೩ನೆ ಆಗಸ್ಟ್ ೧೮೮೪, ಶ್ರಾವಣ ಶುಕ್ಲ ದ್ವಾದಶಿ, ಭಾನುವಾರ
ಪರಮಹಂಸರು ದಕ್ಷಿಣೇಶ್ವರದ ತಮ್ಮ ಕೊಠಡಿಯಲ್ಲಿ ಮಧ್ಯಾಹ್ನದ ಊಟ ಮುಗಿಸಿಕೊಂಡು ಕುಳಿತುಕೊಂಡಿದ್ದಾರೆ. ಘಂಟೆ ಅಪರಾಹ್ನ ಎರಡು. ಶಿವಪುರದಿಂದ ಬಾವುಲರೆಂಬ ಹೆಸರಿನ ಗಾಯಕರ ಒಂದು ಗುಂಪು ಬಂದಿದೆ. ಭವಾನೀಪುರದ ಅನೇಕ ಮಂದಿ ಭಕ್ತರು, ಬಲರಾಮ ಮತ್ತು ಮಾಸ್ಟರ್ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ರಾಖಾಲ, ಲಾಟು, ಹರೀಶ ಪರಮಹಂಸರೊಡನೆಯೇ ಇದ್ದಾರೆ. ಅವರೂ ಕುಳಿತುಕೊಂಡಿದ್ದಾರೆ.
ಈಗ ಪರಮಹಂಸರು ಶಿವಪುರದ ಬಾವುಲ ಗಾಯಕರನ್ನು ಸಂಬೋಧಿಸಿ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಕಾಮಕಾಂಚನಗಳಲ್ಲಿ ಮನಸ್ಸು ನೆಲಸಿದ್ದರೆ ಯೋಗ ಸಾಧ್ಯವಾಗುವುದಿಲ್ಲ. ಸಾಧಾರಣ ಜೀವರ ಮನಸ್ಸು ಲಿಂಗ, ಗುಹ್ಯ, ನಾಭಿ ಇವುಗಳಲ್ಲಿ ನೆಲಸಿರುತ್ತದೆ. ಬಹಳವಾಗಿ ಸಾಧನೆ ಭಜನೆ ಮಾಡಿದ ನಂತರ ಕುಲಕುಂಡಲಿನಿ ಜಾಗ್ರತಗೊಳ್ಳುತ್ತದೆ. ಯೋಗಿಗಳು ಹೇಳುತ್ತಾರೆ, ಬೆನ್ನೆಲುಬಿನಲ್ಲಿ ಇಡಾ, ಪಿಂಗಳಾ, ಸುಷುಮ್ನಾ ಎಂಬ ಮೂರು ನಾಡಿಗಳು ಇವೆ ಎಂಬುದಾಗಿ. ಸುಷುಮ್ನಾದ ಮಧ್ಯೆ ಒಟ್ಟು ಆರು ಪದ್ಮಗಳಿವೆ. ಅವುಗಳಲ್ಲಿ ಅತ್ಯಂತ ಕೆಳಗಿನದೇ ಮೂಲಾಧಾರ ಪದ್ಮ. ಅನಂತರ ಅನುಕ್ರಮವಾಗಿ ಇವೆ ಸ್ವಾಧಿಷ್ಠಾನ, ಮಣಿಪುರ, ಅನಾಹತ, ವಿಶುದ್ಧ, ಆಜ್ಞಾಪದ್ಮಗಳು. ಇವುಗಳಿಗೆ ಷಟ್ಚಕ್ರ ಅಂತಲೂ ಹೇಳುತ್ತಾರೆ. ಕುಲಕುಂಡಲಿನಿ ಜಾಗ್ರತಗೊಂಡಿತು ಎಂದರೆ, ಅದು ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರ ಪದ್ಮಗಳನ್ನು ದಾಟಿ ಹೃದಯ ಮಧ್ಯದಲ್ಲಿರುವ ಅನಾಹತ ಪದ್ಮಕ್ಕೆ ಬರುತ್ತದೆ. ಬಳಿಕ ಅಲ್ಲಿ ನೆಲಸಿರುತ್ತದೆ. ಆಗ ಮನಸ್ಸು ಲಿಂಗ, ಗುಹ್ಯ, ನಾಭಿ ಇವುಗಳ ಕಡೆ ಹರಿಯುವುದನ್ನು ತ್ಯಜಿಸಿ ಚೇತನಗೊಳ್ಳುತ್ತದೆ. ಆಗ ಅದಕ್ಕೆ ಜ್ಯೋತಿ ದರ್ಶನ ಆಗುತ್ತದೆ. ಸಾಧಕ ಆಗ ಆಶ್ಚರ್ಯಚಕಿತನಾಗಿ ಆ ಜ್ಯೋತಿಯನ್ನು ನೋಡುತ್ತ ಕೂಗಿಕೊಳ್ಳುತ್ತಾನೆ: ‘ಇದು ಏನು? ಇದು ಏನು?’
“ಕುಲಕುಂಡಲಿನಿ ಈ ಆರು ಚಕ್ರಗಳನ್ನೂ ಭೇದಿಸಿ ಕೊನೆಗೆ ಸಹಸ್ರಾರ ಪದ್ಮವನ್ನು ಮುಟ್ಟಿದಾಗ ಸಾಧಕನಿಗೆ ಸಮಾಧಿ ಉಂಟಾಗುತ್ತದೆ.
“ವೇದಗಳು ಈ ಚಕ್ರಗಳನ್ನು ‘ಭೂಮಿ’ ಎಂಬ ಹೆಸರಿನಿಂದ ಕರೆಯುತ್ತವೆ. ಅವುಗಳ ದೃಷ್ಟಿಯಿಂದ ಒಟ್ಟು ಏಳು ಭೂಮಿಗಳಿವೆ. ಹೃದಯ ಚತುರ್ಥ ಭೂಮಿ. ತಂತ್ರಶಾಸ್ತ್ರದ ದೃಷ್ಟಿಯಿಂದ ಇದೇ ಜಾಗದಲ್ಲಿ ಅನಾಹತ ಎಂಬ ಪದ್ಮವಿದೆ. ಅದಕ್ಕೆ ಹನ್ನೆರಡು ದಳಗಳಿವೆ.
“ವಿಶುದ್ಧ ಚಕ್ರವೇ ಪಂಚಮ ಭೂಮಿ. ಈ ಸ್ಥಳಕ್ಕೆ ಮನಸ್ಸು ಹತ್ತಿತು ಎಂದರೆ, ಭಗವತ್ಕಥೆಯನ್ನು ಆಡಲು ಮತ್ತು ಕೇಳಲು ಮಾತ್ರವೇ ಹೃದಯ ವ್ಯಾಕುಲಪಡುತ್ತದೆ. ಈ ಚಕ್ರದ ಸ್ಥಾನ ಕಂಠ. ಇದು ಷೋಡಶ ದಳದ ಪದ್ಮ. ಯಾರ ಮನಸ್ಸು ಈ ಚಕ್ರವನ್ನು ಮುಟ್ಟಿರುವುದೊ ಅವರೆದುರಿಗೆ ಪ್ರಾಪಂಚಿಕ ಮಾತುಕತೆ, ಅಂದರೆ ಕಾಮಕಾಂಚನಗಳ ಮಾತುಕತೆ ನಡೆಯಿತು ಎಂದರೆ ಅವರಿಗೆ ಬಹಳ ಕಷ್ಟವಾಗುತ್ತದೆ. ಈ ವಿಧದ ಮಾತುಕತೆ ಅವರ ಕಿವಿಗೆ, ಬಿತ್ತು ಎಂದರೆ ಅವರು ಅಲ್ಲಿಂದ ಎದ್ದು ಹೊರಟುಹೋಗಿ ಬಿಡುತ್ತಾರೆ.
“ಅನಂತರ ಆರನೇ ಭೂಮಿ, ಅಂದರೆ ಆಜ್ಞಾಚಕ್ರ. ಇದಕ್ಕೆ ಎರಡೇ ದಳ. ಇಲ್ಲಿಗೆ ಕುಲಕುಂಡಲಿನಿ ಹತ್ತಿಬಂದಿತು. ಎಂದರೆ, ಭಗವಂತನ ರೂಪದರ್ಶನ ದೊರೆಯುತ್ತದೆ. ಆದರೆ ಇನ್ನೂ ಒಂದು ಸ್ವಲ್ಪ ತಡೆ ಇರುತ್ತದೆ. ಉದಾಹರಣೆಗೆ ಲಾಟೀನಿನೊಳಗಿರುವ ದೀಪ. ಮನಸ್ಸಿಗೆ ಅನ್ನಿಸುತ್ತದೆ, ಇನ್ನೇನು ಹೋಗಿ ದೀಪವನ್ನು ಮುಟ್ಟಿಬಿಡೋಣ ಎಂಬುದಾಗಿ. ಆದರೆ ಗಾಜನ್ನು ಹಾಕಿರುವುದರಿಂದ ಮುಟ್ಟಲಾಗುವುದಿಲ್ಲ.
“ಕಟ್ಟಕಡೆಯದಾಗಿ ಏಳನೇ ಭೂಮಿ, ಎಂದರೆ, ಸಹಸ್ರಾರ ಪದ್ಮ. ಕುಂಡಲಿನಿ ಇಲ್ಲಿಗೆ ಬಂತು ಎಂದರೆ, ಸಮಾಧಿಯುಂಟಾಗುತ್ತದೆ. ಈ ಸಹಸ್ರದಳ ಪದ್ಮದಲ್ಲಿ ಸಚ್ಚಿದಾನಂದ ಶಿವ ವಾಸವಾಗಿದ್ದಾನೆ. ಇಲ್ಲಿ ಕುಂಡಲಿನಿಶಕ್ತಿ ಶಿವನೊಡನೆ ಒಂದಾಗುತ್ತದೆ. ಇದಕ್ಕೆ ಶಿವಶಕ್ತಿಯರ ಮಿಲನ ಅಂತ ಹೆಸರು.”
“ಕುಂಡಲಿನಿ ಸಹಸ್ರಾರವನ್ನು ಮುಟ್ಟಿದ ನಂತರ ಮನಸ್ಸು ಸಮಾಧಿಸ್ಥವಾಗುತ್ತದೆ. ಆಗ ಸಾಧಕ ಬಾಹ್ಯಜ್ಞಾನಶೂನ್ಯನಾಗುತ್ತಾನೆ. ಬಳಿಕ ಆತ ತನ್ನ ದೇಹರಕ್ಷಣೆಯ ಕಡೆ ಮನಸ್ಸು ಕೊಡಲಾಗುವುದಿಲ್ಲ. ಬಾಯಿಗೆ ಹಾಲು ಹಾಕಿದರೆ ಅದು ಕಟಬಾಯಿಂದ ಹೊರಕ್ಕೆ ಬಂದು ಬಿಡುತ್ತದೆ. ಈ ಅವಸ್ಥೆಯಲ್ಲಿ ಪ್ರಾಣವಾಯು ಇಪ್ಪತ್ತೊಂದು ದಿನಗಳವರೆಗೆ ಇದ್ದು ಅನಂತರ ಹೊರಟುಹೋಗುತ್ತದೆ. ಜಹಜು ಸಮುದ್ರದಲ್ಲಿ ಕಪ್ಪು ನೀರನ್ನು ಮುಟ್ಟಿತು ಎಂದರೆ, ಮತ್ತೆ ಹಿಂದಿರುಗಿಬಾರದು. ಆದರೆ ಈಶ್ವರಕೋಟಿಗಳು, ಅಂದರೆ ಅವತಾರಾದಿ ಪುರುಷರು ಈ ಸಮಾಧಿಯ ಅವಸ್ಥೆಯಿಂದ ಕೆಳಕ್ಕೆ ಇಳಿದುಬರಬಲ್ಲರು. ಅವರಿಗೆ ಭಕ್ತರೊಡನೆ ಬೆರೆಯಲು, ಭಗವಂತನನ್ನು ಪ್ರೀತಿಸಲು ಇಚ್ಛೆಯಿರುವುದರಿಂದ ಅಲ್ಲಿಂದ ಇಳಿದು ಬರಬಲ್ಲರು. ಭಗವಂತ ಅವರಲ್ಲಿ ‘ವಿದ್ಯಾ ಅಹಂ’ ಅಥವಾ ‘ಭಕ್ತ ಅಹಂ’ ಇಡುತ್ತಾನೆ, ಲೋಕಶಿಕ್ಷಣಕ್ಕಾಗಿ. ಅವರ ಮನಸ್ಸು ಆರನೆ ಮತ್ತು ಏಳನೆ ಭೂಮಿಗಳ ಮಧ್ಯೆ ಓಡಾಡುತ್ತಿರುತ್ತದೆ-ಈ ಎರಡು ಭೂಮಿಗಳ ಮಧ್ಯೆ ಅವರು ದೋಣಿ ಪಂದ್ಯ ನಡೆಸುತ್ತಿರುವರೊ ಏನೊ ಎಂಬಂತೆ.
“ಸಮಾಧಿ ದೊರೆತನಂತರ ‘ವಿದ್ಯಾ ಅಹಂ’ ಅನ್ನು ಕೆಲಕೆಲವರು ಇಚ್ಛೆಪಟ್ಟು ಇಟ್ಟುಕೊಳ್ಳುತ್ತಾರೆ. ಆ ‘ಅಹಂ’ ಅವರಲ್ಲಿ ಯಾವ ಆಸಕ್ತಿಯನ್ನೂ ಬೆಳಸದು. ಅದು ನೀರಿನ ಮೇಲೆ ಎಳೆದ ಗೆರೆಯ ಹಾಗೆ.
“ಹನುಮಂತ ಸಾಕಾರ ನಿರಾಕಾರಗಳ ಸಾಕ್ಷಾತ್ಕಾರ ಪಡೆದುಕೊಂಡ ನಂತರ ‘ದಾಸ ಅಹಂ’ ಇಟ್ಟುಕೊಂಡಿದ್ದ. ನಾರದ. ಸನಕ, ಸನಂದ, ಸನಾತನ, ಸನತ್ಕುಮಾರ ಇವರೇ ಮೊದಲಾದವರು ಬ್ರಹ್ಮಜ್ಞಾನ ದೊರೆತ ನಂತರ ‘ದಾಸ ಅಹಂ’ ‘ಭಕ್ತ ಅಹಂ’ ಇಟ್ಟುಕೊಂಡಿದ್ದರು. ಇವರು ಜಹಜಿನ ಹಾಗೆ. ತಾವೇ ಈ ಭವಸಾಗರವನ್ನು ದಾಟುವುದಲ್ಲದೆ ಅನೇಕರನ್ನೂ ಹೊತ್ತು ದಾಟಿಸಬಲ್ಲರು.
“ಪರಮಹಂಸರಲ್ಲಿ ಎರಡು ವಿಧ-ನಿರಾಕಾರವಾದಿ, ಸಾಕಾರವಾದಿ. ನಿರಾಕಾರವಾದಿ-ಉದಾಹರಣೆಗೆ ತ್ರೈಲಂಗಸ್ವಾಮಿ. ಈ ವಿಧದ ಪರಮಹಂಸರು ಸ್ವಶ್ರೇಯೋಭಿಲಾಷಿಗಳು-ತಮಗೆ ಮುಕ್ತಿ ದೊರೆತರೇ ಸಾಕು ಅನ್ನುವವರು.
