೬ನೆ ಡಿಸೆಂಬರ್ ೧೮೮೪, ಮಾರ್ಗಶಿರ ಕೃಷ್ಣ ಚತುರ್ಥಿ, ಶನಿವಾರ
ಅಧರಸೇನ ಒಬ್ಬ ದೊಡ್ಡ ಭಗವದ್ಭಕ್ತ. ಆತನಿಗೆ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಕೆಲಸ. ಆತನ ವಯಸ್ಸು ಸುಮಾರು ೨೯ ರಿಂದ ೩೦ರ ಒಳಗೆ. ಪರಮಹಂಸರು ಆತನನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಆತನದು ಎಂಥ ಭಕ್ತಿ! ಇಡೀ ದಿವಸವೆಲ್ಲ ಆಫೀಸಿನಲ್ಲಿ ಕೆಲಸ ಮಾಡಿ ಬಂದ ನಂತರ ಕೈಕಾಲಿಗೆ ಒಂದಿಷ್ಟು ನೀರು ಹಾಕಿ ಬಹುಮಟ್ಟಿಗೆ ತಪ್ಪದೆ ಪ್ರತಿ ಸಾಯಂಕಾಲವೂ ಪರಮಹಂಸರನ್ನು ನೋಡಲು ದಕ್ಷಿಣೇಶ್ವರಕ್ಕೆ ಹೋಗುತ್ತಿದ್ದ. ಆತನ ಮನೆ ಇರೋದು ಶೋಭಾಬಜಾರಿನಲ್ಲಿ. ಪ್ರತಿ ದಿವಸವೂ ತನ್ನ ಮನೆಯಿಂದ ದಕ್ಷಿಣೇಶ್ವ ರಕ್ಕೆ ಗಾಡಿಮಾಡಿಕೊಂಡು ಬರುತ್ತಿದ್ದ. ಪರಮಹಂಸರ ದರ್ಶನ ಪಡೆಯೋದು, ಇದೊಂದೇ ಆತನ ಏಕಮಾತ್ರ ಮಹದಾನಂದವಾಗಿತ್ತು. ಅವರ ಶ್ರೀಮುಖದಿಂದ ಬರುತ್ತಿದ್ದ ಮಾತುಕತೆ ಗಳನ್ನು ಕೇಳುವುದಕ್ಕೆ ಬಹುಮಟ್ಟಿಗೆ ಆತನಿಗೆ ಆಗುತ್ತಲೇ ಇರಲ್ಲಿಲ್ಲ. ದಕ್ಷಿಣೇಶ್ವರವನ್ನು ತಲುಪುವುದೇ ತಡ ಒಡನೆಯೇ ಬಂದು ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದ. ಪರಮಹಂಸರು ಆತನ ಕ್ಷೇಮಸಮಾಚಾರವನ್ನು ವಿಚಾರಿಸಿದ ನಂತರ ಕಾಳೀದೇವಾಲಯಕ್ಕೆ ಭಗವತಿಯ ದರ್ಶನಕ್ಕಾಗಿ ಹೋಗುತ್ತಿದ್ದ. ಅಲ್ಲಿಂದ ಹಿಂದಿರುಗಿ ಬಂದು ಪರಮಹಂಸರ ಕೊಠಡಿಯಲ್ಲಿ ನೆಲದ ಮೇಲೆ ಹಾಸಿದ್ದ ಮಂದಲಿಗೆಯ ಮೇಲೆ ಮಲಗಿ ವಿಶ್ರಮಿಸಿಕೊಳ್ಳುತ್ತಿದ್ದ. ಪರಮಹಂಸರೇ ಆತನಿಗೆ ಹಾಗೆ ವಿಶ್ರಮಿಸಿಕೊಳ್ಳಲು ಹೇಳುತ್ತಿದ್ದರು. ಇಡೀ ದಿನದ ಪರಿಶ್ರಮದಿಂದ ಅಧರಸೇನನ ಶರೀರ ಅಷ್ಟು ಆಯಾಸ ಗೊಂಡಿರುತ್ತಿತ್ತು, ಭೂಮಿಗೆ ತಲೆ ಕೊಡುವುದೆ ತಡ, ಆತನಿಗೆ ನಿದ್ರೆ ಬರುತ್ತಿತ್ತು. ರಾತ್ರಿ ಒಂಬತ್ತು ಹತ್ತರೊಳಗೆ ಆತನನ್ನು ಎಬ್ಬಿಸುತ್ತಿದ್ದರು. ಆತ ಎದ್ದು ಪರಮಹಂಸರಿಗೆ ಪ್ರಣಾಮಮಾಡಿ ತಾನು ತಂದಿದ್ದ ಗಾಡಿಯಲ್ಲೇ ಹಿಂದಿರುಗಿಬಿಡುತ್ತಿದ್ದ. ಅಧರಸೇನ ಆಗಾಗ ಪರಮಹಂಸರನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದ. ಅವರು ಆತನ ಮನೆಗೆ ಹೋದಾಗಲೆಲ್ಲಾ ಅಲ್ಲೊಂದು ದೊಡ್ಡ ಉತ್ಸವವೇ ನಡೆದುಹೋಗುತ್ತಿತ್ತು. ಅನೇಕ ಭಕ್ತರು ಅಲ್ಲಿಗೆ ಬಂದು ಸೇರುತ್ತಿದ್ದರು. ವಿವಿಧ ಭಕ್ಷ್ಯ ಭೋಜ್ಯಗಳನ್ನು ತಯಾರಿಸಿ ಅವರೆಲ್ಲರಿಗೂ ತೃಪ್ತಿಯಾಗುವಂತೆ ಬಡಿಸುತ್ತಿದ್ದ.
ಒಂದು ದಿನ ಪರಮಹಂಸರು ಆತನ ಮನೆಗೆ ಹೋಗಿದ್ದಾರೆ. ಆಗ ಅಧರಸೇನ ಹೇಳಿದ : “ನೀವು ಬಹಳ ದಿವಸಗಳಿಂದ ಇಲ್ಲಿಗೆ ಬರಲಿಲ್ಲ. ಮನೆ ಮಲಿನವಾಗಿಬಿಟ್ಟಿತ್ತು. ಏನೋ ಒಂದು ವಿಧವಾದ ದುರ್ಗಂಧ ಬರುತ್ತಿತ್ತು. ಇಂದು ನೋಡಿ, ಮನೆ ಹೇಗೆ ‘ಕಿಲ ಕಿಲ’ ಅಂತ ನಗುತ್ತಿದೆ; ಎಂಥ ಸುಗಂಧ ಬರುತ್ತಿದೆ! ಇಂದು ನಾನು ಭಗವಂತನಿಗೆ ಬಹುವಾಗಿ ಪ್ರಾರ್ಥನೆ ಮಾಡಿದೆ. ನಿಜಸ್ಥಿತಿ ಹೇಳುತ್ತೇನೆ, ಆಗ ಕಣ್ಣಿಂದ ನೀರು ಬಂದು ಬಿಟ್ಟಿತ್ತು” ಅದಕ್ಕೆ ಪರಮಹಂಸರು ಹೇಳಿದರು, “ಆಶ್ಚರ್ಯ!” ಬಳಿಕ ಅಧರಸೇನನನ್ನು ದೃಷ್ಟಿಸಿ ನೋಡುತ್ತ ನಗಲಾರಂಭಿಸಿದರು.
ಇಂದು ಪರಮಹಂಸರು ತಮ್ಮ ಭಕ್ತರೊಡನೆ ಅಧರಸೇನನ ಮನೆಗೆ ಬಂದಿದ್ದಾರೆ. ಎಲ್ಲರೂ ಆನಂದದಿಂದ ತುಂಬಿ ತುಳುಕಾಡುತ್ತಿದ್ದಾರೆ. ಅಧರಸೇನ ಇಂದು ಒಂದು ದೊಡ್ಡ ಔತಣ ಏರ್ಪಡಿಸಿದ್ದಾನೆ. ಪರಮಹಂಸರ ದರ್ಶನ ಪಡೆಯಲು ಅನೇಕ ಹೊಸಬರು ಬಂದಿದ್ದಾರೆ. ಅಧರಸೇನನ ಇಚ್ಛೆಗನುಸಾರ ಆತನ ಸಹೋದ್ಯೋಗಿ ಡೆಪ್ಯುಟಿ ಮ್ಯಾಜಿಸ್ಟ್ರೇಟರುಗಳಲ್ಲಿ ಕೆಲವರು ಬಂದಿದ್ದಾರೆ. ಅವರ ಇಚ್ಛೆ ತಾವೇ ಪರಮಹಂಸರನ್ನು ನೋಡಿ ಅವರು ಎಂಥವರು ಎಂಬುದುನ್ನು ಅರಿತುಕೊಳ್ಳಬೇಕೆಂಬುದಾಗಿ ಇತ್ತು.
ಶ್ರೀರಾಮಕೃಷ್ಣರು ಹಸನ್ಮುಖರಾಗಿ ಭಕ್ತರೊಡನೆ ಮಾತುಕತೆಗಳನ್ನಾಡುತ್ತಿದ್ದಾರೆ.ಅಧರಸೇನ ಕೆಲವು ಸ್ನೇಹಿತರೊಡನೆ ಪರಮಹಂಸರ ಹತ್ತಿರ ಹೋಗಿ ಕುಳಿತುಕೊಂಡ. ಆತ ಪರಮಹಂಸರಿಗೆ ಬಂಕಿಮಚಂದ್ರ ಚಟ್ಟೋಪಾಧ್ಯಾಯನನ್ನು ತೋರಿಸಿ ಹೇಳಿದ, “ಈತ ಒಬ್ಬ ದೊಡ್ಡ ಪಂಡಿತ. ಅನೇಕ ಪುಸ್ತಕಗಳನ್ನು ಬರೆದಿದ್ದಾನೆ. ತಮ್ಮ ದರ್ಶನ ಪಡೆಯಲು ಬಂದಿದ್ದಾನೆ. ಈತನ ಹೆಸರು ‘ಬಂಕಿಮಬಾಬು’ ಅಂತ.”
ಶ್ರೀರಾಮಕೃಷ್ಣರು ನಗುತ್ತ : “ಏನು ಬಂಕಿಮ 1 ಅಂತಲೆ ! ಒಳ್ಳೆಯದು, ನೀನು ಯಾವುದರ ದೆಸೆಯಿಂದ ಬಗ್ಗಿ ಹೋಗಿಬಿಟ್ಟೆ !”
ಬಂಕಿಮ ನಗುತ್ತ ನಗುತ್ತ : “ಏನು ಹೇಳಲಿ ಹಣೆಬರಹವನ್ನು ! ಬೂಟ್ಸಿನ ಏಟಿನಿಂದ, (ಎಲ್ಲರೂ ನಗುತ್ತಾರೆ). ಸಾಹೇಬರ ಬೂಟ್ಸಿನ ಏಟಿನಿಂದ ಬಗ್ಗಿಹೋಗಿದ್ದೇನೆ.” ಶ್ರೀರಾಮಕೃಷ್ಣರು : “ಹಾಗಲ್ಲವಪ್ಪ ! ಶ್ರೀಕೃಷ್ಣ ಪ್ರೇಮದ ದೆಸೆಯಿಂದ ಬಾಗಿಬಿಟ್ಟಿದ್ದಾನೆ. ಶ್ರೀಮತಿ (ರಾಧೆ)ಯ ಪ್ರೇಮದ ದೆಸೆಯಿಂದ ಆತ ತ್ರಿಭಂಗಿಯಾಗಿಬಿಟ್ಟಿದ್ದಾನೆ ಅಂತ ಕೆಲವರು ವ್ಯಾಖ್ಯಾನ ಮಾಡುತ್ತಾರೆ. ಆತನದು ಶ್ಯಾಮವರ್ಣ; ಕಾರಣಗೊತ್ತೆ ? ಸಮುದ್ರದ ನೀರು ದೂರದಿಂದ ಶ್ಯಾಮವರ್ಣದಂತೆ ಕಾಣುತ್ತದೆ; ಆದರೆ ಹತ್ತಿರಹೋಗಿ ಕೈಯಲ್ಲಿ ತೆಗೆದು ನೋಡಿದರೆ, ಅದು ಶ್ಯಾಮವರ್ಣದಂತೆ ಕಾಣೋದಿಲ್ಲ.ಬಹಳ ಸ್ವಚ್ಛ ಸಲಿಲವಾಗಿ ಕಾಣುತ್ತದೆ. ಅದೇ ರೀತಿ ನಾವು ಭಗವಂತನಿಂದ ಬಹುದೂರ ದಲ್ಲಿ ಇರುವಾಗ ಆತ ಶ್ಯಾಮವರ್ಣದವನಾಗಿ ಕಾಣುತ್ತಾನೆ. ಆತ ಕುಳ್ಳು––ಆತನ ಎತ್ತರ ಅವನ ಪುಟ್ಟ ಕೈಗಳ ಅಳತೆಯಲ್ಲಿ ಮೂರೂವರೆ ಮೊಳ ಮಾತ್ರ––ಕಾರಣ ಗೊತ್ತೆ ? ಸೂರ್ಯ ಬಹಳ ದೂರದಲ್ಲಿರುವುದರಿಂದ ಬಹಳ ಚಿಕ್ಕದಾಗಿ ಕಾಣುತ್ತಾನೆ. ಆದರೆ ಹತ್ತಿರ ಹೋಗಿ ನೋಡಿದರೆ ಆತ ಚಿಕ್ಕದಾಗಿ ಕಾಣುವ ಹಾಗೇ ಇಲ್ಲ. ಭಗವಂತನ ಸ್ವರೂಪವನ್ನು ಸರಿಯಾಗಿ ಅರಿತುಕೊಂಡಾಗ ಆತ ಶ್ಯಾಮವರ್ಣದವನಾಗಿಯೂ ಕಾಣುವುದಿಲ್ಲ. ಕುಳ್ಳಾ ಗಿಯೂ ತೋರುವುದಿಲ್ಲ. ಅದು ಬಹುದೂರದ ಮಾತು; ಸಮಾಧಿಸ್ಥನಾಗದ ಹೊರತು ಆ ಅನುಭವ ದೊರೆಯದು. ಎಲ್ಲಿಯವರೆಗೆ ‘ನಾನು’, ‘ನೀನು’ ಎಂಬ ಭಾವನೆ ಹೃದಯದಲ್ಲಿ ಇರುವುದೊ, ಅಲ್ಲಿಯವರೆಗೆ 2 ಆತ ನಮಗೆ ನಾಮರೂಪಗಳಿಂದ ಕಾಣಿಸಿ ಕೊಳ್ಳುತ್ತಾನೆ.
