೭ನೆ ಸೆಪ್ಟೆಂಬರ್ ೧೮೮೪, ಭಾದ್ರಪದ ಕೃಷ್ಣ ಬಿದಿಗೆ, ಭಾನುವಾರ
ಘಂಟೆ ಬೆಳಗಿನ ಹನ್ನೊಂದು. ಪರಮಹಂಸರು ದಕ್ಷಿಣೇಶ್ವರದಲ್ಲಿ ತಮ್ಮ ಕೊಠಡಿಯೊಳಗೆ ಕುಳಿತುಕೊಂಡಿದ್ದಾರೆ. ಅವರಿನ್ನೂ ತಮ್ಮ ಮಧ್ಯಾಹ್ನದ ಊಟ ಮುಗಿಸಿಲ್ಲ.
ಇಂದು ಇಲ್ಲಿ ಶ್ಯಾಮದಾಸನ ಕೀರ್ತನೆ ನಡೆಯಲಿದೆ. ಬಾಬುರಾಮ, ಮಾಸ್ಟರ್, ಮನಮೋಹನ, ಭವನಾಥ, ಕಿಶೋರಿ, ಚುನಿಲಾಲ, ಹರಿಪದ, ಮುಖ್ಯೋಪಾಧ್ಯಾಯ ಸೋದರರು, ರಾಮ, ಸುರೇಂದ್ರ, ತಾರಕ, ನಿರಂಜನ ಮತ್ತು ಇನ್ನೂ ಕೆಲವರು ಬಂದಿದ್ದಾರೆ. ಲಾಟು, ಹರೀಶ ಮತ್ತು ಹಾಜರಾ ಪರಮಹಂಸರೊಡನೆಯೇ ಇದ್ದಾರೆ.
ಶ್ರೀರಾಮಕೃಷ್ಣರಿಗೆ ಮಾಸ್ಟರ್ ಪ್ರಣಾಮ ಮಾಡಿದಾಗ ಅವರು ಕೇಳಿದರು: “ನರೇಂದ್ರ ಎಲ್ಲಿ? ಏನು ಆತ ಬರುವುದಿಲ್ಲವೆ?” ಮಾಸ್ಟರ್ ಹೇಳಿದ, ಆತನಿಗೆ ಬರಲಾಗಲಿಲ್ಲ ಎಂದು.
ಒಬ್ಬ ಬ್ರಾಹ್ಮಣ ಭಕ್ತ ರಾಮಪ್ರಸಾದನ ಹಾಡುಗಳನ್ನು ಪರಮಹಂಸರಿಗೆ ಒಂದು ಪುಸ್ತಕದಿಂದ ಆಗಾಗ ಓದಿ ಹೇಳುತ್ತಿದ್ದಾನೆ. ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ. ಮುಂದುವರಿಸುವಂತೆ. ಆ ಬ್ರಾಹ್ಮಣ ಒಂದು ಹಾಡನ್ನು ಓದಿದ. ಅದರ ಮೊದಲನೆ ಚರಣ: “ಹೇ ತಾಯೆ, ವಸನ ಧರಿಸು.”
ಶ್ರೀರಾಮಕೃಷ್ಣರು: “ದಯವಿಟ್ಟು ನಿಲ್ಲಿಸು! ಇಂಥವು ಯಾವ ಕೆಲಸಕ್ಕೂ ಬಾರದವು. ಭಕ್ತಿಯ ಹಾಡುಗಳನ್ನು ಓದು.”
ಆ ಬ್ರಾಹ್ಮಣ ಓದುತ್ತಿದ್ದಾನೆ.
ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು!
ಆರು ದರುಶನ ವೇದ ಶಾಸ್ತ್ರ ಪುರಾಣವರಿಯದು ಅವಳನು…..
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನಿನ್ನೆ ಅಧರಸೇನನ ಮನೆಯಲ್ಲಿ ಭಾವಾವಸ್ಥೆಯಲ್ಲಿ ಒಂದು ಕಡೆಗೇ ಹೆಚ್ಚು ಭಾರ ಹಾಕಿ ಬಹಳ ಹೊತ್ತು ನಿಂತುಕೊಂಡಿದ್ದರಿಂದ ಕಾಲು ನೋಯುತ್ತಿದೆ; ಅದಕ್ಕಾಗಿ ಇನ್ನು ಮೇಲೆ ಭಕ್ತರ ಮನೆಗೆ ಹೋದಾಗಲೆಲ್ಲ ಬಾಬುರಾಮನನ್ನು ಕರೆದುಕೊಂಡು ಹೋಗಬೇಕು ಅಂತ ಮಾಡಿಕೊಂಡಿದ್ದೇನೆ. ಆತ ಒಬ್ಬ ಸಹಾನುಭೂತಿಯುಳ್ಳ ಜೀವ.”
ಹೀಗೆಂದು ಹೇಳಿ ಪರಮಹಂಸರು ಹಾಡುತ್ತಿದ್ದಾರೆ:
ಎಂತೊರೆಯಲಿ ಸಖಿ ನನ್ನೆದೆಯೊಳಗನು?
ಬಾಯಿಗೆ ಇಕ್ಕಿದೊಲಿದೆ ಬೀಗ!……
ಶ್ರೀರಾಮಕೃಷ್ಣರು: “ಬಾವುಲರು ಈ ವಿಧದ ಹಾಡು ಹಾಡುತ್ತಾರೆ. ಅವರು ಇನ್ನೊಂದು ವಿಧದ ಹಾಡನ್ನೂ ಹಾಡುತ್ತಾರೆ:
ಭಿಕ್ಷಾಪಾತ್ರೆಯ ಹಿಡಿದು ಸುತ್ತುತಿಹ
ಓ ಪರಿವ್ರಾಜಕ, ನಿಲ್ಲು ಒಂದು ಚಣ ಬಾಗಿಲಲಿ
ನಿನ್ನ ಕಾಂತಿಯುತ ಮುಖಮಂಡಲವನು
ನೋಡುವೆನೊಮ್ಮೆಗೆ ಸನಿಹದಲಿ.
“ಶಾಕ್ತಮತದ ಪ್ರಕಾರ ಸಿದ್ಧಪುರುಷನಿಗೆ ‘ಕೌಲ್’ ಅಂತ ಹೆಸರು. ವೇದಾಂತದ ಪ್ರಕಾರ ‘ಪರಮಹಂಸ’ ಅಂತ ಹೆಸರು. ಆತನನ್ನೇ ಬಾವುಲರು ‘ಸಾಯ್ಞ್’ ಅಂತ ಕರೆಯುತ್ತಾರೆ. ಅವರು ಹೇಳುತ್ತಾರೆ: ‘ “ಸಾಯ್ಞ್” ಗಿಂತ ದೊಡ್ಡವರು ಯಾರೂ ಇಲ್ಲ.’ ಬಾವುಲ ಸಿದ್ಧ ಪುರುಷನಾದ ಎಂದರೆ ಒಬ್ಬ ‘ಸಾಯ್ಞ್’ ಆಗಿಬಿಡುತ್ತಾನೆ. ಆಗ ಎಲ್ಲ ಅಭೇದ. ಕೊರಳಿನ ಮಾಲೆಯ ಅರ್ಧಭಾಗ ಗೋವಿನ ಮೂಳೆಯ ಮಣಿಗಳಿಂದ ಕೂಡಿರುತ್ತದೆ. ಇನ್ನರ್ಧಭಾಗ ತುಳಸಿ ಮಣಿಗಳಿಂದ. ಆತ ತುತ್ತತುದಿಯ ಸತ್ಯವನ್ನು ಕರೆಯುತ್ತಾನೆ. ‘ಆಲೇಖ್’ ಅಂದರೆ ‘ಅವಿಜ್ಞೇಯ’ ಎಂದು. ವೇದ ಹೇಳುತ್ತದೆ ‘ಬ್ರಹ್ಮ’ ಅಂತ; ಬಾವುಲರು ಹೇಳುತ್ತಾರೆ ‘ಆಲೇಖ್’ ಅಂತ. ಜೀವಗಳ ಸಂಬಂಧವಾಗಿ ಹೇಳುತ್ತಾರೆ: ‘ಆಲೇಖದಿಂದ ಬರುತ್ತವೆ, ಆಲೇಖಕ್ಕೆ ಹಿಂದಿರುಗುತ್ತವೆ.’ ಅಂದರೆ, ಜೀವಾತ್ಮ ಅವ್ಯಕ್ತದಿಂದ ಬಂದು ಮತ್ತೆ ಅವ್ಯಕ್ತದಲ್ಲಿ ಲಯವಾಗುತ್ತದೆ. ಬಾವುಲರು ಕೇಳುತ್ತಾರೆ: ‘ಹವದ ವಿಷಯ ನನಗೆ ಗೊತ್ತೆ?’ ಅಂದರೆ, ಕುಲ ಕುಂಡಲಿನಿ ಜಾಗೃತಿಗೊಂಡಾಗ ಇಡಾ, ಪಿಂಗಳಾ, ಸುಷುಮ್ನಾ ಇವುಗಳ ಮೂಲಕ ಹರಿಯುತ್ತದೆಯಲ್ಲ ಮಹಾವಾಯು ಅದರ ವಿಷಯ. ಅವರು ಮತ್ತೆ ಕೇಳುತ್ತಾರೆ: ‘ನೀನು ಯಾವ ಅಂತಸ್ತಿನಲ್ಲಿದ್ದೀಯೆ?’ ಅವರ ದೃಷ್ಟಿಯಿಂದ ಆರು ಅಂತಸ್ತುಗಳಿವೆ-ಯೋಗಿಗಳ ಷಟ್ಚಕ್ರಗಳ ಹಾಗೆ. ಅವರಲ್ಲಿ ಒಬ್ಬ ತಾನೆ ಐದನೆ ಅಂತಸ್ತಿನಲ್ಲಿದ್ದೇನೆ ಎಂದು ಹೇಳಿದರೆ, ಆತನ ಮನಸ್ಸು ಐದನೆಯದಾದ ವಿಶುದ್ಧ ಚಕ್ರಕ್ಕೆ ಹತ್ತಿದೆ ಎಂದು ಅರ್ಥ. (ಮಾಸ್ಟರಿಗೆ) ಆಗ ಆತನಿಗೆ ನಿರಾಕಾರ ದರ್ಶನ ದೊರೆಯುತ್ತದೆ.”
ಹೀಗೆಂದು ಹೇಳಿ ಪರಮಹಂಸರು ಹಾಡುತ್ತಿದ್ದಾರೆ:
ಈ ಕಮಲ ದಳಗಳಲ್ಲಿ ಆಕಾಶವಡಗಿಹುದು
ಅದನು ದಾಟಲು ಎಲ್ಲ ಆಕಾಶವಹುದು!
ಶ್ರೀರಾಮಕೃಷ್ಣರು: “ಒಮ್ಮೆ ಒಬ್ಬ ಬಾವುಲ ಇಲ್ಲಿಗೆ ಬಂದಿದ್ದ. ನಾನು ಆತನನ್ನು ಕೇಳಿದೆ: ‘ನಿನ್ನ ಪಾಕದ ಕೆಲಸ ಮುಗಿದುಹೋಯಿತೆ? ಕೊಪ್ಪರಿಗೆಯನ್ನು ಒಲೆಯಿಂದ ಕೆಳಗೆ ಇಳಿಸಿ ಬಿಟ್ಟಿದ್ದೀಯ?’ ರಸವನ್ನು ಚೆನ್ನಾಗಿ ಕಾಯಿಸಿದಷ್ಟೂ ಅದು ರಿಫೈನ್ (ಪರಿಷ್ಕೃತ) ಆಗುತ್ತಾ ಬರುತ್ತದೆ. ಒಲೆಯ ಮೇಲೆ ಇಡುವಾಗ ಅದು ಕೇವಲ ಕಬ್ಬಿನ ರಸವೇ. ಅನಂತರ ಬೆಲ್ಲ, ಅನಂತರ ಸಕ್ಕರೆ, ಅನಂತರ ಕಲ್ಲುಸಕ್ಕರೆ ಇತ್ಯಾದಿಯಾಗಿ ಆಗುತ್ತದೆ. ಕುದಿಸುತ್ತಾ ಕುದಿಸುತ್ತಾ ಮುಂದುವರಿದ ಹಾಗೆ ಅದು ಇನ್ನೂ ಇನ್ನೂ ಪರಿಷ್ಕೃತ ಆಗುತ್ತಿರುತ್ತದೆ.
“ಕೊಪ್ಪರಿಗೆಯನ್ನು ಯಾವಾಗ ಇಳಿಸುತ್ತಾರೆ? ಅಂದರೆ, ಸಾಧನೆ ಮುಗಿಯುವುದು ಯಾವಾಗ? ಇಂದ್ರಿಯ ಜಯವನ್ನು ಹೊಂದಿದಾಗ. ಉದಾಹರಣೆಗೆ ಜಿಗಣೆಯ ಬಾಯಿಗೆ ಸುಣ್ಣ ಹಾಕಿದರೆ ಯಾವ ರೀತಿಯಾಗಿ ಅದು ಕಚ್ಚಿರುವುದನ್ನು ಬಿಟ್ಟು ಕೆಳಕ್ಕೆ ಬಿದ್ದು ಹೋಗು ವುದೋ, ಅದೇ ರೀತಿ ಇಂದ್ರಿಯಗಳು ಶಿಥಿಲವಾಗಿ ಮನುಷ್ಯನನ್ನು ಬಿಟ್ಟು ತೊಲಗುತ್ತವೆ. ಆ ಅವಸ್ಥೆಯಲ್ಲಿ ಮನುಷ್ಯ ರಮಣಿಯೊಡನೆ ಇರಬಲ್ಲ, ಆದರೆ ಸಂಪೂರ್ಣ ಕಾಮವಿಹೀನನಾಗಿ.”
“ಬಾವುಲರಲ್ಲನೇಕರು ರಾಧಾತಂತ್ರವನ್ನು ಅನುಸರಿಸುತ್ತಾರೆ. ಪಂಚತತ್ತ್ವ, ಅಂದರೆ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ ತತ್ತ್ವಗಳನ್ನು ಉಪಯೋಗಿಸಿ ಸಾಧನೆ ಮಾಡುತ್ತಾರೆ. ಈ ವಿಧದ ಸಾಧನೆ ಬಹಳ ಆಶ್ಲೀಲವಾದುವು. ಇದು ಕಕ್ಕಸದ ಬಾಗಿಲದ ಮೂಲಕ ಮನೆಗೆ ಬಂದ ಹಾಗೆ.
“ಒಂದು ದಿನ ನಾನು ಊಟಮಾಡುತ್ತಿದ್ದಾಗ ಒಬ್ಬ ಬಾವುಲ ಬಂದ. ಬಂದು ಕೇಳಿದ: “ನೀವೇ ಊಟ ಮಾಡುತ್ತಿದ್ದೀರೋ ಅಥವಾ ಬೇರೆ ಯಾರಿಗಾದರೂ ಊಟ ಮಾಡಿಸು ತ್ತಿದ್ದೀರೋ?’ ಇದರ ಅರ್ಥ, ಯಾರು ಸಿದ್ಧಪುರುಷನೊ ಆತ, ತನ್ನ ಆಂತರ್ಯ ದಲ್ಲಿ ಭಗವಂತನಿರುವುದನ್ನು ನೋಡುತ್ತಾನೆ ಎಂದು. ಈ ಮತದ ದೃಷ್ಟಿಯಂತೆ ಸಿದ್ಧಪುರುಷರಾದವರು ಉಳಿದ ಮತಗಳ ಜನರನ್ನ ಕರೆಯುತ್ತಾರೆ ‘ಜೀವ’ ಎಂದು. ಇವರು ಅವರೊಡನೆ ಮಾತುಕತೆಯಾಡುವುದಿಲ್ಲ; ಹೇಳುತ್ತಾರೆ-ಇಲ್ಲಿ ‘ಜೀವ’ ಇದೆ ಎಂದು.
“ಬಾವುಲರು ಸಿದ್ಧಾವಸ್ಥೆಯನ್ನು ಕರೆಯುತ್ತಾರೆ, ‘ಸಹಜಾವಸ್ಥೆ’ ಅಂತ. ಈ ಅವಸ್ಥೆಗೆ ಎರಡು ಲಕ್ಷಣಗಳಿವೆ. ಮೊದಲನೆಯದು-ಕೃಷ್ಣಗಂಧ ಸಿದ್ಧನ ಶರೀರದಲ್ಲಿರದು. ಎರಡನೆ ಯದು-ತಾವರೆ ಮೇಲೆ ದುಂಬಿ ಕುಳಿತುಕೊಳ್ಳುತ್ತದೆ, ಆದರೆ ಮಕರಂದವನ್ನು ಮಾತ್ರ ಕುಡಿಯುವುದಿಲ್ಲ. ಮೊದಲನೆಯದರ ಅರ್ಥ, ಆತ ಭಗವದ್ಭಾವನೆಗಳನ್ನೆಲ್ಲಾ ಆಂತರ್ಯ ದಲ್ಲೇ ಇಟ್ಟುಕೊಳ್ಳುತ್ತಾನೆ; ಹೊರಗಡೆ ಅವುಗಳ ಯಾವ ವ್ಯಕ್ತತೆಯೂ ಇರದು: ಭಗವನ್ನಾಮವನ್ನು ಕೂಡ ಬಾಯಿಂದ ಹೊರಗೆಡಹುವುದಿಲ್ಲ ಅಂತ. ಎರಡನೆಯದರ ಅರ್ಥ, ಆತನಿಗೆ ಕಾಮಿನಿಯಲ್ಲಿ ಆಸಕ್ತಿ ಇಲ್ಲ ಅಂತ-ಅಂದರೆ ಜಿತೇಂದ್ರಿಯ.
“ಬಾವುಲರು ವಿಗ್ರಹಗಳನ್ನು ಪೂಜಿಸಲಿಚ್ಛಿಸುವುದಿಲ್ಲ. ಅವರಿಗೆ ಬೇಕು, ಬದುಕಿರುವ ಮನುಷ್ಯ. ಅದಕ್ಕಾಗಿಯೇ ಅವರ ಒಂದು ಗುಂಪಿಗೆ ‘ಕರ್ತಾಭಜಾ’ ಅಂತ ಹೆಸರು. ಅಂದರೆ ಯಾರು ಕರ್ತನನ್ನು-ಗುರುವನ್ನು ಭಗವದ್ಭಾವನೆಯಿಂದ ಭಜಿಸುತ್ತಾರೊ, ಪೂಜಿಸುತ್ತಾರೊ ಅವರು.
“ನೋಡಿದೆಯೊ, ಎಷ್ಟೊಂದು ಮತಗಳಿವೆ? ಪ್ರತಿಯೊಂದು ಮತವೂ ಒಂದೊಂದು ಪಥ. ಅನಂತ ಮತ, ಅನಂತ ಪಥ.”
ಭವನಾಥ: “ಹಾಗಾದರೆ ನಮಗೆ ಮಾರ್ಗ?”
ಶ್ರೀರಾಮಕೃಷ್ಣರು: “ಯಾವುದಾದರೂ ಒಂದನ್ನು ಬಲವಾಗಿ ಹಿಡಿದುಕೊಳ್ಳಬೇಕು. ಮನೆಯ ಚಾವಣಿಗೆ ಹತ್ತಿಹೋಗಬೇಕಾಗಿದ್ದರೆ, ಕಲ್ಲಿನ ಮೆಟ್ಟಲ ಸಾಲಿನಿಂದಾಗಲಿ, ಏಣಿ ಯಿಂದಾಗಲಿ, ಹಗ್ಗದ ಏಣಿಯಿಂದಾಗಲಿ, ಕೇವಲ ಹಗ್ಗದಿಂದಾಗಲಿ ಅಥವಾ ಕೇವಲ ಬೊಂಬಿನಿಂದಲೇ ಆಗಲಿ ಹತ್ತಿ ಹೋಗಿಬಿಡಬಹುದು. ಆದರೆ ಇದರ ಮೇಲೆ ಒಂದಷ್ಟು ದೂರ, ಅದರ ಮೇಲೆ ಒಂದಷ್ಟು ದೂರ ಹೀಗೆ ಹತ್ತುತ್ತಿದ್ದರೆ ಚಾವಣಿಯನ್ನು ಮುಟ್ಟಲಾಗು ವುದಿಲ್ಲ. ಯಾವುದಾದರೂ ಒಂದನ್ನು ಹಿಡಿದು ಬಿಡದೆ ಹತ್ತಬೇಕು. ಭಗವಂತನ ಸಾಕ್ಷಾತ್ಕಾರ ದೊರಕಬೇಕಾಗಿದ್ದರೆ ಯಾವುದಾದರೂ ಒಂದು ಮಾರ್ಗವನ್ನು ವಜ್ರಮುಷ್ಟಿ ಯಿಂದ ಹಿಡಿದು ಮುಂದುವರಿಯಬೇಕು.
“ಎಲ್ಲ ಮತಗಳೂ ಒಂದೊಂದು ಮಾರ್ಗ ಎಂಬುದನ್ನು ಮನಸ್ಸಿಗೆ ಚೆನ್ನಾಗಿ ಒತ್ತಬೇಕು. ನಮ್ಮದೇ ಸರಿಯಾದ ಮಾರ್ಗ, ಉಳಿದವರದೆಲ್ಲಾ ಮಿಥ್ಯಾ ಎಂದು ಎಂದಿಗೂ ಭಾವಿಸ ಕೂಡದು. ವಿದ್ವೇಷಭಾವನೆಗೆ ಎಂದಿಗೂ ಎಡೆ ಕೊಡಕೂಡದು.
“ಒಳ್ಳೇದು, ನಾನು ಯಾವ ಪಥಾವಲಂಬಿ? ಕೇಶವಸೇನ ಹೇಳುತ್ತಿದ್ದ: ‘ನೀವು ನಮ್ಮ ಪಥಕ್ಕೆ ಸೇರಿದವರು-ನಿರಾಕಾರದ ಕಡೆ ಮುಂದುವರಿಯುತ್ತಿದ್ದೀರಿ.’ ಶಶಧರ ಹೇಳುತ್ತಾನೆ: ‘ನೀವು ನಮ್ಮ ಪಥಕ್ಕೆ ಸೇರಿದವರು.’ ವಿಜಯಗೋಸ್ವಾಮಿಯೂ ಹೇಳುತ್ತಾನೆ: ‘ನೀವು ನಮ್ಮ ಪಥಕ್ಕೆ ಸೇರಿದ ವ್ಯಕ್ತಿಗಳು.’”
ಪರಮಹಂಸರು ಪಂಚವಟಿಯ ಕಡೆ ಮಾಸ್ಟರೇ ಮೊದಲಾದ ಒಬ್ಬಿಬ್ಬರು ಭಕ್ತರೊಡನೆ ಮುಂದುವರಿಯುತ್ತಿದ್ದಾರೆ. ಘಂಟೆ ಮಧ್ಯಾಹ್ನ ಹನ್ನೆರಡು. ಗಂಗೆಯಲ್ಲಿ ಉಬ್ಬರ ಬರುವ ಸಮಯ. ಅವರು ಪಂಚವಟಿಯಲ್ಲಿ ಕಾದು ನಿಂತಿದ್ದಾರೆ ಸಮುದ್ರದ ಏರುತೆರೆಯನ್ನು ನೋಡಲು.
