೧೧ನೆ ಮಾರ್ಚಿ, ೧೮೮೨, ಫಾಲ್ಗುಣ ಶುಕ್ಲ ಪೌರ್ಣಿಮೆ, ಶನಿವಾರ
ಘಂಟೆ ರಾತ್ರಿ ಎಂಟೊ ಒಂಭತ್ತೊ. ದೋಲ ಜಾತ್ರೆ ಇಂದು. ಬಲರಾಮವಸು ಪರಮಹಂಸರನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಜೊತೆಯಲ್ಲಿ ರಾಮ, ಮನಮೋಹನ, ರಾಖಾಲ, ನಿತ್ಯಗೋಪಾಲ ಮೊದಲಾದವರು ಬಂದಿದ್ದಾರೆ. ಪರಮಹಂಸರ ಆಜ್ಞೆಗನುಸಾರ ಮಾಸ್ಟರೂ ಅಲ್ಲಿಗೆ ಬಂದಿದ್ದಾನೆ.
ಪರಮಹಂಸರೂ, ಭಕ್ತರೂ ಕೂಡಿ ಹರಿನಾಮ ಸಂಕೀರ್ತನೆ ಮಾಡುತ್ತ ಮಾಡುತ್ತ ಪ್ರೇಮೋನ್ಮತ್ತರಾಗಿಬಿಟ್ಟಿದ್ದಾರೆ. ಕೆಲವು ಮಂದಿ ಭಕ್ತರಿಗೆ ಭಾವಾವಸ್ಥೆ ಬಂದುಬಿಟ್ಟಿದೆ. ನಿತ್ಯಗೋಪಾಲನ ಎದೆ ಕೆಂಪೇರಿಬಿಟ್ಟಿದೆ. ರಾಖಾಲ ಭಾವಸ್ಥನಾಗಿ ಸಂಪೂರ್ಣ ಬಾಹ್ಯಜ್ಞಾನ ಶೂನ್ಯನಾಗಿ ನೆಲದ ಮೇಲೆ ಬಿದ್ದಿದ್ದಾನೆ. ಪರಮಹಂಸರು ಆತನ ಎದೆ ಮೇಲೆ ತಮ್ಮ ಕೈಯಿಟ್ಟು ಹೇಳುತ್ತಿದ್ದಾರೆ: “ಶಾಂತನಾಗು, ಶಾಂತನಾಗು.” ಇದೇ ರಾಖಾಲನ ಪ್ರಥಮ ಭಾವಾವಸ್ಥೆ. ಆತ ಕಲ್ಕತ್ತದಲ್ಲಿ ತನ್ನ ತಂದೆಯೊಡನೆ ಇದ್ದಾನೆ. ಪರಮಹಂಸರನ್ನು ನೋಡಲು ಆಗಾಗ ದಕ್ಷಿಣೇಶ್ವರಕ್ಕೆ ಬಂದುಹೋಗುತ್ತಿದ್ದಾನೆ. ಶ್ಯಾಮಪುಕುರದಲ್ಲಿರುವ ವಿದ್ಯಾಸಾಗರನ ಶಾಲೆಯಲ್ಲಿ ಸ್ವಲ್ಪಕಾಲ ವ್ಯಾಸಂಗ ಮಾಡಿದ್ದಾನೆ.
ಸಂಕೀರ್ತನೆ ಮುಗಿದನಂತರ ಭಕ್ತರೆಲ್ಲರೂ ಊಟಕ್ಕೆ ಕುಳಿತುಕೊಂಡಿದ್ದಾರೆ. ಬಲರಾಮ ಭೃತ್ಯನ ಹಾಗೆ ಕೈಕಟ್ಟಿ ನಿಂತಿದ್ದಾನೆ. ನೋಡುವುದಕ್ಕೆ ಮನೆ ಯಜಮಾನನ ಹಾಗೆ ಕಂಡುಬರುವುದಿಲ್ಲ. ಮಾಸ್ಟರ್ ಭಕ್ತರ ಬಳಗಕ್ಕೆ ಇನ್ನೂ ಹೊಸಬ. ಅವರೊಡನೆ ಮಾತುಕತೆ ಏನೂ ನಡೆದಿಲ್ಲ. ಕೇವಲ ನರೇಂದ್ರನೊಡನೆ ಮಾತ್ರ ದಕ್ಷಿಣೇಶ್ವರದಲ್ಲಿ ಮಾತುಕತೆ ಆಡಿದ್ದಾನೆ.
ಕೆಲವು ದಿವಸಗಳ ನಂತರ ಮಾಸ್ಟರ್ ದಕ್ಷಿಣೇಶ್ವರಕ್ಕೆ ಬಂದಿದ್ದಾನೆ. ಘಂಟೆ ಅಪರಾಹ್ನ ನಾಲ್ಕೊ ಐದೊ ಇರಬೇಕು. ಈಗ ಪರಮಹಂಸರು ಮಾಸ್ಟರೊಡನೆ ಶಿವದೇವಾಲಯಗಳ ಹಂತಗಳ ಮೇಲೆ ಕುಳಿತಿದ್ದಾರೆ. ತಮ್ಮ ಎದುರಿಗೇ ಇದ್ದ ರಾಧಾಕಾಂತ ದೇವಾಲಯಗಳ ಕಡೆ ನೋಡಿ ಪರಮಹಂಸರು ಇದ್ದಕ್ಕಿದ್ದಹಾಗೆ ಭಾವಾವಿಷ್ಟರಾಗಿದ್ದಾರೆ.
ಪರಮಹಂಸರ ಸೋದರಳಿಯ ಹೃದಯನನ್ನು ದೇವಾಲಯದ ಕೆಲಸದಿಂದ ತೆಗೆದು ಹಾಕಿಬಿಟ್ಟಂದಿನಿಂದ ಬೇರೆ ಯಾರೂ ಅವರ ಶುಶ್ರೂಷೆಗಾಗಿ ದೊರೆತಿಲ್ಲ. ಅವರು ಆಗಾಗ ಭಾವಾವಿಷ್ಟರಾಗುತ್ತಿದ್ದುದರಿಂದ ಅವರ ಶರೀರದ ಯೋಗಕ್ಷೇಮ ನೋಡಿಕೊಳ್ಳಲು ಅವರಿಂದ ಸಾಧ್ಯವೇ ಆಗುತ್ತಿಲ್ಲ. ಶುಶ್ರೂಷೆಗೆ ಯಾರೂ ಅವರ ಬಳಿ ಇಲ್ಲದಿದ್ದುದು ಅವರಿಗೆ ಬಹಳ ತೊಂದರೆಯಾಗಿದೆ.
ಪರಮಹಂಸರು ಜಗನ್ಮಾತೆಯೊಡನೆ ಮಾತಾಡುತ್ತಿದ್ದಾರೆ ಈಗ. ಹೇಳುತ್ತಿದ್ದಾರೆ: “ಎಲ್ಲರೂ ಹೇಳುತ್ತಾರೆ, ತಮ್ಮ ಗಡಿಯಾರ ಸರಿಯಾಗಿ ನಡೆಯುತ್ತಿದೆ ಎಂಬುದಾಗಿ. ಕ್ರಿಶ್ಚಿಯನ್, ಬ್ರಾಹ್ಮೊ, ಹಿಂದೂ, ಮುಸಲ್ಮಾನ ಎಲ್ಲರೂ ಹೇಳುತ್ತಾರೆ, ತಮ್ಮ ಧರ್ಮ ಸರಿ ಎಂಬುದಾಗಿ. ಆದರೆ ತಾಯೆ, ಯಾರ ಗಡಿಯಾರವೂ ಸರಿಯಾಗಿ ನಡೆಯುತ್ತಿಲ್ಲ. ನಿನ್ನನ್ನು ಸರಿಯಾಗಿ ಯಾರು ತಾನೆ ಅರಿಯಬಲ್ಲರು? ಆದರೆ ವ್ಯಾಕುಲತೆಯಿಂದ ನಿನ್ನನ್ನು ಕರೆದರೆ, ನೀನೂ ಕೃಪೆ ಮಾಡುವುದಾದರೆ, ಎಲ್ಲಾ ಮಾರ್ಗಗಳಿಂದಲೂ ನಿನ್ನನ್ನು ಮುಟ್ಟಬಹುದು. ತಾಯೆ, ಕ್ರಿಶ್ಚಿಯನ್ನರು ನಿನ್ನನ್ನು ಚರ್ಚಿನಲ್ಲಿ ಹೇಗೆ ಕರೆಯುತ್ತಾರೆ ಎಂಬುದನ್ನು ಒಮ್ಮೆ ನನಗೆ ತೋರಿಸು. ಆದರೆ ತಾಯೆ, ಒಳಕ್ಕೆ ಹೋದರೆ ಜನರು ಏನಂದುಕೊಳ್ಳುತ್ತಾರೋ? ಒಂದು ಪಕ್ಷ ಅವರು ಇಲ್ಲದ ಸಲ್ಲದ ಗೊಂದಲ ಎಬ್ಬಿಸಿಬಿಟ್ಟರೆ! ಕಾಳೀದೇವಾಲಯಕ್ಕೆ ಬಿಡದೆಹೋಗಿ ಬಿಟ್ಟರೆ! ಹಾಗಾದರೆ ಚರ್ಚಿನ ಬಾಗಿಲ ಹಂತದಿಂದಲೇ ಅವರ ಪೂಜೆಯನ್ನು ನನಗೆ ತೋರಿಸಿಬಿಡು.”
ಇನ್ನೊಂದು ದಿನ ಪರಮಹಂಸರು ತಮ್ಮ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಕಾಳೀಕೃಷ್ಣನನ್ನು ಮಾಸ್ಟರ್ ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾನೆ. ಮನೆಯಿಂದ ಹೊರಟಾಗ ಕಾಳೀಕೃಷ್ಣನಿಗೆ ಗೊತ್ತೇ ಇರಲಿಲ್ಲ, ಮಾಸ್ಟರ್ ತನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾನೆ ಎಂಬುದು. ಮಾಸ್ಟರ್ ಆತನಿಗೆ ಹೇಳಿದ್ದ: “ಮದ್ಯದಂಗಡಿಗೆ ಹೋಗಬೇಕು ಅಂತ ಇದ್ದರೆ ನನ್ನೊಡನೆ ಬಾ. ಅಲ್ಲಿ ಒಂದು ಗುಡಾಣ ಮದ್ಯ ಇದೆ.” ಮಾಸ್ಟರ್ ಪರಮಹಂಸರಿಗೆ ಪ್ರಣಾಮ ಮಾಡಿ ಕಾಳೀಕೃಷ್ಣನಿಗೆ ತಾನು ಹೇಳಿದ್ದುದನ್ನು ಅವರಿಗೆ ತಿಳಿಸಿದ್ದಾನೆ. ಪರಮಹಂಸರು ನಗಲಾರಂಭಿಸಿದ್ದಾರೆ. ಅವರು ಹೇಳುತ್ತಿದ್ದಾರೆ: “ಭಜನಾನಂದವೇ, ಬ್ರಹ್ಮಾನಂದವೇ ನಿಜವಾದ ಸುರೆ, ಪ್ರೇಮದ ಸುರೆ. ಮಾನವ ಜೀವನದ ಉದ್ದೇಶ ಭಗವಂತನಲ್ಲಿ ಪ್ರೇಮ ಗಳಿಸಿಕೊಳ್ಳುವುದೇ, ಆತನನ್ನು ಪ್ರೀತಿಸುವುದೇ. ಭಕ್ತಿಯೇ ಮುಖ್ಯ. ಜ್ಞಾನ, ವಿಚಾರ ಇವುಗಳಿಂದ ಆತನನ್ನು ಅರಿಯುವುದು ಎಂದರೆ ಬಹಳ ಕಠಿಣ.”
ಬಳಿಕ ಪರಮಹಂಸರು ಹಾಡುತ್ತಿದ್ದಾರೆ:
ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು!
ಆರು ದರುಶನ ವೇದ ಶಾಸ್ತ್ರ ಪುರಾಣವರಿಯದು….
ಪರಮಹಂಸರು ಮತ್ತೆ ಹೇಳುತ್ತಿದ್ದಾರೆ: “ಭಗವಂತನನ್ನು ಪ್ರೀತಿಸುವುದು-ಇದೇ ಜೀವನದ ಉದ್ದೇಶ; ಬೃಂದಾವನದಲ್ಲಿ ಗೋಪ-ಗೋಪಿಯರು ಗೋವಳಿಗರು ಶ್ರೀಕೃಷ್ಣನನ್ನು ಪ್ರೀತಿಸುತ್ತಿದ್ದ ಹಾಗೆ. ಕೃಷ್ಣ ಮಥುರೆಗೆ ಹೊರಟುಹೋದನಂತರ ಗೋವಳಿಗರು ಆತನ ವಿರಹದಿಂದ ಅಳುತ್ತ ಅಳುತ್ತ ಸುಮ್ಮನೆ ಸುತ್ತಾಡುತ್ತಿದ್ದರು.”
ಹೀಗೆಂದು ಹೇಳಿ ಪರಮಹಂಸರು ಊರ್ಧ್ವದೃಷ್ಟಿಯುಳ್ಳವರಾಗಿ ಹಾಡಲಾರಂಭಿಸಿದ್ದಾರೆ:
ಒಂದು ಕೈಯೊಳು ತನ್ನ ಮುದ್ದು ಕರುವನು ತಬ್ಬಿ
ಮತ್ತೊಂದರೊಳು ಮರದ ಕೊಂಬೆಯನು ಹಿಡಿದು,
ಇಲ್ಲಿಯೇ ನಿಂತಿದ್ದ ರಾಖಾಲನ ಕಂಡೆ.
“ಎಲ್ಲಿರುವೆ ಓ ಕೃಷ್ಣ” -ಎಂದು ಬಲು ಕಷ್ಟದಲಿ
ಕರೆಯುವಷ್ಟರೊಳವನ ಕೊರಳು ಬಿಗಿದು,
“ಕೃ” ಎಂಬ ಮಾತಿಗೇ ಅವನ ದನಿ ತಡೆದು
“ಎಲ್ಲಿರುವೆ ನನ್ನಯ್ಯ” -ಎಂದು ಕೂಗಲು ಅವನ
ಎರಡು ಕಣ್ಣೊಳು ನೀರು ತುಂಬಿಕೊಂಡಿತ್ತು!
ಪರಮಹಂಸರ ಪ್ರೇಮಮಯ ಹಾಡನ್ನು ಕೇಳಿ ಮಾಸ್ಟರ ಕಣ್ಣುಗಳಿಂದ ಪ್ರೇಮಾಶ್ರು ಸುರಿಯಲಾರಂಭಿಸಿದೆ.
೨ನೆ ಏಪ್ರಿಲ್ ೧೮೮೨, ಚೈತ್ರ ಶುಕ್ಲ ಚತುರ್ದಶಿ ಭಾನುವಾರ
ಶ್ರೀರಾಮಕೃಷ್ಣರು ತಮ್ಮ ಭಕ್ತರೊಡನೆ ಕಲ್ಕತ್ತದಲ್ಲಿರುವ ಪ್ರಾಣಕೃಷ್ಣ ಮುಖರ್ಜಿಯ ಮನೆಯ ಬೈಠಕ್ ಖಾನೆಯಲ್ಲಿ ಕುಳಿತಿದ್ದಾರೆ. ಘಂಟೆ ಅಪರಾಹ್ನ ಒಂದೊ ಎರಡೊ ಇರಬೇಕು. ಕ್ಯಾಪ್ಟನ್ ವಿಶ್ವನಾಥನ1 ಮನೆಯೂ ಹತ್ತಿರದಲ್ಲೇ ಇದೆ. ಪರಮಹಂಸರ ಇಚ್ಛೆ.ಇಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ಬಳಿಕ ಕ್ಯಾಪ್ಟನ್ನನ ಮನೆಗೆ ಹೋಗಿ, ಆ ಬಳಿಕ ಕಮಲಕುಟೀರಕ್ಕೆ ತೆರಳಿ ಕೇಶವಸೇನನನ್ನು ಕಾಣಬೇಕು ಎಂಬುದಾಗಿ. ಬೈಠಕ್ಖಾನೆಯಲ್ಲಿ ಪ್ರಾಣಕೃಷ್ಣನ ನೆರೆಹೊರೆಯವರೂ ಮತ್ತು ಆತನ ಇನ್ನೂ ಅನೇಕ ಸ್ನೇಹಿತರೂ ಕುಳಿತಿದ್ದಾರೆ. ಪರಮಹಂಸರ ಮಾತು ಕೇಳಲು ಎಲ್ಲರೂ ಉತ್ಸುಕರಾಗಿ ಕಾದಿದ್ದಾರೆ.
ಶ್ರೀರಾಮಕೃಷ್ಣರು: “ನೋಡಿ, ಭಗವಂತ ಮತ್ತು ಆತನ ಐಶ್ವರ್ಯ. ಈ ಜಗತ್ತು ಆತನ ಐಶ್ವರ್ಯ. ಜನ ಆತನ ಐಶ್ವರ್ಯಕ್ಕೆ ಮರುಳಾಗೇ ಎಲ್ಲವನ್ನೂ ಮರೆತುಬಿಡುತ್ತಾರೆ. ಐಶ್ವರ್ಯ ಯಾರದೊ ಅವನನ್ನು ಹುಡುಕುವುದಿಲ್ಲ. ಕಾಮಕಾಂಚನದ ಸುಖಕ್ಕಾಗಿ ಎಲ್ಲರೂ ಹಾತೊರೆಯುತ್ತಾರೆ. ಆದರೆ ಅದರಲ್ಲಿ ದುಃಖ, ಅಶಾಂತಿ ಇವೇ ಅಧಿಕ. ಈ ಸಂಸಾರ ವಿಶಾಲಾಕ್ಷಿಯ2 ಸುಳಿಯ ಹಾಗೆ. ದೋಣಿಯೇನಾದರೂ ಅದಕ್ಕೆ ಸಿಕ್ಕಿತು ಎಂದರೆ ಮೇಲೆ ಏಳುವ ಹಾಗೇ ಇಲ್ಲ. ಮತ್ತೆ ಈ ಸಂಸಾರ ಸೀಗೆಮುಳ್ಳಿನ ಹಾಗೆ; ಒಂದರಿಂದ ಬಿಡಿಸಿಕೊಂಡೆ ಎಂದರೆ ಇನ್ನೊಂದರಿಂದ ಚುಚ್ಚಿಸಿಕೊಳ್ಳುತ್ತೀಯೆ. ಬಲಿಚಕ್ರವರ್ತಿಯ ಕೋಟೆಗೆ ಒಮ್ಮೆ ನುಗ್ಗಿದೆ ಎಂದರೆ ಹೊರಕ್ಕೆ ಬರುವುದು ಬಹಳ ಕಷ್ಟ. ಮನುಷ್ಯ ಬರೆಯಿಂದ ಸುಟ್ಟವನ ಹಾಗೆ ಆಗಿಬಿಡುತ್ತಾನೆ.
ಒಬ್ಬ ಭಕ್ತ : “ಹಾಗಾದರೆ ಉಪಾಯ?”
ಶ್ರೀರಾಮಕೃಷ್ಣರು : “ಸಾಧುಸಂಗ ಮತ್ತು ಪ್ರಾರ್ಥನೆ. ವೈದ್ಯನ ಹತ್ತಿರಕ್ಕೆ ಹೋಗದೆ ಇದ್ದರೆ ರೋಗ ಗುಣವಾಗುವುದಿಲ್ಲ. ಸಾಧುಸಂಗವನ್ನು ಎಲ್ಲೊ ಒಂದು ದಿನ ಮಾಡಿ ಬಿಟ್ಟರೇ ಸಾಲದು, ಅದು ಸರ್ವದಾ ಆವಶ್ಯಕ; ರೋಗ ತಗುಲಿಕೊಂಡೇ ಇದೆ. ವೈದ್ಯನ ಸಹವಾಸ ಮಾಡದೆ ಇದ್ದರೆ, ನಾಡಿ-ಜ್ಞಾನ ದೊರಕದು; ಒಟ್ಟಿಗೇ ಸುತ್ತಾಡಿಕೊಂಡಿರಬೇಕಾಗುತ್ತದೆ. ಆಗ ಅರಿತುಕೊಳ್ಳಬಹುದು, ಯಾವುದು ಕಫದ ನಾಡಿ, ಯಾವುದು ಪಿತ್ತದ ನಾಡಿ ಎಂಬುದನ್ನು.”
ಭಕ್ತ: “ಸಾಧುಸಂಗದಿಂದ ಆಗುವ ಉಪಕಾರವೇನು?”
ಶ್ರೀರಾಮಕೃಷ್ಣರು: “ಭಗವಂತನಲ್ಲಿ ಅನುರಾಗ ಹುಟ್ಟಿಸುತ್ತದೆ; ಆತನನ್ನು ಪ್ರೀತಿಸುವಂತೆ ಮಾಡುತ್ತದೆ. ವ್ಯಾಕುಲತೆ ಉಂಟಾಗದಿದ್ದರೆ ಏನೂ ದೊರಕದು. ಸಾಧುಸಂಗ ಮಾಡುತ್ತ ಮಾಡುತ್ತ ಭಗವಂತನಿಗಾಗಿ ಪ್ರಾಣ ವ್ಯಾಕುಲಪಡಲಾರಂಭಿಸುತ್ತದೆ. ಮನೆಯಲ್ಲಿ ಯಾರಿಗಾದರೂ ಅಸೌಖ್ಯವಾದರೆ ಆತನನ್ನು ಗುಣಪಡಿಸುವುದು ಹೇಗೆ ಎಂಬುದಾಗಿ ಸರ್ವದಾ ಮನಸ್ಸು ವ್ಯಾಕುಲಪಡುತ್ತಾ ಇರುತ್ತದೆಯಲ್ಲಾ ಹಾಗೆ. ಕೆಲಸ ಕಳೆದುಕೊಂಡ ವ್ಯಕ್ತಿ ಯಾವ ರೀತಿ ವ್ಯಾಕುಲತೆಯಿಂದ ಒಂದು ಆಫೀಸಿನಿಂದ ಇನ್ನೊಂದು ಆಫೀಸಿಗೆ ಅಲೆಯುತ್ತಾ ಇರುತ್ತಾನೊ ಹಾಗೆ. ಇವೊತ್ತು ಯಾವುದಾದರೂ ಒಂದು ಆಫೀಸಿನಲ್ಲಿ ಕೆಲಸ ಖಾಲಿ ಇಲ್ಲ ಎಂದು ತಿಳಿಸಿದರೆ, ಮಾರನೆ ದಿನ ಮತ್ತೆ ಹೋಗಿ ವಿಚಾರ ಮಾಡುತ್ತಾನೆ: ‘ಇಂದು ಯಾವುದಾದರೂ ಖಾಲಿ ಬಿದ್ದಿರುವುದೇ?’
“ಇನ್ನೊಂದು ಮಾರ್ಗ-ವ್ಯಾಕುಲನಾಗಿ ಪ್ರಾರ್ಥನೆಮಾಡುವುದು. ಭಗವಂತ ನಮ್ಮ ಸ್ವಂತದವ. ನಾವು ಆತನಿಗೆ ಹೇಳಬೇಕು: ‘ಹೇ ಭಗವಂತ ನಿನ್ನ ಸ್ವರೂಪ ಎಂಥದು? ತೋರಿಸು ಅದನ್ನು ನನಗೆ. ನೀನು ತೋರಿಸಲೇಬೇಕು. ಇಲ್ಲದಿದ್ದರೆ ನನ್ನನ್ನು ಯಾಕೆ ಸೃಷ್ಟಿಸಿದೆ?’ ಕೆಲವು ಸಿಖ್ಖರು ಒಮ್ಮೆ ನನಗೆ ತಿಳಿಸಿದರು. ‘ಭಗವಂತ ದಯಾಮಯ’ ಎಂದು. ನಾನು ಹೇಳಿದೆ: ‘ದಯಾಮಯ ಅಂತ ಏಕೆ ಹೇಳಬೇಕು ಆತನನ್ನು? ಆತ ನಮ್ಮನ್ನು ಸೃಷ್ಟಿಸಿದ್ದಾನೆ. ನಮಗೆ ಶ್ರೇಯಸ್ಸನ್ನು ತರಲು ಆತ ಪ್ರಯತ್ನಿಸಿದರೆ ಅದಕ್ಕಾಗಿ ಆಶ್ಚರ್ಯಪಡುವುದೇನಿದೆ? ತಂದೆತಾಯಿಗಳು ಮಕ್ಕಳನ್ನು ಬೆಳೆಸುತ್ತಾರೆ. ಅದೇನು ದಯೆಯ ಕಾರ್ಯವೇ? ಅವರು ಹಾಗೆ ಮಾಡಲೇಬೇಕು.’ ಆದ್ದರಿಂದ ನಾವು ಆತನನ್ನು ಬಲಾತ್ಕರಿಸಿ ಕೇಳಬೇಕು. ಆತ ನಮ್ಮ ತಂದೆ-ತಾಯಿ ಅಲ್ಲವೆ? ಮಗ ಅನ್ನ ನೀರು ಬಿಟ್ಟು ತನ್ನ ಹಿಸ್ಸೆ ಬೇಕೆಂದರೆ, ದೊಡ್ಡವನಾಗಲು ಇನ್ನೂ ಮೂರು ವರ್ಷವಿದೆ ಎನ್ನುವಾಗಲೇ ತಂದೆತಾಯಿಗಳು ಆತನ ಹಿಸ್ಸೆ ಕೊಟ್ಟುಬಿಡುತ್ತಾರೆ. ಅಥವಾ ಮಗು ಕಾಸು ಕೇಳುವಾಗ ಮತ್ತೆ ಮತ್ತೆ ಕೇಳಲಾರಂಭಿಸಿದರೆ : ‘ಅಮ್ಮಾ, ನಿನ್ನ ಕಾಲಿಗೆ ಅಡ್ಡ ಬೀಳುತ್ತೇನಮ್ಮ. ನನಗೆರಡು ಕಾಸು ಕೊಡಮ್ಮಾ!’ -ತಾಯಿ ಆತನ ವ್ಯಾಕುಲತೆ ನೋಡಿ ಇನ್ನು ತಡೆಯಲಾರದೆ ಕಾಸು ಬಿಸಾಡಿಬಿಡುತ್ತಾಳೆ.
“ಸಾಧುಸಂಗದಿಂದ ಇನ್ನೊಂದು ಉಪಕಾರವಾಗುತ್ತದೆ. ಸದಸದ್ವಿಚಾರ ಬೆಳೆಯುತ್ತದೆ. ಭಗವಂತನೇ ಸತ್, ಎಂದರೆ ನಿತ್ಯ, ಈ ಜಗತ್ತು ಅಸತ್, ಎಂದರೆ ಅನಿತ್ಯ. ಅಸತ್ ಮಾರ್ಗಕ್ಕೆ ಮನಸ್ಸು ಕಾಲುಹಾಕಿತು ಎಂದೊಡನೆಯೇ ವಿಚಾರದಲ್ಲಿ ತೊಡಗಬೇಕಾಗುತ್ತದೆ. ಆನೆ ಬೇರೆಯವರ ತೋಟದಲ್ಲಿರುವ ಬಾಳೆ ಗಿಡಗಳ ಕಡೆ ನೋಡಿ ಸೊಂಡಿಲು ನೀಡಿತು ಎಂದರೆ, ಅದಕ್ಕೆ ಮಾವಟಿಗನ ಅಂಕುಶದೇಟು ಬೀಳುತ್ತದೆ.”
ನೆರೆಯವ: “ಮಹಾಶಯರೆ, ಪಾಪಬುದ್ಧಿ ಏಕೆ ಬರುತ್ತದೆ?”
ಶ್ರೀರಾಮಕೃಷ್ಣರು: “ಆತನ ಸೃಷ್ಟಿಯಲ್ಲಿ ಎಲ್ಲವೂ ಇದೆ. ಸಾಧುಗಳನ್ನು ಆತನೆ ಸೃಷ್ಟಿಸಿದ್ದಾನೆ; ದುಷ್ಟರನ್ನೂ ಆತನೆ ಸೃಷ್ಟಿಸಿದ್ದಾನೆ. ಸದ್ಭುದ್ಧಿ ಕೊಡುವವನೂ ಅವನೇ; ದುರ್ಬುದ್ಧಿ ಕೊಡುವವನೂ ಅವನೇ.”
ನೆರೆಯವ: “ಹಾಗಾದರೆ, ಪಾಪಕಾರ್ಯಕ್ಕೆ ನಾವೇನೂ ಹೊಣೆಗಾರರಲ್ಲ, ಅಲ್ಲವೆ?”
ಶ್ರೀರಾಮಕೃಷ್ಣರು: ‘ಭಗವಂತನ ನಿಯಮ, ಪಾಪ ಮಾಡಿದೆ ಎಂದರೆ ಅದರ ಫಲ ಅನುಭವಿಸಲೇಬೇಕಾಗುತ್ತದೆ. ಮೆಣಸಿನಕಾಯಿ ತಿಂದರೆ ಬಾಯಿಗೆ ಖಾರ ಹತ್ತುವುದಿಲ್ಲವೆ? ಮಥುರಬಾಬು3 ಯೌವನದಲ್ಲಿ ಏನೇನೋ ಮಾಡಿದ್ದ; ಆದ್ದರಿಂದ ಕೊನೆಗಾಲದಲ್ಲಿ ಆತನಿಗೆ ರೋಗ ಬಂತು.
“ಯೌವನಾವಸ್ಥೆಯಲ್ಲಿ ಇದು ಗೊತ್ತಾಗದೆ ಹೋಗಬಹುದು. ಕಾಳೀದೇವಾಲಯದಲ್ಲಿ ಅಡಿಗೆಗೆ ಉರುಟು ಸೌದೆ ಉಪಯೋಗಿಸುವುದನ್ನು ನೋಡಿದ್ದೇನೆ. ಮೊದಮೊದಲು ಸೌದೆ ನೆನೆದಿದ್ದರೂ ಚೆನ್ನಾಗಿ ಉರಿಯುತ್ತದೆ; ಅದರಲ್ಲಿ ನೀರಿರುವ ಹಾಗೇ ತೋರುವುದಿಲ್ಲ. ಆದರೆ ಸಾಕಾದಷ್ಟು ಉರಿಯುವುದರೊಳಗೆ ನೀರು ಅದರ ತುದಿಗೆ ಬಂದುಬಿಟ್ಟಿರುತ್ತದೆ. ಕೊನೆಗೆ ‘ಚೊಯ್ಞ್ ಚೊಯ್ಞ್’ ಅಂತ ನೀರು ಸೌದೆಯಿಂದ ಹೊರಕ್ಕೆ ಬಂದು ಒಲೆಯನ್ನು ಆರಿಸಿ ಬಿಡುತ್ತದೆ.
“ಆದ್ದರಿಂದ ಕಾಮ, ಕ್ರೋಧ, ಲೋಭ ಇವುಗಳ ಸಂಬಂಧವಾಗಿ ಬಹಳ ಎಚ್ಚರಿಕೆಯಿಂದಿರಬೇಕು. ಉದಾಹರಣೆಗೆ ಹನುಮಂತನನ್ನು ತೆಗೆದುಕೊ. ಕೋಪಗೊಂಡು ಲಂಕೆಗೆ ಬೆಂಕಿ ಹಾಕಿಬಿಟ್ಟ. ಕೊನೆಗೆ ಯೋಚನೆ ಬಂತು. ಅಶೋಕವನದಲ್ಲಿ ಸೀತೆ ಇದ್ದಾಳಲ್ಲ ಏನು ಗತಿ, ಆಕೆಗೆ ಏನಾದರೂ ಆಗಿಬಿಟ್ಟರೆ, ಮುಂದೇನು ಗತಿ ಎಂಬುದಾಗಿ ಚಟಪಟಗುಡಲಾರಂಭಿಸಿದ.”
ನೆರೆಯವ: “ಭಗವಂತ ದುಷ್ಟರನ್ನೇಕೆ ಸೃಷ್ಟಿಮಾಡಿದ?”
ಶ್ರೀರಾಮಕೃಷ್ಣರು: “ಆತನ ಇಚ್ಛೆ. ಆತನ ಲೀಲೆ. ಆತನ ಮಾಯೆಯಲ್ಲಿ ವಿದ್ಯೆಯೂ ಇದೆ. ಅಂಧಕಾರದ ಆವಶ್ಯಕತೆಯೂ ಇದೆ. ಅದು ಬೆಳಕಿನ ಮಹತ್ತನ್ನು ಇನ್ನೂ ಹೆಚ್ಚಾಗಿ ಪ್ರಕಾಶಗೊಳಿಸುತ್ತದೆ. ಕಾಮ, ಕ್ರೋಧ, ಲೋಭ ಇವು ಕೆಟ್ಟವೇನೊ ನಿಜ. ಹಾಗಾದರೇಕೆ ಅವನ್ನು ಸೃಷ್ಟಿಸಿದ್ದಾನೆ ಅಂತೀಯೊ? ಮಹಾಪುರುಷರನ್ನಾಗಿ ತಯಾರು ಮಾಡಲು. ಇಂದ್ರಿಯಗಳನ್ನು ಗೆದ್ದರೆ ಮನುಷ್ಯ ಮಹಾಪುರುಷನಾಗುತ್ತಾನೆ. ಜಿತೇಂದ್ರಿಯನ ಕೈಯಲ್ಲಿ ಏನು ತಾನೆ ಸಾಧ್ಯವಿಲ್ಲ? ಭಗವಂತನ ಸಾಕ್ಷಾತ್ಕಾರವೂ ಆತನ ಕೃಪೆಯಿಂದ ದೊರೆತುಬಿಡುತ್ತದೆ. ಮತ್ತೆ ಬೇರೆ ದೃಷ್ಟಿಯಿಂದ ನೋಡು. ಕಾಮದಿಂದಲೆ ಆತನ ಸೃಷ್ಟಿ-ಲೀಲೆ ಮುಂದುವರಿಯುತ್ತದೆ.
“ದುಷ್ಟರ ಆವಶ್ಯಕತೆಯೂ ಇದೆ. ಒಮ್ಮೆ ಒಂದು ಎಸ್ಟೇಟಿನ ಜನರು ಪುಂಡೆದ್ದರು. ಜಮೀನುದಾರ ಗೋಲೋಕಚೌಧುರಿಯನ್ನು ಅಲ್ಲಿಗೆ ಕಳುಹಿಸಬೇಕಾಯಿತು. ಆತ ಅಂಥಾ ನಿರ್ದಯಿ, ಆತನ ಹೆಸರು ಕೇಳಿಯೇ ಜನರು ‘ತರತರ’ ನಡುಗಲಾರಂಭಿಸಿದರು.
“ಪ್ರತಿಯೊಂದರ ಆವಶ್ಯಕತೆಯೂ ಇದೆ. ಒಮ್ಮೆ ಸೀತೆ ರಾಮನಿಗೆ ಹೇಳಿದಳು: ‘ರಾಮ, ಅಯೋಧ್ಯೆಯಲ್ಲಿನ ಪ್ರತಿಯೊಂದು ಮನೆಯೂ ಅರಮನೆಯಂತಿದ್ದರೆ ಚೆನ್ನಾಗಿರುತ್ತದೆ! ಅನೇಕ ಮನೆ ನೋಡುತ್ತೇನೆ. ಹರಕಲು-ಮುರುಕಲು, ಬಹಳ ಹಳೆಯವು.’
“ರಾಮ ಹೇಳಿದ: ‘ಸೀತೆ, ಎಲ್ಲಾ ಮನೆಗಳೂ ಸುಂದರವಾದುವೇ ಆಗಿಬಿಟ್ಟರೆ, ಮೇಸ್ತ್ರಿಗಳ ಗತಿ?’ (ನಗು). ಭಗವಂತ ಎಲ್ಲಾ ರಕಮುವಾರಿ ಸೃಷ್ಟಿಸಿದ್ದಾನೆ-ಒಳ್ಳೆ ಮರ, ವಿಷದ ಗಿಡ, ಜೊತೆಗೆ ಜೊಂಡು ಕೂಡ. ಪ್ರಾಣಿಗಳಲ್ಲಿಯೂ ಒಳ್ಳೇದು ಕೆಟ್ಟದು ಎಲ್ಲಾ ಇವೆ-ಹುಲಿ, ಸಿಂಹ, ಹಾವು ಎಲ್ಲಾ.”
ನೆರೆಯವ: “ಮಹಾಶಯರೆ, ಸಂಸಾರದಲ್ಲಿದ್ದು ಭಗವಂತನ ಸಾಕ್ಷಾತ್ಕಾರ ಪಡೆಯಲು ಸಾಧ್ಯವೆ?”
ಶ್ರೀರಾಮಕೃಷ್ಣರು: “ಖಂಡಿತ ಸಾಧ್ಯ. ಆದರೆ ನಾನು ತಿಳಿಸಿದ ಹಾಗೆ ಸಾಧುಸಂಗ ಸರ್ವದಾ ಪ್ರಾರ್ಥನೆ ಇವನ್ನೂ ಮಾಡುತ್ತಿರಬೇಕು. ಆತನಿಗಾಗಿ ಅಳಬೇಕು. ಮನಸ್ಸಿನ ಕಶ್ಮಲಗಳೆಲ್ಲ ತೊಳೆದುಹೋದ ಮೇಲೆ ಆತನ ದರ್ಶನ ದೊರೆಯುತ್ತದೆ. ಮನಸ್ಸು ಮಣ್ಣು ಹಿಡಿದ ಸೂಜಿಯ ಹಾಗೆ, ಭಗವಂತ ಚುಂಬಕದ ಹಾಗೆ. ಮಣ್ಣು ತೊಳೆದು ಹೋಗುವವರೆಗೆ ಸೂಜಿ ಚುಂಬಕದೊಡನೆ ಐಕ್ಯವಾಗಲಾರದು. ಅಳುತ್ತ ಅಳುತ್ತ ಸೂಜಿಯ ಮಣ್ಣು ತೊಳೆದು ಹೋಗುತ್ತದೆ. ಸೂಜಿಯ ಮಣ್ಣು ಎಂದರೆ, ಕಾಮ, ಕ್ರೋಧ, ಲೋಭ, ಪಾಪಬುದ್ಧಿ. ಮಣ್ಣು ತೊಳೆದು ಹೋದೊಡನೆಯೇ ಸೂಜಿಯನ್ನು ಚುಂಬಕ ಎಳೆದುಕೊಂಡುಬಿಡುತ್ತದೆ. ಎಂದರೆ ಭಗವಂತನ ದರ್ಶನ ದೊರೆಯುತ್ತದೆ. ಚಿತ್ತಶುದ್ಧಿಯಾಯಿತು ಎಂದರೆ, ಆತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ಜ್ವರ ಬಂದು ದೇಹದಲ್ಲಿ ನೀರು ಹೆಚ್ಚಿಬಿಟ್ಟಿದೆ. ಅದನ್ನು ಕಡಿಮೆಮಾಡದ ಮುನ್ನ ಕ್ವಿನೈನ್ ಕೊಟ್ಟರೆ ಏನಾದೀತು?”
“ಸಂಸಾರದಲ್ಲಿ ಭಗವಂತನ ಸಾಕ್ಷಾತ್ಕಾರ ಏಕೆ ಸಾಧ್ಯವಿಲ್ಲ? ನಾನು ತಿಳಿಸಿದ ಹಾಗೆ ಸಾಧುಸಂಗ, ಅಳುತ್ತ ಅಳುತ್ತ ಪ್ರಾರ್ಥನೆ, ಆಗಾಗ ನಿರ್ಜನವಾಸ ಇವನ್ನು ಮಾಡಬೇಕು. ಫುಟ್ಪಾತಿನಲ್ಲಿರುವ ಗಿಡಕ್ಕೆ ಬೇಲಿಹಾಕದೆ ಇದ್ದರೆ ಆಡು-ಕುರಿ, ದನಕರು ತಿಂದು ಬಿಡುತ್ತವೆ.”
ನೆರೆಯವ: “ಹಾಗಾದರೆ, ಸಂಸಾರಿಗಳಿಗೂ ದೊರಕುತ್ತದೆ?”
ಶ್ರೀರಾಮಕೃಷ್ಣರು: “ಎಲ್ಲರಿಗೂ ಮುಕ್ತಿ ದೊರೆಯುತ್ತದೆ. ಆದರೆ ಗುರುವಿನ ಉಪದೇಶಕ್ಕನುಸಾರ ನಡೆದುಕೊಳ್ಳಬೇಕು. ಅಡ್ಡ ಮಾರ್ಗ ಹಿಡಿದರೆ ದಾರಿಗೆ ಹಿಂದಿರುಗಿ ಬರಲು ಕಷ್ಟಪಡಬೇಕಾಗುತ್ತದೆ. ಮುಕ್ತಿ ದೊರೆಯಬೇಕಾದರೆ ಬಹಳ ಕಾಲ ಹಿಡಿಯುತ್ತದೆ. ಬಹುಶಃ ಈ ಜನ್ಮದಲ್ಲಿ ದೊರೆಯದೆ ಹೋಗಬಹುದು. ಮತ್ತೆ, ಬಹುಶಃ ಅನೇಕ ಜನ್ಮಗಳ ನಂತರ ದೊರೆತುಬಿಡಬಹುದು. ಜನಕಾದಿಗಳು ಸಾಂಸಾರಿಕ ಕೆಲಸಗಳನ್ನೂ ಮಾಡಿದರು. ಆದರೆ ಭಗವಂತನನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಾಡಿದರು-ನರ್ತಕಿ ತಲೆಮೇಲೆ ಪಾತ್ರೆ ಇಟ್ಟುಕೊಂಡು ನರ್ತಿಸುತ್ತಾಳಲ್ಲ ಹಾಗೆ. ಪಶ್ಚಿಮ ಭಾರತದ ಹೆಂಗಸರು ತಲೆಮೇಲೆ ನೀರಿನ ಕೊಡ ಹೊತ್ತುಕೊಂಡು ನಗುತ್ತ ನಗುತ್ತ ನಡೆದುಹೋಗುವುದನ್ನು ನೋಡಿಲ್ಲ ನೀನು?”
ನೆರೆಯವ: “ಗುರುವಿನ ಉಪದೇಶದ ಸಂಬಂಧವಾಗಿ ತಿಳಿಸಿದಿರಲ್ಲ, ಆತನನ್ನು ನಾವು ಪಡೆದುಕೊಳ್ಳುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಸಿಕ್ಕಿಸಿಕ್ಕಿದವರೆಲ್ಲಾ ಗುರು ಆಗಲಾರರು. ಮರದ ದಿಮ್ಮಿ ತಾನೂ ತೇಲಿಹೋಗಬಲ್ಲದು, ಅನೇಕ ಜಂತುಗಳನ್ನೂ ಹೊತ್ತುಕೊಂಡು ಹೋಗಬಲ್ಲುದು. ಆದರೆ ಬೆಂಡಿನ ಮೇಲೆ ಹತ್ತಿ ಕುಳಿತರೆ, ಬೆಂಡೂ ಮುಳುಗಿ ಹೋಗುತ್ತದೆ, ಹತ್ತಿದವನೂ ಮುಳುಗಿ ಹೋಗುತ್ತಾನೆ. ಅದಕ್ಕಾಗಿಯೇ ಭಗವಂತನು ಯುಗಯುಗದಲ್ಲೂ ಗುರುರೂಪದಿಂದ ಅವತೀರ್ಣನಾಗುತ್ತಾನೆ. ಸಚ್ಚಿದಾನಂದನೇ ಗುರು.
“ಯಾವುದಕ್ಕೆ ಜ್ಞಾನ ಅಂತ ಹೆಸರು? ನಾನು ಎಂಬುದರ ಸ್ವರೂಪವೇನು? ‘ಭಗವಂತನೊಬ್ಬನೇ ಕರ್ತ, ಉಳಿದವರೆಲ್ಲರೂ ಅಕರ್ತರೇ’ -ಇದೇ ಜ್ಞಾನ; ನಾನು ಅಕರ್ತ, ಆಕೆಯ ಕೈಯ ಯಂತ್ರ. ಅದಕ್ಕಾಗಿಯೇ ನಾನು ಹೇಳುವುದು: ‘ತಾಯೆ, ನೀನು ಯಂತ್ರಿ; ನಾನು ಯಂತ್ರ; ನೀನು ಗೃಹಿಣಿ; ನಾನು ಗೃಹ; ನೀನು ಚಾಲಕ; ನಾನು ಗಾಡಿ; ಚಲಿಸಿದಂತೆ ಚಲಿಸುತ್ತೇನೆ; ನುಡಿಸಿದಂತೆ ನುಡಿಯುತ್ತೇನೆ; ನಾನಲ್ಲ ನಾನಲ್ಲ, ನೀನು ನೀನು.’
ಪರಮಹಂಸರು ಪ್ರಾಣಕೃಷ್ಣನ ಮನೆಯಿಂದ ಹೊರಟು ಕ್ಯಾಪ್ಟನ್ ವಿಶ್ವನಾಥನ ಮನೆಗೆ ಹೋಗಿ ಬಳಿಕ ಕಮಲ-ಕುಟೀರಕ್ಕೆ ಹೋಗುತ್ತಿದ್ದಾರೆ.
ಶ್ರೀರಾಮಕೃಷ್ಣರು ಕಲ್ಕತ್ತದಲ್ಲಿರುವ ಕೇಶವಚಂದ್ರಸೇನನ ಕಮಲಕುಟೀರದ ಬೈಠಕ್ ಖಾನೆಯಲ್ಲಿ ಕುಳಿತಿದ್ದಾರೆ. ಘಂಟೆ ಸಾಯಂಕಾಲ ಐದು. ಕೇಶವಚಂದ್ರಸೇನ ಮನೆಯ ಒಳಗೆ ಇದ್ದ. ಆತನಿಗೆ ಪರಮಹಂಸರು ಬಂದಿರುವ ಸುದ್ದಿಯನ್ನು ತಿಳಿಸಲಾಯಿತು. ಆತ ಉತ್ತರೀಯವನ್ನು ಹೊದ್ದುಕೊಂಡು ಬಂದು ಪರಮಹಂಸರಿಗೆ ಪ್ರಣಾಮಮಾಡಿದ. ಆತನ ಸ್ನೇಹಿತ ಕಾಳೀನಾಥ ರೋಗಗ್ರಸ್ತನಾಗಿದ್ದುದರಿಂದ ಅವನನ್ನು ನೋಡಲು ಹೋಗಬೇಕೆಂದು ಸಿದ್ಧನಾಗಿದ್ದ. ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ: “ನಿನಗೆ ಅನೇಕ ಕೆಲಸಕಾರ್ಯಗಳು. ಜೊತೆಗೆ ವೃತ್ತಪತ್ರಿಕೆಯನ್ನು ಪರಿಷ್ಕರಿಸಿ ಮುದ್ರಿಸಬೇಕಾಗಿದೆ. ದಕ್ಷಿಣೇಶ್ವರಕ್ಕೆ ಬರಲು ನಿನಗೆ ಸಮಯವೇ ದೊರೆಯುತ್ತಿಲ್ಲ. ಅದಕ್ಕಾಗಿ ನಾನೇ ಇಲ್ಲಿಗೆ ಬಂದುಬಿಟ್ಟೆ. ನಿನಗೆ ಕಾಯಿಲೆ ಆಗಿರುವುದನ್ನು ಕೇಳಿ ಭಗವತಿಗೆ ಎಳನೀರು-ಸಕ್ಕರೆಯ ಹರಕೆ ಹೊತ್ತೆ. ಆಕೆಗೆ ಹೇಳಿದೆ: ‘ತಾಯೆ, ಕೇಶವಸೇನನಿಗೆ ಏನಾದರೂ ಎಡವಟ್ಟು ಆಗಿಬಿಟ್ಟಿದ್ದೇ ಆದರೆ ಕಲ್ಕತ್ತಕ್ಕೆ ಹೋದಾಗ ಅಲ್ಲಿ ಯಾರ ಸಂಗಡ ಮಾತಾಡಲಿ?’
ಪ್ರತಾಪನೇ ಮೊದಲಾದ ಬ್ರಾಹ್ಮಭಕ್ತರೊಡನೆ ಪರಮಹಂಸರು ಮಾತುಕತೆ ಆಡುತ್ತಿದ್ದಾರೆ. ಮಾಸ್ಟರ್ ಹತ್ತಿರ ಕುಳಿತಿದ್ದಾನೆ. ಆತನನ್ನು ತೋರಿಸಿ ಪರಮಹಂಸರು ಕೇಶವಸೇನನಿಗೆ ಹೇಳುತ್ತಿದ್ದಾರೆ: “ವಿಚಾರಿಸು, ಈಗ ಏಕೆ ದಕ್ಷಿಣೇಶ್ವರಕ್ಕೆ ಬರುತ್ತಾ ಇಲ್ಲ? ಯಾವಾಗಲೂ ಹೇಳುತ್ತಿದ್ದಾನೆ, ಹೆಂಡತಿ ಮಕ್ಕಳ ಮೇಲೆ ವ್ಯಾಮೋಹ ಇಲ್ಲವೆಂಬುದಾಗಿ.” ಮಾಸ್ಟರ್ ಈಗ ಸುಮಾರು ಒಂದು ತಿಂಗಳಿಂದ ಪರಮಹಂಸರ ಹತ್ತಿರಕ್ಕೆ ಬಂದು ಹೋಗುತ್ತಾ ಇದ್ದಾನೆ. ಈಗೆಲ್ಲೋ ಕೆಲವು ದಿನಗಳಿಂದ ಅಲ್ಲಿಗೆ ಹೋಗುವುದಕ್ಕಾಗದೆ ಇದ್ದುದರಿಂದ ಅವರು ಹೀಗೆ ಹೇಳುತ್ತಿದ್ದಾರೆ. ಬರುವುದು ತಡವಾದರೆ ಕಾಗದ ಬರೆಯಬೇಕು ಎಂಬುದಾಗಿ ಪರಮಹಂಸರು ಆತನಿಗೆ ತಿಳಿಸಿದ್ದರು.
ಅಲ್ಲಿ ಪಂಡಿತ ಸಮಾಧ್ಯಾಯಿ ಇದ್ದ. ಆತ ಒಬ್ಬ ಪಂಡಿತ, ವೇದಾದಿಶಾಸ್ತ್ರಗಳನ್ನು ಚೆನ್ನಾಗಿ ಓದಿದ್ದಾನೆ ಎಂಬುದಾಗಿ ಬ್ರಾಹ್ಮಭಕ್ತರು ಆತನನ್ನು ಪರಮಹಂಸರಿಗೆ ಪರಿಚಯ ಮಾಡಿಕೊಟ್ಟರು. ಪರಮಹಂಸರು ಹೇಳುತ್ತಿದ್ದಾರೆ: “ಹೌದು. ಈತನ ಕಣ್ಣುಗಳಿಂದಲೇ ಈತನ ಆಂತರ್ಯ ತೋರಿಬರುತ್ತದೆ, ಗಾಜಿನ ಬಾಗಿಲ ಮೂಲಕ ಮನೆ ಒಳಗಿರುವುದೆಲ್ಲ ತೋರಿಬರುವ ಹಾಗೆ.
ತ್ರೈಲೋಕ್ಯ ಹಾಡುತ್ತಿದ್ದಾನೆ. ಹಾಡನ್ನು ಕೇಳುತ್ತ ಕೇಳುತ್ತ ಪರಮಹಂಸರು ಇದ್ದಕ್ಕಿದ್ದ ಹಾಗೆ ಎದ್ದು ನಿಂತು ಭಗವತಿಯ ನಾಮ ಜಪಿಸುತ್ತ ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಈಗ ಕಿಂಚಿತ್ ಪ್ರಕೃತಿಸ್ಥರಾಗಿ ತಾವೇ ನರ್ತಿಸುತ್ತ ಹಾಡುತ್ತಿದ್ದಾರೆ:
ಜಯ್ ಕಾಳಿ-ಎಂದು ನಾ ಕುಡಿಯುವೀ ದಿವ್ಯ ಮಧು
ಸಾಮಾನ್ಯ ಸುರೆಯಲ್ಲವೆಂದರಿಯದೆ…………………..
ಪರಮಹಂಸರು ಕೇಶವಸೇನನ್ನು ಸ್ನೇಹಪೂರ್ಣದೃಷ್ಟಿಯಿಂದ ನೋಡುತ್ತಿದ್ದಾರೆ, ತಮ್ಮ ಆತ್ಮೀಯನೋ ಏನೋ ಎಂಬಂತೆ. ಕೇಶವಸೇನ ಬೇರೆಯವರಿಗೆ ಸೇರಿದವನಾಗಿ, ಎಂದರೆ ಪ್ರಾಪಂಚಿಕನಾಗಿ ಆಗಿಬಿಡುತ್ತಾನೊ ಏನೊ ಎಂಬುದಾಗಿ ಅವರು ಭಯಪಡುವಂತೆ ಕಂಡಿತು. ಆತನ ಕಡೆ ನೋಡುತ್ತ ಮತ್ತೆ ಹಾಡುತ್ತಿದ್ದಾರೆ:
ನುಡಿಯಲಮ್ಮೆವು ನಾವು, ರಾಧಾ, ನುಡಿಯದಿರಲೂ ಆರೆವು!
ನಾವು ನಿನ್ನನ್ನು ಕಳೆದುಕೊಳ್ಳುವೆವು-ಎಂಬ ಭಯದೊಳಗಿರುವೆವು.
ಹಿಂದೆ ಎನಿತೋ ಸಾರಿ ಕಂಟಕದಾಚೆ ದಾಟಿದ ಗುಟ್ಟನು
ಇಂದು ನಾವೂ ಬಲ್ಲೆವಾದರೂ-ಇಂದಿನೆಲ್ಲಾ ಆಗುಹೋಗನು
ನಿನ್ನಮೇಲೇ ಬಿಟ್ಟೆವು!
ಪರಮಹಂಸರು ಈ ಹಾಡಿನ ಕೊನೆ ಭಾಗವನ್ನು ಪುನರಾವೃತ್ತಿ ಮಾಡಿ ಕೇಶವಸೇನನಿಗೆ ಹೇಳುತ್ತಿದ್ದಾರೆ: “ಇದರ ಅರ್ಥ ಎಲ್ಲವನ್ನೂ ತ್ಯಜಿಸಿ ಭಗವಂತನನ್ನು ಕರೆ. ಆತನೇ ಸತ್ಯ. ಉಳಿದುದೆಲ್ಲ ಅನಿತ್ಯ. ಆತನ ಸಾಕ್ಷಾತ್ಕಾರ ಮಾಡಿಕೊಳ್ಳದಿದ್ದರೆ ಎಲ್ಲವೂ ವ್ಯರ್ಥ. ಇದೇ ಮಹಾಮಂತ್ರ.”
ಪರಮಹಂಸರು ಕೆಳಗೆ ಕುಳಿತುಕೊಂಡು ಈಗ ಮತ್ತೆ ಭಕ್ತರೊಡನೆ ಮಾತುಕತೆಯಾಡಲು ಆರಂಭಿಸಿದ್ದಾರೆ. ಹಜಾರದ ಒಂದು ಭಾಗದಲ್ಲಿ ಒಬ್ಬ ಬ್ರಾಹ್ಮಭಕ್ತ ಪಿಯಾನೊ ನುಡಿಸಲು ಆರಂಭಿಸಿದ. ಪರಮಹಂಸರು ಬಾಲಕನ ಹಾಗೆ ಅದರ ಹತ್ತಿರ ಹೋಗಿ ನಿಂತು ನೋಡುತ್ತಿದ್ದಾರೆ. ಸ್ವಲ್ಪ ಹೊತ್ತಾದ ನಂತರ ಅವರನ್ನು ಮನೆ ಒಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಅವರಿಗೆ ಉಪಾಹಾರ ಮಾಡಿಸುತ್ತಿದ್ದಾರೆ. ಈಗ ಮನೆ ಹೆಂಗಸರು ಬಂದು ಅವರಿಗೆ ಪ್ರಣಾಮ ಮಾಡುತ್ತಿದ್ದಾರೆ.
ಪರಮಹಂಸರ ಉಪಾಹಾರ ಮುಗಿಯಿತು. ಈಗ ಗಾಡಿಗೆ ಹತ್ತಿದ್ದಾರೆ. ಬ್ರಾಹ್ಮ ಭಕ್ತರೆಲ್ಲರೂ ಗಾಡಿ ಹತ್ತಿರ ಬಂದು ನಿಂತಿದ್ದಾರೆ. ಗಾಡಿ ಕಮಲಕುಟೀರ ಬಿಟ್ಟು ದಕ್ಷಿಣೇಶ್ವರದ ಕಡೆ ಹೊರಟಿತು.
1. ಕಲ್ಕತ್ತದಲ್ಲಿ ವಾಸವಾಗಿರುವ ನೇಪಾಲ ಸರ್ಕಾರದ ಪ್ರತಿನಿಧಿ. ಆತ ಪರಮಹಂಸರ ಭಕ್ತ.
2. ಕಾಮಾರಪುಕುರದ ಹತ್ತಿರವಿರುವ ಒಂದು ನದಿ.
3. ರಾಣಿ ರಾಸಮಣಿಯ ಅಳಿಯ. ಪರಮಹಂಸರ ದೊಡ್ಡ ಭಕ್ತ. ಪರಮಹಂಸರಿಗೆ ಬೇಕಾದ ಅನುಕೂಲತೆಗಳನ್ನೆಲ್ಲಾ ಈತ ಕಲ್ಪಿಸಿಕೊಟ್ಟ.