೧೯ನೆ ಸೆಪ್ಟೆಂಬರ್ ೧೮೮೪, ಭಾದ್ರಪದ ಅಮಾವಾಸ್ಯೆ, ಶುಕ್ರವಾರ
ಇಂದು ಮಹಾಲಯ ಅಮಾವಾಸ್ಯೆ. ಘಂಟೆ ಅಪರಾಹ್ನ ಎರಡು, ಶ್ರೀರಾಮಕೃಷ್ಣರು ತಮ್ಮ ಕೊಠಡಿಯಲ್ಲಿ ಮಾಸ್ಟರ್, ಮಹೇಂದ್ರಮುಖ್ಯೋಪಾಧ್ಯಾಯ, ಪ್ರಿಯ ಮುಖ್ಯೋಪಾ ಧ್ಯಾಯ, ಬಾಬುರಾಮ, ಹರೀಶ, ಕಿಶೋರಿ, ಲಾಟು ಇವರೇ ಮೊದಲಾದವರೊಡನೆ ಕುಳಿತುಕೊಂಡಿದ್ದಾರೆ. ಕೆಲವರು ನೆಲದ ಮೇಲೆ ಕುಳಿತಿದ್ದಾರೆ. ಇನ್ನು ಕೆಲವರು ನಿಂತುಕೊಂಡಿ ದ್ದಾರೆ. ಮತ್ತೆ ಕೆಲವರು ಆಗಾಗ ಕೊಠಡಿಗೆ ಬಂದು ಹೋಗುತ್ತಿದ್ದಾರೆ. ಹಾಜರಾ ವರಾಂಡದಲ್ಲಿ ಕುಳಿತಿದ್ದಾನೆ. ರಾಖಾಲ ಇನ್ನೂ ಬೃಂದಾವನದಲ್ಲೇ ಬಲರಾಮನೊಡನೆ ಇದ್ದಾನೆ.
ಶ್ರೀರಾಮಕೃಷ್ಣರು ಭಕ್ತರಿಗೆ: “ನಾನು ಕಲ್ಕತ್ತದಲ್ಲಿ ಕ್ಯಾಪ್ಟನ್ನನ ಮನೆಗೆ ಹೋಗಿದ್ದೆ. ಹಿಂದಿರುಗಿ ಬರುವಷ್ಟರಲ್ಲಿ ಬಹಳವಾಗಿ ರಾತ್ರಿಯೇ ಆಗಿಬಿಟ್ಟಿತು. ಆತ ಎಂಥಾ ವಿನಯಿ! ಎಷ್ಟೊಂದು ಭಕ್ತಿ! ರೇಷ್ಮೆ ವಸ್ತ್ರ ಉಟ್ಟು ಮಂಗಳಾರತಿ ಮಾಡುತ್ತಿದ್ದಾನೆ. ಮೊದಲು ಮೂರು ಬತ್ತಿಗಳ, ಅನಂತರ ಒಂದು ಬತ್ತಿಯ, ಕೊನೆಗೆ ಕರ್ಪೂರದ ಆರತಿ ಎತ್ತುತ್ತಾನೆ. ಆರತಿಯ ಸಮಯದಲ್ಲಿ ಯಾರೊಡನೆಯೂ ಮಾತಾಡುವುದಿಲ್ಲ. ಬರೀ ಕೈಸನ್ನೆಯಿಂದಲೇ ನನಗೆ ಕುಳಿತುಕೊಳ್ಳುವಂತೆ ಹೇಳಿದ. ಪೂಜೆಯ ಸಮಯದಲ್ಲಿ ಆತನ ಕಣ್ಣುಗಳು ಭಾವದಿಂದ ಉದ್ರೇಕಗೊಳ್ಳುತ್ತವೆ, ಅವನ್ನು ಕಣಜ ಕಡಿದುಬಿಟ್ಟಿವೆಯೋ ಏನೋ ಎಂಬಂತೆ. ಆತನಿಗೆ ಹಾಡಲು ಬರುವುದಿಲ್ಲ. ಆದರೆ ಬಹಳ ಚೆನ್ನಾಗಿ ಸ್ತೋತ್ರಪಾಠ ಮಾಡಬಲ್ಲ. ತಾಯಿಯ ಎದುರಿನಲ್ಲಿ ಆತ ಆಕೆಯನ್ನು ಒಂದು ಪೀಠದಲ್ಲಿ ಕೂರಿಸಿ ತಾನು ಕೆಳಗಡೆ ಕುಳಿತುಕೊಳ್ಳುತ್ತಾನೆ.
“ಕ್ಯಾಪ್ಟನ್ನನ ತಂದೆ ಆಂಗ್ಲಸೇನೆಯಲ್ಲಿ ಹವಾಲದಾರನಾಗಿದ್ದ. ರಣರಂಗದಲ್ಲಿ ಆಗ ಒಂದು ಕೈಯಲ್ಲಿ ಬಂದೂಕು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಶಿವಪೂಜೆ ಮಾಡುತ್ತಿದ್ದ. ಆತನ ಸೇವಕ ಆತನಿಗೆ ಮಣ್ಣಿನ ಶಿವಲಿಂಗ ಮಾಡಿಕೊಳ್ಳುತ್ತಿದ್ದ. ಶಿವಪೂಜೆಯನ್ನು ಮಾಡದ ಹೊರತು ಆತ ಒಂದು ತೊಟ್ಟು ನೀರನ್ನೂ ಮುಟ್ಟುತ್ತಿರಲಿಲ್ಲ. ಆತನಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿ ಸಂಬಳ ಬರುತ್ತಿತ್ತು.”
“ಕ್ಯಾಪ್ಟನ್ ತನ್ನ ತಾಯಿಯನ್ನು ಕಾಶಿಗೆ ಕಳುಹಿಸುತ್ತಾನೆ. ಅಲ್ಲಿ ಹನ್ನೆರಡೋ ಹದಿ ಮೂರೋ ಜನ ಆಕೆಯ ಸೇವೆಯಲ್ಲಿ ನಿರತರಾಗಿರುತ್ತಾರೆ. ಖರ್ಚು ಬಹಳ ಆಗುತ್ತದೆ. ವೇದಾಂತ, ಗೀತೆ, ಭಾಗವತ ಇವೆಲ್ಲ ಆತನಿಗೆ ಕಂಠಸ್ಥವಾಗಿವೆ. ಕಲ್ಕತ್ತದ ಬಾಬುಗಳು ಮ್ಲೇಚ್ಛಾಚಾರಿಗಳು ಎಂದು ಆತ ಹೇಳುತ್ತಿರುತ್ತಾನೆ.
“ಚಿಕ್ಕ ವಯಸ್ಸಿನಲ್ಲಿ ಆತ ಹಠಯೋಗವನ್ನು ಅಭ್ಯಾಸ ಮಾಡಿದ್ದ. ಅದಕ್ಕಾಗಿ ಆತ ನಾನು ಸಮಾಧಿಯಲ್ಲಿ ಅಥವಾ ಭಾವಾವಸ್ಥೆಯಲ್ಲಿ ಇರುವಾಗ ನನ್ನ ತಲೆಯನ್ನು ಹಿಡಿದು ಸವರು ತ್ತಾನೆ. ಆತನ ಹೆಂಡತಿ ಬೇರೆ ದೇವರನ್ನು, ಅಂದರೆ ಗೋಪಾಲನನ್ನು ಪೂಜೆ ಮಾಡುತ್ತಾಳೆ. ಈ ಸಲ ಅಷ್ಟೊಂದು ಕೃಪಣತೆ ತೋರಿಸಲಿಲ್ಲ. ಆಕೆಯೂ ಗೀತೆಯೇ ಮೊದಲಾದ ಶಾಸ್ತ್ರ ಗ್ರಂಥಗಳನ್ನು ಓದಿದ್ದಾಳೆ. ಅವರಿಬ್ಬರದೂ ಎಂಥಾ ಭಕ್ತಿ!
“ಒಮ್ಮೆ ಅವರು ಆಡಿನ ಮಾಂಸ ಹಾಕಿ ಪಲ್ಯ ತಯಾರು ಮಾಡಿದ್ದರು. ಕ್ಯಾಪ್ಟನ್ ಹೇಳಿದ: ‘ಇದನ್ನು ಹದಿನೈದು ದಿನದವರೆಗೂ ಇಟ್ಟುಕೊಂಡು ತಿನ್ನಬಹುದು.’ ಆಕೆ ಹೇಳಿದಳು: ‘ಇಲ್ಲ, ಇಲ್ಲ! ಏಳು ದಿನ ಮಾತ್ರ,’ ನನಗೆ ಅದು ಬಹಳ ರುಚಿಕರವಾಗಿತ್ತು. ಅವರಿಗೆ ಪಲ್ಯಗಳನ್ನು ಎಲ್ಲೋ ಸ್ವಲ್ಪ ಸ್ವಲ್ಪ ಮಾತ್ರ ಬಡಿಸುವ ಅಭ್ಯಾಸ. ಅವು ನನಗೆ ಅವರಿಗಿಂತ ಸ್ವಲ್ಪ ಹೆಚ್ಚಾಗಿ ಬೇಕಾಗಿರುವುದನ್ನು ಅರಿತು, ಈಗ ನನಗೆ ಸ್ವಲ್ಪ ಹೆಚ್ಚಾಗಿಯೇ ಬಡಿಸುತ್ತಾರೆ. ಊಟವಾದ ನಂತರ ಕ್ಯಾಪ್ಟನ್ನನೋ ಅಥವಾ ಆತನ ಹೆಂಡತಿಯೋ ನನಗೆ ಬೀಸಣಿಗೆಯಿಂದ ಗಾಳಿ ಬೀಸುತ್ತಾರೆ.
“ಅವರ ಭಕ್ತಿ ಬಹಳ ವಿಶೇಷವಾದದ್ದು-ಸಾಧುಗಳಿಗೆ ವಿಶೇಷ ಸನ್ಮಾನ ತೋರಿಸುತ್ತಾರೆ. ಪಶ್ಚಿಮ ಭಾರತದ ಜನರಿಗೆ ಸಾಧುಗಳಲ್ಲಿ ವಿಶೇಷವಾದ ಶ್ರದ್ಧಾಭಕ್ತಿ. ನೇಪಾಳದ ಜಂಗ್ಬಹದೂರನ ಮತ್ತು ಆತನ ಅಣ್ಣನ ಮಕ್ಕಳು ಇಲ್ಲಿಗೆ ದೇವಾಲಯ ನೋಡಲು ಬಂದಿದ್ದರು. ಅವರು ನನಗೆ ಬಹಳವಾಗಿ ಗೌರವ ತೋರಿಸಿದರು. ಒಮ್ಮೆ ನೇಪಾಳ ದೇಶದ ಒಬ್ಬ ಹುಡುಗಿ ಕ್ಯಾಪ್ಟನ್ನೊಡನೆ ಇಲ್ಲಿಗೆ ಬಂದಿದ್ದಳು. ದೊಡ್ಡ ಭಕ್ತೆ. ವಿವಾಹವಾಗಿರಲಿಲ್ಲ. ಆಕೆಗೆ ಗೀತ-ಗೋವಿಂದ ಬಾಯಿಗೆ ಬರುತ್ತಿತ್ತು. ಮಥುರಬಾಬುವಿನ ಮಗ ದ್ವಾರಕಬಾಬು ಮೊದಲಾದವರು ಆಕೆ ಹಾಡುವುದನ್ನು ಕೇಳಬೇಕು ಅಂತ ಇಚ್ಛಿಸಿದರು. ಆಕೆ ಗೀತಗೋವಿಂದವನ್ನು ಹಾಡುತ್ತಿದ್ದಾಗ ದ್ವಾರಕಬಾಬು ಕರವಸ್ತ್ರದಿಂದ ಆಗಾಗ ತನ್ನ ಕಣ್ಣುಗಳನ್ನು ಒರಸಿಕೊಳ್ಳುತ್ತಲೇ ಇದ್ದ. ವಿವಾಹವನ್ನೇಕೆ ಮಾಡಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದಾಗ, ಆಕೆ ಹೇಳಿದಳು: ‘ನಾನು ಭಗವಂತನ ದಾಸಿ. ಬೇರೆ ಯಾರ ದಾಸಿಯಾಗಲು ಹೋಗಲಿ?’ ಆಕೆಯ ಜನರೆಲ್ಲರೂ ಆಕೆಯನ್ನು ಸಾಕ್ಷಾತ್ ಭಗವತಿಯೇ ಎಂಬ ದೃಷ್ಟಿಯಿಂದ ಗೌರವಿಸುತ್ತಾರೆ-ಶಾಸ್ತ್ರಗಳು ಹೇಳುವ ಹಾಗೆ.
(ಮಹೇಂದ್ರ ಮುಖ್ಯೋಪಾಧ್ಯಾಯನಿಗೆ ಮತ್ತು ಉಳಿದವರಿಗೆ) “ನೀವು ಇಲ್ಲಿಗೆ ಬರುತ್ತಿರುವುದರಿಂದ ನಿಮಗೆ ಉಪಕಾರ ಆಗುತ್ತಿದ್ದರೆ ನನಗೆ ಬಹಳ ಆನಂದ. (ಮಾಸ್ಟರಿಗೆ) ಇಲ್ಲಿಗೆ ಜನ ಬರುತ್ತಿದ್ದಾರಲ್ಲ ಏಕೆ? ನನ್ನಲ್ಲಿ ಅಂಥಾ ಪಾಂಡಿತ್ಯವೇನೂ ಇಲ್ಲವಲ್ಲ.”
ಮಾಸ್ಟರ್: “ಭಗವಂತನ ಶಕ್ತಿ ನಿಮ್ಮಲ್ಲಿದೆ. ಅದಕ್ಕಾಗಿ ಇಷ್ಟೊಂದು ಆಕರ್ಷಣೆ. ಆಕರ್ಷಿಸುತ್ತಿರುವುದು-ನಿಮ್ಮಲ್ಲಿರುವ ಭಗವಂತನ ಶಕ್ತಿ.”
ಶ್ರೀರಾಮಕೃಷ್ಣರು: “ಇದೆಲ್ಲ ಯೋಗಮಾಯೆಯ ಆಕರ್ಷಣೆ. ಆಕೆ ಮೋಡಿ ಹಾಕುತ್ತಾಳೆ. ಭಗವಲ್ಲೀಲೆಯೆಲ್ಲವೂ ಯೋಗಮಾಯೆಯ ಸಹಾಯದಿಂದ.”
“ಗೋಪಿಯರ ಪ್ರೀತಿ, ಜಾರೆ ತನ್ನ ಉಪಪತಿಯಲ್ಲಿಟ್ಟಿರುವ ಪ್ರೀತಿಯ ಹಾಗೆ. ಅವರಿಗೆ ಕೃಷ್ಣನಲ್ಲಿ ಪ್ರೇಮೋನ್ಮಾದ ಉಂಟಾಗಿತ್ತು. ಜಾರೆಗೆ ತನ್ನ ಸ್ವಂತ ಪತಿಯ ಮೇಲೆ ಅಷ್ಟೊಂದು ಪ್ರೀತಿ ಉಂಟಾಗದು. ಆಕೆಗೆ ಯಾರಾದರೂ ಹೇಳಿದರೆ: ‘ನೋಡಿ ನಿಮ್ಮ ಯಜಮಾನರು ಬಂದಿದ್ದಾರೆ.’ ಆಕೆ ಹೇಳುತ್ತಾಳೆ: ‘ಅದಕ್ಕೇನು ಮಾಡಬೇಕು? ಒಲೆಯ ಮೇಲೆ ಅನ್ನ ಸಾರು ಇದೆ. ಬಡಿಸಿಕೊಂಡು ಊಟ ಮಾಡುತ್ತಾರೆ.’ ಆದರೆ ಯಾರೋ ಒಬ್ಬ ಹೊಸಬ-ರಸಿಕ, ಸುಂದರ, ಸರಸಿ-ಬಂದಿದ್ದಾನೆ ಎಂಬುದಾಗಿ ಕೇಳಿದೊಡನೆಯೇ ಆತನನ್ನು ನೋಡಲು ಎದ್ದು ಹೋಗಿ ಪರದೆ ಹಿಂದಿನಿಂದ ಇಣಿಕಿ ನೋಡಲಾರಂಭಿಸುತ್ತಾಳೆ.
“ನೀವು ಕೇಳಬಹುದು: ‘ನಾವು ಭಗವಂತನನ್ನು ನೋಡಿಲ್ಲ, ಆತನ ಮೇಲೆ, ಗೋಪಿಯರಿಗೆ ಆದ ಹಾಗೆ, ಯಾವ ರೀತಿಯಾಗಿ ಆಕರ್ಷಣೆ ಉಂಟಾದೀತು?’ ನೋಡದೆ ಇದ್ದರೂ ಸಾಧ್ಯ. ‘ಭಗವಂತ ಯಾರು ಎಂಬುದು ನನಗೆ ಗೊತ್ತಿಲ್ಲ. ಆತನ ಹೆಸರು ಮಾತ್ರ ಕೇಳಿದ್ದೇನೆ. ಅಷ್ಟೇ ನನ್ನ ಮನಸ್ಸು ಆತನಲ್ಲಿ ನೆಟ್ಟುಬಿಟ್ಟಿದೆ.’”
ಒಬ್ಬ ಭಕ್ತ: “ಒಳ್ಳೇದು, ಗೋಪಿಯರ ವಸ್ತ್ರಾಪಹರಣದ ಇಂಗಿತವೇನು?”
ಶ್ರೀರಾಮಕೃಷ್ಣರು: “ಅಷ್ಟಪಾಶಗಳಲ್ಲಿ ಎಲ್ಲವನ್ನೂ ಗೋಪಿಯರು ಕಳೆದು ಕೊಂಡಿದ್ದರು-ಕೇವಲ ಲಜ್ಜೆಯನ್ನು ವಿನಾ. ಅದಕ್ಕಾಗಿಯೇ ಶ್ರೀಕೃಷ್ಣ ಅವರ ವಸ್ತ್ರವನ್ನು ಅಪಹರಿಸಿ ಆ ಪಾಶದಿಂದಲೂ ಅವರನ್ನು ಮುಕ್ತರನ್ನಾಗಿ ಮಾಡಿದ. ಭಗವಂತನ ಸಾಕ್ಷಾತ್ಕಾರ ದೊರೆತರೆ ಎಲ್ಲಾ ಪಾಶಗಳೂ ನಾಶವಾಗಿ ಹೋಗುತ್ತವೆ. (ಮಹೇಂದ್ರ ಮುಖ್ಯೋಪಾಧ್ಯಾಯನಿಗೆ ಮತ್ತು ಉಳಿದವರಿಗೆ) ಭಗವಂತನ ಕಡೆ ಆಕರ್ಷಣೆ ಎಲ್ಲರಿಗೂ ಉಂಟಾಗದು-ವಿಶೇಷ ವ್ಯಕ್ತಿಗಳಿಗೆ ಮಾತ್ರ. ಸಂಸ್ಕಾರವಿದ್ದರೆ ಉಂಟಾಗುತ್ತದೆ. ಹಾಗಲ್ಲದಿದ್ದ ಪಕ್ಷದಲ್ಲಿ ಬಾಗ್ಬಜಾರಿನ ಅಷ್ಟೊಂದು ಜನರಲ್ಲಿ ಕೇವಲ ನೀವು ಮಾತ್ರವೇ ಇಲ್ಲಿಗೆ ಬರಲು ಕಾರಣವೇನು? ತಿಪ್ಪೆಗುಂಡಿಯಲ್ಲಿ ಗುಲಾಬಿ ಗಿಡ ಬೆಳೆಯದು. ಮಲಯ ಪರ್ವತದಿಂದ ಬರುವ ಮಾರುತ ತಾಕಿದರೆ ಹತ್ತಿಯ ಗಿಡ, ಆಲದಮರ, ಅಶ್ವತ್ಥಮರ ಇನ್ನೂ ಕೆಲವು ಹೊರತು ಉಳಿದವೆಲ್ಲವೂ ಚಂದನದ ಮರವಾಗಿಬಿಡುತ್ತವೆ.
(ಮುಖ್ಯೋಪಾಧ್ಯಾಯ ಸೋದರರಿಗೆ) “ನಿಮಗೆ ಯಾವುದರ ಅಭಾವವೂ ಇಲ್ಲ. ಅನುಕೂಲಸ್ಥರಾಗಿದ್ದೀರಿ. ಸಾಧಕ ಯೋಗಭ್ರಷ್ಟನಾದರೆ ಆತನಿಗೆ ಭಾಗ್ಯವಂತರ ಮನೆಯಲ್ಲಿ ಜನ್ಮ ಉಂಟಾಗುತ್ತದೆ. ಮತ್ತೆ ಆಗ ಭಗವಂತನ ಸಾಕ್ಷಾತ್ಕಾರಕ್ಕಾಗಿ ಸಾಧನೆ ಮುಂದುವರಿಸುತ್ತಾನೆ.”
ಮಹೇಂದ್ರ ಮುಖ್ಯೋಪಾಧ್ಯಾಯ: “ಸಾಧಕ ಯೋಗಭ್ರಷ್ಟನಾಗಿ ಏಕೆ ಆಗುತ್ತಾನೆ?”
ಶ್ರೀರಾಮಕೃಷ್ಣರು: “ಭಗವಂತನ ಧ್ಯಾನ ಮಾಡುತ್ತ ಮಾಡುತ್ತ ಸಾಧಕನಿಗೆ ಇದ್ದಕ್ಕಿದ್ದ ಹಾಗೆ ಭೋಗಲಾಲಸೆ ಉಂಟಾಗಿಬಿಡಬಹುದು. ಹೀಗಾದುದೇ ಆದರೆ ಆತ ಯೋಗ ಭ್ರಷ್ಟನಾಗಿಬಿಡುತ್ತಾನೆ. ಮುಂದಿನ ಜನ್ಮದಲ್ಲಿ ಸುಸಂಸ್ಕಾರಗಳಿಂದ ಕೂಡಿದ ಜನ್ಮ ದೊರೆಯುತ್ತದೆ.”
ಮಹೇಂದ್ರ: “ಹಾಗಾದರೆ ಮಾರ್ಗವೇನು?”
ಶ್ರೀರಾಮಕೃಷ್ಣರು: “ಕಾಮನೆ ಇರುವವರೆಗೆ, ಭೋಗಲಾಲಸೆ ಇರುವವರೆಗೆ ಮುಕ್ತಿ ದೊರಕದು. ಆದ್ದರಿಂದ ತಿನ್ನುವುದು, ಉಡುವುದು, ರಮಿಸುವುದು ಇವುಗಳನ್ನೆಲ್ಲ ಬೇಗ ಮುಗಿಸಿಕೊಂಡುಬಿಡು. (ನಗುತ್ತ) ಕೊನೆಯದರ ವಿಷಯವಾಗಿ ಏನು ಹೇಳುತ್ತೀಯೆ? ಸ್ವಂತ ಪತ್ನಿಯೊಡನೆಯೊ ಅಥವಾ ಪರರ ಪತ್ನಿಯೊಡನೆಯೊ? (ಮಾಸ್ಟರ್ ಮತ್ತು ಮಹೇಂದ್ರ ನಗುತ್ತಿದ್ದಾರೆ.)
“ಭೋಗಲಾಲಸೆ ಇಟ್ಟುಕೊಂಡಿರುವುದು ಒಳ್ಳೆಯದಲ್ಲ. ಅದಕ್ಕಾಗಿಯೇ ನಾನು ಮನಸ್ಸಿನಲ್ಲಿ ಆಸೆಗಳನ್ನು ಒಡನೆಯೇ ಪೂರ್ಣಮಾಡಿಕೊಂಡುಬಿಡುತ್ತಿದ್ದೆ. ಬಡೋಬಜಾರಿನ ಬಣ್ಣ ಕಟ್ಟಿದ ಸಂದೇಶಗಳನ್ನು ತಿನ್ನಬೇಕು ಅಂತ ಇಚ್ಛೆಯಾಯಿತು. ಇವರು ಕೊಂಡುಕೊಂಡು ಬಂದು ನನಗೆ ಕೊಟ್ಟರು. ಬಹಳವಾಗಿ ತಿಂದೆ-ಬಳಿಕ ಕಾಯಿಲೆ.
“ನನ್ನ ಬಾಲ್ಯಕಾಲದಲ್ಲಿ ಒಂದು ದಿನ ಗಂಗೆಯಲ್ಲಿ ಸ್ನಾನಮಾಡುತ್ತಿದ್ದಾಗ ಒಬ್ಬ ಹುಡುಗ ನಡುವಿಗೆ ಚಿನ್ನದ ಉಡಿದಾರ ಕಟ್ಟಿಕೊಂಡಿದ್ದನ್ನು ನೋಡಿದೆ. ನನಗೆ ಈ ಭಗವದುನ್ಮಾದ ಬಂದನಂತರ ಅದೇ ತರದ ಉಡಿದಾರ ಕಟ್ಟಿಕೊಳ್ಳಬೇಕು ಅಂತ ಇಚ್ಛೆಯಾಯಿತು. ಹೆಚ್ಚು ಹೊತ್ತು ಕಟ್ಟಿಕೊಂಡಿರಲಾಗಲಿಲ್ಲ. ಕಟ್ಟಿಕೊಂಡ ಒಡನೆಯೇ ನನ್ನ ಶರೀರದೊಳಗೆ ಒಂದು ವಿಧವಾದ ವಾಯು ತಾಳಲಾರದ ನೋವನ್ನು ಉಂಟುಮಾಡುತ್ತ ಊರ್ಧ್ವಾಭಿಮುಖವಾಗಿ ಏಳಲಾರಂಭಿಸಿತು-ಚಿನ್ನ ಶರೀರಕ್ಕೆ ತಾಗಿತಲ್ಲ ಅದಕ್ಕಾಗಿ. ಕಟ್ಟಿಕೊಂಡ ಸ್ವಲ್ಪ ಹೊತ್ತಿನೊಳಗೇ ಅದನ್ನು ಬಿಚ್ಚಬೇಕಾಯಿತು. ಇಲ್ಲದಿದ್ದರೆ ಅದನ್ನು ಕಿತ್ತು ಬಿಸಾಡಬೇಕಾಗಿ ಬರುತ್ತಿತ್ತು.”
“ಒಮ್ಮೆ ನನಗೆ ಇಚ್ಛೆಯಾಯಿತು. ವಿವಿಧ ಪಟ್ಟಣಗಳ ಪ್ರಸಿದ್ಧಿಯಾದ ಸಿಹಿ ತಿಂಡಿಗಳನ್ನು ತಿನ್ನಬೇಕು ಅಂತ. (ಎಲ್ಲರೂ ನಗುತ್ತಿದ್ದಾರೆ.) ಚಂಡಿಯನ್ನು ಶಂಭು ಹಾಡುವುದನ್ನು ಕೇಳಬೇಕು ಅಂತ ಇಚ್ಛೆಯಾಯಿತು ಅದನ್ನು ಕೇಳಿದ ನಂತರ ಮತ್ತೆ ಅದನ್ನೇ ರಾಜನಾರಾಯಣನ ಕೈಯಲ್ಲಿ ಹಾಡಿಸಿ ಕೇಳಬೇಕು ಅಂತ ಇಚ್ಛೆಯಾಯಿತು. ಅದೂ ಪೂರ್ಣವಾಯಿತು.
“ಅನೇಕ ಮಂದಿ ಸಾಧುಗಳು ಆ ಸಮಯದಲ್ಲಿ ಬರುತ್ತಿದ್ದರು. ಇಚ್ಛೆಯಾಯಿತು, ಅವರ ಸೇವೆಗಾಗಿ ಪ್ರತ್ಯೇಕವಾದ ಒಂದು ಉಗ್ರಾಣ ಆಗಬೇಕೆಂದು. ಮಥುರಬಾಬು ಹಾಗೇ ವ್ಯವಸ್ಥೆ ಮಾಡಿದ. ಆ ಉಗ್ರಾಣದಿಂದ ಸಾಧುಗಳಿಗೆ ದಿನಸಿ, ಸೌದೆ ಇವೇ ಮೊದಲಾದುವು ದೊರೆಯುತ್ತಿದ್ದುವು.
“ಒಮ್ಮೆ ಮನಸ್ಸಿನಲ್ಲಿ ಇಚ್ಛೆ ಎದ್ದಿತು, ಒಳ್ಳೇ ಜರಿ ಶಾಲು ಹೊದ್ದುಕೊಳ್ಳಬೇಕೆಂದು ಮತ್ತು ಬೆಳ್ಳಿಯ ಗುಡುಗುಡಿಯಿಂದ ತಂಬಾಕು ಸೇದಬೇಕೆಂದು. ಮಥುರಬಾಬು ಒಂದು ಹೊಸ ಶಾಲು ಮತ್ತು ಗುಡುಗುಡಿಯನ್ನು ಕಳುಹಿಸಿಕೊಟ್ಟ. ಶಾಲು ಹೊದ್ದುಕೊಂಡೆ. ಆ ಗುಡುಗುಡಿಯಿಂದ ತಂಬಾಕನ್ನು ವಿವಿಧ ರೀತಿಯಾಗಿ ಸೇದಿದೆ-ಕೆಲವು ವೇಳೆ ದಿಂಬನ್ನು ಈ ರೀತಿಯಾಗಿ ಒರಗಿಕೊಂಡು, ಇನ್ನು ಕೆಲವು ವೇಳೆ ಆ ರೀತಿಯಾಗಿ ಒರಗಿಕೊಂಡು, ಮತ್ತೆ ಕೆಲವು ವೇಳೆ ಮೇಲಕ್ಕೆ ತಲೆ ಎತ್ತಿ, ಮತ್ತೂ ಕೆಲವು ವೇಳೆ ತಲೆಯನ್ನು ತಗ್ಗಿಸಿ, ಬಳಿಕ ನನಗೆ ನಾನೇ ಹೇಳಿಕೊಂಡೆ: ‘ಹೇ ಮನಸ್ಸೇ, ಇದಕ್ಕೇ ಬೆಳ್ಳಿಯ ಗುಡುಗುಡಿಯಿಂದ ತಂಬಾಕು ಸೇದುವಿಕೆ ಅಂತ ಹೆಸರು.’ ಹೀಗೆಂದು ಹೇಳಿ ಗುಡುಗುಡಿಯನ್ನು ತ್ಯಜಿಸಿಬಿಟ್ಟೆ. ಶಾಲನ್ನು ಕೆಲವು ನಿಮಿಷಗಳ ಮಟ್ಟಿಗೆ ಹೊದ್ದುಕೊಂಡಿದ್ದು, ಅನಂತರ ಅದನ್ನು ತೆಗೆದು ನೆಲದ ಮೇಲೆ ಬಿಸಾಡಿ, ಕಾಲಿನಿಂದ ಚೆನ್ನಾಗಿ ತುಳಿದು, ಅದರ ಮೇಲೆ ‘ಥೂ, ಥೂ’ ಅಂತ ಉಗುಳಿ, ಹೇಳಲಾರಂಭಿಸಿದೆ: ‘ಇದಕ್ಕೇ ಜರಿಶಾಲು ಅಂತ ಹೆಸರು! ಈ ಶಾಲನ್ನು ಉಪಯೋಗಿಸುವುದರಿಂದ ರಜೋಗುಣ ವೃದ್ಧಿಯಾಗುತ್ತದೆ.’”
ಬಲರಾಮನೊಡನೆ ರಾಖಾಲ ಬೃಂದಾವನದಲ್ಲಿದ್ದಾನೆ. ಮೊದಮೊದಲು ಆತ ಬೃಂದಾ ವನವನ್ನು ಬಹಳವಾಗಿ ಹೊಗಳಿ ಮತ್ತು ವರ್ಣಿಸಿ ಕಾಗದ ಬರೆಯುತ್ತಿದ್ದ. ಮಾಸ್ಟರಿಗೆ ಬರೆದಿದ್ದ: “ಇದು ಅತ್ಯಂತ ಉತ್ತಮ ಸ್ಥಳ. ಇಲ್ಲಿಗೆ ದಯವಿಟ್ಟು ಬನ್ನಿ. ಗಂಡುಹೆಣ್ಣು ನವಿಲುಗಳು ನರ್ತಿಸುತ್ತಿರುತ್ತವೆ. ನೃತ್ಯ, ಸಂಗೀತ ಸತತ ನಡೆಯುತ್ತಲೇ ಇರುತ್ತವೆ. ಆನಂದವಾಹಿನಿ ಸುಮ್ಮನೆ ಹರಿಯುತ್ತಲೇ ಇದೆ.” ಆದರೆ ಆತನಿಗೆ ಅನಂತರ ಜ್ವರ ಬಂದುಬಿಟ್ಟಿತು. ಪರಮಹಂಸರು ಅದನ್ನು ಕೇಳಿ ಬಹಳ ಚಿಂತಾಕುಲರಾಗಿದ್ದಾರೆ. ಆತನಿಗೆ ಗುಣವಾಗಲೆಂದು ಭಗವತಿ ಚಂಡಿಗೆ ಹರಕೆ ಹೊತ್ತಿದ್ದಾರೆ. ಈಗ ಆತನ ಸಂಬಂಧವಾಗಿ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ರಾಖಾಲ ಇಲ್ಲಿ ಕುಳಿತು ನನ್ನ ಕಾಲು ಒತ್ತುತ್ತ ಇದ್ದ ಹಾಗೆ ಆತನಿಗೆ ಮೊಟ್ಟಮೊದಲನೆ ಭಾವ ಉಂಟಾಯಿತು. ಒಬ್ಬ ಭಾಗವತ ಪಂಡಿತ ಈ ಕೊಠಡಿಯಲ್ಲಿ ಕುಳಿತು ಭಾಗವತ ಮಾಡುತ್ತಿದ್ದ. ಅದನ್ನು ಕೇಳುತ್ತ ಕೇಳುತ್ತ ಇದ್ದಹಾಗೆ ಆತನ ಶರೀರ ಆಗಾಗ ಕಂಪಿಸಲಾರಂಭಿಸಿತು. ಕೊನೆಗೆ ಒಮ್ಮೆಗೇ ಸ್ಥಿರವಾಗಿಬಿಟ್ಟಿತು.
“ಎರಡನೆಯ ಸಲ ಭಾವ ಬಂದದ್ದು ಬಲರಾಮನ ಮನೆಯಲ್ಲಿ-ಭಾವಬಂದು ನೆಲದ ಮೇಲೆ ಬಿದ್ದಿದ್ದ. ಆತನ ನೆಲೆ ಸಾಕಾರದ್ದು. ನಿರಾಕಾರದ ಮಾತು ಕಿವಿಗೆ ಬಿದ್ದೊಡನೆಯೇ ಎದ್ದು ಹೋಗಿಬಿಡುತ್ತಾನೆ.