ಶ್ರೀರಾಮಕೃಷ್ಣರು ಭಕ್ತರಿಗೆ: “ಉಬ್ಬರ ಇಳಿತ ಎಷ್ಟು ಆಶ್ಚರ್ಯಕರವಾದುವು! ಆದರೆ ಇದನ್ನು ನೋಡು. ಸಮುದ್ರದ ಹತ್ತಿರ ನದಿಯೊಳಗೆ ಈ ಉಬ್ಬರ-ಇಳಿತಗಳನ್ನು ನೋಡ ಬಹುದು; ಆದರೆ ಸಮುದ್ರದಿಂದ ದೂರದಲ್ಲಿ ನದಿ ಒಂದೇ ದಿಕ್ಕಿಗೆ ಹರಿಯುತ್ತದೆ. ಇದರ ಇಂಗಿತಾರ್ಥವೇನು? ಇದರಿಂದ ನಾವು ಒಂದು ಪಾಠ ಕಲಿತುಕೊಳ್ಳಬಹುದು. ಯಾರು ಭಗವಂತನಿಗೆ ಅತ್ಯಂತ ಸಮೀಪದಲ್ಲಿರುತ್ತಾರೊ, ಅವರಲ್ಲಿ ಭಕ್ತಿ, ಭಾವ ಇವೇ ಮೊದಲಾದುವು ಉಂಟಾಗುತ್ತವೆ. ಇನ್ನು ಕೆಲವರಲ್ಲಿ-ಉದಾಹರಣೆಗೆ ಈಶ್ವರಕೋಟಿ ಗಳಲ್ಲಿ-ಮಹಾಭಾವ, ಪ್ರೇಮ ಇವು ಕೂಡ ಉಂಟಾಗುತ್ತವೆ.
(ಮಾಸ್ಟರಿಗೆ): “ಒಳ್ಳೇದು, ಈ ಉಬ್ಬರವಿಳಿತಗಳು ಹೇಗಾಗುತ್ತವೆ?”
ಮಾಸ್ಟರ್: “ಪಾಶ್ಚಾತ್ಯ ಜ್ಯೋತಿಶ್ಶಾಸ್ತ್ರದ ಪ್ರಕಾರ ಇವು ಸೂರ್ಯ-ಚಂದ್ರರ ಆಕರ್ಷಣೆ ಯಿಂದ ಆಗುತ್ತವೆ.”
ಇದನ್ನು ವಿವರಿಸಲು ಹೇಳಲು ಮಾಸ್ಟರ್ ನೆಲದ ಮೇಲೆ ನಕ್ಷೆ ಬರೆದು, ಪರಮಹಂಸರಿಗೆ ಚಂದ್ರ, ಸೂರ್ಯ, ಭೂಮಿ ಇವುಗಳ ಗತಿಯನ್ನು ತೋರಿಸುತ್ತಿದ್ದಾನೆ. ಪರಮಹಂಸರು ಅವುಗಳ ಕಡೆ ಒಂದು ನಿಮಿಷ ನೋಡಿಯೇ ಹೇಳುತ್ತಿದ್ದಾರೆ: “ದಯವಿಟ್ಟು ಸಾಕು! ಆಗಲೆ ತಲೆ ನೋಯಲಾರಂಭಿಸಿದೆ.”
ಇಷ್ಟರಲ್ಲೆ ಸಮುದ್ರದ ಏರುತೆರೆ ಬರುತ್ತಿರುವುದರ ಶಬ್ದ ಕೇಳಿಬಂತು. ಒಡನೆಯೆ ಅದು ಒಂದು ದಡವನ್ನು ಅಪ್ಪಳಿಸಿ ಉತ್ತರದ ಕಡೆಗೆ ನುಗ್ಗಲಾರಂಭಿಸಿತು. ಪರಮಹಂಸರು ನೆಟ್ಟ ಕಣ್ಣುಗಳಿಂದ ಅದರ ಕಡೆ ನೋಡುತ್ತಿದ್ದಾರೆ. ದೂರದಲ್ಲಿದ್ದ ಒಂದು ದೋಣಿಯನ್ನು ನೋಡಿ ಬಾಲಕನಹಾಗೆ ಕೂಗಿಕೊಳ್ಳುತ್ತಿದ್ದಾರೆ: “ಅಲ್ಲಿ ನೋಡು! ಅಲ್ಲಿ ನೋಡು! ಆ ದೋಣಿಯ ದುಃಸ್ಥಿತಿಯನ್ನು! ಅದರ ಗತಿ ಏನಾಗುವುದೊ?”
ಪರಮಹಂಸರು ಮತ್ತು ಮಾಸ್ಟರ್ ಪಂಚವಟಿಯಲ್ಲಿ ಕುಳಿತುಕೊಂಡಿದ್ದಾರೆ. ಪರಮ ಹಂಸರು ತಮ್ಮ ಛತ್ರಿಯನ್ನು ಸಿಮೆಂಟಿನ ಕಟ್ಟೆಯ ಮೇಲೆ ಇಟ್ಟಿದ್ದಾರೆ. ಅವರು ನಾರಾಯಣ ಎಂಬ ಹೆಸರಿನ ಹುಡುಗನನ್ನು ಸಾಕ್ಷಾತ್ ಭಗವಂತನೇ ಎಂಬ ದೃಷ್ಟಿಯಿಂದ ನೋಡುತ್ತಿದ್ದಾರೆ. ಆದ್ದರಿಂದ ಆತನನ್ನು ಕಂಡರೆ ಬಹಳ ಪ್ರೀತಿ. ಆತ ಸ್ಕೂಲಿನಲ್ಲಿ ಓದುತ್ತಿದ್ದಾನೆ. ಈಗ ಮಾತುಕತೆ ಆತನ ಸಂಬಂಧವಾಗಿ ಆರಂಭವಾಯಿತು.
ಶ್ರೀರಾಮಕೃಷ್ಣರು: “ನಾರಾಯಣನ ಸ್ವಭಾವ ಎಷ್ಟು ಒಳ್ಳೇದು ನೋಡಿದ್ದೀಯೆ ತಾನೆ? ಆತ ಎಲ್ಲರೊಡನೆಯೂ ಬೆರೆಯಬಲ್ಲ-ಮಕ್ಕಳಾದಿಯಾಗಿ ಮುದುಕರವರೆಗೆ. ಇದು, ಒಂದು ವಿಶೇಷವಾದ ಶಕ್ತಿಯಿಲ್ಲದಿದ್ದರೆ, ಸಾಧ್ಯವಿಲ್ಲ. ಇದೂ ಅಲ್ಲದೆ ಎಲ್ಲರೂ ಆತನನ್ನು ಪ್ರೀತಿಸುತ್ತಾರೆ. ಒಳ್ಳೆಯದು, ಆತ ನಿಜವಾಗಿಯೂ ಸರಳನೆ?”
ಮಾಸ್ಟರ್: “ಹೌದು, ಬಹಳ ಸರಳ ಅಂತ ಅನ್ನಿಸುತ್ತದೆ?”
ಶ್ರೀರಾಮಕೃಷ್ಣರು: “ನಿಮ್ಮ ಮನೆಗೆ ಆತ ಬರುತ್ತಿರುತ್ತಾನಂತಲ್ಲ?”
ಮಾಸ್ಟರ್: “ಹೌದು, ಒಂದೆರಡು ಸಲ ಬಂದಿದ್ದ.”
ಶ್ರೀರಾಮಕೃಷ್ಣರು: “ನೀನು ಆತನಿಗೊಂದು ರೂಪಾಯಿ ಕೊಡಬಲ್ಲೆಯಾ? ಅಥವಾ ನಾನು ಕಾಳಿಗೆ ಹೇಳಲೊ?”
ಮಾಸ್ಟರ್: “ಬೇಡ; ನಾನೇ ಕೊಡುತ್ತೇನೆ.”
ಶ್ರೀರಾಮಕೃಷ್ಣರು: “ಬಹಳ ಒಳ್ಳೆಯದು. ಭಗವಂತನಲ್ಲಿ ಯಾರಿಗೆ ಅನುರಾಗ ವಿದೆಯೋ ಅವರಿಗೆ ಸಹಾಯ ನೀಡುವುದು ಮೇಲು. ಹಣದ ಸದ್ವಿನಿಯೋಗವಾಗುತ್ತದೆ ಆಗ. ಎಲ್ಲವನ್ನೂ ಸಂಸಾರದ ಮೇಲೆಯೇ ಸುರಿದರೆ ದೊರೆಯುವುದೇನು?”
ಕಿಶೋರಿಗೆ ಮಕ್ಕಳು ಮರಿ ಆಗಿಬಿಟ್ಟಿವೆ. ಸಂಬಳ ಸಾರಿಗೆ ಕಡಮೆ-ಸಾಕಾಗುತ್ತಿಲ್ಲ. ಪರಮಹಂಸರು ಮಾಸ್ಟರಿಗೆ ಹೇಳುತ್ತಿದ್ದಾರೆ : “ನಾರಾಯಣ ಹೇಳಿದ, ನಾನು ಕಿಶೋರಿಗೆ ಒಂದು ಕೆಲಸವನ್ನು ಕೊಡಿಸುವುದಾಗಿ, ಇದನ್ನು ಆತನಿಗೆ ಜ್ಞಾಪಕ ಮಾಡು.”
ಪರಮಹಂಸರು ಈಗ ಸರ್ವೆಮರಗಳ ಕಡೆ ಹೋಗುತ್ತಿದ್ದಾರೆ. ಅಲ್ಲಿಂದ ಹಿಂದಿರುಗಿ ಪಂಚವಟಿಗೆ ಬಂದು ಮಾಸ್ಟರಿಗೆ ಹೇಳುತ್ತಿದ್ದಾರೆ: “ವರಾಂಡದಲ್ಲಿ ಒಂದು ಮಂದಲಿಗೆ ಹಾಕುವಂತೆ ಯಾರಿಗಾದರೂ ಹೇಳು. ನಾನು ಇನ್ನು ಸ್ವಲ್ಪ ಹೊತ್ತಿನಲ್ಲೇ ಅಲ್ಲಿಗೆ ಬರುತ್ತೇನೆ -ಸ್ವಲ್ಪ ಹೊತ್ತು ಮಲಗಿಕೊಂಡಿರುತ್ತೇನೆ.’”
ಪರಮಹಂಸರು ತಮ್ಮ ಕೊಠಡಿಗೆ ಹಿಂದಿರುಗಿ ಬಂದು ನೋಡುತ್ತಾರೆ, ಯಾರೂ ಅವರ ಛತ್ರಿಯನ್ನು ಪಂಚವಟಿಯಿಂದ ತಂದಿಲ್ಲ. ಈಗ ಹೇಳುತ್ತಿದ್ದಾರೆ: “ಛತ್ರಿಯನ್ನು ತರಬೇಕು ಅಂತ ನಿಮಗಾರಿಗೂ ಅನ್ನಿಸಲೇ ಇಲ್ಲವಲ್ಲ! ಅಧಿಕಪ್ರಸಂಗಿಗಳಿಗೆ ಎದುರಿಗಿರು ವುದೂ ಕಣ್ಣಿಗೆ ಬೀಳುವುದಿಲ್ಲ. ಒಬ್ಬ ಇನ್ನೊಬ್ಬನ ಮನೆಗೆ ಗುಡುಗುಡಿ ಹತ್ತಿಸಿಕೊಳ್ಳಲು ಹೋಗಿದ್ದ-ತನ್ನ ಕೈಯಲ್ಲೇ ಉರಿಯುತ್ತಿರುವ ಲಾಟೀನು ಇದ್ದರೂ! ಇನ್ನೊಬ್ಬ ತನ್ನ ಚೌಕಕ್ಕಾಗಿ ಎಲ್ಲೆಲ್ಲೂ ಹುಡುಕಾಡಿಬಿಟ್ಟ. ಕೊನೆಗೆ ನೋಡಿಕೊಳ್ಳುತ್ತಾನೆ, ಅದು ತನ್ನ ಹೆಗಲ ಮೇಲೆಯೇ ಇದೆ!”
ಪರಮಹಂಸರು ಕಾಳಿದೇವಾಲಯದ ಅನ್ನಪ್ರಸಾದವನ್ನು ಸ್ವೀಕರಿಸುತ್ತಿದ್ದಾರೆ. ಈಗ ಘಂಟೆ ಅಪರಾಹ್ನ ಒಂದು. ಊಟವಾದ ನಂತರ ಪರಮಹಂಸರು ವಿಶ್ರಮಿಸಿಕೊಳ್ಳಲೆಂದು ಭಕ್ತರಿಗೆ ಹೇಳಲಾಯಿತು, ಹೊರಗೆ ಹೋಗಿ ಕುಳಿತುಕೊಳ್ಳುವಂತೆ. ಈಗ ಪರಮಹಂಸರು ವಿಶ್ರಮಿಸಿಕೊಳ್ಳುತ್ತಿದ್ದಾರೆ. ಅವರು ಬಾಬುರಾಮನಿಗೆ ಹೇಳುತ್ತಿದ್ದಾರೆ: “ಬಾ, ನನ್ನ ಹತ್ತಿರ ಬಂದು ಕುಳಿತುಕೊ.” ಬಾಬುರಾಮ ಹೇಳುತ್ತಿದ್ದಾನೆ: “ನಾನು ತಾಂಬೂಲ ತಯಾರಿಸು ತ್ತಿದ್ದೇನೆ.” ಅದಕ್ಕೆ ಹೇಳುತ್ತಿದ್ದಾರೆ: “ಈಗ ಸದ್ಯ ಅದನ್ನು ಒತ್ತಟ್ಟಿಗಿಟ್ಟು ಬಾ.”
ಭಕ್ತರು ಪಂಚವಟಿಯಲ್ಲಿ ಬಕುಳವೃಕ್ಷದ ಕೆಳಗೆ ಕುಳಿತುಕೊಂಡಿದ್ದಾರೆ. ಆಗತಾನೆ ಬೃಂದಾವನದಿಂದ ಹಿಂದಿರುಗಿ ಬಂದಿದ್ದ ತಾರಕ ತನ್ನ ಯಾತ್ರೆಯ ಸಂಬಂಧವಾಗಿ ತಿಳಿಸುತ್ತಿದ್ದಾನೆ.
ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಭಕ್ತರು ನೆಲದ ಮೇಲೆ. ಶ್ಯಾಮದಾಸ ತನ್ನ ಪಾರ್ಟಿಯವರೊಡನೆ ಗೋಪಿಯರ ಕೃಷ್ಣವಿರಹದ ಸಂಬಂಧವಾಗಿ ಹಾಡುತ್ತಿದ್ದಾನೆ :
ಸುಂದರ ಸರಸಿಯು ಮರುವನವಾಯಿತು
ಗೋಪಿಜನಮನ ಕಂಗಳಿಗೆ
ಬಾನ ಮೋಡದೆಡೆ ನೋಡುತ ಚಾತಕ
ಹರಣವ ನೀಗಿತು ತೃಷೆಯೊಳಗೆ!
ಪರಮಹಂಸರು ಎಲ್ಲೋ ಕಿಂಚಿತ್ ಭಾವಾವಿಷ್ಟರೇನೋ ಆದರು, ಆದರೆ ಕೀರ್ತನೆ ಕಳೆಕಟ್ಟುತ್ತಿಲ್ಲ. ಆದ್ದರಿಂದ ಕೊನ್ನಗರದ ನಬಾಯಿ ಚೈತನ್ಯನಿಗೆ ಹೇಳುತ್ತಿದ್ದಾರೆ, ಕೀರ್ತನೆ ಮಾಡುವಂತೆ. ನಬಾಯಿ ಮನಮೋಹನನ ಚಿಕ್ಕಪ್ಪ. ವಿರಾಮವೇತನ ಪಡೆಯುತ್ತ ಗಂಗಾತೀರದಲ್ಲಿರುವ ಕೊನ್ನಗರದಲ್ಲಿ ಸಾಧನೆ ಭಜನೆ ಮಾಡುತ್ತ ಇದ್ದಾನೆ. ಪರಮಹಂಸರ ದರ್ಶನ ಪಡೆಯಲು ಆಗಾಗ ದಕ್ಷಿಣೇಶ್ವರಕ್ಕೆ ಬರುತ್ತಲೇ ಇದ್ದಾನೆ.
ನಬಾಯಿ ಉಚ್ಚ ಸಂಕೀರ್ತನೆಯನ್ನು ಮಾಡುತ್ತಿದ್ದಾನೆ. ಪರಮಹಂಸರು ಮಂಚ ದಿಂದೆದ್ದು ಬಂದು ನರ್ತಿಸುತ್ತಿದ್ದಾರೆ. ನಬಾಯಿ ಮತ್ತು ಭಕ್ತರೆಲ್ಲರೂ ಅವರ ಸುತ್ತಲೂ ಸುತ್ತಿ ಸುತ್ತಿ ನರ್ತಿಸುತ್ತ ಹಾಡುತ್ತಿದ್ದಾರೆ. ಕೀರ್ತನೆ ಬಹಳ ಚೆನ್ನಾಗಿ ಕಳೆಗಟ್ಟಿಬಿಟ್ಟಿದೆ. ಮಹಿಮ ಚರಣನೂ ನರ್ತಿಸಲಾರಂಭಿಸಿದ್ದಾನೆ.
ಕೀರ್ತನೆ ಮುಗಿಯಿತು. ಪರಮಹಂಸರು ತಮ್ಮ ಮಂಚದ ಮೇಲೆ ಕುಳಿತಿದ್ದಾರೆ. ಈಗ ಅವರು ಭಾವದಿಂದ ಮತ್ತರಾಗಿ ಊರ್ಧ್ವದೃಷ್ಟಿಯುಳ್ಳವರಾಗಿ ಭಗವತಿಯ ಸಂಬಂಧವಾಗಿ ಹಾಡುತ್ತಿದ್ದಾರೆ:
ನಿನ್ನ ನಿತ್ಯಾನಂದದಾಚೆಗೆ ತಳ್ಳದಿರು ನೀನೆನ್ನನು;
ನಿನ್ನ ಪಾದವನಲ್ಲದೀತನು ಬೇರೆ ಏನನು ಕಾಣನು……
ಅವರು ಮತ್ತೆ ಹಾಡುತ್ತಿದ್ದಾರೆ:
ಭಾವುಕನ ಭಾವದೊಳು ಅವನೊಳುದಿಸುವ ಒಲವು
ಆ ಒಲವಿಗನುಸಾರ ಅವನು ಪಡೆಯುವ ಫಲವು!…….
ಮತ್ತೆ:
ನಿನ್ನದೀ ಮರುಳು ಮನೆ
ನಿನ್ನದೀ ಲೋಕ;
ಬಣ್ಣಿಸಲೆ ನಿನ್ನ ಗುಣ?
ನಾನಾದೆ ಮೂಕ!
ಆನೆಯಿದ್ದೂ ಕೂಡ
ನೀ ಪಾದಚಾರಿ!
ಮುತ್ತುರತ್ನಗಳಿದ್ದು
ನರಶಿರೋಧಾರಿ!
ಜಟಿಲತಮ ಸಂಸಾರ
ಕಾಂತಾರದೊಳಗೆ
ನೀನೆ ಕಾಪಿಡಬೇಕು
ಕೃಪೆಯ ಕೈಯೊಳಗೆ
ಮತ್ತೆ ಹಾಡುತ್ತಿದ್ದಾರೆ:
ಏತಕೆ, ಇನ್ನೇತಕೆ?
ಕಾಶಿ ಕಾಂಚಿಯೊ, ಗಯೆಯೊ ಗಂಗೆಯೊ
ಪುಣ್ಯಕ್ಷೇತ್ರಗಳೇತಕೆ?……..
ಮತ್ತೆ:
ನಿನ್ನೊಳಗೆ ನೀನಿರು ಮನವೇ,
ಅನ್ಯಾಶ್ರಯದೊಳಗರಸದಿರು……
ಅನಂತರ:
ಸಾಗುತಿಹುದು ಚಿತ್ತಭೃಂಗ
ಕಾಳೀಪದನೀಲಕಮಲ ಮಧುಪಾನದ ಆಸೆಗೆ!…..
ಮತ್ತೆ:
ಅಂತರಂಗದಲಿ ಶ್ರೀಘನಶ್ಯಾಮೆಯ
ಆದರಿಸೆಲೆ ಮನವೇ…….
ಪರಮಹಂಸರು ಈ ಹಾಡನ್ನು ಹಾಡುತ್ತ ಇದ್ದ ಹಾಗೇ ಎದ್ದು ನಿಂತುಬಿಟ್ಟಿದ್ದಾರೆ. ಬಹುಮಟ್ಟಿಗೆ ಪ್ರೇಮೋನ್ಮತ್ತರಾಗಿಬಿಟ್ಟಿದ್ದಾರೆ. ಅವರು ಭಕ್ತರ ಕಡೆ ತಿರುಗಿ ಮತ್ತೆ ಮತ್ತೆ ಹೇಳುತ್ತಿದ್ದಾರೆ: “ಅಂತರಂಗದಲಿ ಶ್ರೀಘನಶ್ಯಾಮೆಯ ಆದರಿಸೆಲೆ ಮನವೇ.” ಈಗ ಮತ್ತೆ ನರ್ತಿಸುತ್ತ ಹಾಡಲಾರಂಭಿಸಿದ್ದಾರೆ:
ಕಾಲರೂಪೇ ದಿಗಂಬರೀ
ಹೃದಯಪದ್ಮ ಭಾಸ್ಕರೀ,
ನಿಜವಾಗಿಯೂ ಕಪ್ಪಗಿಹಳೇ ನನ್ನ ತಾಯಿ ಕಾಳಿ?
ಪರಮಹಂಸರು ಹಾಡುತ್ತ ಹಾಡುತ್ತ ಇದ್ದಹಾಗೆ ತೂಗಾಡುತ್ತಿರುವುದನ್ನು ನೋಡಿ ನಿರಂಜನ ಅವರನ್ನು ಹಿಡಿದುಕೊಳ್ಳಲು ಹೋಗುತ್ತಿದ್ದಾನೆ. ಅವರು ಪ್ರೀತಿಪೂರ್ವಕವಾಗಿ ಆತನಿಗೆ ಹೇಳುತ್ತಿದ್ದಾರೆ: “ದಯವಿಟ್ಟು ಮುಟ್ಟಬೇಡ.” ಪರಮಹಂಸರು ನರ್ತಿಸುವುದನ್ನು ನೋಡಿ ಭಕ್ತರೂ ಎದ್ದು ನಿಂತಿದ್ದಾರೆ. ಪರಮಹಂಸರು ಮಾಸ್ಟರ ಕೈಹಿಡಿದು ಹೇಳುತ್ತಿದ್ದಾರೆ: “ಮೂರ್ಖನ ಹಾಗೆ ವರ್ತಿಸಬೇಡ! ನರ್ತಿಸು!”
ಪರಮಹಂಸರು ತಮ್ಮ ಮಂಚದ ಮೇಲೆ ಕುಳಿತಿದ್ದಾರೆ. ಇನ್ನೂ ಭಾವೋನ್ಮತ್ತರಾಗಿಯೇ ಇದ್ದಾರೆ. ಭಾವ ಕಿಂಚಿತ್ ಇಳಿದ ನಂತರ ಹೇಳುತ್ತಿದ್ದಾರೆ: “ಓಂ! ಓಂ! ಓಂ! ಓಂ! ಓಂ! ಓಂ! ಕಾಳಿ!” ಈಗ ಹೇಳುತ್ತಿದ್ದಾರೆ: “ಗುಡುಗುಡಿ ಸೇದಬೇಕು.” ಭಕ್ತರಲ್ಲನೇಕರು ಅವರ ಸುತ್ತ ನಿಂತಿದ್ದಾರೆ. ಮಹಿಮಚರಣ ನಿಂತುಕೊಂಡು ಪರಮಹಂಸರಿಗೆ ಗಾಳಿ ಬೀಸುತ್ತಿದ್ದಾನೆ. ಕೆಳಗೆ ಕುಳಿತುಕೊಂಡು ವೇದಗಳಿಂದ ಮಂತ್ರೋಚ್ಚಾರಣೆ ಮೂಡುವಂತೆ. ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ. ಈಗ ಮಹಿಮಚರಣ ಮಹಾನಿರ್ವಾಣತಂತ್ರದಿಂದ ಕೆಲವು ಸ್ತೋತ್ರಗಳನ್ನು ಪಠಿಸುತ್ತಿದ್ದಾನೆ.
ಓಂ ನಮಸ್ತೇ ಸತೇ ತೇ ಜಗತ್ಕಾರಣಾಯ….. ಇತ್ಯಾದಿ.
ಪರಮಹಂಸರು ಕೈಮುಗಿದುಕೊಂಡು ಸ್ತೋತ್ರಗಳನ್ನು ಕೇಳುತ್ತಿದ್ದಾರೆ. ಸ್ತೋತ್ರ ಪಾಠ ಮುಗಿಯಿತು. ಈಗ ಅವರು ಭಕ್ತಿಭಾವದಿಂದ ನಮಸ್ಕಾರ ಮಾಡುತ್ತಿದ್ದಾರೆ. ಭಕ್ತರೂ ಹಾಗೆ ಮಾಡುತ್ತಿದ್ದಾರೆ.
