೨೬ನೇ ಅಕ್ಟೋಬರ್ ೧೮೮೪, ಕಾರ್ತಿಕ ಶುಕ್ಲ ಸಪ್ತಮಿ, ಭಾನುವಾರ
ಅಪರಾಹ್ನವಾಗಿದೆ. ಅನೇಕ ಮಂದಿ ಭಕ್ತರು ಬಂದು ಶ್ರೀರಾಮಕೃಷ್ಣರ ಕೊಠಡಿಯಲ್ಲಿ ಸೇರಿದ್ದಾರೆ. ಮನಮೋಹನ, ಮಹಿಮಚರಣ, ಮಾಸ್ಟರ್ ಸಹ ಬಂದಿರುವರು. ಸ್ವಲ್ಪ ಹೊತ್ತಿನ ನಂತರ ಈಶಾನ ಮತ್ತು ಹಾಜರಾ ಅಲ್ಲಿಗೆ ಬಂದರು. ಬಲರಾಮ ಮತ್ತು ರಾಖಾಲ ಇನ್ನೂ ಬೃಂದಾವನದಲ್ಲೆ ಇದ್ದಾರೆ. ಈಗೀಗ ಕೆಲವು ಕಾಲದಿಂದ ಅನ್ಯೋನ್ಯವಾಗಿ ಶ್ರೀರಾಮಕೃಷ್ಣರೊಡನೆ ಬೆರೆತ ಯುವಕರು ಮುಂದೆ ಅವರ ಪರಮ ಶಿಷ್ಯರಾದರು. ಲಾಟು ರಾಮಕೃಷ್ಣರೊಡನೆಯೆ ಇದ್ದಾನೆ. ಹತ್ತಿರದ ಹಳ್ಳಿಯಲ್ಲಿ ವಾಸಿಸುತ್ತಿದ್ದ ಯೋಗಿನ್ ಎಂಬುವನು ಆಗಾಗ ಬಂದು ಪರಮಹಂಸರನ್ನು ನೋಡಿ ಹೋಗುತ್ತಿದ್ದಾನೆ.
ಸಾಕ್ಷಾತ್ ಭಗವತಿಯ ಮಗುವೇ ಆದ ಪರಮಹಂಸರು ತಮ್ಮ ಸುತ್ತಲೂ ಸತತ ಆನಂದ ಮತ್ತು ಶಾಂತಿಯನ್ನು ಬೀರುತ್ತಿದ್ದಾರೆ. ಅದು ಭಕ್ತರ ಹೃದಯದಲ್ಲಿ ಬಿಂಬಿತ ವಾಗುತ್ತಿದೆ ಮತ್ತು ಅವರ ಮುಖದಿಂದ ಎದ್ದು ಕಾಣುತ್ತಿದೆ. ಅವರೆಲ್ಲ ಪರಮಹಂಸರನ್ನು ದೃಷ್ಟಿಸಿ ನೋಡುತ್ತ ನೆಲದ ಮೇಲೆ ಕುಳಿತುಕೊಂಡಿದ್ದಾರೆ. ಶ್ರೀರಾಮಕೃಷ್ಣರು ಏನನ್ನೊ ಯೋಚಿಸುತ್ತ ತೀರ ಬಾಲಕನೋಪಾದಿಯಲ್ಲಿ ನಿಂತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು ಮನಮೋಹನನಿಗೆ: “ಎಲ್ಲಾ ರಾಮನೇ ಆಗಿ ಕಾಣುತ್ತಿದ್ದಾನೆ. ನೀವೆಲ್ಲಾ ಕುಳಿತುಕೊಂಡಿದ್ದೀರಿ; ರಾಮನೇ ನಿಮ್ಮ ಪ್ರತಿಯೊಬ್ಬರ ರೂಪವನ್ನು ಧರಿಸಿ ಕುಳಿತಿರುವಂತೆ ಕಾಣುತ್ತಿದೆ.”
ಮನಮೋಹನ: “ಹೌದು, ರಾಮನೇ ಎಲ್ಲಾ ಆಗಿದ್ದಾನೆ. ಆದರೆ, ನೀವು ಹೇಳುವ ಹಾಗೆ ಎಲ್ಲಾ ನೀರು ನಾರಾಯಣನೆ ಆದರೂ, ಕೆಲವನ್ನು ಕುಡಿಯಬಹುದು, ಕೆಲವುದ ರಲ್ಲಿ ಮುಖ ಮಾತ್ರ ತೊಳೆಯಬಹುದು, ಇನ್ನೂ ಕೆಲವು ಮುಸುರೆ ತೊಳೆಯೋಕೆ ಮಾತ್ರವೇ ಉಪಯೋಗವಾಗುತ್ತವೆ.”
ಶ್ರೀರಾಮಕೃಷ್ಣರು: “ಅದೇನೊ ನಿಜ. ಆದರೆ ಆತನೇ ಎಲ್ಲಾ ಆಗಿರುವುದು ನನಗೆ ಕಾಣುತ್ತಿದೆ, ಆತನೇ ಜೀವ ಜಗತ್ತು ಆಗಿದ್ದಾನೆ.”
ಹೀಗೆ ಹೇಳುತ್ತ ಹೇಳುತ್ತ ಪರಮಹಂಸರು ತಮ್ಮ ಚಿಕ್ಕಮಂಚದ ಮೇಲೆ ಕುಳಿತು ಕೊಂಡರು.
ಶ್ರೀರಾಮಕೃಷ್ಣರು ಮಹಿಮಚರಣನಿಗೆ: “ಒಳ್ಳೇದು. ಸತ್ಯ ನುಡಿಯಬೇಕೆಂದು ನಾನು ಸುಮ್ಮನೆ ಹುಚ್ಚನಾಗಿಬಿಡೋದು? ಅಕಸ್ಮಾತ್ತಾಗಿ ನಾನು ಊಟ ಮಾಡೋಲ್ಲ ಅಂದುಬಿಟ್ಟರೆ ಹಸಿವಾದರೂ ಊಟಮಾಡೋಹಾಗಿಲ್ಲವಲ್ಲ. ನಾನು ಯಾರಿಗಾದರೂ ನನ್ನ ಕಾಲುತಂಬಿಗೆ ತೆಗೆದುಕೊಂಡು ದೇವದಾರು ತೋಪಿಗೆ ಬರುವಂತೆ ಹೇಳಿದ್ದರೆ, ಆತನಲ್ಲದೆ ಬೇರೆ ಯಾರೂ ತರಲಾಗೋದಿಲ್ಲ. ಬೇರೆ ಯಾರಾದರೂ ತಂದರೆ ಆತ ಹಿಂದಿರುಗಿ ತೆಗೆದುಕೊಂಡು ಹೋಗಬೇಕಾಗುತ್ತದೆ. ನಾನು ಎಂಥ ದುರವಸ್ಥೆಯಲ್ಲಿ ಸಿಕ್ಕಿಕೊಂಡಿದ್ದೇನೆ. ಪಾರಾಗಲು ಬೇರೆ ಮಾರ್ಗವೇ ಇಲ್ಲವೇನು?
“ಮತ್ತೆ, ಏನನ್ನೂ ಜೊತೆಯಲ್ಲಿ ತರೋಹಾಗಿಲ್ಲ. ಎಲೆಡಿಕೆ, ಆಹಾರ ಸಾಮಗ್ರಿ – ಯಾವುದನ್ನೂ ಜೊತೆಯಲ್ಲಿ ತೆಗೆದುಕೊಂಡು ಬರೋ ಹಾಗಿಲ್ಲ. ಹಾಗೆ ಮಾಡಿದರೆ ಸಂಚಯ ಮಾಡಿದ ಹಾಗೆ ಆಗಿಬಿಡುತ್ತದೆಯಲ್ಲ ಅದಕ್ಕಾಗಿ. ಒಂದುಹಿಡಿ ಮಣ್ಣು ಹಿಡಿದು ಕೊಂಡು ಬರೋ ಹಾಗೂ ಇಲ್ಲ.”
ಪರಮಹಂಸರು ಹೀಗೆ ಮಾತನಾಡುತ್ತಿದ್ದಾಗ ಒಬ್ಬ ಬಂದು ಹೇಳಿದ: “ಮಹಾಶಯರೆ, ಹೃದಯ (ಹೃದೆ) ಯದುಮಲ್ಲಿಕನ ತೋಟಕ್ಕೆ ಬಂದಿದ್ದಾನೆ. ಗೇಟಿನ ಹತ್ತಿರ ನಿಂತಿದ್ದಾನೆ. ನಿಮ್ಮನ್ನು ನೋಡಬೇಕಂತೆ.”
ಪರಮಹಂಸರು ಭಕ್ತರಿಗೆ: “ನಾನು ಹೃದಯನನ್ನು ಒಮ್ಮೆ ನೋಡಿಬರುತ್ತೇನೆ. ನೀವು ಸ್ವಲ್ಪ ಕುಳಿತುಕೊಂಡಿರಿ” ಎಂದು ಹೇಳಿ ಪಾಲಿಷ್ ಮಾಡಿದ ಮೆಟ್ಟನ್ನು ಹಾಕಿಕೊಂಡು ಪೂರ್ವದಿಕ್ಕಿನ ಗೇಟಿನ ಕಡೆ ಹೋದರು. ಅವರೊಡನೆ ಮಾಸ್ಟರ್ ಕೂಡ ಹೋದನು. ಉದ್ಯಾನಪಥವನ್ನು ಕೆಂಪು ಇಟ್ಟಿಗೆ ಪುಡಿಯಿಂದ ಅಲಂಕರಿಸಿದ್ದರು. ಪರಮಹಂಸರು ಅದೇ ಮಾರ್ಗವಾಗಿ ಪೂರ್ವದಿಕ್ಕಿಗೆ ಹೋಗುತ್ತಿದ್ದಾರೆ. ರಸ್ತೆಯಲ್ಲೆ ನಿಂತಿದ್ದ ಖಜಾಂಚಿ ಪರಮಹಂಸರಿಗೆ ಪ್ರಣಾಮಮಾಡಿದ. ಪರಮಹಂಸರು ದೇವಾಲಯ ಪ್ರಾಕಾರದ ಉತ್ತರ ಬಾಗಿಲನ್ನು ದಾಟಿದರು. ಅಲ್ಲಿ ಗಡ್ಡ ಬೆಳೆಸಿಕೊಂಡಿದ್ದ ಕಾವಲುಗಾರರು ಕುಳಿತುಕೊಂಡಿದ್ದರು. ಅವರ ಎಡಭಾಗದಲ್ಲಿ ರಾಣಿ ರಾಸಮಣಿ ಬಂದಾಗ ಇಳಿದುಕೊಳ್ಳುವ ಬಂಗಲೆ ಇದೆ. ಅಲ್ಲಿಂದಾಚೆಗೆ ರಸ್ತೆಯ ಎರಡು ಪಾರ್ಶ್ವಗಳಲ್ಲಿಯೂ ಹೂವಿನ ಗಿಡಗಳು ತುಂಬಿವೆ. ರಸ್ತೆಯ ಹತ್ತಿರವೆ ಅದರ ಬಲಭಾಗಕ್ಕೆ ಗಾಜೀತಲ ಎಂಬ ಪುಷ್ಕರಣಿ ಇದೆ. ಇನ್ನೂ ಮುಂದುವರಿದು ಉದ್ಯಾನವನವನ್ನು ಬಿಟ್ಟು ಹೊರಕ್ಕೆ ಬಂದರು. ಹೃದಯ ತಮಗಾಗಿ ಯದುಮಲ್ಲಿಕನ ತೋಟದ ಬಾಗಿಲ ಹತ್ತಿರ ಕಾದು ನಿಂತಿರುವುದನ್ನು ನೋಡಿದರು.
ಪರಮಹಂಸರನ್ನು ಕಂಡೊಡನೆಯೆ ಅದುವರೆಗೆ ಕೈಕಟ್ಟಿ ನಿಂತಿದ್ದ ಹೃದಯ ಒಮ್ಮೆಗೆಯೇ ರಾಜಪಥದ ಮೇಲೆ ಬಿದ್ದು ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ. ಪರಮಹಂಸರು ಆತನಿಗೆ ಮೇಲಕ್ಕೆ ಏಳುವಂತೆ ಹೇಳಿದರು. ಹೃದಯ ಮತ್ತೆ ಕೈಮುಗಿದು ಬಾಲಕನ ಹಾಗೆ ಸುಮ್ಮನೆ ಬಿಕ್ಕಿಬಿಕ್ಕಿ ಅಳಲಾರಂಭಿಸಿದ. ಏನಾಶ್ಚರ್ಯ! ಪರಮಹಂಸರೂ ಅಳಲಾರಂಭಿಸಿದ್ದಾರೆ. ಅವರ ಕಣ್ಣಿನಲ್ಲೂ ನೀರು ಬಂದುಬಿಟ್ಟಿತು. ಅವರು ಅದನ್ನು ತಮ್ಮ ಕೈಯಿಂದ ಒರೆಸಿಕೊಂಡರು. ಏನಿದು! ಯಾವ ಹೃದಯ ಪರಮಹಂಸರಿಗೆ ಅಷ್ಟೊಂದು ಚಿತ್ರಹಿಂಸೆ ಕೊಟ್ಟಿದ್ದನೋ, ಆತನನ್ನು ನೋಡಲು ಎದ್ದು ಓಡಿ ಬಂದಿದ್ದಾರೆ ಮತ್ತು ಆತನಿಗಾಗಿ ಅಳುತ್ತಿದ್ದಾರೆ!
ಶ್ರೀರಾಮಕೃಷ್ಣರು: “ಏನು ಬಂದೆ?”
ಹೃದಯ ಬಿಕ್ಕಿ ಬಿಕ್ಕಿ ಅಳುತ್ತ: “ನಿಮ್ಮನ್ನು ನೋಡಲು ಬಂದೆ. ನನ್ನ ದುಃಖವನ್ನು ನಾನು, ಬೇರೆ ಇನ್ನು ಯಾರಿಗೆ ತಾನೇ ಹೇಳಿಕೊಳ್ಳಲಿ?”
ಶ್ರೀರಾಮಕೃಷ್ಣರು ನಗುತ್ತ ಮತ್ತು ಸಂತೈಸುತ್ತ “ಸಂಸಾರದಲ್ಲಿ ಈ ವಿಧದ ದುಃಖ ಇದ್ದೇ ಇದೆ. ಸಂಸಾರಕ್ಕೆ ಕಾಲು ಹಾಕಿತು ಎಂದರೆ ಸುಖದುಃಖವನ್ನು ಅನುಭವಿಸಲೇಬೇಕು. (ಮಾಸ್ಟರನ್ನು ತೋರಿಸಿ) ಇವರೆಲ್ಲ ಒಮ್ಮೊಮ್ಮೆ ಇದಕ್ಕಾಗೆ ಇಲ್ಲಿಗೆ ಬರುತ್ತಿರೋದು; ಬಂದು ಒಂದೆರಡು ಭಗವಂತನ ಮಾತುಗಳನ್ನು ಕೇಳಿದರೆ ಮನಸ್ಸಿಗೆ ಶಾಂತಿಯುಂಟಾಗುತ್ತದೆ. ನಿನಗೆ ಯಾತರ ದುಃಖ?”
ಹೃದಯ ಅಳುತ್ತ: “ನಿಮ್ಮ ಸಂಗ ನನಗೆ ಇಲ್ಲದೆ ಹೋಯಿತಲ್ಲ, ಎಂಬ ದುಃಖ.”
ಶ್ರೀರಾಮಕೃಷ್ಣರು: “ನೀನೇ ಹೇಳಿದೆ. ‘ನಿಮ್ಮ ಆದರ್ಶ ಧ್ಯೇಯ ನಿಮ್ಮ ಹತ್ತಿರ ಇರಲಿ, ನನ್ನ ಆದರ್ಶ ಧ್ಯೇಯ ನನ್ನ ಹತ್ತಿರ ಇರಲಿ’ ಅಂತ?”
ಹೃದಯ: “ಹೌದು ಹಾಗೇನೋ ಹೇಳಿದೆ, ಆದರೆ ಆಗ ನನಗೆ ಏನು ಗೊತ್ತಿತ್ತು?”
ಶ್ರೀರಾಮಕೃಷ್ಣರು: “ಇಂದು ಇಷ್ಟಕ್ಕೆ ಸಾಕು. ನಾನು ಹಿಂದಿರುಗಿ ಹೋಗಬೇಕಾಗಿದೆ. ಇನ್ನೊಂದು ದಿನ ನಿನ್ನೊಡನೆ ಮಾತುಕತೆ ಆಡುತ್ತೇನೆ. ಇಂದು ಭಾನುವಾರ, ಅನೇಕರು ಬಂದಿದ್ದಾರೆ; ನನಗಾಗಿ ಕಾದಿದ್ದಾರೆ. ಈ ಸಲ ಊರಿನಲ್ಲಿ ಮಳೆ ಬೆಳೆ ಹೇಗೆ?”
ಹೃದಯ: “ಈ ಸಲ ಅಷ್ಟೇನು ಕೆಟ್ಟುಹೋಗಿಲ್ಲ.”
ಶ್ರೀರಾಮಕೃಷ್ಣರು: “ಹಾಗಾದರೆ ನಾನು ಹಿಂದಿರುಗುತ್ತೇನೆ. ಇನ್ನೊಂದು ದಿನ ಬಾ.”
ಹೃದಯ ಮತ್ತೆ ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ. ಪರಮಹಂಸರು ಬಂದ ದಾರಿಯಲ್ಲೆ ಹಿಂದಿರುಗಿದರು. ಮಾಸ್ಟರ್ ಅವರನ್ನು ಹಿಂಬಾಲಿಸುತ್ತಿದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಅವನು ನನಗೆ ಸೇವೆಮಾಡಿದಷ್ಟೂ ಚಿತ್ರಹಿಂಸೆ ಯನ್ನೂ ಕೊಟ್ಟಿದ್ದಾನೆ. ನಾನು ಒಮ್ಮೆ ಹೊಟ್ಟೆರೋಗದಿಂದ ಮೂಳೆ ಚಕ್ಕಳ ಆಗಿಬಿಟ್ಟಿದ್ದೆ – ಏನೂ ತಿನ್ನಲೂ ಆಗುತ್ತಿರಲಿಲ್ಲ. ಆಗ ‘ಇಲ್ಲಿ ನೋಡಿ, ನಾನು ಹೇಗೆ ತಿನ್ನುತ್ತೇನೆ! ತಿನ್ನುವುದಕ್ಕೆ ಆಗುವುದಿಲ್ಲ ಅಂತ ನೀವು ಸುಮ್ಮನೆ ನಟಿಸುತ್ತಿದ್ದೀರಿ’ ಅಂತ ನನಗೆ ಹೇಳಿದ. ಮತ್ತೊಮ್ಮೆ, ‘ಬುದ್ಧಿಯಿಲ್ಲ! ನಾನು ಇಲ್ಲಿ ನಿಮ್ಮ ಸಹಾಯಕನಾಗಿ ಇಲ್ಲದೆ ಇದ್ದರೆ, ನಿಮ್ಮ ಸಾಧುಗಿರಿ ಎಲ್ಲಿ ತಲೆ ಎತ್ತುತ್ತಿತ್ತು ಎಂಬುದನ್ನು ನೋಡಬಹುದಾಗಿತ್ತು!’ ಎಂದು ಹೇಳಿದ. ಒಂದು ದಿನ ಆತ ನನ್ನನ್ನು ಎಷ್ಟೊಂದು ಕಾಡಿದ, ನಾನು ಗಂಗೆಯ ದಡದ ಮೇಲೆ ನಿಂತುಕೊಂಡು ಅದರ ಉಬ್ಬರ ಪ್ರವಾಹಕ್ಕೆ ಬಿದ್ದು ದೇಹತ್ಯಾಗಮಾಡಲು ಯತ್ನಿಸಿದೆ.”
ಇದನ್ನು ಕೇಳಿ ಮಾಸ್ಟರ್ ಆಶ್ಚರ್ಯಚಕಿತನಾಗಿದ್ದಾನೆ. ಭಾವಿಸುತ್ತಿದ್ದಾನೆ, ಏನಾಶ್ಚರ್ಯ! ಇಂಥ ಮನುಷ್ಯನಿಗಾಗಿಯೇನು ಪರಮಹಂಸರು ಸ್ವಲ್ಪ ಹೊತ್ತಿನ ಹಿಂದೆ ಕಣ್ಣೀರು ಸುರಿಸಿದ್ದು! ಎಂದು.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಒಳ್ಳೆಯದು, ಆತ ಬಹಳವಾಗಿ ನನಗೆ ಸೇವೆ ಮಾಡಿದ್ದಾನೆ, –ಆದರೂ ಆತನಿಗೆ ಹೀಗಾಗಲು ಕಾರಣವೇನು? ಮಗುವನ್ನು ಬೆಳೆಸೋ ರೀತಿಯಲ್ಲಿ ನನ್ನನ್ನು ನೋಡಿಕೊಂಡಿದ್ದಾನೆ. ಆಗ ನನಗಂತು ಹಗಲು ರಾತ್ರಿ ಎಂಬ ಪ್ರಜ್ಞೆಯೇ ಇರುತ್ತಿರಲಿಲ್ಲ. ಅದರ ಜೊತೆಗೆ ಬಹಳ ಕಾಲ ರೋಗಗ್ರಸ್ತನಾಗಿದ್ದೆ. ನನ್ನ ಯೋಗಕ್ಷೇಮವೆಲ್ಲ ಸಂಪೂರ್ಣವಾಗಿ ಆತನ ಕೈಯಲ್ಲಿತ್ತು.”
ಮಾಸ್ಟರಿಗೆ ಏನು ಹೇಳಲು ತಾನೆ ಸಾಧ್ಯ, ಅದಕ್ಕಾಗಿ ಸುಮ್ಮನೆ ಇದ್ದ. ಹೃದಯ ಬಹುಶಃ ನಿಷ್ಕಾಮ ಭಾವನೆಯಿಂದ ಸೇವೆಮಾಡದೆ ಇರಬೇಕು ಎಂದು ಭಾವಿಸಿದ.
ಹಾಗೆ ಮಾತಾಡುತ್ತ ಮಾತಾಡುತ್ತ ಪರಮಹಂಸರು ತಮ್ಮ ಕೊಠಡಿಯನ್ನು ತಲುಪಿದರು. ಭಕ್ತರು ಅವರಿಗಾಗಿ ಎದುರುನೋಡುತ್ತಿದ್ದರು. ಪರಮಹಂಸರು ಮತ್ತೆ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಮಹಿಮಚರಣ ಮೊದಲಾದವರೇ ಅಲ್ಲದೆ ಇನ್ನೂ ಕೆಲವು ಕೊನ್ನಗರದ ಭಕ್ತರೂ ಬಂದಿದ್ದಾರೆ. ಅವರಲ್ಲಿ ಒಬ್ಬ ಪರಮಹಂಸರಿಗೆ ಕೆಲವು ಪ್ರಶ್ನೆಗಳನ್ನು ಹಾಕಿದ.
ಭಕ್ತ: “ಮಹಾಶಯರೆ, ‘ನಿಮಗೆ ಭಾವ ಬರುತ್ತೆ, ಸಮಾಧಿ ಉಂಟಾಗುತ್ತೆ’ ಅಂತ ಕೇಳಿದ್ದೇವೆ. ಏಕೆ ಹಾಗಾಗುತ್ತದೆ ಮತ್ತೆ ಯಾವ ರೀತಿಯಾಗಿ ಆಗುತ್ತದೆ ಎಂಬುದನ್ನು ದಯವಿಟ್ಟು ನಮಗೆ ಸ್ವಲ್ಪ ತಿಳಿಸಿ.”
ಶ್ರೀರಾಮಕೃಷ್ಣರು: “ಶ್ರೀಮತಿ ರಾಧೆಗೆ ಮಹಾಭಾವ ಉಂಟಾಗುತ್ತಿತ್ತು. ಸಖಿಯರಲ್ಲಿ ಯಾರಾದರು ಆಕೆಯನ್ನು ಮುಟ್ಟಲು ಹೋಗುತ್ತಿದ್ದರೆ, ಆಕೆಯ ಅಂಗರಕ್ಷಕಿ ಹೇಳುತ್ತಿದ್ದಳು, ‘ಆಕೆಯ ಶರೀರ ಶ್ರೀಕೃಷ್ಣನ ವಿಲಾಸಕ್ಷೇತ್ರ, ಮುಟ್ಟಬೇಡಿ–ಆಕೆಯ ದೇಹದಲ್ಲಿ ಈಗ ಶ್ರೀಕೃಷ್ಣ ಕ್ರೀಡಿಸುತ್ತಿದ್ದಾನೆ’ ಎಂದು. ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳದ ಹೊರತು ಭಾವ ಅಥವಾ ಮಹಾಭಾವ ಉಂಟಾಗೋದಿಲ್ಲ. ಆಳವಾದ ನೀರಿನಿಂದ ಮೀನು ಮೇಲಕ್ಕೆ ಬಂದರೆ ಆಗ ನೀರು ಚಲಿಸುತ್ತದೆ:-ಭಾರಿ ಮೀನು ಆಗಿದ್ದರೆ ನೀರು ಆ ಕಡೆಗೆ ಈ ಕಡೆಗೆ ಸುಮ್ಮನೆ ಹಾರುತ್ತಿರುತ್ತದೆ, ಅದಕ್ಕಾಗಿಯೆ ಭಕ್ತ, ‘ಭಾವದಲ್ಲಿ ನಗುವನು, ಅಳುವನು, ನರ್ತಿಸುವನು, ಹಾಡುವನು.’
“ಭಾವಾವಸ್ಥೆಯಲ್ಲಿ ಹೆಚ್ಚುಕಾಲ ಇರುವುದಕ್ಕೆ ಆಗುವುದಿಲ್ಲ. ಕನ್ನಡಿಯ ಮುಂದೆ ಕುಳಿತು ಸುಮ್ಮನೆ ಮುಖ ನೋಡುತ್ತಿದ್ದರೆ ಜನ ಭಾವಿಸುತ್ತಾರೆ ಆತ ಒಬ್ಬ ಹುಚ್ಚನಿರಬೇಕು ಅಂತ.”
ಭಕ್ತ: “ ‘ನಿಮಗೆ ಭಗವಂತನ ದರ್ಶನ ಆಗಿದೆ’ ಅಂತ ಕೇಳಿದ್ದೇವೆ. ಹಾಗಿದ್ದರೆ ನಮಗೂ ಆತನನ್ನು ತೋರಿಸಿ.”
ಶ್ರೀರಾಮಕೃಷ್ಣರು: “ಎಲ್ಲವೂ ಭಗವಂತನಾಧೀನ – ಮನುಷ್ಯನ ಕೈಯಲ್ಲಿ ಏನು ತಾನೆ ಸಾಧ್ಯ? ಆತನ ನಾಮವನ್ನು ಜಪಮಾಡುತ್ತ ಜಪಮಾಡುತ್ತ ಇದ್ದ ಹಾಗೆ ಒಮ್ಮೊಮ್ಮೆ ಪ್ರೇಮಾಶ್ರು ಸುರಿಯುತ್ತದೆ. ಒಮ್ಮೆಮ್ಮೆ ಸುರಿಯದು. ಆತನ ಧ್ಯಾನ ಮಾಡುತ್ತಿದ್ದ ಹಾಗೆ ಒಂದೊಂದು ದಿನ ಒಳ್ಳೆ ಉದ್ದೀಪನೆಯಾಗಿಬಿಡುತ್ತದೆ. ಒಂದೊಂದು ದಿನ ಏನೂ ಆಗದು.
“ಸಾಧನೆ ಮಾಡಬೇಕು. ಆಗ ಆತನ ದರ್ಶನ ದೊರಯುತ್ತದೆ. ಒಂದು ದಿನ ಭಾವದಲ್ಲಿ ಹಾಲದಾರಪುಕುರವನ್ನು ನೋಡಿದೆ. ಒಬ್ಬ ಅಂತ್ಯಜ ಅದರಲ್ಲಿ ತೇಲುತ್ತಿದ್ದ ಹಸಿರು ಪಾಚಿಯನ್ನು ತಳ್ಳಿ ತಳ್ಳಿ ಕೊಡಕ್ಕೆ ನೀರು ತುಂಬುತ್ತಿದ್ದ. ಆಗಾಗ ಆತ ಕೈಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಪರೀಕ್ಷಿಸುತ್ತಿದ್ದ. ಪಾಚಿಯನ್ನು ತಳ್ಳದೆ ಇದ್ದರೆ ನೀರನ್ನು ನೋಡಲಾಗುವುದಿಲ್ಲ ಎಂಬುದನ್ನು ಆತ ನನಗೆ ಪಾಠ ಕಲಿಸಿಕೊಟ್ಟಂತೆ ಆಯಿತು–ಸಾಧನೆ ಮಾಡದೆ ಇದ್ದರೆ ಭಕ್ತಿ ದೊರಕದು. ಭಗವಂತನ ಸಾಕ್ಷಾತ್ಕಾರ ದೊರಕದು. ಧ್ಯಾನ, ಜಪ ಇವೆಲ್ಲ ಕರ್ಮವೇ; ಆತನ ನಾಮಗುಣ ಕೀರ್ತನೆ ಮಾಡೋದು ಕರ್ಮವೇ; ದಾನ ಯಜ್ಞ ಇವೂ ಕರ್ಮವೆ.
“ಬೆಣ್ಣೆ ಬೇಕಾಗಿದ್ದರೆ, ಹಾಲಿಗೆ ಹೆಪ್ಪು ಹಾಕಿ ಮೊಸರು ಮಾಡಬೇಕು. ಹಾಲಿಗೆ ಹೆಪ್ಪು ಹಾಕಿದ ನಂತರ ಅದನ್ನು ಅಲುಗಾಡದೆ ಇರುವ ಜಾಗದಲ್ಲಿ ಇಡಬೇಕು. ಅದು ಮೊಸರಾದ ನಂತರ ಶ್ರಮ ತೆಗೆದುಕೊಂಡು ಅದನ್ನು ಕಡೆಯಬೇಕು, ಆಗತಾನೆ ಬೆಣ್ಣೆ ತೆಗೆಯಲು ಆಗುತ್ತದೆ.”
ಮಹಿಮಚರಣ: “ಹೌದು, ನಿಜ. ಸಾಧನೆ ಮಾಡದೆ ಇದ್ದರೆ ಹೇಗೆ? ಬಹಳ ಶ್ರಮ ತೆಗೆದುಕೊಳ್ಳಬೇಕು. ಆಗ ದೊರೆಯುತ್ತದೆ, ಓದಿ ತಿಳಿದುಕೊಳ್ಳುವುದು ಎಷ್ಟೊಂದಿದೆ! ಶಾಸ್ತ್ರಗ್ರಂಥಗಳಿಗೆ ಮಿತಿ ಎಂಬುದು ಇಲ್ಲವೇ ಇಲ್ಲ.”
ಶ್ರೀರಾಮಕೃಷ್ಣರು ಮಹಿಮನಿಗೆ: “ಶಾಸ್ತ್ರವನ್ನು ಎಷ್ಟೂ ಅಂತ ಓದುವುದು? ಬರಿ ವಿಚಾರದಿಂದ ಏನು ದೊರೆಯುತ್ತದೆ. ಮೊದಲು ಆತನ ಸಾಕ್ಷಾತ್ಕಾರ ಪಡೆಯಲು ಪ್ರಯತ್ನಿಸು. ಗುರುವಾಕ್ಯದಲ್ಲಿ ವಿಶ್ವಾಸವಿಟ್ಟು ಸಾಧನೆಮಾಡು. ನಿನಗೆ ಗುರು ದೊರೆಯ ದಿದ್ದರೆ, ವ್ಯಾಕುಲ ಹೃದಯದಿಂದ ಆತನಿಗೆ ಪ್ರಾರ್ಥನೆ ಮಾಡು. ತನ್ನ ನಿಜಸ್ವರೂಪ ಎಂಥದು ಅನ್ನುವುದನ್ನು ಆತ ತಾನಾಗಿಯೇ ತೋರಿಸಿಕೊಟ್ಟುಬಿಡುತ್ತಾನೆ.
“ಶಾಸ್ತ್ರ ಓದಿ ಏನು ತಾನೆ ತಿಳಿಯಬಲ್ಲೆ. ಸಂತೆಯನ್ನು ಮುಟ್ಟದೆ ಬಹುದೂರದಲ್ಲೇ ಇನ್ನೂ ಇರುವಾಗ ಬರೀ ‘ಹೋ! ಹೋ!’ ಎಂಬ ಶಬ್ದ ಕೇಳಿಬರುತ್ತದೆ. ಸಂತೆ ಮುಟ್ಟಿದ ನಂತರ ಬೇರೊಂದು ವಿಧದ ಅನುಭವ. ಆಗ ಎಲ್ಲವನ್ನೂ ಸ್ಪಷ್ಟವಾಗಿ ನೋಡಬಹುದು, ಕೇಳಬಹುದು. ಆಗ ಜನ, ‘ಇಗೋ ತೆಗೆದುಕೊಳ್ಳಿ, ನಿಮ್ಮ ಆಲೂಗಡ್ಡೆ, ನಮಗೆ ದುಡ್ಡುಕೊಡಿ’ ಎಂದು ಹೇಳುವುದನ್ನೂ ಕೇಳಬಹುದು.
“ಸಮುದ್ರ ಇನ್ನೂ ದೂರದಲ್ಲಿರುವಾಗ ಅದು ಭೋರ್ಗರೆಯುತ್ತಿರುವ ಶಬ್ದ ಮಾತ್ರ ಕೇಳಿಸುತ್ತದೆ. ಅದರ ಹತ್ತಿರ ಹೋದರೆ ಅನೇಕ ಜಹಜುಗಳು ಸಂಚರಿಸುತ್ತಿರುವುದನ್ನು, ಹಕ್ಕಿಗಳು ಹಾರಾಡುತ್ತಿರುವುದನ್ನು ಅಲೆಗಳು ಹೊಡೆಯುತ್ತಿರುವುದನ್ನು – ನೋಡಬಹುದು.