“ಬ್ರಹ್ಮಜ್ಞಾನ ದೊರೆತ ನಂತರವೂ ಸಾಕಾರವಾದಿ ಪರಮಹಂಸರು ಲೋಕಶಿಕ್ಷಣಕ್ಕಾಗಿ ಭಕ್ತಿಯನ್ನು ಆಶ್ರಯಿಸಿಕೊಂಡು ಬದುಕಿರುತ್ತಾರೆ: ಇಂಥವರು ತುಂಬಿದ ಕೊಡ ಇದ್ದ ಹಾಗೆ. ತಮ್ಮ ಕೊಡದಿಂದ ಉಳಿದ ಪಾತ್ರೆಗಳಿಗೆ ನೀರು ಹಂಚುತ್ತಿರುತ್ತಾರೆ. ಇವರು ತಾವು ಏನೇನು ಸಾಧನೆಮಾಡಿ ಭಗವಂತನ ಸಾಕ್ಷಾತ್ಕಾರ ಪಡೆದರೊ, ಆ ವಿಷಯಗಳನ್ನೆಲ್ಲಾ ಲೋಕ ಶಿಕ್ಷಣಕ್ಕಾಗಿ ಲೋಕಹಿತಕ್ಕಾಗಿ ಬೋಧಿಸುತ್ತಾರೆ. ಜನ ಬಹಳ ಶ್ರಮವಹಿಸಿ ಕುಡಿಯುವ ನೀರಿಗೆಂದು ಬಾವಿ ತೋಡುತ್ತಾರೆ-ಹಾರೆ, ಗುದ್ದಲಿ, ಕುಕ್ಕೆ ಇವನ್ನು ಉಪಯೋಗಿಸಿ. ನೀರು ದೊರೆತನಂತರ ಕೆಲವರು ಹಾರೆ, ಗುದ್ದಲಿ, ಕುಕ್ಕೆ ಎಲ್ಲವನ್ನೂ ಬಾವಿಯೊಳಗೇ ಬಿಟ್ಟು ಬಿಡುತ್ತಾರೆ. ಇನ್ನು ಕೆಲವರು ಅವನ್ನು ಇಟ್ಟಿರುತ್ತಾರೆ-ಪರರ ಉಪಯೋಗಕ್ಕೆ ಬರಲೆಂದು.
“ಕೆಲವರು ಮುಚ್ಚುಮರೆಯಲ್ಲಿ ಮಾವಿನ ಹಣ್ಣನ್ನು ತಿನ್ನುವುದೂ ಅಲ್ಲದೆ, ಅದರ ಚಿಹ್ನೆಯೇ ಇಲ್ಲದ ರೀತಿಯಲ್ಲಿ ಬಾಯಿ ಒರಸಿಕೊಂಡುಬಿಡುತ್ತಾರೆ. ಇನ್ನು ಕೆಲವರು ಇತರರಿಗೂ ಹಂಚಿ ತಾವೂ ತಿನ್ನುತ್ತಾರೆ-ಲೋಕಶಿಕ್ಷಣಕ್ಕಾಗಿ, ಭಗವದ್ರಸವನ್ನು ಸವಿಯಲಿಕ್ಕಾಗಿ. ‘ಸಕ್ಕರೆ ತಿನ್ನಬೇಕು ಅಂತ ಇಚ್ಛೆ. ಸಕ್ಕರೆ ಆಗಬೇಕು ಅಂತ ಇಚ್ಛೆಯಿಲ್ಲ.’
“ಗೋಪಿಯರಿಗೂ ಬ್ರಹ್ಮಜ್ಞಾನ ಮುಡಿಪಾಗಿತ್ತು. ಆದರೆ ಅವರಿಗೆ ಅದು ಬೇಡವಾಗಿತ್ತು. ಅವರು ವಾತ್ಸಲ್ಯಭಾವದಿಂದಲೊ, ಸಖ್ಯಭಾವದಿಂದಲೊ, ಮಧುರಭಾವದಿಂದಲೊ, ದಾಸೀಭಾವದಿಂದಲೊ ಭಗವಂತನೊಡನೆ ಆನಂದಪಡಬೇಕೆಂದು ಇಚ್ಛಿಸುತ್ತಿದ್ದರು.”
ಶಿವಪುರದ ಭಕ್ತರು ಗೋಪೀಯಂತ್ರ ಹಿಡಿದು ಹಾಡಲಾರಂಭಿಸಿದ್ದಾರೆ. ಅದರ ಮೊದಲನೆ ಚರಣ:
ನಾವು ಪಾಪಿಗಳಯ್ಯ-ಉದ್ಧರಿಸೊ ಕರುಣಾಮಯಾ,
ಶ್ರೀರಾಮಕೃಷ್ಣರು ಭಕ್ತರಿಗೆ: “ಭಯದಿಂದ ಹೆದರಿ ಭಗವಂತನನ್ನು ಪೂಜಿಸುವುದಿದೆಯಲ್ಲ, ಇದು ಪ್ರವರ್ತಕನ ಭಾವ. ಆತನ ಸಾಕ್ಷಾತ್ಕಾರ ದೊರಕಿಸಿಕೊಡುವ ಹಾಡುಗಳನ್ನು ಹಾಡಿ. ಆನಂದದಾಯಕ ಹಾಡುಗಳನ್ನು ಹಾಡಿ.
(ರಾಖಾಲನಿಗೆ) “ನವೀನಯೋಗಿಯ ಮನೆಯಲ್ಲಿ ಅಂದು ಎಷ್ಟು ಸೊಗಸಾಗಿ ಹಾಡಿದರು: ‘ಹರಿರಸ ಮದಿರೆಯ ಕುಡಿದು ನಿರಂತರ ಉನ್ಮತ್ತನ ತೆರ ನೀನಿರುತ’ ಎಂಬ ಹಾಡನ್ನು! ಯಾವಾಗ ನೋಡಿದರೂ ಸಂಸಾರ ತಾಪತ್ರಯದ ಮಾತುಕತೆ, ಚಿಂತನೆ ಇವುಗಳಲ್ಲೇ ನಿರತವಾಗಿರುವುದು ಒಳ್ಳೆಯದಲ್ಲ. ಭಗವಂತನ ಸಂಬಂಧವಾಗಿ ಹಾಡುವಾಗ ಆನಂದವನ್ನು ಉದ್ರೇಕಿಸತಕ್ಕಂತ ಪ್ರೇಮೋನ್ಮತ್ತತೆಯನ್ನು ಉಂಟುಮಾಡತಕ್ಕ ಹಾಡುಗಳನ್ನು ಹಾಡಬೇಕು.”
ಶಿವಪುರದ ಒಬ್ಬ ಭಕ್ತ: “ನೀವು ಹಾಡುವುದಿಲ್ಲವೇ?”
ಶ್ರೀರಾಮಕೃಷ್ಣರು: “ಏನು ಮಾಡಲಿ? ಒಳ್ಳೇದು, ಪ್ರೇರಣೆಯಾದಾಗ ಹಾಡುತ್ತೇನೆ.” ಈಗ ಪರಮಹಂಸರು ಹಾಡುತ್ತಿದ್ದಾರೆ. ಕಣ್ಣು ಊರ್ಧ್ವದೃಷ್ಟಿಯುಳ್ಳವಾಗಿವೆ. ಹಾಡುತ್ತಿದ್ದಾರೆ:
ಜಗವೇ ಮುಳುಗಿತು ನರ್ತಿಪ ಗೌರನ
ದಿವ್ಯ ಪ್ರೇಮದಿ ಅಲೆಗಳಲಿ
ಈ ಒಲವೆನ್ನನು ಸೆಳೆಯಿತು, ನುಂಗಿತು
ಕಣ್ಣು ಮಿಟುಕಿಸುವ ಹೊತ್ತಿನಲಿ!
ಭವಸಾಗರ ಕೂಪದೊಳಿರುವೆಮ್ಮನು
ಈ ಗೌರಾಂಗನ ರೀತಿಯಲಿ
ಕರುಣಿಸಿ ಕೈವಿಡಿದೆತ್ತುವ ಧೀರರು
ಇನ್ನಾರಿರುವರು ಲೋಕದಲಿ!
ಅವರು ಮತ್ತೆ ಹಾಡುತ್ತಿದ್ದಾರೆ:
ಮುಳುಗು ಮುಳುಗು ಮನವೇ-
ಹಿರಿಯೊಲವಿನ ಕಡಲಾಳಕೆ……
ಈಗ ಹಾಡುತ್ತಿದ್ದಾರೆ:
ಅತಿ ಕಠೋರ ಸಾಧನೆಯಲಿ ತೊಡಗಿರುವೀ ಶಿವನು ಕೂಡ
ಇನ್ನಾದರೂ ಕಾಣದಿರಲು ಕಾಳೀಪದನೀಲವ…….
ಮತ್ತೆ:
ಸಾಗುತಿಹುದು ಚಿತ್ತಭೃಂಗ
ಕಾಳೀಪದನೀಲಕಮಲ ಮಧುಪಾನದ ಆಸೆಗೆ!…..,
ಮತ್ತೆ ಹಾಡುತ್ತಿದ್ದಾರೆ:
ನಿನ್ನದೇ ಈ ಯಂತ್ರ? ಎಂಟು ಗೇಣಿನ ಬೊಂಬೆ!
ಯಾವ ಆಟಕೆ ಇದನು ನೀ ಮಾಡಿದೆ?…..
ಪರಮಹಂಸರು ಈ ಕೊನೆಯ ಹಾಡನ್ನು ಹಾಡುತ್ತ ಹಾಡುತ್ತ ಇದ್ದಹಾಗೆಯೇ ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಭಕ್ತರೆಲ್ಲರೂ ನಿಶ್ಯಬ್ದರಾಗಿ ಅವರನ್ನು ನೋಡುತ್ತಿದ್ದಾರೆ. ಈಗ ಕಿಂಚಿತ್ ಪ್ರಕೃತಿಸ್ಥರಾಗಿ ಭಗವತಿಯೊಡನೆ ಮಾತಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಹೇಳುತ್ತಿದ್ದಾರೆ: “ತಾಯೆ ಮೇಲಿಂದ ಕೆಳಕ್ಕೆ ಇಳಿದು ಬಾ.” ತಮ್ಮ ಮನಸ್ಸು ಇನ್ನೂ ಸಹಸ್ರಾರದಲ್ಲೇ ಬಳಸಾಡುತ್ತಿದೆ, ಎಂಬುದನ್ನು ಪರಮಹಂಸರು ಸೂಚಿಸಿದರೇನು?
ಶ್ರೀರಾಮಕೃಷ್ಣರು ಮತ್ತೆ ಹೇಳುತ್ತಿದ್ದಾರೆ: “ದಯವಿಟ್ಟು ಕೆಳಕ್ಕೆ ಇಳಿದು ಬಾ. ಈ ರೀತಿಯಾಗಿ ನನ್ನನ್ನು ಸುಮ್ಮನೆ ಕಾಡಿಸಬೇಡ. ಇಲ್ಲಿ ಸುಮ್ಮನೆ ಕುಳಿತುಕೊ.
“ಹೇ ತಾಯಿ, ಪ್ರತಿಯೊಬ್ಬನ ಭವಿಷ್ಯತ್ತೂ ಅವನವನ ಸಂಸ್ಕಾರವನ್ನು ಅವಲಂಬಿಸಿರುತ್ತದೆ. ನಾನು ಇವರಿಗೆ ಏನನ್ನು ತಾನೆ ಹೇಳಲಿ. ವಿವೇಕ ವೈರಾಗ್ಯ ಇಲ್ಲದೆ ಇತ್ತು ಎಂದರೆ ಏನೂ ದೊರೆಯದು.”
ಪರಮಹಂಸರು ಈಗ ಪೂರ್ಣ ಪ್ರಕೃತಿಸ್ಥರಾಗಿ ಹೇಳುತ್ತಿದ್ದಾರೆ: “ವೈರಾಗ್ಯದಲ್ಲಿ ಅನೇಕ ಬಗೆ. ಒಂದು ವಿಧದ್ದಿದೆ, ಅದಕ್ಕೆ ಮರ್ಕಟ ವೈರಾಗ್ಯ ಅಂತ ಹೆಸರು-ಸಂಸಾರದ ಬೇಗೆ ತಾಳಲಾರದೆ ಉಂಟಾಗುವ ವೈರಾಗ್ಯ. ಇದು ಹೆಚ್ಚು ದಿನ ನಿಲ್ಲಲೊಲ್ಲದು. ಬಳಿಕ ನಿಜವಾದ ವೈರಾಗ್ಯವೆಂಬುದಿದೆ-ಎಲ್ಲವೂ ಇದೆ, ಯಾವುದರ ಕೊರತೆಯೂ ಇಲ್ಲ. ಆದರೂ ಎಲ್ಲವೂ ಮಿಥ್ಯೆಯಾಗಿ ಬೋಧೆಯಾಗುತ್ತದೆ.
“ವೈರಾಗ್ಯ ಒಮ್ಮೆಗೇ ಉಂಟಾಗಿಬಿಡದು. ಸಮಯ ಬಾರದಿದ್ದರೆ ಉಂಟಾಗದು. ಆದರೆ ಒಂದು ವಿಷಯ-ಕೇಳಿಟ್ಟುಕೊಂಡಿರುವುದು ಒಳ್ಳೆಯದು. ಸಮಯ ಬಂದೊದಗಿದಾಗ ಅನಿಸುತ್ತದೆ: ‘ಓ ಈ ವಿಷಯ ಕೇಳಿದ್ದೆನಲ್ಲ’ ಎಂದು.
“ಇನ್ನೊಂದು ವಿಷಯ. ಈ ವಿಧದ ಮಾತುಕತೆ ಕೇಳುತ್ತ ವಿಷಯವಾಸನೆ ಸ್ವಲ್ಪಸ್ವಲ್ಪವಾಗಿ ಕಡಮೆಯಾಗಲಾರಂಭಿಸುತ್ತದೆ. ಮದ್ಯಪಾನದ ಮತ್ತನ್ನು ಕಡಮೆಮಾಡಿಕೊಳ್ಳಲು ಅಕ್ಕಿ ತೊಳೆದ ನೀರನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಯುತ್ತಲೇ ಇರಬೇಕು.
“ಬ್ರಹ್ಮಜ್ಞಾನಕ್ಕೆ ಅಧಿಕಾರಿಗಳು ಬಹಳ ಕಡಮೆ. ಗೀತೆಯಲ್ಲಿ ಹೇಳಿದೆ: ‘ಸಹಸ್ರ ಸಹಸ್ರ ಜನರಲ್ಲಿ ಎಲ್ಲೋ ಒಬ್ಬ ಬ್ರಹ್ಮಜ್ಞಾನಕ್ಕಾಗಿ ಹಾತೊರೆಯುತ್ತಾನೆ. ಈ ರೀತಿಯಾಗಿ ಹಾತೊರೆಯತಕ್ಕ ಸಹಸ್ರ ಜನರಲ್ಲಿ ಎಲ್ಲೋ ಒಬ್ಬನಿಗೆ ಮಾತ್ರ ಬ್ರಹ್ಮಜ್ಞಾನ ದೊರೆಯಬಹುದು’ ಎಂಬುದಾಗಿ.”