ಶ್ರೀಕೃಷ್ಣ ಪುರುಷ; ಶ್ರೀಮತಿ ಆತನ ಶಕ್ತಿ––ಆದ್ಯಾಶಕ್ತಿ. ಪುರುಷ ಮತ್ತು ಪ್ರಕೃತಿ.ಯುಗಲಮೂರ್ತಿ ಎಂದರೆ ಅರ್ಥವೇನು ? ಪುರುಷನಿಗೂ ಪ್ರಕೃತಿಗೂ ಅಭೇದ ಅಂತ; ಅವರಿಬ್ಬರಿಗೂ ಯಾವ ಭೇದವೂ ಇಲ್ಲ ಅಂತ. ಪ್ರಕೃತಿರಹಿತನಾಗಿ ಪುರುಷನಿರಲಾರ ಪುರುಷರಹಿತಳಾಗಿ ಪ್ರಕೃತಿಯಿರಲಾರಳು. ಒಂದನ್ನು ಪ್ರಸ್ತಾಪಿಸಿತು ಅಂದರೆ ಅದರೊಡ ನೆಯೇ ಮತ್ತೊಂದು ಇರುವುದನ್ನೂ ಭಾವಿಸಲೇಬೇಕು. ಇದು ಅಗ್ನಿ ಮತ್ತು ಅದರ ದಾಹಕಶಕ್ತಿಯ ಹಾಗೆ, ಅಗ್ನಿಯನ್ನು ಬಿಟ್ಟು ದಾಹಕಶಕ್ತಿಯನ್ನು ಭಾವಿಸುವುದಕ್ಕೆ ಆಗುವುದಿಲ್ಲ. ಅದಕ್ಕಾಗಿಯೇ ಯುಗಲಮೂರ್ತಿಯಲ್ಲಿ ಶ್ರೀಕೃಷ್ಣನ ದೃಷ್ಟಿ ರಾಧೆಯ ಕಡೆಗೆ ಇರುವುದು, ರಾಧೆಯ ದೃಷ್ಟಿ ಶ್ರೀಕೃಷ್ಣನ ಕಡೆಗೆ ಇರುವುದು. ಶ್ರೀಮತಿಯದು ವಿದ್ಯುತ್ತಿನೋಪಾದಿಯ ಗೌರವರ್ಣ; ಅದಕ್ಕಾಗಿಯೇ ಶ್ರೀಕೃಷ್ಣ ಪೀತಾಂಬರ ಉಡುವುದು. ಶ್ರೀಕೃಷ್ಣನ ವರ್ಣ ನೀಲಮೇಘದ ವರ್ಣ; ಅದಕ್ಕಾಗೇ ಶ್ರೀಮತಿ ನೀಲಾಂಬರ ಉಡುವುದು. ನೀಲರತ್ನಗಳಿಂದ ಅಂಗಾಂಗಗಳನ್ನು ಸಿಂಗರಿಸಿಕೊಳ್ಳುವುದು. ಶ್ರೀಮತಿ ಕಾಲಿಗೆ ಗೆಜ್ಜೆ ಕಟ್ಟುತ್ತಾಳೆ; ಅದಕ್ಕಾಗೇ ಶ್ರೀಕೃಷ್ಣನೂ ಕಾಲಿಗೆ ಗೆಜ್ಜೆ ಕಟ್ಟುತ್ತಾನೆ. ಅಂದರೆ ಪ್ರಕೃತಿಪುರುಷರಲ್ಲಿ ಆಂತರಿಕವಾಗಿ ಬಾಹ್ಯವಾಗಿ ಸಂಪೂರ್ಣ ಸಾಮರಸ್ಯವಿದೆ ಎಂದು.”
ಶ್ರೀರಾಮಕೃಷ್ಣರು ಈ ಮಾತುಗಳನ್ನು ಆಡಿ ಮುಗಿಸಿದ ಒಡನೆಯೇ ಬಂಕಿಮ ಮತ್ತು ಆತನ ಸ್ನೇಹಿತರು ಪರಸ್ಪರ ಇಂಗ್ಲೀಷಿನಲ್ಲಿ ಮೆಲ್ಲಮೆಲ್ಲನೆ ಮಾತನಾಡಿಕೊಳ್ಳಲಾರಂಭಿಸಿದರು.
ಶ್ರೀರಾಮಕೃಷ್ಣರು ನಗುತ್ತ ಬಂಕಿಮನೇ ಮೊದಲಾದವರಿಗೆ: “ಏನು ಸಮಾಚಾರ? ನೀವು ಇಂಗ್ಲೀಷಿನಲ್ಲಿ ಏನು ಮಾತನಾಡಿಕೊಳ್ಳುತ್ತಿದ್ದೀರಿ?” (ಎಲ್ಲರೂ ನಗುತ್ತಾರೆ).
ಅಧರಸೇನ: “ಅಂಥದೇನಿಲ್ಲ, ನೀವು ಹೇಳಿದ ಕೃಷ್ಣರೂಪಿನ ವಿವರಣೆ- ಅದರ ಮೇಲೆ ಸ್ವಲ್ಪ ಮಾತನಾಡಿಕೊಳ್ಳುತ್ತಿದ್ದೇವೆ.”
ಶ್ರೀರಾಮಕೃಷ್ಣರು ನಗುತ್ತ: “ಒಂದು ವಿಷಯ ನನ್ನ ಜ್ಞಾಪಕಕ್ಕೆ ಬಂದು ನಗು ಬರುತ್ತದೆ. ಒಂದು ಕಥೆ ಹೇಳುತ್ತೇನೆ ಕೇಳಿ. ಒಬ್ಬ ಹಜಾಮ ಒಬ್ಬ ದೊಡ್ಡ ಮನುಷ್ಯನಿಗೆ ಕ್ಷೌರ ಮಾಡಲು ಹೋಗಿದ್ದ. ಕ್ಷೌರ ಮಾಡುತ್ತಿರುವಾಗ ಆ ಮನುಷ್ಯನಿಗೆ ಕತ್ತಿ ಒಂದು ಕಡೆ ಸ್ವಲ್ಪ ತಾಗಿತು. ಆತ ‘ಡ್ಯಾಮ್!’ ಎಂಬುದಾಗಿ ಕೂಗಿಕೊಂಡ. ಆದರೆ ಹಜಾಮನಿಗೆ ‘ಡ್ಯಾಮ್’ ಎಂಬುದರ ಅರ್ಥ ಗೊತ್ತಿರಲಿಲ್ಲ. ಆಗ ಆತ ಕ್ಷೌರದ ಕತ್ತಿಯನ್ನು ಬದಿಗಿಟ್ಟು ಚಳಿಗಾಲವಾಗಿದ್ದರೂ ಕೈತೋಳುಗಳನ್ನು ಸರಿಮಾಡಿಕೊಂಡು ಆತನನ್ನು ಕೇಳಿದ, ‘ನೀವು ನನ್ನನ್ನು “ಡ್ಯಾಮ್” ಎಂದು ಕರೆದಿರಿ. ಇದರ ಅರ್ಥ ಏನು ಎಂಬುದನ್ನು ನೀವು ಹೇಳಿಯೇತೀರಬೇಕು.” ಆಗ ಆ ಮನುಷ್ಯ ಹೇಳಿದ: ‘ಓ ನೀನು ಸುಮ್ಮನೆ ಕ್ಷೌರಮಾಡಿ ಮುಗಿಸು. ಅದಕ್ಕೆ ಒಂದು ನಿರ್ದಿಷ್ಟ ಅರ್ಥವೇನಿಲ್ಲ; ಆದರೆ ಸ್ವಲ್ಪ ಎಚ್ಚರಿಕೆಯಿಂದ ಕ್ಷೌರಮಾಡು ಅಷ್ಟೆ.’ ಹಜಾಮ ಅಷ್ಟಕ್ಕೆ ಸುಮ್ಮನಾಗೋ ಮೂರ್ತಿಯಲ್ಲ. ಆತ ಹೇಳಿದ: “ ‘ಡ್ಯಾಮ್” ಎಂಬುದರ ಅರ್ಥ ಒಳ್ಳೇದಾಗಿದ್ದರೆ, ನಾನೂ “ಡ್ಯಾಮ್”, ನಮ್ಮ ತಂದೆಯೂ “ಡ್ಯಾಮ್”, ನಮ್ಮ ಹದಿನಾಲ್ಕು ವಂಶದವರೆಲ್ಲರೂ “ಡ್ಯಾಮ್” (ಎಲ್ಲರೂ ನಗುತ್ತಾರೆ). ಆದರೆ “ಡ್ಯಾಮ್”, ಎಂಬುದರ ಅರ್ಥ ಕೆಟ್ಟದ್ದಾಗಿದ್ದರೆ ನೀವೂ “ಡ್ಯಾಮ್” ನಿಮ್ಮ ತಂದೆಯೂ “ಡ್ಯಾಮ್” ನಿಮ್ಮ ಹದಿನಾಲ್ಕು ವಂಶದ ತಲೆಗಳೆಲ್ಲಾ “ಡ್ಯಾಮ್”, (ಎಲ್ಲರೂ ನಗುತ್ತಾರೆ). ಅವರು ಬರೀ “ಡ್ಯಾಮ್” ಮಾತ್ರವೇ ಅಲ್ಲ, “ಡ್ಯಾಮ್- ಡ್ಯಾಮ್-ಡ್ಯಾಮ್-ಡ್ಯಾಮ್”’ ಅಂತ. (ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ).
ನಗುವುದು ನಿಂತನಂತರ ಬಂಕಿಮ ಮಾತಾಡಲು ಪ್ರಾರಂಭಿಸಿದ.
ಬಂಕಿಮ: “ನೀವು ಪ್ರಚಾರಕಾರ್ಯ ಮಾಡೋದಿಲ್ಲವಲ್ಲ ಏಕೆ?”
ಶ್ರೀರಾಮಕೃಷ್ಣರು ನಗುತ್ತ ನಗುತ್ತ: “ಪ್ರಚಾರ! ಅವೆಲ್ಲ ಅಭಿಮಾನಜನ್ಯ. ಮನುಷ್ಯನೆ! ಆತ ಒಂದು ಕ್ಷುದ್ರ ಜೀವಿ. ಪ್ರಚಾರಮಾಡೋದು ಆತನೇ – ಯಾರು ಚಂದ್ರಸೂರ್ಯರನ್ನು ಸೃಷ್ಟಿಸಿ ಈ ಜಗತ್ತನ್ನು ವ್ಯಕ್ತಗೊಳಿಸುತ್ತಿದ್ದಾನೊ ಆತ. ಪ್ರಚಾರ ಮಾಡೋದು ಏನು ಸಾಮಾನ್ಯ ಕೆಲಸವೆ? ಆತ ತನ್ನ ಸಾಕ್ಷಾತ್ಕಾರ ಕೊಟ್ಟು ಆದೇಶ ಮಾಡದಿದ್ದರೆ ಪ್ರಚಾರ ನಡೆಯೋಹಾಗಿಲ್ಲ. ಆದರೆ, ಮಾಡಿದರೆ ಯಾರೂ ಬೇಡ ಅನ್ನೋದಿಲ್ಲ. ಆತನಿಂದ ಆದೇಶ ದೊರೆತಿಲ್ಲದಿದ್ದರೂ ಬೇಕಾದರೆ ಗಂಟಲು ಕಿತ್ತುಕೊಳ್ಳ ಬಹುದು. ಒಂದೆರಡು ದಿವಸಗಳ ಮಟ್ಟಿಗೆ ಜನ ನೀನು ಹೇಳಿದಂತೆ ನಡೆದುಕೊಳ್ಳುತ್ತಾರೆ. ಬಳಿಕ ಎಲ್ಲವನ್ನೂ ಮರೆತುಬಿಡುತ್ತಾರೆ. ಜನರಿಗೆ ಇದೂ ಒಂದು ವಿಧವಾದ ತಮಾಷೆ ಮಾತ್ರವೆ. ನೀನು ಮಾತನಾಡುತ್ತಿರುವವರೆಗೂ ಜನ ಹೇಳುತ್ತಾರೆ, ‘ಆಹ! ಈತ ಬಹಳ ಚೆನ್ನಾಗಿ ಮಾತನಾಡುತ್ತಾನೆ’. ನೀನು ಮಾತನಾಡುವುದನ್ನು ನಿಲ್ಲಿಸುವುದೇ ಎಲ್ಲಾ ಗಾಳಿಯಲ್ಲಿ ತೂರಿಹೋಗಿಬಿಡುತ್ತದೆ.
“ಎಲ್ಲಿಯವರೆಗೆ ಒಲೆಯಲ್ಲಿ ಸೌದೆ ಉರಿಯುತ್ತಿರುವುದೊ ಅಲ್ಲಿಯವರೆಗೆ ಹಾಲು ಸುಮ್ಮನೆ ಮರಳಿ ಮರಳಿ ಉಕ್ಕುತ್ತಿರುತ್ತದೆ. ಸೌದೆಯನ್ನು ತೆಗೆದುಹಾಕಿದೊಡನೆಯೆ ಎಂದಿನಂತೆ ತೆಪ್ಪಗಾಗುತ್ತದೆ; ಇಳಿದುಹೋಗಿಬಿಡುತ್ತದೆ.
“ಸಾಧನೆಮಾಡಿ ಆಧ್ಯಾತ್ಮಿಕಶಕ್ತಿಯನ್ನು ಸಂಪಾದಿಸಬೇಕು. ಹಾಗೆ ಮಾಡದೆ ಇದ್ದರೆ ಪ್ರಚಾರಕಾರ್ಯ ಸಾಧ್ಯವಿಲ್ಲ. ‘ತನಗೇ ಮಲಗಲು ಸ್ಥಳವಿಲ್ಲ. ಶಂಕರನನ್ನು ಬೇರೆ ಕರೆಯು ತ್ತಿದ್ದಾನೆ!’ ಮಲಗಲು ತನಗೇ ಸ್ಥಳವಿಲ್ಲ. ಆದರೂ, ‘ಓ! ಶಂಕರಾ ಬಾ; ನನ್ನೊಡನೆ ಮಲಗಿಕೋ’ ಅಂತ ಕರೆಯೋದು ಬೇರೆ! (ನಗು).
“ನಮ್ಮ ಊರಿನ ಹಾಲಧಾರಪುಕುರದ ಏರಿಯ ಪಕ್ಕದಲ್ಲಿ ನಿತ್ಯವೂ ಬಹಿರ್ದೇಶಕ್ಕೆ ಹೋಗಿ ಆ ಸ್ಥಳವನ್ನು ಕೆಲವರು ಗಲೀಜುಮಾಡಿಬಿಡುತ್ತಿದ್ದರು. ಪ್ರಾತಃಕಾಲ ಆ ಊರಿನ ಜನ ಅಲ್ಲಿಗೆ ಬಂದು ಹಾಗೆ ಮಾಡಿದವರನ್ನು ಬಯ್ದು ಹೋಗುತ್ತಿದ್ದರು. ಆದರೂ ಗಲೀಜು ಮಾಡುವ ಕಾರ್ಯ ತಪ್ಪಿಹೋಗಲಿಲ್ಲ. ಕೊನೆಗೆ ಆ ಗ್ರಾಮದವರು ಸರ್ಕಾರಕ್ಕೆ ಅರ್ಜಿಯ ಮೂಲಕ ಅದನ್ನು ತಿಳಿಯಪಡಿಸಿದರು. ಆಗ ಸರ್ಕಾರದವರು ಅಲ್ಲಿ, ‘ಇಲ್ಲಿ ಹೇಸಿಗೆ ಮಾಡಕೂಡದು. ಹಾಗೆ ಮಾಡಿದವರಿಗೆ ಶಿಕ್ಷೆ ವಿಧಿಸಲಾಗುತ್ತದೆ’ ಅಂತ ಒಂದು ಬೋರ್ಡು ಹಾಕಿಬಿಟ್ಟರು. ಆಗ ಒಡನೆಯೇ ಎಲ್ಲಾ ನಿಂತುಹೋಗಿಬಿಟ್ಟಿತು. ಬಳಿಕ ಆ ಊರಿನವರಿಗೆ ಯಾವ ತೊಂದರೆಯೂ ಆಗಲಿಲ್ಲ. ಅದು ಸರ್ಕಾರದ ಆಜ್ಞೆ – ಎಲ್ಲರೂ ಪಾಲಿಸಲೇಬೇಕು.
“ಅದೇ ರೀತಿಯಾಗಿ ಮೊದಲು ಭಗವಂತನ ದರ್ಶನ ದೊರೆತು ಆತ ಆದೇಶ ಈಯುವುದಾದರೆ ಮಾತ್ರ ಪ್ರಚಾರಕಾರ್ಯ ಸಾಧ್ಯವಾಗುತ್ತದೆ. ಲೋಕಶಿಕ್ಷಣೆಯ ಕಾರ್ಯ ಸಾಧ್ಯವಾಗುತ್ತದೆ. ಇಲ್ಲದೆ ಇದ್ದರೆ ನಿನ್ನ ಮಾತಿಗೆ ಯಾರು ತಾನೆ ಬೆಲೆ ಕೊಡುತ್ತಾರೆ?”
ಶ್ರೀರಾಮಕೃಷ್ಣರು ಹೇಳುತ್ತಿದ್ದ ಈ ಮಾತುಗಳನ್ನೆಲ್ಲ ಎಲ್ಲರೂ ಗಂಭೀರಮುದ್ರೆಯಿಂದ ಕೇಳುತ್ತಿದ್ದಾರೆ.