“ಶಾಸ್ತ್ರಾಧ್ಯಯನದಿಂದ ಸರಿಯಾದ ಅನುಭವ ದೊರೆಯದು. ಇವೆರಡಕ್ಕೂ ಅಜ ಗಜಾಂತರ ವ್ಯತ್ಯಾಸ. ಆತನ ದರ್ಶನ ದೊರೆತ ನಂತರ ಶಾಸ್ತ್ರ, ಸೈನ್ಸು (ವಿಜ್ಞಾನ) ಎಲ್ಲ ಕಸಕಡ್ಡಿಗಳ ಹಾಗೆ ಕಾಣುತ್ತವೆ.
“ಆವಶ್ಯಕವಾಗಿ ಮೊದಲು ಬೇಕಾಗಿರೋದು ಮನೆಯ ಯಜಮಾನನ ಪರಿಚಯ. ಆತನಿಗೆ ಎಷ್ಟು ಮನೆಗಳಿವೆ, ಎಷ್ಟು ಲೇವಾದೇವಿ ಪತ್ರಗಳಿವೆ, ಇವನ್ನೆಲ್ಲ ಮೊದಲೇ ತಿಳಿದುಕೊಳ್ಳಲು ಏಕೆ ಅಷ್ಟೊಂದು ವ್ಯಸ್ತರಾಗಿ ಆಗಬೇಕು? ಸೇವಕರ ಹತ್ತಿರ ಹೋದರೆ ಒಂದು ನಿಮಿಷ ನಿಂತುಕೊಳ್ಳಲು ಕೂಡ ಬಿಟ್ಟುಕೊಡುವುದಿಲ್ಲ, – ಲೇವಾದೇವಿ ಪತ್ರ ಎಷ್ಟಿದೆ ಎಂಬುದನ್ನು ಅವರು ನಿನಗೆ ತಿಳಿಸುತ್ತಾರೆಯೆ? ಆದರೆ ಹೇಗೋ ಮಾಡಿ ಮನೆ ಯಜಮಾನನ ಪರಿಚಯ ಮಾಡಿಕೊಂಡುಬಿಡು. ಅದಕ್ಕಾಗಿ ನೀನು ಒಂದೆರಡೇಟು ತಿನ್ನಬೇಕಾಗಿ ಬಂದರೂ ಚಿಂತೆಯಿಲ್ಲ. ಬೇಲಿ ನೆಗೆಯಬೇಕಾಗಿ ಬಂದರೂ ಚಿಂತೆಯಿಲ್ಲ, – ಆಗ ಯಜಮಾನ ತನಗೆ ಎಷ್ಟು ಮನೆ, ಎಷ್ಟು ತೋಟಗಳು, ಎಷ್ಟು ಲೇವಾದೇವಿ ಇದೆ, ಎಂಬುದನ್ನು ತಾನೇ ಹೇಳಿಬಿಡುತ್ತಾನೆ. ಮನೆಯ ಯಜಮಾನನ ಪರಿಚಯಮಾಡಿಕೊಂಡು ಬಿಟ್ಟಿತು ಅಂದರೆ, ಆತನ ಸೇವಕರು ಜವಾನರು ಎಲ್ಲರೂ ನಿನಗೆ ಸಲಾಮು ಹೊಡೆಯು ತ್ತಾರೆ.” (ಎಲ್ಲರೂ ನಗುತ್ತಾರೆ.)
ಭಕ್ತ: “ಮನೆಯ ಯಜಮಾನನೊಡನೆ ಪರಿಚಯಮಾಡಿಕೊಳ್ಳುವುದು ಹೇಗೆ ಎಂಬುದೆ ಪ್ರಶ್ನೆ.” (ನಗು)
ಶ್ರೀರಾಮಕೃಷ್ಣರು: “ಅದಕ್ಕಾಗೆ ಶ್ರಮಿಸಬೇಕು. ಭಗವಂತನಿದ್ದಾನೆ ಎಂದು ಸುಮ್ಮನೆ ಕೈಕಟ್ಟಿ ಕುಳಿತಿದ್ದರೆ ಆಗದು. ಹೇಗೊ ಮಾಡಿ ಆತನ ಹತ್ತಿರ ಹೋಗಬೇಕು. ಏಕಾಂತ ಸ್ಥಳದಲ್ಲಿ ಆತನನ್ನು ಕರೆ, ಆತನನ್ನು ಪ್ರಾರ್ಥನೆಮಾಡು, ‘ನನಗೆ ನಿನ್ನ ದರ್ಶನ ಕೊಡು’ ಅಂತ ವ್ಯಾಕುಲನಾಗಿ ಅಳು. ಕಾಮಕಾಂಚನಕ್ಕಾಗಿ ಹುಚ್ಚನ ಹಾಗೆ ಅಲೆಯಲು ಸಿದ್ಧನಾಗಿದ್ದೀಯೆ! ಈಗ ಭಗವಂತನಿಗಾಗಿ ಸ್ವಲ್ಪ ಹುಚ್ಚನಾಗು. ಜನ ಹೇಳಿಕೊಳ್ಳಲಿ, ಭಗವಂತನಿಗಾಗಿ ಆತ ಹುಚ್ಚನಾಗಿಬಿಟ್ಟ ಅಂತ. ಒಂದೆರಡು ದಿನಗಳ ಮಟ್ಟಿಗಾದರೂ ಎಲ್ಲವನ್ನೂ ತ್ಯಜಿಸಿ ಆತನನ್ನು ಏಕಾಂತದಲ್ಲಿ ಕರೆ.
“ ‘ಭಗವಂತನಿದ್ದಾನೆ’ ಎಂದು ಕೇವಲ ಬಾಯಲ್ಲಿ ಹೇಳುತ್ತ ಕೈಕಟ್ಟಿ ಸುಮ್ಮನೆ ಕುಳಿತಿದ್ದರೆ ಏನಾಗುತ್ತದೆ ? ಹಾಲದಾರಪುಕುರದಲ್ಲಿ ದೊಡ್ಡ ದೊಡ್ಡ ಮೀನುಗಳೇನೊ ಇವೆ. ಆದರೆ ಆ ಪುಷ್ಕರಣಿಯ ದಡದಲ್ಲಿ ಸುಮ್ಮನೆ ಕೈಕಟ್ಟಿ ಕುಳಿತಿದ್ದರೆ ಮೀನು ದೊರೆಯುವುದೆ? ಎರೆ ತಯಾರುಮಾಡಿ ಅದನ್ನು ನೀರಿನಲ್ಲಿ ಬಿಸಾಡು. ಬಳಿಕ ಮೀನು ಆಳದ ನೀರಿನಲ್ಲಿ ಮೇಲಕ್ಕೆ ಬರುತ್ತದೆ, ನೀರು ಅಲುಗಲು ಆರಂಭಿಸುತ್ತದೆ. ಆಗ ನಿನಗೆ ಬಹಳ ಆನಂದ ವಾಗುತ್ತದೆ. ಬಹುಶಃ ಅವುಗಳಲ್ಲಿ ಒಂದು ಮೀನು ನೀರಿನ ಮೇಲಕ್ಕೆ ತಟಕ್ಕನೆ ಒಂದು ಸ್ವಲ್ಪ ಎದ್ದಾಗ ಅದರ ಆಕೃತಿ ನಿನಗೆ ಗೋಚರವಾಗಬಹುದು. ಆಗ ನಿನಗೆ ಆನಂದ ವಾಗುತ್ತದೆ.
“ಹಾಲನ್ನು ಮೊಸರುಮಾಡಿ ಅದನ್ನು ಕಡೆದರೆ ತಾನೆ ಬೆಣ್ಣೆ ದೊರೆಯುತ್ತದೆ. (ಮಹಿಮಚರಣನಿಗೆ) ಏನಪ್ಪ ಕಾಟ ಇದು! ಮನುಷ್ಯನಿಗೆ ತಾನು ಮಾತ್ರ ಸುಮ್ಮನೆ ಕುಳಿತಿರಬೇಕಂತೆ. ಬೇರೆಯವರು ಬಂದು ಆತನಿಗೆ ಭಗವಂತನನ್ನು ತೋರಿಸಿಕೊಟ್ಟು ಬಿಡಬೇಕಂತೆ! ಬೇರೆಯವರು ಬೆಣ್ಣೆ ತೆಗೆದು ಈತನ ಬಾಯಿಯಲ್ಲಿ ಇಡಬೇಕು! (ಎಲ್ಲರೂ ನಗುತ್ತಾರೆ.) ಇದು ಎಂಥ ಕಷ್ಟ! ಮೀನು ಹಿಡಿದು ಕೊಡು ಅನ್ನೋದು!
“ಒಬ್ಬ ರಾಜನನ್ನು ನೋಡಲು ಇಚ್ಛಿಸಿದ. ರಾಜ ಇರುವುದು ಏಳು ಗೇಟು ಗಳಿಂದಾಚೆ. ಮೊದಲ ಗೇಟನ್ನು ದಾಟುತ್ತಿರುವಾಗಲೆ ಆತ ಕೇಳಿದ, ‘ರಾಜನೆಲ್ಲಿ?’ ಅಂತ. ಒಂದೊಂದಾಗಿ ಏಳು ಗೇಟುಗಳನ್ನು ದಾಟಿದರೆ ತಾನೆ ಆತ ದೊರೆಯೋದು.”
ಮಹಿಮಚರಣ: “ಯಾವ ಕರ್ಮದ ಮೂಲಕ ಆತನನ್ನು ಪಡೆಯಬಹುದು?”
ಶ್ರೀರಾಮಕೃಷ್ಣರು: “ಈ ಕರ್ಮದಿಂದ ಆತ ದೊರೆಯುತ್ತಾನೆ, ಆ ಕರ್ಮದಿಂದ ಆತ ದೊರೆಯುವುದಿಲ್ಲ ಅಂತಲೇನು ಇಲ್ಲ. ಎಲ್ಲಾ ಆತನ ಕೃಪೆಯ ಮೇಲೆ ನಿಂತಿದೆ. ಆದರೆ ವ್ಯಾಕುಲನಾಗಿ ಸ್ವಲ್ಪ ಸಾಧನೆ ಮಾಡಬೇಕು. ವ್ಯಾಕುಲತೆ ಇದ್ದರೆ ಆತನ ಕೃಪೆ ಲಭಿಸುತ್ತದೆ.
‘ಆತನ ಸಾಕ್ಷಾತ್ಕಾರಕ್ಕೆ ಕೆಲವು ಸುಯೋಗಗಳು ಬಂದೊದಗಬೇಕು; ಸಾಧುಸಂಗ, ವಿವೇಕ, ಸದ್ಗುರುವಿನ ಕೃಪೆ. ಒಂದು ಪಕ್ಷ ಹಿರಿಯ ಅಣ್ಣ ಸಂಸಾರದ ಭಾರವನ್ನು ವಹಿಸಿಕೊಂಡು ಬಿಡುವುದು; ಒಂದು ಪಕ್ಷ ಹೆಂಡತಿ ವಿದ್ಯಾಪಕ್ಷವಾಗಿಯೂ ಬಹಳ ಧಾರ್ಮಿಕಳಾಗಿಯೂ ಇರುವುದು; ವಿವಾಹವಾಗದೆ ಉಳಿದುಕೊಂಡಿರುವುದು; ಸಂಸಾರಕ್ಕೆ ಕಟ್ಟುಬೀಳದೆ ಇರುವುದು; – ಇವೆಲ್ಲಾ ಒಂದಕ್ಕೊಂದು ಸೇರಿಕೊಂಡರೆ ದೊರೆತುಬಿಡುತ್ತದೆ.
“ಒಂದು ಮನೆಯಲ್ಲಿ ಒಬ್ಬ ದಾರುಣ ರೋಗಗ್ರಸ್ತನಾಗಿದ್ದಾನೆ; – ಇನ್ನೇನು ಹೋಗುವುದರಲ್ಲಿದ್ದಾನೆ. ಆಗ ಯಾರೋ ಒಬ್ಬ ಹೇಳಿದ, ‘ಸ್ವಾತಿ ನಕ್ಷತ್ರದಲ್ಲಿ ಮಳೆ ಹೊಯ್ಯಬೇಕು, ಆ ಮಳೆಯ ನೀರು ಮನುಷ್ಯನ ಒಂದು ಕಪಾಲದಲ್ಲಿ (skull) ಶೇಖರ ವಾಗಬೇಕು, ನಾಗರ ಹಾವು ಒಂದು ಕಪ್ಪೆಯನ್ನು ಅಟ್ಟಿಸಿಕೊಂಡು ಹೋಗಬೇಕು, ಆ ಹಾವು ಅದನ್ನು “ಬುಸ್” ಎಂದು ಕಡಿಯುವಾಗ ಕಪ್ಪೆ ನೆಗೆದು ತಪ್ಪಿಸಿಕೋಬೇಕು, ಆಗ ಆ ಹಾವಿನ ವಿಷ ಆ ಕಪಾಲದೊಳಗೆ ಬೀಳಬೇಕು; ಬಳಿಕ ಆ ವಿಷದಿಂದ ಔಷಧ ತಯಾರು ಮಾಡಿ ಕುಡಿಸುವುದಾದರೆ ಆಗ ಈತ ಬದುಕಿಕೊಳ್ಳುತ್ತಾನೆ’ ಅಂತ. ಆಗ ಆ ರೋಗಿಯ ಮನೆಯವ ಪಂಚಾಂಗ ನೋಡಿ ಸಕಾಲಕ್ಕೆ ಮನೆಯಿಂದ ಹೊರಟ. ಬಹಳ ವ್ಯಾಕುಲಚಿತ್ತದಿಂದ ಆ ಸಾಮಗ್ರಿಗಳಿಗಾಗಿ ಹುಡುಕಲು ಯತ್ನಿಸಿದ. ಆತ ಮನಸ್ಸಿನಲ್ಲೆ ಭಗವಂತನಿಗೆ ಮೊರೆಯಿಡುತ್ತಿದ್ದಾನೆ, ‘ಹೇ ಭಗವಂತ, ಎಲ್ಲವನ್ನೂ ನೀನೇ ಒದಗಿಸಿಕೊಟ್ಟರೆ ಮಾತ್ರ ಸಾಧ್ಯ’ ಅಂತ. ಹೀಗೆ ಪ್ರಾರ್ಥಿಸುತ್ತ ಮುಂದುಮುಂದುವರಿಯುತ್ತಿರುವಾಗ ವಾಸ್ತವವಾಗಿ ಒಂದು ಕಪಾಲ ನೆಲದ ಮೇಲೆ ಬಿದ್ದಿರುವುದನ್ನು ನೋಡಿದ. ಇದ್ದಕ್ಕಿದ್ದ ಹಾಗೆ ಒಂದು ಹದ ಮಳೆ ಬಂತು. ಆಗ ಆ ವ್ಯಕ್ತಿ ಪ್ರಾರ್ಥನೆ ಮಾಡಿದ: ‘ಹೇ ಗುರುದೇವ, ಮನುಷ್ಯನ ಕಪಾಲ ದೊರಕಿತು, ಸ್ವಾತಿ ನಕ್ಷತ್ರದ ಮಳೆ ಹೊಯ್ಯಿತು, ಅದರ ನೀರು ಕಪಾಲದಲ್ಲಿ ಶೇಖರವಾಗಿದೆ; ಈಗ ಕೃಪೆ ಇಟ್ಟು ಉಳಿದ ಕೆಲಸವನ್ನು ಒದಗಿಸಿಕೊಟ್ಟು ಬಿಡು, ಭಗವಂತ ವ್ಯಾಕುಲಚಿತ್ತದಿಂದ ಎದುರು ನೋಡುತ್ತಿದ್ದಾನೆ. ಆಗ ನೋಡುತ್ತಾನೆ ಒಂದು ನಾಗರಹಾವು ಬರುತ್ತಿದೆ. ಆಗ ಅವನಿಗೆ ಬಹಳ ಆನಂದವಾಯಿತು. ಆತನ ಸಂಭ್ರಮ ಎಂಥಾ ಸ್ಥಿತಿಯನ್ನು ಮುಟ್ಟಿಬಿಟ್ಟಿತು ಎಂದರೆ, ಎದೆ ‘ಡಬಡಬ’ ಎಂದು ಹೊಡೆದುಕೊಳ್ಳಲಾರಂಭಿಸಿತು. ಆಗ ಮತ್ತೆ ಆತ ಪ್ರಾರ್ಥನೆ ಮಾಡಿದ, ‘ಹೇ ಗುರುದೇವ, ಈಗ ಹಾವೂ ಬಂದಿದೆ, ಈಗ ಬೇಕಾಗಿದ್ದರಲ್ಲಿ ಅನೇಕ ವಸ್ತುಗಳು ತಾವಾಗಿಯೇ ಒದಗಿವೆ. ದಯವಿಟ್ಟು ಇನ್ನೂ ಏನೇನು ಉಳಿದುಕೊಂಡಿವೆಯೋ ಅವುಗಳನ್ನೂ ಒದಗಿಸಿ ಕೊಟ್ಟುಬಿಡು’ ಅಂತ. ಹೀಗೆಂದು ಪ್ರಾರ್ಥಿಸುತ್ತಿದ್ದಾಗಲೆ ಒಂದು ಕಪ್ಪೆ ಬಂತು. ಹಾವು ಅದನ್ನು ಅಟ್ಟಿಸಿಕೊಂಡೂ ಹೋಯಿತು. ಆ ಹಾವು ಆ ಕಪಾಲದ ಹತ್ತಿರ ಬಂದು ಇನ್ನೇನು ಕಪ್ಪೆಯನ್ನು ‘ಬುಸ್ಸೆಂದು’ ಕಚ್ಚಬೇಕು; ಅಷ್ಟರಲ್ಲಿ ಆ ಕಪ್ಪೆ ನೆಗೆದು ಆ ಕಡೆಗೆ ಹೋಗಿ ಬಿತ್ತು, ವಿಷ ಕಪಾಲದೊಳಕ್ಕೆ ಬಿತ್ತು. ಆಗ ವ್ಯಕ್ತಿ ಆನಂದದಿಂದ ಚಪ್ಪಾಳೆ ಹಾಕುತ್ತ ಕುಣಿಯಲಾರಂಭಿಸಿದ. ಅದಕ್ಕಾಗಿಯೆ ನಾನು ಹೇಳುವುದು, ‘ವ್ಯಾಕುಲತೆ ಇದ್ದರೆ ಎಲ್ಲಾ ದೊರೆಯುತ್ತೆ’ ಎಂದು.
“ಮನಸ್ಸಿನಿಂದ ಎಲ್ಲಾ ಆಸೆಗಳನ್ನು ತ್ಯಜಿಸಿದ ಹೊರತು ಭಗವಂತನ ಸಾಕ್ಷಾತ್ಕಾರ ದೊರೆಯದು. ಸಾಧುವು ಸಂಚಯ ಮಾಡಿ ಇಡಲಾರ. ‘ಹಕ್ಕಿ ಮತ್ತು ಪರಿವ್ರಾಜಕ ಸಂನ್ಯಾಸಿ ಸಂಚಯ ಮಾಡಿ ಇಡುವುದಿಲ್ಲ.’ ಇಲ್ಲಿನ ಭಾವ ಅಂಥದು, -ಕೈ ಶುದ್ಧಿಮಾಡಿ ಕೊಳ್ಳುವುದಕ್ಕೆ ಒಂದು ಹಿಡಿ ಮಣ್ಣೂ ತಂದಿಡುವ ಹಾಗಿಲ್ಲ. ಎಲೆಡಿಕೆ ಚೀಲಕ್ಕೆ ಎಲೆಡಿಕೆ ಹಾಕಿಕೊಂಡು ಬರುವ ಹಾಗಿಲ್ಲ. ಹೃದೆ ನನ್ನನ್ನು ಒಮ್ಮೆ ಬಹಳವಾಗಿ ಕಾಡಿದಾಗ, ‘ಇಲ್ಲಿಂದ ಕಾಶಿಗೆ ಹೊರಟು ಹೋಗೋಣ’ ಎಂದು ಪ್ಲಾನು ಮಾಡಿದೆ. ನನ್ನೊಡನೆ ಕೆಲವು ಬಟ್ಟೆಗಳನ್ನು ತೆಗೆದುಕೊಂಡು ಹೋಗಲೆಂತಲೇನೊ ಯೋಚಿಸಿದೆ – ಆದರೆ ಹಣವನ್ನು ಹೇಗೆ ತೆಗೆದುಕೊಂಡು ಹೋಗಲಿ? ಅದಕ್ಕಾಗಿ ಕಾಶಿಗೆ ಹೋಗೋದಕ್ಕಾಗಲಿಲ್ಲ. (ಎಲ್ಲರೂ ನಗುತ್ತಾರೆ).
(ಮಹಿಮಚರಣನಿಗೆ) “ನೀವು ಸಂಸಾರಿಗಳು. ನೀವು ಇದರ ಕಡೆಯೂ ಮನಸ್ಸನ್ನಿಡಿ, ಅದರ ಕಡೆಯೂ ಮನಸ್ಸನ್ನಿಡಿ. ಸಂಸಾರದ ಕಡೆಯೂ ಮನಸ್ಸನ್ನಿಡಿ, ಧರ್ಮದ ಕಡೆಯೂ (ಭಗವಂತನ ಕಡೆಯೂ) ಮನಸ್ಸನ್ನಿಡಿ.”
ಮಹಿಮಚರಣ: “ಅದರ ಕಡೆ ಮನಸ್ಸನ್ನಿಟ್ಟರೆ, ಮತ್ತೆ ಇದರ ಕಡೆ ಇಡಲಾ ಗುವುದೆ?”
ಶ್ರೀರಾಮಕೃಷ್ಣರು: “ಒಮ್ಮೆ ನಾನು ಪಂಚವಟಿಯ ಬಳಿ ಗಂಗೆಯ ದಡದಲ್ಲಿ ಕುಳಿತು, ಒಂದು ಕೈಯಲ್ಲಿ ಒಂದು ಹಿಡಿ ಮಣ್ಣನ್ನು ಇನ್ನೊಂದು ಕೈಯಲ್ಲಿ ಒಂದು ರೂಪಾಯಿಯನ್ನು ಹಿಡಿದು, ‘ರೂಪಾಯಿ ಮಣ್ಣು-ಮಣ್ಣೇ ನಿಜವಾಗಿ ರೂಪಾಯಿ, ರೂಪಾಯೇ ನಿಜವಾಗಿ ಮಣ್ಣು’ ಎಂಬುದಾಗಿ ವಿಚಾರ ಮಾಡುತ್ತ ಮಾಡುತ್ತ ಯಾವಾಗ ಅವನ್ನು ಗಂಗೆಯಲ್ಲಿ ಬಿಸಾಡಿದೆನೊ, ಆಗ ನನಗೆ ಸ್ವಲ್ಪ ಭಯವಾಯಿತು. ಆಗ ಭಾವಿಸಿದೆ, ‘ಈ ರೀತಿ ನಾನು ಭಗವತಿ ಲಕ್ಷ್ಮೀದೇವಿಯನ್ನು ತಿರಸ್ಕರಿಸಿದುದು ಎಂಥ ಅವಿವೇಕವಾದ ಕೆಲಸ ಆಯಿತು! ಆಕೆ ನನ್ನ ಗ್ರಾಸಕ್ಕೆ ಸೊನ್ನೆ ಹಾಕಿಬಿಟ್ಟರೆ ಏನು ಗತಿ!’ ಅಂತ. ಆಗ ಹಾಜರಾನ ಹಾಗೆ ಒಂದು ಯುಕ್ತಿ ಹೂಡಿದೆ. ಹೇಳಿದೆ, ‘ಹೇ ತಾಯಿ, ನನ್ನ ಹೃದಯದಲ್ಲೇ ವಾಸಿಸು’ ಅಂತ. ಒಬ್ಬನ ತಪಸ್ಸನ್ನು ಮೆಚ್ಚಿ ಭಗವತಿ ಆತನಿಗೆ ಹೇಳಿದಳು, ‘ನೀನು ಒಂದು ವರ ಬೇಡಿಕೊ’ ಅಂತ. ಅವನು ಹೇಳಿದ ‘ನೀನು ವರ ಕೊಡುವುದಾದರೆ ನನಗೆ ಈ ವರ ಕೊಡು, ನಾನು ನನ್ನ ಮೊಮ್ಮಕ್ಕಳೊಡನೆ ಚಿನ್ನದ ತಟ್ಟೆಯಲ್ಲಿ ಊಟಮಾಡುವ ಹಾಗೆ’ ಅಂತ. ಒಂದು ವರದಿಂದಲೇ ಆತನಿಗೆ ಮೊಮ್ಮಕ್ಕಳು, ಐಶ್ವರ್ಯ, ಚಿನ್ನದ ತಟ್ಟೆಗಳು ಇವೆಲ್ಲಾ ದೊರೆತುವು. (ಎಲ್ಲರೂ ನಗುತ್ತಾರೆ).
“ಕಾಮಕಾಂಚನಾಸಕ್ತಿ ಮನಸ್ಸಿನಿಂದ ತೊಲಗಿಹೋದರೆ, ಭಗವಂತನ ಕಡೆ ಮನಸ್ಸು ಹರಿಯುತ್ತದೆ. ಅಲ್ಲಿಗೆ ಹೋಗಿ ಆತನಲ್ಲಿ ಲೀನವಾಗಿಬಿಡುತ್ತದೆ. ಯಾರು ಬದ್ಧನೋ ಆತನೇ ಮುಕ್ತನಾಗಬಲ್ಲ. ಭಗವಂತನಿಗೆ ವಿಮುಖನಾದೊಡನೆಯೇ ಬದ್ಧನಾಗಿ ಬಿಡುತ್ತಾನೆ- ತಕ್ಕಡಿಯ ಕೆಳಗಿನ ಮುಳ್ಳು ಮೇಲಿನ ಮುಳ್ಳಿನಿಂದ ಬೇರೆಯಾಗಿ ಯಾವಾಗ ನಿಲ್ಲುತ್ತದೆ? ಯಾವಾಗ ತಕ್ಕಡಿಯ ಒಂದು ತಟ್ಟೆಯಲ್ಲಿ ಕಾಮಕಾಂಚನದ ಭಾರ ಅಧಿಕವಾಗುವುದೋ ಆಗ.
“ಮಗು ತಾಯ ಗರ್ಭದಿಂದ ಹೊರಕ್ಕೆ ಬಂದೊಡನೆಯೆ ಏಕೆ ಅಳುತ್ತದೆ? ‘ಗರ್ಭ ದಲ್ಲಿತ್ತು, ಯೋಗದಲ್ಲಿತ್ತು’ ಭೂಮಿಗೆ ಬಂದೊಡನೇ ಅಳುತ್ತದೆ, ‘ಇದು ಯಾವ ಸ್ಥಳ? ಇದು ಯಾವ ಸ್ಥಳ? ನಾನು ಎಲ್ಲಿಗೆ ಬಂದು ಬಿದ್ದಿದ್ದೇನೆ! ಅಲ್ಲಿ ಭಗವಂತನ ಪಾದಪದ್ಮಗಳ ಚಿಂತನೆ ಮಾಡುತ್ತಿದ್ದೆ. ಈಗ ಎಲ್ಲಿ ಬಂದು ಬಿದ್ದಿದ್ದೇನೆ!’.
(ಮಹಿಮಚರಣನಿಗೆ) “ನಿಮಗೆ ಅಗತ್ಯವಾದ್ದು ಮಾನಸಿಕ ತ್ಯಾಗ – ಅನಾಸಕ್ತರಾಗಿ ಇದ್ದುಕೊಂಡು ಸಂಸಾರವನ್ನು ನಡೆಸಿಕೊಂಡು ಹೋಗಿ.”
ಮಹಿಮಚರಣ: “ಭಗವಂತನ ಕಡೆ ಮನಸ್ಸು ಹರಿಯಲಾರಂಭಿಸಿದ ಮೇಲೆ, ಈ ಸಂಸಾರದಲ್ಲಿ ಇರಲಾಗುತ್ತದೆಯೆ?”
ಶ್ರೀರಾಮಕೃಷ್ಣರು: “ಏನು ನೀನು ಹೇಳೋದು? ಸಂಸಾರದಲ್ಲಿ ಇರೋದಿಲ್ಲ ಅಂದರೆ ಹೋಗುವುದು ತಾನೆ ಎಲ್ಲಿಗೆ? ನನಗೆ ಅನುಭವ ಆಗುತ್ತಿದೆ, ‘ನಾನೆಲ್ಲಿ ಇದ್ದರೂ ಅದು ಅಯೋಧ್ಯೆಯೆ’ ಅಂತ. ಈ ಇಡೀ ಸಂಸಾರವೇ, ಜಗತ್ತೇ ರಾಮನ ಅಯೋಧ್ಯೆ. ಗುರುವಿನಿಂದ ಉಪದೇಶ ಪಡೆದನಂತರ ರಾಮಚಂದ್ರ ಹೇಳಿದ: ‘ನಾನು ಸಂಸಾರವನ್ನು ತ್ಯಾಗಮಾಡಿ ಹೋಗುತ್ತೇನೆ’. ಆತನಿಗೆ ಬುದ್ಧಿ ಹೇಳಲು ದಶರಥ ವಸಿಷ್ಠನನ್ನು ಕರೆಸಿದ. ವಸಿಷ್ಠ ನೋಡುತ್ತಾನೆ, ರಾಮನಿಗೆ ತೀವ್ರ ವೈರಾಗ್ಯ ಬಂದುಬಿಟ್ಟಿದೆ. ಆಗ ಆತ ಹೇಳಿದ, ‘ಓ ರಾಮ, ಮೊದಲು ನನ್ನೊಡನೆ ಸ್ವಲ್ಪ ವಿಚಾರಮಾಡು, ಬಳಿಕ ಸಂಸಾರವನ್ನು ತ್ಯಜಿಸುವೆಯಂತೆ. ಒಳ್ಳೆಯದು, ಒಂದು ಪ್ರಶ್ನೆ. ಈ ಸಂಸಾರ (ಪ್ರಪಂಚ) ಭಗವಂತನಿಂದ ಪ್ರತ್ಯೇಕವಾದುದೆ? ಅದು ಹಾಗಿದ್ದರೆ ನೀನು ಅದನ್ನು ತ್ಯಜಿಸಿ ಹೋಗು’. ರಾಮ ನೋಡುತ್ತಾನೆ, ಭಗವಂತನೇ ಜೀವಜಗತ್ತು ಎಲ್ಲ ಆಗಿದ್ದಾನೆ, ಆತನ ಸತ್ತ್ವದಿಂದಲೇ ಎಲ್ಲವೂ ಸತ್ಯವಾಗಿ ತೋರಿಬರುತ್ತದೆ. ಆಗ ರಾಮಚಂದ್ರ ತೆಪ್ಪಗೆ ಕುಳಿತ.
“ಈ ಸಂಸಾರದಲ್ಲಿ ಕಾಮ, ಕ್ರೋಧ ಇವೇ ಮೊದಲಾದುವುಗಳೊಡನೆ ಯುದ್ಧ ಮಾಡಬೇಕಾಗಿದೆ. ವಿವಿಧ ಕಾಮನೆಗಳೊಡನೆ ಯುದ್ಧ ಮಾಡಬೇಕಾಗಿದೆ, ಆಸಕ್ತಿಯೊಡನೆ ಯುದ್ಧ ಮಾಡಬೇಕಾಗಿದೆ. ಯುದ್ಧವನ್ನು ಕೋಟೆಯೊಳಗಿನಿಂದ ಮಾಡುವುದೇ ಮೇಲು. ಗೃಹದಲ್ಲಿದ್ದುಕೊಂಡೇ ಯುದ್ಧಮಾಡುವುದು ಮೇಲು; – ಊಟೋಪಚಾರ ದೊರೆಯುತ್ತೆ; – ಕೈಹಿಡಿದ ಹೆಂಡತಿ ಅನೇಕ ವಿಧವಾಗಿ ಸಹಾಯ ಮಾಡುತ್ತಾಳೆ, ಈ ಕಲಿಯುಗದಲ್ಲಿ ಅನ್ನಗತಪ್ರಾಣ-ಭಿಕ್ಷಾಟನೆಗಾಗಿ ಒಂದು ಏಳು ಮನೆಗೆ ಹೋಗುವುದಕ್ಕೆ ಬದಲು ಒಂದು ಮನೆಯದೇ ಮೇಲು. ಗೃಹದಲ್ಲಿರುವುದು ಕೋಟೆಯೊಳಗಿನಿಂದ ಯುದ್ಧ ಮಾಡಿದ ಹಾಗೆ.
“ಸಂಸಾರದಲ್ಲಿರಿ, ಬಿರುಗಾಳಿಗೆ ಸಿಕ್ಕಿದ ಎಂಜಲೆಲೆಯೋಪಾದಿಯಲ್ಲಿ ಇರಿ. ಗಾಳಿ ಅದನ್ನು ಒಮ್ಮೆ ಮನೆಯ ಒಳಕ್ಕೂ, ಒಮ್ಮೊಮ್ಮೆ ತಿಪ್ಪೆಗುಂಡಿಗೂ ಎತ್ತಿ ಬಿಸಾಡುತ್ತದೆ. ಗಾಳಿ ಯಾವ ಕಡೆಗೆ ಬೀಸುವುದೊ ಅದು ಆ ಕಡೆಗೆ ಹೋಗುತ್ತದೆ. ಒಮ್ಮೊಮ್ಮೆ ಒಳ್ಳೆಯ ಸ್ಥಳಗಳಿಗೆ, ಒಮ್ಮೊಮ್ಮೆ ಮಲಿನ ಸ್ಥಳಗಳಿಗೆ ಹೋಗಿ ಬೀಳುತ್ತದೆ. ಈಗ ನಿನ್ನನ್ನು ಸಂಸಾರದಲ್ಲಿ ಬಿಸಾಡಿದ್ದಾನೆ; ಒಳ್ಳೆಯದು, ಈಗ ಇಲ್ಲೇ ಇರು – ಮತ್ತೆ ಯಾವಾಗ ಆತ ನಿನ್ನನ್ನು ಇಲ್ಲಿಂದ ಎತ್ತಿಕೊಂಡು ಹೋಗಿ ಇದಕ್ಕಿಂತಲೂ ಮೇಲಾದ ಜಾಗದಲ್ಲಿ ಬಿಸಾಡುವನೊ ಆಗ ಏನಾಗಬೇಕೊ ಅದು ಆಗುತ್ತದೆ.
