೧೧ನೆ ಅಕ್ಟೋಬರ್ ೧೮೮೪, ಸಪ್ತಮಿ, ಶನಿವಾರ
ಪರಮಹಂಸರು ಚಿಕ್ಕ ಮಂಚದ ಮೇಲೆ ತಮ್ಮ ಕೊಠಡಿಯಲ್ಲಿ ಸುಮ್ಮನೆ ಮಲಗಿಕೊಂಡಿದ್ದಾರೆ. ಸಮಯ ಅಪರಾಹ್ನ ಎರಡು, ನೆಲದ ಮೇಲೆ ಮಾಸ್ಟರ್ ಮತ್ತು ಪ್ರಿಯ ಮುಖರ್ಜಿ ಕುಳಿತುಕೊಂಡಿದ್ದಾರೆ. ಮಾಸ್ಟರ್ ತನ್ನ ಸ್ಕೂಲನ್ನು ಒಂದು ಘಂಟೆಗೆ ಬಿಟ್ಟು ಅದೇತಾನೆ ಬಂದು ಕುಳಿತಿದ್ದಾನೆ. ಪರಮಹಂಸರು ಶ್ರೀಮಂತ ಯದುಮಲ್ಲಿಕನ ಜಿಪುಣತೆಯ ಸಂಬಂಧವಾಗಿ ಮಾತು ಎತ್ತಿದರು.
ಶ್ರೀರಾಮಕೃಷ್ಣರು: “ಒಮ್ಮೆ ನಾನು ಯದುಮಲ್ಲಿಕನ ಮನೆಗೆ ಹೋಗಿದ್ದೆ. ನೇರವಾಗಿ ಕೇಳಿಬಿಟ್ಟ, ‘ಗಾಡಿ ಬಾಡಿಗೆ ಎಷ್ಟು’ ಅಂತ. ಆಗ ಜೊತೆಯವರು ಹೇಳಿದರು, ‘ಮೂರು ರೂಪಾಯಿ ಎರಡು ಆಣೆ’ ಅಂತ. ಬಳಿಕ ಒಮ್ಮೆ ನನ್ನನ್ನೂ ಕೇಳಿದ. ಅದೂ ಸಾಲದೆಂದು ಆತನ ಮನೆಯವನೊಬ್ಬ ಗಾಡಿಯವನನ್ನು ರಹಸ್ಯವಾಗಿ ಕೇಳಿದ. ಗಾಡಿಯವ ಹೇಳಿದ, ‘ಮೂರು ರೂಪಾಯಿ ನಾಲ್ಕು ಆಣೆ’ ಅಂತ. (ಎಲ್ಲರೂ ನಗುತ್ತಾರೆ.) ಆಗ ನಮ್ಮ ಹತ್ತಿರಕ್ಕೆ ಓಡಿಬಂದು ಕೇಳಿದ, ‘ಗಾಡಿ ಬಾಡಿಗೆ ಎಷ್ಟು ಅಂತ ಹೇಳಿದಿರಿ?’ ಎಂದು.
“ಅಂದು ಒಬ್ಬ ದಲ್ಲಾಳಿ ಅಲ್ಲಿಗೆ ಬಂದಿದ್ದ. ಆತ ಯದುವನ್ನು ಕೇಳಿದ, ‘ಬಡೊ ಬಜಾರಿನ ಹತ್ತಿರ ಒಂದು ಭೂಮಿ ಮಾರಾಟಕ್ಕೆ ಬಂದಿದೆ, ಕೊಂಡುಕೊಳ್ಳುವಿರೇನು?’ ಎಂದು. ಯದು ಕೇಳಿದ, ‘ಬೆಲೆ ಎಷ್ಟು?’ ಅಂತ. ದಲ್ಲಾಳಿ ಅದರ ಬೆಲೆ ಹೇಳಿದ. ಬಳಿಕ ಯದು ಕೇಳಿದ, ಅದಕ್ಕಿಂತ ಕಡಿಮೆ ಬೆಲೆಗೆ ಕೊಡಲೊಲ್ಲನೆ ಎಂದು. ಆಗ ನಾನು ಯದುವಿಗೆ ಹೇಳಿದೆ, ನೀನು ಕೊಂಡುಕೊಳ್ಳುವುದೇನೂ ಇಲ್ಲ. ಸುಮ್ಮನೆ ಚೌಕಾಸಿ ಮಾಡುತ್ತಿದ್ದೀಯೆ, ಅಲ್ಲವೆ? ಎಂದು. ಆಗ ನನ್ನ ಕಡೆ ತಿರುಗಿ ನಕ್ಕ.
“ಪ್ರಾಪಂಚಿಕ ಸ್ವಭಾವವೇ ಇದು; ಒಂದು ಹತ್ತಾರು ಜನ ಮನೆಗೆ ಬಂದು ಹೋಗುತ್ತಿರಬೇಕು! ಊರಿನಲ್ಲೆಲ್ಲ ದೊಡ್ಡವ ಅನ್ನಿಸಿಕೊಳ್ಳಬೇಕು!
“ಯದು ಒಮ್ಮೆ ಅಧರಸೇನನ ಮನೆಗೆ ಹೋಗಿದ್ದ. ನಾನು ಯದುವಿಗೆ ಹೇಳಿದೆ, ‘ನೀನು ಅಧರನ ಮನೆಗೆ ಹೋದುದಕ್ಕಾಗಿ ಆತನಿಗೆ ಬಹಳ ಆನಂದವಾಗಿಬಿಟ್ಟಿದೆ’ ಎಂದು. ಆಗ ಆತ ಕೇಳಿದ, ‘ಏನು, ಏನು ನಿಜವಾಗಿ?’ ಯದುವಿನ ಮನೆಗೆ ಒಬ್ಬ ಮಲ್ಲಿಕ ಬಂದಿದ್ದ. ಒಳ್ಳೆ ಚತುರ ಮತ್ತು ತಂತ್ರಿ. ಕಣ್ಣು ನೋಡಿಯೆ ಅರಿತುಕೊಂಡುಬಿಟ್ಟೆ. ಆಗ ನಾನು ಆತನ ಕಡೆ ತಿರುಗಿ ನೋಡಿ, ‘ಚತುರನಾಗೋದು ಒಳ್ಳೆಯದಲ್ಲ. ಕಾಗೆಯೇನೊ ಬಹಳ ಚತುರ ಪ್ರಾಣಿ. ಆದರೆ ಅದು ಪರರ ಹೇಸಿಕೆಯನ್ನು ತಿಂದು ಸಾಯುತ್ತದೆ’ ಎಂದು ಹೇಳಿದೆ. ಆತ ದಟ್ಟದರಿದ್ರನಾಗಿಯೂ ಕಂಡುಬಂದ. ಯದುವಿನ ತಾಯಿ ಆಶ್ಚರ್ಯ ಚಕಿತಳಾಗಿ ನನ್ನನ್ನೇ ಕೇಳಿದಳು, ‘ಆತ ದಟ್ಟದರಿದ್ರ ಎಂಬುದು ನಿಮಗೆ ಹೇಗೆ ಗೊತ್ತಾಯಿತು?’ ಎಂದು. ಮೋರೆ ನೋಡಿಯೆ ತಿಳಿದುಕೊಂಡುಬಿಟ್ಟೆ.”
ನಾರಾಯಣ ಬಂದಿದ್ದಾನೆ. ಆತನೂ ನೆಲದ ಮೇಲೆ ಕುಳಿತುಕೊಂಡಿದ್ದಾನೆ.
ಶ್ರೀರಾಮಕೃಷ್ಣರು ಪ್ರಿಯನಾಥನಿಗೆ: “ನಿಮ್ಮ ಹರಿ ಬಹಳ ಒಳ್ಳೆಯವ.”
ಪ್ರಿಯನಾಥ : “ಅಂಥ ವಿಶೇಷವಾದ ಒಳ್ಳೆಯತನ ಏನಿದೆ ಅವನಲ್ಲಿ ? ಆದರೆ ಇನ್ನೂ ಮಗುವಿನಂಥ ಮನಸ್ಸು.”
ನಾರಾಯಣ : “ಅವನು ತನ್ನ ಹೆಂಡತೀನ ತಾಯಿ ಎಂದು ಕರೆಯುತ್ತಾನೆ.”
ಶ್ರೀರಾಮಕೃಷ್ಣರು : “ಹೇಗಪ್ಪ ಅದು ? ಅದು ನನ್ನ ಕೈಯಲ್ಲೂ ಸಾಧ್ಯವಿಲ್ಲ.ಅಂಥಾದ್ದರಲ್ಲಿ ಅವನು ತಾಯಿ ಅಂತ ಕರೆಯುತ್ತಾನೆಯೆ ! (ಪ್ರಿಯನಾಥನ ಕಡೆಗೆ ತಿರುಗಿ) ನೋಡು, ಹುಡುಗನದು ಬಹಳ ಶಾಂತಪ್ರಕೃತಿ, ಭಗವಂತನ ಕಡೆ ಮನಸ್ಸಿದೆ.”
ಪರಮಹಂಸರು ಬೇರೆ ಮಾತು ಎತ್ತಿದರು.
ಶ್ರೀರಾಮಕೃಷ್ಣರು : “ಹೇಮ ಏನು ಹೇಳಿದ ಎಂಬುದು ಗೊತ್ತೇನು ? ಬಾಬುರಾಮನಿಗೆ ಹೇಳಿದ, ‘ಭಗವಂತನೊಬ್ಬನೇ ಸತ್ಯ; ಉಳಿದುದೆಲ್ಲ ಮಿಥ್ಯ’ ಎಂದು. (ಎಲ್ಲರೂ ನಗುತ್ತಾರೆ.) ಹಾಗಲ್ಲ ! ಹೃತ್ಪೂರ್ವಕವಾಗಿಯೂ ಹೇಳಿದ. ಇದೂ ಅಲ್ಲದೆ ತನ್ನ ಮನೆಗೆ ನನ್ನನ್ನು ಕರೆದುಕೊಂಡು ಹೋಗಿ ತಾನು ಹಾಡುವುದಾಗಿ ಹೇಳಿದ. ಆದರೆ ಅದು ನಡೆಯಲಿಲ್ಲ. ಬಳಿಕ ಏನೊ ಹೇಳಿದನಂತೆ, ‘ನಾನು ತಾಳ ಮೃದಂಗಗಳೊಡನೆ ಹಾಡಲಾ ರಂಭಿಸಿದರೆ ಜನ ಏನು ಅಂದುಕೊಳ್ಳುತ್ತಾರೊ !’ ಎಂದು. ಜನರು ಹುಚ್ಚನಾಗಿ ಬಿಟ್ಟಿದ್ದಾನೆ ಎಂಬುದಾಗಿ ಹೇಳಬಹುದೆಂದು ಹೆದರಿಬಿಟ್ಟ.
“ಹರಿಪದನು ಘೋಷ್ಪಾರಾ ಸಂಪ್ರದಾಯದ ಒಬ್ಬ ಹೆಂಗಸಿನ ಬಲೆಗೆ ಬಿದ್ದಿದ್ದಾನೆ –– ಬಿಡುತ್ತಿಲ್ಲ. ‘ತೊಡೆಯ ಮೇಲೆ ಕೂರಿಸಿಕೊಂಡು ತಿನ್ನಿಸುತ್ತಾಳೆ ಅಂತೆ. ಹೇಳುತ್ತಾಳಂತೆ, ಗೋಪಾಲ ಭಾವ !’ ಅಂತ. ನಾನು ಆತನಿಗೆ ಬಹಳವಾಗಿ ಎಚ್ಚರಿಕೆ ಕೊಟ್ಟಿದ್ದೇನೆ. ವಾತ್ಸಲ್ಯಭಾವ ಅಂತಲೇನೊ ಹೇಳುತ್ತಾಳೆ ! ಈ ವಾತ್ಸಲ್ಯಭಾವ ಕೊನೆಗೆ ಗೀತ್ಸಲ್ಯಭಾವವಾಗಿಬಿಡುತ್ತದೆ.
“ನೋಡು, ಹೆಂಗಸಿನಿಂದ ಬಹಳ ದೂರದಲ್ಲಿಯೆ ಇರಬೇಕು. ಆಗ ಭಗವಂತನ ಸಾಕ್ಷಾತ್ಕಾರ ದೊರೆಯುವ ಸಂಭವ. ದುರಾಲೋಚನೆಯುಳ್ಳ ಹೆಂಗಸರೊಡನೆ ಬೆರೆಯುವುದು, ಅಥವಾ ಅವರ ಕೈಯಿಂದ ಏನಾದರೂ ತಿನ್ನೋದು ಬಲು ಕೆಟ್ಟದ್ದು. ಅವರು ಸತ್ತ್ವವನ್ನು ಅಪಹರಿಸಿಕೊಂಡುಬಿಡುತ್ತಾರೆ. ಬಹಳ ಎಚ್ಚರಿಕೆಯಿಂದ ಇದ್ದುಕೊಂಡಿದ್ದರೆ ಮಾತ್ರ ನಮ್ಮ ಭಕ್ತಿ ಸುರಕ್ಷಿತವಾಗಿ ಉಳಿದುಕೊಳ್ಳುತ್ತದೆ. ಭವನಾಥ, ರಾಖಾಲ ಇವರೆಲ್ಲ ಕೂಡಿ ಒಂದು ದಿನ ಸ್ವಯಂಪಾಕ ತಯಾರುಮಾಡಿದರು. ಅವರೆಲ್ಲ ಊಟಕ್ಕೆ ಕುಳಿತಿದ್ದಾರೆ. ಆ ಸಮಯಕ್ಕೆ ಸರಿಯಾಗಿ ಒಬ್ಬ ಬಾವುಲ (ಬಾವುಲ ಸಂಪ್ರದಾಯದವ) ಬಂದು ಅವರ ಪಂಕ್ತಿಯಲ್ಲಿ ಕುಳಿತುಕೊಂಡು ಹೇಳಿದ, ‘ಊಟಕ್ಕೆ ಹಾಕಿ’ ಅಂತ. ನಾನು ಹೇಳಿದೆ, ‘ಸಾಕಾದಷ್ಟು ಅನ್ನವಿಲ್ಲ; ಒಂದು ಪಕ್ಷ ಮಿಕ್ಕರೆ ನಿನಗಾಗಿ ಇಡುತ್ತೇವೆ’ ಎಂದು. ಆತ ಕೋಪಿಸಿಕೊಂಡು ಎದ್ದು ಹೊರಟುಹೋದ. ವಿಜಯದಶಮಿ ದಿನ ಸಿಕ್ಕಿಸಿಕ್ಕಿದವರೆಲ್ಲ ತಿಂಡಿತಂದು ಬಾಯಿಗೆ ಹಾಕುತ್ತಾರೆ, ಹಾಗೆ ಅನುಮತಿ ಕೊಡುವುದು ಒಳ್ಳೆಯದಲ್ಲ. ಶುದ್ಧ ಸಾತ್ತ್ವಿಕ ಭಕ್ತರ ಕೈಯಿಂದ ಹಾಗೆ ತಿನ್ನಬಹುದು.
“ಹೆಂಗಸರ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಅವರ ಗೋಪಾಲ ಭಾವ ಮುಂತಾದುವನ್ನು ಗಮನಿಸಬೇಡಿ. ಹೆಂಗಸು ಮೂರುಲೋಕ ಕೊಟ್ಟರೂ ತಿಂದು ಬಿಡುತ್ತಾಳೆ. ದೃಢಕಾಯ ಯುವಕ, ನೋಡಲು ಸುಂದರ ರೂಪು, ಇಂಥವರನ್ನು ಕಂಡರೆ ಅನೇಕ ಹೆಂಗಸರು ತಮ್ಮ ಮಾಯಾ ಬಲೆಯನ್ನು ಅವರ ಸುತ್ತ ಹರಡುತ್ತಾರೆ. ಅದಕ್ಕಾಗಿ ಗೋಪಾಲಭಾವ!
“ಯಾರಿಗೆ ಕೌಮಾರ್ಯದಿಂದಲೆ ವೈರಾಗ್ಯವೊ, ಯಾರು ಬಾಲ್ಯದಿಂದಲೆ ಭಗವಂತನಿ ಗಾಗಿ ವ್ಯಾಕುಲರಾಗಿದ್ದಾರೊ, ಯಾರು ಸಂಸಾರಕ್ಕೆ ಕಾಲು ಹಾಕಲೊಲ್ಲರೊ, ಅವರದು ಒಂದು ಪ್ರತ್ಯೇಕ ಶ್ರೇಣಿ. ಅವರು ಕಳಂಕರಹಿತ ಕುಲೀನರು. ನಿಜವಾದ ವೈರಾಗ್ಯ ಉಂಟಾಗಿದ್ದರೆ, ತಮ್ಮ ಭಾವ ನಷ್ಟವಾಗಿಬಿಡಬಹುದು ಎಂದು ಹೆದರಿ ಅವರು ಹೆಂಗಸ ರಿಂದ ಒಂದು ಐವತ್ತು ಮೊಳ ದೂರದಲ್ಲೇ ಇರುತ್ತಾರೆ. ಅವರೇನಾದರೂ ಒಂದು ಪಕ್ಷ ಹೆಂಗಸರ ಬಲೆಗೆ ಬಿದ್ದರೆಂದರೆ ಅವರು ಆ ನಿಷ್ಕಳಂಕ ಕುಲೀನ ಗುಂಪಿನಲ್ಲಿ ಇರುವುದಕ್ಕೆ ಆಗುವುದಿಲ್ಲ. ಅವರ ಭಾವ ನಷ್ಟವಾಗಿಬಿಡುತ್ತದೆ. ಯಾರು ಕೌಮಾರ್ಯದಿಂದಲೆ ವೈರಾಗ್ಯಸಂಪನ್ನರೊ ಅವರದು ಉಚ್ಚಶ್ರೇಣಿ; ಅತ್ಯಂತ ಶುದ್ಧಭಾವ. ಅವರಿಗೆ ಕಿಂಚಿತ್ ಕರೆ ಕೂಡ ಹತ್ತದು.
“ಏನು ಮಾಡಿದರೆ ಜಿತೇಂದ್ರಿಯರಾಗಬಹುದು? ತನಗೆ ತಾನೇ ಹೆಂಗಸಿನ ಭಾವವನ್ನು ಆರೋಪಿಸಿಕೊಳ್ಳಬೇಕು. ನಾನು ಬಹಳ ಕಾಲ ಸಖೀಭಾವದಿಂದಿದ್ದೆ. ಹೆಂಗಸಿನ ಸೀರೆ ಉಡುತ್ತಿದ್ದೆ; ಆಭರಣತೊಡುತ್ತಿದ್ದೆ; ಉತ್ತರೀಯವನ್ನು ಹೊದ್ದುಕೊಳ್ಳುತ್ತಿದ್ದೆ; ಉತ್ತರೀಯವನ್ನು ಹೊದ್ದುಕೊಂಡು ಆರತಿ ಮಾಡುತ್ತಿದ್ದೆ. ಹಾಗಿಲ್ಲದೆ ಇದ್ದರೆ ನನ್ನ ಹೆಂಡತಿಯನ್ನು ಕರೆದುಕೊಂಡುಬಂದು ಎಂಟು ತಿಂಗಳ ಕಾಲ ಹತ್ತಿರವೆ ಇಟ್ಟುಕೊಂಡಿ ದ್ದೆನಲ್ಲ ಅದು ಹೇಗೆ? ಇಬ್ಬರೂ ಭಗವತಿಯ ಸಖಿಯರಂತೆ ಇದ್ದೆವು. ನಾನು ನನ್ನನ್ನು ಪುರುಷ ಎಂದು ಹೇಳಿಕೊಳ್ಳಲಾರೆ. ಒಂದು ದಿನ ಭಾವದಲ್ಲಿದ್ದೆ. ನನ್ನ ಹೆಂಡತಿ ಕೇಳಿದಳು, ‘ನೀವು ನನ್ನನ್ನು ಯಾವ ದೃಷ್ಟಿಯಿಂದ ನೋಡುತ್ತೀರಿ?’ ಎಂದು. ನಾನು ಹೇಳಿದೆ, ‘ಆನಂದಮಯಿಯೆ’ ಅಂತ.
“ಶಿವಪೂಜೆಯ ಇಂಗಿತವೇನೆಂಬುದು ಗೊತ್ತೆ? ಶಿವಲಿಂಗದ ಪೂಜೆ ಮಾತೃಸ್ಥಾನದ ಪೂಜೆ ಮತ್ತು ಪಿತೃಸ್ಥಾನದ ಪೂಜೆ. ಭಕ್ತ ಹೀಗೆ ಪ್ರಾರ್ಥಿಸುತ್ತಾ ಪೂಜೆ ಮಾಡುತ್ತಾನೆ: ‘ಹೇ! ಭಗವಂತ! ನನಗೆ ಮತ್ತೆ ಜನ್ಮ ಬಾರದ ಹಾಗೆ ನೋಡಿಕೊ. ಶೋಣಿತ-ಶುಕ್ರದ ಮೂಲಕ, ತಾಯ ಗರ್ಭದ ಮೂಲಕ ನನಗೆ ಇನ್ನು ಎಂದೆಂದಿಗೂ ಜನ್ಮ ಬಾರದ ಹಾಗೆ ನೋಡಿಕೊ.”
ಪರಮಹಂಸರು ಪ್ರಕೃತಿಭಾವದ ಸಂಬಂಧವಾಗಿ ಮಾತನಾಡುತ್ತಿದ್ದಾರೆ. ಪ್ರಿಯ ಮುಖರ್ಜಿ, ಮಾಸ್ಟರ್ ಇನ್ನು ಕೆಲವು ಭಕ್ತರು ಕುಳಿತಿದ್ದಾರೆ. ಆಗ ದೇವೇಂದ್ರನಾಥ ಠಾಕೂರನ ಮನೆಯ ಹುಡುಗರ ಒಬ್ಬ ಪ್ರೈವೇಟ್ ಟೀಚರ್ ಕೆಲವು ಹುಡುಗರನ್ನು ಕರೆದುಕೊಂಡು ಬಂದು ಕೊಠಡಿಯನ್ನು ಪ್ರವೇಶಿಸಿದನು.
ಶ್ರೀರಾಮಕೃಷ್ಣರು ಭಕ್ತರಿಗೆ: “ಶ್ರೀಕೃಷ್ಣನ ತಲೆಯ ಮೇಲೆ ನವಿಲಿನ ಗರಿ ಇದೆ. ಆ ಗರಿಯಲ್ಲಿ ಯೋನಿಯ ಚಿಹ್ನೆ ಇದೆ–ಅಂದರೆ ಶ್ರೀಕೃಷ್ಣ ಪ್ರಕೃತಿಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡಿದ್ದಾನೆ ಎಂದರ್ಥವಾಗುತ್ತದೆ. ಶ್ರೀಕೃಷ್ಣ ರಾಸಮಂಡಲಿಗೆ ಹೋದ. ಆದರೆ, ಅಲ್ಲಿ ತಾನೇ ಪ್ರಕೃತಿಯಾದ. ಅದಕ್ಕಾಗಿಯೆ ನೋಡು, ರಾಸಮಂಡಲಿಯಲ್ಲಿ ಆತ ಹೆಂಗಸಿನ ವೇಷವನ್ನು ಧರಿಸಿರೋದು. ಪ್ರಕೃತಿ ಭಾವೋಪಪನ್ನನಾಗದೆ ಇದ್ದರೆ, ಪ್ರಕೃತಿಯ ಸಂಗದ ಅಧಿಕಾರಿಯಾಗಲಾರ. ಪ್ರಕೃತಿಭಾವ ಸಂಪನ್ನನಾದರೆ ಆಗ ಕ್ರೀಡೆ, ಆಗ ಆನಂದ. ಆದರೆ ಸಾಧಕನ ಅವಸ್ಥೆಯಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಆಗ ಹೆಂಗಸಿನಿಂದ ಬಹಳ ದೂರದಲ್ಲೇ ಇರಬೇಕು. ಅಷ್ಟೇಕೆ, ಭಕ್ತಿಮತಿಯಾದರೂ ಹೆಚ್ಚು ಹತ್ತಿರಕ್ಕೆ ಹೋಗ ಕೂಡದು. ಮನೆಯ ಮೇಲಕ್ಕೆ ಹತ್ತುವಾಗ ಹಿಂದಕ್ಕೂ ಮುಂದಕ್ಕೂ ಜಗ್ಗಾಡಕೂಡದು. ಹಿಂದಕ್ಕೂ ಮುಂದಕ್ಕೂ ಜಗ್ಗಾಡಿದರೆ ಕೆಳಕ್ಕೆ ಬೀಳುವ ಸಂಭವವಿದೆ, ದುರ್ಬಲರು ಮೆಟ್ಟಲನ್ನು ಹಿಡಿದು ಹಿಡಿದು ಹತ್ತಬೇಕು.
“ಸಿದ್ಧನ ಅವಸ್ಥೆ ಪ್ರತ್ಯೇಕವಾದ ಸಮಾಚಾರ. ಭಗವಂತನ ದರ್ಶನಾನಂತರ ಅಷ್ಟೊಂದು ಹೆದರಿಕೊಳ್ಳಬೇಕಾದ್ದೇನಿಲ್ಲ, ಬಹುಮಟ್ಟಿಗೆ ನಿರ್ಭಯನಾಗಿರಬಹುದು. ಹೇಗೊ ಮಾಡಿ ಚಾವಣಿಯ ಮೇಲಕ್ಕೆ ಹತ್ತಿಬಿಟ್ಟರೆ ಕಾರ್ಯ ಮುಗಿಯಿತು. ಹತ್ತಿದ ನಂತರ ಚಾವಣಿ ಮೇಲೆ ನರ್ತಿಸಲೂಬಹುದು. ಆದರೆ ಹಂತ ಹತ್ತುವಾಗ ನರ್ತಿಸ ಲಾಗುವುದಿಲ್ಲ. ಮತ್ತೆ ನೋಡು–ಯಾವುದನ್ನು ತ್ಯಜಿಸಿ ಚಾವಣಿ ಹತ್ತಿದೆಯೋ, ಹತ್ತಿದ ನಂತರ ಪೂರ್ವದಲ್ಲಿ ತ್ಯಜಿಸಿದ್ದನ್ನು ಮತ್ತೆ ತ್ಯಜಿಸಬೇಕಾಗಿಲ್ಲ. ಚಾವಣಿಯೂ ಇಟ್ಟಿಗೆ ಸುಣ್ಣ ಮರಳಿನಿಂದ ತಯಾರಾಗಿದೆ; ಹಾಗೇ ಹಂತವೂ ಅದೇ ವಸ್ತುಗಳಿಂದ ತಯಾರಾಗಿದೆ. ಯಾವ ಹೆಂಗಸನ್ನು ಕಂಡರೆ ಬಹಳ ಎಚ್ಚರಿಕೆಯಿಂದಿರಬೇಕೊ, ಭಗವಂತನ ದರ್ಶನಾ ನಂತರ ಅದೇ ಹೆಂಗಸು ಸಾಕ್ಷಾತ್ ಭಗವತಿಯೆ ಎಂಬ ಬೋಧೆಯಾಗುತ್ತದೆ. ಆಗ ಮಾತೃದೃಷ್ಟಿಯಿಂದ ಆಕೆಯನ್ನು ಪೂಜಿಸುತ್ತೀಯೆ. ಆಗ ಅಷ್ಟೊಂದು ಹೆದರಿಕೆ ಆಗುವುದಿಲ್ಲ.
“ವಿಷಯವೇನೆಂದರೆ, ಅಜ್ಜಿಯನ್ನು ಮುಟ್ಟಿ ಇಚ್ಛೆ ಬಂದಂತೆ ಮಾಡು.
“ಬಹಿರ್ಮುಖ ಅವಸ್ಥೆಯಲ್ಲಿ ಸ್ಥೂಲ ಕಣ್ಣಿಗೆ ಬೀಳುತ್ತದೆ. ಆಗ ಮನಸ್ಸು ಅನ್ನಮಯ ಕೋಶದಲ್ಲಿ ಇರುತ್ತದೆ. ಬಳಿಕ ಸೂಕ್ಷ್ಮಶರೀರ-ಲಿಂಗಶರೀರ. ಆಗ ಮನಸ್ಸು ಮನೋಮಯ ಕೋಶದಲ್ಲಿ ಮತ್ತು ವಿಜ್ಞಾನಮಯಕೋಶದಲ್ಲಿ ಇರುತ್ತದೆ. ಬಳಿಕ ಕಾರಣ ಶರೀರ. ಮನಸ್ಸು ಕಾರಣಶರೀರಕ್ಕೆ ಬಂದಾಗ ಆನಂದ ಉಂಟಾಗುತ್ತದೆ. ಆನಂದಮಯ ಕೋಶದಲ್ಲಿ ಮನಸ್ಸು ಇರುತ್ತದೆ. ಇದೇ ಚೈತನ್ಯದೇವನ ಅರ್ಧಬಾಹ್ಯದಶೆ. ಬಳಿಕ ಮನಸ್ಸು ಲಯವಾಗಿ ಹೋಗುತ್ತದೆ. ಮನಸ್ಸು ನಾಶವಾಗುತ್ತದೆ. ಅದು ಮಹಾಕಾರಣದಲ್ಲಿ ನಾಶವಾಗಿಬಿಡುತ್ತದೆ. ಮನಸ್ಸು ನಾಶವಾಯಿತು ಅಂದರೆ ಸುದ್ದಿ ಸಮಾಚಾರವೇ ಇಲ್ಲ. ಇದು ಚೈತನ್ಯದೇವನ ಅಂತರ್ದಶೆ. ‘ಅಂತರ್ಮುಖಾವಸ್ಥೆ ಯಾವ ರೀತಿಯದು ಎಂಬುದು ಗೊತ್ತೆ? ದಯಾನಂದ ಹೇಳಿದ್ದಾನೆ, ಅಂತಃಪುರಕ್ಕೆ ಹೋಗಿ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡುಬಿಡು’ ಅಂತ. ಆಗ ಸಿಕ್ಕಿಸಿಕ್ಕಿದವರೆಲ್ಲ ಅಲ್ಲಿಗೆ ಹೋಗುವುದಕ್ಕೆ ಆಗುವುದಿಲ್ಲ.
“ನಾನು ದೀಪದ ಕುಡಿಯನ್ನು ಇದಕ್ಕೆ ಹೋಲಿಸುತ್ತಿದ್ದೆ. ಅದರ ಕೆಂಪು ಭಾಗವನ್ನು ಸ್ಥೂಲಕ್ಕೆ ಹೋಲಿಸುತ್ತಿದ್ದೆ. ಅದರೊಳಗಿನ ಬಿಳಿಯ ಭಾಗವನ್ನು ಸೂಕ್ಷ್ಮಕ್ಕೆ ಹೋಲಿಸುತ್ತಿದ್ದೆ. ಇವೆಲ್ಲದರ ಒಳಕ್ಕೆ ಒಂದು ಕಪ್ಪು ಕಡ್ಡಿಯಂತೆ ಕಾಣುವ ಭಾಗವನ್ನು ಕಾರಣ ಶರೀರಕ್ಕೆ ಹೋಲಿಸುತ್ತಿದ್ದೆ.
“ಧ್ಯಾನ ಸರಿಯಾಗಿ ಆಗುತ್ತಿರುವುದೆ ಎಂಬುದನ್ನು ಅರಿಯಲು ಕೆಲವು ಲಕ್ಷಣಗಳಿವೆ. ಒಂದು–ಇದು ಒಂದು ಜಡವಸ್ತು ಎಂದು ಭಾವಿಸಿ ಹಕ್ಕಿ ಬಂದು ತಲೆಯ ಮೇಲೆ ಕುಳಿತುಕೊಳ್ಳುತ್ತದೆ.
“ನಾನು ಕೇಶವಸೇನನನ್ನು ಮೊಟ್ಟಮೊದಲು ನೊಡಿದುದು ಆದಿಸಮಾಜದಲ್ಲಿ. ಅಲ್ಲಿ ವೇದಿಕೆಯ ಮೇಲೆ ಕೆಲವರು ಕುಳಿತುಕೊಂಡಿದ್ದರು. ಕೇಶವಸೇನ ಅವರ ಮಧ್ಯದಲ್ಲಿ ಕುಳಿತುಕೊಂಡಿದ್ದ. ಆತ ಒಂದು ಮರದ ದಿಮ್ಮಿಯೋಪಾದಿಯಲ್ಲಿ ಕುಳಿತಿರುವುದನ್ನು ಕಂಡೆ. ಸೇಜಬಾಬುವಿಗೆ (ಮಥುರಬಾಬುವಿಗೆ) ಹೇಳಿದೆ: ‘ನೋಡಲ್ಲಿ! ಆ ಎರೆಯನ್ನು ಮೀನು ತಿಂದುಬಿಟ್ಟಿದೆ! ಅದೊಂದಷ್ಟು ಧ್ಯಾನವಿದ್ದುದರಿಂದ ಭಗವಂತನ ಇಚ್ಛೆಯಿಂದ ಆತನ ಹೃದಯ ಯಾವುದಕ್ಕಾಗಿ – ಹೆಸರು, ಕೀರ್ತಿ ಮೊದಲಾದವು – ಹಾತೊರೆಯುತ್ತಿತ್ತೊ ಅವು ದೊರೆತುವು.
“ಕಣ್ಣು ತೆರೆದಿದ್ದರೂ ಧ್ಯಾನ ಸಾಧ್ಯ. ಮಾತುಕತೆಯಾಡುತ್ತಿದ್ದರೂ ಧ್ಯಾನ ಮಾಡ ಬಹುದು. ಭಾವಿಸಿಕೊಳ್ಳಿ ಒಬ್ಬನಿಗೆ ಹಲ್ಲುನೋವಿದೆ, ಅದು ಸುಮ್ಮನೆ ಬಾಧೆಕೊಡುತ್ತಿದೆ ಎಂದು -”
ಠಾಕೂರರ ಮನೆಯ ಶಿಕ್ಷಕ: “ಹೌದು ನನಗೆ ಚೆನ್ನಾಗಿ ಅನುಭವ ಆಗಿದೆ.” (ನಗೆ).
ಪರಮಹಂಸರು ನಗುತ್ತ: “ನೋಡು, ಹಲ್ಲು ನೋಯುತ್ತಿದ್ದರೂ ಮನುಷ್ಯ ಎಲ್ಲಾ ಕೆಲಸಗಳನ್ನು ಮಾಡುತ್ತಾನೆ. ಆದರೆ ಆತನ ಮನಸ್ಸು ಮಾತ್ರ ನೋವಿನ ಕಡೆಗೇ ಹರಿಯುತ್ತಿರುತ್ತದೆ.ಆದ್ದರಿಂದ ಧ್ಯಾನ ಕಣ್ಣು ತೆರೆದಿದ್ದರೂ ಸಾಧ್ಯ; ಮಾತುಕತೆಗಳಾಡು ತ್ತಿದ್ದರೂ ಸಾಧ್ಯ.”
ಶಿಕ್ಷಕ: “ಪತಿತಪಾವನ ಎಂಬ ಹೆಸರು ಆತನಿಗಿದೆ. ಅದೇ ನಮ್ಮ ಆಸೆಯ ನೆಲೆ. ಆತ ದಯಾಮಯ.”
ಶ್ರೀರಾಮಕೃಷ್ಣರು: “ಒಮ್ಮೆ ಸಿಖ್ ಮತದವರು ಆತ ದಯಾಮಯನೆಂದು ಹೇಳಿದರು. ನಾನು ‘ಆತ ಹೇಗೆ ದಯಾಮಯ?’ ಎಂದು ಕೇಳಿದೆ. ಆಗ ಅವರು ‘ಏಕೆ ಮಹಾರಾಜ್! ಆತ ನಮ್ಮನ್ನು ಸೃಷ್ಟಿಸಿದ್ದಾನೆ; ನಮಗಾಗಿ ಅಷ್ಟೊಂದು ವಸ್ತುಗಳನ್ನು ಸೃಷ್ಟಿ ಮಾಡಿದ್ದಾನೆ; ನಮ್ಮನ್ನು ಬೆಳಸಿ ಮನುಷ್ಯರನ್ನಾಗಿ ಮಾಡುತ್ತಾನೆ; ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ನಮ್ಮನ್ನು ವಿಪತ್ತುಗಳಿಂದ ಪಾರುಮಾಡಿಸುತ್ತಾನೆ’ ಎಂದು ಹೇಳಿದರು. ಅದಕ್ಕೆ ನಾನು ಹೇಳಿದೆ, ‘ಆತ ನಮಗೆ ಜನ್ಮವಿತ್ತು ರಕ್ಷಿಸುತ್ತಿದ್ದಾನೆ, ಪೋಷಿಸುತ್ತಿದ್ದಾನೆ. ನಿಜ. ಇದೇನು ಒಂದು ಮಹಾ ಕಾರ್ಯವೆ? ನಿಮಗೆ ಮಕ್ಕಳಾದರೆ ಅಗ್ರಹಾರದಿಂದ ಜನ ಬಂದು ಅವನ್ನು ಬೆಳಸುತ್ತಾರೆಯೆ?’ ಎಂದು.”
ಶಿಕ್ಷಕ: “ಕೆಲವರಿಗೆ ಇದ್ದಕ್ಕಿದ್ದಹಾಗೆ ದೊರೆತುಬಿಡುತ್ತದೆ, ಕೆಲವರಿಗೆ ಆಗುವುದಿಲ್ಲ. ಇದರ ರಹಸ್ಯವೇನು?”
ಶ್ರೀರಾಮಕೃಷ್ಣರು: “ಹೀಗೆ ಏಕೆ ಗೊತ್ತೆ? ಬಹುಮಟ್ಟಿಗೆ ಪೂರ್ವಜನ್ಮದ ಸಂಸ್ಕಾರದಿಂದ ದೊರೆಯುತ್ತದೆ. ಜನರು ಭಾವಿಸುತ್ತಾರೆ, ‘ಇದ್ದಕ್ಕಿದ್ದ ಹಾಗೆ ದೊರೆತು ಬಿಟ್ಟಿತು’ ಎಂದು. ಒಬ್ಬ ಬೆಳಿಗ್ಗೆ ಎದ್ದು ಒಂದು ಗ್ಲಾಸು ಮದ್ಯ ಸೇವಿಸಿದ. ಅದರಿಂದಲೆ ತಲೆತಿರುಗಲು ಆರಂಭವಾಯಿತು; ತತ್ತರಿಸಲು ಆರಂಭಿಸಿದ. ಜನರಿಗೆಲ್ಲ ಆಶ್ಚರ್ಯ, ಒಂದು ಗ್ಲಾಸಿಗೇನೆ ಇಷ್ಟೊಂದು ಉನ್ಮತ್ತತೆ ಹೇಗೆ ಬಂತು ಅಂತ! ಆಗ ಒಬ್ಬ ಹೇಳಿದ: ‘ಹುಚ್ಚರಾ! ಆತ ಇಡೀ ರಾತ್ರಿ ಮದ್ಯ ಕುಡಿದಿದ್ದ!’
“ಹನುಮಂತ ಸ್ವರ್ಣನಿರ್ಮಿತ ಲಂಕೆಯನ್ನು ಸುಟ್ಟುಹಾಕಿದ. ಜನರಿಗೆ ಆಶ್ಚರ್ಯ, ಕಪಿಯೊಂದು ಬಂದು ಎಲ್ಲವನ್ನೂ ಸುಟ್ಟುಹಾಕಿಬಿಟ್ಟಿತಲ್ಲ! ಅಂತ. ಆದರೆ ಮತ್ತೆ ಅವರು ಹೇಳಿದರು. ‘ಸತ್ಯವೇನೆಂದರೆ, –ಸೀತೆಯ ನಿಟ್ಟುಸಿರು, ರಾಮನ ಕೋಪಾಗ್ನಿಸುಟ್ಟುಹಾಕಿತು’ ಎಂದು.
“ಲಾಲಾಬಾಬುವನ್ನು1 ನೋಡಿ! ಆತನಿಗೆ ಎಷ್ಟೊಂದು ಐಶ್ವರ್ಯ! ಪೂರ್ವಜನ್ಮದ ಸಂಸ್ಕಾರವಿಲ್ಲದೆ ಇದ್ದರೆ ಇದ್ದಕ್ಕಿದ್ದ ಹಾಗೆ ವೈರಾಗ್ಯ ಉಂಟಾಗುವುದೆ! ಮತ್ತೆ ರಾಣಿ ಭವಾನಿಯನ್ನು ನೋಡಿ! ಹೆಂಗಸಾದರೂ ಎಷ್ಟೊಂದು ಜ್ಞಾನ ಭಕ್ತಿ ಆಕೆಯಲ್ಲಿ!
“ಹಿಂದಿನ ಜನ್ಮದಲ್ಲಿ ಸತ್ತ್ವಗುಣ ತುಂಬಿದ್ದರೆ, ಈ ಜನ್ಮದಲ್ಲಿ ಮನಸ್ಸು ಭಗವಂತನ ಕಡೆ ಹರಿಯುತ್ತದೆ; ಆತನಿಗಾಗಿ ವ್ಯಾಕುಲಪಡುತ್ತದೆ; ಎಲ್ಲಾ ವಿಷಯಕರ್ಮಗಳನ್ನೂ ತ್ಯಜಿಸಿ ಬಂದುಬಿಡುತ್ತದೆ.
“ಕೃಷ್ಣದಾಸಪಾಲ ಬಂದಿದ್ದ; ರಜೋಗುಣಿಯಾಗಿ ಕಂಡುಬಂದ. ಆದರೆ ಹಿಂದೂ ಆಗಿದ್ದರಿಂದ ಮೆಟ್ಟನ್ನು ಹೊರಗೆ ಬಿಟ್ಟು ಬಂದ. ಒಂದೆರಡು ಮಾತನಾಡಿ ನೋಡಿದೆ; ಒಳಗೆ ಏನೂ ಇಲ್ಲ. ಪ್ರಶ್ನೆ ಹಾಕಿದೆ, ‘ಮನುಷ್ಯನ ಕರ್ತವ್ಯವೇನು?’ ಅಂತ. ಆತ ಹೇಳಿದ, ‘ಜಗತ್ತಿಗೆ ಉಪಕಾರ ಮಾಡೋದು’ ಎಂದು. ಆಗ ನಾನು ಹೇಳಿದೆ, ‘ಹಾಗೆ ಹೇಳುವುದಕ್ಕೆ ನೀನು ಯಾರು? ನೀನು ಯಾವ ಉಪಕಾರವನ್ನು ತಾನೆ ಮಾಡಬಲ್ಲೆ? ನೀನು ಉಪಕಾರ ಮಾಡುವುದಕ್ಕೆ ಈ ಜಗತ್ತೇನು ಒಂದು ಅಂಗೈಯಗಲದ್ದೆ!’ ಎಂದು.”
ನಾರಾಯಣ ಬಂದಿದ್ದಾನೆ. ಪರಮಹಂಸರಿಗೆ ಬಹಳ ಆನಂದ. ನಾರಾಯಣನನ್ನು ಚಿಕ್ಕ ಮಂಚದ ಮೇಲೆ ತಮ್ಮ ಹತ್ತಿರವೆ ಕೂರಿಸಿಕೊಂಡಿದ್ದಾರೆ. ಆತನ ಮೈಕೈಯನ್ನು ಸವರುತ್ತ ಆದರವನ್ನು ತೋರಿಸಲಾರಂಭಿಸಿದರು. ಆತನಿಗೆ ಮೃಷ್ಟಾನ್ನ ತಿನ್ನಲು ಕೊಟ್ಟಿದ್ದಾರೆ. ಪ್ರೀತಿ ಯಿಂದ ಕೇಳುತ್ತಿದ್ದಾರೆ, ‘ನೀರು ಕುಡಿಯುತ್ತೀಯ?’ ಎಂದು. ನಾರಾಯಣ ಮಾಸ್ಟರಿನ ಸ್ಕೂಲಿನಲ್ಲಿ ಓದುತ್ತಿದ್ದಾನೆ. ಪರಮಹಂಸರನ್ನು ನೋಡಲು ಹೋಗುತ್ತಾನಲ್ಲ ಅಂತ ಆತನಿಗೆ ಮನೆಯಲ್ಲಿ ಬಡಿತ. ಪರಮಹಂಸರು ಪ್ರೀತಿಯಿಂದ ಸ್ವಲ್ಪ ಸ್ವಲ್ಪ ನಗುತ್ತ ನಾರಾಯಣನಿಗೆ “ನೀನು ಒಂದು ಚರ್ಮದ ಕೋಟು ಹೊಲಿಸಿಕೊಂಡು ಬಿಡು. ಆಗ ಹೊಡೆದರೂ ಅಷ್ಟಾಗಿ ತಾಗೋದಿಲ್ಲ” ಎಂದು ಹೇಳುತ್ತಿದ್ದಾರೆ. ಪರಮಹಂಸರು ಹರೀಶನಿಗೆ ಹೇಳಿದರು, “ಹುಕ್ಕ ಬೇಕು” ಎಂದು.
ಪರಮಹಂಸರು ಮತ್ತೆ ನಾರಾಯಣನನ್ನು ಸಂಬೋಧಿಸಿ: “ಹರಿಪದನನ್ನು ಮಾತೃ ಭಾವದಿಂದ ನೋಡುತ್ತಾಳಲ್ಲ ಆಕೆ ಇಲ್ಲಿಗೆ ಬಂದಿದ್ದಳು. ನಾನು ಹರಿಪದನಿಗೆ ಬಹಳವಾಗಿ ಎಚ್ಚರಿಕೆ ಕೊಟ್ಟಿದ್ದೇನೆ, ಆಕೆ ಘೋಷ್ಪಾರಾದವರ ಸಂಪ್ರದಾಯದವಳು. ನಾನು ಆಕೆಯನ್ನು, ‘ನಿನಗೆ ಯಾರಾದರೂ ದೊರೆತಿದ್ದಾರೆಯೆ?’ ಎಂದು ಕೇಳಿದೆ. ಆಕೆ ‘ಹೌದು – ಒಬ್ಬ ಚಕ್ರವರ್ತಿ’ ಅಂತ ಹೇಳಿದಳು.
(ಮಾಸ್ಟರಿಗೆ) “ಆಹ! ನೀಲಕಂಠ ಅಂದು ಬಂದಿದ್ದ. ಆತನದು ಎಂಥ ಭಾವ! ಇನ್ನೊಂದು ದಿನ ಬರುವೆನೆಂದು ಹೇಳಿ ಹೋಗಿದ್ದಾನೆ. ಬಂದು ಹಾಡುತ್ತಾನಂತೆ. ಈಗ ಅವರು ಅಲ್ಲಿ ನರ್ತಿಸುತ್ತಿದ್ದಾರೆ. ಏಕೆ ನೀನು ಹೋಗಿ ನೋಡಬಾರದು? (ರಾಮಲಾಲನಿಗೆ) ಎಣ್ಣೆ ಇಲ್ಲವಲ್ಲ. (ಎಣ್ಣೆ ಗಡಿಗೆ ನೋಡಿ) ಕಾವಲುಗಾರ ಎಣ್ಣೆ ಹಾಕೇ ಇಲ್ಲವಲ್ಲ.”
ಈಗ ಶ್ರೀರಾಮಕೃಷ್ಣರು ಅಡ್ಡಾಡುತ್ತಿದ್ದಾರೆ. ಒಮ್ಮೊಮ್ಮೆ ಕೊಠಡಿಯೊಳಗೆ ಒಮ್ಮೊಮ್ಮೆ ದಕ್ಷಿಣದ ವರಾಂಡದಲ್ಲಿ. ಪಶ್ಚಿಮದ ವರಾಂಡಕ್ಕೆ ಒಮ್ಮೊಮ್ಮೆ ಹೋದಾಗ ಅಲ್ಲಲ್ಲಿ ನಿಂತು ಗಂಗೆಯನ್ನು ನೋಡುತ್ತಾರೆ.
ಹೀಗೆ ಸ್ವಲ್ಪ ಹೊತ್ತು ಅಡ್ಡಾಡಿದನಂತರ ಮತ್ತೆ ತಮ್ಮ ಚಿಕ್ಕಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಗಂಟೆ ಅಪರಾಹ್ನ ಮೂರು. ಭಕ್ತರೆಲ್ಲ ಮತ್ತೆ ನೆಲದ ಮೇಲೆ ಕುಳಿತು ಕೊಂಡಿದ್ದಾರೆ. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಸುಮ್ಮನೆ ಕುಳಿತಿದ್ದಾರೆ. ಒಮ್ಮೊಮ್ಮೆ ಕೊಠಡಿಯ ಗೋಡೆ ಕಡೆ ನೋಡುತ್ತಿದ್ದಾರೆ. ಗೋಡೆಗಳಲ್ಲಿ ಅನೇಕ ಪಟಗಳನ್ನು ನೇತು ಹಾಕಲಾಗಿದೆ. ಪರಮಹಂಸರ ಎಡಭಾಗಕ್ಕೆ ಇರುವ ಗೋಡೆಯಲ್ಲಿ ಸರಸ್ವತಿ ಪಟ ಇದೆ. ಅದಾದ ನಂತರ ಅದಕ್ಕೆ ಸ್ವಲ್ಪ ದೂರದಲ್ಲಿ ಗೌರಾಂಗ ಮತ್ತು ನಿತಾಯಿ ಭಕ್ತರೊಡನೆ ಕೀರ್ತನೆಮಾಡುತ್ತಿರುವ ಪಟ ಇದೆ. ಪರಮಹಂಸರ ಎದುರಿಗೆ ಧ್ರುವ, ಪ್ರಹ್ಲಾದ, ಕಾಳಿಯ ಪಟಗಳು. ಪರಮಹಂಸರ ಬಲಭಾಗಕ್ಕಿರುವ ಗೋಡೆಯ ಮೇಲೆ ರಾಜರಾಜೇಶ್ವರಿ ಪಟ ಇದೆ. ಅವರ ಹಿಂದುಗಡೆ ಇರುವ ಗೋಡೆಯ ಮೇಲೆ ಯೇಸುಕ್ರಿಸ್ತನ ಪಟವಿದೆ, – ಪೀಟರ್ ಮುಳುಗಿಹೋಗುತ್ತಿದ್ದಾನೆ, ಯೇಸು ಆತನನ್ನು ಮೇಲಕ್ಕೆ ಎತ್ತುತ್ತಿದ್ದಾನೆ. ಪರಮ ಹಂಸರು ಇದ್ದಕ್ಕಿದ್ದ ಹಾಗೆ ಮಾಸ್ಟರಿಗೆ ಹೇಳುತ್ತಿದ್ದಾರೆ: “ನೋಡು, ಸಾಧು ಸಂನ್ಯಾಸಿಗಳ ಪಟವನ್ನು ಮನೆಯಲ್ಲಿ ಇಡುವುದು ಶ್ರೇಯಸ್ಕರ. ಬೆಳಗಾಗೆದ್ದು ಬೇರೆಯವರ ಮುಖ ನೋಡದೆ ಸಾಧು ಸಂನ್ಯಾಸಿಗಳ ಮುಖನೋಡಿ ಹಾಸಿಗೆ ಬಿಡೋದು ಒಳ್ಳೆಯದು. ಗೋಡೆಯ ಮೇಲೆ ಆಂಗ್ಲರ ಚಿತ್ರಗಳು – ಧನಿಕ, ರಾಜ, ರಾಣಿ ಚಿತ್ರಗಳು; ರಾಣಿ ಮತ್ತು ಆಕೆಯ ಮಕ್ಕಳ ಚಿತ್ರಗಳು; ಪರಂಗಿಯ ದಂಪತಿಗಳು ಜೊತೆಯಲ್ಲಿ ಹೋಗುತ್ತಿರುವ ಚಿತ್ರ- ಇವೆಲ್ಲ ಜನರ ರಜೋಗುಣವನ್ನು ತೋರಿಸುತ್ತದೆ.
“ನೀನು ಯಾರ ಸಹವಾಸವನ್ನು ಮಾಡುವೆಯೊ, ನಿನಗೂ ಅವರ ಸ್ವಭಾವ ಬಂದು ಬಿಡುತ್ತದೆ. ಹಾಗೆಯೆ ಚಿತ್ರಪಟಗಳಲ್ಲಿಯೂ ಆ ದೋಷವಿದೆ. ತಮ್ಮ ಸ್ವಭಾವ ಎಂಥದೊ ಅಂಥ ಸಹವಾಸಕ್ಕಾಗಿಯೆ ಜನ ಹುಡುಕುತ್ತಾರೆ. ಪರಮಹಂಸಾವಸ್ಥೆಯನ್ನು ಹೊಂದಿದವರು ಐದಾರು ವರ್ಷದ ನಾಲ್ಕೈದು ಹುಡುಗರನ್ನು ತಮ್ಮ ಹತ್ತಿರ ಇಟ್ಟುಕೊಂಡಿರುತ್ತಾರೆ. ತಮ್ಮೊಡನೆ ಬೆರೆಯಲು ಬಿಟ್ಟುಕೊಡುತ್ತಾರೆ. ಅವರಿಗೆ ಆ ಅವಸ್ಥೆಯಲ್ಲಿ ಮಕ್ಕಳ ಮಧ್ಯೆ ಇರಲು ಇಚ್ಛೆಯಾಗುತ್ತದೆ. ಮಕ್ಕಳು ಸತ್ತ್ವ ರಜಸ್ಸು ತಮಸ್ಸು ಯಾವ ಗುಣಗಳಿಗೂ ವಶರಾಗಿಲ್ಲ.
“ಮರಗಿಡಗಳನ್ನು ನೋಡಿದೊಡನೆಯೆ, ತಪೋವನದ ಋಷಿ ತಪಸ್ಸುಮಾಡುತ್ತಿದ್ದಾನೆ ಎಂಬುದರ ಭಾವನೆ ಉದ್ದೀಪನೆಯಾಗುತ್ತದೆ.”
ಸಿಂಥಿಯ ಒಬ್ಬ ಬ್ರಾಹ್ಮಣ ಕೊಠಡಿಗೆ ಬಂದು ಪರಮಹಂಸರಿಗೆ ಪ್ರಣಾಮ ಮಾಡಿದ. ಆತ ಕಾಶಿಯಲ್ಲಿ ವೇದಾಂತ ಓದುತ್ತಿದ್ದ.
ಶ್ರೀರಾಮಕೃಷ್ಣರು: “ಏನು ಸಮಾಚಾರ? ಎಲ್ಲಾ ಹೇಗಿದ್ದಾರೆ? ಅಪರೂಪ ದರ್ಶನ.”
ಪಂಡಿತ ನಗುತ್ತ: “ಹೌದು, ಬರಲಿಲ್ಲ. ಸಂಸಾರದ ತಾಪತ್ರಯ. ನಿಮಗೆ ಗೊತ್ತೇ ಇದೆ ಹೆಚ್ಚು ಸಮಯ ದೊರೆಯೋ ಹಾಗಿಲ್ಲ ಎಂಬುದು.”
ಪಂಡಿತ ಒಂದು ಕಡೆ ಕುಳಿತುಕೊಂಡ. ಪರಮಹಂಸರು ಆತನೊಡನೆ ಮಾತುಕತೆಗಳ ನ್ನಾಡುತ್ತಿದ್ದಾರೆ.
ಪರಮಹಂಸರು: “ಕಾಶಿಯಲ್ಲಿ ನೀನು ಬಹಳ ಕಾಲ ಇದ್ದೆ. ಅಲ್ಲಿ ಏನೇನು ನೋಡಿದೆ ಎಂಬುದರ ವಿಷಯವಾಗಿ ಒಂದು ಸ್ವಲ್ಪ ಹೇಳು. ದಯಾನಂದನ ವಿಷಯವಾಗಿ ಒಂದಷ್ಟು ತಿಳಿಸು.”
ಪಂಡಿತ: “ಹೌದು ನಾನು ದಯಾನಂದರನ್ನು ಕಂಡು ಮಾತನಾಡಿದ್ದೇನೆ. ನೀವೂ ಕೂಡ ಆತನನ್ನು ಸಂಧಿಸಿದ್ದಿರಲ್ಲವೆ?”
ಶ್ರೀರಾಮಕೃಷ್ಣರು: “ನೋಡುವುದಕ್ಕೆ ಹೋಗಿದ್ದೆ, -ಆಗ ಆಚೆ ದಡದಲ್ಲಿ ಒಂದು ತೋಟದಲ್ಲಿ ಇಳಿದುಕೊಂಡಿದ್ದ. ಅಂದು ಅಲ್ಲಿಗೆ ಕೇಶವಸೇನ ಬರುವ ವದಂತಿ ಇತ್ತು. ಚಕೋರಪಕ್ಷಿಯಂತೆ ಆತ ಕೇಶವಸೇನನಿಗಾಗಿ ಹಾತೊರೆಯಲಾರಂಭಿಸಿದ. ದೊಡ್ಡ ವಿದ್ಯಾವಂತ. ಬಂಗಾಳಿ ಭಾಷೆಯನ್ನು ಒಂದು ತಿರಸ್ಕಾರ ದೃಷ್ಟಿಯಿಂದ ನೋಡುತ್ತಿದ್ದ. ದೇವತೆಗಳನ್ನು ಒಪ್ಪುತ್ತಿದ್ದ–ಕೇಶವ ಒಪ್ಪುತ್ತಿರಲಿಲ್ಲ. ದಯಾನಂದ ಹೇಳುತ್ತಿದ್ದ, ‘ಭಗವಂತ ಇಷ್ಟೊಂದು ವಸ್ತುಗಳನ್ನು ಸೃಷ್ಟಿಸಿದ್ದಾನೆ, ದೇವತೆಗಳನ್ನು ಸೃಷ್ಟಿಸಲು ಅವನ ಕೈಯಲ್ಲಾಗುವು ದಿಲ್ಲವೆ!’ ಎಂದು. ಆದರೆ ಆತ ನಿರಾಕಾರವಾದಿ. ಕ್ಯಾಪ್ಟನ್ ‘ರಾಮ, ರಾಮ’ ಎಂದು ಹೇಳುತ್ತಿದ್ದ. ಆಗ ಆತ ಹೇಳಿದ, ‘ಅದಕ್ಕೆ ಬದಲು ಜಿಲೇಬಿ! ಜಿಲೇಬಿ! ಎಂದು ಹೇಳು’ ಅಂತ!”
ಪಂಡಿತ: “ಕಾಶಿಯಲ್ಲಿ ದಯಾನಂದ ಸರಸ್ವತಿಗೂ ಉಳಿದ ಪಂಡಿತರಿಗೂ ಒಂದು ದೊಡ್ಡ ವಾಗ್ವಾದ ನಡೆಯಿತು. ಕೊನೆಕೊನೆಗೆ ಆತನೊಬ್ಬನೇ ಒಂದು ಕಡೆ, ಉಳಿದವರೆಲ್ಲಾ ಇನ್ನೊಂದು ಕಡೆ. ಅವರೆಲ್ಲಾ ಆತನಿಗೆ ಅಂಥಾ ಬಿಸಿ ತಾಗಿಸಿದರು! ಆತ ಅಲ್ಲಿಂದ ಓಡಿಹೋಗಿ ತಲೆತಪ್ಪಿಸಿಕೊಂಡುಬಿಟ್ಟರೆ ಬದುಕಿಕೊಂಡೆನಲ್ಲ ಅನ್ನುವಂತೆ ಆಯಿತು. ಎಲ್ಲರೂ ಒಟ್ಟಿಗೆ ಕೂಡಿ ಉಚ್ಚಕಂಠದಿಂದ ಕೂಗಿಕೊಳ್ಳಲಾರಂಭಿಸಿದರು, ‘ದಯಾನಂದೇನ ಯದುಕ್ತಂ ತದ್ಧೇಯಮ್!’ ಎಂದು.
“ನಾನು ಕರ್ನಲ್ ಆಲ್ಕಾಟನನ್ನೂ ಕಂಡು ಮಾತನಾಡಿದ್ದೇನೆ. ಥಿಯಾಸೊಫಿಗಳು ಹೀಗೆ ಹೇಳುತ್ತಾರೆ: ಮಹಾತ್ಮರಿದ್ದಾರೆ; ಚಂದ್ರಲೋಕ, ಸೂರ್ಯಲೋಕ, ನಕ್ಷತ್ರಲೋಕ ಇವೆಲ್ಲ ಇವೆ; ಸೂಕ್ಷ್ಮ ಶರೀರದಲ್ಲಿ ಅಲ್ಲಿಗೆಲ್ಲ ಹೋಗಬಹುದು-ಇನ್ನು ಏನೇನೊ. ಒಳ್ಳೆಯದು, ನಿಮಗೆ ಥಿಯಾಸೊಫಿ ಹೇಗೆ ಕಾಣುತ್ತದೆ?”
ಶ್ರೀರಾಮಕೃಷ್ಣರು: “ಭಕ್ತಿಯೊಂದೇ ಸಾರಭೂತವಾದದ್ದು-ಭಗವಂತನಲ್ಲಿ ಭಕ್ತಿ. ಅವರು ಅದನ್ನು ಪಡೆಯಲು ವ್ಯಾಕುಲರಾಗಿದ್ದಾರೇನು? ಹಾಗಿದ್ದರೆ ಒಳ್ಳೆಯದೆ. ಭಗವಂತನ ಸಾಕ್ಷಾತ್ಕಾರವೆ ಉದ್ದೇಶವಾಗಿದ್ದರೆ ಅದು ಒಳ್ಳೆಯದೆ. ಚಂದ್ರಲೋಕ, ಸೂರ್ಯಲೋಕ, ನಕ್ಷತ್ರಲೋಕ, ಮಹಾತ್ಮ ಇವುಗಳಲ್ಲಿಯೆ ಮನಸ್ಸು ನಿರತವಾಗಿಬಿಟ್ಟರೆ ಭಗವಂತನನ್ನು ಪಡೆಯಲಾಗುವುದಿಲ್ಲ. ಆತನ ಪಾದಪದ್ಮಗಳಲ್ಲಿ ಭಕ್ತಿ ಉಂಟಾಗಲೋಸುಗ ಸಾಧನೆ ಮಾಡಬೇಕು; ವ್ಯಾಕುಲರಾಗಿ ಕರೆಯಬೇಕು. ವಿವಿಧ ವಸ್ತುಗಳ ಕಡೆ ಹರಿದು ಹೋಗಿರುವ ಮನಸ್ಸನ್ನು ಒಂದು ಕಡೆ ಕೇಂದ್ರೀಕರಿಸಿ ಅದನ್ನು ಆತನ ಕಡೆ ತಿರುಗಿಸ ಬೇಕು.”
ಹೀಗೆಂದು ಪರಮಹಂಸರು ರಾಮಪ್ರಸಾದನ ಹಾಡನ್ನು ಹಾಡುತ್ತಿದ್ದಾರೆ:
ದೇವ ದೇವನ ನಿಜವನರಿಯಲು
ಮನವು ತೊಳಲುತ ಬಳಲಿದೆ,
ಬೀಗ ಮುದ್ರೆಯನಿಟ್ಟ ಕೋಣೆಯೊ-
ಳಲೆವ ಮರುಳನ ಹೋಲಿದೆ!
ದಿವ್ಯ ಪ್ರೇಮಕೆ ದೊರೆವನಾತನು;
ಶ್ರದ್ಧೆಗಲ್ಲದೆ ಒಲಿಯನು.
ವೇದಶಾಸ್ತ್ರಪುರಾಣದರ್ಶನ-
ದಾಚೆಗೇ ನಿಂತಾತನು!
ಭಕ್ತಿಗೊಲಿಯುವ ಹೃದಯದಮೃತಾ-
ನಂದರೂಪನು ಆತನು;
ಇದನರಿತೆ ಆ ಯೋಗಿವರ್ಯರು
ಯುಗ ಯುಗವು ತಪಗೈವರು!
ಭಕ್ತಿಯೆಚ್ಚರಗೊಳಲು ಎದೆಯಲಿ
ಅವನೆ ನಿನ್ನನು ಸೆಳೆವನು.
ಈ ರಹಸ್ಯವ ಜಗದ ಸಂತೆಯ
ಜನದ ಜಂಗುಳಿಗೊರೆಯೆನು.
ಶ್ರೀಪ್ರಸಾದನು ನುಡಿವನೀತೆರ;
“ಮಾತೃಭಾವದಿ ನೆನೆವೆನು;
ನನ್ನ ಸೂಚನೆಯರಿತು ನೀವೇ
ತಿಳಿಯಿರಾತನ ನಿಜವನು!”
ಮತ್ತೆ ಪರಮಹಂಸರು ಹೇಳಿದರು: “ಶಾಸ್ತ್ರ ಹೇಳು! ದರ್ಶನ ಹೇಳು! ವೇದಾಂತ ಹೇಳು! ಇವುಗಳಾವುದರಲ್ಲಿಯೂ ಆತನಿಲ್ಲ. ಆತನಿಗಾಗಿ ನಿನ್ನ ಪ್ರಾಣ ವ್ಯಾಕುಲಪಡದೆ ಇದ್ದರೆ ಏನೂ ದೊರಕದು.
ದಿವ್ಯ ಪ್ರೇಮಕೆ ದೊರೆವನಾತನು;
ಶ್ರದ್ಧೆಗಲ್ಲದೆ ಒಲಿಯನು.
ವೇದಶಾಸ್ತ್ರಪುರಾಣದರ್ಶನ-
ದಾಚೆಗೇ ನಿಂತಾತನು!
ಭಕ್ತಿಗೊಲಿಯುವ ಹೃದಯದಮೃತಾ-
ನಂದರೂಪನು ಆತನು;
“ಬಹಳವಾಗಿ ವ್ಯಾಕುಲನಾಗಬೇಕು. ಒಂದು ಹಾಡನ್ನು ಕೇಳು:
ಎಲ್ಲರಿಗೂ ಲಭಿಸಬಹುದೆ ಆ ರಾಧೆಯ ದರ್ಶನ
ಎಲ್ಲರೂ ಸವಿಯಬಹುದೆ ರಾಧೆಯೊಲವಿನಮೃತವ!
ಎಷ್ಟು ಹಣವ ಸುರಿದರೂ ಈ ಅಪೂರ್ವ ನಿಧಿಯು ನಮಗೆ
ಎಂದೆಂದಿಗು ದೊರೆಯದು
ಭಕ್ತಿಭಾವ ಸಾಧನೆಯಲಿ ಮಾತ್ರ ದೊರೆಯುವಂಥದು!
ಸ್ವಾತಿಯ ಹನಿ ಚಿಪ್ಪಿನಲ್ಲಿ
ಮುತ್ತಾಗುವ ರೀತಿಯಲ್ಲಿ
ಬೇರೆ ಮಳೆಯ ಹನಿಯಿಂದಲು ಮುತ್ತಾಗಲು ಸಾಧ್ಯವೇ?
‘ಬಾನ ತೊರೆದು ಇಳೆಗೆ ಇಳಿದು
ಬಾರೊ ಚಂದಮಾಮ’ ಎಂದು
ತಾಯ್ ಕರೆಯಲು ಮಗುವಿಗಾಗಿ, ಚಂದ್ರನಿಳಿದು ಬರುವನೆ?
“ಸಾಧನೆ ಅತ್ಯಂತ ಆವಶ್ಯಕ. ಇದ್ದಕ್ಕಿದ್ದ ಹಾಗೆ ಭಗವಂತನ ದರ್ಶನ ದೊರೆಯು ವುದೆ?
“ಒಬ್ಬ ‘ನನಗೇಕೆ ಭಗವಂತನನ್ನು ನೋಡಲಾಗುತ್ತಿಲ್ಲ?’ ಎಂದು ನನ್ನನ್ನು ಕೇಳಿದ. ಆಗ ಮನಸ್ಸಿಗೆ ಏನು ತಟ್ಟಿತೊ ಅದನ್ನು ಹೇಳಿಬಿಟ್ಟೆ. ‘ನಿನಗೆ ಒಂದು ದೊಡ್ಡ ಮೀನು ಹಿಡಿಯಬೇಕು ಎಂಬ ಇಚ್ಛೆ. ಅದಕ್ಕೆ ತಕ್ಕ ಸಲಕರಣೆಗಳನ್ನು ಒದಗಿಸಿಕೊ. ಎರೆಯನ್ನು ತಯಾರು ಮಾಡಿಕೊ. ಗಾಳದ ಕಡ್ಡಿ ಮತ್ತು ದಾರವನ್ನು ಹವಣಿಸಿಕೊ. ಅನಂತರ ಗಾಳವನ್ನು ಬೀಸು. ಎರೆಯ ಗಂಧದಿಂದ ಆಕರ್ಷಿತವಾಗಿ ಆಳವಾದ ನೀರಿನಿಂದ ಮೀನು ಬರುತ್ತದೆ. ನೀರು ಅಲುಗಾಡಿದರೆ ದೊಡ್ಡ ಮೀನು ಬಂದಿದೆ ಎಂಬುದರ ಸೂಚನೆ ನಿನಗೆ ಸಿಕ್ಕುತ್ತದೆ.’
“ನಿನಗೆ ಬೆಣ್ಣೆ ತಿನ್ನಬೇಕೆಂಬ ಇಚ್ಛೆ. ಅದಕ್ಕಾಗಿ, ಹಾಲಿನಲ್ಲಿ ಬೆಣ್ಣೆ ಇದೆ, ಹಾಲಿನಲ್ಲಿ ಬೆಣ್ಣೆ ಇದೆ–ಎಂದು ಜಪಿಸಿದರೆ ಏನಾಗುತ್ತದೆ? ಮೈಮುರಿದು ಕೆಲಸ ಮಾಡಬೇಕು. ಆಗ ಬೆಣ್ಣೆ ಸಿಕ್ಕುತ್ತದೆ. ‘ಭಗವಂತ ಇದ್ದಾನೆ, ಭಗವಂತ ಇದ್ದಾನೆ’ ಎಂದು ಸುಮ್ಮನೆ ಹೇಳುತ್ತಿದ್ದರೆ ಆತನನ್ನು ನೋಡಲಾಗುವುದೆ? ಸಾಧನೆ ಆವಶ್ಯಕ.
“ಭಗವತಿ ತಾನೇ ಸ್ವಯಂ ಐದು ಪ್ರಾಣಿಗಳ ಕಪಾಲಗಳಿಂದ ನಿರ್ಮಿತವಾದ ಆಸನದ ಮೇಲೆ ಕುಳಿತು ಲೋಕಶಿಕ್ಷಣಾರ್ಥವಾಗಿ ಕಠೋರ ತಪಸ್ಸು ಮಾಡಿದಳು. ಶ್ರೀಕೃಷ್ಣ ಸಾಕ್ಷಾತ್ ಪೂರ್ಣಬ್ರಹ್ಮ. ಆತನೂ ರಾಧಾಯಂತ್ರವನ್ನು ಹುಡುಕಿತಂದು ಲೋಕಶಿಕ್ಷಣಾರ್ಥವಾಗಿ ತಪಸ್ಸು ಮಾಡಿದ.
“ಶ್ರೀಕೃಷ್ಣ ಪುರುಷ; ರಾಧೆ ಪ್ರಕೃತಿ, ಚಿಚ್ಛಕ್ತಿ – ಆದ್ಯಾಶಕ್ತಿ. ರಾಧೆ ಪ್ರಕೃತಿ, ತ್ರಿಗುಣ ಮಯಿ. ಆಕೆಯಲ್ಲಿ ಸತ್ತ್ವ, ರಜಸ್ಸು, ತಮಸ್ಸು – ಈ ಮೂರು ಗುಣಗಳಿವೆ. ಈರುಳ್ಳಿಯನ್ನು ಬಿಡಿಸುತ್ತಾ ಹೋದರೆ, ಮೊದಲು ಕಪ್ಪು ಮಿಶ್ರಿತ ಕೆಂಪು ಸಿಪ್ಪೆ, ಬಳಿಕ ಕೆಂಪು ಸಿಪ್ಪೆ, ಆ ಬಳಿಕ ಬಿಳಿ ಸಿಪ್ಪೆ ಬರುತ್ತಾ ಹೋಗುತ್ತವೆ. ವೈಷ್ಣವ ಶಾಸ್ತ್ರದಲ್ಲಿ ಕಾಮರಾಧೆಯ, ಪ್ರೇಮರಾಧೆಯ, ನಿತ್ಯರಾಧೆಯ ವಿಷಯ ಇದೆ. ಕಾಮರಾಧೆಯೇ ಚಂದ್ರಾವಳಿ, ಪ್ರೇಮರಾಧೆಯೇ ಶ್ರೀಮತಿ; ನಿತ್ಯರಾಧೆಯನ್ನು-ಕಂಕುಳಲ್ಲಿ ಗೋಪಾಲನನ್ನು ಎತ್ತಿ ಕೊಂಡಿದ್ದ ರಾಧೆಯನ್ನು – ನಂದ ನೋಡಿದ್ದ.
“ನೀರು ಮತ್ತು ಅದರ ತೋಯಿಸುವ ಶಕ್ತಿಯಂತೆ ಚಿಚ್ಛಕ್ತಿಗೂ ವೇದಾಂತದ ಬ್ರಹ್ಮ ನಿಗೂ ಅಭೇದ, ನೀರಿನ ತೋಯಿಸುವ ಶಕ್ತಿಯನ್ನು ಭಾವಿಸಿದರೆ ನೀರನ್ನು ಭಾವಿಸಬೇಕಾಗು ತ್ತದೆ; ನೀರನ್ನು ಭಾವಿಸಿದರೆ ನೀರಿನ ತೋಯಿಸುವ ಶಕ್ತಿಯ ಭಾವನೆ ಬಂದೇ ಬಿಡುತ್ತದೆ. ಹಾವು ಮತ್ತು ಅದರ ವಕ್ರಗತಿ; ವಕ್ರಗತಿಯನ್ನು ಭಾವಿಸಿದರೆ ಸರ್ಪವನ್ನು ಭಾವಿಸಲೇ ಬೇಕಾಗುತ್ತದೆ. ಬ್ರಹ್ಮವೆಂದು ಯಾವಾಗ ಹೇಳುತ್ತೇನೆ? ಆತ ನಿಷ್ಕ್ರಿಯನಾಗಿರುವಾಗ, ಕಾರ್ಯದಿಂದ ನಿರ್ಲಿಪ್ತನಾಗಿರುವಾಗ, ಪುರುಷ ಪೋಷಾಕು ಹಾಕಿಕೊಂಡ ಮೇಲೂ ಎಂದಿನಂತೆ ಪುರುಷನೆ. ದಿಗಂಬರನಾಗಿದ್ದ, ಸಾಂಬರನಾದ – ಮತ್ತೆ ದಿಗಂಬರನಾಗುತ್ತಾನೆ. ಹಾವಿನಲ್ಲಿ ವಿಷವಿದೆ. ಆದರೆ ಅದರಿಂದ ಹಾವಿಗೆ ಏನೂ ಆಗುವುದಿಲ್ಲ. ಅದು ಯಾರನ್ನು ಕಡಿಯುತ್ತದೆಯೊ ಅವರಿಗೆ ಅದು ವಿಷವಾಗಿ ಪರಿಣಮಿಸುತ್ತದೆ. ಬ್ರಹ್ಮ ಅದರಿಂದ ನಿರ್ಲಿಪ್ತ.
“ನಾಮರೂಪ ಎಲ್ಲಿದೆಯೊ ಅಲ್ಲೇನೆ ಪ್ರಕೃತಿಯ ಐಶ್ವರ್ಯ (ಆವಿರ್ಭಾವ). ಸೀತೆ ಹನುಮಂತನಿಗೆ, ‘ಮಗು ನಾನೆ ಒಂದು ರೂಪಿನಲ್ಲಿ ರಾಮ, ಒಂದು ರೂಪಿನಲ್ಲಿ ಸೀತೆ ಆಗಿದ್ದೇನೆ; ಒಂದು ರೂಪಿನಲ್ಲಿ ಇಂದ್ರ, ಒಂದು ರೂಪಿನಲ್ಲಿ ಇಂದ್ರಾಣಿ – ಒಂದು ರೂಪಿನಲ್ಲಿ ಬ್ರಹ್ಮ, ಒಂದು ರೂಪಿನಲ್ಲಿ ಬ್ರಹ್ಮಾಣಿ, – ಒಂದು ರೂಪಿನಲ್ಲಿ ರುದ್ರ, ಒಂದು ರೂಪಿನಲ್ಲಿ ರುದ್ರಾಣಿ, – ಆಗಿದ್ದೇನೆ’ ಎಂದು ಹೇಳಿದಳು. ಏನೇನು ನಾಮರೂಪ ಗಳಿವೆಯೋ ಅವೆಲ್ಲಾ ಚಿಚ್ಛಕ್ತಿಯ ಐಶ್ವರ್ಯ (ಆವಿರ್ಭಾವ). ಎಲ್ಲವೂ ಚಿಚ್ಛಕ್ತಿಯ ಐಶ್ವರ್ಯವೇ – ಧ್ಯಾನ ಧ್ಯಾನಿ ಕೂಡ. ನಾನು ಧ್ಯಾನ ಮಾಡುತ್ತೇನೆ ಎಂಬ ಬೋಧೆ ಎಲ್ಲಿಯವರೆಗೆ ಇರುವುದೋ ಅಲ್ಲಿಯವರೆಗೆ ಆಕೆಯ ಇಲಾಖೆಯಲ್ಲಿಯೆ ನಾನು ಇದ್ದೇನೆ. (ಮಾಸ್ಟರ್ ಕಡೆ ತಿರುಗಿ) ಇವನ್ನು ಅರಗಿಸಿಕೊ. ವೇದ ಪುರಾಣಗಳನ್ನು ಕೇಳಬೇಕು. ಅವು ಹೇಳುವುದನ್ನು ಅನುಷ್ಠಾನಕ್ಕೆ ತರಬೇಕು.
(ಪಂಡಿತನಿಗೆ): “ಆಗಾಗ ಸಾಧುಸಂಗ ಒಳ್ಳೆಯದು. ಮನುಷ್ಯನಿಗೆ ರೋಗ ಹತ್ತಿಕೊಂಡೇ ಇದೆ. ಅದು ಸಾಧುಸಂಗದಿಂದ ಬಹಳವಾಗಿ ತಲೆತಗ್ಗಿಸುತ್ತದೆ.
“ ‘ನಾನು’ ಮತ್ತು ‘ನನ್ನದು.’ ‘ಹೇ ಭಗವಂತ, ನೀನೆ ಎಲ್ಲದರ ಕರ್ತ, ನೀನೊಬ್ಬನೆ ನಮ್ಮ ಆಪ್ತಬಂಧು. ಈ ಮನೆ, ಮಠ, ಪರಿವಾರ, ಬಾಂಧವರು, ಬಂಧುಗಳು; ಈ ಇಡೀ ಜಗತ್ತು ಎಲ್ಲವೂ ನಿನಗೆ ಸೇರಿದವೆ’ –ಇದಕ್ಕೆ ಸರಿಯಾದ ಜ್ಞಾನ ಎಂದು ಹೆಸರು. ಅದಕ್ಕೆ ಬದಲು ‘ನಾನೆ ಎಲ್ಲವನ್ನು ಮಾಡುತ್ತಿದ್ದೇನೆ; ನಾನು ಕರ್ತ; ಮನೆ, ಮಠ, ಪರಿವಾರ, ಮಕ್ಕಳುಗಿಕ್ಕಳು, ಬಂಧುಗಳು, ಆಸ್ತಿಪಾಸ್ತಿ ಇವೆಲ್ಲ ನನಗೆ ಸೇರಿವೆ, -’ ಇವೆಲ್ಲಾ ಅಜ್ಞಾನ.
“ಒಮ್ಮೆ ಗುರು ಈ ವಿಷಯವನ್ನೆಲ್ಲ ಶಿಷ್ಯನಿಗೆ ತಿಳಿಸುತ್ತಿದ್ದ. ಗುರು ಹೇಳಿದ, ‘ಭಗವಂತನೊಬ್ಬನೆ ನಿನ್ನ ಸ್ವಂತದವ, ಬೇರೆ ಯಾರೂ ನಿನ್ನ ಸ್ವಂತದವರಲ್ಲ’ ಎಂದು. ಶಿಷ್ಯ ಹೇಳಿದ ‘ಒಳ್ಳೆಯದು, ಆದರೆ ತಾಯಿ ಹೆಂಡತಿ ಇವರೆಲ್ಲ ಬಹಳ ಅಕ್ಕರೆಯಿಂದ ನನ್ನನ್ನು ನೋಡುತ್ತಾರೆ. ನಾನು ಇಲ್ಲದೆ ಇದ್ದಾಗ ಎಲ್ಲವೂ ಅಂಧಕಾರಮಯವಾದಂತೆ ಕಾಣುತ್ತದೆ. ಅವರು ಎಷ್ಟೊಂದು ನನ್ನನ್ನು ಪ್ರೀತಿಸುತ್ತಾರೆ!’ ಗುರು ಹೇಳಿದ, ‘ಅದೆಲ್ಲ ನಿನ್ನ ಮಾನಸಿಕ ಭ್ರಾಂತಿ. ನಿನಗೆ ತೋರಿಸಿಕೊಡುತ್ತೇನೆ ಯಾರೂ ನಿನ್ನ ಸ್ವಂತದವರಲ್ಲ ಎಂಬುದನ್ನು. ಈ ಕೆಲವು ಔಷಧದ ಗುಳಿಗೆಗಳನ್ನು ನಿನ್ನ ಹತ್ತಿರ ಇಟ್ಟುಕೊ. ಮನೆಗೆ ಹೋಗಿ ಅವನ್ನು ನುಂಗಿ ಮಲಗಿಕೊ. ಜನರಿಗೆ ಭಾವನೆಯಾಗುತ್ತದೆ ನೀನು ಸತ್ತುಹೋಗಿಬಿಟ್ಟಿದ್ದೀಯೆ ಅಂತ. ಆದರೆ ನಿನಗೆ ಮಾತ್ರ ಬಾಹ್ಯ ಜ್ಞಾನವಿರುತ್ತದೆ; ನೋಡಲು ಕೇಳಲು ಎಲ್ಲಾ ಸಾಧ್ಯವಾಗುತ್ತದೆ. ಆ ಸಮಯಕ್ಕೆ ಸರಿಯಾಗಿ ನಾನು ನಿನ್ನ ಮನೆಗೆ ಬರುತ್ತೇನೆ’ ಎಂದು.