ಶ್ರೀರಾಮಕೃಷ್ಣರು ಬಂಕಿಮನಿಗೆ: “ಒಳ್ಳೇದು, ನೀನೊಬ್ಬ ದೊಡ್ಡ ಪಂಡಿತನೆ; ಬಹಳ ಪುಸ್ತಕಗಳನ್ನು ಬರೆದಿದ್ದೀಯೆ. ನೀನು ಏನು ಹೇಳುತ್ತೀಯೆ? ಮನುಷ್ಯನ ಕರ್ತವ್ಯ ಏನು? ಆತನನ್ನು ಹಿಂಬಾಲಿಸುವುದು ಏನು? ಪರಲೋಕ ಎಂಬುದರಲ್ಲಿ ನಿನಗೆ ನಂಬಿಕೆಯಿದೆ ತಾನೇ?”
ಬಂಕಿಮ: “ಪರಲೋಕವೇ! ಅದೊಂದು ಬೇರೆ ಏನಪ್ಪ ಅದು?”
ಶ್ರೀರಾಮಕೃಷ್ಣರು: “ಹೌದು, ಜ್ಞಾನ ಪಡೆದುಕೊಂಡ ಮೇಲೆ ಬೇರೆ ಲೋಕಕ್ಕೆ ಹೋಗಬೇಕಾಗಿಲ್ಲ. ಪುನರ್ಜನ್ಮ ಉಂಟಾಗೋದಿಲ್ಲ. ಆದರೆ ಎಲ್ಲಿಯವರೆಗೆ ಜ್ಞಾನವನ್ನು ಪಡೆದುಕೊಂಡಿಲ್ಲವೊ, ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಂಡಿಲ್ಲವೊ, ಅಲ್ಲಿಯವರೆಗೆ ಮತ್ತೆ ಜನ್ಮವೆತ್ತಬೇಕಾಗುತ್ತದೆ. ಅದರಿಂದ ಬಿಡುಗಡೆ ಎಂಬುದು ಇಲ್ಲವೇ ಇಲ್ಲ. ಅದುವರೆಗೆ ಪರಲೋಕ ಎಂಬುದು ಇದ್ದೇ ಇದೆ. ಜ್ಞಾನ ದೊರೆತರೆ, ಭಗವಂತನ ದರ್ಶನ ದೊರೆತರೆ, ಮುಕ್ತಿ ದೊರೆತು ಬಿಡುತ್ತದೆ – ಬಳಿಕ ಪುನರ್ಜನ್ಮವಿಲ್ಲ. ಬೇಯಿಸಿದ ಬತ್ತವನ್ನು ಬಿತ್ತಿದರೆ ಅದು ಮೊಳೆಯದು. ಯಾರಾದರು ಜ್ಞಾನಾಗ್ನಿಯಲ್ಲಿ ಬೆಂದುಹೋಗಿಬಿಟ್ಟಿರುವು ದಾದರೆ ಅವರಿಂದ ಸೃಷ್ಟಿಯ ಯಾವ ಕಾರ್ಯವೂ ನಡೆಯದು. ಅವರ ಕೈಯಲ್ಲಿ ಸಂಸಾರಕಾರ್ಯ ಸಾಧ್ಯವಿಲ್ಲ; ಅವರಿಗೆ ಕಾಮ ಕಾಂಚನದಲ್ಲಿ ಆಸಕ್ತಿಯೂ ಇರದು. ಆಗಲೇ ಬತ್ತ ಬೆಂದುಹೋಗಿಬಿಟ್ಟಿದೆ, ಅದನ್ನು ತೆಗೆದುಕೊಂಡು ಹೋಗಿ ಒಟ್ಟಲು ಹಾಕಿದರೆ ಏನು ಹುಟ್ಟುತ್ತದೆ?”
ಬಂಕಿಮ ನಗುತ್ತ ನಗುತ್ತ: “ಮಹಾಶಯರೆ, ಜೊಂಡೂ ಕೂಡ ಯಾವ ಮರ ಗೆಲಸಕ್ಕೂ ಬಾರದು.”
ಶ್ರೀರಾಮಕೃಷ್ಣರು: “ಹಾಗೆಂದು ಜ್ಞಾನಿಯೇನೂ ಜೊಂಡುಗಿಡವಲ್ಲ. ಆತ ಭಗವಂತನ ದರ್ಶನ ಮಾಡಿದ್ದಾನೆ, ಅಮೃತಫಲವನ್ನು ಪಡೆದುಕೊಂಡಿದ್ದಾನೆ – ಅದು ಸೋರೆ ಕುಂಬಳವಲ್ಲ! ಆತನಿಗೆ ಪುನರ್ಜನ್ಮ ಎಂಬುದು ಇಲ್ಲವೇ ಇಲ್ಲ. ಭೂಮಿ ಯಲ್ಲಿ ಆಗಲಿ, ಸೂರ್ಯ ಲೋಕದಲ್ಲಿ ಆಗಲಿ, ಚಂದ್ರಲೋಕದಲ್ಲಿ ಆಗಲಿ – ಯಾವ ಲೋಕದಲ್ಲಿಯೂ ಆತ ಜನ್ಮವೆತ್ತಬೇಕಾಗಿಲ್ಲ.
“ಉಪಮೆ – ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ. ನೀನಂತು ಒಬ್ಬ ಪಂಡಿತನೆ. ನ್ಯಾಯ ಓದಿಲ್ಲವೇನು? ಆತ ಒಂದು ಹುಲಿಯೇ ಅಂತ ಹೇಳಿದರೆ, ಆತನಿಗೆ ಒಂದು ಭೀಕರ ಬಾಲವಿದೆ ಮತ್ತು ಗುಡಾಣದಂಥ ಒಂದು ಮುಖ ಇದೆ ಅಂತ ಏನೂ ಆಗೋದಿಲ್ಲವಲ್ಲ! (ಎಲ್ಲರೂ ನಗುತ್ತಾರೆ).
“ನಾನು ಕೇಶವಸೇನನಿಗೆ ಇದೇ ವಿಷಯವನ್ನು ಹೇಳಿದೆ. ಕೇಶವಸೇನ ಕೇಳಿದ, ‘ಮಹಾಶಯರೆ ಪರಲೋಕ ಎಂಬುದು ಇದೆಯೆ.?’ ನಾನು ಯಾವ ಒಂದು ನಿರ್ದಿಷ್ಟ ಉತ್ತರವನ್ನೂ ಕೊಡಲಿಲ್ಲ. ಹೇಳಿದೆ: ‘ಕುಂಬಾರರು ಮಡಕೆಗಳನ್ನು ಬಿಸಿಲಿಗೆ ಇಡುತ್ತಾರೆ- ಹಸಿಯದು ಬೆಂದದ್ದು ಎರಡನ್ನೂ ಇಡುತ್ತಾರೆ. ಅಕಸ್ಮಾತ್ತಾಗಿ ದನಕರುಗಳು ಅವನ್ನು ಒಮ್ಮೊಮ್ಮೆ ತುಳಿದುಬಿಡುತ್ತವೆ. ಬೆಂದ ಮಡಕೆಗಳು ಒಡೆದುಹೋಗಿದ್ದರೆ ಕುಂಬಾರರು ಅವನ್ನು ಬಿಸಾಡಿ ಬಿಡುತ್ತಾರೆ; ಆದರೆ ಹಸಿಯ ಮಡಕೆಗಳು ಒಡೆದು ಹೋಗಿದ್ದರೆ ಅವನ್ನು ಮನೆಗೆ ತಂದು ನೀರಿನಲ್ಲಿ ನೆನೆಹಾಕಿ ಮತ್ತೆ ಮುದ್ದೆಮಾಡಿ ಚಕ್ರದಲ್ಲಿಟ್ಟು ಹೊಸ ಮಡಕೆ ತಯಾರುಮಾಡುತ್ತಾರೆ; ಬಿಸಾಡುವುದಿಲ್ಲ.’ ಅದಕ್ಕಾಗಿ ನಾನು ಕೇಶವನಿಗೆ ಹೇಳಿದೆ, ‘ಎಲ್ಲಿಯವರೆಗೆ ನೀನು ಹಸಿಯಾಗಿ ಇರುವೆಯೋ, ಅಲ್ಲಿಯವರೆಗೆ ಕುಂಬಾರ ನಿನ್ನನ್ನು ಬಿಡ. ಎಲ್ಲಿಯವರೆಗೆ ನೀನು ಜ್ಞಾನವನ್ನು ಪಡೆದುಕೊಳ್ಳುವುದಿಲ್ಲವೊ, ಎಲ್ಲಿಯವರೆಗೆ ನೀನು ಭಗವಂತನ ದರ್ಶನವನ್ನು ಪಡೆದು ಕೊಳ್ಳುವುದಿಲ್ಲವೊ, ಅಲ್ಲಿಯವರೆಗೆ ಕುಂಬಾರ (ಭಗವಂತ) ಮತ್ತೆ ಮತ್ತೆ ನಿನ್ನನ್ನು ಚಕ್ರಕ್ಕೆ ಹಾಕುತ್ತಲೇ ಇರುತ್ತಾನೆ; ಬಿಡುವುದಿಲ್ಲ. ಅಂದರೆ ಮತ್ತೆ ಮತ್ತೆ ಜನ್ಮವೆತ್ತಬೇಕಾಗುತ್ತದೆ. ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಆತನ ಸಾಕ್ಷಾತ್ಕಾರ ಪಡೆದುಕೊಂಡುಬಿಟ್ಟರೆ, ಆಗ ಮುಕ್ತಿ ದೊರಕುತ್ತದೆ. ಆಗ ಕುಂಬಾರ ಬಿಟ್ಟುಬಿಡುತ್ತಾನೆ. ಏಕೆಂದರೆ, ಆಗ ನೀನು ಈ ಮಾಯಾ ಸೃಷ್ಟಿರಚನೆಯಲ್ಲಿ ಯಾವ ಕೆಲಸಕ್ಕೂ ಬಾರದವನಾಗುತ್ತೀಯೆ’. ಜ್ಞಾನಿ ಮಾಯೆಯ ಮಿತಿಯನ್ನು ದಾಟಿ ಹೋಗಿಬಿಟ್ಟಿ ರುತ್ತಾನೆ. ಆದ್ದರಿಂದ ಈ ಮಾಯಾಸಂಸಾರದಲ್ಲಿ ಆತನಿಗೆ ಮತ್ತೇನು ಕೆಲಸ?
“ಆದರೆ ಕೆಲಕಾಲ ಜ್ಞಾನಿಗಳನ್ನು ಲೋಕಶಿಕ್ಷಣಾರ್ಥವಾಗಿ ಭಗವಂತ ಈ ಮಾಯಾ ಸಂಸಾರದಲ್ಲಿ ಇಡುತ್ತಾನೆ. ಅವರು ಈ ಕಾರ್ಯಕ್ಕಾಗಿ ವಿದ್ಯಾಮಾಯೆಯ ಸಹಾಯ ತೆಗೆದು ಕೊಳ್ಳುತ್ತಾರೆ. ಭಗವಂತನೇ ತನ್ನ ಸ್ವಕಾರ್ಯಕ್ಕಾಗಿ ಇವರನ್ನು ಈ ಜಗತ್ತಿನಲ್ಲಿ ಇಟ್ಟಿರುತ್ತಾನೆ. ಉದಾಹರಣೆಗಾಗಿ: ಶುಕದೇವ, ಶಂಕರಾಚಾರ್ಯರು.
(ಬಂಕಿಮನಿಗೆ): “ಒಳ್ಳೇದು, ನೀನು ಏನು ಹೇಳುತ್ತೀಯೆ? ಮನುಷ್ಯನ ಕರ್ತವ್ಯ ಏನು?”
ಬಂಕಿಮ ನಗುತ್ತ ನಗುತ್ತ: “ಅದರ ಸಂಬಂಧವಾಗಿ ಹೇಳಬೇಕೆಂದರೆ ನನಗನಿಸುತ್ತದೆ ಆಹಾರ ನಿದ್ರೆ ಮೈಥುನ ಅಂತ.”
ಶ್ರೀರಾಮಕೃಷ್ಣರು ಸಿಟ್ಟುಗೊಂಡು: “ಛೀ! ನಿನಗೆ ನಾಚಿಕೆ ಹೇಸಿಗೆ ಅನ್ನುವುದು ಏನೂ ಇಲ್ಲ! ನೀನು ಹಗಲೂ ರಾತ್ರಿ ಏನು ಏನು ಮಾಡುತ್ತಿದ್ದೀಯೋ ಅದೇ ನಿನ್ನ ಬಾಯಿಂದ ಹೊರ ಬೀಳುತ್ತದೆ. ಜನ ಏನು ತಿನ್ನುತ್ತಾರೊ ಅದನ್ನೇ ತೇಗುತ್ತಾರೆ. ಮೂಲಂಗಿ ತಿಂದರೆ ಮೂಲಂಗಿ ವಾಸನೆಯ ತೇಗು ಬರುತ್ತದೆ. ಎಳನೀರು ಕುಡಿದರೆ ಎಳನೀರು ವಾಸನೆಯ ತೇಗು ಬರುತ್ತದೆ. ಹಗಲೂ ಇರುಳೂ ನೀನು ಕಾಮಕಾಂಚನದ ಮಧ್ಯೆ ಬಿದ್ದಿದ್ದೀಯೆ: ಅದಕ್ಕಾಗಿಯೇ ನಿನ್ನ ಬಾಯಿಂದ ಈ ವಿಧವಾದ ಮಾತುಗಳು ಹೊರಬರುತ್ತಿವೆ. ಕೇವಲ ವಿಷಯಚಿಂತನೆಯಲ್ಲಿಯೇ ಮುಳುಗಿಹೋಗಿದ್ದರೆ ಲೆಕ್ಕಾಚಾರದ ಸ್ವಭಾವ ಬಂದುಬಿಡುತ್ತದೆ. ಮನುಷ್ಯ ಕಪಟಿಯಾಗಿ ಬಿಡುತ್ತಾನೆ. ಭಗವಚ್ಚಿಂತನೆ ಮಾಡಿದರೆ ಸರಳನಾಗುತ್ತಾನೆ. ಯಾರಿಗೇ ಆಗಲಿ ಭಗವಂತನ ಸಾಕ್ಷಾತ್ಕಾರವಾಗಿದ್ದರೆ ಅವರ ಬಾಯಿಂದ ನೀನಾಡಿದ ಮಾತುಗಳು ಎಂದಿಗೂ ಬಾರವು. ಭಗವಚ್ಚಿಂತನೆ ಮಾಡದೆ ಬರೀ ಪಾಂಡಿತ್ಯ ಗಳಿಸಿಕೊಂಡುಬಿಟ್ಟರೆ ಏನಾಯಿತು? ವಿವೇಕ ವೈರಾಗ್ಯವಿಲ್ಲದಿದ್ದರೆ ಏನಾಯಿತು? ಕಾಮ ಕಾಂಚನದಲ್ಲಿ ಮನಸ್ಸು ಆಸಕ್ತವಾಗಿದ್ದರೆ ಬರೀ ಪಾಂಡಿತ್ಯದಿಂದ ಏನಾಗುತ್ತದೆ?
“ರಣಹದ್ದು ಬಹಳ ಎತ್ತರಕ್ಕೇನೊ ಹಾರಿಹೋಗುತ್ತದೆ, ಆದರೆ ಅದರ ದೃಷ್ಟಿಯೆಲ್ಲ ಕೇವಲ ಹೆಣದ ಗುಂಡಿಗಳ ಕಡೆ. ಪಂಡಿತ ಅನ್ನಿಸಿಕೊಳ್ಳೋನು ಅನೇಕ ಪುಸ್ತಕ ಶಾಸ್ತ್ರ ಓದಿರುತ್ತಾನೆ. ಶ್ಲೋಕ ಎತ್ತಿ ಹೇಳಬಲ್ಲ. ಅನೇಕ ಪುಸ್ತಕಗಳನ್ನು ಬರೆದಿರಬಹುದು – ಆದರೆ ಆತ ಸ್ತ್ರಿಲೋಲನಾಗಿ ಹೆಸರು, ಕೀರ್ತಿ ಧನಕನಕಾದಿಗಳೇ ಸಾರವಸ್ತು ಅಂತ ಭಾವಿಸುತ್ತಿದ್ದರೆ ಆತ ಹೇಗೆ ಪಂಡಿತನಾಗಬಲ್ಲ? ಭಗವಂತನಲ್ಲಿ ಮನಸ್ಸು ನೆಲೆಸದಿದ್ದರೆ ಆತ ಪಂಡಿತ ನಾಗಬಲ್ಲನೆ?
