೧೪ನೆ ಡಿಸೆಂಬರ್ ೧೮೮೪, ಮಾರ್ಗಶಿರ ಕೃಷ್ಣ ದ್ವಾದಶಿ, ಭಾನುವಾರ
ಶ್ರೀರಾಮಕೃಷ್ಣ ಪರಮಹಂಸರು ಇಂದು ಕಲ್ಕತ್ತದಲ್ಲಿ ಬೀಡನ್ ಸ್ಟ್ರೀಟಿನಲ್ಲಿರುವ ಸ್ಟಾರ್ ಥಿಯೇಟರಿಗೆ ‘ಪ್ರಹ್ಲಾದ ಚರಿತ್ರೆ’ ಎಂಬ ನಾಟಕವನ್ನು ನೋಡಲು ಬಂದಿದ್ದಾರೆ. ಅವರೊಡನೆ ಮಾಸ್ಟರ್, ಬಾಬುರಾಮ, ನಾರಾಯಣ ಮೊದಲಾದವರು ಬಂದಿದ್ದಾರೆ. ಥಿಯೇಟರಿನಲ್ಲಿ ಬಹಳ ಪ್ರಕಾಶಮಾನವಾದ ದೀಪಗಳನ್ನು ಹಾಕಿದ್ದಾರೆ. ನಾಟಕ ಇನ್ನೂ ಪ್ರಾರಂಭವಾಗಿರಲಿಲ್ಲ. ಪರಮಹಂಸರು ಒಂದು ಬಾಕ್ಸಿನಲ್ಲಿ ಕುಳಿತು ಗಿರೀಶ್ಚಂದ್ರಘೋಷ ನೊಡನೆ ಮಾತುಕತೆಗಳನ್ನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು (ನಗುತ್ತ): “ಭೇಷ್! ನೀನು ಎಲ್ಲಾ ನಾಟಕಗಳನ್ನು ಬಹಳ ಚೆನ್ನಾಗಿ ಬರೆದಿದ್ದೀಯೆ.”
ಗಿರೀಶ: “ಮಹಾಶಯರೆ, ಅವು ನನ್ನ ರಕ್ತಗತವಾಗಿರುವುದೆಲ್ಲಿ? ಸುಮ್ಮನೆ ಬರೆದು ಕೊಂಡು ಹೋಗಿಬಿಟ್ಟಿದ್ದೇನೆ ಅಷ್ಟೆ.”
ಶ್ರೀರಾಮಕೃಷ್ಣರು: “ಇಲ್ಲ, ನಿನ್ನ ರಕ್ತಗತವಾಗಿದೆ. ಅಂದೇ ನಾನು ನಿನಗೆ ಹೇಳಿದೆ. ‘ಆಂತರ್ಯದಲ್ಲಿ ಭಕ್ತಿ ಇಲ್ಲದಿದ್ದರೆ ಯಾರಿಗೂ ಭಗವಂತನ ಸಂಬಂಧವಾಗಿ ನಿರೂಪಿಸ ಲಾಗೋದಿಲ್ಲ’ ಅಂತ.
“ಅನುಭೂತಿ ಬೇಕು. ‘ನವಬೃಂದಾವನ’ ಎಂಬ ನಾಟಕ ನೋಡಲು ನಾನು ಒಮ್ಮೆ ಕೇಶವಸೇನನ ಮನೆಗೆ ಹೋಗಿದ್ದೆ. ತಿಂಗಳಿಗೆ ಎಂಟುನೂರು ಸಂಬಳ ಬರುತ್ತಿದ್ದ ಒಬ್ಬ ಡೆಪ್ಯುಟಿ ಮ್ಯಾಜಿಸ್ಟ್ರೇಟನನ್ನು ಅಲ್ಲಿ ನೋಡಿದೆ. ಅನೇಕರು ಹೇಳಿದರು, ಆತ ಒಬ್ಬ ದೊಡ್ಡ ಪಂಡಿತ ಅಂತ; ಆದರೆ ಆತ ತನ್ನ ಒಬ್ಬ ಹುಡುಗನನ್ನು ಕರೆದುಕೊಂಡು ಬಂದು ಅದಕ್ಕಾಗಿ ಸುಮ್ಮನೆ ಚಿಂತಿತನಾಗಿದ್ದ. ಆ ಹುಡುಗ ಎಲ್ಲಿ ಕುಳಿತುಕೊಳ್ಳಬೇಕು, ಎಲ್ಲಿ ಕುಳಿತುಕೊಂಡರೆ ಆತ ಚೆನ್ನಾಗಿ ನಾಟಕ ನೋಡಬಲ್ಲ, ಇದರ ಚಿಂತನೆಯೇ! ಸ್ಟೇಜಿನಲ್ಲಿ ನಡೆಯುತ್ತಿದ್ದ ಭಗವದ್ವಿಷಯಗಳಿಗೆ ಕಿವಿಯನ್ನೇ ಕೊಡಲಿಲ್ಲ. ಆ ಮಗು ಯಾವಾಗ ನೋಡಿದರೂ ಕೇಳುತ್ತಿತ್ತು, ‘ಅಪ್ಪ ಇದು ಏನು? ಅಪ್ಪ, ಅದು ಏನು?’ ಅಂತ. ಆತನೂ ಈ ಹುಡುಗನನ್ನು ಸಂತೈಸುವುದರಲ್ಲಿಯೆ ನಿರತನಾಗಿದ್ದ, ಪುಸ್ತಕಗಳನ್ನೇನೂ ಬರಿದೆ ಓದಿದ್ದಾನೆ; ಆದರೆ ಅದನ್ನು ರಕ್ತಗತಮಾಡಿಕೊಂಡಿಲ್ಲ.”
ಗಿರೀಶ: “ಭಾವಿಸುತ್ತಿದ್ದೇನೆ, ‘ಥಿಯೇಟರ್, ಎಲ್ಲ ನನಗೇಕೆ ಇನ್ನು?’ ಅಂತ.”
ಶ್ರೀರಾಮಕೃಷ್ಣರು: “ಬೇಡ, ಹಾಗೆ ಯೋಚಿಸಬೇಡ! ಇರಲಿ, ಅದರಿಂದ ಲೋಕ ಶಿಕ್ಷಣ ಆಗುತ್ತಿದೆ.”
ನಾಟಕ ಪ್ರಾರಂಭಿಸಿತು, ಪ್ರಹ್ಲಾದ ಓದುಬರಹ ಕಲಿಯಲು ಪಾಠಶಾಲೆಗೆ ಬಂದಿದ್ದಾನೆ. ಪ್ರಹ್ಲಾದನನ್ನು ನೋಡಿದೊಡನೆಯೆ ಪರಮಹಂಸರು ಪ್ರೀತಿಯಿಂದ “ಪ್ರಹ್ಲಾದ, ಪ್ರಹ್ಲಾದ” ಅಂತ ಹೇಳುತ್ತಿದ್ದ ಹಾಗೆಯೆ ಒಮ್ಮೆಗೆಯೆ ಸಮಾಧಿಸ್ಥರಾಗಿ ಬಿಟ್ಟಿದ್ದಾರೆ.
ಪ್ರಹ್ಲಾದ ಆನೆಯ ಪಾದದಡಿಯಲ್ಲಿ ಬಿದ್ದಿರುವುದನ್ನು ನೋಡಿ ಪರಮಹಂಸರು ಅಳುತ್ತಿದ್ದಾರೆ, ಆತನನ್ನು ಅಗ್ನಿಕುಂಡಕ್ಕೆ ಬಿಸಾಡಿದಾಗಲೂ ಅತ್ತರು.
ಗೋಲೋಕದಲ್ಲಿ ಲಕ್ಷ್ಮೀನಾರಾಯಣರು ಕುಳಿತಿದ್ದಾರೆ. ನಾರಾಯಣ ಪ್ರಹ್ಲಾದ ನಿಗಾಗಿ ಚಿಂತಿಸುತ್ತಿದ್ದಾನೆ. ಆ ದೃಶ್ಯವನ್ನು ನೋಡಿ ಪರಮಹಂಸರು ಮತ್ತೆ ಸಮಾಧಿಸ್ಥ ರಾದರು.
ನಾಟಕ ಮುಗಿದನಂತರ ಗಿರೀಶ ಪರಮಹಂಸರನ್ನು ಥಿಯೇಟರಿನಲ್ಲಿದ್ದ ತನ್ನ ಕೋಣೆಗೆ ಕರೆದುಕೊಂಡು ಹೋದ. ಬಳಿಕ ಅಲ್ಲಿ ಪರಮಹಂಸರನ್ನು ಕೇಳಿದ, “ನಿಮಗೆ ‘ವಿವಾಹ ವಿಭ್ರಾಂತಿ’ ಎಂಬ ನಕಲಿಯನ್ನು ನೋಡಲಿಚ್ಛೆಯಿರುವುದೆ ?”
ಶ್ರೀರಾಮಕೃಷ್ಣರು : “ಛೇ ! ಬೇಡ. ಪ್ರಹ್ಲಾದನ ಚರಿತ್ರೆಯ ನಂತರ ಅದೆಲ್ಲ ಏಕೆ ? ಇದೇ ಕಾರಣದಿಂದ ನಾನು ಒಮ್ಮೆ ಗೋಪಾಲನ ಮಂಡಲಿಗೆ ‘ಸಮಾಪ್ತಿಯನ್ನು ನೀವು ಯಾವುದಾದರು ಒಂದು ಭಗವಂತನ ನೆನಪು ತರುವ ವಿಷಯದಿಂದ ಮುಕ್ತಾಯ ಮಾಡಿ’ ಎಂದು ಹೇಳಿದೆ. ಇದುವರೆಗೆ ಭಗವಂತನ ಸಂಬಂಧವಾಗಿ ನಡೆಯಿತು; ಈಗ ‘ವಿವಾಹ ವಿಭ್ರಾಂತಿ’ ಸಂಬಂಧವಾಗಿ––ಸಂಸಾರದ ಸಂಬಂಧವಾಗಿ ! ಮತ್ತೆ ಅದೇ ಹಿಂದಿನ ಮಾನಸಿಕ ಸ್ಥಿತಿಗೆ ಹೋಗುವುದು !”
ಗಿರೀಶ : “ಮಹಾಶಯರೆ, ನಾಟಕ ಹೇಗಾಯಿತು ?”
ಶ್ರೀರಾಮಕೃಷ್ಣರು : “ಆತನೇ ಎಲ್ಲಾ ಆಗಿರುವುದನ್ನು ನೋಡಿದೆ. ಯಾರು ಹೆಂಗಸರ ಪಾತ್ರ ವಹಿಸಿದ್ದರೊ ಅವರು ಸಾಕ್ಷಾತ್ ಆನಂದಮಯಿಯಾಗಿಯೇ ಕಂಡುಬಂದರು. ಯಾರು ಗೋಲೋಕದ ಗೋಪಾಲರ ಪಾತ್ರ ವಹಿಸಿದ್ದರೊ ಅವರು ಸಾಕ್ಷಾತ್ ನಾರಾಯಣನಾಗಿಯೇ ತೋರಿಬಂದರು, ಎಲ್ಲವೂ ಆತನೇ ಆಗಿದ್ದಾನೆ.
“ನಿಜವಾಗಿ ಭಗವಂತನ ದರ್ಶನ ಆಗಿದೆಯೊ ಇಲ್ಲವೊ ಎಂಬುದನ್ನು ಅರಿಯಲು ಕೆಲವು ಲಕ್ಷಣಗಳಿವೆ. ಅವುಗಳಲ್ಲಿ ಒಂದು ಆನಂದ; ಸಂಕೋಚವಿರದು. ಆತನನ್ನು ಸಮುದ್ರಕ್ಕೆ ಹೋಲಿಸಬಹುದು; ಮೇಲೆ ಅಲ್ಲೋಲಕಲ್ಲೋಲ. ಆಂತರ್ಯದಲ್ಲಿ ಗಂಭೀರ ಜಲ. ಯಾರಿಗೆ ಭಗವಂತನ ದರ್ಶನ ದೊರೆತಿದೆಯೊ ಆತ ಕೆಲವು ವೇಳೆ ಹುಚ್ಚನ ಹಾಗೆ; ಕೆಲವು ವೇಳೆ ಪಿಶಾಚಿಯ ಹಾಗೆ––ಶುಚಿ ಅಶುಚಿ ಎಂಬ ಭೇದಜ್ಞಾನವಿಲ್ಲದೆ; ಕೆಲವು ವೇಳೆ ಜಡನ ಹಾಗೆ––ಒಳಗೆ ಹೊರಗೆ ಎಲ್ಲೆಲ್ಲೂ ಭಗವಂತನನ್ನು ನೋಡುತ್ತಿರುವುದರಿಂದ ಸ್ತಂಭೀಭೂತನಾಗಿ; ಕೆಲವು ವೇಳೆ ಬಾಲಕನ ಹಾಗೆ––ಯಾವ ಆಸಕ್ತಿಯೂ ಇಲ್ಲದೆ ಕಂಕುಳಲ್ಲಿ ಬಟ್ಟೆ ಇಟ್ಟುಕೊಂಡು ಸುತ್ತಾಡುವ ಮಕ್ಕಳ ಹಾಗೆ ಇರುತ್ತಾನೆ. ಈ ಅವಸ್ಥೆಯಲ್ಲಿ ಕೆಲವು ವೇಳೆ ಬಾಲಭಾವದಿಂದ––ಹುಡುಗಾಟವಾಡುತ್ತ; ಕೆಲವು ವೇಳೆ ಯುವಕಭಾವ ದಿಂದ–– ಸಿಂಹ ಪರಾಕ್ರಮದಿಂದ ಕೆಲಸಮಾಡುತ್ತ, ಲೋಕಶಿಕ್ಷಣ ಮಾಡುತ್ತ ಇರುತ್ತಾನೆ.
“ಜೀವನಿಗೆ ಅಹಂಕಾರವಿರುವುದರಿಂದ ಭಗವಂತನ ದರ್ಶನ ಪಡೆಯಲು ಆಗುತ್ತಿಲ್ಲ. ಮೋಡ ಕವಿಯಿತು. ಅಂದರೆ ಸೂರ್ಯನನ್ನು ನೋಡಲಾಗುವುದಿಲ್ಲ. ಆದರೆ ಆತ ಕಾಣದೇ ಇರುವುದರಿಂದ ಸೂರ್ಯನೇ ಇಲ್ಲ ಅಂತ ಲೆಕ್ಕವೆ ? ಸೂರ್ಯ ಎಂದಿನಂತೆ ಇದ್ದೇ ಇದ್ದಾನೆ.
“ಆದರೆ ಬಾಲಕನ ‘ಅಹಂ’ ; ಇದರಲ್ಲಿ ಯಾವ ದೋಷವೂ ಇಲ್ಲ; ನಿಸ್ಸಂದೇಹ ವಾಗಿ ಉಪಕಾರಿ. ಸೊಪ್ಪು ದೇಹಕ್ಕೆ ಒಳ್ಳೆಯದಲ್ಲ; ಆದರೆ ಹಿಂಚೇಸೊಪ್ಪು ದೇಹಕ್ಕೆ ಒಳ್ಳೆಯದು. ಆದ್ದರಿಂದ ಹಿಂಚೆಯನ್ನು ಸೊಪ್ಪು ಅಂತ ಹೇಳುವುದಕ್ಕೆ ಆಗುವುದಿಲ್ಲ. ಅದೇ ರೀತಿಯಾಗಿ ಕಲ್ಲುಸಕ್ಕರೆ ಸಿಹಿಯ ಗುಂಪಿಗೆ ಸೇರಿದುದಲ್ಲ. ಉಳಿದ ಸಿಹಿ ಪದಾರ್ಥಗಳು ಶರೀರಕ್ಕೆ ರೋಗವನ್ನು ತರುತ್ತವೆ; ಆದರೆ ಕಲ್ಲುಸಕ್ಕರೆ ಕಫದೋಷವನ್ನು ವೃದ್ಧಿಮಾಡುವು ದಿಲ್ಲ.
“ಅದಕ್ಕಾಗೇ ನಾನು ಕೇಶವಸೇನನಿಗೆ, ‘ನಿನಗೆ ಇನ್ನೂ ಸ್ವಲ್ಪ ಹೆಚ್ಚಾಗಿ ತಿಳಿದೇಬಿಟ್ಟಿತು ಅಂದರೆ ನಿನ್ನ ಸಮಾಜ ಮುಂತಾದುವು ಯಾವುದೂ ಇರದು’ ಅಂತ ಹೇಳಿದೆ. ಕೇಶವ ಭಯಪಟ್ಟುಬಿಟ್ಟ. ಆಗ ನಾನು, ‘ಬಾಲಕನ ಅಹಂ’ ‘ದಾಸನ ಅಹಂ’ ಇವುಗಳಲ್ಲಿ ಯಾವ ದೋಷವೂ ಇಲ್ಲ’ ಅಂತ ಮತ್ತೆ ಹೇಳಿದೆ.
“ಯಾರಿಗೆ ಭಗವಂತನ ಸಾಕ್ಷಾತ್ಕಾರವಾಗಿದೆಯೊ ಆತನಿಗೆ ಭಗವಂತನೇ ಈ ಜೀವ ಜಗತ್ತಾಗಿರುವಂತೆ, ಎಲ್ಲವೂ ಆತನೇ ಆಗಿರುವಂತೆ ಕಂಡುಬರುತ್ತದೆ. ಆತನಿಗೇನೇ ಉತ್ತಮ ಭಕ್ತ, ಅಂತ ಹೆಸರು.
ಗಿರೀಶ (ನಗುತ್ತ): “ಎಲ್ಲವೂ ಆತನೆ; ಆದರೆ ಭಕ್ತನಲ್ಲಿ ಕಿಂಚಿತ್ ‘ಅಹಂ’ ಇರುತ್ತದೆ; -ಅದು ಏನನ್ನೂ ಮಾಡದು.”
ಶ್ರೀರಾಮಕೃಷ್ಣರು (ನಗುತ್ತ): “ಹೌದು. ಅದರಿಂದ ಯಾವ ಹಾನಿಯೂ ಉಂಟಾಗದು. ಸ್ವಲ್ಪ ‘ಅಹಂ’ ಅನ್ನು ಇಟ್ಟುಕೊಂಡಿರುವುದು ಭಗವಂತನೊಡನೆ ಆನಂದಪಡುವುದಕ್ಕೆ. ನಾನು ನೀನು ಪ್ರತ್ಯೇಕ ಎಂಬ ಭಾವನೆ ಇದ್ದರೆ ತಾನೆ-ಸೇವ್ಯ ಸೇವಕ ಭಾವ ಇದ್ದರೆ ತಾನೆ ಆನಂದಪಡಲಾಗುತ್ತದೆ?
“ಮಧ್ಯಮ ಶ್ರೇಣಿಯ ಭಕ್ತನಿದ್ದಾನೆ. ಆತನ ಕಣ್ಣಿಗೆ ಭಗವಂತ ಸರ್ವಭೂತ ಗಳಲ್ಲಿಯೂ ಅಂತರ್ಯಾಮಿಯಾಗಿರುವುದು ಕಂಡುಬರುತ್ತದೆ. ಅಧಮ ಶ್ರೇಣಿಯ ಭಕ್ತ ಹೇಳುತ್ತಾನೆ, ‘ಭಗವಂತನಿದ್ದಾನೆ. ನೋಡಲ್ಲಿ ಭಗವಂತ!-ಅಂದರೆ ಆಕಾಶದ ಮೇಲೆ!’ (ಎಲ್ಲರೂ ನಗುತ್ತಾರೆ).