ಅಧರಸೇನ ಕಲ್ಕತ್ತದಿಂದ ಬಂದು ಪರಮಹಂಸರಿಗೆ ಪ್ರಣಾಮ ಮಾಡುತ್ತಿದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಇಂದು ಬಹಳವಾಗಿ ಆನಂದ ದೊರೆತುಬಿಟ್ಟಿತು. ಭಗವಂತನ ನಾಮಗುಣಕೀರ್ತನೆ ಎಷ್ಟು ಆನಂದವನ್ನು ಉಂಟುಮಾಡುತ್ತದೆ! ಅಲ್ಲವೆ?”
ಮಾಸ್ಟರ್: “ಹೌದು, ನಿಜ.”
ಮಹಿಮಚರಣ ಜ್ಞಾನಚರ್ಚೆ ಮಾಡುತ್ತಿರುತ್ತಾನೆ. ಇಂದು ಆತ ಭಗವನ್ನಾಮ ಸಂಕೀರ್ತನೆಯಲ್ಲಿ ಭಾಗವಹಿಸಿದುದೂ ಅಲ್ಲದೆ, ನರ್ತಿಸಿಯೂ ಬಿಟ್ಟ. ಇದು ಪರಮಹಂಸರಿಗೆ ಬಹಳ ಆನಂದವನ್ನು ಉಂಟುಮಾಡಿಬಿಟ್ಟಿದೆ.
ಇನ್ನೇನು ಮುಸ್ಸಂಜೆಯಾಗುವುದರಲ್ಲಿದೆ. ಭಕ್ತರಲ್ಲನೇಕರು ಪರಮಹಂಸರಿಗೆ ಪ್ರಣಾಮ ಮಾಡಿ ಅವರಿಂದ ಬೀಳ್ಕೊಳ್ಳುತ್ತಿದ್ದಾರೆ. ಪರಮಹಂಸರ ಕೊಠಡಿಗೆ ದೀಪ ಹಚ್ಚಿ ಧೂಪ ಹಾಕಲಾಯಿತು. ಸ್ವಲ್ಪ ಹೊತ್ತಿನಲ್ಲಿ ಚಂದ್ರೋದಯವಾಗಲಾರಂಭಿಸಿತು. ಬೆಳ್ದಿಂಗಳು ಎಲ್ಲೆಲ್ಲೂ ಹಾಲು ಚೆಲ್ಲಿದಂತೆ ಹಬ್ಬಿದೆ.
ಪರಮಹಂಸರು ತಮ್ಮ ಮಂಚದಲ್ಲಿ ಕುಳಿತುಕೊಂಡು ಭಗವತಿಯ ಧ್ಯಾನದಲ್ಲಿ ತೊಡಗಿದ್ದಾರೆ. ಆಗಾಗ ಭಗವತಿಯ ನಾಮಜಪ ಮಾಡುತ್ತಿದ್ದಾರೆ. ಅಧರಸೇನ ನೆಲದ ಮೇಲೆ ಕುಳಿತುಕೊಂಡಿದ್ದಾನೆ. ಮಾಸ್ಟರ್ ಮತ್ತು ನಿರಂಜನನೂ ಅಲ್ಲಿ ಕುಳಿತಿದ್ದಾರೆ. ಈಗ ಪರಮಹಂಸರು ಅಧರಸೇನನೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಏನು ಈಗತಾನೆ ಬಂದೆಯಾ! ಬೇಕಾದಷ್ಟು ಕೀರ್ತನೆ ನರ್ತನ ನಡೆಯಿತು. ರಾಮನ ಸಂಗೀತ, ಉಪಾಧ್ಯಾಯ ಶ್ಯಾಮದಾಸನ ಕೀರ್ತನೆ ನಡೆಯಿತು. ಆದರೆ ನನಗೆ ಮಾತ್ರ ಹಿಡಿಸಲಿಲ್ಲ. ಎದ್ದು ನರ್ತಿಸುವಂತೆ ಮನಸ್ಸಾಗಲಿಲ್ಲ. ಅನಂತರ ಆತನ ಶೀಲದ ಸಂಬಂಧವಾಗಿ ತಿಳಿದುಬಂತು. ಮನುಷ್ಯನ ತಲೆಯಲ್ಲಿ ಎಷ್ಟೊಂದು ಕೂದಲುಗಳಿವೆಯೊ ಅಷ್ಟೊಂದು ಜನ ಉಪಪತ್ನಿಯರಿದ್ದಾರಂತೆ ಆತನಿಗೆ!”
“ನಿನಗೆ ಕೆಲಸ ಸಿಕ್ಕಿತೆ?”
ಅಧರಸೇನ ಒಬ್ಬ ಡೆಪ್ಯುಟಿ ಮ್ಯಾಜಿಸ್ಟ್ರೇಟ್. ತಿಂಗಳಿಗೆ ಮುನ್ನೂರು ರೂಪಾಯಿ ಸಂಬಳ. ಕಲ್ಕತ್ತದ ಮುನಿಸಿಪಾಲಿಟಿಯ ಉಪಾಧ್ಯಕ್ಷನ ಪದವಿಗೆ ಅರ್ಜಿ ಹಾಕಿಕೊಂಡಿದ್ದಾನೆ. ಆ ಪದವಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ಸಂಬಳ. ಆ ಪದವಿಯನ್ನು ದೊರಕಿಸಿಕೊಳ್ಳಲು ಅಧರಸೇನ ಹೋಗಿ ದೊಡ್ಡ ಮನುಷ್ಯರನ್ನು ಕಂಡು ಬಂದಿದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ ಮತ್ತು ನಿರಂಜನನಿಗೆ: “ಹಾಜರಾ ನನಗೆ ಹೇಳಿದ: ‘ನೀವು ಅಧರಸೇನನಿಗಾಗಿ ಭಗವತಿಗೆ ಪ್ರಾರ್ಥನೆಮಾಡಿ, ಆತನಿಗೆ ಆ ಕೆಲಸ ದೊರೆಯಲಿ ಎಂದು.’ ಅಧರಸೇನನೂ ನನ್ನನ್ನು ಕೇಳಿಕೊಂಡಿದ್ದ. ನಾನು ಭಗವತಿಗೆ ಪ್ರಾರ್ಥನೆ ಮಾಡಿದೆ: ‘ಹೇ ತಾಯೆ, ಅಧರಸೇನ ನಿನ್ನ ದರ್ಶನಕ್ಕಾಗಿ ಇಲ್ಲಿಗೆ ಬಂದು ಹೋಗಿ ಮಾಡುತ್ತಿದ್ದಾನೆ. ನಿನಗಿಚ್ಛೆ ಯಿರುವುದಾದರೆ, ಆತನಿಗೆ ಆ ಕೆಲಸ ದೊರೆಯಲಿ.’ ಆದರೆ ಆ ಪ್ರಾರ್ಥನೆಯೊಡನೇ ಆಕೆಗೆ ತಿಳಿಸಿದೆ: ‘ತಾಯೆ, ಆತನದು ಎಂಥ ಹೀನಬುದ್ಧಿ! ಜ್ಞಾನ, ಭಕ್ತಿ ಇವುಗಳಿಗಾಗಿ ಪ್ರಾರ್ಥನೆ ಮಾಡದೆ ಇಂಥ ಅಲ್ಪವಸ್ತುಗಳಿಗಾಗಿ ಪ್ರಾರ್ಥನೆ ಮಾಡುತ್ತ ಇದ್ದಾನಲ್ಲ!’
(ಅಧರಸೇನನಿಗೆ) “ಏಕೆ ನೀನು ಆ ಹೀನಬುದ್ಧಿಯುಳ್ಳವರ ಹತ್ತಿರಕ್ಕೆಲ್ಲಾ ಸಲಾಮು ಹೊಡೆಯಲು ಹೋಗಿದ್ದೆ? ಇಲ್ಲಿಗೆ ಬಂದು ಎಲ್ಲವನ್ನೂ ಇಷ್ಟೊಂದು ನೋಡಿದ್ದೀಯೆ! ಕೇಳಿದ್ದೀಯೆ! ‘ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು ಸಂಬಂಧ ಅಂತ ಕೇಳುವುದು!’”
ಅಧರಸೇನ: “ಸಂಸಾರ ನಡೆಸಿಕೊಂಡು ಹೋಗಬೇಕಾದರೆ, ಹೀಗೆಲ್ಲಾ ಮಾಡದಿದ್ದರೆ ಅದು ನಡೆಯುವುದಿಲ್ಲ. ಹಾಗೆ ಮಾಡಕೂಡದು ಅಂತಲೇನೊ ನೀವು ನಮಗೆ ಹೇಳಿರಲಿಲ್ಲ ವಲ್ಲ. ಏನು ಹೇಳಿದ್ದೀರಾ?”
ಶ್ರೀರಾಮಕೃಷ್ಣರು: “ನಿವೃತ್ತಿಯೇ ಶ್ರೇಯಸ್ಕರವಾದ್ದು. ಪ್ರವೃತ್ತಿ ಅಲ್ಲ, ಒಮ್ಮೆ ನಾನು ಪ್ರೇಮೋನ್ಮತ್ತನಾಗಿದ್ದಾಗ ನನ್ನ ಸಂಬಳ ರಶೀದಿಗೆ ರುಜು ಹಾಕಲು ನನಗೆ ಹೇಳಿ ಕಳುಹಿಸಿದರು, ನಾನೂ ಎಲ್ಲರ ಹಾಗೆ ಹೋಗಿ ಖಜಾಂಚಿಯ ಹತ್ತಿರ ರುಜು ಹಾಕಿ ಬರಬೇಕೆಂದು. ನಾನು ಖಜಾಂಚಿ ತಿಳಿಸಿದೆ: ‘ಇದು ನನ್ನ ಕೈಯಲ್ಲಿ ಸಾಧ್ಯವಿಲ್ಲ. ನನಗೆ ಸಂಬಳ ಬೇಕಾಗಿಲ್ಲ. ಇಚ್ಛೆ ಇದ್ದರೆ ನೀವು ಅದನ್ನು ಬೇರೆ ಯಾರಿಗಾದರೂ ಕೊಟ್ಟುಬಿಡಬಹುದು.’ ನಾನು ಕೇವಲ ಭಗವಂತನ ದಾಸ. ಬೇರೆ ಯಾರಿಗೆ ತಾನೆ ನಾನು ದಾಸನಾಗಲು ಹೋಗಲಿ? ಊಟ ನನಗೆ ಸರಿಯಾಗಿ ಹೊತ್ತು ಹೊತ್ತಿಗೆ ದೊರೆಯದಿರುವುದನ್ನು ನೋಡಿ, ಮಲ್ಲಿಕ ಒಬ್ಬ ಅಡಿಗೆಯವ ನನ್ನು ನೇಮಿಸಿದ. ತಿಂಗಳು ತಿಂಗಳ ಖರ್ಚು ವೆಚ್ಚಗಳಿಗಾಗಿ ಒಂದು ರೂಪಾಯಿ ಕೊಡುತ್ತಿದ್ದ. ಅದನ್ನು ತೆಗೆದುಕೊಳ್ಳಲು ಒಂದು ವಿಧವಾದ ನಾಚಿಕೆ ಆಗುತ್ತಿತ್ತು. ಹೇಳಿ ಕಳುಹಿಸಿದಾಗಲೆಲ್ಲಾ ಆತನ ಹತ್ತಿರ ಓಡಿಹೋಗಬೇಕಾಗುತ್ತಿತ್ತು. ಸ್ವಂತ ಇಚ್ಛೆಯಿಂದ ಹೋದರೆ ಅದು ಬೇರೆ ಸಮಾಚಾರ.
“ಸಂಸಾರ ಜೀವನ ನಡೆಸಿಕೊಂಡು ಹೋಗಬೇಕಾದರೆ, ಹೀನಬುದ್ಧಿಯ ಮನುಷ್ಯರ ಕೈಕಾಲುಗಳನ್ನು ಹಿಡಿದು ದಮ್ಮಯ್ಯ ದತ್ತಯ್ಯ ಅನ್ನಬೇಕಾಗುವುದೇ ಅಲ್ಲದೆ, ಇನ್ನೂ ಏನೇನೋ ಮಾಡಬೇಕಾಗುತ್ತದೆ. ನನಗೀ ದಿವ್ಯ ಅವಸ್ಥೆ ಬಂದ ನಂತರ, ನನ್ನ ಸುತ್ತಮುತ್ತಲೂ ಇರುವ ಸ್ಥಿತಿ ಪರಿಸ್ಥಿಗಳನ್ನು ಚೆನ್ನಾಗಿ ಪರಿಶೀಲಿಸಿ ನೋಡಿ, ನಾನು ಭಗವತಿಗೆ ಹೇಳಿದೆ: ‘ಐಶ್ವರ್ಯ ವಂತರನ್ನು ಮುಖಸ್ತುತಿ ಮಾಡಬೇಕೆಂಬ ಪ್ರವೃತ್ತಿ ನನ್ನ ಮನಸ್ಸಿನಲ್ಲಿ ಏಳದ ರೀತಿಯಲ್ಲಿ ಒಡನೆಯೇ ಅದನ್ನು ಪರಿವರ್ತಿಸಿಬಿಡು.’
(ಅಧರಸೇನನಿಗೆ) “ನಿನಗೀಗಿರುವ ಉದ್ಯೋಗದಲ್ಲೇ ತೃಪ್ತನಾಗಿರು. ಜನ ಐವತ್ತೋ ಅಥವಾ ನೂರೋ ರೂಪಾಯಿ ಸಂಬಳ ಬರುವ ಉದ್ಯೋಗಕ್ಕಾಗಿಯೇ ಬಹಳವಾಗಿ ಹಾತೊರೆಯುವಾಗ ನಿನಗೆ ಮುನ್ನೂರು ರೂಪಾಯಿ ಸಂಬಳ ಬರುತ್ತಿದೆ! ನೀನು ಒಬ್ಬ ಡೆಪ್ಯುಟಿ ಮ್ಯಾಜಿಸ್ಟ್ರೇಟ್. ಕಾಮಾರಪುಕುರಿನಲ್ಲಿ ಒಬ್ಬ ಡೆಪ್ಯುಟಿ ಮ್ಯಾಜಿಸ್ಟ್ರೇಟನನ್ನು ನೋಡಿದ್ದೆ. ಆತನ ಹೆಸರು ಈಶ್ವರಘೋಷಾಲ. ಆತ ಪೇಟ ಸುತ್ತುತ್ತಿದ್ದ. ಆತನ ಎದುರು ಮನುಷ್ಯನ ಮೂಳೆ ಕೂಡ ನಡುಗುತ್ತಿದ್ದುವು. ನಾನು ಬಾಲ್ಯಕಾಲದಲ್ಲಿ ಆತನನ್ನು ನೋಡಿದ್ದೆ. ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಏನು ಒಬ್ಬ ಸಾಮಾನ್ಯ ಪುರುಷನೇ!
“ಈಗ ನೀನು ಯಾರ ಕೈಕೆಳಗೆ ಇದ್ದೀಯೋ ಆತನ ಕೈಕೆಳಗೇ ಇರು. ಒಬ್ಬ ಯಜ ಮಾನನ ಕೈಕೆಳಗೆ ಕೆಲಸ ಮಾಡಿದರೇ ಮನಸ್ಸು ಕೆಟ್ಟುಹೋಗಿಬಿಡುತ್ತದೆ. ಅಂಥಾದ್ದರಲ್ಲಿ ಹತ್ತು ಜನ ಯಜಮಾನರ ಕೈಕೆಳಗೆ!
“ಒಮ್ಮೆ ಒಬ್ಬ ಹೆಂಗಸು ಒಬ್ಬ ಮುಸಲ್ಮಾನನಲ್ಲಿ ಅನುರಕ್ತಳಾಗಿ ಆತನೊಡನೆ ಮಾತುಕತೆ ಯಾಡಲು ಆತನನ್ನು ತನ್ನ ಮನೆಗೆ ಕರೆಸಿಕೊಂಡಳು. ಆತ ಒಳ್ಳೆ ಧಾರ್ಮಿಕ. ಆತ ಆಕೆಗೆ ಹೇಳಿದ: ‘ನಾನು ನೀರುಮನೆಗೆ ಹೋಗಬೇಕಾಗಿದೆ. ನೀರಿನ ಪಾತ್ರೆಗಾಗಿ ಮನೆಗೆ ಹೋಗಿ ಬರುತ್ತೇನೆ.’ ಆ ಹೆಂಗಸು ಹೇಳಿದಳು: ‘ಎಲ್ಲ ಇಲ್ಲೆ ನಡೆಯಲಿ. ನಾನು ಪಾತ್ರೆ ಕೊಡುತ್ತೇನೆ.’ ಆಗ ಆತ ಹೇಳಿದ: ‘ಸಾಧ್ಯವಿಲ್ಲ. ನಾನು ಪ್ರಥಮತಃ ಯಾವ ಪಾತ್ರೆಯ ಎದುರು ನಿರ್ಲಜ್ಜಿತ ನಾದೆನೋ ಆ ಪಾತ್ರೆಯನ್ನೇ ಉಪಯೋಗಿಸುತ್ತೇನೆ. ಮತ್ತೆ ಹೊಸದೊಂದರ ಎದುರು ನಿರ್ಲಜ್ಜಿತನಾಗಲಾರೆ.’ ಹೀಗೆಂದು ಹೇಳಿ ಆತ ಮನೆಗೆ ಹಿಂದಿರುಗಿ ಹೊರಟುಹೋದ. ಆ ಹೆಂಗಸಿಗೂ ಬುದ್ಧಿ ಬಂತು. ಆತ ಹೊಸ ನೀರಿನ ಪಾತ್ರೆ ಎಂದು ಉಪಯೋಗಿಸಿದುದರ ಅರ್ಥ ಏನೆಂಬುದನ್ನು ಆಕೆ ತಿಳಿದುಕೊಂಡಳು.”
ನರೇಂದ್ರ ಪಿತೃವಿಯೋಗವಾದ ನಂತರ ಬಹಳ ಕಷ್ಟಕ್ಕೆ ಸಿಕ್ಕಿಕೊಂಡಿದ್ದಾನೆ. ತಾಯಿ ಮತ್ತು ಸೋದರ ಸೋದರಿಯರ ಉದರಪೋಷಣೆಗಾಗಿ ಕೆಲಸ ಹುಡುಕುತ್ತಿದ್ದಾನೆ. ವಿದ್ಯಾ ಸಾಗರನ ಬೋಬಜಾರ್ ಸ್ಕೂಲಿನಲ್ಲಿ ಕೆಲವು ಕಾಲ ಹೆಡ್ಮಾಸ್ಟರ್ ಕೆಲಸ ಮಾಡಿದ್ದ.
ಅಧರಸೇನ: “ಒಳ್ಳೇದು, ನರೇಂದ್ರನಿಗೆ ಯಾವುದಾದರೂ ಒಂದು ಕೆಲಸ ದೊರಕಿಸಿ ಕೊಟ್ಟರೆ ಮಾಡುತ್ತಾನೇನು ?”
ಶ್ರೀರಾಮಕೃಷ್ಣರು: “ಹೌದು ಮಾಡುತ್ತಾನೆ. ಆತ ತಾಯಿ, ಸೋದರ ಸೋದರಿಯರನ್ನು ಸಾಕಬೇಕಾಗಿದೆ.”
ಅಧರಸೇನ : “ಒಳ್ಳೇದು, ನರೇಂದ್ರನಿಗೆ ಐವತ್ತು ರೂಪಾಯಿನದೇ ಸಾಕೋ ಅಥವಾ ನೂರು ರೂಪಾಯಿನದು ಬೇಕೊ. ಆತ ನೂರು ರೂಪಾಯಿನದಕ್ಕೆ ಪ್ರಯತ್ನ ಮಾಡುತ್ತಾನೇನು?”
ಶ್ರೀರಾಮಕೃಷ್ಣರು: “ಪ್ರಾಪಂಚಿಕರು ಹಣವನ್ನು ಬಹಳವಾಗಿ ಪ್ರೀತಿಸುತ್ತಾರೆ-ಭಾವಿಸು ತ್ತಾರೆ, ಇಂಥ ವಸ್ತು ಈ ಜಗತ್ತಿನಲ್ಲಿ ಬೇರೊಂದು ಇಲ್ಲ ಎಂದು. ಒಮ್ಮೆ ಶಂಭುಮಲ್ಲಿಕ ಹೇಳಿದ: ‘ನನ್ನ ಸಕಲ ಐಶ್ವರ್ಯಗಳನ್ನೂ ಭಗವಂತನ ಪಾದಪದ್ಮಗಳಲ್ಲಿ ಅರ್ಪಿಸಬಿಡಬೇಕೆಂಬುದು ನನ್ನ ಇಚ್ಛೆ.’ ಆದರೆ ಭಗವಂತನಿಗೆ ಪ್ರಾಪಂಚಿಕ ಐಶ್ವರ್ಯ ಬೇಕಾಗಿರುವುದೆ? ಆತನಿಗೆ ಬೇಕಾಗಿದೆ-ಭಕ್ತರ ಜ್ಞಾನ, ಭಕ್ತಿ, ವಿವೇಕ, ವೈರಾಗ್ಯ.
“ರಾಧಾಕಾಂತ ದೇವಾಲಯದಿಂದ ಆಭರಣ ಕಳುವಾದಾಗ ಮಥುರಬಾಬು ಹೇಳಿದ: ‘ಹೇ ಭಗವಂತ, ನಿನ್ನ ಕೈಯಲ್ಲಿ ನಿನ್ನ ಆಭರಣಗಳನ್ನು ರಕ್ಷಿಸಿಕೊಳ್ಳಲಾಗಲಿಲ್ಲವಲ್ಲ! ಇದು ಎಂಥಾ ನಾಚಿಕೆಗೇಡಿತನ!’ ಆತ ಒಮ್ಮೆ ನನಗೆ ಒಂದು ತಾಲ್ಲೂಕನ್ನು ಜಹಗೀರಾಗಿ ಕೊಡ ಬೇಕೆಂದು ಇಚ್ಛೆಪಟ್ಟು, ಅದರ ಸಂಬಂಧವಾಗಿ ಹೃದೂನೊಡನೆ ಸಮಾಲೋಚನೆ ನಡೆಸುತ್ತಿದ್ದ. ನಾನು ಕಾಳೀದೇವಾಲಯದಿಂದಲೇ ಎಲ್ಲವನ್ನೂ ಕೇಳಿದೆ. ಬಳಿಕ ನಾನು ಆತನಿಗೆ ಹೇಳಿದೆ: ‘ದಯವಿಟ್ಟು ಆ ಪ್ರಸ್ತಾಪವನ್ನೇ ಬಿಟ್ಟುಬಿಡು. ನೀನು ಹಾಗೆ ಮಾಡಿದ್ದೇ ಆದರೆ ಅದು ನನಗೆ ಬಹಳ ದೊಡ್ಡ ವಿಪತ್ತನ್ನು ತಂದೊಡ್ಡಿಬಿಡುತ್ತದೆ.’”
ಅಧರಸೇನ: “ನಾನು ನಿಸ್ಸಂದೇಹವಾಗಿ ಹೇಳುತ್ತೇನೆ, ಈ ಜಗತ್ತು ಸೃಷ್ಟಿಯಾದಂದಿ ನಿಂದ ನಿಮ್ಮಂಥವರು ಆರೇಳು ಜನಕ್ಕಿಂತ ಹೆಚ್ಚಾಗಿ ಜನ್ಮತಳೆದಿಲ್ಲ.”
