೧೯ನೆ ಅಕ್ಟೋಬರ್ ೧೮೮೪, ಕಾರ್ತಿಕ ಶುಕ್ಲ ಪಾಡ್ಯಮಿ, ಭಾನುವಾರ
ಬ್ರಾಹ್ಮಭಕ್ತರೆಲ್ಲ ಸಿಂಥಿಯ ಬ್ರಾಹ್ಮ ಸಮಾಜಕ್ಕೆ ಬಂದು ಸೇರಿದ್ದಾರೆ. ಇಂದು ಸಮಾಜದ ಶರದೃತುವಿನ ಮಹೋತ್ಸವ, ವೇಣೀಮಾಧವಪಾಲನ ಮನೋಹರ ಉದ್ಯಾನವನದಲ್ಲಿ ಬ್ರಾಹ್ಮ ಸಮಾಜದ ಅಧಿವೇಶನ ನಡೆಯಲಿದೆ. ಪ್ರಾತಃಕಾಲದ ಉಪಾಸನಾದಿಗಳೆಲ್ಲ ಮುಗಿದಿದೆ. ಪರಮಹಂಸರು ಅಪರಾಹ್ನ ನಾಲ್ಕೂವರೆ ಘಂಟೆಯ ಸಮಯಕ್ಕೆ ಅಲ್ಲಿಗೆ ಬಂದರು. ಅವರ ಗಾಡಿ ಉದ್ಯಾನವನದ ಮಧ್ಯೆ ನಿಂತಿದೆ. ಭಕ್ತರು ಸುಮ್ಮನೆ ಗುಂಪುಗುಂಪಾಗಿ ಅವರ ಸುತ್ತಲೂ ನೆರೆಯುತ್ತಿದ್ದಾರೆ. ಪ್ರಾಂಗಣದ ಮಧ್ಯೆ ಸಮಾಜದ ವೇದಿಕೆಯನ್ನು ನಿರ್ಮಿಸಿದ್ದಾರೆ. ಅದರ ಮುಂಭಾಗದಲ್ಲಿ ಸಭಾಂಗಣ. ಅಲ್ಲಿ ಪರಮಹಂಸರು ಕುಳಿತುಕೊಂಡಿದ್ದಾರೆ. ಭಕ್ತರು ಅವರ ಸುತ್ತಲೂ ಸುತ್ತುಗಟ್ಟಿ ಕುಳಿತು ಕೊಂಡಿದ್ದಾರೆ. ವಿಜಯ, ತ್ರೈಲೋಕ್ಯ ಇವರೆ ಮೊದಲಾದ ಅನೇಕ ಬ್ರಾಹ್ಮಭಕ್ತರು ಕುಳಿತಿದ್ದಾರೆ. ಅವರ ಮಧ್ಯೆ ಒಬ್ಬ ಬ್ರಾಹ್ಮಭಕ್ತ ಸಬ್ – ಜಡ್ಜಿ ಕೂಡ ಇದ್ದಾನೆ.
ಸಮಾಜಗೃಹ ಮಹೋತ್ಸವದ ದೆಸೆಯಿಂದ ಒಂದು ವಿಚಿತ್ರ ಶೋಭೆಯನ್ನು ಧರಿಸಿದೆ. ಅಲ್ಲಲ್ಲಿ ವಿವಿಧ ವರ್ಣಗಳ ಪತಾಕೆ ಹಾರಾಡುತ್ತಿವೆ. ಆ ಗೃಹದ ಮಧ್ಯೆ ಅಂದರೆ ಕಿಟಕಿ ಬಾಗಿಲುಗಳಲ್ಲಿ ತಳಿರು ತೋರಣಗಳನ್ನು ಆ ರೀತಿಯಾಗಿ ಅಲಂಕಾರಮಾಡಿದ್ದಾರೆ. ಅಲ್ಲೆಲ್ಲ ಮರಗಿಡಗಳು ನಿಜವಾಗಿ ಬೆಳೆದಿರುವುವೊ ಏನೊ ಎಂಬಂತೆ ನಯನರಂಜಿತವಾಗಿದೆ. ಬಳಿಯಲ್ಲಿಯೆ ಇರುವ ಸರೋವರದ ಸ್ವಚ್ಛ ಸಲಿಲದಲ್ಲಿ ಶರದೃತುವಿನ ಸುನೀಲ ನಭೋ ಮಂಡಲ ಪ್ರತಿಬಿಂಬಿತವಾಗುತ್ತಿದೆ. ಉದ್ಯಾನವನದ ಕೆಂಪುಕೆಂಪಾಗಿರುವ ರಸ್ತೆಗಳ ಇಕ್ಕೆಲ ಗಳಲ್ಲಿಯೂ ಹೂವು ಹಣ್ಣು ಮರ ಗಿಡಗಳ ಸಾಲು ಹಬ್ಬಿದೆ. ಇಂದು ಪರಮಹಂಸರ ಶ್ರೀಮುಖದಿಂದ ಬರುವ ದೇವವಾಣಿಯನ್ನು ಭಕ್ತರು ಮತ್ತೆ ಕೇಳುವ ಸುಯೋಗವಿದೆ. ಆರ್ಯ ಋಷಿಗಳ ಮುಖದಿಂದ ವೇದರೂಪವಾಗಿ ಒಂದಾನೊಂದು ಕಾಲದಲ್ಲಿ ಹೊರಹೊಮ್ಮಿ ಅದೇ ಧ್ವನಿ ಮತ್ತೊಮ್ಮೆ ನರರೂಪಧರಿಸಿರುವ, ಪರಮಸಂನ್ಯಾಸಿಯಾದ, ಜೀವಿಗಳ ದುಃಖವನ್ನು ಕಂಡು ಕಾತರನಾಗುವ, ಸಂಪೂರ್ಣ ಮನಸ್ಸನ್ನು ಬ್ರಹ್ಮನಲ್ಲಿ ನಿಲಿಸಿರುವ, ಭಕ್ತವತ್ಸಲನಾದ, ಭಕ್ತರಿಗಾಗಿ ಅವತಾರವೆತ್ತಿರುವ, ಹರಿಪ್ರೇಮದಿಂದ ಉದ್ವೇಗಕ್ಕೆ ಒಳಗಾಗಿರುವ ಇವರಿಂದ ಬರುವುದು. ಅದೇ ಮತ್ತೆ ಯೇಸುವಿನ ಬಾಯಿಂದ ಬೆಸ್ತರ ಜಾತಿಗೆ ಸೇರಿದ ನಿರಕ್ಷರಕುಕ್ಷಿಗಳಾದ ಆತನ ಹನ್ನೆರಡು ಜನ ಶಿಷ್ಯರ ಕಿವಿಗೆ ಬಿದ್ದಿತ್ತು. – ಯಾವ ವಾಣಿ ಪುಣ್ಯಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಭಗವಾನ್ ಶ್ರೀಕೃಷ್ಣನ ಮುಖದಿಂದ ಶ್ರೀಮದ್ಭಗವದ್ಗೀತಾ ರೂಪದಿಂದ ಏಕಕಾಲದಲ್ಲಿ ಹೊರಹೊರಟು, – ಸಾರಥಿವೇಷಧಾರಿ ಮಾನವಾಕಾರ ಸಚ್ಚಿದಾನಂದ ಗುರುವಿನ ತುಟಿಗಳಿಂದ ಮೇಘಗಂಭೀರ ವಾಣಿಯ ಮೂಲಕ ಬಂದ –
“ಕವಿಂ ಪುರಾಣಮ್ ಅನುಶಾಸಿತಾರಮ್ ಅಣೋರಣೀಯಾಂಸಮನುಸ್ಮರೇದ್ಯಃ ।
ಸರ್ವಸ್ಯ ಧಾತಾರಮಚಿಂತ್ಯರೂಪಮ್ ಆದಿತ್ಯವರ್ಣಂ ತಮಸಃ ಪರಸ್ತಾತ್ ॥
ಪ್ರಯಾಣಕಾಲೇ ಮನಸಾಚಲೇನ ಭಕ್ತ್ಯಾಯುಕ್ತೋ ಯೋಗಬಲೇನ ಚೈವ ।
ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್ ಸ ತಂ ಪರಂ ಪುರುಷಮುಪೈತಿ ದಿವ್ಯಮ್ ॥
ಯದಕ್ಷರಂ ವೇದವಿದೋ ವದಂತಿ ವಿಶಂತಿ ಯದ್ಯತಯೋ ವೀತರಾಗಾಃ ॥
ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ ತತ್ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ ॥
(ಭ.ಗೀ. ಡ್ಜಿಜಿಜಿ ೯-೧೧)
ಇತ್ಯಾದಿಯನ್ನು ವಿನಯನಮ್ರ ವ್ಯಾಕುಲ ಗುಡಾಕೇಶ ಕೌಂತೇಯ ಪಾನಮಾಡಿದ್ದನೋ, ಅದನ್ನೇ ಪರಮಹಂಸರ ಮೂಲಕ ಕೇಳುವ ಸುಯೋಗ ಇಂದು.
ಪರಮಹಂಸರು ಸಭಾಂಗಣದಲ್ಲಿ ಕುಳಿತ ನಂತರ ಬಹಳ ಸುಂದರವಾಗಿ ನಿರ್ಮಿತ ವಾದ ಸಮಾಜ ವೇದಿಕೆಯ ಕಡೆ ಅವರ ದೃಷ್ಟಿ ಬೀಳುವುದೆ ತಡ ಒಡನೆಯೆ ಬಗ್ಗಿ ಪ್ರಣಾಮ ಮಾಡಿದರು. ವೇದಿಕೆಯ ಮೇಲೆ ಭಗವಂತನ ಕಥಾಶ್ರವಣ ನಡೆಯುತ್ತದೆ – ಅದಕ್ಕಾಗಿ ಅವರು ಭಾವಿಸುತ್ತಿದ್ದಾರೆ, “ವೇದಿಕೆ ಒಂದು ಪುಣ್ಯಸ್ಥಳ; ಅಚ್ಯುತನ ಕಥಾಶ್ರವಣ ವಾಗುವುದರಿಂದ ಅಲ್ಲಿ ಸರ್ವ ತೀರ್ಥಗಳು ಸಮಾಗಮವಾಗುತ್ತವೆ” ಎಂದು. ಕೋರ್ಟನ್ನು ನೋಡಿದೊಡನೆಯೆ ಮೊಕದ್ದಮೆಯ ಮತ್ತು ಜಡ್ಜಿಯ ಜ್ಞಾಪಕ ಬರುತ್ತದೆ. ಅದೇ ರೀತಿಯಾಗಿ ಈ ಹರಿಕಥಾಶ್ರವಣ ಸ್ಥಾನವನ್ನು ನೋಡಿ ಪರಮಹಂಸರಿಗೆ ಭಗವಂತನ ಉದ್ದೀಪನೆಯಾಗಿ ಬಿಟ್ಟಿದೆ.
ತ್ರೈಲೋಕ್ಯ ಹಾಡುತ್ತಿದ್ದಾನೆ.
ಪರಮಹಂಸರು ತ್ರೈಲೋಕ್ಯನಿಗೆ: “ನಿನ್ನ ಆ ಹಾಡು, ‘ನನ್ನನೂ ಉನ್ಮತ್ತನಾಗಿಸೆಲೆ ತಾಯೆ’ ಎಂಬ ಹಾಡು ಬಹಳ ಚೆನ್ನಾಗಿದೆ. ಇದನ್ನು ಸ್ವಲ್ಪ ಹಾಡು.”
ತ್ರೈಲೋಕ್ಯ ಹಾಡಿದ:
ನನ್ನನೂ ಉನ್ಮತ್ತನಾಗಿಸೆಲೆ ತಾಯೆ
ನಿನ್ನ ಭಕ್ತಿಯ ಮಧುರ ಮಧುಪಾನದಿಂದ!…..
ಹಾಡನ್ನು ಕೇಳುತ್ತ ಕೇಳುತ್ತ ಇದ್ದಹಾಗೆಯೆ ಪರಮಹಂಸರಿಗೆ ಭಾವಪರಿವರ್ತನೆ ಯಾಗಿದೆ. ಒಡನೆಯೆ ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಕರ್ಮೇಂದ್ರಿಯ, ಜ್ಞಾನೇಂದ್ರಿಯ, ಮನಸ್ಸು, ಬುದ್ಧಿ, ಅಹಂಕಾರ ಇವುಗಳೆಲ್ಲದರ ಅಸ್ತಿತ್ವವೇ ಇಲ್ಲದಂತೆ ಕಾಣುತ್ತಿದೆ. ದೇಹವು ಚಿತ್ರಿತ ಗೊಂಬೆಯಂತಿದೆ. ಸ್ವಲ್ಪಹೊತ್ತಿನ ಮೇಲೆ ಪರಮಹಂಸರು ಕಿಂಚಿತ್ ಪ್ರಕೃತಿಸ್ಥರಾಗಿ ಭಾವಾವಸ್ಥೆಯಲ್ಲಿಯೆ ಬ್ರಾಹ್ಮಭಕ್ತರಿಗೆ ಉಪದೇಶಮಾಡುತ್ತಿದ್ದಾರೆ. ಅವರ ಭಾವ ಭಗವ ದ್ಭಾವನೆಯಿಂದ ಘನೀಭೂತವಾಗಿರುವಂತೆ ಕಾಣುತ್ತಿದೆ, ಉನ್ಮತ್ತರಂತೆ ಮಾತನಾಡುತ್ತಿದ್ದಾರೆ. ಅವರ ಭಾವದ ತೀವ್ರತೆ ಕ್ರಮಕ್ರಮೇಣ ಕಡಮೆಯಾಗುತ್ತ ಬರುತ್ತಿದೆ. ಕೊನೆಗೆ ಎಂದಿನ ಸಹಜಾವಸ್ಥೆ ಬಂದಿದೆ.
ಶ್ರೀರಾಮಕೃಷ್ಣರು ಭಾವಸ್ಥರಾಗಿ “ಹೇ ತಾಯೆ! ನನಗೆ ಕಾರಣಾನಂದ ಬೇಡ, ಸಿದ್ಧಿ ಬೇಕು.
(ಭಕ್ತರಿಗೆ) “ಸಿದ್ಧಿ ಅಂದರೆ ವಸ್ತುಲಾಭ, ಅಷ್ಟಸಿದ್ಧಿಗಳ ಸಿದ್ಧಿಯಲ್ಲ-ಅಣಿಮಾ ಲಘಿಮಾದಿಗಳಲ್ಲ. ಸಿದ್ಧಿಗಳ ವಿಷಯವಾಗಿ ಶ್ರೀಕೃಷ್ಣ ಅರ್ಜುನನಿಗೆ ಹೇಳಿದ: ‘ಸಖ! ನೋಡು, ಅಷ್ಟಸಿದ್ಧಿಗಳಲ್ಲಿ ಎಲ್ಲದರ ಮಾತು ಬಿಡು, ಒಂದೇ ಒಂದು ಯಾರಿಗಾದರೂ ಲಭಿಸಿದ್ದರೂ ಆ ವ್ಯಕ್ತಿ ನನ್ನನ್ನು ಪಡೆಯಲಾರ.’ ಏಕೆಂದರೆ, ಸಿದ್ಧಿ ಇದ್ದಿತು ಎಂದರೆ ಅಹಂಕಾರ ಇದ್ದೇ ಇರುತ್ತದೆ. ಅಹಂಕಾರ ಲೇಶಮಾತ್ರ ಇದ್ದರೂ ಭಗವಂತನನ್ನು ಪಡೆಯಲಾಗೋದಿಲ್ಲ.
“ಒಂದು ವಿಷಯ. ಭಕ್ತರಲ್ಲಿ ನಾಲ್ಕು ಗುಂಪಿನವರಿದ್ದಾರೆ: ಪ್ರವರ್ತಕ, ಸಾಧಕ, ಸಿದ್ಧ, ಸಿದ್ಧರಸಿದ್ಧ. ಈಗತಾನೆ ಭಗವಂತನ ಪೂಜೆ ಪುರಸ್ಕಾರಗಳಲ್ಲಿ ತೊಡಗಿರುವವನಿಗೆ ಪ್ರವರ್ತಕ ಎಂದು ಹೆಸರು. ಅವನು ಹಣೆಗೆ ಮೈಗೆ ಕೈಗೆ ತಿಲಕ ಮೊದಲಾದುವನ್ನು ಹಚ್ಚಿಕೊಳ್ಳುತ್ತಾನೆ. ಕೊರಳಿಗೆ ತುಳಸಿಮಾಲೆ ಹಾಕಿಕೊಳ್ಳುತ್ತಾನೆ. ಬಾಹ್ಯವಾಗಿ ಸ್ವಲ್ಪ ಆಚಾರವಂತನಾಗಿರುತ್ತಾನೆ. ಸಾಧಕ ಇನ್ನೂ ಸ್ವಲ್ಪ ಮುಂದುವರಿದಿರುತ್ತಾನೆ. ಆತನಲ್ಲಿ ಬಾಹ್ಯಾಡಂಬರ ಕಡಿಮೆಯಾಗಿ ಬಿಟ್ಟಿರುತ್ತದೆ. ಭಗವಂತನನ್ನು ಪಡೆಯಲು ವ್ಯಾಕುಲನಾಗಿರುತ್ತಾನೆ. ಆತನ ಹೃದಯ ಭಗವಂತನನ್ನು ಕರೆಯುತ್ತದೆ, ಆತ ಭಗವಂತನ ನಾಮವನ್ನು ಜಪಿಸುತ್ತಾನೆ, ಹೃತ್ಪೂರ್ವಕ ವಾದ ಪ್ರಾರ್ಥನೆ ಸಲ್ಲಿಸುತ್ತಾನೆ. ಸಿದ್ಧ ಯಾರು ಗೊತ್ತೆ? ಯಾರಿಗೆ ಭಗವಂತನಿದ್ದಾನೆ, ಆತನೆ ಸಮಸ್ತವನ್ನೂ ಮಾಡುತ್ತಿದ್ದಾನೆ ಎಂಬ ನಿಶ್ಚಯಾತ್ಮಕ ಬುದ್ಧಿ ಉಂಟಾಗಿದೆಯೊ, ಯಾರಿಗೆ ಆತನ ಸಾಕ್ಷಾತ್ಕಾರ ದೊರಕಿದೆಯೊ ಆತನೇ ಸಿದ್ಧ. ಸಿದ್ಧರಸಿದ್ಧ ಯಾರು ಗೊತ್ತೆ? ಯಾರು ಆತನೊಡನೆ ಆಲಾಪಮಾಡಿದ್ದಾನೊ ಆತ ಸಿದ್ಧರಸಿದ್ಧ. ಅವರದು ಬರಿಯ ದರ್ಶನವೇ ಅಲ್ಲ; ಅವರಲ್ಲಿ ಕೆಲವರು ಪಿತೃಭಾವದಿಂದ, ಕೆಲವರು ವಾತ್ಸಲ್ಯಭಾವದಿಂದ, ಕೆಲವರು ಮಧುರಭಾವದಿಂದ ಆತನೊಡನೆ ಅನ್ಯೋನ್ಯವಾಗಿ ಬೆರೆತಿದ್ದಾರೆ.
“ಕಟ್ಟಿಗೆಯಲ್ಲಿ ಬೆಂಕಿ ನಿಶ್ಚಯವಾಗಿ ಇದೆ ಎಂಬ ನಂಬಿಕೆ ಒಂದು; ಕಟ್ಟಿಗೆಯಿಂದ ಬೆಂಕಿ ಉತ್ಪನ್ನಮಾಡಿ ಅನ್ನ ಬೇಯಿಸಿ ಊಟಮಾಡಿ ಶಾಂತಿ ಅಥವಾ ತೃಪ್ತಿಯನ್ನು ಪಡೆಯೋದು ಇನ್ನೊಂದು. ಇವೆರಡಕ್ಕೂ ಅಜಗಜಾಂತರ ವ್ಯತ್ಯಾಸ.
“ಆಧ್ಯಾತ್ಮಿಕ ಅನುಭವಗಳು ಇಷ್ಟೇ ಎಂದು ಹೇಳಲಾಗೋದಿಲ್ಲ. ಒಂದು ದೊರೆತರೆ ಇನ್ನೊಂದು. ಅದು ದೊರೆತರೆ ಮತ್ತೊಂದು ಇದ್ದೇ ಇರುತ್ತದೆ.
(ಭಾವಾವಿಷ್ಟರಾಗಿ ಬ್ರಾಹ್ಮಭಕ್ತರನ್ನುದ್ದೇಶಿಸಿ) “ಇವರೆಲ್ಲ ಬ್ರಹ್ಮಜ್ಞಾನಿಗಳು, ನಿರಾಕಾರ ವಾದಿಗಳು; ಅದು ಒಳ್ಳೆಯದೆ.
(ಬ್ರಾಹ್ಮಭಕ್ತರಿಗೆ) “ಒಂದರಲ್ಲಿ ದೃಢವಿಶ್ವಾಸವುಳ್ಳವರಾಗಿರಿ–ಸಾಕಾರದಲ್ಲಿ ಇಲ್ಲದಿದ್ದರೆ ನಿರಾಕಾರದಲ್ಲಿ. ಆಗ ಮಾತ್ರ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ; ಇಲ್ಲದೆ ಇದ್ದರೆ ದೊರೆಯದು. ದೃಢತೆಯೊಂದಿದ್ದರೆ ಸಾಕಾರವಾದಿಗೂ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ, ನಿರಾಕಾರವಾದಿಗೂ ದೊರೆಯುತ್ತದೆ. ಕಜ್ಜಾಯವನ್ನು ನೆಟ್ಟನೆಟ್ಟಗೆ ಕಡಿದು ತಿನ್ನಿ, ಹೇಗೆ ತಿಂದರೂ ಸಿಹಿಯಾಗಿ ಇರುತ್ತದೆ. (ಎಲ್ಲರೂ ನಗುತ್ತಾರೆ.)
“ಆದರೆ ದೃಢ ವಿಶ್ವಾಸ ಉಳ್ಳವರಾಗಿರಬೇಕು; ವ್ಯಾಕುಲರಾಗಿ ಆತನನ್ನು ಕರೆಯಬೇಕು. ಪ್ರಾಪಂಚಿಕರ ದೃಷ್ಟಿಯ ಭಗವಂತ ಎಂಥವನು ಎಂಬುದು ಗೊತ್ತೆ? ಮಕ್ಕಳು ಚಿಕ್ಕಮ್ಮ ದೊಡ್ಡಮ್ಮನ ಜಗಳ ಕೇಳಿಕೊಂಡಿದ್ದು ತಾವು ಆಟವಾಡುವಾಗ ಪರಸ್ಪರ, ‘ದೇವರ ಆಣೆಯಾಗಿಯೂ,’ ಎಂಬುದಾಗಿ ಹೇಳುತ್ತವೆ. ಇವರದೂ ಮಕ್ಕಳ ಭಗವಂತನ ಹಾಗೆ, ಅಥವಾ ಇದು ಒಬ್ಬ ಷೋಕಿಲಾಲ ಎಲೆಯಡಿಕೆ ಅಗಿಯುತ್ತ ಅಗಿಯುತ್ತ ಕೈಯಲ್ಲಿ ಬೆತ್ತ ಹಿಡಿದು ಪಾರ್ಕಿನಲ್ಲಿ ನಡೆಯುತ್ತ ನಡೆಯುತ್ತ ಒಂದು ಹೂವನ್ನು ಕಿತ್ತುಕೊಂಡು ತನ್ನ ಬಂಧುವಿಗೆ, ‘ಆಹ! ಭಗವಂತ ಎಷ್ಟು ಬ್ಯೂಟಿಫುಲ್ (ಸುಂದರವಾದ) ಹೂವನ್ನು ಸೃಷ್ಟಿಸಿದ್ದಾನೆ!’ ಎಂಬುದಾಗಿ ಹೇಳುವಾಗ ಭಗವಂತ ಎಂಬ ಪದವನ್ನು ಉಪಯೋಗಿಸಿದ ಹಾಗೆ. ಆದರೆ ಈ ಪ್ರಾಪಂಚಿಕರ ಭಗವಂತನ ಭಾವನೆ ಬಹಳ ಕ್ಷಣಿಕವಾದದ್ದು, ಕಾದ ಬಾಣಲೆಯ ಮೇಲೆ ಬಿದ್ದ ಹನಿಯ ಹಾಗೆ.
“ಒಂದರ ಮೇಲೆ ದೃಢವಿಶ್ವಾಸವುಳ್ಳವರಾಗಿ ಇರಬೇಕು. ಆಳಕ್ಕೆ ಮುಳುಗಿ, ಹಾಗೆ ಮಾಡದಿದ್ದರೆ ಸಮುದ್ರದೊಳಗಿನ ಮುತ್ತುಗಳನ್ನು ಪಡೆಯಲಾಗೋದಿಲ್ಲ. ನೀರಿನ ಮೇಲೆಯೆ ಕೇವಲ ತೇಲುತ್ತಿದ್ದರೆ ಪಡೆಯಲಾಗೋದಿಲ್ಲ.
ಹೀಗೆಂದು ಹೇಳಿ ಶ್ರೀರಾಮಕೃಷ್ಣರು ಯಾವ ಹಾಡಿನಿಂದ ಕೇಶವಾದಿ ಭಕ್ತರ ಮನಸ್ಸನ್ನು ಮುಗ್ಧಮಾಡುತ್ತಿದ್ದರೊ ಆ ಹಾಡನ್ನು ತಮ್ಮ ಮಧುರ ಕಂಠದಿಂದ ಹಾಡಲಾರಂಭಿಸಿದ್ದಾರೆ:
ಮುಳುಗು ಮುಳುಗು ಮನವೇ –
ಹಿರಿಯೊಲವಿನ ಕಡಲಾಳಕೆ…..
ಎಲ್ಲರಿಗೂ ತಾವು ಸ್ವರ್ಗದಲ್ಲಿಯೊ ಅಥವಾ ವೈಕುಂಠದಲ್ಲಿಯೊ ಕುಳಿತಿರಬೇಕು ಅಂತ ಅನ್ನಿಸುತ್ತಿದೆ.
ಪರಮಹಂಸರು ಬ್ರಾಹ್ಮಭಕ್ತರಿಗೆ: “ಆಳಕ್ಕೆ ಮುಳುಗಿ ಭಗವಂತನನ್ನು ಪ್ರೀತಿಸಲು ಕಲಿತುಕೊಳ್ಳಿ. ಆತನ ಪ್ರೇಮದಲ್ಲಿ ಮಗ್ನರಾಗಿ. ನೋಡಿ, ನಾನು ನಿಮ್ಮ ಪ್ರಾರ್ಥನೆ ಕೇಳಿದ್ದೇನೆ. ಆದರೆ ನಿಮ್ಮ ಬ್ರಾಹ್ಮಸಮಾಜದಲ್ಲಿ ಭಗವಂತನ ವೈಭವವನ್ನು ಅಷ್ಟೊಂದು ವರ್ಣಿಸುತ್ತೀರಲ್ಲ ಏಕೆ? ‘ಹೇ ಭಗವಂತ! ನೀನು ಆಕಾಶವನ್ನು ಸೃಷ್ಟಿಸಿದ್ದೀಯೆ, ಮಹಾಸಾಗರಗಳನ್ನು ಸೃಷ್ಟಿಸಿದ್ದೀಯೆ. ಚಂದ್ರಲೋಕ ಸೂರ್ಯಲೋಕ ನಕ್ಷತ್ರಲೋಕ ಇವನ್ನೆಲ್ಲ ಸೃಷ್ಟಿಸಿದ್ದೀಯೆ’ ಅಂತ. ಇಂಥ ಭಾವನೆಗಳೆಲ್ಲದರ ಆವಶ್ಯಕತೆಯೇನಿದೆ?
“ಎಲ್ಲರೂ ದೊಡ್ಡ ಮನುಷ್ಯನ ತೋಟವನ್ನು ನೋಡುವುದೇ ತಡ ಬೆರಗಾಗಿ ಬಿಡುತ್ತಾರೆ-ಎಷ್ಟು ಸುಂದರವಾದ ಗಿಡಗಳು, ಎಷ್ಟು ಸುಂದರವಾದ ಹೂವುಗಳು, ಎಷ್ಟು ಸುಂದರವಾದ ಕೊಳಗಳು, ಎಷ್ಟು ಸುಂದರವಾದ ಬೈಠಕ್ಖಾನೆ, ಅದರೊಳಗೆ ಎಷ್ಟು ಸುಂದರವಾದ ಪಟಗಳು ಇವುಗಳನ್ನೆಲ್ಲ ನೋಡಿಯೆ ಆಶ್ಚರ್ಯಚಕಿತರಾಗಿಬಿಡುತ್ತಾರೆ. ಆದರೆ ಎಲ್ಲಿ, ತೋಟದ ಯಜಮಾನ ಇದ್ದಾನಲ್ಲ ಆ ದೊಡ್ಡ ಮನುಷ್ಯ, ಆತ ಬೇಕೆಂದು ಇಚ್ಛಿಸುವವರು ಎಷ್ಟು ಜನ? ಆತ ಬೇಕು ಎನ್ನುವವರು ಎಲ್ಲೊ ಒಬ್ಬಿಬ್ಬರು. ವ್ಯಾಕುಲ ನಾಗಿ ಭಗವಂತನನ್ನು ಕರೆದರೆ ಆತನ ದರ್ಶನ ದೊರೆಯುತ್ತದೆ. ಆತನೊಡನೆ ನಾನು ನಿಮ್ಮೊಡನೆ ಈ ಮಾತುಕತೆಯಾಡುತ್ತಿರುವಂತೆ ಮಾತುಕತೆಯಾಡಬಹುದು. ಸತ್ಯವಾಗಿ ಹೇಳುತ್ತೇನೆ, ಆತನ ದರ್ಶನ ದೊರೆಯುತ್ತದೆ, ನಾನು ಯಾರಿಗೆ ಇದನ್ನು ಹೇಳುತ್ತಿರೋದು! ಯಾರು ತಾನೆ ನನ್ನ ಮಾತಿಗೆ ಬೆಲೆ ಕೊಡುತ್ತಾರೆ!