“ಆತನಿಗೆ ಗುಣವಾಗಲೆಂದು ಚಂಡಿಗೆ ಹರಕೆ ಹೊತ್ತಿದ್ದೇನೆ. ಆತ ನನ್ನ ಮೇಲೆ ತನ್ನ ಭಾರವನ್ನೆಲ್ಲಾ ಹಾಕಿಬಿಟ್ಟಿದ್ದಾನೆ-ಮನೆ, ಮಠ ಎಲ್ಲವನ್ನೂ ತೊರೆದು. ನಾನೇ ಆತನನ್ನು ಆತನ ಹೆಂಡತಿಯ ಹತ್ತಿರಕ್ಕೆ ಕಳುಹಿಸುತ್ತಿದ್ದೆ-ಭೋಗಪಡಬೇಕಾದ್ದು ಸ್ವಲ್ಪ ಬಾಕಿ ಉಳಿದುಕೊಂಡಿತ್ತು.”
(ಮಾಸ್ಟರನ್ನು ತೋರಿಸಿ) “ರಾಖಾಲ ಈತನಿಗೆ ಬೃಂದಾವನದಿಂದ ಬರೆದಿದ್ದಾನೆ. ಇದು ಬಹಳ ಒಳ್ಳೇ ಜಾಗ-ಸುತ್ತಲೂ ಗಂಡು ಹೆಣ್ಣು ನವಿಲು ನರ್ತಿಸುತ್ತಿರುತ್ತವೆ ಅಂತ. ಈಗ ನೋಡೋಣ ಗಂಡು ಹೆಣ್ಣು ನವಿಲು ಆತನಿಗೆ ಮಾಡುವುದನ್ನು! ಬಹಳವಾಗಿ ಜ್ವರದಿಂದ ನರಳುತ್ತಿದ್ದಾನೆ. ಅದರಿಂದ ನನಗೆ ಬಹಳ ವ್ಯಾಕುಲ ಆಗಿದೆ.
“ಅಲ್ಲಿ ಬಲರಾಮನೊಡನೆ ಇದ್ದಾನೆ. ಆಹಾ, ಬಲರಾಮನದು ಎಂಥಾ ಒಳ್ಳೇ ಸ್ವಭಾವ. ನನಗಾಗಿ ಬಲರಾಮ ಒರಿಸ್ಸಾಕ್ಕೆ ಹೋಗುತ್ತಿಲ್ಲ. ಅಲ್ಲಿ ಆತನಿಗೆ ಒಂದು ದೊಡ್ಡ ಜಮೀನುದಾರಿ ಇದೆ. ಆತನ ಸೋದರ ಅಲ್ಲಿಂದ ಮಾಸಾಶನ ಕಳುಹಿಸದೆ ಬಲರಾಮನಿಗೆ ಬರೆದಿದ್ದ: “ನೀನು ಇಲ್ಲಿಗೇ ಬಂದುಬಿಡು. ಕಲ್ಕತ್ತದಲ್ಲೇಕೆ ನೀನು ಬರಿದೆ ಹಣ ಖರ್ಚುಮಾಡಬೇಕು?’ ಆದರೆ ಆತ ಹಾಗೆ ಮಾಡಲಿಲ್ಲ-ನನ್ನ ಸಹವಾಸಕ್ಕಾಗಿ. ಆತನಿಗೆ ಭಗವಂತನಲ್ಲಿ ಎಷ್ಟೊಂದು ಪ್ರೀತಿ! ಹಗಲೂ ಇರುಳೂ ಭಗವಂತನ ಸೇವೆಯಲ್ಲೇ ನಿರತನಾಗಿರುತ್ತಾನೆ. ಆತನ ತೋಟಗಾರರು ಯಾವಾಗ ನೋಡಿದರೂ ಆತನ ದೇವರ ಪೂಜೆಗೆ ಹೂವು ಕಟ್ಟುತ್ತಲೇ ಇರುತ್ತಾರೆ. ತನ್ನ ಖರ್ಚನ್ನು ಸ್ವಲ್ಪ ಕಡಿಮೆಮಾಡಿಕೊಳ್ಳಲು ಬೃಂದಾವನಕ್ಕೆ ಹೋಗಿ ನಾಲ್ಕು ತಿಂಗಳ ಕಾಲ ಇದ್ದು ಬರುತ್ತಾನೆ. ಆತನಿಗೆ ಇನ್ನೂರು ರೂಪಾಯಿ ಮಾಸಾಶನ ದೊರೆಯುತ್ತಿದೆ.
“ನಾನು ಯುವಕರನ್ನು ಬಹಳವಾಗಿ ಪ್ರೀತಿಸುತ್ತಿದ್ದೇನಲ್ಲ, ಏಕೆ? ಅವರನ್ನು ಕಾಮಕಾಂಚನ ಇನ್ನೂ ಸ್ಪರ್ಶಿಸದೆ ಇರುವುದರಿಂದ. ನನಗೆ ತೋರಿಬರುತ್ತಿದೆ, ಅವರು ನಿತ್ಯಸಿದ್ಧರ ಗುಂಪಿಗೆ ಸೇರಿರುವುದು.
“ನರೇಂದ್ರ ಮೊಟ್ಟಮೊದಲು ಇಲ್ಲಿಗೆ ಬಂದಿದ್ದಾಗ ಮಾಸಲು ಬಟ್ಟೆ ಹಾಕಿಕೊಂಡು ಬಂದಿದ್ದ; ಆದರೆ ಆತನ ಕಣ್ಣು ಮುಖ ನೋಡಿ ಅನಿಸಿತು. ಆಂತರ್ಯದಲ್ಲಿ ಏನೋ ವಿಶೇಷವಾದ್ದು ಇದೆ ಎಂಬುದಾಗಿ. ಆಗ ಆತನಿಗೆ ಹೆಚ್ಚಾಗಿ ಹಾಡು ಗೊತ್ತಿರಲಿಲ್ಲ. ಒಂದೆರಡು ಹಾಡು ಹಾಡಿದ: ‘ಓ ನಡೆಯೊ ಹೋಗೋಣ ನಮ್ಮ ನೆಲೆಗೆ!’ ಮತ್ತು ‘ಇನ್ನೆಷ್ಟು ದಿನ ನಾನು ಬರಿಯ ವಿಫಲತೆಯಲ್ಲಿ ತೊಳಲಬೇಕೋ?’
“ಆತ ಇಲ್ಲಿಗೆ ಬಂದಾಗಲೆಲ್ಲ, ಕೊಠಡಿ ಜನರಿಂದ ತುಂಬಿದ್ದರೂ, ಕೇವಲ ಆತನೊಡನೆಯೇ ಮಾತುಕತೆಯಾಡಲು ಆರಂಭಿಸಿಬಿಡುತ್ತಿದ್ದೆ. ಆಗ ಆತ ಹೇಳುತ್ತಿದ್ದ ‘ಅವರೊಡನೆಯೂ ಮಾತನಾಡಿ.’ ಅನಂತರ ಬಾಕಿಯವರೊಡನೆ ಮಾತುಕತೆಯಾಡಲು ಪ್ರಾರಂಭಿಸುತ್ತಿದ್ದೆ.
“ಆತನನ್ನು ನೋಡಬೇಕೆಂಬ ಹುಚ್ಚು ಹಿಡಿದು ಆತನಿಗಾಗಿ ಯದುಮಲ್ಲಿಕನ ತೋಟದಲ್ಲಿ ಅಳುತ್ತಿದ್ದೆ. ಇಲ್ಲಿ ಭೋಲಾನಾಥನ ಕೈ ಹಿಡಿದುಕೊಂಡು ಆತನಿಗಾಗಿ ಅತ್ತೆ. ಭೋಲಾನಾಥನು ಹೇಳಿದ: ‘ಮಹಾಶಯರೆ, ಒಬ್ಬ ಕಾಯಸ್ಥ ಯುವಕನಿಗಾಗಿ ನೀವು ಈ ರೀತಿ ವರ್ತಿಸುವುದು ಸರಿಯಲ್ಲ. ಆ ದೊಡ್ಡ ಹೊಟ್ಟೆಯ ಬ್ರಾಹ್ಮಣ ಪ್ರಾಣಕೃಷ್ಣ ಕೈ ಮುಗಿದು ಹೇಳಿದ: ‘ಮಹಾಶಯರೆ, ಆತ ಕೇವಲ ಸಾಮಾನ್ಯ ವಿದ್ಯಾವಂತ; ಆತನಿಗೇಕೆ ನೀವು ಇಷ್ಟೊಂದು ವ್ಯಸ್ತರಾಗುತ್ತಿದ್ದೀರಿ?’
“ಭವನಾಥ ಮತ್ತು ನರೇಂದ್ರ ಇಬ್ಬರೂ ಒಂದು ಜೊತೆ-ಗಂಡ ಹೆಂಡತಿಯರೋ ಏನೋ ಎಂಬಂತೆ. ಅದಕ್ಕಾಗಿ ನಾನು ಭವನಾಥನಿಗೆ ಹೇಳಿದೆ, ನರೇಂದ್ರನ ಮನೆಯ ಹತ್ತಿರ ಒಂದು ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಳ್ಳುವಂತೆ. ಅವರಿಬ್ಬರೂ ನಿರಾಕಾರದ ನೆಲೆಗೆ ಸೇರಿದ್ದಾರೆ.
“ನಾನು ಯುವಕರಿಗೆ ಎಚ್ಚರ ಕೊಡುತ್ತಿದ್ದೇನೆ, ಹೆಂಗಸರೊಡನೆ ಹೆಚ್ಚು ಕಾಲ ಕಳೆಯ ದಿರುವಂತೆ ಮತ್ತು ಅವರನ್ನು ಆಗಾಗ ಹೋಗಿ ಸಂಧಿಸದಿರುವಂತೆ. ಹರಿಪದ ಘೋಷಪಾರದ ಒಬ್ಬ ಹೆಂಗಸಿನ ಬಲೆಗೆ ಬಿದ್ದಿದ್ದಾನೆ. ಆಕೆ ವಾತ್ಸಲ್ಯಭಾವ ತೋರಿಸುತ್ತಿದ್ದಾಳೆ. ಹರಿಪದ ಇನ್ನೂ ಚಿಕ್ಕ ಹುಡುಗ. ಆತನಿಗೆ ಏನೂ ಗೊತ್ತಾಗದು. ಆ ಸಂಪ್ರದಾಯದ ಹೆಂಗಸರು ಯುವಕರನ್ನು ಕಂಡರೆ ಹಾಗೆ ವರ್ತಿಸುತ್ತಾರೆ. ಕೇಳಿದೆ, ಹರಿಪದ ಆಕೆಯ ತೊಡೆಯ ಮೇಲೆ ಮಲಗಿ ಕೊಳ್ಳುತ್ತಾನೆ. ಆಕೆ ತನ್ನ ಕೈಯಿಂದ ಆತನಿಗೆ ಆಹಾರ ತಿನ್ನಿಸುತ್ತಾಳೆ ಎಂದು. ನಾನು ಆತನಿಗೆ ಹೇಳಬೇಕೆಂದಿದ್ದೇನೆ: ‘ಹಾಗೆ ಮಾಡುವುದು ಒಳ್ಳೆಯದಲ್ಲ.’ ಕೊನೆಗೆ ಆಕೆ ತೋರಿಸುತ್ತಿರುವ ಆ ವಾತ್ಸಲ್ಯಭಾವ ಗೀತ್ಸಲ್ಯಭಾವ ಆಗಿ ಬಿಡುತ್ತದೆ. ಆ ಸಂಪ್ರದಾಯದ ಹೆಂಗಸರು ಗಂಡಸಿ ನೊಡನೆ ಸಾಧನೆಮಾಡುತ್ತಾರೆ. ಅವರು ಗಂಡಸನ್ನು ಕೃಷ್ಣ ಎಂದು ಕಂಡು ಆತನನ್ನು ‘ರಾಗಕೃಷ್ಣ’ ಅಂತ ಕರೆಯುತ್ತಾರೆ. ಆ ಸಂಪ್ರದಾಯದ ಗುರು ಹೆಂಗಸನ್ನು ಕೇಳುತ್ತಾನೆ: ‘ನಿನಗೆ ರಾಗಕೃಷ್ಣ ದೊರೆತಿದ್ದಾನೆಯೆ?’ ಆಕೆ ಹೇಳುತ್ತಾಳೆ: ‘ಹೌದು, ದೊರೆತಿದ್ದಾನೆ.’
“ಅಂದು ಆ ಹೆಂಗಸು ಇಲ್ಲಿಗೆ ಬಂದಿದ್ದಳು. ಆಕೆ ಸುತ್ತಮುತ್ತಲು ಕಣ್ಣುಹಾಕುತ್ತಿದ್ದ ರೀತಿ ನನಗೆ ಸರಿ ಎಂದು ತೋರಲಿಲ್ಲ. ನಾನು ಆಕೆಗೆ ಹೇಳಿದೆ: ‘ನೀನು ಹರಿಪದನೊಡನೆ ಈಗ ವರ್ತಿಸುತ್ತಿರುವಂತೆ ಬೇಕಾದರೆ ವರ್ತಿಸು, ಆದರೆ ಆತನ ಸಂಬಂಧವಾಗಿ ಕೆಟ್ಟ ಭಾವನೆಯನ್ನು ಮಾತ್ರ ಎಂದಿಗೂ ಇಟ್ಟುಕೊಳ್ಳಬೇಡ.’
“ಯುವಕರು ಈಗ ಸಾಧನಾವಸ್ಥೆಯಲ್ಲಿದ್ದಾರೆ. ಅವರಿಗೆ ಈಗ ಬೇಕಾಗಿರುವುದು ಕೇವಲ ತ್ಯಾಗ. ಸಂನ್ಯಾಸಿ ಹೆಂಗಸರ ಚಿತ್ರಪಟ ಕೂಡ ನೋಡಕೂಡದು. ನಾನು ಅವರಿಗೆ ಹೇಳುತ್ತಿದ್ದೇನೆ: ‘ಹೆಂಗಸು ಭಕ್ತೆಯಾದರೂ ಆಕೆಯ ಹತ್ತಿರ ಕುಳಿತು ಆಕೆಯೊಡನೆ ಮಾತುಕತೆ ಆಡಬೇಡಿ.’ ನಿಂತುಕೊಂಡು ಬೇಕಾದರೆ ಒಂದೆರಡು ಮಾತು ಆಡಿ ಕಳುಹಿಸಿ ಬಿಡಿ.’ ಸಿದ್ಧಪುರುಷನೂ ಹೀಗೆ ವರ್ತಿಸಬೇಕಾಗುತ್ತದೆ-ತನ್ನ ಸ್ವಂತ ರಕ್ಷಣೆಗಾಗಿ ಮತ್ತು ಲೋಕ ಶಿಕ್ಷಣಕ್ಕಾಗಿ. ಹೆಂಗಸರು ನನ್ನನ್ನು ನೋಡಲು ಬಂದಾಗ ನಾನೂ ಸ್ವಲ್ಪ ಹೊತ್ತಾದ ನಂತರ ಅವರಿಗೆ ಹೇಳುತ್ತೇನೆ: ‘ಹೋಗಿ ದೇವರ ದರ್ಶನ ಮಾಡಿಕೊಂಡು ಬನ್ನಿ.’ ಹಾಗೂ ಅವರು ಎದ್ದು ಹೋಗದಿದ್ದರೆ, ನಾನೇ ಎದ್ದು ಕೊಠಡಿಯಿಂದ ಹೊರಕ್ಕೆ ಹೋಗಿಡುತ್ತೇನೆ. ನನ್ನನ್ನು ನೋಡಿ ಉಳಿದವರೂ ಪಾಠ ಕಲಿತುಕೊಳ್ಳುತ್ತಾರೆ.
“ಒಳ್ಳೇದು, ಈ ಯುವಕರೆಲ್ಲ ಇಲ್ಲಿಗೆ ಬರುತ್ತಿದ್ದಾರೆ, ನೀವೆಲ್ಲರೂ ಇಲ್ಲಿಗೆ ಬರುತ್ತಿದ್ದೀರಿ; ಏನು ಕಾರಣದಿಂದ ಹೇಳಬಲ್ಲೆಯಾ? ಇದರ (ಪರಮಹಂಸರು) ಒಳಗೆ ಏನೋ ಒಂದು ಇರಬೇಕು ಇಲ್ಲದಿದ್ದರೆ ನಿಮ್ಮೆಲ್ಲರಿಗೂ ಇಂಥ ಮನಸ್ಸೆಳೆತ, ಆಕರ್ಷಣೆ ಉಂಟಾಗುವ ಬಗೆ ಹೇಗೆ?”
“ಒಮ್ಮೆ ನಾನು ಹೃದೂನ ಊರು ಸಿಹೋರಿಗೆ ಹೋಗಿದ್ದೆ. ಅಲ್ಲಿಂದ ನನ್ನನ್ನು ಶ್ಯಾಮ ಬಜಾರಿಗೆ ಕರೆದುಕೊಂಡು ಹೋಗಿದ್ದರು. ಆ ಹಳ್ಳಿಯ ಒಳಕ್ಕೆ ಕಾಲಿಡುವ ಮುನ್ನವೇ ನನಗೆ ಗೌರಾಂಗನ ದರ್ಶನವಾಯಿತು. ಅಲ್ಲಿ ಗೌರಾಂಗನ ಭಕ್ತರಿದ್ದಾರೆ ಎಂಬುದನ್ನು ಅದು ಸೂಚಿಸಿತು. ಅಂಥ ಆಕರ್ಷಣೆ ಅಲ್ಲಿ-ಏಳು ಹಗಲು, ಏಳು ರಾತ್ರಿ ಜನ ನನ್ನನ್ನು ಸುತ್ತಿಕೊಂಡು ಬಿಟ್ಟರು! ಯಾವಾಗ ನೋಡಿದರೂ ಕೇವಲ ಕೀರ್ತನೆ, ನೃತ್ಯ. ಕಾಂಪೌಂಡ್ ಮೇಲೆಲ್ಲಾ ಜನ! ಮರಗಳ ಮೇಲೆಲ್ಲಾ ಜನ!
“ನಾನು ನಟವರ ಗೋಸ್ವಾಮಿಯ ಮನೆಯಲ್ಲಿ ಉಳಿದುಕೊಂಡಿದ್ದೆ. ಅಲ್ಲೂ, ಹಗಲೂ ಇರುಳೂ ಜನ ತುಂಬಿಕೊಂಡೇ ಇರುತ್ತಿದ್ದರು. ಜನರ ಗುಂಪಿನಿಂದ ತಪ್ಪಿಸಿಕೊಳ್ಳಲು, ಬೆಳಗಾಗೆದ್ದು ಒಬ್ಬ ಬಡಗಿಯ ಮನೆಗೆ ಹೋಗಿ ಇದ್ದುಬಿಡುತ್ತಿದ್ದೆ. ಆದರೇನು, ಅಲ್ಲಿಗೂ ಸ್ವಲ್ಪ ಹೊತ್ತಿನಲ್ಲೇ ಜನರ ಗುಂಪು ಬಂದುಬಿಡುತ್ತಿತ್ತು. ಮದ್ದಲೆ, ತಾಳ ಎಲ್ಲವನ್ನೂ ಜೊತೆಯಲ್ಲೇ ತಂದುಬಿಡುತ್ತಿದ್ದರು. ಮತ್ತೆ ಅಲ್ಲಿ ಮದ್ದಲೆಯ ‘ತಾಕುಟಿ! ತಾಕುಟಿ!’ ಶಬ್ದ. ಊಟ-ಗೀಟ ಅಪರಾಹ್ನ ಮೂರು ಗಂಟೆಗೇನೇ.
“ಸುದ್ದಿ ಹಬ್ಬಿಬಿಟ್ಟಿತು-ಏಳು ಸಲ ಸತ್ತು, ಏಳು ಸಲವೂ ಬದುಕಿ ಬಂದ ಒಬ್ಬ ಮನುಷ್ಯ ಬಂದಿದ್ದಾನೆ ಅಂತ. ನನಗೆ ನೆಗಡಿ, ತಲೆನೋವು ಬಂದುಬಿಡಬಹುದೆಂದು ಹೆದರಿ ಹೃದೆ ಆ ಗುಂಪಿನಿಂದ ನನ್ನನ್ನು ಬಿಡಿಸಿ ಗದ್ದೆಬಯಲು ಕಡೆ ಎಳೆದುಕೊಂಡು ಹೋಗುತ್ತಿದ್ದ. ಅಲ್ಲಿಗೂ ಜನ ಇರುವೆ ಸಾಲಿನೋಪಾದಿಯಲ್ಲಿ ಬರಲಾರಂಭಿಸಿಬಿಡುತ್ತಿದ್ದರು. ಮತ್ತೆ ತಾಳಗಳ ಮತ್ತು ಮದ್ದಲೆಯ ‘ತಾಕುಟಿ! ತಾಕುಟಿ!’ ಶಬ್ದ. ಹೃದೆ ಬಯ್ದು ಹೇಳುತ್ತಿದ್ದ: ‘ಏಕೆ ಹೀಗೆ ನೀವು ನಮ್ಮನ್ನು ಕಾಡುತ್ತಾ ಇದ್ದೀರಿ? ನಾವು ಎಂದೂ ಕೀರ್ತನೆಯನ್ನು ಕೇಳೇ ಇಲ್ಲವೇ?’
“ಅಲ್ಲಿನ ಗೋಸಾಯಿಗಳು (ವೈಷ್ಣವ ಅರ್ಚಕರು) ನಮ್ಮೊಡನೆ ಒಂದು ದಿನ ಜಗಳ ಕಾಯಲು ಬಂದಿದ್ದರು. ಅವರು ಭಾವಿಸಿಕೊಂಡಿದ್ದರು, ನಾವು ಅವರಿಗೆ ಸಲ್ಲುವ ಕಾಣಿಕೆ ಗಳನ್ನೆಲ್ಲ ಭಕ್ತರಿಂದ ವಸೂಲು ಮಾಡಿಕೊಂಡು ಹೋಗಿಬಿಡಬಹುದೆಂದು. ಅವರೇ ನೋಡಿದರು, ನಾನು ಒಂದು ತುಂಡು ಬಟ್ಟೆಯನ್ನೇ ಆಗಲಿ ಅಥವಾ ಒಂದು ಎಳೆ ನೂಲನ್ನೇ ಆಗಲಿ ಮುಟ್ಟದೇ ಇರುವುದನ್ನು. ಯಾರೋ ವೈಷ್ಣವಪಂಡಿತರಿಗೆಲ್ಲ ತಿಳಿಸಿದ್ದರು, ನಾನು ಒಬ್ಬ ಬ್ರಹ್ಮಜ್ಞಾನಿ ಅಂತ. ಅದಕ್ಕಾಗಿ ಅವರು ನನ್ನನ್ನು ಪರೀಕ್ಷಿಸಲು ಬಂದಿದ್ದರು. ಅವರಲ್ಲಿ ಒಬ್ಬ ಪ್ರಶ್ನೆ ಹಾಕಿದ: ‘ಇವರಿಗೆ ಮಾಲೆ, ತಿಲಕ ಇಲ್ಲವಲ್ಲ ಏಕೆ?’ ಅವರಲ್ಲೇ ಒಬ್ಬ ಹೇಳಿದ: ‘ತೆಂಗಿನಮಟ್ಟೆಯ ಹಾಗೆ ಅವು ತಾವುತಾವಾಗಿಯೇ ಬಿದ್ದು ಹೋಗಿವೆ.’ ತೆಂಗಿನಮಟ್ಟೆಯ ದೃಷ್ಟಾಂತವನ್ನು ನಾನು ಅಲ್ಲಿ ಕಲಿತುಕೊಂಡೆ. ಬ್ರಹ್ಮಜ್ಞಾನ ದೊರೆತರೆ ಉಪಾಧಿ ತಾವೂ ತಾವಾಗಿಯೇ ಕಳಚಿ ಬಿದ್ದುಹೋಗುತ್ತವೆ.
“ದೂರದೂರದ ಗ್ರಾಮಗಳಿಂದಲೂ ಜನ ಬಂದು ಅಲ್ಲಿ ಸೇರಿಬಿಡುತ್ತಿದ್ದರು. ರಾತ್ರಿಯನ್ನೂ ಅಲ್ಲೇ ಕಳೆದುಬಿಡುತ್ತಿದ್ದರು. ಆಕರ್ಷಣೆ ಅಂದರೆ ಏನು ಎಂಬುದು ನನಗೆ ಅಲ್ಲಿ (ಶ್ಯಾಮಬಜಾರಿನಲ್ಲಿ) ಅರ್ಥವಾಯಿತು. ಭಗವಂತ ಅವತರಿಸಿದಾಗ ಆತ ತನ್ನ ಯೋಗ ಮಾಯೆಯ ಸಹಾಯದಿಂದ ಜನರನ್ನು ಆಕರ್ಷಿಸುತ್ತಾರೆ. ಜನ ಸರ್ಪಮುಗ್ಧರಾಗಿ ಬಿಡುತ್ತಾರೆ.”
ಪರಮಹಂಸರು ಮುಖ್ಯೋಪಾಧ್ಯಾಯ ಸೋದರರೊಡನೆ ಮತ್ತು ಉಳಿದ ಭಕ್ತರೊಡನೆ ಮಾತುಕತೆ ಆಡುತ್ತ ಆಡುತ್ತ ಘಂಟೆ ಅಪರಾಹ್ನ ಮೂರು ಆಯಿತು. ರಾಧಿಕಾ ಗೋಸ್ವಾಮಿ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡುತ್ತಿದ್ದಾನೆ. ಆತ ಪರಮಹಂಸ ರನ್ನು ದರ್ಶನಮಾಡಿದ್ದು ಅದೇ ಮೊದಲನೆ ಸಲ. ಈಗ ಆತ ಒಂದು ಕಡೆ ಕುಳಿತುಕೊಳ್ಳುತ್ತಿದ್ದಾನೆ.
ಶ್ರೀರಾಮಕೃಷ್ಣರು: “ಏನು, ನೀನು ಅದ್ವೈತ ಗೋಸ್ವಾಮಿ ವಂಶಕ್ಕೆ ಸೇರಿದವನೇ ?”
ಗೋಸ್ವಾಮಿ: “ಹೌದು.”
ಈ ಮಾತನ್ನು ಕೇಳಿ ಪರಮಹಂಸರು ಆತನಿಗೆ ಕೈ ಮುಗಿಯುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಅದ್ವೈತ ಗೋಸ್ವಾಮಿಯ ವಂಶ-ನಿನ್ನಲ್ಲಿ ಆತನ ಗುಣಗಳು ಇದ್ದೇ ಇರಬೇಕು. ಸಿಹಿ ಮಾವಿನ ಮರ ಸಿಹಿ ಹಣ್ಣುಗಳನ್ನೇ ವಿನಾ ಎಂದಿಗೂ ಹುಳಿಯಾದ್ದನ್ನು ಬಿಡದು. ಆದರೆ ನೆಲದ ಗುಣಕ್ಕನುಗುಣವಾಗಿ ಕೆಲವು ಮರ ದೊಡ್ಡ ದೊಡ್ಡ ಹಣ್ಣುಗಳನ್ನು, ಇನ್ನು ಕೆಲವು ಚಿಕ್ಕ ಚಿಕ್ಕ ಹಣ್ಣುಗಳನ್ನು ಬಿಡುತ್ತವೆ. ಏನು, ನಿಜ ತಾನೆ ?”
ಗೋಸ್ವಾಮಿ ವಿನಯದಿಂದ: “ಹೌದು, ಆದರೆ ನನಗೆ ಏನು ತಾನೆ ಗೊತ್ತಿದೆ?”
ಶ್ರೀರಾಮಕೃಷ್ಣರು: “ನೀನು ಏನು ಬೇಕಾದರೂ ಹೇಳಿಕೊ, ಜನ ನಿನ್ನನ್ನು ಹಾಗೆ ನುಣುಚಿಕೊಳ್ಳಲು ಬಿಟ್ಟುಕೊಡುವರೆ? ಬ್ರಾಹ್ಮಣರಲ್ಲಿ ಎಷ್ಟೇ ದೋಷವಿದ್ದರೂ ಅವರು ಭಾರದ್ವಾಜ, ಶಾಂಡಿಲ್ಯ ಇವರೇ ಮೊದಲಾದ ಋಷಿಗಳ ಗೋತ್ರಕ್ಕೆ ಸೇರಿದವರಾದ್ದರಿಂದ ಅವರು ಎಲ್ಲರಿಂದಲೂ ಪೂಜನೀಯರೇ. (ಮಾಸ್ಟರಿಗೆ) ಗರುಡನ ಕಥೆ ತಿಳಿಸು.”
ಮಾಸ್ಟರ್ ಸುಮ್ಮನೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು: “ಯಾರ ವಂಶದಲ್ಲಿಯೇ ಆಗಲಿ, ಮಹಾಪುರುಷರು ಜನ್ಮವೆತ್ತಿದ್ದ ಪಕ್ಷದಲ್ಲಿ ಅವರು ಆ ವಂಶದವರನ್ನು ಮೇಲಕ್ಕೆ ಎತ್ತಿಬಿಡುತ್ತಾರೆ-ಎಷ್ಟೇ ದೋಷಗಳಿಂದ ಕೂಡಿದ್ದರೂ. ದುರ್ಯೋಧನ ಪಾಂಡವರ ಶತ್ರುವಾಗಿದ್ದರೂ, ಆತನ ದೆಸೆಯಿಂದ ಪಾಂಡವರಿಗೆ ವನವಾಸ ಬಂದಿದ್ದರೂ ಗಂಧರ್ವರು ಕೌರವರನ್ನು ಬಂಧಿಸಿದಾಗ ಯುಧಿಷ್ಠಿರ ಹೋಗಿ ಅವರನ್ನು ಬಿಡಿಸಿದ.”
“ಇದೂ ಅಲ್ಲದೆ ಧಾರ್ಮಿಕ ವೇಷಭೂಷಣಗಳಿಗೆ ಗೌರವ ತೋರಿಸಬೇಕಾಗುತ್ತದೆ. ಸೋಗು ಕಣ್ಣಿಗೆ ಬಿತ್ತು ಎಂದರೇ ನಿಜವಾದ ವಸ್ತುವಿನ ಉದ್ದೀಪನವಾಗುತ್ತದೆ. ಚೈತನ್ಯ ದೇವ ಒಮ್ಮೆ ಒಂದು ಕತ್ತೆಗೆ ಧಾರ್ಮಿಕ ವೇಷಭೂಷಣ ತೊಡಿಸಿ ಅದಕ್ಕೆ ಸಾಷ್ಟಾಂಗ ಪ್ರಣಾಮ ಮಾಡಿದನಂತೆ.
“ಗರುಡನನ್ನು ನೋಡಿದರೆ ಜನ ಕೈಮುಗಿಯುತ್ತಾರಲ್ಲ, ಏಕೆ? ಕಂಸನು ದೇವಕಿಯ ಶಿಶುವನ್ನು ಕೊಲ್ಲಲು ಹೋದಾಗ, ಆ ಶಿಶುವಿನ ರೂಪ ಧರಿಸಿದ್ದ ಭಗವತಿ ಗರುಡನ ರೂಪ ತಾಳಿ ಅಂತರ್ಧಾನವಾಗಿಬಿಡುತ್ತಾಳೆ. ಅದಕ್ಕಾಗಿಯೇ ಈಗಲೂ ಜನ ಆ ಹಕ್ಕಿಯನ್ನು ಕಂಡರೆ ಕೈಮುಗಿಯುತ್ತಾರೆ.
“ಚಾನಕ್ ಎಂಬ ಹೆಸರಿನ ದಂಡುಪ್ರದೇಶಕ್ಕೆ ಒಬ್ಬ ಆಂಗ್ಲೇಯ ಪ್ರವೇಶಮಾಡು ತ್ತಿರುವುದನ್ನು ನೋಡಿ ಅಲ್ಲಿನ ಸಿಪಾಯಿಗಳೆಲ್ಲರೂ ಆತನಿಗೆ ಸೆಲ್ಯೂಟ್ ಮಾಡಿದರು. ಕೊಯರ್ಸಿಂಗ್ ಅದಕ್ಕೆ ಕಾರಣ ತಿಳಿಸಿದ: ‘ಆಂಗ್ಲೇಯರ ಆಳ್ವಿಕೆಯಲ್ಲಿರುವುದರಿಂದ ನಾವು ಅವರಿಗೆ ಸೆಲ್ಯೂಟ್ ಮಾಡಬೇಕಾಗಿದೆ.’
“ಶಾಕ್ತರು ತಂತ್ರಶಾಸ್ತ್ರವನ್ನು, ವೈಷ್ಣವರು ಪುರಾಣವನ್ನು ಅನುಸರಿಸುತ್ತಾರೆ. ವೈಷ್ಣವರು ಯಾವ ಸಾಧನೆಯನ್ನು ಮಾಡುತ್ತಾರೊ ಅದನ್ನು ಪ್ರಕಾಶಗೊಳಿಸುವುದರಲ್ಲಿ ದೋಷವೇನಿಲ್ಲ. ಆದರೆ, ಶಾಕ್ತರದೆಲ್ಲ ಗೋಪ್ಯ. ಆದ್ದರಿಂದ ಶಾಕ್ತನನ್ನು ಸಂಪೂರ್ಣವಾಗಿ ಅರಿತುಕೊಳ್ಳುವುದು ಬಹಳ ಕಷ್ಟ.
(ಗೋಸ್ವಾಮಿಗೆ) “ನೀವೆಲ್ಲರೂ ಒಳ್ಳೆಯ ಜನ. ಎಷ್ಟು ಜಪ ಮಾಡುತ್ತೀರಿ! ಹರಿನಾಮವನ್ನು ಎಷ್ಟೊಂದು ಮಾಡುತ್ತೀರಿ!”
ಗೋಸ್ವಾಮಿ ವಿನಯದಿಂದ: “ನಾವೇನು ಮಹಾ ಮಾಡುತ್ತಿದ್ದೇವೆ! ನಾನು ಅತ್ಯಂತ ಅಧಮ.”