“ಸಂಸಾರದಲ್ಲಿ ಇಟ್ಟಿದ್ದಾನೆ, ಅದಕ್ಕೇನುತಾನೆ ಮಾಡಲಾದೀತು? ಎಲ್ಲವನ್ನೂ ಆತನಿಗೆ ಸಮರ್ಪಿಸಿಬಿಡು – ಆತನಿಗೆ ಆತ್ಮಸಮರ್ಪಣೆ ಮಾಡಿಕೊ. ಹಾಗೆ ಮಾಡಿದರೆ ಮತ್ತೆಯಾವ ತೊಂದರೆಯೂ ಬರದು. ಆಗ ಎಲ್ಲವನ್ನೂ ಆತನೇ ಮಾಡುತ್ತಿದ್ದಾನೆ ಎಂಬ ಅರಿವು ಉಂಟಾಗುತ್ತದೆ. ಎಲ್ಲವೂ ‘ರಾಮನ ಇಚ್ಛೆಯಂತೆ’ ನಡೆಯುತ್ತದೆ.”
ಒಬ್ಬ ಭಕ್ತ: “ ‘ರಾಮನ ಇಚ್ಛೆಯಂತೆ’ ಎಲ್ಲವೂ ನಡೆಯುತ್ತದೆ ಎಂಬ ಕಥೆ ಯಾವುದು?”
ಶ್ರೀರಾಮಕೃಷ್ಣರು: “ಒಂದು ಗ್ರಾಮದಲ್ಲಿ ಒಬ್ಬ ನೇಯ್ಗೆಯವನು ಇದ್ದ. ಆತ ಅತ್ಯಂತ ಧಾರ್ಮಿಕ. ಎಲ್ಲರೂ ಆತನನ್ನು ನಂಬುತ್ತಿದ್ದರು ಮತ್ತು ಪ್ರೀತಿಸುತ್ತಿದ್ದರು. ಆತ ಸಂತೆಗೆ ಹೋಗಿ ಬಟ್ಟೆ ಮಾರುತ್ತಿದ್ದ. ಗಿರಾಕಿ ಯಾವುದಕ್ಕಾದರೂ ಬೆಲೆ ಎಷ್ಟು ಎಂದು ಕೇಳಿದರೆ ಆತ ಹೇಳುತ್ತಿದ್ದ, ‘ರಾಮನ ಇಚ್ಛೆಗನುಸಾರ ನೂಲಿನ ಬೆಲೆ ಒಂದು ರೂಪಾಯಿ. ನೇಯ್ಗೆ ಕೂಲಿ ನಾಲ್ಕು ಆಣೆ. ರಾಮನ ಇಚ್ಛೆಗನುಸಾರ ಲಾಭ ಎರಡಾಣೆ. ಆದ್ದರಿಂದ ಬಟ್ಟೆ ಬೆಲೆ ರಾಮನ ಇಚ್ಛೆಗನುಸಾರ ರೂಪಾಯಿ ಆರಾಣೆ ಅಂತ. ಗಿರಾಕಿಗಳಿಗೆ ಆತನಲ್ಲಿ ಅಷ್ಟೊಂದು ನಂಬಿಕೆ. ಒಡನೆಯೆ ಬೆಲೆ ಕೊಟ್ಟು ಬಟ್ಟೆ ಕೊಂಡುಕೊಂಡು ಹೋಗಿಬಿಡುತ್ತಿದ್ದರು. ಮನುಷ್ಯ ದೊಡ್ಡ ಭಕ್ತ. ರಾತ್ರಿ ವೇಳೆ ಊಟವಾದ ನಂತರ ಚಂಡೀಮಂಟಪದಲ್ಲಿ ಕುಳಿತು ಭಗವಂತನ ಚಿಂತನೆ ಮಾಡುತ್ತಿದ್ದ ಮತ್ತು ಆತನ ನಾಮಕೀರ್ತನೆ ಮಾಡುತ್ತಿದ್ದ. ಒಂದು ದಿನ ಬಹಳವಾಗಿ ರಾತ್ರಿಯಾಗಿಬಿಟ್ಟಿದೆ, ಬಡಪಾಯಿಗೆ ನಿದ್ರೆ ಬರುತ್ತಿಲ್ಲ, ಕುಳಿತೇ ಇದ್ದಾನೆ. ಒಮ್ಮೊಮ್ಮೆ ಹುಕ್ಕ ಸೇದುತ್ತಾನೆ. ಆ ಸಮಯದಲ್ಲಿ ಆ ಮಾರ್ಗವಾಗಿ ಒಂದು ಕಳ್ಳರ ಗುಂಪು ಕಳವು ಮಾಡಲು ಹೋಗುತ್ತಿದೆ. ಮೂಟೆ ಹೊರುವುದಕ್ಕೆ ಅವರಿಗೆ ಒಬ್ಬ ಆಳು ಬೇಕಾಗಿತ್ತು. ಅವರು ಬಂದು ಈ ನೇಯ್ಗೆಯವನಿಗೆ ಹೇಳಿದರು, ‘ಬಾ ನಮ್ಮೊಡನೆ!’ ಅಂತ. ಹೀಗೆಂದು ಹೇಳಿ ಆತನ ಕೈ ಹಿಡಿದು ಎಳೆದುಕೊಂಡು ಹೊರಟೇ ಹೋದರು. ಬಳಿಕ ಒಬ್ಬ ಗೃಹಸ್ಥನ ಮನೆಗೆ ಕನ್ನ ಹಾಕಿದರು. ಅಲ್ಲಿ ಕದ್ದ ಸಾಮಾನುಗಳ ಮೂಟೆಯೊಂದನ್ನು ನೇಯ್ಗೆಯವನ ತಲೆ ಮೇಲೆ ಹೊರಿಸಿದರು. ಆ ಸಮಯಕ್ಕೆ ಸರಿಯಾಗಿ ಪೊಲೀಸಿನವರು ಅಲ್ಲಿಗೆ ಬಂದರು, ಕಳ್ಳರು ಓಡಿಬಿಟ್ಟರು. ತಲೆ ಮೇಲೆ ಮೂಟೆ ಹೊತ್ತುಕೊಂಡಿದ್ದ ಈ ನೇಯ್ಗೆಯವ ಅವರ ಕೈಗೆ ಸಿಕ್ಕಿಬಿದ್ದ. ಅಂದಿನ ರಾತ್ರಿ ಅವನನ್ನು ಜೈಲಿನಲ್ಲಿ ಇಟ್ಟರು. ಮಾರನೆಯ ದಿನ ಮ್ಯಾಜಿಸ್ಟ್ರೇಟ್ ಸಾಹೇಬರ ಎದುರು ವಿಚಾರಣೆ ಶುರು ಆಯಿತು. ಈ ಸಮಾಚಾರವನ್ನು ಕೇಳಿ ಗ್ರಾಮಸ್ಥರೆಲ್ಲ ಅಲ್ಲಿಗೆ ಓಡಿ ಬಂದರು. ಅವರೆಲ್ಲರೂ ಹೇಳಿದರು, ‘ಹುಜೂರ್, ಈ ಮನುಷ್ಯ ಎಂದಿಗೂ ಕಳವು ಮಾಡಲಾರ’ ಅಂತ. ಆಗ ಸಾಹೇಬರು ನೇಯ್ಗೆಯವನನ್ನು ಕೇಳಿದರು, ‘ಏನು ಸಮಾಚಾರ, ಏನಾಯಿತು ಹೇಳು!’ ಅಂತ.
“ಆ ನೇಯ್ಗೆಯವನು ಹೇಳಿದ: ‘ಮಹಾಸ್ವಾಮಿ, ರಾಮನ ಇಚ್ಛೆಯಂತೆ ನಾನು ರಾತ್ರಿ ಊಟ ಮುಗಿಸಿದೆ. ಬಳಿಕ ರಾಮನ ಇಚ್ಛೆಯಂತೆ ಚಂಡೀಮಂಟಪದಲ್ಲಿ ಕುಳಿತುಕೊಂಡಿದ್ದೆ. ರಾಮನ ಇಚ್ಛೆಯಂತೆ ರಾತ್ರಿ ಬಹಳವಾಗಿ ಮುಂದುವರಿಯಿತು. ನಾನು ರಾಮನ ಇಚ್ಛೆಯಂತೆ ಆತನ ಚಿಂತನೆ ಮಾಡುತ್ತಿದ್ದೆ ಮತ್ತು ಆತನ ನಾಮಗುಣಕೀರ್ತನೆ ಮಾಡುತ್ತಿದ್ದೆ. ಆಗ ರಾಮನ ಇಚ್ಛೆಯಂತೆ ಒಂದು ಕಳ್ಳರ ಗುಂಪು ಆ ಮಾರ್ಗವಾಗಿ ಮುಂದುವರಿ ಯುತ್ತಿತ್ತು. ರಾಮನ ಇಚ್ಛೆಯಂತೆ ಆ ಕಳ್ಳರು ನನ್ನನ್ನು ಹಿಡಿದುಕೊಂಡು ಹೋದರು. ರಾಮನ ಇಚ್ಛೆಯಂತೆ ಅವರು ಒಬ್ಬ ಗೃಹಸ್ಥನ ಮನೆಗೆ ಕನ್ನಹಾಕಿದರು. ರಾಮನ ಇಚ್ಛೆಯಂತೆ ನನ್ನ ತಲೆಯ ಮೇಲೆ ಮೂಟೆ ಹೊರಿಸಿದರು. ಆ ಸಮಯಕ್ಕೆ ಸರಿಯಾಗಿ ಪೊಲೀಸಿನವರು ಅಲ್ಲಿಗೆ ಬಂದರು. ರಾಮನ ಇಚ್ಛೆಯಂತೆ ನಾನು ಸಿಕ್ಕಿಬಿದ್ದೆ. ಈಗ ರಾಮನ ಇಚ್ಛೆಯಂತೆ ಹುಜೂರರ ಹತ್ತಿರ ಕರೆದುಕೊಂಡು ಬಂದಿದ್ದಾರೆ.’ ಆಗ ಮ್ಯಾಜಿಸ್ಟ್ರೇಟ್ ಈತ ಬಹಳ ಧಾರ್ಮಿಕ ಎಂದು ಭಾವಿಸಿ ಆತನನ್ನು ಬಿಟ್ಟುಬಿಡಲು ಹುಕುಂ ಮಾಡಿದರು. ಮನೆಗೆ ಹಿಂದಿರುಗುವಾಗ ಆ ನೇಯ್ಗೆಯವನು ತನ್ನ ಬಂಧುಗಳಿಗೆ ಹೇಳಿದ, ‘ರಾಮನ ಇಚ್ಛೆಯಂತೆ ನನ್ನನ್ನು ಬಿಟ್ಟುಬಿಟ್ಟರು’ ಅಂತ.
“ಮನುಷ್ಯ ಸಂಸಾರಿಯಾಗುವುದು ಅಥವಾ ಸಂನ್ಯಾಸಿಯಾಗುವುದು ಎಲ್ಲ ಆತನ ಇಚ್ಛೆಯಂತೆ. ಅದಕ್ಕಾಗಿಯೆ ಎಲ್ಲಾ ಭಾರವನ್ನು ಆತನ ಮೇಲೆ ಹೊರಿಸಿಬಿಟ್ಟು ಈ ಪ್ರಪಂಚದಲ್ಲಿ ನಿನ್ನ ಕೆಲಸ ಕಾರ್ಯಗಳನ್ನು ಮಾಡು. ಅದನ್ನು ಬಿಟ್ಟರೆ ಮತ್ತೆ ಇನ್ನೇನು ತಾನೆ ಸಾಧ್ಯ? ಒಬ್ಬ ಗುಮಾಸ್ತ ಜೈಲನ್ನು ಅನುಭವಿಸಬೇಕಾಗಿ ಬಂತು. ಸಜಾ ಮುಗಿದ ನಂತರ ಆತ ಜೈಲಿನಿಂದ ಹಿಂದಿರುಗಿ ಬಂದ. ಹಿಂದಿರುಗಿ ಬಂದನಂತರ ಆತ ‘ತಕಥೈ’ ಅಂತ ಕುಣಿಯುತ್ತಾನೊ ಅಥವಾ ತನ್ನ ಹಿಂದಿನ ಗುಮಾಸ್ತೆ ಕೆಲಸ ಮಾಡುತ್ತಾನೊ?
“ಸಂಸಾರಿ ಜೀವನ್ಮುಕ್ತಿಯನ್ನು ಪಡೆದರೆ, ಆತ ಇಚ್ಛೆಪಟ್ಟರೆ ಅನಾಯಾಸವಾಗಿ ಸಂಸಾರದಲ್ಲೇ ಇರಬಲ್ಲ, ಯಾರಿಗೆ ಜ್ಞಾನ ದೊರೆತಿದೆಯೊ ಅವರಿಗೆ ‘ಈ ಸ್ಥಳ’, ‘ಆ ಸ್ಥಳ’ ಎಂಬ ಭೇದಭಾವವೇನಿರದು. ಅವರಿಗೆ ಎಲ್ಲಾ ಒಂದೇ. ಯಾರಿಗೆ ‘ಆ ಸ್ಥಳ’ ಎಂಬ ಭಾವನೆ ಇರುವುದೊ ಅವರಿಗೆ ‘ಈ ಸ್ಥಳ’ ಎಂಬ ಭಾವನೆಯೂ ಇರುತ್ತದೆ.
“ನಾನು ಕೇಶವಸೇನನನ್ನು ಮೊಟ್ಟಮೊದಲು ಜಯಗೋಪಾಲಸೇನನ ತೋಟದಲ್ಲಿ ನೋಡಿದಾಗ ಆತನನ್ನು ತಮಾಷೆಮಾಡಿ ಹೇಳಿದೆ, ‘ಕೇವಲ ಈತನಿಗೆ ಮಾತ್ರವೇ ಬಾಲ ಬಿದ್ದುಹೋಗಿದೆ’ ಅಂತ. ಇಡೀ ಸಭೆ ಜನರೆಲ್ಲ ಗೊಳ್ಳೆಂದು ನಕ್ಕರು. ಕೇಶವ ಹೇಳಿದ, ‘ನೀವು ಸುಮ್ಮನೆ ನಗಬೇಡಿ, ಇವರ ಮಾತಿನಲ್ಲಿ ಏನೊ ಅರ್ಥ ಇದೆ, ಕೇಳಿ ತಿಳಿದು ಕೊಳ್ಳೋಣ’ ಅಂತ. ನಾನು ಹೇಳಿದೆ: ಎಲ್ಲಿಯವರೆಗೆ ಕಪ್ಪೆಮರಿಗೆ ಬಾಲ ಬಿದ್ದು ಹೋಗುವುದಿಲ್ಲವೋ, ಅಲ್ಲಿಯವರೆಗೆ ಅದು ಕೇವಲ ನೀರಿನಲ್ಲೇ ಇರಬೇಕಾಗುತ್ತದೆ. ಅದು ನೆಗೆದು ದಡಕ್ಕೆ ಬಂದು ನೆಲದ ಮೇಲೆ ಸಂಚರಿಸಲಾರದು. ಆದರೆ ಬಾಲ ಬಿದ್ದುಹೋದ ಒಡನೆಯೆ ನೆಲದ ಮೇಲಕ್ಕೆ ನೆಗೆದು ಬರುತ್ತದೆ. ಬಳಿಕ ಅದು ನೀರಿನಲ್ಲೂ ಇರಬಲ್ಲದು. ನೆಲದ ಮೇಲೂ ಇರಬಲ್ಲದು. ಅದೇ ರೀತಿ ಮನುಷ್ಯನ ಅವಿದ್ಯೆ ಎಂಬ ಬಾಲ ಕಳಚಿ ಬಿದ್ದು ಹೋಗದವರೆಗೆ ಸಂಸಾರವೆಂಬ ನೀರಿನಲ್ಲೇ ಇರುತ್ತಾನೆ. ಅವಿದ್ಯೆ ಎಂಬ ಬಾಲ ಕಳಚಿಬಿದ್ದುಹೋಯಿತು ಅಂದರೆ – ಜ್ಞಾನ ದೊರೆಯಿತು ಅಂದರೆ ಮುಕ್ತನಾಗಿ ತಿರುಗಾಡ ಬಲ್ಲ, ಇಚ್ಛೆ ಬಂದರೆ ಸಂಸಾರದಲ್ಲಿ ಇರಲೂ ಬಲ್ಲ.”
ಮಹಿಮಚರಣ ಮೊದಲಾದ ಭಕ್ತರು ಕುಳಿತು ಪರಮಹಂಸರ ಅಮೃತಮಯ ಮಾತುಗಳನ್ನು ಕೇಳುತ್ತಿದ್ದಾರೆ. ಒಂದೊಂದು ಮಾತು ಒಂದೊಂದು ರತ್ನ. ಯಾರಿಗೆ ಎಷ್ಟೆಷ್ಟು ಬೇಕೊ ಅವರು ಅಷ್ಟಷ್ಟನ್ನು ಆರಿಸಿಕೊಳ್ಳಬಹುದು – ಆದರೆ ಮಡಿಲು ತುಂಬಿ ಹೋಗಿಬಿಟ್ಟಿದೆ. ಅದು ಅಷ್ಟೊಂದು ಭಾರವಾಗಿಬಿಟ್ಟಿದೆ. ಎತ್ತುವುದಕ್ಕೆ ಆಗುತ್ತಿಲ್ಲ, ಸೃಷ್ಟಿಯ ಆರಂಭದಿಂದ ಇದುವರೆಗೆ ಎಷ್ಟೊಂದು ಸಮಸ್ಯೆಗಳು ಮನುಷ್ಯನ ಹೃದಯದಲ್ಲಿ ಉದಯವಾಗಿವೆಯೋ, ಅವಕ್ಕೆಲ್ಲ ಪರಿಹಾರ ಇಲ್ಲಿ ದೊರೆಯುತ್ತಿದೆ.
ಶ್ರೀರಾಮಕೃಷ್ಣರು: “ಒಮ್ಮೆ ನಾನು ಮಥುರಬಾಬುವಿನೊಡನೆ ದೇವೇಂದ್ರನಾಥ ಠಾಕೂರನನ್ನು ನೋಡಲು ಹೋಗಿದ್ದೆ. ಮಥುರಬಾಬುವಿಗೆ ಹೇಳಿದೆ. ‘ನಾನು ಕೇಳಿದ್ದೇನೆ, ದೇವೇಂದ್ರನಾಥ ಠಾಕೂರ ಭಗವಂತನ ಚಿಂತನೆ ಮಾಡುತ್ತಾನೆ. ಆತನನ್ನು ನೋಡಲು ನನಗೆ ಇಚ್ಛೆಯಾಗುತ್ತಿದೆ’. ಮಥುರಬಾಬು, ‘ಒಳ್ಳೆಯದು, ನಾನು ನಿಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ಅವನೂ ನಾನೂ ಹಿಂದೂ ಕಾಲೇಜಿನಲ್ಲಿ ಒಂದೇ ಕ್ಲಾಸಿನಲ್ಲಿ ಓದುತ್ತಿದ್ದೆವು. ನಮ್ಮಿಬ್ಬರಿಗೂ ಸ್ನೇಹ ಇದೆ’ ಅಂತ ಹೇಳಿದ. ನಾವು ದೇವೇಂದ್ರನಾಥ ಠಾಕೂರನ ಮನೆಗೆ ಹೋದೆವು. ಅವರಿಬ್ಬರೂ ಒಬ್ಬರನ್ನೊಬ್ಬರು ನೋಡಿ ಬಹಳ ದಿವಸ ಆಗಿತ್ತು. ಮಥುರಬಾಬುವನ್ನು ನೋಡಿ ದೇವೇಂದ್ರ, ‘ನೀನು ಒಂದು ಸ್ವಲ್ಪ ಬದಲಾಯಿಸಿ ಬಿಟ್ಟಿದ್ದೀಯೆ – ನಿನಗೊಂದಷ್ಟು ಬೊಜ್ಜು ಬೆಳೆದಿದೆ’ ಅಂತ ಹೇಳಿದ. ಬಳಿಕ ಮಥುರ ಬಾಬು ನನ್ನನ್ನು ತೋರಿಸಿ ಹೇಳಿದ, ‘ಇವರು ನಿನ್ನನ್ನು ನೋಡಲು ಬಂದಿದ್ದಾರೆ. ಇವರು “ಭಗವಂತ,” “ಭಗವಂತ” ಅಂತ ಹೇಳುತ್ತ ಆತನಿಗಾಗಿ ಹುಚ್ಚರಾಗಿದ್ದಾರೆ’ ಎಂದು. ನಾನು ದೇವೇಂದ್ರನಾಥನ ದೇಹದ ಲಕ್ಷಣ ನೋಡಲೋಸುಗ ಆತನಿಗೆ ಹೇಳಿದೆ, ‘ಎಲ್ಲಿ, ನಿನ್ನ ಮೈಯನ್ನು ತೋರಿಸು ನೋಡೋಣ’ ಅಂತ. ಆತ ಶರಟನ್ನು ಮೇಲಕ್ಕೆ ಎತ್ತಿ ತೋರಿಸಿದ. ನೋಡಿದೆ – ಗೌರವರ್ಣ. ಅದರ ಮೇಲೆ ಕುಂಕುಮ ಹರಡಿದ ಹಾಗೆ ಕಂಡಿತು. ಆಗ ಆತನ ತಲೆಗೂದಲು ಇನ್ನೂ ನರೆತಿರಲಿಲ್ಲ.
“ದರ್ಶನಮಾತ್ರದಿಂದಲೇ ಆತನಲ್ಲಿ ಸ್ವಲ್ಪ ಅಭಿಮಾನ ಇರೋದು ಕಂಡುಬಂದಿತು. ಅದರಲ್ಲಿ ಆಶ್ಚರ್ಯವೇನು? ಆತನಿಗೆ ಅಷ್ಟೊಂದು ಐಶ್ವರ್ಯ ಪಾಂಡಿತ್ಯ ಮತ್ತು ಕೀರ್ತಿ! ಆತನ ಅಭಿಮಾನ ನೋಡಿ ಮಥುರಬಾಬುವಿಗೆ ಕೇಳಿದೆ, ‘ಒಳ್ಳೆಯದು, ಅಭಿಮಾನ ಜ್ಞಾನಜನ್ಯವೊ ಅಜ್ಞಾನಜನ್ಯವೊ? ಯಾರಿಗೆ ಬ್ರಹ್ಮಜ್ಞಾನ ದೊರೆತಿರುವುದೊ ಅವರಿಗೆ, “ನಾನು ಒಬ್ಬ ಪಂಡಿತ; ನಾನು ಒಬ್ಬ ಜ್ಞಾನಿ; ನಾನು ಧನಿಕ” ಎಂಬ ಭಾವನೆಗಳಿರುವು ದೇನು?’ ಅಂತ.
“ದೇವೇಂದ್ರನೊಡನೆ ಮಾತುಕತೆಯಾಡುತ್ತಿದ್ದ ಹಾಗೆಯೆ ಇದ್ದಕ್ಕಿದ್ದ ಹಾಗೆ ನನಗೆ ಆ ಅವಸ್ಥೆ ಬಂದುಬಿಟ್ಟಿತು. ಆ ಅವಸ್ಥೆಯಲ್ಲಿ ಯಾರು ಯಾರು ಎಂಥೆಂಥವರು ಎಂಬುದು ನನ್ನ ಕಣ್ಣೆದುರು ಬರುತ್ತದೆ, ನನ್ನ ಮನಸ್ಸಿನಲ್ಲಿ ಬಹಳವಾಗಿ ನಗು ಬಂತು. ಆ ಅವಸ್ಥೆ ಬಂದಾಗ ಪಂಡಿತರೆಲ್ಲ ಒಂದು ತೃಣವಾಗಿ ಕಾಣುತ್ತಾರೆ. ಪಂಡಿತನಲ್ಲಿ ವಿವೇಕ ವೈರಾಗ್ಯ ಇಲ್ಲ ಅಂಬುದು ಕಂಡು ಬಂದರೆ, ಆಗ ಆತ ಒಂದು ಚೂರು ಕಸಕಡ್ಡಿಯಂತೆ ಕಾಣುತ್ತಾನೆ. ಆಗ ನನ್ನ ಕಣ್ಣಿಗೆ ಆತ ಬಹು ಎತ್ತರಕ್ಕೆ ಹಾರಿಹೋಗಿದ್ದರೂ ಹೆಣದ ಗುಂಡಿಗಳ ಕಡೆ ದೃಷ್ಟಿ ಇಟ್ಟುಕೊಂಡಿರೋ ರಣಹದ್ದಿನೋಪಾದಿಯಲ್ಲಿ ಕಂಡುಬರುತ್ತಾನೆ.
“ನೋಡಿದೆ, ಆತನಿಗೆ ಯೋಗ ಭೋಗ ಎರಡೂ ಇವೆ. ಚಿಕ್ಕ ಚಿಕ್ಕ ಅನೇಕ ಮಕ್ಕಳು ಮರಿಗಳು ಇದ್ದುವು. ಅಂದು ಅಲ್ಲಿಗೆ ಮನೆ-ಡಾಕ್ಟರ್ ಬಂದಿದ್ದ, ಇದರಿಂದ ಗೊತ್ತಾಗುತ್ತದೆ ಆತ ಜ್ಞಾನಿಯಾಗಿದ್ದರೂ ಪ್ರಾಪಂಚಿಕನಾಗಿಯೂ ಇದ್ದ ಎಂಬುದು. ನಾನು ಆತನಿಗೆ ಹೇಳಿದೆ, ‘ನೀನು ಕಲಿಯುಗದ ಜನಕನೆ.’
ಅದನೂ ಇದನೂ-ಎರಡನು ಹಿಡಿದು
ಕುಡಿದನು ತುಂಬಿದ ಹಾಲ್ ಬಟ್ಟಲನು!
‘ನೀನು ಸಂಸಾರದಲ್ಲಿದ್ದರೂ ಭಗವಂತನಲ್ಲಿ ಮನಸ್ಸಿಟ್ಟಿರುವುದನ್ನು ಕೇಳಿ ನಿನ್ನನ್ನು ನೋಡಲು ಬಂದಿದ್ದೇನೆ. ನನಗೆ ಭಗವಂತನ ವಿಷಯವಾಗಿ ಸ್ವಲ್ಪ ತಿಳಿಸು’ ಅಂತ.
ಆಗ ಆತ ವೇದಗಳಿಂದ ಕೆಲವು ಮಂತ್ರಗಳನ್ನು ಎತ್ತಿ ಹೇಳಿದ. ಆತ ಹೇಳಿದ, ‘ಈ ಜಗತ್ತು ಒಂದು ಗೊಂಚಲುದೀಪದ (ಇಜ್ಚ್ಞಛ್ಛ್ಝಿಜಿಛ್ಟಿ) ಹಾಗೆ. ಪ್ರತಿಯೊಂದು ಜೀವವೂ ಅದರ ಒಂದೊಂದು ದೀಪವಿದ್ದ ಹಾಗೆ’ ಅಂತ. ಇಲ್ಲಿ ಒಮ್ಮೆ ನಾನು ಪಂಚವಟಿಯಲ್ಲಿ ಧ್ಯಾನಮಾಡುತ್ತಿದ್ದಾಗ ಅದೇ ರೀತಿಯಾಗಿ ಧ್ಯಾನದಲ್ಲಿ ಕಂಡಿದ್ದೆ. ದೇವೇಂದ್ರನ ಮಾತಿನೊಡನೆ ನನ್ನ ಅನುಭವ ಹೊಂದಿಕೊಂಡುಬಿಟ್ಟಿದ್ದರಿಂದ ಭಾವಿಸಿದೆ, ‘ಆತ ದೊಡ್ಡ ಅನುಭವ ಶಾಲಿಯೇ ಅಂತ.’ ಆತನಿಗೆ ಅದನ್ನು ಇನ್ನೂ ಸ್ವಲ್ಪ ವಿಶದಪಡಿಸುವಂತೆ ಹೇಳಿದೆ, ಆಗ ಆತ ಹೇಳಿದ, ‘ಭಗವಂತ ಮನುಷ್ಯನನ್ನು ಸೃಷ್ಟಿ ಮಾಡಿರೋದು ತನ್ನ ಮಹಿಮೆಯನ್ನು ಪ್ರಕಾಶಗೊಳಿಸಲೋಸುಗ; ಇಲ್ಲದಿದ್ದರೆ ಈ ಜಗತ್ತು ಇರೋದು ಯಾರಿಗೆ ತಾನೆ ಗೊತ್ತಾಗುತ್ತಿತ್ತು? ಗೊಂಚಲುದೀಪದ ಬೆಳಕು ಇಲ್ಲದೆ ಇದ್ದ ಪಕ್ಷದಲ್ಲಿ ಎಲ್ಲಾ ಅಂಧಕಾರ ಮಯವಾಗುತ್ತಿತ್ತು, ಗೊಂಚಲುದೀಪವನ್ನೂ ನೋಡುವುದಕ್ಕೆ ಆಗುತ್ತಿರಲಿಲ್ಲ’ ಎಂದು.
“ನಾವಿಬ್ಬರು ಬಹಳ ಹೊತ್ತು ಮಾತುಕತೆಗಳಾಡಿದ ನಂತರ ದೇವೇಂದ್ರ ಬಹಳ ಆನಂದವಾಗಿ ಹೇಳಿದ, ‘ನೀವು ಬ್ರಾಹ್ಮಸಮಾಜದ ವಾರ್ಷಿಕೋತ್ಸವಕ್ಕೆ ಬಂದೇತೀರಬೇಕು’ ಅಂತ. ನಾನು ಹೇಳಿದೆ, ‘ಅದೆಲ್ಲ ಭಗವಂತನ ಇಚ್ಛೆಯಂತೆ; ನೀನೇ ನೋಡುತ್ತಿದ್ದೀಯೆ, ನನ್ನದು ಅಂಥ ಅವಸ್ಥೆ, ಆತ ನನ್ನನ್ನು ಯಾವ ಘಳಿಗೆಯಲ್ಲಿ ಯಾವ ಭಾವದಲ್ಲಿ ಇಡುತ್ತಾನೋ ಹೇಳುವುದಕ್ಕೆ ಆಗುವುದಿಲ್ಲ’ ಅಂತ. ದೇವೇಂದ್ರ ಹೇಳಿದ, ‘ಹಾಗಾಗೋ ದಿಲ್ಲ, ಬರಲೇಬೇಕು; ಆದರೆ ಬಟ್ಟೆಬರೆ ಹಾಕಿಕೊಂಡು, ಮೈ ಮೇಲೆ ಉತ್ತರೀಯ ಹೊದ್ದುಕೊಂಡು ಬರಬೇಕು; –ನೀವು ಹಾಗೆ ಹೀಗೆ ಬಟ್ಟೆಬರೆ ಹಾಕಿಕೊಂಡಿರುವು ದನ್ನು ನೋಡಿ ಯಾರಾದರೂ ಒಂದೆರಡು ಮಾತು ಆಡಿದರೆ ಅದು ನನಗೆ ದುಃಖ ವನ್ನುಂಟು ಮಾಡುತ್ತದೆ’ ಎಂದು. ನಾನು ಹೇಳಿದೆ, ‘ಅದು ನನ್ನ ಕೈಯಲ್ಲಿ ಸಾಧ್ಯ ವಾಗೋದಿಲ್ಲ. ನಾನು ಬಾಬು ಆಗಲಾರೆ’ ಅಂತ. ದೇವೇಂದ್ರ ಮಥುರಬಾಬು ಮತ್ತೆಲ್ಲರೂ ನಗಲಾರಂಭಿಸಿದರು.
“ಮಾರನೆ ದಿನವೇ ದೇವೇಂದ್ರನಿಂದ, ಮಥುರಬಾಬುವಿಗೆ ಒಂದು ಪತ್ರ ಬಂತು – ನಾನು ಉತ್ಸವಕ್ಕೆ ಹೋಗಕೂಡದು ಎಂಬುದಾಗಿ. ಅದರಲ್ಲಿ ಬರೆದಿದ್ದಿತು, ‘ಉತ್ತರೀಯ ಹೊದ್ದುಕೊಂಡು ಬರದೆ ಇದ್ದರೆ ಅದು ಅಸಭ್ಯತೆಯನ್ನು ತೋರಿಸುತ್ತದೆ’ ಎಂಬುದಾಗಿ (ಎಲ್ಲರೂ ನಗುತ್ತಾರೆ).
“ಒಬ್ಬ ದೊಡ್ಡ ಮನುಷ್ಯನಿದ್ದಾನೆ, ಕ್ಯಾಪ್ಟನ್ 1 ಅನ್ನುವವನು. ಸಂಸಾರಿಯೇನೋ ನಿಜ. ಆದರೆ ದೊಡ್ಡ ಭಕ್ತ. (ಮಹಿಮಚರಣನಿಗೆ) ನೀನು ಆತನೊಡನೆ ಒಮ್ಮೊಮ್ಮೆ ಮಾತುಕತೆಗಳನ್ನಾಡು. ಆತ ವೇದ, ವೇದಾಂತ, ಶ್ರೀಮದ್ಭಾಗವತ, ಗೀತೆ, ಆಧ್ಯಾತ್ಮ ರಾಮಾಯಣ ಇವನ್ನು ಕಂಠಪಾಠ ಮಾಡಿಕೊಂಡಿದ್ದಾನೆ. ನೀನು ಆತನೊಡನೆ ಮಾತುಕತೆ ಯನ್ನಾಡಿ ನೋಡು.
“ಆತ ಒಳ್ಳೆ ಸದ್ಗುಣಶಾಲಿ. ನಾನು ಒಮ್ಮೆ ವರಾಹನಗರದ ರಸ್ತೆಯಲ್ಲಿ ಹೋಗುತ್ತಿರು ವಾಗ ನನ್ನ ತಲೆಯ ಮೇಲೆ ಛತ್ರಿ ಹಿಡಿದುಕೊಂಡು ಬಂದ. ನನ್ನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಎಷ್ಟೊಂದು ಉಪಚಾರ ಮಾಡುತ್ತಾನೆ ಅಂತ! – ಗಾಳಿ ಬೀಸೋದು, ಕಾಲು ಒತ್ತೋದು, ವಿವಿಧ ಭಕ್ಷ್ಯಭೋಜ್ಯಗಳಿಂದ ತೃಪ್ತಿಗೊಳಿಸೋದು, ಇತ್ಯಾದಿ. ನಾನು ಒಂದು ದಿನ ಆತನ ಕಕ್ಕಸ್ಸಿನಲ್ಲಿ ಸಮಾಧಿಸ್ಥನಾಗಿಬಿಟ್ಟೆ. ಆತ ಅಷ್ಟೊಂದು ಆಚಾರಶೀಲನಾಗಿದ್ದರೂ ಅಸಹ್ಯಪಟ್ಟುಕೊಳ್ಳದೆ ಅಲ್ಲಿಗ ಬಂದ ನನ್ನ ಕೈಕಾಲು ತೊಳೆದು ನನ್ನ ಯೋಗಕ್ಷೇಮವನ್ನು ನೋಡಿಕೊಂಡ. ನೋಡು, ಅಷ್ಟೊಂದು ಆಚಾರವಂತ, ಆದರೂ ಅದನ್ನೆಲ್ಲ ಒಂದು ಬದಿಗಿಟ್ಟು ಅಲ್ಲಿಗೆ ಬಂದನಲ್ಲ!
“ಆತನಿಗೆ ಹಲವಾರು ವಿವಿಧ ಖರ್ಚು. ಕಾಶಿಯಲ್ಲಿ ಸಹೋದರರಿದ್ದಾರೆ. ಅವರಿಗೆ ಕಳುಹಿಸಬೇಕಾಗಿದೆ. ಹೆಂಡತಿ ಮೊದಲು ಜಿಪುಣೆ ಆಗಿದ್ದಳು. ಈಗ ಆಕೆ ಅಷ್ಟೊಂದು ವಿಶಾಲ ಹೃದಯದವಳಾಗಿ ಬಿಟ್ಟಿದ್ದಾಳೆ. ಆಕೆಯ ವಿವಿಧ ಖರ್ಚುಗಳಿಗೆ ಸಾಕಾದಷ್ಟು ಹಣ ದೊರೆಯುತ್ತಿಲ್ಲ.
“ಕ್ಯಾಪ್ಟನ್ನನ ಹೆಂಡತಿ ಒಮ್ಮೆ ನನಗೆ, ‘ಅವರಿಗೆ ಸಂಸಾರ ರುಚಿಸುತ್ತಿರಲಿಲ್ಲ. ಅದಕ್ಕಾಗಿಯೆ ಅವರು ಒಮ್ಮೆ ತಾವು ಸಂಸಾರವನ್ನು ತ್ಯಜಿಸಿಬಿಡುವುದಾಗಿ ಹೇಳಿದರು’ ಅಂತ ಹೇಳಿದಳು. ಆತ ಆಗಾಗ ನನಗೂ ಹೇಳುತ್ತಿದ್ದ, ‘ಬಿಟ್ಟುಬಿಡುತ್ತೇನೆ’ ಅಂತ.
“ಆತನ ವಂಶಿಕರೆಲ್ಲರೂ ಭಕ್ತರೆ. ಆತನ ತಂದೆ ಒಬ್ಬ ಸಿಪಾಯಿ. ಆತ ಯುದ್ಧದ ಸಮಯದಲ್ಲಿ ಒಂದು ಕೈಯಲ್ಲಿ ಶಿವಪೂಜೆಯನ್ನು ಮಾಡುತ್ತ ಇನ್ನೊಂದು ಕೈಯಿಂದ ಕತ್ತಿ ಹಿಡಿದು ಯುದ್ಧಮಾಡುತ್ತಿದ್ದನಂತೆ.
“ಕ್ಯಾಪ್ಟನ್ ಬಹಳ ಆಚಾರವಂತ. ನಾನು ಕೇಶವಸೇನನನ್ನು ನೋಡಲು ಹೋಗುತ್ತಿದ್ದೆ. ಅದನ್ನು ನೋಡಿ ಆತ ಇಲ್ಲಿಗೆ ಒಂದು ತಿಂಗಳಕಾಲ ಬರಲಿಲ್ಲ. ಆತ ಹೇಳುತ್ತಿದ್ದ, ‘ಕೇಶವಸೇನ ಭ್ರಷ್ಟಾಚಾರಿ-ಇಂಗ್ಲೀಷರೊಡನೆ ಉಣ್ಣೋದು ತಿನ್ನೋದು ಮಾಡುತ್ತಾನೆ, ಬೇರೆ ಜಾತಿಯವನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ್ದಾನೆ; ಅವನಿಗೆ ಜಾತಿ ಕುಲ ಅನ್ನುವುದೇ ಇಲ್ಲ’ ಅಂತ. ನಾನು ಹೇಳಿದೆ, ‘ಅದನ್ನೆಲ್ಲ ಕಟ್ಟಿಕೊಂಡು ನನಗೇನು? ಕೇಶವಸೇನ ಭಗವಂತನ ನಾಮಸ್ಮರಣೆ ಮಾಡುತ್ತಾನೆ. ಅದಕ್ಕಾಗಿ ಆತನನ್ನು ನೋಡಲು ಹೋಗುತ್ತೇನೆ; ಆತನ ಬಾಯಿಂದ ಭಗವಂತನ ವಿಷಯ ಕೇಳಲು ಹೋಗುತ್ತೇನೆ. ನನಗೆ ಬೇಕಾಗಿರೋದು ದ್ವೀಪ ದ್ರಾಕ್ಷಿ ಹಣ್ಣು; ಅದರ ಮುಳ್ಳಿನ ವಿಚಾರ ನನಗೇಕೆ?’ ಅಂತ. ಹಾಗೂ ಆತ ನನ್ನನ್ನು ಸುಮ್ಮನೆ ಬಿಡಲಿಲ್ಲ. ಆತ ಹೇಳಿದ, ‘ಭಗವಂತನ ವಿಷಯವಾಗಿ ಕೇಳುವುದಕ್ಕೆ ನೀವು ಕೇಶವಸೇನನ ಹತ್ತಿರಕ್ಕೆ ಏಕೆ ಹೋಗಬೇಕು?’ ಅಂತ. ಆಗ ಸ್ವಲ್ಪ ಸಿಟ್ಟುಕೊಂಡು ಹೇಳಿದೆ, ‘ನಾನು ದುಡ್ಡಿಗಾಗಿ ಅಲ್ಲಿಗೆ ಹೋಗುತ್ತಿಲ್ಲ – ನಾನು ಹರಿನಾಮ ಕೇಳಲು ಹೋಗುತ್ತಿದ್ದೇನೆ – ನೀನು ವೈಸ್ರಾಯನ್ನು ನೋಡಲು ಹೋಗುತ್ತೀ ಯಲ್ಲ ಅದು ಹೇಗೆ? ಅವರು ಮ್ಲೇಚ್ಛರು. ಅವರೊಡನೆ ನೀನು ಬೆರೆಯುತ್ತೀಯಲ್ಲ ಅದು ಹೇಗೆ?’ ಅಂತ. ಇದನ್ನೆಲ್ಲ ಹೇಳಿದ ಮೇಲೆ ಆತ ಒಂದು ಸ್ವಲ್ಪ ಮೆತ್ತಗಾದ.
“ಆದರೂ ಆತ ಒಬ್ಬ ದೊಡ್ಡ ಭಕ್ತ, ಪೂಜೆಯ ಸಮಯದಲ್ಲಿ ಕರ್ಪೂರದ ಮಂಗಳಾರತಿ ಮಾಡುತ್ತಾನೆ. ಅವನು ಸ್ತೋತ್ರಪಾಠ ಮಾಡುವಾಗಲಂತೂ ಬೇರೆ ವ್ಯಕ್ತಿಯೇ ಆಗಿಬಿಡುತ್ತಾನೆ. ಅದರಲ್ಲಿ ಆತ ಸಂಪೂರ್ಣ ತನ್ಮಯನಾಗಿಬಿಡುತ್ತಾನೆ.
(ಮಹಿಮಚರಣನಿಗೆ) “ವೇದಾಂತದ ದೃಷ್ಟಿಯಿಂದ ಈ ಜಗತ್ತು ಮಾಯಾಮಯ – ಸ್ವಪ್ನದಂತೆ ಮಿಥ್ಯೆ. ಯಾರು ಪರಮಾತ್ಮನೋ ಆತನೇ ಸಾಕ್ಷಿಸ್ವರೂಪನಾಗಿದ್ದಾನೆ – ಜಾಗ್ರತ್ ಸ್ವಪ್ನ ಸುಷುಪ್ತಿ ಮೂರು ಅವಸ್ಥೆಗಳಲ್ಲಿಯೂ ಸಾಕ್ಷಿಸ್ವರೂಪನಾಗಿದ್ದಾನೆ. ಇವೆಲ್ಲ ನಿನಗೆ ತುಂಬ ಚೆನ್ನಾಗಿ ಹಿಡಿಸುವ ವಿಷಯ. ಸ್ವಪ್ನ ಎಷ್ಟು ಸತ್ಯವೊ ಜಗತ್ತು ಅಷ್ಟೇ ಸತ್ಯ. ನಿನಗೆ ಹಿಡಿಸುವ ಒಂದು ಕಥೆ ಹೇಳುತ್ತೇನೆ ಕೇಳು.
“ಒಂದು ಊರಿನಲ್ಲಿ ಒಬ್ಬ ರೈತ ಇದ್ದ. ಒಳ್ಳೇ ಜ್ಞಾನಿ. ಆತನಿಗೆ ಮದುವೆ ಆಗಿತ್ತು. ಬಹಳ ಕಾಲವಾದ ಮೇಲೆ ಆತನಿಗೆ ಒಂದು ಗಂಡು ಮಗು ಆಯಿತು. ಅದರ ಹೆಸರು ಹಾರೂ ಅಂತ. ಗಂಡ ಹೆಂಡತಿ ಇಬ್ಬರೂ ಆ ಮಗುವನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಏಕೆಂದರೆ ಆತನೇ ಸಂಸಾರದ ಏಕಮಾತ್ರ ಪುತ್ರರತ್ನ. ರೈತ ಬಹಳ ಧಾರ್ಮಿಕ. ಆ ಊರಿನವರೆಲ್ಲರೂ ಆತನನ್ನು ಪ್ರೀತಿಸುತ್ತಿದ್ದರು. ಒಂದು ದಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾನೆ. ಆಗ ಯಾರೊ ಒಬ್ಬ ಬಂದು ಹೇಳಿದ, ‘ಹಾರುವಿಗೆ ಕಾಲರಾ ತಗುಲಿಬಿಟ್ಟಿದೆ’ ಅಂತ. ಆತ ಮನೆಗೆ ಬಂದು ಬಹಳವಾಗಿ ಚಿಕಿತ್ಸೆಮಾಡಿದ. ಆದರೂ ಆ ಹುಡುಗ ಸತ್ತು ಹೋಗಿಬಿಟ್ಟ. ಮನೆಯವರೆಲ್ಲರೂ ಶೋಕಾಕ್ರಾಂತರಾಗಿದ್ದಾರೆ. ಆದರೆ ರೈತನಿಗೆ ಏನೂ ಆದ ಹಾಗೆ ತೋರಲಿಲ್ಲ. ಶೋಕ ಪಡುವುದಕ್ಕೆ ಬದಲು ಎಲ್ಲರಿಗೂ ಸಮಾಧಾನ ಹೇಳುತ್ತಿದ್ದಾನೆ, ‘ಬರಿದೆ ಶೋಕಪಟ್ಟರೆ ಏನು ದೊರೆತೀತು?’ ಅಂತ. ಬಳಿಕ ಎಂದಿನಂತೇ ಕೆಲಸಕ್ಕೆ ಹೊರಟ. ಮನೆಗೆ ಹಿಂದಿರುಗಿ ಬಂದು ನೋಡುತ್ತಾನೆ, ಹೆಂಡತಿ ಇನ್ನೂ ಅಧಿಕವಾಗಿ ಶೋಕಪಡುತ್ತಿದ್ದಾಳೆ. ಅವಳು ಹೇಳಿದಳು, ‘ನಿಮ್ಮದು ಕಲ್ಲು ಹೃದಯ!- ಮಗುವಿಗಾಗಿ ಒಂದು ತೊಟ್ಟು ಕಣ್ಣೀರನ್ನು ಹಾಕಲಿಲ್ಲವಲ್ಲ!’ ಆಗ ರೈತ ಸಮಾಧಾನಚಿತ್ತದಿಂದ ಹೇಳಿದ, ‘ನಾನು ಏಕೆ ಅಳುತ್ತಿಲ್ಲ ಹೇಳಲೆ! ನನಗೆ ನಿನ್ನೆ ರಾತ್ರಿ ಒಂದು ಸ್ವಪ್ನ ಬಿತ್ತು. ಅದರಲ್ಲಿ ನಾನು ದೊರೆಯಾಗಿರುವಂತೆ, ಎಂಟು ಮಕ್ಕಳ ತಂದೆಯಾಗಿರುವಂತೆ, ಬಹಳ ಆನಂದದಿಂದ ಇರುವಂತೆ ಅನುಭವ ಆಯಿತು. ಬಳಿಕ ಎಚ್ಚರಗೊಂಡೆ, ಈಗ ಮಹಾದಿಗ್ಭ್ರಾಂತಿಯಿಂದ ಸಿಕ್ಕಿಬಿದ್ದಿದ್ದೇನೆ – ಆ ಎಂಟು ಮಕ್ಕಳಿಗಾಗಿ ಶೋಕಪಡಲೊ, ಈ ಒಂದು ಹುಡುಗ ಹಾರೂ, ಇವನಿಗಾಗಿ ಶೋಕಪಡಲೋ?’
“ರೈತ ಒಬ್ಬ ಜ್ಞಾನಿ; ಆದ್ದರಿಂದ ಆತನಿಗೆ ಅನುಭವ ಆಗಿತ್ತು ಸ್ವಪ್ನಾವಸ್ಥೆ ಎಷ್ಟು ಮಿಥ್ಯವೊ ಅಷ್ಟೇ ಮಿಥ್ಯ ಜಾಗ್ರದವಸ್ಥೆ ಅಂತ. ನಿತ್ಯವಸ್ತು ಒಂದೇ ಒಂದು; ಅದೇ ಆತ್ಮ.
“ನಾನು ಎಲ್ಲವನ್ನೂ ಅಂಗೀಕರಿಸುತ್ತೇನೆ; ತುರೀಯ ಮತ್ತು ಜಾಗ್ರತ್ ಸ್ವಪ್ನ ಸುಷುಪ್ತಿ; ನಾನು ಈ ಮೂರು ಅವಸ್ಥೆಗಳನ್ನೂ ಅಂಗೀಕರಿಸುತ್ತೇನೆ. ಎಲ್ಲವನ್ನು ಒಟ್ಟಿಗೆ ಸೇರಿಸಿ ಅಂಗೀಕರಿಸದೆ ಇದ್ದರೆ ತೂಕ ಕಡಿಮೆ ಬಿದ್ದುಬಿಡುತ್ತದೆ.”
ಒಬ್ಬ ಭಕ್ತ: ‘ತೂಕ ಏಕೆ ಕಡಿಮೆ ಬಿದ್ದುಬಿಡುತ್ತದೆ?” (ಎಲ್ಲರೂ ನಗುತ್ತಾರೆ).
ಶ್ರೀರಾಮಕೃಷ್ಣರು: “ಬ್ರಹ್ಮ-ಜೀವಜಗತ್ ವಿಶಿಷ್ಟ (ಜೀವಜಗತ್ ಎಲ್ಲವೂ ಕೂಡಿ). ಮೊದಲು ‘ನೇತಿ’ ‘ನೇತಿ’ ಎಂಬ ಮಾರ್ಗವನ್ನು ಅನುಸರಿಸುವಾಗ ಜೀವಜಗತ್ತನ್ನು ಬಿಟ್ಟು ಬಿಡಬೇಕಾಗುತ್ತದೆ. ‘ಅಹಂ’ ಬುದ್ಧಿ ಎಲ್ಲಿಯವರೆಗೆ ಇರುವುದೊ ಅಲ್ಲಿಯವರೆಗೆ ಆತನೇ ಎಲ್ಲವೂ ಆಗಿದ್ದಾನೆ ಎಂಬ ಬೋಧೆ ಇರುತ್ತದೆ; – ಆತನೇ ಚತುರ್ವಿಂಶತಿ ತತ್ತ್ವ ಆಗಿದ್ದಾನೆ.
“ಬೇಲದ ಹಣ್ಣಿನ ಮುಖ್ಯ ಭಾಗ ಯಾವುದು ಎಂದರೆ ಜನರಿಗೆ ಅರ್ಥವಾಗುತ್ತದೆ, ಅದರ ತಿರುಳು ಮಾತ್ರವೇ ಅಂತ. ಆಗ ಅದರ ಬೀಜ ಮತ್ತು ಓಟೆಯನ್ನು ಗಣನೆಗೆ ತೆಗೆದುಕೊಳ್ಳದೆ ಹೋಗಬೇಕಾಗುತ್ತದೆ. ಆದರೆ ಬೇಲದ ಹಣ್ಣಿನ ತೂಕ ಕಂಡುಹಿಡಿಯ ಬೇಕಾದರೆ ಬರೀ ತಿರುಳನ್ನು ತೂಗಿದರೇ ಸಾಲದು. ತಿರುಳು, ಓಟೆ, ಬೀಜ ಎಲ್ಲವನ್ನೂ ಸೇರಿಸಿ ತೂಗಬೇಕಾಗುತ್ತದೆ. ತಿರುಳು ಯಾವುದರದೊ, ಅದರದೇ ಬೀಜ ಮತ್ತು ಓಟೆ.
“ನಿತ್ಯ ಯಾರದೊ ಆತನದೇ ಲೀಲೆ ಕೂಡ. ಅದಕ್ಕಾಗಿಯೆ ನಾನು ನಿತ್ಯ ಲೀಲೆ ಎಲ್ಲವನ್ನೂ ಸ್ವೀಕರಿಸೋದು. ಸಂಸಾರ, ಜಗತ್ತು ಮಾಯಾ ಅಂತ. ಅದನ್ನು ಗಾಳಿಯಲ್ಲಿ ಹಾರಿಸಿಬಿಡುತ್ತಿಲ್ಲ. ಹಾಗೆ ಮಾಡಿದರೆ ತೂಕ ಕಡಿಮೆ ಆಗಿಬಿಡುತ್ತದೆ.’
ಮಹಿಮಚರಣ: “ಇದು ಒಳ್ಳೆ ಸಾಮಂಜಸ್ಯ; –ನಿತ್ಯದಿಂದಲೇ ಲೀಲೆ, ಲೀಲೆ ಯಿಂದಲೇ ನಿತ್ಯ.”
ಶ್ರೀರಾಮಕೃಷ್ಣರು: “ಜ್ಞಾನಿಗಳು ಎಲ್ಲವನ್ನು ಸ್ವಪ್ನಸದೃಶ ಎಂದು ಭಾವಿಸುತ್ತಾರೆ; ಆದರೆ ಭಕ್ತರು ಎಲ್ಲಾ ಅವಸ್ಥೆಗಳನ್ನೂ ಅನುಮೋದಿಸುತ್ತಾರೆ. ಜ್ಞಾನಿ ‘ಚಿಟಕ್, ಚಿಟಕ್’ ಅಂತ ತೊಟ್ಟುತೊಟ್ಟಾಗಿ ಹಾಲು ಕೊಡುತ್ತಾನೆ (ಎಲ್ಲರೂ ನಗುತ್ತಾರೆ). ಕೆಲವು ಹಸುಗಳು ಇವೆ–ಅವು ಆಯ್ದು ಆಯ್ದು ಮೇಯುತ್ತವೆ; ಅದಕ್ಕೇನೆ ಅವು, ‘ತೊಟಕ್, ತೊಟಕ್’ ಅಂತ ಹಾಲು ಕರೆಯೋದು. ಆದರೆ ಯಾವುವು ಅಷ್ಟೊಂದಾಗಿ ಹುಡುಕಿ ಹುಡುಕಿ ಮೇಯದೆ ಸಿಕ್ಕಿದುದನ್ನೆಲ್ಲ ತಿನ್ನುವುವೊ ಅವು ‘ಹುರ್, ಹುರ್’ ಎಂದು ಧಾರಾಕಾರವಾಗಿ ಹಾಲು ಕರೆಯುತ್ತವೆ. ಉತ್ತಮ ಭಕ್ತ-ನಿತ್ಯ ಲೀಲೆ ಎರಡನ್ನೂ ಅನುಮೋದಿಸುತ್ತಾನೆ. ಅದಕ್ಕಾಗಿಯೇ ಆತನ ಮನಸ್ಸು ನಿತ್ಯದಿಂದ ಲೀಲೆಗೆ ಇಳಿದು ಬಂದಾಗಲೂ ಆತ ಭಗವಂತನೊಡನೆ ಆನಂದಪಡಬಲ್ಲ. ಉತ್ತಮ ಭಕ್ತ, ‘ಹುರ್, ಹುರ್’ ಅಂತ ಧಾರಾಕಾರವಾಗಿ ಹಾಲು ಕೊಡುತ್ತಾನೆ.’
ಮಹಿಮಚರಣ: “ಆದರೆ ಆ ಹಾಲಿನಲ್ಲಿ ಸ್ವಲ್ಪ ವಾಸನೆ ಇರುತ್ತೆ.” (ನಗು).
ಶ್ರೀರಾಮಕೃಷ್ಣರು (ನಗುತ್ತ): “ಅದೇನೋ ನಿಜ. ಅದಕ್ಕಾಗಿ ಅದನ್ನು ಸ್ವಲ್ಪ ಕಾಯಿಸ ಬೇಕು. ಅದನ್ನು ಬೆಂಕಿಯ ಮೇಲೆ ಇಟ್ಟು ಸ್ವಲ್ಪ ಹೊತ್ತು ಕಾಯಿಸಬೇಕು; ಜ್ಞಾನಾಗ್ನಿಯ ಮೇಲೆ ಅದನ್ನು ಸ್ವಲ್ಪಹೊತ್ತು ಇಡಬೇಕಾಗುತ್ತದೆ. ಆಗ ಅದರಲ್ಲಿ ವಾಸನೆ ಏನೂ ಇರುವುದಿಲ್ಲ. (ಎಲ್ಲರೂ ನಗುತ್ತಾರೆ).
(ಮಹಿಮಚರಣನಿಗೆ) “ಓಂಕಾರ ಎನ್ನುವುದು ‘ಅಕಾರ, ಉಕಾರ, ಮಕಾರ’ ಇವು ಗಳಿಂದಾದ ಸಂಯುಕ್ತಾಕ್ಷರ ಅಂತ ನೀವು ಕೇವಲ ವ್ಯಾಖ್ಯಾನಮಾಡುತ್ತೀರಿ.”
ಮಹಿಮಚರಣ: “ಅಕಾರ, ಉಕಾರ, ಮಕಾರ-ಅಂದರೆ ಸೃಷ್ಟಿ, ಸ್ಥಿತಿ, ಪ್ರಳಯ.”
ಶ್ರೀರಾಮಕೃಷ್ಣರು: “ನಾನು ಗಂಟೆಯ ‘ಟಂ’ ಶಬ್ದವನ್ನು ಉಪಮೆಯನ್ನಾಗಿ ಕೊಡುತ್ತೇನೆ. ‘ಟ-ಅ-ಆ-ಮ–’ ಅಂತ ಶಬ್ದ ಮಾಡುತ್ತದೆ. ಇದು ಲೀಲೆಯಿಂದ ನಿತ್ಯದಲ್ಲಿ ಲಯವಾಗುತ್ತದೆ. ಸ್ಥೂಲ, ಸೂಕ್ಷ್ಮ, ಕಾರಣಗಳಿಂದ ಮಹಾಕಾರಣದಲ್ಲಿ ಲಯ ವಾಗುವಿಕೆ. ಜಾಗ್ರತ್, ಸ್ವಪ್ನ, ಸುಷುಪ್ತಿಗಳಿಂದ ತುರೀಯದಲ್ಲಿ ಲಯವಾಗುವಿಕೆ. ಮತ್ತೆ ಗಂಟೆ ಶಬ್ದ ಆಯಿತು ಅಂದರೆ ಅದು ಮಹಾಸಮುದ್ರಕ್ಕೆ ಒಂದು ಭಾರವಾದ ವಸ್ತುವನ್ನು ಬಿಸಾಡಿದ ಹಾಗೆ. ಆಗ ಮತ್ತೆ ಅಲೆಗಳು ಆರಂಭವಾಗುತ್ತವೆ. ನಿತ್ಯದಿಂದ ಲೀಲೆಯ ಆರಂಭ, ಮಹಾಕಾರಣದಿಂದ ಸ್ಥೂಲ ಸೂಕ್ಷ್ಮ ಕಾರಣಶರೀರಗಳ ಆರಂಭ- ಆ ತುರೀಯದಿಂದಲೇ ಜಾಗ್ರತ್ ಸ್ವಪ್ನ ಸುಷುಪ್ತಿ ಮೊದಲಾದ ಅವಸ್ಥೆಗಳು ಆರಂಭ ವಾಗುತ್ತವೆ. ಮತ್ತೆ ಆ ಮಹಾಸಮುದ್ರದ ಅಲೆಗಳು ಆ ಮಹಾ ಸಮುದ್ರದಲ್ಲೇ ಲಯವಾಗುತ್ತವೆ, ನಿತ್ಯದಿಂದ ಲೀಲೆ, ಲೀಲೆಯಿಂದ ನಿತ್ಯ. ಅದಕ್ಕಾಗೆ ನಾನು ‘ಟಂ’ ಎಂಬ ಶಬ್ದವನ್ನು ಉಪಮೆಯಾಗಿ ಕೊಡೋದು. ನಾನು ಇವನ್ನೆಲ್ಲಾ ಸಾಕ್ಷಾತ್ತಾಗಿ ನೋಡಿದ್ದೇನೆ. ನನಗೆ ಭಗವತಿ ಚಿತ್ ಸಮುದ್ರವನ್ನು ತೋರಿಸಿದ್ದಾಳೆ. ಅದಕ್ಕೆ ಮಿತಿ ಎಂಬುದೇ ಇಲ್ಲ, ಅದರಿಂದಲೇ ಈ ಇಡೀ ಲೀಲೆ ಆರಂಭವಾಯಿತು, ಮತ್ತೆ ಅದರಲ್ಲೇ ಅದು ಲಯವಾಗಿ ಹೋಯಿತು, ಕೋಟಿ ಕೋಟಿ ಬ್ರಹ್ಮಾಂಡಗಳು ಆ ಚಿದಾಕಾಶದಲ್ಲೇ ಉದ್ಭವವಾದವು, ಮತ್ತೆ ಅದರಲ್ಲೇ ಲಯವಾದುವು; ನಿಮ್ಮ ಶಾಸ್ತ್ರಗ್ರಂಥಗಳು ಏನು ಹೇಳುವವೊ ಅದು ನನಗೆ ಅಷ್ಟೊಂದಾಗಿ ಗೊತ್ತಿಲ್ಲ.”
ಮಹಿಮಚರಣ: “ಯಾರಿಗೆ ಈ ವಿವಿಧ ಅನುಭವ ದೊರೆಯಿತೊ ಅಂಥವರು ಶಾಸ್ತ್ರಗಳನ್ನು ಬರೆಯಲಿಲ್ಲ. ಅವರು ತಮ್ಮ ಭಾವದಲ್ಲೇ ಮಗ್ನರಾಗಿಬಿಟ್ಟಿದ್ದರು; ಅವರು ಬರೆಯುವುದು ಯಾವಾಗ? ಬರೆಯಬೇಕಾದರೆ ಒಂದು ಸ್ವಲ್ಪ ಲೆಕ್ಕಾಚಾರದ ಬುದ್ಧಿ ಆವಶ್ಯಕ. ಅಂಥವರಿಂದ (ಮಂತ್ರದ್ರಷ್ಟರಿಂದ) ಕೇಳಿ ಬೇರೆಯವರು ಬರೆದಿಟ್ಟಿದ್ದಾರೆ.”
ಶ್ರೀರಾಮಕೃಷ್ಣರು: “ಸಂಸಾರಿಗಳು ಕೇಳುತ್ತಾರೆ, ‘ಕಾಮಕಾಂಚನದ ಆಸಕ್ತಿ ಏಕೆ ಹೋಗುವುದಿಲ್ಲ?’ ಆತನ ಸಾಕ್ಷಾತ್ಕಾರ ದೊರೆತರೆ ಅದು ಹೋಗುತ್ತದೆ. ಒಮ್ಮೆ ಏನಾದರೂ ಬ್ರಹ್ಮಾನಂದ ದೊರೆತುದೇ ಆದರೆ ಇಂದ್ರಿಯ ಸುಖಗಳನ್ನು ಭೋಗಿಸಲಿಕ್ಕೇ ಆಗಲಿ ಅಥವಾ ಹೆಸರು ಕೀರ್ತಿ ಐಶ್ವರ್ಯಗಳನ್ನು ಪಡೆಯುವುದಕ್ಕೇ ಆಗಲಿ ಮನಸ್ಸು ಓಡಿಹೋಗದು. ದೀಪದ ಚಿಟ್ಟೆ ಒಮ್ಮೆ ಬೆಳಕನ್ನು ಕಂಡಿತು ಅಂದರೆ ಅದು ಎಂದಿಗೂ ಕತ್ತಲೆ ಕಡೆ ಹಾರಿಹೋಗುವುದಿಲ್ಲ.
“ಕೆಲವು ಸ್ನೇಹಿತರು ರಾವಣನಿಗೆ; ‘ನೀನು ಸೀತೆಯನ್ನು ಒಲಿಸಿಕೊಳ್ಳಲು ನಿನ್ನ ಮಾಯಾಶಕ್ತಿಯಿಂದ ಅನೇಕ ರೂಪುಗಳನ್ನು ಧರಿಸುತ್ತಿದ್ದೀಯೆ. ಒಮ್ಮೆ ರಾಮನ ರೂಪು ಧರಿಸಿ ಆಕೆಯನ್ನು ನೀನು ಏಕೆ ಸಮೀಪಿಸಬಾರದು?’ ಅಂತ ಕೇಳಿದರು. ರಾವಣ ಹೇಳಿದ. ‘ತುಚ್ಛಂ ಬ್ರಹ್ಮಪದಂ ಪರವಧೂಸಂಗಃ ಕುತಃ’ ರಾಮನ ಚಿಂತನೆ ಮಾಡಿದಾಗ ಬ್ರಹ್ಮ ಪದವಿಯೂ ತುಚ್ಛವಾಗಿ ತೋರುವಾಗ ಪರಸ್ತ್ರೀಯಂತೂ ಒಂದು ಅಲ್ಪ ವಸ್ತುವೆ! ಆ ಕಾರ್ಯಕ್ಕಾಗಿ ನಾನು ರಾಮನ ರೂಪವನ್ನು ಹೇಗೆ ತಾನೆ ಧರಿಸಲಿ?”
“ಸಂಸಾರಾಸಕ್ತಿಯನ್ನು ನಿರ್ಮೂಲಮಾಡುವುದಕ್ಕೆ ಸಾಧನೆ ಭಜನೆಯನ್ನು ಮಾಡು ವುದು. ಭಗವಂತನ ಚಿಂತನೆ ಹೆಚ್ಚುಹೆಚ್ಚಿದಂತೆಲ್ಲ ಸಂಸಾರದ ಸಾಮಾನ್ಯ ವಸ್ತುಗಳ ಭೋಗಾಸಕ್ತಿ ಕಡಿಮೆ ಕಡಿಮೆಯಾಗುತ್ತಾ ಬರುತ್ತದೆ. ಆತನ ಪಾದಪದ್ಮಗಳ ಕಡೆ ಭಕ್ತಿ ಎಷ್ಟು ಪ್ರಮಾಣದಲ್ಲಿ ಬೆಳೆಯುವುದೊ ಅಷ್ಟೇ ಪ್ರಮಾಣದಲ್ಲಿ ವಿಷಯಾಸಕ್ತಿ ಕಡಿಮೆ ಕಡಿಮೆಯಾಗುತ್ತಾ ಬರುತ್ತದೆ. ಅಷ್ಟೇ ಪ್ರಮಾಣದಲ್ಲಿ ದೇಹಸುಖದ ಕಡೆ ಹಾತೊರೆಯೋದು ಕಡಮೆ ಕಡಮೆಯಾಗುತ್ತಾ ಬರುತ್ತದೆ. ಪರಸ್ತ್ರೀ ತಾಯಿಯೇ ಎಂಬ ಬೋಧೆಯಾಗುತ್ತದೆ. ಸ್ವಪತ್ನಿ ಅಧ್ಯಾತ್ಮಜೀವನದ ಸಹಾಯಕಿ ಎಂಬ ಬೋಧೆಯಾಗುತ್ತದೆ. ಪಶುಪ್ರವೃತ್ತಿ ಹೊರಟುಹೋಗುತ್ತದೆ. ದೇವಭಾವ ಬಂದುಬಿಡುತ್ತದೆ. ಸಂಸಾರಾಸಕ್ತಿ ಒಮ್ಮೆಗೆಯೆ ಬಿಟ್ಟು ತೊಲಗಿ ಹೋಗುತ್ತದೆ. ಆಗ ನೀನು ಸಂಸಾರದಲ್ಲಿ ಇದ್ದರೂ ಜೀವನ್ಮುಕ್ತನಾಗಿ ಓಡಾಡಿಕೊಂಡು ಇರುತ್ತೀಯೆ. ಚೈತನ್ಯದೇವನ ಶಿಷ್ಯರು ಅನಾಸಕ್ತರಾಗಿ ಸಂಸಾರದಲ್ಲಿ ಇದ್ದುಕೊಂಡಿದ್ದರು.
“ಯಾರು ನಿಜವಾದ ಭಕ್ತನೊ ಆತನೊಡನೆ ಬೇಕಾದಷ್ಟು ವೇದಾಂತ ವಿಚಾರಮಾಡು. ಈ ಜಗತ್ತು ಸ್ವಪ್ನಸದೃಶ ಅಂತ ಹೇಳು. ಆತನ ಭಕ್ತಿ ಮಾತ್ರ ಆತನನ್ನು ಬಿಟ್ಟು ಹೋಗೋ ಹಾಗಿಲ್ಲ. ಹೇಗೋ ಮಾಡಿ ಒಂದು ಕಿಂಚಿತ್ತಾದರೂ ಉಳಿದೇ ಉಳಿದುಕೊಳ್ಳುತ್ತದೆ. ಕೊನೆಗೆ ಅದು ಆತನ ಹೃದಯವನ್ನು ಸಂಪೂರ್ಣವಾಗಿ ಆವರಿಸಿ ಕೊಂಡು ಬಿಡುತ್ತದೆ.
“ಶಿವಾಂಶದಿಂದ ಜನ್ಮವೆತ್ತಿದರೆ ವ್ಯಕ್ತಿ ಜ್ಞಾನಿಯಾಗುತ್ತಾನೆ; ಬ್ರಹ್ಮ ಸತ್ಯ ಜಗತ್ ಮಿಥ್ಯಾ ಎಂಬ ಭಾವನೆಯ ಕಡೆ ಆತನ ಮನಸ್ಸು ಸರ್ವದಾ ಹರಿಯುತ್ತದೆ. ವಿಷ್ಣು ಅಂಶದಿಂದ ಜನ್ಮವೆತ್ತಿದರೆ ಪ್ರೇಮಭಕ್ತಿ ಉಂಟಾಗುತ್ತದೆ. ಆ ಪ್ರೇಮಭಕ್ತಿ ಎಂದಿಗೂ ಹೃದಯವನ್ನು ಬಿಟ್ಟು ಹೋಗುವ ಹಾಗಿಲ್ಲ. ಆ ಪ್ರೇಮಭಕ್ತಿ ಒಂದು ಪಕ್ಷ ಕಡಿಮೆಯಾಗಿ ಹೋದರೂ ಮತ್ತೊಮ್ಮೆ ‘ಹು, ಹು,’ ಅಂತ ಅಧಿಕವಾಗಿಬಿಡುತ್ತದೆ; ಯದುವಂಶವನ್ನು ನಾಶಮಾಡಿದ್ದು ಒಂದು ಒನಕೆಯ ತುಂಡು. ಹಾಗೇ ಇದೂ ಕೂಡ ವರ್ತಿಸುತ್ತದೆ.”
ಭಕ್ತರೆಲ್ಲರೂ ಶ್ರೀರಾಮಕೃಷ್ಣರಿಂದ ಬೀಳ್ಕೊಂಡು ತಮ್ಮ ತಮ್ಮ ಗೃಹಗಳಿಗೆ ಹಿಂತಿರುಗಿದ ನಂತರ ಮಹಿಮಚರಣ ಹಾಜರಾನನ್ನು ಪರಮಹಂಸರ ಹತ್ತಿರಕ್ಕೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಮಾಸ್ಟರ್ ಕೂಡ ಕುಳಿತಿದ್ದಾನೆ. ಮಹಿಮಚರಣ ಶ್ರೀರಾಮಕೃಷ್ಣರಿಗೆ ಹೇಳಿದ: “ಮಹಾಶಯರೆ, ನಾನು ನಿಮ್ಮ ಮೇಲೆ ಒಂದು ತಪ್ಪು ಹೊರಿಸಬೇಕಾಗಿದೆ. ನೀವು ಹಾಜರಾನಿಗೆ ಮನೆಗೆ ಹೋಗುವಂತೆ ಹೇಳುತ್ತೀರಂತಲ್ಲ, ಏಕೆ? ಮತ್ತೆ ಸಂಸಾರದಲ್ಲಿ ಇರುವುದಕ್ಕೆ ಆತನಿಗೆ ಇಚ್ಛೆಯಿಲ್ಲ.”
ಶ್ರೀರಾಮಕೃಷ್ಣರು: “ಈತನ ತಾಯಿ ರಾಮಲಾಲನ ಹತ್ತಿರ ಈತನ ಸಂಬಂಧ ವಾಗಿ ತನ್ನ ದುಃಖವನ್ನು ಹೇಳಿಕೊಂಡಿದ್ದಾಳೆ. ಅದಕ್ಕಾಗಿ ನಾನು ಈತನಿಗೆ ಹೇಳಿದೆ. ‘ಒಂದು ಮೂರು ದಿವಸದ ಮಟ್ಟಿಗಾದರೂ ಊರಿಗೆ ಹೋಗಿ ಆಕೆಯನ್ನು ನೋಡಿ ಬಾ’ ಅಂತ. ಹೆತ್ತ ತಾಯನ್ನು ದುಃಖಕ್ಕೆ ಈಡುಮಾಡಿ ಯಾರೇ ಆಗಲೀ ಅಧ್ಯಾತ್ಮ ಜೀವನದಲ್ಲಿ ಮುಂದುವರಿಯಲು ಸಾಧ್ಯವೇ? ನಾನು ಒಮ್ಮೆ ಬೃಂದಾವನಕ್ಕೆ ಹೋಗಿ ಅಲ್ಲೆ ಇದ್ದು ಬಿಡೋಣವೆಂದುಕೊಂಡು ಇದ್ದೆ. ಆಗ ತಾಯಿಯ ನೆನಪಾಯಿತು. ನಾನು ಆಲೋಚಿಸಿದೆ, ‘ನಾನು ಇಲ್ಲೇ ಇದ್ದುಬಿಟ್ಟರೆ ತಾಯಿ ಅಲ್ಲಿ (ದಕ್ಷಿಣೇಶ್ವರದಲ್ಲಿ) ಅಳಲಾರಂಭಿಸುತ್ತಾಳೆ’ ಅಂತ. ಅದಕ್ಕಾಗಿ ಮಥುರಬಾಬುವಿನೊಡನೆ ಇಲ್ಲಿಗೆ ಹಿಂದಿರುಗಿ ಬಂದುಬಿಟ್ಟೆ. ಅದೂ ಅಲ್ಲದೆ ಹಾಜರಾನಂಥ ಜ್ಞಾನಿಗಳು ಸಂಸಾರದಲ್ಲಿ ಇರುವುದಕ್ಕೆ ಏಕೆ ಭಯಪಡಬೇಕು ?”
ಮಹಿಮಚರಣ (ನಗುತ್ತ): “ಈತನಿಗೆ ಜ್ಞಾನ ದೊರೆತಿದ್ದರೆ ತಾನೆ!”
ಶ್ರೀರಾಮಕೃಷ್ಣರು (ನಗುತ್ತ): “ಹಾಜರಾನಿಗೆ ಎಲ್ಲ ದೊರೆತುಬಿಟ್ಟಿದೆ. ಈತನಿಗೆ ಕೆಲವು ಮಕ್ಕಳಿರೋದರಿಂದ ಮತ್ತು ಸಾಲ ಇರೋದರಿಂದ ಸಂಸಾರದಲ್ಲಿ ಎಲ್ಲೋ ಕಿಂಚಿತ್ತು ಮನಸ್ಸು ಇಟ್ಟಿದ್ದಾನೆ. ‘ನಮ್ಮ ಸೋದರ ಅತ್ತೆಗೆ ಸಂಪೂರ್ಣ ಗುಣ ಆಗಿದೆ, ಆದರೆ ಒಂದಿಷ್ಟು ಕೊಸರು ಮಾತ್ರ ಉಳಿದುಕೊಂಡಿದೆ’ !” (ಎಲ್ಲರೂ ನಗುತ್ತಾರೆ.)
ಮಹಿಮಚರಣ: “ಎಲ್ಲಿ, ಮಹಾಶಯರೆ, ಹಾಜರಾನಿಗೆ ಜ್ಞಾನ ದೊರೆತಿರೋದು?”
ಶ್ರೀರಾಮಕೃಷ್ಣರು (ನಗುತ್ತ): “ಓ ಅದೆಲ್ಲ ನಿನಗೆ ಗೊತ್ತಿಲ್ಲ! ಎಲ್ಲರೂ ಹೇಳುತ್ತಾರೆ, ‘ಹಾಜರಾ ಒಬ್ಬ ಗಣ್ಯ ವ್ಯಕ್ತಿ. ಆತ ರಾಸಮಣಿಯ ಕಾಳೀದೇವಾಲಯದಲ್ಲಿ ವಾಸವಾಗಿ ದ್ದಾನೆ’ ಅಂತ. ಆತನ ಹೆಸರೇ ಎಲ್ಲರ ತುಟಿಯ ಮೇಲು. ನನ್ನ ಹೆಸರನ್ನು ಯಾರಾದರೂ ಎತ್ತುತ್ತಾರೇನು?” (ಎಲ್ಲರೂ ನಗುತ್ತಾರೆ).
ಹಾಜರಾ: “ನೀವು ನಿರುಪಮರು – ನಿಮ್ಮೊಡನೆ ಹೋಲಿಸಲು ಯಾವ ಉಪಮೆಯೂ ದೊರೆಯೋ ಹಾಗಿಲ್ಲ. ಆದ್ದರಿಂದ ಯಾರಿಗೂ ನಿಮ್ಮನ್ನು ಅರಿತುಕೊಳ್ಳುವು ದಕ್ಕೆ ಆಗುತ್ತಿಲ್ಲ.”
ಶ್ರೀರಾಮಕೃಷ್ಣರು: “ಅಲ್ಲಿ ನೋಡು ನಿನ್ನ ನಿಜಸ್ವರೂಪಾನ! ಹೌದು ನಿರುಪಮ ವಸ್ತು ಯಾವುದಕ್ಕೂ ಬಂದುದಲ್ಲ; ಆದ್ದರಿಂದ ಜನ ನನ್ನ ಹೆಸರನ್ನು ಏಕೆ ಎತ್ತಬೇಕು?”
ಮಹಿಮಚರಣ: “ಮಹಾಶಯರೆ, ಈತನಿಗೆ ಏನು ತಾನೆ ಗೊತ್ತು? ಇನ್ನು ಮುಂದೆ ನೀವು ಹೇಳಿದ ಹಾಗೆ ಕೇಳುತ್ತಾನೆ.”
ಶ್ರೀರಾಮಕೃಷ್ಣರು: “ನಿನಗೆ ಗೊತ್ತಿಲ್ಲ ಅದು. ನೀನೇ ಒಂದು ಪ್ರಶ್ನೆ ಹಾಕಿ ನೋಡು. ಈತ ನನಗೆ ಹೇಳಿದ, ‘ನಿಮಗೂ ನನಗೂ ಕೊಟ್ಟು ತೆಗೆದುಕೊಳ್ಳುವಂಥದ್ದು ಏನು ಇಲ್ಲ’ ಅಂತ.”
ಮಹಿಮಚರಣ: “ಬಹಳವಾಗಿ ತರ್ಕ ಮಾಡುತ್ತಾನೆ.”
ಶ್ರೀರಾಮಕೃಷ್ಣರು: “ಆಗಾಗ ಈತ ನನಗೆ ಬುದ್ಧಿ ಕಲಿಸೋಕೆ ಬರುತ್ತಾನೆ. (ಎಲ್ಲರೂ ನಗುತ್ತಿದ್ದಾರೆ.) ಬಹುವಾಗಿ ವಾದಿಸಲು ಮುಂದೆ ಬಂದಾಗ ನಾನು ಕೆಲವು ವೇಳೆ ಈತನನ್ನು ಗದರಿಸುತ್ತೇನೆ. ಬಳಿಕ ನಾನು ಬಹುಶಃ ಸೊಳ್ಳೆಪರದೆಯ ಒಳಗೆ ಮಲಗಿರಬಹುದು. ಆದರೂ ನಾನು ಹೇಳಿದ್ದು ಆತನ ಮನಸ್ಸಿಗೆ ನೋವು ಉಂಟುಮಾಡಿರುವುದೊ ಏನೊ ಎಂದು ದುಃಖಿಸಿ ಪರದೆಯಿಂದ ಹೊರಕ್ಕೆ ಬಂದು ಈತನಿಗೆ ಪ್ರಣಾಮ ಮಾಡಿ ಹೋಗುತ್ತೇನೆ, – ಆಗ ನನ್ನ ಮನಸ್ಸಿಗೆ ಶಾಂತಿ.
(ಹಾಜರಾನಿಗೆ) “ನೀನು ಶುದ್ಧ ಆತ್ಮನನ್ನು ‘ಈಶ್ವರ’ ಅಂತ ಕರೆಯುತ್ತೀಯಲ್ಲ ಏಕೆ? ಶುದ್ಧ ಆತ್ಮ ನಿಷ್ಕ್ರಿಯ, ಮೂರು ಅವಸ್ಥೆಗಳಲ್ಲಿಯೂ ಸಾಕ್ಷಿಸ್ವರೂಪನಾಗಿ ಇದ್ದಾನೆ. ಸೃಷ್ಟಿ ಸ್ಥಿತಿ ಪ್ರಳಯ ಕಾರ್ಯಗಳ ಭಾವನೆ ಬಂದಾಗ, ನಾನು ಆತನನ್ನು ‘ಈಶ್ವರ’ ಅಂತ ಕರೆಯುತ್ತೇನೆ. ಶುದ್ಧ ಆತ್ಮವನ್ನು ಯಾವುದಕ್ಕೆ ಹೋಲಿಸಬಹುದು? ಆತ ಸೂಜಿಯಿಂದ ಬಹಳ ದೂರದಲ್ಲಿ ಬಿದ್ದಿರುವ ಸೂಜಿಗಲ್ಲಿನ ಹಾಗೆ. ಸೂಜಿ ಚಲಿಸುತ್ತದೆ, ಆದರೆ ಸೂಜಿಗಲ್ಲು ಸುಮ್ಮನೆ ಬಿದ್ದಿರುತ್ತದೆ – ಯಾವ ಚಲನೆಯೂ ಇಲ್ಲದೆ ಬಿದ್ದಿರುತ್ತದೆ.”
ಇನ್ನೇನು ಸಾಯಂಕಾಲವಾಗುವುದರಲ್ಲಿದೆ. ಪರಮಹಂಸರು ಸುಮ್ಮನೆ ಕೊಠಡಿಯಲ್ಲೆ ಅಡ್ಡಾಡುತ್ತಿದ್ದಾರೆ. ಮಣಿ ಏನನ್ನೊ ಯೋಚಿಸುತ್ತ ಕುಳಿತಿದ್ದಾನೆ. ಪರಮಹಂಸರು ಇದ್ದಕ್ಕಿದ್ದ ಹಾಗೆ ಈತನನ್ನು ಸಂಬೋಧಿಸಿ ಸೌಮ್ಯದೃಷ್ಟಿಯಿಂದ ಕೇಳುತ್ತಿದ್ದಾರೆ: “ನನಗೆ ಒಂದೆರಡು ಬಿಳಿ ಬಟ್ಟೆಯ ಷರಟುಗಳನ್ನು ಹೊಲಿಸಿಕೊಡು. ಸಿಕ್ಕಿದವರೆಲ್ಲ ತಂದುಕೊಡುವುದನ್ನು ನಾನು ಉಪಯೋಗಿಸುವುದಕ್ಕೆ ಆಗುವುದಿಲ್ಲ ಎಂಬುದು ನಿನಗೆ ಗೊತ್ತೇ ಇದೆ. ಅದಕ್ಕಾಗಿ ಕ್ಯಾಪ್ಟನ್ನನಿಗೆ ಹೇಳಬೇಕೆಂದಿದ್ದೆ. ನೀನೇ ತಂದು ಕೊಟ್ಟುಬಿಡು.” ಮಣಿ ಎದ್ದು ನಿಂತು ಕೊಂಡು ಹೇಳಿದ, “ಬಹಳ ಒಳ್ಳೆಯದು.”
ಸಾಯಂಕಾಲವಾಗಿದೆ. ಪರಮಹಂಸರ ಕೊಠಡಿಗೆ ಧೂಪ ಹಾಕಿ ಆಯಿತು. ಅವರು ಎಂದಿನಂತೆ ದೇವದೇವಿಯರ ಪಟಗಳಿಗೆಲ್ಲ ಕೈಮುಗಿದು, ಬೀಜಮಂತ್ರ ಜಪಿಸಿ ನಾಮ ಸಂಕೀರ್ತನೆ ಮಾಡುತ್ತಿದ್ದಾರೆ. ಕೊಠಡಿಯ ಹೊರಗಿನಿಂದ ಗಂಗೆಯ ಮರ್ಮರ ಧ್ವನಿ, ಕಾಳಿ ವಿಷ್ಣು ಶಿವದೇವಾಲಯದ ಸಂಧ್ಯಾರತಿಯ ಗಂಟೆ ಜಾಗಟೆ ಇವೇ ಮೊದಲಾದವುಗಳ ನಿನಾದ ಕೇಳಿ ಬರುತ್ತಿದೆ. ಅರ್ಚಕ ಎಡಗೈಯಲ್ಲಿ ಗಂಟೆಯನ್ನು ಬಲಗೈಯಲ್ಲಿ ಪಂಚಾರತಿ ಯನ್ನು ಹಿಡಿದು ಒಂದು ಶಿವಾಲಯದಿಂದ ಇನ್ನೊಂದು ಶಿವಾಲಯಕ್ಕೆ ಹೋಗುತ್ತಿದ್ದುದನ್ನು ಮತ್ತು ಆತನನ್ನು ಇನ್ನೊಬ್ಬ ಜಾಗಟೆಯೊಡನೆ ಹಿಂಬಾಲಿಸುತ್ತಿದ್ದುದನ್ನು ಬಾಗಿಲಿನ ಹತ್ತಿರ ದಿಂದ ನೋಡಬಹುದಾಗಿತ್ತು. ವಾದ್ಯಶಾಲೆಯಿಂದ ಹೊರಡುತ್ತಿದ್ದ ಸುಮಧುರ ವಾದ್ಯ ಘೋಷ ಆ ವೇಳೆಗೆ ತಕ್ಕಂತೆ ಮತ್ತು ಭಕ್ತರ ಆಂತರಿಕ ಭಾವನೆಗಳಿಗೆ ಅನುಗುಣವಾಗಿ ಹೊರಡುತ್ತಿದೆ. ಆಗ ಅಲ್ಲಿನ ಜನರೆಲ್ಲ ತಮ್ಮ ದೈನಂದಿನ ಕೆಲಸಕಾರ್ಯಗಳ ಕೋಟಲೆ- ಗೀಟಲೆಗಳನ್ನೆಲ್ಲ ಮರೆತಂತೆ ಕಾಣುತ್ತಿತ್ತು.
ಪರಮಹಂಸರು ತಮ್ಮ ಎಂದಿನ ಆನಂದಮಯಾವಸ್ಥೆಯಲ್ಲಿ ಕೊಠಡಿಯಲ್ಲಿ ಕುಳಿತಿ ದ್ದಾರೆ. ಈಶಾನ ಕಲ್ಕತ್ತದಿಂದ ಬಂದಿದ್ದಾನೆ. ಭಗವಂತನ ವಿಷಯವಾಗಿ ಮಾತುಕತೆ ನಡೆಯುತ್ತಿದೆ. ಈಶಾನನಿಗೆ ಭಗವಂತನ ಕೃಪಾಕಟಾಕ್ಷದಲ್ಲಿ ಉಜ್ವಲವಾದ ಶ್ರದ್ಧೆ ಇದೆ. ಆತ ಹೇಳುತ್ತಾನೆ : “ಯಾರೇ ಆಗಲಿ ಒಮ್ಮೆ ದುರ್ಗೆಯ ನಾಮವನ್ನು ಜಪಿಸಿ ಮನೆಯನ್ನು ಬಿಟ್ಟು ಹೊರಡುವುದಾದರೆ ಶೂಲಪಾಣಿ ಶೂಲವನ್ನು ಹಸ್ತದಲ್ಲಿ ಹಿಡಿದು ಆತನ ಅಂಗರಕ್ಷಕನಾಗಿ ಹಿಂಬಾಲಿಸುತ್ತಾನೆ. ಆದ್ದರಿಂದ ಯಾವ ವಿಪತ್ತು ಬಂದರೂ ಭಯಪಡುವುದೇಕೆ? ಆತನೇ ಸ್ವಯಂ ನಮ್ಮನ್ನು ಪಾರುಮಾಡಿಸುತ್ತಾನೆ.”
ಶ್ರೀರಾಮಕೃಷ್ಣರು ಈಶಾನನಿಗೆ: “ನಿನಗೆ ಭಗವಂತನಲ್ಲಿ ಅತಿಶಯವಾದ ವಿಶ್ವಾಸ ವಿದೆ – ನಮಗೆ ಇನ್ನೂ ಅಷ್ಟೊಂದು ಉಂಟಾಗಿಲ್ಲ. (ಎಲ್ಲರೂ ನಗುತ್ತಾರೆ.) ವಿಶ್ವಾಸ ದಿಂದಲೇ ಆತನನ್ನು ಪಡೆಯಬಹುದು.”
ಈಶಾನ: “ಹೌದು, ನಿಜ.”
ಶ್ರೀರಾಮಕೃಷ್ಣರು : “ನಾಮ ಜಪ, ಆಹ್ನಿಕ, ಉಪವಾಸ, ಪುರಶ್ಚರಣೆ ಇವೇ ಮೊದಲಾದ ಕರ್ಮಗಳನ್ನು ಮಾಡುತ್ತೀಯೆ. ಇದು ಬಹಳ ಒಳ್ಳೆಯದೆ. ಯಾರಿಗೆ ನಿಜವಾದ ಭಗವಂತನ ಕಡೆ ಮನಸ್ಸು ಹರಿಯುವುದೊ ಅವರ ಮೂಲಕ ಆತ ಈ ವಿಧವಾದ ಕರ್ಮಗಳನ್ನೆಲ್ಲ ಮಾಡಿಸುತ್ತಾನೆ. ಫಲಾಕಾಂಕ್ಷೆ ಇಲ್ಲದೆ ಈ ಕರ್ಮಗಳನ್ನೆಲ್ಲ ಮಾಡಿದರೆ ನಿಶ್ಚಯವಾಗಿಯೂ ಆತನನ್ನು ಪಡೆಯಬಹುದು. ಶಾಸ್ತ್ರ ಈ ವಿಧವಾದ ಅನೇಕ ಕರ್ಮ ಗಳನ್ನು ಮಾಡುವಂತೆ ಹೇಳಿದೆ.- ಅದಕ್ಕಾಗಿ ನೀನು ಮಾಡುತ್ತಿದ್ದೀಯೆ. ಈ ವಿಧವಾದ ಭಕ್ತಿಗೆ ‘ವೈಧೀಭಕ್ತಿ’ ಅಂತ ಹೆಸರು. ಇನ್ನೊಂದಿದೆ ‘ರಾಗಾಭಕ್ತಿ’ ಅನ್ನೋದು. ಅದು ಅನುರಾಗದಿಂದ ಬರುತ್ತದೆ, ಭಗವಂತನನ್ನು ಪ್ರೀತಿಸುವುದರಿಂದ ಬರುತ್ತದೆ. ಉದಾಹರಣೆಗೆ ಪ್ರಹ್ಲಾದನದು. ಆ ಭಕ್ತಿ ಏನಾದರೂ ಹೃದಯಲ್ಲಿ ಅಂಕುರವಾದರೆ, ಬಳಿಕ ವೈದಿಕಕರ್ಮಗಳ ಆವಶ್ಯಕತೆಯೇನಿರದು.”
೯ನೇ ನವೆಂಬರ್ ೧೮೮೪, ಕಾರ್ತಿಕ ಕೃಷ್ಣ ಸಪ್ತಮಿ, ಭಾನುವಾರ
ಶ್ರೀರಾಮಕೃಷ್ಣರು ಪೂರ್ವಾಭಿಮುಖರಾಗಿ ಚಿಕ್ಕ ಮಂಚದ ಮೇಲೆ ತಮ್ಮ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ಭಕ್ತರು ನೆಲದ ಮೇಲೆ ಕುಳಿತಿದ್ದಾರೆ. ಘಂಟೆ ಬಹುಶಃ ಅಪರಾಹ್ನ ಎರಡು. ಮಾಸ್ಟರ್ ಅಲ್ಲಿಗೆ ಬಂದು ನೋಡಿದಾಗ ಇನ್ನೂ ಭಕ್ತರು ಬರುತ್ತಲೇ ಇದ್ದರು. ವಿಜಯ ಕೃಷ್ಣ ಗೋಸ್ವಾಮಿಯೊಡನೆ ಕೆಲವು ಮಂದಿ ಬ್ರಾಹ್ಮಭಕ್ತರು ಬಂದಿದ್ದಾರೆ. ಅರ್ಚಕ ರಾಮಚಕ್ರವರ್ತಿಯೂ ಬಂದು ಕುಳಿತಿದ್ದಾನೆ. ಕ್ರಮೇಣ ಮಹಿಮಚರಣ, ನಾರಾಯಣ, ಕಿಶೋರಿ ಬಂದರು. ಇನ್ನೂ ಸ್ವಲ್ಪ ಹೊತ್ತಾದ ಮೇಲೆ ಇನ್ನೂ ಕೆಲವು ಮಂದಿ ಭಕ್ತರು ಬಂದರು.
ಚಳಿಗಾಲ ಪ್ರಾರಂಭಿಸಿದೆ. ಪರಮಹಂಸರಿಗೆ ಒಂದೆರಡು ಷರಟು ಬೇಕಾಗಿವೆ. ಅವುಗಳಿಗಾಗಿ ಅವರು ಮಾಸ್ಟರಿಗೆ ಹೇಳಿದ್ದರು. ಆತ ಬಿಳಿ ಬಟ್ಟೆಯ ಎರಡು ಷರಟು ಗಳನ್ನಲ್ಲದೆ ಒಂದು ವಿಧದ ದಪ್ಪ ಬಟ್ಟೆಯ ಷರಟನ್ನೂ ತಂದಿದ್ದ. ಆದರೆ ಶ್ರೀರಾಮಕೃಷ್ಣರು ಆ ತರದ ಷರಟನ್ನು ತರಲು ಹೇಳಿರಲಿಲ್ಲ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನೀನು ಅದನ್ನು ತೆಗೆದುಕೊಂಡು ಹೋಗಿಬಿಡು. ನೀನೇ ಅದನ್ನು ಹಾಕಿಕೊ. ಹಾಗೆ ಮಾಡುವುದರಿಂದ ದೋಷವೇನೂ ಬರದು. ಒಳ್ಳೇದು, ನಾನು ನಿನಗೆ ಎಂಥ ಷರಟನ್ನು ತೆಗೆದುಕೊಂಡು ಬರುವಂತೆ ಹೇಳಿದ್ದೆ?”
ಮಾಸ್ಟರ್: “ತಾವು ಸಾಮಾನ್ಯ ಬಿಳಿ ಬಟ್ಟೆಯ ಷರಟುಗಳನ್ನು ತರಲು ಹೇಳಿದ್ದಿರಿ. ಈ ದಪ್ಪ ಬಟ್ಟೆಯ ಷರಟನ್ನು ತರಲು ಹೇಳಿರಲಿಲ್ಲ.”
ಶ್ರೀರಾಮಕೃಷ್ಣರು: “ಹಾಗಾದರೆ ಆ ದಪ್ಪ ಬಟ್ಟೆಯ ಷರಟನ್ನು ಹಿಂದಿರುಗಿ ತೆಗೆದು ಕೊಂಡು ಹೋಗಿಬಿಡು. (ವಿಜಯ ಮೊದಲಾದವರಿಗೆ) ನೋಡಿ, ದ್ವಾರಕನಾಥ ನನಗೊಂದು ಶಾಲು ತೆಗೆದುಕೊಟ್ಟ. ಮಾರ್ವಾಡಿ ಭಕ್ತರೂ ಒಂದು ಶಾಲನ್ನು ತಂದರು. ನಾನು ಅದನ್ನು ಸ್ವೀಕರಿಸಲಿಲ್ಲ –
ವಿಜಯ ಮಧ್ಯೆ ಬಾಯಿ ಹಾಕಿ: “ನೀವು ಹಾಗೆ ಮಾಡಿದ್ದು ಸರಿ. ಆವಶ್ಯಕವಾಗಿ ಬೇಕಾಗಿದ್ದರೆ ಮಾತ್ರ ಸ್ವೀಕರಿಸಬೇಕು. ಯಾವನಾದರೂ ಒಬ್ಬ ತಂದುಕೊಡಬೇಕು ತಾನೆ. ಮನುಷ್ಯನಲ್ಲದೆ ಬೇರೆ ಯಾರು ತಂದುಕೊಡುತ್ತಾರೆ?”
ಶ್ರೀರಾಮಕೃಷ್ಣರು: “ಕೊಡುವವನು ಭಗವಂತನೇ. ಅತ್ತೆ ಸೊಸೆಗೆ ಹೇಳಿದಳು, ‘ಮಗೂ, ಎಲ್ಲರಿಗೂ ಸೇವೆ ಮಾಡುವವರಿದ್ದಾರೆ, ನಿನಗೆ ಯಾರಾದರು ಒಬ್ಬ ಸೇವಕಿ ಕೈಕಾಲುಗಳನ್ನು ಒತ್ತಲು ಇದ್ದಿದ್ದರೆ ಬಹಳ ಚೆನ್ನಾಗಿರುತ್ತಿತ್ತು.’ ಸೊಸೆ ಹೇಳಿದಳು, ‘ತಾಯೆ, ನನ್ನ ಪಾದಗಳನ್ನು ಭಗವಂತನೇ ಒತ್ತುತ್ತಿದ್ದಾನೆ, ನನಗೆ ಬೇರೆ ಯಾರೂ ಬೇಕಾಗಿಲ್ಲ.’ ಆಕೆ ಒಳ್ಳೆ ಭಕ್ತೆಯಾಗಿದ್ದುದರಿಂದ ಹಾಗೆ ಹೇಳಿದಳು.
“ಅಕ್ಬರ್ ಬಾದಶಹನ ಹತ್ತಿರಕ್ಕೆ ಒಬ್ಬ ಸ್ವಲ್ಪ ಹಣ ಯಾಚಿಸಲು ಹೋಗಿದ್ದ. ಬಾದಶಹ ಆಗ ನಮಾಜು ಮಾಡುತ್ತಿದ್ದ, ಆತ ಆಗ ಪ್ರಾರ್ಥಿಸುತ್ತಿದ್ದ, ‘ಹೇ ಖುದಾ, ನನಗೆ ಧನ ಕೊಡು, ದೌಲತ್ತು ಕೊಡು’ ಅಂತ. ಫಕೀರ ಅದನ್ನು ನೋಡಿ ಎದ್ದು ಹೊರಟು ಬರುವುದರಲ್ಲಿದ್ದ. ಆಗ ಅಕ್ಬರ್ ಆತನಿಗೆ ಸ್ವಲ್ಪ ಕುಳಿತಿರುವಂತೆ ಸಂಜ್ಞೆ ಮಾಡಿದ. ನಮಾಜು ಮುಗಿದ ನಂತರ ಆತನನ್ನು ಕೇಳಿದ, ‘ಏಕೆ ನೀವು ಎದ್ದು ಹೊರಟು ಹೋಗುವುದರಲ್ಲಿದ್ದಿರಲ್ಲ?’ ಆತ ಹೇಳಿದ: ‘ನೀವೇ ಭಗವಂತನನ್ನು ಧನ ದರ್ಪಾದಿ ಗಳಿಗಾಗಿ ಪ್ರಾರ್ಥಿಸುತ್ತಿದ್ದಿರಿ; ಅದರಿಂದ ಬೇಕಾದರೆ ಭಿಕಾರಿಯನ್ನೇಕೆ, ಖುದಾನನ್ನೇ ಬೇಡಬೇಕು ಅಂತ ಯೋಚಿಸಿದೆ.’
ವಿಜಯ: “ಗಯೆಯಲ್ಲಿ ನಾನು ಒಬ್ಬ ಸಾಧುವನ್ನು ನೋಡಿದ್ದೇನೆ. ಆತನಿಗೆ ‘ಅಹಂ’ ಎಂಬುದು ಇಲ್ಲವೆ ಇಲ್ಲ. ಆತನಿಗೆ ಒಂದು ದಿನ ಭಕ್ತರಿಗೆ ಅನ್ನ ಹಾಕಬೇಕೆಂಬ ಇಚ್ಛೆಯಾಯಿತು. ನೋಡುತ್ತೇವೆ, ಜನ ಎಲ್ಲಿಂದಲೊ ತಾವು ತಾವಾಗಿಯೇ ಗೋಧಿಹಿಟ್ಟು, ತುಪ್ಪ ಇದನ್ನೆಲ್ಲ ತಲೆ ಮೇಲೆ ಹೊತ್ತುಕೊಂಡು ಬಂದು ತಂದಿಟ್ಟು ಹೋದರು. ಹಾಗೇ ಹಣ್ಣು ಹಂಪಲುಗಳೂ ಬಂದು ಸೇರಿದುವು.”
ಶ್ರೀರಾಮಕೃಷ್ಣರು ವಿಜಯ ಮೊದಲಾದವರಿಗೆ: “ಸಾಧುಗಳಲ್ಲಿ ಮೂರು ಶ್ರೇಣಿ ಸಾಧುಗಳಿದ್ದಾರೆ; ಉತ್ತಮ, ಮಧ್ಯಮ, ಅಧಮ. ಯಾರು ಉತ್ತಮ ಶ್ರೇಣಿ ಸಾಧುಗಳೊ ಅವರು ತಮ್ಮ ಆಹಾರಕ್ಕಾಗಿ ಪ್ರಯತ್ನಪಡುವುದಿಲ್ಲ. ದಂಡಿ ಸಾಧುಗಳೆಲ್ಲ ಮಧ್ಯಮ ಅಥವಾ ಅಧಮ ಶ್ರೇಣಿಗೆ ಸೇರಿದವರು. ಅವರಲ್ಲಿ ಮಧ್ಯಮ ಶ್ರೇಣಿಗೆ ಸೇರಿದ ಸಾಧುಗಳು ‘ನಮೋ ನಾರಾಯಣಾಯ’ ಅಂತ ಹೇಳಿ ಭಿಕ್ಷೆ ಬೇಡುತ್ತಾರೆ. ಯಾರು ಅಧಮ ಶ್ರೇಣಿಯವರೊ ಅವರು, ಭಿಕ್ಷೆ ಕೊಡದಿದ್ದರೆ ಜಗಳಕ್ಕೆ ಬರುತ್ತಾರೆ.
‘ಉತ್ತಮ ಶ್ರೇಣಿ ಸಾಧುಗಳದು ಅಜಗರವೃತ್ತಿ. ಕುಳಿತಲ್ಲಿಯೇ ಅವರಿಗೆ ಆಹಾರ ಬಂದೊದಗುತ್ತದೆ. ಅಜಗರ ತನ್ನ ಸ್ಥಳದಿಂದ ಎದ್ದು ಚಲಿಸದು. ಒಬ್ಬ ಎಳೆ ವಯಸ್ಸಿನ ಸಾಧು – ಬಾಲ ಬ್ರಹ್ಮಚಾರಿ, ಭಿಕ್ಷಾಟನೆಗಾಗಿ ಹೋಗಿದ್ದ. ಒಬ್ಬ ಯುವತಿ ತಂದು ಭಿಕ್ಷೆ ಹಾಕಿದಳು, ಆಕೆಯ ವಕ್ಷ ಸ್ಥಳದಲ್ಲಿ ಸ್ತನಗಳನ್ನು ನೋಡಿ ಆಕೆಯ ಎದೆಯ ಮೇಲೆ ಕುರು ಎದ್ದಿರಬೇಕು ಎಂದು ಭಾವಿಸಿದ. ಅದಕ್ಕಾಗಿ ಆತ ಹೇಳಿದ, ‘ಅವು ಏನು?’ ಅಂತ. ಮನೆಯ ವಯಸ್ಸಾದ ಹೆಂಗಸರು ಆತನಿಗೆ ವಿವರಿಸಿ ಹೇಳಿದರು, ‘ಈಕೆಯ ಗರ್ಭದಲ್ಲಿ ಮುಂದೆ ಮಕ್ಕಳು ಹುಟ್ಟುವುವು ಎಂದು ಭಗವಂತ ಈಕೆಯ ಸ್ತನಗಳಲ್ಲಿ ಹಾಲು ಕೊಟ್ಟಿದ್ದಾನೆ. ಅದಕ್ಕಾಗಿಯೇ ಭಗವಂತ ಅವುಗಳಿಗೆ ಮೊದಲೇ ವ್ಯವಸ್ಥೆ ಮಾಡಿದ್ದಾನೆ.’ ಈ ಮಾತನ್ನು ಕೇಳಿ ಆ ಯುವಕ ಸಾಧು ಆಶ್ಚರ್ಯಚಕಿತನಾದ. ಆಗ ಆತ ಹೇಳಿದ, ‘ಹಾಗಾದರೆ ನಾನು ಭಿಕ್ಷೆ ಮಾಡುವ ಆವಶ್ಯಕತೆ ಏನೂ ಇಲ್ಲ, ನನಗೂ ಭಗವಂತ ವ್ಯವಸ್ಥೆ ಮಾಡಿಯೇ ಇರಬೇಕು.”
ಅಲ್ಲಿದ್ದ ಭಕ್ತರಲ್ಲಿ ಕೆಲವರು ತಮಗೆ ತಾವೇ, ಹಾಗಾದರೂ ತಾವೂ ಯಾವ ಪ್ರಯತ್ನ ವನ್ನೂ ಮಾಡದೆ ಇದ್ದರೆ ಆಯಿತಲ್ಲ ಅಂತ ಭಾವಿಸಿದರು.
ಶ್ರೀರಾಮಕೃಷ್ಣರು: “ಆದರೆ ಯಾರಿಗೆ ಪ್ರಯತ್ನ ಆವಶ್ಯಕ ಎಂಬ ಭಾವನೆ ಇರುವುದೊ ಅವರು ಪ್ರಯತ್ನ ಮಾಡಿಯೇ ತೀರಬೇಕು.”
ವಿಜಯ: “ಇದರ ಸಂಬಂಧವಾಗಿ ಭಕ್ತಮಾಲೆಯಲ್ಲಿ ಒಂದು ಸೊಗಸಾದ ಕಥೆ ಇದೆ.”
ಶ್ರೀರಾಮಕೃಷ್ಣರು: “ನೀನೆ ಹೇಳು ಅದನ್ನು.”
ವಿಜಯ: “ದಯವಿಟ್ಟು ನೀವೇ ಹೇಳಿ.”
ಶ್ರೀರಾಮಕೃಷ್ಣರು: “ನೀನೇ ಹೇಳು. ನನಗೆ ಸ್ವಲ್ಪ ಮರೆತುಹೋಗಿದೆ.”
“ಮೊದಲು ಮೊದಲು ಇವುಗಳನ್ನೆಲ್ಲ ಕೇಳಬೇಕು. ಅದಕ್ಕಾಗಿಯೆ ಬಹಳ ವರ್ಷಗಳ ಹಿಂದೆ ಇವುಗಳನ್ನೆಲ್ಲ ಕೇಳುತ್ತಿದ್ದೆ. ಈಗ ನನಗೆ ಆ ಅವಸ್ಥೆ ಇಲ್ಲ. ಹನುಮಂತ ಹೇಳಿದ: ‘ನನಗೆ ತಿಥಿಯೇ ಆಗಲಿ, ನಕ್ಷತ್ರವೇ ಆಗಲಿ ಗೊತ್ತಿಲ್ಲ. ಕೇವಲ ರಾಮಚಿಂತನೆ ಮಾಡುತ್ತಿದ್ದೇನೆ’.
“ಚಾತಕಪಕ್ಷಿಗೆ ಕುಡಿಯಲು ಮಳೆನೀರೇ ಬೇಕು. ಬಾಯಾರಿಕೆಯಿಂದ ಪ್ರಾಣ ಹೋಗುತ್ತಿದ್ದರೂ ಬಾಯನ್ನು ಮೇಲಕ್ಕೆ ತಿರುಗಿಸಿ ಆಕಾಶದಿಂದ ಬೀಳುವ ಮಳೆನೀರಿ ಗಾಗಿಯೇ ಎದುರು ನೋಡುತ್ತಿರುತ್ತದೆ. ಗಂಗೆ ಯಮುನೆ ಮತ್ತು ಏಳು ಸಮುದ್ರ ಗಳಲ್ಲಿಯೂ ನೀರು ಭರ್ತಿಯಾಗಿದೆ. ಆದರೂ ಅದು ಭೂಮಿಯ ಮೇಲೆ ಶೇಖರವಾಗಿ ರುವ ನೀರಿನ ಒಂದು ತೊಟ್ಟನ್ನೂ ಮುಟ್ಟದು.
“ರಾಮಲಕ್ಷ್ಮಣರು ಪಂಪಾಸರೋವರಕ್ಕೆ ಹೋಗಿದ್ದರು. ಅಲ್ಲಿ ಒಂದು ಕಾಗೆ ಆತುರದಿಂದ ಮತ್ತೆ ಮತ್ತೆ ನೀರು ಕುಡಿಯಲು ಆ ಸರೋವರದ ದಡದ ಹತ್ತಿರ ಹೋಗುತ್ತ ನೀರನ್ನು ಮಾತ್ರ ಕುಡಿಯದೆ ಹಿಂದಿರುಗುತ್ತಿರುವುದನ್ನು ಲಕ್ಷ್ಮಣ ನೋಡಿದ. ಆತ ರಾಮನನ್ನು ಕಾರಣ ಕೇಳಲಾಗಿ ರಾಮ ಹೇಳಿದ, ‘ತಮ್ಮ, ಇದು ಪರಮ ಭಕ್ತ ಕಾಗೆ. ಅಹರ್ನಿಶಿ ಇದು ರಾಮನಾಮವನ್ನು ಜಪಿಸುತ್ತಿದೆ. ನೀರಡಿಕೆಯಿಂದ ಇದರ ಗಂಟಲು ಒಣಗಿ ಬತ್ತಿಹೋಗುತ್ತಿದೆ. ಆದರೂ ಅದಕ್ಕೆ ನೀರು ಕುಡಿಯಲು ಆಗುತ್ತಿಲ್ಲ. ಅದು ಯೋಚಿಸುತ್ತಿದೆ, “ನೀರು ಕುಡಿಯಲು ಹೋದರೆ ಆ ಸಮಯದಲ್ಲಿ ರಾಮನಾಮಜಪ ನಿಂತು ಹೋಗುವುದಲ್ಲ ಏನು ಮಾಡುವುದು” ಅಂತ.’
“ಒಂದು ಪೂರ್ಣಿಮೆಯ ರಾತ್ರಿ ನಾನು ಹಲಧಾರಿಯನ್ನು ಕೇಳಿದೆ, ‘ಅಣ್ಣಾ, ಈವತ್ತು ಅಮಾವಾಸ್ಯೆಯೇನು?’ (ಎಲ್ಲರೂ ನಗುತ್ತಾರೆ).
(ನಗುತ್ತ) “ಹೌದು. ಇದು ಸತ್ಯ. ಕೇಳಿದ್ದೇನೆ, ‘ಅಮಾವಾಸ್ಯೆ ಮತ್ತು ಪೂರ್ಣಿಮೆ ಯಾವಾಗ ಅದಲುಬದಲಾಗಿ ತೋರುತ್ತದೆಯೊ ಆಗ ಆತನಿಗೆ ಪೂರ್ಣಜ್ಞಾನ ದೊರೆತಿದೆ’ ಅಂತ. ಹಲಧಾರಿ ಅದನ್ನು ಏಕೆ ತಾನೆ ನಂಬಿಯಾನು? ಆತ ಹೇಳಿದ, ‘ಇದು ನಿಜ ವಾಗಿಯೂ ಕಲಿಗಾಲವೇ ಸರಿ! ಯಾರಿಗೆ ಅಮಾವಾಸ್ಯೆಗೂ ಪೂರ್ಣಿಮೆಗೂ ವ್ಯತ್ಯಾಸ ಗೊತ್ತಾಗದೊ ಅಂಥ ಇವರನ್ನು ಜನ ಗೌರವಿಸುತ್ತಾ ಇದ್ದಾರಲ್ಲ!’”
ಮಹಿಮಚರಣ ಕೊಠಡಿಯನ್ನು ಪ್ರವೇಶಿಸಿದನು.
ಶ್ರೀರಾಮಕೃಷ್ಣರು ಸಂಭ್ರಮದಿಂದ “ಬನ್ನಿ ಬನ್ನಿ, ಕುಳಿತುಕೊಳ್ಳಿ.”
(ವಿಜಯ ಮೊದಲಾದವರಿಗೆ) “ಈಗಿನ ಅವಸ್ಥೆಯಲ್ಲಿ ನನಗೆ ತಿಥಿ ವಾರ ನಕ್ಷತ್ರ ಇವು ಜ್ಞಾಪಕದಲ್ಲಿರೋದಿಲ್ಲ. ಅಂದು ವೇಣೀಪಾಲನ ಉದ್ಯಾನವನದಲ್ಲಿ ಮಹೋತ್ಸವದ ದಿನ ಯಾವುದು ಎಂಬುದು ಮರೆತುಹೋಯಿತು. ಇಂಥ ದಿನ ಸಂಕ್ರಮಣ. ಹೆಚ್ಚಾಗಿ ಭಗವನ್ನಾಮ ಸಂಕೀರ್ತನೆ ಮಾಡಬೇಕು ಎಂಬ ಈ ವಿಧವಾದ ಸಂಕಲ್ಪಗಳು ಮರೆತೇ ಹೋಗುತ್ತವೆ.”
ಪರಮಹಂಸರು ಸ್ವಲ್ಪ ಹೊತ್ತು ಹಾಗೆ ಏನನ್ನೊ ಯೋಚಿಸುತ್ತ ಕುಳಿತಿದ್ದರು.
ಶ್ರೀರಾಮಕೃಷ್ಣರು: “ಆದರೆ ಯಾರಾದರೂ ನನ್ನನ್ನು ಇಂಥ ಸಮಯದಲ್ಲಿ ಬಂದು ಕಾಣುತ್ತೇನೆ ಅಂತ ಹೇಳಿದ್ದರೆ ಅದು ಮಾತ್ರ ಜ್ಞಾಪಕದಲ್ಲಿ ಇರುತ್ತದೆ.
“ಭಗವಂತನ ಕಡೆಗೆ ಮನಸ್ಸಿನ ಹದಿನಾರಾಣೆ ಭಾಗವೂ ಹರಿದುಹೋಗುತ್ತಿದ್ದರೆ ಈ ಅವಸ್ಥೆ ಬರುತ್ತದೆ. ರಾಮ ಹನುಮಂತನನ್ನು ಕೇಳಿದ, ‘ಹನುಮಂತ, ನೀನು (ಲಂಕೆಯಿಂದ) ಸೀತೆಯ ಸಂದೇಶವನ್ನು ತಂದಿದ್ದೀಯೆ; ಆಕೆ ಯಾವ ರೀತಿ ಇದ್ದಾಳೆ ಎಂಬುದನ್ನು ನನಗೆ ತಿಳಿಸು.’ ಹನುಮಂತ ಹೇಳಿದ, ‘ಹೇ ರಾಮ, ಸೀತೆಯ ಸ್ಥೂಲ ಶರೀರ ಅಲ್ಲಿ ಬಿದ್ದಿರುವುದನ್ನು ಕಂಡೆ. ಅದರೊಳಗೆ ಪ್ರಾಣವೂ ಇಲ್ಲ ಮನಸ್ಸೂ ಇಲ್ಲ. ಆಕೆ ತನ್ನ ಪ್ರಾಣ ಮನಸ್ಸನ್ನು ನಿಮ್ಮ ಪಾದಪದ್ಮಗಳಿಗೆ ಅರ್ಪಿಸಿಬಿಟ್ಟಿದ್ದಾಳೆ. ಅದಕ್ಕಾಗಿ ಬರೀ ಸ್ಥೂಲ ಶರೀರ ಮಾತ್ರ ಅಲ್ಲಿ ಬಿದ್ದಿದೆ. ಯಮ ಅದರ ಹತ್ತಿರ ಸುಳಿದಾಡುತ್ತಿದ್ದಾನೆ. ಆತ ಏನು ತಾನೆ ಮಾಡಿಯಾನು? ಅಲ್ಲಿ ಬಿದ್ದಿರುವುದು ಬರೀ ಸ್ಥೂಲ ಶರೀರ ಮಾತ್ರ; ಮನಸ್ಸು ಪ್ರಾಣ ಅದರಲ್ಲಿ ಇಲ್ಲ.’
“ನೀವು ಯಾರ ಚಿಂತನೆ ಮಾಡುತ್ತೀರೊ ಅವರ ಸತ್ವ ನಿಮಗೆ ಬಂದುಬಿಡುತ್ತದೆ. ಹಗಲು ಇರುಳು ಭಗವಂತನ ಚಿಂತನೆ ಮಾಡುತ್ತಿದ್ದರೆ ಭಗವಂತನ ಸತ್ತ್ವ ನಿಮಗೆ ಬಂದು ಬಿಡುತ್ತದೆ. ಉಪ್ಪಿನ ಗೊಂಬೆ ಸಮುದ್ರ ಅಳೆಯಲು ಹೋಗಿ ಅದೂ ಸಮುದ್ರವೇ ಆಗಿಬಿಟ್ಟಿತು. ಗ್ರಂಥಗಳ ಅಥವಾ ಶಾಸ್ತ್ರಗಳ ಉದ್ದೇಶವೇನು? ಭಗವಂತನ ಸಾಕ್ಷಾತ್ಕಾರ ದೊರಕಿಸಿಕೊಡೋದು. ಯಾರೊ ಒಬ್ಬ ವ್ಯಕ್ತಿ ಒಬ್ಬ ಸಾಧುವಿನ ಪುಸ್ತಕ ತೆಗೆದು ನೋಡಿದ. ಅದರ ಪ್ರತಿಯೊಂದು ಹಾಳೆಯಲ್ಲಿಯೂ ಕೇವಲ ‘ರಾಮ, ರಾಮ’ ಅಂತ ಬರೆದಿತ್ತು; ಬೇರೆ ಏನೂ ಬರೆದಿರಲಿಲ್ಲ.
“ಭಗವಂತನಲ್ಲಿ ಅನುರಾಗ ಉಂಟಾದರೆ ಸಾಮಾನ್ಯ ಘಟನೆಯಿಂದಲೇ ಭಕ್ತಿ ಉದ್ದೀಪನೆಯಾಗಿಬಿಡುತ್ತದೆ. ಆಗ ಒಂದು ಸಲ ರಾಮನಾಮ ಜಪಿಸಿದರೆ ಅದಕ್ಕೆ ಒಂದು ಕೋಟಿ ಸಂಧ್ಯಾವಂದನೆಗಳ ಫಲ ದೊರೆತುಬಿಡುತ್ತದೆ. ಮೇಘವನ್ನು ನೋಡಿದೊಡನೆಯೆ ನವಿಲಿಗೆ ರಾಗದ ಉದ್ದೀಪನೆಯಾಗಿಬಿಡುತ್ತದೆ. ಆನಂದದಿಂದ ಪುಕ್ಕವನ್ನು ಕೆದರಿ ನಲಿಯುತ್ತದೆ. ಶ್ರೀಮತಿ (ರಾಧೆ)ಗೂ ಹಾಗೇ ಆಗುತ್ತಿತ್ತು. ಮೇಘವನ್ನು ನೋಡಿದೊಡ ನೆಯೆ ಆಕೆಗೆ ಕೃಷ್ಣನ ನೆನಪು ಬಂದುಬಿಡುತ್ತಿತ್ತು.
“ಚೈತನ್ಯದೇವ ಒಮ್ಮೆ ಒಂದು ಹಳ್ಳಿಯ ಹತ್ತಿರ ಹೋಗುತ್ತಿದ್ದ. ಆ ಹಳ್ಳಿಯ ಮಣ್ಣಿನಿಂದ ಮೃದಂಗ ತಯಾರಾಗುತ್ತದೆ ಎಂಬುದಾಗಿ ಯಾರೋ ಆತನಿಗೆ ಹೇಳಿದರು. ಒಡನೆಯೆ ಭಾವೋನ್ಮತ್ತನಾಗಿಬಿಟ್ಟ – ಏಕೆಂದರೆ ಹರಿನಾಮ ಸಂಕೀರ್ತನೆಯ ಸಮಯದಲ್ಲಿ ಮೃದಂಗವನ್ನು ಬಾಜಿಸುತ್ತಾರೆ.
“ಯಾರಿಗೆ ಭಗವದ್ಭಾವನೆಯ ಉದ್ದೀಪನೆಯಾಗುತ್ತದೆ? ವಿಷಯಾತ್ಮಿಕ ಬುದ್ಧಿಯನ್ನು ತ್ಯಜಿಸಿರತಕ್ಕವರಿಗೆ. ಯಾರ ವಿಷಯರಸ ಬತ್ತಿಹೋಗಿರುವುದೊ ಅವರಿಗೆ ಒಂದು ಸ್ವಲ್ಪದ ರಿಂದಲೆ ಭಗವದ್ಭಾವನೆಯ ಉದ್ದೀಪನೆಯಾಗಿಬಿಡುತ್ತದೆ. ಬೆಂಕಿಕಡ್ಡಿ ಒದ್ದೆಯಾಗಿದ್ದರೆ ಒಂದು ಸಾವಿರ ಸಲ ಗೀಚಿದರೂ ಅದು ಹತ್ತದು. ಆದರೆ ಒಣಗಿದರೆ ಒಂದು ಸ್ವಲ್ಪ ಗೀಚಿದರೇ ಸಾಕು ‘ಧಗ್’ ಎಂದು ಹತ್ತಿಕೊಂಡು ಬಿಡುತ್ತದೆ.
“ದೇಹದ ಸುಖದುಃಖವಂತು ಇದ್ದೇ ಇದೆ. ಯಾರಿಗೆ ಭಗವಂತನ ಸಾಕ್ಷಾತ್ಕಾರ ಆಗಿದೆಯೊ ಅವರ ಮನಸ್ಸು ಪ್ರಾಣ ದೇಹ ಆತ್ಮ ಎಲ್ಲವನ್ನೂ ಆತನಿಗೆ ಅರ್ಪಿಸಿ ಬಿಟ್ಟಿರುತ್ತಾರೆ. ರಾಮ ಲಕ್ಷ್ಮಣರು ಪಂಪಾಸರೋವರಕ್ಕೆ ಸ್ನಾನಮಾಡಲು ಹೋದಾಗ ಅವರು ದಡದಲ್ಲಿ ತಮ್ಮ ಧನುಸ್ಸುಗಳನ್ನು ನೆಟ್ಟು ಹೋದರು. ಸ್ನಾನಾನಂತರ ಲಕ್ಷ್ಮಣ ಧನುಸ್ಸುಗಳನ್ನು ಕೈಯಲ್ಲಿ ತೆಗೆದು ನೋಡುತ್ತಾನೆ ಅವುಗಳ ಮೊನೆ ರಕ್ತಮಯವಾಗಿದೆ. ಅಗ ರಾಮಲಕ್ಷ್ಮಣನಿಗೆ ಹೇಳಿದ: ‘ತಮ್ಮ, ನೋಡು ನೋಡು! ಬಹುಶಃ ಯಾವುದೊ ಒಂದು ಪ್ರಾಣಿಗೆ ನಾವು ಗಾಯ ಮಾಡಿರಬೇಕು.’ ಲಕ್ಷ್ಮಣ ಆ ಸ್ಥಳವನ್ನು ಅಗೆದು ನೋಡಿದಾಗ ಅದು ಗೂಳಿ ಕಪ್ಪೆ ಆಗಿತ್ತು. ಅದು ಇನ್ನೇನು ಸಾಯುವುದರಲ್ಲಿತ್ತು. ಆಗ ರಾಮ ಕರುಣಾಜನಕ ಕಂಠದಿಂದ ಕಪ್ಪೆಗೆ ಹೇಳಿದ, ‘ಏಕೆ ನೀನು ಕೂಗಿಕೊಳ್ಳಲಿಲ್ಲ. ನಿನ್ನನ್ನು ಸರ್ಪ ಹಿಡಿದಾಗ ಮಾತ್ರ ನೀನು ಬಹುವಾಗಿ ಕೂಗಿಕೊಳ್ಳುತ್ತೀಯಲ್ಲ?’ ಅದಕ್ಕೆ ಆ ಕಪ್ಪೆ ಹೇಳಿತು, ‘ಹೇ ರಾಮ, ಹಾವು ನನ್ನನ್ನು ಹಿಡಿದಾಗ, “ಹೇ ರಾಮ ನನ್ನನ್ನು ರಕ್ಷಿಸು! ಹೇ ರಾಮ ನನ್ನನ್ನು ರಕ್ಷಿಸು!” ಅಂತ ಕೂಗಿಕೊಳ್ಳುತ್ತೇನೆ. ಈಗ ನೋಡಿದರೆ ರಾಮನೇ ನನ್ನನ್ನು ಕೊಲ್ಲುತ್ತಿದ್ದಾನೆ; ಅದಕ್ಕಾಗಿ ಸುಮ್ಮನೆ ಇದ್ದುಬಿಟ್ಟೆ.’”
ಶ್ರೀರಾಮಕೃಷ್ಣರು ಮಹಿಮ ಮೊದಲಾದವರ ಕಡೆ ದೃಷ್ಟಿ ಹಾಕುತ್ತ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದರು. ಮಹಿಮಚರಣನಿಗೆ ಗುರುವಿನ ಉಪದೇಶದಲ್ಲಿ ವಿಶ್ವಾಸವಿಲ್ಲ ಎಂಬುದನ್ನು ಕೇಳಿದರು. ಮತ್ತೆ ಅವರು ಮಾತನಾಡಲಾರಂಭಿಸಿದ್ದಾರೆ.
ಶ್ರೀರಾಮಕೃಷ್ಣರು: “ಗುರುವಾಕ್ಯದಲ್ಲಿ ಶ್ರದ್ಧೆ ಇಡುವುದು ಉಚಿತ. ಗುರುವಿನ ಚಾರಿತ್ರ್ಯದ ಕಡೆ ಗಮನಕೊಡಬೇಕಾಗಿಲ್ಲ. ‘ನನ್ನ ಗುರು ಹೆಂಡದಂಗಡಿಗೆ ಹೋಗುತ್ತಿದ್ದರೂ, ಆತ ನಿತ್ಯಾನಂದರಾಯ.’
“ಒಬ್ಬ ಚಂಡಿ, ಭಾಗವತ ಇವುಗಳ ಪ್ರವಚನ ಮಾಡುತ್ತಿದ್ದ. ಆತ ಒಮ್ಮೆ ಹೇಳಿದ, ‘ಪೊರಕೆಯೇನೊ ಕೊಳಕಾದ್ದೆ. ಆದರೆ ಅದು ಮಲಿನ ಸ್ಥಳಗಳನ್ನು ಚೊಕ್ಕಟ ಮಾಡುತ್ತದೆ’ ಅಂತ.”
ಶ್ರೀರಾಮಕೃಷ್ಣರು ಮಹಿಮಚರಣನಿಗೆ: “ಸ್ವಸ್ವರೂಪವನ್ನು ಅರಿಯಬೇಕೆಂಬುದೇ ಜ್ಞಾನಿಗಳ ಉದ್ದೇಶ. ಇದಕ್ಕೆ ‘ಜ್ಞಾನ’ ಎಂದು ಹೆಸರು. ಇದಕ್ಕೇ ‘ಮುಕ್ತಿ’ ಅಂತ ಹೆಸರು. ನಮ್ಮ ನಿಜಸ್ವರೂಪವೇ ಪರಬ್ರಹ್ಮಸ್ವರೂಪ. ನಾನು ಮತ್ತು ಪರಬ್ರಹ್ಮ ಒಂದೇ ಒಂದು ವಸ್ತು. ಮಾಯೆಯ ದೆಸೆಯಿಂದ ಅದು ಗೊತ್ತಾಗುತ್ತಿಲ್ಲ.
“ನಾನು ಹರೀಶನಿಗೆ ಹೇಳಿದೆ, ‘ಇನ್ನೇನು ಇಲ್ಲ, – ಚಿನ್ನದ ಮೇಲೆ ಕೆಲವು ಕುಕ್ಕೆ ಮಣ್ಣು ಬಿದ್ದಿದೆ, ಅದನ್ನು ತೆಗೆದುಹಾಕಿಬಿಡುವುದೆ ಉಳಿದುಕೊಂಡಿರೋದು’ ಅಂತ.
“ಭಕ್ತರು ‘ಅಹಂ’ ಎಂಬುದನ್ನು ಇಟ್ಟುಕೊಳ್ಳುತ್ತಾರೆ, ಜ್ಞಾನಿಗಳು ಇಟ್ಟುಕೊಳ್ಳುವು ದಿಲ್ಲ. ಹೇಗೆ ಸ್ವಸ್ವರೂಪದಲ್ಲಿ ನೆಲೆಸಿರಬಹುದು ಎಂಬುದರ ವಿಷಯವಾಗಿ ತೋತಾಪುರಿ ನನಗೆ ಉಪದೇಶ ಕೊಡುತ್ತಿದ್ದ: “ಮನಸ್ಸನ್ನು ಬುದ್ಧಿಯಲ್ಲಿ ಲಯಮಾಡು, ಬುದ್ಧಿಯನ್ನು ಆತ್ಮದಲ್ಲಿ ಲಯಮಾಡು; ಆಗ ಸ್ವಸ್ವರೂಪದಲ್ಲಿ ನೆಲೆಸಬಲ್ಲೆ.”
“ಆದರೆ ‘ಅಹಂ’ ಅಂಬುದು ಉಳಿದೇ ಉಳಿದುಕೊಳ್ಳುತ್ತದೆ; ಹೋಗಲೊಲ್ಲದು. ಒಂದು ಅನಂತ ಜಲರಾಶಿಯನ್ನು ಭಾವಿಸಿಕೊಳ್ಳಿ; ಮೇಲೆ ಕೆಳಗೆ, ಹಿಂದೆ ಮುಂದೆ, ಎಡಕ್ಕೆ ಬಲಕ್ಕೆ ಎಲ್ಲೆಲ್ಲಿಯೂ ನೀರಿನಿಂದ ತುಂಬಿದೆ. ಆ ಜಲರಾಶಿಯಲ್ಲಿ ನೀರಿನಿಂದ ತುಂಬಿದ ಕೊಡವೊಂದಿದೆ ಎಂದು ಭಾವಿಸಿಕೊಳ್ಳಿ. ಅದರ ಒಳಗೂ ನೀರಿರುವುದು, ಅದರ ಹೊರಗೂ ನೀರಿರುವುದು; ಆದರೂ ‘ಕೊಡ’ ಎಂಬುದು ಇದ್ದೇ ಇದೆ. ‘ಅಹಂ’ ಎಂಬುದು ಆ ಕೊಡ.
“ಜ್ಞಾನ ಪಡೆದ ನಂತರವೂ ಜ್ಞಾನಿಯ ಶರೀರ ಎಂದಿನಂತೆ ಉಳಿದುಕೊಳ್ಳುತ್ತದೆ. ಆದರೆ ಜ್ಞಾನಾಗ್ನಿಯಲ್ಲಿ ಕಾಮಾದಿ ರಿಪುಗಳು ದಗ್ಧವಾಗಿ ಹೋಗಿರುತ್ತವೆ. ಅನೇಕ ದಿವಸಗಳ ಹಿಂದೆ ಬಹಳ ಬಿರುಮಳೆ ಬಂದು ಕಾಳೀದೇವಾಲಯಕ್ಕೆ ಸಿಡಿಲು ಬಡಿಯಿತು. ನಾವೆಲ್ಲರೂ ಹೋಗಿ ನೋಡಿದೆವು. ಬಾಗಿಲುಗಳಿಗೆ ಯಾವ ಅಪಾಯವೂ ಆಗಿರಲಿಲ್ಲ. ಆದರೆ ಸ್ಕ್ರೂ ಮೊಳೆಗಳ ತಲೆಗಳೆಲ್ಲಾ ಹಾರಿಹೋಗಿದ್ದವು. ಬಾಗಿಲುಗಳೇ ಶರೀರ, ಕಾಮಾದಿ ಆಸಕ್ತಿಗಳೇ ಸ್ಕ್ರೂ ಮೊಳೆಗಳು.
“ಜ್ಞಾನಿಗೆ ಕೇವಲ ಭಗವಂತನ ಭಾವನೆಗಳೇ ರುಚಿಸುತ್ತವೆ. ವಿಷಯವಸ್ತುಗಳ ಮಾತುಕತೆ ಆತನ ಮನಸ್ಸಿಗೆ ಬಹಳವಾಗಿ ಕಷ್ಟವನ್ನುಂಟುಮಾಡುತ್ತವೆ. ವಿಷಯಾಸಕ್ತರು ಬೇರೆ ಗುಂಪಿಗೆ ಸೇರಿದವರು. ಅವರ ಅವಿದ್ಯೆಯ ರುಮಾಲು ಇನ್ನೂ ಕಳಚಿ ಬಿದ್ದಿಲ್ಲ. ಅದಕ್ಕಾಗಿಯೆ ಅವರು ಅಲ್ಲಿ ಇಲ್ಲಿ ಸುತ್ತಿ ಮತ್ತೆ ಮತ್ತೆ ವಿಷಯವಸ್ತುಗಳ ಮಾತುಗಳನ್ನೇ ಎತ್ತುತ್ತಾರೆ.
“ವೇದದಲ್ಲಿ ‘ಸಪ್ತ ಭೂಮಿಕೆಯ’ ವಿಷಯ ಇದೆ. ಜ್ಞಾನಿಯ ಮನಸ್ಸು ಐದನೆಯ ಭೂಮಿಕೆಗೆ ಹತ್ತಿದಾಗ, ಆತ ಭಗವದ್ವಿಷಯದ, ಹೊರತು ಬೇರೆ ಏನನ್ನೂ ಕೇಳಲೂ ಆರ ಅಥವಾ ಮಾತನಾಡಲೂ ಆರ. ಆಗ ಆತನ ಬಾಯಿಂದ ಕೇವಲ ಜ್ಞಾನೋಪದೇಶಗಳೇ ಹೊರಡುತ್ತವೆ.
“ವೇದದಲ್ಲಿ ಸಚ್ಚಿದಾನಂದ ಬ್ರಹ್ಮನ ವಿಷಯ ಇದೆ. ಬ್ರಹ್ಮ ಒಂದೂ ಅಲ್ಲ ಎರಡೂ ಅಲ್ಲ; ಒಂದೂ ಎರಡರ ಮಧ್ಯೆ. ಆತನನ್ನು ಅಸ್ತಿ ಎಂಬುದಾಗಿಯೂ ಹೇಳಲಾ ಗುವುದಿಲ್ಲ. ನಾಸ್ತಿ ಎಂಬುದಾಗಿಯೂ ಹೇಳಲಾಗುವುದಿಲ್ಲ; ಆತ ಅಸ್ತಿನಾಸ್ತಿಗಳ ಮಧ್ಯೆ.
“ರಾಗಾಭಕ್ತಿ ಉಂಟಾದರೆ, ಅಂದರೆ ಭಗವಂತನಲ್ಲಿ ಪ್ರೀತಿ ಉಂಟಾದರೆ ಆಗ ಆತನನ್ನು ಪಡೆಯಬಹುದು. ವೈಧೀಭಕ್ತಿ ಎಷ್ಟು ಬೇಗ ಉತ್ಪನ್ನವಾಗುತ್ತದೆಯೊ ಅಷ್ಟೇ ಬೇಗ ಹೊರಟು ಹೋಗುತ್ತದೆ. ಇಷ್ಟೊಂದು ಜಪಮಾಡಬೇಕು, ಇಷ್ಟೊಂದು ಧ್ಯಾನ ಮಾಡಬೇಕು, ಇಂಥಿಂಥ ಉಪಚಾರಗಳಿಂದ ಪೂಜೆ ಮಾಡಬೇಕು, ಪೂಜೆಯ ಸಮಯ ದಲ್ಲಿ ಇಂಥಿಂಥ ಮಂತ್ರ ಹೇಳಬೇಕು ಇವುಗಳಿಗೆಲ್ಲ ‘ವೈಧೀಭಕ್ತಿ’ ಅಂತ ಹೆಸರು. ಇದು ಬರುವುದಕ್ಕೂ ತಡವಿಲ್ಲ, ಹೋಗುವುದಕ್ಕೂ ತಡವಿಲ್ಲ. ಅನೇಕರು ಹೇಳುತ್ತಾರೆ, ‘ಅಣ್ಣಂದಿರಾ, ನಾವು ಎಷ್ಟು ಕಾಲ ಹವಿಷ್ಯಾನ್ನ ತಿಂದೆವು ಏನು ಕತೆ! ಎಷ್ಟೊಂದು ಸಲ ಮನೆಯಲ್ಲಿ ಪೂಜೆ ನಡೆಸಿದೆವು ಏನು ಕತೆ! ಆದರೆ ಕೊನೆಗೆ ನಮಗೆ ಏನು ತಾನೆ ದೊರಕಿತು?’ ಅಂತ. ಆದರೆ ರಾಗಾಭಕ್ತಿಯಿಂದ ವಿಮುಖವಾಗುವಂತೇ ಇಲ್ಲ. ಯಾರಿಗೆ ರಾಗಾಭಕ್ತಿ ಉಂಟಾಗುತ್ತದೆ ಎಂಬುದು ಗೊತ್ತೇನು? ಯಾರು ಪೂರ್ವಜನ್ಮಗಳಲ್ಲಿ ಬಹಳವಾಗಿ ಸಾಧನೆ ಮಾಡಿದ್ದಾರೊ ಅಥವಾ ಯಾರು ನಿತ್ಯ ಸಿದ್ಧರೊ ಅವರಿಗೆ. ಉದಾಹರಣೆಗಾಗಿ ಪಾಳುಬಿದ್ದಿರುವ ಮನೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಬೆಳೆದಿರುವ ಗಿಡಗೆಂಟೆಗಳನ್ನು ಮತ್ತು ಕಸಕಡ್ಡಿಗಳನ್ನು ತೆಗೆಯುವಾಗ ಪೈಪು ಹಾಕಿರುವ ಒಂದು ಚಿಲುಮೆಯನ್ನು ಕಂಡಂತೆ. ಅದು ಮಣ್ಣು ಮತ್ತು ಇಟ್ಟಿಗೆ ಚೂರುಗಳಿಂದ ಮುಚ್ಚಿ ಹೋಗಿದ್ದಿತು. ಅವುಗಳನ್ನು ತೆಗೆದ ಒಡನೆಯೆ ನೀರು ‘ಜಳ, ಜಳ’ ಅಂತ ಉಕ್ಕಿಬರಲಾ ರಂಭಿಸುತ್ತದೆ.
“ಯಾರಿಗೆ ರಾಗಾಭಕ್ತಿ ಉಂಟಾಗಿದೆಯೊ ಅವರು ಎಂದಿಗೂ ಹೇಳರು, ‘ಅಣ್ಣಂದಿರಾ, ಎಷ್ಟೊಂದು ಹವಿಷ್ಯಾನ್ನ ತಿಂದೆವು ಏನು ಕತೆ! ಆದರೆ ದೊರೆತುದೇನು?’ ಅಂತ. ಯಾರು ಹೊಸದಾಗಿ ವ್ಯವಸಾಯ ಮಾಡುತ್ತಾರೊ ಅವರು ಬೆಳೆ ನಷ್ಟವಾದರೆ ವ್ಯವಸಾಯವನ್ನೇ ಬಿಟ್ಟುಬಿಡುತ್ತಾರೆ. ಆದರೆ ಯಾರು ವಂಶಪಾರಂಪರ್ಯದಿಂದ ವ್ಯವಸಾಯ ಮಾಡಿ ಬಂದಿದ್ದಾರೊ, ಅವರು ಬೆಳೆ ಆದರೂ ಸರಿಯೆ ಹೋದರೂ ಸರಿಯೆ ವ್ಯವಸಾಯವನ್ನು ಮಾತ್ರ ಎಂದಿಗೂ ಬಿಡರು. ಅವರ ತಂದೆ, ತಾತ ಎಲ್ಲಾ ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ; ಅವರಿಗೆ ಗೊತ್ತಿದೆ ವ್ಯವಸಾಯಮಾಡೇ ತಿನ್ನಬೇಕು ಅಂತ.
“ಯಾರಿಗೆ ರಾಗಾಭಕ್ತಿ ಉಂಟಾಗಿರುತ್ತದೆಯೊ ಅವರೇ ಆತನ ನಿಜವಾದ ಭಕ್ತರು. ಭಗವಂತ ಅವರ ಭಾರವನ್ನು ಹೊತ್ತುಕೊಳ್ಳುತ್ತಾನೆ. ಆಸ್ಪತ್ರೆಗೆ ಹೋಗಿ ದಾಖಲಾದರೆ – ಗುಣವಾಗುವವರೆಗೆ ಡಾಕ್ಟರ್ ಬಿಟ್ಟುಕೊಡೋದಿಲ್ಲ. ಭಗವಂತ ಯಾರ ಕೈಯನ್ನು ಹಿಡಿದಿರುವನೊ ಅವರು ಯಾವುದಕ್ಕೂ ಭಯಪಡಬೇಕಾಗಿಲ್ಲ. ಯಾವ ಮಗು ಗದ್ದೆ ತೆವರಿಯ ಮೇಲೆ ನಡೆಯುವಾಗ ತಂದೆಯ ಕೈಯನ್ನು ಹಿಡಿದು ನಡೆಯುತ್ತಿರುವುದೊ ಅದು – ಬೇರೆ ಕಡೆ ಮನಸ್ಸಿಟ್ಟು ತಂದೆಯ ಕೈ ಬಿಟ್ಟರೆ- ಬಿದ್ದರೂ ಬೀಳಬಹದು. ಆದರೆ ತಂದೆ ಮಗುವಿನ ಕೈಯ ಹಿಡಿದಿದ್ದರೆ ಅದು ಬೀಳುವ ಸಂಭವವೇ ಇಲ್ಲ.
“ವಿಶ್ವಾಸದಿಂದ ಏನು ತಾನೇ ಸಾಧ್ಯವಿಲ್ಲ? ಯಾರು ನಿಜವಾದ ಭಕ್ತರೊ ಅವರಿಗೆ ಎಲ್ಲದರಲ್ಲಿಯೂ ವಿಶ್ವಾಸ; – ಸಾಕಾರ, ನಿರಾಕಾರ, ರಾಮ, ಕೃಷ್ಣ, ಭಗವತಿ.
“ಒಮ್ಮೆ ಕಾಮಾರಪುಕುರಕ್ಕೆ ಹೋಗುತ್ತಿರುವಾಗ ಬಿರುಗಾಳಿ ಮಳೆ ಬಂತು. ಆಗ ಹುಲ್ಲುಗಾವಲಿನ ಮಧ್ಯೆ ಹೋಗುತ್ತಿದ್ದೆ. ಅಲ್ಲಿ ಹಗಲುಗಳ್ಳರ ಭಯ. ಆಗ ಎಲ್ಲರ ಹೆಸರನ್ನೂ ಹೇಳಲಾರಂಭಿಸಿದೆ: ರಾಮ, ಕೃಷ್ಣ, ಭಗವತಿ, ಹನುಮಂತನ ಹೆಸರನ್ನೂ ಹೇಳಿದೆ. ಒಳ್ಳೇದು, ನಾನು ಎಲ್ಲರ ಹೆಸರನ್ನೂ ಹೇಳಿದೆ – ಇದರ ಇಂಗಿತವೇನು? ಇಲ್ಲಿ ಕೇಳಿ; ಚಾಕರನೆ ಆಗಲಿ ದಾಸಿಯೆ ಆಗಲಿ ಸ್ವಂತ ಖರ್ಚಿಗೆ ದುಡ್ಡು ತೆಗೆದುಕೊಳ್ಳುವಾಗ ಹೀಗೆ ಹೇಳಿ ಹೇಳಿ ತೆಗೆದುಕೊಳ್ಳುತ್ತಾರೆ: ‘ಇದು ಆಲೂಗಡ್ಡೆಯ ದುಡ್ಡು. ಇದು ಬದನೆಕಾಯಿ ದುಡ್ಡು’ ಅಂತ. ಪ್ರತಿಯೊಂದರ ದುಡ್ಡನ್ನೂ ಪ್ರತ್ಯೇಕವಾಗಿ ಎಣಿಸಿ ಬಳಿಕ ಎಲ್ಲವನ್ನೂ ಒಟ್ಟಿಗೆ ಸೇರಿಸಿಕೊಂಡು ಬಿಡುತ್ತಾರೆ.
“ಭಗವಂತನ ಮೇಲೆ ಪ್ರೀತಿ ಉಂಟಾದರೆ, ಕೇವಲ ಆತನ ಸಂಬಂಧವಾಗಿಯೇ ಮಾತುಕತೆಯಾಡಲು ಇಚ್ಛೆಯಾಗುತ್ತದೆ. ಯಾರು ಯಾರನ್ನು ಪ್ರೀತಿಸುತ್ತಾರೊ ಅವರು ಅವರ ವಿಷಯವಾಗಿ ಕೇಳಲು ಮತ್ತು ಮಾತನಾಡಲು ಇಚ್ಛಿಸುತ್ತಾರೆ. ಸಂಸಾರಿಗಳು ತಮ್ಮ ಮಕ್ಕಳ ಸಂಬಂಧವಾಗಿ ಮಾತನಾಡುವಾಗ ಅವರ ಬಾಯಿಂದ ನೀರು ಊರುವುದನ್ನು ನೋಡಬಹುದು. ಯಾರಾದರೂ ತನ್ನ ಮಗನನ್ನು ಹೊಗಳಿದರಂತೂ ಒಡನೆಯೇ ಸಂಸಾರಿ ಮಗುವಿಗೆ ಹೇಳುತ್ತಾನೆ, ‘ಮಗು, ನಿಮ್ಮ ಚಿಕ್ಕಪ್ಪನಿಗೆ ಕೈಕಾಲು ತೊಳೆಯಲು ನೀರು ತೆಗೆದುಕೊಂಡು ಬಾ.’
“ಯಾರಿಗೆ ಪಾರಿವಾಳವನ್ನು ಕಂಡರೆ ಪ್ರೀತಿಯೊ ಅವರ ಮುಂದೆ ಅದನ್ನು ಹೊಗಳಿದರೆ ಅವರಿಗೆ ಅತ್ಯಂತ ಆನಂದ. ಯಾರಾದರೂ ಅದನ್ನು ನಿಂದಿಸಿದರೆ ಆಗ ಅವರು ರೇಗಿ ಹೇಳುತ್ತಾರೆ, ‘ನಿಮ್ಮ ತಂದೆಯೇ ಆಗಲಿ ಅಥವಾ ನಿಮ್ಮ ವಂಶದ ಹದಿನಾಲ್ಕು ತಲೆಗಳಲ್ಲಿ ಯಾರಾದರೂ ಒಬ್ಬರು ಪಾರಿವಾಳವನ್ನು ಸಾಕಿದ್ದರೆ ತಾನೆ.”
ಮಹಿಮಚರಣ ಸಂಸಾರಿ. ಆದ್ದರಿಂದ ಪರಮಹಂಸರು ಸಂಸಾರದ ವಿಷಯವಾಗಿ ಮಾತನಾಡಲು ಆರಂಭಿಸಿದ್ದಾರೆ.
ಶ್ರೀರಾಮಕೃಷ್ಣರು: “ಸಂಸಾರವನ್ನು ಒಮ್ಮೆಗೆಯೆ ತ್ಯಾಗಮಾಡಿಬಿಡುವುದರ ಆವಶ್ಯ ಕತೆಯೇನಿದೆ? ಆಸಕ್ತಿ ಹೋಯಿತು ಅಂದರೆ ಮುಗಿಯಿತು. ಆದರೆ ಸಾಧನೆ ಆವಶ್ಯಕ; ಇಂದ್ರಿಯಗಳೊಡನೆ ಯುದ್ಧ ಮಾಡಲೇಬೇಕು.
“ಕೋಟೆಯೊಳಗಿನಿಂದ ಯುದ್ಧ ಮಾಡುವುದರಲ್ಲಿ ಹೆಚ್ಚು ಅನುಕೂಲ; ಕೋಟೆ ಬಹಳವಾಗಿ ಸಹಾಯ ನೀಡುತ್ತದೆ. ಸಂಸಾರ ಭೋಗಾಲಯ; ಒಂದೊಂದನ್ನಾಗಿ ಅನು ಭೋಗಿಸಿ ಅವನ್ನು ಒಡನೆಯೇ ತ್ಯಜಿಸಬಿಡಬೇಕು. ಒಮ್ಮೆ ಚಿನ್ನದ ಉಡಿದಾರ ಹಾಕಿಕೊಳ್ಳ ಬೇಕೆಂಬ ಇಚ್ಛೆಯಾಯಿತು. ಕೊನೆಗೆ ಅದು ದೊರೆಯಿತು; ಕಟ್ಟಿಕೊಂಡೆ; ಆದರೆ ಕಟ್ಟಿ ದೊಡನೆಯೇ ತೆಗೆಯಬೇಕಾಗಿ ಬಂದಿತು.
“ಒಮ್ಮೆ ನಾನು ಈರುಳ್ಳಿಯನ್ನು ತಿಂದೆ. ತಿನ್ನುವಾಗ ವಿಚಾರಮಾಡಿದೆ, ‘ಹೇ ಮನಸ್ಸೆ, ಇದು ಈರುಳ್ಳಿ ಅನ್ನುವುದು’ ಅಂತ. ಬಳಿಕ ಅದನ್ನು ಬಾಯೊಳಗೆ ಒಮ್ಮೆ ಈ ಕಡೆಗೆ, ಒಮ್ಮೆ ಆ ಕಡೆಗೆ, ಒಮ್ಮೆ ಹಾಗೆ ಎಲ್ಲಾ ಕಡೆಗೂ ಒತ್ತರಿಸಿ ಕೊನೆಗೆ ಉಗುಳಿಬಿಟ್ಟೆ.”
ಇಂದು ಇಲ್ಲಿಗೆ ಒಬ್ಬ ಗಾಯಕ ಬರುವ ಸಂಭವ. ಆತ ತನ್ನ ಮಂಡಲಿಯೊಡಗೂಡಿ ಹಾಡುತ್ತಾನೆ. ಪರಮಹಂಸರು ಆಗಾಗ ಭಕ್ತರನ್ನು ಕೇಳುತ್ತಲೇ ಇದ್ದಾರೆ, “ಎಲ್ಲಿ ಸಂಗೀತ ಗಾರ? ಎಲ್ಲಿ ಸಂಗೀತಗಾರ?”
ಮಹಿಮಚರಣ: “ಈಗ ನಡೆದುಕೊಂಡು ಹೋಗುತ್ತಿರುವುದೆ ಬಹಳ ಚೆನ್ನಾಗಿದೆ.”
ಶ್ರೀರಾಮಕೃಷ್ಣರು: “ಅದು ಹಾಗಲ್ಲ, ವರ್ಷಾದ್ಯಂತವೂ ನಮ್ಮದು ನಡೆದುಕೊಂಡು ಹೋಗುತ್ತಲೇ ಇರುತ್ತದೆ.”
ಹೊರಗೆ ಇದ್ದವನೊಬ್ಬ ಹೇಳಿದ: “ಗಾಯಕ ಬಂದ, ಗಾಯಕ ಬಂದ.”
ಶ್ರೀರಾಮಕೃಷ್ಣರು ಆನಂದದಿಂದ ತುಂಬಿತುಳುಕಾಡುತ್ತ, “ಹಾ! ಬಂದನೇ?” ಅಂದರು. ಪರಮಹಂಸರ ಕೊಠಡಿಯ ಆಗ್ನೇಯ ದಿಕ್ಕಿನ ಉದ್ದವಾದ ವರಾಂಡದಲ್ಲಿ ಮಂದಲಿಗೆ ಹಾಸಿದೆ. ಶ್ರೀರಾಮಕೃಷ್ಣರು ಹೇಳುತ್ತಿದ್ದಾರೆ: “ಮಂದಲಿಗೆಗಳ ಮೇಲೆ ಸ್ವಲ್ಪ ಗಂಗಾಜಲ ಚಿಮುಕಿಸಿ, ಅವುಗಳ ಮೇಲೆ ಅನೇಕ ವಿಷಯಾಸಕ್ತರು ಕುಳಿತುಕೊಂಡಿದ್ದರು”
ಬಾಲಿಯ ನಿವಾಸಿ ಪ್ಯಾರೀಬಾಬುವಿನ ಮನೆಯ ಹೆಂಗಸರು ಕಾಳಿಯ ದರ್ಶನಕ್ಕಾಗಿ ಅಲ್ಲಿಗೆ ಬಂದಿದ್ದಾರೆ. ಕೀರ್ತನೆಯ ವ್ಯವಸ್ಥೆ ಆಗುತ್ತಿರುವುದನ್ನು ನೋಡಿ ಅವರಿಗೂ ಕೇಳಲು ಇಚ್ಛೆ. ಒಬ್ಬ ಬಂದು ಪರಮಹಂಸರನ್ನು ಕೇಳಿದ. “ಅವರು ಕೇಳುತ್ತಿದ್ದಾರೆ, ‘ಕೊಠಡಿಯಲ್ಲಿ ಜಾಗವಿರುವುದೆ, ತಾವು ಅಲ್ಲಿ ಕುಳಿತುಕೊಳ್ಳಬಹುದೆ?’ ಅಂತ.” ಪರಮಹಂಸರು ಕೀರ್ತನೆ ಕೇಳುತ್ತ ಕೇಳುತ್ತ ಇದ್ದಹಾಗೆಯೇ ಹೇಳಿದರು: “ಇಲ್ಲ, ಇಲ್ಲ! ಜಾಗವೆಲ್ಲಿದೆ?”
ನಾರಾಯಣ ಆ ಸಮಯಕ್ಕೆ ಸರಿಯಾಗಿ ಬಂದು ಪರಮಹಂಸರಿಗೆ ಪ್ರಣಾಮ ಮಾಡಿದ. ಪರಮಹಂಸರು ಪ್ರೇಮದೃಷ್ಟಿಯಿಂದ ಕೇಳಿದರು: “ನೀನು ಏಕೆ ಇಲ್ಲಿಗೆ ಬಂದೆ? ನಿನ್ನ ಮನೆಯವರು ನಿನ್ನನ್ನು ಆಗಲೆ ಬಹಳವಾಗಿ ಹೊಡೆದಿದ್ದಾರೆ!” ನಾರಾಯಣ ತಮ್ಮ ಕೊಠಡಿಯ ಕಡೆ ಹೋಗುತ್ತಿರುವುದನ್ನು ನೋಡಿ ಪರಮಹಂಸರು ಬಾಬುರಾಮನಿಗೆ ಸಂಜ್ಞೆ ಮಾಡಿದರು: “ಆತನಿಗೆ ಏನಾದರೂ ತಿನ್ನಲು ಕೊಡು.” ನಾರಾಯಣ ಪರಮ ಹಂಸರ ಕೊಠಡಿಗೆ ಹೋದ. ಪರಮಹಂಸರು ಇದ್ದಕ್ಕಿದ್ದ ಹಾಗೆ ತಾವೂ ಎದ್ದು ಅಲ್ಲಿಗೆ ಬಂದರು. ಅವರು ತಮ್ಮ ಕೈಯಿಂದಲೇ ಆತನಿಗೆ ತಿನ್ನಿಸಲಾರಂಭಿಸಿದರು. ಆತ ತಿಂದು ಮುಗಿಸಿದ ನಂತರ ಮತ್ತೆ ಕೀರ್ತನೆ ಕೇಳಲು ಬಂದರು.
ಅಲ್ಲಿಗೆ ಅನೇಕ ಭಕ್ತರು ಬಂದಿದ್ದಾರೆ. ವಿಜಯಗೋಸ್ವಾಮಿ, ಮಹಿಮಚರಣ, ಮಾಸ್ಟರ್, ಚಿಕ್ಕಗೋಪಾಲ ಇವರೇ ಮೊದಲಾದವರು ಬಂದಿದ್ದಾರೆ. ನಾರಾಯಣ ಬಂದು ಪರಮಹಂಸರ ಪಕ್ಕದಲ್ಲಿ ಕುಳಿತುಕೊಂಡ.
ಮೂರು ಘಂಟೆಯ ಹೊತ್ತಿಗೆ ಅಧರಸೇನ ಬಂದ. ಆತನನ್ನು ಕಂಡೊಡನೆಯೇ ಪರಮಹಂಸರು ಸಂಭ್ರಮಭರಿತರಾದರು. ಆತ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡ. ತಮ್ಮ ಹತ್ತಿರ ಬಂದು ಕುಳಿತುಕೊಳ್ಳುವಂತೆ ಪರಮಹಂಸರು ಆತನಿಗೆ ಸನ್ನೆ ಮಾಡಿದರು.
ಗಾಯಕ ಹಾಡು ಮುಗಿಸಿದ. ಎಲ್ಲರೂ ಎದ್ದು ಹೊರಟರು. ಕೆಲವರು ಉದ್ಯಾನವನ ದಲ್ಲಿ ಅಡ್ಡಾಡುತ್ತಿದ್ದಾರೆ. ಇನ್ನು ಕೆಲವರು ಕಾಳಿಯ ಮತ್ತು ರಾಧಾಕಾಂತ ದೇವಾಲಯ ಗಳಲ್ಲಿ ಮಂಗಳಾರತಿ ನೋಡಲು ಹೋದರು.
ಸಾಯಂಕಾಲವಾದ ಮೇಲೆ ಮತ್ತೆ ಭಕ್ತರೆಲ್ಲ ಪರಮಹಂಸರ ಕೊಠಡಿಗೆ ಬಂದಿದ್ದಾರೆ. ಪರಮಹಂಸರ ಕೊಠಡಿಯಲ್ಲಿ ಕೀರ್ತನೆಯನ್ನು ಮತ್ತೆ ನಡೆಸುವ ವ್ಯವಸ್ಥೆ ಆಗುತ್ತಿದೆ. ಪರಮ ಹಂಸರಿಗೆ ಬಹಳ ಉತ್ಸಾಹ. ಹೇಳುತ್ತಿದ್ದಾರೆ, “ಈ ಕಡೆಗೂ ಒಂದು ದೀಪ ಹಚ್ಚಿ.” ಕೊಠಡಿಯಲ್ಲಿ ಎರಡು ದೀಪಗಳನ್ನು ಹಚ್ಚಿ ಇಟ್ಟಿದ್ದರಿಂದ ಕೊಠಡಿ ಚೆನ್ನಾಗಿ ಪ್ರಕಾಶವಾಗಿದೆ.
ಪರಮಹಂಸರು ವಿಜಯನಿಗೆ ಹೇಳಿದರು: “ನೀನು ಹೋಗಿ ಆ ಸ್ಥಳದಲ್ಲಿ ಏಕೆ ಕುಳಿತೆ? ಈ ಕಡೆ ಎದ್ದು ಬಂದುಬಿಡು.” ಈ ಸಲದ ಕೀರ್ತನೆ ಬಹಳ ಚೆನ್ನಾಗಿ ಕಳೆಕಟ್ಟಿ ಬಿಟ್ಟಿತು. ಪರಮಹಂಸರು ಭಾವೋದ್ರೇಕಗೊಂಡು ನರ್ತಿಸುತ್ತಿದ್ದಾರೆ. ಭಕ್ತರು ಅವರನ್ನು ಸುತ್ತುಗಟ್ಟಿ ನರ್ತಿಸುತ್ತಾ ಇದ್ದಾರೆ. ವಿಜಯ ನರ್ತಿಸುತ್ತ ದಿಗಂಬರನಾಗಿ ಬಿಟ್ಟಿದ್ದಾನೆ. ಆತನಿಗೆ ಬಾಹ್ಯಪ್ರಜ್ಞೆಯೇ ಇಲ್ಲ.
ಕೀರ್ತನೆ ಮುಗಿದ ನಂತರ ವಿಜಯ ತನ್ನ ಬೀಗದ ಕೈಗಾಗಿ ಹುಡುಕುತ್ತಿದ್ದಾನೆ. ಅದು ನರ್ತಿಸುವಾಗ ಎಲ್ಲೋ ಬಿದ್ದುಹೋಗಿಬಿಟ್ಟದೆ. ಪರಮಹಂಸರು ಹೇಳುತ್ತಿದ್ದಾರೆ, “ಅದಕ್ಕಾಗಿ ಮತ್ತೆ ಏಕೆ ಪೇಚಾಡಬೇಕು?” ಹೀಗೆ ಹೇಳಿ ನಗುತ್ತಿದ್ದಾರೆ. ವಿಜಯನಿಗೆ ಮತ್ತೆ ಹೇಳುತ್ತಿದ್ದಾರೆ, “ಅವೆಲ್ಲ ಮತ್ತೇಕೆ?” (ಅಂದರೆ, ಬೀಗದ ಕೈಗಳ ತಂಟೆ ಮತ್ತೆ ಆತನಿಗೆ ಏಕೆ ಎಂದು).
ಕಿಶೋರಿ ಪರಮಹಂಸರಿಗೆ ಪ್ರಣಾಮ ಮಾಡಿ ಇನ್ನೇನು ಹೊರಡುವುದರಲ್ಲಿದ್ದಾನೆ. ಪರಮಹಂಸರು ಆತನ ಎದೆಯನ್ನು ಸವರಿ ಆಶೀರ್ವಾದಮಾಡಿ ಹೇಳಿದರು, “ಮತ್ತೆ ಬಾ.” ಆ ಮಾತುಗಳು ಕರುಣಾರಸದಿಂದ ತೊಯ್ದುಹೋಗಿದ್ದುವು. ಬಳಿಕ ಮಣಿ ಮತ್ತು ಗೋಪಾಲ ಪರಮಹಂಸರಿಗೆ ಪ್ರಣಾಮಮಾಡಿದರು. ಅವರೂ ಹೊರಡುವುದರಲ್ಲಿದ್ದರು. ಅದೇ ಪ್ರೇಮ ಪೂರಿತ ಹೃದಯದಿಂದ ಮಧು ತೊಟ್ಟಿಕ್ಕುತ್ತಾ ಇದೆಯೊ ಏನೊ ಎಂಬ ರೀತಿಯಲ್ಲಿ ಅವರಿಗೆ ಹೇಳಿದರು: “ನೀವು ನಾಳೆ ಬೆಳಿಗ್ಗೆ ಎದ್ದುಹೋಗಿ, ಇಲ್ಲದಿದ್ದರೆ ಹಿಮಕ್ಕೆ ಸಿಗಬೇಕಾಗುತ್ತದೆ.”
ಮಣಿ ಮತ್ತು ಗೋಪಾಲ ಮನೆಗೆ ಹೋಗುವುದು ನಿಂತುಹೋಯಿತು. ಅವರು ಇಂದಿನ ರಾತ್ರಿ ಇಲ್ಲೇ ಇರುತ್ತಾರೆ. ಅವರು ಮತ್ತು ಇನ್ನೂ ಒಬ್ಬಿಬ್ಬರು ಭಕ್ತರು ನೆಲದ ಮೇಲೆ ಕುಳಿತಿದ್ದಾರೆ.
ಪರಮಹಂಸರಿಗೆ ಇಡೀ ದಿನವೆಲ್ಲ ವಿಶ್ರಾಂತಿಯೇ ದೊರಕಲಿಲ್ಲ; ಭಕ್ತರು ಅವರ ಸುತ್ತ ನೆರೆದುಕೊಂಡೇ ಇದ್ದರು. ಈಗ ಬಹಿರ್ದೇಶಕ್ಕೆ ಹೋಗುತ್ತಿದ್ದಾರೆ. ಮತ್ತೆ ಕೊಠಡಿಗೆ ಹಿಂದಿರುಗಿ ಬಂದು ನೋಡಿದಾಗ ಮಣಿ ರಾಮಲಾಲನ ಕೈಯಲ್ಲಿ ಹೇಳಿಸಿಕೊಂಡು ಒಂದು ಹಾಡು ಬರೆದುಕೊಳ್ಳುತ್ತಿದ್ದಾನೆ.
ಶ್ರೀರಾಮಕೃಷ್ಣರು: “ಏನು ಬರೆಯುತ್ತಿದ್ದೀಯೆ?”
ಮಣಿ ತಾನು ಒಂದು ಹಾಡನ್ನು ಬರೆದುಕೊಳ್ಳುತ್ತಿರುವುದಾಗಿ ಹೇಳಿದ. ಆ ಹಾಡು ಯಾವುದು ಎಂಬುದನ್ನು ಕೇಳಿ ಶ್ರೀರಾಮಕೃಷ್ಣರು ಹೇಳಿದರು, “ಅದು ಒಂದು ದೊಡ್ಡ ಹಾಡು.” ಮಣಿ ಆ ಹಾಡಿನ ಒಂದೆರಡು ಚರಣಗಳನ್ನು ಮಾತ್ರವೇ ಬರೆದು ಮುಂದಕ್ಕೆ ಬರೆಯುವುದನ್ನು ನಿಲ್ಲಿಸಿದ. ಈಗ ಪರಮಹಂಸರು ನೆಲದ ಮೇಲೆ ಹಾಕಿದ್ದ ಒಂದು ಆಸನದಲ್ಲಿ ಕುಳಿತು ಸ್ವಲ್ಪ ರವೆ ಪಾಯಸ ಮತ್ತು ಒಂದೆರಡು ಪೂರಿಯನ್ನು ತಿನ್ನುತ್ತಿದ್ದಾರೆ. ಅವರ ಪಕ್ಕದಲ್ಲಿ ಒಂದು ಪೀಠದ ಮೇಲೆ ದೀಪವೊಂದು ಉರಿಯುತ್ತಿದೆ. ಮಾಸ್ಟರ್ ಪರಮಹಂಸರ ಹತ್ತಿರ ಕುಳಿತಿದ್ದಾನೆ. ಪರಮಹಂಸರು ಕೇಳಿದರು, “ಕೊಠಡಿಯಲ್ಲಿ ಏನಾದರೂ ಸಿಹಿ ತಿಂಡಿ ಇದೆಯೆ” ಮಾಸ್ಟರ್ ಹೊಸಬೆಲ್ಲದ ಸಂದೇಶ (ಸಿಹಿ ತಿಂಡಿ) ತಂದು ಬಡುವಿನ ಮೇಲೆ ಇಟ್ಟಿದ್ದ. ಮಾಸ್ಟರ್ ಅಲ್ಲಿಗೆ ಹೋಗಿ ನೋಡಿದಾಗ ಅದು ಅಲ್ಲಿ ಇರಲಿಲ್ಲ. ಅದನ್ನು ನೋಡಿ ಮಾಸ್ಟರಿಗೆ ತುಂಬ ವ್ಯಥೆಯಾಯಿತು. ಅವುಗಳನ್ನು ಯಾರೊ ಭಕ್ತರಿಗೆ ಕೊಟ್ಟುಬಿಟ್ಟಿರಬೇಕು.
ರಾತ್ರಿಯ ಆಹಾರವನ್ನು ಸ್ವೀಕರಿಸಿದ ನಂತರ ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಮಾಸ್ಟರ್ ಆ ಮಂಚದ ಹತ್ತಿರವೇ ಇದ್ದ ಫುಟ್ರಗ್ಗಿನ ಮೇಲೆ ಕುಳಿತಿದ್ದಾನೆ. ಪರಮಹಂಸರು ನಾರಾಯಣನ ಮಾತು ಎತ್ತಿ ಭಾವಸ್ಥರಾಗುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಇಂದು ನಾರಾಯಣನನ್ನು ನೋಡಿದೆ.”
ಮಾಸ್ಟರ್: “ಹೌದು, ನಾನೂ ನೋಡಿದೆ. ಆತನ ಕಣ್ಣು ಒದ್ದೆಯಾಗಿದ್ದಿತು. ಆತನ ಮುಖ ನೋಡಿ ನನಗೆ ಅಳುವಂತೆ ಆಯಿತು.”
ಶ್ರೀರಾಮಕೃಷ್ಣರು: “ಆತನನ್ನು ನೋಡಿದರೆ ನನ್ನಲ್ಲಿ ವಾತ್ಸಲ್ಯಭಾವ ಹುಟ್ಟುತ್ತದೆ. ಇಲ್ಲಿಗೆ ಬರುತ್ತಾನಲ್ಲ ಅಂತ ಆತನನ್ನು ಮನೆಯಲ್ಲಿ ಚೆಚ್ಚುತ್ತಾರೆ. ಆತನನ್ನು ರಕ್ಷಿಸುವವರು ಅಲ್ಲಿ ಯಾರೂ ಇಲ್ಲ.”
ಮಾಸ್ಟರ್ ನಗುತ್ತಾ: “ಅಂದು ಆತ ಹರಿಪದನ ಮನೆಯಲ್ಲಿ ಪುಸ್ತಕ ಇಟ್ಟು ಇಲ್ಲಿಗೆ ಓಡಿಬಂದ.”
ಶ್ರೀರಾಮಕೃಷ್ಣರು: “ಹಾಗೆ ಮಾಡಿದ್ದು ಸರಿಯಲ್ಲ.”
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು ಮತ್ತೆ ಮಾತನಾಡಲು ಆರಂಭಿಸಿದರು.
ಶ್ರೀರಾಮಕೃಷ್ಣರು: “ನೋಡು, ಆತನಲ್ಲಿ ವಿಶೇಷ ಸತ್ವವಿದೆ. ಅದು ಹಾಗಿಲ್ಲದೆ ಇದ್ದರೆ ನಾನು ಕೀರ್ತನೆ ಕೇಳುತ್ತಿದ್ದರೂ ನನ್ನನ್ನು ಆತ ಆಕರ್ಷಿಸಲು ಸಾಧ್ಯವಾಗುತ್ತಿತ್ತೆ? ನಾನು ಕೀರ್ತನೆ ಕೇಳುವುದನ್ನು ಬಿಟ್ಟು ಕೊಠಡಿಗೆ ಬರಬೇಕಾಗಿ ಬಂದುಬಿಟ್ಟಿತು. ಕೀರ್ತನೆಯನ್ನು ಬಿಟ್ಟು ಬರೋದು – ಇದು ಎಂದಿಗೂ ಹಿಂದೆ ನಡೆದುದಲ್ಲ.”
ಪರಮಹಂಸರು ಮತ್ತೆ ಮೌನವಾಗಿ ಕುಳಿತರು. ಸ್ವಲ್ಪ ಹೊತ್ತಾದನಂತರ ಮತ್ತೆ ಮಾತನಾಡಲು ಆರಂಭಿಸಿದರು.
ಶ್ರೀರಾಮಕೃಷ್ಣರು: “ಒಮ್ಮೆ ಭಾವಾವಸ್ಥೆಯಲ್ಲಿ ಆತನನ್ನು, ‘ಹೇಗಿದ್ದೀಯೆ?’ ಅಂತ ಕೇಳಿದೆ. ಆತ ಒಂದೇ ಮಾತಿನಲ್ಲಿ ಉತ್ತರವಿತ್ತ. ‘ನಾನು ಆನಂದದಿಂದ ಇದ್ದೇನೆ’ ಅಂತ. (ಮಣಿಗೆ) ನೀನು ಏನನ್ನಾದರೂ ಕಿಂಚಿತ್ ಆಗಾಗ ಕೊಂಡುಕೊಂಡು ಬಂದು ಆತನಿಗೆ ತಿನ್ನಿಸು – ವಾತ್ಸಲ್ಯಭಾವದಿಂದ ತಿನ್ನಿಸು.”
ಪರಮಹಂಸರು ತೇಜಚಂದ್ರನ ಮಾತು ಎತ್ತಿದರು.
