೨೬ನೆ ಸೆಪ್ಟೆಂಬರ್ ೧೮೮೪, ಸಪ್ತಮಿ, ಶುಕ್ರವಾರ
ಈ ದಿವಸ ಶ್ರೀರಾಮಕೃಷ್ಣ ಪರಮಹಂಸರು ಕಲ್ಕತ್ತೆಗೆ ಬಂದಿದ್ದಾರೆ. ಅಲ್ಲಿ ಅವರಿಗೆ ಅನೇಕ ಕೆಲಸ. ರಾಜಧಾನಿಯಲ್ಲಿ ದುರ್ಗಾಪೂಜೆಯ ಮಹೋತ್ಸವ. ಪ್ರಾಯಶಃ ಪ್ರತಿಯೊಬ್ಬ ಹಿಂದುವಿನ ಮನೆಯಲ್ಲಿಯೂ ಈ ದಿವಸ ಭಗವತಿಯ ಸಪ್ತಮಿ ಪೂಜೆ ಆರಂಭ. ಪರಮಹಂಸರು ಅಧರಸೇನನ ಮನೆಯ ದುರ್ಗಾಪ್ರತಿಮೆಯನ್ನು ದರ್ಶನ ಮಾಡಬೇಕೆಂದು ಮತ್ತು ಆನಂದಮಯಿ ಶ್ರೀದುರ್ಗೆಯ ಆನಂದೋತ್ಸವದಲ್ಲಿ ಭಾಗಿಗಳಾಗಬೇಕೆಂದು ಇಚ್ಛಿಸಿದ್ದಾರೆ. ಅವರ ಇನ್ನೊಂದು ಇಚ್ಛೆ ಶಿವನಾಥಶಾಸ್ತ್ರಿಯನ್ನು ಕಂಡು ಮಾತಾಡಬೇಕೆಂಬುದು.
ಸುಮಾರು ಮಧ್ಯಾಹ್ನದ ಸಮಯ ಸಾಧಾರಣ ಬ್ರಾಹ್ಮಸಮಾಜದ ಕಾಲುದಾರಿಯಲ್ಲಿ ಕೈಯಲ್ಲಿ ಛತ್ರಿಯನ್ನು ಹಿಡಿದು ಮಾಸ್ಟರ್ ಮಹಾಶಯ ಅಡ್ಡಾಡುತ್ತಿದ್ದಾನೆ. ಘಂಟೆ ಒಂದಾಯ್ತು, ಎರಡಾಯ್ತು. ಪರಮಹಂಸರು ಇನ್ನೂ ಬರಲಿಲ್ಲ. ಆತ ಮಹಾಲನವಿಶನ ಔಷಧಾಲಯದ ಹಂತಗಳ ಮೇಲೆ ಆಗಾಗ ಕುಳಿತುಕೊಳ್ಳುತ್ತಿದ್ದನು. ದುರ್ಗಾಪೂಜೆ ಬಂದಿರುವುದಕ್ಕಾಗಿ ಮಕ್ಕಳು ಆನಂದಪಡುತ್ತಿರುವುದನ್ನೂ ಮತ್ತು ಆಬಾಲವೃದ್ಧರಾದಿಯಾಗಿ ಸಕಲರೂ ಸಂಭ್ರಮಭರಿತರಾಗಿರುವುದನ್ನೂ ನೋಡುತ್ತಿದ್ದನು.
ಘಂಟೆ ಮೂರಾಯ್ತು. ಅನಂತರ ಸ್ವಲ್ಪ ಹೊತ್ತಿನಲ್ಲಿಯೆ ಶ್ರೀರಾಮಕೃಷ್ಣರು ಕುಳಿತಿದ್ದ ಗಾಡಿ ಅಲ್ಲಿಗೆ ಬಂದಿತು. ಅವರು ಅದರಿಂದ ಕೆಳಕ್ಕೆ ಇಳಿದೊಡನೆಯೆ ಸಮಾಜ ಮಂದಿರದ ಕಡೆ ತಿರುಗಿ ಕೈ ಮುಗಿದರು. ಅವರೊಡನೆ ಹಾಜರಾ ಮತ್ತು ಒಬ್ಬಿಬ್ಬರು ಭಕ್ತರು ಇದ್ದರು. ಮಾಸ್ಟರ್ ಪರಮಹಂಸರಿಗೆ ಪ್ರಣಾಮಮಾಡಿ ಅವರ ಪಾದಧೂಳಿ ಸ್ವೀಕರಿಸಿದನು. ಪರಮಹಂಸರು ಆತನಿಗೆ ತಾವು ಶಿವನಾಥಶಾಸ್ತ್ರಿಯ ಮನೆಗೆ ಹೋಗುತ್ತಿರುವುದಾಗಿ ತಿಳಿಸಿದರು. ಶ್ರೀರಾಮಕೃಷ್ಣರ ಆಗಮನ ವಾರ್ತೆಯನ್ನು ಕೇಳಿದ ಸ್ವಲ್ಪಹೊತ್ತಿನಲ್ಲಿಯೆ, ಅಲ್ಲಿಗೆ ಕೆಲವು ಬ್ರಾಹ್ಮಭಕ್ತರು ಬಂದರು. ಅವರು ಪರಮಹಂಸರನ್ನು ಬ್ರಾಹ್ಮವಠಾರದ ಮಧ್ಯೆ ಇದ್ದ ಶಿವನಾಥಶಾಸ್ತ್ರಿಯ ಮನೆಗೆ ಕರೆದುಕೊಂಡು ಹೋದರು, ಶಿವನಾಥಶಾಸ್ತ್ರಿ ಮನೆಯಲ್ಲಿರಲಿಲ್ಲ. ಏನು ಮಾಡಬೇಕೆಂದು ಯೋಚಿಸುವಷ್ಟರಲ್ಲಿಯೆ, ಬ್ರಾಹ್ಮಸಮಾಜದ ಪ್ರಮುಖರಾದ ವಿಜಯ ಗೋಸ್ವಾಮಿ, ಮಹಾಲನವಿಶ ಇವರೆ ಮೊದಲಾದವರು ಅಲ್ಲಿಗೆ ಬಂದು ಪರಮಹಂಸರಿಗೆ ಸುಖಾಗಮನ ಬಯಸಿ, ಅವರನ್ನು ಸಮಾಜ ಮಂದಿರದೊಳಕ್ಕೆ ಕರೆದುಕೊಂಡು ಹೋದರು.
ವೇದಿಕೆಯ ಮೇಲೆ ಸಂಕೀರ್ತನೆ ನಡೆಯುವ ಜಾಗದಲ್ಲಿ ಅವರಿಗೆ ಆಸನ ಹಾಕಿದರು. ಆನಂದಮಯರಾದ ಪರಮಹಂಸರು ನಗುಮೊಗದಿಂದ ಅದರ ಮೇಲೆ ಕುಳಿತುಕೊಂಡರು. ವಿಜಯನೆ ಮೊದಲಾದ ಅನೇಕ ಬ್ರಾಹ್ಮಭಕ್ತರು ಅವರ ಸಮ್ಮುಖದಲ್ಲಿ ಕುಳಿತರು.
ಪರಮಹಂಸರು ಮಂದಹಾಸದಿಂದ ವಿಜಯನಿಗೆ, “ನಾನು ಕೇಳಿದೆ, ಇಲ್ಲೇನೊ ಒಂದು ಸೈನ್ಬೋರ್ಡ ನ್ಬೋರ್ಡ ಇದೆಯಂತೆ. ಅನ್ಯ ಸಂಪ್ರದಾಯದವರು ಯಾರೂ ಇಲ್ಲಿಗೆ ಬರುವ ಹಾಗಿಲ್ಲವಂತೆ! ನರೇಂದ್ರ ಹೇಳಿದ : ‘ಸಮಾಜಕ್ಕೆ ಹೋಗುವುದು ಬೇಕಾಗಿಲ್ಲ, ಬೇಕಾದರೆ ಶಿವನಾಥನ ಮನೆಗೆ ಹೋಗಿ ಬನ್ನಿ’ ಎಂದು.
“ಎಲ್ಲರೂ ಅವನನ್ನೇ ಕರೆಯುವುದು ಎಂದು ನಾನು ಹೇಳುತ್ತೇನೆ. ಅಲ್ಲಿ ತನ್ನ, ಪರ ಏತಕ್ಕೆ? ಕೆಲವರು ಸಾಕಾರ ಎಂದು ಹೇಳುತ್ತಾರೆ, ಕೆಲವರು ನಿರಾಕಾರ ಎಂದು ಹೇಳುತ್ತಾರೆ. ನಾನು ಯಾರಿಗೆ ಸಾಕಾರದಲ್ಲಿ ವಿಶ್ವಾಸವೊ ಅವರು ಸಾಕಾರವನ್ನೇ ಚಿಂತಿಸಲಿ, ಯಾರಿಗೆ ನಿರಾಕಾರದಲ್ಲಿ ವಿಶ್ವಾಸವೊ ಅವರು ನಿರಾಕಾರವನ್ನೇ ಚಿಂತಿಸಲಿ ಎಂದು ಹೇಳುತ್ತೇನೆ. ಆದರೆ ಒಟ್ಟಿನಲ್ಲಿ ಹೀಗೆ ಹೇಳಬಹುದು, ಸ್ವಮತ ಭ್ರಾಂತಿ ಒಳ್ಳೆಯದಲ್ಲ – ಅಂದರೆ, ನನ್ನ ಧರ್ಮವೇ ಸರಿ, ಉಳಿದವರದೆಲ್ಲ ತಪ್ಪು ಎಂಬುದು. ನನ್ನ ಧರ್ಮ ಸರಿಯಾದುದೆ; ಉಳಿದವರದು ಸರಿಯೊ ತಪ್ಪೊ, ಸತ್ಯವೊ ಮಿಥ್ಯವೊ ಅದು ನನಗೆ ಸರಿಯಾಗಿ ಗೊತ್ತಾಗುವುದಿಲ್ಲ – ಈ ಭಾವ ಒಳ್ಳೆಯದು. ಏಕೆಂದರೆ ಭಗವಂತನ ಸಾಕ್ಷಾತ್ಕಾರ ಆಗದ ತನಕ ಆತನ ಸ್ವರೂಪವನ್ನು ಅರಿತುಕೊಳ್ಳಲಾಗುವುದಿಲ್ಲ. ಕಬೀರ ಹೇಳುತ್ತಿದ್ದ: ‘ಸಾಕಾರ ನನ್ನ ತಾಯಿ, ನಿರಾಕಾರ ನನ್ನ ತಂದೆ. ಯಾರನ್ನು ಹೊಗಳುವುದು, ಯಾರನ್ನು ತೆಗಳುವುದು? ತಕ್ಕಡಿ ತಟ್ಟೆಗಳೆರಡೂ ಒಂದೆ ಸಮತೂಕ !’ ಎಂದು.
“ಹಿಂದು, ಮುಸಲಮಾನ, ಕ್ರೈಸ್ತ, ಶಾಕ್ತ, ಶೈವ, ವೈಷ್ಣವ; ಋಷಿಗಳ ಕಾಲದ ಬ್ರಹ್ಮಜ್ಞಾನಿಗಳು, ನೀವು, ಎಲ್ಲರೂ ಆ ಒಂದೇ ವಸ್ತುವಿಗಾಗಿ ಹುಡುಕುತ್ತಿರುವುದು. ಆದರೆ ಯಾರ ಹೊಟ್ಟೆಗೆ ಯಾವುದು ಒಗ್ಗುತ್ತದೆಯೊ, ಅದನ್ನೆ ತಾಯಿ ಅಡುಗೆ ಮಾಡುತ್ತಾಳೆ. ಮನೆಗೆ ಮೀನು ತಂದರೆ, ಐದು ಮಕ್ಕಳಿದ್ದರೆ, ತಾಯಿ ಎಲ್ಲರಿಗೂ ಪಲಾವು, ಕಾಲಿಯಾ ಮಾಡಿ ಬಡಿಸುವುದಿಲ್ಲ. ಎಲ್ಲರ ಜೀರ್ಣಶಕ್ತಿಯೂ ಒಂದೇ ಸಮನಾಗಿ ಇರುವುದಿಲ್ಲ. ಕೆಲವರಿಗೆ ಮೀನಿನ ಸಾರು ಮಾಡಿ ಬಡಿಸುತ್ತಾಳೆ. ಆದರೂ ತಾಯಿ ತನ್ನ ಎಲ್ಲಾ ಮಕ್ಕಳನ್ನೂ ಒಂದೇ ಸಮನಾಗಿ ಪ್ರೀತಿಸುತ್ತಾಳೆ.
“ನನ್ನ ಭಾವ ಏನು ಗೊತ್ತೆ ? ಮೀನಿನ ಎಲ್ಲಾ ತರದ ಮೇಲೋಗರಗಳನ್ನು ತಿನ್ನಲು ನನಗೆ ಆಸೆ. ನನ್ನದು ಹೆಂಗಸಿನ ಸ್ವಭಾವ! (ಎಲ್ಲರೂ ನಗುತ್ತಾರೆ) ನನಗೆ ಬಜ್ಜಿಮಾಡಿದ ಮೀನು, ಅರಸಿನ ಹಾಕಿದ ಮೀನು, ಹುಳಿಹಾಕಿದ ಮೀನು, ಬಾಟಿ ಚಚ್ಚಡಿ ಯಾವುದು ಎಲೆಗೆ ಬಿದ್ದರೂ ಸರಿಯೆ. ಇವೂ ಅಲ್ಲದೆ, ಮೀನಿನ ತಲೆಯ ಪಲ್ಯ, ಕಾಲಿಯಾ ಪಲಾವು ಯಾವುದು ಬಿದ್ದರೂ ಸರಿಯೆ ತಿಂದುಹಾಕಿಬಿಡುತ್ತೇನೆ! (ಎಲ್ಲರೂ ನಗುತ್ತಾರೆ)
“ನಿಜ ಏನು ಗೊತ್ತೆ? ದೇಶಕಾಲಪಾತ್ರಕ್ಕೆ ತಕ್ಕಂತೆ ಭಗವಂತ ನಾನಾ ಧರ್ಮಗಳನ್ನು ಮಾಡಿದ್ದಾನೆ. ಆದರೂ ಎಲ್ಲಾ ಮತಗಳೂ ಪಥಗಳೆ. ಆದರೆ ಮತವೇ ಭಗವಂತನಲ್ಲ. ಆಂತರಿಕ ಭಕ್ತಿಯಿಂದ ಯಾವುದಾದರೂ ಒಂದು ದಾರಿ ಹಿಡಿಯುವುದಾದರೆ ಅದರ ಮೂಲಕವೆ ಆತನನ್ನು ಮುಟ್ಟಬಹುದು. ಶ್ರದ್ಧೆಯೊಂದಿದ್ದರೆ ಯಾವ ಮತ ಹಿಡಿದರೇನು, ಅದರಲ್ಲಿ ತಪ್ಪಿದ್ದರೂ ಚಿಂತೆಯಿಲ್ಲ; ಆತ ತಿದ್ದಿಕೊಡುತ್ತಾನೆ. ಯಾರಾದರೂ ಜಗನ್ನಾಥನನ್ನು ನೋಡಬೇಕೆಂದು ತುಂಬು ಆಕಾಂಕ್ಷೆಯಿಂದ ಹೊರಟು ದಿಕ್ಕು ತಪ್ಪಿ ದಕ್ಷಿಣಕ್ಕೆ ಹೋಗುವುದಕ್ಕೆ ಬದಲು ಉತ್ತರಕ್ಕೆ ಹೋಗುತ್ತಿದ್ದರೆ, ಆವಶ್ಯಕವಾಗಿ ದಾರಿಯಲ್ಲಿ ಯಾರಾದರೂ ಸಿಕ್ಕಿ ‘ಅಯ್ಯಾ, ಈ ದಿಕ್ಕಿಗೆ ಹೋಗಬೇಡ. ದಕ್ಷಿಣ ದಿಕ್ಕಿಗೆ ಹೋಗು’ ಎಂದು ಹೇಳಿಕೊಡುತ್ತಾರೆ. ಅವನು ಒಂದಲ್ಲ ಒಂದು ದಿವಸ ಜಗನ್ನಾಥ ದರ್ಶನ ಮಾಡಿಯೇ ಮಾಡುತ್ತಾನೆ.
“ಒಂದು ಪಕ್ಷ ಅನ್ಯಧರ್ಮಗಳಲ್ಲಿ ಲೋಪದೋಷಗಳಿದ್ದರೆ, ಅದನ್ನು ಕಟ್ಟಿಕೊಂಡು ನಮಗೇನು? ಈ ಜಗತ್ತು ಯಾರದೊ ಆತನಿಗೆ ಅದರ ಚಿಂತನೆ. ನಮ್ಮ ಕರ್ತವ್ಯ ಹೇಗೋ ಮಾಡಿ ಜಗನ್ನಾಥನ ದರ್ಶನಮಾಡುವುದು. (ಬ್ರಾಹ್ಮಭಕ್ತರ ಕಡೆ ತಿರುಗಿ) ನಿಮ್ಮ ಮತವಂತು ಒಳ್ಳೆಯದೆ. ನೀವು ನಿರಾಕಾರ ಎಂದು ಹೇಳುತ್ತೀರಿ. ಅದೂ ಒಳ್ಳೆಯದೆ. ಕಜ್ಜಾಯವನ್ನು ಉದ್ದುದ್ದವಾಗಿ ತಿನ್ನಿ ಅಡ್ಡಡ್ಡಲಾಗಿ ತಿನ್ನಿ, ಹೇಗೆ ತಿಂದರೂ ಸಿಹಿಯೇ.
“ಆದರೆ ಸ್ವಮತ ಭ್ರಾಂತಿ ಒಳ್ಳೆಯದಲ್ಲ. ನೀನು ಗೋಸುಂಬೆ ಕಥೆ ಕೇಳಿದ್ದೀಯ? ಒಂದು ಸಲ ಒಬ್ಬ ಒಂದು ತೋಪಿಗೆ ಹೋಗಿ ಮರದ ಮೇಲೆ ಒಂದು ಗೋಸುಂಬೆ ಕಂಡ. ಆತ ತನ್ನ ಸ್ನೇಹಿತರಿಗೆ: ‘ನಾನು ಆ ತೋಪಿನಲ್ಲಿ ಒಂದು ಕೆಂಪು ಗೋಸುಂಬೆ ನೋಡಿ ಬಂದೆ’ ಎಂದ. ಆತನ ನಂಬಿಕೆ ಅದು ಸಂಪೂರ್ಣ ಕೆಂಪು ಎಂದೆ. ಅದೇ ತೋಪಿನಿಂದ ಬಂದ ಇನ್ನೊಬ್ಬ: ‘ನಾನು ಒಂದು ಹಸುರು ಗೋಸುಂಬೆ ನೋಡಿ ಬಂದೆ’ ಎಂದ. ಆತನ ನಂಬಿಗೆ ಅದು ಅಚ್ಚ ಹಸುರು ಎಂದೆ. ಆದರೆ ಯಾರು ಆ ತೋಪಿನಲ್ಲಿ ವಾಸವಾಗಿದ್ದನೋ ಆತ ಬಂದು: ‘ನೀವೇನು ಹೇಳುತ್ತಿರುವಿರೋ ಅದೆಲ್ಲಾ ಸರಿ, ಆದರೆ ಈ ಪ್ರಾಣಿ ಕೆಲವು ವೇಳೆ ಕೆಂಪಾಗಿ, ಕೆಲವು ವೇಳೆ ಹಸುರಾಗಿ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವು ಸಮಯ ಅದಕ್ಕೆ ಯಾವ ಬಣ್ಣವೂ ಇರುವುದಿಲ್ಲ’ ಎಂದ.
“ವೇದದಲ್ಲಿ ಆತ ಸಗುಣ ನಿರ್ಗುಣ ಎಂದು ಹೇಳಿದೆ. ನೀವು ನಿರಾಕಾರ ಎಂದು ಹೇಳುತ್ತೀರಿ. ನಿಮ್ಮದು ಒಂದೇ ಸ್ವರ. ಆದರೂ ಚಿಂತೆಯಿಲ್ಲ. ಒಂದನ್ನು ಸರಿಯಾಗಿ ತಿಳಿದುಕೊಂಡರೆ ಇನ್ನೊಂದನ್ನು ತಿಳಿದುಕೊಳ್ಳಬಹುದು. ಅವನೆ ತಿಳಿಸಿಕೊಡುತ್ತಾನೆ. (ಅಲ್ಲಿ ಕುಳಿತಿದ್ದ ಒಬ್ಬಿಬ್ಬರು ಬ್ರಾಹ್ಮಭಕ್ತರ ಕಡೆ ಬೆರಳು ಮಾಡಿ) ಇಲ್ಲಿಗೆ ನಿಮ್ಮವರು ಯಾರು ಯಾರು ಬರುತ್ತಾರೊ ಅವರಿಗೆ ಈತನೂ ಗೊತ್ತು, ಆತನೂ ಗೊತ್ತು.”
ವಿಜಯಗೋಸ್ವಾಮಿ ಇನ್ನೂ ಸಾಧಾರಣ ಬ್ರಾಹ್ಮಸಮಾಜದ ಭಕ್ತ; ಆ ಸಮಾಜದಿಂದ ಸಂಬಳ ಪಡೆಯುತ್ತಿರುವ ಆಚಾರ್ಯರಲ್ಲಿ ಅವನೂ ಒಬ್ಬ. ಈಗ ಕೆಲವು ಕಾಲದಿಂದ ಬ್ರಾಹ್ಮಸಮಾಜದ ಎಲ್ಲಾ ನೀತಿ ನಿಯಮಗಳನ್ನೂ ಪರಿಪಾಲಿಸಲು ಆತನಿಗೆ ಸಾಧ್ಯವಾಗುತ್ತಿಲ್ಲ. ಸಾಕಾರವಾದಿಗಳೊಡನೆ ಬೆರೆಯುತ್ತಿದ್ದಾನೆ. ಇವೆಲ್ಲಾ ಕೂಡಿ, ಆತನಿಗೂ ಸಾಧಾರಣ ಬ್ರಾಹ್ಮಸಮಾಜದ ಮುಖ್ಯಸ್ಥರಿಗೂ ಒಂದು ವಿಧವಾದ ಮನಸ್ತಾಪಕ್ಕೆ ಕಾರಣವಾಗಿದೆ. ಸಮಾಜದ ಬ್ರಾಹ್ಮಭಕ್ತರಲ್ಲಿ ಅನೇಕರಿಗೆ ಆತನ ಮೇಲೆ ಅಸಂತುಷ್ಟಿ. ಪರಮಹಂಸರು ಇದ್ದಕ್ಕಿದ್ದ ಹಾಗೆ ವಿಜಯನ ಕಡೆ ತಿರುಗಿ ಮತ್ತೆ ಮಾತನಾಡಲಾರಂಭಿಸಿದರು.
ಶ್ರೀರಾಮಕೃಷ್ಣರು ಮುಗುಳುನಗುತ್ತ ವಿಜಯನಿಗೆ; “ನೀನು ಸಾಕಾರವಾದಿಗಳೊಡನೆ ಬೆರೆಯುತ್ತಿರುವೆ ಎಂದು ನಿನ್ನನ್ನು ಬಹಳವಾಗಿ ನಿಂದಿಸಿದರಂತೆ ? ಯಾರು ಭಗವಂತನ ಭಕ್ತನೊ ಆತನಿಗೆ ನಿಶ್ಚಲವಾದ ಬುದ್ಧಿಯ ಆವಶ್ಯಕತೆ ಇದೆ – ಕಮ್ಮಾರನ ಅಡಿಗಲ್ಲಿನಂತೆ. ಸುತ್ತಿಗೆ ಪೆಟ್ಟು ಒಂದರ ಮೇಲೊಂದು ಬೀಳುತ್ತಲೇ ಇರುತ್ತದೆ. ಆದರೂ ಅದು ನಿರ್ವಿಕಾರಿ. ತಿಳಿಗೇಡಿಗಳು ನಿನ್ನ ಮೇಲೆ ಏನೇನೊ ಹೇಳುತ್ತಾರೆ, ಎಷ್ಟೊಂದು ನಿಂದಿಸುತ್ತಾರೆ! ನಿನಗೆ ನಿಜವಾಗಿ ಭಗವಂತ ಬೇಕಾಗಿದ್ದರೆ, ಇವನ್ನೆಲ್ಲಾ ನೀನು ಸಹಿಸಿಕೊಳ್ಳಬೇಕು. ದುಷ್ಟರ ಮಧ್ಯೆ ಇರಬೇಕಾಗಿ ಬಂದರೆ ಭಗವಂತನ ಚಿಂತನೆ ಮಾಡುವುದಕ್ಕೆ ಆಗುವುದಿಲ್ಲವೊ? ನೋಡು ಕಾಡಿನ ಮಧ್ಯೆ ಋಷಿಗಳು ಭಗವಚ್ಚಿಂತನೆ ಮಾಡುತ್ತಿದ್ದರು. ಸುತ್ತುಮುತ್ತಲು ಹುಲಿ ಕರಡಿ ಇನ್ನೂ ಅನೇಕ ಹಿಂಸ್ರಜಂತುಗಳು. ದುಷ್ಟರದು ಹುಲಿ ಕರಡಿಗಳ ಸ್ವಭಾವ; ಅಟ್ಟಿಸಿಕೊಂಡು ಬಂದು ತೊಂದರೆ ಕೊಡುತ್ತಾರೆ.
“ಈ ಒಂದೆರಡು ವಿಚಾರಗಳಲ್ಲಿ ಸಾವಧಾನದಿಂದಿರಬೇಕು. ಒಂದನೆಯದಾಗಿ ದೊಡ್ಡ ಮನುಷ್ಯ. ಆತನಿಗೆ ದುಡ್ಡು ಕಾಸು ಆಳು ಕಾಳು ಯಥೇಚ್ಛವಾಗಿವೆ. ಮನಸ್ಸು ಮಾಡಿದರೆ ನಿನಗೆ ಕಷ್ಟ ತರಬಲ್ಲ. ಅಂಥವನೊಡನೆ ಎಚ್ಚರಿಕೆಯಿಂದ ಮಾತುಕತೆ ಆಡಬೇಕು. ಆತ ಹೇಳುವುದಕ್ಕೆಲ್ಲ ‘ಹ್ಞೂ’ ಗುಟ್ಟಬೇಕಾಗಿ ಬರುವುದು. ಎರಡನೆಯದಾಗಿ ನಾಯಿ. ಅದು ಅಟ್ಟಿಸಿಕೊಂಡು ಬಂದಾಗ ಅಥವಾ ಬೊಗಳುವಾಗ ಓಡಿಹೋಗದೆ ಲೊಚಗುಟ್ಟಿ, ಸಮಾಧಾನಪಡಿಸಬೇಕು. ಮೂರನೆಯದಾಗಿ ಗೂಳಿ, ಅದು ತಿವಿಯಲು ಬಂದರೆ ಆಗಲೂ ‘ಹೊ! ಹೊ! ಹೊ!’ ಎಂದು ಹೇಳಿ ಅದನ್ನು ಸುಮ್ಮನಿರಿಸಬೇಕು. ನಾಲ್ಕನೆಯದಾಗಿ ಕುಡುಕ. ನೀನೇನಾದರೂ ಅವನನ್ನು ರೇಗಿಸಿಬಿಟ್ಟರೆ, ‘ನೀನು ಹಾಗೆ, ನೀನು ಹೀಗೆ’ ಎಂದು ನಿನ್ನ ಹದಿನಾಲ್ಕು ವಂಶಗಳ ಪಾರಂಪರ್ಯವನ್ನೆಲ್ಲ ಹಿಡಿದು ಬೈದುಬಿಡುತ್ತಾನೆ. ಅವನಿಗೆ ಹೇಳಬೇಕು: ‘ಏನಣ್ಣಾ! ಹೇಗಿದ್ದೀಯಾ’ ಎಂದು. ಆಗ ಅವನಿಗೆ ತುಂಬಾ ಆನಂದ. ಬಂದು ನಿನ್ನ ಹತ್ತಿರ ಕುಳಿತು ಹುಕ್ಕ ಸೇದುತ್ತಾನೆ.
“ದುಷ್ಟರನ್ನು ಕಂಡರೆ ನಾನು ಎಚ್ಚೆತ್ತುಕೊಳ್ಳುತ್ತೇನೆ. ಯಾರಾದರೂ ಬಂದು ಇಲ್ಲಿ ಹುಕ್ಕ ಇದೆಯೆ? ಎಂದು ಕೇಳಿದರೆ, ‘ಇದೆ’ ಎಂದು ಹೇಳುತ್ತೇನೆ. ಕೆಲವರಿಗೆ ಸರ್ಪದ ಸ್ವಭಾವ. ಮುನ್ಸೂಚನೆ ಕೊಡದೆಯೆ ‘ಬುಸ್’ ಎಂದು ಕಚ್ಚಿಬಿಡುತ್ತಾರೆ. ಅದರಿಂದ ಪಾರಾಗಬೇಕಾದರೆ ಬಹಳ ಬುದ್ಧಿವಂತಿಕೆ ಉಪಯೋಗಿಸಬೇಕು. ಇಲ್ಲದಿದ್ದರೆ ನಿನಗೆ ತುಂಬಾ ಕೋಪ ಉಕ್ಕಿ ಪ್ರತೀಕಾರಮಾಡುವ ಇಚ್ಛೆಯಾಗುವುದು. ಆದ್ದರಿಂದ ಆಗಾಗ ಸತ್ಸಂಗಮಾಡುವುದು ಅತ್ಯಂತ ಆವಶ್ಯಕ. ಸತ್ಸಂಗ ಮಾಡಿದರೆ ಸದಸತ್ ವಿಚಾರ ಉಂಟಾಗುತ್ತದೆ.”
ವಿಜಯ: “ನನಗೆ ಸಮಯವೇ ಇಲ್ಲ. ಇಲ್ಲಿಯ ಕೆಲಸಕಾರ್ಯಗಳಲ್ಲಿ ಕಟ್ಟಿಬಿದ್ದಿದ್ದೇನೆ.”
ಪರಮಹಂಸರು: “ನೀವೆಲ್ಲ ಆಚಾರ್ಯರು. ಉಳಿದವರಿಗೆ ರಜಾ ಸಿಕ್ಕುತ್ತದೆ. ಆದರೆ ಆಚಾರ್ಯರಿಗೆ ಸಿಗೋದಿಲ್ಲ. ಎಸ್ಟೇಟಿನಲ್ಲಿ ಮ್ಯಾನೇಜರಿಗೆ ಒಂದು ಕಡೆ ವ್ಯವಸ್ಥೆ ಮುಗಿಯಿತೊ ಇಲ್ಲವೊ ಆಗಲೆ ಇನ್ನೊಂದು ಕಡೆ ವ್ಯವಸ್ಥೆಗೆ ಆತನನನ್ನು ಕಳುಹಿಸುತ್ತಾನೆ ಜಮೀನುದಾರ. ಹಾಗೆಯೆ ನಿಮಗೂ ರಜಾ ಸಿಗೋದಿಲ್ಲ.” (ಎಲ್ಲರೂ ನಗುತ್ತಾರೆ.)
ವಿಜಯ (ಕೈ ಜೋಡಿಸಿ): “ನೀವು ನನಗೆ ಸ್ವಲ್ಪ ಆಶೀರ್ವಾದ ಮಾಡಬೇಕು.”
ಶ್ರೀರಾಮಕೃಷ್ಣರು: “ಇದು ತಿಳಿಯದವರ ಮಾತು. ಆಶೀರ್ವಾದ ಮಾಡೋನು ಭಗವಂತ.”
ವಿಜಯ : “ದಯವಿಟ್ಟು ಸ್ವಲ್ಪ ಉಪದೇಶ ಮಾಡಿ.”
ಪರಮಹಂಸರು ಸಮಾಜ ಮಂದಿರದ ನಾಲ್ಕು ಕಡೆಗೂ ದೃಷ್ಟಿ ಹಾಯಿಸಿ ಮುಗುಳುನಗೆ ನಗುತ್ತ: “ಇದೂ ಒಂದು ತರದಲ್ಲಿ ಒಳ್ಳೇದೆ! ಜೋನಿ,1 ಗಟ್ಟಿ. ಇಲ್ಲಿ ಜೋನಿಯೂ ಇದೆ. ಗಟ್ಟಿಯೂ ಇದೆ.
“ನನಗೆ ಹೆಚ್ಚಾಗಿ ನಂಬರು ಬಂದು ನನ್ನ ಆಟ ಮುಗಿದುಹೋಗಿದೆ (ಎಲ್ಲರೂ ನಗುತ್ತಾರೆ.) ನಿನಗೆ ನಕ್ಸ ಆಟ ಬರುತ್ತದೆಯೆ? ಅದರಲ್ಲಿ ಯಾರಿಗೆ ಹದಿನೇಳಕ್ಕಿಂತ ಹೆಚ್ಚಾಗಿ ನಂಬರು ಬರುತ್ತದೆಯೊ ಅವರ ಆಟ ಮುಗಿದುಹೋಗುತ್ತದೆ. ಅದು ಒಂದು ತರದ ಇಸ್ಪೀಟ್ ಆಟ. ಯಾರಿಗೆ ಹದಿನೇಳಕ್ಕಿಂತ ಕಮ್ಮಿ, ಅಂದರೆ ಐದೊ, ಏಳೊ ಅಥವಾ ಹತ್ತೊ ನಂಬರು ಬಂದಿರುವುದೊ ಅವರೇ ತುಂಬಾ ಜಾಣರು. ನಾನು ಹೆಚ್ಚಾಗಿ ನಂಬರು ತೆಗೆದು ನನ್ನ ಆಟ ಪೂರೈಸೇ ಹೋಗಿದೆ.
“ಕೇಶವಸೇನ ತನ್ನ ಮನೆಯಲ್ಲಿ ಉಪನ್ಯಾಸ ಕೊಟ್ಟ. ನಾನು ಕೇಳುತ್ತಿದ್ದೆ. ಅನೇಕರು ಬಂದಿದ್ದರು. ಹೆಂಗಸರು ಪರದೆ ಹಿಂದೆ ಕುಳಿತಿದ್ದರು. ಕೇಶವ ಹೇಳಿದ: ‘ಹೇ ಭಗವಂತ! ನಾವು ಒಮ್ಮೆಯೆ ಭಕ್ತಿನದಿಯಲ್ಲಿ ಮುಳುಗಿ ಹೋಗುವಂತೆ ಅನುಗ್ರಹಮಾಡು’ ಎಂದು. ನಾನು ನಗುತ್ತ ಕೇಶವನಿಗೆ ಹೇಳಿದೆ: ‘ಭಕ್ತಿನದಿಯಲ್ಲಿ ನೀವು ಒಮ್ಮೆಯೆ ಮುಳುಗಿ ಹೋಗಿಬಿಟ್ಟರೆ, ಪರದೆ ಹಿಂದೆ ಇರುವವರ ಗತಿ ಏನಾಗಬೇಕು? ಆದ್ದರಿಂದ ಒಂದು ಕೆಲಸ ಮಾಡಿ, ಮುಳುಗೇನೊ ಹಾಕಿ, ಆದರೆ ಆಗಾಗ ದಡಕ್ಕೂ ಬಂದು ಹೋಗಿ. ಒಂದೇ ಸಾರಿಗೆ ಮುಳುಗಿ ನೆಲ ಕಚ್ಚಬೇಡಿ’ ಎಂದು. ಇದಕ್ಕೆ ಕೇಶವ ಮತ್ತು ಎಲ್ಲರೂ ಹೊ! ಹೊ! ಹೊ! ಎಂದು ನಗಲಾರಂಭಿಸಿದರು.
“ಏನೇ ಆದರೂ ನಿಜವಾದ ಆಕಾಂಕ್ಷೆಯೊಂದಿದ್ದರೆ ಸಂಸಾರದಲ್ಲಿದ್ದರೂ ಭಗವಂತನ ಸಾಕ್ಷಾತ್ಕಾರ ಪಡೆಯಬಹುದು. ‘ನಾನು ನನ್ನದು’ ಎಂಬುದೆ ಅಜ್ಞಾನ. ಹೇ ಭಗವಂತ, ‘ನೀನು ನಿನ್ನದು’ ಎಂಬುದೆ ಜ್ಞಾನ.
“ಶ್ರೀಮಂತರ ಮನೆಯ ದಾಸಿಯಂತೆ ಸಂಸಾರದಲ್ಲಿರು. ಆಕೆ ಎಲ್ಲಾ ಕೆಲಸ ಮಾಡುತ್ತಾಳೆ. ಯಜಮಾನನ ಮಗುವನ್ನು ನೋಡಿಕೊಳ್ಳುತ್ತಾಳೆ. ಅದನ್ನು, ‘ನನ್ನ ಹರಿ’ ಎಂದು ಕರೆಯುತ್ತಾಳೆ. ಆದರೆ ಆಕೆಗೆ ತನ್ನ ಮನಸ್ಸಿನಲ್ಲಿ ಚೆನ್ನಾಗಿ ಗೊತ್ತಿದೆ, ಆ ಮಗು ತನ್ನದಲ್ಲವೆಂದು. ಆಕೆ ಎಲ್ಲಾ ಕೆಲಸಗಳನ್ನೂ ಮಾಡುತ್ತಾಳೆ. ಆದರೆ ಆಕೆಯ ಮನಸ್ಸು ಮಾತ್ರ ತನ್ನ ಹಳ್ಳಿಯ ಮೇಲೆ ನೆಲೆಸಿದೆ. ಅದೇ ರೀತಿ ಸಂಸಾರದ ಎಲ್ಲಾ ಕೆಲಸಗಳನ್ನೂ ಮಾಡು. ಆದರೆ ಮನಸ್ಸನ್ನು ಮಾತ್ರ ಭಗವಂತನ ಕಡೆ ಇಡು. ಇದನ್ನು ತಿಳಿದುಕೊ. ‘ಮನೆ, ಪರಿವಾರ, ಪುತ್ರ ಇವೆಲ್ಲ ನನ್ನವಲ್ಲ. ಎಲ್ಲವೂ ಆತನದು’ ಎಂದು. ನೀನು ಆತನ ದಾಸ ಮಾತ್ರ.
“ಮಾನಸಿಕವಾಗಿ ತ್ಯಾಗಮಾಡಲು ನಾನು ಹೇಳುತ್ತಿದ್ದೇನೆ. ಸಂಸಾರ ತ್ಯಜಿಸಬೇಕೆಂದು ಹೇಳುತ್ತಿಲ್ಲ. ಸಂಸಾರದಲ್ಲಿ ಅನಾಸಕ್ತರಾಗಿ ಇದ್ದುಕೊಂಡು ನಿಜವಾಗಿ ವ್ಯಾಕುಲಹೃದಯ ರಾಗಿದ್ದರೆ ಆತನ ಸಾಕ್ಷಾತ್ಕಾರ ಪಡೆಯಬಹುದು.”
ಪರಮಹಂಸರು ವಿಜಯನಿಗೆ: “ನಾನು ಕಣ್ಣು ಮುಚ್ಚಿ ಧ್ಯಾನ ಮಾಡುತ್ತಿದ್ದೆ. ಅನಂತರ ಭಾವಿಸಿದೆ; ಹೀಗೆ ಮಾಡಿದರೆ(ಕಣ್ಣು ಮುಚ್ಚಿದರೆ) ಭಗವಂತನಿದ್ದಾನೆ, ಹೀಗೆ ಮಾಡಿದರೆ (ಕಣ್ಣು ತೆರೆದರೆ) ಇಲ್ಲವೆ? ಕಣ್ಣು ತೆರೆದಿದ್ದರೂ ಕೂಡ ಸರ್ವಭೂತಗಳಲ್ಲಿಯೂ ಭಗವಂತನಿರುವುದನ್ನು ನೋಡಿದ್ದೇನೆ. ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ಗಿಡಮರಗಳಲ್ಲಿ, ಸೂರ್ಯಚಂದ್ರರಲ್ಲಿ, ನೆಲದಲ್ಲಿ, ಜಲದಲ್ಲಿ, ಸರ್ವಭೂತಗಳಲ್ಲಿಯೂ ಆತನೆ ಇದ್ದಾನೆ.
“ಶಿವನಾಥನನ್ನು ಕಂಡರೆ ನನಗೇಕೆ ಇಷ್ಟ? ಯಾರು ಬಹಳ ಕಾಲ ಭಗವಂತನ ಚಿಂತನೆ ಮಾಡುತ್ತಾರೊ ಅವರಲ್ಲಿ ಸಾರವಿದೆ, ಅವರ ಆಂತರ್ಯದಲ್ಲಿ ಭಗವಂತನ ಶಕ್ತಿ ಇದೆ. ಅದೂ ಅಲ್ಲದೆ ಯಾರು ಚೆನ್ನಾಗಿ ಹಾಡಬಲ್ಲರೊ, ಚೆನ್ನಾಗಿ ನುಡಿಸಬಲ್ಲರೊ, ಯಾವುದಾದರೂ ಒಂದು ಕಲೆಯನ್ನು ಚೆನ್ನಾಗಿ ತಿಳಿದಿರುವರೊ ಅಂಥವರೊಳಗೂ ಸಾರವಿದೆ. ಭಗವಂತನ ಶಕ್ತಿ ಇದೆ. ಇದು ಗೀತೆಯ ಮತ. ಚಂಡಿಯಲ್ಲಿ ಇದೆ; ‘ಯಾರು ಅತ್ಯಂತ ಸುಂದರನೊ ಆತನೊಳಗೂ ಸಾರವಿದೆ. ಭಗವಂತನ ಶಕ್ತಿ ಇದೆ!’ ಎಂದು. (ವಿಜಯನಿಗೆ) ಆಹ! ಕೇದಾರ 2 ನಿಗೆ ಎಂಥ ಸ್ವಭಾವ ಬಂದುಬಿಟ್ಟಿದೆ! ಬಂದೊಡನೆಯೆ ಅಳಲಾರಂಭಿಸುತ್ತಾನೆ. ಆತನ ಕಣ್ಣುಗಳೆರಡೂ, ಯಾವಾಗ ನೋಡಿದರೂ ಸಕ್ಕರೆ ಪಾಕದಿಂದ ತೆಗೆದ ಛಾಣದ ವಡೆಯಂತೆ (ಹಾಲಿನ ಗರಣೆ) ಕಾಣುತ್ತದೆ.”
ವಿಜಯ: “ಢಾಕಾದಲ್ಲಿ ಯಾವಾಗ ನೋಡಿದರೂ ಆತನ ಬಾಯಲ್ಲಿ ಕೇವಲ ನಿಮ್ಮ ಮಾತೆ. ಇಲ್ಲಿಗೆ ಬಂದು ತಮ್ಮನ್ನು ಕಾಣಲು ಬಹಳ ವ್ಯಾಕುಲನಾಗಿದ್ದಾನೆ.”
ಸ್ವಲ್ಪ ಹೊತ್ತಿನ ಮೇಲೆ ಪರಮಹಂಸರು ಮೇಲೆಕ್ಕೆದ್ದರು. ಬ್ರಾಹ್ಮ ಭಕ್ತರು ಅವರಿಗೆ ನಮಸ್ಕಾರ ಮಾಡಿದರು. ಅವರೂ ಕೂಡ ಭಕ್ತರ ಕಡೆ ನಮಸ್ಕಾರ ಮಾಡಿದರು. ಅನಂತರ ಶ್ರೀರಾಮಕೃಷ್ಣರು ಗಾಡಿಯಲ್ಲಿ ಕುಳಿತುಕೊಂಡರು. ಅಧರಸೇನನ ಮನೆಯ ಪ್ರತಿಮೆಯ ದರ್ಶನ ಮಾಡಲು ಹೋಗುತ್ತಿದ್ದಾರೆ.
೨೮ನೆ ಸೆಪ್ಟೆಂಬರ್ ೧೮೮೪, ಮಹಾಷ್ಟಮಿ, ಭಾನುವಾರ
ಇಂದು ಮಹಾಷ್ಟಮಿ. ಶ್ರೀರಾಮಕೃಷ್ಣರು ದುರ್ಗಾಪ್ರತಿಮೆಯ ದರ್ಶನಕ್ಕಾಗಿ ಕಲ್ಕತ್ತಕ್ಕೆ ಬಂದಿರುತ್ತಾರೆ. ಅಧರಸೇನನ ಮನೆಯಲ್ಲಿ ಶ್ರೀದುರ್ಗಾಪೂಜೆಯ ಮಹೋತ್ಸವ ನಡೆಯುತ್ತಿದೆ. ಆತನ ಮನೆಯಿಂದ ಈ ಮೂರು ದಿನಗಳೂ – ಸಪ್ತಮಿ, ಅಷ್ಟಮಿ, ನವಮಿ – ಶ್ರೀರಾಮಕೃಷ್ಣರಿಗೆ ಆಹ್ವಾನ. ಅವರು ಆತನ ಮನೆಗೆ ಹೋಗುವ ಮುನ್ನ ರಾಮನ ಮನೆಗೆ ಹೋಗಿ ಅನಂತರ ಆತನ ಮನೆಗೆ ಹೋಗುತ್ತಿದ್ದಾರೆ. ಅಲ್ಲಿಗೆ ವಿಜಯ, ಕೇದಾರ, ರಾಮ, ಸುರೇಂದ್ರ, ಚುಣಿಲಾಲ, ನರೇಂದ್ರ, ನಿರಂಜನ, ನಾರಾಯಣ, ಹರೀಶ, ಬಾಬುರಾಮ, ಮಾಸ್ಟರ್ ಇವರೇ ಮೊದಲಾದವರು ಬಂದಿದ್ದಾರೆ. ಬಲರಾಮ ರಾಖಾಲ ಇನ್ನೂ ಬೃಂದಾವನದಲ್ಲೇ ಇದ್ದಾರೆ.
ಶ್ರೀರಾಮಕೃಷ್ಣರು ವಿಜಯ ಮತ್ತು ಕೇದಾರನ ಕಡೆ ನೋಡಿ ನಗುತ್ತ: “ಈ ದಿನ ಒಳ್ಳೆ ಜೊತೆ ಸೇರಿದೆ! ನಿಮ್ಮಿಬ್ಬರದೂ ಒಂದೇ ರೀತಿಯ ಭಾವ. (ವಿಜಯನ ಕಡೆ ತಿರುಗಿ) ಒಳ್ಳೇದು, ಶಿವನಾಥಶಾಸ್ತ್ರಿ? ನೀವು-”
ವಿಜಯ : “ಹೌದು, ಆತನಿಗೆ ಗೊತ್ತಾಗಿದೆ. ನಾನು ಆತನನ್ನು ನೋಡಲಾಗಲಿಲ್ಲ. ಆದರೆ ಸಮಾಚಾರ ತಿಳಿಸಿದ್ದೇನೆ. ಅದು ಆತನಿಗೆ ಗೊತ್ತಾಗಿದೆ.”
ಶಿವನಾಥಶಾಸ್ತ್ರಿಯನ್ನು ಕಂಡು ಮಾತನಾಡಿಸಲು ಶ್ರೀರಾಮಕೃಷ್ಣರು ಮೊನ್ನೆ ಆತನ ಮನೆಗೆ ಹೋಗಿದ್ದರು. ಆದರೆ ಆತ ಮನೆಯಲ್ಲಿ ಇರಲಿಲ್ಲ. ಬಳಿಕ ವಿಜಯ ಆಸಮಾಚಾರ ವನ್ನು ಆತನಿಗೆ ತಿಳಿಸಿದ. ಕೆಲಸ ಕಾರ್ಯಗಳ ನಿಮಿತ್ತ ಆತ ಇಂದೂ ಶ್ರೀರಾಮಕೃಷ್ಣರನ್ನು ಕಾಣಲಾಗಲಿಲ್ಲ.
ಪರಮಹಂಸರು ವಿಜಯನಿಗೆ: “ನನ್ನ ಮನಸ್ಸಿನಲ್ಲಿ ನಾಲ್ಕು ಇಚ್ಛೆ ಎದ್ದಿವೆ. ಮೊದಲನೆ ಯದು, ಬದನೆಕಾಯಿ ಹಾಕಿದ ಮೀನಿನ ಸಾರು ಉಣ್ಣಬೇಕು; ಎರಡನೆಯದು, ಶಿವನಾಥಶಾಸ್ತ್ರಿಯನ್ನು ನೋಡಬೇಕು; ಮೂರನೆಯದು ಭಕ್ತರು ಹರಿನಾಮ ಉಚ್ಚಾರಣೆ ಮಾಡುತ್ತ ಜಪಮಾಲೆ ತಿರುಗಿಸುವುದನ್ನು ನೋಡಬೇಕು; ನಾಲ್ಕನೆಯದು, ಅಷ್ಟಮಿ ದಿನ ಒಂದೆಂಟಾಣೆ ‘ಕಾರಣ’ 3 ವನ್ನು ತಾಂತ್ರಿಕ ಭಕ್ತರಿಗೆ ನೀಡಬೇಕು; ಅವರು ಅದನ್ನು ಕುಡಿಯುವಾಗ ನಾನು ನೋಡಬೇಕು; ಆಮೇಲೆ ಪ್ರಣಾಮ ಮಾಡಬೇಕು.”
ನರೇಂದ್ರ ಪರಮಹಂಸರ ಮುಂದೆ ಕುಳಿತಿದ್ದಾನೆ. ಇಪ್ಪತ್ತೆರಡೊ ಇಪ್ಪತ್ತುಮೂರೊ ವಯಸ್ಸು. ಪರಮಹಂಸರ ದೃಷ್ಟಿ, ಮಾತನಾಡುತ್ತಿದ್ದ ಹಾಗೆಯೆ ನರೇಂದ್ರನ ಮೇಲೆ ಬಿತ್ತು. ಅವರು ಎದ್ದುನಿಂತು ಸಮಾಧಿಸ್ಥರಾದರು. ತಮ್ಮ ಒಂದು ಪಾದವನ್ನು ನರೇಂದ್ರನ ಮಂಡಿಯ ಮೇಲೆ ಊರಿ ನಿಂತಿದ್ದಾರೆ. ಸಂಪೂರ್ಣ ಬಾಹ್ಯಶೂನ್ಯರಾಗಿದ್ದಾರೆ. ಕಣ್ಣುಗಳು ಎವೆಯಿಕ್ಕದೆ ನೋಡುತ್ತಿವೆ. ಬಹಳ ಹೊತ್ತಿನ ಮೇಲೆ ಅವರ ಸಮಾಧಿ ಇಳಿಮುಖ ವಾಯಿತು. ಬ್ರಹ್ಮಾನಂದದ ಅಮಲು ಇನ್ನೂ ಇಳಿದಿಲ್ಲ. ಪರಮಹಂಸರು ತಮ್ಮಷ್ಟಕ್ಕೆ ತಾವೆ ಮಾತಾಡಿಕೊಳ್ಳುತ್ತಿದ್ದಾರೆ. ಭಾವಾವಿಷ್ಟರಾಗಿ ಭಗವನ್ನಾಮ ಉಚ್ಚಾರಣೆ ಮಾಡುತ್ತಿದ್ದಾರೆ. ಹೇಳುತ್ತಿದ್ದಾರೆ: “ಸಚ್ಚಿದಾನಂದ! ಸಚ್ಚಿದಾನಂದ! ಎಂದು ಹೇಳಲೆ? ಬೇಡ. ಈ ದಿನ ಕಾರಣಾನಂದದಾಯಿನಿ! ಕಾರಣಾನಂದಮಯಿ! ಸ, ರಿ, ಗ, ಮ, ಪ, ದ, ನಿ. ನೀಯಲ್ಲಿ ಇರುವುದು ಒಳ್ಳೆಯದಲ್ಲ. ಅಲ್ಲಿ ಹೆಚ್ಚು ಹೊತ್ತು ಇರಲಾಗುವುದಿಲ್ಲ. ಅದರ ಹಿಂದಿನ ಮನೆಯಲ್ಲಿ ಇರುತ್ತೇನೆ.
“ಸ್ಥೂಲ, ಸೂಕ್ಷ್ಮ, ಕಾರಣ, ಮಹಾಕಾರಣ. ಮಹಾಕಾರಣ ಮುಟ್ಟಿದರೆ ಬಾಯಿ ಕಟ್ಟಿ ಹೋಗುತ್ತದೆ. ಅಲ್ಲಿ ಮಾತಿನ ಸೊಲ್ಲೇ ಇಲ್ಲ.
“ಈಶ್ವರಕೋಟಿ ಮಹಾಕಾರಣವನ್ನು ಮುಟ್ಟಿ ಹಿಂದಿರುಗಿ ಬರಬಲ್ಲ. ಅವತಾರಾದಿಗಳು ಈಶ್ವರಕೋಟಿಗಳು. ಅವರು ಮೇಲೆ ಹತ್ತಿ ಹೋಗಬಲ್ಲರು. ಚಾವಣಿಯ ಮೇಲೆ ಹತ್ತಿ ಹಂತಗಳ ಮೂಲಕ ಕೆಳಕ್ಕೆ ಇಳಿದು ಕೆಳಗಿನ ಅಂತಸ್ತಿನಲ್ಲಿ ಅಡ್ಡಾಡಬಲ್ಲರು. ಅವರದು ಅನುಲೋಮ ವಿಲೋಮ. ರಾಜನ ಏಳು ಅಂತಸ್ತಿನ ಮನೆ ತೆಗೆದುಕೊಳ್ಳಿ. ಹೊರಗಿನವರಿಗೆ ಕೆಳಗಿನ ಅಂತಸ್ತಿಗೆ ಮಾತ್ರ ಅವಕಾಶ. ಆದರೆ ರಾಜಕುಮಾರ, ಅದು ಆತನ ಮನೆಯೇ, ಏಳು ಅಂತಸ್ತಿನಲ್ಲಿ ಎಲ್ಲಿ ಬೇಕಾದರೆ ಅಲ್ಲಿ ಓಡಾಡಬಲ್ಲ. ಒಂದು ತರಹದ ಆಕಾಶ ಬಾಣವಿದೆ. ಮೊದಲು ಅದು ಒಂದು ವಿಧದ ಕಿಡಿ ಕಾರಿ ತೆಪ್ಪಗಾಗುತ್ತದೆ. ಸ್ವಲ್ಪ ಹೊತ್ತಿನ ನಂತರ ಇನ್ನೊಂದು ವಿಧದ ಕಿಡಿ ಕಾರಿ ಸುಮ್ಮಗಾಗುತ್ತದೆ. ಆ ಬಳಿಕ ಮತ್ತೊಂದು ತರಹದ ಕಿಡಿ ಕಾರಿ ತೆಪ್ಪಗಾಗುತ್ತದೆ. ಆದರೆ ನಮೂನೆ ಮುಗಿಯುವ ಹಾಗೇ ಇಲ್ಲ. ಆದರೆ ಇನ್ನೊಂದು ವಿಧದ ಆಕಾಶ ಬಾಣವಿದೆ. ಬೆಂಕಿ ತಾಗಿದ ಸ್ವಲ್ಪ ಹೊತ್ತಿನಲ್ಲೆ ಫುಸ್ ಎಂದು ಮೇಲೆ ಹಾರಿಹೋಗಿ ಒಡೆದು ಚೂರುಚೂರಾಗುತ್ತದೆ. ಸಾಮಾನ್ಯ ಜೀವ ಈ ಎರಡನೆಯದರಂತೆ ಸಾಧನೆಯ ಮೂಲಕ ತುತ್ತತುದಿಯನ್ನು ಮುಟ್ಟಬಲ್ಲದು. ಆದರೆ ಹಿಂದಿರುಗಿ ಬಂದು ತನಗೆ ದೊರೆತ ಅನುಭವವನ್ನು ಪರರಿಗೆ ತಿಳಿಸಲಾರದು. ಜೀವಕೋಟಿಗಳಿಗೆ ಸಾಧನೆಯ ಮೂಲಕ ಸಮಾಧಿ ದೊರೆಯಬಹುದು. ಆದರೆ ದೊರೆತ ನಂತರ ಕೆಳಗೆ ಇಳಿದು ಬರುವುದಾಗಲಿ, ಬಂದ ನಂತರ ತಮಗೆ ದೊರೆತ ಅನುಭವವನ್ನು ಇತರರಿಗೆ ತಿಳಿಸುವುದಾಗಲೀ ಅವಕ್ಕೆ ಸಾಧ್ಯವಿಲ್ಲ.
“ನಿತ್ಯಸಿದ್ಧರ ಗುಂಪೊಂದಿದೆ. ಹುಟ್ಟಿದಂದಿನಿಂದಲೆ ಅವರಿಗೆ ಭಗವಂತನ ಕಡೆ ಮನಸ್ಸು. ಸಂಸಾರದ್ದು ಯಾವುದೂ ಅವರಿಗೆ ಹಿಡಿಸದು. ವೇದದಲ್ಲಿ ಹೋಮಾಪಕ್ಷಿಯ ಕಥೆಯಿದೆ. ಅದು ಆಕಾಶದಲ್ಲಿ ಬಹಳ ಎತ್ತರದಲ್ಲಿ ಇರುತ್ತದೆ. ಅದು ಅಲ್ಲಿ ಮೊಟ್ಟೆ ಇಡುತ್ತದೆ. ಅದು ಎಷ್ಟು ಎತ್ತರದಲ್ಲಿ ಇರುತ್ತದೆ ಅಂದರೆ, ಅದರ ಮೊಟ್ಟೆ ಅನೇಕ ದಿನಗಳವರೆಗೆ ಕೆಳಕ್ಕೆ ಬೀಳುತ್ತಲೇ ಇರುತ್ತದೆ. ಮೊಟ್ಟೆ ಬೀಳುತ್ತ ಬೀಳುತ್ತಲೇ ಬಿರಿದು ಮರಿಯಾಗುತ್ತದೆ. ಅನಂತರ ಮರಿ ಬೀಳುತ್ತಲೇ ಇರುತ್ತದೆ. ಅನೇಕ ದಿವಸಗಳವರೆಗೆ ಅದು ಬೀಳುತ್ತಲೇ ಹೋಗುತ್ತದೆ. ಬೀಳುತ್ತ ಬೀಳುತ್ತಲೇ ಅದು ಕಣ್ಣು ಬಿಡುತ್ತದೆ. ಭೂಮಿಯ ಹತ್ತಿರಕ್ಕೆ ಬಂದಾಗ ಅದಕ್ಕೆ ಚೈತನ್ಯ ಬರುತ್ತದೆ. ಆಗ ಅದಕ್ಕೆ ತಾನೇನಾದರೂ ಭೂಮಿ ಮುಟ್ಟಿದೆನೆಂದರೆ ಸಾವು ನಿಶ್ಚಯ ಎಂದು ಗೊತ್ತಾಗುತ್ತದೆ. ಮರಿ ಚೀತ್ಕಾರಮಾಡುತ್ತಾ ತಾಯಿಯ ಕಡೆ ನೇರವಾಗಿ ಹಾರಿ ಹೋಗುತ್ತದೆ ಭೂಮಿಯೆ ಅದರ ಮೃತ್ಯುಸ್ಥಾನ. ಅದನ್ನು ನೋಡಿದೊಡನೆಯೆ ಅದಕ್ಕೆ ಭಯ ಹುಟ್ಟಿತು. ಅದಕ್ಕೆ ತಾಯಿ ಮಾತ್ರ ಬೇಕು. ತಾಯಿ ಆ ಎತ್ತರದ ಆಕಾಶದಲ್ಲಿದೆ. ಆ ಕಡೆ ನೇರವಾಗಿ ಹಾರಿಹೋಗುತ್ತದೆ. ಆಗ ಅದು ಬೇರೆ ಯಾವ ಕಡೆಗೂ ದೃಷ್ಟಿಹಾಕುವುದಿಲ್ಲ.
“ಅವತಾರಾದಿಗಳೊಡನೆ ಯಾರು ಬರುವರೋ ಅವರು ನಿತ್ಯಸಿದ್ಧರು. ಅವರಲ್ಲಿ ಕೆಲವರಿಗೆ ಅದೇ ಕೊನೆಯ ಜನ್ಮ.
(ವಿಜಯನಿಗೆ) “ನಿನಗೆ ಯೋಗ ಭೋಗ ಎರಡೂ ಇವೆ. ಜನಕ ರಾಜನಿಗೆ ಯೋಗವೂ ಇತ್ತು, ಭೋಗವೂ ಇತ್ತು. ಅದಕ್ಕಾಗಿಯೇ ಆತ ರಾಜರ್ಷಿ, – ರಾಜ ಮತ್ತು ಋಷಿ. ನಾರದ ದೇವರ್ಷಿ, ಶುಕ ಬ್ರಹ್ಮರ್ಷಿ. ಶುಕದೇವ ಬರೀ ಜ್ಞಾನಿಯೇ ಅಲ್ಲ, ಜ್ಞಾನಘನ ಮೂರ್ತಿ. ಯಾರಿಗೆ ಜ್ಞಾನಿ ಎಂದು ಹೇಳುತ್ತಾರೆ? ಯಾರಿಗೆ ಜ್ಞಾನೋದಯ ವಾಗಿರುವುದೋ ಆತನಿಗೆ – ಸಾಧನೆಯ ಮೂಲಕವಲ್ಲ, ಸ್ವಾಭಾವಿಕವಾಗಿಯೆ ಜ್ಞಾನೋ ದಯ.”
ಇಷ್ಟು ಹೊತ್ತು ಮಾತಾಡಿದ ನಂತರ ಶ್ರೀರಾಮಕೃಷ್ಣರು ಪ್ರಕೃತಿಸ್ಥರಾಗಿದ್ದಾರೆ. ಈಗ ಭಕ್ತರೊಡನೆ ಎಂದಿನ ಹಾಗೆ ಮಾತನಾಡಲು ಅವರಿಗೆ ಸಾಧ್ಯವಾಗಿದೆ. ಅವರು ಕೇದಾರನಿಗೆ ಹಾಡಲು ಹೇಳಿದರು. ಕೇದಾರ ಹಾಡುತ್ತಿದ್ದಾನೆ:
ಎಂತೊರೆಯಲಿ ಸಖಿ ನನ್ನೆದೆಯೊಳಗನು?
ಬಾಯಿಗೆ ಇಕ್ಕಿದೊಲಿದೆ ಬೀಗ!
ನನ್ನೀ ವ್ಯಥೆಗನುಕಂಪಿಸುವೆದೆಯಿಲ್ಲದೆ
ಸಾವಂತಿಹೆನೀಗ!
ಪ್ರಿಯನ ಕಂಗಳನು ಬರಿದೆ ದಿಟ್ಟಿಸುತ
ನನ್ನೆದೆಯೊಲವನೆ ಕಾಣುವೆನು!
ಯಾರಿಗೊರೆಯಲಿದೆ? ಆತನ ಪ್ರೇಮದಿ
ಆಡುವಪೂರ್ವರು ಅತಿ ವಿರಳ!
ಕೇದಾರ ಇನ್ನೂ ಹಾಡುಗಳನ್ನು ಹಾಡಿದನು. ಅವನು ಹಾಡಿದ ನಂತರ ಪರಮಹಂಸರು ಮತ್ತೆ ಭಕ್ತರೊಡನೆ ಮಾತನಾಡುತ್ತಿದ್ದಾರೆ. ಕೇಶವಸೇನನ ಅಣ್ಣನ ಮಗ ನಂದಲಾಲ ತನ್ನ ಒಬ್ಬಿಬ್ಬರು ಬ್ರಾಹ್ಮ ಬಂಧುಗಳೊಡನೆ ಶ್ರೀರಾಮಕೃಷ್ಣರ ಹತ್ತಿರ ಕುಳಿತಿದ್ದಾನೆ.
ಪರಮಹಂಸರು ವಿಜಯ ಮೊದಲಾದ ಭಕ್ತರಿಗೆ: “ಒಬ್ಬ ಕಾರಣದ ಸೀಸೆ ತಂದಿದ್ದ. ನನ್ನ ಕೈಲಿ ಅದನ್ನು ಮುಟ್ಟಲೂ ಆಗಲಿಲ್ಲ.”
ವಿಜಯ: “ಆಹಾ!”
ಶ್ರೀರಾಮಕೃಷ್ಣರು: “ಸಹಜಾನಂದ ಉಂಟಾದರೆ ತಾನಾಗಿಯೆ ನೆಶಾ ಬರುತ್ತದೆ. ಕಾರಣ ಕುಡಿವ ಆವಶ್ಯಕತೆಯೇ ಇರದು. ಭಗವತಿಯ ಚರಣಾಮೃತ ನೋಡಿದರೇನೆ ನನಗೆ ನೆಶಾ ಬರುತ್ತದೆ, ಐದು ಸೀಸೆ ಮದ್ಯ ಕುಡಿದವನ ಹಾಗೆ. ಈ ಅವಸ್ಥೆಯಲ್ಲಿ ಸಿಕ್ಕಿದಾಗಲೆಲ್ಲ ಸಿಕ್ಕದ್ದನ್ನೆಲ್ಲ ತಿನ್ನೋಹಾಗಿಲ್ಲ.”
ನರೇಂದ್ರ: “ತಿನ್ನೋ ವಿಚಾರದಲ್ಲಿ ಯದೃಚ್ಛಾಲಾಭ ಸಂತುಷ್ಟವೆ ಒಳ್ಳೆಯದು.”
ಪರಮಹಂಸರು: “ಅದು ವಿಶೇಷ ಅವಸ್ಥೆಯಲ್ಲಿ ಸಾಧ್ಯ. ಜ್ಞಾನಿಗೆ ಯಾವುದರಿಂದಲೂ ದೋಷವಿಲ್ಲ. ಗೀತೆಯ ದೃಷ್ಟಿಯಿಂದ, ಜ್ಞಾನಿ ತನಗೆಂದು ತಿನ್ನುವುದಿಲ್ಲ, ಕುಂಡಲಿನಿಗೆ ಆಹುತಿ ಕೊಡುತ್ತಾನೆ. ಆದರೆ ಭಕ್ತರಿಗೆ ಅದು ಸರಿಹೋಗದು. ಈಗಿನ ನನ್ನ ಅವಸ್ಥೆಯಲ್ಲಿ ಬ್ರಾಹ್ಮಣ ಪೂಜಾರಿ ಅರ್ಪಿಸಿದ ನೈವೇದ್ಯವನ್ನಲ್ಲದೆ ಬೇರೆ ಏನನ್ನೂ ತಿನ್ನಲಾರೆ. ಹಿಂದೆ ನನಗೆ ಒಂದು ಅವಸ್ಥೆ ಬಂದಿತ್ತು. ಆಗ ದಕ್ಷಿಣೇಶ್ವರದ ಆಚೆ ದಡದಿಂದ ಬರುತ್ತಿದ್ದ ಸುಟ್ಟ ಹೆಣದ ವಾಸನೆಯನ್ನು ಮೂಗಿನಿಂದ ಎಳೆದು ಸೇವಿಸುತ್ತಿದ್ದೆ. ಅದು ನನಗೆ ಸೊಗಸಾಗಿ ತೋರುತ್ತಿತ್ತು. ಈಗ ಎಲ್ಲರ ಕೈಯಿಂದಲೂ ಆಹಾರ ತೆಗೆದುಕೊಳ್ಳಲಾರೆ. ಈಗ ಆಗದಿರುವುದೇನೋ ನಿಜ. ಆದರೆ ಒಮ್ಮೊಮ್ಮೆ ತಿಂದುಬಿಡುತ್ತೇನೆ. ಕೇಶವಸೇನನ ಮನೆಯಲ್ಲಿ (ನವ ಬೃಂದಾವನ) ನಡೆದ ನಾಟಕಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಪೂರಿ-ಪಲ್ಯ ತಂದುಕೊಟ್ಟರು. ತಂದವನು ಅಗಸನೊ ಹಜಾಮನೊ ಯಾರೊ ಗೊತ್ತಿಲ್ಲ. (ಎಲ್ಲರೂ ನಗುತ್ತಾರೆ) ನಾನು ಚೆನ್ನಾಗಿ ಹೊಡೆದೆ. ರಾಖಾಲ ಹೇಳಿದ: ‘ಸ್ವಲ್ಪ ಕಡಿಮೆ ತಿನ್ನಿ’ ಎಂದು.
(ನರೇಂದ್ರನಿಗೆ): “ನಿನಗೆ ಈಗ ಸಾಧ್ಯ. ನೀನು ಇದರಲ್ಲೂ ಇದ್ದೀಯೆ ಅದರಲ್ಲೂ ಇದ್ದೀಯೆ. ಈಗ ನೀನು ಎಲ್ಲವನ್ನೂ ತಿನ್ನಲು ಸಾಧ್ಯ. (ಭಕ್ತರ ಕಡೆ ತಿರುಗಿ) ಹಂದೀ ಮಾಂಸ ತಿಂದರೂ ಮನಸ್ಸು ಭಗವಂತನ ಕಡೆ ಎಳೆದರೆ, ಆತನೇ ಧನ್ಯ. ಹವಿಷ್ಯಾನ್ನ ತಿಂದರೂ ಮನಸ್ಸು ಕಾಮಕಾಂಚನದಲ್ಲಿ ನೆಲಸಿದರೆ, ಆತ ಜಘನ್ಯ!
“ನನಗೆ ಒಮ್ಮೆ ಕಮ್ಮಾರನ ಮನೆ ತೊವ್ವೆ ತಿನ್ನಲು ಇಚ್ಛೆ ಆಯಿತು. ನನ್ನ ಎಳೆತನ ದಿಂದಲೂ ಕಮ್ಮಾರರು ಹೇಳುತ್ತಿದ್ದರು: ‘ಬ್ರಾಹ್ಮಣರಿಗೇನು ಅಡಿಗೆ ಮಾಡಲು ಬರುವುದೆ?’ ಎಂದು. ಅದಕ್ಕಾಗಿ ಒಂದು ದಿನ ತೊವ್ವೆ ತಿಂದೆ. ಆದರೆ ಅದರಲ್ಲಿಯೂ ಕಮ್ಮಾರರ ವಾಸನೆಯೆ! (ಎಲ್ಲರೂ ನಗುತ್ತಾರೆ.)
“ಗೋವಿಂದರಾಯನಿಂದ ‘ಅಲ್ಲಾ’ ಮಂತ್ರ ಸ್ವೀಕರಿಸಿದೆ. ಕುಠಿಯಲ್ಲಿ ಈರುಳ್ಳಿ ಹಾಕಿದ ಅನ್ನ ತಯಾರಾಯಿತು. ಎಲ್ಲೋ ಸ್ವಲ್ಪ ತಿಂದೆ. ಮಣಿಮಲ್ಲಿಕನ (ಬರಾಹನಗರದ) ತೋಟದಲ್ಲಿ ಒಂದು ತರದ ಪಲ್ಯ ತಿಂದೆ. ಆದರೆ ಏನೊ ಒಂದು ತರದ ವಾಕರಿಕೆ ಉಂಟಾಯಿತು.
“ನಾನು ಒಮ್ಮೆ ಊರಿಗೆ ಹೋದೆ. ರಾಮಲಾಲನ ತಂದೆಗೆ ಭಯವಾಯಿತು; ಆತ ನಾನು ಸಿಕ್ಕಿದವರ ಮನೆಯಲ್ಲೆಲ್ಲ ತಿಂದುಬಿಡಬಹುದೆಂದು ಭಾವಿಸಿದ. ಅವರನ್ನು ಜಾತಿಯಿಂದ ಹೊರಗೆ ಹಾಕಿಬಿಡಬಹುದೆಂದು ಆತನಿಗೆ ಭಯ. ಅದಕ್ಕಾಗಿಯೆ ನಾನು ಅಲ್ಲಿ ಹೆಚ್ಚು ದಿವಸ ನಿಲ್ಲಲಾಗಲಿಲ್ಲ; ಬಂದುಬಿಟ್ಟೆ.
“ವೇದಪುರಾಣಗಳಲ್ಲಿ ಶುದ್ಧ ಆಚಾರ ಯಾವುದು ಎಂಬುದು ನಿರೂಪಿತವಾಗಿದೆ. ಅವು ಯಾವು ಯಾವುದನ್ನು ‘ಮಾಡಬೇಡಿ, ಅನಾಚಾರವಾಗುತ್ತದೆ’ ಎಂದು ಹೇಳುವುವೊ ತಂತ್ರ ಅವನ್ನೆ ‘ಪರಮ ಪವಿತ್ರ ಆಚಾರ’ ಎಂದು ಹೇಳುತ್ತದೆ.
“ಏನವಸ್ಥೆ ಬಂದುಹೋಯಿತು! ಸ್ವರ್ಗ ಪಾತಾಳ ಮುಟ್ಟುವ ಹಾಗೆ ಬಾಯಿ ತೆರೆದು ‘ತಾಯಿ!’ ಎಂದು ಕೂಗುತ್ತಿದ್ದೆ. ಬೆಸ್ತ ಬಲೆ ಬೀಸಿ ಮೀನನ್ನು ಉಸ್ ಉಸ್ ಎಂದು ಎಳೆಯುವಂತೆ ನಾನು ತಾಯಿಯನ್ನು ಬಾಯಿಗೆ ಸಿಕ್ಕಿಸಿ ಎಳೆದು ತರುತ್ತಿರುವೆನೊ ಎಂಬಂತೆ ಭಾವಿಸುತ್ತಿದ್ದೆ. ಈ ಅವಸ್ಥೆಯ ಸಂಬಂಧವಾಗಿ ಒಂದು ಹಾಡಿದೆ:
ಗಂಡಯೋಗದಲಿ ಜನಿಸಿದಂಥ ಶಿಶು; ತಿನುವುದಂತೆ ತಾಯ !
ನಾನು ಅಂಥ ಶಿಶು; ನಿನ್ನ ನುಂಗುವೆನು ತೆರೆದು ನನ್ನ ಬಾಯ !
ನೀನು ನುಂಗುವೆಯೊ ನಾನೆ ನುಂಗಲೋ ಹೇಳು, ಹೇಳು ಬೇಗ
ಎರಡರೊಳಗೆ ಒಂದಾಗಿಬಿಡಲಿ ನೀ ಹೇಳು, ಕಾಳಿ, ಈಗ !
ಕಾಳಿಕಾಡಿಗೆಯ ಕೈಗೆ ಮೈಗೆ ನಾ ಬಳಿದುಕೊಂಡುಬಿಡುವೆ!
ಮೃತ್ಯು ಬರಲು ನಾನವನ ಮುಖಕು ಈ ಕಾಳಿಯನ್ನೆ ಬಳಿವೆ.
ನಿನ್ನ ನುಂಗಿದರು, ನಿನ್ನನರಗಿಸಲು ಆಗದೆನಗೆ ತಾಯಿ !
ಹೃದಯ ಪದ್ಮದಲಿ ನಿನ್ನನಿರಿಸಿ ನಾ ಪೂಜೆಗೈವೆ ಮನದಿ.
ನಿನ್ನ ನುಂಗಿದರೆ ನಿನ್ನ ಪತಿದೇವ ಆ ಕಾಳ ರೇಗಬಹುದು.
ನಿನ್ನ ನಾಮವನೆ ಜಪಿಸಿ ಕಾಳನನು ನಾನು ತಡೆಯಬಹುದು.
ನಾನು ನಿನ್ನ ಮಗನೆಂಬ ಮಹಿಮೆಯನು ಜಗಕೆ ತೋರಲೆಂದೇ
ನೀನು ನಿನ್ನವರ ನುಂಗಿನೊಣೆವೆ ನಾ, ಜೀವ ಹೋಗಲಿಂದೇ !
“ನನ್ನ ವ್ಯಾಕುಲತೆ ಅಂಥದಾಗಿತ್ತು, ತೀರ ಹುಚ್ಚನಂತೆಯೇ ತೋರುತ್ತಿದ್ದೆ.”
ನರೇಂದ್ರ ಹಾಡಲಾರಂಭಿಸಿದ:
ನನ್ನನ್ನೂ ಉನ್ಮತ್ತನಾಗಿಸೆಲೆ ತಾಯೆ.
ನಿನ್ನ ಭಕ್ತಿಯ ಮಧುರ ಮಧುಪಾನದಿಂದ !
ಅರಿವು ಚಿಂತನೆಯೆಲ್ಲ ನನಗೇಕೆ?
ಭಕ್ತ ಹೃದಯಾಪಹಾರಿಣಿಯೆ,
ನಿನ್ನ ಒಲವಿನ ಕಡಲಿನಾಳಕೆ ನನ್ನನದ್ದಿಬಿಡು;
ನಿನ್ನ ಭಕ್ತಿಯ ಮಧುರ ಮಧುಪಾನದಲಿ
ಉನ್ಮತ್ತಗೊಂಡವರು ಕುಣಿವ ಮನೆ ಈ ಜಗವು.
ಇದರೊಳಗೆ ನಗುವರು ಹಲರು ಅಳುವರು ಹಲರು,
ಆನಂದದಲಿ ಕುಣಿಯುವರು ಹಲರು.
ಚೈತನ್ಯ ಕ್ರಿಸ್ತ ಬುದ್ಧಾದಿಗಳು ನಿನ್ನ ಪ್ರೇಮದಲಿ
ಉನ್ಮತ್ತರಾಗಿಹರು!
ಆ ದಿವ್ಯಗೋಷ್ಠಿಯಲಿ ನಾನೆಂದು ಸೇರಿ ನಲಿಯಲಿ, ತಾಯಿ,
ನಿನ್ನ ಮಹಿಮೆಗೆ ಸಂದು?
ಹಾಡನ್ನು ಕೇಳುತ್ತಿದ್ದ ಹಾಗೆಯೆ ಪರಮಹಂಸರು ಮತ್ತೆ ಸಮಾಧಿಸ್ಥರಾಗಿದ್ದಾರೆ. ಪ್ರಕೃತಿಸ್ಥರಾದ ನಂತರ ಶ್ರೀರಾಮಕೃಷ್ಣರು ಗಿರಿರಾಣಿಯ ಭಾವ ಆರೋಪಿಸಿಕೊಂಡು ಆಗಮನಿ ಹಾಡನ್ನು ಹಾಡಲಾರಂಭಿಸಿದ್ದಾರೆ. ಅವರು ಅದನ್ನು ಪ್ರೇಮೋನ್ಮತ್ತತೆಯಿಂದ ಹಾಡುತ್ತಿದ್ದಾರೆ.
ಹೌದೇನೇ ಉಮಾ ಹೌದೇನೇ
ಜನವೆನ್ನುವುದಿದು ನಿಜವೇನೇ?-
ಮಸಣದ ಬೂದಿಯ ಮೈಗೆ ಬಳಿದು ಶಿವ
ಎಲ್ಲೆಲ್ಲೋ ತಿರುಗುವನಂತೆ!
ಹೊಟ್ಟೆಬಟ್ಟೆಗೂ ಗತಿಯಿಲ್ಲದರೊಲು
ಊರೂರಲು ತಿರುದುಂಬುವನಂತೆ!
ನೀನು ಕೂಡ ಬಂಗಾರದ ಮೈಗೆ
ಆ ಬೂದಿಯನೇ ಬಳಿಯುವೆಯಂತೆ!
ನಿನ್ನ ತಾಯಿ ನಾನಾಗಿಹ ತಪ್ಪಿಗೆ
ಸಹಿಸಬೇಕೆ ಅವಮಾನವನು?
ಮತ್ತೆ ನಿನ್ನ ಶಿವ ಕರೆಯಲು ಬರಲಿ
‘ಮನೆಯೊಳಿಲ್ಲ ಉಮೆ’ -ಎನ್ನುವೆನು!
ಹಾಡಿ ಮುಗಿಸಿದನಂತರ ಪರಮಹಂಸರು ಭಕ್ತರ ಕಡೆ ತಿರುಗಿ; “ಈ ದಿವಸ ಮಹಾಷ್ಟಮಿಯಲ್ಲವೆ; ಭಗವತಿ ಬಂದಿದ್ದಾಳೆ. ಅದಕ್ಕಾಗಿ ನನಗೆ ಇಷ್ಟೊಂದು ಉದ್ದೀಪನೆ.”
ಕೇದಾರ: “ಪ್ರಭು, ತಾವೇ ಬಂದಿದ್ದೀರಿ! ಭಗವತಿ ತಮಗಿಂತ ಪ್ರತ್ಯೇಕವೆ?”
ಶ್ರೀರಾಮಕೃಷ್ಣರು ಅನ್ಯಮನಸ್ಕರಾಗಿ ಬೇರೆಕಡೆಗೆ ದೃಷ್ಟಿಹಾಕಿ ಹಾಡಲಾರಂಭಿಸಿದ್ದಾರೆ:
ಯಾರಿಗಾಗಿ ಮರುಳುಗೊಂಡು ಅಲೆಯುತಿರುವೆನೋ
ಆ ನಿನ್ನ ಮೋಹಮೂರ್ತಿ ಕಾಣನಿನ್ನೂ ಕೆಳದಿಯೆ…
ಈ ಹಾಡನ್ನು ಹಾಡಿದ ನಂತರ ಮತ್ತೆ ಭಾವದಿಂದ ಮತ್ತರಾಗಿ ಮತ್ತೆ ತಾಯಮೇಲಿನ ಒಂದು ಹಾಡನ್ನು ಹಾಡುತ್ತಿದ್ದಾರೆ. ಅವರು ಹಾಡುತ್ತಿದ್ದ ಹಾಗೆ ‘ಹರಿ! ಹರಿ!’ ಎಂದು ಹೇಳುತ್ತ ವಿಜಯ ಮೇಲಕ್ಕೆ ಎದ್ದು ನಿಂತಿದ್ದಾರೆ. ಪರಮಹಂಸರು ಭಾವೋನ್ಮತ್ತರಾಗಿ ವಿಜಯನೆ ಮೊದಲಾದ ಭಕ್ತರೊಡನೆ ನರ್ತಿಸಲು ಆರಂಭಿಸಿದ್ದಾರೆ.
ಕೀರ್ತನೆ ಮುಗಿದ ನಂತರ ಪರಮಹಂಸರು, ವಿಜಯ, ನರೇಂದ್ರ ಉಳಿದ ಭಕ್ತರೆಲ್ಲ ಕುಳಿತುಕೊಂಡಿದ್ದಾರೆ. ಎಲ್ಲರೂ ಪರಮಹಂಸರ ಕಡೆ ನೋಡುತ್ತಿದ್ದಾರೆ. ಸಾಯಂಕಾಲ ವಾಗಲು ಇನ್ನೂ ಕೆಲವು ಸಮಯ ಬೇಕು. ಪರಮಹಂಸರು ಈಗ ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ. ಭಕ್ತರ ಕ್ಷೇಮಸಮಾಚಾರ ವಿಚಾರಿಸುತ್ತಿದ್ದಾರೆ. ಕೇದಾರ ಬಹಳ ವಿನಯ ದಿಂದ ಕೈಜೋಡಿಸಿ ಅತ್ಯಂತ ಮೃದುಮಧುರಕಂಠದಿಂದ ಶ್ರೀರಾಮಕೃಷ್ಣರಿಗೆ ಏನನ್ನೋ ಹೇಳಿಕೊಳ್ಳುತ್ತಿದ್ದಾನೆ. ಪರಮಹಂಸರ ಹತ್ತಿರ ನರೇಂದ್ರ, ಚುಣಿ, ಸುರೇಂದ್ರ, ರಾಮ, ಮಾಸ್ಟರ್, ಹರೀಶ ಕುಳಿತಿದ್ದಾರೆ.
ಕೇದಾರ ವಿನಯದಿಂದ ಶ್ರೀರಾಮಕೃಷ್ಣರಿಗೆ: “ತಲೆಸುತ್ತು ಏನು ಮಾಡಿದರೆ ನಿಲ್ಲುತ್ತದೆ?”
ಪರಮಹಂಸರು ಪ್ರೇಮದೃಷ್ಟಿಯಿಂದ: “ಓ, ಹಾಗಾಗುವುದುಂಟು. ಒಮ್ಮೆ ನನಗೂ ಹಾಗಾಗುತ್ತಿತ್ತು. ತಲೆಗೆ ಸ್ವಲ್ಪಸ್ವಲ್ಪ ಕಡಲೇಕಾಯಿ ಎಣ್ಣೆ ಹಚ್ಚು. ಅದು ಅದನ್ನು ನಿಲ್ಲಿಸುವುದು ಎಂದು ಕೇಳಿದ್ದೇನೆ.”
ಕೇದಾರ: “ಅಪ್ಪಣೆ, ಹಾಗೆಯೇ ಮಾಡಿನೋಡುತ್ತೇನೆ.”
ಪರಮಹಂಸರು ಚುಣಿಗೆ: “ಏನು, ನೀವೆಲ್ಲ ಕ್ಷೇಮವೆ?”
ಚುಣಿ: “ನಾನು ಬೃಂದಾವನದಿಂದ ಬಂದೆ.”
ಚುಣಿಲಾಲ ಬಲರಾಮನೊಡನೆ ಬೃಂದಾವನಕ್ಕೆ ಹೋಗಿ ಅಲ್ಲಿ ಕೆಲವು ತಿಂಗಳಕಾಲ ಇದ್ದ. ಆತನ ರಜೆ ಮುಗಿದುಹೋಗಿದೆ. ಅದಕ್ಕಾಗಿ ಕಲ್ಕತ್ತಕ್ಕೆ ಹಿಂದಿರುಗಿ ಬಂದಿದ್ದಾನೆ.
ಪರಮಹಂಸರು ಹರೀಶನಿಗೆ: “ನೀನು ಒಂದೆರಡು ದಿನಗಳಾದ ಮೇಲೆ ದಕ್ಷಿಣೇಶ್ವರಕ್ಕೆ ಬಾ. ನಿನ್ನ ಆರೋಗ್ಯ ಚೆನ್ನಾಗಿಲ್ಲ. ಇಲ್ಲದಿದ್ದರೆ ಮತ್ತೆ ಅಲ್ಲಿ ಬೀಳುವೆ.”
ಶ್ರೀರಾಮಕೃಷ್ಣರು ಪ್ರೇಮಭರಿತ ದೃಷ್ಟಿಯಿಂದ ನಾರಾಯಣನಿಗೆ, “ಕುಳಿತುಕೊ. ನನ್ನ ಹತ್ತಿರ ಬಂದು ಕುಳಿತುಕೊ. ನಾಳೆ ದಿನ ದಕ್ಷಿಣೇಶ್ವರಕ್ಕೆ ಬಾ, ಅಲ್ಲೇ ಊಟಮಾಡುವೆ ಯಂತೆ. (ಮಾಸ್ಟರನ್ನು ತೋರಿಸಿ) ಈತನೊಡನೆ ಬಾ. (ಮಾಸ್ಟರಿಗೆ) ಏನು?”
ಮಾಸ್ಟರಿಗೆ ಇಂದೇ ಪರಮಹಂಸರೊಡನೆ ದಕ್ಷಿಣೇಶ್ವರಕ್ಕೆ ಹೋಗಲು ಇಚ್ಛೆ. ಅದಕ್ಕಾಗಿ ಆತ ಚಿಂತಿಸುತ್ತಿದ್ದಾನೆ.
ಸುರೇಂದ್ರ ಅಲ್ಲಿ ಬಹಳ ಹೊತ್ತಿನವರೆಗೆ ಇದ್ದ. ಅನಂತರ ತನ್ನ ಮನೆಗೆ ಹೋಗಿದ್ದು ಈಗ ಬಂದು ಪರಮಹಂಸರ ಹತ್ತಿರ ನಿಂತಿದ್ದಾನೆ. ಸುರೇಂದ್ರನಿಗೆ ಕುಡಿಯುವ ಅಭ್ಯಾಸ. ಹಿಂದೆ ಅನೇಕ ವೇಳೆ ಅತಿಯಾಗಿ ಕುಡಿಯುತ್ತಿದ್ದ. ಪರಮಹಂಸರು ಸುರೇಂದ್ರನ ಅವಸ್ಥೆ ನೋಡಿ ಚಿಂತಿಸುತ್ತಿದ್ದರು. ಅವರು ಆತನಿಗೆ ಒಮ್ಮೆಗೆಯೇ ಕುಡಿಯುವುದನ್ನು ಬಿಟ್ಟುಬಿಡು ಎಂದು ಹೇಳಲಿಲ್ಲ. ಹೇಳಿದರು, “ಸುರೇಂದ್ರ, ಒಂದು ಕೆಲಸಮಾಡು, ಕುಡಿಯುವುದನ್ನು ಭಗವಂತನಿಗೆ ಅರ್ಪಿಸಿ ಕುಡಿ. ಕೈಕಾಲು ಮುದುರಿಕೊಳ್ಳುವಷ್ಟು, ತಲೆಸುತ್ತುವಷ್ಟು ಕುಡಿಯ ಬೇಡ. ಭಗವಚ್ಚಿಂತನೆ ಮಾಡುತ್ತ ಮಾಡುತ್ತ ಹೋದಹಾಗೆ ನಿನಗೇನೇ ಕುಡಿತ ರುಚಿಸದೆ ಹೋಗುತ್ತದೆ. ಆಕೆ ಕಾರಣಾನಂದಮಯಿಯಲ್ಲವೆ! ಅವಳ ಸಾಕ್ಷಾತ್ಕಾರ ಮಾಡಿಕೊಂಡರೆ ಸಹಜಾನಂದ ಉಂಟಾಗುತ್ತದೆ.”
ಸುರೇಂದ್ರ ಇನ್ನೂ ಪರಮಹಂಸರ ಹತ್ತಿರವೆ ನಿಂತಿದ್ದಾನೆ. ಅವರು ಆತನ ಕಡೆ ನೋಡಿ:
“ಏನು, ನೀನು ಮದ್ಯ ಕುಡಿದು ಬಂದಿರುವೆಯಾ?” ಎಂದು ಹೇಳಿಯೇ ಭಾವಾವಿಷ್ಟರಾಗಿದ್ದಾರೆ.
ಸಾಯಂಕಾಲವಾಗುತ್ತಿದೆ. ಸ್ವಲ್ಪ ಬಾಹ್ಯಪ್ರಜ್ಞೆ ಪಡೆದು ಪರಮಹಂಸರು ಭಗವತಿಯ ಹೆಸರನ್ನು ಜಪಿಸುತ್ತ ಆನಂದದಿಂದ ಹಾಡಲಾರಂಭಿಸಿದ್ದಾರೆ.
ಶಿವಸಂಗದೊಳಾನಂದದಿ ತಾಯಿ ಕುಣಿಯುತ್ತಿರುವಳು.
ದಿವ್ಯ ಮಧುವ ಕುಡಿದು ಕೂಡ, ಹೆಜ್ಜೆತಪ್ಪದಿರುವಳು.
ಶಿವಶಿವೆಯರ ಪದಘಾತಕೆ ನೆಲವೆ ನಡುಗಿದೆ
ಲಜ್ಜೆಭಯಗಳೆಂಬುವೆಲ್ಲ ಎಲ್ಲೊ ಬಿದ್ದಿವೆ!
ಸಾಯಂಕಾಲವಾಯಿತು. ಪರಮಹಂಸರು ಹರಿನಾಮವನ್ನು ಜಪಿಸುತ್ತಿದ್ದಾರೆ. ಆಗಾಗ ಚಪ್ಪಾಳೆ ತಟ್ಟುತ್ತಿದ್ದಾರೆ. ಸುಸ್ವರದಿಂದ ಹೇಳುತ್ತಿದ್ದಾರೆ: “ಹರಿ ಎಂದು ಹೇಳಿ, ಹರಿ ಎಂದು ಹೇಳಿ, ಹರಿಮಯ ಹರಿ ಎಂದು ಹೇಳಿ; ಹರಿ ಹರಿ ಎಂದು ಹೇಳಿ.”
ಮತ್ತೆ ರಾಮನಾಮ ಜಪಿಸುತ್ತಿದ್ದಾರೆ: “ರಾಮ, ರಾಮ, ರಾಮ, ರಾಮ! ರಾಮ, ರಾಮ, ರಾಮ, ರಾಮ, ರಾಮ, ರಾಮ!”
ಈಗ ಪರಮಹಂಸರು ಪ್ರಾರ್ಥನೆ ಮಾಡುತ್ತಿದ್ದಾರೆ: “ಓ ರಾಮ! ಓ ರಾಮ! ನಾನು ಭಜನಹೀನ, ಸಾಧನಹೀನ, ಭಕ್ತಿಹೀನ-ಕ್ರಿಯಾಹೀನ, ರಾಮ, ನಾನು ಶರಣಾಗತ! ಓ ರಾಮ, ನಾನು ಶರಣಾಗತ! ದೇಹಸುಖ ಬೇಡ, ರಾಮ! ಲೋಕಮಾನ್ಯತೆ ಬೇಡ, ರಾಮ! ಅಷ್ಟಸಿದ್ಧಿ ಬೇಡ, ರಾಮ! ಶತಸಿದ್ಧಿ ಬೇಡ, ರಾಮ! ಶರಣಾಗತ ನಾನು, ಶರಣಾಗತ ನಾನು, ಕೇವಲ ಇವನ್ನು ಕರುಣಿಸು – ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧ ಭಕ್ತಿಯುಂಟಾಗುವಂತೆ ಮಾಡು. ರಾಮ! ನಿನ್ನ ಭುವನಮೋಹಿನಿ ಮಾಯೆಯಿಂದ ನಾನು ಮುಗ್ಧನಾಗದ ರೀತಿ ಮಾಡು. ರಾಮ! ಓ ರಾಮ. ಶರಣಾಗತ ನಾನು!”
ಪರಮಹಂಸರು ಈ ರೀತಿಯಾಗಿ ಪ್ರಾರ್ಥನೆ ಮಾಡಿದರು. ಎಲ್ಲರೂ ನೆಟ್ಟ ಕಣ್ಣಿನಿಂದ ಅವರ ಕಡೆ ನೋಡುತ್ತಿದ್ದಾರೆ, ಅವರ ಕರುಣಾಜನಕ ಸ್ವರವನ್ನು ಕೇಳಿ ಕಣ್ಣೀರು ಸುರಿಸದವರೇ ಇಲ್ಲ.
ರಾಮ ಬಂದು ಪರಮಹಂಸರ ಹತ್ತಿರ ನಿಂತಿದ್ದಾನೆ.
ಪರಮಹಂಸರು ರಾಮನಿಗೆ: “ರಾಮ ಎಲ್ಲಿಗೆ ಹೋಗಿದ್ದೆ?”
ರಾಮ: “ಮೇಲಿದ್ದೆ.”
ಉಪ್ಪರಿಗೆ ಮೇಲೆ ಎಲ್ಲರಿಗೂ ಎಲೆ ಹಾಕಲು ರಾಮ ಅಣಿ ಮಾಡುತ್ತಿದ್ದ.
ಪರಮಹಂಸರು ನಗುತ್ತ ರಾಮನಿಗೆ: “ಮೇಲೆ ಇರೋದಕ್ಕಿಂತ ಕೆಳಗೆ ಇರೋದು ಮೇಲಲ್ಲವೆ? ನೀರು ತಗ್ಗುಪ್ರದೇಶದಲ್ಲಿ ನಿಲ್ಲುತ್ತದೆ, ಅದು ಎತ್ತರ ಪ್ರದೇಶದಿಂದ ಕೆಳಕ್ಕೆ ಉರುಳಿ ಬಂದುಬಿಡುತ್ತದೆ.”
ರಾಮ: “ಹೌದು, ನಿಜ.”
ಉಪ್ಪರಿಗೆ ಮೇಲೆ ಎಲೆ ಹಾಕಿ ಆಗಿದೆ. ರಾಮಚಂದ್ರದತ್ತ ಪರಮಹಂಸರನ್ನು ಇತರ ಎಲ್ಲಾ ಭಕ್ತರನ್ನು ಮೇಲೆ ಕರೆದುಕೊಂಡು ಹೋಗಿ ತೃಪ್ತಿಯಾಗುವಂತೆ ಊಟಬಡಿಸಿದ. ಅನಂತರ ಶ್ರೀರಾಮಕೃಷ್ಣರು ನಿರಂಜನ, ಮಾಸ್ಟರ್ ಮೊದಲಾದವರೊಡನೆ ಅಧರಸೇನನ ಮನೆಗೆ ಹೋಗುತ್ತಿದ್ದಾರೆ, ಅಲ್ಲಿಗೆ ಭಗವತಿ ಬಂದಿದ್ದಾಳೆ. ಈ ದಿವಸ ಮಹಾಷ್ಟಮಿ, ಇಂದು ಪರಮಹಂಸರು ತನ್ನ ಮನೆಗೆ ಬಂದು ಪೂಜೆಯನ್ನು ಸಾರ್ಥಕಗೊಳಿಸಬೇಕೆಂಬುದೆ ಅಧರಸೇನನ ವಿಶೇಷ ಪ್ರಾರ್ಥನೆಯಾಗಿತ್ತು.
೨೯ನೆ ಸೆಪ್ಟೆಂಬರ್ ೧೮೮೪, ಮಹಾನವಮಿ, ಸೋಮವಾರ
ಇಂದು ನವಮಿ ಪೂಜೆ. ಈಗತಾನೆ ಬೆಳಗಾಗುತ್ತಿದೆ. ಕಾಳೀದೇವಾಲಯದಲ್ಲಿ ಮುಂಜಾನೆ ಮಂಗಳಾರತಿ ಮುಗಿದಿದೆ. ವಾದ್ಯಶಾಲೆಯಿಂದ ಉದಯರಾಗದ ಆಲಾಪನೆ ಕೇಳಿಬರುತ್ತಿದೆ. ಮಾಲಿಗಳೂ, ಪೂಜಾರಿಗಳೂ ಕೈಯಲ್ಲಿ ಹೂಬುಟ್ಟಿಗಳನ್ನು ಹಿಡಿದು ಹೂವು ಕೊಯ್ಯಲು ಬರುತ್ತಿದ್ದಾರೆ. ಭಗವತಿಯ ಪೂಜೆಗೆ ಸನ್ನಾಹ ನಡೆಯುತ್ತಿದೆ. ಪರಮಹಂಸರು ಇನ್ನೂ ಕತ್ತಲಿರುವಾಗಲೆ, ಹೊತ್ತಿಗೆ ಬಹಳ ಮುಂಚೆ ಎದ್ದಿದ್ದಾರೆ. ಭವನಾಥ, ರಾಮಬಾಬು, ನಿರಂಜನ, ಮಾಸ್ಟರ್ ನಿನ್ನೆ ರಾತ್ರಿಯಿಂದ ಇಲ್ಲಿಯೇ ಇದ್ದಾರೆ. ಪರಮಹಂಸರ ಕೊಠಡಿಯ ಜಗಲಿಯ ಮೇಲೆ ಮಲಗಿದ್ದಾರೆ. ಅವರು ಬೆಳಗ್ಗೆ ಕಣ್ಣೊರೆಸಿ ನೋಡುತ್ತಾರೆ, ಪರಮಹಂಸರು ಪ್ರೇಮೊನ್ಮತ್ತರಾಗಿ ನರ್ತಿಸುತ್ತಿದ್ದಾರೆ. ಅವರು ಹೇಳುತ್ತಿದ್ದರು: “ಜಯ ಜಯ ದುರ್ಗೆ! ಜಯ ಜಯ ದುರ್ಗೆ!” ಎಂದು. ನೋಡಿದರೆ ಒಬ್ಬ ತೀರ ಬಾಲಕನೆ! ಮೈ ಮೇಲೆ ಬಟ್ಟೆಯಿಲ್ಲ. ಭಗವತಿಯ ಹೆಸರನ್ನು ಜಪಿಸುತ್ತ ಕೊಠಡಿಯೊಳಗೆ ನರ್ತಿಸುತ್ತ ಸುತ್ತಾಡುತ್ತಿದ್ದಾರೆ.
ಸ್ವಲ್ಪ ಹೊತ್ತಾದ ನಂತರ ಮತ್ತೆ ಹೇಳುತ್ತಿದ್ದಾರೆ, “ಸಹಜಾನಂದ! ಸಹಜಾನಂದ!” ಎಂದು. ಕೊನೆಗೆ ಗೋವಿಂದನ ಹೆಸರನ್ನು ಪುನರಾವೃತ್ತಿಮಾಡುತ್ತಿದ್ದಾರೆ. “ಹೇ ಗೋವಿಂದ! ಮಮಪ್ರಾಣ! ಮಮಜೀವನ” ಎಂದು.
ಭಕ್ತರು ಹಾಸಿಗೆ ಮೇಲೆ ಎದ್ದು ಕುಳಿತಿದ್ದಾರೆ. ಪರಮಹಂಸರ ಭಾವವನ್ನು ಎವೆಯಿಕ್ಕದೆ ನೋಡುತ್ತಿದ್ದಾರೆ. ಹಾಜರಾ ಕೂಡ ಕಾಳಿದೇವಾಲಯದಲ್ಲಿಯೆ ಇದ್ದಾನೆ. ಪರಮಹಂಸರ ಕೊಠಡಿಯ ನೈಋತ್ಯ ದಿಕ್ಕಿನ ವರಾಂಡವೆ ಆತನ ವಾಸಸ್ಥಾನ, ಲಾಟೂ ಕೂಡ ಇಲ್ಲೆ ಇದ್ದಾನೆ. ಪರಮಹಂಸರ ಸೇವೆ ಮಾಡಿಕೊಂಡಿದ್ದಾನೆ. ರಾಖಾಲ ಈಗ ಬೃಂದಾವನದಲ್ಲಿ ಇದ್ದಾನೆ. ನರೇಂದ್ರ ಆಗಾಗ ಬಂದು ಪರಮಹಂಸರ ದರ್ಶನಮಾಡಿ ಹೋಗುತ್ತಿದ್ದಾನೆ. ಇಂದು ಆತ ಬರುತ್ತಾನೆ.
ಭಕ್ತರೆಲ್ಲ ಎದ್ದು ಮುಖ ತೊಳೆದುಕೊಂಡಿದ್ದಾರೆ. ಪರಮಹಂಸರು ತಮ್ಮ ಕೊಠಡಿಯ ಉತ್ತರದ ಜಗಲಿಯಲ್ಲಿ ಮಂದಲಿಗೆಯ ಮೇಲೆ ಕುಳಿತಿದ್ದಾರೆ. ಭವನಾಥ ಮತ್ತು ಮಾಸ್ಟರ್ ಅವರ ಹತ್ತಿರ ಕುಳಿತಿದ್ದಾರೆ. ಉಳಿದ ಭಕ್ತರು ಕ್ರಮಕ್ರಮೇಣ ಬಂದು ಅಲ್ಲಿ ಕುಳಿತು ಕೊಳ್ಳುತ್ತಿದ್ದಾರೆ.
ಪರಮಹಂಸರು ಭವನಾಥನಿಗೆ “ನಿನಗೆ ಇದು ಗೊತ್ತೇ? ಯಾರು ಜೀವಕೋಟಿಗಳೊ ಅವರಿಗೆ ಭಗವಂತನಲ್ಲಿ ವಿಶ್ವಾಸ ಸ್ವತಸ್ಸಿದ್ಧವಾದುದು. ಪ್ರಹ್ಲಾದ ‘ಕ’ ಬರೆಯಲು ಹೋಗಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ಅದು ಆತನಿಗೆ ಕೃಷ್ಣನ ನೆನಪು ತಂದಿತು. ಜೀವಿಗಳಿಗೆ ಸಂಶಯಾತ್ಮಕ ಬುದ್ಧಿ, ಅವರೇನೊ ಹೇಳುವರು ಹೌದು ಎಂದು, ಆದರೆ-
“ಹಾಜರಾನ ತಲೆಗೆ ಬ್ರಹ್ಮಕ್ಕು ಶಕ್ತಿಗು, ಶಕ್ತಿಗು ಶಕ್ತಿಮಾನನಿಗೂ ಅಭೇದ ಎಂಬುದನ್ನು ಯಾವ ವಿಧದಿಂದಲೂ ತುಂಬಲು ಸಾಧ್ಯವಿಲ್ಲ. ನಿಷ್ಕ್ರಿಯನಾದವನಿಗೆ ಬ್ರಹ್ಮ ಎಂದು ಕರೆಯುತ್ತೇವೆ. ಸೃಷ್ಟಿ, ಸ್ಥಿತಿ, ಪ್ರಳಯಗಳನ್ನು ಮಾಡುವಾಗ ಶಕ್ತಿ ಎಂದು ಕರೆಯುತ್ತೇವೆ. ಆದರೆ ವಸ್ತು ಮಾತ್ರ ಒಂದೆ; ಅಭೇದ ಸ್ವರೂಪ. ಅಗ್ನಿ ಎಂದೊಡನೆ ಅದರ ಸುಡುವ ಶಕ್ತಿಯೂ, ಸುಡುವ ಶಕ್ತಿ ಎಂದೊಡನೆ ಅಗ್ನಿಯೂ ತಾನಾಗಿ ಮನಸ್ಸಿಗೆ ಹೊಳೆಯುತ್ತದೆ. ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸುವ ಹಾಗೆಯೇ ಇಲ್ಲ!
‘ಅದಕ್ಕಾಗಿ ನಾನು ಪ್ರಾರ್ಥನೆಮಾಡಿದೆ: ‘ಹೇ ತಾಯೆ! ಹಾಜರಾ ಇಲ್ಲಿನ 4 ಮತಗಳನ್ನು ತಲೆಕೆಳಗು ಮಾಡುತ್ತಿದ್ದಾನೆ. ಸಾಧ್ಯವಾದರೆ ಆತನಿಗೆ ಒಳ್ಳೆ ಬುದ್ಧಿ ಕೊಡು. ಇಲ್ಲದಿದ್ದರೆ ಆತನನ್ನು ಇಲ್ಲಿಂದ ತೆಗೆ’ ಎಂದು. ಆಗ ಆ ದಿನವೆ ಇಲ್ಲಿಗೆ ಬಂದು: ‘ಹಾಂ, ಒಪ್ಪುತ್ತೇನೆ ಭಗವಂತ ವಿಭು, ಎಲ್ಲೆಲ್ಲಿಯೂ ಇದ್ದಾನೆ’ ಎಂದು ಅವನು ಹೇಳಿದ.
ಭವನಾಥ ನಗುತ್ತ: “ಹಾಜರಾನ ಈ ಮಾತಿನಿಂದ ನೀವು ಇಷ್ಟೊಂದು ಕಷ್ಟ ಅನುಭವಿಸಿಬಿಟ್ಟಿರಾ!”
ಶ್ರೀರಾಮಕೃಷ್ಣರು: “ನನ್ನ ಅವಸ್ಥೆ ಬದಲಾಯಿಸಿಬಿಟ್ಟಿದೆ. ಈಗ ಜನರೊಡನೆ ವಾದ ಮಾಡಿ ಗಂಟಲು ಕಿತ್ತುಕೊಳ್ಳಲಾರೆ. ಹಾಜರಾನೊಡನೆ ತರ್ಕಮಾಡೊ ಮನಸ್ಸು ಈಗ ನನಗಿಲ್ಲ. ಯದುಮಲ್ಲಿಕನ ತೋಟದಲ್ಲಿ ಹೃದೆ 5 ಹೇಳಿದ: ‘ಮಾವಯ್ಯ, ನನ್ನನ್ನು ಇಟ್ಟುಕೊಳ್ಳುವುದಕ್ಕೆ ನಿಮಗಿಚ್ಛೆಯಿಲ್ಲವೆ?’”.
ನಾನು ಹೇಳಿದೆ: “ಇಲ್ಲ. ಈಗ ಆ ಮನಸ್ಸು ಇಲ್ಲ. ಈಗ ನಿನ್ನೊಡನೆ ಕೂಗಾಡಿ ಗಂಟಲು ಕಿತ್ತುಕೊಳ್ಳುವಂತೆ ಇಲ್ಲ.
“ಯಾವುದಕ್ಕೆ ಜ್ಞಾನ, ಯಾವುದಕ್ಕೆ ಅಜ್ಞಾನ ಎಂದು ಹೇಳುತ್ತಾರೆ-ಎಲ್ಲಿಯವರೆಗೆ ಭಗವಂತ ಬಹುದೂರದಲ್ಲಿರುವನು ಎಂಬ ಬೋಧೆಯಿರುವುದೊ ಅಲ್ಲಿಯವರೆಗೆ ಅಜ್ಞಾನಾವಸ್ಥೆ; ಯಾವಾಗ ಇಲ್ಲಿ ಇಲ್ಲಿಯೆ ಇದ್ದಾನೆ ಎಂಬ ಬೋಧೆಯಾಗುವುದೋ ಆಗ ಜ್ಞಾನಾವಸ್ಥೆ.
“ಯಾವಾಗ ಸರಿಯಾದ ಜ್ಞಾನೋದಯವಾಗುವುದೊ ಆಗ ಎಲ್ಲಾ ವಸ್ತುಗಳು ಚೈತನ್ಯಮಯವಾಗಿ ತೋರುತ್ತವೆ. ನಾನು ಊರಿನಲ್ಲಿದ್ದಾಗ ಆಗಾಗ ನನ್ನ ಅಣ್ಣನ ಮಗ ಶಿವನೊಡನೆ ಹರಟುತ್ತಿದ್ದೆ. ಶಿವು ಅತ್ಯಂತ ಚಿಕ್ಕ ಹುಡುಗ-ನಾಲ್ಕೋ ಐದೋ ವರ್ಷ ಇರಬೇಕು. ಒಂದು ದಿನ ಮುಗಿಲು ಗುಡುಗುತ್ತಿತ್ತು. ಆಕಾಶ ಮಿಂಚುತ್ತಿತ್ತು. ಆಗ ಶಿವು ಹೇಳಿದ: ‘ಚಿಕ್ಕಪ್ಪ, ನೋಡಲ್ಲಿ! ಯಾರೊ ಬೆಂಕಿಕಡ್ಡಿ ಗೀಚೋದ!’ ಎಂದು. (ಎಲ್ಲರೂ ನಗುತ್ತಾರೆ.) ಒಂದು ದಿವಸ ನೋಡುತ್ತೇನೆ ಒಬ್ಬನೆ ಹಸುರುಚಿಟ್ಟೆ ಹಿಡಿಯಲು ಹೋಗುತ್ತಿದ್ದಾನೆ. ಹತ್ತಿರದಲ್ಲಿದ್ದ ಮರದ ಎಲೆಗಳು ಅಲ್ಲಾಡಿದುವು. ಆಗ ಅವನು ಎಲೆಗಳಿಗೆ ಹೇಳಿದ: ‘ಚುಪ್ ಚುಪ್! ನಾನು ಚಿಟ್ಟೆ ಹಿಡಿಯುತ್ತಿದ್ದೇನೆ’ ಎಂದು. ಇನ್ನೂ ಬಾಲಕ, ಅವನಿಗೆ ಎಲ್ಲಾ ಚೈತನ್ಯಮಯವಾಗಿ ಕಾಣುತ್ತಿದೆ! ಸರಳ ವಿಶ್ವಾಸ, ಹಸುಳೆಯ ವಿಶ್ವಾಸ ಇಲ್ಲದಿದ್ದರೆ ಭಗವಂತನನ್ನು ಪಡೆಯಲಾಗುವುದಿಲ್ಲ.
“ಓ, ನನಗೆ ಹಿಂದೆ ಏನೇನು ಅವಸ್ಥೆ ಬಂದಿದ್ದುವು! ಒಂದು ದಿನ ಹುಲ್ಲುಗಾವಲಿನಲ್ಲಿ ಏನೋ ಒಂದು ನನ್ನನ್ನು ಕಡಿಯಿತು. ಸರ್ಪ ಕಡಿದುಬಿಟ್ಟಿದ್ದರೆ! ಎಂಬ ಭಯವಾಯಿತು. ದಿಕ್ಕು ತೋರಲಿಲ್ಲ, ಕೇಳಿದ್ದೆ, ಅದು ಮತ್ತೆ ಕಡಿದರೆ ವಿಷ ಹಿಂದಕ್ಕೆ ತೆಗೆದುಕೊಂಡು ಬಿಡುವುದೆಂದು. ಅಲ್ಲೆ ಕುಳಿತು ಅದು ನನ್ನನ್ನು ಮತ್ತೆ ಕಡಿಯಲಿ ಎಂದು ಬಿಲವನ್ನು ಹುಡುಕಲಾರಂಭಿಸಿದೆ. ನಾನು ಹಾಗೆ ಅದರ ಬಿಲ ಹುಡುಕುತ್ತಿದ್ದಾಗ ಒಬ್ಬ ಕೇಳಿದ: ‘ಏನನ್ನು ಹುಡುಕುತ್ತಿರುವುದು?’ ಎಂದು. ಸಮಾಚಾರವನ್ನೆಲ್ಲ ಕೇಳಿ, ಆತ ಹೇಳಿದ: ‘ಹಿಂದೆ ಯಾವ ಜಾಗದಲ್ಲಿ ಕಡಿದಿತ್ತೊ, ಅದೇ ಜಾಗದಲ್ಲಿ ಮತ್ತೆ ಕಡಿಯಬೇಕು. ಆಗ ಅದು ತನ್ನ ವಿಷವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತದೆ’ ಎಂದು. ಬಹುಶಃ ಚೇಳುಗೀಳು ಕಚ್ಚಿದ್ದಿರಬೇಕು.
“ಒಮ್ಮೆ ರಾಮಲಾಲ ಹೇಳಿದ್ದ: ‘ಶರದೃತುವಿನ ಹಿಮ ಶರೀರಕ್ಕೆ ಒಳ್ಳೇದು’ ಎಂದು. ಯಾವುದೋ ಒಂದು ಶ್ಲೋಕ ಅದರ ಸಂಬಂಧವಾಗಿ ಇದೆಯಂತಲ್ಲ ಅದನ್ನೆ ಎತ್ತಿ ಹೇಳಿದ್ದ.
“ಒಮ್ಮೆ ಕಲ್ಕತ್ತದಿಂದ ಗಾಡಿಯಲ್ಲಿ ಕುಳಿತು ಬರುವಾಗ ಹಿಮ ಚೆನ್ನಾಗಿ ಬೀಳಲಿ ಎಂದು ತಲೆಯನ್ನು ಹೊರಕ್ಕೆ ಚಾಚಿ ಬಂದೆ. ಫಲ, ಒಡನೆಯೆ ಅಸೌಖ್ಯ.” (ಎಲ್ಲರೂ ನಗುತ್ತಾರೆ.)
ಈಗ ಪರಮಹಂಸರು ತಮ್ಮ ಕೊಠಡಿಯಲ್ಲಿ ಬಂದು ಕುಳಿತುಕೊಂಡಿದ್ದಾರೆ. ಅವರ ಪಾದಗಳೆರಡು ಸ್ವಲ್ಪ ಊದಿದ ಹಾಗೆ ಇವೆ. ಅವರು ಭಕ್ತರಿಗೆ “ನನ್ನ ಕಾಲನ್ನು ಸ್ವಲ್ಪ ಬೆರಳಿನಿಂದ ಒತ್ತಿನೋಡಿ. ಕುಳಿಯಾಗುವುದೆ?” ಎಂದರು. ಒತ್ತಿದಾಗ ಚಿಕ್ಕ ಚಿಕ್ಕ ಕುಳಿಬಿದ್ದವು. ಎಲ್ಲರೂ ಸೇರಿಕೊಂಡು ಹೇಳಲಾರಂಭಿಸಿದರು: “ಓ! ಅದು ಏನೂ ಇಲ್ಲ” ಎಂದು.
ಪರಮಹಂಸರು ವಿಜಯನಿಗೆ: “ನೀನು ಸಿಂಥಿಯ ಮಹೇಂದ್ರನನ್ನು ಕರೆದುಕೊಂಡು ಬಾ. ಇದು ಏನೂ ಇಲ್ಲ ಎಂದು ಅವನು ಹೇಳಿಬಿಟ್ಟರೆ ಆಗ ನನ್ನ ಮನಸ್ಸಿಗೆ ಶಾಂತಿ.”
ಭವನಾಥ ನಗುತ್ತ: “ನಿಮಗೆ ಔಷಧದ ಮೇಲೆ ತುಂಬಾ ವಿಶ್ವಾಸ! ನಮಗೆ ಅಷ್ಟೊಂದು ಇಲ್ಲ.”
ಪರಮಹಂಸರು: “ಔಷಧ ಆತನದೇ. ಆತನೆ ಒಂದು ರೂಪಿನಲ್ಲಿ ಚಿಕಿತ್ಸಕನಾಗಿದ್ದಾನೆ. ಗಂಗಾಪ್ರಸಾದ ಹೇಳಿದ: ‘ನೀವು ರಾತ್ರಿಯ ವೇಳೆ ನೀರು ಕುಡಿಯಬೇಡಿ’ ಎಂದು. ನಾನು ಅದನ್ನು ವೇದವಾಕ್ಯವೆಂದೇ ಎಣಿಸಿದ್ದೇನೆ. ಆತ ಸಾಕ್ಷಾತ್ ಧನ್ವಂತರಿಯೆ ಎಂಬುದಾಗಿ ನನ್ನ ಭಾವನೆ.”
ಹಾಜರಾ ಕೊಠಡಿಗೆ ಬಂದು ಕುಳಿತುಕೊಂಡ. ಪರಮಹಂಸರು ಯಾವುಯಾವುದೊ ವಿಷಯವಾಗಿ ಮಾತನಾಡುತ್ತಿದ್ದು ಹಾಜರಾನ ಕಡೆ ತಿರುಗಿ: “ನೋಡು, ನಿನ್ನೆ ವಿಜಯ, ಕೇದಾರ ಇವರೆ ಮೊದಲಾಗಿ ಅನೇಕರು ರಾಮನ ಮನೆಯಲ್ಲಿ ಕುಳಿತಿದ್ದರು. ಅಲ್ಲಿ ಅಷ್ಟೊಂದು ಜನ ಕುಳಿತಿದ್ದರೂ ನರೇಂದ್ರನ ಕಡೆ ನನ್ನ ದೃಷ್ಟಿ ಬಿದ್ದೊಡನೆಯೆ ನನಗೇಕೆ ಅಷ್ಟೊಂದು ಉದ್ದೀಪನೆ ಆಯಿತು? ಕೇದಾರ ಕಾರಣಾನಂದದ ಆಲಯಕ್ಕೆ ಸೇರಿದವನಾಗಿ ರುವುದನ್ನು ನಾನು ನೋಡಿದ್ದೇನೆ.”
ನರೇಂದ್ರನಿಗಾಗಿ ಕಾಯುತ್ತಿದ್ದ ಹಾಗೆಯೆ ನರೇಂದ್ರ ಬಂದುಬಿಟ್ಟ. ಪರಮಹಂಸರ ಆನಂದಕ್ಕೆ ಮೇರೆಯೇ ಇಲ್ಲದಂತಾಯಿತು. ಪರಮಹಂಸರಿಗೆ ಪ್ರಣಾಮ ಮಾಡಿದನಂತರ ನರೇಂದ್ರ ಕೊಠಡಿಯಲ್ಲಿ ಕುಳಿತು ಭವನಾಥ ಮೊದಲಾದವರೊಡನೆ ಸ್ವಲ್ಪ ಹರಟುತ್ತಿದ್ದಾನೆ. ಆತನ ಹತ್ತಿರವೆ ಮಾಸ್ಟರ್ ಕುಳಿತಿದ್ದಾನೆ. ಕೊಠಡಿಯಲ್ಲಿ ಒಂದು ಉದ್ದವಾದ ಮಂದಲಿಗೆ ಯನ್ನು ಹಾಸಿದೆ. ನರೇಂದ್ರ ಮಾತುಕತೆಯಾಡುತ್ತ ಮಂದಲಿಗೆಯ ಮೇಲೆ ತನ್ನ ಹೊಟ್ಟೆ ಮೇಲೆ ಮಲಗಿಕೊಂಡಿದ್ದಾನೆ. ಪರಮಹಂಸರು ಇದ್ದಕ್ಕಿದ್ದ ಹಾಗೆ ಆತನ ಕಡೆ ದೃಷ್ಟಿ ಹಾಕಿ ಸಮಾಧಿಸ್ಥರಾಗಿದ್ದಾರೆ. ಆ ಅವಸ್ಥೆಯಲ್ಲಿಯೆ ಅವರು ಆತನ ಬೆನ್ನಿನಮೇಲೆ ಹೋಗಿ ಕುಳಿತಿದ್ದಾರೆ.
ಭವನಾಥ ಹಾಡುತ್ತಿದ್ದಾನೆ:
ನಿನ್ನ ನಿತ್ಯಾನಂದದಾಚೆಗೆ ತಳ್ಳದಿರು ನೀನೆನ್ನನು,
ನಿನ್ನ ಪಾದವನಲ್ಲದೀತನು ಬೇರೆ ಏನೂ ಕಾಣನು.
ಮೃತ್ಯು ಬಂದೆನ್ನೆದುರು ಹುಬ್ಬನು ಗಂಟುಹಾಕುತಲಿರುವನು.ಹೇಳು ತಾಯೀ, ಏನು ಹೇಳಲಿ? ಅವನು ಬಾಗಿಲೊಳಿರುವನು!
ನಿನ್ನ ನಾಮವನೊಂದ ನಂಬುತ ನಾನು ಭವಸಾಗರದೊಳು
ನನ್ನ ದೋಣಿಯ ತೇಲಿಬಿಡುವೀ ಬಯಕೆಯಿದ್ದಿತು ಎದೆಯೊಳು,
ತೀರವಿಲ್ಲದಪಾರಕತ್ತಲ ಮೊರೆ ಮೊರೆವ ಮುನ್ನೀರೊಳು
ಒಮ್ಮೆಗೇ ಕೈಬಿಡುವೆ ಎಂಬುದ ಕನಸಿನಲ್ಲೂ ಕಾಣೆನು!
ನಿನ್ನ ತಾರಕ ನಾಮವನು ನೆನೆದಿಲ್ಲಿ ಮುಳುಮುಳುಗೇಳುವೆ,
ಹಗಲು ಇರುಳೂ ನಿನ್ನ ನೆನೆದರು ತೀರದಾಗಿದೆ ವೇದನೆ!
ನಾನು ಈ ಸಲ ಮುಳುಗಿ ಸತ್ತರೆ ನಾಳೆ ನಿನ್ನಯ ಹೆಸರನು
ಮತ್ತೆ ಯಾರೂ ಜಪಿಸರೆಂಬುದ ಮರೆಯದಿರು ಈಗಾದರೂ!
ಪರಮಹಂಸರಿಗೆ ಬಾಹ್ಯಪ್ರಜ್ಞೆ ಬಂದಿದೆ. ಈಗ ಅವರು ಹಾಡುತ್ತಿದ್ದಾರೆ.
ನಮೋ ಗೌರಿ ನಾರಾಯಣಿ ಶ್ರೀ ದುರ್ಗಾಮಾಯಿ,
ನಿನ್ನಯ ಕೃಪೆ ಇಲ್ಲದಿರಲು ನಾನು ಕಾಣೆ ತಾಯಿ,
ನೀನೆ ಹಗಲು, ನೀನೆ ಇರುಳು, ನೀನೆ ಸಂಜೆ, ರಾತ್ರಿ,
ಕೋದಂಡಪಾಣಿಯಾದ ಶ್ರೀರಾಮರೂಪಿಣೀ
ಕೊಳಲ ಹಿಡಿದು ಗಾನ ಗೈವ ಗೋಪಾಲರೂಪಿಣೀ
ಶಿವನ ಮೆಟ್ಟಿ ಮೇಲೆ ನಿಂತ ರುದ್ರ ಭದ್ರ ಕಾಳಿ ನೀ,
ದಶಾವತಾರಿ ನೀನೇ, ದಶಮಹಾವಿದ್ಯೆ ನೀನೆ
ಪರಮಶಕ್ತಿರೂಪಿಣೀ
ಭವಸಾಗರತಾರಿಣಿ.
ಬಿಲ್ವದಲದಿ ಪೂಜೆಗೈದ ಯಶೋದಾ ತಾಯಿಗೆ
ಬಾಲಗೋಪಾಲನನ್ನು ಕೊಟ್ಟ ಮಹಾತಾಯಿ,
ಕಾಡಿನಲೋ ಬೀಡಿನಲೋ ಎಲ್ಲಾದರೂ ಇರಲಿ ನಾ,
ಎಂಥ ಸಾವು ಬಂದರೂ ನಿನ್ನ ನೆನಪು ಉಳಿಯಲೆನಗೆ
ನನ್ನ ಅಂತ್ಯಕಾಲದಿ.
ನೀನೆ ನನ್ನ ನೂಂಕಿಬಿಟ್ಟರೆಲ್ಲಿ ನನಗೆ ತಾವಿದೆ
ನಿನ್ನ ಅಡಿಯಲಲ್ಲವೆ?
‘ಹೋಗು ನಡೆ’… ಎಂದು ನೀನು ಗದರಿಕೊಂಡು ತಳ್ಳಿದರೂ,
ಕಾಲಂದಿಗೆಯಾಗಿ ನಿನ್ನ ಕಾಲಿಗಂಟಿಕೊಳ್ಳುವೆ!
ಶಿವನ ಜೊತೆಗೆ ಕುಳಿತು ನೀನು ಸರಸವಾಡುವಾಗ, ನಾನು
“ಜೈ ಶಿವಾ” ಎನ್ನುವೆ!
ಗರುಡನಾಗಿ ನೀನು ಮೇಲೆ ನೀಲಬಾನೊಳಾಡುವಾಗ
ಕಿರಿಯ ಮತ್ಸ್ಯವಾಗಿ ನಾನು ತೆರೆಯ ತುದಿಯೊಳಾಡುವೆ!
ಆಗ ಉಸಿರುಕಟ್ಟಿ ನಾನು ಒದ್ದಾಡುತಲಿದ್ದರೂ,
ನನ್ನ ನೂಕಬೇಡ ತಾಯಿ ಓ ಕಾಲಕಾಮಿನೀ
ನಿನ್ನ ಪಾದಪದ್ಮನೌಕೆ ಭವಸಾಗರತಾರಿಣೀ!
ನೀನೆ ಸ್ವರ್ಗ ನೀನೆ ಮರ್ತ್ಯ ನೀನೆಯೆ ಪಾತಾಳ
ದ್ವಾದಶಗೋಪಾಲ ಮತ್ತೆ ಹರಿಹರಬ್ರಹ್ಮಾದಿಗಳಿಗೆ
ನಿನ್ನ ಬಸಿರೆ ಮೂಲ!
ಓ ಅನಂತೆ, ಅನ್ನಪೂರ್ಣೆ, ನಮೋ ಸರ್ವಮಂಗಳೇ,
ಶೂಲಹಸ್ತ ಶೂಲಪಾಣಿ
ತಾನೆ ರಕ್ಷೆ ನಿಲುವನಲ್ತೆ
ನಿನ್ನ ನೆನೆವ ಭಕ್ತಗೇ!
ಹಾಜರಾ ಪರಮಹಂಸರ ಕೊಠಡಿಯ ಈಶಾನ್ಯ ದಿಕ್ಕಿನಲ್ಲಿರುವ ಜಗಲಿಮೇಲೆ ಕುಳಿತಿ ದ್ದಾನೆ. ಕೈಯಲ್ಲಿ ಜಪಮಾಲೆ ಹಿಡಿದು ಹರಿನಾಮ ಜಪಮಾಡುತ್ತಿದ್ದಾನೆ. ಪರಮಹಂಸರು ಆತನ ಮುಂದೆ ಹೋಗಿ ಕುಳಿತುಕೊಂಡಿದ್ದಾರೆ. ಅವರು ಆತನ ಜಪಮಾಲೆಯನ್ನು ತಮ್ಮ ಕೈಗೆ ಈಗ ತೆಗೆದುಕೊಂಡಿದ್ದಾರೆ.
ಶ್ರೀರಾಮಕೃಷ್ಣರು ಹಾಜರಾನಿಗೆ: “ನೋಡು, ನನ್ನ ಕೈಯಲ್ಲಿ ಜಪ ಸಾಧ್ಯವಿಲ್ಲ; – ಇಲ್ಲ, ಇಲ್ಲ, ಸಾಧ್ಯ!- ಎಡಗೈಯಿಂದ ಸಾಧ್ಯ- ಆದರೆ ಅದರೊಂದಿಗೆ ನಾಮಜಪ ಸಾಧ್ಯವಿಲ್ಲ!”
ಹೀಗೆಂದು ಹೇಳಿ ಪರಮಹಂಸರು ಸ್ವಲ್ಪ ಜಪಮಾಡಲು ಪ್ರಯತ್ನಮಾಡಿದರು. ಆದರೆ ಜಪ ಆರಂಭಿಸಲು ಹೋಗಿ ಒಮ್ಮೆಗೆಯೆ ಸಮಾಧಿಸ್ಥರಾಗಿದ್ದಾರೆ. ಬಹಳ ಹೊತ್ತು ಕಳೆದು ಹೋದರೂ ಇನ್ನೂ ಆ ಅವಸ್ಥೆಯಲ್ಲಿಯೇ ಕುಳಿತಿದ್ದಾರೆ. ಕೈಯಲ್ಲಿ ಜಪಮಾಲೆಯನ್ನು ಹಿಡಿದುಕೊಂಡೇ ಕುಳಿತಿದ್ದಾರೆ, ಭಕ್ತರೆಲ್ಲ ಆಶ್ಚರ್ಯಚಕಿತರಾಗಿ ನೋಡುತ್ತಿದ್ದಾರೆ. ಹಾಜರಾ ಕೂಡ ತಾನು ಕುಳಿತಲ್ಲಿಯೇ ಕುಳಿತು ಸ್ತಂಭೀಭೂತನಾಗಿ ನೋಡುತ್ತಿದ್ದಾನೆ. ಈ ರೀತಿಯಾಗಿ ಬಹಳ ಹೊತ್ತು ಕಳೆದುಹೋದ ನಂತರ ಅವರಿಗೆ ಸ್ವಲ್ಪ ಬಾಹ್ಯಪ್ರಜ್ಞೆ ಬರಲಾರಂಭಿಸಿದೆ. ಅವರು: ‘ಹಸಿವು ನನಗೆ’ ಎಂದು ಕೂಗಿಕೊಳ್ಳುತ್ತಿದ್ದಾರೆ. ಪ್ರಕೃತಿಸ್ಥರಾಗಲು ಅನೇಕ ವೇಳೆ ಅವರು ಹೀಗೆ ಕೂಗಿಕೊಳ್ಳುವುದುಂಟು. ಮಾಸ್ಟರ್ ಅವರಿಗೆ ಸ್ವಲ್ಪ ಫಲಾಹಾರ ತರಲು ಎದ್ದು ಹೋಗುತ್ತಿದ್ದಾನೆ. ಪರಮಹಂಸರು ಅವನನ್ನು ಕರೆದು “ಈಗ ಬೇಡಪ್ಪ, ಮೊದಲು ಕಾಳೀ ದೇವಾಲಯಕ್ಕೆ ಹೋಗಿ ಬರುತ್ತೇನೆ” ಎಂದರು.
ಶ್ರೀರಾಮಕೃಷ್ಣರು ಸಿಮೆಂಟು ಅಂಗಳದ ಮೂಲಕ ದಕ್ಷಿಣಾಭಿಮುಖವಾಗಿ ಕಾಳೀ ದೇವಾಲಯಕ್ಕೆ ಹೋಗುತ್ತಿದ್ದಾರೆ. ಕೆಲವು ಹೆಜ್ಜೆ ಹಾಕಿದ ನಂತರ ದ್ವಾದಶ ಶಿವ ದೇವಾಲಯಗಳ ಕಡೆ ತಿರುಗಿ ಕೈಮುಗಿದರು. ಎಡಗಡೆಯಲ್ಲಿ ರಾಧಾಕಾಂತ ದೇವಾಲಯ. ಅಲ್ಲಿಗೆ ಹೋಗಿ ರಾಧಾಕಾಂತ ದರ್ಶನಮಾಡಿ ಅವನಿಗೆ ಪ್ರಣಾಮಮಾಡಿದರು. ಅಲ್ಲಿಂದ ಕಾಳೀ ದೇವಾಲಯಕ್ಕೆ ಬಂದು, ತಾಯಿಗೆ ಪ್ರಣಾಮಮಾಡಿ ಆಸನದ ಮೇಲೆ ಕುಳಿತುಕೊಳ್ಳುತ್ತಿದ್ದಾರೆ. ಅನಂತರ ಭಗವತಿಯ ಪಾದಪದ್ಮಗಳಿಗೆ ಹೂವನ್ನು ಅರ್ಪಿಸಿದರು. ಈಗ ತಮ್ಮ ತಲೆಯ ಮೇಲೂ ಹೂವನ್ನು ಇಟ್ಟುಕೊಳ್ಳುತ್ತಿದ್ದಾರೆ. ಬಳಿಕ ಭವನಾಥನಿಗೆ: “ತಾಯಿಯ ಪ್ರಸಾದ, ಈ ಎಳನೀರು ಮತ್ತು ಚರಣಾಮೃತ ತೆಗೆದುಕೊಂಡು ನನ್ನೊಡನೆ ಬಾ” ಎಂದು ಹೇಳಿದರು. ಈಗ ಹಿಂದಿರುಗುತ್ತಿದ್ದಾರೆ. ಭವನಾಥ ಮತ್ತು ಮಾಸ್ಟರ್ ಅವರನ್ನು ಹಿಂಬಾಲಿಸುತ್ತಿದ್ದಾರೆ. ಪರಮಹಂಸರು ಈಗ ತಮ್ಮ ಕೊಠಡಿಗೆ ಹಿಂದಿರುಗಿದ್ದಾರೆ. ಬಳಿಕ ಅವರು ಹಾಜರಾನ ಮುಂದೆ ಬಂದು ಆತನಿಗೆ ಪ್ರಣಾಮ ಮಾಡಿದರು. ಹಾಜರಾ: “ಏನು ನೀವು ಮಾಡುತ್ತಿರುವುದು! ಏನು ನೀವು ಮಾಡುತ್ತಿರುವುದು!” ಎಂದು ಬೊಬ್ಬೆ ಹಾಕಲಾರಂಭಿಸಿದ. ಅದಕ್ಕೆ ಪರಮಹಂಸರು: “ಇದೇನು ಅನ್ಯಾಯದ ಕೆಲಸವೇ? ನೀನೆ ಹೇಳು” ಎನ್ನುತ್ತಿದ್ದಾರೆ. ಹಾಜರಾ ಅನೇಕ ವೇಳೆ ಪರಮಹಂಸರೊಡನೆ: “ಭಗವಂತ ಎಲ್ಲರಲ್ಲಿಯೂ ಅಂತರ್ಯಾಮಿಯಾಗಿದ್ದಾನೆ; ಸಾಧನೆಯ ಮೂಲಕ ಸರ್ವರೂ ಬ್ರಹ್ಮಜ್ಞಾನ ಪಡೆಯಬಹುದು” ಎಂದು ತರ್ಕಮಾಡುತ್ತಿದ್ದ. ಆತನಿಗೆ ತನ್ನ ಆಧ್ಯಾತ್ಮಿಕ ಉನ್ನತಿಯ ವಿಷಯವಾಗಿ ಸ್ವಲ್ಪ ಹೆಮ್ಮೆ ಇದ್ದಿತು.
ಸಮಯ ಆಗಿದೆ. ನೈವೇದ್ಯಾನಂತರದ ಆರತಿ ಮುಗಿಯಿತು. ಅತಿಥಿಶಾಲೆಗೆ ಶಾಕ್ತರು, ವೈಷ್ಣವರು, ಭಿಕ್ಷುಕರಾದಿಯಾಗಿ ಎಲ್ಲರೂ ಹೋಗುತ್ತಿದ್ದಾರೆ. ಎಲ್ಲರಿಗೂ ದೇವಿಯ ಪ್ರಸಾದ, ರಾಧಾಕಾಂತರ ಪ್ರಸಾದ ದೊರೆಯುವ ಸಮಯ. ಪರಮಹಂಸರ ಭಕ್ತರಿಗೂ ಭಗವತಿಯ ಪ್ರಸಾದ ದೊರಕುವುದು. ಬ್ರಾಹ್ಮಣ ಪರಿಚಾರಕರೊಂದಿಗೆ ಪರಮಹಂಸರ ಭಕ್ತರೂ ಅತಿಥಿಶಾಲೆಯಲ್ಲಿ ಕುಳಿತು ಪ್ರಸಾದ ಸ್ವೀಕರಿಸಲು ಹೋಗುವರು. ಪರಮಹಂಸರು ಹೇಳಿದರು. “ನೀವೆಲ್ಲರೂ ಅಲ್ಲಿಗೆ ಹೋಗಿ ಊಟಮಾಡಿ ಬನ್ನಿ” ಎಂದು. ನರೇಂದ್ರನಿಗೆ: “ನೀನು ಇಲ್ಲಿಯೆ ಊಟಮಾಡುವೆಯಾ? ಒಳ್ಳೇದು, ನಾನು-ನರೇಂದ್ರ ಇಲ್ಲಿಯೆ ಊಟಮಾಡುತ್ತೇವೆ” ಎಂದರು. ಭವನಾಥ, ಬಾಬುರಾಮ, ಮಾಸ್ಟರ್ ಮೊದಲಾದ ವರೆಲ್ಲ ಪ್ರಸಾದ ಸ್ವೀಕರಿಸಲು ಅತಿಥಿಶಾಲೆಗೆ ಹೋಗುತ್ತಿದ್ದಾರೆ.
ಪ್ರಸಾದ ಸ್ವೀಕರಿಸಿದ ನಂತರ ಪರಮಹಂಸರು ಸ್ವಲ್ಪ ಹೊತ್ತು ಮಾತ್ರವೆ ವಿಶ್ರಮಿಸಿ ಕೊಂಡರು. ಭಕ್ತರು ವರಾಂಡದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಪರಮಹಂಸರು ಅಲ್ಲಿಗೆ ಬಂದು ಕುಳಿತು ಅವರೊಡನೆ ಆನಂದದಿಂದ ಮಾತುಕತೆಗಳಾಡುತ್ತಿದ್ದಾರೆ. ಆಗ ಘಂಟೆ ಎರಡು. ಎಲ್ಲರೂ ಈಶಾನ್ಯ ವರಾಂಡದಲ್ಲಿ ಕುಳಿತಿದ್ದಾರೆ. ಇದ್ದಕ್ಕಿದ್ದ ಹಾಗೆ ಭವನಾಥನು ಬ್ರಹ್ಮಚಾರಿಯ ವೇಷ ಹಾಕಿಕೊಂಡ. ಆತನ ಮೈಮೇಲೆ ಕಾಷಾಯ ವಸ್ತ್ರ. ಕೈಯಲ್ಲಿ ಕಮಂಡಲು, ಮುಖದಲ್ಲಿ ನಸುನಗೆ, ಪರಮಹಂಸರು ಮತ್ತು ಭಕ್ತರೆಲ್ಲರೂ ನಗಲಾರಂಭಿಸಿದರು.
ಶ್ರೀರಾಮಕೃಷ್ಣರು ನಗುತ್ತ : “ಈತನ ಮಾನಸಿಕ ಪ್ರವೃತ್ತಿ ಈ ಕಡೆಗೆ ತಾನೆ, ಅದಕ್ಕಾಗಿ ಈ ವೇಷ.”
ನರೇಂದ್ರ: “ಇವನು ಬ್ರಹ್ಮಚಾರಿ ವೇಷ ಹಾಕಿ ಬಂದಿದ್ದಾನೆ: ಸ್ವಲ್ಪ ತಾಳಿ, ನಾನು ವಾಮಾಚಾರಿ ವೇಷ ಹಾಕಿ ಬರುತ್ತೇನೆ.” (ಎಲ್ಲರೂ ನಗುತ್ತಾರೆ.)
ಹಾಜರಾ: “ಆಗ ನೀನು ಪಂಚ ‘ಮ’ ಕಾರ 6 ಇವೆ ಮೊದಲಾದ ತಾಂತ್ರಿಕ ಕ್ರಿಯೆಗಳಲ್ಲಿ ತೊಡಗಬೇಕಾಗುತ್ತದೆ.”
ಪರಮಹಂಸರು ವಾಮಾಚಾರದ ಒಂದು ಮಾತನ್ನೂ ಆಡಲಿಲ್ಲ. ಆ ಮಾತುಕತೆ ಮುಂದುವರಿಯಲು ಬಿಟ್ಟುಕೊಡಲಿಲ್ಲ. ಸ್ವಲ್ಪ ಹಾಸ್ಯಮಾಡಿ ಅದನ್ನು ಕೊನೆಗಾಣಿಸಿದರು.
ಪರಮಹಂಸರು ಇದ್ದಕ್ಕಿದ್ದ ಹಾಗೆ ಪ್ರೇಮೋನ್ಮತ್ತರಾಗಿ ನರ್ತಿಸಲು ಆರಂಭಿಸಿದ್ದಾರೆ. ಹಾಡುತ್ತಿದ್ದಾರೆ :
ಏನಾದರೂ ನೀನು ನನ್ನ ವಂಚಿಸಲಾರೆ ಇನ್ನು ಮುಂದೆ;
ನಿನ್ನರುಣ ಪಾದಪದ್ಮಗಳ ನಾನಿಂದು ಕಂಡೆ!
ನಿತ್ಯ ಮಾಯೆಗೊಳಗಾದರೇನಂತೆ, ನಿನ್ನಭಯ ಪದಕಮಲಗಳ
ಎಂದರಿತಮೇಲೆ!
ಸಂಸಾರ ಕೂಪದೆಡೆ ಎಳೆದೊಯ್ದು ಬಂಧನಕೆ
ಒಳಗಾಗೆನಿನ್ನುಮೇಲೆ!
ಸುಖ ದುಃಖ ಸಮ ಎಂದು ಅರಿತುದಾಯಿತು, ಇನ್ನು
ಬಯಕೆಗಳ ಬೆಂಕಿಯನು ಮರುಕೊಳಿಸೆನು,
ಕಾಂಚನದ ಬಯಕೆ ಮೋಹದ ಮೂಲ ಎಂದರಿತಾಯ್ತು;
ತಿರುಕನಂತದಕಾಗಿ ಹಾರೈಸೆನು.
ರಾಮಪ್ರಸಾದನಿದೊ, ಹಾಡುತಿಹನಿಂತು;
ಹಾಲು ಕುಡಿದವ ನಾನು, ಮಜ್ಜಿಗೆಯೊಳಿನ್ನೇನು?
ಹೀನವನು ನಾನು ನಾ ಬಯಸೆನೆಂದೂ.
ಪರಮಹಂಸರು ಹೇಳುತ್ತಿದ್ದಾರೆ: “ಆಹಾ! ರಾಜನಾರಾಯಣನ ಚಂಡೀ ಮೇಲಿನ ಹಾಡುಗಾರಿಕೆ ಎಷ್ಟು ಸುಶ್ರಾವ್ಯ ಮಧುಮಧುರ! ಆತ ಈ ರೀತಿಯಾಗಿ ನರ್ತಿಸುತ್ತ ನರ್ತಿಸುತ್ತ ಹಾಡುತ್ತಿದ್ದಾನೆ. ಕಾಮಾರಪುಕುರಿನ ನಕುರ ಆಚಾರ್ಯನ ಹಾಡುಗಾರಿಕೆಯನ್ನು ಕಿವಿಯಿಂದ ಕೇಳಬೇಕು. ಆತನದು ಎಂಥಾ ಮನೋಹರ ನೃತ್ಯ! ಎಂಥ ಇಂಪಾದ ಹಾಡುಗಾರಿಕೆ!”
ಪಂಚವಟಿಗೆ ಒಬ್ಬ ಸಾಧು ಬಂದಿದ್ದಾನೆ. ಬಹಳ ಕೋಪಿಷ್ಠ. ಸಿಕ್ಕಿದವರನ್ನೆಲ್ಲ ಬಯ್ಯುವುದೆ ಮತ್ತು ಶಾಪಕೊಡುವುದೆ ಕೆಲಸ. ಆತ ಮರದ ಪಾದರಕ್ಷೆ ತೊಟ್ಟುಕೊಂಡು ಕೊಠಡಿಗೆ ಬಂದಿದ್ದಾನೆ. ಆತ ಕೇಳಿದ: “ಏನು, ಇಲ್ಲಿ ಬೆಂಕಿ ಸಿಕ್ಕುವುದೆ?” ಎಂದು. ಪರಮಹಂಸರು ಸಾಧುವಿಗೆ ಕೈಮುಗಿಯುತ್ತಿದ್ದಾರೆ. ಬಳಿಕ ಕೈಕಟ್ಟಿ ನಿಂತಿದ್ದಾರೆ. ಆ ಸಾಧು ಕೊಠಡಿಯಿಂದ ಹೊರಕ್ಕೆ ಹೋಗುವವರೆಗೆ ಕೈಕಟ್ಟಿ ನಿಂತಿದ್ದರು.
ಆ ಸಾಧು ಕೊಠಡಿಯಿಂದ ಹೊರಕ್ಕೆ ಹೊರಟುಹೋದ ಮೇಲೆ ಭವನಾಥ ನಗುತ್ತ ನಗುತ್ತ ಹೇಳುತ್ತಿದ್ದಾನೆ: “ನಿಮಗೆ ಆ ಸಾಧುವಿನ ಮೇಲೆ ಎಷ್ಟೊಂದು ಭಕ್ತಿ!”
ಪರಮಹಂಸರು ನಗುತ್ತ: “ಆತ ತಮೋಗುಣಿ ನಾರಾಯಣ. ಯಾರಲ್ಲಿ ತಮೋಗುಣ ಪ್ರಧಾನವಾಗಿದೆಯೊ ಅವರನ್ನು ಈ ರೀತಿ ಪ್ರಸನ್ನರಾಗಿ ಮಾಡಬೇಕು. ಏನೇ ಆದರೂ ಆತ ಒಬ್ಬ ಸಾಧು.”
ಭಕ್ತರೆಲ್ಲ ಕೂಡಿ ಗೋಲೋಕಧಾಮದ ಆಟ ಆಡುತ್ತಿದ್ದಾರೆ. ಹಾಜರಾ ಕೂಡ ಆಡು ತ್ತಿದ್ದಾನೆ. ಪರಮಹಂಸರು ಹತ್ತಿರ ನಿಂತು ನೋಡುತ್ತಿದ್ದಾರೆ. ಮೊದಲು ಮಾಸ್ಟರಿನ ಮತ್ತು ಕಿಶೋರಿಯ ಕಾಯಿಗಳು ಹಣ್ಣಾದುವು. ಪರಮಹಂಸರು ಅವರಿಬ್ಬರಿಗೂ ನಮಸ್ಕಾರ ಮಾಡಿದರು. ಹೇಳಿದರು: “ನೀವು ಸಹೋದರರಿಬ್ಬರೂ ಧನ್ಯರು” ಎಂದು. ಮಾಸ್ಟರನನ್ನು ಒಂದು ಕಡೆ ಕರೆದು: “ಮತ್ತೆ ಆಡಬೇಡ” ಎಂದರು. ಪರಮಹಂಸರು ಮತ್ತೆ ಆಟವನ್ನು ನೋಡುತ್ತಿದ್ದಾರೆ. ಹಾಜರಾನ ಕಾಯಿ ನೇರವಾಗಿ ನರಕಕ್ಕೆ ನುಗ್ಗಿತು. ಪರಮಹಂಸರು ಹೇಳುತ್ತಿದ್ದಾರೆ: “ಹಾಜರಾನಿಗೆ ಏನಾಯಿತು?–ಮತ್ತೆ!” ಆತನ ಕಾಯಿ ಮತ್ತೆ ನರಕಕ್ಕೆ ಹೋಗಿ ಬಿದ್ದಿತು. ಇದನ್ನು ನೋಡಿ ಎಲ್ಲರೂ ಗೊಳ್ಳೆಂದು ನಗುತ್ತಿದ್ದಾರೆ. ಲಾಟುವಿನ ಕಾಯಿ ಸಂಸಾರದ ಮನೆಯಿಂದ ಹೊರಟು ನೇರವಾಗಿ ಸತ್ ಚಿತ್ ಮುಕ್ತಿಯನ್ನು ಪಡೆಯಿತು. ಲಾಟು ಆಕಾಶಕ್ಕೂ ಭೂಮಿಗೂ ನೆಗೆಯುತ್ತಿದ್ದಾನೆ. ಅದನ್ನು ನೋಡಿದ ಪರಮಹಂಸರು ಹೇಳುತ್ತಿದ್ದಾರೆ: “ನೋಡಿ ನೀವು ಲಾಟುವಿನ ಆಹ್ಲಾದವನ್ನು! ಅದು ದೊರೆಯದೆ ಇದ್ದರೆ ಆತನ ಮನಸ್ಸಿಗೆ ಬಹಳ ವ್ಯಥೆಯಾಗಿಬಿಡುತ್ತಿತ್ತು. (ಏಕಾಂತದಲ್ಲಿ ಭಕ್ತರಿಗೆ) ಇಂದಿನ ಆಟದ ಫಲದಲ್ಲಿ ಅರ್ಥವಿದೆ. ಹಾಜರಾನಿಗೆ ಅಷ್ಟೊಂದು ಅಹಂಕಾರ. ಇದರಲ್ಲಿಯೂ ತಾನು ಗೆದ್ದುಬಿಡುತ್ತೇನೆ ಎಂದು ಇದ್ದ. ಭಗವಂತನದು ಅಂಥಾ ನಿಯಮ, ಆತ ಸಾಧು ಸತ್ಪುರುಷರನ್ನು ಎಂದಿಗೂ ಮತ್ತು ಎಲ್ಲಿಯೂ ಅಪಮಾನಕ್ಕೆ ಈಡುಮಾಡೋದಿಲ್ಲ, ಅವರಿಗೆ ಎಲ್ಲೆಲ್ಲಿಯೂ ಜಯವೆ.”
ಪರಮಹಂಸರು ತಮ್ಮ ಕೊಠಡಿಯಲ್ಲಿ ಚಿಕ್ಕ ಮಂಚದ ಮೇಲೆ ಕುಳಿತಿದ್ದಾರೆ. ನರೇಂದ್ರ, ಭವನಾಥ, ಬಾಬುರಾಮ, ಮಾಸ್ಟರ್ ನೆಲದ ಮೇಲೆ ಕುಳಿತಿದ್ದಾರೆ. ಘೋಷ್ಪಾರಾದವರ ಮತ್ತು ಪಂಚನಾಮಿಗಳ ವಿಷಯವಾಗಿ ನರೇಂದ್ರ ಮಾತು ಎತ್ತಿದ. ಪರಮಹಂಸರು ಅವರನ್ನು ವರ್ಣಿಸುತ್ತ ಅವರನ್ನು ಟೀಕಿಸುತ್ತಿದ್ದಾರೆ. ಹೇಳುತ್ತಿದ್ದಾರೆ: “ಸರಿಯಾದ ಸಾಧನೆ ಅವರ ಕೈಯಲ್ಲಿ ಹರಿಯದು; ಧರ್ಮದ ಹೆಸರಿನಲ್ಲಿ ಇಂದ್ರಿಯ ರಾಜ್ಯದಲ್ಲಿ ವ್ಯವಹರಿಸುತ್ತಿದ್ದಾರೆ!” ಶ್ರೀರಾಮಕೃಷ್ಣರು ನರೇಂದ್ರನಿಗೆ: “ನೀನು ಇಂಥ ವಿಷಯಗಳಿಗೆ ಮನಸ್ಸು ಕೊಡಬೇಡ. ಭೈರವ, ಭೈರವಿ ಇವರದೂ ಇದೇ ರೀತಿ. ನಾನು ಕಾಶಿಗೆ ಹೋಗಿದ್ದಾಗ, ಒಂದು ದಿನ ನನ್ನನ್ನು ಭೈರವ ಮಂಡಲಿಗೆ ಕರೆದುಕೊಂಡು ಹೋಗಿದ್ದರು. ಒಬ್ಬೊಬ್ಬ ಭೈರವನಿಗೆ ಒಬ್ಬೊಬ್ಬ ಭೈರವಿ. ನನಗೆ ಕಾರಣ ಕುಡಿಯಲು ಹೇಳಿದರು. ಕಾರಣವನ್ನು ತಂದ ಭೈರವಿಗೆ ನಾನು ಹೇಳಿದೆ. ‘ತಾಯಿ, ನಾನು ಕಾರಣವನ್ನು ಕೈಯಿಂದ ಮುಟ್ಟಲೂ ಆರೆ’ ಎಂದು. ಆಗ ಅವರೆಲ್ಲರೂ ಕುಡಿಯಲಾರಂಭಿಸಿದರು. ನಾನು ಯೋಚಿಸಿದೆ. ಬಹುಶಃ ಕುಡಿದ ನಂತರ ಧ್ಯಾನ ಮಾಡಬಹುದೆಂದು, ಅವರು ಹಾಗೇನೂ ಮಾಡಲಿಲ್ಲ. ನರ್ತಿಸಲು ಆರಂಭಿಸಿದರು! ಹತ್ತಿರವೆ ಇದ್ದ ಗಂಗೆಗೆ ಬಿದ್ದುಬಿಡಬಹುದೊ ಏನೊ ಎಂಬ ಭಯ ನನಗಾಯಿತು. ಅವರು ಸೇರಿದ್ದುದು ಗಂಗೆಯ ದಡದಲ್ಲಿಯೆ, ಪತಿ-ಪತ್ನಿಯರು ಭೈರವ-ಭೈರವಿಗಳಾದರೆ, ಅದು ಬಹಳ ಮಾನ ನೀಯವಾದುದೆ.
(ನರೇಂದ್ರಾದಿ ಭಕ್ತರಿಗೆ): “ಇದು ಗೊತ್ತೆ ನಿಮಗೆ? ನನ್ನದು ಮಾತೃಭಾವ. ಮಾತೃಭಾವ, ಪರಮ ಶುದ್ಧಭಾವ. ಇದರಲ್ಲಿ ಯಾವ ವಿಪತ್ತೂ ಇಲ್ಲ. ಭಗಿನೀಭಾವ, ಇದು ಕೆಟ್ಟದ್ದೇನಲ್ಲ. ಸ್ತ್ರೀಭಾವ-ವೀರಭಾವ ಬಹಳ ಕಠಿಣ. ತಾರಕನ ತಂದೆ ಈ ಭಾವ ಹಿಡಿದು ಸಾಧನೆ ಮಾಡುತ್ತಿದ್ದ. ಬಹಳ ಕಠಿಣ; ಇದರಲ್ಲಿ ಮನಸ್ಸನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಸ್ವಲ್ಪ ಪ್ರಯಾಸವೆ.
“ಭಗವಂತನನ್ನು ಮುಟ್ಟಲು ಅನೇಕ ಮಾರ್ಗಗಳಿವೆ. ಮತಗಳಿದ್ದಂತೆ ಪಥಗಳು. ಇದು ಕಾಳೀದೇವಾಲಯಕ್ಕೆ ಬರಲು ಅನೇಕ ಮಾರ್ಗಗಳಿರುವಂತೆ. ಆದರೆ ಕೆಲವು ಮಾರ್ಗ ನಿರ್ಮಲವಾಗಿವೆ; ಕೆಲವು ಕೊಳಕಾಗಿವೆ. ನಿರ್ಮಲ ಮಾರ್ಗದಿಂದ ಹೋಗುವುದೆ ಮೇಲು.
“ಅನೇಕ ಮತ – ಅನೇಕ ಪಥ – ನೋಡಿದ್ದೇನೆ. ಮತ್ತೆ ಅವುಗಳ ಕಡೆ ಮನಸ್ಸು ಕೊಡಲು ನನಗೆ ಇಚ್ಛೆಯಾಗುತ್ತಿಲ್ಲ. ಅವೆಲ್ಲ ಪರಸ್ಪರ ವಾದವಿವಾದದಲ್ಲಿ ತೊಡಗುತ್ತವೆ. ಈಗ ಇಲ್ಲಿ ಬೇರೆ ಯಾರೂ ಇಲ್ಲ; ನೀವೆಲ್ಲರೂ ನನಗೆ ಸೇರಿದವರು; ನಿಮಗೆ ಇದನ್ನು ಹೇಳುತ್ತೇನೆ – ಕಟ್ಟಕಡೆಗೆ ನನಗೆ ಈ ಅನುಭವ ಆಗಿದೆ. ಆತ ಪೂರ್ಣ, ನಾನು ಅಂಶ; ಆತ ಪ್ರಭು, ನಾನು ಆತನ ದಾಸ; ಮತ್ತೆ ಒಮ್ಮೊಮ್ಮೆ ಅನುಭವಿಸಿದ್ದೇನೆ, ಆತನೇ ನಾನು, ನಾನೇ ಆತ.”
ಭಕ್ತರೆಲ್ಲ ಈ ಮಾತುಗಳನ್ನು ಏಕಾಗ್ರಚಿತ್ತದಿಂದ ಕೇಳುತ್ತಿದ್ದಾರೆ.
ಭವನಾಥ ವಿನಯದಿಂದ: “ಜನರೊಡನೆ ನನಗೆ ವೈಮನಸ್ಯವಿದ್ದರೆ ನನ್ನ ಮನಸ್ಸು ಕಿರಿಕಿರಿ ಅನ್ನುತ್ತದೆ. ಹಾಗಾಗುವುದಾದರೆ ಎಲ್ಲರನ್ನೂ ಪ್ರೀತಿಸಲಾಗುವುದಿಲ್ಲ.”
ಶ್ರೀರಾಮಕೃಷ್ಣರು: “ಮೊದಲು ಒಮ್ಮೆ ಮಾತುಕತೆಯಾಡು – ಅವರೊಡನೆ ಸ್ನೇಹ ಬೆಳೆಸಲು ಪ್ರಯತ್ನಮಾಡು. ಏನೇ ಪ್ರಯತ್ನಪಟ್ಟರೂ ಸಾಧ್ಯವಾಗದೇ ಹೋದರೆ, ಅನಂತರ ಅದರ ವಿಷಯವಾಗಿ ಕಿಂಚಿತ್ತೂ ವ್ಯಥೆಪಡಬೇಡ. ಭಗವಂತನಿಗೆ ಶರಣಾಗತನಾಗು, ಆತ್ಮಚಿಂತನೆಮಾಡು, ಆತನನ್ನು ಮರೆತು ಬೇರೆಯವರ ಚಿಂತನೆಯಿಂದ ಮನಸ್ಸನ್ನು ಕೆಡಿಸಿ ಕೊಳ್ಳುವುದು ಬೇಡ.”
ಭವನಾಥ: “ಎಲ್ಲರನ್ನೂ ಪ್ರೀತಿಸಬೇಕು ಎಂದು ಯೇಸುಕ್ರಿಸ್ತ, ಚೈತನ್ಯ ಇವರೆಲ್ಲ ಹೇಳಿ ಹೋಗಿರುವರಲ್ಲ.”
ಶ್ರೀರಾಮಕೃಷ್ಣರು: “ಭಗವಂತ ಸಕಲ ಭೂತಗಳಲ್ಲಿಯೂ ಇರುವುದರಿಂದ ಎಲ್ಲರನ್ನೂ ಪ್ರೀತಿಸಲೇ ಬೇಕು. ಆದರೂ ದುಷ್ಟರಿಗೆ ಸ್ವಲ್ಪ ದೂರದಿಂದಲೇ ನಮಸ್ಕಾರ ಹಾಕಿಬಿಡಬೇಕು. ಏನು! ಚೈತನ್ಯದೇವನೆ? ಆತನೂ ಕೂಡ ಅನ್ಯ ಸಂಪ್ರದಾಯ ದವರೊಡನೆ ವ್ಯವಹರಿಸುವಾಗ ತನ್ನ ಆಂತರಿಕ ಭಾವನೆಗಳನ್ನು ಒಂದು ನಿರೋಧದಲ್ಲಿ ಇಟ್ಟುಕೊಳ್ಳುತ್ತಿದ್ದ. ಶ್ರೀವಾಸನ ಮನೆಯಲ್ಲಿ ಆತನ ಅತ್ತೆಯ ಜುಟ್ಟನ್ನು ಹಿಡಿದು ಮನೆಯಿಂದ ಹೊರಕ್ಕೆ ದೂಡವ ಕಾರ್ಯ ಆತನ ಮೂಲಕ ನಡೆಯಿತು.”
ಭವನಾಥ : “ಆಕೆಯನ್ನು ಹೊರಕ್ಕೆ ದೂಡಿದವ ಬೇರೆ ಯಾರೊ ಒಬ್ಬ.”
ಶ್ರೀರಾಮಕೃಷ್ಣರು: “ಆತನ ಅನುಮತಿಯಿಲ್ಲದಿದ್ದರೆ, ಆ ಕಾರ್ಯ ನಡೆಯುತ್ತಿತ್ತೆ? ಏನು ಮಾಡೋದು, ಪರರ ಹೃದಯವನ್ನು ಗೆಲ್ಲಲಾಗದೆ ಹೋದರೆ, ಅದಕ್ಕಾಗಿ ಹಗಲು ಇರುಳು ಪ್ರಾಣಬಿಡಬೇಕೆ? ಯಾವ ಮನಸ್ಸನ್ನು ಭಗವಂತನಿಗೆ ಅರ್ಪಿಸಬೇಕೊ, ಅದನ್ನು ತೆಗೆದುಕೊಂಡು ಹೋಗಿ ಅಲ್ಲಿ ಇಲ್ಲಿ ಬರಿದೆ ವ್ಯಯ ಮಾಡುವುದೆ? ‘ತಾಯೆ! ನರೇಂದ್ರ, ರಾಖಾಲ, ಭವನಾಥ ನನಗೆ ಯಾರೂ ಬೇಕಾಗಿಲ್ಲ; ಕೇವಲ ನೀನೊಬ್ಬಳೆ ಬೇಕು. ಮಾನವ ಜೀವಿಯಿಂದ ನನಗಾಗಬೇಕಾಗಿರುವುದೇನು?’ ಎಂದು ನಾನು ಹೇಳುತ್ತೇನೆ.”
ಆನಂದಮಯಿಯಾದ ಶ್ರೀಚಂಡಿ ಬಂದಾಗ
ನನ್ನ ಮನೆಗೆ
ಎನಿತೊಂದು ಮಂತ್ರಗಳು ನನ್ನ ಕಿವಿಗೆ?
ಎನಿತೆನಿತು ಯೋಗಿಗಳು, ಎನಿತು ಸಂನ್ಯಾಸಿಗಳು
ಬಹರಿಲ್ಲಿಗೆ!
“ಆತನ ಸಾಕ್ಷಾತ್ಕಾರ ದೊರೆತರೆ ಉಳಿದುದೆಲ್ಲ ತಾನಾಗಿಯೆ ದೊರೆಯುತ್ತವೆ. ರೂಪಾಯಿ ಮಣ್ಣೇ, ಮಣ್ಣೇ ರೂಪಾಯಿ; – ಚಿನ್ನ ಮಣ್ಣೇ, ಮಣ್ಣೇ ಚಿನ್ನ, -ಹೀಗೆಂದು ಹೇಳಿ ಅವನ್ನು ತ್ಯಜಿಸಿಬಿಟ್ಟೆ; ಗಂಗಾನದಿಗೆ ಬಿಸಾಡಿಬಿಟ್ಟೆ. ಆಗ ಭಯವಾಯಿತು. ಒಂದು ಪಕ್ಷ ಭಗವತಿ ಲಕ್ಷ್ಮಿ ಕೋಪಿಸಿಕೊಂಡುಬಿಟ್ಟರೆ! ಎಂದು. ಆಕೆಯ ಐಶ್ವರ್ಯವನ್ನು ತಿರಸ್ಕರಿಸಿಬಿಟ್ಟೆ. ನನ್ನ ಗ್ರಾಸಕ್ಕೆ ಆಕೆ ಸೊನ್ನೆ ಹಾಕಿಬಿಟ್ಟರೆ! ಎಂದು. ಆಗ ಪ್ರಾರ್ಥನೆ ಮಾಡಿದೆ: ‘ಹೇ ತಾಯೆ! ನೀನೊಬ್ಬಳು ಬೇಕೆ ವಿನಾ, ಬೇರೆ ಏನೂ ಬೇಕಾಗಿಲ್ಲ’ ಎಂದು. ಆಕೆಯೊಬ್ಬಳು ದೊರೆತರೆ ಉಳಿದುದೆಲ್ಲಾ ಸ್ವಾಭಾವಿಕವಾಗಿಯೆ ದೊರೆಯುತ್ತವೆ ಎಂಬುದು ನನಗೆ ಗೊತ್ತಿದೆ.”
ಭವನಾಥ ನಗುತ್ತ ನಗುತ್ತ: “ಇದು ವ್ಯಾಪಾರಿಯ ಬುದ್ಧಿ!”
ಪರಮಹಂಸರು ನಗುತ್ತ: “ಹೌದು, ಇದು ಸ್ವಲ್ಪ ಅದಕ್ಕೆ ಸೇರಿದುದೆ! ಒಮ್ಮೆ ಭಗವಂತ ಪ್ರಸನ್ನನಾಗಿ ಒಬ್ಬನಿಗೆ ಹೇಳಿದ: ‘ನಿನ್ನ ತಪಸ್ಯ ನೋಡಿ ನನಗೆ ಬಹಳ ಆನಂದವಾಗಿದೆ. ನೀನು ಒಂದು ವರ ಬೇಡಿಕೊ’ ಎಂದು. ಸಾಧಕ ಹೇಳಿದ: ‘ಹೇ ಪ್ರಭು! ಹಾಗಾದರೆ ಈ ವರ ಕೊಡು; ನಾನು ನನ್ನ ಮೊಮ್ಮಕ್ಕಳೊಂದಿಗೆ ಚಿನ್ನದ ತಟ್ಟೆಯಲ್ಲಿ ಊಟಮಾಡುವ ಹಾಗೆ ಅನುಗ್ರಹಿಸು’ ಎಂದು. ಒಂದು ವರದಿಂದಲೆ ಆತನಿಗೆ ಬೇಕಾದುದೆಲ್ಲಾ ದೊರೆತುಬಿಟ್ಟಿತು. ಐಶ್ವರ್ಯ ದೊರೆಯಿತು. ಮಕ್ಕಳು ದೊರೆತುವು. ಮೊಮ್ಮಕ್ಕಳೂ ದೊರೆತುವು!” (ಎಲ್ಲರೂ ನಗುತ್ತಾರೆ.)
ಭಕ್ತರು ಕೊಠಡಿಯಲ್ಲಿ ಕುಳಿತಿದ್ದಾರೆ. ಹಾಜರಾ ವರಾಂಡದಲ್ಲಿ ಕುಳಿತಿದ್ದಾನೆ.
ಪರಮಹಂಸರು ಭಕ್ತರಿಗೆ : “ಹಾಜರಾನಿಗೆ ಏನು ಬೇಕು ಎಂಬುದು ನಿಮಗೆ ಗೊತ್ತೇನು? ಆತನಿಗೆ ಸ್ವಲ್ಪ ಹಣ ಬೇಕು. ಮನೆಯಲ್ಲಿ ಬಡತನ; ಸ್ವಲ್ಪ ಸಾಲ ಇದೆ. ಆತ ಜಪ ಧ್ಯಾನ ಮಾಡುತ್ತಿರುವುದು ಭಗವಂತ ಐಶ್ವರ್ಯ ಕೊಡುತ್ತಾನೆ ಅಂತ.”
ಒಬ್ಬ ಭಕ್ತ: “ಏನು, ಭಗವಂತನು ಭಕ್ತನ ಇಚ್ಛೆಯನ್ನು ಪೂರ್ಣಮಾಡಿ ಕೊಡಲಾರನೆ?”
ಶ್ರೀರಾಮಕೃಷ್ಣರು: “ಆತನ ಇಚ್ಛೆ. ಆದರೆ, ಭಕ್ತನು ಪ್ರೇಮೋನ್ಮತ್ತನಾಗದಿದ್ದರೆ ಆತನ ಹೊರೆಯನ್ನೆಲ್ಲ ಹೊತ್ತುಕೊಳ್ಳಲೊಲ್ಲ. ಚಿಕ್ಕ ಮಕ್ಕಳನ್ನು ಮಾತ್ರವೆ ಅವುಗಳ ಕೈ ಹಿಡಿದುಕೊಂಡು ಹೋಗಿ ಊಟಕ್ಕೆ ಕುಳ್ಳಿರಿಸುತ್ತಾರೆ. ದೊಡ್ಡವರ ವಿಷಯವಾಗಿ ಯಾರು ತಾನೆ ಹಾಗೆ ವರ್ತಿಸುತ್ತಾರೆ! ಭಕ್ತ ತನ್ನ ಯೋಗಕ್ಷೇಮವನ್ನು ತಾನೇ ನೋಡಿಕೊಳ್ಳ ಲಾರದಷ್ಟು ಭಗವತ್ಚಿಂತನೆಯಲ್ಲಿ ತನ್ಮಯನಾಗಿಬಿಟ್ಟರೆ, ಆಗ ಮಾತ್ರ, ಭಗವಂತ, ಆತನ ಇಡಿಯ ಹೊರೆಯನ್ನು ಹೊತ್ತುಕೊಳ್ಳುತ್ತಾನೆ.
“ಹಾಜರಾ ತನ್ನ ಮನೆಯ ಯೋಗಕ್ಷೇಮವನ್ನು ಕೇಳಿ ತಿಳಿದುಕೊಳ್ಳುವುದೆ ಇಲ್ಲ. ರಾಮಲಾಲನಿಗೆ ಹಾಜರಾನ ಮಗ ಹೇಳಿ ಕಳುಹಿಸಿದನಂತೆ: ‘ನಮ್ಮ ತಂದೆಗೆ ಒಮ್ಮೆಗೆ ಇಲ್ಲಿಗೆ ಬಂದು ಹೋಗುವಂತೆ ಹೇಳು. ನಾವು ಅವರನ್ನು ಯಾವುದಕ್ಕೂ ಪೀಡಿಸುವುದಿಲ್ಲ’ ವೆಂದು. ಇದನ್ನು ಕೇಳಿ ನನ್ನ ಕಣ್ಣಿನಲ್ಲಿ ನೀರು ಬಂದೇಬಿಟ್ಟಿತು. ಹಾಜರಾನ ತಾಯಿ ಕೂಡ ರಾಮಲಾಲನಿಗೆ ಹೇಳಿದಳಂತೆ: ‘ನೀನು ಪ್ರತಾಪನಿಗೆ (ಹಾಜರಾ) ಒಮ್ಮೆ ಇಲ್ಲಿಗೆ ಬಂದು ಹೋಗುವಂತೆ ಹೇಳು. ನಿಮ್ಮ ಚಿಕ್ಕಪ್ಪ ಕೂಡ ಇಲ್ಲಿಗೆ ಹೋಗಿಬರುವಂತೆ ಆತನಿಗೆ ಹೇಳಬೇಕೆಂದು ನಾನು ಅವರನ್ನು ಪ್ರಾರ್ಥಿಸಿಕೊಂಡಿರುವುದನ್ನು ನೀನು ಅವರಿಗೆ ತಿಳಿಸು’ ಎಂದು. ನಾನೂ ಆತನಿಗೆ ಹೇಳಿದೆ. ಆದರೆ ಅವನು ಕಿವಿಗೊಡಲಿಲ್ಲ.
“ಏನು, ಹೆತ್ತ ತಾಯಿ ಕಸಕಡ್ಡಿಯೆ! ಚೈತನ್ಯದೇವ ಎಷ್ಟೊಂದು ತನ್ನ ತಾಯಿಗೆ ಹೇಳಿ ಮಾಡಿ ಆಕೆಯಿಂದ ಸಂನ್ಯಾಸ ಸ್ವೀಕಾರಕ್ಕೆ ಅನುಮತಿ ಪಡೆದ. ಶಚಿ 7 ಹೇಳಿದಳಂತೆ: ‘ನಾನು ಕೇಶವ ಭಾರತಿಯನ್ನು 8 ಕತ್ತರಿಸಿ ಹಾಕುತ್ತೇನೆ’ ಎಂದು. ಚೈತನ್ಯದೇವ ಬಹಳವಾಗಿ ಆಕೆಗೆ ಬುದ್ಧಿವಾದವನ್ನು ಇತ್ತ. ಹೇಳಿದ: ‘ತಾಯೆ, ನೀನು ಅನುಮತಿಯನ್ನು ಕೊಡದಿದ್ದರೆ ನಾನು ಮನೆಯನ್ನು ಬಿಟ್ಟು ಹೋಗುವುದಿಲ್ಲ. ಆದರೆ ಸಂಸಾರಿಯಾಗಲು ನನ್ನನ್ನು ನೀನು ಒತ್ತಾಯ ಮಾಡಿದೆಯೊ, ಈ ಶರೀರ ಮಾತ್ರ ಬದುಕಿರದು. ಒಂದು ಪಕ್ಷ ನೀನು ಅನುಮತಿ ಕೊಡುವುದೆ ಆದರೆ ಇಚ್ಛೆ ಬಂದಾಗಲೆಲ್ಲ ನೀನು ನನ್ನನ್ನು ನೋಡಬಹುದು. ನಾನು ಹತ್ತಿರವೆ ಇರಲು ಹೋಗುತ್ತೇನೆ. ಆಗಾಗ ಬಂದು ನೋಡಿ ಹೋಗುತ್ತೇನೆ!’ ಎಂದು. ಆಗ ಮಾತ್ರವೇ ಶಚಿದೇವಿ ಅನುಮತಿ ಕೊಟ್ಟಳಂತೆ. ತಾಯಿ ಬದುಕಿದ್ದಷ್ಟು ದಿವಸನಾರದ ತಪಸ್ಸಿಗೆ ಹೋಗಲಾಗಲಿಲ್ಲ. ತಾಯಿಯ ಸೇವೆ ಮಾಡಿಕೊಂಡಿರಬೇಕಾಗಿತ್ತು. ತಾಯಿ ದೇಹತ್ಯಾಗವಾದ ಮೇಲೇನೆ ಹರಿಯ ಸಾಕ್ಷಾತ್ಕಾರಕ್ಕಾಗಿ ಮನೆಬಿಟ್ಟು ಹೊರಟ.
“ಬೃಂದಾವನಕ್ಕೆ ಹೋಗಿ ಹಿಂದಿರುಗಿ ಬರಲಿಚ್ಛೆಯಾಗಲಿಲ್ಲ. ಅಲ್ಲಿ ಗಂಗಾಮಾಯಿ ಯೊಡನೆ 9 ಇರಲು ಮಾತುಕತೆ ನಡೆಯಿತು. ಎಲ್ಲಾ ಚಾಚೂ ತಪ್ಪದೆ ವ್ಯವಸ್ಥೆಯಾಗಿಬಿಟ್ಟಿತು. ಈ ಕಡೆ ನನ್ನ ಹಾಸಿಗೆ, ಆ ಕಡೆ ಆಕೆಯ ಹಾಸಿಗೆ. ‘ಕಲ್ಕತ್ತಕ್ಕೆ ಹಿಂದಿರುಗುವುದಿಲ್ಲ; ಬೆಸ್ತರ ಮನೆ (ದಕ್ಷಿಣೇಶ್ವರದ) ಅನ್ನ ಇನ್ನೆಷ್ಟು ದಿನ ತಿನ್ನೋದು?’ ಎಂದು ಯೋಚಿಸಿದೆ. ಆಗ ಹೃದೆ ಹೇಳಿದ: ‘ಇದೆಲ್ಲ ನಡೆಯದ ಕಾರ್ಯ, ಕಲ್ಕತ್ತಕ್ಕೆ ಹಿಂದಿರುಗಿ ಹೋಗೋಣ’ ಎಂದು. ನನ್ನನ್ನು ಆತ ಒಂದು ಕಡೆಗೆ ಎಳೆಯಲಾರಂಭಿಸಿದ. ಗಂಗಾಮಾಯಿ ಇನ್ನೊಂದು ಕಡೆಗೆ ಎಳೆಯಲಾರಂಭಿಸಿದಳು. ನನಗೆ ಅಲ್ಲೆ ಇರಬೇಕೆಂಬ ಇಚ್ಛೆ ಬಹಳ. ಅಂಥ ಸಂದಿಗ್ಧ ಸಮಯದಲ್ಲಿ ನನ್ನ ಹೆತ್ತ ತಾಯ ಜ್ಞಾಪಕ ಬಂದಿತು. ಒಡನೆಯೆ ನನ್ನ ಪ್ಲಾನುಗೀನು ಎಲ್ಲ ಬದಲಾಯಿಸಿಬಿಟ್ಟಿತು. ತಾಯಿ ಮುದುಕಿಯಾಗಿದ್ದಳು. ಭಾವಿಸಿದೆ, ‘ಹೆತ್ತ ತಾಯ ಚಿಂತೆ ತಲೆಗೆ ಹತ್ತಿಕೊಂಡಿತೆಂದರೆ ಈಶ್ವರ ದೂರ ಹೋಗಿಬಿಡುತ್ತಾನೆ. ಇಲ್ಲಿ ಇರುವುದಕ್ಕಿಂತ ಆಕೆಯೊಡನೆಯೆ ಹೋಗಿ ಇರುತ್ತೇನೆ. ಅಲ್ಲಿಗೆ ಹೋಗಿ ನಿಶ್ಚಿಂತೆಯಿಂದ ಭಗವಚ್ಚಿಂತನೆ ಮಾಡುತ್ತೇನೆ” ಎಂದು.
(ನರೇಂದ್ರನಿಗೆ): “ನೀನು ಒಂದು ಸ್ವಲ್ಪ ಹಾಜರಾನಿಗೆ ಹೇಳು. ಅಂದು ನನಗೆ ಹೇಳಿದ: ‘ಹ್ಞೂ, ಊರಿಗೆ ಹೋಗಿ ಮೂರುದಿನ ಇದ್ದು ಬರುತ್ತೇನೆ’ ಎಂದು. ಮತ್ತೆ ನೋಡಿದರೆ ಎಂದಿನಂತೆಯೆ!”
(ಭಕ್ತರಿಗೆ): “ಇಂದು ಘೋಷ್ಪಾರಾ ಇವರೇ ಮೊದಲಾದವರ ಮಾತುಕತೆ ಆಡಿ ವ್ಯರ್ಥವಾಗಿ ಕಾಲ ಕಳೆದೆವು. ಗೋವಿಂದ, ಗೋವಿಂದ, ಗೋವಿಂದ! ಈಗ ಸ್ವಲ್ಪ ಹರಿನಾಮ ನಡೆಯಲಿ. ಅಂಬಲಿ ತುಂಬೆಸೊಪ್ಪು ತಿಂದನಂತರ ಸ್ವಲ್ಪ ಮೃಷ್ಟಾನ್ನ ತಿನ್ನೋಣ.”
ನರೇಂದ್ರ ಹಾಡಲಾರಂಭಿಸಿದ:
ಏಕಪುರಾತನ ಪುರುಷ ನಿರಂಜನ
ಪಾದದಿ ಚಿತ್ತವ ನಿಲಿಸೋ.
ಆದಿಸತ್ಯನವ, ಕಾರಣ ಕಾರಣ
ಚರಾಚರದೊಳಗು ಪ್ರಾಣಮಯ.
ನಿತ್ಯ ಅತೀಂದ್ರಿಯ ಚೈತನ್ಯ ಸ್ವರೂಪ
ಹೃದಿಕಂದರದೊಳು ವಿರಾಜಿತ.
ಜ್ಞಾನಪ್ರೇಮ ಪುಣ್ಯಾದಿ ಭೂಷಿತ
ಪ್ರಶಾಂತ ಮೂರುತಿ, ಅನಂತಗುಣಭೂತ.
ಚಿರಕ್ಷಮಶೀಲ, ಮಂಗಳದಾತ,
ಭವಸಾಗರದೊಳು ನಿಕಟಸಹಾಯ,
ಜೀವರೂಪನವ, ಜ್ಯೊತಿರ್ಮಯನು
ಸರ್ವಾಶ್ರಯ ಸಂತಾಪಹರ,
ಪಾಪಪುಣ್ಯಗಳ ಪರಮನ್ಯಾಯವಾನ್
ದಯಾಸಿಂಧು ಮೇಣ್ ಕೃಪಾಮಯ.
ಆತನ ಮಹಿಮೆಯ ನೆನೆವ ತೃಷಿತಮನ
ಕರೆಯುವುದೊಲವಿನ ಕಂಬನಿಯ !
ಅಂಥ ಶ್ರೀಮುಖವ ನೋಡಿ ನಲಿಯೊ ಮನ;
ನಿರಂತರವು ಎದೆ ಹಸಿದಿರಲಿ.
ಧ್ಯಾನ ಪೂಜೆ ಪ್ರಾರ್ಥನೆಯ ರೂಪದಲಿ
ತಿರುಕನವೋಲಿರು ಬಾಗಿಲಲಿ !
ನರೇಂದ್ರ ಮತ್ತೆ ಹಾಡುತ್ತಿದ್ದಾನೆ:
ಉದಯಿಪನದೊ ಚಿದಾಕಾಶದಲ್ಲಿ ಪೂರ್ಣ ಇಂದು
ಪ್ರೇಮಸಿಂಧು ಉಕ್ಕಿ ಹರಿದು ಲೋಕಗಳೇ ನಾಂದು
ತಳಿತಳಿಸುವ ಚಂದ್ರಿಕೆಯಲಿ ಭಕ್ತವೃಂದಗ್ರಹದಲಿ
ಭಕ್ತರೊಡನೆ ಭಕ್ತಸಖನು ಲೀಲಾರಸ ಚಂಚಲ!
ಅದೋ ನೋಡು ಸ್ವರ್ಗದೆದೆಯ ಸಿರಿಬಾಗಿಲೆ ತೆರೆದಿದೆ
ಆನಂದಲಹರಿ ಹರಿದಿದೆ!
ತೀಡುತಿಹುದು ಉದಿತದಿನದ ಮಂದ ಮಧು ಸಮೀರನು;
ಹಿರಿಯೊಲವಿನ ಗಂಧದಲಿ ತೇಲಿಸಿಹುದು ಜಗವನು.
ಅದನು ಹೀರಿ ಯೋಗಿವೃಂದಕೊದಗಿತಾನಂದ!
ಭವಜಲಧಿಯ ತೆರೆಯಮೇಲೆ ನವೋದಯದ ಪದ್ಮ
ಅರಳಿರಲದೆ ತಾಯಿಗಾಯ್ತು ಸಿಂಹಪೀಠ ಸದ್ಮ.
ಝೇಂಕರಿಸಿದೆ ಬಂಡನುಂಡ ಭಕ್ತಭ್ರಮರ ವೃಂದ!
ಪ್ರಸನ್ನವದನತೇಜದಲ್ಲಿ ಭುವನ ಮನವ ಮೋಹಿಸಿಹುದು
ತಾಯ ಮಧುರ ರೂಪ !
ಪದತಲದೆಡೆ ದಲದಲದಲ ನೃತ್ಯ ಶೀಲ ಭಕ್ತವೃಂದ;
ನಿರುಪಮವೀನೋಟ !
ಕಾಣಲವನು ನನ್ನ ಎದೆಗೆ ಶಾಂತಿ ಶಾಂತಿ ಶಾಂತಿ
ಚಿರ ಅನಂತ ಕಾಂತಿ !
ಪ್ರೇಮದಾಸನೊರೆವ; ನಿಮ್ಮ ಇಂಥ ತಾಯ ನುತಿಸಿರಣ್ಣ
ಹಿರಿಯ ಕಿರಿಯರೆಲ್ಲ.
ಪರಮಹಂಸರು ನರ್ತಿಸುತ್ತಿದ್ದಾರೆ. ಪ್ರದಕ್ಷಿಣೆ ಮಾಡುತ್ತ ಪ್ರದಕ್ಷಿಣೆ ಮಾಡುತ್ತ ನರ್ತಿಸು ತ್ತಿದ್ದಾರೆ. ಎಲ್ಲರೂ ಕೂಡಿ ಅವರೊಡನೆ ನರ್ತಿಸುತ್ತಿದ್ದಾರೆ ಮತ್ತು ಹಾಡುತ್ತಿದ್ದಾರೆ. ಬಹಳ ಆನಂದ.
ಎಲ್ಲರೂ ಕೂಡಿ ಹಾಡುತ್ತಿದ್ದುದು ಮುಗಿಯಿತು. ಪರಮಹಂಸರು ಮತ್ತೆ ಹಾಡಲು ಆರಂಭಿಸಿದ್ದಾರೆ:
ಶಿವಸಂಗದೊಳಾನಂದದಿ ತಾಯಿ ಕುಣಿಯುತಿರುವಳು
ದಿವ್ಯಮಧುವ ಕುಡಿದು ಕೂಡ, ಹೆಜ್ಜೆತಪ್ಪದಿರುವಳು….
ಪರಮಹಂಸರಿಗೆ ಮಾಸ್ಟರ್ ಎಲ್ಲರೊಡನೆಯೂ ಕೂಡಿ ಹಾಡುತ್ತಿದ್ದುದನ್ನು ನೋಡಿ ಬಹಳ ಆನಂದ.ಅವರು ನಗುತ್ತ ಮಣಿಗೆ ಹೇಳುತ್ತಿದ್ದಾರೆ: “ಒಂದು ಮೃದಂಗವಿದ್ದಿದ್ದರೆ ಬಹಳ ಚೆನ್ನಾಗಿರುತ್ತಿತ್ತು; ಇನ್ನೂ ಕಳೆ ಕಟ್ಟುತ್ತಿತ್ತು. ಅದು ತಕ್ ತಕ್ ತಕ್ ಧಿನಾ, ದಾಕ್ ದಾಕ್ ದಾ ಧಿನಾ ಎಂದು ಶಬ್ದಮಾಡುತ್ತಿತ್ತು!” ಕೀರ್ತನೆ ಮುಗಿಯುವುದರೊಳಗೆ ಸಂಜೆಯಾಯಿತು.
೧ನೆ ಅಕ್ಟೋಬರ್ ೧೮೮೪, ಆಶ್ವೀಜ ಶುಕ್ಲ ಏಕಾದಶಿ, ಬುಧವಾರ
ಪರಮಹಂಸರು ದಕ್ಷಿಣೇಶ್ವರವನ್ನು ಬಿಟ್ಟು ಅಧರಸೇನನ ಮನೆಗೆ ಹೊರಟಿದ್ದಾರೆ. ಅವರೊಡನೆ ನಾರಾಯಣ ಮತ್ತು ಗಂಗಾಧರ. ಇದ್ದಕ್ಕಿದ್ದ ಹಾಗೆ ಅವರು ಅರ್ಧ ದಾರಿಯಲ್ಲಿ ಭಾವಾವಿಷ್ಟರಾಗಿದ್ದಾರೆ. ಪರಮಹಂಸರು ಭಾವದಲ್ಲಿ : “ನಾನು ಜಪಮಾಲೆ ತಿರುಗಿಸಲೆ? ಥೂ! ಈ ಶಿವ ಪಾತಾಳದಿಂದ ಒಡೆದು ಮೂಡಿದ ಶಿವ; ಸ್ವಯಂಭೂಲಿಂಗ” ಎಂದು ಹೇಳುತ್ತಿದ್ದಾರೆ.
ಅವರು ಅಧರಸೇನನ ಮನೆಗೆ ಬಂದಿದ್ದಾರೆ. ಅಲ್ಲಿ ಅನೇಕ ಭಕ್ತರು ಬಂದು ಸೇರಿದ್ದಾರೆ. ಕೇದಾರ, ವಿಜಯ, ಬಾಬುರಾಮ ಮೊದಲಾದವರು ಕುಳಿತಿದ್ದಾರೆ. ಕೀರ್ತನೆಗಾರ ವೈಷ್ಣವಚರಣ ಬಂದಿದ್ದಾನೆ. ಪರಮಹಂಸರ ಆಜ್ಞೆಗನುಸಾರ ಅಧರಸೇನನಿಗೆ ತನ್ನ ಆಫೀಸಿನಿಂದ ಹಿಂದಿರುಗಿ ಬಂದ ನಂತರ ಪ್ರತಿ ದಿವಸವೂ ಹೋಗಿ ವೈಷ್ಣವಚರಣನ ಕೀರ್ತನೆ ಕೇಳುವ ಅಭ್ಯಾಸ. ವೈಷ್ಣವಚರಣನ ಸಂಕೀರ್ತನೆ ಬಹಳ ಇಂಪು. ಇಂದೂ ಆತನ ಸಂಕೀರ್ತನೆ. ಪರಮಹಂಸರು ಅಧರಸೇನನ ಬೈಠಕ್ಖಾನೆಯನ್ನು ಪ್ರವೇಶಿಸುತ್ತಾರೆ. ಭಕ್ತರೆಲ್ಲ ಎದ್ದುನಿಂತು ಅವರಿಗೆ ಗೌರವವನ್ನು ತೋರಿಸಿದರು. ಪರಮಹಂಸರು ಮುಗುಳು ನಗುತ್ತ ಆಸನದಲ್ಲಿ ಕುಳಿತುಕೊಂಡರು. ಬಳಿಕ ಭಕ್ತರೂ ಕುಳಿತುಕೊಂಡರು. ಕೇದಾರ ಮತ್ತು ವಿಜಯ ಪರಮಹಂಸರಿಗೆ ಪ್ರಣಾಮ ಮಾಡಿದ ನಂತರ ಅವರಿಬ್ಬರಿಗೂ ಪ್ರಣಾಮ ಮಾಡುವಂತೆ ಪರಮಹಂಸರು ನಾರಾಯಣನಿಗೂ ಮತ್ತು ಬಾಬುರಾಮನಿಗೂ ಹೇಳಿದರು. ಮತ್ತೆ ಹೇಳಿದರು: (ಕೇದಾರ ಮತ್ತು ವಿಜಯನಿಗೆ) “ಭಗವಂತನಲ್ಲಿ ಭಕ್ತಿಯುಂಟಾಗುವಂತೆ ಇವರಿಗೆ ಆಶೀರ್ವಾದ ಮಾಡಿ” ಎಂದು. ನಾರಾಯಣನನ್ನು ತೋರಿಸಿ ಹೇಳಿದರು: “ಈತ ಅತ್ಯಂತ ಸರಳಜೀವಿ” ಎಂದು. ಭಕ್ತರೆಲ್ಲ ನಾರಾಯಣ ಮತ್ತು ಬಾಬುರಾಮನನ್ನು ದೃಷ್ಟಿಸಿ ನೋಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಕೇದಾರಾದಿ ಭಕ್ತರಿಗೆ: “ನಿಮ್ಮನ್ನೆಲ್ಲ ರಸ್ತೆಯಲ್ಲಿಯೆ ನೋಡಿದ್ದಾಯಿತು, – ಇಲ್ಲದೆ ಇದ್ದರೆ ನೀವೆಲ್ಲ ದಕ್ಷಿಣೇಶ್ವರಕ್ಕೆ ಹೋಗಿ ಮುಖ ಒಣಗಿಸಿಕೊಂಡು ಕುಳಿತಿರಬೇಕಾಗುತ್ತಿತ್ತು. ಭಗವಂತನ ಇಚ್ಛೆಯಿಂದ ದಾರಿಯಲ್ಲಿಯೆ ನೋಡಿದ್ದಾಗಿಬಿಟ್ಟಿತು.”
ಕೇದಾರ ಕೈಗಳನ್ನು ಜೋಡಿಸಿ ವಿನಯದಿಂದ: “ಭಗವಂತನ ಇಚ್ಛೆಯೆ, – ಎಲ್ಲ ತಮ್ಮ ಇಚ್ಛೆ!”
ಪರಮಹಂಸರು ನಗುತ್ತಿದ್ದಾರೆ.
ಈಗ ಕೀರ್ತನೆ ಆರಂಭವಾಗಿದೆ. ರಾಧಾಕೃಷ್ಣರು ಒಬ್ಬರನೊಬ್ಬರು ಸಂಧಿಸಿದ ಭಾಗ ಆರಂಭವಾದದ್ದೆ ತಡ, ಪರಮಹಂಸರು ಪ್ರೇಮಾನಂದದಿಂದ ನರ್ತಿಸುತ್ತಿದ್ದಾರೆ. ತತ್ಕ್ಷಣವೆ ಭಕ್ತರೂ ಅವರನ್ನು ಸುತ್ತುಗಟ್ಟಿ ಅವರೊಡನೆ ಹಾಡುತ್ತ ನರ್ತಿಸುತ್ತಿದ್ದಾರೆ. ಕೀರ್ತನೆ ಮುಗಿದ ಮೇಲೆ ಎಲ್ಲರೂ ಕುಳಿತುಕೊಂಡಿದ್ದಾರೆ. ಪರಮಹಂಸರು ವೈಷ್ಣವಚರಣನನ್ನು ತೋರಿಸಿ ವಿಜಯನಿಗೆ: “ಈತ ಬಹಳ ಚೆನ್ನಾಗಿ ಹಾಡುತ್ತಾನೆ” ಎಂದು ಹೇಳಿ, ‘ಗೌರಾಂಗ ಸುಂದರ’ ಎಂಬ ಹಾಡನ್ನು ಹಾಡುವಂತೆ ಹೇಳಿದರು.
ವೈಷ್ಣವಚರಣ ಹಾಡುತ್ತಿದ್ದಾನೆ:
ಶ್ರೀಗೌರಾಂಗ ಸುಂದರ ನವ ನಟವರ,
ತಪ್ತ ಕಾಂಚನ ಕಾಯಬಂಧುರ ನರವರ….
ಹಾಡು ಮುಗಿಯಿತು. ಪರಮಹಂಸರು ವಿಜಯನಿಗೆ: “ಹೇಗಿತ್ತು?” ಎಂದು ಕೇಳಿದರು.
ಪರಮಹಂಸರು ಗೌರಾಂಗನ ಮೇಲಿನ ಒಂದು ಹಾಡನ್ನು ಹಾಡಲಾರಂಭಿಸಿದ್ದಾರೆ. ಮಾಸ್ಟರ್ ಕೂಡ ಅವರೊಡನೆ ಹಾಡುತ್ತಿದ್ದಾನೆ.
ಪರಮಹಂಸರು ಹಾಡಿ ಮುಗಿಸಿದ್ದಾರೆ – ವೈಷ್ಣವಚರಣ ಮತ್ತೆ ಹಾಡಲು ಆರಂಭಿಸಿದ್ದಾನೆ:
ಹರಿನಾಮವ ನುಡಿ, ಕೊಳಲೆ, –ನಿರಂತರ
ಹರಿನಾಮವ ನುಡಿಯೊ.
ಹರಿಯ ನಾಮವನು ನಿತ್ಯವು ನೆನೆದರೆ
ಹಿರಿಯ ಸತ್ಯದರಿವಾಗುವುದೊ.
ಬೆಟ್ಟದಂಥ ಎಡರೆಲ್ಲವು ಕರಗಿ
ನಿಮಿಷದಲ್ಲಿ ನೀರಾಗುವುದೊ.
ಆತನ ಕೃಪೆ ನಿಮಗೊಮ್ಮೆಗೆ ದೊರೆತರೆ
ಭವದುಃಖದ ಭಯವೆಲ್ಲಿಯದೊ?
ಅವನ ನೆನೆವುದೇ ಪರಮ ಸಂಪದವು,
ಇದಕೂ ಮಿಗಿಲಿನ್ನೇನಿಹುದೊ?
ಆತನ ನೆನೆಯದೆ ನನ್ನೀ ದಿನಗಳು
ಬರಿದೆ ಬರಿದೆ ಹಿಂದೋಡಿವೆ!
ತಳಗಾಣದ ಮುನ್ನೀರಿನ ಹರವೊಳು
‘ನಾ ಮುಳುಗದಿರಲಿ’ ಎನುವೆ;
ವೈಷ್ಣವಚರಣ ಮತ್ತೆ ಹಾಡುತ್ತಿದ್ದಾನೆ:
ಶ್ರದ್ಧೆಯ ಸರೋವರದಿ ತಾಯನಾಮದ ನೌಕೆ
ತೇಲುತಿದೆ ನೋಡು!
ಗುರುಕರುಣೆಯಲಿ ಕಲಿತ ಸಾಧನಾದಿಗಳಿಂದ
ಭವಜಲಧಿ ಕೂಲವನು ಸೇರಬಹುದು.