ಶ್ರೀರಾಮಕೃಷ್ಣರು ನಗುತ್ತ: “ದೈನ್ಯತೆ-ಇದು ಇರಬೇಕಾದ್ದೆ. ಇನ್ನೊಂದು ದೃಷ್ಟಿ ಇದೆ. ‘ನಾನು ಹರಿನಾಮ ಜಪ ಮಾಡುತ್ತಿದ್ದೇನೆ. ನನ್ನಲ್ಲಿ ಇನ್ನೂ ಪಾಪ ಅಂದರೆ?’ ಎಂಬುದು. ಯಾರು ಹಗಲಿರುಳೂ ಜಪಿಸುತ್ತಾನೊ: ‘ನಾನು ಪಾಪಿ! ನಾನು ಪಾಪಿ!, ನಾನು ಅಧಮ! ನಾನು ಅಧಮ!’ ಅಂತ, ಆತ ಹಾಗೆಯೇ ಆಗಿಹೋಗಿಬಿಡುತ್ತಾನೆ. ಎಂಥಾ ಅಶ್ರದ್ಧೆ! ಭಗವಂತನ ಹೆಸರನ್ನು ಅಷ್ಟೊಂದು ಜಪಿಸುತ್ತಿದ್ದರೂ ‘ಪಾಪಿ! ಪಾಪಿ!’ ಅಂತ ಹೇಳಿಕೊಳ್ಳುತ್ತಲೇ ಇರುವುದು!”
ಗೋಸ್ವಾಮಿ ಪರಮಹಂಸರು ಈ ಮಾತನ್ನು ಬಾಯಿ ಬಿಟ್ಟುಕೊಂಡು ಕೇಳಿದ.
ಶ್ರೀರಾಮಕೃಷ್ಣರು: “ನಾನು ಬೃಂದಾವನದಲ್ಲಿ ವೈಷ್ಣವರಂತೆಯೇ ಬಟ್ಟೆಬರೆ ಹಾಕಿಕೊಳ್ಳು ತ್ತಿದ್ದೆ-ಹದಿನೈದು ದಿನಗಳ ಮಟ್ಟಿಗೆ. (ಭಕ್ತರಿಗೆ) ಎಲ್ಲಾ ಭಾವಗಳಲ್ಲೂ ಕೆಲವು ದಿನ ಇರುತ್ತಿದ್ದೆ. ಆಗ ಮಾತ್ರವೇ ಶಾಂತಿ ದೊರೆಯುತ್ತಿತ್ತು. (ನಗುತ್ತ) ನಾನು ಎಲ್ಲಾ ಸಾಧನೆಗಳನ್ನೂ ಮಾಡಿ ದ್ದೇನೆ; ಎಲ್ಲಾ ಮಾರ್ಗಗಳನ್ನೂ ಒಪ್ಪುತ್ತೇನೆ. ಶಾಕ್ತರನ್ನೂ ಗೌರವಿಸುತ್ತೇನೆ; ವೈಷ್ಣವರನ್ನೂ ಗೌರವಿಸುತ್ತೇನೆ; ಹಾಗೇ ವೇದಾಂತವಾದಿಗಳನ್ನು ಕೂಡ. ಇಲ್ಲಿಗೆ ಅದಕ್ಕಾಗಿಯೇ ಎಲ್ಲಾ ಮತದ ಜನರೂ ಬರುತ್ತಿರುವುದು. ಪ್ರತಿಯೊಬ್ಬರೂ ಭಾವಿಸುತ್ತಾರೆ, ನಾನು ಅವರ ಸಂಪ್ರದಾಯಕ್ಕೆ ಸೇರಿದವನು ಎಂದು. ಈಗಿನ ಕಾಲದ ಬ್ರಹ್ಮಜ್ಞಾನಿಗಳನ್ನೂ1 ನಾನು ಗೌರವಿಸುತ್ತೇನೆ.”
“ಒಬ್ಬನ ಹತ್ತಿರ ಒಂದು ಕೊಳದಪ್ಪಲೆ ತುಂಬ ಬಣ್ಣ ಇದ್ದಿತು. ಆ ಬಣ್ಣದ ವಿಶೇಷ ಗುಣ ಏನೆಂದರೆ, ಯಾರಾರು ಯಾವ ಯಾವ ಬಣ್ಣವನ್ನು ತಮ್ಮ ಬಟ್ಟೆಗೆ ಹಾಕಿಕೊಡಬೇಕು ಅಂತ ಕೇಳುತ್ತಿದ್ದರೊ, ಅದೇ ಬಣ್ಣದಿಂದ ಆಯಾಯ ಬಣ್ಣಗಳನ್ನು ಹಾಕಿಕೊಡಬಹುದಾಗಿತ್ತು. ಆದರೆ ಒಬ್ಬ ಜಾಣ ಆ ಬಣ್ಣ ಹಾಕುವವನನ್ನು ಕೇಳಿದ: ‘ನೀನು ಯಾವ ಬಣ್ಣದಿಂದ ಎಲ್ಲಾ ಬಣ್ಣಗಳನ್ನೂ ಹಾಕಿಕೊಡುತ್ತಾ ಇದ್ದೀಯೊ, ಆ ಮೂಲ ಬಣ್ಣದ ಬಣ್ಣವನ್ನೇ ನನ್ನದಕ್ಕೆ ಹಾಕಿಕೊಡು.’ (ಎಲ್ಲರೂ ನಗುತ್ತಿದ್ದಾರೆ.)
“ನಾನೇಕೆ ಒಂದೇ ಸ್ವರ ಊದುವವನಾಗಲಿ? ನಾನು ಹೀಗಿದ್ದರೆ ಈ ಸಂಪ್ರದಾಯ ದವರು ಬರುವುದಿಲ್ಲವಲ್ಲ ಎಂಬ ಭಯ ನನಗಿಲ್ಲ. ಜನ ಬರಲಿ ಬಿಡಲಿ, ಅದಕ್ಕಾಗಿ ನಾನು ಕಿಂಚಿತ್ತೂ ಚಿಂತಿಸುತ್ತಿಲ್ಲ. ಜನರನ್ನು ಕೈಯಲ್ಲಿ ಇಟ್ಟುಕೊಳ್ಳುವ ಭಾವನೆಯೇ ನನ್ನ ಮನಸ್ಸಿನಲ್ಲಿ ಏಳುತ್ತಿಲ್ಲ. ಅಧರಸೇನ ತನಗೊಂದು ದೊಡ್ಡ ಉದ್ಯೋಗಕ್ಕಾಗಿ ನಾನು ಭಗವತಿಗೆ ಪ್ರಾರ್ಥನೆ ಮಾಡಬೇಕೆಂದು ತಿಳಿಸಿದ, ಆದರೆ ಆತನಿಗೆ ಅದು ದೊರೆಯಲಿಲ್ಲ. ಅದಕ್ಕಾಗಿ ಆತ ನನ್ನ ಸಂಬಂಧವಾಗಿ ಬೇರೆ ವಿಧವಾಗಿ ಭಾವಿಸುವುದಾದರೆ ನನಗೇನು ಅಂಜಿಕೆ?
“ಒಂದು ದಿನ ನಾನು ಕೇಶವಸೇನನ ಮನೆಗೆ ಹೋಗಿದ್ದಾಗ, ಅಲ್ಲಿ ನನಗೊಂದು ಹೊಸಭಾವ ಬಂದಿರುವುದು ನನ್ನ ಅರಿವಿಗೆ ಬಂತು. ಬ್ರಾಹ್ಮಸಮಾಜದವರು ಯಾವಾಗ ನೋಡಿದರೂ ‘ನಿರಾಕಾರ! ನಿರಾಕಾರ!’ ಅಂತ ಹೇಳುತ್ತಲೇ ಇರುತ್ತಾರೆ. ಆದ್ದರಿಂದ ಭಾವದಲ್ಲಿ ಭಗವತಿಗೆ ಹೇಳಿದೆ: ‘ತಾಯೆ, ನೀನು ಇಲ್ಲಿಗೆ ಬರಬೇಡ. ಇವರು ನಿನ್ನ ರೂಪಗಳನ್ನು ಒಪ್ಪುತ್ತಿಲ್ಲ.’”
ಸ್ವಮತಾಭಿಮಾನಕ್ಕೆ ವಿರುದ್ಧವಾಗಿ ಪರಮಹಂಸರು ಆಡಿದ ಮಾತುಗಳನ್ನೆಲ್ಲ ಗೋಸ್ವಾಮಿ ಸದ್ದಿಲ್ಲದೆ ಕೇಳಿದ.
ಶ್ರೀರಾಮಕೃಷ್ಣರು ನಗುತ್ತ: “ವಿಜಯ ಈಗ ಒಳ್ಳೆಯ ಮಾನಸಿಕ ಸ್ಥಿತಿಯಲ್ಲಿದ್ದಾನೆ. ‘ಹರಿ! ಹರಿ!’ ಎಂದು ಹೇಳುತ್ತ ಹೇಳುತ್ತ ಇದ್ದ ಹಾಗೆ ನೆಲದ ಮೇಲೆ ಬಿದ್ದುಬಿಡುತ್ತಾನೆ. ಬೆಳಗಿನ ಜಾವ ನಾಲ್ಕು ಘಂಟೆಯವರೆಗೆ ಕೀರ್ತನೆ, ಧ್ಯಾನ ಇವುಗಳಲ್ಲೇ ನಿರತನಾಗಿರುತ್ತಾನೆ. ಈಗ ಕಾಷಾಯ ವಸ್ತ್ರ ಧರಿಸುತ್ತಿದ್ದಾನೆ. ಭಗವದ್ವಿಗ್ರಹ ಕಣ್ಣಿಗೆ ಬಿತ್ತು ಎಂದರೇ ಸಾಷ್ಟಾಂಗ ಪ್ರಣಾಮ. ಒಮ್ಮೆ ಆತ ನನ್ನೊಡನೆ ಗದಾಧರನ 2 ಶಾಲಾಗೃಹಕ್ಕೆ ಬಂದ. ಗದಾಧರ ಧ್ಯಾನ ಮಾಡುತ್ತಿದ್ದ ಸ್ಥಳವನ್ನು ನಾನು ಆತನಿಗೆ ತೋರಿಸಿದೆ. ಒಡನೆಯೇ ಅಲ್ಲಿಗೆ ಬಂದು ಸಾಷ್ಟಾಂಗ ಪ್ರಣಾಮ ಹಾಕಿದ. ಚೈತನ್ಯದೇವನ ಪಟದ ಮುಂದೆ ಮತ್ತೆ ಸಾಷ್ಟಾಂಗ ಪ್ರಣಾಮ ಮಾಡಿದ.”
ಗೋಸ್ವಾಮಿ: “ರಾಧಾಕೃಷ್ಣ ಮೂರ್ತಿಗಳ ಎದುರಿಗೆ?”
ಶ್ರೀರಾಮಕೃಷ್ಣರು: “ಅಲ್ಲಿಯೂ ಸಾಷ್ಟಾಂಗ ಪ್ರಣಾಮ ಮಾಡಿದ. ಒಳ್ಳೇ ಆಚಾರವಂತ.”
ಗೋಸ್ವಾಮಿ: “ಹಾಗಾದರೆ ನಾವು ಈಗ ಆತನನ್ನು ನಮ್ಮ ಸಂಪ್ರದಾಯಕ್ಕೆ ಸೇರಿಸಿಕೊಳ್ಳಬಹುದಲ್ಲ.”
ಶ್ರೀರಾಮಕೃಷ್ಣರು: “ಜನ ಏನಂದುಕೊಳ್ಳುತ್ತಾರೆ ಎಂಬುದರ ಮೇಲೇನು ಆತ ಅಷ್ಟೊಂದು ಮನಸ್ಸು ಕೊಡುವುದಿಲ್ಲ.”
ಗೋಸ್ವಾಮಿ: “ಅದಕ್ಕಾಗಿ ಅಲ್ಲ. ಸಮಾಜ ಕೃತಾರ್ಥವಾಗಿಬಿಡುತ್ತದೆ, ಅದಕ್ಕೆ ಅಂಥ ಮನುಷ್ಯ ದೊರೆತುದೇ ಆದರೆ.”
ಶ್ರೀರಾಮಕೃಷ್ಣರು: “ನನ್ನನ್ನು ಬಹಳವಾಗಿ ಗೌರವಿಸುತ್ತಾನೆ. ಆದರೆ ಆತನನ್ನು ಸಂಧಿಸುವುದೇ ಬಹಳ ಕಷ್ಟ. ಇಂದು ಢಾಕಾಕ್ಕೆ, ನಾಳೆ ಇನ್ನೊಂದು ಜಾಗಕ್ಕೆ-ಹೀಗೆ ಕರೆ ಆತನಿಗೆ ಬರುತ್ತಲೇ ಇರುತ್ತವೆ. ಯಾವಾಗಲೂ ವ್ಯಸ್ತನಾಗಿಯೇ ಇರುತ್ತಾನೆ. ಸಾಧಾರಣ ಬ್ರಾಹ್ಮ ಸಮಾಜದಲ್ಲಿ ಒಂದು ದೊಡ್ಡ ಗೊಂದಲ ಎದ್ದಿದೆ.”
ಗೋಸ್ವಾಮಿ: “ಮಹಾಶಯರೆ, ಕಾರಣ?”
ಶ್ರೀರಾಮಕೃಷ್ಣರು: “ಬ್ರಾಹ್ಮಸಮಾಜದವರು ಆತನಿಗೆ (ವಿಜಯನಿಗೆ) ಹೇಳುತ್ತಾರೆ: ‘ನೀನು ಸಾಕಾರವಾದಿಗಳೊಡನೆ ಬೆರೆಯುತ್ತಾ ಇದ್ದೀಯೆ. ನೀನು ವಿಗ್ರಹಾರಾಧಕ.’ ವಿಜಯ ಬಹಳ ಉದಾರಿ ಮತ್ತು ಸರಳ. ವ್ಯಕ್ತಿ ಸರಳನಾಗದ ಹೊರತು ಭಗವಂತನ ಕೃಪೆ ದೊರಕದು.”
ಈಗ ಪರಮಹಂಸರು ಮುಖ್ಯೋಪಾಧ್ಯಾಯ ಸೋದರರೊಡನೆ ಮಾತುಕತೆ ಆಡುತ್ತಿದ್ದಾರೆ. ಅಣ್ಣ ಮಹೇಂದ್ರನಿಗೆ ಸ್ವಂತ ವ್ಯಾಪಾರ ಇದೆ. ತಮ್ಮ ಪ್ರಿಯನಾಥನಿಗೆ ಎಂಜಿನಿಯರ್ ಕೆಲಸ ಇತ್ತು. ಸಾಕಾದಷ್ಟು ಸಂಪಾದನೆ ಮಾಡಿಕೊಂಡು ಆ ಕೆಲಸವನ್ನು ಬಿಟ್ಟುಬಿಟ್ಟಿದ್ದಾನೆ. ಮಹೇಂದ್ರನ ವಯಸ್ಸು ಮೂವತ್ತೈದೊ ಮೂವತ್ತಾರೊ ಇರಬೇಕು. ಅವರಿಗೆ ಮನೆ ಕಲ್ಕತ್ತದಲ್ಲೂ ಇದೆ, ಹಳ್ಳಿಯಲ್ಲೂ ಇದೆ.
ಶ್ರೀರಾಮಕೃಷ್ಣರು ನಗುತ್ತ: “ಸ್ವಲ್ಪ ಉದ್ದೀಪನವಾಗುತ್ತಿದೆಯಲ್ಲ ಅಂತ ಸುಮ್ಮನೆ ಇದ್ದುಬಿಡಬೇಡಿ. ಮುಂದೆ ಹೋಗಿ. ಚಂದನದ ಕಾಡಿನ ನಂತರ ಇನ್ನೂ ಇವೆ-ಬೆಳ್ಳಿಯ ಗಣಿ, ಚಿನ್ನದ ಗಣಿ, ಇತ್ಯಾದಿ.”
ಪ್ರಿಯನಾಥ ನಗುತ್ತ: “ಮಹಾಶಯರೆ, ಕಾಲಿಗೆ ಬೇಡಿ ಬಿದ್ದುಬಿಟ್ಟಿದೆ. ಮುಂದೆ ಹೋಗಲು ಬಿಟ್ಟುಕೊಡುತ್ತಿಲ್ಲ.”
ಶ್ರೀರಾಮಕೃಷ್ಣರು : “ಕಾಲಿಗೆ ಬೇಡಿ ಬಿದ್ದಿದ್ದರೆ ಏನು ತೊಂದರೆ? ಮುಖ್ಯವಾದ್ದು ಮನಸ್ಸು. ಮನಸ್ಸಿನಿಂದಲೇ ಬಂಧನ, ಮನಸ್ಸಿನಿಂದಲೇ ಮುಕ್ತಿ.”
“ಒಂದು ಕಥೆ ಕೇಳು. ಇಬ್ಬರು ಸ್ನೇಹಿತರಿದ್ದರು. ಒಬ್ಬ ವೇಶ್ಯೆಯ ಮನೆಗೆ ಹೋದ. ಇನ್ನೊಬ್ಬ ಭಾಗವತ ಕೇಳಲು ಹೋದ. ಮೊದಲನೆಯವನು ಭಾವಿಸಲಾರಂಭಿಸಿದ: ‘ನನ್ನ ಜನ್ಮಕ್ಕೆ ಬೆಂಕಿಹಾಕ! ನನ್ನ ಸ್ನೇಹಿತ ಭಾಗವತ ಕೇಳುತ್ತಿದ್ದಾನೆ, ನಾನು ಇಲ್ಲಿ ಯಾವ ಗುಂಡಿಯಲ್ಲಿ ಬಿದ್ದಿದ್ದೇನೆ!’ ಎರಡನೆಯವನು ಭಾವಿಸಲಾರಂಭಿಸಿದ: ‘ನನ್ನ ಜನ್ಮವನ್ನು ತೆಗೆದುಕೊಂಡು ಹೋಗಿ ನೀರು ನೆರಳಿಲ್ಲದ ಜಾಗದಲ್ಲಿ ಚೆನ್ನಾಗಿ ಸುಡಬೇಕು! ನನ್ನ ಸ್ನೇಹಿತ ಅಲ್ಲಿ ಎಷ್ಟು ಆಮೋದ ಆಹ್ಲಾದಗಳಲ್ಲಿ ತೊಡಗಿರಬೇಕು, ಆದರೆ ನಾನೆಂಥ ಪೆದ್ದಭಟ್ಟ!’ ಅವರಿಬ್ಬರೂ ಸತ್ತನಂತರ ಮೊದಲನೆಯವನನ್ನು ವಿಷ್ಣುದೂತರು ಕರೆದುಕೊಂಡು ಹೋದರು-ವೈಕುಂಠಕ್ಕೆ. ಎರಡನೆಯವನನ್ನು ಯಮದೂತರು ಕರೆದುಕೊಂಡು ಹೋದರು-ನರಕಕ್ಕೆ.”
ಪ್ರಿಯನಾಥ: “ಮನಸ್ಸು ನನ್ನ ವಶದಲ್ಲಿಲ್ಲವಲ್ಲ.”
ಶ್ರೀರಾಮಕೃಷ್ಣರು: “ಏಕೆ ಹಾಗೆ? ಅಭ್ಯಾಸಯೋಗ ಇದೆಯಲ್ಲ, ಅಭ್ಯಾಸ ಮಾಡು, ನೋಡುವೆಯಂತೆ ಮನಸ್ಸು ನೀನು ಬೇಕು ಅಂದ ಕಡೆಗೇ ಹೋಗುತ್ತದೆ. ಮನಸ್ಸೆಂಬುದು ಆಗಸನ ಮನೆಯಿಂದ ಬಂದ ಬಟ್ಟೆಯ ಹಾಗೆ. ಕೆಂಪು ಬಣ್ಣದಲ್ಲಿ ಅದ್ದಿದರೆ ಕೆಂಪು, ನೀಲಿ ಬಣ್ಣದಲ್ಲಿ ಅದ್ದಿದರೆ ನೀಲಿ ಆಗಿಬಿಡುತ್ತದೆ. ಯಾವ ಬಣ್ಣದಲ್ಲಿ ಅದ್ದುತ್ತೀಯೋ ಆ ಬಣ್ಣವನ್ನು ಅದು ಹಿಡಿದುಕೊಂಡುಬಿಡುತ್ತದೆ.
(ಗೋಸ್ವಾಮಿಗೆ) “ಕೇಳಬೇಕಾದ್ದು ಏನಾದರೂ ಇದೆಯೇ?”
ಗೋಸ್ವಾಮಿ ಅತ್ಯಂತ ವಿನಯದಿಂದ: “ಏನಿಲ್ಲ. ತಮ್ಮ ದರ್ಶನ ಆಯಿತಲ್ಲ. ಜೊತೆಗೆ ಇಷ್ಟು ಹೊತ್ತಿನಿಂದ ಎಲ್ಲವನ್ನೂ ಕೇಳಿದ್ದೇನಲ್ಲ.”
ಶ್ರೀರಾಮಕೃಷ್ಣರು: “ಹೋಗಿ ದೇವಾಲಯಗಳನ್ನು ನೋಡಿಕೊಂಡು ಬಾ.”
ಗೋಸ್ವಾಮಿ ಅತ್ಯಂತ ವಿನಯದಿಂದ: “ತಮ್ಮ ಮುಖದಿಂದ ಒಂದೆರಡು ಚೈತನ್ಯ ಮಹಾಪ್ರಭುವಿನ ಗುಣಾನುಕೀರ್ತನೆ.”
ಪರಮಹಂಸರು ಹಾಡುತ್ತಿದ್ದಾರೆ:
ಗೌರವರ್ಣವಾಯಿತೇಕೆ ಇಂದು ನನ್ನ ತನುರುಚಿ?
ಯುಗಯುಗಗಳು ಕಳೆಯಬೇಕು………………..
ಮತ್ತೆ ಹಾಡುತ್ತಿದ್ದಾರೆ:
ಬೃಂದಾವನದೆಡೆ ನೋಡುತ ಗೌರನು
ಕಂಬನಿಯನು ಸುರಿಸುವನು,
ಅಳುವನು ನಗುವನು ಹಾಡುತ ಕುಣಿವನು
ಆನಂದದ ಕಡಲಾಗಿಹನು
ಯಾವ ಕಾಡನೋ ಬೃಂದಾವನವೆನ್ನುತ
ಈ ಕಡಲನೆ ಯಮುನೆಯ ಹೊನಲೆಂದು
ಭಾವಿಸಿ ನೆಲದಲಿ ಹೊರಳುವನು
ಹಾಡುವುದು ಮುಗಿಯಿತು. ಈಗ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಗೋಸ್ವಾಮಿಗೆ: “ಈಗ ನಿಮ್ಮ ಸಂಪ್ರದಾಯಕ್ಕನುಸಾರ ಹಾಡಿದೆ. ಶಾಕ್ತರೇ ಆಗಲಿ, ಘೋಷಪಾರದವರೇ ಆಗಲಿ, ಮತ್ತಾರೇ ಆಗಲಿ ಬಂದರೂ ಅವರಂತೆ ನಾನು ಹಾಡಬೇಕಾಗಿದೆ.
“ಇಲ್ಲಿಗೆ ಎಲ್ಲಾ ವಿಧದ ಸಂಪ್ರದಾಯದವರೂ ಬರುತ್ತಾರೆ. ವೈಷ್ಣವರು, ಶಾಕ್ತರು, ಕರ್ತಾಭಜಾದವರು, ವೇದಾಂತವಾದಿಗಳು. ಈಗಿನ ಬ್ರಹ್ಮಜ್ಞಾನಿಗಳು (ಬ್ರಾಹ್ಮಸಮಾಜ ದವರು) ಎಲ್ಲಾ; ಇಲ್ಲಿ ಎಲ್ಲರ ಭಾವಗಳೂ ಇರುವುದರಿಂದ. ಭಗವಂತನ ಇಚ್ಛೆಯಿಂದಲೇ ವಿವಿಧ ಧರ್ಮಗಳು, ವಿವಿಧ ಮತಗಳು ಉದ್ಭವವಾಗಿವೆ. ಯಾರಿಗೆ ಯಾವುದು ಹಿಡಿಸುತ್ತದೊ ಅವರಿಗೆ ಅದನ್ನು ಕೊಡುತ್ತಾನೆ. ತಾಯಿ ತನ್ನ ಎಲ್ಲಾ ಮಕ್ಕಳಿಗೂ ಮೀನಿನ ಪಲಾವು ಮಾಡಿ ಬಡಿಸುವುದಿಲ್ಲ. ಎಲ್ಲರ ಹೊಟ್ಟೆಗೂ ಅದು ಸರಿಹೋಗದು. ಅದಕ್ಕಾಗಿ ಆಕೆ ಕೆಲವರಿಗೆ ಮೀನಿನ ಸಾರು ಮಾಡಿ ಬಡಿಸುತ್ತಾಳೆ. ಪ್ರತಿಯೊಬ್ಬನೂ ತನ್ನ ತನ್ನ ಪ್ರಕೃತಿಗನುಸಾರ, ತನ್ನ ಭಾವಕ್ಕನುಗುಣವಾಗಿ ಮುಂದುವರಿಯುತ್ತಿರುತ್ತಾನೆ.
“ಬರೋಯಾರಿ 3 ಸಮಯದಲ್ಲಿ ಅನೇಕ ಬಗೆಯ ಮೂರ್ತಿಗಳನ್ನು ಮಾಡಿ ಪೂಜೆ ಮಾಡುತ್ತಾರೆ. ವಿವಿಧ ಸಂಪ್ರದಾಯದ ಜನ ಅಲ್ಲಿ ಒಟ್ಟುಗೂಡುತ್ತಾರೆ. ರಾಧಾಕೃಷ್ಣ, ಹರ-ಪಾರ್ವತಿ, ಸೀತಾ-ರಾಮ ಈ ಮೂರ್ತಿಗಳನ್ನು ಪ್ರತ್ಯೇಕಪ್ರತ್ಯೇಕವಾಗಿ ಬೇರೆ ಬೇರೆ ಸ್ಥಳಗಳಲ್ಲಿ ಇಟ್ಟು ಪೂಜಿಸುತ್ತಾರೆ. ಪ್ರತಿಯೊಂದು ಮೂರ್ತಿಯ ಹತ್ತಿರವೂ ಜನ ಗುಂಪುಗಟ್ಟಿ ನಿಂತಿರುತ್ತಾರೆ. ವೈಷ್ಣವರು ಹೆಚ್ಚಾಗಿ ರಾಧಾ-ಕೃಷ್ಣರ ಹತ್ತಿರ, ಶಾಕ್ತರು ಹರ-ಪಾರ್ವತಿಯರ ಹತ್ತಿರ, ರಾಮ ಭಕ್ತರು ಸೀತಾ-ರಾಮರ ಹತ್ತಿರ ಸೇರುತ್ತಾರೆ.”
“ಆದರೆ ಯಾರ ಮನಸ್ಸು ಒಂದು ಕಿಂಚಿತ್ತೂ ಭಗವಂತನ ಕಡೆಗೆ ಹರಿಯಲೊಲ್ಲದೊ ಅವರಿಗೂ ಒಂದು ಪ್ರತ್ಯೇಕ ಸ್ಥಳವಿದೆ. ಅವರಿಗೆ ವೇಶ್ಯೆ, ಉಪಪತಿಯರನ್ನು ಬರಲು ತೆಗೆದುಕೊಂಡು ಹೊಡೆಯುತ್ತಾ ಇರುವ ಮೂರ್ತಿ. ಇಂಥಾ ಮೂರ್ತಿಗಳನ್ನೂ ಹಬ್ಬದಲ್ಲಿ ಒಂದು ಕಡೆ ಇಡುತ್ತಾರೆ. ಆ ವಿಧದ ಜನರು ಅಲ್ಲಿಗೆ ಹೋಗಿ ನಿಂತುಕೊಂಡು ಆ ಮೂರ್ತಿಗಳನ್ನು ಬಾಯಿಬಿಟ್ಟುಕೊಂಡು ನೋಡುತ್ತ ಬಂಧುಗಳಿಗೆ ಕೂಗಿ ಹೇಳುತ್ತಾರೆ: ‘ಏನ್ರೋ ಅಲ್ಲೇನಿದೆ ಮಣ್ಣು! ಇಲ್ಲಿಗೆ ಬಂದು ನೋಡ್ರೋ ತಮಾಷೇನಾ!’” (ಎಲ್ಲರೂ ನಗುತ್ತಿದ್ದಾರೆ.)
ಗೋಸ್ವಾಮಿ ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಳ್ಳುತ್ತಾನೆ. ಘಂಟೆ ಸಾಯಂಕಾಲ ಐದು. ಪರಮಹಂಸರು ತಮ್ಮ ಕೊಠಡಿಯ ಅರ್ಧಚಂದ್ರಾಕೃತಿಯ ವರಾಂಡದಲ್ಲಿ ಬಾಬುರಾಮ, ಲಾಟು, ಮುಖ್ಯೋಪಾಧ್ಯಾಯ ಸಹೋದರರು, ಮಾಸ್ಟರ್ ಇವರೇ ಮೊದಲಾದ ಭಕ್ತರೊಡನೆ ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರ್ ಮೊದಲಾದವರಿಗೆ: “ನಾನೇಕೆ ಒಂದೇ ಸ್ವರ ಊದುವವನಾಗಲಿ? ಗೋಸ್ವಾಮಿಗಳು ಗೊಡ್ಡು ವೈಷ್ಣವರು. ಅವರು ಭಾವಿಸುತ್ತಾರೆ, ತಮ್ಮ ಮತವೇ ಸರಿ. ಉಳಿದವರದೆಲ್ಲ ತಪ್ಪು ಎಂಬುದಾಗಿ. ನಾನು ಮಾತನಾಡಿದ್ದು ಆತನಿಗೆ ಚೆನ್ನಾಗಿ ತಾಕಿರಬೇಕು. (ನಗುತ್ತ) ಆನೆಯ ತಲೆಯನ್ನು ಅಂಕುಶದಿಂದ ಚುಚ್ಚಬೇಕು; ತಲೆ ಅದರ ಮರ್ಮ ಸ್ಥಾನವಂತೆ.”
ಪರಮಹಂಸರು ಈಗ ಯುವಕರೊಡನೆ ಹುಡುಗಾಟವಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಭಕ್ತರಿಗೆ: “ನಾನು ಈ ಯುವಕರಿಗೆ ಕೇವಲ ಸಸ್ಯಾಹಾರವನ್ನೇ ಕೊಡುತ್ತಿಲ್ಲ; ಆಗಾಗ ಸ್ವಲ್ಪ ಮೀನು ತೊಳೆದ ನೀರನ್ನೂ ಕೊಡುತ್ತಿದ್ದೇನೆ: ಇಲ್ಲದಿದ್ದರೆ ಇವರು ಇಲ್ಲಿಗೆ ಬರುತ್ತಾ ಇದ್ದರೆ?” ಮುಖ್ಯೋಪಾಧ್ಯಾಯ ಸೋದರರು ವರಾಂಡದಿಂದ ಎದ್ದು ಹೋಗುತ್ತಿದ್ದಾರೆ-ಉದ್ಯಾನವನದಲ್ಲಿ ಸುತ್ತಾಡಿ ಬರಲು.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನಾನು ತಮಾಷೆ ಮಾಡಿದ್ದು ಮುಖ್ಯೋಪಾಧ್ಯಾಯ ರನ್ನು ಬೇಜಾರುಪಡಿಸಿತೇನು?”
ಮಾಸ್ಟರ್: “ಏಕೆ ಬೇಜಾರುಪಡಿಸೀತು? ಕ್ಯಾಪ್ಟನ್ ಹೇಳಿದ್ದಾನೆ. ನಿಮ್ಮದು ಬಾಲಕ ಸ್ವಭಾವ ಅಂತ. ಭಗವಂತನ ಸಾಕ್ಷಾತ್ಕಾರ ದೊರೆತನಂತರ ಬಾಲಕನ ಸ್ವಭಾವ ಬಂದು ಬಿಡುತ್ತದೆ.”
ಶ್ರೀರಾಮಕೃಷ್ಣರು: “ಅದೇನೋ ನಿಜ. ಆತ ಕೆಲವು ವೇಳೆ ಬಾಲಕನ ಹಾಗೆ, ಇನ್ನು ಕೆಲವು ವೇಳೆ ಹುಡುಗನ ಹಾಗೆ, ಮತ್ತೆ ಕೆಲವು ವೇಳೆ ಯುವಕನ ಹಾಗೆ ವರ್ತಿಸುತ್ತಾನೆ. ಒಮ್ಮೊಮ್ಮೆ ಕೋಡಂಗಿಯ ಹಾಗೂ ಮಾತುಕತೆ ಆಡಬಹುದು. ಯುವಕನ ಅವಸ್ಥೆಯಲ್ಲಿ ಗರ್ಜಿಸುವ ಸಿಂಹದ ಹಾಗೆ ಲೋಕಶಿಕ್ಷಣ ಕೊಡುತ್ತಾನೆ. ನೀನು ಮುಖ್ಯೋಪಾಧ್ಯಾಯ ಸೋದರರಿಗೆ ನನ್ನ ಮಾನಸಿಕ ಅವಸ್ಥೆಯನ್ನು ವಿವರಿಸಿ ತಿಳಿಸು.”
ಮಾಸ್ಟರ್: “ನಾನೇನು ಹಾಗೆ ಮಾಡಬೇಕಾಗಿಲ್ಲ. ಅಷ್ಟು ಬುದ್ಧಿಯಿಲ್ಲವೆ ಅವರಿಗೆ?”
ಮತ್ತೆ ಪರಮಹಂಸರು ಯುವಕರೊಡನೆ ಹುಡುಗಾಟವಾಡುತ್ತಿದ್ದಾರೆ. ಈಗ ಒಬ್ಬ ಭಕ್ತನಿಗೆ ಹೇಳುತ್ತಿದ್ದಾರೆ: “ಇಂದು ಅಮಾವಾಸ್ಯೆ. ರಾತ್ರಿ ಕಾಳೀದೇವಾಲಯಕ್ಕೆ ಹೋಗು.”
ಮುಸ್ಸಂಜೆಯಾಗಿದೆ. ಸಾಯಂ ಮಂಗಳಾರತಿಯ ಶಬ್ದ ಕೇಳಿಬರುತ್ತಿದೆ. ಪರಮಂಹಸರು ಬಾಬುರಾಮನಿಗೆ ಹೇಳುತ್ತಿದ್ದಾರೆ. “ಹೊರಡು ಕಾಳೀದೇವಾಲಯಕ್ಕೆ ನನ್ನೊಡನೆ.” ಅವರು ಬಾಬುರಾಮ ಕಾಳಿದೇವಾಲಯದ ಕಡೆ ಸಾಗುತ್ತಿದ್ದಾರೆ. ಮಾಸ್ಟರೂ ಅವರನ್ನು ಹಿಂಬಾಲಿಸು ತ್ತಿದ್ದಾನೆ. ವರಾಂಡದಲ್ಲಿ ಹರೀಶ ಕುಳಿತಿರುವುದನ್ನು ನೋಡಿ ಪರಮಹಂಸರು ಹೇಳುತ್ತಿದ್ದಾರೆ. “ಇವನಿಗೆ ಭಾವ ಬಂದುಬಿಟ್ಟಿದೆ ಅಂತ ಕಾಣುತ್ತದೆ!”
ಪ್ರಾಂಗಣದ ಮೂಲಕ ನಡೆಯುತ್ತ ನಡೆಯುತ್ತ ಪರಮಹಂಸರು ಮತ್ತು ಭಕ್ತರು ರಾಧಾಕಾಂತ ದೇವಾಲಯದ ಎದುರು ಮಂಗಳಾರತಿ ನೋಡಲು ನಿಂತಿದ್ದಾರೆ. ಈಗ ಕಾಳೀದೇವಾಲಯದ ಕಡೆ ಮುಂದುವರಿಯುತ್ತಿದ್ದಾರೆ. ಮುಂದುವರಿಯುತ್ತ ಇದ್ದ ಹಾಗೆ ಕೈಗಳನ್ನು ಮೇಲಕ್ಕೆ ಎತ್ತಿ ಭಗವತಿಯನ್ನು ಕರೆಯುತ್ತಿದ್ದಾರೆ, “ಹೇ ತಾಯಿ! ಹೇ ಬ್ರಹ್ಮಮಯಿ!”
ಪರಮಹಂಸರು ಗರ್ಭಗುಡಿಯ ಮುಂಭಾಗಕ್ಕೆ ಬಂದು ಭಗವತಿಗೆ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದಾರೆ. ಮಂಗಳಾರತಿ ನಡೆಯುತ್ತಿದೆ. ಈಗ ಗರ್ಭಗುಡಿಯನ್ನು ಪ್ರವೇಶಿಸಿ ಭಗವತಿಗೆ ಚಾಮರ ಬೀಸುತ್ತಿದ್ದಾರೆ.
ಮಂಗಳಾರತಿ ಮುಗಿಯಿತು. ಎಲ್ಲರೂ ಒಟ್ಟಿಗೆ ದೇವಿಗೆ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದಾರೆ. ಇಂದು ಅಮಾವಾಸ್ಯೆ. ಪರಮಹಂಸರು ಭಾವಾವಿಷ್ಟರಾಗಿದ್ದಾರೆ. ಪ್ರೇಮೋನ್ಮತ್ತತೆಯಿಂದ ತುಂಬಿತುಳುಕಾಡುತ್ತಿದ್ದಾರೆ. ಉನ್ಮತ್ತನ ಹಾಗೆ ಕಾಲು ಹಾಕುತ್ತ ಬಾಬುರಾಮನ ಕೈ ಹಿಡಿದೆಳೆದುಕೊಂಡು ತಮ್ಮ ಕೊಠಡಿಗೆ ಹಿಂತಿರುಗಿ ಬರುತ್ತಿದ್ದಾರೆ.
ಪರಮಹಂಸರ ಕೊಠಡಿಯ ಪಶ್ಚಿಮ ವರಾಂಡದಲ್ಲಿ ಒಂದು ದೀಪ ಉರಿಯುತ್ತಿದೆ. ಪರಮಹಂಸರು ಆ ವರಾಂಡಕ್ಕೆ ಬಂದು ಕುಳಿತುಕೊಂಡು ಹೇಳುತ್ತಿದ್ದಾರೆ: “ಹರಿಃ ಓಂ! ಹರಿಃ ಓಂ! ಹರಿಃ ಓಂ!” ಈಗ ಕೆಲವು ತಂತ್ರೋಕ್ತ ಮಂತ್ರಗಳನ್ನು ಪಠಿಸುತ್ತಿದ್ದಾರೆ. ಸ್ವಲ್ಪ ಹೊತ್ತು ಅಲ್ಲೆ ಕುಳಿತಿದ್ದು ಈಗ ತಮ್ಮ ಕೊಠಡಿಗೆ ಬಂದು ಚಿಕ್ಕ ಮಂಚದ ಮೇಲೆ ಪೂರ್ವಾಭಿಮುಖ ವಾಗಿ ಕುಳಿತಿದ್ದಾರೆ. ಇನ್ನೂ ಭಾವೋನ್ಮತ್ತರಾಗಿಯೇ ಇದ್ದಾರೆ. ಭಗವತಿಯನ್ನು ಸಂಬೋಧಿಸಿ ಹೇಳುತ್ತಿದ್ದಾರೆ: ‘ಹೇ ತಾಯಿ, ಮೊದಲು ನಾನು ಹೇಳುವುದು, ಅನಂತರ ನೀನು ಮಾಡು ವುದು-ಓ, ಇದು ತಿಳಿಗೇಡಿತನ! ಮಾತಾಡುವುದು ಅಂದರೆ ಏನು? ಸಂಕೇತದಿಂದ ತಿಳಿಸುವಿಕೆಯಲ್ಲದೆ ಬೇರೇನೂ ಅಲ್ಲ. ಒಬ್ಬ ಹೇಳುತ್ತಾನೆ: ‘ನಾನು ಊಟಮಾಡುತ್ತೇನೆ’ ಮತ್ತೆ, ಇನ್ನೊಬ್ಬ ಹೇಳುತ್ತಾನೆ: ‘ಹೋಗು! ನಾನು ಕಿವಿಗೊಡುವುದಿಲ್ಲ.’ ಒಳ್ಳೇದು ತಾಯೆ, ನಾನು ಊಟಮಾಡುವುದಿಲ್ಲವೆಂದು ಒಂದು ಪಕ್ಷ ಹೇಳಿದ್ದೆ ಅಂತ ಇಟ್ಟುಕೊ; ಹಾಗೆ ಹೇಳಿಬಿಟ್ಟಾಕ್ಷಣಕ್ಕೆ ನನಗೆ ಹಸಿವಾಗಲೊಲ್ಲದೆ? ಬಾಯಿಬಿಟ್ಟು ಹೇಳಿದರೇ ನೀನು ಕಿವಿಗೊಡುವೆ; ಆಂತರ್ಯದಲ್ಲಿ ವ್ಯಾಕುಲಪಟ್ಟರೆ ನೀನು ಕಿವಿಗೊಡುವುದಿಲ್ಲ ಅಂತಲೇನು? ನೀನು ಎಂದಾದರೂ ಹಾಗೆ ಮಾಡತಕ್ಕವಳೆ? ನೀನು ಏನಾಗಿದ್ದೀಯೋ ಅದೇ ಆಗಿದ್ದೀಯೆ. ಆದ್ದರಿಂದ ನಾನೇಕೆ ನಿನಗೆ ತಿಳಿಸಹೋಗಲಿ? ನಾನೇಕೆ ನಿನಗೆ ಪ್ರಾರ್ಥನೆ ಮಾಡಹೋಗಲಿ? ನೀನು ಮಾಡಿಸಿದ ಹಾಗೆ ಮಾಡುತ್ತೇನೆ. ಹೋಗು, ಎಲ್ಲಾ ಹದಗೆಟ್ಟು ಹೋಯಿತು! ವಿಚಾರಮಾಡುವಂತೆ ಏಕೆ ನನ್ನನ್ನು ತೊಡಗಿಸಿದ್ದೀಯೆ?”
ಪರಮಹಂಸರು ಈ ಮಾತುಗಳನ್ನೆಲ್ಲ ಕೇಳಿ ಭಕ್ತರು ಆಶ್ಚರ್ಯಚಕಿತರಾಗಿಬಿಟ್ಟಿದ್ದಾರೆ. ಪರಮಹಂಸರು ಈಗ ಭಕ್ತರ ಕಡೆ ನೋಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಭಕ್ತರಿಗೆ: “ಭಗವಂತನ ಸಾಕ್ಷಾತ್ಕಾರ ದೊರಕಬೇಕಾದರೆ ಒಳ್ಳೇ ಸಂಸ್ಕಾರ ಬೇಕು. ಏನಾದರೂ ಒಂದು ಸ್ವಲ್ಪ ತಪಸ್ಸನ್ನು-ಈ ಜನ್ಮದಲ್ಲಾದರೂ ಸರಿಯೆ, ಹಿಂದಿನ ಜನ್ಮದಲ್ಲಾದರೂ ಸರಿಯೆ-ಮಾಡಿರಬೇಕು.
“ದ್ರೌಪದಿಯ ಸೀರೆಯನ್ನು ದುರ್ಯೋಧನನ ಅನುಯಾಯಿಗಳು ಸೆಳೆಯುತ್ತಿದ್ದಾಗ ಅತ್ಯಂತ ವ್ಯಾಕುಲತೆಯಿಂದ ಕೂಡಿದ ಆಕೆಯ ರೋದನವನ್ನು ಕೇಳಿ ಭಗವಂತ ಆಕೆಗೆ ದರ್ಶನ ಕೊಟ್ಟು ಹೇಳಿದ: ‘ನೀನು ಯಾರಿಗೇ ಆಗಲಿ, ಎಂದಾದರೂ ವಸ್ತ್ರದಾನ ಮಾಡಿದ್ದೀಯಾ? ಸ್ವಲ್ಪ ಹಾಗೇ ಆಲೋಚಿಸಿ ನೋಡು. ಹಾಗೆ ನೀನು ಮಾಡಿದ್ದೇ ಆಗಿದ್ದರೆ, ನಿನ್ನ ಮಾನಭಂಗ ಎಂದಿಗೂ ಆಗದು.’ ದ್ರೌಪದಿ ಹೇಳಿದಳು: ‘ಹೌದು, ಜ್ಞಾಪಕಕ್ಕೆ ಬರುತ್ತಾ ಇದೆ. ಒಬ್ಬ ಋಷಿ ಸ್ನಾನಮಾಡುತ್ತಿದ್ದ. ಆತನ ಕೌಪೀನವನ್ನು ಪ್ರವಾಹ ಕೊಚ್ಚಿಕೊಂಡು ಹೋಯಿತು. ಆಗ ನಾನು ನನ್ನ ಸೀರೆಯ ಅರ್ಧಭಾಗವನ್ನು ಹರಿದು ಆತನಿಗೆ ಕೊಟ್ಟೆ.’ ಆಗ ಭಗವಂತ ಹೇಳಿದ: ‘ಹಾಗಾದರೆ, ನೀನು ಸ್ವಲ್ಪವೂ ಹೆದರಬೇಕಾಗಿಲ್ಲ.’”
ಮಾಸ್ಟರ್ ಒಂದು ಚಿಕ್ಕ ಕಾಲೊರಸಿನ (ಫುಟ್ರಗ್ಗಿನ) ಮೇಲೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನಿನಗೆ ಅದು ಅರ್ಥವಾಯಿತೆ?”
ಮಾಸ್ಟರ್: “ಹೌದು, ಆ ಸಂಸ್ಕಾರದ ವಿಷಯ ತಾನೆ.”
ಶ್ರೀರಾಮಕೃಷ್ಣರು: “ಒಮ್ಮೆ ಹೇಳು ನೋಡೋಣ, ನಾನು ಏನು ಹೇಳಿದೆ?”
ಮಾಸ್ಟರ್ ದ್ರೌಪದಿಯ ಕಥೆಯನ್ನು ಪುನಃ ಹೇಳುತ್ತಾನೆ.
ಹಾಜರಾ ಕೊಠಡಿಯನ್ನು ಪ್ರವೇಶಿಸುತ್ತಾನೆ. ಆತ ಈಗ ಎರಡು ವರ್ಷಗಳಿಂದ ಪರಮಹಂಸರೊಡನೆ ದಕ್ಷಿಣೇಶ್ವರದಲ್ಲೇ ವಾಸಿಸುತ್ತಿದ್ದಾನೆ. ೧೮೮೦ನೆ ಇಸವಿಯಲ್ಲಿ ಆತ ಪರಮಹಂಸರನ್ನು ಹೃದಯನ ಊರು ಸಿಹೋರಿನಲ್ಲಿ ಸಂಧಿಸಿದ. ಹಾಜರಾನ ಊರು ಸಿಹೋರಿನ ಹತ್ತಿರವೇ. ಅಲ್ಲಿ ಆತನಿಗೆ ಅಲ್ಪ ಸ್ವಲ್ಪ ಭೂಮಿ ಕಾಣಿ ಮನೆ ಮಠ ಇವೆ, ಹೆಂಡತಿ ಮಕ್ಕಳೂ ಇದ್ದಾರೆ. ಸ್ವಲ್ಪ ಸಾಲವೂ ಇದೆ. ಬಾಲ್ಯದಿಂದಲೂ ಆತನ ಮನಸ್ಸು ಭಗವಂತನ ಕಡೆಗೆ ಹರಿಯುತ್ತಿದೆ. ಅದಕ್ಕಾಗಿ ಆತ ಸಾಧು-ಸತ್ಪುರುಷರ ಸಹವಾಸ ಮಾಡುತ್ತಿದ್ದಾನೆ. ಪರಮಹಂಸರು ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾನೆ. ಆದರೆ ಆತನ ಮನಸ್ಸು ಅರಗಿಸಿ ಕೊಳ್ಳಲಾಗದೇ ಇದ್ದ ಧಾರ್ಮಿಕ ಭಾವನೆಗಳ ಕಲಸುಮೇಲೋಗರದಂತಿದೆ. ಆತ ಜ್ಞಾನಮಾರ್ಗ ಅವಲಂಬಿ. ಪರಮಹಂಸರ ಭಕ್ತಿಪ್ರವೃತ್ತಿ ಮತ್ತು ಅವರು ಯುವಕರಿಗೆ ತೋರಿಸುತ್ತಿದ್ದ ಆದರ ಅಕ್ಕರೆ ಆತನಿಗೆ ಹಿಡಿಸುತ್ತಿಲ್ಲ. ಕೆಲವು ವೇಳೆಯೇನೋ ಆತ ಪರಮಹಂಸರನ್ನು ಒಬ್ಬ ಮಹಾಪುರುಷರೆಂದೇ ಪರಿಗಣಿಸುತ್ತಾನೆ. ಆದರೆ ಇನ್ನು ಕೆಲವು ವೇಳೆ ಅವರು ಬರೀ ಸಾಮಾನ್ಯ ಮನುಷ್ಯರೇ ಎಂದು ಭಾವಿಸಿ, ಅವರನ್ನು ನಿಂದಿಸುತ್ತಿರುತ್ತಾನೆ. ಆತ ತನ್ನ ಸಮಯದ ಬಹುಭಾಗವನ್ನು ಜಪಮಾಲೆ ತಿರುಗಿಸುತ್ತಲೇ ಕಳೆಯುತ್ತಿದ್ದಾನೆ. ರಾಖಾಲನೇ ಮೊದಲಾದ ಯುವಕ ಭಕ್ತರು ತನ್ನನ್ನು ಅನುಸರಿಸದೆ ಇರುವುದಕ್ಕಾಗಿ ಅವರನ್ನು ನಿಂದಿಸುತ್ತಾನೆ. ಆತ ಒಬ್ಬ ಗೊಡ್ಡು ಆಚಾರವಂತ. ವಯಸ್ಸು ಸುಮಾರು ಮೂವತ್ತೆಂಟು ಇರಬಹುದು.
ಹಾಜರಾ ಕೊಠಡಿಯನ್ನು ಪ್ರವೇಶಿಸಿದೊಡನೆಯೇ ಪರಮಹಂಸರು ಕಿಂಚಿತ್ ಭಾವಾವಿಷ್ಟರಾಗಿ ಆ ಅವಸ್ಥೆಯಲ್ಲೇ ಮಾತಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಹಾಜರಾನಿಗೆ: “ನೀನು ಏನು ಹಿಡಿದಿದ್ದೀಯೋ ಅದು ಸರಿಯಾದ ಮಾರ್ಗವೇ, ಆದರೆ ಅದನ್ನು ಉಪಯೋಗಿಸಿಕೊಳ್ಳುವ ರೀತಿ ಸರಿಯಾಗಿಲ್ಲ. ಯಾರಲ್ಲೂ ತಪ್ಪು ಕಂಡುಹಿಡಿಯಬೇಡ-ಒಂದು ಕ್ರಿಮಿಯಲ್ಲಿಯೂ ಕೂಡ. ಭಕ್ತಿಗಾಗಿ ಭಗವಂತನನ್ನು ಪ್ರಾರ್ಥನೆಮಾಡುತ್ತೀಯಲ್ಲ, ಹಾಗೆಯೇ ಯಾರಲ್ಲೂ ತಪ್ಪು ಕಂಡುಹಿಡಿಯದೆ ಇರುವುದಕ್ಕಾಗಿಯೇ ಪ್ರಾರ್ಥನೆಮಾಡು.”
ಹಾಜರಾ: “ಭಕ್ತಿಗಾಗಿ ಪ್ರಾರ್ಥನೆಮಾಡಿದರೆ ಆತ ಕೇಳುತ್ತಾನೇನು?”
ಶ್ರೀರಾಮಕೃಷ್ಣರು: “ನಿಜವಾಗಿಯೂ, ಆ ವಿಷಯವಾಗಿಯೂ ನಿನಗೆ ಒಂದು ಸಾವಿರ ಸಲ ಆಶ್ವಾಸನ ಕೊಡಬಲ್ಲೆ. ಆದರೆ ಪ್ರಾರ್ಥನೆ ಹೃತ್ಪೂರ್ವಕವಾಗಿರಬೇಕು, ವ್ಯಾಕುಲತೆ ಯಿಂದ ಕೂಡಿರಬೇಕು. ಪ್ರಾಪಂಚಿಕರು ಹೆಂಡತಿ ಮಕ್ಕಳಿಗಾಗಿ ಅಳುವಂತೆ ಅವರು ಭಗವಂತನಿಗಾಗಿ ಅಳಬಲ್ಲರೆ? ಕಾಮಾರಪುಕುರಿನಲ್ಲಿ ಒಬ್ಬನ ಹೆಂಡತಿ ಒಮ್ಮೆ ಕಾಯಿಲೆ ಬಿದ್ದಳು. ಆಕೆ ಬದುಕುವುದಿಲ್ಲ ಅಂತ ಭಾವಿಸಿ, ‘ಥರ, ಥರ’ ಅಂತ ಗಂಡ ನಡುಗಲಾ ರಂಭಿಸಿದ-ಮೂರ್ಛಿತನಾಗುವುದರಲ್ಲಿದ್ದ. ಆ ರೀತಿಯಾಗಿ ಭಗವಂತನಿಗಾಗಿ ಯಾರು ವ್ಯಾಕುಲಪಡುತ್ತಾರೆ?”
ಹಾಜರಾ ಪರಮಹಂಸರ ಪಾದಧೂಳಿ ತೆಗೆದುಕೊಳ್ಳಲು ಮುಂದುವರಿಯುತ್ತಿದ್ದಾನೆ.
ಶ್ರೀರಾಮಕೃಷ್ಣರು ಹೀಗೆಂದರು: “ಏಕೆ, ಇದೆಲ್ಲ?”
ಹಾಜರಾ: “ಯಾರು ಕೃಪೆಮಾಡಿ ತಮ್ಮ ಹತ್ತಿರ ಇಟ್ಟುಕೊಂಡಿದ್ದಾರೊ ಅವರ ಪಾದಧೂಳಿಯನ್ನು ನಾನೇಕೆ ತೆಗೆದುಕೊಳ್ಳಬಾರದು?”
ಶ್ರೀರಾಮಕೃಷ್ಣರು: “ಭಗವಂತನನ್ನು ತುಷ್ಟಿಗೊಳಿಸು. ಅದರಿಂದ ಎಲ್ಲರೂ ತುಷ್ಟರಾಗಿ ಬಿಡುತ್ತಾರೆ. ‘ತಸ್ಮಿನ್ ತುಷ್ಟೇ ಜಗತ್ ತುಷ್ಟಮ್’, ‘ಭಗವಂತ ತುಷ್ಟನಾದರೆ ಜಗತ್ತು ತುಷ್ಟವಾಗಿಬಿಡುತ್ತದೆ.’ ಒಮ್ಮೆ ಶ್ರೀಕೃಷ್ಣ ಪರಮಾತ್ಮ ದ್ರೌಪದಿಯ ಅಡಿಗೆ ಪಾತ್ರೆಗೆ ಅಂಟಿ ಕೊಂಡಿದ್ದ ಸೊಪ್ಪನ್ನು ತಿಂದು ಹೇಳಿದ: ‘ನನಗೆ ತೃಪ್ತಿಯಾಯಿತು’ ಒಡನೆಯೇ ಇಡೀ ಜಗತ್ತಿಗೆ, ಅದರ ಜೀವರಾಶಿಗಳಿಗೆಲ್ಲಾ ತೃಪ್ತಿಯಾಗಿಬಿಟ್ಟಿತು-ಹೊಟ್ಟೆ ತುಂಬಿ ತೇಗೂ ಬಂದುಬಿಟ್ಟಿತು. ಆದರೆ ಋಷಿಗಳು ತಿಂದಾಗ ಈ ಜಗತ್ತಿಗೆ ತೃಪ್ತಿಗೂ. ಆ ರೀತಿಯ ತೇಗು ಉಂಟಾಯಿತೇನು?
(ಹಾಜರಾನಿಗೆ): “ಜ್ಞಾನಿಗಳು ಬ್ರಹ್ಮಜ್ಞಾನ ದೊರೆತ ನಂತರವೂ ಲೋಕಶಿಕ್ಷಣಾರ್ಥ ವಾಗಿ ಪೂಜಾದಿ ಕರ್ಮಗಳನ್ನು ಮಾಡಿಕೊಂಡು ಹೋಗುತ್ತಿರುತ್ತಾರೆ. ನಾನು ಕಾಳೀ ದೇವಾಲಯಕ್ಕೆ ಹೋಗುತ್ತಿದ್ದೇನೆ ಮತ್ತು ಈ ಕೊಠಡಿಯ ಎಲ್ಲಾ ಪಠಗಳಿಗೂ ನಮಸ್ಕಾರ ಮಾಡುತ್ತಿದ್ದೇನೆ; ಆದ್ದರಿಂದ ಇಲ್ಲಿ ಎಲ್ಲರೂ ಹಾಗೇ ಮಾಡುತ್ತಿದ್ದಾರೆ. ಇದೂ ಅಲ್ಲದೆ ಒಮ್ಮೆ ಅಭ್ಯಾಸವಾಗಿ ಬಿಟ್ಟಿತು ಎಂದರೆ, ಮತ್ತೆ ಹಾಗೆ ಮಾಡದಿದ್ದರೆ ಮನಸ್ಸಿಗೆ ಏನೋ ಒಂದು ವಿಧವಾದ ಅಶಾಂತಿಯುಂಟಾಗುತ್ತದೆ.
“ಒಂದು ದಿನ ನಾನು ಆಲದ ಮರದ ಕೆಳಗೆ ಒಬ್ಬ ಸಂನ್ಯಾಸಿಯನ್ನು ಕಂಡೆ. ಆತ ಒಂದೇ ಪೀಠದ ಮೇಲೆ ಗುರುಪಾದುಕೆ ಮತ್ತು ಸಾಲಗ್ರಾಮ ಎರಡನ್ನೂ ಇಟ್ಟು ಪೂಜೆಮಾಡುತ್ತಿದ್ದ. ನಾನು ಕೇಳಿದೆ: ‘ಜ್ಞಾನ ಈ ಮಟ್ಟವನ್ನು ಮುಟ್ಟಿಬಿಟ್ಟಿದ್ದೇ ಆದರೆ ಇನ್ನು ಪೂಜೆಯನ್ನು ಏಕೆ ಮಾಡುತ್ತಾ ಇದ್ದೀಯೆ?’ ಆತ ಹೇಳಿದ: ‘ಎಲ್ಲಾ ಕೆಲಸಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಿರುವಾಗ ಇದೊಂದನ್ನು ಮಾತ್ರ ಏಕೆ ಬಿಟ್ಟುಬಿಡಬೇಕು? ಈ ಪಾದಗಳಿಗೆ ಹೂವು ಅರ್ಪಿಸುವಾಗ ಆ ಪಾದಗಳಿಗೂ ಕೆಲವನ್ನು ಅರ್ಪಿಸಿಬಿಡುತ್ತೇನೆ, ಅಷ್ಟೇ.’
“ದೇಹವಿರುವವರೆಗೆ ಕರ್ಮತ್ಯಾಗ ಮಾಡುವ ಹಾಗಿಲ್ಲ. ಕೆರೆಯ ತಳದಲ್ಲಿ ಕೆಸರಿರುವವರೆಗೆ ಗುಳ್ಳೆ ಎದ್ದೇ ಏಳುತ್ತವೆ.”
(ಹಾಜರಾನಿಗೆ): “ಒಂದರ ಜ್ಞಾನ ಇತ್ತು ಎಂದರೆ, ಅನೇಕ ವಿಷಯಗಳ ಜ್ಞಾನ ಇದ್ದೇ ಇರುತ್ತದೆ. ಕೇವಲ ಶಾಸ್ತ್ರಾಧ್ಯಯನದಿಂದ ಏನು ದೊರೆತೀತು? ಶಾಸ್ತ್ರದಲ್ಲಿ ಸಕ್ಕರೆ ಮರಳು ಎರಡು ಬೆರೆತುಕೊಂಡಿದೆ. ಮರಳಿನಿಂದ ಸಕ್ಕರೆಯನ್ನು ಪ್ರತ್ಯೇಕಿಸುವುದೆಂದರೆ ಬಹಳ ಕಷ್ಟ. ಆದ್ದರಿಂದ ಶಾಸ್ತ್ರಗಳ ಮರ್ಮವನ್ನು ಸಾಧುಮುಖದಿಂದ, ಗುರುಮುಖದಿಂದ ಕೇಳಿ ತಿಳಿದುಕೊಳ್ಳಬೇಕು. ಬಳಿಕ ಶಾಸ್ತ್ರಗಳ ಆವಶ್ಯಕತೆ ಏನಿರುತ್ತದೆ?
(ಭಕ್ತರಿಗೆ) “ಎಲ್ಲವನ್ನೂ ಸಾಂಗವಾಗಿ ತಿಳಿದುಕೊಂಡು ಬಳಿಕ ಮುಳುಗಿ. ಕೆರೆಯ ಒಂದು ಜಾಗದಲ್ಲಿ ಕೊಡ ಮುಳುಗಿಕೊಂಡಿದೆ ಅಂತ ಇಟ್ಟುಕೊ. ಆ ಜಾಗ ಯಾವುದು ಎಂಬುದನ್ನು ಸರಿಯಾಗಿ ಅರಿತುಕೊಂಡು ಅಲ್ಲಿ ಮುಳುಗಬೇಕು.
“ಶಾಸ್ತ್ರದ ಮರ್ಮವನ್ನು ಗುರುಮುಖದಿಂದ ಕೇಳಿ ತಿಳಿದುಕೊಂಡು, ಅನಂತರ ಸಾಧನೆಯಲ್ಲಿ ತೊಡಗಬೇಕು. ಸಾಧನೆ ಸರಿಯಾಗಿ ನಡೆಯಿತು ಎಂದರೆ, ಭಗವಂತನ ಪ್ರತ್ಯಕ್ಷ ದರ್ಶನ ದೊರೆತುಬಿಡುತ್ತದೆ. ಗುರು ಹೇಳಿರುವ ರೀತಿಯಲ್ಲಿ ಸಂಪೂರ್ಣವಾಗಿ ಸಾಧನೆಯಲ್ಲಿ ಮುಳುಗಿ ಹೋದರೆ ತಾನೆ ಅದನ್ನು ಸರಿಯಾಗಿ ಅನುಸರಿಸಿದಂತಾಗುತ್ತದೆ. ಸುಮ್ಮನೆ ಕುಳಿತು ಶಾಸ್ತ್ರಗಳ ಸಂಬಂಧವಾಗಿ ವಿಚಾರದಲ್ಲೇ ತೊಡಗಿ ಕಾಲ ಕಳೆಯುತ್ತಿದ್ದರೆ ದೊರಕುವ ಫಲವೇನು? ಅಯ್ಯೊ, ಎಂಥ ತಿಳಿಗೇಡಿಗಳು! ಕೇವಲ ಮಾರ್ಗದ ಸಂಬಂಧವಾಗಿಯೇ ವಿಚಾರದಲ್ಲಿ ತೊಡಗಿ ಸತ್ತು ಸುಣ್ಣವಾಗುತ್ತಾರೆ. ಸಾಧನೆಯಲ್ಲಿ ಮುಳುಗರು. ಇದು ಎಷ್ಟು ಶೋಚನೀಯವಾದ್ದು!
“ನೀವು ಹೇಳಬಹುದು, ಮುಳುಗಿದರೂ ತಿಮಿಂಗಿಲ ಮೊಸಳೆಗಳ ಭಯ, ಅಂದರೆ ಕಾಮ ಕ್ರೋಧಾದಿಗಳ ಭಯ ಇದ್ದೇ ಇರುತ್ತದೆ ಎಂದು. ಅರಸಿನವನ್ನು ಮೈಗೆ ಸವರಿಕೊಂಡು ಮುಳುಗಿ, ಆಗ ಅವು ಹತ್ತಿರ ಸುಳಿಯವು. ವಿವೇಕ ವೈರಾಗ್ಯಗಳೇ ಅರಸಿನ.
(ಭಕ್ತರಿಗೆ) “ಭಗವಂತ ನನ್ನ ಕೈಯಿಂದ ಅನೇಕ ಬಗೆಯ ಸಾಧನೆಗಳನ್ನು ಮಾಡಿಸಿದ್ದಾನೆ. ಮೊದಲು ಪುರಾಣಮತಕ್ಕನುಸಾರ, ಅನಂತರ ತಂತ್ರಮತಕ್ಕನುಸಾರ. ಬಳಿಕ ವೇದಮತಕ್ಕನು ಸಾರವಾಗಿಯೂ. ಮೊದಲು ಪಂಚವಟಿಯಲ್ಲಿ ಸಾಧನೆಮಾಡುತ್ತಿದ್ದೆ. ತುಳಸಿವನ ಬೆಳೆಸಿ ಅದರ ಮಧ್ಯದಲ್ಲಿ ಕುಳಿತು ಧ್ಯಾನಮಾಡುತ್ತಿದ್ದೆ. ಕೆಲವು ವೇಳೆ ವ್ಯಾಕುಲನಾಗಿ, ‘ತಾಯಿ !’ ಅಂತ ಕೂಗುತ್ತಿದ್ದೆ. ಇನ್ನು ಕೆಲವು ವೇಳೆ ‘ರಾಮ! ರಾಮ!’ ಅನ್ನುತ್ತಿದ್ದೆ.
“ ‘ರಾಮ! ರಾಮ! ಅನ್ನುತ್ತಿದ್ದಾಗ, ಹನುಮಂತನ ಭಾವ ಆರೋಪಿಸಿಕೊಂಡು ಬೆನ್ನಿಗೆ ಬಾಲ ಕಟ್ಟಿಕೊಂಡಿರುತ್ತಿದ್ದೆ. ಆಗ ನನಗೆ ಪ್ರೇಮೋನ್ಮಾದ. ಆ ಸಮಯದಲ್ಲಿ ರೇಶ್ಮೆ ವಸ್ತ್ರ ಉಟ್ಟು ದೇವರನ್ನು ಪೂಜೆಮಾಡುತ್ತಿದ್ದೆ. ಆ ಪೂಜೆಯಲ್ಲಿ ಎಷ್ಟು ಆನಂದ ದೊರೆಯುತ್ತಿತ್ತು !
“ತಂತ್ರ ಮತದ ಸಾಧನೆಯನ್ನು ಮಾಡಿದೆ-ಬಿಲ್ವವೃಕ್ಷದ ಕೆಳಗೆ. ಆ ಸಮಯದಲ್ಲಿ ತುಳಸಿಗಿಡ, ಕಾಡುಗಿಡ ಎರಡೂ ಒಂದೇ ಆಗಿ ಕಾಣುತ್ತಿದ್ದುವು. ಆ ಅವಸ್ಥೆಯಲ್ಲಿ ನರಿಯ ಉಚ್ಛಿಷ್ಟವನ್ನು ತಿನ್ನುತ್ತಿದ್ದೆ. ಅದು ಇಡೀ ರಾತ್ರಿಯೆಲ್ಲಾ ತೆರವು ಬಿದ್ದಿರುತ್ತಿತ್ತು; ಅದನ್ನು ಹಾವು ತಿಂದಿತ್ತೊ, ಹಲ್ಲಿ ತಿಂದಿತ್ತೊ ಭಗವಂತನೇ ಬಲ್ಲ. ಆ ಉಚ್ಛಿಷ್ಟವೇ ಆಗ ನನ್ನ ಆಹಾರ.
“ಕೆಲವು ವೇಳೆ ನಾಯಿಯ ಮೇಲೆ ಸವಾರಿಮಾಡುತ್ತ ಅದರ ಬಾಯಿಗೆ ಪೂರಿಯ ತುಂಡನ್ನು ಹಾಕುತ್ತಿದ್ದೆ, ನಾನೂ ತಿನ್ನುತ್ತಿದ್ದೆ. ಎಲ್ಲವೂ ಭಗವನ್ಮಯವಾಗಿ ಕಾಣುತ್ತಿತ್ತು. ‘ಸರ್ವಂ ವಿಷ್ಣುಮಯಂ ಜಗತ್’, ಅವಿದ್ಯೆಯನ್ನು ನಾಶಪಡಿಸದಿದ್ದರೆ ಭಗವಂತನ ಸಾಕ್ಷಾತ್ಕಾರ ದೊರೆಯದು; ಅದಕ್ಕಾಗಿ ಹುಲಿಯ ಭಾವವನ್ನು ಆರೋಪಿಸಿಕೊಂಡು ಅವಿದ್ಯೆಯನ್ನು ನುಂಗಿಬಿಡುತ್ತಿದ್ದೆ.