ಒಬ್ಬ ಭಕ್ತ ಗೀತೆಯ “ಮನುಷ್ಯಾಣಾಂ ಸಹಸ್ರೇಷು…..” ಎಂಬ ಶ್ಲೋಕವನ್ನು ಉದ್ಧರಿಸಿದ.
ಶ್ರೀರಾಮಕೃಷ್ಣರು : “ಸಂಸಾರದಲ್ಲಿ ಆಸಕ್ತಿ ಕಡಮೆಯಾದಷ್ಟೂ ಜ್ಞಾನವೃದ್ಧಿಯಾಗುತ್ತಾ ಬರುತ್ತದೆ. ಆಸಕ್ತಿ ಎಂದರೆ ಕಾಮಕಾಂಚನಾಸಕ್ತಿ.
“ಭಗವತ್ಪ್ರೇಮ ಎಲ್ಲರಿಗೂ ಉಂಟಾಗದು. ಗೌರಾಂಗನಿಗೆ ಉಂಟಾಗಿತ್ತು. ಜೀವರಿಗೆ ಭಾವ ಸಾಧ್ಯವಾಗಬಹುದು-ಇಷ್ಟು ಮಾತ್ರವೇ ಇವರಿಗೆ. ಈಶ್ವರಕೋಟಿಗಳಿಗೆ, ಅಂದರೆ ಅವತಾರಾದಿಗಳಿಗೆ ಪ್ರೇಮ ಉಂಟಾಗುತ್ತದೆ. ಪ್ರೇಮ ಉಂಟಾಯಿತು ಎಂದರೆ ಈ ಜಗತ್ತು ಮಿಥ್ಯೆ ಎಂಬ ಬೋಧೆ ಆಗೇ ಆಗುತ್ತದೆ; ಜೊತೆಗೆ ಈ ಶರೀರ ಇದೆಯಲ್ಲ, ಇಷ್ಟೊಂದು ಪ್ರೀತಿಕರವಾದ ವಸ್ತು, ಇದು ಕೂಡಾ ಮರೆತೇ ಹೋಗಿಬಿಡುತ್ತದೆ.
“ಪಾರ್ಸಿಗಳ ಒಂದು ಪುಸ್ತಕದಲ್ಲಿ ಬರೆದಿದೆ, ಚರ್ಮದೊಳಗೆ ಮಾಂಸವಿದೆ, ಮಾಂಸದೊಳಗೆ ಮೂಳೆ, ಮೂಳೆಯೊಳಗೆ ಮಜ್ಜೆ, ಇತ್ಯಾದಿ ಇತ್ಯಾದಿ. ಕೊನೆಗೆ ಎಲ್ಲದರ ಒಳಗೆ ಪ್ರೇಮ. ಪ್ರೇಮದಿಂದ ಸಾಧಕ ಕೋಮಲನಾಗಿಯೂ, ಮೃದುವಾಗಿಯೂ ಆಗಿಬಿಡುತ್ತಾನೆ. ಪ್ರೇಮದ ದೆಸೆಯಿಂದ ಕೃಷ್ಣ ತ್ರಿಭಂಗಿಯಾಗಿಬಿಟ್ಟಿದ್ದಾನೆ.
“ಪ್ರೇಮ ಉಂಟಾಯಿತು ಎಂದರೆ, ಸಚ್ಚಿದಾನಂದನನ್ನು ಕಟ್ಟಿಹಾಕಲು ಒಂದು ಹಗ್ಗ ದೊರೆತ ಹಾಗೆ. ಆತನ ದರ್ಶನ ಮಾಡಬೇಕೆಂಬ ಇಚ್ಛೆಯಾದಾಗಲೆಲ್ಲ ಆ ಹಗ್ಗವನ್ನು ಹಿಡಿದು ಎಳೆದರೇ ಸಾಕು. ಕರೆದಾಗಲೆಲ್ಲಾ ಬಂದು ದರ್ಶನವೀಯುತ್ತಾನೆ.”
“ಭಕ್ತಿ ಪಕ್ವವಾಯಿತು ಎಂದರೆ ಭಾವ. ಭಾವ ಉಂಟಾಯಿತು ಎಂದರೆ ಸಾಧಕ ಸಚ್ಚಿದಾನಂದನ ಸಂಬಂಧವಾಗಿ ಭಾವಿಸಿ ಮೂಕನಾಗಿಬಿಡುತ್ತಾನೆ. ಮತ್ತೆ, ಭಾವ ಪಕ್ವವಾಯಿತು ಎಂದರೆ, ಮಹಾಭಾವ-ಪ್ರೇಮ. ಇದು ಮಾವಿನ ಕಾಯಿಗೂ, ಹಣ್ಣಿಗೂ ಇರುವ ವ್ಯತ್ಯಾಸದ ಹಾಗೆ. ಶುದ್ಧ ಭಕ್ತಿಯೇ ಸಾರ, ಉಳಿದುದೆಲ್ಲಾ ಮಿಥ್ಯೆ.
“ಒಮ್ಮೆ ನಾರದನ ಸ್ತೋತ್ರಕ್ಕೆ ಮೆಚ್ಚಿ ಶ್ರೀರಾಮ ಒಂದು ವರ ಬೇಡಿಕೊಳ್ಳುವಂತೆ ಆತನಿಗೆ ಹೇಳಿದ. ನಾರದ ಶುದ್ಧಭಕ್ತಿಗಾಗಿ ಪ್ರಾರ್ಥಿಸಿಕೊಂಡು ಹೇಳಿದ: ‘ಹೇ ರಾಮ, ನಿನ್ನ ಜಗನ್ಮೋಹಿನಿ ಮಾಯೆಯಿಂದ ನಾನು ಮುಗ್ಧನಾಗದ ಹಾಗೆ ಮಾಡು.’ ರಾಮ ಹೇಳಿದ: ‘ಅದೇನೊ ಸರಿಯೆ. ಬೇರೆ ಯಾವುದಾದರೂ ವರ ಕೇಳು.’ ನಾರದ ಹೇಳಿದ: ‘ನನಗಿನ್ನೇನೂ ಬೇಕಾಗಿಲ್ಲ-ಕೇವಲ ಭಕ್ತಿ ಮಾತ್ರ.’
“ಈ ಭಕ್ತಿಯನ್ನು ಗಳಿಸಿಕೊಳ್ಳುವ ಬಗೆ ಹೇಗೆ? ಮೊದಲು ಸಾಧುಸಂಗ ಮಾಡಬೇಕು. ಸತ್ಸಂಗ ಮಾಡಿದರೆ ಭಗವಂತನ ಸಂಬಂಧವಾಗಿ ಶ್ರದ್ಧೆಯುಂಟಾಗುತ್ತದೆ. ಅನಂತರ ನಿಷ್ಠೆ. ಭಗವಂತನ ಮಾತುಕತೆ ಹೊರತು ಬೇರೇನೂ ಕೇಳಲು ಇಚ್ಛೆಯಾಗದು. ಭಗವತ್ಸಂಬಂಧವಾದ ಕೆಲಸಕಾರ್ಯಗಳನ್ನೇ ಮಾಡಲು ಇಚ್ಛೆಯಾಗುತ್ತದೆ. ನಿಷ್ಠೆಯ ನಂತರ ಭಕ್ತಿ. ಅನಂತರ ಭಾವ, ಮಹಾಭಾವ, ಪ್ರೇಮ, ವಸ್ತುಲಾಭ. ಮಹಾಭಾವ, ಪ್ರೇಮ ಅವತಾರಾದಿಗಳಿಗೆ ದೊರೆಯುತ್ತದೆ.
“ಸಂಸಾರಿ ವ್ಯಕ್ತಿಯ ಜ್ಞಾನ, ಭಕ್ತರ ಜ್ಞಾನ, ಅವತಾರಪುರುಷರ ಜ್ಞಾನ ಒಂದೇ ಸಮವಾದುವಲ್ಲ. ಸಂಸಾರಿ ವ್ಯಕ್ತಿಯ ಜ್ಞಾನ ಒಂದು ಹಣತೆಯ ಬೆಳಕು ಇದ್ದ ಹಾಗೆ – ಮನೆಯ ಒಳಪ್ರದೇಶ ಮಾತ್ರ ಬೆಳಕಾಗುತ್ತದೆ. ಆ ಬೆಳಕಿನಿಂದ ಊಟ, ಮನೆಗೆಲಸ, ಶರೀರ ರಕ್ಷಣೆ ಇತ್ಯಾದಿ ಸಾಧ್ಯ.
“ಭಕ್ತರ ಬೆಳಕು ಚಂದ್ರನ ಬೆಳಕು ಇದ್ದ ಹಾಗೆ. ಅದು ಮನೆಯ ಒಳಗೆ ಹೊರಗೆ ಇರುವುದನ್ನೆಲ್ಲ ಪ್ರಕಾಶಗೊಳಿಸುತ್ತದೆ. ಆದರೆ ಬಹಳ ದೂರದಲ್ಲಿರುವ ವಸ್ತುಗಳನ್ನು ಅಥವಾ ಬಹಳ ಪುಟ್ಟ ವಸ್ತುಗಳನ್ನು ಆ ಬೆಳಕಿನಿಂದ ನೋಡಲಾಗುವುದಿಲ್ಲ.
“ಅವತಾರಾದಿಗಳ ಬೆಳಕು ಸೂರ್ಯನ ಬೆಳಕು ಇದ್ದ ಹಾಗೆ. ಒಳಗೆ ಹೊರಗೆ, ದೊಡ್ಡದು ಚಿಕ್ಕದು-ಎಲ್ಲವನ್ನೂ ಅವರು ನೋಡಬಲ್ಲರು.
“ಸಂಸಾರಿಗಳ ಮನಸ್ಸು ಬಗ್ಗಡದ ನೀರಾಗಿಬಿಟ್ಟಿರುವುದೇನೊ ನಿಜ. ಆದರೆ ಅದಕ್ಕೆ ಶುದ್ಧೀಕರಣ ವಸ್ತು ಹಾಕಿದರೆ ಮತ್ತೆ ಅದು ಶುದ್ಧ ಆಗಬಹುದು. ವಿವೇಕ ವೈರಾಗ್ಯಗಳೇ ಶುದ್ಧೀಕರಣವಸ್ತು.”
ಈಗ ಪರಮಹಂಸರು ಶಿವಪುರದ ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೀವೇನಾದರೂ ಕೇಳಬೇಕು ಅಂತ ಇದ್ದರೆ ಕೇಳಿ.”
ಒಬ್ಬ ಭಕ್ತ: “ಇಷ್ಟು ಹೊತ್ತೂ ನೀವು ಆಡಿದ ಮಾತುಗಳನ್ನೆಲ್ಲ ಕೇಳಿದೆವಲ್ಲ.”
ಶ್ರೀರಾಮಕೃಷ್ಣರು: “ಇವುಗಳನ್ನೆಲ್ಲ ಕೇಳಿಟ್ಟುಕೊಂಡಿರುವುದು ಒಳ್ಳೆಯದು. ಆದರೆ ಸಮಯ ಬಾರದಿದ್ದರೆ ಏನೂ ಆಗದು. ಜ್ವರ ಎಳ್ಳು ಸಿಡಿಯುವಂತಿರುವಾಗ ಕ್ವಿನೈನ್ ಕೊಟ್ಟರೆ ಅದು ಯಾವ ಪ್ರಯೋಜನಕ್ಕೆ ಬಂದೀತು? ‘ಫೀವರ್ ಮಿಕ್ಸ್ ಚರ್’ ಕೊಟ್ಟು ಜ್ವರ ಸ್ವಲ್ಪ ಇಳಿಯಿತು ಎಂದರೆ, ಆಗ ಕ್ವಿನೈನ್ ಕೊಡಬೇಕು. ಇನ್ನು ಕೆಲವರಿಗೆ ಜ್ವರ ತಾನಾಗೇ ನಿಂತು ಹೋಗುತ್ತದೆ-ಕ್ವಿನೈನ್ ಕೊಡದೆ ಇದ್ದರೂ. ಒಂದು ಮಗು ಮಲಗಿಕೊಳ್ಳುವಾಗ ತನ್ನ ತಾಯಿಗೆ ಹೇಳಿತು; ‘ಅಮ್ಮ, ನನಗೆ ದೇಹಬಾಧೆ ಉಂಟಾದಾಗ ನನ್ನನ್ನು ಎಬ್ಬಿಸಿಬಿಡು.’ ತಾಯಿ ಹೇಳಿದಳು: ‘ಮಗು, ನಾನು ನಿನ್ನನ್ನು ಎಬ್ಬಿಸಬೇಕಾಗಿರುವುದಿಲ್ಲ. ದೇಹಬಾಧೆಯೇ ನಿನ್ನನ್ನು ಎಬ್ಬಿಸಿಬಿಡುತ್ತದೆ.’
“ಬಗೆಬಗೆಯ ಪ್ರವೃತ್ತಿಯುಳ್ಳ ಜನ ಇಲ್ಲಿಗೆ ಬರುತ್ತಾರೆ. ಕೆಲವರು ಭಕ್ತರೊಡನೆ ದೋಣಿಯಲ್ಲಿ ಬರುತ್ತಾರೆ. ಅವರಿಗೆ ಭಗವದ್ವಿಷಯ ಹಿಡಿಸದು. ತಮ್ಮ ಸ್ನೇಹಿತರನ್ನು ಮೊಳಕೈಯಿಂದ ಮೆತ್ತಗೆ ತಿವಿಯುತ್ತಲೇ ಇರುತ್ತಾರೆ: ‘ಯಾವಾಗ ಹೋಗೋಣ? ಯಾವಾಗ ಹೋಗೋಣ?’ ಏನು ಮಾಡಿದರೂ ತಮ್ಮ ಸ್ನೇಹಿತರು ಇನ್ನೂ ಏಳದಿರುವುದನ್ನು ನೋಡಿ, ಅವರು ಹೇಳುತ್ತಾರೆ: ‘ಹಾಗಾದರೆ ನೀವು ಬರುವವರೆಗೆ ನಾವು ದೋಣಿಯಲ್ಲಿ ಹೋಗಿ ಕುಳಿತಿರುತ್ತೇವೆ.’
“ಯಾರಿಗೆ ಇದೇ ಪ್ರಥಮ ಮಾನುಷಜನ್ಮವೊ ಅವರಿಗೆ ವಿಷಯಸುಖಗಳ ಅನುಭವ ಬೇಕಾಗಿರುತ್ತದೆ. ಮಾಡಬೇಕಾದ ಕಾರ್ಯಗಳು ಇನ್ನೂ ಉಳಿದುಕೊಂಡಿದ್ದರೆ, ಅವರಿಗೆ ಆತ್ಮ-ಜಾಗೃತಿ ಉಂಟಾಗದು.”
ಪರಮಹಂಸರು ಸರ್ವೆಮರಗಳ ಕಡೆಗೆ ಹೊರಟಿದ್ದಾರೆ. ಅವರು ನಗುತ್ತ ಆ ಅರ್ಧ ಚಂದ್ರಾಕೃತಿಯ ವರಾಂಡದಲ್ಲಿ ನಿಂತು ಮಾಸ್ಟರನ್ನು ಕೇಳುತ್ತಿದ್ದಾರೆ: “ಒಳ್ಳೇದು, ನನ್ನದು ಯಾವ ರೀತಿಯ ಅವಸ್ಥೆ?”