ಶ್ರೀರಾಮಕೃಷ್ಣರು: “ಅದು ಹೇಗೆ? ನಿಶ್ಚಯವಾಗಿಯೂ ತ್ಯಾಗೀ ಪುರುಷರಿದ್ದಾರೆ. ಐಶ್ವರ್ಯವನ್ನು ತ್ಯಜಿಸಿದೊಡನೆಯೇ ಜನರಿಗೆ ಗೊತ್ತಾಗಿಬಿಡುತ್ತದೆ, ಆತ ಯಾರು ಎಂಬುದು. ಆದರೆ ಇದೂ ನಿಜ, ಜನರಿಗೆ ಗೊತ್ತಾಗದವರೂ ಇದ್ದಾರೆ. ಪಶ್ಚಿಮ ಭಾರತದಲ್ಲಿ ಅಂಥವರಿಲ್ಲ?”
ಅಧರಸೇನ: “ಕಲ್ಕತ್ತದಲ್ಲಿ ನನಗೆ ತಿಳಿದಿರುವ ಹಾಗೆ ಒಬ್ಬರಿದ್ದಾರೆ-ದೇವೇಂದ್ರನಾಥ ಠಾಕುರ್.”
ಶ್ರೀರಾಮಕೃಷ್ಣರು: “ಏನು ಹೇಳಿದೆ? ಆತನಷ್ಟು ಈ ಪ್ರಾಪಂಚಿಕ ಸುಖಗಳನ್ನು ಅನುಭವಿಸಿರತಕ್ಕಂಥವರು ಬೇರೆ ಯಾರಿದ್ದಾರೆ? ಒಮ್ಮೆ ನಾನು ಮಥುರಬಾಬುವಿನೊಡನೆ ಆತನ ಮನೆಗೆ ಹೋಗಿದ್ದೆ. ಚಿಕ್ಕಪುಟ್ಟ ಮಕ್ಕಳು ಆತನಿಗೆ ಬೇಕಾದಷ್ಟು ಇದ್ದುವು. ಮನೆ ಡಾಕ್ಟರ್ ಒಂದು ಔಷಧ ಬರೆಯುತ್ತಾ ಕುಳಿತಿದ್ದ. ಆತನಿಗೆ ಎಂಟು ಗಂಡು ಮಕ್ಕಳು ಇವೆ. ಅಲ್ಲದೆ ಹೆಣ್ಣು ಮಕ್ಕಳೂ ಇದ್ದಾರೆ. ಅಂಥವನು ಭಗವಂತನ ಧ್ಯಾನಮಾಡದೆ ಇನ್ನು ಬೇರೆ ಯಾರು ಮಾಡಬೇಕು? ಅಷ್ಟು ಸುಖೋಪಭೋಗಗಳನ್ನು ಅನುಭವಿಸಿಯೂ ಆತ ಭಗವಂತನ ಧ್ಯಾನಮಾಡದೆ ಇದ್ದಿದ್ದರೆ ಜನ ಆತನಿಗೆ ಛೀಮಾರಿ ಮಾಡಿಬಿಡುತ್ತಿದ್ದರು.”
ನಿರಂಜನ: “ಆದರೆ ಆತ ತನ್ನ ತಂದೆಯ ಸಾಲವನ್ನೆಲ್ಲಾ ತೀರಿಸಿಬಿಟ್ಟ.”
ಶ್ರೀರಾಮಕೃಷ್ಣರು: “ಆ ಮಾತುಕತೆಗಳನ್ನೆಲ್ಲಾ ಒಂದು ಕಡೆಗೆ ಕಟ್ಟಿಡು. ಸುಮ್ಮನೆ ನನ್ನನ್ನು ರೇಗಿಸಬೇಡ. ಶಕ್ತಿ ಇದ್ದೂ ತಂದೆಯ ಸಾಲವನ್ನು ತೀರಿಸದೆ ಇದ್ದವನನ್ನು ಮನುಷ್ಯ ಅಂತ ಕರೆಯಬಹುದೇ? ಆದರೆ ಸಂಸಾರಿಗಳು ಪೂರ್ಣವಾಗಿ ಸಂಸಾರದಲ್ಲಿ ಮುಳುಗಿಹೋಗಿರುತ್ತಾರೆ. ಅವರಿಗೆ ಹೋಲಿಸಿದರೆ ಆತ ಎಷ್ಟೋ ಮೇಲು. ಆತನಿಂದ ಅವರು ಎಷ್ಟೋ ಕಲಿತುಕೊಳ್ಳಬಹುದು.
“ನಿಜವಾದ ತ್ಯಾಗೀ ಭಕ್ತನಿಗೂ ಸಂಸಾರೀ ಭಕ್ತನಿಗೂ ಅಜಗಜಾಂತರ ವ್ಯತ್ಯಾಸ. ನಿಜವಾದ ಸಂನ್ಯಾಸಿ, ಅಂದರೆ ತ್ಯಾಗೀ ಭಕ್ತ ಜೇನುಹುಳು ಇದ್ದ ಹಾಗೆ. ಜೇನುಹುಳು ಹೂವಿನ ಮೇಲೆ ಹೊರತು ಬೇರೆ ಯಾವುದರ ಮೇಲೆಯೂ ಕೂರದು. ಮಧುವನ್ನು ಹೊರತು ಬೇರೆ ಏನನ್ನೂ ಸೇವಿಸದು. ಆದರೆ ಸಂಸಾರಿ ಭಕ್ತ ಸಾಮಾನ್ಯ ನೊಣ ಇದ್ದ ಹಾಗೆ. ಅದು ಸಿಹಿ ತಿಂಡಿಗಳ ಮೇಲೂ ಕೂರುತ್ತದೆ, ಕೊಳೆತ ಗಾಯಗಳ ಮೇಲೂ ಕೂರುತ್ತದೆ. ಆತ ಈ ನಿಮಿಷ ಭಗವದ್ಭಾವನೆಯಿಂದ ತುಂಬಿತುಳುಕಾಡುತ್ತಿದ್ದವನು ಮರುನಿಮಿಷ ಕಾಮಕಾಂಚನಗಳಲ್ಲಿ ಮತ್ತನಾಗಿರುತ್ತಾನೆ.
“ನಿಜವಾದ ತ್ಯಾಗೀ ಭಕ್ತ ಚಾತಕಪಕ್ಷಿ ಇದ್ದ ಹಾಗೆ. ಅದು ಸ್ವಾತಿ ಮಳೆಯ ನೀರನ್ನು ವಿನಾ ಬೇರೆ ಯಾವ ನೀರನ್ನೂ ಕುಡಿಯದು. ಏಳು ಸಮುದ್ರಗಳಲ್ಲೂ, ಎಲ್ಲಾ ನದಿಗಳಲ್ಲೂ ನೀರು ತುಂಬಿತುಳುಕಾಡುತ್ತಿದ್ದರೂ ಅವೊಂದನ್ನೂ ಅದು ಮುಟ್ಟದು. ತ್ಯಾಗೀ ಭಕ್ತ ಕಾಮಕಾಂಚನಗಳನ್ನು ಇಕ್ಕಳದಿಂದಲೂ ಮುಟ್ಟುವುದಿಲ್ಲ. ಕಾಮಕಾಂಚನಗಳನ್ನು ಹತ್ತಿರ ಇಟ್ಟುಕೊಳ್ಳುವುದಿಲ್ಲ, ಆಸಕ್ತಿ ಉಂಟಾಗಿಬಿಡಬಹುದೆಂದು.”
ಅಧರಸೇನ: “ಚೈತನ್ಯದೇವನೂ ಪ್ರಾಪಂಚಿಕ ಸುಖಗಳನ್ನು ಅನುಭವಿಸಿದ್ದನಲ್ಲ.”
ಶ್ರೀರಾಮಕೃಷ್ಣರು ಆಶ್ಚರ್ಯಚಕಿತರಾಗಿ: “ಏನು? ಯಾವ ಪ್ರಾಪಂಚಿಕ ಸುಖಗಳನ್ನು?”
ಅಧರಸೇನ: “ಪಾಂಡಿತ್ಯ! ಗೌರವ! ಇವುಗಳ ಸುಖವನ್ನು.”
ಶ್ರೀರಾಮಕೃಷ್ಣರು : “ಅನ್ಯರ ದೃಷ್ಟಿಗೆ ಅದು ಗೌರವವಾಗಿ ತೋರಬಹುದು. ಆದರೆ ಆತನ ದೃಷ್ಟಿಗೆ ಅದು ಏನೂ ಇಲ್ಲ. ನೀನು ನನಗೆ ಗೌರವ ತೋರಿಸುತ್ತ ಇದ್ದೀಯೆ, ಹಾಗೆ ನಿರಂಜನ ಕೂಡ. ಆದರೆ ನನ್ನ ದೃಷ್ಟಿಯಿಂದ ಎರಡೂ ಒಂದೇ. ಸತ್ಯವಾಗಿ ಹೇಳುತ್ತೇನೆ: “ಒಬ್ಬ ಧನಿಕನನ್ನು ಕೈಗೆ ಹಾಕಿಕೊಳ್ಳಬೇಕೆಂಬ ಭಾವನೆಯೇ ನನ್ನ ತಲೆಯನ್ನು ಹೊಗದು. ಸುರೇಂದ್ರ ಒಮ್ಮೆ ಹೇಳಿದನಂತೆ, ನನ್ನನ್ನು ಉದ್ಧಾರಮಾಡಿಬಿಡುವವನ ಹಾಗೆ, ನಾನು ರಾಖಾಲನನ್ನು ನನ್ನ ಹತ್ತಿರ ಇಟ್ಟುಕೊಂಡಿರುವುದರಿಂದ ಆತನ ತಂದೆ ನನ್ನ ಮೇಲೆ ಮೊಕದ್ದಮೆ ಹೂಡಿಬಿಡ ಬಹುದೆಂದು. ಮನಮೋಹನ ಈ ಸಮಾಚಾರವನ್ನು ನನಗೆ ತಿಳಿಸಿದಾಗ, ನಾನು ರೇಗಿ ಹೇಳಿದೆ: ‘ಯಾವನೋ ಈ ಸುರೇಂದ್ರ? ಅವನಿಗೆ ಎದೆಕೆಚ್ಚು ಎಷ್ಟಿರಬೇಕು ಹಾಗೆ ಮಾತಾಡ ಬೇಕಾಗಿದ್ದರೆ? ಅವನಿಗೆ ಸೇರಿದ ಒಂದು ಜಮಖಾನ ಮತ್ತು ತಲೆದಿಂಬು ಇಲ್ಲಿ ಇವೆ. ಅವನು ಸ್ವಲ್ಪ ಹಣ ಕೊಡುತ್ತಾನೆ. ಅದಕ್ಕೋ ಇಷ್ಟೊಂದು ಅಹಂಕಾರದ ಮಾತುಗಳು?”
ಅಧರಸೇನ: “ತಿಂಗಳಿಗೆ ಹತ್ತು ರೂಪಾಯಿ ಕೊಡುತ್ತಾ ಇದ್ದಾನಂತೆ. ಅಲ್ಲವೆ?”
ಶ್ರೀರಾಮಕೃಷ್ಣರು: “ಹತ್ತು ರೂಪಾಯಿಯಿಂದ ಎರಡು ತಿಂಗಳು ನಡೆಯುತ್ತದೆ. ಭಕ್ತರು ಇಲ್ಲಿ ಇರುತ್ತಾರೆ-ಅವರಿಗಾಗಿ ಅವನು ಕೊಡುತ್ತಾನೆ. ಪುಣ್ಯ ಕಟ್ಟಿಕೊಳ್ಳುವವನು ಅವನು. ಅದರಿಂದ ನನಗೆ ಬಂದುದೇನು? ನಾನು ರಾಖಾಲ, ನರೇಂದ್ರ ಇವರೇ ಮೊದಲಾದವರನ್ನು ಪ್ರೀತಿಸುತ್ತಿದ್ದೇನೆ. ಅದು ಸ್ವಾರ್ಥಕ್ಕಾಗಿಯೇನು?”
ಮಾಸ್ಟರ್: “ನಿಮ್ಮದು ತಾಯಿಯ ಪ್ರೀತಿಯ ಹಾಗೆ.”
ಶ್ರೀರಾಮಕೃಷ್ಣರು: “ತಾಯಿಯ ಪ್ರೀತಿ ನಿಃಸ್ವಾರ್ಥವಾದದ್ದೇ. ಆದರೂ ಆ ಪ್ರೀತಿಯ ಹಿನ್ನೆಲೆಯಲ್ಲಿ ಮಕ್ಕಳು ಬೆಳೆದು ಮುಂದೆ ತನ್ನನ್ನು ಕಾಪಾಡುವರೆಂಬ ನಿರೀಕ್ಷಣೆ ಇದೆ. ಆದರೆ ನಾನು ಇವರನ್ನು ಪ್ರೀತಿಸುತ್ತೇನೆ. ಇವರಲ್ಲಿ ಸಾಕ್ಷಾತ್ ಭಗವಂತನನ್ನೇ ನೋಡಿ. ಇದು ಬರಿದೆ ಮಾತಲ್ಲ.
(ಅಧರಸೇನನಿಗೆ) “ಇಲ್ಲಿ ಕೇಳು. ದೀಪವನ್ನು ಹೊತ್ತಿಸಿದ ನಂತರ ದೀಪದ ಚಿಟ್ಟೆಗಳಿಗೆ ಅಭಾವವಿರದು. ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡರೆ ಆತ ಎಲ್ಲವನ್ನೂ ದೊರಕಿಸಿ ಕೊಟ್ಟು ಬಿಡುತ್ತಾನೆ-ಯಾವುದರ ಅಭಾವವೂ ಇರದು. ಭಗವಂತ ಹೃದಯಮಧ್ಯದಲ್ಲಿ ಬಂದು ನೆಲಸಿದರೆ, ಆತನಿಗೆ ಸೇವೆ ಸಲ್ಲಿಸಲು ಅನೇಕ ಮಂದಿ ಬರುತ್ತಾರೆ.
“ಒಮ್ಮೆ ಎಳೆ ವಯಸ್ಸಿನ ಸಂನ್ಯಾಸಿ ಒಬ್ಬ ಗೃಹಸ್ಥರ ಮನೆಗೆ ಭಿಕ್ಷೆಗೆ ಹೋದ. ಆತ ಆಜನ್ಮ ಸಂನ್ಯಾಸಿ. ಸಂಸಾರದ ಎಳ್ಳಷ್ಟೂ ವಿಷಯ ಗೊತ್ತಿರಲಿಲ್ಲ. ಆ ಮನೆಯ ಒಬ್ಬ ಯುವತಿ ಭಿಕ್ಷೆ ನೀಡಿದಳು. ಆತ ಆಕೆಯ ತಾಯನ್ನು ಕೇಳಿದ: ‘ತಾಯೆ, ಈಕೆಯ ಎದೆಯ ಮೇಲೆ ಕುರು ಎದ್ದಿವೆಯೇನು?’ ತಾಯಿ ಹೇಳಿದಳು: ‘ಇಲ್ಲ ಮಗು. ಈಕೆಯ ಹೊಟ್ಟೆಯಲ್ಲಿ ಮಕ್ಕಳಾಗುವುವು ಎಂದು ಭಗವಂತ ಈಕೆಗೆ ಸ್ತನ ಕೊಟ್ಟಿದ್ದಾನೆ-ಈ ಸ್ತನಗಳಿಂದ ಮಕ್ಕಳು ಹಾಲು ಕುಡಿಯುತ್ತವೆ.’ ಆಗ ಆ ಸಂನ್ಯಾಸಿ ಹೇಳಿದ: ‘ಹಾಗಾದರೆ ಇನ್ನೇಕೆ ಚಿಂತೆ? ಇನ್ನು ನಾನೇಕೆ ಭಿಕ್ಷೆಗೆ ಬರಲಿ? ಯಾರು ನನ್ನನ್ನು ಸೃಷ್ಟಿಸಿದ್ದಾನೊ ಆತ ನನಗೆ ಆಹಾರ ಕೊಡುತ್ತಾನೆ.’
“ಕೇಳು, ಯಾರು ತನ್ನ ಉಪಪತಿಗಾಗಿ ಸರ್ವಸ್ವವನ್ನೂ ತ್ಯಜಿಸಿಬಂದಳೊ, ಅವಳು, ಅವಶ್ಯವೆನಿಸಿದರೆ, ‘ಹೇ ನೀಚ! ನಿನ್ನ ಎದೆಯ ಮೇಲೆ ಕುಳಿತು ನಿನ್ನನ್ನು ನುಂಗಿಬಿಡುತ್ತೇನೆ’ ಅಂತ ಹೇಳುತ್ತಾಳೆ.
“ತೋತಾಪುರಿ ಒಮ್ಮೆ ಯಾರೊ ಒಬ್ಬ ರಾಜ ಚಿನ್ನದ ತಟ್ಟೆ ಬಟ್ಟಲು ಉಪಯೋಗಿಸಿ ಸಾಧುಗಳಿಗೆ ಸಂತರ್ಪಣೆ ಏರ್ಪಡಿಸಿದ್ದುದರ ವಿಷಯವಾಗಿ ನನಗೆ ತಿಳಿಸಿದ. ಕಾಶಿಯ ಮಠಗಳಲ್ಲಿ ನೋಡಿದ್ದೇನೆ, ಮಠಾಧೀಶರಿಗೆ ಜನ ಎಷ್ಟು ಗೌರವ ತೋರಿಸುತ್ತಾರೆ ಎಂಬುದನ್ನು. ಉತ್ತರದೇಶದ ದೊಡ್ಡ ದೊಡ್ಡ ಧನಿಕರು ‘ಏನಪ್ಪಣೆ’ ಅಂತ ಕೈಕಟ್ಟಿ ನಿಂತಿರು ತ್ತಿದ್ದರು! ಆದರೆ ನಿಜವಾದ ಸಂನ್ಯಾಸಿ, ಅಂದರೆ ನಿಜವಾದ ತ್ಯಾಗೀಪುರುಷ, ಚಿನ್ನದ ತಟ್ಟೆಗಳಿಗೂ ಹಾತೊರೆಯುವುದಿಲ್ಲ. ಗೌರವಕ್ಕೂ ಹಾತೊರೆಯುವುದಿಲ್ಲ. ಆತನಿಗೆ ಯಾವುದರ ಅಭಾವವೂ ಇಲ್ಲದ ಹಾಗೆ ಭಗವಂತ ನೋಡಿಕೊಳ್ಳುತ್ತಾನೆ. ತನ್ನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಲು ಏನೇನು ಬೇಕೊ, ಎಲ್ಲವನ್ನೂ ಭಗವಂತ ಭಕ್ತನಿಗೆ ದೊರಕಿಸಿಕೊಡುತ್ತಾನೆ.
(ಅಧರಸೇನನಿಗೆ) “ನೀನು ಒಬ್ಬ ಕಾರ್ಯನಿರ್ವಾಹಕ. ನಿನಗೆ ಬೇರೆ ಇನ್ನೇನು ಹೇಳಲಿ? ಏನು ಸರಿ ಅಂತ ತೋರುವುದೋ ಹಾಗೇ ಮಾಡು. ನಾನೊಬ್ಬ ದಡ್ಡ-ನಿರಕ್ಷರಕುಕ್ಷಿ.”
ಅಧರಸೇನ, ನಗುತ್ತ ಭಕ್ತರಿಗೆ: “ಈಗ ಇವರು ನನ್ನನ್ನು ಪರೀಕ್ಷಿಸುತ್ತಿದ್ದಾರೆ.”
ಶ್ರೀರಾಮಕೃಷ್ಣರು, ನಗುತ್ತ : “ನಿವೃತ್ತಿಯೇ ಒಳ್ಳೆಯದು. ಕೇಳಲಿಲ್ಲವೇ ನೀನು, ಸಂಬಳದ ರಶೀದಿಗೆ ನಾನು ರುಜು ಹಾಕದೆ ಹೋದುದನ್ನು? ಭಗವಂತನೇ ವಸ್ತು, ಉಳಿದುವೆಲ್ಲಾ ಅವಸ್ತು.”
ಹಾಜರಾ ಕೊಠಡಿಯನ್ನು ಪ್ರವೇಶಿಸಿ ಭಕ್ತರೊಡನೆ ನೆಲದ ಮೇಲೆ ಕುಳಿತುಕೊಳ್ಳು ತ್ತಿದ್ದಾನೆ. ಹಾಜರಾ ಆಗಾಗ ಹೇಳುತ್ತಿರುತ್ತಾನೆ : “ಸೋಠ್ಹಮ್! ಸೋಠ್ಹಮ್,” “ನಾನೇ ಅವನು! ನಾನೇ ಅವನು!” ಎಂಬುದಾಗಿ. ಲಾಟು ಮೊದಲಾದವರಿಗೆ ಹೇಳುತ್ತಾನೆ: ಭಗವಂತನನ್ನು ಫಲಪುಷ್ಪಾದಿಗಳಿಂದ ಪೂಜಿಸುವುದರಿಂದ ದೊರೆಯುವ ಪ್ರಯೋಜನ ವೇನು? ಇದು, ಅವನಿಗೆ ಸೇರಿದುದನ್ನೇ ಅವನಿಗೆ ಅರ್ಪಿಸಿದ ಹಾಗಾಗುತ್ತದೆ.” ಇದನ್ನು ಒಮ್ಮೆ ಆತ ನರೇಂದ್ರನಿಗೆ ಹೇಳಿದ್ದ.
ಈಗ ಪರಮಹಂಸರು ಹಾಜರಾನೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನಾನು ಲಾಟುವಿಗೆ ವಿವರಿಸಿ ಹೇಳಿದೆ, ಭಕ್ತ ನಿಜವಾಗಿ ಯಾರನ್ನು ಪೂಜೆಮಾಡುತ್ತಾನೆ ಎಂಬುದರ ವಿಷಯವಾಗಿ.”
ಹಾಜರಾ: “ಭಕ್ತ, ತಾನು ತನಗೇ ಪ್ರಾರ್ಥನೆಮಾಡಿಕೊಳ್ಳುತ್ತಾನೆ.”
ಶ್ರೀರಾಮಕೃಷ್ಣರು: “ಇದು ತುತ್ತತುದಿಯ ಅವಸ್ಥೆಯ ಮಾತುಕತೆ. ಆ ಅವಸ್ಥೆಯನ್ನು ಮುಟ್ಟಲೋಸುಗವೇ ಸಾಧನೆ-ಭಜನೆ-ಆತನ ನಾಮಗುಣಕೀರ್ತನೆ. ತನ್ನಲ್ಲಿ ತನ್ನನ್ನು ಅರಿತು ಕೊಂಡುಬಿಟ್ಟುದೇ ಆದರೆ ಅಲ್ಲಿಗೆ ಎಲ್ಲ ಮುಗಿದ ಹಾಗೆ. ಇದನ್ನು ಅರಿತುಕೊಳ್ಳುವುದಕ್ಕಾಗಿಯೇ ಸಾಧನೆ. ಈ ಶರೀರಧಾರಣೆ ಈ ಉದ್ದೇಶಕ್ಕಾಗಿಯೇ. ಚಿನ್ನದ ಪ್ರತಿಮೆಯನ್ನು ಎರಕ ಹೊಯ್ಯದವರೆಗೆ ಅಚ್ಚಿನ ಆವಶ್ಯಕತೆ; ಹೊಯ್ದನಂತರ ಅಚ್ಚನ್ನು ಬಿಸಾಡಿಬಿಡುತ್ತಾರೆ. ಭಗವಂತನ ಸಾಕ್ಷಾತ್ಕಾರವಾದನಂತರ ಈ ಶರೀರವನ್ನು ತ್ಯಜಿಸಿಬಿಡಬಹುದು.
“ಭಗವಂತ ಕೇವಲ ಒಳಗೇ ಇಲ್ಲ; ಒಳಗೂ ಇದ್ದಾನೆ, ಹೊರಗೂ ಇದ್ದಾನೆ. ಕಾಳೀ ದೇವಾಲಯದಲ್ಲಿ ಭಗವತಿ ನನಗೆ ತೋರಿಸಿದಳು ಎಲ್ಲವೂ ಚಿನ್ಮಯವಾಗಿರುವುದನ್ನು. ಅಂದರೆ ಎಲ್ಲವೂ ತಾನೇ ಆಗಿರುವುದನ್ನು-ಪ್ರತಿಮೆ, ನಾನು, ಪೂಜಾಪಾತ್ರೆಗಳು, ಹೊಸಲು, ಅಮೃತಶಿಲೆಯ ನೆಲ, ಎಲ್ಲವೂ ಚಿನ್ಮಯವಾಗಿರುವುದನ್ನು.