“ವೇದಮತದ ಸಾಧನೆ ಸಮಯದಲ್ಲಿ ಸಂನ್ಯಾಸ ಸ್ವೀಕರಿಸಿದೆ. ಆಗ ಮುಖಮಂಟಪದಲ್ಲೇ ಇರುತ್ತಿದ್ದೆ. ಹೃದೂಗೆ ಹೇಳುತ್ತಿದ್ದೆ: ‘ನಾನು ಸಂನ್ಯಾಸಿಯಾಗಿದ್ದೇನೆ. ಆದ್ದರಿಂದ ನಾನು ಇಲ್ಲೇ ಊಟಮಾಡುತ್ತೇನೆ.’
“ಭಗವತಿಯ ಎದುರು ಪ್ರತಿಜ್ಞೆಮಾಡಿದೆ. ಭಗವಂತನ ದರ್ಶನ ದೊರೆಯದಿದ್ದ ಪಕ್ಷದಲ್ಲಿ ಕತ್ತು ಕೊಯ್ದುಕೊಂಡುಬಿಡುತ್ತೇನೆ ಎಂದು. ಭಗವತಿಗೆ ಹೇಳಿದೆ: ‘ಹೇ ತಾಯಿ, ನಾನೊಬ್ಬ ಮೂರ್ಖ. ನೀನು ನನಗೆ ತಿಳಿಸಿಕೊಡು, ವೇದ, ಪುರಾಣ, ತಂತ್ರ ಇವೇ ಮೊದಲಾದ ಶಾಸ್ತ್ರಗಳಲ್ಲಿ ಏನೇನಿದೆಯೆಂದು. ಭಗವತಿ ಹೇಳಿದಳು: ‘ವೇದಾಂತದ ಸಾರ ಬ್ರಹ್ಮ ಸತ್ಯ, ಜಗತ್ತು ಮಿಥ್ಯೆ.’ ವೇದದ ಸಚ್ಚಿದಾನಂದ ಬ್ರಹ್ಮನೇ, ತಂತ್ರದ ಸಚ್ಚಿದಾನಂದ ಶಿವ, ಪುರಾಣದ ಸಚ್ಚಿದಾನಂದ ಕೃಷ್ಣ. ಗೀತಾ ಎಂದು ಹತ್ತು ಸಲ ಉಚ್ಚರಿಸಿದರೆ ಅದು ಏನಾಗಿ ಕೇಳಿಬರುವುದೋ ಅದೇ ಅದರ ಸಾರ, ಎಂದರೆ ‘ತ್ಯಾಗಿ! ತ್ಯಾಗಿ!’ ಆಗು ಎಂಬುದೇ.
“ಯಾವಾಗ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೊ, ಆಗ ವೇದ, ವೇದಾಂತ, ಪುರಾಣ, ತಂತ್ರ ಇವೆಲ್ಲಾ ಎಂದೋ ಕೆಳಗೆ ಬಿದ್ದುಕೊಂಡಿರುತ್ತವೆ! (ಹಾಜರಾನಿಗೆ) ಸಮಾಧಿಯಲ್ಲಿ ‘ಓಂ’ ಎಂದು ಉಚ್ಚರಿಸಲಾಗುವುದಿಲ್ಲ. ಏಕೆ ಹೀಗೆ? ಸಮಾಧಿಯಿಂದ ಬಹಳ ದೂರ ಕೆಳಕ್ಕೆ ಇಳಿದುಬಾರದವರೆಗೆ ‘ಓಂ’ ಅಂತ ಉಚ್ಚರಿಸಲು ಸಾಧ್ಯವಾಗುತ್ತಿಲ್ಲ.
“ಭಗವಂತನ ಪ್ರತ್ಯಕ್ಷ ದರ್ಶನ ದೊರೆತನಂತರ ಏನೇನು ಅವಸ್ಥೆ ಉಂಟಾಗುತ್ತದೆ ಎಂಬುದಾಗಿ ಶಾಸ್ತ್ರಗಳಲ್ಲಿ ಹೇಳಿವೆಯೋ ಅವೆಲ್ಲಾ, ನನಗಾದುವು. ನಾನು ಬಾಲಕನ ಹಾಗೆ ಉನ್ಮತ್ತನ ಹಾಗೆ, ಪಿಶಾಚಿಯ ಹಾಗೆ, ಜಡನ ಹಾಗೆ ವರ್ತಿಸಬೇಕಾಯಿತು.
“ಶಾಸ್ತ್ರಗಳಲ್ಲಿ ಹೇಳಿರುವ ಹಾಗೆಯೇ ದರ್ಶನಗಳಾಗುತ್ತಿದ್ದುವು. ಕೆಲವು ವೇಳೆ ಕಾಣುತ್ತಿತ್ತು ಈ ಇಡೀ ಜಗತ್ತು ಬೆಂಕಿಯ ಕಿಡಿಗಳಿಂದ ತುಂಬಿತುಳುಕಾಡುತ್ತಿರುವಂತೆ. ಇನ್ನು ಕೆಲವು ವೇಳೆ ಕಾಣುತ್ತಿತ್ತು, ಸುತ್ತಲು ಪಾದರಸದ ಸರೋವರವಿರುವ ಹಾಗೆ. ಅದು ಸುಮ್ಮನೆ ಧಗಧಗಿಸುತ್ತಿರುತ್ತದೆ. ಮತ್ತೆ ಕೆಲವು ವೇಳೆ ಈ ಜಗತ್ತು ದ್ರವರೂಪದ ಬೆಳ್ಳಿಯ ಸಾಗರದ ಹಾಗೆ ಕಾಣುತ್ತಿತ್ತು. ಮತ್ತೂ ಕೆಲವು ವೇಳೆ ಕಾಣುತ್ತಿತ್ತು, ಸಕಲ ದಿಕ್ಕುಗಳೂ ಮೊಂಬತ್ತಿಯ ಬೆಳಕಿನಿಂದ ಬೆಳಗುತ್ತಿರುವಂತೆ. ನನ್ನ ಅನುಭವಗಳೆಲ್ಲಾ ಶಾಸ್ತ್ರಗಳು ಹೇಳುವುದರೊಡನೆ ಹೊಂದಿಕೊಂಡವು.
“ಮತ್ತೆ ಅನುಭವವಾಯಿತು, ಭಗವಂತನೇ ಜೀವಜಗತ್ತು, ಚತುರ್ವಿಂಶತಿ ತತ್ತ್ವ ಆಗಿರುವಂತೆ. ಇದು ಚಾವಣಿಗೆ ಹತ್ತಿ ಮತ್ತೆ ಮೆಟ್ಟಲುಸಾಲಿನ ಮೂಲಕ ಕೆಳಕ್ಕೆ ಇಳಿದ ಹಾಗೆ-ಅನುಲೋಮ, ವಿಲೋಮ.
“ಓ, ಆಗ ಭಗವಂತ ನನ್ನನ್ನು ಎಂಥ ಅವಸ್ಥೆಯಲ್ಲಿ ಇಟ್ಟಿದ್ದ! ಒಂದು ಅನುಭವ ಆಗುವುದರೊಳಗೇ ಇನ್ನೊಂದು ಕಾದಿರುತ್ತಿತ್ತು. ಇದು, ಭತ್ತ ಕುಟ್ಟುವ ಏತದ ಚಲನೆಯಂತೆ ನಡೆಯುತ್ತಿತ್ತು-ಒಂದು ತುದಿ ಕೆಳಕ್ಕೆ ಹೋಯಿತು ಎಂದರೆ, ಮತ್ತೊಂದು ತುದಿ ಮೇಲಕ್ಕೆ ಹೋಗಿಬಿಡುವ ಹಾಗೆ.
“ನಾನು ಅಂತರ್ಮುಖನಾದಾಗಲೂ ಅಂದರೆ, ಸಮಾಧಿಸ್ಥನಾದಾಗಲೂ ಭಗವಂತನನ್ನು ನೋಡುತ್ತಿದ್ದೆ; ಅನಂತರ ಮನಸ್ಸು ಬಾಹ್ಯಜಗತ್ತಿಗೆ ಇಳಿದಾಗಲೂ ಅದೇ ಭಗವಂತನನ್ನು ನೋಡುತ್ತಿದ್ದೆ. ಕನ್ನಡಿಯ ಮುಂಭಾಗದಲ್ಲಿ ನೋಡಿದರೂ ಭಗವಂತನೇ ಕಾಣುತ್ತಿದ್ದ; ಅದರ ಹಿಂಭಾಗದಲ್ಲಿ ನೋಡಿದರೂ ಅದೇ ಭಗವಂತ ಕಾಣುತ್ತಿದ್ದ.”
ಭಕ್ತರೆಲ್ಲರೂ ಆಶ್ಚರ್ಯಚಕಿತರಾಗಿ ಪರಮಹಂಸರ ಈ ಮಾತುಗಳನ್ನು ಕೇಳುತ್ತಿದ್ದಾರೆ. (ಮುಖ್ಯೋಪಾಧ್ಯಾಯ ಸೋದರರಿಗೆ) “ಕ್ಯಾಪ್ಟನ್ನದು ನಿಜವಾದ ಸಾಧಕನ ಅವಸ್ಥೆ. ಐಶ್ವರ್ಯವಿತ್ತು ಎಂದರೆ ಆಸಕ್ತನಾಗಲೇಬೇಕು ಎಂಬುದೇನಿಲ್ಲ. ಶಂಭುಮಲ್ಲಿಕ ಹೇಳುತ್ತಿದ್ದ ಹೃದೂಗೆ: ‘ಹೃದೂ, ನಾನು ಗಂಟುಮೂಟೆ ಎಲ್ಲಾ ಕಟ್ಟಿ ಸಿದ್ಧನಾಗಿ ಕುಳಿತಿದ್ದೇನೆ.’ ಅದಕ್ಕೆ ನಾನು ಹೇಳಿದೆ: ‘ದೇವರ ದಯೆಯಿಂದ ಹಾಗಾಗದಿರಲಿ! ಏನು ಅವಲಕ್ಷಣದ ಮಾತು ನಿನ್ನ ಬಾಯಿಂದ?’ ಶಂಭುಮಲ್ಲಿಕ ಹೇಳಿದ: ‘ಅದು ಹಾಗಲ್ಲ. ದಯವಿಟ್ಟು ಹರಸಿ, ನಾನು ನನ್ನ ಸ್ವತ್ತನ್ನೆಲ್ಲ ಬಿಸಾಡಿಬಿಟ್ಟು ಭಗವಂತನ ಕಡೆಗೆ ಹೋಗುವ ಹಾಗೆ.’
“ಭಗವದ್ಭಕ್ತರಾದವರು ಸ್ವಲ್ಪವೂ ಹೆದರಬೇಕಾಗಿಲ್ಲ. ಭಕ್ತರು ಭಗವಂತನ ಆತ್ಮೀಯರು. ಆತ ಅವರನ್ನು ಎಳೆದುಕೊಂಡುಬಿಡುತ್ತಾನೆ. ದುರ್ಯೋಧನನೇ ಮೊದಲಾದ ಕೌರವರನ್ನು ಗಂಧರ್ವರು ಬಂಧಿಸಿದಾಗ ಯುಧಿಷ್ಠಿರ ಹೋಗಿ ಬಿಡಿಸಿದ. ಆಗ ಯುಧಿಷ್ಠಿರ ಹೇಳಿದ : ‘ಸ್ವಬಾಂಧವರಿಗೆ ಹಾಗೆ ಆಯಿತು ಎಂದರೆ, ಅದು ನಮಗೇ ಕಳಂಕ ತರುತ್ತದೆ.”
ಘಂಟೆ ರಾತ್ರಿ ಒಂಬತ್ತು. ಮುಖ್ಯೋಪಾಧ್ಯಾಯ ಸೋದರರು ಮನೆಗೆ ಹಿಂದಿರುಗಲು ಸಿದ್ಧವಾಗುತ್ತಿದ್ದಾರೆ. ಪರಮಹಂಸರು ಮಂಚದಿಂದಿಳಿದು ಕೊಠಡಿ ಮತ್ತು ವರಾಂಡದಲ್ಲಿ ಸುತ್ತಾಡುತ್ತಿದ್ದಾರೆ. ವಿಷ್ಣು ದೇವಾಲಯದಲ್ಲಿ ಹಾಡುತ್ತಿದ್ದ ಕೀರ್ತನೆ ಕಿವಿಗೆ ಬೀಳುತ್ತಿದೆ. ಒಬ್ಬ ಭಕ್ತ ಹೇಳಿದ ಆ ಹಾಡು ಹಾಡುತ್ತಿರುವವರ ಗುಂಪಿನಲ್ಲಿ ಲಾಟು, ಹರೀಶ ಕೂಡ ಇದ್ದಾರೆ ಎಂದು.
ಪರಮಹಂಸರು ಮತ್ತು ಭಕ್ತರು ವಿಷ್ಣು ದೇವಾಲಯಕ್ಕೆ ಬಂದು ದೇವರಿಗೆ ಸಾಷ್ಟಾಂಗ ಪ್ರಣಾಮಮಾಡುತ್ತಿದ್ದಾರೆ. ಕಾಳೀದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ಬ್ರಾಹ್ಮಣರು, ಅಂದರೆ ಅರ್ಚಕರು, ಪರಿಚಾರಕರು, ಅಡಿಗೆಯವರು ಮತ್ತು ಸೇವಕರು ಎಲ್ಲರೂ ಕೂಡಿ ನಾಮಸಂಕೀರ್ತನೆ ಮಾಡುತ್ತಿದ್ದಾರೆ. ಪರಮಹಂಸರು ಅಲ್ಲೆ ನಿಂತುಕೊಂಡು ಉತ್ಸಾಹ ಕೊಡುತ್ತಿದ್ದಾರೆ. ಹಿಂದಿರುಗಿ ತಮ್ಮ ಕೊಠಡಿಗೆ ಬರುತ್ತ ಭಕ್ತರಿಗೆ ಹೇಳುತ್ತಿದ್ದಾರೆ: “ನೋಡಿ, ಇವರಲ್ಲಿ ಕೆಲವರು ಪಾತ್ರೆ ಪದಾರ್ಥಗಳನ್ನು ಬೆಳಗಿಕೊಡುತ್ತಾರೆ. ಇನ್ನು ಕೆಲವರು ವೇಶ್ಯೆಯರ ಮನೆಗೆ ಹೋಗುತ್ತಾರೆ.”
ಪರಮಹಂಸರು ಕೊಠಡಿಗೆ ಬಂದು ಚಿಕ್ಕ ಮಂಚದ ಮೇಲೆ ಕುಳಿತಿದ್ದಾರೆ. ವಿಷ್ಣು ದೇವಾಲಯದಲ್ಲಿ ಸಂಕೀರ್ತನೆ ಮಾಡುತ್ತಿದ್ದವರು ಬಂದು ಪರಮಹಂಸರಿಗೆ ಪ್ರಣಾಮ ಮಾಡುತ್ತಿದ್ದಾರೆ. ಪರಮಹಂಸರು ಅವರಿಗೆ ಹೇಳುತ್ತಿದ್ದಾರೆ: “ಹಣಕ್ಕಾಗಿ ಜನ ಬೆವರು ಸುರಿಸುವ ಹಾಗೆ ಭಗವನ್ನಾಮ ಗುಣಕೀರ್ತನೆ ಮಾಡಿ ಬೆವರು ಸುರಿಸಬೇಕು. ಯೋಚನೆ ಮಾಡಿದೆ, ನಿಮ್ಮ ಜೊತೆಗೆ ಸೇರಿ ನರ್ತಿಸೋಣ ಅಂತ; ಆದರೆ ನೀವೇ ಹಾಡುವುದು, ನರ್ತನ ಎಲ್ಲವನ್ನೂ ಬಹಳ ಚೆನ್ನಾಗಿ ಮಾಡುತ್ತಿದ್ದೀರಿ. ಮಸಾಲೆ ಒಗ್ಗರಣೆ ಎಲ್ಲವನ್ನೂ ಚೆನ್ನಾಗಿ ಹಾಕಿಬಿಟ್ಟಿದ್ದೀರಿ. ಅದಕ್ಕೆ ನಾನು ಸೇರಿಸುವುದೇನೂ ಉಳಿದುಕೊಂಡಿರುವುದಿಲ್ಲ. ಆಗಾಗ ಈ ರೀತಿಯಾಗಿ ನೀವು ನಾಮಗುಣಕೀರ್ತನೆ ಮಾಡುವುದು ಒಳ್ಳೆಯದು.”
ಮುಖ್ಯೋಪಾಧ್ಯಾಯ ಸೋದರರು ಪರಮಹಂಸರಿಗೆ ಪ್ರಣಾಮ ಮಾಡಿ ಅವರಿಂದ ಬೀಳ್ಕೊಳ್ಳುತ್ತಿದ್ದಾರೆ. ಅವರ ಗಾಡಿ ಸಿದ್ಧವಾಗಿ ಕೊಠಡಿಯ ಉತ್ತರ ವರಾಂಡದ ಹತ್ತಿರ ನಿಂತಿದೆ. ಪರಮಹಂಸರು ಉತ್ತರ ದಿಕ್ಕನ್ನು ನೋಡುತ್ತ ಅದೇ ವರಾಂಡದಲ್ಲಿ ನಿಂತಿದ್ದಾರೆ. ಅವರ ಎಡಭಾಗದಲ್ಲಿ ಗಂಗೆ ಹರಿಯುತ್ತಿದ್ದಾಳೆ; ಮುಂದುಗಡೆ ನಹಬತ್ಖಾನೆ, ಪುಷ್ಪೋದ್ಯಾನ ಮತ್ತು ಕುಟೀರ; ಬಲಭಾಗದಲ್ಲಿ ಹೆಬ್ಬಾಗಿಲವರೆಗೆ ಹಬ್ಬಿದೆ ಸುಂದರ ರಸ್ತೆ. ಇಂದು ಅಮಾವಾಸ್ಯೆಯಾದ್ದರಿಂದ, ಎಲ್ಲೆಲ್ಲೂ ಅಂಧಕಾರ. ಒಬ್ಬ ಭಕ್ತ ಲಾಟೀನು ಹಿಡಿದು ನಿಂತಿದ್ದಾನೆ. ಭಕ್ತರೆಲ್ಲರೂ ಪರಮಹಂಸರಿಗೆ ಪ್ರಣಾಮ ಮಾಡಿ ಒಬ್ಬೊಬ್ಬರಾಗಿ ಅವರಿಂದ ಬೀಳ್ಕೊಳ್ಳು ತ್ತಿದ್ದಾರೆ. ಕುದುರೆ ಎಳೆಯಲಾರದಷ್ಟು ಜನ ಗಾಡಿಯಲ್ಲಿ ತುಂಬಿರುವಂತೆ ಕಾಣುತ್ತಿದೆ. ಪರಮಹಂಸರು ಹೇಳುತ್ತಿದ್ದಾರೆ: “ಕುದುರೆ ಅಷ್ಟೊಂದು ಜನರನ್ನು ಎಳೆಯಬಲ್ಲುದೆ?”
ಪರಮಹಂಸರು ಇನ್ನೂ ನಿಂತುಕೊಂಡೇ ಇದ್ದಾರೆ. ಭಕ್ತರು ಆ ಭಕ್ತವಾತ್ಸಲ್ಯ ಮೂರ್ತಿಯನ್ನು ನೋಡುತ್ತ ನೋಡುತ್ತ ಕಲ್ಕತ್ತದ ಕಡೆ ಮುಂದುವರಿಯುತ್ತಿದ್ದಾರೆ.
೨೧ನೆ ಸೆಪ್ಟೆಂಬರ್ ೧೮೮೪, ಆಶ್ವೀಜ ಶುಕ್ಲ ಬಿದಿಗೆ, ಭಾನುವಾರ
ಪರಮಹಂಸರ ಕೊಠಡಿಯಲ್ಲಿ ಅನೇಕ ಜನ ಭಕ್ತರು ಬಂದು ಸೇರಿದ್ದಾರೆ-ರಾಮ ಮಹೇಂದ್ರ ಮುಖ್ಯೋಪಾಧ್ಯಾಯ, ಚುನಿಲಾಲ, ಮಾಸ್ಟರ್ ಇವರೇ ಮೊದಲಾದವರು. ಚುನಿಲಾಲ ಈಗ ತಾನೆ ಬೃಂದಾವನದಿಂದ ಹಿಂದಿರುಗಿ ಬಂದಿದ್ದಾನೆ. ಬಲರಾಮ ಮತ್ತು ರಾಖಾಲನೊಡನೆ ಈತನೂ ಬೃಂದಾವನಕ್ಕೆ ಹೋಗಿದ್ದ. ರಾಖಾಲ, ಬಲರಾಮ ಇನ್ನೂ ಅಲ್ಲೇ ಇದ್ದಾರೆ. ನಿತ್ಯಗೋಪಾಲನೂ ಬೃಂದಾವನದಲ್ಲೇ ಇದ್ದಾನೆ. ಪರಮಹಂಸರು ಚುನಿಲಾಲನೊಡನೆ ಬೃಂದಾವನದ ಸಂಬಂಧವಾಗಿ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ರಾಖಾಲನ ಆರೋಗ್ಯ ಹೇಗಿದೆ?”
ಚುನಿಲಾಲ: “ಈಗ ಆತ ಆರೋಗ್ಯದಿಂದಿದ್ದಾನೆ.”
ಶ್ರೀರಾಮಕೃಷ್ಣರು: “ನಿತ್ಯಗೋಪಾಲ ಹಿಂದಿರುಗುವುದಿಲ್ಲವೆ?”
ಚುನಿಲಾಲ: “ಆತ ಇನ್ನೂ ಅಲ್ಲೇ ಇದ್ದ!”
ಶ್ರೀರಾಮಕೃಷ್ಣರು: “ನಿನ್ನ ಮನೆಯವರನ್ನು ಯಾರು ಹಿಂದಿರುಗಿ ಕರೆದುಕೊಂಡು ಬರುತ್ತಾರೆ?”
ಚುನಿಲಾಲ: “ಬಲರಾಮ ಹೇಳಿದ್ದಾನೆ, ಒಳ್ಳೆಯವರನ್ನು ಜೊತೆಮಾಡಿ ಕಳುಹಿಸುವುದಾಗಿ. ಅವರ ಹೆಸರು ತಿಳಿಸಲಿಲ್ಲ.”
ಪರಮಹಂಸರು ಈಗ ಮಹೇಂದ್ರ ಮುಖ್ಯೋಪಾಧ್ಯಾಯರೊಡನೆ ನಾರಾಯಣ ಎಂಬ ಹೆಸರಿನ ಒಬ್ಬ ಹುಡುಗನ ಸಂಬಂಧವಾಗಿ ಮಾತನಾಡುತ್ತಿದ್ದಾರೆ. ಆತ ಸ್ಕೂಲಿನಲ್ಲಿ ಓದುತ್ತಿದ್ದಾನೆ. ವಯಸ್ಸು ಹದಿನಾರೊ ಹದಿನೇಳೊ. ಪರಮಹಂಸರ ಹತ್ತಿರಕ್ಕೆ ಆಗಾಗ ಬರುತ್ತಿದ್ದಾನೆ. ಅವರು ಆತನನ್ನು ಬಹಳವಾಗಿ ಪ್ರೀತಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಬಹಳ ಸರಳ, ಅಲ್ಲವೆ?”
ಸರಳ ಎಂಬ ಪದ ಅವರ ಬಾಯಿಂದ ಹೊರಟಿತೊ ಇಲ್ಲವೋ ಅವರ ಮುಖ ಆನಂದದಿಂದ ನಲಿಯಲಾರಂಭಿಸಿತು.
ಮಹೇಂದ್ರ: “ಹೌದು, ಬಹಳ ಸರಳ.”
ಶ್ರೀರಾಮಕೃಷ್ಣರು: “ಅಂದು ಆತನ ತಾಯಿ ಇಲ್ಲಿಗೆ ಬಂದಿದ್ದಳು. ಆಕೆಯಲ್ಲಿ ಅಭಿಮಾನವಿರುವುದನ್ನು ನೋಡಿ ನನಗೆ ಸ್ವಲ್ಪ ಹೆದರಿಕೆಯಾಯಿತು. ನೀವೆಲ್ಲರೂ ಇಲ್ಲಿಗೆ ಬರುತ್ತಿರುವುದನ್ನು, ಕ್ಯಾಪ್ಟನ್ ಇಲ್ಲಿಗೆ ಬರುತ್ತಿರುವುದನ್ನು ಅಂದು ಆಕೆ ನೋಡಿದಳು. ಆಗ ಆಕೆಯ ಮನಸ್ಸಿಗೆ ತಟ್ಟಿರಬೇಕು, ಕೇವಲ ತಾನು ಮತ್ತು ತನ್ನ ಮಗ ನಾರಾಯಣನೇ ಅಲ್ಲ ಇಲ್ಲಿಗೆ ಬರುತ್ತಿರುವುದು. (ಎಲ್ಲರೂ ನಗುತ್ತಿದ್ದಾರೆ.) ಇಲ್ಲಿ ಸ್ವಲ್ಪ ಕಲ್ಲು ಸಕ್ಕರೆ ಇತ್ತು. ಇದನ್ನು ನೋಡಿ ಹೇಳಿದಳು, ಬಹಳ ಸೊಗಸಾದ ಕಲ್ಲುಸಕ್ಕರೆ. ಆಗ ಆಕೆಗೆ ಗೊತ್ತಾಯಿತು, ಇಲ್ಲಿ ತಿಂಡಿತೀರ್ಥಗಳಿಗಾಗಿ ಯಾವ ಅಭಾವವೂ ಇಲ್ಲ. ಆಕೆಯ ಎದುರಿಗೇ ಬಾಬುರಾಮನಿಗೆ ನಾನು ಹೇಳಿದೆ ಅಂತ ಕಾಣುತ್ತದೆ, ತನಗಾಗಿ ಮತ್ತು ನಾರಾಯಣನಿಗಾಗಿ ಸ್ವಲ್ಪ ಸಂದೇಶ ಇಟ್ಟುಕೊಳ್ಳುವಂತೆ. ಗಣುವಿನ ತಾಯಿ ನನಗೆ ತಿಳಿಸಿದಳು, ನಾರಾಯಣ ಇಲ್ಲಿಗೆ ಬರುವುದಕ್ಕಾಗಿ ದೋಣಿ ಬಾಡಿಗೆಗಾಗಿ ತನ್ನ ತಾಯಿಯನ್ನು ಯಾವಾಗಲೂ ಪೀಡಿಸುತ್ತಲೇ ಇರುತ್ತಾನೆ. ನಾರಾಯಣನ ತಾಯಿ ನನಗೆ ಹೇಳಿದಳು: ‘ನೀವು ನಾರಾಯಣನಿಗೆ ದಯವಿಟ್ಟು ಮದುವೆ ಮಾಡಿಕೊಳ್ಳುವಂತೆ ಹೇಳಿ.’ ಅದಕ್ಕೆ ನಾನು ಹೇಳಿದೆ: ‘ಇದೆಲ್ಲ ಹಣೆಯಲ್ಲಿ ಬರೆದಂತೆ ಆಗುತ್ತದೆ. ನಾನೇಕೆ ಇದಕ್ಕೆಲ್ಲ ತಲೆ ಹಾಕಲಿ? (ಎಲ್ಲರೂ ನಗುತ್ತಿದ್ದಾರೆ.) ಆತನಿಗೆ ಓದುಬರಹದ ಕಡೆ ಅತಿಯಾಗಿ ಮನಸ್ಸಿಲ್ಲ. ಅದಕ್ಕಾಗಿ ಆತನ ತಾಯಿ ನನಗೆ ಹೇಳಿದಳು: ‘ಸ್ವಲ್ಪ ಚೆನ್ನಾಗಿ ಓದುವಂತೆ ಆತನಿಗೆ ಹೇಳಿ.’ ನಾನು ಆಗ ನಾರಾಯಣನಿಗೆ ಹೇಳಿದೆ: ‘ಸ್ವಲ್ಪ ಚೆನ್ನಾಗಿ ಓದು’ ಅಂತ. ಮತ್ತೆ ಆತನ ತಾಯಿ ನನಗೆ ಹೇಳಿದಳು; ‘ಸ್ವಲ್ಪ ಗದರಿಸಿ ಹೇಳಿ.’ (ಎಲ್ಲರೂ ನಗುತ್ತಿದ್ದಾರೆ.)
(ಚುನಿಲಾಲನಿಗೆ) “ಏನು, ಇಲ್ಲಿಗೆ ಗೋಪಾಲ ಬರುತ್ತಿಲ್ಲವಲ್ಲ, ಏಕೆ?”
ಚುನಿಲಾಲ: “ಆತನಿಗೆ ಆಮಶಂಕೆಯಾಗಿದೆ.”
ಶ್ರೀರಾಮಕೃಷ್ಣರು: “ಔಷಧ ತೆಗೆದುಕೊಳ್ಳುತ್ತಿದ್ದಾನೆಯೆ?”
ಶ್ರೀರಾಮಕೃಷ್ಣರು ಇಂದು ಸ್ಟಾರ್ ಥಿಯೇಟರಿನಲ್ಲಿ ಚೈತನ್ಯಲೀಲೆಯನ್ನು ನೋಡಲು ಕಲ್ಕತ್ತಕ್ಕೆ ಹೋಗಲಿದ್ದಾರೆ. ಮಹೇಂದ್ರ ಮುಖ್ಯೋಪಾಧ್ಯಾಯ ಅವರನ್ನು ತನ್ನ ಗಾಡಿಯಲ್ಲಿ ಕರೆದುಕೊಂಡು ಹೋಗುತ್ತಾನೆ. ಎಲ್ಲಿ ಕುಳಿತುಕೊಂಡರೆ ಚೆನ್ನಾಗಿ ಕಾಣುತ್ತದೆ ಎಂಬುದರ ವಿಷಯವಾಗಿ ಈಗ ಮಾತುಕತೆ ನಡೆಯುತ್ತಿದೆ, ಒಂದು ರೂಪಾಯಿಯ ಸೀಟಿನಲ್ಲಿ ಕುಳಿತು ಕೊಂಡರೆ ಚೆನ್ನಾಗಿ ನೋಡಬಹುದು ಎಂಬ ಒಬ್ಬ ಭಕ್ತ ಹೇಳಿದ, ರಾಮ ಹೇಳಿದ: ‘ಅವರು ಅಲ್ಲಿಗೆ ಹೋಗಿ ಏಕೆ ಕುಳಿತುಕೊಳ್ಳಬೇಕು? ಒಂದು ಬಾಕ್ಸ್ ನಲ್ಲಿ ಕೂರಿಸುತ್ತೇನೆ.” ಪರಮ ಹಂಸರು ನಗುತ್ತಿದ್ದಾರೆ.
ಒಬ್ಬ ಭಕ್ತ ಹೇಳಿದ : “ಈ ನಾಟಕದಲ್ಲಿ ವೇಶ್ಯೆಯರೂ ಅಭಿನಯಿಸು ತ್ತಾರೆ. ಚೈತನ್ಯದೇವ, ನಿತಾಯಿ ಮೊದಲಾದವರ ಪಾರ್ಟನ್ನು ಅವರು ವಹಿಸುತ್ತಾರೆ.”
ಶ್ರೀರಾಮಕೃಷ್ಣರು ಭಕ್ತರಿಗೆ: “ಅವರನ್ನು ಸಾಕ್ಷಾತ್ ಆನಂದಮಯಿಯರೇ ಎಂದು ನೋಡುತ್ತೇನೆ. ಅವರಲ್ಲಿ ಒಬ್ಬಳು ಚೈತನ್ಯದೇವನ ಪಾರ್ಟು ವಹಿಸಿಬಿಟ್ಟಾಕ್ಷಣಕ್ಕೆ ಮುಳುಗಿ ಹೋಗಿಬಿಡುವುದೇನು? ಕೃತಕ ಸೀತಾಫಲದ ಹಣ್ಣು ನಿಜವಾದ ಸೀತಾಫಲದ ಉದ್ದೀಪನವನ್ನು ತರುತ್ತದೆ. ಒಬ್ಬ ಕೃಷ್ಣ ಭಕ್ತ ಒಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ನೋಡಿದ, ಸುತ್ತಲೂ ಅನೇಕ ಗೊಬ್ಬಳಿ ಮರಗಳಿರುವುದನ್ನು. ಆ ದೃಶ್ಯ ಒಡನೆಯೇ ಆತನನ್ನು ಭಾವಾವಿಷ್ಟನನ್ನಾಗಿ ಮಾಡಿಬಿಟ್ಟಿತು. ಆತನ ಜ್ಞಾಪಕಕ್ಕೆ ಬಂದಿತು, ಶ್ಯಾಮಸುಂದರನ ದೇವಾಲಯದ ಉದ್ಯಾನವನದ ಗುದ್ದಲಿಗಳಿಗೆ ಆ ಮರದ ಕಾವುಗಳನ್ನು ಉಪಯೋಗಿಸು ತ್ತಿರುವುದು. ಆ ಮರಗಳು ಆತನಿಗೆ ಕೃಷ್ಣನ ನೆನಪನ್ನು ತಂದುಬಿಟ್ಟುವು. ಒಮ್ಮೆ ನನ್ನನ್ನು ಕಲ್ಕತ್ತದ ಮೈದಾನದಲ್ಲಿ ಆಕಾಶಬುಟ್ಟಿಗಳ ಹಾರಾಟವನ್ನು ನೋಡಿಬರಲು ಕರೆದುಕೊಂಡು ಹೋಗಿದ್ದರು. ಅಲ್ಲಿ ಒಬ್ಬ ಆಂಗ್ಲೇಯರ ಹುಡುಗ ತ್ರಿಭಂಗಿಯಾಗಿ ನಿಂತು ಒಂದು ಮರವನ್ನು ಒರಗಿಕೊಂಡಿದ್ದ ದೃಶ್ಯ ನನ್ನ ಕಣ್ಣಿಗೆಬಿತ್ತು. ಅದನ್ನು ನೋಡಿದೊಡನೇ ನನಗೆ ಕೃಷ್ಣನ ಉದ್ದೀಪನವಾಗಿಬಿಟ್ಟಿತು; ಸಮಾಧಿಸ್ಥನಾಗಿಬಿಟ್ಟೆ.