“ಕೆಲಕೆಲವರು ಭಾವಿಸುತ್ತಾರೆ, ‘ಇವರು ಕೇವಲ ಭಗವಚ್ಚಿಂತನೆ ಮಾಡುತ್ತಾರೆ; ಹುಚ್ಚರು ಇವರು. ಇವರಿಗೆ ತಲೆ ಕೆಟ್ಟುಹೋಗಿದೆ. ನಾವೆಷ್ಟು ಬುದ್ಧಿವಂತರು! ನಾವು ಹೇಗೆ ಸುಖೋಪಭೋಗ – ಹಣ, ಹೆಸರು, ಕೀರ್ತಿ, ಇಂದ್ರಿಯಸುಖ ಪಡುತ್ತಿದ್ದೇವೆ!’ ಅಂತ. ಕಾಗೆಯೂ ಭಾವಿಸುತ್ತದೆ ತಾನೂ ಬಹಳ ಬುದ್ಧಿಶಾಲಿ ಹಕ್ಕಿ ಅಂತ. ಆದರೆ ಅದು ಬೆಳಗ್ಗೆ ಏಳುವುದೇ ತಡ, ಒಡನೆಯೆ ಹೋಗಿ ಪರರ ಹೇಸಿಗೆ ತಿಂದೇ ಸಾಯುತ್ತದೆ. ನೋಡಿಲ್ಲವೆ ಕಾಗೆ ಎಷ್ಟೊಂದು ಬಿಂಕದಿಂದ ನಡೆಯುತ್ತದೆ ಅಂಬೋದನ್ನ? ಬಹಳ ಬುದ್ಧಿಶಾಲಿ ಹಕ್ಕಿಯೇ!”
ಎಲ್ಲರೂ ನಿಶ್ಶಬ್ದರಾಗಿ ಕುಳಿತಿದ್ದಾರೆ.
ಪರಮಹಂಸರು ಮತ್ತೆ ತಮ್ಮ ಮಾತು ಮುಂದುವರಿಸಿದರು: “ಯಾರು ಭಗವಚ್ಚಿಂತನೆ ಮಾಡುತ್ತಾರೊ, ಯಾರು ವಿಷಯಗಳಲ್ಲಿ ಆಸಕ್ತಿ – ಕಾಮಕಾಂಚನದಲ್ಲಿ ಆಸಕ್ತಿ ತೊಲಗಿ ಹೋಗಲು ಹಗಲೂ ಇರುಳೂ ಭಗವಂತನ ಪ್ರಾರ್ಥನೆ ಮಾಡುತ್ತಾರೊ, ಯಾರಿಗೆ ವಿಷಯ ರಸ ಕಹಿಯಾಗಿ ತೋರುವುದೊ, ಯಾರಿಗೆ ಹರಿಪಾದಪದ್ಮಸುಧೆ ಹೊರತು ಬೇರೆ ಏನೂ ರುಚಿಸದೊ ಅಂಥವರ ಸ್ವಭಾವ ಹಂಸಪಕ್ಷಿಯ ಹಾಗೆ ಆಗಿಬಿಟ್ಟಿರುತ್ತದೆ. ಹಂಸದ ಎದುರು ನೀರು ಬೆರೆಸಿದ ಹಾಲನ್ನು ಇಡಿ. ಅದು ನೀರನ್ನು ಬಿಟ್ಟು ಹಾಲನ್ನು ಕುಡಿದುಬಿಡುತ್ತದೆ. ಅದರ ನಡೆಯನ್ನು ನೀನು ನೋಡಿಲ್ಲವೇನು? ಅದು ನೇರವಾಗಿ ಮುಂದುಮುಂದಕ್ಕೆ ಮುಂಬರಿದು ಬಿಡುತ್ತದೆ. ಶುದ್ಧ ಭಕ್ತರ ನಡೆಯೂ ಕೇವಲ ಭಗವಂತನ ಕಡೆಗೆಯೇ. ಅವರಿಗೆ ಬೇರೆ ಏನೂ ಬೇಕಾಗಿಲ್ಲ; ಅವರಿಗೆ ಬೇರೆ ಯಾವುದೂ ರುಚಿಸದು.
(ದಯಾರ್ದ್ರಹೃದಯದಿಂದ ಬಂಕಿಮನಿಗೆ): “ಮನಸ್ಸಿಗೇನೂ ತಿಳಿದುಕೊಳ್ಳಬೇಡ.’
ಬಂಕಿಮ: “ಮಹಾಶಯರೆ, ನಾನು ತಮ್ಮಿಂದ ಸಿಹಿಮಾತನ್ನು ಕೇಳಲು ಮಾತ್ರವೇ ಬರಲಿಲ್ಲ.”
ಶ್ರೀರಾಮಕೃಷ್ಣರು ಬಂಕಿಮನಿಗೆ: “ಕಾಮಕಾಂಚನವೇ ಸಂಸಾರ. ಇದರ ಹೆಸರೇ ಮಾಯೆ ಎನ್ನುವುದು. ಅದು ಆತನ ದರ್ಶನ ಪಡೆಯಲು ಆತನ ಚಿಂತನೆ ಮಾಡಲು ಬಿಟ್ಟುಕೊಡಲೊಲ್ಲದು. ಒಂದೆರಡು ಮಕ್ಕಳಾದ ನಂತರ ಹೆಂಡತಿಯೊಡನೆ ಅಣ್ಣತಂಗಿಯರ ಹಾಗೆ ವಾಸಿಸಬೇಕು. ಮತ್ತು ಆಕೆಯೊಡನೆ ಸರ್ವದಾ ಭಗವಂತನ ವಿಷಯವನ್ನೇ ಮಾತನಾಡಬೇಕು. ಹಾಗೆ ಮಾಡುವುದಾದರೆ ಇಬ್ಬರ ಮನಸ್ಸೂ ಆತನ ಕಡೆ ಹರಿಯುತ್ತದೆ. ಹೆಂಡತಿ ಭಗವಂತನ ಸಾಕ್ಷಾತ್ಕಾರ ಪಡೆಯಲು ಸಹಾಯಕಳಾಗುತ್ತಾಳೆ. ಪಶುಭಾವ ನಾಶವಾಗದೆ ಇದ್ದರೆ ಹೊರತು ಭಗವಂತನ ಆನಂದದ ಸವಿಯನ್ನು ಸವಿಯಲಾಗುವುದಿಲ್ಲ. ಪಶುಭಾವ ಹೃದಯವನ್ನು ಬಿಟ್ಟು ತೊಲಗಿಹೋಗುವಂತೆ ಭಗವಂತನಿಗೆ ಪ್ರಾರ್ಥನೆ ಮಾಡಬೇಕು; ವ್ಯಾಕುಲಚಿತ್ತದಿಂದ ಪ್ರಾರ್ಥನೆ ಮಾಡಬೇಕು. ಅಂತರ್ಯಾಮಿ, ನಾವು ಹೃತ್ಪೂರ್ವಕವಾಗಿ ಪ್ರಾರ್ಥನೆ ಮಾಡಿದ್ದೇ ಆದರೆ ಆತ ಕೇಳಿಯೇ ಕೇಳುತ್ತಾನೆ.
“ಮತ್ತೆ- ‘ಕಾಂಚನ’, ನಾನು ಪಂಚವಟಿಯ ಹತ್ತಿರ ಗಂಗೆ ದಡದಲ್ಲಿ ಕುಳಿತು, ‘ರೂಪಾಯಿ ಮಣ್ಣೇ’, ‘ಮಣ್ಣೇ ರೂಪಾಯಿ’ ಅಂತ ಹೇಳಿ ಅವನ್ನು ನೀರಿನಲ್ಲಿ ಬಿಸಾಡಿಬಿಟ್ಟೆ.”
ಬಂಕಿಮ: ‘ದುಡ್ಡು ಅನ್ನೋದು ಮಣ್ಣೇ! ಮಹಾಶಯರೇ, ಕೈಯಲ್ಲಿ ಒಂದು ನಾಲ್ಕು ಕಾಸು ಇದ್ದರೆ ಬಡಬಗ್ಗರಿಗೆ ದಾನಮಾಡಬಹುದು. ದುಡ್ಡು ಅನ್ನೋದು ಮಣ್ಣಿಗೆ ಸರಿಸಮಾನವಾಗಿದ್ದ ಪಕ್ಷದಲ್ಲಿ ದಯೆ ತೋರಿಸುವುದಕ್ಕೆ ಪರೋಪಕಾರ ಮಾಡುವುದಕ್ಕೆ ಆಗುವುದಿಲ್ಲವಲ್ಲ?”
ಶ್ರೀರಾಮಕೃಷ್ಣರು ಬಂಕಿಮನಿಗೆ: “ದಯೆ, ಪರೋಪಕಾರ! ಪರೋಪಕಾರ ಮಾಡುತ್ತೇನೆ ಅಂತ ಹೇಳಬೇಕಾದರೆ ನಿನಗೆ ಎಷ್ಟೊಂದು ಎದೆಗಾರಿಕೆ ಇರಬೇಕು? ಮನುಷ್ಯ ಅಷ್ಟೊಂದು ಜಂಭಕೊಚ್ಚಿಕೊಳ್ಳುತ್ತಾನೆ. ಆತ ನಿದ್ರಿಸುತ್ತಿರುವಾಗ ಯಾರಾದರು ಬಂದು ನಿಂತು ಆತನ ಬಾಯಲ್ಲಿ ಒಂದಕ್ಕೆ ಹೋಗಿಬಿಟ್ಟರೂ ಅದು ಅವನಿಗೆ ಗೊತ್ತೇ ಆಗದು – ಆತನ ಬಾಯಿಂದ ಅದು ತುಂಬಿ ಹರಿಯುತ್ತಿದ್ದರೂ ಸರಿಯೆ ಅದು ಗೊತ್ತಾಗದು. ಆಗ ಆತನ ಅಹಂಕಾರ ಅಭಿಮಾನ ದರ್ಪ ಇವೆಲ್ಲ ಎಲ್ಲಿಗೆ ಹೋಗಿರುತ್ತವೆ?
“ಸಂನ್ಯಾಸಿ ಕಾಮಕಾಂಚನತ್ಯಾಗ ಮಾಡಲೇಬೇಕು. ಆತ ಮತ್ತೆ ಅವನ್ನು ಸ್ವೀಕರಿಸ ಲಾಗುವುದಿಲ್ಲ. ಉಗುಳಿಬಿಟ್ಟ ಉಗುಳನ್ನು ಮತ್ತೆ ತೆಗೆದು ನುಂಗಬಾರದು. ಸಂನ್ಯಾಸಿ ಯಾರಿಗಾದರು ಏನನ್ನಾದರು ಕೊಟ್ಟರೆ ಅದನ್ನು ತಾನು ಕೊಡುತ್ತಿದ್ದೇನೆ ಅಂತ ಆತ ಭಾವಿಸೋದಿಲ್ಲ. ದಯೆದೋರುವುದು ಭಗವಂತನ ಹಕ್ಕು, ಮನುಷ್ಯ ದಯೆದೋರಲೆಂದಾ ದೀತು? ದಾನ ಮುಂತಾದವು ಆತನ ಇಚ್ಛೆಗನುಸಾರ ಮಾತ್ರ ಸಾಧ್ಯ. ನಿಜವಾದ ಸಂನ್ಯಾಸಿ ಆಂತರಿಕವಾಗಿಯೂ ತ್ಯಾಗ ಮಾಡುತ್ತಾನೆ, ಬಾಹ್ಯವಾಗಿಯೂ ತ್ಯಾಗ ಮಾಡುತ್ತಾನೆ. ಯಾರು ಬೆಲ್ಲ (ಕಾಮಕಾಂಚನ) ತಿನ್ನೋದಿಲ್ಲವೋ ಆತ ತನ್ನ ಹತ್ತಿರ ಅದನ್ನು ಇಟ್ಟುಕೊಂಡಿರುವುದೂ ಒಳ್ಳೆಯದಲ್ಲ, ಆತ ತನ್ನ ಹತ್ತಿರ ಬೆಲ್ಲ ಇಟ್ಟುಕೊಂಡು ಅದನ್ನು ತಿನ್ನುವುದಿಲ್ಲ ಎಂದು ಹೇಳಿದರೆ ಜನ ನಂಬುವುದಿಲ್ಲ.
“ಸಂಸಾರಿಗಳಿಗೆ ದುಡ್ಡಿನ ಆವಶ್ಯಕತೆ ಇದೆ; ಏಕೆಂದರೆ ಆತನಿಗೆ ಹೆಂಡತಿ ಮಕ್ಕಳಿದ್ದಾರೆ. ಅವರ ಪೋಷಣೆಗಾಗಿ ಆತ ದುಡ್ಡು ಕೂಡಿಡಬೇಕಾಗುತ್ತದೆ. ಕೇವಲ ಸಂನ್ಯಾಸಿ ಮತ್ತು ಹಕ್ಕಿ ಕೂಡಿಡುವುದಿಲ್ಲ. ಆದರೆ ಹಕ್ಕಿಗೆ ಮರಿ ಆದಾಗ ಅವಕ್ಕೆ ಅದು ಕೊಕ್ಕಿನಲ್ಲಿ ಆಹಾರ ಶೇಖರಿಸಿಕೊಂಡು ತರುತ್ತದೆ; ಆಗ ಅದೂ ಸಂಚಯಮಾಡಬೇಕಾಗುತ್ತದೆ. ಪರಿವಾರದ ರಕ್ಷಣೆ ಮಾಡಬೇಕಾಗಿರುವುದರಿಂದ ಸಂಸಾರಿಗೆ ದುಡ್ಡಿನ ಆವಶ್ಯಕತೆ ಇದೆ.
“ಸಂಸಾರಿ ನಿಜವಾದ ಭಕ್ತನಾದರೆ ಆತ ಅನಾಸಕ್ತನಾಗಿ ತನ್ನ ಕೆಲಸಕಾರ್ಯಗಳನ್ನು ಮಾಡುತ್ತಾನೆ. ತನ್ನ ಕರ್ಮದ ಫಲ ಲಾಭದಾಯಕವಾಗಿದ್ದರೂ ಸರಿಯೆ ನಷ್ಟದಾಯಕ ವಾಗಿದ್ದರೂ ಸರಿಯೆ, ಸುಖದಾಯಕವಾಗಿದ್ದರೂ ಸರಿಯೆ, ದುಃಖದಾಯಕವಾಗಿದ್ದರೂ ಸರಿಯೆ ಎಲ್ಲವನ್ನು ಭಗವಂತನಿಗೆ ಅರ್ಪಿಸಿಬಿಡುತ್ತಾನೆ. ಹಗಲಿರುಳು ಭಕ್ತಿಗಾಗಿ ಪ್ರಾರ್ಥನೆ ಮಾಡುತ್ತಾನೆ, ಮತ್ತೆ ಬೇರೆ ಯಾವುದಕ್ಕೂ ಪ್ರಾರ್ಥನೆ ಮಾಡುವುದಿಲ್ಲ. ಇದಕ್ಕೆ ನಿಷ್ಕಾಮ ಕರ್ಮ ಅಂತ ಹೆಸರು. ಅಂದರೆ ಅನಾಸಕ್ತಿಯಿಂದ ಕೆಲಸ ಮಾಡುವುದು. ಸಂನ್ಯಾಸಿಯೂ ಎಲ್ಲಾ ಕೆಲಸಗಳನ್ನು ನಿಷ್ಕಾಮ ಭಾವನೆಯಿಂದ ಮಾಡಬೇಕು; ಆದರೆ ಆತ ಸಂಸಾರಿಗಳ ಹಾಗೆ ಪ್ರಾಪಂಚಿಕ ಕರ್ಮಗಳನ್ನು ಮಾಡಬೇಕಾಗಿರುವುದಿಲ್ಲ.
“ಸಂಸಾರಿ ನಿಷ್ಕಾಮ ಭಾವನೆಯಿಂದ ಯಾರಿಗಾದರೂ ದಾನ ಮಾಡಿದರೆ ಅದು ತನ್ನ ಉಪಕಾರಕ್ಕಾಗಿಯೇ ವಿನಾ ಪರರ ಉಪಕಾರಕ್ಕಲ್ಲ. ಸರ್ವಭೂತಗಳಲ್ಲಿಯೂ ಭಗವಂತನು ಇರುವುದರಿಂದ ಆತನ ಸೇವೆಮಾಡಿದಂತೆಯೇ ಆಗುತ್ತದೆ. ಹರಿಯ ಸೇವೆ ಮಾಡಿದರೆ ಅದು ತನಗೇ ಉಪಕಾರ ಮಾಡಿಕೊಂಡಂತಾಗುವುದೇ ವಿನಾ ಪರರಿಗಲ್ಲ. ಸರ್ವಭೂತಗಳ ಲ್ಲಿಯೂ – ಬರೀ ಮನುಷ್ಯನಲ್ಲೇ ಅಲ್ಲ, ಎಲ್ಲಾ ಜೀವಜಂತುಗಳಲ್ಲಿಯೂ ಹರಿಯ ಸೇವೆ ಯಾರೇ ಆಗಲಿ ಮಾಡಿದರೆ, ಮತ್ತು ಆತನಿಗೆ ಹೆಸರು ಬೇಕಾಗದೆ, ಕೀರ್ತಿ ಬೇಕಾಗದೆ, ಸತ್ತ ಬಳಿಕ ಸ್ವರ್ಗಕ್ಕೆ ಹೋಗಬೇಕು ಎಂಬ ಇಚ್ಛೆ ಇಲ್ಲದೆ ಇದ್ದರೆ, ಯಾರಿಗೆ ಸೇವೆ ಮಾಡುತ್ತಿದ್ದಾನೊ ಅವರಿಂದ ಯಾವ ಪ್ರತಿಫಲವನ್ನೂ ಅಪೇಕ್ಷಿಸದೆ ಇದ್ದರೆ ಮತ್ತು ಇವೇ ಮೊದಲಾದ ರೀತಿಯಾಗಿ ಸೇವೆ ಮಾಡಿದರೆ, ಆತ ಯಥಾರ್ಥ ನಿಷ್ಕಾಮಕರ್ಮವನ್ನು, ಅನಾಸಕ್ತಕರ್ಮವನ್ನು ಮಾಡಿದಂತೆ ಆಗುತ್ತದೆ. ಕರ್ಮಯೋಗ ಅನ್ನುವುದು ಇದೇ. ಈ ಕರ್ಮಯೋಗ ಭಗವಂತನನ್ನು ಪಡೆಯುವುದಕ್ಕೆ ಒಂದು ಮಾರ್ಗ. ಆದರೆ ಬಹಳ ಕಠಿನವಾದದ್ದು, ಕಲಿಯುಗಕ್ಕೆ ಅನುಗುಣವಾದದ್ದಲ್ಲ.
“ಅದಕ್ಕಾಗಿಯೆ ನಾನು ಹೇಳುವುದು ಯಾರು ಅನಾಸಕ್ತಿಯಿಂದ ಈ ವಿಧವಾಗಿ ಕರ್ಮ ಮಾಡುತ್ತಾನೊ ಯಾರು ದಯಾಪರನೊ ಮತ್ತು ದಾನಿಯೊ – ಆತ ತನಗೆ ಶ್ರೇಯಸ್ಸು ತಂದುಕೊಳ್ಳುತ್ತಾನೆ. ಯಾರು ಜೀವರಿಗಾಗಿ ಚಂದ್ರ ಸೂರ್ಯ, ತಂದೆ ತಾಯಿ, ಹೂವು ಹಣ್ಣು ಧಾನ್ಯ ಸೃಷ್ಟಿಸಿದ್ದಾನೊ, ಆ ಭಗವಂತನೇ ಪರರಿಗೆ ಉಪಕಾರಮಾಡಲು ಪರರಿಗೆ ಶ್ರೇಯಸ್ಸನ್ನು ತರಲು ಹಕ್ಕುದಾರ. ತಾಯಿತಂದೆಗಳಲ್ಲಿ ಕಾಣಬರುವ ಒಲುಮೆ ಅದು ಆತನಿಗೆ ಸೇರಿದುದೆ; ಜೀವ ರಕ್ಷಣೆಗಾಗಿಯೇ ಆತ ಅದನ್ನು ಅವರಿಗೆ ಕೊಟ್ಟಿದ್ದಾನೆ. ದಯಾಳುವಿನಲ್ಲಿ ಕಾಣಬರುವ ದಯೆ ಆತನದೇ; ನಿಸ್ಸಹಾಯಕ ಜೀವಿಗಳ ರಕ್ಷಣೆಗಾಗಿ ಅವರಿಗೆ ಅದನ್ನು ಕೊಟ್ಟಿದ್ದಾನೆ. ನೀನು ದಯೆತೋರು. ಬಿಡು; ಆತ ಒಂದಲ್ಲ ಒಂದು ವಿಧವಾಗಿ ತನ್ನ ಕೆಲಸವನ್ನು ಮಾಡಿಸಿಕೊಂಡು ಬಿಡುತ್ತಾನೆ. ಆತನ ಕಾರ್ಯ ಮಾತ್ರ ಎಂದಿಗೂ ನಿಲ್ಲದು.
“ಆದ್ದರಿಂದ ಜೀವನ ಕರ್ತವ್ಯವೇನು? ಬೇರೆ ಏನು, ಆತನಿಗೆ ಶರಣಾಗತ ನಾಗುವುದು ಮತ್ತು ಯಾವುದರಿಂದ ಆತನನ್ನು ಪಡೆಯಬಹುದೊ, ಯಾವುದರಿಂದ ಆತನ ದರ್ಶನ ಹೊಂದಬಹುದೊ ಅದಕ್ಕಾಗಿ ವ್ಯಾಕುಲನಾಗಿ ಆತನಿಗೆ ಪ್ರಾರ್ಥನೆ ಮಾಡುವುದು.
“ಒಮ್ಮೆ ಶಂಭುಮಲ್ಲಿಕ ಹೇಳಿದ, ‘ನನಗೆ ಅನೇಕ ಡಿಸ್ಪೆನ್ಸರಿ ಮತ್ತು ಹಾಸ್ಪಿಟಲ್ಗಳನ್ನು ಕಟ್ಟಿಸಬೇಕೆಂಬುದಾಗಿ ಬಹಳ ಇಚ್ಛೆ ಇದೆ; ಅದರಿಂದ ಬಡಬಗ್ಗರಿಗೆ ಬಹಳ ಉಪಕಾರವಾಗುತ್ತದೆ’ ಎಂದು. ನಾನು ಹೇಳಿದೆ, ‘ಹ್ಞೂ, ಅನಾಸಕ್ತನಾಗಿ ಅವುಗಳನ್ನೆಲ್ಲ ಮಾಡುವುದಾದರೆ ಕೆಟ್ಟದ್ದೇನಲ್ಲ. ಆದರೆ ಭಗವಂತನಲ್ಲಿ ನಿಜವಾದ ಪ್ರೀತಿ ಉಂಟಾಗದೆ ಇದ್ದರೆ ಅನಾಸಕ್ತನಾಗೋದು ಬಹಳ ಕಠಿನ. ಜೊತೆಗೆ ಅನೇಕ ಕಾರ್ಯಗಳನ್ನು ಗಂಟು ಹಾಕಿಕೊಂಡರೆ ನಮಗೆ ಗೊತ್ತಾಗದ ರೀತಿಯಲ್ಲಿ ಯಾವ ದಿಕ್ಕಿನಿಂದಲೋ ಆಸಕ್ತಿ ಹೃದಯವನ್ನು ಹೊಕ್ಕಿಬಿಡುತ್ತದೆ. ನೀನು ಭಾವಿಸಬಹುದು, ನಿಷ್ಕಾಮಭಾವನೆಯಿಂದ ಕೆಲಸಮಾಡುತ್ತಿದ್ದೇನೆ ಅಂತ. ಆದರೆ ಆಗಲೇ ಹೃದಯದಲ್ಲಿ ಕೀರ್ತಿ ಸಂಪಾದಿಸುವ ಇಚ್ಛೆ ಬಂದುಬಿಟ್ಟಿರಬಹುದು, ಹೆಸರುವಾಸಿ ಆಗುವ ಇಚ್ಛೆ ಬಂದುಬಿಟ್ಟಿರಬಹುದು. ಇದೂ ಅಲ್ಲದೆ ಹೆಚ್ಚು ಕರ್ಮಗಳನ್ನು ಗಂಟು ಹಾಕಿಕೊಂಡರೆ ಅವುಗಳ ಒತ್ತಡದಲ್ಲಿ ಭಗವಂತನನ್ನು ಮರೆತುಬಿಡುತ್ತೀಯೆ’ ಆತನಿಗೆ ಮತ್ತೆ ಹೇಳಿದೆ, ‘ಶಂಭು, ನಿನಗೆ ಒಂದು ಪ್ರಶ್ನೆ ಹಾಕಬೇಕೆಂದಿದ್ದೇನೆ. ಒಂದು ಪಕ್ಷ ಭಗವಂತ ನಿನಗೆ ದರ್ಶನ ಕೊಟ್ಟರೆ, ನಿನಗೆ ಆತ ಬೇಕೊ ಅಥವಾ ಕೆಲವು ಹಾಸ್ಪಿಟಲ್ ಡಿಸ್ಪೆನ್ಸರಿಗಳು ಬೇಕೋ?’ ಆತ ದೊರತುಬಿಟ್ಟುದೇ ಆದರೆ ಆಗ ಬೇರೆ ಏನೂ ಬೇಕಾಗದು. ಸಕ್ಕರೆ ಪಾನಕ ದೊರೆತ ಮೇಲೆ ಜೋನಿ ಬೆಲ್ಲದ ಪಾನಕದ ಕಡೆ ಹೋಗಲಿಚ್ಛೆಯಾಗದು.
“ಯಾರು ಹಾಸ್ಪಿಟಲ್ ಡಿಸ್ಪೆನ್ಸರಿ ಕಟ್ಟಿಸಿ ಅದರಿಂದಲೆ ಆನಂದಪಡೆಯುವರೊ ಅವರು ಒಳ್ಳೆಯವರೆ; ಆದರೆ ಅವರು ಬೇರೆ ಶ್ರೇಣಿಗೆ ಸೇರಿದವರು. ಯಾರು ನಿಜವಾದ ಭಕ್ತನೋ ಆತನಿಗೆ ಭಗವಂತನೊಬ್ಬನಲ್ಲದೆ ಬೇರೆ ಏನೂ ಬೇಕಾಗಿಲ್ಲ. ಒಂದು ಪಕ್ಷ ಅನೇಕ ಕೆಲಸಗಳನ್ನು ಮಾಡಬೇಕಾಗಿ ಬಂದರೆ ಆತ ವ್ಯಾಕುಲನಾಗಿ ಪ್ರಾರ್ಥನೆಮಾಡುತ್ತಾನೆ, ‘ಹೇ ಭಗವಂತ, ಕೃಪೆಯಿಟ್ಟು ನನ್ನ ಕೆಲಸಕಾರ್ಯಗಳನ್ನು ಕಡಿಮೆಮಾಡಿಕೊಡು. ನೀನು ಹಾಗೆ ಮಾಡಿಕೊಡದಿದ್ದರೆ ಯಾವ ಮನಸ್ಸು ಹಗಲು ರಾತ್ರಿ ನಿನ್ನ ಪಾದಪದ್ಮಗಳಲ್ಲಿ ನೆಲೆಸಿರಬೇಕೊ ಅದು ಬರಿದೆ ವ್ಯಯವಾಗುತ್ತಿದೆ. ಅದರಲ್ಲಿ ವಿಷಯಚಿಂತನೆಯ ಕಾರ್ಯ ನಡೆಯುತ್ತಿದೆ.’ ಶುದ್ಧ ಭಕ್ತರ ಶ್ರೇಣಿಯು ಒಂದು ಪ್ರತ್ಯೇಕ ಶ್ರೇಣಿ. ಭಗವಂತನೇ ವಸ್ತು, ಉಳಿದುದೆಲ್ಲ ಅವಸ್ತು ಎಂಬ ಬೋಧೆ ಇಲ್ಲದಿದ್ದರೆ ಶುದ್ಧ ಭಕ್ತಿ ಉಂಟಾಗದು. ಸಂಸಾರ ಅನಿತ್ಯ, ಎರಡು ದಿನದ್ದು; ಯಾರು ಅದರ ಕರ್ತನೊ ಆತನೇ ಸತ್ಯ, ನಿತ್ಯ. ಈ ಜ್ಞಾನೋದಯವಾಗದಿದ್ದರೆ ಶುದ್ಧ ಭಕ್ತಿ ಉಂಟಾಗದು.
“ಜನಕಾದಿಗಳು ಭಗವಂತನ ಆದೇಶ ಪಡೆದು ಈ ಜಗತ್ತಿನಲ್ಲಿ ಕೆಲಸಕಾರ್ಯಗಳನ್ನು ಮಾಡಿದರು.
(ಬಂಕಿಮನಿಗೆ) “ಕೆಲಕೆಲವರು ಭಾವಿಸುತ್ತಾರೆ ಶಾಸ್ತ್ರ ಓದದಿದ್ದರೆ ಪುಸ್ತಕ ಓದದಿದ್ದರೆ ಭಗವಂತನನ್ನು ಪಡೆಯಲಾಗುವುದಿಲ್ಲ ಅಂತ. ಮೊದಲು ಜಗತ್ತಿನ ವಿಷಯ – ಜೀವರ ವಿಷಯವನ್ನು ಮೊದಲು ಅರಿಯಬೇಕು – ಮೊದಲು ಸೈನ್ಸು ಓದಬೇಕು ಅಂತ ಅವರ ಭಾವನೆ. (ಎಲ್ಲರೂ ನಗುತ್ತಾರೆ). ‘ಭಗವಂತನ ಸೃಷ್ಟಿಯನ್ನು ಅರಿತುಕೊಳ್ಳದೆ ಆತನನ್ನು ಅರಿಯಲಾಗೋದಿಲ್ಲ’ ಅಂತ ಅವರು ಹೇಳುತ್ತಾರೆ. ನಿನ್ನ ಅಭಿಪ್ರಾಯವೇನು? ಮೊದಲು ಸೈನ್ಸೊ, ಅಥವಾ ಭಗವಂತನೊ?”
ಬಂಕಿಮ: “ಹೌದು, ಮೊದಲು ವೈಚಿತ್ರ್ಯವನ್ನು ಅರಿಯಬೇಕು; ಜಗತ್ತಿನ ವಿಷಯ ವನ್ನು ಅರಿಯಬೇಕು. ಇದರ ಜ್ಞಾನವನ್ನು ಮೊದಲು ಸ್ವಲ್ಪ ಪಡೆದುಕೊಳ್ಳದೆ ಇದ್ದರೆ, ಭಗವಂತನನ್ನು ಅರಿಯುವುದೆಂತು? ಮೊದಲು ಪುಸ್ತಕ ಓದಿ ಅರಿಯಬೇಕು.”
ಶ್ರೀರಾಮಕೃಷ್ಣರು: “ನಿಮ್ಮೆಲ್ಲರದೂ ಒಂದೇ ಒಂದು ಕೂಗು! ಮೊದಲು ಭಗವಂತ ಬಳಿಕ ಆತನ ಸೃಷ್ಟಿ. ಆತನನ್ನು ಪಡೆದುಕೊಂಡರೆ ಇಚ್ಛೆ ಬಂದರೆ ಉಳಿದುದನ್ನೆಲ್ಲಾ ಅರಿತುಕೊಳ್ಳಬಹುದು.
“ಹೇಗೋ ಮಾಡಿ ಯದುಮಲ್ಲಿಕನೊಡನೆ ಪರಿಚಯಮಾಡಿಕೊಂಡುಬಿಟ್ಟರೆ ಬಳಿಕ ಏನಾದರು ನಿನಗೆ ಇಚ್ಛೆ ಇದ್ದರೆ, ಯದುಮಲ್ಲಿಕನಿಗೆ ಮನೆಗಳೆಷ್ಟಿವೆ ತೋಟಗಳೆಷ್ಟಿವೆ ಇವನ್ನೆಲ್ಲಾ ಅರಿತುಕೊಂಡುಬಿಡಬಲ್ಲೆ. ಯದುಮಲ್ಲಿಕ ತಾನೇ ಹೇಳಿಬಿಡುತ್ತಾನೆ. ಆದರೆ ಆತನ ಪರಿಚಯ ಮಾಡಿಕೊಳ್ಳದೆ ಇದ್ದರೆ, ಆತನ ಮನೆಯ ಜವಾನರು ನಿನ್ನನ್ನು ಒಳಗೆ ಬಿಡದೇ ಹೋದರೆ, ಆತನಿಗೆ ಲೇವಾದೇವಿ ಪತ್ರಗಳೆಷ್ಟಿವೆ, ತೋಟತುಡಿಕೆಗಳೆಷ್ಟಿವೆ 3 , ಇವುಗಳೆಲ್ಲದರ ಸಮಾಚಾರವನ್ನು ನೀನು ಅರಿಯುವ ಬಗೆ ಎಂತು? ಆತನನ್ನು ಅರಿತು ಕೊಂಡರೆ ಎಲ್ಲವನ್ನೂ ಅರಿಯಬಹುದು. ಆದರೆ ಸಾಮಾನ್ಯ ವಿಷಯಗಳ ಅರಿವಿನ ಆಕಾಂಕ್ಷೆ ಇರದು. ವೇದದಲ್ಲಿಯೂ ಈ ವಿಷಯ ಹೇಳಿದೆ; ವ್ಯಕ್ತಿಯನ್ನು ನೋಡದವರೆಗೆ ಆತನ ಗುಣಸಂಬಂಧವಾಗಿ ಮಾತುಕತೆಯಾಡಬಹುದು; ಆತ ಎದುರಿಗೆ ಕಾಣಿಸಿಕೊಳ್ಳು ವುದೇ ತಡ ಆಗ ಆ ವಿಧದ ಮಾತುಗಳೆಲ್ಲ ನಿಂತುಹೋಗಿಬಿಡುತ್ತವೆ. ಜನರು ಆತನನ್ನು ನೋಡಿಯೇ ಬಹಳ ಹರ್ಷಚಿತ್ತರಾಗುತ್ತಾರೆ. ಆತನೊಡನೆ ಬೆರೆತು ಆನಂದದಿಂದ ತುಂಬಿ ತುಳುಕಾಡಲಾರಂಭಿಸುತ್ತಾರೆ. ಆಗ ಆತನ ಗುಣ ವರ್ಣನೆಮಾಡುವುದು ಯಾವುದೂ ಇರುವುದಿಲ್ಲ.
“ಮೊದಲು ಭಗವಂತನ ಸಾಕ್ಷಾತ್ಕಾರ, ಬಳಿಕ ಆತನ ಸೃಷ್ಟಿ ಮೊದಲಾದವು. ವಾಲ್ಮೀಕಿಗೆ ರಾಮಮಂತ್ರ ಜಪಮಾಡಲು ಉಪದೇಶ ದೊರೆಯಿತು. ಆದರೆ ಆತನಿಗೆ ಗುರುವಾಜ್ಞೆಯಾಯಿತು, ‘ “ಮರಾ”, “ಮರಾ” ಅಂತ ಜಪ ಮಾಡಬೇಕು’ ಎಂದು. ‘ಮ’ ಅಂದರೆ ಭಗವಂತ, ‘ರಾ’ ಅಂದರೆ ಜಗತ್ತು ಎಂದು. ಮೊದಲು ಭಗವಂತ. ಬಳಿಕ ಜಗತ್ತು. ಆತನೊಬ್ಬನನ್ನು ಅರಿತರೆ ಎಲ್ಲವನ್ನೂ ಅರಿಯಬಹುದು. ಒಂದರ ಪಕ್ಕದಲ್ಲಿ ಒಂದೈವತ್ತು ಸೊನ್ನೆಗಳನ್ನು ಹಾಕಿದರೆ ಅದು ಒಂದು ದೊಡ್ಡ ಸಂಖ್ಯೆಯೇ ಆಗಿಬಿಡುತ್ತದೆ; ಆದರೆ ಆ ಒಂದನ್ನು ಅಳಿಸಿಹಾಕಿಬಿಟ್ಟರೆ ಏನೂ ಇರದು. ಏಕವೇ ಅನೇಕಕ್ಕೆ ಕಾರಣ. ಮೊದಲು ಏಕ, ಬಳಿಕ ಅನೇಕ, ಮೊದಲು ಭಗವಂತ, ಬಳಿಕ ಜೀವ ಜಗತ್ತು.
“ನಿನಗೆ ಆವಶ್ಯಕವಾಗಿರೋದು ಭಗವಂತನ ಸಾಕ್ಷಾತ್ಕಾರ. ನೀನು ಏಕೆ ಅಷ್ಟೊಂದು ಜಗತ್ತು, ಸೃಷ್ಟಿ, ಸೈನ್ಸು, ಇವುಗಳ ವಿಷಯವಾಗಿ ತಲೆ ಚಚ್ಚಿಕೊಳ್ಳುತ್ತಿದ್ದೀಯೆ? ನಿನಗೆ ಬೇಕಾಗಿರುವುದು ಮಾವಿನ ಹಣ್ಣು. ತೋಟದಲ್ಲಿ ಎಷ್ಟು ನೂರು ಮರಗಳಿವೆ, ಎಷ್ಟು ಸಾವಿರ ಕೊಂಬೆಗಳಿವೆ, ಎಷ್ಟು ಲಕ್ಷ-ಎಷ್ಟು ಕೋಟಿ ಎಲೆಗಳಿವೆ ಇವೇ ಮೊದಲಾದವು ಗಳ ವೃತ್ತಾಂತ ನಿನಗೇಕೆ? ನೀನು ಬಂದಿರೋದು ಮಾವಿನ ಹಣ್ಣು ತಿನ್ನುವುದಕ್ಕೆ. ತಿಂದು ಹೋಗು. ಈ ಜಗತ್ತಿಗೆ ಮನುಷ್ಯ ಬಂದಿರುವುದು ಭಗವಂತನನ್ನು ಪಡೆದುಕೊಳ್ಳುವುದಕ್ಕೆ. ಅದನ್ನು ಮರೆತು ಉಳಿದ ವಿಷಯಗಳಿಗೆ ಮನಸ್ಸು ಹಚ್ಚುವುದು ಒಳ್ಳೆಯದಲ್ಲ. ಮಾವಿನ ಹಣ್ಣು ತಿನ್ನುವುದಕ್ಕೆ ಬಂದೆ, ಅದನ್ನು ತಿಂದುಹೋಗು.”
ಬಂಕಿಮ: “ಎಲ್ಲಿ, ಮಾವಿನ ಹಣ್ಣು ಎಲ್ಲಿ ಸಿಕ್ಕೀತು?”
ಶ್ರೀರಾಮಕೃಷ್ಣರು: “ವ್ಯಾಕುಲನಾಗಿ ಆತನಿಗೆ ಪ್ರಾರ್ಥಿಸು, ಹೃತ್ಪೂರ್ವಕವಾಗಿ ಪ್ರಾರ್ಥಿಸಿದರೆ ಆತ ಕೇಳಿಯೇ ಕೇಳುತ್ತಾನೆ. ಬಹುಶಃ ಯಾರಾದರು ಒಬ್ಬರ ಸತ್ಸಂಗವನ್ನು, ನಿನಗೆ ದೊರಕಿಸಿಕೊಟ್ಟುಬಿಡಬಹುದು. ಅದು ನಿನಗೆ ಬಹಳ ಉಪಕಾರಿಯಾಗಿ ಬಿಡಬಹುದು. ಬಹುಶಃ ಯಾರಾದರೂ ನಿನಗೆ ಹೇಳಿಬಿಡಬಹುದು, ಹೀಗೆ ಮಾಡು, ಅದರಿಂದ ನಿನಗೆ ಭಗವಂತ ದೊರೆತುಬಿಡುತ್ತಾನೆ ಅಂತ.”
ಬಂಕಿಮ: “ಯಾರು? ಗುರು? ಆತ, ತಾನೋ ಒಳ್ಳೊಳ್ಳೆ ಮಾವಿನ ಹಣ್ಣು ತಿಂದು, ನಮಗೆ ಕೆಟ್ಟದ್ದನ್ನು ಕೊಡುತ್ತಾನೆ!” (ನಗು)
ಶ್ರೀರಾಮಕೃಷ್ಣರು: “ಆತ ಹಾಗೆ ಏಕೆ ಮಾಡಿಯಾನು? ತಾಯಿಗೆ ಗೊತ್ತಿದೆ, ಯಾರ ಜೀರ್ಣಶಕ್ತಿ ಎಷ್ಟು ಎನ್ನುವುದು. ಎಲ್ಲರೂ ಪಲಾವೂ ಕಾಲಿಯಾ ತಿಂದು ಅರಗಿಸಿಕೊಳ್ಳ ಬಲ್ಲರೇನು? ಮನೆಗೆ ಮೀನು ತಂದರೆ ಎಲ್ಲಾ ಮಕ್ಕಳಿಗೂ ತಾಯಿ ಪಲಾವು ಕಾಲಿಯಾ ಮಾಡಿಬಡಿಸಳು. ಯಾರು ದುರ್ಬಲರೋ, ಯಾರ ಹೊಟ್ಟೆ ಸರಿಯಾಗಿ ಇಲ್ಲವೊ, ಅವಕ್ಕೆ ಮೀನಿನ ಸಾರು ಮಾಡಿ ಬಡಿಸುತ್ತಾಳೆ. ಹಾಗೆಂದು ತಾಯಿ ಅವನ್ನು ಕಡಿಮೆಯಾಗಿ ಪ್ರೀತಿಸುತ್ತಾಳೇನು?
“ಗುರುವಾಕ್ಯದಲ್ಲಿ ವಿಶ್ವಾಸವಿಡಬೇಕು. ಗುರುವೇ ಸಚ್ಚಿದಾನಂದ, ಸಚ್ಚಿದಾನಂದನೇ ಗುರು, ಆತನ ಮಾತಿನಲ್ಲಿ ವಿಶ್ವಾಸವಿಟ್ಟರೆ, – ಬಾಲಕನ ಹಾಗೆ ವಿಶ್ವಾಸವಿಟ್ಟರೆ, – ಭಗವಂತ ದೊರೆತುಬಿಡುತ್ತಾನೆ. ಬಾಲಕನದು ಎಂಥ ವಿಶ್ವಾಸ! ಒಬ್ಬನನ್ನು ತೋರಿಸಿ ತಾಯಿ ಮಗುವಿಗೆ ಹೇಳಿದರೆ, ‘ಆತ ನಿನ್ನ ಅಣ್ಣನಾಗಬೇಕು’ ಅಂತ, ಒಡನೆಯೇ ಅದು ನಂಬುತ್ತದೆ. ಆತ ತನ್ನ ಅಣ್ಣ ಅಂತ. ಆತ ಬ್ರಾಹ್ಮಣನಾಗಿದ್ದರೂ ಸರಿಯೆ ಅಥವಾ ಕಮ್ಮಾರನಾಗಿದ್ದರೂ ಸರಿಯೇ, ತಾಯಿ ಮಾತಿನಲ್ಲಿ ಅದಕ್ಕೆ ನೂರಕ್ಕೆ ನೂರಿಪ್ಪತ್ತೈದು ಭಾಗ ವಿಶ್ವಾಸ. ತಾಯಿ ಹೇಳಿದರೆ, ‘ಆ ಕೊಠಡಿಯಲ್ಲಿ ಗೊಗ್ಗಯ್ಯನಿದ್ದಾನೆ’ ಅಂತ. ಅಲ್ಲಿ ಗೊಗ್ಗಯ್ಯನಿದ್ದಾನೆ ಅಂತ ಮಗು ಸಂಪೂರ್ಣವಾಗಿ ನಂಬಿಬಿಡುತ್ತದೆ. ಬಾಲಕನ ವಿಶ್ವಾಸ ಅನ್ನುವುದು ಇದೇ. ಗುರುವಾಕ್ಯದಲ್ಲಿ ಇಂಥ ವಿಶ್ವಾಸ ಬೇಕು. ಕಪಟಿಯ, ಲೆಕ್ಕಾಚಾರದ, ವಿಚಾರದ ಬುದ್ಧಿಯಿಂದ ಭಗವಂತನನ್ನು ಪಡೆಯಲಾಗೋದಿಲ್ಲ. ಶ್ರದ್ಧಾವಂತನಾಗಿಯೂ ಸರಳನಾಗಿಯೂ ಆಗಬೇಕು; ಕಪಟಿಯಾದರೆ ಆಗದು. ಸರಳನಿಗೆ ಭಗವಂತ ಬಹಳ ಸಹಜವಾಗಿ ದೊರೆತುಬಿಡುತ್ತಾನೆ; ಆದರೆ ಕಪಟಿಯಿಂದ ಆತ ಬಹಳ ದೂರದಲ್ಲೇ ಇರುತ್ತಾನೆ.
“ಯಾವ ರೀತಿ ಮಗು ತನ್ನ ತಾಯಿಯನ್ನು ಕಾಣದೆ ದಿಗ್ಭ್ರಮೆಗೊಂಡು, ಅದರ ಬಾಯಿಗೆ ಸಂದೇಶ, ಮಿಠಾಯಿ ಯಾವುದು ಹಾಕಿದರೂ ಅದೊಂದೂ ಅದಕ್ಕೆ ಬೇಡವಾಗಿ ಏನು ಮಾಡಿದರೂ ತಾಯಿಯನ್ನು ಮರೆಯದೆ ಹೇಳುತ್ತದೆಯೊ, ‘ಒಂದೂ ಬೇಡ, ನಾನು ತಾಯ ಹತ್ತಿರ ಹೋಗಬೇಕು’ ಅಂತ, ಅದೇ ರೀತಿಯಾಗಿ ಭಗವಂತನಿಗಾಗಿ ಮನುಷ್ಯ ವ್ಯಾಕುಲಪಡಬೇಕು. ಆಹಾ! ಎಂಥ ಅವಸ್ಥೆ! ಮಗು ತನ್ನ ತಾಯಿಗಾಗಿ ಎಷ್ಟೊಂದು ವ್ಯಾಕುಲಪಡುತ್ತದೆ! ಯಾವುದರಿಂದಲೂ ಅದು ತನ್ನ ತಾಯಿಯನ್ನು ಮರೆಯದು. ಯಾರಿಗೆ ಈ ಜಗತ್ತಿನ ಸುಖೋಪಭೋಗಗಳೂ ರುಚಿಸವೊ, ಯಾರಿಗೆ ಬೇರೆ ಯಾವುವೂ ಬೇಕಾಗಿಲ್ಲವೊ, ಹಣ, ಹೆಸರು, ದೇಹಸುಖ, ಇಂದ್ರಿಯಸುಖ ಇವು ಯಾವುವೂ ಹಿಡಿಸವೊ, – ಆತ ಹೃತ್ಪೂರ್ವಕವಾಗಿಯೂ ಭಗವಂತನ ದರ್ಶನಕ್ಕಾಗಿ ಅತ್ಯಂತ ಕಾತರ ನಾಗುತ್ತಾನೆ. ಅಂಥವರಿಗಾಗಿಯೇ ಭಗವತಿ ತನ್ನ ಎಲ್ಲಾ ಕೆಲಸಗಳನ್ನು ಬಿಟ್ಟೇ ಓಡಿಬರ ಬೇಕಾಗುತ್ತದೆ.
“ವ್ಯಾಕುಲತೆಯೇ ಸರ್ವಸ್ವ. ಯಾವ ಮಾರ್ಗದಲ್ಲಾದರೂ ಹೋಗು-ನೀನು ಹಿಂದೂ ಮುಸಲ್ಮಾನ, ಕ್ರಿಶ್ಚಿಯನ್, ಶಾಕ್ತ, ಬ್ರಾಹ್ಮ ಯಾವುದು ಬೇಕಾದರೂ ಆಗಿರು – ಆವಶ್ಯಕ ವಾಗಿ ಬೇಕಾಗಿರೋದು ವ್ಯಾಕುಲತೆ. ಆತ ನಮ್ಮ ಅಂತರ್ಯಾಮಿ. ವ್ಯಾಕುಲತೆ ಯೊಂದಿದ್ದರೆ ನಾವು ತಪ್ಪು ದಾರಿ ಹಿಡಿದಿದ್ದರೂ ಚಿಂತೆಯಿಲ್ಲ, ಆತ ಮತ್ತೆ ನಮ್ಮನ್ನು ಒಳ್ಳೇ ಮಾರ್ಗಕ್ಕೆ ತಂದು ಸೇರಿಸಿಬಿಡುತ್ತಾನೆ.
“ಪ್ರತಿಯೊಂದು ಪಥದಲ್ಲಿಯೂ ಕುಂದುಕೊರತೆಗಳು ಇದ್ದೇ ಇವೆ, – ಪ್ರತಿಯೊ ಬ್ಬರೂ ಭಾವಿಸುತ್ತಾರೆ. ತಮ್ಮ ಗಡಿಯಾರ ಸರಿಯಾಗಿ ನಡೆಯುತ್ತಿದೆ ಅಂತ; ಆದರೆ ಯಾರದೂ ವಾಸ್ತವಿಕವಾಗಿ ಸಂಪೂರ್ಣ ಸರಿಯಾಗಿ ನಡೆಯುವುದಿಲ್ಲ. ಅದು ಹಾಗೆಂದು ಯಾರ ಕೆಲಸವೂ ನಿಂತುಕೊಂಡುಬಿಡೋದಿಲ್ಲ. ವ್ಯಾಕುಲತೆ ಇದ್ದರೆ ಸಾಧುಸಂಗ ದೊರೆತು ಬಿಡುತ್ತದೆ. ಸಾಧುಸಂಗದಿಂದ ಬಹುಮಟ್ಟಿಗೆ ತಮ್ಮ ತಮ್ಮ ಗಡಿಯಾರವನ್ನು ಸರಿಮಾಡಿ ಕೊಳ್ಳಬಹುದು.”
ಬ್ರಾಹ್ಮಸಮಾಜದ ಅನುಯಾಯಿ ತ್ರೈಲೋಕ್ಯ ಹಾಡುತ್ತಿದ್ದಾನೆ. ಪರಮಹಂಸರು ಕೀರ್ತನೆಯನ್ನು ಒಂದು ಸ್ವಲ್ಪ ಕೇಳುತ್ತಿದ್ದ ಹಾಗೆಯೇ ಭಗವದಾವೇಶದಿಂದ ಎದ್ದುನಿಂತು ಬಾಹ್ಯಜ್ಞಾನಶೂನ್ಯರಾಗಿದ್ದಾರೆ. ಒಮ್ಮೆಗೆಯೆ ಅಂತರ್ಮುಖರಾಗಿ ಸಮಾಧಿಸ್ಥರಾಗಿದ್ದಾರೆ. ಎಲ್ಲರೂ ಅವರನ್ನು ಸುತ್ತುಗಟ್ಟಿ ನಿಂತಿದ್ದಾರೆ. ಬಂಕಿಮ ಗುಂಪನ್ನು ತಳ್ಳಿಕೊಂಡು ಬಂದು ಪರಮಹಂಸರ ಹತ್ತಿರ ನಿಂತು ಅವರನ್ನು ನೆಟ್ಟದೃಷ್ಟಿಯಿಂದ ನೋಡುತ್ತಿದ್ದಾನೆ. ಆತ ಸಮಾಧಿಸ್ಥ ಪುರುಷರನ್ನು ಎಂದೂ ನೋಡಿರಲಿಲ್ಲ.
ಸ್ವಲ್ಪ ಹೊತ್ತಾದನಂತರ ಪರಮಹಂಸರು ಕಿಂಚಿತ್ ಬಾಹ್ಯಪ್ರಜ್ಞೆಯನ್ನು ಪಡೆದು ಪ್ರೇಮೋನ್ಮತ್ತತೆಯಿಂದ ನರ್ತಿಸಲಾರಂಭಿಸಿದರು. ಅದು ಗೌರಾಂಗನೇ ಶ್ರೀವಾಸನ ಮನೆ ಯಲ್ಲಿ ಭಕ್ತರೊಡನೆ ನರ್ತಿಸುತ್ತಿರುವನೊ ಏನೊ ಎಂಬಂತ್ತಿತ್ತು. ಅದು ಒಂದು ಅದ್ಭುತ ನೃತ್ಯವೇ ಆಗಿತ್ತು. ಇಂಗ್ಲೀಷು ವಿದ್ಯಾಭ್ಯಾಸ ಪಡೆದ ಬಂಕಿಮನೇ ಮೊದಲಾದವರು ಇದನ್ನು ನೋಡಿ ಆಶ್ಚರ್ಯಚಕಿತರಾದರು. ಭಾವಿಸಿದರು, ಪ್ರೇಮಾನಂದ ಎಂಬುದು ಇದೇ ಏನು? ಏನದ್ಭುತವಾದ್ದು! ಅಂತ.
ಇಂಥ ದೇವದುರ್ಲಭ ನೃತ್ಯ ಮತ್ತು ಕೀರ್ತನೆ ಮುಗಿದ ನಂತರ ಪರಮಹಂಸರು ತಮ್ಮ ಹಣೆಯಿಂದ ನೆಲವನ್ನು ಮುಟ್ಟಿ ಪ್ರಣಾಮಮಾಡುತ್ತ ಹೇಳಿದರು, “ಭಾಗವತ – ಭಕ್ತ – ಭಗವಂತ! ಜ್ಞಾನಿಗಳ, ಯೋಗಿಗಳ, ಭಕ್ತ ಚರಣಗಳಿಗೆ ಪ್ರಣಾಮ! ಮತ್ತೆಲ್ಲರ ಚರಣಗಳಿಗೂ ಪ್ರಣಾಮ” ಬಳಿಕ ಅವರು ಕೆಳಗೆ ಕುಳಿತುಕೊಂಡರು. ಭಕ್ತರೆಲ್ಲ ಅವರ ಸುತ್ತಲೂ ಕುಳಿತುಕೊಂಡರು.
ಬಂಕಿಮ ಪರಮಹಂಸರಿಗೆ: “ಭಕ್ತಿ ಏನು ಮಾಡಿದರೆ ಉಂಟಾದಿತು?”
ಶ್ರೀರಾಮಕೃಷ್ಣರು: “ವ್ಯಾಕುಲತೆ ಬೇಕು, ಯಾವ ರೀತಿಯಾಗಿ ಮಗು ತಾಯಿಯನ್ನು ಕಾಣದೆ ದಿಗ್ಭ್ರಮೆಗೊಂಡು ಆಕೆಗಾಗಿ ಅಳುವುದೊ, ಅದೇ ರೀತಿಯಾಗಿ ವ್ಯಾಕುಲನಾಗಿ ಭಗವಂತನಿಗಾಗಿ ಅತ್ತರೆ ಆಗ ಭಗವಂತ ಕೂಡ ದೊರೆತುಬಿಡುತ್ತಾನೆ.
“ಅರುಣೋದಯವಾದರೆ ಪೂರ್ವ ಹೊಂಬಣ್ಣವಾಗುತ್ತದೆ. ಆಗ ಗೊತ್ತಾಗುತ್ತದೆ ಸೂರ್ಯೋದಯಕ್ಕೆ ಇನ್ನು ಹೆಚ್ಚು ಹೊತ್ತು ಇಲ್ಲ. ಅದೇ ರೀತಿ ಯಾರಲ್ಲಿಯೇ ಆಗಲಿ ಭಗವಂತನಿಗಾಗಿ ಅತ್ಯಂತ ಅಗಾಧವಾದ ವ್ಯಾಕುಲತೆ ಉಂಟಾಗಿರುವುದು ಕಂಡುಬಂದರೆ, ಆಗ ಚೆನ್ನಾಗಿ ಗೊತ್ತಾಗುತ್ತದೆ ಆ ವ್ಯಕ್ತಿ ಸಾಕ್ಷಾತ್ಕಾರಕ್ಕಾಗಿ ಇನ್ನು ಹೆಚ್ಚು ಕಾಲ ಕಾದಿರ ಬೇಕಾಗಿಲ್ಲ ಅಂತ.
“ಒಬ್ಬ ಶಿಷ್ಯ ಗುರುವನ್ನು ಕೇಳಿದ, ‘ಪೂಜ್ಯರೆ. ದಯವಿಟ್ಟು ಹೇಳಿ, ಭಗವಂತನನ್ನು ಪಡೆಯುವುದು ಹೇಗೆ?’ ಗುರು ಹೇಳಿದ, ‘ಬಾ ನನ್ನೊಡನೆ, ನಿನಗೆ ತೋರಿಸಿಕೊಡುತ್ತೇನೆ.’ ಹೀಗೆಂದು ಹೇಳಿ ಗುರು ಆತನನ್ನು ಸಂಗಡ ಕರೆದುಕೊಂಡು ಒಂದು ಕೆರೆಯ ಹತ್ತಿರಕ್ಕೆ ಹೋದ. ಇಬ್ಬರೂ ನೀರಿಗೆ ಇಳಿದರು. ಬಳಿಕ ಗುರು ಇದ್ದಕ್ಕಿದ್ದ ಹಾಗೆ ಶಿಷ್ಯನನ್ನು ನೀರಿನೊಳಕ್ಕೆ ಮುಳುಗಿಸಿ ಅದುಮಿ ಹಿಡಿದ. ಒಂದು ಸ್ವಲ್ಪ ಹೊತ್ತಿನ ನಂತರ ಆತನನ್ನು ಬಿಟ್ಟುಬಿಡಲಾಗಿ ಶಿಷ್ಯ ನೀರಿನಿಂದ ಮೇಲೆಕ್ಕೆ ಎದ್ದುಬಂದು ನಿಂತ. ಆಗ ಗುರು ಕೇಳಿದ, ‘ನೀರಿನೊಳಗಿದ್ದಾಗ ನಿನಗೇನನಿಸುತ್ತಿತ್ತು?’ ಶಿಷ್ಯ ಹೇಳಿದ, ‘ಪ್ರಾಣ ಹೋಗುವುದರಲ್ಲಿತ್ತು; ಒಂದು ಗುಟುಕು ಉಸಿರಿಗಾಗಿ ಪ್ರಾಣ ಸುಮ್ಮನೆ ಒದ್ದಾಡುತ್ತಿತ್ತು.’ ಆಗ ಗುರು ಹೇಳಿದ: ‘ಯಾವಾಗ ನಿನ್ನ ಪ್ರಾಣ ಈ ರೀತಿ ಭಗವಂತನಿಗಾಗಿ ವ್ಯಾಕುಲಪಡುವುದೊ ಆಗ ತಿಳಿದುಕೊ ನೀನು ಹೆಚ್ಚು ಕಾಲ ಆತನ ದರ್ಶನಕ್ಕಾಗಿ ಕಾಯಬೇಕಾಗಿಲ್ಲ ಅಂತ.’
(ಬಂಕಿಮನಿಗೆ): “ನಿನಗೊಂದು ವಿಷಯ ತಿಳಿಸುತ್ತೇನೆ. ಸುಮ್ಮನೆ ಮೇಲೆಯೇ ತೇಲಿದರೆ ಏನು ದೊರೆಯುತ್ತದೆ? ಒಂದು ಸ್ವಲ್ಪ ಮುಳುಗು. ರತ್ನಗಳು ಬಹಳ ಆಳದಲ್ಲಿ ಬಿದ್ದಿವೆ. ನೀರಿನ ಮೇಲೆ ಕೈಕಾಲು ಹೊಡೆದರೆ ಏನಾಗುತ್ತದೆ? ಮಾಣಿಕ್ಯ ವಾಸ್ತವಿಕವಾಗಿ ಬಹಳ ಭಾರವಾದದ್ದು; ಅದು ನೀರಿನ ಮೇಲೆ ತೇಲದು; ಅದು ಮುಳುಗಿ ತಳಕ್ಕೆ ಹೋಗಿ ಕುಳಿತುಕೊಳ್ಳುತ್ತದೆ. ನಿನಗೆ ನಿಜವಾದ ರತ್ನ ಬೇಕಾಗಿದ್ದರೆ ನೀರಿನ ಆಳಕ್ಕೆ ಮುಳುಗ ಬೇಕು.”
ಬಂಕಿಮ: “ಮಹಾಶಯರೆ, ನಾವೇನು ಮಾಡುವುದು? ಬೆನ್ನಿಗೆ ಬೆಂಡು ಬಿಗಿದಿದೆ; ಮುಳುಗಲು ಬಿಟ್ಟುಕೊಡಲೊಲ್ಲದು.” (ಎಲ್ಲರೂ ನಗುತ್ತಾರೆ).
ಶ್ರೀರಾಮಕೃಷ್ಣರು: “ಆತನ ಸ್ಮರಣೆಮಾಡಿದರೆ ಸಕಲ ಪಾಪಗಳೂ ಭಸ್ಮವಾಗಿ ಹೋಗುತ್ತದೆ. ಮುಳುಗು ಹಾಕಲೇಬೇಕು. ಇಲ್ಲದಿದ್ದರೆ ರತ್ನ ದೊರೆಯದು. ಒಂದು ಹಾಡು ಕೇಳು.”
ಪರಮಹಂಸರು ತಮ್ಮ ದೇವದುರ್ಲಭ ಮಧುರ ಕಂಠದಿಂದ ಹಾಡಿದರು:
ಮುಳುಗು ಮುಳುಗು ಮನವೇ-
ಹಿರಿಯೊಲವಿನ ಕಡಲಾಳಕೆ…..
ಎಲ್ಲರೂ ಈ ಹಾಡನ್ನು ಸ್ತಂಭೀಭೂತರಾಗಿ ಕೇಳಿದರು. ಈ ಹಾಡನ್ನು ಹಾಡಿದ ನಂತರ ಮತ್ತೆ ಪರಮಹಂಸರು ಮಾತು ಮುಂದುವರಿಸಿದರು.
ಶ್ರೀರಾಮಕೃಷ್ಣರು ಬಂಕಿಮನಿಗೆ: “ಕೆಲಕೆಲವರಿಗೆ, ಮುಳುಗಲು ಇಚ್ಛೆ ಇಲ್ಲ. ಅವರು ಹೇಳುತ್ತಾರೆ: ‘ಭಗವಂತ, ಭಗವಂತ ಅಂತ ತಲೆ ಚಚ್ಚಿಕೊಂಡು ಕೊನೆಗೆ ಹುಚ್ಚರಾಗಿ ಬಿಡೋಣವೇನು?’ ಯಾರು ಭಗವಂತನ ಪ್ರೇಮದಿಂದ ಮತ್ತರಾಗಿದ್ದಾರೊ ಅವರ ಸಂಬಂಧವಾಗಿ ಅವರು ‘ಇವರಿಗೆ ತಲೆ ಕೆಟ್ಟುಹೋಗಿದೆ’ ಅಂತ ಹೇಳುತ್ತಾರೆ. ಆದರೆ ಈ ಜನರಿಗೆ ಗೊತ್ತಾಗದು; ಸಚ್ಚಿದಾನಂದ ಅಮೃತಸಾಗರ ಎಂಬುದು. ನಾನು ಒಮ್ಮೆ ನರೇಂದ್ರನನ್ನು ಕೇಳಿದೆ, ‘ಒಂದು ಬಟ್ಟಲ ತುಂಬ ಸಕ್ಕರೆಪಾನಕ ಇದೆ, ನೀನು ಒಂದು ನೊಣ ಆಗಿದ್ದೀಯೆ ಅಂತ. ನೀನು ಎಲ್ಲಿ ಕುಳಿತು ಪಾನಕ ಕುಡಿಯುವೆ ಹೇಳು ನೋಡೋಣ?’ ನರೇಂದ್ರ ‘ಬಟ್ಟಲ ಅಂಚಿನಲ್ಲಿ ಕುಳಿತು ಮುಖವನ್ನು ಮುಂದಕ್ಕೆ ಚಾಚಿ ಕುಡಿಯುತ್ತೇನೆ’ ಅಂತ ಹೇಳಿದ. ನಾನು, ‘ಹಾಗೇಕೆ ಮಾಡಬೇಕು? ಅದರ ಮಧ್ಯಕ್ಕೆ ಮುಳುಗಿ ಕುಡಿದರೆ ತಪ್ಪೇನು?’ ಅಂತ ಕೇಳಿದೆ. ಆತ ಹೇಳಿದ, ‘ಆಗ ಆ ಪಾನಕದಲ್ಲಿ ಸಿಕ್ಕಿಕೊಂಡುಬಿಟ್ಟು ಸತ್ತುಹೋಗಿಬಿಡುತ್ತೇನೆ’ ಎಂದು ಹೇಳಿದ. ಅದಕ್ಕೆ ನಾನು ಹೇಳಿದೆ. ‘ಮಗು, ಸಚ್ಚಿದಾನಂದ ಪಾನಕ ಅಂಥದೇನಲ್ಲ, ಅದು ಅಮೃತದ ಪಾನಕ. ಅದರಲ್ಲಿ ಮುಳುಗಿದರೆ ಮನುಷ್ಯ ಸಾಯುವುದಿಲ್ಲ, ಅಮರನಾಗಿಬಿಡುತ್ತಾನೆ.
“ಅದಕ್ಕಾಗಿಯೆ ನಾನು ಹೇಳುವುದು, ‘ಆಳಕ್ಕೆ ಮುಳುಗಿ’ ಅಂತ. ಹೆದರಬೇಕಾಗಿಲ್ಲ, ಮುಳುಗಿದರೆ ಅಮರರಾಗುತ್ತೀರಿ.”
ಈಗ ಬಂಕಿಮ ಪರಮಹಂಸರಿಗೆ ಪ್ರಣಾಮಾಡುತ್ತಿದ್ದಾನೆ. ಇನ್ನೇನು ಹೊರಡುವುದ ರಲ್ಲಿದ್ದಾನೆ.
ಬಂಕಿಮ: “ಮಹಾಶಯರೆ, ನೀವು ಭಾವಿಸಬಹುದಾದಷ್ಟು ಮೂರ್ಖನೇನಲ್ಲ ನಾನು. ನನ್ನದೊಂದು ಪ್ರಾರ್ಥನೆ – ಕೃಪೆಮಾಡಿ ನನ್ನ ಕುಟೀರದಲ್ಲಿ ಒಮ್ಮೆ ತಮ್ಮ ಪಾದಧೂಳಿ -”
ಶ್ರೀರಾಮಕೃಷ್ಣರು (ನಗುತ್ತ) : “ಬಹಳ ಒಳ್ಳೆಯದು, ಭಗವಂತನ ಇಚ್ಛೆಯಿದ್ದರೆ.”
ಬಂಕಿಮ: “ಅಲ್ಲಿಯೂ ನೋಡುತ್ತೀರಿ ಭಕ್ತರನ್ನು.”
ಶ್ರೀರಾಮಕೃಷ್ಣರು(ನಗುತ್ತ): “ಓಹೊ! ಎಂಥ ಭಕ್ತರನ್ನು? ಯಾರು ‘ಗೋಪಾಲ! ಕೇಶವ! ಕೇಶವ!’ ಅಂತ ಹೇಳುತ್ತಿದ್ದರೊ ಅಂಥವರನ್ನೇನು” (ಎಲ್ಲರೂ ನಗುತ್ತಾರೆ).
ಒಬ್ಬ ಭಕ್ತ: “ಮಹಾಶಯರೆ, ‘ಗೋಪಾಲ! ಗೋಪಾಲ!’ ಎಂಬ ಕಥೆಯೇನು?”
ಶ್ರೀರಾಮಕೃಷ್ಣರು (ನಗುತ್ತ): “ಹಾಗಾದರೆ ಹೇಳುತ್ತೇನೆ ಕೇಳು. ಒಂದು ಸ್ಥಳದಲ್ಲಿ ಅಕ್ಕಸಾಲಿಗರ ಅಂಗಡಿಯೊಂದು ಇದೆ. ಅವರು ಪರಮವೈಷ್ಣವರು; ಕೊರಳಲ್ಲಿ ತುಲಸೀ ಮಾಲೆ, ಹಣೆಗೆ ತಿಲಕ, ಯಾವಾಗ ನೋಡಿದರೂ ಕೈಯಲ್ಲಿ ಜಪಮಾಲೆ ಚೀಲ, ಸರ್ವದಾ ಹರಿನಾಮೋಚ್ಚಾರಣೆ. ಅವರನ್ನು ಬಹುಮಟ್ಟಿಗೆ ಸಾಧುಗಳೇ ಅಂತ ಹೇಳಬಹುದು. ಆದರೆ ಹೊಟ್ಟೆಪಾಡಿಗಾಗಿ ಅವರು ಚಿನ್ನದ ಕೆಲಸ ಮಾಡಬೇಕಾಗಿದೆ; ಹೆಂಡತಿ ಮಕ್ಕಳನ್ನು ಸಾಕಲೇ ಬೇಕಾಗಿದೆಯಲ್ಲ, ಅದಕ್ಕಾಗಿ. ಅವರು ಪರಮವೈಷ್ಣವರು ಅಂತ ಕೇಳಿ ಅನೇಕ ಗಿರಾಕಿಗಳು ಅವರ ಅಂಗಡಿಗೆ ಬರುತ್ತಾರೆ. ಏಕೆಂದರೆ ಅವರಿಗೆ ಗೊತ್ತಿದೆ, ಈ ಅಂಗಡಿ ಯವರು ತಮ್ಮ ಚಿನ್ನ ಬೆಳ್ಳಿಯನ್ನು ಅಪಹರಿಸೋದಿಲ್ಲ ಅಂತ. ಗಿರಾಕಿ ಅಂಗಡಿಗೆ ಹೋಗಿ ನೋಡಿದೊಡನೆಯೆ, ಅಲ್ಲಿನವರು ಬಾಯಲ್ಲಿ ಹರಿನಾಮೋಚ್ಚಾರಣೆ ಮಾಡುತ್ತ ಕೈಯಲ್ಲಿ ಕೆಲಸಮಾಡುತ್ತಿರುವುದು ಕಣ್ಣಿಗೆ ಬೀಳುತ್ತದೆ. ಗಿರಾಕಿ ಅಂಗಡಿಗೆ ಹೋಗಿ ಕುಳಿತುಕೊಳ್ಳು ವುದೇ ತಡ ಒಬ್ಬ ಕೆಲಸಗಾರ ಗಟ್ಟಿಯಾಗಿ ಹೇಳಲಾರಂಭಿಸುತ್ತಾನೆ, ‘ಕೇಶವ! ಕೇಶವ! ಕೇಶವ!’ ಅಂತ. ಒಂದು ಕ್ಷಣ ಬಿಟ್ಟು ಇನ್ನೊಬ್ಬ ಹೇಳಲಾರಂಭಿಸುತ್ತಾನೆ, ‘ಗೋಪಾಲ! ಗೋಪಾಲ! ಗೋಪಾಲ!’ ಅಂತ. ಬಳಿಕ ಗಿರಾಕಿಯೊಡನೆ ಒಂದಿಷ್ಟು ಮಾತಾಡಿ ಮತ್ತೊಬ್ಬ ಹೇಳಲಾರಂಭಿಸುತ್ತಾನೆ, ‘ಹರಿ! ಹರಿ! ಹರಿ!’ ಅಂತ. ಒಡವೆ ಮಾಡಿಸೋ ಮಾತು ಇನ್ನೇನು ಮುಗಿಯುತ್ತದೆ ಅನ್ನುವಷ್ಟರಲ್ಲಿ ನಾಲ್ಕನೆಯವ ಹೇಳಲಾರಂಭಿಸುತ್ತಾನೆ, ‘ಹರ! ಹರ! ಹರ!’ ಅಂತ. ಕೆಲಸಗಾರರ ಅಷ್ಟೊಂದು ಭಕ್ತಿ ನೋಡಿ, ಗಿರಾಕಿಗಳು ಅಂಗಡಿಯವರಿಗೆ ತಮ್ಮ ಚಿನ್ನ ಬೆಳ್ಳಿ ಕೊಟ್ಟು ನಿಶ್ಚಿಂತರಾಗಿರುತ್ತಾರೆ; ಅವರಿಗೆ ಗೊತ್ತಿದೆ ಇವರು ಎಂದಿಗೂ ಮೋಸ ಮಾಡೋರಲ್ಲ ಅಂತ.
“ಆದರೆ ವಿಷಯ ಏನು ಎಂಬುದು ಗೊತ್ತೆ? ಗಿರಾಕಿ ಬಂದೊಡನೆ ‘ಕೇಶವ! ಕೇಶವ!’ ಅಂತ ಯಾರು ಹೇಳಿದನೊ, ಆತನ ಭಾವನೆ, ‘ಇವರು ಯಾರು?’ ಎಂಬುದಾಗಿ. ಅಂದರೆ, ಬಂದ ಗಿರಾಕಿಗಳ ಬುದ್ಧಿಚಾತುರ್ಯತೆ ಎಂಥದು ಅಂತ ಪ್ರಶ್ನೆ. ‘ಗೋಪಾಲ! ಗೋಪಾಲ!’ ಅಂತ ಯಾರು ಹೇಳಿದನೊ. ಆತನ ಭಾವನೆ, ‘ಇವರು ಕಂಡುಬರುತ್ತಿದ್ದಾರೆ ಗೋವಿನ ಹಿಂಡಿನ ಹಾಗೆ’ ಎಂಬುದಾಗಿ. ‘ಹರಿ! ಹರಿ!’ ಅಂತ ಯಾರು ಹೇಳಿದನೊ. ಆತನ ಭಾವನೆ, ‘ಇವರು ಗೋವಿನ ಹಿಂಡಿನೋಪಾದಿಯಲ್ಲಿ ಇರುವುದರಿಂದ ನಾನು ಹರಣ ಮಾಡಲೇನು?’ ಎಂಬುದಾಗಿ. ಕೊನೆಗೆ ಯಾರು ಹೇಳಿದನೊ, ‘ಹರ! ಹರ!’ ಅಂತ, ಆತನ ಭಾವನೆ, ‘ಇವರು ಗೋವಿನ ಹಿಂಡಿನ ಸರಿಸಮಾನರಾಗಿರುವುದರಿಂದ ಯಾವ ಹೆದರಿಕೆಯೂ ಇಲ್ಲದೆ ಹರಣ ಮಾಡು’ ಎಂಬುದಾಗಿ. ಅವರು ಈ ರೀತಿಯಾದ ಪರಮಭಕ್ತ ಸಾಧುಗಳು!” (ಎಲ್ಲರೂ ನಗುತ್ತಾರೆ).
ಬಂಕಿಮ ಶ್ರೀರಾಮಕೃಷ್ಣರಿಂದ ಬೀಳ್ಕೊಂಡ: ಆದರೆ ಏಕಾಗ್ರಚಿತ್ತನಾಗಿ ಏನನ್ನೋ ಯೋಚಿಸುತ್ತಾ ಇದ್ದಾನೆ. ಬಾಗಿಲ ಬಳಿ ಬಂದು ನೋಡಿಕೊಂಡಾಗ ತಾನು ತನ್ನ ಉತ್ತರೀಯವನ್ನು ಕೊಠಡಿಯಲ್ಲೇ ಬಿಟ್ಟುಬಂದಿರೋದು ಆತನ ಅರಿವಿಗೆ ಬರುತ್ತದೆ. ಆತನ ಮೈಯಲ್ಲಿ ಬರೀ ಷರಟು ಮಾತ್ರ ಇತ್ತು. ಬೇರೊಬ್ಬ ಅದನ್ನು ಹುಡುಕಿ ತಂದು ಆತನ ಕೈಗೆ ಕೊಟ್ಟ.
ಅಧರಸೇನನ ಮನೆಗೆ ಬಂದಿದ್ದ ಭಕ್ತರಲ್ಲಿ ಶರಚ್ಚಂದ್ರ ಮತ್ತು ಸನ್ಯಾಲ ಬ್ರಾಹ್ಮಣರು; ಅಧರಸೇನ ಅಕ್ಕಸಾಲಿಗ. ಅಧರಸೇನ ಊಟಕ್ಕೆ ಏಳಿಸಬಹುದು ಎಂಬುದಾಗಿ ಭಾವಿಸಿ ಅವರಿಬ್ಬರೂ ಬೇಗ ಎದ್ದು ಹೋಗಿಬಿಟ್ಟರು. ಅವರು ಇನ್ನೂ ಹೊಸಬರು- ಅಧರಸೇನ ನನ್ನು ಪರಮಹಂಸರು ಯಾವ ರೀತಿಯಾಗಿ ಪ್ರೀತಿಸುತ್ತಾರೆ ಎಂಬುದು ಅವರಿಗೆ ಗೊತ್ತಿಲ್ಲ. ಪರಮಹಂಸರು ಹೇಳುತ್ತಿದ್ದರು: “ಭಕ್ತರೆಲ್ಲರೂ ಒಂದು ಪ್ರತ್ಯೇಕ ಜಾತಿಗೆ ಸೇರಿದವರು; ಅವರಲ್ಲಿ ಯಾವ ಭೇದಭಾವನೆಯೂ ಇರೋದಿಲ್ಲ.”
ಅಧರಸೇನ ಪರಮಹಂಸರಿಗೂ ಅಲ್ಲಿ ನೆರೆದಿದ್ದ ಭಕ್ತರೆಲ್ಲರಿಗೂ ಭಕ್ತಿಪೂರ್ವಕವಾಗಿ ಊಟಕ್ಕೆ ಬಡಿಸಿದ. ಊಟವಾದ ನಂತರ ಭಕ್ತರೆಲ್ಲರು ಪರಮಹಂಸರ ಮಾತುಕತೆಗಳನ್ನು ಸ್ಮರಿಸಿಕೊಳ್ಳುತ್ತ ಅವರ ಅದ್ಭುತ ಪ್ರೇಮಮಯ ಮುಖವನ್ನು ತಮ್ಮ ಹೃದಯದಲ್ಲಿ ಮುದ್ರಿಸಿಟ್ಟುಕೊಂಡು ತಮ್ಮ ತಮ್ಮ ಮನೆಗೆ ಹಿಂತಿರುಗಿದರು.
ಪರಮಹಂಸರು ತಮ್ಮ ಮನೆಗೆ ಬರಬೇಕೆಂದು ಬಂಕಿಮ ಆಹ್ವಾನಿಸಿದ್ದರಿಂದ, ಕೆಲವು ದಿವಸಗಳಾದ ನಂತರ ಆತನ ಕಲ್ಕತ್ತೆಯ ಮನೆಗೆ ಆತನನ್ನು ನೋಡಿಬರಲು ಪರಮಹಂಸರು ಮಾಸ್ಟರರನ್ನು ಮತ್ತು ಗಿರೀಶನನ್ನು ಕಳುಹಿಸಿದ್ದರು. ಆಗ ಆತ ಅವರೊಡನೆ ಪರಮಹಂಸರ ವಿಷಯವಾಗಿ ಬಹಳ ಹೊತ್ತು ಮಾತನಾಡಿದ. ಆಗ ಆತ ಹೇಳಿದ, “ನಾನು ಪರಮಹಂಸ ರನ್ನು ನೋಡಲು ಮತ್ತೆ ಬರುತ್ತೇನೆ” ಅಂತ. ಆದರೆ ಆತನ ಇಚ್ಛೆ ಪೂರ್ಣವಾಗಲಿಲ್ಲ.
1. ಬಂಗಾಳಿಯಲ್ಲಿ “ಬಗ್ಗಿಸಿದ” ಅಥವಾ “ಬಾಗಿಸಿದ” ಎಂದು ಅರ್ಥ.
2. ನಾಮರೂಪವೂ ಇದ್ದೇ ಇರುತ್ತದೆ. ಇದೆಲ್ಲವೂ ಆತನ ಲೀಲೆಯೆ.3. ತುಡಿಕೆ = ಹಣ್ಣು ಸಂಗ್ರಹಿಸುವ ಮನೆ