“ಶಾಸ್ತ್ರಗಳೊಳಗೆ ಭಗವಂತ ಸಿಕ್ಕುವನೆ? ಶಾಸ್ತ್ರಾಧ್ಯಯನದಿಂದ ಅಬ್ಬಬ್ಬ ಎಂದರೆ ಆತನ ಅಸ್ಥಿ ಮಾತ್ರ ಸಿಕ್ಕಬಹುದು. ಆದರೆ ತಾನೆ ಸ್ವತಃ ಮುಳುಗದೆ ಇದ್ದರೆ ಭಗವಂತ ಕಾಣಿಸಿಕೊಳ್ಳುವುದಿಲ್ಲ. ಮುಳುಗಿದ ನಂತರ ಆತ ತಾನಾಗಿಯೆ ತೋರಿಸಿಕೊಂಡರೆ ಆಗ ಸಂದೇಹ ನಿವೃತ್ತಿಯಾಗುತ್ತದೆ. ಲೆಕ್ಕವಿಲ್ಲದಷ್ಟು ಪುಸ್ತಕ ಓದು, ಬಾಯಿಂದ ಬೇಕಾದಷ್ಟು ಶ್ಲೋಕಗಳನ್ನು ಹೇಳು. ವ್ಯಾಕುಲನಾಗಿ ಮುಳುಗು ಹಾಕದೆ ಇದ್ದರೆ ಆತನ ಸಾಕ್ಷಾತ್ಕಾರ ಸಾಧ್ಯವಿಲ್ಲ. ಬರೇ ಪಾಂಡಿತ್ಯದಿಂದ ಮನುಷ್ಯನನ್ನು ಮುಗ್ಧಗೊಳಿಸಲು ಸಾಧ್ಯ, ಆದರೆ ಆತನನ್ನು ಪಡೆಯಲು ಸಾಧ್ಯವಿಲ್ಲ.
“ಕೇವಲ ಶಾಸ್ತ್ರಗ್ರಂಥಗಳಿಂದಲೆ ಏನು ತಾನೆ ಸಾಧ್ಯ? ಆತನ ಕೃಪೆ ದೊರಕದೆ ಇದ್ದರೆ ಏನೂ ದೊರೆಯುವ ಹಾಗಿಲ್ಲ. ಏನು ಮಾಡಿದರೆ ಆತನ ಕೃಪೆ ದೊರಕಬಹುದೊ ವ್ಯಾಕುಲರಾಗಿ ಅದಕ್ಕೆ ಪ್ರಯತ್ನಿಸಿ. ಕೃಪೆ ಒದಗಿತೆಂದರೆ ಆತನ ದರ್ಶನ ದೊರೆಯುತ್ತದೆ. ಆಗ ಆತ ನಿಮ್ಮೊಡನೆ ಮಾತುಕತೆಗಳಾಡುತ್ತಾನೆ.”
ಸಬ್-ಜಡ್ಜಿ: “ಮಹಾಶಯರೆ, ಏನು ಆತನ ಕೃಪೆ ಒಬ್ಬನ ಮೇಲೆ ಹೆಚ್ಚಾಗಿ ಇನ್ನೊಬ್ಬನ ಮೇಲೆ ಕಡಿಮೆಯಾಗಿ ಬೀಳುವುದೇನು? ಅದು ಹಾಗಿದ್ದರೆ ಭಗವಂತನಿಗೆ ವೈಷಮ್ಯದೋಷ ಬರುವುದಲ್ಲ?”
ಶ್ರೀರಾಮಕೃಷ್ಣರು: “ಏನು ಹಾಗೆ ಕೇಳುತ್ತೀಯಲ್ಲ! ಆನೆಯೂ ಒಂದು ಪ್ರಾಣಿ, ಇಲಿಯೂ ಒಂದು ಪ್ರಾಣಿ! ನೀನು ಕೇಳಿದುದನ್ನೆ ವಿದ್ಯಾಸಾಗರ ಕೇಳಿದ. ಆತ ಕೇಳಿದ, ‘ಮಹಾಶಯರೆ, ಕೆಲವರಿಗೆ ಅಧಿಕ ಶಕ್ತಿ, ಕೆಲವರಿಗೆ ಕಡಿಮೆ ಶಕ್ತಿ ಕೊಟ್ಟಿದ್ದಾನೇನು?’ ಅಂತ. ನಾನು ಹೇಳಿದೆ, ‘ವಿಭುರೂಪದಿಂದ ಆತ ಎಲ್ಲರಲ್ಲಿಯೂ ಇದ್ದಾನೆ-ನನ್ನೊಳಗೆ ಹೇಗೊ ಹಾಗೆಯೆ ಇರುವೆಯೊಳಗೂ ಕೂಡ. ಆದರೆ ಶಕ್ತಿವಿಶೇಷವಿದೆ. ಎಲ್ಲರಲ್ಲಿಯೂ ಒಂದೇ ಸಮನಾಗಿದ್ದರೆ ನಿನ್ನ ಹೆಸರು ಕೀರ್ತಿ ಕೇಳಿ ನಾವೇಕೆ ನಿನ್ನನ್ನು ನೋಡಲು ಬಂದಿದ್ದೇವೆ? ನಿನಗೇನು ಕೊಂಬು ಬೆಳೆದಿದೆಯೆ? ಅದಲ್ಲ. ನೀನು ದಯಾಳು, ನೀನು ಪಂಡಿತ, ಈ ಅನೇಕ ಗುಣಗಳು ಬೇರೆಯವರಿಗಿಂತ ನಿನ್ನಲ್ಲಿ ಅಧಿಕವಾಗಿ ವ್ಯಕ್ತವಾಗಿವೆ; ಅದಕ್ಕಾಗಿ ನೀನು ಅಷ್ಟೊಂದು ಪ್ರಸಿದ್ಧನಾಗಿರೋದು’ ಎಂದು. ನೋಡುತ್ತಿಲ್ಲವೆ ಅಂಥವರನ್ನು. ಒಬ್ಬನೆ ಒಂದು ನೂರು ಜನರನ್ನು ಒಟ್ಟಿಗೆ ಸೋಲಿಸಿಬಿಡೋದನ್ನು? ಜೊತೆಗೆ ಇದನ್ನೂ ನೋಡಬಹುದು, ಒಬ್ಬನಿಗೆ ಹೆದರಿ ಎಲ್ಲರೂ ಓಡಿ ಹೋಗುವುದನ್ನು. ಶಕ್ತಿವಿಶೇಷತೆ ಇಲ್ಲದೆ ಇದ್ದರೆ ಜನ ಕೇಶವನನ್ನು ಏಕೆ ಅಷ್ಟೊಂದು ಗೌರವಿಸುತ್ತಿದ್ದರು!
“ಗೀತೆಯಲ್ಲಿ ಹೇಳಿದೆ: ಯಾರನ್ನೆ ಆಗಲಿ ಅನೇಕರು ಗೌರವಿಸಿ ಆದರಿಸುತ್ತಿದ್ದರೆ- ವಿದ್ವತ್ತಿಗೆ ಆಗಲಿ, ಗಾಯನಕ್ಕೆ ಆಗಲಿ, ಉಪನ್ಯಾಸ ಕೊಡುವುದಕ್ಕೆ ಆಗಲಿ, ಅಥವಾ ಇನ್ನು ಬೇರೆ ಯಾವುದಕ್ಕೆ ಆಗಲಿ–ನಿಶ್ಚಯವಾಗಿ ತಿಳಿದುಕೊ, ಆತನಲ್ಲಿ ಭಗವಂತನ ವಿಶೇಷ ಶಕ್ತಿ ಇದೆ ಎಂದು.”
ಒಬ್ಬ ಬ್ರಾಹ್ಮಭಕ್ತ ಜಡ್ಜಿಗೆ: “ಅವರು ಹೇಳುವುದನ್ನು ಸುಮ್ಮನೆ ಏಕೆ ಒಪ್ಪಿಕೊಂಡು ಬಿಡಬಾರದು?”
ಶ್ರೀರಾಮಕೃಷ್ಣರು ಆ ಬ್ರಾಹ್ಮಭಕ್ತನಿಗೆ: “ನೀನು ಎಂಥ ಮನುಷ್ಯ ? ಹೇಳಿದ್ದರಲ್ಲಿ ವಿಶ್ವಾಸವಿಲ್ಲದೆ ಬರಿದೆ ಒಪ್ಪಿಕೊಳ್ಳೋದು! ಕಪಟಾಚರಣೆ! ನೀನು ಖೋಟಾ ನಾಣ್ಯ ಅಂತ ಕಾಣುತ್ತೆ.”
ಆ ಬ್ರಾಹ್ಮಭಕ್ತ ಬಹಳವಾಗಿ ಲಜ್ಜೆಗೊಂಡ.
ಸಬ್-ಜಡ್ಜಿ: “ಮಹಾಶಯರೆ, ಸಂಸಾರವನ್ನು ನಾವು ತ್ಯಜಿಸಿಬಿಡಬೇಕೇನು?”
ಶ್ರೀರಾಮಕೃಷ್ಣರು: “ಇಲ್ಲ, ಬೇಕಾಗಿಲ್ಲ. ನೀವೇಕೆ ತ್ಯಜಿಸಲು ಹೋಗಬೇಕು? ಸಂಸಾರದಲ್ಲಿ ಇದ್ದರೂ ಆತ ದೊರೆಯಬಹುದು. ಆದರೆ ಮೊದಲು ಕೆಲವು ಕಾಲ ನಿರ್ಜನಪ್ರದೇಶದಲ್ಲಿ ಇರಬೇಕು, ನಿರ್ಜನಪ್ರದೇಶದಲ್ಲಿದ್ದು ಸಾಧನೆ ಮಾಡಬೇಕು. ಮನೆಯ ಹತ್ತಿರ ಅಂತಹ ಒಂದು ಸ್ಥಳವನ್ನು ಮಾಡಿಕೊಳ್ಳಬೇಕು. ಅಲ್ಲಿಂದ ಬಂದು ಊಟಮಾಡಿ ಮತ್ತೆ ಹಿಂದಿರುಗಿ ಅಲ್ಲಿಗೆ ಹೋಗುವಂತಿರಬೇಕು. ಕೇಶವಸೇನ, ಪ್ರತಾಪ ಇವರೆ ಮೊದಲಾದವರು ನನಗೆ, ‘ಮಹಾಶಯರೆ, ನಮ್ಮದು ಜನಕರಾಜನ ಆದರ್ಶ’ ಅಂತ ಹೇಳಿದರು. ನಾನು ಹೇಳಿದೆ, ‘ಬರೀ ಮಾತುಗಳಿಂದಲೆ ಜನಕನಾಗುವುದಕ್ಕೆ ಸಾಧ್ಯವಿಲ್ಲ. ಆತ ತಲೆಕೆಳಕಾಗಿ ನಿಂತು ಮೊದಲು ನಿರ್ಜನ ಪ್ರದೇಶದಲ್ಲಿ ಎಷ್ಟೊಂದು ತಪಸ್ಸು ಮಾಡಿದ್ದ! ನೀವು ಮೊದಲು ಒಂದು ಸ್ವಲ್ಪ ಏನಾದರೂ ಮಾಡಿ; ಆಗತಾನೆ ಜನಕರಾಜನಾಗುತ್ತೀರಿ’ ಎಂದು. ಅವನು ಬಹು ಬೇಗ ಬೇಗ ಇಂಗ್ಲೀಷನ್ನು ಬರೆಯಬಲ್ಲ; ಹಾಗೆ ಪ್ರಾರಂಭದಲ್ಲಿ ಬರೆಯುವುದಕ್ಕಾಗುತ್ತಿತ್ತೆ? ಆತ ಒಬ್ಬ ಬಡ ಹುಡುಗ. ಹಿಂದೆ ಒಬ್ಬರ ಮನೆಯಲ್ಲಿದ್ದುಕೊಂಡು ಅಡಿಗೆಮಾಡಿ ಹಾಕುತ್ತಿದ್ದ. ಒಂದೆರಡು ತುತ್ತನ್ನು ತಾನೂ ತಿನ್ನುತ್ತಿದ್ದ. ಬಹಳ ಕಷ್ಟಪಟ್ಟು ಓದು ಬರಹ ಕಲಿತ. ಅದಕ್ಕಾಗಿಯೆ ಈಗ ಅಷ್ಟು ಬೇಗ ಬೇಗ ಬರೆಯಬಲ್ಲ.
“ನಾನು ಕೇಶವಸೇನನಿಗೆ ಮತ್ತೂ ಹೇಳಿದೆ, ‘ನಿರ್ಜನಪ್ರದೇಶಕ್ಕೆ ಹೋಗಿ ಇರದೆ ಇದ್ದರೆ, ಬಲವಾದ ರೋಗ ಹೇಗೆತಾನೆ ಬಿಟ್ಟು ತೊಲಗೀತು?’ ಅಂತ. ರೋಗವೊ ವಿಷಮಶೀತಜ್ವರ. ಸಾಲದುದಕ್ಕೆ ಯಾವ ಕೊಠಡಿಯಲ್ಲಿ ವಿಷಮಶೀತಜ್ವರದ ರೋಗಿ ಮಲಗಿರುವನೊ, ಅದೇ ಕೊಠಡಿಯಲ್ಲಿ ಇವೆ ಉಪ್ಪಿನಕಾಯಿ, ಹುಣಿಸೆಹಣ್ಣು, ನೀರಿನ ಕೊಡಗಳು! ಆತನನ್ನು ರೋಗ ಹೇಗೆ ತಾನೆ ಬಿಟ್ಟು ತೊಲಗೀತು? ಉಪ್ಪಿನಕಾಯಿ ಹುಣಿಸೆಹಣ್ಣು–ಇಲ್ಲಿ ನೋಡು ಅನ್ನುತ್ತಲೆ ಅನ್ನುತ್ತಲೆ ನನ್ನ ಬಾಯಲ್ಲಿ ನೀರು ಬಂದುಬಿಟ್ಟಿದೆ. (ಎಲ್ಲರೂ ನಗುತ್ತಾರೆ) ಎದುರಿಗಿದ್ದರೆ ಏನು ನಡೆಯುತ್ತದೆ ಎಂಬುದು ನಿಮಗೆಲ್ಲ ಗೊತ್ತೇ ಇದೆ. ಹೆಂಗಸು ಗಂಡಸಿಗೆ ಉಪ್ಪಿನಕಾಯಿ ಮತ್ತು ಹುಣಿಸೆಹಣ್ಣು, ಭೋಗವಾಸನೆಯೆ ನೀರಿನ ಕೊಡ. ವಿಷಯತೃಷ್ಣೆಗೆ ಕೊನೆಯೆಂಬುದೇ ಇಲ್ಲ. ಜೊತೆಗೆ ವಿಷಯವಸ್ತುಗಳು ರೋಗಿಯ ಕೊಠಡಿಯಲ್ಲಿ ಇವೆ. ಪರಿಸ್ಥಿತಿ ಹೀಗಿದ್ದರೆ, ಏನು ವಿಷಮಶೀತ ಜ್ವರ ಬಿಟ್ಟು ಹೋಗುವುದೆ? ಎಲ್ಲಿ ಉಪ್ಪಿನಕಾಯಿ ಆಗಲಿ, ಹುಣಿಸೆಹಣ್ಣು ಆಗಲಿ, ನೀರಿನ ಕೊಡಗಳೆ ಆಗಲಿ ಇಲ್ಲವೊ ಅಲ್ಲಿ ಆತನನ್ನು ಕೆಲವು ದಿವಸಗಳ ಮಟ್ಟಿಗೆ ಇಟ್ಟಿರಬೇಕು. ಅನಂತರ ಆತ ರೋಗದಿಂದ ಪಾರಾಗಿ ಅದೇ ಕೊಠಡಿಗೆ ಬಂದು ಇದ್ದರೂ ಭಯವೇನಿಲ್ಲ. ಆತನ ಸಾಕ್ಷಾತ್ಕಾರ ಪಡೆದ ವ್ಯಕ್ತಿ ಸಂಸಾರದಲ್ಲಿ ಬಂದು ಇದ್ದರೂ ಕಾಮಕಾಂಚನ ಆತನಿಗೆ ಏನನ್ನೂ ಮಾಡಲಾರವು. ಆಗ ಆತ ಜನಕರಾಜನಂತೆ ನಿರ್ಲಿಪ್ತನಾಗಿ ಇರಬಲ್ಲ. ಆದರೆ ಪ್ರಥಮದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು, ಅತ್ಯಂತ ನಿರ್ಜನಪ್ರದೇಶದಲ್ಲಿ ಇದ್ದು ಸಾಧನೆಮಾಡಬೇಕು. ಅಶ್ವತ್ಥವೃಕ್ಷ ಇನ್ನೂ ಸಸಿಯಾಗಿರುವಾಗ ಆಡು ದನಕರುಗಳು ಅದನ್ನು ತಿಂದು ನಾಶಮಾಡದೆ ಇರಲಿ ಎಂದು ಅದರ ಸುತ್ತಲೂ ಬೇಲಿ ಹಾಕುತ್ತಾರೆ. ಆದರೆ ಬುಡ ದಪ್ಪವಾಯಿತೆಂದರೆ ಬೇಲಿಯ ಅವಶ್ಯಕತೆಯೇನಿರದು. ಆಗ ತೆಗೆದುಕೊಂಡು ಹೋಗಿ ಆನೆಯನ್ನು ಕಟ್ಟಿದರೂ ಅದಕ್ಕೆ ಏನೂ ಆಗದು. ನಿರ್ಜನಪ್ರದೇಶದಲ್ಲಿ ಸಾಧನೆ ಮಾಡಿ ಭಗವಂತನ ಪಾದಪದ್ಮಗಳನ್ನು ಭಕ್ತಿಯಿಂದ ಪೂಜಿಸಿ ಶಕ್ತಿಯನ್ನು ವೃದ್ಧಿಮಾಡಿ ಕೊಂಡು ಮನೆಗೆ ಹೋಗಿ ಸಂಸಾರದಲ್ಲಿ ಇದ್ದರೆ ಕಾಮ ಕಾಂಚನ ನಿನ್ನನ್ನು ಏನೂ ಮಾಡಲಾರವು.
“ಅಲುಗಾಡದ ಸ್ಥಳದಲ್ಲಿ ಹಾಲಿಗೆ ಹೆಪ್ಪು ಹಾಕಿ ಇಟ್ಟು ಅನಂತರ ಬೆಣ್ಣೆ ತೆಗೆಯ ಬೇಕು. ಮನಸ್ಸೆಂಬ ಹಾಲಿನಿಂದ ಜ್ಞಾನಭಕ್ತಿ ಎಂಬ ಬೆಣ್ಣೆಯನ್ನು ಒಮ್ಮೆ ತೆಗೆದುಬಿಟ್ಟಿದ್ದೇ ಆದರೆ ಅದನ್ನು ಸಂಸಾರವೆಂಬ ನೀರಿನಲ್ಲಿ ಇಟ್ಟರೂ ನಿರ್ಲಿಪ್ತವಾಗಿ ಮೇಲೆ ತೇಲುತ್ತದೆ. ಆದರೆ ಮನಸ್ಸನ್ನು ಅದರ ಅಪಕ್ವ ಸ್ಥಿತಿಯಲ್ಲಿ, ಹಾಲಿನ ಸ್ಥಿತಿಯಲ್ಲಿ ಸಂಸಾರವೆಂಬ ನೀರಿನ ಮೇಲೆ ಇಡು, ಆಗ ಹಾಲು ನೀರು ಎರಡೂ ಬೆರೆತುಕೊಂಡುಬಿಡುತ್ತವೆ. ಬಳಿಕ ಮನಸ್ಸು ನಿರ್ಲಿಪ್ತವಾಗಿ ತೇಲಲಾರದು.
“ಸಂಸಾರದಲ್ಲಿ ಇದ್ದು ಭಗವಂತನ ಸಾಕ್ಷಾತ್ಕಾರ ಪಡೆಯಬೇಕಾದರೆ ಒಂದು ಕೈಯಿಂದ ಭಗವಂತನ ಪಾದಪದ್ಮಗಳನ್ನು ಹಿಡಿದುಕೊಂಡಿರಬೇಕು. ಇನ್ನೊಂದು ಕೈಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತಿರಬೇಕು, ಯಾವಾಗ ಕೆಲಸಕಾರ್ಯಗಳಿಂದ ಬಿಡುಗಡೆ ಹೊಂದುವೆಯೊ ಆಗ ಎರಡು ಕೈಗಳಿಂದಲೂ ಭಗವಂತನ ಪಾದಪದ್ಮಗಳನ್ನು ಹಿಡಿದುಕೊಳ್ಳ ಬೇಕು. ನಿರ್ಜನ ಪ್ರದೇಶದಲ್ಲಿ ವಾಸಮಾಡಬೇಕು, ಕೇವಲ ಆತನ ಚಿಂತನೆ ಮತ್ತು ಸೇವೆಯಲ್ಲಿಯೆ ನಿರತನಾಗಿರಬೇಕು.”
ಸಬ್-ಜಡ್ಜಿ ಆನಂದದಿಂದ: “ಮಹಾಶಯರೆ, ತಾವು ಹೇಳಿದ್ದೆಲ್ಲ ಬಹಳ ಅಮೂಲ್ಯ ವಿಷಯಗಳು. ನಿರ್ಜನಪ್ರದೇಶದಲ್ಲಿ ಸಾಧನೆಯೇನೊ ಆವಶ್ಯಕ. ಇದನ್ನೇ ನಾವು ಮರೆತು ಬಿಡುತ್ತಿರೋದು. ‘ಒಂದೇ ಸಲ ಜನಕರಾಜನಾಗಿಬಿಟ್ಟಿದ್ದೇವೆ!’ ಎಂದು ಭಾವಿಸುತ್ತೇವೆ. (ಶ್ರೀರಾಮಕೃಷ್ಣರು ಮತ್ತು ಎಲ್ಲರೂ ನಗುತ್ತಾರೆ.) ಸಂಸಾರವನ್ನು ತ್ಯಜಿಸುವ ಆವಶ್ಯಕತೆ ಏನಿಲ್ಲ, ಮನೆಯಲ್ಲಿ ಇದ್ದುಕೊಂಡೆ ಭಗವಂತನನ್ನು ಪಡೆಯಬಹುದು ಎಂಬುದನ್ನು ಕೇಳಿಯೆ ನನಗೆ ಶಾಂತಿ ಮತ್ತು ಆನಂದ ದೊರೆತುಬಿಟ್ಟಿದೆ.”
ಶ್ರೀರಾಮಕೃಷ್ಣರು: “ನೀವು ಏಕೆ ತ್ಯಾಗಮಾಡಬೇಕು? ಯುದ್ಧವನ್ನಂತು ಮಾಡ ಬೇಕಾಗಿಯೆ ಇರುವುದರಿಂದ ಕೋಟೆಯೊಳಗಿನಿಂದಲೆ ಯುದ್ಧ ಮಾಡುವುದು ಮೇಲು. ಇಂದ್ರಿಯಗಳೊಡನೆ ಯುದ್ಧ. ಹಸಿವು ತೃಷೆ ಇವುಗಳೆಲ್ಲರೊಡನೆಯೂ ಯುದ್ಧಮಾಡ ಬೇಕಾಗಿ ಇದೆ. ಈ ಯುದ್ಧವನ್ನು ಸಂಸಾರದಲ್ಲಿದ್ದು ಮಾಡುವುದೆ ಮೇಲು. ಜೊತೆಗೆ ಕಲಿಯುಗದಲ್ಲಿ ಪ್ರಾಣ ಅನ್ನದ ಮೇಲೆ ನಿಂತಿದೆ; ತಿನ್ನಲು ಏನೂ ದೊರೆಯದೆ ಹೋಗಬಹುದು. ಆಗ ದೇವರು ಮುಂತಾದುವೆಲ್ಲ ದೂರಸರಿಯಬೇಕಾಗುತ್ತದೆ. ಒಬ್ಬ ತನ್ನ ಹೆಂಡತಿಗೆ, ‘ನಾನು ಸಂಸಾರ ಬಿಟ್ಟು ಹೊರಟೆ’ ಎಂದು ಹೇಳಿದ. ಹೆಂಡತಿ ಸ್ವಲ್ಪ ಬುದ್ಧಿವಂತೆ. ಆಕೆ ಹೇಳಿದಳು: ‘ನೀವು ಸುಮ್ಮನೆ ಏಕೆ ಅಲ್ಲಿ ಇಲ್ಲಿ ಅಲೆಯಲು ಹೋಗಬೇಕು? ನೀವು ಹೊಟ್ಟೆ ಹೊರೆದುಕೊಳ್ಳಲು ಒಂದು ಹತ್ತು ಮನೆಗೆ ಭಿಕ್ಷೆಗಾಗಿ ಅಲೆಯಬೇಕಾದರೆ ಹೋಗಿ. ಆದರೆ ಹಾಗೆ ಅಲೆಯುವುದಕ್ಕಿಂತ ಈ ಒಂದು ಮನೆಯದೇ ಒಳ್ಳೆಯದು.’
“ನೀವು ಏಕೆ ತ್ಯಾಗಮಾಡಬೇಕು? ಮನೆಯಲ್ಲಿ ಅನುಕೂಲ ಜಾಸ್ತಿ. ಆಹಾರಕ್ಕಾಗಿ ಯೋಚಿಸಬೇಕಾಗಿಲ್ಲ, ಸ್ವಪತ್ನಿಯೊಡನೆ ಸಹವಾಸಮಾಡೋದು ದೋಷವಾದದ್ದೇನಲ್ಲ. ಶರೀರಕ್ಕೆ ಬೇಕಾದ ಅನುಕೂಲತೆಗಳೆಲ್ಲ ಕೈಯ ಹತ್ತಿರವೆ ಇರುತ್ತದೆ. ರೋಗಗ್ರಸ್ತನಾದರೆ ಸೇವೆ ಮಾಡಲು ಜನ ಬಳಿಯಲ್ಲಿ ಇರುತ್ತಾರೆ.
“ಜನಕ, ವ್ಯಾಸ, ವಸಿಷ್ಠ, ಜ್ಞಾನ ಪಡೆದು ಸಂಸಾರದಲ್ಲಿದ್ದರು, ಇವರು ಎರಡು ಕತ್ತಿಗಳನ್ನು ತಿರುಗಿಸುತ್ತಿದ್ದರು; ಒಂದು ಜ್ಞಾನದ್ದು, ಇನ್ನೊಂದು ಕರ್ಮದ್ದು.”
ಸಬ್-ಜಡ್ಜಿ: “ಮಹಾಶಯರೆ, ಜ್ಞಾನೋದಯವಾಗಿದೆ ಎಂಬುದನ್ನು ಅರಿಯುವು ದೆಂತು?”
ಶ್ರೀರಾಮಕೃಷ್ಣರು: “ಜ್ಞಾನೋದಯವಾದರೆ ಆತ ದೂರದಲ್ಲಿದ್ದಾನೆ ಎಂಬುದಾಗಿ ಅನಿಸೋದಿಲ್ಲ. ಆಗ ಅವನು ಅವನಾಗಿ ತೋರೋದಿಲ್ಲ. ಇವನಾಗಿಬಿಡುತ್ತಾನೆ. ಆಗ ಅವನನ್ನು ಹೃದಯ ಮಧ್ಯದಲ್ಲಿ ನೋಡಬಹುದು. ಆತ ಎಲ್ಲರ ಆಂತರ್ಯದಲ್ಲಿಯೂ ಇದ್ದಾನೆ ಅರಸಿದವರಿಗೆ ದೊರೆತುಬಿಡುತ್ತಾನೆ.”
ಸಬ್-ಜಡ್ಜಿ: “ನಾನು ಒಬ್ಬ ಪಾಪಿ. ನನ್ನ ಆಂತರ್ಯದಲ್ಲಿ ಆತ ಇದ್ದಾನೆ ಎಂದು ಹೇಗೆ ತಾನೆ ತಿಳಿಯಲಿ?”
ಶ್ರೀರಾಮಕೃಷ್ಣರು: “ಯಾವಾಗ ನೋಡಿದರೂ ನೀವು ಪಾಪ ಪಾಪ ಅಂತಲೆ ಇರುತ್ತೀರಿ! ಕ್ರೈಸ್ತರೂ ಹೀಗೆಯೆ ಹೇಳುತ್ತಾರೆ, ಅಲ್ಲವೆ? ಒಬ್ಬ ನನಗೆ ಒಂದು ಬೈಬಲ್ ತಂದುಕೊಟ್ಟ. ಒಂದು ಸ್ವಲ್ಪ ಓದಿಸಿ ಕೇಳಿದೆ. ಅದರಲ್ಲಿ ಕೇವಲ ಇದೊಂದೇ ಮಾತು – ಪಾಪ ಪಾಪ: ‘ನಾನು ಆತನ ಹೆಸರನ್ನು ಜಪಿಸಿದ್ದೇನೆ; ಹರನ, ಹರಿಯ ಅಥವಾ ರಾಮನ ಹೆಸರನ್ನು ಜಪಿಸಿದ್ದೇನೆ – ನನ್ನಲ್ಲಿ ಹೇಗೆ ಪಾಪ ಇರಬಲ್ಲದು!’ ಇಂಥ ವಿಶ್ವಾಸ ಬೇಕು.”
ಸಬ್-ಜಡ್ಜಿ: ‘ಮಹಾಶಯರೆ, ಅಂಥ ವಿಶ್ವಾಸವನ್ನು ಪಡೆಯುವುದು ಹೇಗೆ?”
ಶ್ರೀರಾಮಕೃಷ್ಣರು: “ಆತನಲ್ಲಿ ಅನುರಕ್ತನಾಗು. ನಿಮ್ಮ ಸಮಾಜದ ಒಂದು ಹಾಡು ಹೇಳುತ್ತದೆ:
ಅನುರಾಗಕಲ್ಲದೆಯೆ
ಒಲಿಯದಿಹ ಪ್ರಭು ನೀನು!
ಯಜ್ಞಯಾಗಗಳಿಂದ ಇನ್ನು ಫಲವೇನು?
ಯಾವುದರಿಂದ ಈ ವಿಧವಾದ ಅನುರಾಗ, ಈ ವಿಧವಾಗಿ ಭಗವಂತನಲ್ಲಿ ಪ್ರೇಮ ಉಂಟಾಗುವುದೊ ಅದಕ್ಕಾಗಿ ಏಕಾಂತದಲ್ಲಿದ್ದು ವ್ಯಾಕುಲನಾಗಿ ಆತನನ್ನು ಪ್ರಾರ್ಥಿಸು ಮತ್ತು ಅಳು. ಹೆಂಡತಿಗೆ ಕಾಯಿಲೆ ಆಗಿದೆ ಅಂತ, ದುಡ್ಡು ನಷ್ಟವಾಗಿದೆ ಅಂತ, ಏನೂ ಕೆಲಸ ಸಿಕ್ಕಲಿಲ್ಲವಲ್ಲ ಅಂತ ಜನ ಒಂದೊಂದು ಬಿಂದಿಗೆ ಕಣ್ಣೀರು ಸುರಿಸುತ್ತಾರೆ. ಭಗವಂತನಿಗಾಗಿ ಯಾರು ಅಳುತ್ತಾರೆ, ಹೇಳು ನೋಡೋಣ?”
ತ್ರೈಲೋಕ್ಯ: “ಮಹಾಶಯರೆ, ಜನರಿಗೆ ವಿರಾಮವೆಲ್ಲಿ? ಆಂಗ್ಲ ಧಣಿಗಳ ಸೇವೆ ಮಾಡಬೇಕಾಗಿದೆ.”
ಶ್ರೀರಾಮಕೃಷ್ಣರು: “ಒಳ್ಳೇದು. ಹಾಗಾದರೆ ಆತನಿಗೆ ವಕಾಲತ್ತು ವಹಿಸಿಬಿಡು. ಯಾರೆ ಆಗಲಿ ಒಳ್ಳೆಯವರ ಮೇಲೆ ತನ್ನ ಜವಾಬ್ದಾರಿಯನ್ನು ಹೊರಿಸಿದ್ದರೆ ಅವರು ಆತನಿಗೆ ಕೇಡುಮಾಡುವರೆ? ಹೃತ್ಪೂರ್ವಕವಾಗಿ ಭಾರವನ್ನೆಲ್ಲ ಭಗವಂತನ ಮೇಲೆ ಹಾಕಿ ನಿಶ್ಚಿಂತ ನಾಗಿ ಇದ್ದುಬಿಡು. ಆತ ನಿನ್ನನ್ನು ಯಾವ ಕೆಲಸವನ್ನು ಮಾಡುವಂತೆ ಪ್ರೇರೇಪಿಸುವನೋ ಅದನ್ನು ಮಾಡು. ಬೆಕ್ಕಿನ ಮರಿಗೆ ಲೆಕ್ಕಾಚಾರ ಬುದ್ಧಿ ಇಲ್ಲ; ಅದು ಸುಮ್ಮನೆ ‘ಮಿಯಾವ್, ಮಿಯಾವ್!’ ಅನ್ನುತ್ತದೆ. ತಾಯಿಬೆಕ್ಕು ಅದನ್ನು ತೆಗೆದುಕೊಂಡು ಹೋಗಿ ಅಡುಗೆಮನೆಯಲ್ಲಿ ಒಲೆ ಬೂದಿಯೊಳಗೆ ಇಟ್ಟರೆ, ಅಲ್ಲಿಯೆ ಸುಮ್ಮನೆ ಬಿದ್ದಿರುತ್ತದೆ. ತಾಯಿ ಬೇಕಾಗಿದ್ದರೆ ಮಾತ್ರ ಕೇವಲ, ‘ಮಿಯಾವ್, ಮಿಯಾವ್!’ ಅನ್ನುತ್ತದೆ. ತಾಯಿಬೆಕ್ಕು ಮತ್ತೆ ಅದನ್ನು ತೆಗೆದುಕೊಂಡುಹೋಗಿ ಮನೆ ಯಜಮಾನನ ಹಾಸಿಗೆ ಮೇಲೆ ಇಟ್ಟಾಗಲೂ ಆ ಮರಿ ಎಂದಿನಂತೆಯೇ ವರ್ತಿಸುತ್ತದೆ. ಕೇವಲ, ‘ಮಿಯಾವ್, ಮಿಯಾವ್!’ ಅನ್ನುತ್ತದೆ.”
ಸಬ್-ಜಡ್ಜಿ: “ನಾವು ಗೃಹಸ್ಥರು. ಎಲ್ಲಿಯವರೆಗೆ ಈ ಕೆಲಸಕಾರ್ಯಗಳನ್ನೆ ಮಾಡಿ ಕೊಂಡು ಹೋಗಬೇಕು?”
ಶ್ರೀರಾಮಕೃಷ್ಣರು: “ನಿಮಗೆ ಕೆಲಸಕಾರ್ಯಗಳೇನೋ ನಿಶ್ಚಯವಾಗಿ ಇವೆ, ಮಕ್ಕಳನ್ನು ಬೆಳೆಸೋದು, ಹೆಂಡತಿಗೆ ಹಿಟ್ಟುಬಟ್ಟೆ ಹಾಕೋದು, ಆಕೆಗೆ ಆಸ್ತಿ ಇಟ್ಟು ಹೋಗೋದು; ಇವನ್ನೆಲ್ಲ ಮಾಡಬೇಕಾಗಿದೆ. ಇವನ್ನೆಲ್ಲ ಮಾಡದೆ ಇದ್ದರೆ ನೀವು ನಿರ್ದಯಿಗಳು. ಶುಕದೇವಾದಿಗಳು ದಯಾವಂತರಾಗಿದ್ದರು. ಯಾರಲ್ಲಿ ದಯೆ ಇಲ್ಲವೊ ಆತ ಮನುಷ್ಯನೇ ಅಲ್ಲ.”
ಸಬ್-ಜಡ್ಜಿ: “ಮಕ್ಕಳನ್ನು ಎಷ್ಟುಕಾಲ ನೋಡಿಕೊಳ್ಳಬೇಕು?”
ಶ್ರೀರಾಮಕೃಷ್ಣರು: “ಪ್ರಾಪ್ತವಯಸ್ಸು ಬರುವವರೆಗೆ. ಮರಿ ದೊಡ್ಡದಾಗಿ ಬೆಳೆದು ತನ್ನ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳುವ ಶಕ್ತಿಯನ್ನು ಸಂಪಾದಿಸಿಕೊಂಡಾಗ ತಾಯಿ ಹಕ್ಕಿ ಅದನ್ನು ಕುಟುಕಿ ಓಡಿಸಿಬಿಡುತ್ತದೆ ಮತ್ತು ಅದು ತನ್ನ ಹತ್ತಿರ ಬರಲು ಬಿಡುವುದಿಲ್ಲ.” (ಎಲ್ಲರೂ ನಗುತ್ತಾರೆ.)
ಸಬ್-ಜಡ್ಜಿ: “ಹೆಂಡತಿಯ ಸಂಬಂಧವಾಗಿ ಗಂಡನ ಕರ್ತವ್ಯವೇನು?”
ಶ್ರೀರಾಮಕೃಷ್ಣರು: “ನೀನು ಬದುಕಿಕೊಂಡಿರುವವರೆಗೆ ನೀನು ಆಕೆಗೆ ಧರ್ಮೋಪದೇಶ ನೀಡಬೇಕು ಮತ್ತು ಹಿಟ್ಟು ಬಟ್ಟೆ ಹಾಕಬೇಕು. ಆಕೆ ಪತಿವ್ರತೆಯಾಗಿದ್ದರೆ ನೀನು ಸತ್ತನಂತರ ಆಕೆಯ ಜೀವನಾಂಶಕ್ಕೆ ಬೇಕಾಗಬಹುದಾದ ಅನುಕೂಲತೆಗಳನ್ನು ಮೊದಲೆ ಮಾಡಿ ಇರಿಸಬೇಕು.
“ಆದರೆ ಜ್ಞಾನೋನ್ಮಾದ ಉಂಟಾಗಿಬಿಟ್ಟಿತು ಅಂದರೆ ನಿನಗೆ ಯಾವ ಕರ್ತವ್ಯವೂ ಇಲ್ಲ. ಆಗ ನಿನಗೆ ಮಾರನೆ ದಿನದ ಯೋಚನೆ ಬಾರದೆ ಇದ್ದರೂ ಭಗವಂತ ಅದಕ್ಕಾಗಿ ಯೋಚಿಸುತ್ತಾನೆ. ನಿನಗೆ ಜ್ಞಾನೋನ್ಮಾದ ಬಂದುಬಿಟ್ಟರೆ ನಿನ್ನ ಸಂಸಾರದವರ ಹಿತಚಿಂತನೆ ಯನ್ನು ಆತ ಮಾಡುತ್ತಾನೆ. ಜಮೀನುದಾರ ಅಪ್ರಾಪ್ತವಯಸ್ಕ ಮಗನನ್ನು ಬಿಟ್ಟು ಸತ್ತರೆ, ಕೋರ್ಟಿನಿಂದ ನೇಮಿಸಲ್ಪಟ್ಟ ಅಧಿಕಾರಿ ಆತನ ರಕ್ಷಕನಾಗುತ್ತಾನೆ. ಇವೆಲ್ಲ ಕಾನೂನಿಗೆ ಸಂಬಂಧಪಟ್ಟ ವಿಷಯಗಳು. ನಿನಗೆ ಗೊತ್ತೇ ಇವೆ.”
ಸಬ್-ಜಡ್ಜಿ: “ಹೌದು, ನಿಜ.”
ವಿಜಯ ಗೋಸ್ವಾಮಿ: “ಆಹಾ! ಆಹಾ! ಎಂಥ ಅಮೂಲ್ಯ ಮಾತುಗಳು! ಯಾರು ಅನನ್ಯಮನಸ್ಕನಾಗಿ ಭಗವಂತನ ಚಿಂತನೆ ಮಾಡುತ್ತಾನೊ, ಯಾರು ಆತನ ಪ್ರೇಮದಿಂದ ಉನ್ಮತ್ತನಾಗಿದ್ದಾನೊ, ಆತನ ಹೊರೆಯನ್ನು ಭಗವಂತ ಸ್ವಯಂ ತಾನೇ ಹೊತ್ತುಕೊಳ್ಳುತ್ತಾನೆ. ಅಪ್ರಾಪ್ತವಯಸ್ಕ ಬಾಲಕನಿಗೆ ತಾನಾಗಿಯೆ ಬಂದು ಒದಗುತ್ತಾನೆ. ಆಹಾ! ಎಂದು ಆ ಅವಸ್ಥೆ ನನಗೆ ಬರುತ್ತದೆ? ಅದು ಯಾರಿಗೆ ದೊರೆತಿದೆಯೊ ಅವರು ಎಂಥ ಭಾಗ್ಯಶಾಲಿಗಳು!”
ತ್ರೈಲೋಕ್ಯ: “ಮಹಾಶಯರೆ, ಸಂಸಾರದಲ್ಲಿದ್ದರೆ ಯಥಾರ್ಥಜ್ಞಾನ ದೊರಕುವುದೆ? ಭಗವಂತನ ಸಾಕ್ಷಾತ್ಕಾರ ದೊರಕುವುದೆ?”
ಶ್ರೀರಾಮಕೃಷ್ಣರು ನಗುತ್ತ ನಗುತ್ತ: “ನಿನಗೇಕೆ ಚಿಂತನೆ? ನೀನು ಜೋನಿಬೆಲ್ಲ ಗಟ್ಟಿ ಎರಡನ್ನೂ ತಿನ್ನುತ್ತಿದ್ದೀಯೆ. (ಎಲ್ಲರೂ ನಗುತ್ತಿದ್ದಾರೆ.) ಭಗವಂತನಲ್ಲಿ ಮನಸ್ಸನ್ನಿಟ್ಟು ಸಂಸಾರದಲ್ಲಿ ಇದ್ದೀಯೆ. ಸಂಸಾರದಲ್ಲಿದ್ದರೆ ಏಕೆ ಆತನ ಸಾಕ್ಷಾತ್ಕಾರ ದೊರಕದು? ನಿಶ್ಚಯವಾಗಿ ದೊರಕುತ್ತದೆ.”
ತ್ರೈಲೋಕ್ಯ: “ಸಂಸಾರದಲ್ಲಿಯೂ ಜ್ಞಾನ ದೊರೆತಿದೆ ಎಂಬುದಕ್ಕೆ ಚಿಹ್ನೆಗಳೇನು?”
ಶ್ರೀರಾಮಕೃಷ್ಣರು: “ಪ್ರೇಮಾಶ್ರು ಮತ್ತು ಪುಲಕ, ಆತನ ದಿವ್ಯನಾಮವನ್ನು ಕೇಳುವುದೇ ತಡ ಶರೀರದಲ್ಲಿ ರೋಮಾಂಚನ ಉಂಟಾಗುತ್ತದೆ; ಕಣ್ಣಿಂದ ಪ್ರೇಮಾಶ್ರು ಸುರಿಯಲಾರಂಭಿಸುತ್ತದೆ.”
“ಎಲ್ಲಿಯವರೆಗೆ ವಿಷಯಾಸಕ್ತಿ ಇರುವುದೊ, ಕಾಮಕಾಂಚನದ ಮೇಲೆ ಪ್ರೀತಿ ಇರುವುದೊ, ಅಲ್ಲಿಯವರೆಗೆ ದೇಹಬುದ್ಧಿ ಹೋಗದು. ವಿಷಯಾಸಕ್ತಿ ಎಷ್ಟೆಷ್ಟು ಮಟ್ಟಿಗೆ ಕಡಿಮೆಯಾಗುವುದೊ ಅಷ್ಟಷ್ಟು ಮಟ್ಟಿಗೆ ಆತ್ಮಜ್ಞಾನದ ಕಡೆ ಮುಂದುವರಿಯಬಹುದು; ದೇಹಬುದ್ಧಿ ಕೂಡ ಕಡಿಮೆಯಾಗುತ್ತದೆ. ವಿಷಯಾಸಕ್ತಿ ಬೇರುಸಹಿತ ಹೊರಟುಹೋದರೆ ಆತ್ಮಜ್ಞಾನ ದೊರಕುತ್ತದೆ. ಆಗ, ಆತ್ಮ ಬೇರೆ ದೇಹ ಬೇರೆ ಎಂಬ ಬೋಧೆಯಾಗುತ್ತದೆ. ತೆಂಗಿನಕಾಯಿಯ ನೀರು ಇಂಗದ ಮುನ್ನ ಅದನ್ನು ಮಚ್ಚಿನಿಂದ ಕತ್ತರಿಸಿ ತಿರುಳನ್ನು ಪ್ರತ್ಯೇಕ ಕರಟವನ್ನು ಪ್ರತ್ಯೇಕ ಮಾಡಬೇಕಾದರೆ ಕಷ್ಟಪಡಬೇಕಾಗುತ್ತದೆ. ಆದರೆ ಒಳಗೆ ನೀರು ಇಂಗಿಹೋಗಿಬಿಟ್ಟಿತು ಎಂದರೆ ತಿರುಳು ಒಳಗೆ ಸುಮ್ಮನೆ ಗಡಗಡ ಎಂದು ಶಬ್ದ ಮಾಡುತ್ತದೆ. ಅದು ಕರಟದಿಂದ ಬೇರೆಯಾಗಿದೆ. ಇದನ್ನು ತೆಂಗಿನ ಗಿಟಕು ಅನ್ನುತ್ತಾರೆ.
“ಭಗವಂತನನ್ನು ಪಡೆದರೆ ವ್ಯಕ್ತಿಯಲ್ಲಿ ಈ ಚಿಹ್ನೆ ಕಂಡುಬರುತ್ತದೆ, ಆತ ತೆಂಗಿನ ಗಿಟಕಿನೋಪಾದಿಯಲ್ಲಿ ಆಗಿಬಿಡುತ್ತಾನೆ.- ದೇಹಬುದ್ಧಿ ಹೊರಟುಹೋಗುತ್ತದೆ. ದೇಹದ ಸುಖದುಃಖವು ತನ್ನ ಸುಖದುಃಖ ಎಂಬ ಭಾವನೆ ಆತನಿಗೆ ಉಂಟಾಗದು. ಆ ವ್ಯಕ್ತಿ ದೇಹದ ಸುಖವನ್ನು ಇಚ್ಛಿಸುವುದಿಲ್ಲ. ಜೀವನ್ಮುಕ್ತನಾಗಿ ಸುತ್ತಾಡುತ್ತಾನೆ. ‘ಕಾಳಿಯ ಭಕ್ತ, ನಿತ್ಯಾನಂದಮಯ ಜೀವನ್ಮುಕ್ತ.’
“ಭಗವನ್ನಾಮ ಶ್ರವಣಮಾತ್ರದಿಂದಲೆ ಪ್ರೇಮಾಶ್ರು ಮತ್ತು ಪುಲಕ ಉಂಟಾಗು ವುದು ಕಂಡುಬಂದರೆ ಆಗ ಅರಿಯಬೇಕು, ಕಾಮಕಾಂಚನ ಆಸಕ್ತಿ ಹೊರಟುಹೋಗಿದೆ, ಭಗವಂತನ ಸಾಕ್ಷಾತ್ಕಾರ ದೊರೆತುಬಿಟ್ಟಿದೆ ಎಂದು. ಬೆಂಕಿಕಡ್ಡಿ ಒಣಗಿದ್ದರೆ ಒಂದನ್ನು ಗೀಚಿದರೇನೆ ಅದು ಭಗ್ ಎಂದು ಹತ್ತಿಕೊಂಡುಬಿಡುತ್ತದೆ. ಅದೇನಾದರು ನೆನೆದಿದ್ದರೆ, ಒಂದೈವತ್ತು ಕಡ್ಡಿ ಗೀಚಿದರೂ ಏನು ಆಗದು. ಬರಿದೆ ಬೆಂಕಿಕಡ್ಡಿಗಳ ನಷ್ಟ. ವಿಷಯ ರಸದಲ್ಲಿ ನೆನೆದಿದ್ದರೆ, ಕಾಮಕಾಂಚನ ರಸದಲ್ಲಿ ಮನಸ್ಸು ನೆನೆದಿದ್ದರೆ, ಭಗವದುದ್ದೀಪನೆ ಉಂಟಾಗದು. ಕಂಡ ಆಟವನ್ನೆಲ್ಲ ಆಡು, ಅದೆಲ್ಲ ಬರಿದೆ ವಿಫಲ. ವಿಷಯರಸ ಒಣಗಿ ಹೋದರೆ ಒಡನೆಯೆ ಉದ್ದೀಪನೆ ಉಂಟಾಗಿಬಿಡುತ್ತದೆ.”
ತ್ರೈಲೋಕ್ಯ: “ವಿಷಯರಸವನ್ನು ಒಣಗಿಸಲು ಸದ್ಯಕ್ಕೆ ಉಪಾಯವೇನು?”
ಶ್ರೀರಾಮಕೃಷ್ಣರು: “ವ್ಯಾಕುಲನಾಗಿ ಭಗವತಿಯನ್ನು ಕರೆ. ಆಕೆಯ ದರ್ಶನ ದೊರೆತರೆ ವಿಷಯರಸ ಒಣಗಿಹೋಗಿಬಿಡುತ್ತದೆ; ಕಾಮಕಾಂಚನ ಆಸಕ್ತಿ ಎಲ್ಲಾ ಬಿಟ್ಟು ಹೋಗುತ್ತದೆ. ಆಕೆ ನಿನ್ನ ಸ್ವಂತ ತಾಯಿ ಎಂಬ ಬೋಧೆ ಉಂಟಾದರೆ ಈ ಕ್ಷಣವೆ ಹಾಗಾಗಿಬಿಡುತ್ತದೆ. ಆಕೆ ನಿನ್ನ ದೇವಮಾತೆ (ಎಟಛ್ಞಟಠಿಜ್ಛ್ಟಿ) ಅಲ್ಲ. ನಿನ್ನ ಸ್ವಂತ ಮಾತೆಯೆ. ವ್ಯಾಕುಲನಾಗಿ ಹಟಹಿಡಿದು ಆಕೆಯನ್ನು ಕೇಳು. ಮಗು ಗಾಳೀಪಟ ಕೊಂಡುಕೊಳ್ಳ ಲೋಸುಗ ತಾಯ ಸೆರಗನ್ನು ಹಿಡಿದು ದುಡ್ಡು ಕೇಳುತ್ತದೆ – ತಾಯಿ ಬಹುಶಃ ಆಗ ಬೇರೆ ಹೆಂಗಸರೊಡನೆ ಹರಟೆ ಹೊಡೆಯುತ್ತಿರಬೇಕು. ಮೊದಲು ಆಕೆಗೆ ಕೊಡಲು ಇಚ್ಛೆಯೇ ಇಲ್ಲ. ಹೇಳುತ್ತಾಳೆ, ‘ಕೊಡೋದಿಲ್ಲ. ನಿಮ್ಮ ತಂದೆ ಬೇಡ ಅಂತ ಹೇಳಿ ಹೋಗಿದ್ದಾರೆ. ಅವರು ಬಂದರೆ ನೋಡು ಹೇಳಿಬಿಡುತ್ತೇನೆ. ಒಡನೆಯೆ ಹೋಗಿ ಗಾಳೀಪಟ ಕೊಂಡುಕೊಂಡು ಕೈಯೊ ಕಾಲೊ ಏನೊ ಒಂದು ಮಾಡಿಕೊಂಡು ಬಂದುಬಿಡುತ್ತೀಯೆ’ ಎಂದು. ಆಗ ಮಗು ಅಳಲು ಆರಂಭಿಸುತ್ತದೆ. ಏನು ಮಾಡಿದರೂ ಬಿಡಲೊಲ್ಲದು. ತಾಯಿ ತನ್ನ ಗೆಳತಿಯರಿಗೆ ಹೇಳುತ್ತಾಳೆ: ‘ದಯವಿಟ್ಟು ಒಂದು ಸ್ವಲ್ಪ ಕುಳಿತುಕೊಂಡಿರಿ. ಈ ಮಗುವನ್ನು ಸ್ವಲ್ಪ ಸಮಾಧಾನಪಡಿಸಿ ಬರುತ್ತೇನೆ’ ಎಂದು. ಬಳಿಕ ಬೀಗದ ಕೈ ತೆಗೆದುಕೊಂಡು ಹೋಗಿ ‘ಕಟಕ್’, ‘ಕಟಕ್’ ಎಂದು ಶಬ್ದಮಾಡಿ ಪೆಟ್ಟಿಗೆಯನ್ನು ತೆರೆದು ಮೂರು ಕಾಸನ್ನು ಬಿಸಾಕುತ್ತಾಳೆ.
“ನೀವೂ ಕೂಡ ತಾಯಿಯೊಡನೆ ಚಂಡಿಹಿಡಿಯಬೇಕು. ಆಗ ಆಕೆ ವಿಧಿಯಿಲ್ಲದೆ ಪ್ರತ್ಯಕ್ಷಳಾಗುತ್ತಾಳೆ. ನಾನು ಸಿಖ್ಖರಿಗೂ ಇದೇ ವಿಷಯವನ್ನು ಹೇಳಿದೆ. ಅವರು ದಕ್ಷಿಣೇಶ್ವರದ ಕಾಳೀ ದೇವಾಲಯಕ್ಕೆ ಬಂದಿದ್ದರು. ಕಾಳೀದೇವಾಲಯದ ಎದುರಿಗೆ ಕುಳಿತು ಈ ಮಾತುಕತೆಗಳೆಲ್ಲ ನಡೆದುವು. ಅವರು ‘ಭಗವಂತ ದಯಾಮಯ’ ಅಂತ ಹೇಳಿದರು. ನಾನು ‘ಹೇಗೆ ದಯಾಮಯ?’ ಅಂತ ಪ್ರಶ್ನಿಸಿದೆ. ‘ಏಕೆ ಮಹಾರಾಜ್, ಆತ ಸರ್ವದಾ ನಮ್ಮನ್ನು ನೋಡಿಕೊಳ್ಳುತ್ತಾನೆ. ನಮಗೆ ಬೇಕಾದ ಧರ್ಮ ಅರ್ಥ ಎಲ್ಲವನ್ನೂ ಕೊಡುತ್ತಾನೆ, ಬೇಕಾದ ಆಹಾರಸಾಮಗ್ರಿಗಳನ್ನು ಒದಗಿಸಿ ಕೊಡುತ್ತಾನೆ’ ಎಂದು ಅವರು ಹೇಳಿದರು. ಆಗ ನಾನು ‘ಯಾರಿಗಾದರೂ ಮಕ್ಕಳು ಆದರೆ, ಅವರ ಯೋಗಕ್ಷೇಮವನ್ನು, ಅವರ ಪೋಷಣೆಯ ಭಾರವನ್ನು ತಂದೆ ಹೊತ್ತುಕೊಳ್ಳುತ್ತಾನೊ ಅಥವಾ ಪಕ್ಕದ ಅಗ್ರಹಾರದ ಬ್ರಾಹ್ಮಣ ಹೊತ್ತುಕೊಳ್ಳುತ್ತಾನೊ?’ ಅಂತ ಕೇಳಿದೆ.”
ಸಬ್-ಜಡ್ಜಿ: “ಮಹಾಶಯರೆ, ಹಾಗಾದರೆ ಆತ ದಯಾಮಯನಲ್ಲವೆ?”
ಶ್ರೀರಾಮಕೃಷ್ಣರು: “ಏಕಲ್ಲ? ಹಾಗೇನೊ ಒಂದು ಮಾತು ಆಡಿದೆ. ಆತ ನಿಜ ವಾಗಿಯೂ ಆತ್ಮೀಯನೆ. ನಾವು ಆತನನ್ನು ಬಲಾತ್ಕರಿಸಿ ಕೇಳಬಹುದು. ಸ್ವಂತದವರನ್ನು ಹೀಗೂ ಕೇಳಿಬಿಡಬಹುದು, ‘ಏನೊ ಮೂರ್ಖ, ಕೊಡುತ್ತೀಯೊ ಇಲ್ಲವೋ?’ ಅಂತ.”
(ಸಬ್-ಜಡ್ಜಿಗೆ) “ಒಳ್ಳೆಯದು; ಅಭಿಮಾನ, ಅಹಂಕಾರ ಜ್ಞಾನಜನ್ಯವೊ – ಅಥವಾ ಅಜ್ಞಾನಜನ್ಯವೊ? ಅಹಂಕಾರ ತಮೋಗುಣಾತ್ಮಕವಾದ್ದು; ಅಜ್ಞಾನದಿಂದ ಉತ್ಪನ್ನವಾಗಿದೆ. ಈ ಅಹಂಕಾರ ಅಡ್ಡಲಾಗಿರುವುದರಿಂದ ಭಗವಂತನನ್ನು ನೋಡಲಾಗುವುದಿಲ್ಲ. ‘ನಾನು ಎಂಬುದು ಸತ್ತರೆ ತಾಪತ್ರಯಗಳೆಲ್ಲ ಕೊನೆಗಾಣುವುವು.’ ಅಹಂಕಾರವೃದ್ಧಿ ನಿಷ್ಪ್ರಯೋಜಕ ವಾದುದು. ಈ ಶರೀರವೆ ಆಗಲಿ, ಈ ಐಶ್ವರ್ಯವೆ ಆಗಲಿ ಯಾವುದೂ ಸ್ಥಿರವಲ್ಲ. ಒಮ್ಮೆ ಒಬ್ಬ ಕುಡುಕ ದುರ್ಗಾಪ್ರತಿಮೆಯನ್ನು ನೋಡುತ್ತಿದ್ದ. ಪ್ರತಿಮೆಯ ಶೃಂಗಾರ ಅಲಂಕಾರಗಳನ್ನು ನೋಡಿ ಹೇಳಿದ, ‘ತಾಯೆ, ನೀನು ಎಷ್ಟೇ ಶೃಂಗಾರ ಅಲಂಕಾರಗಳನ್ನು ಮಾಡಿಕೊಂಡರೂ ಎರಡು ಮೂರು ದಿವಸಗಳಾದ ಮೇಲೆ ನಿನ್ನನ್ನು ಎತ್ತಿಕೊಂಡು ಹೋಗಿ ಗಂಗೆಯಲ್ಲಿ ಬಿಸಾಡುತ್ತಾರೆ’ ಎಂದು. (ಎಲ್ಲರೂ ನಗುತ್ತಾರೆ.)
