೩೦ನೆ ಜೂನ್ ೧೮೮೪, ಆಷಾಢ ಶುಕ್ಲ ಸಪ್ತಮಿ, ಸೋಮವಾರ
ಪರಮಹಂಸರ ಕೊಠಡಿಯಲ್ಲಿ ನೆಲದ ಮೇಲೆ ಮಂದಲಿಗೆ ಹಾಸಿದೆ. ಅದರ ಮೇಲೆ ಪರಮಹಂಸರು, ಪಂಡಿತ ಶಶಧರ ಮತ್ತು ಕೆಲವು ಮಂದಿ ಭಕ್ತರೊಡನೆ ಕುಳಿತುಕೊಂಡಿದ್ದಾರೆ. ಇನ್ನು ಕೆಲವು ಮಂದಿ ಬರಿ ನೆಲದ ಮೇಲೆಯೇ ಕುಳಿತುಕೊಂಡಿದ್ದಾರೆ. ಸುರೇಂದ್ರ, ಬಾಬು, ರಾಮ, ಮಾಸ್ಟರ್, ಹರೀಶ, ಲಾಟು, ಹಾಜರಾ, ಮಣಿಮಲ್ಲಿಕ ಇವರೇ ಮೊದಲಾದವರೂ ಕುಳಿತುಕೊಂಡಿದ್ದಾರೆ. ಸಮಯ ಈಗ ಅಪರಾಹ್ನ ನಾಲ್ಕು.
ಪರಮಹಂಸರು ಪಂಡಿತ ಶಶಧರನನ್ನು ಆರು ದಿನಗಳ ಹಿಂದೆ ಕಲ್ಕತ್ತದಲ್ಲಿ ಸಂಧಿಸಿದ್ದರು. ಇಂದು ಆತ ಪರಮಹಂಸರನ್ನು ಸಂಧಿಸಲು ದಕ್ಷಿಣೇಶ್ವರಕ್ಕೆ ಬಂದಿದ್ದಾನೆ. ಆತನೊಡನೆ ಭೂಧರ ಚಟ್ಟೋಪಾಧ್ಯಾಯ ಮತ್ತು ಆತನ ಅಣ್ಣ ಕೂಡ ಬಂದಿದ್ದಾರೆ. ಇವರ ಮನೆಯಲ್ಲೇ ಪಂಡಿತ ಶಶಧರ ಕಲ್ಕತ್ತದಲ್ಲಿ ಇಳಿದುಕೊಂಡಿರುವುದು.
ಪಂಡಿತ ಜ್ಞಾನಮಾರ್ಗಿ. ಪರಮಹಂಸರು ಈ ಮಾರ್ಗ ಏನು ಎಂಬುದನ್ನು ಆತನಿಗೆ ವಿವರಿಸುತ್ತಿದ್ದಾರೆ. ಹೇಳುತ್ತಿದ್ದಾರೆ: “ಯಾರದು ನಿತ್ಯವೊ ಆತನದೇ ಲೀಲೆ ಕೂಡ. ಯಾರು ಅಖಂಡ ಸಚ್ಚಿದಾನಂದನೊ ಆತನೇ ಲೀಲೆಗಾಗಿ ಅನೇಕ ರೂಪಗಳನ್ನು ಧರಿಸಿದ್ದಾನೆ.” ಭಗವಂತನ ಸಂಬಂಧವಾಗಿ ಮಾತಾಡುತ್ತ ಮಾತಾಡುತ್ತ ಆಗಾಗ ಬಾಹ್ಯಜ್ಞಾನಶೂನ್ಯರಾಗುತ್ತಿದ್ದಾರೆ. ಈಗ ಭಾವೋನ್ಮತ್ತರಾಗಿ ಪಂಡಿತನಿಗೆ ಹೇಳುತ್ತಿದ್ದಾರೆ: “ನೋಡು, ಬ್ರಹ್ಮ ಸುಮೇರುವಿನ ಹಾಗೆ ಅಚಲ ಮತ್ತು ಕೂಟಸ್ಥ. ಆದರೆ ಯಾರು ಅಚಲನೊ ಆತ ಚಲನೂ ಹೌದು.”
ಪರಮಹಂಸರು ಈಗ ಪ್ರೇಮಾನಂದದಿಂದ ಮತ್ತರಾಗಿಬಿಟ್ಟಿದ್ದಾರೆ. ತಮ್ಮ ಎಂದಿನ ಮಧುರಕಂಠದಿಂದ ಹಾಡಲಾರಂಭಿಸಿದ್ದಾರೆ; ಒಂದಾದ ಮೇಲೊಂದು ಹಾಡನ್ನು ಹಾಡುತ್ತಲೇ ಇದ್ದಾರೆ:
ತಾಯಿ ದುರ್ಗೆಯ ನಿಜವನರಿಯುವ ಧೀರರಾರೋ ಜಗದೊಳು!
ಆರು ದರುಶನ ವೇದ ಶಾಸ್ತ್ರ ಪುರಾಣವರಿಯದು ಅವಳನು….
ಅನಂತರ ಹಾಡುತ್ತಿದ್ದಾರೆ:
ಹುಟ್ಟು ಸಾವಿಗೆ ಸಲುವ ಬರಿ ಮರ್ತ್ಯಳೆನಬೇಡ
ತಾಯಿ ಕಾಳಿಯನು.
ಇವಳ ಶ್ರೀನಾಮವನು ಜಪಿಸದಿರೆ ತಾಳುವನೆ
ಪರಮ ಶಿವನೂ ಕೂಡ ಕೊರಳ ಗರಳವನು?
ದೃಷ್ಟಿಮಾತ್ರದಿ ಜಗವ ಸೃಷ್ಟಿ-ಸ್ಥಿತಿ-ಲಯಗಳಲಿ
ತಿರುಗಿಸುವಳು.
ಸಕಲ ಬ್ರಹ್ಮಾಂಡಗಳ ತನ್ನ ಬಸಿರಲಿ ಧರಿಸಿ
ಕಾಪಿಡುವಳು!
ಅವಳ ಚರಣಾಶ್ರಯದಿ ತಲ್ಲಣವ ನೀಗುವರು
ದೇವಾಧಿದೇವರುಗಳು,
ಆ ಮಹಾಕಾಲನೇ ಇವಳ ಪದತಲದಲ್ಲಿ
ನಿತ್ಯವೂ ಬಿದ್ದಿರುವನು!
ಮತ್ತೆ ಹಾಡುತ್ತಿದ್ದಾರೆ:
ಬರಿಯ ಶಿವಸತಿಯಲ್ಲ ಈ ಮಹಾಕಾಳಿ;
ಈ ದಿಗಂಬರೆ ಜಗದ ದೈತ್ಯರನು ಸೀಳಿ
ಸುತ್ತುತಿರೆ, ಮೃತ್ಯುವೇ ಬಾಗಿರಲು ಪದಕೆ
ತನ್ನ ಕಾಲೂರಿಹಳು ಪರಶಿವನ ಎದೆಗೆ!
ಶಿವನ ಮೆಟ್ಟುವಳಿವಳು; ಓ ಎಂಥ ಗರತಿ!
ಇವಳ ಲೀಲೆಗೆ ಇಲ್ಲ ಏನೊಂದು ಇತಿಮಿತಿ.
ನೂರು ಬಗೆ ಈ ಲೀಲೆ; ಸಾವಧಾನದಲಿ
ನೀನರಿವೆ ಪರಿಶುದ್ಧ ಸಾಧನೆಯಲಿ!
ಮತ್ತೆ:
‘ಜಯ್ ಕಾಳಿ’ -ಎಂದು ನಾ ಕುಡಿಯುವೀ ದಿವ್ಯ ಮಧು
ಸಾಮಾನ್ಯ ಸುರೆಯಲ್ಲವೆಂದರಿಯದೆ,
ನನ್ನ ಇರವನು ಕಂಡು ಭಾವಿಸಿಹರೀ ಜನರು
ನಾನೊಬ್ಬ ಉನ್ಮತ್ತ ಕುಡುಕನೆಂದೇ!…….
ಮತ್ತೆ:
ಅತಿ ಕಠೋರ ಸಾಧನೆಯಲಿ ತೊಡಗಿರುವೀ ಶಿವನು ಕೂಡ
ಇನ್ನಾದರೂ ಕಾಣದಿರಲು ಕಾಳೀಪದನೀಲವ
ಎಲ್ಲರಿಗೂ ಲಭಿಸಬಹುದೆ ಶ್ರೀಶ್ಯಾಮೆಯ ದರ್ಶನ
ಎಲ್ಲರಿಗೂ ದೊರೆಯಬಹುದೆ ಶ್ರೀಕಾಳಿಯ ಸಂಪದ?……
ಪರಮಹಂಸರ ಭಾವಾವಸ್ಥೆಯ ತೀವ್ರತೆ ಈಗ ಸ್ವಲ್ಪ ಕಡಮೆಯಾಗುತ್ತಿದೆ. ಹಾಡುವುದನ್ನು ನಿಲ್ಲಿಸಿ, ಎದ್ದು ಹೋಗಿ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಳ್ಳುತ್ತಿದ್ದಾರೆ.
ಪರಮಹಂಸರ ಹಾಡು ಕೇಳಿ ಪಂಡಿತ ಶಶಧರ ಮೋಹಗೊಂಡುಬಿಟ್ಟಿದ್ದಾನೆ. ವಿನಯದಿಂದ ಪರಮಹಂಸರನ್ನು ಕೇಳುತ್ತಿದ್ದಾನೆ: “ಮತ್ತೆ ಹಾಡುವಿರೇನು?”
ಈಗ ಪರಮಹಂಸರು ಮತ್ತೆ ಹಾಡಲಾರಂಭಿಸಿದ್ದಾರೆ:
ಶ್ರೀ ಘನಶ್ಯಾಮೆಯ ಚರಣಾಕಾಶದಿ ಗಾಳಿಪಟದ ತೆರದಿ
ಹಾರುತಿರಲು ಮನ, ದುರಿತ ಕಲುಷ ಬಿರುಗಾಳಿಯು ಭರದಿ…..
ಮತ್ತೆ ಹಾಡುತ್ತಿದ್ದಾರೆ:
ಅರಿತೆ ನಾನು ಅರಿತೆ ನಾನು-ನಿಜದ ನೆಲೆಯನರಿತೆನು
ಭಾವದಂತರಂಗವರಿತ ವ್ಯಕ್ತಿಯೊಬ್ಬ ದೊರೆತನು….
ಮತ್ತೆ:
ತಾಯ ಶ್ರೀಪಾದದಲ್ಲಿ ಜೀವವರಿಸಿದ ನನಗೆ
ಮೃತ್ಯುಭಯವೇನು?
ಆತ್ಮಶಿರಶಿಖೆಯಲ್ಲಿ ತಾಯ ನಾಮವ ಹಿಡಿದು
ಕಟ್ಟಿರುವೆನು!
ಈ ಜಗದ ಸಂತೆಯಲಿ ನನ್ನ ದೇಹವ ಮಾರಿ
ತಾಯ ಶ್ರೀನಾಮವನು ಕೊಂಡಿರುವೆನು!
ಪರಮಹಂಸರು, “ತಾಯ ಶ್ರೀನಾಮವನು ಕೊಂಡಿರುವೆನು!” ಎಂಬುದಾಗಿ ಹಾಡಿದೊಡನೇ ಪಂಡಿತ ಶಶಧರನ ಕಣ್ಣುಗಳಿಂದ ಪ್ರೇಮಾಶ್ರು ಸುರಿಯಲಾರಂಭಿಸಿತು. ಪರಮಹಂಸರು ಆ ಹಾಡನ್ನು ಮುಂದುವರಿಸುತ್ತಿದ್ದಾರೆ:
ಕಾಳೀನಾಮ ಕಲ್ಪತರುವನು ನಾನು
ಎದೆಯ ಅಂಗಳದಲ್ಲಿ ನೆಟ್ಟಿರುವೆನು.
ಯಮ ಬಂದು ನಿಂತಾಗ ನನ್ನ ಎದೆಯನು ತೆರೆದು
ಬೆಳೆಯುವೀ ವೃಕ್ಷವನು ತೋರಿಸುವೆನು.
ಅರಿವರ್ಗವನು ಕಿತ್ತು, ಭವಜಲಧಿಯಲಿ ನಾನು
“ಜಯ ದುರ್ಗೆ” ಎಂದೆಂದು ಹೊರಟಿರುವೆನು!
ಮತ್ತೆ ಹಾಡುತ್ತಿದ್ದಾರೆ:
ನಿನ್ನೊಳಗೇ ನೀನಿರು ಮನವೇ,
ಅನ್ಯಾಶ್ರಯದೊಳಗರಸದಿರು…..
ಮತ್ತೆ:
ಮುಕ್ತಿಪದವನು ನೀಡಲೆನಗೆ ಮನವಿದ್ದರೂ
ಶುದ್ಧ ಭಕ್ತಿಯ ಕೊಡಲು ಹಿಂಜರಿವೆನು…..
ಪಂಡಿತ ವೇದಾದಿ ಶಾಸ್ತ್ರಗಳನ್ನು ಅಧ್ಯಯನಮಾಡಿದ್ದಾನೆ. ಜ್ಞಾನಚರ್ಚೆಯಲ್ಲಿ ಆತನಿಗೆ ಆಸಕ್ತಿ. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡು ಆತನನ್ನು ದೃಷ್ಟಿಸಿ ನೋಡುತ್ತ ರೂಪಕ ಕಥೆಗಳ ಮೂಲಕ ಉಪದೇಶವೀಯುತ್ತಿದ್ದಾರೆ.
ಶ್ರೀರಾಮಕೃಷ್ಣರು ಪಂಡಿತನಿಗೆ: “ವೇದಗಳೇ ಮೊದಲಾದ ಅನೇಕ ಶಾಸ್ತ್ರಗಳೇನೋ ಇವೆ. ಆದರೆ ಸಾಧನೆಮಾಡದೆ, ತಪಸ್ಸುಮಾಡದೆ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲಾಗುವುದಿಲ್ಲ. ‘ಆಗಮ, ನಿಗಮ, ತಂತ್ರ, ಷಡ್ದರ್ಶನಗಳಲ್ಲೂ ದೊರೆಯನಾತನು.’
“ಆದರೆ ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ಮೊದಲು ಅರಿತುಕೊಂಡು, ಬಳಿಕ ಅವುಗಳಿಗನುಸಾರ ಕೆಲಸಕಾರ್ಯಗಳನ್ನು ಮಾಡಬೇಕು. ಒಬ್ಬ ಒಂದು ಪತ್ರವನ್ನು ಕಳೆದುಕೊಂಡ. ಎಲ್ಲಿ ಇಟ್ಟುಬಿಟ್ಟಿದ್ದಾನೊ ಜ್ಞಾಪಕದಲ್ಲಿಲ್ಲ. ದೀಪ ಹಿಡಿದುಕೊಂಡು ಹುಡುಕಲಾರಂಭಿಸಿದ. ಇಬ್ಬರು ಮೂವರು ಸೇರಿ ಹುಡುಕಿದ ನಂತರ ಪತ್ರ ಸಿಕ್ಕಿತು. ಅದರಲ್ಲಿ ಬರೆದಿತ್ತು, ಐದು ಸೇರು ಸಂದೇಶ (ಸಿಹಿತಿಂಡಿ), ಒಂದು ಪಂಚೆ ಕಳುಹಿಸಬೇಕೆಂದು. ಆತ ಆ ಪತ್ರವನ್ನು ಓದಿಕೊಂಡು ಅದನ್ನು ಬಿಸಾಡಿಬಿಟ್ಟ. ಮತ್ತೆ ಆ ಪತ್ರದ ಆವಶ್ಯಕತೆಯೇನಿರಲಿಲ್ಲ ಆತನಿಗೆ. ಅನಂತರ ಅವನು ಮಾಡಬೇಕಾಗಿ ಉಳಿದುಕೊಂಡದ್ದು ಐದು ಸೇರು ಸಂದೇಶ, ಒಂದು ಪಂಚೆ ಕೊಂಡುಕೊಂಡು ಕಳುಹಿಸುವುದೊಂದೇ.
“ಓದುವುದಕ್ಕಿಂತ ಕಿವಿಯಲ್ಲಿ ಕೇಳುವುದು ಮೇಲು, ಕಿವಿಯಲ್ಲಿ ಕೇಳುವುದಕ್ಕಿಂತ ಕಣ್ಣಿನಿಂದ ನೋಡುವುದು ಮೇಲು. ಗುರುವಿನ ಬಾಯಿಂದ ಅಥವಾ ಸಾಧುವಿನ ಬಾಯಿಂದ ಶಾಸ್ತ್ರಗಳನ್ನು ಕೇಳಿದರೆ, ಅವು ಮನಸ್ಸಿನ ಮೇಲೆ ಹೆಚ್ಚು ಪರಿಣಾಮವನ್ನು ಮಾಡುತ್ತವೆ-ಅವುಗಳ ಅಮುಖ್ಯ ಭಾಗಗಳ ಕಡೆ ಮನಸ್ಸು ಕೊಡಬೇಕಾಗಿರುವುದಿಲ್ಲ. ಒಮ್ಮೆ ಹನುಮಂತ ಹೇಳಿದ: “ತಮ್ಮ, ತಿಥಿ, ವಾರ, ನಕ್ಷತ್ರ ಇವು ಯಾವುವೂ ನನಗೆ ಗೊತ್ತಿಲ್ಲ. ನಾನು ಸದಾ ಕೇವಲ ರಾಮಚಿಂತನೆ ಮಾಡುತ್ತಿದ್ದೇನೆ.’
“ಕಿವಿಯಲ್ಲಿ ಕೇಳುವುದಕ್ಕಿಂತ ಕಣ್ಣಿನಿಂದ ನೋಡುವುದು ಅತ್ಯಂತ ಮೇಲು. ಕಣ್ಣಿನಿಂದ ನೋಡಿದ ನಂತರ ಸಕಲ ಸಂದೇಹಗಳೂ ನಿವೃತ್ತಿಯಾಗಿಬಿಡುತ್ತವೆ. ಶಾಸ್ತ್ರಗಳಿಂದಲೇನೊ ಭಗವಂತನ ಸಂಬಂಧವಾಗಿ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು; ಆದರೆ ಆತನ ಸಾಕ್ಷಾತ್ಕಾರ ಮಾಡಿಕೊಳ್ಳದೆ ಇದ್ದರೆ, ಆತನ ಪಾದಪದ್ಮಗಳಲ್ಲಿ ಭಕ್ತಿ ಉಂಟುಮಾಡಿಕೊಳ್ಳದೆ ಇದ್ದರೆ, ಚಿತ್ತಶುದ್ಧಿ ಉಂಟುಮಾಡಿಕೊಳ್ಳದೆ ಇದ್ದರೆ ಎಲ್ಲವೂ ವ್ಯರ್ಥ. ಪಂಚಾಗದಲ್ಲಿ ಬರೆದಿರುತ್ತದೆ, ಇಪ್ಪತ್ತು ಕೊಳಗ ಮಳೆ ಬೀಳುವುದೆಂದು. ಆದರೆ ಆದನ್ನು ಹಿಂಡಿದರೆ ಒಂದು ತೊಟ್ಟು ನೀರೂ ಕೆಳಕ್ಕೆ ಬೀಳದು. ಒಂದೇ ಒಂದು ತೊಟ್ಟು ನೀರೂ ಬೀಳದು.
“ಶಾಸ್ತ್ರಗಳ ಸಂಬಂಧವಾಗಿ ವಿಚಾರ ಎಲ್ಲಿಯವರೆಗೆ? ಭಗವಂತನ ಸಾಕ್ಷಾತ್ಕಾರ ಆಗದವರೆಗೆ. ದುಂಬಿ ಎಲ್ಲಿಯವರೆಗೆ ಝೇಂಕರಿಸುತ್ತದೆ? ಹೂವಿನ ಮೇಲೆ ಕೂಡದವರೆಗೆ. ಹೂವಿನ ಮೇಲೆ ಕುಳಿತು ಮಧುಪಾನ ಮಾಡಲು ಆರಂಭಿಸಿದೊಡನೆಯೇ ಶಬ್ದ ಎಲ್ಲ ನಿಂತುಹೋಗಿಬಿಡುತ್ತದೆ.
“ಆದರೆ ಒಂದು ವಿಷಯವನ್ನು ನೀನು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು. ಭಗವಂತನ ದರ್ಶನ ದೊರೆತ ನಂತರವೂ ಮಾತುಕತೆ ನಡೆಯಬಹುದು. ಅದು ಕೇವಲ ಭಗವಂತನ ಮತ್ತು ಆತನಲ್ಲಿ ದೊರೆಯುವ ಆನಂದದ ವಿಷಯವಾಗಿ ಮಾತ್ರವೇ. ಇದು ಕುಡುಕ, ‘ಜೈ ಕಾಳಿ!’ ಅಂತ ಹೇಳುವುದಿಲ್ಲವೆ, ಹಾಗೆ. ಮತ್ತೆ ಇದು ದುಂಬಿ ಹೂವಿನ ಮೇಲೆ ಕುಳಿತು ಮಧುಪಾನ ಮಾಡಿದ ನಂತರ ಮೆಲ್ಲಗೆ ಅಸ್ಪಷ್ಟ ಧ್ವನಿ ಮಾಡುವ ಹಾಗೆ.
“ಜ್ಞಾನಿ, ‘ನೇತಿ, ನೇತಿ’, ‘ಇದಲ್ಲ, ಇದಲ್ಲ’ ಎಂದು ವಿಚಾರಮಾಡುತ್ತಾನೆ. ಹೀಗೆಯೇ ವಿಚಾರ ಮಾಡುತ್ತ ಮಾಡುತ್ತ ಮುಂದುವರಿದರೆ ಕೊನೆಗೆ ಎಲ್ಲಿ ಆತನಿಗೆ ಆನಂದ ದೊರೆಯುವುದೋ ಅದೇ ಬ್ರಹ್ಮ. ಜ್ಞಾನಿಯ ಸ್ವಭಾವವೇನು? ಆತ ಶಾಸ್ತ್ರಾನುಸಾರ ನಡೆದುಕೊಳ್ಳುತ್ತಾನೆ.
“ಒಮ್ಮೆ ನನ್ನನ್ನು ಚಾಣಕ ಎಂಬ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಕೆಲವು ಮಂದಿ ಸಾಧುಗಳು ಇದ್ದರು. ಅವರಲ್ಲಿ ಕೆಲವರು ಬಟ್ಟೆ ಹೊಲಿಯುತ್ತಿದ್ದರು. (ಎಲ್ಲರೂ ನಗುತ್ತಿದ್ದಾರೆ.) ನಾವು ಅಲ್ಲಿಗೆ ಹೋದೊಡನೇ ಆ ಕೆಲಸ ಅಲ್ಲಿಗೇ ನಿಲ್ಲಿಸಿ ಪದ್ಮಾಸನ ಹಾಕಿಕೊಂಡು ನಮ್ಮೊಡನೆ ಮಾತುಕತೆಗಳಾಡಲು ಆರಂಭಿಸಿದರು. (ಎಲ್ಲರೂ ನಗುತ್ತಿದ್ದಾರೆ.)
“ಭಗವಂತನ ಸಂಬಂಧವಾಗಿ ಪ್ರಶ್ನೆಹಾಕಿದ ಹೊರತು ತಾವಾಗೇ ಜ್ಞಾನಿಗಳು ಆತನ ಮಾತು ಎತ್ತುವುದಿಲ್ಲ. ಜನ ಅವರನ್ನು ಸಮೀಪಿಸಿದೊಡನೇ ಅವರಿಗೆ ಕೆಲವು ಕುಶಲಪ್ರಶ್ನೆಗಳನ್ನು ಹಾಕಿ ಸುಮ್ಮನಿದ್ದುಬಿಡುತ್ತಾರೆ.
“ಆದರೆ ವಿಜ್ಞಾನಿಗಳ ಸ್ವಭಾವ ಬೇರೆ. ಅವರಿಗೆ ಈ ಜಗತ್ತಿನ ಎಲ್ಲದರ ಮೇಲೂ ಔದಾಸೀನ್ಯ. ಒಮ್ಮೊಮ್ಮೆ ಅವರು ಉಟ್ಟಿದ್ದ ಬಟ್ಟೆ ಕಳಚಿ ಎಲ್ಲೋ ಬಿದ್ದುಹೋಗಿಬಿಡಬಹುದು ಅಥವಾ ಅವನ್ನು ಕಂಕುಳಲ್ಲಿ ಇರುಕಿಕೊಂಡು ಮಕ್ಕಳ ಹಾಗೆ ಸುತ್ತಾಡಬಹುದು.
“ಭಗವಂತನಿದ್ದಾನೆ ಎಂಬುದಾಗಿ ತಿಳಿದುಕೊಂಡಿರುವವನಿಗೆ ‘ಜ್ಞಾನಿ’ ಅಂತ ಹೆಸರು. ಕಟ್ಟಿಗೆಯಲ್ಲಿ ನಿಶ್ಚಯವಾಗಿಯೂ ಬೆಂಕಿ ಇದೆ ಎಂಬುದಾಗಿ ಅರಿತುಕೊಂಡಿರುವವನೇ ಜ್ಞಾನಿ. ಆದರೆ ಯಾರು ಅದನ್ನು ಹೊತ್ತಿಸಿ, ಅದರಿಂದ ಅಡಿಗೆ ಮಾಡಿ ತೇಗು ಬರುವವರೆಗೆ ಊಟ ಮಾಡುವನೋ ಆತನೇ ವಿಜ್ಞಾನಿ. ವಿಜ್ಞಾನಿಯ ಅಷ್ಟಪಾಶಗಳೂ ಕಳಚಿ ಹೋಗುತ್ತದೆ-ಕಾಮಕ್ರೋಧಾದಿಗಳ ಚಿಹ್ನೆ ಮಾತ್ರ ಉಳಿದುಕೊಂಡಿರುತ್ತದೆ.”
ಪಂಡಿತ: “ ‘ಭಿದ್ಯತೇ ಹೃದಯಗ್ರಂಥಿಃ ಛಿದ್ಯಂತೇ ಸರ್ವಸಂಶಯಾಃ’ ಅಂದರೆ, ‘ಆತನ ಹೃದಯಗ್ರಂಥಿಗಳೆಲ್ಲ ಕತ್ತರಿಸಿಹೋಗುತ್ತವೆ; ಎಲ್ಲಾ ಸಂಶಯಗಳೂ ನಿವೃತ್ತಿಯಾಗಿಬಿಡುತ್ತವೆ.’”
ಶ್ರೀರಾಮಕೃಷ್ಣರು: “ಹೌದು, ನಿಜ. ಒಮ್ಮೆ ಒಂದು ಜಹಜು ಸಮುದ್ರದ ಮೂಲಕ ಹೋಗುತ್ತಿತ್ತು. ಇದ್ದಕ್ಕಿದ್ದ ಹಾಗೆ ಅದರ ಕಬ್ಬಿಣದ ಕೀಲು, ಮೊಳೆ, ಸ್ಕ್ರೂ ಎಲ್ಲಾ ಕಳಚಿ ಬಿದ್ದುಹೋದವು. ಹತ್ತಿರ ಚುಂಬಕದ ಬೆಟ್ಟ ಇದ್ದುದರಿಂದ ಅದು ಹಾಗಾಯಿತು.
“ನಾನು ಆಗಾಗ ಕೃಷ್ಣಕಿಶೋರನ ಮನೆಗೆ ಹೋಗುತ್ತಿದ್ದೆ. ಒಂದು ದಿನ ಅಲ್ಲಿಗೆ ಹೋಗಿದ್ದಾಗ, ಆತ ನನ್ನನ್ನು ಕೇಳಿದ: ‘ನೀವು ಎಲಡಿಕೆ ಹಾಕಿಕೊಳ್ಳುತ್ತೀರಲ್ಲ ಏಕೆ?’ ನಾನು ಹೇಳಿದೆ: ‘ನನ್ನ ಖುಷಿ. ಇಚ್ಛೆ ಬಂತು ಎಂದರೆ, ಎಲಡಿಕೆ ಹಾಕಿಕೊಳ್ಳುವುದಲ್ಲದೆ, ಕನ್ನಡಿಯಲ್ಲಿ ಮುಖವನ್ನೂ ನೋಡುಕೊಳ್ಳುತ್ತೇನೆ, ಸಾವಿರಾರು ಯುವತಿಯರ ಮಧ್ಯೆ ಬರೀ ಬತ್ತಲೆ ಕುಣಿದಾಡಿಯೂಬಿಡುತ್ತೇನೆ.’ ಕೃಷ್ಣಕಿಶೋರನನ್ನು ಆತನ ಹೆಂಡತಿ ಗದರಿಸಿ ಹೇಳಿದಳು: ‘ನೀವು ಹಾಗೆ ಕೇಳಿದಿರೇನು? ಯಾರೊಡನೆ ಹೇಗೆ ಮಾತಾಡಬೇಕು ಎಂಬುದು ನಿಮಗೆ ಸ್ವಲ್ಪವೂ ಗೊತ್ತಿಲ್ಲ.’
“ಈ ಅವಸ್ಥೆಯಲ್ಲಿ ಕಾಮ-ಕ್ರೋಧಾದಿಗಳೆಲ್ಲ ಭಸ್ಮವಾಗಿ ಹೋಗುತ್ತವೆ. ಅದರಿಂದ ಶರೀರವೇನೊ ಬದಲಾಯಿಸುವುದಿಲ್ಲ. ಉಳಿದವರ ಶರೀರದ ಹಾಗೆಯೇ ಇರುತ್ತದೆ. ಆದರೆ ಒಳಗಡೆ ಎಲ್ಲ ಖಾಲಿಯಾಗಿರುತ್ತದೆ.”
ಒಬ್ಬ ಭಕ್ತ: “ಭಗವಂತನ ದರ್ಶನ ದೊರೆತ ಮೇಲೂ ಈ ಶರೀರ ಬದುಕಿಕೊಂಡಿರುವುದೇ?”