‘ಗೋಲೋಕದ ಗೋಪಾಲರನ್ನು ನೋಡಿ ನನಗಂತು ಅನುಭವವಾಯಿತು, ಎಲ್ಲವೂ ಭಗವಂತನೇ ಆಗಿರುವ ಹಾಗೆ, ಯಾರಿಗೆ ಭಗವಂತನ ದರ್ಶನ ದೊರೆತಿದೆಯೊ ಆತನಿಗೆ ಅನುಭವವಾಗುತ್ತದೆ. ‘ಭಗವಂತನೆ ಕರ್ತ, ಆತನೇ ಎಲ್ಲವನ್ನೂ ಮಾಡುತ್ತಾನೆ’.”
ಗಿರೀಶ: “ಮಹಾಶಯರೆ, ಆತನೇ ಎಲ್ಲವನ್ನು ಮಾಡುತ್ತಾನೆ ಎಂಬುದನ್ನು ಹೇಗೋ ಅರಿತುಕೊಂಡುಬಿಟ್ಟಿದ್ದೇನೆ.”
ಶ್ರೀರಾಮಕೃಷ್ಣರು: “ನಾನು ಹೇಳುತ್ತೇನೆ, ‘ಹೇ ತಾಯಿ, ನಾನು ಯಂತ್ರ, ನೀನು ಯಂತ್ರಿ; ನಾನು ಜಡ, ನೀನು ಚೇತಯಿತ್ರಿ; ನೀನು ಮಾಡಿಸಿದಂತೆ ಮಾಡುತ್ತೇನೆ, ನುಡಿಸಿದಂತೆ ನುಡಿಯುತ್ತೇನೆ’ ಅಂತ. ಯಾರು ಅಜ್ಞಾನಿಗಳೊ ಅವರು ಹೇಳುತ್ತಾರೆ, ಸ್ವಲ್ಪ ಭಾಗವನ್ನು ನಾವು ಮಾಡುತ್ತೇವೆ, ಸ್ವಲ್ಪ ಭಾಗವನ್ನು ಭಗವಂತ ಮಾಡುತ್ತಾನೆ.’”
ಗಿರೀಶ: “ಮಹಾಶಯರೆ, ನಾನು ನಿಜವಾಗಿ ಏನನ್ನೂ ಮಾಡುತ್ತಿಲ್ಲ. ಇನ್ನೇಕೆ ಕೆಲಸ ಕಾರ್ಯಗಳ ತಂಟೆ?”
ಶ್ರೀರಾಮಕೃಷ್ಣರು: “ಹಾಗಲ್ಲ, ಕರ್ಮ ಒಳ್ಳೆಯದು. ಜಮೀನನ್ನು ಉತ್ತು ಹಸನು ಮಾಡಿ ಇಟ್ಟುಕೊಂಡಿದ್ದರೆ ಅದರಲ್ಲಿ ಯಾವ ಬೀಜ ಬಿತ್ತಿದರೂ ಬೆಳೆಯುತ್ತದೆ, ಆದರೆ ಕರ್ಮವನ್ನು ನಿಷ್ಕಾಮ ಭಾವನೆಯಿಂದ ಮಾಡಬೇಕು.
“ಪರಮಹಂಸರಲ್ಲಿ ಎರಡು ವಿಧ; ಜ್ಞಾನೀ ಪರಮಹಂಸ, ಪ್ರೇಮೀ ಪರಮಹಂಸ, ಯಾರು ಜ್ಞಾನಿಯೊ ಆತ ಸ್ವಾರ್ಥಪರ-ತನಗಾದರೆ ಸಾಕು ಅನ್ನುತ್ತಾನೆ. ಯಾರು ಪ್ರೇಮಿಯೊ ಆತ ಶುಕದೇವಾದಿಗಳೋಪಾದಿಯಲ್ಲಿ ಭಗವಂತನ ಸಾಕ್ಷಾತ್ಕಾರಮಾಡಿ ಕೊಂಡು ಲೋಕ ಶಿಕ್ಷಣ ಮಾಡುತ್ತಾನೆ. ಕೆಲವರು ಮಾವಿನ ಹಣ್ಣು ತಿಂದು ಬಾಯನ್ನು ಚೆನ್ನಾಗಿ ಒರೆಸಿಕೊಂಡು ಬಿಡುತ್ತಾರೆ; ಇನ್ನು ಕೆಲವರು ಒಂದು ಐದಾರು ಜನಕ್ಕೆ ಕೊಟ್ಟು ತಾವೂ ತಿನ್ನುತ್ತಾರೆ. ಕೆಲವರು ಬಾವಿ ತೋಡಲು ಕುಕ್ಕೆ ಗುದ್ದಲಿ ತೆಗೆದುಕೊಂಡು ಬರುತ್ತಾರೆ; ತೋಡಿದ ನಂತರ ಅವನ್ನು ಹಾಗೆಯೇ ಬಿಸಾಡಿಬಿಡುತ್ತಾರೆ. ಇನ್ನು ಕೆಲವರು ಅಕ್ಕಪಕ್ಕ ದವರಿಗೆ ಬೇಕಾಗಬಹುದೆಂದು ಒಂದು ಕಡೆ ಇಡುತ್ತಾರೆ. ಶುಕದೇವಾದಿಗಳು ಇತರರಿಗಾಗಿ ಕುಕ್ಕೆ ಗುದ್ದಲಿಯನ್ನು ತೆಗೆದು ಇಟ್ಟಿದ್ದರು. (ಗಿರೀಶನಿಗೆ) ನೀನೂ ಪರರಿಗಾಗಿ ಇಡಬೇಕು.”
ಗಿರೀಶ: “ಹಾಗಾದರೆ ತಾವು ಆಶೀರ್ವಾದ ಮಾಡಬೇಕು.”
ಶ್ರೀರಾಮಕೃಷ್ಣರು: “ನೀನು ಭಗವತಿಯಲ್ಲಿ ಪೂರ್ಣ ವಿಶ್ವಾಸವಿಡು, ದೊರೆತು ಬಿಡುತ್ತದೆ.”
ಗಿರೀಶ: “ನಾನೊಬ್ಬ ಪಾಪಿ.”
ಶ್ರೀರಾಮಕೃಷ್ಣರು: “ಯಾವ ನೀಚ ತಾನು ‘ಪಾಪಿ’ ‘ಪಾಪಿ’ ಅಂತ ಸರ್ವದಾ ಭಾವಿಸುತ್ತಾನೊ ಆತ ಪಾಪಿಯೇ ಆಗಿಬಿಡುತ್ತಾನೆ.”
ಗಿರೀಶ: “ಮಹಾಶಯರೇ, ನಾನು ಎಲ್ಲಿ ಕುಳಿತುಕೊಳ್ಳುವೆನೊ ಆ ಸ್ಥಳ ಅಪವಿತ್ರ ವಾಗಿ ಬಿಡುತ್ತದೆ.”
ಶ್ರೀರಾಮಕೃಷ್ಣರು: “ಏಕೆ ಹಾಗೆ? ಕೊಠಡಿ ಸಹಸ್ರಾರು ವರ್ಷಗಳಿಂದ ಅಂಧಕಾರ ದಲ್ಲಿ ಇರಬಹುದು. ಅದಕ್ಕೆ ಬೆಳಕು ತಂದರೆ ಅದು ಸ್ವಲ್ಪ ಸ್ವಲ್ಪವಾಗಿ ಬೆಳಕಾಗುತ್ತದೆಯೊ ಅಥವಾ ‘ಥಟ್’ ಅಂತ ಒಡನೆಯೇ ಬೆಳಕಾಗುತ್ತದೆಯೊ?”
ಗಿರೀಶ: “ಹಾಗಾದರೆ ನೀವು ಆಗಲೇ ಆಶೀರ್ವಾದ ಮಾಡಿಬಿಟ್ಟಿದ್ದೀರಿ!”
ಶ್ರೀರಾಮಕೃಷ್ಣರು: “ಹಾಗೆಂದು ನೀನು ಸಂಪೂರ್ಣವಾಗಿ ನಂಬುವುದಾದರೆ ಮಾತ್ರ. ನಾನು ಇನ್ನೇನು ತಾನೆ ಹೇಳಲಿ? ನಾನು ಉಂಡು ತಿಂದು ಆಕೆಯ ಹೆಸರನ್ನು ಜಪಿಸುತ್ತ ಕಾಲ ಕಳೆಯುತ್ತಿದ್ದೇನೆ.”
ಗಿರೀಶ: “ನನಗೆ ಅಂತಶ್ಶುದ್ಧಿಯಿಲ್ಲ, ದಯವಿಟ್ಟು ಅದೊಂದನ್ನು ಸ್ವಲ್ಪ ಕರುಣಿಸಿ ಬಿಡಿ.”
ಶ್ರೀರಾಮಕೃಷ್ಣರು: “ನಾನು ಯಾರು? ನಾರದ ಶುಕದೇವ ಇಂಥವರು ಬಹುಶಃ ಕರುಣಿಸಬಲ್ಲವರಾಗಿದ್ದರು.”
ಗಿರೀಶ: “ನಾರದಾದಿಗಳು ಕಣ್ಣಿಗೆ ಕಾಣಿಸಿಕೊಳ್ಳುತ್ತಿಲ್ಲವಲ್ಲ. ಸಾಕ್ಷಾತ್ತಾಗಿ ನೀವೇ ಇದ್ದೀರಲ್ಲ.”
ಶ್ರೀರಾಮಕೃಷ್ಣರು ನಗುತ್ತ: “ಒಳ್ಳೆಯದು, ನಿನಗೆ ವಿಶ್ವಾಸವಿದೆ.”
ಎಲ್ಲರೂ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದರು. ಮತ್ತೆ ಮಾತುಕತೆ ಪ್ರಾರಂಭ ವಾಯಿತು.
ಗಿರೀಶ: “ಒಂದು ಆಸೆ. ಅಹೇತುಕ ಭಕ್ತಿಯನ್ನು ಕೃಪೆಮಾಡಬೇಕು.”
ಶ್ರೀರಾಮಕೃಷ್ಣರು: “ಅಹುತೇಕ ಭಕ್ತಿ ಈಶ್ವರಕೋಟಿಗಳಿಗೆ ಮಾತ್ರ ಲಭಿಸುತ್ತದೆ; ಜೀವಕೋಟಿಗಳಿಗೆ ಲಭಿಸದು.”
ಎಲ್ಲರೂ ಸುಮ್ಮನೆ ಕುಳಿತಿದ್ದಾರೆ. ಪರಮಹಂಸರು ಅನ್ಯಮನಸ್ಕರಾಗಿ ಊರ್ಧ್ವ ದೃಷ್ಟಿಯಿಟ್ಟು ಹಾಡಲಾರಂಭಿಸಿದ್ದಾರೆ :
ಅತಿ ಕಠೋರ ಸಾಧನೆಯಲಿ ತೊಡಗಿರುವೀ ಶಿವನು ಕೂಡ
ಇನ್ನಾದರು ಕಾಣದಿರಲು ಕಾಳೀಪದನೀಲವ
ಎಲ್ಲರಿಗೂ ಲಭಿಸಬಹುದೆ ಶ್ರೀಶ್ಯಾಮೆಯ ದರ್ಶನ
ಎಲ್ಲರಿಗೂ ದೊರೆಯಬಹುದೆ ಶ್ರೀ ಕಾಳಿಯ ಸಂಪದ?
ಏನು ಹುಚ್ಚುಮನಸು ನನಗೆ? ಇದುವರೆಗೂ ತಿಳಿಯದಾದೆ
ಇಷ್ಟು ಮಾತ್ರ ಸತ್ಯವ!
ಕಾಳೀಪದದಿಷ್ಟಮನಕೆ ಸ್ವರ್ಗಭೋಗ ವೈಭವವೂ
ತುಚ್ಛವೆಂದು ತಿಳಿವುದು.
ಕಾಳಿಯ ಕಡೆಗಣ್ಣ ನೋಟ ದೊರೆತರನಿತೆ ಸಾಕು, ಮನವು
ಆನಂದದಿ ನಲಿವುದು.
ಯೋಗೀಂದ್ರ ಮುನೀಂದ್ರ ಇಂದ್ರಾದಿಗಳೆಲ್ಲರೂ
ಕಾಣದಿರಲು ಅವಳನು
ಆ ತಾಯಿಯ ಪದಕಮಲಕೆ ಹಂಬಲಿಸುತ ನಮಿಪನಿಲ್ಲಿ
ಭಕ್ತ ಕಮಲಕಾಂತನು!
ಗಿರೀಶ ಪುನರಾವೃತ್ತಿ ಮಾಡಿದ:
ಆ ತಾಯಿಯ ಪದಕಮಲಕೆ ಹಂಬಲಿಸುತ ನಮಿಪನಿಲ್ಲಿ
ಭಕ್ತ ಕಮಲಕಾಂತನು!
ಶ್ರೀರಾಮಕೃಷ್ಣರು ಗಿರೀಶನಿಗೆ: “ತೀವ್ರ ವೈರಾಗ್ಯ ಉಂಟಾದರೆ ಆತನನ್ನು ಪಡೆಯ ಬಹುದು. ಯಾರನ್ನೇ ಆಗಲಿ ನೀರಿನೊಳಕ್ಕೆ ಅದುಮಿ ಇಟ್ಟಾಗ ಹೇಗೆ ಆತನ ಪ್ರಾಣ ಒಂದು ಗುಟುಕು ಉಸಿರಿಗಾಗಿ ಒದ್ದಾಡುವುದೊ, ಅದೇ ರೀತಿಯಾಗಿ ಪ್ರಾಣ ಭಗವಂತನಿಗಾಗಿ ಕಾತರಿಸುತ್ತಿದ್ದರೆ ಆಗ ಆತನ ಸಾಕ್ಷಾತ್ಕಾರವನ್ನು ಪಡೆಯಬಹುದು.
“ಅದಕ್ಕಾಗಿಯೆ ‘ಇವು ಮೂರು ಪ್ರೀತಿಗಳನ್ನು ಒಟ್ಟುಗೂಡಿಸಿ, ಭಗವಂತನ ಕಡೆ ಹರಿಸುವುದಾದರೆ ಆತನನ್ನು ಪಡೆಯಬಹುದು’ ಎಂದು ನಾನು ಹೇಳುವುದು. ಪ್ರಾಪಂಚಿಕನಿಗೆ ಪ್ರಾಪಂಚಿಕ ವಸ್ತುಗಳ ಮೇಲಿರುವ ಪ್ರೀತಿ, ಸತಿಗೆ ಪತಿಯಲ್ಲಿರುವ ಪ್ರೀತಿ, ತಾಯಿಗೆ ಮಕ್ಕಳ ಮೇಲಿರುವ ಪ್ರೀತಿ-ಇವು ಮೂರು ಪ್ರೀತಿಗಳನ್ನು ಒಟ್ಟುಗೂಡಿಸಿ ಯಾರೇ ಆಗಲಿ ಭಗವಂತನ ಕಡೆ ತಿರುಗಿಸುವುದಾದರೆ, ತತ್ಕ್ಷಣವೆ ಆತನಿಗೆ ಭಗವಂತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ.
ನಂಬಿ ಕರೆದರೆ ತಾಯಿ ಓ ಎನ್ನದಿಹಳೇನೊ?
ನಿನ್ನ ತೊರೆದವಳೆಂತು ಇರಬಲ್ಲಳೊ?
“ನಿಜವಾದ ವ್ಯಾಕುಲತೆಯಿಂದ ಆತನನ್ನು ಕರೆದರೆ, ಆತ ಭಕ್ತನಿಗೆ ಪ್ರತ್ಯಕ್ಷನಾಗಲೇ ಬೇಕಾಗುತ್ತದೆ.
“ಅಂದು ನಾನು ಭಕ್ತಿ ಅಂದರೆ ಏನು ಎಂಬುದನ್ನು ನಿನಗೆ ತಿಳಿಸಿದೆನು, ಕಾಯಾ ವಾಚಾ ಮನಸಾ ಆತನನ್ನು ಪೂಜಿಸುವುದಕ್ಕೆ ಭಕ್ತಿ ಎಂದು ಹೆಸರು. ಕಾಯಾ-ಅಂದರೆ ಕೈಯ ಮೂಲಕ ಆತನ ಪೂಜೆ ಮತ್ತು ಸೇವೆ ಮಾಡೋದು, ಪಾದಗಳ ಮೂಲಕ ತೀರ್ಥಯಾತ್ರೆ ಮಾಡೋದು, ಕಿವಿಯಿಂದ ಆತನ ಚರಿತ್ರೆ ಮತ್ತು ನಾಮಗುಣಕೀರ್ತನೆ ಕೇಳೋದು, ಕಣ್ಣಿನಿಂದ ಆತನ ವಿಗ್ರಹದರ್ಶನ ಮಾಡೋದು. ಮನಸಾ-ಅಂದರೆ ಸರ್ವದಾ ಆತನ ಧ್ಯಾನ ಮತ್ತು ಚಿಂತನೆ ಮಾಡೋದು. ಆತನ ಲೀಲೆಯನ್ನು ಸ್ಮರಣ ಮನನ ಮಾಡೋದು. ವಾಚಾ- ಅಂದರೆ ಆತನ ಸ್ತೋತ್ರಸ್ತುತಿಗಳನ್ನು ಪಠಿಸೋದು ಮತ್ತು ಆತನ ನಾಮಗುಣ ಕೀರ್ತನೆ ಮಾಡೋದು.
“ಕಲಿಯುಗಕ್ಕೆ ನಾರದೀಯಭಕ್ತಿ-ಸರ್ವದಾ ಆತನ ನಾಮಗುಣಕೀರ್ತನೆ ಮಾಡೋದು. ಯಾರಿಗೆ ಸಮಯವೇ ಇಲ್ಲವೊ ಅವರು ಪ್ರಾತಃಕಾಲ ಸಾಯಂಕಾಲ ಕೈತಾಳ ಹಾಕುತ್ತ ನಾಮ ಜಪವನ್ನು ಮಾಡಲಿ.
“ಭಕ್ತನ ‘ಅಹಂ’ ಅಹಂಕಾರವನ್ನು ಉಂಟುಮಾಡುವುದಿಲ್ಲ; ಅಜ್ಞಾನವನ್ನು ಉಂಟು ಮಾಡುವುದಿಲ್ಲ. ಅದಕ್ಕೆ ಬದಲು ಭಗವಂತನ ಸಾಕ್ಷಾತ್ಕಾರವನ್ನು ದೊರಕಿಸಿಕೊಡುತ್ತದೆ. ಯಾವ ರೀತಿ ಹಿಂಚೆಸೊಪ್ಪು ಸೊಪ್ಪಿನ ಗುಂಪಿಗೆ ಸೇರಿಲ್ಲವೊ, ಅದೇ ರೀತಿಯಾಗಿ ಈ ‘ಅಹಂ’, ‘ಅಹಂ’ ನ ಗುಂಪಿಗೆ ಸೇರಿಲ್ಲ. ಉಳಿದ ಸೊಪ್ಪುಗಳಿಂದ ಶರೀರಾರೋಗ್ಯ ಕೆಡುತ್ತದೆ. ಆದರೆ ಹಿಂಚೆ ಪಿತ್ತಹಾರಿ, ದೇಹಕ್ಕೆ ಒಳ್ಳೆಯದು. ಕಲ್ಲುಸಕ್ಕರೆ ಸಿಹಿ ಪದಾರ್ಥ ಗಳ ಗುಂಪಿಗೆ ಸೇರಿಲ್ಲ, ಉಳಿದ ಸಿಹಿ ಪದಾರ್ಥಗಳನ್ನು ತಿಂದರೆ ಶರೀರಾರೋಗ್ಯ ಕೆಡುತ್ತದೆ. ಆದರೆ ಕಲ್ಲುಸಕ್ಕರೆ ಆಮ್ಲಹಾರಿ.
“ನಿಷ್ಠೆ ಭಕ್ತಿಯನ್ನು ದೊರಕಿಸಿಕೊಡುತ್ತದೆ. ಭಕ್ತಿ ಪಕ್ವವಾದರೆ ಭಾವವಾಗಿ ಪರಿಣಮಿಸು ತ್ತದೆ; ಭಾವ ಘನೀಭೂತವಾದಾಗ ಅದು ಮಹಾಭಾವವಾಗುತ್ತದೆ; ಕಟ್ಟಕಡೆಗೆ ಪ್ರೇಮ ವಾಗುತ್ತದೆ; ಪ್ರೇಮವನ್ನು ಒಂದು ಹಗ್ಗಕ್ಕೆ ಹೋಲಿಸಬಹುದು. ಪ್ರೇಮ ಉಂಟಾಯಿತು ಅಂದರೆ ಭಗವಂತ ಭಕ್ತನ ಕೈಯಲ್ಲಿ ಕಟ್ಟಿ ಬೀಳುತ್ತಾನೆ, ಮತ್ತೆ ಆತನ ಕೈಯಿಂದ ತಪ್ಪಿಸಿ ಕೊಳ್ಳಲಾರ. ಸಾಮಾನ್ಯ ಜೀವ ಅತಿ ಹೆಚ್ಚೆಂದರೆ ಭಾವಾವಸ್ಥೆಯನ್ನು ಪಡೆಯಬಲ್ಲದು. ಈಶ್ವರಕೋಟಿಗಳಿಗೆ ವಿನಾ ಬೇರೆ ಯಾರಿಗೂ ಮಹಾಭಾವ ಪ್ರೇಮ ಉಂಟಾಗದು. ಈ ಅವಸ್ಥೆಗಳು ಚೈತನ್ಯ ದೇವನಿಗೆ ಉಂಟಾಗಿದ್ದುವು.
“ಜ್ಞಾನಯೋಗ ಎಂಬುದು ಯಾವುದು? ಯಾವ ಮಾರ್ಗದಿಂದ ಸ್ವಸ್ವರೂಪವನ್ನು ಅರಿಯಬಹುದೊ ಅದು; ಬ್ರಹ್ಮವೇ ನನ್ನ ಸ್ವರೂಪವೆಂಬ ಬೋಧೆಯಾಗುತ್ತದೆ. ಪ್ರಹ್ಲಾದ ಕೆಲವು ವೇಳೆ ತನ್ನ ಸ್ವಸ್ವರೂಪದಲ್ಲಿ ಇರುತ್ತಿದ್ದ. ಇನ್ನು ಕೆಲವು ವೇಳೆ ಆತನಿಗೆ ತಾನು ಪ್ರತ್ಯೇಕ ಭಗವಂತ ಪ್ರತ್ಯೇಕ ಎಂಬುದಾಗಿ ತೋರುತ್ತಿತ್ತು; ಆಗ ಭಕ್ತಿಯ ಭಾವದಲ್ಲಿ ಇರುತ್ತಿದ್ದ.
“ಹನುಮಂತ ಹೇಳಿದ, ‘ಓ ರಾಮ, “ನೀನು ಪೂರ್ಣ, ನಾನು ಅಂಶ” ಅಂತ ಕೆಲವು ವೇಳೆ ಅನುಭವವಾಗುತ್ತದೆ. “ನೀನು ಪ್ರಭು, ನಾನು ದಾಸ” ಅಂತ ಇನ್ನು ಕೆಲವು ವೇಳೆ ಅನುಭವವಾಗುತ್ತದೆ. ಮತ್ತೆ ರಾಮ, “ನೀನೇ ನಾನು. ನಾನೇ ನೀನು” ಅಂತ ತತ್ತ್ವಜ್ಞಾನ ದೊರೆತಾಗ ಅನುಭವವಾಗುತ್ತದೆ.’
ಗಿರೀಶ: “ಆಹಾ!”
ಶ್ರೀರಾಮಕೃಷ್ಣರು: “ಸಂಸಾರದಲ್ಲಿ ಏಕೆ ದೊರಕೋದಿಲ್ಲ? ಆದರೆ ವಿವೇಕವೈರಾಗ್ಯ ಬೇಕು. ಭಗವಂತನೊಬ್ಬನೇ ವಸ್ತು, ಉಳಿದುದೆಲ್ಲ ಅನಿತ್ಯವಾದ್ದು. ಒಂದೆರಡು ದಿನದ ಬಾಳಿನವು ಈ ಪಕ್ವಬೋಧೆ ಬೇಕು. ಮೇಲೆ ಮೇಲೆ ತೇಲಿದರೆ ಆಗದು. ಆಳಕ್ಕೆ ಮುಳುಗಬೇಕು.”
ಹೀಗೆಂದು ಹೇಳಿ ಪರಮಹಂಸರು ಹಾಡಲಾರಂಭಿಸಿದ್ದಾರೆ:
ಮುಳುಗು ಮುಳುಗು ಮನವೇ-
ಹಿರಿಯೊಲವಿನ ಕಡಲಾಳಕೆ…..
ಶ್ರೀರಾಮಕೃಷ್ಣರು: “ಇನ್ನೊಂದು ವಿಷಯ, ಕಾಮಾದಿ ಮೊಸಳೆಗಳ ಭಯ ವೊಂದಿದೆ.”
ಗಿರೀಶ: “ಆದರೆ ಯಮನಿಗೂ ನಾನು ಅಂಜೋನಲ್ಲ.”
ಶ್ರೀರಾಮಕೃಷ್ಣರು: “ಅದಲ್ಲ, ಕಾಮಾದಿ ಮೊಸಳೆಗಳ ಭಯವೊಂದಿದೆ; ಅದಕ್ಕಾಗಿ ಮೈಗೆ ಅರಿಸಿನ ಹಚ್ಚಿಕೊಂಡು ಮುಳುಗಬೇಕು -ವಿವೇಕ ವೈರಾಗ್ಯಗಳೆಂಬ ಅರಸಿನವನ್ನು ಹಚ್ಚಿಕೊಂಡು ಮುಳುಗಬೇಕು.
“ಸಂಸಾರದಲ್ಲಿಯೂ ಕೆಲವರಿಗೆ ಜ್ಞಾನ ದೊರಕುತ್ತದೆ. ಅದಕ್ಕಾಗಿಯೇ ಎರಡು ವಿಧದ ಯೋಗಿಗಳ ವಿಷಯ ಶಾಸ್ತ್ರದಲ್ಲಿ ಹೇಳಿದೆ-ಗುಪ್ತಯೋಗಿ, ವ್ಯಕ್ತಯೋಗಿ. ಯಾರು ಸಂಸಾರವನ್ನು ತ್ಯಜಿಸಿದ್ದಾರೊ ಅವರೇ ವ್ಯಕ್ತಯೋಗಿಗಳು; ಅವರನ್ನು ಎಲ್ಲರೂ ಗುರುತಿಸ ಬಲ್ಲರು. ಗುಪ್ತಯೋಗಿಗಳು ಪ್ರಕಾಶಕ್ಕೆ ಬರುವುದಿಲ್ಲ. ಇವರನ್ನು ಮನೆಯ ದಾಸಿಗೆ ಹೋಲಿಸಬಹುದು. ಆಕೆ ಮನೆಯ ಎಲ್ಲಾ ಕೆಲಸಗಳನ್ನು ಮಾಡುತ್ತಾಳೆ, ಆದರೆ ಆಕೆಯ ಮನಸ್ಸೆಲ್ಲ ಊರಿನಲ್ಲಿರುವ ತನ್ನ ಮಕ್ಕಳು ಮರಿಗಳ ಕಡೆ ಹರಿಯುತ್ತಿರುತ್ತದೆ. ಇವರನ್ನು ಮತ್ತೆ ನಾನು ನಿನಗೆ ತಿಳಿಸಿರುವಂತೆ, ಪತಿತ ಹೆಂಗಸಿಗೆ ಹೋಲಿಸಬಹುದು. ಪತಿತ ಹೆಂಗಸು ಮನೆಯ ಕೆಲಸಗಳನ್ನೆಲ್ಲಾ ಬಹಳ ಉತ್ಸಾಹದಿಂದ ಮಾಡುತ್ತಾಳೆ. ಆದರೆ ಆಕೆಯ ಮನಸ್ಸು ಮಾತ್ರ ತನ್ನ ಉಪಪತಿಯ ಕಡೆಗೆ ಸರ್ವದಾ ಹರಿಯುತ್ತಿರುತ್ತದೆ. ವಿವೇಕವೈರಾಗ್ಯವನ್ನು ಬೆಳೆಸಿಕೊಳ್ಳೋದು ಸುಲಭಸಾಧ್ಯವಲ್ಲ. ‘ನಾನು ಕರ್ತಾ ಮತ್ತು ಎಲ್ಲವೂ ನನಗೆ ಸೇರಿದುವು’ ಎಂಬ ಭಾವನೆ ಸಹಜವಾಗಿ ಹೋಗದು. ನಾನು ಒಬ್ಬ ಡೆಪ್ಯುಟಿ ಮ್ಯಾಜಿಸ್ಟ್ರೇಟನನ್ನು ನೋಡಿದೆ. ಆತನಿಗೆ ತಿಂಗಳಿಗೆ ಎಂಟು ನೂರು ರೂಪಾಯಿ ಸಂಬಳ. ಭಗವದ್ವಿಷಯ ವಾಗಿ ಮಾತುಕತೆ ನಡೆಯುತ್ತಿತ್ತು-ಆ ಕಡೆ ಕಿಂಚಿತ್ ಮನಸ್ಸನ್ನು ಆತ ಕೊಡಲಿಲ್ಲ. ಜೊತೆಯಲ್ಲಿ ತನ್ನ ಹುಡುಗನೊಬ್ಬನನ್ನು ಕರೆದುಕೊಂಡು ಬಂದಿದ್ದ. ಆತನನ್ನು ಒಮ್ಮೆ ಈ ಕಡೆ ಕೂರಿಸುತ್ತಿದ್ದ. ಒಮ್ಮೆ ಆ ಕಡೆ ಕೂರಿಸುತ್ತಿದ್ದ. ನನಗೆ ಇನ್ನೊಬ್ಬ ಗೊತ್ತಿದ್ದಾನೆ, ಆತನ ಹೆಸರು ಹೇಳುವುದಿಲ್ಲ; ಆತ ಜಪವನ್ನೇನೋ ಬಹಳವಾಗಿ ಮಾಡುತ್ತಿದ್ದಾನೆ, ಆದರೆ ಹತ್ತುಸಾವಿರ ರೂಪಾಯಿಗಾಗಿ ಸುಳ್ಳುಸಾಕ್ಷಿ ಕೊಟ್ಟಿದ್ದಾನೆ. ಅದಕ್ಕಾಗಿಯೇ ನಾನು ಹೇಳೋದು, ‘ವಿವೇಕ ವೈರಾಗ್ಯವನ್ನು ಗಳಿಸಿಕೊಂಡರೆ ಸಂಸಾರದಲ್ಲಿದ್ದರೂ ದೊರಕುತ್ತದೆ’ ಅಂತ.”
ಗಿರೀಶ: “ಈ ಪಾಪಿಯ ಗತಿಯೇನು?”
ಪರಮಹಂಸರು ಊರ್ಧ್ವದೃಷ್ಟಿಯಿಂದ ಮಧುರ ಕಂಠದಿಂದ ಹಾಡಲಾರಂಭಿಸಿದ್ದಾರೆ:
ಕೃತಾಂತ ಭಯಂಕರ ನರಕಾಂತಕ ಶ್ರೀಕಾಂತನ ನೆನೆಯೊ
ಕಣ್ ಮಿಟುಕುವ ಹೊತ್ತಿನಲೇ
ಭವಸಾಗರದಾಚೆಯ ದಡಕೊಯ್ಯುವನವನೋ!
ನೆನೆ ಮನವೇ: ನೀನೇತಕ್ಕೆ ಈ ಲೋಕಕ್ಕೆ ಬಂದೆ.
ಅಲ್ಪತುಚ್ಛ ಕಿರುಬಯಕೆಯ ನೆನೆಕೆಯೊಳೇನಿದೆ!
ಹಾದಿಯಲ್ಲವಿದು; ಅವನೆಡೆಗೊಯ್ವುದು ನಿತ್ಯಪೂಜೆ ತಪ
ಪ್ರಾರ್ಥನೆ ಸಾಧನೆಯೊಂದೇ!
ಶ್ರೀರಾಮಕೃಷ್ಣರು: “ ‘ಕಣ್ ಮಿಟುಕುವ ಹೊತ್ತಿನಲ್ಲೇ ಭವಸಾಗರದಾಚೆಯ ದಡ ಕೊಯ್ಯುವನವನೊ! ಮಹಾಮಾಯೆ ಹೊಸಲು ಬಿಟ್ಟು ನಿಂತರೆ ಆತನ ದರ್ಶನ ದೊರೆಯುತ್ತದೆ. ಮಹಾಮಾಯೆಯ ಕೃಪೆ ಬೇಕು; ಅದಕ್ಕಾಗಿಯೆ ಆಕೆಯ ಉಪಾಸನೆ ಮಾಡೋದು. ನೋಡು, ಹತ್ತಿರವೇ ಭಗವಂತ ಇದ್ದಾನೆ, ಆದರೂ ಮಧ್ಯೆ ಮಹಾಮಾಯೆ ನಿಂತಿರುವುದರಿಂದ ಆತನನ್ನು ನೋಡೋಕಾಗುತ್ತಿಲ್ಲ. ರಾಮ ಸೀತೆ ಲಕ್ಷ್ಮಣ ಕಾಡಿನಲ್ಲಿ ಹೋಗುತ್ತಿದ್ದಾರೆ; ಮುಂದೆ ರಾಮ, ಮಧ್ಯೆ ಸೀತೆ-ಲಕ್ಷ್ಮಣ ಕೊನೆಯಲ್ಲಿ. ರಾಮ ಎರಡೂವರೆ ಮೊಳ ದೂರದಲ್ಲೇ ಇದ್ದಾನೆ, ಆದರೂ ಲಕ್ಷ್ಮಣ ಆತನನ್ನು ನೋಡಲಾರ.
“ಆತನ ಉಪಾಸನೆ ಮಾಡಬೇಕಾದರೆ ಯಾವುದಾದರು ಒಂದು ಭಾವವನ್ನು ಆರೋಪಿಸಿಕೊಳ್ಳಬೇಕು. ನನ್ನದು ಮೂರು ಭಾವಗಳು: ಸಂತಾನಭಾವ, ದಾಸೀಭಾವ, ಸಖೀಭಾವ. ದಾಸೀಭಾವ, ಸಖೀಭಾವ ಇವುಗಳಲ್ಲಿ ಅನೇಕ ಕಾಲ ಇದ್ದೆ; ಆಗ ಹೆಂಗಸರ ಹಾಗೆ ಸೀರೆ ಉಡುತ್ತಿದ್ದೆ, ಒಡವೆ ತೊಡುತ್ತಿದ್ದೆ, ಮುಸುಕು ಹಾಕಿಕೊಳ್ಳುತ್ತಿದ್ದೆ. ಸಂತಾನಭಾವ ಬಹಳ ಒಳ್ಳೆಯದು.
“ವೀರಭಾವ ಒಳ್ಳೆಯದಲ್ಲ. ವೈಷ್ಣವ-ವೈಷ್ಣವಿಯರದು, ಭೈರವ-ಭೈರವಿಯರದು ವೀರಭಾವ; ಪ್ರಕೃತಿಯನ್ನು ಸ್ತ್ರೀಯೆಂದು ಭಾವಿಸುವುದು. ರಮಿಸೋದರಿಂದ ಆಕೆಯನ್ನು ಪ್ರಸನ್ನಳನ್ನಾಗಿ ಮಾಡಿಕೊಳ್ಳುವುದು. ಈ ಭಾವದಲ್ಲಿ ಪ್ರಾಯಶಃ ಪತನ ಆಗುವ ಸಂಭವ ಇದೆ.”
ಗಿರೀಶ: “ಒಮ್ಮೆ ನನಗೆ ಈ ಭಾವ ಬಂದುಬಿಟ್ಟಿತು.”
ಪರಮಹಂಸರು ಚಿಂತಾಕ್ರಾಂತರಾಗಿ ಗಿರೀಶನ ಕಡೆ ನೋಡುತ್ತಿದ್ದಾರೆ.
ಗಿರೀಶ: “ನನಗಿನ್ನೂ ಆ ಪ್ರವೃತ್ತಿ ಇದೆ. ಈಗ ಉಪಾಯವೇನು ದಯವಿಟ್ಟು ಹೇಳಿ.”
ಶ್ರೀರಾಮಕೃಷ್ಣರು ಸ್ವಲ್ಪ ಹೊತ್ತು ಯೋಚಿಸಿ: “ಆತನಿಗೆ ವಕಾಲತ್ತು ವಹಿಸಿಬಿಡು-ಆತ ತನಗಿಚ್ಛೆ ಬಂದಂತೆ ಮಾಡಲಿ.”
ಪರಮಹಂಸರು ತಮ್ಮ ಯುವಕ ಭಕ್ತರ ಸಂಬಂಧವಾಗಿ ಮಾತುಕತೆ ಪ್ರಾರಂಭ ಮಾಡಿದ್ದಾರೆ.
ಶ್ರೀರಾಮಕೃಷ್ಣರು ಗಿರೀಶಾದಿಗಳಿಗೆ: “ಧ್ಯಾನದ ಸಮಯದಲ್ಲಿ ಈ ಯುವಕರ ಎಲ್ಲಾ ಲಕ್ಷಣಗಳನ್ನು ನೋಡಿದ್ದೇನೆ. ಮನೆ ಮಠ ಕಟ್ಟಿ ಬಾಳಬೇಕೆಂಬ ಬುದ್ಧಿ ಇವರಿಗಿಲ್ಲ. ಹೆಂಡತಿಯ ಸುಖದ ಬಯಕೆ ಇವರ ಹೃದಯದಲ್ಲಿ ಇಲ್ಲ. ಯಾರಿಗೆ ಮದುವೆಯಾಗಿದೆಯೊ ಅವರು ತಮ್ಮ ಹೆಂಡತಿಯರೊಡನೆ ಒಟ್ಟಿಗೆ ಮಲಗುತ್ತಿಲ್ಲ. ಸತ್ಯವೇನೆಂದರೆ-ರಜೋಗುಣ ಹೋಗಿ ಸತ್ತ್ವಗುಣ ಬರದ ಹೊರತು ಭಗವಂತನಲ್ಲಿ ಮನಸ್ಸು ಸ್ಥಿರವಾಗಿ ನಿಲ್ಲದು; ಆತನನ್ನು ಕಂಡರೆ ಪ್ರೀತಿಯುಂಟಾಗದು. ಆತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲಾಗುವು ದಿಲ್ಲ.”
ಗಿರೀಶ: “ನೀವು ನನಗೆ ಆಶೀರ್ವಾದ ಮಾಡಿದ್ದೀರಿ!”
ಶ್ರೀರಾಮಕೃಷ್ಣರು: “ಎಲ್ಲಿ? ಆದರೆ ಹೇಳಿದ್ದೇನೆ, ‘ನಿಜವಾದ ವ್ಯಾಕುಲತೆ ಇದ್ದರೆ ದೊರೆತುಬಿಡುತ್ತದೆ’ ಅಂತ.”
ಹೀಗೆ ಮಾತನಾಡುತ್ತಿದ್ದ ಹಾಗೆಯೆ, “ಆನಂದಮಯಿ! ಆನಂದಮಯಿ!” ಎಂದು ಹೇಳುತ್ತ ಸಮಾಧಿಸ್ಥರಾಗಿದ್ದಾರೆ. ಆ ಅವಸ್ಥೆಯಲ್ಲಿ ಬಹಳಕಾಲ ಇದ್ದರು. ಕಿಂಚಿತ್ ಪ್ರಕೃತಿಸ್ಥ ರಾಗಿ “ಈ ಯುವಕರೆಲ್ಲ ಎಲ್ಲಿ?” ಅಂತ ಹೇಳುತ್ತಿದ್ದಾರೆ. ಮಾಸ್ಟರ್ ಬಾಬುರಾಮನನ್ನು ಕರೆದು ತಂದ, ಬಾಬುರಾಮನ ಮತ್ತು ಉಳಿದವರ ಕಡೆ ದಿಟ್ಟಿಸಿ ನೋಡುತ್ತ ಪ್ರೇಮೋನ್ಮತ್ತ ರಾಗಿ ಹೇಳುತ್ತಿದ್ದಾರೆ, “ಸಚ್ಚಿದಾನಂದವೇ ಒಳ್ಳೆಯದು; ಆದರೆ ಕಾರಣಾನಂದ?” ಎಂಬುದಾಗಿ. ಹೀಗೆಂದು ಹೇಳಿ ಪರಮಹಂಸರು ಹಾಡಲಾರಂಭಿಸಿದ್ದಾರೆ:
ಅರಿತೆ ನಾನು ಅರಿತೆ ನಾನು-ನಿಜದ ನೆಲೆಯನರಿತೆನು
ಭಾವದಂತರಂಗವರಿತ ವ್ಯಕ್ತಿಯೊಬ್ಬ ದೊರೆತನು.
ಎಂದೆಂದೂ ಇರುಳಿಲ್ಲದ ಬೆಳಕಿನೂರಿನಿಂದ ಅವನು
ನಮ್ಮಲ್ಲಿಗೆ ಬಂದನು.
ಅವನ ಸಂಗದಿಂದ ನಾನು ಹಗಲಾವುದು ಇರುಳಾವುದು
ಎಂಬುದನೂ ತಿಳಿಯೆನು!
ಜಪತಪಾದಿ ಕರ್ಮಗಳು ನೀರಸವೆಂದರಿತೆ ನಾನು;
ಹಳೆಯ ನಿದ್ರೆ ಹರಿಯಿತು!
ತೂಕಡಿಸುವುದೆಲ್ಲಿ ಬಂತು?- ನಿರಂತರವು ಯೋಗದಲ್ಲಿ
ಎಚ್ಚರಿರುವುದಾಯಿತು.
ಲೋಕನಿದ್ರೆ ಮುಗಿಯಿತಿನ್ನು; ನಿನ್ನ ಯೋಗನಿದ್ರೆಯಲ್ಲಿ
ನಿಲಿಸು ತಾಯಿ ನನ್ನನು.
ಪರಮಬ್ರಹ್ಮರೂಪಿ ನೀನು; ಭುಕ್ತಿ ಮುಕ್ತಿ ಎಂಬೆರಡಕು
ತಲೆಬಾಗಿಸಿ ನಿಲುವೆನು.
ಪಾಪಪುಣ್ಯವೆಂಬುದನೂ ಕಿತ್ತು ಎಸೆಯಬಲ್ಲೆನು!
ಮತ್ತೆ ಹಾಡಿದರು:
ಏತಕೆ, ಇನ್ನೇತಕೆ?
ಕಾಶಿ ಕಾಂಚಿಯೊ, ಗಯೆಯೊ ಗಂಗೆಯೊ
ಪುಣ್ಯಕ್ಷೇತ್ರಗಳೇತಕೆ?……
ಪರಮಹಂಸರು ಮಾತು ಮುಂದುವರಿಸುತ್ತ ಹೇಳಿದರು: “ನಾನು ಭಗವತಿಗೆ ಪ್ರಾರ್ಥನೆ ಮಾಡುತ್ತಿದ್ದಾಗ ‘ತಾಯೆ, ನನಗೇನೂ ಬೇಕಾಗಿಲ್ಲ; ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧ ಭಕ್ತಿ ಉಂಟಾಗುವಂತೆ ಮಾಡು’ ಅಂತ ಹೇಳಿದೆ.”
ಗಿರೀಶನ ಶಾಂತಭಾವವನ್ನು ನೋಡಿ ಪರಮಹಂಸರು ಹರ್ಷಚಿತ್ತರಾಗಿದ್ದಾರೆ. ಹೇಳು ತ್ತಿದ್ದಾರೆ: “ನಿನ್ನ ಈ ಅವಸ್ಥೆ ಬಹಳ ಒಳ್ಳೆಯದು; ಸಹಜ ಅವಸ್ಥೆಯೇ ಉತ್ತಮ ಅವಸ್ಥೆ.”
ಶ್ರೀರಾಮಕೃಷ್ಣರು ಇನ್ನೂ ಗಿರೀಶನ ಕೊಠಡಿಯಲ್ಲೇ ಕುಳಿತಿದ್ದಾರೆ. ಒಬ್ಬ ಬಂದು ಅವರಿಗೆ ಹೇಳಿದ: “ನೀವು ‘ವಿವಾಹದ ವಿಭ್ರಾಂತಿ’ ಎಂಬುದನ್ನು ನೋಡುವಿರೇನು?-ಈಗ ಅದು ನಡೆಯುತ್ತಿದೆ.”
ಪರಮಹಂಸರು ಗಿರೀಶನಿಗೆ ಹೇಳಿದರು: “ಏನು ನಿನ್ನ ಅವಸ್ಥೆ? ಪ್ರಹ್ಲಾದನ ಚರಿತ್ರೆ ನೋಡಿದನಂತರ ಈ ನಕಲಿಯೆ! ಮೊದಲು ಲಾಡು ಚಿರೋಟಿ ಪಾಯಸ, ಬಳಿಕ ಹಾಗಲ ಕಾಯಿ ಗೊಜ್ಜು!”
ಅಭಿನಯ ಮುಗಿದನಂತರ ಗಿರೀಶನ ಇಚ್ಛೆಗನುಸಾರ ನಟಿಯರು ಪರಮಹಂಸರಿಗೆ ಪ್ರಣಾಮಮಾಡಲು ಬಂದಿದ್ದಾರೆ. ಅವರೆಲ್ಲರಿಗೂ ಒಟ್ಟಿಗೆ ತಮ್ಮ ತಲೆಯಿಂದ ಭೂಮಿ ಯನ್ನು ಮುಟ್ಟಿ ಪ್ರಣಾಮಮಾಡಿದರು. ಬಳಿಕ ಅವರಲ್ಲಿ ಕೆಲವರು ಪರಮಹಂಸರ ಪಾದ ಗಳನ್ನು ಸ್ಪರ್ಶಿಸಿ ಪ್ರಣಾಮಮಾಡುತ್ತಿದ್ದುದನ್ನು ನೋಡಿ ಭಕ್ತರು ಆಶ್ಚರ್ಯಚಕಿತರಾದರು. ನಟಿಯರು ಪರಮಹಂಸರ ಪಾದಗಳನ್ನು ಸ್ಪರ್ಶಿಸುತ್ತಿದ್ದಾಗ ಅವರುಹೇಳುತ್ತಿದ್ದರು, ‘ತಾಯಂದಿರಾ, ದಯವಿಟ್ಟು ಬೇಡಿ, ದಯವಿಟ್ಟು ಬೇಡಿ’ ಅಂತ. ಅವರ ಪ್ರತಿಯೊಂದು ಮಾತೂ ಕರುಣೆಯಿಂದ ತೊಯ್ದಿತ್ತು.
ನಟಿಯರು ಹೊರಟುಹೋದನಂತರ ಪರಮಹಂಸರು ಭಕ್ತರಿಗೆ ಹೇಳುತ್ತಿದ್ದಾರೆ: “ಎಲ್ಲವೂ ಆತನೆ, ಆದರೆ ವಿವಿಧ ರೂಪಿನಿಂದ ಕಾಣುತ್ತಿದ್ದಾನೆ.”
ಈಗ ಪರಮಹಂಸರು ಗಾಡಿಯಲ್ಲಿ ಕುಳಿತಿದ್ದಾರೆ. ಗಿರೀಶಾದಿ ಭಕ್ತರು ಅವರನ್ನು ಗಾಡಿಗೆ ಹತ್ತಿಸಿದರು. ಗಾಡಿಯನ್ನು ಹತ್ತಿದೊಡನೆಯೇ ಅವರಿಗೆ ಗಾಢಸಮಾಧಿ ಉಂಟಾಯಿತು. ನಾರಾಯಣನೆ ಮೊದಲಾದ ಭಕ್ತರು ಗಾಡಿಯಲ್ಲಿ ಕುಳಿತರು. ಅದು ದಕ್ಷಿಣೇಶ್ವರದ ಕಡೆ ಹೋಗುತ್ತಿದೆ.
೨೭ನೆ ಡಿಸೆಂಬರ್ ೧೮೮೪, ಪುಷ್ಯ ಶುಕ್ಲ ಸಪ್ತಮಿ, ಶನಿವಾರ
ಕ್ರಿಸ್ಮಸ್ ರಜಾದಿನಗಳು ಬಂದಿರುವುದರಿಂದ ಭಕ್ತರಿಗೆ ವಿರಾಮವಿದೆ. ಅನೇಕರು ಪರಮಹಂಸರನ್ನು ನೋಡಲು ಬಂದಿದ್ದಾರೆ. ಬೆಳಗಾಗೆದ್ದೇ ಅನೇಕರು ಬಂದುಬಿಟ್ಟಿದ್ದಾರೆ. ಕೇದಾರ, ರಾಮ, ನಿತ್ಯಗೋಪಾಲ, ತಾರಕ, ಸುರೇಂದ್ರ, ಮಾಸ್ಟರ್, ಶಾರದಾಪ್ರಸನ್ನ ಇನ್ನೂ ಕೆಲವು ಯುವಭಕ್ತರೂ ಬಂದಿದ್ದಾರೆ. ಇಂದು ಶಾರದಾಪ್ರಸನ್ನನ ಮೊದಲನೆಯ ಆಗಮನ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಬಂಕಿಮನೆಲ್ಲಿ? ಅವನನ್ನು ಕರೆದುಕೊಂಡು ಬರಲಿಲ್ಲವೇನು ನೀನು?”
ಬಂಕಿಮ ಒಬ್ಬ ವಿದ್ಯಾರ್ಥಿ. ಪರಮಹಂಸರು ಆತನನ್ನು ಬಾಗ್ಬಜಾರಿನಲ್ಲಿ ನೋಡಿದ್ದರು. ಆತನನ್ನು ದೂರದಿಂದ ನೋಡಿ ಆತ ಬಹಳ ಒಳ್ಳೆಯ ಹುಡುಗ ಎಂದು ಹೇಳಿದ್ದರು.
ಸ್ವಲ್ಪ ಹೊತ್ತಾದನಂತರ ಪರಮಹಂಸರು ಭಕ್ತರೊಡನೆ ಪಂಚವಟಿಗೆ ಹೋಗಿ ಕುಳಿತಿ ದ್ದಾರೆ. ಅವರ ಸುತ್ತಲೂ ಕೆಲವರು ಕುಳಿತಿದ್ದಾರೆ, ಕೆಲವರು ನಿಂತಿದ್ದಾರೆ. ಪರಮಹಂಸರು ನೈರುತ್ಯಾಭಿಮುಖರಾಗಿ ಸಿಮೆಂಟು ಕಟ್ಟೆಯ ಮೇಲೆ ಕುಳಿತಿದ್ದಾರೆ. ಅವರು ನಗುತ್ತ ಮಾಸ್ಟರನ್ನು ಕೇಳಿದರು, “ಆ ಪುಸ್ತಕ ತಂದಿದ್ದೀಯೇನು.”
ಮಾಸ್ಟರ್: “ಹೌದು, ತಂದಿದ್ದೇನೆ.”
ಶ್ರೀರಾಮಕೃಷ್ಣರು: “ನನಗೊಂದು ಸ್ವಲ್ಪ ಅದನ್ನು ಓದಿಹೇಳು.”
ಆ ಪುಸ್ತಕ ಏನೆಂಬುದನ್ನು ಅರಿಯಲು ಭಕ್ತರು ಉತ್ಸುಕರಾಗಿದ್ದಾರೆ. ಅದರ ಹೆಸರು “ದೇವೀಚೌಧುರಾಣಿ” ಅಂತ. ಅದು ನಿಷ್ಕಾಮಕರ್ಮದ ವಿಷಯವಾಗಿ ಹೇಳುತ್ತದೆ ಎಂದು ಪರಮಹಂಸರು ಕೇಳಿದ್ದರು. ಅದರ ಲೇಖಕ ಸುಪ್ರಸಿದ್ಧ ಬಂಕಿಮಚಂದ್ರ ಅಂತಲೂ ಕೇಳಿದ್ದರು. ಅದರಲ್ಲಿ ಆತ ಏನು ಬರೆದಿದ್ದಾನೆ ಎಂಬುದನ್ನು ಕೇಳಿದರೆ, ಬಂಕಿಮಚಂದ್ರನ ಮಾನಸಿಕ ಅವಸ್ಥೆ ಎಂಥದು ಎಂಬುದು ಪರಮಹಂಸರಿಗೆ ಗೊತ್ತಾಗಿಬಿಡುತ್ತದೆ.
ಮಾಸ್ಟರ್ ಹೇಳಿದ: “ಒಬ್ಬ ಯುವತಿ-ಕಥಾನಾಯಕಿ-ಒಬ್ಬ ಡಕಾಯಿತನ ಕೈಗೆ ಸಿಕ್ಕಿಬಿದ್ದಳು. ಯುವತಿಯ ಹೆಸರು ‘ಪ್ರಫುಲ್ಲೆ’ ಅಂತ. ಬಳಿಕ ಅವಳಿಗೆ ‘ದೇವೀಚೌಧುರಾಣಿ’ ಎಂಬ ಹೆಸರು ಬಂದಿತು. ಡಕಾಯಿತನ ಹೆಸರು ‘ಭವಾನೀಪಾಠಕ’ ಅಂತ. ಡಕಾಯಿತ ಬಹಳ ಒಳ್ಳೆಯವ. ಆತ ಆಕೆಯ ಕೈಯಿಂದ ಅನೇಕ ಸಾಧನೆ ಭಜನೆಗಳನ್ನು ಮಾಡಿಸಿದ್ದ; ಯಾವ ರೀತಿಯಾಗಿ ನಿಷ್ಕಾಮಕರ್ಮವನ್ನು ಮಾಡಬೇಕೆಂಬುದನ್ನೂ ಆಕೆಗೆ ಹೇಳಿಕೊಟ್ಟಿದ್ದ. ಡಕಾಯಿತ ದುಷ್ಟರನ್ನು ಸುಲಿಗೆಮಾಡಿ ದೊರೆತ ಹಣದಿಂದ ಬಡಬಗ್ಗರಿಗೆ ಅನ್ನ ಹಾಕುತ್ತಿದ್ದ-ಅವರಿಗೆ ದಾನ ಮಾಡುತ್ತಿದ್ದ. ಪ್ರಫುಲ್ಲೆಗೆ ‘ದುಷ್ಟರನ್ನು ದಂಡಿಸಿ ಶಿಷ್ಟರನ್ನು ಪಾಲಿಸು ತ್ತಿದ್ದೇನೆ’ ಅಂತ ಹೇಳಿದ.”
ಶ್ರೀರಾಮಕೃಷ್ಣರು: “ಹೀಗೆ ಮಾಡುವುದು ರಾಜನ ಕರ್ತವ್ಯ.”
ಮಾಸ್ಟರ್: “ಗ್ರಂಥಕರ್ತ ಬೇರೊಂದು ಜಾಗದಲ್ಲಿ ಭಕ್ತಿಯ ವಿಷಯವಾಗಿ ಬರೆದಿದ್ದಾನೆ. ಭವಾನೀಪಾಠಕ ಪ್ರಫುಲ್ಲೆಯೊಡನೆ ಇರಲು ಒಬ್ಬ ಹುಡುಗಿಯನ್ನು ಕಳುಹಿಸಿ ಕೊಟ್ಟಿದ್ದ. ಆಕೆಯ ಹೆಸರು ‘ನಿಶಿ’ ಅಂತ. ಆಕೆ ಒಳ್ಳೆ ಭಕ್ತಳು. ಆಕೆ ಹೇಳುತ್ತಿದ್ದಳು, ‘ಶ್ರೀಕೃಷ್ಣ ನನ್ನ ಪತಿ’ ಅಂತ. ಪ್ರಫುಲ್ಲೆಗೆ ವಿವಾಹವಾಗಿತ್ತು; ಆಕೆಗೆ ತಂದೆ ಇರಲಿಲ್ಲ, ತಾಯಿ ಇದ್ದಳು. ಆಕೆಯ ಊರಿನವರು ಬರಿದೆ ಒಂದು ಅಪನಿಂದೆಯನ್ನು ಅವರ ಮನೆಯ ಮೇಲೆ ಹೊರಿಸಿ ಅವರಿಗೆ ಬಹಿಷ್ಕಾರ ಹಾಕಿಬಿಟ್ಟಿದ್ದರು. ಈ ಕಾರಣದಿಂದ ಪ್ರಫುಲ್ಲೆಯ ಮಾವ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಲಿಲ್ಲ. ಆತ ತನ್ನ ಮಗನಿಗೆ ಇನ್ನೂ ಇಬ್ಬರು ಹುಡುಗಿಯರನ್ನು ತಂದು ಮದುವೆ ಮಾಡಿದ್ದ; ಆದರೂ ಪ್ರಫುಲ್ಲೆಗೆ ತನ್ನ ಪತಿಯ ಮೇಲೆ ಬಹಳ ಪ್ರೀತಿ ಇತ್ತು.
(ಶ್ರೀರಾಮಕೃಷ್ಣರಿಗೆ) “ಈ ಭಾಗವನ್ನು ಕೇಳಿದರೆ ಕಥೆ ಏನೆಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.”
ಮಾಸ್ಟರ್ ಓದುತ್ತಾನೆ:
ನಿಶಿ: “ನಾನು ಭವಾನೀಪಾಠಕನ ಮಗಳು, ಆತ ನನ್ನ ತಂದೆ. ಆತನು ಒಂದು ವಿಧದಲ್ಲಿ ನನಗೆ ವಿವಾಹಮಾಡಿದ್ದಾನೆ.”
ಪ್ರಫುಲ್ಲೆ: “ಒಂದು ವಿಧದಲ್ಲಿ ಅಂದರೆ?”
ನಿಶಿ: “ಸರ್ವಸ್ವವನ್ನೂ ಶ್ರೀಕೃಷ್ಣನಿಗೆ.”
ಪ್ರಫುಲ್ಲೆ: “ಹೇಗೆ ಅದು?”
ನಿಶಿ: “ರೂಪು, ಯೌವನ ಪ್ರಾಣ.”
ಪ್ರಫುಲ್ಲೆ: “ಆತನೆ ನಿನ್ನ ಪತಿಯೆ?”
ನಿಶಿ: ‘ಹೌದು-ಏಕೆಂದರೆ, ಯಾರು ನನ್ನನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿರುವನೋ ಆತನೇ ನನ್ನ ಪತಿ.”
ಪ್ರಫುಲ್ಲೆ ನಿಟ್ಟುಸಿರುಬಿಟ್ಟು: “ನಿನಗೇನು ಹೇಳುವುದೋ ನನಗೆ ಗೊತ್ತಾಗುತ್ತಿಲ್ಲ. ಪತಿಯ ಅನುಭವ ನಿನಗಿಲ್ಲ. ಅದಕ್ಕಾಗಿ ನೀನು ಹಾಗೆ ಹೇಳುತ್ತಿರುವೆ. ನಿನಗೆ ನಿಜವಾದ ಪತಿಯೊಬ್ಬನಿದ್ದಿದ್ದರೆ ಶ್ರೀಕೃಷ್ಣನ ಕಡೆ ಮನಸ್ಸು ಹೋಗುತ್ತಿರಲಿಲ್ಲ.”
ಮೂರ್ಖ ವ್ರಜೇಶ್ವರನಿಗೆ (ಪ್ರಫುಲ್ಲೆಯ ಪತಿಗೆ) ಪ್ರಫುಲ್ಲೆಯ ಹೃದಯ ಎಂಥದು ಎಂಬುದು ಗೊತ್ತಿರಲಿಲ್ಲ.
ನಿಶಿ: “ಶ್ರೀಕೃಷ್ಣನನ್ನು ಕಂಡರೆ ಎಲ್ಲರೂ ಮೋಹಗೊಳ್ಳುವ ಸಂಭವ, ಏಕೆಂದರೆ ಆತನದು ಅನಂತ ಯೌವನ, ಅನಂತ ಐಶ್ವರ್ಯ.”
ಈ ಯುವತಿ (ನಿಶಿ) ಭವಾನೀಪಾಠಕನ ಕೈಯಲ್ಲಿ ಶಿಕ್ಷಣವನ್ನು ಹೊಂದಿದವಳು. ಆದರೆ ಪ್ರಫುಲ್ಲೆ ನಿರಕ್ಷರಕುಕ್ಷಿ-ಈಕೆಯ ಕೈಯಿಂದ ಆಕೆಗೆ ಉತ್ತರ ಕೊಡಲಾಗಲಿಲ್ಲ. ಹಿಂದೂಧರ್ಮದ ಸ್ಮೃತಿಕಾರರಿಗೆ ಉತ್ತರ ಗೊತ್ತಿತ್ತು. ಭಗವಂತ ಅನಂತ ಎಂಬುದೇನೋ ಗೊತ್ತು; ಆದರೆ ಆ ಅನಂತವನ್ನು ಈ ಕ್ಷುದ್ರ ಹೃದಯ ಪಂಜರದೊಳಗೆ ಕೂಡಿಡಲಾಗುವುದಿಲ್ಲ. ಸಾಂತನೊಡನೆ ಮಾತ್ರ ಹಾಗೆ ವ್ಯವಹರಿಸಬಹುದು, ಅದಕ್ಕಾಗಿಯೇ ಹಿಂದೂ, ಆ ಅನಂತ ಜಗದೀಶ್ವರನನ್ನು ತನ್ನ ಹೃದಯಪಂಜರದಲ್ಲಿ ಸಾಂತ ಶ್ರೀಕೃಷ್ಣನ ರೂಪದಿಂದ ಪೂಜಿಸುತ್ತಾನೆ. ಪತಿ ಇನ್ನೂ ನಿರ್ದಿಷ್ಟವಾದ ಆ ಅನಂತನ ಸಾಂತರೂಪು. ಅದಕ್ಕಾಗಿಯೇ ಹೆಂಗಸಿನ ಪ್ರೇಮವು ಪಾತ್ರವಾದುದೇ ಆಗಿದ್ದರೆ ಭಗವಂತನ ಕಡೆಗೆ ಹೋಗಲು ಪತಿಯೇ ಪ್ರಥಮ ಸೋಪಾನವಾಗುತ್ತಾನೆ. ಅದಕ್ಕಾಗಿಯೇ ಹಿಂದೂ ಹೆಂಗಸಿನ ಪತಿಯೇ ದೇವರು. ಉಳಿದ ಎಲ್ಲಾ ಸಮಾಜಗಳು ಹಿಂದೂಸಮಾಜದ ಎದುರು ಈ ವಿಷಯವಾಗಿ ನಿಕೃಷ್ಟ ದೆಸೆಯಲ್ಲಿವೆ.
ಪ್ರಫುಲ್ಲೆ ಏನೂ ಅರಿಯದವಳು: ಅವಳಿಗೊಂದೂ ಅರ್ಥವಾಗಲಿಲ್ಲ. ಹೇಳಿದಳು, “ಗೆಳತಿ, ನನಗೆ ಅದೆಲ್ಲ ಅರ್ಥವಾಗುತ್ತಿಲ್ಲ. ನಿನ್ನ ಹೆಸರೇನು ಎಂಬುದನ್ನು ನೀನು ಇದುವರೆಗೆ ಹೇಳಲೇಯಿಲ್ಲ ವಲ್ಲ?” ಅಂತ.
ನಿಶಿ: “ಭವಾನೀಪಾಠಕ ನನಗೆ ‘ನಿಶಿ’ ಅಂತ ಹೆಸರು ಇಟ್ಟಿದ್ದಾನೆ. ನಾನು ದಿವೆಯ ತಂಗಿ. ಒಂದು ದಿವಸ ಮಾತುಕತೆಯಾಡಲು ದಿವೆಯನ್ನು ಇಲ್ಲಿಗೆ ಕರೆದುಕೊಂಡು ಬರುತ್ತೇನೆ. ಆದರೆ ಏನು ಹೇಳುತ್ತಿದ್ದೇನೊ ಅದನ್ನು ಮುಂದುವರಿಸುತ್ತೇನೆ ಕೇಳು. ಭಗವಂತನೇ ಪರಮ ಪತಿ. ಹೆಂಗಸಿಗೆ ಪತಿಯೇ ದೇವರು. ಶ್ರೀಕೃಷ್ಣನೇ ಎಲ್ಲರ ದೇವರು. ಎರಡು ದೇವರುಗಳನ್ನೇಕೆ ಹೃದಯದಲ್ಲಿ ಇಟ್ಟುಕೊಳ್ಳಬೇಕು? ಇಬ್ಬರು ಭಗವಂತರಲ್ಲಿ ಏಕೆ ಮನಸ್ಸನ್ನಿಡಬೇಕು? ಈ ಕ್ಷುದ್ರ ಹೃದಯದ ಅಲ್ಪ ಭಕ್ತಿಯನ್ನು ಇಬ್ಭಾಗ ಮಾಡಿಬಿಟ್ಟರೆ ಅದು ಬಹಳ ಅಲ್ಪವಾಗಿ ಹೋಗಿಬಿಡುತ್ತದೆ!”
ಪ್ರಫುಲ್ಲೆ: “ಏ ಹೋಗು! ಹೆಂಗಸಿನ ಭಕ್ತಿಗೆ ಮಿತಿ ಎಂಬುದು ಉಂಟೆ?”
ನಿಶಿ: “ಹೆಂಗಸಿನ ಪ್ರೀತಿಗೆ ಕೊನೆ ಎಂಬುದೇನೂ ಇಲ್ಲ. ಆದರೆ ಭಕ್ತಿ ಎಂಬುದು ಒಂದು, ಪ್ರೀತಿ ಎಂಬುದು ಇನ್ನೊಂದು.”
ಮಾಸ್ಟರ್ ಈಗ ಪ್ರಫುಲ್ಲೆಯ ಕೈಯಲ್ಲಿ ಭವಾನೀಪಾಠಕ ಮಾಡಿಸಿದ ಸಾಧನೆಯ ಭಾಗವನ್ನು ಓದಲು ಪ್ರಾರಂಭಿಸಿದ:
ಮೊದಲನೆಯ ವರ್ಷ ಭವಾನೀಪಾಠಕ ಪ್ರಫುಲ್ಲೆಯ ಮನೆಗೆ ಯಾವ ಪುರುಷನೂ ಹೋಗದಹಾಗೆ ನೋಡಿಕೊಂಡುದೇ ಅಲ್ಲದೆ, ಆಕೆ ಹೊರಗೆ ಬಂದು ಬೇರೆ ಯಾವ ಪುರುಷ ನೊಡನೆಯೂ ಮಾತುಕತೆಯಾಡದ ಹಾಗೆ ವ್ಯವಸ್ಥೆ ಮಾಡಿದ. ಎರಡನೆಯ ವರ್ಷ ಆಕೆ ಬೇರೆ ಪುರುಷನೊಡನೆ ಮಾತುಕತೆಯಾಡಕೂಡದು ಎಂಬ ನಿರ್ಬಂಧನೆಯನ್ನು ತೆಗೆದುಹಾಕಿದರು; ಆದರೆ ಯಾವ ಪುರುಷನನ್ನೂ ಆಕೆಯ ಮನೆಗೆ ಹೋಗಲು ಬಿಟ್ಟುಕೊಡುತ್ತಿರಲಿಲ್ಲ. ಮೂರನೆಯ ವರ್ಷ ಪ್ರಫುಲ್ಲೆ ಮುಂಡನ ಮಾಡಿಸಿಕೊಂಡ ನಂತರ ಭವಾನೀಪಾಠಕ ತನ್ನ ಎಳೇ ವಯಸ್ಸಿನ ಶಿಷ್ಯರನ್ನು ಜೊತೆಯಲ್ಲಿ ಕರೆದುಕೊಂಡು ಆಕೆಯ ಮನೆಗೆ ಹೋಗುತ್ತಿದ್ದ-ಆಗ ಪ್ರಫುಲ್ಲೆ ತನ್ನ ದೃಷ್ಟಿಯನ್ನು ನೆಲದ ಕಡೆ ತಿರುಗಿಸಿ ಅವರೊಡನೆ ಶಾಸ್ತ್ರಗಳ ಸಂಬಂಧವಾಗಿ ಮಾತುಕತೆಗಳನ್ನಾಡುತ್ತಿದ್ದಳು.
ಬಳಿಕ ಮಾಸ್ಟರ್ ಓದಿದ, ‘ಪ್ರಫುಲ್ಲೆ ಶಾಸ್ತ್ರಗಳನ್ನು ಓದಲು ಆರಂಭಿಸಿದಳು; ವ್ಯಾಕರಣ ಮುಗಿಸಿದಳು; ರಘುವಂಶ, ಕುಮಾರಸಂಭವ, ಶಾಕುಂತಲ, ನೈಷಧವನ್ನು ಓದಿದಳು; ಕಿಂಚಿತ್ ಸಾಂಖ್ಯ, ವೇದಾಂತ, ನ್ಯಾಯ ಇವನ್ನೂ ಓದಿದಳು.’
ಶ್ರೀರಾಮಕೃಷ್ಣರು: “ಇದರ ಇಂಗಿತವೇನು ಗೊತ್ತೆ? ಓದದೆ ಬರೆಯದೆ ಇದ್ದರೆ ಜ್ಞಾನ ದೊರಕದು ಅಂತ. ಈ ಗ್ರಂಥಕರ್ತನ ಮತ್ತು ಇವನಂಥವರ ಅಭಿಪ್ರಾಯವೇ ಇದು. ಇವರ ಭಾವನೆ, ಮೊದಲು ಓದು ಬರಹ, ಬಳಿಕ ಭಗವಂತ; ಭಗವಂತನನ್ನು ಅರಿಯಲು ಓದು ಬರಹ ಬೇಕು ಅಂತ! ಆದರೆ ಯದುಮಲ್ಲಿಕನೊಡನೆ ಮಾತುಕತೆಯಾಡ ಬೇಕಾದರೆ ಮೊದಲು ಆತನಿಗೆಷ್ಟು ಮನೆಗಳಿವೆ, ಎಷ್ಟು ಐಶ್ವರ್ಯವಿದೆ, ಎಷ್ಟು ಲೇವಾದೇವಿ ಪತ್ರಗಳಿವೆ, ಇವನ್ನೆಲ್ಲ ಅರಿತುಕೊಳ್ಳುವುದರ ಆವಶ್ಯಕತೆಯೇನಿದೆ? ಹೇಗೊ ಮಾಡಿ-ಹೊಗಳಿಯೊ, ಜವಾನರಿಂದ ತಳ್ಳಿಸಿಕೊಂಡೊ ಮನೆಗೆ ಪ್ರವೇಶಮಾಡಿ ಯದುಮಲ್ಲಿಕನೊಡನೆ ಸ್ನೇಹ ಬೆಳೆಸಿಕೊಳ್ಳಬೇಕು. ಒಂದು ವೇಳೆ ಆತನ ಧನಕನಕಾದಿಗಳ ಮನೆಮಠಾದಿಗಳ ವಿಷಯ ತಿಳಿದುಕೋಬೇಕು ಎಂಬ ಇಚ್ಛೆ ಬಂದರೆ, ಯದುಮಲ್ಲಿಕನನ್ನು ಕೇಳಿಬಿಟ್ಟರೆಯೇ ಎಲ್ಲಾ ದೊರೆತುಬಿಡುತ್ತದೆ-ಬಹಳ ಸಹಜವಾಗಿ ದೊರೆತುಬಿಡುತ್ತದೆ. ಮೊದಲು ರಾಮ ಬಳಿಕ ಆತನ ಐಶ್ವರ್ಯ-ಜಗತ್ತು. ಅದಕ್ಕಾಗೇ ವಾಲ್ಮೀಕಿ ‘ಮರಾ’ ಎಂಬ ಮಂತ್ರವನ್ನು ಜಪಿಸಿದ್ದು. ಮೊದಲು ‘ಮ’ ಅಂದರೆ ಭಗವಂತ ಬಳಿಕ ‘ರಾ’ ಅಂದರೆ ಜಗತ್ತು-ಆತನ ಐಶ್ವರ್ಯ.”
ಭಕ್ತರೆಲ್ಲರೂ ಪರಮಹಂಸರ ಈ ಮಾತುಕತೆಗಳನ್ನು ಸ್ತಂಭೀಭೂತರಾಗಿ ಕೇಳಿದರು.
ಮಾಸ್ಟರ್ ಮುಂದಕ್ಕೆ ಓದಿದ:
ಪ್ರಫುಲ್ಲೆ ಶಾಸ್ತ್ರಾಧ್ಯಯನವನ್ನು ಮುಗಿಸಿ ಬಹಳಕಾಲ ಸಾಧನೆಯಲ್ಲಿ ತೊಡಗಿದ್ದಳು. ಆಕೆ ತನ್ನ ಸಾಧನೆಯನ್ನು ಮುಗಿಸಿದನಂತರ ಒಂದು ದಿನ ಭವಾನೀಪಾಠಕ ಪ್ರಫುಲ್ಲೆಯನ್ನು ನೋಡಲು ಬಂದ; ಈ ಸಲ ನಿಷ್ಕಾಮಕರ್ಮದ ಸಂಬಂಧವಾಗಿ ಉಪದೇಶಕೊಡಲಿಚ್ಛಿಸಿದ್ದಾನೆ. ಗೀತೆಯಿಂದ ಒಂದು ಶ್ಲೋಕವನ್ನು ಎತ್ತಿ ಹೇಳಿದ: “ತಸ್ಮಾದಸಕ್ತಃ ಸತತಂ ಕಾರ್ಯಂ, ಕರ್ಮಸಮಾಚರ । ಅಸಕ್ತೋ ಹ್ಯಾಚರನ್ ಕರ್ಮ ಪರಮಾಪ್ನೋತಿ ಪೂರುಷಃ ॥ (ಭ.ಗೀ ಜಿಜಿಜಿ ೧೯)
ಆಕೆಗೆ ಅನಾಸಕ್ತ ಯೋಗದ ಮೂರು ಲಕ್ಷಣಗಳನ್ನು ತಿಳಿಸಿದ: ಮೊದಲನೆಯದು ಇಂದ್ರಿಯ ಸಂಯಮ; ಎರಡನೆಯದು ನಿರಹಂಕಾರ: ಮೂರನೆಯದು ಶ್ರೀಕೃಷ್ಣನಿಗೆ ಫಲಸಮರ್ಪಣೆ. ಮತ್ತೆ ತಿಳಿಸಿದ, ನಿರಹಂಕಾರಿಯಾಗದ ಹೊರತು ಧರ್ಮಾಚರಣೆ ಸಾಧ್ಯವಿಲ್ಲ ಅಂತ. ಗೀತೆಯಿಂದ ಈ ಶ್ಲೋಕವನ್ನು ಎತ್ತಿ ಹೇಳಿದ: “ಪ್ರಕೃತೇಃ ಕ್ರಿಯಾಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ । ಅಹಂಕಾರ ವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ ॥” (ಭ.ಗೀ ಜಿಜಿಜಿ ೨೭)
ಬಳಿಕ ಭವಾನೀಪಾಠಕ ಪ್ರಫುಲ್ಲೆಗೆ ಸರ್ವ ಕರ್ಮಗಳ ಫಲವನ್ನು ಶ್ರೀಕೃಷ್ಣನಿಗೆ ಹೇಗೆ ಅರ್ಪಿಸ ಬೇಕು ಎಂಬುದರ ವಿಷಯವಾಗಿ ತಿಳಿಸಿದ. ಅದಕ್ಕಾಗಿ ಗೀತೆಯಿಂದ ಈ ಶ್ಲೋಕವನ್ನು ಎತ್ತಿ ಹೇಳಿದ: “ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ । ಯತ್ತಪಸ್ಯಸಿ ಕೌಂತೇಯ ತತ್ಕುರುಷ್ವ ಮದರ್ಪಣಮ್ ॥” (ಭ.ಗೀ. ಜ್ಡಿ ೨೭)
ಶ್ರೀರಾಮಕೃಷ್ಣರು: “ಇದು ಬಹಳ ಚೆನ್ನಾಗಿವೆ. ಇವೆಲ್ಲ ಗೀತೋಕ್ತಿಗಳು; ಅಲ್ಲಗಳೆಯು ವಂತೆ ಇಲ್ಲ; ಆದರೆ ಒಂದು ವಿಷಯ: ಗ್ರಂಥಕರ್ತ ಶ್ರೀಕೃಷ್ಣನಿಗೆ ಫಲಸಮರ್ಪಣೆ ಮಾಡುವ ವಿಷಯವನ್ನೇನೊ ಹೇಳಿದ್ದಾನೆ. ಆದರೆ ಆತನಿಗಾಗಿ ಭಕ್ತಿಯನ್ನು ಬೆಳೆಸಿಕೊಳ್ಳ ಬೇಕು ಎಂಬ ವಿಷಯವನ್ನು ಹೇಳಲಿಲ್ಲ.”
ಮಾಸ್ಟರ್: “ಹೌದು, ಅದನ್ನು ಒಂದು ನಿರ್ದಿಷ್ಟರೂಪದಿಂದ ಹೇಳಿಲ್ಲ.”
“ಬಳಿಕ ಭವಾನೀಪಾಠಕ ಮತ್ತು ಪ್ರಫುಲ್ಲೆ ಹಣದ ವ್ಯವಹಾರದ ಸಂಬಂಧವಾಗಿ ಮಾತುಕತೆಯಾಡಿದರು. ಪ್ರಫುಲ್ಲೆ, ‘ನನ್ನ ಸಮಸ್ತ ಐಶ್ವರ್ಯವನ್ನೂ ಶ್ರೀಕೃಷ್ಣನಿಗೆ ಅರ್ಪಿಸಿ ಬಿಟ್ಟಿದ್ದೇನೆ’ ಅಂತ ಹೇಳಿದಳು.”
ಮಾಸ್ಟರ್ ಮತ್ತೆ ಪುಸ್ತಕದಿಂದ ಓದಿದ.
ಪ್ರಫುಲ್ಲೆ: “ಯಾವಾಗ ನಾನು ನನ್ನ ಸಕಲ ಕರ್ಮಗಳ ಫಲವನ್ನು ಶ್ರೀಕೃಷ್ಣನಿಗೆ ಅರ್ಪಿಸಿ ಬಿಟ್ಟೆನೊ, ಆಗಲೇ ನನ್ನ ಧನವನ್ನೆಲ್ಲಾ ಶ್ರೀಕೃಷ್ಣನಿಗೆ ಅರ್ಪಿಸಿಬಿಟ್ಟೆ.”
ಭವಾನಿ: “ಎಲ್ಲವನ್ನೂ?”
ಪ್ರಫುಲ್ಲೆ: “ಹೌದು ಎಲ್ಲವನ್ನೂ.”
ಭವಾನಿ: “ನೀನು ಹಾಗೆ ಮಾಡಿಬಿಟ್ಟಿದ್ದರೆ ಕರ್ಮವನ್ನು ನೀನು ಅನಾಸಕ್ತಿಯಿಂದ ಮಾಡಲಾಗು ವುದಿಲ್ಲ. ನಿನ್ನ ಉದರ ಪೋಷಣೆಗಾಗಿ ನೀನು ಕೆಲಸಮಾಡಬೇಕಾಗಿ ಬಂದರೆ, ಆಗ ಆ ಕೆಲಸದ ಮೇಲೆ ಆಸಕ್ತಿ ಬಂದುಬಿಡುತ್ತದೆ. ಆದ್ದರಿಂದ ನಿನಗೆ ಎರಡು ಮಾರ್ಗಗಳಿವೆ; ನೀನು ನಿನ್ನ ಆಹಾರವನ್ನು ಭಿಕ್ಷಾವೃತ್ತಿಯಿಂದ ಸಂಪಾದಿಸಿಕೊಳ್ಳಬೇಕಾಗುತ್ತದೆ, ಇಲ್ಲದಿದ್ದರೆ ನಿನ್ನ ಹಣದಿಂದ ಸಂಪಾದಿಸಿಕೊಳ್ಳ ಬೇಕಾಗುತ್ತದೆ. ಭಿಕ್ಷಾವೃತ್ತಿಯಲ್ಲಿಯೂ ಆಸಕ್ತಿ ಉಂಟಾಗುವ ಸಂಭವ; ಆದ್ದರಿಂದ ನೀನು ನಿನ್ನ ಹಣದಿಂದಲೇ ಜೀವಿಸಬೇಕು.”
ಮಾಸ್ಟರ್ ನಗುತ್ತ ಶ್ರೀರಾಮಕೃಷ್ಣರಿಗೆ: “ಇದು ಮಾತ್ರ ಲೆಕ್ಕಾಚಾರದ ಬುದ್ಧಿ.”
ಶ್ರೀರಾಮಕೃಷ್ಣರು: “ಹೌದು, ಇದು ಲೆಕ್ಕಾಚಾರದ ಬುದ್ಧಿ; ಪ್ರಾಪಂಚಿಕನ ಬುದ್ಧಿ. ಯಾರಿಗೆ ಭಗವಂತ ಬೇಕಾಗಿದ್ದಾನೊ ಆತ, ಒಮ್ಮೆಗೆಯೆ ಧುಮುಕಿ ಸಾಧನೆಯಲ್ಲಿ ಮುಳುಗೇ ಬಿಡುತ್ತಾನೆ; ಜೀವನಕ್ಕೆ ಇದೊಂದಿಷ್ಟು ಇರಲಿ ಎಂಬ ಭಾವನೆಯೇ ಆತನ ತಲೆಯನ್ನು ಹೋಗದು.”
ಮಾಸ್ಟರ್:
“ಬಳಿಕ ಭವಾನೀಪಾಠಕ ಪ್ರಫುಲ್ಲೆಯನ್ನು, ‘ನೀನು ನಿನ್ನ ಹಣವನ್ನೆಲ್ಲ ಯಾವ ರೀತಿಯಾಗಿ ಅರ್ಪಿಸಲು ಹೋಗುವೆ?’ ಎಂದು ಕೇಳಿದ. ಪ್ರಫುಲ್ಲೆ ಹೇಳಿದಳು, ‘ಶ್ರೀಕೃಷ್ಣ ಸರ್ವಭೂತಗಳಲ್ಲಿಯೂ ಇದ್ದಾನೆ. ಆದ್ದರಿಂದ ಸರ್ವಭೂತಗಳಲ್ಲಿಯೂ ಧನವನ್ನು ಹಂಚಿಬಿಡುತ್ತೇನೆ’ ಅಂತ. ಭವಾನಿ ಹೇಳಿದ, ‘ಒಳ್ಳೆಯದು! ಬಹಳ ಒಳ್ಳೆಯದು!’ ಅಂತ. ಮತ್ತೆ ಆತ ಗೀತೆಯಿಂದ ಶ್ಲೋಕವನ್ನು ಎತ್ತಿ ಹೇಳಿದ: “ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ । ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ ॥ ಸರ್ವಭೂತಸ್ಥಿತಂ ಯೋ ಮಾಂ ಭಜತ್ಯೇಕತ್ವಮಾಸ್ಥಿತಃ । ಸರ್ವಥಾ ವರ್ತಮಾನೋಪಿ ಸ ಯೋಗೀ ಮಯಿ ವರ್ತತೇ ॥ ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋರ್ಠ್ಜುನ । ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ ॥ (ಭ.ಗೀ ಡ್ಜಿ ೩೦, ೩೧, ೩೨.)
ಶ್ರೀರಾಮಕೃಷ್ಣರು: “ಇವೆಲ್ಲ ಉತ್ತಮ ಭಕ್ತನ ಲಕ್ಷಣ.”
ಮಣಿ ಮತ್ತೆ ಓದಲಾರಂಭಿಸಿದ:
ಸರ್ವಭೂತಗಳಿಗೂ ದಾನಮಾಡಬೇಕಾದರೆ ಬಹಳವಾಗಿ ಶ್ರಮಪಡಬೇಕಾಗುವ ಆವಶ್ಯಕತೆ ಇದೆ. ಆದ್ದರಿಂದ ಸ್ವಲ್ಪ ಉಡಿಗೆ-ತೊಡಿಗೆಗಳ, ಸ್ವಲ್ಪ ಭೋಗವಿಲಾಸಗಳ ಆವಶ್ಯಕತೆ ಇದೆ. ಅದಕ್ಕಾಗಿಯೇ ಭವಾನಿ ಹೇಳಿದ, ‘ಒಮ್ಮೊಮ್ಮೆ ಸ್ವಲ್ಪ ವ್ಯಾಪಾರ ಬುದ್ಧಿ ಬೇಕು’ ಅಂತ.
ಶ್ರೀರಾಮಕೃಷ್ಣರು (ಸಿಟ್ಟುಗೊಂಡು): “ ‘ವ್ಯಾಪಾರ ಬುದ್ಧಿ ಬೇಕೆ?’ ಮನಸ್ಸಿನ ಆಲೋಚನೆಯಂತೆ ಮಾತುಕತೆ ವ್ಯಕ್ತವಾಗುತ್ತವೆ. ಹಗಲು ಇರುಳು ವಿಷಯ ಚಿಂತನೆ, ಇತರರೊಡನೆ ಕಪಟಾಚರಣೆ ಇಂಥವುಗಳನ್ನೆಲ್ಲ ಜನರು ಮಾಡಿ ಮಾಡಿ ಅವರ ಬಾಯಿಂದ ಹೊರಡುವ ಮಾತುಕತೆಗಳೆಲ್ಲ ಅಂಥವೇ ಆಗಿರುತ್ತವೆ. ಮೂಲಂಗಿ ತಿಂದರೆ ಮೂಲಂಗಿ ವಾಸನೆಯ ತೇಗು ಬರುತ್ತದೆ. ‘ವ್ಯಾಪಾರಬುದ್ಧಿ ಬೇಕು’ ಅಂತ ಹೇಳದೆ, ತಾನು ಅಕರ್ತನೆಂದು ಭಾವಿಸಿ ಕರ್ತನೋಪಾದಿಯಲ್ಲಿ ಕೆಲಸಮಾಡಬೇಕು ಅಂತ ಹೇಳಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ಅಂದು ಒಬ್ಬ ಇಲ್ಲಿ ಹಾಡುತ್ತಿದ್ದ. ಆ ಹಾಡಿನಲ್ಲಿ ‘ಲಾಭ,’ ‘ನಷ್ಟ’ ಎಂಬ ಈ ತರದ ಪದಗಳೇ ಬಹಳವಾಗಿ ಇದ್ದುವು. ನಾನು ಆತನಿಗೆ ಅದನ್ನು ಹಾಡಬೇಡವೆಂದು ಹೇಳಿದೆ. ಹಗಲು ಇರುಳು ಯಾವುದರ ಚಿಂತನೆಯೊ ಅದರ ತೇಗೇ ಹೊರಕ್ಕೆ ಬರುತ್ತದೆ.”
ಓದುವುದು ಮುಂದುವರಿಯಿತು. ಗ್ರಂಥಕರ್ತ ಭಗವಂತನ ಸಾಕ್ಷಾತ್ಕಾರದ ವಿಷಯ ವಾಗಿ ಬರೆದಿದ್ದಾನೆ. ಪ್ರಫುಲ್ಲೆಯು ದೇವೀಚೌಧುರಾಣಿ ಆಗಿಬಿಟ್ಟಿದ್ದ್ದಾಳೆ. ಅಂದು ವೈಶಾಖ ಶುಕ್ಲ ಸಪ್ತಮಿ. ಆಕೆ ಮನೆ-ದೋಣಿಯ ಚಾವಣಿಯ ಮೇಲೆ ಕುಳಿತು ದಿವೆಯೊಡನೆ ಮಾತುಕತೆಯಾಡುತ್ತಿದ್ದಾಳೆ. ಚಂದ್ರ ಉದಯಿಸಿದ್ದಾನೆ. ದೋಣಿ ಲಂಗರು ಹಾಕಿ ಗಂಗೆಯಲ್ಲಿ ನಿಂತಿದೆ. ಭಗವಂತನ ಸಾಕ್ಷಾತ್ಕಾರವನ್ನು ಪಡೆಯುವುದೆಂತು ಎಂಬುದರ ವಿಷಯವಾಗಿ ಮಾತುಕತೆ ನಡೆಯುತ್ತಿದೆ. ದೇವಿ ಹೇಳಿದಳು, “ಯಾವ ರೀತಿಯಾಗಿ ಹೂವಿನ ಗಂಧ ಮೂಗಿಗೆ ಪ್ರತ್ಯಕ್ಷವಾಗುತ್ತದೆಯೋ, ಅದೇ ರೀತಿಯಾಗಿ ಭಗವಂತ ಮನಸ್ಸಿಗೆ ಪ್ರತ್ಯಕ್ಷ ನಾಗುತ್ತಾನೆ” ಅಂತ.
ಹೀಗೆಂದು ಓದಿದೊಡನೆಯೆ ಪರಮಹಂಸರು ಮಧ್ಯೆ ಬಾಯಿ ಹಾಕಿ, “ಮನಸ್ಸಿಗೆ ಪ್ರತ್ಯಕ್ಷವಾಗುವಿಕೆ. ಅದು ಈ ಮನಸ್ಸಿಗೆ ಅಲ್ಲ; ಶುದ್ಧ ಮನಸ್ಸಿಗೆ, ಆಗ ಈ ಮನಸ್ಸು ಇರದು. ವಿಷಯಾಸಕ್ತಿ ಒಂದು ಕಿಂಚಿತ್ತು ಇದ್ದರೂ ಅದು ಶುದ್ಧ ಮನಸ್ಸಾಗದು. ಯಾವಾಗ ಮನಸ್ಸು ಪರಿಶುದ್ಧವಾಗುತ್ತದೆಯೋ, ಆಗ ಅದನ್ನೇ ಶುದ್ಧ ಮನಸ್ಸು, ಶುದ್ಧ ಆತ್ಮ ಅಂತಲೂ ಹೇಳಬಹುದು.”
ಮಾಸ್ಟರ್: “ಮನಸ್ಸಿನ ಮೂಲಕ ಆತನನ್ನು ಸುಲಭವಾಗಿ ಪ್ರತ್ಯಕ್ಷಮಾಡಿಕೊಳ್ಳ ಲಾಗುವುದಿಲ್ಲ ಎಂಬ ವಿಷಯ ಮುಂದೆ ಬರುತ್ತದೆ. ಹೇಳಿದ್ದಾನೆ, ‘ಪ್ರತ್ಯಕ್ಷಮಾಡಿಕೊಳ್ಳಲು ದುರ್ಬೀನು ಬೇಕು. ಯೋಗವೇ ಆ ದುರ್ಬೀನು. ಗೀತೆಯಲ್ಲಿ ಹೇಳಿರುವಂತೆ ಯೋಗ ಮೂರು ವಿಧವಾದ್ದು: ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ. ಈ ಯೋಗವೆಂಬ ದುರ್ಬೀನಿನಿಂದ ಭಗವಂತನನ್ನು ನೋಡಬಹುದು’.”
ಶ್ರೀರಾಮಕೃಷ್ಣರು: “ಇದು ಬಹಳ ಒಳ್ಳೆಯ ವಿಷಯ. ಇವು ಗೀತೋಕ್ತಿಗಳು.”
ಮಾಸ್ಟರ್: “ಕಡೆಗೆ ದೇವೀಚೌಧುರಾಣಿ ತನ್ನ ಪತಿಯನ್ನು ಸಂಧಿಸುತ್ತಾಳೆ. ಆಕೆಗೆ ಆತನಲ್ಲಿ ವಿಶೇಷವಾದ ಭಕ್ತಿ. ಪತಿಗೆ ಹೇಳಿದಳು, ‘ನೀವೇ ನನ್ನ ದೇವರು. ಬೇರೆ ದೇವರು ಗಳನ್ನು ಪೂಜೆ ಮಾಡಲು ಕಲಿಯಲೆತ್ನಿಸಿದೆ-ಆದರೆ ಸಾಧ್ಯವಾಗಲಿಲ್ಲ. ನೀವೇ ಎಲ್ಲಾ ದೇವತೆಗಳ ಸ್ಥಾನವನ್ನು ಅಲಂಕರಿಸಿಬಿಟ್ಟಿದ್ದೀರಿ’ ಅಂತ.”
ಶ್ರೀರಾಮಕೃಷ್ಣರು ನಗುತ್ತ: “ ‘ಸಾಧ್ಯವಾಗಲಿಲ್ಲ.’ ಇದು ಪತಿವ್ರತೆಯ ಧರ್ಮ. ಇದೂ ಒಂದು ಮಾರ್ಗವೆ.”
ಓದುವುದು ಮುಗಿಯಿತು. ಪರಮಹಂಸರು ಮತ್ತೆ ಏನು ಹೇಳುತ್ತಾರೆ ಎಂಬುದನ್ನು ಕೇಳಲು ಭಕ್ತರು ಕಿವಿ ನೆಟ್ಟಗೆ ಮಾಡಿಕೊಂಡು ಕುಳಿತಿದ್ದಾರೆ.
ಶ್ರೀರಾಮಕೃಷ್ಣರು ನಗುತ್ತ ಕೇದಾರ ಮೊದಲಾದವರಿಗೆ: “ಇದು ಅಷ್ಟೇನೂ ಕೆಟ್ಟದ್ದಲ್ಲ; ಇದು ಪತಿವ್ರತೆಯ ಧರ್ಮ. ಪ್ರತಿಮೆಯ ಮೂಲಕ ಭಗವಂತನನ್ನು ಪೂಜಿಸ ಬಹುದಂತೆ, ಜೀವಂತ ಮನುಷ್ಯನ ಮೂಲಕ ಪೂಜಿಸಲಾಗುವುದಿಲ್ಲವೇನು? ಆತನೇ ಮಾನವನ ರೂಪಿನಲ್ಲಿ ಕ್ರಿಡಿಸುತ್ತಿದ್ದಾನೆ.
“ಓ, ನನಗೇನವಸ್ಥೆ ಬಂದು ಹೋಯಿತು! ಹರಗೌರೀಭಾವದಲ್ಲಿ ಎಷ್ಟೊಂದು ಕಾಲ ಕಳೆದೆ! ರಾಧಾಕೃಷ್ಣ ಭಾವದಲ್ಲಿ ಎಷ್ಟೊಂದು ಕಾಲ ಕಳೆದೆ! ಎಷ್ಟೊಂದು ಕಾಲ ಸೀತಾರಾಮನ ಭಾವದಲ್ಲಿ ಕಳೆದೆ! ರಾಧೆಯ ಭಾವ ಆರೋಪಿಸಿಕೊಂಡು ‘ಕೃಷ್ಣ! ಕೃಷ್ಣ!’ ಅಂತ ಅಳುತ್ತಿದ್ದೆ. ಸೀತೆಯ ಭಾವ ಆರೋಪಿಸಿಕೊಂಡು ‘ರಾಮ! ರಾಮ!’ ಅಂತ ಅಳುತ್ತಿದ್ದೆ.
“ಆತನ ಲೀಲೆಗೆ ಕೊನೆಯೆಂಬುದೇ ಇಲ್ಲ. ಈ ಭಾವಗಳನ್ನೆಲ್ಲ ಅನುಭವಿಸಿದ ನಂತರ ಭಗವಂತನಿಗೆ ಪ್ರಾರ್ಥನೆಮಾಡಿದೆ. ‘ತಾಯೆ, ಇವುಗಳಲ್ಲೆಲ್ಲ ವಿಚ್ಛೇದನ ಇದೆ. ಯಾವುದರಲ್ಲಿ ವಿಚ್ಛೇದನ ಎಂಬುದು ಇಲ್ಲವೊ ಅಂಥ ಅವಸ್ಥೆಯನ್ನು ದಯಪಾಲಿಸು’ ಅಂತ. ಅದಕ್ಕಾಗೇ ಕೆಲವು ಕಾಲ ಅಖಂಡ ಸಚ್ಚಿದಾನಂದನ ಭಾವದಲ್ಲಿ ಇದ್ದೆ. ದೇವದೇವಿಯರ ಪಟಗಳನ್ನೆಲ್ಲ ರೂಮಿನಿಂದ ತೆಗೆದುಹಾಕಿಬಿಟ್ಟಿದ್ದೆ. ಆತನನ್ನು ಸರ್ವಭೂತ ಗಳಲ್ಲಿಯೂ ದರ್ಶನ ಮಾಡುತ್ತಿದ್ದೆ. ಅಗೋ ಅಲ್ಲಿ ಬಿಲ್ವಮರ, ಅದರಿಂದ ಬಿಲ್ವಪತ್ರೆ ಕಿತ್ತುಕೊಂಡು ಬರಲು ಹೋಗುತ್ತಿದ್ದೆ. ಒಂದು ದಿನ ಅದರ ಎಲೆ ಕೀಳಲು ಹೋಗಿ ಅದರ ತೊಗಟೆ ಒಂದು ಕಿಂಚಿತ್ ಕಿತ್ತುಬಂದುಬಿಟ್ಟಿತು. ಆಗ ಕಂಡುಬಂದಿತು, ಮರ ಚೈತನ್ಯಮಯವಾಗಿರುವಂತೆ. ಅದಕ್ಕೆ ನೋವು ಉಂಟುಮಾಡಿದುದಕ್ಕಾಗಿ ಸ್ವಲ್ಪ ವ್ಯಥೆ ಆಯಿತು. ಒಂದು ದಿನ ದರ್ಭೆ ಕೀಳಲು ಹೋಗಿ ನೋಡುತ್ತೇನೆ. ಅದು ಸುಲಭವಾಗಿ ಬರುತ್ತಿಲ್ಲ. ಆಗ ಸ್ವಲ್ಪ ಬಲಪ್ರಯೋಗ ಮಾಡಿ ಕಿತ್ತೆ.
“ನನ್ನ ಕೈಯಲ್ಲಿ ನಿಂಬೆ ಹಣ್ಣು ಕತ್ತರಿಸಲಾಗುತ್ತಿಲ್ಲ. ಅಂದು ಬಹಳ ಪ್ರಯಾಸಪಟ್ಟು ‘ಜೈ ಕಾಳಿ!’ ಅಂತ ಹೇಳಿ ಆಕೆಯ ಎದುರು ಅದನ್ನು ಬಲಿ ಕತ್ತರಿಸುವ ಹಾಗೆ ಕತ್ತರಿಸಲು ಸಾಧ್ಯವಾಯಿತು. ಒಂದು ಹೂವು ಕೊಯ್ಯಲು ಹೋಗಿದ್ದಾಗ, ನನಗೀದೃಶ್ಯ ಕಂಡಿತು-ಗಿಡಗಳಲ್ಲಿ ಹೂವು ಅರಳಿ ತುಂಬಿತ್ತು. ಎದುರಿಗೇನೇ ವಿರಾಟ್ಪುರುಷನಿರುವ ಹಾಗೆ, ಆತನ ಪೂಜೆ ಆಗತಾನೆ ಮುಗಿದಿರುವ ಹಾಗೆ, ಆತನ ತಲೆಯ ಮೇಲೆ ಈ ಹೂವುಗಳೆಲ್ಲ ಅಲಂಕೃತವಾಗಿರುವ ಹಾಗೆ ಕಂಡೆ. ಅವನ್ನು ಬಳಿಕ ಕೊಯ್ಯಲಾಗಲಿಲ್ಲ.
“ಆತ ಮನುಷ್ಯನಾಗಿಯೂ ಕ್ರೀಡಿಸುತ್ತಾನೆ. ಮನುಷ್ಯ ಸಾಕ್ಷಾತ್ ನಾರಾಯಣನೇ ಆಗಿ ನನಗೆ ಕಂಡುಬರುತ್ತಿದ್ದಾನೆ. ಕಡ್ಡಿಗಳನ್ನು ಒಂದಕ್ಕೊಂದು ಉಜ್ಜಿದರೆ ಯಾವ ರೀತಿ ಬೆಂಕಿ ಉತ್ಪನ್ನವಾಗುತ್ತದೆಯೋ, ಅದೇ ರೀತಿ ತೀವ್ರ ಭಕ್ತಿಯೊಂದಿದ್ದರೆ ಮನುಷ್ಯರಲ್ಲಿಯೂ ಭಗವಂತನನ್ನು ದರ್ಶಿಸಬಹುದು. ಎರೆ ಒಳ್ಳೆಯದಾಗಿದ್ದರೆ ದೊಡ್ಡ ದೊಡ್ಡ ‘ರುಯಿ’ ಮೀನುಗಳೂ ಅದನ್ನು ‘ಗಬಕ್’ ಅಂತ ನುಂಗಿಬಿಡುತ್ತವೆ. ಪ್ರೇಮೋನ್ಮಾದ ಉಂಟಾದರೆ ಸರ್ವಭೂತಗಳಲ್ಲಿಯೂ ಆತನನ್ನು ನೋಡಬಹುದು, ಗೋಪಿಯರು ಸರ್ವಭೂತ ಗಳಲ್ಲಿಯೂ ಶ್ರೀಕೃಷ್ಣ ಇರುವುದನ್ನು ಕಂಡಿದ್ದರು; ಎಲ್ಲವೂ ಅವರಿಗೆ ಕೃಷ್ಣಮಯವಾಗಿ ಕಂಡಿತು. ಅವರು ಆಗ ಹೇಳುತ್ತಿದ್ದರು, ತಾವೇ ಕೃಷ್ಣ ಅಂತ. ಆಗ ಅವರದು ಪ್ರೇಮೋನ್ಮಾದ. ಮರ ನೋಡಿ ಅವರು ಹೇಳುತ್ತಿದ್ದರು, ‘ಇವರು ತಪಸ್ವಿಗಳು; ಶ್ರೀಕೃಷ್ಣನ ಧ್ಯಾನ ಮಾಡುತ್ತಿದ್ದಾರೆ’ ಅಂತ. ನೆಲದ ಮೇಲೆ ಬೆಳೆದಿರೋ ಹುಲ್ಲು ನೋಡಿ ಅವರು ಹೇಳುತ್ತಿದ್ದರು, ‘ನೋಡಿ, ಶ್ರೀಕೃಷ್ಣನನ್ನು ಸ್ಪರ್ಶಿಸಿ. ಪೃಥಿವಿಗೆ ರೋಮಾಂಚನವಾಗಿ ಬಿಟ್ಟಿದೆ’.
“ಪತಿವ್ರತಾ ಧರ್ಮ, ಪತಿಯೆ ದೇವರು ಅಂತ. ಇದು ಏಕೆ ಆಗದು? ಪ್ರತಿಮೆ ಯಲ್ಲಿ ಪೂಜೆ ಸಾಧ್ಯವಾಗುವುದಾದರೆ, ಜೀವಂತ ಮನುಷ್ಯನಲ್ಲಿ ಸಾಧ್ಯವಾಗದೊ? ಪ್ರತಿಮೆಯಲ್ಲಿ ಭಗವಂತ ಆವಿರ್ಭಾವವಾಗಬೇಕಾದರೆ ಮೂರು ವಸ್ತುಗಳು ಬೇಕು; ಮೊದಲನೆಯದು ಅರ್ಚಕನ ಭಕ್ತಿ; ಎರಡನೆಯದು ಸುಂದರ ಪ್ರತಿಮೆ; ಮೂರನೆಯದು ಮನೆ ಯಜಮಾನನ ಭಕ್ತಿ. ವೈಷ್ಣವಚರಣ ಹೇಳಿದ, ಕೊನೆಕೊನೆಯಲ್ಲಿ ಭಗವಂತನ ನರಲೀಲೆಯಲ್ಲಿಯೇ ಭಕ್ತನ ಮನಸ್ಸು ಏಕಾಗ್ರವಾಗುತ್ತದೆ.’
“ಆದರೆ ಒಂದು ವಿಷಯ, -ಆತನ ಸಾಕ್ಷಾತ್ಕಾರ ಮಾಡಿಕೊಳ್ಳದೆ ಇದ್ದರೆ ಆತ ಮನುಷ್ಯ ರೂಪಿನಲ್ಲಿ ಕ್ರೀಡಿಸುವುದನ್ನು ನೋಡಲಾಗುವುದಿಲ್ಲ. ಸಾಕ್ಷಾತ್ಕಾರ ಲಕ್ಷಣ ಏನು ಎಂಬುದು ಗೊತ್ತೇನು? ಬಾಲಕನ ಸ್ವಭಾವ ಬಂದುಬಿಡುತ್ತದೆ. ಬಾಲಕ ಸ್ವಭಾವ ಬರಲು ಕಾರಣವೇನು? ಭಗವಂತ ತಾನೇ ಬಾಲಕನ ಹಾಗೆ ಇರುವುದರಿಂದ ಅದು ಬರುತ್ತದೆ. ಅದಕ್ಕಾಗಿಯೇ ಯಾರು ಆತನ ಸಾಕ್ಷಾತ್ಕಾರ ಪಡೆಯುತ್ತಾರೊ ಅವರಿಗೆ ಬಾಲಕನ ಸ್ವಭಾವ ಬಂದುಬಿಡುತ್ತದೆ.
“ಭಗವಂತನ ದರ್ಶನವನ್ನು ಪಡೆಯಬೇಕು, ಈ ಪ್ರಶ್ನೆ ಆತನ ದರ್ಶನವನ್ನು ಪಡೆಯುವುದು ಹೇಗೆ ಎಂಬುದು? ತೀವ್ರ ವೈರಾಗ್ಯಬೇಕು. ಅದು ಅಷ್ಟೊಂದು ತೀವ್ರವಾದುದಾಗಿರಬೇಕು. ಆವಶ್ಯಕತೆ ತೋರಿಬಂದರೆ, ‘ಹೇ ಜಗತ್ಪಿತನೆ, -ನಾನು ನಿನ್ನ ಈ ಜಗತ್ತಿಗೆ ಸೇರಿಲ್ಲವೇನೊ? ನೀನು ನನಗೆ ದಯೆತೋರೋದಿಲ್ಲವೇನೊ ನೀಚ?’ ಎಂಬುದಾಗಿ ಹೇಳುವಂಥದಾಗಿಯೂ ಇರಬೇಕು.
“ಯಾರು ಯಾರ ಚಿಂತನೆ ಮಾಡುತ್ತಾರೊ ಅವರಿಗೆ ಅವರ ಸತ್ತ್ವ ಬಂದುಬಿಡುತ್ತದೆ. ಶಿವನ ಪೂಜೆ ಮಾಡಿದರೆ ಶಿವನ ಸತ್ತ್ವ ದೊರೆಯುತ್ತದೆ. ಒಬ್ಬ ರಾಮಭಕ್ತ ಹಗಲು ಇರುಳು ಹನುಮಂತನ ಮೇಲೆ ಧ್ಯಾನಮಾಡುತ್ತಿದ್ದ. ತಾನು ಹನುಮಂತನಾಗಿಬಿಟ್ಟಿದ್ದೇನೆ ಅಂತ ಭಾವಿಸುತ್ತಿದ್ದ. ಕೊನೆಗೆ ಆತನಿಗೆ ತನಗೊಂದು ಬಾಲವೂ ಬೆಳೆದುಬಿಟ್ಟಿದೆ ಎಂಬ ದೃಢವಿಶ್ವಾಸ ಆಗಿಬಿಟ್ಟಿತು. ಶಿವನ ಅಂಶದಿಂದ ಜ್ಞಾನ ಉಂಟಾಗುತ್ತದೆ. ವಿಷ್ಣುವಿನ ಅಂಶದಿಂದ ಭಕ್ತಿ ಉಂಟಾಗುತ್ತದೆ, ಯಾರಲ್ಲಿ ಶಿವನ ಅಂಶ ಇದೆಯೊ ಅವರದು ಜ್ಞಾನಿಯ ಸ್ವಭಾವ; ಯಾರಲ್ಲಿ ವಿಷ್ಣುವಿನ ಅಂಶ ಇದೆಯೊ ಅವರದು ಭಕ್ತನ ಸ್ವಭಾವ.”
ಮಾಸ್ಟರ್: “ಚೈತನ್ಯದೇವನದು? ನೀವು ಹೇಳಿದ್ದೀರಿ. ಆತನದು ‘ಜ್ಞಾನ ಭಕ್ತಿ ಎರಡೂ’ ಅಂತ.”
ಶ್ರೀರಾಮಕೃಷ್ಣರು ಸಿಟ್ಟುಗೊಂಡು: “ಅವನದು ಒಂದು ಪ್ರತ್ಯೇಕ ಸಮಾಚಾರ. ಆತ ಭಗವಂತನ ಅವತಾರ. ಅವನಿಗೂ ಜೀವಕ್ಕೂ ಅಜಗಜಾಂತರ ವ್ಯತ್ಯಾಸ. ಅವನದು ಎಂಥ ವೈರಾಗ್ಯ ! ಸಾರ್ವಭೌಮ ಆತನ ನಾಲಗೆ ಮೇಲೆ ಸಕ್ಕರೆ ಚಿಮುಕಿಸಿದ ನಂತರ, ಆತ ‘ಫೂ’ ಎಂದು ಊದಿದೊಡನೆಯೆ ಎಲ್ಲಾ ಹಾರಿಹೋಗಿಬಿಟ್ಟಿತು; ಒಂದು ತುಣುಕೂ ಆತನ ನಾಲಗೆಗೆ ಅಂಟಿಕೊಂಡಿರಲಿಲ್ಲ; ಸರ್ವದಾ ಸಮಾಧಿಸ್ಥನಾಗಿರುತ್ತಿದ್ದ. ಆತ ಎಂಥ ಅದ್ಭುತ ಕಾಮಜಯಿ! ಅಂಥವರನ್ನು ಜೀವದೊಡನೆ ಹೋಲಿಸೋದು! ಸಿಂಹ ಹನ್ನೆರಡು ವರ್ಷಕೊಮ್ಮೆ ಸಂಭೋಗ ಕಾರ್ಯದಲ್ಲಿ ತೊಡಗುತ್ತದೆ. ಆದರೆ ಅದು ಮಾಂಸಾಹಾರಿ; ಗುಬ್ಬಚ್ಚಿ ಧಾನ್ಯಾಹಾರಿ, ಆದರೆ ಹಗಲು ಇರುಳು ಸಂಭೋಗಕಾರ್ಯದಲ್ಲಿಯೇ ತೊಡಗಿರುತ್ತದೆ. ಇದೇ ಅವತಾರಕ್ಕೆ ಮತ್ತು ಜೀವನಿಗೆ ಇರುವ ತಾರತಮ್ಯ. ಜೀವನೇನೊ ಕಾಮವನ್ನು ತ್ಯಜಿಸುತ್ತಾನೆ; ಆದರೆ ತಡೆಯೋಕೆ ಆಗದೆ ಒಮ್ಮೊಮ್ಮೆ ಸಂಭೋಗಕಾರ್ಯ ಆತನಿಂದ ನಡೆದೇ ಹೋಗಿಬಿಡುತ್ತದೆ.
(ಮಣಿಗೆ) “ಏಕೆ ಲಜ್ಜೆಪಡುವೆ? ಯಾರು ಮೇಲಿನ ಹಾಗೆ ವರ್ತಿಸುತ್ತಾರೋ ಅವರಿಗೆ ನಾಚಿಕೆ ಹೇಸಿಕೆ ಎಂಬೋದೇ ಇಲ್ಲ. ‘ಲಜ್ಜೆ ಘೃಣ ಭಯ ಇವು ಮೂರೂ ಇರಬಾರದು.’ ಇವೆಲ್ಲಾ ಪಾಶಗಳೇ. ಅಷ್ಟಪಾಶಗಳಿರೋದನ್ನು ನೀನು ಕೇಳಿಲ್ಲವೆ?
“ಯಾರು ನಿತ್ಯಸಿದ್ಧನೊ ಆತನಿಗೆ ಇನ್ನು ಸಂಸಾರದ ಭಯವೆಲ್ಲಿ? ಪಗಡೆ ಆಟ; ಮತ್ತೆ ಅದನ್ನು ಆಡಬೇಕಾಗಿ ಬಂದರೆ ನಿಪುಣನಿಗೆ ಕಿಂಚಿತ್ತೂ ಭಯವಿರದು. ನಿತ್ಯಸಿದ್ಧ ಇಚ್ಛೆಪಟ್ಟರೆ ಸಂಸಾರದಲ್ಲೂ ಇರಬಲ್ಲ. ಕೆಲಕೆಲವರು ಎರಡು ಕತ್ತಿ ಹಿಡಿದು ತಿರುಗಿಸಬಲ್ಲರು; ಅವರು ಕತ್ತಿವರಸೆಯಲ್ಲಿ ಅಂಥ ನಿಪುಣರು. ಅವರ ಕಡೆ ಕಲ್ಲು ಎಸೆದರೂ ಅವು ಅವರ ಕತ್ತಿಗೆ ಮಾತ್ರ ತಾಗಿ ಹಿಂತಿರುಗುತ್ತವೆ!”
ಭಕ್ತ: “ಮಹಾಶಯರೆ, ಯಾವ ಮಾನಸಿಕ ಅವಸ್ಥೆಯಲ್ಲಿ ಆತನ ದರ್ಶನ ಪಡೆಯ ಬಹುದು?”
ಶ್ರೀರಾಮಕೃಷ್ಣರು: “ಮನಸ್ಸನ್ನೆಲ್ಲ ಏಕೀಕರಿಸಿ ಆತನ ಕಡೆಗೆ ತಿರುಗಿಸದಿದ್ದರೆ ಆತನ ದರ್ಶನ ಪಡೆಯಲಾಗುವುದೆ? ಭಾಗವತದಲ್ಲಿ ಶುಕದೇವನ ಸಂಬಂಧವಾಗಿ ಹೇಳಿದೆ- ಭರ್ಜಿ (ಆಚ್ಢ್ಟ್ಞಛಿಠಿ) ಹಿಡಿದ ಸಿಪಾಯಿಯ ಹಾಗೆ; ದಾರಿಯಲ್ಲಿ ಹೋಗುತ್ತಿದ್ದಾನೆ, ಬೇರೆ ಯಾವ ಕಡೆಗೂ ದೃಷ್ಟಿಯಿಲ್ಲ. ಒಂದೇ ದೃಷ್ಟಿ ಕೇವಲ ಭಗವಂತನ ಕಡೆಗೇ ದೃಷ್ಟಿ. ಯೋಗ ಎಂಬುದು ಇದೇನೇ.
“ಚಾತಕಪಕ್ಷಿ ಕೇವಲ ಮಳೆ ನೀರನ್ನು ಮಾತ್ರವೇ ಕುಡಿಯುತ್ತದೆ. ಗಂಗೆ, ಯಮುನೆ, ಗೋದಾವರಿ ಮತ್ತು ಉಳಿದ ನದಿಗಳಲ್ಲೆಲ್ಲಾ ನೀರು ತುಂಬಿದೆ. ಸಪ್ತಸಮುದ್ರಗಳೂ ತುಂಬಿ ತುಳುಕಾಡುತ್ತಿವೆ. ಆದರೂ ಅದು ಆ ನೀರನ್ನೆಲ್ಲ ಮುಟ್ಟದು. ಮಳೆ ಬೀಳಬೇಕು. ಅದು ಆ ನೀರನ್ನು ಕುಡಿಯಬೇಕು.
“ಯಾರಿಗೆ ಈ ವಿಧದ ಯೋಗ ಉಂಟಾಗಿದೆಯೊ, ಅವರಿಗೆ ಭಗವಂತನ ದರ್ಶನ ದೊರೆಯುವ ಸಂಭವ. ಥಿಯೇಟರಿಗೆ ಹೋದರೆ ಪರದೆಯನ್ನು ಎಲ್ಲಿಯವರೆಗೆ ಎಳೆಯುವು ದಿಲ್ಲವೊ ಅಲ್ಲಿಯವರೆಗೆ ಜನ ಕುಳಿತಲ್ಲಿಯೇ ಕುಳಿತು ಹಲವಾರು ವಿಧದ ಹರಟೆ ಹೊಡೆಯುತ್ತಾರೆ-ಗೃಹಕೃತ್ಯದ ವಿಷಯವಾಗಿ, ಆಫೀಸಿನ ವಿಷಯವಾಗಿ, ಸ್ಕೂಲಿನ ವಿಷಯ ವಾಗಿ, ಇವೇ ಮೊದಲಾದವುಗಳ ವಿಷಯವಾಗಿ ಹರಟೆ ಹೊಡೆಯುತ್ತಾರೆ, ಪರದೆಯನ್ನು ಮೇಲಕ್ಕೆ ಎಳೆದರು ಅಂದರೆ, ಒಡನೆಯೆ ಎಲ್ಲಾ ಮಾತುಕತೆಗಳು ನಿಂತುಹೋಗಿಬಿಡುತ್ತವೆ. ಪ್ರೇಕ್ಷಕರು ನೆಟ್ಟದೃಷ್ಟಿಯಿಂದ ನಾಟಕ ನೋಡುತ್ತ ಕುಳಿತಿರುತ್ತಾರೆ. ಎಷ್ಟೋ ಹೊತ್ತಿನ ಮೇಲೆ ಯಾರಾದರು ಒಂದೆರಡು ಮಾತಾಡಿದರೆ ಅದು ನಾಟಕದ ಸಂಬಂಧವಾಗಿ ಮಾತ್ರವೇ ಆಗಿರುತ್ತದೆ.
“ಕುಡುಕ ಮದ್ಯ ಕುಡಿದನಂತರ ಕೇವಲ ಆನಂದದ ಮಾತುಗಳನ್ನೇ ಆಡುತ್ತಾನೆ.”
ನಿತ್ಯಗೋಪಾಲ ಪರಮಹಂಸರೆದುರು ಕುಳಿತಿದ್ದಾನೆ. ಆತ ಯಾವಾಗ ನೋಡಿದರೂ ಭಾವಸ್ಥನಾಗಿಯೆ ಇರುತ್ತಾನೆ; ಈಗ ಸುಮ್ಮನೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು ನಗುತ್ತ: “ಗೋಪಾಲ! ಏಕೆ ಹೀಗೆ? ಯಾವಾಗ ನೋಡಿದರೂ ನೀನು ಮೌನವಾಗಿಯೆ ಇರುತ್ತೀಯಲ್ಲ?”
ನಿತ್ಯಗೋಪಾಲ ಬಾಲಕನ ಹಾಗೆ ಹೇಳಿದ: “ನನಗೆ-ಗೊತ್ತೂ-ಇಲ್ಲ.”
ಶ್ರೀರಾಮಕೃಷ್ಣರು: “ನೀನು ಏಕೆ ಮಾತನಾಡುವುದಿಲ್ಲ ಎಂಬುದನ್ನು ಅರಿತುಬಿಟ್ಟೆ; ಬಹುಶಃ ಅಪರಾಧ ಆಗಬಹುದು ಎಂದು. ಸರಿ, ಸರಿ, ಜಯವಿಜಯರು ಶ್ರೀಮನ್ನಾರಾ ಯಣನ ವೈಕುಂಠದ ದ್ವಾರಪಾಲಕರಾಗಿದ್ದರು. ಸನಕ ಸನಾತನಾದಿ ಋಷಿಗಳನ್ನು ಒಳಕ್ಕೆ ಹೋಗಲು ಅವರು ಬಿಟ್ಟುಕೊಡಲಿಲ್ಲ. ಆ ಅಪರಾಧಕ್ಕಾಗಿ ಅವರು ಈ ಸಂಸಾರದಲ್ಲಿ ಮೂರು ಸಾರಿ ಜನ್ಮವೆತ್ತಬೇಕಾಯಿತು.
“ಗೋಲೋಕದಲ್ಲಿ ಶ್ರೀದಾಮ ಎಂಬುವನು ವಿರಜೆಯ ಮನೆಯ ದ್ವಾರಪಾಲಕ ನಾಗಿದ್ದ. ಶ್ರೀಮತಿ (ರಾಧೆ) ಶ್ರೀಕೃಷ್ಣನನ್ನು ವಿರಜೆಯ ಮನೆಯಲ್ಲಿ ಅನಿರೀಕ್ಷಿತವಾಗಿ ಹಿಡಿಯ ಬೇಕೆಂದು ಆಶಿಸಿ ಆಕೆಯ ಮನೆಯ ಬಾಗಿಲ ಬಳಿ ಹೋಗಿ ಒಳಕ್ಕೆ ಪ್ರವೇಶಿಸಲು ಶ್ರೀದಾಮನ ಅನುಮತಿ ಕೇಳಿದಳು. ಆತ ಕೊಡಲಿಲ್ಲ.
ಅದಕ್ಕಾಗಿ ಶ್ರೀಮತಿ ಶಾಪ ಕೊಟ್ಟಳು, ‘ನೀನು ಮರ್ತ್ಯಲೋಕದಲ್ಲಿ ಅಸುರನಾಗಿ ಹುಟ್ಟು’ ಅಂತ. ಶ್ರೀದಾಮನೂ ಆಕೆಗೆ ಶಾಪ ಕೊಟ್ಟ.
“ಆದರೆ ಒಂದು ವಿಷಯ-ಮಗು ತಂದೆಯ ಕೈ ಹಿಡಿದುಕೊಂಡಿದ್ದರೆ ಹಳ್ಳಕ್ಕೆ ಬೀಳುವ ಸಂಭವ; ಆದರೆ ತಂದೆಯೇ ಮಗುವಿನ ಕೈ ಹಿಡಿದುಕೊಂಡಿದ್ದರೆ ಅದಕ್ಕೆ ಮತ್ತೇತರ ಭಯ?”
ಶ್ರೀದಾಮನ ವಿಷಯ ಬ್ರಹ್ಮವೈವರ್ತಪುರಾಣದಲ್ಲಿದೆ.
ಕೇದಾರ ಚಟ್ಟೋಪಾಧ್ಯಾಯ ಈಗ ಢಾಕಾದಲ್ಲಿ ಇದ್ದಾನೆ. ಅಲ್ಲಿ ಆತನಿಗೆ ಸರ್ಕಾರಿ ಉದ್ಯೋಗ. ಹಿಂದೆ ಕಲ್ಕತ್ತದಲ್ಲಿ ಕೆಲಸ ಮಾಡುತ್ತಿದ್ದ. ಆತ ಪರಮಹಂಸರ ಪರಮಭಕ್ತ. ಢಾಕಾದಲ್ಲಿ ಅನೇಕರು ಆತನ ಭಕ್ತರಾಗಿದ್ದಾರೆ. ಅವರು ಸರ್ವದಾ ಆತನ ಹತ್ತಿರಕ್ಕೆ ಬಂದು ಉಪದೇಶ ಪಡೆದು ಹೋಗುತ್ತಿದ್ದಾರೆ. ಬರಿಯ ಕೈಯಲ್ಲಿ ಭಕ್ತರನ್ನು ನೋಡಲು ಹೋಗಬಾರದು. ಆದ್ದರಿಂದ ಅವರು ತಿಂಡಿತೀರ್ಥಗಳನ್ನು ತಂದು ಆತನಿಗೆ ಅರ್ಪಿಸುತ್ತಾರೆ.
ಕೇದಾರ ವಿನಯದಿಂದ ಶ್ರೀರಾಮಕೃಷ್ಣರಿಗೆ: “ಅವರು ತರುವುದನ್ನು ತಿನ್ನಲೆ?”
ಶ್ರೀರಾಮಕೃಷ್ಣರು: “ಭಗವಂತನ ಪ್ರೀತ್ಯರ್ಥವಾಗಿ ನಿನಗೆ ತಂದುಕೊಡುವುದಾದರೆ ದೋಷವೇನಿಲ್ಲ. ಸ್ವಾರ್ಥ ದೃಷ್ಟಿಯಿಂದ ಕೊಟ್ಟರೆ ಒಳ್ಳೆಯದಲ್ಲ.”
ಕೇದಾರ: “ನಾನು ನಿಜಸ್ಥಿತಿ ತಿಳಿಸಿ ನಿಶ್ಚಿಂತನಾಗಿಬಿಟ್ಟಿದ್ದೇನೆ. ನಾನು ಅವರಿಗೆ ‘ಯಾರು 1 ನನ್ನ ಮೇಲೆ ಕೃಪೆಮಾಡಿದ್ದಾರೊ ಅವರಿಗೆ ಎಲ್ಲಾ ಗೊತ್ತಿದೆ’ ಅಂತ ಹೇಳಿದ್ದೇನೆ.”
ಶ್ರೀರಾಮಕೃಷ್ಣರು ನಗುತ್ತ: “ಅದೇನೊ ನಿಜ, ಇಲ್ಲಿಗೆ ಎಲ್ಲಾ ವಿಧದ ಜನರು ಬರುತ್ತಿದ್ದಾರೆ. ಅದಕ್ಕಾಗಿಯೇ ಜನರು ವಿವಿಧ ಭಾವಗಳನ್ನು ಇಲ್ಲಿ ನೋಡುತ್ತಿದ್ದಾರೆ.”
ಕೇದಾರ: “ನನಗೆ ಅನೇಕ ವಿಷಯಗಳನ್ನು ತಿಳಿದುಕೊಳ್ಳುವುದರ ಆವಶ್ಯಕತೆ ಏನಿಲ್ಲ.”
ಶ್ರೀರಾಮಕೃಷ್ಣರು ನಗುತ್ತ: “ಏಕಿಲ್ಲ? ಪ್ರತಿಯೊಂದು ವಿಷಯ ಸ್ವಲ್ಪ ತಿಳಿದು ಕೊಳ್ಳುವುದರ ಆವಶ್ಯಕತೆ ಇದೆ. ಯಾರಾದರೂ ಚಿಲ್ಲರೆ ಅಂಗಡಿ ಇಟ್ಟರೆ ಎಲ್ಲಾ ವಿಧದ ಸಾಮಾನುಗಳನ್ನೂ ಇಡಬೇಕಾಗುತ್ತದೆ. ಸ್ವಲ್ಪ ಮಸೂರು ಬೇಳೆಯನ್ನೂ ಇಡಬೇಕಾಗುತ್ತದೆ, ಒಂದಿಷ್ಟು ಹುಣಸೆ ಹಣ್ಣನ್ನೂ ಇಡಬೇಕಾಗುತ್ತದೆ. ಇವನ್ನೆಲ್ಲ ಇಡಬೇಕಾಗುತ್ತದೆ. ನಿಪುಣ ವಾದ್ಯಗಾರನಿಗೆ ಎಲ್ಲಾ ವಾದ್ಯಗಳನ್ನು ಸ್ವಲ್ಪಸ್ವಲ್ಪವಾಗಿ ಬಾಜಿಸಲು ಬರುತ್ತದೆ.”
ಪರಮಹಂಸರು ದೇವದಾರು ವೃಕ್ಷಗಳ ಕಡೆ ಹೋದರು. ಒಬ್ಬ ಭಕ್ತ ಕಾಲುತಂಬಿಗೆ ತೆಗೆದುಕೊಂಡು ಹೋಗಿ ಅಲ್ಲಿ ಇಟ್ಟು ಬಂದ.
ಭಕ್ತರು ಇಚ್ಛೆ ಬಂದ ಕಡೆ ಉದ್ಯಾನವನದಲ್ಲಿ ತಿರುಗಾಡಲಾರಂಭಿಸಿದರು-ಕೆಲವರು ಪರಮಹಂಸರ ಕೊಠಡಿಯ ಕಡೆಗೆ ಹೋಗುತ್ತಿದ್ದಾರೆ, ಕೆಲಕೆಲವರು ಪಂಚವಟಿಗೆ ಹಿಂದಿರುಗಿ ಬರುತ್ತಿದ್ದಾರೆ. ಪರಮಹಂಸರು ಪಂಚವಟಿಯ ಹತ್ತಿರಕ್ಕೆ ಬಂದು ಹೇಳಿದರು, “ನನಗೆ ಸ್ವಲ್ಪ ಅಗ್ನಿಮಾಂದ್ಯವಾಗಿದೆ, ಕಾರಣ ಮಲ್ಲಿಕನ ಮನೆ ಊಟ; ಘೋರ ವಿಷಯಾಸಕ್ತರು, ಉಷ್ಣವಾಗಿಬಿಟ್ಟಿದೆ”.
ಶ್ರೀರಾಮಕೃಷ್ಣರ ಒಂದೆರಡು ವಸ್ತುಗಳು ಪಂಚವಟಿಯ ಸಿಮೆಂಟು ಕಟ್ಟೆಯಮೇಲೆ ಬಿದ್ದಿದ್ದುವು. ಅದನ್ನು ತೆಗೆದುಕೊಂಡು ಬರುವಂತೆ ಮಾಸ್ಟರಿಗೆ ಹೇಳಿ ಪರಮಹಂಸರು ತಮ್ಮ ಕೊಠಡಿಯ ಕಡೆ ಮುಂದುವರಿಯುತ್ತಿದ್ದಾರೆ. ಭಕ್ತರು ಅವರನ್ನು ಹಿಂಬಾಲಿಸುತ್ತಿದ್ದಾರೆ.
ಪರಮಹಂಸರು ಮಧ್ಯಾಹ್ನವಾದ ನಂತರ ಸ್ವಲ್ಪ ವಿಶ್ರಮಿಸಿಕೊಂಡರು. ಬಳಿಕ ಕೆಲವು ಮಂದಿ ಬಂದು ಪರಮಹಂಸರ ಕೊಠಡಿಯಲ್ಲಿ ಕುಳಿತುಕೊಂಡರು. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ದಿಂಬು ಒರಗಿಕೊಂಡು ಕುಳಿತಿದ್ದಾರೆ.
ಒಬ್ಬ ಭಕ್ತ: “ಮಹಾಶಯರೆ, ಜ್ಞಾನದಿಂದ ಭಗವಂತನ ಸ್ವರೂಪವನ್ನು ಅರಿಯ ಲಾಗುವುದೇ?”
ಪರಮಹಂಸರು: “ಈ ಜ್ಞಾನದಿಂದ ಸಾಧ್ಯವಿಲ್ಲ. ಏನೂ ಮಾಡದೆ ಅಷ್ಟು ಸುಲಭವಾಗಿ ಆತನನ್ನು ಅರಿಯಲಾಗುತ್ತದೆಯೇ? ಸಾಧನೆ ಮಾಡಬೇಕು. ಯಾವುದಾದರೂ ಒಂದು ಭಾವವನ್ನು ಆರೋಪಿಸಿಕೊಳ್ಳಬೇಕು; ಉದಾಹರಣೆಗೆ ದಾಸ್ಯಭಾವ. ಋಷಿಗಳದು ಶಾಂತ ಸ್ವಭಾವ. ಜ್ಞಾನಿಗಳ ಭಾವ ಎಂಥದು ಗೊತ್ತೆ? ಸ್ವಸ್ವರೂಪವನ್ನು ಚಿಂತನೆ ಮಾಡುವುದು. (ಒಬ್ಬ ಭಕ್ತನಿಗೆ, ನಗುತ್ತ) ನಿನ್ನದು ಎಂಥದು?”
ಶ್ರೀರಾಮಕೃಷ್ಣರು ನಗುತ್ತ: “ನಿನಗೆ ಎರಡು ಭಾವಗಳಿವೆ-ಸ್ವಸ್ವರೂಪದ ಮೇಲೆ ಚಿಂತನೆ ಮಾಡುವುದೂ ಇದೆ, ಜೊತೆಗೆ ಸೇವ್ಯಸೇವಕ ಭಾವವೂ ಇದೆ. ಏನು ನಾನು ಹೇಳುವುದು ಸರಿಯಿಲ್ಲವೆ?”
ಭಕ್ತ ನಗುತ್ತ ಕಕ್ಕಾಬಿಕ್ಕಿಯಾಗಿ: “ಹೌದು, ಸರಿ.”
ಶ್ರೀರಾಮಕೃಷ್ಣರು ನಗುತ್ತ: “ಅದಕ್ಕಾಗಿಯೆ ಹಾಜರಾ, ‘ನೀವು ಪರರ ಮನಸ್ಸಿನಲ್ಲಿ ನಡೆಯುವುದನ್ನೆಲ್ಲ ಅರಿತುಕೊಂಡುಬಿಡಬಲ್ಲಿರಿ’ ಹೇಳುತ್ತಿರೋದು.
“ಅಧ್ಯಾತ್ಮ ಜೀವನದಲ್ಲಿ ಬಹಳವಾಗಿ ಮುಂದುವರಿದನಂತರ ಆ ರೀತಿಯ ದ್ವಯಭಾವ ಬರುತ್ತದೆ. ಅದು ಪ್ರಹ್ಲಾದನಿಗೆ ಉಂಟಾಗಿತ್ತು. ಆದರೆ ಆ ಭಾವವನ್ನು ಸಾಧಿಸಬೇಕಾದರೆ ಬಹಳ ಪ್ರಯಾಸಪಡಬೇಕು.
“ಒಬ್ಬ ದ್ವೀಪದ್ರಾಕ್ಷಿಯ ಮುಳ್ಳನ್ನು ಹಿಡಿದುಕೊಂಡಿದ್ದಾನೆ ಅಂತ ಭಾವಿಸಿಕೊಳ್ಳಿ-ಕೈಯಿಂದ ರಕ್ತ ಧಾರಾಕಾರವಾಗಿ ಸುರಿಯುತ್ತಿದೆ; ಆದರೂ ಹೇಳುತ್ತಾನೆ : ‘ನನಗೇನೂ ಆಗಿಲ್ಲ, ನನಗೇನೂ ನೋವಾಗುತ್ತಿಲ್ಲ.’ ಆತನ ಗಾಯದ ಸಂಬಂಧವಾಗಿ ಕೇಳಿದರೆ ಹೇಳುತ್ತಾನೆ, ‘ಏನೂ ಆಗಿಲ್ಲ, ಏನೂ ಆಗಿಲ್ಲ.’ ಈ ಮಾತನ್ನು ಕೇವಲ ಬಾಯಿಂದ ಮಾತ್ರ ಹೇಳಿದರೆ ಏನು ಪ್ರಯೋಜನ? ಆ ಆದರ್ಶವನ್ನು ಸಾಧಿಸಬೇಕಾದರೆ ಸಾಧನೆ ಮಾಡಬೇಕು.”
ಭಕ್ತರೆಲ್ಲರು ಪರಮಹಂಸರ ವೇದವಚನವನ್ನು ಕಿವಿಗೊಟ್ಟು ಕೇಳುತ್ತಿದ್ದಾರೆ.
1. ಶ್ರೀರಾಮಕೃಷ್ಣರು