“ಶಿಷ್ಯ ಹಾಗೆಯೆ ಮಾಡಿದ. ಮನೆಗೆ ಹೋಗಿ ಕೆಲವು ಗುಳಿಗೆಗಳನ್ನು ತಿಂದ ಬಳಿಕ ಅಚೇತನನಾಗಿ ಹಾಸಿಗೆ ಮೇಲೆ ಬಿದ್ದಿದ್ದ. ತಾಯಿ ಹೆಂಡತಿ ಎಲ್ಲರೂ ಗೋಳಾಡಲಾರಂಭಿ ಸಿದರು. ಆ ಸಮಯಕ್ಕೆ ಸರಿಯಾಗಿ ಗುರು ಕವಿರಾಜನ (ಆಯುರ್ವೇದ ಪಂಡಿತನ) ವೇಷ ಹಾಕಿಕೊಂಡು ಆ ಮನೆಗೆ ಹೋದ. ಎಲ್ಲವನ್ನೂ ಕೇಳಿ ಹೇಳಿದ: ‘ಒಳ್ಳೇದು, ಇದಕ್ಕೊಂದು ಔಷಧವಿದೆ – ಮತ್ತೆ ಬದುಕಿ ಏಳುತ್ತಾನೆ, ಆದರೆ ಒಂದು ವಿಷಯ. ಈ ಔಷಧವನ್ನು ಮೊದಲು ಆತನ ಸ್ವಂತದವರೊಬ್ಬರು ತಿನ್ನಬೇಕು, ಬಳಿಕ ಆತನಿಗೆ ಕೊಡಲಾಗುತ್ತದೆ. ಆತನ ಸ್ವಂತದವರು ಯಾರು ಈ ಗುಳಿಗೆಯನ್ನು ತಿನ್ನುತ್ತಾರೆ, ಅವರು ಮಾತ್ರ ಸತ್ತುಹೋಗುತ್ತಾರೆ. ಇಲ್ಲಿ ಆತನ ತಾಯಿ ಹೆಂಡತಿ ಎಲ್ಲರೂ ಇದ್ದೀರಿ. ಒಬ್ಬರಲ್ಲದಿದ್ದರೆ ಒಬ್ಬರಾದರೂ ತಿಂದುಬಿಡುತ್ತೀರಿ ಎಂಬುದರಲ್ಲಿ ನನಗೆ ಯಾವ ಸಂದೇಹವೂ ಇಲ್ಲ. ನೋಡಿ, ಹಾಗೆ ಮಾಡುವುದಾದರೆ ಆತ ಬದುಕಿ ಏಳುತ್ತಾನೆ.’
“ಶಿಷ್ಯ ಎಲ್ಲವನ್ನೂ ಕೇಳುತ್ತಿದ್ದಾನೆ. ಕವಿರಾಜ ಮೊದಲು ತಾಯಿಯನ್ನು ಕರೆದ. ಆಕೆ ದುಃಖದಿಂದ ನೆಲದ ಮೇಲೆ ಬಿದ್ದು ಹೊರಳಾಡುತ್ತಾ ಅಳುತ್ತಿದ್ದಾಳೆ. ಪಂಡಿತ ಆಕೆಗೆ ಹೇಳಿದ: ‘ತಾಯೆ, ನೀನಿನ್ನು ಅಳಬೇಕಾಗಿಲ್ಲ. ನೀನು ಈ ಔಷಧವನ್ನು ತೆಗೆದುಕೊ, ನಿಸ್ಸಂದೇಹವಾಗಿ ನಿನ್ನ ಮಗ ಬದುಕಿ ಏಳುತ್ತಾನೆ. ಆದರೆ ನಿನಗೆ ಮಾತ್ರ ಇದರಿಂದ ಮೃತ್ಯು ಉಂಟಾಗುತ್ತದೆ.’ ತಾಯಿ ಔಷಧವನ್ನು ಕೈಗೆ ತೆಗೆದುಕೊಂಡು ಯೋಚಿಸಲಾರಂಭಿಸಿದಳು. ಬಹಳವಾಗಿ ಯೋಚಿಸಿ ಚಿಂತೆಯಿಂದ ಅಳುತ್ತ ಹೇಳಿದಳು: ‘ಅಪ್ಪಾ, ನನಗೆ ಇನ್ನೂ ಕೆಲವು ಗಂಡು ಹೆಣ್ಣು ಮಕ್ಕಳಿದ್ದಾರೆ. ನಾನು ಸತ್ತುಹೋದರೆ ಅವರಿಗೆ ಏನಾಗಿಬಿಡುತ್ತದೊ ಏನೊ. ಆ ವಿಷಯವಾಗಿ ನಾನು ಯೋಚಿಸುತ್ತಿದ್ದೇನೆ. ಯಾರು ತಾನೆ ನೋಡಿಕೊಳ್ಳುತ್ತಾರೆ ಅವರನ್ನು? ಯಾರು ತಾನೆ ಅವರಿಗೆ ಅನ್ನಾಹಾರಾದಿಗಳನ್ನು ಕೊಡುತ್ತಾರೆ? ಅದಕ್ಕಾಗಿ ಯೋಚಿಸುತ್ತಿದ್ದೇನೆ.’ ಕವಿರಾಜ ಹೆಂಡತಿಯನ್ನು ಕರೆದು ಆಕೆಯ ಕೈಗೆ ಔಷಧವನ್ನು ಕೊಟ್ಟ. ಆಕೆಯೂ ಬಹಳವಾಗಿ ಅಳುತ್ತಿದ್ದಳು. ಔಷಧವನ್ನು ಕೈಗೆ ತೆಗೆದುಕೊಂಡು ಆಕೆಯೂ ಯೋಚಿಸಲಾರಂಭಿಸಿದಳು. ಔಷಧಿ ತೆಗೆದುಕೊಂಡರೆ ತಾನು ಸಾಯಬೇಕಾಗುತ್ತದೆ ಎಂಬುದನ್ನು ಕೇಳಿದಳು. ಆಗ ಅಳುತ್ತ ಹೇಳಲಾರಂಭಿಸಿದಳು: ‘ಅಯ್ಯೊ! ಅವರ ಹಣೆಯಲ್ಲಿ ಏನು ಬರೆದಿತ್ತೊ ಅದು ಆಗಿಹೋಯಿತು. ಈಗ ಈ ಎಳೆಯ ಮಕ್ಕಳ ಗತಿಯೇನು ಹೇಳು? ಇವರನ್ನು ಬೆಳೆಸುವವರು ಯಾರು ತಾನೆ ಇದ್ದಾರೆ? ನಾನು ಔಷಧವನ್ನು ಎಂಥ ಹೃದಯದಿಂದ ತೆಗೆದುಕೊಳ್ಳಲಿ?’ ಅಷ್ಟರಲ್ಲಿ ಆ ಶಿಷ್ಯನ ಔಷಧದ ನೆಶಾ ಇಳಿದು ಹೋಯಿತು. ಆಗ ಅವನಿಗೆ ಯಾರೂ ತನ್ನ ಸ್ವಂತದವರಲ್ಲ ಎಂಬುದು ಚೆನ್ನಾಗಿ ಮಂದಟ್ಟಾಯಿತು. ದಡಮಡಗುಟ್ಟಿಕೊಂಡು ಎದ್ದು ಗುರುವಿನೊಡನೆ ಹೊರಟೇಹೋದ. ಆಗ ಗುರು ಶಿಷ್ಯನಿಗೆ ಹೇಳಿದ: ‘ನಿನ್ನ ಸ್ವಂತದವರು ಒಬ್ಬನೇ ಒಬ್ಬ – ಭಗವಂತ.’
“ಆದ್ದರಿಂದ ಯಾವುದರಿಂದ ಆತನ ಪಾದಪದ್ಮಗಳಲ್ಲಿ ಭಕ್ತಿಯುಂಟಾಗುವುದೊ, – ಯಾವುದರಿಂದ ಆತನೇ ತನ್ನ ಸ್ವಂತದವ ಎಂಬ ಶ್ರದ್ಧಾಭಕ್ತಿಯುಂಟಾಗುವುದೊ, – ಅದನ್ನು ಮಾಡುವುದೇ ಮೇಲು. ಸಂಸಾರ ಎಂಬುದನ್ನು ನೋಡುತ್ತಿದ್ದೀಯೆ, ಎಲ್ಲಾ ಎರಡು ದಿವಸದ ವ್ಯಾಪಾರ. ಇದರಲ್ಲಿ ಏನೂ ಇಲ್ಲ.”
ಪಂಡಿತ ನಗುತ್ತಾ: “ಇಲ್ಲಿಗೆ ಬಂದರೆ, ಬಂದ ದಿವಸವಂತೂ ಪೂರ್ಣ ವೈರಾಗ್ಯ ಬಂದುಬಿಡುತ್ತದೆ. ಇಚ್ಛೆ ಬರುತ್ತದೆ-ಸಂಸಾರವನ್ನು ತ್ಯಜಿಸಿ ಹೊರಟೇಹೋಗಿಬಿಡೋಣ ಅಂತ.”
ಪರಮಹಂಸರು: “ಬೇಕಾಗಿಲ್ಲ. ತ್ಯಜಿಸಿ ಹೋಗಬೇಕಾದುದರ ಆವಶ್ಯಕತೆ ಏನಿದೆ? ನೀವು ಮಾನಸಿಕವಾಗಿ ತ್ಯಾಗಮಾಡಿ. ಸಂಸಾರದಲ್ಲಿ ಅನಾಸಕ್ತರಾಗಿ ಇದ್ದುಕೊಂಡಿರಿ.
“ರಾತ್ರಿವೇಳೆ ಆಗಾಗ ಇಲ್ಲಿಗೆ ಬಂದು ಇರಬೇಕು ಎಂದು ಭಾವಿಸಿ ಸುರೇಂದ್ರ ತನ್ನ ಹಾಸಿಗೆ ತಂದಿಟ್ಟಿದ್ದ. ಒಂದೆರಡು ದಿನ ಇಲ್ಲಿಗೆ ಬಂದಿದ್ದ. ಬಳಿಕ ಆತನ ಹೆಂಡತಿ ಹೇಳಿದಳಂತೆ: ‘ಹಗಲು ವೇಳೆ ಎಲ್ಲಿಗೆ ಬೇಕು ಅಂದರೆ ಅಲ್ಲಿಗೆ ಹೋಗಿ ಬನ್ನಿ. ಆದರೆ ರಾತ್ರಿವೇಳೆ ನೀವು ಮನೆಬಿಟ್ಟು ಹೋಗಕೂಡದು.’ ಆಗ ಸುರೇಂದ್ರ ಪಾಪ ಇನ್ನೇನು ತಾನೇ ಮಾಡಿಯಾನು? ರಾತ್ರಿಕಾಲವನ್ನು ಆತ ಹೊರಗೆ ಕಳೆಯುವ ಹಾಗೆಯೇ ಇಲ್ಲ.
“ನೋಡು, ಬರೀ ಶುಷ್ಕ ವಿಚಾರದಿಂದ ಏನುತಾನೆ ಪ್ರಯೋಜನ? ಆತನಿಗಾಗಿ ವ್ಯಾಕುಲನಾಗು. ಆತನನ್ನು ಪ್ರೀತಿಸಲು ಯತ್ನಿಸು. ಜ್ಞಾನ-ವಿಚಾರ-ಗಂಡಸು; ಮನೆಯ ಜಗಲಿಯವರೆಗೆ ಹೋಗಬಲ್ಲದು. ಭಕ್ತಿ – ಹೆಂಗಸು; ಅಂತಃಪುರದವರೆಗೂಹೋಗಬಲ್ಲದು.
“ಯಾವುದಾದರು ಒಂದು ಭಾವವನ್ನು ಅವಲಂಬಿಸಬೇಕಾಗುತ್ತದೆ, ಆಗ ಭಗವಂತ ದೊರಕುತ್ತಾನೆ. ಸನಕಾದಿ ಋಷಿಗಳು ಶಾಂತಭಾವವನ್ನು ಅವಲಂಬಿಸಿದ್ದರು. ಹನುಮಂತ ದಾಸ್ಯಭಾವವನ್ನು ಅವಲಂಬಿಸಿದ್ದ. ಶ್ರೀಧಾಮ, ಸುಧಾಮ ಮೊದಲಾದ ವ್ರಜದ ಗೋಪಾಲರದು–ಸಖ್ಯಭಾವ. ಯಶೋದೆಯದು ವಾತ್ಸಲ್ಯಭಾವ – ಭಗವಂತನನ್ನು ಸಂತಾನ ದೃಷ್ಟಿಯಿಂದ ನೋಡುವುದು. ಶ್ರೀಮತಿಯದು ಮಧುರಭಾವ.
“ ‘ಹೇ ಭಗವಂತ, ನೀನು ಪ್ರಭು, ನಾನು ದಾಸ’, – ಇದಕ್ಕೆ ದಾಸ್ಯಭಾವ ಎಂದು ಹೆಸರು. ಸಾಧಕನ ಹಿತದೃಷ್ಟಿಯಿಂದ ಈ ಭಾವ ಬಹಳ ಒಳ್ಳೆಯದು.”
ಪಂಡಿತ: “ಹೌದು ನಿಜ.”
ಸಿಂಥಿಯ ಪಂಡಿತ ಹೊರಟು ಹೋದ. ಕ್ರಮೇಣ ಸಾಯಂಕಾಲವಾಗುತ್ತಿದೆ! ಕಾಳೀ ದೇವಾಲಯದಲ್ಲಿ ದೇವದೇವಿಯರ ಮಂಗಳಾರತಿಯ ನಿನಾದ ಪ್ರಾರಂಭವಾಯಿತು. ಪರಮಹಂಸರು ದೇವದೇವಿಯರಿಗೆ ನಮಸ್ಕಾರ ಮಾಡುತ್ತಿದ್ದಾರೆ. ತಮ್ಮ ಚಿಕ್ಕ ಮಂಚದ ಮೇಲೆ ಕುಳಿತು ಭಾವರಾಜ್ಯದಲ್ಲಿ ಮುಳುಗಿದ್ದಾರೆ. ಕೆಲವು ಭಕ್ತರು ಮತ್ತೆ ಕೊಠಡಿಗೆ ಬಂದು ನೆಲದ ಮೇಲೆ ಕುಳಿತುಕೊಂಡಿದ್ದಾರೆ. ಕೊಠಡಿ ನಿಶ್ಶಬ್ದವಾಗಿದೆ.
ಈ ರೀತಿಯಾಗಿ ಒಂದು ಘಂಟೆ ಕಳೆಯಿತು. ಈಶಾನ ಮುಖ್ಯೋಪಾಧ್ಯಾಯ ಮತ್ತು ಕಿಶೋರಿ ಬಂದಿದ್ದಾರೆ. ಅವರು ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತು ಕೊಂಡರು. ಈಶಾನನಿಗೆ ಪುರಶ್ಚರಣವೆ ಮೊದಲಾದ ಶಾಸ್ತ್ರೋಕ್ತ ಕರ್ಮಗಳಲ್ಲಿ ಬಹಳ ಶ್ರದ್ಧಾಭಕ್ತಿ. ಆತ ಒಬ್ಬ ಕರ್ಮಯೋಗಿ. ಈಗ ಪರಮಹಂಸರು ಮಾತುಕತೆಯಾಡಲು ಆರಂಭಿಸಿದರು.
ಶ್ರೀರಾಮಕೃಷ್ಣರು: “ಸುಮ್ಮನೆ ‘ಜ್ಞಾನ’, ‘ಜ್ಞಾನ’, ಎಂದು ಹೊಡೆದುಕೊಂಡರೆ ಏನಾಗುತ್ತದೆ? ಜ್ಞಾನಲಾಭಕ್ಕೆ ಲಕ್ಷಣಗಳಿವೆ. ಮುಖ್ಯವಾಗಿ ಎರಡು ಲಕ್ಷಣ – ಮೊದಲನೆ ಯದು ಅನುರಾಗ, ಅಂದರೆ ಭಗವಂತನನ್ನು ಪ್ರೀತಿಸುವುದು. ಬರಿದೆ ಜ್ಞಾನವಿಚಾರ ವನ್ನೇನೊ ಮಾಡುತ್ತಿರಬಹುದು, ಆದರೆ ಭಗವಂತನಲ್ಲಿ ಅನುರಾಗವಿಲ್ಲದಿದ್ದರೆ, ಪ್ರೀತಿ ಇಲ್ಲದಿದ್ದರೆ, ಅದು ವಿಫಲ. ಇನ್ನೊಂದು ಲಕ್ಷಣ, ಕುಲಕುಂಡಲಿನೀಶಕ್ತಿ ಎಚ್ಚರಗೊಳ್ಳುವಿಕೆ. ಕುಲಕುಂಡಲಿನಿ ಎಲ್ಲಿಯವರೆಗೆ ನಿದ್ರಿಸುವುದೊ ಅಲ್ಲಿಯವರೆಗೆ ಜ್ಞಾನ ದೊರಕದು. ಘಂಟೆಗಳ ಕಾಲ ಕುಳಿತು ಶಾಸ್ತ್ರವನ್ನು ಓದುತ್ತಿರಬಹುದು. ವಿಚಾರಮಾಡುತ್ತಿರಬಹುದು. ಆದರೆ ಆಂತರ್ಯದಲ್ಲಿ ವ್ಯಾಕುಲತೆಯಿಲ್ಲದಿದ್ದರೆ, ಅದು ಜ್ಞಾನ ದೊರಕುವ ಲಕ್ಷಣವಲ್ಲ.
“ಕುಲಕುಂಡಲಿನೀಶಕ್ತಿ ಜಾಗ್ರತವಾದರೆ ಭಾವ, ಭಕ್ತಿ, ಪ್ರೇಮ-ಇವೆಲ್ಲಾ ಉಂಟಾಗುತ್ತವೆ. ಇದಕ್ಕೆ ಭಕ್ತಿಯೋಗ ಎಂದು ಹೆಸರು.
“ಕರ್ಮಯೋಗ 2 ಬಹಳ ಕಠಿಣ ಕರ್ಮಯೋಗದಿಂದ ಅನೇಕ ಶಕ್ತಿಗಳು ಉಂಟಾಗುತ್ತವೆ–ಸಿದ್ಧಿಗಳೂ ದೊರಕುತ್ತವೆ.”
ಈಶಾನ: “ನಾನು ಹಾಜರಾ ಮಹಾಶಯನನ್ನು ನೋಡಿ ಬರುತ್ತೇನೆ.”
ಪರಮಹಂಸರು ಸುಮ್ಮನೆ ಕುಳಿತಿದ್ದಾರೆ. ಸ್ವಲ್ಪ ಹೊತ್ತಾದ ಮೇಲೆ ಈಶಾನ ಮತ್ತೆ ಕೊಠಡಿಗೆ ಬಂದ. ಆತನ ಜೊತೆಯಲ್ಲಿ ಹಾಜರಾ ಬಂದಿದ್ದಾನೆ. ಪರಮಹಂಸರು ಇನ್ನೂ ಸುಮ್ಮನೆ ಕುಳಿತಿದ್ದಾರೆ. ಸ್ವಲ್ಪ ಹೊತ್ತಾದ ಮೇಲೆ ಹಾಜರಾ ಈಶಾನನಿಗೆ ಹೇಳಿದ: “ಬಾ, ಬಹುಶಃ ಇವರು ಈಗ ಧ್ಯಾನಮಾಡಬಹುದು.” ಇಬ್ಬರೂ ಹೊರಗೆ ಹೊರಟು ಹೋದರು.
ಶ್ರೀರಾಮಕೃಷ್ಣರು ಇನ್ನೂ ಸುಮ್ಮನೆ ಕುಳಿತಿದ್ದಾರೆ. ನೋಡುವಲ್ಲಿ ನಿಜವಾಗಿಯೂ ಧ್ಯಾನ ಮಾಡುತ್ತಿದ್ದಾರೆ. ಕೈಯಿಂದ ಜಪಮಾಡುತ್ತಿದ್ದಾರೆ. ಅದೇ ಕೈಯನ್ನು ಒಮ್ಮೆ ತಲೆಯ ಮೇಲೆ ಇಟ್ಟುಕೊಂಡರು. ಬಳಿಕ ಭ್ರೂಮಧ್ಯದ ಮೇಲೆ, ಬಳಿಕ ಕಂಠದ ಮೇಲೆ, ಬಳಿಕ ಹೃದಯದ ಮೇಲೆ, ಬಳಿಕ ನಾಭಿಯ ಮೇಲೆ ಇಟ್ಟುಕೊಂಡರು. ಏನು ಪರಮಹಂಸರು ಷಟ್ಚಕ್ರದಲ್ಲಿ ಆದ್ಯಾಶಕ್ತಿಯ ಧ್ಯಾನಮಾಡುತ್ತಿದ್ದಾರೆಯೇನು? ಶಿವಸಂಹಿತಾದಿ ಶಾಸ್ತ್ರದಲ್ಲಿ ಯೋಗದ ವಿಷಯವಾಗಿ ಏನಿದೆಯೋ ಅದೇ ಏನು ಇದು?
ಹಾಜರಾ ಈಶಾನನೊಡನೆ ಕಾಳೀದೇವಾಲಯಕ್ಕೆ ಹೋದ. ಪರಮಹಂಸರು ಇನ್ನೂ ಧ್ಯಾನ ಮಾಡುತ್ತಲೆ ಇದ್ದಾರೆ. ಆಗ ಬಹುಶಃ ರಾತ್ರಿ ಏಳೂವರೆ. ಅಷ್ಟರಲ್ಲಿ ಅಧರಸೇನನೂ ಬಂದುಬಿಟ್ಟ.
ಸ್ವಲ್ಪ ಹೊತ್ತಾದ ಮೇಲೆ ಪರಮಹಂಸರು ಕಾಳೀದೇವಾಲಯಕ್ಕೆ ಹೋದರು. ಅಲ್ಲಿ ದೇವಿಯ ದರ್ಶನಮಾಡಿ, ಆಕೆಯ ಪಾದಪದ್ಮದಲ್ಲಿದ್ದ ನಿರ್ಮಾಲ್ಯವನ್ನು ತೆಗೆದುಕೊಂಡು ತಲೆಗೆ ಮುಡಿದುಕೊಂಡರು. ತಾಯಿಗೆ ಪ್ರಣಾಮದ ಬಳಿಕೆ ಪ್ರದಕ್ಷಿಣೆ ಮಾಡಿದರು. ಚಾಮರ ಹಿಡಿದು ಭಗವತಿಗೆ ಗಾಳಿ ಬೀಸಿದರು. ಪರಮಹಂಸರು ಭಾವದಲ್ಲಿ ತನ್ಮಯ ರಾಗಿದ್ದಾರೆ. ಹೊರಕ್ಕೆ ಬರುವಾಗ ನೋಡಿದರು ಈಶಾನ ಕೋಶಾಕುಶಿ (ಪಂಚಪಾತ್ರೆ ಉದ್ಧರಣೆ) ತೆಗೆದುಕೊಂಡು ಸಂಧ್ಯಾವಂದನೆ ಮಾಡುತ್ತಿದ್ದುದನ್ನು.
ಶ್ರೀರಾಮಕೃಷ್ಣರು ಈಶಾನನಿಗೆ: “ನೀನು ಆಗಲೆ ಬಂದೆ, ಇನ್ನೂ ಸಂಧ್ಯಾವಂದನೆ ಮಾಡುತ್ತಿದ್ದೀಯ? ಒಂದು ಹಾಡು ಕೇಳು.” ಭಾವದಿಂದ ಉನ್ಮತ್ತರಾಗಿ ಈಶಾನನ ಹತ್ತಿರ ಕುಳಿತು ಮಧುರ ಕಂಠದಿಂದ ಹಾಡಲಾರಂಭಿಸಿದರು:
ಏತಕೆ, ಇನ್ನೇತಕೆ?
ಕಾಶಿ ಕಾಂಚಿಯೊ, ಗಯೆಯೊ ಗಂಗೆಯೊ
ಪುಣ್ಯಕ್ಷೇತ್ರಗಳೇತಕೆ?
ಎಲ್ಲಿವರೆಗೂ ನಾನು ಕಾಳಿಯ ನೆನೆಯುತಿರುವೆನೊ ನಿತ್ಯವೂ,
ಅಲ್ಲಿವರೆಗೂ ಜಪತಪಾದಿಯ ಕಟ್ಟುಕಟ್ಟಲೆ ಏತಕೆ?….
“ಸಂಧ್ಯಾದಿಗಳು ಎಷ್ಟು ದಿವಸ? ಎಲ್ಲಿಯವರೆಗೆ ಭಗವಂತನ ಪಾದಪದ್ಮಗಳಲ್ಲಿ ಭಕ್ತಿ ಯುಂಟಾಗಿಲ್ಲವೊ ಅಲ್ಲಿಯವರೆಗೆ–ಆತನ ನಾಮವನ್ನು ಜಪಿಸುತ್ತ ಜಪಿಸುತ್ತ ಇದ್ದ ಹಾಗೆ ಕಣ್ಣಿನಿಂದ ಪ್ರೇಮಾಶ್ರು ಎಲ್ಲಿಯವರೆಗೆ ಸುರಿಯದೊ ಅಲ್ಲಿಯವರೆಗೆ, – ರೋಮಾಂಚನ ಎಲ್ಲಿಯವರೆಗೆ ಉಂಟಾಗದೊ ಅಲ್ಲಿಯವರೆಗೆ.
ತಾಯಿ ದುರ್ಗೆಯೆ ಪರಮಬ್ರಹ್ಮಸ್ವರೂಪಿ-
ಯೆಂಬುದನರಿಯುತ,
ಭಕ್ತಿ ಮುಕ್ತಿಗೆ ತಲೆಯಬಾಗಿಸಿ ನಿಲ್ಲುತ
ಧರ್ಮ ಮೇಣ್ ಅಧರ್ಮವೆರಡನು ಬಿಸುಡುತ
ನಿಲುವೆನೆಂಬನು ಶ್ರೀಪ್ರಸಾದನು ಹಾಡುತ!
“ಫಲ ಬಿಟ್ಟೊಡನೆಯೇ ಹೂವು ಉದುರಿಹೋಗುತ್ತದೆ. ಯಾವಾಗ ಭಕ್ತಿ ಉಂಟಾಗು ತ್ತದೆಯೊ ಆಗ ಭಗವಂತ ದೊರೆಯುತ್ತಾನೆ, – ಆಗ ಸಂಧ್ಯಾವಂದನಾದಿ ಕರ್ಮಗಳು ಬಿಟ್ಟು ಹೋಗುತ್ತವೆ. ಸೊಸೆ ಗರ್ಭಿಣಿಯಾದರೆ ಅತ್ತೆ ಆಕೆಯ ಕೆಲಸಗಳನ್ನು ಕಡಿಮೆಮಾಡಿ ಕೊಡುತ್ತಾಳೆ. ಒಂಬತ್ತು ತಿಂಗಳಾದರೆ ಮನೆಗೆಲಸ ಮಾಡಲು ಬಿಟ್ಟುಕೊಡುವುದಿಲ್ಲ. ಮಗು ಹುಟ್ಟಿದ ನಂತರ, ಆಕೆ ಅದನ್ನು ಕಂಕುಳಲ್ಲಿ ಎತ್ತಿಕೊಂಡು ಕೇವಲ ಅದರ ಸೇವೆಯಲ್ಲಿಯೆ ನಿರತಳಾಗಿರುತ್ತಾಳೆ. ಆಕೆಗೆ ಬೇರೆ ಯಾವ ಕೆಲಸವೂ ಇರದು. ಭಗವಂತನನ್ನು ಪಡೆದು ಕೊಂಡರೆ ಸಂಧ್ಯಾವಂದನಾದಿ ಕರ್ಮಗಳು ಬಿಟ್ಟುಹೋಗುತ್ತವೆ.
“ನೀನು ಈ ರೀತಿಯಾಗಿ ಸುಮ್ಮನೆ ತೆವಳುತ್ತಿದ್ದರೆ ಏನನ್ನೂ ಸಾಧಿಸಲಾಗುವುದಿಲ್ಲ. ತೀವ್ರ ವೈರಾಗ್ಯ ಆವಶ್ಯಕ. ಒಂದು ದಿವಸದ್ದನ್ನು ಒಂದು ವರ್ಷದವರೆಗೆ ಮಾಡಿದರೆ ಏನನ್ನಾದರೂ ಸಾಧಿಸಲಾಗುತ್ತದೆಯೇ? ನೋಡಿದರೆ, ನಿನ್ನಲ್ಲಿ ಸ್ಫೂರ್ತಿ ಇಲ್ಲದ ಹಾಗೆ, ಶಕ್ತಿ ಇಲ್ಲದ ಹಾಗೆ ತೋರುತ್ತಿದೆಯಲ್ಲ! ನೆನೆದ ಅವಲಕ್ಕಿಯ ಹಾಗೆ ತೋರುತ್ತಿರುವೆಯಲ್ಲ! ಏಳು, ಇಳಿ ಕಾರ್ಯರಂಗಕ್ಕೆ! ಕಟ್ಟು ಸೊಂಟಾನ!
“ಅದಕ್ಕಾಗಿ ನನಗೆ ಈ ಹಾಡು ರುಚಿಸದು:
ನಲಿವಿನಲಿ ದೇವರಿಗೆ ಅಂಟಿಕೊಂಡಿರು ನೀನು.
ಈ ಬಗೆಯ ಸಾಧನೆಗೆ ಎಂದಾದರೊಂದು ದಿನ
ದೊರಕುವನು ಅವನು.
“ನನಗೆ ‘ಎಂದಾದರೊಂದು ದಿನ ದೊರಕುವನು ಅವನು’ ಎಂಬ ಭಾವನೆ ರುಚಿಸುತ್ತಿಲ್ಲ. ತೀವ್ರ ವೈರಾಗ್ಯ ಬೇಕು. ಹಾಜರಾನಿಗೆ ನಾನು ಅದನ್ನೇ ಹೇಳುತ್ತಿರುವುದು.
“ತೀವ್ರ ವೈರಾಗ್ಯ ಏಕೆ ಉಂಟಾಗುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದೀಯೊ? ಕಾರಣವಿದೆ. ಆಂತರ್ಯದಲ್ಲಿ ವಾಸನಾ ಪ್ರವೃತ್ತಿಗಳು ತುಂಬಿವೆ. ಹಾಜರಾನಿಗೆ ನಾನು ಅದನ್ನೇ ಹೇಳುತ್ತಿರುವುದು. ನಮ್ಮ ಊರಿನಲ್ಲಿ ಗದ್ದೆಗೆ ನೀರು ಹಾಯಿಸುತ್ತಾರೆ. ನೀರು ಹರಿದು ಹೋಗದೆ ಇರಲೆಂದು ಗದ್ದೆಯ ನಾಲ್ಕು ಕಡೆಗೆ ತೆವರಿ ಕಟ್ಟುತ್ತಾರೆ. ಇವು ಮಣ್ಣಿನ ವಾದ್ದರಿಂದ ಅನೇಕ ವೇಳೆ ಬಿರುಕು ಬಿಟ್ಟಿರುತ್ತವೆ. ರೈತರು ಎದೆ ಮುರಿದೇನೊ ಗದ್ದೆಗೆ ನೀರು ತರುತ್ತಾರೆ. ಆದರೆ ಬಿರುಕುಗಳ ಮೂಲಕ ನೀರು ಹೊರಕ್ಕೆ ಹರಿದುಹೋಗಿ ಬಿಡುತ್ತದೆ. ವಾಸನೆಗಳೇ ಬಿರುಕುಗಳು. ನಿಜ, ಜನ ಜಪತಪಾದಿಗಳನ್ನು ಮಾಡುತ್ತಾರೆ. ಆದರೆ ಅವುಗಳ ಹಿನ್ನೆಲೆಯಲ್ಲಿಯೇ ವಾಸನೆಗಳು (ಆಸೆಗಳು). ಆ ವಾಸನೆಯ ಬಿರುಕುಗಳ ಮೂಲಕ ಎಲ್ಲಾ ಖಾಲಿಯಾಗಿಬಿಡುತ್ತದೆ.
“ಜನರು ಒಂದು ವಿಧದ ಬಿದಿರಬೋನಿನಿಂದ ಮೀನು ಹಿಡಿಯುತ್ತಾರೆ. ಬಿದಿರಿನದು ನೆಟ್ಟಗೆ ನಿಲ್ಲುವ ಸ್ವಭಾವ. ಆದರೆ ಅದು ಬೋನಿನಲ್ಲಿ ಬಗ್ಗಿಕೊಂಡಿದೆಯಲ್ಲ ಏಕೆ ಗೊತ್ತೆ? ಮೀನು ಹಿಡಿಯಲೋಸುಗ. ವಾಸನೆಯೇ ಮೀನು, ಅದಕ್ಕಾಗಿಯೇ ಮನಸ್ಸು ಸಂಸಾರದ ಕಡೆ ವಾಲಿಕೊಂಡಿದೆ. ವಾಸನೆಗಳಿಲ್ಲದಿದ್ದರೆ ಸಹಜವಾಗಿಯೆ ಮನಸ್ಸಿಗೆ ಊರ್ಧ್ವದೃಷ್ಟಿ; ಭಗವಂತನ ಕಡೆ ದೃಷ್ಟಿ.
“ಹೇಗೆ ಗೊತ್ತೆ? ಇದು ತಕ್ಕಡಿಯ ಮುಳ್ಳುಗಳ ಹಾಗೆ. ಕಾಮಕಾಂಚನದ ಭಾರ ತಕ್ಕಡಿಯ ಮೇಲೆ ಇರುವುದರಿಂದ ಮೇಲಿನ ಕೆಳಗಿನ ಮುಳ್ಳು ಒಂದಾಗಿ ನಿಲ್ಲುವುದಿಲ್ಲ. ಅದಕ್ಕಾಗಿಯೆ ಮನುಷ್ಯ ಯೋಗಭ್ರಷ್ಟನಾಗುತ್ತಾನೆ. ದೀಪದ ಉರಿಯನ್ನು ನೋಡಿಲ್ಲವೆ? ಒಂದು ಸ್ವಲ್ಪ ಗಾಳಿ ತಾಗಿದರೆ ಅಲುಗಲಾರಂಭಿಸುತ್ತದೆ. ಯೋಗಾವಸ್ಥೆ ದೀಪದ ಉರಿಯ ಹಾಗೆ, – ಅಲ್ಲಿ ಗಾಳಿ ಇಲ್ಲ.
“ಮನಸ್ಸು ಚದುರಿ ಹೋಗಿದೆ – ಸ್ವಲ್ಪ ಭಾಗ ಢಾಕಾಕ್ಕೆ, ಸ್ವಲ್ಪ ಭಾಗ ದೆಹಲಿಗೆ, ಸ್ವಲ್ಪ ಭಾಗ ಕೂಚ್ಬಿಹಾರಿಗೆ. ಅಂಥ ಮನಸ್ಸನ್ನು ಈಗ ಒಟ್ಟುಗೂಡಿಸಬೇಕಾಗುತ್ತದೆ. ಒಟ್ಟುಗೂಡಿಸಿ ಒಂದು ವಸ್ತುವಿನ ಮೇಲೆ ಏಕಾಗ್ರಮಾಡಬೇಕಾಗುತ್ತದೆ. ನಿನಗೆಹದಿನಾರಾಣೆ ಬೆಲೆಬಾಳುವ ಬಟ್ಟೆ ಬೇಕಾದರೆ ವ್ಯಾಪಾರಿಗೆ ಹದಿನಾರಾಣೆಯನ್ನೇ ಕೊಡಬೇಕಾಗುತ್ತದೆ. ಒಂದು ಸ್ವಲ್ಪ ವಿಘ್ನವೇನಾದರು ಇದ್ದರೆ ಯೋಗ ಸಿದ್ಧಿಸುವ ಹಾಗಿಲ್ಲ. ಟೆಲಿಗ್ರಾಫ್ ತಂತಿ ಯಲ್ಲಿ ಒಂದು ಸ್ವಲ್ಪ ಬಿರುಕು ಇದ್ದರೂ ಸಮಾಚಾರ ಮಟ್ಟದು.
“ನೀನು ಸಂಸಾರದಲ್ಲೇನೊ ಇದ್ದೀಯೆ, ಇದ್ದರೇನು ಭಯ? ಆದರೆ ಮಾತ್ರ ಇಡಿಯ ಕರ್ಮಫಲವನ್ನು ಭಗವಂತನಿಗೆ ಅರ್ಪಿಸಿಬಿಡಬೇಕು. ನೀನು ಮಾತ್ರ ಯಾವ ಫಲವನ್ನೂ ಅಪೇಕ್ಷಿಸಕೂಡದು. ಆದರೆ ಒಂದು ವಿಷಯ, ಭಕ್ತಿಕಾಮನೆ ಕಾಮನೆಗಳ ಗುಂಪಿಗೆ ಸೇರಿದು ದಲ್ಲ. ಭಕ್ತಿಕಾಮನೆಯನ್ನ, ಭಕ್ತಿ ಪ್ರಾರ್ಥನೆಯನ್ನ ಮಾಡಬಹುದು. ಭಕ್ತಿಯ ತಾಮಸಿಕ ಭಾಗವನ್ನು ಉಪಯೋಗಿಸು. ಭಗವತಿಯನ್ನು ಬಲಾತ್ಕರಿಸಿ ಕೇಳು-
ತಾಯಿಗೂ ಮಗನಿಗೂ ಏನು ಜಿದ್ದಿನ ಸ್ಪರ್ಧೆ!
ಎಂಥ ಲೀಲೆಯಿದಮ್ಮ! ಕಾದಲಾರದೆ ಸೋತು
ನಿನ್ನ ತೋಳೊಳಗೆನ್ನ ಎತ್ತಿಕೊಳುವನ್ನೆಗಂ
ನನ್ನ ಪೀಡನೆ ನಿನಗೆ ತಪ್ಪದೆಂದಿಗೂ!
“ತ್ರೈಲೋಕ್ಯ ಒಮ್ಮೆ ಹೇಳಿದ, ‘ಎಂದು ನಾನು ಅವರ ಮನೆಯಲ್ಲಿ ಜನ್ಮತಾಳಿದೆನೊ, ಅಂದಿನಿಂದಲೆ ನನ್ನ ಭಾಗದ ಹಿಸ್ಸೆ ಅಲ್ಲಿ ಇದ್ದೇ ಇದೆ’.
“ಭಗವತಿ ನಿನ್ನ ಹಡೆದ ತಾಯಿ. ಆಕೆ ಏನು ನಿನ್ನ ಮಲತಾಯಿಯೆ? ಆಕೆಯೊಡನೆ ಏನು ಕೃತಕ ಸಂಬಂಧವಿದೆಯೆ? ಆಕೆಯೊಡನೆ ಒತ್ತಾಯ ನಡೆಯೊ ಹಾಗಿಲ್ಲ ಎಂದರೆ ಬೇರೆ ಯಾರೊಡನೆ ತಾನೆ ಸಾಧ್ಯ? ಹೇಳು –
ಇವನೆಲ್ಲೊ ಎಂಟು ತಿಂಗಳ ಕೂಸು – ಎಂದುಕೊಂಡಿಹೆ ನೀನು!
ನಿನ್ನ ಕೆಂಗಣ್ಣುಗಳ ಕಂಡು ಬೆದರುವೆನೆ ನಾನು?
ಶಿವನೆದೆಯ ಮೆಟ್ಟಿರುವ ನಿನ್ನ ಪದಕಮಲಗಳೆ
ನನ್ನ ನಿಧಿಯು.
ಆ ನನ್ನ ಆಸ್ತಿಯನ್ನು ಪಡೆವ ಹಕ್ಕಿದ್ದರೂ
ನಡುನಡುವೆ ನಿನ್ನಿಂದ ಎಡರುತೊಡರು!
ಶಿವನೆ ಸಾಕ್ಷಿಯು ಇದಕೆ; ಪಂಚಾಯಿತರ ಮುಂದೆ
ಒಂದೇ ಸವಾಲಿನಲಿ ನಾನು ಗೆಲುವೆ!
ನೀನಿಂತು ಪ್ರತಿಭಟಿಸುತಿದ್ದರೆ ನಾನು
ಎಂಥ ಮಗನೆಂಬುದನು ತೋರಿಬಿಡುವೆ!
ರಾಮಪ್ರಸಾದನಿದೊ ನುಡಿಯುವನು ಈ ತೆರದಿ;
ತಾಯಿಗೂ ಮಗುವಿಗೂ ಏನು ಜಿದ್ದಿನ ಸ್ಪರ್ಧೆ!
ಎಂಥ ಲೀಲೆಯಿದಮ್ಮ! ಕಾದಲಾರದೆ ಸೋತು
ನಿನ್ನ ತೋಳೊಳಗೆನ್ನ ಎತ್ತಿಕೊಳುವನ್ನೆಗಂ
ನನ್ನ ಪೀಡನೆ ನಿನಗೆ ತಪ್ಪದೆಂದಿಗೂ!
“ಭಗವತಿ ನಿನ್ನ ತಾಯಿ. ಜೋರುಮಾಡಿ ಕೇಳು. ಯಾವುದು ಯಾವುದರ ಅಂಶವೊ ಅದು ಅದರಿಂದ ಆಕರ್ಷಿತವಾಗುತ್ತದೆ. ತಾಯಿಯ ಸತ್ವ ನಮ್ಮಲ್ಲಿ ಇರುವುದರಿಂದ, ಆಕೆಯ ಕಡೆಗೆ ಅಷ್ಟೊಂದು ಸೆಳೆತ. ನಿಜವಾದ ಶೈವ ಶಿವನ ಸತ್ತ್ವವನ್ನು ಪಡೆಯುತ್ತಾನೆ; ಕೆಲವು ಕಿಡಿ ಆತನ ಹೃದಯಕ್ಕೆ ಬಂದು ಬೀಳುತ್ತವೆ. ಯಾರು ನಿಜವಾದ ವೈಷ್ಣವನೊ ಆತನಲ್ಲಿ ನಾರಾಯಣನ ಸತ್ತ್ವವಿರುತ್ತದೆ.
“ಈಗ ನೀನು ಹಿಟ್ಟುಬಟ್ಟೆಗಾಗಿ ದುಡಿಯಬೇಕಾಗಿಲ್ಲ. ಈಗ ಸ್ವಲ್ಪ ಕಾಲ ಆತನ ಚಿಂತನೆ ಮಾಡು. ಸಂಸಾರದಲ್ಲಿ ಏನೂ ಇಲ್ಲ ಎಂಬುದನ್ನಂತು ಆಗಲೆ ನೀನು ಅರಿತಿ ದ್ದೀಯೆ.”
ಪರಮಹಂಸರು ಮತ್ತೆ ತಮ್ಮ ಮಧುರ ಕಂಠದಿಂದ ಹಾಡಲಾರಂಭಿಸಿದರು:
ಎತ್ತ ಹೋದರು ಸುತ್ತಲೆಲ್ಲೂ
ನನಗೆ ಯಾರೂ ಇಲ್ಲ ಜಗದೊಳು
ಎಂಬುದನು ನೀ ನೆನಪಿಡು…..
ಪರಮಹಂಸರು ಮತ್ತೆ ಮಾತು ಮುಂದುವರಿಸಿದರು: “ನೀನು ಮಧ್ಯಸ್ಥಿಕೆ ಕೆಲಸ ಗಳಲ್ಲಿ ಏಕೆ ವ್ಯರ್ಥವಾಗಿ ಕಾಲಕಳೆಯುತ್ತಿರುವೆ? ನೀನು ಜನರ ಜಗಳ ಮನಸ್ತಾಪ ಇವನ್ನು ಫೈಸಲು ಮಾಡುತ್ತೀಯೆ. ನಿನ್ನನ್ನು ಜನರು ಮಧ್ಯಸ್ಥನನ್ನಾಗಿ ಮಾಡಿಕೊಳ್ಳುತ್ತಾರೆ ಅಂತ ಕೇಳಿದ್ದೇನೆ. ನೀನು ಆ ರೀತಿಯಾಗಿ ಬಹಳ ಕಾಲದಿಂದ ಮಾಡಿಕೊಂಡು ಬಂದಿದ್ದೀಯೆ. ಯಾರಿಗೆ ಇಚ್ಛೆ ಇದೆಯೊ ಅವರು ಅದನ್ನು ಮಾಡಲಿ. ನೀನು ಈಗ ಆಕೆಯ ಪಾದಪದ್ಮಗಳ ಕಡೆ ಹೆಚ್ಚಾಗಿ ಮನಸ್ಸಿಡು. ಜನ ಹೇಳುತ್ತಾರೆ: ‘ರಾವಣ ಲಂಕೆಯಲ್ಲಿ ಸತ್ತರೆ, ಇಲ್ಲಿ ಬೇಹುಳ 3 ಅತ್ತು ಅತ್ತು ಅಳಲೇಕಾಯಿಯಾದ!’ ಎಂದು.
“ಶಂಭೂ ಕೂಡ ಒಮ್ಮೆ ನನಗೆ ಹೇಳಿದ, ‘ಹಾಸ್ಪಿಟಲ್, ಡಿಸ್ಪೆನ್ಸರಿ ಕಟ್ಟಿಸುತ್ತೇನೆ’ ಎಂದು. ಮನುಷ್ಯ ಭಕ್ತ; ಅದಕ್ಕಾಗಿ ನಾನು, ‘ಭಗವಂತ ದರ್ಶನ ಕೊಟ್ಟರೆ ಹಾಸ್ಪಿಟಲ್, ಡಿಸ್ಪೆನ್ಸರಿಗಳಿಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತೀಯ!’ ಅಂತ ಹೇಳಿದೆ.
“ಕೇಶವಸೇನ ನನ್ನನ್ನು ಕೇಳಿದ, ‘ಭಗವಂತನ ದರ್ಶನ ಏಕೆ ಆಗಲೊಲ್ಲದು?’ ಅಂತ. ನಾನು ಹೇಳಿದೆ, ‘ನೀನು ಹೆಸರು ಕೀರ್ತಿ ಪಾಂಡಿತ್ಯ ಇವುಗಳಲ್ಲಿಯೇ ನಿರತನಾಗಿರುವು ದರಿಂದ ಆಗುತ್ತಿಲ್ಲ’ ಎಂದು. ಮಗು ಎಲ್ಲಿಯವರೆಗೆ–ಕೆಂಪು ಗಿಲಕೆ ತೆಗೆದುಕೊಂಡು ಚೀಪುತ್ತಿರುವುದೊ ಅಲ್ಲಿಯವರೆಗೆ ತಾಯಿ ಹತ್ತಿರ ಬರಳು. ಆದರೆ ಹಾಗೇ ಸ್ವಲ್ಪ ಸಮಯವನ್ನು ಕಳೆದ ನಂತರ ಯಾವಾಗ ಗಿಲಕೆ ಬಿಸಾಡಿ ಚಂಡಿ ಹಿಡಿಯುವುದೊ, ಆಗ ತಾಯಿ ಒಲೆ ಮೇಲೆ ಬೇಯುತ್ತಿದ್ದ ಅನ್ನದ ತಪ್ಪಲೆಯನ್ನು ಕೂಡ ಕೆಳಗಿಳಿಸಿ ಓಡಿಬರುತ್ತಾಳೆ.
“ನೀನು ಮಧ್ಯಸ್ಥಿಕೆ ಕೆಲಸ ಮಾಡುತ್ತೀಯೆ. ಭಗವತಿ ಭಾವಿಸುತ್ತಾಳೆ, ‘ನನ್ನ ಮಗು ಮಧ್ಯಸ್ಥಿಕೆ ಕೆಲಸ ಮಾಡಿಕೊಂಡು ಆನಂದದಿಂದ ಇದೆ. ಆನಂದದಿಂದ ಇದೇ ತಾನೆ, ಇರಲಿ’ ಎಂದು.”
ಇಷ್ಟೆಲ್ಲ ಹೇಳಿ ಮುಗಿಸುವುದರಲ್ಲಿ ಈಶಾನ ಪರಮಹಂಸರ ಪಾದಗಳನ್ನು ಹಿಡಿದು ಕುಳಿತುಕೊಂಡಿದ್ದಾನೆ. ಪಾದಗಳನ್ನು ಹಿಡಿದು ನಮ್ರತೆಯಿಂದ, “ನಾನು ಬೇಕು ಅಂತ ಇವುಗಳನ್ನೆಲ್ಲ ಮಾಡುತ್ತಿಲ್ಲ” ಎಂದು ಹೇಳುತ್ತಿದ್ದಾನೆ.
ಶ್ರೀರಾಮಕೃಷ್ಣರು: “ಅದು ಗೊತ್ತು. ಆ ಹೆಂಗಸಿನ ಕ್ರೀಡೆಯೆ–ಆಕೆಯ ಲೀಲೆಯೆ. ಸಂಸಾರದಲ್ಲಿ ಬದ್ಧರನ್ನಾಗಿ ಇಟ್ಟಿರೋದು ಆ ಮಹಾಮಾಯೆಯ ಇಚ್ಛೆಯೆ. ಅದು ಹೇಗೆ ಗೊತ್ತೆ?
ಮತ್ತೆ:
ಜಗದ ಕಡಲಿನ ಮೇಲೆ ಎನಿತೊಂದು ದೋಣಿಗಳು
ತೇಲುತಿಹವೊ!
ಮತ್ತೆನಿತು ದೋಣಿಗಳು ಮುಳುಗಲಿಹವೊ!
ಬಾನೊಳಾಡುವ ನೂರುಸಾವಿರದ ಪಟದಲಿ,
ಒಂದೊ ಎರಡೊ ಕಿತ್ತು ಬಿಡುಗಡೆ
ಪಡೆಯುತಿರಲಾಕಡೆಯಲಿ,
ಅದನು ನೋಡುತ ನೀನು ಚಪ್ಪಳೆ-
ತಟ್ಟಿ ನಲಿಯುವೆ ಬಯಲಲಿ!
ಲಕ್ಷಾಂತರಗಳ ಮಧ್ಯೆ ಒಬ್ಬಿಬ್ಬರು ಮುಕ್ತರಾಗಿಬಿಡುತ್ತಾರೆ. ಬಾಕಿಯವರೆಲ್ಲರೂ ಭಗವತಿಯ ಇಚ್ಛೆಯಿಂದ ಬದ್ಧರಾಗಿ ಇರುತ್ತಾರೆ.
“ನೀನು ಕಣ್ಣುಮುಚ್ಚಾಲೆ ಆಟ ನೋಡಿಲ್ಲವೇನು? ಅಜ್ಜಿಯ ಇಚ್ಛೆ ಆಟ ಮುಂದು ವರಿಯಬೇಕೆಂದು. ಎಲ್ಲರೂ ಅಜ್ಜಿಯನ್ನು ಮುಟ್ಟಿ ಮುಗಿಸಿಬಿಟ್ಟರೆ ಆಟ ಮುಗಿದು ಹೋಗಿಬಿಡುತ್ತದೆ. ಅದಕ್ಕಾಗಿಯೆ ಆಕೆಗೆ ಎಲ್ಲರೂ ಬಂದು ಆಕೆಯನ್ನು ಮುಟ್ಟಿಬಿಡೋದು ಇಚ್ಛೆಯಿಲ್ಲ.
“ನೋಡು ದೊಡ್ಡ ದೊಡ್ಡ ಅಂಗಡಿಗಳಲ್ಲಿ ದೊಡ್ಡ ದೊಡ್ಡ ಅಕ್ಕಿಯ ಹೆಡಗೆಗಳಿರುತ್ತವೆ. ಅವನ್ನು ಅಟ್ಟದವರೆಗೂ ಅಡಕಿರುತ್ತಾರೆ. ಅಕ್ಕಿಯ ಜೊತೆ ಬೇಳೆಯನ್ನು ಇಟ್ಟಿರುತ್ತಾರೆ. ಇಲಿ ಅವನ್ನು ತಿನ್ನದೆ ಇರಲಿ ಎಂದು ವ್ಯಾಪಾರಿಗಳು ಅವುಗಳ ಹತ್ತಿರ ಪುರಿ ಮತ್ತು ಬೆಲ್ಲದ ಅರಳನ್ನು ಮೊರಗಳಲ್ಲಿ ತುಂಬಿ ಇಡುತ್ತಾರೆ. ಅವಕ್ಕೆ ಸಿಹಿ ಕಂಡರೆ ಇಷ್ಟ, ಜೊತೆಗೆ ಹುರಿದ ವಾಸನೆ ಬೇರೆ ಇದೆ. ಅದಕ್ಕಾಗಿ ಇಲಿಗಳು ಎಷ್ಟಿದ್ದರೂ ಸರಿಯೆ ಎಲ್ಲಾ ಮೊರಗಳ ಕಡೆಗೆ ಹೋಗುತ್ತವೆ. ದೊಡ್ಡ ದೊಡ್ಡ ಅಕ್ಕಿ ಬೇಳೆ ಹೆಡಗೆಗಳಿರುವುದು ಅವಕ್ಕೆ ಗೊತ್ತೇ ಆಗದು. ಜೀವ, ಕಾಮ ಕಾಂಚನದಿಂದ ಮುಗ್ಧವಾಗಿ ಹೋಗುತ್ತದೆ. ಭಗವಂತನ ವಿಷಯವೇ ಅದಕ್ಕೆ ಗೊತ್ತಾಗದು.
“ಶ್ರೀರಾಮ ನಾರದನಿಗೆ ಹೇಳಿದ, ‘ನೀನು ನನ್ನಿಂದ ಒಂದು ವರ ಬೇಡಿಕೊ’ ಎಂದು. ನಾರದ ಹೇಳಿದ: ‘ಹೇ ರಾಮ, ನಾನು ಕೇಳಬೇಕಾದ್ದು ಏನಾದರೂ ಉಳಿದು ಕೊಂಡಿದೆಯೇನು? ಯಾವ ವರ ಬೇಡಲಿ? ನೀನು ಕೊಡಲೇಬೇಕಾಗಿ ಇದ್ದರೆ ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧಭಕ್ತಿ ಉಂಟಾಗುವಂತೆ, ಮತ್ತೆ ನಿನ್ನ ಭುವನಮೋಹಿನಿ ಮಾಯೆಯಿಂದ ನಾನು ಮುಗ್ಧನಾಗಿ ಹೋಗದೆ ಇರುವಂತೆ ವರ ಕೊಡು.’ ಶ್ರೀರಾಮ ಹೇಳಿದ, ‘ಬೇರೆ ಏನನ್ನಾದರು ಕೇಳು’ ಅಂತ. ನಾರದ ಮತ್ತೆ ಹೇಳಿದ. ‘ಓ ರಾಮ, ನನಗೆ ಇನ್ನು ಏನೂ ಬೇಕಾಗಿಲ್ಲ. ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧಭಕ್ತಿ ಉಂಟಾಗುವಂತೆ ಅನುಗ್ರಹ ಮಾಡು.’
“ನಾನು ಭಗವತಿಗೆ ಪ್ರಾರ್ಥನೆ ಮಾಡಿದೆ, ‘ತಾಯಿ! ನನಗೆ ಲೋಕಮಾನ್ಯತೆ ಬೇಡ; ತಾಯಿ, ಅಷ್ಟಸಿದ್ಧಿ ಬೇಡ; ತಾಯಿ, ಶತಸಿದ್ಧಿ ಬೇಡ; ತಾಯಿ, ದೇಹಸುಖ ಬೇಡ; ತಾಯಿ ನನಗೆ ನಿನ್ನ ಪಾದಪದ್ಮಗಳಲ್ಲಿ ಶ್ರದ್ಧಾಭಕ್ತಿಯುಂಟಾಗುವಂತೆ ಮಾಡು; ಕೇವಲ ಇದೊಂದನ್ನು ಮಾತ್ರ ಕರುಣಿಸು.’
“ಅಧ್ಯಾತ್ಮ ರಾಮಾಯಣದಲ್ಲಿ ಹೀಗೆ ಹೇಳಿದೆ: ಲಕ್ಷ್ಮಣ ಶ್ರೀರಾಮನನ್ನು, ‘ರಾಮ, ನೀನು ಎಷ್ಟೊಂದು ಭಾವಗಳಲ್ಲಿ ಎಷ್ಟೊಂದು ರೂಪುಗಳಲ್ಲಿ ಇರುವೆ? ಯಾವ ರೂಪಿನಲ್ಲಿ ನಿನ್ನನ್ನು ಗುರುತಿಸಲಿ?’ ಎಂದು ಕೇಳಿದ. ಶ್ರೀರಾಮ ಹೇಳಿದ, ‘ತಮ್ಮ, ಇದನ್ನು ನೀನು ಚೆನ್ನಾಗಿ ಜ್ಞಾಪಕದಲ್ಲಿಡು. ಎಲ್ಲೆಲ್ಲಿ ನೀನು ಪ್ರೇಮೋನ್ಮಾದವನ್ನು ನೋಡುತ್ತೀಯೊ ಅಲ್ಲೆಲ್ಲ ನಾನು ನಿಶ್ಚಯವಾಗಿಯೂ ಇದ್ದೇನೆ’ ಎಂದು. ಪ್ರೇಮೋನ್ಮಾದ ಭಕ್ತಿಯ ದೆಸೆಯಿಂದ ಭಕ್ತ ನಗುತ್ತಾನೆ, ಅಳುತ್ತಾನೆ, ನರ್ತಿಸುತ್ತಾನೆ, ಹಾಡುತ್ತಾನೆ. ಯಾರಿಗೇ ಆಗಲಿ ಈ ವಿಧದ ಭಕ್ತಿ ಉಂಟಾಗಿದ್ದರೆ, ನಿಶ್ಚಯವಾಗಿ ತಿಳಿದುಕೊಳ್ಳಬೇಕು ಆತನಲ್ಲಿ ಭಗವಂತ ಸ್ವಯಂ ಇದ್ದಾನೆ ಎಂದು. ಚೈತನ್ಯದೇವನಿಗೆ ಈ ವಿಧದ ಭಕ್ತಿ ಉಂಟಾಗಿತ್ತು.”
ಭಕ್ತರೆಲ್ಲ ಆಶ್ಚರ್ಯಚಕಿತರಾಗಿ ಕೇಳುತ್ತಿದ್ದಾರೆ. ದೈವವಾಣಿಯೇ ಎಂಬಂತೆ ಪರಮ ಹಂಸರ ಈ ಮಾತುಗಳನ್ನೆಲ್ಲ ಕೇಳುತ್ತಿದ್ದಾರೆ. ಕೆಲವರು ಭಾವಿಸುತ್ತಿದ್ದಾರೆ, “ಪರಮಹಂಸರು ಹೇಳುತ್ತಾರೆ, ‘ಪ್ರೇಮೋನ್ಮಾದದ ದೆಸೆಯಿಂದ ಭಕ್ತ ನಗುತ್ತಾನೆ, ಅಳುತ್ತಾನೆ, ನರ್ತಿಸುತ್ತಾನೆ’ ಎಂದು. ಇದು ಕೇವಲ ಚೈತನ್ಯದೇವನಿಗೆ ಉಂಟಾಗಿದ್ದ ಅವಸ್ಥೆ ಮಾತ್ರವೇ ಅಲ್ಲ, ಪರಮ ಹಂಸರದೂ ಅದೇ ಅವಸ್ಥೆ! ಆದ್ದರಿಂದ ಇವರಲ್ಲಿ ಸ್ವಯಂ ಭಗವಂತನೇ ಇದ್ದಾನೇನು?” ಅಂತ.
ನಿವೃತ್ತಿಮಾರ್ಗದ ವಿಷಯವಾಗಿ ಪರಮಹಂಸರ ಅಮೃತಮಯ ಮಾತುಕತೆ ಮುಂದು ವರಿಯುತ್ತಿದೆ. ಈಗ ಈಶಾನನಿಗೆ ಗಂಭೀರವಾಣಿಯಿಂದ ಹಿತೋಪದೇಶ್ವೀಯುತ್ತಿದ್ದಾರೆ.
ಪರಮಹಂಸರು: “ನೀನು ಮುಖಸ್ತುತಿ ಮಾತುಗಳಿಂದ ಮೈಮರೆಯಬೇಡ. ಪ್ರಾಪಂಚಿಕನ (ಧನಕನಕಾದಿಯುಳ್ಳವನ) ಸುತ್ತಲೂ ಹೊಗಳುಭಟ್ಟರು ಬಂದು ಸೇರಿಕೊಳ್ಳು ತ್ತಾರೆ. ಒಂದು ಸತ್ತ ಹಸುವೇನಾದರೂ ಸಿಕ್ಕಿಬಿಟ್ಟರೆ, ಅಕ್ಕಪಕ್ಕದಲ್ಲಿ ಎಷ್ಟೊಂದು ರಣಹದ್ದು ಗಳು ಇವೆಯೊ ಅವೆಲ್ಲಾ ಅಲ್ಲಿಗೆ ಬಂದುಬಿಡುತ್ತವೆ.
“ಪ್ರಾಪಂಚಿಕರ ಹೃದಯದಲ್ಲಿ ತಿರುಳಿಲ್ಲ. ಅವರು ಒಂದು ಗೊಬ್ಬರದ ಗುಂಡಿ. ಹೊಗಳುಭಟ್ಟರು ಬಂದು ಸೇರಿಕೊಂಡು ಆತನಿಗೆ ಹೇಳುತ್ತಾರೆ, ‘ನೀನು ದಾನಿ! ನೀನು ಧ್ಯಾನಿ! ನೀನು ಜ್ಞಾನಿ!’ ಎಂದು. ಅವೆಲ್ಲ ಬರಿಯ ಮಾತುಗಳೇನಲ್ಲ, ಮೊನೆಯಾದ ಬಿದಿರಿನ ಗೂಟಗಳೆ! ಇದೆಂಥ ಅವಿವೇಕ! ಕೆಲವು ಸಂಸಾರಿ ಬ್ರಾಹ್ಮಣ ಪಂಡಿತರುಗಳಿಂದ ಹಗಲು ಇರುಳು ಸುತ್ತುಗಟ್ಟಿಸಿಕೊಂಡಿರೋದು ಮತ್ತು ಅವರಿಂದ ಮುಖಸ್ತುತಿ ಕೇಳೋದು!
“ಸಂಸಾರಿಗಳು ಇವು ಮೂರರ ದಾಸರು. ಆದ್ದರಿಂದ ಅವರಲ್ಲಿ ತಿರುಳೇನಾದರೂ ಇರಬಲ್ಲದೆ? ಅವರು ಹೆಂಡತಿಯ ದಾಸರು, ಹಣದ ದಾಸರು, ಒಡೆಯನ ದಾಸರು. ಒಬ್ಬ ಇದ್ದಾನೆ. ಆತನ ಹೆಸರು ಹೇಳುವುದಿಲ್ಲ. ಅವನಿಗೆ ತಿಂಗಳಿಗೆ ಎಂಟುನೂರು ರೂಪಾಯಿ ಸಂಬಳ. ಆದರೆ ಆತ ಹೆಂಡತಿಯ ದಾಸ; ಏಳು ಅಂದರೆ ಏಳುತ್ತಾನೆ, ಕೂರು ಅಂದರೆ ಕೂರುತ್ತಾನೆ!
“ಮಧ್ಯಸ್ಥಿಕೆ, ಮುಖ್ಯಸ್ಥಿಕೆ ಇವೆಲ್ಲ ಮಹತ್ತಾದ ಕೆಲಸಗಳೇನು? ದಯೆಯೆ? ಪರೋಪಕಾರವೆ? ಇವಕ್ಕೆ ಸಾಕಾದಷ್ಟು ಮಣ್ಣು ಹೊತ್ತಿದ್ದೀಯೆ. ಯಾರು ಇಂಥ ಕೆಲಸಗಳಲ್ಲಿ ನಿರತರಾಗಿರಬೇಕೊ ಅವರು ಬೇರೆ ದರ್ಜೆಗೆ ಸೇರಿದವರು. ನಿನಗೆ ಭಗವಂತನ ಪಾದಪದ್ಮಗಳ ಕಡೆ ಮನಸ್ಸು ತಿರುಗಿಸಿಡುವ ಸಮಯ ಬಂದುಬಿಟ್ಟಿದೆ. ಆತನನ್ನು ಪಡೆದುಕೊಂಡರೆ ಎಲ್ಲವನ್ನೂ ಪಡೆಯಬಹುದು. ಮೊದಲು ಆತ, ಬಳಿಕ ದಯೆ ಪರೋಪಕಾರ ಜಗತ್ತಿನ ಉಪಕಾರ ಜೀವೋದ್ಧಾರ. ನಿನಗೇಕೆ ಅವುಗಳ ವಿಷಯವಾಗಿ ಚಿಂತನೆ?’ ಲಂಕೆಯಲ್ಲಿ ರಾವಣ ಸತ್ತರೆ, ಇಲ್ಲಿ ಬೇಹುಳ ಅತ್ತು ಸುಣ್ಣವಾದ!
“ನಿನಗೂ ಅದೇ ವಿಪತ್ತು. ನಿನಗೆ ಹೀಗೆ ಮಾಡು ಎಂಬುದಾಗಿ ಒಬ್ಬ ಸರ್ವಸಂಗ ಪರಿತ್ಯಾಗಿ ಉಪದೇಶ ಕೊಡುವುದಾದರೆ ಅದು ಬಹಳ ಒಳ್ಳೆಯದಾಗುತ್ತದೆ. ಸಂಸಾರಿಯ ಉಪದೇಶ, ಆತ ಬ್ರಾಹ್ಮಣ ಪಂಡಿತನೇ ಆಗಿರಲಿ ಅಥವಾ ಇನ್ನೇನು ಬೇಕಾದರೂ ಆಗಿರಲಿ ಅದು ಸರಿಹೋಗದು.
“ಹುಚ್ಚನಾಗು! ಭಗವಂತನ ಪ್ರೇಮದಿಂದ ಹುಚ್ಚನಾಗು! ಜನರಿಗೆ ಗೊತ್ತಾಗಲಿ, ‘ಈಶಾನ ಹುಚ್ಚನಾಗಿಬಿಟ್ಟ, ಆತನಿಂದ ಇನ್ನೇನೂ ಸಾಧ್ಯವಿಲ್ಲ’ ಅಂತ. ಆಗ ಅವರು ನಿನ್ನನ್ನು ಮುಖ್ಯಸ್ಥಿಕೆಗಾಗಲಿ ಮಧ್ಯಸ್ಥಿಕೆಗಾಗಲಿ ಕರೆಯಲು ಬರೋದಿಲ್ಲ. ಉದ್ಧರಣೆಯ ಪಾತ್ರೆಯನ್ನು ಒಂದು ಮೂಲೆಗೆ ಬಿಸಾಡು. ಈಶಾನ ಎಂಬ ಹೆಸರನ್ನು ಸಾರ್ಥಕ ಮಾಡಿಕೊ.”
ಈಶಾನ ಎತ್ತಿಹೇಳಿದ:
ನನ್ನನೂ ಉನ್ಮತ್ತನಾಗಿಸಲೆ ತಾಯೆ
ನಿನ್ನ ಭಕ್ತಿಯ ಮಧುರಮಧುಪಾನದಿಂದ!
ಅರಿವು ಚಿಂತನೆಯೆಲ್ಲ ನನಗೇಕೆ?
ಶ್ರೀರಾಮಕೃಷ್ಣರು: “ಉನ್ಮತ್ತನಾಗುವುದು! ಬೇಕಾಗಿರುವುದು ಅದು! ಶಿವನಾಥ ಒಮ್ಮೆ ಹೇಳಿದ. ಹೆಚ್ಚಾಗಿ ಭಗವಂತನ ಚಿಂತನೆ ಮಾಡಿದರೆ ‘ಪ್ರಜ್ಞಾಶೂನ್ಯರಾಗಿಬಿಡುತ್ತಾರೆ’ ಅಂತ. ನಾನು ಹೇಳಿದೆ, ಏನು ನೀನು ಹೇಳುವುದು? ಚೈತನ್ಯದ ಚಿಂತನೆಮಾಡಿ ಯಾರಾದರೂ ಅಚೈತನ್ಯರಾಗಿ ಹೋಗುತ್ತಾರೇನು? ಆತ ನಿತ್ಯ ಶುದ್ಧ ಬೋಧ ಸ್ವರೂಪ. ಆತನ ಬೋಧೆಯಿಂದಲೆ ಎಲ್ಲವೂ ಬೋಧವಾಗುತ್ತಿದೆ; ಆತನ ಚೈತನ್ಯದಿಂದಲೆ ಎಲ್ಲವೂ ಚೈತನ್ಯಮಯವಾಗಿದೆ’ ಎಂದು. ಅದಕ್ಕೆ ಶಿವನಾಥ ಹೇಳಿದ, ‘ಯಾರೊ ಪರಂಗಿಯವರಿಗೆ ಹಾಗಾಗಿಬಿಟ್ಟಿತ್ತು–ಹೆಚ್ಚು ಚಿಂತನೆ ಮಾಡಿ ತಲೆ ಕಳೆದುಕೊಂಡು ಬಿಟ್ಟಿದ್ದರು’ ಎಂದು. ಅದು ಸಾಧ್ಯವಾಗಬಹುದು. ಅವರು ಐಹಿಕ ವಿಷಯಗಳ ಚಿಂತನೆ ಮಾಡುತ್ತಾರೆ. ಅದರ ವಿಷಯವಾಗಿ ಒಂದು ಚರಣವಿದೆ, ‘ಭಗವಂತನ ಭಾವನೆ ನನ್ನ ಹೃದಯವನ್ನು ತುಂಬಿಕೊಂಡು ಅದು ನನ್ನ ಜ್ಞಾನವನ್ನು ಅಪಹರಿಸಿಕೊಂಡು ಹೋಯಿತು.’ ಇಲ್ಲಿ ಜ್ಞಾನ ಎಂದರೆ ಬಾಹ್ಯ ಜ್ಞಾನ.”
ಈಶಾನ ಪರಮಹಂಸರ ಪಾದಗಳನ್ನು ಹಿಡಿದು ಕುಳಿತುಕೊಂಡಿದ್ದಾನೆ ಮತ್ತು ಅವರು ಹೇಳುವುದನ್ನೆಲ್ಲ ಕೇಳುತ್ತಿದ್ದಾನೆ. ಒಮ್ಮೊಮ್ಮೆ ಗರ್ಭಗುಡಿಯಲ್ಲಿರುವ ಶಿಲಾನಿರ್ಮಿತ ಕಾಳೀ ಪ್ರತಿಮೆಯ ಕಡೆ ದೃಷ್ಟಿಹಾಕುತ್ತಿದ್ದಾನೆ. ದೀಪದ ಬೆಳಕಿನಲ್ಲಿ ಭಗವತಿಯ ಮುಖ ನಗುವಂತೆ ಕಾಣುತ್ತಿದೆ. ಭಗವತಿ ಅಲ್ಲಿ ಆವಿರ್ಭಾವಳಾಗಿ ವೇದಮಂತ್ರಗಳಿಗೆ ಸರಿಸಮಾನವಾದ ಶ್ರೀರಾಮಕೃಷ್ಣರ ಮಾತುಗಳನ್ನು ಕೇಳುತ್ತ ಆನಂದಪಡುತ್ತಿರುವಳೊ ಏನೊ ಎಂಬಂತಿತ್ತು.
ಈಶಾನ ಕಾಳಿಯ ಮೂರ್ತಿಯನ್ನು ತೋರಿಸಿ ಪರಮಹಂಸರಿಗೆ “ನೀವು ಏನೇನು ನಿಮ್ಮ ಶ್ರೀಮುಖದಿಂದ ನುಡಿದಿರೋ ಅವೆಲ್ಲ ಅಲ್ಲಿಂದಲೇ ಬಂದಿವೆ.”
ಪರಮಹಂಸರು: “ನಾನು ಯಂತ್ರ, ಆಕೆ ಯಂತ್ರಿ; ನಾನು ಗೃಹ, ಆಕೆ ಗೃಹಿಣಿ; – ನಾನು ರಥ, ಆಕೆ ರಥಿ; ಆಕೆ ನಡೆಸಿದಂತೆ ನಡೆಯುತ್ತೇನೆ, ನುಡಿಸಿದಂತೆ ನುಡಿಯುತ್ತೇನೆ. ಕಲಿಯುಗದಲ್ಲಿ ಬೇರೆ ಯಾವ ವಿಧದ ದೈವವಾಣಿಯೂ ಆಗುವುದಿಲ್ಲ. ಆದರೆ ಒಂದು ವಿಧವಾಗಿ ಆಗುತ್ತದೆ. ಆಕೆ ಬಾಲಕನೊ ಹುಚ್ಚನೊ ಇವರ ಮೂಲಕ ನುಡಿಯುತ್ತಾಳೆ.
“ಮನುಷ್ಯ ಮಾತ್ರದವ ಗುರುವಾಗಲಾರ. ಭಗವಂತನ ಇಚ್ಛೆಯಿಂದಲೆ ಎಲ್ಲವೂ ನಡೆಯುತ್ತದೆ. ಮಹಾಪಾಪ, ಬಹಳ ಕಾಲದಿಂದ ಹಿಂಬಾಲಿಸಿದ ಪಾಪ, ಬಹಳ ಕಾಲದಿಂದ ಬಂದ ಅಜ್ಞಾನ ಆಕೆಯ ಕೃಪೆಯೊದಗಿದರೆ ಒಡನೆಯೇ ಧ್ವಂಸವಾಗಿ ಹೋಗುತ್ತವೆ. ಕೊಠಡಿ ಯೊಳಗೆ ಒಂದು ಸಾವಿರ ವರ್ಷಗಳಿಂದ ಅಂಧಕಾರವಿದೆ. ದೀಪ ಹಚ್ಚಿದರೆ ಆ ಸಹಸ್ರಾರು ವರ್ಷಗಳ ಅಂಧಕಾರ ಕಿಂಚಿತ್ ಕಿಂಚಿತ್ತಾಗಿ ನಾಶವಾಗಿ ಹೋಗುತ್ತದೆಯೊ ಅಥವಾ ಒಡನೆಯೆ ನಾಶವಾಗಿ ಹೋಗುವುದೊ? ಅದು ಬೆಳಕು ಬಿದ್ದೊಡನೆಯೆ ವಿಧಿಯಿಲ್ಲದೆ ಕಾಲಿಗೆ ಬುದ್ಧಿ ಹೇಳುತ್ತದೆ.
“ಮನುಷ್ಯನ ಕೈಯಿಂದ ಏನು ತಾನೆ ಸಾಧ್ಯ? ಮನುಷ್ಯ ಬೇಕಾದಷ್ಟು ಓದಿರಬಹುದು, ಆದರೆ ಎಲ್ಲವೂ ಭಗವಂತನ ಕೈಲಿದೆ. ಲಾಯರು ಹೇಳುತ್ತಾನೆ ‘ನಾನು ತಿಳಿಸಬೇಕಾದುದನ್ನೆಲ್ಲ ತಿಳಿಸಿ ಮುಗಿಸಿದ್ದೇನೆ, ಈಗ ಎಲ್ಲ ನ್ಯಾಯಾಧೀಶನ ಕೈಯಲ್ಲಿದೆ’ ಎಂದು.
“ಬ್ರಹ್ಮ ನಿಷ್ಕ್ರಿಯ. ಯಾವಾಗ ಆತ ಸೃಷ್ಟಿಸ್ಥಿತಿಪ್ರಳಯ ಕಾರ್ಯ ಇವೇ ಮೊದಲಾದ ವುಗಳನ್ನು ಮಾಡುತ್ತಾನೊ ಆಗ ಆತನಿಗೆ ‘ಆದ್ಯಾಶಕ್ತಿ’ ಎಂದು ಹೆಸರು. ಆ ಆದ್ಯಾಶಕ್ತಿ ಯನ್ನು ಪ್ರಸನ್ನಳನ್ನಾಗಿ ಮಾಡಿಕೊಳ್ಳಬೇಕು. ಚಂಡಿಯಲ್ಲಿ ಹೇಳಿರುವುದು ನಿನಗೆ ಗೊತ್ತಿಲ್ಲವೆ? ದೇವತೆಗಳು ಮೊದಲು ಆದ್ಯಾಶಕ್ತಿಯನ್ನು ಸ್ತುತಿಸಿದರು. ಆಕೆ ಪ್ರಸನ್ನಳಾದರೆ ಮಾತ್ರ ಹರಿ ಯೋಗನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ.
ಈಶಾನ: “ಹೌದು, ನಿಜ. ಮಧುಕೈಟಭ ರಾಕ್ಷಸರ ವಧೆಯ ಕಾಲದಲ್ಲಿ ಬ್ರಹ್ಮಾದಿ ದೇವತೆಗಳು ಈ ಸ್ತೋತ್ರವನ್ನು ಹೇಳಲಾರಂಭಿಸಿದರು:
ತ್ವಂ ಸ್ವಾಹಾ ತ್ವಂ ಸ್ವಧಾ ತ್ವಂ ಹಿ ವಷಟ್ಕಾರಃ ಸ್ವರಾತ್ಮಿಕಾ ।
ಸುಧಾ, ತ್ವಮಕ್ಷರೇ ನಿತ್ಯೇ ತ್ರಿಧಾಮಾತ್ರಾತ್ಮಿಕಾ ಸ್ಥಿತಾ ॥
ಅರ್ಧಮಾತ್ರಾ ಸ್ಥಿತಾ ನಿತ್ಯಾ ಯಾನುಚ್ಚಾರ್ಯಾ ವಿಶೇಷತಃ ॥
ತ್ವಮೇವ ಸಾ ತ್ವಂ ಸಾವಿತ್ರೀ ತ್ವಂ ದೇವಜನನೀ ಪರಾ ॥
ತ್ವಯೈವ ಧಾರ್ಯತೇ ಸರ್ವಂ ತ್ವಯೈತತ್ ಸೃಜ್ಯತೇ ಜಗತ್ ।
ತ್ವಯೈತತ್ ಪಾಲ್ಯತೇ ದೇವಿ ತ್ವಮತ್ಸ್ಯಂತೇ ಚ ಸರ್ವದಾ ॥
ವಿಸೃಷ್ಟೌ ಸೃಷ್ಟಿರೂಪಾ ತ್ವಂ ಸ್ಥಿತಿರೂಪಾ ಚ ಪಾಲನೇ ।
ತಥಾ ಸಂಹೃತಿರೂಪಾಂತೇ ಜಗತೋಠ್ಸ್ಯ ಜಗನ್ಮಯೇ ॥”
ಶ್ರೀರಾಮಕೃಷ್ಣರು: “ಹೌದು, ಆದರೆ ಅದನ್ನು ಅರಗಿಸಿಕೊಳ್ಳಬೇಕು.”
ಕಾಳೀದೇವಾಲಯದ ಮುಂಭಾಗದಲ್ಲಿ ಭಕ್ತರೆಲ್ಲರೂ ಪರಮಹಂಸರ ಸುತ್ತ ಕುಳಿತಿದ್ದಾರೆ. ಇಲ್ಲಿಯವರೆಗೂ ಮುಗ್ಧರಾಗಿ ಅವರ ಶ್ರೀಮುಖದಿಂದ ಬಂದ ವಾಣಿಯನ್ನೆಲ್ಲ ಕೇಳಿದರು. ಈಗ ಪರಮಹಂಸರು ಮೇಲಕ್ಕೆ ಎದ್ದರು. ಗರ್ಭಗುಡಿಯ ಮುಂಭಾಗಕ್ಕೆ ಬಂದು ಭಗವತಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ಭಕ್ತರೆಲ್ಲ ಕ್ಷಣಮಾತ್ರದಲ್ಲಿ ಅವರ ಹತ್ತಿರ ಬಂದು ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ಎಲ್ಲರೂ ಅವರ ಪಾದಧೂಳಿಯ ಭಿಕಾರಿಗಳೆ. ಭಕ್ತರೆಲ್ಲ ಪ್ರಣಾಮಮಾಡಿದ ನಂತರ ಪರಮಹಂಸರು ವರಾಂಡದಿಂದ ಕೆಳಕ್ಕೆ ಇಳಿಯುತ್ತಿದ್ದಾರೆ. ಮಾಸ್ಟರ್ರೊಡನೆ ಮಾತುಕತೆಯಾಡುತ್ತ ತಮ್ಮ ಕೊಠಡಿಯ ಕಡೆಗೆ ಬರುತ್ತಿದ್ದಾರೆ. ಮೊದಲು ಅವರು ಹಾಡಿದರು:
ತಾಯಿ ದುರ್ಗೆಯೆ ಪರಮಬ್ರಹ್ಮಸ್ವರೂಪಿ-
ಯೆಂಬುದನರಿಯುತ,
ಭಕ್ತಿಮುಕ್ತಿಗೆ ತಲೆಯ ಬಾಗಿಸಿ ನಿಲ್ಲುತ
ಧರ್ಮ ಮೇಣ್ ಅಧರ್ಮವೆರಡನು ಬಿಸುಡುತ
ನಿಲುವೆನೆಂಬನು ಶ್ರೀಪ್ರಸಾದನು ಹಾಡುತ!
ಪರಮಹಂಸರು ಮಾತು ಮುಂದುವರಿಸಿದರು: “ಧರ್ಮ ಅಧರ್ಮ ಎಂದರೆ ಏನು ಗೊತ್ತೆ? ಇಲ್ಲಿ ‘ಧರ್ಮ’ ಅಂದರೆ ವೈದಿಕಧರ್ಮ. ಯಾವ ರೀತಿಯಾಗಿ ದಾನ ಮಾಡಬೇಕು; ಶ್ರಾದ್ಧ, ಭಿಕ್ಷುಕರಿಗೆ ಅನ್ನದಾನ ಇವೇ ಮೊದಲಾದವನ್ನು ಹೇಗೆ ಮಾಡಬೇಕು ಎಂಬುದರ ವಿಷಯವಾಗಿ ತಿಳಿಸುತ್ತದೆ.
“ಈ ಧರ್ಮಕ್ಕೇನೆ ಕರ್ಮಕಾಂಡ ಎಂದು ಹೆಸರು. ಈ ಮಾರ್ಗ ಬಹಳ ಕಠಿಣ. ನಿಷ್ಕಾಮಕರ್ಮ ಬಹಳ ಕಠಿಣ. ಅದಕ್ಕಾಗಿಯೆ ಶಾಸ್ತ್ರ ಭಕ್ತಿಮಾರ್ಗವನ್ನು ಅವಲಂಬಿಸು ವಂತೆ ಹೇಳುತ್ತದೆ.
“ಒಬ್ಬ ತನ್ನ ಮನೆಯಲ್ಲಿ ಶ್ರಾದ್ಧ ಮಾಡುತ್ತಿದ್ದ. ಅನೇಕರು ಬಂದು ಊಟ ಮಾಡಿ ಹೋಗುತ್ತಿದ್ದರು. ಒಬ್ಬ ಕಟುಕ ಕಸಾಯಿಖಾನೆಗೆ ಬಂದು ಹಸುವನ್ನು ಹೊಡೆದುಕೊಂಡು ಹೋಗುತ್ತಿದ್ದ. ಆ ಹಸು ಆತ ಹೇಳಿದ ಹಾಗೆ ಕೇಳುತ್ತಿರಲಿಲ್ಲ.- ಕಟುಕನಿಗೆ ಬಹಳವಾಗಿ ಸಾಕಾಗಿ ಹೋಗಿತ್ತು. ಆಗ ಆತ ಭಾವಿಸಿದ, ‘ಶ್ರಾದ್ಧದ ಮನೆಗೆ ಹೋಗಿ ಊಟ ಮಾಡು ತ್ತೇನೆ; -ಊಟಮಾಡಿ ಶರೀರವನ್ನು ಸ್ವಲ್ಪ ಬಲಪಡಿಸುತ್ತೇನೆ; ಬಳಿಕ ಹಸುವನ್ನು ಹೊಡೆದು ಕೊಂಡು ಹೋಗುತ್ತೇನೆ’ ಎಂದು. ಕೊನೆಗೆ ಹಾಗೆಯೇ ಮಾಡಿದ. ಆದರೆ ಆತ ಹಸುವನ್ನು ಕೊಲೆಮಾಡಿದಾಗ, — ಯಾರು ಶ್ರಾದ್ಧಮಾಡುತ್ತಿದ್ದನೊ ಆತನಿಗೂ ಗೋಹತ್ಯೆಯ ಪಾಪ ಬಂದಿತು. ಅದಕ್ಕಾಗಿಯೆ ನಾನು ಹೇಳುವುದು, ‘ಕರ್ಮಕಾಂಡಕ್ಕಿಂತ ಭಕ್ತಿಮಾರ್ಗ ಮೇಲು ಅಂತ.”
ಪರಮಹಂಸರು ಮಾಸ್ಟರ್ರೊಡನೆ ತಮ್ಮ ಕೊಠಡಿಗೆ ಬಂದರು. ಅವರು ಒಂದು ಹಾಡನ್ನು ಮೂಗಿನಲ್ಲೆ ಹಾಡುತ್ತಿದ್ದಾರೆ. ನಿವೃತ್ತಿಮಾರ್ಗದ ವಿಷಯವಾಗಿ ಈಗ ತಾನೆ ಈಶಾನನೊಡನೆ ಏನು ಮಾತನಾಡಿದರೊ ಅದು ಆ ಹಾಡಿನ ಮೂಲಕ ಮೂಡುತ್ತಿದೆ.
ಅವರು ಹೀಗೆ ಹಾಡುತ್ತಿದ್ದಾರೆ:
ನನ್ನ ಸರ್ವಸ್ವವನು ಸೆಳೆದುಕೊಳ್ಳೌ ತಾಯಿ;
ಅಸ್ಥಿಮಾಲೆಯ ಜೊತೆಗೆ ಸಿದ್ಧಿಘಟವನು ಮಾತ್ರ
ಉಳಿಸು ನನಗೆ!
ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡರು. ಅಧರಸೇನ, ಕಿಶೋರಿ ಮತ್ತು ಉಳಿದ ಭಕ್ತರು ನೆಲದ ಮೇಲೆ ಕುಳಿತುಕೊಂಡರು.
ಶ್ರೀರಾಮಕೃಷ್ಣರು ಭಕ್ತರಿಗೆ: “ಈಶಾನನನ್ನು ನೋಡಿದೆ, – ಎಲ್ಲಿ, ಏನೂ ಆಗಿಲ್ಲ ವಲ್ಲ! ಕಾರಣವೇನು ಹೇಳು? ಆತ ಐದು ತಿಂಗಳ ಕಾಲ ಪುರಶ್ಚರಣೆ ಮಾಡಿದ್ದಾನೆ. ಬೇರೆಯವರಲ್ಲಿ ಅದು ಇಡಿಯ ಜೀವನವನ್ನೆ ಪರಿವರ್ತಿಸಿಬಿಡುತ್ತಿತ್ತು !”
ಅಧರಸೇನ: “ನಮ್ಮ ಎದುರಿಗೆಲ್ಲ ನೀವು ಆತನಿಗೆ ಹಾಗೆಲ್ಲ ಹೇಳಿದ್ದು ಸರಿಹೋಗಲಿಲ್ಲ.”
ಶ್ರೀರಾಮಕೃಷ್ಣರು: “ಏನು ಹೇಳುತ್ತಿದ್ದೀಯೆ! ಆತನಿಗೆ ಬರೇ ಜಪದ ಹುಚ್ಚು. ಆ ಮಾತು ಆತನಿಗೇಕೆ ದುಃಖವನ್ನುಂಟುಮಾಡಿತು?”
ಸ್ವಲ್ಪ ಹೊತ್ತಾದ ಮೇಲೆ ಪರಮಹಂಸರು ಅಧರಸೇನನಿಗೆ ಹೇಳುತ್ತಿದ್ದಾರೆ, “ಈಶಾನ ಒಬ್ಬ ದೊಡ್ಡ ದಾನಿ. ಜೊತೆಗೆ ನೋಡು, ಜಪತಪಾದಿಗಳನ್ನು ಬಹಳವಾಗಿ ಮಾಡುತ್ತಿದ್ದಾನೆ.” ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡರು. ಭಕ್ತರು ಅವರ ಕಡೆಗೆ ದೃಷ್ಟಿಸಿ ನೋಡುತ್ತಿದ್ದಾರೆ. ಇದ್ದಕ್ಕಿದ್ದ ಹಾಗೆ ಪರಮಹಂಸರು ಅಧರಸೇನನಿಗೆ ಹೇಳಿದರು: “ನಿನಗೆ ಯೋಗ ಭೋಗ ಎರಡೂ ಇವೆ.”
೧೮ನೇ ಅಕ್ಟೋಬರ್ ೧೮೮೪, ಕಾರ್ತಿಕ ಅಮಾವಾಸ್ಯೆ, ಶನಿವಾರ
ಇಂದು ಕಾಳಿಯ ಪೂಜೆ. ರಾತ್ರಿ ಹತ್ತೊ ಹನ್ನೊಂದೊ ಘಂಟೆಗೆ ಆರಂಭವಾಗುತ್ತದೆ. ಕೆಲವು ಭಕ್ತರು ಈ ಗಂಭೀರ ಅಮಾವಾಸ್ಯೆಯ ರಾತ್ರಿಯಲ್ಲಿ ಪರಮಹಂಸರ ದರ್ಶನ ಮಾಡಬೇಕೆಂದು ಇಚ್ಛಿಸಿದ್ದಾರೆ. ಅದಕ್ಕಾಗಿ ಅವರು ಹೊತ್ತಿಗೆ ಮುಂಚೆಯೆ ದಕ್ಷಿಣೇಶ್ವರಕ್ಕೆ ಬಂದು ಸೇರುತ್ತಿದ್ದಾರೆ.
ಮಾಸ್ಟರ್ ಸುಮಾರು ರಾತ್ರಿ ಎಂಟು ಘಂಟೆಯ ಸಮಯಕ್ಕೆ ಒಬ್ಬನೆ ದಕ್ಷಿಣೇಶ್ವರಕ್ಕೆ ಬಂದ. ನೋಡುತ್ತಾನೆ, ಕಾಳೀದೇವಾಲಯದಲ್ಲಿ ಮಹೋತ್ಸವ ಆಗಲೆ ಆರಂಭವಾಗಿ ಬಿಟ್ಟಿದೆ. ಉದ್ಯಾನವನದಲ್ಲಿ ಅಲ್ಲಲ್ಲಿ ದೀಪ ಹಚ್ಚಿದೆ. ಬೆಳಕಿನಿಂದ ದೇವಾಲಯ ಹೊಳೆಯುತ್ತಿದೆ. ವಾದ್ಯಾಲಯದಿಂದ ವಾದ್ಯಘೋಷ ಕೇಳಿಬರುತ್ತಿದೆ. ದೇವಾಲಯದ ಕೆಲಸಗಾರರು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಓಡಾಡುತ್ತಿದ್ದಾರೆ. ಇಂದಿನ ರಾತ್ರಿ ರಾಸಮಣಿಯ ಕಾಳೀದೇವಾಲಯದಲ್ಲಿ ಮೇಳ ನಡೆಯುತ್ತದೆ, ಬೆಳಗಿನ ಜಾವ ನಾಟಕ ನಡೆಯುತ್ತದೆ ಎಂಬುದಾಗಿ ದಕ್ಷಿಣೇಶ್ವರದ ಗ್ರಾಮವಾಸಿಗಳು ಕೇಳಿದ್ದರು. ಹಳ್ಳಿಯಿಂದ ಆಬಾಲವೃದ್ಧ ವನಿತೆಯರೆಲ್ಲರೂ ಇರುವೆ ಸಾಲಿನೋಪಾದಿಯಲ್ಲಿ ದೇವಾಲಯಕ್ಕೆ ಬರುತ್ತಲೇ ಇದ್ದಾರೆ.
ಅಪರಾಹ್ನದಲ್ಲಿ ರಾಜನಾರಾಯಣನ ಚಂಡೀಕೀರ್ತನೆ ನಡೆಯಿತು. ರಾಮಕೃಷ್ಣರು ತಮ್ಮ ಭಕ್ತರೊಡನೆ ಅದನ್ನು ಬಹಳ ಆನಂದದಿಂದ ಕೇಳಿದರು. ಈಗ ಜಗನ್ಮಯಿ ಕಾಳಿಯ ಪೂಜೆಗೆ ಸಿದ್ಧತೆ ಆಗುತ್ತಿದೆ. ಪರಮಹಂಸರು ಆನಂದದಿಂದ ತುಂಬಿತುಳುಕಾಡುತ್ತಿದ್ದಾರೆ.
ಮಾಸ್ಟರ್ ದಕ್ಷಿಣೇಶ್ವರಕ್ಕೆ ಬಂದು ಪರಮಹಂಸರ ಕೊಠಡಿಯನ್ನು ಪ್ರವೇಶಿಸಿ ನೋಡುತ್ತಾನೆ, ಅವರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಅವರ ಮುಂಭಾಗದಲ್ಲಿ ನೆಲದ ಮೇಲೆ ಬಾಬುರಾಮ, ಚಿಕ್ಕ ಗೋಪಾಲ, ಹರಿಪದ, ಕಿಶೋರ, ಒಬ್ಬ ಚಿಕ್ಕ ಹುಡುಗ – ನಿರಂಜನನ ಸಂಬಂಧಿ, ಏಡೇದಾರಿನಿಂದ ಬಂದಿದ್ದ ಒಬ್ಬ ಯುವಕ ಇವರೆ ಮೊದಲಾದ ಭಕ್ತರು ಕುಳಿತುಕೊಂಡಿದ್ದಾರೆ. ರಾಮಲಾಲ ಮತ್ತು ಹಾಜರಾ ಆಗಾಗ ಅಲ್ಲಿಗೆ ಬಂದು ಹೋಗುತ್ತಿದ್ದಾರೆ. ನಿರಂಜನನ ಸಂಬಂಧಿ-ಆ ಚಿಕ್ಕ ಹುಡುಗ- ಪರಮಹಂಸರ ಮುಂದೆ ಕುಳಿತು ಧ್ಯಾನ ಮಾಡುತ್ತಿದ್ದಾನೆ – ಪರಮಹಂಸರು ಆತನಿಗೆ ಧ್ಯಾನಮಾಡುವಂತೆ ಹೇಳಿದ್ದರು.
ಮಾಸ್ಟರ್ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡನು. ಸ್ವಲ್ಪ ಹೊತ್ತಾದ ನಂತರ ನಿರಂಜನನ ಸಂಬಂಧಿ ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡು ಹೊರಡುವುದರಲ್ಲಿದ್ದಾನೆ, ಏಡೇದಾರಿನ ಹುಡುಗನೂ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ನಿಂತುಕೊಂಡಿದ್ದಾನೆ, –ಈತ ಆ ಹುಡುಗನ ಜೊತೆಯಲ್ಲಿ ತೆರಳುವನು. ಪರಮಹಂಸರು ನಿರಂಜನನ ಸಂಬಂಧಿಯನ್ನು ಕೇಳಿದರು, “ಮತ್ತೆ ಯಾವಾಗ ಬರುತ್ತೀಯೆ?”
ಭಕ್ತ: “ಬಹುಶಃ ಮುಂದಿನ ಸೋಮವಾರ.”
ಶ್ರೀರಾಮಕೃಷ್ಣರು ಆಕಾಂಕ್ಷೆಯಿಂದ: “ಲಾಟೀನು ಬೇಕೇನು? ಜೊತೆಯಲ್ಲಿ ತೆಗೆದು ಕೊಂಡು ಹೋಗುವೆಯಾ?”
ಭಕ್ತ: “ಬೇಡಿ, ಈ ತೋಟದ ಪಕ್ಕದಲ್ಲಿಯೆ; –ಆವಶ್ಯಕತೆಯೇನಿಲ್ಲ.”
ಪರಮಹಂಸರು ಏಡೇದಾರಿನ ಹುಡುಗನಿಗೆ, “ಮಗು, ನೀನೂ ಹೊರಟು ಬಿಟ್ಟೆಯಾ?”
ಯುವಕ: “ಹೌದು, ಸ್ವಲ್ಪ ನೆಗಡಿಯಾಗಿಬಿಟ್ಟಿದೆ.”
ಪರಮಹಂಸರು: “ಒಳ್ಳೇದು, ತಲೆ ಮೇಲೆ ಬಟ್ಟೆಹಾಕಿಕೊಂಡು ಹೋಗು.”
ಆ ಹುಡುಗರಿಬ್ಬರು ಮತ್ತೆ ಪರಮಹಂಸರಿಗೆ ಪ್ರಣಾಮಮಾಡಿ ಹೊರಟು ಹೋದರು.
ಇಂದು ಅಮಾವಾಸ್ಯೆಯ ಗಾಢಾಂಧಕಾರ. ಇದರ ಜೊತೆಗೆ ಜಗನ್ಮಯಿಯ ಪೂಜೆ ಬೇರೆ, ಪರಮಹಂಸರು ತಮ್ಮ ಚಿಕ್ಕಮಂಚದ ಮೇಲೆ ಒರಗುದಿಂಬು ಹಾಕಿಕೊಂಡು ಒರಗಿ ಕುಳಿತಿದ್ದಾರೆ. ಅವರ ಮನಸ್ಸು ಅಂತರ್ಮುಖವಾಗಿದೆ. ಆಗಾಗ ಭಕ್ತರೊಡನೆ ಒಂದೊ ಎರಡೊ ಮಾತು ಆಡುತ್ತಿದ್ದಾರೆ. ಇದ್ದಕ್ಕಿದ್ದ ಹಾಗೆ ಮಾಸ್ಟರನ ಮತ್ತು ಭಕ್ತರ ಕಡೆ ತಿರುಗಿ ಹೇಳುತ್ತಿದ್ದಾರೆ: “ಆ ಹುಡುಗನದು ಎಂಥ ಧ್ಯಾನ! (ಹರಿಪದನಿಗೆ) ಏನು? ಎಂಥ ಧ್ಯಾನ!”
ಹರಿಪದ: “ಹೌದು ನಿಜ, ಒಂದು ಮರದ ದಿಮ್ಮಿಯ ಹಾಗೆ.”
ಪರಮಹಂಸರು ಕಿಶೋರಿಗೆ: “ಆ ಹುಡುಗ ಯಾರೆಂಬುದು ಗೊತ್ತೆ? ನಿರಂಜನನ ದೂರದ ಸೋದರ.”
ಮತ್ತೆ ಎಲ್ಲರೂ ನಿಶ್ಶಬ್ದರಾಗಿ ಕುಳಿತಿದ್ದಾರೆ. ಹರಿಪದ ಪರಮಹಂಸರ ಪಾದಗಳನ್ನು ಒತ್ತುತ್ತಿದ್ದಾನೆ. ಪರಮಹಂಸರು ಅಪರಾಹ್ನದಲ್ಲಿ ಚಂಡಿಯ ಹಾಡುಗಳನ್ನು ಕೇಳಿದ್ದರು.ಅವು ಅವರ ಮೂಲಕ ಹೊರಬರುತ್ತಿವೆ. ಮೆಲ್ಲಮೆಲ್ಲನೆ ಹಾಡುತ್ತಿದ್ದಾರೆ:
ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು!
ಆರು-ದರುಶನ ವೇದ ಶಾಸ್ತ್ರ ಪುರಾಣವರಿಯದು ಅವಳನು.
ಯೋಗಿಹೃದಯ ದಿವ್ಯನಿತ್ಯಾನಂದರೂಪಿಣಿ–ಆಕೆಯು.
ತನ್ನ ಆನಂದದಲಿ ತಾನೇ ಜೀವರೆದೆಯೊಳಗಿರುವಳು.
ಸಕಲ ಬ್ರಹ್ಮಾಂಡವನು ಬಸಿರಲಿ ಧರಿಸಿ ನಿತ್ಯವು ಪೊರೆವಳು.
ಮೂಲಾಧಾರ ಸಹಸ್ರಾರದಲ್ಲಿಯೆ ಮುನಿಗಳವಳನು ನೆನೆವರು.
ಶಿವನ ಹೊರತಿನ್ನಾರು ಅರಿಯರು ಅವಳ ದಿವ್ಯ ಸ್ವರೂಪವ.
ಪದ್ಮವನದಲಿ ಹಂಸರೂಪನ ಜೊತೆಗೆ ನಲಿಯುವ ಮಾಟವ!
ಕಡಲನೀಜುವೆನೆಂಬ ಮರುಳನ ಕಲ್ಪನೆಗೆ ನಗುವಂದದಿ!
ಇಂಥ ತಾಯಿಯ ತಿಳಿದೆನೆಂದರೆ ರಾಮಪ್ರಸಾದನು ನಗುವನು!
ಕುಬ್ಜನಾದವ ಮುಗಿಲ-ಚಂದ್ರನ ಹಿಡಿವ ಯತ್ನದ ತೆರದಲಿ,
ಬುದ್ಧಿಯರಿತರು ಹೃದಯವರಿಯದು ತಾಯಿ ದುರ್ಗೆಯ ನಿಜವನು!
ಪರಮಹಂಸರು ಎದ್ದು ಕುಳಿತುಕೊಂಡರು. ಮತ್ತೆ ಅತ್ಯಂತ ಉತ್ಸಾಹದಿಂದ ಭಗವತಿಯ ಮೇಲಿನ ಹಾಡನ್ನು ಹಾಡುತ್ತಿದ್ದಾರೆ:
ತಾಯಿ ಕಾಳಿಯ ಉನ್ಮತ್ತಲೀಲೆ ಈ ಸೃಷ್ಟಿ;
ಮೂಲೋಕಗಳು ಅವಳ ಮಾಯೆಯಲಿ ಮರುಳು!
ಶಿವಮರುಳು, ಶಿವೆಯೂ ಮರುಳು, ಅವರೊಡನೆ
ನರ್ತಿಸುವ ಭಕ್ತರಿಬ್ಬರು ಮರುಳು,
ಕುಣಿವ ತಾಯಿಯ ರೂಪ ಭಾವ ಭಂಗಿಗಳನ್ನು
ಬಣ್ಣಿಸಲ್ಕರಿದು!
ಕಂಠಸ್ಥಗರಳ ಬಾಧೆಗೆ ಶಿವನೆ ಶ್ರೀಕಾಳಿಯನು
ಜಪಿಸುವನು ಹಗಲು ಇರುಳು
ಕಲ್ಲಿನಿಂದಲೆ ಮತ್ತೊಂದು ಕಲ್ಲನು ಒಡೆವೊಲು,
ಸಗುಣ-ನಿರ್ಗುಣವೆಂಬ ವಾದವ ಸೃಜಿಸಿ-ಅದನೂ ಮುರಿವಳು.
ಉಳಿದ ಎಲ್ಲಾ ವಿಷಯದಲ್ಲೂ ಅವಳು ಒಪ್ಪಿಗೆಯಿತ್ತರೂ,
ಕರ್ತವ್ಯಚ್ಯುತಿಯನು ಒಪ್ಪಳು!
ಇಂಥ ತಾಯಿಯ ನಾಮನೌಕೆಯ ಹಿಡಿದು ಭವಸಾಗರದೊಳು
ತೇಲಿ ನಡೆಯಿರಿ ಎಂದು ನುಡಿವನು ಭಕ್ತ ರಾಮಪ್ರಸಾದನು!
ಪರಮಹಂಸರು ಹಾಡುತ್ತ ಹಾಡುತ್ತ ಭಾವಾವಿಷ್ಟರಾಗಿಹೋಗಿದ್ದಾರೆ. ಹೇಳಿದರು, “ಈ ವಿಧದ ಹಾಡುಗಳೆಲ್ಲ ಭಗವತ್ ಪ್ರೇಮೋನ್ಮಾದಕ ಹಾಡುಗಳು” ಎಂದು. ಬಳಿಕ ಹಾಡಿನ ಮೇಲೆ ಹಾಡನ್ನು ಹಾಡಲಾರಂಭಿಸಿದ್ದಾರೆ:
ಗಂಡಯೋಗದಲಿ ಜನಿಸಿದಂಥ ಶಿಶು ತಿನ್ನುವುದಂತೆ ತಾಯ!
ನಾನು ಅಂಥ ಶಿಶು; ನಿನ್ನ ನುಂಗುವೆನು ತೆರೆದು ನನ್ನ ಬಾಯ!
ಮತ್ತೆ:
ಸದಾನಂದಮಯಿ ಕಾಳೀ
ಪರಶಿವ ಮನಮೋಹಿನೀ!
ಕರತಾಳವ ಗೈದು ಕುಣಿವೆ
ಉನ್ಮತ್ತರ ತೆರದಲಿ.
ಆದಿಭೂತೆ ಸನಾತನಿ
ಶೂನ್ಯರೂಪೆ ಶಶಿ ಭಾಲೀ,
ಬ್ರಹ್ಮಾಂಡವೆ ಇರುವ ಮುನ್ನ
ನೀನಾಗಿಹೆ ಶಿರಮಾಲೀ.
ಸರ್ವ ಚಲನಕೂ ಪ್ರೇರಕೆ ನೀನು
ನಾವೋ ಬರಿ ಬೊಂಬೆಗಳು.
ನೀನಾಡಿಸಿದಂತೆ ಆಡಿ
ನೀ ನುಡಿಸಿದಂತೆ ನುಡಿವೆವು!
ಅಶಾಂತ ಕಮಲಕಾಂತ ನುಡಿವನು;
‘ಓ ಕಾಳೀ ಪ್ರಳಯ ಸ್ವರೂಪೀ,
ಧರ್ಮಾಧರ್ಮಗಳೆರಡನು ನೀನು
ಸೀಳಿಹಾಕಿರುವೆ ಖಡ್ಗದಲಿ!’
ಜಯ್ ಕಾಳಿ, ಜಯ್ ಕಾಳಿ, ಜಯ್ ಕಾಳಿ, ಎಂದಾನು
ನಿಷ್ಕ್ರಮಣ ಕಾಲದಲಿ ಜಪಿಸುತಿರಲು
ಶಿವತ್ವ ಲಭಿಸುವುದು; ಕಾಶಿಗೀಶಿಗಳೆಂಬ
ಪುಣ್ಯಕ್ಷೇತ್ರಗಳಿಂದ ಮತ್ತೆ ನನಗೇನು?
ಅನಂತರೂಪಿಣಿಯ ಮಹಿಮೆ ಏನೆಂಬುದನು
ನಾವು ಮರ್ತ್ಯರು ತಿಳಿಯಬಲ್ಲೆವೇನು?
ತನ್ನಲ್ಪಮಹಿಮೆಯನು ಅರಿತ ಶಿವನೇ ಅವಳ
ಪದಕಮಲಗಳ ಕೆಳಗೆ ಬಿದ್ದಿಲ್ಲವೇನು?
ಹಾಡುವುದು ಮುಗಿಯಿತು. ಆ ಸಮಯಕ್ಕೆ ಸರಿಯಾಗಿ ರಾಜನಾರಾಯಣನ ಇಬ್ಬರು ಮಕ್ಕಳು ಬಂದು ಪರಮಹಂಸರಿಗೆ ಪ್ರಣಾಮ ಮಾಡಿದರು. ಅಪರಾಹ್ನ ನಾಟ್ಯಮಂದಿರದಲ್ಲಿ ರಾಜನಾರಾಯಣ ಚಂಡೀಕೀರ್ತನೆಯನ್ನು ಮಾಡಿದ, ಆತನೊಡನೆ ಈ ಮಕ್ಕಳೂ ಹಾಡಿದರು. ಪರಮಹಂಸರು ಮತ್ತೆ ಈ ಮಕ್ಕಳೊಡನೆ ಹಾಡಲಾರಂಭಿಸಿದರು:
ತಾಯಿ ಕಾಳಿಯ ಉನ್ಮತ್ತಲೀಲೆ ಈ ಸೃಷ್ಟಿ;
ಮೂಲೋಕಗಳು ಅವಳ ಮಾಯೆಯಲಿ ಮರುಳು!
ಶಿವ ಮರುಳು, ಶಿವೆಯೂ ಮರುಳು, ಅವರೊಡನೆ
ನರ್ತಿಸುವ ಭಕ್ತರಿಬ್ಬರು ಮರುಳು.
ಚಿಕ್ಕ ಹುಡುಗ ಪರಮಹಂಸರನ್ನು, “ನೀವು ಕರುಣಾಪೂರ್ಣರೆಂಬುದ ಕೇಳಿ ಬಂದೆನು’ ಎಂಬ ಹಾಡನ್ನು ದಯವಿಟ್ಟು ಒಮ್ಮೆ ಹಾಡಿ” ಎಂದು ಕೇಳಿದ. ಪರಮಹಂಸರು ‘ಗೌರಾಂಗ ನಿತ್ಯಾನಂದರೆನ್ನುವ ದಿವ್ಯ ಸೋದರವರ್ಯರೇ’ ಎಂಬ ಹಾಡನ್ನೇನು?” ಎಂದು ಕೇಳಿದರು. ಬಳಿಕ ಅದನ್ನು ಹಾಡಲಾರಂಭಿಸಿದರು:
ಗೌರಾಂಗ ನಿತ್ಯಾನಂದರೆನ್ನುವ
ದಿವ್ಯ ಸೋದರವರ್ಯರೇ,
ನೀವು ಕರುಣಾಪೂರ್ಣರೆಂಬುದ
ಕೇಳಿ ಬಂದೆನು ನಿಮ್ಮೆಡೆ.
ಪರಮಹಂಸರು ನೀವು–ಎಂಬುದ
ಕಾಶಿಯೊಡೆಯನೆ ನುಡಿದನು.
ಬ್ರಹ್ಮರೂಪರು ನೀವು, ನಿಮ್ಮನು
ನಾನು ಗುರುತಿಸಿ ಬಂದೆನು.
ಎನಿತೊ ಸಾಧುಗಳನ್ನು ಕಂಡೆನು
ನಿಮ್ಮ ಕರುಣೆಯು ನನಗೆ ಯಾರಲು
ಇದುವರೆಗೂ ಕಾಣದು!
ಹಿಂದೆ ಗೋಕುಲದಲ್ಲಿ ನೀವೇ
ವ್ರಜರ ಕುಲದಲಿ ಬಂದಿರಿ,
ಗೋವ ಕಾಯುತ ಹುಲ್ಲುಗಾವಲ
ಹಸುರಬಯಲೊಳು ನಲಿದಿರಿ,
ಗೆಳೆಯ ಗೋಪಕುಮಾರರೊಂದಿಗೆ
ನೂರು ಆಟದೊಳಿದ್ದಿರಿ.
ಆದರಂದಿನ ರೂಪವನು ಮರೆ-
ಮಾಡಿ ನಮ್ಮೆಡೆ ನಿಂದಿರಿ.
ಇಂದು ಹರಿನಾಮವನು ನುತಿಸುತ
ನಮ್ಮ ಎದುರೇ ನಲಿವಿರಿ!
ಅಯ್ಯ, ಗೌರಾಂಗದೇವನೆ
ನಿನ್ನ ಅಂದಿನ ನೀಲ ವರ್ಣವ
ಎಂತು ಮರೆಮಾಡಿರುವೆಯೋ!
ಆದರೂ ನಿನ್ನಕ್ಷಿ ಅಂದಿನ
ಗುಟ್ಟನೊರೆಯುತಲಿರುವುವೊ!
ನಿನ್ನ ನಾಮವ ನುತಿಸಿ ಎನಿತೋ,
ಮುಕ್ತರಾದರು ಜೀವರು.
ನಿನ್ನ ಮಹಿಮೆಯ ಕೇಳಿ ನಾನೂ
ನಿನ್ನ ಪಾದಕೆ ಮಣಿಯುವೆ
‘ನಿನ್ನ ನೆರಳೊಳಗಿಟ್ಟು ನನ್ನನು
ಸಲಹು’ ಎನ್ನುತ ಬೇಡುವೆ.
ದುರುಳರಿಬ್ಬರ 4 ಹಿಂದೆ ನೀನೇ
ಕೈ ಹಿಡಿದು ಮೇಲೆತ್ತಿದೆ.
ಸರ್ವರನು ಸಮದೃಷ್ಟಿಯಲಿ ನೀ
ತೆಗೆದು ಎದೆಯೊಳಗಪ್ಪುವೆ,
ಹರಿಯನಾಮದ ಅಮೃತಬೀಜವ
ಎಲ್ಲ ಮನದೊಳು ಬಿತ್ತುವೆ.
‘ಇಂದು ನನ್ನನು ಎತ್ತು ತಂದೇ’
ಎಂದು ನಿನ್ನನು ಬೇಡುವೆ!
ರಾಮಲಾಲ ಕೊಠಡಿಗೆ ಬಂದ. ಆತನಿಗೆ ಪರಮಹಂಸರು ಹೇಳಿದರು: “ಒಂದು ಸ್ವಲ್ಪ ಹೊತ್ತು ಹಾಡು. ಇಂದು ಭಗವತಿಯ ಪೂಜೆ.”
ರಾಮಲಾಲ ಹಾಡುತ್ತಿದ್ದಾನೆ:
ನಲಿಯುವಳಾರೀ ಭೈರವನಾರೀ
ರಣರಂಗದೊಳೀ ಬೆಳಕನು ಬೀರಿ?–
ಮಿಂಚಿನ ಬಳಗವನೊಳಗೊಂಡಿರುವ
ಮುಂಗಾರ್ ಮೋಡದ ಮಯ್ಯವಳು!
ಮಿಂಚುವ ದಾಡೆಯ; ಬಿಡುಮುಡಿಗೂದಲ
ರುದ್ರಭಯಂಕರಿ ನುಗ್ಗುವಳು.
ಇಂತು ರೌದ್ರವನು ತೋರುತ ಮೆರೆಯುವ
ಧೀರನಾರಿಯಿವಳಾರಿವಳು?
ಎನಿತು ಮನೋಹರ ನೋಡು ಹಣೆಯೊಳಗೆ
ಅಂಟಿಕೊಂಡಿರುವ ಬೆವರು ಮಣಿ!
ಕೆದರುಗೂದಲಲಿ ಝೇಂಕೃತಿಗೈಯ್ಯುತ
ಹಾರಾಡುವ ಆ ಭೃಂಗಾಳಿ!
ಭುವನಮೋಹಿನಿಯ ರೂಪದೆದುರು, ಆ
ಚಂದಿರನೆ ಬಲು ನಾಚಿಹನು.
ಅಚ್ಚರಿ, ಅಚ್ಚರಿ, ಶಿವನೇ ಆಕೆಯ
ಪದತಲದೆಡೆ ಶವದಂತಿಹನು!
ಈ ಗಜಗಾಮಿನಿ ಲೋಕಮಾತೆ ಶ್ರೀ
ಮಹಾಕಾಳಿ ಎಂತೆಂಬುದನು
ಕಮಲಾಕಾಂತನು ಊಹಿಪನು.
ಮತ್ತೆ ರಾಮಲಾಲ ಹಾಡಿದ:
ನಟ್ಟಿರುಳು ನಭದಂತೆ ಕಾಳಿಮಾ ತನುವಾಗಿ
ಧಾವಿಸುವ ನಾರಿ ಯಾರು?
ರಕ್ತಸಾಗರದಲ್ಲಿ ನೀಲ ಕಮಲದ ತೆರದಿ
ರಣರಂಗದಲಿ ಕುಣಿವ ಇವಳು ಯಾರು?
ಯಾರೀ ದಿಗಂಬರೆಯು, ತಮ್ಮ ನೂರ್ ಕಣ್ಣನೂ
ದಿಕ್ಕುದಿಕ್ಕಿಗೆ ಇಂತು ಹೊರಳಿಸುವಳು?
ಶೂಲ ಪಾಣಿಯನಿಂತು ಶವದಂತೆ ಮೆಟ್ಟುತ್ತ
ತಿರೆ ನಡುವೆ ನರ್ತನವ ಗೈಯುವವಳು?
ಪರಮಹಂಸರು ಪ್ರೇಮಾನಂದದಿಂದ ನರ್ತಿಸುತ್ತಿದ್ದಾರೆ. ನರ್ತಿಸುತ್ತ ನರ್ತಿಸುತ್ತ ಪರಮಹಂಸರೇ ಹಾಡಲಾರಂಭಿಸಿದರು:
ಸಾಗುತಿಹುದು ಚಿತ್ತಭೃಂಗ
ಕಾಳೀಪದನೀಲಕಮಲ ಮಧುಪಾನದ ಆಸೆಗೆ!
ಸಕಲ ವಿಷಯ ಕುಸುಮರಸವು
ಎಷ್ಟಾದರು ತುಚ್ಛವೆಂದು
ತಿಳಿಯಿತಿಂದು ಮನಸಿಗೆ!
ತಾಯಪಾದಕಮಲ ನೀಲ
ಮಧುಕುಡಿಯುವ ಭೃಂಗ ನೀಲ
ನೀಲದಲ್ಲಿ ನೀಲಸೇರಿ ನೀಲವಾದ ಪರಿಯನು,
ಕಂಡು ಬೆರಗುವಡುವನು.
ಸುಖ ಬಂದರೆ ಹಿಗ್ಗದೆ
ನೋವಿನಲ್ಲಿ ಕುಗ್ಗದೆ
ಆನಂದದ ಸಿಂಧುವಿನಲಿ ನಿರುತ ತೇಲುತಿರುವನು
ಭಕ್ತ ಕಮಲಕಾಂತನು!
ಹಾಡುವುದು, ನರ್ತಿಸುವುದು ಮುಗಿಯಿತು. ಭಕ್ತರೆಲ್ಲ ಮತ್ತೆ ನೆಲದ ಮೇಲೆ ಕುಳಿತು ಕೊಂಡರು. ಪರಮಹಂಸರು ಚಿಕ್ಕ ಮಂಚದ ಮೇಲೆ ಕುಳಿತುಕೊಂಡರು. ಅವರು ಮಾಸ್ಟರಿಗೆ ಹೇಳುತ್ತಿದ್ದಾರೆ: “ನೀನು ಬರದೆ ಹೋದೆಯಲ್ಲ. ಚಂಡೀಕೀರ್ತನೆ ಎಷ್ಟು ಚೆನ್ನಾಗಿ ನಡೆಯಿತು!”
ಭಕ್ತರಲ್ಲಿ ಕೆಲವರು ಕಾಳೀದೇವಾಲಯಕ್ಕೆ ಭಗವತಿಯ ದರ್ಶನಕ್ಕಾಗಿ ಹೊರಟರು. ದರ್ಶನ ಮಾಡಿದ ನಂತರ ಕೆಲವರು ಗಂಗಾತೀರದ ಹಂತಗಳ ಮೇಲೆ ನಿರ್ಜನ ಪ್ರದೇಶ ಗಳಲ್ಲಿ ಕುಳಿತು ಮಾನಸಿಕವಾಗಿ ನಾಮಜಪ ಮಾಡುತ್ತಿದ್ದಾರೆ. ಆಗ ಸುಮಾರು ಹನ್ನೊಂದು ಘಂಟೆ. ಮಹಾನಿಶಿ. ಗಂಗೆಯಲ್ಲಿ ಉಬ್ಬರ ಬರುತ್ತಿದೆ-ಆಕೆ ಉತ್ತರವಾಹಿನಿಯಾಗಿದ್ದಾಳೆ. ದಡದಲ್ಲಿದ್ದ ದೀಪಗಳು ಆಕೆಯ ಕಪ್ಪು ನೀರಿನಲ್ಲಿ ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತಿವೆ.
ರಾಮಲಾಲ ಪೂಜಾಪದ್ಧತಿಯ ಪುಸ್ತಕವನ್ನು ಕೈಯಲ್ಲಿ ಹಿಡಿದು ಭಗವತಿಯ ಗರ್ಭ ಗುಡಿಯನ್ನು ಪ್ರವೇಶಿಸಿದನು. ಮಣಿಯು ಹೊರಗೆ ನಿಂತೆ ಭಗವತಿಯನ್ನು ನೆಟ್ಟದೃಷ್ಟಿ ಯಿಂದ ನೋಡುತ್ತಿರುವುದನ್ನು ಕಂಡು ರಾಮಲಾಲ ಆತನನ್ನು ಕೇಳಿದನು, “ಏನು, ಒಳಗೆ ಬರುವಿರೇನು?” ಎಂದು. ಮಣಿ ಅತ್ಯಂತ ಸಂತುಷ್ಟನಾಗಿ ಒಳಗೆ ಹೋಗಿ ಕುಳಿತು ಕೊಂಡನು. ನೋಡುತ್ತಾನೆ, ಭಗವತಿಗೆ ಬಹಳ ಚೆನ್ನಾಗಿ ಅಲಂಕಾರವಾಗಿದೆ. ಗರ್ಭಗುಡಿ ಬೆಳಕಿನಿಂದ ಕಂಗೊಳಿಸುತ್ತಿದೆ. ತಾಯಿಯ ಮುಂಭಾಗದಲ್ಲಿ ಎರಡು ದೀಪದ ಕಂಬಗಳು ಉರಿಯುತ್ತಿವೆ. ಮೇಲ್ಛಾವಣಿಯಿಂದ ಒಂದು ದೀಪದ ಗೊಂಚಲು ನೇತಾಡುತ್ತಿದೆ. ದೇವಾಲಯದ ತಟ್ಟೆಗಳು ನೈವೇದ್ಯದಿಂದ ತುಂಬಿವೆ. ತಾಯಿಯ ಪಾದಪದ್ಮಗಳು ಜವಾ ಬಿಲ್ವದಳಗಳಿಂದ ಅಲಂಕೃತವಾಗಿವೆ. ನಾನಾವಿಧ ಪುಷ್ಪಮಾಲಿಕೆಗಳಿಂದ ಆಕೆಯ ಕೊರಳು ಶೋಭಿಸುತ್ತಿದೆ. ಹತ್ತಿರವೆ ಚಾಮರ ನೇತಾಡುತ್ತಿದ್ದುದು ಮಣಿಯ ಕಣ್ಣಿಗೆ ಬಿತ್ತು. ಪರಮಹಂಸರು ಅನೇಕವೇಳೆ ಅದರಿಂದ ಭಗವತಿಗೆ ಶೈತ್ಯೋಪಚಾರ ಮಾಡಿರುವುದು ಆತನ ಮನಸ್ಸಿಗೆ ಥಟ್ಟನೆ ಹೊಳೆಯಿತು. “ನಾನೂ ಸಹ ಅದರಿಂದ ಭಗವತಿಗೆ ಶೈತ್ಯೋಪಚಾರ ಮಾಡಬಹುದೆ?” ಎಂದು ಅಂಜುತ್ತ ರಾಮಲಾಲನನ್ನು ಕೇಳಿದನು. ರಾಮಲಾಲ ಅನುಮತಿ ಕೊಟ್ಟ. ಬಳಿಕ ಆತ ಭಗವತಿಗೆ ಚಾಮರಸೇವೆ ಮಾಡಲು ಆರಂಭಿಸಿದ. ಆಗ ಪೂಜೆ ಇನ್ನೂ ಆರಂಭವಾಗಿರಲಿಲ್ಲ.
ಭಕ್ತರು ಯಾರು ಯಾರು ಹೊರಗೆ ಹೋಗಿದ್ದರೊ ಅವರೆಲ್ಲ ಮತ್ತೆ ಪರಮಹಂಸರ ಕೊಠಡಿಗೆ ಬಂದು ಸೇರಲಾರಂಭಿಸಿದರು. ವೇಣಿಪಾಲ ಪರಮಹಂಸರನ್ನು ಆಹ್ವಾನಿಸಿದ್ದಾನೆ. ಅವರು ನಾಳೆ ಹಗಲು ಸಿಂಥಿ ಬ್ರಾಹ್ಮ ಸಮಾಜಕ್ಕೆ ಹೋಗಬೇಕಾಗಿದೆ. ಆದರೆ ಆಹ್ವಾನ ಪತ್ರದಲ್ಲಿ ತಪ್ಪು ತಾರೀಕನ್ನು ಹಾಕಿದ್ದಾನೆ.
ಶ್ರೀರಾಮಕೃಷ್ಣರು ಮಣಿಗೆ: “ವೇಣಿಪಾಲ ನನ್ನನ್ನು ಆಹ್ವಾನಿಸಿದ್ದಾನೆ. ಆದರೆ ಹೀಗೇಕೆ ಬರೆದುಬಿಟ್ಟ ಹೇಳು ನೋಡೋಣ?”
ಮಾಸ್ಟರ್: “ಹೌದು, ಬರೆದದ್ದು ಸರಿಯಾಗಿಲ್ಲ. ಆದರೆ ಅಷ್ಟೊಂದು ಯೋಚಿಸಿ ಮಾಡಿ ನೋಡಿ ಬರೆಯಲಿಲ್ಲ ಅಂತ ಕಾಣುತ್ತೆ.”
ವೇಣಿಪಾಲನ ಪತ್ರದ ವಿಷಯವಾಗಿ ಮಾತನಾಡುತ್ತಿದ್ದಾಗ ಪರಮಹಂಸರು ಕೊಠಡಿಯ ಮಧ್ಯೆ ನಿಂತಿದ್ದರು. ಬಾಬುರಾಮ ಅವರ ಹತ್ತಿರ ನಿಂತಿದ್ದ. ಬಳಿಕ ಪರಮಹಂಸರು ಬಾಬುರಾಮನ ಮೇಲೆ ಒರಗಿ ನಿಂತರು. ಒಡನೆಯೆ ಸಮಾಧಿಸ್ಥರಾಗಿ ಬಿಟ್ಟಿದ್ದಾರೆ. ಭಕ್ತರೆಲ್ಲ ಅವರ ಸುತ್ತಲೂ ಸುತ್ತುಗಟ್ಟಿ ನಿಂತಿದ್ದಾರೆ. ಅವರೆಲ್ಲ ಆ ಸಮಾಧಿಸ್ಥ ಪುರುಷರನ್ನು ಆಶ್ಚರ್ಯಚಕಿತರಾಗಿ ನೋಡುತ್ತಿದ್ದಾರೆ. ಬಲಗಾಲನ್ನು ಸ್ವಲ್ಪ ಮುಂದೆ ಚಾಚಿ ನಿಂತಿದ್ದಾರೆ; ಭುಜ ಒಂದು ಕಡೆಗೆ ಸ್ವಲ್ಪ ಬಾಗಿದೆ; ಬಾಬುರಾಮನ ಹೆಗಲ ಮೇಲೆ ಕಿವಿಯ ಸಮೀಪದಲ್ಲಿ ಕೈ ಇಟ್ಟಿದ್ದಾರೆ. ಸ್ವಲ್ಪ ಹೊತ್ತಿನ ಮೇಲೆ ಸಮಾಧಿ ಇಳಿಮುಖ ವಾಯಿತು. ಇನ್ನೂ ನಿಂತೇ ಇದ್ದಾರೆ. ಈಗ ತಮ್ಮ ಕೆನ್ನೆಯ ಮೇಲೆ ಕೈ ಇಟ್ಟುಕೊಂಡು ಏನೊ ಬಹಳವಾಗಿ ಚಿಂತಿಸುತ್ತಿರುವಂತೆ ನಿಂತಿದ್ದಾರೆ. ಈಗ ಸ್ವಲ್ಪ ನಕ್ಕು ಭಕ್ತರನ್ನು ಸಂಬೋಧಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಎಲ್ಲವನ್ನು ನೋಡಿದೆ – ಯಾರು ಎಷ್ಟು ಎಷ್ಟು ದೂರ ಮುಂದುವರಿದಿದ್ದಾರೆ ಅನ್ನುವುದನ್ನು. ರಾಖಾಲ, ಇವನು(ಮಣಿ), ಸುರೇಂದ್ರ, ಬಾಬುರಾಮ, ಇನ್ನೂ ಅನೇಕರನ್ನು ನೋಡಿದೆ.”
ಹಾಜರಾ: “ನನ್ನನ್ನು?”
ಶ್ರೀರಾಮಕೃಷ್ಣರು: “ನೋಡಿದೆ.”
ಹಾಜರಾ: “ಬಂಧನ ಹೆಚ್ಚಾಗಿದೆಯೆ?”
ಶ್ರೀರಾಮಕೃಷ್ಣರು: “ಇಲ್ಲ.”
ಹಾಜರಾ: “ನರೇಂದ್ರನ್ನ ನೋಡಿದಿರೇನು?”
ಶ್ರೀರಾಮಕೃಷ್ಣರು: “ನೋಡಲಿಲ್ಲ – ಆದರೆ ಈಗಲೂ ಹೇಳಬಲ್ಲೆ; – ಒಂದು ಸ್ವಲ್ಪ ತೊಡಕಿನಲ್ಲಿ ಸಿಕ್ಕಿಬಿದ್ದಿದ್ದಾನೆ; – ಆದರೆ ಎಲ್ಲರಿಗೂ ದೊರೆತುಬಿಡುವುದನ್ನು ನೋಡಿದೆ. (ಮಣಿ ಕಡೆ ದೃಷ್ಟಿ ಹಾಕಿ) ಎಲ್ಲರೂ ಅವಿತು ಕುಳಿತಿರುವುದನ್ನು ನೋಡಿದೆ.”
ಭಕ್ತರೆಲ್ಲ ಆಶ್ಚರ್ಯಚಕಿತರಾಗಿದ್ದಾರೆ; ದೈವವಾಣಿ ಸದೃಶವಾದ ಈ ಅದ್ಭುತ ಸಂವಾದವನ್ನು ಕೇಳುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಆದರೆ ಇವನನ್ನು (ಬಾಬುರಾಮನನ್ನು) ಮುಟ್ಟಿ ಆ ಭಾವ ಬಂದಿತು.”
ಹಾಜರಾ: “ಫಸ್ಟ್ ಯಾರು?”
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಇದ್ದರು. ಬಳಿಕ ಹೇಳಿದರು, “ನಿತ್ಯ ಗೋಪಾಲನಂಥವರು ಕೆಲವರು ಇದ್ದಿದ್ದರೆ!” ಮತ್ತೆ ಯೋಚಿಸುತ್ತಿದ್ದಾರೆ. ಈಗಲೂ ಅದೇ ೯೮ ಶ್ರೀರಾಮಕೃಷ್ಣ ವಚನವೇದ ಭಾವದಲ್ಲೇ ನಿಂತಿದ್ದಾರೆ. ಮತ್ತೆ ಹೇಳಿದರು: “ಅಧರಸೇನ – ತನ್ನ ಕೆಲಸಕಾರ್ಯಗಳನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದಾದರೆ; – ಆದರೆ ಸಾಹೇಬ ರೇಗಿಕೊಂಡುಬಿಟ್ಟರೆ ಎಂಬ ಭಯ! ‘ಎಲ್ಲ ಏನಿದು ಅಂತ!’ ಆತ ಹೇಳಿಬಿಟ್ಟರೆ, ಎಂದು.” (ಎಲ್ಲರೂ ಸ್ವಲ್ಪ ನಕ್ಕರು.)
ಈಗ ಪರಮಹಂಸರು ತಮ್ಮ ಸ್ವಂತ ಜಾಗದಲ್ಲಿ ಹೋಗಿ ಕುಳಿತುಕೊಂಡಿದ್ದಾರೆ. ಭಕ್ತರೆಲ್ಲ ನೆಲದ ಮೇಲೆ ಕುಳಿತಿದ್ದಾರೆ. ಬಾಬುರಾಮ ಮತ್ತು ಕಿಶೋರಿ ಚಿಕ್ಕ ಮಂಚದ ಹತ್ತಿರಕ್ಕೆ ಬಂದು ಪರಮಹಂಸರ ಪಾದಗಳನ್ನು ಒತ್ತುತ್ತಿದ್ದಾರೆ.
ಶ್ರೀರಾಮಕೃಷ್ಣರು ಕಿಶೋರಿಯ ಕಡೆ ನೋಡಿ: “ಇದೇನು ಬಹಳ ಸೇವೆ!”
ರಾಮಲಾಲ ಬಂದು ಸಾಷ್ಟಾಂಗ ಪ್ರಣಾಮ ಮಾಡಿದ; ವಿಶೇಷ ಭಕ್ತಿಭಾವದಿಂದ ಪಾದಧೂಳಿಯನ್ನು ತೆಗೆದುಕೊಂಡ. ಭಗವತಿಯ ಪೂಜೆ ಪ್ರಾರಂಭ ಮಾಡಲು ಸನ್ನದ್ಧ ನಾಗಿದ್ದಾನೆ.
ರಾಮಲಾಲ ಪರಮಹಂಸರಿಗೆ: “ಪೂಜೆ ಪ್ರಾರಂಭಿಸಲೆ?”
ಶ್ರೀರಾಮಕೃಷ್ಣರು: “ಓಂ ಕಾಳಿ, ಓಂ ಕಾಳಿ. ಜೋಪಾನವಾಗಿ ಪೂಜೆ ಮಾಡು. ಜೊತೆಗೆ ಹೋತನ ಬಲಿ ಬೇರೆ ಕೊಡಬೇಕಾಗಿದೆ!”
ಮಧ್ಯರಾತ್ರಿಯಾಗಿದೆ. ಪೂಜೆ ಪ್ರಾರಂಭವಾಗಿದೆ. ಪರಮಹಂಸರು ಪೂಜೆ ನೋಡಲು ಬರುತ್ತಿದ್ದಾರೆ. ದೇವಾಲಯಕ್ಕೆ ಬಂದು ಭಗವತಿಯ ಹತ್ತಿರ ನಿಂತು ನೋಡುತ್ತಿದ್ದಾರೆ. ಈಗ ಬಲಿ ಆಗುತ್ತದೆ. ಜನರು ಆಕಾಂಕ್ಷಿತರಾಗಿ ನಿಂತುಕೊಂಡಿದ್ದಾರೆ. ವಧ್ಯಪಶುವಿಗೆ ಪ್ರೋಕ್ಷಣೆ ಮಾಡಿದರು. ಅದನ್ನು ಈಗ ಬಲಿಕೊಡಲು ಎಳೆದುಕೊಂಡು ಹೋಗುತ್ತಿದ್ದಾರೆ. ಪರಮಹಂಸರು ತಮ್ಮ ಕೊಠಡಿಗೆ ಹಿಂದಿರುಗಿದರು. ಪಶುವಧೆ ನೋಡಲು ಅವರ ಕೈಯ್ಯಲ್ಲಾಗುತ್ತಿಲ್ಲ.
ರಾತ್ರಿ ಎರಡು ಗಂಟೆಯವರೆಗೆ ಅನೇಕ ಭಕ್ತರು ಕಾಳೀದೇವಾಲಯದಲ್ಲಿ ಕುಳಿತು ಕೊಂಡಿದ್ದರು. ಹರಿಪದ ಕಾಳೀದೇವಾಲಯಕ್ಕೆ ಬಂದು ಹೇಳಿದ, “ಏಳಿ, ಪರಮಹಂಸರು ಕರೆಯುತ್ತಿದ್ದಾರೆ; ಪ್ರಸಾದ ಎಲ್ಲ ಸಿದ್ಧವಾಗಿದೆ.” ಭಕ್ತರು ದೇವಿಯ ಪ್ರಸಾದ ಸ್ವೀಕರಿಸಿದರು; ಬಳಿಕ ಎಲ್ಲೆಲ್ಲಿ ಸ್ಥಳ ಸಿಕ್ಕಿತೊ ಅಲ್ಲಲ್ಲೆ ಮಲಗಿ ನಿದ್ರಿಸಿದರು.
ಬೆಳಗಾಯಿತು. ಭಗವತಿಯ ಪ್ರಾತಃಕಾಲದ ಮಂಗಳಾರತಿ ಮುಗಿಯಿತು. ಭಗವತಿಯ ಎದುರಿಗೇನೇ ನಾಟ್ಯಮಂದಿರವಿದೆ. ಅಲ್ಲಿ ನಾಟಕ ನಡೆಯುತ್ತಿದೆ. ಭಗವತಿ ನಾಟಕ ನೋಡುತ್ತಿದ್ದಾಳೆ. ಪರಮಹಂಸರು ಸಿಮೆಂಟು ಹಾಕಿದ ಅಂಗಳದ ಮೂಲಕ ನಾಟಕ ನೋಡಲು ಬರುತ್ತಿದ್ದಾರೆ. ಮಣಿ ಅವರೊಡನೆಯೆ ಬರುತ್ತಿದ್ದಾನೆ–ಪರಮಹಂಸ ರಿಂದ ಬೀಳ್ಕೊಂಡು ಹೊರಡುವುದರಲ್ಲಿದ್ದಾನೆ.
ಶ್ರೀರಾಮಕೃಷ್ಣರು: “ಈಗ ಏಕೆ ಹೋಗುತ್ತೀಯೆ?”
ಮಣಿ: “ನೀವು ಇಂದಿನ ಅಪರಾಹ್ನ ಸಿಂಥಿಗೆ ಹೋಗುತ್ತೀರಿ. ನನಗೂ ಅಲ್ಲಿಗೆ ಬರಲು ಇಚ್ಛೆ. ಅದಕ್ಕಾಗಿ ಮನೆಗೆ ಒಮ್ಮೆ ಹೋಗಿ ಬರುತ್ತೇನೆ.”
ಮಾತಾಡುತ್ತ ಕಾಳಿಕಾದೇವಾಲಯದ ಹತ್ತಿರ ಬಂದುಬಿಟ್ಟರು. ಮಣಿಯು ಮೆಟ್ಟಲುಗಳ ಹತ್ತಿರ ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ.
ಪರಮಹಂಸರು: “ಒಳ್ಳೆಯದು. ಹೋಗಿ ಬಾ. ನನಗಾಗಿ ಅಗ್ಗವಾಗಿರುವ ಎರಡು ಸ್ನಾನದ ಚೌಕ ತೆಗೆದುಕೊಂಡು ಬಾ.”
1. ವಂಗದೇಶದ ಬಹಳ ಪ್ರಸಿದ್ಧನಾದ ಒಬ್ಬ ಜಮೀನುದಾರ. ಆತ ತನ್ನ ಎಳೆಯ ವಯಸ್ಸಿನಲ್ಲಿಯೇ ಮನೆಯನ್ನು ಬಿಟ್ಟು ವೈಷ್ಣವ ಸಂನ್ಯಾಸಿಯಾಗಿ ಮಥುರಾದಲ್ಲಿ ವಾಸಿಸುತ್ತಿದ್ದ
2. ಇಲ್ಲಿ ಇದರ ಸಂಕೇತ ಧಾರ್ಮಿಕ ಕ್ರಿಯಾಕರ್ಮಗಳು ಎಂದು.
3. ರಾವಣನಿಗೂ ಮತ್ತು ಬೇಹುಳನಿಗೂ ಇರುವ ಸಂಬಂಧ ಏಕಾದಶಿಗೂ ಪೀರ್ಸಾಹೇಬರಿಗೂ ಇರುವ ಹಾಗೆ.
4. ಜಗಾಯ್ ಮತ್ತು ಮಾಧಾಯ್