“ಈ ಸಾಕ್ಷಾತ್ಕಾರವನ್ನು ಹೊಂದಲೋಸುಗವೇ ಪ್ರಾರ್ಥನೆ, ಸಾಧನೆ, ಭಜನೆ, ನಾಮಗುಣ ಕೀರ್ತನೆ ಮಾಡುವುದು. ಇದಕ್ಕಾಗಿಯೇ ಆತನನ್ನು ಪ್ರೀತಿಸುವುದು. ಆ ಹುಡುಗರು ಕೆಳ ಅಂತಸ್ತಿನಲ್ಲಿ ಇದ್ದಾರೆ; ಇನ್ನೂ ಅವರು ಆ ಉಚ್ಚ ಅವಸ್ಥೆಯನ್ನು ಮುಟ್ಟಿಲ್ಲ. ಅವರು ಭಕ್ತಿ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಅವರಿಗೆ ‘ಸೋಠ್ಹಮ್’, ‘ನಾನೇ ಅವನು’ ಇತ್ಯಾದಿ ಏನೂ ಹೇಳಬೇಡ.”
ಹಕ್ಕಿ ಹೇಗೆ ತನ್ನ ಮರಿಗಳನ್ನು ತನ್ನ ರೆಕ್ಕೆಯಿಂದ ಮುಚ್ಚಿ ರಕ್ಷಿಸುವುದೊ, ಹಾಗೆ ಪರಮಹಂಸರು ತಮ್ಮ ಭಕ್ತರನ್ನು ರಕ್ಷಿಸುತ್ತಿದ್ದಾರೆ.
ಅಧರಸೇನ ಮತ್ತು ನಿರಂಜನ ಉಪಾಹಾರ ಮಾಡಲು ಜಗಲಿಯ ಕಡೆ ಹೋಗುತ್ತಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಹಿಂದಿರುಗಿ ಬಂದರು.
ಅಧರಸೇನ ನಗುತ್ತ : “ನಾವೆಲ್ಲ ಇಷ್ಟೊಂದು ಮಾತಾಡಿದೆವು. (ಮಾಸ್ಟರನ್ನು ತೋರಿಸಿ) ಒಂದು ಮಾತೂ ಆಡಲಿಲ್ಲವಲ್ಲ ಈತ!”
ಶ್ರೀರಾಮಕೃಷ್ಣರು : “ಕೇಶವಸೇನನ ಸಮಾಜದಲ್ಲಿ ನಾಲ್ಕು ಡಿಗ್ರಿ ಪಡೆದುಕೊಂಡಿದ್ದ ಒಬ್ಬ ಯುವಕ ಇದ್ದ. ಜನ ನನ್ನೊಡನೆ ವಾದಿಸುವುದನ್ನು ನೋಡಿ ಆತ ಸುಮ್ಮನೆ ನಗುತ್ತಿರುತ್ತಿದ್ದ. ಆತ ಹೇಳುತ್ತಿದ್ದ: ‘ಇವರೊಡನೆಯೇ ತರ್ಕಕ್ಕೆ ಹೋಗುವುದು! ಇದು ಎಂಥ ತಿಳಿಗೇಡಿತನ!’ ಆತನನ್ನು, ಸ್ವಲ್ಪ ಕಾಲವಾದ ನಂತರ, ಮತ್ತೆ ಕೇಶವಸೇನನ ಸಮಾಜದಲ್ಲಿ ನೋಡಿದೆ-ಆದರೆ ಆ ಹಿಂದಿನ ಕಾಂತಿ ಆತನ ಮುಖದಲ್ಲಿರಲಿಲ್ಲ.”
ಶ್ರೀರಾಮಕೃಷ್ಣರ ರಾತ್ರಿ ಆಹಾರ-ಭಗವತಿ ಕಾಳಿಗೆ ಅರ್ಪಿಸಿದ ಒಂದೆರಡು ಪೂರಿ ಮತ್ತು ಒಂದು ಸ್ವಲ್ಪ ರವೆ ಪಾಯಸ ಮಾತ್ರ. ನೆಲದ ಮೇಲೆ ಕುಳಿತು ಆಹಾರ ತೆಗೆದು ಕೊಳ್ಳುತ್ತಿದ್ದಾರೆ. ಮಾಸ್ಟರ್ ಮತ್ತು ಲಾಟು ಕೊಠಡಿಯಲ್ಲಿದ್ದಾರೆ. ಭಕ್ತರು ಸಂದೇಶ ಮುಂತಾದ ಸಿಹಿ ತಿಂಡಿಗಳನ್ನು ಪರಮಹಂಸರಿಗಾಗಿ ತಂದಿದ್ದಾರೆ. ಒಂದು ಚೂರು ಸಂದೇಶವನ್ನು ಮುಟ್ಟಿ ಲಾಟುವನ್ನು ಕೇಳುತ್ತಿದ್ದಾರೆ: “ಇದನ್ನು ತಂದ ನೀಚನಾರು?” ಅದನ್ನು ರವೆ ಪಾಯಸದ ಬಟ್ಟಲಿನಿಂದ ತೆಗೆದು ಹೊರಕ್ಕೆ ಹಾಕುತ್ತಿದ್ದಾರೆ. ಮಾಸ್ಟರ್ ಮತ್ತು ಲಾಟುವಿಗೆ ಹೇಳುತ್ತಿದ್ದಾರೆ: “ನನಗೆ ಆತನ ವಿಷಯವೆಲ್ಲಾ ಚೆನ್ನಾಗಿ ಗೊತ್ತು. ಆತನ ಶೀಲ ಚೆನ್ನಾಗಿಲ್ಲ.”
ಲಾಟು: “ನಿಮಗೆ ಈ ಸಿಹಿ ತಿಂಡಿಯನ್ನು ಕೊಡಲೆ?”
ಶ್ರೀರಾಮಕೃಷ್ಣರು: “ಕಿಶೋರಿ ತಂದಿದ್ದಾನೆ.”
ಲಾಟು: “ಇದು ನಿಮಗೆ ಒಗ್ಗುವುದೆ?”
ಶ್ರೀರಾಮಕೃಷ್ಣರು, ನಗುತ್ತ: “ಹೌದು.”
ಮಾಸ್ಟರ್ ಆಂಗ್ಲ ವಿದ್ಯಾಭ್ಯಾಸ ಪಡೆದಿದ್ದಾನೆ, ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ: “ಸಿಕ್ಕಿಸಿಕ್ಕಿದವರು ತರುವುದನ್ನೆಲ್ಲಾ ನಾನು ತಿನ್ನಲಾರೆ. ನೀನು ಇದನ್ನು ಒಪ್ಪುತ್ತೀಯಾ?”
ಮಾಸ್ಟರ್: “ಕ್ರಮೇಣ ಎಲ್ಲವನ್ನೂ ಒಪ್ಪಬೇಕಾಗುತ್ತದೆ.”
ಶ್ರೀರಾಮಕೃಷ್ಣರು: “ನಿಜ, ನೀನು ಹೇಳುವುದು ಸರಿ.”
ಊಟವಾದ ನಂತರ ಆ ಅರ್ಧಚಂದ್ರಾಕೃತಿಯ ಜಗಲಿಗೆ ಹೋಗಿ ಕೈತೊಳೆದುಕೊಳ್ಳು ತ್ತಿದ್ದಾರೆ. ಮಾಸ್ಟರ್ ಅವರ ಕೈಗೆ ನೀರು ಹಾಕುತ್ತಿದ್ದಾನೆ. ಪರಮಹಂಸರು ಮಾಸ್ಟರನ್ನು ಕೇಳುತ್ತಿದ್ದಾರೆ: “ಹಾಗಾದರೆ, ನಾರಾಯಣನಿಗೆ ಒಂದು ರೂಪಾಯಿ ಕೊಡುತ್ತೀಯೆ ತಾನೆ?” ಮಾಸ್ಟರ್ ಹೇಳುತ್ತಿದ್ದಾನೆ: “ನಿಸ್ಸಂದೇಹವಾಗಿ.”
ಶರತ್ಕಾಲದ ನೀಲಾಕಾಶದಲ್ಲಿ ಚಂದ್ರೋದಯವಾಗಿದೆ. ಚಂದ್ರ ಭಾಗೀರಥಿಯ ವಕ್ಷಸ್ಥಲದ ಮೇಲೆ ಸುಮ್ಮನೆ ನಲಿದಾಡುತ್ತಿದ್ದಾನೆ. ಈಗ ಇಳಿತ. ಭಾಗೀರಥಿ ದಕ್ಷಿಣವಾಹಿನಿಯಾಗಿದ್ದಾಳೆ.
೧೪ನೇ ಸೆಪ್ಟೆಂಬರ್ ೧೮೮೪, ಭಾದ್ರಪದ ಕೃಷ್ಣ ದಶಮಿ, ಭಾನುವಾರ
ಪರಮಹಂಸರು ತಮ್ಮ ಕೊಠಡಿಯಲ್ಲಿ ನರೇಂದ್ರ, ಭವನಾಥ, ಮುಖ್ಯೋಪಾಧ್ಯಾಯ ಸೋದರರು ಮತ್ತು ಇನ್ನೂ ಕೆಲವು ಭಕ್ತರೊಡನೆ ಕುಳಿತುಕೊಂಡಿದ್ದಾರೆ. ರಾಖಾಲ ಬಲರಾಮನೊಡನೆ ಬೃಂದಾವನದಲ್ಲಿ ಇದ್ದಾನೆ. ಈಗ ಆತ ಅಲ್ಲಿ ಜ್ವರದಿಂದ ನರಳುತ್ತಿದ್ದಾನೆ. ನರೇಂದ್ರ ಈಗ ಸಮೀಪಿಸುತ್ತಿರುವ “ಲಾ” ಪರೀಕ್ಷೆಗೆ ಸಿದ್ಧನಾಗುತ್ತಿದ್ದಾನೆ.
ಜ್ಞಾನಬಾಬು ಬಂದಿದ್ದಾನೆ. ಆತ ನಾಲ್ಕು ವಿಶ್ವವಿದ್ಯಾನಿಲಯದ ಡಿಗ್ರಿಗಳನ್ನು ಪಡೆದಿದ್ದಾನೆ. ಸರಕಾರಿ ಕೆಲಸದಲ್ಲಿದ್ದಾನೆ. ಈಗ ಘಂಟೆ ಬೆಳಗಿನ ಹನ್ನೊಂದು.
ಶ್ರೀರಾಮಕೃಷ್ಣರು ಜ್ಞಾನಬಾಬುವನ್ನು ನೋಡಿ: “ಏನಪ್ಪ ಇದು! ಇದ್ದಕ್ಕಿದ್ದ ಹಾಗೆ ಜ್ಞಾನೋದಯ!”
ಜ್ಞಾನಬಾಬು ನಗುತ್ತ : “ಹೌದು, ಬಹಳ ಸುಕೃತ ಮಾಡಿದ್ದರೆ ತಾನೇ ಜ್ಞಾನೋದಯ ವಾಗಬೇಕಾದರೆ.”
ಶ್ರೀರಾಮಕೃಷ್ಣರು: “ನಿನ್ನ ಹೆಸರೇ ಜ್ಞಾನ. ಅಂಥಾದರಲ್ಲಿ ನಿನಗೆ ಅಜ್ಞಾನ ಎಲ್ಲಿಂದ? ಓ, ನನಗೆ ಈಗ ಅರ್ಥವಾಯಿತು. ಎಲ್ಲಿ ಜ್ಞಾನವಿದೆಯೋ ಅಲ್ಲಿ ಅಜ್ಞಾನವೂ ಇರುತ್ತದೆ. ವಸಿಷ್ಠದೇವ ದೊಡ್ಡ ಜ್ಞಾನಿ, ಆದರೂ ಪುತ್ರಶೋಕಾನ್ವಿತನಾಗಿ ಅತ್ತ. ಆದ್ದರಿಂದ ನೀನು ಜ್ಞಾನಾಜ್ಞಾನಗಳಿಗೆ ಅತೀತನಾಗಿಬಿಡು. ಕಾಲಿಗೆ ಅಜ್ಞಾನವೆಂಬ ಮುಳ್ಳು ಚುಚ್ಚಿಕೊಂಡಿದೆ. ಅದನ್ನು ತೆಗೆಯಲು ಜ್ಞಾನವೆಂಬ ಮುಳ್ಳು ಅವಶ್ಯಕ. ಮುಳ್ಳು ತೆಗೆದ ನಂತರ ಎರಡು ಮುಳ್ಳುಗಳನ್ನೂ ಬಿಸಾಡಿಬಿಡುತ್ತಾರೆ. ‘ಮಾಯೆಯ ಚೌಕಟ್ಟಿದು ಈ ಸಂಸಾರ!’ ಎಂಬುದಾಗಿ ಜ್ಞಾನಿ ಹೇಳುತ್ತಾನೆ. ಆದರೆ ಯಾರು ಜ್ಞಾನಾಜ್ಞಾನಗಳಿಗೆ ಅತೀತನೋ ಆತ ಹೇಳುತ್ತಾನೆ : ‘ಈ ಜಗತ್ತೆಂಬುದು ಮೋಜಿನ ಮನೆಯೊ!’ ಆತನಿಗೆ ತೋರಿಬರುತ್ತದೆ, ಭಗವಂತನೇ ಜೀವ, ಜಗತ್ತು, ಚತುರ್ವಿಂಶತಿ ತತ್ತ್ವ ಎಲ್ಲ ಆಗಿರುವುದಾಗಿ.
“ಭಗವಂತನ ಸಾಕ್ಷಾತ್ಕಾರ ಪಡೆದುಕೊಂಡ ನಂತರ ಬೇಕಾದರೆ ಸಂಸಾರದಲ್ಲಿರ ಬಹುದು. ಆಗ ನಿರ್ಲಿಪ್ತನಾಗಿ ಇರಲು ಸಾಧ್ಯ. ಕಾಮಾರಪುಕುರಿನಲ್ಲಿ ಬಡಗಿಯ ಹೆಂಗಸರನ್ನು ನೋಡಿದ್ದೇನೆ-ಏತದಿಂದ ಅವಲಕ್ಕಿ ಕುಟ್ಟುತ್ತಾರೆ. ಅದರಲ್ಲಿ ಒಬ್ಬಳು ಒಂದು ಕೈಯಿಂದ ಬತ್ತ ತಳ್ಳಿಕೊಡುತ್ತಿರುತ್ತಾಳೆ, ಇನ್ನೊಂದು ಕೈಯಿಂದ ಮಗುವಿನ ಸ್ತನ್ಯಪಾನ ಮಾಡಿಸುತ್ತಿರುತ್ತಾಳೆ. ಅದೇ ಸಮಯದಲ್ಲಿ ಆಕೆ ಗಿರಾಕಿಗಳೊಡನೆ ಮಾತುಕತೆ ಆಡುತ್ತಿರುತ್ತಾಳೆ. ಅವರಿಗೆ ಹೇಳುತ್ತಾಳೆ: ‘ನೀವು ಎರಡಾಣೆ ಕೊಡಬೇಕಾಗಿದೆ. ಅದನ್ನು ಕೊಟ್ಟುಹೋಗಿ.’ ಆದರೆ ಆಕೆಯ ಮುಕ್ಕಾಲು ಭಾಗ ಮನಸ್ಸೆಲ್ಲ ತನ್ನ ಕೈಮೇಲೇ-ಏತದ ಮೊನೆ ಎಲ್ಲಿ ಅದರ ಮೇಲೆ ಬಿದ್ದು ಬಿಡುವುದೊ ಅಂತ.
“ಮನುಷ್ಯ ತನ್ನ ಮುಕ್ಕಾಲು ಭಾಗ ಮನಸ್ಸನ್ನು ಭಗವಂತನಲ್ಲಿ ಇಟ್ಟು ಉಳಿದ ಕಾಲು ಭಾಗದಿಂದ ಈ ಜಗತ್ತಿನ ಕೆಲಸಗಳನ್ನು ಮಾಡಿಕೊಂಡು ಹೋಗಬೇಕು.”
ಪಂಡಿತ ಶಶಧರನ ಮಾತೆತ್ತಿ ಪರಮಹಂಸರು ಭಕ್ತರಿಗೆ ಹೇಳುತ್ತಿದ್ದಾರೆ: “ಅವನದು ಕೇವಲ ಒಂದೇ ರಾಗ-ಬರೀ ಶುಷ್ಕ ಜ್ಞಾನವಿಚಾರ.
“ಯಾರ ಕೈಯಲ್ಲಿ ನಿತ್ಯವನ್ನು ಮುಟ್ಟಿದ ನಂತರ ಲೀಲೆಯಲ್ಲಿ ಇರಲು ಸಾಧ್ಯ ವಾಗುವುದೊ, ಮತ್ತೆ ಯಾರು ಲೀಲೆಯಿಂದ ನಿತ್ಯಕ್ಕೆ ಹತ್ತಿ ಹೋಗಬಲ್ಲನೋ ಆತನಿಗೆ ಪಕ್ವಜ್ಞಾನ, ಪಕ್ವಭಕ್ತಿ ದೊರೆತಿರುತ್ತದೆ. ನಾರದನೇ ಮೊದಲಾದವರು ಬ್ರಹ್ಮಜ್ಞಾನ ದೊರೆತ ನಂತರವೂ ಭಕ್ತಿಯನ್ನು ಅವಲಂಬಿಸಿಕೊಂಡು ಇದ್ದರು. ಇದಕ್ಕೇ ‘ವಿಜ್ಞಾನ’ ಅಂತ ಹೆಸರು.
“ಬರೀ ಶುಷ್ಕಜ್ಞಾನವಿದೆಯಲ್ಲ, ಇದು ಸಾಮಾನ್ಯ ಆಕಾಶಬಾಣದ ಹಾಗೆ; “ಫುಸ್” ಅಂತ ಮೇಲಕ್ಕೆ ಹೋಗಿ ಕೆಲವು ಕಿಡಿಗಳನ್ನು ಒದರಿ ನಾಶವಾಗಿಬಿಡುತ್ತದೆ. ಆದರೆ ನಾರದ, ಶುಕದೇವ ಇವರೇ ಮೊದಲಾದವರ ಜ್ಞಾನ ಒಂದು ಒಳ್ಳೇ ಆಕಾಶಬಾಣ ಇದ್ದ ಹಾಗೆ. ಸ್ವಲ್ಪ ಹೊತ್ತು ವಿವಿಧ ಬಣ್ಣಗಳ ಕಿಡಿಗಳನ್ನು ಕಾರುತ್ತಿದ್ದು ತೆಪ್ಪಗಾಗುತ್ತದೆ; ಮತ್ತೆ ಹೊಸ ಕಿಡಿಗಳನ್ನು ಉದಿರಿಸುತ್ತಿದ್ದು ಮತ್ತೆ ತೆಪ್ಪಗಾಗುತ್ತದೆ. ಈ ರೀತಿಯಾಗಿ ಅದು ಮಾಡುತ್ತಲೇ ಹೋಗು ತ್ತಿರುತ್ತದೆ. ಆ ಋಷಿಗಳಿಗೆ ಭಗವಂತನಲ್ಲಿ ಪ್ರೇಮ ಉಂಟಾಗಿತ್ತು. ಪ್ರೇಮವಿದೆಯಲ್ಲ, ಅದು ಸಚ್ಚಿದಾನಂದನನ್ನು ಮುಟ್ಟಲು ಸಹಾಯಕವಾಗುವ ಹಗ್ಗ.”
ಪರಮಹಂಸರು ಮಧ್ಯಾಹ್ನದ ಊಟ ಮುಗಿಸಿಕೊಂಡು ವಿಶ್ರಮಿಸಿಕೊಳ್ಳುತ್ತಿದ್ದಾರೆ. ಭವನಾಥ, ಮಾಸ್ಟರ್, ಮುಖ್ಯೋಪಾಧ್ಯಾಯ ಸೋದರರು, ಹಾಜರಾ, ಇನ್ನೂ ಅನೇಕ ಮಂದಿ ಭಕ್ತರು ಬಕುಳ ವೃಕ್ಷದ ಕೆಳಗೆ ಕುಳಿತು ಮಾತುಕತೆ ಆಡುತ್ತಿದ್ದಾರೆ. ಈಗ ಪರಮ ಹಂಸರು ಸರ್ವೆಮರಗಳ ಕಡೆಗೆ ಹೋಗುತ್ತಿದ್ದವರು, ಬಂದು ಭಕ್ತರ ಹತ್ತಿರ ಕುಳಿತಿದ್ದಾರೆ.
ಹಾಜರಾ ಚಿಕ್ಕ ಗೋಪಾಲನಿಗೆ: “ಇವರಿಗೆ (ಪರಮಹಂಸರಿಗೆ) ಗುಡುಗುಡಿ ತಯಾರು ಮಾಡಿಕೊಂಡು.”
ಶ್ರೀರಾಮಕೃಷ್ಣರು ನಗುತ್ತ: “ನಿನಗೇ ಬೇಕಾಗಿದೆ ಅಂತ ನೇರವಾಗಿ ಹೇಳಿಬಿಡ ಬಾರದೆ?” (ಎಲ್ಲರೂ ನಗುತ್ತಿದ್ದಾರೆ.)
ಮುಖ್ಯೋಪಾಧ್ಯಾಯ ಹಾಜರಾನಿಗೆ: “ನೀವು ಇವರಿಂದ (ಪರಮಹಂಸರಿಂದ) ಬಹಳವಾಗಿ ಬುದ್ಧಿ ಕಲಿತುಕೊಂಡಿರಬೇಕು.”
ಶ್ರೀರಾಮಕೃಷ್ಣರು ನಗುತ್ತ: “ಇಲ್ಲ, ಇಲ್ಲ. ಈತನಿಗೆ ಬಾಲ್ಯದಿಂದಲೇ ಈ ತರದ ಬುದ್ಧಿ.” (ಎಲ್ಲರೂ ನಗುತ್ತಿದ್ದಾರೆ.)
ಈಗ ಪರಮಹಂಸರು ಸರ್ವೆಮರಗಳ ಕಡೆಯಿಂದ ಹಿಂದಿರುಗಿ ಬರುತ್ತಿದ್ದಾರೆ. ಅವರು ಭಾವಾವಿಷ್ಟರಾಗಿ ಉನ್ಮತ್ತರ ಹಾಗೆ ಕಾಲು ಹಾಕುತ್ತಿದ್ದಾರೆ. ಕೊಠಡಿಯನ್ನು ಮುಟ್ಟುವುದರಲ್ಲಿ ಪ್ರಕೃತಿಸ್ಥರಾದರು.
ಪರಮಹಂಸರ ಕೊಠಡಿಯಲ್ಲಿ ಅನೇಕ ಮಂದಿ ಭಕ್ತರು ಬಂದು ನೆರೆದಿದ್ದಾರೆ. ಕೊನ್ನಗರದ ಭಕ್ತರೊಡನೆ ಒಬ್ಬ ಸಾಧಕ ಹೊಸದಾಗಿ ಬಂದಿದ್ದಾನೆ. ವಯಸ್ಸು ಐವತ್ತರ ಮೇಲೆ ಇರಬೇಕು. ಪಾಂಡಿತ್ಯದ ಅಭಿಮಾನ ಬಹಳವಾಗಿ ಇರುವಂತೆ ತೋರಿಬರುತ್ತಿದೆ.
ಪರಮಹಂಸರು ತಮ್ಮ ಕೊಠಡಿಯ ಮಧ್ಯದಲ್ಲಿ ನಿಂತುಕೊಂಡು ಇದ್ದಕ್ಕಿದ್ದ ಹಾಗೆ ಮಾಸ್ಟರಿಗೆ ಹೇಳುತ್ತಿದ್ದಾರೆ: “ಆತ ಬಂದಿದ್ದ-ನಾರಾಯಣ.”
ನರೇಂದ್ರ ವರಾಂಡದಲ್ಲಿ ಹಾಜರಾ ಮೊದಲಾದವರೊಡನೆ ಮಾತುಕತೆ ಆಡುತ್ತಿದ್ದಾನೆ. ಮಾತನ್ನು ಕೊಠಡಿಯಿಂದಲೇ ಚೆನ್ನಾಗಿ ಕೇಳಬಹುದಾಗಿತ್ತು.
ಶ್ರೀರಾಮಕೃಷ್ಣರು ನರೇಂದ್ರನನ್ನು ಸೂಚಿಸಿ: “ದೊಡ್ಡ ಮಾತಾಳಿ! ಆದರೆ ಈಗ ಮನೆಯ ತೊಂದರೆಯಿಂದ ಬಹಳವಾಗಿ ಚಿಂತೆಗೆ ಒಳಗಾಗಿದ್ದಾನೆ.”
ಮಾಸ್ಟರ್: “ಆತನದು ಬಹಳ ಬಲವಾದ ಮನಸ್ಸು.”
ಒಬ್ಬ ಭಕ್ತ : “ಯಾವುದರಲ್ಲೇ ಆಗಲಿ, ಆತ ಬಲಹೀನನಾಗಿರುವನೇ?”
ಕೊನ್ನಗರದ ಒಬ್ಬ ಭಕ್ತ ಸಾಧಕನ ಕಡೆ ಬೆರಳುಮಾಡಿ ಪರಮಹಂಸರಿಗೆ ಹೇಳುತ್ತಿದ್ದಾನೆ: “ಮಹಾಶಯರೆ, ಈತ ನಿಮ್ಮನ್ನು ಸಂಧಿಸಲು ಬಂದಿದ್ದಾನೆ. ನಿಮ್ಮನ್ನು ಏನೇನೊ ಪ್ರಶ್ನೆ ಕೇಳಬೇಕೆಂದಿದ್ದಾನೆ.” ಸಾಧಕ ತಲೆ ಎತ್ತಿ ನೆಟ್ಟಗೆ ಕುಳಿತಿದ್ದಾನೆ.
ಸಾಧಕ: “ಮಹಾಶಯರೆ, ಮಾರ್ಗವೇನು?”
ಶ್ರೀರಾಮಕೃಷ್ಣರು: “ಗುರುವಾಕ್ಯದಲ್ಲಿ ಶ್ರದ್ಧೆ. ಗುರುವಿನ ಉಪದೇಶವನ್ನು ಅನುಕ್ರಮ ವಾಗಿ ಆಚರಿಸಿದರೆ ಭಗವಂತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ಇದು ದಾರವನ್ನು ಅನುಸರಿಸಿ ಕೊನೆಗೆ ವಸ್ತುವನ್ನು ಮುಟ್ಟುವ ಹಾಗೆ.”
ಸಾಧಕ: “ಭಗವಂತನನ್ನು ದರ್ಶನ ಮಾಡಲಾಗುವುದೆ?”
ಶ್ರೀರಾಮಕೃಷ್ಣರು: “ಆತ ವಿಷಯಬುದ್ಧಿಗೆ ಅಗೋಚರ. ಕಾಮಕಾಂಚನಾಸಕ್ತಿ ಲೇಶ ಮಾತ್ರವಿದ್ದರೂ ಆತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಲಾಗುವುದಿಲ್ಲ. ಆದರೆ ಶುದ್ಧ ಮನಸ್ಸು ಶುದ್ಧ ಬುದ್ಧಿಗೆ ಗೋಚರ-ಅಂದರೆ ಯಾವ ಮನಸ್ಸಿನಲ್ಲಿ, ಯಾವ ಬುದ್ಧಿಯಲ್ಲಿ ಲೇಶ ಮಾತ್ರವೂ ಆಸಕ್ತಿ ಇರದೊ ಅವುಗಳಿಗೆ. ಶುದ್ಧ ಮನಸ್ಸು, ಶುದ್ಧ ಆತ್ಮ-ಎಲ್ಲಾ ಒಂದೇ ವಸ್ತು.”
ಸಾಧಕ: “ಆದರೆ ಶಾಸ್ತ್ರ ಹೇಳುತ್ತದೆ: “ಯತೋ ವಾಚೋ ನಿವರ್ತಂತೇ! ಅಪ್ರಾಪ್ತ ಮನಸಾ ಸಹ!’, ಯಾರನ್ನು ಅರಿಯಲಾರದೆ ವಾಕ್ಕು ಮತ್ತು ಮನಸ್ಸು ಹಾಗೆಯೇ ಹಿಂದಿರುಗುವುವೊ ಎಂಬುದಾಗಿ. ಆತ ವಾಕ್ಕು ಮತ್ತು ಮನಸ್ಸುಗಳಿಗೆ ಅಗೋಚರ.”
ಶ್ರೀರಾಮಕೃಷ್ಣರು: “ಸಾಕು ನಿಲ್ಲಿಸು! ಸಾಧನೆ ಮಾಡದೆ ಶಾಸ್ತ್ರಗಳ ಅರ್ಥವನ್ನು ಅರಿಯಲಾಗುವುದಿಲ್ಲ. ಬರಿದೆ ಭಂಗಿಸೊಪ್ಪು, ಭಂಗಿಸೊಪ್ಪು, ಅನ್ನುತ್ತಿದ್ದರೆ ಏನಾದೀತು ? ಪಂಡಿತರು ಶ್ಲೋಕಗಳನ್ನು ನಿರರ್ಗಳವಾಗಿ ಹೇಳಬಿಡಬಲ್ಲರು-ಆದರೆ ಅದರಿಂದ ಏನು ದೊರೆಯುತ್ತದೆ? ಭಂಗಿಸೊಪ್ಪನ್ನು ಮೈಮೇಲೆ ಲೇಪ ಹಾಕಿಕೊಂಡರೂ ಏನೂ ಆಗದು- ಅರೆದು ಕುಡಿಯಬೇಕು. ಬರಿದೆ ಹೇಳುತ್ತಿದ್ದರೆ ಏನಾದೀತು. “ಹಾಲಿನಲ್ಲಿ ಬೆಣ್ಣೆ ಇದೆ’, ‘ಹಾಲಿನಲ್ಲಿ ಬೆಣ್ಣೆ ಇದೆ’, ಅಂತ? ಹಾಲಿಗೆ ಹೆಪ್ಪು ಹಾಕಿ, ಮೊಸರು ಮಾಡಿ ಕಡೆ. ಆಗ ತಾನೆ ಬೆಣ್ಣೆ ಸಿಕ್ಕಬೇಕಾದರೆ.”
ಸಾಧಕ: “ನೀವು ಬೆಣ್ಣೆ ತೆಗೆಯುವ ವಿಷಯ ಹೇಳಿದಿರಿ. ನೀವೂ ಶಾಸ್ತ್ರಗಳನ್ನು ಉದ್ಧರಿಸುತ್ತಾ ಇದ್ದೀರಲ್ಲ.”
ಶ್ರೀರಾಮಕೃಷ್ಣರು: “ಶಾಸ್ತ್ರಗಳನ್ನು ಉದ್ಧರಿಸುವುದರಿಂದ ಅಥವಾ ಕೇಳುವುದರಿಂದ ಏನು ದೊರೆತೀತು? ಅವನ್ನು ರಕ್ತಗತ ಮಾಡಿಕೊಳ್ಳಬೇಕು. ಪಂಚಾಂಗದಲ್ಲಿ ಬರೆದಿರುತ್ತದೆ, ಇಪ್ಪತ್ತು ಕೊಳಗ ಮಳೆ ಬೀಳುವುದೆಂದು-ಆದರೆ ಅದನ್ನು ಹಿಂಡಿದರೆ ಒಂದು ತೊಟ್ಟೂ ನೀರು ಬೀಳದು.”
ಸಾಧಕ: “ಬೆಣ್ಣೆ ತೆಗೆಯುವುದು-ನೀವು ತೆಗೆದಿದ್ದೀರೇನು?”
ಶ್ರೀರಾಮಕೃಷ್ಣರು: “ನಾನು ತೆಗೆದಿದ್ದೇನೋ ಬಿಟ್ಟಿದ್ದೇನೋ ಆ ಮಾತು ಹಾಗಿರಲಿ. ಈ ವಿಷಯಗಳನ್ನೆಲ್ಲ ಪರರಿಗೆ ತಿಳಿಸುವುದೆಂದರೆ ಬಹಳ ಕಷ್ಟ. ಒಂದು ಪಕ್ಷ ಯಾರಾದರೂ ಕೇಳಿದರೆ: ‘ತುಪ್ಪ ಹೇಗೆ ರುಚಿಸುತ್ತದೆ’, ಅದಕ್ಕೆ ಉತ್ತರ: ‘ತುಪ್ಪ ತುಪ್ಪದ ಹಾಗೆ ರುಚಿಸುತ್ತದೆ.’
“ಇವನ್ನೆಲ್ಲಾ ಅರ್ಥಮಾಡಿಕೊಳ್ಳಬೇಕಾದರೆ ಸಾಧುಸಂಗ ಆವಶ್ಯಕ. ಯಾವುದು ಕಫದ ನಾಡಿ, ಯಾವುದು ಪಿತ್ತದ ನಾಡಿ, ಯಾವುದು ವಾಯುವಿನ ನಾಡಿ-ಎಂಬುದನ್ನು ಅರಿತು ಕೊಳ್ಳಬೇಕಾದರೆ, ವೈದ್ಯನೊಡನೆ ಇರಬೇಕಾಗುತ್ತದೆ.”
ಸಾಧಕ: “ಕೆಲಕೆಲವರಿಗೆ ಬೇರೆಯವರ ಜೊತೆಯಲ್ಲಿ ಇರಬೇಕು ಅಂದರೇ ಬೇಜಾರು.”
ಶ್ರೀರಾಮಕೃಷ್ಣರು: “ಹಾಗಾಗುತ್ತದೆ, ಜ್ಞಾನ ದೊರೆತ ನಂತರ-ಭಗವಂತನ ಸಾಕ್ಷಾತ್ಕಾರದ ನಂತರ. ಆದರೆ ಅದಕ್ಕೆ ಮುಂಚೆ ಸಾಧಕನಿಗೆ ಸಾಧುಸಂಗ ಬೇಡವೆ?”
ಸಾಧಕ ಸುಮ್ಮನೆ ಕುಳಿತಿದ್ದಾನೆ. ಈಗ ಆತ ಸ್ವಲ್ಪ ಸಿಟ್ಟುಗೊಂಡು ಹೇಳುತ್ತಿದ್ದಾನೆ: “ನೀವು ಭಗವಂತನ ಸಾಕ್ಷಾತ್ಕಾರ ಪಡೆದಿದ್ದೀರಾ-ಪ್ರತ್ಯಕ್ಷವಾಗಿ ಆಗಲಿ, ಪರೋಕ್ಷವಾಗಿ ಆಗಲಿ. ಸಾಧ್ಯವಾದರೆ ಇದಕ್ಕೆ ಉತ್ತರ ಕೊಡಿ, ಇಲ್ಲದಿದ್ದರೆ ಸುಮ್ಮನೆ ಇದ್ದುಬಿಡಿ-ಹಾಗೆ ಇಚ್ಛಿಸಿದರೆ.” ಪರಮಹಂಸರು ನಗುತ್ತ ಹೇಳುತ್ತಿದ್ದಾರೆ: “ನಾನು ಏನು ಹೇಳಲಿ? ಕೇವಲ ಸೂಚನೆ ಕೊಡಲು ಸಾಧ್ಯ.”
ಸಾಧಕ: “ಅದನ್ನೇ ಕೊಡಿ ಮತ್ತೆ.”
ನರೇಂದ್ರ ಹಾಡಲಿದ್ದಾನೆ. ಆತ ಹೇಳುತ್ತಿದ್ದಾನೆ: “ಯಾರೂ ಮೃದಂಗವನ್ನೇ ತಂದಿಲ್ಲವಲ್ಲ.”
ಚಿಕ್ಕಗೋಪಾಲ: “ಮಹಿಮಚರಣನ ಹತ್ತಿರ ಇದೆ.”
ಶ್ರೀರಾಮಕೃಷ್ಣರು ಮಧ್ಯೆ ಬಾಯಿ ಹಾಕಿ: “ಬೇಡಿ, ಅವನದಾವುದನ್ನೂ ಇಲ್ಲಿಗೆ ತರಬೇಡಿ.”
ಈಗ ಕೊನ್ನಗರದ ಒಬ್ಬ ಭಕ್ತ ಹಾಡುತ್ತಿದ್ದಾನೆ. ಪರಮಹಂಸರು ಆಗಾಗ ಸಾಧಕನ ಕಡೆ ಕಣ್ಣು ಹಾಕುತ್ತಲೇ ಇದ್ದಾರೆ. ಈಗ ಗಾಯಕ ಮತ್ತು ನರೇಂದ್ರ ಸಂಗೀತ ಕಲೆಯ ಸಂಬಂಧವಾಗಿ ಒಂದು ದೊಡ್ಡ ಚರ್ಚೆಯಲ್ಲಿ ತೊಡಗಿಬಿಟ್ಟಿದ್ದಾರೆ. ಸಾಧಕ ಗಾಯಕನಿಗೆ ಹೇಳುತ್ತಿದ್ದಾನೆ: “ನೀನು ಕಡಮೆಯೇನಲ್ಲ! ಈ ವಿಧವಾದ ಚರ್ಚೆಯಿಂದ ಏನು ಪ್ರಯೋಜನ?” ಇನ್ನೊಬ್ಬನೂ ಈ ಚರ್ಚೆಯಲ್ಲಿ ತಲೆಹಾಕಿದ್ದ. ಪರಮಹಂಸರು ಆತನ ಕಡೆ ಬೆರಳುಮಾಡಿ ಸಾಧಕನಿಗೆ ಹೇಳುತ್ತಿದ್ದಾರೆ: “ಆತನಿಗೇನೂ ನೀನು ಹೇಳಲೇ ಇಲ್ಲವಲ್ಲ?” ಸಾಧಕನ ವ್ಯವಹಾರ ತೋರಿಸಿತು, ಆತ ಆ ಕೊನ್ನಗರದ ಭಕ್ತರೊಡನೆ ಸ್ನೇಹಭಾವದಿಂದ ಇಲ್ಲ ಎಂಬುದನ್ನು.
ನರೇಂದ್ರ ಹಾಡುತ್ತಿದ್ದಾನೆ.
ಇನ್ನೆಷ್ಟು ದಿನ ನಾನು ಬರಿಯ ವಿಫಲತೆಯಲ್ಲಿ
ತೊಳಲಬೇಕೋ……………………………
ಸಾಧಕ ಹಾಡನ್ನು ಕೇಳುತ್ತ ಕೇಳುತ್ತ ಧ್ಯಾನಸ್ಥನಾಗಿಬಿಟ್ಟಿದ್ದಾನೆ. ಘಂಟೆ ಅಪರಾಹ್ನ ನಾಲ್ಕು. ಪಶ್ಚಿಮದಿಂದ ಬಿಸಿಲು ಬಂದು ಆತನ ಶರೀರದ ಮೇಲೆ ಬೀಳುತ್ತಿರುವುದನ್ನು ನೋಡಿ ಪರಮಹಂಸರು ಒಡನೆ ಎದ್ದು ಬಂದು ಛತ್ರಿಯನ್ನು ತೆರೆದು ಅಡ್ಡಲಾಗಿ ಇಟ್ಟಿದ್ದಾರೆ.
ನರೇಂದ್ರ ಮತ್ತೆ ಹಾಡುತ್ತಿದ್ದಾನೆ:
ಎಂತು ಕರೆಯಲಯ್ಯ ನಿನ್ನ
ಸಕಲ ಪುಣ್ಯ ದೀಪನ
ಪಾಪ ಪಂಕ ಮಲಿನ ನಾನು
ಬೆಂಕಿಗೆಸೆದ ತೃಣಕಣ
ಆದರು ಇದು ಸುಡದು ನೋಡು
ಈ ಪಾಪದ ಬಂಧನ!
ಸರ್ವ ಪಾಪ ಹರಣ ನೀನು
ಎನ್ನುವುದೀ ಲೋಕವೆ
ನಿನ್ನನ್ನೆಷ್ಟು ನೆನೆದರೂ
ನಡುಗುತಿಹುದು ನನ್ನೆದೆ!
ಬರುವನೆಂತು ಈ ಪಾತಕಿ
ನಿನ್ನ ಪುಣ್ಯ ಪಥದಲಿ ?
ಎಳೆದುಕೊ ನಿನ್ನಡಿಯ ಗುಡಿಗೆ
ನಿನ್ನ ಕೃಪೆಯ ಕೈಯಲಿ!
ಮತ್ತೆ ಹಾಡುತ್ತಿದ್ದಾನೆ:
ಬಲು ಮಧುರವೊ ನಿನ್ನ ಹೆಸರು
ಕಿವಿಗೆ ಸುಧೆಯ ಕರೆವುದು;
ದೀನ ಶರಣ ಪ್ರಾಣ ರಮಣ
ಅಮೃತ ಭವನ ಧನವಿದು.
ನಿನ್ನ ಹೆಸರ ಕೀರ್ತಿಸಿದರೆ
ನಾವು ಅಮರರಪ್ಪೆವೊ
ಚಿಂತೆಗೆಡಲು ನಿಮಿಷದಲ್ಲಿ
ಬತ್ತುತ ಬಯಲಪ್ಪುದೊ!
ಹೃದಯದಲ್ಲಿ ನಿನ್ನ ಮಧುರ
ಗಾಯನವನೆ ಗೈವೆವು!
ಹೃದಯನಾಥ, ಚಿದಾನಂದ
ನಿರುತ ನಿನ್ನ ನೆನೆವೆವು.
“ನಿನ್ನ ಹೆಸರ ಕೀರ್ತಿಸಿದರೆ ನಾವು ಅಮರರಪ್ಪೆವೊ” ಎಂಬ ಚರಣವನ್ನು, ನರೇಂದ್ರ ಯಾವಾಗ ಹಾಡಿದನೊ ಇಲ್ಲವೊ ಪರಮಹಂಸರು ಒಡನೆ ಸಮಾಧಿಸ್ಥರಾಗಿಬಿಟ್ಟರು. ಸಮಾಧಿಯ ಆರಂಭದಲ್ಲಿ ಅವರ ಬೆರಳುಗಳು, ವಿಶೇಷತಃ ಹೆಬ್ಬೆರಳುಗಳು ಕಂಪಿಸ ಲಾರಂಭಿಸಿದುವು. ಕೊನ್ನಗರದ ಭಕ್ತರು ಪರಮಹಂಸರ ಸಮಾಧಿಯ ಅವಸ್ಥೆಯನ್ನು ಇದುವರೆಗೆ ನೋಡಿರಲಿಲ್ಲ. ಪರಮಹಂಸರು ಸುಮ್ಮನೆ ಕುಳಿತಿರುವುದನ್ನು ನೋಡಿ ಆ ಭಕ್ತರು ಎದ್ದು ಹೊರಡಲಾರಂಭಿಸಿದರು. ಭವನಾಥ ಅವರನ್ನು ಕೇಳುತ್ತಿದ್ದಾನೆ: “ಏಕೆ ಹೊರಟು ಹೋಗುತ್ತಿದ್ದೀರಿ? ಇದು ಅವರ ಸಮಾಧಿ ಅವಸ್ಥೆ.” ಮತ್ತೆ ಅವರು ಕುಳಿತುಕೊಳ್ಳುತ್ತಿದ್ದಾರೆ.
ನರೇಂದ್ರ ಹಾಡುತ್ತಿದ್ದಾನೆ:
ಹಗಲಿರುಳೂ ಶ್ರಮಿಸಿ ನಾನು
ಸಿದ್ಧಪಡಿಸಿ ಕಾದಿರುವೆನು
ನನ್ನ ಹೃದಯ ಪೀಠವ,
ಓ ಎಂದಿಗೆ ನೀನು ಬಂದು
ನನಗೆ ಕೃಪೆಯ ಗೈವೆ ಎಂದು
ಕಾಯುತಿರುವ ಮಾರ್ಗವ!
ಪರಮಹಂಸರು ಇನ್ನೂ ಭಾವವಿಷ್ಟರಾಗಿಯೇ ತಮ್ಮ ಮಂಚದಿಂದ ಇಳಿದುಬಂದು ನರೇಂದ್ರನ ಹತ್ತಿರ ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದಾರೆ. ನರೇಂದ್ರ ಮತ್ತೆ ಹಾಡುತ್ತಿದ್ದಾನೆ:
ಉದಯಿಪನದೊ ಚಿದಾಕಾಶದಲಿ ಪೂರ್ಣ ಇಂದು
ಪ್ರೇಮಸಿಂಧು ಉಕ್ಕಿ ಹರಿದು ಲೋಕಗಳೇ ನಾಂದು!…..
ನರೇಂದ್ರ ಈ ಎರಡನೆಯ ಚರಣವನ್ನು ಹಾಡಿದೊಡನೆಯೇ ಪರಮಹಂಸರು ಎದ್ದು ನಿಂತುಕೊಂಡು ಸಮಾಧಿಸ್ಥರಾಗಿಬಿಟ್ಟಿದ್ದಾರೆ.
ಪರಮಹಂಸರು ಬಹಳ ಹೊತ್ತಿನವರೆಗೆ ಅದೇ ಅವಸ್ಥೆಯಲ್ಲಿ ಇದ್ದು ಈಗ ಕಿಂಚಿತ್ ಪ್ರಕೃತಿಸ್ಥರಾಗಿ ಮಂದಲಿಗೆ ಮೇಲೆ ಕುಳಿತುಕೊಳ್ಳುತ್ತಿದ್ದಾರೆ. ನರೇಂದ್ರ ಹಾಡುವುದನ್ನು ಮುಗಿಸಿದ. ಈಗ ಆತ ತಂಬೂರಿಯನ್ನು ಅದರ ಸ್ಥಳಕ್ಕೆ ತೂಗುಹಾಕುತ್ತಿದ್ದಾನೆ. ಪರಮಹಂಸರು ಇನ್ನೂ ಭಾವಾವಿಷ್ಟರಾಗಿಯೇ ಇದ್ದಾರೆ. ಆ ಅವಸ್ಥೆಯಲ್ಲೇ ಹೇಳುತ್ತಿದ್ದಾರೆ: “ತಾಯೆ, ಇದೇನಿದು, ನೋಡು. ಬೆಣ್ಣೆ ಕಡೆದು ಬಾಯಲ್ಲಿ ಹಾಕಿಕೊಡಬೇಕಂತಲ್ಲ ಜನರಿಗೆ. ಗಾಳಕ್ಕೆ ಎರೆಹುಳು ಕಟ್ಟಿ ನೀರಿಗೆ ಬಿಸಾಡಲೊಲ್ಲರಂತೆ; ಗಾಳದ ಕಡ್ಡಿ ಹಿಡಿದು ಕುಳಿತುಕೊಳ್ಳ ಲೊಲ್ಲರಂತೆ. ಆದರೆ ಮೀನನ್ನು ಮಾತ್ರ ಹಿಡಿದು ಅವರ ಕೈಗೆ ಕೊಡಬೇಕಂತೆ! ಇದು ಎಂಥ ತಂಟೆಯ ಕೆಲಸ! ತಾಯೆ, ಇನ್ನು ಎಂದಿಗೂ ವಾದಕ್ಕೆ ಕಿವಿಗೊಡೆನು. ನೀಚರು ಅದನ್ನು ನನ್ನ ಮೇಲೆ ಬಲಾತ್ಕರಿಸಲು ಬರುತ್ತಾರೆ. ಏನು ಕಷ್ಟ ಇದು! ಅದರಿಂದ ಕೊಡವಿಕೊಂಡು ಬಿಡುತ್ತೇನೆ. ಭಗವಂತ ವೇದವಿಚಾರಗಳಿಗೆ ಅತೀತ. ವೇದ, ವೇದಾಂತ, ಶಾಸ್ತ್ರ ಇವುಗಳ ಅಧ್ಯಯನದಿಂದ ಆತನ ಸಾಕ್ಷಾತ್ಕಾರ ಪಡೆಯಲು ಸಾಧ್ಯವಾಗುವುದೇ? (ನರೇಂದ್ರನಿಗೆ) ಅರ್ಥವಾಯಿತೆ? ವೇದ ಕೇವಲ ಸೂಕ್ಷ್ಮ ಸೂಚನೆಯನ್ನು ಮಾತ್ರ ಕೊಡಬಲ್ಲದು.”
ನರೇಂದ್ರ ಮತ್ತೆ ತಂಬೂರಿಯನ್ನು ತರುವಂತೆ ಒಬ್ಬನಿಗೆ ಹೇಳಿದ. ಪರಮಹಂಸರು ಹೇಳುತ್ತಿದ್ದಾರೆ: “ನಾನು ಹಾಡುತ್ತೇನೆ.” ಅವರು ಇನ್ನೂ ಭಾವಾವಿಷ್ಟರಾಗಿಯೇ ಇದ್ದಾರೆ. ಈಗ ಹಾಡುತ್ತಿದ್ದಾರೆ:
ಈ ಎದೆಯ ಕೊರೆಯುವುದು ಒಂದೆ ವ್ಯಥೆ ನನಗೆ;
ನೀನೊಡನೆ ಇದ್ದರೂ ನಾನೆಚ್ಚರಿದ್ದರೂ
ಕಳ್ಳತನವಾಯ್ತ್ತಲ್ಲ ನನ್ನ ಮನೆಯೊಳಗೆ!…….
ಪರಮಹಂಸರು ಹೇಳುತ್ತಿದ್ದಾರೆ: “ಹೇ ತಾಯೆ, ನನ್ನನ್ನು ವಿಚಾರದಲ್ಲಿ ತೊಡಗುವಂತೆ ಏಕೆ ಮಾಡುತ್ತಿದ್ದೀಯೆ? ಅವರು ಮತ್ತೆ ಹಾಡುತ್ತಿದ್ದಾರೆ:
ಅರಿತೆ ನಾನು ಅರಿತೆ ನಾನು-ನಿಜದ ನೆಲೆಯನರಿತೆನು
ಭಾವದಂತರಂಗವರಿತ ವ್ಯಕ್ತಿಯೊಬ್ಬ ದೊರೆತನು…….
ಪರಮಹಂಸರು ಹೇಳುತ್ತಿದ್ದಾರೆ: “ನಾನು ಪ್ರಜ್ಞೆಯಿಂದ ಇದ್ದೇನೆ.” ಆದರೆ ಅವರು ಇನ್ನೂ ಭಾವಾವಿಷ್ಟರಾಗಿಯೇ ಇದ್ದಾರೆ. ಅವರು ಮತ್ತೆ ಹಾಡುತ್ತಿದ್ದಾರೆ:
‘ಜಯ್ ಕಾಳಿ’ -ಎಂದು ನಾ ಕುಡಿಯುವೀ ದಿವ್ಯಮಧು
ಸಾಮಾನ್ಯ ಸುರೆಯಲ್ಲವೆಂದರಿಯದೆ………….
ಪರಮಹಂಸರು ಹೇಳಿದರು: “ಹೇ ತಾಯೆ, ಇನ್ನು ಎಂದಿಗೂ ವಾದಕ್ಕೆ ಕಿವಿಗೊಡೆನು” ಎಂದು. ಈಗ ನರೇಂದ್ರ ಹಾಡುತ್ತಿದ್ದಾನೆ:
ನನ್ನನ್ನೂ ಉನ್ಮತ್ತನಾಗಿಸಲೆ ತಾಯೆ,
ನಿನ್ನ ಭಕ್ತಿಯ ಮಧುರ ಮಧುಪಾನದಿಂದ!……
ಶ್ರೀರಾಮಕೃಷ್ಣರು ಕಿಂಚಿತ್ ನಗುತ್ತ ನಗುತ್ತ ಹೇಳುತ್ತಿದ್ದಾರೆ: “ಹೇ ತಾಯೆ, ನನ್ನನ್ನು ಉನ್ಮತ್ತನಾಗಿಸು! ಭಗವಂತನನ್ನು ಜ್ಞಾನವಿಚಾರಗಳಿಂದ, ಶಾಸ್ತ್ರವಿಚಾರಗಳಿಂದ ಪಡೆಯಲಾಗುವುದಿಲ್ಲ.” ಕೊನ್ನಗರದ ಗಾಯಕನ ಹಾಡುಗಾರಿಕೆ ಕೇಳಿ ಪರಮಹಂಸರಿಗೆ ಆನಂದವಾಗಿ ಬಿಟ್ಟಿದೆ. ಆತನನ್ನು ವಿನಯದಿಂದ ಕೇಳಿಕೊಳ್ಳುತ್ತಿದ್ದಾರೆ: “ಬಾಬು, ದಯವಿಟ್ಟು ಆನಂದಮಯಿಯ ಒಂದು ಹಾಡನ್ನು ಹಾಡಿ.”
ಗಾಯಕ: “ದಯವಿಟ್ಟು ಕ್ಷಮಿಸಿ.”
ಶ್ರೀರಾಮಕೃಷ್ಣರು, ಕೈಮುಗಿದು: “ಸಾಧ್ಯವಿಲ್ಲ. ನನಗೆ ಬಲಾತ್ಕರಿಸಲು ಹಕ್ಕಿದೆ. ಹೀಗೆಂದು ಹೇಳಿ ಪರಮಹಂಸರು ಗೋಪಿಯರ ಭಾವವನ್ನು ಆರೋಪಿಸಿಕೊಂಡು ಒಂದು ಕೀರ್ತನೆಯಿಂದ ಈ ಕೆಲವು ಚರಣಗಳನ್ನು ಹಾಡುತ್ತಿದ್ದಾರೆ:
ಕೃಷ್ಣನ ವಿಷಯದಿ ಮುನಿಸನು ತಾಳಲು
ರಾಧೆಗೂ ಇದೆ ಹಕ್ಕು,
ಅವನಿಗಾಗಿ ಇರುಳೆಲ್ಲವು ಕಾದಳು
ನಿದ್ದೆಯನೂ ಮಿಕ್ಕು!
ಪರಮಹಂಸರು ಈಗ ಗಾಯಕನಿಗೆ ಹೇಳುತ್ತಿದ್ದಾರೆ: “ಬಾಬು, ನೀನು ಬ್ರಹ್ಮಮಯಿಯ ಶಿಶು. ಆಕೆ ಎಲ್ಲಾ ಜೀವರಾಶಿಗಳಲ್ಲೂ ಇದ್ದಾಳೆ. ಆದ್ದರಿಂದ ನಿನ್ನನ್ನು ಬಲಾತ್ಕರಿಸಲು ಹಕ್ಕಿದೆ. ಒಬ್ಬ ರೈತ ತನ್ನ ಗುರುವಿಗೆ ಹೇಳಿದ: ‘ಆವಶ್ಯಕತೆ ತೋರಿಬಂದರೆ ನಿನ್ನನ್ನು ಚೆನ್ನಾಗಿ ಬಡಿದು ನೀರುಗಾಯಿ ಹಣ್ಣುಗಾಯಿ ಮಾಡಿ ನಿಮ್ಮಿಂದ ಮಂತ್ರೋಪದೇಶ ಪಡೆಯುತ್ತೇನೆ.”
ಗಾಯಕ ನಗುತ್ತ : “ಏನು, ಎಕ್ಕಡದೇಟು ಕೊಟ್ಟೇ?”
ಶ್ರೀರಾಮಕೃಷ್ಣರು ನಗುತ್ತ: “ಇಲ್ಲ! ಅಷ್ಟು ದೂರ ಹೋಗುವುದಿಲ್ಲ.”
ಪರಮಹಂಸರು ಮತ್ತೆ ಭಾವಾವಿಷ್ಟರಾಗಿ ಹೇಳುತ್ತಿದ್ದಾರೆ : “ಪ್ರವರ್ತಕ, ಸಾಧಕ, ಸಿದ್ಧ, ಸಿದ್ಧರ ಸಿದ್ಧ. ನೀನು ಸಿದ್ಧನೊ ಅಥವಾ ಸಿದ್ಧರ ಸಿದ್ಧನೊ? ಬೇಗೇಳು! ಹಾಡು.”
ಕೊನೆಗೆ ಗಾಯಕ ಒಪ್ಪಿ, ಮೊದಲು ಆಲಾಪನೆ ಮಾಡಿ ಅನಂತರ ಹಾಡಲಾರಂಭಿಸಿದ. ಪರಮಹಂಸರು ಆಲಾಪನೆ ಕೇಳಿ ಹೇಳುತ್ತಿದ್ದಾರೆ, : “ಇದೇ ನನಗೆ ಆನಂದವನ್ನು ತರುತ್ತಾ ಇದೆ.”
ಹಾಡುವುದು ಮುಗಿಯಿತು. ಕೊನ್ನಗರದ ಭಕ್ತರು ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಳ್ಳುತ್ತಿದ್ದಾರೆ. ಸಾಧಕ ಕೈ ಮುಗಿದು ಹೇಳುತ್ತಿದ್ದಾನೆ: “ಮಹಾತ್ಮರೆ, ಹೋಗಿ ಬರುತ್ತೇನೆ.”
ಪರಮಹಂಸರು ಇನ್ನೂ ಭಾವಾವಿಷ್ಟರಾಗಿಯೇ ಇದ್ದಾರೆ. ಭಗವತಿಯೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಹೇ ತಾಯೆ, ನಾನೊ: ನೀನೊ? ನಾನು ಮಾಡುತ್ತೇನೆಯೇ? ಇಲ್ಲ, ಇಲ್ಲ! ನೀನು. ಇದುವರೆಗೆ ಚರ್ಚೆಯನ್ನು ಕೇಳಿದವಳು ನೀನೊ ಅಥವಾ ನಾನೊ? ಇಲ್ಲ, ನಾನಲ್ಲ ನೀನೆ.”
ಪರಮಹಂಸರು ಪ್ರಕೃತಿಸ್ಥರಾಗಿದ್ದಾರೆ. ನರೇಂದ್ರ ಭವನಾಥ ಮೊದಲಾದವರೊಡನೆ ಆ ಸಾಧಕನ ವಿಷಯವಾಗಿ ಮಾತುಕತೆ ಆಡುತ್ತಿದ್ದಾರೆ.
ಭವನಾಥ ನಗುತ್ತ: “ಅವನೆಂಥಾ ಮನುಷ್ಯ?”
ಶ್ರೀರಾಮಕೃಷ್ಣರು: “ತಮೋಗುಣಿ ಭಕ್ತ.”
ಭವನಾಥ: “ಬಹಳವಾಗಿ ಶ್ಲೋಕಗಳನ್ನು ಉದ್ಧರಿಸಬಲ್ಲ.”
ಶ್ರೀರಾಮಕೃಷ್ಣರು: “ನಾನು ಒಮ್ಮೆ ಒಬ್ಬನಿಗೆ ಒಬ್ಬ ಸಾಧುವಿನ ವಿಷಯವಾಗಿ ಹೇಳಿದೆ: ‘ಆತ ಒಬ್ಬ ರಾಜಸಿಕ ಸಾಧು. ಆತನಿಗೇಕೆ ಭಿಕ್ಷೆ ನೀಡಬೇಕು?’ ಈ ಮಾತು ಕೇಳಿ ಇನ್ನೊಬ್ಬ ಸಾಧು ನನಗೆ ಪಾಠ ಕಲಿಸಿದ. ಆತ ಹೇಳಿದ: ‘ಹಾಗೆಂದೂ ನೀವು ಹೇಳಕೂಡದು. ಸಾಧುಗಳಲ್ಲಿ ಮೂರು ವಿಧ-ಸಾತ್ತ್ವಿಕ, ರಾಜಸಿಕ, ತಾಮಸಿಕ.’ ಅಂದಿನಿಂದ ನಾನು ಎಲ್ಲಾ ವಿಧದ ಸಾಧುಗಳನ್ನೂ ಗೌರವಿಸುತ್ತಿದ್ದೇನೆ.
ನರೇಂದ್ರ ನಗುತ್ತ: “ಏನು? ಇದು ‘ಆನೆ ಭಗವಂತನ’ ಹಾಗೇನು? ಎಲ್ಲರೂ ನಿಜವಾಗಿ ಭಗವಂತನೇ.”
ಶ್ರೀರಾಮಕೃಷ್ಣರು ನಗುತ್ತ : “ಭಗವಂತನೇ ವಿದ್ಯಾ, ಅವಿದ್ಯಾ ರೂಪಗಳಲ್ಲಿ ಕ್ರೀಡಿಸು ತ್ತಿದ್ದಾನೆ. ಎರಡನ್ನೂ ನಾನು ವಂದಿಸುತ್ತೇನೆ. ಚಂಡಿಯಲ್ಲಿ ಹೇಳಿದೆ: ‘ಭಗವತಿ ಸೌಭಾಗ್ಯವಂತರ ಲಕ್ಷ್ಮಿಯಾಗಿದ್ದಾಳೆ. ದೌರ್ಭಾಗ್ಯವಂತರ ಅಲಕ್ಷ್ಮಿಯಾಗಿದ್ದಾಳೆ’ ಎಂದು. (ಭವನಾಥನಿಗೆ) ಇದು ವಿಷ್ಣುಪುರಾಣದಲ್ಲಿದೆಯೇ?”
ಭವನಾಥ ನಗುತ್ತ : “ಅದು ನನಗೆ ಗೊತ್ತಿಲ್ಲ. ಕೊನ್ನಗರದ ಭಕ್ತರಿಗೆ ನಿಮ್ಮ ಸಮಾಧಿ ಅವಸ್ಥೆ ಏನು ಎಂಬುದು ಗೊತ್ತಾಗದೆ, ಇನ್ನೇನು ಎದ್ದು ಹೊರಡುವುದರಲ್ಲಿದ್ದರು.”
ಶ್ರೀರಾಮಕೃಷ್ಣರು: “ಅವರಿಗೆ ಮತ್ತೆ ಕುಳಿತುಕೊಳ್ಳುವಂತೆ ಹೇಳಿದವರು ಯಾರು?”
ಭವನಾಥ ನಗುತ್ತ: “ನಾನೇ ಆ ಮಹಾಪುರುಷ!”
ಶ್ರೀರಾಮಕೃಷ್ಣರು: “ನೀನು ಜನರನ್ನು ಇಲ್ಲಿಗೆ ಎಳೆದುಕೊಂಡು ಬರುವುದರಲ್ಲೂ ಗಟ್ಟಿಗ, ಓಡಿಸಿಬಿಡುವುದರಲ್ಲೂ ಗಟ್ಟಿಗ!”
ನರೇಂದ್ರ ಆ ಕೊನ್ನಗರದ ಗಾಯಕನೊಡನೆ ನಡೆಸಿದ ಚರ್ಚೆಯ ಸಂಬಂಧವಾಗಿ ಈಗ ಮಾತುಕತೆ ಆರಂಭವಾಯಿತು.
ಮುಖ್ಯೋಪಾಧ್ಯಾಯ: “ನರೇಂದ್ರ ಆತನನ್ನು ಸುಮ್ಮನೆ ಬಿಡಲಿಲ್ಲ.”
ಶ್ರೀರಾಮಕೃಷ್ಣರು: “ಅದು ಸರಿಯೆ. ಈ ವಿಧದ ಛಲ ಬೇಕು. ಇದಕ್ಕೆ ‘ಸಾತ್ತ್ವಿಕ ತಮಸ್ಸು’ ಅಂತ ಹೆಸರು. ಜನ ಹೇಳುವುದಕ್ಕೆಲ್ಲ ಸುಮ್ಮನೆ ತಲೆಬಾಗಿಸುತ್ತಿರಬೇಕೇ? ವೇಶ್ಯೆಗೆ ಹೇಳಿಬಿಡುವುದೇ: ‘ಒಳ್ಳೇದು, ನಿನಗಿಚ್ಛೆಯಿದ್ದಂತೆ ಮಾಡಿಕೊ’ ಅಂತ? ಆಕೆಗೆ ಕಿವಿ ಗೊಡುವುದೆ? ಒಮ್ಮೆ ರಾಧೆಗೆ ಸ್ವಲ್ಪ ಮುನಿಸು ಬಂತು. ಆಗ ಒಬ್ಬ ಸಖಿ ಹೇಳಿದಳು: ‘ಶ್ರೀಮತಿಗೆ (ರಾಧೆಗೆ) ಅಹಂಕಾರ ಬಂದುಬಿಟ್ಟಿದೆ’. ಇನ್ನೊಬ್ಬ ಸಖಿ, ಬೃಂದೆಹೇಳಿದಳು: “ಅಹಂ” ಯಾರದು? ಅದು ಕೃಷ್ಣನಿಗೆ ಸೇರಿದ್ದೇ. ಆಕೆ ಕೃಷ್ಣನ ಗರ್ವದಿಂದ ಗರ್ವಿತಳಾಗಿದ್ದಾಳೆ.”
ಈಗ ಭಗವನ್ನಾಮ ಮಾಹಾತ್ಮ್ಯದ ಸಂಬಂಧವಾಗಿ ಮಾತುಕತೆ ಆರಂಭವಾಗಿದೆ.
ಭವನಾಥ: “ಹರಿನಾಮ ನನಗೆ ಬಹಳವಾಗಿ ನೆಮ್ಮದಿ ತರುತ್ತದೆ.”
ಶ್ರೀರಾಮಕೃಷ್ಣರು: “ಯಾರು ಪಾಪವನ್ನು ಹರಣಮಾಡುತ್ತಾನೋ ಆತನೇ ಹರಿ. ಹರಿ ತ್ರಿತಾಪವನ್ನು ಹರಣಮಾಡುತ್ತಾನೆ. ಚೈತನ್ಯದೇವ ಹರಿನಾಮವನ್ನು ಪ್ರಚಾರ ಮಾಡಿದ; ಆದ್ದರಿಂದ ಅದು ಒಳ್ಳೆಯದೇ ಆಗಿರಬೇಕು. ನೋಡು, ಚೈತನ್ಯದೇವ ಒಬ್ಬ ದೊಡ್ಡ ಪಂಡಿತನೇ ಅಲ್ಲದೆ, ಅವತಾರಪುರುಷ ಬೇರೆ. ಆತ ಹರಿನಾಮವನ್ನು ಪ್ರಚಾರ ಮಾಡಿದ್ದರಿಂದ ಅದು ನಿಸ್ಸಂದೇಹವಾಗಿ ಒಳ್ಳೆಯದೇ ಆಗಿರಬೇಕು. (ನಗುತ್ತ) ಒಮ್ಮೆ ಕೆಲವು ಮಂದಿ ರೈತರು ಒಂದು ಸಮಾರಾಧನೆಗೆ ಬಂದಿದ್ದರು. ಅವರನ್ನು ಕೇಳಲಾಯಿತು, ಅಮಟೆಕಾಯಿಯ ಗೊಜ್ಜು ತಿನ್ನುತ್ತೀರಾ ಅಂತ. ಅವರು ಹೇಳಿದರು: ‘ಅದು ನೀವೆಲ್ಲರೂ ತಿನ್ನುವ ವಸ್ತುವಾಗಿದ್ದರೆ ನಮಗೂ ಕೊಡಿ. ನೀವು ಅದನ್ನು ತಿನ್ನುವಾಗ ಅದು ಒಳ್ಳೆಯ ವಸ್ತುವೇ ಆಗಿರಬೇಕು.’ (ಎಲ್ಲರೂ ನಗುತ್ತಿದ್ದಾರೆ.)
(ಮುಖ್ಯೋಪಾಧ್ಯಾಯ ಸೋದರರಿಗೆ) “ನಾನು ಶಿವನಾಥಶಾಸ್ತ್ರಿಯನ್ನು ಸಂಧಿಸಬೇಕು ಅಂತ ಇದ್ದೇನೆ. ನಿಮ್ಮ ಗಾಡಿಯಲ್ಲೇ ನೀವು ಕರೆದುಕೊಂಡು ಹೋಗುವುದಾದರೆ, ನಾನು ಬೇರೊಂದು ಗಾಡಿಯನ್ನು ಮಾಡಬೇಕಾದ ಆವಶ್ಯಕತೆಯೇನೂ ಬರುವುದಿಲ್ಲ.”
ಮುಖ್ಯೋಪಾಧ್ಯಾಯ: “ಆಗಲಿ, ಒಂದು ದಿನ ಅಲ್ಲಿಗೆ ಹೋಗೋಣ.”
ಶ್ರೀರಾಮಕೃಷ್ಣರು ಭಕ್ತರಿಗೆ: “ಒಳ್ಳೇದು, ಬ್ರಾಹ್ಮಸಮಾಜದವರಿಗೆ ನನ್ನನ್ನು ಕಂಡರೆ ಹಿಡಿಸುತ್ತದೆಯೇ? ಅವರು ಸಾಕಾರವಾದಿಗಳನ್ನು ಬಹಳವಾಗಿ ನಿಂದಿಸುತ್ತಾರಲ್ಲ.”
ಮಹೇಂದ್ರ ಮುಖ್ಯೋಪಾಧ್ಯಾಯ ತೀರ್ಥಯಾತ್ರೆಗೆ ಹೋಗಬೇಕು ಅಂತ ಇದ್ದಾನೆ. ಆತ ಅದನ್ನು ಪರಮಹಂಸರಿಗೆ ತಿಳಿಸುತ್ತಿದ್ದಾನೆ.
ಶ್ರೀರಾಮಕೃಷ್ಣರು ನಗುತ್ತ: “ಏಕೆ ಹೀಗೆ? ಪ್ರೇಮದ ಮೊಳಕೆ ಇನ್ನೇನು ತಲೆದೋರುವುದರಲ್ಲಿದೆ ಅನ್ನುವಷ್ಟರಲ್ಲೇ ಹೊರಡಬೇಕು ಅಂತ ಇದ್ದೀಯಾ? ಮೊದಲು ಮೊಳಕೆ ಬರುತ್ತವೆ, ಅನಂತರ ಗಿಡವಾಗುತ್ತದೆ. ಅನಂತರ ಫಲಬಿಡುತ್ತದೆ. ನಿನ್ನೊಡನೆ ಮಾತುಕತೆಯಾಡುತ್ತ ನಾವು ಬಹಳ ಆನಂದಪಡುತ್ತಿದ್ದೇವೆ.”
ಮಹೇಂದ್ರ ಮುಖ್ಯೋಪಾಧ್ಯಾಯ: “ಸ್ವಲ್ಪ ಸುತ್ತಾಡಿಕೊಂಡು ಬರೋಣ ಅಂತ ಇಚ್ಛೆಯಾಗಿಬಿಟ್ಟಿದೆ. ಬೇಗ ಬಂದುಬಿಡುತ್ತೇನೆ.”
ಘಂಟೆ ಅಪರಾಹ್ನ ಐದು. ಪರಮಹಂಸರು ತಮ್ಮ ಕೊಠಡಿಯಿಂದ ಹೊರಕ್ಕೆ ಬಂದಿದ್ದಾರೆ. ಭಕ್ತರು ಉದ್ಯಾನವನದಲ್ಲಿ ಸುತ್ತಾಡುತ್ತಿದ್ದಾರೆ. ಅವರಲ್ಲನೇಕರು ಇನ್ನೇನು ಮನೆಗೆ ಹಿಂದಿರುಗಲಿದ್ದಾರೆ.
ಪರಮಹಂಸರು ಉತ್ತರ ವರಾಂಡದಲ್ಲಿ ಹಾಜರಾನೊಡನೆ ಮಾತುಕತೆ ಆಡುತ್ತಿದ್ದಾರೆ. ಈಗ ಕೆಲವು ಕಾಲದಿಂದ ನರೇಂದ್ರ ಅಡಿಗಡಿಗೆ ಗುಹನ ಹಿರಿಯ ಮಗ ಅನ್ನದಾನನ್ನು ಸಂಧಿಸುತ್ತಿರುವುದರ ಸಂಬಂಧವಾಗಿ ಮಾತುಕತೆ ನಡೆಯುತ್ತಿದೆ.
ಹಾಜರಾ: “ಅನ್ನದಾ ಕಠೋರ ತಪಸ್ವಿಯಾಗಿಬಿಟ್ಟಿದ್ದಾನೆ ಅಂತ ಕೇಳಿದ್ದೇನೆ. ಆಹಾರವನ್ನು ಎಲ್ಲೊ ಕಿಂಚಿತ್ ಮಾತ್ರ ತೆಗೆದುಕೊಳ್ಳುತ್ತಾನಂತೆ. ನಾಲ್ಕು ದಿನಕ್ಕೊಮ್ಮೆ ಅನ್ನ ತಿನ್ನುತ್ತಾನಂತೆ.”
ಶ್ರೀರಾಮಕೃಷ್ಣರು: “ಹಾಗೇನು? ಯಾರಿಗೆ ತಾನೆ ಗೊತ್ತು? ಧಾರ್ಮಿಕ ವೇಷದಿಂದಲೂ ಭಗವಂತ ದೊರೆತರೂ ದೊರೆತುಬಿಡಬಹುದು!”
ಹಾಜರಾ: “ನರೇಂದ್ರ ಆಗಮನಿ 1 ಹಾಡುಗಳನ್ನು ಹಾಡಿದ.”
ಶ್ರೀರಾಮಕೃಷ್ಣರು ಉತ್ಸಕರಾಗಿ: “ಹೇಗಿತ್ತು?”
ಕಿಶೋರಿ ಪರಮಹಂಸರ ಹತ್ತಿರ ನಿಂತಿದ್ದಾನೆ. ಅವರು ಆತನನ್ನು ಕೇಳುತ್ತಿದ್ದಾರೆ: “ಏನು ಆರೋಗ್ಯವೇ?”
ಪರಮಹಂಸರು ತಮ್ಮ ಕೊಠಡಿಯ ಅರ್ಧಚಂದ್ರಾಕೃತಿಯ ವರಾಂಡದಲ್ಲಿ ನಿಂತುಕೊಂಡಿ ದ್ದಾರೆ. ಚಳಿಗಾಲವಾದ್ದರಿಂದ ಕಾಷಾಯ ಬಣ್ಣದಲ್ಲಿ ಅದ್ದಿದ್ದ ಫ್ಲಾನಲ್ ಬಟ್ಟೆಯ ಷರಟು ತೊಟ್ಟುಕೊಂಡಿದ್ದಾರೆ. ನರೇಂದ್ರನನ್ನು ಕೇಳುತ್ತಿದ್ದಾರೆ: “ನೀನು ಆಗಮನಿ ಹಾಡು ಹಾಡಿದ್ದೆಯಾ?”
ಪರಮಹಂಸರು ನರೇಂದ್ರ ಮತ್ತು ಮಾಸ್ಟರೊಡನೆ ಗಂಗಾತೀರಕ್ಕೆ ಬಂದಿದ್ದಾರೆ. ನರೇಂದ್ರ ಆಗಮನಿ ಹಾಡು ಹಾಡುತ್ತಿದ್ದಾನೆ:
ಹೌದೇನೇ ಉಮಾ ಹೌದೇನೇ
ಜನವೆನ್ನುವುದಿದು ನಿಜವೇನೆ?……
ಪರಮಹಂಸರು ನಿಂತುಕೊಂಡೇ ಹಾಡು ಕೇಳುತ್ತಿದ್ದಾರೆ. ಕೇಳುತ್ತ ಕೇಳುತ್ತ ಇದ್ದ ಹಾಗೆ ಭಾವಾವಿಷ್ಟರಾಗಿಬಿಟ್ಟಿದ್ದಾರೆ. ಹೊತ್ತು ಮುಳುಗಲು ಇನ್ನೂ ಸ್ವಲ್ಪ ಸಮಯ ಇದೆ. ಸೂರ್ಯ ಬಾನಂಚಿನ ಹತ್ತಿರ ಕಾಣಿಸಿಕೊಳ್ಳುತ್ತಿದ್ದಾನೆ. ಪರಮಹಂಸರು ಭಾವಾವಿಷ್ಟರಾಗಿ ನಿಂತಿದ್ದಾರೆ. ಅವರ ಪಕ್ಕದಲ್ಲಿ ಹರಿಯುತ್ತಿರುವ ಗಂಗೆ ಉತ್ತರವಾಹಿನಿಯಾಗಿದ್ದಾಳೆ. ಉಬ್ಬರ ಬಂದು ಈಗ ಸ್ವಲ್ಪ ಹೊತ್ತು ತಾನೆ ಆಗಿದೆ. ಅವರ ಹಿಂದುಗಡೆ ಪುಷ್ಪೋದ್ಯಾನ. ಅವರ ಬಲಪಕ್ಕದಲ್ಲಿ ನಹಬತ್ಖಾನೆ ಮತ್ತು ಪಂಚವಟಿ ಕಣ್ಣಿಗೆ ಬೀಳುತ್ತಿವೆ. ನರೇಂದ್ರ ಅವರ ಹತ್ತಿರವೇ ನಿಂತು ಹಾಡುತ್ತಿದ್ದಾನೆ. ಈಗ ಮುಂಗತ್ತಲು ಕಾಲಿಕ್ಕುತ್ತಿದೆ.
ನರೇಂದ್ರನೇ ಮೊದಲಾದವರು ಪರಮಹಂಸರಿಂದ ಬೀಳ್ಕೊಂಡ ನಂತರ ಅವರು ತಮ್ಮ ಕೊಠಡಿಗೆ ಹಿಂದಿರುಗಿ ಬಂದಿದ್ದಾರೆ. ಈಗ ಜಗನ್ಮಾತೆಯ ಧ್ಯಾನದಲ್ಲಿ ತೊಡಗಿ ಆಕೆಯ ನಾಮಜಪ ಮಾಡುತ್ತಿದ್ದಾರೆ.
ಯದುಮಲ್ಲಿಕ ಕಾಳೀದೇವಾಲಯದ ಪಕ್ಕದಲ್ಲಿರುವ ತನ್ನ ತೋಟಕ್ಕೆ ಬಂದಿದ್ದಾನೆ. ತೋಟಕ್ಕೆ ಬಂದಾಗ ಸಾಮಾನ್ಯವಾಗಿ ಆತ ದೂತರನ್ನು ಕಳಿಸಿ ಶ್ರೀರಾಮಕೃಷ್ಣರನ್ನು ಬರಮಾಡಿಕೊಳ್ಳುತ್ತಾನೆ. ಇಂದು ಕೂಡಾ ಕಳಿಸಿದ್ದಾನೆ-ಶ್ರೀರಾಮಕೃಷ್ಣರು ಹೋಗಬೇಕಾಗಿದೆ. ಕಲಕತ್ತೆಯಿಂದ ಶ್ರೀ ಅಧರಸೇನ ಬಂದು ಪರಮಹಂಸರಿಗೆ ಪ್ರಣಾಮ ಮಾಡುತ್ತಿದ್ದಾನೆ. ಪರಮಹಂಸರು ಲಾಟುವಿಗೆ ಹೇಳುತ್ತಿದ್ದಾರೆ. ಲಾಟೀನು ಹೊತ್ತಿಸಿಕೊಂಡು ಹೊರಡು- ಯದುಮಲ್ಲಿಕನ ತೋಟಕ್ಕೆ ಹೋಗಿ ಬರೋಣ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನೀನು ನಾರಾಯಣನನ್ನು ಏಕೆ ಕರೆದುಕೊಂಡು ಬರಲಿಲ್ಲ?”
ಮಾಸ್ಟರು: “ನಾನೂ ನಿಮ್ಮೊಡನೇ ಬರಲೇ?”
ಶ್ರೀರಾಮಕೃಷ್ಣರು: “ಅಲ್ಲಿಗೆ ಬರಬೇಕು ಅಂತೀಯಾ? ಅಧರಸೇನ ಮೊದಲಾದವರು ಇಲ್ಲಿ ಇದ್ದಾರಲ್ಲ. ಒಳ್ಳೇದು, ಬಾ. ಮುಖ್ಯೋಪಾಧ್ಯಾಯ ಸೋದರರಿಗೂ ಬರಲಿಚ್ಛೆಯಿದೆಯೇ? (ಮುಖ್ಯೋಪಾಧ್ಯಾಯ ಸೋದರರಿಗೆ) ಬನ್ನಿ ಹೋಗೋಣ. ಇಷ್ಟೊಂದು ಜನ ಒಟ್ಟಿಗೆ ಹೋದರೆ ಬೇಗ ಹಿಂದಿರುಗಿ ಬಂದುಬಿಡಬಹುದು.”
ಪರಮಹಂಸರು ಯದುಮಲ್ಲಿಕನ ಬೈಠಕ್ಖಾನೆಗೆ ಬಂದಿದ್ದಾರೆ. ಒಳ್ಳೇ ಸುಸಜ್ಜಿತ ಬೈಠಕ್ಖಾನೆ. ಕೊಠಡಿಯ ಒಳಗೆ, ಹೊರಗೆ ಎಲ್ಲೆಲ್ಲಿಯೂ ದೀಪ ಉರಿಯುತ್ತಿವೆ. ಯದು ಮಲ್ಲಿಕ ಒಬ್ಬಿಬ್ಬರು ಸ್ನೇಹಿತರೊಡನೆ ಕುಳಿತುಕೊಂಡು ಚಿಕ್ಕ ಮಕ್ಕಳೊಡನೆ ಆಟವಾಡುತ್ತಿದ್ದಾನೆ. ಸೇವಕರೆಲ್ಲ ಕೈಕಟ್ಟಿ ನಿಂತಿದ್ದಾರೆ. ಯದುಮಲ್ಲಿಕ ನಗುನಗುತ್ತ ಕುಳಿತುಕೊಂಡೇ ಪರಮಹಂಸ ರನ್ನು ಒಳಕ್ಕೆ ಬರಮಾಡಿಕೊಂಡ. ಪರಮಹಂಸರು ಬಹಳ ಕಾಲದಿಂದಲೂ ಪರಿಚಿತರಾದ ಸ್ನೇಹಿತರೋ ಏನೋ ಎಂಬಂತೆ ಅವರೊಡನೆ ವ್ಯವಹರಿಸಲಾರಂಭಿಸಿದ.
ಯದುಮಲ್ಲಿಕ ಗೌರಾಂಗನ ಭಕ್ತ. ಆತ ಸ್ಟಾರ್ ಥಿಯೇಟರಿನಲ್ಲಿ ‘ಚೈತನ್ಯಲೀಲೆ’ ಯನ್ನು ನೋಡಿಕೊಂಡು ಈಗತಾನೆ ಬಂದಿದ್ದಾನೆ. ಅದರ ವಿಷಯವಾಗಿ ಆತ ಪರಂಹಸರಿಗೆ ವರ್ಣನೆ ಮಾಡುತ್ತಿದ್ದಾನೆ. ಪರಮಹಂಸರು ಆನಂದದಿಂದ ಆತನ ವರ್ಣನೆಯನ್ನು ಕೇಳುತ್ತ ಅಲ್ಲಿದ್ದ ಮಕ್ಕಳೊಡನೆ ಆಟವಾಡುತ್ತಿದ್ದಾರೆ. ಮಾಸ್ಟರ್ ಮತ್ತು ಮುಖ್ಯೋಪಾಧ್ಯಾಯ ಸಹೋದರರು ಅವರ ಹತ್ತಿರ ಕುಳಿತುಕೊಂಡಿದ್ದಾರೆ. ಹಾಗೇ ಮಾತಾಡುತ್ತಾ ಪರಮಹಂಸರು ಯದುಮಲ್ಲಿಕನಿಗೆ ಹೇಳುತ್ತಿದ್ದಾರೆ, ಅಧರಸೇನನಿಗೆ ಒಂದು ಸಾವಿರ ರೂಪಾಯಿ ಸಂಬಳದ ಕಲ್ಕತ್ತದ ಮುನಿಸಿಪಾಲಿಟಿಯ ಉಪಾಧ್ಯಕ್ಷನ ಪದವಿ ಸಿಕ್ಕಲಿಲ್ಲವಂತೆ ಎಂಬುದಾಗಿ. ಅಧರಸೇನ ಡೆಪ್ಯುಟಿ ಮ್ಯಾಜಿಸ್ಟ್ರೇಟ್, ತಿಂಗಳಿಗೆ ಮುನ್ನೂರು ರೂಪಾಯಿ ಸಂಖ್ಯೆ ಪಡೆಯುತ್ತಿದ್ದಾನೆ. ಅವನ ವಯಸ್ಸು ಮೂವತ್ತು. ಯದುಮಲ್ಲಿಕ ಹೇಳುತ್ತಿದ್ದಾನೆ, ಆತನಿಗಿನ್ನೂ ಚಿಕ್ಕ ವಯಸ್ಸಾದ್ದರಿಂದ ಮತ್ತೆ ಪ್ರಯತ್ನ ಮಾಡಬಹುದಲ್ಲ. ಯದುಮಲ್ಲಿಕನ ಇಚ್ಛೆಗನುಸಾರ ಪರಮಹಂಸರು ದೇವಸ್ಥಾನದ ಮುಖ್ಯದ್ವಾರದ ಹತ್ತಿರ ಬಂದಿದ್ದಾರೆ.
ಹಾಡುವುದು ಮುಗಿದನಂತರ ಮುಖ್ಯೋಪಾಧ್ಯಾಯ ಸೋದರರು ಹೊರಡಲು ಸಿದ್ಧರಾಗುತ್ತಿದ್ದಾರೆ. ಪರಮಹಂಸರೂ ಹೊರಡಲು ಮೇಲಕ್ಕೆ ಎದ್ದರು. ಆದರೆ ಭಾವಾವಿಷ್ಟ ರಾಗಿದ್ದಾರೆ. ಕೊಠಡಿಯ ಹೊರಗಿನ ವರಾಂಡಕ್ಕೆ ಬರುವುದೇ ತಡ, ಸಮಾಧಿಸ್ಥರಾಗಿ ನಿಂತುಕೊಂಡಿದ್ದಾರೆ. ಆ ತೋಟದ ಕಾವಲುಗಾರ ಒಳ್ಳೇ ಭಕ್ತ. ಪರಮಹಂಸರನ್ನು ಆಗಾಗ ತನ್ನ ಮನೆಗೆ ಕರೆದುಕೊಂಡು ಹೋಗಿ ಅವರಿಗೆ ತಿಂಡಿ ತೀರ್ಥಗಳನ್ನು ಕೊಡುತ್ತಿದ್ದ. ಪರಮಹಂಸರು ಇನ್ನೂ ಸಮಾಧಿಸ್ಥರಾಗಿ ನಿಂತಿದ್ದಾರೆ. ಕಾವಲುಗಾರ ದೊಡ್ಡ ಬೀಸಣಿಗೆ ಯಿಂದ ಬೀಸುತ್ತ ನಿಂತಿದ್ದಾನೆ. ತೋಟದ ಮ್ಯಾನೇಜರ್ ರತನ ಬಂದು ಪರಮಹಂಸರಿಗೆ ಪ್ರಣಾಮ ಮಾಡಿದ. ಪರಮಹಂಸರು ಅಷ್ಟರಲ್ಲಿ ಪ್ರಕೃತಿಸ್ಥರಾಗಿ “ನಾರಾಯಣ, ನಾರಾಯಣ” ಎಂದು ಉಚ್ಚರಿಸಿ ಆ ಕಾವಲುಗಾರನ ಮತ್ತು ಮ್ಯಾನೇಜರನ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ದಾರೆ. ಈಗ ಭಕ್ತರೊಡಗೂಡಿ ಪರಮಹಂಸರು ದೇವಸ್ಥಾನದ ಮುಖ್ಯದ್ವಾರದ ಹತ್ತಿರ ಬಂದಿದ್ದಾರೆ.
ಶ್ರೀರಾಮಕೃಷ್ಣರು ಮುಖ್ಯೋಪಾಧ್ಯಾಯ ಸೋದರರಿಗೆ ಮಾಸ್ಟರನ್ನು ತೋರಿಸಿ: “ಈತನನ್ನು ಆಗಾಗ ಸಂಧಿಸಿ.”
ಪ್ರಿಯ ಮುಖ್ಯೋಪಾಧ್ಯಾಯ: “ಇನ್ನು ಮೇಲೆ ಈತ ನಮಗೆ ಉಪಾಧ್ಯಾಯನಾಗುತ್ತಾನೆ.”
ಶ್ರೀರಾಮಕೃಷ್ಣರು : “ಗಾಂಜಾಖೋರನಿಗೆ ಗಾಂಜಾಖೋರ ದೊರೆತರೆ ಆತನೊಡನೆ ಆನಂದಪಡುವುದೇ ಆತನ ಸ್ವಭಾವ. ಆತನ ಹತ್ತಿರಕ್ಕೆ ಒಬ್ಬ ಅಮೀರ ಬಂದನೆಂದರೆ, ಆತನನ್ನು ಈತ ಮಾತಾಡಿಸುವುದು ಕೂಡ ಇಲ್ಲ; ಆದರೆ ಒಬ್ಬ ದರಿದ್ರ ಗಾಂಜಾಖೋರ ಬಂದನೆಂದರೆ ಸರಿಯೆ, ಆತನನ್ನು ತಬ್ಬಿತಕ್ಕೈಸಿ ಆತನೊಡನೆ ಆನಂದ ಪಡುತ್ತಾನೆ.” (ಎಲ್ಲರೂ ನಗುತ್ತಿದ್ದಾರೆ.)
ಘಂಟೆ ರಾತ್ರಿ ಒಂಬತ್ತು. ಮುಖ್ಯೋಪಾಧ್ಯಾಯ ಸೋದರರು ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡರು. ಅಧರಸೇನ ಮತ್ತು ಮಾಸ್ಟರ್ ನೆಲದ ಮೇಲೆ ಕುಳಿತಿದ್ದಾರೆ. ಪರಮಹಂಸರು ಅಧರಸೇನನೊಡನೆ ರಾಖಾಲನ ಸಂಬಂಧವಾಗಿ ಮಾತುಕತೆ ಆಡುತ್ತಿದ್ದಾರೆ.
ರಾಖಾಲ ಬೃಂದಾವನದಲ್ಲಿ ಬಲರಾಮನೊಡನಿದ್ದಾನೆ. ಅವನ ಶರೀರಾರೋಗ್ಯ ಸರಿಯಾಗಿಲ್ಲವೆಂದು ಕೆಲವು ದಿನಗಳ ಹಿಂದೆ ಒಂದು ಪತ್ರ ಬಂತು. ಪರಮಹಂಸರು ಆತನ ಸಂಬಂಧವಾಗಿ ಅಷ್ಟೊಂದು ವ್ಯಸನಾಕ್ರಾಂತರಾಗಿದ್ದಾರೆ. ಮೂರು ದಿನಗಳ ಹಿಂದೆ ಹಾಜರಾ ನೆದುರು, ಮಕ್ಕಳ ಹಾಗೆ ಅತ್ತುಬಿಟ್ಟರು. ಅಧರಸೇನ ರಾಖಾಲನಿಗೆ ಒಂದು ರಿಜಿಸ್ಟರ್ ಪತ್ರ ಕಳುಹಿಸಿದ್ದಾನೆ. ಇನ್ನೂ ಯಾವ ಉತ್ತರವೂ ಆತನಿಂದ ಬಂದಿಲ್ಲ.
ಶ್ರೀರಾಮಕೃಷ್ಣರು ಅಧರಸೇನನಿಗೆ: “ನಾರಾಯಣನಿಗೆ ಬೃಂದಾವನದಿಂದ ಒಂದು ಪತ್ರ ಬಂದಿದೆ. ನಿನ್ನದಕ್ಕೆ ಇನ್ನೂ ಉತ್ತರವೇ ಬರಲಿಲ್ಲವಲ್ಲ.”
ಅಧರಸೇನ: “ಹೌದು, ಇನ್ನೂ ಬಂದಿಲ್ಲ.”
ಶ್ರೀರಾಮಕೃಷ್ಣರು: “ಮಾಸ್ಟರಿಗೂ ಬೃಂದಾವನದಿಂದ ಒಂದು ಪತ್ರ ಬಂದಿದೆ.”
ಮಾಸ್ಟರ್ ಮತ್ತು ಅಧರಸೇನ ಪರಮಹಂಸರನ್ನು ಸ್ಟಾರ್ ಥಿಯೇಟರಿಗೆ ಕರೆದುಕೊಂಡು ಹೋಗಿ ಚೈತನ್ಯಲೀಲೆಯನ್ನು ತೋರಿಸಿಕೊಂಡು ಬರುವುದರ ಸಂಬಂಧವಾಗಿ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು ನಗುತ್ತ: “ಯದುಮಲ್ಲಿಕ ಹೇಳಿದ: ‘ಒಂದು ರೂಪಾಯಿ ಸೀಟಿನಿಂದಲೇ ಚೆನ್ನಾಗಿ ನೋಡಿಬರಬಹುದು. ಬಹಳ ಅಗ್ಗ!’ ಒಮ್ಮೆ ನಾವು ಪಾನಿಹಾಟಿಗೆ ಹೋಗಿಬರಬೇಕೆಂದು ಯೋಚನೆ ಮಾಡುತ್ತಿದ್ದೆವು. ಯದುಮಲ್ಲಿಕ ನಮಗೆ ಪ್ರಯಾಣಿಕರ ದೋಣಿಗೆ ಹತ್ತುವ ಹಾಗೆ ಉಪದೇಶವಿತ್ತ. (ಎಲ್ಲರೂ ನಗುತ್ತಿದ್ದಾರೆ.)
“ಹಿಂದೆ ಭಗವಂತನ ಸಂಬಂಧವಾಗಿ ಸ್ವಲ್ಪ ಕೇಳಬೇಕು, ಮಾಡಬೇಕು ಅಂತ ಆತನಿಗೆ ಇಚ್ಛೆ ಇತ್ತು. ಆತನ ಮನೆಗೆ ಒಬ್ಬ ಭಕ್ತ ಹೋಗಿ ಬರುತ್ತಾ ಇದ್ದ. ಈಗ ಆತನ ಸುಳಿವೇ ಅಲ್ಲಿ ಇಲ್ಲ. ಯದುಮಲ್ಲಿಕನನ್ನು ಸರ್ವದಾ ಹೊಗಳುಭಟ್ಟರು ಮುತ್ತಿ ಆತನನ್ನು ನಾಶಪಡಿಸುತ್ತಿದ್ದಾರೆ. ಆತನದು ಲೆಕ್ಕಾಚಾರದ ಸ್ವಭಾವ. ನಾನು ಆತನ ಮನೆಗೆ ಕಾಲಿಡುವುದೇ ತಡ, ಆತ ಕೇಳುತ್ತಾನೆ: ‘ಗಾಡಿಯ ಬಾಡಿಗೆ ಎಷ್ಟು?’ ನಾನು ಹೇಳುತ್ತೇನೆ: ‘ಅದನ್ನೆಲ್ಲ ನಿನಗೆ ಹೇಳಿಕೊಳ್ಳುವುದರಿಂದ ಏನು ಪ್ರಯೋಜನವೂ ಆಗುವ ಹಾಗಿಲ್ಲ. ನೀನು ಎರಡೂವರೆ ರೂಪಾಯಿಯನ್ನು ಮಾತ್ರ ಕೊಟ್ಟುಬಿಡು.’ ಆಗ ಆತ ಸುಮ್ಮನಾಗಿಬಿಟ್ಟು ಎರಡೂವರೆ ರೂಪಾಯಿಯನ್ನೇ ಕೊಡುತ್ತಾನೆ.” (ಎಲ್ಲರೂ ನಗುತ್ತಿದ್ದಾರೆ.)
ಆಗಲೆ ಬಹಳವಾಗಿ ರಾತ್ರಿಯಾಗಿಬಿಟ್ಟಿದೆ. ಅಧರಸೇನ ಪರಮಹಂಸರಿಗೆ ಪ್ರಣಾಮ ಮಾಡಿ ಅವರಿಂದ ಬೀಳ್ಕೊಳ್ಳುತ್ತಿದ್ದಾನೆ. ಪರಮಹಂಸರು ಮಾಸ್ಟರಿಗೆ ಹೇಳುತ್ತಿದ್ದಾರೆ, ನಾರಾಯಣನನ್ನು ತನ್ನೊಡನೆ ಕರೆದುಕೊಂಡು ಬರುವಂತೆ.
1. ಶ್ರೀ ದುರ್ಗೆಯನ್ನು ಎದುರುಗೊಳ್ಳುವ ಹಾಡುಗಳು.