ಶ್ರೀರಾಮಕೃಷ್ಣರು: “ಕೆಲವರ ಶರೀರ ಸ್ವಲ್ಪ ಕೆಲಸಗಳಿಗಾಗಿ-ಲೋಕಶಿಕ್ಷಣಕ್ಕಾಗಿ ಉಳಿದುಕೊಂಡಿರುತ್ತದೆ. ಗಂಗಾಸ್ನಾನದಿಂದ ಪಾಪ ಹೋಗಿ ಮುಕ್ತಿ ದೊರೆಯುತ್ತದೆ. ಆದರೆ ಕುರುಡು ಮಾತ್ರ ಹೋಗುವುದಿಲ್ಲ. ಆದರೆ ಇದು ನಿಜ, ಹಿಂದಿನ ಪಾಪಕರ್ಮಗಳ ಫಲ ಭೋಗವನ್ನು ಅನುಭವಿಸಲು ಎಷ್ಟು ಜನ್ಮಗಳನ್ನು ಎತ್ತಬೇಕಾಗಿತ್ತೊ, ಅವನ್ನು ಮತ್ತೆ ಎತ್ತ ಬೇಕಾಗಿರುವುದಿಲ್ಲ. ಯಾವ ಕರ್ಮಗಳ ದೆಸೆಯಿಂದ ಪ್ರಸ್ತುತ ಶರೀರ ಉದ್ಭವವಾಯಿತೊ, ಅವು ಮುಗಿಯುವವರೆಗೆ ಮಾತ್ರ ಅದು ಬದುಕಿಕೊಂಡಿರುತ್ತದೆ; ಉಳಿದ ಜನ್ಮಗಳನ್ನು ಮತ್ತೆ ಎತ್ತಬೇಕಾಗಿರುವುದಿಲ್ಲ. ಕಾಮಕ್ರೋಧಾದಿಗಳೆಲ್ಲ ಸುಟ್ಟು ಭಸ್ಮವಾಗಿಬಿಡುತ್ತವೆ. ಶರೀರ ಮಾತ್ರ ಉಳಿದುಕೊಂಡಿರುತ್ತದೆ. ಇನ್ನು ಸ್ವಲ್ಪ ಕಾಲ-ಕೆಲವು ಕಾರ್ಯಗಳನ್ನು ಮುಗಿಸಲು.”
ಪಂಡಿತ: “ಅದಕ್ಕೇ ‘ಸಂಸ್ಕಾರ’ ಅಂತ ಹೆಸರು.”
ಶ್ರೀರಾಮಕೃಷ್ಣರು: “ವಿಜ್ಞಾನಿ ಸತತ ಭಗವದ್ದರ್ಶನ ಮಾಡುತ್ತಿರುತ್ತಾನೆ. ಅದಕ್ಕೇ ಆತನಿಗೆ ಈ ಜಗತ್ತಿನ ಕಡೆ ಉದಾಸೀನಭಾವ. ಈ ಕಣ್ಣುಗಳನ್ನು ತೆರೆದುಕೊಂಡೇ ಆತನ ದರ್ಶನ ಮಾಡುತ್ತಾನೆ. ಕೆಲವು ವೇಳೆ ನಿತ್ಯದಿಂದ ಲೀಲೆಗೆ ಇಳಿದುಬರುತ್ತಾನೆ, ಇನ್ನು ಕೆಲವು ವೇಳೆ ಲೀಲೆಯಿಂದ ನಿತ್ಯಕ್ಕೆ ಹತ್ತಿಹೋಗುತ್ತಾನೆ.”
ಪಂಡಿತ: “ಇದು ನನಗೆ ಅರ್ಥವಾಗಲಿಲ್ಲ.”
ಶ್ರೀರಾಮಕೃಷ್ಣರು: “ಜ್ಞಾನಿ ‘ನೇತಿ, ನೇತಿ’, ‘ಇದಲ್ಲ, ಇದಲ್ಲ’ ಎಂದು ವಿಚಾರ ಮಾಡಿ ಕೊನೆಗೆ ನಿತ್ಯ ಅಖಂಡ ಸಚ್ಚಿದಾನಂದನನ್ನು ಮುಟ್ಟಿಬಿಡುತ್ತಾನೆ. ಆತ ಈ ರೀತಿ ವಿಚಾರ ಮಾಡುತ್ತಾನೆ: ‘ಬ್ರಹ್ಮ ಜೀವವಲ್ಲ, ಜಗತ್ತಲ್ಲ, ಚತುರ್ವಿಂಶತಿ ತತ್ತ್ವವಲ್ಲ’. ಈ ವಿಧವಾದ ವಿಚಾರದಿಂದ ಕೊನೆಗೆ ಸಚ್ಚಿದಾನಂದ ಸಾಕ್ಷಾತ್ಕಾರ ದೊರೆಯುತ್ತದೆ. ಆಗ ಆತನಿಗೇ ಅನುಭವವಾಗುತ್ತದೆ, ಆತನೇ ಇದೆಲ್ಲ ಆಗಿರುವ ಹಾಗೆ-ಜೀವ, ಜಗತ್ತು, ಚತುರ್ವಿಂಶತಿ ತತ್ತ್ವ ಎಲ್ಲ.
“ಹಾಲಿಗೆ ಹೆಪ್ಪು ಹಾಕಿ ಮೊಸರು ಮಾಡಿ ಕಡೆದು ಬೆಣ್ಣೆ ತೆಗೆಯಬೇಕು. ಬೆಣ್ಣೆಯನ್ನು ತೆಗೆದ ನಂತರ ಅರ್ಥವಾಗುತ್ತದೆ, ಬೆಣ್ಣೆ ಮಜ್ಜಿಗೆಗೆ ಸೇರಿದ್ದು, ಮಜ್ಜಿಗೆ ಬೆಣ್ಣೆಗೆ ಸೇರಿದ್ದು ಎಂಬುದಾಗಿ. ತೊಗಟೆ ಕಾಂಡಕ್ಕೆ ಸೇರಿದ್ದು, ಕಾಂಡ ತೊಗಟೆಗೆ ಸೇರಿದ್ದು.”
ಪಂಡಿತ ನಗುತ್ತ ಭೂಧರನಿಗೆ: “ಅರ್ಥವಾಯಿತೆ? ಇದನ್ನು ತಿಳಿದುಕೊಳ್ಳುವುದು ಬಹಳ ಕಷ್ಟ.”
ಶ್ರೀರಾಮಕೃಷ್ಣರು: “ಬೆಣ್ಣೆಯ ಉತ್ಪನ್ನದೊಡನೆ ಮಜ್ಜಿಗೆಯೂ ಉತ್ಪನ್ನವಾಗಲೇಬೇಕು. ಬೆಣ್ಣೆಯ ಭಾವನೆಯೊಡನೆ ಮಜ್ಜಿಗೆಯ ಭಾವನೆಯನ್ನೂ ಮಾಡಲೇಬೇಕು-ಏಕೆಂದರೆ ಮಜ್ಜಿಗೆ ಉತ್ಪನ್ನವಾಗದಿದ್ದರೆ ಬೆಣ್ಣೆಯೂ ಉತ್ಪನ್ನವಾಗುವ ಹಾಗಿಲ್ಲ. ಈ ಕಾರಣದಿಂದ ನಿತ್ಯವನ್ನು ಒಪ್ಪಿಕೊಂಡರೆ ಲೀಲೆಯನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಮೊದಲು ವಿಲೋಮ, ಅನಂತರ ಅನುಲೋಮ. ಸಾಕಾರವು ನಿರಾಕಾರಗಳನ್ನು ಸಾಕ್ಷಾತ್ಕಾರ ಮಾಡಿಕೊಂಡ ನಂತರ ಈ ಅವಸ್ಥೆ ಉಂಟಾಗುತ್ತದೆ. ಸಾಕಾರವು ಚಿನ್ಮಯರೂಪ; ನಿರಾಕಾರವು ಅಖಂಡ ಸಚ್ಚಿದಾನಂದ.
“ಬ್ರಹ್ಮನೇ ಎಲ್ಲವೂ ಆಗಿದ್ದಾನೆ. ಆದ್ದರಿಂದ ವಿಜ್ಞಾನಿಗೆ ಈ ಜಗತ್ತು ಒಂದು ‘ಆನಂದ ಭವನ.’ ಆದರೆ ಜ್ಞಾನಿಗೆ ಒಂದು ‘ಮಾಯೆಯ ಚೌಕಟ್ಟು’. ರಾಮಪ್ರಸಾದ ಈ ಜಗತ್ತನ್ನು ಒಂದು ‘ಮಾಯೆಯ ಚೌಕಟ್ಟು’ ಎಂದು ವರ್ಣನೆಮಾಡಿದ. ಇನ್ನೊಬ್ಬ ಅದಕ್ಕೆ ಎದುರುತ್ತರ ಕೊಟ್ಟ:
“ಈ ಜಗವೆಂಬುದು ಮೋಜಿನ ಮನೆಯೊ!
ಇದರೊಳು ನಾ ಮನಬಂದೊಲು ನಡೆವೆ……
“ವಿಜ್ಞಾನಿ ಭಗವದಾನಂದವನ್ನು ವಿಶೇಷವಾಗಿ ಅನುಭವಿಸುತ್ತಾನೆ. ಕೆಲವರು ಹಾಲಿನ ಸಂಬಂಧವಾಗಿ ಕೇಳಿದ್ದಾರೆ. ಇನ್ನು ಕೆಲವರು ಅದನ್ನು ನೋಡಿದ್ದಾರೆ, ಮತ್ತೆ ಕೆಲವರು ಅದನ್ನು ಕುಡಿದಿದ್ದಾರೆ. ವಿಜ್ಞಾನಿ ಹಾಲನ್ನು ಕುಡಿದಿರುವುದೂ ಅಲ್ಲದೆ, ಕುಡಿದ ನಂತರ ಆನಂದವನ್ನೂ ಪಟ್ಟಿದ್ದಾನೆ, ಪುಷ್ಟನೂ ಆಗಿದ್ದಾನೆ.”
ಪರಮಹಂಸರು ಈಗ ಸುಮ್ಮನೆ ಕುಳಿತಿದ್ದಾರೆ. ಪಂಡಿತನಿಗೆ ಹೇಳುತ್ತಿದ್ದಾರೆ, ಗಂಡು ಗುಡಿ ಸೇದುವಂತೆ. ಆತ ಆಗ್ನೇಯ ವರಾಂಡಕ್ಕೆ ಹೋದ, ಗುಡುಗುಡಿ ಕುಡಿಯಲು. ಕುಡಿದು ಮುಗಿಸಿದ ನಂತರ ಆತ ಕೊಠಡಿಗೆ ಹಿಂದಿರುಗಿ ಬಂದು ಭಕ್ತರ ಮಧ್ಯೆ ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದಾನೆ. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತು ಮಾತುಕತೆಯಾಡಲು ಈಗ ಆರಂಭಿಸಿದ್ದಾರೆ.
ಶ್ರೀರಾಮಕೃಷ್ಣರು ಪಂಡಿತನಿಗೆ: “ನಿನಗೆ ಇದನ್ನು ತಿಳಿಸಬೇಕು ಅಂತ ಇದ್ದೇನೆ. ಆನಂದದಲ್ಲಿ ಮೂರು ವಿಧ-ವಿಷಯಾನಂದ, ಭಜನಾನಂದ, ಬ್ರಹ್ಮಾನಂದ. ಯಾವುದರ ಕಡೆ ಜನ ಸರ್ವದಾ ನುಗ್ಗುತ್ತಿರುವರೊ, ಎಂದರೆ ಕಾಮಕಾಂಚನಗಳ ಆನಂದದ ಕಡೆ, ಅದಕ್ಕೆ ವಿಷಯಾನಂದ ಅಂತ ಹೆಸರು. ಭಗವಂತನ ನಾಮಗುಣಕೀರ್ತನೆಯಿಂದ ದೊರೆಯುವ ಆನಂದಕ್ಕೆ ಭಜನಾನಂದ ಅಂತ ಹೆಸರು. ಬ್ರಹ್ಮಾನಂದ ದೊರೆತ ನಂತರ ಹಿಂದಿನ ಕಾಲದ ಋಷಿಗಳು ಸಾಂಪ್ರದಾಯಿಕ ರೀತಿ-ನೀತಿಗಳ ಎಲ್ಲೆಯನ್ನು ದಾಟಿಹೋಗಿಬಿಡುತ್ತಿದ್ದರು.”
“ಚೈತನ್ಯದೇವನಿಗೆ ಮೂರು ವಿಧದ ಅವಸ್ಥೆ ಉಂಟಾಗುತ್ತಿದ್ದುವು-ಅಂತರ್ದಶಾವಸ್ಥೆ, ಅರ್ಧಬಾಹ್ಯದಶಾವಸ್ಥೆ, ಬಾಹ್ಯದಶಾವಸ್ಥೆ. ಅಂತರ್ದಶಾವಸ್ಥೆಯಲ್ಲಿ ಭಗವಂತನನ್ನು ದರ್ಶನ ಮಾಡುತ್ತ, ಸಮಾಧಿಸ್ಥನಾಗುತ್ತಿದ್ದ-ಜಡಸಮಾಧಿಯ ಅವಸ್ಥೆ ಉಂಟಾಗುತ್ತಿತ್ತು. ಅರ್ಧ ಬಾಹ್ಯಾದಶಾವಸ್ಥೆಯಲ್ಲಿ ಒಂದು ಕಿಂಚಿತ್ ಬಾಹ್ಯಪ್ರಜ್ಞೆ ಆತನಿಗೆ ಇರುತ್ತಿತ್ತು. ಬಾಹ್ಯದಶಾವಸ್ಥೆಯಲ್ಲಿದ್ದಾಗ ಭಗವಂತನ ನಾಮಗುಣಕೀರ್ತನೆ ಮಾಡಲು ಆತನಿಗೆ ಸಾಧ್ಯವಾಗುತ್ತಿತ್ತು.”
ಹಾಜರಾ, ಪಂಡಿತನಿಗೆ: ‘ಈಗ ನಿನ್ನ ಸಂದೇಹಗಳೆಲ್ಲ ನಿವೃತ್ತಿಯಾಗಿಬಿಟ್ಟುವು.’
ಶ್ರೀರಾಮಕೃಷ್ಣರು, ಪಂಡಿತನಿಗೆ: “ಯಾವುದಕ್ಕೆ ಸಮಾಧಿ ಅಂತ ಹೇಳುತ್ತಾರೆ? ಯಾವ ಅವಸ್ಥೆಯಲ್ಲಿ ಮನಸ್ಸು ಬ್ರಹ್ಮನಲ್ಲಿ ಲಯವಾಗುವುದೋ ಆ ಅವಸ್ಥೆಗೆ. ಜ್ಞಾನಿಗೆ ಜಡಸಮಾಧಿ ಉಂಟಾಗುತ್ತದೆ. ಆಗ ‘ಅಹಂ’ ಇರದು. ಭಕ್ತಿಯೋಗದ ಮೂಲಕ ದೊರೆಯುವ ಸಮಾಧಿಗೆ ‘ಚೇತನ ಸಮಾಧಿ’ ಅಂತ ಹೆಸರು. ಇದರಲ್ಲಿ ಸೇವ್ಯಸೇವಕನ, ರಸರಸಿಕನ, ಆಸ್ವಾದ್ಯ ಆಸ್ವಾದಕನ ‘ಅಹಂ’ ಉಳಿದುಕೊಂಡಿರುತ್ತದೆ. ಭಗವಂತ ಸೇವ್ಯ; ಭಕ್ತ ಸೇವಕ. ಭಗವಂತ ರಸಸ್ವರೂಪ; ಭಕ್ತ ರಸಿಕ. ಭಗವಂತ ಆಸ್ವಾದ್ಯ; ಭಕ್ತ ಆಸ್ವಾದಕ. ‘ಸಕ್ಕರೆಯಾಗಲು ಇಚ್ಛೆಯಿಲ್ಲ. ಸಕ್ಕರೆ ತಿನ್ನಲು ಇಚ್ಛೆ.’”
ಪಂಡಿತ: “ಭಗವಂತ ಒಂದು ಪಕ್ಷ ‘ಅಹಂ’ ಅನ್ನು ಸಂಪೂರ್ಣವಾಗಿ ನಾಶಮಾಡಿ ಆತನನ್ನು ಸಕ್ಕರೆಯನ್ನಾಗಿ ಮಾಡಿಕೊಂಡುಬಿಟ್ಟರೆ?”
ಶ್ರೀರಾಮಕೃಷ್ಣರು ನಗುತ್ತ: “ಬಾ, ಬಾ ಇಲ್ಲಿ! ನಿನ್ನ ಮನಸ್ಸಿನಲ್ಲಿ ಏನಿದೆ ಹೇಳು. ‘ತಾಯಿ ಕೌಸಲ್ಯೇ, ನಿನ್ನ ಮನಸ್ಸಿನ ದುಗುಡ ಏನೆಂಬುದನ್ನು ದಯವಿಟ್ಟು ಹೊರಗೆಡಹಮ್ಮಾ!’ (ಎಲ್ಲರೂ ನಗುತ್ತಿದ್ದಾರೆ.) ನಾರದ, ಸನಕ, ಸನತ್ಕುಮಾರ ಇವರ ವಿಷಯವಾಗಿ ಶಾಸ್ತ್ರಗ್ರಂಥಗಳಲ್ಲಿ ಹೇಳಿರುವುದು ಏನು ಮತ್ತೆ?”
ಪಂಡಿತ: “ಹೌದು, ಅದರ ವಿಷಯವಾಗಿ ಇದೆ-ಶಾಸ್ತ್ರಗ್ರಂಥಗಳಲ್ಲಿ.”
ಶ್ರೀರಾಮಕೃಷ್ಣರು: “ಅವರು ಜ್ಞಾನಿಗಳಾಗಿದ್ದರೂ ಭಕ್ತನ ‘ಅಹಂ’ ಅನ್ನು ಇಟ್ಟುಕೊಂಡಿದ್ದರು. ನೀನು ಭಾಗವತವನ್ನು ಓದಿಲ್ಲ ವೇ?”
ಪಂಡಿತ: “ಸ್ವಲ್ಪ ಭಾಗವನ್ನು ಓದಿದ್ದೇನೆ, ಪೂರ್ಣವಾಗಿ ಇಲ್ಲ.”
ಶ್ರೀರಾಮಕೃಷ್ಣರು: “ಪ್ರಾರ್ಥನೆ ಮಾಡು; ಭಗವಂತ ದಯಾಮಯ. ಆತ ಭಕ್ತರ ಪ್ರಾರ್ಥನೆಗೆ ಕಿವಿಗೊಡುವುದಿಲ್ಲ ಅಂತ ತಿಳಿದುಕೊಂಡಿದ್ದೀಯೇನು? ಆತ ಕಲ್ಪತರು. ಪ್ರಾರ್ಥಿಸಿದ್ದೆಲ್ಲಾ ದೊರೆಯುತ್ತದೆ.”
ಪಂಡಿತ: “ಇವುಗಳ ಸಂಬಂಧವಾಗಿ ನಾನು ಇಷ್ಟೊಂದು ಆಳಕ್ಕೆ ಹೋಗಿರಲಿಲ್ಲ. ಈಗ ನನಗೆ ಚೆನ್ನಾಗಿ ಅರ್ಥವಾಗುತ್ತಿದೆ.”
ಶ್ರೀರಾಮಕೃಷ್ಣರು: “ಬ್ರಹ್ಮಜ್ಞಾನವನ್ನು ಕೃಪೆಮಾಡಿದ ನಂತರವೂ ಭಗವಂತ ಭಕ್ತನಲ್ಲಿ ಸ್ವಲ್ಪ ‘ಅಹಂ’ ಅನ್ನು ಉಳಿಸಿಬಿಟ್ಟಿರುತ್ತಾನೆ. ಆ ‘ಅಹಂ’, ‘ಭಕ್ತನ ಅಹಂ’, ‘ವಿದ್ಯೆಯ ಅಹಂ’. ಆ ‘ಅಹಂ’ ಮೂಲಕ ಭಕ್ತ ಭಗವಂತನ ಅನಂತ ಲೀಲೆಯನ್ನು ಆಸ್ವಾದಿಸುತ್ತಾನೆ.
“ಕುಟ್ಟಿ ಕುಟ್ಟಿ ಒನಕೆ ಬಹಳವಾಗಿ ಸವೆದುಹೋಗಿ ಎಲ್ಲೋ ಅದರ ಒಂದು ಕಿಂಚಿತ್ತು ಭಾಗ ಮಾತ್ರ ಉಳಿದುಕೊಂಡಿತ್ತು. ಅದು ಒಮ್ಮೆ ಜೊಂಡಿನ ಪೊದೆಯೊಳಕ್ಕೆ ಬಿದ್ದುಹೋಗಿ ಯದುವಂಶದ ನಾಶಕ್ಕೆ ಮೂಲಕಾರಣವಾಗಿಬಿಟ್ಟಿತು. ವಿಜ್ಞಾನಿ ‘ಭಕ್ತನ ಅಹಂ’, ‘ವಿದ್ಯೆಯ ಅಹಂ’ ಇಟ್ಟುಕೊಳ್ಳುತ್ತಾನೆ-ಆಸ್ವಾದನಕ್ಕಾಗಿ, ಲೋಕಶಿಕ್ಷಣಕ್ಕಾಗಿ.
“ಹಿಂದಿನ ಕಾಲದ ಋಷಿಗಳದು ಬಹಳ ಪುಕ್ಕಲು ಸ್ವಭಾವ. ಅವರನ್ನು ಬಹಳ ಸುಲಭವಾಗಿ ಹೆದರಿಸಿಬಿಡಬಹುದಾಗಿತ್ತು. ಅವರ ಮಾನಸಿಕ ಪ್ರವೃತ್ತಿ ಏನಾಗಿತ್ತು ಗೊತ್ತೆ? ‘ಯಾವ ರೀತಿಯಿಂದಲಾದರೂ ನನಗೆ ಮುಕ್ತಿ ದೊರೆತುಬಿಟ್ಟರೆ ಸಾಕು; ಉಳಿದವರನ್ನು ಕಟ್ಟಿಕೊಂಡು ನನಗೇನು?’ ಎನ್ನುವ ಸ್ವಭಾವ. ಬೆಂಡು ಹೇಗೋ ಮಾಡಿ ತಾನು ಮಾತ್ರ ತೇಲಿಕೊಂಡು ಹೋಗಬಲ್ಲುದು. ಆದರೆ ಅದರ ಮೇಲೆ ಒಂದು ಪುಟ್ಟ ಹಕ್ಕಿ ಕುಳಿತುಕೊಂಡರೂ ಮುಳುಗಿಹೋಗಿಬಿಡುತ್ತದೆ. ನಾರದಾದಿ ಋಷಿಗಳು ಹೆಮ್ಮರ ಇದ್ದ ಹಾಗೆ. ಅದು ತಾನೂ ತೇಲಿಕೊಂಡು ಹೋಗುವುದಲ್ಲದೆ, ಅನೇಕ ಜೀವಜಂತುಗಳನ್ನೂ ಹೊತ್ತುಕೊಂಡು ಹೋಗಬಲ್ಲದು. ಜಹಜು ತಾನೂ ಸಮುದ್ರವನ್ನು ದಾಟಿಬಿಡುವುದಲ್ಲದೆ, ಇತರರನ್ನೂ ಸಮುದ್ರದಾಚೆ ಕರೆದೊಯ್ಯುತ್ತದೆ.
“ನಾರದಾದಿ ಆಚಾರ್ಯಪುರುಷರು ವಿಜ್ಞಾನಿಗಳು-ಉಳಿದ ಋಷಿಗಳಿಗಿಂತ ಹೆಚ್ಚು ಸಾಹಸವುಳ್ಳವರು. ಅವರನ್ನು ನಿಪುಣ ಪಗಡೆಯಾಟಗಾರನಿಗೆ ಹೋಲಿಸಬಹುದು. ಆತ ದಾಳ ಬಿಡುವಾಗ ಕೂಗಿಕೊಳ್ಳುತ್ತಾನೆ: ‘ಈಗ ಎಷ್ಟು ಬೇಕು? ಆರೊ? ಇಲ್ಲ ಐದು! ತಕೋ ಐದು!’ ಆತ ಕೇಳಿದ ಗರ ಬೀಳುತ್ತಿರುತ್ತದೆ. ಆತ ಅತ್ಯಂತ ನಿಪುಣ ಆಟಗಾರ. ಆಟವಾಡುತ್ತಿರುವಾಗ ಒಮ್ಮೊಮ್ಮೆ ಮೀಸೆಯನ್ನೂ ಹುರಿಮಾಡುತ್ತಿರುತ್ತಾನೆ.
“ಬರಿಯ ಜ್ಞಾನಿ ಭಯಗ್ರಸ್ತ. ಆತನದು ಅಭ್ಯಾಸವಿಲ್ಲದ ಪಗಡೆಯಾಟಗಾರನ ಮನೋವೃತ್ತಿ-ಹೇಗೋ ಕಾಯಿಯನ್ನು ಹಣ್ಣುಮಾಡಿಕೊಂಡುಬಿಟ್ಟರೆ ಸಾಕಪ್ಪ ಎನ್ನುವ ಮನೋವೃತ್ತಿ. ಆದರೆ ವಿಜ್ಞಾನಿ ಯಾವುದಕ್ಕೂ ಹೆದರುವುದಿಲ್ಲ. ಆತ ಸಾಕಾರ, ನಿರಾಕಾರ, ಎರಡನ್ನೂ ಸಾಕ್ಷಾತ್ಕಾರ ಮಾಡಿಕೊಂಡುಬಿಟ್ಟಿದ್ದಾನೆ. ಭಗವಂತನೊಡನೆ ಮಾತುಕತೆಯಾಡಿದ್ದಾನೆ. ಭಗವದಾನಂದವನ್ನು ಅನುಭವಿಸಿದ್ದಾನೆ.
“ವಿಜ್ಞಾನಿಗೆ ಮನಸ್ಸು ಧ್ಯಾನದ ಮೂಲಕ ಅಖಂಡ ಸಚ್ಚಿದಾನಂದದಲ್ಲಿ ಲಯವಾಗಿ ಹೋದರೂ ಆನಂದವೇ, ಲಯವಾಗದೆ ಲೀಲೆಯಲ್ಲಿ ನೆಲೆಸಿದ್ದರೂ ಆನಂದವೇ.
“ಬರಿಯ ಜ್ಞಾನಿಯದು ಕೇವಲ ಒಂದೇ ಸ್ವರ. ಯಾವಾಗ ನೋಡಿದರೂ ವಿಚಾರದಲ್ಲಿ ತೊಡಗಿರುತ್ತಾನೆ; ‘ಇದಲ್ಲ, ಇದಲ್ಲ.’ ‘ಈ ಇಡೀ ಜಗತ್ತು ಸ್ವಪ್ನದ ಹಾಗೆ.’ ಆದರೆ ನಾನು ‘ಎರಡು ಕೈಗಳನ್ನೂ ಮೇಲಕ್ಕೆ ಎತ್ತಿಬಿಟ್ಟಿದ್ದೇನೆ.’ ಆದ್ದರಿಂದ ನಾನು ಎಲ್ಲವನ್ನೂ ಸ್ವೀಕರಿಸುತ್ತೇನೆ.
“ಒಂದು ಕಥೆ ಕೇಳು. ಒಮ್ಮೆ ಒಬ್ಬ ಹೆಂಗಸು ತನ್ನ ನೇಯ್ಗೆ ಗೆಳತಿಯನ್ನು ನೋಡಿಕೊಂಡು ಬರಲು ಆಕೆಯ ಮನೆಗೆ ಹೋದಳು. ನೇಯ್ಗೆಯವಳು ಆ ಸಮಯದಲ್ಲಿ ದಾರ ತೆಗೆಯುತ್ತಿದ್ದಳು-ವಿವಿಧ ಬಗೆಯ ರೇಶ್ಮೆ ದಾರಗಳನ್ನು. ತನ್ನ ಗೆಳತಿ ಬಂದುದನ್ನು ನೋಡಿ ನೇಯ್ಗೆಯವಳಿಗೆ ಬಹಳ ಆನಂದವಾಗಿಬಿಟ್ಟು ಆಕೆ ಗೆಳತಿಗೆ ಹೇಳಿದಳು: ‘ಗೆಳತಿ, ನೀನು ಬಂದುದನ್ನು ನೋಡಿ ನನಗೆಷ್ಟು ಆನಂದವಾಗಿಬಿಟ್ಟಿದೆ ಎಂಬುದನ್ನು ನಾನು ಬಾಯಿಂದ ವರ್ಣಿಸಲಾರೆ. ಸ್ವಲ್ಪ ಕುಳಿತುಕೊಂಡಿರು, ಉಪಾಹಾರ ತೆಗೆದುಕೊಂಡು ಬರುತ್ತೇನೆ.’ ನೇಯ್ಗೆಯವಳು ಅಡಿಗೆ ಮನೆಗೆ ಹೋದಳು. ಹತ್ತಿರದಲ್ಲೆ ಬಿದ್ದಿದ್ದ ವಿವಿಧ ಬಣ್ಣದ ರೇಶ್ಮೆ ದಾರಗಳನ್ನು ನೋಡಿ ಗೆಳತಿಗೆ ಲೋಭ ಉಂಟಾಯಿತು. ಒಂದು ಕಟ್ಟನ್ನು ತೆಗೆದು ಕಂಕುಳಿಗೆ ಸೇರಿಸಿದಳು. ನೇಯ್ಗೆಯವಳು ಉಪಾಹಾರ ತೆಗೆದುಕೊಂಡು ಬಂದು ಉತ್ಸಾಹದಿಂದ ಈಕೆಗೆ ಉಪಾಹಾರ ಮಾಡಿಸಿದಳು. ಅವಳ ಕಣ್ಣು ದಾರದ ಕಡೆಗೆ ಬಿದ್ದೊಡನೆಯೇ ತನ್ನ ಗೆಳತಿ ಒಂದು ಕಟ್ಟು ದಾರವನ್ನು ಹೊಡೆದುಬಿಟ್ಟಿರುವುದು ಆಕೆಗೆ ಗೊತ್ತಾಗಿಬಿಟ್ಟಿತು. ಅದನ್ನು ಹಿಂದಿರುಗಿ ಪಡೆಯಲು ಆಕೆ ಒಂದು ಯುಕ್ತಿ ಹೂಡಿದಳು. ಆಕೆ ತನ್ನ ಗೆಳತಿಗೆ ಹೇಳಿದಳು: ‘ಗೆಳತಿ ಬಹಳ ದಿನಗಳಾದ ಮೇಲೆ ಇಂದು ನಿನ್ನ ದರ್ಶನ. ಇಂದು ಒಳ್ಳೆ ಶುಭದಿನವೇ. ನಾವಿಬ್ಬರೂ ಸ್ವಲ್ಪ ಹೊತ್ತು ನರ್ತಿಸೋಣ ಅಂತ ಬಹಳ ಉತ್ಕಟೇಚ್ಛೆಯಾಗುತ್ತಿದೆ ನನಗೆ.’ ಈಕೆಯೂ ಹೇಳಿದಳು: ‘ನನಗೂ ಬಹಳ ಆನಂದವಾಗಿಬಿಟ್ಟಿದೆ.’ ಬಳಿಕ ಇಬ್ಬರೂ ನರ್ತಿಸಲು ತೊಡಗಿದರು. ಈಕೆ ಕೈಯನ್ನು ಮೇಲಕ್ಕೆ ಎತ್ತದೆ ನರ್ತಿಸುತ್ತಿರುವುದನ್ನು ನೋಡಿ ಆಕೆ ಹೇಳಿದಳು: ‘ಗೆಳತಿ, ನಾವು ಎರಡು ಕೈಗಳನ್ನೂ ಮೇಲಕ್ಕೆ ಎತ್ತಿ ನರ್ತಿಸೋಣ. ಇಂದು ಒಳ್ಳೆ ಆನಂದದ ದಿನ.’ ಆದರೆ ಈಕೆ ಒಂದು ಕೈಯನ್ನು ಕಂಕುಳಿಗೆ ಒತ್ತಿ ಹಿಡಿದು, ಇನ್ನೊಂದು ಕೈಯನ್ನು ಮೇಲಕ್ಕೆ ಎತ್ತಿ ನರ್ತಿಸಲಾರಂಭಿಸಿದಳು. ಆಗ ಆಕೆ ಹೇಳಿದಳು: ‘ಇದೇನಿದು? ಏಕೆ ಒಂದೇ ಕೈ ಎತ್ತಿ ನರ್ತಿಸುತ್ತಿದ್ದೀಯೆ? ಎರಡು ಕೈಗಳನ್ನೂ ಎತ್ತಿ ನರ್ತಿಸು. ನೋಡು, ನನ್ನ ಕಡೆ ಇಗೋ ನೋಡು, ನಾನು ಹೇಗೆ ಎರಡು ಕೈಗಳನ್ನೂ ಎತ್ತಿ ನರ್ತಿಸುತ್ತಿದ್ದೇನೆ.’ ಆದರೆ ಈಕೆ ಒಂದು ಕೈಯನ್ನು ಇನ್ನೂ ಕಂಕುಳಿಗೆ ಒತ್ತಿ ಹಿಡಿದುಕೊಂಡು ನಗುತ್ತ ನಗುತ್ತ ಇನ್ನೊಂದು ಕೈಯನ್ನು ಮಾತ್ರವೇ ಮೇಲಕ್ಕೆತ್ತಿ ನರ್ತಿಸುತ್ತ ಹೇಳಲಾರಂಭಿಸಿದಳು: ‘ಗೆಳತಿ, ನನಗೆ ಬರುವ ನರ್ತನ ಈ ತರದ್ದೇ.’”