ಮಾಸ್ಟರ್ ನಗುತ್ತ: “ನಿಮ್ಮದು ಮೇಲುಗಡೆ ಸಹಜಾವಸ್ಥೆ, ಆದರೆ ಆಂತರ್ಯ ಗಂಭೀರವಾದ್ದು. ನಿಮ್ಮ ಅವಸ್ಥೆ ಏನು ಎಂಬುದನ್ನು ಅರಿತುಕೊಳ್ಳುವುದು ಬಹಳ ಕಠಿಣ.”
ಶ್ರೀರಾಮಕೃಷ್ಣರು ನಗುತ್ತ : “ಹೌದು ಇದು ಸಿಮೆಂಟು ನೆಲ ಇದ್ದ ಹಾಗೆ. ಜನ ಅದರ ಮೇಲ್ಭಾಗವನ್ನು ಮಾತ್ರ ನೋಡಬಲ್ಲರು. ಅದರೊಳಗಡೆ ಏನೇನು ಇದೆ ಎಂಬುದು ಅವರಿಗೆ ಗೊತ್ತಾಗುವುದಿಲ್ಲ.”
ಘಂಟೆ ಅಪರಾಹ್ನ ನಾಲ್ಕು. ಬಲರಾಮನೇ ಮೊದಲಾದ ಭಕ್ತರು ಕಲ್ಕತ್ತಕ್ಕೆ ಹಿಂದಿರುಗಲು ದೋಣಿ ಹತ್ತುತ್ತಿದ್ದಾರೆ. ಗಂಗೆ ಇಳಿಮುಖಳಾಗಿದ್ದಾಳೆ. ದಕ್ಷಿಣ ದಿಕ್ಕಿನಿಂದ ಗಾಳಿ ಬೀಸುತ್ತಿದೆ. ಗಂಗೆ ತರಂಗಮಾಲೆಗಳಿಂದ ವಿಭೂಷಿತಳಾಗಿದ್ದಾಳೆ. ಬಹಳ ಹೊತ್ತಿನಿಂದ ಮಾಸ್ಟರ್ ಆ ದೃಶ್ಯವನ್ನು ನೋಡುತ್ತಲೇ ಇದ್ದಾನೆ. ಬಾಗ್ಬಜಾರಿನ ಕಡೆ ಹೋಗುತ್ತಿದ್ದ ಬಲರಾಮನ ದೋಣಿ ಕಣ್ಮರೆಯಾದ ನಂತರ, ಮಾಸ್ಟರ್ ಪರಮಹಂಸರ ಹತ್ತಿರಕ್ಕೆ ಹಿಂದಿರುಗುತ್ತಿದ್ದಾನೆ.
ಪರಮಹಂಸರು ಈಗ ಆ ಅರ್ಧಾಚಂದ್ರಾಕೃತಿಯ ವರಾಂಡದಿಂದಿಳಿದು ಸರ್ವೆಮರಗಳ ಕಡೆಗೆ ಮುಂದುವರಿಯುತ್ತಿದ್ದಾರೆ. ವಾಯುವ್ಯ ದಿಕ್ಕಿನಲ್ಲಿ ಬಹಳ ಸುಂದರವಾದ ಮೋಡಗಳು ಎದ್ದಿವೆ. ಪರಮಹಂಸರು ಮಾಸ್ಟರನ್ನು ಕೇಳುತ್ತಿದ್ದಾರೆ: “ಏನು, ಮಳೆ ಬರಬಹುದೆ? ದಯವಿಟ್ಟು ಛತ್ರಿ ತೆಗೆದುಕೊಂಡು ಬಾ.” ಮಾಸ್ಟರ್ ಛತ್ರಿಯನ್ನು ತಂದುಕೊಟ್ಟ. ಲಾಟು ಕೂಡ ಅವರನ್ನು ಹಿಂಬಾಲಿಸುತ್ತಿದ್ದಾನೆ. ಪಂಚವಟಿಯ ಹತ್ತಿರಕ್ಕೆ ಬಂದ ನಂತರ ಪರಮಹಂಸರು ಲಾಟುವನ್ನು ಕೇಳುತ್ತಿದ್ದಾರೆ: “ನೀನು ದಿನದಿನಕ್ಕೂ ಕೃಶವಾಗುತ್ತಿದ್ದೀಯಲ್ಲ ಏಕೆ?”
ಲಾಟು: “ಹಸಿವೇ ಆಗುತ್ತಿಲ್ಲ.”
ಶ್ರೀರಾಮಕೃಷ್ಣರು: “ಅದೊಂದೇ ಏನು ಕಾರಣ? ಈಗಿನ ಹವ ಕೂಡ ಚೆನ್ನಾಗಿಲ್ಲ. ಬಹುಶಃ ಧ್ಯಾನವನ್ನೂ ಹೆಚ್ಚಾಗಿ ಮಾಡುತ್ತಿರಬೇಕು? (ಮಾಸ್ಟರಿಗೆ) ನೀನು ಈ ಕೆಲಸ ಮಾಡಬೇಕಾಗಿದೆ. ನೀನು ಬಾಬುರಾಮನಿಗೆ ಹೇಳು, ರಾಖಾಲ ಇಲ್ಲಿ ಇಲ್ಲದಾಗ ಒಂದೆರಡು ದಿನದ ಮಟ್ಟಿಗೆ ಇಲ್ಲಿ ಆತ ಇದ್ದು ಹೋಗಬೇಕೆಂದು. ಇಲ್ಲದಿದ್ದರೆ ನನಗೆ ಬಹಳ ತೊಂದರೆಯಾಗಿಬಿಡುತ್ತದೆ.”
ಮಾಸ್ಟರ್: “ಆಗಲಿ, ಹೇಳುತ್ತೇನೆ.”
ಪರಮಹಂಸರು ಮಾಸ್ಟರನ್ನು ಕೇಳುತ್ತಿದ್ದಾರೆ, ಬಾಬುರಾಮ ಸರಳ ಹೌದೊ ಅಲ್ಲವೋ ಎಂಬುದಾಗಿ.
ಶ್ರೀರಾಮಕೃಷ್ಣರು ಈಗ ಸರ್ವೆ ಮರಗಳ ಕಡೆಯಿಂದ ದಕ್ಷಿಣಾಭಿಮುಖವಾಗಿ ಬರುತ್ತಿದ್ದಾರೆ. ಲಾಟು ಮತ್ತು ಮಾಸ್ಟರ್ ಪಂಚವಟಿಯ ಕೆಳಗೆ ಉತ್ತರಾಭಿಮುಖವಾಗಿ ನಿಂತು ಅವರನ್ನು ನೋಡುತ್ತಿದ್ದಾರೆ. ಪರಮಹಂಸರ ಹಿನ್ನೆಲೆಯಲ್ಲಿ ಕಾರ್ಮುಗಿಲು ಗಗನಮಂಡಲವನ್ನು ಅಲಂಕರಿಸಿ ಚಾಹ್ನವಿಯಲ್ಲಿ ಪ್ರತಿಬಿಂಬತವಾಗುತ್ತಿದೆ. ಆ ಕಾರಣದಿಂದ ಗಂಗೆ ಕೃಷ್ಣವರ್ಣ ಧರಿಸಿದ್ದಾಳೆ. ಈ ಶಿಷ್ಯರ ಕಣ್ಣಿಗೆ ಪರಮಹಂಸರು ಕಾಣಬರುತ್ತಿದ್ದಾರೆ-ಸಾಕ್ಷಾತ್ ಭಗವಂತನೇ ದೇಹಧಾರಣೆಮಾಡಿಕೊಂಡು ಮರ್ತ್ಯದಲ್ಲಿ ಭಕ್ತರ ಸಲುವಾಗಿ ಕಲುಷವಿನಾಶಿನಿಯಾದ, ಹರಿಪಾದಾಂಬುಜಸಂಭೂತಳಾದ, ಸುರನದಿಯಾದ ಗಂಗೆಯ ತೀರದಲ್ಲಿ ಚಲಿಸುತ್ತಿರುವನೊ ಏನೊ ಎಂಬಂತೆ. ಸಾಕ್ಷಾತ್ತಾಗಿ ಆತನೇ ಇಲ್ಲಿ ಇರುವುದರಿಂದ ವೃಕ್ಷ, ಲತೆ, ಬಳ್ಳಿ, ಉದ್ಯಾನಮಾರ್ಗ, ದೇವಾಲಯ, ವಿಗ್ರಹ, ಸೇವಕಗಣ, ದ್ವಾರಪಾಲಕಗಣ, ಪ್ರತಿಯೊಂದು ಧೂಳಿಯ ಕಣ ಎಲ್ಲವೂ ಆನಂದದಿಂದ ಹಿಗ್ಗುತ್ತಿವೆ.
ಪರಮಹಂಸರು ಹಿಂದಿರುಗಿ ಬಂದು ತಮ್ಮ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ತಮಗಾಗಿ ಯಾರೊ ಒಬ್ಬ ಬ್ರಹ್ಮಚಾರಿ ತಯಾರು ಮಾಡಿದ್ದ ಔಷಧವನ್ನು ಅವರು ಬಹಳವಾಗಿ ಹೊಗಳುತ್ತಿದ್ದಾರೆ. ಆತನ ಮಾತೆತ್ತಿ ಹಾಜರಾ ಹೇಳುತ್ತಿದ್ದಾನೆ: “ಈಗ ಆತ ಸಂಸಾರಕ್ಕೆ ಸಿಕ್ಕಿ ಸುಮ್ಮನೆ ನರಳುತ್ತಿದ್ದಾನೆ. ಕೊನ್ನಗರದಿಂದ ನಬಾಯಿ ಚೈತನ್ಯ ಬಂದಿದ್ದಾನೆ: ಆದರೆ ನೋಡಿ, ಗೃಹಸ್ಥನಾಗಿಯೂ ಆತ ಕಾಷಾಯವಸ್ತ್ರಧಾರಿಯಾಗಿರುವುದನ್ನು!”
ಶ್ರೀರಾಮಕೃಷ್ಣರು: “ನಾನು ಏನು ಹೇಳಲಿ? ನೋಡು, ಕಾಣಬರುತ್ತಿದೆ, ತಾನೇ ಈ ಎಲ್ಲಾ ಮಾನುಷರೂಪ ಧರಿಸಿರುವ ಹಾಗೆ. ಆದ್ದರಿಂದ ಯಾರಿಗೂ ಏನೂ ಹೇಳಲಾರೆ.”
ಹಾಜರಾ: “ನರೇಂದ್ರ ಮತ್ತೆ ಮೊಕದ್ದಮೆಯಲ್ಲಿ ಸಿಕ್ಕಿಬಿದ್ದಿದ್ದಾನೆ.”
ಶ್ರೀರಾಮಕೃಷ್ಣರು: “ಆತ ಶಕ್ತಿಯನ್ನು ಒಪ್ಪುತ್ತಿಲ್ಲ. ದೇಹಧಾರಣೆಮಾಡಿಕೊಂಡು ಬಂದುದೇ ಆದರೆ ಶಕ್ತಿಯನ್ನು ಒಪ್ಪಲೇಬೇಕು.”
ಹಾಜರಾ: “ನರೇಂದ್ರ ಹೇಳುತ್ತಾನೆ: ‘ನಾನು ಒಪ್ಪಿಕೊಂಡುಬಿಟ್ಟುದೇ ಆದರೆ ಎಲ್ಲರೂ ಒಪ್ಪಿಕೊಂಡುಬಿಡುತ್ತಾರೆ. ಆದ್ದರಿಂದ ಸಾಧ್ಯವಾಗುತ್ತಿಲ್ಲ.’”
ಶ್ರೀರಾಮಕೃಷ್ಣರು: “ಹಾಗೆಂದು ಆತ ಶಕ್ತಿಯೇ ಇಲ್ಲ ಎನ್ನುವಷ್ಟು ದೂರ ಹೋಗುವುದು ಸರಿಯಲ್ಲ. ಈಗ ಆತ ಶಕ್ತಿಯ ಎಲ್ಲೆಯಲ್ಲಿದ್ದಾನೆ. ನ್ಯಾಯಾಧೀಶ ಕೂಡ, ಸಾಕ್ಷ್ಯಕೊಡಬೇಕಾಗಿ ಬಂದ ಪಕ್ಷದಲ್ಲಿ, ತನ್ನ ಪೀಠದಿಂದಿಳಿದು ಬಂದು ಸಾಕ್ಷಿಕಟ್ಟೆಯಲ್ಲಿ ನಿಲ್ಲಬೇಕಾಗುತ್ತದೆ.
(ಮಾಸ್ಟರಿಗೆ) “ಈಚೆಗೇನಾದರೂ ನೀನು ನರೇಂದ್ರನನ್ನು ಸಂಧಿಸಿದೆಯಾ?”
ಮಾಸ್ಟರ್: “ಇಲ್ಲ, ಈಗ ಕೆಲವು ದಿನದಿಂದ ಇಲ್ಲ.”
ಶ್ರೀರಾಮಕೃಷ್ಣರು: “ಒಮ್ಮೆ ಆತನನ್ನು ಸಂಧಿಸಿ ಗಾಡಿ ಮಾಡಿಕೊಂಡು ಕರೆದುಕೊಂಡು ಬಾ.”
(ಹಾಜರಾನಿಗೆ) “ಒಳ್ಳೇದು, ಆತನಿಗೂ ಇದಕ್ಕೂ (ತಮಗೂ) ಏನು ಸಂಬಂಧ ?”
ಹಾಜರಾ: “ನಿಮ್ಮಿಂದ ಸಹಾಯ ಅಪೇಕ್ಷಿಸುತ್ತಿದ್ದಾನೆ.”
ಶ್ರೀರಾಮಕೃಷ್ಣರು : “ಹಾಗಾದರೆ ಭವನಾಥ? ಸುಸಂಸ್ಕಾರವಿಲ್ಲದಿದ್ದ ಪಕ್ಷದಲ್ಲಿ ಆತ ಇಷ್ಟಾಗಿ ಇಲ್ಲಿಗೆ ಬರುತ್ತಿದ್ದನೆ? ಒಳ್ಳೇದು, ಹರೀಶ, ಲಾಟು ಇವರೊ? ಅವರು ಯಾವಾಗಲೂ ಧ್ಯಾನದಲ್ಲೇ ಇರುತ್ತಾರೆ. ಇವೆಲ್ಲ ಏನು ಮತ್ತೆ?”
ಹಾಜರಾ: “ಅದೇನೊ ಸರಿಯೆ. ಏನಿದು, ಅವರು ಯಾವಾಗಲೂ ಧ್ಯಾನದಲ್ಲೇ ತೊಡಗಿರುವುದು? ಅವರು ಇಲ್ಲಿ ಇರುವುದು ನಿಮ್ಮ ಸೇವೆಗಾಗಿ ಮಾತ್ರವಾದರೆ, ಅದು ಬೇರೆ ವಿಷಯ.”