“ಒಮ್ಮೆ ಚೈತನ್ಯದೇವ ಒಂದು ಹಳ್ಳಿಯ ಮಾರ್ಗವಾಗಿ ಹೋಗುತ್ತಿದ್ದ. ಯಾರೋ ಹೇಳಿ ದರು, ಆ ಹಳ್ಳಿಯ ಮಣ್ಣಿನಿಂದ ಮೃದಂಗವನ್ನು ತಯಾರು ಮಾಡುತ್ತಾರೆ ಎಂದು. ಮೃದಂಗ ಎಂಬ ಶಬ್ದ ಕಿವಿಗೆ ಬಿದ್ದೊಡನೆ ಸಂಕೀರ್ತನೆಯ ನೆನಪು ಬಂದು ಭಾವಾವಿಷ್ಟನಾಗಿಬಿಟ್ಟ.
“ರಾಧೆ ಮೇಘವನ್ನೋ, ನವಿಲುಕಂಠವನ್ನೋ ನೋಡಿದಳು ಎಂದರೆ, ಆಕೆಯ ಕೈಯಲ್ಲಿ ಸುಮ್ಮನಿರಲಾಗುತ್ತಿರಲಿಲ್ಲ. ಆಕೆಗೆ ಶ್ರೀಕೃಷ್ಣನ ಉದ್ದೀಪನವಾಗಿಬಿಟ್ಟು ಬಾಹ್ಯಜ್ಞಾನ ಶೂನ್ಯಳಾಗಿಬಿಡುತ್ತಿದ್ದಳು.”
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು ಈಗ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ರಾಧೆಗೆ ಮಹಾಭಾವ ಉಂಟಾಗಿತ್ತು. ಗೋಪಿಯರ ಪ್ರೇಮದ ಹಿನ್ನೆಲೆಯಲ್ಲಿ ಯಾವ ಕಾಮನೆಯೂ ಇರಲಿಲ್ಲ. ನಿಜವಾದ ಭಕ್ತ ಭಗವಂತನಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ಕೇವಲ ಶುದ್ಧಭಕ್ತಿಗಾಗಿ ಪ್ರಾರ್ಥನೆಮಾಡುತ್ತಾನೆ. ಯಾವ ಶಕ್ತಿಯೇ ಆಗಲಿ, ಅಥವಾ ಸಿದ್ಧಿಯೇ ಆಗಲಿ ಯಾವುದೂ ಆತನಿಗೆ ಬೇಕೆನಿಸದು.
“ಸಿದ್ಧಿಗಳಿಂದ ಕೂಡಿದರೆ ಅನೇಕ ತೊಂದರೆಗಳಿಗೆ ಈಡಾಗಬೇಕಾಗಿ ಬರುತ್ತದೆ. ತೋತಾಪುರಿ ಇದನ್ನು ಒಂದು ಕಥೆಯ ಮೂಲಕ ನನಗೆ ಮನದಟ್ಟುಮಾಡಿಸಿದ. ಒಮ್ಮೆ ಒಬ್ಬ ಸಿದ್ಧ ಸಮುದ್ರದ ಬಳಿ ಕುಳಿತುಕೊಂಡಿದ್ದ. ಇದ್ದಕ್ಕಿದ್ದ ಹಾಗೆ ಬಿರುಗಾಳಿ ಎದ್ದಿತು. ಅದು ಆತನಿಗೆ ಕಿರಿಕಿರಿಯನ್ನುಂಟುಮಾಡಿತು; ಆದ್ದರಿಂದ ಆತ ಹೇಳಿದ: ‘ಈ ಬಿರುಗಾಳಿ ನಿಂತು ಹೋಗಲಿ.’ ಆತನ ಇಚ್ಛೆ ನಡೆಯದೆ ಹೋಗುವ ಹಾಗಿಲ್ಲ. ಆ ಸಮಯದಲ್ಲಿ ಒಂದು ಹಡಗು ಎಲ್ಲಾ ಪಟಗಳನ್ನೂ ಕಟ್ಟಿ ಪೂರ್ಣವೇಗದಿಂದ ಹೋಗುತ್ತಿತ್ತು. ಗಾಳಿ ಯಾವಾಗ ಥಟ್ಟನೆ ನಿಂತು ಹೋಯಿತೋ ಒಡನೆಯೇ ಹಡಗು ಮುಗುಚಿಕೊಂಡು ಮುಳುಗಿಹೋಯಿತು. ಅದರೊಡನೆ ಹಡಗಿನಲ್ಲಿದ್ದವರೂ ನೀರುಪಾಲಾದರು. ಅಷ್ಟು ಜನ ನೀರುಪಾಲಾದುದರ ಪಾಪ ಆ ಸಿದ್ಧನ ತಲೆಯಮೇಲೆ ಬಂತು. ಆ ಪಾಪದ ದೆಸೆಯಿಂದ ಆತ ಸಿದ್ಧಿಗಳನ್ನೂ ಕಳೆದುಕೊಂಡ, ಜೊತೆಗೆ ಆತನಿಗೆ ನರಕ ಪ್ರಾಪ್ತಿಯೂ ದೊರೆಯಿತು.
“ಒಮ್ಮೆ ಒಬ್ಬ ಸಾಧುವಿಗೆ ದೊಡ್ಡ ದೊಡ್ಡ ಸಿದ್ಧಿಗಳು ದೊರೆತುಬಿಟ್ಟಿದ್ದರಿಂದ ಸ್ವಲ್ಪ ಅಹಂಕಾರ ಉಂಟಾಗಿಬಿಟ್ಟಿತು. ಆದರೂ ಆ ಸಾಧು ಬಹಳ ಒಳ್ಳೆಯವ ಮತ್ತು ತಪಸ್ವಿ ಕೂಡಾ. ಒಂದು ದಿನ ಭಗವಂತ ಇನ್ನೊಬ್ಬ ಸಾಧುವಿನ ವೇಷ ಧರಿಸಿ ಆತನನ್ನು ಸಮೀಪಿಸಿ ಹೇಳಿದ: ‘ಮಹಾರಾಜ್, ತಮಗೆ ದೊಡ್ಡ ದೊಡ್ಡ ಸಿದ್ಧಿಗಳು ದೊರೆತಿವೆ ಅಂತ ಕೇಳಿದ್ದೇನೆ.’ ಆ ಸಾಧು ಈ ಸಾಧುವನ್ನು ಬಹಳವಾಗಿ ಆದರಿಸಿ ಒಳ್ಳೇ ಆಸನದಲ್ಲಿ ಕೂರಿಸಿದ. ಆ ಸಮಯಕ್ಕೆ ಸರಿಯಾಗಿ ಒಂದು ಆನೆ ಪಕ್ಕದ ರಸ್ತೆಯಲ್ಲಿ ಹೋಗುತ್ತಿತ್ತು. ಆಗ ಈ ಸಾಧು ಆ ಸಾಧುವನ್ನು ಕೇಳಿದ: ‘ಮಹಾರಾಜ್, ನೀವು ಮನಸ್ಸು ಮಾಡಿದರೆ ಆ ಆನೆಯನ್ನು ಸಾಯಿಸಿಬಿಡಬಲ್ಲಿರಾ?’ ಆ ಸಾಧು ಹೇಳಿದ: “ಹೌದು, ಸಾಧ್ಯ.’ ಹೀಗೆಂದು ಹೇಳಿ ಒಂದು ಚಿಟಕಿ ಬೂದಿ ತೆಗೆದುಕೊಂಡು ಮಂತ್ರಿಸಿ ಆ ಆನೆಯ ಕಡೆ ಬಿಸಾಡಿದ. ಒಡನೇ ಆ ಆನೆ ಕೈಕಾಲು ಒದರುತ್ತ ಕೆಳಕ್ಕೆ ಉರುಳಿ ಸತ್ತುಹೋಯಿತು. ಆಗ ಈ ಸಾಧು ಹೇಳಿದ: ‘ನಿಮ್ಮಲ್ಲಿ ಎಂಥ ಅದ್ಭುತ ಶಕ್ತಿ! ಆನೆಯನ್ನು ಸಾಯಿಸಿಯೇ ಬಿಟ್ಟರಲ್ಲ!’ ಆ ಸಾಧು ನಗಲಾರಂಭಿಸಿದ. ಆಗ ಈ ಸಾಧು ಹೇಳಿದ: ‘ಒಳ್ಳೇದು, ಆ ಆನೆಗೆ ಮತ್ತೆ ಜೀವ ಬರಿಸಬಲ್ಲಿರಾ?’ ಆ ಸಾಧು ಹೇಳಿದ: “ಹೌದು ಅದೂ ಸಾಧ್ಯ.’ ಆತ ಇನ್ನೊಂದು ಚಿಟಿಕೆ ಮಂತ್ರಿಸಿದ ಬೂದಿಯನ್ನು ಆ ಆನೆಯ ಕಡೆ ಬಿಸಾಡಿದ. ಒಡನೆಯೆ ಆ ಆನೆ ದಡಮಡಗುಟ್ಟಿಕೊಂಡು ಎದ್ದು ನಿಂತುಕೊಂಡಿತು. ಆಗ ಈ ಸಾಧು ಹೇಳಿದ: ‘ನಿಮ್ಮಲ್ಲಿ ಎಂಥಾ ಅದ್ಭುತ ಶಕ್ತಿ ಇದೆ! ಆದರೆ ಒಂದು ಪ್ರಶ್ನೆ ಹಾಕಬೇಕೆಂದಿದ್ದೇನೆ. ಈಗ ನೀವು ಆ ಆನೆಯನ್ನು ಸಾಯಿಸಿದಿರಿ ಮತ್ತು ಜೀವ ಬರಿಸಿದಿರಿ. ಅದರಿಂದ ನಿಮಗೆ ಏನು ಉಪಕಾರ ಆದ ಹಾಗಾಯಿತು? ನಿಮಗೆ ಯಾವ ಉನ್ನತಿಯಾದರೂ ದೊರೆಯಿತೆ? ಅದರಿಂದ ನಿಮಗೆ ಭಗವಂತನ ಸಾಕ್ಷಾತ್ಕಾರವೇನಾದರೂ ದೊರೆಯಿತೆ?’ ಹೀಗೆಂದು ಹೇಳಿ ಆ ಸಾಧು ಅಂತರ್ಧಾನವಾಗಿಬಿಟ್ಟ.
ಧರ್ಮಮಾರ್ಗ ಬಹಳ ಸೂಕ್ಷ್ಮವಾದದ್ದು. ಕಿಂಚಿತ್ ಕಾಮನೆ ಇದ್ದರೂ ಭಗವಂತನ ಸಾಕ್ಷಾತ್ಕಾರ ದೊರೆಯದು. ಸೂಜಿಗೆ ದಾರ ಪೋಣಿಸಬೇಕಾದರೆ, ದಾರದ ಕೊನೆಗೆ ಒಂದು ಚಿಕ್ಕ ಅಡ್ಡ ಎಳೆ ಅಂಟಿಕೊಂಡಿದ್ದರೂ ಸಾಧ್ಯವಾಗುವುದಿಲ್ಲ.”
ಕೃಷ್ಣ ಅರ್ಜುನನಿಗೆ ಹೇಳಿದ: ‘ಗೆಳೆಯ, ನೀನು ನನ್ನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬೇಕೆಂದಿದ್ದರೆ, ಅಷ್ಟಸಿದ್ಧಿಗಳಲ್ಲಿ ಒಂದು ನಿನ್ನಲ್ಲಿ ಇದ್ದರೂ ಸಾಧ್ಯವಾಗುವುದಿಲ್ಲ. ಏಕೆ ಹೀಗೆ ಗೊತ್ತೆ? ಸಿದ್ಧಿ ಇತ್ತು ಎಂದರೆ, ಅಹಂಕಾರ ಉಂಟಾಗುತ್ತದೆ. ಅಹಂಕಾರ ಭಗವಂತನನ್ನು ಮರೆಸಿಬಿಡುತ್ತದೆ.’
“ಒಮ್ಮೆ ಒಬ್ಬ ಶ್ರೀಮಂತ ಬಂದಿದ್ದ-ಮೆಳ್ಳೆಗಣ್ಣು. ಆತ ಹೇಳಿದ: ‘ನೀವು ಪರಮಹಂಸರು ತಾನೆ, ಬಹಳ ಒಳ್ಳೆಯದು. ನೀವು ನನಗಾಗಿ ಒಂದು ಸ್ವಸ್ತ್ಯಯನ ಮಾಡಬೇಕು.’ ಅವನದು ಎಂಥಾ ಹೀನಬುದ್ಧಿ! ಆತ ನನ್ನನ್ನು ‘ಪರಮಹಂಸ’ ಅಂತ ಕರೆದೂ ‘ಸ್ವಸ್ತ್ಯಯನ ಮಾಡಬೇಕು’ ಅಂತ ಹೇಳಿದ್ದನ್ನು ನೋಡಿ! ಸ್ವಸ್ತ್ಯಯನದಿಂದ ಒಳ್ಳೆಯದನ್ನು ಮಾಡುವುದು-ಇದು ಸಿದ್ಧಿಯ ಕಾರ್ಯವೇ.
“ಅಹಂಕಾರವಿತ್ತು ಎಂದರೆ ಭಗವಂತನ ಸಾಕ್ಷಾತ್ಕಾರ ದೊರೆಯದು. ಅಹಂಕಾರದ ಸ್ವರೂಪ ಗೊತ್ತೆ? ಅದು ಒಂದು ದಿಣ್ಣೆ ಇದ್ದ ಹಾಗೆ. ಅಲ್ಲಿ ಮಳೆಯ ನೀರು ಶೇಖರವಾಗಲಾರದು; ಕೆಳಕ್ಕೆ ಇಳಿದು ಬಂದುಬಿಡುತ್ತದೆ. ತಗ್ಗುಪ್ರದೇಶದಲ್ಲಿ ನೀರು ಶೇಖರವಾಗುತ್ತದೆ. ಅಲ್ಲಿ ಬೀಜ ಮೊಳೆತು ದೊಡ್ಡ ಮರಗಳಾಗುತ್ತವೆ. ಬಳಿಕ ಆ ಮರಗಳು ಫಲ ಕೊಡುತ್ತವೆ.
“ಇದಕ್ಕಾಗಿಯೇ ನಾನು ಹಾಜರಾನಿಗೆ ಹೇಳುತ್ತಿರುವುದು: ‘ನೀನೊಬ್ಬನೇ ಜ್ಞಾನಿ, ಉಳಿದವರೆಲ್ಲ ಪೆದ್ದರು ಅಂತ ಎಂದೂ ಭಾವಿಸಬೇಡ.’ ಎಲ್ಲರನ್ನೂ ಪ್ರೀತಿಸಬೇಕು; ಯಾರೂ ಪರರಲ್ಲ. ಎಲ್ಲರಲ್ಲೂ ಆ ಒಬ್ಬ ಭಗವಂತನೇ ವಾಸಿಸುತ್ತಾನೆ. ಆತನಿಲ್ಲದ ವಸ್ತುವೇ ಇಲ್ಲ.
“ಭಗವಂತ ಪ್ರಹ್ಲಾದನಿಗೆ ಹೇಳಿದ: “ಒಂದು ವರವನ್ನು ಬೇಡಿಕೊ.’ ಪ್ರಹ್ಲಾದ ಹೇಳಿದ: ‘ನನಗೆ ನಿನ್ನ ದರ್ಶನ ಲಭಿಸಿದೆ, ನನಗಿನ್ನೇನೂ ಬೇಕಾಗಿಲ್ಲ.’ ಆದರೆ ಭಗವಂತ ಆತನನ್ನು ಸುಮ್ಮನೆ ಬಿಡಲಿಲ್ಲ. ಆಗ ಪ್ರಹ್ಲಾದ ಹೇಳಿದ: ‘ನೀನು ವರ ಕೊಡಬೇಕೆಂದಿದ್ದರೆ ನನಗೆ ಈ ವರ ಕೊಡು-ಯಾರು ನನಗೆ ಕಷ್ಟ ಕೊಟ್ಟಿದ್ದಾರೊ ಅವರಿಗೆ ಶಿಕ್ಷೆಯಾಗದ ಹಾಗೆ.’ ಇದರ ಅರ್ಥ, ಆ ಹಿಂಸಕರ ರೂಪಿನಲ್ಲಿ ಕಷ್ಟ ಕೊಟ್ಟವನು ಭಗವಂತನೇ. ಆ ಹಿಂಸಕರಿಗೆ ಶಿಕ್ಷೆ ವಿಧಿಸಿದ್ದೇ ಆದರೆ, ಅದನ್ನು ಭಗವಂತನಿಗೇ ವಿಧಿಸಿದಂತಾಗುತ್ತದೆ.
“ರಾಧೆಗೆ ಪ್ರೇಮೋನ್ಮಾದ ಉಂಟಾಗಿತ್ತು. ಭಕ್ತ್ಯುನ್ಮಾದ ಎಂಬುದೂ ಇದೆ. ಉದಾಹರಣೆಗೆ ಹನುಮಂತನದು. ಸೀತೆ ಅಗ್ನಿಪ್ರವೇಶ ಮಾಡುತ್ತಿರುವುದನ್ನು ನೋಡಿ, ರಾಮನನ್ನು ಕೊಲ್ಲಲು ಹೋಗಿಬಿಟ್ಟಿದ್ದ. ಮತ್ತೆ ಇದೇ ಜ್ಞಾನೋನ್ಮಾದ. ಒಮ್ಮೆ ಒಬ್ಬ ಜ್ಞಾನಿ ಹುಚ್ಚನ ಹಾಗೆ ಕಂಡುಬಂದ. ಆತ ಈ ಕಾಳೀದೇವಾಲಯ ಪ್ರತಿಷ್ಠೆಯಾದ ಕೆಲವು ದಿನಗಳಲ್ಲೇ ಇಲ್ಲಿಗೆ ಬಂದಿದ್ದ. ಜನ ಹೇಳಿದರು, ‘ಆತ ರಾಮಮೋಹನರಾಯನ ಬ್ರಾಹ್ಮಸಭೆಯ ಅನುಯಾಯಿ.’ ಆತ ಒಂದು ಕಾಲಿಗೆ ಒಂದು ಹರಿದುಹೋದ ಜೋಡು ಹಾಕಿಕೊಂಡಿದ್ದ. ಒಂದು ಕೈಯಲ್ಲಿ ಒಂದು ಕೋಲನ್ನು ಇನ್ನೊಂದು ಕೈಯಲ್ಲಿ ಮಾವಿನ ಸಸಿಯ ಒಂದು ಚಟ್ಟಿಯನ್ನು ಹಿಡಿದುಕೊಂಡಿದ್ದ. ಗಂಗೆಯಲ್ಲಿ ಸ್ನಾನಮಾಡಿ ಕಾಳೀದೇವಾಲಯವನ್ನು ಪ್ರವೇಶಿಸಿದ. ಆಗ ಹಲಧಾರಿ ಕಾಳಿಯ ಗರ್ಭಗುಡಿಯಲ್ಲಿ ಕುಳಿತಿದ್ದ. ಆವೇಶಪೂರಿತನಾಗಿ ದೇವಿಯ ಸಂಬಂಧವಾಗಿ ಕೆಲವು ಶ್ಲೋಕಗಳನ್ನು ಹೇಳಿದ. ಅನಂತರ ಒಂದು ನಾಯಿಯನ್ನು ಸಮೀಪಿಸಿ ಅದರ ಕಿವಿ ಹಿಡಿದುಕೊಂಡು ಅದರ ಉಚ್ಛಿಷ್ಟವನ್ನು ತಿಂದ. ನಾಯಿಯೂ ಸುಮ್ಮನೆ ನಿಂತಿತು. ನನಗೂ ಆಗ ಭಗವದುನ್ಮಾದ ಬರಲು ಆರಂಭವಾಗಿ ಬಿಟ್ಟಿತ್ತು. ನಾನೂ ಹೃದೂನ ಕತ್ತು ಹಿಡಿದುಕೊಂಡು ಹೇಳಿದೆ : ‘ಏನು ಹೃದೂ! ನನಗೂ ಆ ಅವಸ್ಥೆ ಉಂಟಾಗುತ್ತದೆಯೇ?’
“ನನಗೆ ಪ್ರೇಮೋನ್ಮಾದ ಬಂದಿತ್ತು. ನಾರಾಯಣಶಾಸ್ತ್ರಿ ಬಂದು ನೋಡುತ್ತಾನೆ, ನಾನು ಒಂದು ಗಳುವಿನ ತುಂಡನ್ನು ಹೆಗಲ ಮೇಲೆ ಇಟ್ಟುಕೊಂಡು ಸುಮ್ಮನೆ ಸುತ್ತಾಡುತ್ತಿರುವುದನ್ನು. ಅದನ್ನು ನೋಡಿ ಆತ ಜನರಿಗೆ ಹೇಳಿದ: ‘ಇವರಿಗೆ ಪ್ರೇಮೋನ್ಮಾದ ಬಂದುಬಿಟ್ಟಿದೆ.’ ಆ ಅವಸ್ಥೆಯಲ್ಲಿ ಜಾತಿ ಭಾವನೆಯೇ ನನ್ನ ತಲೆಗೆ ಬರುತ್ತಿರಲಿಲ್ಲ. ಒಬ್ಬ ನೀಚ ಜಾತಿಯವನ ಹೆಂಡತಿ ಸೊಪ್ಪನ್ನು ಬೇಯಿಸಿ ಕಳುಹಿಸುತ್ತಿದ್ದಳು. ನಾನು ತಿಂದು ಬಿಡುತ್ತಿದ್ದೆ.
“ಕಾಳೀದೇವಾಲಯದ ಅತಿಥಿಶಾಲೆಯಲ್ಲಿ ಭಿಕ್ಷುಕರು ಊಟಮಾಡಿ ಹೋದನಂತರ ಬಿದ್ದಿರುತ್ತಿದ್ದ ಎಂಜಲು ಎಲೆಗಳನ್ನು ಒಮ್ಮೆ ತೆಗೆದು ನನ್ನ ತಲೆಗೆ ಮತ್ತು ಬಾಯಿಗೆ ಮುಟ್ಟಿಸಿದೆ. ಅದನ್ನು ನೋಡಿ ಹಲಧಾರಿ ನನಗೆ ಹೇಳಿದ: ‘ಏನು ಕೆಲಸ ಮಾಡಿಬಿಟ್ಟೆ? ಭಿಕ್ಷುಕರ ಎಂಜಲು ತಿಂದುಬಿಟ್ಟೆಯಲ್ಲ. ನಿನ್ನ ಮಕ್ಕಳು ಮರಿಗಳನ್ನು ಯಾರುತಾನೆ ತಂದುಕೊಳ್ಳುತ್ತಾರೆ?’ ನನಗೆ ಆಗ ಕೋಪ ಬಂತು. ಹಲಧಾರಿ ನನ್ನ ಸಂಬಂಧಿ, ನನಗಿಂತ ಹಿರಿಯವ, ಆದರೂ ಅದು ನನ್ನನ್ನು ಸುಮ್ಮನೆ ಇರಿಸಬಲ್ಲುದೆ? ನಾನು ರೇಗಿ ಹೇಳಿದೆ: ‘ಎಲಾ ನೀಚ! ನೀನು ತಾನೆ ಗೀತೆ, ವೇದಾಂತ ಇವುಗಳ ಸಂಬಂಧವಾಗಿ ಪ್ರತಿಷ್ಠೆ ತೋರಿಸುತ್ತಿರುವವನು? ನೀನು ತಾನೆ ಜನರಿಗೆ ಬೋಧಿಸುತ್ತಿರುವವನು, ಬ್ರಹ್ಮಸತ್ಯ, ಜಗತ್ತು ಮಿಥ್ಯಾ ಅಂತ? ಆದರೂ ನೀನು ನನಗೆ ಮಕ್ಕಳಾಗುವುದು ಅಂತ ಭಾವಿಸಿದ್ದೀಯಾ? ಗೀತಾಪಾಠ ಮಾಡುತ್ತಿರುವ ನಿನ್ನ ಬಾಯಿಗೆ ಬೆಂಕಿಹಾಕ!’
(ಮಾಸ್ಟರಿಗೆ) “ನೋಡು, ಕೇವಲ ಪುಸ್ತಕ ಪಾಂಡಿತ್ಯದಿಂದ ಏನೂ ದೊರೆಯುವುದಿಲ್ಲ. ಮೃದಂಗ ಬಾಜನ ಶಾಸ್ತ್ರವನ್ನು ಬಹಳ ಚೆನ್ನಾಗಿ ಕಂಠಪಾಠ ಮಾಡಿಬಿಡಬಹುದು. ಆದರೆ ಹಾಗೇ ಬಾಜಿಸುವುದು ಬಹಳ ಕಠಿಣ.”
ಶ್ರೀರಾಮಕೃಷ್ಣರು ತಮ್ಮ ಪ್ರೇಮೋನ್ಮಾದದ ವರ್ಣನೆಯನ್ನು ಮುಂದುವರಿಸುತ್ತಿದ್ದಾರೆ. “ಒಮ್ಮೆ ಮಧುರಬಾಬುವಿನೊಡನೆ ವಿಹಾರಾರ್ಥವಾಗಿ ಕೆಲವು ದಿನಗಳ ಮಟ್ಟಿಗೆ ಪುಟ್ಟ ದೋಣಿಯಲ್ಲಿ ಹೋಗಿದ್ದೆ. ಆ ಸಂದರ್ಭದಲ್ಲಿ ನವದ್ವೀಪಕ್ಕೆ ಹೋಗಿದ್ದೆವು. ಒಂದು ದಿನ ಆ ದೋಣಿಯ ಅಂಬಿಗರು ಅಡಿಗೆ ಮಾಡುವುದನ್ನು ನೋಡುತ್ತ ನಿಂತಿದ್ದೆ. ಮಥುರಬಾಬು ನನ್ನನ್ನು ಕೇಳಿದ: ‘ಬಾಬಾ, ಅಲ್ಲಿ ನಿಂತುಕೊಂಡು ಏನು ಮಾಡಿತ್ತಿದ್ದೀರಿ?’ ನಾನು ನಗುತ್ತ ಹೇಳಿದೆ: ‘ಅಂಬಿಗರು ಬಹಳ ಚೆನ್ನಾಗಿ ಅಡಿಗೆ ಮಾಡುತ್ತಿದ್ದಾರೆ.’ ಮಥುರಬಾಬುವಿಗೆ ಅನಿಸಿತು, ನಾನು ಅವರಿಂದ ಆಹಾರ ಕೇಳಿ ಈಸಿಕೊಂಡು ತಿಂದುಬಿಡಬಹುದೆಂದು. ಅದಕ್ಕಾಗಿ ಆತ ನನ್ನನ್ನು ಕೂಗಿದ: ‘ಬಾಬಾ, ಬೇಗ ಇಲ್ಲಿಗೆ ಬಂದುಬಿಡಿ! ಬೇಗ ಇಲ್ಲಿಗೆ ಬಂದುಬಿಡಿ!’
“ಆದರೆ ಈಗ ಹಾಗೆ ಮಾಡಲಾರೆ. ಆ ಅವಸ್ಥೆ ಈಗ ನನಗಿಲ್ಲ. ಈಗ ಅಡಿಗೆಯವನು ಬ್ರಾಹ್ಮಣನಾಗಿರಬೇಕು, ಆತ ಆಚಾರಶೀಲನಾಗಿರಬೇಕು. ಮಾಡಿದ ಅಡಿಗೆ ಭಗವಂತನಿಗೆ ಅರ್ಪಿಸಬೇಕು; ಆಗ ಮಾತ್ರವೇ ನಾನು ಊಟಮಾಡಲು ಸಾಧ್ಯವಾಗುತ್ತದೆ.
“ಓ, ನನಗೆ ಏನೇನವಸ್ಥೆ ಬಂದಿದ್ದುವು. ಕಾಮಾರಪುಕುರಿನಲ್ಲಿ ಚಿನು ಶಙ್ಖರಿಯೇ ಮೊದಲಾದ ನನ್ನ ಬಾಲ್ಯಸ್ನೇಹಿತರಿಗೆ ಹೇಳಿದೆ: ‘ನಿಮ್ಮ ಕಾಲಿಗೆ ಅಡ್ಡಬೀಳುತ್ತೇನೆ, ಒಮ್ಮೆ ಯಾದರೂ “ಹರಿ” ಎಂಬುದಾಗಿ ನಿಮ್ಮ ಬಾಯಿಂದ ‘ಹೇಳಿ!’ ಅವರ ಕಾಲಿಗೆಲ್ಲಾ ಇನ್ನೇನು ಅಡ್ಡಬೀಳುವುದರಲ್ಲಿದ್ದೆ. ಆಗ ಚಿನೇಶಂಕರಿ ಹೇಳಿದ : ‘ಇದು ನಿನ್ನ ಪ್ರಥಮ ಅನುರಾಗ; ಆದ್ದರಿಂದ ಎಲ್ಲರೂ ನಿನಗೆ ಒಂದೇ ಸಮನಾಗಿ ತೋರುತ್ತಿದ್ದಾರೆ. ಬಿರುಗಾಳಿ ಬಂದು ಧೂಳು ಎದ್ದಾಗ ಮಾವಿನ ಮರ, ಹುಣಸೆ ಮರ ಎಲ್ಲಾ ಒಂದೇ ರೀತಿಯಾಗಿ ಕಾಣುತ್ತವೆ. ಇದು ಈ ಜಾತಿಯ ಮರ, ಅದು ಆ ಜಾತಿಯ ಮರ ಎಂಬುದಾಗಿ ಪತ್ತೆಹಚ್ಚಲಾಗುವುದಿಲ್ಲ.’”
ಒಬ್ಬ ಭಕ್ತ: “ಭಕ್ತಿಯ ಉನ್ಮಾದವೇ ಆಗಲಿ, ಪ್ರೇಮೋನ್ಮಾದವೇ ಆಗಲಿ, ಜ್ಞಾನೋನ್ಮಾದವೇ ಆಗಲಿ, ಸಂಸಾರಿಗೆ ಉಂಟಾಗಿಬಿಟ್ಟದ್ದೇ ಆದರೆ, ಆತ ಸಂಸಾರ ಕಾರ್ಯಗಳನ್ನು ನಡೆಸಿಕೊಂಡು ಹೋಗುವ ಬಗೆ ಹೇಗೆ?”
ಶ್ರೀರಾಮಕೃಷ್ಣರು ಆತನನ್ನು ದೃಷ್ಟಿಸಿ: “ಯೋಗಿಗಳಲ್ಲಿ ಎರಡು ವಿಧ-ವ್ಯಕ್ತ, ಗುಪ್ತ. ಗುಪ್ತಯೋಗಿಯನ್ನು ಸಂಸಾರದಲ್ಲಿ ನೋಡಬಹುದು. ಬೇರೆ ಯಾರಿಗೂ ಆತ ಗೊತ್ತಾಗುವುದಿಲ್ಲ. ಸಂಸಾರಿಗಳಿಗೆ ಮಾನಸಿಕ ತ್ಯಾಗವೇ ವಿನಾ ಬಾಹ್ಯಿಕ ತ್ಯಾಗವಲ್ಲ.”
ರಾಮ: “ಇದು ಮಕ್ಕಳನ್ನು ಸಂತೈಸುವ ಮಾತು. ಸಂಸಾರಿ ಜ್ಞಾನಿಯಾಗಬಲ್ಲನೇ ವಿನಾ ಎಂದಿಗೂ ವಿಜ್ಞಾನಿಯಾಗಲಾರ.”
ಶ್ರೀರಾಮಕೃಷ್ಣರು: “ಕೊನೆಯಲ್ಲಿ ಆತ ವಿಜ್ಞಾನಿಯಾಗಲು ಸಾಧ್ಯ. ಬಲಾತ್ಕಾರದಿಂದ ಸಂಸಾರತ್ಯಾಗ ಒಳ್ಳೆಯದಲ್ಲ.”
ರಾಮ: “ಕೇಶವಸೇನ ಹೇಳುತ್ತಿದ್ದ, “ಅವರ (ಪರಮಹಂಸರ) ಹತ್ತಿರಕ್ಕೆ ಜನ ಏಕೆ ಅಷ್ಟೊಂದಾಗಿ ಹೋಗುತ್ತಿದ್ದಾರೆ? ಒಂದು ದಿನ ಅವರು “ಕಚಕ್” ಅಂತ ಕಚ್ಚಿಬಿಡುತ್ತಾರೆ, ಆಗ ಅಲ್ಲಿಂದ ಓಡಿಬರಬೇಕಾಗಿ ಬಂದುಬಿಡುತ್ತದೆ.’”
ಶ್ರೀರಾಮಕೃಷ್ಣರು: “ನಾನೇಕೆ ಜನರನ್ನು “ಕಚಕ್” ಅಂತ ಕಚ್ಚಲಿ. ನಾನು ಜನರಿಗೆ ತೋರಿಸುತ್ತೇನೆ, ಇದನ್ನೂ ಮಾಡಿ, ಅದನ್ನೂ ಮಾಡಿ; ಸಂಸಾರವನ್ನು ನಡೆಸಿಕೊಂಡು ಹೋಗಿ, ಭಗವಂತನನ್ನೂ ಕರೆಯುತ್ತಿರಿ!’ ಎಲ್ಲವನ್ನೂ ತ್ಯಜಿಸಿಬಿಡುವಂತೆ ನಾನು ಹೇಳುತ್ತಿಲ್ಲ ವಲ್ಲ, (ನಗುತ್ತ) ಒಂದು ದಿನ ಕೇಶವಸೇನ ಉಪನ್ಯಾಸ ಮಾಡಿದ, ಆಗ ಹೇಳಿದ: ‘ಹೇ ಭಗವಂತ, ದಯವಿಟ್ಟು ಕೃಪೆಮಾಡು, ನಾವು ಭಕ್ತಿನದಿಯಲ್ಲಿ ಮುಳುಗಿ ಸಚ್ಚಿದಾನಂದ ಸಾಗರವನ್ನು ತಲುಪಿಬಿಡುವ ಹಾಗೆ.’ ಹೆಂಗಸರೆಲ್ಲರೂ ಪರದೆಯ ಹಿಂದೆ ಕುಳಿತಿದ್ದರು. ನಾನು ಕೇಶವಸೇನನಿಗೆ ಹೇಳಿದೆ: ‘ನೀವೆಲ್ಲರೂ ಒಮ್ಮೆಗೇ ನದಿಯಲ್ಲಿ ಮುಳುಗಿಬಿಡಲು ಹೇಗೆ ಸಾಧ್ಯವಾದೀತು?’ ಹೆಂಗಸರ ಕಡೆ ಬೆರಳುಮಾಡಿ ಹೇಳಿದೆ: ‘ಆಗ ಅವರ ಗತಿ ಏನಾಗಬೇಕು? ಆಗಾಗ ದಡಕ್ಕೆ ಬಂದು ಹೋಗುತ್ತಿರಿ. ಒಮ್ಮೆ ಮುಳುಗಿ ಮತ್ತೊಮ್ಮೆ ಎದ್ದು ಬಂದುಬಿಡಿ.’ ಕೇಶವಸೇನ ಮತ್ತು ಉಳಿದವರೆಲ್ಲರೂ ನಗಲಾರಂಭಿಸಿದರು.