ಪರಮಹಂಸರು ಮಾತು ಮುಂದುವರಿಸುತ್ತಿದ್ದಾರೆ: “ನಾನು ಕಂಕುಳನ್ನು ಕೈಯಿಂದ ಒತ್ತಿ ಹಿಡಿದುಕೊಂಡಿಲ್ಲ. ಎರಡೂ ಕೈಗಳನ್ನೂ ಬಿಟ್ಟುಬಿಟ್ಟಿದ್ದೇನೆ. ನನಗೆ ಯಾವುದರ ಭಯವೂ ಇಲ್ಲ. ನಾನು ನಿತ್ಯ, ಲೀಲೆ ಎರಡನ್ನೂ ಸ್ವೀಕರಿಸುತ್ತೇನೆ.
“ನಾನು ಕೇಶವಸೇನನಿಗೆ ಹೇಳಿದೆ: ‘ “ಅಹಂ” ಅನ್ನು ತ್ಯಜಿಸದವರೆಗೆ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುವುದಿಲ್ಲ.’ ಅದಕ್ಕೆ ಆತ ಹೇಳಿದ: ‘ಹಾಗಾದರೆ, ಮಹಾಶಯರೆ, ನನ್ನ ಸಮಾಜ ಮುಂತಾದುವು ಬದುಕುವ ಹಾಗೇ ಇಲ್ಲ.’ ನಾನು ಹೇಳಿದೆ: “ಅಪಕ್ವ ಅಹಂ”, “ದುಷ್ಟ ಅಹಂ” ಇವನ್ನು ಮಾತ್ರ ತ್ಯಜಿಸು ಅಂತ ನಾನು ಹೇಳುತ್ತಿದ್ದೇನೆ. ಆದರೆ “ಪಕ್ವ ಅಹಂ”, “ಬಾಲಕ ಅಹಂ”, “ದಾಸ ಅಹಂ”, “ವಿದ್ಯಾ ಅಹಂ” ಇವುಗಳಿಂದ ಯಾವ ಕೆಡುಕೂ ಉಂಟಾಗದು.
“ಸಂಸಾರಿಯ ಅಹಂ”, ಎಂದರೆ ‘ಅಪಕ್ವ ಅಹಂ’ ಒಂದು ದಪ್ಪ ಕೋಲು ಇದ್ದ ಹಾಗೆ. ಸಚ್ಚಿದಾನಂದಸಾಗರದ ನೀರನ್ನು ಈ ಕೋಲು ಎರಡು ಭಾಗವಾಗಿ ಮಾಡಿರುವ ಹಾಗೆ ಕಾಣುತ್ತದೆ. ಆದರೆ ‘ದಾಸ ಅಹಂ’, ‘ಬಾಲಕ ಅಹಂ’, ‘ವಿದ್ಯಾ ಅಹಂ’ ನೀರಿನ ಮೇಲೆಳೆದ ಗೆರೆಯ ಹಾಗೆ. ಇದು ಒಂದೇ ಸಾಗರ ಎಂಬುದು ಸ್ಪಷ್ಟವಾಗಿ ಕಾಣಬರುತ್ತದೆ. ಸಾಗರ ಎರಡು ಭಾಗವಾಗಿರುವಂತೇನೋ ಆ ಗೆರೆ ತೋರಿಸಬಹುದು. ಆದರೆ ವಾಸ್ತವಿಕವಾಗಿ ಅದು ಒಂದೇ ಸಾಗರ ಎಂಬುದನ್ನು ಸ್ಪಷ್ಟವಾಗಿ ನೋಡಬಹುದು.
“ಶಂಕರಾಚಾರ್ಯರು ‘ವಿದ್ಯಾ ಅಹಂ’ ಇಟ್ಟುಕೊಂಡಿದ್ದರು-ಲೋಕಶಿಕ್ಷಣಕ್ಕಾಗಿ. ಬ್ರಹ್ಮಜ್ಞಾನ ದೊರೆತ ನಂತರವೂ ಅನೇಕರ ಆಂತರ್ಯದಲ್ಲಿ ಭಗವಂತ ‘ವಿದ್ಯಾ ಅಹಂ’ ಅಥವಾ ‘ಭಕ್ತ ಅಹಂ’ ಇಡುತ್ತಾನೆ. ಹನುಮಂತನು ಸಾಕಾರ ನಿರಾಕಾರಗಳನ್ನು ಸಾಕ್ಷಾತ್ಕಾರ ಮಾಡಿಕೊಂಡ ನಂತರ ಸೇವ್ಯಸೇವಕಭಾವದಲ್ಲಿ, ಭಕ್ತಭಾವದಲ್ಲಿ ಇರುತ್ತಿದ್ದ. ಆತ ರಾಮನಿಗೆ ಹೇಳಿದ: ‘ಹೇ ರಾಮ, ಕೆಲವು ವೇಳೆ ಭಾವಿಸುತ್ತೇನೆ. ನೀನು ಪೂರ್ಣ, ನಾನು ಅಂಶ. ಇನ್ನು ಕೆಲವು ವೇಳೆ ಭಾವಿಸುತ್ತೇನೆ, ನೀನು ಸೇವ್ಯ, ನಾನು ಸೇವಕ. ಆದರೆ ರಾಮ, ತತ್ತ್ವಜ್ಞಾನ ಉಂಟಾದಾಗ ಕಂಡುಬರುತ್ತದೆ, ನೀನೇ ನಾನು, ನಾನೇ ನೀನು.’
“ಯಶೋದೆ ಕೃಷ್ಣವಿರಹ ತಾಳಲಾರದೆ ರಾಧೆಯ ಹತ್ತಿರಕ್ಕೆ ಹೋದಳು. ಆಕೆಯ ಕಷ್ಟವನ್ನು ಮನಗಂಡು ರಾಧೆ ತನ್ನ ನಿಜಸ್ವರೂಪವನ್ನು ತೋರಿಸಿದಳು. ಆಕೆ ಯಶೋದೆಗೆ ಹೇಳಿದಳು: ‘ಕೃಷ್ಣ ಚಿದಾತ್ಮ, ನಾನು ಚಿಚ್ಛಕ್ತಿ, ನನ್ನಿಂದ ಒಂದು ವರ ಬೇಡಿಕೊ.’ ಯಶೋದೆ ಹೇಳಿದಳು. ‘ನನಗೆ ಬ್ರಹ್ಮಜ್ಞಾನ ಬೇಕಾಗಿಲ್ಲ. ನನಗೀ ವರ ಕೊಡು: ಧ್ಯಾನದ ಸಮಯದಲ್ಲಿ ಗೋಪಾಲನ ರೂಪವನ್ನು ಸರ್ವದಾ ನೋಡುವ ಹಾಗೆ; ಕೃಷ್ಣಭಕ್ತರ ಸಂಗ ಸರ್ವದಾ ದೊರೆಯುವ ಹಾಗೆ; ಭಕ್ತರ ಸೇವೆಯನ್ನು ಮಾಡಲು ಸಾಧ್ಯವಾಗುವ ಹಾಗೆ; ಆತನ ನಾಮಗುಣ ಕೀರ್ತನೆಯನ್ನು ಸತತವೂ ಮಾಡಲಾಗುವ ಹಾಗೆ.’
“ಒಮ್ಮೆ ಗೋಪಿಯರಿಗೆ ಇಚ್ಛೆಯಾಗಿಬಿಟ್ಟಿತು ಭಗವಂತನ ಈಶ್ವರೀಯ ರೂಪ ನೋಡಬೇಕೆಂದು. ಕೃಷ್ಣ ಅವರಿಗೆ ಹೇಳಿದ, ಯಮುನೆಯಲ್ಲಿ ಒಂದು ಮುಳುಗು ಹಾಕುವ ಹಾಗೆ. ಹಾಕುವುದೇ ತಡ ಎಲ್ಲರೂ ವೈಕುಂಠಕ್ಕೆ ಬಂದುಬಿಟ್ಟರು. ಅಲ್ಲಿ ಭಗವಂತನ ಷಡೈಶ್ವರ್ಯಪೂರ್ಣ ರೂಪದ ದರ್ಶನವೇನೊ ಆಯಿತು. ಆದರೆ ಅವರಿಗೆ ಅದು ಹಿಡಿಸಲಿಲ್ಲ. ಆಗ ಅವರು ಕೃಷ್ಣನನ್ನು ಕೇಳಿಕೊಂಡರು: ‘ನಮಗೆ ಗೋಪಾಲನ ದರ್ಶನ, ಗೋಪಾಲನ ಸೇವೆ ಮಾತ್ರ ದೊರೆಯುವಂತಾಗಲಿ. ನಮಗಿನ್ನೇನೂ ಬೇಕಾಗಿಲ್ಲ.’
“ಮಥುರೆಗೆ ಹೋಗುವ ಮುನ್ನ ಗೋಪಿಯರಿಗೆ ಬ್ರಹ್ಮಜ್ಞಾನ ಕೊಟ್ಟು ಹೋಗಬೇಕೆಂದು ಕೃಷ್ಣ ಮನಸ್ಸುಮಾಡಿಕೊಂಡಿದ್ದ. ಆತ ಅವರಿಗೆ ಹೇಳಿದ: ‘ನಾನು ಎಲ್ಲಾ ಭೂತಗಳ ಒಳಗೂ ಹೊರಗೂ ಇದ್ದೇನೆ. ನೀವು ನನ್ನನ್ನು ಈ ಒಂದು ರೂಪದಲ್ಲಿ ಮಾತ್ರವೇ ಏಕೆ ನೋಡುತ್ತಿರಬೇಕು?” ಗೋಪಿಯರೆಲ್ಲರೂ ಒಕ್ಕೊರಳಿನಿಂದ ಕೂಗಿಕೊಳ್ಳಲಾರಂಭಿಸಿದರು: “ಓ ಕೃಷ್ಣ, ನಮ್ಮನ್ನು ಬಿಟ್ಟು ಹೊರಟುಹೋಗಬೇಕು ಅಂತ ಇದ್ದೀಯೇನು? ಅದಕ್ಕಾಗೇನು ಈ ಬ್ರಹ್ಮಜ್ಞಾನೋಪದೇಶ?’
“ಗೋಪಿಯರ ಭಾವ ಯಾವುದು ಗೊತ್ತೆ? ‘ನಾವು ರಾಧೆಯ ಗುಂಪಿಗೆ ಸೇರಿದವರು; ರಾಧೆ ನಮ್ಮವಳು.”
ಒಬ್ಬ ಭಕ್ತ: “ಈ ‘ಭಕ್ತ ಅಹಂ’ ಎಂಬುದು ಪೂರ್ತಿಯಾಗಿ ಹೋಗುವುದೇ ಇಲ್ಲವೇ?”
ಶ್ರೀರಾಮಕೃಷ್ಣರು: “ಅದು ಒಮ್ಮೊಮ್ಮೆ ಹೊರಟುಹೋಗುತ್ತದೆ. ಆಗ ಬ್ರಹ್ಮಜ್ಞಾನ ದೊರೆತು ಸಮಾಧಿ ಉಂಟಾಗುತ್ತದೆ. ನನ್ನದೂ ಹೋಗುತ್ತದೆ. ಆದರೆ ಬಹಳ ಹೊತ್ತಿನವರೆಗಲ್ಲ. ಸ, ರಿ, ಗ, ಮ, ಪ, ದ, ನಿ. ‘ನಿ’ ಯಲ್ಲಿ ಹೆಚ್ಚು ಹೊತ್ತು ಕಂಠ ಇಡಲಾಗುವುದಿಲ್ಲ. ಕೆಳಗಿನ ಮನೆಗಳಿಗೆ ಇಳಿಯಬೇಕಾಗುತ್ತದೆ. ನಾನು ಭಗವತಿಗೆ ಪ್ರಾರ್ಥನೆ ಮಾಡುತ್ತೇನೆ: ‘ಹೇ ತಾಯಿ. ನನಗೆ ಬ್ರಹ್ಮಜ್ಞಾನ ಕೊಡಬೇಡ.’ ಹಿಂದೆ ಇಲ್ಲಿಗೆ ಸಾಕಾರವಾದಿಗಳು ಬಹಳವಾಗಿ ಬರುತ್ತಿದ್ದರು. ಅನಂತರ ಆಧುನಿಕ ಬ್ರಹ್ಮಜ್ಞಾನಿಗಳು (ಬ್ರಾಹ್ಮಸಮಾಜದವರು) ಬರಲಾರಂಭಿಸಿದರು. ಹಿಂದೆ ಪ್ರಾಯಿಕವಾಗಿ ಸಮಾಧಿಯುಂಟಾಗಿ ಬಾಹ್ಯಜ್ಞಾನಶೂನ್ಯನಾಗಿರುತ್ತಿದ್ದೆ. ಆಗ ಬಾಹ್ಯಪ್ರಜ್ಞೆ ಬಂದೊಡನೇ ಪ್ರಾರ್ಥನೆ ಮಾಡುತ್ತಿದ್ದೆ: ‘ಹೇ ತಾಯೆ, ನನಗೆ ಬ್ರಹ್ಮಜ್ಞಾನ ಕರುಣಿಸಬೇಡ.’”
ಪಂಡಿತ: “ನಾವು ಪ್ರಾರ್ಥನೆ ಮಾಡಿದರೆ, ಭಗವಂತ ಕಿವಿಗೊಡುವನೇನು?”
ಶ್ರೀರಾಮಕೃಷ್ಣರು: “ಭಗವಂತ ಕಲ್ಪತರು. ಬೇಡಿದ್ದೆಲ್ಲಾ ದೊರೆತುಬಿಡುತ್ತದೆ. ಆದರೆ ಕಲ್ಪತರುವಿನ ಕೆಳಗೆ ನಿಂತು ಪ್ರಾರ್ಥನೆ ಮಾಡಬೇಕು. ಆಗ ಮಾತ್ರವೇ ಪ್ರಾರ್ಥನೆ ಸಫಲಗೊಳ್ಳುತ್ತದೆ. ಆದರೆ ಒಂದು ವಿಷಯ. ಭಗವಂತ ಭಾವಗ್ರಾಹಿ. ಜನ ಏನೇನನ್ನು ಭಾವಿಸಿ ಸಾಧನೆ ಮಾಡುತ್ತಾರೊ, ಅವರಿಗೆ ಅದರಂತೇ ಫಲ ದೊರೆಯುತ್ತದೆ. ಮನಸ್ಸಿನಂತೆ ಮಹಾದೇವ. ಒಬ್ಬ ಐಂದ್ರಜಾಲಿಕ ತನ್ನ ಇಂದ್ರಜಾಲವನ್ನು ಒಬ್ಬ ದೊರೆಯ ಮುಂದೆ ತೋರಿಸುತ್ತಿದ್ದ. ಮಧ್ಯೆ ಮಧ್ಯೆ ಹೇಳುತ್ತಿದ್ದ: ‘ಓ ರಾಜ, ದುಡ್ಡು ಕೊಡು! ಬಟ್ಟೆ ಬರೆ ಕೊಡು!’ ಇದ್ದಕ್ಕಿದ್ದ ಹಾಗೆ ಆತನ ನಾಲಗೆ ಗಂಟಲಿನ ಒಳಕ್ಕೆ ಹೋಗಿ ಸಿಕ್ಕಿಕೊಂಡುಬಿಟ್ಟಿತು. ಕುಂಭಕ ಉಂಟಾಗಿಬಿಟ್ಟಿತು. ಅವನ ಬಾಯಿಂದ ಒಂದು ಮಾತೂ ಇಲ್ಲ, ಶಬ್ದವೂ ಇಲ್ಲ. ಸ್ಪಂದಹೀನನಾಗಿಬಿಟ್ಟ. ಜನ ಭಾವಿಸಿಕೊಂಡರು, ಆತ ಸತ್ತುಹೋದ ಎಂದು. ಆಗ ಎಲ್ಲರೂ ಕೂಡಿ ಒಂದು ಇಟ್ಟಿಗೆಯ ಸಮಾಧಿ ಕಟ್ಟಿ ಆತ ಇದ್ದ ಅವಸ್ಥೆಯಲ್ಲೇ ಆತನನ್ನು ಅದರಲ್ಲಿ ಹೂಳಿಬಿಟ್ಟರು. ಒಂದು ಸಾವಿರ ವರ್ಷಗಳಾದ ನಂತರ ಯಾರೊ ಕೆಲವರು ಆ ಸಮಾಧಿಯನ್ನು ಬಗೆದು ನೋಡಿದರು. ಆಗ ಅವರಿಗೆ ಕಂಡು ಬಂತು, ಯಾರೊ ಒಬ್ಬ ಸಮಾಧಿಸ್ಥನಾಗಿ ಅಲ್ಲಿ ಕುಳಿತಿರುವುದು. ಜನ, ಆತ ಒಬ್ಬ ಮಹಾಪುರುಷನೇ ಎಂದು ಭಾವಿಸಿ ಆತನನ್ನು ಪೂಜಿಸಲಾರಂಭಿಸಿದರು. ಆತನನ್ನು ಹಿಡಿದು ಸ್ವಲ್ಪ ಅಲುಗಾಡಿಸಿ ನೋಡಲಾಗಿ, ಆತನ ನಾಲಗೆ ಸ್ವಸ್ಥಾನಕ್ಕೆ ಹಿಂದಿರುಗಿತು. ಒಡನೇ ಆತನಿಗೆ ಬಾಹ್ಯಪ್ರಜ್ಞೆ ಬಂದು ಕೂಗಿಕೊಳ್ಳಲಾರಂಭಿಸಿದ: ‘ಕಣ್ಣುಕಟ್ಟೇ ಬಾ! ಭ್ರಮೆಯೇ ಬಾ! ಓ ರಾಜ, ದುಡ್ಡು ಕೊಡು! ಬಟ್ಟೆ ಬರೆ ಕೊಡು!’
“ನಾನು ಅಳುತ್ತ ಭಗವತಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದೆ : ‘ಹೇ ತಾಯಿ, ನನ್ನ ವಿಚಾರ ಬುದ್ಧಿಗೆ ವಜ್ರಾಘಾತ ಬೀಳಲಿ.’”
ಪಂಡಿತ: “ಹಾಗಾದರೆ, ನಿಮಗೂ ವಿಚಾರಬುದ್ಧಿ ಇತ್ತು?”
ಶ್ರೀರಾಮಕೃಷ್ಣರು: “ಹೌದು, ಒಮ್ಮೆ ಇತ್ತು?”
ಪಂಡಿತ: “ಹಾಗಾದರೆ ಆಶೀರ್ವಾದ ಮಾಡಿಬಿಡಿ, ನಮ್ಮದೂ ಹೋಗುವಂತೆ. ನಿಮ್ಮದರಿಂದ ನೀವು ಹೇಗೆ ಮುಕ್ತರಾದಿರಿ?”
ಶ್ರೀರಾಮಕೃಷ್ಣರು: “ಓ, ಹೇಗೊ ಮಾಡಿ.”
ಪರಮಹಂಸರು ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು ಮತ್ತೆ ಈಗ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಭಗವಂತ ಕಲ್ಪತರು. ಆತನನ್ನು ಸಮೀಪಿಸಿ ಬೇಡಿಕೊಳ್ಳಬೇಕಾಗುತ್ತದೆ. ಆಗ ಬೇಡಿದ್ದೆಲ್ಲಾ ದೊರೆಯುತ್ತದೆ.
“ಭಗವಂತ ಎಷ್ಟೊಂದು ವಸ್ತುಗಳನ್ನು ಸೃಷ್ಟಿಸಿದ್ದಾನೆ! ಈ ಅನಂತ ಬ್ರಹ್ಮಾಂಡವೇ ಆತನದು. ಆತನ ಅನಂತ ಐಶ್ವರ್ಯಗಳ ಜ್ಞಾನ ನಮಗೇಕೆ ಬೇಕು? ಒಂದು ಪಕ್ಷ ಅರಿತುಕೊಳ್ಳಬೇಕೆಂಬ ಇಚ್ಛೆಯಿದ್ದರೆ, ಮೊದಲು ಅವನ ಸಾಕ್ಷಾತ್ಕಾರ ಪಡೆದುಕೊಂಡು ಬಿಡಬೇಕು. ಬಳಿಕ ಆತನೇ ತಿಳಿಸಿಕೊಟ್ಟುಬಿಡುತ್ತಾನೆ. ಯದುಮಲ್ಲಿಕನಿಗೆ ಎಷ್ಟು ಮನೆ, ಎಷ್ಟು ಲೇವಾದೇವಿ ಪತ್ರ ಇವೆ ಎಂಬುವುಗಳ ಸಮಾಚಾರ ನಮಗೇಕೆ ಬೇಕು? ನಮಗೆ ಬೇಕಾಗಿರುವುದು, ಹೇಗೊ ಮಾಡಿ ಆತನನ್ನು ಸಂಧಿಸಿ ಆತನೊಡನೆ ಸ್ನೇಹ ಬೆಳೆಸಿಕೊಳ್ಳುವುದೇ-ಹಳ್ಳಕೊಳ್ಳಗಳನ್ನು ದಾಟಿಯೊ, ಅರ್ಜಿಯ ಮೂಲಕವೊ ಅಥವಾ ಜವಾನನಿಂದ ದಬ್ಬಿಸಿಕೊಂಡೊ. ಸ್ನೇಹ ಬೆಳೆದ ನಂತರ ಆಸ್ತಿಪಾಸ್ತಿ ಏನಿದೆ ಎಂದು ಪ್ರಶ್ನಿಸಿದರೆ ಆತನೇ ಎಲ್ಲವನ್ನೂ ಹೇಳಿಬಿಡುತ್ತಾನೆ. ಯಜಮಾನನೊಡನೆ ಸ್ನೇಹ ಬೆಳೆಸಿಕೊಂಡು ಬಿಟ್ಟರೆ, ಆತನ ಕೈಕೆಳಗಿನವರೆಲ್ಲಾ ಗೌರವ ತೋರಿಸುತ್ತಾರೆ. (ಎಲ್ಲರೂ ನಗುತ್ತಿದ್ದಾರೆ.)
“ಕೆಲಕೆಲವರಿಗೆ ಭಗವಂತನ ಐಶ್ವರ್ಯದ ಜ್ಞಾನ ಬೇಕಾಗಿರುವುದಿಲ್ಲ. ಮದ್ಯದಂಗಡಿಯಲ್ಲಿ ಎಷ್ಟು ಮಣ ಮದ್ಯವಿದೆ ಎಂಬುದರ ಸಮಾಚಾರ ನಮಗೇಕೆ ಬೇಕು? ಒಂದೊಂದು ಸೀಸೆಯೇ ಸಾಕು ನಮಗೆ. ಭಗವಂತನ ಐಶ್ವರ್ಯದ ಜ್ಞಾನಬೇಕೆಂದು ಇಚ್ಛಿಸುವ ಬಗೆ ಹೇಗೆ-ಸ್ವಲ್ಪ ಕುಡಿಯುವುದರಲ್ಲೆ ಮತ್ತು ಬಂದುಬಿಡುವಾಗ?”
“ಭಕ್ತಿಯೋಗ, ಜ್ಞಾನಯೋಗ ಎಲ್ಲವೂ ಮಾರ್ಗವೆ. ಯಾವ ಮಾರ್ಗ ಹಿಡಿದು ಹೋದರೂ ಭಗವಂತ ದೊರೆತುಬಿಡುತ್ತಾನೆ. ಭಕ್ತಿಮಾರ್ಗ ಸುಲಭವಾದದ್ದು. ಜ್ಞಾನ ವಿಚಾರ ಮಾರ್ಗ ಬಹಳ ಕಠಿಣ, ಯಾವ ಮಾರ್ಗ ಒಳ್ಳೆಯದೆಂದು ಬಹಳವಾಗಿ ವಿಚಾರದಲ್ಲಿ ತೊಡಗುವುದರ ಆವಶ್ಯಕತೆ ಏನಿದೆ? ಈ ವಿಷಯವಾಗಿ ವಿಜಯನೊಡನೆ ನಾನು ಅನೇಕ ದಿನ ಮಾತುಕತೆಯಾಡಿದೆ. ಒಮ್ಮೆ ನಾನು ಒಬ್ಬನ ವಿಷಯವಾಗಿ ಆತನಿಗೆ ತಿಳಿಸಿದೆ. ಆತ ಪ್ರಾರ್ಥನೆಮಾಡುತ್ತಿದ್ದ: “ಹೇ ಭಗವಂತ, ನೀನು ಯಾರು ಎಂತು ಎಂಬುದನ್ನು ನನಗೆ ತೋರಿಸಿಕೊಡು.’
“ವಿಚಾರಮಾರ್ಗ ಬಹಳ ಕಠಿಣ. ಪಾರ್ವತಿ ತನ್ನ ತಂದೆಯಾದ ಗಿರಿರಾಜನಿಗೆ ತನ್ನ ಅನೇಕ ಈಶ್ವರೀಯ ರೂಪಗಳನ್ನು ತೋರಿಸಿ ಹೇಳಿದಳು: ‘ತಂದೆ, ನಿಮಗೆ ಬ್ರಹ್ಮಜ್ಞಾನ ಬೇಕಾದರೆ ಸಾಧುಸಂಗ ಮಾಡಿ.’
“ಬ್ರಹ್ಮ ಏನು ಎಂಬುದನ್ನು ಬಾಯಿಂದ ವರ್ಣಿಸಲಾಗುವುದಿಲ್ಲ. ರಾಮಗೀತೆಯಲ್ಲಿ ಹೇಳಿದೆ : ಕೇವಲ ತಟಸ್ಥ ಲಕ್ಷಣದಿಂದ ಆತನನ್ನು ವರ್ಣಿಸಬಹುದು. ಉದಾಹರಣೆಗೆ ‘ಗಂಗೆಯ ಮೇಲೆ ಗೊಲ್ಲರ ದೊಡ್ಡಿ’ ಎಂದು ಹೇಳುವಾಗ, ಅದರ ನಿಜವಾದ ಅರ್ಥ ಗೊಲ್ಲರ ದೊಡ್ಡಿ ಗಂಗೆಯ ದಡದ ಮೇಲಿದೆ ಎಂಬುದಾಗಿ ಆಗುವ ಹಾಗೆ.
“ನಿರಾಕಾರ ಬ್ರಹ್ಮನ ಸಾಕ್ಷಾತ್ಕಾರ ಏಕೆ ದೊರೆಯದು? ಆದರೆ ಬಹಳ ಕಠಿಣ. ವಿಷಯಬುದ್ಧಿ ಕಿಂಚಿತ್ ಇದ್ದರೂ ದೊರಕದು. ಇಂದ್ರಿಯವಸ್ತುಗಳು ಅಂದರೆ, ರೂಪ, ರಸ, ಗಂಧ, ಸ್ಪರ್ಶ, ಶಬ್ದ ಇವನ್ನು ತ್ಯಜಿಸಿದ ನಂತರವೇ ಮನೋನಾಶವಾದ ಮೇಲೆಯೇ ಆಂತರ್ಯದಲ್ಲಿ ಬೋಧೆಯ ಬೋಧೆ ಆಗುತ್ತದೆ. ಅದೂ ಇಷ್ಟು ಮಾತ್ರವೇ-ಭಗವಂತನಿದ್ದಾನೆ ಎಂಬ ಅನುಭವ ಮಾತ್ರ.”
ಪಂಡಿತ: “ಶಾಸ್ತ್ರದಲ್ಲಿ ಹೇಳಿದೆ. ‘ಅಸ್ತಿತ್ಯೇವೋಪಲಬ್ಧವ್ಯಃ’ ಎಂದು. ಅಂದರೆ, ‘ಭಗವಂತ ಇದ್ದಾನೆ ಎಂಬ ಅನುಭವವನ್ನು ಪಡೆದುಕೊಳ್ಳಬೇಕು’ ಎಂದು.”
ಶ್ರೀರಾಮಕೃಷ್ಣರು: “ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬೇಕಾದರೆ ಯಾವುದಾದರೂ, ಒಂದು ಭಾವವನ್ನು ಆಶ್ರಯಿಸಿಕೊಳ್ಳಬೇಕಾಗುತ್ತದೆ-ವೀರಭಾವವನ್ನೊ, ಸಖೀಭಾವವನ್ನೊ, ದಾಸೀಭಾವವನ್ನೊ, ಸಂತಾನಭಾವವನ್ನೊ.
ಮಣಿಮಲ್ಲಿಕ: “ಆಗ ಮಾತ್ರವೇ ಭಗವಂತನಲ್ಲಿ ಆಸಕ್ತಿ ಉಂಟಾಗುತ್ತದೆ.”
ಶ್ರೀರಾಮಕೃಷ್ಣರು: “ನಾನು ಸಖೀಭಾವದಲ್ಲಿ ಅನೇಕ ದಿನ ಇದ್ದೆ. ಆಗ ನಾನು ಹೇಳುತ್ತಿದ್ದೆ: ‘ನಾನು ಆನಂದಮಯಿ ಬ್ರಹ್ಮಮಯಿಯ ದಾಸಿ. ಎಲೌ ಬ್ರಹ್ಮಮಯಿಯ ದಾಸಿಯರಾ, ನನ್ನನ್ನೂ ಒಬ್ಬ ದಾಸಿಯನ್ನಾಗಿ ಮಾಡಿಕೊಳ್ಳಿ! ಬಳಿಕ ನಾನು “ಬ್ರಹ್ಮಮಯಿಯ ದಾಸಿ ನಾನು” ಎಂಬುದಾಗಿ ಹೇಳುತ್ತ ಹೇಳುತ್ತ ಹೆಮ್ಮೆಯಿಂದ ಸುತ್ತಾಡಲಾರಂಭಿಸುತ್ತೇನೆ.’