ಶ್ರೀರಾಮಕೃಷ್ಣರು: “ಎಲ್ಲವೂ ಸಕಾಲಕ್ಕೆ ಬರುತ್ತವೆ. ಅವರು ಹೊರಟುಹೋಗಿ ಬೇರೆಯವರು ಬರಬಹುದು.”
ಹಾಜರಾ ಕೊಠಡಿಯಿಂದ ಎದ್ದು ಹೊರಟುಹೋದ. ಮುಸ್ಸಂಜೆಯಾಗಲು ಇನ್ನೂ ಸಮಯವಿದೆ. ಪರಮಹಂಸರು ಏಕಾಂತದಲ್ಲಿ ಮಾಸ್ಟರೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಒಳ್ಳೇದು, ನಾನು ಭಾವಾವಸ್ಥೆಯಲ್ಲಿ ಏನೇನೊ ಮಾತಾಡಿಕೊಳ್ಳುತ್ತೇನಲ್ಲ, ಅದು ಜನರನ್ನು ಆಕರ್ಷಿಸುತ್ತಾ ಇದೆಯೇನು?”
ಮಾಸ್ಟರ್: “ಹೌದು. ಬಹಳವಾಗಿ.”
ಶ್ರೀರಾಮಕೃಷ್ಣರು: “ಜನರ ಭಾವನೆಯೇನು? ಭಾವಾವಸ್ಥೆ ನೋಡಿದರೆ ಅವರಿಗೇನಾದರೂ ಅರ್ಥವಾಗುತ್ತದೆಯೆ ?”
ಮಾಸ್ಟರ್: “ಆಗುತ್ತಿದೆ. ಒಂದೇ ಆಧಾರದಲ್ಲಿ ಜ್ಞಾನ, ಪ್ರೇಮ, ವೈರಾಗ್ಯಗಳಿರುವುದೂ ಅಲ್ಲದೆ, ಸರಳ ಸ್ವಭಾವ ಬೇರೆ ಇದೆಯಲ್ಲ ಎಂದು. ನಿಮ್ಮ ಆಂತರ್ಯದಲ್ಲಿ ಭಗವದನುಭವಗಳ ದೊಡ್ಡ ದೊಡ್ಡ ಜಹಜು ಹಾದುಹೋಗಿಬಿಟ್ಟಿವೆ; ಆದರೂ ನೀವು ಅತ್ಯಂತ ಸರಳರಾಗಿಯೇ ತೋರಿಬರುತ್ತಿದ್ದೀರಿ! ನಿಮ್ಮ ಈ ಅವಸ್ಥೆ ಅನೇಕರಿಗೆ ಅರ್ಥವಾಗುತ್ತಿಲ್ಲ. ಆದರೆ ಕೆಲವರು ನಿಮ್ಮ ಈ ಅವಸ್ಥೆಯಿಂದಲೇ ಆಕರ್ಷಿತರಾಗುತ್ತಿದ್ದಾರೆ.”
ಶ್ರೀರಾಮಕೃಷ್ಣರು: “ಘೋಷ್ಪಾರದ ವೈಷ್ಣವರು ಭಗವಂತನನ್ನು ‘ಸಹಜ’ ಅಂದರೆ ‘ಸರಳ’ ಅಂತ ಕರೆಯುತ್ತಾರೆ. ಅವರು ಹೇಳುತ್ತಾರೆ: ಮನುಷ್ಯ ಸರಳನಾಗದ ಹೊರತು ಸರಳನನ್ನು ಅರಿಯಲಾಗುವುದಿಲ್ಲ ಎಂದು. (ಮಾಸ್ಟರಿಗೆ) ನನ್ನಲ್ಲಿ ‘ಅಹಂ’ ಇದೆಯೆ?”
ಮಾಸ್ಟರ್: “ಹೌದು, ಸ್ವಲ್ಪ ಇದೆ-ಶರೀರ ರಕ್ಷಣೆಗಾಗಿ, ಭಕ್ತರೊಡನೆ ಭಗವದಾನಂದ ಸವಿಯಲಿಕ್ಕಾಗಿ, ಜನರಿಗೆ ಜ್ಞಾನೋಪದೇಶ ಕೊಡಲಿಕ್ಕಾಗಿ. ವಿಶೇಷವಾಗಿ ಭಗವತಿಗೆ ಪ್ರಾರ್ಥನೆ ಮಾಡಿ ಸ್ವಲ್ಪವನ್ನು ಇಟ್ಟುಕೊಂಡಿದ್ದೀರಿ.”
ಶ್ರೀರಾಮಕೃಷ್ಣರು: “ಇಲ್ಲ. ನಾನು ಅದನ್ನು ಇಟ್ಟುಕೊಂಡಿಲ್ಲ. ಭಗವತಿಯೇ ಅದನ್ನು ಇಟ್ಟಿದ್ದಾಳೆ. ಒಳ್ಳೇದು, ನನಗೆ ಭಾವಾವೇಶ ಬಂದಾಗ ಏನಾಗುತ್ತದೆ?”
ಮಾಸ್ಟರ್: “ನೀವು ಸ್ವಲ್ಪ ಹೊತ್ತಿನ ಹಿಂದೆ ಹೇಳಿದಿರಲ್ಲ, ‘ಆರನೆ ಭೂಮಿಗೆ’ ಮನಸ್ಸು ಹತ್ತಿ ನಿಮಗೆ ಭಗವಂತನ ರೂಪದರ್ಶನ ಆಗುತ್ತೆ; ಬಳಿಕ ನೀವು ಮಾತುಕತೆಯಾಡಲು ಆರಂಭಿಸಿದಾಗ ‘ಐದನೆ ಭೂಮಿಗೆ’ ಮನಸ್ಸು ಇಳಿದುಬಿಡುತ್ತದೆ ಎಂಬುದಾಗಿ.”
ಶ್ರೀರಾಮಕೃಷ್ಣರು: “ಎಲ್ಲವನ್ನೂ ಭಗವತಿಯೇ ಮಾಡುತ್ತಾಳೆ. ನನಗೆ ಏನೂ ಗೊತ್ತಿಲ್ಲ.”
ಮಾಸ್ಟರ್: “ಇದಕ್ಕಾಗೇ ಜನ ಬಹಳವಾಗಿ ಆಕರ್ಷಿತರಾಗುತ್ತಿರುವುದು. ಒಳ್ಳೇದು. ನಾನು ಒಂದು ಪ್ರಶ್ನೆ ಹಾಕಲೆ? ಶಾಸ್ತ್ರದಲ್ಲಿ ಎರಡು ಅಭಿಪ್ರಾಯಗಳಿವೆ. ಒಂದು ಪುರಾಣದ ದೃಷ್ಟಿಯಿಂದ, ಕೃಷ್ಣ ಚಿದಾತ್ಮ, ರಾಧೆ ಚಿಚ್ಛಕ್ತಿ; ಇನ್ನೊಂದರ ದೃಷ್ಟಿಯಿಂದ ಕೃಷ್ಣನೇ ಕಾಳಿ-ಆದ್ಯಾಶಕ್ತಿ. ಇದು ಹೇಗೆ?”
ಶ್ರೀರಾಮಕೃಷ್ಣರು: “ಈ ಎರಡನೆಯದು ದೇವೀಪುರಾಣದ ಹಾಗೆ. ಇದರಲ್ಲಿ ಹೇಳಿದೆ, ಕಾಳಿಯೇ ಕೃಷ್ಣ ಆಗಿಬಿಟ್ಟಿದ್ದಾಳೆ ಎಂಬುದಾಗಿ. ಇದು ನಿಜವಾದರೆ ತಾನೆ ಏನು? ಭಗವಂತ ಅನಂತ, ಮಾರ್ಗವೂ ಅನಂತ.”
ಈ ಮಾತುಗಳನ್ನೆಲ್ಲ ಕೇಳಿ ಮಾಸ್ಟರ್ ಆಶ್ಚರ್ಯಚಕಿತನಾಗಿ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು ಈಗ ಹೇಳುತ್ತಿದ್ದಾನೆ: “ಓ, ಈಗ ನನಗೆ ಅರ್ಥವಾಗುತ್ತಿದೆ. ನೀವು ಹೇಳುವ ಹಾಗೆ ಮುಖ್ಯವಾಗಿ ಮಾಡಬೇಕಾಗಿರುವ ಕೆಲಸ ಚಾವಣಿಯ ಮೇಲೆ ಹತ್ತುವುದು. ಅದನ್ನು ಯಾವ ವಿಧದಿಂದ ಮಾಡಿದರೂ ಕೆಲಸ ಕೈಗೂಡಿದ ಹಾಗೆ-ಹಗ್ಗದಿಂದಲೊ, ಬೊಂಬಿನಿಂದಲೊ ಅಥವಾ ಮತ್ತಾವುದರಿಂದಲೊ.”
ಶ್ರೀರಾಮಕೃಷ್ಣರು: “ಈಗ ನೀನು ಇದನ್ನು ಅರ್ಥಮಾಡಿಕೊಂಡಿದ್ದೀಯಲ್ಲ ಇದು ಭಗವಂತನ ಕೃಪೆ ದೊರೆಯದೆ ಇತ್ತು ಎಂದರೆ ಸಂಶಯ ನಿವೃತ್ತಿಯಾಗುವುದಿಲ್ಲ.
“ಮುಖ್ಯ ವಿಷಯವೇನೆಂದರೆ, ಹೇಗಾದರೂ ಮಾಡಿ ಭಗವಂತನಲ್ಲಿ ಭಕ್ತಿ ಉಂಟಾಗುವಂತೆ, ಪ್ರೇಮ ಉಂಟಾಗುವಂತೆ ಮಾಡಿಕೊಳ್ಳಬೇಕು. ಅನೇಕ ವಿಷಯಗಳ ಸಂಬಂಧವಾಗಿ ತಿಳಿದುಕೊಳ್ಳುವುದರಿಂದ ಆಗುವ ಪ್ರಯೋಜನವೇನು? ಒಂದು ಮಾರ್ಗ ಹಿಡಿದು ಮುಂದುವರಿಯುತ್ತಿದ್ದ ಹಾಗೇ ಭಗವಂತನಲ್ಲಿ ಪ್ರೀತಿ ಉಂಟಾಯಿತು ಎಂದರೆ, ಕಾರ್ಯ ಕೈಗೂಡಿದ ಹಾಗೆ. ಪ್ರೀತಿ ಉಂಟಾಯಿತು ಎಂದರೆ ನಿಜವಾಗಿಯೂ ಆತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ಅನಂತರ ಆವಶ್ಯಕವಾಗಿದ್ದ ಪಕ್ಷದಲ್ಲಿ ಆತ ಎಲ್ಲವನ್ನೂ ತಿಳಿಸಿಕೊಟ್ಟು ಬಿಡುತ್ತಾನೆ – ಎಲ್ಲಾ ಮಾರ್ಗಗಳ ವಿಷಯವಾಗಿಯೂ ತಿಳಿಸಿಕೊಟ್ಟುಬಿಡುತ್ತಾನೆ. ಭಗವಂತನಲ್ಲಿ ಪ್ರೀತಿ ಉಂಟಾಗಿಬಿಟ್ಟರೆ ಎಲ್ಲಾ ಮುಗಿದ ಹಾಗೆ-ಉಳಿದ ವಿಷಯಗಳ ವಿಚಾರದ ಆವಶ್ಯಕತೆಯೇನಿರದು. ಮಾವಿನಹಣ್ಣು ತಿನ್ನಲು ಬಂದಿದ್ದೀಯೆ ತೋಟಕ್ಕೆ. ಅವನ್ನು ತಿಂದು ಹೋಗು. ಎಷ್ಟು ಕೊಂಬೆಗಳಿವೆ. ಎಷ್ಟು ಎಲೆಗಳಿವೆ, ಇವೇ ಮೊದಲಾದುವುಗಳ ಲೆಕ್ಕಾಚಾರದ ಆವಶ್ಯಕತೆಯೇನಿಲ್ಲ. ಹನುಮಂತನ ಭಾವ ಆರೋಪಿಸಿಕೊಳ್ಳುವುದು ಒಳ್ಳೆಯದು: ‘ನನಗೆ ತಿಥಿ, ವಾರ, ನಕ್ಷತ್ರ ಇವುಗಳ ವಿಷಯ ಏನೂ ಗೊತ್ತಿಲ್ಲ; ಕೇವಲ ರಾಮಚಿಂತನೆ ಮಾಡುತ್ತಿದ್ದೇನೆ.’”
ಮಾಸ್ಟರ್ : “ಈಗ ನನಗೆ ಇಚ್ಛೆಯಾಗುತ್ತಿದೆ. ನನ್ನ ಕೆಲಸಕಾರ್ಯಗಳು ಬಹಳವಾಗಿ ಕಡಮೆಯಾಗಿಬಿಟ್ಟು, ನನ್ನ ಮನಸ್ಸು ಭಗವಂತನ ಕಡೆಗೆ ಅಧಿಕವಾಗಿ ಹರಿದುಹೋಗುವಂತಾಗಲೆಂದು.”
ಶ್ರೀರಾಮಕೃಷ್ಣರು: “ಆಹಾ ! ಅದರಲ್ಲೇನು ಸಂದೇಹ. ಆದರೆ ಜ್ಞಾನಿ ನಿರ್ಲಿಪ್ತನಾಗಿ ಸಂಸಾರದಲ್ಲಿ ಇರಬಲ್ಲ.”
ಮಾಸ್ಟರ್: “ಅದೇನೋ ನಿಜ. ಆದರೆ ನಿರ್ಲಿಪ್ತನಾಗಿ ಇರಬೇಕಾದರೆ ವಿಶೇಷ ಶಕ್ತಿ ಬೇಕಲ್ಲ.”
ಶ್ರೀರಾಮಕೃಷ್ಣರು: “ಹೌದು, ಅದು ನಿಜ. ಆದರೆ ಹಿಂದೆ ನೀನು ಭಗವಂತನನ್ನು ಸಂಸಾರ ಜೀವನಕ್ಕಾಗಿ ಪ್ರಾರ್ಥಿಸಿರಬೇಕು. ಕೃಷ್ಣ ರಾಧೆಯ ಹೃದಯದಲ್ಲಿ ವಾಸವಾಗಿದ್ದ; ಆದರೆ ರಾಧೆಗೆ ಇಚ್ಛೆಯಾಯಿತು. ಮನುಷ್ಯರೂಪದಲ್ಲಿ ಆತನೊಡನೆ ಕ್ರೀಡಿಸಬೇಕೆಂದು. ಅದಕ್ಕಾಗಿಯೇ ಬೃಂದಾವನ ಲೀಲೆ. ಈಗ ಭಗವಂತನಿಗೆ ಪ್ರಾರ್ಥನೆಮಾಡು. ನಿನ್ನ ಕೆಲಸ ಕಾರ್ಯಗಳನ್ನು ಕಡಮೆಮಾಡಿಕೊಡುವಂತೆ. ನೀನು ಮಾನಸಿಕವಾಗಿ ತ್ಯಜಿಸಲು ಶಕ್ತನಾದರೆ ಎಲ್ಲಾ ನಿನಗೆ ದೊರೆತುಬಿಡುತ್ತದೆ.”
ಮಾಸ್ಟರ್: “ಇದು ಬಾಹ್ಯತ್ಯಾಗ ಯಾರಿಗೆ ಸಾಧ್ಯವಿಲ್ಲವೋ ಅವರಿಗೆ ಮಾತ್ರ. ಆದರೆ ಉತ್ತಮ ಮಟ್ಟದವರಿಗೆ ಪೂರ್ಣತ್ಯಾಗ-ಮಾನಸಿಕ ತ್ಯಾಗ ಮತ್ತು ಬಾಹ್ಯತ್ಯಾಗ.”
ಪರಮಹಂಸರು ಸುಮ್ಮನೆ ಕುಳಿತಿದ್ದು ಈಗ ಮತ್ತೆ ಮಾತಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಈಗ ನಾನು ಸ್ವಲ್ಪ ಹೊತ್ತಿನ ಹಿಂದೆ ವೈರಾಗ್ಯದ ವಿಷಯವಾಗಿ ಮಾತನಾಡಿದೆನಲ್ಲ, ಅದು ನಿನಗೆ ಹೇಗೆ ಹಿಡಿಸಿತು?”
ಮಾಸ್ಟರ್: “ಬಹಳ ಚೆನ್ನಾಗಿ.”
ಶ್ರೀರಾಮಕೃಷ್ಣರು: “ವೈರಾಗ್ಯ ಅಂದರೆ ಏನು ಹೇಳು ನೋಡೋಣ?”
ಮಾಸ್ಟರ್: “ವೈರಾಗ್ಯವೆಂದರೆ ಕೇವಲ ಸಂಸಾರದ ಮೇಲಿನ ವಿರಾಗವಲ್ಲ. ಭಗವಂತನ ಕಡೆ ಅನುರಾಗ; ಸಂಸಾರದ ಕಡೆ ವಿರಾಗ.”
ಶ್ರೀರಾಮಕೃಷ್ಣರು : “ಹೌದು, ಸರಿಯಾಗಿ ಹೇಳಿದೆ. ಸಂಸಾರಿಗೆ ಹಣದ ಆವಶ್ಯಕತೆಯೇನೋ ಇದೆ; ಆದರೆ ಹಣಕ್ಕಾಗಿ ಹಗಲಿರುಳು ಚಿಂತಿಸಬೇಕಾಗಿಲ್ಲ. ‘ಯದೃಚ್ಛಾಲಾಭ’ -ಇದೇ ಒಳ್ಳೆಯದು. ಸಂಚಯ ಮಾಡಿಸಲು ಬಹಳವಾಗಿ ಶ್ರಮಿಸಬೇಡ. ಯಾರು ಭಗವಂತನಿಗೆ ಮನಸ್ಸು ಪ್ರಾಣಗಳನ್ನು ಅರ್ಪಿಸಿಬಿಟ್ಟಿದ್ದಾರೊ, ಯಾರು ಆತನ ಭಕ್ತರೊ ಅವನಲ್ಲಿ ಶರಣಾಗತರಾಗಿದ್ದಾರೊ ಅವರು ಅವುಗಳ ಕಡೆ ಅಷ್ಟೊಂದು ಮನಸ್ಸು ಕೊಡುವುದಿಲ್ಲ. ಸಂಪಾದಿಸಿದ ಹಾಗೆ ಖರ್ಚೂ ಆಗುತ್ತಿರುತ್ತದೆ. ಹಣ ಒಂದು ಕಡೆಯಿಂದ ಬರುತ್ತಿರುತ್ತದೆ, ಇನ್ನೊಂದು ಕಡೆಯಿಂದ ಖರ್ಚಾಗಿ ಬಿಡುತ್ತಿರುತ್ತದೆ. ಇದಕ್ಕೇ ‘ಯದೃಚ್ಛಾ ಲಾಭ’ ಅಂತ ಹೆಸರು. ಹೀಗೆಂದು ಗೀತೆಯಲ್ಲಿ ಹೇಳಿದೆ.”
ಶ್ರೀರಾಮಕೃಷ್ಣರು ಹರಿಪದನ ಸಂಬಂಧವಾಗಿ ಮಾತೆತ್ತಿ ಹೇಳುತ್ತಿದ್ದಾರೆ: “ಅಂದು ಆತ ಇಲ್ಲಿಗೆ ಬಂದಿದ್ದ.”
ಮಾಸ್ಟರ್: “ಆತನಿಗೆ ಹರಿಕಥೆ ಗೊತ್ತಿದೆ. ಪ್ರಹ್ಲಾದನ ಚರಿತ್ರೆ, ಶ್ರೀಕೃಷ್ಣ ಜನ್ಮ-ಇವನ್ನು ಬಹಳ ಚೆನ್ನಾಗಿ ಮಾಡಬಲ್ಲ. ಕಂಠ ಬಹಳ ಚೆನ್ನಾಗಿದೆ.”
ಶ್ರೀರಾಮಕೃಷ್ಣರು: “ಹಾಗೇನು? ಅಂದು ಆತನ ಕಣ್ಣುಗಳ ಕಡೆ ನೋಡಿದೆ. ಅಂತರ್ದಷ್ಟಿ ಇತ್ತು. ಆತನನ್ನು ಕೇಳಿದೆ: “ನೀನು ಬಹಳವಾಗಿ ಧ್ಯಾನದಲ್ಲಿ ತೊಡಗುತ್ತಿದ್ದೀಯೇನು?’ ಆಗ ಆತ ಸುಮ್ಮನೆ ತಲೆ ತಗ್ಗಿಸಿ ಕುಳಿತುಕೊಂಡ. ನಾನು ಆತನಿಗೆ ಹೇಳಿದೆ: ‘ಬೇಡಪ್ಪ, ಅಷ್ಟೊಂದು ಮಾಡಬೇಡ.’”
ಮುಸ್ಸಂಜೆಯಾಗಿದೆ. ಪರಮಹಂಸರು ಭಗವತಿಯ ನಾಮವನ್ನು ಜಪಿಸುತ್ತ ಆಕೆಯ ಧ್ಯಾನದಲ್ಲಿ ತೊಡಗಿದ್ದಾರೆ. ದೇವಾಲಯಗಳಲ್ಲಿ ಮಂಗಳಾರತಿ ನಡೆಯುತ್ತಿದೆ. ಚಂದ್ರ ಉದಯಿಸುತ್ತಿದ್ದಾನೆ. ದೇವಾಲಯ, ಪ್ರಾಂಗಣ, ಉದ್ಯಾನವನ ಎಲ್ಲ ಚಂದ್ರನ ಬೆಳಕಿನಿಂದ ಸ್ನಾನ ಮಾಡುತ್ತಿವೆ. ಗಂಗೆಯಲ್ಲೆದ್ದಿದ್ದ ಲಕ್ಷಾಂತರ ಕಿರುದೆರೆಗಳ ಮೇಲೆ ಚಂದ್ರ ಸುಮ್ಮನೆ ನಲಿದಾಡುತ್ತಿದ್ದಾನೆ. ಈಗ ಘಂಟೆ ರಾತ್ರಿ ಎಂಟು. ಪರಮಹಂಸರೊಡನೆ ರಾಖಾಲ ಮತ್ತು ಮಾಸ್ಟರ್ ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಬಾಬುರಾಮ ಹೇಳುತ್ತಾನೆ: ‘ಸಂಸಾರ ಜೀವನ ಅಬ್ಬಬ್ಬ!’”
ಮಾಸ್ಟರ್: “ಹೌದು, ಅವರಿಂದ ಇವರಿಂದ ಕೇಳಿದ ಮಾತು. ಸಂಸಾರದ ವಿಷಯ ಅವನಿಗೇನು ಗೊತ್ತಿದೆ?”
ಶ್ರೀರಾಮಕೃಷ್ಣರು: “ಹೌದು, ಅದೇನೋ ನಿಜ. ನಿರಂಜನನ್ನು ನೋಡಿದ್ದೀಯಾ? ಆತ ಅತ್ಯಂತ ಸರಳ.”
ಮಾಸ್ಟರ್: “ಹೌದು, ನೋಡಿದ್ದೇನೆ. ಆತನ ರೂಪವೇ ಆಕರ್ಷಿಸಿಬಿಡುತ್ತದೆ. ಆತನ ಕಣ್ಣುಗಳು ಎಷ್ಟು ಭಾವಪ್ರದರ್ಶಕವಾಗಿವೆ!”
ಶ್ರೀರಾಮಕೃಷ್ಣರು: “ಕೇವಲ ಕಣ್ಣುಗಳೇ ಅಲ್ಲ-ಇಡೀ ವ್ಯಕ್ತಿಯೇ. ಮದುವೆಯ ಪ್ರಯತ್ನ ನಡೆಯಿತು. ಆಗ ಆತ ಹೇಳಿದ: ‘ನನ್ನನ್ನೇಕೆ ಮುಳುಗಿಸಲು ಪ್ರಯತ್ನಿಸುತ್ತಿದ್ದೀರಿ?’ (ನಗುತ್ತ) ನೋಡು, ಇದರ ನಿಜಸ್ಥಿತಿ ತಿಳಿಸು. ಜನ ಹೇಳುತ್ತಾರೆ, ಹಗಲೆಲ್ಲಾ ದುಡಿದು ಹೋಗಿ ಹೆಂಡತಿಯೊಡನೆ ಬೆರೆತರೆ ಬಹಳ ಆನಂದ ಉಂಟಾಗುತ್ತದೆ ಎಂಬುದಾಗಿ.”
ಮಾಸ್ಟರ್: “ಹೌದು. ಆ ರೀತಿಯ ಭಾವನೆ ಉಳ್ಳವರಿಗೆ ಅದು ಹಾಗೆ ಆಗುವುದೇನೋ ನಿಜ. (ರಾಖಾಲನ ಕಡೆ ನೋಡಿ ನಗುತ್ತಾನೆ) ಪರೀಕ್ಷೆ ನಡೆಯುತ್ತಿದೆ. ಆಂತರ್ಯವನ್ನು ಬಯಲುಮಾಡಿಬಿಡುತ್ತದೆ.”
ಶ್ರೀರಾಮಕೃಷ್ಣರು ನಗುತ್ತ: “ತಾಯಿ ಹೇಳುತ್ತಾಳೆ: ‘ನನ್ನ ಮಗನಿಗೆ ಒಂದು ಗೊತ್ತುಗುರಿ ಮಾಡಿಕೊಟ್ಟುಬಿಟ್ಟೆನೆಂದರೆ, ಬದುಕಿಕೊಂಡೆನಪ್ಪ! ಆಗ ಪ್ರಪಂಚದ ಬೇಗೆಯನ್ನು ತಾಳಲಾರದೆ ಹೋದಾಗ. ಆತ ಅದರ ನೆರಳಲ್ಲಿ ಕುಳಿತು ವಿಶ್ರಮಿಸಿಕೊಳ್ಳುತ್ತಾನೆ.
ಮಾಸ್ಟರ್: “ಹೌದು, ನಿಜ. ಆದರೆ ವಿವಿಧ ಮಟ್ಟದ ತಂದೆತಾಯಿಗಳಿದ್ದಾರೆ. ಮುಕ್ತನಾದ ತಂದೆ ತನ್ನ ಮಕ್ಕಳನ್ನು ಮದುವೆಯ ಬಂಧನದಿಂದ ಕಟ್ಟಿಹಾಕುವುದಿಲ್ಲ. ಹಾಗೇನಾದರೂ ಮಾಡಿದ್ದೇ ಆದರೆ ಆತ ಒಳ್ಳೇ ಮುಕ್ತಪುರುಷನೇ!”
ಅಧರಸೇನ ಕಲ್ಕತ್ತದಿಂದ ಬಂದು ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಂಡ. ಈಗ ಕಾಳಿಯನ್ನು ದರ್ಶನಮಾಡಿ ಬರಲು ದೇವಾಲಯದ ಕಡೆ ಹೋಗುತ್ತಿದ್ದಾನೆ. ಮಾಸ್ಟರೂ ಆತನನ್ನು ಹಿಂಬಾಲಿಸುತ್ತಿದ್ದಾನೆ.
ಮಾಸ್ಟರ್ ಗಂಗೆಯ ಸ್ನಾನಘಟ್ಟದ ಹತ್ತಿರ ಕುಳಿತಿದ್ದಾನೆ. ನದಿಯಲ್ಲಿ ಉಬ್ಬರ ಈಗತಾನೆ ಆರಂಭವಾಗಿದೆ. ಮಾಸ್ಟರ್ ಏಕಾಂತದಲ್ಲಿ ಕುಳಿತು ನೆನಸಿಕೊಳ್ಳುತ್ತಿದ್ದಾನೆ, ಪರಮಹಂಸರ ಅದ್ಭುತ ಜೀವನಚರಿತ್ರೆಯನ್ನು-ಅವರ ಅದ್ಭುತ ಸಮಾಧಿಯ ಅವಸ್ಥೆ, ಮತ್ತೆ ಮತ್ತೆ ಭಾವಸಮಾಧಿ, ಪ್ರೇಮಾನಂದ, ಅವಿಶ್ರಾಂತ ಭಗವತ್ಸಬಂಧವಾದ ಮಾತುಕತೆ, ಭಕ್ತರಲ್ಲಿಟ್ಟಿರುವ ಅಕೃತ್ರಿಮಪ್ರೇಮ, ಬಾಲಕನಂಥ ವ್ಯವಹಾರ ಇವೇ ಮೊದಲಾದುವುಗಳನ್ನು, ಮತ್ತೆ ಭಾವಿಸುತ್ತಿದ್ದಾನೆ. ಇವರು ಯಾರಿರಬೇಕು? ಏನು ಭಗವಂತನೇ ಭಕ್ತರ ಸಲುವಾಗಿ ಇವರ ರೂಪಿನಲ್ಲಿ ದೇಹಧಾರಣೆ ಮಾಡಿಕೊಂಡು ಬಂದಿದ್ದಾನೇನು?
ಅಧರಸೇನ ಮತ್ತು ಮಾಸ್ಟರ್ ಪರಮಹಂಸರ ಕೊಠಡಿಗೆ ಬಂದಿದ್ದಾರೆ. ಅಧರಸೇನ ಚಿತ್ತಗಾಂಗಿಗೆ ತನ್ನ ಕಚೇರಿಯ ಕಾರ್ಯಾರ್ಥವಾಗಿ ಹೋಗಿದ್ದ. ಅಲ್ಲಿ ಆತ ಚಂದ್ರನಾಥ ಮತ್ತು ಸೀತಾಕುಂಡಗಳಿಗೆ ಯಾತ್ರೆ ಹೋಗಿದ್ದ. ಈಗ ಅವುಗಳ ಸಂಬಂಧವಾಗಿ ವರ್ಣನೆ ಮಾಡುತ್ತಿದ್ದಾನೆ.
ಅಧರಸೇನ: “ಸೀತಾಕುಂಡದ ನೀರಿನಿಂದ ಉರಿ ‘ಭಗ್, ಭಗ್’ ಅಂತ ಏಳುತ್ತಿರುತ್ತದೆ.”
ಶ್ರೀರಾಮಕೃಷ್ಣರು: “ಅದು ಹೇಗೆ ಸಾಧ್ಯ?”
ಅಧರಸೇನ: “ನೀರಿನಲ್ಲಿ ರಂಜಕವಿದೆ.”