ಶ್ರೀರಾಮಕೃಷ್ಣರು ಮಣಿಗೆ: “ನನ್ನ ವಿಷಯವಾಗಿ ಆತ ಏನು ಹೇಳುತ್ತಾನೆ ಎಂಬುದನ್ನು ಆತನಿಗೆ ಒಮ್ಮೆ ಕೇಳಿನೋಡು; ಜ್ಞಾನಿ ಅನ್ನುತ್ತಾನೊ, ಅಥವಾ ಬೇರೆ ಏನಾದರೂ ಹೇಳುತ್ತಾನೊ? ‘ಆತ ಅತ್ಯಂತ ಮಿತಭಾಷಿ’ ಅಂತ ಕೇಳಿದ್ದೇನೆ. (ಗೋಪಾಲ ನಿಗೆ) ನೋಡು, ತೇಜಚಂದ್ರನಿಗೆ ಶನಿವಾರ ಮತ್ತು ಮಂಗಳವಾರ ಇಲ್ಲಿಗೆ ಬರುವಂತೆ ಹೇಳು. (ಮಣಿಗೆ) ಒಳ್ಳೆಯದು. ಒಮ್ಮೆ ನಾನು ಸ್ಕೂಲಿಗೆ ಬಂದು ನೋಡಿದರೆ -”
ಪರಮಹಂಸರು ನಾರಾಯಣನನ್ನು ನೋಡಲು ಸ್ಕೂಲಿಗೇ ಬರಲು ಇಚ್ಛಿಸಿದ್ದಾರಲ್ಲ! ಆಶ್ಚರ್ಯ – ಅಂತ ಮಾಸ್ಟರ್ ಭಾವಿಸಿದ. ಆತ ಪರಮಹಂಸರಿಗೆ ಹೇಳಿದ, “ನೀವು ಬಂದು ನಮ್ಮ ಮನೆಯಲ್ಲಿ ಕುಳಿತುಕೊಂಡಿದ್ದರೇ ಸಾಕು” ಅಂತ.
ಶ್ರೀರಾಮಕೃಷ್ಣರು: “ಅದಕ್ಕಲ್ಲ; ಬೇರೊಂದು ಉದ್ದೇಶವಿದೆ. ಅದು ಏನು ಎಂಬುದು ಗೊತ್ತೆ? ಬೇರೆ ಯಾರಾದರೂ ಒಳ್ಳೆ ಪ್ರವೃತ್ತಿಯುಳ್ಳ ಹುಡುಗರು ಇದ್ದಾರೆಯೆ ಎಂಬುದನ್ನು ಒಮ್ಮೆ ನೋಡಲೋಸುಗ.”
ಮಾಸ್ಟರ್: “ಅವಶ್ಯಕವಾಗಿ ಬನ್ನಿ, ಬೇರೆಯವರು ಸ್ಕೂಲು ನೋಡುವುದಕ್ಕೆ ಅಲ್ಲಿಗೆ ಬರುತ್ತಾರೆ. ಹಾಗೆ ನೀವೂ ಅಲ್ಲಿಗೆ ಬಂದರಾಯಿತು.”
ಪರಮಹಂಸರು ಹುಕ್ಕ ಸೇದುತ್ತಿದ್ದಾರೆ. ಮಣಿ ಮತ್ತು ಗೋಪಾಲ ತಮ್ಮ ರಾತ್ರಿ ಊಟವನ್ನು ಮುಗಿಸಿದರು. ಇವರಿಬ್ಬರು ವಾದ್ಯಶಾಲೆಯಲ್ಲಿ ಮಲಗಿಕೊಳ್ಳಲು ಯೋಚಿಸಿ ದ್ದಾರೆ. ಮಣಿ ಮತ್ತೆ ಶ್ರೀರಾಮಕೃಷ್ಣರ ಹತ್ತಿರ ಫುಟ್ರಗ್ಗಿನ ಮೇಲೆ ಕುಳಿತುಕೊಂಡ.
ಶ್ರೀರಾಮಕೃಷ್ಣರು ಮಣಿಗೆ: “ವಾದ್ಯಶಾಲೆಯಲ್ಲಿ ಕೆಲವು ಮಡಕೆ ಕುಡಿಕೆಗಳಿರ ಬಹುದು. ಇಲ್ಲೆ, ಈ ಕೊಠಡಿಯಲ್ಲೆ ಏಕೆ ಮಲಗಬಾರದು?”
ಮಣಿ: “ಆಗಲಿ, ಬಹಳ ಆನಂದ.”
ರಾತ್ರಿ ಹತ್ತೊ ಹನ್ನೊಂದೊ ಆಯಿತು. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ದಿಂಬನ್ನು ಒರಗಿ ಮಲಗಿಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ. ಮಣಿ ನೆಲದ ಮೇಲೆ ಕುಳಿತುಕೊಂಡಿದ್ದಾನೆ. ಪರಮಹಂಸರು ಆತನೊಡನೆ ಮಾತುಕತೆಯಾಡುತ್ತಿದ್ದಾರೆ. ಗೋಡೆಯ ಹತ್ತಿರವಿದ್ದ ಒಂದು ಪೀಠದ ಮೇಲೆ ದೀಪ ಉರಿಯುತ್ತಿದೆ.
ಪರಮಹಂಸರು ಅಹೇತುಕ ಕೃಪಾಸಿಂಧು. ಮಣಿಯಿಂದ ಸೇವೆ ಸಲ್ಲಿಸಿಕೊಳ್ಳಲಿದ್ದಾರೆ.
ಶ್ರೀರಾಮಕೃಷ್ಣರು: “ಇಲ್ಲಿ ನೋಡು, ನನ್ನ ಪಾದಗಳು ಸ್ವಲ್ಪ ನೋಯುತ್ತಿವೆ, ಅವನ್ನು ಸ್ವಲ್ಪ ಮೆದುವಾಗಿ ಸವರು.”
ಮಣಿ ಆ ಚಿಕ್ಕ ಮಂಚದ ಮೇಲೆ ಪರಮಹಂಸರ ಪಾದಗಳ ಹತ್ತಿರ ಕುಳಿತು, ಅವರ ಪಾದಗಳನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಅವುಗಳ ಮೇಲೆ ಮೃದುವಾಗಿ ಕೈ ಆಡಿಸುತ್ತಿದ್ದಾನೆ. ಪರಮಹಂಸರು ಆಗಾಗ ಆತನಿಗೆ ಪ್ರಶ್ನೆ ಹಾಕುತ್ತಿದ್ದಾರೆ.
ಶ್ರೀರಾಮಕೃಷ್ಣರು (ನಗುತ್ತ): “ಇಂದಿನ ಮಾತುಕತೆ ಹೇಗೆ ಇತ್ತು?”
ಮಣಿ: “ಬಹಳ ಚೆನ್ನಾಗಿ ಇತ್ತು.”
ಶ್ರೀರಾಮಕೃಷ್ಣರು (ನಗುತ್ತ): “ಅಕ್ಬರ್ ಬಾದಶಹನ ವಿಷಯ ಹೇಗೆ ಹಿಡಿಸಿತು?”
ಮಣಿ: “ಬಹಳ ಚೆನ್ನಾಗಿತ್ತು.”
ಶ್ರೀರಾಮಕೃಷ್ಣರು: “ಅದನ್ನು ನೀನು ಮತ್ತೆ ಹೇಳು ನೋಡೋಣ.”
ಮಣಿ: “ಒಬ್ಬ ಫಕೀರ ಅಕ್ಬರ್ ಬಾದಶಹನನ್ನು ಕಾಣಲು ಬಂದ. ಆಗ ಅಕ್ಬರ್ ನಮಾಜು ಮಾಡುತ್ತಿದ್ದ. ನಮಾಜು ಮಾಡುತ್ತ ಮಾಡುತ್ತ ಅಕ್ಬರ್ ಭಗವಂತನನ್ನು ಧನಕನ ಕಾದಿ ದೌಲತ್ತುಗಳಿಗಾಗಿ ಬೇಡುತ್ತಿದ್ದುದನ್ನು ನೋಡಿ, ಫಕೀರ ಆ ಕೊಠಡಿಯಿಂದ ಯಾವ ಸದ್ದನ್ನೂ ಮಾಡದೆ ಎದ್ದು ಬರುವುದರಲ್ಲಿದ್ದ. ನಮಾಜು ಮುಗಿಸಿಕೊಂಡು ಬಂದ ನಂತರ ಅಕ್ಬರ್ ಆತನನ್ನು ತಾವು ಏಕೆ ಎದ್ದುಹೋಗುತ್ತಿದ್ದೀರಿ ಎಂದು ಕೇಳಲಾಗಿ ಆತ ಹೇಳಿದ, ‘ಭಿಕ್ಷೆ ಬೇಡಬೇಕಾದರೆ ಭಿಕಾರಿಯಿಂದ ಏಕೆ ಭಿಕ್ಷೆ ಬೇಡಲಿ?’ ಅಂತ.”
ಶ್ರೀರಾಮಕೃಷ್ಣರು: “ಇನ್ನೇನು ಮಾತುಕತೆ ನಡೆಯಿತು?
ಮಣಿ: “ಸಂಚಯ ಮಾಡುವುದರ ವಿಷಯವಾಗಿ ಬಹಳ ಚೆನ್ನಾಗಿ ಮಾತ ನಾಡಿದಿರಿ.”
ಶ್ರೀರಾಮಕೃಷ್ಣರು (ನಗುತ್ತ) : “ಅದರ ವಿಷಯವಾಗಿ ಏನೇನು ಹೇಳಿದೆ?”
ಮಣಿ: “ಪ್ರಯತ್ನ ಮಾಡಬೇಕು ಎಂಬ ಭಾವನೆ ವ್ಯಕ್ತಿಗೆ ಇರುವವರೆಗೆ ಆತ ಪ್ರಯತ್ನ ಮಾಡಿಯೇ ತೀರಬೇಕು. ಸಂಚಯ ಮಾಡುವುದರ ವಿಷಯವಾಗಿ ನೀವು ಸಿಂಥಿಯಲ್ಲಿ ಎಷ್ಟು ಚೆನ್ನಾಗಿ ಮಾತನಾಡಿದಿರಿ ಅಂತ!”
ಶ್ರೀರಾಮಕೃಷ್ಣರು: “ಅಲ್ಲಿ ಏನು ಹೇಳಿದೆ?”
ಮಣಿ: “ಯಾರು ಭಗವಂತನನ್ನು ಸಂಪೂರ್ಣವಾಗಿ ಆಶ್ರಯಿಸಿರುವನೊ ಆತನ ಇಡೀ ಭಾರವನ್ನು ಭಗವಂತ ಹೊತ್ತುಕೊಳ್ಳುತ್ತಾನೆ – ಇದು ಮೈನರ್ ಹುಡುಗನ ಇಡೀ ಭಾರವನ್ನು ಒಬ್ಬ ಪಾಲಕ ಹೊತ್ತುಕೊಳ್ಳುವ ಹಾಗೆ. ಇನ್ನೊಂದು ವಿಷಯ ಹೇಳಿದಿರಿ: ಔತಣದ ಮನೆಗೆ ಹೋಗಿ ಚಿಕ್ಕ ಮಗು ತಾನಾಗಿಯೇ ಊಟದ ಪಂಕ್ತಿಯಲ್ಲಿ ಒಂದು ಜಾಗವನ್ನು ಹಿಡಿದು ಕುಳಿತುಕೊಳ್ಳಲಾರದು. ಬೇರೆ ಯಾರಾದರೂ ಅದನ್ನು ಕರೆದುಕೊಂಡು ಹೋಗಿ ಪಂಕ್ತಿಯಲ್ಲಿ ಕೂರಿಸುತ್ತಾರೆ.”
ಶ್ರೀರಾಮಕೃಷ್ಣರು: “ಅದಲ್ಲ. ಅದು ನಾನು ಹೇಳಿದಂತೆ ಆಗಲಿಲ್ಲ. ನಾನು ಹೇಳಿದ್ದು, ತಂದೆ ಮಗುವಿನ ಕೈ ಹಿಡಿದುಕೊಂಡು ಹೋಗುತ್ತಿದ್ದರೆ ಅದು ಬೀಳುವ ಸಂಭವವೇ ಇಲ್ಲ ಅಂತ.”
ಮಣಿ: “ನೀವು ಇಂದು ಮೂರು ಶ್ರೇಣಿಯ ಸಾಧುಗಳ ವಿಷಯವಾಗಿ ಹೇಳಿದಿರಿ. ಉತ್ತಮ ಸಾಧು; ಆತ ಕುಳಿತಲ್ಲಿಯೇ ಕುಳಿತು ದೇಹಪೋಷಣೆ ಮಾಡಿಕೊಳ್ಳಬಲ್ಲ. ನೀವು ಒಬ್ಬ ಎಳೆ ವಯಸ್ಸಿನ ಸಾಧುವಿನ ವಿಷಯವಾಗಿ ಹೇಳಿದಿರಿ; ಹುಡುಗಿಯ ಸ್ತನ ನೋಡಿ ಆತ ಕೇಳಿದ, ‘ಎದೆಯಲ್ಲಿ ಕುರು ಏಕೆ ಎದ್ದಿದೆ?’ ಅಂತ. ನೀವು ಇನ್ನೂ ಏನೇನೂ ಚಮತ್ಕಾರ ವಿಷಯಗಳನ್ನು ಕೊನೆಕೊನೆಗೆ ಹೇಳಿದಿರಿ.”
ಶ್ರೀರಾಮಕೃಷ್ಣರು (ನಗುತ್ತ): “ಏನೇನು?”
ಮಣಿ: “ಪಂಪಾಸರೋವರದ ಆ ಕಾಗೆಯ ವಿಷಯ. ಅದು ಅಹರ್ನಿಶಿ ರಾಮನಾಮ ಜಪಿಸುತ್ತಿತ್ತು. ಬಾಯಾರಿ ನೀರಿನ ಹತ್ತಿರ ಹೋಗುತ್ತಿತ್ತು. ಆದರೆ ನೀರು ಕುಡಿಯಲು ಮಾತ್ರ ಅದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಒಬ್ಬ ಸಾಧುವಿನ ಪುಸ್ತಕದ ವಿಷಯ: ಅದರಲ್ಲಿ ಕೇವಲ ‘ಓಂ ರಾಮ್’ ‘ಓಂ ರಾಮ್’ ಎಂದು ಬರೆದಿತ್ತು. ಮತ್ತೆ ಹನುಮಂತ ರಾಮನಿಗೆ ಏನು ಹೇಳಿದನೊ ಅದು.”
ಶ್ರೀಮಕೃಷ್ಣರು: “ಏನು ಹೇಳಿದ?”
ಮಣಿ: “ ‘ಸೀತೆಯನ್ನು ನೋಡಿ ಬಂದೆ; ಬರೀ ಶರೀರ ಮಾತ್ರ ಅಲ್ಲಿ ಬಿದ್ದಿದೆ. ಆಕೆ ತನ್ನ ಮನಸ್ಸು ಪ್ರಾಣ ಎಲ್ಲವನ್ನೂ ನಿಮ್ಮ ಪಾದಪದ್ಮಗಳಿಗೆ ಅರ್ಪಿಸಿಬಿಟ್ಟಿದ್ದಾಳೆ’ ಅಂತ.
“ಮತ್ತೆ ಚಾತಕಪಕ್ಷಿಯ ವಿಷಯ, – ಆಕಾಶದಿಂದ ಬೀಳುವ ಮಳೆ ನೀರನ್ನು ವಿನಾ ಬೇರೆ ಏನನ್ನೂ ಕುಡಿಯದು. ಮತ್ತೆ ಜ್ಞಾನಯೋಗದ ಮತ್ತು ಭಕ್ತಿಯೋಗದ ವಿಷಯ ವಾಗಿ.”
ಶ್ರೀರಾಮಕೃಷ್ಣರು: “ಏನು ಹೇಳಿದೆ?”
ಮಣಿ: “ಎಲ್ಲಿಯವರೆಗೆ ‘ಕುಂಭ’, ಎಂಬುದರ ಜ್ಞಾನವಿರುವುದೊ ಅಲ್ಲಿಯವರೆಗೆ ‘ನಾನು, ಕುಂಭ’ ಎಂಬ ಜ್ಞಾನ ಇದ್ದೇ ಇರುತ್ತದೆ. ಎಲ್ಲಿಯವರೆಗೆ ‘ನಾನು’, ಎಂಬುದರ ಜ್ಞಾನವಿರುವುದೊ, ‘ನಾನು ಭಕ್ತ, ನೀನು ಭಗವಂತ’ ಎಂಬ ಜ್ಞಾನ ಇದ್ದೇ ಇರುತ್ತದೆ.”
ಶ್ರೀರಾಮಕೃಷ್ಣರು: “ಅದು ಹಾಗಲ್ಲ. ‘ಕುಂಭ,’ ಎಂಬುದರ ಜ್ಞಾನ ಇರಲಿ ಹೋಗಲಿ ಕುಂಭ ಮಾತ್ರ ಹೋಗದು – ಅದೃಶ್ಯವಾಗದು. ‘ನಾನು’ ಎಂಬುದು ಹೋಗುವ ಹಾಗೆಯೇ ಇಲ್ಲ. ಬೇಕಾದಷ್ಟು ವಿಚಾರದಲ್ಲಿ ತೊಡಗು; ಅದು ಮಾತ್ರ ಹೋಗದು.”
ಮಣಿ ಒಂದು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು ಮತ್ತೆ ಹೇಳಲಾರಂಭಿಸಿದ.
ಮಣಿ: ‘ಅಂದು ನೀವು ಕಾಳೀ ದೇವಾಲಯದಲ್ಲಿ ಈಶಾನಮುಖರ್ಜಿಯೊಡನೆ ಮಾತನಾಡಿದಿರಿ – ಅದೊಂದು ನಮ್ಮ ದೊಡ್ಡ ಭಾಗ್ಯವೇ ಸರಿ. ಆಗ ನಾವು ಅಲ್ಲೇ ಇದ್ದೆವು, ಎಲ್ಲವನ್ನೂ ಕೇಳಿದೆವು.”
ಶ್ರೀರಾಮಕೃಷ್ಣರು (ನಗುತ್ತ): “ಹೌದು, ಏನೇನು ಮಾತನಾಡಿದೆ ಹೇಳು ನೋಡೋಣ?”
ಮಣಿ: “ತಾವು ಹೇಳಿದಿರಿ, ‘ಕರ್ಮಕಾಂಡವು, ಆದಿಕಾಂಡ, ಮೊದಲನೆ ಹಂತ’ ಅಂತ. ಮತ್ತೆ ಹೇಳಿದಿರಿ, ನಾನು ಒಮ್ಮೆ ಶಂಭುಮಲ್ಲಿಕನಿಗೆ ಕೇಳಿದೆ, “ಭಗವಂತ ನಿನ್ನ ಎದುರಿಗೆ ಬಂದರೆ ಆತನನ್ನು ಹಾಸ್ಪಿಟಲ್, ಡಿಸ್ಪೆನ್ಸರಿಗಳಿಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತೀಯ?”
“ಇನ್ನೊಂದು ವಿಷಯ ಹೇಳಿದಿರಿ: ಎಲ್ಲಿಯವರೆಗೆ ವ್ಯಕ್ತಿಗೆ ಕರ್ಮದಲ್ಲಿ ಆಸಕ್ತಿ ನೆಲೆಸಿರುವುದೊ, ಅಲ್ಲಿಯವರೆಗೆ ಆತನಿಗೆ ಭಗವಂತ ತನ್ನ ದರ್ಶನವನ್ನು ಕೊಡಲೊಲ್ಲ. ನೀವು ಅದೇ ವಿಷಯವನ್ನು ಕೇಶವಸೇನನಿಗೆ ಹೇಳಿದ್ದಿರಿ.”
ಶ್ರೀರಾಮಕೃಷ್ಣರು: “ಯಾವುದನ್ನು ಹೇಳಿದ್ದೆ?”
ಮಣಿ: “ಎಲ್ಲಿಯವರೆಗೆ ಮಗು ಗಿಲಕೆ ಹೊಡೆದು ಎಲ್ಲವನ್ನೂ ಮರೆಯುವುದೊ, ಅಲ್ಲಿಯವರೆಗೆ, ತಾಯಿ ಅಡುಗೆ ಮುಂತಾದ ಕೆಲಸದಲ್ಲಿ ತೊಡಗಿರುತ್ತಾಳೆ. ಗಿಲಕೆ ಬಿಸಾಡಿ ಯಾವಾಗ ಮಗು ಚೀತ್ಕಾರ ಮಾಡುತ್ತದೆಯೊ, ಆಗ ತಾಯಿ ಒಲೆ ಮೇಲೆ ಇದ್ದ ಅನ್ನದ ತಪ್ಪಲೆ ಕೆಳಗೆ ಇಳಿಸಿ ಮಗುವಿನ ಹತ್ತಿರ ಓಡಿಬರುತ್ತಾಳೆ.
“ಅಂದು ಇನ್ನೊಂದು ವಿಷಯ ಹೇಳಿದಿರಿ: ಲಕ್ಷ್ಮಣ ರಾಮನನ್ನು ಕೇಳಿದ, ‘ಭಗವಂತನನ್ನು ಎಲ್ಲಿ ಎಲ್ಲಿ ದರ್ಶನಮಾಡಬಹುದು?’ ರಾಮ ಆ ವಿಷಯವಾಗಿ ಬಹಳವಾಗಿ ವಿವರಿಸಿ, ಕೊನೆಗೆ ಹೇಳಿದ, ‘ತಮ್ಮ, ಯಾವ ಮನುಷ್ಯನಲ್ಲಿ ನೀನು ಊರ್ಜಿತಭಕ್ತಿ ಉಂಟಾಗಿರುವುದನ್ನು ನೋಡುವೆಯೊ – ಅದರಿಂದ ಆತ “ನಗುತ್ತಾನೆ, ಅಳುತ್ತಾನೆ, ನರ್ತಿಸುತ್ತಾನೆ” – ಪ್ರೇಮದಿಂದ ಉನ್ಮತ್ತನಾಗಿರುತ್ತಾನೆ – ಆತನಲ್ಲಿ ನಾನು (ಭಗವಂತ) ಇದ್ದೇನೆ ಎಂಬುದನ್ನು ತಿಳಿದುಕೊ.’”
ಶ್ರೀರಾಮಕೃಷ್ಣರು: “ಆಹ! ಆಹ!”
ಶ್ರೀರಾಮಕೃಷ್ಣರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದರು.
ಮಣಿ: “ಅಂದು ನೀವು ಈಶಾನನಿಗೆ ಕೇವಲ ನಿವೃತ್ತಿ ವಿಷಯವಾಗಿ ಮಾತನಾಡಿದಿರಿ. ಅಂದಿನಿಂದ ನಮ್ಮಲ್ಲಿ ಅನೇಕರಿಗೆ ಸ್ವಲ್ಪ ಬುದ್ಧಿ ಬಂದಿದೆ. ನಮ್ಮ ಕರ್ಮಗಳನ್ನು ಕಡಿಮೆ ಮಾಡಿಕೊಳ್ಳುವುದರ ಕಡೆಗೇ ಮನಸ್ಸು ಓಡುತ್ತಿದೆ. ಅಂದು ಹೇಳಿದಿರಿ ‘ಲಂಕೆಯಲ್ಲಿ ರಾವಣ ಸತ್ತರೆ, ಇಲ್ಲಿ ಬೇಹುಳ ಅತ್ತು ಅತ್ತು ಅಳಲೇಕಾಯಾದ!’”
ಪರಮಹಂಸರು ಈ ಮಾತು ಕೇಳಿ ಗಹಗಹಿಸಿ ನಗುತ್ತಿದ್ದಾರೆ.
ಮಣಿ ವಿನಯದಿಂದ: “ಒಳ್ಳೆಯದು, ಕರ್ತವ್ಯ ಕರ್ಮಗಳ ಕೋಟಲೆ ಕಡಮೆಮಾಡಿ ಕೊಳ್ಳುವುದು ಒಳ್ಳೆಯದಲ್ಲವೆ?”
ಶ್ರೀರಾಮಕೃಷ್ಣರು: “ನಿಜ. ಆದರೆ ಸಮ್ಮುಖದಲ್ಲಿ ಯಾರಾದರೂ ಕಾಣಿಸಿಕೊಂಡರೆ ಅದು ಬೇರೆ ವಿಷಯ. ಸಾಧುವೇ ಆಗಲಿ ದರಿದ್ರನೇ ಆಗಲಿ ಎದುರಿಗೆ ಕಾಣಿಸಿಕೊಂಡರೆ ಅವರ ಸೇವೆ ಮಾಡೋದು ಉಚಿತ.”
ಮಣಿ: “ಅಂದು ಈಶಾನ ಮುಖರ್ಜಿಗೆ ಪರರಿಗೆ ಬೆಣ್ಣೆಹಚ್ಚೊ ವಿಷಯವಾಗಿ ಬಹಳ ಚೆನ್ನಾಗಿ ಹೇಳಿದಿರಿ. ಅವರನ್ನು ಹೆಣಗಳ ಮೇಲೆ ಕುಳಿತಿರುವ ರಣಹದ್ದುಗಳಿಗೆ ಹೋಲಿಸಿದಿರಿ. ಅದೇ ವಿಷಯವನ್ನು ತಾವು ಒಮ್ಮೆ ಪಂಡಿತ ಪದ್ಮಲೋಚನನಿಗೂ ಹೇಳಿದಿರಿ.”
ಶ್ರೀರಾಮಕೃಷ್ಣರು: “ಆತನಿಗಲ್ಲ, ‘ಉಲೊ’ ಎಂಬ ಸ್ಥಳದ ವಾಮನದಾಸನಿಗೆ.”
ಸ್ವಲ್ಪ ಹೊತ್ತು ಮಾತುಕತೆಗಳಾಡಿದ ನಂತರ ಮಣಿ ಮಂಚದಿಂದ ಕೆಳಕ್ಕೆ ಇಳಿದು ಅದರ ಹತ್ತಿರವೇ ನೆಲದ ಮೇಲೆ ಹಾಕಿದ್ದ ಫುಟ್ರಗ್ಗಿನ ಮೇಲೆ ಕುಳಿತುಕೊಂಡ. ಪರಮಹಂಸರಿಗೆ ನಿದ್ದೆ ಬರುತ್ತಿದೆ. ಅವರು ಮಣಿಗೆ ಹೇಳಿದರು, “ನೀನು ಹೋಗಿ ಮಲಗು. ಗೋಪಾಲನೆಲ್ಲಿ? ದಯವಿಟ್ಟು ಬಾಗಿಲನ್ನು ಮುಚ್ಚು.”
ಮಾರನೆಯ ದಿನ ಸೋಮವಾರ ಪರಮಹಂಸರು ಬಹಳ ಹೊತ್ತಿಗೆ ಮುಂಚೆ ಎದ್ದು ಎಂದಿನಂತೆ ಭಗವಂತನ ನಾಮಸ್ಮರಣೆ ಮಾಡುತ್ತಿದ್ದಾರೆ. ಆಗಾಗ ಗಂಗಾದರ್ಶನ ಮಾಡುತ್ತಿದ್ದಾರೆ. ಪ್ರಾತಃಕಾಲದ ಮಂಗಳಾರತಿ ಕಾಳಿ ಮತ್ತು ರಾಧಾಕಾಂತ ದೇವಾಲಯ ಗಳಲ್ಲಿ ಪ್ರಾರಂಭವಾಗಿದೆ. ಮಣಿ ರಾಮಕೃಷ್ಣರ ಕೊಠಡಿಯಲ್ಲಿ ನೆಲದ ಮೇಲೆ ಮಲಗಿ ರಾತ್ರಿಯನ್ನು ಕಳೆದನು. ಆತನೂ ಹಾಸಿಗೆಯಿಂದ ಎದ್ದು ವಿವಿಧ ದೇವಾಲಯಗಳ ಮಂಗಳಾರತಿಯನ್ನು ನೋಡುತ್ತಿದ್ದಾನೆ. ಪ್ರಾತರ್ವಿಧಿಗಳನ್ನೆಲ್ಲ ಮುಗಿಸಿಕೊಂಡು ಮಣಿ ಪರಮಹಂಸರ ಹತ್ತಿರ ಬಂದು ಕುಳಿತನು.
ಪರಮಹಂಸರು ಈಗ ಸ್ನಾನ ಮಾಡಿದರು. ಸ್ನಾನವಾದನಂತರ ಕಾಳೀದೇವಾಲಯಕ್ಕೆ ಹೋಗುತ್ತಿದ್ದಾರೆ. ಮಣಿ ಅವರನ್ನು ಹಿಂಬಾಲಿಸುತ್ತಿದ್ದಾನೆ. ಅವರು ಮಣಿಗೆ ಕೊಠಡಿಗೆ ಬೀಗ ಹಾಕುವಂತೆ ಹೇಳಿದರು.
ಕಾಳೀದೇವಾಲಯಕ್ಕೆ ಬಂದ ಪರಮಹಂಸರು ಅರ್ಚಕನ ಪೀಠದಲ್ಲಿ ಕುಳಿತು ಹೂವನ್ನು ತೆಗೆದು ಒಮ್ಮೊಮ್ಮೆ ತಮ್ಮ ತಲೆಯ ಮೇಲೂ ಒಮ್ಮೊಮ್ಮೆ ತಾಯ ಪಾದಪದ್ಮಗಳ ಮೇಲೂ ಇಡುತ್ತಿದ್ದಾರೆ. ಬಳಿಕ ಚಾಮರ ತೆಗೆದುಕೊಂಡು ದೇವಿಗೆ ಶೈತ್ಯೋಪಚಾರ ಮಾಡಿದರು. ತರುವಾಯ ತಮ್ಮ ಕೊಠಡಿಯ ಹತ್ತಿರ ಬಂದು ಅದನ್ನು ತೆರೆಯುವಂತೆ ಮಣಿಗೆ ಹೇಳಿದರು. ಕೊಠಡಿಯನ್ನು ಪ್ರವೇಶಿಸಿ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತು ಕೊಂಡರು. ಈಗ ಭಾವದಿಂದ ಮತ್ತರಾಗಿದ್ದಾರೆ – ಭಗವಂತನ ಹೆಸರು ಹೇಳುತ್ತಿದ್ದಾರೆ. ಮಣಿ ಒಬ್ಬನೇ ನೆಲದ ಮೇಲೆ ಕುಳಿತಿದ್ದಾನೆ. ಈಗ ಪರಮಹಂಸರು ಭಗವತಿಯ ಸಂಬಂಧವಾಗಿ ಹಾಡಲಾರಂಭಿಸಿದ್ದಾರೆ:
ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು!
ಆರು-ದರುಶನ ವೇದ ಶಾಸ್ತ್ರ ಪುರಾಣವರಿಯದು ಅವಳನು…..
ಮತ್ತೆ ಹಾಡಿದರು:
ತಾಯಿ ಕಾಳಿಯ ಉನ್ಮತ್ತ ಲೀಲೆ ಈ ಸೃಷ್ಟಿ;
ಮೂಲೋಕಗಳು ಅವಳ ಮಾಯೆಯಲಿ ಮರುಳು!
ಮತ್ತೆ ಹಾಡಿದರು:
ತಿಳಿಯ ಬಲ್ಲರಾರು ತಾಯಿ
ಓ ಅನಂತ ರೂಪಿಣಿ…..
ಮತ್ತೆ ಹಾಡಿದರು:
ತ್ವರಿತದಿಂದ ಕಡೆಹಾಯಿಸು
ಮೃತ್ಯುಭಯದಿ ತಲ್ಲಣಿಸುತ ಸಾಯುತ್ತಿರುವ ನನ್ನನು……..
ಮಣಿ ತನ್ನೊಳಗೆ ತಾನೇ ಅಂದುಕೊಂಡ ಪರಮಹಂಸರು ಈ ಹಾಡು ಹಾಡುವುದಾದರೆ:
“ಏನಾದರೂ ನೀನು ನನ್ನ ವಂಚಿಸಲಾರೆ ಇನ್ನು ಮುಂದೆ:
ನಿನ್ನರುಣ ಪಾದಪದ್ಮಗಳ ನಾನಿಂದು ಕಂಡೆ!
ಏನಾಶ್ಚರ್ಯ – ಮಣಿ ಹಾಗೆ ಭಾವಿಸುವುದೇ ತಡ, ಪರಮಹಂಸರು ಅದೇ ಹಾಡನ್ನು ಹಾಡಲಾರಂಭಿಸಿದ್ದಾರೆ. ಕೆಲವು ನಿಮಿಷಗಳಾದ ನಂತರ ಅವರು ಮಣಿಯನ್ನು ಕೇಳುತ್ತಿದ್ದಾರೆ, “ನನ್ನ ಈಗಿನ ಅವಸ್ಥೆ ಎಂಥದು ಎಂಬುದು ನಿನಗೆ ಗೊತ್ತಾಗುತ್ತದೆಯೆ?”
ಮಣಿ ನಗುತ್ತ: ‘ಈಗ ತಮ್ಮದು ಸಹಜಾವಸ್ಥೆ.”
ಪರಮಹಂಸರು ತಮ್ಮಷ್ಟಕ್ಕೆ ತಾವೆ ಒಂದು ಹಾಡಿನ ಪಲ್ಲವಿಯನ್ನು ಹಾಡಲಾರಂಭಿ ಸಿದ್ದಾರೆ.
ಸಹಜಮಾನಸನಾಗದಿರೆ ನೀ
ಸಹಜ ಸುಂದರ ದೇವನೊಲುಮೆಯ
ಗಳಿಪುದೆಂತೀ ಲೋಕದಿ?
1. ಈತನ ನಿಜವಾದ ಹೆಸರು ವಿಶ್ವನಾಥ ಉಪಾಧ್ಯಾಯ ಅಂತ. ನೇಪಾಳ ನಿವಾಸಿ; ನೇಪಾಳ ರಾಜನ ವಕೀಲ. ರಾಜಪ್ರತಿನಿಧಿಯಾಗಿ ಕಲ್ಕತ್ತದಲ್ಲಿ ಇದ್ದಾನೆ. ಈತ ಬಹಳ ಸದಾಚಾರನಿಷ್ಠ ಬ್ರಾಹ್ಮಣ. ಒಬ್ಬ ದೊಡ್ಡ ಭಕ್ತನೂ ಆಗಿದ್ದಾನೆ.