ಮೃತ್ಯುಂಜಯನೆ ತಾ ಹುಟ್ಟು ಹಾಕುತಿರಲು,
ಬಿರುಗಾಳಿಯಲಿ ನೌಕೆ ಮುಳುಗಿಹೋಗುವುದೆಂಬ
ಭಯವೇಕೆ ನಿನಗೆ,
ತಾಯಪಾದವ ಮಾತ್ರ ನಂಬಿದವಗೆ?
ತಾಯಿ ನಿಸ್ತಾರಕ ಶ್ರೀನಾಮವನು ನಿತ್ಯವೂ ನುತಿಸೊ-
ನೀನೆ ಸ್ವರ್ಗ, ನೀನೇ ಮರ್ತ್ಯ, ನೀನೆಯೆ ಪಾತಾಳ
ದ್ವಾದಶಗೋಪಾಲ ಮತ್ತೆ ಹರಿಹರಬ್ರಹ್ಮಾದಿಗಳಿಗೆ
ನಿನ್ನ ಬಸಿರೆ ಮೂಲ!
ದಶಾಽವತಾರಿ ನೀನೆ, ದಶಮಹಾವಿದ್ಯೆ ನೀನೆ,
ತ್ರೈಜಗವೇ ನಿನ್ನದು!
ಚಲ-ಅಚಲ, ಸ್ಥೂಲ-ಸೂಕ್ಷ್ಮ
ಸೃಷ್ಟಿ-ಸ್ಥಿತಿ-ಪ್ರಲಯ ರೂಪಿ,
ಕಾಯ್ವ ಭಾರ ನಿನ್ನದು
ನಿನಗೆ ನೀನೆ ಶಕ್ತಿಯಾದ, ಸರ್ವಶಕ್ತಿಧಾರಿಣೀ
ಪಾರುಗಾಣಿಸೆನ್ನನು.
ಪರಮಹಂಸರು ಗಾಯಕನೊಡನೆ ಮತ್ತೆ ಮತ್ತೆ ಈ ಕೆಳಗಿನ ಚರಣವನ್ನು ಹಾಡುತ್ತಿದ್ದಾರೆ.
ಚಲ-ಅಚಲ, ಸ್ಥೂಲ-ಸೂಕ್ಷ್ಮ
ಸೃಷ್ಟಿ-ಸ್ಥಿತಿ-ಪ್ರಲಯ ರೂಪಿ.
ಕಾಯ್ವ ಭಾರ ನಿನ್ನದು!
ನಿನಗೆ ನೀನೆ ಶಕ್ತಿಯಾದ ಸರ್ವಶಕ್ತಿಧಾರಿಣೀ
ಪಾರುಗಾಣಿಸೆನ್ನನು
ಕೀರ್ತನೆಯ ಮಂಡಲಿ ಮತ್ತೆ ಹಾಡಲು ಆರಂಭಿಸಿದೆ:
ವಾಯು ಅಂಧಕಾರ ಆದಿ ಶೂನ್ಯ ಆಕಾಶ
ರೂಪ ದಿಕ್ ದಿಗಂತರ ನಿನ್ನಿಂದಲೆ ಪ್ರಕಾಶ.
ಬ್ರಹ್ಮವಿಷ್ಣು ಆದಿ ಅಮರ ವೃಂದ
ನಿನ್ನ ಶಕ್ತಿಪ್ರಕಾಶ ತರಂಗ ಛಂದ.
ಇಡೆ ಪಿಂಗಳೆ ಸುಷುಮ್ನೆ ವಜ್ರೆ ಚಿತ್ರೆ ಎಲ್ಲ
ಕ್ರಮಕ್ರಮದಿ ಎಚ್ಚೆತ್ತಿವೆ ಸಹಸ್ರೆಯಿಂದ.
ಚಿತ್ರಾಣಿಯ ಮಧ್ಯೆ ಮೇಲೆ ಇಹವು ಪದ್ಮ ಪಂಕ್ತಿ ಪಂಕ್ತಿ
ಶುಕ್ಲವರ್ಣ ಸ್ವರ್ಣವರ್ಣ ವಿದ್ಯುತಾದಿಯಾಗಿ.
ಪದ್ಮವೆರಡು ಅರಳಿವೆ. ಪದ್ಮವೊಂದು ಮುಚ್ಚಿದೆ
ಅಧೋಮುಖದಿ ಊರ್ಧ್ವ ಮುಖದಿ ಪದ್ಮೆವೆರಡು ಇಹವು ಜೋಡಿ;
ವಿಹರಿಸುತಿಹೆ ನೀನಲ್ಲಿ ಹಂಸರೂಪದಿ
ಆಧಾರದಿ ತಾಯಿ ನೀನೆ ಕುಲಕುಂಡಲಿನೀ.
ಅದಕೆ ಮೇಲೆ ನಾಭಿಸ್ಥಲದಿ ಮಣಿಪುರದಾ ನಾಮದಿಂದೆ
ದಶದಲದಾ ರಕ್ತವರ್ಣ ಪದ್ಮವಿಹುದು ಅಲ್ಲಿ ಒಂದೆ.
ನಿನ್ನ ಶಕ್ತಿ-ಅನಲ ಇಹುದು ಆ ಪದ್ಮದಲ್ಲಿ
ಅನಲ ಅದು ನಿವೃತ್ತಿಯಾಗೆ ಎಲ್ಲ ಶೂನ್ಯದಲ್ಲಿ.
ಹೃದಿಪದ್ಮದಿ ಆಕಾಶದ ಮಾನಸ ಸರೋವರದಲಿ
ತೇಲುತಿದೆ ಅನಾಹತ ಪದ್ಮ ಅದರ ಮೇಗಡೆ;
ಸುವರ್ಣವರ್ಣ ದ್ವಾದಶದಲ ಅಲ್ಲಿ ಶಿವತ್ರಾಣ,
ಆ ಪದ್ಮದಿ ನಿನ್ನ ಶಕ್ತಿ ಜೀವ ಮೇಣ್ಪ್ರಾಣ.
ಅದಕೆ ಮೇಲೆ ಕಂಠದಲ್ಲಿ ಧೂಮ್ರವರ್ಣ ಪದ್ಮ
ಷೋಡಶದಲ ಅದರ ಹೆಸರು ವಿಶುದ್ಧಾಖ್ಯ ಪದ್ಮ
ಆ ಪದ್ಮದಿ ನಿನ್ನ ಶಕ್ತಿ ತಾನಾಗಿದೆ ಆಕಾಶ
ರುದ್ಧವಾಗಲಾ ಆಕಾಶ ಸಕಲವಹುದು ಆಕಾಶ.
ಅದಕೆ ಮೇಲೆ ಶಿರದ ಮಧ್ಯೆ ಪದ್ಮವಿಹುದು ಸಹಸ್ರದಲ
ಗುರುದೇವನ ಸ್ಥಾನವೆ ಅದು ಅತಿ ಗುಹ್ಯಸ್ಥಲ
ಆ ಪದ್ಮದಿ ಬಿಂಬರೂಪದಿ ವಿರಾಜಿಸಿಹನು ಪರಮ ಪಿನಾಕಿ
ಶುಕ್ಲವರ್ಣ ಸಹಸ್ರದಲ ಪಂಕಜದಲಿ ಒಬ್ಬನೆ ಏಕಾಕಿ.
ಅಲ್ಲೆ ಇಹುದು ಬ್ರಹ್ಮರಂಧ್ರ ಎಲ್ಲಿಯೊ ಶಿವನ ಬಿಂಬರೂಪ,
ಅಲ್ಲಿಗೇರಿ ಹೋಗೆ ನೀನು ಶಿವತಾಳುವ ಸ್ವೀಯರೂಪ
ಆಗಲೆ ನೀ ಶಿವಸಂಗದ ಕ್ರೀಡೆಯಲ್ಲಿ ವಿಹರಿಪೆ,
ಕ್ರೀಡೆ ಮುಗಿಯೆ ಶಿವನು ಮತ್ತೆ ತಿರುಗುವನಾ ಬಿಂಬರೂಪಕೆ.
ಕೇದಾರ ಮತ್ತು ಕೆಲವು ಭಕ್ತರು ಮೇಲಕ್ಕೆದ್ದರು-ಮನೆಗೆ ಹೋಗುತ್ತಾರೆ. ಕೇದಾರ ಪರಮಹಂಸರಿಗೆ ಪ್ರಣಾಮಮಾಡಿದ ಮತ್ತು “ಹೋಗಿ ಬರಲೆ?” ಎಂದು ಕೇಳಿದ.
ಪರಮಹಂಸರು: “ನೀನು ಅಧರನಿಗೆ ತಿಳಿಸದೆ ಹೋಗುತ್ತೀಯೆ? ಅದು ಅಸಭ್ಯತೆಯನ್ನು ತೋರಿಸುವುದಲ್ಲವೆ?”
ಕೇದಾರ: “ ‘ತಸ್ಮಿನ್ ತುಷ್ಟೇ ಜಗತ್ ತುಷ್ಟಮ್.’ ನೀವೂ ಇಲ್ಲಿಗೆ ಬಂದದ್ದರಿಂದ ನಾವೂ ಬಂದೆವು – ನನಗೆ ಸ್ವಲ್ಪ ದೇಹ ಸೌಖ್ಯವಿಲ್ಲ – ಮದುವೆ ಮುಂಜಿಗಾಗಿ ಸ್ವಲ್ಪ ಸಮಾಜಕ್ಕೆ ಹೆದರಬೇಕಾದ ಭಯ – ನನಗಾಗಲೆ ಒಂದು ಸಲ ಏಟು ಬಿದ್ದಿದೆ.”
ವಿಜಯ: “ಇವರನ್ನು ಇಲ್ಲಿಯೆ ಬಿಟ್ಟುಹೋಗೋದು?”
ಆ ಸಮಯಕ್ಕೆ ಸರಿಯಾಗಿ ಅಧರಸೇನ ಪರಮಹಂಸರನ್ನು ಒಳಕ್ಕೆ ಕರೆದುಕೊಂಡು ಹೋಗಲು ಬಂದ. ಒಳಗೆ ಎಲೆ ಹಾಕಿದೆ. ಪರಮಹಂಸರು ಮೇಲಕ್ಕೆ ಎದ್ದರು. ಕೇದಾರ ಮತ್ತು ವಿಜಯನನ್ನು ಸಂಬೋಧಿಸಿ ಹೇಳಿದರು: “ಬನ್ನಿ, ನನ್ನೊಡನೆ ಬನ್ನಿ” ಎಂದು. ವಿಜಯ, ಕೇದಾರ ಮತ್ತು ಉಳಿದ ಭಕ್ತರು ಪರಮಹಂಸರೊಡನೆ ಕುಳಿತು ಪ್ರಸಾದ ಸ್ವೀಕರಿಸಿದರು.
ಶ್ರೀರಾಮಕೃಷ್ಣರು ಪ್ರಸಾದ ಸ್ವೀಕರಿಸಿದ ನಂತರ ಮತ್ತೆ ಬೈಠಕ್ಖಾನೆಯಲ್ಲಿ ಕುಳಿತು ಕೊಂಡಿದ್ದಾರೆ. ವಿಜಯ, ಕೇದಾರ ಮತ್ತು ಉಳಿದ ಭಕ್ತರು ಅವರ ಸುತ್ತಲೂ ಕುಳಿತು ಕೊಂಡಿದ್ದಾರೆ. ಕೇದಾರ ಕೈಮುಗಿದುಕೊಂಡು ಬಹಳ ನಮ್ರತೆಯಿಂದ ಪರಮಹಂಸರಿಗೆ ನಿವೇದಿಸಿಕೊಳ್ಳುತ್ತಿದ್ದಾನೆ: “ಇಲ್ಲಿ ಊಟಮಾಡಲು ಅನುಮಾನ ಪಡುತ್ತಿದ್ದುದಕ್ಕಾಗಿ ನನ್ನನ್ನು ಕ್ಷಮಿಸಿ” ಎಂದು. ಪರಮಹಂಸರೆ ಇಲ್ಲಿ ಊಟಮಾಡಲು ಸಿದ್ಧರಾಗಿರುವಾಗ ತಾನು ಎತ್ತಲ ಕಂತೆ ಎಂದು ಕೇದಾರ ಬಹುಶಃ ಭಾವಿಸಿರಬೇಕು.
ಕೇದಾರ ಹುದ್ದೆಯಲ್ಲಿದ್ದುದು ಢಾಕಾದಲ್ಲಿ. ಆತನಿಗೆ ಅಲ್ಲಿ ಅನೇಕ ಭಕ್ತರಿದ್ದಾರೆ. ಅವರು ಸಂದೇಶ ಮೊದಲಾದ ವಿವಿಧ ಭಕ್ಷ್ಯಭೋಜ್ಯಗಳನ್ನು ಆತನಿಗೆಂದು ತರುವ ವಾಡಿಕೆ. ಕೇದಾರ ಆ ವಿಷಯಗಳನ್ನೆಲ್ಲ ಕುರಿತು ಪರಮಹಂಸರಿಗೆ ನಿವೇದನೆ ಮಾಡಿಕೊಳ್ಳುತ್ತಿದ್ದಾನೆ.
ಕೇದಾರ ವಿನಯದಿಂದ: “ಜನರು ಬಹಳವಾಗಿ ತಿಂಡಿ ತೀರ್ಥಗಳನ್ನು ತಾವಾಗಿಯೆ ತರುವರು. ಪ್ರಭು, ಏನು ಮಾಡಲಿ ನಾನು? ಅಪ್ಪಣೆ ಕೊಡಿಸಿ.”
ಶ್ರೀರಾಮಕೃಷ್ಣರು: “ಭಕ್ತನಾಗಿದ್ದರೆ ಆತ ಚಂಡಾಲನಾಗಿದ್ದರೂ ಆತನ ಕೈಯಿಂದ ಅನ್ನ ತಿನ್ನಬಹುದು. ಏಳು ವರ್ಷಗಳ ಕಾಲ ಉನ್ಮಾದಾವಸ್ಥೆಯಲ್ಲಿ ಇದ್ದ ನಂತರ ಆ ದೇಶಕ್ಕೆ (ಕಾಮಾರಪುಕುರಕ್ಕೆ) ಹೋದೆ.
“ಆಗಿನದು ಎಂಥ ಅವಸ್ಥೆ; ಆಗ ಸೂಳೆ ಕೂಡ ತನ್ನ ಕೈಯಿಂದಲೆ ತಿನ್ನಿಸಿಬಿಟ್ಟಳು! ಆದರೆ ಈಗ ನನ್ನ ಕೈಯಲ್ಲಿ ಆಗುವುದಿಲ್ಲ.”
ಕೇದಾರ ಇನ್ನೇನು ಪರಮಹಂಸರಿಂದ ಬೀಳ್ಕೊಂಡು ಹೊರಡುವುದರಲ್ಲಿದ್ದ. ಕೇದಾರ ಮೆತ್ತಗೆ: “ಪ್ರಭು, ನನ್ನಲ್ಲಿ ತಾವು ಸ್ವಲ್ಪ ಶಕ್ತಿಸಂಚಾರಮಾಡಿ. ಅಲ್ಲಿಗೆ ಅನೇಕರು ಬರುತ್ತಾರೆ. ನನಗೆ ಏನು ತಾನೆ ಗೊತ್ತು?”
ಪರಮಹಂಸರು: “ಎಲ್ಲಾ ದೊರಕಿಬಿಡುತ್ತದೆ. ಮನಸ್ಸು ಹೃತ್ಪೂರ್ವಕವಾಗಿ ಭಗ ವಂತನ ಕಡೆಗೆ ಹರಿಯುತ್ತಿದ್ದರೆ ಎಲ್ಲ ದೊರೆತುಬಿಡುತ್ತದೆ.”
ಬಂಗವಾಸಿ ಪತ್ರಿಕೆಯ ಸಂಪಾದಕ ಯೋಗೇಂದ್ರ ಕೊಠಡಿಗೆ ಬಂದು ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡ. ಆತನೊಡನೆ ಸಾಕಾರ ನಿರಾಕಾರದ ಸಂಬಂಧವಾಗಿ ಮಾತುಕತೆ ಆರಂಭವಾಯಿತು.
ಪರಮಹಂಸರು: “ಆತ ಸಾಕಾರ, ನಿರಾಕಾರ ಮತ್ತು ಏನೇನೊ, ಅದು ನಮಗೆ ಗೊತ್ತಾಗುವುದಿಲ್ಲ. ಸುಮ್ಮನೆ ನಿರಾಕಾರ ಎಂದು ಹೇಳಿಬಿಟ್ಟರೆ ಎಂತಾದೀತು?”
ಯೋಗೇಂದ್ರ: “ಇದು ಬ್ರಾಹ್ಮಸಮಾಜದ ಒಂದು ವೈಶಿಷ್ಟ್ಯ. ಅಲ್ಲಿನ ಒಂದು ಹನ್ನೆರಡು ವಯಸ್ಸಿನ ಬಾಲಕನಿಗೂ ನಿರಾಕಾರವೇ ಆದರ್ಶ! ಆದಿ ಸಮಾಜದವರು ಸಾಕಾರವನ್ನು ಅಷ್ಟೊಂದು ನಿಕೃಷ್ಟ ದೃಷ್ಟಿಯಿಂದ ನೋಡುವುದಿಲ್ಲ. ಸದ್ಗೃಹಸ್ಥರ ಮನೆಗಳಲ್ಲಿ ನಡೆಯುವ ಪೂಜೆಪುರಸ್ಕಾರಗಳಿಗೆ ಹೋಗಲು ಅವರಿಗೆ ಅನುಮತಿ ಇದೆ.”
ಪರಮಹಂಸರು ನಗುತ್ತ: “ಈತ ಚೆನ್ನಾಗಿ ವರ್ಣಿಸುತ್ತಾನೆ. ಬಾಲಕನಿಗೂ ನಿರಾಕಾರದ ಆದರ್ಶ ಎಂದು!”
ಅಧರಸೇನ: “ಶಿವನಾಥಬಾಬು ಸಾಕಾರವನ್ನು ಒಪ್ಪುವುದಿಲ್ಲ.”
ವಿಜಯ: “ಆತ ಸರಿಯಾಗಿ ತಿಳಿದುಕೊಳ್ಳದೆ ಇರುವುದರಿಂದ, (ಪರಮಹಂಸರನ್ನು ತೋರಿಸಿ) ಇವರು ಹೇಳುತ್ತಾರಲ್ಲ, ‘ಗೋಸುಂಬೆಗೆ ಒಮ್ಮೊಮ್ಮೆ ಈ ಬಣ್ಣ, ಒಮ್ಮೊಮ್ಮೆ ಆ ಬಣ್ಣ. ಆದರೆ ಆ ಮರದ ಕೆಳಗೆ ವಾಸಿಸುವವನಿಗೆ ಅದರ ನಿಜಸ್ವರೂಪ ಚೆನ್ನಾಗಿ ಗೊತ್ತಿದೆ’ ಎಂದು.
“ನಾನು ಧ್ಯಾನ ಮಾಡುತ್ತ ಮಾಡುತ್ತ ಒಮ್ಮೆ ಪರದೆಯ ಮೇಲಿನ ಚಿತ್ರಗಳಂಥ ಒಂದು ದೃಶ್ಯವನ್ನು ಕಂಡೆ. ಅದರಲ್ಲಿ ಎಷ್ಟೊಂದು ದೇವತೆಗಳು! ಮತ್ತು ಅವರು ಏನೇನು ಮಾತನಾಡಿದರು ಅಂತ! ನನ್ನ ಮನಸ್ಸಿನಲ್ಲೆ ನಾನು: ‘ಪರಮಹಂಸರ ಹತ್ತಿರ ಹೋಗಿ ತಿಳಿಸುವೆ. ಆಗ ಸತ್ಯ ಗೊತ್ತಾಗುತ್ತದೆ’ ಎಂದು ಭಾವಿಸಿದೆ.
ಪರಮಹಂಸರು: “ನೀನು ನೋಡಿದ್ದು ಯಥಾರ್ಥ.”
ಕೇದಾರ: “ಭಕ್ತರಿಗಾಗಿ ಸಾಕಾರ. ಭಕ್ತನು ಪ್ರೇಮದ ದೆಸೆಯಿಂದ ಸಾಕಾರವನ್ನು ನೋಡುತ್ತಾನೆ. ಧ್ರುವ ಭಗವಂತನ ದರ್ಶನ ಮಾಡಿದಾಗ : ‘ನಿನ್ನ ಕರ್ಣಕುಂಡಲವೇಕೆ ತೂಗಾಡುವುದು!’ ಎಂದು ಕೇಳಿದ. ಭಗವಂತ: ‘ನೀನು ತೂಗಾಡಿಸಿದರೆ ಅವು ತೂಗಾಡುತ್ತವೆ’ ಎಂದು ಹೇಳಿದ.”
ಪರಮಹಂಸರು: “ಎಲ್ಲವನ್ನು ಒಪ್ಪಬೇಕು-ನಿರಾಕಾರ ಸಾಕಾರ ಎಲ್ಲವನ್ನೂ ಒಪ್ಪ ಬೇಕು. ಕಾಳೀದೇವಾಲಯದಲ್ಲಿ ಕುಳಿತು ಧ್ಯಾನ ಮಾಡುತ್ತ ಧ್ಯಾನ ಮಾಡುತ್ತ ಇದ್ದ ಹಾಗೆ ನನ್ನ ಮನಸ್ಸಿನಲ್ಲಿ ಒಮ್ಮೆ ಸೂಳೆ ರಮಣಿಯ ರೂಪು ಎದ್ದಿತು. ಆಗ ಹೇಳಿದೆ: ‘ಹೇ ತಾಯೆ, ನೀನೆ ಈ ರೂಪಿನಲ್ಲಿ ಇದ್ದೀಯೆ’ ಎಂದು. ಅದಕ್ಕಾಗಿಯೆ ನಾನು ಹೇಳುವುದು ಎಲ್ಲವನ್ನು ಒಪ್ಪಬೇಕು ಎಂದು. ಆತ ಯಾವ ರೂಪದಿಂದ ನಮಗೆ ಕಾಣಿಸಿಕೊಳ್ಳುವನು, ಯಾವ ರೂಪದಿಂದ ನಮ್ಮ ಹತ್ತಿರ ಬರುವನು ಎಂಬುದನ್ನು ಹೇಳಲಾಗುವುದಿಲ್ಲ.”
ಪರಮಹಂಸರು ಹಾಡುತ್ತಿದ್ದಾರೆ:
ನಿರಂತರವು ಹಿರಿಯೊಲವಿನೊಳದ್ದಿದ
ಫಕೀರನೊಬ್ಬನು ಬಂದಿಹನು….
ವಿಜಯ: “ಆತನಿಗೆ ಅನಂತಶಕ್ತಿ, – ಇಚ್ಛೆ ಬಂದರೆ ಬೇರೆ ರೂಪಿನಲ್ಲಿ ಕಾಣಿಸಿಕೊಳ್ಳ ಲಾರನೆ? ಏನಾಶ್ಚರ್ಯ ಇದು! ಮಾನವ ಒಂದು ರೇಣುವಿನ ರೇಣು ಮಾತ್ರ. ಈತ ಭಗವಂತನ ಸ್ವರೂಪವನ್ನು ನಿರ್ಧರಿಸಲು ಹೋಗುವುದು!”
ಪರಮಹಂಸರು: “ಸ್ವಲ್ಪ ಗೀತೆ, ಸ್ವಲ್ಪ ಭಾಗವತ, ಸ್ವಲ್ಪ ವೇದಾಂತ ಓದಿ ಜನರು ನಾವು ಎಲ್ಲವನ್ನೂ ಅರೆದು ಕುಡಿದುಬಿಟ್ಟಿದ್ದೇವೆ ಎಂದು ಭಾವಿಸುತ್ತಾರೆ ! ಸಕ್ಕರೆ ಗುಡ್ಡಕ್ಕೆ ಒಂದು ಇರುವೆ ಹೋಯಿತು. ಒಂದು ಕಣ ಸಕ್ಕರೆ ತಿನ್ನುವುದರಲ್ಲಿಯೇ ಅದರ ಹೊಟ್ಟೆ ತುಂಬಿಹೋಯಿತು. ಇನ್ನೊಂದು ಕಣ ಸಕ್ಕರೆಯನ್ನು ಬಾಯಲ್ಲಿ ಕಚ್ಚಿಕೊಂಡು ತನ್ನ ಗೂಡಿಗೆ ಹಿಂದಿರುಗುತ್ತಿತ್ತು. ಹಿಂದಿರುಗುವಾಗ ಅದು ‘ಮುಂದಿನ ಸಲ ಬಂದು ಆ ಗುಡ್ಡವನ್ನೇ ಗೂಡಿಗೆ ಸಾಗಿಸಿಬಿಡುತ್ತೇನೆ!’ ಎಂದು ಯೋಚಿಸಿತು.” (ಎಲ್ಲರೂ ನಗುತ್ತಾರೆ.)
1. ಬ್ರಾಹ್ಮಸಮಾಜದ ಆದರ್ಶ ಲೌಕಿಕ ಮತ್ತು ಆಧ್ಯಾತ್ಮಿಕಗಳ ಸಮ್ಮಿಶ್ರಣ. ಅದನ್ನು ಪರಮಹಂಸರು ಜೋನಿ, ಗಟ್ಟಿ ಎಂದು ಬೆಲ್ಲದ ವಿಧಗಳ ರೂಪಕ ರೀತಿಯಲ್ಲಿ ಸೂಚಿಸಿದ್ದಾರೆ.
2. ಕೇದಾರನಾಥ ಚಟ್ಟೋಪಾಧ್ಯಾಯ, ಪರಮಭಕ್ತ; ಸರಕಾರೀ ಕೆಲಸದ ಮೇಲೆ ಢಾಕಾದಲ್ಲಿದ್ದ.
3. ಭಗವಂತನಿಗೆ ಅರ್ಪಿಸುವ ಮದ್ಯಕ್ಕೆ ‘ಕಾರಣ’ ಎಂದು ಹೆಸರು.
4. ಪರಮಹಂಸರ.
5. ಹೃದೆ, ಅಂದರೆ ಹೃದಯ ಮುಖರ್ಜಿ, ಈತ ಶ್ರೀರಾಮಕೃಷ್ಣರ ತಂಗಿಯ ಮಗ. ಪರಮಹಂಸರು ಸಾಧನಾವಸ್ಥೆಯಲ್ಲಿದ್ದಾಗ ಬಹಳ ವರ್ಷ ಅವರ ಸೇವೆ ಮಾಡಿದ್ದ. ಆದರೆ ಕೊನೆಕೊನೆಗೆ ಪರಮಹಂಸರನ್ನು ಬಹಳವಾಗಿ ಕಾಡಲಾರಂಭಿಸಿದ. ಒಮ್ಮೆ ತನ್ನ ಯಾವುದೊ ನಡತೆಯಿಂದ ದೇವಾಲಯದ ಅಧಿಕಾರಿಗಳ ಕೋಪಕ್ಕೆ ಪಾತ್ರನಾದ. ಅವರು ಆತನನ್ನು ದಕ್ಷಿಣೇಶ್ವರದಿಂದ ಓಡಿಸಿಬಿಟ್ಟರು ಮತ್ತು ದೇವಾಲಯಕ್ಕೆ ಕಾಲುಹಾಕದ ಹಾಗೆ ಕಟ್ಟಾಜ್ಞೆ ಇತ್ತರು.
6. ಮಾಂಸ, ಮದ್ಯ, ಮತ್ಸ್ಯ, ಮೈಥುನ ಮತ್ತು ಮುದ್ರೆ.
7. ಚೈತನ್ಯದೇವನ ತಾಯಿ.
8. ಈತ ಚೈತನ್ಯದೇವನಿಗೆ ಸಂನ್ಯಾಸ ಕೊಟ್ಟಯತಿ.
9. ಆಧ್ಯಾತ್ಮಿಕ ಜೀವನದಲ್ಲಿ ಬಹಳ ಮುಂದುವರಿದು ಬೃಂದಾವನದಲ್ಲಿಯೇ ವಾಸಿಸುತ್ತಿದ್ದ ಒಬ್ಬ ವೈಷ್ಣವಿ.