ರಾಮ ಚಟ್ಟೋಪಾಧ್ಯಾಯ ಈಗ ಕೊಠಡಿಗೆ ಬಂದಿದ್ದಾನೆ. ಪರಮಹಂಸರು ಅಧರಸೇನನ ಎದುರು ಆತನನ್ನು ಹೊಗಳುತ್ತಿದ್ದಾರೆ.
ಶ್ರೀರಾಮಕೃಷ್ಣರು: “ರಾಮ ಇಲ್ಲಿ ಇರುವುದರಿಂದ ನಮಗೆ ಯಾವ ಯೋಚನೆಯೂ ಇಲ್ಲ. ಹರೀಶ, ಲಾಟು ಇವರನ್ನು ಹುಡುಕಿ ಕರೆದುಕೊಂಡು ಬಂದು ಊಟ ಮಾಡಿಸುತ್ತಾನೆ. ಅವರು ಉದ್ಯಾನವನದ ಯಾವಾವುದೋ ಮೂಲೆಗಳಲ್ಲಿ ಕುಳಿತು ಧ್ಯಾನಮಗ್ನರಾಗಿರುವುದುಂಟು. ಅಲ್ಲಿಗೆಲ್ಲಾ ಹೋಗಿ ಸಕಾಲಕ್ಕೆ ಕರೆದುಕೊಂಡು ಬರುತ್ತಾನೆ.”
೬ನೆ ಸೆಪ್ಟೆಂಬರ್ ೧೮೮೪, ಭಾದ್ರಪದ ಕೃಷ್ಣ ಪಾಡ್ಯಮಿ, ಶನಿವಾರ
ಪರಮಹಂಸರು ಅಧರಸೇನನ ಮನೆಯ ಎರಡನೆಯ ಅಂತಸ್ತಿನಲ್ಲಿರುವ ಬೈಠಕ್ಖಾನೆಯಲ್ಲಿ ಕುಳಿತುಕೊಂಡಿದ್ದಾರೆ. ಅವರ ಹತ್ತಿರ ನರೇಂದ್ರ, ಮುಖ್ಯೋಪಾಧ್ಯಾಯ ಸೋದರರು, ಭವನಾಥ, ಮಾಸ್ಟರ್, ಚುನೀಲಾಲ, ಹಾಜರಾ ಇವರೇ ಮೊದಲಾದ ಭಕ್ತರು ಕುಳಿತಿದ್ದಾರೆ. ಘಂಟೆ ಅಪರಾಹ್ನ ಮೂರು.
ನರೇಂದ್ರನ ಹಾಡುಗಾರಿಕೆಗಾಗಿ ವ್ಯವಸ್ಥೆ ನಡೆಯುತ್ತಿದೆ. ಆತ ತಂಬೂರಿಯನ್ನು ಶ್ರುತಿ ಮಾಡುತ್ತಿದ್ದ ಹಾಗೆಯೇ ತಂತಿಯೊಂದು ಕಿತ್ತುಹೋಗಿಬಿಟ್ಟಿತು. ಪರಮಹಂಸರು ಕೂಗಿಕೊಂಡರು: “ಓ! ಏನು ಮಾಡಿಬಿಟ್ಟೆಯೋ?” ನರೇಂದ್ರ ಈಗ ತಬಲವನ್ನು ಶ್ರುತಿಮಾಡುತ್ತಿದ್ದಾನೆ. ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ: “ನಿನ್ನ ತಬಲ ಕೆನ್ನೆಗೆ ಏಟು ಬಿದ್ದ ಶಬ್ದ ಕೊಡುತ್ತಿದೆ!”
ನರೇಂದ್ರ ಕೀರ್ತನೆಯ ಮಾತೆತ್ತಿ ಹೇಳುತ್ತಿದ್ದಾನೆ: “ಕೀರ್ತನೆಯಲ್ಲಿ ತಾಳಬದ್ಧತೆ ಇಲ್ಲ. ಅದಕ್ಕಾಗಿಯೇ ಅದು ಅಷ್ಟೊಂದು ಜನಪ್ರಿಯವಾಗಿರುವುದು. ಜನ ಅದನ್ನು ಬಹಳವಾಗಿ ಪ್ರೀತಿಸುತ್ತಾರೆ.”
ಶ್ರೀರಾಮಕೃಷ್ಣರು: “ಏನು ಬುದ್ಧಿಯಿಲ್ಲದ ಮಾತು! ಅದರಲ್ಲಿ ಕರುಣರಸ ತುಂಬಿರುವುದರಿಂದ ಜನ ಪ್ರೀತಿಸುತ್ತಾರೆ.”
ನರೇಂದ್ರ ಹಾಡುತ್ತಿದ್ದಾನೆ:
ಬಲುಮಧುರವೊ ನಿನ್ನ ಹೆಸರು
ಕಿವಿಗೆ ಸುಧೆಯ ಕರೆವುದು!……
ಆತ ಮತ್ತೆ ಹಾಡುತ್ತಿದ್ದಾನೆ:
ಇನ್ನೆಷ್ಟು ದಿನ ನಾನು ಬರಿಯ ವಿಫಲತೆಯಲ್ಲಿ
ತೊಳಲಬೇಕೊ…….
ಶ್ರೀರಾಮಕೃಷ್ಣರು ಹಾಜರಾನಿಗೆ ನಗುತ್ತ: “ಈತ ನನ್ನ ಮುಂದೆ ಹಾಡಿದ ಮೊದಲನೇ ಹಾಡೇ ಇದು.”
ನರೇಂದ್ರ ಇನ್ನೂ ಒಂದೆರಡು ಹಾಡುಗಳನ್ನು ಹಾಡಿದ. ಈಗ ಗಾಯಕ ವೈಷ್ಣವಚರಣ ಹಾಡುತ್ತಿದ್ದಾನೆ:
ನೀ ಮಥುರೆಯೊಳು ರಾಜವೈಭವದಿ ಮುಳುಗಿರಲು
ನಾವು ನಿನ್ನನ್ನು ಈಗ ಅರಿವುದೆಂತು!……..
ಶ್ರೀರಾಮಕೃಷ್ಣರು: “ ‘ಹರಿನಾಮವನು ನುಡಿಸು ಓ ನನ್ನ ವೀಣೆ’ ಎಂಬುದು ಒಮ್ಮೆ ನಡೆಯಲಿ.”
ವೈಷ್ಣವಚರಣ ಹಾಡುತ್ತಿದ್ದಾನೆ:
ಹರಿನಾಮವನು ನುಡಿಸು ಓ ನನ್ನ ವೀಣೆ
ಹರಿಚರಣವಲ್ಲದೆಯೇ ಪರಮಪದ ಕಾಣೆ…..
ಹಾಡನ್ನು ಕೇಳುತ್ತ ಕೇಳುತ್ತ ಇದ್ದ ಹಾಗೆ ಪರಮಹಂಸರು ಭಾವಾವಿಷ್ಟರಾಗಿ ಬಿಡುತ್ತಿದ್ದಾರೆ. ‘ಆಹ! ಆಹ!” ಎಂದು ಹೇಳುತ್ತ ಹೇಳುತ್ತ ಇದ್ದ ಹಾಗೇ ಸಮಾಧಿಸ್ಥರಾಗಿಬಿಟ್ಟರು. ಭಕ್ತರು ಅವರ ಸುತ್ತ ಅವರನ್ನು ಏಕದೃಷ್ಟಿಯಿಂದ ನೋಡುತ್ತಿದ್ದಾರೆ. ಕೊಠಡಿ ಜನರಿಂದ ಕಿಕ್ಕಿರಿದು ತುಂಬಿದೆ.
ಗಾಯಕ ಮತ್ತೆ ಹಾಡುತ್ತಿದ್ದಾನೆ. ಆತ ಭಗವತ್ಪ್ರೇಮದ ವಿಷಯವಾಗಿ ಆಶುಕವಿತೆಗಳನ್ನು ಮಾಡಿದಂತೆಲ್ಲ ಪರಮಹಂಸರು ಎದ್ದು ನಿಂತು ನರ್ತಿಸುತ್ತಿದ್ದಾರೆ. ಈಗ ತಾವೇ ಕೆಲವು ಆಶುಕವಿತೆಗಳನ್ನು ಮಾಡಿ ಕೈಗಳೆರಡನ್ನೂ ಮೇಲಕ್ಕೆ ಎತ್ತಿ ನರ್ತಿಸುತ್ತಿದ್ದಾರೆ. ಹಾಗೆಯೇ ನರ್ತಿಸುತ್ತಿದ್ದ ಹಾಗೇ ಸಮಾಧಿಸ್ಥರಾಗಿಬಿಟ್ಟು ಮಂಡಿಯೂರಿ ಕುಳಿತು ತಲೆಯನ್ನು ಒರಗು ದಿಂಬಿನ ಮೇಲೆ ಇಟ್ಟುಕೊಂಡಿದ್ದಾರೆ. ಗಾಯಕ ಭಾವೋನ್ಮತ್ತನಾಗಿ ಹೊಸ ಹೊಸ ಹಾಡುಗಳನ್ನು ಹಾಡುತ್ತಿದ್ದಾನೆ. ಪರಮಹಂಸರು ಈಗ ಮತ್ತೆ ಎದ್ದು ನಿಂತು ಆಶುಕವಿತೆಗಳನ್ನು ಮಾಡುತ್ತ ನರ್ತಿಸುತ್ತಿದ್ದಾರೆ. ಪರಮಹಂಸರ ಈ ಅಪೂರ್ವ ನೃತ್ಯ ನೋಡಿ ನರೇಂದ್ರನೇ ಮೊದಲಾದವರಿಗೆ ಸುಮ್ಮನೆ ಕುಳಿತಿರಲಾಗಲಿಲ್ಲ. ಎಲ್ಲರೂ ಪರಮಹಂಸರ ಜೊತೆಗೆ ಸೇರಿ ನರ್ತಿಸುತ್ತಿದ್ದಾರೆ. ಪರಮಹಂಸರು ನರ್ತಿಸುತ್ತ ನರ್ತಿಸುತ್ತ ಅಡಿಗಡಿಗೆ ಸಮಾಧಿಸ್ಥರಾಗುತ್ತಿದ್ದಾರೆ. ಈಗ ಗಾಢ ಸಮಾಧಿಸ್ಥರಾಗಿಬಿಟ್ಟಿದ್ದಾರೆ-ಅಂತರ್ದಶೆ ಬಂದಿದೆ, ಬಾಯಲ್ಲಿ ಒಂದು ಮಾತೂ ಇಲ್ಲ. ಇಡೀ ಶರೀರ ಸ್ಥಿರವಾಗಿಬಿಟ್ಟಿದೆ. ಭಕ್ತರು ಅವರ ಸುತ್ತ ಸುತ್ತು ಸುತ್ತು ನರ್ತಿಸುತ್ತಿದ್ದಾರೆ. ಈಗ ಅವರಿಗೆ ಅರ್ಧ ಬಾಹ್ಯದಶೆ ಬಂದಿದೆ-ಚೈತನ್ಯದೇವನಿಗೆ ಉಂಟಾಗುತ್ತಿತ್ತಲ್ಲ ಹಾಗೆ. ಸಿಂಹಪರಾಕ್ರಮದಿಂದ ನರ್ತಿಸುತ್ತಿದ್ದಾರೆ. ಇನ್ನೂ ಅವರ ಬಾಯಿಂದ ಯಾವ ಮಾತೂ ಹೊರಡುತ್ತಿಲ್ಲ. ಪ್ರೇಮದಿಂದ ಉನ್ಮತ್ತರಾಗಿದ್ದಾರೆ. ಆಶುಕವಿತೆ ಮಾಡುತ್ತ ಹಾಡುತ್ತಿದ್ದಾರೆ. ಇಂದು ಅಧರಸೇನನ ಬೈಠಕ್ಖಾನೆ ಶ್ರೀವಾಸನ (ಚೈತನ್ಯನ ಒಡನಾಡಿ) ಪ್ರಾಂಗಣವಾಗಿಬಿಟ್ಟಿದೆ. ಹರಿನಾಮದ ಘೋಷ ಕೇಳಿ ರಸ್ತೆಯಲ್ಲಿ ಅನೇಕ ಜನ ಗುಂಪುಕಟ್ಟಿ ಬಿಟ್ಟಿದ್ದಾರೆ.
ಭಕ್ತರೊಡನೆ ಬಹಳ ಹೊತ್ತಿನವರೆಗೆ ನರ್ತನಮಾಡಿ ಈಗ ಪರಮಹಂಸರು ಕೆಳಗೆ ಕುಳಿತುಕೊಂಡಿದ್ದಾರೆ-ಇನ್ನೂ ಭಾವಾವಿಷ್ಟರಾಗಿಯೇ. ಆ ಅವಸ್ಥೆಯಲ್ಲೇ ನರೇಂದ್ರನಿಗೆ ಹೇಳುತ್ತಿದ್ದಾರೆ: “ಆ ಹಾಡು- ‘ನನ್ನನೂ ಉನ್ಮತ್ತನಾಗಿಸೆಲೆ ತಾಯೆ’, ಎಂಬುದು.”
ನರೇಂದ್ರ ಹಾಡುತ್ತಿದ್ದಾನೆ:
ನನ್ನನೂ ಉನ್ಮತ್ತನಾಗಿಸೆಲೆ ತಾಯೆ
ನಿನ್ನ ಭಕ್ತಿಯ ಮಧುರ ಮಧುಪಾನದಿಂದ!……
ಶ್ರೀರಾಮಕೃಷ್ಣರು: “ಅದು- ‘ಚಿದಾನಂದ ಸಿಂಧುವಿನಲಿ ಪ್ರೇಮಾನಂದದಲೆಗಳು’ ಎಂಬ ಹಾಡು.”
ನರೇಂದ್ರ ಹಾಡುತ್ತಿದ್ದಾನೆ:
ಚಿದಾನಂದ ಸಿಂಧುವಿನಲಿ ಪ್ರೇಮಾನಂದದಲೆಗಳು
ಮಹಾಭಾವ ರಾಸಲೀಲ ಮಾಧುರ್ಯದೊಳಾಡಿವೆ!……
ಶ್ರೀರಾಮಕೃಷ್ಣರು: “ಅದನ್ನು ಕೂಡ- ‘ಉದಯಿಪನದೊ ಚಿದಾಕಾಶದಲ್ಲಿ ಪೂರ್ಣ ಇಂದು’ ಎಂಬ ಹಾಡನ್ನು. ಬಹುಶಃ ಅದು ತುಂಬ ದೊಡ್ಡದು ಅಂತ ಕಾಣುತ್ತೆ, ಅಲ್ಲವೆ? ಒಳ್ಳೇದು, ಮೆಲ್ಲಗೆ ಹಾಡು.”
ನರೇಂದ್ರ ಹಾಡುತ್ತಿದ್ದಾನೆ:
ಉದಯಿಪನದೊ ಚಿದಾಕಾಶದಲ್ಲಿ ಪೂರ್ಣ ಇಂದು
ಪ್ರೇಮಸಿಂಧು ಉಕ್ಕಿ ಹರಿದು ಲೋಕಗಳೇ ನಾಂದು!…….
ಶ್ರೀರಾಮಕೃಷ್ಣರು: “ಇದನ್ನು ಹಾಡುವುದಿಲ್ಲವೆ- ‘ಹರಿರಸ ಮದಿರೆಯ ಕುಡಿದು ನಿರಂತರ’ ಎಂಬುದನ್ನು?”
ನರೇಂದ್ರ ಹಾಡುತ್ತಿದ್ದಾನೆ:
ಹರಿರಸ ಮದಿರೆಯ ಕುಡಿದು ನಿರಂತರ
ಉನ್ಮತ್ತನ ತೆರೆ ನೀನಿರುತ……
ಪರಮಹಂಸರು ಆಶುಕವಿತೆ ಮಾಡುತ್ತಿದ್ದಾರೆ :
ಪ್ರೇಮಮತ್ತರಾಗಿ ಹರಿಯ ಬಾಷ್ಪದೊಡನೆ ನೆನೆಯಿರೆ!
ಮತ್ತೆ
ಭಾವಮತ್ತರಾಗಿ ಹರಿಯ ಬಾಷ್ಪದೊಡನೆ ನೆನೆಯಿರೋ!
ಪರಮಹಂಸರು ಮತ್ತು ಭಕ್ತರು ಈಗ ವಿಶ್ರಮಿಸಿಕೊಳ್ಳುತ್ತಿದ್ದಾರೆ. ನರೇಂದ್ರ ಮೆಲ್ಲಗೆ ಪರಮಹಂಸರನ್ನು ಕೇಳುತ್ತಿದ್ದಾನೆ: “ದಯವಿಟ್ಟು ನೀವು ಆ ಹಾಡನ್ನು ಹಾಡುತ್ತೀರಾ?”
ಶ್ರೀರಾಮಕೃಷ್ಣರು: “ನನ್ನ ಗಂಟಲು ಸ್ವಲ್ಪ ಕಟ್ಟಿಕೊಂಡುಬಿಟ್ಟಿದೆ.” ಸ್ವಲ್ಪ ಹೊತ್ತು ಸುಮ್ಮನೆ ಇದ್ದು ಈಗ ನರೇಂದ್ರನನ್ನು ಕೇಳುತ್ತಿದ್ದಾರೆ: “ಯಾವುದನ್ನು?”
ನರೇಂದ್ರ: ‘ “ಸಕಲ ಭುವನ ಮನದೀಪಕನ’” ಎಂಬುದನ್ನು.
ಶ್ರೀರಾಮಕೃಷ್ಣರು ಮೆಲ್ಲಮೆಲ್ಲಗೆ ಹಾಡುತ್ತಿದ್ದಾರೆ:
ಕರೆದುತಂದರಾರಿಲ್ಲಿಗೆ ಗೌರನ
ಸಕಲಭುವನ ಮನ ದೀಪಕನ
ಕಾಳಮೇಘದಲಿ ಮಿಂಚೆಸೆವಂದದ
ಆಲಕಾವೃತ ಮುಖಮಂಡಲನ!….
ಈಗ ಪರಮಹಂಸರು ಗೋಪಿಯರ ಕೃಷ್ಣವಿರಹದ ಸಂಬಂಧವಾಗಿ ಹಾಡುತ್ತಿದ್ದಾರೆ:
ಇನ್ನೂ ಕಾಣೆನು ಕೃಷ್ಣನ ನಾ-
ಇನ್ನೂ ಕಾಣೆನು ಸಖಿಯೇ………
ಈಗ ಹಾಡು ಮುಗಿಯಿತು. ಪರಮಹಂಸರು ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು ನಗುತ್ತ: “ಹಾಜರಾ ನರ್ತಿಸಿದ.”
ನರೇಂದ್ರ: “ಹೌದು, ಸ್ವಲ್ಪ.”
ಶ್ರೀರಾಮಕೃಷ್ಣರು: “ಏನು, ಸ್ವಲ್ಪವೇ?”
ನರೇಂದ್ರ: “ಹೌದು, ಆತನೊಡನೆ ಆತನ ಹೊಟ್ಟೆಯೂ ನರ್ತಿಸಿತು.” (ಎಲ್ಲರೂ ನಗುತ್ತಿದ್ದಾರೆ.)
ಪಂಡಿತ ಶಶಧರ ಯಾವ ಮನೆಯಲ್ಲಿ ಇಳಿದುಕೊಂಡಿದ್ದನೊ, ಆ ಮನೆಗೆ ಪರಮಹಂಸರನ್ನು ಆಮಂತ್ರಿಸುವ ಮಾತುಕತೆ ನಡೆಯುತ್ತಿದೆ.
ಶ್ರೀರಾಮಕೃಷ್ಣರು: “ಕೇಳಿದ್ದೇನೆ, ಆತನ ಸ್ವಭಾವ ಒಳ್ಳೆಯದಲ್ಲ ಎಂದು-ಲುಚ್ಚ ಮನುಷ್ಯ.”
ನರೇಂದ್ರ: ಅದಕ್ಕೇ ಅಂದು ನೀವು ಆತ ಮುಟ್ಟಿದ ಲೋಟದಿಂದ ನೀರು ಕುಡಿಯಲಿಲ್ಲ. ನಿಮಗೆ ಹೇಗೆ ಗೊತ್ತಾಯಿತು ಆತನ ಸ್ವಭಾವ ಸರಿಯಾಗಿಲ್ಲ ಎಂದು?”
ಶ್ರೀರಾಮಕೃಷ್ಣರು ನಗುತ್ತ: “ಹಾಜರಾನಿಗೆ ಅದೇ ತರದ ಘಟನೆ ಇನ್ನೊಂದು ಗೊತ್ತಿದೆ. ಅದು ಸಿಹೋರಿನಲ್ಲಿ ಹೃದೆಯ ಮನೆಯಲ್ಲಿ ನಡೆಯಿತು.”
ಹಾಜರಾ: “ಆತ ಒಬ್ಬ ವೈಷ್ಣವ. ನನ್ನೊಡನೆ ಇವರನ್ನು (ಶ್ರೀರಾಮಕೃಷ್ಣರನ್ನು) ದರ್ಶನಮಾಡಲು ಬಂದಿದ್ದ. ಆತ ಬಂದು ಕುಳಿತುಕೊಳ್ಳುವುದೇ ತಡ, ಇವರು ಆತನ ಕಡೆ ಬೆನ್ನುಹಾಕಿ ಕುಳಿತುಕೊಂಡುಬಿಟ್ಟರು.”
ಶ್ರೀರಾಮಕೃಷ್ಣರು: “ಆತನ ಶೀಲ ಸರಿಯಾಗಿಲ್ಲವೆಂದು ಅನಂತರ ತಿಳಿದುಬಂತು. (ನರೇಂದ್ರನಿಗೆ) ಹಿಂದೆ ಹೇಳುತ್ತಿದ್ದೆಯಲ್ಲ.ನನ್ನ ಈ ಅವಸ್ಥೆಗಳೆಲ್ಲ ಮಾನಸಿಕ ಭ್ರಾಂತಿ ಅಂತ.”
ನರೇಂದ್ರ: “ಆಗ ನನಗೆ ಅದು ಹೇಗೆ ಗೊತ್ತಾಗಬೇಕು? ಈಗ ನನಗೆ ಗೊತ್ತಾಗುತ್ತಿದೆ ಅವೆಲ್ಲಾ ಸರಿ ಎಂದು.”
ಪರಮಹಂಸರಿಗೆ ಮತ್ತು ಭಕ್ತರಿಗೆ ಅಧರಸೇನ ಒಳ್ಳೇ ಔತಣ ಏರ್ಪಡಿಸಿದ್ದಾನೆ. ಈಗತಾನೆ ಊಟಕ್ಕೆ ಏಳಿಸುತ್ತಿದ್ದಾನೆ. ಪರಮಹಂಸರು ಮುಖ್ಯೋಪಾಧ್ಯಾಯ ಸೋದರರಿಗೆ ಹೇಳುತ್ತಿದ್ದಾರೆ: “ಏನು, ನೀವು ಊಟಕ್ಕೆ ಏಳುವುದಿಲ್ಲವೆ?” ಅವರು ವಿನಯದಿಂದ ಹೇಳುತ್ತಿದ್ದಾರೆ: “ದಯವಿಟ್ಟು ಕ್ಷಮಿಸಿ.”
ಶ್ರೀರಾಮಕೃಷ್ಣರು ನಗುತ್ತ: “ಇವರು ಎಲ್ಲವನ್ನೂ ಮಾಡುತ್ತಿದ್ದಾರೆ. ಕೇವಲ ಇದೊಂದರಲ್ಲಿ ಮಾತ್ರ ಸಂಕೋಚ. ಒಬ್ಬಾಕೆಯ ಮಾವ, ಭಾವಂದಿರ ಹೆಸರು ಹರಿ, ಕೃಷ್ಣ ಇತ್ಯಾದಿ. ಹರಿನಾಮ ಜಪ ಮಾಡಬೇಕಲ್ಲ! ಆದರೆ ಹರೇ ಕೃಷ್ಣ ಅಂತ ಹೇಳುವಂತಿಲ್ಲ’. ಅದಕ್ಕೇ ಆಕೆ ಹೀಗೆ ಜಪ ಮಾಡುತ್ತಾಳೆ-
ಫರೇ ಖೃಷ್ಟ, ಫರೇ ಖೃಷ್ಟ, ಖೃಷ್ಟ ಖೃಷ್ಟ ಫರೇ ಫರೇ!
ಫರೇ ರಾಮ, ಫರೇ ರಾಮ, ರಾಮ ರಾಮ ಫರೇ ಫರೇ!”
ಅಧರಸೇನ ಕೀಳುಜಾತಿಗೆ ಸೇರಿದವನು. ಆದ್ದರಿಂದ ಪರಮಹಂಸರ ಬ್ರಾಹ್ಮಣ ಭಕ್ತರು ಆತನ ಮನೆಯಲ್ಲಿ ಊಟಮಾಡಲು ಮೊದಮೊದಲು ಹಿಂಜರಿಯುತ್ತಿದ್ದರು.
ಪರಮಹಂಸರೇ ಅಲ್ಲಿ ಆಗಾಗ ಊಟಮಾಡುತ್ತಿರುವುದನ್ನು ನೋಡಿ ಅವರು ಕೊನೆಗೆ ತಮ್ಮ ಮನಸ್ಸನ್ನು ಬದಲಾಯಿಸಿದರು.
ಘಂಟೆ ರಾತ್ರಿ ಒಂಬತ್ತು. ಪರಮಹಂಸರು ಭಕ್ತರೊಡನೆ ಬೈಠಕ್ಖಾನೆಯಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಅವರು ದಕ್ಷಿಣೇಶ್ವರಕ್ಕೆ ಹಿಂದಿರುಗಲು ವ್ಯವಸ್ಥೆ ನಡೆಯುತ್ತಿದೆ.
ಪರಮಹಂಸರನ್ನು ಆನಂದಪಡಿಸಲು ಮುಖ್ಯೋಪಾಧ್ಯಾಯ ಸಹೋದರರು ನಾಳೆ ದಿನ ದಕ್ಷಿಣೇಶ್ವರದಲ್ಲಿ ಕೀರ್ತನೆ ನಡೆಯುವಂತೆ ಏರ್ಪಾಡು ಮಾಡಿದ್ದಾರೆ. ಶ್ಯಾಮದಾಸ ಕೀರ್ತನೆ ಮಾಡುತ್ತಾನೆ. ರಾಮ ಆತನಿಂದ ಕೀರ್ತನೆ ಕಲಿಯುತ್ತಿದ್ದಾನೆ. ಪರಮ ಹಂಸರು ನರೇಂದ್ರನಿಗೆ ಹೇಳುತ್ತಿದ್ದಾರೆ, ಮರುದಿನ ಬಂದು ಕೀರ್ತನೆ ಕೇಳಬೇಕೆಂದು.
ಶ್ರೀರಾಮಕೃಷ್ಣರು ನರೇಂದ್ರನಿಗೆ: “ನಾಳೆ ಬಾ-ಏನು?”
ನರೇಂದ್ರ: “ಪ್ರಯತ್ನಮಾಡುತ್ತೇನೆ.”
ಶ್ರೀರಾಮಕೃಷ್ಣರು: “ಅಲ್ಲೇ ಸ್ನಾನಮಾಡಿ ಊಟ ಮಾಡುವೆಯಂತೆ. (ಮಾಸ್ಟರನ್ನು ತೋರಿಸಿ) ಈತನೂ ಅಲ್ಲಿಗೇ ಊಟಕ್ಕೆ ಬರುತ್ತಾನೆ. (ಮಾಸ್ಟರಿಗೆ) ಈಗ ನಿನಗೆ ಗುಣವಾಗಿದೆಯೆ? ಈಗೇನು ಪಥ್ಯ ಇಲ್ಲ ತಾನೆ?”
ಮಾಸ್ಟರ್: “ಇಲ್ಲ, ಬರುತ್ತೇನೆ.”
ನಿತ್ಯಗೋಪಾಲ ಬೃಂದಾವನದಲ್ಲಿದ್ದಾನೆ. ಚುನಿಲಾಲ ಬೃಂದಾವನದಿಂದ ಹಿಂದಿರುಗಿ ಬಂದು ಈಗ ಕೆಲವು ದಿನ ಮಾತ್ರ ಆಗಿವೆ. ಪರಮಹಂಸರು ನಿತ್ಯಗೋಪಾಲನ ಸುದ್ದಿ ಸಮಾಚಾರವನ್ನು ಆತನಿಂದ ಕೇಳಿ ತಿಳಿದುಕೊಳ್ಳುತ್ತಿದ್ದಾರೆ.
ಪರಮಹಂಸರು ಇನ್ನೇನು ದಕ್ಷಿಣೇಶ್ವರಕ್ಕೆ ಹೊರಡಲಿದ್ದಾರೆ. ಮಾಸ್ಟರ್ ಅವರ ಪಾದಗಳ ಮೇಲೆ ತನ್ನ ತಲೆಯನ್ನಿಟ್ಟು ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದಾನೆ. ಪರಮಹಂಸರು ಪ್ರೀತಿಯಿಂದ ಆತನಿಗೆ ಹೇಳುತ್ತಿದ್ದಾರೆ: “ಹಾಗಾದರೆ ಅಲ್ಲಿಗೆ ಬಾ. ನರೇಂದ್ರ! ಭವನಾಥ! ನಾಳೆ ಅಲ್ಲಿಗೆ ಬನ್ನಿ.”
ಈಗ ಅನೇಕ ಮಂದಿ ಭಕ್ತರೊಡನೆ ದಕ್ಷಿಣೇಶ್ವರಕ್ಕೆ ಹಿಂದಿರುಗುತ್ತಿದ್ದಾರೆ. ಉಳಿದ ಭಕ್ತರು ಪರಮಹಂಸರ ಅಪೂರ್ವ ನರ್ತನ ಮತ್ತು ಗೀತೆಗಳನ್ನು ಸ್ಮರಿಸಿಕೊಳ್ಳುತ್ತ ಸುಮ್ಮನೆ ನಗುತ್ತಿದ್ದ ಬೆಳ್ದಿಂಗಳಿನಲ್ಲಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದಾರೆ.