಗ ಹೋಗುತ್ತಾರೆ. ಗಿರೀಶ ಅವರೊಡನೆ ಪರಮಹಂಸರ ವಿಷಯವಾಗಿಯೇ ಮಾತನಾಡುತ್ತಾನೆ. ಗಿರೀಶ ಗೃಹಸ್ಥನಾಗಿದ್ದಾನೆ; ಆದರೆ ಪರಮಹಂಸರಿಗೆ ಗೊತ್ತಿದೆ, ನರೇಂದ್ರ ಗೃಹಸ್ಥನಾಗುವುದಿಲ್ಲ ಅಂತ; ಕಾಮಕಾಂಚನತ್ಯಾಗಿಯಾಗುತ್ತಾನೆ ಅಂತ.
ಶ್ರೀರಾಮಕೃಷ್ಣರು: “ನೀನು ಅಡಿಗಡಿಗೆ ಗಿರೀಶಘೋಷನ ಮನೆಗೆ ಹೋಗುತ್ತಿ ಯೇನು? ಆದರೆ ನೋಡಿಕೊ, ಬೆಳ್ಳುಳ್ಳಿ ರಸ ಇಟ್ಟಿದ್ದ ಪಾತ್ರೆಯನ್ನು ಎಷ್ಟು ಸಲ ತೊಳೆದರೂ ಬೆಳ್ಳುಳ್ಳಿ ಗಂಧ ಮಾತ್ರ ಕಿಂಚಿತ್ತಾದರೂ ಆ ಪಾತ್ರೆಯಲ್ಲಿ ಉಳಿದೇ ಉಳಿದಿರುತ್ತದೆ. ಯುವಕರು ಶುದ್ಧ ಜೀವಿಗಳು, ಕಾಮಕಾಂಚನ ಅವರನ್ನು ಸ್ಪರ್ಶಿಸಿಲ್ಲ. ಬಹಳ ಕಾಲ ಕಾಮಕಾಂಚನದ ಮಧ್ಯೆ ಇದ್ದರೆ ಬೆಳ್ಳುಳ್ಳಿಯಂಥ ಗಂಧ ಉಂಟಾಗಿಬಿಡುತ್ತದೆ. ಅವರನ್ನು ಕಾಗೆ ಕುಟುಕಿದ ಮಾವಿನ ಹಣ್ಣಿಗೆ ಹೋಲಿಸಬಹುದು. ಅದನ್ನು ದೇವರಿಗೆ ಅರ್ಪಿಸುವುದಕ್ಕೂ ಆಗುವುದಿಲ್ಲ, ತಾನೂ ತಿನ್ನುವುದಕ್ಕೆ ಆಗುವುದಿಲ್ಲ. ಉದಾಹರಣೆಗೆ ಹೊಸಮಡಕೆ ಮತ್ತು ಮೊಸರಿನ ಮಡಕೆ. ಮೊಸರಿನ ಮಡಕೆಯಲ್ಲಿ ಹಾಲು ಇಡಲು ಭಯ. ಅನೇಕ ವೇಳೆ ಅದು ಕೆಟ್ಟುಹೋಗಿ ಬಿಡುತ್ತದೆ.
“ಗಿರೀಶನಂಥವರು ಬೇರೆ ಶ್ರೇಣಿಗೆ ಸೇರಿದವರು. ಇವರಿಗೆ ಯೋಗವೂ ಬೇಕು ಭೋಗವೂ ಬೇಕು. ಉದಾಹರಣೆಗೆ ರಾವಣ-ಆತನಿಗೆ ದೇವಕನ್ಯೆ ನಾಗಕನ್ಯೆಯರೂ ಬೇಕು, ರಾಮನನ್ನೂ ಪಡೆದುಕೊಳ್ಳಬೇಕು. ಇವರನ್ನು ಅಸುರರಿಗೆ ಹೋಲಿಸಬಹುದು. ಅಸುರರು ನಾನಾ ವಿಧದ ಭೋಗೋಪಭೋಗಗಳನ್ನು ಅನುಭವಿಸುತ್ತಾರೆ ಮತ್ತು ನಾರಾಯಣನನ್ನೂ ಪಡೆಯುತ್ತಾರೆ.”
ನರೇಂದ್ರ: “ಆದರೆ ಈಗ ಗಿರೀಶಘೋಷ ತನ್ನ ಹಿಂದಿನ ಸಹಚರರನ್ನೆಲ್ಲ ಬಿಟ್ಟು ಬಿಟ್ಟಿದ್ದಾನೆ.”
ಶ್ರೀರಾಮಕೃಷ್ಣರು: “ಹೌದು, ಹೌದು. ಆತ ಈಗ ಮುಪ್ಪಿನಲ್ಲಿ ಹಿಡ ಮಾಡಿದ ಹೋರಿಯ ಹಾಗೆ ಇದ್ದಾನೆ. ನಾನು ವರ್ಧಮಾನಕ್ಕೆ ಹೋಗಿದ್ದಾಗ, ಅಲ್ಲಿ ಒಂದು ಎತ್ತು ಹಸುಗಳ ಹಿಂದೆಯೇ ಸುತ್ತಾಡುತ್ತಿದ್ದುದನ್ನು ನೋಡಿದೆ. ಆಗ ನಾನು ಒಬ್ಬ ಗಾಡಿಯವನನ್ನು ಕೇಳಿದೆ, ‘ಏನು ಬಂದಿದೆ ಇದಕ್ಕೆ ರೋಗ? ಇದು ಎತ್ತಲ್ಲವೆ!’ ಅಂತ. ಅದಕ್ಕೆ ಆತ ಹೇಳಿದ. ‘ಹೆಚ್ಚು ವಯಸ್ಸಾದ ಮೇಲೆ ಇದಕ್ಕೆ ಹಿಡ ಮಾಡಿದ್ದಾರೆ. ಆದ್ದರಿಂದ ಇದು ತನ್ನ ಹಿಂದಿನ ಚಾಳಿಯನ್ನು ಇನ್ನೂ ಬಿಟ್ಟಿಲ್ಲ’ ಅಂತ.
“ಒಂದು ಜಾಗದಲ್ಲಿ ಕೆಲವು ಸಂನ್ಯಾಸಿಗಳು ಕುಳಿತುಕೊಂಡಿದ್ದರು. ಒಬ್ಬ ಯುವತಿ ಆ ಮಾರ್ಗವಾಗಿಯೇ ನಡೆದುಹೋದಳು. ಎಲ್ಲರೂ ಕುಳಿತು ಧ್ಯಾನಮಾಡುತ್ತಿದ್ದಾರೆ; ಆದರೆ, ಅವರಲ್ಲಿ ಒಬ್ಬ ಮಾತ್ರ ಓರೆ ನೋಟದಿಂದ ಆಕೆಯನ್ನು ನೋಡಿದ. ಆತ ಮೂರು ಮಕ್ಕಳ ತಂದೆಯಾದ ಬಳಿಕ ಸಂನ್ಯಾಸಿಯಾಗಿದ್ದ.
“ಯಾವುದಾದರೂ ಒಂದು ಪಾತ್ರೆಯಲ್ಲಿ ಬೆಳ್ಳುಳ್ಳಿ ರಸವನ್ನು ಇಟ್ಟಿದ್ದರೆ, ಬೆಳ್ಳುಳ್ಳಿ ಗಂಧ ಅದನ್ನು ಬಿಟ್ಟು ತೊಲಗುವುದೆ? ಗೊಬ್ಬಳಿಗಿಡ ಮಾವಿನಹಣ್ಣು ಬಿಡುತ್ತದೆಯೇ? ಹಾಗೆ ಮಾಡುವ ಸಿದ್ಧಿ ಎಲ್ಲರಿಗೂ ದೊರೆಯುವುದೆ?
“ಸಂಸಾರಿಗಳಿಗೆ ಸಮಯವೆಲ್ಲಿ? ಒಬ್ಬನಿಗೆ ಒಬ್ಬ ಭಾಗವತ ಪಂಡಿತ ಬೇಕಾಗಿತ್ತು. ಆತನ ಸ್ನೇಹಿತ ಆತನಿಗೆ ಹೇಳಿದ, ‘ಒಬ್ಬ ಉತ್ತಮ ಭಾಗವತ ಪಂಡಿತ ಇದ್ದಾನೆ. ಆದರೆ ಆತನಿಗೆ ಒಂದು ತೊಂದರೆ ಇದೆ; ಆತ ದೊಡ್ಡ ಆರಂಬಗಾರ. ಆತನಿಗೆ ನಾಲ್ಕು ನೇಗಿಲು. ಎಂಟು ಎತ್ತುಗಳು ಇವೆ. ಯಾವಾಗ ನೋಡಿದರೂ ಆತ ಅವುಗಳ ಹಿಂದೆಯೇ ಇರುತ್ತಾನೆ; ಎಳ್ಳಷ್ಟೂ ಸಮಯವೇ ಇಲ್ಲ’ ಅಂತ. ಯಾರಿಗೆ ಪಂಡಿತ ಬೇಕಾಗಿದ್ದನೊ ಆತ ಹೇಳಿದ, ‘ನನಗೆ ಇಂಥ ಭಾಗವತ ಪಂಡಿತ-ಯಾರಿಗೆ ಸಮಯವೇ ಇಲ್ಲವೊ-ಬೇಕಾಗಿಲ್ಲ. ನೇಗಿಲು ಎತ್ತು ಇವುಗಳಲ್ಲೇ ನಿರತನಾಗಿರೋ ಭಾಗವತ ಪಂಡಿತನನ್ನು ನಾನು ಹುಡುಕುತ್ತಿಲ್ಲ. ಯಾರು ನನಗೆ ಭಾಗವತ ಶ್ರವಣ ಮಾಡಿಸಬಲ್ಲನೊ ಅಂಥ ಭಾಗವತ ಪಂಡಿತ ಬೇಕು’ ಅಂತ.
“ಒಬ್ಬ ದೊರೆ ನಿತ್ಯವೂ ಭಾಗವತವನ್ನು ಕೇಳುತ್ತಿದ್ದ. ಭಾಗವತವನ್ನು ಓದುತ್ತಿದ್ದ ಪಂಡಿತ ನಿತ್ಯವೂ ತಾನು ಓದಿ ಮುಗಿಸಿದ ನಂತರ ದೊರೆಯನ್ನು ಕೇಳುತ್ತಿದ್ದ, ‘ಮಹಾಸ್ವಾಮಿ, ನಾನು ಓದಿದ್ದು ತಮಗೆ ಅರ್ಥವಾಯಿತೇ?’ ಅಂತ. ನಿತ್ಯವೂ ದೊರೆ ಹೇಳುತ್ತಿದ್ದ, ‘ಮೊದಲು ನೀವೇ ಅದನ್ನು ಅರ್ಥಮಾಡಿಕೊಳ್ಳಿ’ ಅಂತ. ಪಂಡಿತ ಮನೆಗೆ ಹಿಂದಿರುಗಿ ಹೋಗಿ ದಿನವೂ ಯೋಚಿಸುತ್ತಿದ್ದ, ‘ದೊರೆ ಏಕೆ ಹೇಳುತ್ತಾನೆ, “ಮೊದಲು ನೀವೇ ಅರ್ಥಮಾಡಿಕೊಳ್ಳಿ” ಅಂತ?” ಎಂದು. ಪಂಡಿತ ಸಾಧನೆ ಭಜನೆ ಮಾಡುತ್ತಿದ್ದ- ಕ್ರಮೇಣ ಆತನಿಗೆ ಸರಿಯಾದ ಜ್ಞಾನೋದಯವಾಯಿತು. ಆಗ ಆತನಿಗೆ ತೋರಿತು, ಹರಿ ಪಾದಪದ್ಮವೇ ಸತ್ಯ, ಉಳಿದುದೆಲ್ಲ ಮಿಥ್ಯಾ’ ಎಂದು. ಬಳಿಕ ಸಂಸಾರದಲ್ಲಿ ವಿರಕ್ತನಾಗಿ ಮನೆ ಬಿಟ್ಟು ಹೊರಟ. ಮನೆ ಬಿಟ್ಟು ಹೊರಡುವಾಗ ಆತ ಒಬ್ಬ ದೂತನ ಮುಖಾಂತರ ದೊರೆಗೆ ತಿಳಿಸಿದ, ‘ಮಹಾಸ್ವಾಮಿ, ಈಗ ನಾನು ಅರ್ಥಮಾಡಿಕೊಂಡೆ’ ಎಂಬುದಾಗಿ.
“ನಾನು ಸಂಸಾರಿಗಳನ್ನು ಒಂದು ವಿಧವಾದ ನಿಕೃಷ್ಟ ದೃಷ್ಟಿಯಿಂದ ನೋಡುತ್ತಿರುವೆ ನೇನು? ಇಲ್ಲ. ಅವರು ನನ್ನ ಕಣ್ಣಿಗೆ ಬಿದ್ದಾಗ ಅವರನ್ನು ಬ್ರಹ್ಮಜ್ಞಾನದ ದೃಷ್ಟಿಯಿಂದ ನೋಡಲಾರಂಭಿಸುತ್ತೇನೆ. ಆಗ ಆತನೇ ಎಲ್ಲವೂ ಆಗಿದ್ದಾನೆ-ಪ್ರತಿಯೊಂದೂ ನಾರಾಯಣನೇ, ಎಲ್ಲಾ ಯೋನಿಯೂ ಮಾತೃಯೋನಿಯೆ ಅಂತ ತೋರಿಬರುತ್ತದೆ. ಆಗ ವೇಶ್ಯೆಗೂ ಮತ್ತು ಪತಿವ್ರತೆಗೂ ಯಾವ ಭೇದವೂ ಇರುವಂತೆ ನನಗೆ ತೋರುವುದಿಲ್ಲ.
“ನಾನು ಏನು ಹೇಳಲಿ! ಎಲ್ಲರೂ ಉದ್ದಿನಬೇಳೆ ಬೇಕು ಅಂತ ಬರುವವರೆ! ಕಾಮಕಾಂಚನ ಬಿಡುವುದಕ್ಕೆ ಯಾರಿಗೂ ಇಚ್ಛೆಯಿಲ್ಲ. ಜನರು ಹೆಂಗಸಿನ ರೂಪಕ್ಕೆ ಮರುಳಾಗಿ ಬಿಡುತ್ತಾರೆ; ಹಣ ಐಶ್ವರ್ಯಕ್ಕೆ ಮರುಳಾಗಿಬಿಡುತ್ತಾರೆ. ಆದರೆ ಒಮ್ಮೆ ಭಗವಂತನ ರೂಪವನ್ನು ನೋಡಿದ್ದೇ ಆದರೆ, ಆಗ ಬ್ರಹ್ಮಪದವೂ ತುಚ್ಛವಾಗಿ ತೋರಿ ಬಿಡುತ್ತದೆ.
“ಒಬ್ಬ ರಾವಣನನ್ನು ಕೇಳಿದ, ‘ನೀನು ಅನೇಕ ರೂಪಗಳನ್ನು ಧರಿಸಿ ಸೀತೆಯ ಸಮ್ಮುಖಕ್ಕೆ ಹೋಗುತ್ತಿದ್ದೀಯೆ; ರಾಮನ ರೂಪು ಧರಿಸಿ ಏಕೆ ನೀನು ಹೋಗಬಾರದು?’. ಅದಕ್ಕೆ ರಾವಣ ಹೇಳಿದ, ‘ರಾಮನ ರೂಪವನ್ನು ನನ್ನ ಹೃದಯದಲ್ಲಿ ಒಮ್ಮೆ ನೋಡಿದ್ದೇ ಆದರೆ, ಆಗ ಕಣ್ಣಿಗೆ ರಂಭೆ, ತಿಲೋತ್ತಮೆ ಇವರೆಲ್ಲ ಸ್ಮಶಾನದ ಬೂದಿಯೋಪಾದಿಯಲ್ಲಿ ತೋರಿಬರುತ್ತಾರೆ; ಬ್ರಹ್ಮಪದವೂ ತುಚ್ಛವಾಗಿ ತೋರಿಬರುತ್ತದೆ. ಹಾಗಿರುವಲ್ಲಿ ಪರಸ್ತ್ರೀಯ ಯೋಚನೆ ಹೇಗೆ ಹೃದಯದಲ್ಲಿ ಉದಯವಾದೀತು!.’
“ಹಾ! ಎಲ್ಲರೂ ಉದ್ದಿನಬೇಳೆ ಗಿರಾಕಿಗಳೇ. ಜೀವಿ ಶುದ್ಧವಾಗದ ಹೊರತು ಭಗವಂತನಲ್ಲಿ ಶ್ರದ್ಧೆ ಭಕ್ತಿ ಉಂಟಾಗದು-ಮನಸ್ಸು ಏಕಾಗ್ರವಾಗದು, ಸಿಕ್ಕಿಸಿಕ್ಕಿದ ಕಡೆಗೆ ಹರಿದು ಹೋಗುತ್ತಿರುತ್ತದೆ.
(ಮನಮೋಹನನಿಗೆ) “ನೀನು ಕೋಪವನ್ನಾದರೂ ಮಾಡಿಕೊ, ಅಥವಾ ಇನ್ನೇನಾದರೂ ಮಾಡಿಕೊ, ನಾನು ಮಾತ್ರ ರಾಖಾಲನಿಗೆ, ‘ನೀನು ಯಾರ ಕೈಕೆಳಗೊ ದಾಸತ್ವ ಮಾಡುತ್ತಿದ್ದೀಯೆ, ಉದ್ಯೋಗಕ್ಕೆ ಸೇರಿದ್ದೀಯೆ ಎಂಬ ಸುದ್ದಿಯನ್ನು ಕೇಳುವುದ ಕ್ಕಿಂತ, ನೀನು ಭಗವಂತನ ಸಾಕ್ಷಾತ್ಕಾರಕ್ಕಾಗಿ ಗಂಗೆಗೆ ಬಿದ್ದು ಸತ್ತುಹೋಗಿಬಿಟ್ಟೆ ಎಂಬ ಸುದ್ದಿಯನ್ನು ಕೇಳಲು ಬಯಸುತ್ತೇನೆ’ ಅಂತ ಹೇಳಿಬಿಟ್ಟೆ.
“ನೇಪಾಳದ ಒಬ್ಬ ಹುಡುಗಿ ಇಲ್ಲಿಗೆ ಬಂದಿದ್ದಳು. ‘ಏಸ್ರಾಜ್’ ಎಂಬ ವಾದ್ಯವನ್ನು ಬಾಜಿಸುತ್ತ ಹರಿಯ ಸಂಬಂಧವಾಗಿ ಹಾಡಿದಳು. ಹಾಡು ಕೇಳುತ್ತಿದ್ದವರಲ್ಲಿ ಒಬ್ಬ ಕೇಳಿದ, ‘ನಿನಗೆ ವಿವಾಹ ಆಗಿದೆಯೆ’ ಅಂತ. ಆಕೆ, ‘ನಾನು ಕೇವಲ ಭಗವಂತನ ದಾಸಿ ಮಾತ್ರ; ಮತ್ತೆ ಬೇರೆ ಯಾರ ದಾಸಿಯಾಗುವುದಕ್ಕೆ ಹೋಗಲಿ?’ ಅಂತ ಹೇಳಿದಳು.
“ಕಾಮಕಾಂಚನದ ಮಧ್ಯೆ ಇದ್ದರೆ ಭಗವಂತನನ್ನು ಪಡೆಯುವುದೆಂತು? ಅಲ್ಲಿ ಅನಾಸಕ್ತನಾಗಿರುವುದು ಬಹಳ ಕಷ್ಟ. ಮೊದಲನೆಯದಾಗಿ ಮನುಷ್ಯ ಹೆಂಡತಿಯ ದಾಸ, ಎರಡನೆಯದಾಗಿ ಹಣದ ದಾಸ, ಮೂರನೆಯದಾಗಿ ಧಣಿಯ ದಾಸ; ಇವರೆಲ್ಲರ ಸೇವೆ ಮಾಡಬೇಕಾಗಿದೆ.
“ಒಬ್ಬ ಫಕೀರ ಒಂದು ಕಾಡಿನಲ್ಲಿ ಕುಟೀರ ಕಟ್ಟಿಕೊಂಡು ವಾಸವಾಗಿದ್ದ. ಆಗ ಅಕ್ಬರ್ ದಿಲ್ಲಿಯಲ್ಲಿ ಚಕ್ರವರ್ತಿಯಾಗಿದ್ದ. ಫಕೀರನನ್ನು ನೋಡಲು ಅನೇಕರು ಆತನ ಕುಟೀರಕ್ಕೆ ಬರುತ್ತಿದ್ದರು. ಅವರೆಲ್ಲರಿಗೂ ಅತಿಥಿ ಸತ್ಕಾರ ಮಾಡಲು ಆತನಿಗೆ ಬಹಳವಾಗಿ ಇಚ್ಛೆಯಾಯಿತು. ‘ಹಣ-ಕಾಸು ಇಲ್ಲದೆ ಅತಿಥಿಸತ್ಕಾರ ಮಾಡುವುದೆಂತು?’ ಎಂಬ ಯೋಚನೆ ಬಂತು. ಸಾಧು-ಸತ್ಪುರುಷರ ಸೇವೆಗಾಗಿ ಅಕ್ಬರನ ಹೃದಯದ ಬಾಗಿಲು ಯಾವಾಗಲೂ ತೆರೆದಿತ್ತು. ಅದಕ್ಕಾಗಿ ಫಕೀರ ಅಕ್ಬರನನ್ನು ನೋಡಲು ದಿಲ್ಲಿಗೆ ಹೊರಟ. ಆತ ಅರಮನೆಗೆ ಹೋದಾಗ ಅಕ್ಬರ್ ನಮಾಜು ಮಾಡುತ್ತಿದ್ದ. ಆದ್ದರಿಂದ ಆತ ಅಲ್ಲೇ ಒಂದು ಕಡೆ ಕುಳಿತ. ನೋಡುತ್ತಾನೆ, -ಅಕ್ಬರನೂ ತನ್ನ ನಮಾಜು ಮುಗಿದನಂತರ ಪ್ರಾರ್ಥನೆ ಮಾಡುತ್ತಿದ್ದಾನೆ, ‘ಹೇ ಅಲ್ಲಾ, ನನಗೆ ಧನ ಕೊಡು, ದೌಲತ್ತು ಕೊಡು, -’ ಅಂತ. ಇದನ್ನೆಲ್ಲ ಕೇಳಿ ಫಕೀರ ನಮಾಜಿನ ಕೊಠಡಿಯಿಂದ ಎದ್ದು ಹೊರಡುವುದರಲ್ಲಿದ್ದಾನೆ. ಅಕ್ಬರ್ ಸಂಜ್ಞೆಮಾಡಿ ಆತನಿಗೆ ಕುಳಿತುಕೊಳ್ಳಲು ಹೇಳಿದ. ನಮಾಜು ಮುಗಿದ ನಂತರ ಅಕ್ಬರ್ ಆ ಫಕೀರನನ್ನು ಕೇಳಿದ, ‘ಏತಕ್ಕೋ ಬಂದು ಕುಳಿತುಕೊಂಡಿರಿ. ಮತ್ತೆ ಎದ್ದು ಹೋಗಿಬಿಡುತ್ತಿದ್ದೀರಲ್ಲ, ಕಾರಣವೇನು?’ ಎಂಬುದಾಗಿ. ಅದಕ್ಕೆ ಫಕೀರ ಹೇಳಿದ, ‘ಅದರ ವಿಷಯ ಮಾತ್ರ ದಯವಿಟ್ಟು ನೀವು ಕೇಳಬೇಡಿ; ಇಗೋ ಹೊರಟೆ’ ಅಂತ. ತಿಳಿಸಲೇ ಬೇಕೆಂದು ಅಕ್ಬರ್ ಬಹುವಾಗಿ ಒತ್ತಾಯ ಪಡಿಸಲು ಆ ಫಕೀರ ಹೇಳಿದ, ‘ಅನೇಕರು ನನ್ನ ಕುಟೀರಕ್ಕೆ ಬಂದು ಹೋಗುತ್ತಿದ್ದಾರೆ. ಅವರ ಸೇವೆಗಾಗಿ ಸ್ವಲ್ಪ ಧನಸಹಾಯಕ್ಕಾಗಿ ಬಂದೆ’ ಅಂತ. ಆಗ ಅಕ್ಬರ್ ಕೇಳಿದ, ‘ಹಾಗಾದರೆ ಹೊರಟುಹೋಗಿಬಿಡುತ್ತಿದ್ದೀರಲ್ಲ ಏಕೆ?’ ಅಂತ. ಅದಕ್ಕೆ ಫಕೀರ ಹೇಳಿದ, ‘ನೀವೂ ಕೂಡ ಭಗವಂತನನ್ನು ಧನ ದೌಲತ್ತಿಗಾಗಿ ಭಿಕ್ಷೆ ಬೇಡಿದುದನ್ನು ನೋಡಿದೆ. ಆಗ ಭಾವಿಸಿದೆ, “ಭಿಕ್ಷುಕನ ಹತ್ತಿರ ಹೋಗಿ ಏಕೆ ಭಿಕ್ಷೆ ಬೇಡಬೇಕು? ಭಿಕ್ಷೆ ಬೇಡಬೇಕಾದರೆ ನೇರವಾಗಿ ಅಲ್ಲಾನಿಂದಲೇ ಭಿಕ್ಷೆ ಬೇಡೋದು ಮೇಲು ಅಂತ.”
ನರೇಂದ್ರ: “ಈಗ ಗಿರೀಶಘೋಷ ಈ ವಿಷಯಗಳ ಸಂಬಂಧವಾಗಿಯೇ ಆಲೋಚಿ ಸುತ್ತಿದ್ದಾನೆ.”
ಶ್ರೀರಾಮಕೃಷ್ಣರು: “ಹಾಗೆ ಮಾಡುತ್ತಿದ್ದರೆ ಅದು ಬಹಳ ಒಳ್ಳೆಯದೆ. ಆದರೆ ಆತ ಅಷ್ಟೊಂದು ಬಯ್ಯುವುದು, ದುರ್ಭಾಷೆಯಾಡೋದು ಇದನ್ನೆಲ್ಲ ಏಕೆ ಮಾಡುತ್ತಾನೆ. ಅದನ್ನೆಲ್ಲ ಸಹಿಸೋ ಅವಸ್ಥೆ ಈಗ ನನಗೆ ಇಲ್ಲ. ಸಿಡಿಲು ಬಡಿದರೆ ಮನೆಯಲ್ಲಿರುವ ಭಾರಿ ಭಾರಿ ವಸ್ತುಗಳು ಅಷ್ಟೊಂದು ಅಲುಗಾಡವು, ಆದರೆ ಕಿಟಕಿ ಬಾಗಿಲುಗಳು ‘ಕಟ ಕಟ’ ಅಂತ ಶಬ್ದ ಮಾಡುತ್ತವೆ. ಈಗ ಅಂಥ ಒರಟುತನವನ್ನು ಸಹಿಸುವ ಅವಸ್ಥೆ ನನಗಿಲ್ಲ. ಸತ್ತ್ವಗುಣಾವಸ್ಥೆಯಲ್ಲಿ ಗದ್ದಲ ಗಲಾಟೆಯನ್ನು ಸಹಿಸುವುದಕ್ಕೆ ಆಗುವುದಿಲ್ಲ. ಅದಕ್ಕಾಗಿಯೇ ಹೃದೆ ಇಲ್ಲಿಂದ ಹೊರಟುಹೋದ-ಭಗವತಿ ಕಳುಹಿಸಿಬಿಟ್ಟಳು. ಕೊನೆಕೊನೆಗೆ ಆತ ಬಾಲವನ್ನು ಬಹಳವಾಗಿ ಬಿಚ್ಚಿಬಿಟ್ಟಿದ್ದ. ನನ್ನನ್ನು ಯದ್ವಾತದ್ವಾ ಬಯ್ಯುತ್ತಿದ್ದ ಮತ್ತು ಒರಟೊರಟಾಗಿ ವರ್ತಿಸುತ್ತಿದ್ದ. (ನರೇಂದ್ರನಿಗೆ) ಗಿರೀಶ ಏನೋ ಹೇಳುತ್ತಿದ್ದಾನಲ್ಲ, ಅದಕ್ಕೆ ನಿನ್ನ ಒಪ್ಪಿಗೆ ಇರುವುದೆ?”
ನರೇಂದ್ರ: “ಆತ ಹೇಳಿದ, ತಾವು ಅವತಾರಪುರುಷರು ಎಂಬ ದೃಢವಿಶ್ವಾಸ ತನಗೆ ಉಂಟಾಗಿಬಿಟ್ಟಿದೆ ಅಂತ. ಅದಕ್ಕೆ ನಾನು ಯಾವ ಉತ್ತರವನ್ನೂ ಕೊಡಲಿಲ್ಲ.”
ಶ್ರೀರಾಮಕೃಷ್ಣರು: “ಆದರೆ ಆತನ ವಿಶ್ವಾಸ ಬಹಳ ವಿಶೇಷವಾದ್ದು! ಅದು ಎದ್ದು ಕಾಣುತ್ತಿಲ್ಲವೇನು?”
ಭಕ್ತರೆಲ್ಲ ಪರಮಹಂಸರ ಮಾತುಗಳನ್ನೆಲ್ಲ ಏಕಾಗ್ರ ಮನಸ್ಸಿನಿಂದ ಕೇಳುತ್ತಿದ್ದಾರೆ, ಅವರು ಇನ್ನೂ ಮಂದಲಿಗೆಯ ಮೇಲೆಯೇ ಕುಳಿತಿದ್ದಾರೆ. ಅವರ ಪಕ್ಕದಲ್ಲಿ ಮಾಸ್ಟರ್ ಮುಂಭಾಗದಲ್ಲಿ ನರೇಂದ್ರ, ಸುತ್ತಲೂ ಭಕ್ತರು ಕುಳಿತುಕೊಂಡಿದ್ದಾರೆ.
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದ ನಂತರ ಪ್ರೀತಿಯಿಂದ ನರೇಂದ್ರನಿಗೆ ಹೇಳಿದರು: “ನೋಡಪ್ಪ, ಕಾಮಕಾಂಚನ ತ್ಯಜಿಸದೆ ಇದ್ದರೆ ಆತನನ್ನು ಪಡೆಯಲು ಆಗುವುದಿಲ್ಲ.” ಹೀಗೆಂದು ಹೇಳುತ್ತಿದ್ದ ಹಾಗೆಯೇ ಭಾವಾವಿಷ್ಟರಾದರು. ನರೇಂದ್ರನ ಕಡೆ ತಮ್ಮ ಕರುಣಾಮಯ ದೃಷ್ಟಿಯನ್ನು ಬೀರುತ್ತ ಭಾವೋನ್ಮತ್ತರಾಗಿ ಹಾಡಲಾರಂಭಿಸಿದ್ದಾರೆ:
ನುಡಿಯಲಮ್ಮೆವು ನಾವು, ರಾಧಾ, ನುಡಿಯದಿರಲೂ ಆರೆವು!
ನಾವು ನಿನ್ನನ್ನು ಕಳೆದುಕೊಳ್ಳುವೆವು-ಎಂಬ ಭಯದೊಳಗಿರುವೆವು.
ಹಿಂದೆ ಎನಿತೋ ಸಾರಿ ಕಂಟಕದಾಚೆ ದಾಟಿದ ಗುಟ್ಟನು
ಇಂದು ನಾವೂ ಬಲ್ಲೆವಾದರು-ಇಂದಿನೆಲ್ಲಾ ಆಗುಹೋಗನು
ನಿನ್ನ ಮೇಲೇ ಬಿಟ್ಟೆವು!
ನರೇಂದ್ರ ತಮ್ಮವನಾಗದೆ ಬೇರೊಬ್ಬರವನಾಗಿಬಿಟ್ಟರೆ ಏನು ಮಾಡುವುದು ಎಂಬ ಭಯ ಪರಮಹಂಸರಿಗೆ ಇರುವಂತೆ ಕಂಡಿತು. ನರೇಂದ್ರ ಅಶ್ರುಪೂರ್ಣಲೋಚನನಾಗಿ ಪರಮಹಂಸರ ಕಡೆ ನೋಡುತ್ತಿದ್ದಾನೆ.
ಒಬ್ಬ ಭಕ್ತ ಇಂದೇ ಹೊಸದಾಗಿ ಪರಮಹಂಸರನ್ನು ನೋಡಲು ಬಂದಿದ್ದಾನೆ. ಆತ ಪರಮಹಂಸರ ಹತ್ತಿರ ಕುಳಿತುಕೊಂಡು ಅವರ ಮಾತುಕತೆಗಳನ್ನೆಲ್ಲ ಕೇಳಿದ ಮತ್ತು ಅವರ ವರ್ತನೆಯನ್ನೂ ನೋಡಿದ. ಆತ ಪರಮಹಂಸರನ್ನು ಕೇಳಿದ, “ಮಹಾಶಯರೇ, ಕಾಮ ಕಾಂಚನವನ್ನು ತ್ಯಾಗಮಾಡಲೇಬೇಕಾದರೆ, ಗೃಹಸ್ಥನಿಗೆ ಬೇರೆ ಗತಿ?” ಅಂತ.
ಶ್ರೀರಾಮಕೃಷ್ಣರು: “ಬೇಕಾದರೆ ನೀನು ಅವನ್ನು ಭೋಗಿಸು. ಇದು ನಮ್ಮಿಬ್ಬರ ಅಂತರಂಗದ ಮಾತು.”
ಮಹಿಮಚರಣ ಸುಮ್ಮನೆ ಕುಳಿತಿದ್ದಾನೆ. ಬಾಯಿಂದ ಒಂದು ಮಾತೂ ಇಲ್ಲ.
ಶ್ರೀರಾಮಕೃಷ್ಣರು (ಮಹಿಮಚರಣನಿಗೆ): “ಮುಂದಕ್ಕೆ ಹೋಗು ಇನ್ನೂ ಮುಂದಕ್ಕೆ ಹೋಗು, ಚಂದನದ ಕಾಡು ದೊರೆಯುತ್ತದೆ. ಅದಕ್ಕಿಂತಲೂ ಮುಂದಕ್ಕೆ ಹೋಗು, ಬೆಳ್ಳಿಯ ಗಣಿ ಸಿಕ್ಕುತ್ತದೆ, ಮತ್ತೂ ಮುಂದಕ್ಕೆ ಹೋಗು, ಚಿನ್ನದ ಗಣಿ ಸಿಕ್ಕುತ್ತದೆ. ಮತ್ತೂ ಅದಕ್ಕೂ ಮುಂದಕ್ಕೆ ಹೋಗು, ಪದ್ಮರಾಗ ಮತ್ತು ಮಾಣಿಕ್ಯದ ಗಣಿಗಳು ದೊರೆಯುತ್ತವೆ. ಮುಂದು ಮುಂದಕ್ಕೆ ಹೋಗು.”
ಮಹಿಮಚರಣ: “ಮುಂದು ಮುಂದಕ್ಕೆ ಹೋಗಲೇನೋ ಬೇಕು. ಆದರೆ ಸಂಸಾರದ ಲಗಾಮು ನಮ್ಮನ್ನು ಹಿಡಿದೆಳೆದು ನಿಲ್ಲಿಸುತ್ತವೆ, -ಮುಂದು ಮುಂದಕ್ಕೆ ಹೋಗಲು ಬಿಟ್ಟು ಕೊಡುತ್ತಿಲ್ಲ.”
ಶ್ರೀರಾಮಕೃಷ್ಣರು (ನಗುತ್ತ); “ಏಕೆ ಬಿಟ್ಟುಕೊಡದು? ಲಗಾಮನ್ನು ಕತ್ತರಿಸಿ ಹಾಕಿಬಿಡು. ಭಗವಂತನ ಹೆಸರೆಂಬ ಕತ್ತಿಯಿಂದ ಅದನ್ನು ಕತ್ತರಿಸಿ ಹಾಕು. ಕಾಳಿಯ ನಾಮ ಕಾಲನ ಪಾಶಗಳನ್ನು ಕತ್ತರಿಸಿಹಾಕುತ್ತದೆ.”
ಪಿತೃವಿಯೋಗವಾದ ಮೇಲೆ ನರೇಂದ್ರನು ಬಹಳವಾಗಿ ಸಂಸಾರದ ತಾಪತ್ರಯಕ್ಕೆ ಸಿಕ್ಕಿಕೊಂಡಿದ್ದಾನೆ. ಬಹಳವಾಗಿ ಕಷ್ಟಪಡುತ್ತಿದ್ದಾನೆ. ಪರಮಹಂಸರು ಆಗಾಗ ತಮ್ಮ ಕೃಪಾ ದೃಷ್ಟಿಯನ್ನು ಆತನ ಕಡೆ ಹಾಕುತ್ತ ಹೇಳಿದರು, “ನೀನು ಏನು ಚಿಕಿತ್ಸಕನಾಗಿ ಬಿಟ್ಟಿದ್ದೀಯೇನು?” ಅಂತ. ಅನಂತರ ಒಂದು ಸಂಸ್ಕೃತ ಶ್ಲೋಕವನ್ನು ಎತ್ತಿ ಹೇಳಿದರು: “ಶತಮಾರೀ ಭವೇದ್ವೈದ್ಯಃ ಸಹಸ್ರಮಾರೀ ಚಿಕಿತ್ಸಕಃ” (ಎಲ್ಲರೂ ನಗುತ್ತಿದ್ದಾರೆ.)
ಇಷ್ಟು ಅಲ್ಪವಯಸ್ಸಿನಲ್ಲಿಯೇ ನರೇಂದ್ರನಿಗೆ ಈ ಸಂಸಾರದ ಅನೇಕ ಕಷ್ಟಗಳು ಮತ್ತು ಸುಖದುಃಖಗಳ ಅನುಭವ ಆಗಿಬಿಟ್ಟಿದೆ ಎಂಬುದನ್ನು ಪರಮಹಂಸರು ಬಹುಶಃ ಸೂಚಿಸುತ್ತಿರಬಹುದೆ?
ನರೇಂದ್ರನೂ ಸ್ವಲ್ಪ ನಕ್ಕು ಸುಮ್ಮನಾದ.
ಅಪರಾಹ್ನವಾಗಿದೆ. ನಬಾಯಿಚೈತನ್ಯ ಹಾಡುತ್ತಿದ್ದಾನೆ. ಭಕ್ತರೆಲ್ಲರು ಕುಳಿತು ಕೇಳು ತ್ತಿದ್ದಾರೆ. ಇದ್ದಕ್ಕಿದ್ದ ಹಾಗೆ ಪರಮಹಂಸರು ತಮ್ಮ ಚಿಕ್ಕಮಂಚದಿಂದ ಎದ್ದು ಕೊಠಡಿಯಿಂದ ಹೊರಕ್ಕೆ ಹೋದರು. ಆದರೆ ಭಕ್ತರು ಮಾತ್ರ ಕುಳಿತೇ ಇದ್ದಾರೆ. ಹಾಡುವುದು ಮುಂದುವರಿಯುತ್ತಿದೆ. ಮಾಸ್ಟರ್ ಪರಮಹಂಸರನ್ನು ಹಿಂಬಾಲಿಸಿದ.
ಪರಮಹಂಸರು ಸಿಮೆಂಟಿನ ಅಂಗಳದ ಮೂಲಕ ಕಾಳೀದೇವಾಲಯದ ಕಡೆ ಹೋಗುತ್ತಿದ್ದಾರೆ. ಮೊದಲು ಅವರು ರಾಧಾಕಾಂತ ದೇವಾಲಯಕ್ಕೆ ಹೋದರು. ಅಲ್ಲೆ ಅವರು ವಿಗ್ರಹಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ಅವರು ಪ್ರಣಾಮ ಮಾಡುತ್ತಿರುವುದನ್ನು ನೋಡಿ ಮಾಸ್ಟರನೂ ಪ್ರಣಾಮ ಮಾಡಿದ. ಪರಮಹಂಸರ ಮುಂದುಗಡೆ ಒಂದು ತಟ್ಟೆಯಲ್ಲಿ ಕುಂಕುಮ ಇಟ್ಟಿತ್ತು. ಇಂದು ದೋಲೋತ್ಸವ-ಪರಮಹಂಸರು ಅದನ್ನು ಮರೆತಿರಲಿಲ್ಲ. ಅದಕ್ಕಾಗಿಯೇ ಅವರು ಕುಂಕುಮವನ್ನು ತೆಗೆದು ಕೊಂಡು ಶ್ರೀರಾಧೇಶ್ಯಾಮನಿಗೆ ಅರ್ಪಿಸಿ ಮತ್ತೆ ಪ್ರಣಾಮ ಮಾಡಿದರು.
ಈಗ ಕಾಳೀದೇವಾಲಯಕ್ಕೆ ಹೋಗುತ್ತಿದ್ದಾರೆ. ಅಲ್ಲಿಗೆ ಹಾಕಿರುವ ಏಳು ಮೆಟ್ಟಲು ಗಳನ್ನೂ ಹತ್ತಿ ಮುಖಮಂಟಪಕ್ಕೆ ಬಂದು ತಾಯಿಯ ದರ್ಶನಮಾಡಿದರು. ಬಳಿಕ ಗರ್ಭ ಗುಡಿಗೆ ಪ್ರವೇಶ ಮಾಡಿ ಭಗವತಿಗೆ ಕುಂಕುಮವನ್ನು ಅರ್ಪಿಸುತ್ತ ಪ್ರಣಾಮ ಮಾಡಿದರು. ಈಗ ದೇವಾಲಯವನ್ನು ಬಿಟ್ಟು ತಮ್ಮ ಕೊಠಡಿಗೆ ಹಿಂದಿರುಗುತ್ತಿದ್ದಾರೆ. ಕಾಳೀದೇವಾಲಯದ ಮುಖಮಂಟಪದಲ್ಲಿ ನಿಂತುಕೊಂಡು ಮಾಸ್ಟರನ್ನು ಕೇಳಿದರು, “ಬಾಬುರಾಮನನ್ನು ಏಕೆ ಕರೆದುಕೊಂಡು ಬರಲಿಲ್ಲ?” ಅಂತ.
ಪರಮಹಂಸರು ಮತ್ತೆ ಅದೇ ಸಿಮೆಂಟು ಅಂಗಳದ ಮೂಲಕ ಹಿಂದಿರುಗುತ್ತಿದ್ದಾರೆ. ಮಾಸ್ಟರ್ ಮತ್ತು ಕುಂಕುಮದ ತಟ್ಟೆ ಹಿಡಿದುಕೊಂಡಿದ್ದ ಇನ್ನೊಬ್ಬ ಅವರನ್ನು ಹಿಂಬಾಲಿಸು ತ್ತಿದ್ದಾರೆ. ಪರಮಹಂಸರು ತಮ್ಮ ಕೊಠಡಿಗೆ ಹಿಂದಿರುಗಿದನಂತರ ಒಂದೆರಡು ಪಟಗಳನ್ನು- ತಮ್ಮ ಫೋಟೋ ಮತ್ತು ಕ್ರಿಸ್ತನ ಪಟ-ಬಿಟ್ಟು ಉಳಿದವುಗಳಿಗೆಲ್ಲ ಕುಂಕುಮ ಹಚ್ಚಿದರು. ಈಗ ವರಾಂಡಕ್ಕೆ ಬಂದಿದ್ದಾರೆ. ನರೇಂದ್ರ ವರಾಂಡದಲ್ಲಿ ಕುಳಿತು ಯಾರೊ ಭಕ್ತರೊಡನೆ ಮಾತುಕತೆ ಆಡುತ್ತಿದ್ದಾನೆ. ಪರಮಹಂಸರು ನರೇಂದ್ರನ ಶರೀರದ ಮೇಲೆ ಕುಂಕುಮವನ್ನು ಎರಚಿದ ಮೇಲೆ ಹಿಂದಿರುಗಿ ಕೊಠಡಿಗೆ ಬಂದರು. ಮಾಸ್ಟರೂ ಅವರನ್ನು ಹಿಂಬಾಲಿಸಿದ. ಆತನಿಗೂ ಕುಂಕುಮ ಪ್ರಸಾದ ದೊರೆಯಿತು. ಬಳಿಕ ಎಲ್ಲಾ ಭಕ್ತರ ಶರೀರಗಳ ಮೇಲೂ ಕುಂಕುಮವನ್ನು ಎರಚಿದರು. ಎಲ್ಲರೂ ಪರಮಹಂಸರಿಗೆ ಪ್ರಣಾಮ ಮಾಡಲಾರಂಭಿಸಿದ್ದಾರೆ.
ಇಳಿ ಹೊತ್ತಾಯಿತು. ಭಕ್ತರು ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದಾರೆ. ಪರಮಹಂಸರು ಮಾಸ್ಟ ರೊಡನೆ ಪಿಸುಗುಟ್ಟುತ್ತಾ ಮಾತನಾಡುತ್ತಿದ್ದಾರೆ. ಆಗ ಅವರ ಹತ್ತಿರ ಬೇರೆ ಯಾರೂ ಇಲ್ಲ. ಯುವಭಕ್ತರ ಸಂಬಂಧವಾಗಿ ಮಾತನಾಡುತ್ತ ಅವರು ಮಾಸ್ಟರನ್ನು ಕೇಳುತ್ತಿದ್ದಾರೆ, “ನೋಡು ಎಲ್ಲರೂ ಹೇಳುತ್ತಿದ್ದಾರೆ, ತಮಗೆ ಒಳ್ಳೆಯ ಧ್ಯಾನ ಆಗುತ್ತಿದೆ ಅಂತ. ಆದರೆ ಪಲ್ಟುವಿಗೆ ಆಗುತ್ತಿಲ್ಲವಂತಲ್ಲ ಕಾರಣವೇನು? ನರೇಂದ್ರನ ಸಂಬಂಧವಾಗಿ ನಿನ್ನ ಅಭಿಪ್ರಾಯವೇನು? ಆತ ಸರಳ ಸ್ವಭಾವಿ. ಈಗ ಆತನ ಮೇಲೆ ಸಂಸಾರದ ಹೊರೆ ಬಿದ್ದಿದೆ. ಆದ್ದರಿಂದ ಆತನ ಅಧ್ಯಾತ್ಮ ಜೀವನದ ಉನ್ನತಿಗೆ ಒಂದು ಸ್ವಲ್ಪ ತಡೆ ಬಂದಿದೆ. ಆದರೆ ಅದು ಹೆಚ್ಚು ದಿವಸ ನಿಲ್ಲದು” ಅಂತ. ನರೇಂದ್ರ ವರಾಂಡದಲ್ಲಿ ಕುಳಿತು ಒಬ್ಬ ವೇದಾಂತಿಯೊಡನೆ ವಿಚಾರದಲ್ಲಿ ತೊಡಗಿದ್ದಾನೆ. ಪರಮಹಂಸರು ಆಗಾಗ ಎದ್ದು ಬಂದು ಅವರನ್ನು ನೋಡಿಹೋಗುತ್ತಿದ್ದಾರೆ. ಕ್ರಮೇಣ ಎಲ್ಲಾ ಭಕ್ತರೂ ಕೊಠಡಿಗೆ ಬಂದು ಕುಳಿತುಕೊಂಡರು. ಮಹಿಮಚರಣ ಸ್ತೋತ್ರಪಾಠ ಮಾಡಲಾರಂಭಿಸಿದ. ಆತ ಮಹಾನಿರ್ವಾಣತಂತ್ರದಿಂದ ಒಂದು ಶ್ಲೋಕವನ್ನು ಪಠಿಸಿದ:
ಹೃದಯಕಮಲಮಧ್ಯೇ ನಿರ್ವಿಶೇಷಂ ನಿರೀಹಂ
ಹರಿಹರವಿಧಿವೇದ್ಯಂ ಯೋಗಿಭಿರ್ಧ್ಯಾನಗಮ್ಯಮ್
ಜನನಮರಣಭೀತಿಭ್ರಂಶಿಸಚ್ಚಿತ್ಸ್ವರೂಪಂ,
ಸಕಲಭುವನಬೀಜಂ ಬ್ರಹ್ಮ ಚೈತನ್ಯಮೀಡೇ ॥ (ಮ.ತಂತ್ರ, iii ೫೦)
ಮಹಿಮಚರಣ ಇನ್ನೂ ಒಂದೆರಡು ಶ್ಲೋಕಗಳನ್ನು ಪಠಿಸಿದ ನಂತರ ಶ್ರೀಶಂಕರಾ ಚಾರ್ಯ ವಿರಚಿತ ಶಿವನಾಮಾವಲ್ಯಷ್ಟಕವನ್ನು ಪಠಿಸಿದ. ಅದರಲ್ಲಿ ಶ್ರೀಶಂಕರಾಚಾರ್ಯರು ಈ ಸಂಸಾರವನ್ನು ಒಂದು ಆಳವಾದ ಬಾವಿಗೂ ಗಹನವಾದ ಕಾಡಿಗೂ ಹೋಲಿಸಿದ್ದಾರೆ. ಮಹಿಮಚರಣ ಪರಮಹಂಸರ ಒಬ್ಬ ಗೃಹಸ್ಥ ಭಕ್ತ.
ಶಿವನಾಮಾವಲ್ಯಷ್ಟಕಮ್:
ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ
ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ ।
ಭೂತೇಶ ಭೀತಭಯಸೂದನ ಮಾಮನಾಥಂ
ಸಂಸಾರದುಃಖಗಹನಾಜ್ಜಗದೀಶ ರಕ್ಷ ॥
ಹೇ ಪಾರ್ವತೀಹೃದಯವಲ್ಲಭ ಚಂದ್ರಮೌಲೇ
ಭೂತಾಧಿಪ ಪ್ರಮಥನಾಥ ಗಿರೀಶಜಾಪ ।
ಹೇ ವಾಮದೇವ ಭವ ರುದ್ರ ಪಿನಾಕಪಾಣೇ
ಸಂಸಾರದುಃಖಗಹನಾಜ್ಜಗದೀಶ ರಕ್ಷ ॥
ಹೇ ನೀಲಕಂಠ ವೃಷಭಧ್ವಜ ಪಂಚವಕ್ತ್ರ
ಲೋಕೇಶ ಶೇಷವಲಯಿ ಪ್ರಮಥೇಶ ಶರ್ಮ ।
ಹೇ ಧೂರ್ಜಟೇ ಪಶುಪತೇ ಗಿರಿಜಾಪತೇ ಮಾಂ
ಸಂಸಾರದುಃಖಗಹನಾಜ್ಜಗದೀಶ ರಕ್ಷ ॥
ಹೇ ವಿಶ್ವನಾಥ ಶಿವ ಶಂಕರ ದೇವದೇವ
ಗಂಗಾಧರ ಪ್ರಮಥನಾಯಕ ನಂದಿಕೇಶ ।
ಬಾಣೇಶ್ವರಾಂಧಕರಿಪೋ ಹರ ಲೋಕನಾಥ
ಸಂಸಾರದುಃಖಗಹನಾಜ್ಜಗದೀಶ ರಕ್ಷ ॥
ವಾರಾಣಸೀಪುರಪತೇ ಮಣಿಕರ್ಣಿಕೇಶ
ವೀರೇಶ ದಕ್ಷಮಖಕಾಲ ವಿಭೋ ಗಣೇಶ ।
ಸರ್ವಜ್ಞ ಸರ್ವಹೃದಯೈಕನಿವಾಸ ನಾಥ
ಸಂಸಾರದುಃಖಗಹನಾಜ್ಜಗದೀಶ ರಕ್ಷ ॥
ಶ್ರೀಮನ್ಮಹೇಶ್ವರ ಕೃಪಾಮಯ ಹೇ ದಯಾಲೋ
ಹೇ ವ್ಯೋಮಕೇಶ ಶಿತಿಕಂಠ ಗಣಾಧಿನಾಥ ।
ಭಸ್ಮಾಂಗರಾಗ ನೃಕಪಾಲಕಲಾಪಮಾಲ
ಸಂಸಾರದುಃಖಗಹನಾಜ್ಜಗದೀಶ ರಕ್ಷ ॥
ಕೈಲಾಸಶೈಲವಿನಿವಾಸ ವೃಷಾಕಪೇ
ಹೇ ಮೃತ್ಯುಂಜಯ ತ್ರಿನಯನ ತ್ರಿಜಗನ್ನಿವಾಸ ।
ನಾರಾಯಣಪ್ರಿಯ ಮದಾಪಹ ಶಕ್ತಿನಾಥ
ಸಂಸಾರದುಃಖಗಹನಾಜ್ಜಗದೀಶ ರಕ್ಷ ॥
ವಿಶ್ವೇಶ ವಿಶ್ವಭವನಾಶಿತ ವಿಶ್ವರೂಪ
ವಿಶ್ವಾತ್ಮಕ ತ್ರಿಭುವನೈಕಗುಣಾಭಿವೇಶ ।
ಹೇ ವಿಶ್ವವಂದ್ಯ ಕರುಣಾಮಯ ದೀನಬಂಧೋ
ಸಂಸಾರದುಃಖಗಹನಾಜ್ಜಗದೀಶ ರಕ್ಷ ॥
ಶ್ರೀರಾಮಕೃಷ್ಣರು ಮಹಿಮಚರಣನಿಗೆ: “ಈ ಸಂಸಾರ ಒಂದು ಆಳವಾದ ಬಾವಿ. ಗಹನವಾದ ಕಾಡು ಅಂತ ಏಕೆ ಹೇಳುತ್ತಿದ್ದೀಯೆ? ಮೊದಲು ಮೊದಲೇನೋ ಹಾಗೆ ಭಾವಿಸಬೇಕು. ಆತ ದೊರೆತುಬಿಟ್ಟ ಅಂದರೆ ಆಮೇಲೆ ಯಾರ ಭಯ? ಆಗ-
ಈ ಜಗವೆಂಬುದು ಮೋಜಿನ ಮನೆಯೊ
ಇದರೊಳು ನಾ ಮನಬಂದೊಲು ನಡೆವೆ.
ತಿನ್ನುವೆ-ಕುಡಿಯುವೆ-ಕುಣಿಯುವೆ-ನಲಿವೆ….
“ಯಾತರ ಭಯ? ಆತನ ಪಾದಪದ್ಮಗಳನ್ನು ಬಿಗಿಯಾಗಿ ಹಿಡಿದುಕೊ. ಈ ಸಂಸಾರ ಮುಳ್ಳುಕಾಡಾಗಿದ್ದರೆ ತಾನೆ ಏನು? ಕಾಲಿಗೆ ಮೆಟ್ಟು ಹಾಕಿಕೊಂಡು ಅದರ ಮೇಲೆ ನಡೆದು ಹೋಗಿಬಿಡು. ಯಾರಿಗೆ ತಾನೆ ಭಯಪಡಬೇಕು? ಯಾರು ಅಜ್ಜಿಯನ್ನು ಮುಟ್ಟಿಬಿಡು ತ್ತಾನೊ ಆತ ಮತ್ತೆ ಕಳ್ಳನಾಗುತ್ತಾನೇನು?
“ಜನಕರಾಜ ಎರಡು ಕತ್ತಿಗಳನ್ನು ತಿರುಗಿಸುತ್ತಿದ್ದ: ಒಂದು ಜ್ಞಾನದ್ದು, ಇನ್ನೊಂದು ಕರ್ಮದ್ದು. ನಿಪುಣ ಆಟಗಾರನಿಗೆ ಸ್ವಲ್ಪವೂ ಭಯವೇ ಇಲ್ಲ.”
(ಮಾಸ್ಟರಿಗೆ): “ಆತ ಪಠಿಸಿದ ಶ್ಲೋಕಗಳು ಇನ್ನೂ ನನ್ನ ಮನಸ್ಸನ್ನು ಹಿಡಿದೆಳೆದು ನಿಲ್ಲಿಸುತ್ತಿವೆ.”
ಪರಮಹಂಸರು ಮಹಿಮಚರಣನ ಸಂಬಂಧವಾಗಿ ಮತ್ತು ಆತ ಪಠಿಸಿದ ಬ್ರಹ್ಮಜ್ಞಾನ ಸಂಬಂಧವಾದ ಶ್ಲೋಕಗಳ ವಿಷಯವಾಗಿ ಆಲೋಚಿಸುತ್ತಿದ್ದಾರೆ.
ನಬಾಯಿಚೈತನ್ಯ ಮತ್ತು ಉಳಿದ ಭಕ್ತರು ಮತ್ತೆ ಹಾಡುತ್ತಿದ್ದಾರೆ. ಪರಮಹಂಸರೂ ಅವರೊಡನೆ ಸೇರಿ ಭಾವೋನ್ಮತ್ತರಾಗಿ ಹಾಡುತ್ತ ನರ್ತಿಸುತ್ತಿದ್ದಾರೆ. ಕೀರ್ತನೆ ಮುಗಿದ ನಂತರ ಅವರು ಹೇಳಿದರು. “ಆವಶ್ಯಕವಾಗಿ ಬೇಕಾದ್ದು ಇದೇನೆ, ಉಳಿದುದೆಲ್ಲಾ ಮಿಥ್ಯಾ. ಪ್ರೇಮವೇ, ಭಕ್ತಿಯೇ ವಸ್ತು, ಉಳಿದುದೆಲ್ಲ ಅವಸ್ತು.”
ಸಾಯಂಕಾಲವಾಗಿದೆ. ಪರಮಹಂಸರು ಪಂಚವಟಿಯ ಕಡೆ ಹೋಗುತ್ತಿದ್ದಾರೆ. ಅವರು ವಿನೋದನ ಕ್ಷೇಮಸಮಾಚಾರದ ವಿಷಯವಾಗಿ ಮಾಸ್ಟರನ್ನು ಕೇಳುತ್ತಿದ್ದಾರೆ. ವಿನೋದ ಮಾಸ್ಟರಿನ ಸ್ಕೂಲಿನಲ್ಲಿ ಓದುತ್ತಿದ್ದಾನೆ. ಆತ ಧ್ಯಾನದ ಸಮಯದಲ್ಲಿ ಆಗಾಗ ಭಾವಾವಿಷ್ಟನಾಗುವುದುಂಟು. ಅದಕ್ಕಾಗಿಯೆ ಪರಮಹಂಸರು ಆತನನ್ನು ಬಹಳವಾಗಿ ಪ್ರೀತಿಸುತ್ತಿದ್ದಾರೆ.
ಈಗ ಪರಮಹಂಸರು ಮಾಸ್ಟರೊಡನೆ ಮಾತಾಡುತ್ತ ಹಿಂದಿರುಗುತ್ತಿದ್ದಾರೆ. ಬಕುಳ ವೃಕ್ಷದ ಹತ್ತಿರ ಬಂದು ಕೇಳಿದರು, “ಒಳ್ಳೇದು ಕೆಲಕೆಲವರು ನನ್ನನ್ನು ಅವತಾರ ಅಂತ ಹೇಳುತ್ತಾರಲ್ಲ, ನಿನ್ನ ಅಭಿಪ್ರಾಯವೇನು?” ಅಂತ. ಹಾಗೆ ಮಾತುಕತೆಯಾಡುತ್ತಲೆ ತಮ್ಮ ಕೊಠಡಿಗೆ ಹಿಂದಿರುಗಿ ಬಂದು ಚಿಕ್ಕ ಮಂಚದ ಮೇಲೆ ಕುಳಿತುಕೊಂಡರು. ಆ ಮಂಚದ ಹತ್ತಿರ ಪೂರ್ವ ದಿಕ್ಕಿಗೆ ಹಾಕಿದ್ದ ಫುಟ್ರಗ್ಗಿನ ಮೇಲೆ ಮಾಸ್ಟರ್ ಕುಳಿತುಕೊಂಡಿದ್ದಾನೆ. ಪರಮಹಂಸರು ಮಾಸ್ಟರಿಗೆ ಅದೇ ಪ್ರಶ್ನೆಯನ್ನು ಮತ್ತೆ ಕೇಳುತ್ತಿದ್ದಾರೆ. ಉಳಿದ ಭಕ್ತರು ಸ್ವಲ್ಪ ದೂರದಲ್ಲಿ ಕುಳಿತುಕೊಂಡಿರುವರು. ಅವರಿಗೆ ಇವರಿಬ್ಬರು ಮಾತನಾಡಿಕೊಳ್ಳುವುದು ಸ್ವಲ್ಪವೂ ಅರ್ಥವಾಗಲಿಲ್ಲ.
ಶ್ರೀರಾಮಕೃಷ್ಣರು: “ನಿನ್ನ ಅಭಿಪ್ರಾಯವೇನು?”
ಮಾಸ್ಟರ್: “ನನಗೂ ಹಾಗೇ ತೋರುತ್ತಿದೆ. ನೀವೂ ಚೈತನ್ಯದೇವನ ಹಾಗೆ ಒಬ್ಬರು.”
ಶ್ರೀರಾಮಕೃಷ್ಣರು: “ಪೂರ್ಣವೊ, ಅಂಶವೊ ಅಥವಾ ಕಲೆಯೋ? ತೂಕ ಎಷ್ಟು ಹೇಳು.”
ಮಾಸ್ಟರ್: “ತೂಕ ಎಷ್ಟು ಎಂಬುದು ನನಗೆ ಗೊತ್ತಾಗುತ್ತಿಲ್ಲ. ಆದರೆ ಆತನ ಶಕ್ತಿ ನಿಮ್ಮಲ್ಲಿ ಅವತರಿಸಿದೆ. ನಿಮ್ಮ ಆಂತರ್ಯದಲ್ಲಿ ಇರುವವನು ಕೇವಲ ಆತನೊಬ್ಬನೆ.”
ಶ್ರೀರಾಮಕೃಷ್ಣರು: “ಅದೇನೊ ನಿಜ. ಚೈತನ್ಯದೇವನೂ ಭಗವಂತನ ಶಕ್ತಿ ತನ್ನಲ್ಲಿ ಆವಿರ್ಭಾವವಾಗಬೇಕೆಂದು ಇಚ್ಛಿಸಿದ.”
ಪರಮಹಂಸರು ಸ್ವಲ್ಪ ಹೊತ್ತು ಕುಳಿತಿದ್ದರು. ಬಳಿಕ ಹೇಳಿದರು: “ಆದರೆ ಷಡ್ಭುಜ?”
ಮಾಸ್ಟರ್ ಭಾವಿಸುತ್ತಿದ್ದಾನೆ, ಚೈತನ್ಯದೇವನೇನೊ ಷಡ್ಭುಜನಾಗಿದ್ದ-ಭಕ್ತರಿಗೆ ಆ ರೀತಿಯಾಗಿ ದರ್ಶನಕೊಟ್ಟ. ಪರಮಹಂಸರು ಈ ವಿಷಯವನ್ನು ಏಕೆ ಪ್ರಸ್ತಾಪ ಮಾಡಿದರು? ಅಂತ.
ನರೇಂದ್ರ ಒಂದು ದೊಡ್ಡ ವಾಗ್ವಾದದಲ್ಲಿ ತೊಡಗಿದ್ದಾನೆ. ಈಗ ತಾನೆ ಕಾಯಿಲೆ ಯಿಂದ ಗುಣವಾಗಿ ಬಂದಿರುವ ರಾಮಚಂದ್ರದತ್ತನೂ ನರೇಂದ್ರನೊಡನೆ ಸೇರಿಕೊಂಡ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಈ ವಿಧವಾದ ವಾಗ್ವಾದ ನನಗೆ ರುಚಿಸದು. (ರಾಮಚಂದ್ರದತ್ತನಿಗೆ) ನಿಲ್ಲಿಸು. ನಿನಗೆ ದೇಹಸೌಖ್ಯವಿರಲಿಲ್ಲ-ಒಳ್ಳೇದು, ಮೆತ್ತ ಮೆತ್ತಗೆ. (ಮಾಸ್ಟರಿಗೆ) ನನಗೆ ಇದೆಲ್ಲ ಸರಿದೋರುತ್ತಿಲ್ಲ. ನಾನು ಅಳುತ್ತ ಪ್ರಾರ್ಥಿಸುತ್ತಿದ್ದೆ, ಹೇ ತಾಯಿ, ಒಬ್ಬ ಹೇಳುತ್ತಾನೆ, ‘ಇದು ಸತ್ಯ’ ಅಂತ; ಇನ್ನೊಬ್ಬ ಹೇಳುತ್ತಾನೆ, ‘ಅದು ಸತ್ಯ’ ಅಂತ, ಸತ್ಯ ಯಾವುದು ಎಂಬುದನ್ನು ದಯವಿಟ್ಟು ನನಗೆ ತಿಳಿಸು ಅಂತ.”
೭ನೇ ಮಾರ್ಚಿ ೧೮೮೫, ಫಾಲ್ಗುಣ ಕೃಷ್ಣ ಪಂಚಮಿ, ಶನಿವಾರ
ಘಂಟೆ ಅಪರಾಹ್ನ ಮೂರು. ಶ್ರೀರಾಮಕೃಷ್ಣರು ತಮ್ಮ ಕೊಠಡಿಯಲ್ಲಿ ಭಕ್ತರೊಡನೆ ಆನಂದದಿಂದ ಮತುಕತೆಗಳನ್ನಾಡುತ್ತಿದ್ದಾರೆ. ಬಾಬುರಾಮ, ಚಿಕ್ಕನರೇನ, ಪಲ್ಟು, ಮೋಹಿನಿಮೋಹನ ಮೊದಲಾದ ಭಕ್ತರು ಮಂದಲಿಗೆ ಮೇಲೆ ಕುಳಿತಿರುವರು. ಒಬ್ಬ ಬ್ರಾಹ್ಮಣ ಯುವಕ ಈಗ ಎರಡು ಮೂರು ದಿವಸಗಳಿಂದ ಪರಮಹಂಸರೊಡನೆಯೆ ಇರುವನು. ಆತನೂ ಕುಳಿತಿರುವನು.
ಶ್ರೀಶಾರದಾದೇವಿಯವರು (ಶ್ರೀರಾಮಕೃಷ್ಣರ ಪತ್ನಿ) ಈಗ ಸ್ವಲ್ಪ ಕಾಲದಿಂದ ನಹಬತ್ ಖಾನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಆಗಾಗ ಪರಮಹಂಸರ ಕೊಠಡಿಗೆ ಬಂದು ಅವರಿಗೆ ಸೇವೆ ಸಲ್ಲಿಸಿ ಹೋಗುತ್ತಿದ್ದಾರೆ. ಮೋಹಿನೀಮೋಹನ ತನ್ನ ಹೆಂಡತಿಯನ್ನು ಮತ್ತು ನವೀನ ಬಾಬುವಿನ ತಾಯಿಯನ್ನು ಗಾಡಿ ಮಾಡಿಕೊಂಡು ದಕ್ಷಿಣೇಶ್ವರಕ್ಕೆ ಕರೆದು ಕೊಂಡು ಬಂದಿದ್ದಾನೆ. ಆ ಹೆಂಗಸರು ನಹಬತ್ಖಾನೆಗೆ ಹೋಗಿ ಶಾರದಾದೇವಿ ಯವರಿಗೆ ಪ್ರಣಾಮಮಾಡಿ ಅವರೊಡನೆಯೆ ಕುಳಿತುಕೊಂಡರು. ಪುರುಷರೆಲ್ಲರು ಪರಮಹಂಸರ ಕೊಠಡಿಯನ್ನು ಬಿಟ್ಟು ಹೋದ ನಂತರ ತಾವು ಹೋಗಿ ಏಕಾಂತವಾಗಿ ಪರಮಹಂಸರನ್ನು ಕಾಣಲೋಸುಗ ಆ ಹೆಂಗಸರು ನಹಬತ್ಖಾನೆಯಲ್ಲಿಯೇ ಕಾದು ಕುಳಿತುಕೊಂಡಿರುವರು.
ಹಾಗೆ ಪರಮಹಂಸರು ಚಿಕ್ಕ ಮಂಚದ ಮೆಲೆ ಕುಳಿತುಕೊಂಡಿದ್ದಾರೆ. ಯುವಕ ಭಕ್ತರ ಕಡೆ ನೋಡುತ್ತಿದ್ದ ಅವರ ಮುಖ ಆನಂದದಿಂದ ಅರಳಿದೆ.
ರಾಖಾಲ ಈಗ ಪರಮಹಂಸರೊಡನೆ ಇಲ್ಲ. ಬೃಂದಾವನದಿಂದ ಹಿಂತಿರುಗಿ ಬಂದ ಮೇಲೆ ಮನೆಯಲ್ಲೇ ಇದ್ದಾನೆ.
ಶ್ರೀರಾಮಕೃಷ್ಣರು (ನಗುತ್ತ): “ರಾಖಾಲ ಈಗ ಪೆನ್ಶನ್ ತಿನ್ನುತ್ತಿದ್ದಾನೆ. ಮನೆಯಲ್ಲಿ ಆತನ ಹೆಂಡತಿ ಇದ್ದಾಳೆ. ಆದರೆ ಆತ ಮತ್ತೆ ನನಗೆ ಹೇಳಿದ್ದಾನೆ. ‘ತಿಂಗಳಿಗೆ ಒಂದು ಸಾವಿರ ರೂಪಾಯಿ ಕೊಟ್ಟರೂ ನಾನು ಮಾತ್ರ ಯಾವ ಉದ್ಯೋಗಕ್ಕೂ ಸೇರುವುದಿಲ್ಲ’ ಅಂತ.
“ರಾಖಾಲ ಇಲ್ಲಿ ಮಲಗಿಕೊಂಡು ಹೇಳುತ್ತಿದ್ದ, ‘ನಿಮ್ಮ ಸಹವಾಸವೂ ನನಗೆ ಬೇಕೆನಿಸುತ್ತಿಲ್ಲ.’ ಆತನಿಗೆ ಆಗ ಒಂದು ಉಚ್ಚ ಅವಸ್ಥೆ ಬಂದಿತ್ತು.
“ಭವನಾಥ ಮದುವೆಮಾಡಿಕೊಂಡಿದ್ದಾನೆ; ಆದರೆ ಆತ ಇಡೀ ರಾತ್ರಿಯನ್ನೆಲ್ಲ ತನ್ನ ಹೆಂಡತಿಯೊಡನೆ ಭಗವದ್ವಿಷಯವಾಗಿ ಮಾತನಾಡುತ್ತಲೆ ಕಳೆಯುತ್ತಾನೆ. ದಂಪತಿಗಳು ಭಗದ್ವಿಷಯವಾಗಿಯೆ ಚಿಂತಿಸುತ್ತ ಇದ್ದಾರೆ. ನಾನು ಆತನಿಗೆ ಹೇಳಿದೆ, ‘ಆಗಾಗ ನಿನ್ನ ಹೆಂಡತಿಯೊಡನೆ ಒಂದು ಸ್ವಲ್ಪ ಸರಸಸಲ್ಲಾಪಗಳಲ್ಲಿ ತೊಡಗು’ ಅಂತ. ಆಗ ಆತ ಕೋಪಿಸಿಕೊಂಡು, ‘ನಾವೂ ಹಾಗೆ ಮಾಡೋದೆ?’ ಎಂದು ಹೇಳಿದ.”
ಪರಮಹಂಸರು ಈಗ ನರೇಂದ್ರನ ಸಂಬಂಧವಾಗಿ ಮಾತನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು (ಭಕ್ತರಿಗೆ): “ನನ್ನ ಮನಸ್ಸು ನರೇಂದ್ರನ ಕಡೆಗೆ ಎಳೆದಷ್ಟು ಮಟ್ಟಿಗೆ ಈತನ (ಚಿಕ್ಕ ನರೇಂದ್ರನ) ಕಡೆಗೆ ಎಳೆಯುತ್ತಿಲ್ಲ.”
(ಹರಿಪದನಿಗೆ) “ನೀನು ಗಿರೀಶಘೋಷನ ಮನೆಗೆ ಹೋಗುತ್ತಿದ್ದೀಯೇನು?’
ಹರಿಪದ: “ಹೌದು ಆಗಾಗ ಹೋಗುತ್ತೇನೆ, ನಮ್ಮ ಮನೆಯ ಹತ್ತಿರವೇ ಆತನ ಮನೆ”
ಶ್ರೀರಾಮಕೃಷ್ಣರು: “ನರೇಂದ್ರನೂ ಅಲ್ಲಿಗೆ ಬರುತ್ತಾನೇನು?”
ಹರಿಪದ: “ಆಗಾಗ ನಾನು ಅವನನ್ನು ಅಲ್ಲಿ ನೋಡುತ್ತೇನೆ.”
ಶ್ರೀರಾಮಕೃಷ್ಣರು: “ಗಿರೀಶಘೋಷ ಏನೋ ಹೇಳುತ್ತಾನಲ್ಲ, ಅದಕ್ಕೆ ನರೇಂದ್ರ ಏನು ಉತ್ತರ ಕೊಡುತ್ತಾನೆ?”
ಹರಿಪದ: “ನರೇಂದ್ರ ವಾದಮಾಡಿ ಸೋತುಬಿಟ್ಟ.”
ಶ್ರೀರಾಮಕೃಷ್ಣರು: “ಇಲ್ಲವಂತೆ, ನರೇಂದ್ರ, ‘ಗಿರೀಶಘೋಷನಿಗೆ ಅದರಲ್ಲಿ ಬಹಳ ಬಲವಾದ ವಿಶ್ವಾಸ; ನಾನೇಕೆ ಅದನ್ನು ವಿರೋಧಿಸಲು ಹೋಗಲಿ?’ ಅಂತ ಹೇಳಿದ.”
ಜಡ್ಜಿ ಅನುಕೂಲ ಮುಖ್ಯೋಪಾಧ್ಯಾಯನ ಅಳಿಯನ ಸಹೋದರ ಬಂದಿದ್ದಾನೆ. ಶ್ರೀರಾಮಕೃಷ್ಣರು ಆತನನ್ನು ಕೇಳಿದರು, “ನಿನಗೆ ನರೇಂದ್ರನ ಪರಿಚಯವಾಗಿದೆಯೆ?” ಅಂತ.
ಸಹೋದರ: “ಹೌದು, ಆತನದು ಬಹಳ ಚುರುಕುಬುದ್ಧಿ.”
ಶ್ರೀರಾಮಕೃಷ್ಣರು (ಭಕ್ತರಿಗೆ): “ಈತ ನರೇಂದ್ರನನ್ನು ಹೊಗಳುತ್ತಿರುವುದರಿಂದ ಈತ ಒಳ್ಳೆ ಮನುಷ್ಯನಾಗಿಯೇ ಇರಬೇಕು. ಅಂದು ನರೇಂದ್ರ ಇಲ್ಲಿಗೆ ಬಂದಿದ್ದ; ತ್ರೈಲೋಕ್ಯ ನೊಡನೆ ಹಾಡಿದ. ಆದರೆ ಆತನ ಹಾಡುಗಳು ಬಹಳ ಸಪ್ಪೆಯಾಗಿ ತೋರಿದುವು.”
ಪರಮಹಂಸರು ಬಾಬುರಾಮನ ಕಡೆ ನೋಡುತ್ತ ಮಾತಾಡುತ್ತಿದ್ದಾರೆ. ಮಾಸ್ಟರ್ ಉಪಾಧ್ಯಾಯನಾಗಿರೋ ಸ್ಕೂಲಿನಲ್ಲಿ ಬಾಬುರಾಮ ಎಂಟ್ರೆನ್ಸ ತರಗತಿಯಲ್ಲಿ ಓದುತ್ತಿದ್ದಾನೆ.
ಶ್ರೀರಾಮಕೃಷ್ಣರು (ಬಾಬುರಾಮನಿಗೆ): “ನಿನ್ನ ಪುಸ್ತಕಗಳೆಲ್ಲಿ? ಓದೋದು ಬರಿ ಯೋದು ಏನು ಬೇಡವೇನು? (ಮಾಸ್ಟರಿಗೆ) ಎರಡು ಕಡೆಗೂ ಮನಸ್ಸನ್ನು ಇಡಬೇಕೆಂದಿದ್ದಾನೆ.
“ಇದು ಬಹಳ ಕಠಿನ ಮಾರ್ಗ. ಆತನ ಸಂಬಂಧವಾಗಿ ಎಲ್ಲೊ ಒಂದು ಕಿಂಚಿತ್ತು ಅರಿತುಕೊಂಡುಬಿಟ್ಟರೆ ಏನು ಆದಹಾಗಾಯಿತು? ಅಂಥ ವಸಿಷ್ಠ ಋಷಿಗೇ ಪುತ್ರಶೋಕ ಉಂಟಾಗಿಬಿಟ್ಟಿತ್ತು. ಅದನ್ನು ಲಕ್ಷ್ಮಣ ನೋಡಿದಾಗ ಆಶ್ಚರ್ಯಚಕಿತನಾಗಿ ಅದಕ್ಕೆ ಕಾರಣ ಏನು ಅಂತ ರಾಮನನ್ನು ಕೇಳಿದ. ರಾಮ ಹೇಳಿದ, ‘ತಮ್ಮ, ಇದರಲ್ಲಿ ಆಶ್ಚರ್ಯ ಪಡುವುದೇನಿದೆ? ಯಾರಲ್ಲಿ ಜ್ಞಾನವಿದೆಯೊ ಆತನಲ್ಲಿ ಅಜ್ಞಾನವೂ ಇದೆ. ನೀನು ಜ್ಞಾನಾಜ್ಞಾನಗಳನ್ನು ದಾಟಿ ಹೋಗು. ಕಾಲಿಗೆ ಮುಳ್ಳು ಚುಚ್ಚಿಕೊಂಡರೆ ಹುಡುಕಿಕೊಂಡು ಹೋಗಿ ಬೇರೊಂದು ಮುಳ್ಳನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. ದೊರೆತ ಮುಳ್ಳಿನಿಂದ ಕಾಲಿಗೆ ಚುಚ್ಚಿಕೊಂಡಿರೋ ಮುಳ್ಳನ್ನು ತೆಗೆದುಹಾಕಿ, ಬಳಿಕ ಎರಡು ಮುಳ್ಳನ್ನೂ ಬಿಸಾಡ ಬೇಕಾಗುತ್ತದೆ. ಅದಕ್ಕಾಗಿಯೇ ಅಜ್ಞಾನದ ಮುಳ್ಳನ್ನು ತೆಗೆದುಹಾಕಲೋಸುಗ ಜ್ಞಾನದ ಮುಳ್ಳನ್ನು ಸಂಪಾದಿಸಿಕೊಳ್ಳಬೇಕು. ಬಳಿಕ ಜ್ಞಾನಾಜ್ಞಾನಗಳನ್ನು ದಾಟಿಹೋಗಬೇಕು.’”
ಬಾಬುರಾಮ (ನಗುತ್ತ): “ನನಗೆ ಬೇಕಾಗಿರೋದು ಅದೆ.”
ಪರಮಹಂಸರು (ನಗುತ್ತ): “ಎರಡು ಕಡೆಯೂ ಮನಸ್ಸನ್ನಿಟ್ಟರೆ ಅದು ಸಾಧ್ಯ ವಾಗುತ್ತದೆಯೆ? ನಿನಗೆ ಅದು ಬೇಕಾಗಿದ್ದರೆ ಎಲ್ಲವನ್ನೂ ಬಿಟ್ಟು ಬಂದುಬಿಡು.”
ಬಾಬುರಾಮ (ನಗುತ್ತ): “ನೀವು ಅಲ್ಲಿಂದ ಎಳೆದುಕೊಂಡು ಬಂದುಬಿಡಿ.”
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ರಾಖಾಲ ಇಲ್ಲಿ ಇದ್ದ. ಅದು ಬೇರೆ ಸಮಾಚಾರ; ಆತನ ತಂದೆ ಅನುಮತಿ ಕೊಟ್ಟಿದ್ದ. ಇವರು ಬಂದು ಇಲ್ಲಿ ಇದ್ದುಕೊಂಡರೆ, ಕಷ್ಟಕ್ಕೆ ಕಾರಣವಾಗುತ್ತದೆ.”
(ಬಾಬುರಾಮನಿಗೆ) “ನಿನ್ನದು ದುರ್ಬಲ ಮನಸ್ಸು-ನಿನಗೆ ಸಾಹಸ ಕಡಿಮೆ. ನೋಡು, ಚಿಕ್ಕ ನರೇನ ಯಾವ ರೀತಿಯಾಗಿ, ‘ನಾನು ಒಮ್ಮೆಗೆಯೆ ಇಲ್ಲಿಗೆ ಬಂದು ಇದ್ದು ಬಿಡುತ್ತೇನೆ’ ಅಂತ ಹೇಳುತ್ತಾನೆ!”
ಪರಮಹಂಸರು ಈಗ ಮಂಚದಿಂದ ಎದ್ದು ಬಂದು ಯುವಭಕ್ತರ ಮಧ್ಯದಲ್ಲಿ ಮಂದಲಿಗೆಯ ಮೇಲೆ ಕುಳಿತುಕೊಂಡಿದ್ದಾರೆ. ಮಾಸ್ಟರ್ ಅವರ ಹತ್ತಿರ ಕುಳಿತು ಕೊಂಡಿದ್ದಾನೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ನಾನು ಒಬ್ಬ ಕಾಮಕಾಂಚನ ತ್ಯಾಗಿಗಾಗಿ ಹುಡುಕುತ್ತಿದ್ದೇನೆ. ಪ್ರತಿ ಹೊಸಬ ಬಂದಾಗಲೂ ಯೋಚಿಸುತ್ತೇನೆ. ‘ಬಹುಶಃ ಈತ ನನ್ನ ಹತ್ತಿರ ಇರಬಹುದು’ ಅಂತ. ಆದರೆ ಪ್ರತಿಯೊಬ್ಬನೂ ಒಂದೊಂದು ಅಡ್ಡಿ ತರುತ್ತಾನೆ.
“ಒಂದು ಭೂತಕ್ಕೆ ಒಬ್ಬ ಜತೆಗಾರ ಬೇಕಾಗಿತ್ತು. ಶನಿವಾರ ಮಂಗಳವಾರ ಅಕಾಲ ಮರಣವನ್ನು ಹೊಂದಿದವರು ಭೂತವಾಗುತ್ತಾರೆ ಎಂಬ ಹೇಳಿಕೆಯೊಂದಿದೆ. ಅದಕ್ಕಾಗಿಯೆ ಆ ಎರಡು ವಾರಗಳಲ್ಲಿ ಯಾರಾದರೂ ಮನೆ ಮೇಲಿಂದ ಕೆಳಗೆ ಬಿದ್ದುಬಿಟ್ಟಿದ್ದಾರೆ, ದಾರಿಯಲ್ಲಿ ಹೋಗುತ್ತ ಎಡವಿ ಮೂರ್ಛಿತರಾಗಿ ಬಿದ್ದಿದ್ದಾರೆ ಎಂಬುದನ್ನು ಕೇಳಿದ ಒಡನೆಯೆ ಆ ಭೂತ ಅಲ್ಲಿಗೆ ಬಹುಶಃ ಈತ ಆಕಾಲ ಮೃತ್ಯುವನ್ನು ಹೊಂದಿ ಭೂತವಾಗಿ ತನ್ನ ಜೊತೆಗಾರನಾಗಬಹುದು ಎಂದು ಭಾವಿಸಿ ಓಡಿಹೋಗುತ್ತಿತ್ತು. ಆದರೆ ಅದರ ಅದೃಷ್ಟ ಅಂಥದು; ಪ್ರತಿಯೊಬ್ಬನೂ ಬದುಕಿ ಏಳುತ್ತಿದ್ದ. ಆ ಬಡಪಾಯಿ ಭೂತಕ್ಕೆ ಯಾರೂ ಜೊತೆಗಾರರೇ ದೊರೆಯಲಿಲ್ಲ.
“ನೋಡು, ಯಾವಾಗ ನೋಡಿದರೂ ರಾಖಾಲ ‘ಹೆಂಡತಿ’, ‘ಹೆಂಡತಿ’ ಅನ್ನುತ್ತಲೇ ಇದ್ದಾನೆ. ಹೇಳುತ್ತಾನೆ, ‘ನನ್ನ ಹೆಂಡತಿಯ ಗತಿ?’ ಅಂತ. ನಾನು ನರೇಂದ್ರನ ಎದೆಯನ್ನು ಸ್ಪರ್ಶಿಸಿದೊಡನೆಯೇ ಆತ ಬಾಹ್ಯಜ್ಞಾನಶೂನ್ಯನಾಗಿ ಬಿಟ್ಟ; ಆಗ ಕೂಗಿಕೊಂಡ, ‘ನನಗೆ ಏನು ಮಾಡಿಬಿಟ್ಟಿರಿ ನೀವು? ನನಗೆ ತಂದೆತಾಯಿಗಳಿರುವುದು ನಿಮಗೆ ಗೊತ್ತಿಲ್ಲವೆ?’ ಅಂತ.
“ನನ್ನನ್ನು ಭಗವಂತ ಏಕೆ ಈ ಅವಸ್ಥೆಯಲ್ಲಿ ಇಟ್ಟಿದ್ದಾನೆ? ಎಲ್ಲರೂ ಪ್ರಣಾಮ ಮಾಡಲಿ ಎಂದು ಭಾವಿಸಿ ಚೈತನ್ಯದೇವ ಸಂನ್ಯಾಸಿಯಾದ. ಯಾರು ಒಮ್ಮೆಯಾದರೂ ಅವತಾರ ಪುರುಷರಿಗೆ ನಮಸ್ಕಾರ ಮಾಡುತ್ತಾರೊ ಅವರ ಉದ್ಧಾರ ಆಗಿಯೇಬಿಡುತ್ತದೆ.”
ಮೋಹಿನೀಮೋಹನ 1 ಪರಮಹಂಸರಿಗಾಗಿ ಒಂದು ಬುಟ್ಟಿ ಸಂದೇಶವನ್ನು (ಸಿಹಿತಿಂಡಿಯನ್ನು) ತಂದಿದ್ದಾನೆ.
ಶ್ರೀರಾಮಕೃಷ್ಣರು: “ಈ ಸಂದೇಶವನ್ನು ತಂದವರು ಯಾರು?”
ಬಾಬುರಾಮನು ಮೋಹಿನೀಮೋಹನನ ಕಡೆ ಕೈ ತೋರಿಸಿದ.
ಪರಮಹಂಸರು ಪ್ರಣವೋಚ್ಚಾರಣೆಯನ್ನು ಮಾಡಿ ಸಂದೇಶವನ್ನು ಸ್ಪರ್ಶಿಸಿ ಎಲ್ಲೋ ಒಂದು ಕಿಂಚಿತ್ತನ್ನು ಸ್ವೀಕರಿಸಿದರು. ಉಳಿದುದನ್ನು ತಾವೆ ಭಕ್ತರಿಗೆ ಹಂಚುತ್ತಿದ್ದಾರೆ. ಆಶ್ಚರ್ಯ ಚಿಕ್ಕ ನರೇನನಿಗೂ ಮತ್ತು ಇನ್ನೂ ಕೆಲವು ಯುವಕರಿಗೂ ತಾವೇ ತಮ್ಮ ಕೈಯಿಂದ ತಿನ್ನಿಸುತ್ತಿದ್ದಾರೆ!
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ನಾನು ಹೀಗೆ ಮಾಡುತ್ತಿರುವುದರಲ್ಲಿ ಅರ್ಥವಿದೆ. ಶುದ್ಧ ಆತ್ಮರಲ್ಲಿ ನಾರಾಯಣ ವಿಶೇಷವಾಗಿ ವ್ಯಕ್ತವಾಗಿದ್ದಾನೆ. ನಾನು ಕಾಮಾರಪುಕುರಕ್ಕೆ ಒಮ್ಮೊಮ್ಮೆ ಹೋದಾಗ ಕೆಲವು ಹುಡುಗರಿಗೆ ಇದೇ ರೀತಿಯಾಗಿ ನನ್ನ ಕೈಯಿಂದಲೇ ತಿನ್ನಿಸುತ್ತಿದ್ದೆ. ಚಿನಿಶಾಂಕಾರಿ, ‘ನಮಗೇಕೆ ಇವರು ತಿನ್ನಿಸುತ್ತಿಲ್ಲ?’ ಅಂತ ಹೇಳುತ್ತಿದ್ದ. ಅವರಿಗೆ ಹೇಗೆ ತಿನ್ನಿಸಲಿ? ಅವರ ಶೀಲ ಸರಿಯಾದುದಲ್ಲ. ಅಂಥವರಿಗೆ ಯಾರು ತಾನೆ ತಿನ್ನಿಸುತ್ತಾರೆ?”
ಪರಮಹಂಸರಿಗೆ ಶುದ್ಧಾತ್ಮರಾದ ಭಕ್ತಾದಿಗಳು ದೊರೆತು ಬಹಳ ಆನಂದದಿಂದ ಇದ್ದಾರೆ. ತಮ್ಮ ಚಿಕ್ಕ ಮಂಚದ ಮೇಲೆ ಕುಳಿತು ಭಕ್ತರಿಗೆ ಕೀರ್ತನಕಾರೆಯರ ಹಾವಭಾವ ಗಳನ್ನು ತೋರಿಸುತ್ತಿದ್ದಾರೆ. ಆಕೆ ಯಾವ ರೀತಿಯಾಗಿ ಒಡವೆ ವಸ್ತ್ರಗಳಿಂದ ಅಲಂಕಾರ ಮಾಡಿಕೊಂಡು ಹಾಡುವುದಕ್ಕೆ ಬರುತ್ತಾಳೆ, ಹೇಗೆ ನಿಂತುಕೊಳ್ಳುತ್ತಾಳೆ, ಹೇಗೆ ಕೈಯಲ್ಲಿ ಕರವಸ್ತ್ರವನ್ನು ಹಿಡಿದುಕೊಳ್ಳುತ್ತಾಳೆ, ಹೇಗೆ ಆಗಾಗ ಬೇಕೂ ಅಂತ ಕೆಮ್ಮುತ್ತಾಳೆ ಮತ್ತು ಮುಕುರವನ್ನು ಒಂದು ಕಡೆಗೆ ತಳ್ಳಿ ಮೂಗು ಒರೆಸಿಕೊಳ್ಳುತ್ತಾಳೆ, ಹೇಗೆ ಯಾರಾದರೂ ಗಣ್ಯ ವ್ಯಕ್ತಿ ಬಂದರೆ ಹಾಡುತ್ತ ಇದ್ದ ಹಾಗೆಯೇ ಅವರಿಗೆ ಸುಖಾಗಮನ ಬಯಸಿ, ‘ಬನ್ನಿ’ ಅಂತ ಹೇಳುತ್ತಾಳೆ, ಹೇಗೆ ಆಕೆ ತನ್ನ ಒಡವೆಗಳನ್ನು ತೋರಿಸಿಕೊಳ್ಳಲು ಆಗಾಗ ಸೆರಗನ್ನು ತೋಳಿನ ಮೇಲಿಂದ ಜಾರಿಸುತ್ತಾಳೆ ಎಂಬಿವೇ ಮೊದಲಾದವುಗಳನ್ನು ತೋರಿಸಿದರು.
ಶ್ರೀರಾಮಕೃಷ್ಣರು ತೋರಿಸಿದ ಈ ನಟನೆಗಳನ್ನೆಲ್ಲ ನೋಡಿ ಎಲ್ಲರೂ “ಹೋ! ಹೋ! ಹೋ!” ಅಂತ ನಗಲಾರಂಭಿಸಿದರು. ಪಲ್ಟು ನಗುತ್ತ ನೆಲದ ಮೇಲೆ ಹೊರಳಾಡುತ್ತಿದ್ದಾನೆ. ಪರಮಹಂಸರು ಪಲ್ಟುವಿನ ಕಡೆ ನೋಡುತ್ತ ಮಾಸ್ಟರಿಗೆ, “ಈತ ಇನ್ನೂ ಚಿಕ್ಕ ಹುಡುಗನಲ್ಲವೆ! ಆದ್ದರಿಂದ ನಕ್ಕು ಹೊರಳಾಡುತ್ತಿದ್ದಾನೆ” ಅಂತ ಹೇಳುತ್ತಿ ದ್ದಾರೆ. ನಗುತ್ತ ಪಲ್ಟುವಿಗೆ, “ಹೋಗಿ ಇದನ್ನೆಲ್ಲ ನಿಮ್ಮ ತಂದೆಗೆ ತಿಳಿಸಬೇಡ. ಆತನಿಗೆ ನನ್ನ
ಮೇಲೆ ಇರುವ ಸ್ವಲ್ಪ ಗೌರವವೂ ಮಾಯವಾಗಿಬಿಡುತ್ತದೆ. ನೋಡಿಕೋ, ಆತ ಒಬ್ಬ ‘ಇಂಗ್ಲೀಷಮ್ಯಾನ್’” ಅಂತ ಹೇಳಿದರು.
ಶ್ರೀರಾಮಕೃಷ್ಣರು (ಭಕ್ತರಿಗೆ): ಅನೇಕರು ಆಹ್ನಿಕಕ್ರಿಯೆಗಳಲ್ಲಿ ತೊಡಗಿರುವಾಗ ಈ ಇಡಿಯ ಜಗತ್ತಿನ ಮಾತುಕತೆಗಳನ್ನೆಲ್ಲ ಆಡಿ ಮುಗಿಸಿಬಿಡುತ್ತಾರೆ. ಆದರೆ ವಿಧಿಗನುಸಾರವಾಗಿ ಮಾತನ್ನೇ ಆಡಕೂಡದು. ಅದಕ್ಕಾಗಿ ಆಗ ಬಾಯಿಮುಚ್ಚಿಕೊಂಡು ವಿವಿಧ ಸನ್ನೆಗಳನ್ನು ಮಾಡುತ್ತಾರೆ. ಆ ಸಮಯದಲ್ಲಿ, ‘ಇದನ್ನು ತೆಗೆದುಕೊಂಡು ಬಾ’, ‘ಅದನ್ನು ತೆಗೆದು ಕೊಂಡು ಬಾ’ ಎಂದು ಹೇಳುವುದಕ್ಕೆ ‘ಹ್ಞೂ’, ‘ಊಹ್ಞೂ’ ಎಂಬಿವೇ ಮೊದಲಾದ ಶಬ್ದ ಗಳನ್ನು ಉಪಯೋಗಿಸುತ್ತಾರೆ! (ನಗು).
“ಇನ್ನು ಕೆಲವರು ಜಪಮಾಲೆ ತಿರುಗಿಸುತ್ತಿರುತ್ತಾರೆ. ಆದರೆ ಅದೇ ಸಮಯದಲ್ಲಿ ಚೌಕಾಸಿ ಮಾಡಿ ಮೀನು ಕೊಂಡುಕೊಳ್ಳುತ್ತಲೂ ಇರುತ್ತಾರೆ. ಜಪಮಾಡುತ್ತ ಜಪಮಾಡುತ್ತ ಇದ್ದ ಹಾಗೆಯೇ ಬೆರಳಿನಿಂದ ತೋರಿಸುತ್ತಾರೆ, ‘ದಯವಿಟ್ಟು ಆ ಮೀನು’ ಅಂತ. ಇಡಿಯ ಪ್ರಪಂಚ ವ್ಯವಹಾರವೆಲ್ಲ ಆ ಸಮಯದಲ್ಲೆ ನಡೆಯಬೇಕು! (ಎಲ್ಲರೂ ನಗುತ್ತಾರೆ).
“ಕೆಲವರು ಗಂಗಾಸ್ನಾನಕ್ಕಾಗಿ ಬರುತ್ತಾರೆ. ಆಗ ಭಗವಂತನ ಚಿಂತನೆ ಮಾಡುವುದು ಎಲ್ಲಿಂದ ಬಂತು? ಇಡೀ ಪ್ರಪಂಚದ ಕಾಡುಹರಟೆಗಳನ್ನೆಲ್ಲ ಆಡಿ ಮುಗಿಸಿಬಿಡುತ್ತಾರೆ: ‘ನಿಮ್ಮ ಮಗನ ಮದುವೆಯಲ್ಲಿ ಸೊಸೆಗೆ ಏನೇನು ಒಡವೆ ವಸ್ತ್ರಗಳನ್ನು ಇಟ್ಟಿರಿ?’ ; ‘ಅವನಿಗೆ ದೊಡ್ಡ ಕಾಯಿಲೆಯಾಗಿದೆ’ ; ‘ಆಕೆ ಮಾವನ ಮನೆಯಿಂದ ಬಂದಳೊ ಇಲ್ಲವೊ’ ; ‘ಅವರು ಕನ್ಯೆ ನೋಡಿಕೊಂಡು ಬರಲು ಹೋಗಿದ್ದರು. ಒಳ್ಳೆ ಬಳುವಳಿ ಕೊಡುತ್ತಾರೆ; ಊಟೋಪಚಾರ ಬಹಳ ವಿಜೃಂಭಣೆಯಿಂದ ನಡೆಯುತ್ತದೆ’ ; ‘ಹರೀಶ ನನ್ನನ್ನು ಸುಮ್ಮನೆ ಪೀಡಿಸುತ್ತಲೇ ಇರುತ್ತಾನೆ. ಒಂದು ಘಂಟೆ ಕೂಡ ನನ್ನನ್ನು ಬಿಟ್ಟು ಇರಲಾರ’ ; ‘ತಾಯೀ, ಇಷ್ಟು ದಿವಸ ನನಗೆ ಬರುವುದಕ್ಕೆ ಆಗಲಿಲ್ಲ; ನಾನು ಆತನ ಮಗಳ ಮದುವೆಯ ವಿವಾಹದ ಸಂಬಂಧವಾಗಿ ಕಾರ್ಯಮಗ್ನಳಾಗಿದ್ದೆ.’
“ನೋಡು, ಅವರು ಬಂದಿರುವುದು ಗಂಗಾಸ್ನಾನಕ್ಕೆ; ಎಷ್ಟೊಂದು ಗೃಹಕೃತ್ಯದ ಮಾತುಗಳು!”
ಪರಮಹಂಸರು ಚಿಕ್ಕ ನರೇನನ ಕಡೆ ದೃಷ್ಟಿಸಿ ನೋಡುತ್ತಿದ್ದಾರೆ. ಹಾಗೆ ನೋಡುತ್ತ ಇದ್ದ ಹಾಗೆಯೆ ಸಮಾಧಿಸ್ಥರಾದರು. ಶುದ್ಧಾತ್ಮರ ಆಂತರ್ಯದಲ್ಲಿ ಸಾಕ್ಷಾತ್ ನಾರಾಯಣ ನನ್ನು ನೋಡುತ್ತಿರಬಹುದೆ?
ಭಕ್ತರೆಲ್ಲರು ನೆಟ್ಟ ದೃಷ್ಟಿಯಿಂದ ಅವರ ಸಮಾಧಿಯ ಅವಸ್ಥೆಯನ್ನು ನೋಡುತ್ತಿದ್ದಾರೆ. ಇದುವರೆಗೆ ಅಷ್ಟೊಂದು ತಮಾಷೆ ನಡೆಯುತ್ತಿತ್ತು. ಈಗ ಎಲ್ಲರೂ ನಿಶ್ಶಬ್ದರಾಗಿ ಕುಳಿತಿದ್ದಾರೆ. ಕೊಠಡಿಯಲ್ಲಿ ಜನವೇ ಇಲ್ಲದಂತೆ ಇದೆ. ಪರಮಹಂಸರ ಶರೀರ ಅಲುಗಾಡದೆ ಇದೆ. ಕಣ್ಣು ಸ್ಥಿರದೃಷ್ಟಿಯುಳ್ಳದ್ದಾಗಿವೆ. ಕೈಗಳನ್ನು ಜೋಡಿಸಿ ಚಿತ್ರದ ಗೊಂಬೆಯೋಪಾದಿಯಲ್ಲಿ ಕುಳಿತಿದ್ದಾರೆ.
ಸ್ವಲ್ಪ ಹೊತ್ತಾದ ನಂತರ ಸಮಾಧಿ ಇಳಿಮುಖವಾಯಿತು. ಅವರ ಶ್ವಾಸ ಸ್ಥಿರವಾಗಿ ಹೋಗಿತ್ತು. ಈಗ ಅವರು ದೀರ್ಘ ನಿಃಶ್ವಾಸವನ್ನು ಬಿಟ್ಟರು. ಕ್ರಮೇಣ ಮನಸ್ಸು ಬಹಿರ್ಜಗತ್ತಿಗೆ ಬರುತ್ತಿದೆ. ಈಗ ಅವರು ಭಕ್ತರ ಕಡೆ ನೋಡುತ್ತಿದ್ದಾರೆ. ಇನ್ನೂ ಭಾವಾವಿಷ್ಟ ರಾಗಿಯೇ ಇದ್ದಾರೆ. ಈಗ ಪ್ರತಿಯೊಬ್ಬ ಭಕ್ತನನ್ನು ಸಂಬೋಧಿಸಿ ಯಾರ್ಯಾರಿಗೆ ಏನೇನು ದೊರೆಯುತ್ತದೆ ಮತ್ತು ಈಗ ಯಾವ ಅವಸ್ಥೆಯಲ್ಲಿ ಇದ್ದಾರೆ ಎಂಬುದನ್ನು ತಿಳಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು (ಚಿಕ್ಕ ನರೇನನಿಗೆ): “ನಿನ್ನನ್ನು ನೋಡಬೇಕೆಂದು ವ್ಯಾಕುಲನಾಗಿದ್ದೆ. ನಿನಗೆ ದೊರೆಯುತ್ತದೆ. ಒಮ್ಮೊಮ್ಮೆ ಇಲ್ಲಿಗೆ ಬಾ. ಒಳ್ಳೆಯದು ನಿನಗೆ ಯಾವುದು ರುಚಿಸುತ್ತದೆ-ಜ್ಞಾನವೊ, ಭಕ್ತಿಯೊ?”
ಚಿಕ್ಕ ನರೇನ: “ಶುದ್ಧ ಭಕ್ತಿ.”
ಶ್ರೀರಾಮಕೃಷ್ಣರು: “ಮೊದಲು ಅರಿತುಕೊಳ್ಳದೆ ಇದ್ದರೆ ಯಾರನ್ನು ತಾನೆ ಪ್ರೀತಿಸ ಲಾದೀತು? (ನಗುತ್ತ ಮಾಸ್ಟರನ್ನು ತೋರಿಸಿ) ಈತ ಯಾರು ಎಂಬುದನ್ನು ಅರಿಯದೆ, ಈತನನ್ನು ಪ್ರೀತಿಸುವುದೆಂತು? (ಮಾಸ್ಟರಿಗೆ) ಆದರೆ ಶುದ್ಧಾತ್ಮನಾದ ಈ ಹುಡುಗ ಶುದ್ಧಭಕ್ತಿ ಬೇಕು ಅಂತ ಕೇಳುತ್ತಿರುವಾಗ ಇದರಲ್ಲಿ ವಿಶೇಷತೆ ಇದ್ದೇ ಇರಬೇಕು. ತಾನು ತಾನಾಗಿಯೆ ಭಕ್ತಿ ಅಂಕುರವಾಗಬೇಕಾದರೆ, ಹಿಂದಿನ ಸಂಸ್ಕಾರವಿಲ್ಲದಿದ್ದರೆ ಆಗದು. ಇದೇ ಪ್ರೇಮ ಭಕ್ತಿಯ ಲಕ್ಷಣ. ಜ್ಞಾನಭಕ್ತಿ ಎಂಬುದು ವಿಚಾರಪೂರಿತ ಭಕ್ತಿ.
(ಚಿಕ್ಕ ನರೇನನಿಗೆ) “ಎಲ್ಲಿ, ನಿನ್ನ ಮೈ ತೋರಿಸು. ಷರಟು ಬಿಚ್ಚು, ನೋಡೋಣ. ಒಳ್ಳೆಯ ಎದೆಕಟ್ಟು ಇದೆ-ನಿನಗೆ ದೊರೆಯುತ್ತದೆ. ಆಗಾಗ ಬಂದು ಹೋಗು.”
ಪರಮಹಂಸರು ಇನ್ನೂ ಭಾವಾವಿಷ್ಟರಾಗಿಯೇ ಇದ್ದಾರೆ. ಉಳಿದ ಭಕ್ತರನ್ನೂ ದಯಾರ್ದ್ರಹೃದಯದಿಂದ ಒಬ್ಬೊಬ್ಬರನ್ನಾಗಿ ಸಂಬೋಧಿಸಿ ಅವರ ಭವಿಷ್ಯವನ್ನು ತಿಳಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು (ಪಲ್ಟುವಿಗೆ): “ನಿನಗೂ ದೊರೆಯುತ್ತದೆ. ಆದರೆ ಒಂದು ಸ್ವಲ್ಪ ನಿಧಾನವಾಗಿ ದೊರೆಯುತ್ತದೆ.”
(ಬಾಬುರಾಮನಿಗೆ) “ನಿನ್ನನ್ನು ಏಕೆ ಆಕರ್ಷಿಸುತ್ತಿಲ್ಲ ಗೊತ್ತೆ?-ಕೊನೆಗೆ ಅದು ಒಂದು ಕಷ್ಟಕ್ಕಿಟ್ಟುಕೊಂಡುಬಿಡುತ್ತದೆ.”
(ಮೋಹಿನೀಮೋಹನನಿಗೆ) “ನೀನಂತು ಸರಿಯಾದ ರಸ್ತೆಯಲ್ಲಿ ಇದ್ದೇ ಇದ್ದೀಯೆ. ಇನ್ನೂ ಸ್ವಲ್ಪ ಬಾಕಿ ಉಳಿದುಕೊಂಡಿದೆ. ಅದೊಂದಷ್ಟು ಮುಗಿಯಿತು ಅಂದರೆ ಬೇರೆ ಯಾವುದೂ-ಕರ್ತವ್ಯ, ಕರ್ಮ, ಸಂಸಾರ-ನಿನ್ನನ್ನು ನಿಲ್ಲಿಸದು. ಎಲ್ಲದರಿಂದಲೂ ಒಂದೇ ಸಲ ಮುಕ್ತವಾಗಿಬಿಡುವುದೇನು ಒಳ್ಳೆಯದೆ!”
ಹೀಗೆಂದು ಹೇಳಿ ಮೋಹಿನೀಮೋಹನನ ಆಂತರ್ಯದ ಎಲ್ಲಾ ಭಾವನೆಗಳನ್ನು ಅರಿತುಕೊಳ್ಳುತ್ತಿರುವರೊ ಏನೊ ಎಂಬಂತೆ ಆತನ ಕಡೆಗೆ ತಮ್ಮ ಪ್ರೇಮಪೂರಿತ ದೃಷ್ಟಿಯನ್ನು ಹಾಕಿದರು. ಮೋಹಿನಿಮೋಹನ ಭಗವಂತನ ಸಾಕ್ಷಾತ್ಕಾರಕ್ಕೋಸುಗ ಎಲ್ಲವನ್ನೂ ತ್ಯಜಿಸಿ ಬಿಡುವುದು ಶ್ರೇಯಸ್ಕರವಾದ್ದೆ ಎಂಬುದಾಗಿ ಯೋಚಿಸುತ್ತಿದ್ದನೇನು? ಮತ್ತೆ ಸ್ವಲ್ಪ ಹೊತ್ತಿನ ಮೇಲೆ ಪರಮಹಂಸರು ಹೇಳಿದರು, “ಭಾಗವತಪಂಡಿತನನ್ನು ಭಗವಂತ ಎಲ್ಲೋ ಒಂದು ಪಾಶದಿಂದ ಈ ಜಗತ್ತಿಗೆ ಕಟ್ಟಿಹಾಕಿರುತ್ತಾನೆ; ಇಲ್ಲದೆ ಇದ್ದರೆ ಭಾಗವತ ಪ್ರವಚನವನ್ನು ಮಾಡಲು ಯಾರು ತಾನೆ ಉಳಿದುಕೊಳ್ಳುತ್ತಿದ್ದರು? ಆತನನ್ನು ಲೋಕಶಿಕ್ಷಣಾರ್ಥವಾಗಿ ಬಂಧಿಸಿ ಇಡುತ್ತಾನೆ. ಆ ಕಾರಣದಿಂದಲೇ ಭಗವತಿ ನಿನ್ನನ್ನು ಈ ಜಗತ್ತಿನಲ್ಲಿ ಇಟ್ಟಿದ್ದಾಳೆ” ಅಂತ.
ಈಗ ಪರಮಹಂಸರು ಆ ಬ್ರಾಹ್ಮಣ ಯುವಕನನ್ನು ಸಂಬೋಧಿಸಿ ಆತನಿಗೆ ಬುದ್ಧಿವಾದವೀಯುತ್ತಿದ್ದಾರೆ.
ಶ್ರೀರಾಮಕೃಷ್ಣರು (ಯುವಕನಿಗೆ): “ನೀನು ಜ್ಞಾನಚರ್ಚೆಯನ್ನು ಬಿಟ್ಟುಬಿಡು; ಭಕ್ತಿಯನ್ನು ಸ್ವೀಕರಿಸು. ಭಕ್ತಿಯೇ ಸಾರ. ನೀನು ಇಲ್ಲಿಗೆ ಬಂದು ಮೂರು ದಿನ ಆಯಿತು ಅಲ್ಲವೆ?”
ಬ್ರಾಹ್ಮಣ ಯುವಕ (ಕರಗಳನ್ನು ಜೋಡಿಸಿ): “ಹೌದು, ಆಯಿತು.”
ಶ್ರೀರಾಮಕೃಷ್ಣರು: “ವಿಶ್ವಾಸವಿಡು. ಭಗವತಿಯನ್ನು ಆಶ್ರಯಿಸು. ಹಾಗೆ ಮಾಡಿದರೆ, ತಾನೇ ಸ್ವತಃ ಏನೂ ಮಾಡಬೇಕಾಗಿರುವುದಿಲ್ಲ. ಭಗವತಿ ಕಾಳಿಯೇ ಎಲ್ಲವನ್ನೂ ಮಾಡಿ ಕೊಟ್ಟುಬಿಡುತ್ತಾಳೆ.
“ಜ್ಞಾನ ಅಂತಃಪುರದವರೆಗೆ ಮಾತ್ರ ಹೋಗಬಲ್ಲದು, ಆದರೆ ಭಕ್ತಿ ಅಂತಃಪುರಕ್ಕೇನೇ ಹೋಗಬಲ್ಲದು. ಶುದ್ಧಾತ್ಮ ನಿರ್ಲಿಪ್ತ. ಆತನಲ್ಲಿ ವಿದ್ಯೆ ಅವಿದ್ಯೆ ಎರಡೂ ಇವೆ. ಆದರೆ ಆತ ಮಾತ್ರ ನಿರ್ಲಿಪ್ತ. ಗಾಳಿಯಲ್ಲಿ ಒಮ್ಮೆ ಸುಗಂಧ, ಒಮ್ಮೆ ದುರ್ಗಂಧ ಎರಡೂ ಬರುತ್ತವೆ, ಆದರೆ ಅದು ಮಾತ್ರ ನಿರ್ಲಿಪ್ತ.
“ಒಮ್ಮೆ ವ್ಯಾಸಮಹರ್ಷಿ ಯಮುನೆಯನ್ನು ಇನ್ನೇನು ದಾಟುವುದರಲ್ಲಿದ್ದರು. ಗೋಪಿಯರೂ ಅಲ್ಲಿಗೆ ಬಂದರು. ಅವರೂ ದಾಟಬೇಕಾಗಿದೆ-ದಾಟಿ ಆಚೆ ದಡದಲ್ಲಿ ಹಾಲು ಮೊಸರು ಬೆಣ್ಣೆ ಮಾರಲು ಹೋಗುತ್ತಿದ್ದಾರೆ. ಆಗ ಅಲ್ಲಿ ದೋಣಿ ಇರಲಿಲ್ಲ. ಅವರೆಲ್ಲರೂ ನದಿಯನ್ನು ಹೇಗೆ ದಾಟುವುದು ಎಂದು ಚಿಂತಿಸುತ್ತಾ ನಿಂತಿದ್ದರು. ಆಗ ವ್ಯಾಸಮಹರ್ಷಿ ವ್ಯಕ್ತಪಡಿಸಿದರು, ತಮಗೆ ಬಹಳ ಹಸಿವಾಗುತ್ತಿದೆ ಅಂತ. ಒಡನೆ ಗೋಪಿಯರು ಅವರಿಗೆ ಹಾಲು ಬೆಣ್ಣೆ ಕೆನೆ ಇವುಗಳನ್ನೆಲ್ಲ ಕೊಟ್ಟರು. ವ್ಯಾಸಮಹರ್ಷಿ ಕೊಟ್ಟಿದುದನ್ನೆಲ್ಲ ಬಹುಮಟ್ಟಿಗೆ ತಿಂದುಬಿಟ್ಟರು. ಬಳಿಕ ಅವರು ಯಮುನೆಯನ್ನು ಸಂಬೋಧಿಸಿ ಹೇಳಿದರು, ‘ಹೇ ಯಮುನಾ ದೇವಿ, ನಾನು ಏನನ್ನೂ ತಿನ್ನದೆ ಇರುವುದು ಸತ್ಯವಾದುದೆ ಆದರೆ, ನಿನ್ನ ನೀರು ಇಬ್ಭಾಗವಾಗಲಿ, ನಾವು ಆಚೆ ದಡಕ್ಕೆ ನಡೆದು ಹೊರಟುಹೋಗುವೆವು’ ಅಂತ. ಅವರು ಸಂಕಲ್ಪಿಸಿದ ಹಾಗೆಯೇ ಆಯಿತು. ಯಮುನೆ ಇಬ್ಭಾಗವಾಗಿ ನಿಂತಳು. ನಡೆದುಹೋಗಲು ದಾರಿಯಾಯಿತು. ಆ ಮಾರ್ಗವಾಗಿ ವ್ಯಾಸಮಹರ್ಷಿ ಮತ್ತು ಗೋಪಿಯರು ಆಚೆ ದಡವನ್ನು ತಲುಪಿದರು. ‘ನಾನು ಏನನ್ನೂ ತಿನ್ನದೆ ಇರುವುದು ಸತ್ಯವಾದುದೆ ಆಗಿದ್ದರೆ’ ಎಂಬುದಾಗಿ ವ್ಯಾಸಮಹರ್ಷಿ ಹೇಳಿದುದರ ಅರ್ಥ ತಾವು ಶುದ್ಧಾತ್ಮ ಎಂದು. ಶುದ್ಧಾತ್ಮ ನಿರ್ಲಿಪ್ತ, ಪ್ರಕೃತಿಗೆ ಅತೀತ. ಆತನಿಗೆ ಹಸಿವು ತೃಷೆಗಳೇನಿಲ್ಲ; ಜನ್ಮಮೃತ್ಯುಗಳೇನಿಲ್ಲ-ಸುಮೇರುವಿನಂತೆ ಅಜರ, ಅಮರ.
“ಯಾರಿಗೆ ಈ ಬ್ರಹ್ಮಜ್ಞಾನ ದೊರೆತಿರುವುದೊ, ಆತ ಜೀವನ್ಮುಕ್ತ. ಆತನಿಗೆ ಚೆನ್ನಾಗಿ ಗೊತ್ತಿದೆ, ಶರೀರ ಪ್ರತ್ಯೇಕ, ಆತ್ಮ ಪ್ರತ್ಯೇಕ ಅಂತ. ಭಗವಂತನ ದರ್ಶನವಾದ ಮೇಲೆ ದೇಹಾತ್ಮಬುದ್ಧಿ ಇರದು. ನೀರು ಇಂಗಿಹೋದ ತೆಂಗಿನಕಾಯಿಯಲ್ಲಿ ತಿರುಳು ಪ್ರತ್ಯೇಕವಾಗಿ ಕರಟ ಪ್ರತ್ಯೇಕವಾಗಿ ಇರುವಂತೆ ಇವೆರಡೂ ಪ್ರತ್ಯೇಕ ಪ್ರತ್ಯೇಕ. ಆತ್ಮ ದೇಹದೊಳಗೆ ‘ಗಡಗಡ’ ಅಂತ ಅಳ್ಳಾಡುತ್ತಿರುವುದೊ ಏನೊ ಎಂಬಂತೆ ಕಂಡುಬರುತ್ತದೆ. ವಿಷಯಬುದ್ಧಿ ಎಂಬ ನೀರು ಇಂಗಿಹೋಯಿತು ಎಂದರೆ ಆತ್ಮಜ್ಞಾನ ದೊರಕುತ್ತದೆ; ಆತ್ಮ ಪ್ರತ್ಯೇಕ ದೇಹ ಪ್ರತ್ಯೇಕ ಎಂಬ ಬೋಧೆಯಾಗುತ್ತದೆ. ಹಸಿಯ ಅಡಕೆ ಅಥವಾ ಹಸಿಯ ಬಾದಾಮಿ ಒಳಗಿರೋ ಅಡಕೆಯನ್ನು ಅಥವಾ ಬಾದಾಮಿಯನ್ನು ಅವುಗಳ ಸಿಪ್ಪೆಯಿಂದ ಪ್ರತ್ಯೇಕ ಪಡಿಸಲಾಗುವುದಿಲ್ಲ; ಆದರೆ ಅವು ಹಣ್ಣಾದಾಗ ಅಡಕೆ ಮತ್ತು ಬಾದಾಮಿ ಪ್ರತ್ಯೇಕವಾಗಿ, ಅವುಗಳ ಸಿಪ್ಪೆ ಪ್ರತ್ಯೇಕವಾಗಿ ಆಗಿಬಿಡುತ್ತವೆ. ಹಣ್ಣಾದಾಗ ರಸ ಇಂಗಿಹೋಗಿಬಿಡುತ್ತದೆ. ಬ್ರಹ್ಮಜ್ಞಾನ ದೊರೆತರೆ ವಿಷಯರಸ ಇಂಗಿಹೋಗಿಬಿಡುತ್ತದೆ.
“ಆದರೆ ಆ ಜ್ಞಾನವನ್ನು ಪಡೆದುಕೊಳ್ಳಲು ಬಹಳ ಕಷ್ಟ. ಬರಿಯ ಬಾಯಿಮಾತಿ ನಿಂದಲೇ ಬ್ರಹ್ಮಜ್ಞಾನ ದೊರಕದು. ಕೆಲವರು ಬ್ರಹ್ಮಜ್ಞಾನ ದೊರೆತವನ ಹಾಗೆ ನಟಿಸುತ್ತಾರೆ. (ನಗುತ್ತ) ಒಬ್ಬ ಬಹಳವಾಗಿ ಸುಳ್ಳು ಹೇಳುತ್ತಿದ್ದ; ಆದರೂ ತನಗೆ ಬ್ರಹ್ಮಜ್ಞಾನ ದೊರೆತಿದೆ ಎಂದು ಹೇಳಿಕೊಳ್ಳುತ್ತಿದ್ದ. ಆತನನ್ನು ಯಾರೊ ತರಾಟೆಗೆ ತೆಗೆದುಕೊಂಡಾಗ ಆತ ಹೇಳಿದ, ‘ಹೀಗೇಕೆ ವರ್ತಿಸುತ್ತಿದ್ದೀರಿ? ಈ ಜಗತ್ತು ಸ್ವಪ್ನವತ್; ಎಲ್ಲವೂ ಮಿಥ್ಯವೇ ಆಗಿದ್ದರೆ ಸತ್ಯವಚನ ಮಾತ್ರ ಸತ್ಯವಾದುದಾಗಿ ಆಗುವುದೆ? ಮಿಥ್ಯವೂ ಮಿಥ್ಯಾ, ಸತ್ಯವೂ ಮಿಥ್ಯಾ!’ ಅಂತ.” (ಎಲ್ಲರೂ ನಗುತ್ತಾರೆ).
ಪರಮಹಂಸರು ಭಕ್ತರೊಡನೆ ಮಂದಲಿಗೆ ಮೇಲೆ ಕುಳಿತಿದ್ದಾರೆ. ಮುಖದಲ್ಲಿ ನಗು ಕಾಣಬರುತ್ತಿದೆ. ತಮ್ಮ ಕಾಲನ್ನು ಸ್ವಲ್ಪ ಮೆದುವಾಗಿ ಒತ್ತುವಂತೆ ಅವರು ಭಕ್ತರಿಗೆ ಹೇಳಿದರು. ಭಕ್ತರು ಮೆದುವಾಗಿ ಒತ್ತುತ್ತಿದ್ದಾರೆ. ಅವರು ಮಾಸ್ಟರಿಗೆ ಹೇಳಿದರು, “ಇದರಲ್ಲಿ (ಪಾದಸೇವೆ ಮಾಡುವುದರಲ್ಲಿ) ಒಂದು ದೊಡ್ಡ ಮಹತ್ತಿದೆ” ಅಂತ. ತಮ್ಮ ಎದೆಯ ಮೇಲೆ ಕೈಯಿಟ್ಟುಕೊಂಡು ಮತ್ತೆ ಹೇಳಿದರು, “ಇದರೊಳಗೆ ಏನಾದರೂ ಸತ್ಯವಿರುವುದಾದರೆ, ಈ ಸೇವೆಯಿಂದ ಭಕ್ತರ ಅಜ್ಞಾನ, ಅವಿದ್ಯೆ ಒಂದೇ ಸಮನೆ ನಾಶವಾಗಿ ಬಿಡುತ್ತದೆ” ಅಂತ.
ಏನೋ ಒಂದು ಗುಹ್ಯ ವಿಷಯವನ್ನು ತಿಳಿಸುವಂತೆ ಪರಮಹಂಸರು ಗಂಭೀರ ಮುದ್ರೆ ತಾಳಿದರು.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಇಲ್ಲಿ ಪರರು ಯಾರೂ ಇಲ್ಲ. ಅಂದು, ಹರೀಶ ನನ್ನೊಡನೆ ಇದ್ದಾಗ, ಸಚ್ಚಿದಾನಂದ ಈ ಕೋಶದಿಂದ (ಪರಮಹಂಸರ ಶರೀರದಿಂದ) ಹೊರಕ್ಕೆ ಬರುವುದನ್ನು ನೋಡಿದೆ. ಆತ ಹೊರಕ್ಕೆ ಬಂದು ಹೇಳಿದ, ‘ನಾನು ಪ್ರತಿಯೊಂದು ಯುಗದಲ್ಲಿಯೂ ಅವತರಿಸುತ್ತೇನೆ’ ಅಂತ. ಆಗ ಭಾವಿಸಿದೆ, ಬಹುಶಃ ಚಿತ್ತಭ್ರಮಣೆಯಿಂದ ನಾನು ಹೀಗೆ ಹೇಳುತ್ತಿರಬಹುದು ಎಂದು. ಒಂದು ಸ್ವಲ್ಪ ಹೊತ್ತು ಸುಮ್ಮನೆ ಇದ್ದು ನೋಡಿದೆ, ಆಗ ಸಚ್ಚಿದಾನಂದ ಮತ್ತೆ ತಾನಾಗಿಯೆ ಹೇಳಿದ, ‘ಶಕ್ತಿಯ ಆರಾಧನೆಯನ್ನು ಚೈತನ್ಯದೇವನೂ ಮಾಡಿದ’ ಅಂತ.”
ಇದನ್ನೆಲ್ಲ ಭಕ್ತರು ಬೆರಗಾಗಿ ಕೇಳಿದರು. ಕೆಲವರು ಭಾವಿಸುತ್ತಿದ್ದಾರೆ, ಸಾಕ್ಷಾತ್ ಸಚ್ಚಿದಾನಂದನೆ ಪರಮಹಂಸರ ರೂಪವನ್ನು ಧರಿಸಿ ನಮ್ಮ ಹತ್ತಿರ ಕುಳಿತಿರುವನೆ? ಭಗವಂತ ಮತ್ತೆ ಅವತರಿಸಿ ಬಂದಿದ್ದಾನೆಯೆ? ಅಂತ. ಪರಮಹಂಸರು ಒಂದು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು ಮಾಸ್ಟರನ್ನು ಸಂಬೋಧಿಸಿ ಮತ್ತೆ ಅವನಿಗೆ ಹೇಳಿದರು : “ಪೂರ್ಣ ಆವಿರ್ಭಾವವಾಗಿ ಕಂಡಿತು; ಆದರೆ ಈ ಸಲ ಅದು ಸತ್ತ್ವಗುಣದ ಐಶ್ವರ್ಯ ಮಾತ್ರ”.
ಭಕ್ತರೆಲ್ಲರು ಮಂತ್ರಮುಗ್ಧರಾಗಿ ಕುಳಿತು ಇದನ್ನೆಲ್ಲ ಕೇಳುತ್ತಿದ್ದಾರೆ.
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಈಗತಾನೆ ನಾನು ತಾಯಿಗೆ ಹೇಳಿದೆ, ‘ನಾನು ಹೆಚ್ಜಾಗಿ ಮಾತನಾಡಲಾರೆ’ ಅಂತ. ಮತ್ತೆ ಹೇಳಿದೆ, ‘ಹೇ ತಾಯೆ, ಒಂದು ಸಲ ಮುಟ್ಟಿದರೆ ಸಾಕು, ಜನರಿಗೆ ಚೈತನ್ಯ ಉಂಟಾಗಿಬಿಡುವಂತೆ ಮಾಡಿಬಿಡು’ ಅಂತ. ಯೋಗಮಾಯೆಯ ಮಹಿಮೆ ಅಂಥದು, ಆಕೆ ಸುಮ್ಮನೆ ಮೋಡಿಹಾಕಿಬಿಡಬಲ್ಲಳು. ಆಕೆ ಬೃಂದಾವನದ ಲೀಲೆಯಲ್ಲಿ ಮೋಡಿ ಹಾಕಿಬಿಟ್ಟಳು. ಅದರ ಬಲದಿಂದ ಶ್ರೀಮತಿ(ರಾಧೆ) ಶ್ರೀಕೃಷ್ಣನನ್ನು ಸಂಧಿಸುವ ಸನ್ನಾಹ ನಡೆಸಲು ಸುಬಲನಿಗೆ ಸಾಧ್ಯವಾಯಿತು. ಯೋಗಮಾಯೆ-ಆದ್ಯಾಶಕ್ತಿ-ಆಕೆಗೆ ಒಂದು ಆಕರ್ಷಣೀಯ ಶಕ್ತಿ ಇದೆ. ನಾನು ಈ ಶಕ್ತಿಯ ಆರೋಪಣೆಯನ್ನು ಮಾಡಿಕೊಂಡಿದ್ದೆ.
(ಮಾಸ್ಟರಿಗೆ) “ಒಳ್ಳೆಯದು, ಯಾರು ಇಲ್ಲಿಗೆ ಬರುತ್ತಿರುವರೊ, ಅವರಿಗೇನಾದರೂ ಅಲ್ವಸ್ವಲ್ಪ ಅನುಭವ ಆಗುತ್ತಿದೆಯೆ?”
ಮಾಸ್ಟರ್: “ಹೌದು ಆಗುತ್ತಿದೆ. ಅದರಲ್ಲಿ ಸಂದೇಹವೇನು?”
ಶ್ರೀರಾಮಕೃಷ್ಣರು: “ಅದು ನಿನಗೆ ಹೇಗೆ ಗೊತ್ತು?”
ಮಾಸ್ಟರ್: “ಪ್ರತಿಯೊಬ್ಬರೂ, ‘ಯಾರು ಅವರ ಹತ್ತಿರ ಹೋಗುವರೊ ಅವರು ಮತ್ತೆ ಜನ್ಮವೆತ್ತುವುದಿಲ್ಲ’ ಅಂತ ಹೇಳುತ್ತಿದ್ದಾರೆ.”
ಶ್ರೀರಾಮಕೃಷ್ಣರು (ನಗುತ್ತ): “ಒಂದು ಗೂಳಿಕಪ್ಪೆ ಒಂದು ನೀರಹಾವಿನ ಬಾಯಿಗೆ ಸಿಕ್ಕಿಬಿತ್ತು. ಆ ಹಾವು ಅದನ್ನು ನುಂಗಲೂ ಆರದು, ಉಗುಳಲೂ ಆರದು. ಅದರ ಫಲವಾಗಿ ಕಪ್ಪೆ ಸುಮ್ಮನೆ ಸಂಕಟಪಡುತ್ತಿತ್ತು; ಅದು ಸುಮ್ಮನೆ ಕೂಗಿಕೊಳ್ಳುತ್ತಿತ್ತು. ಹಾವಿಗೂ ಮರಣ ಸಂಕಟ. ಆದರೆ ಆ ಕಪ್ಪೆ ನಾಗರಹಾವಿನ ಬಾಯಿಗೇನಾದರೂ ಸಿಕ್ಕಿ ಬಿದ್ದಿದ್ದರೆ ಒಂದೆರಡು ಸಲ ಕೂಗಿಕೊಳ್ಳುವುದರಲ್ಲಿಯೆ ಅದರ ಆಟ ಮುಗಿದುಹೋಗುತ್ತಿತ್ತು. (ಎಲ್ಲರೂ ನಗುತ್ತಿದ್ದಾರೆ).
(ಯುವಭಕ್ತರಿಗೆ) “ತ್ರೈಲೋಕ್ಯ ಬರೆದಿರುವ ಆ ಪುಸ್ತಕ – ‘ಭಕ್ತಿಚೈತನ್ಯಚಂದ್ರಿಕಾ’ ಓದಿದ್ದೀರೇನು? ಅವನಿಂದ ಒಂದು ಪ್ರತಿಯನ್ನು ವಸೂಲುಮಾಡಿ. ಚೈತನ್ಯದೇವನ ಸಂಬಂಧವಾಗಿ ಬಹಳ ಚೆನ್ನಾಗಿ ಬರೆದಿದ್ದಾನೆ.”
ಒಬ್ಬ ಭಕ್ತ: “ಆತ ನಮಗೆ ಹಾಗೇ ಕೊಡುವನೆ?”
ಶ್ರೀರಾಮಕೃಷ್ಣರು (ನಗುತ್ತ): “ಏಕೆ ಕೊಡಲಾರ. ರೈತನಿಗೆ ಕೆಕ್ಕರಿಕೆ ಕರಬೂಜದ ಬೆಳೆ ಬಹಳ ಚೆನ್ನಾಗಿ ಬಂದಿದ್ದರೆ ಒಂದೆರಡು ಹಣ್ಣನ್ನು ಉಚಿತವಾಗಿ ಕೊಟ್ಟುಬಿಡಬಲ್ಲ. (ಎಲ್ಲರೂ ನಗುತ್ತಾರೆ). ಏನು ನಿನ್ನ ಮಾತು-ಹಾಗೇ ಒಂದು ಪ್ರತಿಯನ್ನುಕೊಡಲಾರನೆ?”
(ಪಲ್ಟುವಿಗೆ) “ಒಮ್ಮೊಮ್ಮೆ ಇಲ್ಲಿಗೆ ಬಂದು ಹೋಗುತ್ತಿರು.”
ಪಲ್ಟು: “ಸಾಧ್ಯವಾದಾಗ ಬರುತ್ತೇನೆ.”
ಶ್ರೀರಾಮಕೃಷ್ಣರು: “ನಾನು ಕಲ್ಕತ್ತದಲ್ಲಿ ಅಲ್ಲಿಗೆ ಬಂದಾಗ, ನೀನು ಅಲ್ಲಿಗೆ ಬರಲಾಗುವುದೆ?”
ಪಲ್ಟು: “ಇಚ್ಛೆ ಇದೆ; ಪ್ರಯತ್ನ ಮಾಡುತ್ತೇನೆ.”
ಶ್ರೀರಾಮಕೃಷ್ಣರು: “ನೋಡು, ಲೆಕ್ಕಾಚಾರದ ಬುದ್ಧಿಯನ್ನು!”
ಪಲ್ಟು: “ ‘ಪ್ರಯತ್ನಮಾಡುತ್ತೇನೆ’ ಅಂತ ಹೇಳದೆ ಇದ್ದರೆ, ಸಾಧ್ಯವಾಗದೆ ಹೋಗಿ ಸುಳ್ಳು ಹೇಳಿದಂತಾಗಬಹುದು.”
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಇಂಥ ಹುಡುಗರು ಸುಳ್ಳು ಹೇಳಿದರೆ ನಾನು ಅಷ್ಟೊಂದಾಗಿ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ; ಇವರ ಸ್ವಾತಂತ್ರ್ಯ ಇವರ ಕೈಯಲ್ಲಿ ಇಲ್ಲ.”
(ಹರಿಪದನಿಗೆ) “ಮಹೇಂದ್ರಮುಖರ್ಜಿ ಏಕೆ ಬರುತ್ತಿಲ್ಲ?”
ಹರಿಪದ: “ಕಾರಣವೇನೊ ಸರಿಯಾಗಿ ಗೊತ್ತಿಲ್ಲ.”
ಮಾಸ್ಟರ್ (ನಗುತ್ತ): “ಆತ ಜ್ಞಾನಯೋಗಕ್ಕೆ ಕೈಹಾಕಿದ್ದಾನೆ!”
ಶ್ರೀರಾಮಕೃಷ್ಣರು: “ಅಲ್ಲ, ಅದಕ್ಕಲ್ಲ. ಅಂದು ಆತ ಹೇಳಿದ್ದ, ‘ಗಾಡಿ ಕಳುಹಿಸುತ್ತೇನೆ, ಹೋಗಿ ಪ್ರಹ್ಲಾದನ ಚರಿತ್ರೆಯನ್ನು ನೋಡಿಬನ್ನಿ’ ಅಂತ. ಆದರೆ ಕಳುಹಿಸಲಿಲ್ಲ. ಬಹುಶಃ ಅದಕ್ಕಾಗಿ ಬರುತ್ತಿಲ್ಲ ಅಂತ ಕಾಣುತ್ತದೆ.”
ಮಾಸ್ಟರ್: “ಒಂದು ದಿನ ನಾನು ಮಹಿಮಚಕ್ರವರ್ತಿಯನ್ನು ಕಂಡು ಆತನೊಡನೆ ಮಾತುಕತೆ ಆಡಿದೆ. ಮಹೇಂದ್ರ ಅಲ್ಲಿಗೆ ಹೋಗಿ ಬರುತ್ತಿದ್ದಾನಂತೆ.”
ಶ್ರೀರಾಮಕೃಷ್ಣರು: “ಮಹಿಮಚಕ್ರವರ್ತಿ ಭಕ್ತಿಯ ವಿಷಯವಾಗಿಯೂ ಮಾತುಕತೆ ಆಡುತ್ತಾನೆ. ಆತನಿಗೆ, ‘ಪ್ರೇಮದೊಳಾರಾಧಿಸೆ ದೇವರ, ಈ ಜಪತಪವಿನ್ನೇಕೆ?’ ಎಂಬ ಅರ್ಥದ ಶ್ಲೋಕ ಕಂಡರೆ ಬಹಳ ಇಷ್ಟ.”
ಮಾಸ್ಟರ್ (ನಗುತ್ತ): “ನೀವು ಬಲಾತ್ಕರಿಸುವುದರಿಂದ ಆತ ಅದನ್ನು ಪಠಿಸುತ್ತಾನೆ.”
ಗಿರೀಶಘೋಷ ಈಗ ಕೆಲವು ಕಾಲದಿಂದ ಯಾವಾಗ ನೋಡಿದರೂ ಭಕ್ತರೊಡನೆ ಪರಮಹಂಸರ ವಿಷಯವಾಗಿಯೇ ಮಾತುಕತೆಯಾಡುತ್ತಿರುತ್ತಾನೆ.
ಹರಿಪದ: “ಗಿರೀಶಘೋಷನಿಗೆ ಈಗ ಸ್ವಲ್ಪ ದಿನಗಳಿಂದ ವಿವಿಧ ದರ್ಶನ ಗಳಾಗುತ್ತಿವೆ. ಇಲ್ಲಿಂದ ಮನೆಗೆ ಹೋದನಂತರ ಭಗವದ್ಭಾವನೆಯಲ್ಲಿಯೇ ತನ್ಮಯನಾಗಿ ರುತ್ತಾನೆ ಮತ್ತು ಏನೇನೋ ದರ್ಶನ ಪಡೆಯುತ್ತಿರುತ್ತಾನೆ.”
ಶ್ರೀರಾಮಕೃಷ್ಣರು: “ಆತ ನೋಡಿದರೂ ನೋಡುತ್ತಿರಬಹುದು. ಗಂಗೆಯ ದಡಕ್ಕೆ ಬಂದರೆ ಅನೇಕ ವಸ್ತುಗಳನ್ನು-ದೋಣಿ, ಜಹಜು, ಇನ್ನು ಏನೇನೊ ವಸ್ತುಗಳನ್ನು – ನೋಡಬಹುದು.”
ಹರಿಪದ: “ಗಿರೀಶಘೋಷ ಹೇಳುತ್ತಾನೆ, ‘ಇನ್ನು ಮೇಲೆ ನಾನು ನನ್ನ ಕೆಲಸ ದಲ್ಲಿಯೇ ನಿರತನಾಗಿಬಿಡುತ್ತೇನೆ. ಪ್ರಾತಃಕಾಲ ಎದ್ದು ಗಡಿಯಾರ ಮುಂದೆ ಇಟ್ಟುಕೊಂಡು ಕೈಗೆ ಪೆನ್ನು ತೆಗೆದುಕೊಂಡು ಇಡೀ ದಿವಸವೆಲ್ಲ ಇದನ್ನು (ಪುಸ್ತಕ ಬರೆಯುವ ಕೆಲಸವನ್ನು) ಮಾಡುತ್ತೇನೆ’ ಅಂತ. ಹೀಗೇನೊ ಹೇಳುತ್ತಾನೆ, ಆದರೆ ಆತನ ಕೈಯಲ್ಲಿ ಹಾಗೆ ನಡೆದುಕೊಳ್ಳ ಲಾಗುತ್ತಿಲ್ಲ. ನಾವು ಯಾರಾದರೂ ಅಲ್ಲಿಗೆ ಹೋದೆವೆಂದರೆ ಕೇವಲ ನಿಮ್ಮ ವಿಷಯ ವಾಗಿಯೇ ಮಾತುಕತೆಯಾಡಲು ಆರಂಭಿಸುತ್ತಾನೆ. ನೀವು ನರೇಂದ್ರನನ್ನು ಇಲ್ಲಿಗೆ ಕಳುಹಿಸುವಂತೆ ಆತನಿಗೆ ಹೇಳಿದ್ದಿರಿ. ಆತ ಹೇಳಿದ, ‘ನಾನು ನರೇಂದ್ರನನ್ನು ಒಂದು ಗಾಡಿ ಮಾಡಿ ಕಳುಹಿಸುತ್ತೇನೆ’ ಅಂತ.”
ಘಂಟೆ ಸಾಯಂಕಾಲ ಐದು. ಚಿಕ್ಕ ನರೇನ ಮನೆಗೆ ಹಿಂದಿರುಗಲುಸಿದ್ಧನಾಗುತ್ತಿದ್ದಾನೆ. ಪರಮಹಂಸರು ತಮ್ಮ ಕೊಠಡಿಯ ವಾಯುವ್ಯ ದಿಕ್ಕಿನ ಉದ್ದ ವರಾಂಡದಲ್ಲಿ ನಿಂತು ಏಕಾಂತದಲ್ಲಿ ಆತನಿಗೆ ಏನೇನೊ ಉಪದೇಶಗಳನ್ನು ಕೊಡುತ್ತಿದ್ದಾರೆ. ಸ್ವಲ್ಪ ಹೊತ್ತಾದ ನಂತರ ಆತ ಅವರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡ. ಉಳಿದ ಭಕ್ತರಲ್ಲಿ ಅನೇಕರು ಅವರಿಂದ ಬೀಳ್ಕೊಂಡರು.
ಶ್ರೀರಾಮಕೃಷ್ಣರು ಚಿಕ್ಕ ಮಂಚದ ಮೇಲೆ ಕುಳಿತು ಮೋಹಿನಿಮೋಹನನೊಡನೆ ಮಾತುಕತೆಯಾಡುತ್ತಿದ್ದಾರೆ. ಪುತ್ರವಿಯೋಗವಾದ ಮೇಲೆ ಆತನ ಹೆಂಡತಿ ಹುಚ್ಚಿಯಂತಾಗಿ ಬಿಟ್ಟಿದ್ದಾಳೆ. ಒಮ್ಮೆ ನಗುತ್ತಾಳೆ, ಒಮ್ಮೆ ಅಳುತ್ತಾಳೆ, ಆದರೆ ದಕ್ಷಿಣೇಶ್ವರದಲ್ಲಿ ಪರಮಹಂಸರ ಎದುರಿಗೆ ಇರುವಾಗ ಮಾತ್ರ ಶಾಂತಳಾಗಿರುತ್ತಾಳೆ.
ಶ್ರೀರಾಮಕೃಷ್ಣರು: “ಈಗ ನಿನ್ನ ಹೆಂಡತಿಗೆ ಹೇಗೆ ಇದೆ!”
ಮೋಹಿನೀಮೋಹನ: “ಇಲ್ಲಿಗೆ ಬಂತು ಅಂದರೆ ಶಾಂತಳಾಗಿಬಿಡುತ್ತಾಳೆ; ಅಲ್ಲಿ ಆಗಾಗ ಬಹಳವಾಗಿ ಹುಚ್ಚಿಯಾಗಿಬಿಡುತ್ತಾಳೆ. ಅಂದು ಪ್ರಾಣ ಕಳೆದುಕೊಳ್ಳಲು ಹೋಗಿದ್ದಳು.”
ಪರಮಹಂಸರು ಇದನ್ನು ಕೇಳಿ ಒಂದು ಸ್ವಲ್ಪ ಹೊತ್ತು ಚಿಂತಾಮಗ್ನರಾಗಿ ಕುಳಿತು ಕೊಂಡರು. ಮೋಹಿನೀಮೋಹನ ವಿನಯದಿಂದ, “ತಾವು ಆಕೆಗೆ ಸ್ವಲ್ಪ ಬುದ್ಧಿವಾದವನ್ನು ದಯವಿಟ್ಟು ಹೇಳಲೇಬೇಕು” ಅಂತ ಪ್ರಾರ್ಥನೆ ಮಾಡಿಕೊಂಡ.
ಶ್ರೀರಾಮಕೃಷ್ಣರು: “ಆಕೆಗೆ ಅಡುಗೆಕೆಲಸ ಕೊಡಬೇಡ. ಅದು ಆಕೆಯ ತಲೆ ಉಷ್ಣವನ್ನು ಇನ್ನೂ ಅತಿಯಾಗಿ ಕೆರಳಿಸಿ ಬಿಡುತ್ತದೆ. ಆಕೆಯನ್ನು ನೋಡಿಕೊಳ್ಳುವುದಕ್ಕೆ ಯಾರಾದರೂ ಬಂಧುಬಾಂಧವರು ಆಕೆಯ ಜೊತೆಯಲ್ಲಿರಲಿ.”
ಸಾಯಂಕಾಲವಾಗಿದೆ. ದೇವಾಲಯಗಳಲ್ಲಿ ಮಂಗಳಾರತಿ ಸಿದ್ಧತೆ ನಡೆಯುತ್ತಿದೆ. ಪರಮಹಂಸರ ಕೊಠಡಿಗೆ ದೀಪ ಹಚ್ಚಿ ಧೂಪವನ್ನು ಹಾಕಿ ಆಗಿದೆ. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡು ಜಗನ್ಮಾತೆಗೆ ಪ್ರಣಾಮಮಾಡುತ್ತ ತಮ್ಮ ಮಧುರ ಕಂಠದಿಂದ ಭಗವತಿಯ ನಾಮಕೀರ್ತನೆ ಮಾಡುತ್ತಿದ್ದಾರೆ. ಕೊಠಡಿಗೆ ಮಾಸ್ಟರ್ ವಿನಾ ಬೇರೆ ಯಾರೂ ಬಂದಿರಲಿಲ್ಲ. ಆತ ಮಂದಲಿಗೆಯ ಮೇಲೆ ಕುಳಿತಿದ್ದಾನೆ.
ಪರಮಹಂಸರು ತಮ್ಮ ಮಂಚವನ್ನು ಬಿಟ್ಟು ಎದ್ದರು. ಮಾಸ್ಟರೂ ಎದ್ದು ನಿಂತು ಕೊಂಡ. ಪರಮಹಂಸರು ಮಾಸ್ಟರಿಗೆ ಉತ್ತರದ ಮತ್ತು ಪಶ್ಚಿಮದ ಬಾಗಿಲುಗಳನ್ನು ಮುಚ್ಚುವಂತೆ ಹೇಳಿದರು. ಮಾಸ್ಟರ್ ಅವುಗಳನ್ನು ಮುಚ್ಚಿ ವರಾಂಡಕ್ಕೆ ಬಂದು ಪರಮಹಂಸರ ಹತ್ತಿರ ನಿಂತುಕೊಂಡ. ಅವರು ತಾವು ಕಾಳೀ ದೇವಾಲಯಕ್ಕೆ ಹೋಗಿ ಬರಬೇಕಾಗಿದೆ ಅಂತ ಹೇಳಿದರು. ಹೀಗೆಂದು ಹೇಳಿ ಮಾಸ್ಟರನ ಕೈಯನ್ನು ಹಿಡಿದು ಕೊಂಡು ಆತನ ಮೇಲೆ ತಮ್ಮ ಭಾರವನ್ನೆಲ್ಲ ಹಾಕಿ ಕಾಳೀ ದೇವಾಲಯದ ಮುಖಮಂಟಪಕ್ಕೆ ಬಂದು ಅಲ್ಲಿಯೆ ಕುಳಿತುಕೊಂಡರು. ಕುಳಿತುಕೊಳ್ಳುವುದಕ್ಕೆ ಮುನ್ನ ಹೇಳಿದರು, “ನೀನು ಅವನನ್ನು ಕರೆ” ಅಂತ. ಮಾಸ್ಟರ್ ಬಾಬುರಾಮನನ್ನು ಕರೆದ.
ಪರಮಹಂಸರು ಕಾಳಿಯ ದರ್ಶನಮಾಡಿಕೊಂಡು ಆ ದೊಡ್ಡ ಅಂಗಳದ ಮೂಲಕ ತಮ್ಮ ಕೊಠಡಿಗೆ ಹಿಂದಿರುಗಿ ಬಂದರು. ಬರುವಾಗ, “ಹೇ ತಾಯೆ, ತಾಯೆ! ರಾಜೇಶ್ವರಿ!” ಅಂತ ಹೇಳುತ್ತ ಬಂದರು.
ಪರಮಹಂಸರು ತಮ್ಮ ಕೊಠಡಿಗೆ ಹಿಂದಿರುಗಿದನಂತರ ಚಿಕ್ಕ ಮಂಚದ ಮೇಲೆ ಕುಳಿತುಕೊಂಡರು. ಈಗ ಕೆಲವು ಕಾಲದಿಂದ ಪರಮಹಂಸರಿಗೆ ಒಂದು ಅದ್ಭುತ ಅವಸ್ಥೆ ಬಂದುಬಿಟ್ಟಿದೆ. ಅವರಿಗೆ ಯಾವ ಲೋಹವನ್ನೂ ಮುಟ್ಟುವುದಕ್ಕೆ ಆಗುತ್ತಿಲ್ಲ. ಈ ಅವಸ್ಥೆ ಬರುವುದಕ್ಕೆ ಒಂದೆರಡು ದಿವಸ ಮುನ್ನ ಅವರು ಹೇಳಿದರು, “ಬಹುಶಃ ಹೀಗೆ ಕಾಣುತ್ತಿದೆ, ತಾಯಿ ನನ್ನ ಹೃದಯದಿಂದ ಐಶ್ವರ್ಯಾಸಕ್ತಿಯನ್ನು ಒಂದೇ ಸಲ ತೆಗೆದು ಹಾಕಿಬಿಡುವಂತಿದೆ” ಅಂತ. ಈಗ ಅವರು ಬಾಳೆ ಎಲೆಯಲ್ಲಿ ಊಟ ಮಾಡುತ್ತಿದ್ದಾರೆ, ಮಣ್ಣಿನ ಲೋಟದಿಂದ ನೀರು ಕುಡಿಯುತ್ತಿದ್ದಾರೆ. ಅವರಿಗೆ ಕಾಲುತಂಬಿಗೆಯನ್ನೂ ಮುಟ್ಟುವುದಕ್ಕೆ ಆಗುತ್ತಿಲ್ಲ; ಅದಕ್ಕಾಗಿ ಅವರು ಭಕ್ತರಿಗೆ ಕೆಲವು ಮಣ್ಣಿನ ಗಡಿಗೆಗಳನ್ನು ತರುವಂತೆ ಹೇಳಿದ್ದಾರೆ. ಅವರು ಲೋಹದ ಪಾತ್ರೆ ಪದಾರ್ಥಗಳನ್ನು ಮುಟ್ಟಿದರು ಅಂದರೆ ಮುಳ್ಳಿರೋ ಮೀನು ಅವರ ಕೈಯನ್ನು ಚುಚ್ಚಿದ ಹಾಗೆ ಆಗಿ ಅದು ‘ಜುಮ್’ ಅಂತ ನೋಯಲಾರಂಭಿಸುತ್ತದೆ.
ಪ್ರಸನ್ನ ಕೆಲವು ಗಡಿಗೆಗಳನ್ನು ತಂದಿದ್ದಾನೆ, ಆದರೆ ಅವು ಬಹಳ ಚಿಕ್ಕವು. ಪರಮ ಹಂಸರು ನಗುತ್ತ ಹೇಳಿದರು, “ಈ ಗಡಿಗೆಗಳು ಬಹಳ ಚಿಕ್ಕವು. ಆದರೆ ಈ ಹುಡುಗ ಮಾತ್ರ ಬಹಳ ಒಳ್ಳೆಯವ. ಒಮ್ಮೆ ನಾನು ನಿನ್ನ ಬಟ್ಟೆ ತೆಗೆ ಅಂದೊಡನೆ ನನ್ನೆದುರು ಹುಟ್ಟಿದ ನಿರ್ವಾಣದಲ್ಲಿಯೇ ನಿಂತುಕೊಂಡುಬಿಟ್ಟ. ಈತನದು ತೀರ ಮಗುವಿನಂಥ ಮನಸ್ಸು!” ಅಂತ.
ಬೇಲಘರದ ತಾರಕ ತನ್ನ ಒಬ್ಬ ಮಿತ್ರನೊಡನೆ ಕೊಠಡಿಯನ್ನು ಪ್ರವೇಶಿಸಿದ. ಪರಮಹಂಸರು ಚಿಕ್ಕ ಮಂಚದ ಮೇಲೆ ಕುಳಿತಿದ್ದಾರೆ. ಮಾಸ್ಟರ್ ಮತ್ತು ಇನ್ನೂ ಒಬ್ಬಿಬ್ಬರು ಭಕ್ತರು ಮಂದಲಿಗೆ ಮೇಲೆ ಕುಳಿತಿದ್ದಾರೆ. ಕೊಠಡಿಗೆ ದೀಪ ಹಚ್ಚಿದ್ದಾರೆ. ತಾರಕ ಕೊಠಡಿಯನ್ನು ಪ್ರವೇಶಿಸಿದೊಡನೆಯೆ ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ.
ತಾರಕನಿಗೆ ವಯಸ್ಸು ಬಹುಶಃ ಇಪ್ಪತ್ತು ಇರಬಹುದು; ಮದುವೆ ಆಗಿದೆ. ಆತನ ತಂದೆ ತಾಯಿಗಳು ಪರಮಹಂಸರೊಡನೆ ಬೆರೆಯಲು ಬಿಟ್ಟುಕೊಡುತ್ತಿಲ್ಲ. ಕಲ್ಕತ್ತದಲ್ಲಿ ಬೋಬಜಾರಿನಲ್ಲಿರುವ ತಮ್ಮ ಮನೆಯಲ್ಲಿಯೇ ಆತ ವಿಶೇಷವಾಗಿ ಇರುತ್ತಾನೆ. ಪರಮಹಂಸರು ಆತನನ್ನು ಬಹಳವಾಗಿ ಪ್ರೀತಿಸುತ್ತಾರೆ. ಆತನೊಡನೆ ಬಂದಿದ್ದವನು ಒಂದು ಸ್ವಲ್ಪ ತಮೋಗುಣಿ. ಧಾರ್ಮಿಕ ವಿಷಯಗಳ ಮತ್ತು ಪರಮಹಂಸರ ಸಂಬಂಧ ವಾಗಿ ಆತ ವ್ಯಂಗ್ಯವಾಗಿ ಮಾತನಾಡುತ್ತಾನೆ.
ಶ್ರೀರಾಮಕೃಷ್ಣರು (ತಾರಕನ ಮಿತ್ರನಿಗೆ): “ಒಮ್ಮೆ ಹೋಗಿ ದೇವಾಲಯಗಳನ್ನೆಲ್ಲ ನೋಡಿಕೊಂಡು ಬಾ.”
ಮಿತ್ರ: “ಓ, ಅವನ್ನೆಲ್ಲ ನಾನು ಹಿಂದೆಯೇ ನೋಡಿಬಿಟ್ಟಿದ್ದೇನೆ.”
ಶ್ರೀರಾಮಕೃಷ್ಣರು: “ಒಳ್ಳೇದು, ತಾರಕ ಇಲ್ಲಿಗೆ ಬರುತ್ತಿದ್ದಾನಲ್ಲ, ಅದೇನು ಕೆಟ್ಟ ಕಾರ್ಯವೇನು?”
ಮಿತ್ರ: “ಅದು ನಿಮಗೇ ಗೊತ್ತು.”
ಶ್ರೀರಾಮಕೃಷ್ಣರು (ಮಾಸ್ಟರನ್ನು): “ಈತ ಒಬ್ಬ ಹೆಡ್ಮಾಸ್ಟರ್.”
ಮಿತ್ರ: “ಓ!”
ಪರಮಹಂಸರು ತಾರಕನ ಕ್ಷೇಮಸಮಾಚಾರವನ್ನು ವಿಚಾರಿಸಿ ಆತನೊಡನೆ ಬಹಳ ಹೊತ್ತು ಮಾತುಕತೆಯಾಡಿದರು. ತಾರಕ ಈಗ ಮನೆಗೆ ಹಿಂದಿರುಗಲು ಸಿದ್ಧನಾಗಿದ್ದಾನೆ. ಪರಮಹಂಸರು ಆತನಿಗೆ ಕೆಲವು ವಿಷಯಗಳ ಸಂಬಂಧವಾಗಿ ಎಚ್ಚರಿಕೆ ಕೊಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಸಾಧು ಹುಷಾರ್. ಕಾಮಕಾಂಚನ ಸಂಬಂಧವಾಗಿ ಹುಷಾರ್. ಹೆಂಗಸಿನ ಮಾಯಾಬಲೆಗೆ ಒಮ್ಮೆ ಸಿಕ್ಕಿಬಟ್ಟೆ ಎಂದರೆ ಮತ್ತೆ ಏಳೋಹಾಗಿಲ್ಲ. ಅದು ವಿಶಾಲಾಕ್ಷಿಯ 2 ಸುಳಿ. ಅದಕ್ಕೆ ಒಂದು ಸಲ ಸಿಕ್ಕಿದವ ಮತ್ತೆ ಏಳೋ ಹಾಗೇ ಇಲ್ಲ. ಒಮ್ಮೊಮ್ಮೆ ಇಲ್ಲಿಗೆ ಬಂದುಹೋಗು.”
ತಾರಕ: “ಮನೆಯವರು ನನ್ನನ್ನು ಬಿಟ್ಟುಕೊಡುತ್ತಿಲ್ಲವಲ್ಲ.”
ಒಬ್ಬ ಭಕ್ತ: “ಒಂದು ಪಕ್ಷ ಯಾರೊ ಒಬ್ಬನ ತಾಯಿ ಆತನಿಗೆ ಹೇಳುತ್ತಾಳೆ : ‘ನೀನು ದಕ್ಷಿಣೇಶ್ವರಕ್ಕೆ ಹೋಗಕೂಡದು. ಹೋದೆಯೋ, ನೋಡು ನನ್ನ ರಕ್ತವನ್ನು ನೀನು ಹೀರಿದ ಹಾಗೆ!’”
ಶ್ರೀರಾಮಕೃಷ್ಣರು: “ಯಾವ ತಾಯಿ ಹಾಗೆ ಹೇಳುತ್ತಾಳೋ ಅವಳು ತಾಯಿಯೇ ಅಲ್ಲ; ಆಕೆ ಅವಿದ್ಯಾರೂಪಿಣಿ. ಅಂಥ ತಾಯಿಯ ಆಜ್ಞೆಯನ್ನು ಉಲ್ಲಂಘನೆ ಮಾಡಿದರೆ ಯಾವ ದೋಷವೂ ಬರದು. ಆಕೆ ಭಗವಂತನ ಸಾಕ್ಷಾತ್ಕಾರಕ್ಕೆ ವಿಘ್ನವನ್ನು ತಂದೊಡ್ಡುತ್ತಾಳೆ. ಭಗವಂತನ ಸಾಕ್ಷಾತ್ಕಾರಕ್ಕೋಸುಗ ಗುರುಹಿರಿಯರ ಆಜ್ಞೆಯನ್ನು ಉಲ್ಲಂಘನೆ ಮಾಡಿದರೆ ಯಾವ ಅಪರಾಧವೂ ಆಗದು. ಭರತನು ಶ್ರೀರಾಮನಿಗಾಗಿ ಕೈಕೇಯಿಯ ಆಜ್ಞೆಯನ್ನು ಮೀರಿದ. ಗೋಪಿಯರು ಶ್ರೀಕೃಷ್ಣನ ದರ್ಶನಕ್ಕಾಗಿ ತಮ್ಮ ಪತಿಗಳ ಪ್ರತಿಬಂಧಕಾಜ್ಞೆಯನ್ನು ಮೀರಿದರು. ಪ್ರಹ್ಲಾದ ಭಗವಂತನಿಗಾಗಿ ತಂದೆಯ ಆಜ್ಞೆಯನ್ನು ಮೀರಿದ. ಬಲಿಚಕ್ರವರ್ತಿ ಭಗವಂತನ ಪ್ರೀತ್ಯರ್ಥವಾಗಿ ತನ್ನ ಗುರು ಶ್ರೀ ಶುಕ್ರಾಚಾರ್ಯರ ಆಜ್ಞೆಯನ್ನು ಉಲ್ಲಂಘನೆ ಮಾಡಿದ. ವಿಭೀಷಣ ರಾಮನ ಅನುಗ್ರಹವನ್ನು ಪಡೆಯಲು ತನ್ನ ಹಿರಿಯ ಅಣ್ಣ ರಾವಣನ ಇಚ್ಛೆಗೆ ವ್ಯತಿರಿಕ್ತವಾಗಿ ನಡೆದುಕೊಂಡ. ಆದರೆ ನಮ್ಮ ಗುರುಹಿರಿಯರ ‘ಭಗವಂತನ ಕಡೆಗೆ ಹೋಗ ಬೇಡ’ ಎಂಬ ಆಜ್ಞೆಯೊಂದನ್ನು ಬಿಟ್ಟು ಉಳಿದವುಗಳನ್ನೆಲ್ಲಾ ಪಾಲಿಸಬೇಕು. ಎಲ್ಲಿ ನಿನ್ನ ಕೈ ನೋಡೋಣ.”
ಪರಮಹಂಸರು ತಾರಕನ ಕೈ ಎಷ್ಟು ಭಾರವಾಗಿದೆ ಎಂಬುದನ್ನು ಪರೀಕ್ಷಿಸಿ ನೋಡು ತ್ತಿದ್ದಾರೆ. ಕೆಲವು ನಿಮಿಷಗಳಾದನಂತರ ಹೇಳಿದರು: “ನಿನ್ನ ಮನಸ್ಸಿನಲ್ಲಿ ಒಂದು ಸ್ವಲ್ಪ ವಕ್ರತೆ ಇದೆ; – ಆದರೆ ಅದು ಹೊರಟುಹೋಗಿಬಿಡುತ್ತದೆ. ಭಗವಂತನಿಗೆ ಸ್ವಲ್ಪ ಪ್ರಾರ್ಥನೆಮಾಡು. ಆಗಾಗ ಇಲ್ಲಿಗೆ ಬಂದು ಹೋಗುತ್ತಿರು-ಅದೊಂದಷ್ಟು ವಕ್ರತೆ ಹೊರಟುಹೋಗಿ ಬಿಡುತ್ತದೆ. ಬೋಬಜಾರಿನಲ್ಲಿ ಮನೆ ಬಾಡಿಗೆಗೆ ತೆಗೆದುಕೊಂಡಿರೋನು ನೀನೇ ಏನು?’
ತಾರಕ: “ನಾನಲ್ಲ, ನನ್ನ ತಂದೆತಾಯಿಗಳು.”
ಶ್ರೀರಾಮಕೃಷ್ಣರು (ನಗುತ್ತ): “ಅವರೊ ಅಥವಾ ನೀನೋ? ಏನು ಹುಲಿಗೆ ಹೆದರಿಕೊಂಡಿಯೇನು?”
ತಾರಕನಿಗೆ ಆಗತಾನೆ ಮದುವೆ ಆಗಿತ್ತು. ಪುರುಷನಿಗೆ ಕಾಮಿನಿ ಒಂದು ಹುಲಿಯ ಹಾಗೆ ಅಂತ ಪರಮಹಂಸರ ಭಾವನೆಯೇನು?
ತಾರಕ ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡ. ಪರಮಹಂಸರು ಚಿಕ್ಕ ಮಂಚದ ಮೇಲೆ ಸುಮ್ಮನೆ ಮಲಗಿಕೊಂಡಿದ್ದಾರೆ. ತಾರಕನ ಸಂಬಂಧವಾಗಿ ಅವರು ಯೋಚಿಸುತ್ತಿರುವಂತೆ ಕಂಡಿತು. ಇದ್ದಕ್ಕಿದ್ದ ಹಾಗೆ ಮಾಸ್ಟರನ್ನು ಕೇಳಿದರು, “ಇವರಿಗಾಗಿ ನಾನು ಇಷ್ಟೊಂದು ವ್ಯಾಕುಲನಾಗಿಬಿಡುತ್ತೇನಲ್ಲ ಏಕೆ?” ಎಂದು. ಮಾಸ್ಟರ್ ಸುಮ್ಮನೆ ಕುಳಿತಿದ್ದಾನೆ, ಏನು ಉತ್ತರ ಕೊಡುವುದು ಅಂತ ಭಾವಿಸುತ್ತಿದ್ದಾನೆ. ಶ್ರೀರಾಮಕೃಷ್ಣರು ಮತ್ತೆ ಆತನನ್ನು ಕೇಳಿದರು, “ಏಕೆ ಸುಮ್ಮನೆ ಕುಳಿತಿದ್ದೀಯೆ? ಏನಾದರು ಉತ್ತರ ಕೊಡು” ಅಂತ.
ಮೋಹಿನೀಮೋಹನನ ಹೆಂಡತಿ ಪರಮಹಂಸರ ಕೊಠಡಿಗೆ ಬಂದು ಅವರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡಳು. ಪರಮಹಂಸರು ತಾರಕನ ಮಿತ್ರನ ಸಂಬಂಧವಾಗಿ ಮಾಸ್ಟರಿಗೆ ಹೇಳುತ್ತಿದ್ದಾರೆ.
ಶ್ರೀರಾಮಕೃಷ್ಣರು: “ತಾರಕ ಅವನನ್ನು ಏಕೆ ಜೊತೆಯಲ್ಲಿ ಕರೆದುಕೊಂಡು ಬಂದ?”
ಮಾಸ್ಟರ್: “ಬಹುಶಃ ಆತ ರಸ್ತೆಯಲ್ಲಿ ಸಿಕ್ಕಿರಬಹುದು. ಬಹಳ ದೂರದಿಂದ ಬರ ಬೇಕು; ಅದಕ್ಕಾಗಿ ಯಾರೊ ಒಬ್ಬನನ್ನ ಜೊತೆಯಲ್ಲಿ ಕರೆದುಕೊಂಡು ಬಂದಿರಬೇಕು.”
ಹೀಗೆ ಮಾತಾಡುತ್ತಿದ್ದ ಹಾಗೆಯೆ, ಇದ್ದಕ್ಕಿದ್ದ ಹಾಗೆ ಮೋಹಿನೀಮೋಹನನ ಹೆಂಡತಿ ಯನ್ನು ಸಂಬೋಧಿಸಿ ಹೇಳಿದರು. “ಅಪಮೃತ್ಯುವಿನಿಂದ ಪ್ರೇತವಾಗಬೇಕಾಗಿ ಬರುತ್ತದೆ. ಹುಷಾರ್; ಇದನ್ನು ನಿನ್ನ ಮನಸ್ಸಿಗೆ ಚೆನ್ನಾಗಿ ಒತ್ತಿ ಹೇಳು. ಇಷ್ಟೊಂದು ಸದ್ವಿಷಯಗಳನ್ನು ಕೇಳಿ ಮಾಡಿ ನೋಡಿ ಕೊನೆಗೆ ನಿನಗೆ ಈ ದುರವಸ್ಥೆಯೇ?”.
ಮೋಹಿನೀಮೋಹನ ಇನ್ನೇನು ಹೊರಡುವುದರಲ್ಲಿದ್ದಾನೆ. ಆತ ಪರಮಹಂಸರಿಗೆ ಸಾಷ್ಟಾಂಗಪ್ರಣಾಮ ಮಾಡಿದ. ಆತನ ಹೆಂಡತಿಯೂ ಅವರಿಗೆ ಪ್ರಣಾಮಮಾಡಿದಳು. ಪರಮಹಂಸರು ತಮ್ಮ ಕೊಠಡಿಯ ಉತ್ತರ ದಿಕ್ಕಿನ ಬಾಗಿಲ ಹತ್ತಿರ ನಿಂತುಕೊಂಡಿದ್ದಾರೆ. ಮೋಹಿನೀಮೋಹನನ ಹೆಂಡತಿ ತಲೆಗೆ ಮೇಲು ಸೆರಗು ಹಾಕಿಕೊಂಡು ಪರಮಹಂಸ ರೊಡನೆ ಏನನ್ನೋ ಮೆತ್ತಮೆತ್ತಗೆ ಹೇಳಿಕೊಳ್ಳುತ್ತಿದ್ದಾಳೆ.
ಶ್ರೀರಾಮಕೃಷ್ಣರು: “ನಿನಗೆ ಇಲ್ಲೇ ಇರಲು ಇಚ್ಛೆಯೇನು?”
ಮೋಹಿನೀಮೋಹನನ ಹೆಂಡತಿ: “ಇಲ್ಲಿಗೆ ಬಂದು ಕೆಲವು ದಿವಸ ಶಾರದಾದೇವಿ ಯವರೊಡನೆ ಇರಬೇಕು ಅಂತ ಇಚ್ಛೆ. ತಮಗೆ ಅದು ಸಮ್ಮತವೇ?”
ಶ್ರೀರಾಮಕೃಷ್ಣರು: “ಅದು ಬಹಳ ಒಳ್ಳೆಯದೆ. ಆದರೆ ನೀನು ಸಾಯೊ ವಿಷಯ ವಾಗಿ ಮಾತುಕತೆಯಾಡುತ್ತಿದ್ದೀಯೆ. ಜೊತೆಗೆ ಹತ್ತಿರವೇ ಗಂಗೆ ಬೇರೆ ಇದೆ!”
1. ಎಂ, ಮ, ಮಣಿ, ಮೋಹಿನೀಮೋಹನ-ಇವೆಲ್ಲ ಮಾಸ್ಟರ್ ಮಹಾಶಯರ (ಮಹೇಂದ್ರನಾಥ ಗುಪ್ತ) ಗುಪ್ತನಾಮಗಳು.
2. ಕಾಮಾರಪುಕುರದ ಹತ್ತಿರವಿರುವ ಒಂದು ನದಿ.