“ಅದಕ್ಕಾಗಿಯೆ ನಾನು ನಿಮ್ಮೆಲ್ಲರಿಗೂ ಹೇಳುತ್ತಿರೋದು, ‘ನೀವು ಜಡ್ಜಿಗಳಾಗಿರಿ ಅಥವಾ ಬೇರೆ ಏನಾದರೂ ಆಗಿರಿ, ಎಲ್ಲಾ ಎರಡು ದಿವಸದ ಬಾಳುವೆ’ ಎಂದು. ಆದ್ದರಿಂದ ಅಭಿಮಾನ ಮತ್ತು ಅಹಂಕಾರವನ್ನು ಬಿಟ್ಟುಬಿಡಬೇಕು.
“ಸತ್ತ್ವ ರಜಸ್ಸು ತಮಸ್ಸು ಗುಣಗಳ ಸ್ವಭಾವ ಭಿನ್ನಭಿನ್ನವಾದುದು. ಅಹಂಕಾರ, ನಿದ್ರೆ, ಅತಿಭೋಜನ, ಕಾಮ, ಕ್ರೋಧ ಇವೆಲ್ಲ ತಮೋಗುಣಿಯ ಲಕ್ಷಣಗಳು. ರಜೋಗುಣಿಗಳು ಹೆಚ್ಚು ಕೆಲಸಕಾರ್ಯಗಳನ್ನು ಗಂಟುಹಾಕಿಕೊಳ್ಳುತ್ತಾರೆ; ಬಟ್ಟೆಬರೆ ಠಾಕು ಠೀಕು, ಮನೆ ಪರಿಷ್ಕಾರ ಪರಿಚ್ಛಿನ್ನ, ಬೈಠಕ್ಖಾನೆಯಲ್ಲಿ ರಾಣಿ ಮೊದಲಾದವರ ಪಟ; ಪೂಜೆ ಪುನಸ್ಕಾರಗಳಲ್ಲಿ ತೊಡಗಿರುವಾಗ ನಾರುಮಡಿಯನ್ನು ಉಡುತ್ತಾರೆ; ಕೊರಳಿಗೆ ಮಧ್ಯೆಮಧ್ಯೆ ಚಿನ್ನದ ರುದ್ರಾಕ್ಷಿ ಹಾಕಿರುವ ರುದ್ರಾಕ್ಷಿಸರ ಹಾಕಿರುತ್ತಾರೆ; ಯಾರಾದರೂ ಅವರ ದೇವಾಲಯ ನೋಡಲು ಬಂದರೆ ತಾವೆ ಸ್ವತಃ ಅವರನ್ನು ಜೊತೆಯಲ್ಲಿ ಕರೆದು ಕೊಂಡು ಹೋಗಿ ತೋರಿಸುತ್ತಾರೆ ಮತ್ತು ಹೇಳುತ್ತಾರೆ, ‘ಈ ಕಡೆಗೆ ಬನ್ನಿ, ನೋಡಬೇಕಾದ್ದು ಇನ್ನೂ ಇದೆ – ಬಿಳಿಯ ಅಮೃತಶಿಲೆ ಹಾಸಿದ ಅಂಗಳ ಮತ್ತು ಬಹಳ ಚೆನ್ನಾಗಿ ಕೆತ್ತನೆ ಕೆಲಸ ಮಾಡಿರುವ ಪ್ರಾರ್ಥನಾಲಯ ಇವೆಲ್ಲ ಇವೆ’. ಅವರು ಎಲ್ಲರಿಗೂ ಗೊತ್ತಾಗುವಂತೆ ದಾನಮಾಡುತ್ತಾರೆ. ಸತ್ವಗುಣಿ ಜನರು ಬಹಳ ನಿಷ್ಠಾವಂತರು ಮತ್ತು ಶಾಂತಸ್ವಭಾವಿಗಳು; ಅವರಿಗೆ ದೊರೆತುದೆ ಉಡಿಗೆ ತೊಡಿಗೆ; ಸಂಪಾದನೆ ಹೊಟ್ಟೆ ತುಂಬಿಸಿಕೊಳ್ಳಲು ಮಾತ್ರ; ಹೊಗಳು ಭಟ್ಟರ ಕೆಲಸ ಮಾಡಿ ಎಂದಿಗೂ ದುಡ್ಡು ಸಂಪಾದಿಸರು. ಮನೆಗೆ ಸುಣ್ಣ ಮಣ್ಣು ಮಾಡಿರೋದಿಲ್ಲ; ಮಕ್ಕಳ ಉಡಿಗೆ ತೊಡಿಗೆಗಳ ವಿಷಯವಾಗಿ ಅಷ್ಟೊಂದು ತಲೆಗೆ ಹಚ್ಚಿಕೊಳ್ಳೋದಿಲ್ಲ; ಭಗವಚ್ಚಿಂತನೆ ದಾನ ಧ್ಯಾನ ಇವನ್ನೆಲ್ಲ ಗೋಪ್ಯವಾಗಿ-ಯಾರಿಗೂ ಗೊತ್ತೇ ಆಗದ ಹಾಗೆ ಮಾಡುತ್ತಾರೆ. ಸೊಳ್ಳೆಪರದೆಯೊಳಗೆ ಕುಳಿತು ಧ್ಯಾನ ಮಾಡುತ್ತಾರೆ. ಜನ ಭಾವಿಸುತ್ತಾರೆ, ‘ಇವರಿಗೆ ರಾತ್ರಿ ನಿದ್ರೆ ಬರಲಿಲ್ಲ ಅಂತ ಕಾಣುತ್ತೆ. ಅದಕ್ಕಾಗಿ ಹೊತ್ತು ಹುಟ್ಟಿದರೂ ನಿದ್ರೆ ಮಾಡುತ್ತಿದ್ದಾರೆ’ ಎಂದು. ಸತ್ತ್ವಗುಣ ಮೆಟ್ಟಿಲಸಾಲಿನ ಕೊನೆಯ ಹಂತ. ಮುಂದಿನದೇ ಚಾವಣಿ. ಸತ್ತ್ವಗುಣ ಉಂಟಾಯಿತು ಎಂದರೆ ಭಗವಂತನ ಸಾಕ್ಷಾತ್ಕಾರಕ್ಕೆ ಇನ್ನು ಹೆಚ್ಚುಕಾಲ ವಿಳಂಬವಾಗದು. ಒಂದು ಕಿಂಚಿತ್ ಮುಂದುವರಿದರೇ ಆತ ದೊರೆತುಬಿಡುತ್ತಾನೆ. (ಸಬ್-ಜಡ್ಜಿಗೆ) ನೀನು ತಾನೆ ಹೇಳಿದವನು ಜನರೆಲ್ಲ ಒಂದೇ ಸರಿಸಮ ಅಂತ; ಈಗ ನೋಡು ಎಷ್ಟೊಂದು ವಿಧದ ಭಿನ್ನ ಭಿನ್ನ ಪ್ರಕೃತಿಗಳ ಜನರಿದ್ದಾರೆ ಎಂಬುದನ್ನು.
“ಇನ್ನೂ ಎಷ್ಟೋ ಅಂತಸ್ತಿನವರಿದ್ದಾರೆ; – ನಿತ್ಯಜೀವ, ಮುಕ್ತಜೀವ, ಮುಮುಕ್ಷು ಜೀವ, ಬದ್ಧಜೀವ; -ವಿವಿಧ ತರದ ಮನುಷ್ಯರು. ನಾರದ ಮತ್ತು ಶುಕದೇವ ನಿತ್ಯಜೀವರು; ಯಾವ ರೀತಿ ಜಹಜು ತಾನು ಸಮುದ್ರದ ಆಚೆ ದಡವನ್ನು ಸೇರುವುದಲ್ಲದೆ, ದೊಡ್ಡ ದೊಡ್ಡ ಜೀವಜಂತುಗಳನ್ನು, ಕೊನೆಗೆ ಆನೆಯನ್ನೂ ಕೂಡ ಆಚೆದಡಕ್ಕೆ ಸಾಗಿಸಿ ಬಿಡುತ್ತದೆಯೊ, ಹಾಗೆ ಇವರೂ ಕೂಡ ತಾವು ಮುಕ್ತರಾಗುವುದೇ ಅಲ್ಲದೆ ಪರರೂ ಮುಕ್ತರಾಗಲು ನೆರವಾಗುತ್ತಾರೆ. ಮತ್ತು ಇವರನ್ನು ಒಂದು ಎಸ್ಟೇಟಿನ ಮ್ಯಾನೇಜರಿಗೆ ಹೋಲಿಸಬಹುದು. ಆತ ಒಂದು ತಾಲ್ಲೋಕಿನಲ್ಲಿ ಸುವ್ಯವಸ್ಥೆ ಮಾಡಿದ ನಂತರ ಮತ್ತೆ ಇನ್ನೊಂದು ತಾಲ್ಲೋಕಿಗೆ ಅದೇ ಕಾರ್ಯಕ್ಕಾಗಿ ಹೋಗುತ್ತಾನೆ. ಬಳಿಕ ಮುಮುಕ್ಷು ಜೀವಿಗಳಿದ್ದಾರೆ. ಇವರು ಸಂಸಾರದ ಬಲೆಯಿಂದ ತಪ್ಪಿಸಿಕೊಳ್ಳಲು ಅತ್ಯಂತ ವ್ಯಾಕುಲ ಹೃದಯದಿಂದ ಬಹಳವಾಗಿ ಪ್ರಯತ್ನ ಮಾಡುತ್ತಾರೆ. ಇವರಲ್ಲಿ ಒಬ್ಬಿಬ್ಬರು ಮಾತ್ರ ಬಲೆಯಿಂದ ತಪ್ಪಿಸಿಕೊಂಡುಬಿಡಬಹುದು. ಇವರೇ ಮುಕ್ತಜೀವರು. ನಿತ್ಯಜೀವರನ್ನು ಬಹಳ ಬುದ್ಧಿಯುಳ್ಳ ಮೀನಿಗೆ ಹೋಲಿಸಬಹುದು; ಅವರು ಎಂದಿಗೂ ಬಲೆಗೆ ಬೀಳರು.
“ಆದರೆ ಬದ್ಧಜೀವಿಗಳು – ಸಂಸಾರಜೀವಿಗಳು – ಇವರಿಗೆ ಪ್ರಜ್ಞೆ ಎಂಬುದೆ ಇಲ್ಲ. ಇವರು ಬಲೆಗೆ ಸಿಕ್ಕಿಕೊಂಡುಬಿಟ್ಟಿದ್ದಾರೆ. ಸಿಕ್ಕಿದರೂ ತಾವು ಬಲೆಗೆ ಸಿಕ್ಕಿಕೊಂಡು ಬಿಟ್ಟಿದ್ದೇವಲ್ಲ ಎಂಬ ಅರಿವೇ ಇಲ್ಲ ಇವರಿಗೆ. ಇವರ ಎದುರಿಗೇ ಹರಿಕಥಾಶ್ರವಣ ವಾಗುತ್ತಿದ್ದರೆ, ಇವರು ಆ ಸ್ಥಳವನ್ನು ಬಿಟ್ಟು ಬೇರೆ ಕಡೆ ಹೊರಟುಹೋಗುತ್ತಾರೆ. ಇವರು ಹೇಳುತ್ತಾರೆ, ‘ಹರಿನಾಮವನ್ನು ಸಾಯುವಾಗ ಮಾಡಿದರಾಯಿತು, ಈಗಲೇ ಏಕೆ?’ ಎಂದು. ಇವರು ಮೃತ್ಯುಶಯ್ಯೆಯಲ್ಲಿ ಮಲಗಿರುವಾಗ ಹೆಂಡತಿಗೊ ಅಥವಾ ಮಕ್ಕಳಿಗೊ ಹೇಳುತ್ತಾರೆ, ‘ದೀಪದ ಕಂಬಕ್ಕೆ ಅಷ್ಟೊಂದು ಬತ್ತಿಗಳನ್ನೇಕೆ ಹಾಕಿದ್ದೀರಿ? ಒಂದು ಬತ್ತಿಯೇ ಸಾಕು. ಇಲ್ಲದಿದ್ದರೆ ಎಣ್ಣೆ ಹೆಚ್ಚಾಗಿ ಖರ್ಚಾಗಿ ಬಿಡುತ್ತದೆ’ ಎಂದು. ಮತ್ತೆ ಅದೇ ಸಮಯದಲ್ಲಿ ಹೆಂಡತಿ ಮಕ್ಕಳು ಇವರನ್ನು ನೆನೆಸಿಕೊಂಡು ಗೊಳೋ ಅಂತ ಅಳುತ್ತಾರೆ; ‘ಅಯ್ಯೋ! ನಾನು ಸತ್ತರೆ ಇವರ ಗತಿ ಏನು?’ ಎಂದು ಮತ್ತೆ ಹೇಳುತ್ತಾರೆ.
“ಬದ್ಧಜೀವರು ಯಾವ ಕಾರ್ಯದ ದೆಸೆಯಿಂದ ಅಷ್ಟೊಂದು ದುಃಖಗಳಿಗೆ ಈಡಾಗು ವರೊ, ಮತ್ತೆ ಅದೇ ಕಾರ್ಯದಲ್ಲಿ ತೊಡಗುವರು. ಇವರ ವ್ಯವಹಾರ ಒಂಟೆಯ ಹಾಗೆ. ಒಂಟೆ ಮುಳ್ಳುಗಿಡ ತಿನ್ನಲು ಹೋಗಿ ಅದರ ಬಾಯಿಂದ ಪ್ರವಾಹದೋಪಾದಿಯಲ್ಲಿ ರಕ್ತ ಹರಿಯುತ್ತಿದ್ದರೂ ಅದುಮಾತ್ರ ಆ ಮುಳ್ಳುಗಿಡ ತಿನ್ನುವುದನ್ನು ಬಿಡದು. ಒಂದು ಕಡೆ ನೋಡಿದರೆ ಮಕ್ಕಳು ಸತ್ತು ವಿಪರೀತ ಶೋಕಾಕ್ರಾಂತರಾಗಿರುತ್ತಾರೆ, ಆದರೂ ವರ್ಷ ಕ್ಕೊಮ್ಮೆ ಮಕ್ಕಳನ್ನು ಹಡೆಯುತ್ತಲೇ ಇರುತ್ತಾರೆ. ಮಗಳ ಮದುವೆಗಾಗಿ ಇದ್ದಬದ್ದ ಆಸ್ತಿ ಯನ್ನೆಲ್ಲ ಕಳೆದುಕೊಂಡರೂ ಪ್ರತಿವರ್ಷವೂ ಒಂದೊಂದು ಹೆಣ್ಣುಮಗುವನ್ನು ಹೆರುತ್ತಾರೆ. ಆಗ ಹೇಳುತ್ತಾರೆ, ‘ನಾವೇನು ಮಾಡೋಣ, ಇವೆಲ್ಲ ನಾವು ತಂದ ಅದೃಷ್ಟ’. ಇವರು ತೀರ್ಥಯಾತ್ರೆಗೆ ಹೋದರೆ, ಇವರಿಗೆ ಭಗವಚ್ಚಿಂತನೆ ಮಾಡಲು ಸಮಯವೆ ದೊರಕದು- ಹೆಂಡತಿಯ ಗಂಟುಮೂಟೆ ಹೊತ್ತೇ ಪ್ರಾಣ ಬಿಡಬೇಕಾಗುತ್ತದೆ; ದೇವಾಲಯಕ್ಕೆ ಹೋದರೆ ಮಕ್ಕಳಿಗೆ ತೀರ್ಥ ಕುಡಿಸಿ ಅವರನ್ನೆಲ್ಲ ಅಡ್ಡ ಬೀಳಿಸುವುದರಲ್ಲೆ ನಿರತರಾಗಿಬಿಡುತ್ತಾರೆ. ಬದ್ಧಜೀವರು ತಮ್ಮ ಮತ್ತು ಪರಿವಾರದವರ ಉದರಪೋಷಣೆಗಾಗಿ ದಾಸತ್ವಕ್ಕೆ ಇಳಿಯುತ್ತಾರೆ – ಸುಳ್ಳು, ಮೋಸ, ಮುಖಸ್ತುತಿ ಇವುಗಳಲ್ಲಿ ತೊಡಗಿ ದುಡ್ಡು ಸಂಪಾದಿಸುತ್ತಾರೆ. ಯಾರು ಭಗವಚ್ಚಿಂತನೆ ಮಾಡುತ್ತಾರೊ, ಭಗವಂತನ ಧ್ಯಾನದಲ್ಲಿ ಮಗ್ನರಾಗಿರುತ್ತಾರೋ ಅವರನ್ನು ಈ ಬದ್ಧಜೀವರು, ‘ಹುಚ್ಚರು’ ಎಂದು ಹೀಯಾಳಿಸು ತ್ತಾರೆ.
“ಮನುಷ್ಯರು ಎಂತೆಂಥ ಸ್ವಭಾವದವರಿದ್ದಾರೆ ಎಂಬುದನ್ನು ನೋಡು. ನೀನು ಹೇಳಿ ಬಿಟ್ಟೆ ಎಲ್ಲಾ ಒಂದೇ ಅಂತ? ಎಷ್ಟೊಂದು ಭಿನ್ನ ಭಿನ್ನ ಪ್ರಕೃತಿಯುಳ್ಳವರಿದ್ದಾರೆ! ಕೆಲವರಲ್ಲಿ ಶಕ್ತಿ ವಿಶೇಷವಾಗಿದೆ, ಇನ್ನು ಕೆಲವರಲ್ಲಿ ಕಡಿಮೆ ಇದೆ.
“ಸಂಸಾರಾಸಕ್ತ ಬದ್ಧಜೀವರು ಸಾಯುವ ಸಮಯದಲ್ಲಿ ಸಾಂಸಾರಿಕ ಮಾತುಕತೆಗಳನ್ನೆ ಆಡುತ್ತಾರೆ. ತೋರಿಕೆಗಾಗಿ ಜಪಮಾಲೆ ತಿರುಗಿಸಿದರೆ, ಗಂಗಾಸ್ನಾನ ಮಾಡಿದರೆ, ತೀರ್ಥ ಯಾತ್ರೆ ಮಾಡಿದರೆ-ಏನು ತಾನೆ ದೊರಕೀತು? ಆಂತರ್ಯದಲ್ಲಿ ಸಂಸಾರಾಸಕ್ತಿ ಇದ್ದರೆ ಸಾಯುವಾಗ ಅದು ಹೊರಕ್ಕೆ ಕಾಣಿಸಿಕೊಂಡುಬಿಡುತ್ತದೆ. ಆಗ ಬರೀ ಅಬದ್ಧವನ್ನೇ ಬೊಗಳುವರು. ಬಹುಶಃ ಮತಿಭ್ರಮಣೆಯಿಂದ ಚೀತ್ಕಾರ ಮಾಡಬಹುದು; ‘ಅರಿಸಿನ, ಒಗ್ಗರಣೆ! ಕರಿಬೇವಿನಸೊಪ್ಪು!’ ಎಂದು. ಅರಗಿಣಿ ಯಾವ ತೊಂದರೆಗೂ ಈಡಾಗದಿ ರುವಾಗ, ‘ರಾಧಾಕೃಷ್ಣ’ ಎಂದು ಹೇಳುತ್ತದೆ; ಆದರೆ ಅದನ್ನು ಬೆಕ್ಕು ಹಿಡಿಯಿತೆಂದರೆ ಅದರ ಸ್ವಂತಕೂಗು ಹೊರಗೆ ಬರುತ್ತದೆ. ಆಗ ‘ಕ್ಯಾ! ಕ್ಯಾ!’ ಎಂದು ಕಿರಿಚಿಕೊಳ್ಳುತ್ತದೆ. ಸಾಯುವ ಸಮಯದಲ್ಲಿ ಏನೇನು ಭಾವನೆಗಳು ಬರುವವೊ, ಅವುಗಳಂತೆಯೇ ಮುಂದಿನ ಜನ್ಮದಲ್ಲಿ ಫಲ ದೊರಕುವುದು ಎಂಬುದಾಗಿ ಗೀತೆಯಲ್ಲಿ ಹೇಳಿದೆ. ಭರತರಾಜ, ಜಿಂಕೆ! ಜಿಂಕೆ! ಎಂದು ಕೂಗಿಕೊಳ್ಳುತ್ತಲೆ ದೇಹತ್ಯಾಗ ಮಾಡಿದ. ಅದಕ್ಕಾಗಿ ಮುಂದಿನ ಜನ್ಮದಲ್ಲಿ ಆತನಿಗೆ ಜಿಂಕೆಯ ಜನ್ಮ ದೊರೆಯಿತು. ಭಗವಂತನ ಚಿಂತನೆ ಮಾಡುತ್ತ ದೇಹತ್ಯಾಗ ಮಾಡಿದರೆ ಭಗವಂತನ ಸಾಕ್ಷಾತ್ಕಾರ ದೊರಕುತ್ತದೆ. ಮತ್ತೆ ಈ ಸಂಸಾರಕ್ಕೆ ಬರಬೇಕಾ ಗಿಲ್ಲ.”
ಬ್ರಾಹ್ಮಭಕ್ತ: “ಮಹಾಶಯರೆ, ಒಬ್ಬ ವ್ಯಕ್ತಿ ಉಳಿದ ಸಮಯದಲ್ಲೆಲ್ಲಾ ಭಗವಚ್ಚಿಂತನೆ ಮಾಡಿದ್ದಾನೆ. ಆದರೆ, ಸಾಯುವಾಗ ಆತನ ಚಿಂತನೆ ಮಾಡಲಿಲ್ಲ ಅಂತ ಆತ ಮತ್ತೆ ಈ ಸುಖದುಃಖಮಯ ಸಂಸಾರಕ್ಕೆ ಹಿಂದಿರುಗಿ ಬರಬೇಕಾಗುತ್ತೇನು? ಹಾಗೆ ಏಕಾಗಬೇಕು, ಆತ ಹಿಂದೆ ಭಗವಚ್ಚಿಂತನೆ ಮಾಡಿದ್ದಾನಲ್ಲ?”
ಶ್ರೀರಾಮಕೃಷ್ಣರು: “ಮನುಷ್ಯ ಭಗವಚ್ಚಿಂತನೆಯನ್ನೇನೊ ಮಾಡುತ್ತಾನೆ, ಆದರೆ ಆತನ ಇರುವಿಕೆಯಲ್ಲಿ ಆತನಿಗೆ ವಿಶ್ವಾಸವಿಲ್ಲ; ಮತ್ತೆ ಮತ್ತೆ ಭಗವಂತನನ್ನು ಮರೆಯುತ್ತಾನೆ, ಮತ್ತೆ ಸಂಸಾರದಲ್ಲಿ ಆಸಕ್ತನಾಗುತ್ತಾನೆ. ಇದು ಆನೆಗೆ ಮೈ ತೊಳೆದ ಹಾಗೆ; ಅದು ಮತ್ತೆ ಧೂಳು ಮತ್ತು ಬೂದಿಯನ್ನು ಮೈಗೆ ಮೆತ್ತಿಕೊಂಡುಬಿಡುತ್ತದೆ. ‘ಮನಸ್ಸೆಂಬುದು ಒಂದು ಮದಿಸಿದ ಆನೆ.’ ಆದರೆ ಆನೆಗೆ ಮೈ ತೊಳೆದ ಒಡನೆಯೆ ಅದನ್ನು ತೆಗೆದುಕೊಂಡು ಲಾಯದಲ್ಲಿ ಕಟ್ಟಿಹಾಕಿದರೆ ಅದು ಮತ್ತೆ ಧೂಳು ಮತ್ತು ಬೂದಿಯನ್ನು ಮೈಗೆ ಬಳಿದು ಕೊಳ್ಳಲಾರದು. ಮನುಷ್ಯ ಮೃತ್ಯುಶಯ್ಯೆಯಲ್ಲಿ ಭಗವಂತನ ಚಿಂತನೆ ಮಾಡಿದರೆ ಆತನ ಮನಸ್ಸು ಶುದ್ಧವಾಗುತ್ತದೆ. ಬಳಿಕ ಆ ಮನಸ್ಸಿಗೆ ಮತ್ತೆ ಕಾಮಕಾಂಚನದಲ್ಲಿ ಆಸಕ್ತವಾಗಲು ಅವಕಾಶ ದೊರೆಯದು.
“ಮನುಷ್ಯನಿಗೆ ಭಗವಂತನಲ್ಲಿ ವಿಶ್ವಾಸವಿಲ್ಲ; ಅದಕ್ಕಾಗಿಯೆ ಆತ ಅಷ್ಟೊಂದು ದುಃಖವನ್ನು ಅನುಭವಿಸುವುದು. ಜನ ಹೇಳುತ್ತಾರೆ, ‘ಗಂಗಾಸ್ನಾನದ ಸಮಯದಲ್ಲಿ ಜನರ ಪಾಪಗಳೆಲ್ಲ ಅವರವರನ್ನು ಬಿಟ್ಟು ಗಂಗೆಯ ತೀರದಲ್ಲಿರುವ ಗಿಡಗಳ ಮೇಲೆ ಕುಳಿತು ಕೊಂಡಿರುತ್ತವೆ. ಸ್ನಾನ ಮುಗಿಸಿ ದಡಕ್ಕೆ ಬರುವುದೇ ತಡ ಒಡನೆಯೆ ಅವು ನೆಗೆದು ಅವರವರ ಹೆಗಲನ್ನು ಹತ್ತಿಬಿಡುತ್ತವೆ’ ಎಂದು. (ಎಲ್ಲರೂ ನಗುತ್ತಾರೆ.) ದೇಹತ್ಯಾಗದ ಸಮಯದಲ್ಲಿ ಭಗವಂತನ ಚಿಂತನೆ ಬರಬೇಕಾದರೆ, ಬದುಕಿರುವಾಗಲೆ ಅದಕ್ಕೆ ತಕ್ಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸಿದ್ಧತೆ-ಅಭ್ಯಾಸಯೋಗ, ಭಗವಚ್ಚಿಂತನೆಯ ಅಭ್ಯಾಸ ವನ್ನು ಮಾಡಿದ್ದರೆ ಜೀವನದ ಕೊನೆಯ ದಿನವೂ ಆತನ ಭಾವನೆ ಮನಸ್ಸಿನಲ್ಲಿ ಏಳುತ್ತದೆ.”
ಬ್ರಾಹ್ಮಭಕ್ತ: “ಬಹಳ ಒಳ್ಳೆಯ ಮಾತುಕತೆಗಳಾದುವು. ಬಹಳ ಒಳ್ಳೆಯ ವಿಷಯಗಳು ಇವು.”
ಶ್ರೀರಾಮಕೃಷ್ಣರು: “ಬಾಯಿಗೆ ಬಂದುದನ್ನೆಲ್ಲ ಹೇಳಿಬಿಟ್ಟೆ. ಆದರೆ ನನ್ನ ಭಾವ ಏನೆಂಬುದು ನಿನಗೆ ಗೊತ್ತೆ? ನಾನು ಯಂತ್ರ, ಆಕೆ ಯಂತ್ರಿ; ನಾನು ಗೃಹ, ಆಕೆ ಗೃಹಿಣಿ; ನಾನು ಎಂಜಿನ್, ಆಕೆ ಎಂಜಿನೀಯರ್; ನಾನು ರಥ, ಆಕೆ ರಥಿ; ಆಕೆ ನಡೆಸಿದಂತೆ ನಡೆಯುತ್ತೇನೆ, ಮಾಡಿಸಿದಂತೆ ಮಾಡುತ್ತೇನೆ.”
ಪಕ್ಕವಾದ್ಯಗಳೊಡನೆ ತ್ರೈಲೋಕ್ಯ ಹಾಡಲು ಆರಂಭಿಸಿದ್ದಾನೆ, ಪರಮಹಂಸರು ಪ್ರೇಮದಿಂದ ಉನ್ಮತ್ತರಾಗಿ ನರ್ತಿಸುತ್ತಿದ್ದಾರೆ. ನರ್ತಿಸುತ್ತ ನರ್ತಿಸುತ್ತ ಎಷ್ಟೊಂದು ಸಲ ಸಮಾಧಿಸ್ಥರಾದರೊ! ಈಗ ಸಮಾಧಿಸ್ಥರಾಗಿ ನಿಂತುಕೊಂಡೇ ಇದ್ದಾರೆ. ಸ್ಪಂದಹೀನ ದೇಹ, ಸ್ಥಿರನೇತ್ರ, ಪ್ರಸನ್ನವದನ ಇವುಗಳಿಂದ ಕೂಡಿ ಯಾರೊ ಒಬ್ಬ ಆಪ್ತಭಕ್ತನ ಹೆಗಲ ಮೇಲೆ ಕೈ ಇಟ್ಟುಕೊಂಡಿದ್ದಾರೆ. ಆ ಭಾವದಿಂದ ಕೆಳಕ್ಕೆ ಇಳಿದುಬಂದನಂತರ ಮದಿಸಿದ ಆನೆಯಂತೆ ನರ್ತಿಸುತ್ತಿದ್ದಾರೆ. ಬಾಹ್ಯದಶೆ ಉಂಟಾಗಿ ಆ ಹಾಡಿಗೆ ಆಶುಕವಿತೆಗಳನ್ನು ಮಾಡುತ್ತಿದ್ದಾರೆ:
ನಿನ್ನ ಭಕ್ತರ ಜೊತೆಗೆ ಕುಣಿ ಕುಣಿದು ಅವರನೂ
ಕುಣಿಸು ಬಾ ತಾಯೀ!
ಭುವನ ಮೋಹನ ರೂಪೆ, ನನ್ನ ಹೃದಿಪದ್ಮದಲಿ
ನಿತ್ಯಲಾಸ್ಯದಿ ತೊಡಗಿ ನೆಲಸು ಬಾ ತಾಯಿ!
ಅದು ಒಂದು ಅಪೂರ್ವ ದೃಶ್ಯವೇ ಆಗಿತ್ತು! ಮಾತೃಗತಪ್ರಾಣರಾದ ಅವರು ಪ್ರೇಮ ದಿಂದ ಉನ್ಮತ್ತರಾಗಿ ಬಾಲಕನೋಪಾದಿಯಲ್ಲಿ ಸ್ವರ್ಗಸದೃಶ ನೃತ್ಯವನ್ನು ನರ್ತಿಸುವಂತೆ ಇತ್ತು. ಈಗ ಬ್ರಾಹ್ಮಭಕ್ತರು ಅವರನ್ನು ಸುತ್ತುಗಟ್ಟಿ ನರ್ತಿಸುತ್ತಿದ್ದಾರೆ. ಅಯಸ್ಕಾಂತ ಲೋಹವನ್ನು ಆಕರ್ಷಿಸುವ ರೀತಿಯಲ್ಲಿ ಬ್ರಾಹ್ಮಭಕ್ತರು ಆಕರ್ಷಿತರಾಗಿಬಿಟ್ಟಿದ್ದಾರೆ. ಎಲ್ಲರೂ ಉನ್ಮತ್ತರಾಗಿ ಬ್ರಹ್ಮನಾಮಸಂಕೀರ್ತನೆ ಮಾಡುತ್ತಿದ್ದಾರೆ. ಮತ್ತೆ ಬ್ರಹ್ಮನ ಆ ಮಧುರ ನಾಮ, ಭಗವತಿಯ ನಾಮ ಹಾಡುತ್ತಿದ್ದಾರೆ. ಅನೇಕರು ಬಾಲಕರ ಹಾಗೆ, ‘ತಾಯಿ! ತಾಯಿ!’ ಎಂದು ರೋದಿಸಲಾರಂಭಿಸಿದ್ದಾರೆ.
ಕೀರ್ತನೆ ಮುಗಿದ ನಂತರ ಎಲ್ಲರೂ ಕುಳಿತುಕೊಂಡರು. ಘಂಟೆ ಎಂಟಾಗಿದ್ದರೂ ಇನ್ನೂ ಸಮಾಜದ ಸಾಯಂ ಪ್ರಾರ್ಥನೆ ಆರಂಭವಾಗಿರಲಿಲ್ಲ. ಈ ಸ್ವರ್ಗಸದೃಶ ಕೀರ್ತನೆಯ ಆನಂದದಲ್ಲಿ ನಿಯಮಗಿಯಮಗಳೆಲ್ಲ ಎಲ್ಲೋ ಹಾರಿಹೋಗಿಬಿಟ್ಟಿವೆ. ಇಂದಿನ ರಾತ್ರಿ ವಿಜಯಕೃಷ್ಣ ಗೋಸ್ವಾಮಿ ವೇದಿಕೆಯಲ್ಲಿ ಮಂಡಿಸುವ ವ್ಯವಸ್ಥೆಯಾಗಿದೆ. ಆತ ಪರಮಹಂಸರ ಮುಂದೆಯೆ ಕುಳಿತುಕೊಂಡಿದ್ದಾನೆ. ವಿಜಯನ ಅತ್ತೆ ಮತ್ತು ಇನ್ನೂ ಕೆಲವು ಮಹಿಳೆಯರು ಪರಮಹಂಸರೊಡನೆ ಮಾತುಕತೆಗಳನ್ನಾಡಬೇಕೆಂದು ಇಚ್ಛಿಸಿದರು. ಪರಮ ಹಂಸರು ಬೇರೊಂದು ಕೊಠಡಿಗೆ ಹೋಗಿ ಅವರನ್ನು ಸಂಧಿಸಿದರು.
ಸ್ವಲ್ಪ ಹೊತ್ತಾದನಂತರ ಹಿಂದಿರುಗಿ ಬಂದು ವಿಜಯನಿಗೆ ಹೇಳುತ್ತಿದ್ದಾರೆ: “ನಿನ್ನ ಅತ್ತೆಯದು ಎಂಥಾ ಭಕ್ತಿ! ‘ಈ ಸಂಸಾರ ನನಗೆ ರೋಸಿಹೋಗಿಬಿಟ್ಟಿದೆ. ಒಂದು ಅಲೆಯಿಂದ ಪಾರಾದೆವು ಎಂದರೆ ಇನ್ನೊಂದು ಅಲೆ ಬಂದುಕೊಂಡೇ ಇರುತ್ತದೆ’ ಎಂದು ಹೇಳಿದಳು. ನಾನು ಹೇಳಿದೆ, ‘ನಿನಗೂ ಅದಕ್ಕೂ ಏನು ಸಂಬಂಧ? ನಿನಗಂತು ಆಗಲೆ ಜ್ಞಾನ ದೊರೆತು ಬಿಟ್ಟಿದೆಯಲ್ಲ’ ಎಂದು. ಅದಕ್ಕೆ ಆಕೆ ಹೇಳಿದಳು, “ನನಗೆ ಜ್ಞಾನ ದೊರೆತುಬಿಟ್ಟಿದೆಯೆ! ನಾನು ಇನ್ನೂ ವಿದ್ಯಾಮಾಯೆ ಮತ್ತು ಅವಿದ್ಯಾಮಾಯೆಯನ್ನು ದಾಟಿ ಹೋಗಿಲ್ಲ; ಅವಿದ್ಯೆಯಿಂದ ಮುಕ್ತವಾದರೇ ಸಾಕಾಗದು. ವಿದ್ಯೆಯಿಂದಲೂ ಮುಕ್ತವಾಗಬೇಕಾಗಿದೆ. ಆಗತಾನೆ ಜ್ಞಾನ ದೊರಕುತ್ತದೆ. ನೀವೇ ಹಾಗೆ ಹೇಳುತ್ತೀರಲ್ಲ’.”
ಪರಮಹಂಸರು ಈ ರೀತಿಯಾಗಿ ಮಾತನಾಡುತ್ತಿರುವಾಗ ವೇಣೀಪಾಲ ಅಲ್ಲಿಗೆ ಬಂದ.
ವೇಣೀಪಾಲ (ವಿಜಯನಿಗೆ): “ಮಹಾಶಯ, ದಯವಿಟ್ಟು ಏಳಿ, ಆಗಲೆ ಹೊತ್ತಾಗಿ ಬಿಟ್ಟಿದೆ; ಉಪಾಸನೆಯನ್ನು ಶುರುಮಾಡಿ.”
ವಿಜಯ: “ಮಹಾಶಯ, ಇನ್ನು ಉಪಾಸನೆಯ ಆವಶ್ಯಕತೆ ಏನಿದೆ? ನಿಮ್ಮ ವ್ಯವಸ್ಥೆ ನೋಡಿದರೆ ಮೊದಲು ಪಾಯಸ ಬಳಿಕ ಅನ್ನ ಸಾರು ಅಂತ ಕಾಣುತ್ತೆ.”
ಶ್ರೀರಾಮಕೃಷ್ಣರು ನಗುತ್ತ: “ಭಕ್ತ ಎಂಥವನೊ ಅವನಂತೆ ವ್ಯವಸ್ಥೆ. ಸಾತ್ತ್ವಿಕ ಭಕ್ತ ಭಗವಂತನಿಗೆ ಪಾಯಸವನ್ನು ಅರ್ಪಿಸುತ್ತಾನೆ; ರಾಜಸಿಕ ಭಕ್ತ ಭಕ್ಷ್ಯಭೋಜ್ಯಾದಿಗಳನ್ನು ಅರ್ಪಿಸುತ್ತಾನೆ; ತಾಮಸಿಕ ಭಕ್ತ ಆಡು ಮತ್ತು ಇತರ ಪ್ರಾಣಿಗಳ ಬಲಿ ಕೊಡುತ್ತಾನೆ.”
ವಿಜಯ ಉಪಾಸನೆ ನಡೆಸಲು ವೇದಿಕೆಯ ಮೇಲಕ್ಕೆ ಹೊಗುವುದೊ ಬೇಡವೊ ಎಂದು ಚಿಂತಿಸುತ್ತಿದ್ದಾನೆ. ಆತ ಪರಮಹಂಸರಿಗೆ ಪ್ರಾರ್ಥನೆ ಮಾಡಿಕೊಂಡ: “ಅನುಗ್ರಹ ಮಾಡುವುದಾದರೆ ನಾನು ವೇದಿಕೆಯ ಮೇಲೆ ಹೋಗಿ ಉಪಾಸನೆ ನಡೆಸುವೆನು.”
ಶ್ರೀರಾಮಕೃಷ್ಣರು: “ಅಭಿಮಾನ ಹೋಯಿತು ಎಂದರೆ ಎಲ್ಲ ಸರಿಹೋಗುತ್ತದೆ. ‘ನಾನು ಉಪನ್ಯಾಸ ಮಾಡುತ್ತೇನೆ, ನೀವು ಕೇಳಿ’ ಎಂಬ ಈ ಅಭಿಮಾನ ಇಲ್ಲದೆ ಇದ್ದರೆ ಯಾವ ತೊಂದರೆಯೂ ಬರದು. ಅಹಂಕಾರ ಜ್ಞಾನಜನ್ಯವಾದುದೊ ಅಜ್ಞಾನಜನ್ಯ ವಾದುದೊ? ಯಾರು ನಿರಹಂಕಾರಿಯೊ ಆತನಿಗೆ ಮಾತ್ರವೇ ಜ್ಞಾನ ಲಭಿಸುತ್ತದೆ. ಮಳೆಯ ನೀರು ತಗ್ಗುಪ್ರದೇಶದಲ್ಲಿ ಶೇಖರವಾಗುತ್ತದೆ; ಎತ್ತರ ಪ್ರದೇಶದಿಂದ ಕೆಳಕ್ಕೆ ಹರಿದು ಬಂದುಬಿಡುತ್ತದೆ.
“ಎಲ್ಲಿಯವರೆಗೆ ಅಹಂಕಾರವಿರುವುದೊ ಅಲ್ಲಿಯವರೆಗೆ ಜ್ಞಾನ ದೊರಕದು; ಈ ಸಂಸಾರಕ್ಕೆ ಮತ್ತೆ ಮತ್ತೆ ಹಿಂದಿರುಗಿ ಬರಬೇಕಾಗುತ್ತದೆ. ಹಸುವಿನ ಕರು, ‘ಹಂಬಾ! ಹಂಬಾ!’ ಅಂದರೆ, ‘ನಾನು! ನಾನು!’ ಅನ್ನುತ್ತದೆ. ಅದಕ್ಕಾಗಿಯೆ ಅದಕ್ಕೆ ಕಾದಿದೆ ಅಷ್ಟೊಂದು ಚಿತ್ರಹಿಂಸೆ. ಕಟುಕ ಅದನ್ನು ಕೊಲ್ಲುತ್ತಾನೆ. ಅದರ ಚರ್ಮದಿಂದ ಮೆಟ್ಟು ಆಗುತ್ತದೆ. ನಗಾರಿಯ ಮತ್ತು ಡೋಲಿನ ಬಾಯಿಮುಚ್ಚಳ ಆಗುತ್ತದೆ. ಅದನ್ನು ಜನ ದಯದಾಕ್ಷಿಣ್ಯವಿಲ್ಲದೆ ಸುಮ್ಮನೆ ಬಡಿಯುತ್ತಾರೆ. ಅದರ ಕಷ್ಟ ಅಷ್ಟಕ್ಕೇ ಮುಗಿಯೋ ಹಾಗಿಲ್ಲ. ಕಟ್ಟಕಡೆಗೆ ಅದರ ಕರುಳಿನಿಂದ ಹುರಿಯಾಗುತ್ತದೆ. ಆ ಹುರಿಯಿಂದ ಹತ್ತಿ ಎಕ್ಕುವ ಯಂತ್ರವನ್ನು ತಯಾರು ಮಾಡುತ್ತಾರೆ. ಆ ಯಂತ್ರದಿಂದ ಹತ್ತಿಯನ್ನು ಎಕ್ಕುವಾಗ ಆ ಹುರಿ ಯಾವಾಗ ‘ತುಹ್ಞೂ! ತುಹ್ಞೂ!’ ಅಂದರೆ, ‘ನೀನು! ನೀನು!’ ಎಂದು ಹೇಳಲು ಆರಂಭಿಸುವುದೊ ಆಗ ಅದಕ್ಕೆ ಬಿಡುಗಡೆ. ಬಳಿಕ ಅದು ಎಂದಿಗೂ ‘ಹಂಬಾ! ಹಂಬಾ!’ ಎಂದು ಹೇಳದು. ‘ನೀನು! ನೀನು!’ ಎಂದೇ ಹೇಳುತ್ತದೆ. ಅಂದರೆ, ‘ಹೇ ಭಗವಂತ, ನೀನು ಕರ್ತ, ನಾನು ಅಕರ್ತ; ನೀನು ಯಂತ್ರಿ, ನಾನು ಯಂತ್ರ; ಸಮಸ್ತವೂ ನೀನೇ’ ಅಂತ.
“ಇವು ಮೂರು ಪದಗಳು- ‘ಗುರು’, ‘ತಂದೆ’, ‘ಕರ್ತ’ – ಮಾತು ಎತ್ತಿದರೇ ನನಗೆ ಮುಳ್ಳು ಚುಚ್ಚಿದ ಹಾಗೇ ಅನುಭವ. ನಾನು ಆತನ ಮಗು, ಎಂದೆಂದಿಗೂ ಬಾಲಕನೆ. ಹೀಗಿರುವಲ್ಲಿ ನಾನು ಯಾವ ರೀತಿಯಾಗಿ ತಂದೆ ಆಗಬಲ್ಲೆ? ಭಗವಂತನೇ ಕರ್ತ, ನಾನು ಅಕರ್ತ; ಆತ ಯಂತ್ರಿ, ನಾನು ಯಂತ್ರ ಮಾತ್ರ.
“ಯಾರಾದರೂ ನನ್ನನ್ನು, ‘ಗುರು’ ! ಎಂದು ಸಂಬೋಧಿಸಿದರೆ ನಾನು ಉತ್ತರ ವೀಯುತ್ತೇನೆ, ‘ತಿಳಿಗೇಡಿ, ದೂರ ಸರಿ!ಹೇಗೆ ನಾನು ಗುರು?’ ಎಂದು ಸಚ್ಚಿದಾನಂದ ನೊಬ್ಬನನ್ನು ಬಿಟ್ಟರೆ ಬೇರೆ ಯಾರೂ ಗುರು ಅಂಬುವರೇ ಇಲ್ಲ. ಆತನ ವಿನಾ ಬೇರೆ ಯಾವ ಆಸರೆಯೂ ಇಲ್ಲ. ಕೇವಲ ಆತ ಮಾತ್ರನೇ ಈ ಭವಸಾಗರದ ಅಂಬಿಗ. (ವಿಜಯನಿಗೆ) ಆಚಾರ್ಯಗಿರಿ ಕೆಲಸ ಬಹಳ ಕಠಿಣವಾದ್ದು. ಅದರಿಂದ ಆಚಾರ್ಯನಿಗೇ ಹಾನಿಯುಂಟಾಗುತ್ತದೆ. ಒಂದು ಹತ್ತಾರು ಜನ ಗೌರವಿಸುವುದನ್ನು ನೋಡಿ, ಕಾಲಿನ ಮೇಲೆ ಕಾಲುಹಾಕಿಕೊಂಡು ಹೇಳುತ್ತಾನೆ, ‘ನಾನು ಉಪದೇಶ ಮಾಡುತ್ತೇನೆ, ನೀವೆಲ್ಲ ಕೇಳಿ’ ಎಂದು. ಈ ಭಾವ ಬಹಳ ಕೆಟ್ಟದ್ದು. ಆತನಿಗೆ ನಿಜವಾಗಿ ದೊರೆಯುವುದು ಒಂದಷ್ಟು ಗೌರವ ಮಾತ್ರ! ಅತಿ ಹೆಚ್ಚೆಂದರೆ ಜನ ಹೇಳುತ್ತಾರೆ, ‘ಆಹ! ವಿಜಯಬಾಬು ಬಹಳ ಚೆನ್ನಾಗಿ ಮಾತನಾಡುತ್ತಾನೆ; ಒಳ್ಳೆ ಜ್ಞಾನಿ’ ಅಂತ. ‘ನಾನು ಉಪದೇಶ ಮಾಡುತ್ತೇನೆ’ ಎಂಬ ಭಾವನೆ ನಿನಗೆ ಎಂದಿಗೂ ಬಾರದೆ ಇರಲಿ. ನಾನು ‘ಹೇ ತಾಯಿ! ನೀನು ಯಂತ್ರಿ, ನಾನು ಯಂತ್ರ; ನೀನು ಮಾಡಿಸಿದಂತೆ ಮಾಡುತ್ತೇನೆ, ನುಡಿಸಿದಂತೆ ನುಡಿಯುತ್ತೇನೆ’ ಎಂದು ತಾಯಿಗೆ ಹೇಳುತ್ತೇನೆ.”
ವಿಜಯ ವಿನಯದಿಂದ: “ನೀವು ಹೇಳುವುದಾದರೆ ಮಾತ್ರ ಅಲ್ಲಿಗೆ ಹೋಗಿ ಕುಳಿತು ಕೊಳ್ಳುತ್ತೇನೆ.”
ಶ್ರೀರಾಮಕೃಷ್ಣರು ನಗುನಗುತ್ತ: “ನಾನು ಏನು ಹೇಳಲಿ? ಚಂದಮಾಮ ಎಲ್ಲರ ಮಾಮ. ನೀನೇ ಆತನಿಗೆ ಹೇಳಿಕೊ, ನಿಷ್ಕಪಟಿಯಾಗಿದ್ದರೆ ಯಾವ ಭಯವೂ ಇಲ್ಲ.”
ವಿಜಯ ಮತ್ತೆ ಅನುಮತಿಗಾಗಿ ಪ್ರಾರ್ಥನೆ ಮಾಡಿಕೊಳ್ಳಲು ಶ್ರೀರಾಮಕೃಷ್ಣರು ಹೇಳಿದರು, “ಹೋಗು, ಪದ್ಧತಿಗನುಸಾರ ನಡೆಯಿಸು. ನಿಜವಾದ ಭಕ್ತಿಯನ್ನು ಆತನಲ್ಲಿ ಇಟ್ಟಿದ್ದರೆ ಎಲ್ಲಾ ಸರಿಹೋಗುತ್ತದೆ” ಎಂದು.
ವಿಜಯ ವೇದಿಕೆಯ ಮೇಲೆ ಕುಳಿತು ಬ್ರಾಹ್ಮಸಮಾಜದ ಪದ್ಧತಿ ಪ್ರಕಾರ ಉಪಾಸನೆ ಪ್ರಾರಂಭಿಸಿದನು. ಆತ ಉಪಾಸನೆಯ ಸಮಯದಲ್ಲಿ, ‘ತಾಯಿ! ತಾಯಿ!’ ಎಂದು ಕರೆಯುತ್ತಿದ್ದನು. ಎಲ್ಲರ ಮನಸ್ಸೂ ದ್ರವೀಭೂತವಾಗಿಬಿಟ್ಟಿತ್ತು.
ಉಪಾಸನೆ ಮುಗಿಯಿತು. ಭಕ್ತರ ಭೋಜನಕ್ಕೆ ವ್ಯವಸ್ಥೆ ನಡೆಯುತ್ತಿದೆ. ಜಮಖಾನ ಮಡಿಸಿಟ್ಟು ಎಲೆ ಹಾಕುತ್ತಿದ್ದಾರೆ. ಭಕ್ತರೆಲ್ಲ ಕುಳಿತುಕೊಂಡರು. ಪರಮಹಂಸರಿಗೂ ಒಂದು ಸ್ಥಳವನ್ನು ಏರ್ಪಡಿಸಿದರು. ಅವರು ಆ ಸ್ಥಳದಲ್ಲಿ ಕುಳಿತುಕೊಂಡು, ವೇಣೀಪಾಲ ಬಡಿಸಿದ ಪೂರಿ, ಕಚೋರಿ, ಹಪ್ಪಳ, ನಾನಾವಿಧ ಮೃಷ್ಟಾನ್ನ, ಮೊಸರು, ಖೀರು ಇತ್ಯಾದಿಗಳೆಲ್ಲವನ್ನು ಭಗವಂತನಿಗೆ ಅರ್ಪಿಸಿ ಆನಂದದಿಂದ ಆತನ ಪ್ರಸಾದವನ್ನು ಸ್ವೀಕರಿಸಿದರು.
ಊಟವಾದನಂತರ ಎಲ್ಲರೂ ತಾಂಬೂಲವನ್ನು ಅಗಿಯುತ್ತ ಅಗಿಯುತ್ತ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಲು ಸಿದ್ಧರಾಗುತ್ತಿದ್ದಾರೆ. ಪರಮಹಂಸರು ಏಕಾಂತದಲ್ಲಿ ಕುಳಿತು ವಿಜಯನೊಡನೆ ಮಾತುಕತೆಗಳನ್ನಾಡುತ್ತಿದ್ದಾರೆ. ಅಲ್ಲಿ ಮಾಸ್ಟರ್ ಕೂಡ ಇದ್ದಾನೆ.
ಶ್ರೀರಾಮಕೃಷ್ಣರು: “ನೀನು ಭಗವಂತನನ್ನು ‘ತಾಯಿ! ತಾಯಿ!’ ಎಂದು ಸಂಬೋಧಿಸಿ ಪ್ರಾರ್ಥಿಸುತ್ತಿದ್ದೆ. ಅದು ಬಹಳ ಒಳ್ಳೆಯದು. ಜನ ಹೇಳುತ್ತಾರೆ, ‘ತಾಯಿಯ ಒಲವು ತಂದೆಯದಕ್ಕಿಂತ ಅಧಿಕ’ ಅಂತ. ತಾಯಿಯನ್ನು ಬಲಾತ್ಕರಿಸಿ ಕೇಳಬಹುದು, ಆದರೆ ತಂದೆಯೊಡನೆ ಅದು ನಡೆಯದು. ತ್ರೈಲೋಕ್ಯನ ತಾಯಿಯ ಜಮೀನುದಾರಿಯಿಂದ ಗಾಡಿ ಗಾಡಿ ಹಣ ಬರುತ್ತಿತ್ತು. ತಲೆಗೆ ಕೆಂಪು ರುಮಾಲನ್ನು ಸುತ್ತಿದ್ದ ಮತ್ತು ಕೈಯಲ್ಲಿ ಬೀಸುದೊಣ್ಣೆಯನ್ನು ಹಿಡಿದಿದ್ದ ಆಜಾನುಬಾಹು ಸಿಬ್ಬಂದಿಗಳು ಅದರೊಡನೆ ರಕ್ಷಕರಾಗಿ ಬರುತ್ತಿದ್ದರು. ತ್ರೈಲೋಕ್ಯ ತನ್ನ ಜನರೊಡನೆ ರಸ್ತೆ ಕಾಯುತ್ತಿದ್ದು ಬಲಪ್ರಯೋಗಮಾಡಿ ಅದನ್ನೆಲ್ಲ ಅಪಹರಿಸಿಕೊಂಡುಬಿಟ್ಟ. ತಾಯಿಯ ಹಣದ ಮೇಲೆ ಮಗ ಕೈ ಇಡಲು ಸಾಧ್ಯ. ಜನ ಒಂದನ್ನು ಹೇಳ್ತಾರಲ್ಲ, ‘ಮಗನ ಮೇಲೆ ಮೊಕದ್ದಮೆ ಹೂಡಲು ತಾಯಿಗೆ ಕೋರ್ಟಿನ ಅನುಮತಿ ದೊರಕದು’ ಅಂತ.”
ವಿಜಯ: “ಬ್ರಹ್ಮನೆ ಭಗವತಿಯಾಗಿರುವುದಾದರೆ, ಆತ ಸಾಕಾರನೋ ಅಥವಾ ನಿರಾಕಾರನೊ?”
ಶ್ರೀರಾಮಕೃಷ್ಣರು: “ಯಾರು ಬ್ರಹ್ಮನೊ ಆತನೇ ಕಾಳಿ, ಭಗವತಿ, ಆದ್ಯಾಶಕ್ತಿ. ನಿಷ್ಕ್ರಿಯನಾಗಿರುವಾಗ ಆತನಿಗೆ ಬ್ರಹ್ಮ ಎಂದು ಹೆಸರು. ಯಾವಾಗ ಸೃಷ್ಟಿ ಸ್ಥಿತಿ ಪ್ರಳಯ ಈ ಕಾರ್ಯಗಳನ್ನು ಮಾಡುತ್ತಾನೊ ಆಗ ಆತನಿಗೆ ಶಕ್ತಿ ಎಂದು ಹೆಸರು. ಸ್ಥಿರ ಜಲ ಬ್ರಹ್ಮನ ಉಪಮೆ. ಅಲೆಯಾಕಾರದಲ್ಲಿ ಎದ್ದು ಬೀಳುವ ಜಲ ಶಕ್ತಿಯ ಅಥವಾ ಕಾಳಿಯ ಉಪಮೆ. ಹಾಗಾದರೆ ಕಾಳಿ ಎಂಬುವಳು ಯಾರು? ಯಾರು ಮಹಾಕಾಲನೊಡನೆ (ಬ್ರಹ್ಮನೊಡನೆ) ರಮಿಸುತ್ತಾಳೊ ಅವಳು. ಆಕೆ ಸಾಕಾರಳೂ ಹೌದು, ನಿರಾಕಾರಳೂ ಹೌದು. ನಿಮಗೆ ನಿರಾಕಾರದಲ್ಲಿ ವಿಶ್ವಾಸವಿರುವುದಾದರೆ ಕಾಳಿಯನ್ನು ಆ ರೂಪಿನಿಂದ ಚಿಂತನೆ ಮಾಡಿ. ಯಾವುದಾದರೂ ಒಂದನ್ನು ಹಿಡಿದು ಆಕೆಯ ಚಿಂತನೆ ಮಾಡಿದರೆ ತಾನು ಏನೇನು ಎಂಬುದನ್ನು ಆಕೆಯೇ ತೋರಿಸಿಕೊಟ್ಟುಬಿಡುತ್ತಾಳೆ. ಶ್ಯಾಮಪುಕುರಕ್ಕೆ ಹೋಗಿ ತಲುಪಿದರೆ ತೇಲಿಕೊಪ್ಪಲು ಎಲ್ಲಿದೆ ಅನ್ನುವುದೂ ಗೊತ್ತಾಗಿಬಿಡುತ್ತದೆ. ಆಗ ಆಕೆಯ ಇರುವಿಕೆಯ ಅನುಭವ ದೊರೆಯುವುದೊಂದೇ ಅಲ್ಲ, ನಾನು ನಿಮ್ಮೊಡನೆ ಮಾತನಾಡುತ್ತಿರುವಂತೆ ಆಕೆ ನಿಮ್ಮ ಹತ್ತಿರ ಬಂದು ನಿಮ್ಮೊಡನೆ ಮಾತನಾಡುವುದರ ಅನುಭವವೂ ದೊರೆಯುತ್ತದೆ. ಆದರೆ ಒಂದು ವಿಷಯ, ನಿಮಗೆ ನಿರಾಕಾರದಲ್ಲಿ ವಿಶ್ವಾಸವಿರುವುದಾದರೆ ಅದನ್ನೇ ದೃಢವಾಗಿ ಹಿಡಿದುಕೊಳ್ಳಿ. ಆದರೆ ಮಾತ್ರ ಸ್ವಮತ ಭ್ರಾಂತರಾಗಬೇಡಿ. ಆತನ ಸಂಬಂಧವಾಗಿ ಒತ್ತಿ ಹೇಳಬೇಡಿ, ‘ಆತ ಇದಾಗಬಲ್ಲ, ಅದು ಆಗಲಾರ’. ಅದಕ್ಕೆ ಬದಲು ‘ನನ್ನ ವಿಶ್ವಾಸ ಆತ ನಿರಾಕಾರ ಅಂತ; ಆತ ಇನ್ನೇನು ಆಗಬಲ್ಲನೋ ಅದು ಆತನಿಗೆ ಗೊತ್ತು. ಅದು ನನಗೆ ಗೊತ್ತಿಲ್ಲ; ತಿಳಿದುಕೊಳ್ಳಲಾಗುತ್ತಿಲ್ಲ’ ಎಂದು ಹೇಳಿ. ಮನುಷ್ಯ ಒಂದು ಚಟಾಕು ಬುದ್ಧಿಯಿಂದ ಭಗವಂತನ ಸ್ವರೂಪವನ್ನು ಅರಿಯಲು ಸಾಧ್ಯವೆ? ಒಂದು ಸೇರಿನ ಗಡಿಗೆ ನಾಲ್ಕು ಸೇರು ಹಾಲನ್ನು ಹಿಡಿಸುವುದೆ? ಆತ ಕೃಪೆಮಾಡಿ ಯಾವಾಗಲಾದರೂ ದರ್ಶನ ಕೊಡುವುದಾದರೆ ಮತ್ತು ತಿಳಿಸಿಕೊಡುವು ದಾದರೆ ಆಗ ಅರಿತುಕೊಳ್ಳಲು ಸಾಧ್ಯ; ಇಲ್ಲದೆ ಇದ್ದರೆ ಸಾಧ್ಯವೇ ಇಲ್ಲ.
“ಯಾರು ಬ್ರಹ್ಮನೊ ಆತನೇ ಭಗವತಿ.
ಶ್ರೀಪ್ರಸಾದನು ನುಡಿವನೀ ತೆರ;
ಮಾತೃಭಾವದಿ ನೆನೆವೆನು,
ಈ ರಹಸ್ಯವ ಜಗದ ಸಂತೆಯ
ಜಗದ ಜಂಗುಳಿಗೊರೆಯೆನು!
ನನ್ನ ಸೂಚನೆಯರಿತು ನೀವೇ
ತಿಳಿಯಿರಾಕೆಯ ನಿಜವನು!
“ಮಾತೃಭಾವದಿ ನೆನೆವೆನು,” ಅಂದರೆ ನಾನು, ಬ್ರಹ್ಮನ ಸ್ವರೂಪವನ್ನು ಅರಿತಿದ್ದೇನೆ, ಆತನನ್ನೇ ನಾನು ‘ಭಗವತಿ! ಭಗವತಿ!’ ಎಂದು ಕರೆಯುತ್ತೇನೆ ಎಂಬುದಾಗಿ.
“ಮತ್ತೆ ಇನ್ನೊಂದು ಹಾಡಿನಲ್ಲಿ ರಾಮಪ್ರಸಾದ ಇದೇ ಭಾವನೆಯನ್ನು ಹೊರ ಗೆಡಹಿದ್ದಾನೆ:
ತಾಯಿ ದುರ್ಗೆಯೆ ಪರಮ ಬ್ರಹ್ಮಸ್ವರೂಪಿಯೆಂಬುದನರಿಯುತ
ಧರ್ಮ ಮೇಣ್ ಅಧರ್ಮವೆರಡನು ಬಿಸುಡುತ
ನಿಲುವೆನೆಂಬನು ಭಕ್ತ ರಾಮಪ್ರಸಾದನು!
ಅಧರ್ಮ ಎಂದರೆ ಅಸತ್ ಕರ್ಮ. ಧರ್ಮ ಎಂದರೆ ವೈದಿಕ ಕರ್ಮ–ಇಷ್ಟೊಂದು ದಾನ ಮಾಡಬೇಕು, ಇಷ್ಟೊಂದು ಬ್ರಾಹ್ಮಣಭೋಜನ ಮಾಡಿಸಬೇಕು, ಇವೇ ಮೊದಲಾದ ಧರ್ಮಗಳು.”
ವಿಜಯ: “ಧರ್ಮಾಧರ್ಮಗಳನ್ನು ತ್ಯಾಗಮಾಡಿಬಿಟ್ಟರೆ ಇನ್ನು ಉಳಿದುಕೊಳ್ಳುವು ದೇನು?”
ಶ್ರೀರಾಮಕೃಷ್ಣರು: “ಶುದ್ಧಭಕ್ತಿ. ನಾನು ಭಗವತಿಗೆ ಪ್ರಾರ್ಥನೆ ಮಾಡಿದೆ: ‘ತಾಯೆ, ಇಗೋ ತೆಗೆದುಕೊ ನಿನ್ನ ಧರ್ಮವನ್ನ. ಇಗೋ ತೆಗೆದುಕೊ ನಿನ್ನ ಅಧರ್ಮವನ್ನ. ನನಗೆ ಶುದ್ಧಭಕ್ತಿಯನ್ನು ಕೊಡು. ಇಗೋ ತೆಗೆದುಕೊ ನಿನ್ನ ಪುಣ್ಯಾನ, ಇಗೋ ತೆಗೆದುಕೊ ನಿನ್ನ ಪಾಪಾನ, ನನಗೆ ಶುದ್ಧಭಕ್ತಿಯನ್ನು ನೀಡು. ಇಗೋ ತೆಗೆದುಕೊ ನಿನ್ನ ಜ್ಞಾನವನ್ನ, ಇಗೋ ತೆಗೆದುಕೊ ನಿನ್ನ ಅಜ್ಞಾನವನ್ನ, ನನಗೆ ಶುದ್ಧಭಕ್ತಿಯನ್ನು ಕರುಣಿಸು. ನೋಡು, ನಾನು ಜ್ಞಾನ ಬೇಕೆಂದು ಕೂಡ ಪ್ರಾರ್ಥಿಸಲಿಲ್ಲ. ನಾನು ಲೋಕಮಾನ್ಯತೆಗಾಗಿಯೂ ಪ್ರಾರ್ಥಿಸ ಲಿಲ್ಲ. ಧರ್ಮಾಧರ್ಮಗಳನ್ನು ತ್ಯಜಿಸಿಬಿಟ್ಟರೆ ಶುದ್ಧಭಕ್ತಿ-ಅಮಲ, ನಿಷ್ಕಾಮ, ಅಹೇತುಕ ಭಕ್ತಿ ಉಳಿದುಕೊಳ್ಳುತ್ತದೆ.”
ಬ್ರಾಹ್ಮಭಕ್ತ: “ಆತನಿಗೂ ಆತನ ಶಕ್ತಿಗೂ ಏನಾದರೂ ವ್ಯತ್ಯಾಸವಿದೆಯೇನು?”
ಶ್ರೀರಾಮಕೃಷ್ಣರು: “ಪೂರ್ಣಜ್ಞಾನ ದೊರೆತನಂತರ ಅಭೇದ ಎಂಬ ಅನುಭವ. ಇದು ರತ್ನಕ್ಕೂ ಅದರ ಪ್ರಭೆಗೂ ಇರುವ ಅಭಿನ್ನತೆಯ ಹಾಗೆ. ರತ್ನಪ್ರಭೆಯ ಭಾವನೆ ಯೊಡನೆ ರತ್ನದ ಭಾವನೆಯನ್ನು ಭಾವಿಸಲೇಬೇಕಾಗುತ್ತದೆ. ಇದು ಹಾಲಿಗೂ ಮತ್ತು ಅದರ ಬಿಳುಪಿಗೂ ಇರುವ ಅಭಿನ್ನತೆಯ ಹಾಗೆ. ಒಂದನ್ನು ಭಾವಿಸಿದ ಒಡನೆಯೆ ಇನ್ನೊಂದನ್ನು ಭಾವಿಸಲೇಬೇಕಾಗುತ್ತದೆ. ಆದರೆ ಈ ಅಭಿನ್ನತೆಯ ಜ್ಞಾನ – ಪೂರ್ಣಜ್ಞಾನ ದೊರೆತ ಹೊರತು ಉಂಟಾಗದು. ಪೂರ್ಣಜ್ಞಾನ ದೊರೆತ ಒಡನೆಯೆ ಸಮಾಧಿಯುಂಟಾ ಗುತ್ತದೆ, ಚತುರ್ವಿಂಶತಿ ತತ್ತ್ವಗಳನ್ನು ದಾಟಿ ಹೋಗುತ್ತಾನೆ – ಅದಕ್ಕಾಗಿಯೆ ಆ ಸ್ಥಿತಿಯಲ್ಲಿ ‘ಅಹಂ ತತ್ತ್ವ’ ಇರದು. ಸಮಾಧಿಯಲ್ಲಿ ಏನು ಅನುಭವ ದೊರೆಯುವುದೊ ಅದನ್ನು ಬಾಯಿಂದ ಹೇಳಲಾಗೋದಿಲ್ಲ. ಇಳಿದುಬಂದು ಎಲ್ಲೋ ಒಂದು ಕಿಂಚಿತ್ತು ಅದರ ಆಭಾಸದ ಹಾಗಿರುವುದನ್ನು ಮಾತ್ರ ತಿಳಿಸಬಹುದು. ಸಮಾಧಿ ಇಳಿಮುಖವಾದ ನಂತರ ಯಾವಾಗ ನಾನು ‘ಓಂ, ಓಂ’, ಎಂದು ಹೇಳುವೆನೋ, ನಾನು ಆಗಲೇ ಒಂದು ನೂರು ಮೊಳ ಕೆಳಕ್ಕೆ ಇಳಿದುಬಿಟ್ಟಿರುತ್ತೇನೆ. ಬ್ರಹ್ಮನು ವೇದವಿಧಿಗಳಿಗೆ ಅತೀತನು, ಬಾಯಿಂದ ವರ್ಣಿಸಲಾಗೋದಿಲ್ಲ. ಅಲ್ಲಿ ‘ನಾನು’, ‘ನೀನು’ ಎಂಬ ಭಾವನೆ ಇಲ್ಲವೇ ಇಲ್ಲ.
“ಎಲ್ಲಿಯವರೆಗೆ ‘ನಾನು’, ‘ನೀನು’ ಎಂಬ ಭಾವನೆ ಇರುವುದೊ, ಎಲ್ಲಿಯವರೆಗೆ ‘ನಾನು ಪ್ರಾರ್ಥನೆ ಅಥವಾ ಧ್ಯಾನ ಮಾಡುತ್ತೇನೆ’ ಎಂಬ ಭಾವನೆ ಇರುವುದೊ, ಅಲ್ಲಿಯ ವರೆಗೆ ‘ನೀನು (ಭಗವಂತ) ಪ್ರಾರ್ಥನೆ ಕೇಳುತ್ತೀಯೆ ಎಂಬ ಭಾವನೆಯೂ ಇರುತ್ತದೆ, ಭಗವಂತ ಒಬ್ಬ ವ್ಯಕ್ತಿ ಎಂಬ ಬೋಧೆಯಿರುತ್ತದೆ, ‘ನೀನು ಪ್ರಭು, ನಾನು ದಾಸ, ನೀನು ಪೂರ್ಣ, ನಾನು ಅಂಶ; ನೀನು ತಾಯಿ, ನಾನು ಮಗು’ ಎಂಬ ಬೋಧೆ ಇರುತ್ತದೆ. ಆಗ ಈ ಭೇದಬೋಧೆ – ನಾನು ಪ್ರತ್ಯೇಕ ನೀನು ಪ್ರತ್ಯೇಕ ಎಂಬುದು – ಇದ್ದೇ ಇರುತ್ತದೆ. ಈ ಭೇದ ಬೋಧೆಯನ್ನು ಆತನೇ ನಿಮ್ಮ ಕೈಯಿಂದ ಮಾಡಿಸುತ್ತಾನೆ. ಅದಕ್ಕಾಗಿಯೆ ಗಂಡಸು ಹೆಂಗಸು, ಬೆಳಕು ಕತ್ತಲೆ, ಇವೇ ಮೊದಲಾದವುಗಳ ಬೋಧೆ ಆಗುತ್ತಿರುವುದು. ಎಲ್ಲಿಯವರೆಗೆ ಈ ಭೇದ ಬೋಧೆ ಇರುವುದೊ, ಅಲ್ಲಿಯವರೆಗೆ ಶಕ್ತಿಯನ್ನು (ಸಾಕಾರವನ್ನು) ಒಪ್ಪಬೇಕು.ಆತನೆ ನಮ್ಮ ಆಂತರ್ಯದಲ್ಲೆ ‘ನಾನು’ ಎಂಬುದನ್ನು ಇಟ್ಟುಬಿಟ್ಟಿದ್ದಾನೆ. ಎಷ್ಟೇ ವಿಚಾರಮಾಡಿದರೂ, ಸಾವಿರ ಬಾರಿ- ‘ನಾನು’ ಎಂಬುದು ಹೋಗದು. ಅದು ಹೋಗುವ ತನಕ ಆತ ವ್ಯಕ್ತಿರೂಪದಿಂದ ತೋರಿಸಿಕೊಳ್ಳುತ್ತಾನೆ.
“ಅದಕ್ಕಾಗಿಯೆ ಎಲ್ಲಿಯವರೆಗೆ ‘ನಾನು’ ಎಂಬುದು ಇರುವುದೊ, ಭೇದಬುದ್ಧಿ ಇರುವುದೊ, – ಬ್ರಹ್ಮನನ್ನು ನಿರ್ಗುಣ ಎಂದು ಹೇಳುವ ಹಾಗಿಲ್ಲ. ಅದು ಇರುವವರೆಗೆ ಸಗುಣಬ್ರಹ್ಮನನ್ನು ಒಪ್ಪಿಕೊಳ್ಳಬೇಕು, ಈ ಸಗುಣಬ್ರಹ್ಮನನ್ನೇ ವೇದ ಪುರಾಣ ಶಾಸ್ತ್ರಗಳು, ‘ಕಾಲ ಅಥವಾ ಆದ್ಯಾಶಕ್ತಿ’ ಎಂದು ಕರೆದಿವೆ.”
ವಿಜಯ: “ಏನು ಮಾಡಿದರೆ ಈ ಆದ್ಯಾಶಕ್ತಿಯ ದರ್ಶನ ದೊರೆಯುತ್ತದೆ. ಬ್ರಹ್ಮಜ್ಞಾನ ದೊರೆಯುತ್ತದೆ?”
ಶ್ರೀರಾಮಕೃಷ್ಣರು: “ವ್ಯಾಕುಲ ಹೃದಯದಿಂದ ಆತನಿಗೆ ಪ್ರಾರ್ಥನೆ ಸಲ್ಲಿಸು; ಆತನಿಗಾಗಿ ಅಳು. ಆಗ ಚಿತ್ತಶುದ್ಧಿ ಉಂಟಾಗುತ್ತದೆ. ನಿರ್ಮಲವಾದ ನೀರಿನಲ್ಲಿ ಸೂರ್ಯನ ಪ್ರತಿಬಿಂಬವನ್ನು ನೋಡಬಹುದು. ಭಕ್ತನ ‘ನಾನು’ ಎಂಬ ರೂಪಿನ ಕನ್ನಡಿಯಲ್ಲಿ ಸಗುಣಬ್ರಹ್ಮನ, ಆದ್ಯಾಶಕ್ತಿಯ ದರ್ಶನ ದೊರೆಯುತ್ತದೆ. ಆದರೆ ಕನ್ನಡಿಯನ್ನು ಬಹಳ ಚೆನ್ನಾಗಿ ಒರೆಸಬೇಕು. ಕೊಳೆ ಕುಳಿತಿದ್ದರೆ ಸರಿಯಾದ ಪ್ರತಿಬಿಂಬ ಬೀಳದು.
“ಎಲ್ಲಿಯವರೆಗೆ ನಾನು ಎಂಬ ನೀರಿನಲ್ಲಿ ಸೂರ್ಯನನ್ನು ನೋಡಬೇಕಾಗಿರುವುದೊ ಮತ್ತು ಸೂರ್ಯನನ್ನು ನೋಡಲು ಬೇರೆ ಯಾವ ಮಾರ್ಗವೂ ಇಲ್ಲವೊ, ಎಲ್ಲಿಯವರೆಗೆ ಪ್ರತಿಬಿಂಬಿತ ಸೂರ್ಯನನ್ನು ವಿನಾ ನಿಜವಾದ ಸೂರ್ಯನನ್ನು ನೋಡಲು ಯಾವ ಉಪಾಯವೂ ಇಲ್ಲವೊ, ಅಲ್ಲಿಯವರೆಗೆ ರೂಪಾಯಿಗೆ ಹದಿನಾರಾಣೆ ಭಾಗ ಪ್ರತಿಬಿಂಬಿತ ಸೂರ್ಯನೇ ಸತ್ಯ. ಆ ಪ್ರತಿಬಿಂಬಿತ ಸೂರ್ಯನೇ ಆದ್ಯಾಶಕ್ತಿ.
“ಬ್ರಹ್ಮಜ್ಞಾನ ಬೇಕಾಗಿದ್ದರೆ ಆ ಪ್ರತಿಬಿಂಬ ಸೂರ್ಯನನ್ನು ಹಿಡಿದುಕೊಂಡು ನಿಜವಾದ ಸೂರ್ಯನ ಕಡೆಗೆ ಹೋಗು. ನಮ್ಮ ಪ್ರಾರ್ಥನೆ ಕೇಳುತ್ತಾನಲ್ಲ ಆ ಸಗುಣಬ್ರಹ್ಮ ಆತನನ್ನೇ ಕೇಳಿಕೊ, ಆತನೇ ಬ್ರಹ್ಮಜ್ಞಾನವನ್ನು ಕೊಡುತ್ತಾನೆ; ಹೇಗೆಂದರೆ ಯಾರು ಸಗುಣಬ್ರಹ್ಮನೊ ಆತನೇ ನಿರ್ಗುಣಬ್ರಹ್ಮ. ಯಾರು ಶಕ್ತಿಯೊ ಆತನೇ ಬ್ರಹ್ಮ. ಪೂರ್ಣ ಜ್ಞಾನ ದೊರೆತ ಮೇಲೆ ಈ ಅಭಿನ್ನತೆಯ ಅನುಭವ.
“ಭಗವತಿ ಬ್ರಹ್ಮಜ್ಞಾನವನ್ನು ಕೊಡಬಲ್ಲಳು. ಆದರೆ ನಿಜವಾದ ಭಕ್ತ ಪ್ರಾಯಶಃ ಬ್ರಹ್ಮಜ್ಞಾನಕ್ಕಾಗಿ ಹಾತೊರೆಯೋದಿಲ್ಲ.
“ಇನ್ನೊಂದು ಮಾರ್ಗವಿದೆ, ಜ್ಞಾನಯೋಗ. ಅದು ಬಹಳ ಕಠಿಣ ಮಾರ್ಗ. ಬ್ರಹ್ಮ ಸಮಾಜಕ್ಕೆ ಸೇರಿದ ನೀವು ಜ್ಞಾನಿಗಳಲ್ಲ, ಭಕ್ತರೇ. ಯಾರು ಜ್ಞಾನಿಗಳೊ ಅವರ ವಿಶ್ವಾಸ, ‘ಬ್ರಹ್ಮ ಸತ್ಯ, ಜಗತ್ ಮಿಥ್ಯ; ‘ನಾನು,’ ‘ನೀನು’ ಎಲ್ಲ ಸ್ವಪ್ನವತ್’ ಎಂಬುದು.
“ಆತ ಅಂತರ್ಯಾಮಿ, ಆತನಿಗೆ ಸರಳ ಮನಸ್ಸಿನಿಂದ, ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಸಲ್ಲಿಸು. ಆತ ಎಲ್ಲವನ್ನೂ ತಿಳಿಸಿಕೊಡುತ್ತಾನೆ, ಅಹಂಕಾರವನ್ನು ತ್ಯಜಿಸಿ ಆತನಲ್ಲಿ ಶರಣಾಗತನಾಗು; ಎಲ್ಲಾ ದೊರೆಯುತ್ತದೆ.”
ಪರಮಹಂಸರು, ಹಾಡಲಾರಂಭಿಸಿದರು:
ನಿನ್ನೊಳಗೇ ನೀನಿರು ಮನವೇ,
ಅನ್ಯಾಶ್ರಯದೊಳಗರಸದಿರು.
ನೀನಾವುದನೀತೆರ ಹುಡುಕುತಿಹೆಯೋ
ಅದೆ ನಿನ್ನೆದೆಯೊಳಗಿರುತಿರಲು.
ಹೃದಯದ ಕರೆಗೋಗೊಡುವನು ಅವನು
ಸರ್ವಸಿದ್ಧಿಗಳ ಸ್ಪರುಶಮಣಿ!
ನಿನ್ನ ಎದೆಯೊಳೇ ಹುದುಗಿದೆ ಕಾಣೊ
ಸಕಲೈಶ್ವರ್ಯದ ರನ್ನಗಣಿ!
ಮುತ್ತುರತುನಗಳೊ ಪಚ್ಚೆಹರಳುಗಳೊ
ಹೃದಯಮಂದಿರದ ಅಂಗಳದಿ
ಚದುರಿಬಿದ್ದಿರಲು ಎಲ್ಲಿ ಹುಡುಕುತಿಹೆ
ಮರುಳನಂತೆ ಅನ್ಯಾಶ್ರಯದಿ?
ಪರಮಹಂಸರು ಮಾತು ಮುಂದುವರಿಸಿದರು: “ಹೊರಗಿನವರೊಡನೆ ಬೆರೆಯು ವಾಗ ಎಲ್ಲರನ್ನೂ ಪ್ರೀತಿಸು, ಬೆರೆತು ಒಂದಾಗಿಬಿಡು – ತಿರಸ್ಕಾರ ದೃಷ್ಟಿಗೆ ಎಡೆಗೊಡ ಬೇಡ. ‘ಆ ವ್ಯಕ್ತಿ ಸಾಕಾರ ಒಪ್ಪುತ್ತಾನೆ, ನಿರಾಕಾರ ಒಪ್ಪುತ್ತಿಲ್ಲ; ಈತ ನಿರಾಕಾರ ಒಪ್ಪುತ್ತಾನೆ, ಸಾಕಾರ ಒಪ್ಪುತ್ತಿಲ್ಲ; ಆತ ಹಿಂದು, ಈತ ಮುಸಲ್ಮಾನ; ಆತ ಕ್ರಿಶ್ಚಿಯನ್’ ಎಂಬುದಾಗಿ ತಿರಸ್ಕಾರ ದೃಷ್ಟಿಯಿಂದ ಮೂಗು ಮುರಿಯಬೇಡ. ಭಗವಂತನೇ ಜನರಿಗೆ ವಿವಿಧ ದೃಷ್ಟಿಯನ್ನು ಕೊಟ್ಟಿದ್ದಾನೆ. ಪ್ರತಿಯೊಬ್ಬರದೂ ಬೇರೆ ಬೇರೆ ಪ್ರಕೃತಿ ಎಂಬುದನ್ನು ಮೊದಲು ಅರಿತುಕೊ. ಅರಿತುಕೊಂಡು ಅವರೊಡನೆ ಬೆರೆ. ಸಾಧ್ಯವಾದಷ್ಟು ಮಟ್ಟಿಗೆ ಬೆರೆ, ಎಲ್ಲರನ್ನೂ ಪ್ರೀತಿಸು, ಬಳಿಕ ನಿನ್ನ ಸ್ವಂತ ಆಂತರ್ಯಕ್ಕೆ ಹಿಂದಿರುಗಿ ಹೋಗಿ ಶಾಂತಿ ಮತ್ತು ಆನಂದವನ್ನು ಅನುಭವಿಸು.
ಹೃದಯ ಮಂದಿರದಲ್ಲಿ ಜ್ಞಾನದೀವಿಗೆ ಹಚ್ಚಿ
ಬ್ರಹ್ಮಮಯಿ ಮಾತೆಯ ಮುಖವ ನೋಡು
ನಿನ್ನ ಸ್ವಂತ ಆಂತರ್ಯದಲ್ಲಿ ಮಾತ್ರವೆ ಸ್ವಸ್ವರೂಪದ ದರ್ಶನ ಪಡೆಯಬಲ್ಲೆ. ಗೋಪಾಲಕರು ದನ ಮೇಯಿಸಲು ಹೋದಾಗ, ಎಲ್ಲಾ ದನಗಳು ಹುಲ್ಲುಗಾವಲಿಗೆ ಹೋಗಿ ಒಂದಾಗಿ ಕಲೆತು ಹೋಗುತ್ತವೆ; ಒಂದು ಹಿಂಡಾಗಿಬಿಡುತ್ತವೆ. ಆದರೆ ಸಾಯಂಕಾಲದಲ್ಲಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವಾಗ ಮತ್ತೆ ಪ್ರತ್ಯೇಕ ಪ್ರತ್ಯೇಕವಾಗಿಬಿಡುತ್ತವೆ, ಅದಕ್ಕಾಗಿಯೇ ನಾನು ಹೇಳೋದು, ‘ಸ್ವಂತ ಆಂತರ್ಯದಲ್ಲಿ ನೀನೇ ನೀನಾಗಿರು’ ಎಂದು.”
ರಾತ್ರಿ ಹತ್ತು ಗಂಟೆಯಾದ ನಂತರ ಶ್ರೀರಾಮಕೃಷ್ಣರು ದಕ್ಷಿಣೇಶ್ವರಕ್ಕೆ ಹಿಂದಿರುಗಲು ಗಾಡಿಯಲ್ಲಿ ಕುಳಿತುಕೊಂಡರು. ಅವರೊಡನೆ ಒಬ್ಬಿಬ್ಬ ಸೇವಕರೂ ಗಾಡಿಯನ್ನು ಹತ್ತಿದರು. ಒಂದು ಮರದ ಕೆಳಗೆ ಅಂದಿನ ಗಂಭೀರ ಅಂಧಕಾರದಲ್ಲಿ ಗಾಡಿ ನಿಂತಿದೆ. ವೇಣೀಪಾಲ ರಾಮಲಾಲನಿಗಾಗಿ ಪೂರಿ ಮೃಷ್ಟಾನ್ನಾದಿಗಳನ್ನು ಗಾಡಿಯಲ್ಲಿ ಇಡಲು ಬಂದ.
ವೇಣೀಪಾಲ ಪರಮಹಂಸರಿಗೆ: “ಮಹಾಶಯರೆ, ರಾಮಲಾಲ ಬರಲಿಲ್ಲ. ಆತನಿ ಗಾಗಿ ಲೂಚಿ ಮಿಷ್ಟಾನ್ನಗಳನ್ನು ಇದರೊಡನೆ ಕಳುಹಿಸಲು ಇಚ್ಛೆಯಾಗುತ್ತಿದೆ. ದಯವಿಟ್ಟು ತಾವು ಅನುಮತಿ ಕೊಡಬೇಕು.”
ಶ್ರೀರಾಮಕೃಷ್ಣರು ವ್ಯಸ್ತರಾಗಿ: “ಓ, ವೇಣೀಪಾಲ! ದಯವಿಟ್ಟು ನೀನು ನನ್ನೊಡನೆ ಅಂಥವುಗಳನ್ನೆಲ್ಲ ಕಳುಹಿಸಬೇಡ. ಅದು ನನಗೆ ಹಾನಿಯನ್ನು ತರುತ್ತದೆ. ನನ್ನೊಡನೆ ಯಾವ ವಸ್ತುವನ್ನೇ ಆಗಲಿ ನಾನು ಸಂಚಯಮಾಡಿಕೊಂಡು ತೆಗೆದುಕೊಂಡು ಹೋಗೋ ಹಾಗಿಲ್ಲ. ನೀನು ಅನ್ಯಥಾ ಭಾವಿಸಬೇಡ.”
ವೇಣೀಪಾಲ: “ತಮ್ಮ ಚಿತ್ತ. ದಯವಿಟ್ಟು ಆಶೀರ್ವಾದ ಮಾಡಿ.”
ಶ್ರೀರಾಮಕೃಷ್ಣರು: “ಇಂದು ಬಹಳವಾಗಿ ಆನಂದವಾಯಿತು. ನೋಡು, ಅರ್ಥ ಯಾರ ದಾಸನಾಗುತ್ತದೆಯೊ ಆತನೇ ಮನುಷ್ಯ, ಯಾರಿಗೆ ಅರ್ಥದ ವ್ಯವಹಾರ ಗೊತ್ತಿಲ್ಲವೊ ಅವರು ಮನುಷ್ಯರಾಗಿಯೂ ಮನುಷ್ಯರಲ್ಲ. ಆಕೃತಿಯೇನೊ ಮನುಷ್ಯರದು, ಆದರೆ ವ್ಯವಹಾರ ಪಶುವಿನದು. ಧನ್ಯ ನೀನು. ಇಷ್ಟೊಂದು ಮಂದಿ ಭಕ್ತರಿಗೆ ಆನಂದ ಕೊಟ್ಟೆ.”
೨೦ನೇ ಅಕ್ಟೋಬರ್ ೧೮೮೪, ಕಾರ್ತಿಕ ಶುಕ್ಲ ಬಿದಿಗೆ, ಸೋಮವಾರ
ಇಂದಿಗೆ ಕಾಳಿಯ ಪೂಜೆ ಮುಗಿದು ಎರಡು ದಿವಸಗಳಾಗಿವೆ. ಬಡೋಬಜಾರಿನ ಮಾರ್ವಾಡಿ ಭಕ್ತರು ಇಂದು ಅನ್ನಕೂಟದ1 ಹಬ್ಬವನ್ನು ಆಚರಿಸುತ್ತಿದ್ದಾರೆ, ಅದರ ನಿಮಿತ್ತ ಅವರು ಪರಮಹಂಸರನ್ನು ಮಣಿಮಲ್ಲಿಕನ ಬೀದಿಯ ೧೨ನೆ ನಂಬರಿನ ಮನೆಗೆ ಆಹ್ವಾನಿ ಸಿದ್ದಾರೆ. ಕಾಳಿಯ ಪೂಜೆ ಮುಗಿದು ಎರಡು ದಿನ ಆಗಿದ್ದರೂ ದೀಪಾವಳಿಯ ಸಂಭ್ರಮ ಇನ್ನೂ ಬಡೋಬಜಾರಿನಲ್ಲಿ ಕಾಣಬರುತ್ತಿದೆ.
ಬಹುಶಃ ಸಮಯ ಮೂರು ಇರಬೇಕು. ಮಾಸ್ಟರ್ ಚಿಕ್ಕ ಗೋಪಾಲನೊಡನೆ ಬಡೋಬಜಾರಿಗೆ ಬಂದಿದ್ದಾನೆ. ಪರಮಹಂಸರು ಮಾಸ್ಟರಿಗೆ ಸ್ನಾನದ ಚೌಕಗಳನ್ನು ಕೊಂಡುಕೊಂಡು ಬರಲು ಹೇಳಿದ್ದರು. ಆತ ಅವುಗಳನ್ನು ಕೊಂಡುಕೊಂಡು ಬಂದಿದ್ದಾನೆ. ಅವನ್ನು ಕಾಗದದಲ್ಲಿ ಸುತ್ತಿ ಒಂದು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಅವರಿಬ್ಬರೂ ಮಲ್ಲಿಕನ ಬೀದಿಗೆ ಬಂದು ನೋಡುತ್ತಾರೆ, ಅದು ಎತ್ತಿನ ಗಾಡಿಗಳಿಂದ, ಕುದುರೆ ಗಾಡಿಗಳಿಂದ ಮತ್ತು ಜನರಿಂದ ಕಿಕ್ಕಿರಿದು ತುಂಬಿದೆ. ಅವರು ೧೨ನೆ ನಂಬರಿನ ಮನೆಯ ಹತ್ತಿರ ಹತ್ತಿರಕ್ಕೆ ಹೋಗಿ ನೋಡುತ್ತಾರೆ ಪರಮಹಂಸರು ಒಂದು ಗಾಡಿಯಲ್ಲಿ ಕುಳಿತುಕೊಂಡಿದ್ದಾರೆ, ಅದು ಮುಂದುವರಿಯಲಾಗದೆ ನಿಂತುಕೊಂಡಿದೆ. ಅದರೊಳಗೆ ಬಾಬುರಾಮ ಮತ್ತು ರಾಮ ಚಟರ್ಜಿಯೂ ಕುಳಿತಿದ್ದಾರೆ. ಪರಮಹಂಸರು ಗೋಪಾಲ ಮತ್ತು ಮಾಸ್ಟರನ್ನು ಕಂಡು ನಗುತ್ತಿದ್ದಾರೆ.
ಪರಮಹಂಸರು ಗಾಡಿಯಿಂದ ಕೆಳಕ್ಕೆ ಇಳಿದರು. ಮಾಸ್ಟರ್ ಮುಂದುಮುಂದಕ್ಕೆ ಹೋಗುತ್ತ ದಾರಿ ತೋರಿಸುತ್ತಿದ್ದಾನೆ. ಪರಮಹಂಸರು ಬಾಬುರಾಮನೊಡನೆ ಆತನನ್ನು ಹಿಂಬಾಲಿಸುತ್ತಿದ್ದಾರೆ. ಆ ಮಾರ್ವಾಡಿಯ ಮನೆಯನ್ನು ತಲುಪಿದ ನಂತರ ನೋಡುತ್ತಾರೆ ಕೆಳಗಿನ ಅಂಗಳವೆಲ್ಲ ಬಟ್ಟೆಯ ಬೇಲುಗಳಿಂದ ತುಂಬಿದೆ. ಆಗಾಗ ಎತ್ತಿನ ಗಾಡಿಗಳು ಆ ಸರಕನ್ನು ತುಂಬಿಕೊಂಡು ಬಂದರಿಗೆ ಹೋಗುತ್ತಲೇ ಇವೆ. ಪರಮಹಂಸರು ಭಕ್ತರೊಡನೆ ಮೇಲಿನ ಅಂತಸ್ತಿಗೆ ಹತ್ತಿದರು. ಮಾರ್ವಾಡಿಗಳು ಪರಮಹಂಸರನ್ನು ಎದುರುಗೊಂಡು ಅವರನ್ನು ಮೂರನೆ ಅಂತಸ್ತಿಗೆ ಕರೆದುಕೊಂಡು ಹೋದರು. ಅಲ್ಲಿ ಭಗವತಿ ಕಾಳಿಯ ಪಟ ಗೋಡೆಗೆ ನೇತುಹಾಕಿದ್ದಿತು. ಪರಮಹಂಸರು ಅದಕ್ಕೆ ನಮಸ್ಕಾರ ಮಾಡಿದರು. ಬಳಿಕ ಅವರು ಒಂದು ಕಡೆ ಕುಳಿತುಕೊಂಡು ಭಕ್ತರೊಡನೆ ಮಾತುಕತೆ ಆಡಲು ಆರಂಭಿಸಿದರು. ಒಬ್ಬ ಮಾರ್ವಾಡಿ ಮುಂದೆ ಬಂದು ಅವರ ಪಾದಗಳನ್ನು ಒತ್ತಲು ಆರಂಭಿಸಿದ. ಪರಮ ಹಂಸರು ಏನೂ ಬೇಡ ಎಂದರು. ಬಳಿಕ ಏನೋ ಯೋಚಿಸಿ ಹೇಳಿದರು, “ಒಳ್ಳೆಯದು, ಒಂದು ಸ್ವಲ್ಪ ಒತ್ತು” ಎಂದು. ಅವರ ಪ್ರತಿಯೊಂದು ಮಾತು ಕರುಣೆಯಿಂದ ತುಂಬಿತ್ತು.
ಶ್ರೀರಾಮಕೃಷ್ಣರು ಮಣಿಗೆ: “ಸ್ಕೂಲಿನ ಗತಿ?”
ಮಾಸ್ಟರ್: “ಇಂದು ರಜ.”
ಶ್ರೀರಾಮಕೃಷ್ಣರು ನಗುತ್ತ: “ನಾಳೆ ಅಧರಸೇನನ ಮನೆಯಲ್ಲಿ ಮತ್ತೆ ಚಂಡೀ ಕೀರ್ತನೆ.”
ಮನೆಯ ಯಜಮಾನ ಒಬ್ಬ ಪಂಡಿತನನ್ನು ಪರಮಹಂಸರ ಹತ್ತಿರಕ್ಕೆ ಕಳುಹಿಸಿದನು. ಆತ ಅಲ್ಲಿಗೆ ಬಂದು ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡನು. ಪರಮಹಂಸರು ಆತನೊಡನೆ ಭಗವಂತನ ವಿಷಯವಾಗಿ ಮಾತುಕತೆಗಳನ್ನಾಡುತ್ತಿದ್ದಾರೆ. ಅವತಾರಾದಿಗಳ ಮಾತು ಆರಂಭವಾಯಿತು.
ಶ್ರೀರಾಮಕೃಷ್ಣರು: “ಭಕ್ತರಿಗಾಗಿಯೇ ಅವತಾರ, ಜ್ಞಾನಿಗಳಿಗಾಗಿ ಅಲ್ಲ.”
ಪಂಡಿತ: “ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಾಮ್ಣ ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥ ಭಗವಂತ ಅವತರಿಸುವುದು ಪ್ರಥಮತಃ ಭಕ್ತರಿಗೆ ಆನಂದವೀಯುವುದಕ್ಕಾಗಿ. ದ್ವಿತೀಯತಃ ದುಷ್ಟರನ್ನು ದಮನಮಾಡು ವುದಕ್ಕಾಗಿ, ಆದರೆ ಜ್ಞಾನಿ ಕಾಮನಾಶೂನ್ಯ.”
ಶ್ರೀರಾಮಕೃಷ್ಣರು ನಗುತ್ತ: “ಆದರೆ ಎಲ್ಲಾ ಕಾಮನೆಗಳು ನನ್ನನ್ನು ಬಿಟ್ಟುಹೋಗಿಲ್ಲ. ನನ್ನಲ್ಲಿ ಭಕ್ತಿಕಾಮನೆ ಇದೆ.”
ಹೀಗೆ ಮಾತನಾಡುತ್ತಿದ್ದಾಗ ಪಂಡಿತನ ಮಗ ಕೊಠಡಿಗೆ ಬಂದು ಪರಮಹಂಸರಿಗೆ ನಮಸ್ಕಾರಮಾಡಿ ಒಂದು ಕಡೆ ಕುಳಿತುಕೊಂಡನು.
ಶ್ರೀರಾಮಕೃಷ್ಣರು ಪಂಡಿತನಿಗೆ: “ಒಳ್ಳೆಯದು, ಯಾವುದಕ್ಕೆ ಭಾವ ಅಂತ ಹೇಳುತ್ತಾರೆ, ಯಾವುದಕ್ಕೆ ಭಕ್ತಿ ಅಂತ ಹೇಳುತ್ತಾರೆ?”
ಪಂಡಿತ: “ಭಗವಂತನ ಚಿಂತನೆಮಾಡಿದರೆ ಮನೋವೃತ್ತಿ ಕೋಮಲವಾಗಿಬಿಡುತ್ತದೆ. ಈ ಕೋಮಲ ಮನೋವೃತ್ತಿಗೆ ‘ಭಾವ’ ಅಂತ ಹೆಸರು. ಇದು ಸೂರ್ಯ ಉದಯಿಸಿದರೆ ಮಂಜು ಹೇಗೆ ನೀರಾಗುತ್ತದೆಯೊ ಹಾಗೆ.”
ಶ್ರೀರಾಮಕೃಷ್ಣರು: “ಒಳ್ಳೆಯದು, ಯಾವುದಕ್ಕೆ ಪ್ರೇಮ ಅಂತ ಹೇಳುತ್ತಾರೆ?”
ಪಂಡಿತ ಮತ್ತೆ ಹಿಂದಿಯಲ್ಲಿ ಮಾತನಾಡುತ್ತಿದ್ದಾನೆ. ಪರಮಹಂಸರು ಆತನೊಡನೆ ಬಹಳ ಒಳ್ಳೆಯ ಹಿಂದಿಯಲ್ಲಿ ಮಾತುಕತೆಯಾಡುತ್ತಿದ್ದಾರೆ. ಪಂಡಿತ ಪರಮಹಂಸರ ಪ್ರಶ್ನೆಗೆ ಉತ್ತರವೀಯುತ್ತ ಪ್ರೇಮ ಎಂಬುದಕ್ಕೆ ಏನೋ ಒಂದು ವಿಧವಾದ ಅರ್ಥವನ್ನು ಕೊಟ್ಟ.
ಶ್ರೀರಾಮಕೃಷ್ಣರು ಪಂಡಿತನಿಗೆ: “ಅಲ್ಲ! ಅಲ್ಲ! ಅದಲ್ಲ ಅದರ ಅರ್ಥ. ಪ್ರೇಮ ಅಂದರೆ ಭಗವಂತನಲ್ಲಿ ಅಂಥ ಅಗಾಧವಾದ ಅನುರಾಗ. ಅದರ ದೆಸೆಯಿಂದ ಜಗತ್ತೂ ಮರೆತುಹೋಗಿಬಿಡುತ್ತದೆ. ಜೊತೆಗೆ ಅಷ್ಟೊಂದು ಪ್ರಿಯವಾಗಿರುವ ಸ್ವಂತ ದೇಹ ಕೂಡ ಮರೆತುಹೋಗಿಬಿಡುತ್ತದೆ. ಅದಕ್ಕೆ ‘ಪ್ರೇಮ’ ಅಂತ ಹೆಸರು. ಅದು ಚೈತನ್ಯದೇವನಿಗೆ ಉಂಟಾಗಿತ್ತು.”
ಪಂಡಿತ: “ಹೌದು, ನೀವು ಹೇಳುವುದು ಸರಿ. ಕುಡುಕನಿಗೆ ಆಗುತ್ತದೆಯಲ್ಲ ಹಾಗೆ.”
ಶ್ರೀರಾಮಕೃಷ್ಣರು: “ಒಳ್ಳೆಯದು, ಕೆಲವರ ಹೃದಯದಲ್ಲಿ ಭಕ್ತಿ ಉದ್ದೀಪನವಾಗಿ ಬಿಡುತ್ತದೆ. ಇನ್ನು ಕೆಲವರಲ್ಲಿ ಆಗುವುದಿಲ್ಲ; ಇದಕ್ಕೇನು ಉತ್ತರ?”
ಪಂಡಿತ: “ಭಗವಂತನಿಗೆ ವೈಷಮ್ಯತೆ ಅನ್ನುವುದೇನಿಲ್ಲ. ಆತ ಕಲ್ಪತರು. ಯಾರು ಏನನ್ನು ಬೇಡುವರೊ ಅದು ಅವರಿಗೆ ದೊರೆತುಬಿಡುತ್ತದೆ. ಆದರೆ ಕಲ್ಪತರುವಿನ ಹತ್ತಿರ ಹೋಗಿ ಬೇಡಬೇಕು.”
ಪಂಡಿತ ಅದನ್ನೆಲ್ಲ ಹಿಂದಿಯಲ್ಲೇ ಹೇಳಿದನು. ಪರಮಹಂಸರು ಅದನ್ನು ಮಾಸ್ಟರಿಗೆ ಬಂಗಾಳಿಯಲ್ಲಿ ವಿವರಿಸಿದರು.
ಶ್ರೀರಾಮಕೃಷ್ಣರು: “ಒಳ್ಳೆಯದು, ಸಮಾಧಿ ಅನ್ನುವುದು ಹೇಗೆ ಹೇಗೆ ಎಂಬುದನ್ನು ಸ್ವಲ್ಪ ವಿವರಿಸಿ ಹೇಳಿ ನೋಡೋಣ.”
ಪಂಡಿತ: “ಸಮಾಧಿಯಲ್ಲಿ ಎರಡು ವಿಧ–ಸವಿಕಲ್ಪ ಮತ್ತು ನಿರ್ವಿಕಲ್ಪ. ನಿರ್ವಿಕಲ್ಪ ಸಮಾಧಿಯಲ್ಲಿ ವಿಕಲ್ಪ ಎಂಬುದು ಇಲ್ಲವೇ ಇಲ್ಲ”
ಶ್ರೀರಾಮಕೃಷ್ಣರು: “ಹೌದು. ‘ತದಾಕಾರಕಾರಿತ.’ ಧ್ಯಾನ, ಧ್ಯೇಯ ಎಂಬ ಭೇದವಿರದು. ಮತ್ತೆ ಚೇತನಸಮಾಧಿ ಮತ್ತು ಜಡಸಮಾಧಿ ಎಂಬುವೂ ಇವೆ. ನಾರದ ಶುಕದೇವ ಇವರಿಗೆ ಉಂಟಾಗಿದ್ದುದು ಚೇತನಸಮಾಧಿ. ಏನು ಹೇಗೆ?”
ಪಂಡಿತ: “ಹೌದು, ನಿಜ.”
ಶ್ರೀರಾಮಕೃಷ್ಣರು: “ಮತ್ತೆ ಉನ್ಮನಸಮಾಧಿ ಮತ್ತು ಸ್ಥಿರಸಮಾಧಿ ಎಂಬುವು ಇವೆ. ಅಲ್ಲವೆ?”
ಪಂಡಿತ ಸುಮ್ಮನೆ ಇದ್ದುಬಿಟ್ಟ; ಯಾವ ಉತ್ತರವನ್ನೂ ಕೊಡಲಿಲ್ಲ.
ಶ್ರೀರಾಮಕೃಷ್ಣರು: “ಒಳ್ಳೇದು, ಜಪ ತಪ ಮಾಡಿದರೆ, ಗಂಗೆಯ ಮೇಲೆ ನಡೆದು ಹೋಗುವುದೇ ಮೊದಲಾದ ಸಿದ್ಧಿಗಳು ದೊರೆಯಬಹುದು, ಏನು ಅಲ್ಲವೆ?”
ಪಂಡಿತ: “ಹೌದು, ದೊರಕುತ್ತವೆ, ಆದರೆ ಭಕ್ತನಿಗೆ ಅವು ಬೇಕೆನಿಸೋದಿಲ್ಲ.”
ಹೀಗೆ ಸ್ವಲ್ಪ ಹೊತ್ತು ಮಾತುಕತೆಗಳನ್ನಾಡಿದ ನಂತರ ಪಂಡಿತ, “ನಾನು ಏಕಾದಶಿ ದಿವಸ ನಿಮ್ಮ ದರ್ಶನಕ್ಕಾಗಿ ದಕ್ಷಿಣೇಶ್ವರಕ್ಕೆ ಬರುತ್ತೇನೆ” ಎಂದು ಹೇಳಿದ.
ಶ್ರೀರಾಮಕೃಷ್ಣರು: “ಆಹಾ! ನಿಮ್ಮ ಹುಡುಗ ಬಹಳ ಒಳ್ಳೆಯವ.”
ಪಂಡಿತ: “ಇದೇನು ವಿಶೇಷ! ನದಿಯಲ್ಲಿ ಒಂದು ಅಲೆ ಏಳುತ್ತದೆ, ಒಂದು ಇಳಿಯುತ್ತದೆ, ಎಲ್ಲಾ ಅನಿತ್ಯ.”
ಶ್ರೀರಾಮಕೃಷ್ಣರು: “ನಿನ್ನ ಆಂತರ್ಯದಲ್ಲಿ ಸಾರವಿದೆ.”
ಪಂಡಿತ ಸ್ವಲ್ಪಹೊತ್ತು ಹಾಗೆ ಕುಳಿತಿದ್ದು ಪರಮಹಂಸರಿಗೆ ಪ್ರಣಾಮಮಾಡಿ ಹೇಳಿದ, “ಪೂಜೆ ಮಾಡಬೇಕಾಗಿದೆ. ಬರುತ್ತೇನೆ” ಎಂದು.
ಶ್ರೀರಾಮಕೃಷ್ಣರು: “ಓ ಹೋಗುವಿರಂತೆ ಕುಳಿತುಕೊಳ್ಳಿ! ಕುಳಿತುಕೊಳ್ಳಿ!”
ಪಂಡಿತ ಮತ್ತೆ ಕುಳಿತುಕೊಂಡನು. ಪರಮಹಂಸರು ಹಠಯೋಗದ ಮಾತು ಎತ್ತಿದರು. ಪಂಡಿತ ಹಿಂದಿಯಲ್ಲಿ ಪರಮಹಂಸರೊಡನೆ ಅದರ ಸಂಬಂಧವಾಗಿ ಮಾತನಾಡು ತ್ತಿದ್ದಾನೆ. ಪರಮಹಂಸರು ಹೇಳಿದರು: “ಹೌದು, ಅದೂ ಒಂದು ವಿಧವಾದ ತಪಸ್ಯೆ ಯೇನೋ ನಿಜ. ಆದರೆ ಹಠಯೋಗಿ ದೇಹಾಭಿಮಾನಿ ಸಾಧು – ಕೇವಲ ದೇಹದ ಕಡೆಗೇ ಮನಸ್ಸು” ಎಂದು. ಪಂಡಿತ ಮತ್ತೆ ಪರಮಹಂಸರಿಂದ ಬೀಳ್ಕೊಂಡನು. ಪರಮಹಂಸರು ಆತನ ಮಗನೊಡನೆ ಮಾತುಕತೆಗಳನ್ನಾಡಲು ಆರಂಭಿಸಿದರು.
ಶ್ರೀರಾಮಕೃಷ್ಣರು: “ಒಂದು ಸ್ವಲ್ಪ ನ್ಯಾಯ, ವೇದಾಂತ ಮತ್ತು ಉಳಿದ ದರ್ಶನ ಗಳನ್ನು ಅಧ್ಯಯನ ಮಾಡಿದರೆ ಶ್ರೀಮದ್ಭಾಗವತವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳ ಬಹುದು, ಏನು?”
ಪಂಡಿತನ ಮಗ: “ಹೌದು, ಸಾಂಖ್ಯದರ್ಶನವನ್ನು ಓದುವುದು ಅತ್ಯಂತ ಆವಶ್ಯಕ.”
ಈ ವಿಧವಾದ ಮಾತುಗಳು ಸ್ವಲ್ಪ ಹೊತ್ತು ಸಾಗಿದವು. ಪರಮಹಂಸರು ಸ್ವಲ್ಪ ಒರಗಿ ಮಲಗಿಕೊಂಡರು. ಪಂಡಿತನ ಮಗ ಮತ್ತು ಕೆಲವು ಭಕ್ತರು ನೆಲದ ಮೇಲೆ ಕುಳಿತು ಕೊಂಡಿದ್ದಾರೆ. ಪರಮಹಂಸರು ಮಲಗಿಕೊಂಡೆ ಹಾಡಲಾರಂಭಿಸಿದರು:
ನಲಿವಿನಲಿ ದೇವರಿಗೆ ಅಂಟಿಕೊಂಡಿರು ನೀನು,
ಈ ಬಗೆಯ ಸಾಧನೆಗೆ ಎಂದಾದರೊಂದು ದಿನ
ದೊರಕುವನು ಅವನು!
ಮನೆಯ ಯಜಮಾನ ಬಂದು ಪರಮಹಂಸರಿಗೆ ಪ್ರಣಾಮ ಮಾಡಿದ. ಆತ ಒಬ್ಬ ಭಗವದ್ಭಕ್ತ, ಪರಮಹಂಸರನ್ನು ಬಹಳ ಭಕ್ತಿಯಿಂದ ನೋಡುತ್ತಿದ್ದಾನೆ. ಪಂಡಿತನ ಮಗ ಇನ್ನೂ ಕುಳಿತೇ ಇದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಈ ಕಡೆ ಪಾಣಿನಿಯ ವ್ಯಾಕರಣ ಹೇಳಿಕೊಡುತ್ತಾರೆ ಯೇನು?”
ಮಾಸ್ಟರ್: “ಏನು ಪಾಣಿನಿಯನ್ನ?”
ಶ್ರೀರಾಮಕೃಷ್ಣರು: “ಹೌದು, ನ್ಯಾಯ, ವೇದಾಂತ ಇವುಗಳನ್ನೆಲ್ಲ ಕಲಿಸುತ್ತಾರೇನು?”
ಮನೆಯ ಯಜಮಾನ ಈ ವಿಷಯವಾಗಿ ಹೆಚ್ಚು ಆಸಕ್ತಿ ತೋರಿಸದೆ ಬೇರೆ ಮಾತು ಎತ್ತಿದ.
ಯಜಮಾನ: “ಮಹಾರಾಜ್, ನಮಗೆ ಉಪಾಯವೇನು?”
ಶ್ರೀರಾಮಕೃಷ್ಣರು: “ಆತನ ನಾಮಗುಣಕೀರ್ತನೆ, ಸಾಧುಸಂಗ, ವ್ಯಾಕುಲನಾಗಿ ಆತನಿಗೆ ಪ್ರಾರ್ಥನೆ ಮಾಡೋದು.”
ಯಜಮಾನ: “ಒಳ್ಳೆಯದು, ಸಂಸಾರಾಸಕ್ತಿ ಕಡಿಮೆಯಾಗುವಂತೆ ನನಗೆ ಆಶೀರ್ವಾದ ಮಾಡಿ.”
ಶ್ರೀರಾಮಕೃಷ್ಣರು ನಗುತ್ತ: “ಎಷ್ಟಿದೆ? ಎಂಟಾಣೆಯಷ್ಟು?” (ನಗು.)
ಯಜಮಾನ: “ಅದು ನಿಮಗೆ ಗೊತ್ತೇ ಇದೆ, ಮಹಾತ್ಮರ ದಯೆ ದೊರೆಯದೆ ಇದ್ದರೆ ಏನೂ ಆಗದು.”
ಶ್ರೀರಾಮಕೃಷ್ಣರು: “ಭಗವಂತನನ್ನು ಸಂತುಷ್ಟನನ್ನಾಗಿ ಮಾಡಿದರೆ ಎಲ್ಲರೂ ಸಂತುಷ್ಟರಾಗುತ್ತಾರೆ. ಮಹಾತ್ಮರ ಹೃದಯದಲ್ಲಿ ಕೇವಲ ಆತ ತಾನೆ ಇರೋದು?”
ಯಜಮಾನ: “ಆತ ದೊರೆತುಬಿಟ್ಟ ಅಂದರೆ ಮುಂದಿನ ಮಾತೇ ಇಲ್ಲ. ಯಾರಿಗಾದರು ಆತ ದೊರೆತುಬಿಟ್ಟಿದ್ದೇ ಆದರೆ, ಆಗ ಅವರು ಎಲ್ಲವನ್ನೂ ತ್ಯಜಿಸಿ ಬಿಡುತ್ತಾರೆ. ರೂಪಾಯಿ ದೊರೆತರೆ ಕಾಸಿನ ಆನಂದದ ಕಡೆ ಹೋಗುವುದನ್ನು ಬಿಟ್ಟು ಬಿಡುತ್ತಾರೆ.”
ಶ್ರಿರಾಮಕೃಷ್ಣರು: “ಒಂದು ಸ್ವಲ್ಪ ಸಾಧನೆ ಮಾಡಲೇಬೇಕು. ಸಾಧನೆ ಮಾಡುತ್ತ ಮಾಡುತ್ತ ಮುಂದುವರಿದರೆ, ಕ್ರಮೇಣ ಆನಂದ ದೊರೆಯುತ್ತದೆ. ನೆಲದಲ್ಲಿ ಬಹಳ ಆಳದಲ್ಲಿ ಒಂದು ಗಡಿಗೆ ಹಣವನ್ನು ಹೂತಿಟ್ಟಿರುವುದಾದರೆ, ಅದು ಯಾರಿಗಾದರೂ ಬೇಕಾದರೆ, ಶ್ರಮವಹಿಸಿ ಅದನ್ನು ತೆಗೆಯಬೇಕು. ಅಗೆಯುವಾಗ ಬೆವರು ಸುರಿಯುತ್ತದೆ. ಬಹಳವಾಗಿ ಅಗೆದ ನಂತರ, ಯಾವಾಗ ಗುದ್ದಲಿಯ ಮೊನೆ ಆ ಗಡಿಗೆಗೆ ತಗುಲಿ ಹಣ ಧಣಧಣ ಎಂದು ಶಬ್ದ ಮಾಡುವುದೊ ಆಗ ಒಡನೆಯೇ ಆನಂದ ಉಂಟಾಗುತ್ತದೆ. ಅದು ಎಷ್ಟೊಂದು ಹೆಚ್ಚಾಗಿ ಧಣಧಣ ಎಂದು ಶಬ್ದಮಾಡುತ್ತದೆಯೊ ಅಷ್ಟೊಂದು ಹೆಚ್ಚಾಗಿ ಆನಂದ ಉಂಟಾಗುತ್ತದೆ.
“ರಾಮನನ್ನು ಕರೆಯುತ್ತಾ ಹೋಗು; ಆತನ ಚಿಂತನೆ ಮಾಡು. ಆತನೇ ಬೇಕಾದ್ದನ್ನೆಲ್ಲ ಒದಗಿಸಿಕೊಡುತ್ತಾನೆ.”
ಯಜಮಾನ: “ಮಹಾರಾಜ್, ನೀವೇ ರಾಮ.”
ಶ್ರೀರಾಮಕೃಷ್ಣರು: “ಅದು ಹೇಗೆ? ಅಲೆಗಳೇನೊ ನದಿಯವು; ನದಿ ಅಲೆಯದೆ?”
ಯಜಮಾನ: “ಕೇವಲ ಮಹಾತ್ಮರ ಹೃದಯದಲ್ಲೇ ರಾಮ ಇರುವುದು. ಆತನನ್ನು ಅಲ್ಲಿ ವಿನಾ ಬೇರೆಲ್ಲಿಯೂ ನೋಡಲಾಗುವುದಿಲ್ಲ. ನೋಡೋಣ ಅಂದರೆ ಈಗ ಆತ ಅವತರಿಸಿಲ್ಲವಲ್ಲ.”
ಶ್ರೀರಾಮಕೃಷ್ಣರು ನಗುತ್ತ: “ಈಗ ಅವನು ಅವತರಿಸಿಲ್ಲ ಎಂಬುದನ್ನು ನೀನು ಹೇಗೆ ಅರಿತೆ?”
ಯಜಮಾನ ಸುಮ್ಮನೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು: “ಅವತಾರವನ್ನು ಎಲ್ಲರೂ ಗುರುತಿಸಲಾರರು. ನಾರದ ರಾಮಚಂದ್ರನ ದರ್ಶನಕ್ಕಾಗಿ ಹೋದಾಗ, ಆತ ಎದ್ದು ನಿಂತು ನಾರದನಿಗೆ ಸಾಷ್ಟಾಂಗ ಪ್ರಣಾಮ ಮಾಡಿದ. ಬಳಿಕ ಹೇಳಿದ ‘ನಾವು ಸಂಸಾರಿ ಜೀವಿಗಳು. ನಿಮ್ಮಂಥ ಸಾಧುಗಳು ಬಂದು ನಮಗೆ ದರ್ಶನ ಕೊಡದಿದ್ದರೆ ನಾವು ಪವಿತ್ರರಾಗುವುದು ಎಂತು?” ಮತ್ತೆ ರಾಮಚಂದ್ರ ಸತ್ಯಪಾಲನೆಗಾಗಿ ವನವಾಸಕ್ಕೆ ತೆರಳಿದಾಗ, ರಾಮಚಂದ್ರನಿಗೆ ವನವಾಸ ದೊರಕಿದೆ ಎಂಬುದನ್ನು ಕೇಳಿ ಅನೇಕ ಋಷಿಗಳು ಉಪವಾಸವ್ರತ ಕೈಗೊಂಡಿರುವುದನ್ನು ರಾಮಚಂದ್ರ ನೋಡಿದ. ರಾಮಚಂದ್ರ ಸಾಕ್ಷಾತ್ ಪರಬ್ರಹ್ಮನೇ ಎಂಬುದು ಅವರಲ್ಲಿ ಅನೇಕರಿಗೆ ಗೊತ್ತಿರಲಿಲ್ಲ.”
ಯಜಮಾನ: “ನೀವೇ ಆ ರಾಮಚಂದ್ರ.”
ಪರಮಹಂಸರು: “ರಾಮ! ರಾಮ! ಹಾಗೆಲ್ಲ ಹೇಳಬಾರದು.”
ಹೀಗೆಂದು ಹೇಳಿ ಕೈಜೋಡಿಸಿ ಪ್ರಣಾಮ ಮಾಡಿದರು. ಮತ್ತೆ ಹೇಳಿದರು: “ಆ ರಾಮ ಸಕಲ ಜೀವರಾಶಿಗಳ ಅಂತರ್ಯಾಮಿ; ಆತ ಈ ಜಗತ್ತನ್ನೆಲ್ಲಾ ವ್ಯಾಪಿಸಿ ಕೊಂಡಿದ್ದಾನೆ ನಾನು ನಿಮ್ಮಗಳ ದಾಸ, ಆ ರಾಮನೇ ಈ ಜೀವಜಂತು ಮನುಷ್ಯ ಸಕಲವೂ ಆಗಿದ್ದಾನೆ.”
ಯಜಮಾನ: “ಮಹಾರಾಜ್, ನಮಗೆಲ್ಲ ಅದು ಗೊತ್ತಿಲ್ಲ, –”
ಶ್ರೀರಾಮಕೃಷ್ಣರು: “ನಿನಗೆ ಗೊತ್ತಿರಲಿ, ಗೊತ್ತಿಲ್ಲದಿರಲಿ, ನೀನೂ ರಾಮನೆ.”
ಯಜಮಾನ: “ನಿಮಗೆ ರಾಗ ದ್ವೇಷ ಇಲ್ಲ.”
ಶ್ರೀರಾಮಕೃಷ್ಣರು: “ಏಕಿಲ್ಲ? ಒಬ್ಬ ಗಾಡಿಯವನನ್ನು ಕಲ್ಕತ್ತಕ್ಕೆ ಬರಲು ಗೊತ್ತು ಮಾಡಿಯಾಯಿತು. ಆತ ಮುಂಗಡವಾಗಿ ಮೂರು ಆಣೆಯನ್ನು ತೆಗೆದುಕೊಂಡು ಹೋದ. ಆದರೆ ತಲೆ ತೋರಿಸಲೇ ಇಲ್ಲ. ಆತನ ಮೇಲೆ ನನಗೆ ಕೋಪ ಬಂದುಬಿಟ್ಟಿತ್ತು. ಆತ ಬಹಳ ಕೆಟ್ಟವ. ನೋಡು, ಆತ ನನಗೆ ಎಷ್ಟು ಕಷ್ಟ ಕೊಟ್ಟ!”
ಪರಮಹಂಸರು ಸ್ವಲ್ಪ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಮಾರ್ವಾಡಿ ಭಕ್ತರು ಚಾವಣಿಯ ಮೇಲೆ ಭಜನೆ ಮಾಡುತ್ತಿದ್ದಾರೆ. ಇಂದು ಶ್ರೀ ಮಯೂರಮುಕುಟಧಾರಿಯ ಮಹೋತ್ಸವ, ನೈವೇದ್ಯವೆಲ್ಲ ಸಿದ್ಧವಾಗಿದೆ. ಯಜಮಾನ ಬಂದು ಪರಮಹಂಸರನ್ನು ದೇವರ ಕೋಣೆಗೆ ಕರೆದುಕೊಂಡು ಹೋದನು, ಪರಮಹಂಸರು ಮಯೂರಮುಕುಟಧಾರಿಗೆ ಪ್ರಣಾಮ ಮಾಡಿ ಪುಷ್ಪ ಪ್ರಸಾದವನ್ನು ಸ್ವೀಕರಿಸಿದರು.
ಪರಮಹಂಸರು ವಿಗ್ರಹದರ್ಶನಾನಂತರ ಭಾವಾವಿಷ್ಟರಾಗಿದ್ದಾರೆ. ಕೈಗಳನ್ನು ಜೋಡಿಸಿ ಹೇಳುತ್ತಿದ್ದಾರೆ: “ಓ, ಗೋವಿಂದ ಮಮ ಪ್ರಾಣ! ಮಮ ಜೀವನ! ಜೈ ಗೋವಿಂದ ಗೋವಿಂದ ವಾಸುದೇವ ಸಚ್ಚಿದಾನಂದ ವಿಗ್ರಹ! ಹಾ ಕೃಷ್ಣ! ಹೇ ಕೃಷ್ಣ! ಜ್ಞಾನ ಕೃಷ್ಣ! ಪ್ರಾಣ ಕೃಷ್ಣ! ಆತ್ಮ ಕೃಷ್ಣ! ದೇಹ ಕೃಷ್ಣ! ಜಾತಿ ಕೃಷ್ಣ! ಕುಲ ಕೃಷ್ಣ! ಪ್ರಾಣ! ಹೇ, ಗೋವಿಂದ ಮಮ ಜೀವನ!” ಎಂದು. ಹೀಗೆ ಹೇಳುತ್ತ ಹೇಳುತ್ತ ಪರಮಹಂಸರು ನಿಂತೇ ಸಮಾಧಿಸ್ಥರಾಗಿ ಬಿಟ್ಟಿದ್ದಾರೆ. ರಾಮಚಟರ್ಜಿ ಅವರನ್ನು ಹಿಡಿದು ನಿಂತುಕೊಂಡಿದ್ದಾನೆ.
ಬಹಳ ಹೊತ್ತಾದ ಮೇಲೆ ಪರಮಹಂಸರು ಪ್ರಕೃತಿಸ್ಥರಾದರು. ಈಗ ಮಾರ್ವಾಡಿ ಭಕ್ತರು ಸಿಂಹಾಸನಸ್ಥ ಮಯೂರಮುಕುಟಧಾರಿ ವಿಗ್ರಹವನ್ನು ಹೊರಗಡೆಗೆ ತೆಗೆದುಕೊಂಡು ಹೋಗಲು ಬಂದಿದ್ದಾರೆ. ನೈವೇದ್ಯದ ವ್ಯವಸ್ಥೆಯನ್ನು ಹೊರಗಡೆ ಮಾಡಿದ್ದಾರೆ. ಮಹದಾ ನಂದದಿಂದ ಮಾರ್ವಾಡಿ ಭಕ್ತರು ಆ ಸಿಂಹಾಸನಸ್ಥ ವಿಗ್ರಹವನ್ನು ದೇವರ ಮನೆಯಿಂದ ಹೊರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಪರಮಹಂಸರು ಅದನ್ನು ಹಿಂಬಾಲಿಸುತ್ತಿದ್ದಾರೆ. ನೈವೇದ್ಯವನ್ನು ಅರ್ಪಿಸಿಯಾಯಿತು. ನೈವೇದ್ಯವನ್ನಿಟ್ಟಿದ್ದಾಗ ಮಾರ್ವಾಡಿ ಭಕ್ತರು ವಿಗ್ರಹ ದೆದುರಿಗೆ ಒಂದು ಬಟ್ಟೆಯ ಪರದೆಯನ್ನು ಇಳಿಬಿಟ್ಟಿದ್ದರು. ಈಗ ಮಂಗಳಾರತಿ ಆರಂಭ ವಾಯಿತು. ಭಜನೆಯೂ ನಡೆಯುತ್ತದೆ. ಪರಮಹಂಸರು ವಿಗ್ರಹಕ್ಕೆ ಚಾಮರದಿಂದ ಶೈತ್ಯೋಪಚಾರ ಮಾಡುತ್ತಿದ್ದಾರೆ.
ಈಗ ಬ್ರಾಹ್ಮಣ ಭೋಜನ ನಡೆಯುತ್ತಿದೆ. ಆ ಚಾವಣಿ ಮೇಲೆ ಪರಮಹಂಸರ ಕಣ್ಣೆದುರು ಇಂದಿನ ಕೆಲಸಕಾರ್ಯಗಳೆಲ್ಲ ನಿರ್ವಿಘ್ನವಾಗಿ ನೆರವೇರುತ್ತಾ ಬಂದಿವೆ. ಮಾರ್ವಾಡಿ ಭಕ್ತರು ಪರಮಹಂಸರನ್ನು ಊಟಮಾಡುವಂತೆ ಬೇಡಿಕೊಂಡರು. ಪರಮಹಂಸರು ಊಟಕ್ಕೆ ಕುಳಿತುಕೊಂಡರು; ಭಕ್ತರೂ ಕುಳಿತು ಪ್ರಸಾದ ಸ್ವೀಕರಿಸಿದರು.
ಪರಮಹಂಸರು ಆ ಮನೆಯ ಯಜಮಾನನಿಂದ ಬೀಳ್ಕೊಂಡರು. ಈಗ ಸಾಯಂಕಾಲವಾಗಿಬಿಟ್ಟಿದೆ. ಇನ್ನೂ ಬೀದಿ, ಜನ ಗಾಡಿ ಮೊದಲಾದವುಗಳಿಂದ ಕಿಕ್ಕಿರಿದು ತುಂಬಿದೆ. ಆಗ ಪರಮಹಂಸರು ಹೇಳಿದರು, “ನಾವು ಗಾಡಿಯಿಂದ ಇಳಿದುಬಿಡೋಣ. ಅದು ಹಿಂದಿನ ರಸ್ತೆಯಿಂದ ಬಳಸಿಕೊಂಡು ಬರಲಿ” ಎಂದು. ಬೀದಿಯಲ್ಲಿ ಸ್ವಲ್ಪ ದೂರ ನಡೆದ ನಂತರ ಒಂದು ಗವಿಯೋಪಾದಿಯಲ್ಲಿದ್ದ ಮನೆಯ ಮುಂದೆ ಒಬ್ಬ ಎಲೆಡಿಕೆ ಅಂಗಡಿ ಇಟ್ಟಿರುವುದನ್ನು ಕಂಡರು. ಆ ಮನೆಯನ್ನು ಪ್ರವೇಶಮಾಡಬೇಕಾದರೆ ಬಗ್ಗಿ ಒಳಕ್ಕೆ ನುಗ್ಗಬೇಕು. ಪರಮಹಂಸರು ಹೇಳಿದರು; “ಏನು ಕಷ್ಟವಪ್ಪ ಇದು, ಇಷ್ಟರೊಳಗೆ ಕಟ್ಟಿಬಿದ್ದಿರೋದು! ಸಂಸಾರಿಗಳದು ಎಂಥ ಸ್ವಭಾವ, ಇದರಲ್ಲೇ ಆನಂದಮಯ ವಾಗಿರೋದು!”
ಗಾಡಿ ಬಳಸಿಕೊಂಡು ಬಂದಿತು, ಪರಮಹಂಸರು ಮತ್ತೆ ಗಾಡಿಗೆ ಹತ್ತಿದರು. ಬಳಿಕ ಬಾಬುರಾಮ, ಮಾಸ್ಟರ್, ರಾಮಚಟರ್ಜಿ ಗಾಡಿಯನ್ನು ಹತ್ತಿದರು. ಚಿಕ್ಕ ಗೋಪಾಲ ಗಾಡಿಯ ಕಮಾನಿನ ಮೇಲೆ ಕುಳಿತುಕೊಂಡನು.
ಒಬ್ಬ ಭಿಕ್ಷುಕಿ ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಗಾಡಿಯ ಹತ್ತಿರಕ್ಕೆ ಬಂದು ಭಿಕ್ಷೆಬೇಡಿದಳು. ಪರಮಹಂಸರು ಅದನ್ನು ನೋಡಿ, ಮಾಸ್ಟರನ್ನು ಕೇಳಿದರು, “ಏನು ಕಾಸು ಇದೆಯೇನು?” ಎಂದು. ಗೋಪಾಲ ಆಕೆಗೆ ಮೂರು ಕಾಸು ಕೊಟ್ಟ.
ಗಾಡಿ ಬಡೋಬಜಾರಿನ ಮೂಲಕ ಮುಂದುವರಿಯುತ್ತಿದೆ. ದೀಪಾವಳಿಯ ಧಾಮ್ ಧೂಮ್ ಇನ್ನೂ ಮುಂದುವರಿಯುತ್ತಿದೆ. ರಾತ್ರಿಯೇನೊ ಆರಂಭವಾಗಿದೆ. ಆದರೆ ಎಲ್ಲೆಲ್ಲೂ ದೀಪವೇ ದೀಪ. ಗಾಡಿ ಬಡೋಬಜಾರಿನ ಗಲ್ಲಿಯನ್ನು ಬಿಟ್ಟು ಚಿತ್ಪುರ ರಸ್ತೆಗೆ ಬಂದಿತು. ಅಲ್ಲೂ ಅಸಂಖ್ಯ ದೀಪಗಳು. ಇರುವೆ ಸಾಲಿನೋಪಾದಿಯಲ್ಲಿ ಜನ ಮುಂದುವರಿಯುತ್ತಿದ್ದಾರೆ. ಜನರು ಬಾಯಿ ಬಿಟ್ಟುಕೊಂಡು ಇಕ್ಕೆಲಗಳಲ್ಲಿಯೂ ಬಹಳ ಚೆನ್ನಾಗಿ ಅಲಂಕೃತವಾಗಿರುವ ಅಂಗಡಿ ಮುಂಗಟ್ಟುಗಳನ್ನು ನೋಡಿಕೊಂಡು ಮುಂದುವರಿ ಯುತ್ತಿದ್ದಾರೆ. ಅಲ್ಲಲ್ಲಿ ಮಿಠಾಯಿ ಅಂಗಡಿಗಳಿವೆ; ತಟ್ಟೆಗಳಲ್ಲಿ ಸಿಹಿತಿಂಡಿಗಳನ್ನು ಬಹಳ ಚೆನ್ನಾಗಿ ಜೋಡಿಸಿ ಇಟ್ಟಿದ್ದಾರೆ. ಇನ್ನೂ ಬೇರೆ ಬೇರೆ ಕಡೆಗಳಲ್ಲಿ ಸುಗಂಧದ್ರವ್ಯಗಳ ಅಂಗಡಿಗಳು. ಅವೆಲ್ಲ ವಿವಿಧ ಚಿತ್ರಪಟಗಳಿಂದ ಶೋಭಿತವಾಗಿವೆ. ಅಂಗಡಿಯವರು ಬಹಳ ಸೊಗಸಾದ ಉಡಿಗೆತೊಡಿಗೆಗಳನ್ನು ಹಾಕಿಕೊಂಡು ಪನ್ನೀರುದಾನಿಯನ್ನು ಕೈಯಲ್ಲಿ ಹಿಡಿದು ಪ್ರೇಕ್ಷಕ ವೃಂದಕ್ಕೆ ಪನ್ನೀರನ್ನು ಎರಚುತ್ತಿದ್ದಾರೆ. ಪರಮಹಂಸರ ಗಾಡಿ ಒಂದು ಸುಗಂಧದ್ರವ್ಯದ ಅಂಗಡಿಯ ಹತ್ತಿರಕ್ಕೆ ಬಂದಿತು. ಪರಮಹಂಸರು ಐದು ವರ್ಷದ ಬಾಲಕನೋಪಾದಿಯಲ್ಲಿ ಚಿತ್ರಪಟಗಳನ್ನು ಮತ್ತು ದೀಪಗಳನ್ನು ನೋಡಿ ಆನಂದ ಪಡುತ್ತಿದ್ದಾರೆ. ಎಲ್ಲಾ ಕಡೆಯೂ ಕೋಲಾಹಲವೇ ಕೋಲಾಹಲ. ಪರಮಹಂಸರು ಗಟ್ಟಿಯಾಗಿ ಕೂಗಿಕೊಳ್ಳುತ್ತಿದ್ದಾರೆ, “ಇನ್ನೂ ಮುಂದೆ ಹೋಗಿ ನೋಡಿ! ಇನ್ನೂ ಮುಂದಕ್ಕೆ ಹೋಗಿ ನೋಡಿ!” ಹೀಗೆಂದು ಹೇಳುತ್ತ ನಗುತ್ತಿದ್ದಾರೆ. ಗಹಗಹಿಸಿ ನಗುತ್ತ ಬಾಬುರಾಮನಿಗೆ ಹೇಳುತ್ತಿದ್ದಾರೆ, “ಏನು ಮಾಡುತ್ತಿದ್ದೀಯೆ? ಹೋಗು ಇನ್ನೂ ಮುಂದಕ್ಕೆ” ಎಂದು. ಭಕ್ತರೂ ನಗಲಾರಂಭಿಸಿದರು. ಭಕ್ತರು ಭಾವಿಸಿದರು, ಪರಮಹಂಸರು ಬಹುಶಃ ಹೇಳುತ್ತಿದ್ದಾರೆ, ಭಗವಂತನ ಕಡೆಗೆ ಮುಂದುವರಿಯಿರಿ, ನೀವು ಈಗಿರುವ ಸ್ಥಿತಿಯಲ್ಲೇ ತುಷ್ಟರಾಗಬೇಡಿ ಎಂದು.
ಗಾಡಿ ಮುಂದುವರಿಯಲಾರಂಭಿಸಿತು. ಮಾಸ್ಟರ್ ತಮಗಾಗಿ ಸ್ನಾನದ ಚೌಕಗಳನ್ನು ತಂದಿರುವುದು ಪರಮಹಂಸರ ಕಣ್ಣಿಗೆ ಬಿತ್ತು. ಅವುಗಳಲ್ಲಿ ಎರಡು ಕೋರಾ ಎರಡು ಚಲುವೆ ಮಾಡಿದ್ದು. ಆದರೆ ಪರಮಹಂಸರು ಎರಡು ಕೋರಾ ಚೌಕಗಳನ್ನು ತರಲು ಹೇಳಿದ್ದರು. ಅವರು ಮಣಿಗೆ ಹೇಳಿದರು, “ಆ ಎರಡು ಕೋರಾ ಚೌಕಗಳನ್ನು ಮಾತ್ರ ನನಗೆ ಈಗಲೇ ಕೊಡು. ಉಳಿದ ಎರಡನ್ನು ಸದ್ಯಕ್ಕೆ ತೆಗೆದುಕೊಂಡು ಹೋಗಿ ನಿನ್ನ ಹತ್ತಿರ ಇಟ್ಟುಕೊ. ಹೋಗಲಿ ಅದರಲ್ಲೂ ಒಂದನ್ನು ಕೊಟ್ಟುಬಿಡು.”
ಮಾಸ್ಟರ್: “ಒಳ್ಳೆಯದು, ಹಾಗಾದರೆ ಒಂದು ಚೌಕವನ್ನು ವಾಪಸು ತೆಗೆದುಕೊಂಡು ಹೋಗಲೇನು?”
ಶ್ರೀರಾಮಕೃಷ್ಣರು: “ಈಗ ಕೋರಾ ಚೌಕಗಳೇ ಸಾಕು. ಅವೆರಡನ್ನೂ ಹಿಂದಕ್ಕೆ ತೆಗೆದುಕೊಂಡು ಹೋಗಿಬಿಡು”
ಮಾಸ್ಟರ್: “ಒಳ್ಳೆಯದು, ತಮ್ಮ ಚಿತ್ತ.”
ಶ್ರೀರಾಮಕೃಷ್ಣರು: “ಆವಶ್ಯಕತೆ ತೋರಿಬಂದಾಗ ಮತ್ತೆ ಅವುಗಳನ್ನು ತಂದು ಕೊಡುವೆಯಂತೆ. ನೋಡು, ನಿನ್ನೆ ವೇಣೀಪಾಲ ರಾಮಲಾಲನಿಗೆಂದು ತಿಂಡಿತೀರ್ಥವನ್ನು ಗಾಡಿಯಲ್ಲಿ ಇಡಲು ಬಂದ. ನಾನು, ‘ನನ್ನೊಡನೆ ಯಾವ ವಸ್ತುವನ್ನೂ ಕಳುಹಿಸಬೇಡ. ನಾನು ಸಂಚಯ ಮಾಡೋ ಹಾಗಿಲ್ಲ’ ಎಂದು ಹೇಳಿದೆ.
ಮಾಸ್ಟರ್: “ಅದು ಸರಿ. ಚಲುವೆ ಮಾಡಿದ ಎರಡು ಚೌಕಗಳನ್ನೂ ಹಿಂದಿರುಗಿ ತೆಗೆದುಕೊಂಡು ಹೋಗಿಬಿಡುತ್ತೇನೆ.”
ಶ್ರೀರಾಮಕೃಷ್ಣರು ಮೃದುವಾಗಿ: “ನನ್ನ ಮನಸ್ಸಿನಲ್ಲಿ ಯಾವುದಾದರೂ ಆಸೆ ಎದ್ದರೆ ಅದು ನಿಮ್ಮೆಲ್ಲರ ಹಿತಚಿಂತನೆಗಾಗಿಯೆ ಅಲ್ಲವೆ? ನೀನು ನನಗೆ ಸೇರಿದವ. ಬೇಕಾದಾಗಲೆಲ್ಲ ತಿಳಿಸುತ್ತೇನೆ.”
ಮಾಸ್ಟರ್ ವಿನಯದಿಂದ: “ದಯವಿಟ್ಟು ಹಾಗೆ ಮಾಡಿ.”
ಶ್ರೀರಾಮಕೃಷ್ಣರು ಯಾರೊ ಒಬ್ಬ ಭಕ್ತನ ಮಾತು ಎತ್ತಿದರು. ಅವರು: “ನಾನು ಅವನಿಗೆ ಹೇಳಿದೆ ‘ನಾನು ಬಡೋಬಜಾರಿಗೆ ಹೋಗುತ್ತೇನೆ, ನೀನು ಅಲ್ಲಿಗೆ ಬಾ’ ಅಂತ. ಅವನು ಏನು ಹೇಳಿದ ನಿಮಗೆ ಗೊತ್ತೆ? ‘ಟ್ರಾಮಿಗೆ ಒಂದಾಣೆ ಕೊಡಬೇಕಾಗುತ್ತದೆ. ನಾನೆಲ್ಲಿ ತರಲಿ?’ ಅಂತ. ನಿನ್ನೆ ವೇಣೀಪಾಲನ ತೋಟಕ್ಕೆ ಬಂದಿದ್ದ. ಅಲ್ಲಿ ಆಚಾರ್ಯನ ಕೆಲಸ ಮಾಡಿದ. ಹಾಗೆ ಮಾಡು ಅಂತ ಯಾರೂ ಆತನಿಗೆ ಹೇಳಲಿಲ್ಲ. ತನ್ನ ಸ್ವಪ್ರತಿಷ್ಠೆಯನ್ನು ತೋರಿಸಿಕೊಂಡ. ಆತನ ಇಚ್ಛೆ ತಾನೂ ಬ್ರಹ್ಮಜ್ಞಾನಿಗಳಲ್ಲಿ (ಬ್ರಹ್ಮಸಮಾಜ ದವರಲ್ಲಿ) ಒಬ್ಬ ಎಂದು ಜನರಿಗೆ ಗೊತ್ತಾಗಲಿ ಅಂತ. (ಮಾಸ್ಟರಿಗೆ) ಟ್ರಾಮಿಗೆ ಒಂದಾಣೆ ಕೊಡಬೇಕಾಗುತ್ತೆ ಅಂತ ಅವ ಏಕೆ ಹೇಳಿದ ಹೇಳು ನೋಡೋಣ?”
ಸಂಭಾಷಣೆ ಮಾರ್ವಾಡಿಗಳ ಅನ್ನಕೂಟ ಹಬ್ಬದ ವಿಷಯವಾಗಿ ಆರಂಭವಾಯಿತು.
ಶ್ರೀರಾಮಕೃಷ್ಣರು ಭಕ್ತರಿಗೆ: “ಇಲ್ಲಿ ಏನು ನೋಡಿದಿರೋ ಬೃಂದಾವನದಲ್ಲೂ ಹಾಗೇನೆ, ರಾಖಾಲ ಮೊದಲಾದವರೂ ಬೃಂದಾವನದಲ್ಲಿ ಇದನ್ನೇ ನೋಡುತ್ತಿದ್ದಾರೆ. ಆದರೆ ಅನ್ನಕೂಟ ಇನ್ನೂ ದೊಡ್ಡದು; ಜನರ ಕೂಟವೂ ಹೆಚ್ಚು; ಜೊತೆಗೆ ಅಲ್ಲಿ ಗೋವರ್ಧನ ಪರ್ವತ ಬೇರೆ ಇದೆ. ಇಷ್ಟೇ ವ್ಯತ್ಯಾಸ.
“ಮಾರ್ವಾಡಿಗಳದು ಎಂಥ ಭಕ್ತಿ ಎಂಬುದನ್ನು ನೋಡಿದಿರಾ? ಇದು ಯಥಾರ್ಥ ಹಿಂದೂ ಭಾವ. ಇದೇ ಸನಾತನಧರ್ಮ. ದೇವರ ಮೆರವಣಿಗೆ ಸಮಯದಲ್ಲಿ ಅವರು ಎಷ್ಟು ಆನಂದಪಟ್ಟರು ಎಂಬುದನ್ನು ನೋಡಿದಿರಾ? ಅವರ ಆನಂದ ಈ ರೀತಿಯದು: ‘ನಮಗೆ ಭಗವಂತನ ಸಿಂಹಾಸನವನ್ನು ನಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗಲು ಸೌಲಭ್ಯ ದೊರೆಯಿತಲ್ಲ!’
“ಹಿಂದೂಧರ್ಮವೇ ಸನಾತನಧರ್ಮ. ಈ ನವನಾಗರಿಕ ಕಾಲದಲ್ಲಿ ಕಾಣಬರುವ ಧರ್ಮಗಳೆಲ್ಲ ಆತನ ಇಚ್ಛೆಯಿಂದ ಬರುತ್ತವೆ ಹೋಗುತ್ತವೆ–ಹೆಚ್ಚು ಕಾಲ ನಿಲ್ಲವು. ಅದಕ್ಕಾಗಿಯೆ ನಾನು ‘ಈ ನವನಾಗರಿಕ ಧರ್ಮಗಳ ಅನುಯಾಯಿಗಳ ‘ಚರಣೇಭ್ಯೋ ನಮಃ’ ಎಂದು ಹೇಳುವುದು. ಹಿಂದೂಧರ್ಮ ಎಂದಿನಿಂದಲೂ ಬದುಕಿ ಬಂದಿದೆ, ಮುಂದೆಯೂ ಎಂದೆಂದಿಗೂ ಬದುಕಿ ಬಾಳುತ್ತದೆ.”
ಮಾಸ್ಟರ್ ತನ್ನ ಮನೆಗೆ ಹೋಗಬೇಕಾಗಿದೆ. ಪರಮಹಂಸರಿಗೆ ಪ್ರಣಾಮಮಾಡಿ ಶೋಭಾಬಜಾರಿನ ಹತ್ತಿರ ಗಾಡಿಯಿಂದ ಇಳಿದನು. ಪರಮಹಂಸರು ಆನಂದದಿಂದ ಗಾಡಿಯಲ್ಲಿ ಮುಂದುವರಿಯುತ್ತಿದ್ದಾರೆ.
1. “ಅಂದರೆ, ಅನ್ನದ ರಾಶಿ” ಎಂದು. ಈ ಹಬ್ಬದಲ್ಲಿ ಒಂದು ಅನ್ನದ ಗುಡ್ಡೆಯನ್ನೇ ಭಗವಂತನಿಗೆ ಅರ್ಪಿಸಿ, ಬಳಿಕ ಅದನ್ನು ಭಕ್ತರಿಗೆ ಮತ್ತು ಬಡಬಗ್ಗರಿಗೆ ಹಂಚುತ್ತಾರೆ.