೨ನೆ ಅಕ್ಟೋಬರ್ ೧೮೮೪, ಆಶ್ವೀಜ ಶುಕ್ಲ ದ್ವಾದಶಿ-ತ್ರಯೋದಶಿ, ಗುರುವಾರ
ಶ್ರೀರಾಮಕೃಷ್ಣರು ದಕ್ಷಿಣೇಶ್ವರದಲ್ಲಿ ತಮ್ಮ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ಲಾಟು, ರಾಮಲಾಲ, ಹರೀಶ, ಹಾಜರಾ ಇವರೆಲ್ಲ ಪರಮಹಂಸರೊಡನೆ ಇದ್ದಾರೆ. ಬಾಬುರಾಮ ಆಗಾಗ ಬಂದು ಒಂದೆರಡು ದಿವಸ ಇದ್ದು ಹೋಗುತ್ತಿದ್ದಾನೆ.
ಮಣಿಲಾಲ ಮಲ್ಲಿಕ, ಪ್ರಿಯ ಮುಖರ್ಜಿ ಮತ್ತು ಆತನ ಸಂಬಂಧಿ ಹರಿ, ಶಿವಪುರದ ಒಬ್ಬ ಬ್ರಾಹ್ಮಭಕ್ತ (ಗಡ್ಡವಿದೆ), ಕಲ್ಕತ್ತದಿಂದ ಬಂದ ಅನೇಕ ಮಾರ್ವಾಡಿ ಭಕ್ತರು ಇವರೆಲ್ಲ ಪರಮಹಂಸರ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ಕ್ರಮೇಣ ಕೆಲವು ಮಂದಿ ದಕ್ಷಿಣೇಶ್ವರದ ಯುವಕರು, ಸಿಂಥಿಯ ಕವಿರಾಜ ಮಹೇಂದ್ರ, ಇನ್ನೂ ಕೆಲವರು ಬಂದು ಕುಳಿತುಕೊಂಡಿದ್ದಾರೆ. ಮಣಿಲಾಲ ಹಳೆಯ ಬ್ರಾಹ್ಮಭಕ್ತ.
ಶ್ರೀರಾಮಕೃಷ್ಣರು (ಮಣಿಲಾಲ ಮೊದಲಾದವರಿಗೆ): “ನಮಸ್ಕಾರವನ್ನು ಮನಸ್ಸಿ ನಿಂದ ಮಾಡೋದೆ ಮೇಲು. ಪಾದಮುಟ್ಟಿ ನಮಸ್ಕಾರ ಮಾಡುವುದರ ಆವಶ್ಯಕತೆ ಏನಿದೆ? ಮಾನಸಿಕ ನಮಸ್ಕಾರ ಮಾಡಿದರೆ ಯಾರೂ ಸಂಕೋಚ ಪಡಬೇಕಾಗಿಲ್ಲ.”
“ನನ್ನ ಧರ್ಮವೆ ಸರಿ, ಉಳಿದವರದೆಲ್ಲ ತಪ್ಪು, ಎನ್ನುವ ಭಾವ ಒಳ್ಳೆಯದಲ್ಲ. ನಾನು ನೋಡುತ್ತಿದ್ದೇನೆ ಆತನೆ ಈ ಎಲ್ಲ ಆಗಿರುವುದನ್ನು – ಮನುಷ್ಯ, ಪ್ರತಿಮೆ, ಸಾಲಿಗ್ರಾಮ, ಎಲ್ಲದರ ಆಂತರ್ಯದಲ್ಲಿಯೂ ಆತನೊಬ್ಬನನ್ನೆ ನೋಡುತ್ತಿದ್ದೇನೆ; ಆತನೊಬ್ಬನನ್ನು ವಿನಾ ಎರಡನೆಯದನ್ನು ಕಾಣುತ್ತಿಲ್ಲ.
“ಅನೇಕರ ಭಾವನೆ ತಮ್ಮ ಮತವೆ ಸರಿ ಉಳಿದವರದೆಲ್ಲ ತಪ್ಪು – ಗೆದ್ದಿರತಕ್ಕವರು ತಾವು ಮಾತ್ರವೆ, ಉಳಿದವರೆಲ್ಲ ಸೋತಿದ್ದಾರೆ ಎಂದು. ಆದರೆ ಯಾರು ಮುಂದುವರಿದು ಬಂದನೊ ಆತನೂ ಒಂದು ಚಿಕ್ಕ ಅಡಚಣೆಯಿಂದ ನಿಂತುಕೊಂಡುಬಿಡಬಹುದು. ಆಗ, ಯಾರು ಹಿಂದಕ್ಕೆ ಬಿದ್ದಿದ್ದನೊ ಆತ ಮುಂದುವರಿದುಬಿಡಬಹುದು. ಗೋಲೋಕ ಧಾಮದ 1 ಆಟದಲ್ಲಿ ಕಾಯಿ ಬಹುವಾಗಿ ಮುಂದುವರಿದೂ ಗುರಿಯನ್ನು ಮುಟ್ಟದೆ ಉಳಿಯಬಹುದು.
“ಸೋಲು ಗೆಲುವು ಆತನ ಕೈಯಲ್ಲಿ. ಆತನ ಕಾರ್ಯವನ್ನು ಸ್ವಲ್ಪವೂ ಅರಿಯಲಾಗುವುದಿಲ್ಲ. ನೋಡಿ, ಎಳನೀರು ಎಷ್ಟು ಎತ್ತರದಲ್ಲಿ ಜೋಲಾಡುತ್ತದೆ. ಅದರ ಮೇಲೆ ಎಷ್ಟು ವಿಪರೀತ ಬಿಸಿಲು ಬೀಳುತ್ತದೆ! ಆದರೂ ಅದು ತಂಪುಕಾರಿ! ಅದಕ್ಕೆ ವ್ಯತಿರಿಕ್ತವಾಗಿ ಪಾನೀಫಲ ನೀರಿನಲ್ಲೆ ಇರುತ್ತದೆ, ಆದರೂ ಉಷ್ಣಕಾರಿ!
“ಮನುಷ್ಯನ ಶರೀರದ ಕಡೆ ನೋಡಿ, ತಲೆಯೇ ಮೂಲ, ಆದರೆ ಅದು ಮೇಲೆ ಹೋಗಿ ಕುಳಿತುಬಿಟ್ಟಿದೆ !”
ಮಣಿಲಾಲ : “ನಮ್ಮ ಸದ್ಯದ ಕರ್ತವ್ಯ ?”
ಶ್ರೀರಾಮಕೃಷ್ಣರು : “ಹೇಗೊ ಮಾಡಿ ಆತನೊಡನೆ ಐಕ್ಯವಾಗಿ ಇರುವುದು; ಎರಡು ಮಾರ್ಗಗಳಿವೆ––ಕರ್ಮಯೋಗ ಮತ್ತು ಮನೋಯೋಗ. ಯಾರು ಗೃಹಸ್ಥರೊ ಅವರು ಆತನೊಡನೆ ಐಕ್ಯವಾಗುವುದು ಕರ್ಮದ ಮೂಲಕ. ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸ ಎಂಬ ಆಶ್ರಮಗಳಿವೆ. ಸಂನ್ಯಾಸಿಗಳು ಕಾಮ್ಯಕರ್ಮ ತ್ಯಜಿಸಬೇಕು, ಆದರೆ ನಿತ್ಯಕರ್ಮಗಳನ್ನು ಕಾಮನಾಶೂನ್ಯರಾಗಿ ಮಾಡಬೇಕು. ದಂಡಧಾರಣೆ, ಭೈಕ್ಷಚರ್ಯೆ, ತೀರ್ಥಯಾತ್ರೆ, ಪೂಜೆ, ಜಪ ಇವೇ ಮೊದಲಾದ ಕರ್ಮಗಳ ಮೂಲಕ ಇವರಿಗೆ ಆತನೊಡನೆ ಐಕ್ಯ.
“ಮಾಡೊ ಕೆಲಸ ಯಾವುದಾದರೂ ಸರಿಯೆ, ಫಲಾಕಾಂಕ್ಷೆ ತ್ಯಜಿಸಿ ಕಾಮನಾಶೂನ್ಯರಾಗಿ ಮಾಡಿದಿರೆಂದರೆ ಆತನೊಡನೆ ಐಕ್ಯ ದೊರೆಯುತ್ತದೆ.
“ಮನೋಯೋಗ ಬೇರೆ ಮಾರ್ಗ. ಈ ಯೋಗಿಗಳಿಗೆ ಬಾಹ್ಯಚಿಹ್ನೆ ಯಾವುದೂ ಇಲ್ಲ. ಆಂತರ್ಯದಲ್ಲಿಯೆ ಐಕ್ಯವಾಗುವಿಕೆ. ಉದಾಹರಣೆಗೆ ಜಡಭರತ, ಶುಕದೇವ, ಇಂಥವರು ಇನ್ನೂ ಎಷ್ಟೋಮಂದಿ ಇರುವರು. ಇವರಿಬ್ಬರು ಪ್ರಸಿದ್ಧ ಪುರುಷರು. ಇವರ ಶರೀರದ ಮೇಲಿನ ಗಡ್ಡ ಮೀಸೆ ಕೂದಲು ಹುಟ್ಟಿದಂದಿನಿಂದ ಬೆಳೆದಿರುತ್ತವೆ.
“ಪರಮಹಂಸ ಅವಸ್ಥೆಯಲ್ಲಿ ಕರ್ಮ ಬಿಟ್ಟುಹೋಗುತ್ತದೆ. ಸ್ಮರಣ ಮನನ ಉಳಿದು ಕೊಂಡಿರುತ್ತದೆ. ಮನಸ್ಸು ಸರ್ವದಾ ಆತನಲ್ಲಿ ಐಕ್ಯವಾಗಿರುತ್ತದೆ. ಅದು ಲೋಕಶಿಕ್ಷಣಾರ್ಥ ವಾಗಿ ಮಾತ್ರ.
“ಕರ್ಮದ ಮೂಲಕ ಐಕ್ಯ ದೊರೆಯಲಿ, ಮನಸ್ಸಿನ ಮೂಲಕ ಐಕ್ಯ ದೊರೆಯಲಿ, ಭಕ್ತಿಯೊಂದಿದ್ದರೆ ಎಲ್ಲವನ್ನೂ ತಿಳಿಯಬಹುದು. ಭಕ್ತಿಯಿಂದ ಕುಂಭಕ ತಾನಾಗಿಯೆ ಉಂಟಾಗುತ್ತದೆ–ಮನಸ್ಸು ಏಕಾಗ್ರವಾದೊಡನೆಯೆ ಉಸಿರು ಸ್ಥಿರವಾಗಿಬಿಡುತ್ತದೆ; ಅದೇ ರೀತಿ ಉಸಿರು ಸ್ಥಿರವಾಯಿತೆಂದರೆ ಮನಸ್ಸು ಏಕಾಗ್ರವಾಗಿಬಿಡುತ್ತದೆ. ಬುದ್ಧಿಯೂ ಸ್ಥಿರವಾಗಿ ಬಿಡುತ್ತದೆ. ಯಾರಿಗೆ ಈ ಸ್ಥಿತಿ ಉಂಟಾಗಿದೆಯೊ, ಅದು ಉಂಟಾಗುವುದು ಅವರಿಗೆ ಗೊತ್ತೇ ಆಗದು.
“ಭಕ್ತಿಯೋಗದಿಂದ ಎಲ್ಲವನ್ನು ಪಡೆಯಬಹುದು. ನಾನು ಭಗವತಿಯ ಬಳಿ ಅತ್ತು ಅತ್ತು ಪ್ರಾರ್ಥನೆ ಮಾಡುತ್ತಿದ್ದೆ. ಹೇ ತಾಯಿ ! ಯೋಗಿಗಳು ಯೋಗಾಭ್ಯಾಸ ಮಾಡಿ ಏನನ್ನು ತಿಳಿದುಕೊಂಡಿದ್ದಾರೊ-ಅವನ್ನು ನನಗೆ ತಿಳಿಸಿಕೊಡು-ಅವನ್ನು ನನಗೆ ಸಾಕ್ಷಾತ್ಕಾರ ಮಾಡಿಕೊಡು ಎಂದು. ಭಗವತಿ ನನಗೆ ಎಲ್ಲವನ್ನೂ ತೋರಿಸಿದ್ದಾಳೆ. ವ್ಯಾಕುಲರಾಗಿ ಆಕೆಯ ಬಳಿ ಅತ್ತರೆ ಆಕೆ ಎಲ್ಲವನ್ನೂ ತಿಳಿಸಿಕೊಡುತ್ತಾಳೆ. ವೇದ, ವೇದಾಂತ, ತಂತ್ರ ಈ ಶಾಸ್ತ್ರಗಳಲ್ಲೆಲ್ಲ ಏನೇನು ಇದೆಯೊ ಅವೆಲ್ಲವನ್ನೂ ಆಕೆ ನನಗೆ ತಿಳಿಸಿಕೊಟ್ಟಿದ್ದಾಳೆ.”
ಮಣಿಲಾಲ : “ಹಠಯೋಗ ?”
ಪರಮಹಂಸರು : “ಹಠಯೋಗಿಗಳು ದೇಹಾಭಿಮಾನಿ ಸಾಧುಗಳು, ಕೇವಲ ನೇತಿ ಧೌತಿಯಲ್ಲಿಯೇ ನಿರತರಾಗಿರುತ್ತಾರೆ. ಶರೀರಚಿಂತನೆಯೆ ಅವರ ಏಕಮಾತ್ರ ಚಿಂತನೆ. ಅವರ ಗುರಿ ಆಯುಸ್ಸನ್ನು ವೃದ್ಧಿಮಾಡಿಕೊಳ್ಳುವುದು. ಹಗಲು ಇರುಳು ದೇಹದ ಸೇವೆಯಲ್ಲಿಯೆ ಮಗ್ನರಾಗಿರುತ್ತಾರೆ. ಅದು ಒಳ್ಳೆಯದಲ್ಲ.
“ನೀವೇನು ಮಾಡಬೇಕು ಗೊತ್ತೆ? ನೀವು ಮಾನಸಿಕವಾಗಿ ಕಾಮಕಾಂಚನ ತ್ಯಾಗ ಮಾಡಬೇಕು. ಸಂಸಾರವನ್ನು ನೀವು, ‘ಕಾಕಪಿಷ್ಟ’ ಎಂದು ನೋಡಲಾಗುವುದಿಲ್ಲ.
“ಗೋಸ್ವಾಮಿಗಳು ಗೃಹಸ್ಥರು, ಅದಕ್ಕಾಗಿ ನಾನು ಅವರಿಗೆ ಹೇಳಿದೆ: ನಿಮಗೆ ಅರ್ಚಕರ ಕೆಲಸವಿದೆ. ನೀವು ಸಂಸಾರವನ್ನು ಹೇಗೆ ತಾನೆ ತ್ಯಜಿಸಲಾದೀತು? ನೀವು ಸಂಸಾರವನ್ನು ಬರಿಯ ಮಾಯೆ ಎಂದು ಗಾಳಿಯಲ್ಲಿ ತೂರಿಬಿಡಲಾಗುವುದಿಲ್ಲ.
“ಸಂಸಾರಿಗಳ ಕರ್ತವ್ಯವೇನು ಎಂಬುದನ್ನು ಚೈತನ್ಯದೇವ ಹೇಳಿಹೋಗಿದ್ದಾನೆ. ಅದು, ‘ಜೀವಿಗಳಿಗೆ ದಯೆ ತೋರುವುದು, ವೈಷ್ಣವರ ಸೇವೆ ಮಾಡುವುದು, ಭಗವನ್ನಾಮ ಸಂಕೀರ್ತನೆ ಮಾಡುವುದು.’
“ಕೇಶವಸೇನ ಒಮ್ಮೆ ನನ್ನ ಸಂಬಂಧವಾಗಿ ಹೇಳಿದ: ‘ಈಗ ಇವರು ನಮಗೆ ಭಗವಂತ ಮತ್ತು ಪ್ರಪಂಚ ಎರಡರ ಕಡೆಗೂ ಮನಸ್ಸು ಇಟ್ಟಿರುವಂತೆ ಹೇಳುತ್ತಿದ್ದಾರೆ. ಆದರೆ ನೋಡಿಕೊಳ್ಳಿ. ಒಂದು ದಿನ ಕಚಕ್ ಅಂತ ಚುಚ್ಚಿಯೇಬಿಡುತ್ತಾರೆ’ ಎಂದು. ಅದು ಸತ್ಯವಲ್ಲ. ನಾನೇಕೆ ಚುಚ್ಚೋಕೆ ಹೋಗಲಿ?
ಮಣಿಮಲ್ಲಿಕ: “ಆದರೆ, ನೀವು ಹಾಗೆ ಮಾಡೋದುಂಟು.”
ಪರಮಹಂಸರು ನಗುತ್ತ: “ನಿದರ್ಶನ? ನೀನೊಬ್ಬ ಸಂಸಾರಿ. ನಿಮ್ಮಗಳಿಗೆ ತ್ಯಾಗದ ಆವಶ್ಯಕತೆಯೇನಿದೆ?”
“ಯಾರ ಮುಖಾಂತರ ಆತ ಲೋಕಶಿಕ್ಷಣ ಮಾಡಬೇಕಾಗಿದೆಯೊ ಅವರಿಗೆ ಸಂಸಾರ ತ್ಯಾಗದ ಆವಶ್ಯಕತೆ. ಆಚಾರ್ಯ ಲೋಕಶಿಕ್ಷಕ; ಆದ್ದರಿಂದ ಆತ ಕಾಮಕಾಂಚನತ್ಯಾಗಿ ಯಾಗುವುದರ ಆವಶ್ಯಕತೆಯಿದೆ. ಇಲ್ಲದಿದ್ದರೆ ಆತನ ಉಪದೇಶ ಬೇರು ಬಿಡದು. ಬರಿಯ ಆಂತರಿಕ ತ್ಯಾಗವೆ ಸಾಕಾಗದು, ಬಾಹ್ಯತ್ಯಾಗವೂ ಬೇಕೇಬೇಕು. ಆಗ ಮಾತ್ರ ಸರಿಯಾಗಿ ಲೋಕಶಿಕ್ಷಣ ನಡೆಯುತ್ತದೆ. ಹಾಗಿಲ್ಲದೆ ಇದ್ದರೆ ಜನರು ‘ಈತ ಕಾಮಕಾಂಚನವನ್ನು ತ್ಯಾಗಮಾಡಬೇಕೆಂದು ನಮಗೆ ಬೋಧಿಸುತ್ತಿದ್ದರೂ, ತಾನು ಮಾತ್ರ ಅವನ್ನು ಭೋಗಿಸು ತ್ತಿದ್ದಾನೆ’ ಎಂದು ಯೋಚಿಸುತ್ತಾರೆ.
“ಒಬ್ಬ ಆಯುರ್ವೇದ ಪಂಡಿತ ರೋಗಿಗೆ ಔಷಧಿ ಕೊಟ್ಟು ಹೇಳಿದ: ‘ನೀನು ಇನ್ನೊಂದು ದಿನ ಬಾ, ಆಗ ಪಥ್ಯ ತಿಳಿಸುತ್ತೇನೆ’ ಎಂದು. ಅಂದು ಪಂಡಿತನ ಕೊಠಡಿ ಯಲ್ಲಿ ಅನೇಕ ಬೆಲ್ಲದ ಗುಡಾಣಗಳಿದ್ದುವು. ಆ ರೋಗಿಯ ಊರು ಬಹಳ ದೂರದಲ್ಲಿತ್ತು. ಆತ ಇನ್ನೊಂದು ದಿವಸ ಬಂದು ಪಂಡಿತನನ್ನು ನೋಡಿದ. ಪಂಡಿತ ಹೇಳಿದ: ‘ಉಣ್ಣೊ ತಿನ್ನೊ ವಿಷಯದಲ್ಲಿ ಬಹಳ ಜೋಪಾನವಾಗಿ ಇರಬೇಕು. ಬೆಲ್ಲ ನಿನ್ನ ಶರೀರಕ್ಕೆ ಒಳ್ಳೆಯ ದಲ್ಲ.’ ರೋಗಿ ಹಿಂದಿರುಗಿ ಹೊರಟುಹೋದ. ಆಗ ಆ ಪಂಡಿತನಿಗೆ ಇನ್ನೊಬ್ಬ ಹೇಳಿದ: ‘ಇದಿಷ್ಟಕ್ಕಾಗಿ ಅಷ್ಟೊಂದು ದೂರದಿಂದ ಮತ್ತೆ ಆತ ನಡೆಯುವ ಹಾಗೆ ಏಕೆ ಮಾಡಿದೆ? ಈ ಪಥ್ಯವನ್ನು ಅಂದೇ ಹೇಳಿಬಿಟ್ಟಿದ್ದರೆ ಮುಗಿದು ಹೋಗುತ್ತಿತ್ತಲ್ಲ!’ ಪಂಡಿತ ಗಹಗಹಿಸಿ ನಕ್ಕು ಹೇಳಿದ: ‘ನಾನು ಹಾಗೆ ಮಾಡಿದುದರಲ್ಲಿ ಅರ್ಥವಿದೆ. ಅಂದು ನನ್ನ ಕೊಠಡಿಯಲ್ಲಿ ಅನೇಕ ಬೆಲ್ಲದ ಗುಡಾಣಗಳಿದ್ದುವು. ನಾನು ಆ ಪಥ್ಯವನ್ನು ಅಂದು ರೋಗಿಗೆ ತಿಳಿಸಿದ್ದರೆ, ಆತನಿಗೆ ಅದರಲ್ಲಿ ಶ್ರದ್ಧೆಯುಂಟಾಗುತ್ತಿರಲಿಲ್ಲ. “ಈತನ ಕೊಠಡಿಯಲ್ಲಿಯೆ ಇಷ್ಟೊಂದು ಬೆಲ್ಲದ ಗುಡಾಣಗಳಿವೆ. ನಿಶ್ಚಯವಾಗಿ ಈತ ಅದನ್ನು ಸ್ವಲ್ಪವಾಗಿ ತಿನ್ನುತ್ತಲೆ ಇರಬೇಕು. ಆದ್ದರಿಂದ ಬೆಲ್ಲ ಅಂಥ ಕೆಡುಕು ವಸ್ತುವೇನಲ್ಲ” ಎಂದು ಆತ ಭಾವಿಸುತ್ತಿದ್ದ. ಇಂದು ನಾನು ಬೆಲ್ಲದ ಗುಡಾಣಗಳನ್ನು ಆತನ ಕಣ್ಣಿಗೆ ಬೀಳದಂತೆ ಇಟ್ಟಿದ್ದೇನೆ. ಈಗ ನನ್ನ ಮಾತಿನಲ್ಲಿ ಆತನಿಗೆ ವಿಶ್ವಾಸ ಉಂಟಾಗುತ್ತದೆ.’
“ಆದಿಸಮಾಜದ ಆಚಾರ್ಯನನ್ನು ನೋಡಿದ್ದೇನೆ. ಯಾರೊ ಹೇಳಿದರು. ಆತ ಎರಡನೆ ಸಾರಿಯೊ ಮೂರನೆ ಸಾರಿಯೊ ಮದುವೆಯಾಗಿದ್ದಾನೆ ಎಂದು. ಆತನಿಗೆ ದೊಡ್ಡ ದೊಡ್ಡ ಮಕ್ಕಳು! ಇಂಥವರು ಆಚಾರ್ಯರು! ಅಂಥವರು, ‘ಭಗವಂತನೊಬ್ಬನೇ ಸತ್ಯ, ಉಳಿದುದೆಲ್ಲ ಮಿಥ್ಯ’ ಎಂದು ಉಪದೇಶ ಮಾಡಿದರೆ, ಯಾರು ಇವರ ಉಪದೇಶವನ್ನು ಸ್ವೀಕರಿಸುತ್ತಾರೆ? ಎಂಥವರು ಇಂಥವರ ಶಿಷ್ಯರಾಗುತ್ತಾರೆ ಎಂಬುದು ನಿಮಗೆ ಗೊತ್ತೇ ಇದೆ, ಗುರುವಿನಂತೆ ಶಿಷ್ಯ.
“ಸಂನ್ಯಾಸಿ ಮಾನಸಿಕವಾಗಿ ಕಾಮಕಾಂಚನ ತ್ಯಾಗಮಾಡಿ, ಬಾಹ್ಯವಾಗಿ ಅವುಗಳ ಮಧ್ಯದಲ್ಲಿ ಓಡಾಡುತ್ತಿದ್ದರೆ, ಆತನ ಮುಖಾಂತರ ಲೋಕಶಿಕ್ಷಣದ ಕಾರ್ಯ ನಡೆಯದು. ಜನರು ‘ಈತ ಮುಚ್ಚುಮರೆಯಲ್ಲಿ ಬೆಲ್ಲ ತಿನ್ನುತ್ತಾನೆ’ ಎಂದು ಆಡಿಕೊಳ್ಳುತ್ತಾರೆ.
“ಒಮ್ಮೆ ಸಿಂಥಿಯ ವೈದ್ಯ ಮಹೇಂದ್ರ ರಾಮಲಾಲನ ಕೈಯಲ್ಲಿ ಐದು ರೂಪಾಯಿ ಕೊಟ್ಟು ಹೋಗಿದ್ದ. ಅದು ನನಗೆ ಗೊತ್ತಿರಲಿಲ್ಲ. ರಾಮಲಾಲ ಅದನ್ನು ನನಗೆ ತಿಳಿಸಿದ ನಂತರ ನಾನು ಆತನನ್ನು ಕೇಳಿದೆ: ‘ವೈದ್ಯ ಯಾರಿಗೆಂದು ಕೊಟ್ಟ?’ ಎಂದು. ಆತ ಹೇಳಿದ: ‘ತಮಗೆ’ ಎಂದು. ನಾನು ಪ್ರಥಮತಃ ಭಾವಿಸಿದೆ, ‘ಹಾಲಿನವನಿಗೆ ಸ್ವಲ್ಪಬಾಕಿ ಕೊಡಬೇಕಾಗಿದೆ. ಅದನ್ನು ತೀರಿಸಿಬಿಡೋಣ’ ಎಂದು. ಏನು ಹೇಳಲಿ! ಸ್ವಲ್ಪ ನಿದ್ರಿಸಿರಬಹುದು. ದಡಮಡಗುಟ್ಟಿಕೊಂಡು ಎದ್ದೆ. ಬೆಕ್ಕು ಎದೆ ಪರಚಿದಂತೆ ನೋವು ಆಯಿತು. ಆಗ ರಾಮಲಾಲನನ್ನು ಎಬ್ಬಿಸಿ ಕೇಳಿದೆ: ‘ಆತ ಕೊಟ್ಟಿದ್ದು ನಿಮ್ಮ ಚಿಕ್ಕಮ್ಮನಿಗೇನೊ?’ ಆತ ಹೇಳಿದ ‘ಇಲ್ಲ’ ಅಂತ. ಆಗ ನಾನು ಆತನಿಗೆ ಹೇಳಿದೆ: ‘ನೀನು ಈಗಲೆ ಹೋಗಿ ಅದನ್ನು ಆತನಿಗೆ ಕೊಟ್ಟು ಬಾ’ ಎಂದು. ರಾಮಲಾಲ ಅದನ್ನು ಮಾರನೆಯ ದಿನ ಕೊಟ್ಟು ಬಂದ.
“ಸಂನ್ಯಾಸಿಯು ಹಣವನ್ನು ಸ್ವೀಕರಿಸೋದು, ಮೋಹಕ ವಸ್ತುಗಳಲ್ಲಿ ಲೋಭದಿಂದ ಆಸಕ್ತನಾಗಿರೋದು ಯಾವ ರೀತಿಯಾಗಿ ತೋರುತ್ತದೆ ಎಂಬುದು ನಿಮಗೆ ಗೊತ್ತೆ? ಇದು ಬ್ರಾಹ್ಮಣ ವಿಧವೆ ಬಹಳ ಕಾಲ ಹವಿಷ್ಯಾನ್ನ ತಿಂದು, ನಿರಂತರ ಬ್ರಹ್ಮಚರ್ಯ ಪರಿಪಾಲನೆ ಮಾಡಿಕೊಂಡು ಹೋಗಿ ಕೊನೆಗೆ ಒಬ್ಬ ಹೊಲೆಯನನ್ನು ಮಿಂಡನನ್ನಾಗಿ ಸ್ವೀಕರಿಸಿದಂತೆ.” (ಎಲ್ಲರೂ ಸ್ತಂಭಿತರಾದಂತೆ ಕಾಣುತ್ತಿದ್ದಾರೆ.)
“ಕಾಮಾರಪುಕುರದ ಭಗೀತೇಲಿ ಎಂಬ ಒಬ್ಬ ಶೂದ್ರಳಿಗೆ ಅನೇಕರು ಶಿಷ್ಯ ರಾದರು. ಆ ಶೂದ್ರಳಿಗೆ ಎಲ್ಲರೂ ಹೋಗಿ ಪ್ರಣಾಮ ಮಾಡುತ್ತಿರುವುದನ್ನು ನೋಡಿ, ಜಮೀನುದಾರ ಒಬ್ಬ ದುರುಳನನ್ನು ಆಕೆಗೆ ಹಚ್ಚಿಬಿಟ್ಟ. ಆತ ಆಕೆಯ ಧಾರ್ಮಿಕ ಪ್ರವೃತ್ತಿಯನ್ನು ನಷ್ಟ ಮಾಡಿಬಿಟ್ಟ. ಆಕೆಯ ಸಾಧನೆ ತಪಸ್ಸು ಎಲ್ಲ ಮಣ್ಣುಪಾಲಾಯಿತು. ಪತಿತ ಸಂನ್ಯಾಸಿ ಈಕೆಯ ಅಣ್ಣತಮ್ಮನೆ.
“ನೀವು ಸಂಸಾರದಲ್ಲಿದ್ದೀರಿ. ನಿಮಗೆ ಸತ್ಸಂಗ (ಸಾಧುಸಂಗ) ಆವಶ್ಯಕ. ಮೊದಲು ಸಾಧುಸಂಗ, ಬಳಿಕ ಭಗವಂತನಲ್ಲಿ ಶ್ರದ್ಧೆ.
“ಸಾಧು ಭಗವಂತನ ನಾಮಗುಣ ಸಂಕೀರ್ತನೆ ಮಾಡದೆ ಇದ್ದರೆ, ಹೇಗೆ ತಾನೆ ಜನರಿಗೆ ಭಗವಂತನಲ್ಲಿ ಶ್ರದ್ಧೆ ಭಕ್ತಿ ವಿಶ್ವಾಸ ಉಂಟಾದೀತು? ಮೂರು ತಲೆಗಳಿಂದಲೂ ಅಮೀರರಾಗಿ (ಮಂತ್ರಿಗಳಾಗಿ) ಬಂದಿರುವ ಮನೆತನಕ್ಕೆ ಸೇರಿದವನಿವ ಎಂದು ಜನರಿಗೆ ಗೊತ್ತಾದರೆ ತಾನೆ ಅವರು ಆತನ ಮಾತಿಗೆ ಬೆಲೆ ಕೊಡುತ್ತಾರೆ.
(ಮಣಿಗೆ): “ಜ್ಞಾನ ದೊರೆತಿದ್ದರೂ ‘ಸರ್ವದಾ ಆತನ ಕಡೆ ಲಕ್ಷ್ಯವಿಟ್ಟೇ ಇರಬೇಕು. ನ್ಯಾಂಗ್ಟ (ತೋತಾಪುರಿ) ಹೇಳುತ್ತಿದ್ದ: ‘ಹಿತ್ತಾಳೆ ಲೋಟವನ್ನು ಎಲ್ಲೊ ಒಂದು ದಿನ ಮಾತ್ರ ಬೆಳಗಿಬಿಟ್ಟರೆ ಏನು ಪ್ರಯೋಜನ? ಉಪಯೋಗಿಸದೆ ಒಂದು ಮೂಲೆಗೆ ಹಾಕಿಬಿಟ್ಟರೆ ಮತ್ತೆ ಕಪ್ಪಾಗುತ್ತದೆ’ ಎಂದು. ನಾನು ನಿನ್ನ ಮನೆಗೆ ಒಂದು ದಿವಸ ಹೋಗಿ ಬರಬೇಕಾಗಿದೆ. ನಿನ್ನ ಮನೆ ನನಗೆ ಪರಿಚಯವಾದರೆ, ಉಳಿದ ಭಕ್ತರನ್ನೂ ಅಲ್ಲಿ ಸಂಧಿಸಬಹುದು. ಒಮ್ಮೆ ಈಶಾನನನ್ನು ಹೋಗಿ ನೋಡು.
(ಮಣಿಲಾಲನಿಗೆ): “ಕೇಶವಸೇನನ ತಾಯಿ ಇಲ್ಲಿಗೆ ಬಂದಿದ್ದಳು. ಆಕೆ ಮನೆಯ ಚಿಕ್ಕ ಪುಟ್ಟ ಮಕ್ಕಳೆಲ್ಲ ಕೂಡಿ ಇಲ್ಲಿ ಹರಿನಾಮ ಸಂಕೀರ್ತನೆ ಮಾಡಿದರು. ಆಕೆ ಅವರ ಸುತ್ತಲೂ ಪ್ರದಕ್ಷಿಣೆ ಮಾಡುತ್ತ ಕೈತಾಳ ಹಾಕಲಾರಂಭಿಸಿದಳು. ಕೇಶವಸೇನನ ಮರಣಕ್ಕಾಗಿ ಆಕೆ ಶೋಕದಿಂದ ಅಷ್ಟೊಂದಾಗಿ ಕುಗ್ಗಿ ಹೋಗದೆ ಇರುವುದನ್ನು ನೋಡಿದೆ. ಇಲ್ಲಿಗೆ ಬಂದು ಜಪಮಾಲೆ ಹಿಡಿದು ಜಪ ಮಾಡುತ್ತ ಏಕಾದಶಿ ವ್ರತವನ್ನು ಆಚರಿಸಿದಳು. ಒಳ್ಳೆ ಭಕ್ತೆಯಾಗಿರುವುದನ್ನು ನೋಡಿದೆ.”
ಮಣಿಲಾಲ: “ಕೇಶವಸೇನನ ತಾತ ರಾಮಕಮಲಸೇನನೂ ಒಬ್ಬ ಭಕ್ತನೆ. ತುಲಸೀ ವನದಲ್ಲಿ ಕುಳಿತು ಜಪತಪಾದಿಗಳನ್ನು ಮಾಡುತ್ತಿದ್ದ. ಕೇಶವಸೇನನ ತಂದೆ ಪ್ಯಾರೀ ಮೋಹನನೂ ಒಬ್ಬ ವೈಷ್ಣವ ಭಕ್ತನಾಗಿದ್ದ.”
ಶ್ರೀರಾಮಕೃಷ್ಣರು: “ತಂದೆ ಅಂಥವನಲ್ಲದಿದ್ದರೆ, ಮಗ ಅಂಥ ಭಕ್ತನಾಗುತ್ತಿರಲಿಲ್ಲ. ವಿಜಯನ ಕಡೆ ನೋಡು. ವಿಜಯನ ತಂದೆ ಭಾಗವತವನ್ನು ಓದುತ್ತ ಓದುತ್ತ ಇದ್ದ ಹಾಗೆ ಭಾವದಿಂದ ಬಾಹ್ಯಜ್ಞಾನಶೂನ್ಯನಾಗಿ ಬಿಡುತ್ತಿದ್ದ. ವಿಜಯ ಆಗಾಗ, ಹರಿ! ಹರಿ! ಎಂದು ಹೇಳಿ ಎದ್ದು ನಿಂತುಕೊಂಡುಬಿಡುತ್ತಾನೆ. ಈಗ ಕೆಲಕಾಲದಿಂದ ವಿಜಯ ಏನೇನು ಭಗವಂತನ ರೂಪಗಳನ್ನು ದರ್ಶನಮಾಡುತ್ತಿರುವನೊ, ಅವೆಲ್ಲ ಸತ್ಯ. ಸಾಕಾರ ನಿರಾಕಾರದ ಸಂಬಂಧವಾಗಿ ‘ಯಾವ ರೀತಿ ಗೋಸುಂಬೆ ಕೆಂಪು, ನೀಲಿ, ಹಳದಿ ಬಣ್ಣವನ್ನು ತಾಳುವುದೊ ಮತ್ತು ಅದಕ್ಕೆ ಕೆಲವು ವೇಳೆ ಯಾವ ಬಣ್ಣವೂ ಇಲ್ಲವೋ, ಅದೇ ರೀತಿ ಭಗವಂತ ಕೆಲವು ವೇಳೆ ಸಗುಣ ಕೆಲವು ವೇಳೆ ನಿರ್ಗುಣ’ ಎಂದು ವಿಜಯ ಹೇಳಿದ.
“ವಿಜಯ ಅತ್ಯಂತ ಸರಳಜೀವಿ. ಅತ್ಯಂತ ಉದಾರ ಮತ್ತು ಸರಳ ಹೃದಯದವನಾಗ ದಿದ್ದರೆ, ಮನುಷ್ಯ ಭಗವಂತನನ್ನು ಪಡೆಯಲಾರ. ವಿಜಯ ನಿನ್ನೆ ಅಧರಸೇನನ ಮನೆಗೆ ಬಂದಿದ್ದ. ಅದು ತನ್ನ ಸ್ವಂತ ಮನೆಯೇ, ಎಲ್ಲರೂ ತನ್ನ ಬಂಧುಬಾಂಧವರೇ ಎಂಬ ರೀತಿಯಲ್ಲಿ ವರ್ತಿಸಿದ. ವಿಷಯಬುದ್ಧಿ ಹೋಗದ ಹೊರತು ಉದಾರತೆ, ಸರಳತೆ ಬರದು.”
ಬಳಿಕ ಪರಮಹಂಸರು ಹಾಡಲಾರಂಭಿಸಿದ್ದಾರೆ:
ಅಮೂಲ್ಯನಿಧಿ ದೊರಕೊಳುವುದು ನಿನಗೆ
ಮನವು ನಿರಂಜನವಾದಾಗ!…….
ಪರಮಹಂಸರು ಮುಂದುವರಿಸಿದರು: “ಮಣ್ಣನ್ನು ಚೆನ್ನಾಗಿ ಹದಮಾಡಿಕೊಳ್ಳದೆ ಇದ್ದರೆ ಮಡಕೆ ಕುಡಿಕೆಗಳನ್ನು ತಯಾರುಮಾಡಲಾಗುವುದಿಲ್ಲ. ಒಳಗೆ ಮರಳು ಕಲ್ಲು ಸೇರಿಕೊಂಡಿದ್ದರೆ ಮಡಕೆ ಬಿರುಕುಬಿಡುತ್ತದೆ. ಅದಕ್ಕಾಗಿಯೆ ಕುಂಬಾರ ಮಣ್ಣನ್ನು ಮೊದಲೆ ಚೆನ್ನಾಗಿ ಹದಮಾಡಿಕೊಳ್ಳುತ್ತಾನೆ.
“ಕನ್ನಡಿಯ ಮೇಲೆ ಧೂಳು ಕವಿದಿದ್ದರೆ ಮುಖ ಕಾಣಿಸದು. ಚಿತ್ತಶುದ್ಧವಿಲ್ಲದಿದ್ದರೆ ಸ್ವಸ್ವರೂಪದ ದರ್ಶನ ದೊರೆಯದು, ನೋಡಿ, ಎಲ್ಲಿ ಅವತಾರಪುರುಷ ಜನ್ಮವೆತ್ತುವನೊ ಅಲ್ಲಿ ಸರಳತೆ ತಾಂಡವವಾಡುತ್ತದೆ. ನಂದ, ದಶರಥ, ವಸುದೇವ – ಇವರೆಲ್ಲರೂ ಸರಳ ಜೀವಿಗಳೆ.
“ವೇದಾಂತ ಹೇಳುತ್ತದೆ, ‘ಚಿತ್ತ ಪರಿಶುದ್ಧವಾಗಿಲ್ಲದೆ ಇದ್ದರೆ ಭಗವಂತನನ್ನು ಪಡೆಯಬೇಕು ಎಂಬ ಇಚ್ಛೆಯೆ ಬರದು’ ಅಂತ. ಹಿಂದಿನ ಜನ್ಮದಲ್ಲಿಯೆ ಆಗಲಿ ಅಥವಾ ಈ ಜನ್ಮದಲ್ಲಿಯೆ ಆಗಲಿ ವಿಶೇಷವಾಗಿ ತಪಸ್ಸು ಮಾಡದಿದ್ದರೆ ಸರಳತೆ ಉದಾರತೆ ಉಂಟಾಗದು.”
ಪರಮಹಂಸರ ಕಾಲು ಸ್ವಲ್ಪ ಊದಿದ ಹಾಗೆ ಇರುವುದರಿಂದ ಅವರು ಬಾಲಕ ನೋಪಾದಿಯಲ್ಲಿ ಬಹಳ ಚಿಂತಾಶೀಲರಾಗಿದ್ದಾರೆ. ಸಿಂಥಿಯ ಕವಿರಾಜ (ವೈದ್ಯ) ಮಹೇಂದ್ರ ಬಂದು ಅವರಿಗೆ ಪ್ರಣಾಮ ಮಾಡಿದ.
ಪರಮಹಂಸರು ಪ್ರಿಯಮುಖರ್ಜಿ ಮೊದಲಾದ ಭಕ್ತರಿಗೆ: “ನಿನ್ನೆ ನಾರಾಯಣನಿಗೆ ಹೇಳಿದೆ, ‘ನನ್ನ ಕಾಲನ್ನು ಬೆರಳಿನಿಂದ ಒತ್ತಿನೋಡು ಕುಳಿಯಾಗುವುದೆ?’ ಎಂದು, ಆಗ ಒತ್ತಿ ನೋಡಿದ- ಕುಳಿಬಿತ್ತು; ‘ಬದುಕಿಕೊಂಡೆ!’ ಎಂದೆ. (ಮುಖರ್ಜಿಗೆ) ನೀನು ಒಮ್ಮೆ ನಿನ್ನ ಕಾಲನ್ನು ಒತ್ತಿನೋಡು ನೋಡೋಣ. ಕುಳಿಬಿತ್ತೇನು?”
ಮುಖರ್ಜಿ: “ಹೌದು ಬಿದ್ದಿದೆ.”
ಪರಮಹಂಸರು: “ಉಸ್ ಬದುಕಿದೆನಪ್ಪ!”
ಮಣಿಮಲ್ಲಿಕ: “ಇದಕ್ಕೇಕೆ ಇಷ್ಟೊಂದು ಚಿಂತನೆ? ಹರಿಯುವ ನೀರಿನಲ್ಲಿ ಸ್ನಾನ ಮಾಡಿ ಬಿಡಿ. ಇದಕ್ಕಾಗಿ ಔಷಧವನ್ನು ಏಕೆ ಕುಡಿಯಬೇಕು?”
ಪರಮಹಂಸರು: “ಊಹ್ಞು, ನಿಮ್ಮಗಳ ರಕ್ತದಲ್ಲಿ ಇನ್ನೂ ಬಲವಿದೆ – ನಿಮ್ಮಗಳ ವಿಷಯವೇ ಬೇರೆ, ಭಗವತಿ ನನ್ನನ್ನು ಬಾಲಕನ ಅವಸ್ಥೆಯಲ್ಲಿ ಇಟ್ಟಿದ್ದಾಳೆ. ಒಂದು ದಿನ ಹುಲ್ಲುಗಾವಲಿನಲ್ಲಿ ಏನೊ ಕಡಿಯಿತು. ‘ಸರ್ಪ ಮತ್ತೊಮ್ಮೆ ಕಡಿದರೆ ವಿಷವನ್ನು ಹಿಂದಕ್ಕೆ ತೆಗೆದುಕೊಂಡುಬಿಡುವುದು’ ಎಂದು ನಾನು ಕೇಳಿದ್ದೆ. ಅದಕ್ಕಾಗಿ ಹುತ್ತಕ್ಕೆ ಕೈಹಾಕಿ ಕುಳಿತೆ. ಒಬ್ಬ ಬಂದು ‘ಏನು ನೀವು ಮಾಡುತ್ತಿರೋದು ! ಸರ್ಪ ಅದೇ ಜಾಗದಲ್ಲಿ ಮತ್ತೆ ಕಡಿದರೆ ಮಾತ್ರ ಅದು ಸಾಧ್ಯ. ಬೇರೆ ಜಾಗದಲ್ಲಿ ಕಡಿದರೆ ಏನೂ ಆಗದು’ ಅಂತ ನನಗೆ ಹೇಳಿದ.
“ಶರದೃತುವಿನ ಹಿಮ ಮೈಗೆ ಒಳ್ಳೆಯದೆಂದು ಕೇಳಿದ್ದೆ. ಕಲ್ಕತ್ತದಿಂದ ಗಾಡಿಯಲ್ಲಿ ಬರುವಾಗ ತಲೆಯನ್ನು ಹೊರಕ್ಕೆ ಚಾಚಿ ಅದಕ್ಕೆ ಹಿಮವನ್ನು ಸುಮ್ಮನೆ ಬೀಳಿಸಿದ್ದೇ ಬೀಳಿಸಿದ್ದು! (ಎಲ್ಲರೂ ನಗುತ್ತಾರೆ.)
(ಸಿಂಥಿಯ ಮಹೇಂದ್ರನಿಗೆ) “ನಿಮ್ಮ ಸಿಂಥಿಯ ಆ ಪಂಡಿತ ಬಹಳ ಒಳ್ಳೆಯವ. ಆತ ವೇದಾಂತವಾಗೀಶ. ನನ್ನನ್ನು ಗೌರವಿಸುತ್ತಾನೆ. ಆತನಿಗೆ ನಾನು, – ನೀನು ಬಹಳವಾಗಿ ಓದಿದ್ದೀಯೆ; ಆದರೆ ‘ನಾನು ಒಬ್ಬ ಮಹಾ ಪಂಡಿತ’ ಎಂಬ ಅಹಂಕಾರವನ್ನು ಮಾತ್ರ ತ್ಯಜಿಸಿಬಿಡು – ಎಂದು ಹೇಳಿದಾಗ, ಆತನಿಗೆ ಬಹಳ ಆನಂದವಾಯಿತು. ಆತನೊಡನೆ ವೇದಾಂತದ ವಿಷಯವಾಗಿ ಮಾತುಕತೆಗಳಾಡಿದೆ.
(ಮಾಸ್ಟರಿಗೆ) “ಯಾವುದು ಶುದ್ಧ ಆತ್ಮವೊ ಅದು ನಿರ್ಲಿಪ್ತವಾದುದು. ಅದರಲ್ಲಿ ಮಾಯೆ ಅಥವಾ ಅವಿದ್ಯೆ ಇದೆ. ಈ ಮಾಯೆಗೆ ಸತ್ತ್ವ, ರಜಸ್ಸು, ತಮಸ್ಸು ಎಂಬ ಮೂರು ಗುಣಗಳಿವೆ. ಯಾವುದು ಶುದ್ಧ ಆತ್ಮವೊ ಅದರಲ್ಲಿಯೂ ಈ ಮೂರು ಗುಣಗಳು ಇದ್ದೇ ಇವೆ. ಆದರೂ ಅದು ನಿರ್ಲಿಪ್ತವೆ. ಬೆಂಕಿಗೆ ನೀಲಿ ಉಂಡೆ ಬಿಸಾಡಿದರೆ ನೀಲಿ ಬಣ್ಣದ ಉರಿ ಏಳುತ್ತದೆ. ಕೆಂಪು ಉಂಡೆ ಬಿಸಾಡಿದರೆ ಕೆಂಪು ಬಣ್ಣದ ಉರಿ ಏಳುತ್ತದೆ. ಆದರೆ, ಬೆಂಕಿಗೆ ತನ್ನದೇ ಆದ ಯಾವ ಬಣ್ಣವೂ ಇಲ್ಲ.
“ನೀರಿಗೆ ನೀಲಿ ಬಣ್ಣ ಕದಡಿದರೆ ಅದು ನೀಲಿಯಾಗಿ ಕಾಣುತ್ತದೆ. ಮತ್ತೆ ಅದಕ್ಕೇನೆ ಪಟಿಕ ಹಾಕಿದರೆ ಅದು ತನ್ನ ಸ್ವರೂಪವನ್ನು ಪಡೆಯುತ್ತದೆ.
“ಒಬ್ಬ ಚಂಡಾಲ ಮಾಂಸದ ಹೊರೆಯನ್ನು ಹೊತ್ತುಕೊಂಡು ಹೋಗುತ್ತಿದ್ದ. ಆತ ಶ್ರೀಶಂಕರಾಚಾರ್ಯರನ್ನು ಮುಟ್ಟಿಬಿಟ್ಟ. ಶಂಕರಾಚಾರ್ಯರು, ‘ಏನು, ನನ್ನನ್ನು ಮುಟ್ಟಿಬಿಟ್ಟೆಯಲ್ಲ?’ ಅಂತ ರೇಗಿದರು. ಚಂಡಾಲ ಉತ್ತರವಿತ್ತ: ‘ಪೂಜ್ಯರೆ! ನಾನು ನಿಮ್ಮನ್ನು ಮುಟ್ಟಲಿಲ್ಲ. ನೀವೂ ನನ್ನನ್ನು ಮುಟ್ಟಲಿಲ್ಲ, ನೀವು ಶುದ್ಧ ನಿರ್ಲಿಪ್ತ ಆತ್ಮ’ ಎಂದು. ಜಡಭರತ ಇದೇ ಮಾತನ್ನು ರಾಜ ರಹುಗಣನಿಗೆ ಹೇಳಿದ.
“ಶುದ್ಧ ಆತ್ಮ ನಿರ್ಲಿಪ್ತವಾದದ್ದು. ಅದನ್ನು ಕಣ್ಣಿನಿಂದ ನೋಡಲಾಗುವುದಿಲ್ಲ. ನೀರಿನಲ್ಲಿ ಉಪ್ಪು ಬೆರೆತುಕೊಂಡಿದ್ದರೆ, ಅದನ್ನು ಕಣ್ಣಿನಿಂದ ನೋಡಲಾಗುವುದಿಲ್ಲ.
“ಯಾವುದು ಶುದ್ಧ ಆತ್ಮವೊ, ಅದೇ ಮಹಾಕಾರಣ – ಕಾರಣದ ಕಾರಣ. ಸ್ಥೂಲ, ಸೂಕ್ಷ್ಮ, ಕಾರಣ ಮತ್ತು ಮಹಾಕಾರಣ. ಪಂಚಭೂತಗಳು ಸ್ಥೂಲ. ಮನಸ್ಸು, ಬುದ್ಧಿ, ಅಹಂಕಾರ, ಸೂಕ್ಷ್ಮ. ಪ್ರಕೃತಿ ಅಥವಾ ಆದ್ಯಾಶಕ್ತಿ ಎಲ್ಲದರ ಕಾರಣ. ಬ್ರಹ್ಮ ಅಥವಾ ಶುದ್ಧ ಆತ್ಮ, ಕಾರಣದ ಕಾರಣ.
“ಈ ಶುದ್ಧ ಆತ್ಮವೆ ನಮ್ಮ ಸ್ವಸ್ವರೂಪ. ಯಾವುದಕ್ಕೆ ಜ್ಞಾನ ಎಂದು ಹೆಸರು? ಈ ಸ್ವಸ್ವರೂಪವನ್ನು ಅರಿತುಕೊಳ್ಳುವುದು ಮತ್ತು ಅದರಲ್ಲಿಯೆ ಮನಸ್ಸನ್ನಿಡುವುದು, ಈ ಶುದ್ಧ ಆತ್ಮವನ್ನು ಅರಿತುಕೊಳ್ಳುವುದು.
“ಕರ್ಮ ಎಲ್ಲಿಯವರೆಗೆ ?- ದೇಹಾಭಿಮಾನ ಇರುವವರೆಗೆ, ಅಂದರೆ ನಾನೆ ಈ ದೇಹ ಎಂಬ ಅಭಿಮಾನ ಇರುವವರೆಗೆ. ಗೀತೆಯಲ್ಲಿಯೂ ಹೀಗೆಯೇ ಹೇಳಿದೆ. ದೇಹವನ್ನು ಆತ್ಮವೆಂದು ಭಾವಿಸುವುದೆ ಅಜ್ಞಾನ.
(ಶಿವಪುರದ ಬ್ರಾಹ್ಮ ಭಕ್ತನಿಗೆ): “ನೀವು ಒಬ್ಬ ಬ್ರಾಹ್ಮ ಭಕ್ತರೇನು?”
ಬ್ರಾಹ್ಮ: “ಹೌದು.”
ಪರಮಹಂಸರು ನಗುತ್ತ : “ನಾನು ನಿರಾಕಾರ ಸಾಧಕರ ಕಣ್ಣು ಮುಖಚರ್ಯೆ ನೋಡಿಯೆ ಅವರನ್ನು ಅರಿತುಕೊಂಡುಬಿಡಬಲ್ಲೆ. ನೀವು ಒಂದು ಸ್ವಲ್ಪ ಮುಳುಗು ಹಾಕಬೇಕು. ಮೇಲೆಯೆ ತೇಲಿದರೆ ರತ್ನ ದೊರೆಯದು. ನಾನು ಸಾಕಾರ ನಿರಾಕಾರ ಎಲ್ಲವನ್ನೂ ಅನುಮೋದಿಸುತ್ತೇನೆ.”
ದೊಡ್ಡ ಅಂಗಡಿಬೀದಿಯ ಮಾರ್ವಾಡಿ ಭಕ್ತರು ಕೊಠಡಿಗೆ ಬಂದು ಪರಮಹಂಸರಿಗೆ ಪ್ರಣಾಮ ಮಾಡಿದರು. ಪರಮಹಂಸರು ಅವರ ಕ್ಷೇಮಸಮಾಚಾರವನ್ನು ವಿಚಾರಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು ಭಕ್ತರಿಗೆ: “ಆಹಾ! ಇವರು ದೊಡ್ಡ ಭಕ್ತರು. ಇವರೆಲ್ಲರೂ ದೇವಾಲಯಕ್ಕೆ ಹೋಗುತ್ತಾರೆ. ಸ್ತೋತ್ರಮಾಡುತ್ತಾರೆ. ಪ್ರಸಾದ ಸ್ವೀಕರಿಸುತ್ತಾರೆ! ಈ ಸಲ ಯಾರು ಪುರೋಹಿತನಾಗಿದ್ದಾನೊ ಆತ ಒಬ್ಬ ಭಾಗವತ ಪಂಡಿತ.”
ಮಾರ್ವಾಡಿ ಭಕ್ತ: “ಹೇ ಭಗವಂತ! ನಾನು ನಿನ್ನ ದಾಸ ಎಂದು ಹೇಳುತ್ತಿರುವ ಈ ನಾನು ಎಂಬುದು ಯಾವುದು?”
ಪರಮಹಂಸರು: “ಲಿಂಗಶರೀರ ಅಥವಾ ಜೀವಾತ್ಮ. ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ – ಈ ನಾಲ್ಕೂ ಸೇರಿ ಲಿಂಗಶರೀರವಾಗಿದೆ.”
ಮಾರ್ವಾಡಿ ಭಕ್ತ: “ಜೀವಾತ್ಮ ಎಂಬುದು ಯಾವುದು?”
ಶ್ರೀರಾಮಕೃಷ್ಣರು: “ಅಷ್ಟಪಾಶಬಂಧಿತ ಆತ್ಮ. ಚಿತ್ತ ಎಂಬುದು ಯಾವುದು? ಯಾವುದರಿಂದ ಅಹಂ ಉದ್ಭವವಾಗುವುದೋ ಅದು.”
ಮಾರ್ವಾಡಿ ಭಕ್ತ: “ಮಹಾರಾಜ್, ಸತ್ತರೆ ಏನಾಗುತ್ತದೆ?”
ಪರಮಹಂಸರು: “ಗೀತೆಯ ಪ್ರಕಾರ ಸಾಯುವಾಗ ಯಾವ ಭಾವನೆ ಬರುತ್ತದೆಯೊ ಅದರಂತೆ ಮುಂದಿನ ಜನ್ಮ. ಭರತರಾಜ ಜಿಂಕೆಯ ಚಿಂತನೆಮಾಡಿ ಜಿಂಕೆಯಾಗಿ ಹುಟ್ಟಿದ. ಅದಕ್ಕಾಗಿಯೇ ಭಗವಂತನನ್ನು ಪಡೆಯುವುದಕ್ಕೆ ಸಾಧನೆ ಆವಶ್ಯಕ. ಹಗಲು ಇರುಳು ಆತನ ಚಿಂತನೆ ಮಾಡಿದರೆ, ಸಾಯುವಾಗಲೂ ಆತನ ಚಿಂತೆಯೇ ಬರುತ್ತದೆ.”
ಮಾರ್ವಾಡಿ ಭಕ್ತ: “ಒಳ್ಳೆಯದು. ಮಹಾರಾಜ್, ವಿಷಯಗಳನ್ನು ಕಂಡರೆ ನಮಗೇಕೆ ವೈರಾಗ್ಯ ಉಂಟಾಗುವುದಿಲ್ಲ?”
ಪರಮಹಂಸರು: “ಮಾಯೆ ಎಂಬುದು ಇದೇನೆ, ಮಾಯೆಯ ದೆಸೆಯಿಂದ ಸತ್ ಅಸತ್ತಾಗಿಯೂ ಅಸತ್ ಸತ್ತಾಗಿಯೂ ಕಾಣಿಸಿಕೊಳ್ಳುತ್ತದೆ. ಸತ್ ಅಂದರೆ ನಿತ್ಯವಾದದ್ದು- ಪರಬ್ರಹ್ಮ. ಅಸತ್ ಅಂದರೆ ಅನಿತ್ಯವಾದದ್ದು – ಸಂಸಾರ.”
ಮಾರ್ವಾಡಿ ಭಕ್ತ: “ಶಾಸ್ತ್ರಗಳನ್ನೇನೊ ಓದುತ್ತೇವೆ. ಆದರೆ ಜೀವನ ಮಾರ್ಪಾಟು ಹೊಂದುತ್ತಿಲ್ಲವಲ್ಲ?”
ಪರಮಹಂಸರು: “ಸುಮ್ಮನೆ ಓದಿಬಿಟ್ಟರೆ ಏನಾದೀತು? ಸಾಧನೆ-ತಪಸ್ಸು ಬೇಕು. ಕರೆ ಆತನನ್ನು, ಸುಮ್ಮನೆ ಸಿದ್ಧಿ ಸಿದ್ಧಿ ಎಂದು ಹೇಳಿದರೆ ಅಮಲೇರುವುದೆ? ಅರೆದು ಕುಡಿಯಬೇಕು.
“ಈ ಸಂಸಾರ ಒಂದು ಮುಳ್ಳುಗಿಡ. ಕೈ ಹಾಕಿತು ಅಂದರೆ ತರಚಿ ರಕ್ತಸುರಿಯ ಲಾರಂಭಿಸುತ್ತದೆ. ಒಂದು ಮುಳ್ಳುಗಿಡ ತೆಗೆದುಕೊಂಡು ಬಂದು ಅದರ ಹತ್ತಿರ ಕುಳಿತು ಕೊಂಡು ಜಪಿಸು: ‘ಈ ಗಿಡ ಸುಟ್ಟುಹೋಯಿತು’ ಎಂದು. ಅದಷ್ಟಕ್ಕೆ ಅದು ಸುಟ್ಟು ಹೋಗುತ್ತದೆಯೆ? ಜ್ಞಾನಾಗ್ನಿಯನ್ನು ಹೊತ್ತಿಸಿಕೊ. ಆ ಅಗ್ನಿಯಿಂದ ಅದನ್ನು ಸುಡು. ಆಗ ಮಾತ್ರವೆ ಅದು ಸುಟ್ಟು ಬೂದಿಯಾಗುತ್ತದೆ.
“ಸಾಧನೆಯ ಸಮಯದಲ್ಲಿ ಸ್ವಲ್ಪ ಹೆಚ್ಚು ಶ್ರಮ ತೆಗೆದುಕೊಳ್ಳಬೇಕು. ಆ ಬಳಿಕ ರಾಜರಸ್ತೆ. ನದಿ ಡೊಂಕಾಗಿ ಹರಿಯುವ ಜಾಗದಲ್ಲಿ ಸ್ವಲ್ಪ ಶ್ರಮ ತೆಗೆದುಕೊಂಡು ಮುಂದುವರಿದು, ಬಳಿಕ ಅನುಕೂಲವಾದ ಗಾಳಿ ದೊರೆತಾಗ ದೋಣಿಯನ್ನು ಸುಮ್ಮನೆ ತೇಲಿಬಿಡು.
“ಎಲ್ಲಿಯವರೆಗೆ ನೀನು ಮಾಯೆಯ ಮನೆಯೊಳಗೆ ಇರುವೆಯೊ, ಎಲ್ಲಿಯವರೆಗೆ ಮಾಯೆಯ ಮೋಡ ಮೇಲೆ ಕವಿದುಕೊಂಡಿರುತ್ತದೆಯೋ, ಅಲ್ಲಿಯವರೆಗೆ ಜ್ಞಾನ ಸೂರ್ಯನ ಪ್ರಭಾವ ಗೊತ್ತಾಗದು. ಮಾಯೆಯ ಗೃಹವನ್ನು ತ್ಯಜಿಸಿ (ಕಾಮಕಾಂಚನ ತ್ಯಜಿಸಿ) ಹೊರಗಡೆ ಬಂದು ನಿಂತುಕೊಂಡರೆ ಆಗ ಜ್ಞಾನಸೂರ್ಯ ಅವಿದ್ಯೆಯನ್ನು ನಾಶ ಮಾಡುತ್ತಾನೆ. ಮನೆಯ ಒಳಗೆ ನಿಂತರೆ ಲೆನ್ಸು ಕಾಗದವನ್ನು ಸುಡಲಾರದು. ಮನೆಯಿಂದ ಹೊರಗೆ ಬಂದು ನಿಂತರೆ ಬಿಸಿಲು ಲೆನ್ಸಿನ ಮೇಲೆ ಬೀಳುತ್ತದೆ, – ಆಗ ಕಾಗದ ಸುಟ್ಟು ಹೋಗುತ್ತದೆ. ಮತ್ತೆ ಆಕಾಶ ಮೋಡದಿಂದ ಕೂಡಿದ್ದರೆ ಲೆನ್ಸು ಕಾಗದವನ್ನು ಸುಡ ಲಾರದು. ಮೇಘ ಚದುರಿ ಹೋದರೆ ಆಗ ಅದು ಸುಟ್ಟುಹೋಗುತ್ತದೆ.
“ಕಾಮಕಾಂಚನದ ಮನೆಯನ್ನು ಬಿಟ್ಟು ಸ್ವಲ್ಪ ಹೊರಗೆ ನಿಂತರೆ – ಹೊರಗೆ ನಿಂತು ಸ್ವಲ್ಪ ಸಾಧನೆ ತಪಸ್ಸುಮಾಡಿದರೆ, ಆಗ ಮನಸ್ಸಿನ ಅಂಧಕಾರ ನಾಶವಾಗುತ್ತದೆ, ಅಹಂಕಾರ ವೆಂಬ ಅವಿದ್ಯಾ ಮೋಡ ಸುಟ್ಟು ಭಸ್ಮವಾಗುತ್ತದೆ; ಜ್ಞಾನ ಪ್ರಾಪ್ತಿಯಾಗುತ್ತದೆ. ಕಾಮ ಕಾಂಚನವೇ ಆ ಮೋಡ.
(ಮಾರ್ವಾಡಿ ಭಕ್ತರಿಗೆ): “ತ್ಯಾಗಿಗಳಿಗೆ ಅತ್ಯಂತ ಕಠಿಣವಾದ ನಿಯಮ. ಕಾಮ ಕಾಂಚನದ ಸಹವಾಸ ಲೇಶಮಾತ್ರವೂ ಇರಕೂಡದು. ಹಣವನ್ನು ತಮ್ಮ ಕೈಯಿಂದ ಮುಟ್ಟುವುದಂತೂ ಇಲ್ಲವೇ ಇಲ್ಲ, – ಹತ್ತಿರ ಇಡಲೂ ಕೂಡ ಅನುಮತಿ ಕೊಡಕೂಡದು.
“ವೇದಾಂತವಾದಿ ಲಕ್ಷ್ಮೀನಾರಾಯಣ ಮಾರ್ವಾಡಿ ಇಲ್ಲಿಗೆ ಬಹುವಾಗಿ ಬರುತ್ತಿದ್ದ. ನನ್ನ ಹಾಸಿಗೆ ಸ್ವಲ್ಪ ಕೊಳಕಾಗಿರುವುದನ್ನು ನೋಡಿ ಹೇಳಿದ: ‘ನಿಮ್ಮ ಹೆಸರಿನಲ್ಲಿ ಹತ್ತು ಸಾವಿರ ರೂಪಾಯಿಯನ್ನು ಇಡುತ್ತೇನೆ. ಅದರಿಂದ ಬರುವ ಬಡ್ಡಿ ನಿಮ್ಮ ಸೇವೆಗಾಗಿ ಉಪಯೋಗವಾಗುತ್ತದೆ’ ಎಂದು. ಈ ಮಾತುಗಳು ಆತನ ಬಾಯಿಂದ ಹೊರಬಿದ್ದುದೇ ತಡ ನನ್ನನ್ನು ಯಾರೊ ದೊಣ್ಣೆಯಿಂದ ಹೊಡೆದಂತಾಗಿ ಮೂರ್ಛಿತನಾದೆ. ಮೈತಿಳಿದ ಮೇಲೆ ಆತನಿಗೆ ಹೇಳಿದೆ: ‘ನೀನು ಅಂಥ ಮಾತುಗಳನ್ನು ಮತ್ತೆ ಆಡುವುದಾದರೆ, ಮುಂದೆ ದಯವಿಟ್ಟು ಇಲ್ಲಿಗೆ ಬರಬೇಡ. ನಾನು ಹಣವನ್ನು ಮುಟ್ಟುವಂತೆಯೂ ಇಲ್ಲ; ಹತ್ತಿರ ಇಟ್ಟುಕೊಳ್ಳುವಂತೆಯೂ ಇಲ್ಲ’ ಎಂದು. ಆತ ಅತ್ಯಂತ ಬುದ್ಧಿವಂತ. ಹೇಳಿದ: ‘ನಿಮಗೂ ಇನ್ನೂ ಗ್ರಾಹ್ಯ ತ್ಯಾಜ್ಯ ಬುದ್ಧಿ ಇದೆ. ಹಾಗಾದರೆ ನಿಮಗೆ ಜ್ಞಾನ ಲಭ್ಯವಾಗಿಲ್ಲ’ ಎಂದು. ನಾನು ಹೇಳಿದೆ, ‘ನನ್ನದು ಇನ್ನೂ ಅಷ್ಟು ದೂರ ಮುಂದುವರಿದಿಲ್ಲ!’ ಅಂತ. (ಎಲ್ಲರೂ ನಗುತ್ತಾರೆ.) ಆತ ಅದನ್ನು ಬಳಿಕ ಹೃದಯನ ಹತ್ತಿರ ಇಡಲು ಇಚ್ಛಿಸಿದ. ನಾನು ಹೇಳಿದೆ, ‘ನೀನು ಹಾಗೆ ಮಾಡಿದರೆ ನಾನು ಹೃದಯನಿಗೆ ಹೇಳಬೇಕಾಗುತ್ತದೆ, ಈತನಿಗೆ ಕೊಡು, ಆತನಿಗೆ ಕೊಡು, ಎಂದು. ಆತ ಹಾಗೆ ಮಾಡದಿದ್ದರೆ ಕೋಪ ಬರುವ ಸಂಭವ. ಹಣ ಹತ್ತಿರವಿರುವುದೇ ಕೆಟ್ಟದ್ದು. ನೀನು ಹಾಗೆಲ್ಲ ಮಾಡಲು ಹೋಗಬೇಡ’. ಕನ್ನಡಿಯ ಹತ್ತಿರ ಸಾಮಾನು ಇದ್ದರೆ, ಅವು ಪ್ರತಿಬಿಂಬಿತವಾಗವೆ?”
ಮಾರ್ವಾಡಿ ಭಕ್ತ: “ಮಹಾರಾಜ್, ಗಂಗೆಯಲ್ಲಿ ಶರೀರವನ್ನು ತ್ಯಾಗಮಾಡಿದರೆ ತಾನೆ ಮುಕ್ತಿ?”
ಪರಮಹಂಸರು: “ಜ್ಞಾನ ದೊರೆತರೆ ಮುಕ್ತಿ. ಜ್ಞಾನಿ ಗಂಗಾಜಲದಲ್ಲಿಯೇ ಆಗಲಿ, ಹೆಣದ ಗುಂಡಿಯಲ್ಲಿಯೇ ಆಗಲಿ, ಮತ್ತೆಲ್ಲಿಯೇ ಆಗಲಿ ಸತ್ತರೂ ಆತನಿಗೆ ಮುಕ್ತಿ. ಆದರೂ ಅಜ್ಞಾನಿಗಳಿಗೆ ಮಾತ್ರ ಗಂಗಾದಡ.”
ಮಾರ್ವಾಡಿ ಭಕ್ತ: “ಮಹಾರಾಜ್, ಕಾಶಿಯಲ್ಲಿ ಮುಕ್ತಿ ದೊರಕಲು ಕಾರಣ ವೇನು?”
ಪರಮಹಂಸರು: “ಕಾಶಿಯಲ್ಲಿ ಮೃತ್ಯು ಉಂಟಾದರೆ ಶಿವ ಪ್ರತ್ಯಕ್ಷನಾಗುತ್ತಾನೆ. ಆಗ ಶಿವ ಹೇಳುತ್ತಾನೆ: ‘ಈ ನನ್ನ ಸಾಕಾರ ರೂಪು ಇದೆಯಲ್ಲ ಇದು ಮಾಯಿಕವಾದುದು; ಭಕ್ತರಿಗಾಗಿ ನಾನು ಈ ರೂಪವನ್ನು ಧರಿಸುತ್ತೇನೆ; ನೋಡಿಲ್ಲಿ, ನಾನು ಅಖಂಡ ಸಚ್ಚಿದಾನಂದದಲ್ಲಿ ಲಯವಾಗಿರುವುದು!’ ಬಳಿಕ ಆ ರೂಪು ಅಂತರ್ಧಾನವಾಗಿ ಬಿಡುತ್ತದೆ.
“ಪುರಾಣದ ದೃಷ್ಟಿಯಿಂದ ವ್ಯಕ್ತಿ ಚಂಡಾಲನಾದರೂ ಆತನ ಹೃದಯದಲ್ಲಿ ಭಗವದ್ಭಕ್ತಿ ಉಂಟಾದರೆ, ಆತನಿಗೆ ಮುಕ್ತಿ. ಅದರ ದೃಷ್ಟಿಯಿಂದ ಬರಿಯ ನಾಮೋಚ್ಚಾರಣೆಯಿಂದಲೇ ಮುಕ್ತಿ. ಯಾಗ, ಯಜ್ಞ, ತಂತ್ರ, ಮಂತ್ರ ಇವೆಲ್ಲ ಬೇಕಾಗಿಲ್ಲ.
“ಆದರೆ, ವೇದೋಕ್ತಿ ಪ್ರತ್ಯೇಕವಾದ್ದು. ಬ್ರಾಹ್ಮಣನಾಗದಿದ್ದರೆ ಮುಕ್ತಿ ದೊರಕದು, ಮತ್ತೆ, ಮಂತ್ರೋಚ್ಚಾರಣೆಯನ್ನು ಸರಿಯಾಗಿ ಮಾಡದೆ ಇದ್ದರೆ ಪೂಜೆ ಸಫಲವಾಗದು. ಯಾಗ, ಯಜ್ಞ, ಮಂತ್ರ, ತಂತ್ರ ಇವುಗಳನ್ನೆಲ್ಲ ವಿಧಿಗನುಸಾರವಾಗಿ ಮಾಡಬೇಕು.
“ಈ ಕಲಿಯುಗದಲ್ಲಿ ವೇದೋಕ್ತ ಕರ್ಮಗಳನ್ನು ಮಾಡಲು ಸಮಯವೆಲ್ಲಿ? ಅದಕ್ಕಾಗಿಯೆ ಈ ಯುಗಕ್ಕೆ ನಾರದೀಯ ಭಕ್ತಿ. ಕರ್ಮಯೋಗ ಬಹಳ ಕಠಿಣ. ನಿಷ್ಕಾಮ ಭಾವನೆಯಿಂದ ಮಾಡಲಾಗದಿದ್ದರೆ ಅದು ಬಂಧನಕ್ಕೆ ಕಾರಣವಾಗುತ್ತದೆ. ಜೊತೆಗೆ ಈ ಶರೀರ ಅನ್ನಗತಪ್ರಾಣ ಬೇರೆ. ವಿಧಿನಿಯಮಗಳಿಗನುಸಾರ ಕರ್ಮಮಾಡಲು ಸಮಯವಿಲ್ಲ. ದಶಮೂಲಿಕೆಗಳ ಕಷಾಯ ಕುಡಿಯಲು ಹೋದರೆ ರೋಗಿ ಈ ಕಡೆ ಯಮಪುರಿಗೆ ಟಿಕೆಟ್ಟು ತೆಗೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಈಗಿನವರಿಗೆ ಫೀವರ್ ಮಿಕ್ಸ್ಚರ್.
“ನಾರದೀಯ ಭಕ್ತಿ-ಭಗವಂತನ ನಾಮಗುಣಕೀರ್ತನೆ ಮಾಡುವುದು. ಕಲಿಯುಗಕ್ಕೆ ಸೂಕ್ತವಾದದ್ದು ಕರ್ಮಯೋಗವಲ್ಲ, ಭಕ್ತಿಯೋಗ. ಆಸಕ್ತಿ ಇರುವವರೆಗೆ ಸಂಸಾರದಲ್ಲಿ ಕೆಲಸಮಾಡಿ. ಆದರೆ ಅದರ ಜೊತೆಗೆ ಭಕ್ತಿಯೂ ಅನುರಾಗವೂ ಬೇಕು. ಆತನ ನಾಮಗುಣಕೀರ್ತನೆ ಮಾಡಿದರೆ ಕರ್ಮ ಕ್ಷಯವಾಗುತ್ತದೆ.
“ಚಿರಕಾಲವೂ ಕರ್ಮಗಳನ್ನು ಮಾಡುತ್ತಿರಬೇಕಾದ ಆವಶ್ಯಕತೆಯೇನೂ ಇರುವುದಿಲ್ಲ. ಆತನ ಅಡಿದಾವರೆಗಳಲ್ಲಿ ಶುದ್ಧಭಕ್ತಿ, ಪ್ರೇಮ ಬೆಳೆದಷ್ಟು ಕರ್ಮಗಳು ಕಡಮೆ ಕಡಮೆಯಾಗುತ್ತ ಬರುತ್ತವೆ. ಆತನನ್ನು ಪಡೆದುಕೊಂಡರೆ ಅವು ತಾವಾಗಿಯೇ ನಿಂತು ಹೋಗುತ್ತವೆ. ಸೊಸೆ ಗರ್ಭಿಣಿಯಾದರೆ, ಅತ್ತೆ ಆಕೆಯ ಕೆಲಸಗಳನ್ನು ಕಡಿಮೆಮಾಡುತ್ತಾಳೆ. ಹೆತ್ತನಂತರ ಆಕೆ ಯಾವ ಕೆಲಸವನ್ನೂ ಮಾಡಬೇಕಾಗಿರುವುದಿಲ್ಲ.”
ದಕ್ಷಿಣೇಶ್ವರ ಗ್ರಾಮದಿಂದ ಕೆಲವು ಯುವಕರು ಬಂದು ಪರಮಹಂಸರಿಗೆ ಪ್ರಣಾಮ ಮಾಡಿದರು. ಈಗ ಅಪರಾಹ್ನ ನಾಲ್ಕು. ಅವರು ಕೊಠಡಿಯಲ್ಲಿ ಒಂದು ಕಡೆ ಕುಳಿತು ಕೊಂಡು-ಪರಮಹಂಸರಿಗೆ ಪ್ರಶ್ನೆ ಹಾಕುತ್ತಿದ್ದಾರೆ.
ಒಬ್ಬ ಯುವಕ: “ಮಹಾಶಯರೆ, ಯಾವುದಕ್ಕೆ ಜ್ಞಾನ ಎಂದು ಹೇಳುತ್ತಾರೆ?”
ಪರಮಹಂಸರು: “ಭಗವಂತನೊಬ್ಬನೆ ಸತ್ ಉಳಿದುದೆಲ್ಲ ಅಸತ್ ಎಂದು ಅರಿತು ಕೊಳ್ಳುವುದಕ್ಕೆ ಜ್ಞಾನ ಎಂದು ಹೆಸರು. ಯಾವುದು ಸತ್ತೊ ಅದರ ಇನ್ನೊಂದು ಹೆಸರು ‘ಬ್ರಹ್ಮ’ ಎಂದು; ಅದರ ಮತ್ತೊಂದು ಹೆಸರು ‘ಕಾಲ’ ಎಂದು. ಅದಕ್ಕಾಗಿಯೆ ಜನರು ಹೇಳುತ್ತಾರೆ. ‘ಅಣ್ಣಂದಿರಾ! ಕಾಲಗರ್ಭದಲ್ಲಿ ಎಷ್ಟೊಂದು ಬಂದು ಹೋದುವು!’ ಎಂದು.
“ಯಾರು ಕಾಳಿಯೋ ಆಕೆ ಕಾಲನೊಡನೆ ರಮಿಸುತ್ತಾಳೆ. ಆಕೆಯೇ ಆದ್ಯಾಶಕ್ತಿ. ಕಾಲನಿಗೂ ಕಾಳಿಗೂ, ಬ್ರಹ್ಮನಿಗೂ ಶಕ್ತಿಗೂ ಅಭೇದ.
“ಆ ಸತ್ಸ್ವರೂಪ ಬ್ರಹ್ಮ ನಿತ್ಯ; ತ್ರಿಕಾಲದಲ್ಲಿಯೂ ಇದ್ದಾನೆ; ಆದಿ ಅಂತ್ಯರಹಿತ. ಆತನನ್ನು ಬಾಯಿಂದ ವರ್ಣಿಸಲು ಆಗುವುದಿಲ್ಲ. ಇಷ್ಟು ಮಾತ್ರ ಹೇಳಬಹುದು, – ಅವನು ಚೈತನ್ಯಸ್ವರೂಪ, ಆನಂದ ಸ್ವರೂಪ ಎಂದು.
“ಜಗತ್ತು ಅನಿತ್ಯ, ಆತ ನಿತ್ಯ. ಜಗತ್ತು ಇಂದ್ರಜಾಲ ಸ್ವರೂಪದ್ದು. ಐಂದ್ರಜಾಲಿಕನೆ ಸತ್ಯ. ಅವನ ಇಂದ್ರಜಾಲ ಅನಿತ್ಯ.”
ಯುವಕ: “ಜಗತ್ತು ಮಾಯೆ-ಇಂದ್ರಜಾಲ. ಈ ಮಾಯೆ ಏಕೆ ಹೋಗುವುದಿಲ್ಲ?”
ಪರಮಹಂಸರು: “ಸಂಸ್ಕಾರದೋಷದಿಂದ ಮಾಯೆ ಹೋಗುವುದಿಲ್ಲ. ಅನೇಕ ಜನ್ಮಗಳಿಂದ ಈ ಮಾಯಾಸಂಸಾರದಲ್ಲಿಯೆ ಇದ್ದು ಇದ್ದು ಮಾಯೆಯೇ ಸತ್ಯ ಎಂಬ ಬೋಧೆ ಬಂದುಬಿಟ್ಟಿದೆ.
“ಸಂಸ್ಕಾರಕ್ಕೆ ಎಷ್ಟು ಬಲ ಎಂಬುದನ್ನು ಕೇಳು. ಒಬ್ಬ ರಾಜಕುಮಾರ ತನ್ನ ಹಿಂದಿನ ಜನ್ಮದಲ್ಲಿ ಅಗಸನ ಮನೆಯಲ್ಲಿ ಜನ್ಮವೆತ್ತಿದ್ದ. ಈ ಜನ್ಮದಲ್ಲಿ ರಾಜಕುಮಾರನಾಗಿ ಹುಟ್ಟಿ ಆಟವಾಡುವಾಗ ತನ್ನ ಸಂಗಾತಿಗಳಿಗೆ ಹೇಳುತ್ತಾನೆ: ‘ಈ ಆಟಗಳನ್ನೆಲ್ಲ ಒಂದು ಕಡೆ ಕಟ್ಟಿಡಿ. ನಾನು ಬಗ್ಗಿ ನಿಂತುಕೊಳ್ಳುತ್ತೇನೆ. ನೀವು ನನ್ನ ಬೆನ್ನಿನ ಮೇಲೆ “ಉಸ್” “ಉಸ್” ಅಂತ ಬಟ್ಟೆ ಒಗೆಯಿರಿ’ ಎಂದು.
“ಇಲ್ಲಿಗೆ ಅನೇಕ ಯುವಕರು ಬರುತ್ತಾರೆ. ಆದರೆ ಎಲ್ಲೊ ಕೆಲವರು ಮಾತ್ರ ಭಗವಂತನಿಗಾಗಿ ವ್ಯಾಕುಲಪಡುತ್ತಾರೆ. ಅವರು ಒಳ್ಳೆಸಂಸ್ಕಾರ ಪಡೆದುಕೊಂಡು ಬಂದಿದ್ದಾರೆ. ವಿವಾಹ ಎಂಬ ಪದವನ್ನು ಕೇಳಿದರೇನೆ ಅವರಿಗೆ ಮೈಯೆಲ್ಲಾ ನಡುಗುತ್ತದೆ, ಅದರ ವಿಷಯವಾಗಿ ಯೋಚಿಸುವುದೇ ಇಲ್ಲ. ನಿರಂಜನ ಬಾಲ್ಯದಿಂದಲೆ ಹೇಳುತ್ತಿದ್ದಾನೆ, ವಿವಾಹವಾಗುವುದಿಲ್ಲ ಎಂದು.
“ಬಹಳ ದಿವಸ ಆಯಿತು – ಬಹುಶಃ ಇಪ್ಪತ್ತು ವರ್ಷದ ಹಿಂದೆ ಅಂತ ಕಾಣುತ್ತೆ – ಬರಾಹನಗರದಿಂದ ಇಬ್ಬರು ಯುವಕರು ಇಲ್ಲಿಗೆ ಬರುತ್ತಿದ್ದರು. ಒಬ್ಬನ ಹೆಸರು ಗೋವಿಂದಪಾಲ, ಇನ್ನೊಬ್ಬನ ಹೆಸರು ಗೋಪಾಲಸೇನ ಎಂದು. ಅವರಿಬ್ಬರಿಗೂ ಬಾಲ್ಯ ದಿಂದಲೆ ಭಗವಂತನ ಕಡೆ ಮನಸ್ಸು. ವಿವಾಹದ ಮಾತು ಎತ್ತಿದರೆಯೆ ಭಯದಿಂದ ಸುಮ್ಮನೆ ಕಂಪಿಸಲಾರಂಭಿಸುತ್ತಿದ್ದರು. ಗೋಪಾಲನಿಗೆ ಭಾವಸಮಾಧಿ ಬರುತ್ತಿತ್ತು. ಇಲಿ ಬೆಕ್ಕನ್ನು ನೋಡಿ ಹಿಮ್ಮೆಟ್ಟುವಂತೆ ವಿಷಯಾಸಕ್ತರನ್ನು ಕಂಡರೆ ಹೆದರಿ ಹಿಮ್ಮೆಟ್ಟುತ್ತಿದ್ದ. ದೇವೇಂದ್ರನಾಥ ಠಾಕೂರನ ಮಕ್ಕಳು ಇಲ್ಲಿನ ತೋಟದಲ್ಲಿ ಸುಮ್ಮನೆ ಸುತ್ತಾಡಲು ಬಂದಿದ್ದಾಗ, ಅವರೊಡನೆ ಮಾತುಕತೆಗಳಾಡುವ ಸಂಭವ ಬರಬಹುದೆಂದು ಭಾವಿಸಿ ಮಥುರಬಾಬುವಿನ ಬಂಗಲೆಯ ಒಂದು ಕೊಠಡಿಯಲ್ಲಿ ಬಾಗಿಲು ಹಾಕಿಕೊಂಡು ಇದ್ದುಬಿಟ್ಟ.
“ಗೋಪಾಲನಿಗೆ ಪಂಚವಟಿಯಲ್ಲಿ ಭಾವಸಮಾಧಿ ಬಂದಿತ್ತು. ಆತ ಆ ಅವಸ್ಥೆ ಯಲ್ಲಿಯೆ ನನ್ನ ಕಾಲುಗಳನ್ನು ಹಿಡಿದು ಹೇಳಿದ: ‘ನಾನು ಹೋಗಿ ಬರುತ್ತೇನೆ. ನಾನು ಈ ಜಗತ್ತಿನಲ್ಲಿ ಇನ್ನು ಮೇಲೆ ಜೀವ ಹಿಡಿದುಕೊಂಡು ಇರಲಾರೆ-ನೀವು ಬರಬೇಕಾದರೆ ಇನ್ನೂ ಬಹಳಕಾಲ ಬೇಕು – ನಾನು ಹೋಗಿ ಬರುತ್ತೇನೆ’ ಎಂದು. ನಾನೂ ಭಾವಾವಸ್ಥೆಯಲ್ಲಿಯೆ ಹೇಳಿದೆ: ‘ಮತ್ತೆ ಬಾ’ ಎಂದು. ಆತ ಹೇಳಿದ: ‘ಒಳ್ಳೇದು, ಆಗಲಿ’ ಅಂತ. ಕೆಲವು ದಿವಸಗಳ ನಂತರ ಗೋವಿಂದ ಬಂದು ನನ್ನನ್ನು ನೋಡಿದ. ನಾನು ಕೇಳಿದೆ: ‘ಗೋಪಾಲನೆಲ್ಲಿ?’ ಎಂದು. ಆತ ಹೇಳಿದ: ‘ಗೋಪಾಲ (ಶರೀರತ್ಯಾಗ ಮಾಡಿ) ಹೊರಟೇ ಹೋದ’ ಅಂತ.
‘ಉಳಿದ ಯುವಕರ ದೃಷ್ಟಿ ಯಾವ ಕಡೆ? ದುಡ್ಡು ಸಂಪಾದನೆ ಹೇಗೆ ಮಾಡೋದು- ಮನೆ-ಸಾರೋಟು-ಪೋಷಾಕು, ಬಳಿಕ ವಿವಾಹ – ಇದಕ್ಕಾಗಿ ಹಗಲು ಇರುಳು ಚಿಂತಿಸೋದು. ಮದುವೆಮಾಡಿಕೊಳ್ಳಬೇಕಾಗಿ ಬಂದಾಗ, ಮೊದಲೇ ಹುಡುಗಿಯ ವಿಶಿಷ್ಟವನ್ನೆಲ್ಲ ಕೇಳಿ ತಿಳಿದುಕೊಳ್ಳಬೇಕು! ಜೊತೆಗೆ ಹುಡುಗಿಯು ಸುಂದರಿಯೊ ಅಲ್ಲವೊ ಎಂಬುದನ್ನು ತಾವೇ ಖುದ್ದಾಗಿ ಕಣ್ಣಿನಿಂದ ನೋಡಿಕೊಳ್ಳಬೇಕು!
“ಒಬ್ಬ ನನ್ನನ್ನು ಬಹಳವಾಗಿ ನಿಂದಿಸುತ್ತಾನೆ. ಆತನ ಖಂಡನೆ ‘ನಾನು ಯುವಕ ಪ್ರೇಮಿ’ ಎಂದು. ಯಾರಿಗೆ ಸುಸಂಸ್ಕಾರವಿದೆಯೊ, ಶುದ್ಧ ಆತ್ಮರೊ, ಭಗವಂತನಿಗಾಗಿ ವ್ಯಾಕುಲರಾಗಿದ್ದಾರೊ, ಹಣ ಕಾಸು ಶರೀರಸುಖ ಇವುಗಳ ಕಡೆ ಮನಸ್ಸಿಲ್ಲವೋ ಅಂಥವರನ್ನು ನಾನು ಪ್ರೀತಿಸುತ್ತೇನೆ.
“ಯಾರು ವಿವಾಹವಾಗಿದ್ದಾರೊ ಅವರು ಭಗವದ್ಭಕ್ತರಾಗಿದ್ದರೆ ಅವರು ಸಂಸಾರದಲ್ಲಿ ಆಸಕ್ತರಾಗಿ ಇರುವುದಿಲ್ಲ. ಹೀರಾನಂದ ವಿವಾಹವಾಗಿದ್ದಾನೆ. ಆಗಿದ್ದರೇನು? ಆತ ಅದರಲ್ಲಿ ವಿಶೇಷವಾಗಿ ಏನು ಆಸಕ್ತನಾಗುವುದಿಲ್ಲ.”
ಹೀರಾನಂದ ಸಿಂಧೂದೇಶದ ವಾಸಿ. ಬಿ.ಎ., ಪಾಸುಮಾಡಿದ್ದಾನೆ. ಆತ ಶ್ರೀರಾಮಕೃಷ್ಣರನ್ನು ಕಲ್ಕತ್ತೆಯಲ್ಲಿ ಒಮ್ಮೆ ಸಂಧಿಸಿದ. ಅಂದಿನಿಂದ ಆತ ಪರಮಹಂಸರ ಭಕ್ತನಾಗಿದ್ದಾನೆ.
ಮಣಿಲಾಲ, ಶಿವಪುರದ ಬ್ರಾಹ್ಮಭಕ್ತ, ಮಾರ್ವಾಡಿ ಭಕ್ತರು ಮತ್ತು ಯುವಕರು ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡರು.
ಸಾಯಂಕಾಲವಾಗಿದೆ. ದಕ್ಷಿಣದ ವರಾಂಡದಲ್ಲಿ ಮತ್ತು ಪಶ್ಚಿಮದ ಗುಂಡು ವರಾಂಡದಲ್ಲಿ ದೀಪ ಹಚ್ಚಿದೆ. ಪರಮಹಂಸರ ಕೊಠಡಿಗೆ ಧೂಪಹಾಕಿ ದೀಪವನ್ನು ಹಚ್ಚಿದೆ. ಪರಮಹಂಸರು ತಮ್ಮ ಸ್ವಸ್ಥಾನದಲ್ಲಿ ಕುಳಿತು ದೇವಿಯ ಹೆಸರನ್ನು ಜಪಿಸುತ್ತ ಆಕೆಯ ಧ್ಯಾನದಲ್ಲೆ ತೊಡಗಿದ್ದಾರೆ. ಧ್ಯಾನ ಮುಗಿದ ನಂತರ ಪರಮಹಂಸರು ಭಕ್ತರೊಡನೆ ಮಾತುಕತೆಗಳನ್ನಾಡುತ್ತಿದ್ದಾರೆ. ದೇವಾಲಯಗಳಲ್ಲಿ ಆರತಿ ಆರಂಭವಾಗಲು ಇನ್ನೂ ಸ್ವಲ್ಪ ಸಮಯಬೇಕು.
ಪರಮಹಂಸರು ಮಾಸ್ಟರಿಗೆ: “ಯಾರು ದಿನ ರಾತ್ರೆ ಆತನ ಚಿಂತನೆಯಲ್ಲಿ ಮಗ್ನರಾಗಿರುವರೊ ಅವರಿಗೆ ಸಂಧ್ಯಾದಿಗಳ ಆವಶ್ಯಕತೆಯೇನಿದೆ?
ಎಲ್ಲಿವರೆಗೂ ನಾನು ಕಾಳಿಯ ನೆನೆಯುತಿರುವೆನೊ ನಿತ್ಯವೂ
ಅಲ್ಲಿವರೆಗೂ ಜಪತಪಾದಿಯ ಕಟ್ಟುಕಟ್ಟಲೆ ಏತಕೆ?
ದಾನಧರ್ಮವೊ, ನಿಯಮವ್ರತವೊ–ಎಲ್ಲವೂ ನನಗೇತಕೆ?
ಬ್ರಹ್ಮಮಯಿಯಾ ಪಾದಪದ್ಮವೆ ಸರ್ವವೂ ಎನುವಾತಗೆ!
“ಸಂಧ್ಯೆ ಗಾಯತ್ರಿಯಲ್ಲಿ ಲಯವಾಗುತ್ತದೆ. ಗಾಯತ್ರಿ ಓಂಕಾರದಲ್ಲಿ ಲಯ ವಾಗುತ್ತದೆ. ಓಂಕಾರವನ್ನು ಒಮ್ಮೆ ಪಠಿಸುವುದರಿಂದಲೆ ಸಮಾಧಿ ಉಂಟಾದರೆ ಆಗ ಅದು ಪೂರ್ಣ ಹಣ್ಣು.
“ಹೃಷೀಕೇಶದ ಒಬ್ಬ ಸಾಧುವಿಗೆ ಬೆಳಗಾಗೆದ್ದು ಒಂದು ದೊಡ್ಡ ಜಲಪಾತದ ಹತ್ತಿರ ಹೋಗಿ ನಿಂತುಕೊಳ್ಳುವ ಅಭ್ಯಾಸ. ಇಡೀ ದಿವಸವೆಲ್ಲ ಅದನ್ನು ನೋಡುತ್ತ ಭಗವಂತನಿಗೆ ಹೇಳುತ್ತಿದ್ದ: ‘ಆಹ! ಬಹಳ ಚೆನ್ನಾಗಿವೆ ನಿನ್ನ ಸೃಷ್ಟಿ! ಬಹಳ ಮನೋಹರವಾಗಿದೆ ನಿನ್ನ ಸೃಷ್ಟಿ! ಎಷ್ಟೊಂದು ಆಶ್ಚರ್ಯಕರವಾಗಿದೆ ನಿನ್ನ ಸೃಷ್ಟಿ!’ ಎಂದು. ಆತ ಬೇರೆ ಯಾವ ಜಪವನ್ನು ಮಾಡುತ್ತಿರಲಿಲ್ಲ. ರಾತ್ರಿಯಾದ ನಂತರ ಕುಟೀರಕ್ಕೆ ಹಿಂದಿರುಗಿಬಿಡುತ್ತಿದ್ದ.
“ಭಗವಂತ ನಿರಾಕಾರನೆ ಅಥವಾ ಸಾಕಾರನೆ ಎಂಬ ವಿಷಯಗಳನ್ನು ತಲೆಗೆ ಹಚ್ಚಿ ಕೊಳ್ಳುವ ಆವಶ್ಯಕತೆ ತಾನೆ ಏನಿದೆ? ನಿರ್ಜನ ಪ್ರದೇಶದಲ್ಲಿ ಏಕಾಂತವಾಗಿ ವ್ಯಾಕುಲ ಹೃದಯದಿಂದ ಅಳುತ್ತ ಅಳುತ್ತ ಅವನಿಗೆ ‘ಹೇ ಭಗವಂತನೆ! ನೀನು ಯಾವ ರೀತಿಯಾಗಿ ಇರುವೆಯೊ ಅದನ್ನು ನನಗೆ ತೋರಿಸು’ ಎಂದು ಪ್ರಾರ್ಥಿಸಿದರೆ ಮುಗಿಯಿತು.
“ಭಗವಂತ ಒಳಗೂ ಹೊರಗೂ ಇದ್ದಾನೆ. ಆಂತರ್ಯದಲ್ಲಿ ಆತನೆ ಇದ್ದಾನೆ. ಅದಕ್ಕಾಗಿಯೆ ವೇದ ಹೇಳುತ್ತದೆ, ‘ತತ್ತ್ವಮಸಿ’ –ಆತನೇ ನೀನು ಎಂದು. ಹೊರಗೂ ಆತನೆ. ಮಾಯೆಯಿಂದ ನಾನಾ ರೂಪುಗಳಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಆದರೆ ವಸ್ತುತಃ ಆತನೆ ಇದ್ದಾನೆ. ಅದಕ್ಕಾಗಿಯೆ ಆತನ ಎಲ್ಲಾ ನಾಮರೂಪಗಳನ್ನು ವರ್ಣಿಸುವುದಕ್ಕೆ ಮುನ್ನ ಹೇಳಬೇಕು, ‘ಓಂ ತತ್ ಸತ್’ ಎಂದು.
“ದರ್ಶನ ಮಾಡಿದರೆ ಒಂದು ವಿಧ, ಶಾಸ್ತ್ರ ಓದಿದರೆ ಇನ್ನೊಂದು ವಿಧ. ಶಾಸ್ತ್ರದಿಂದ ಸೂಚನೆ ಮಾತ್ರ ದೊರೆಯುತ್ತದೆ. ಅದಕ್ಕಾಗಿಯೆ ಅನೇಕಶಾಸ್ತ್ರಗಳನ್ನು ಓದುವುದರಿಂದ ಯಾವ ಪ್ರಯೋಜನವೂ ದೊರಕದು. ಅದಕ್ಕೆ ಬದಲು ನಿರ್ಜನಪ್ರದೇಶ ದಲ್ಲಿ ಆತನನ್ನು ಕರೆಯುವುದು ಮೇಲು.
“ಗೀತೆಯನ್ನು ಪೂರ್ಣವಾಗಿ ಓದದೆ ಇದ್ದರೂ ಸರಿಯೆ, ಹತ್ತು ಸಲ ‘ಗೀತಾ’ ‘ಗೀತಾ’ ಎಂದು ಉಚ್ಚರಿಸಿದರೆ ಅದು ಏನಾಗುವುದೊ ಅದೇ ಗೀತೆಯ ಸಾರ. ಅಂದರೆ ‘ತ್ಯಾಗಿ’ ಎಂದು. ‘ಹೇ ಜೀವ, ಎಲ್ಲವನ್ನೂ ತ್ಯಜಿಸಿ ಭಗವಂತನನ್ನು ಆರಾಧಿಸು’, ಎಂದು. ಇದೇ ಗೀತೆಯ ಸಾರ ವಿಷಯ.”
ಪರಮಹಂಸರು ಭಗವತಿ ಕಾಳಿಯ ಆರತಿಯನ್ನು ನೋಡುತ್ತಿದ್ದ ಹಾಗೆ ಭಾವಾವಿಷ್ಟ ರಾಗಿಬಿಟ್ಟಿದ್ದಾರೆ. ಭಗವತಿಗೆ ಸಾಷ್ಟಾಂಗ ಪ್ರಣಾಮ ಮಾಡಲು ಅವರಿಗೆ ಆಗುತ್ತಿಲ್ಲ. ಬಹಳ ಎಚ್ಚರಿಕೆಯಿಂದ ಕಾಲಿಡುತ್ತ ಭಕ್ತರೊಡನೆ ತಮ್ಮ ಕೊಠಡಿಗೆ ಹಿಂದಿರುಗಿ ಬಂದು ತಮ್ಮ ಸ್ವಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ. ಈಗಲೂ ಭಾವಾವಿಷ್ಟರಾಗಿಯೆ ಇದ್ದಾರೆ. ಆ ಅವಸ್ಥೆಯಲ್ಲಿಯೇ ಭಕ್ತರೊಡನೆ ಮಾತುಕತೆಗಳನ್ನಾಡುತ್ತಿದ್ದಾರೆ.
ಮುಖರ್ಜಿಯ ಸಂಬಂಧಿ ಹರಿಗೆ ಸುಮಾರು ಇಪ್ಪತ್ತು ವಯಸ್ಸು. ಮದುವೆ ಆಗಿದೆ. ಸದ್ಯದಲ್ಲಿ ಮುಖರ್ಜಿಯ ಮನೆಯಲ್ಲಿಯೆ ಇದ್ದಾನೆ. ಕೆಲಸ ಹುಡುಕುತ್ತಿದ್ದಾನೆ. ಪರಮಹಂಸರನ್ನು ವಿಶೇಷವಾದ ಶ್ರದ್ಧಾಭಕ್ತಿಯಿಂದ ನೋಡುತ್ತಿದ್ದಾನೆ.
ಪರಮಹಂಸರು ಭಾವಾವಿಷ್ಟರಾಗಿಯೆ ಹರಿಗೆ: “ನೀನು ನಿನ್ನ ತಾಯಿಯ ಅನುಮತಿ ಪಡೆದು ಮಂತ್ರೋಪದೇಶ ತೆಗೆದುಕೊ. (ಪ್ರಿಯ ಮುಖರ್ಜಿಗೆ ಹರಿಯ ಸಂಬಂಧವಾಗಿ) ಈತನಿಗೆ ವಾಗ್ದಾನಮಾಡಿಯೂ ಕೊಡಲಾಗಲಿಲ್ಲ. ಮಂತ್ರವನ್ನು ಕೊಡುತ್ತಿಲ್ಲ. ಈಗ ನೀನು ಯಾವ ಜಪಧ್ಯಾನವನ್ನು ಮಾಡುತ್ತಿದ್ದೀಯೊ ಅದನ್ನೇ ಮುಂದುವರಿಸು.”
ಪ್ರಿಯ ಮುಖರ್ಜಿ: “ಆಗಲಿ, ಹಾಗೆಯೆ ಮಾಡುತ್ತೇನೆ.”
ಶ್ರೀರಾಮಕೃಷ್ಣರು: “ನಾನು ಈ ಅವಸ್ಥೆಯಲ್ಲಿ ಹೇಳುತ್ತಿದ್ದೇನೆ – ಮಾತಿನಲ್ಲಿ ವಿಶ್ವಾಸವಿಡು, ನೋಡು ಇಲ್ಲಿ ಠಕ್ಕು ಮೋಸ ಏನೂ ಇಲ್ಲ. ನಾನು ಭಾವದಲ್ಲಿ ಹೇಳಿದ್ದೇನೆ, ‘ಹೇ ತಾಯೆ! ಯಾರು ಇಲ್ಲಿಗೆ ಆಂತರಿಕ ಶ್ರದ್ಧಾಭಕ್ತಿಯಿಂದ ಬರುವರೊ ಅವರು ಮುಕ್ತರಾಗಲಿ’ ಎಂದು.”
ಸಿಂಥಿಯ ಕವಿರಾಜ ಮಹೇಂದ್ರ ವರಾಂಡದಲ್ಲಿ ಕುಳಿತಿದ್ದಾನೆ. ರಾಮಲಾಲ ಹಾಜರಾ ಮೊದಲಾದವರೊಡನೆ ಮಾತುಕತೆಗಳನ್ನಾಡುತ್ತಿದ್ದಾನೆ. ಪರಮಹಂಸರು ತಮ್ಮ ಆಸನದಲ್ಲಿ ಕುಳಿತು ಕೂಗುತ್ತಿದ್ದಾರೆ, “ಮಹೇಂದ್ರ! ಮಹೇಂದ್ರ!” ಎಂದು. ಮಾಸ್ಟರ್ ಒಡನೆಯೆ ಹೋಗಿ ಕವಿರಾಜನನ್ನು ಕರೆದುಕೊಂಡು ಬಂದ.
ಪರಮಹಂಸರು ಕವಿರಾಜನಿಗೆ: “ಕುಳಿತುಕೊ–ಒಂದು ಸ್ವಲ್ಪ ಕೇಳು.”
ಕವಿರಾಜ ಒಂದು ಸ್ವಲ್ಪ ಪೆಚ್ಚಾದವನಂತೆ ಕುಳಿತುಕೊಂಡು ಪರಮಹಂಸರ ಅಮೃತೋಪಮ ಮಾತುಗಳನ್ನು ಕೇಳಲಾರಂಭಿಸಿದ.
ಪರಮಹಂಸರು ಭಕ್ತರಿಗೆ: “ಆತನಿಗೆ ಹಲವಾರು ವಿಧದಿಂದ ಸೇವೆ ಸಲ್ಲಿಸಬಹುದು. ಪ್ರೇಮಿಕ ಭಕ್ತ ಆತನೊಡನೆ ವಿವಿಧ ರೂಪದಲ್ಲಿ ಆನಂದಪಡುತ್ತಾನೆ. ಕೆಲವು ವೇಳೆ ಯೋಚಿಸುತ್ತಾನೆ, ‘ನೀನು ತಾವರೆ, ನಾನು ದುಂಬಿ’ ಎಂದು. ಇನ್ನು ಕೆಲವು ವೇಳೆ ಭಾವಿಸುತ್ತಾನೆ, ‘ನೀನು ಸಚ್ಚಿದಾನಂದ ಸಾಗರ, ನಾನು ಅದರಲ್ಲಿ ಮೀನು’ ಎಂದು. ಮತ್ತೆ ಕೆಲವು ವೇಳೆ ಯೋಚಿಸುತ್ತಾನೆ, ‘ನಾನು ನಿನ್ನ ನರ್ತಕಿ’ ಎಂದು. ಆತನ ಮುಂದೆ ಹಾಡುತ್ತಾನೆ, ನರ್ತಿಸುತ್ತಾನೆ. ಕೆಲವು ವೇಳೆ ಸಖೀಭಾವ-ದಾಸೀಭಾವ. ಕೆಲವು ವೇಳೆ ವಾತ್ಸಲ್ಯಭಾವ-ಯಶೋದೆಯಂತೆ. ಕೆಲವು ವೇಳೆ ಸತೀಭಾವ-ಮಧುರಭಾವ- ಗೋಪಿಯರಂತೆ.
“ಬಲರಾಮ ಕೆಲವು ವೇಳೆ ಸಖನ ಭಾವದಲ್ಲಿ ಇರುತ್ತಿದ್ದ. ಕೆಲವು ವೇಳೆ ಯೋಚಿಸುತ್ತಿದ್ದ, ‘ನಾನು ಕೃಷ್ಣನ ಛತ್ರಿ ಮತ್ತು ಪೀಠ ಆಗಿದ್ದೇನೆ’ ಎಂದು. ವಿವಿಧ ರೀತಿಯಿಂದ ಆತನ ಸೇವೆ ಮಾಡುತ್ತಿದ್ದ.”
ಪರಮಹಂಸರು ಪ್ರೇಮಿಕ ಭಕ್ತನ ವರ್ಣನೆಮಾಡುತ್ತ ತಮ್ಮ ಸ್ವಂತ ಅವಸ್ಥೆಯ ಸಂಬಂಧವಾಗಿ ಸೂಚನೆಯನ್ನು ಕೊಡುತ್ತಿದ್ದಾರೇನು?
ಬಳಿಕ ಅವರು ಚೈತನ್ಯದೇವನ ಮೂರು ಅವಸ್ಥೆಗಳನ್ನು ವರ್ಣಿಸಿದರು.
ಪರಮಹಂಸರು: “ಚೈತನ್ಯದೇವನಿಗೆ ಮೂರು ಅವಸ್ಥೆಗಳು. ಅಂತರ್ದಶಾವಸ್ಥೆಯಲ್ಲಿ ಸಮಾಧಿಸ್ಥನಾಗುತ್ತಿದ್ದ-ಬಾಹ್ಯಜ್ಞಾನಶೂನ್ಯನಾಗುತ್ತಿದ್ದ. ಅರ್ಧಬಾಹ್ಯದಶೆಯಲ್ಲಿ ಭಾವಾವಿಷ್ಟ ನಾಗಿ ನರ್ತಿಸಲು ಸಾಧ್ಯವಾಗುತ್ತಿತ್ತೆ ವಿನಾ ಮಾತುಕತೆಗಳನ್ನಾಡುತ್ತಿರಲಿಲ್ಲ. ಬಾಹ್ಯದಶೆಯಲ್ಲಿ ಸಂಕೀರ್ತನೆ ಮಾಡುತ್ತಿದ್ದ.
(ಭಕ್ತರಿಗೆ) “ನೀವು ಈ ಮಾತುಕತೆಗಳನ್ನೆಲ್ಲ ಕೇಳುತ್ತಿದ್ದೀರಿ. ಅರಗಿಸಿಕೊಳ್ಳಲು ಪ್ರಯತ್ನಿಸಿ. ಪ್ರಾಪಂಚಿಕರು ಸಾಧುಗಳ ಹತ್ತಿರಕ್ಕೆ ಬಂದಾಗ ತಮ್ಮ ಪ್ರಾಪಂಚಿಕ ಭಾವನೆ ವಿಷಯಚಿಂತನೆ ಇವನ್ನೆಲ್ಲ ತಮ್ಮ ಹೃದಯದಲ್ಲಿ ಬಚ್ಚಿಟ್ಟು ಕುಳಿತಿರುತ್ತಾರೆ. ಅಲ್ಲಿಂದ ಹೊರಟುಹೋದ ನಂತರ ಅವನ್ನೆಲ್ಲ ಹೊರಕ್ಕೆ ತರುತ್ತಾರೆ. ಪಾರಿವಾಳ ಬಟಾಣಿಯನ್ನು ತಿನ್ನುತ್ತದೆ. ನೋಡುವುದಕ್ಕೆ ಅದು ಅವನ್ನೆಲ್ಲ ಅರಗಿಸಿಕೊಂಡುಬಿಟ್ಟಂತೆ ಕಾಣುತ್ತದೆ. ಆದರೆ ಅದು ತನ್ನ ಗಂಟಲಿನೊಳಗೇ ಅದನ್ನೆಲ್ಲ ಇಟ್ಟುಕೊಂಡಿರುತ್ತದೆ. ಅಲ್ಲಿ ಬಟಾಣಿ ಗಿಜಿಗಿಜಿ ಅನ್ನುತ್ತಿರುತ್ತದೆ.
“ಸಂಧ್ಯಾ ಸಮಯದಲ್ಲಿ ಎಲ್ಲಾ ಕೆಲಸಗಳನ್ನು ಬಿಟ್ಟು ಆತನನ್ನು ಕರೆಯಬೇಕು. ಕತ್ತಲೆ ಆತನ ನೆನಪು ತರುತ್ತದೆ. ಆಗ, ‘ಈಗತಾನೆ ಎಲ್ಲಾ ಕಾಣಿಸಿಕೊಳ್ಳುತ್ತಿತ್ತು; ಈ ರೀತಿಯಾಗಿ ಮಾಡಿಬಿಟ್ಟವನು ಯಾರು!’ ಎಂಬ ಭಾವನೆ ಬರುತ್ತದೆ. ನೋಡಿ, ಮುಸಲ್ಮಾನರು ಎಲ್ಲಾ ಕೆಲಸಗಳನ್ನು ಬಿಟ್ಟು ಸಾಯಂಕಾಲ ನಮಾಜು ಮಾಡುತ್ತಾರೆ.”
ಪ್ರಿಯ ಮುಖರ್ಜಿ: “ಹೌದು, ನಿಜ, ಜಪ ಮಾಡುವುದು ಒಳ್ಳೆಯದೇನು?”
ಶ್ರೀರಾಮಕೃಷ್ಣರು: “ಹೌದು, ಜಪದಿಂದ ಆತನನ್ನು ಪಡೆಯಬಹುದು. ನಿರ್ಜನ ಪ್ರದೇಶದಲ್ಲಿ ಏಕಾಂತವಾಗಿ ಆತನ ನಾಮವನ್ನು ಜಪಮಾಡುತ್ತ ಜಪಮಾಡುತ್ತ ಇದ್ದರೆ ಆತನ ಕೃಪೆ ದೊರೆಯುತ್ತದೆ. ಬಳಿಕ ಆತನ ದರ್ಶನ. ಉದಾಹರಣೆಗಾಗಿ, ಒಂದು ದೊಡ್ಡ ಮರದ ದಿಮ್ಮಿಯನ್ನು ನೀರಿನಲ್ಲಿ ಮುಳುಗಿಸಿ ಅದನ್ನು ಸರಪಣಿಯಿಂದ ದಡಕ್ಕೆ ಕಟ್ಟಿರುವುದನ್ನು ತೆಗೆದುಕೊಳ್ಳಿ. ಆ ಸರಪಣಿಯ ಕೊಂಡಿಯಾದ ಮೇಲೆ ಕೊಂಡಿಯನ್ನು ಹಿಡಿದು ಮುಂದುವರಿದರೆ ಕೊನೆಗೆ ಹೋಗಿ ಆ ಮರದ ದಿಮ್ಮಿಯನ್ನು ಮುಟ್ಟಲು ಆಗುವಂತೆ ಇದು.
“ಪೂಜೆಗಿಂತ ಮೇಲಾದುದು ಜಪ, ಜಪಕ್ಕಿಂತ ಮೇಲಾದುದು ಧ್ಯಾನ, ಧ್ಯಾನಕ್ಕಿಂತ ಮೇಲಾದುದು ಭಾವ, ಭಾವಕ್ಕಿಂತ ಮೇಲಾದುದು ಮಹಾಭಾವ, ಪ್ರೇಮ. ಚೈತನ್ಯ ದೇವನಿಗೆ ಪ್ರೇಮ ಉಂಟಾಗಿತ್ತು. ಪ್ರೇಮ ಉಂಟಾದರೆ ಭಗವಂತನನ್ನು ಕಟ್ಟಿ ಇಡಲು ಒಂದು ಹಗ್ಗ ದೊರಕಿದಂತೆಯೆ.”
ಹಾಜರಾ ಬಂದು ಕುಳಿತಿದ್ದಾನೆ:
ಪರಮಹಂಸರು ಹಾಜರಾನಿಗೆ: “ಭಗವಂತನಲ್ಲಿ ಪ್ರೇಮ ಉಂಟಾದರೆ, ಅದಕ್ಕೆ ರಾಗಾಭಕ್ತಿ ಎಂದು ಹೆಸರು. ವೈಧೀಭಕ್ತಿ ಬರುವುದಕ್ಕೆ ಎಷ್ಟು ಸಮಯ ಬೇಕೋ ಹೋಗುವುದಕ್ಕೂ, ಅಷ್ಟೇ ಸಮಯ. ರಾಗಾಭಕ್ತಿ ಸ್ವಯಂಭೂ ಲಿಂಗದ ಹಾಗೆ. ಅದರ ಮೂಲವನ್ನು ಹುಡುಕಿ ತೆಗೆಯಲಾಗುವುದಿಲ್ಲ. ಅದರ ಮೂಲ ಕಾಶಿಯವರೆಗೂ ಹಬ್ಬಿದೆ. ರಾಗಾಭಕ್ತಿ ಅವತಾರ ಪುರುಷರಿಗೆ ಮತ್ತು ಅವರ ಸಾಂಗೋಪಾಂಗಿಗಳಿಗೆ ಮಾತ್ರ ಉಂಟಾಗುತ್ತದೆ.”
ಹಾಜರಾ: “ಆಹ!”
ಪರಮಹಂಸರು: “ನೀನು ಒಂದು ದಿವಸ ಜಪಮಾಡುತ್ತಿದ್ದಾಗ ನಾನು ಆ ದೇವದಾರು ತೋಪಿನಿಂದ ಬಂದು ಭಗವತಿಗೆ, ‘ತಾಯೆ! ಇದೆಂಥ ಹೀನಬುದ್ಧಿ, ಮಾಲೆ ಹಿಡಿದು ಜಪಿಸುತ್ತಿದ್ದಾನೆ! ಇಲ್ಲಿಗೆ ಯಾರು ಬರುತ್ತಾರೊ ಅವರಿಗೆ ಒಡನೆಯೆ ಜಾಗ್ರತಿ ಉಂಟಾಗಿ ಬಿಡುತ್ತದೆ. ಜಪಮಾಲೆ ಹಿಡಿದು ಜಪವನ್ನು ಅಷ್ಟೊಂದಾಗಿ ಏನು ಮಾಡಬೇಕಾಗಿರೋದಿಲ್ಲವಲ್ಲ!’ ಎಂದು ಹೇಳಿದೆ. ನೀನು ಕಲ್ಕತ್ತಕ್ಕೆ ಹೋಗಿ ನೋಡು, ಸಹಸ್ರ ಸಹಸ್ರ ಜನ ಜಪಮಾಲೆ ತಿರುಗಿಸುವುದನ್ನು – ವೇಶ್ಯೆಯರೂ ಕೂಡ!
(ಮಾಸ್ಟರಿಗೆ): “ನೀನು ಗಾಡಿ ಮಾಡಿಕೊಂಡು ನಾರಾಯಣನನ್ನು ಕರೆದುಕೊಂಡು ಬಾ. (ಮುಖರ್ಜಿಯ ಕಡೆ ತಿರುಗಿ) ಈತನಿಗೆ ನಾನು ನಾರಾಯಣನ ವಿಷಯವನ್ನು ಹೇಳಿದ್ದೇನೆ. ಆತ ಬಂದಂತೆ ಏನನ್ನಾದರೂ ತಿನ್ನಿಸುತ್ತೇನೆ. ಅಂಥವರಿಗೆ ತಿನ್ನಿಸುವುದರಲ್ಲಿ ಬಹಳ ಅರ್ಥವಿದೆ.”
೪ನೇ ಅಕ್ಟೋಬರ್ ೧೮೮೪
ಶ್ರೀರಾಮಕೃಷ್ಣ ಪರಮಹಂಸರು ಕೇಶವಸೇನನ ಹಿರಿಯಣ್ಣ ನವೀನಸೇನನ ಕಲ್ಕತ್ತದ ಮನೆಗೆ ಬಂದಿದ್ದಾರೆ. ಕಳೆದ ಗುರುವಾರ ಕೇಶವಸೇನನ ತಾಯಿ ಪರಮಹಂಸರಿಗೆ ಆಹ್ವಾನವಿತ್ತು ಅಲ್ಲಿಗೆ ಬರಬೇಕೆಂದು ಬಹುವಾಗಿ ಹೇಳಿಹೋಗಿದ್ದಳು.
ಹೊರಗಿನ ಕೊಠಡಿಯ ಮೇಲಿರುವ ಕೊಠಡಿಗೆ ಹೋಗಿ ಪರಮಹಂಸರು ಕುಳಿತಿದ್ದಾರೆ. ಅವರೊಡನೆ ಬಾಬುರಾಮ, ಕಿಶೋರ ಮತ್ತು ಒಬ್ಬಿಬ್ಬರು ಭಕ್ತರು ಬಂದಿದ್ದಾರೆ. ಕೇಶವಸೇನನ ಅಣ್ಣನ ಮಕ್ಕಳು ನಂದಲಾಲ ಮೊದಲಾದವರು ಕೇಶವಸೇನನ ತಾಯಿ ಮತ್ತು ಆಕೆಯ ಬಂಧುಗಳು ಪರಮಹಂಸರಿಗೆ ಕೈಂಕರ್ಯ ಮಾಡುತ್ತಿದ್ದಾರೆ. ಆ ಕೊಠಡಿಯಲ್ಲಿ ಸಂಕೀರ್ತನೆ ಆರಂಭವಾಯಿತು. ಅಕ್ಕಪಕ್ಕದಿಂದ ಅನೇಕ ಹೆಂಗಸರು ಬಂದಿದ್ದಾರೆ. ಮಾಸ್ಟರೂ ಅಲ್ಲಿಗೆ ಬಂದಿದ್ದಾನೆ. ಆತ ಕೆಳಗಿನ ಅಂತಸ್ತಿನ ಕೊಠಡಿ ಯಲ್ಲಿಯೆ ಕುಳಿತು ಕೀರ್ತನೆ ಕೇಳುತ್ತಿದ್ದಾನೆ.
ಪರಮಹಂಸರು ಬ್ರಾಹ್ಮಭಕ್ತರಿಗೆ: “ಸಂಸಾರ ಅನಿತ್ಯ; ಸರ್ವದಾ ಮೃತ್ಯುವನ್ನು ಸ್ಮರಿಸಿ ಕೊಳ್ಳುವುದು ಆವಶ್ಯಕ.”
ಪರಮಹಂಸರು ಹಾಡುತ್ತಿದ್ದಾರೆ:
ಎತ್ತ ಹೋದರು ಸುತ್ತಲೆಲ್ಲೂ
ಯಾರಿಗಾರೂ ಇಲ್ಲ ಜಗದೊಳು
ಎಂಬುದನು ನೀ ನೆನಪಿಡು.
ಮಾಯೆಯೊಡ್ಡಿದ ಬಲೆಯೊಳಿದ್ದರು
ತಾಯಪಾದದಿ ಮನವಿಡು.
ಒಂದು ದಿನವೋ, ಎರಡು ದಿನವೋ,
‘ಸ್ವಾಮಿ, ಬುದ್ಧೀ’ –ಎಂದು ಜನಗಳು
ಗೌರವದಿ ಬಳಿ ಸುಳಿವರು!
ಮೃತ್ಯು ಬಂದೆಳೆವಾಗ ನಿನ್ನನು
ಎಲ್ಲರೂ ಹಿಂದುಳಿವರು!
ಯಾವ ಪ್ರಿಯತಮೆಯೊಲವಿಗಾಗಿಯೆ
ಹಗಲು ಇರುಳೂ ಜೀವ ತೇದೆಯೊ,
ಬಾರಳವಳೂ ಜೊತೆಯೊಳು!
ನೀನು ಸಾಯಲು, ನಿನ್ನ ಶವವನು
ಅಶುಭವೆಂದೇ ತಿಳಿವಳು!
ಪರಮಹಂಸರು ಭಕ್ತರಿಗೆ ಹೇಳುತ್ತಿದ್ದಾರೆ: “ಆಳಕ್ಕೆ ಮುಳುಗಿ, ಮೇಲೆಯೆ ತೇಲಿದರೆ ಏನಾದೀತು? ಎಲ್ಲವನ್ನೂ ತ್ಯಜಿಸಿ ಕೆಲವು ದಿವಸಗಳ ಮಟ್ಟಿಗೆ ನಿರ್ಜನಪ್ರದೇಶದಲ್ಲಿದ್ದು ಹದಿನಾರಾಣೆ ಮನಸ್ಸಿಟ್ಟು ಆತನನ್ನು ಕರೆಯಿರಿ.”
ಪರಮಹಂಸರು ಹಾಡುತ್ತಿದ್ದಾರೆ:
ಮುಳುಗು ಮುಳುಗು ಮನವೇ–
ಹಿರಿಯೊಲವಿನ ಕಡಲಾಳಕೆ
ಮುಳುಗು ಮುಳುಗು ಒಳಗೇ,
ತಲಾತಲ ಪಾತಾಲಕೆ ಮುಳುಗಲು
ಮುತ್ತು ರತುನಗಳ ನೀ ತರುವೆ
ಹುಡುಕು ಹುಡುಕು ನಿನ್ನೆದೆಯೊಳಗನು
ಬೃಂದಾವನವಿದೆ ಅಲ್ಲಿ!
ಗೋಪೀಜನ ಮನಮೋಹನವಲ್ಲಭ
ನಿತ್ಯ ಲೀಲೆಯಲಿ ಇಹನಲ್ಲಿ!
ಅರಿವಿನ ಹಣತೆಯ ಹಚ್ಚಿಕೊಳ್ಳೋ ಒಳಗೆ,
ನಿರಂತರವು ಅದು ಬೆಳಗುತಿರಲಿ
ಘಟ್ಟಿನೆಲದ ಮೇಲಾರೊ ದೋಣಿಯನು
ಹುಟ್ಟುಹಾಕುತ ಇಂತು ನಡೆಸುವವರು?
‘ಅವನೇ ನಿನ್ನ ಗುರು’ ಎನುವ ಕುಬೀರ.
ಆತನ ಪಾದದಿ ಮನವನು ನಿಲಿಸೊ.
ಪರಮಹಂಸರು ಬ್ರಾಹ್ಮಭಕ್ತರಿಗೆ, ‘ನೀನೆನ್ನ ಸರ್ವಸ್ವ’ ಎಂಬ ಹಾಡನ್ನು ಹಾಡುವಂತೆ ಹೇಳಿದರು.
ಬ್ರಾಹ್ಮಭಕ್ತರು ಹಾಡುತ್ತಿದ್ದಾರೆ:
ನೀನೆನ್ನ ಸರ್ವಸ್ವ, ನನ್ನ ಜೀವನ ಜೀವ, ನನ್ನೊಳಗಿನೊಳಗು
ನಿನ್ನ ಹೊರತೆನಗಾರು ನನ್ನವರು ಇಲ್ಲವೋ ಮೂಲೋಕದೊಳಗೂ!
ಶಾಂತಿ, ಸುಖ, ಆಶ್ರಯ, ಮತ್ತೆ ಸಂಪದೈಶ್ವರ್ಯ ನೀನೆ.
ಜ್ಞಾನಾದಿ ಬುದ್ಧಿಬಲ ನೀನೆ.
ಮನೆ ನೀನೆ, ಮಠ ನೀನೆ, ಆತ್ಮೀಯ ಬಂಧು ಪರಿವಾರ ನೀನೆ.
ನನ್ನಿಂದು ಮುಂದುಗಳು ನೀನೆ, ಸ್ವರ್ಗಮೋಕ್ಷವು ನೀನೆ.
ವೇದಾದಿ ಶಾಸ್ತ್ರಗಳು ನೀನೆ, ಪರಮ ಗುರು ನೀನೆ.
ಅನಂತ ಸುಖದ ನೆಲೆವೀಡು ನೀನೆ.
ಪಥ ನೀನೆ, ಗುರಿ ನೀನೆ, ತಾಯ್ತಂದೆಗಳು ನೀನೆ.
ಸೃಷ್ಟಿಕರ್ತನು ನೀನೆ, ಪ್ರಳಯರೂಪಿಯು ನೀನೆ,
ಜೀವನದ ಜಲಧಿಯಲಿ ನನ್ನ ದೋಣಿಯ ನಡೆಪ
ಅಂಬಿಗನು ನೀನೆ!
ಈಗ ಪರಮಹಂಸರು ತಾವೇ ಹಾಡಲಾರಂಭಿಸಿದ್ದಾರೆ:
ಅಂದು –
ನಂದಗೋಕುಲದಲ್ಲಿ ಗೋಪಾಲನಾದಂದು,
ಶ್ರೀ ಯಶೋದೆಯು ನಿನ್ನ ‘ಓ ನನ್ನ ಮುದ್ದು ಮಣಿ’
ಎಂದು ಮುದ್ದಿಸಿದಂದು,
ನೀನಾವರೂಪದಲಿ ನರ್ತಿಸಿದೆಯೋ ಅಂಥ
ರೂಪವನು ಮತ್ತೊಮ್ಮೆ ಧರಿಸು ಕಾಳಿ!
ಕರವಾಳವನು ಬಿಸುಟು ಕರದಿ ಕೊಳಲನು ಧರಿಸು!
ರುಂಡಮಾಲೆಯನೆಸೆದು ವನಮಾಲೆಯನು ಧರಿಸು!
ಬಲರಾಮನೇ ಶಿವನೆಂದು ತಿಳಿದು ನರ್ತಿಸು ಮತ್ತೆ
ನನ್ನ ಮುಂದೆ!
ಆ ಕೊಳಲ ನುಡಿಸಮ್ಮ –
ಹಿಂದೆ ಬೃಂದಾವನದಿ, ಗೋಪಿಯರ ಮರುಳುಗೊಳಿಸಿದ ಮಧುರ
ವೇಣುವನು ನುಡಿಸು!
ಗೋವುಗಳ ಮೈಮರೆಯಿಸಿದ ಮೋಹನದ ಮುರುಳಿಯ ನುಡಿಸು!
ಜುಳಜುಳನೆ ಹರಿವ ಯಮನೆಯ ಹೊನಲ
ಹೆಪ್ಪುಗಟ್ಟಿಸಿದಂಥ ಗಾರುಡಿಯ ಕೊಳಲ ನುಡಿಸು!
ನಡುಹಗಲ ಬಿರುಬಿಸಿಲೊಳರಸಿಬಂದ ಯಶೋದೆ,
“ಬಾ ನನ್ನ ಗೋಪಾಲ ಹಾಲಕೆನೆಬೆಣ್ಣೆಗಳ ತಂದಿರುವೆ ನಿನಗಾಗಿ”
ಎಂದು ಬಳಿಯಲಿ ಬಂದು ಕುರುಳ ನೇವರಿಸುವಳು.
ಕೆದರಿರುವ ತಲೆನವಿರ ಬಾಚಿ ಸಿಂಗರಿಸುವಳು!
ಅಂದು, ನೀ ತ್ರಿಭಂಗಿಯಲಿ ನಿಂತು,
ಶ್ರೀಧಾಮನೊಡನೆಂತು
ಕಾಲಗೆಜ್ಜೆಯ ಝಣಿರುಝಣಿರೆನುವಂತೆ ನರ್ತಿಸಿದೆಯೋ, ಅಂತು
ಮತ್ತೊಮ್ಮೆ ಕುಣಿಯಮ್ಮ, ನಿನ್ನ ನೂಪುರ ರವಕೆ
ಭಕ್ತಗೋಪಿಯರೆದೆಯು ಪುಳಕಗೊಳುವಂತೆ!
ಈ ಹಾಡನ್ನು ಕೇಳಿ ಕೇಶವಸೇನ ಇದೇ ಮಟ್ಟಿನ ಬೇರೊಂದು ಹಾಡನ್ನು ರಚಿಸಿದ್ದಾನೆ. ಬ್ರಾಹ್ಮಭಕ್ತರು ತಾಳಮೇಳ ವಾದ್ಯಗಳೊಡನೆ ಆ ಹಾಡನ್ನು ಹಾಡಲು ಆರಂಭಿಸಿದ್ದಾರೆ:
ಮಾನವ ಸಂತಾನದೆಡೆಗೆ ಎನಿತು ಕರುಣೆ ನಿನ್ನದು!
ಅದ ನೆನೆಯಲು ಕಂಬನಿಯೇ ಕೋಡಿಯೊಡೆದು ಹರಿವುದು!
ಹುಟ್ಟಿದಂದಿನಿಂದ ನಾನು ನಿನ್ನಾಣೆಯ ಮೀರಿದೆ,
ಆದರು ನೀ ಅಕ್ಕರೆಯಲಿ ತಾಯ್ತನವನೆ ತೋರಿದೆ!
ಮಧುರವಚನದಿಂದ ಮನವ ಸಂತೈಸುತ ನಲಿಸಿದೆ,
ಇದ ನೆನೆದರೆ ಕಂಬನಿಯೇ ಕೋಡಿಯೊಡೆದು ಹರಿದಿದೆ!
ನಿನ್ನೊಲವಿನ ಹೊರೆಯ ಹೊತ್ತು ನಾನು ಬಹಳ ಬಳಲಿದೆ
ಇನ್ನು ಮುಂದೆ ಹೊರಲಾರದೆ ಎದೆಯು ನರಳಿ ಕೊರಗಿದೆ.
ನಿನ್ನೊಲವಿನ ಕರಸ್ಪರ್ಶದಿ ಈ ನೋವನು ನೀಗಿಸು;
ನಿನ್ನ ಪಾದಪದ್ಮದಲ್ಲಿ ನನ್ನನಿರಿಸಿ ಪಾಲಿಸು!
ಬ್ರಾಹ್ಮಭಕ್ತರು ಈಗ ಇನ್ನೊಂದು ಹಾಡನ್ನು ಹಾಡಲು ಆರಂಭಿಸಿದ್ದಾರೆ:
ನನ್ನ ಹೃದಯದ ದಿವ್ಯ ಸೂತ್ರಧಾರಿಣಿ ನೀನು;
ತೊಡೆಯ ತೊಟ್ಟಿಲೊಳಿಟ್ಟು ಪಾಲಿಸಿರುವೆ!
ನಾನಪಾತ್ರನು ತಾಯಿ, ನಿನ್ನ ಒಲವಿನ ಕೃಪೆಗೆ;
ಆದರೂ ಎನಿತೊಂದು ಕರುಣೆ ನಿನಗೆ!
ನನ್ನ ಮೇಲಿನಿತೊಂದು ವ್ಯಾಮೋಹವಿದೆ ನಿನಗೆ!
ನೇವರಿಸಿ ಕೈಹಿಡಿದು ನಡೆಸುತಿರುವೆ!
ಮೃದುನುಡಿಗಳಮೃತವನು ಕಿವಿಗಳಿಗೆ ಕರೆಯುತ್ತ
ದಿವ್ಯ ಮಧುವನು ನನಗೆ ಕುಡಿಸುತಿರುವೆ!
ದೋಷವರಸದ ಹಿರಿಯ ತಾಯ್ತನದ ಮೂರ್ತಿ ನೀ;
ಕಷ್ಟಸಂಕಟದಿಂದ ರಕ್ಷಿಸಿರುವೆ!
ನಾನು ನಿನ್ನವನೆಂಬ, ನೀನು ನನ್ನವಳೆಂಬ–
ಹಿರಿಯ ತತ್ತ್ವವನೀಗ ಅರಿಯುತಿರುವೆ!
ನಾನಿನ್ನು ಆ ತಾಯ, ಹಾಲುಂಡು ಪುಷ್ಟಿಯಲಿ,
ಅವಳ ಆಣತಿಯಂತೆ ಋಜು ಪಥದಲಿ,
ನಡೆನಡೆದು ಭಕ್ತಿಯಲಿ, “ಜಯ್ ಬ್ರಹ್ಮಮಯಿ” ಎಂದು
ಹಾಡಿ ಕುಣಿಯುವೆನಿನ್ನು ದಿನದಿನದಲಿ!
ಪರಮಹಂಸರು ಈಗ ಹರಿನಾಮವನ್ನು ಮತ್ತು ಗೌರಾಂಗನ ನಾಮವನ್ನು ಹಾಡುತ್ತ ಬ್ರಾಹ್ಮಭಕ್ತರೊಡನೆ ನರ್ತಿಸುತ್ತಿದ್ದಾರೆ.
೫ನೆ ಅಕ್ಟೋಬರ್ ೧೮೮೪, ಆಶ್ವೀಜ ಕೃಷ್ಣ ಪಾಡ್ಯಮಿ, ಭಾನುವಾರ
ಶ್ರೀರಾಮಕೃಷ್ಣರು ಮಧ್ಯಾಹ್ನದ ಊಟವಾದ ಮೇಲೆ ತಮ್ಮ ಕೊಠಡಿಯಲ್ಲಿ ಭಕ್ತರೊಡನೆ ಕುಳಿತುಕೊಂಡಿದ್ದಾರೆ. ಅವರ ಹತ್ತಿರವೆ ನೆಲದ ಮೇಲೆ ಮಾಸ್ಟರ್ ಕುಳಿತಿದ್ದಾನೆ. ಹಾಜರಾ, ಹಿರಿಯ ಕಾಳಿ, ಬಾಬುರಾಮ, ರಾಮಲಾಲ, ಮುಖರ್ಜಿಯ ಬಂಧು ಹರಿ ಇವರೆ ಮೊದಲಾದವರಲ್ಲಿ ಕೆಲವರು ನಿಂತಿದ್ದಾರೆ, ಕೆಲವರು ಕುಳಿತಿದ್ದಾರೆ. ನಿನ್ನೆ ಪರಮಹಂಸರು ಕೇಶವಸೇನನ ತಾಯಿಯ ಇಚ್ಛೆಯಂತೆ ಅವರ ಕಲ್ಕತ್ತದ ಮನೆಗೆ ಹೋಗಿ ಬಹಳವಾಗಿ ಹಾಡಿ ಆಕೆಯನ್ನು ತೃಪ್ತಿಪಡಿಸಿದ್ದರು.
ಪರಮಹಂಸರು ಹಾಜರಾನಿಗೆ: “ನಾನು ಕೇಶವಸೇನನ ಆ ಮನೆಯಲ್ಲಿ–ನವೀನ ಸೇನನ ಮನೆಯಲ್ಲಿ–ನಿನ್ನೆ ಚೆನ್ನಾಗಿ ಊಟಮಾಡಿದೆ; ಒಳ್ಳೆ ಭಕ್ತಿಯಿಂದ ಬಡಿಸಿದರು.”
ಹಾಜರಾ ಮಹಾಶಯ ಬಹಳ ಕಾಲದಿಂದ ಪರಮಹಂಸರೊಡನೆಯೆ ಇದ್ದಾನೆ. “ನಾನು ಒಬ್ಬ ಜ್ಞಾನಿ” ಎಂಬ ಅಹಂಕಾರ ಆತನಿಗೆ ಉಂಟು. ಪರಮಹಂಸರನ್ನು ಜನರೆದುರಿಗೆ ನಿಂದಿಸುವ ಅಭ್ಯಾಸ ಆತನಿಗೊಂದು ಸ್ವಲ್ಪ ಇದೆ. ಪರಮಹಂಸರ ಕೊಠಡಿಯ ವರಾಂಡದಲ್ಲಿ ಒಮ್ಮೊಮ್ಮೆ ಏಕಾಗ್ರಚಿತ್ತದಿಂದ ಜಪ ಮಾಡುತ್ತಾನೆ. ಚೈತನ್ಯದೇವ “ಆಧುನಿಕ ಅವತಾರ” ಎಂಬುದಾಗಿ ಆತನನ್ನು ಒಂದು ವಿಧವಾದ ನಿಕೃಷ್ಟ ದೃಷ್ಟಿಯಿಂದ ನೋಡುತ್ತಾನೆ. ಆತ ಹೇಳುತ್ತಾನೆ, “ಭಗವಂತ ಶುದ್ಧ ಭಕ್ತಿಯೊಂದನ್ನೇ ಅಲ್ಲ, ಐಶ್ವರ್ಯವನ್ನೂ ಕೊಡುತ್ತಾನೆ; ಆತನಿಗೆ ಐಶ್ವರ್ಯದ ಅಭಾವವೇನಿಲ್ಲ. ಆತನನ್ನು ಪಡೆದುಕೊಂಡರೆ ಅಷ್ಟಸಿದ್ಧಿ ಮೊದಲಾದವೂ ದೊರೆಯುತ್ತವೆ” ಎಂದು. ಮನೆ ಕಟ್ಟಲು ಒಂದು ಸ್ವಲ್ಪ ಸಾಲ ಮಾಡಿರುವನು-ಬಹುಶಃ ಒಂದು ಸಾವಿರ. ಅದನ್ನು ತೀರಿಸುವುದೆಂತು ಎಂದು ಹಂಬಲಿಸುತ್ತಿದ್ದಾನೆ.
ಹಿರಿಯ ಕಾಳಿಗೆ ಒಂದು ಆಫೀಸಿನಲ್ಲಿ ಒಂದು ಕೆಲಸವಿದೆ. ಸಾಮಾನ್ಯ ತಲಬು ಬರುತ್ತದೆ. ಮನೆಯಲ್ಲಿ ಹೆಂಡತಿ ಮಕ್ಕಳು ಮರಿ ಇದ್ದಾರೆ. ಆತನಿಗೆ ಪರಮಹಂಸರ ಮೇಲೆ ವಿಶೇಷವಾದ ಭಕ್ತಿ. ಆಗಾಗ ಮತ್ತೆ ಕೆಲವು ವೇಳೆ ಆಫೀಸಿಗೆ ಹೋಗದೆಯೂ ಪರಮಹಂಸರ ದರ್ಶನಮಾಡಿ ಹೋಗುತ್ತಾನೆ.
ಹಿರಿಯ ಕಾಳಿ, ಹಾಜರಾನಿಗೆ: “ನೀನು ಒರೆಗಲ್ಲಿನೋಪಾದಿಯಲ್ಲಿ ಯಾರದು ಅಪ್ಪಟ ಚಿನ್ನ ಯಾರದು ಬೆರಕೆ ಚಿನ್ನ ಎಂದು ಜನರನ್ನು ಪರೀಕ್ಷಿಸುತ್ತಾ ಕಾಲಕಳೆಯುತ್ತಿದ್ದೀಯೆ. ಪರರನ್ನು ನೀನು ಅಷ್ಟೊಂದು ಏಕೆ ನಿಂದಿಸುತ್ತಿದ್ದೀಯೆ?”
ಹಾಜರಾ: “ಹೇಳಬೇಕೆನಿಸುವುದನ್ನೆಲ್ಲ ನಾನು ಇವರ (ಶ್ರೀರಾಮಕೃಷ್ಣರ) ಎದುರಿಗೆ ತಾನೆ ಹೇಳುತ್ತಿರುವುದು?”
ಶ್ರೀರಾಮಕೃಷ್ಣರು: “ಅದೇನೊ ದಿಟ.”
ಹಾಜರಾ ತತ್ತ್ವಜ್ಞಾನ ಎಂಬುದು ಏನು ಎಂಬುದನ್ನು ವಿವರಿಸಲು ಆರಂಭಿಸಿದ್ದಾನೆ.
ಹಾಜರಾ: “ತತ್ತ್ವಜ್ಞಾನವೆಂದರೆ-ಚತುರ್ವಿಂಶತಿ ತತ್ತ್ವಗಳಿವೆಯಲ್ಲ, ಅದನ್ನು ತಿಳಿದುಕೊಳ್ಳುವುದು.”
ಒಬ್ಬ ಭಕ್ತ: “ಚತುರ್ವಿಂಶತಿ ತತ್ತ್ವಗಳು ಯಾವು ಯಾವುವು?”
ಹಾಜರಾ: “ಪಂಚಭೂತಗಳು, ಆರು ರಿಪುಗಳು, ಐದು ಜ್ಞಾನೇಂದ್ರಿಯಗಳು – ಐದು ಕರ್ಮೇಂದ್ರಿಯಗಳು ಇವೇ ಮೊದಲಾದುವು.”
ಮಾಸ್ಟರ್ ನಗುತ್ತ ಪರಮಹಂಸರಿಗೆ: “ಈತ ‘ಆರು ರಿಪುಗಳು ಚತುರ್ವಿಂಶತಿ ತತ್ತ್ವಗಳ ಅಂಗ’ ಎಂದು ಹೇಳುತ್ತಾನೆ !”
ಪರಮಹಂಸರು ನಗುತ್ತ: “ನೋಡಿ! ನೀವೇ ನೋಡಿ ಅವನ ತತ್ತ್ವಜ್ಞಾನದ ವ್ಯಾಖ್ಯಾನವನ್ನು! ‘ತತ್ತ್ವಜ್ಞಾನ’ ಅಂದರೆ ‘ಆತ್ಮಜ್ಞಾನ!’ ‘ತತ್’ ಅಂದರೆ ಪರಮಾತ್ಮ ‘ತ್ವಮ್’ ಅಂದರೆ ಜೀವಾತ್ಮ. ಜೀವಾತ್ಮ ಪರಮಾತ್ಮ ಒಂದೇ ಎಂಬ ಜ್ಞಾನೋದಯವಾದರೆ ಆಗ ತತ್ತ್ವಜ್ಞಾನ ದೊರೆಯುತ್ತದೆ.”
ಕೆಲವು ನಿಮಿಷಗಳಾದ ನಂತರ ಹಾಜರಾ ಕೊಠಡಿಯಿಂದ ಎದ್ದು ಹೋಗಿ ವರಾಂಡದಲ್ಲಿ ಕುಳಿತುಕೊಂಡ.
ಪರಮಹಂಸರು ಮಾಸ್ಟರ್ ಮೊದಲಾದವರಿಗೆ: “ಆತ ಸುಮ್ಮನೆ ತರ್ಕಮಾಡುತ್ತಾನೆ, ಈ ಕ್ಷಣ ಆತನ ಅರಿವಿಗೆ ಬಂದರೂ ಮರುಕ್ಷಣ ಆತ ಎಂದಿನ ಮೂರ್ತಿಯೆ!
“ದೊಡ್ಡ ಮೀನು ದಾರವನ್ನು ಜೋರಾಗಿ ಎಳೆಯುತ್ತಿರುವುದನ್ನು ನೋಡಿ ಗಾಳ ಹಾಕಿರುವವ ದಾರವನ್ನು ಸಡಿಲಬಿಡುತ್ತಾನೆ. ಇಲ್ಲದಿದ್ದರೆ ಅದು ದಾರವನ್ನು ಕಿತ್ತುಬಿಡುತ್ತದೆ. ಮತ್ತು ಗಾಳ ಹಿಡಿದಿರುವವನನ್ನು ನೀರಿಗೆ ಎಳೆದುಬಿಡುತ್ತದೆ. ಅದಕ್ಕಾಗಿಯೆ ನಾನು ಆತನೊಡನೆ ವಿಶೇಷವಾಗಿ ಏನೂ ಮಾತನಾಡಲು ಹೋಗುವುದಿಲ್ಲ.
(ಮಾಸ್ಟರಿಗೆ) “ಹಾಜರಾ ಹೇಳುತ್ತಾನೆ, ‘ಬ್ರಾಹ್ಮಣ ಶರೀರವಲ್ಲದೆ ಇದ್ದರೆ ಮುಕ್ತಿ ದೊರಕದು’ ಅಂತ. ನಾನು ಹೇಳಿದೆ: ‘ಅದು ಹೇಗೆ! ಭಕ್ತಿಯ ಮೂಲಕವೂ ಮುಕ್ತಿ ದೊರೆಯುತ್ತದೆ. ಶಬರಿ ಒಬ್ಬ ಬೇಡನ ಮಗಳು. ಆಕೆ, ರೂಹಿದಾಸ ಮತ್ತು ಇನ್ನೂ ಕೆಲವರು ಶೂದ್ರರೆ. ಇವರಿಗೆಲ್ಲ ಭಕ್ತಿಯ ಮೂಲಕವೆ ಮುಕ್ತಿ ದೊರಕಿದೆ’ ಎಂದು. ಆದರೂ ಹಾಜರಾ ಎಂದಿನಂತೆಯೇ ಹೇಳುತ್ತಾನೆ.
“ಆತ ಧ್ರುವನನ್ನೇನೋ ಒಪ್ಪಿಕೊಳ್ಳುತ್ತಾನೆ, ಆದರೆ ಪ್ರಹ್ಲಾದನ ಸ್ಥಾನವನ್ನು ಆತನಿಗೆ ಕೊಡುತ್ತಿಲ್ಲ. ಒಮ್ಮೆ ಲಾಟು, ‘ಎಳೆಯ ವಯಸ್ಸಿನಿಂದಲೆ ಆತನದು ಬಹಳ ವಿಶೇಷವಾದ ಅನುರಾಗ’ ಎಂದು ಹೇಳಿದ. ಆಗ ಅವನು ಬಾಯಿ ಮುಚ್ಚಿದ.
“ನಾನು ಹೇಳುತ್ತೇನೆ, ‘ಕಾಮನಾಶೂನ್ಯಭಕ್ತಿ ಅಹೇತುಕಭಕ್ತಿ-ಇದಕ್ಕಿಂತ ಮೇಲಾದದ್ದು ಯಾವುದೂ ಇಲ್ಲ.’ ಆತ ಅದನ್ನು ಖಂಡಿಸುತ್ತಾನೆ. ಆತನಿಗೆ ನಾನು ಹೇಳಿದೆ, ‘ಯಾರು ಯಾಚಿಸುತ್ತಾರೊ ಅಂಥವರು ಬಂದರೆ ಶ್ರೀಮಂತನ ಮನಸ್ಸು ಕಿರಿಕಿರಿ ಅನ್ನುತ್ತದೆ. ವಿರಕ್ತನಾಗಿ ಹೇಳುತ್ತಾನೆ, “ನೋಡಪ್ಪ ಬಂದ!” ಎಂದು. ಬಂದ ನಂತರ ಒಂದು ವಿಧವಾದ ಸ್ವರದಿಂದ ಹೇಳುತ್ತಾನೆ, “ಕೂತುಕೊ!” ಅಂತ-ಬಹಳ ರೇಗಿಕೊಂಡವ ನಂತೆ. ಇಂಥವರನ್ನು ಆತ ತನ್ನ ಗಾಡಿಯಲ್ಲಿ ಕೂರಿಸಿಕೊಂಡು ಒಟ್ಟಿಗೆ ಪ್ರಯಾಣ ಮಾಡುವುದಿಲ್ಲ.’
“ಹಾಜರಾ ಹೇಳುತ್ತಾನೆ, ‘ಆತ ಈ ಧನಿಕರಂತಲ್ಲ; ಆತನಿಗೆ ಐಶ್ವರ್ಯದ ಅಭಾವ ವಿದೆಯೇನು ಜನರಿಗೆ ಕೊಡಲು ಕಷ್ಟವಾಗುವುದಕ್ಕೆ? ಅವನು ಮತ್ತೆ ಹೇಳುತ್ತಾನೆ, ‘ಆಕಾಶದಿಂದ ಮಳೆ ಬೀಳುವಾಗ ಗಂಗಾನದಿ ಮೊದಲಾದ ದೊಡ್ಡ ದೊಡ್ಡ ನದಿಗಳು, ದೊಡ್ಡ ದೊಡ್ಡ ಸರೋವರಗಳು ನೀರಿನಿಂದ ತುಂಬಿ ಹರಿಯುತ್ತವೆ. ಚಿಕ್ಕ ಪುಟ್ಟ ಕೆರೆ ಕಟ್ಟೆಗಳೂ ತುಂಬಿಹೋಗುತ್ತವೆ. ಆತ ಕೃಪೆಮಾಡಿದರೆ ಜ್ಞಾನ, ಭಕ್ತಿ ಇವನ್ನೂ ಕೊಡುತ್ತಾನೆ- ಜೊತೆಗೆ ಧನಕನಕಾದಿಗಳನ್ನೂ ಕೊಡುತ್ತಾನೆ’ ಎಂದು.
(ಭಕ್ತರಿಗೆ) “ಇದಕ್ಕೆ ಮಲಿನ ಭಕ್ತಿ ಎಂದು ಹೆಸರು. ಶುದ್ಧ ಭಕ್ತಿಯಲ್ಲಿ ಯಾವ ಕಾಮನೆಗೂ ಆಶ್ರಯವಿಲ್ಲ. ನೀವು ಇಲ್ಲಿಗೆ ಏನನ್ನಾದರೂ ಯಾಚಿಸಲು ಬರುತ್ತಿಲ್ಲ. ಆದರೆ ನನ್ನನ್ನು ನೋಡಲು, ನನ್ನ ಮಾತುಕತೆ ಕೇಳಲು ನಿಮಗೆ ಇಚ್ಛೆ. ನನ್ನ ಮನಸ್ಸೂ ಕೂಡ ನಿಮ್ಮ ಕಡೆಯೇ ಹರಿದು ಹೋಗುತ್ತಿರುತ್ತದೆ. ಹೇಗಿದ್ದಾರೆ? – ಏಕೆ ಬರಲಿಲ್ಲ? – ಇವುಗಳ ವಿಷಯವಾಗೆಲ್ಲ ಯೋಚಿಸುತ್ತೇನೆ.
“ಏನೂ ಬೇಕಾಗಿಲ್ಲ, ಆದರೂ ಪ್ರೀತಿಸುವುದು – ಇದಕ್ಕೆ ಅಹೇತುಕ ಭಕ್ತಿ, ಶುದ್ಧ ಭಕ್ತಿ ಎಂದು ಹೆಸರು. ಪ್ರಹ್ಲಾದನಿಗೆ ಇದು ಇತ್ತು. ರಾಜ್ಯ ಬೇಕಾಗಿರಲಿಲ್ಲ. ಐಶ್ವರ್ಯ ಬೇಕಾಗಿರಲಿಲ್ಲ, ಕೇವಲ ‘ಹರಿ’ ಮಾತ್ರ ಆತನಿಗೆ ಬೇಕಾಗಿತ್ತು.”
ಮಾಸ್ಟರ್: “ಹಾಜರಾ ಮಹಾಶಯ ತುಂಬಾ ಮಾತಾಳಿ. ವಟ ವಟ ಅನ್ನುತ್ತಾನೆ, ಮೌನಿಯಾದ ಹೊರತು ಆತನಿಗೆ ಏನೂ ದೊರಕದು.”
ಶ್ರೀರಾಮಕೃಷ್ಣರು: “ನನ್ನ ಸಹವಾಸಮಾಡಿ ಒಮ್ಮೊಮ್ಮೆ ಸೌಮ್ಯನಾಗುತ್ತಾನೆ. ಎಂಥ ಪಿಶಾಚಿ ಆತ! ಮತ್ತೆ ತರ್ಕಮಾಡುತ್ತಾನೆ. ಅಹಂಕಾರ ತೊಲಗಿಹೋಗುವುದು ಬಹಳ ಕಠಿಣ. ಅಶ್ವತ್ಥವೃಕ್ಷವನ್ನು ಇಂದು ಕಡಿದು ಹಾಕಿದರೆ ಮಾರನೆ ದಿವಸವೆ ಅದು ಚಿಗುರುತ್ತದೆ. ಬೇರು ಇರುವವರೆಗೆ ಅದು ಮತ್ತೆ ಬೆಳೆಯುತ್ತದೆ.
“ನಾನು ಹಾಜರಾನಿಗೆ ಹೇಳುತ್ತೇನೆ, ‘ಯಾರನ್ನೂ ನಿಂದಿಸಬೇಡ’ ಎಂದು. ಭಗವಂತನೆ ಈ ಎಲ್ಲಾ ರೂಪುಗಳನ್ನು ಧರಿಸಿದ್ದಾನೆ. ದುಷ್ಟರನ್ನೂ ಪೂಜಿಸಬಹುದು. ನೀನು ಕುಮಾರಿ ಪೂಜೆ ನೋಡಿಲ್ಲವೆ? ಉಟ್ಟ ಬಟ್ಟೆ ಕೆಡಿಸಿಕೊಳ್ಳುವ, ಮೂಗಿನಿಂದ ಗೊಣ್ಣೆ ಸುರಿಸಿಕೊಳ್ಳುವ ಬಾಲೆಯನ್ನು ಏಕೆ ಪೂಜಿಸುತ್ತಾರೆ? ಅವಳು ಭಗವತಿಯ ಒಂದು ರೂಪು ಎಂಬುದಾಗಿ. ಭಕ್ತನಲ್ಲಿ ಆತ ವಿಶೇಷ ರೂಪದಿಂದ ಇದ್ದಾನೆ. ಭಕ್ತ ಭಗವಂತನ ಬೈಠಕ್ಖಾನೆ. ಸೋರೆಕಾಯಿಯ ಬುರುಡೆ ತುಂಬ ದಪ್ಪವಾಗಿದ್ದರೆ, ಅದು ಒಳ್ಳೆ ತಂಬೂರಿಯಾಗುತ್ತದೆ – ಬಹಳ ಒಳ್ಳೆ ಸ್ವರ ಕೊಡುತ್ತದೆ.”
ಇಂದು ಪಂಚವಟಿಗೆ ಇಬ್ಬರು ಸಾಧು ಅತಿಥಿಗಳು ಬಂದಿದ್ದಾರೆ. ಇವರು ಗೀತೆ ವೇದಾಂತ ಮೊದಲಾದುವುಗಳನ್ನು ಅಧ್ಯಯನ ಮಾಡುತ್ತಾರೆ. ಮಧ್ಯಾಹ್ನದ ಊಟವಾದ ನಂತರ ಪರಮಹಂಸರ ದರ್ಶನಕ್ಕಾಗಿ ಕೊಠಡಿಗೆ ಬಂದಿದ್ದಾರೆ. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡರು. ಮಾಸ್ಟರ್ ಮೊದಲಾದವರೂ ಕೊಠಡಿಯಲ್ಲಿ ಕುಳಿತಿರುವರು. ಪರಮಹಂಸರು ಆ ಸಾಧುಗಳೊಡನೆ ಹಿಂದಿಯಲ್ಲಿ ಮಾತುಕತೆಗಳಾಡು ತ್ತಿದ್ದಾರೆ.
ಶ್ರೀರಾಮಕೃಷ್ಣರು: “ಭೋಜನವಾಯಿತೆ?”
ಸಾಧುಗಳು: “ಹೌದು ಆಯಿತು.”
ಶ್ರೀರಾಮಕೃಷ್ಣರು: “ಏನೇನು ಊಟ ಮಾಡಿದಿರಿ?”
ಸಾಧುಗಳು: “ತೊವ್ವೆ ರೊಟ್ಟಿ; ನಿಮಗೆ ಸ್ವಲ್ಪ ಬೇಕೇನು?”
ಶ್ರೀರಾಮಕೃಷ್ಣರು: “ದಯವಿಟ್ಟು ಕ್ಷಮಿಸಿ. ನಾನು ತಿನ್ನೋದು ಕೆಲವು ತುತ್ತು ಅನ್ನ ಮಾತ್ರ. ಒಳ್ಳೇದು. ನೀವು ನಿಮ್ಮ ಜಪಧ್ಯಾನಾದಿಗಳನ್ನು ನಿಷ್ಕಾಮ ಭಾವನೆಯಿಂದ ಮಾಡುತ್ತಿರಬೇಕು ಅಲ್ಲವೆ?”
ಸಾಧು: “ಹೌದು ಮಹಾರಾಜ್.”
ಪರಮಹಂಸರು: “ಅದು ಬಹಳ ಒಳ್ಳೆಯದು. ಫಲವನ್ನು ಭಗವಂತನಿಗೆ ಅರ್ಪಿಸ ಬೇಕು; -ಅಲ್ಲವೇನು? ಗೀತೆಯಲ್ಲಿ ಹಾಗೆಯೇ ಹೇಳಿದೆ.”
ಒಬ್ಬ ಸಾಧು ಇನ್ನೊಬ್ಬ ಸಾಧುವಿಗೆ: “ಯತ್ ಕರೋಷಿ ಯದಶ್ನಾಸಿ ಯಜ್ಜು ಹೋಷಿ ದದಾಸಿ ಯತ್ ॥ ಯತ್ ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್ ॥” ಎಂಬ ಗೀತೆಯ ಶ್ಲೋಕವನ್ನು ಎತ್ತಿ ಹೇಳಿದ.
ಪರಮಹಂಸರು: “ಯಾವುದನ್ನೇ ಆದರೂ ಆತನಿಗೆ ಒಂದು ಪಾಲಿನಷ್ಟು ಅರ್ಪಿಸಿ ದರೆ ಅದರ ಸಹಸ್ರದಷ್ಟು ಪಾಲು ಹಿಂದಿರುಗಿ ಬರುತ್ತದೆ. ಅದಕ್ಕಾಗಿಯೆ ದಾನ ಧರ್ಮಾದಿ ಗಳನ್ನು ಮಾಡಿದ ನಂತರ ಒಂದು ಬೊಗಸೆ ನೀರನ್ನು ತೆಗೆದುಕೊಂಡು, ‘ಶ್ರೀಕೃಷ್ಣಾರ್ಪಣ ಮಸ್ತು-ಶ್ರೀಕೃಷ್ಣನಿಗೆ ಫಲವನ್ನು ಅರ್ಪಿಸಿದ್ದೇನೆ’ ಎಂದು ಹೇಳುವುದು. ಯುಧಿಷ್ಠಿರ ತನ್ನ ಸಕಲ ಪಾಪಗಳನ್ನು ಶ್ರಿಕೃಷ್ಣನಿಗೆ ಅರ್ಪಿಸಲು ಸಿದ್ಧನಾಗುತ್ತಿದ್ದಾಗ ಒಬ್ಬ (ಭೀಮ) ‘ಅಂಥ ಕಾರ್ಯವನ್ನು ಎಂದಿಗೂ ಮಾಡಬೇಡ–ಶ್ರೀಕೃಷ್ಣನಿಗೆ ನೀನು ಏನು ಅರ್ಪಿಸುವಿಯೊ, ಅದು ಒಂದು ಸಹಸ್ರಮಡಿಯಾಗಿ ನಿನಗೆ ಹಿಂದಿರುಗಿ ಬರುತ್ತದೆ’ ಎಂದು ಎಚ್ಚರಿಕೆ ಕೊಟ್ಟ.
(ಒಬ್ಬ ಸಾಧುವಿಗೆ): “ಒಳ್ಳೆಯದು, ಮನುಷ್ಯ ನಿಷ್ಕಾಮಿಯಾಗಬೇಕಾಗುತ್ತದೆ. ಸಕಲ ಕಾಮನೆಗಳನ್ನು ತ್ಯಾಗಮಾಡಬೇಕಾಗುತ್ತದೆ; ಅಲ್ಲವೇನು?”
ಸಾಧು: “ಹೌದು.”
ಶ್ರೀರಾಮಕೃಷ್ಣರು: “ಆದರೆ ನನ್ನಲ್ಲಿ ಭಕ್ತಿಕಾಮನೆ ಇದೆ. ಅದು ಕೆಟ್ಟದ್ದೇನಲ್ಲ. ಅದಕ್ಕೆ ಬದಲು ಅದರಿಂದ ಒಳ್ಳೆಯದೇ ಆಗುತ್ತದೆ. ಸಿಹಿ ಕೆಟ್ಟ ವಸ್ತು – ಹುಳಿಯನ್ನುಂಟುಮಾಡು ತ್ತದೆ. ಆದರೆ ಕಲ್ಲುಸಕ್ಕರೆಯಿಂದ ವಿಶೇಷವಾಗಿ ಉಪಕಾರವಾಗುತ್ತದೆ. ಏನು ನಿಜವೇನು?”
ಸಾಧು: “ಹೌದು ಮಹಾರಾಜ್.”
ಶ್ರೀರಾಮಕೃಷ್ಣರು: “ಒಳ್ಳೆಯದು, ವೇದಾಂತದ ವಿಷಯವಾಗಿ ನಿಮ್ಮ ಅಭಿಪ್ರಾಯ ವೇನು?”
ಸಾಧು: “ವೇದಾಂತ ಷಡ್ದರ್ಶನಗಳನ್ನು ಒಳಗೊಂಡಿದೆ.”
ಶ್ರೀರಾಮಕೃಷ್ಣರು: “ಆದರೆ ವೇದಾಂತದ ಸಾರ-ಬ್ರಹ್ಮ ಸತ್ಯ, ಜಗತ್ ಮಿಥ್ಯ. ನಾನು ಪ್ರತ್ಯೇಕವಾಗಿರುವ ಯಾವ ಒಂದು ವಸ್ತುವೂ ಅಲ್ಲ; ನಾನೇ ಆ ಬ್ರಹ್ಮ ಎಂದು. ಅಲ್ಲವೇನು?”
ಸಾಧು: “ಹೌದು, ಸತ್ಯ.”
ಪರಮಹಂಸರು: “ಆದರೆ, ಯಾರು ಸಂಸಾರಿಗಳೊ, ಯಾರಿಗೆ ದೇಹಬುದ್ಧಿ ಇದೆಯೊ, ಅವರಿಗೆ ಸೋಠ್ಹಂ’ ಭಾವ ಒಳ್ಳೆಯದಲ್ಲ. ಸಂಸಾರಿಗಳಿಗೆ ಯೋಗವಾಸಿಷ್ಠ ವೇದಾಂತ, –ಒಳ್ಳೆಯದಲ್ಲ, ಬಹಳ ಕೆಡಕಾಗುತ್ತದೆ. ಸಂಸಾರಿಗಳು ಸೇವ್ಯಸೇವಕ ಭಾವ ವನ್ನು ಅನುಸರಿಸಬೇಕು. ಅವರು ಭಾವಿಸಬೇಕು: ‘ಹೇ ಭಗವಂತ! ನೀನು ಸೇವಾರ್ಹ ಪ್ರಭು, ನಾನು ಸೇವಕ–ನಾನು ನಿನ್ನ ದಾಸ’ ಎಂದು. ಯಾರಿಗೆ ದೇಹ ಬುದ್ಧಿ ಇದೆಯೋ, ‘ಸೋಠ್ಹಂ’ ಭಾವ ಅವರಿಗೆ ಒಳ್ಳೆಯದಲ್ಲವೇ ಅಲ್ಲ.”
ಎಲ್ಲರೂ ಸದ್ದಿಲ್ಲದೆ ಕುಳಿತುಕೊಂಡಿದ್ದಾರೆ. ಪರಮಹಂಸರು ತಮ್ಮೊಳಗೆ ತಾವೇ ಸ್ವಲ್ಪ ನಗುತ್ತಿದ್ದಾರೆ. ಆತ್ಮಾರಾಮ! ಸ್ವಯಮಾನಂದದಲ್ಲಿಯೆ ಆನಂದಿತರಾಗಿದ್ದಾರೆ.
ಒಬ್ಬ ಸಾಧು ಇನ್ನೊಬ್ಬ ಸಾಧುವಿಗೆ “ನೋಡು, ನೋಡು! ಇದಕ್ಕೇನೆ ಪರಮಹಂಸಾವಸ್ಥೆ ಅಂತ ಹೆಸರು” ಎಂದು ಪಿಸುಗುಟ್ಟುತ್ತಿದ್ದಾನೆ.
ಶ್ರೀರಾಮಕೃಷ್ಣರು ಅವರ ಕಡೆಗೆ ನೋಡಿ ಮಣಿಗೆ: “ನನಗೆ ನಗು ಬರುತ್ತಿದೆ.”
ಪರಮಹಂಸರು ಬಾಲಕನೋಪಾದಿಯಲ್ಲಿ ತಮ್ಮಷ್ಟಕ್ಕೆ ತಾವೇ ನಗುತ್ತಿದ್ದಾರೆ. ಸಾಧುಗಳು ಎದ್ದು ಹೊರಟುಹೋದರು. ಭಕ್ತರು ಕೊಠಡಿಯೊಳಗೆ ಮತ್ತು ವರಾಂಡದಲ್ಲಿ ಸುತ್ತಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನವೀನಸೇನನ ಆ ಮನೆಗೆ ನೀನು ಹೋಗಿ ದ್ದೆಯಾ?”
ಮಾಸ್ಟರ್: “ಹೌದು ಹೋಗಿದ್ದೆ. ಕೆಳಗಡೆ ಕುಳಿತು ಹಾಡುಗಳನ್ನೆಲ್ಲ ಕೇಳುತ್ತಿದ್ದೆ.”
ಶ್ರೀರಾಮಕೃಷ್ಣರು: “ಒಳ್ಳೇದು ಮಾಡಿದೆ. ನಿನ್ನವರೂ ಅಲ್ಲಿಗೆ ಬಂದಿದ್ದರು. ಕೇಶವಸೇನ ನಿನ್ನವಳ ಸೋದರ ವರ್ಗಕ್ಕೆ ಸೇರಿದವರಂತೆ?”
ಮಾಸ್ಟರ್: “ದೂರದ ಸೋದರ.”
ಪರಮಹಂಸರು ಸುತ್ತಾಡುತ್ತ ಸುತ್ತಾಡುತ್ತ ಮಣಿಯೊಡನೆ ನಿಸ್ಸಂಕೋಚವಾಗಿ ಮಾತನಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಜನರು ಮಾವನ ಮನೆಗೆ ಹೋಗುತ್ತಾರೆ. ನಾನು ಅಷ್ಟೊಂದು ಸ್ವಪ್ನ ಕಟ್ಟಿದ್ದೆ, ‘ಮದುವೆಯಾಗುತ್ತೇನೆ, ಮಾವನ ಮನೆಗೆ ಹೋಗುತ್ತೇನೆ – ತಮಾಷೆ ಮಾಡುತ್ತೇನೆ!’ ಎಂದು. ಆದರೆ ಅದೆಲ್ಲ ಏನಾಯಿತು ನೋಡು!”
ಮಣಿ: “ನಿಜ, ‘ಮಗು ತಂದೆಯನ್ನು ಹಿಡಿದುಕೊಂಡಿದ್ದರೆ ಅದು ಬೀಳುವ ಹಾಗೆಯೇ ಇಲ್ಲ’ ಎಂದು ನೀವು ಹೇಳುತ್ತೀರಿ, ನಿಮ್ಮದೂ ತದ್ವತ್ ಆ ಅವಸ್ಥೆಯೆ. ಭಗವತಿ ನಿಮ್ಮನ್ನು ಹಿಡಿದುಕೊಂಡಿದ್ದಾಳೆ.”
ಶ್ರೀರಾಮಕೃಷ್ಣರು: “ನಾನು ಉಲೋರು ವಾಮನದಾಸನನ್ನು ವಿಶ್ವಾಸರ ಮನೆಯಲ್ಲಿ ನೋಡಿದೆ. ಆತನಿಗೆ ಹೇಳಿದೆ, ‘ನಾನು ನಿನ್ನನ್ನು ನೋಡಲು ಬಂದಿದ್ದೇನೆ’ ಎಂದು. ನಾನು ಹಿಂದಿರುಗುವಾಗ ಆತ ಹೇಳಿಕೊಳ್ಳುತ್ತಿದ್ದುದನ್ನು ಕೇಳಿದೆ, ‘ಹಾ ಭಗವಂತ! ಹುಲಿ ಮನುಷ್ಯನನ್ನು ಹಿಡಿದುಕೊಳ್ಳುವ ಹಾಗೆ ಭಗವತಿ ಇವರನ್ನು ಹಿಡಿದುಕೊಂಡು ಬಿಟ್ಟಿದ್ದಾಳೆ’ ಅಂತ. ಆಗ ನನಗೆ ಒಳ್ಳೆ ಪ್ರಾಯ, –ದುಂಡುದುಂಡಾದ ಶರೀರ. ಯಾವಾಗಲೂ ಭಾವಾ ವಸ್ಥೆಯಲ್ಲೆ ಇರುತ್ತಿದ್ದೆ.
“ಹೆಂಗಸರನ್ನು ಕಂಡರೆ ನನಗೆ ಬಹಳ ಭಯ. ಹೆಣ್ಣು ಹುಲಿ ನುಂಗುವುದಕ್ಕೆ ಬರುತ್ತಿರುವಂತೆ ಕಾಣುತ್ತದೆ. ಇದೂ ಅಲ್ಲದೆ ಅವರ ಅಂಗ, ಪ್ರತ್ಯಂಗ, ರೋಮಕೂಪಗಳು ಬಹಳ ದೊಡ್ಡ ದೊಡ್ಡದಾಗಿರುವಂತೆ ಕಾಣುತ್ತದೆ! ಎಲ್ಲರೂ ರಾಕ್ಷಸಿಯರ ಹಾಗೆ ಕಾಣುತ್ತಾರೆ. ಹಿಂದೆ ನನಗೆ ಅತ್ಯಂತ ಭಯವಿತ್ತು. ಅವರು ಯಾರೂ ಹತ್ತಿರ ಬರಲು ಬಿಟ್ಟುಕೊಡುತ್ತಿರಲಿಲ್ಲ. ಈಗ ನಾನು ನನ್ನ ಮನಸ್ಸಿಗೆ ಬಹಳವಾಗಿ ಬುದ್ಧಿ ಹೇಳಿ ಅವರೆಲ್ಲ ಭಗವತಿ ಆನಂದಮಯಿಯ ಒಂದೊಂದು ಅಂಶ ಎಂಬುದಾಗಿ ನೋಡುತ್ತಿದ್ದೇನೆ.
“ಹೆಂಗಸು ಭಗವತಿಯ ಅಂಶ. ಆದರೆ ಪುರುಷನ ದೃಷ್ಟಿಯಿಂದ – ಸಾಧುವಿನ ದೃಷ್ಟಿ ಯಿಂದ – ಭಕ್ತನ ಹಿತದೃಷ್ಟಿಯಿಂದ- ಅವರನ್ನು ತ್ಯಜಿಸಬೇಕು. ಹೆಂಗಸು ಭಕ್ತಾಗ್ರೇಸರೆ ಯಾಗಿದ್ದರೂ ಹೆಚ್ಚು ಹೊತ್ತು ಹತ್ತಿರ ಕುಳಿತುಕೊಳ್ಳಲು ಅವಕಾಶ ಕೊಡುವುದಿಲ್ಲ. ಸ್ವಲ್ಪ ಹೊತ್ತಾದ ನಂತರ ಹೇಳಿಬಿಡುತ್ತೇನೆ, ‘ಹೋಗಿ ದೇವಾಲಯಕ್ಕೆ ಹೋಗಿಬನ್ನಿ’ ಎಂದು. ಆಗಲೂ ಏಳದೆ ಇದ್ದರೆ, ಹುಕ್ಕ ಸೇದಬೇಕೆಂಬ ನೆಪದಿಂದ ನಾನೆ ಹೊರಕ್ಕೆ ಬಂದು ಬಿಡುತ್ತೇನೆ.
“ಕೆಲಕೆಲವರಿಗೆ ಹೆಂಗಸರ ಕಡೆ ಮನಸ್ಸೇ ಹೋಗದಿರುವುದು ನನ್ನ ಕಣ್ಣಿಗೆ ಬೀಳುತ್ತದೆ. ನಿರಂಜನ ಹೇಳುತ್ತಾನೆ, ‘ಹೆಂಗಸಿನ ಕಡೆ ನನ್ನ ಮನಸ್ಸು ಒಂದು ಸ್ವಲ್ಪವೂ ಹೋಗುತ್ತಿಲ್ಲ’ ಎಂದು. ನಾನೇ ಈ ವಿಷಯವಾಗಿ ಹರಿಯನ್ನು (ಡಾಕ್ಟರ್ ಉಪೇನನ ಸಹೋದರನನ್ನು) ಕೇಳಿದೆ. ಆತನೂ ಹೇಳಿದ. ‘ಇಲ್ಲ, ಹೆಂಗಸಿನ ಕಡೆ ನನ್ನ ಮನಸ್ಸು ಹೋಗುತ್ತಿಲ್ಲ’ ಎಂದು.
“ಯಾವ ಮನಸ್ಸನ್ನು ನಾವು ಭಗವಂತನಿಗೆ ಕೊಡಬೇಕೊ ಅದರ ಮುಕ್ಕಾಲು ಭಾಗವನ್ನು ಹೆಂಗಸರು ಅಪಹರಿಸಿಕೊಂಡುಬಿಡುತ್ತಾರೆ. ಬಳಿಕ ಮಕ್ಕಳಾದರೆ ಪ್ರಾಯಶಃ ಇಡಿಯ ಮನಸ್ಸು ವ್ಯಯವಾಗಿ ಹೋಗಿಬಿಡುತ್ತದೆ. ಅನಂತರ ಭಗವಂತನಿಗೆ ನೀನು ಕೊಡುವುದು ಏನನ್ನು?
“ಕೆಲವರಿಗೆ ಆಕೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದರಲ್ಲೆ ತಮ್ಮ ಪ್ರಾಣವನ್ನೆಲ್ಲ ಬಸಿಯಬೇಕಾಗಿ ಬರುತ್ತದೆ. ಇಲ್ಲಿನ ಗೇಟ್ಕೀಪರ್ ಒಬ್ಬ ಮುದುಕ. ಆತನಿಗೆ ಹದಿನಾಲ್ಕು ವಯಸ್ಸಿನ ಒಬ್ಬಳು ಹೆಂಡತಿ. ಈ ಮುದುಕನೊಡನೆ ಆಕೆ ಒಗೆತನ ಮಾಡಬೇಕಾಗಿದೆ. ಅವರದು ತಾಳೆಗರಿಯ ಗುಡಿಸಲು. ಜನರು ಆ ಎಲೆಗಳನ್ನು ಕಳಚಿ ಕಳಚಿ ಇಣಿಕಿ ನೋಡು ತ್ತಾರೆ! ಈಗ ಆ ಹುಡುಗಿ ಆತನನ್ನು ಬಿಟ್ಟು ಹೋಗಿಬಿಟ್ಟಿದ್ದಾಳೆ.
“ಒಬ್ಬನ ಹೆಂಡತಿ–ಆಕೆಯನ್ನು ಎಲ್ಲಿ ಸುರಕ್ಷಿತವಾಗಿ ಇಡೋದು ಎಂಬುದು ಆತನಿಗೆ ಒಂದು ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಮನೆಯಲ್ಲಿ ವಿಪರೀತ ಜಗಳ. ಈಗ ಬಹಳ ಚಿಂತಾಕ್ರಾಂತನಾಗಿರುವನು. ಇಂಥ ಮಾತುಕಥೆಗಳು ಇಷ್ಟಕ್ಕೇ ಸಾಕು. ಮುಂದಕ್ಕೆ ಬೇಡ.
“ಹೆಂಗಸಿನೊಡನೆ ಇದ್ದರೇನೇ ಆಕೆಯ ವಶ ಆಗಬೇಕಾಗುತ್ತದೆ. ಸಂಸಾರಿಗಳು ಹೆಂಗಸಿನ ಆಜ್ಞೆಯಂತೆ ಏಳು ಅಂದರೆ ಏಳಬೇಕು, ಕೂರು ಅಂದರೆ ಕೂರಬೇಕು. ಎಲ್ಲರೂ ತಮ್ಮ ತಮ್ಮ ಹೆಂಡತಿಯರನ್ನು ಬಹಳವಾಗಿ ಹೊಗಳುತ್ತಾರೆ.
“ನಾನು ಯಾವುದೋ ಒಂದು ಜಾಗಕ್ಕೆ ಹೋಗಲಿಚ್ಛಿಸಿದ್ದೆ. ರಾಮಲಾಲನ ಚಿಕ್ಕಮ್ಮ ನನ್ನು (ಪರಮಹಂಸರ ಹೆಂಡತಿಯನ್ನು) ಕೇಳಲಾಗಿ ಬೇಡ ಅಂದರು. ಅದಕ್ಕಾಗಿ ಹೋಗುವುದಕ್ಕೆ ಆಗಲಿಲ್ಲ. ಬಳಿಕ ಯೋಚಿಸಿದೆ, ‘ಏನಪ್ಪ ಇದು! ನಾನು ಸಂಸಾರಿಯಾಗಿ ಜೀವಿಸುತ್ತಿಲ್ಲ. ಕಾಮಕಾಂಚನ ತ್ಯಾಗಿ. ಹಾಗಿದ್ದರೂ ಈ ದುರವಸ್ಥೆ! ಸಂಸಾರಿಗಳು ತಮ್ಮ ಹೆಂಡತಿಯರಿಗೆ ಎಷ್ಟೊಂದು ವಶರಾಗಿಬಿಟ್ಟಿದ್ದಾರೆ ಎಂಬುದು ಹೇಳುವುದಕ್ಕೆ ಆಗುವು ದಿಲ್ಲ.’”
ಮಣಿ: “ಕಾಮಕಾಂಚನದ ಮಧ್ಯೆ ಇದ್ದರೆ ಏನಿಲ್ಲ ಎಂದರೂ ಒಂದು ಕಿಂಚಿತ್ತಾದರೂ ಅದರ ಬಣ್ಣ ತಾಗಿಯೇ ತಾಗುತ್ತದೆ. ನೀವು ಒಮ್ಮೆ ಹೇಳಿದಿರಿ: ಜಯನಾರಾಯಣ ಒಬ್ಬ ದೊಡ್ಡ ಪಂಡಿತ–ಮುದುಕನಾಗಿದ್ದಾನೆ–ನೀವು ಅಲ್ಲಿಗೆ ಹೋಗಿದ್ದಾಗ ಆತ ಹಾಸಿಗೆ ದಿಂಬು ಮುಂತಾದುವನ್ನು ಬಿಸಿಲಿಗೆ ಹಾಕುತ್ತಿದ್ದ.”
ಶ್ರೀರಾಮಕೃಷ್ಣರು: “ಆದರೆ ಆತನಿಗೆ ತಾನು ಒಬ್ಬ ಪಂಡಿತ ಎಂಬ ಅಹಂಕಾರವಿಲ್ಲ, ಆತ ಹೇಳುತ್ತಿದ್ದ ಹಾಗೆಯೇ, ಶಾಸ್ತ್ರಾನುಸಾರ ಕೊನೆಗಾಲದಲ್ಲಿ ಆತನಿಗೆ ಕಾಶಿವಾಸ ದೊರಕಿತು. ಆತನ ಮಕ್ಕಳು ಮರಿಗಳನ್ನು ನೋಡಿದೆ. ಅವರು ಬೂಟ್ಸನ್ನು ಹಾಕಿಕೊಂಡಿ ದ್ದರು. ಅವರಿಗೆ ಇಂಗ್ಲೀಷು ಬರುತ್ತಿತ್ತು.”
ಪ್ರಶ್ನೋತ್ತರಗಳ ರೂಪವಾಗಿ ಪರಮಹಂಸರು ಮಣಿಗೆ ತಮ್ಮ ಸ್ವಂತ ಆಧ್ಯಾತ್ಮಿಕ ಉನ್ನತಿಯನ್ನು ವಿವರಿಸುವರು.
ಶ್ರೀರಾಮಕೃಷ್ಣರು: “ಹಿಂದೆ ಬಹಳವಾಗಿ ಉನ್ಮತ್ತತೆ ಬಂದಿತ್ತು. ಈಗ ಏಕೆ ಅದು ಕಡಿಮೆಯಾಗಿಬಿಟ್ಟಿತು? – ಆದರೆ ಆಗಾಗ ಬರುತ್ತದೆ.”
ಮಣಿ : “ನಿಮ್ಮದು ಒಂದೇ ಒಂದು ವಿಧವಾದ ಭಾವವೇನಲ್ಲ. ನೀವು ತಿಳಿಸಿರುವ ಹಾಗೆ ನಿಮಗೆ ಕೆಲವು ವೇಳೆ ಬಾಲಕನ, ಕೆಲವು ವೇಳೆ ಉನ್ಮತ್ತನ – ಕೆಲವು ವೇಳೆ ಜಡನ- ಕೆಲವು ವೇಳೆ ಪಿಶಾಚಿಯ – ಈ ಅವಸ್ಥೆಗಳೆಲ್ಲಾ ಆಗಾಗ ಬರುತ್ತವೆ. ಮತ್ತೆ ಆಗಾಗ ಸಹಜಾವಸ್ಥೆಯೂ ಬರುತ್ತದೆ.”
ಪರಮಹಂಸರು: “ಹೌದು, ಬಾಲಕನ ಹಾಗೆ. ಅದರ ಜೊತೆಗೆ ಬಾಲ್ಯ, ಕೌಮಾರ್ಯ, ಯೌವನ – ಈ ಅವಸ್ಥೆಗಳೆಲ್ಲಾ ಬರುತ್ತವೆ. ಜ್ಞಾನೋಪದೇಶವನ್ನು ಕೊಡುವಾಗ ನನಗೆ ಯುವಕನ ಅವಸ್ಥೆ ಬರುತ್ತದೆ. ಕುಮಾರನ ಅವಸ್ಥೆ, ಹನ್ನೆರಡು ಹದಿಮೂರು ವಯಸ್ಸಿನ ಹುಡುಗನ ಹಾಗೆ ಹುಡುಗಾಟವಾಡಬೇಕೆನಿಸುತ್ತದೆ. ಅದಕ್ಕಾಗಿಯೆ ನಾನು ಹುಡುಗರೊಡನೆ ತಮಾಷೆ ಮಾಡೋದು.
“ಒಳ್ಳೇದು, ನಾರಾಯಣ ಎಂಥವನು?”
ಮಣಿ: “ಆತನಿಗೆ ಒಳ್ಳೆ ಗುಣಗಳಿವೆ.”
ಶ್ರೀರಾಮಕೃಷ್ಣರು: “ಹೌದು, ಸೋರೆಕಾಯಿ ಬುರುಡೆ ಒಳ್ಳೆಯದೆ–ಅದರಿಂದಾದ ತಂಬೂರಿ ಒಳ್ಳೆ ಶಬ್ದ ಕೊಡುತ್ತದೆ. ಅವನು ನನಗೆ, ‘ನೀವೇ ಎಲ್ಲ (ಅವತಾರ)’ ಎಂದು ಹೇಳುತ್ತಾನೆ. ಯಾರಿಗೆ ಹೇಗೆ ಕಾಣುತ್ತೇನೆಯೊ ಅವರು ಹಾಗೆ ಹೇಳುತ್ತಾರೆ. ಕೆಲವರು ‘ಸಾಮಾನ್ಯ ಸಾಧು, ಭಕ್ತ’ ಎಂದು ಹೇಳುತ್ತಾರೆ.
“ನಾನು ಯಾವುದನ್ನು ಮಾಡಬೇಡ ಎಂದು ನಾರಾಯಣನಿಗೆ ಹೇಳುತ್ತೇನೆಯೊ, ಅದನ್ನು ಆತ ಚೆನ್ನಾಗಿ ಜ್ಞಾಪಕದಲ್ಲಿಟ್ಟುಕೊಂಡಿರುತ್ತಾನೆ. ಅಂದು ಪರದೆ ಮೇಲಕ್ಕೆಳೆಯಲು ಹೇಳಿದೆ, ಆತ ಹಾಗೆ ಮಾಡಲಿಲ್ಲ. ನಾನು ಆತನಿಗೆ ಸೆರಗಿಗೆ ಗಂಟುಹಾಕೋದು, ಪೆಟ್ಟಿಗೆಗೆ ಬೀಗ ಹಾಕೋದು, ಪರದೆ ಮೇಲಕ್ಕೆತ್ತೋದು ಇವೆ ಮೊದಲಾದುವನ್ನು ಮಾಡಬಾರದೆಂದು ಹೇಳಿದ್ದೆ. ಅವನ್ನೆಲ್ಲ ಆತ ಜ್ಞಾಪಕದಲ್ಲಿಟ್ಟುಕೊಂಡಿರುವನು. ತ್ಯಾಗಿಯಾಗಬೇಕೆಂಬುವನು ಇವನ್ನೆಲ್ಲ ಅನುಷ್ಠಾನಕ್ಕೆ ತರಬೇಕು. ಸಂನ್ಯಾಸಿ ಇವನ್ನೆಲ್ಲ ಆಚರಿಸಬೇಕು.
“ಸಾಧನೆ ಅವಸ್ಥೆಯಲ್ಲಿ ‘ಕಾಮಿನಿ ದಾವಾನಲಸ್ವರೂಪಿ-ಕೃಷ್ಣಸರ್ಪಸ್ವರೂಪಿ!’ ಎಂದು ಭಾವಿಸಬೇಕು. ಸಿದ್ಧನ ಅವಸ್ಥೆಯಲ್ಲಿ ಭಗವಂತನ ದರ್ಶನ ದೊರೆತ ನಂತರ, – ಆಕೆ ಭಗವತಿ ಆನಂದಮಯಿಯಾಗಿ ಕಾಣುತ್ತಾಳೆ. ಆಗ ಆಕೆಯನ್ನು ಭಗವತಿಯ ಒಂದೊಂದು ರೂಪು ಎಂಬುದಾಗ ಕಾಣುತ್ತೀಯೆ.”
ಈಗ ಕೆಲವು ದಿವಸಗಳ ಹಿಂದೆ ಪರಮಹಂಸರು ನಾರಾಯಣನಿಗೆ ಹೆಂಗಸಿನ ಸಂಬಂಧವಾಗಿ ಬಹಳ ಎಚ್ಚರಿಕೆ ಕೊಟ್ಟಿದ್ದರು: “ಹೆಂಗಸಿನ ಶರೀರದ ಗಾಳಿಯೂ ತಾಗದ ಹಾಗೆ ನೋಡಿಕೊಳ್ಳಬೇಕು. ಅವರ ಶರೀರದ ಗಾಳಿ ತನಗೆ ತಾಗದೆ ಇರಲೆಂದು ಮಂದವಾದ ಬಟ್ಟೆಯನ್ನು ಉಟ್ಟುಕೊಳ್ಳಬೇಕು-ಹೆತ್ತ ತಾಯಿಯೊಬ್ಬಳು ವಿನಾ ಉಳಿದವ ರೊಡನೆ ಎಂಟುಮೊಳ, ಇಲ್ಲದಿದ್ದರೆ ಎರಡು ಮೊಳ, ಅದೂ ಆಗದಿದ್ದರೆ ಕೊನೆಗೆ ಒಂದು ಮೊಳದ ಅಂತರದಲ್ಲಿಯಾದರೂ ತಾನು ಇರುವಂತೆ ನೋಡಿಕೊಳ್ಳಬೇಕು.”
ಶ್ರೀರಾಮಕೃಷ್ಣರು ಮಣಿಗೆ: “ನಾರಾಯಣನ ತಾಯಿ ನನ್ನ ಸಂಬಂಧವಾಗಿ ನಾರಾಯಣನಿಗೆ ‘ಅವರನ್ನು ನೋಡಿ ನಾವೂ ಮುಗ್ಧರಾಗಿ ಹೋಗಿಬಿಡುತ್ತೇವೆ, ನೀನೊ ಇನ್ನೂ ಚಿಕ್ಕ ಹುಡುಗ!’ ಎಂದು ನಾರಾಯಣನಿಗೆ, ಹೇಳಿದಳಂತೆ. ಸರಳಜೀವಿಯಾಗದೆ ಇದ್ದರೆ ಭಗವಂತನನ್ನು ಪಡೆಯಲಾಗುವುದಿಲ್ಲ. ನಿರಂಜನ ಎಷ್ಟೊಂದು ಸರಳಜೀವಿ.”
ಮಣಿ: “ಹೌದು, ನಿಜ.”
ಪರಮಹಂಸರು: “ಅಂದು ಕಲ್ಕತ್ತಕ್ಕೆ ಹೋದಾಗ ಆತನನ್ನು ಗಾಡಿಯಲ್ಲಿ ನೋಡಲಿಲ್ಲ ವೇನು? ಎಲ್ಲ ಸಮಯದಲ್ಲಿಯೂ ಒಂದೇ ವಿಧವಾದ ನಡತೆ — ಸರಳತೆ. ಜನರು ತಮ್ಮ ಮನೆಯ ಒಳಗೆ ಇರುವಾಗ ಒಂದು ವಿಧವಾಗಿ, ಮನೆಯಿಂದ ಹೊರಗೆ ಬರುವಾಗ ಬೇರೊಂದು ವಿಧವಾಗಿ ನಡೆದುಕೊಳ್ಳುತ್ತಾರೆ. ನರೇಂದ್ರ ಈಗ (ತಂದೆ ಸತ್ತನಂತರ) ಸಂಸಾರದ ಯೋಚನೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆತನಿಗೆ ಒಂದು ಸ್ವಲ್ಪ ಲೆಕ್ಕಾಚಾರದ ಬುದ್ಧಿ ಇದೆ. ಹುಡುಗರೆಲ್ಲಾ ಇವರಂತೆ ಆಗಲು ಸಾಧ್ಯವೇನು?
“ಇಂದು ನಾನು ದಕ್ಷಿಣೇಶ್ವರದಲ್ಲಿ ನೀಲಕಂಠನ ಬಯಲುನಾಟಕ ನೋಡಲು ಹೋಗಿದ್ದೆ. ಅದು ನವೀನ ನಿಯೋಗಿಯ ಮನೆಯಲ್ಲಿ ನಡೆಯಿತು. ಅಲ್ಲಿನ ಹುಡುಗರ ನಡೆನುಡಿ ಬಹಳ ಹೀನ. ಕೇವಲ ಇವನನ್ನ ಅವನನ್ನ ನಿಂದಿಸೋದೆ ಕೆಲಸ. ಅಂಥ ಸ್ಥಳಗಳಲ್ಲಿ ಭಾವ ಅಡಗಿಹೋಗುತ್ತದೆ. ಆ ಸಲದ ನಾಟಕದ ಸಮಯದಲ್ಲಿ ಡಾಕ್ಟರ್ ಮಧುವಿನ ಕಣ್ಣಿನಿಂದ ಪ್ರೇಮಾಶ್ರು ಹರಿಯುವುದನ್ನು ನೋಡಿ ನಾನು ಆತನ ಕಡೆಗೆ ದೃಷ್ಟಿಸಿ ನೋಡುತ್ತಿದ್ದೆ. ಬೇರೆ ಯಾರ ಕಡೆಗೂ ದೃಷ್ಟಿಹಾಕಲು ಮನಸ್ಸಾಗಲಿಲ್ಲ.
(ಮಣಿಗೆ) “ಒಳ್ಳೇದು, ಜನರು ಅಷ್ಟೊಂದು ಆಕರ್ಷಿತರಾಗಿ ಇಲ್ಲಿಗೆ ಬರುತ್ತಿದ್ದಾರಲ್ಲ ಇದರ ರಹಸ್ಯವೇನು?”
ಮಣಿ: “ನನಗೆ ವ್ರಜದ (ಬೃಂದಾವನದ) ಲೀಲೆ ಜ್ಞಾಪಕಕ್ಕೆ ಬರುತ್ತಿದೆ. ಯಾವಾಗ ಕೃಷ್ಣ ಗೋಪಾಲರ ಮತ್ತು ಗೋವು ಕರುಗಳ ರೂಪವನ್ನು ಧರಿಸಿದನೊ ಆಗ ಗೋಪಾಲರ ಮೇಲೆ ಗೋಪಿಯರ, ಕರುಗಳ ಮೇಲೆ ಗೋವುಗಳ ಆಕರ್ಷಣೆ ವಿಶೇಷವಾಗಲು ಆರಂಭಿಸಿತು.”
ಶ್ರೀರಾಮಕೃಷ್ಣರು: “ಅದು ಭಗವಂತನ ಆಕರ್ಷಣೆ. ಸತ್ಯವೇನೆಂದರೆ ಭಗವತಿ ಆ ವಿಧದ ಮೋಡಿ ಹಾಕಿಬಿಡುತ್ತಾಳೆ. ಆದಕ್ಕಾಗಿ ಆಕರ್ಷಣೆ.
“ಇಲ್ಲಿ ನೋಡು, ಕೇಶವಸೇನನನ್ನು ನೋಡಲು ಎಷ್ಟೊಂದು ಜನ ಹೋಗುತ್ತಿದ್ದರೊ ಅಷ್ಟೊಂದು ಜನ ಇಲ್ಲಿಗೆ ಬರುತ್ತಿಲ್ಲ. ಕೇಶವಸೇನನನ್ನು ಎಷ್ಟೊಂದು ಜನ ಸನ್ಮಾನಿಸುತ್ತಾರೆ ಗೌರವಿಸುತ್ತಾರೆ! ಆತನ ಕೀರ್ತಿ ವಿಲಾಯಿತಿಯವರೆಗೂ ಹಬ್ಬಿದೆ. ವಿಕ್ಟೋರಿಯಾ ರಾಣಿ ಕೂಡ ಆತನೊಡನೆ ಮಾತುಕತೆಯಾಡಿದ್ದಾಳೆ. ಗೀತೆ ಕೂಡ ಹೇಳಿದೆ, ‘ಯಾರನ್ನು ಅನೇಕರು ಸನ್ಮಾನಿಸುತ್ತಾರೊ ಗೌರವಿಸುತ್ತಾರೊ ಅವರಲ್ಲಿ ಭಗವಂತನ ಶಕ್ತಿ ವಿಶೇಷವಾಗಿ ಇದೆ’ ಎಂದು. ಇಲ್ಲಿ ನೋಡಿದರೆ ಅಂಥದ್ದೇನು ಕಾಣುತ್ತಿಲ್ಲವಲ್ಲ?”
ಮಣಿ: “ಕೇಶವಸೇನನನ್ನು ನೋಡಲು ಸಂಸಾರಿಗಳು ಮಾತ್ರ ಹೋಗುತ್ತಿದ್ದರು.”
ಶ್ರೀರಾಮಕೃಷ್ಣರು: “ಏಕೆ, ಒಂದು ಸಂಹಿತೆಯನ್ನೇ ಬರೆದಿಟ್ಟು ಹೋಗಿರುವನಲ್ಲ, –ಅದರಲ್ಲಿ ಎಷ್ಟೊಂದು ನಿಯಮಗಳು ಇವೆ!”
ಮಣಿ: “ಅವತಾರಪುರುಷ ತಾನೇ ಸ್ವತಃ ಧರ್ಮಸಂಸ್ಥಾಪನೆ ಮಾಡುವುದು ಬೇರೆ ಮಟ್ಟಕ್ಕೆ ಸೇರಿದ್ದು. ಉದಾಹರಣೆಗಾಗಿ ಚೈತನ್ಯದೇವನದು.”
ಶ್ರೀರಾಮಕೃಷ್ಣರು: “ಹೌದು, ಹೌದು, ನೀನು ಹೇಳುವುದು ಸರಿ.”
ಮಣಿ: “ನೀವೇ ಹೇಳುತ್ತೀರಿ, -ಚೈತನ್ಯದೇವ ಹೇಳಿದ್ದಾನೆ, ‘ನಾನು ಏನು ಬೀಜವನ್ನು ಚೆಲ್ಲಿ ಹೋಗಿದ್ದೇನೋ, ಒಂದಲ್ಲ ಒಂದು ದಿನ ಅದು ಫಲಿಸುತ್ತದೆ’ ಎಂದು. ಯಾರೊ ಮನೆಯ ಕಾರ್ನೀಸಿನ ಮೇಲೆ ಬೀಜವನ್ನಿಟ್ಟಿದ್ದರು. ಮನೆ ಮುರಿದುಬಿದ್ದಿತೆಂದರೆ ಮತ್ತೆ ಆ ಬೀಜ ಮರವಾಗುತ್ತದೆ.”
ಶ್ರೀರಾಮಕೃಷ್ಣರು: “ಇಲ್ಲಿ ನೋಡು, ಶಿವನಾಥ ಮತ್ತು ಅವನ ಅನುಯಾಯಿಗಳು ಯಾವ ಸಮಾಜವನ್ನು ಕಟ್ಟಿದ್ದಾರೊ ಅದಕ್ಕೂ ಅನೇಕರು ಹೋಗುತ್ತಿದ್ದಾರೆ. ಅಲ್ಲವೇನು?”
ಮಣಿ: “ಹೌದು, ಆ ಮಟ್ಟದ ಜನರು.”
ಶ್ರೀರಾಮಕೃಷ್ಣರು: “ಹೌದು, ಹೌದು. ಸಂಸಾರಿ ಜನ ಅಲ್ಲಿಗೆ ಹೋಗುತ್ತಾರೆ. ಯಾರು ಭಗವಂತನಿಗಾಗಿ ವ್ಯಾಕುಲರಾಗಿದ್ದಾರೊ – ಕಾಮಕಾಂಚನವನ್ನು ತ್ಯಜಿಸಲು ಪ್ರಯತ್ನಿಸುತ್ತಿರುವರೊ – ಅಂಥವರು ಅಲ್ಲಿಗೆ ಹೋಗುವುದು ಬಹಳ ಕಡಿಮೆಯೇನೋ ನಿಜ.”
ಮಣಿ: “ಇಲ್ಲಿಂದ ಒಂದು ಪ್ರವಾಹ ಹೊರಟರೆ ಅದು ಬಹಳ ಸೊಗಸಾಗಿಬಿಡುತ್ತದೆ. ಅದರ ವೇಗಕ್ಕೆ ಸಿಕ್ಕಿ ಎಲ್ಲವೂ ಕೊಚ್ಚಿಹೋಗಿ ಬಿಡುತ್ತದೆ. ಇಲ್ಲಿಂದ ಏನು ಹೊರಡುತ್ತದೆಯೊ ಅದು ಒಂದೇ ಸ್ವರದ್ದೇನು ಆಗೋದಿಲ್ಲವಲ್ಲ.”
ಪರಮಹಂಸರು (ನಗುತ್ತ): “ನಾನು ಯಾರದು ಯಾವ ಭಾವವೊ ಅದನ್ನು ಸಂರಕ್ಷಿ ಸಲು ಪ್ರಯತ್ನಿಸುತ್ತಿದ್ದೇನೆ. ವೈಷ್ಣವರಿಗೆ ವೈಷ್ಣವರ ಭಾವದಲ್ಲಿಯೆ ಮುಂದುವರಿಯುವಂತೆ ಹೇಳುತ್ತೇನೆ; ಶಾಕ್ತನಿಗೆ ಶಾಕ್ತರ ಭಾವ. ಆದರೆ ಹೇಳುತ್ತೇನೆ, ‘ಹೀಗೆ ಎಂದೂ ಹೇಳಬೇಡಿ – ನಮ್ಮ ಮಾರ್ಗವೆ ಸತ್ಯ, ಉಳಿದುದೆಲ್ಲ ಮಿಥ್ಯ, ತಪ್ಪು!’ ಎಂದು. ಹಿಂದೂ, ಮುಸಲ್ಮಾನ, ಕ್ರೈಸ್ತ–ವಿವಿಧ ಮಾರ್ಗದಿಂದ ಒಂದೇ ಸ್ಥಳಕ್ಕೆ ಹೋಗಿ ಸೇರುತ್ತಾರೆ. ತಮ್ಮ ತಮ್ಮ ಭಾವವನ್ನು ಸಂರಕ್ಷಿಸಿಕೊಂಡು ಹೃತ್ಪೂರ್ವಕವಾಗಿ ಭಗವಂತನನ್ನು ಕರೆದರೆ ಆತನನ್ನು ಪಡೆಯಬಹುದು.
“ವಿಜಯನ ಅತ್ತೆ ‘ನೀವು ಬಲರಾಮನಿಗೆ ಹೇಳಿ ಬಿಡಿ, ಸಾಕಾರಪೂಜೆಯ ಆವಶ್ಯಕತೆಯೇನಿದೆ; ನಿರಾಕಾರ ಸಚ್ಚಿದಾನಂದನನ್ನು ಕರೆದರೆ ಆಯಿತಲ್ಲ? ಅಂತ ಹೇಳಿದಳು. ನಾನು ಹೇಳಿದೆ, ‘ನಾನು ತಾನೆ ಅಂಥ ಮಾತು ಏಕೆ ಹೇಳಲು ಹೋಗಲಿ?– ಆತ ತಾನೆ ಅದನ್ನು ಏಕೆ ಕೇಳಲು ಹೋಗಬೇಕು?’ ತಾಯಿ ಮೀನನ್ನು ಅಡಿಗೆಗೆ ಉಪಯೋಗಿಸುತ್ತಾಳೆ–ಒಂದು ಮಗುವಿಗೆ ಪಲಾವು ಮಾಡಿ ಬಡಿಸುತ್ತಾಳೆ. ಯಾವ ಮಗುವಿಗೆ ಹೊಟ್ಟೆ ಸರಿಯಾಗಿಲ್ಲವೊ ಅದಕ್ಕೆ ಮೀನಿನ ಸಾರು ಮಾಡಿ ಬಡಿಸುತ್ತಾಳೆ. ರುಚಿಭೇದ ಅಧಿಕಾರಭೇದ ಇವಕ್ಕೆ ತಕ್ಕಂತೆ ಒಂದೇ ವಸ್ತುವನ್ನು ವಿವಿಧ ರೂಪದಲ್ಲಿ ಕೊಡಬೇಕಾಗುತ್ತದೆ.”
ಮಣಿ: “ಹೌದು, ಅದೇನೋ ನಿಜ. ದೇಶಕಾಲ ಪಾತ್ರಕ್ಕೆ ತಕ್ಕಂತೆ ಪ್ರತಿಯೊಬ್ಬನಿಗೂ ಬೇರೆ ಬೇರೆ ಮಾರ್ಗ. ಆದರೆ ಯಾವ ಮಾರ್ಗವನ್ನಾದರೂ ಹಿಡಿದು ಹೋಗಲಿ ಶುದ್ಧ ಮನಸ್ಕನಾಗಿ ಹೃತ್ಪೂರ್ವಕ ವ್ಯಾಕುಲತೆಯಿಂದ ಆತನನ್ನು ಕರೆದರೆ ಆಗ ಆತನನ್ನು ಪಡೆಯ ಬಹುದು. ಹೀಗೆಂದು ನೀವೇ ಹೇಳುತ್ತೀರಿ.”
ಪರಮಹಂಸರು ಕೊಠಡಿಯೊಳಗೆ ತಮ್ಮ ಸ್ಥಾನದಲ್ಲಿ ಕುಳಿತುಕೊಂಡಿರುವರು. ನೆಲದ ಮೇಲೆ ಮುಖರ್ಜಿಯ ಸಂಬಂಧಿ ಹರಿ, ಮಾಸ್ಟರ್ ಮೊದಲಾದವರು ಕುಳಿತಿರುವರು. ಒಬ್ಬ ಅಪರಿಚಿತ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡಿರುವನು. ಆತ ಹೊರಟುಹೋದ ಮೇಲೆ ಪರಮಹಂಸರು ಹೇಳಿದರು, “ಆತನ ಕಣ್ಣಿನ ಲಕ್ಷಣ ಒಳ್ಳೆಯದಲ್ಲ – ಆತನದು ಬೆಕ್ಕಿನ ಹಾಗೆ ಕಂದು ಹಳದಿ ಬಣ್ಣ” ಎಂದು.
ಹರಿ ಹುಕ್ಕ ತಯಾರುಮಾಡಿ ಪರಮಹಂಸರಿಗೆ ತಂದುಕೊಟ್ಟ.
ಪರಮಹಂಸರು ಹುಕ್ಕವನ್ನು ಕೈಯಲ್ಲಿ ಹಿಡಿದು ಹರಿಗೆ: “ಎಲ್ಲಿ ನಿನ್ನ ಕೈ ನೋಡೋಣ. ಓಹೊ, ಎಲ್ಲಾ ಇದೆ! – ಇದು ಬಹಳ ಒಳ್ಳೆಯ ಲಕ್ಷಣ. ನಿನ್ನ ಕೈ ಸ್ವಲ್ಪ ಸಡಿಲಬಿಡು ನೋಡೋಣ.
ಪರಮಹಂಸರು ತಮ್ಮ ಕೈಮೇಲೆ ಹರಿಯ ಕೈಯನ್ನು ಇಟ್ಟುಕೊಂಡು ಅದರ ಭಾರವನ್ನು ಕಂಡುಹಿಡಿಯುತ್ತಿರುವಂತೆ ಅದನ್ನು ತೂಗುತ್ತಿದ್ದಾರೆ.
ಪರಮಹಂಸರು: “ಈಗಲೂ ಈತನಿಗೆ ಹುಡುಗತನದಂಥ ಬುದ್ಧಿ; ಇನ್ನೂ ಯಾವ ದೋಷವೂ ತಾಗಿಲ್ಲ. (ಭಕ್ತರ ಕಡೆ ತಿರುಗಿ) ಕೈ ನೋಡಿಯೆ ವ್ಯಕ್ತಿ ಸರಳನೋ ಕಪಟಿಯೊ ಎಂಬುದನ್ನು ಹೇಳಿಬಿಡಬಲ್ಲೆ.(ಹರಿಗೆ)ಏಕೆ, – ಮಾವನ ಮನೆಗೆ ಹೋಗು-ಹೆಂಡತಿಯೊಡನೆ ಮಾತುಕತೆಯಾಡು – ಇಚ್ಛೆ ಬಂದರೆ ಆಕೆಯೊಡನೆ ಸ್ವಲ್ಪ ಸರಸಸಲ್ಲಾಪಗಳನ್ನೂ ಆಡು. (ಮಾಸ್ಟರ್ ಕಡೆ ತಿರುಗಿ) ಏನು, ಸರಿಯೆ?” (ಮಾಸ್ಟರ್ ಮತ್ತು ಉಳಿದವರು ನಗುತ್ತಾರೆ.)
ಮಾಸ್ಟರ್: “ಹೊಸ ಮಡಕೆ ಕೆಟ್ಟುಹೋಗಿಬಿಟ್ಟರೆ, ಅದರಲ್ಲಿ ಮತ್ತೆ ಹಾಲನ್ನು ಇಡಲಾಗುವುದಿಲ್ಲ.”
ಪರಮಹಂಸರು ನಗುತ್ತ: “ಅದು ಮೊದಲೇ ಕೆಟ್ಟುಹೋದ ಮಡಕೆಯಲ್ಲ ಎಂಬುದು ನಿನಗೆ ಹೇಗೆ ಗೊತ್ತು?”
ಮುಖರ್ಜಿಗಳು-ಮಹೇಂದ್ರ ಮತ್ತು ಪ್ರಿಯನಾಥ-ಇಬ್ಬರೂ ಸಹೋದರರೆ. ಅವರು ಯಾವ ಸರ್ಕಾರಿ ಉದ್ಯೋಗದಲ್ಲೂ ಇಲ್ಲ. ಅವರು ಹಿಟ್ಟಿನ ಮಿಲ್ಲು ಇಟ್ಟಿದ್ದಾರೆ. ಪ್ರಿಯನಾಥ ಹಿಂದೆ ಎಂಜಿನಿಯರ್ ಕೆಲಸ ಮಾಡುತ್ತಿದ್ದ. ಪರಮಹಂಸರು ಹರಿಯೊಡನೆ ಮುಖರ್ಜಿ ಸಹೋದರರ ವಿಷಯವಾಗಿ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಹರಿಗೆ: “ಹಿರಿಯವನು ಬಹಳ ಒಳ್ಳೆಯವ, ಅಲ್ಲವೆ? ಬಹಳ ಒಳ್ಳೆಯವ, ಸರಳಜೀವಿ.”
ಹರಿ: “ಹೌದು, ನಿಜ.”
ಶ್ರೀರಾಮಕೃಷ್ಣರು ಭಕ್ತರಿಗೆ: “ಚಿಕ್ಕವನು ಬಹಳ ಕೃಪಣನಲ್ಲವೆ?-ಇಲ್ಲಿಗೆ ಬಂದ ಮೇಲೆ ಈಗ ಆತ ಎಷ್ಟೋ ಮೇಲು. ನನಗೆ ಹೇಳಿದ, ‘ನನಗೆ ಏನೂ ಗೊತ್ತಿರಲಿಲ್ಲ’ ಎಂದು. (ಹರಿಯ ಕಡೆ ತಿರುಗಿ) ಇವರೇನಾದರೂ ದಾನಧರ್ಮ ಮಾಡುತ್ತಾರೇನು?”
ಹರಿ: “ಅಂಥದೇನು ನನ್ನ ಕಣ್ಣಿಗೆ ಬಿದ್ದಿಲ್ಲ, ಇವರ ಹಿರಿಯ ಅಣ್ಣ ಬದುಕಿದ್ದಾಗ ಅದು ನಡೆಯಿತು. ಆತ ಬಹಳ ಒಳ್ಳೆಯ ಮನುಷ್ಯ-ಆಗ ದಾನ ಧ್ಯಾನ ಎಲ್ಲ ಬಹಳವಾಗಿ ನಡೆಯಿತು.”
ಶ್ರೀರಾಮಕೃಷ್ಣರು ಮಾಸ್ಟರ್ ಮೊದಲಾದವರಿಗೆ: “ಶರೀರದ ಲಕ್ಷಣ ನೋಡಿ ಬಹುಮಟ್ಟಿಗೆ ತಿಳಿದುಕೊಳ್ಳಬಹುದು ಈತನಿಗೆ ದೊರಕುವುದೊ ಇಲ್ಲವೊ ಎಂಬುದನ್ನು. ಕಪಟಿಯ ಕೈ ಭಾರವಾಗಿರುತ್ತೆ. ಮೂಗು ಗಿಡ್ಡವಾಗಿರೋದು ಒಳ್ಳೆಯದಲ್ಲ. ಶಂಭು ಬಾಬುವಿನ ಮೂಗು ಗಿಡ್ಡಮೂಗು. ಅದಕ್ಕಾಗಿಯೆ ಆತ ಎಷ್ಟು ಬುದ್ಧಿವಂತನಾಗಿದ್ದರೂ ತಕ್ಕಂತೆ ಸರಳನಾಗಿರಲಿಲ್ಲ. ಪಾರಿವಾಳದಂಥ ಎದೆಯ ಗೂಡೂ ಒಳ್ಳೆಯ ಲಕ್ಷಣವಲ್ಲ. ಗಟ್ಟಿ ಎಲುಬುಗಳು, ದಪ್ಪವಾದ ಮೊಳಕೈ ಕೀಲುಗಳು ಒಳ್ಳೆಯವಲ್ಲ, ಬೆಕ್ಕಿನಕಣ್ಣು, ಬೆಕ್ಕಿನ ಹಾಗೆ ಕಂದು ಹಳದಿ ವರ್ಣದ ಕಣ್ಣು ಒಳ್ಳೆಯದಲ್ಲ.
“ತುಟಿ–ಮೇದರ ತುಟಿಯಂತೆ ಇದ್ದರೆ–ನೀಚಬುದ್ಧಿ ಉಂಟಾಗುತ್ತದೆ. ಒಬ್ಬ ಬ್ರಾಹ್ಮಣ ಇಲ್ಲಿನ ವಿಷ್ಣು ದೇವಾಲಯದಲ್ಲಿ ಕೆಲವು ತಿಂಗಳ ಮಟ್ಟಿಗೆ ಆಕ್ಟಿಂಗ್ ಆಗಿ ಬಂದಿದ್ದ. ನಾನು ಆತನ ಕೈಯಿಂದ ಊಟಮಾಡುತ್ತಿರಲಿಲ್ಲ. ಅಕಸ್ಮಾತ್ತಾಗಿ ಬಾಯಿಂದ ಹೇಳಿಬಿಟ್ಟೆ, ‘ಎಲೊ ಮೇದ!’ ಎಂದು. ಬಳಿಕ ಒಂದು ದಿನ ಹೇಳಿದ, ‘ಹೌದು, ನಮ್ಮ ಮನೆ ಮೇದರಕೇರಿಯಲ್ಲಿದೆ – ನನಗೆ ಮೇದರ ಹಾಗೆ ಮಕ್ಕರಿ ಕುಕ್ಕೆ ಮಾಡುವುದಕ್ಕೆ ಬರುತ್ತದೆ’ ಎಂದು.
“ಮಾಲುಗಣ್ಣು, ಒಕ್ಕಣ್ಣು ಇನ್ನೂ ಹೀನ ಲಕ್ಷಣಗಳು. ಒಕ್ಕಣ್ಣು ಮಾಲುಗಣ್ಣಿಗಿಂತ ಎಷ್ಟೋ ಮೇಲು. ಮಾಲುಗಣ್ಣಿನವರು ಬಹಳ ದುಷ್ಟರು ಮತ್ತು ಕಪಟಿಗಳು ಆಗುತ್ತಾರೆ.
“ನ್ಯಾಯರತ್ನ ಮಹೇಶನ ಒಬ್ಬ ವಿದ್ಯಾರ್ಥಿ ಇಲ್ಲಿಗೆ ಬಂದಿದ್ದ. ಆತ ತಾನು ಒಬ್ಬ ನಾಸ್ತಿಕ ಎಂದು ಹೇಳಿದ. ಅವನು ಹೃದಯನಿಗೆ, ‘ನಾನು ಒಬ್ಬ ನಾಸ್ತಿಕ. ನೀನು ಒಬ್ಬ ಆಸ್ತಿಕನ ಪಾತ್ರ ವಹಿಸಿ ನನ್ನೊಡನೆ ವಾದಮಾಡು’ ಎಂದು ಹೇಳಿದ. ಆಗ ನಾನು ಆತನನ್ನು ಸ್ವಲ್ಪ ಚೆನ್ನಾಗಿ ದೃಷ್ಟಿಸಿ ನೋಡಿದೆ. ನೋಡುತ್ತೇನೆ, ಬೆಕ್ಕಿನ ಕಣ್ಣು.
“ನಡಿಗೆಯಲ್ಲೇ ಸ್ವಭಾವ ಒಳ್ಳೆಯದೊ ಕೆಟ್ಟದೊ ಎಂಬುದರ ಸೂಕ್ಷ್ಮ ಗೊತ್ತಾಗಿ ಬಿಡುತ್ತದೆ.
“ಪುರುಷಶಿಶ್ನದ ಮುಂದೊಗಲು ಮುಸಲ್ಮಾನರು ಸುನತಿ (Circumcision) ಮಾಡಿಕೊಂಡ ಹಾಗೆ ಇದ್ದರೆ ಅದು ಒಂದು ಹೀನ ಲಕ್ಷಣ. (ಮಾಸ್ಟರ್ ಮೊದಲಾದವರು ನಗುತ್ತಿದ್ದಾರೆ.) (ಮಾಸ್ಟರಿಗೆ ನಗುತ್ತ) ನೀನು ಅದನ್ನು ನೋಡಿಕೊ – ಅದು ಹೀನ ಲಕ್ಷಣ.” (ಎಲ್ಲರೂ ನಗುತ್ತಿದ್ದಾರೆ.)
ಕೊಠಡಿಯಿಂದ ಹೊರಕ್ಕೆ ಬಂದು ಪರಮಹಂಸರು ವರಾಂಡದಲ್ಲಿ ಸುತ್ತುತ್ತಿದ್ದಾರೆ. ಅವರ ಜೊತೆಯಲ್ಲಿ ಮಾಸ್ಟರ್ ಮತ್ತು ಬಾಬುರಾಮ ಇದ್ದಾರೆ.
ಶ್ರೀರಾಮಕೃಷ್ಣರು ಹಾಜರಾನಿಗೆ: “ಒಬ್ಬ ಇಲ್ಲಿಗೆ ಬಂದಿದ್ದ – ನೋಡಿದೆ. ಬೆಕ್ಕಿನಂತೆ ಕಣ್ಣು. ಆತ ಕೇಳಿದ, ‘ನಿಮಗೆ ಜ್ಯೋತಿಷ್ಯವೇನಾದರೂ ಗೊತ್ತೆ?–ನಾನು ಒಂದು ಸ್ವಲ್ಪ ಕಷ್ಟದಲ್ಲಿ ಸಿಕ್ಕಿದ್ದೇನೆ’ ಅಂತ. ನಾನು ಹೇಳಿದೆ: ‘ಇಲ್ಲ–ಬರಾಹನಗರಕ್ಕೆ ಹೋಗು; ಅಲ್ಲಿ ಜ್ಯೋತಿಷ್ಯ ತಿಳಿದ ಪಂಡಿತರು ಇದ್ದಾರೆ.”
ಬಾಬುರಾಮ ಮತ್ತು ಮಾಸ್ಟರ್ ನೀಲಕಂಠನ ಬಯಲುನಾಟಕದ ಸಂಬಂಧವಾಗಿ ಮಾತುಕತೆಯಾಡುತ್ತಿರುವರು. ಬಾಬುರಾಮ ನವೀನಸೇನನ ಮನೆಗೆ ಹೋಗಿದ್ದು ಹಿಂದಿರುಗಿ ದಕ್ಷಿಣೇಶ್ವರಕ್ಕೆ ಬಂದು ನಿನ್ನೆ ರಾತ್ರಿ ಇಲ್ಲೆ ಇದ್ದ. ಇಂದು ಪ್ರಾತಃಕಾಲ ಪರಮಹಂಸರೊಡನೆ ದಕ್ಷಿಣೇಶ್ವರದಲ್ಲಿರುವ ನವೀನ ನಿಯೋಗಿಯ ಮನೆಗೆ ಹೋಗಿ ನೀಲಕಂಠನ ಬಯಲುನಾಟಕ ನೋಡಿಬಿಟ್ಟು ಹಿಂದಿರುಗಿ ಬಂದಿದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರ್ ಮತ್ತು ಬಾಬುರಾಮನಿಗೆ: “ನೀವೇನು ಮಾತಾಡು ತ್ತಿರೋದು?”
ಮಾಸ್ಟರ್ ಮತ್ತು ಬಾಬುರಾಮ: “ನೀಲಕಂಠನ ಬಯಲುನಾಟಕದ ಆ ಹಾಡಿನ ಸಂಬಂಧವಾಗಿ–ಶ್ಯಾಮಾಪದೆಯನ್ನು ಹೊಂದುವುದರ ಮತ್ತು ನದೀತೀರ ವಾಸದ ಸಂಬಂಧವಾಗಿ ಮಾತನಾಡುತ್ತಿದ್ದೇವೆ.”
ಪರಮಹಂಸರು ವರಾಂಡದಲ್ಲಿ ನಡೆಯುತ್ತ ನಡೆಯುತ್ತ ಇದ್ದ ಹಾಗೆ, ಮಣಿಯನ್ನು ಒಂದುಕಡೆಗೆ ಕರೆದುಕೊಂಡು ಹೋಗಿ ಹೇಳುತ್ತಾರೆ, “ನೀನು ಭಗವಚ್ಚಿಂತನೆ ಮಾಡುವುದು ಆದಷ್ಟು ಮಟ್ಟಿಗೆ ಹೆಚ್ಚು ಜನರಿಗೆ ಗೊತ್ತಾಗದಿರುವುದೆ ಮೇಲು” ಅಂತ. ಹೀಗೆಂದು ಹೇಳಿ ಒಮ್ಮಿಂದೊಮ್ಮೆಯೆ ಹೊರಟು ಹೋದರು. ಒಂದು ಸ್ವಲ್ಪ ಹೊತ್ತಾದ ನಂತರ ಹಾಜರಾನೊಡನೆ ಮಾತುಕತೆಗಳನ್ನಾಡಲು ಆರಂಭಿಸಿದ್ದಾರೆ.
ಹಾಜರಾ: “ತಾನೇ ಇಲ್ಲಿಗೆ ಬರುತ್ತೇನೆ ಎಂದು ನೀಲಕಂಠ ನಿಮಗೆ ಹೇಳಿದ್ದಾನೆ; ಕರೆಸುವುದು ಒಳ್ಳೆಯದು.”
ಶ್ರೀರಾಮಕೃಷ್ಣರು: “ಬೇಡ, ರಾತ್ರಿಯೆಲ್ಲ ನಿದ್ದೆಗೆಟ್ಟಿದ್ದಾನೆ – ಭಗವಂತನ ಇಚ್ಛೆಯಿಂದ ಆತ ತಾನೇ ಇಲ್ಲಿಗೆ ಬರುವುದಾದರೆ ಅದು ಬೇರೆ ವಿಷಯ.”
ಪರಮಹಂಸರು ಬಾಬುರಾಮನಿಗೆ ನಾರಾಯಣನ ಮನೆಗೆ ಹೋಗಿ ನಾರಾಯಣ ನನ್ನು ನೋಡಿ ಬರುವಂತೆ ಹೇಳುತ್ತಿದ್ದಾರೆ. ಅವರು ನಾರಾಯಣನನ್ನು ಸಾಕ್ಷಾತ್ ನಾರಾಯಣನೆ ಎಂದು ನೋಡುತ್ತಿದ್ದಾರೆ. ಅದಕ್ಕಾಗಿಯೆ ಆತನನ್ನು ನೋಡಲು ವ್ಯಾಕುಲರಾಗಿದ್ದಾರೆ. ಬಾಬುರಾಮನಿಗೆ ಹೇಳುತ್ತಿದ್ದಾರೆ, “ನೀನು ಒಂದು ಇಂಗ್ಲಿಷ್ ಪುಸ್ತಕವನ್ನು ತೆಗೆದುಕೊಂಡು ಆತನ ಮನೆಗೆ ಹೋಗು” ಎಂದು.
ಪರಮಹಂಸರು ಕೊಠಡಿಯಲ್ಲಿ ತಮ್ಮ ಸ್ವಸ್ಥಾನದಲ್ಲಿ ಕುಳಿತಿದ್ದಾರೆ. ಘಂಟೆ ಮೂರರ ಸಮಯ. ನೀಲಕಂಠನು ಐದಾರು ಜನ ಸಾಂಗೋಪಾಂಗಿಗಳೊಡನೆ ಪರಮಹಂಸರ ಕೊಠಡಿ ಕಡೆಗೆ ಬರುತ್ತಿದ್ದಾನೆ. ಪರಮಹಂಸರು ಆತನನ್ನು ಎದುರುಗೊಳ್ಳಲು ಹೋಗುತ್ತಿರುವಂತೆ ಪೂರ್ವ ದಿಕ್ಕಿನ ಬಾಗಿಲ ಕಡೆ ಹೋದರು. ನೀಲಕಂಠನು ಪೂರ್ವದ ಬಾಗಿಲಿನಿಂದ ಒಳಕ್ಕೆ ಬಂದು ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದಾನೆ.
ಪರಮಹಂಸರು ಸಮಾಧಿಸ್ಥರಾಗಿದ್ದಾರೆ. ಅವರ ಹಿಂದುಗಡೆ ಬಾಬುರಾಮ ನಿಂತಿದ್ದಾನೆ – ಮುಂದುಗಡೆ ಮಾಸ್ಟರ್ ನೀಲಕಂಠ ಮತ್ತು ಉಳಿದ ನಟರು ಆಶ್ಚರ್ಯಚಕಿತರಾಗಿ ಅವರನ್ನು ನೋಡುತ್ತಾ ನಿಂತಿದ್ದಾರೆ. ಮಂಚದ ಉತ್ತರಕ್ಕೆ ನಿಂತುಕೊಂಡು ಖಜಾಂಚಿ ದೀನನಾಥ ನೋಡುತ್ತಿದ್ದಾನೆ. ಬರುತ್ತ ಬರುತ್ತ ದೇವಾಲಯದ ಕೆಲಸಗಾರರಿಂದ ಕೊಠಡಿ ತುಂಬಿಹೋಗಿದೆ. ಈಗ ಪರಮಹಂಸರ ಭಾವ ಸ್ವಲ್ಪ ಉಪಶಮನವಾಗಿದೆ. ಅವರು ನೆಲದ ಮೇಲೆ ಹಾಸಿದ ಮಂದಲಿಗೆ ಮೇಲೆ ಕುಳಿತಿದ್ದಾರೆ – ಮುಂದುಗಡೆ ನೀಲಕಂಠ, ಚತುರ್ದಿಕ್ಕುಗಳಲ್ಲಿಯೂ ಉಳಿದ ಭಕ್ತರು ಕುಳಿತಿದ್ದಾರೆ.
ಪರಮಹಂಸರು ಭಾವಾವಿಷ್ಟರಾಗಿಯೇ: “ಕ್ಷೇಮವಾಗಿದ್ದೇನೆ.”
ನೀಲಕಂಠ ಕೈಮುಗಿದು: “ನನಗೂ ಕ್ಷೇಮವಾಗುವಂತೆ ಕೃಪೆಮಾಡಿ.”
ಪರಮಹಂಸರು ನಗುತ್ತ: “ನೀನು ಆಗಲೆ ಕ್ಷೇಮವಾಗಿದ್ದೀಯೆ. ‘ಕ’ ಕ್ಕೆ ‘ಆ’ ಸೇರಿಸಿದರೆ ‘ಕಾ’ ಆಗುತ್ತದೆ. ಅದಕ್ಕೆ ಮತ್ತೆ ಪುನಃ ‘ಆ’ ಸೇರಿಸಿದರೆ ಏನು ಪ್ರಯೋಜನ? ‘ಕಾ’ ಕ್ಕೆ ಪುನಃ ಪುನಃ ‘ಆ’ ಸೇರಿಸಿದರೆ ಅದು ‘ಕಾ’ ಆಗಿಯೆ ಉಳಿಯುತ್ತದೆ” (ಎಲ್ಲರೂ ನಗುತ್ತಾರೆ.)
ನೀಲಕಂಠ: “ಈ ಸಂಸಾರದಲ್ಲಿ ಬಿದ್ದು ಹೊರಳಾಡುತ್ತಿದ್ದೇನಲ್ಲ!”
ಪರಮಹಂಸರು ನಗುತ್ತ: “ಪರರಿಗೋಸ್ಕರ ನಿನ್ನನ್ನು ಸಂಸಾರದಲ್ಲಿ ಇಟ್ಟಿದ್ದಾನೆ. ಅಷ್ಟ ಪಾಶಗಳಿವೆ. ಎಲ್ಲ ಒಟ್ಟಿಗೆ ಹೋಗುವುದಿಲ್ಲ. ಒಂದೆರಡು ಪಾಶಗಳನ್ನು ಆತ ಇಟ್ಟಿರುತ್ತಾನೆ–ಲೋಕಶಿಕ್ಷಣೆಗಾಗಿ. ನೀನು ಈ ಬಯಲುನಾಟಕವನ್ನು ಆಡಿದೆ. ನಿನ್ನ ಭಕ್ತಿಯನ್ನು ನೋಡಿ ಎಷ್ಟೊಂದು ಜನಕ್ಕೆ ಉಪಕಾರವಾಗುತ್ತಿದೆ, ನೀನು ಇದನ್ನೆಲ್ಲ ಬಿಟ್ಟುಬಿಟ್ಟರೆ ಇವರ (ನಟರ) ಗತಿಯೇನಾಗಬೇಕು?
“ಆತ ನಿನ್ನ ಮೂಲಕ ತನ್ನ ಕೆಲಸ ಮಾಡಿಸಿಕೊಳ್ಳುತ್ತಿದ್ದಾನೆ. ಅದು ಮುಗಿಯಿತೆಂದರೆ ಮತ್ತೆ ನೀನು ಜನ್ಮವೆತ್ತುವುದಿಲ್ಲ. ಗೃಹಿಣಿ ಮನೆಕೆಲಸವನ್ನೆಲ್ಲ ಪೂರ್ಣವಾಗಿ ಮುಗಿಸಿ, – ಎಲ್ಲರಿಗೂ ಊಟಕ್ಕೆ ಹಾಕಿ – ಪರಿಚಾರಕರಿಗೂ ಊಟಕ್ಕೆ ಬಡಿಸಿ – ಸ್ನಾನಕ್ಕೆ ಹೋಗುತ್ತಾಳೆ; – ಆಗ ಕೂಗಿ ಗಂಟಲು ಕಿತ್ತುಕೊಂಡರೂ ಸ್ನಾನ ಬಿಟ್ಟು ಬರುವುದಿಲ್ಲ.”
ನೀಲಕಂಠ: “ನನಗೆ ಆಶೀರ್ವಾದ ಮಾಡಿ.”
ಶ್ರೀರಾಮಕೃಷ್ಣರು: “ಕೃಷ್ಣನ ವಿರಹದಿಂದ ಯಶೋದೆ ಉನ್ಮತ್ತಳಾಗಿದ್ದಾಳೆ. ಶ್ರೀಮತಿ ಯನ್ನು (ರಾಧೆಯನ್ನು) ನೋಡಲು ಹೋಗಿದ್ದಾಳೆ. ಆಗ ಶ್ರೀಮತಿ ಧ್ಯಾನ ಮಾಡುತ್ತಿದ್ದಳು. ಆಕೆ ಭಾವಾವಿಷ್ಟಳಾಗಿ ಯಶೋದೆಗೆ ಹೇಳಿದಳು, ‘ನಾನು ಆ ಮೂಲಪ್ರಕೃತಿ ಆದ್ಯಾಶಕ್ತಿ, ನೀನು ಒಂದು ವರ ಬೇಡಿಕೊ’ ಎಂದು. ಯಶೋದೆ ಹೇಳಿದಳು, ‘ನಾನು ಏನನ್ನು ತಾನೇ ಕೇಳಲಿ? ಕೊಡುವುದಾದರೆ, ಕಾಯಾ ವಾಚಾ ಮನಸಾ ಆತನ ಚಿಂತನೆ, ಆತನ ಸೇವೆ ಮಾಡುವಂತೆ; ಕಿವಿಯಿಂದ ಆತನ ನಾಮಗುಣ ಕೀರ್ತನೆಯನ್ನು ಕೇಳುವಂತೆ; ಕಣ್ಣಿನಿಂದ ಆತನ ರೂಪವನ್ನು ಮತ್ತು ಆತನ ಭಕ್ತರನ್ನು ನೋಡುವಂತೆ ಅನುಗ್ರಹಿಸು.’
“ನೀನು ಭಗವಂತನ ಹೆಸರನ್ನು ಉಚ್ಚರಿಸಿದೊಡನೆಯೆ ನಿನ್ನ ಕಣ್ಣುಗಳು ಪ್ರೇಮಾಶ್ರು ವಿನಿಂದ ತುಂಬಿ ಹೋಗುವುದರಿಂದ ನಿನಗೇಕೆ ಚಿಂತೆ?–ಆತನ ಮೇಲಿನ ಪ್ರೇಮ ನಿನಗೆ ಆಗಲೆ ಉಂಟಾಗಿಬಿಟ್ಟಿದೆ.
“ಬಹುತ್ವದ ಜ್ಞಾನಕ್ಕೆ ಅಜ್ಞಾನ ಎಂದು ಹೆಸರು. ಏಕತ್ವದ ಜ್ಞಾನಕ್ಕೆ ಜ್ಞಾನ ಎಂದು ಹೆಸರು–ಅಂದರೆ ಭಗವಂತನೊಬ್ಬನೆ ಸತ್ಯ, ಸರ್ವಭೂತಗಳಲ್ಲಿಯೂ ಇದ್ದಾನೆ ಎಂದು. ಆತನೊಡನೆ ಆಲಾಪಿಸುವುದಕ್ಕೆ ವಿಜ್ಞಾನ ಎಂದು ಹೆಸರು–ಆತನ ಸಾಕ್ಷಾತ್ಕಾರವನ್ನು ಮಾಡಿಕೊಂಡು ಹಲವಾರು ವಿಧದಿಂದ ಆತನನ್ನು ಪ್ರೀತಿಸುವುದಕ್ಕೆ ವಿಜ್ಞಾನ ಎಂದು ಹೆಸರು.
“ಮತ್ತೆ ಇದೆ – ಆತ ದ್ವೈತಾದ್ವೈತವಿವರ್ಜಿತ-ವಾಕ್ಯಮನಾತೀತ. ಲೀಲೆಯಿಂದ ನಿತ್ಯಕ್ಕೆ, ನಿತ್ಯದಿಂದ ಲೀಲೆಗೆ ಬರೋದು; – ಇದಕ್ಕೆ ಪಕ್ವಭಕ್ತಿ ಎಂದು ಹೆಸರು.
“ನಿನ್ನ ಆ ಹಾಡು ಬಹಳ ಚೆನ್ನಾಗಿದೆ – ಶ್ಯಾಮಾಪದೆಯನ್ನು ಹೊಂದುವುದರ ಮತ್ತು ನದೀತೀರದಲ್ಲಿ ವಾಸಿಸುವುದರ ಹಾಡು. ಅದು ದೊರೆತುಬಿಟ್ಟರೇ ಮುಗಿಯಿತು – ಎಲ್ಲಾ ಆಕೆಯ ಕೃಪೆ ಮೇಲೆ ನಿಂತಿದೆ. ಆದರೆ ಆಕೆಯನ್ನು ಕರೆಯಬೇಕು, – ಸುಮ್ಮನೆ ಇದ್ದುಬಿಟ್ಟರೆ ಸಾಲದು. ವಕೀಲನು ನ್ಯಾಯಾಧೀಶನಿಗೆ ಎಲ್ಲವನ್ನೂ ತಿಳಿಸಿ ಕೊನೆಗೆ ಹೇಳುತ್ತಾನೆ, ‘ಏನೇನು ತಿಳಿಸಬೇಕೊ ಅದೆಲ್ಲವನ್ನೂ ತಿಳಿಸಿಬಿಟ್ಟಿದ್ದೇನೆ. ಈಗ ತಮ್ಮ ಚಿತ್ತ’ ಎಂದು.”
ಸ್ವಲ್ಪ ಹೊತ್ತಿನ ನಂತರ ಪರಮಹಂಸರು ನೀಲಕಂಠನಿಗೆ ಹೇಳುತ್ತಿದ್ದಾರೆ: “ನೀನು ಇಂದು ಬೆಳಿಗ್ಗೆ ಬಹಳವಾಗಿ ಹಾಡಿದೆ; ಮತ್ತೆ ಇಲ್ಲಿಗೆ ಶ್ರಮವಹಿಸಿ ಬಂದಿದ್ದೀಯೆ, ನೋಡು, ಇಲ್ಲಿ ಮಾತ್ರ ಬರಿ ಆನರರಿಯೆ.2 ”
ನೀಲಕಂಠ: “ಏಕೆ ಹಾಗೆ?”
ಪರಮಹಂಸರು ನಗುತ್ತ: “ಅರ್ಥವಾಯಿತು, ಏನು ಹೇಳುತ್ತೀಯೆ ಅಂಬುದು.”
ನೀಲಕಂಠ: “ಅಮೂಲ್ಯ ರತ್ನವನ್ನೇ ತೆಗೆದುಕೊಂಡು ಹೋಗುತ್ತೇನೆ!!!”
ಶ್ರೀರಾಮಕೃಷ್ಣರು: “ಆ ಅಮೂಲ್ಯ ರತ್ನ ನಿಮ್ಮ ಹತ್ತಿರವೆ ಇದೆ. ಮತ್ತೆ ‘ಕಾ’ ಗೆ ಆ ಸೇರಿಸಿದರೆ ಆಗುವುದೇನು? ಅದು ನಿನ್ನಲ್ಲಿ ಇಲ್ಲದೆ ಇದ್ದರೆ, ನಿನ್ನ ಹಾಡು ಅಷ್ಟೊಂದು ಚೆನ್ನಾಗಿ ಏಕೆ ಮನಸ್ಸಿಗೆ ಹಿಡಿಸುತ್ತದೆ? ರಾಮಪ್ರಸಾದ ಸಿದ್ಧಪುರುಷ. ಅದಕ್ಕಾಗಿಯೆ ಆತನ ಹಾಡುಗಳು ಬಹಳವಾಗಿ ಹಿಡಿಸುತ್ತದೆ. ಸಾಧಾರಣ ಜೀವಕ್ಕೆ ಮಾನುಷ್ ಎಂದು ಹೆಸರು. ಯಾರಿಗೆ ಚೈತನ್ಯ ಉಂಟಾಗಿದೆಯೊ ಅವನು ಮಾನ್ಹ್ಞುಸ್ (ಜಾಗೃತನಾದ ಮನುಷ್ಯ). ಆದ್ದರಿಂದ ನೀನು ಮಾನ್ಹ್ಞುಸ್.
“ಅಲ್ಲಿ ನಿನ್ನ ಹಾಡುಗಾರಿಕೆ ಆಗುವುದೆಂದು ಕೇಳಿ ನಾನೇ ಅಲ್ಲಿಗೆ ಬರಬೇಕು ಎಂದಿದ್ದೆ – ಅಷ್ಟರಲ್ಲಿ ನಿಯೋಗಿ ಕೂಡ ಇಲ್ಲಿಗೆ ಬಂದು ನನ್ನನ್ನು ಆಹ್ವಾನಿಸಿದ.”
ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ನೀಲಕಂಠನಿಗೆ ಹೇಳುತ್ತಿದ್ದಾರೆ. “ಒಂದೆರಡು ಭಗವತಿಯ ಹಾಡುಗಳನ್ನು ಹಾಡು” ಎಂದು.
ನೀಲಕಂಠನು ತನ್ನ ಸಾಂಗೋಪಾಂಗಿಗಳೊಡನೆ ಎರಡು ಹಾಡನ್ನು ಹಾಡಿದನು. ಎರಡನೆಯ ಹಾಡನ್ನು ಕೇಳುತ್ತಿದ್ದ ಹಾಗೆಯೆ ಪರಮಹಂಸರು ನಿಂತುಕೊಂಡೆ ಸಮಾಧಿಸ್ಥ ರಾಗಿದ್ದಾರೆ. ಸ್ವಲ್ಪ ಪ್ರಕೃತಿಸ್ಥರಾದ ನಂತರ ಪ್ರೇಮೋನ್ಮತ್ತರಾಗಿ ನರ್ತಿಸುತ್ತಿದ್ದಾರೆ. ನೀಲಕಂಠ ಮತ್ತು ಉಳಿದ ಭಕ್ತರು ಅವರ ಸುತ್ತಲೂ ಸುತ್ತ್ತುತ್ತ ಸುತ್ತುತ್ತ ನರ್ತಿಸಲು ಮತ್ತು ಹಾಡಲು ಆರಂಭಿಸಿದರು. ಆ ರೀತಿಯಾಗಿ ನರ್ತಿಸಿದ ನಂತರ ನೀಲಕಂಠ ಶಿವನ ಮೇಲಿನ ಒಂದು ಹಾಡನ್ನು ಹಾಡುತ್ತಿದ್ದಾನೆ. ಪರಮಹಂಸರು ಭಕ್ತರೊಡಗೂಡಿ ಮತ್ತೆ ನರ್ತಿಸುತ್ತಿದ್ದಾರೆ.
ಆ ಹಾಡು ಮುಗಿಯಿತು. ಪರಮಹಂಸರು ನೀಲಕಂಠನಿಗೆ ಹೇಳುತ್ತಿದ್ದಾರೆ, “ನಾನು ನಿಮ್ಮ ಆ ಹಾಡನ್ನು – ಕಲ್ಕತ್ತದಲ್ಲಿ ಕೇಳಿದೆನಲ್ಲ ಅದನ್ನು – ಕೇಳಬೇಕೆಂಬ ಇಚ್ಛೆ” ಎಂದು.
ಮಾಸ್ಟರ್: “ಶ್ರೀ ಗೌರಾಂಗ ಸುಂದರ ನವ ನಟವರ ಎಂಬುದೇನು?”
ಪರಮಹಂಸರು: “ಹೌದು ಹೌದು!”
ನೀಲಕಂಠ ಆ ಹಾಡನ್ನು ಹಾಡುತ್ತಾನೆ:
ಶ್ರೀ ಗೌರಾಂಗ ಸುಂದರ ನವ ನಟವರ
ತಪ್ತ ಕಾಂಚನ ಕಾಯಬಂಧುರ ನರವರ….
“ಪ್ರೇಮದ ಪ್ರವಾಹಕ್ಕೆ ಸಿಕ್ಕಿ ಎಲ್ಲವೂ ಕೊಚ್ಚಿಹೋಗುತ್ತಿತ್ತು” ಎಂಬ ನುಡಿಯನ್ನು ಹಿಡಿದು ಹಾಡುತ್ತ ಪರಮಹಂಸರು ನೀಲಕಂಠ ಮೊದಲಾದ ಭಕ್ತರೊಡನೆ ಮತ್ತೊಮ್ಮೆ ನರ್ತಿಸುತ್ತಿದ್ದಾರೆ. ಈ ಅಪೂರ್ವ ನೃತ್ಯವನ್ನು ಅಂದು ಯಾರು ನೋಡಿದರೊ ಅದನ್ನು ಅವರು ಎಂದಿಗೂ ಮರೆಯುವ ಹಾಗಿಲ್ಲ. ಕೊಠಡಿಯಲ್ಲಿ ಜನ ತುಂಬಿರುವರು. ಪ್ರಾಯಶಃ ಎಲ್ಲರೂ ಉನ್ಮತ್ತರಾಗಿದ್ದಾರೆ. ತನ್ನ ಅನುಯಾಯಿಗಳೊಡನೆ ಸಾಕ್ಷಾತ್ ಶ್ರೀಚೈತನ್ಯಪ್ರಭುವೇ ನರ್ತಿಸುತ್ತಿರುವನೊ ಏನೊ ಎಂಬಂತ್ತಿತ್ತು.
ಮನಮೋಹನ ಭಾವಾವಿಷ್ಟನಾಗಿದ್ದಾನೆ, ಆತನ ಮನೆಯಿಂದ ಕೆಲವು ಹೆಂಗಸರು ಬಂದಿದ್ದಾರೆ. ಅವರು ಉತ್ತರದ ವರಾಂಡದಿಂದ ಈ ಅದ್ಭುತ ನೃತ್ಯ ಮತ್ತು ಸಂಕೀರ್ತನೆ ಯನ್ನು ನೋಡುತ್ತಿದ್ದಾರೆ, ಅವರಲ್ಲಿಯೂ ಒಬ್ಬಳಿಗೆ ಭಾವ ಬಂದುಬಿಟ್ಟಿದೆ. ಮನಮೋಹನ ಪರಮಹಂಸರ ಭಕ್ತ ಮತ್ತು ರಾಖಾಲನ ಸಂಬಂಧಿ.
ಪರಮಹಂಸರು ಮತ್ತೆ ಹಾಡಲಾರಂಭಿಸಿದ್ದಾರೆ :
ಹರಿನಾಮವನು ನುತಿಸಿ, ಆನಂದಬಾಷ್ಪವನು
ಕರೆವಣ್ಣ ತಮ್ಮಂದಿರು,3 ಇವರು ನೋಡು!
ತಾವು ಆನಂದದಲಿ ಕುಣಿದು ಜಗವನೆ ಕುಣಿಪ
ತಾವು ಕಂಬನಿಗರೆದು, ಜಗವ ಕಂಬನಿಗರೆಪ
ಚೋದ್ಯವನು ನೋಡು!
ಒದೆಯನಿತ್ತರು, ಹರಿಯ ಸುಧೆಯನೇ ನೀಡುವರು!
ಹಿಂದೆ, ಗೋಪಿಯರಿಂದ ಹಾಲ್ ಬೆಣ್ಣೆಗಳ ಕದ್ದ
ಗೋಪಾಲರವರು!
ಜಾತಿಗೀತಿಯ ಕ್ಷುದ್ರಭಾವಗಳ ಪುಡಿಗುಟ್ಟಿ
ಸಮತೆಯನು ನೆಲೆಗೊಳಿಸೆ ಬಂದರಿವರು!
ಹೊಲೆಯರನು ತೆಕ್ಕೆಯಲಿ ತಬ್ಬಿದವರು !
ಹರಿನಾಮ ಸುಧೆಯಲ್ಲಿ ಇರವ ಕರಗಿಸಿದವರು
ಜಗವನೇ ಉನ್ಮತ್ತಗೊಳಿಸಿದವರು !
ತನ್ನ ಹೆಸರನು ತಾನೆ ಸವಿಪ ಲೀಲೆಗೆ ಸಂದು
ಶ್ರೀಹರಿಯೆ ಇವರಾಗಿ ಬಂದನೇನೊ !
ದುರುಳರಿಬ್ಬರ 4 ಹಿಂದೆ ಉದ್ಧಾರಮಾಡಿದಾ
ಪತಿತಪಾವನಮೂರ್ತಿ. ಇವರೆ ಏನೋ !
ಹಗೆಕೆಳಗಳೆಂಬುದನು ಕಾಣದೀ ಸೋದರರು
ಮತ್ತೆ ಜಗದುದ್ಧಾರಕೆ ಬಂದರೇನೊ !
ಸಂಕೀರ್ತನೆ ಮಾಡುತ್ತ ಮಾಡುತ್ತ ಪರಮಹಂಸರು ನೀಲಕಂಠನೆ ಮೊದಲಾದ ಭಕ್ತರೊಡನೆ ನರ್ತಿಸುತ್ತಿದ್ದಾರೆ ಮತ್ತು ಆಶುಕವಿತೆ ಮಾಡುತ್ತಿದ್ದಾರೆ:
ರಾಧೆಯೊಲವನು ಕಂಡು ಉನ್ಮತ್ತರಾಗಿರುವ
ಸೋದರರು ಬಂದಿರುವರಿಲ್ಲಿ ನೋಡು!
ಈ ಉಚ್ಚಕಂಠದ ಸಂಕೀರ್ತನೆ ಕೇಳಿ ಅಕ್ಕಪಕ್ಕದ ಜನರೆಲ್ಲ ಕೊಠಡಿಯ ಸುತ್ತಲೂ ನಿಂತಿದ್ದಾರೆ. ದಕ್ಷಿಣದ ವರಾಂಡ, ಪಶ್ಚಿಮದ ವರಾಂಡ, ಪಶ್ಚಿಮದ ಗುಂಡು ವರಾಂಡ ಎಲ್ಲೆಲ್ಲೂ ಜನ ಕಿಕ್ಕಿರಿದು ನಿಂತಿರುವರು. ಯಾರು ಗಂಗೆಯಲ್ಲಿ ದೋಣಿಯಲ್ಲಿ ಹೋಗುತ್ತಿದ್ದರೊ ಅವರೂ ಈ ಮಧುರ ಸಂಕೀರ್ತನೆಯ ಶಬ್ದ ಕೇಳಿ ಆಕರ್ಷಿತರಾಗಿ ಬಿಟ್ಟಿದ್ದಾರೆ.
ಕೀರ್ತನೆ ಮುಗಿಯಿತು. ಪರಮಹಂಸರು ಭಗವತಿಗೆ ಪ್ರಣಾಮ ಮಾಡಿ ಹೇಳುತ್ತಿದ್ದಾರೆ: “ಭಾಗವತ ಭಕ್ತ-ಭಗವಂತ. ಜ್ಞಾನಿಗಳಿಗೆ ನಮಸ್ಕಾರ, ಯೋಗಿಗಳಿಗೆ ನಮಸ್ಕಾರ, ಭಕ್ತರಿಗೆ ನಮಸ್ಕಾರ.”
ಈಗ ಪರಮಹಂಸರು ಗುಂಡು ವರಾಂಡದಲ್ಲಿ ನೀಲಕಂಠ ಮೊದಲಾದ ಭಕ್ತ ರೊಡನೆ ಕುಳಿತಿದ್ದಾರೆ. ಸಾಯಂಕಾಲವಾಗಿದೆ. ಶರದೃತುವಿನ ಹುಣ್ಣಿಮೆಯ ಎರಡನೆ ದಿನ, ಎಲ್ಲೆಲ್ಲಿಯೂ ಬೆಳದಿಂಗಳು ಚೆಲ್ಲಿದೆ. ಪರಮಹಂಸರು ನೀಲಕಂಠನೊಡನೆ ಆನಂದದಿಂದ ಮಾತುಕತೆಗಳನ್ನಾಡುತ್ತಿದ್ದಾರೆ.
ನೀಲಕಂಠ: “ತಾವು ಸಾಕ್ಷಾತ್ ಗೌರಾಂಗನೆ ಅಲ್ಲದೆ ಬೇರೆ ಯಾರೂ ಅಲ್ಲ.”
ಶ್ರೀರಾಮಕೃಷ್ಣರು: “ಓ! ಅಂಥ ದೊಡ್ಡ ಮಾತುಗಳೆಲ್ಲ ಏಕೆ? – ನಾನು ಎಲ್ಲರ ದಾಸನ ದಾಸ. ಅಲೆಯೇನೊ ಗಂಗೆಯದೆ; ಎಂದಿಗಾದರೂ ಗಂಗೆ ಅಲೆಯದಾಗುವುದೆ?”
ನೀಲಕಂಠ: “ನೀವು ಏನು ಬೇಕಾದರೂ ಹೇಳಿಕೊಳ್ಳಿ. ನಾವು ಮಾತ್ರ ಭಾವಿಸುತ್ತೇವೆ ತಾವು ಗೌರಾಂಗನೆ ಎಂದು.”
ಶ್ರೀರಾಮಕೃಷ್ಣರು ಕಿಂಚಿತ್ ಭಾವಾವೇಶರಾಗಿ ಕರುಣಾಮಯ ಸ್ವರದಿಂದ: “ಅಣ್ಣಂದಿರಾ! ನನ್ನ ‘ನಾನು’ ಎಂಬುದನ್ನು ಪತ್ತೆ ಮಾಡಲು ನನಗೆ ಇಚ್ಛೆ. ಆದರೆ ಅದು ಹುಡುಕಿದರೂ ಪತ್ತೆಯಾಗುತ್ತಿಲ್ಲ. ಹನುಮಂತ ಹೇಳಿದ: ‘ಹೇ ರಾಮ, ಕೆಲವು ವೇಳೆ ಭಾವಿಸುತ್ತೇನೆ ನೀನು ಪೂರ್ಣ ನಾನು ಅಂಶ ಅಂತ. ನೀನು ಪ್ರಭು, ನಾನು ದಾಸ ಅಂತ, – ಮತ್ತೆ ತತ್ತ್ವಜ್ಞಾನ ದೊರೆತಾಗ ನೋಡುತ್ತೇನೆ, ನೀನೇ ನಾನಾಗಿರುವುದನ್ನು, ನಾನೇ ನೀನಾಗಿರುವುದನ್ನು.”
ನೀಲಕಂಠ: “ನಾನು ಏನನ್ನು ತಾನೆ ಹೇಳಲಿ? ನಮ್ಮ ಮೇಲೆ ದಯವಿಟ್ಟು ಕೃಪಾಕಟಾಕ್ಷವನ್ನು ಬೀರಬೇಕು.”
ಶ್ರೀರಾಮಕೃಷ್ಣರು ನಗುತ್ತ: “ನೀನು ಎಷ್ಟೊಂದು ಜನರನ್ನು ಪಾರುಮಾಡಿಸು ತ್ತಿದ್ದೀಯೆ ಏನು ಕತೆ! – ನಿನ್ನ ಹಾಡನ್ನು ಕೇಳಿ ಎಷ್ಟೊಂದು ಜನಕ್ಕೆ ಉದ್ದೀಪನೆ ಆಗುತ್ತಿದೆ!”
ನೀಲಕಂಠ: “ಪಾರುಮಾಡಿಸುತ್ತಿದ್ದೇನೆ ಎಂದು ಹೇಳುತ್ತಿದ್ದೀರಿ! ಆದರೆ ನಾನೇ ಮುಳುಗಿ ಹೋಗದ ಹಾಗೆ ಆಶೀರ್ವಾದ ಮಾಡಿ!”
ಶ್ರೀರಾಮಕೃಷ್ಣರು ನಗುತ್ತ: “ನೀನು ಮುಳುಗಿ ಹೋಗುವುದಾದರೆ ಅದು ಅಮೃತ ಸಾಗರದಲ್ಲಿ ಮಾತ್ರ.”
ಪರಮಹಂಸರು ನೀಲಕಂಠನ ಸಹವಾಸದಿಂದ ಬಹಳ ಆನಂದದಿಂದ ಇದ್ದಾರೆ, ಆತನಿಗೆ ಮತ್ತೆ ಹೇಳುತ್ತಿದ್ದಾರೆ: “ನೀನು ಇಲ್ಲಿಗೆ ಬರುವುದು! – ಯಾರನ್ನು ಬಹಳ ಸಾಧನೆ ತಪಸ್ಸಿನಿಂದ ಪಡೆಯಬೇಕೊ ಅಂಥವ ನೀನು! ಹೋಗಲಿ, ಒಂದು ಹಾಡು ಕೇಳು.”
ಪರಮಹಂಸರು ಹಾಡುತ್ತಿದ್ದಾರೆ. ಅದರ ಎರಡು ಚರಣ:
ಆನಂದಮಯಿಯಾದ ಶ್ರೀ ಚಂಡಿ ಬಂದಾಗ
ನನ್ನ ಮನೆಗೆ
ಎನಿತೊಂದು ಮಂತ್ರಗಳು ನನ್ನ ಕಿವಿಗೆ
ಎನಿತೆನಿತು ಯೋಗಿಗಳು, ಎನಿತು ಸಂನ್ಯಾಸಿಗಳು
ಬಹರಿಲ್ಲಿಗೆ!
ಪರಮಹಂಸರು ಮತ್ತೆ ಹೇಳಿದರು, “ಭಗವತಿ ಎಲ್ಲಿಯವರೆಗೆ ಇಲ್ಲಿ ಇರುವಳೊ, ಅಲ್ಲಿಯವರೆಗೆ ಎಷ್ಟೊಂದು ಜನ ಜಟಾಧಾರಿ ಯೋಗಿಗಳು ಬರುವರಿಲ್ಲಿಗೆ.”
ಪರಮಹಂಸರು ನಗುತ್ತಿದ್ದಾರೆ. ಮಾಸ್ಟರ್, ಬಾಬುರಾಮ ಮೊದಲಾದವರಿಗೆ ಹೇಳು ತ್ತಿದ್ದಾರೆ: “ನನಗೆ ಬಹಳ ನಗು ಬರುತ್ತಿದೆ. ಯೋಚಿಸುತ್ತಿದ್ದೇನೆ–ಇವರ (ನಟರ) ಎದುರಿಗೆ ನಾನು ಹಾಡೋದು!”
ನೀಲಕಂಠ: “ನಾವು ಯಾವುದನ್ನು ಇಲ್ಲಿ ಅಲ್ಲಿ ಹಾಡುತ್ತ ಸುತ್ತುತ್ತಿದ್ದೆವೊ ಅದಕ್ಕೆ ಇಂದು ಪುರಸ್ಕಾರ ದೊರೆಯಿತು.”
ಶ್ರೀರಾಮಕೃಷ್ಣರು ನಗುತ್ತ: “ಏನು ಮಾರಿದರೂ ಅಂಗಡಿಯವ ಒಂದು ಸ್ವಲ್ಪ ಕೊಸರು ಕೊಡುತ್ತಾನೆ. ನೀವು ಅಲ್ಲಿಗೆ ಹೋಗಿ ಹಾಡಿದಿರಿ! ಇಲ್ಲಿಗೆ ಬಂದು ಕೊಸರು ಕೊಟ್ಟಿರಿ!” (ಎಲ್ಲರೂ ನಗುತ್ತಿದ್ದಾರೆ.)
1. ಇದು ಒಂದು ವಿಧದ ಪಗಡೆ ಆಟ. ಕಾಯಿ ವಿವಿಧ ಭೂಮಿಕೆಗಳ (ಮನೆಗಳ) ಮೂಲಕ ಹಾದು ವೈಕುಂಠವನ್ನು ಮುಟ್ಟಬೇಕು, ತಪ್ಪಾಗಿ ನಡೆಸಿದಾಗಲೆಲ್ಲ ಕಾಯಿ ಒಂದೊಂದು ನಿರ್ದಿಷ್ಟ ನರಕಕ್ಕೆ ಬೀಳುತ್ತದೆ.
2. ಠಾಕುರರು ಕೆಲವು ಇಂಗ್ಲಿಷ್ ಪದಗಳನ್ನು ಬಳಸುತ್ತಿದ್ದರು. ಆನರರಿ ಎಂದರೆ ಗೌರವ ಪೂರಿತ, ಆದರೆ ಯಾವ ಸಂಭಾವನೆಯೂ ಇಲ್ಲದ್ದು ಎಂದು.
3. ಗೌರಾಂಗ ಮತ್ತು ನಿತ್ಯಾನಂದ
4. ಒಮ್ಮೆ ನಿತ್ಯಾನಂದನನ್ನು ಹೊಡೆದ ಜಗಾಯ್ ಮಾಧಾಯ್ ಎಂಬ ಇಬ್ಬರು ಪುಂಡರು ನಿತ್ಯಾನಂದನ ಪ್ರೇಮದಿಂದ ಕೊನೆಗೆ ಭಗವದ್ ಭಕ್ತರಾದರು.