“ಕೆಲಕೆಲವರಿಗೆ ಯಾವ ಸಾಧನೆಯನ್ನೂ ಮಾಡದೆ ಭಗವಂತನ ಸಾಕ್ಷಾತ್ಕಾರ ದೊರೆತು ಬಿಡುತ್ತದೆ. ಅವರಿಗೆ ನಿತ್ಯಸಿದ್ಧರು ಎಂದು ಹೆಸರು. ಜಪತಪಾದಿ ಸಾಧನೆಮಾಡಿ ಭಗವಂತನ ಸಾಕ್ಷಾತ್ಕಾರ ಪಡೆದುಕೊಂಡಿರತಕ್ಕವರಿಗೆ ಸಾಧನಸಿದ್ಧರೆಂದು ಹೆಸರು. ಮತ್ತೆ ಕೃಪಾಸಿದ್ಧರೆಂಬುವರು ಇದ್ದಾರೆ. ಉದಾಹರಣೆಗೆ ಸಹಸ್ರಾರು ವರ್ಷಗಳಿಂದ ಅಂಧಕಾರದಲ್ಲಿ ಮುಳುಗಿದ್ದ ಕೊಠಡಿಗೆ ಬೆಳಕು ತಂದರೆ ಅದು ಒಡನೆಯೇ ಬೆಳಗುವುದಿಲ್ಲವೆ? ಹಾಗೇ ಇವರ ವಿಷಯವಾಗಿ ಕೂಡ.
“ಮತ್ತೂ ಕೆಲವರು ಇದ್ದಾರೆ, ಹಠಾತ್ ಸಿದ್ಧರೆಂಬುವರು. ಇವರ ವಿಷಯ ಹೇಗೆ ಎಂದರೆ ಒಬ್ಬ ಬಡ ಹುಡುಗನ ಮೇಲೆ ಒಬ್ಬ ಧನಿಕನ ಕಣ್ಣು ಬಿದ್ದರೆ ಹೇಗಾಗುತ್ತೊ ಹಾಗೆ. ಆತ ಆ ಹುಡುಗನಿಗೆ ತನ್ನ ಮಗಳನ್ನು ಕೊಟ್ಟು ವಿವಾಹಮಾಡಿ, ಮನೆ-ಮಠ, ಆಸ್ತಿ-ಪಾಸ್ತಿ, ಕುದುರೆಗಾಡಿ, ಸೇವಕ-ಸೇವಕಿಯರು ಇತ್ಯಾದಿಗಳನ್ನು ವರದಕ್ಷಿಣೆಯಾಗಿ ಕೊಟ್ಟುಬಿಡುತ್ತಾನೆ.
“ಇನ್ನೂ ಕೆಲವರು ಇದ್ದಾರೆ, ಸ್ವಪ್ನಸಿದ್ಧರೆಂಬುವರು. ಇವರಿಗೆ ಸ್ವಪ್ನದಲ್ಲಿ ಭಗವಂತನ ದರ್ಶನ ದೊರೆತುಬಿಟ್ಟಿರುತ್ತದೆ.”
ಸುರೇಂದ್ರ ನಗುತ್ತ “ಈಗ ನಾವು ನಿದ್ದೆಮಾಡೋಣ. ಏಳುವುದರಲ್ಲೇ ಶ್ರೀಮಂತರಾಗಿ ಬಿಟ್ಟಿರೋಣ.”
ಶ್ರೀರಾಮಕೃಷ್ಣರು ಕೃಪಾದೃಷ್ಟಿಯಿಂದ: “ನೀನು ಆಗಲೇ ಒಬ್ಬ ಶ್ರೀಮಂತ. ‘ಕ’ ಎಂಬ ಅಕ್ಷರಕ್ಕೆ ‘ಆ’ ಕಾರ ಸೇರಿಸಿದರೆ ಅದು ‘ಕಾ’ ಆಗುತ್ತದೆ. ಮತ್ತೆ ಅದಕ್ಕೆ ‘ಆ’ ಕಾರ ಸೇರಿಸುವುದು ಬರಿದೆ ವ್ಯರ್ಥ. ಸೇರಿಸಿದರೂ ಮತ್ತೆ ಅದು ‘ಕಾ’ ನೇ. (ಎಲ್ಲರೂ ನಗುತ್ತಿದ್ದಾರೆ.)
“ನಿತ್ಯಸಿದ್ಧರು ಒಂದು ಪ್ರತ್ಯೇಕ ಶ್ರೇಣಿಗೆ ಸೇರಿದವರು. ಅವರು ಅರಣಿಕಡ್ಡಿಯ ಹಾಗೆ. ಸ್ವಲ್ಪ ಉಜ್ಜಿದರೇ ಹೊತ್ತಿಕೊಂಡುಬಿಡುತ್ತದೆ. ಉಜ್ಜದೆಯೂ ಅದರಿಂದ ಬೆಂಕಿ ಉತ್ಪನ್ನ ಮಾಡಬಹುದು. ಸ್ವಲ್ಪ ಸಾಧನೆ ಮಾಡಿದರೆ ಇನ್ನು ಕೆಲವು ವೇಳೆ ಯಾವ ಸಾಧನೆಯನ್ನೂ ಮಾಡದೆಯೆ ನಿತ್ಯಸಿದ್ಧರು ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಂಡು ಬಿಡುತ್ತಾರೆ. ಆದರೆ ಅವರು ಆತನ ಸಾಕ್ಷಾತ್ಕಾರ ಪಡೆದುಕೊಂಡ ನಂತರ ಸಾಧನೆ ಮಾಡುತ್ತಾರೆ. ಅವರು ಕುಂಬಳಕಾಯಿ ಅಥವಾ ಸೋರೆಕಾಯಿ ಗಿಡದ ಹಾಗೆ-ಮೊದಲು ಕಾಯಿ, ಅನಂತರ ಹೂವು.”
ಪಂಡಿತ ಕುಂಬಳಕಾಯಿ, ಸೋರೆಕಾಯಿ ದೃಷ್ಟಾಂತ ಕೇಳಿ ನಗುತ್ತಿದ್ದಾನೆ.
ಶ್ರೀರಾಮಕೃಷ್ಣರು: “ಪ್ರಹ್ಲಾದನ ದೃಷ್ಟಾಂತವೂ ಇದೆ. ಆತ ಒಬ್ಬ ನಿತ್ಯಸಿದ್ಧ. ಆತ ‘ಕ’ ಎಂಬ ಅಕ್ಷರವನ್ನು1 ಬರೆಯುವುದೇ ತಡ, ಆತನ ಕಣ್ಣಿನಿಂದ ಪ್ರೇಮಾಶ್ರು ಸುರಿಯಲಾರಂಭಿಸಿಬಿಟ್ಟಿತು.”
ಪಂಡಿತನ ವಿನಯಭಾವ ನೋಡಿ ಪರಮಹಂಸರಿಗೆ ಬಹಳ ಆನಂದವಾಗಿಬಿಟ್ಟಿದೆ. ಈಗ ಆತನನ್ನು ಭಕ್ತರ ಮುಂದೆ ಹೊಗಳುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಈತನಿಗೆ ಒಳ್ಳೆ ಸ್ವಭಾವ ಇದೆ. ಮಣ್ಣಿನ ಗೋಡೆಗೆ ಮೊಳೆ ಹೊಡೆಯಲು ಸ್ವಲ್ಪವೂ ಕಷ್ಟವಾಗುವುದಿಲ್ಲ. ಆದರೆ ಒಂದು ಕಲ್ಲಿಗೆ ಹೊಡೆಯಲು ಪ್ರಯತ್ನಿಸಿದರೆ, ಮೊಳೆಯ ಮೊನೆಯೇ ಮುರಿದುಹೋಗುತ್ತದೆ. ಕಲ್ಲಿಗೆ ಏನೆಂದರೇನೂ ಆಗುವುದಿಲ್ಲ. ಈ ಜಗತ್ತಿನಲ್ಲಿ ಅಂಥ ಜನರಿದ್ದಾರೆ, ಒಂದು ಸಾವಿರ ಸಲ ಭಗವಂತನ ವಿಷಯವಾಗಿ ಕೇಳಿದರೂ ಅವರಿಗೆ ಒಂದು ಕಿಂಚಿತ್ತೂ ಆತ್ಮಜಾಗೃತಿ ಉಂಟಾಗುವುದಿಲ್ಲ. ಅವರನ್ನು ಮೊಸಳೆಗೆ ಹೋಲಿಸಬಹುದು. ಅವರ ಶರೀರಕ್ಕೆ ಕತ್ತಿಯ ಏಟು ತಾಗುವುದೇ ಇಲ್ಲ.”
ಪಂಡಿತ: “ಆದರೆ ಭರ್ಜಿಯಿಂದ ಮೊಸಳೆಯ ಹೊಟ್ಟೆಯನ್ನು ಚುಚ್ಚಿಬಿಡಬಹುದು.” (ಎಲ್ಲರೂ ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು, ನಗುತ್ತ: “ಶಾಸ್ತ್ರಗಳ ರಾಶಿಯನ್ನೇ ಓದಿದರೂ ಏನು ತಾನೆ ದೊರೆಯುತ್ತದೆ? ಫಿಲಾಸಫಿ (ತತ್ತ್ವಶಾಸ್ತ್ರ) ಓದಿದರೆ ತಾನೆ ಏನು ದೊರೆಯುತ್ತದೆ? ದೊಡ್ಡ ದೊಡ್ಡ ಮಾತಾಡಿ ಬಿಡುವುದರಿಂದ ತಾನೆ ಏನು ದೊರೆಯುತ್ತದೆ? ಬಿಲ್ಲುವಿದ್ಯೆ ಕಲಿಯಬೇಕಾಗಿದ್ದರೆ ಮೊದಲು ಬಾಳೆಗಿಡವನ್ನು ಗುರಿಯನ್ನಾಗಿ ಮಾಡಿಕೊಳ್ಳಬೇಕು. ಅನಂತರ ಬೆಂಡನ್ನು, ಅನಂತರ ದೀಪದ ಕುಡಿಯನ್ನು, ನಂತರ ಹಾರಿಹೋಗುತ್ತಿರುವ ಹಕ್ಕಿಯನ್ನು. ಮೊದಲು ಸಾಕಾರದಲ್ಲಿ ಮನಸ್ಸನ್ನು ಸ್ಥಿರಮಾಡಿಕೊಳ್ಳಬೇಕಾಗುತ್ತದೆ.
“ಅನಂತರ ತ್ರಿಗುಣಾತೀತರೆಂಬ ಭಕ್ತರಿದ್ದಾರೆ-ನಿತ್ಯಭಕ್ತರು, ನಾರದಾದಿಗಳ ಹಾಗೆ. ಇವರ ದೃಷ್ಟಿಯಲ್ಲಿ ಶ್ಯಾಮ ಚಿನ್ಮಯ, ಧಾಮ ಚಿನ್ಮಯ, ಸೇವಕ ಚಿನ್ಮಯ; ಭಗವಂತ ನಿತ್ಯ, ಭಕ್ತ ನಿತ್ಯ, ಧಾಮ ನಿತ್ಯ.
‘ನೇತಿ, ನೇತಿ’, ‘ಇದಲ್ಲ, ಇದಲ್ಲ’ ಎಂದು ಯಾರು ಜ್ಞಾನವಿಚಾರದಲ್ಲಿ ತೊಡಗುತ್ತಾರೊ ಅವರು ಅವತಾರವನ್ನು ಒಪ್ಪುವುದಿಲ್ಲ. ಹಾಜರಾ ಬಹಳ ಚೆನ್ನಾಗಿ ಹೇಳುತ್ತಾನೆ, ಭಗವಂತ ಅವತರಿಸುವುದು ಭಕ್ತರಿಗಾಗಿಯೇ ವಿನಾ ಜ್ಞಾನಿಗಳಿಗಾಗಿ ಅಲ್ಲ. ಏಕೆಂದರೆ ಅವರು ‘ಸೋಠ್ಹಮ್’ ಎಂಬ ಭಾವನೆಯಿಂದ ತುಷ್ಟರಾಗಿಬಿಟ್ಟಿರುತ್ತಾರೆ.”
ಭಕ್ತರೂ ಪರಮಹಂಸರೂ ಸುಮ್ಮನೆ ಕುಳಿತಿದ್ದಾರೆ. ಈಗ ಪಂಡಿತ ಮಾತನಾಡಲಾರಂಭಿಸಿದ್ದಾನೆ.
ಪಂಡಿತ: “ಒಳ್ಳೇದು, ಕಾಠಿನ್ಯ ಪ್ರವೃತ್ತಿಯಿಂದ ಮುಕ್ತವಾಗುವ ಬಗೆ ಹೇಗೆ? ನಗುವುದರ ಕಡೆ ನೋಡಿದರೆ, ಮಾಂಸಖಂಡಗಳ, ಸ್ನಾಯುಗಳ ಕಾರ್ಯ ಮನಸ್ಸಿಗೆ ಬರುತ್ತದೆ. ಶೋಕ ಸ್ನಾಯುರಚನೆ ಎಂಥದು ಎಂಬುದನ್ನು ಮನಸ್ಸಿಗೆ ತರುತ್ತದೆ.”
ಶ್ರೀರಾಮಕೃಷ್ಣರು ನಗುತ್ತ: “ಇದಕ್ಕಾಗಿಯೇ ನಾರಾಯಣಶಾಸ್ತ್ರಿ ಹೇಳುತ್ತಿದ್ದ: ಶಾಸ್ತ್ರಾಧ್ಯಾಯನದಿಂದ ಆಗುವ ಕೆಡುಕೇನೆಂದರೆ, ಅದು ತರ್ಕ, ವಿಚಾರ ಇವನ್ನು ಅತಿಯಾಗಿ ಬೆಳೆಸಿಬಿಡುತ್ತದೆ.’”
ಪಂಡಿತ: “ಹಾಗಾದರೆ ನಮಗೆ ಯಾವ ಮಾರ್ಗವೂ ಇಲ್ಲವೆ?”
ಶ್ರೀರಾಮಕೃಷ್ಣರು: “ಇದೆ-ವಿವೇಕಮಾರ್ಗ. ಒಂದು ಹಾಡಿನಲ್ಲಿ ಈ ಚರಣ ಇದೆ: ‘ಆಕೆಯ ಮಗನಾದ ವಿವೇಕನನ್ನು ಸತ್ಯದ ವಿಷಯವಾಗಿ ಕೇಳು.’
“ವಿವೇಕ, ವೈರಾಗ್ಯ, ಭಗವಂತನಲ್ಲಿ ಅನುರಾಗ-ಇವೇ ಮಾರ್ಗ. ವಿವೇಕವಿಲ್ಲದೆ ಇತ್ತು ಎಂದರೆ, ಮಾತುಕತೆ ಸರಿಯಾಗಿ ಹೊರಡವು. ಸಮಾಧ್ಯಾಯಿ ಒಮ್ಮೆ ಬಹಳ ಹೊತ್ತು ಧರ್ಮದ ವಿಷಯವಾಗಿ ಮಾತನಾಡಿ ಕೊನೆಗೆ ಹೇಳಿದ: ‘ಭಗವಂತ ನೀರಸ’ ಎಂದು. ಒಮ್ಮೆ ಒಬ್ಬ ಹೇಳಿದ: ‘ನಮ್ಮ ಸೋದರಮಾವನ ದನದ ಕೊಟ್ಟಿಗೆ ತುಂಬ ಕುದುರೆ ಇವೆ’ ಎಂದು. ದನದ ಕೊಟ್ಟಿಗೆಯಲ್ಲಿ ಕುದುರೆ ಕಟ್ಟುತ್ತಾರೆಯೇ? (ನಗುತ್ತ) ನೀನು ಚಾಣಾದ 2 ವಡೆಯಂತೆ (ಸಿಹಿತಿಂಡಿ) ಆಗಿಬಿಟ್ಟಿದ್ದೀಯೆ. ಈಗ ನಿನ್ನನ್ನು ಒಂದು ನಾಲ್ಕೈದು ದಿನ ಸಕ್ಕರೆ ಪಾಕದಲ್ಲಿ ನೆನಸಿಟ್ಟರೆ ನಿನಗೂ ಮೇಲು, ಪರರಿಗೂ ಮೇಲು. ಏನು, ನಾಲ್ಕೈದು ದಿನ ಮಾತ್ರ!”
ಪಂಡಿತ ನಗುತ್ತ: ‘ಚಾಣಾದ ವಡೆ ಸೀದುಹೋಗಿ ಕರಿ ಆಗಿಬಿಟ್ಟಿದೆ.’
ಶ್ರೀರಾಮಕೃಷ್ಣರು, ನಗುತ್ತ: “ಇಲ್ಲ! ಇಲ್ಲ! ಅದಕ್ಕೆ ಜಿರಲೆ ಬಣ್ಣ ಬಂದಿದೆ. ಸರಿಯಾದ ಬಣ್ಣ!”
ಹಾಜರಾ: “ಚೆನ್ನಾಗಿ ಬೆಂದಿದೆ. ಈಗ ರಸವನ್ನು ಸರಿಯಾಗಿ ಕುಡಿಯಬಲ್ಲುದು.”
ಶ್ರೀರಾಮಕೃಷ್ಣರು: “ನೋಡು, ಶಾಸ್ತ್ರಗಳನ್ನು ಹೆಚ್ಚಾಗಿ ಓದುವುದರ ಆವಶ್ಯಕತೆಯೇನಿಲ್ಲ. ಹೆಚ್ಚಾಗಿ ಓದಿದರೆ, ತರ್ಕ ವಿಚಾರ ಇವುಗಳ ಕಡೆ ಮನಸ್ಸು ಓಡುವುದು. ತೋತಾಪುರಿ ಹೀಗೆ ನನಗೆ ಉಪದೇಶವೀಯುತ್ತಿದ್ದ: ಗೀತಾ ಎಂಬ ಪದವನ್ನು ಒಂದು ಹತ್ತುಸಲ ಉಚ್ಚರಿಸಿದರೆ ಅದು ಏನಾಗಿ ಹೇಳಬರುವುದೊ, ಅದೇ ಗೀತೆಯ ಸಾರ. ಅಂದರೆ, ‘ಗೀತಾ’, ‘ಗೀತಾ’ ಎಂದು ಒಂದು ಹತ್ತು ಸಲ ಉಚ್ಚರಿಸುವುದರಲ್ಲಿ ಅದು ‘ತ್ಯಾಗಿ’ ‘ತ್ಯಾಗಿ’ ಎಂಬುದಾಗಿ ಕೇಳಿಬರಲಾರಂಭಿಸುತ್ತದೆ.
“ಮಾರ್ಗ-ವಿವೇಕ, ವೈರಾಗ್ಯ, ಭಗವಂತನಲ್ಲಿ ಅನುರಾಗ. ಎಂಥ ಅನುರಾಗ? ಭಗವಂತನಿಗಾಗಿ ಪ್ರಾಣವ್ಯಾಕುಲತೆ-ಹಸು ಕರುವಿನ ಹಿಂದೆ ವ್ಯಾಕುಲತೆಯಿಂದ ಓಡುವಂತೆ.”
ಪಂಡಿತ: “ವೇದದಲ್ಲಿ ಹೀಗೆ ಹೇಳಿದೆ: ಹೇ ಭಗವಂತ, ಹಸು ತನ್ನ ಕರುವಿಗಾಗಿ ಕೂಗುವಂತೆ. ನಾವು ನಿನಗಾಗಿ ಕರೆಯುತ್ತೇವೆ.’”
ಶ್ರೀರಾಮಕೃಷ್ಣರು: “ವ್ಯಾಕುಲತೆಯೊಡನೆ ಅಳು. ವಿವೇಕ, ವೈರಾಗ್ಯ ಇವುಗಳಿಂದ ಎಲ್ಲವನ್ನೂ ತ್ಯಜಿಸಿಬಿಟ್ಟಿದ್ದೇ ಆದರೆ ಭಗವಂತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ನಿಜವಾದ ವ್ಯಾಕುಲತೆ ಉಂಟಾಯಿತು ಎಂದರೆ, ಉನ್ಮತ್ತನ ಅವಸ್ಥೆ ಬಂದುಬಿಡುತ್ತದೆ-ಸಾಧಕ ಜ್ಞಾನಮಾರ್ಗಿಯಾದರೂ ಸರಿಯೆ, ಭಕ್ತಿಮಾರ್ಗಿಯಾದರೂ ಸರಿಯೆ. ದೂರ್ವಾಸನಿಗೆ ಜ್ಞಾನೋನ್ಮಾದ ಉಂಟಾಗಿತ್ತು.
“ಸಂಸಾರಿಯ ಜ್ಞಾನಕ್ಕೂ, ಸರ್ವಸಂಗಪರಿತ್ಯಾಗಿಯ ಜ್ಞಾನಕ್ಕೂ ಅಜಗಜಾಂತರ ವ್ಯತ್ಯಾಸ. ಸಂಸಾರಿಯ ಜ್ಞಾನ-ದೀಪದ ಬೆಳಕಿನ ಹಾಗೆ, ಮನೆಯ ಒಳಗೆ ಮಾತ್ರ ಬೆಳಕು ಕೊಡುತ್ತದೆ. ಅಂದರೆ ಆತ ತನ್ನನ್ನು ಮತ್ತು ತನ್ನ ಸಂಸಾರದವರನ್ನು ಹೊರತು ಬೇರೆ ಯಾರನ್ನೂ ನೋಡಲಾರ. ಸರ್ವಸಂಗಪರಿತ್ಯಾಗಿಯ ಜ್ಞಾನ ಸೂರ್ಯನ ಬೆಳಕು ಇದ್ದ ಹಾಗೆ. ಆ ಬೆಳಕಿನಿಂದ ಮನೆಯ ಒಳಗೆ ಹೊರಗೆ ಎಲ್ಲವನ್ನೂ ನೋಡಬಹುದು. ಚೈತನ್ಯದೇವನ ಜ್ಞಾನ ಸೌರಜ್ಞಾನ, ಜ್ಞಾನಸೂರ್ಯನ ಬೆಳಕು. ಇದೂ ಅಲ್ಲದೆ ಆತನ ಆಂತರ್ಯದಲ್ಲಿ ಭಕ್ತಿಚಂದ್ರನ ತಂಪಾದ ಬೆಳಕೂ ಇತ್ತು. ಬ್ರಹ್ಮಜ್ಞಾನ, ಭಕ್ತಿ ಪ್ರೇಮ-ಎರಡೂ ಇದ್ದುವು.
(ಪಂಡಿತನಿಗೆ) “ಭಗವಂತನ ಸಾಕ್ಷಾತ್ಕಾರವನ್ನು ಅಭಾವಮುಖ ಅಂದರೆ ‘ನೇತಿ, ನೇತಿ,’, ಭಾವಮುಖ ಅಂದರೆ ‘ಇತಿ, ಇತಿ’ ಈ ಎರಡು ಮಾರ್ಗಗಳಿಂದಲೂ ಪಡೆಯಬಹುದು. ಮೊದಲನೆಯದು, ವಿವೇಕ ವೈರಾಗ್ಯಗಳಿಂದ ಕೂಡಿದ ಅಭಾವಸೂಚಕ ಮಾರ್ಗ. ಎರಡನೆಯದು, ಭಾವಭಕ್ತಿಗಳಿಂದ ಕೂಡಿದ ಭಾವಸೂಚಕ ಮಾರ್ಗ. ನೀನು ಅಭಾವಸೂಚಕ ಮಾರ್ಗವನ್ನು ಅಂದರೆ, ಜ್ಞಾನಮಾರ್ಗವನ್ನು ಪ್ರಚಾರ ಮಾಡುತ್ತಿದ್ದೀಯೆ. ಆದರೆ ಅದು ಬಹಳ ಕಠಿಣ ಸನ್ನಿವೇಶವನ್ನು ತಂದೊಡ್ಡುತ್ತದೆ. ಅಲ್ಲಿ ಈತ ಗುರು, ಆತ ಶಿಷ್ಯ ಎಂಬ ಭೇದವೇ ಇರದು. ಜನಕರಾಜನ ಹತ್ತಿರಕ್ಕೆ ಶುಕದೇವ ಬ್ರಹ್ಮಜ್ಞಾನಾರ್ಥಿಯಾಗಿ ಹೋದ, ಜನಕ ಹೇಳಿದ: ‘ನೀನು ಮೊದಲೇ ಗುರುದಕ್ಷಿಣೆ ಕೊಟ್ಟು ಬಿಡಬೇಕು. ಬ್ರಹ್ಮಜ್ಞಾನ ದೊರೆತ ನಂತರ ನೀನು ಗುರುದಕ್ಷಿಣೆ ಕೊಡುವ ಹಾಗೇ ಇಲ್ಲ. ಏಕೆಂದರೆ ಆಗ ಗುರು ಶಿಷ್ಯ ಭೇದವಿರದು.’
“ಭಾವಸೂಚಕ, ಅಭಾವಸೂಚಕ ಎಲ್ಲಾ ಮಾರ್ಗಗಳೇ. ಅನಂತ ಮತ ಅನಂತ ಪಥ. ಆದರೆ ಒಂದು ವಿಷಯ. ಕಲಿಯುಗಕ್ಕೆ ನಾರದೀಯ ಭಕ್ತಿ-ಅದೇ ಆಜ್ಞೆ. ಈ ಮಾರ್ಗದಲ್ಲಿ ಮೊದಲನೆಯದು ಭಕ್ತಿ; ಅದು ಪಕ್ವವಾಯಿತು ಎಂದರೆ ಭಾವ. ಭಾವಕ್ಕಿಂತ ಉಚ್ಚವಾದುದು ಮಹಾಭಾವ, ಪ್ರೇಮ. ಮಹಾಭಾವ, ಪ್ರೇಮ ಜೀವರಿಗೆ ಉಂಟಾಗದು. ಯಾರಿಗೆ ಅವು ದೊರೆತಿವೆಯೊ ಅವರಿಗೆ ವಸ್ತುಲಾಭ, ಎಂದರೆ ಭಗವಂತನ ಸಾಕ್ಷಾತ್ಕಾರ ದೊರೆತುಬಿಟ್ಟಿರುತ್ತದೆ.”
ಪಂಡಿತ: “ಧಾರ್ಮಿಕ ವಿಷಯಗಳನ್ನು ಬೋಧಿಸಬೇಕಾದರೆ, ಬಹಳವಾಗಿ ಮಾತುಕತೆಗಳನ್ನು ಖರ್ಚುಮಾಡಬೇಕಾಗುತ್ತದೆ.”
ಶ್ರೀರಾಮಕೃಷ್ಣರು: “ನೀನು ‘ತಲೆ, ಬಾಲ’ ತೆಗೆದು, ಅಂದರೆ ಮುಖ್ಯಾಂಶವನ್ನು ಮಾತ್ರ ಬೋಧಿಸು.
ಈಗ ಮಣಿಮಲ್ಲಿಕನೊಡನೆ ಪಂಡಿತ ಮಾತುಕತೆ ಆಡುತ್ತಿದ್ದಾನೆ. ಮಣಿಮಲ್ಲಿಕ ಬ್ರಾಹ್ಮಸಮಾಜದ ಅನುಯಾಯಿ. ಪಂಡಿತ ಬ್ರಾಹ್ಮಸಮಾಜದ ಗುಣ ಅವಗುಣ ಇವುಗಳ ವಿಷಯವಾಗಿ ಬಹಳ ಜೋರಿನಿಂದ ತರ್ಕಮಾಡುತ್ತಿದ್ದಾನೆ. ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತು ಕಿರುನಗೆ ನಗುತ್ತ ಆತನ ಕಡೆ ನೋಡುತ್ತಿದ್ದಾರೆ. ಈಗ ಹೇಳುತ್ತಿದ್ದಾರೆ: “ಇದು ಸತ್ತ್ವದ ತಮಸ್ಸು-ವೀರನ ಭಾವ, ಇವೆಲ್ಲ ಬೇಕಾದ್ದೆ. ಅನ್ಯಾಯ, ಅಸತ್ಯ ಕಂಡರೆ ಸುಮ್ಮನೆ ಬಾಯಿ ಮುಚ್ಚಿ ಕುಳಿತಿರಕೂಡದು. ಭಾವಿಸಿಕೊ ಒಬ್ಬ ಭ್ರಷ್ಟಹೆಂಗಸು ನಿನ್ನ ಪಾರಮಾರ್ಥಿಕ ಜೀವನವನ್ನು ನಾಶಮಾಡಲಿಚ್ಛಿಸಿದ್ದಾಳೆ ಎಂದು. ಆಗ ವೀರಭಾವವನ್ನು ತಾಳಿ ಗರ್ಜಿಸಬೇಕು: ‘ಎಲಾ ಹೆಮ್ಮಾರಿ, ನನ್ನನ್ನು ಅಧೋಗತಿಗೆ ಎಳೆಯಲು ಇಚ್ಛಿಸಿದೆಯಾ? ಈ ಕ್ಷಣವೇ ನಿನ್ನನ್ನು ಎರಡು ತುಂಡಾಗಿ ಕತ್ತರಿಸಿಬಿಡುವೆ.”
ಪರಮಹಂಸರು ನಗುತ್ತ ಪಂಡಿತನಿಗೆ ಹೇಳುತ್ತಿದ್ದಾರೆ: “ಮಣಿಮಲ್ಲಿಕ ಬ್ರಾಹ್ಮ ಸಮಾಜದ ಅನುಯಾಯಿ-ಬಹಳ ಕಾಲದಿಂದ. ಆತನ ಹೃದಯಕ್ಕೆ ನಿನ್ನ ಭಾವನೆಗಳನ್ನು ಹಾಕಲಾಗುವುದಿಲ್ಲ. ಪೂರ್ವ ಸಂಸ್ಕಾರ ಸುಮ್ಮನೆ ಹೋಗಿಬಿಡುವುದೆ? ಒಬ್ಬ ಹಿಂದೂ ದೊಡ್ಡ ಭಕ್ತನಾಗಿದ್ದ. ಸರ್ವದಾ ಜಗದಂಬೆಯ ಪೂಜೆ, ನಾಮಗುಣಕೀರ್ತನೆ ಮಾಡುತ್ತಿದ್ದ. ಮಹಮ್ಮದೀಯರು ರಾಜ್ಯ ಗೆದ್ದುಕೊಂಡ ನಂತರ ಬಲಾತ್ಕರಿಸಿ ಆತನನ್ನು ಅವರು ಮಹಮ್ಮದೀಯನನ್ನಾಗಿ ಮಾಡಿದರು. ಅವರು ಆತನಿಗೆ ಹೇಳಿದರು: ‘ಈಗ ನೀನು ಮಹಮ್ಮದೀಯನಾಗಿದ್ದೀಯೆ. ಹೇಳು “ಅಲ್ಲಾ” ಅಂತ. ಇನ್ನು ಮೇಲೆ ನೀನು ಕೇವಲ ಅಲ್ಲಾನಾಮವನ್ನೇ ಜಪಿಸಬೇಕು.’ ಆತ ಬಹಳ ಕಷ್ಟಪಟ್ಟು ‘ಅಲ್ಲಾ,’ ‘ಅಲ್ಲಾ’, ಎಂದು ಹೇಳಲಾರಂಭಿಸಿದೆ. ಆದರೆ ಒಮ್ಮೊಮ್ಮೆ ಹೇಳಿಬಿಡುತ್ತಿದ್ದ, ‘ಜಗದಂಬೆ’, ‘ಜಗದಂಬೆ’ ಎಂದೂ. ಅದನ್ನು ನೋಡಿ ಮಹಮ್ಮದೀಯರು ಆತನನ್ನು ಹೊಡೆಯಲು ಹೋದರು. ಆಗ ಆತ ಹೇಳಿದ: ‘ನಿಮ್ಮನ್ನು ಪ್ರಾರ್ಥಿಸಿಕೊಳ್ಳುತ್ತೇನೆ, ಕೊಲ್ಲಬೇಡಿ. ನಿಮ್ಮ ‘ಅಲ್ಲಾ’ ನಾಮವನ್ನು ಹೇಳಲು ಬಹಳವಾಗಿ ಪ್ರಯತ್ನಿಸುತ್ತಿದ್ದೇನೆ. ಆದರೆ ನಮ್ಮ ಜಗದಂಬೆ ನನ್ನ ಕಂಠದವರೆಗೂ ತುಂಬಿಕೊಂಡುಬಿಟ್ಟಿದ್ದಾಳೆ. ಆಕೆ ನಿಮ್ಮ “ಅಲ್ಲಾ” ನನ್ನು ಹೊರಕ್ಕೆ ದಬ್ಬಿಬಿಡುತ್ತಿದ್ದಾಳೆ.’ (ಎಲ್ಲರೂ ನಗುತ್ತಿದ್ದಾರೆ.)
(ಪಂಡಿತನಿಗೆ) “ಮಣಿಮಲ್ಲಿಕನಿಗೆ ಏನೂ ಹೇಳಬೇಡ. ರುಚಿಭೇದವಿದೆ ಎಂಬುದನ್ನು, ಹೊಟ್ಟೆಗೆ ತಕ್ಕಂತೆ ಆಹಾರ ಎಂಬುದನ್ನು ನೀನು ಅರಿತುಕೊಳ್ಳಬೇಕು. ಭಗವಂತ ನಾನಾ ಧರ್ಮ ನಾನಾ ಮತಗಳನ್ನು ಸೃಷ್ಟಿಸಿದ್ದಾನೆ-ಅಧಿಕಾರಭೇದಕ್ಕನುಗುಣವಾಗಿ. ಎಲ್ಲರೂ ಬ್ರಹ್ಮಜ್ಞಾನಕ್ಕೆ ಅಧಿಕಾರಿಗಳಲ್ಲ. ಅದಕ್ಕಾಗಿಯೇ ಆತ ಸಾಕಾರಪೂಜೆಯ ವ್ಯವಸ್ಥೆ ಮಾಡಿದ್ದಾನೆ.
“ತಾಯಿ ಮಕ್ಕಳಿಗಾಗಿ ಮೀನು ಕೊಂಡುಕೊಂಡು ಬಂದಿದ್ದಾಳೆ. ಆ ಮೀನು ಹಾಕಿ ಸಾರು, ಚಟ್ಣಿ, ಬಜ್ಜಿ, ಪಲಾವು ತಯಾರುಮಾಡುತ್ತಾಳೆ. ಎಲ್ಲರ ಹೊಟ್ಟೆಗೂ ಪಲಾವು ಸರಿ ಹೋಗದು. ಅದಕ್ಕಾಗಿಯೇ ಕೆಲವು ಮಕ್ಕಳಿಗೆ ಮೀನಿನ ಸಾರು ತಯಾರುಮಾಡುತ್ತಾಳೆ-ಅವಕ್ಕೆ ಜೀರ್ಣಶಕ್ತಿ ಬಹಳ ಕಡಮೆ. ಇನ್ನು ಕೆಲವು ಚಟ್ಣಿಯನ್ನೋ ಅಥವಾ ಬಜ್ಜಿಯನ್ನೊ ತಿನ್ನುತ್ತವೆ. ಒಬ್ಬೊಬ್ಬರ ಪ್ರಕೃತಿ ಒಂದೊಂದು ವಿಧ. ಅಂತೆಯೇ ಅಧಿಕಾರಿ ಭೇದ ಕೂಡ.”
ಎಲ್ಲರೂ ಸುಮ್ಮನೆ ಕುಳಿತಿದ್ದಾರೆ. ಪರಮಹಂಸರು ಪಂಡಿತನಿಗೆ ಹೇಳುತ್ತಿದ್ದಾರೆ: “ಈಗ ಹೋಗಿ ದೇವಾಲಯಗಳನ್ನು ನೋಡಿಕೊಂಡು ಬಾ, ಅನಂತರ ಉದ್ಯಾನವನದಲ್ಲೂ ಸ್ವಲ್ಪ ಸುತ್ತಾಡಿಬಾ.” ಈಗ ಘಂಟೆ ಸಾಯಂಕಾಲ ಐದೂವರೆ. ಪಂಡಿತ ತನ್ನ ಸ್ನೇಹಿತರೊಡನೆಯೂ ಇನ್ನು ಕೆಲವು ಮಂದಿ ಭಕ್ತರೊಡನೆಯೂ ಕೂಡಿ ಕೊಠಡಿಯನ್ನು ಬಿಟ್ಟು ಹೊರಟ.
ಈಗ ಪರಮಹಂಸರು ಮಾಸ್ಟರೊಡನೆ ಗಂಗೆಯ ಸ್ನಾನಘಟ್ಟದ ಕಡೆಗೆ ಬರುತ್ತಿದ್ದಾರೆ. ಅವರು ಮಾಸ್ಟರಿಗೆ ಹೇಳುತ್ತಿದ್ದಾರೆ: “ಬಾಬುರಾಮ ಈಗ ಹೇಳುತ್ತಿದ್ದಾನೆ: “ಓದುವುದರಿಂದ ಏನು ದೊರೆಯುತ್ತದೆ?”’ ಗಂಗಾತೀರದ ಹತ್ತಿರ ಮತ್ತೆ ಪರಮಹಂಸರು ಪಂಡಿತನನ್ನು ಸಂಧಿಸಿದರು. ಆತನನ್ನು ಕೇಳುತ್ತಿದ್ದಾರೆ: “ಏನು, ಕಾಳೀದೇವಾಲಯಕ್ಕೆ ಹೋಗುವುದಿಲ್ಲವೆ?” ಪಂಡಿತ ಹೇಳಿದ: “ಹೋಗುತ್ತೇನೆ. ಬನ್ನಿ ನೀವೂ ಜೊತೆಯಲ್ಲಿ, ದರ್ಶನಮಾಡಿ ಬರೋಣ.”
ನಗುಮುಖರಾದ ಪರಮಹಂಸರು ಮುಖಮಂಟಪದ ಮೂಲಕ ಕಾಳೀದೇವಾಲಯದ ಕಡೆ ಮುಂದುವರಿಯುತ್ತಿದ್ದಾರೆ. ಪಂಡಿತನಿಗೆ ಹೇಳುತ್ತಿದ್ದಾರೆ, “ಒಂದು ಹಾಡು ಕೇಳು.” ಅವರು ಹಾಡುತ್ತಿದ್ದಾರೆ:
ಕಾಲರೂಪೇ ದಿಗಂಬರೀ
ಹೃದಯಪದ್ಮ ಭಾಸ್ಕರೀ,
ನಿಜವಾಗಿಯೂ ಕಪ್ಪಗಿಹಳೆ ನನ್ನ ತಾಯಿ ಕಾಳಿ?…..
ಪರಮಹಂಸರು ಮುಖಮಂಟಪದಿಂದಿಳಿದು ಅಂಗಳಕ್ಕೆ ಬಂದಾಗ ಪಂಡಿತನಿಗೆ ಒಂದು ಹಾಡಿನ ಚರಣವೊಂದನ್ನು ಎತ್ತಿ ಹೇಳುತ್ತಿದ್ದಾರೆ:
ಹೃದಯಮಂದಿರದಲ್ಲಿ ಜ್ಞಾನದೀವಿಗೆ ಹಚ್ಚಿ
ಬ್ರಹ್ಮಮಯಿ ಮಾತಾಯ ಮುಖವ ನೋಡು!
ದೇವಾಲಯಕ್ಕೆ ಬಂದನಂತರ ಪರಮಹಂಸರು ಭಗವತಿಗೆ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದಾರೆ. ಆಕೆಯ ಪಾದಪದ್ಮಗಳು ದಾಸವಾಳ ಹೂವು, ಬಿಲ್ವದಳಗಳಿಂದ ಅಲಂಕೃತವಾಗಿವೆ. ತ್ರಿನಯನೆಯಾದ ಆಕೆ ತನ್ನ ಭಕ್ತರನ್ನು ಅತ್ಯಂತ ಕೃಪಾದೃಷ್ಟಿಯಿಂದ ನೋಡುತ್ತಿದ್ದಾಳೆ. ಕೈಗಳಿಂದ ವರ, ಅಭಯಗಳನ್ನು ನೀಡುತ್ತಿದ್ದಾಳೆ. ಕಾಶಿಯ ರೇಶ್ಮೆ ಸೀರೆ ಉಟ್ಟು, ವಿವಿಧ ಆಭರಣಗಳನ್ನು ಧರಿಸಿಕೊಂಡಿದ್ದಾಳೆ.
ಭಗವತಿಯ ದರ್ಶನಮಾಡಿದನಂತರ ಭೂಧರನ ಅಣ್ಣ ಹೇಳುತ್ತಿದ್ದಾನೆ: “ಕೇಳಿದ್ದೇನೆ, ನವೀನ ಭಾಸ್ಕರನಿಂದ ಈ ಮೂರ್ತಿ ಕೆತ್ತಲ್ಪಟ್ಟಿತು ಎಂದು.” ಅದನ್ನು ಕೇಳಿ ಪರಮಹಂಸರು ಹೇಳುತ್ತಿದ್ದಾರೆ: “ಅದು ನನಗೆ ಗೊತ್ತಿದೆ. ಆದರೆ ನನಗೆ ಈಕೆ ಚಿನ್ಮಯಿ.”
ಪರಮಹಂಸರು ಈಗ ಭಕ್ತರೊಡನೆ ತಮ್ಮ ಕೊಠಡಿಗೆ ಹಿಂದಿರುಗುತ್ತಿದ್ದಾರೆ. ಬಾಬುರಾಮನಿಗೆ ಹೇಳುತ್ತಿದ್ದಾರೆ: “ಬಾ, ನಮ್ಮೊಡನೆ.” ಮಾಸ್ಟರೂ ಅವರನ್ನು ಹಿಂಬಾಲಿಸುತ್ತಿದ್ದಾನೆ.
ಮುಸ್ಸಂಜೆಯಾಗಿದೆ. ಪರಮಹಂಸರು ತಮ್ಮ ಕೊಠಡಿಯ ಪಶ್ಚಿಮಕ್ಕಿರುವ ಅರ್ಧಚಂದ್ರಾಕೃತಿಯ ವರಾಂಡದಲ್ಲಿ ಕುಳಿತಿದ್ದಾರೆ. ಭಾವಸ್ಥರಾಗಿದ್ದಾರೆ-ಪೂರ್ಣವಾಗಿ ಅಲ್ಲ. ಹತ್ತಿರ ಬಾಬುರಾಮ, ಮಾಸ್ಟರ್ ಕುಳಿತಿದ್ದಾರೆ.
ಈಗ ಕೆಲವು ದಿವಸಗಳಿಂದ ರಾಖಾಲ ಪರಮಹಂಸರೊಡನೆ ಇಲ್ಲ. ಆದ್ದರಿಂದ ಅವರ ಸೇವೆಗೆ ಸ್ವಲ್ಪ ತೊಂದರೆಯಾಗಿದೆ. ಆತನಲ್ಲದೆ ಇನ್ನೂ ಕೆಲವು ಮಂದಿ ಭಕ್ತರು ಪರಮಹಂಸರೊಡನೆ ಇದ್ದಾರೆ. ಆದರೆ ಪರಮಹಂಸರು ಭಾವಾವಿಷ್ಟರಾದಾಗ, ಅವರಾರೂ ಬಂದು ಅವರನ್ನು ಮುಟ್ಟಲಾಗುತ್ತಿರಲಿಲ್ಲ. ಆದ್ದರಿಂದ ಅವರು ಬಾಬುರಾಮನಿಗೆ ಸೂಚಿಸುತ್ತಿದ್ದಾರೆ: “ನೀನು ಇಲ್ಲೆ ಇದ್ದುಬಿಡು. ಆಗ ಬಹಳ ಚೆನ್ನಾಗಿಬಿಡುತ್ತದೆ. ನನ್ನ ಈ ಅವಸ್ಥೆಯಲ್ಲಿ ಬೇರೆಯವರು ಯಾರೂ ಬಂದು ನನ್ನನ್ನು ಮುಟ್ಟಲಾಗುವುದಿಲ್ಲ.”
ಪಂಡಿತ ದೇವಾಲಯಗಳನ್ನೆಲ್ಲ ನೋಡಿದ ನಂತರ ಹಿಂದಿರುಗಿ ಪರಮಹಂಸರ ಕೊಠಡಿಗೆ ಬಂದಿದ್ದಾನೆ. ವರಾಂಡದಿಂದಲೆ ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ: “ಸ್ವಲ್ಪ ಉಪಾಹಾರ ಮಾಡು.” ಪಂಡಿತ ಹೇಳಿದ: “ನಾನಿನ್ನೂ ಸಂಧ್ಯಾವಂದನೆ ಮಾಡಿಲ್ಲ.” ಪರಮಹಂಸರು ತಟ್ಟನೆ ಎದ್ದುನಿಂತು ಭಾವೋನ್ಮತ್ತರಾಗಿ ಹಾಡಲಾರಂಭಿಸಿದ್ದಾರೆ:
ಏತಕೆ, ಇನ್ನೇತಕೆ?
ಕಾಶಿ ಕಾಂಚಿಯೊ, ಗಯೆಯೊ ಗಂಗೆಯೊ
ಪುಣ್ಯಕ್ಷೇತ್ರಗಳೇತಕೆ?…….
ಪರಮಹಂಸರು ಪ್ರೇಮೋನ್ಮತ್ತರಾಗಿ ಹೇಳುತ್ತಿದ್ದಾರೆ: “ಸಂಧ್ಯೆ ಎಷ್ಟು ಕಾಲದವರೆಗೆ? ‘ಓಂ’ ಎಂದು ಉಚ್ಚರಿಸಿದೊಡನೆಯೇ ಮನಸ್ಸು ಭಗವಂತನಲ್ಲಿ ಲಯವಾಗದವರೆಗೆ.”
ಪಂಡಿತ: “ಹಾಗಾದರೆ, ಮೊದಲು ಉಪಾಹಾರ ಮುಗಿಸಿಕೊಂಡು ಅನಂತರ ಸಂಧ್ಯಾವಂದನೆ ಮಾಡುತ್ತೇನೆ.”
ಶ್ರೀರಾಮಕೃಷ್ಣರು: “ನಿನ್ನ ಜೀವನದ ಪ್ರವಾಹಕ್ಕೆ ತಡೆಯೊಡ್ಡಲು ಇಚ್ಛೆಯಿಲ್ಲ. ಸಮಯ ಬಾರದೆ ತ್ಯಾಗಮಾಡುವುದು ಶ್ರೇಯಸ್ಕರವಾದ್ದಲ್ಲ. ಕಾಯಿ ಹಣ್ಣಾದರೆ ಹೂವು ತಾನಾಗಿಯೇ ಉದುರಿಹೋಗುತ್ತದೆ. ತೆಂಗಿನಮಟ್ಟೆ ಇನ್ನೂ ಹಸಿದಾಗಿರುವಾಗ ಅದನ್ನು ಬಲಾತ್ಕಾರದಿಂದ ಕೀಳಬಾರದು. ಆ ರೀತಿಯಾಗಿ ಅದನ್ನು ಕಿತ್ತುಹಾಕಿದರೆ ಮರಕ್ಕೆ ಕೇಡಾಗುತ್ತದೆ.’
ಸುರೇಂದ್ರ ಮನೆಗೆ ಹೊರಡಲು ಸಿದ್ಧನಾಗುತ್ತಿದ್ದಾನೆ. ತನ್ನ ಸ್ನೇಹಿತರನ್ನು ತನ್ನ ಗಾಡಿಗೆ ಹತ್ತುವ ಹಾಗೆ ಹೇಳುತ್ತಿದ್ದಾನೆ. ಪರಮಹಂಸರು ಇನ್ನು ಭಾವಸ್ಥರಾಗಿಯೇ ಹೇಳುತ್ತಿದ್ದಾರೆ: “ನಿನ್ನ ಕುದುರೆಯ ಶಕ್ತಿಗೆ ಮೀರಿ ಜನ ತುಂಬಬೇಡ.” ಸುರೇಂದ್ರ ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡ. ಪಂಡಿತ ಸಂಧ್ಯಾವಂದನೆ ಮಾಡಲು ಕೊಠಡಿಯನ್ನು ಬಿಟ್ಟು ಹೋಗುತ್ತಿದ್ದಾನೆ. ಮಾಸ್ಟರ್ ಮತ್ತು ಬಾಬುರಾಮ ಪರಮಹಂಸರಿಗೆ ಪ್ರಣಾಮ ಮಾಡುತ್ತಿದ್ದಾರೆ. ಇವರು ಕಲ್ಕತ್ತಕ್ಕೆ ಹೊರಡಲಿದ್ದಾರೆ. ಪರಮಹಂಸರು ಇನ್ನೂ ಭಾವಸ್ಥರಾಗಿಯೇ ಇದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಮಾತು ಹೊರಡುತ್ತಿಲ್ಲ. ಒಂದು ಸ್ವಲ್ಪ ಇರು.”
ಮಾಸ್ಟರ್ ಕುಳಿತಿದ್ದಾನೆ. ಪರಮಹಂಸರ ಅನುಮತಿಗಾಗಿ ಕಾಯುತ್ತಿದ್ದಾನೆ. ಪರಮಹಂಸರು ಕೈಸನ್ನೆಯಿಂದ ಬಾಬುರಾಮನಿಗೆ ಹೇಳುತ್ತಿದ್ದಾರೆ, ಕುಳಿತುಕೊಂಡು ಬೀಸಣಿಗೆಯಿಂದ ತಮಗೆ ಸ್ವಲ್ಪ ಗಾಳಿ ಬೀಸುವಂತೆ. ಬಾಬುರಾಮ ಈಗ ಗಾಳಿ ಬೀಸುತ್ತಿದ್ದಾನೆ. ಮಾಸ್ಟರೂ ಬೀಸುತ್ತಿದ್ದಾನೆ.
ಶ್ರೀರಾಮಕೃಷ್ಣರು ಪ್ರೇಮದೃಷ್ಟಿಯಿಂದ ಮಾಸ್ಟರಿಗೆ: “ಈಗ ನೀನು ಪದೇ ಪದೇ ಬರುತ್ತಿಲ್ಲವಲ್ಲ, ಏಕೆ?”
ಮಾಸ್ಟರ್: “ವಿಶೇಷ ಕಾರಣವೇನಿಲ್ಲ. ಮನೆಯಲ್ಲಿ ಕೆಲಸವಿರುತ್ತಿತ್ತು.”
ಶ್ರೀರಾಮಕೃಷ್ಣರು: “ಬಾಬುರಾಮ ಯಾವ ಅಂತಸ್ತಿಗೆ ಸೇರಿದವನು ಎಂಬುದರ ಅರಿವು ನಿನ್ನೆ ನನಗಾಗಿಬಿಟ್ಟಿತು. ಅದಕ್ಕಾಗಿಯೇ ನಾನು ಈತನನ್ನು ಇಲ್ಲೇ ಇರುವಂತೆ ಅಷ್ಟಾಗಿ ಒತ್ತಾಯಪಡಿಸಿದುದು. ತಾಯಿ ಹಕ್ಕಿ ಸಕಾಲಕ್ಕೆ ಮೊಟ್ಟೆಯನ್ನು ಒಡೆಯುತ್ತದೆ. ಇವರು ಶುದ್ಧ ಆತ್ಮ-ಇನ್ನೂ ಕಾಮಕಾಂಚನದ ಬಲೆಗೆ ಬಿದ್ದಿಲ್ಲ. ಏನು ಹೇಳುತ್ತೀಯೆ ?”
ಮಾಸ್ಟರ್: “ಹೌದು. ಇನ್ನೂ ಯಾವ ಕರೆಯೂ ಆಗಿಲ್ಲ.”
ಶ್ರೀರಾಮಕೃಷ್ಣರು: “ಹೊಸ ಮಡಕೆ-ಹಾಲು ಇಟ್ಟರೆ ಕೆಡುವುದಿಲ್ಲ.”
ಮಾಸ್ಟರ್: “ಹೌದು. ನಿಜ.”
ಶ್ರೀರಾಮಕೃಷ್ಣರು: “ಬಾಬುರಾಮ ಇಲ್ಲೇ ಇರಬೇಕಾದ ಆವಶ್ಯಕತೆ ಬಂದಿದೆ. ನನಗೆ ಬರುತ್ತದೆಯಲ್ಲ, ಆ ಅವಸ್ಥೆ, ಆಗ ಇಂಥವರ ಸಹಾಯ ಬೇಕಾಗುತ್ತದೆ. ಈತ ಹೇಳುತ್ತಿದ್ದಾನೆ, ಒಮ್ಮೆಗೇ ಬಂದು ಇಲ್ಲಿ ಇದ್ದುಬಿಡಲಾಗುವುದಿಲ್ಲ. ಅದು ಮನೆಯಲ್ಲಿ ಅಸಮಾಧಾನವನ್ನು ಎಬ್ಬಿಸಿಬಿಡುತ್ತದೆ. ಈತನ ನೆಂಟರಿಷ್ಟರು ತೊಂದರೆ ಕೊಡಲಾರಂಭಿಸುತ್ತಾರೆ. ನಾನು ಹೇಳಿದ್ದೇನೆ, ಶನಿವಾರ, ಭಾನುವಾರ ಬರುವ ಹಾಗೆ.”
ಪಂಡಿತ ತನ್ನ ಸ್ನೇಹಿತರೊಡನೆ ಕೊಠಡಿಯನ್ನು ಪ್ರವೇಶಿಸುತ್ತಿದ್ದಾನೆ. ಸಂಧ್ಯಾವಂದನೆ ಮುಗಿಸಿದ್ದಾನೆ. ಉಪಾಹಾರ ತೆಗೆದುಕೊಳ್ಳಲು ಈಗ ಸಿದ್ಧನಾಗಿದ್ದಾನೆ. ಭೂಧರನು ಪರಮಹಂಸರನ್ನು ಕೇಳುತ್ತಿದ್ದಾನೆ: “ನಮಗೆ ಭಗವಂತನ ಸಾಕ್ಷಾತ್ಕಾರ ದೊರೆಯುವುದೆ? ನಾವು ಹೇಗೆ ಮುಂದುವರಿಯಬೇಕು ದಯವಿಟ್ಟು ಸ್ವಲ್ಪ ತಿಳಿಸಿ.”
ಶ್ರೀರಾಮಕೃಷ್ಣರು: “ನೀವೆಲ್ಲರೂ ಮುಮುಕ್ಷುಗಳು, ವ್ಯಾಕುಲತೆ ಇತ್ತು ಎಂದರೆ, ಭಗವಂತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ಶ್ರಾದ್ಧದ ಅನ್ನ ತಿನ್ನಬೇಡಿ. ಸಂಸಾರದಲ್ಲಿ ದುಶ್ಶೀಲ ಹೆಂಗಸಿನಂತೆ ಇರಿ. ಆಕೆ ಮನೆ ಕೆಲಸಗಳನ್ನೇನೋ ಬಹಳ ಗಮನವಿಟ್ಟು ಮಾಡುತ್ತಾಳೆ. ಆದರೆ ಆಕೆಯ ಮನಸ್ಸು ಮಾತ್ರ ಹಗಲಿರುಳೂ ಉಪಪತಿಯ ಮೇಲೇ ನೆಲಸಿರುತ್ತದೆ. ನೀವು ಸಂಸಾರದ ಕೆಲಸಕಾರ್ಯಗಳನ್ನೇನೋ ಮಾಡಿ, ಆದರೆ ನಿಮ್ಮ ಮನಸ್ಸನ್ನು ಮಾತ್ರ ಭಗವಂತನ ಅಡಿದಾವರೆಗಳಲ್ಲಿ ಇಡಿ.”
ಪಂಡಿತ ಉಪಾಹಾರ ಮುಗಿಸಿದ.
ಶ್ರೀರಾಮಕೃಷ್ಣರು ಪಂಡಿತನಿಗೆ: “ನೀನು ನಿಶ್ಚಯವಾಗಿಯೂ ಭಗವದ್ಗೀತೆಯನ್ನು ಓದಿದ್ದೀಯೆ. ಅದು ಹೇಳುತ್ತದೆ, ಯಾರನ್ನು ಎಲ್ಲರೂ ಪ್ರೀತಿಸುತ್ತಾರೊ, ಗೌರವಿಸುತ್ತಾರೊ, ಆತನಲ್ಲಿ ಭಗವಂತನ ಶಕ್ತಿ ವಿಶೇಷವಾಗಿ ವ್ಯಕ್ತವಾಗಿದೆ ಎಂದು.”
ಪಂಡಿತ ಗೀತೆಯಿಂದ “ಯದ್ ಯದ್ ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಂ ಏವ ವಾ” ಎಂಬ ಶ್ಲೋಕವನ್ನು ಉದ್ಧರಿಸಿ ಹೇಳಿದ.
ಶ್ರೀರಾಮಕೃಷ್ಣರು: “ನಿನ್ನ ಆಂತರ್ಯದಲ್ಲಿ ನಿಜವಾಗಿಯೂ ಭಗವಂತನ ಶಕ್ತಿ ವ್ಯಕ್ತವಾಗಿದೆ.”
ಪಂಡಿತ: “ನಾನು ಏನು ವ್ರತ ಕೈಗೊಂಡಿದ್ದೇನೊ ಅದನ್ನು ಪೂರ್ಣಮಾಡಲು ಪಟ್ಟು ಹಿಡಿದು ಕೆಲಸ ಮಾಡಲೆ?”
ಪರಮಹಂಸರು ವಿಧಿಯಿಲ್ಲದೆ ಹೇಳಬೇಕಾಯಿತು: “ಮಾಡು. ಆಗುತ್ತೆ.” ಅವರು ಒಡನೆಯೇ ಬೇರೆ ಮಾತು ಎತ್ತಿಬಿಟ್ಟರು.
ಶ್ರೀರಾಮಕೃಷ್ಣರು: “ಶಕ್ತಿಯನ್ನು ಒಪ್ಪಿಕೊಳ್ಳಲೇಬೇಕು. ವಿದ್ಯಾಸಾಗರ ಒಮ್ಮೆ ನನ್ನನ್ನು ಕೇಳಿದ: ‘ಕೆಲವರಿಗಿಂತ ಕೆಲವರಿಗೆ ಭಗವಂತ ಹೆಚ್ಚು ಶಕ್ತಿ ಕೊಟ್ಟಿದ್ದಾನೇನು?’ ನಾನು ಹೇಳಿದೆ: ‘ಹಾಗಿಲ್ಲದಿದ್ದರೆ ಒಬ್ಬ ಒಂದು ನೂರು ಜನರನ್ನು ಕೊಂದುಬಿಡುತ್ತಿದ್ದಾನಲ್ಲ, ಅದು ಹೇಗೆ? ವಿಕ್ಟೋರಿಯಾ ರಾಣಿಗೆ ಅಷ್ಟೊಂದು ಗೌರವ ಕೀರ್ತಿ ಹೇಗೆ ಬರುತ್ತಿತ್ತು? ಆಕೆಯಲ್ಲಿ ಶಕ್ತಿ ಅಧಿಕವಾಗಿರದಿದ್ದ ಪಕ್ಷದಲ್ಲಿ? ಇದನ್ನು ನೀನು ಒಪ್ಪುತ್ತೀಯೆ ತಾನೆ?’ ಆಗ ಒಪ್ಪಿಕೊಂಡ.”
ಪಂಡಿತ ಮತ್ತು ಆತನ ಸ್ನೇಹಿತರು ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಅವರಿಂದ ಬೀಳ್ಕೊಳ್ಳುವುದರಲ್ಲಿದ್ದಾರೆ. ಪರಮಹಂಸರು ಪಂಡಿತನಿಗೆ ಹೇಳುತ್ತಿದ್ದಾರೆ: “ಮತ್ತೆ ಬರಬೇಕು. ಗಾಂಜಾಖೋರನಿಗೆ ಗಾಂಜಾಖೋರನನ್ನು ಕಂಡರೆ ಬಹಳ ಆನಂದ. ಅವರು ಒಬ್ಬರನ್ನೊಬ್ಬರು ಆಲಿಂಗನಮಾಡಿಕೊಂಡೂ ಬಿಡಬಹುದು. ಉಳಿದವರನ್ನು ಕಂಡಾಗ ಅವರು ನಾಚಿ ತಲೆ ತಗ್ಗಿಸಿಕೊಂಡುಬಿಡುತ್ತಾರೆ. ಹಸು ತನ್ನ ಜೊತೆಯ ಹಸುವನ್ನು ಕಂಡಾಗ ನೆಕ್ಕುತ್ತದೆ. ಬೇರೆ ಹಸು ಸಿಕ್ಕಿದರೆ ಅದನ್ನು ಗುದ್ದಲು ಹೋಗುತ್ತದೆ.” (ಎಲ್ಲರೂ ನಗುತ್ತಿದ್ದಾರೆ.)
ಪಂಡಿತ ಹೊರಟುಹೋದ. ಪರಮಹಂಸರು ನಗುತ್ತ ಹೇಳುತ್ತಿದ್ದಾರೆ: “ಡೈಲ್ಯೂಟ್ (ನೀರಾಗಿ) ಆಗಿಬಿಟ್ಟ ಒಂದೇ ದಿನಕ್ಕೆ. ನೋಡಿದೆಯೊ, ಎಂಥ ವಿನಯಿ! ಎಲ್ಲವನ್ನೂ ಒಪ್ಪಿಕೊಂಡುಬಿಟ್ಟ.”
ಬೆಳದಿಂಗಳು ಅರ್ಧಚಂದ್ರಾಕೃತಿಯ ವರಾಂಡದಲ್ಲಿ ಹಾಲು ಚೆಲ್ಲಿದ ಹಾಗೆ ಬಿದ್ದಿದೆ. ಪರಮಹಂಸರು ಇನ್ನೂ ಅಲ್ಲೇ ಕುಳಿತಿದ್ದಾರೆ. ಮಾಸ್ಟರ್ ಇನ್ನೇನು ಮನೆಗೆ ಹೊರಡುವುದರಲ್ಲಿದ್ದಾನೆ. ಆತ ಪರಮಹಂಸರಿಗೆ ಪ್ರಣಾಮ ಮಾಡುತ್ತಿದ್ದಾನೆ.
ಶ್ರೀರಾಮಕೃಷ್ಣರು ಪ್ರೇಮಪೂರಿತರಾಗಿ: “ಈಗ ಹೋಗಲೇಬೇಕೆ?”
ಮಾಸ್ಟರ್: “ಹೌದು, ಹೋಗಿಬರುತ್ತೇನೆ.”
ಶ್ರೀರಾಮಕೃಷ್ಣರು: “ಭಕ್ತರೆಲ್ಲರ ಮನೆಗೂ ಒಂದೊಂದು ದಿನ ಹೋಗಿಬರಬೇಕೆಂದು ಒಮ್ಮೆ ಯೋಚನೆ ಬಂತು. ನಿನ್ನ ಮನೆಗೂ ಒಂದು ದಿನ. ಏನು, ಒಪ್ಪಿಗೆಯೇ?”
ಮಾಸ್ಟರ್: “ಬಹಳ ಒಳ್ಳೆಯದು.”
೩ನೆ ಜುಲೈ, ೧೮೮೪, ಆಷಾಢ ಶುಕ್ಲ ದಶಮಿ, ಗುರುವಾರ
ಪರಮಹಂಸರು ಕಲ್ಕತ್ತದಲ್ಲಿ ಬಲರಾಮನ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಇಂದು ಪುರಿಯಲ್ಲಿ ಪುನರಾಗಮನ ರಥಜಾತ್ರೆ. ಬಲರಾಮನ ಮನೆಯಲ್ಲೂ ಇಂದು ಜಗನ್ನಾಥನ ಪೂಜೆ. ಈತನ ಹತ್ತಿರ ಒಂದು ಚಿಕ್ಕ ರಥ ಇದೆ. ಅದನ್ನು ವರಾಂಡದಲ್ಲಿ ಇಂದು ಎಳೆಯುತ್ತಾರೆ.
ಬಲರಾಮನ ತಂದೆ ಅತ್ಯಂತ ನಿಷ್ಠಾವಂತ ವೈಷ್ಣವ. ಆತ ಪ್ರಾಯಿಕವಾಗಿ ಬೃಂದಾವನದಲ್ಲಿರುವ ತಮ್ಮ ಒಂದು ಕುಂಜದಲ್ಲಿ ಒಬ್ಬನೆ ಇದ್ದುಕೊಂಡು ಧ್ಯಾನ ಭಜನೆಗಳಲ್ಲೇ ತನ್ನ ಅಧಿಕ ಸಮಯವನ್ನು ಕಳೆಯುತ್ತಿದ್ದಾನೆ. ಉಳಿದ ವೇಳೆ ಭಕ್ತಿ ಗ್ರಂಥಗಳನ್ನು ಓದುತ್ತ ಭಕ್ತರೊಡನೆ ಬೆರೆಯುತ್ತ ಆನಂದದಿಂದ ಇದ್ದಾನೆ. ಆತನಿಗೆ ಪರಮಹಂಸರ ದರ್ಶನ ದೊರೆಯಲಿ ಎಂದು ಬಲರಾಮ ಆತನನ್ನು ಪತ್ರದ ಮೇಲೆ ಪತ್ರ ಬರೆದು ಕರೆಸಿಕೊಂಡಿದ್ದಾನೆ.
ಪರಮಹಂಸರು ಅತ್ಯಂತ ಆನಂದಾವಸ್ಥೆಯಲ್ಲಿ ಇದ್ದಾರೆ. ರಾಮ, ಬಲರಾಮನ ತಂದೆ, ಮಾಸ್ಟರ್, ಮನಮೋಹನ, ಇನ್ನೂ ಅನೇಕ ಮಂದಿ ಯುವಕ ಭಕ್ತರು ಅವರ ಹತ್ತಿರ ಕುಳಿತಿದ್ದಾರೆ. ಅವರು ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಬಲರಾಮನ ತಂದೆಗೆ ಮತ್ತು ಉಳಿದವರಿಗೆ: “ಭಕ್ತಮಾಲೆ ಎಂಬುದು ವೈಷ್ಣವರ ಒಂದು ಗ್ರಂಥ. ಅದು ಬಹಳ ಒಳ್ಳೇ ಪುಸ್ತಕ-ಭಕ್ತರ ವಿಷಯ ಅದರಲ್ಲಿ ತುಂಬಿದೆ. ಆದರೆ ಒಂದೇ ಸ್ವರದ್ದು. ಅದರಲ್ಲಿ ಒಂದು ಕಡೆ ಭಗವತಿ ವಿಷ್ಣುಮಂತ್ರವನ್ನು ತೆಗೆದುಕೊಳ್ಳುವಂತೆ ಗ್ರಂಥಕರ್ತ ಮಾಡಿದ್ದಾನೆ.
“ಒಮ್ಮೆ ನಾನು ಮಥುರಬಾಬುವಿನೆದುರಿಗೆ ವೈಷ್ಣವಚರಣನನ್ನು ಬಹಳವಾಗಿ ಹೊಗಳಿ ಆತನನ್ನು ತನ್ನ ಮನೆಗೆ ಆಹ್ವಾನಿಸುವಂತೆ ಮಾಡಿದೆ. ಮಥುರಬಾಬು ವೈಷ್ಣವಚರಣನನ್ನು ಅತ್ಯಂತ ಆದರದಿಂದ ಕಂಡ, ಬೆಳ್ಳಿಯ ತಟ್ಟೆ-ಬಟ್ಟಲುಗಳನ್ನು ಹೊರಕ್ಕೆ ತೆಗೆದು ಉಪಾಹಾರ ಮಾಡುಸುವುದರವರೆಗೂ ಹೋಗಿಬಿಟ್ಟಿತು ಅತಿಥಿಸತ್ಕಾರ. ಇಷ್ಟೆಲ್ಲ ಆದ ಮೇಲೆ ಏನಾಯಿತು ಗೊತ್ತೆ? ವೈಷ್ಣವಚರಣ ಮಥುರಬಾಬುವಿನ ಮುಂದೆ ಹೇಳಿಬಿಟ್ಟ: ‘ನಮ್ಮ ಕೇಶವಮಂತ್ರೋಪದೇಶವನ್ನು ಪಡೆದುಕೊಳ್ಳದವರೆಗೆ ಏನೂ ದೊರೆಯದು’. ಮಥುರಬಾಬು ಶಾಕ್ತ; ಭಗವತಿಯ ಉಪಾಸಕ, ಮುಖ ಕೆಂಪೇರಿತು. ವೈಷ್ಣವಚರಣನಿಗೆ ನಾನು ಒಂದು ಒಳಶುಂಠಿಕೊಟ್ಟೆ.
“ಶ್ರೀಮದ್ಭಾಗವತ-ಅದರಲ್ಲೂ ಈ ರೀತಿಯ ವಚನಗಳಿವೆಯಂತೆ. ಅದರಲ್ಲಿ ಒಂದು ಕಡೆ ಹೇಳಿದೆಯಂತೆ: ‘ಕೇಶವಮಂತ್ರೋಪದೇಶ ಪಡೆದುಕೊಳ್ಳದೆ ಭವಸಾಗರವನ್ನು ದಾಟಲು ಪ್ರಯತ್ನಿಸುವುದು, ನಾಯಿ ಬಾಲ ಹಿಡಿದು ಮಹಾಸಾಗರವನ್ನು ದಾಟಲು ಪ್ರಯತ್ನಿಸಿದ ಹಾಗೆ’ ಎಂದು. ಪ್ರತಿಯೊಬ್ಬ ಮತಸ್ಥನೂ ತನ್ನ ಮತವೇ ದೊಡ್ಡದು ಎಂದು ಸಾರಿಹೋಗಿದ್ದಾನೆ.
“ಶಾಕ್ತರೂ ವೈಷ್ಣವರನ್ನು ತಿರಸ್ಕಾರ ದೃಷ್ಟಿಯಿಂದ ನೋಡುತ್ತಾರೆ. ವೈಷ್ಣವರು ಹೇಳುತ್ತಾರೆ: ‘ಶ್ರೀಕೃಷ್ಣನೇ ನಮ್ಮನ್ನು ಈ ಭವಸಾಗರದಿಂದ ದಾಟಿಸಬಲ್ಲ ಅಂಬಿಗ.’ ಅದಕ್ಕೆ ಪ್ರತೀಕಾರವಾಗಿ ಶಾಕ್ತರು ಹೇಳುತ್ತಾರೆ: ‘ನಿಜ, ನಿಜ! ನಾವು ಒಪ್ಪುತ್ತೇವೆ. ನಮ್ಮ ಭಗವತಿ ರಾಜರಾಜೇಶ್ವರಿ. ಅಂಬಿಗನ ಕೆಲಸ ಮಾಡುವ ದರದು ಏನು ಬಂದಿದೆ ಅವಳಿಗೆ? ಆ ಕೆಲಸ ಮಾಡಲು ಆಕೆ ಕೃಷ್ಣನನ್ನು ನೇಮಕಮಾಡಿದ್ದಾಳೆ.’ (ಎಲ್ಲರೂ ನಗುತ್ತಿದ್ದಾರೆ.)
“ಇದೂ ಅಲ್ಲದೆ ಜನ ತಮ್ಮ ತಮ್ಮ ಮತಗಳ ಸಂಬಂಧವಾಗಿ ಎಷ್ಟು ಒಣ ಹೆಮ್ಮೆಪಡುತ್ತಾರೆ! ಕಾಮಾರಪುಕುರಿನ ಹತ್ತಿರವಿರುವ ಶ್ಯಾಮಬಜಾರ್ ಎಂಬ ಹಳ್ಳಿಯಲ್ಲಿ ಅನೇಕ ಮಂದಿ ನೇಯ್ಗೆಯವರಿದ್ದಾರೆ. ಅವರಲ್ಲಿ ಅನೇಕರು ವೈಷ್ಣವರು-ಬಹಳವಾಗಿ ಜಂಬ ಕೊಚ್ಚುತ್ತಾರೆ. ಅವರು ಹೇಳುತ್ತಾರೆ: ‘ಈತ ಯಾವ ವಿಷ್ಣುವನ್ನು ಪೂಜಿಸುತ್ತಾನೆ? ಪಾಲನ ವಿಷ್ಣುವನ್ನೇ? ನಾವು ಆತನನ್ನು ಕಣ್ಣೆತ್ತಿಯೂ ನೋಡುವುದಿಲ್ಲ!’ ಅಥವಾ ‘ಯಾವ ಶಿವನನ್ನು? ನಾವು ಆತ್ಮಾರಾಮಶಿವನನ್ನು, ಆತ್ಮರಾಮೇಶ್ವರ ಶಿವನನ್ನು ಒಪ್ಪುತ್ತೇವೆ.’ ಅಥವಾ ಮತ್ತೆ : ‘ಸ್ವಲ್ಪ ವಿಶದವಾಗಿ ತಿಳಿಸಿ, ನೀವು ಯಾವ ಹರಿಯನ್ನು ಪೂಜಿಸುತ್ತಾ ಇದ್ದೀರಿ.’ ಅವರು ನೂಲು ತೆಗೆಯುತ್ತಾ ಹೀಗೆಲ್ಲಾ ಹರಟುತ್ತಿರುತ್ತಾರೆ.
“ರತಿಯ ತಾಯಿ, ರಾಣಿ ಕಾತ್ಯಾಯಿನಿಯ ಆಪ್ತ ಗೆಳತಿ. ಆಕೆ ವೈಷ್ಣವಚರಣನ ಗುಂಪಿಗೆ ಸೇರಿದವಳು. ಒಳ್ಳೇ ಗೊಡ್ಡು ವೈಷ್ಣವಿ. ನನ್ನನ್ನು ನೋಡಿಹೋಗಲು ಅಡಿಗಡಿಗೆ ಬರುತ್ತಿದ್ದಳು. ನನಗೆ ತೋರಿಸುತ್ತಿದ್ದ ಭಕ್ತಿಯಲ್ಲಿ ಯಾರೂ ಆಕೆಯನ್ನು ಮೀರಿಸಿದವರೇ ಇಲ್ಲ. ಒಂದು ದಿನ ನಾನು ಭಗವತಿ ಕಾಳಿಯ ಪ್ರಸಾದ ತಿನ್ನುತ್ತಿರುವುದನ್ನು ನೋಡಿ, ಒಡನೆಯೇ ಹಿಂದಿರುಗಿಬಿಟ್ಟಳು. ಅಂದಿನಿಂದ ಆಕೆಯ ನೆರಳೂ ನನ್ನ ಕಣ್ಣಿಗೆ ಬಿದ್ದಿಲ್ಲ.
“ಯಾರಿಗೆ ಸಮನ್ವಯ ದೃಷ್ಟಿ ಇರುವುದೊ, ಆತನೇ ನಿಜವಾದ ಮನುಷ್ಯ. ಪ್ರಾಯಿಕವಾಗಿ ಜನ ಒಂದು ಸ್ವರದವರೇ. ಆದರೆ ನನಗೆ ಕಂಡುಬರುತ್ತಿದೆ, ಎಲ್ಲವೂ ಆ ಒಬ್ಬನನ್ನೇ ಸೂಚಿಸುತ್ತಿದೆ ಎಂಬುದಾಗಿ. ಶಾಕ್ತ, ವೈಷ್ಣವ, ವೇದಾಂತ ಎಲ್ಲಾ ಮತಗಳೂ ಆ ಪರಬ್ರಹ್ಮನನ್ನೇ ಸೂಚಿಸುತ್ತಿವೆ. ಯಾರು ನಿರಾಕಾರನೋ ಆತನೇ ಸಾಕಾರ, ಆತನದೇ ಈ ನಾನಾ ರೂಪಗಳೆಲ್ಲ. ನಿರ್ಗುಣ ನನ್ನ ತಂದೆ, ಸಗುಣ ನನ್ನ ತಾಯಿ. ಯಾರನ್ನು ಹೊಗಳುವುದು? ಯಾರನ್ನು ತೆಗಳುವುದು? ತಕ್ಕಡಿಯ ಬಟ್ಟಲೆರಡೂ ಒಂದೇ ಸಮತೂಕ.’
“ವೇದ ಯಾರ ವಿಷಯವಾಗಿ ಹೇಳುತ್ತದೋ, ತಂತ್ರವೂ ಆತನ ವಿಷಯವಾಗಿಯೇ, ಪುರಾಣವೂ ಆತನ ವಿಷಯವಾಗಿಯೇ ಹೇಳುತ್ತದೆ. ಎಲ್ಲವೂ ಆ ಒಬ್ಬ ಸಚ್ಚಿದಾನಂದನ ವಿಷಯವಾಗಿಯೇ ಹೇಳುತ್ತವೆ. ಯಾರದು ನಿತ್ಯವೊ, ಆತನದೇ ಲೀಲೆ. ವೇದದಲ್ಲಿ ಹೇಳಿದೆ: “ಓಂ ಸಚ್ಚಿದಾನಂದ ಬ್ರಹ್ಮ’ ಎಂದು; ತಂತ್ರದಲ್ಲಿ: “ಓಂ ಸಚ್ಚಿದಾನಂದಶಿವ, ಶಿವಃ ಕೇವಲ, ಕೇವಲ ಶಿವಃ’ ಎಂಬುದಾಗಿ; ಪುರಾಣದಲ್ಲಿ: ‘ಓಂ ಸಚ್ಚಿದಾನಂದ ಕೃಷ್ಣ’ ಅಂತ ಆ ಒಬ್ಬ ಸಚ್ಚಿದಾನಂದ ವಿಷಯವೇ ವೇದ, ಪುರಾಣ, ತಂತ್ರ ಎಲ್ಲದರಲ್ಲೂ. ವೈಷ್ಣವ ಶಾಸ್ತ್ರದಲ್ಲಿ ಹೇಳಿದೆ, ಕೃಷ್ಣನೇ ಕಾಳಿಯಾಗಿದ್ದಾನೆ ಎಂದು.”
ಪರಮಹಂಸರು ವರಾಂಡದ ಕಡೆಗೆ ಕೆಲವು ನಿಮಿಷಗಳ ಮಟ್ಟಿಗೆ ಹೋಗಿದ್ದು ಈಗ ಹಿಂದಿರುಗಿ ಬರುತ್ತಿದ್ದಾರೆ. ಅವರು ವರಾಂಡದ ಕಡೆಗೆ ಹೋಗುತ್ತಿದ್ದಾಗ, ವಿಶ್ವಂಭರನ ಮಗಳು, ವಯಸ್ಸು ಆರೇಳು ಇರಬೇಕು, ಅವರಿಗೆ ನಮಸ್ಕಾರ ಮಾಡಿದಳು. ಅವರು ಕೊಠಡಿಗೆ ಹಿಂದಿರುಗಿದ ನಂತರ ಆ ಬಾಲಕಿ ಅವರೊಡನೆ ಮಾತುಕತೆ ಆಡುತ್ತಿದ್ದಾಳೆ. ಆ ಹುಡುಗಿಯೊಡನೆ ಅದೇ ವಯಸ್ಸಿನ ಒಬ್ಬಿಬ್ಬರು ಹುಡುಗಿಯರೂ ಬಂದಿದ್ದಾರೆ.
ಬಾಲಕಿ ಶ್ರೀರಾಮಕೃಷ್ಣರಿಗೆ: “ನಿಮಗೆ ನಾನು ನಮಸ್ಕಾರ ಮಾಡಿದೆ. ನೀವು ಕಣ್ಣೆತ್ತಿಯೂ ನೋಡಲಿಲ್ಲವಲ್ಲ.”
ಶ್ರೀರಾಮಕೃಷ್ಣರು ನಗುತ್ತ: “ಎಲ್ಲಿ? ನೀನು ಮಾಡಿದ್ದು, ಕಣ್ಣಿಗೇ ಬೀಳಲಿಲ್ಲವಲ್ಲ.”
ಬಾಲಕಿ: “ಹಾಗಾದರೆ ಸ್ವಲ್ಪ ನಿಲ್ಲಿ, ಮತ್ತೆ ನಮಸ್ಕಾರ ಮಾಡುತ್ತೇವೆ-ಸ್ವಲ್ಪ ನಿಲ್ಲಿ. ಆ ಪಾದಕ್ಕೂ.” ಪರಮಹಂಸರು ನಗುತ್ತ ನಗುತ್ತ ಕುಳಿತುಕೊಳ್ಳುತ್ತಿದ್ದಾರೆ. ಈಗ ನೆಲದವರೆಗೂ ಬಗ್ಗಿ, ತಲೆ ತಗ್ಗಸಿ ಆ ಬಾಲಕಿಗೆ ಪ್ರತಿನಮಸ್ಕಾರ ಮಾಡುತ್ತಿದ್ದಾರೆ. ಅವರು ಹುಡುಗಿಗೆ ಹಾಡುವಂತೆ ಹೇಳುತ್ತಿದ್ದಾರೆ. ಆ ಬಾಲಕಿ ಹೇಳುತ್ತಿದ್ದಾಳೆ: “ದೇವರಾಣೆಗೂ ನನಗೆ ಬಾರದು.” ಪರಮಹಂಸರು ಆಕೆಗೆ ಹಾಡುವಂತೆ ಒತ್ತಿಹೇಳಿದಾಗ ಆ ಬಾಲಕಿ ಉತ್ತರಕೊಟ್ಟಳು: “ದೇವರಾಣೆಗೂ ಅಂತ ಹೇಳಿದ ಮೇಲೂ ನನ್ನನ್ನು ಬಲಾತ್ಕರಿಸುವುದು ಸರಿಯೆ?” ಈಗ ಪರಮಹಂಸರು ಆ ಬಾಲಕಿಯೊಡನೆ ಹುಡುಗಾಟವಾಡುತ್ತ ಅವರ ಮುಂದೆ ವಿನೋದದ ಹಾಡು ಹಾಡುತ್ತಿದ್ದಾರೆ.
ನಿನ್ನಿನಿಯ ಬಂದಾಗ ಮುನಿಸಿಕೊಂಡಾನು, ಬಾ
ಬಾಚಿ ಸಿಂಗರಿಸುವೆನು ನಿನ್ನ ಹೆರಳ!
ಆ ಬಾಲಕಿಯರು ಮತ್ತು ಭಕ್ತರು ನಗುತ್ತಿದ್ದಾರೆ.
ಶ್ರೀರಾಮಕೃಷ್ಣರು ಭಕ್ತರಿಗೆ: “ಪರಮಹಂಸನ ಸ್ವಭಾವ ಐದು ವರ್ಷದ ಮಗುವಿನ ಹಾಗೆ, ಎಲ್ಲವೂ ಆತನಿಗೆ ಚಿನ್ಮಯವಾಗಿ ತೋರಿಬರುತ್ತವೆ. ನಾನು ಹಿಂದೆ ಕಾಮಾರಪುಕುರಿನಲ್ಲಿದ್ದಾಗ, ರಾಮಲಾಲನ ಸೋದರ ಶಿವರಾಮನಿಗೆ ನಾಲ್ಕೊ ಐದೊ ವಯಸ್ಸು. ಒಂದು ದಿನ ಆತ ಒಂದು ಕಟ್ಟೆಯ ದಡದಲ್ಲಿ ಮಿಡಿತೆ ಹಿಡಿಯುತ್ತಿದ್ದ. ಎಲೆ ಅಲುಗಾಡುತ್ತಿದ್ದುವು. ಅವುಗಳ ಶಬ್ದ ನಿಲ್ಲಿಸಲು ಅವಕ್ಕೆ ಹೇಳಿದ: “ಚುಪ್!ಚುಪ್! ನಾನು ಮಿಡಿತೆ ಹಿಡಿಯಬೇಕು.’ ಒಂದು ದಿನ ಬಿರುಗಾಳಿ ಮಳೆ ಎದ್ದು ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಶಿವರಾಮ ನನ್ನೊಡನೆ ಕೊಠಡಿಯಲ್ಲಿದ್ದ. ಆಕಾಶ ಸುಮ್ಮನೆ ಮಿಂಚುತ್ತಿತ್ತು. ಬಾಗಿಲು ತೆಗೆದು ಹೊರಗಡೆ ಹೋಗಲು ಆತ ತವಕಪಟ್ಟ. ನಾನು ಆತನನ್ನು ಬಯ್ದು ತಡೆದೆ. ಆದರೂ ಆಗಾಗ ಹೊರಕ್ಕೆ ಇಣಿಕಿ ನೋಡುತ್ತಲೇ ಇದ್ದ. ಆಕಾಶ ಮಿಂಚುವುದನ್ನು ನೋಡಿ ಕೂಗಿಕೊಂಡ: ‘ಚಿಕ್ಕಪ್ಪ ನೋಡಲ್ಲಿ! ಅವರು ಮತ್ತೆ ಚಕಮುಕಿ ಕಲ್ಲು ಹೊಡೆಯುತ್ತಿದ್ದಾರೆ!’
“ಪರಮಹಂಸ ಒಂದು ಚಿಕ್ಕ ಮಗು ಇದ್ದ ಹಾಗೆ-ತನ್ನವರು ಪರರು ಎಂಬ ಭೇದವಿಲ್ಲ. ಶಿವರಾಮ ಒಂದು ದಿನ ನನ್ನನ್ನು ಕೇಳಿದ: “ಚಿಕ್ಕಪ್ಪ, ನೀನು ನಮ್ಮ ತಂದೆಯ ತಮ್ಮನೊ ಅಥವಾ ಭಾವನೊ?’
“ಪರಮಹಂಸ ಒಂದು ಚಿಕ್ಕ ಮಗು ಇದ್ದ ಹಾಗೆ. ಆತನಿಗೆ ಗತಿ, ವಿಧಿ ಇವುಗಳ ಭಾವನೆಯೇ ಇರುವುದಿಲ್ಲ. ಎಲ್ಲವೂ ಬ್ರಹ್ಮಮಯವಾಗಿ ಕಾಣಬರುತ್ತವೆ-ಎಲ್ಲಿಗೆ ಹೋಗುತ್ತಿರುವುದು, ಎಲ್ಲಿಗೆ ಬರುತ್ತಿರುವುದು ಎಂಬುವುದರ ಭಾವನೆಯೇ ಇರುವುದಿಲ್ಲ. ಶಿವರಾಮ ದುರ್ಗಾಪೂಜೆ ನೋಡಲು ಹೃದಯನ ಮನೆಗೆ ಹೋಗಿದ್ದ. ಆ ಮನೆ ಬಿಟ್ಟು ತನ್ನಷ್ಟಕ್ಕೆ ತಾನೆ ಯಾವ ಕಡೆಗೋ ಸುಮ್ಮನೆ ಹೊರಟುಹೋಗಿಬಿಟ್ಟ. ದಾರಿಯಲ್ಲಿ ನಾಲ್ಕು ವರ್ಷದ ಆ ಬಾಲಕ ದಿಕ್ಕಿಲ್ಲದೆ ಹೋಗುತ್ತಿರುವುದನ್ನು ಒಬ್ಬ ಕಂಡು ಆತನನ್ನು ಕೇಳಿದ: “ನೀನು ಎಲ್ಲಿಂದ ಬಂದೆ?’ ಆತನಿಗೆ ಯಾವ ಉತ್ತರ ಕೊಡಲೂ ಆಗಲಿಲ್ಲ. ಕೇವಲ ಹೇಳಿದ: ‘ಚಪ್ಪರ’. ಅಂದರೆ, ದುರ್ಗಾಪೂಜೆ ನಡೆಯುತ್ತಿದ್ದ ಚಪ್ಪರದಿಂದ ಎಂದು. ಆ ಅಪರಿಚಿತ ಮತ್ತೆ ಆತನನ್ನು ಕೇಳಿದ: ‘ನೀನು ಯಾರ ಮನೆಯಿಂದ ಬಂದೆ?’ ಆಗ ಕೇವಲ ಆತ ಹೇಳಿದ: ‘ಅಣ್ಣ’.
“ಪರಮಹಂಸರಿಗೆ ಕೆಲವು ವೇಳೆ ಉನ್ಮತ್ತನ ಅವಸ್ಥೆ ಉಂಟಾಗುತ್ತದೆ. ನನಗೆ ಪ್ರೇಮೋನ್ಮಾದ ಉಂಟಾದಾಗ ಶಿವಲಿಂಗ ಜ್ಞಾನದಿಂದ ನನ್ನ ಲಿಂಗವನ್ನೇ ನಾನು ಪೂಜಿಸುತ್ತಿದ್ದೆ. ಆದರೆ ಈಗ ಸಾಧ್ಯವಿಲ್ಲ. ದಕ್ಷಿಣೇಶ್ವರ ದೇವಾಲಯ ಪ್ರತಿಷ್ಠೆಯಾದ ಕೆಲವು ದಿನಗಳ ನಂತರ ಅಲ್ಲಿಗೆ ಒಬ್ಬ ಹುಚ್ಚ ಬಂದಿದ್ದ-ಪೂರ್ಣಜ್ಞಾನಿ. ಕಾಲಿಗೆ ಹರಿದುಹೋದ ಜೋಡು ಹಾಕಿಕೊಂಡಿದ್ದ. ಒಂದು ಕೈಯಲ್ಲಿ ಒಂದು ತುಂಡು ಗಳುವನ್ನು, ಇನ್ನೊಂದು ಕೈಯಲ್ಲಿ ತೆಂಗಿನಕಾಯಿಯ ಒಂದು ಗೊರಟೆಯನ್ನು ಹಿಡಿದುಕೊಂಡಿದ್ದ. ಯಾವ ಆಚಾರಕ್ಕೂ ಬದ್ಧನಾಗಿರಲಿಲ್ಲ. ಗಂಗೆಯಲ್ಲಿ ಸ್ನಾನ ಮಾಡಿದ ನಂತರ ಸಂಧ್ಯಾವಂದನೆ, ಆಹ್ನಿಕ ಏನನ್ನೂ ಮಾಡಲಿಲ್ಲ. ಪಂಚೆ ಸೆರಗಿನಲ್ಲಿ ಏನನ್ನು ಕಟ್ಟಿಕೊಂಡು ಬಂದಿದ್ದನೊ ಅದನ್ನೇ ತಿಂದ. ಅನಂತರ ಕಾಳೀ ದೇವಾಲಯಕ್ಕೆ ಹೋಗಿ ಸ್ತೋತ್ರ ಮಾಡಲಾರಂಭಿಸಿದ. ದೇವಾಲಯ ಸುಮ್ಮನೆ ನಡುಗಲಾರಂಭಿಸಿತು. ಹಲಧಾರಿ ಆಗ ಕಾಳಿಯ ಗರ್ಭಗುಡಿಯಲ್ಲಿದ್ದ. ಅಲ್ಲಿಯವರು ಆತನನ್ನು ಅತಿಥಿಶಾಲೆಯಲ್ಲಿ ಕುಳಿತುಕೊಂಡು ಊಟ ಮಾಡಲು ಬಿಟ್ಟುಕೊಡಲಿಲ್ಲ. ಅದಕ್ಕಾಗೇನೂ ಆತನಿಗೆ ಕೋಪ ಬರಲಿಲ್ಲ. ನಾಯಿಗಳು ತಿನ್ನುತ್ತಿದ್ದ ಎಂಜಲೆಲೆ ಗುಂಡಿಯಿಂದ ಅನ್ನ ಎತ್ತಿಕೊಂಡು ತಿನ್ನಲಾರಂಭಿಸಿದ. ಆಗಾಗ ನಾಯಿಗಳನ್ನು ಒಂದು ಕಡೆಗೆ ತಳ್ಳಿ ಆ ಎಲೆಗಳಲ್ಲಿದ್ದುದನ್ನು ತಾನೇ ತಿಂದ. ಆತ ಹಾಗೆ ಮಾಡಿದರೂ ನಾಯಿಗಳು ಆತನಿಗೇನನ್ನೂ ಮಾಡಲಿಲ್ಲ. ಹಲಧಾರಿ ಆತನನ್ನು ಹಿಂಬಾಲಿಸಿ ಕೇಳಿದ: ‘ನೀನು ಯಾರು? ಏನು, ನೀನು ಪೂರ್ಣ ಜ್ಞಾನಿಯೆ?’ ಆತ ಪಿಸುಗುಟ್ಟಿದ: ‘ಹ್ಞೂ! ಪೂರ್ಣಜ್ಞಾನಿ, ಚುಪ್!’ ಈ ಸಮಾಚಾರವನ್ನೆಲ್ಲ ಹಲಧಾರಿ ನನಗೆ ತಿಳಿಸಿದಾಗ, ನನ್ನ ಹೃದಯ ‘ಡಬ್, ಡಬ್’ ಎಂದು ಹೊಡೆದುಕೊಳ್ಳಲಾರಂಭಿಸಿತು. ನಾನು ಹೃದಯನನ್ನು ಬಿಗಿಯಾಗಿ ಹಿಡಿದುಕೊಂಡೆ, ಭಗವತಿಗೆ ಹೇಳಿದೆ: “ತಾಯೆ, ಏನು ನನಗೂ ಈ ಅವಸ್ಥೆ ಬಂದುಬಿಡುವುದೆ?’ ನಾವೆಲ್ಲರೂ ಆತನನ್ನು ನೋಡಲು ಹೋದೆವು. ನಮ್ಮೊಡನೆ ಒಳ್ಳೆಯ ಜ್ಞಾನದ ವಿಷಯವಾಗಿ ಮಾತನಾಡಿದ. ಪರರು ಆತನನ್ನು ಸಮೀಪಿಸಿದಾಗ ಹುಚ್ಚನಂತೆ ವರ್ತಿಸುತ್ತಿದ್ದ. ಆತ ದೇವಾಲಯದಿಂದ ಹೊರಟುಹೋದಾಗ ಹಲಧಾರಿ ಆತನನ್ನು ಬಹಳ ದೂರದವರೆಗೆ ಹಿಂಬಾಲಿಸಿದ. ಗೇಟನ್ನು ದಾಟಿದ ನಂತರ ಆತ ಹಲಧಾರಿಗೆ ಹೇಳಿದ: ‘ನಾನು ನಿನಗೆ ಇನ್ನೇನು ತಾನೆ ಹೇಳಲಿ? ಯಾವಾಗ ನಿನ್ನಲ್ಲಿ ಈ ಗುಂಡಿಯ ನೀರಿಗೂ, ಆ ಗಂಗೆಯ ನೀರಿಗೂ ಯಾವ ವಿಧದ ಭೇದಬುದ್ಧಿ ಇರದೊ, ಆಗ ತಿಳಿದುಕೊ ನಿನಗೆ ಪೂರ್ಣಜ್ಞಾನ ದೊರೆತಿದೆ ಎಂಬುದಾಗಿ.’ ಬಳಿಕ ಆತ ಜೋರು ಜೋರಾಗಿ ಕಾಲು ಹಾಕುತ್ತ ಹೊರಟುಹೋದ.”
ಪರಮಹಂಸರು ಮಾಸ್ಟರೊಡನೆ ಮಾತಾಡುತ್ತಿದ್ದಾರೆ. ಭಕ್ತರು ಹತ್ತಿರ ಕುಳಿತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಶಶಧರನ ಸಂಬಂಧವಾಗಿ ನಿನ್ನ ಅಭಿಪ್ರಾಯವೇನು?”
ಮಾಸ್ಟರ್: ‘ಬಹಳ ಒಳ್ಳೆಯವ.’
ಶ್ರೀರಾಮಕೃಷ್ಣರು: “ಒಳ್ಳೇ ಬುದ್ಧಿವಂತ ಅಲ್ಲವೆ?”
ಮಾಸ್ಟರ್: “ಹೌದು, ಒಳ್ಳೇ ಪಾಂಡಿತ್ಯವಿದೆ.”
ಶ್ರೀರಾಮಕೃಷ್ಣರು: “ಗೀತೆ ಹೇಳಿದೆ-ಯಾರನ್ನು ಅನೇಕರು ಹೊಗಳುತ್ತಾರೊ, ಗೌರವಿಸುತ್ತಾರೊ, ಆತನಲ್ಲಿ ಭಗವಂತನ ಶಕ್ತಿ ವಿಶೇಷವಾಗಿ ವ್ಯಕ್ತವಾಗಿದೆ ಎಂದು. ಆದರೆ ಆತ ಮಾಡಬೇಕಾದ ಕೆಲಸ ಇನ್ನೂ ಸ್ವಲ್ಪ ಬಾಕಿ ಇದೆ. ಕೇವಲ ಪಾಂಡಿತ್ಯದಿಂದಲೇ ಏನು ದೊರೆತೀತು? ಸ್ವಲ್ಪ ತಪಸ್ಸು ಮಾಡಬೇಕು-ಸ್ವಲ್ಪ ಸಾಧನೆ ಭಜನೆ ಮಾಡಬೇಕು.”
“ಗೌರೀಪಂಡಿತ ಸಾಧನೆ ಮಾಡಿದ್ದ. ಆತ ದೇವಿಯ ಸಂಬಂಧವಾಗಿ ಸ್ತೋತ್ರ ಮಾಡುವಾಗ ಉಳಿದ ಪಂಡಿತರು ಆತನ ಎದುರು ಎರೆಹುಳುವಿನಂತಾಗಿಬಿಡುತ್ತಿದ್ದರು.
“ನಾರಾಯಣ ಶಾಸ್ತ್ರಿ ಕೂಡ ಬರೀ ಪಂಡಿತನೇ ಆಗಿರಲಿಲ್ಲ. ಸಾಧನೆ ಭಜನೆಯನ್ನೂ ಮಾಡಿದ್ದ. ಆತ ಇಪ್ಪತ್ತೈದು ವರ್ಷಗಳ ಕಾಲ ಒಂದೇ ಸಮನೆ ವೇದಾಧ್ಯಯನ ಮಾಡಿದ್ದ. ನ್ಯಾಯಶಾಸ್ತ್ರ ಒಂದನ್ನೇ ಏಳು ವರ್ಷಗಳ ಕಾಲ ಓದಿದ್ದ. ಆದರೂ ‘ಹರ, ಹರ’ ಎಂದು ಹೇಳುತ್ತ ಹೇಳುತ್ತ ಇದ್ದಹಾಗೆಯೇ ಭಾವಸ್ಥನಾಗಿಬಿಡುತ್ತಿದ್ದ. ಜಯಪುರದ ರಾಜ ಆತನನ್ನು ತನ್ನ ಸಭಾಪಂಡಿತನನ್ನಾಗಿ ಮಾಡಿಕೊಳ್ಳಲು ಇಚ್ಛೆಪಟ್ಟ. ಆದರೆ ನಾರಾಯಣಶಾಸ್ತ್ರಿ ಅದಕ್ಕೆ ಒಪ್ಪಲಿಲ್ಲ. ಪ್ರಾಯಿಕವಾಗಿ ಆತ ದಕ್ಷಿಣೇಶ್ವರದಲ್ಲೇ ಇರುತ್ತಿದ್ದ. ವಸಿಷ್ಠಾಶ್ರಮಕ್ಕೆ ಹೋಗಬೇಕೆಂದು ಆತನಿಗೆ ಉತ್ಕಟೇಚ್ಛೆ-ತಪಸ್ಸುಮಾಡಲು. ಪದೇ ಪದೇ ನನಗೆ ಹೇಳುತ್ತಲೇ ಇರುತ್ತಿದ್ದ. ಅಲ್ಲಿಗೆ ಹೋಗಬೇಡವೆಂದು ನಾನು ಆತನಿಗೆ ಹೇಳಿದೆ. ಆಗ ಆತ ಹೇಳಿದ: ‘ನಾನು ಯಾವಾಗ ಸಾಯುತ್ತೇನೋ ಯಾರಿಗೆ ತಾನೆ ಗೊತ್ತು? ಮತ್ತೆ ಸಾಧನೆ ಮಾಡುವುದಾವಾಗ? ಈ ದಿನವಿದ್ದವರು ನಾಳೆ ಇರುವುದಿಲ್ಲ.’ ಆತ ಬಹಳವಾಗಿ ಕೇಳಿಕೊಂಡ ಮೇಲೆ ಹೋಗಲು ಅನುಮತಿ ಕೊಟ್ಟೆ. ಕೆಲವರು ಹೇಳುತ್ತಾರೆ, ಆತ ಸತ್ತುಹೋದ-ತಪಸ್ಸು ಮಾಡುತ್ತಿದ್ದಹಾಗೆ ಎಂದು. ಇನ್ನು ಕೆಲವರು ಹೇಳುತ್ತಿದ್ದಾರೆ, ಬದುಕಿಕೊಂಡಿದ್ದಾನೆ-ಈಗತಾನೆ ರೈಲ್ವೆಗಾಡಿಗೆ ಹತ್ತಿಸಿಬಂದೆವು.
“ನಾನು ಕೇಶವಸೇನನನ್ನು ಸಂಧಿಸುವುದಕ್ಕೆ ಮುನ್ನ ನಾರಾಯಣಶಾಸ್ತ್ರಿಗೆ ಆತ ಎಂಥವನು ಎಂಬುದನ್ನು ನೋಡಿಕೊಂಡು ಬರುವಂತೆ ಹೇಳಿ ಕಳುಹಿಸಿದೆ. ಆತ ಬಂದು ತಿಳಿಸಿದ, ಕೇಶವಸೇನ ಜಪಸಿದ್ಧ ಎಂದು. ನಾರಾಯಣಶಾಸ್ತ್ರಿಗೆ ಜ್ಯೋತಿಶ್ಶಾಸ್ತ್ರ ಗೊತ್ತಿತ್ತು. ಕೇಶವಸೇನ ಒಳ್ಳೇ ನಕ್ಷತ್ರದಲ್ಲಿ ಹುಟ್ಟಿದ್ದಾನೆ ಎಂದು ಹೇಳಿದ. ಅನಂತರ ನಾನು ಹೃದಯನನ್ನು ಜೊತೆಯಲ್ಲಿ ಕರೆದುಕೊಂಡು ಬೇಲಘರದ ತೋಟದ ಮನೆಗೆ ಹೋಗಿ ಆತನನ್ನು ಸಂಧಿಸಿದೆ. ಆತನನ್ನು ನಾನು ಕಂಡೊಡನೆಯೇ ಹೇಳಿದೆ: ‘ಇಲ್ಲಿ ಇರತಕ್ಕವರಲ್ಲಿ ಕೇವಲ ಈತನಿಗೇ ಬಾಲ ಬಿದ್ದುಹೋಗಿದೆ. ಈತ ನೀರಿನಲ್ಲೂ ಇರಬಲ್ಲ, ಭೂಮಿಯ ಮೇಲೂ ಇರಬಲ್ಲ.’
“ಕೇಶವಸೇನ ನನ್ನನ್ನು ಪರೀಕ್ಷೆ ಮಾಡಲು ತನ್ನ ಮೂರು ಜನ ಅನುಯಾಯಿಗಳನ್ನು ದಕ್ಷಿಣೇಶ್ವರಕ್ಕೆ ಕಳುಹಿಸಿದ್ದ. ಆಗುಂಪಿನಲ್ಲಿ ಪ್ರಸನ್ನನೂ ಒಬ್ಬ. ಹಗಲೂ ಇರುಳೂ ಅವರು ಪರೀಕ್ಷೆ ಮಾಡಿ ಅವರು ಕೇಶವಸೇನನಿಗೆ ವರದಿ ಒಪ್ಪಿಸಬೇಕಾಗಿತ್ತು. ಅವರು ನನ್ನ ಕೊಠಡಿಯಲ್ಲಿದ್ದರು. ರಾತ್ರಿಯನ್ನು ಅಲ್ಲೇ ಕಳೆಯಬೇಕೆಂದಿದ್ದರು. ಯಾವಾಗ ನೋಡಿದರೂ ‘ದಯಾಮಯ, ದಯಾಮಯ’ ಅಂತ ಹೇಳುತ್ತ ಬೋಧೆ ಮಾಡಲಾರಂಭಿಸಿದರು: ‘ನೀವು ಕೇಶವಸೇನನನ್ನು ಹಿಡಿಯಿರಿ. ಆಗ ನಿಮಗೆ ಒಳ್ಳೆಯದಾಗುತ್ತದೆ.’ ನಾನು ಅವರಿಗೆ ತಿಳಿಸಿದೆ: ‘ನಾನು ಸಾಕಾರ ಒಪ್ಪುತ್ತೇನೆ.’ ಅನಂತರವೂ ಅವರು ‘ದಯಾಮಯ, ದಯಾಮಯ’ ಅನ್ನುತ್ತಲೇ ಇದ್ದರು. ಆಗೊಂದು ಮಾನಸಿಕ ಅವಸ್ಥೆ ನನಗೆ ಬಂತು. ನಾನು ಅವರಿಗೆ ಹೇಳಿದೆ: ‘ಹೊರಡಿ ಇಲ್ಲಿಂದ!’ ಕೊಠಡಿಯಲ್ಲಿ ಮಲಗಲು ಅವರನ್ನು ಬಿಟ್ಟುಕೊಡಲೇ ಇಲ್ಲ. ಅವರು ಜಗಲಿಗೆ ಎದ್ದುಹೋಗಿ ಮಲಗಿಕೊಂಡರು. ಕ್ಯಾಪ್ಟನ್ ಕೂಡ ನನ್ನನ್ನು ಸಂಧಿಸಿದ ಮೊದಲನೆ ರಾತ್ರಿಯನ್ನು ದಕ್ಷಿಣೇಶ್ವರದಲ್ಲೇ ಕಳೆದ.
“ನಾರಾಯಣಶಾಸ್ತ್ರಿ ದಕ್ಷಿಣೇಶ್ವರದಲ್ಲಿ ಇದ್ದಾಗ, ಮೈಕೇಲ 3 ಅಲ್ಲಿಗೆ ಬಂದಿದ್ದ. ಮಥುರಬಾಬುವಿನ ಹಿರಿಯ ಮಗ ದ್ವಾರಕನಾಥಬಾಬು ಆತನನ್ನು ಅಲ್ಲಿಗೆ ಕರೆದುಕೊಂಡು ಬಂದಿದ್ದ. ಕಾಳೀದೇವಾಲಯದ ಯಜಮಾನರು ಪಕ್ಕದಲ್ಲೇ ಇದ್ದ ಮದ್ದಿನ ಕಾರ್ಖಾನೆಯ ಆಂಗ್ಲ ದಣಿಗಳ ಮೇಲೆ ವ್ಯಾಜ್ಯ ಹೂಡಬೇಕಾಗಿತ್ತು. ಅದಕ್ಕಾಗಿ ಅವರು ಆತನನ್ನು ಅಲ್ಲಿಗೆ ಕರೆದುಕೊಂಡು ಬಂದು ಸಲಹೆ ತೆಗೆದುಕೊಂಡರು. ಮ್ಯಾನೇಜರ್ರ ಆಫೀಸಿನ ಪಕ್ಕದಲ್ಲಿದ್ದ ದೊಡ್ಡ ಕೊಠಡಿಯಲ್ಲಿ ನಾನು ಆತನನ್ನು ಸಂಧಿಸಿದುದು. ನಾರಾಯಣಶಾಸ್ತ್ರಿ ನನ್ನೊಡನೆ ಅಲ್ಲಿಗೆ ಬಂದಿದ್ದ. ನಾನು ಆತನಿಗೆ ಹೇಳಿದೆ, ಮೈಕೇಲನೊಡನೆ ಮಾತುಕತೆಯಾಡುವಂತೆ. ಮೈಕೇಲನಿಗೆ ಸಂಸ್ಕೃತದಲ್ಲಿ ಮಾತುಕತೆಯಾಡಲು ಕಷ್ಟವಾಗಿ ತೋರಿತು. ತಪ್ಪು ಮಾಡಲಾರಂಭಿಸಿದ. ಬಳಿಕ ಬಂಗಾಳಿಯಲ್ಲಿ ಮಾತನಾಡಲಾರಂಭಿಸಿದರು. ನಾರಾಯಣಶಾಸ್ತ್ರಿ ಆತನನ್ನು ಕೇಳಿದ ‘ನೀನು ನಿನ್ನ ಸ್ವಧರ್ಮವನ್ನು ಏಕೆ ಬಿಟ್ಟುಬಿಟ್ಟೆ?’ ಮೈಕೇಲ ಹೊಟ್ಟೆ ತೋರಿಸಿ ಹೇಳಿದ: ‘ಇದಕ್ಕಾಗಿ ಬಿಡಬೇಕಾಗಿ ಬಂತು.’ ಆಗ ನಾರಾಯಣಶಾಸ್ತ್ರಿ ಹೇಳಿದ: ‘ಹೊಟ್ಟೆಪಾಡಿಗಾಗಿ ಸ್ವಧರ್ಮವನ್ನೇ ತ್ಯಜಿಸತಕ್ಕ ಮನುಷ್ಯನೊಡನೆ ಏನು ತಾನೆ ಮಾತನಾಡಲಿ?’ ಅನಂತರ ಮೈಕೇಲ ನನ್ನನ್ನು ಕೇಳಿಕೊಂಡ, ಏನನ್ನಾದರೂ ಹೇಳಬೇಕೆಂದು. ನಾನು ಹೇಳಿದೆ: ‘ಇಂದೇಕೊ ನನಗೆ ಗೊತ್ತಿಲ್ಲ. ಏನೂ ಮಾತನಾಡುವುದಕ್ಕೂ ಇಚ್ಛೆಯಾಗುತ್ತಿಲ್ಲ, ಯಾರೊ ನನ್ನ ಬಾಯನ್ನು ಅದುಮಿ ಹಿಡಿದಿರುವಂತಿದೆ.’”
ಮನಮೋಹನ: “ಚೌಧುರಿ ಇಲ್ಲಿಗೆ ಬರುವುದಿಲ್ಲ. ಆತ ಹೇಳಿದ: ‘ಆ ಫರಿದ್ಪುರದ ಮೂರ್ಖ, ಶಶಧರ ಅಲ್ಲಿಗೆ ಬರುತ್ತಾನೆ. ಆದ್ದರಿಂದ ನಾನು ಬರುವುದಿಲ್ಲ.”
ಚೌಧುರಿ ಕಲ್ಕತ್ತ ವಿಶ್ವವಿದ್ಯಾನಿಲಯದ ಎಂ.ಎ. ಆಗಿದ್ದ. ಮುನ್ನೂರೊ ನಾನೂರೊ ರೂಪಾಯಿ ಸಂಬಳ. ಮೊದಲನೆಯ ಹೆಂಡತಿ ಸತ್ತ ನಂತರ ದೊಡ್ಡ ವೈರಾಗ್ಯ ಬಂದುಬಿಟ್ಟಿತು. ಆದರೆ ಮತ್ತೆ ಮದುವೆಯಾದ. ಆಗಾಗ ದಕ್ಷಿಣೇಶ್ವರಕ್ಕೆ ಬಂದು ಹೋಗುತ್ತಿದ್ದಾನೆ.
ಶ್ರೀರಾಮಕೃಷ್ಣರು: “ಆತನದು ಎಂಥಾ ಹೀನಬುದ್ಧಿ! ವಿದ್ಯೆಯ ಅಹಂಕಾರವಿದೆ. ಸಾಲದುದಕ್ಕೆ ಎರಡನೆಯ ಸಲ ವಿವಾಹ ಬೇರೆ ಆಗಿದ್ದಾನೆ. ಈ ಜಗತ್ತು ಆತನ ದೃಷ್ಟಿಯಿಂದ ಒಂದು ಅಂಗೈ ಅಗಲ ಇದ್ದ ಹಾಗೆ!
(ಭಕ್ತರಿಗೆ) “ಕಾಮಕಾಂಚನಾಸಕ್ತಿ ಮನುಷ್ಯನನ್ನು ಹೀನಬುದ್ಧಿಯುಳ್ಳವನನ್ನಾಗಿ ಮಾಡಿಬಿಡುತ್ತದೆ. ಹರಮೋಹನ ಮೊದಲನೆ ಸಲ ನನ್ನನ್ನು ಸಂಧಿಸಿದಾಗ ಆತನಲ್ಲಿ ಒಳ್ಳೇ ಲಕ್ಷಣಗಳಿರುವುದು ನನಗೆ ಕಂಡುಬಂತು. ಆತನನ್ನು ನೋಡಬೇಕೆಂದು ನಾನು ಬಹಳವಾಗಿ ವ್ಯಾಕುಲಪಡುತ್ತಿದ್ದೆ. ಆಗ ಆತನಿಗೆ ವಯಸ್ಸು ಹದಿನೇಳೊ ಹದಿನೆಂಟೊ. ಆಗಾಗ ಆತನಿಗಾಗಿ ಕರೆಕಳುಹಿಸುತ್ತಿದ್ದೆ. ಆದರೂ ಆತ ಬರುತ್ತಿರಲಿಲ್ಲ. ಈಗ ಹೆಂಡತಿಯನ್ನು ಕರೆದುಕೊಂಡು ಬಂದು ಪ್ರತ್ಯೇಕವಾಗಿ ವಾಸಮಾಡುತ್ತಿದ್ದಾನೆ. ಹಿಂದೆ ಸೋದರ ಮಾವನ ಮನೆಯಲ್ಲಿ ಇರುತ್ತಿದ್ದ. ಅದು ಬಹಳ ಚೆನ್ನಾಗಿತ್ತು. ಆಗ ಸಂಸಾರದ ಯಾವ ಜಂಜಾಟವೂ ಇರಲಿಲ್ಲ. ಈಗ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ದಿನವೂ ಹೆಂಡತಿಯ ಸಲುವಾಗಿ ಪೇಟೆಗೆ ಹೋಗಬೇಕಾಗಿ ಬಂದಿದೆ. ಅಂದು ದಕ್ಷಿಣೇಶ್ವರಕ್ಕೆ ಬಂದಿದ್ದ. ನಾನು ಆತನಿಗೆ ಹೇಳಿದೆ: ‘ಹೋಗು, ಇಲ್ಲಿಂದ ಹೊರಟುಹೋಗು! ಕಣ್ಣೆತ್ತಿ ನೋಡಲೂ ನನಗಾಗುತ್ತಿಲ್ಲ.’”
ಈಗ ಪರಮಹಂಸರು ಜಗನ್ನಾಥನನ್ನು ದರ್ಶನಮಾಡಿ ಬರಲು ದೇವರ ಮನೆಗೆ ಹೋಗುತ್ತಿದ್ದಾರೆ. ದರ್ಶನ ಮಾಡಿದ ನಂತರ ಪುಷ್ಪಾಂಜಲಿಯನ್ನು ಅರ್ಪಿಸುತ್ತಿದ್ದಾರೆ. ಬಲರಾಮನ ಮನೆಯ ಹೆಂಗಸರಿಗೆ ಪರಮಹಂಸರ ದರ್ಶನ ದೊರೆತುದಕ್ಕಾಗಿ ಬಹಳ ಆನಂದವಾಗಿಬಿಟ್ಟಿದೆ.
ಪರಮಹಂಸರು ಬೈಠಕ್ಖಾನೆಗೆ ಹಿಂದಿರುಗಿ ಬಂದು ಹೇಳುತ್ತಿದ್ದಾರೆ: ‘ಪ್ರಾಪಂಚಿಕರ ಪೂಜೆ, ಜಪ, ತಪ, ಇವೆಲ್ಲ ಹುಚ್ಚು ರೇಗಿದಾಗ ಮಾತ್ರ. ಯಾರಿಗೆ ಭಗವಂತನ ಹೊರತು ಬೇರೇನೂ ಗೊತ್ತಿಲ್ಲವೊ ಅವರು ತಮ್ಮ ಪ್ರತಿಯೊಂದು ಉಸಿರಿನೊಡನೆಯೂ ಆತನನ್ನು ನೆನೆಯುತ್ತಾರೆ. ಕೆಲವರು ಮನಸ್ಸಿನಲ್ಲೇ ಸರ್ವದಾ ‘ರಾಮ, ರಾಮ’ ಎಂದು ಜಪ ಮಾಡುತ್ತಿರುತ್ತಾರೆ. ಜ್ಞಾನಮಾರ್ಗಿಗಳೂ ‘ಸೋಠ್ಹಮ್’ ಜಪವನ್ನು ಮಾಡುತ್ತಾರೆ. ಇನ್ನು ಕೆಲವರಲ್ಲಿ ನೋಡಬಹುದು, ನಾಲಗೆ ಸರ್ವದಾ ಆಡುತ್ತಿರುವುದನ್ನು. ಯಾವಾಗಲೂ ಸ್ಮರಣ ಮನನ ಮಾಡುತ್ತಲೇ ಇರಬೇಕು.”
ಪಂಡಿತ ಶಶಧರ ತನ್ನ ಒಬ್ಬಿಬ್ಬರು ಗೆಳೆಯರೊಡನೆ ಕೊಠಡಿಯನ್ನು ಪ್ರವೇಶಿಸಿ, ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಳ್ಳುತ್ತಿದ್ದಾನೆ.
ಶ್ರೀರಾಮಕೃಷ್ಣರು ನಗುತ್ತ: “ನಾವೆಲ್ಲರೂ ವಧುವಿನ ಹಾಸಿಗೆ ಹತ್ತಿರ ಕಾದುಕೊಂಡೇ ಕುಳಿತಿದ್ದೇವೆ-ವರ ಎಷ್ಟು ಹೊತ್ತಿಗೆ ಬರುತ್ತಾನೆ ಅಂತ.”
ಪಂಡಿತ ನಗುತ್ತಿದ್ದಾನೆ. ಕೊಠಡಿ ಭಕ್ತರಿಂದ ತುಂಬಿದೆ. ಬಲರಾಮನ ತಂದೆ, ಡಾಕ್ಟರ್ ಪ್ರತಾಪ ಇವರೂ ಭಕ್ತರ ಮಧ್ಯೆ ಕುಳಿತಿದ್ದಾರೆ. ಪರಮಹಂಸರು ಮಾತು ಮುಂದುವರಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು ಶಶಧರನಿಗೆ: “ಜ್ಞಾನದ ಮೊದಲನೆ ಚಿಹ್ನೆ ಶಾಂತಸ್ವಭಾವ, ಎರಡನೆಯದು ಅಭಿಮಾನಶೂನ್ಯತೆ. ನಿನಗೆ ಈ ಎರಡೂ ಗುಣಗಳೂ ಇವೆ. ಜ್ಞಾನಿಗೆ ಇನ್ನೂ ಕೆಲವು ಗುಣಗಳಿವೆ. ಆತ ಸಾಧುಗಳ ಮುಂದೆ ತ್ಯಾಗಿ. ಕರ್ಮಕ್ಷೇತ್ರದಲ್ಲಿ-ಅಂದರೆ ಲೆಕ್ಚರ್-ಗಿಕ್ಚರ್ ಕೊಡುವ ಸಮಯದಲ್ಲಿ ಸಿಂಹಸದೃಶ, ಹೆಂಡತಿಯ ಎದುರು ರಸಿಕ ರಾಜ, ರಸಿಕ ಪಂಡಿತ. (ಎಲ್ಲರೂ ನಗುತ್ತಿದ್ದಾರೆ.)”
“ವಿಜ್ಞಾನಿಯ ಸ್ವಭಾವ ಬೇರೆ. ಉದಾಹರಣೆಗೆ ಚೈತನ್ಯದೇವನದು. ಆತ ಬಾಲಕನ ಹಾಗೆ, ಉನ್ಮತ್ತನ ಹಾಗೆ, ಜಡನ ಹಾಗೆ, ಪಿಶಾಚನ ಹಾಗೆ ವರ್ತಿಸುತ್ತಾನೆ. ಬಾಲಕನ ಅವಸ್ಥೆಯಲ್ಲಿ ಇರುವಾಗ, ಕೆಲವು ವೇಳೆ ಏನೂ ಅರಿಯದ ಹಸುಳೆಯ ಹಾಗೆ ವರ್ತಿಸುತ್ತಾನೆ. ಇನ್ನು ಕೆಲವು ವೇಳೆ ಚಿಕ್ಕ ಹುಡುಗನ ಹಾಗೆ ಹುಡುಗಾಟವಾಡುತ್ತಿರುತ್ತಾನೆ, ಮತ್ತೆ ಕೆಲವು ವೇಳೆ ಉಪದೇಶವೀಯುತ್ತಾನೆ-ವೀರ ಯುವಕ ವ್ಯಕ್ತಿಯ ಹಾಗೆ.”
ಪಂಡಿತ: “ಯಾವ ವಿಧದ ಭಕ್ತಿಯಿಂದ ಆತನ ಸಾಕ್ಷಾತ್ಕಾರ ಪಡೆದುಕೊಳ್ಳಬಹುದು?”
ಶ್ರೀರಾಮಕೃಷ್ಣರು: “ಮನುಷ್ಯನ ಪ್ರಕೃತಿಗೆ ತಕ್ಕಂತೆ ಭಕ್ತಿಯಲ್ಲಿ ಮೂರು ವಿಧ: ಸಾತ್ತ್ವಿಕ ಭಕ್ತಿ, ರಾಜಸಿಕ ಭಕ್ತಿ, ತಾಮಸಿಕ ಭಕ್ತಿ.”
“ಭಕ್ತನಲ್ಲಿ ಸಾತ್ತ್ವಿಕ ಭಕ್ತಿ ಉಂಟಾಗಿರುವುದನ್ನು ಕೇವಲ ಭಗವಂತನೊಬ್ಬನೇ ಅರಿತುಕೊಳ್ಳಬಲ್ಲ. ಇದರಲ್ಲಿ ಬಾಹ್ಯಾಡಂಬರವೇನಿರುವುದಿಲ್ಲ. ಈ ವಿಧದ ಭಕ್ತಿಯುಳ್ಳವನಿಗೆ ಏಕಾಂತದಲ್ಲಿರುವುದು. ಬಹಳವಾಗಿ ಹಿಡಿಸುತ್ತದೆ. ಬಹುಶಃ ಸೊಳ್ಳೆಪರದೆಯೊಳಗೆ ಕುಳಿತು ಧ್ಯಾನಮಾಡಬಹುದು. ಅದು ಯಾರಿಗೂ ಗೊತ್ತೇ ಆಗುವುದಿಲ್ಲ. ಸತ್ತ್ವದ ಸತ್ತ್ವ, ಎಂದರೆ ವಿಶುದ್ಧ ಸತ್ತ್ವ ಉಂಟಾಯಿತು ಎಂದರೆ, ಭಗವಂತನ ದರ್ಶನಕ್ಕಾಗಿ ಇನ್ನು ತಡವೇನಿರುವುದಿಲ್ಲ. ಇದು ಅರುಣೋದಯವಾದೊಡನೆಯೇ ಅರ್ಥವಾಗುವುದಿಲ್ಲವೆ ಇನ್ನು ಸೂರ್ಯೋದಯಕ್ಕೆ ತಡವೇನಿಲ್ಲ ಅಂತ, ಹಾಗೆ.”
“ರಾಜಸಿಕ ಭಕ್ತಿ ಯಾರಿಗೆ ಉಂಟಾಗುತ್ತದೆಯೊ, ಆತನಿಗೆ ಇಚ್ಛೆಯುಂಟಾಗುತ್ತದೆ-ಜನ ನೋಡಲಿ ತಾನು ಒಬ್ಬ ಭಕ್ತ ಎಂಬುದನ್ನು ಎಂದು. ಆತ ಷೋಡಶೋಪಚಾರಗಳಿಂದ ಭಗವಂತನ ಪೂಜೆ ಮಾಡುತ್ತಾನೆ. ರೇಶ್ಮೆ ಉಡುಗೆ ಉಟ್ಟು ದೇವಾಲಯಕ್ಕೆ ಹೋಗುತ್ತಾನೆ. ಕೊರಳಿಗೆ ಮಧ್ಯೆ ಮಧ್ಯೆ ಮುತ್ತಿನ ಮತ್ತು ಚಿನ್ನದ ಮಣಿಗಳನ್ನು ಪೋಣಿಸಿರುವ ರುದ್ರಾಕ್ಷಿಮಾಲೆ ಹಾಕಿಕೊಳ್ಳುತ್ತಾನೆ.”
“ತಾಮಸಿಕ ಭಕ್ತಿಯುಳ್ಳ ಮನುಷ್ಯನ ನಡೆ, ನುಡಿ, ವ್ಯವಹಾರ ಡಕಾಯಿತನ ಹಾಗೆ. ಡಕಾಯಿತ ರಾಜರಸ್ತೆಯಲ್ಲೇ ದರೋಡೆ ಮಾಡಿಬಿಡುತ್ತಾನೆ. ಒಂದು ಹತ್ತು ಜನ ಪೋಲೀಸಿನವರು ಬಂದರೂ ಹೆದರುವುದಿಲ್ಲ. ಕೂಗಿಕೊಳ್ಳುತ್ತಾನೆ ‘ಹೊಡಿ! ಬಡಿ! ಸುಲಿ!’ ಅದೇ ರೀತಿ ತಾಮಸಿಕ ಭಕ್ತ ಉನ್ಮತ್ತನ ಹಾಗೆ ಕೂಗಿಕೊಳ್ಳುತ್ತಾನೆ: ‘ಹರ! ಹರ!ಹರ!ವ್ಯೋಮ್!ಜೈ ಕಾಳಿ!’ ಮನಸ್ಸು ಬಹಳ ಶಕ್ತಿಯುತವಾಗಿರುತ್ತದೆ. ಭಗವಂತನಲ್ಲಿ ಉಜ್ವಲ ಶ್ರದ್ಧೆ ಇರುತ್ತದೆ.
“ಶಾಕ್ತನಿಗೆ ಈ ರೀತಿಯ ಶ್ರದ್ಧೆ ಇರುತ್ತದೆ. ಆತ ಹೇಳುತ್ತಾನೆ: ‘ಏನು? ಒಮ್ಮೆ ಕಾಳಿನಾಮ, ದುರ್ಗಾನಾಮ ಪಠಿಸಿದ್ದೇನೆ! ಒಮ್ಮೆ ರಾಮನಾಮ ಪಠಿಸಿದ್ದೇನೆ! ಇನ್ನು ನನ್ನಲ್ಲಿ ಪಾಪ ಅಂದರೆ?’
“ವೈಷ್ಣವರದು ಅತ್ಯಂತ ದೀನ ನಮ್ರ ಭಾವ. (ಬಲರಾಮನ ತಂದೆ ಕಡೆ ನೋಡಿ) ಅವರು ಜಪಮಾಲೆ ತಿರುಗಿಸುತ್ತ ಅಳುತ್ತ ಕರೆಯುತ್ತಾ ಹೇಳುತ್ತಾರೆ: ‘ಹೇ ಕೃಷ್ಣ, ದಯೆ ತೋರು! ನಾವು ಅಧಮರು! ನಾವು ಪಾಪಿಗಳು!’
“ಮನುಷ್ಯ ಅಂಥ ಉಜ್ವಲ ಶ್ರದ್ಧೆಯುಳ್ಳವನಾಗಿರಬೇಕು. ಆತ ಹೇಳುವಂತಾಗಬೇಕು : ‘ಭಗವಂತನ ಹೆಸರು ಪಠಿಸಿದ್ದೇನೆ ನಾನು, ನನ್ನಲ್ಲಿ ಇನ್ನೂ ಪಾಪ ಅಂದರೆ!’ ಇದು ಎಷ್ಟು ಶೋಚನೀಯವಾದ್ದು-ಹಗಲೂ ಇರುಳೂ ಹರಿನಾಮ ಮಾಡುವುದೂ, ಅದೇ ಉಸಿರಿನಲ್ಲಿ ತಾನು ಪಾಪಿ ಎಂತಲೂ ಹೇಳಿಕೊಳ್ಳುವುದು!”
ಹೀಗೆ ಹೇಳುತ್ತ ಹೇಳುತ್ತ ಇದ್ದ ಹಾಗೆ, ಪರಮಹಂಸರು ಪ್ರೇಮೋನ್ಮತ್ತರಾಗಿ ಹಾಡಲಾರಂಭಿಸಿದ್ದಾರೆ:
ನಾ ಪಾಪಿಯಾದರೂ ನನ್ನ ಕಡೆಗಾಲದಲಿ
ನಿನ್ನ ಶ್ರೀನಾಮವನು ಜಪಿಸುತಿರಲು……
ಅವರು ಮತ್ತೆ ಹಾಡುತ್ತಿದ್ದಾರೆ.
ಶಿವಸಂಗದೊಳಾನಂದದಿ ತಾಯಿ ಕುಣಿಯುತಿರುವಳು
ದಿವ್ಯ ಮಧುವ ಕುಡಿದು ಕೂಡ, ಹೆಜ್ಜೆ ತಪ್ಪದಿರುವಳು.
ಶಿವಶಿವೆಯರ ಪದಘಾತಕೆ ನೆಲವೆ ನಡುಗಿದೆ.
ಲಜ್ಜೆಭಯಗಳೆಂಬುವೆಲ್ಲ ಎಲ್ಲೊ ಬಿದ್ದಿವೆ!
ಪಂಡಿತ ಶಶಧರ ಪ್ರೇಮಾಶ್ರು ಸುರಿಸುತ್ತಿದ್ದಾನೆ. ಗಾಯಕ ವೈಷ್ಣವಚರಣ ಈಗ ಹಾಡಲಾರಂಭಿಸಿದ್ದಾನೆ:
ಶ್ರದ್ಧೆಯ ಸರೋವರದಿ ತಾಯನಾಮದ ನೌಕೆ
ತೇಲುತಿದೆ ನೋಡು!…….
ಪರಮಹಂಸರು ಈ ಹಾಡನ್ನು ಕೇಳುತ್ತಿದ್ದ ಹಾಗೆ ಭಾವಾವಿಷ್ಟರಾಗುತ್ತಿದ್ದಾರೆ. ಈಗ ಅವರೇ ಹಾಡುತ್ತಿದ್ದಾರೆ:
ಅಂದು-
ನಂದಗೋಕುಲದಲ್ಲಿ ಗೋಪಾಲನಾದಂದು……
ಈಗ ಪರಮಹಂಸರು ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಪಂಡಿತ ಶಶಧರ ಮತ್ತೆ ಪ್ರೇಮಾಶ್ರು ಸುರಿಸುತ್ತಿದ್ದಾನೆ.
ಪರಮಹಂಸರು ಪ್ರಕೃತಿಸ್ಥರಾಗುತ್ತಿದ್ದಾರೆ. ಶಶಧರನನ್ನು ತೋರಿಸಿ ಮಾಸ್ಟರಿಗೆ ಹೇಳುತ್ತಿದ್ದಾರೆ: “ನೀವು ಏಕೆ ಆತನನ್ನು ಸ್ವಲ್ಪ ಕೆಣಕಬಾರದು?” ಅವರ ಇಚ್ಛೆ, ಮಾಸ್ಟರೇ ಆಗಲಿ, ಅಥವಾ ಬೇರೆ ಭಕ್ತರೇ ಆಗಲಿ, ಶಶಧರನಿಗೆ ಏನಾದರೂ ಪ್ರಶ್ನೆ ಹಾಕಲಿ ಎಂದು.
ರಾಮದಯಾಳು ಶಶಧರನಿಗೆ: “ಬ್ರಹ್ಮನ ರೂಪ ಕೇವಲ ಕಲ್ಪನೆ ಎಂಬುದಾಗಿ ಶಾಸ್ತ್ರ ಹೇಳುತ್ತದೆಯಲ್ಲ, ಆ ಕಲ್ಪನೆಯನ್ನು ಮಾಡಿದವರು ಯಾರು?
ಶಶಧರ: “ಬ್ರಹ್ಮ ತಾನೇ ಅದನ್ನು ಮಾಡುತ್ತಾನೆ-ಮನುಷ್ಯನ ಕಲ್ಪನೆಯಲ್ಲ.”
ಪ್ರತಾಪ: “ಏಕೆ ಅವನು ಹಾಗೆ ಮಾಡುತ್ತಾನೆ?”
ಶ್ರೀರಾಮಕೃಷ್ಣರು: “ಏಕೆ ಅಂತಲೆ? ಆತ ಇತರರೊಡನೆ ಪರಾಮರ್ಶೆ ಮಾಡಿ ಏನನ್ನೂ ಮಾಡುವುದಿಲ್ಲ. ಆತನ ಖುಷಿ; ಆತ ಇಚ್ಛಾಮಯ. ಏಕೆ ಹಾಗೆ ಮಾಡುತ್ತಾನೆ ಎಂಬ ಸಮಾಚಾರ ಕಟ್ಟಿಕೊಂಡು ನಮಗೇನು? ತೋಟಕ್ಕೆ ಬಂದುದು ಮಾವಿನ ಹಣ್ಣು ತಿನ್ನಲು. ತಿನ್ನು ಹಣ್ಣನ್ನು. ತೋಟದಲ್ಲಿ ಮರಗಳೆಷ್ಟಿವೆ, ಎಷ್ಟು ಸಾವಿರ ಕೊಂಬೆಗಳಿವೆ, ಎಷ್ಟು ಲಕ್ಷ ಎಲೆಗಳಿವೆ ಎಂಬೀ ಲೆಕ್ಕಾಚಾರದಿಂದ ನಮಗಾಗುವ ಪ್ರಯೋಜನವೇನು? ವೃಥಾ ತರ್ಕ, ವಿಚಾರ ಇವುಗಳಲ್ಲಿ ತೊಡಗಿದರೆ ವಸ್ತುಲಾಭ ದೊರಕದು.”
ಪ್ರತಾಪ: “ಹಾಗಾದರೆ ಇನ್ನು ವಿಚಾರ ಮಾಡಲೇಕೂಡದು ಅಂತೀರಾ?”
ಶ್ರೀರಾಮಕೃಷ್ಣರು: “ವೃಥಾ ತರ್ಕ, ವಿಚಾರ ಇವನ್ನು ಮಾಡಬೇಡ. ಆದರೆ ಸದಸದ್ವಿಚಾರ ಮಾಡು-ಯಾವುದು ನಿತ್ಯ, ಯಾವುದು ಅನಿತ್ಯ ಎಂಬುದರ ಸಂಬಂಧವಾಗಿ ವಿಚಾರಮಾಡು. ಕಾಮಕ್ರೋಧಗಳಿಂದ ಉದ್ರಿಕ್ತನಾದಾಗ, ಶೋಕಾನ್ವಿತನಾದಾಗ, ಖಂಡಿತ ವಿಚಾರದಲ್ಲಿ ತೊಡಗು.”
ಶಶಧರ: “ಅದು ಬೇರೆ ಸಮಾಚಾರ. ಅದಕ್ಕೆ ವಿವೇಕಾತ್ಮಕ ವಿಚಾರ ಅಂತ ಹೆಸರು.”
ಶ್ರೀರಾಮಕೃಷ್ಣರು: “ಹೌದು, ಸದಸದ್ವಿಚಾರ.”
ಎಲ್ಲರೂ ಮೌನವಾಗಿ ಕುಳಿತಿದ್ದಾರೆ. ಮತ್ತೆ ಪರಮಹಂಸರು ಪಂಡಿತನನ್ನು ಸಂಬೋಧಿಸಿ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಹಿಂದೆ ದೊಡ್ಡವರು ಅಲ್ಲಿಗೆ ಬರುತ್ತಿದ್ದರು.”
ಶಶಧರ: “ಅಂದರೆ ಐಶ್ವರ್ಯವಂತರೇನು?”
ಶ್ರೀರಾಮಕೃಷ್ಣರು: “ಅಲ್ಲ, ದೊಡ್ಡ ದೊಡ್ಡ ಪಂಡಿತರು.”
ಇಷ್ಟರಲ್ಲಿ ಜಗನ್ನಾಥನ ಆ ಪುಟ್ಟ ರಥವನ್ನು ಜಗಲಿ ಮೇಲಕ್ಕೆ ಎಳೆದು ತಂದಿದ್ದಾರೆ. ರಥದೊಳಗೆ ಜಗನ್ನಾಥನ, ಬಲರಾಮನ ಮತ್ತು ಸುಭದ್ರೆಯ ವಿಗ್ರಹಗಳನ್ನಿಟ್ಟು ಅವನ್ನು ನಾನಾ ವಿಧ ಹೂವುಗಳಿಂದ, ಹಾರಗಳಿಂದ ಬಗೆಬಗೆಯ ಆಭರಣಗಳಿಂದ, ಪೀತಾಂಬರ ವಸ್ತ್ರಗಳಿಂದ ಅಲಂಕಾರ ಮಾಡಿದ್ದಾರೆ. ಬಲರಾಮನದು ಸಾತ್ತ್ವಿಕ ಪೂಜೆ, ಯಾವ ಆಡಂಬರವೂ ಇಲ್ಲ. ಹೊರಗಿನವರಿಗೆ ಗೊತ್ತೇ ಇರಲಿಲ್ಲ, ಈತನ ಮನೆಯಲ್ಲಿ ರಥೋತ್ಸವ ಅಂತ. ಈಗ ಪರಮಹಂಸರು ಮತ್ತು ಭಕ್ತರು ರಥದ ಹತ್ತಿರಕ್ಕೆ ಬರುತ್ತಿದ್ದಾರೆ. ಪರಮಹಂಸರು ಆ ರಥದ ಹಗ್ಗ ಹಿಡಿದು ಸ್ವಲ್ಪ ದೂರ ಆ ವರಾಂಡದಲ್ಲಿ ಎಳೆದರು. ಈಗ ಹಾಡಲಾರಂಭಿಸಿದ್ದಾರೆ.
ಗೌರಾಂಗನು ಹುಟ್ಟಿದೂರು
ಅವನ ಪ್ರೇಮ ಹಿಲ್ಲೋಲದಿ
ಸ್ಪಂದಿಸುತಿದೆ ಮೋದದಿ!
ಅವರು ಮತ್ತೆ ಹಾಡುತ್ತಿದ್ದಾರೆ:
ಹರಿನಾಮವನು ನುತಿಸಿ ಆನಂದಬಾಷ್ಪವನು.
ಕರೆವಣ್ಣ ತಮ್ಮದಿರು, ಇವರು ನೋಡು!
ಪರಮಹಂಸರು ಭಕ್ತರೊಡನೆ ನರ್ತಿಸುತ್ತಿದ್ದಾರೆ. ಗಾಯಕ ಮತ್ತು ಆತನ ಮಂಡಳಿಯವರು ಪರಮಹಂಸರೊಡನೆ ನರ್ತಿಸುತ್ತ ಹಾಡಲಾರಂಭಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಇಡೀ ವರಾಂಡ ಜನರಿಂದ ತುಂಬಿಹೋಯಿತು. ಹೆಂಗಸರು ಪಕ್ಕದ ಕೊಠಡಿಯಿಂದ ಈ ಪ್ರೇಮಾನಂದವನ್ನು ನೋಡುತ್ತಿದ್ದಾರೆ. ಶ್ರೀವಾಸನ ಮನೆಯಲ್ಲಿ ಶ್ರೀಗೌರಾಂಗನೇ ಭಕ್ತರೊಡಗೂಡಿ ಹರಿಪ್ರೇಮದಿಂದ ಮತ್ತನಾಗಿ ನರ್ತಿಸುತ್ತಿದ್ದಾನೊ ಏನೊ ಎಂಬಂತೆ ಅನಿಸಿತು.
ಈಗ ಇನ್ನೂ ಸಾಯಂಕಾಲವಾಗಿಲ್ಲ. ಪರಮಹಂಸರು ಬೈಠಕ್ಖಾನೆಗೆ ಹಿಂದಿರುಗಿ ಬಂದು ಭಕ್ತರೊಡನೆ ಕುಳಿತಿಕೊಂಡಿದ್ದಾರೆ.
ಶ್ರೀರಾಮಕೃಷ್ಣರು ಶಶಧರನಿಗೆ: “ಇದಕ್ಕೇ ಭಜನಾನಂದ ಅಂತ ಹೆಸರು. ಸಂಸಾರಿಗಳು ವಿಷಯಾನಂದದಲ್ಲಿ-ಅಂದರೆ ಕಾಮಕಾಂಚನಾನಂದದಲ್ಲಿ ಮಗ್ನರಾಗಿರುತ್ತಾರೆ. ಭಜನೆ ಮಾಡುತ್ತ ಮಾಡುತ್ತ ಯಾವಾಗ ಭಗವಂತನ ಕೃಪೆ ದೊರಕುವುದೊ, ಆಗ ಆತ ತನ್ನ ದರ್ಶನ ಕೊಡುತ್ತಾನೆ-ಆಗ ಬ್ರಹ್ಮಾನಂದ.”
ಶಶಧರ ಮತ್ತು ಭಕ್ತರು ಪರಮಹಂಸರ ಈ ಮಾತುಗಳನ್ನು ಬಾಯಿಬಿಟ್ಟುಕೊಂಡೇ ಕೇಳುತ್ತಿದ್ದಾರೆ.
ಶಶಧರ ವಿನೀತಭಾವದಿಂದ: “ಮಹಾಶಯರೆ, ಯಾವ ರೀತಿಯ ವ್ಯಾಕುಲತೆ ಉಂಟಾದರೆ ಈ ರೀತಿಯ ಆನಂದಾವಸ್ಥೆ ಮನಸ್ಸಿಗೆ ಉಂಟಾಗುತ್ತದೆ?”
ಶ್ರೀರಾಮಕೃಷ್ಣರು: “ಭಗವಂತನ ದರ್ಶನ ಮಾಡಬೇಕೆಂದು ಯಾವಾಗ ಪ್ರಾಣ ಸುಮ್ಮನೆ ಚಟಪಟಗುಟ್ಟುವುದೋ, ಆಗ ಈ ವ್ಯಾಕುಲತೆ ಉಂಟಾಗುತ್ತದೆ. ಒಬ್ಬ ಗುರು ತನ್ನ ಶಿಷ್ಯನಿಗೆ ಹೇಳಿದ: ‘ಬಾ, ನಿನಗೆ ತೋರಿಸಿಕೊಡುತ್ತೇನೆ, ಯಾವ ರೀತಿಯ ವ್ಯಾಕುಲತೆ ಉಂಟಾದರೆ, ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬಹುದು.’ ಹೀಗೆಂದು ಹೇಳಿ ಒಂದು ಕೊಳಕ್ಕೆ ಕರೆದುಕೊಂಡು ಹೋಗಿ, ಶಿಷ್ಯನನ್ನು ನೀರಿನಲ್ಲಿ ಮುಳುಗಿಸಿ ಆತನನ್ನು ನೀರಿನೊಳಗೇ ಅದುಮಿ ಹಿಡಿದುಕೊಂಡ. ಕೆಲವು ಕ್ಷಣಗಳ ನಂತರ ಆತನನ್ನು ಮೇಲಕ್ಕೆ ಎತ್ತಿ ಕೇಳಿದ: ‘ನೀರಿನೊಳಗಿದ್ದಾಗ ನಿನ್ನ ಪ್ರಾಣ ಏನು ಹೇಳುತ್ತಿತ್ತು?’ ಶಿಷ್ಯ ಹೇಳಿದ: ‘ಪ್ರಾಣ ಒಂದು ಗುಟುಕು ಉಸಿರಿಗಾಗಿ ಸುಮ್ಮನೆ ಚಟಪಟಗುಟ್ಟುತ್ತಿತ್ತು.’”
ಶಶಧರ: “ಹೌದು! ಹೌದು! ಹಾಗೆ, ಈಗ ನನಗೆ ಅರ್ಥವಾಗುತ್ತಿದೆ.”
ಶ್ರೀರಾಮಕೃಷ್ಣರು: “ಭಗವಂತನನ್ನು ಪ್ರೀತಿಸುವುದೇ ಅತ್ಯಂತ ಆವಶ್ಯಕವಾಗಿ ಬೇಕಾದ್ದು. ಭಕ್ತಿಯೇ ಸಾರ. ನಾರದ ರಾಮನನ್ನು ಪ್ರಾರ್ಥಿಸಿಕೊಂಡ: ‘ಹೇ ರಾಮಚಂದ್ರ, ನಿನ್ನ ಪಾದಪದ್ಮಗಳಲ್ಲಿ ನನಗೆ ಸತತ ಶುದ್ಧಭಕ್ತಿ ಉಂಟಾಗುವಂತೆಯೂ, ನಿನ್ನ ಭುವನಮೋಹಿನೀ ಮಾಯೆಯಿಂದ ನಾನು ಮುಗ್ಧನಾಗದೆ ಇರುವಂತೆಯೂ ಕರುಣಿಸು.’ ರಾಮಚಂದ್ರ ಹೇಳಿದ: ‘ಇನ್ನೂ ಬೇರೆ ಯಾವುದಾದರೂ ವರ ಕೇಳಿಕೊ.’ ನಾರದ ಹೇಳಿದ: ‘ನನಗಿನ್ನೇನೂ ಬೇಕಾಗಿಲ್ಲ. ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧಭಕ್ತಿ ಉಂಟಾಗುವಂತೆ ಕೃಪೆಮಾಡು, ಇದೊಂದೇ ನನ್ನ ಪ್ರಾರ್ಥನೆ.’”
ಪಂಡಿತ ಶಶಧರ ಇನ್ನೇನು ಹೊರಡುವುದರಲ್ಲಿದ್ದಾನೆ. ಪರಮಹಂಸರು ಆತನಿಗಾಗೊಂದು ಗಾಡಿಯನ್ನು ತೆಗೆದುಕೊಂಡು ಬರುವಂತೆ ಹೇಳುತ್ತಿದ್ದಾರೆ.
ಶಶಧರ : “ದಯವಿಟ್ಟು ಬೇಡಿ. ಸುಮ್ಮನೆ ನಡೆದುಕೊಂಡು ಹೋಗಿಬಿಡುತ್ತೇನೆ.”
ಶ್ರೀರಾಮಕೃಷ್ಣರು ನಗುತ್ತ: “ಎಲ್ಲಾದರೂ ಉಂಟೇ! ‘ನೀನು ಬ್ರಹ್ಮನ ಧ್ಯಾನಕ್ಕೂ ನಿಲುಕದವನು.’”
ಶಶಧರ: “ಈಗ ಹೋಗಬೇಕಾದ ಆವಶ್ಯಕತೆಯೇನಿರಲಿಲ್ಲ. ಆದರೆ ಸಂಧ್ಯಾವಂದನೆ ಮಾಡಬೇಕಾಗಿದೆ.”
ಶ್ರೀರಾಮಕೃಷ್ಣರು: “ಭಗವತಿ ನನ್ನ ಸಂಧ್ಯಾದಿ ಕರ್ಮಗಳನ್ನೆಲ್ಲ ನಿಲ್ಲಿಸಿಬಿಟ್ಟಿದ್ದಾಳೆ. ಸಂಧ್ಯಾದಿಗಳನ್ನು ಮಾಡುವುದು ಮನಸ್ಸನ್ನು ಶುದ್ಧಪಡಿಸಲಿಕ್ಕೆ. ಆ ಅವಸ್ಥೆಯಲ್ಲಿ ಈಗ ನಾನಿಲ್ಲ.”
ಪರಮಹಂಸರು ಈಗ ಒಂದು ಹಾಡಿನ ಈ ಕೆಲ ಚರಣಗಳನ್ನು ಹಾಡಲಾರಂಭಿಸಿದ್ದಾರೆ:
ಶುಚಿ ಅಶುಚಿಯನೊಂದಾಗಿಸಿ ನೀನೆಂದಿಗೆ
ದಿವ್ಯಧಾಮದಲಿ ಮಲಗುವೆಯೋ,
ಈ ಇಬ್ಬರು ಹೆಂಡಿರ ನೀನೆಂದೊಟ್ಟಿಗೆ
ತೃಪ್ತಿಯೊಳಾಳಲು ಕಲಿಯುವೆಯೋ
ಆ ಅಂದೇ ಶ್ರೀಶ್ಯಾಮೆಯ ದರುಶನವೋ!…..
ಪಂಡಿತ ಶಶಧರ ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡ.
ರಾಮ: “ನಾನು ನಿನ್ನೆ ಹೋಗಿ ಶಶಧರನನ್ನು ಸಂಧಿಸಿ ಬಂದೆ. ನೀವು ಹಾಗೆ ಹೇಳಿದ್ದಿರಲ್ಲ.”
ಶ್ರೀರಾಮಕೃಷ್ಣರು: “ಹೇಳಿದ್ದೆನೇನು? ಜ್ಞಾಪಕದಲ್ಲಿಲ್ಲ, ಆದರೆ ನೀನು ಅಲ್ಲಿಗೆ ಹೋಗಿದ್ದುದು ಬಹಳ ಒಳ್ಳೆಯದೆ.”
ರಾಮ: “ ‘ಇಂಡಿಯನ್ ಎಂಪೈರ್’ ಎಂಬ ಪತ್ರಿಕೆಯ ಸಂಪಾದಕ ನಿಮ್ಮನ್ನು ನಿಂದಿಸುತ್ತಿದ್ದ.”
ಶ್ರೀರಾಮಕೃಷ್ಣರು: “ನಿಂದಿಸಿದರೆ ನಿಂದಿಸಿಕೊಳ್ಳಲಿ. ಅದರಿಂದ ಆಗುವುದೇನು?”
ರಾಮ: “ಆಮೇಲೆ ಏನಾಯಿತು ಎಂಬುದನ್ನು ಸ್ವಲ್ಪ ಕೇಳಿ. ನಿಮ್ಮ ವಿಷಯವನ್ನು ನಾನು ಆತನಿಗೆ ತಿಳಿಸಿದ ನಂತರ ನನ್ನನ್ನು ಬಿಟ್ಟುಕೊಡಲೇ ಆತನಿಗೆ ಮನಸ್ಸಾಗಲಿಲ್ಲ. ನಿಮ್ಮ ವಿಷಯವಾಗಿ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕು ಅಂತ ಆತ ಅತ್ಯಂತ ಕಾತರನಾಗಿಬಿಟ್ಟ.”
ಮುಸ್ಸಂಜೆಯಾಗಿದೆ. ಪರಮಹಂಸರು ಜಗನ್ಮಾತೆಯ ನಾಮ ಪಠಿಸುತ್ತಿದ್ದಾರೆ-ರಾಮನಾಮ, ಕೃಷ್ಣನಾಮ, ಹರಿನಾಮ ಪಠಿಸುತ್ತಿದ್ದಾರೆ. ಭಕ್ತರು ನಿಶ್ಶಬ್ದರಾಗಿ ಕುಳಿತು ಕೇಳುತ್ತಿದ್ದಾರೆ. ಅವರ ನಾಮಸಂಕೀರ್ತನೆ ಅಷ್ಟು ಸವಿಯಾಗಿದೆ, ಮಧುವರ್ಷಣೆಯೇ ಆಗುತ್ತಿದೆಯೋ ಏನೋ ಎಂಬಂತೆ ತೋರುತ್ತಿದೆ. ಇಂದು ಬಲರಾಮನ ಮನೆ ನವದ್ವೀಪನೇ ಆಗಿಬಿಟ್ಟಿದೆಯೋ ಏನೋ ಎಂಬಂತಿದೆ. ಜಗಲಿ ನವದ್ವೀಪದಂತಿದೆ, ಬೈಠಕ್ಖಾನೆ ವೃಂದಾವನದಂತಿದೆ.
ಇಂದಿನ ರಾತ್ರಿಯೇ ಪರಮಹಂಸರು ದಕ್ಷಿಣೇಶ್ವರಕ್ಕೆ ಹೋಗಬೇಕಾಗಿದೆ. ಬಲರಾಮ ಅವರನ್ನು ಮನೆಯ ಒಳಕ್ಕೆ ಕರೆದುಕೊಂಡು ಹೋಗುತ್ತಿದ್ದಾನೆ-ಉಪಾಹಾರ ಮಾಡಿಸಲು. ಈ ಸುಯೋಗ ಉಪಯೋಗಿಸಿಕೊಂಡು ಭಕ್ತೆಯರು ಅವರಿಗೆ ಪ್ರಣಾಮಮಾಡುತ್ತಿದ್ದಾರೆ.
ಭಕ್ತರು ಬೈಠಕ್ಖಾನೆಯಲ್ಲಿ ಸಂಕೀರ್ತನೆ ಮಾಡುತ್ತ ಪರಮಹಂಸರ ಹಿಂದಿರುಗುವಿಕೆಗಾಗಿ ಕಾಯುತ್ತಿದ್ದಾರೆ. ಪರಮಹಂಸರು ಈಗ ಹಿಂದಿರುಗಿ ಬಂದು ಭಕ್ತರೊಡನೆ ಸೇರಿಕೊಂಡು ಹಾಡುತ್ತಿದ್ದಾರೆ:
ಕೀರ್ತನೆ ಮುಂದುವರಿಯುತ್ತಿದೆ:
ಶ್ರೀವಾಸನ ಸಖ ಗೌರಾಂಗನು ಅದೊ
ನರ್ತಿಸುವನು ಅಲ್ಲಿ,
ಭಕ್ತವೃಂದವೂ ಮಗ್ನವಾಗಿಹುದು
ಹರಿನಾಮದ ಸುಧೆಯಲ್ಲಿ,
ನರ್ತಿಪ ಗೌರಾಂಗನ ಬಂಗಾರದ ಮೈ ನಾಂದಿದೆ
ಆನಂದದ ಕಣ್ಣೀರಿನಲ್ಲಿ!
ಶ್ರೀರಾಮಕೃಷ್ಣರು ಆಶುಕವಿತೆ ಮಾಡುತ್ತಿದ್ದಾರೆ:
ಹರಿಕೀರ್ತನೆಯಲ್ಲಿ
ಶಚಿ ನಂದನ ಗೌರಾಂಗ
ಮಮಪ್ರಾಣಪ್ರಿಯ ಗೌರಾಂಗ!
1. ‘ಕ’ ಎಂಬ ಅಕ್ಷರ ಪ್ರಹ್ಲಾದನಿಗೆ ಕೃಷ್ಣನ ಜ್ಞಾಪಕವನ್ನು ತಂದುಬಿಡುತ್ತಿತ್ತು.
2. ಒಡೆದ ಹಾಲಿನ ಗಟ್ಟಿಭಾಗ ಚಾಣಾ ಅಥವಾ ಪನ್ನೀರ್. ಇದನ್ನು ಸಕ್ಕರೆ ಪಾಕದಲ್ಲಿ ಬೇಯಿಸಿದರೆ ರಸಗುಲ್ಲ ಆಗುತ್ತದೆ.
3. ಮೈಕೇಲ ಮಧುಸೂಧನದತ್ತ ಒಬ್ಬ ವಕೀಲ. ಬಂಗಾಳಿಯ ಮಹಾಕವಿಗಳಲ್ಲಿ ಒಬ್ಬ. ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದ.