೨೨ನೆ ಫೆಬ್ರವರಿ ೧೮೮೫, ಫಾಲ್ಗುಣ ಶುಕ್ಲ ಅಷ್ಟಮಿ, ಭಾನುವಾರ
ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಕೊಠಡಿಗೆ ಈಶಾನ್ಯ ದಿಕ್ಕಿನಲ್ಲಿರುವ ಉದ್ದವಾದ ವರಾಂಡದಲ್ಲಿ ಕುಳಿತುಕೊಂಡಿದ್ದಾರೆ. ಆಗ ಸಮಯ ಬೆಳಗಿನ ಎಂಟು. ನರೇಂದ್ರ, ರಾಖಾಲ, ಗಿರೀಶ, ಬಾಬುರಾಮ, ಸುರೇಂದ್ರ, ಭವನಾಥ, ಗಿರೀಂದ್ರ, ವಿನೋದ, ಹಾಜರಾ, ರಾಮಲಾಲ, ರಾಮ, ನಿತ್ಯಗೋಪಾಲ, ಮಣಿಮಲ್ಲಿಕ, ಗಿರೀಶ, ಸಿಂಥಿಯ ಕವಿರಾಜ ಮಹೇಂದ್ರ ಇವರೇ ಮೊದಲಾದ ಅನೇಕ ಭಕ್ತರು ಬಂದಿದ್ದಾರೆ. ಶ್ರೀರಾಮಕೃಷ್ಣರ ಜನ್ಮದಿನ ಹಿಂದಿನ ಸೋಮವಾರ ಆಗಿತ್ತು. ಇಂದು ಭಕ್ತರೆಲ್ಲರೂ ಕೂಡಿ ಅದರ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. ಮಾಸ್ಟರ್ ಮನೆಯಿಂದ ಬಂದು ಪರಮಹಂಸರಿಗೆ ಪ್ರಣಾಮ ಮಾಡಿದ. ಅವರು ಆತನಿಗೆ ತಮ್ಮ ಹತ್ತಿರ ಕುಳಿತುಕೊಳ್ಳುವಂತೆ ಕೈಸನ್ನೆ ಮಾಡಿದರು.
ನರೋತ್ತಮ ಕೀರ್ತನೆ ಮಾಡುತ್ತಿದ್ದಾನೆ. ಅದನ್ನು ಕೇಳುತ್ತ ಕೇಳುತ್ತ ಇದ್ದಹಾಗೆಯೆ ಪರಮಹಂಸರು ಭಾವಾವಿಷ್ಟರಾಗಿದ್ದಾರೆ. ಶ್ರೀಕೃಷ್ಣ ತನ್ನ ಗೆಳೆಯರಾದ ಗೋಪಾಲರನ್ನು ಹುಲ್ಲುಗಾವಲಿನಲ್ಲಿ ಭೇಟಿಮಾಡಿದುದರ ಸಂಬಂಧವಾಗಿ ಕೀರ್ತನೆ ನಡೆಯುತ್ತಿದೆ. ಶ್ರೀಕೃಷ್ಣ ಇನ್ನೂ ಹುಲ್ಲುಗಾವಲಿಗೆ ಬಂದಿಲ್ಲ, ಸ್ವಲ್ಪ ತಡವಾಗಿದೆ. ಗೋಪಾಲರು ಆತನ ಬರುವನ್ನೇ ಎದುರು ನೋಡುತ್ತಿದ್ದಾರೆ. ಅವರಲ್ಲಿ ಒಬ್ಬ ಹೇಳುತ್ತಾನೆ, “ಬಹುಶಃ’ ಯಶೋದೆ ಆತನನ್ನು ಬಿಟ್ಟುಕೊಟ್ಟಿಲ್ಲ ಅಂತ ಕಾಣುತ್ತೆ” ಎಂದು. ಬಲಾಯಿ ಸ್ವಲ್ಪ ಹುಮ್ಮಸ್ಸಿನಿಂದ ಹೇಳುತ್ತಾನೆ, “ನಾನು ತುತೂರಿ ಊದಿ ಆತನನ್ನು ಇಲ್ಲಿಗೆ ಬರುವಂತೆ ಮಾಡುತ್ತೇನೆ” ಕೀರ್ತನೆ ಮುಂದುವರಿಯುತ್ತಿದೆ. ಶ್ರೀಕೃಷ್ಣ ವೇಣುನಾದ ಮಾಡುತ್ತಿದ್ದಾನೆ. ಅದನ್ನು ಕೇಳಿ ಗೋಪಾಲ ರಲ್ಲಿ ಗೋಪಿಯರಲ್ಲಿ ವಿವಿಧ ಭಾವಗಳು ಉತ್ಪನ್ನವಾಗುತ್ತಿವೆ.
ಪರಮಹಂಸರ ದೃಷ್ಟಿ ಇದ್ದಕ್ಕಿದ್ದ ಹಾಗೆ ನರೇಂದ್ರನ ಮೇಲೆ ಬಿತ್ತು. ಆತ ಅವರ ಹತ್ತಿರವೆ ಕುಳಿತಿದ್ದ. ಅವರು ಎದ್ದು ನಿಂತು ಸಮಾಧಿಸ್ಥರಾಗಿದ್ದಾರೆ. ನರೇಂದ್ರನ ಮೊಣಕಾಲನ್ನು ತಮ್ಮ ಒಂದು ಪಾದದಿಂದ ಸ್ಪರ್ಶಿಸಿ ನಿಂತುಕೊಂಡಿದ್ದಾರೆ. ಪ್ರಕೃತಿಸ್ಥರಾದ ನಂತರ ಮತ್ತೆ ಕುಳಿತುಕೊಂಡರು. ನರೇಂದ್ರ ಎದ್ದು ಕೊಠಡಿ ಕಡೆ ಹೋದ. ಕೀರ್ತನೆ ಮುಂದುವರಿಯುತ್ತಿದೆ.
ಶ್ರೀರಾಮಕೃಷ್ಣರು ಬಾಬುರಾಮನಿಗೆ ಪಿಸುಗುಟ್ಟಿದರು: “ಕೊಠಡಿಯಲ್ಲಿ ಸ್ವಲ್ಪ ಕೀರು ಇದೆ. ನರೇಂದ್ರನಿಗೆ ಕೊಟ್ಟು ಬಾ.”
ಪರಮಹಂಸರು ನರೇಂದ್ರನಲ್ಲಿ ಸಾಕ್ಷಾತ್ ನಾರಾಯಣನನ್ನು ನೋಡುತ್ತಿರುವರೇನು? ಕೀರ್ತನೆ ಸಮಾಪ್ತಿಯಾದ ನಂತರ ಪರಮಹಂಸರು ತಮ್ಮ ಕೊಠಡಿಗೆ ಹಿಂದಿರುಗಿ ಬಂದು ಅಕ್ಕರೆಯಿಂದ ನರೇಂದ್ರನಿಗೆ ಮಿಠಾಯಿ ತಿನ್ನಿಸುತ್ತಿದ್ದಾರೆ.
ಭಗವಂತ ಶ್ರೀರಾಮಕೃಷ್ಣರ ರೂಪಿನಲ್ಲಿ ಅವತರಿಸಿದ್ದಾನೆ ಎಂಬುದು ಗಿರೀಶನ ದೃಢ ವಿಶ್ವಾಸ.
ಗಿರೀಶ (ಶ್ರೀರಾಮಕೃಷ್ಣರಿಗೆ): “ನಿಮ್ಮ ಇಡೀ ವ್ಯವಹಾರವೆಲ್ಲ ಶ್ರೀಕೃಷ್ಣನ ಹಾಗೆ. ಶ್ರೀಕೃಷ್ಣ ಯಾವ ರೀತಿಯಾಗಿ ಯಶೋದೆಯ ಎದುರು ನಟಿಸುತ್ತಿದ್ದನೊ ಹಾಗೆಯೇ ನೀವು ನಮ್ಮೆದುರು ನಟಿಸುತ್ತಿದ್ದೀರಿ.”
ಶ್ರೀರಾಮಕೃಷ್ಣರು: “ಆತ ನಟಿಸಿದ್ದೇನೊ ನಿಜ. ಏಕೆಂದರೆ ಆತ ಅವತಾರಪುರುಷ. ಭಗವಂತನ ನರಲೀಲೆಯಲ್ಲಿ ಹಾಗೆ ವರ್ತಿಸಬೇಕಾಗುತ್ತದೆ. ನೋಡು, ಗೋವರ್ಧನ ಗಿರಿಯನ್ನೇ ತನ್ನ ಕೈಯಲ್ಲಿ ಎತ್ತಿ ಹಿಡಿದಂತೆ ಶ್ರೀಕೃಷ್ಣ ತನ್ನ ತಂದೆ ನಂದನ ಎದುರು ಬಂದು ಕಾಲುಮಣೆ ಎತ್ತಲೂ ಬಹಳ ಕಷ್ಟವಾಗಿರುವಂತೆ ನಟಿಸಿದ!”
ಗಿರೀಶ: “ತಿಳಿದುಕೊಂಡು ಬಿಟ್ಟೆ; ಈಗ ನೀವು ಯಾರು ಎಂಬುದನ್ನು ತಿಳಿದುಕೊಂಡು ಬಿಟ್ಟೆ.”
ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತಿದ್ದಾರೆ. ಆಗ ಘಂಟೆ ಹನ್ನೊಂದು. ರಾಮ ಮೊದಲಾದವರು ಪರಮಹಂಸರಿಗೆ ಹೊಸ ಬಟ್ಟೆಯನ್ನು ಉಡಿಸಲು ಹೋಗುತ್ತಿದ್ದಾರೆ. ಅವರು ಹೇಳುತ್ತಿದ್ದಾರೆ, “ಬೇಡಿ, ಬೇಡಿ” ಅಂತ. ಅವರು ಒಬ್ಬ ಇಂಗ್ಲೀಷು ಓದಿದವನನ್ನು ತೋರಿಸಿ ಹೇಳುತಿದ್ದಾರೆ, “ಆತ ಏನು ತಿಳಿದುಕೊಳ್ಳುತ್ತಾನೆ ನೀವು ಹೀಗೆಲ್ಲ ಮಾಡಿದರೆ?” ಭಕ್ತರ ತೀವ್ರ ಆಕಾಂಕ್ಷೆಯನ್ನು ನೋಡಿ ಹೇಳಿದರು, “ಒಳ್ಳೆಯದು, ನೀವು ಅಷ್ಟೊಂದು ಕೇಳಿಕೊಳ್ಳುತ್ತಿರುವುದರಿಂದ ಉಟ್ಟುಕೊಳ್ಳುತ್ತೇನೆ.”
ಭಕ್ತರು ಪರಮಹಂಸರ ಕೊಠಡಿಯಲ್ಲೇ ಅವರಿಗೆ ಊಟಕ್ಕೆ ಅಣಿಮಾಡುತ್ತಿದ್ದಾರೆ. ಪರಮಹಂಸರು ನರೇಂದ್ರನಿಗೆ ಒಂದಷ್ಟು ಹೊತ್ತು ಹಾಡುವಂತೆ ಹೇಳಿದರು.
ನರೇಂದ್ರ ಹಾಡುತ್ತಿದ್ದಾನೆ:
ಮಿರುಗುತಿದೆ ನಿನ್ನ ಅಪರೂಪದ ರಾಶಿ ನಿಬಿಡಾಂಧಕಾರದಲ್ಲಿ
ನಿನ್ನನದರಿಂದಲೇ ನೆನೆವರೌ ಯೋಗಿಗಳು ಗಿರಿಗುಹೆಗಳಲ್ಲಿ!
ಅನಂತ ಅಂಧಕಾರದ ಮೇಲೆ ಮಹಾನಿರ್ವಾಣ ಹಿಲ್ಲೋಲದಲ್ಲಿ
ಹರಿಯುತಿದೆ ಚಿರಶಾಂತಿ ನಿರಂತರವು ಪರಿಮಳವ ಚೆಲ್ಲಿ!
ಕಗ್ಗತ್ತಲುಡುಗೆಯನು ಧರಿಸಿ ಈ ಮಹಾಕಾಲರೂಪದಲ್ಲಿ
ನೀನಾರು ತಾಯಿ ಮಗ್ನಳಾಗಿರುವೆ ಮಹಾಸಮಾಧಿಯಲ್ಲಿ?
ನಿನ್ನಭಯಪದಕಮಲ ಪ್ರೇಮಕಾಂತಿಯ ಮಿಂಚು ಬೆಳಕಿನಲ್ಲಿ
ಅಟ್ಟಹಾಸದೊಳಿರುವ ನಿನ್ನ ಚಿನ್ಮಯವದನ ಕಾಣುತಿಹುದಿಲ್ಲಿ!
‘ನೀನಾರು ತಾಯಿ ಮಗ್ನಳಾಗಿರುವೆ ಮಹಾಸಮಾಧಿಯಲ್ಲಿ?’ ಎಂಬ ಚರಣವನ್ನು ಹಾಡಿದೊಡನೆಯೆ ಪರಮಹಂಸರು ಬಾಹ್ಯಜ್ಞಾನಶೂನ್ಯರಾಗಿ ಸಮಾಧಿಸ್ಥರಾಗಿದ್ದಾರೆ. ಬಹಳ ಹೊತ್ತು ಆ ಸ್ಥಿತಿಯಲ್ಲಿ ಇದ್ದ ನಂತರ ಅವರು ಪ್ರಕೃತಿಸ್ಥರಾಗಿದ್ದಾರೆ. ಬಳಿಕ ಭಕ್ತರು ಅವರನ್ನು ಊಟಕ್ಕೆ ಕೂರಿಸಿದರು. ಈಗಲೂ ಭಾವಾವಿಷ್ಟರಾಗೇ ಇರುವರು. ಊಟ ಮಾಡುತ್ತಿದ್ದಾರೆ, ಆದರೆ ಎರಡು ಕೈಯಿಂದ. ಅವರು ಭವನಾಥನಿಗೆ ಹೇಳಿದರು, “ನನ್ನ ಬಾಯಿಗೆ ತುತ್ತು ಹಾಕು” ಅಂತ. ಅವರಿನ್ನೂ ಭಾವಾವಿಷ್ಟರಾಗೇ ಇರುವುದರಿಂದ ತಾವೇ ಊಟಮಾಡಲು ಆಗುತ್ತಿಲ್ಲ. ಭವನಾಥ ಅವರಿಗೆ ಊಟ ಮಾಡಿಸುತ್ತಿದ್ದಾನೆ. ಅವರು ಎಲ್ಲೋ ಸ್ವಲ್ಪ ಊಟಮಾಡಿದರು. ಊಟವಾದ ನಂತರ ರಾಮ ಅವರಿಗೆ ಹೇಳಿದ: “ನಿತ್ಯಗೋಪಾಲ ನಿಮ್ಮ ಎಲೆಯಿಂದ ಊಟ ಮಾಡುತ್ತಾನೆ”.
ಶ್ರೀರಾಮಕೃಷ್ಣರು: “ಏಕೆ ನನ್ನ ಎಲೆಯಿಂದ? ನನ್ನ ಎಲೆಯಿಂದ ಏಕೆ?”
ರಾಮ: “ನೀವೇನೊ ಬೇಡ ಅಂತ ಹೇಳುತ್ತೀರಿ. ಆತ ಬಿಡುತ್ತಾನೇನು?”
ನಿತ್ಯಗೋಪಾಲ ಭಾವಾವಿಷ್ಟನಾದುದನ್ನು ನೋಡಿ ಪರಮಹಂಸರು ಆತನ ಬಾಯಿಗೆ ಒಂದೆರಡು ತುತ್ತು ಅನ್ನ ಹಾಕಿದರು.
ದೋಣಿ ಮಾಡಿಕೊಂಡು ಕೆಲವು ಕೊನ್ನಗರದ ಭಕ್ತರು ಬರುತ್ತಿದ್ದಾರೆ. ಅವರು ಕೀರ್ತನೆ ಮಾಡುತ್ತ ಮಾಡುತ್ತ ಪರಮಹಂಸರ ಕೊಠಡಿಯನ್ನು ಪ್ರವೇಶಮಾಡಿದರು. ಕೀರ್ತನೆ ಮುಗಿದ ನಂತರ ಅವರು ಸ್ವಲ್ಪ ಉಪಾಹಾರ ಮಾಡಲು ಕೊಠಡಿಯನ್ನು ಬಿಟ್ಟು ಹೊರಕ್ಕೆ ಹೋದರು. ಕೀರ್ತನಗಾರ, ನರೋತ್ತಮ ಪರಮಹಂಸರ ಕೊಠಡಿಯಲ್ಲಿ ಕುಳಿತಿರು ವನು. ಪರಮಹಂಸರು ನರೋತ್ತಮ ಮೊದಲಾದವರಿಗೆ ಹೇಳುತ್ತಿದ್ದಾರೆ, “ಇವರದು ಬಹಳ ಸಪ್ಪೆ ಹಾಡುಗಳು. ಹಾಡು ಹೇಗಿರಬೇಕೆಂದರೆ ಎಲ್ಲವೂ ಎದ್ದು ಸುಮ್ಮನೆ ಕುಣಿಯಬೇಕು. ಈ ವಿಧದ ಹಾಡುಗಳನ್ನು ಹಾಡಬೇಕು:
ಗೌರಾಂಗನು ಹುಟ್ಟಿದೂರು
ಅವರ ಪ್ರೇಮ ಹಿಲ್ಲೋಲದಿ
ಸ್ಪಂದಿಸುತಿದೆ ಮೋದದಿ!
ಅದರೊಡನೆ ಈ ಚರಣಗಳನ್ನು:
ಹರಿನಾಮವನು ನುತಿಸಿ, ಆನಂದಬಾಷ್ಪವನು
ಕರೆವಣ್ಣತಮ್ಮಂದಿರು ಇವರು ನೋಡು!….
ಒದೆಯನಿತ್ತರು, ಹರಿಯ ಸುಧೆಯನ್ನೆ ನೀಡುವರು!….
ಮತ್ತೆ ಇದನ್ನು:
ಗೌರಾಂಗ ನಿತ್ಯಾನಂದರೆನ್ನುವ
ದಿವ್ಯ ಸೋದರವರ್ಯರೇ…..”
ಈಗ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಎಲ್ಲರೂ ತೃಪ್ತಿಕರವಾಗಿ ಊಟ ಮಾಡಿದರು. ಪರಮಹಂಸರು ಮಾಸ್ಟರಿಗೆ ಹೇಳಿದರು, “ಮುಖರ್ಜಿಗಳಿಗೆ ಹೇಳಲಿಲ್ಲವೇನು? ಬಾವುಲರಿಗೆ ಊಟಕ್ಕೆ ಹಾಕುವಂತೆ ಸುರೇಂದ್ರನಿಗೆ ಹೇಳು” ಅಂತ.
ವಿಪಿನಸರ್ಕಾರ ಬಂದಿದ್ದಾನೆ. ಭಕ್ತರು ಆತನ ಪರಿಚಯವನ್ನು ಪರಮಹಂಸರಿಗೆ ಮಾಡಿಕೊಟ್ಟರು. ಪರಮಹಂಸರು ಎದ್ದು ಕುಳಿತು ಭಕ್ತರಿಗೆ ಹೇಳಿದರು, “ಈತನಿಗೆ ಒಂದು ಆಸನ ಹಾಕಿ ಎಲೆಡಿಕೆ ಕೊಡಿ” ಅಂತ. ಅವರು ವಿನಯದಿಂದ ಆತನಿಗೆ ಹೇಳಿದರು, “ನಿಮ್ಮನ್ನು ವಿಚಾರಿಸಲು ಸಾಧ್ಯವಾಗಲಿಲ್ಲ; ಇಂದು ಹೆಚ್ಚು ಗಲಾಟೆ” ಅಂತ.
ಗಿರೀಂದ್ರನನ್ನು ನೋಡಿ ಪರಮಹಂಸರು ಬಾಬುರಾಮನಿಗೆ ಹೇಳಿದರು, “ಇವನಿಗೊಂದು ಆಸನ ಹಾಕು” ಅಂತ. ನಿತ್ಯಗೋಪಾಲ ನೆಲದ ಮೇಲೆ ಕುಳಿತಿರುವು ದನ್ನು ಕಂಡು ಒಬ್ಬ ಭಕ್ತನಿಗೆ ಹೇಳಿದರು, “ಆತನಿಗೂ ಒಂದು ಆಸನ ಹಾಕು” ಅಂತ.
ಸಿಂಥಿಯ ಕವಿರಾಜ ಮಹೇಂದ್ರ ಬಂದಿದ್ದಾನೆ. ಪರಮಹಂಸರು ನಗುತ್ತ ರಾಖಾಲನಿಗೆ ಸನ್ನೆ ಮಾಡಿದರು, “ಆತನಿಗೆ ನಿನ್ನ ಕೈ ತೋರಿಸು” ಅಂತ.
ರಾಮಲಾಲನ ಕಡೆ ತಿರುಗಿ ಪರಮಹಂಸರು ಹೇಳಿದರು, “ಗಿರೀಶಘೋಷನೊಡನೆ ಸ್ನೇಹ ಬೆಳೆಸಿಕೊ; ಆಗ ಒಂದು ಕಾಸೂ ಖರ್ಚುಮಾಡದೆ ನಾಟಕ ನೋಡಿ ಬರಬಹುದು” ಅಂತ.
ನರೇಂದ್ರ ಹೊರಗಿನ ವರಾಂಡದಲ್ಲಿ ಹಾಜರಾನೊಡನೆ ಬಹಳ ಹೊತ್ತಿನಿಂದ ಹರಟೆ ಹೊಡೆಯುತ್ತಿದ್ದಾನೆ. ತನ್ನ ತಂದೆ ಕಾಲವಾದ ನಂತರ ಬಹಳವಾಗಿ ಆರ್ಥಿಕ ಮುಗ್ಗಟ್ಟಿನಿಂದ ನರಳುತ್ತಿದ್ದಾನೆ. ಈಗ ನರೇಂದ್ರ ಕೊಠಡಿಯೊಳಕ್ಕೆ ಬಂದು ಕುಳಿತುಕೊಂಡ.
ಶ್ರೀರಾಮಕೃಷ್ಣರು ನರೇಂದ್ರನಿಗೆ: “ನೀನು ಹಾಜರಾನೊಡನೆ ಕುಳಿತಿದ್ದೆಯೇನು? ನೀನು ವಿದೇಶಿ, ಆತ ವಿರಹಿ! ಹಾಜರಾನಿಗೂ ಒಂದು ಸಾವಿರದ ಐನೂರು ರೂಪಾಯಿ ಬೇಕಾಗಿದೆ. (ನಗು)
“ಹಾಜರಾ ಹೇಳುತ್ತಾನೆ, ‘ನರೇಂದ್ರನಿಗೆ ಎಲ್ಲೋ ಅಲ್ವಸ್ವಲ್ಪ ರಜೋಗುಣದ ಸ್ಪರ್ಶವಿದ್ದರೂ ಆತ ನೂರಕ್ಕೆ ನೂರು ಭಾಗ ಸತ್ತ್ವಗುಣಿಯಾಗಿಬಿಟ್ಟಿದ್ದಾನೆ. ಆದರೆ ನಾನು ನೂರಕ್ಕೆ ನೂರಿಪ್ಪತ್ತೈದು ಭಾಗ ವಿಶುದ್ಧ ಸತ್ತ್ವಗುಣಿಯಾಗಿಬಿಟ್ಟಿದ್ದೇನೆ’. (ಎಲ್ಲರೂ ನಗುತ್ತಾರೆ).
“ನಾನು ಹಾಜರಾನಿಗೆ ಹೇಳಿದೆ, ‘ನೀನು ಕೇವಲ ವಿಚಾರದಲ್ಲೇ ತೊಡಗಿರುವುದರಿಂದ ಒಣಮರದಂತೆ ಕಾಣುತ್ತಿದ್ದೀಯೆ.’ ಆತ ಹೇಳಿದ, ‘ಅದಲ್ಲ, ನಾನು ಸೌರಸುಧೆಯನ್ನು ಪಾನಮಾಡುತ್ತಿರೋದರಿಂದ ಒಣಮರದಂತೆ ಕಾಣುತ್ತಿದ್ದೇನೆ’ ಅಂತ.
“ನಾನು ಶುದ್ಧಭಕ್ತಿಯ ಸಂಬಂಧವಾಗಿ ಮಾತನಾಡುವಾಗ ಆತನಿಗೆ ಹೇಳೋದುಂಟು, ‘ಶುದ್ಧಭಕ್ತ ಧನಕನಕಾದಿಗಳಾವುದಕ್ಕೂ ಪ್ರಾರ್ಥಿಸುವುದಿಲ್ಲ.’ ಆತ ಹೇಳೋದುಂಟು, ‘ಆತನ ಕೃಪಾಪ್ರವಾಹ ಬಂದಾಗ ನದಿಗಳೆಲ್ಲಾ ಉಕ್ಕಿ ಹರಿಯಲಾರಂಭಿಸುತ್ತವೆ; ಕೆರೆಕಟ್ಟೆ ಕುಂಟೆ ಗಳೆಲ್ಲ ತುಂಬಿ ತುಳುಕಾಡಲಾರಂಭಿಸುತ್ತವೆ; ಅದೇ ರೀತಿಯಾಗಿ ಶುದ್ಧ ಭಕ್ತಿಯೂ ಲಭಿಸುತ್ತದೆ, ಷಡೈಶ್ವರ್ಯವೂ ದೊರಕುತ್ತದೆ; ಧನಕನಕಾದಿಗಳೂ ದೊರಕುತ್ತವೆ’ ಅಂತ.”
ಪರಮಹಂಸರ ಕೊಠಡಿಯಲ್ಲಿ ನರೇಂದ್ರಾದಿ ಅನೇಕ ಭಕ್ತರು ಕುಳಿತಿದ್ದಾರೆ. ಗಿರೀಶನೂ ಬಂದು ಕುಳಿತುಕೊಂಡ.
ಶ್ರೀರಾಮಕೃಷ್ಣರು (ಗಿರೀಶನಿಗೆ): “ನಾನು ನರೇಂದ್ರನನ್ನು ಆತ್ಮಸ್ವರೂಪ ಅಂತ ಭಾವಿಸುತ್ತೇನೆ, ನಾನು ಆತನ ಅನುಚರ.”
ಗಿರೀಶ: “ನೀವು ಯಾರನ್ನು ತಾನೆ ಅನುಸರಿಸುತ್ತಿಲ್ಲ?”
ಶ್ರೀರಾಮಕೃಷ್ಣರು (ನಗುತ್ತ): “ಆತನದು ಪುರುಷಭಾವ, ನನ್ನದು ಪ್ರಕೃತಿಭಾವ. ನರೇಂದ್ರನದು ತುತ್ತತುದಿಯ ಆಲಯ, ಅಖಂಡಾಲಯ.”
ಗಿರೀಶ ಹೊರಗಡೆ ಹುಕ್ಕ ಸೇದಲು ಹೋದ.
ನರೇಂದ್ರ (ಶ್ರೀರಾಮಕೃಷ್ಣರಿಗೆ): “ಗಿರೀಶಘೋಷನೊಡನೆ ಮಾತುಕತೆಯಾಡಿದೆ. ಆತ ಒಬ್ಬ ದೊಡ್ಡ ಮನುಷ್ಯನೆ. ನಾವು ನಿಮ್ಮ ವಿಷಯವಾಗಿ ಮಾತಾಡಿದೆವು.”
ಶ್ರೀರಾಮಕೃಷ್ಣರು: “ನನ್ನ ವಿಷಯವಾಗಿ ಏನನ್ನು?”
ನರೇಂದ್ರ: “ನೀವು ನಿರಕ್ಷರಕುಕ್ಷಿಗಳು, ನಾವು ಮಹಾಪಂಡಿತರು ಎಂಬಿವೇ ಮೊದಲಾದ ವಿಷಯಗಳ ಸಂಬಂಧವಾಗಿ ಮಾತಾಡಿದೆವು.” (ನಗು.)
ಮಣಿಮಲ್ಲಿಕ (ಶ್ರೀರಾಮಕೃಷ್ಣರಿಗೆ): “ನೀವು ಯಾವುದನ್ನೂ ಓದದೇನೇ ಪಂಡಿತ ರಾಗಿ ಬಿಟ್ಟಿದ್ದೀರಿ.”
ಶ್ರೀರಾಮಕೃಷ್ಣರು: “ಸತ್ಯವಾಗಿ ಹೇಳುತ್ತೇನೆ, ನಾನು ವೇದಾಂತ ಮೊದಲಾದ ಶಾಸ್ತ್ರ ಗಳನ್ನು ಓದಲಿಲ್ಲವಲ್ಲ ಅಂತ ಒಂದು ಕಿಂಚಿತ್ತೂ ದುಃಖವಾಗುತ್ತಿಲ್ಲ. ನನಗೆ ಗೊತ್ತಾಗಿದೆ ವೇದಾಂತದ ಸಾರ ಬ್ರಹ್ಮಸತ್ಯ ಜಗತ್ಮಿಥ್ಯಾ ಅಂತ. ಗೀತೆಯ ಸಾರವೇನು? ಗೀತಾ ಎಂಬ ಪದವನ್ನು ಒಂದು ಹತ್ತು ಸಾರಿ ಉಚ್ಚರಿಸಿದರೆ ಅದು ಏನಾಗಿ ಕೇಳಿಬರುತ್ತದೊ ಅದೇನೆ. ಅದು ‘ತ್ಯಾಗಿ, ತ್ಯಾಗಿ’ ಅಂತ ಕೇಳಿಬರುತ್ತದೆ.
“ಶಾಸ್ತ್ರದ ಸಾರವನ್ನು ಗುರುಮುಖೇನ ಕೇಳಿ ತಿಳಿದುಕೊಳ್ಳಬೇಕು. ಬಳಿಕ ಸಾಧನೆ ಭಜನೆಯಲ್ಲಿ ತೊಡಗಬೇಕು. ಒಬ್ಬ ಒಬ್ಬನಿಗೆ ಒಂದು ಪತ್ರ ಬರೆದಿದ್ದ, ಅದನ್ನು ಓದುವುದಕ್ಕೆ ಮುನ್ನವೇ ಅದು ಎಲ್ಲೋ ಬಿದ್ದುಹೋಗಿತ್ತು. ಆಗ ಎಲ್ಲರೂ ಕೂಡಿ ಹುಡುಕಲಾರಂಭಿಸಿದರು. ಯಾವಾಗ ಆ ಪತ್ರ ಮತ್ತೆ ಸಿಕ್ಕಿತೋ ಆಗ ಅದನ್ನು ಓದಿ ನೋಡಿದಾಗ ಅದರಲ್ಲಿ ಬರೆದಿತ್ತು. ‘ಐದು ಸೇರು ಮಿಠಾಯಿ ಮತ್ತು ಒಂದು ಪಂಚೆಯನ್ನು ಕೊಂಡು ಕಳುಹಿಸು’ ಅಂತ. ಬಳಿಕ ಆ ಪತ್ರವನ್ನು ಬಿಸಾಡಿ ಐದು ಸೇರು ಮಿಠಾಯಿ ಒಂದು ಪಂಚೆ ಕೊಂಡುಕೊಳ್ಳಲು ಆತ ಹೊರಟ. ಅದೇ ರೀತಿಯಾಗಿ ಶಾಸ್ತ್ರಗಳ ಸಾರವೇನೆಂಬುದನ್ನು ಅರಿತುಕೊಂಡ ಮೇಲೆ ಮತ್ತೆ ಅವುಗಳ ಆವಶ್ಯಕತೆ ಯೇನಿದೆ? ಬಳಿಕ ಸಾಧನೆ ಭಜನೆಯಲ್ಲಿ ತೊಡಗಬೇಕು.”
ಈಗ ಗಿರೀಶ ಕೊಠಡಿಗೆ ಬಂದ.
ಶ್ರೀರಾಮಕೃಷ್ಣರು (ಗಿರೀಶನಿಗೆ): “ಏನಿದು? ನನ್ನ ವಿಷಯವಾಗಿ ನೀವು ಏನೇನೊ ಮಾತನಾಡಿದರಂತಲ್ಲ? ನಾನು ಉಂಡು ತಿಂದು ಸುಮ್ಮನಿದ್ದೇನೆ.”
ಗಿರೀಶ: “ನಿಮ್ಮ ವಿಷಯವಾಗಿ ನಾವು ಇನ್ನೇನು ತಾನೆ ಮಾತನಾಡಿಕೊಳ್ಳಬಹುದು. ನೀವು ಒಬ್ಬ ಸಾಧುವೇನು?”
ಶ್ರೀರಾಮಕೃಷ್ಣರು: “ನಾನು ಸಾಧು ಏನಲ್ಲ. ಸತ್ಯವಾಗಿ ನಾನು ಒಬ್ಬ ಸಾಧು ಅಂತ ನನಗನಿಸುತ್ತಿಲ್ಲ.”
ಗಿರೀಶ: “ಹುಡುಗಾಟಿಕೆಯಲ್ಲಿಯೂ ನಿಮ್ಮನ್ನು ಸೋಲಿಸೋಕಾಗಲಿಲ್ಲವಲ್ಲ!”
ಶ್ರೀರಾಮಕೃಷ್ಣರು: “ನಾನು ಕೆಂಪು ಅಂಚಿನ ಪಂಚೆ ಉಟ್ಟು ಜಯಗೋಪಾಲ ಸೇನನ ಮನೆಗೆ ಹೋಗಿದ್ದೆ. ಅಲ್ಲಿ ಕೇಶವಸೇನ ಇದ್ದ. ಕೇಶವಸೇನ ನನ್ನ ಕೆಂಪು ಅಂಚಿನ ಪಂಚೆಯನ್ನು ನೋಡಿ ಹೇಳಿದ, ‘ಏನು ಸಮಾಚಾರ? ಬಣ್ಣದ ಸ್ಫುರಣ ಇಂದು! ಕೆಂಪು ಅಂಚಿನ ಪ್ರದರ್ಶನ ಇಂದು!’ ಅಂತ. ನಾನು ಹೇಳಿದೆ, ‘ಕೇಶವಸೇನನ ಮನಸ್ಸನ್ನು ಎಳೆಯಬೇಕಾಗಿದೆಯಲ್ಲ, ಅದಕ್ಕಾಗಿ ಈ ಪ್ರದರ್ಶನ!’ ಅಂತ.”
ಈಗ ಮತ್ತೆ ನರೇಂದ್ರ ಹಾಡಲು ಯತ್ನಿಸುವನು. ಶ್ರೀರಾಮಕೃಷ್ಣರು ತಂಬೂರಿಯನ್ನು ಗೂಟದಿಂದ ಬಿಚ್ಚಿ ತರುವಂತೆ ಮಾಸ್ಟರಿಗೆ ಹೇಳಿದರು. ನರೇಂದ್ರ ಅದನ್ನು ಬಹಳ ಹೊತ್ತಿನಿಂದ ಶ್ರುತಿಮಾಡುತ್ತಲೇ ಇದ್ದಾನೆ. ಪರಮಹಂಸರಿಗೆ ಮತ್ತು ಉಳಿದ ಭಕ್ತರಿಗೆ ಇದನ್ನು ನೋಡಿ ಬಹಳ ಬೇಜಾರಾಯಿತು. ಆಗ ವಿನೋದ ಹೇಳಿದ, “ಇಂದು ಶ್ರುತಿಮಾಡೋ ಕೆಲಸವೇ, ಹಾಡೋದು ಇನ್ನೊಂದು ದಿನ.” (ಎಲ್ಲರೂ ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು (ನಗುತ್ತಿದ್ದಾರೆ ಮತ್ತು ಹೇಳುತ್ತಿದ್ದಾರೆ): “ಆ ತಂಬೂರಿಯನ್ನು ಒಡೆದು ಪುಡಿಪುಡಿ ಮಾಡಿಬಿಡಬೇಕು ಅಂತ ಎನಿಸುತ್ತದೆ ನನಗೆ! ಏನಿದು ಇನ್ನೂ ‘ಟಂ, ಟಂ’ ಅಂತಲೇ ಇದ್ದಾನೆ!- ಬಳಿಕ ಅದರ ಮೇಲೆ, ‘ತಾನಾ-ನಾನಾ-ನೇರೆ-ನುಮ್’ ಅಂತ ಅಭ್ಯಾಸ ಮಾಡುತ್ತಾನೆ ಅಂತ ಕಾಣುತ್ತೆ.”
ಭವನಾಥ: “ಸಂಗೀತ ಆರಂಭವಾಗುವುದಕ್ಕೆ ಮುನ್ನ ಹೀಗೆಯೇ ಬೇಜಾರು ಆಗುತ್ತದೆ.”
ನರೇಂದ್ರ (ಇನ್ನೂ ಶ್ರುತಿಮಾಡುತ್ತಲೆ): “ಕಲೆ ಗೊತ್ತಿಲ್ಲದವರಿಗೆ ಹಾಗಾಗುತ್ತದೆ.”
ಶ್ರೀರಾಮಕೃಷ್ಣರು: “ನೋಡು ನಮ್ಮ ಬಾಯಿಗಳನ್ನೆಲ್ಲ ಮುಚ್ಚಿಸಿಬಿಟ್ಟ!”
ನರೇಂದ್ರ ಹಾಡಲಾರಂಭಿಸಿದ. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ನಿತ್ಯಗೋಪಾಲ ಮತ್ತು ಉಳಿದ ಭಕ್ತರು ನೆಲದ ಮೇಲೆ ಕುಳಿತು ಕೇಳುತ್ತಿದ್ದಾರೆ.
ನರೇಂದ್ರ ಹಾಡಿದ:
ನನ್ನ ಹೃದಯದ ದಿವ್ಯ ಸೂತ್ರಧಾರಿಣಿ ನೀನು
ತೊಡೆಯ ತೊಟ್ಟಿಲೊಳಿಟ್ಟು ಪಾಲಿಸಿರುವೆ!…….
ಬಳಿಕ ಹಾಡಿದ:
ಹೃದಯದೊಂದೇ ತಂತಿಯನು ಮಿಡಿಮಿಡಿದು ನುಡಿಯೊ ಇನ್ನು
ಎದೆಗೆ ಸುಧೆಯನು ಕರೆವ ಮಾತಾಯ ಶ್ರೀ ನಾಮವನ್ನು!
ಮತ್ತೆ:
ಮಿರುಗುತಿದೆ ನಿನ್ನ ಅಪರೂಪ ರಾಶಿ ನಿಬಿಡಾಂಧಕಾರದಲ್ಲಿ
ನಿನ್ನನದರಿಂದಲೇ ನೆನೆವರೌ ಯೋಗಿಗಳು ಗಿರಿಗುಹೆಗಳಲ್ಲಿ
ಶ್ರೀರಾಮಕೃಷ್ಣರು ಭಾವಾವಿಷ್ಟರಾಗಿ ಕೆಳಕ್ಕೆ ಇಳಿದುಬಂದು ನರೇಂದ್ರನ ಹತ್ತಿರ ಕುಳಿತಿದ್ದಾರೆ. ಆ ಸ್ಥಿತಿಯಲ್ಲೇ ಮಾತನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಹಾಡಲೇನು? ಥೂ! ಥೂ! (ನಿತ್ಯ ಗೋಪಾಲನಿಗೆ) ನೀನು ಏನು ಹೇಳುತ್ತೀಯಾ? ಉದ್ದೀಪನೆ ಪಡೆಯೋದಕ್ಕಾಗಿ ಹಾಡನ್ನು ಕೇಳಬೇಕು. ಬಳಿಕ ಏನು ಬೇಕಾದರೂ ಆಗಲಿ, ಏನು ಬೇಕಾದರೂ ಹೋಗಲಿ ಚಿಂತಿಸಬೇಕಾಗಿಲ್ಲ.
“ಆತ ಬೆಂಕಿ ಹೊತ್ತಿಸಿದ್ದಾನೆ. ಅದು ಒಳ್ಳೆಯದು. ಬಳಿಕ ಪ್ರಶಾಂತತೆ. ಅದೂ ಒಳ್ಳೆಯದೆ. ನಾನು ಪ್ರಶಾಂತನಾಗಿದ್ದೇನೆ; ನೀನೂ ಹಾಗೆಯೇ ಇರು. ಬೇಕಾಗಿರೋದು ಆನಂದರಸದಲ್ಲಿ ಮಗ್ನವಾಗಿ ಇರೋದು.
“ಹಾಡಲೇನು? ಒಳ್ಳೆಯದು, ಹಾಡಿದರೂ ಆಯಿತಲ್ಲ. ನೀರು ಪ್ರಶಾಂತ ವಾಗಿದ್ದರೂ ನೀರೆ, ಅಲ್ಲೋಲಕಲ್ಲೋಲವಾಗಿದ್ದರೂ ನೀರೆ.”
ನರೇಂದ್ರ ಪರಮಹಂಸರ ಹತ್ತಿರ ಕುಳಿತಿದ್ದಾನೆ. ತನ್ನ ಮನೆಯಲ್ಲಿ ಆರ್ಥಿಕ ಮುಗ್ಗಟ್ಟಿನ ಸಂಬಂಧವಾಗಿ ಸತತ ಚಿಂತಿಸುತ್ತಿದ್ದಾನೆ. ಈಗ ಆತನಿಗೆ ಇಪ್ಪತ್ತಮೂರು ವಯಸ್ಸು. ಪರಮಹಂಸರು ಆತನ ಕಡೆ ನೆಟ್ಟದೃಷ್ಟಿಯಿಂದ ನೋಡುತ್ತಿದ್ದಾರೆ.
ಶ್ರೀರಾಮಕೃಷ್ಣರು (ನಗುತ್ತ ನರೇಂದ್ರನಿಗೆ): ‘ನೀನೊಬ್ಬ ‘ಖ’ (ಆಕಾಶ). ಆದರೆ ಟ್ಯಾಕ್ (ಮನೆಯ ಆರ್ಥಿಕ ಮುಗ್ಗಟ್ಟಿನ ಯೋಚನೆ) ಇಲ್ಲದೆ ಇದ್ದರೆ! (ಎಲ್ಲರೂ ನಗುತ್ತಿದ್ದಾರೆ).
“ಕೃಷ್ಣಕಿಶೋರ ಹೇಳುತ್ತಿದ್ದ, ತಾನು ‘ಖ’ ಅಂತ. ಒಂದು ದಿನ ಆತನ ಮನೆಗೆ ಹೋಗಿ ನೋಡುತ್ತೇನೆ, ಆತ ಚಿಂತಾಕ್ರಾಂತನಾಗಿ ಕುಳಿತಿದ್ದಾನೆ; ಎಂದಿನಂತೆ ಮಾತನಾಡು ತ್ತಿಲ್ಲ. ನಾನು ಆತನನ್ನು ಕೇಳಿದೆ, ‘ಏನಾಗಿಬಿಟ್ಟಿದೆ? ಏತಕ್ಕೆ ಚಿಂತಾಕ್ರಾಂತನಾಗಿದ್ದೀಯೆ?’ ಅಂತ. ಆತ ಹೇಳಿದ, ಟ್ಯಾಕ್ಸ್ ವಾಲ ಬಂದಿದ್ದ. ಆತ ಹೇಳಿಹೋಗಿದ್ದಾನೆ. “ನೀನೇನಾ ದರೂ ಟ್ಯಾಕ್ಸ ಕೊಡದೆ ಇದ್ದರೆ ನಿನ್ನ ಪಾತ್ರೆ ಪದಾರ್ಥಗಳನ್ನೆಲ್ಲ ಹರಾಜು ಹಾಕಿಬಿಡು ತ್ತೇನೆ” ಅಂತ. ಅದಕ್ಕಾಗಿ ನನಗೆ ಯೋಚನೆ ಹತ್ತಿಬಿಟ್ಟಿದೆ’ ಎಂದು. ನಾನು ನಗುತ್ತ ನಗುತ್ತ ಹೇಳಿದೆ, ‘ನೀನು ಅದಕ್ಕಾಗಿ ಏಕೆ ಚಿಂತಿಸಬೇಕು? ನೀನು “ಖ” (ಆಕಾಶ). ತೆಗೆದುಕೊಂಡು ಹೋಗಲಿ, ಆ ನೀಚ ನಿನ್ನ ಪಾತ್ರೆ ಪದಾರ್ಥಗಳನ್ನು ತೆಗೆದುಕೊಂಡು ಹೋಗಲಿ, ಅದಕ್ಕೂ ನಿನಗೂ ಏನು ಸಂಬಂಧ?’ ಅಂತ.
(ನರೇಂದ್ರನಿಗೆ) “ಅದಕ್ಕಾಗೇ ನಾನು ಹೇಳುತ್ತಿರೋದು ನೀನು ‘ಖ’ ಅಂತ. ಏಕೆ ಸುಮ್ಮನೆ ಚಿಂತಿಸುತ್ತಿದ್ದೀಯೆ? ಶ್ರೀಕೃಷ್ಣ ಅರ್ಜುನನಿಗೆ ‘ಅಷ್ಟಸಿದ್ಧಿಗಳಲ್ಲಿ ಒಂದು ದೊರೆತರೂ ಅದರಿಂದ ಕೆಲವು ಶಕ್ತಿಗಳನ್ನು ಪಡೆಯಬಹುದು, ಆದರೆ ನನ್ನನ್ನು ಮಾತ್ರ ಪಡೆಯೋಕಾ ಗೋದಿಲ್ಲ’ ಅಂತ ಹೇಳಿರೋದು ನಿನಗೆ ಗೊತ್ತೆ? ಸಿದ್ಧಿಯ ಮೂಲಕ ವಿಶೇಷವಾದ ಶಕ್ತಿ, ಬಲ, ಧನ ಇವನ್ನು ಪಡೆಯಬಹುದು. ಆದರೆ ಅದರಿಂದ ಭಗವಂತನನ್ನು ಪಡೆಯಲಾರೆ.
“ಇನ್ನೊಂದು ವಿಷಯ. ಜ್ಞಾನಾಜ್ಞಾನಗಳನ್ನು ದಾಟಿ ಹೋಗಬೇಕು. ಜನರು ಹೇಳುವುದುಂಟು. ‘ಆತ ಒಬ್ಬ ದೊಡ್ಡ ಜ್ಞಾನಿ’ ಅಂತ; ಆದರೆ ವಾಸ್ತವಿಕವಾಗಿ ನೋಡಿದರೆ ಆತ ಹಾಗಿರುವುದಿಲ್ಲ. ವಸಿಷ್ಠ ಒಬ್ಬ ದೊಡ್ಡ ಜ್ಞಾನಿ, ಆದರೂ ಆತ ಪುತ್ರಶೋಕದಿಂದ ದುಃಖಿತನಾಗಿದ್ದ. ಅದನ್ನು ನೋಡಿ ಲಕ್ಷ್ಮಣ ರಾಮನಿಗೆ ಹೇಳಿದ, ‘ಹೇ ರಾಮ, ಏನಾಶ್ಚರ್ಯ! ಈತನೂ ಇಷ್ಟು ಶೋಕಾಕ್ರಾಂತನಾಗಿದ್ದಾನಲ್ಲ!’ ಅಂತ. ರಾಮ ಹೇಳಿದ. ‘ಸೋದರ, ಯಾರಿಗೆ ಜ್ಞಾನವಿರುವುದೊ, ಅವರಿಗೆ ಅಜ್ಞಾನವೂ ಇರುತ್ತದೆ. ಯಾರಿಗೆ ಬೆಳಕಿನ ಬೋಧೆ ಇರುತ್ತದೆಯೊ, ಅವರಿಗೆ ಅಂಧಕಾರದ ಬೋಧೆಯೂ ಇರುತ್ತದೆ; ಯಾರಿಗೆ ಒಳ್ಳೆಯದರ ಅರಿವು ಇರುತ್ತದೆಯೊ, ಅವರಿಗೆ ಕೆಟ್ಟದರ ಅರಿವೂ ಇರುತ್ತದೆ; ಯಾರಿಗೆ ಸುಖದ ಜ್ಞಾನ ಇರುತ್ತದೆಯೊ, ಅವರಿಗೆ ದುಃಖದ ಜ್ಞಾನವೂ ಇರುತ್ತದೆ. ಸೋದರ, ನೀನು ಈ ದ್ವಂದ್ವಗಳನ್ನು ಮೀರಿ ಹೋಗು; ಸುಖ ದುಃಖಗಳನ್ನು ದಾಟಿ ಹೋಗು; ಜ್ಞಾನಾಜ್ಞಾನಗಳನ್ನು ದಾಟಿಹೋಗು’ ಅಂತ. (ನರೇಂದ್ರನಿಗೆ) ಅದಕ್ಕಾಗಿಯೇ ನಾನು ನಿನಗೆ ಹೇಳುತ್ತಿರುವುದು, ‘ಜ್ಞಾನಾಜ್ಞಾನ ದಾಟಿಹೋಗು’ ಅಂತ.”
ಪರಮಹಂಸರು ಮತ್ತೆ ಬಂದು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಭಕ್ತರು ಇನ್ನೂ ನೆಲದ ಮೇಲೇ ಕುಳಿತಿದ್ದಾರೆ. ಸುರೇಂದ್ರ ಪರಮಹಂಸರ ಹತ್ತಿರ ಕುಳಿತಿದ್ದಾನೆ. ಪರಮಹಂಸರು ಆತನ ಕಡೆ ದೃಷ್ಟಿಸಿ ನೋಡುತ್ತ ಬುದ್ಧಿವಾದವೀಯುತ್ತಿದ್ದಾರೆ.
ಶ್ರೀರಾಮಕೃಷ್ಣರು ಸುರೇಂದ್ರನಿಗೆ: “ಆಗಾಗ ಇಲ್ಲಿಗೆ ಬಂದು ಹೋಗುತ್ತಿರು. ನ್ಯಾಂಗ್ಟ ಹೇಳುತ್ತಿದ್ದ, ‘ಚೊಂಬನ್ನು ಪ್ರತಿದಿನವೂ ಬೆಳಗಬೇಕು; ಇಲ್ಲದಿದ್ದರೆ ಅದು ಕಪ್ಪಾಗುತ್ತದೆ’ ಅಂತ. ಸರ್ವದಾ ಸಾಧುಸಂಗ ಆವಶ್ಯಕ.
“ಸಂನ್ಯಾಸಿ ಕಾಮಕಾಂಚನವನ್ನು ತ್ಯಜಿಸಬೇಕು; ಆದರೆ ನೀವೇನೂ ಹಾಗೆ ಮಾಡ ಬೇಕಾಗಿಲ್ಲ. ನೀವು ಆಗಾಗ ನಿರ್ಜನಪ್ರದೇಶಕ್ಕೆ ಹೋಗಿ ವ್ಯಾಕುಲಚಿತ್ತದಿಂದ ಆತನನ್ನು ಕರೆಯಬೇಕು. ನೀವು ಮಾನಸಿಕವಾಗಿ ತ್ಯಾಗಮಾಡಬೇಕು.
“ವೀರ ಭಕ್ತನಾಗದೆ ಇದ್ದರೆ ಮನುಷ್ಯ ಎರಡು ಕಡೆಗೂ ಮನಸ್ಸನ್ನಿಡಲಾರ. ಜನಕರಾಜ ಸಾಧನೆ ಭಜನೆ ಮಾಡಿ ಸಿದ್ಧಪುರುಷನಾಗಿ ಸಂಸಾರದಲ್ಲಿದ್ದ. ಆತ ಎರಡು ಕತ್ತಿಗಳನ್ನು ತಿರುಗಿಸುತ್ತಿದ್ದ; ಜ್ಞಾನದ್ದು, ಕರ್ಮದ್ದು.”
ಹೀಗೆಂದು ಹೇಳಿ ಪರಮಹಂಸರು ಹಾಡಲಾರಂಭಿಸಿದರು:
ಈ ಜಗವೆಂಬುದು ಮೋಜಿನ ಮನೆಯೊ!
ಇದರೊಳು ನಾ ಮನಬಂದೊಲು ನಡೆವೆ.
ತಿನ್ನುವೆ-ಕುಣಿಯುವೆ-ಕುಣಿಯುವೆ-ನಲಿವೆ.
ಜನಕನ ತೇಜವ ಮೀರಿದರಾರೊ?
ಇಹಪರದಲ್ಲೂ ಕೊರತೆಯಿಲ್ಲದೊಲು
ಬಾಳಿದನವನು
ಅದನೂ ಇದನೂ-ಎರಡನು-ಹಿಡಿದು
ಕುಡಿದನು ತುಂಬಿದ ಹಾಲ್ಬಟ್ಟಲನು!
ಶ್ರೀರಾಮಕೃಷ್ಣರು: “ಚೈತನ್ಯದೇವ ಹೇಳಿರುವಂತೆ ನೀವು ಜೀವಿಗಳಿಗೆ ದಯೆಯನ್ನು, ಭಕ್ತರಿಗೆ ಸೇವೆಯನ್ನು ಮತ್ತು ಹರಿನಾಮ ಸಂಕೀರ್ತನೆಯನ್ನು ಮಾಡಬೇಕು.
(ಸುರೇಂದ್ರನಿಗೆ): “ನಾನು ಇದನ್ನೆಲ್ಲ ನಿನಗೆ ಏಕೆ ಹೇಳುತ್ತಿರುವೆನು ಗೊತ್ತೆ? ನೀನು ಒಬ್ಬ ವ್ಯಾಪಾರಿಯ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೀಯೆ. ನೀನು ಅಲ್ಲಿ ಬಹಳವಾಗಿ ದುಡಿಯಬೇಕಾಗಿದೆ; ಅದಕ್ಕಾಗೇ ಇದನ್ನೆಲ್ಲ ನಿನಗೆ ಹೇಳುತ್ತಿರುವುದು.
“ನೀನು ಆಫೀಸಿನಲ್ಲಿ ಸುಳ್ಳು ವ್ಯವಹಾರವನ್ನು ಮಾಡುತ್ತಿದ್ದೀಯೆ, ಆದರೂ ನೀನು ತರೋದನ್ನು ತಿನ್ನುತ್ತಿದ್ದೇನೆ. ಇದಕ್ಕೆ ಕಾರಣ ಗೊತ್ತೆ? ನೀನು ದಾನಧರ್ಮಾದಿ ಕಾರ್ಯ ಗಳನ್ನು ಮಾಡುತ್ತಿರೋದರಿಂದ; ‘ಕರಬೂಜದ ಹಣ್ಣಿಗಿಂತ ಅದರ ಬೀಜ ದೊಡ್ಡದು!’ ಎಂಬ ನಾಣ್ಣುಡಿಯಂತೆ ನೀನು ನಿನ್ನ ಸಂಪಾದನೆಗಿಂತ ಅಧಿಕವಾಗಿ ದಾನಧರ್ಮಾದಿ ಕಾರ್ಯಗಳನ್ನು ಮಾಡುತ್ತಿರೋದರಿಂದ.
“ಕೃಪಣರು ತರೋದನ್ನು ತಿನ್ನಲಾರೆ. ಅವರ ಹಣ ಈ ಕೆಲವು ರೀತಿಯಾಗಿ ಪೋಲಾಗಿ ಹೋಗುತ್ತದೆ; ಮೊದಲನೆಯದಾಗಿ ವ್ಯಾಜ್ಯದ ಮೂಲಕ; ಎರಡನೆಯದಾಗಿ ಕಳ್ಳಕಾಕರ ಮೂಲಕ; ಮೂರನೆಯದಾಗಿ ವೈದ್ಯನ ಮೂಲಕ; ನಾಲ್ಕನೆಯದಾಗಿ ದುಷ್ಟಮಕ್ಕಳ ದುಂದುಗಾರಿಕೆಯ ಮೂಲಕ.
“ನೀನು ದಾನ ಮಾಡುತ್ತಿದ್ದೀಯೆ. ಅದು ಬಹಳ ಒಳ್ಳೆಯದೆ. ಯಾರಲ್ಲಿ ಹಣ ವಿರುವುದೊ ಅವರು ದಾನಧರ್ಮಾದಿ ಕಾರ್ಯಗಳನ್ನು ಮಾಡಬೇಕಾದ್ದೆ. ಕೃಪಣನ ಹಣ ದುರ್ವ್ಯಯವಾಗುತ್ತದೆ; ದಾತನ ಧನ ಸುವ್ಯಯವಾಗುತ್ತದೆ; ಸತ್ಕಾರ್ಯಗಳಲ್ಲಿ ವ್ಯಯ ವಾಗುತ್ತದೆ. ಕಾಮಾರಪುಕುರಿನಲ್ಲಿ ರೈತರು ಕಾಲುವೆ ತೆಗೆದು ಗದ್ದೆಗೆ ನೀರು ಹಾಯಿಸುತ್ತಾರೆ. ಒಮ್ಮೊಮ್ಮೆ ನೀರು ಗದ್ದೆಗೆ ಬಹಳ ಅಧಿಕವಾಗಿ ಬಂದು ತೆವರಿಯನ್ನು ಕೊರೆದು ಬೆಳೆಯನ್ನು ನಷ್ಟಮಾಡಿಬಿಡುತ್ತದೆ. ಅದಕ್ಕಾಗಿ ರೈತರು ತೆವರಿಗಳಲ್ಲಿ ಅಲ್ಲಿ ಇಲ್ಲಿ ರಂಧ್ರಗಳನ್ನು ಮಾಡಿರು ತ್ತಾರೆ. ಅಧಿಕವಾಗಿ ಬಂದ ನೀರು ಈ ರಂಧ್ರಗಳ ಮೂಲಕ ಹರಿದು ಹೋಗಿಬಿಡೋ ದರಿಂದ ತೆವರಿಗಳು ಕೊಚ್ಚಿಹೋಗವು. ಜೊತೆಗೆ ಅಧಿಕವಾಗಿ ಬಂದ ನೀರು ಹರಿದು ಹೊರಟು ಹೋಗೋದರಿಂದ ಅದು ಗದ್ದೆಗೆ ಮೆಕ್ಕಲುಮಣ್ಣನ್ನು ತರುತ್ತದೆ. ಆ ಮಣ್ಣು ಗದ್ದೆಯ ಆಬಾದನ್ನು ಹೆಚ್ಚಿಸುತ್ತದೆ; ಒಳ್ಳೇ ಬೆಳೆಯನ್ನು ಕೊಡುತ್ತದೆ. ಯಾರು ದಾನ ಧರ್ಮಾದಿ ಕಾರ್ಯಗಳನ್ನು ಮಾಡುತ್ತಾನೊ ಆತನಿಗೆ ಒಳ್ಳೆ ಫಲ ದೊರೆಯುತ್ತದೆ; ನಾಲ್ಕು ಪುರುಷಾರ್ಥಗಳೂ-ಧರ್ಮ, ಅರ್ಥ, ಕಾಮ, ಮೋಕ್ಷ- ದೊರೆಯುತ್ತವೆ.”
ಭಕ್ತರು ದಾನಧರ್ಮಾದಿಗಳ ಸಂಬಂಧವಾಗಿ ಪರಮಹಂಸರ ಶ್ರೀಮುಖದಿಂದ ಬಂದದ್ದನ್ನೆಲ್ಲ ಏಕಾಗ್ರಚಿತ್ತದಿಂದ ಕೇಳಿದರು.
ಸುರೇಂದ್ರ: “ನನಗೆ ಸರಿಯಾಗಿ ಧ್ಯಾನಮಾಡುವುದಕ್ಕೆ ಆಗುತ್ತಿಲ್ಲ. ಆಗಾಗ ‘ತಾಯಿ, ತಾಯಿ’ ಅಂತ ಹೇಳುತ್ತೇನೆ. ಮಲಗುವ ಸಮಯದಲ್ಲಿ ‘ತಾಯಿ, ತಾಯಿ’ ಎಂಬುದಾಗಿ ಹೇಳುತ್ತ ಹೇಳುತ್ತ ನಿದ್ರಾವಸ್ಥೆಗೆ ಜಾರಿಬೀಳುತ್ತೇನೆ”.
ಶ್ರೀರಾಮಕೃಷ್ಣರು: “ಅದೇ ಬೇಕಾದಷ್ಟು. ಸ್ಮರಣಮನನ ಮಾಡಿದಂತಾಯಿತು. ಅಲ್ಲವೆ?”
“ಯೋಗಗಳಲ್ಲಿ ಎರಡು ವಿಧ; ಮನೋಯೋಗ, ಕರ್ಮಯೋಗ, ಗುರುವಿನ ಉಪ ದೇಶಕ್ಕನುಗುಣವಾಗಿ ಪೂಜೆ, ತೀರ್ಥಯಾತ್ರೆ, ಜೀವಸೇವೆ ಇವನ್ನೆಲ್ಲ ಮಾಡುವುದಕ್ಕೆ ಕರ್ಮ ಯೋಗ ಅಂತ ಹೆಸರು. ಜನಕಾದಿಗಳು ಯಾವ ಕರ್ಮವನ್ನು ಮಾಡುತ್ತಿದ್ದರೊ ಅದಕ್ಕೂ ಕರ್ಮಯೋಗ ಅಂತ ಹೆಸರು. ಯೋಗಿಗಳು ಮಾಡುವ ಸ್ಮರಣ ಮನನಕ್ಕೆ ಮನೋಯೋಗ ಅಂತ ಹೆಸರು.
“ಕೆಲವು ವೇಳೆ ನಾನು ಕಾಳೀದೇವಾಲಯದಲ್ಲಿ ಕುಳಿತು ಭಾವಿಸಿಕೊಳ್ಳುತ್ತೇನೆ, ‘ತಾಯೆ, ಮನಸ್ಸು ಎಂಬುದು ನೀನೇ ಅಲ್ಲದೆ ಮತ್ತೆ ಬೇರೆ ಏನೂ ಅಲ್ಲ’ ಅಂತ. ನನ್ನ ದೃಷ್ಟಿಯಿಂದ ಶುದ್ಧ ಮನಸ್ಸು ಎಂದರೂ ಒಂದೆ, ಶುದ್ಧ ಬುದ್ಧಿ ಎಂದರೂ ಒಂದೆ, ಶುದ್ಧ ಆತ್ಮ ಎಂದರೂ ಒಂದೇ.”
ಇನ್ನೇನು ಸಾಯಂಕಾಲವಾಗುವುದರಲ್ಲಿದೆ. ಬಂದಿದ್ದ ಭಕ್ತರಲ್ಲಿ ಅನೇಕರು ಪರಮ ಹಂಸರಿಗೆ ಪ್ರಣಾಮ ಮಾಡಿ ಮನೆಗೆ ಹಿಂತಿರುಗುತ್ತಿದ್ದಾರೆ. ಪರಮಹಂಸರು ಪಶ್ಚಿಮ ವರಾಂಡಕ್ಕೆ ಹೋದರು. ಭವನಾಥ ಮತ್ತು ಮಾಸ್ಟರ್ ಅವರನ್ನು ಹಿಂಬಾಲಿಸಿದರು.
ಶ್ರೀರಾಮಕೃಷ್ಣರು (ಭವನಾಥನಿಗೆ): “ನೀನು ಇಲ್ಲಿಗೆ ಬಹಳ ಅಪರೂಪವಾಗಿ ಬರುತ್ತಿರುವೆಯಲ್ಲ ಏಕೆ?”
ಭವನಾಥ (ನಗುತ್ತ): “ನಾನು ಸಾಮಾನ್ಯವಾಗಿ ಹದಿನೈದು ದಿನಕ್ಕೊಮ್ಮೆ ಇಲ್ಲಿಗೆ ಬರುತ್ತಿದ್ದೇನೆ. ಅಂದು ನಿಮ್ಮನ್ನು ರಸ್ತೆಯಲ್ಲೇ ನೋಡಿಬಿಟ್ಟೆ, ಅದಕ್ಕಾಗಿ ಇದುವರೆಗೆ ಇಲ್ಲಿಗೆ ಬರಲಿಲ್ಲ.”
ಶ್ರೀರಾಮಕೃಷ್ಣರು: “ಅದು ಹೇಗೆ? ಬರಿಯ ದರ್ಶನದಿಂದಲೇ ಏನು ದೊರೆತೀತು? ಸ್ಪರ್ಶನ, ಆಲಾಪನ ಇವೂ ಆಗಬೇಕು.”
ಸಾಯಂಕಾಲವಾಯಿತು. ದೇವಾಲಯಗಳಲ್ಲಿ ಮಂಗಳಾರತಿಯ ಶಬ್ದ ಕೇಳಲಾರಂಭಿ ಸಿದೆ. ಇಂದು ಫಾಲ್ಗುಣ ಶುಕ್ಲ ಅಷ್ಟಮಿ. ಆರೇಳು ದಿನಗಳಾದ ನಂತರ ದೋಲ್ ಪೂರ್ಣಿಮೆ ಜಾತ್ರೆ ನಡೆಯುತ್ತದೆ. ದೇವಾಲಯಗಳ ಶಿಖರಗಳು, ಪ್ರಾಂಗಣ, ಉದ್ಯಾನವನ, ಗಿಡಮರಗಳು, ಚಂದ್ರನ ಕಿರಣದಿಂದ ಮನೋಹರ ರೂಪವನ್ನು ತಾಳಿವೆ. ಗಂಗೆ ‘ಕಲಕಲ’ ಎಂದು ಶಬ್ದ ಮಾಡುತ್ತ ಉತ್ತರಾಭಿಮುಖವಾಗಿ ಹರಿಯುತ್ತಿದ್ದಾಳೆ. ಪರಮಹಂಸರು ತಮ್ಮ ಕೊಠಡಿಯಲ್ಲೆ ಚಿಕ್ಕ ಮಂಚದ ಮೇಲೆ ಕುಳಿತು ಭಗವತಿಯ ಧ್ಯಾನ ಮಾಡುತ್ತಿದ್ದಾರೆ.
ಮಂಗಳಾರತಿ ಮುಗಿದಿದೆ. ಒಬ್ಬಿಬ್ಬರು ಭಕ್ತರು ಇನ್ನೂ ತಮ್ಮ ಮನೆಗೆ ಹೋಗದೆ ಉಳಿದುಕೊಂಡಿದ್ದಾರೆ. ನರೇಂದ್ರ ಆಗಲೆ ಹೊರಟು ಹೋಗಿದ್ದಾನೆ. ಪರಮಹಂಸರು ಭಾವಾವಿಷ್ಟರಾಗಿ ಅವರ ಕೊಠಡಿಗೆ ಈಶಾನ್ಯದಿಕ್ಕಿನಲ್ಲಿರುವ ಉದ್ದವರಾಂಡದಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದಾರೆ. ಮಾಸ್ಟರ್ ಅವರನ್ನು ದೃಷ್ಟಿಸಿ ನೋಡುತ್ತ ಆ ವರಾಂಡದಲ್ಲೇ ನಿಂತಿದ್ದಾನೆ. ಪರಮಹಂಸರು ಇದ್ದಕ್ಕಿದ್ದ ಹಾಗೆ ಮಣಿಯನ್ನು ಸಂಬೋಧಿಸಿ ಹೇಳಿದರು, “ಆಹ! ನರೇಂದ್ರ ಎಷ್ಟು ಚೆನ್ನಾಗಿ ಹಾಡುತ್ತಾನೆ!”
ಮಾಸ್ಟರ್: “ಹೌದು, ಬಹಳ ಚೆನ್ನಾಗಿ ಹಾಡುತ್ತಾನೆ. ‘ಮಿರುಗುತಿದೆ ನಿನ್ನ ಅತಿ ರೂಪರಾಶಿ ನಿಬಿಡಾಂಧಕಾರದಲ್ಲಿ’ ಎಂಬ ಹಾಡನ್ನು ಬಹಳ ಚೆನ್ನಾಗಿ ಹಾಡಿದ.”
ಶ್ರೀರಾಮಕೃಷ್ಣರು: “ಹೌದು, ಆ ಹಾಡು ಬಹಳ ಗಹನವಾದ ಭಾವನೆಯಿಂದ ಕೂಡಿದೆ. ನನ್ನ ಮನಸ್ಸನ್ನು ಅದು ಇನ್ನೂ ಹಿಡಿದೆಳೆದು ನಿಲ್ಲಿಸಿರುವಂತೆ ತೋರುತ್ತಿದೆ.”
ಮಾಸ್ಟರ್: “ಹೌದು, ನನಗೂ.”
ಶ್ರೀರಾಮಕೃಷ್ಣರು: “ಅಂಧಕಾರದ ಮೇಲೆ ಧ್ಯಾನ, ಇದು ತಾಂತ್ರಿಕ ಮತ. ಆಗ ಸೂರ್ಯನ ಬೆಳಕು ಎಲ್ಲಿಗೆ ಹೋಗಿರುತ್ತದೆ?”
ಗಿರೀಶ ಕೊಠಡಿಯನ್ನು ಪ್ರವೇಶಿಸಿ ನಿಂತುಕೊಂಡಿದ್ದಾನೆ. ಪರಮಹಂಸರು ಹಾಡುತ್ತಿದ್ದಾರೆ:
ಕಾಲರೂಪೆ ದಿಗಂಬರೀ
ಹೃದಯಪದ್ಮ ಭಾಸ್ಕರೀ,
ನಿಜವಾಗಿಯೂ ಕಪ್ಪಗಿಹಳೆ ನನ್ನ ತಾಯಿ ಕಾಳಿ?
ಪರಮಹಂಸರು ಪ್ರೇಮೋನ್ಮತ್ತರಾಗಿ ಗಿರೀಶನ ಹೆಗಲ ಮೇಲೆ ತಮ್ಮ ಒಂದು ಕೈಯನ್ನಿಟ್ಟುಕೊಂಡು ನಿಂತು ಹಾಡುತ್ತಿದ್ದಾರೆ:
ಏತಕೆ, ಇನ್ನೇತಕೆ?
ಕಾಶಿ ಕಾಂಚಿಯೊ, ಗಯೆಯೊ, ಗಂಗೆಯೊ
ಪುಣ್ಯಕ್ಷೇತ್ರಗಳೇತಕೆ?……
ಮತ್ತೆ ಪರಮಹಂಸರು ಹಾಡುತ್ತಿದ್ದಾರೆ:
ಅರಿತೆ ನಾನು ಅರಿತೆ ನಾನು-ನಿಜದ ನೆಲೆಯನರಿತೆನು
ಭಾವದಂತರಂಗವರಿತ ವ್ಯಕ್ತಿಯೊಬ್ಬ ದೊರೆತನು…….
ಪರಮಹಂಸರ ದೃಷ್ಟಿ ಗಿರೀಶನ ಕಡೆ ಬೀಳುತ್ತ ಬೀಳುತ್ತ ಅವರ ಪ್ರೇಮೋನ್ಮತ್ತತೆ ಇನ್ನೂ ಗಾಢವಾದಂತೆ ತೋರಿತು. ಅವರು ನಿಂತು ಮತ್ತೆ ಹಾಡಲು ಆರಂಭಿಸಿದ್ದಾರೆ:
ತಾಯ ಶ್ರೀಪಾದದಲಿ ಜೀವವಿರಿಸಿದ ನನಗೆ
ಮೃತ್ಯುಭಯವೇನು?
ಆತ್ಮ ಶಿರಶಿಖೆಯಲ್ಲಿ ತಾಯನಾಮವ ಹಿಡಿದು
ಕಟ್ಟಿರುವೆನು!
ಈ ಜಗದ ಸಂತೆಯಲಿ ನನ್ನ ದೇಹವ ಮಾರಿ
ತಾಯ ಶ್ರೀನಾಮವನು ಕೊಂಡಿರುವೆನು!
ಕಾಳೀ ನಾಮ ಕಲ್ಪತರುವನು ನಾನು
ಎದೆಯ ಅಂಗಳದಲ್ಲಿ ನೆಟ್ಟಿರುವೆನು.
ಯಮ ಬಂದು ನಿಂತಾಗ ನನ್ನ ಎದೆಯನು ತೆರೆದು
ಬೆಳೆಯುವೀ ವೃಕ್ಷವನು ತೋರಿಸುವೆನು
ಅರಿವರ್ಗಗಳನು ಕಿತ್ತು, ಭವಜಲಧಿಯಲಿ ನಾನು
‘ಜಯದುರ್ಗೆ’ ಎಂದೆಂದು ಹೊರಟಿರುವೆನು!
ಪರಮಹಂಸರು ಭಾವದಿಂದ ಮತ್ತರಾಗಿ ಮತ್ತೆ ಈ ಚರಣವನ್ನು ಹಾಡಿದರು:
ಈ ಜಗದ ಸಂತೆಯಲಿ ನನ್ನ ದೇಹವ ಮಾರಿ
ತಾಯ ಶ್ರೀನಾಮವನು ಕೊಂಡಿರುವೆನು!
ಶ್ರೀರಾಮಕೃಷ್ಣರು ಗಿರೀಶಾದಿಗಳ ಕಡೆ ತಿರುಗಿ ಹೇಳಿದರು, ‘ಭಕ್ತಿ ಭಾವವೆದೆಯ ತುಂಬಿ ನನ್ನ ಜ್ಞಾನವ ಮರೆಸಿದೆ.’
“ಇಲ್ಲಿ ‘ಜ್ಞಾನ’ ಎಂದರೆ ಬಾಹ್ಯಜ್ಞಾನ. ಬೇಕಾಗಿರೋದು ತತ್ತ್ವಜ್ಞಾನ, ಬ್ರಹ್ಮಜ್ಞಾನ.
“ಭಕ್ತಿಯೇ ಸಾರ. ಸಕಾಮ ಭಕ್ತಿ ಎಂಬುದು ಒಂದು ಇದೆ. ಮತ್ತೆ ನಿಷ್ಕಾಮ ಭಕ್ತಿ, ಶುದ್ಧ ಭಕ್ತಿ, ಅಹೇತುಕ ಭಕ್ತಿ ಇವೂ ಇವೆ. ಕೇಶವಸೇನನಿಗೆ ಮತ್ತು ಬ್ರಾಹ್ಮಸಮಾಜ ದವರಿಗೆ ಅಹೇತುಕ ಭಕ್ತಿ ಎಂಬುದು ಒಂದು ಇದೆ ಎಂಬುದು ಗೊತ್ತಿರಲಿಲ್ಲ. ಈ ಭಕ್ತಿಯಲ್ಲಿ ಯಾವ ಕಾಮನೆಯೂ ಇಲ್ಲ; ಇದು ಕೇವಲ ಭಗವಂತನ ಪಾದಪದ್ಮಗಳಲ್ಲಿ ಇಟ್ಟಿರುವ ಶುದ್ಧಭಕ್ತಿಯೇ ಅಲ್ಲದೆ ಬೇರೆ ಏನೂ ಅಲ್ಲ.
“ಮತ್ತೆ ಬೇರೆ ಇದೆ ಊರ್ಜಿತ ಭಕ್ತಿ ಎಂಬುದು. ಇದರಲ್ಲಿ ಭಕ್ತಿ ಉಕ್ಕಿ ಹರಿಯುತ್ತಿರು ವುದೋ ಏನೊ ಎಂಬಂತೆ ತೋರುತ್ತದೆ. ಇದು ಉಂಟಾದಾಗ ಭಕ್ತ ‘ನಗುತ್ತಾನೆ, ಅಳುತ್ತಾನೆ, ನರ್ತಿಸುತ್ತಾನೆ, ಹಾಡುತ್ತಾನೆ.’ ಇದಕ್ಕೆ ಉದಾಹರಣೆ ಶ್ರೀಚೈತನ್ಯದೇವ. ರಾಮ ಲಕ್ಷ್ಮಣನಿಗೆ ಹೇಳಿದ, ‘ತಮ್ಮ, ಯಾರಲ್ಲಿ ನೀನು ಊರ್ಜಿತ ಭಕ್ತಿಯನ್ನು ನೋಡುವೆಯೊ, ಆತನಲ್ಲಿ ನಾನು ಸ್ವಯಂ ಇದ್ದೇನೆ ಎಂಬುದನ್ನು ತಿಳಿದುಕೊ’ ಅಂತ.”
ಗಿರೀಶ: “ನಿಮ್ಮ ಕೃಪೆಯೊಂದು ದೊರೆಯಿತು ಎಂದರೆ ಎಲ್ಲಾ ದೊರೆತುಬಿಡುತ್ತದೆ. ನಾನು ಹಿಂದೆ ಏನಾಗಿದ್ದೆ? ನೋಡಿ, ಈಗ ಏನಾಗಿದ್ದೇನೆ!”
ಶ್ರೀರಾಮಕೃಷ್ಣರು: “ನಿನ್ನಲ್ಲಿ ಸಂಸ್ಕಾರವಿತ್ತು; ಅವು ಈಗ ವ್ಯಕ್ತವಾಗುತ್ತಿವೆ. ಸಮಯ ಬರುವ ತನಕ ಏನೂ ಆಗದು. ಯಾವಾಗ ರೋಗ ಗುಣಮುಖವಾಗುತ್ತ ಬರುತ್ತಿತ್ತೊ ಆಗ ಕವಿರಾಜ ರೋಗಿಗೆ ಹೇಳಿದ, ‘ಈ ಎಲೆಗೆ ಮೆಣಸಿನಕಾಳು ಸೇರಿಸಿ ತಿನ್ನು’ ಅಂತ. ಆಗ ರೋಗಿ ಗುಣವಾಗಿಬಿಟ್ಟ. ಈಗ ಮೆಣಸಿನಕಾಳಿನೊಡನೆ ತಿಂದ ಔಷಧ ಆತನನ್ನು ಗುಣಪಡಿಸಿತೊ ಅಥವಾ ತಾನಾಗಿಯೇ ಆಗ ಗುಣಹೊಂದಿದನೊ ಇದನ್ನು ಯಾರು ತಾನೆ ಹೇಳಬಲ್ಲರು?
“ಲಕ್ಷ್ಮಣನು ಲವಕುಶರಿಗೆ, ‘ನೀವು ಇನ್ನೂ ಚಿಕ್ಕ ಬಾಲಕರು; ರಾಮಚಂದ್ರನ ಮಹತ್ತು ಏನೆಂಬುದು ನಿಮಗೆ ಗೊತ್ತಿಲ್ಲ. ಆತನ ಪಾದಸ್ಪರ್ಶ ಮಾತ್ರದಿಂದಲೇ ಕಲ್ಲಾಗಿದ್ದ ಅಹಲ್ಯೆ ಮತ್ತೆ ಬದುಕಿ ಎದ್ದಳು’ ಅಂತ ಹೇಳಿದ. ಲವಕುಶರು ಹೇಳಿದರು, ‘ನಮಗೆ ಅದೆಲ್ಲ ಗೊತ್ತಿದೆ. ನಾವು ಆ ಕಥೆಯನ್ನು ಕೇಳಿದ್ದೇವೆ. ಕಲ್ಲಾಗಿದ್ದ ಆಕೆ ಮತ್ತೆ ಬದುಕಿ ಎದ್ದುದು ಋಷಿಯ ಆಶೀರ್ವಾದದಿಂದ. ಗೌತಮ ಮುನಿ ಆಕೆಗೆ ಆಶೀರ್ವದಿಸಿದ್ದ, “ತ್ರೇತಾಯುಗ ದಲ್ಲಿ ಶ್ರೀರಾಮಚಂದ್ರ ಈ ಆಶ್ರಮದ ಬಳಿಯಲ್ಲಿಯೇ ಹೋಗುತ್ತಾನೆ. ಆತನ ಪಾದಸ್ಪರ್ಶ ದಿಂದ ನೀನು ಮತ್ತೆ ಬದುಕಿ ಏಳುವೆ” ಅಂತ’ ಎಂದು ಲವಕುಶರು ಹೇಳಿದರು. ಆಕೆ ಬದುಕಿ ಎದ್ದುದು ರಾಮನ ಮಹತ್ತಿನಿಂದಲೋ ಅಥವಾ ಋಷಿಯ ಆಶೀರ್ವಾದ ದಿಂದಲೋ? ಇದು ಹೀಗಲ್ಲ ಹಾಗೆ ಎಂದು ಯಾರು ತಾನೇ ಹೇಳಬಲ್ಲರು?
“ಪ್ರತಿಯೊಂದೂ ಆತನ ಇಚ್ಛೆಗನುಸಾರವಾಗಿ ಘಟಿಸುತ್ತದೆ. ನೀನು ಇಲ್ಲಿಗೆ ಬರುತ್ತಿರುವುದರಿಂದ ನಿನ್ನ ಆಧ್ಯಾತ್ಮಿಕ ಜೀವನ ಜಾಗ್ರತೆಗೊಳ್ಳುವುದಾದರೆ, ನಾನು ಕೇವಲ ಹೇತು ಮಾತ್ರ ಎಂಬುದನ್ನು ತಿಳಿದುಕೊ. ಚಂದಮಾಮ ಎಲ್ಲರ ಮಾಮ. ಭಗವಂತನ ಇಚ್ಛೆಯಂತೆ ಎಲ್ಲಾ ಘಟಿಸುತ್ತದೆ.”
ಗಿರೀಶ (ನಗುತ್ತ): “ಭಗವಂತನ ಇಚ್ಛೆಯಂತೆ ತಾನೆ? ನಾನು ಹೇಳೋದೂ ಇದೇನೆ.” (ಎಲ್ಲರೂ ನಗುತ್ತಾರೆ).
ಶ್ರೀರಾಮಕೃಷ್ಣರು (ಗಿರೀಶನಿಗೆ): “ಮನುಷ್ಯ ಸರಳನಾದರೆ ಶೀಘ್ರವಾಗಿ ಆತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ಈ ಕೆಲವರಿಗೆ ಜ್ಞಾನ ದೊರಕದು. ಮೊದಲನೆಯದಾಗಿ ವಕ್ರಬುದ್ಧಿಯುಳ್ಳವನಿಗೆ-ಸರಳನಾಗಿಲ್ಲದೆ ಇರುವುದರಿಂದ. ಎರಡನೆಯದು ಬಾಹ್ಯ ಶುಚಿ ಯಲ್ಲಿಯೇ ನಿರತನಾಗಿರುವವನಿಗೆ. ಮೂರನೆಯದಾಗಿ ಸಂಶಯಾತ್ಮನಿಗೆ.”
ಶ್ರೀರಾಮಕೃಷ್ಣರು ನಿತ್ಯಗೋಪಾಲನ ಭಾವಾವಸ್ಥೆಯನ್ನು ಬಹುವಾಗಿ ಪ್ರಶಂಸೆ ಮಾಡಿದರು.
ಮೂರು ನಾಲ್ಕು ಜನ ಭಕ್ತರು ಆ ಉದ್ದ ವರಾಂಡದಲ್ಲಿ ಪರಮಹಂಸರ ಹತ್ತಿರ ನಿಂತು ಅವರು ಪರಮಹಂಸಾವಸ್ಥೆಯ ಸಂಬಂಧವಾಗಿ ಹೇಳುತ್ತಿರುವುದನ್ನು ಕೇಳುತ್ತಿದ್ದಾರೆ. “ಪರಮಹಂಸರಿಗೆ ಸರ್ವದಾ ಈ ಬೋಧೆ-ಭಗವಂತನೊಬ್ಬನೇ ಸತ್ಯ, ಉಳಿದುದೆಲ್ಲ ಅನಿತ್ಯ ಎಂಬ ಬೋಧೆ ಇರುತ್ತದೆ. ಹಾಲನ್ನು ನೀರಿನಿಂದ ಪ್ರತ್ಯೇಕ ಮಾಡೋ ಶಕ್ತಿ ಹಂಸಪಕ್ಷಿಯೊಂದಕ್ಕೆ ಮಾತ್ರವೇ ಇದೆ. ಹಾಲು ನೀರಿನಲ್ಲಿ ಬೆರೆತು ಹೋಗಿದ್ದರೆ, ಹಂಸದ ನಾಲಗೆಯಲ್ಲಿ ಒಂದು ವಿಧವಾದ ಆಮ್ಲ ದ್ರವವಿದೆ. ಅದು ಹಾಲನ್ನೂ ನೀರನ್ನೂ ಬೇರೆ ಬೇರೆ ಮಾಡಿಬಿಡುತ್ತದೆ. ಪರಮಹಂಸರ ಬಾಯಲ್ಲಿಯೂ ಅಂಥದೊಂದು ಆಮ್ಲ ದ್ರವವಿದೆ; ಅದೇ ಪ್ರೇಮಾಭಕ್ತಿ. ಅದು ಅಂಕುರವಾಗಿದ್ದರೆ ನಿತ್ಯಾನಿತ್ಯ ವಿವೇಕ ಉಂಟಾಗುತ್ತದೆ: ಭಗವಂತನ ಅನುಭೂತಿ ದೊರೆಯುತ್ತದೆ; ಭಗವಂತನ ದರ್ಶನ ದೊರೆಯುತ್ತದೆ” ಅಂತ.
೨೫ನೆ ಫೆಬ್ರವರಿ ೧೮೮೫, ಫಾಲ್ಗುಣ ಶುಕ್ಲ ಏಕಾದಶಿ, ಬುಧವಾರ
ಪರಮಹಂಸರು ಕಲ್ಕತ್ತೆಯಲ್ಲಿ ಬೋಸ್ಪಾರಾ ಗಲ್ಲಿಯಲ್ಲಿರುವ ಗಿರೀಶಘೋಷನ ಮನೆಗೆ ಇಂದು ಬಂದಿದ್ದಾರೆ. ಸಮಯ ಮೂರು. ಮಾಸ್ಟರ್ ಅಲ್ಲಿಗೆ ಬಂದು ಪರಮಹಂಸ ರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ. ಇಂದು ಪರಮಹಂಸರು ಸ್ಟಾರ್ ಥಿಯೇಟರಿನಲ್ಲಿ ನಡೆಯುವ “ವೃಷಕೇತು” ಎಂಬ ನಾಟಕವನ್ನು ನೋಡಲು ಹೋಗುವರು. ಅವರು ಈಗ ಬ್ರಹ್ಮಜ್ಞಾನದ ಮತ್ತು ಭಕ್ತಿತತ್ತ್ವದ ಸಂಬಂಧವಾಗಿ ಮಾತನಾಡಲಾರಂಭಿಸಿದ್ದಾರೆ.
ಶ್ರೀರಾಮಕೃಷ್ಣರು (ಗಿರೀಶನೇ ಮೊದಲಾದ ಭಕ್ತರಿಗೆ): “ಮನುಷ್ಯನಿಗೆ ಜಾಗ್ರತ್, ಸ್ವಪ್ನ, ಸುಷುಪ್ತಿ ಎಂಬ ಮೂರು ಅವಸ್ಥೆಗಳು ಉಂಟಾಗುತ್ತವೆ. ಯಾರು ಜ್ಞಾನ ಮಾರ್ಗಿ ಗಳೊ ಅವರು ಈ ಅವಸ್ಥೆಗಳನ್ನು ತಿದ್ದಿ ತೇಲಿಸಿಬಿಡುತ್ತಾರೆ. ‘ಬ್ರಹ್ಮ ಈ ಮೂರು ಅವಸ್ಥೆ ಗಳಿಗತೀತ; ಸ್ಥೂಲ ಸೂಕ್ಷ್ಮ ಕಾರಣ-ಈ ಮೂರು ದೇಹಗಳಿಗೆ ಅತೀತ; ಸತ್ತ್ವ ರಜಸ್ಸು ತಮಸ್ಸು-ಈ ಮೂರು ಗುಣಗಳಿಗೂ ಅತೀತ; ಕನ್ನಡಿಯಲ್ಲಿ ಬೀಳುವ ಪ್ರತಿಬಿಂಬದ ಹಾಗೆ ಇವೆಲ್ಲ ಬರೀ ಮಾಯೆ; ಪ್ರತಿಬಿಂಬ ಎಂದಿಗೂ ವಸ್ತುವಲ್ಲ; ಬ್ರಹ್ಮನೊಬ್ಬನೇ ವಸ್ತು. ಉಳಿದುದೆಲ್ಲ ಅವಸ್ತು’ ಅಂತ ಅವರು ಹೇಳುತ್ತಾರೆ.
“ಬ್ರಹ್ಮಜ್ಞಾನಿಗಳು ಮತ್ತೆ ಹೇಳುತ್ತಾರೆ, ‘ದೇಹಾತ್ಮ ಬುದ್ಧಿ ಇದ್ದಿತು ಎಂದರೆ ದ್ವೈತವನ್ನು ನೋಡಬೇಕಾಗುತ್ತದೆ; ಪ್ರತಿಬಿಂಬವೇ ಸತ್ಯ ಎಂಬ ಬೋಧೆಯಾಗುತ್ತದೆ. ಈ ಬುದ್ಧಿ ಹೋಯಿತು ಎಂದರೆ ‘ಸೋಠ್ಹಮ್’, ‘ನಾನೇ ಬ್ರಹ್ಮ’ ಎಂಬ ಅನುಭೂತಿ ಉಂಟಾಗುತ್ತದೆ.’”
ಒಬ್ಬ ಭಕ್ತ: “ಹಾಗಾದರೆ ನಾವೆಲ್ಲರೂ ವಿಚಾರಮಾರ್ಗವನ್ನು ಅನುಸರಿಸೋಣ ವೇನು?”
ಶ್ರೀರಾಮಕೃಷ್ಣರು: “ಅನೇಕ ಮಾರ್ಗಗಳಲ್ಲಿ ವಿಚಾರಮಾರ್ಗವೂ ಒಂದು. ಇದು ವೇದಾಂತವಾದಿಗಳ ಮಾರ್ಗ. ಬೇರೊಂದು ಮಾರ್ಗವಿದೆ, ಭಕ್ತಿಮಾರ್ಗ. ಭಕ್ತನು ಬ್ರಹ್ಮಜ್ಞಾನ ಬೇಕೆಂದು ವ್ಯಾಕುಲಚಿತ್ತದಿಂದ ಅತ್ತರೆ, ಅದೂ ಆತನಿಗೆ ದೊರೆತುಬಿಡುತ್ತದೆ. ಜ್ಞಾನಯೋಗ ಮತ್ತು ಭಕ್ತಿಯೋಗ ಎರಡೂ ಭಗವಂತನ ಸಾಕ್ಷಾತ್ಕಾರಕ್ಕೆ ಮಾರ್ಗಗಳೇ.
“ಇವೆರಡೂ ಮಾರ್ಗಗಳಿಂದಲೂ ಬ್ರಹ್ಮಜ್ಞಾನವನ್ನು ಪಡೆಯಬಹುದು. ಕೆಲಕೆಲವರು ಬ್ರಹ್ಮಜ್ಞಾನವನ್ನು ಪಡೆದುಕೊಂಡ ನಂತರವೂ ಲೋಕಶಿಕ್ಷಣಾರ್ಥವಾಗಿ ಭಕ್ತರಾಗಿಯೇ ಉಳಿಯುವರು; ಉದಾಹರಣೆಗೆ ಅವತಾರಾದಿಗಳು.
“ದೇಹಾತ್ಮಬುದ್ಧಿ, ಅಹಂಬುದ್ಧಿ ಬಡಪಟ್ಟಿಗೆ ಹೊಗಲೊಲ್ಲದು. ಆತನ ಕೃಪೆಯಿಂದ ಸಮಾಧಿ-ನಿರ್ವಿಕಲ್ಪಸಮಾಧಿ, ಜಡಸಮಾಧಿ-ದೊರೆತರೆ ಆಗ ಅದು ಹೋಗುತ್ತದೆ.
“ಸಮಾಧಿ ದೊರೆತನಂತರ ಅವತಾರಾದಿಗಳ ‘ಅಹಂ’ ಮತ್ತೆ ಹಿಂದಿರುಗಿ ಬರುತ್ತದೆ; ಆದರೆ ಆಗ ಅದು ‘ವಿದ್ಯೆಯ ಅಹಂ’ ಅಥವಾ ‘ಭಕ್ತಿಯ ಅಹಂ’ ರೂಪಕ್ಕೆ ಪರಿವರ್ತನೆ ಯನ್ನು ಹೊಂದಿರುತ್ತದೆ. ಈ ‘ವಿದ್ಯೆಯ ಅಹಂ’ ನಿಂದ ಲೋಕಶಿಕ್ಷಣ ಕಾರ್ಯ ನಡೆಯುತ್ತದೆ. ಶ್ರೀ ಶಂಕರಾಚಾರ್ಯರು ‘ವಿದ್ಯೆಯ ಅಹಂ’ ಅನ್ನು ಇಟ್ಟುಕೊಂಡಿದ್ದರು.
“ಶ್ರೀ ಚೈತನ್ಯದೇವನು ‘ಭಕ್ತಿಯ ಅಹಂ’ ನಿಂದ ಭಕ್ತಿಯನ್ನು ಆಸ್ವಾದನ ಮಾಡುತ್ತಿದ್ದ; ಭಕ್ತರೊಡನೆ ಆನಂದಪಡುತ್ತಿದ್ದ; ಭಗವದ್ವಿಷಯವನ್ನೇ ಮಾತನಾಡುತ್ತಿದ್ದ; ನಾಮಸಂಕೀರ್ತನೆ ಮಾಡುತ್ತಿದ್ದ.
“ ‘ಅಹಂ’ ಎಂಬುದು ಸಹಜವಾಗಿ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಆ ಕಾರಣದಿಂದ ಭಕ್ತ ಜಾಗ್ರತ್ ಸ್ವಪ್ನ ಸುಷುಪ್ತಿ ಅವಸ್ಥೆಗಳನ್ನು ತಿದ್ದಿ ತೇಲಿಸಿಬಿಡುವುದಿಲ್ಲ. ಭಕ್ತ ಎಲ್ಲಾ ಅವಸ್ಥೆಗಳನ್ನೂ ಸ್ವೀಕರಿಸುತ್ತಾನೆ; ಸತ್ತ್ವ ರಜಸ್ಸು ತಮಸ್ಸು ಈ ಮೂರು ಗುಣಗಳನ್ನೂ ಅನುಮೋದಿಸುತ್ತಾನೆ. ಭಕ್ತನ ದೃಷ್ಟಿಯಿಂದ ಭಗವಂತನೇ ಚತುರ್ವಿಂಶತಿ ತತ್ತ್ವಗಳಾಗಿದ್ದಾನೆ, ಜೀವ ಜಗತ್ತಾಗಿದ್ದಾನೆ; ಆತನೇ ಸಾಕಾರ ಚಿನ್ಮಯ ರೂಪಿನಿಂದ ಕಾಣಿಸಿಕೊಳ್ಳುತ್ತಿದ್ದಾನೆ.
“ಭಕ್ತನು ವಿದ್ಯಾಮಾಯೆಯನ್ನು ಆಶ್ರಯಿಸಿಕೊಂಡು ಇರುತ್ತಾನೆ. ಸಾಧುಸಂಗ, ತೀರ್ಥ ಯಾತ್ರೆ, ಜ್ಞಾನ, ವೈರಾಗ್ಯ ಇವುಗಳೆಲ್ಲದರ ಆಶ್ರಯಮಾಡಿಕೊಂಡು ಇರುತ್ತಾನೆ. ಆತ ಹೇಳುತ್ತಾನೆ, “ಅಹಂ” ಎಂಬುದು ಸಹಜವಾಗಿ ಹೋಗದೆ ಇರುವುದರಿಂದ, ಆ ನೀಚ “ಅಹಂ” ಭಗವಂತನ ದಾಸನಾಗಿಯೊ, ಭಗವಂತನ ಭಕ್ತನಾಗಿಯೊ ಇರಲಿ’ ಅಂತ.
“ಭಕ್ತನಿಗೂ ಏಕಾಕಾರ ಜ್ಞಾನ ದೊರಕುತ್ತದೆ; ಆತನಿಗೆ ಭಗವಂತನೊಬ್ಬನಲ್ಲದೆ ಬೇರೆ ಏನೂ ಕಾಣದು. ಆತ ಎಲ್ಲವೂ ‘ಸ್ವಪ್ನವತ್’ ಅಂತ ಹೇಳುವುದಿಲ್ಲ, ಆದರೆ ಹೇಳುತ್ತಾನೆ, ‘ಭಗವಂತನೆ ಸಮಸ್ತವೂ ಆಗಿದ್ದಾನೆ’ ಅಂತ. ಮೇಣದ ತೋಟದಲ್ಲಿ ನಾನಾ ಆಕಾರಗಳನ್ನು ನೋಡಬಹುದು. ಆದರೆ ಪ್ರತಿಯೊಂದೂ ಮೇಣದಿಂದ ನಿರ್ಮಿತವಾದುದೆ.
“ಆದರೆ ಭಕ್ತಿ ಪಕ್ವವಾದಾಗ ಮಾತ್ರ ಈ ಅನುಭವ ದೊರೆಯುತ್ತದೆ. ದೇಹದಲ್ಲಿ ಪಿತ್ತ ಜಾಸ್ತಿಯಾದಾಗ ಕಾಮಾಲೆ ರೋಗ ಬರುತ್ತದೆ; ಆಗ ಎಲ್ಲವೂ ಹಳದಿಯಾಗಿ ತೋರುತ್ತದೆ. ಶ್ರೀಮತಿಯು (ರಾಧೆ) ಶ್ಯಾಮನ ಚಿಂತನೆ ಮಾಡಿ ಮಾಡಿ ಎಲ್ಲವೂ ಶ್ಯಾಮಮಯವಾಗಿರುವಂತೆ ಕಂಡಳು; ತಾನೂ ಶ್ಯಾಮನಾಗಿರುವಂತೆ ಆಕೆಗೆ ಅನುಭವ ವಾಯಿತು. ಪಾದರಸದ ಕೊಳದಲ್ಲಿ ಸೀಸ ಅನೇಕ ದಿವಸಗಳವರೆಗೆ ಬಿದ್ದಿದ್ದರೆ ಅದೂ ಪಾದರಸವಾಗಿಬಿಡುತ್ತದೆ. ಕೀಟ ಭ್ರಮರಕ್ಕೆ ಹೆದರಿ, ಅದರ ಚಿಂತನೆ ಮಾಡುತ್ತ ಮಾಡುತ್ತ ಸ್ತಬ್ಧವಾಗಿಬಿಡುತ್ತದೆ; ಅದರ ಚಲನೆಯೇ ನಿಂತುಹೋಗಿಬಿಡುತ್ತದೆ. ಕೊನೆಗೆ ಅದು ಭ್ರಮರವೇ ಆಗಿಬಿಡುತ್ತದೆ. ಭಕ್ತನೂ ಭಗವಂತನ ಧ್ಯಾನ ಮಾಡಿ ಮಾಡಿ ‘ಅಹಂ’ ಶೂನ್ಯವಾಗಿಬಿಡುತ್ತಾನೆ; ಆಗ ಅನುಭವ ಪಡೆಯುತ್ತಾನೆ, ‘ಆತನೇ ನಾನು’ ‘ನಾನೇ ಆತನು’ ಎಂಬುದಾಗಿ. ಕೀಟ ಭ್ರಮರವಾಗಿ ಹೋಯಿತು ಎಂದರೆ, ಎಲ್ಲವೂ ಸಿದ್ಧಿಸಿದ ಹಾಗೆಯೇ; ಒಡನೆಯೇ ಮುಕ್ತಿ.
“ಎಲ್ಲಿಯವರೆಗೆ ಆತ ‘ಅಹಂ’ ಎಂಬುದನ್ನು ಇಟ್ಟಿರುವನೋ, ಅಲ್ಲಿಯವರೆಗೆ ಯಾವುದಾದರೂ ಒಂದು ಭಾವವನ್ನು-ಶಾಂತ, ದಾಸ್ಯ, ವಾತ್ಸಲ್ಯ ಇವೇ ಮೊದಲಾ ದುವನ್ನು ಆರೋಪಿಸಿಕೊಂಡು ಆತನನ್ನು ಕರೆಯಬೇಕು. ನಾನು ದಾಸೀಭಾವದಿಂದ- ಬ್ರಹ್ಮಮಯಿಯ ದಾಸಿ ಎಂಬ ಭಾವದಿಂದ ಒಂದು ವರ್ಷಕಾಲ ಸಾಧನೆ ಮಾಡಿದೆ. ಹೆಂಗಸರ ಹಾಗೆ ಸೀರೆ ಉಡುತ್ತಿದ್ದೆ, ಮುಸುಕು ಹಾಕಿಕೊಳ್ಳುತ್ತಿದ್ದೆ. ಹೆಂಗಸಿನ ಭಾವವನ್ನು ಆರೋಪಿಸಿಕೊಂಡು ಸಾಧನೆ ಮಾಡಿದರೆ ಕಾಮವನ್ನು ಜಯಿಸಬಹುದು.
“ಅದಕ್ಕಾಗಿಯೇ ಆದ್ಯಾಶಕ್ತಿಯ ಪೂಜೆಯನ್ನು ಮಾಡಬೇಕು; ಆಕೆಯನ್ನು ಪ್ರಸನ್ನ ಳನ್ನಾಗಿ ಮಾಡಬೇಕು; ಆಕೆಯೇ ಹೆಂಗಸರ ರೂಪವನ್ನು ಧರಿಸಿಕೊಂಡು ಇದ್ದಾಳೆ. ಅದಕ್ಕಾಗಿಯೇ ನನ್ನದು ಮಾತೃಭಾವ. ಈ ಭಾವ ಬಹಳ ಶುದ್ಧವಾದ ಭಾವ. ತಂತ್ರಶಾಸ್ತ್ರ ದಲ್ಲಿ ವಾಮಾಚಾರದ ಸಾಧನೆಯೂ ಇದೆ; ಆದರೆ ಅದು ಒಳ್ಳೆಯದಲ್ಲ; ಅದರಲ್ಲಿ ಅಧಃಪತನವಾಗುತ್ತದೆ. ಭೋಗವಸ್ತು ಹತ್ತಿರವೇ ಇತ್ತು ಎಂದರೇ ಭಯ.
“ಮಾತೃಭಾವವನ್ನು ನಿರ್ಜಲ ಏಕಾದಶಿಗೆ ಹೋಲಿಸಬಹುದು; ಅದರಲ್ಲಿ ಭೋಗದ ಗಂಧವೇ ಇಲ್ಲ. ಇನ್ನೂ ಕೆಲವು ವಿಧದ ಏಕಾದಶಿಗಳಿವೆ: ಫಲಮೂಲ ತಿಂದು ಮಾಡುವ ಏಕಾದಶಿ; ಪೂರೀಪಲ್ಯ ತಿಂದು ಮಾಡುವ ಏಕಾದಶಿ. ನನ್ನದು ನಿರ್ಜಲ ಏಕಾದಶಿ. ನಾನು ಮಾತೃಭಾವದಿಂದ ಷೋಡಶಿಯ ಪೂಜೆ ಮಾಡಿದೆ; ಆಗ ಆಕೆಯ ಸ್ತನ ಮಾತೃಸ್ತನ, ಯೋನಿ ಮಾತೃಯೋನಿ ಎಂದು ಪರಿಗಣಿಸಿದೆ. ಈ ಮಾತೃಭಾವ-ಸಾಧನೆಯ ಕೊನೆಯ ಮಾತು. ‘ಹೇ ಭಗವಂತ, ನೀನು ನನ್ನ ತಾಯಿ, ನಾನು ನಿನ್ನ ಮಗು’ -ಇದು ಆಧ್ಯಾತ್ಮಿಕ ಜೀವನದ ಕೊನೆಯ ಮಾತು.
“ಸಂನ್ಯಾಸಿಯದು ನಿರ್ಜಲ ಏಕಾದಶಿ. ಸಂನ್ಯಾಸಿ ಭೋಗವಸ್ತುಗಳನ್ನು ತನ್ನ ಹತ್ತಿರ ಇಟ್ಟುಕೊಂಡರೇ ಭಯ. ಕಾಮಕಾಂಚನವೇ ಭೋಗವಸ್ತುಗಳು. ಆತ ಅವನ್ನು ಭೋಗಿ ಸಿದರೆ ತಾನು ಉಗುಳಿದುದನ್ನು ತಾನೇ ಉಂಡಂತೆ ಆಗುತ್ತದೆ. ಧನಕನಕಾದಿಗಳು, ಕೀರ್ತಿ, ಸಂಭ್ರಮ, ಇಂದ್ರಿಯಸುಖ-ಇವೆಲ್ಲಾ ಭೋಗವಸ್ತುಗಳೇ. ಸಂನ್ಯಾಸಿಯು ಭಕ್ತೆ-ಹೆಂಗಸಿನೊಡನೆ ಕುಳಿತಿರೋದು ಅಥವಾ ಆಕೆಯೊಡನೆ ಮಾತುಕತೆಗಳಾಡೋದು, ಇದೂ ಒಳ್ಳೆಯದಲ್ಲ; ಅದರಿಂದ ತನಗೂ ಕೇಡು, ಇತರರಿಗೂ ಕೇಡು. ಹಾಗೆ ಮಾಡುವುದರಿಂದ ಅನ್ಯರ ಶಿಕ್ಷಣೆಯ ಕಾರ್ಯ ನಡೆಯದು, ಲೋಕಶಿಕ್ಷಣೆಯ ಕಾರ್ಯ ನಡೆಯದು. ಸಂನ್ಯಾಸಿ ಬದುಕಿರೋದು ಲೋಕಶಿಕ್ಷಣೆಗಾಗಿ.
“ಹೆಂಗಸಿನೊಡನೆ ಕುಳಿತುಕೊಂಡಿರುವುದು ಅಥವಾ ಆಕೆಯೊಡನೆ ಬಹಳ ಹೊತ್ತು ಮಾತುಕತೆಯಾಡುವುದು ಇವಕ್ಕೂ ಮೈಥುನ ಅಂತ ಹೇಳುತ್ತಾರೆ. ಮೈಥುನದಲ್ಲಿ ಎಂಟು ವಿಧ. ಹೆಂಗಸರು ಮಾತುಕತೆಗಳಾಡುವುದನ್ನು ಕೇಳುವುದು, ಹಾಗೆ ಕೇಳುತ್ತ ಕೇಳುತ್ತ ಆನಂದಪಡುವುದು, ಇದೂ ಒಂದು ವಿಧವಾದ ಮೈಥುನ; ಹೆಂಗಸರ ಸಂಬಂಧವಾಗಿ ಮಾತುಕತೆಗಳಾಡುವುದು (ಕೀರ್ತನೆ) ಇದೂ ಒಂದು ವಿಧವಾದ ಮೈಥುನ; ಹೆಂಗಸಿನೊಡನೆ ನಿರ್ಜನಪ್ರದೇಶದಲ್ಲಿ ಪಿಸುಗುಟ್ಟಿಕೊಂಡು ಮಾತನಾಡುವುದು, ಇದೂ ಒಂದು ವಿಧವಾದ ಮೈಥುನ; ಹೆಂಗಸಿಗೆ ಸೇರಿದ ಯಾವುದಾದರೊಂದು ವಸ್ತುವನ್ನು ಹತ್ತಿರ ಇಟ್ಟುಕೊಂಡು ಆನಂದಪಡುವುದು, ಇದೂ ಒಂದು ವಿಧವಾದ ಮೈಥುನ; ಆಕೆಯನ್ನು ಸ್ಪರ್ಶಿಸುವುದು ಇನ್ನೊಂದು ವಿಧವಾದ ಮೈಥುನ; ಅದಕ್ಕಾಗಿಯೆ ಗುರು-ಪತ್ನಿ ಒಂದು ವೇಳೆ ಯುವತಿ ಯಾಗಿದ್ದರೆ ಆಕೆಯ ಪಾದಗಳನ್ನು ಸ್ಪರ್ಶಿಸಿಯೂ ಪ್ರಣಾಮಮಾಡಕೂಡದು. ಸಂನ್ಯಾಸಿ ಗಳಿಗೆ ಈ ಹಲವಾರು ನಿಯಮಗಳಿವೆ.
“ಆದರೆ ಸಂಸಾರಿಗಳ ಸಮಾಚಾರವೇ ಬೇರೆ. ಒಂದೆರಡು ಮಕ್ಕಳಾದ ಮೇಲೆ ದಂಪತಿಗಳು ಅಣ್ಣ-ತಂಗಿಯರೋಪಾದಿಯಲ್ಲಿ ಇರಬೇಕು. ಅವರು ಉಳಿದ ಏಳು ವಿಧದ ಮೈಥುನದಲ್ಲಿ ತೊಡಗುವುದು ಅಷ್ಟು ದೋಷವಾದ್ದೇನಲ್ಲ.
“ಗೃಹಸ್ಥನು, ಋಣಗಳನ್ನು – ದೇವಋಣ, ಪಿತೃಋಣ, ಋಷಿಋಣ ಇವುಗಳನ್ನೆಲ್ಲ ತೀರಿಸಬೇಕಾಗಿದೆ. ಆತನು ಪತ್ನೀಋಣವನ್ನೂ ತೀರಿಸಬೇಕಾಗಿದೆ; ಆಕೆಯಿಂದ ಒಂದೋ ಎರಡೋ ಮಕ್ಕಳನ್ನು ಪಡೆಯುವುದು ಮತ್ತು ಆಕೆ ಪತಿವ್ರತೆಯಾಗಿದ್ದರೆ ಪರಿಪಾಲನೆ ಮಾಡುವುದು.
“ಸಂಸಾರಿಗಳಿಗೆ ಗೊತ್ತಾಗುವುದಿಲ್ಲ, ಯಾರು ಒಳ್ಳೆ ಹೆಂಡತಿ, ಯಾರು ಕೆಟ್ಟ ಹೆಂಡತಿ, ಯಾರು ವಿದ್ಯಾಶಕ್ತಿ, ಯಾರು ಅವಿದ್ಯಾಶಕ್ತಿ ಅಂತ. ಯಾರು ಒಳ್ಳೆ ಹೆಂಡತಿಯೊ, ವಿದ್ಯಾ ಶಕ್ತಿಯೊ ಆಕೆಗೆ ಕಾಮ ಕ್ರೋಧ ಇವುಗಳೆಲ್ಲ ಬಹಳ ಕಡಿಮೆ; ನಿದ್ರೆ ಕಡಿಮೆ; ಪತಿಯ ತಲೆಯನ್ನು ಹಿಡಿದು ತನ್ನಿಂದ ದೂರಕ್ಕೆ ತಳ್ಳಿ ಬಿಡುತ್ತಾಳೆ. ಆಕೆಯಲ್ಲಿ ಪ್ರೀತಿ, ದಯೆ, ಭಕ್ತಿ, ಲಜ್ಜೆ ಇವೆಲ್ಲ ತುಂಬಿವೆ. ಆಕೆ ಎಲ್ಲರ ಸೇವೆಯನ್ನು ವಾತ್ಸಲ್ಯಭಾವದಿಂದ ಮಾಡುತ್ತಾಳೆ. ಯಾವುದರಿಂದ ಪತಿಗೆ ಭಗವಂತನಲ್ಲಿ ಭಕ್ತಿ ಉಂಟಾಗುತ್ತದೆಯೊ ಅದನ್ನು ಮಾಡಲು ಆಕೆ ಸತತ ಸಿದ್ಧಳಾಗಿರುತ್ತಾಳೆ. ದುಂದುವೆಚ್ಚ ಮಾಡಿದರೆ ತನ್ನ ಪತಿ ಬಹಳವಾಗಿ ದುಡಿಯ ಬೇಕಾಗಬಹುದು, ಅದರಿಂದ ಭಗವಂತನ ಧ್ಯಾನಕ್ಕೆ ಆತನಿಗೆ ಸಮಯ ದೊರಕದೆ ಹೋಗಬಹುದು ಎಂದು ಭಾವಿಸಿ ಅಲ್ಪ ವೆಚ್ಚದಿಂದಲೇ ಸಂಸಾರವನ್ನು ಸಾಗಿಸಿಕೊಂಡು ಹೋಗುತ್ತಾಳೆ.
“ಗಂಡುಬೀರಿ ಹೆಂಗಸರಿಗೆ ಬೇರೆ ಬೇರೆ ಲಕ್ಷಣಗಳಿವೆ. ಇವು ಕೆಟ್ಟ ಲಕ್ಷಣಗಳು: ಮಾಲುಗಣ್ಣು, ಹೂತುಕೊಂಡಿರುವ ಕಣ್ಣು, ಬೆಕ್ಕಿನ ಕಣ್ಣು, ಹಸುವಿನಕರುವಿನಂತಹ ದವಡೆ, ಪಾರಿವಾಳದ ಹಕ್ಕಿಯಂಥ ಎದೆಗೂಡು.”
ಗಿರೀಶ: “ನಮಗೆಲ್ಲ ಗತಿಯೇನು?”
ಶ್ರೀರಾಮಕೃಷ್ಣರು: “ಭಕ್ತಿಯೇ ಸಾರವಾದ್ದು. ಮತ್ತೆ ಸಾತ್ತ್ವಿಕಭಕ್ತಿ, ರಾಜಸಿಕಭಕ್ತಿ, ತಾಮಸಿಕಭಕ್ತಿ ಎಂಬುವೂ ಇವೆ. ಸಾತ್ತ್ವಿಕಭಕ್ತನದು ದೀನ ನಮ್ರಭಾವ. ಆದರೆ ತಾಮಸಿಕ ಭಕ್ತನ ಭಾವ ಡಕಾಯಿತನ ಭಾವ. ಆತ ಹೇಳುತ್ತಾನೆ, ‘ಹೇ ಭಗವಂತ, ನಾನು ನಿನ್ನ ಹೆಸರನ್ನು ಜಪಿಸುತ್ತಿದ್ದೇನೆ; ನನ್ನಲ್ಲಿ ಪಾಪಕ್ಕೆ ಆಶ್ರಯವೆಲ್ಲಿ? ಹೇ ಭಗವಂತ, ನೀನು ನನ್ನ ಸ್ವಂತ ತಾಯಿ; ದರ್ಶನ ಕೊಡಲೇಬೇಕು’ ಅಂತ.
ಗಿರೀಶ (ನಗುತ್ತ): “ತಾಮಸಿಕ ಭಕ್ತನಾಗುವುದನ್ನು ನೀವೇ ನಮಗೆ ಕಲಿಸಿಕೊಡುತ್ತಾ ಇದ್ದೀರಲ್ಲ!”
ಶ್ರೀರಾಮಕೃಷ್ಣರು (ನಗುತ್ತ): “ಆದರೆ ಆತನ ದರ್ಶನ ಪಡೆಯುವುದಕ್ಕೆ ಕೆಲವು ಲಕ್ಷಣಗಳಿವೆ; ಸಮಾಧಿಯುಂಟಾಗುತ್ತದೆ. ಸಮಾಧಿಯಲ್ಲಿ ಐದು ವಿಧ. ಮೊದಲನೆಯದರಲ್ಲಿ ಇರುವೆಯ ಚಲನೆಯಂತೆ ಚಲನೆ-ಮಹಾವಾಯು ಇರುವೆಯಂತೆ ಮೇಲಕ್ಕೆ ಹತ್ತುತ್ತದೆ. ಎರಡನೆಯದರಲ್ಲಿ ಮೀನಿನ ಚಲನೆಯಂತೆ, ಮೂರನೆಯದರಲ್ಲಿ ಹಾವಿನ ಚಲನೆಯಂತೆ ಮಹಾವಾಯು ಮೇಲಕ್ಕೆ ಹತ್ತುತ್ತದೆ. ನಾಲ್ಕನೆಯದರಲ್ಲಿ ಹಕ್ಕಿಯ ಚಲನೆಯಂತೆ ಚಲನೆ- ಹಕ್ಕಿ ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಹಾರಿಹೋಗುವ ಹಾಗೆ ಮಹಾವಾಯು ಮೇಲಕ್ಕೆ ಹತ್ತುತ್ತದೆ. ಐದನೆಯದರಲ್ಲಿ ಕಪಿಯ ಚಲನೆಯಂತೆ ಚಲನೆ-ಮಹಾವಾಯು ಇದರಲ್ಲಿ ಒಂದೇ ನೆಗೆತಕ್ಕೆ ಸಹಸ್ರಾರವನ್ನು ಮುಟ್ಟಿದಂತಾಗುತ್ತದೆ; ಬಳಿಕ ಸಮಾಧಿ.
“ಇನ್ನೂ ಎರಡು ವಿಧಗಳಿವೆ. ಮೊದಲನೆಯದು ಸ್ಥಿತಸಮಾಧಿ; ಸಾಧಕ ಒಮ್ಮೆಗೆಯೆ ಬಾಹ್ಯಜ್ಞಾನಶೂನ್ಯನಾಗಿಬಿಡುತ್ತಾನೆ; ಬಹಳ ಹೊತ್ತು, ಒಮ್ಮೊಮ್ಮೆ ಬಹಳ ದಿವಸಗಳ ವರೆಗೂ ಅದರಲ್ಲಿ ಇರಬಲ್ಲ. ಎರಡನೆಯದು ಉನ್ಮನಸಮಾಧಿ; ಇದ್ದಕ್ಕಿದ್ದ ಹಾಗೆ ನಾಲ್ಕು ಕಡೆಯಿಂದಲೂ ಮನಸ್ಸನ್ನು ಎಳೆದುತಂದು ಏಕೀಕರಿಸಿ ಭಗವಂತನಲ್ಲಿ ಐಕ್ಯ ಮಾಡೋದು.
(ಮಾಸ್ಟರಿಗೆ): “ನಿನಗೆ ಇದು ಅರ್ಥವಾಯಿತೇನು?”
ಮಾಸ್ಟರ್: “ಹೌದು ಆಯಿತು.”
ಗಿರೀಶ: “ಸಾಧನೆಮಾಡಿ ಆತನನ್ನು ಪಡೆಯಬಹುದೆ?”
ಶ್ರೀರಾಮಕೃಷ್ಣರು: “ಹಲವಾರು ವಿಧದಿಂದ ಜನ ಆತನ ಸಾಕ್ಷಾತ್ಕಾರವನ್ನು ಪಡೆದಿ ದ್ದಾರೆ. ಕೆಲವರು ಬಹಳವಾಗಿ ಸಾಧನೆ ಭಜನೆ ತಪಸ್ಸನ್ನು ಮಾಡಿದವರು; ಇವರೇ ಸಾಧನ ಸಿದ್ಧರು. ಕೆಲವರು ನಾರದ ಶುಕದೇವಾದಿಗಳೋಪಾದಿಯಲ್ಲಿ ಆಜನ್ಮಸಿದ್ಧರು; ಇವರನ್ನು ನಿತ್ಯಸಿದ್ಧರು ಅಂತ ಕರೆಯಬಹುದು. ಮತ್ತೆ ಹಠಾತ್- ಸಿದ್ಧರು ಎಂಬುವವರಿದ್ದಾರೆ; ಹಠಾತ್ತಾಗಿ ಸಾಕ್ಷಾತ್ಕಾರ ಪಡೆದುಕೊಂಡಿರತಕ್ಕವರು. ಇದು ಮನುಷ್ಯ ಇದ್ದಕ್ಕಿದ್ದ ಹಾಗೆ ಕುಬೇರನಾಗುವ ಹಾಗೆ. ಜೊತೆಗೆ ಸ್ವಪ್ನ-ಸಿದ್ಧರು, ಕೃಪಾ-ಸಿದ್ಧರು ಎಂಬುವವರೂ ಇದ್ದಾರೆ.”
ಹೀಗೆಂದು ಹೇಳಿ ಪರಮಹಂಸರು ಭಾವೋನ್ಮತ್ತರಾಗಿ ಹಾಡುತ್ತಿದ್ದಾರೆ:
ಅತಿ ಕಠೋರ ಸಾಧನೆಯಲಿ ತೊಡಗಿರುವೀ ಶಿವನು ಕೂಡ
ಇನ್ನಾದರೂ ಕಾಣದಿರಲು ಕಾಳೀಪದನೀಲವ…….
ಶ್ರೀರಾಮಕೃಷ್ಣರು ಭಾವಾವಿಷ್ಟರಾಗಿಯೇ ಸ್ವಲ್ಪ ಹೊತ್ತು ಇದ್ದರು. ಗಿರೀಶನೆ ಮೊದಲಾದ ಭಕ್ತರು ಅವರ ಮುಂದೆ ಕುಳಿತಿದ್ದಾರೆ. ಸ್ವಲ್ಪ ದಿವಸಗಳ ಹಿಂದೆ ಗಿರೀಶ ಸ್ಟಾರ್ ಥಿಯೇಟರಿನಲ್ಲಿ ಏನೇನೊ ಬೈದ. ಈಗ ಶಾಂತಭಾವದಲ್ಲಿದ್ದಾನೆ.
ಶ್ರೀರಾಮಕೃಷ್ಣರು (ಗಿರೀಶನಿಗೆ): “ನಿನ್ನ ಈ ಭಾವ ಬಹಳ ಒಳ್ಳೆಯದು: ಇದೇ ಶಾಂತಭಾವ. ತಾಯಿಗೆ ಪ್ರಾರ್ಥನೆ ಮಾಡಿದೆ, ‘ತಾಯೆ, ಆತ ನನ್ನನ್ನು ಬೈಯ್ಯದೆ ಇರುವಷ್ಟು ಮಟ್ಟಿಗೆ ಆತನನ್ನು ಶಾಂತನನ್ನಾಗಿ ಮಾಡು’ ಅಂತ.”
ಗಿರೀಶ (ಶ್ರೀರಾಮಕೃಷ್ಣರಿಗೆ): “ನನ್ನ ನಾಲಗೆಯನ್ನು ಯಾರೋ ಅದುಮಿ ಹಿಡಿದಿರು ವಂತೆ ತೋರುತ್ತದೆ; ಮಾತನಾಡಲು ಆಗುತ್ತಿಲ್ಲ.”
ಪರಮಹಂಸರು ಇನ್ನೂ ಅಂತರ್ಮುಖರಾಗಿಯೆ ಇದ್ದಾರೆ. ಸುತ್ತಲೂ ಇದ್ದ ಜನ ಮುಂತಾದವರನ್ನೆಲ್ಲ ಮರೆತು ಕ್ರಮಕ್ರಮೇಣ ಅವರು ಬೇರೆ ಅಂತಸ್ತಿಗೆ ಹೋಗುತ್ತಿರುವಂತೆ ತೋರಿತು. ಕಿಂಚಿತ್ ಪ್ರಕೃತಿಸ್ಥರಾಗಿ ಮನಸ್ಸನ್ನು ಕೆಳಗೆ ಇಳಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೆ ಭಕ್ತರ ಕಡೆ ದೃಷ್ಟಿ ಹಾಕಿದರು.
ಪರಮಹಂಸರು ಮಾಸ್ಟರ್ ಕಡೆ ನೋಡಿ ಹೇಳಿದರು, “ಇವರೆಲ್ಲರೂ ದಕ್ಷಿಣೇಶ್ವರಕ್ಕೆ ಬರುತ್ತಾರೆ, ಬರಲಿ. ಎಲ್ಲಾ ತಾಯಿಗೆ ಗೊತ್ತಿದೆ” ಅಂತ. ಪಕ್ಕದ ಮನೆಯ ಒಬ್ಬ ಹುಡುಗನನ್ನು ಕೇಳಿದರು, “ಏನಪ್ಪ ಹುಡುಗ, ನಿನಗೇನನಿಸುತ್ತದೆ? ಮನುಷ್ಯನ ಕರ್ತವ್ಯವೇನು?” ಎಂದು. ಎಲ್ಲರೂ ಮೌನವಾಗಿ ಕುಳಿತಿದ್ದಾರೆ. ನಾರಾಯಣನ ಕಡೆ ತಿರುಗಿ ಹೇಳಿದರು, “ನೀನು ಪರೀಕ್ಷೆಗಳಲ್ಲಿ ಪಾಸಾಗಲು ಇಚ್ಛಿಸುತ್ತಿಲ್ಲವೇನು? ಆದರೆ ಮಗು, ಪಾಶಮುಕ್ತನೆ ಶಿವ, ಪಾಶಬದ್ಧನೆ ಜೀವ” ಎಂದು.
ಪರಮಹಂಸರು ಇನ್ನೂ ಭಾವವಿಷ್ಟರಾಗಿಯೇ ಇದ್ದಾರೆ, ಅವರ ಹತ್ತಿರ ಒಂದು ಗ್ಲಾಸು ನೀರು ಇಟ್ಟಿತ್ತು. ಅವರು ಅದನ್ನು ಕುಡಿದರು. ಅವರು ತಮ್ಮಷ್ಟಕ್ಕೆ ತಾವೆ ಹೇಳಿಕೊಳ್ಳುತ್ತಿದ್ದಾರೆ, “ಏಕೆ, ಈ ಅವಸ್ಥೆಯಲ್ಲಿ ನೀರು ಕುಡಿದುಬಿಟ್ಟೆ!” ಅಂತ.
ಇನ್ನೂ ಸಾಯಂಕಾಲವಾಗಿಲ್ಲ. ಪರಮಹಂಸರು ಗಿರೀಶನ ಅಣ್ಣ ಅತುಲನೊಡನೆ ಮಾತುಕತೆಯಾಡುತ್ತಿದ್ದಾರೆ. ಆತ ಕಲ್ಕತ್ತದ ಹೈಕೋರ್ಟಿನ ಒಬ್ಬ ಲಾಯರು. ಪರಮಹಂಸರ ಎದುರಿಗೇನೆ ಕುಳಿತಿದ್ದಾನೆ. ಪಕ್ಕದ ಮನೆಯ ಒಬ್ಬ ಬ್ರಾಹ್ಮಣನೂ ಅಲ್ಲಿ ಕುಳಿತಿದ್ದಾನೆ. ಉಳಿದ ಭಕ್ತರೂ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು (ಅತುಲನಿಗೆ): “ನಿಮಗೆಲ್ಲ ನಾನು ಹೇಳಬೇಕೆಂದಿರುವುದು ಇಷ್ಟೆ. ನೀವು ಎರಡು ಕಡೆಗೂ ಮನಸ್ಸನ್ನಿಡಬೇಕು; ಸಂಸಾರದ ಕಡೆಗೂ ಮನಸ್ಸನ್ನಿಡಬೇಕು; ಯಾವುದರಿಂದ ಭಕ್ತಿ ದೊರಕುವುದೊ ಅದರ ಕಡೆಗೂ ಮನಸ್ಸನ್ನಿಡಬೇಕು.”
ಬ್ರಾಹ್ಮಣ: “ಬ್ರಾಹ್ಮಣನಲ್ಲದವ ಸಿದ್ಧಪುರುಷನಾಗುವುದಕ್ಕೆ ಆಗುತ್ತದೆಯೆ?”
ಶ್ರೀರಾಮಕೃಷ್ಣರು: “ಏಕೆ ಆಗುವುದಿಲ್ಲ? ಕಲಿಯುಗದಲ್ಲಿ ಶೂದ್ರರಿಗೆ ಭಕ್ತಿ ಉಂಟಾಗುತ್ತೆ ಎಂದು ಹೇಳಿದೆ. ಉದಾಹರಣೆಗಾಗಿ ಶಬರಿ, ರೂಹಿದಾಸ, ಚಂಡಾಲ ಗುಹಕ ಇವರೇ ಮೊದಲಾದವರು ಇರುವರಲ್ಲ.”
ನಾರಾಯಣ (ನಗುತ್ತ): “ಬ್ರಾಹ್ಮಣ-ಶೂದ್ರ-ಎಲ್ಲರೂ ಒಂದೇ.”
ಬ್ರಾಹ್ಮಣ: “ಒಂದೇ ಜನ್ಮದಲ್ಲಿ ಭಗವಂತನ ಸಾಕ್ಷಾತ್ಕಾರ ದೊರೆತುಬಿಡುವುದೆ?”
ಶ್ರೀರಾಮಕೃಷ್ಣರು: “ಆತನ ಕೃಪೆಯೊಂದಿದ್ದರೆ ಏನು ತಾನೆ ಸಾಧ್ಯವಿಲ್ಲ? ಸಹಸ್ರಾರು ವರ್ಷಗಳಿಂದ ಕತ್ತಲೆಯಾಗಿದ್ದ ಕೊಠಡಿಗೆ ಬೆಳಕು ತಂದರೆ ಕತ್ತಲೆ ಕಿಂಚಿತ್ ಕಿಂಚಿತ್ತಾಗಿ ಮಾಯವಾಗುವುದೆ? ಕೊಠಡಿ ಒಮ್ಮೆಗೆಯೇ ಬೆಳಕಾಗುತ್ತದೆ. (ಅತುಲನಿಗೆ) ತೀವ್ರ ವೈರಾಗ್ಯ ಬೇಕು. ಅದು ಒರೆಯಿಂದ ತೆಗೆದ ಕತ್ತಿಯೋಪಾದಿಯಲ್ಲಿರಬೇಕು. ಅಂಥ ವೈರಾಗ್ಯ ಉಂಟಾಯಿತು ಅಂದರೆ ಸ್ವಬಾಂಧವರು ಕಾಳಸರ್ಪನೋಪಾದಿಯಲ್ಲಿ ಕಾಣಬರುತ್ತಾರೆ, ಸ್ವಂತ ಮನೆ ದೊಡ್ಡ ಬಾವಿಯೋಪಾದಿಯಲ್ಲಿ ಕಂಡುಬರುತ್ತದೆ.
“ತೀವ್ರ ವ್ಯಾಕುಲತೆಯಿಂದ ಆತನನ್ನು ಕರೆಯಬೇಕು. ಹೃತ್ಪೂರ್ವಕ ಕರೆಗೆ ಆತ ಮನಸ್ಸು ಕೊಟ್ಟೇ ಕೊಡುತ್ತಾನೆ.”
ಎಲ್ಲರೂ ಸುಮ್ಮನೆ ಕುಳಿತಿದ್ದಾರೆ. ಪರಮಹಂಸರು ಏನೋ ಹೇಳಿದರು. ಅದನ್ನೆಲ್ಲ ಮೆಲುಕು ಹಾಕುತ್ತ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು ಅತುಲನಿಗೆ : “ಏಕೆಚಿಂತಾಕ್ರಾಂತನಾಗಿದ್ದೀಯೆ?ಅಂಥವ್ಯಾಕುಲತೆ ಅಂಥ ಬಲಯುತ ಮನಸ್ಸು ನಿನಗಿಲ್ಲವಲ್ಲ ಅಂತಲೇನು?”
ಅತುಲ: “ನಮ್ಮ ಮನಸ್ಸನ್ನು ಆತನ ಪಾದಪದ್ಮಗಳಲ್ಲಿ ಇಡುವುದು ಹೇಗೆ?”
ಶ್ರೀರಾಮಕೃಷ್ಣರು: “ಅಭ್ಯಾಸಯೋಗದಿಂದ. ದಿನವೂ ಆತನನ್ನು ಕರೆಯೋ ಅಭ್ಯಾಸ ಇಟ್ಟುಕೊಂಡಿರಬೇಕು. ಒಂದೇ ದಿನದಲ್ಲಿ ಬರದು; ದಿನವೂ ಕರೆಯುತ್ತ ಕರೆಯುತ್ತ ಹೋದರೆ ವ್ಯಾಕುಲತೆ ಬಂದುಬಿಡುತ್ತದೆ.
“ಯಾವಾಗ ನೋಡಿದರೂ ಹಗಲು ಇರುಳು ಎನ್ನದೆ ವಿಷಯಕರ್ಮಗಳಲ್ಲಿಯೇ ತೊಡಗಿದ್ದರೆ ವ್ಯಾಕುಲತೆ ಹೇಗೆ ಉಂಟಾದೀತು? ಹಿಂದೆ ಯದುಮಲ್ಲಿಕ ಭಗವತ್ಸಂಬಂಧ ವಾದ ಮಾತುಕತೆಗಳನ್ನು ಕೇಳುವುದರಲ್ಲಿ ಮತ್ತು ಆಡುವುದರಲ್ಲಿ ಬಹಳ ಆಸಕ್ತಿಯನ್ನು ತೋರಿಸುತ್ತಿದ್ದ. ಈಗ ಅಷ್ಟೊಂದು ಆಸಕ್ತಿಯನ್ನೂ ತೋರಿಸುತ್ತಿಲ್ಲ. ಹಗಲು ಇರುಳು ಹೊಗಳು ಭಟ್ಟರನ್ನು ಕಟ್ಟಿಕೊಂಡು ವಿಷಯವಸ್ತುಗಳ ಸಂಬಂಧವಾದ ಮಾತುಕತೆ ಗಳಲ್ಲಿಯೇ ನಿರತನಾಗಿದ್ದಾನೆ.”
ಸಾಯಂಕಾಲವಾಯಿತು. ಕೊಠಡಿಯಲ್ಲಿ ದೀಪ ಹಚ್ಚಿದ್ದಾರೆ, ಪರಮಹಂಸರು ದೇವ- ದೇವಿಯರನ್ನು ನೆನೆಸಿಕೊಳ್ಳುತ್ತಿದ್ದಾರೆ ಮತ್ತು ಪ್ರಾರ್ಥಿಸುತ್ತಿದ್ದಾರೆ. ಹೇಳುತ್ತಿದ್ದಾರೆ, “ಹರಿನಾಮವನ್ನು ಪಠಿಸು, ಹರಿನಾಮವನ್ನು ಜಪಿಸು, ಹರಿನಾಮವನ್ನು ಹಾಡು” ಅಂತ. ಮತ್ತೆ ಹೇಳಿದರು, “ರಾಮ! ರಾಮ! ರಾಮ!” ಅಂತ. ಬಳಿಕ ಹೇಳಿದರು, “ಹೇ, ನಿತ್ಯಲೀಲಾಮಯಿಯೆ, ಹೇ ತಾಯೆ ಮಾರ್ಗವನ್ನು ತೋರಿಸು. ಶರಣಾಗತ, ಶರಣಾಗತ, ಶರಣಾಗತ” ಅಂತ.
ಗಿರೀಶ ಅಶಾಂತನಾಗಿರುವುದನ್ನು ನೋಡಿ ಪರಮಹಂಸರು ಒಂದು ಸ್ವಲ್ಪ ಹೊತ್ತು ಸುಮ್ಮನೆ ಕುಳಿತರು. ತೇಜಚಂದ್ರನಿಗೆ ಹೇಳಿದರು, “ನೀನು ಬಂದು ನನ್ನ ಹತ್ತಿರ ಕುಳಿತುಕೊ” ಅಂತ. ಆತ ಬಂದು ಪರಮಹಂಸರ ಹತ್ತಿರ ಕುಳಿತುಕೊಂಡ. ಸ್ವಲ್ಪಹೊತ್ತಾದ ಮೇಲೆ ಆ ಹುಡುಗ ತಾನು ಹಿಂದಿರುಗಿ ಹೋಗಬೇಕೆಂದು ಮಾಸ್ಟರಿಗೆ ಪಿಸುಗುಟ್ಟಿ ಹೇಳುತ್ತಿದ್ದಾನೆ.
ಮಾಸ್ಟರ್: “ಮನೆಗೆ ಹಿಂದಿರುಗಿ ಹೋಗಬೇಕಂತೆ. ಅದನ್ನು ಕಿವಿಯಲ್ಲಿ ಹೇಳು ತ್ತಿದ್ದಾನೆ.”
ಶ್ರೀರಾಮಕೃಷ್ಣರು: “ಇಂಥ ಹುಡುಗರನ್ನು ನಾನು ಏಕೆ ಆಕರ್ಷಿಸುತ್ತಿದ್ದೇನೆ? ಇಂಥವರು ಪರಿಶುದ್ಧ ಹೃದಯಿಗಳು- ವಿಷಯಬುದ್ಧಿ ಇನ್ನೂ ಪ್ರವೇಶ ಮಾಡಿಲ್ಲ. ವಿಷಯಬುದ್ಧಿ ಇದ್ದಿತು ಎಂದರೆ ಉಪದೇಶವನ್ನು ಗ್ರಹಿಸಲು ಆಗುವುದಿಲ್ಲ. ಹೊಸ ಮಡಕೆಯಲ್ಲಿ ಹಾಲನ್ನು ಇಡಬಹುದು. ಮೊಸರಿನ ಮಡಕೆಯಲ್ಲಿ ಹಾಲನ್ನು ಇಟ್ಟರೆ ಅದು ಒಡೆದುಹೋಗುತ್ತದೆ. ಯಾವ ಪಾತ್ರೆಯಲ್ಲಿ ಬೆಳ್ಳುಳ್ಳಿ ರಸವನ್ನು ಹಾಕಿ ಇಟ್ಟಿತ್ತೊ ಅದನ್ನು ಒಂದು ಸಾವಿರ ಸಲ ತೊಳಿಯಿರಿ, ಅದು ಬೆಳ್ಳುಳ್ಳಿ ಗಂಧದಿಂದ ಪಾರಾಗದು.”
ಶ್ರೀರಾಮಕೃಷ್ಣರು ‘ವೃಷಕೇತು’ ಎಂಬ ನಾಟಕವನ್ನು ನೋಡಲು ಬೀಡನ್ ಸ್ಟ್ರೀಟಿ ನಲ್ಲಿರುವ ಸ್ಟಾರ್ ಥಿಯೇಟರಿಗೆ ಬಂದಿದ್ದಾರೆ. ಅವರು ದಕ್ಷಿಣಾಭಿಮುಖರಾಗಿ ಒಂದು ಬಾಕ್ಸಿನಲ್ಲಿ ಕುಳಿತಿದ್ದಾರೆ. ಮಾಸ್ಟರ್ ಮೊದಲಾದ ಭಕ್ತರು ಹತ್ತಿರವೇ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನರೇಂದ್ರ ಬಂದಿದ್ದಾನೇನು?”
ಮಾಸ್ಟರ್: “ಹೌದು ಬಂದಿದ್ದಾನೆ.”
ನಾಟಕ ಶುರುವಾಯಿತು. ಕರ್ಣನ ದಾನಶೀಲತೆಯನ್ನು ಪರೀಕ್ಷಿಸಲು ಬ್ರಾಹ್ಮಣ ವೇಷಧಾರಿಯಾಗಿ ಬಂದಿದ್ದ ಭಗವಂತನಿಗೆ ಕರ್ಣ, ಕರ್ಣನ ಹೆಂಡತಿ ಪದ್ಮಾವತಿ ಇಬ್ಬರೂ ಕೂಡಿ ತಮ್ಮ ಮಗ ವೃಷಕೇತುವನ್ನು ಬಲಿಕೊಡುತ್ತಿದ್ದಾರೆ. ಈ ದೃಶ್ಯವನ್ನು ನೋಡಿ ಒಬ್ಬ ಭಕ್ತ ನಿಟ್ಟುಸಿರುಬಿಟ್ಟ. ಪರಮಹಂಸರೂ ತಮ್ಮ ದುಃಖವನ್ನು ವ್ಯಕ್ತಪಡಿಸಿದರು.
ನಾಟಕ ಮುಗಿದ ನಂತರ ಪರಮಹಂಸರು ಥಿಯೇಟರಿನ ವಿಶ್ರಾಂತಿ ಕೊಠಡಿಗೆ ಹೋದರು. ಗಿರೀಶ ಮತ್ತು ನರೇಂದ್ರ ಆಗಲೇ ಅಲ್ಲಿಗೆ ಹೋಗಿದ್ದರು. ಶ್ರೀರಾಮಕೃಷ್ಣರು ನರೇಂದ್ರನ ಹತ್ತಿರ ಹೋಗಿ ನಿಂತು ಹೇಳಿದರು, “ನಾನು ಬಂದಿದ್ದೇನೆ” ಅಂತ.
ಪರಮಹಂಸರು ವಿಶ್ರಾಂತಿ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ಇನ್ನೂ ವಾದ್ಯ ಮೇಳದ ಶಬ್ದ ಕೇಳಿಬರುತ್ತಿದೆ.
ಶ್ರೀರಾಮಕೃಷ್ಣರು (ಭಕ್ತರಿಗೆ): “ಈ ವಾದ್ಯಮೇಳವನ್ನು ಕೇಳಿ ನನಗೆ ಬಹಳ ಆನಂದ ವಾಗುತ್ತದೆ. ಅಲ್ಲಿ (ದಕ್ಷಿಣೇಶ್ವರದಲ್ಲಿ) ಶಹನಾಯಿಯನ್ನು ಊದುತ್ತಿದ್ದರು. ಅದನ್ನು ಕೇಳಿ ನಾನು ಭಾವಾವಿಷ್ಟನಾಗಿಬಿಡುತ್ತಿದ್ದೆ. ನನ್ನ ಈ ಮಾನಸಿಕ ಸ್ಥಿತಿಯನ್ನು ನೋಡಿ ಒಬ್ಬ ಸಾಧು ಹೇಳಿದ, ‘ಇವೆಲ್ಲ ಬ್ರಹ್ಮಜ್ಞಾನದ ಲಕ್ಷಣ’ ಅಂತ.”
ವಾದ್ಯಮೇಳ ನಿಂತಿತು. ಪರಮಹಂಸರು ಮಾತುಕತೆಯಾಡಲು ಆರಂಭಿಸಿದರು.
ಶ್ರೀರಾಮಕೃಷ್ಣರು (ಗಿರೀಶನಿಗೆ): “ಈ ಥಿಯೇಟರ್ ನಿನ್ನದೊ ಅಥವಾ ನಿಮ್ಮದೊ?”
ಗಿರೀಶ: “ನಮ್ಮದು.”
ಶ್ರೀರಾಮಕೃಷ್ಣರು : “ ‘ನಮ್ಮದು’ ಅಂತ ಹೇಳುವುದು ಬಹಳ ಒಳ್ಳೆಯದು; ‘ನನ್ನದು’ ಅಂತ ಹೇಳುವುದು ಒಳ್ಳೆಯದಲ್ಲ. ಕೆಲಕೆಲವರು ಹೇಳುತ್ತಾರೆ, ‘ನಾನೇ ಖುದ್ದಾಗಿ ಬಂದಿದ್ದೇನೆ’ ಅಂತ, ಇದು ಹೀನಬುದ್ಧಿಯುಳ್ಳವರು ಮತ್ತು ಅಹಂಕಾರಿಗಳು ಆಡುವ ಮಾತು.”
ನರೇಂದ್ರ: “ಇಡೀ ಪ್ರಪಂಚವೇ ಒಂದು ಥಿಯೇಟರ್.”
ಶ್ರೀರಾಮಕೃಷ್ಣರು: “ಹೌದು, ಹೌದು, ನಿಜ. ಆದರೆ ಕೆಲವು ಕಡೆ ವಿದ್ಯೆಯ ಅಭಿನಯ, ಇನ್ನು ಕೆಲವು ಕಡೆ ಅವಿದ್ಯೆಯ ಅಭಿನಯ.”
ನರೇಂದ್ರ: “ಎಲ್ಲೆಲ್ಲೂ ವಿದ್ಯೆಯ ಅಭಿನಯವೆ.”
ಶ್ರೀರಾಮಕೃಷ್ಣರು: “ನಿಜ, ನಿಜ. ಆದರೆ ಅದು ಬ್ರಹ್ಮಜ್ಞಾನ ದೊರೆತಾಗ ಮಾತ್ರ. ಆದರೆ ಭಕ್ತನ ದೃಷ್ಟಿಯಿಂದ ಎರಡೂ-ವಿದ್ಯಾಮಾಯೆ, ಅವಿದ್ಯಾಮಾಯೆ-ಇವೆ.
“ನೀನು ಒಂದು ಸ್ವಲ್ಪ ಹೊತ್ತು ಹಾಡು.”
ನರೇಂದ್ರ ಹಾಡಲಾರಂಭಿಸಿದ:
ಚಿದಾನಂದ ಸಿಂಧುವಿನಲಿ ಪ್ರೇಮಾನಂದದಲೆಗಳು
ಮಹಾಭಾವ ರಾಸಲೀಲ ಮಾಧುರ್ಯದೊಳಾಡಿವೆ!
ನಿಮಿಷಕೊಮ್ಮೆ ನವನವೀನ ಬಹುವಿಲಾಸರಂಗದಲ್ಲಿ
ಕಣ್ಮನಗಳ ಸೆಳೆದಿವೆ!
ಮಹಾಯೋಗದಲ್ಲಿ ಎಲ್ಲ ಏಕರೂಪವಾಂತಿದೆ!
ಕಾಲದೇಶ ಕರಗಿದೆ.
ಭೇದವೆಲ್ಲ ಅಳಿದಿದೆ.
ಹರಿನಾಮವ ನುತಿಸಿ ಮನಸು ಆನಂದದಿ ಕುಣಿದಿದೆ!
ನರೇಂದ್ರ ಈ ಹಾಡಿನ, “ಮಹಾಯೋಗದಲ್ಲಿ ಎಲ್ಲ ಏಕರೂಪವಾಂತಿದೆ!” ಎಂಬ ಚರಣವನ್ನು ಹಾಡಿದಾಗ ಪರಮಹಂಸರು ಹೇಳಿದರು, “ಬ್ರಹ್ಮಜ್ಞಾನ ದೊರೆತಾಗ ಈ ಅನುಭವ ಆಗುತ್ತದೆ; ಆಗ, ನೀನು ಹೇಳಿದ ಹಾಗೆ ಎಲ್ಲವೂ ವಿದ್ಯೆ ಎಂಬ ಅನುಭವವು ಆಗುತ್ತದೆ” ಅಂತ.
ನರೇಂದ್ರ ಇದೇ ಹಾಡಿನ, “ಹರಿನಾಮವ ನುತಿಸಿ ಮನಸು ಆನಂದದಿ ಕುಣಿದಿದೆ” ಎಂಬ ಚರಣವನ್ನು ಹಾಡಿದಾಗ ಪರಮಹಂಸರು ನರೇಂದ್ರನಿಗೆ ಹೇಳಿದರು, “ಈ ಚರಣ ವನ್ನು ಎರಡು ಬಾರಿ ಹಾಡು” ಅಂತ.
ಹಾಡುವುದು ಮುಗಿದನಂತರ ಪರಮಹಂಸರು ಮತ್ತೆ ಮಾತುಕತೆಯಾಡಲು ಪ್ರಾರಂಭಿಸಿದರು.
ಗಿರೀಶ: “ದೇವೇಂದ್ರಬಾಬು ಬರಲಿಲ್ಲ. ಆತ ಅಭಿಮಾನದಿಂದ ಹೇಳುತ್ತಾನೆ, ‘ನಮ್ಮ ಆಂತರ್ಯಕ್ಕೆ ಭಗವಂತ ಹಾಲಿನ ಕೆನೆಯ ಹೂರ್ಣವನ್ನು ತುಂಬಿಲ್ಲ, ಉದ್ದಿನಬೇಳೆ ಹೂರ್ಣವನ್ನು ತುಂಬಿಬಿಟ್ಟಿದ್ದಾನೆ; ನಾವು ಅಲ್ಲಿಗೆ ಬಂದು ಮಾಡುವುದೇನು?’ ಅಂತ.”
ಶ್ರೀರಾಮಕೃಷ್ಣರು (ವಿಸ್ಮಯರಾಗಿ): “ಹಾಗೆ ಹೇಳುತ್ತಿದ್ದಾನೇನು? ಹಿಂದೆ ಎಂದೂ ಹಾಗೆ ವರ್ತಿಸಿದವನಲ್ಲವಲ್ಲ!”
ಪರಮಹಂಸರು ಫಲಾಹಾರ ತೆಗೆದುಕೊಳ್ಳುತ್ತಿದ್ದಾರೆ; ನರೇಂದ್ರನಿಗೂ ಒಂದು ಸ್ವಲ್ಪ ತಿನ್ನಲು ಕೊಟ್ಟರು.
ಯತೀನದೇವ (ಶ್ರೀರಾಮಕೃಷ್ಣರಿಗೆ): “ನೀವು ಯಾವಾಗ ನೋಡಿದರೂ ನರೇಂದ್ರ ನಿಗೆ ಹೇಳುತ್ತೀರಿ, ‘ನರೇಂದ್ರ ಇದನ್ನು ತಿನ್ನು! ನರೇಂದ್ರ ಅದನ್ನು ತಿನ್ನು!’ ಅಂತ. ನಾವೆಲ್ಲ ಕಸಕಡ್ಡಿಗಳೇನು! ನಮ್ಮ ತಾಯಿ ನಮ್ಮನ್ನು ಮೂರು ಕಾಸಿಗೆ ಕೊಂಡುಕೊಂಡ ಳೇನು?”
ಶ್ರೀರಾಮಕೃಷ್ಣರು ಯತೀನನನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಆತ ಶೋಭಾ ಬಜಾರಿನ ಒಬ್ಬ ಶ್ರೀಮಂತರ ಮಗ. ಆಗಾಗ ದಕ್ಷಿಣೇಶ್ವರಕ್ಕೆ ಬರುತ್ತಾನೆ. ಕೆಲವು ವೇಳೆ ರಾತ್ರಿಯನ್ನು ದಕ್ಷಿಣೇಶ್ವರದಲ್ಲೇ ಕಳೆದುಬಿಡುತ್ತಾನೆ. ಪರಮಹಂಸರು ನಗುತ್ತ ನರೇಂದ್ರ ನಿಗೆ: “ಆತ ನಿನ್ನ ಶ್ರಾದ್ಧವನ್ನು ಮಾಡುತ್ತಿದ್ದಾನೆ!” ಅಂತ.
ಪರಮಹಂಸರು ನಗುತ್ತ ನಗುತ್ತ ಯತೀನನ ಗಲ್ಲವನ್ನು ಹಿಡಿದು ಅಕ್ಕರೆಯಿಂದ “ನೀನು ಅಲ್ಲಿಗೆ (ದಕ್ಷಿಣೇಶ್ವರಕ್ಕೆ) ಬಾ; ತಿನ್ನು, ಹೊಟ್ಟೆ ಬಿರಿಯೋ ಅಷ್ಟು!” ಅಂತ ಹೇಳಿದರು.
ಶ್ರೀರಾಮಕೃಷ್ಣರು “ವಿವಾಹ ವಿಭ್ರಾಂತಿ” ಎಂಬ ನಕಲಿಯನ್ನು ನೋಡಲು ಪ್ರೇಕ್ಷಾ ಗೃಹಕ್ಕೆ ಹೋಗಿ ಒಂದು ಬಾಕ್ಸಿನಲ್ಲಿ ಕುಳಿತುಕೊಂಡರು. ಮನೆಗೆಲಸದವಳ ಮಾತುಕತೆ ಕೇಳಿ ನಗಲಾರಂಭಿಸಿದರು. ಸ್ವಲ್ಪ ಹೊತ್ತು ಅದನ್ನು ಕೇಳಿ ಅನ್ಯಮನಸ್ಕರಾಗಿ ಮಾಸ್ಟರೊಡನೆ ಏನನ್ನೋ ಮೆತ್ತ ಮೆತ್ತಗೆ ಮಾತನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು(ಮಾಸ್ಟರಿಗೆ): “ಗಿರೀಶಘೋಷ ಹೇಳುತ್ತಾನಲ್ಲ ಅದು ಸತ್ಯ ವೇನು? ಗಿರೀಶ ಇತ್ತೀಚೆಗೆ ಹೇಳುತ್ತಿದ್ದಾನೆ, ಪರಮಹಂಸರು ಅವತಾರಪುರುಷರು ಅಂತ.”
ಮಾಸ್ಟರ್: “ಹೌದು ಆತ ಹೇಳುವುದು ಸರಿಯಾಗೇ ಇರಬೇಕು. ಅದು ಹಾಗಿಲ್ಲದಿದ್ದರೆ ನಮಗೆಲ್ಲ ಅದು ಸರಿ ಅಂತ ಏಕೆ ಅನಿಸುತ್ತಿದೆ?”
ಶ್ರೀರಾಮಕೃಷ್ಣರು: “ನೋಡು, ಈಗ ಒಂದು ಅವಸ್ಥೆ ಬರುತ್ತಿದೆ. ಹಿಂದಿನ ಅವಸ್ಥೆ ಬದಲಾವಣೆಯನ್ನು ಹೊಂದಿಬಿಟ್ಟದೆ. ಈಗ ನಾನು ಯಾವ ಲೋಹವನ್ನೂ ಮುಟ್ಟಲಾರೆ.”
ಮಾಸ್ಟರ್ ಈ ಮಾತುಗಳನ್ನು ಆಶ್ಚರ್ಯಚಕಿತನಾಗಿ ಕೇಳುತ್ತಿದ್ದಾನೆ.
ಶ್ರೀರಾಮಕೃಷ್ಣರು: “ನನಗೆ ಈ ಹೊಸ ಅವಸ್ಥೆ ಬಂದಿದೆಯಲ್ಲ, ಇದರಲ್ಲಿ ಬಹಳ ಗಹನವಾದ ರಹಸ್ಯವಿದೆ.”
ಅವತಾರಾದಿ ಪುರುಷರು ಈ ಮಾಯೆಯ ಐಶ್ವರ್ಯವನ್ನು ಒಂದು ಕಿಂಚಿತ್ತೂ ಸ್ಪರ್ಶಿಸುವುದಿಲ್ಲ ಎಂಬುದಾಗಿ ಬಹುಶಃ ಪರಮಹಂಸರು ಈ ಮಾತುಗಳಿಂದ ಸೂಚಿಸಿರ ಬಹುದೆ?
ಶ್ರೀರಾಮಕೃಷ್ಣರು (ಮಾಸ್ಟರಿಗೆ): “ಒಳ್ಳೆಯದು, ನನ್ನ ಅವಸ್ಥೆಯಲ್ಲಿ ಏನಾದರೂ ಬದಲಾವಣೆಯನ್ನು ನೋಡುತ್ತಿದ್ದೀಯೇನು?”
ಮಾಸ್ಟರ್: “ಯಾವುದರ ಸಂಬಂಧವಾಗಿ?”
ಶ್ರೀರಾಮಕೃಷ್ಣರು: “ನನ್ನ ಕೆಲಸಕಾರ್ಯಗಳಲ್ಲಿ.”
ಮಾಸ್ಟರ್: “ನಿಮ್ಮ ವಿಷಯ ಜನರಿಗೆ ಗೊತ್ತಾಗುತ್ತ ಗೊತ್ತಾಗುತ್ತ ನಿಮ್ಮ ಕೆಲಸ ಕಾರ್ಯಗಳು ಅಧಿಕಾಧಿಕವಾಗುತ್ತಾ ಬರುತ್ತಿವೆ.”
ಶ್ರೀರಾಮಕೃಷ್ಣರು: “ಕಾಣುತ್ತಿದೆಯೇನು, ಹಿಂದೆ ನಾನು ಏನು ಹೇಳುತ್ತಿದ್ದೆನೊ ಅದು ಇಂದು ಫಲಿಸುತ್ತಿರುವುದನ್ನು?”
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನಿದ್ದು ಇದ್ದಕ್ಕಿದ್ದ ಹಾಗೆ ಹೇಳಿದರು, “ಒಳ್ಳೇದು, ಪಲ್ಟುವಿಗೆ ಒಳ್ಳೆ ಧ್ಯಾನ ಆಗುತ್ತಿಲ್ಲವಂತೆ, ಕಾರಣ ಹೇಳಬಲ್ಲೆಯ?”
ಶ್ರೀರಾಮಕೃಷ್ಣರು ದಕ್ಷಿಣೇಶ್ವರಕ್ಕೆ ಹಿಂದಿರುಗಲು ಸಿದ್ಧರಾಗಿದ್ದಾರೆ. ಅವರು ಯಾರೊ ಒಬ್ಬ ಭಕ್ತನೆದುರು ಗಿರೀಶನ ಸಂಬಂಧವಾಗಿ ಟೀಕೆ ಮಾಡಿದ್ದರು, “ಬೆಳ್ಳುಳ್ಳಿ ರಸ ಹಾಕಿದ ಪಾತ್ರೆಯನ್ನು ಒಂದು ಸಾವಿರಸಾರಿ ತೊಳೆದರೂ, ಆ ವಾಸನೆಯನ್ನು ಪಾತ್ರೆಯಿಂದ ನಿರ್ಮೂಲ ಮಾಡಲಾಗುವುದೇನು?” ಅಂತ. ಪರಮಹಂಸರ ಈ ಟೀಕೆ ಗಿರೀಶನ ಅಭಿಮಾನವನ್ನು ಉದ್ರೇಕಗೊಳಿಸಿದೆ. ಆತ ಪರಮಹಂಸರು ಇನ್ನೇನು ಹೊರಟರು ಎಂಬುವಾಗ ಅವರಿಗೆ ತನ್ನ ಹೃದಯದಲ್ಲಿದ್ದ ನೈವೇದ್ಯವನ್ನು ಅರ್ಪಿಸಿದ.
ಗಿರೀಶ: “ಬೆಳ್ಳುಳ್ಳಿ ವಾಸನೆ ಎಂದಿಗಾದರೂ ಹೋಗುವುದೆ?”
ಶ್ರೀರಾಮಕೃಷ್ಣರು: “ಹೋಗುತ್ತದೆ.”
ಗಿರೀಶ: “ಹಾಗಾದರೆ, ಹೋಗುತ್ತದೆ ಅಂತೀರಾ?”
ಶ್ರೀರಾಮಕೃಷ್ಣರು: “ದಾವಾನಲ ಸುಡುವಾಗ ವಾಸನೆ ಎಲ್ಲ ಹೊರಟುಹೋಗುತ್ತದೆ. ಬೆಳ್ಳುಳ್ಳಿ ಹಾಕಿದ ಪಾತ್ರೆಯನ್ನು ಚೆನ್ನಾಗಿ ಸುಟ್ಟರೆ, ಅದು ಆ ಗಂಧದಿಂದ ಮುಕ್ತವಾಗು ತ್ತದೆ; ಹೊಸ ಪಾತ್ರೆಯಾಗಿಬಿಡುತ್ತದೆ.
“ಯಾರು ಹೇಳುತ್ತಾನೊ ತನಗೆ ದೊರಕದು ಅಂತ, ಆತನಿಗೆ ಎಂದಿಗೂ ದೊರಕದು. ಮುಕ್ತಾಭಿಮಾನಿ ಮುಕ್ತನೇ ಆಗುತ್ತಾನೆ; ಬದ್ಧಾಭಿಮಾನಿ ಬದ್ಧನೇ ಆಗುತ್ತಾನೆ. ಯಾರು ದೃಢ ಮನಸ್ಸಿನಿಂದ ಭಾವಿಸುತ್ತಾನೊ ತಾನು ಮುಕ್ತನಾಗಿಬಿಟ್ಟೆ ಅಂತ, ಆತ ಮುಕ್ತನೇ ಆಗಿಬಿಡು ತ್ತಾನೆ. ಯಾರು ಹಗಲು ಇರುಳು ತಾನು ಬದ್ಧ, ತಾನು ಬದ್ಧ ಅಂತ ಭಾವಿಸುತ್ತಾನೊ, ಆತ ಬದ್ಧನೇ ಆಗಿಬಿಡುತ್ತಾನೆ.”