“ಹಾಜರಾ ಹೇಳುತ್ತಾನೆ: ‘ನೀವು ರಾಜಸಿಕ ಜನರನ್ನು ಬಹಳವಾಗಿ ಪ್ರೀತಿಸುತ್ತಿದ್ದೀರಿ-ಬೇಕಾದಷ್ಟು ಹಣ-ಕಾಸು, ಕೀರ್ತಿ-ಗೌರವ ಇರುವವರನ್ನು. ಅದು ಹಾಗಿದ್ದ ಪಕ್ಷದಲ್ಲಿ ಹರೀಶ, ಲಾಟು, ಇವರನ್ನು ಪ್ರೀತಿಸುತ್ತಿದ್ದೇನಲ್ಲ ಏಕೆ? ನರೇಂದ್ರನನ್ನು ಪ್ರೀತಿಸುತ್ತೇನಲ್ಲ ಏಕೆ? ಆತನಿಗೆ ಸುಟ್ಟ ಬಾಳೆಕಾಯಿ ತಿನ್ನುವುದಕ್ಕೆ ಉಪ್ಪಿಗೂ ಗತಿಯಿಲ್ಲ’
ಪರಮಹಂಸರು ತಮ್ಮ ಕೊಠಡಿಯಿಂದ ಹೊರಗೆ ಬಂದು ಸರ್ವೆಮರಗಳ ಕಡೆ ಮಾಸ್ಟರೊಡನೆ ಮಾತಾಡುತ್ತ ಮಾತಾಡುತ್ತ ಮುಂದುವರಿಯುತ್ತಿದ್ದಾರೆ. ಒಬ್ಬ ಭಕ್ತ ಕೈಯಲ್ಲಿ ಒಂದು ಚೌಕ ಮತ್ತು ನೀರಿನ ತಂಬಿಗೆ ಹಿಡಿದುಕೊಂಡು ಅವರನ್ನು ಹಿಂಬಾಲಿಸುತ್ತಿದ್ದಾನೆ. ಪರಮಹಂಸರು ತಾವು ಸ್ಟಾರ್ ಥಿಯೇಟರಿಗೆ ಹೋಗುವುದರ ಸಂಬಂಧವಾಗಿ ಮಾತಾಡು ತ್ತಿದ್ದಾರೆ. ಅವರು ಮಾಸ್ಟರಿಗೆ ಹೇಳುತ್ತಿದ್ದಾರೆ: “ರಾಮ ಹೇಳಿದ್ದು ರಾಜಸಿಕ ಜನರಿಗೆ ಅನ್ವಯಿಸತಕ್ಕದ್ದು. ಅಷ್ಟು ಬೆಲೆಯಾದ ಟಿಕೆಟ್ ಕೊಂಡುಕೊಳ್ಳುವುದರ ಆವಶ್ಯಕತೆಯೇನಿದೆ?”
ಘಂಟೆ ಸಾಯಂಕಾಲ ಐದು. ಪರಮಹಂಸರು ಮಹೇಂದ್ರ ಮುಖ್ಯೋಪಾಧ್ಯಾಯನ ಗಾಡಿಯಲ್ಲಿ ಕುಳಿತು ಕಲ್ಕತ್ತಕ್ಕೆ ಬರುತ್ತಿದ್ದಾರೆ. ಗಾಡಿಯಲ್ಲಿ ಮಾಸ್ಟರ್, ಮಹೇಂದ್ರ ಮುಖ್ಯೋಪಾಧ್ಯಾಯ, ಇನ್ನೂ ಕೆಲವು ಮಂದಿ ಭಕ್ತರು ಕುಳಿತಿದ್ದಾರೆ. ಪರಮಹಂಸರು ಭಗವಚ್ಚಿಂತನೆ ಮಾಡುತ್ತ ಮಾಡುತ್ತ ಇದ್ದ ಹಾಗೇ ಭಾವಸಮಾಧಿಯಲ್ಲಿ ಮಗ್ನರಾಗಿ ಬಿಟ್ಟಿದ್ದಾರೆ. ಹಾಗೇ ಬಹಳ ಹೊತ್ತಿನವರೆಗೆ ಇದ್ದು ಈಗ ಪ್ರಕೃತಿಸ್ಥರಾಗುತ್ತಿದ್ದಾರೆ. ತಮಗೆ ತಾವೇ ಈಗ ಹೇಳಿಕೊಳ್ಳುತ್ತಿದ್ದಾರೆ. “ಹಾಜರಾ ನನಗೆ ಬುದ್ಧಿ ಕಲಿಸಲು ಬರುತ್ತಿದ್ದಾನೆ! ನೀಚ!” ಸ್ವಲ್ಪ ಹೊತ್ತು ಸುಮ್ಮನಿದ್ದು ಹೇಳುತ್ತಿದ್ದಾರೆ “ನಾನು ನೀರು ಕುಡಿಯಬೇಕು.” ಬಾಹ್ಯ ಜಗತ್ತಿಗೆ ಮನಸ್ಸು ತರಲು ಪರಮಹಂಸರು ಈ ಮಾತನ್ನು ಪ್ರಾಯಿಕವಾಗಿ ಸಮಾಧಿ ದೊರೆತ ನಂತರ ಹೇಳುವುದುಂಟು.
ಮಹೇಂದ್ರ ಮಾಸ್ಟರಿಗೆ: “ನಾನು ಅವರಿಗೆ ಸ್ವಲ್ಪ ಫಲಾಹಾರ ತೆಗೆದುಕೊಂಡು ಬರಲೆ?”
ಮಾಸ್ಟರ್: “ಬೇಡ. ಈಗ ಅವರು ಏನನ್ನೂ ತಿನ್ನುವುದಿಲ್ಲ.”
ಮಹೇಂದ್ರ ಹಾತೀಬಾಗಾನ್ ಎಂಬ ಜಾಗದಲ್ಲಿದ್ದ ತನ್ನ ಪರಮಹಂಸರನ್ನು ಕರೆದುಕೊಂಡು ಹೋಗುತ್ತಿದ್ದಾನೆ. ಅಲ್ಲಿ ಅವರು ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಸ್ಟಾರ್ ಥಿಯೇಟರಿಗೆ ತೆರಳುತ್ತಾರೆ. ಮಹೇಂದ್ರನ ತಂದೆಗೆ ಪರಮಹಂಸರ ಪರಿಚಯ ಇಲ್ಲದೆ ಇದ್ದುದರಿಂದ ಆತ ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಲಿಲ್ಲ. ಮಹೇಂದ್ರನ ಎರಡನೆ ತಮ್ಮ ಪ್ರಿಯನಾಥನೂ ಪರಮಹಂಸರ ಭಕ್ತ.
ಪರಮಹಂಸರು ರತ್ನಗಂಬಳಿಯನ್ನು ಹಾಸಿದ್ದ ಒಂದು ಮಂಚದ ಮೇಲೆ ಕುಳಿತು ಭಗವಂತನ ಸಂಬಂಧವಾಗಿ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರ್ ಮೊದಲಾದವರಿಗೆ: “ಒಮ್ಮೆ ಚೈತನ್ಯ ಚರಿತಾಮೃತವನ್ನು ಕೇಳುತ್ತ ಕೇಳುತ್ತ ಇದ್ದ ಹಾಗೆ, ಹಾಜರಾ ಹೇಳಿದ: ‘ಈ ಘಟನೆಗಳೆಲ್ಲಾ ಶಕ್ತಿ ಕ್ರೀಡೆ; ವಿಭುವಿಗೆ ಎಂದರೆ ಬ್ರಹ್ಮನಿಗೂ ಇವಕ್ಕೂ ಯಾವ ಸಂಬಂಧವೂ ಇಲ್ಲ.’ ವಿಭುವಿಲ್ಲದೆ ಶಕ್ತಿ ಎಂದಿಗಾದರೂ ಪ್ರತ್ಯೇಕವಾಗಿ ಇರಬಲ್ಲಳೆ? ಇಲ್ಲಿನ 4 ಮತವನ್ನು ಹಾಜರಾ ರದ್ದು ಮಾಡಲು ಪ್ರಯತ್ನಿಸುತ್ತಾನೆ.
“ನನಗೆ ಅನುಭವವಾಗಿದೆ-ಬ್ರಹ್ಮ ಮತ್ತು ಶಕ್ತಿ ಅಭೇದ-ನೀರು ಮತ್ತು ಅದರ ತೋಯುವ ಶಕ್ತಿ, ಬೆಂಕಿ ಮತ್ತು ಅದರ ಸುಡುವ ಶಕ್ತಿ ಇವುಗಳ ಹಾಗೆ. ಬ್ರಹ್ಮ ವಿಭುರೂಪ ದಿಂದ ಸರ್ವಭೂತಗಳಲ್ಲಿಯೂ ಇದ್ದಾನೆ-ಆದರೆ ಕೆಲವದರಲ್ಲಿ ಅಧಿಕವಾಗಿಯೂ, ಇನ್ನು ಕೆಲವದರಲ್ಲಿ ಕಡಿಮೆಯಾಗಿಯೂ ವ್ಯಕ್ತವಾಗಿ. ಹಾಜರಾ ಮತ್ತೆ ಹೇಳುತ್ತಾನೆ: ‘ಭಗವಂತನ ಸಾಕ್ಷಾತ್ಕಾರ ದೊರೆತುದೇ ಆದರೆ, ಭಕ್ತನಿಗೂ ಭಗವಂತನ ಹಾಗೇ ಷಡೈಶ್ಚರ್ಯಗಳು ಉಂಟಾಗುತ್ತವೆ; ಅವು ಅವನಲ್ಲಿ ಇರುತ್ತವೆ, ಆತ ಉಪಯೋಗಿಸಲಿ ಬಿಡಲಿ.’”
ಮಾಸ್ಟರ್: “ಷಡೈಶ್ವರ್ಯಗಳು ಕೈಯಲ್ಲಿರುವುದು ಒಳ್ಳೆಯದು!” (ಎಲ್ಲರೂ ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು ನಗುತ್ತ : “ಹೌದು, ಕೈಯಲ್ಲಿರಬೇಕು! ಇದು ಎಂಥ ಹೀನ ಬುದ್ಧಿ! ಯಾರು ಐಶ್ವರ್ಯಗಳನ್ನು ಎಂದೂ ಭೋಗಿಸಿಲ್ಲವೋ, ಆತ ಅವುಗಳಿಗಾಗಿ ಹಾತೊರೆಯು ತ್ತಾನೆ. ಆದರೆ ನಿಜವಾದ ಭಕ್ತ ಎಂದೂ ಅವುಗಳಿಗಾಗಿ ಪ್ರಾರ್ಥನೆ ಮಾಡುವುದಿಲ್ಲ.”
ಪರಮಹಂಸರು ಕೈಕಾಲು ತೊಳೆದುಕೊಂಡ ನಂತರ ಅವರಿಗೆ ಗುಡುಗುಡಿಯನ್ನು ಅರ್ಪಿಸಲಾಯಿತು. ಅವರು ಮಾಸ್ಟರ್ ಕಡೆ ತಿರುಗಿ ಹೇಳುತ್ತಿದ್ದಾರೆ: “ಮುಸ್ಸಂಜೆಯಾಗಿದೆಯೆ! ಆಗಿದ್ದರೆ ಈ ಗುಡುಗುಡಿ ಸೇದುವುದಿಲ್ಲ. ಮುಸ್ಸಂಜೆಯಲ್ಲಿ ಎಲ್ಲಾ ಕೆಲಸ ಕಾರ್ಯಗಳನ್ನೂ ಬಿಟ್ಟು ಭಗವಂತನ ಸ್ಮರಣೆ ಮಾಡಬೇಕು.” ಹೀಗೆಂದು ಹೇಳಿ ತಮ್ಮ ಕೈಯ ಮೇಲಿನ ರೋಮಗಳ ಕಡೆ ನೋಡುತ್ತಿದ್ದಾರೆ-ಎಣಿಸಲಾಗುವುದೆ ಇಲ್ಲವೆ ಎಂಬುದನ್ನು ಅರಿಯಲು. ಎಣಿಸಲಾಗದಿದ್ದರೆ ಮುಸ್ಸಂಜೆಯಾಗಿದೆ ಅಂತ ಅರ್ಥ.
ಪರಮಹಂಸರ ಗಾಡಿ ಬೀಡನ್ ಬೀದಿಯಲ್ಲಿ ಸ್ಟಾರ್ ಥಿಯೇಟರ್ ಎದುರಿಗೆ ಬಂದು ನಿಂತಿದೆ. ಘಂಟೆ ರಾತ್ರಿ ಎಂಟು. ಪರಮಹಂಸರೊಡನೆ ಮಾಸ್ಟರ್, ಬಾಬುರಾಮ, ಮಹೇಂದ್ರ ಮುಖ್ಯೋಪಾಧ್ಯಾಯ, ಇನ್ನೂ ಒಬ್ಬಿಬ್ಬರು ಭಕ್ತರು ಬಂದಿದ್ದಾರೆ. ಟಿಕೆಟ್ ಕೊಂಡುಕೊಳ್ಳಲು ಪ್ರಯತ್ನ ನಡೆಯುತ್ತಿದೆ. ಥಿಯೇಟರಿನ ಮ್ಯಾನೇಜರ್ ಗಿರೀಶಚಂದ್ರ ಘೋಷನು ತನ್ನ ಕೆಲವು ಮಂದಿ ಕೆಲಸಗಾರರೊಡನೆ ಗಾಡಿಯನ್ನು ಸಮೀಪಿಸುತ್ತಿದ್ದಾನೆ. ಆತ ಪರಮಹಂಸರನ್ನು ಆದರದಿಂದ ಎದುರುಗೊಂಡು ಎಲ್ಲರನ್ನೂ ಮಹಡಿಯ ಮೇಲಕ್ಕೆ ಕರೆದು ಕೊಂಡು ಹೋಗುತ್ತಿದ್ದಾನೆ. ಗಿರೀಶಘೋಷ ಪರಮಹಂಸರ ಹೆಸರು ಕೇಳಿದ್ದ. ಪರಮಹಂಸರು ನಾಟಕ ನೋಡಲು ಬಂದಿರುವುದನ್ನು ನೋಡಿ ಆತನಿಗೆ ಬಹಳ ಆನಂದವಾಗಿಬಿಟ್ಟಿದೆ. ಪರಮಹಂಸರನ್ನು ಒಂದು ಬಾಕ್ಸ್ ನಲ್ಲಿ ಕೂರಿಸಲಾಯಿತು. ಅವರ ಪಕ್ಕದಲ್ಲಿ ಮಾಸ್ಟರ್ ಕುಳಿತಿದ್ದಾನೆ. ಬಾಬುರಾಮ ಮತ್ತು ಇನ್ನೂ ಒಬ್ಬಿಬ್ಬರು ಭಕ್ತರು ಹಿಂದುಗಡೆ ಕುಳಿತಿದ್ದಾರೆ.
ನಾಟ್ಯಾಲಯ ದೀಪಗಳಿಂದ ಪೂರ್ಣ ಪ್ರಕಾಶವಾಗಿದೆ. ಹಳ್ಳದಲ್ಲೂ ಜನ ತುಂಬಿದ್ದಾರೆ. ಬಾಕ್ಸ್ ಗಳೂ ಭರ್ತಿಯಾಗಿವೆ. ಪ್ರತಿಯೊಂದು ಬಾಕ್ಸಿನ ಹಿಂದೆಯೂ ಒಬ್ಬೊಬ್ಬ ಸೇವಕ ನಿಂತು ಗಾಳಿ ಬೀಸುತ್ತಿದ್ದಾನೆ. ಪರಮಹಂಸರಿಗೆ ಬಹಳ ಆನಂದವಾಗಿಬಿಟ್ಟಿದೆ. ಅವರು ಮಗುವಿನ ಹಾಗೆ ನಗುತ್ತ ಮಾಸ್ಟರಿಗೆ ಹೇಳುತ್ತಿದ್ದಾರೆ: “ಆಹಾ! ಇಲ್ಲಿಂದ ಬಹಳ ಚೆನ್ನಾಗಿ ಕಾಣುತ್ತಿದೆ! ಇಲ್ಲಿಗೆ ಬಂದದ್ದು ಬಹಳ ಒಳ್ಳೆಯದೇ ಆಯಿತು. ಅನೇಕ ಮಂದಿ ಒಟ್ಟಿಗೆ ಇರುವುದನ್ನು ನೋಡಿದರೆ ನನಗೆ ಉದ್ದೀಪನವಾಗಿಬಿಡುತ್ತದೆ. ಆಗ ಸ್ಪಷ್ಟವಾಗಿ ತೋರಿಬರುತ್ತದೆ, ಎಲ್ಲವೂ ಭಗವಂತನದೇ ಆಗಿರುವುದಾಗಿ.”
ಮಾಸ್ಟರ್: “ಅದು ನಿಜ.”
ಶ್ರೀರಾಮಕೃಷ್ಣರು: “ಈ ಸೀಟಿಗೆ ಎಷ್ಟು?”
ಮಾಸ್ಟರ್: “ಏನೂ ತೆಗೆದುಕೊಳ್ಳುವುದಿಲ್ಲ. ನೀವು ಇಲ್ಲಿಗೆ ಬಂದುದನ್ನು ನೋಡಿ ಅವರಿಗೆ ಬಹಳ ಆನಂದವಾಗಿಬಿಟ್ಟಿದೆ.”
ಶ್ರೀರಾಮಕೃಷ್ಣರು: “ಎಲ್ಲಾ ಭಗವತಿಯ ಮಹಾತ್ಮೆ.”
ನಾಟಕ ಇನ್ನೇನು ಆರಂಭವಾಗಲಿದೆ. ಇಂದಿನ ನಾಟಕ ಚೈತನ್ಯದೇವನ ಬಾಲ್ಯಲೀಲೆಯ ಸಂಬಂಧವಾಗಿ. ಚೈತನ್ಯದೇವನ ಬಾಲ್ಯದ ಹೆಸರು ನಿಮಾಯಿ ಅಂತ. ಗೌರ್, ಗೋರ, ಗೌರಾಂಗ ಎಂಬುವು ಅಡ್ಡ ಹೆಸರುಗಳು. ಪರದೆ ಮೇಲಕ್ಕೆ ಹೋಗುತ್ತಿದೆ. ಪ್ರೇಕ್ಷಕರೆಲ್ಲರೂ ರಂಗಭೂಮಿಯ ಕಡೆ ನೋಡುತ್ತಿದ್ದಾರೆ.
ಮೊದಲನೆ ದೃಶ್ಯ ಪಾಪ ಮತ್ತು ಆರು ರಿಪುಗಳ ಸಭೆ. ಅವರ ಹಿಂದೆ ಕಾಣುವ ಅರಣ್ಯದ ಒಂದು ದಾರಿಯಲ್ಲಿ ವಿವೇಕ, ವೈರಾಗ್ಯ, ಭಕ್ತಿ ಇವರ ಮಾತುಕತೆ ನಡೆಯುತ್ತಿದೆ.
ಭಕ್ತಿ ತನ್ನ ಸಂಗಾತಿಗಳಿಗೆ ಹೇಳುತ್ತಿದ್ದಾಳೆ: “ಗೌರಾಂಗ ನದೀಯಾದಲ್ಲಿ ಜನ್ಮ ತಳೆದಿದ್ದಾನೆ. ವಿದ್ಯಾಧರರು, ಮುನಿಗಳು, ಋಷಿಗಳು ತಮ್ಮ ವೇಷ ಮರೆಸಿಕೊಂಡು ಆತನ ದರ್ಶನ ಪಡೆಯಲು ಧರೆಗೆ ಇಳಿದು ಬಂದಿದ್ದಾರೆ.”
ಆಕೆ ಹಾಡುತ್ತಿದ್ದಾಳೆ:
ದಿಟಕು ಧನ್ಯವಾಯ್ತು ಧರಣಿ ಗೌರಾಂಗನ ಉದಯದಿ
ರಥವೇರಿದ ವಿದ್ಯಾಧರಗಣ ಬರುತಿದೆ ಮೋದದಿ
ಋಷಿ ಮುನಿಗಳು ತೇಲಿಬಂದರಿತ್ತ ಪ್ರೇಮಪೂರದಿ!
ವಿದ್ಯಾಧರರು, ಮುನಿಗಳು, ಋಷಿಗಳು ಗೌರಾಂಗನನ್ನು ಭಗವಂತನ ಅವತಾರ ಎಂಬ ಜ್ಞಾನದಿಂದ ನೋಡುತ್ತ ಆತನನ್ನು ಸ್ತೋತ್ರಮಾಡುತ್ತಿದ್ದಾರೆ.
ಪರಮಹಂಸರು ಈ ದೃಶ್ಯವನ್ನು ನೋಡಿ ಭಾವದಿಂದ ತುಂಬಿತುಳುಕಾಡುತ್ತಿದ್ದಾರೆ. ಮಾಸ್ಟರಿಗೆ ಹೇಳುತ್ತಿದ್ದಾರೆ “ಆಹ! ಆಹ! ಆ ಕಡೆ ನೋಡು!”
ಋಷಿಗಳು:
ದೀನರೊಳು ದಯೆತೋರೊ ಕೇಶವ, ಕುಂಜಕಾನನಚಾರಿ!
ದೇವಿಯರು
ಮಾಧವ ಮನಮೋಹನ ಮುರಲೀಧಾರೀ!
ಎಲ್ಲರೂ ಒಟ್ಟಿಗೆ:
ಹರಿಯೆನ್ನೊ, ಹರಿಯೆನ್ನೊ, ಹರಿಯೆನ್ನೊ ಮನವೆ!
ಋಷಿಗಳು:
ವ್ರಜಕಿಶೋರ, ಕಾಲೀಯಹರ, ಕಾತರಭಯಭಂಜನಾ!
ದೇವಿಯರು:
ನಯನ ಬಾಣದಲಿ ನವಿಲ-ಗರಿಯೊಳಗೆ ರಾಧಿಕಹೃದಿರಂಜನಾ!
ಋಷಿಗಳು:
ಗೋವರ್ಧನಧಾರಣ-ವನಕುಸುಮಭೂಷಣ-ದಾಮೋದರ ಕಂಸದರ್ಪಹಾರೀ !
ದೇವಿಯರು:
ಶ್ಯಾಮರಾಸರಸವಿಹಾರೀ!
ಎಲ್ಲರೂ ಒಟ್ಟಿಗೆ:
ಹರಿಯೆನ್ನೊ, ಹರಿಯೆನ್ನೊ, ಹರಿಯೆನ್ನೊ ಮನವೆ!
ವಿದ್ಯಾಧರಿಯರು ಈ ಚರಣ ಹಾಡಿದಾಗ,
ನಯನ ಬಾಣದಲಿ ನವಿಲಗರಿಯೊಳಗೆ ರಾಧಿಕಹೃದಿರಂಜನಾ!
ಪರಮಂಸರು ಗಾಢಸಮಾಧಿಸ್ಥರಾಗಿಬಿಟ್ಟರು. ಗಾನಗೋಷ್ಠಿ ಹಾಡುತ್ತಲೇ ಇತ್ತು. ಆದರೆ ಅವರಿಗೆ ಬಾಹ್ಯಪ್ರಜ್ಞೆ ಇರಲಿಲ್ಲ.
ಎರಡನೆ ದೃಶ್ಯ: ನಿಮಾಯಿಯ ತಂದೆ ಜಗನ್ನಾಥಮಿತ್ರನ ಮನೆಗೆ ಒಬ್ಬ ಅತಿಥಿ ಬಂದಿದ್ದಾನೆ. ಬಾಲಕ ನಿಮಾಯಿ ಆನಂದದಿಂದ ತನ್ನ ಗೆಳೆಯರೊಡನೆ ಹಾಡುತ್ತ ಆಟವಾಡುತ್ತಿದ್ದಾನೆ:
ಓ ಎಲ್ಲಿದೆ ಬೃಂದಾವನ ತೋರಿರೊ
ಎಲ್ಲಿ ಯಶೋದಾ ತಾಯಿ?
ಎಲ್ಲಿ ನನ್ನ ಆ ಧವಳ ಶ್ಯಾಮಲಿ?
ಎಲ್ಲಿಹೆ ಮೋಹನ ಮುರಲಿ?
ಎಲ್ಲಿ ನನ್ನ ಪಿತ ನಂದಗೋಪ, ಮ-
ತ್ತೆಲ್ಲಿಹನಾ ಬಲರಾಮ?
ಎಲ್ಲಿ ನನ್ನ ಪ್ರಿಯ ಸ್ನೇಹಿತರಿಬ್ಬರು,
ಆ ಶ್ರೀದಾಮ ಸುದಾಮ?
ಯಮುನಾ ತಟದೆಡೆ ವಂಶೀವಟದೆಡೆ
ಪ್ರಿಯ ಗೋಪೀ ಜನವೆಲ್ಲಿ?
ನನ್ನ ಪ್ರಾಣಸಖಿ ರಾಧಾರಮಣಿಯು
ಹುದುಗಿರುವಲು ಇನ್ನೆಲ್ಲಿ
ಅತಿಥಿ ಕಣ್ಣು ಮುಚ್ಚಿ ಭಗವಂತನಿಗೆ ಅನ್ನ ನೈವೇದ್ಯ ಅರ್ಪಿಸುತ್ತಿದ್ದಾನೆ. ನಿಮಾಯಿ ಓಡಿ ಹೋಗಿ ಆ ಅನ್ನವನ್ನು ತಿನ್ನುತ್ತಿದ್ದಾನೆ. ಅತಿಥಿಗೆ ನಿಮಾಯಿ ಭಗವಂತನ ಅವತಾರ ಎಂಬುದು ಗೊತ್ತಾಗಿ ದಶಾವತಾರ ಸ್ತೋತ್ರದಿಂದ ಆತನನ್ನು ಪ್ರಸನ್ನಗೊಳಿಸಲು ಪ್ರಯತ್ನಿಸುತ್ತಿದ್ದಾನೆ.
ಜಗನ್ನಾಥಮಿತ್ರ ಮತ್ತು ಆತನ ಹೆಂಡತಿ ಶಚೀದೇವಿ ಇವರಿಂದ ಅತಿಥಿ ಬೀಳ್ಕೊಳ್ಳುವುದರಲ್ಲಿದ್ದಾನೆ.
ಈಗ ಆತ ಒಂದು ಸ್ತೋತ್ರವನ್ನು ಹಾಡುತ್ತಿದ್ದಾನೆ:
ಜಯತು ಗೌರ. ನಿತ್ಯಾನಂದ ಜಯ ಜಯ ಭವತಾರಣ
ಅನಾಥ ಶರಣ ಜೀವ ಪ್ರಾಣ ಭೀತಿ ಭಯ ನಿವಾರಣ
ಯುಗಯುಗದಲಿ ನವ ಲೀಲಾ ನವ ರಂಗ,
ನವ ತರಂಗ ನವ ಪ್ರಸಂಗ
ಧರಾಭಾರ ಧಾರಣ!
ತಾಪಹಾರಿ, ಪ್ರೇಮವಾರಿ
ಸತತ ರಾಸರಸ ವಿಹಾರಿ
ದೀನಶರಣ ಕಲುಷಹರಣ ದುಷ್ಟ ದಮನ ಕಾರಣ
ಪರಮಹಂಸರು ಈ ಸ್ತೋತ್ರವನ್ನು ಕೇಳಿ ಭಾವದಿಂದ ತುಂಬಿ ತುಳುಕಾಡುತ್ತಿದ್ದಾರೆ.
ಮೂರನೆ ದೃಶ್ಯ: ನವದ್ವೀಪದ ಗಂಗಾತೀರ. ಗಂಗೆಯಲ್ಲಿ ಸ್ನಾನಮಾಡಿದ ನಂತರ ಬ್ರಾಹ್ಮಣ ಗಂಡಸರು ಹೆಂಗಸರು ಘಟ್ಟಗಳಲ್ಲಿ ಕುಳಿತು ಪೂಜೆಗಳಲ್ಲಿ ತೊಡಗಿದ್ದಾರೆ. ನಿಮಾಯಿ ನೈವೇದ್ಯವನ್ನು ಕದ್ದು ತಿನ್ನುತ್ತಿದ್ದಾನೆ. ಅದನ್ನು ನೋಡಿ ಒಬ್ಬ ಬ್ರಾಹ್ಮಣ ಬಹಳ ಕೋಪಗೊಂಡು ಹೇಳುತ್ತಿದ್ದಾನೆ: “ಎಲಾ ಧೂರ್ತ! ವಿಷ್ಣುವಿಗೆ ಅರ್ಪಿಸಿದ ನೈವೇದ್ಯವನ್ನು ಕದ್ದು ತಿಂದುಬಿಡುತ್ತಾ ಇದ್ದೀಯಾ! ಇಹ ಪರ ಎರಡೂ ಇಲ್ಲದವನಾಗುವೆ!” ಆತ ಹಾಗೆಂದರೂ ನಿಮಾಯಿ ಕದ್ದುಕೊಂಡು ಓಡಿಹೋಗುವುದರಲ್ಲಿದ್ದಾನೆ. ಹೆಂಗಸರಲ್ಲಿ ಅನೇಕರು ಆತನನ್ನು ಬಹಳವಾಗಿ ಪ್ರೀತಿಸುತ್ತಿದ್ದಾರೆ. ನಿಮಾಯಿ ಹೊರಟು ಹೋಗುತ್ತಿರುವುದನ್ನು ನೋಡಿ ಅವರು ಅದನ್ನು ಸಹಿಸಲಾರದೆ ತಾರಸ್ವರದಿಂದ ಕೂಗುತ್ತಿದ್ದಾರೆ: ‘ಓ ನಿಮಾಯಿ, ಹಿಂದಕ್ಕೆ ಬಾ.’ ನಿಮಾಯಿ ಕಿವಿಗೊಡಲಿಲ್ಲ.
ಒಬ್ಬ ಹೆಂಗಸಿಗೆ ನಿಮಾಯಿಯನ್ನು ಹಿಂದಕ್ಕೆ ಬರಿಸುವ ಮಹಾಮಂತ್ರ ಗೊತ್ತಿತ್ತು. ಆಕೆ “ಹರಿಬೋಲ್! ಹರಿಬೋಲ್!” ಅಂತ ಹೇಳಲಾರಂಭಿಸಿದ್ದಾಳೆ. ಒಡನೆ ನಿಮಾಯ್ “ಹರಿ ಬೋಲ್! ಹರಿಬೋಲ್!” ಎಂದು ಹೇಳುತ್ತ ಹೇಳುತ್ತ ಹಿಂದಿರುಗಿ ಬರಲಾರಂಭಿಸಿದ್ದಾನೆ.
ಪರಮಹಂಸರ ಪಕ್ಕದಲ್ಲಿ ಮಾಸ್ಟರ್ ಕುಳಿತಿದ್ದಾನೆ. ಪರಮಹಂಸರಿಗೆ ಇನ್ನು ಸುಮ್ಮನೆ ಕುಳಿತಿರಲಾಗಲಿಲ್ಲ. “ಆಹಾ” ಅಂತ ಹೇಳುತ್ತ ಪ್ರೇಮಾಶ್ರು ಸುರಿಸುತ್ತಿದ್ದಾರೆ. ಅವರು ಬಾಬುರಾಮ ಮತ್ತು ಮಾಸ್ಟರಿಗೆ ಹೇಳುತ್ತಿದ್ದಾರೆ: “ನೋಡಿ, ನನಗೆ ಭಾವವೇ ಆಗಲಿ, ಸಮಾಧಿಯೇ ಆಗಲಿ ಉಂಟಾದರೆ ಗೊಂದಲ ಎಬ್ಬಿಸಬೇಡಿ. ಇಲ್ಲದಿದ್ದರೆ ಪ್ರಾಪಂಚಿಕರು ನಾನೊಬ್ಬ ಠಕ್ಕ ಅಂತ ಭಾವಿಸಬಹುದು.”
ನಾಲ್ಕನೆ ದೃಶ್ಯ: ನಿಮಾಯಿಯ ಉಪನಯನ. ಆತ ಕಾಷಾಯವಸ್ತ್ರಧಾರಿಯಾಗಿದ್ದಾನೆ. ಆತನ ತಾಯಿ ಶುಚಿ ಮತ್ತು ಅಕ್ಕಪಕ್ಕದ ಹೆಂಗಸರು ಆತನ ಸುತ್ತಲೂ ನಿಂತಿದ್ದಾರೆ. ಆತ ಹಾಡುತ್ತ ಭಿಕ್ಷೆ ಬೇಡುತ್ತಿದ್ದಾನೆ:
ನೀಡಿರೊಂದೇ ಒಂದು ತುತ್ತನು ನನ್ನ ಭಿಕ್ಷಾಪಾತ್ರೆಗೆ
ಜಗದ ಹಿರಿಪಥವಲೆವ ಈ ಏಕಾಂಗಿ ನೂತನ ಯೋಗಿಗೆ!
ನಂದಗೋಕುಲ ವ್ರಜರೆ ಸಂದೆನು ನಾನು ನಿಮ್ಮೀ ಒಲುಮೆಗೆ
ಅದಕೆ ಯುಗ ಯುಗ ನಾನು ಬರುವೆನು ಹಸಿದು ನಿಮ್ಮಯ ಭಿಕ್ಷೆಗೆ!
ಅಲ್ಲಗೋ ಜಾರಿಹುದು ನೇಸರು ಪಶ್ಚಿಮಾದ್ರಿಯ ಮಡಿಲಲಿ,
ಹುಡುಕಲೇ ಬೇಕಲ್ಲ ಮನೆಯನು ಇನ್ನು ಯಮುನಾ ತಟದಲಿ!
ನನ್ನ ಕಂಬನಿಯುದುರಿ ಬೆರೆದಿವೆ ಹರಿವ ಯಮುನೆಯ ಜಲದಲಿ,
ಮುಂದೆ ಹರಿದಿದೆ ಯಮುನೆ ಎಲ್ಲಿಗೊ ಮಧುರ ಮರ್ಮರ ಸ್ವರದಲಿ!
ನಿಮಾಯಿ ಒಬ್ಬ ಹೊರತು ಉಳಿದವರೆಲ್ಲರೂ ರಂಗಭೂಮಿಯಿಂದ ಹೊರಟು ಹೋಗುತ್ತಿದ್ದಾರೆ. ದೇವತೆಗಳು ಬ್ರಾಹ್ಮಣ ಬ್ರಾಹ್ಮಣಿಯರ ವೇಷ ಧರಿಸಿ ನಿಮಾಯಿಯನ್ನು ಸ್ತೋತ್ರ ಮಾಡುತ್ತಿದ್ದಾರೆ:
| ಪುರುಷಗಣ | : | ಬೆಳುದಿಂಗಳ ಮೈಯವನೇ |
| ನರವಾಮನನಾದವನೇ | ||
| ನಮೋ ನಮೋ ನಿನಗೆ ನಮೋ | ||
| ಸ್ತ್ರೀಗಣ | : | “ಗೋಪೀಜನ ಮೋಹನನೇ |
| ಬೃಂದಾವನ ಕುಂಜಗಳಲಿ | ||
| ಕೊಳಲೂದುತ ಅಲೆವವನೇ | ||
| ನಿಮಾಯಿ | : | ಜಯ ರಾಧೇ, ಶ್ರೀರಾಧೆ |
| ಪುರುಷಗಣ | : | ವ್ರಜಬಾಲಕ ಸಖನೇ |
| ಮದನನ ಮುರಿದವನೇ | ||
| ಸ್ತ್ರೀಗಣ | : | ಗೋಪೀಜನ ಪ್ರಿಯತಮನೇ |
| ಈ ಯಮುನೆಯ ಅಲೆ ಅಲೆಗಳ | ||
| ಮರುಳಾಗಿಸಿ ನಿಂತವನೇ | ||
| ಪುರುಷಗಣ | : | ನಾರಾಯಣ, ಅಸುರಾರೀ |
| ಸುರಗಣಗಳ ಕಾದವನೇ | ||
| ಸ್ತ್ರೀಗಣ | : | ಗೋಪೀಜನ ಜೀವನವೇ |
| ವ್ರಜ ಕಿಶೋರ ಕೃಷ್ಣನೇ | ||
| ನಮೋ ನಮೋ ನಿನಗೆ ನಮೋ | ||
| ನಿಮಾಯಿ | : | ಜಯ ರಾಧೇ, ಶ್ರೀರಾಧೆ |
ಪರಮಹಂಸರು ಈ ಹಾಡನ್ನು ಕೇಳುತ್ತ ಕೇಳುತ್ತ ಇದ್ದ ಹಾಗೇ ಸಮಾಧಿಸ್ಥರಾಗಿ ಬಿಟ್ಟಿದ್ದಾರೆ. ಪರದೆ ಬೀಳುತ್ತಿದೆ. ವಾದ್ಯಮೇಳ ಮುಂದುವರಿಯುತ್ತಿದೆ.
ಐದನೆ ದೃಶ್ಯ: ಅದ್ವೈತ ಗೋಸ್ವಾಮಿಯ ಮನೆಯ ಮುಂಭಾಗದಲ್ಲಿ ಶ್ರೀವಾಸನೇ ಮೊದಲಾದ ಭಕ್ತರು ಮಾತುಕತೆ ಆಡುತ್ತಿದ್ದಾರೆ. ಮುಕುಂದ ಸುಮಧುರ ಕಂಠದಿಂದ ಹಾಡುತ್ತಿದ್ದಾನೆ:
ಏಳು ಮನವೇ ಏಳು ಮೇಲೇಳು
ಮಾಯೆ ಬಿಗಿದೀ ಮಧುರ ಬಂಧನವ ಸೀಳು
ಓ ಏಳು-ನೀನಾರು, ಇಲ್ಲಿಗೇತಕೆ ಬಂದೆ ಎನ್ನುವೆಚ್ಚರಕೆ;
ಏನು ಮರುಳೋ ನಿನಗೆ, ಮರೆತು ಮಲಗಿದೆಯಲ್ಲ
ಜಗದ ಮಂಪರಕೆ!
ಏಳಿನ್ನು ಮಲಗದಿರು; ಕಣ್ಣಬಿಡು ಕವಿದಿರುವ
ದುಃಸ್ವಪ್ನದಿಂದ;
ನಿನ್ನೊಳೇ ತುಳುಕುತಿದೆ ದಿವ್ಯ ಆನಂದ!
ಬಾ ಹೊರಗೆ, ಕವಿದ ಭ್ರಾಂತಿಯ ತಮದ ಸೆರೆಯೊಳಗಿನಿಂದ
ತಮವು ಹರಿಯಲಿ ಹೊಳೆಯುವೆಳನೇಸರಿಂದ!
ಶ್ರೀರಾಮಕೃಷ್ಣರು ಈ ಹಾಡನ್ನು ಹಾಡಿದವನ ಕಂಠವನ್ನು ಬಹಳವಾಗಿ ಹೊಗಳು ತ್ತಿದ್ದಾರೆ.
ಆರನೆ ದೃಶ್ಯ: ನಿಮಾಯಿ ತನ್ನ ಮನೆಯಲ್ಲಿ ಇದ್ದಾನೆ. ಶ್ರೀವಾಸ ಆತನನ್ನು ಸಂಧಿಸಲು ಅಲ್ಲಿಗೆ ಬಂದಿದ್ದಾನೆ. ಮೊದಲು ಆತ ಶಚಿಯನ್ನು ಸಂಧಿಸುತ್ತಾನೆ. ಶಚಿ ಅಳುತ್ತ ಹೇಳುತ್ತಿದ್ದಾಳೆ: “ನಿಮಾಯಿ ಗೃಹಕೃತ್ಯದ ಯಾವ ಕೆಲಸಗಳಿಗೂ ಮನಸ್ಸು ಕೊಡುತ್ತಿಲ್ಲ. ನನ್ನ ಹಿರಿಯಮಗ ವಿಶ್ವರೂಪ ಸಂನ್ಯಾಸಿಯಾಗಿ ಹೊರಟುಹೋದ. ಅಂದಿನಿಂದ ನನ್ನ ಹೃದಯ ಬಹಳ ದುಃಖಕ್ಕೆ ಈಡಾಗಿದೆ. ನಿಮಾಯಿಯೂ ಎಲ್ಲಿ ಹಾಗೆ ಮಾಡಿಬಿಡುವನೋ ಏನೋ ಎಂಬ ಭಯ ನನ್ನ ಹೃದಯವನ್ನು ನಿರಂತರ ಕಂಪಿಸುತ್ತಿದೆ.”
ನಿಮಾಯಿ ಅಲ್ಲಿಗೆ ಬರುತ್ತಾನೆ. ಶಚಿ ಶ್ರೀವಾಸನಿಗೆ ಹೇಳುತ್ತಿದ್ದಾಳೆ: “ಆಹ, ನೋಡಿ, ನೀವೇ ನೋಡಿ, ಆತ ಹುಚ್ಚನಂತಾಗಿಬಿಟ್ಟಿರುವುದನ್ನು. ಪ್ರೇಮಾಶ್ರುಗಳಿಂದ ಆತನ ಎದೆ ನೆನೆದು ಹೋಗಿಬಿಡುತ್ತದೆ. ಹೇಳಿ ದಯವಿಟ್ಟು ಹೇಳಿ, ಆತನನ್ನು ಈ ಅವಸ್ಥೆಯಿಂದ ಮುಕ್ತನನ್ನಾಗಿ ಮಾಡುವ ಬಗೆ ಹೇಗೆ?”
ನಿಮಾಯಿ ಶ್ರೀವಾಸನನ್ನು ನೋಡಿದೊಡನೆ, ಆತನ ಎರಡು ಪಾದಗಳನ್ನೂ ಬಲವಾಗಿ ಹಿಡಿದುಕೊಂಡು ಅಳುತ್ತ ಹೇಳುತ್ತಿದ್ದಾನೆ: “ಏನು ಮಾಡಲಿ ಪೂಜ್ಯ, ಏನು ಮಾಡಲಿ-ನನಗಿನ್ನೂ ಕೃಷ್ಣ ಭಕ್ತಿ ದೊರೆತಿಲ್ಲವಲ್ಲ! ನನ್ನ ಅಧಮ ಜನ್ಮ ವೃಥಾ ಕಳೆದು ಹೋಗುತ್ತಿದೆಯಲ್ಲ, ಪ್ರಭು, ಹೇಳಿ ಕೃಷ್ಣ ಎಲ್ಲಿದ್ದಾನೆ? ಕೃಷ್ಣ ಎಲ್ಲಿ ದೊರೆಯುತ್ತಾನೆ ಹೇಳಿ, ನಿಮ್ಮ ಪಾದ ಧೂಳಿಯನ್ನು ನನಗೆ ಅನುಗ್ರಹಿಸಿ ಆಶೀರ್ವಾದ ಮಾಡಿ, ವನಮಾಲಿ ನನಗೆ ದೊರೆಯುವ ಹಾಗೆ.”
ಪರಮಹಂಸರು ಮಾಸ್ಟರ ಕಡೆ ತಿರುಗಿ ಏನನ್ನೋ ಹೇಳಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ. ಕಂಠ ಬಿಗಿದುಕೊಳ್ಳುತ್ತದೆ. ಪ್ರೇಮಾಶ್ರು ಕೆನ್ನೆಗಳ ಮೇಲೆ ಹರಿಯುತ್ತಿದೆ; ಏಕದೃಷ್ಟಿಯಿಂದ ನೋಡುತ್ತಿದ್ದಾರೆ, ನಿಮಾಯಿ ಶ್ರೀವಾಸನ ಪಾದಗಳನ್ನು ಹಿಡಿದುಕೊಂಡು ಅಳುತ್ತ ಹೇಳುತ್ತಿರುವುದನ್ನು: “ಏನು ಮಾಡಲಿ ಪೂಜ್ಯರೇ, ಏನು ಮಾಡಲಿ ನನಗಿನ್ನೂ ಕೃಷ್ಣಪ್ರೇಮ ದೊರೆತಿಲ್ಲವಲ್ಲ!”
ನಿಮಾಯಿ ಒಂದು ಪಾಠಶಾಲೆ ತೆರೆದಿದ್ದಾನೆ. ಆದರೆ ಆತನ ಕೈಯಲ್ಲಿ ಪಾಠ ಹೇಳಿಕೊಡಲಾಗುತ್ತಿಲ್ಲ. ನಿಮಾಯಿ ಗಂಗಾದಾಸನ ಕೈಕೆಳಗೆ ಓದಿದ್ದ. ಆತ ನಿಮಾಯಿಗೆ ಬುದ್ಧಿ ಹೇಳಲು ಬರುತ್ತಿದ್ದಾನೆ. “ಪೂಜ್ಯ ಶ್ರೀವಾಸರೆ, ಇಲ್ಲಿ ಕೇಳಿ! ನಾವು ಬ್ರಾಹ್ಮಣರೂ ಆಗಿರುವುದಲ್ಲದೆ ವಿಷ್ಣುಪೂಜೆಯಲ್ಲೂ ನಿರತರಾಗಿದ್ದೇವೆ. ನೀವೆಲ್ಲಾ ಸೇರಿಕೊಂಡು ನಿಮಾಯಿಯ ಸಾಂಸಾರಿಕ ಜೀವನಕ್ಕೆ ಕೊಡಲಿ ಹಾಕುತ್ತಿದ್ದೀರಿ.”
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಇದು ಸಂಸಾರಿಗಳ ಕೊಡುವ ಉಪದೇಶ ಇದನ್ನೂ ಮಾಡಬೇಕು, ಅದನ್ನೂ ಮಾಡಬೇಕು. ಸಂಸಾರಿಗಳು ಉಪದೇಶ ಕೊಡುವಾಗ ಬೋಧಿಸುತ್ತಾರೆ, ರಾಮ, ಕಾಮ ಎರಡು ಕಡೆಯೂ-ಆಸಕ್ತಿ ಇಡುವ ಹಾಗೆ.”
ಮಾಸ್ಟರ್: “ಹೌದು.”
ಈಗ ಗಂಗಾದಾಸ ನಿಮಾಯಿಗೆ ಬುದ್ಧಿ ಹೇಳುತ್ತಾನೆ. ಆತ ಹೇಳುತ್ತಾನೆ: “ನಿಮಾಯಿ, ನಿನಗೆ ನಿಸ್ಸಂದೇಹವಾಗಿ ಶಾಸ್ತ್ರಜ್ಞಾನ ಉಂಟಾಗಿದೆ. ನನ್ನೊಡನೆ ತರ್ಕಿಸು. ಸಂಸಾರಧರ್ಮಕ್ಕಿಂತ ಉತ್ತಮವಾದ್ದು ಬೇರೆ ಯಾವುದಿದೆ ನನಗೆ ತಿಳಿಸು ನೋಡೋಣ. ನೀನು ಗೃಹಸ್ಥ. ನೀನು ಗೃಹಸ್ಥ ಧರ್ಮವನ್ನು ಬಿಟ್ಟು ಬೇರೆ ಧರ್ಮಕ್ಕೆ ಏಕೆ ಕೈ ಹಾಕಿದ್ದೀಯೆ?”
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನೋಡಿದೆಯೊ? ಎರಡು ಕಡೆಗೂ ಆಸಕ್ತಿ ಇರುವಂತೆ ಬೋಧಿಸುತ್ತಿರುವುದನ್ನು!”
ಮಾಸ್ಟರ್: “ಹೌದು, ನಿಜ.”
ನಿಮಾಯಿ ಗಂಗಾದಾಸನಿಗೆ ಹೇಳುತ್ತಿದ್ದಾನೆ: “ನಾನು ಬೇಕು ಅಂತ ಸಂಸಾರ ಧರ್ಮವನ್ನು ಉಪೇಕ್ಷಿಸುತ್ತಿಲ್ಲ. ಅದಕ್ಕೆ ಬದಲು ಎಲ್ಲಾ ನಡೆದುಕೊಂಡು ಹೋಗಲಿ ಅಂತ ನನ್ನ ಇಚ್ಛೆ. ಆದರೆ ಮಹಾಶಯರೆ, ಇದು ಏಕೆ ಹೀಗಾಗುವುದೊ ನನಗೆ ಗೊತ್ತಿಲ್ಲ. ಏನೋ ಒಂದು ನನ್ನನ್ನು ಆಕರ್ಷಿಸಿಬಿಡುತ್ತಿದೆ. ಏನು ಮಾಡುವುದೊ ನನಗೆ ಬೇರೆ ಗೊತ್ತಿಲ್ಲ. ದಡದ ಹತ್ತಿರವೇ ಇರೋಣ ಅಂತ ಪ್ರಯತ್ನಮಾಡುತ್ತೇನೆ, ಆದರೆ ಇದು ಸಾಧ್ಯವಾಗುತ್ತಿಲ್ಲ. ಆ ಕಡೆಗೆ ಪ್ರಾಣ ಸುಮ್ಮನೆ ಧಾವಿಸುತ್ತಿರುತ್ತದೆ. ನಾನು ನಿಸ್ಸಹಾಯಕ. ಆ ಅಖಂಡ ಸಾಗರಕ್ಕೆ ಒಮ್ಮೆಗೇ ಧುಮುಕಿಬಿಡುವಂತೆ ನನ್ನ ಜೀವ ನನ್ನನ್ನು ಸತತವಾಗಿ ಬಲಾತ್ಕರಿಸುತ್ತಿದೆ.”
ಶ್ರೀರಾಮಕೃಷ್ಣರು: “ಆಹಾ !”
ಏಳನೇ ದೃಶ್ಯ: ನಿತ್ಯಾನಂದ ನವದ್ವೀಪಕ್ಕೆ ಬಂದಿದ್ದಾನೆ. ನಿತ್ಯಾನಂದ ನಿಮಾಯಿಗಾಗಿ ಹುಡುಕುತ್ತಿದ್ದಾನೆ. ಹಾಗೇ ನಿಮಾಯಿಯೂ ನಿತ್ಯಾನಂದನಿಗಾಗಿ ಹುಡುಕುತ್ತಿದ್ದಾನೆ. ಇಬ್ಬರೂ ಒಂದು ಜಾಗದಲ್ಲಿ ಒಬ್ಬರನ್ನೊಬ್ಬರು ಸಂಧಿಸುತ್ತಾರೆ. ನಿಮಾಯಿ ಈಗ ಹೇಳುತ್ತಿದ್ದಾನೆ : “ನನ್ನ ಜೀವನ ಸಾರ್ಥಕವಾಯಿತು! ನನ್ನ ಕನಸು ಇಂದು ನನಸಾಯಿತು. ಸ್ವಪ್ನದಲ್ಲಿ ನನಗೆ ದರ್ಶನಕೊಟ್ಟು ಅದೃಶ್ಯರಾಗಿಬಿಟ್ಟಿರಿ.”
ಶ್ರೀರಾಮಕೃಷ್ಣರು ಮಾಸ್ಟರಿಗೆ ಗದ್ಗದ ಸ್ವರದಿಂದ ಹೇಳುತ್ತಿದ್ದಾರೆ: “ನಿಮಾಯಿ ಹೇಳುತ್ತಿದ್ದಾನೆ, ಆತನನ್ನು ಸ್ವಪ್ನದಲ್ಲಿ ತಾನು ಕಂಡುದಾಗಿ.”
ನಿಮಾಯಿಗೆ ಭಗವದಾವೇಶ ಬಂದುಬಿಟ್ಟಿದೆ, ಆತ ಅದ್ವೈತಗೋಸ್ವಾಮಿ, ಶ್ರೀವಾಸ, ಹರಿದಾಸ, ಇವರೇ ಮೊದಲಾದವರೊಡನೆ ಮಾತುಕತೆಯಾಡುತ್ತಿದ್ದಾನೆ. ನಿಮಾಯಿಯ ಭಾವ ಏನು ಎಂಬುದನ್ನು ಅರಿತು ಅದಕ್ಕನುಗುಣವಾಗಿ ನಿತಾಯಿ ಒಂದು ಹಾಡನ್ನು ಹಾಡುತ್ತಾನೆ:
ಕೃಷ್ಣನೆಲ್ಲಿ? ಕೃಷ್ಣನೆಲ್ಲಿ, ಕಾಣಲಿಲ್ಲ ಆತನ
ಶೂನ್ಯವಾಯ್ತು ಬೃಂದಾವನದೀ ನಿಕುಂಜಕಾನನ
ತಂದುಕೊಡಿರೆ ಓ ಸಖಿಯರೆ, ನನಗೆ ನನ್ನ ನಲ್ಲನ
ಈ ರಾಧೆಗೆ ಅವನಲ್ಲದೆ ಬೇರೆ ಇಲ್ಲ ಜೀವನ!
ಪರಮಹಂಸರು ಹಾಡನ್ನು ಕೇಳುತ್ತ ಕೇಳುತ್ತಲೆ ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಬಹಳ ಹೊತ್ತಿನಿಂದಲೂ ಅದೇ ಸ್ಥಿತಿಯಲ್ಲಿದ್ದಾರೆ. ವಾದ್ಯ-ಮೇಳ ಮುಂದುವರಿಯುತ್ತಿದೆ. ಪರಮ ಹಂಸರು ಈಗ ಪ್ರಕೃತಿಸ್ಥರಾಗುತ್ತಿದ್ದಾರೆ. ಈ ಸಮಯಕ್ಕೆ ಸರಿಯಾಗೇ ಖಡ್ದಾ ಗ್ರಾಮದ ಮತ್ತು ನಿತ್ಯಾನಂದ ಗೋಸ್ವಾಮಿಯವರ ವಶಕ್ಕೆ ಸೇರಿದ ಒಬ್ಬ ಯುವಕ ಬಾಕ್ಸನ್ನು ಪ್ರವೇಶಿಸಿ ಪರಮಹಂಸರ ಕುರ್ಚಿಯ ಹತ್ತಿರ ನಿಂತುಕೊಂಡ. ಆತನನ್ನು ನೋಡಿ ಪರಮಹಂಸರಿಗೆ ಬಹಳ ಆನಂದವಾಗಿಬಿಟ್ಟಿದೆ. ಆತನ ಕೈಹಿಡಿದುಕೊಂಡು ಆತನೊಡನೆ ಅಕ್ಕರೆಯಿಂದ ಮಾತುಕತೆಯಾಡುತ್ತಿದ್ದಾರೆ. ಆಗಾಗ ಹೇಳುತ್ತಲೇ ಇದ್ದಾರೆ: “ನೀನು ಇಲ್ಲೇ ಕುಳಿತುಕೊಂಡು ಬಿಡು. ನೀನು ಇಲ್ಲೇ ಇದ್ದರೆ ನನಗೆ ಉದ್ದೀಪನವಾಗಿ ಬಿಡುತ್ತದೆ.” ಈಗ ಪ್ರೀತಿಯಿಂದ ಆತನ ಕೈಯೊಡನೆ ಆಟವಾಡುತ್ತಿದ್ದಾರೆ. ಮುಖವನ್ನು ಸವರುತ್ತ ಆದರ ತೋರಿಸುತ್ತಿದ್ದಾರೆ.
ಆ ಯುವಕ ಹೊರಟುಹೋದ ನಂತರ ಪರಮಹಂಸರು ಮಾಸ್ಟರಿಗೆ ಹೇಳುತ್ತಿದಾರೆ: “ಆ ಹುಡುಗ ದೊಡ್ಡ ಪಂಡಿತ. ಆತನ ತಂದೆ ದೊಡ್ಡ ಭಗವದ್ಭಕ್ತ. ನಾನು ಖಡ್ದಾಗೆ ಶ್ಯಾಮಸುಂದರ ದೇವರನ್ನು ನೋಡಿ ಬರಲು ಹೋದಾಗಲೆಲ್ಲ ಒಂದು ನೂರು ರೂಪಾಯಿಗೂ ದೊರೆಯದ ಭಗವಂತನ ಪ್ರಸಾದವನ್ನು ತಂದು ನನಗೆ ತಿನ್ನಿಸುತ್ತಾನೆ ಆ ಹುಡುಗನಲ್ಲಿ ಒಳ್ಳೆ ಲಕ್ಷಣಗಳಿವೆ. ಆತನನ್ನು ಒಂದು ಕಿಂಚಿತ್ತು ಕುಲುಕಿಬಿಟ್ಟರೇ ಆತನಲ್ಲಿ ಆತ್ಮಜಾಗೃತಿ ಉಂಟಾಗಿಬಿಡುತ್ತದೆ. ಆತನನ್ನು ನೋಡಿದರೇ ನನ್ನಲ್ಲಿ ತೀವ್ರ ಉದ್ದೀಪನವಾಗಿಬಿಡುತ್ತದೆ. ಆತನೇನಾದರೂ ಇಲ್ಲಿ ಇನ್ನು ಸ್ವಲ್ಪ ಹೊತ್ತು ಇದ್ದುಬಿಟ್ಟಿದ್ದರೆ ನಾನು ಭಾವಾವಿಷ್ಟನಾಗಿ ಎದ್ದು ನಿಂತು ಬಿಡುತ್ತಿದ್ದೆ.”
ಎಂಟನೆ ದೃಶ್ಯ: “ಪರದೆ ಮೇಲಕ್ಕೆ ಹೋಗುತ್ತಿದೆ. ನಿತ್ಯಾನಂದ ತನ್ನ ಗೆಳೆಯರೊಡನೆ ಹರಿನಾಮೋಚ್ಚಾರಣೆ ಮಾಡುತ್ತ ರಾಜಮಾರ್ಗದಲ್ಲಿ ಮೆರವಣಿಗೆಯಲ್ಲಿ ಹೋಗುತ್ತಿದ್ದಾನೆ. ಎಲ್ಲಾ ಧಾರ್ಮಿಕರ ಆಜನ್ಮಶತ್ರುಗಳಾದ ಜಗಾಯಿ, ಮಾಧಾಯಿ ಎಂಬ ಇಬ್ಬರು ಪುಂಡರನ್ನು ಆತ ದಾರಿಯಲ್ಲಿ ಸಂಧಿಸುತ್ತಾನೆ. ಮಾಧಾಯಿ ಬಕ್ಕರೆ ಚೂರಿನಿಂದ ನಿತಾಯಿಯನ್ನು ಹೊಡೆಯುತ್ತಾನೆ. ನಿತಾಯಿಯ ತಲೆ ಒಡೆದು ರಕ್ತ ಸುಮ್ಮನೆ ಹರಿಯುತ್ತಿದೆ. ಆದರೆ ಆತ ಪ್ರೇಮೋನ್ಮತ್ತನಾಗಿರುವುದರಿಂದ ಅದರ ಕಡೆಗೆ ಆತನ ಗಮನವೇ ಹೋಗುತ್ತಿಲ್ಲ.”
ಶ್ರೀರಾಮಕೃಷ್ಣರು ಭಾವಾವಿಷ್ಟರಾಗಿದ್ದಾರೆ.
ನಿತಾಯಿ ಆಲಂಗಿಸಿಕೊಳ್ಳುತ್ತಾನೆ, ಜಗಾಯಿಮಾಧಾಯಿ ಎಂಬ ಇಬ್ಬರೂ ಪುಂಡರನ್ನೂ. ಈಗ ಆತ ಹಾಡುತ್ತಿದ್ದಾನೆ:
ಬಾ ಜಗಾಯಿ; ಬಾ ಮಾಧಾಯಿ;
ಹರಿನಾಮವ ಸವಿದಾನಂದದಿ ಕುಣಿಯೋಣ…..
ಈಗ ನಿಮಾಯಿ ಶಚಿದೇವಿಗೆ ತನ್ನ ಸಂನ್ಯಾಸದ ವಿಷಯವಾಗಿ ತಿಳಿಸುತ್ತಾನೆ. ಶಚೀದೇವಿ ಮೂರ್ಛಿತಳಾಗಿ ಕೆಳಕ್ಕೆ ಬೀಳುತ್ತಾಳೆ.
ಈ ದೃಶ್ಯವನ್ನು ನೋಡಿ, ಪ್ರೇಕ್ಷಕರಲ್ಲನೇಕರು ಹಾಹಾಕಾರವನ್ನು ಎಬ್ಬಿಸುತ್ತಿದ್ದಾರೆ. ಪರಮಹಂಸರು ಸ್ಥಿರವಾಗಿ ಕುಳಿತುಕೊಂಡು ರಂಗಭೂಮಿಯ ಕಡೆ ಏಕದೃಷ್ಟಿಯಿಂದ ನೋಡುತ್ತಿದ್ದಾರೆ. ಅವರ ಕಡೆಗಣ್ಣಿನಿಂದ ಕೇವಲ ಒಂದು ಹನಿ ನೀರು ಶೇಖರವಾಗಿರುವುದು ಕಂಡು ಬಂತು. ನಾಟಕ ಸಮಾಪ್ತಿಯಾಯಿತು.
ಪರಮಹಂಸರು ಇನ್ನೇನು ಗಾಡಿಗೆ ಹತ್ತುವುದರಲ್ಲಿದ್ದಾರೆ. ಒಬ್ಬ ಭಕ್ತ ಕೇಳುತ್ತಾನೆ, ನಾಟಕ ಹೇಗಿತ್ತು ಎಂದು. ಶ್ರೀರಾಮಕೃಷ್ಣರು ನಗುತ್ತ ನಗುತ್ತ ಹೇಳುತ್ತಿದ್ದಾರೆ: “ಅಸಲು ನಕಲು ಎರಡೂ ಒಂದೇ ಆಗಿ ತೋರಿದುವು.”
ಗಾಡಿ ಮಹೇಂದ್ರನ ಮಿಲ್ಲಿನ ಕಡೆಗೆ ಮುಂದುವರಿಯುತ್ತಿದೆ. ಇದ್ದಕ್ಕಿದ್ದ ಹಾಗೆ ಪರಮ ಹಂಸರು ಭಾವಾವಿಷ್ಟರಾಗಿಬಿಟ್ಟಿದ್ದಾರೆ. ಪ್ರೇಮಭಾವದಿಂದ ತಮಗೆ ತಾವೇ ಹೇಳಿಕೊಳ್ಳು ತ್ತಿದ್ದಾರೆ: “ಹೇ ಕೃಷ್ಣ! ಹೇ ಕೃಷ್ಣ! ಜ್ಞಾನ ಕೃಷ್ಣ ! ಪ್ರಾಣ ಕೃಷ್ಣ, ಮನ ಕೃಷ್ಣ! ಆತ್ಮ ಕೃಷ್ಣ! ದೇಹ ಕೃಷ್ಣ ! ಮತ್ತೆ ಹೇಳುತ್ತಿದ್ದಾರೆ: “ಪ್ರಾಣ ಹೇ ಗೋವಿಂದ, ಮಮ ಜೀವನ!”
ಗಾಡಿ ಮಿಲ್ಲನ್ನು ಮುಟ್ಟಿತು. ಬಹಳ ಸಡಗರದಿಂದ ಮಹೇಂದ್ರ ಪರಮಹಂಸರಿಗೆ ಉಪಾಹಾರ ಮಾಡಿಸುತ್ತಿದ್ದಾನೆ. ಮಾಸ್ಟರ್ ಅವರ ಹತ್ತಿರವೇ ಕುಳಿತಿದ್ದಾನೆ. ಪರಮಹಂಸರು ಆತನಿಗೆ ಪ್ರೀತಿಯಿಂದ ಹೇಳುತ್ತಿದ್ದಾರೆ: “ನೀನೂ ಸ್ವಲ್ಪ ತೆಗೆದುಕೊ.” ಆತನ ಕೈಗೆ ಸ್ವಲ್ಪ ಸಿಹಿತಿಂಡಿಗಳನ್ನು ಕೊಡುತ್ತಿದ್ದಾರೆ.
ಈಗ ಪರಮಹಂಸರು ದಕ್ಷಿಣೇಶ್ವರದ ಕಡೆ ಮುಂದುವರಿಯುತ್ತಿದ್ದಾರೆ. ಗಾಡಿಯಲ್ಲಿ ಮಹೇಂದ್ರ ಮತ್ತು ಇನ್ನೂ ಒಬ್ಬಿಬ್ಬರು ಭಕ್ತರು ಕುಳಿತಿದ್ದಾರೆ. ಪರಮಹಂಸರು ಆನಂದದಿಂದ ತುಂಬಿತುಳುಕಾಡುತ್ತಿದ್ದಾರೆ. ಈಗ ಅವರು ಗೌರಾಂಗ ಮತ್ತು ನಿತಾಯಿಯ ಸಂಬಂಧವಾಗಿ ಒಂದು ಹಾಡನ್ನು ಹಾಡುತ್ತಿದ್ದಾರೆ. ಮಾಸ್ಟರೂ ಅವರೊಡನೆ ಹಾಡುತ್ತಿದ್ದಾನೆ:
ಗೌರಾಂಗ ನಿತ್ಯಾನಂದರೆನ್ನುವ
ದಿವ್ಯ ಸೋದರವರ್ಯರೇ……
ಮಹೇಂದ್ರ ತೀರ್ಥಯಾತ್ರೆಗೆ ಹೋಗಬೇಕೆಂದಿದ್ದಾನೆ. ಆತ ಆ ವಿಷಯವಾಗಿ ಪರಮಹಂಸರೊಡನೆ ಮಾತುಕತೆ ಆಡುತ್ತಿದ್ದಾನೆ.
ಶ್ರೀರಾಮಕೃಷ್ಣರು ನಗುತ್ತ: “ನಿನ್ನ ಹೃದಯದಲ್ಲಿ ಭಗವತ್ಪ್ರೇಮ ಈಗತಾನೆ ಅಂಕುರವಾಗಿದೆ. ಅದನ್ನೇಕೆ ಒಣಗಿಸಿಬಿಡಬೇಕು ಅಂತ ಮಾಡಿಕೊಂಡಿದ್ದೀಯೆ? ಆದಷ್ಟೂ ಬೇಗ ಬಂದು ಬಿಡು. ನಿನ್ನ ಮನೆಗೆ ಬರಬೇಕೆಂದು ಬಹಳ ದಿನದಿಂದಲೂ ಯೋಚಿಸುತ್ತಿದ್ದೆ. ಈಗ ಅದು ಪೂರ್ಣಗೊಂಡಿತು. ನನಗೆ ಬಹಳ ಆನಂದವಾಗಿಬಿಟ್ಟಿದೆ.”
ಮಹೇಂದ್ರ: “ಮಹಾಶಯರೆ, ನನ್ನ ಜೀವನ ಸಾರ್ಥಕವಾಯಿತು.”
ಶ್ರೀರಾಮಕೃಷ್ಣರು: “ನಿನ್ನ ಜೀವನ ಎಂದೋ ಸಾರ್ಥಕಗೊಂಡುಬಿಟ್ಟಿತು. ನಿನ್ನ ತಂದೆಯೂ ಬಹಳ ಒಳ್ಳೆಯವನೆ. ಅಂದು ನಾನು ಆತನನ್ನು ನೋಡಿದೆ. ಆತನಿಗೆ ಆಧ್ಯಾತ್ಮ ರಾಮಾಯಣದಲ್ಲಿ ಶ್ರದ್ಧೆ.”
ಮಹೇಂದ್ರ: “ಕೃಪೆಮಾಡಿ, ನನಗೆ ಭಕ್ತಿಯುಂಟಾಗುವಂತೆ.”
ಶ್ರೀರಾಮಕೃಷ್ಣರು: “ನೀನು ಅತ್ಯಂತ ಉದಾರಿ ಮತ್ತು ಸರಳಜೀವಿ. ಮನುಷ್ಯ ಉದಾರಿ, ಸರಳ ಆಗದಿದ್ದರೆ, ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲಾರ. ಕಪಟಿಗಳಿಗೆ ಆತ ಬಹಳ ದೂರ.”
ಮಹೇಂದ್ರ ಶಾಮಬಜಾರಿನ ಹತ್ತಿರ ಪರಮಹಂಸರಿಂದ ಬೀಳ್ಕೊಂಡ. ಗಾಡಿ ಮುಂದುವರಿಯುತ್ತಿದೆ-ತನ್ನ ಗುರಿಗೆ.
1. ಬ್ರಾಹ್ಮ ಸಮಾಜದ ಅನುಯಾಯಿಗಳು.
2. ಒಬ್ಬ ಪ್ರಖ್ಯಾತ ವೈಷ್ಣವ ಸಂತ.
3. ಊರೊಟ್ಟಿನ ಹಬ್ಬ-ಬಂಗಾಳದಲ್ಲಿ.
4. ಪರಮಹಂಸರು