೨೫ನೆ ಜೂನ್ ೧೮೮೪, ಆಷಾಢ ಶುಕ್ಲ ದ್ವಿತೀಯ, ಬುಧವಾರ
ಇಂದು ಪೂರಿಯಲ್ಲಿ ಜಾತ್ರೆ. ಈಶಾನನ ಆಹ್ವಾನಕ್ಕನುಸಾರ ಪರಮಹಂಸರು ಕಲ್ಕತ್ತದಲ್ಲಿರುವ ಆತನ ಮನೆಗೆ ಬೆಳಗ್ಗೆ ಹೊತ್ತಿಗೆ ಮುಂಚೆಯೇ ಬಂದುಬಿಟ್ಟಿದ್ದಾರೆ. ಅವರಿಗೆ ಪಂಡಿತ ಶಶಧರ ತರ್ಕಚೂಡಾಮಣಿಯನ್ನು ನೋಡಬೇಕು ಎಂಬ ಇಚ್ಛೆ ಬಹಳ ದಿನದಿಂದ ಇತ್ತು. ಆತ ಈಶಾನನ ಮನೆಯ ಹತ್ತಿರದಲ್ಲೇ ಒಂದು ಮನೆಯಲ್ಲಿ ಇಳಿದುಕೊಂಡಿದ್ದಾನೆ ಎಂಬುದನ್ನು ಕೇಳಿ ಅಲ್ಲಿಗೆ ಅಪರಾಹ್ನ ಹೋಗಲು ನಿರ್ಧರಿಸಿದ್ದಾರೆ.
ಪರಮಹಂಸರೊಡನೆ ಹಾಜರಾ ಮತ್ತು ಇನ್ನೂ ಕೆಲವು ಮಂದಿ ಭಕ್ತರು ಬಂದಿದ್ದಾರೆ. ಈಶಾನ ಒಬ್ಬಿಬ್ಬರು ಬ್ರಾಹ್ಮಣ ಪಂಡಿತನನ್ನು ಮತ್ತು ಒಬ್ಬ ತಾಂತ್ರಿಕ ಭಕ್ತನನ್ನು ಆಹ್ವಾನಿಸಿದ್ದಾನೆ. ಈಶಾನನ ಮಕ್ಕಳು ಶ್ರೀಶನೇ ಮೊದಲಾದವರು ಕುಳಿತಿದ್ದಾರೆ.
ಆ ತಾಂತ್ರಿಕ ಭಕ್ತ ಹಣೆಗೆ ಕುಂಕುಮ ಇಟ್ಟುಕೊಂಡಿರುವುದು ಪರಮಹಂಸರ ಕಣ್ಣಿಗೆ ಬಿತ್ತು. ಅವರು ನಗುತ್ತ ಹೇಳುತ್ತಿದ್ದಾರೆ: “ಓಹೋ, ಈತನಿಗೆ ಬರೆ ಬಿದ್ದಿದೆ!”
ಈಗ ಮಾಸ್ಟರ್ ಮತ್ತು ನರೇಂದ್ರ ಕೊಠಡಿಗೆ ಬಂದು ಪರಮಹಂಸರಿಗೆ ಪ್ರಣಾಮ ಮಾಡುತ್ತಿದ್ದಾರೆ. ತಾವು ಈಶಾನನ ಮನೆಗೆ ಇಂದು ಹೋಗುವುದಾಗಿ ಮೊದಲೇ ಪರಮಹಂಸರು ಮಾಸ್ಟರಿಗೆ ತಿಳಿಸಿದ್ದರು.
ಊಟಕ್ಕೆ ಬಡಿಸುವುದು ಹೊತ್ತಾದುದರಿಂದ ಪರಮಹಂಸರು ತಮಾಷೆ ಮಾಡಲಾರಂಭಿಸಿದ್ದಾರೆ. ಹಸಿವು ಎಂಬತಕ್ಕದ್ದು ಎಷ್ಟು ಬಲಯುತವಾದ್ದು ಎಂಬುದರ ಸಂಬಂಧವಾಗಿ ಒಬ್ಬ ಪಂಡಿತ ಒಂದು ಸಂಸ್ಕೃತ ಶ್ಲೋಕವನ್ನು ಹೇಳುತ್ತಿದ್ದಾನೆ. ಅದನ್ನು ವ್ಯಾಖ್ಯಾನ ಮಾಡುತ್ತ ಆತ ಹೇಳುತ್ತಿದ್ದಾನೆ: “ದರ್ಶನಾದಿ ಶಾಸ್ತ್ರಗಳಿಗಿಂತ ಕಾವ್ಯ ಮನೋಹರವಾದ್ದು. ಕಾವ್ಯಪಠನೆಯಾಗುವಾಗ ಜನರಿಗೆ ಅನಿಸುತ್ತದೆ, ವೇದಾಂತ, ಸಾಂಖ್ಯ, ನ್ಯಾಯ, ಪಾತಂಜಲ ಈ ದರ್ಶನಗಳೆಲ್ಲ ಶುಷ್ಕ ಎಂಬುದಾಗಿ. ಕಾವ್ಯಕ್ಕಿಂತ ಸಂಗೀತ ಮನೋಹರವಾದ್ದು. ಸಂಗೀತ ಕಲ್ಲಿನಂಥ ಹೃದಯಗಳನ್ನೂ ಕರಗಿಸಿಬಿಡುತ್ತದೆ. ಆದರೆ ಸುಂದರಿ ಸಂಗೀತಕ್ಕಿಂತಲೂ ಹೆಚ್ಚು ಆಕರ್ಷಕವಾದ ವಸ್ತು. ಆಕೆ ಏನಾದರೂ ಹತ್ತಿರ ಸುಳಿದಳು ಎಂದರೆ ಕಾವ್ಯ, ಸಂಗೀತ ಎರಡೂ ಒಂದು ಮೂಲೆಗೆ ಬಿದ್ದುಕೊಳ್ಳುತ್ತವೆ. ಇಡೀ ಮನಸ್ಸು ಆ ಯುವತಿಯ ಕಡೆಗೆ ಹರಿದುಹೋಗಿಬಿಡುತ್ತದೆ. ಆದರೆ ಯಾವಾಗ ಹಸಿವಾಗುವುದೊ, ಜಠರಾಗ್ನಿ ಪ್ರಜ್ವಲಿಸುವುದೊ, ಆಗ ಕಾವ್ಯ, ಸಂಗೀತ, ಯುವತಿ, ಯಾವುವೂ ರುಚಿಸವು. ಅನ್ನಚಿಂತೆ ಚಮತ್ಕಾರವಾದ್ದು!”
ಪರಮಹಂಸರು ನಗುತ್ತ ಹೇಳುತ್ತಿದ್ದಾರೆ: “ಈ ಪಂಡಿತ ಒಳ್ಳೆ ರಸಿಕ.”
ಈಗ ನರೇಂದ್ರ ಹಾಡಲಾರಂಭಿಸಿದ್ದಾನೆ. ಸ್ವಲ್ಪ ಹೊತ್ತು ಹಾಡನ್ನು ಕೇಳಿ, ಪರಮಹಂಸರು ಮೇಲ್ಮಹಡಿಗೆ ವಿಶ್ರಮಿಸಿಕೊಳ್ಳಲು ಹೋಗುತ್ತಿದ್ದಾರೆ. ಮಾಸ್ಟರ್ ಮತ್ತು ಶ್ರೀಶ ಅವರನ್ನು ಹಿಂಬಾಲಿಸುತ್ತಿದ್ದಾರೆ. ಪರಮಹಂಸರಿಗೆ ಶ್ರೀಶನ ಪರಿಚಯ ಮಾಡಿಕೊಡುತ್ತ ಮಾಸ್ಟರ್ ಹೇಳುತ್ತಿದ್ದಾನೆ: “ಈತ ಒಬ್ಬ ಪಂಡಿತ, ಈತನದು ಅತಿಶಯವಾದ ಶಾಂತಪ್ರಕೃತಿ. ಬಾಲ್ಯದಲ್ಲಿ ನಾವಿಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದೆವು. ಈಗ ಈತ ವಕೀಲನಾಗಿದ್ದಾನೆ.”
ಶ್ರೀರಾಮಕೃಷ್ಣರು: “ಇಂಥ ಒಳ್ಳೆ ಸ್ವಭಾವಿ ವಕೀಲನಾಗುವುದೆ!”
ಮಾಸ್ಟರ್: “ಹೌದು, ಈತ ಆ ಮಾರ್ಗ ಹಿಡಿದುದು ತಪ್ಪಾಯಿತು.”
ಶ್ರೀರಾಮಕೃಷ್ಣರು: “ನನಗೆ ಕೆಲವು ಮಂದಿ ವಕೀಲರು ಗೊತ್ತಿದ್ದಾರೆ. ಅವರಲ್ಲಿ ಒಬ್ಬ ನನಗೆ ಬಹಳವಾಗಿ ಗೌರವ ತೋರಿಸುತ್ತಾನೆ. ಆತ ಸರಳ ಸ್ವಭಾವಿ. (ಶ್ರೀಶನಿಗೆ) ಭಗವಂತನ ವಿಷಯವಾಗಿ ನಿನ್ನ ಅಭಿಪ್ರಾಯವೇನು?”
ಶ್ರೀಶ: “ಭಗವಂತನೆಂಬುವನೊಬ್ಬ ಇದ್ದಾನೆ. ಆತನೇ ಎಲ್ಲವನ್ನೂ ಮಾಡುತ್ತಾನೆ. ಆದರೆ ನಾವು ಆತನಿಗೆ ಆರೋಪಿಸುವ ಗುಣಗಳು ಮಾತ್ರ ಸರಿಯಾದವುಗಳಲ್ಲ. ಭಗವಂತ ಏನೇನು ಎಂಬುದನ್ನು ಮನುಷ್ಯ ಅರಿಯಬಲ್ಲನೆ? ಆತ ಅನಂತ.”
ಶ್ರೀರಾಮಕೃಷ್ಣರು: “ತೋಟದಲ್ಲಿ ಎಷ್ಟು ಮರಗಳಿವೆ, ಎಷ್ಟು ಕೊಂಬೆಗಳಿವೆ ಎಂಬುದರ ಲೆಕ್ಕಾಚಾರ ನಿನಗೇಕೆ ಬೇಕು? ನೀನು ತೋಟಕ್ಕೆ ಬಂದದ್ದು ಮಾವಿನ ಹಣ್ಣು ತಿನ್ನುವುದಕ್ಕೆ. ತಿಂದು ಆನಂದಪಡು. ಭಗವಂತನಲ್ಲಿ ಭಕ್ತಿ, ಪ್ರೇಮಗಳನ್ನು ಗಳಿಸಿಕೊಳ್ಳುವುದೇ ಮಾನವ ಜನ್ಮದ ಉದ್ದೇಶ. ಅವನ್ನು ಪಡೆದುಕೊಂಡು ಆನಂದದಿಂದಿರು.
“ನೀನು ಬಂದದು ಮದ್ಯ ಕುಡಿಯುವುದಕ್ಕೆ. ಮದ್ಯದ ಅಂಗಡಿಯಲ್ಲಿ ಎಷ್ಟು ಪೀಪಾಯಿ ಮದ್ಯ ಇದೆ ಎಂಬುದನ್ನು ತಿಳಿದುಕೊಳ್ಳುವುದರಿಂದ ನಿನಗಾಗುವ ಪ್ರಯೋಜನವೇನು? ನಿನಗೆ ಒಂದು ಲೋಟವೇ ಸಾಕು. ಭಗವಂತನ ಅನಂತ ಗುಣಗಳ ಸಂಬಂಧವಾಗಿ ಅರಿತುಕೊಳ್ಳುವುದರ ಆವಶ್ಯಕತೆ ತಾನೇ ಏನಿದೆ? ಆತನ ಗುಣ ಏನೇನು ಎಂಬುದನ್ನು ಅರಿತುಕೊಳ್ಳಲು ಒಂದು ಕೋಟಿ ವರ್ಷ ಪ್ರಯತ್ನಪಟ್ಟರೂ ಒಂದು ಕಿಂಚಿತ್ತನ್ನೂ ಅರಿತುಕೊಳ್ಳಲಾಗುವುದಿಲ್ಲ.”
ಪರಮಹಂಸರು ಈಗ ಸುಮ್ಮನೆ ಕುಳಿತಿದ್ದಾರೆ. ಒಬ್ಬ ಬ್ರಾಹ್ಮಣ ಪಂಡಿತ ಕೊಠಡಿಯನ್ನು ಪ್ರವೇಶಿಸುತ್ತಿದ್ದಾನೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಸಂಸಾರದಲ್ಲಿ ಏನೆಂದರೆ ಏನೂ ಇಲ್ಲ. ಈಶಾನನ ಮನೆಯವರೆಲ್ಲರೂ ಒಳ್ಳೆಯವರೇ; ಆದ್ದರಿಂದ ಮನೆಯಲ್ಲಿ ಶಾಂತಿ. ಅದು ಹಾಗಿಲ್ಲದೆ, ಮಕ್ಕಳು ವಿಷಯಲಂಪಟರಾಗಿಯೂ, ಗಾಂಜಾಖೋರರಾಗಿಯೂ, ಕುಡುಕರಾಗಿಯೂ, ಅವಿಧೇಯರಾಗಿಯೂ, ಇನ್ನೂ ಅನೇಕ ದುರ್ಗಣಗಳಿಂದ ಕೂಡಿದವರಾಗಿಯೂ ಇದ್ದಿದ್ದರೆ, ಆಗ ಈತನ ದುಃಖದುರಿತಗಳಿಗೆ ಕೊನೆಯೇ ಇರುತ್ತಿರಲಿಲ್ಲ. ಈತನ ಮನೆಯವರೆಲ್ಲರಿಗೂ ಭಗವಂತನ ಕಡೆಗೇ ಮನಸ್ಸು. ಇವರದು ವಿದ್ಯಾಸಂಸಾರ. ಈ ವಿಧದ ಸಂಸಾರ ಬಹಳ ವಿರಳ. ಎಲ್ಲೋ ಎರಡು ಮೂರು ಮನೆಗಳಲ್ಲಿ ಮಾತ್ರ ನೋಡಿದ್ದೇನೆ. ಸಾಮಾನ್ಯವಾಗಿ ಸಂಸಾರಿಗಳ ಮನೆಯಲ್ಲಿ ಕೇವಲ ಜಗಳ, ಮನಸ್ತಾಪ, ದ್ವೇಷ, ಹೊಟ್ಟೆಕಿಚ್ಚು ಇವನ್ನೇ ನೋಡಬಹುದು. ಸಾಲದುದಕ್ಕೆ ರೋಗ, ಶೋಕ, ದಾರಿದ್ರ್ಯವೂ ಇರುತ್ತವೆ. ಇವನ್ನೆಲ್ಲಾ ಕಣ್ಣಿಂದ ನೋಡಿ ಭಗವತಿಗೆ ಪ್ರಾರ್ಥನೆ ಮಾಡಿದೆ: ‘ಹೇ ತಾಯೆ, ನನ್ನ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಿಬಿಡು,’
“ನರೇಂದ್ರನ ತಾಪತ್ರಯದ ಕಡೆ ನೋಡು. ತಂದೆ ಸತ್ತುಹೋಗಿದ್ದಾನೆ. ಮನೆಯಲ್ಲಿ ತಿನ್ನುವುದಕ್ಕೆ ಏನೂ ಇಲ್ಲ. ಕೆಲಸಕಾರ್ಯಗಳಿಗಾಗಿ ತುಂಬಾ ಪ್ರಯತ್ನ ಮಾಡುತ್ತಿದ್ದಾನೆ. ಯಾವುದೂ ಸಿಕ್ಕುತ್ತಿಲ್ಲ. ಆತನ ಮನಸ್ಸು ಎಂಥ ಅವ್ಯವಸ್ಥಿತ ಸ್ಥಿತಿಯಲ್ಲಿದೆ ನೋಡು!”
(ಮಾಸ್ಟರಿಗೆ) “ನೀನು ಹಿಂದೆ ಅಡಿಗಡಿಗೆ ದಕ್ಷಿಣೇಶ್ವರಕ್ಕೆ ಬರುತ್ತಿದ್ದೆ. ಈಗ ನೀನು ಅಪರೂಪಕ್ಕೆ ಒಮ್ಮೆ ಬರುತ್ತಿದ್ದೀಯಲ್ಲ ಏಕೆ? ಬಹುಶಃ ನಿನಗೆ ನಿನ್ನ ಹೆಂಡತಿಯ ಮೇಲೆ ವಿಶೇಷ ರೀತಿಯ ಪ್ರೀತಿ ಉಂಟಾಗಿಬಿಟ್ಟಿರಬೇಕು. ನಿನ್ನನ್ನು ಅದಕ್ಕೇಕೆ ದೂಷಿಸಲಿ? ಯಾವ ದಿಕ್ಕಿಗೆ ನೋಡಿದರೂ ಕಾಮಕಾಂಚನಗಳ ಪ್ರಭಾವವೇ. ಇದಕ್ಕಾಗಿಯೇ ನಾನು ಪ್ರಾರ್ಥನೆ ಮಾಡುತ್ತಿರುವುದು: ‘ಹೇ ತಾಯೆ, ಮುಂದೆ ಎಂದಾದರೂ ನಾನು ಹುಟ್ಟಬೇಕಾಗಿ ಬಂದರೆ, ನನ್ನನ್ನು ಎಂದಿಗೂ ಸಂಸಾರಿಯನ್ನಾಗಿ ಮಾಡಬೇಡ.’”
ಬ್ರಾಹ್ಮಣ ಪಂಡಿತ: “ನೀವು ಹಾಗೇಕೆ ಪ್ರಾರ್ಥಿಸಬೇಕು? ಗೃಹಸ್ಥಜೀವನವನ್ನು ಶಾಸ್ತ್ರ ಬಹಳವಾಗಿ ಹೊಗಳಿದೆ.”
ಶ್ರೀರಾಮಕೃಷ್ಣರು: “ಹೌದು, ಅದೇನೋ ನಿಜ. ಆದರೆ ಬಹಳ ಕಠಿಣ. (ಮಾಸ್ಟರಿಗೆ) ನಾವೆಂಥ ತಪ್ಪು ಮಾಡಿಬಿಟ್ಟೆವು! ಅವರೆಲ್ಲ ಹಾಡುತ್ತಿದ್ದಾರೆ-ವಿಶೇಷತಃ ನರೇಂದ್ರ. ನಾವೆಲ್ಲರೂ ಕೊಠಡಿಯನ್ನು ಬಿಟ್ಟು ಬಂದುಬಿಟ್ಟೆವಲ್ಲ!”
ಈಗ ಘಂಟೆ ಅಪರಾಹ್ನ ನಾಲ್ಕು. ಪರಮಹಂಸರು ಗಾಡಿಯಲ್ಲಿ ಕುಳಿತು ಪಂಡಿತ ಶಶಧರ ಇಳಿದುಕೊಂಡಿದ್ದ ಮನೆಗೆ ಹೋಗುತ್ತಿದ್ದಾರೆ. ಗಾಡಿಯನ್ನು ಹತ್ತುವುದೇ ತಡ, ಸಮಾಧಿಸ್ಥರಾಗಿಬಿಟ್ಟರು. ಅವರು ಬಹಳ ಕಾಲ ಸಾಧನೆಯನ್ನು ಮಾಡಿದ್ದರಿಂದಲೂ, ಸತತ ಭಾವಾವಿಷ್ಟರಾಗಿಯೇ ಇರುವುದರಿಂದಲೂ ಅವರ ಶರೀರ ಬಹಳ ಕೋಮಲವಾಗಿ ಬಿಟ್ಟಿದೆ. ಅದು ಸಾಮಾನ್ಯ ಶ್ರಮವನ್ನೂ ಸಹಿಸಿಕೊಳ್ಳಲಾರದ ಸ್ಥಿತಿಗಿಳಿದುಬಿಟ್ಟಿದೆ. ಗಾಡಿಯಿಲ್ಲದೆ ಸ್ವಲ್ಪ ದೂರವನ್ನೂ ಅವರ ಕೈಯಲ್ಲಿ ನಡೆಯಲಾಗುತ್ತಿಲ್ಲ.
ಈಗ ಮಳೆಗಾಲ. ಸೋನೆಮಳೆ ರಸ್ತೆಯನ್ನು ಕೆಸರುಮಾಡಿಬಿಟ್ಟಿದೆ. ಆಕಾಶದಲ್ಲಿ ಮೇಘ ಕಟ್ಟಿದೆ. ಭಕ್ತರು ಕಾಲುನಡಿಗೆಯಲ್ಲಿ ಗಾಡಿಯನ್ನು ಹಿಂಬಾಲಿಸುತ್ತಿದ್ದಾರೆ. ಗಾಡಿ ಆ ಮನೆಯ ಹತ್ತಿರಕ್ಕೆ ಬಂದ ಒಡನೆಯೆ, ಮನೆಯ ಯಜಮಾನ ಮತ್ತು ಅವನ ಮನೆಯವರೆಲ್ಲರೂ ಪರಮಹಂಸರನ್ನು ಎದುರುಗೊಂಡು ಅವರನ್ನು ಈಗ ಮಹಡಿಯಲ್ಲಿರುವ ಬೈಠಕ್ಖಾನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಪರಮಹಂಸರು ಬೈಠಕ್ಖಾನೆಯನ್ನು ಮುಟ್ಟುವುದೇ ತಡ, ಪಂಡಿತ ಶಶಧರ ಮುಂದೆ ಬಂದು ಅವರನ್ನು ಆದರದಿಂದ ಕೊಠಡಿಗೆ ಬರಮಾಡಿಕೊಂಡ. ಈಗ ಅವರಿಗೆ ಶ್ರದ್ಧಾಭಕ್ತಿಗಳಿಂದ ಸಾಷ್ಟಾಂಗ ಪ್ರಣಾಮಮಾಡಿ ಅವರನ್ನು ಒಂದು ಕಡೆ ಕೂರಿಸುತ್ತಿದ್ದಾನೆ. ನರೇಂದ್ರ, ರಾಖಾಲ, ರಾಮ, ಮಾಸ್ಟರ್, ಹಾಜರಾ ಇವರೇ ಮೊದಲಾದ ಭಕ್ತರು ಒಬ್ಬೊಬ್ಬರಾಗಿ ಕೊಠಡಿಯೊಳಗೆ ಬಂದು ಪರಮಹಂಸರ ಮಾತುಕತೆಗಳನ್ನೆಲ್ಲಾ ಒಂದನ್ನೂ ತಪ್ಪದೆ ಕೇಳಲೋಸುಗ ಆದಷ್ಟು ಮಟ್ಟಿಗೆ ಅವರ ಹತ್ತಿರ ಸರಿದು ಕುಳಿತುಕೊಳ್ಳುತ್ತಿದ್ದಾರೆ.
ಪಂಡಿತ ಶಶಧರ ಯೌವನಾವಸ್ಥೆಯನ್ನು ಕಳೆದು ಪ್ರೌಢಾವಸ್ಥೆಗೆ ಕಾಲಿಟ್ಟಿದ್ದಾನೆ. ಆತನ ಮೈ ಹೊಂಬಣ್ಣ. ಕೊರಳಿಗೆ ರುದ್ರಾಕ್ಷಿಮಾಲೆ ಹಾಕಿಕೊಂಡಿದ್ದಾನೆ.
ಪಂಡಿತನನ್ನು ನೋಡಿದೊಡನೆಯೇ ಶ್ರೀರಾಮಕೃಷ್ಣರು ಸಮಾಧಿಸ್ಥರಾಗಿಬಿಟ್ಟರು. ಈಗ ಸ್ವಲ್ಪ ಬಾಹ್ಯಪ್ರಜ್ಞೆಯನ್ನು ಹೊಂದಿ ನಗುಮುಖದಿಂದ ಆತನನ್ನು ದಿಟ್ಟಿಸಿ ನೋಡುತ್ತ ನೋಡುತ್ತ ಹೇಳುತ್ತಿದ್ದಾರೆ: “ಭೇಷ್! ಭೇಷ್!” ಸ್ವಲ್ಪ ಸುಮ್ಮನೆ ಕುಳಿತಿದ್ದು ಮತ್ತೆ ಹೇಳುತ್ತಿದ್ದಾರೆ: “ಒಳ್ಳೇದು, ನೀನು ಯಾವುದರ ಸಂಬಂಧವಾಗಿ ಉಪನ್ಯಾಸ ಕೊಡುತ್ತಿದ್ದೀಯೆ?”
ಶಶಧರ: “ಮಹಾಶಯರೆ, ನಾನು ಶಾಸ್ತ್ರಗಳ ಸಂಬಂಧವಾಗಿ ತಿಳಿಸಲು ಪ್ರಯತ್ನ ಮಾಡುತ್ತಿದ್ದೇನೆ.”
ಶ್ರೀರಾಮಕೃಷ್ಣರು: “ಕಲಿಯುಗಕ್ಕೆ ನಾರದೀಯ ಭಕ್ತಿ. ಶಾಸ್ತ್ರಗಳಲ್ಲಿ ಕರ್ಮಗಳ ವಿಷಯವಾಗಿ ಹೇಳಿದೆಯಲ್ಲ, ಅವನ್ನು ಮಾಡಲು ಸಮಯವೆಲ್ಲಿ? ಈಗಿನ ಕಾಲದ ಜ್ವರಕ್ಕೆ ದಶಮೂಲಿಕೆಗಳ ಕಷಾಯ ಸರಿಹೋಗದು. ಆ ಕಷಾಯದಿಂದ ರೋಗಿಯನ್ನು ಗುಣಪಡಿಸಲು ಪ್ರಯತ್ನಪಟ್ಟರೆ ಆತ ಬದುಕುವುದೇ ಕಷ್ಟವಾಗಿಬಿಡುತ್ತದೆ. ಈಗಿನ ಕಾಲಕ್ಕೆ ‘ಫೀವರ್ ಮಿಕ್ಚರ್.’ ಕರ್ಮಮಾಡುವಂತೆ ಹೇಳಬೇಕಾಗಿದ್ದರೆ, ಅಮುಖ್ಯ ಭಾಗವನ್ನು ಬೇರ್ಪಡಿಸಿ, ಮುಖ್ಯವಾದುದರ ಸಂಬಂಧವಾಗಿ ಮಾತ್ರ ತಿಳಿಸಬೇಕು, ನಾನು ಜನರಿಗೆ ಹೇಳುತ್ತೇನೆ: ‘ನೀವು ಸಂಧ್ಯಾವಂದನೆಯನ್ನು “ಅಪವಿತ್ರಃ ಪವಿತ್ರೋ ವಾ” ದಿಂದ ಹಿಡಿದು “ಅಹಂಭೋ ಅಭಿವಾದಯೇ” ಎನ್ನುವವರೆಗೂ ಮಾಡಬೇಕಾದ ಆವಶ್ಯಕತೆಯೇನಿಲ್ಲ. ನೀವು ಗಾಯತ್ರಿಯನ್ನು ಜಪಿಸಿದರೇ ಸಾಕು.’ ಕರ್ಮದ ವಿಷಯವಾಗಿ ಸಾಂಗವಾಗಿ ತಿಳಿಸಬೇಕಾಗಿದ್ದರೆ, ಈಶಾನನಂಥ ಒಬ್ಬಿಬ್ಬರು ವ್ಯಕ್ತಿಗಳಿಗೆ ಮಾತ್ರ ತಿಳಿಸು.
“ನೀನು ಸಹಸ್ರ ಉಪನ್ಯಾಸಗಳನ್ನು ಬೇಕಾದರೂ ಕೊಡು, ಪ್ರಾಪಂಚಿಕರನ್ನು ಒಂದು ಕಿಂಚಿತ್ತೂ ಬದಲಾಯಿಸಲಾರೆ. ಕಲ್ಲಿನ ಗೋಡೆಗೆ ಮೊಳೆ ಹೊಡೆಯಲಾಗುವುದೇ? ಮೊಳೆ ಮೊಂಡಾಗಿ ಹೋಗುವುದೇ ವಿನಾ ಗೋಡೆಗೆ ಏನೂ ಆಗದು. ಕತ್ತಿಯ ಏಟುಕೊಟ್ಟರೆ ಮೊಸಳೆಗೆ ಏನಾದರೂ ಗಾಯ ಆಗುವುದೆ? ಸಾಧುವಿನ ಕಮಂಡಲು-ಸೋರೆಕಾಯಿನದು -ನಾಲ್ಕು ಧಾಮಗಳಿಗೂ ಹೋಗಿಬರುತ್ತದೆ. ಆದರೂ ಅದು ಹಿಂದೆ ಹೇಗೆ ಕಹಿಯಾಗಿತ್ತೊ ಹಾಗೇ ಇರುತ್ತದೆ. ನಿನ್ನ ಉಪನ್ಯಾಸ ಪ್ರಾಪಂಚಿಕರಿಗೆ ಹೆಚ್ಚಾಗೇನೂ ಉಪಕಾರ ಮಾಡುತ್ತಿಲ್ಲ. ಕ್ರಮೇಣ ಇದು ನಿನಗೆ ಗೊತ್ತಾಗುತ್ತದೆ. ಕರು ಒಮ್ಮೆಗೇ ಎದ್ದು ನಿಂತುಕೊಳ್ಳಲಾರದು. ಆಗಾಗ ಕೆಳಕ್ಕೆ ಬೀಳುತ್ತದೆ, ಮತ್ತೆ ಏಳುತ್ತದೆ. ಅದು ಹಾಗೆ ಮಾಡಿಯೇ ತಾನು ಎದ್ದು ನಿಲ್ಲಲು ಮತ್ತು ನಡೆಯಲು ಕಲಿತುಕೊಳ್ಳುತ್ತದೆ.
“ಯಾರು ಭಕ್ತ, ಯಾರು ಪ್ರಾಪಂಚಿಕ ಎಂಬುದು ನಿನಗೆ ಗೊತ್ತಾಗುತ್ತಿಲ್ಲ. ಅದು ನಿನ್ನ ತಪ್ಪೇನಲ್ಲ. ಬಿರುಗಾಳಿ ಆರಂಭವಾದ ಪ್ರಥಮದಲ್ಲಿ ಯಾವುದು ಹುಣಸೆ ಮರ, ಯಾವುದು ಮಾವಿನ ಮರ ಎಂಬುದನ್ನು ಗುರುತುಹಿಡಿಯಲಾಗುವುದಿಲ್ಲ.
“ಭಗವಂತನ ಸಾಕ್ಷಾತ್ಕಾರ ಆಗದವರೆಗೆ ಯಾರೂ ಒಮ್ಮೆಗೇ ಕರ್ಮಗಳನ್ನು ತ್ಯಜಿಸಲು ಸಾಧ್ಯವಾಗುವುದಿಲ್ಲ. ಸಂಧ್ಯಾದಿ ಕರ್ಮಗಳನ್ನು ಎಲ್ಲಿಯವರೆಗೆ ಮಾಡಬೇಕಾಗುತ್ತದೆ? ಭಗವಂತನ ಹೆಸರನ್ನು ಕೇಳಿದೊಡನೆಯೇ ಎಲ್ಲಿಯವರೆಗೆ ಪ್ರೇಮಾಶ್ರು ಸುರಿಯುವುದಿಲ್ಲವೊ, ರೋಮಾಂಚನ ಆಗುವುದಿಲ್ಲವೊ ಅಲ್ಲಿಯವರೆಗೆ. ಒಮ್ಮೆ “ಓಂ, ರಾಮ!’ ಎಂದು ಹೇಳಿದೊಡನೆಯೇ ಪ್ರೇಮಾಶ್ರು ಸುರಿಯಲಾರಂಭಿಸಿದರೆ, ಖಂಡಿತವಾಗಿ ತಿಳಿದುಕೊ, ನಿನ್ನ ಕರ್ಮ ಮುಗಿದುಹೋಯಿತು ಎಂದು. ಬಳಿಕ ಸಂಧ್ಯಾದಿ ಕರ್ಮಗಳನ್ನು ಮಾಡಬೇಕಾಗಿರುವುದಿಲ್ಲ.
“ಕಾಯಿ ಆದೊಡನೆಯೇ ಹೂವು ಉದುರಿಹೋಗುತ್ತದೆ. ಭಕ್ತಿಯೇ ಕಾಯಿ, ಕರ್ಮವೇ ಹೂವು. ಸೊಸೆ ಗರ್ಭಿಣಿಯಾದರೆ ಆಕೆ ಹೆಚ್ಚಾಗಿ ಕೆಲಸ ಮಾಡಲಾರಳು. ಅತ್ತೆ ಆಕೆಯ ಕೆಲಸವನ್ನು ದಿನದಿನಕ್ಕೂ ಕಡಮೆ ಮಾಡಿಕೊಡುತ್ತಾಳೆ. ಒಂಬತ್ತು ತಿಂಗಳು ತುಂಬಿತ್ತು ಎಂದರೆ ಆಕೆಯನ್ನು ಯಾವ ಕೆಲಸ ಮಾಡಲು ಬಿಟ್ಟುಕೊಡುವುದಿಲ್ಲ. ಮಗು ಹುಟ್ಟಿದ ನಂತರ ಅದನ್ನು ಎತ್ತಿಕೊಂಡು ಆಡಿಸುವುದೇ ಆಕೆಯ ಕೆಲಸ. ಬೇರೆ ಯಾವ ಕೆಲಸವನ್ನೂ ಮಾಡಬೇಕಾಗಿರುವುದಿಲ್ಲ. ಸಂಧ್ಯೆ ಗಾಯತ್ರಿಯಲ್ಲಿಯೂ, ಗಾಯತ್ರಿ ಪ್ರಣವದಲ್ಲಿಯೂ, ಪ್ರಣವ ಸಮಾಧಿಯಲ್ಲಿಯೂ ಲಯಹೊಂದುತ್ತದೆ. ಇದು ಘಂಟೆಯ ಶಬ್ದ ಹಾಗೆ: ಟ-ಅ-ಮ್. ಯೋಗಿಯು ನಾದಬ್ರಹ್ಮನನ್ನು ಅನುಸರಿಸಿ ಪರಬ್ರಹ್ಮನಲ್ಲಿ ಲಯವಾಗುತ್ತಾನೆ. ಸಮಾಧಿಯಲ್ಲಿ ಆತನ ಸಂಧ್ಯಾದಿ ಕರ್ಮಗಳು ಲಯವಾಗಿಬಿಡುತ್ತವೆ. ಈ ರೀತಿಯಾಗಿ ಜ್ಞಾನಿಗಳ ಕರ್ಮ ಕೊನೆಗಾಣುತ್ತವೆ.”
ಪರಮಹಂಸರು ಸಮಾಧಿಯ ಸಂಬಂಧವಾಗಿ ಮಾತನಾಡುತ್ತ ಮಾತನಾಡುತ್ತ ತಾವೇ ಆ ಸ್ಥಿತಿಗೆ ಹೋಗಿಬಿಟ್ಟರು. ಅವರ ಮುಖ ಸ್ವರ್ಗಸದೃಶ ಜ್ಯೋತಿಯನ್ನು ಚೆಲ್ಲಲಾರಂಭಿಸಿತು. ಬಾಹ್ಯಜ್ಞಾನಶೂನ್ಯರಾಗಿಬಿಟ್ಟಿದ್ದಾರೆ. ಬಾಯಿಂದ ಒಂದು ಮಾತೂ ಹೊರಡುತ್ತಿಲ್ಲ. ಕಣ್ಣು ಸ್ಥಿರವಾಗಿಬಿಟ್ಟಿದೆ. ಆತ್ಮೈಕ್ಯರಾಗಿಬಿಟ್ಟಿದ್ದಾರೆ. ಬಹಳ ಹೊತ್ತು ಆ ಅವಸ್ಥೆಯಲ್ಲಿಯೇ ಇದ್ದ ನಂತರ ಈಗ ಪ್ರಕೃತಿಸ್ಥರಾಗುತ್ತ ಬಾಲಕನ ಹಾಗೆ ಹೇಳುತ್ತಿದ್ದಾರೆ: “ನೀರು ಕುಡಿಯಬೇಕು.” ಸಮಾಧಿಯನ್ನು ಹೊಂದಿದ ನಂತರ ಯಾವಾಗ ಅವರು ನೀರು ಕುಡಿಯಲಿಚ್ಛಿಸುತ್ತಿದ್ದರೊ, ಆಗ ಭಕ್ತರಿಗೆ ತಿಳಿದುಬರುತ್ತಿತ್ತು, ಇನ್ನು ಕ್ರಮೇಣ ಅವರು ಪ್ರಕೃತಿಸ್ಥರಾಗುವರು ಎಂದು.
ಪರಮಹಂಸರು ಇನ್ನೂ ಭಾವಸ್ಥರಾಗಿಯೇ ಹೇಳುತ್ತಿದ್ದಾರೆ: “ಹೇ ತಾಯೆ, ಅಂದು ನೀನು ನನಗೆ ಈಶ್ವರಚಂದ್ರ ವಿದ್ಯಾಸಾಗರನನ್ನು ಸಂಧಿಸುವಂತೆ ಮಾಡಿದೆ. ಆಗ ಮತ್ತೆ ನಾನು ನಿನ್ನನ್ನು ಕೇಳಿಕೊಂಡಿದ್ದೆ, ಇನ್ನೊಬ್ಬ ಪಂಡಿತನನ್ನು ಸಂಧಿಸುವಂತೆ ಏರ್ಪಾಡು ಮಾಡು ಎಂದು. ಅದಕ್ಕಾಗಿಯೇ ನೀನು ಈಗ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೀಯೆ.”
ಪಂಡಿತ ಶಶಧರನ ಕಡೆಗೆ ನೋಡಿ ಹೇಳುತ್ತಿದ್ದಾರೆ: “ಏನಯ್ಯ! ನೀನು ಇನ್ನೂ ಸ್ವಲ್ಪ ಬಲಾಢ್ಯನಾಗು. ಇನ್ನೂ ಸ್ವಲ್ಪ ಕಾಲ ಸಾಧನೆ ಭಜನೆ ಮಾಡು. ನೀನು ಮರದ ಬುಡಕ್ಕೆ ಕಾಲು ಹಾಕುವುದೇ ತಡ, ಆಗಲೇ ಹಣ್ಣಿನ ಗೊಂಚಲ ಕಡೆ ಕೈ ನೀಡುತ್ತಿರುವೆಯಲ್ಲ! ಆದರೆ ನೀನು ಜನರ ಶ್ರೇಯಸ್ಸಿಗಾಗಿ ಇವನ್ನೆಲ್ಲಾ ಮಾಡುತ್ತಿದ್ದೀಯೆ.” ಹೀಗೆಂದು ಹೇಳಿ ತಮ್ಮ ತಲೆಯನ್ನು ತಗ್ಗಿಸಿ ಶಶಧರನಿಗೆ ನಮಸ್ಕಾರ ಮಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಮತ್ತೆ ಹೇಳುತ್ತಿದ್ದಾರೆ: “ಮೊದಲು ನಿನ್ನ ವಿಷಯವಾಗಿ ಕೇಳಿದಾಗ ವಿಚಾರಿಸಿದೆ, ನೀನು ಒಬ್ಬ ಬರೀ ಪಂಡಿತನೊ ಅಥವಾ ವಿವೇಕ ವೈರಾಗ್ಯವೂ ಇರುವುವೊ ಎಂದು. ಸದಸತ್ ವಿವೇಕವಿಲ್ಲದವ ಪಂಡಿತನೇ ಅಲ್ಲ.
“ಭಗವಂತನಿಂದ ಆದೇಶ ದೊರೆತಿದ್ದರೆ, ಆಗ ಲೋಕಶಿಕ್ಷಣ ತಪ್ಪಿನ ಕಾರ್ಯವೇನಲ್ಲ. ಆದೇಶ ಪಡೆದು ಲೋಕಶಿಕ್ಷಣ ಮಾಡಿದರೆ, ಆತನನ್ನು ಯಾರೂ ಸೋಲಿಸಲಾರರು. ವಾಗ್ದೇವಿಯ ಒಂದು ಕಿರಣ ಮಾತ್ರ ಬಿದ್ದುದೇ ಆದರೆ, ವ್ಯಕ್ತಿಗೆ ಅಂಥ ಶಕ್ತಿ ಬಂದು ಬಿಡುತ್ತದೆ. ಆತನೆದುರು ದೊಡ್ಡ ದೊಡ್ಡ ಪಂಡಿತರೆಲ್ಲ ಎರೆಹುಳುವಿನಂತಾಗಿಬಿಡುತ್ತಾರೆ.
“ದೀಪ ಉರಿಯುತ್ತಿದ್ದರೆ ದೀಪದ ಚಿಟ್ಟೆ ಗುಂಪುಗುಂಪಾಗಿ ತಾವೇ ಬರುತ್ತವೆ-ಆಹ್ವಾನವೀಯಬೇಕಾಗಿರುವುದಿಲ್ಲ. ಅದೇ ರೀತಿ ಯಾರಿಗೆ ಆದೇಶ ದೊರೆತಿದೆಯೋ ಆತ ಜನರನ್ನು ಕರೆಯಬೇಕಾಗಿರುವುದಿಲ್ಲ. ಇಂಥ ಸಮಯದಲ್ಲಿ ಉಪನ್ಯಾಸ ಎಂದು ಪ್ರಕಟಣೆ ಹೊರಡಿಸಬೇಕಾಗಿರುವುದಿಲ್ಲ. ಆತನಲ್ಲಿ ಅಂಥ ಅತಿಮಾನುಷ ಆಕರ್ಷಕ ಶಕ್ತಿ. ಜನರು ತಾವುತಾವಾಗಿಯೇ ಬಂದು ಆತನನ್ನು ಮುತ್ತುತ್ತಾರೆ. ಆಗ ರಾಜಮಹಾರಾಜರೂ, ಬಾಬುಗಳೂ ಎಲ್ಲರೂ ಗುಂಪುಗುಂಪಾಗಿ ಬರಲಾರಂಭಿಸುತ್ತಾರೆ. ಬಂದು ಕೇಳಲಾರಂಭಿಸುತ್ತಾರೆ: ‘ತಾವು ಏನನ್ನು ಸ್ವೀಕರಿಸಲು ಸಾಧ್ಯ? ಮಾವಿನಹಣ್ಣು, ಸಂದೇಶ, ಹಣ, ಶಾಲು ಇವನ್ನೆಲ್ಲಾ ತಂದಿದ್ದೇವೆ. ತಾವು ಯಾವುದನ್ನು ಕೃಪೆಯಿಟ್ಟು ಸ್ವೀಕರಿಸಬಲ್ಲಿರಿ?’ ನಾನು ಅಂಥವರಿಗೆಲ್ಲ ಹೇಳುತ್ತೇನೆ: ‘ದಯವಿಟ್ಟು ನೀವು ಇಲ್ಲಿಂದ ಹೊರಡಿ. ನನಗೆ ಅವು ಯಾವುವೂ ಬೇಕಾಗಿಲ್ಲ. ನನಗೇನೂ ಬೇಕಾಗಿಲ್ಲ.’
“ಸೂಜಿಗಲ್ಲು ಕಬ್ಬಿಣಕ್ಕೆ ಹೇಳುವುದೆ: ‘ನನ್ನ ಹತ್ತಿರಕ್ಕೆ ಬಾ’ ಎಂದು? ಅದು ಹಾಗೇನೂ ಮಾಡಬೇಕಾಗಿಲ್ಲ. ಕಬ್ಬಿಣ ತಾನಾಗಿಯೇ ಸೂಜಿಗಲ್ಲಿನ ಆಕರ್ಷಣದಿಂದ ಅದರ ಕಡೆ ಹಾರಿ ಬರುತ್ತದೆ.
“ಈ ವಿಧದ ವ್ಯಕ್ತಿ ಪಂಡಿತನಾಗಿಲ್ಲದಿರಬಹುದು. ಹಾಗೆಂದು ಭಾವಿಸಿಕೊಳ್ಳಬೇಡ, ಆತನಿಗೆ ಜ್ಞಾನಾಭಾವವಿರದು ಎಂಬುದಾಗಿ. ಪುಸ್ತಕ ಓದಿ ಜ್ಞಾನಿಯಾಗಲು ಸಾಧ್ಯವೇ? ಯಾರಿಗೆ ಭಗವಂತನಿಂದ ಆದೇಶ ದೊರೆತಿದೆಯೋ ಆತನಿಗೆ ಜ್ಞಾನಾಭಾವವಿರದು. ಆ ಜ್ಞಾನ ಭಗವಂತನಿಂದ ಬರುತ್ತದೆ-ಎಂದಿಗೂ ಬರಿದಾಗದು. ಕಾಮಾರಪುಕುರಿನಲ್ಲಿ ಧಾನ್ಯ ಅಳೆಯುವಾಗ ಒಬ್ಬ ಅಳೆಯುತ್ತಾ ಇರುತ್ತಾನೆ. ಇನ್ನೊಬ್ಬ ರಾಶಿಯನ್ನು ತಳ್ಳಿಕೊಡುತ್ತಾ ಇರುತ್ತಾನೆ. ಅದೇ ರೀತಿ ಯಾರಿಗೆ ಆದೇಶ ದೊರೆಯುತ್ತದೆಯೋ ಆತ ಎಷ್ಟೇ ಲೋಕ ಶಿಕ್ಷಣವನ್ನು ಮಾಡುತ್ತಿದ್ದರೂ, ಭಗವತಿ ಹಿಂದಿನಿಂದ ಜ್ಞಾನರಾಶಿಯನ್ನು ತಳ್ಳಿಕೊಡುತ್ತಲೇ ಇರುತ್ತಾಳೆ. ಆ ಜ್ಞಾನ ಎಂದಿಗೂ ಮುಗಿದುಹೋಗದು.
“ಭಗವತಿಯ ಕಟಾಕ್ಷ ಒಮ್ಮೆ ದೊರೆತುದೇ ಆದರೆ, ಬಳಿಕ ಜ್ಞಾನಾಭಾವವಿರುವುದೆ? ಇದಕ್ಕಾಗಿಯೇ ನಿನ್ನನ್ನು ಕೇಳುತ್ತಿದ್ದೇನೆ, ನಿನಗೇನಾದರೂ ಆದೇಶ ದೊರೆತಿದೆಯೇ ಎಂದು?”
ಹಾಜರಾ: “ಹೌದು. ಖಂಡಿತವಾಗಿಯೂ ದೊರೆತಿರಬೇಕು. (ಶಶಧರನಿಗೆ) ಏನು ಮಹಾಶಯರೆ, ನಾನು ಹೇಳುವುದು ಸರಿ ತಾನೆ?”
ಶಶಧರ: “ಆದೇಶವೇ? ಇಲ್ಲ. ಅಂಥದೇನೂ ದೊರೆತಿಲ್ಲ.”
ಮನೆಯ ಯಜಮಾನ: “ಆದೇಶ ದೊರೆತಿಲ್ಲವೇನೋ ನಿಜ. ಆದರೆ ಕರ್ತವ್ಯ ದೃಷ್ಟಿಯಿಂದ ಉಪನ್ಯಾಸ ಕೊಡುತ್ತಿದ್ದಾನೆ.”
ಶ್ರೀರಾಮಕೃಷ್ಣರು: “ಯಾರಿಗೆ ಆದೇಶ ದೊರೆತಿಲ್ಲವೋ ಆತನ ಉಪದೇಶದಿಂದ ಏನು ಉಪಕಾರ ಆದೀತು? ಒಮ್ಮೆ ಒಬ್ಬ ಬ್ರಾಹ್ಮಭಕ್ತ ಉಪನ್ಯಾಸ ಕೊಡುತ್ತ ಕೊಡುತ್ತ ಹೇಳಲಾರಂಭಿಸಿದ: ‘ಸೋದರ ಸೋದರಿಯರಿರಾ, ನಾನು ಎಷ್ಟು ಮದ್ಯ ಕುಡಿಯುತ್ತಿದ್ದೆ !’ ಇತ್ಯಾದಿ. ಇದನ್ನು ಕೇಳಿ ಸಭಿಕರು ತಮ್ಮೊಳಗೆ ತಾವೇ ಮಾತಾಡಿಕೊಳ್ಳಲಾರಂಭಿಸಿದರು: ‘ಅಯೋಗ್ಯ! ಏನು ಹೇಳುತ್ತಿದ್ದಾನೆ ನೋಡಿ? ಮದ್ಯ ಕುಡಿಯುತ್ತಿದ್ದನಂತೆ!’ ಆತನ ಈ ಮಾತು ಆತನಿಗೆ ಖಂಡನೆಯನ್ನು ತಂದುಕೊಟ್ಟವು. ಇದು ಎತ್ತಿ ತೋರಿಸುತ್ತದೆ, ಮನುಷ್ಯ ಸತ್ಪುರುಷನಾಗಿಲ್ಲದಿದ್ದರೆ, ಆತನ ಉಪನ್ಯಾಸ ಯಾವ ಉಪಯೋಗಕ್ಕೂ ಬಾರದು ಎಂಬುದನ್ನು.
“ಬರಿಶಾಲದ ಒಬ್ಬ ನ್ಯಾಯಾಧೀಶ ಒಮ್ಮೆ ನನಗೆ ಹೇಳಿದ: ‘ಮಹಾಶಯರೆ, ನೀವು ಪ್ರಚಾರ ಮಾಡಲು ಆರಂಭಿಸಿಬಿಡಿ. ನಾನು ಸೊಂಟಕಟ್ಟಿ ನಿಲ್ಲುತ್ತೇನೆ.’ ನಾನು ಆತನಿಗೆ ತಿಳಿಸಿದೆ, ಜನ ಹೇಗೆ ಹಲಧಾರಪುಕುರಿನ ಕೆರೆ ಏರಿಯನ್ನು ಕುಲಗೆಡಿಸುತ್ತಿದ್ದರು, ಕೊನೆಗೆ ಹೇಗೆ ಅದು ಸರಕಾರದ ಆಜ್ಞೆಯನ್ನು ಹೊತ್ತು ಜವಾನನ ಎಚ್ಚರಿಕೆಯ ಚೀಟಿಯಿಂದ ನಿಂತು ಹೋಯಿತು ಎಂಬುದರ ವಿಷಯವಾಗಿ.
“ಇದಕ್ಕಾಗಿಯೇ ನಾನು ಹೇಳುವುದು, ಕೆಲಸಕ್ಕೆ ಬಾರದವರೆಲ್ಲಾ ಉಪನ್ಯಾಸ ಕೊಟ್ಟರೆ, ಅದು ಯಾವ ಪ್ರಯೋಜನಕ್ಕೂ ಬಾರದು ಎಂದು. ಭಗವಂತನಿಂದ ಬಂದ ಲಾಂಛನ ಹತ್ತಿರ ಇದ್ದರೆ ತಾನೆ ಹೇಳಿದ ಹಾಗೆ ಕೇಳುತ್ತಾರೆ. ಆತನಿಂದ ಆದೇಶವನ್ನು ಪಡೆದುಕೊಳ್ಳದಿದ್ದರೆ ಲೋಕಶಿಕ್ಷಣ ಸಾಧ್ಯವಾಗದು. ಲೋಕಶಿಕ್ಷಣ ಮಾಡತಕ್ಕವನಿಗೆ ದೊಡ್ಡ ಶಕ್ತಿ ಬೇಕು. ಕಲ್ಕತ್ತದಲ್ಲಿ ಅನೇಕ ಹನುಮಾನ್ ಪುರಿಗಳಿದ್ದಾರೆ-ಅವರೊಡನೆ ನೀನು ಕುಸ್ತಿಯಾಡಬೇಕಾಗಿದೆ. (ಅಲ್ಲಿ ನೆರೆದಿದ್ದ ಜನರನ್ನು ತೋರಿಸಿ) ಇವರೆಲ್ಲ ಆಡು-ಕುರಿಗಳು!
“ಚೈತನ್ಯದೇವ ಒಬ್ಬ ಅವತಾರಪುರುಷ. ಆತ ಏನುಮಾಡಿ ಹೋದನೋ, ಅದರಲ್ಲಿ ಈಗ ಏನು ತಾನೆ ಉಳಿದುಕೊಂಡಿದೆ ಹೇಳು ನೋಡೋಣ? ಅಂಥಾದ್ದರಲ್ಲಿ ಯಾರಿಗೆ ಆದೇಶವೇ ದೊರೆತಿಲ್ಲವೋ ಆತನ ಉಪನ್ಯಾಸಗಳಿಂದ ಯಾವ ಉಪಕಾರ ತಾನೆ ಆದೀತು?
“ಇದಕ್ಕಾಗಿಯೇ ನಾನು ಹೇಳುವುದು. ಭಗವಂತನ ಪಾದಪದ್ಮಗಳಲ್ಲಿ ಮಗ್ನನಾಗು ಎಂದು.”
ಹೀಗೆಂದು ಹೇಳಿ ಪರಮಹಂಸರು ಪ್ರೇಮೋನ್ಮತ್ತರಾಗಿ ಹಾಡುತ್ತಿದ್ದಾರೆ:
ಮುಳುಗು ಮುಳುಗು ಮನವೇ-
ಹಿರಿಯೊಲವಿನ ಕಡಲಾಳಕೆ…..
ಶ್ರೀರಾಮಕೃಷ್ಣರು ಮಾತು ಮುಂದುವರೆಸುತ್ತ ಹೇಳುತ್ತಿದ್ದಾರೆ: “ಈ ಸಾಗರದಲ್ಲಿ ಮುಳುಗಿದರೆ ಸಾವು ಉಂಟಾಗುವುದಿಲ್ಲ. ಇದು ಅಮೃತಸಾಗರ. ಒಮ್ಮೆ ನಾನು ನರೇಂದ್ರನಿಗೆ ಹೇಳಿದೆ: ‘ಭಗವಂತ ಆನಂದಸಾಗರ. ನೀನು ಆ ಸಮುದ್ರದಲ್ಲಿ ಮುಳುಗುಹಾಕುತ್ತೀಯೊ ಇಲ್ಲವೊ ಹೇಳು ನೋಡೋಣ. ಒಳ್ಳೇದು, ಭಾವಿಸಿಕೊ, ಇಲ್ಲೊಂದು ಬಟ್ಟಲು ಪಾನಕ ಇದೆ, ನೀನು ಒಂದು ನೊಣ ಆಗಿದ್ದೀಯೆ ಅಂತ. ಎಲ್ಲಿ ಕುಳಿತು ಪಾನಕ ಕುಡಿಯುತ್ತೀಯೆ ಹೇಳು ನೋಡೋಣ?’ ನರೇಂದ್ರ ಹೇಳಿದ: ‘ಬಟ್ಟಲ ಅಂಚಿನಲ್ಲಿ ಕುಳಿತು ಕತ್ತನ್ನು ಚಾಚಿ ಕುಡಿಯುತ್ತೇನೆ; ಹಾಗೆ ಮಾಡದೆ ಇನ್ನೂ ಒಳಕ್ಕೆ ಹೋದರೆ, ನಿಸ್ಸಂದೇಹವಾಗಿ ಮುಳುಗಿಹೋಗಿ ಬಿಡುತ್ತೇನೆ.’ ಆಗ ನಾನು ಹೇಳಿದೆ: ‘ಆದರೆ ನೋಡು, ಮಗು, ಇದು ಸಚ್ಚಿದಾನಂದ ಸಾಗರ. ಇದರಲ್ಲಿ ಮರಣದ ಭಯ ಎಂಬತಕ್ಕದ್ದೇ ಇಲ್ಲ. ಅದು ಅಮೃತಸಾಗರ. ಅಜ್ಞಾನಿಗಳು ಮಾತ್ರವೇ ಹೇಳುತ್ತಾರೆ, ಭಕ್ತಿ ಪ್ರೇಮಗಳನ್ನು ಅತಿಯಾಗಿ ಹೆಚ್ಚಿಸಿಕೊಳ್ಳಬಾರದು ಎಂದು ಭಗವಂತನ ಪ್ರೇಮದಲ್ಲಿ “ಅತಿ” ಎಂಬುದು ಉಂಟೆ?’
(ಶಶಧರನಿಗೆ) “ಇದಕ್ಕಾಗಿಯೇ ನಾನು ನಿನಗೆ ಹೇಳುವುದು, ಸಚ್ಚಿದಾನಂದ ಸಾಗರದಲ್ಲಿ ಮುಳುಗು ಎಂದು. ಭಗವಂತನ ಸಾಕ್ಷಾತ್ಕಾರ ದೊರೆತುಬಿಟ್ಟಿದ್ದೇ ಆದರೆ, ಇನ್ನು ಯೋಚನೆ ಏಕೆ? ಆಗ ಆದೇಶವೂ ದೊರೆಯುತ್ತದೆ. ಲೋಕಶಿಕ್ಷಣವೂ ಆಗುತ್ತದೆ.
“ಅಮೃತಸಾಗರಕ್ಕೆ ಅನೇಕ ಮಾರ್ಗ. ಯಾವ ರೀತಿಯಿಂದಲಾದರೂ ಸರಿಯೆ, ಆ ಸಾಗರಕ್ಕೆ ಹೋಗಿ ಬೀಳುವುದೇ ಬೇಕಾಗಿರುವುದು. ಭಾವಿಸಿಕೊ, ಇಲ್ಲೊಂದು ಅಮೃತಕುಂಡ ಇದೆ ಎಂದು. ಯಾವ ರೀತಿಯಲ್ಲಾದರೂ ಸರಿಯೆ ಅಮೃತ ಒಂದು ಕಿಂಚಿತ್ ಬಾಯಿಗೆ ಬೀಳುವುದೇ ತಡ, ಅಮರನಾಗಿಬಿಡುತ್ತೀಯೆ, “ಅದರೊಳಕ್ಕೆ ನೀನೇ ನೆಗೆದಾದರೂ ಬೀಳು, ಅಥವಾ ಹಂತ ಹಂತವಾಗಿ ಇಳಿದು ಹೋಗಿಯಾದರೂ ಕುಡಿ, ಅಥವಾ ಯಾರಾದರೂ ನಿನ್ನನ್ನು ತಳ್ಳಿ ಅದರೊಳಕ್ಕೆ ಬೀಳಿಸಿಬಿಟ್ಟರೂ ಸರಿಯೆ ಫಲ ಮಾತ್ರ ಒಂದೇ. ಅಮೃತವನ್ನು ಕಿಂಚಿತ್ ಸವಿದರೆ ಅಮರನಾಗಿಬಿಡುತ್ತೀಯೆ.
“ಭಗವಂತನ ಸಾಕ್ಷಾತ್ಕಾರಕ್ಕೆ ಅನಂತ ಮಾರ್ಗ. ಅವುಗಳಲ್ಲಿ ಜ್ಞಾನ, ಭಕ್ತಿ, ಕರ್ಮ ಮಾರ್ಗಗಳಿವೆ. ಯಾವ ಮಾರ್ಗವನ್ನಾದರೂ ಅನುಸರಿಸು. ನಿಜವಾದ ಆಕಾಂಕ್ಷೆ ಇದ್ದರೆ, ಭಗವಂತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ಸ್ಥೂಲವಾಗಿ ಹೇಳುವುದಾದರೆ, ಯೋಗಗಳಲ್ಲಿ ಮೂರು ವಿಧ-ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ.
“ಜ್ಞಾನಯೋಗ-ಜ್ಞಾನಿ ಬ್ರಹ್ಮಜ್ಞಾನ ಪಡೆದುಕೊಳ್ಳಲು ಹಾತೊರೆಯುತ್ತಾನೆ. ‘ನೇತಿ ನೇತಿ’, ‘ಇದಲ್ಲ, ಇದಲ್ಲ’ ಎಂಬ ವಿಚಾರದಲ್ಲಿ ತೊಡಗುತ್ತಾನೆ. ಸದಸದ್ವಿಚಾರದಲ್ಲಿ ತೊಡಗುತ್ತಾನೆ. ವಿಚಾರದ ಅಂತ್ಯವನ್ನು ಮುಟ್ಟಿದೊಡನೆಯೇ ಸಮಾಧಿಯುಂಟಾಗಿಬಿಡುತ್ತದೆ; ಬ್ರಹ್ಮಜ್ಞಾನ ದೊರೆತುಬಿಡುತ್ತದೆ.
“ಕರ್ಮಯೋಗ-ಕರ್ಮದ ಮೂಲಕ ಭಗವಂತನಲ್ಲಿ ಮನಸ್ಸನ್ನಿಡುವುದು. ನೀನು ಶಿಕ್ಷಣ ಕೊಡುತ್ತಿದ್ದೀಯಲ್ಲ ಅದೇ. ಅನಾಸಕ್ತಿಯಿಂದ ಪ್ರಾಣಾಯಾಮ, ಧ್ಯಾನ ಧಾರಣಾದಿಗಳನ್ನು ಮಾಡಿದರೆ, ಅದು ಕರ್ಮಯೋಗವಾಗಿಬಿಡುತ್ತದೆ. ಸಂಸಾರಿ ಅನಾಸಕ್ತನಾಗಿ ಭಗವಂತನಿಗೆ ಫಲ ಸಮರ್ಪಣೆಮಾಡಿ, ಆತನಲ್ಲಿ ಭಕ್ತಿಯಿಟ್ಟು ಸಾಂಸಾರಿಕ ಕರ್ಮಗಳನ್ನು ಮಾಡಿದ್ದೇ ಆದರೆ, ಅದೂ ಕರ್ಮಯೋಗವಾಗಿಬಿಡುತ್ತದೆ. ಭಗವಂತನಿಗೆ ಫಲ ಸಮರ್ಪಣೆ ಮಾಡಿ, ಪೂಜೆ, ಜಪತಪಾದಿ ಕರ್ಮ ಮಾಡುವುದಕ್ಕೂ ಕರ್ಮಯೋಗ ಅಂತ ಹೆಸರು. ಭಗವಂತನ ಸಾಕ್ಷಾತ್ಕಾರವೇ ಕರ್ಮಯೋಗದ ಲಕ್ಷಣ.
“ಭಕ್ತಿಯೋಗ-ಭಗವಂತನ ನಾಮಗುಣಕೀರ್ತನೆಯನ್ನು ಮಾಡುತ್ತ ಆತನಲ್ಲಿ ಮನಸ್ಸನ್ನಿಡುವುದು. ಕಲಿಯುಗಕ್ಕೆ ಭಕ್ತಿಯೋಗ ಸುಲಭವಾದ್ದು. ಭಕ್ತಿಯೋಗವೇ ಯುಗ ಧರ್ಮ.
“ಕರ್ಮಯೋಗ ಬಹಳ ಕಠಿಣ. ಮೊದಲನೆಯದಾಗಿ, ಆಗಲೇ ತಿಳಿಸಿದ್ದೇನೆ, ಸಮಯ ಎಲ್ಲಿ? ಶಾಸ್ತ್ರ ಏನೇನು ಕರ್ಮ ಮಾಡಬೇಕು ಅಂತ ಹೇಳುತ್ತದೆಯೊ ಅದಕ್ಕೆ ಸಮಯ ಎಲ್ಲಿ? ಕಲಿಯುಗದಲ್ಲಿ ಆಯಸ್ಸು ಕಡಮೆ. ಇವೂ ಅಲ್ಲದೆ ಅನಾಸಕ್ತಿಯಿಂದ ಅಂದರೆ ಫಲಕಾಮನೆಯನ್ನು ಮಾಡದೆ ಕರ್ಮ ಮಾಡುವುದು ಬಹಳ ಕಠಿಣ. ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳದೆ ನಿಜವಾಗಿ ಅನಾಸಕ್ತನಾಗಲು ಆಗುವುದಿಲ್ಲ. ಬಹುಶಃ ನಿನಗೆ ಗೊತ್ತಾಗದೆ ಇರಬಹುದು. ಆದರೆ ಆಸಕ್ತಿ ಎಲ್ಲಿಂದಲೋ ಬಂದು ಹೃದಯವನ್ನು ಹೊಕ್ಕುಬಿಡುತ್ತದೆ.
“ಜ್ಞಾನಯೋಗವೂ ಈ ಯುಗಕ್ಕೆ ಬಹಳ ಕಠಿಣ. ಮೊದಲನೆಯದಾಗಿ ಜೀವ ಅನ್ನಗತ-ಪ್ರಾಣ. ಎರಡನೆಯದಾಗಿ ಆಯುಸ್ಸು ಕಡಮೆ. ಮೂರನೆಯದಾಗಿ ದೇಹಬುದ್ಧಿ ಏನು ಮಾಡಿದರೂ ಹೋಗಲೊಲ್ಲದು. ದೇಹಬುದ್ಧಿ ಹೋಗದ ಹೊರತು ಬ್ರಹ್ಮಜ್ಞಾನ ದೊರೆಯುವ ಹಾಗೇ ಇಲ್ಲ. ಜ್ಞಾನಿ ಹೇಳುತ್ತಾನೆ: ‘ನಾನೇ ಆ ಬ್ರಹ್ಮ; ನಾನು ಶರೀರವಲ್ಲ. ಬಾಯಾರಿಕೆ, ರೋಗ, ಶೋಕ, ಸುಖ, ದುಃಖಗಳ ಬೋಧ ಇದ್ದುದೇ ಆದರೆ, ನೀನು ಜ್ಞಾನಿಯಾಗುವ ಬಗೆ ಹೇಗೆ? ಕೈಗೆ ಒಂದು ಕಡೆ ಮುಳ್ಳು ಚುಚ್ಚಿಕೊಂಡು ರಕ್ತ ಪ್ರವಾಹದೋಪಾದಿಯಲ್ಲಿ ಹರಿಯುತ್ತ ಬಹಳ ನೋವು ಕೊಡುತ್ತಿರಬಹುದು; ಆದರೂ ಜ್ಞಾನಿಯಾಗಿದ್ದ ಪಕ್ಷದಲ್ಲಿ ನೀನು ಹೇಳಬೇಕಾಗುತ್ತದೆ: ‘ಎಲ್ಲಿ, ನನ್ನ ಕೈಗೇನೂ ಮುಳ್ಳು ಚುಚ್ಚಿಕೊಂಡಿಲ್ಲವಲ್ಲ. ನನಗೇನೂ ಆಗಿಲ್ಲವಲ್ಲ.’
“ಆದ್ದರಿಂದ ಈ ಯುಗಕ್ಕೆ ಭಕ್ತಿಯೋಗ. ಇದರಿಂದ ಬೇರೆ ಬೇರೆ ಮಾರ್ಗಗಳಿಗಿಂತ ಬಹಳ ಸುಲಭವಾಗಿ ಭಗವಂತನನ್ನು ಸಮೀಪಿಸಬಹುದು. ಜ್ಞಾನಯೋಗ, ಕರ್ಮಯೋಗಗಳ ಮೂಲಕವಾಗಿಯೂ ಅಥವಾ ಬೇರೆಬೇರೆ ಮಾರ್ಗಗಳ ಮೂಲಕವಾಗಿಯೂ ಭಗವಂತನನ್ನು ಮುಟ್ಟಬಹುದು. ಆದರೆ ಇವೆಲ್ಲಾ ಬಹಳ ಕಠಿಣ.
“ಭಕ್ತಿಯೋಗ ಯುಗಧರ್ಮ. ಆದರೆ ಇದರ ಅರ್ಥ-ಭಕ್ತ ಒಂದು ಗುರಿಯನ್ನು ಮುಟ್ಟುತ್ತಾನೆ; ಜ್ಞಾನಿ, ಕರ್ಮಿಗಳು ಇನ್ನೊಂದು ಗುರಿಯನ್ನು ಮುಟ್ಟುತ್ತಾರೆ ಅಂತಲೇನಲ್ಲ. ಇದರ ಅರ್ಥ, ಯಾರಿಗೆ ಬ್ರಹ್ಮಜ್ಞಾನ ಬೇಕೋ ಆತ ಭಕ್ತಿಮಾರ್ಗವನ್ನು ಅನುಸರಿಸಿದರೂ ಅದೇ ಬ್ರಹ್ಮಜ್ಞಾನ ದೊರೆಯುತ್ತದೆ ಎಂಬುದಾಗಿ. ಭಕ್ತವತ್ಸಲನಾದ ಭಗವಂತ ಇಚ್ಛೆಪಟ್ಟದ್ದೇ ಆದರೆ ಬ್ರಹ್ಮಜ್ಞಾನವನ್ನು ಕೊಡಬಲ್ಲ.
ಭಕ್ತನಿಗೆ ಭಗವಂತನ ಸಾಕಾರ ರೂಪವನ್ನು ನೋಡಲು, ಆತನೊಡನೆ ಮಾತುಕತೆಯಾಡಲು ಇಚ್ಛೆ. ಪ್ರಾಯಿಕವಾಗಿ ಆತ ಬ್ರಹ್ಮಜ್ಞಾನಕ್ಕಾಗಿ ಹಾತೊರೆಯುವುದಿಲ್ಲ. ಆದರೆ ಭಗವಂತ ಇಚ್ಛಾಮಯ. ಆತನಿಗೇನಾದರೂ ಖುಷಿ ಬಂದರೆ, ಭಕ್ತನನ್ನು ತನ್ನ ಸಕಲ ಐಶ್ವರ್ಯಕ್ಕೂ ಅಧಿಕಾರಿಯನ್ನಾಗಿ ಮಾಡಿಬಿಡುತ್ತಾನೆ.ಭಕ್ತಿಯನ್ನೂ ಕೊಡುತ್ತಾನೆ, ಜ್ಞಾನವನ್ನೂ ಕೊಡುತ್ತಾನೆ. ಹೇಗೋ ಮಾಡಿ ಕಲ್ಕತ್ತವನ್ನು ಮುಟ್ಟಿಬಿಟ್ಟಿದ್ದೇ ಆದರೆ, ಆ ದೊಡ್ಡ ಮೈದಾನ, ಮತ್ತು ಪ್ರದರ್ಶನಶಾಲೆ ಇನ್ನೂ ಅನೇಕ ಸ್ಥಳಗಳನ್ನು ನೋಡಬಹುದು. ಈಗ ಯೋಚನೆ ಏನು ಎಂದರೆ, ಹೇಗೆ ಕಲ್ಕತ್ತಕ್ಕೆ ಬರುವುದು ಅಂತ.
“ಜಗನ್ಮಾತೆಯ ಸಾಕ್ಷಾತ್ಕಾರವನ್ನು ಪಡೆದುಕೊಂಡುದೇ ಆದರೆ, ಭಕ್ತಿಯೂ ದೊರೆಯುತ್ತದೆ, ಜ್ಞಾನವೂ ದೊರೆಯುತ್ತದೆ. ಭಾವಸಮಾಧಿಯಲ್ಲಿ ಭಗವದ್ರೂಪದರ್ಶನ ದೊರೆಯುತ್ತದೆ, ನಿರ್ವಿಕಲ್ಪ ಸಮಾಧಿಯಲ್ಲಿ ಅಖಂಡ ಸಚ್ಚಿದಾನಂದ ಬ್ರಹ್ಮನ ಸಾಕ್ಷಾತ್ಕಾರವಾಗುತ್ತದೆ. ನಿರ್ವಿಕಲ್ಪ ಸಮಾಧಿಯಲ್ಲಿ ‘ಅಹಂ’ ಎಂಬುದು, ನಾಮರೂಪ-ಇವೆಲ್ಲ ಇರುವುದಿಲ್ಲ.
“ಭಕ್ತ ಪ್ರಾರ್ಥನೆ ಮಾಡುತ್ತಾನೆ: ‘ಹೇ ಭಗವತಿ. ಸಕಾಮ ಕರ್ಮ ಕಂಡರೆ ನನಗೆ ಬಹಳ ಭಯ. ಅದರಲ್ಲಿ ಕಾಮನೆ ಇದೆ. ಅದನ್ನು ಮಾಡಿದರೇ ಫಲ ಅನುಭವಿಸಬೇಕಾಗುತ್ತದೆ. ಮತ್ತೇನೆಂದರೆ ಅನಾಸಕ್ತಿಯಿಂದ ಕರ್ಮಮಾಡುವುದು ಬಹಳ ಕಠಿಣ. ಸಕಾಮ ಕರ್ಮ ಮಾಡಿದರೆ ನಿನ್ನನ್ನು ನಿಜವಾಗಿಯೂ ಮರೆತುಬಿಡುತ್ತೇನೆ. ಆದ್ದರಿಂದ ಅವು ನನಗೆ ಬೇಕಾಗಿಲ್ಲ. ನಿನ್ನ ಸಾಕ್ಷಾತ್ಕಾರ ದೊರೆಯದವರೆಗೆ, ನನ್ನ ಕರ್ಮ ದಿನದಿನಕ್ಕೂ ಕಡಮೆಯಾಗುವ ಹಾಗೆ ಮಾಡು. ಆದರೆ ಯಾವ ಕರ್ಮಗಳನ್ನು ನಾನು ಮಾಡಲೇಬೇಕಾಗಿರುವುದೋ ಅವನ್ನು ಅನಾಸಕ್ತಿಯಿಂದ ಮಾಡುವ ಹಾಗೆ ಶಕ್ತಿಯನ್ನು ಕರುಣಿಸು. ಅವನ್ನು ಮಾಡುತ್ತ ಮಾಡುತ್ತ ಮುಂದುವರಿದ ಹಾಗೆಲ್ಲ ಭಕ್ತಿಯೂ ಬೆಳೆಯುವಂತೆ ಮಾಡು. ನಿನ್ನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳದವರೆಗೆ ಹೊಸ ಕರ್ಮಗಳನ್ನು ಗಂಟುಹಾಕಿಕೊಳ್ಳಲು ನನ್ನ ಮನಸ್ಸು ಪ್ರಯತ್ನಿಸದ ಹಾಗೆ ಮಾಡು. ಆದರೆ, ನೀನು ಆದೇಶಮಾಡಿದಾಗ ಮಾತ್ರ ನಿನ್ನ ಕರ್ಮಗಳನ್ನು ಮಾಡುವೆನೇ ವಿನಾ, ಇಲ್ಲದಿದ್ದರೆ ಇಲ್ಲ.”
ಶಶಧರ: “ಮಹಾಶಯರೆ, ನೀವು ತೀರ್ಥಯಾತ್ರೆಗೆ ಹೋಗಿದ್ದಾಗ ಎಲ್ಲಿಯವರೆಗೆ ಹೋಗಿದ್ದೀರಿ?”
ಶ್ರೀರಾಮಕೃಷ್ಣರು: “ಓ, ಎಲ್ಲೋ ಕೆಲವು ಸ್ಥಳಗಳನ್ನು ನೋಡಿ ಬಂದೆ. (ನಗುತ್ತ) ಆದರೆ ಹಾಜರಾ ಬಹಳ ದೂರದವರೆಗೆ ಹೋಗಿದ್ದಾನೆ; ಎತ್ತರಕ್ಕೂ ಹತ್ತಿದ್ದಾನೆ; ಹೃಷಿಕೇಶಕ್ಕೆ ಹೋಗಿ ಬಂದಿದ್ದಾನೆ. ನಾನು ಅಷ್ಟು ದೂರ ಹೋಗಲೂ ಇಲ್ಲ, ಅಷ್ಟು ಎತ್ತರಕ್ಕೆ ಹತ್ತಲೂ ಇಲ್ಲ.
“ರಣಹದ್ದು ಬಹಳ ಎತ್ತರಕ್ಕೆ ಹಾರಿಹೋಗುತ್ತವೆ, ಆದರೆ ದೃಷ್ಟಿ ಮಾತ್ರ ಹೆಣದ ಗುಂಡಿಗಳ ಕಡೆಗೆ, ಹೆಣದ ಗುಂಡಿ ಯಾವುದು ಗೊತ್ತೆ? ಕಾಮಕಾಂಚನ.
“ಕುಳಿತಲ್ಲೇ ಕುಳಿತು ಭಕ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಾದರೆ, ತೀರ್ಥಯಾತ್ರೆಗೆ ಹೋಗುವುದರ ಆವಶ್ಯಕತೆ ಏನಿದೆ? ಕಾಶಿಗೆ ಹೋಗಿ ನೋಡುತ್ತೇನೆ, ಅಲ್ಲೂ ಇದೇ ಮರಗಿಡಗಳು, ಇದೇ ಹಸುರು ಹುಣಿಸೆ ಎಲೆ!
“ತೀರ್ಥಯಾತ್ರೆಗೆ ಹೋಗಿಯೂ ಭಕ್ತಿ ದೊರಕದೆ ಹೋದರೆ, ತೀರ್ಥಯಾತ್ರೆಯ ಫಲ ದೊರಕಿದಂತಾಗುವುದಿಲ್ಲ. ಭಕ್ತಿಯೇ ಸಾರ, ಏಕಮಾತ್ರ ಪ್ರಯೋಜನ ವಸ್ತು. ‘ರಣಹದ್ದು’ ಏನು ಗೊತ್ತೆ? ಅನೇಕ ಮಂದಿ ಇದ್ದಾರೆ. ಬಹಳವಾಗಿ ಬ್ಡಾಯಿ ಕೊಚ್ಚಿಕೊಳ್ಳುತ್ತಾರೆ. ಹೇಳುತ್ತಾರೆ, ಶಾಸ್ತ್ರದಲ್ಲಿ ಏನೇನು ಕರ್ಮಮಾಡಬೇಕು ಅಂತ ಹೇಳಿದೆಯೋ, ಅವುಗಳಲ್ಲಿ ಬಹು ಭಾಗವನ್ನು ಮಾಡಿ ಮುಗಿಸಿಬಿಟ್ಟಿದ್ದೇವೆ ಎಂದು. ಅವರು ಹಾಗೆ ಜಂಬ ಕೊಚ್ಚಿಕೊಂಡರೂ, ಅವರ ಮನಸ್ಸು ಮಾತ್ರ ಅತ್ಯಂತ ವಿಷಯಾಸಕ್ತವಾಗಿರುತ್ತದೆ-ಹಣ, ಕಾಸು, ಗೌರವ, ಸಂಭ್ರಮ ದೇಹಸುಖ-ಇವುಗಳಿಗಾಗಿಯೇ ವ್ಯಸ್ತವಾಗಿರುತ್ತದೆ.”
ಶಶಧರ: “ಹೌದು, ನಿಜ. ತೀರ್ಥಯಾತ್ರೆಗೆ ಹೋಗುವುದು, ಕೌಸ್ತುಭಮಣಿ ಬೇಡವೆಂದು ಹೀರಮಾಣಿಕ್ಯಗಳಿಗಾಗಿ ಆರಸಿದಂತೆ.”
ಶ್ರೀರಾಮಕೃಷ್ಣರು: “ನೋಡು, ಇದನ್ನು ತಿಳಿದುಕೊಂಡಿರು. ನೀನು ಜನರಿಗೆ ಸಾವಿರಾರು ಉಪದೇಶಗಳನ್ನು ಕೊಟ್ಟರೂ ಸಮಯಬಾರದೆ ಇದ್ದರೆ ಪ್ರತಿಫಲ ದೊರಕದು. ಮಗು ಮಲಗಿಕೊಳ್ಳುವಾಗ ತಾಯಿಗೆ ಹೇಳಿತು: ‘ನನಗೆ ದೇಹಬಾಧೆಯಾದಾಗ ದಯವಿಟ್ಟು ನನ್ನನ್ನು ಎಬ್ಬಿಸಿಬಿಡು.’ ತಾಯಿ ಹೇಳಿದಳು: ‘ಮಗು, ದೇಹಬಾಧೆಯೇ ನಿನ್ನನ್ನು ಎಬ್ಬಿಸಿ ಬಿಡುತ್ತದೆ. ಅದಕ್ಕಾಗಿ ನೀನು ಸ್ವಲ್ಪವೂ ಚಿಂತಿಸಬೇಕಾಗಿಲ್ಲ.’ (ಎಲ್ಲರೂ ನಗುತ್ತಿದ್ದಾರೆ.) ಅದೇ ರೀತಿಯಾಗಿ ಭಗವಂತನಿಗಾಗಿ ವ್ಯಾಕುಲತೆ ಸಕಾಲ ಬಂದೊಡನೆಯೇ ಉಂಟಾಗಿಬಿಡುತ್ತದೆ.
“ಮೂರು ಶ್ರೇಣಿಯ ವೈದ್ಯರಿದ್ದಾರೆ. ಮೊದಲನೆಯ ಶ್ರೇಣಿಯವರು ನಾಡಿ ಪರೀಕ್ಷಿಸಿ ಔಷಧದ ವ್ಯವಸ್ಥೆಮಾಡಿ ಹೊರಟುಹೋಗುತ್ತಾರೆ. ರೋಗಿಗೆ ಔಷಧವನ್ನು ಕುಡಿಯುವಂತೆ ಕೇವಲ ಹೇಳಿಹೋಗುತ್ತಾರೆ, ಅವರು ಅಧಮ ಶ್ರೇಣಿಯ ವೈದ್ಯರು. ಇದೇ ರೀತಿಯಾಗಿ ಕೆಲವು ಮಂದ ಆಚಾರ್ಯರು ಉಪದೇಶ ಕೊಟ್ಟು ಹೊರಟುಹೋಗುತ್ತಾರೆ. ತಮ್ಮ ಉಪದೇಶ ಜನರಿಗೆ ಒಳ್ಳೆಯದನ್ನು ಮಾಡುತ್ತಿದೆಯೆ ಅಥವಾ ಕೆಟ್ಟದ್ದನ್ನು ಮಾಡುತ್ತಿದೆಯೆ ಎಂಬುದರ ಯೋಚನೆಯೇ ಅವರಿಗೆ ಬಾರದು. ತಮ್ಮ ಶಿಷ್ಯರ ವಿಷಯವಾಗಿ ಕಿಂಚಿತ್ತೂ ತಲೆಗೆ ಹಾಕಿಕೊಳ್ಳುವುದಿಲ್ಲ.
“ಇನ್ನು ಕೆಲವು ಮಂದಿ ವೈದ್ಯರಿದ್ದಾರೆ. ಔಷಧದ ವ್ಯವಸ್ಥೆಮಾಡಿ ರೋಗಿಗೆ ಔಷಧ ಕುಡಿಯುವಂತೆ ಹೇಳುತ್ತಾರೆ, ರೋಗಿ ಕುಡಿಯಲಿಚ್ಛಿಸದಿದ್ದರೆ, ಆತನಿಗೆ ಅನೇಕ ವಿಧದಿಂದ ತಿಳಿಸಿ ಹೇಳುತ್ತಾರೆ. ಇವರು ಮಧ್ಯಮ ಶ್ರೇಣಿಯ ವೈದ್ಯರು. ಹೀಗೇ ಮಧ್ಯಮ ಶ್ರೇಣಿಯ ಆಚಾರ್ಯರೂ ಇದ್ದಾರೆ. ಇವರು ಉಪದೇಶವನ್ನು ಕೊಡುವುದೂ ಅಲ್ಲದೆ, ಅದನ್ನು ಅನುಸರಿಸುವಂತೆ ಬಹಳವಾಗಿ ತಿಳಿಸಿ ಹೇಳುತ್ತಾರೆ.
“ಮತ್ತೆ ಉತ್ತಮ ವೈದ್ಯರಿದ್ದಾರೆ. ಒಳ್ಳೆ ಮಾತಿನಿಂದ ರೋಗಿ ಹೇಳಿದ ಹಾಗೆ ಕೇಳದಿದ್ದರೆ, ಬಲಾತ್ಕಾರವನ್ನೂ ಮಾಡಿಬಿಡುತ್ತಾರೆ. ಆವಶ್ಯಕತೆ ತೋರಿಬಂದರೆ ರೋಗಿಯ ಎದೆ ಮೇಲೆ ಮೊಳಕಾಲೂರಿ ಕುಳಿತು ಔಷಧ ಗಂಟಲಿನೊಳಕ್ಕೆ ಇಳಿಯುವ ಹಾಗೆ ಮಾಡಿ ಬಿಡುತ್ತಾರೆ. ಹಾಗೆಯೇ ಉತ್ತಮ ಶ್ರೇಣಿಯ ಆಚಾರ್ಯರಿದ್ದಾರೆ. ಇವರು ತಮ್ಮ ಶಿಷ್ಯರನ್ನು ಭಗವದಭಿಮುಖಿಗಳನ್ನಾಗಿ ಮಾಡಲು ಬಲವನ್ನೂ ಉಪಯೋಗಿಸಬಿಡುತ್ತಾರೆ.”
ಶಶಧರ: “ಮಹಾಶಯರೆ, ಉತ್ತಮ ಶ್ರೇಣಿಯ ಆಚಾರ್ಯರಿದ್ದರೆ, ಸಕಾಲ ಬಾರದೆ ಜ್ಞಾನ ದೊರೆಯುವುದಿಲ್ಲ ಅಂತ ಹೇಳಿದಿರಲ್ಲ ಏಕೆ?”
ಶ್ರೀರಾಮಕೃಷ್ಣರು: “ನಿನ್ನ ಪ್ರಶ್ನೆ ಯುಕ್ತವಾದ್ದೆ. ಯೋಚಿಸಿ ನೋಡು, ಔಷಧ ಹೊಟ್ಟೆಗೆ ಇಳಿಯದೇ ಬಾಯಿಯಿಂದಲೇ ಹೊರಕ್ಕೆ ಬಂದುಬಿಟ್ಟರೆ, ಆಗ ಉತ್ತಮವೈದ್ಯ ತಾನೆ ಏನು ಮಾಡಿಯಾನು? ಆತ ಏನನ್ನೂ ಮಾಡಲಾರ.
“ಪಾತ್ರ ನೋಡಿ ಉಪದೇಶ ಕೊಡಬೇಕಾಗುತ್ತದೆ. ಆದರೆ ನೀನು ಮಾತ್ರ ಹಾಗೆ ಮಾಡುತ್ತಿಲ್ಲ. ನನ್ನ ಹತ್ತಿರಕ್ಕೆ ಯಾರಾದರೂ ಯುವಕರು ಬಂದರೆ, ಅವರನ್ನು ಕೇಳುತ್ತೇನೆ: ‘ನಿಮ್ಮ ಮನೆಯಲ್ಲಿ ಯಾರ್ಯಾರಿದ್ದಾರೆ?’ ಭಾವಿಸಿಕೊ, ಒಬ್ಬನಿಗೆ ತಂದೆ ಇಲ್ಲ; ತಂದೆಯ ಸಾಲದ ಹೊರೆ ಬೇರೆ ಬಿದ್ದಿದೆ ಅಂತ. ಆತ ಭಗವಂತನ ಕಡೆಗೆ ಮನಸ್ಸನ್ನು ಕೊಡುವ ಬಗೆ ಹೇಗೆ? ಏನು, ಕಿವಿಗೆ ಬಿತ್ತೆ?”
ಶಶಧರ: “ಹೌದು. ಚೆನ್ನಾಗಿ ಕೇಳುತ್ತಿದ್ದೇನೆ.”
ಶ್ರೀರಾಮಕೃಷ್ಣರು: “ಒಂದು ದಿನ ದಕ್ಷಿಣೇಶ್ವರ ದೇವಾಲಯಕ್ಕೆ ಅನೇಕ ಮಂದಿ ಸಿಖ್ ಸಿಪಾಯಿಗಳು ಬಂದಿದ್ದರು. ನಾನು ಅವರನ್ನು ಕಾಳೀದೇವಾಲಯದ ಮುಂಭಾಗದಲ್ಲಿ ಸಂಧಿಸಿದೆ. ಅವರಲ್ಲಿ ಒಬ್ಬ ಹೇಳಿದ: ‘ಭಗವಂತ ದಯಾಮಯ.’ ನಾನು ಕೇಳಿದೆ: ‘ನಿಜವಾಗಿಯೂ! ಸತ್ಯ ಅಂತೀಯಾ? ನಿನಗೆ ಹೇಗೆ ಗೊತ್ತಾಯಿತು?’ ಅತ ಹೇಳಿದ: ‘ಏಕೆ ಹಾಗೆ ಕೇಳುತ್ತೀರಿ? ಭಗವಂತ ನಮಗೆ ಅನ್ನಾಹಾರಾದಿಗಳನ್ನು ಒದಗಿಸಿಕೊಡುತ್ತಿದ್ದಾನೆ.-ಎಲ್ಲಾ ವಿಧದಿಂದಲೂ ನಮ್ಮ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾನೆ.’ ನಾನು ಹೇಳಿದೆ: ‘ಅದರಲ್ಲಿ ವಿಶೇಷತೆಯೇನಿದೆ? ಭಗವಂತ ನಮ್ಮೆಲ್ಲರ ತಂದೆ. ತಂದೆ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲಿಲ್ಲ ಎಂದರೆ, ಇನ್ನು ಬೇರೆ ಯಾರು ನೋಡಿಕೊಳ್ಳುತ್ತಾರೆ? ಪಕ್ಕದ ಹಳ್ಳಿಯವರು ಬಂದು ನೋಡಿಕೊಳ್ಳಬೇಕು ಅಂತ ನಿನ್ನ ಯೋಚನೆಯೇ?’
ನರೇಂದ್ರ: “ಹಾಗಾದರೆ ನಾವು ಭಗವಂತನನ್ನು ದಯಾಮಯ ಅಂತ ಕರೆಯಬೇಡವೇ?”
ಶ್ರೀರಾಮಕೃಷ್ಣರು: “ಹಾಗೆ ಕರೆಯಬಾರದೆಂದು ನಾನು ಹೇಳುತ್ತಿದ್ದೇನೆಯೇ? ನಾನು ಹೇಳಿದುದರ ಅರ್ಥ, ಭಗವಂತ ನಮ್ಮ ಸ್ವಂತದವನೇ ವಿನಾ ಪರಕೀಯನಲ್ಲ ಎಂದು.”
ಶಶಧರ: “ಅಮೂಲ್ಯ ಮಾತುಗಳು!”
ಶ್ರೀರಾಮಕೃಷ್ಣರು ನರೇಂದ್ರನಿಗೆ: “ನಿನ್ನ ಹಾಡನ್ನು ಸ್ವಲ್ಪ ಹೊತ್ತು ಕೇಳಿದೆ-ಆದರೆ ರುಚಿಸಲಿಲ್ಲ. ಅದಕ್ಕಾಗಿ ಎದ್ದು ಹೊರಟುಬಂದೆ. ನಿನ್ನ ಮನಸ್ಸು ಈಗ ಉದ್ಯೋಗದ ಬೇಟೆಯ ಮೇಲೆ ನೆಲಸಿದೆ. ಆದ್ದರಿಂದ ಹಾಡು ಸಪ್ಪೆಯಾಗಿಬಿಟ್ಟಿದೆ.”
ನರೇಂದ್ರ ಲಜ್ಜೆಯಿಂದ ತಲೆಯನ್ನು ಸ್ವಲ್ಪ ತಗ್ಗಿಸಿಕೊಂಡು ಸುಮ್ಮನೆ ಕುಳಿತುಕೊಂಡಿದ್ದಾನೆ.
ಪರಮಹಂಸರು ಕುಡಿಯುವ ನೀರು ಕೇಳುತ್ತಿದ್ದಾರೆ. ಒಂದು ಲೋಟ ನೀರನ್ನು ಅವರ ಹತ್ತಿರ ತಂದಿಡಲಾಯಿತು. ಆ ನೀರನ್ನು ಅವರ ಕೈಯಲ್ಲಿ ಕುಡಿಯಲಾಗುತ್ತಿಲ್ಲ. ಇನ್ನೊಂದು ಲೋಟ ನೀರು ತರುವಂತೆ ಹೇಳುತ್ತಿದ್ದಾರೆ. ಅನಂತರ ಗೊತ್ತಾಯಿತು, ಮೊದಲಿನ ಲೋಟವನ್ನು ಯಾರೋ ಒಬ್ಬ ಘೋರ ಇಂದ್ರಿಯಾಸಕ್ತ ಸ್ಪರ್ಶಮಾಡಿದ್ದ ಎಂದು.
ಶಶಧರ ಹಾಜರಾನಿಗೆ: “ನೀವೆಲ್ಲರೂ ಇವರೊಡನೆ ಹಗಲೂ ಇರುಳೂ ಇದ್ದೀರಿ. ನೀವು ಬಹಳ ಆನಂದದಿಂದ ಇರಲೇಬೇಕು.”
ಶ್ರೀರಾಮಕೃಷ್ಣರು ನಗುತ್ತ : “ನನಗಿಂದು ಶುಕ್ರದೆಶೆ ಒದಗಿಬಿಟ್ಟಿದೆ. ಶುಕ್ಲ ದ್ವಿತೀಯ ಚಂದ್ರನನ್ನು ನೋಡಿದಂತೆಯೇ ಆಗಿಬಿಟ್ಟಿದೆ. (ಎಲ್ಲರೂ ನಗುತ್ತಿದ್ದಾರೆ.) ದ್ವಿತೀಯಚಂದ್ರನ ಮಾತು ಏಕೆ ಎತ್ತಿದೆ ಗೊತ್ತೆ? ಸೀತೆ ಒಮ್ಮೆ ರಾವಣನಿಗೆ ಹೇಳಿದಳು: “ನೀನು ಪೂರ್ಣಚಂದ್ರ; ನನ್ನ ರಾಮಚಂದ್ರ ಶುಕ್ಲ ದ್ವಿತೀಯಚಂದ್ರ.’ ರಾವಣನಿಗೆ ಇದರ ಗೂಡಾರ್ಥ ಗೊತ್ತಾಗಲಿಲ್ಲ. ಆತ ಭಾವಿಸಿದ, ಸೀತೆ ನನ್ನನ್ನು ಹೊಗಳುತ್ತಿದ್ದಾಳೆ ಎಂದು. ಆದ್ದರಿಂದ ಆತನಿಗೆ ಬಹಳ ಆನಂದವಾಗಿಬಿಟ್ಟಿತು. ಸೀತೆ ಹಾಗೆಂದು ಹೇಳಿದುದರ ಅರ್ಥ: ರಾವಣ ತನ್ನ ತುತ್ತತುದಿಯ ವೈಭವವನ್ನು ಮುಟ್ಟಿದ್ದಾನೆ, ಇನ್ನು ಮುಂದೆ ದಿನದಿನಕ್ಕೂ ಪೂರ್ಣಚಂದ್ರನ ಹಾಗೆ ಕುಂದು ಕುಂದುತ್ತಾ ಬರುತ್ತಾನೆ. ಆದರೆ ರಾಮ ಶುಕ್ಲ ದ್ವಿತೀಯಚಂದ್ರ. ದಿನದಿನಕ್ಕೂ ವೃದ್ಧಿಯಾಗುತ್ತಾ ಬರುತ್ತಾನೆ.”
ಪರಮಹಂಸರು ಶಶಧರನಿಂದ ಇನ್ನೇನು ಬೀಳ್ಕೊಳ್ಳುವುದರಲ್ಲಿದ್ದಾರೆ. ಆತ ತನ್ನ ಬಂಧು ಬಾಂಧವರೊಡನೆ ಭಕ್ತಿಯಿಂದ ಪ್ರಣಾಮಮಾಡುತ್ತಿದ್ದಾನೆ.
ಪರಮಹಂಸರು ಭಕ್ತರೊಡನೆ ಈಶಾನನ ಮನೆಗೆ ಹಿಂದಿರುಗಿ ಬಂದಿದ್ದಾರೆ. ಇನ್ನೂ ಮುಸ್ಸಂಜೆಯಾಗಿರಲಿಲ್ಲ. ಈಗ ಅವರು ಈಶಾನನ ಮನೆಯ ನೆಲ ಅಂತಸ್ತಿನಲ್ಲಿರುವ ಬೈಠಕ್ಖಾನೆಯಲ್ಲಿ ಕೆಲವು ಮಂದಿ ಭಕ್ತರು, ಭಾಗವತ ಪಂಡಿತ, ಈಶಾನ ಮತ್ತು ಆತನ ಮಕ್ಕಳು ಇವರೊಡನೆ ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು ನಗುತ್ತ ಈಶಾನನಿಗೆ: “ಶಶಧರನಿಗೆ ಹೇಳಿದೆ: ‘ನೀನು ಮರದ ಬುಡಕ್ಕೆ ಕಾಲು ಹಾಕುವುದೇ ತಡ, ಆಗಲೇ ಹಣ್ಣಿನ ಗೊಂಚಲ ಕಡೆ ಕೈ ನೀಡುತ್ತಿರುವೆಯಲ್ಲ! ಇನ್ನೂ ಸ್ವಲ್ಪ ಕಾಲ ಸಾಧನೆ ಭಜನೆ ಮಾಡು, ಬಳಿಕ ಲೋಕಶಿಕ್ಷಣ ಮಾಡುವಿಯಂತೆ.”’
ಈಶಾನ: “ಪ್ರತಿಯೊಬ್ಬ ಪ್ರಚಾರಕನೂ ಭಾವಿಸುತ್ತಾನೆ, ತಾನು ಲೋಕಶಿಕ್ಷಣ ಮಾಡುತ್ತಿದ್ದೇನೆ ಎಂಬುದಾಗಿ. ಮಿಣುಕುಹುಳು ಕೂಡ ಭಾವಿಸಬಹುದು, ತಾನು ಇಡೀ ಜಗತ್ತಿಗೆ ಬೆಳಕು ನೀಡುತ್ತಿದ್ದೇನೆ ಎಂದು. ಅದು ಹೀಗೆ ಭಾವಿಸಬಹುದೆಂದು ಭಾವಿಸಿ ಒಬ್ಬ ಅದನ್ನು ಸಂಬೋಧಿಸಿ ಹೇಳಿದ: ‘ಎಲೈ ಮಿಣುಕು ಹುಳುವೆ, ನಿನ್ನ ಕೈಯಲ್ಲಿ ಈ ಜಗತ್ತಿಗೆ ಬೆಳಕು ಕೊಡಲು ಹೇಗೆ ಸಾಧ್ಯವಾದೀತು? ನೀನು ಕೇವಲ ಕತ್ತಲೆ ಎಷ್ಟು ಗಾಢವಾದ್ದು ಎಂಬುದನ್ನು ಪ್ರಕಾಶ ಮಾಡಬಲ್ಲೆ.’”
ಶ್ರೀರಾಮಕೃಷ್ಣರು ನಗುತ್ತ : “ಆದರೆ ಶಶಧರ ಕೇವಲ ಪಂಡಿತನೇ ಅಲ್ಲ. ಅವನಲ್ಲಿ ವಿವೇಕ ವೈರಾಗ್ಯವೂ ಇವೆ.”
ಭಾಗವತ ಪಂಡಿತ ಶ್ರೀರಾಮಕೃಷ್ಣರಿಗೆ ಹೇಳಿದ: “ನೀವು ಮಹಾತ್ಮರು.”
ಶ್ರೀರಾಮಕೃಷ್ಣರು: “ನಾರದ, ಪ್ರಹ್ಲಾದ, ಶುಕದೇವ ಇವರನ್ನು ಹಾಗೆ ಬೇಕಾದರೆ ಕರೆಯಬಹುದು. ನಾನು ಕೇವಲ ನಿಮ್ಮ ಒಂದು ಶಿಶು ಮಾತ್ರ.
“ಆದರೆ ಒಂದು ವಿಧದಲ್ಲಿ ಬೇಕಾದರೆ ಹಾಗೆ ಹೇಳಬಹುದು. ಒಂದು ಹೇಳಿಕೆ ಇದೆ, ಭಗವಂತನಿಗಿಂತ ಭಕ್ತ ದೊಡ್ಡವನು ಎಂದು ಏಕೆಂದರೆ ಭಕ್ತ ಭಗವಂತನನ್ನು ತನ್ನ ಹೃದಯದಲ್ಲಿ ಇಟ್ಟುಕೊಂಡು ಸುತ್ತಾಡುತ್ತಾನೆ. (ಎಲ್ಲರೂ ಆನಂದವನ್ನು ಸೂಚಿಸುತ್ತಿದ್ದಾರೆ.) ವೈಷ್ಣವ ಶಾಸ್ತ್ರದಲ್ಲಿ ಹೇಳಿದೆ: ‘ಭಕ್ತ ಭಾವಿಸುತ್ತಾನೆ. ತಾನು ದೊಡ್ಡವನು ಭಗವಂತ ಚಿಕ್ಕವನು ಎಂಬುದಾಗಿ.’ ಯಶೋದೆ ಕೃಷ್ಣನನ್ನು ಹಗ್ಗದಿಂದ ಕಟ್ಟಿಹಾಕಲು ಪ್ರಯತ್ನಿಸಿದಳು. ಆಕೆ ನಂಬಿದ್ದಳು, ತಾನಲ್ಲದೆ ಬೇರೆ ಯಾರೂ ಕೃಷ್ಣನ ಯೋಗಕ್ಷೇಮ ನೋಡಿಕೊಳ್ಳಲಾರರು ಎಂದು.
“ಕೆಲವು ವೇಳೆ ಭಗವಂತ ಚುಂಬಕ, ಭಕ್ತ ಸೂಜಿ ಆಗುತ್ತಾರೆ. ಭಗವಂತ ಭಕ್ತನನ್ನು ಆಕರ್ಷಿಸಿಬಿಡುತ್ತಾನೆ. ಇನ್ನು ಕೆಲವು ವೇಳೆ ಭಕ್ತ ಚುಂಬಕ, ಭಗವಂತ ಸೂಜಿ ಆಗಿಬಿಡುತ್ತಾನೆ. ಭಕ್ತನ ಆಕರ್ಷಣೆ ಅಷ್ಟು ಬಲವಾದ್ದು, ಆತನ ಪ್ರೇಮಕ್ಕೆ ಮುಗ್ಧನಾಗಿ ಭಗವಂತ ಆತನ ಹತ್ತಿರಕ್ಕೆ ಹಾರಿಬರುತ್ತಾನೆ.”
ಪರಮಹಂಸರು ಇನ್ನೇನು ದಕ್ಷಿಣೇಶ್ವರಕ್ಕೆ ಹೊರಡುವುದರಲ್ಲಿದ್ದಾರೆ. ಈಶಾನ ಮತ್ತು ಉಳಿದ ಭಕ್ತರು ಅವರ ಸುತ್ತ ನಿಂತಿದ್ದಾರೆ. ಹಾಗೇ ಮಾತನಾಡುತ್ತ ಈಶಾನನಿಗೆ ಬುದ್ಧಿವಾದವೀಯುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಸಂಸಾರದಲ್ಲಿದ್ದರೂ ಯಾರು ಭಗವಂತನನ್ನು ಪ್ರಾರ್ಥಿಸುತ್ತಾನೋ ಆತ ವೀರಭಕ್ತ. ಭಗವಂತ ಭಾವಿಸುತ್ತಾನೆ: ‘ಯಾರು ಸಂಸಾರವನ್ನು ತ್ಯಜಿಸಿದ್ದಾನೊ ಆತ ನನ್ನನ್ನು ಪ್ರಾರ್ಥಿಸಿಯೇ ಪ್ರಾರ್ಥಿಸುತ್ತಾನೆ. ನನ್ನ ಸೇವೆಯನ್ನು ಆತ ಮಾಡಲೇಬೇಕು. ಇದರಲ್ಲಿ ವಿಶೇಷತೆಯೇನಿದೆ? ಒಂದು ಪಕ್ಷ ಆತ ನನ್ನನ್ನು ಪ್ರಾರ್ಥಿಸದಿದ್ದರೆ ಎಲ್ಲರೂ ಆತನಿಗೆ ಛೀಮಾರಿ ಮಾಡಿಬಿಡುತ್ತಾರೆ. ಆದರೆ ಯಾರು ಸಂಸಾರದಲ್ಲಿದ್ದೂ ನನ್ನನ್ನು ಪ್ರಾರ್ಥಿಸುತ್ತಾನೊ, ಸಂಸಾರವೆಂಬ ಇಪ್ಪತ್ತು ಮಣದ ಕಲ್ಲನ್ನು ಒಂದು ಕಡೆಗೆ ತಳ್ಳಿ ನನ್ನ ದರ್ಶನ ಪಡೆಯಲು ಪ್ರಯತ್ನಿಸುತ್ತಾನೊ, ಆತನೇ ಧನ್ಯ, ಆತನೇ ಮಹಾತ್ಮ, ಆತನೇ ವೀರಪುರುಷ.’”
ಪಂಡಿತ: “ನೀವು ಹೇಳುವುದು ಸರಿ. ಶಾಸ್ತ್ರವೂ ಹೀಗೆಯೇ ಹೇಳುತ್ತದೆ. ಮಹಾಭಾರತದಲ್ಲಿ ಧರ್ಮವ್ಯಾಧನ ಮತ್ತು ಪತಿವ್ರತೆಯ ಕಥೆ ಇದೆ. ಒಂದು ಅರಣ್ಯದಲ್ಲಿ ಒಬ್ಬ ತಪಸ್ವಿ ಧ್ಯಾನ ಮಾಡುತ್ತಿದ್ದಾಗ ಒಂದು ಕಾಗೆ ಅವನಿಗೆ ಉಪದ್ರವ ಕೊಡುತ್ತಿತ್ತು. ಒಂದು ದಿನ ಕೋಪ ಬಂದು ಆತ ಅದರ ಕಡೆ ರೇಗಿ ನೋಡಿದ. ಅದು ಒಡನೆಯೇ ಸುಟ್ಟು ಭಸ್ಮವಾಗಿ ಹೋಯಿತು. ಆತ ಭಾವಿಸಿಕೊಂಡ: ‘ನಾನು ಕೇವಲ ದೃಷ್ಟಿಸಿದುದರಿಂದಲೇ ಈ ಕಾಗೆ ಸುಟ್ಟು ಭಸ್ಮವಾಗಿ ಹೋಯಿತು. ಆದ್ದರಿಂದ ನಾನು ಆಧ್ಯಾತ್ಮಿಕ ಜೀವನದಲ್ಲಿ ಬಹಳವಾಗಿ ಮುಂದುವರಿದಿರಲೇಬೇಕು.’ ಒಂದು ದಿನ ಆತ ಒಂದು ಮನೆಗೆ ಭಿಕ್ಷೆಗೆ ಹೋದ. ಆ ಮನೆಯ ಹೆಂಗಸಿಗೆ ತನ್ನ ಪತಿಯಲ್ಲಿ ಅಷ್ಟೊಂದು ಶ್ರದ್ಧಾಭಕ್ತಿ. ಹಗಲಿರುಳೆನ್ನದೆ ಆತನ ಸೇವೆಯಲ್ಲಿಯೇ ನಿರತಳಾಗಿದ್ದಳು. ಪತಿ ಮನೆಗೆ ಬಂದೊಡನೆಯೇ ಆತನ ಪಾದಗಳನ್ನು ತೊಳೆಯುತ್ತಿದ್ದಳು; ಅಷ್ಟೇ ಅಲ್ಲ, ಅವನ್ನು ತನ್ನ ತಲೆಕೂದಲಿನಿಂದ ಒರಸುತ್ತಿದ್ದಳು. ಆ ತಪಸ್ವಿ ‘ಭವತಿ ಭಿಕ್ಷಾಂ ಧೇಹಿ’ ಎಂದು ಹೇಳಿದಾಗ ತನ್ನ ಪತಿಸೇವೆಯಲ್ಲಿ ನಿರತಳಾಗಿದ್ದುದರಿಂದ ಆತನಿಗೆ ಒಡನೆಯೇ ಭಿಕ್ಷೆ ನೀಡಲು ಆಕೆಗೆ ಸಾಧ್ಯವಾಗಲಿಲ್ಲ. ಆತ ಸ್ವಲ್ಪ ಹೊತ್ತು ಕಾಯಬೇಕಾಗಿ ಬಂದುದರಿಂದ ರೇಗಿ ಕೂಗಲಾರಂಭಿಸಿದ: ‘ಹೀಗೆ ಮಾಡಿದರೆ ನಿಮಗೆ ಶ್ರೇಯಸ್ಸಾಗುವುದಿಲ್ಲ.’ ಆ ಪತಿವ್ರತೆ ಮನೆಯೊಳಗಿನಿಂದಲೇ ಹೇಳಿದಳು: ‘ನಾನೇನು ಕಾಗೆಯಲ್ಲ, ಸುಟ್ಟುಬಿಡುವುದಕ್ಕೆ. ಸ್ವಲ್ಪ ಹೊತ್ತು ಸಾವಧಾನದಿಂದಿರಿ. ಪತಿಯ ಸೇವೆಯನ್ನು ಮುಗಿಸಿದ ನಂತರ, ನಿಮಗೆ ಸತ್ಕಾರ ಮಾಡುತ್ತೇನೆ.’ ಈ ಸಾಮಾನ್ಯ ಹೆಂಗಸು ಅರಣ್ಯದಲ್ಲಿ ಕಾಗೆಯನ್ನು ಸುಟ್ಟದ್ದನ್ನು ಅರಿತುಕೊಂಡಿರುವುದನ್ನು ನೋಡಿ, ತಪಸ್ವಿಗೆ ವಿಸ್ಮಯವೇ ಆಯಿತು. ಆ ತಪಸ್ವಿ ಆಕೆಯಿಂದ ಉಪದೇಶವನ್ನು ಯಾಚಿಸಿದ. ಆಕೆ ಆತನನ್ನು ಕಾಶಿಯ ಧರ್ಮವ್ಯಾಧನ ಹತ್ತಿರಕ್ಕೆ ಕಳುಹಿಸಿದಳು. ಆ ವ್ಯಾಧ ಮಾಂಸದಂಗಡಿ ಇಟ್ಟುಕೊಂಡಿದ್ದ. ಆತ ಕಟುಕನ ಕೆಲಸ ಮಾಡುತ್ತಿದ್ದರೂ, ತನ್ನ ತಂದೆ ತಾಯಿಗಳನ್ನು ಸಾಕ್ಷಾತ್ ಭಗವಂತನ ಮೂರ್ತಿಗಳೇ ಎಂದು ಎಣಿಸಿ ಅವರಿಗೆ ಹಗಲಿರುಳೂ ಸೇವೆ ಸಲ್ಲಿಸುತ್ತಿದ್ದ. ಆ ವ್ಯಾಧನನ್ನು ಸಂಧಿಸಿದ ನಂತರ ತಪಸ್ವಿಗೆ ಅನ್ನಿಸಿತು: ‘ಈ ವ್ಯಾಧ ಕಟುಕನಾಗಿರುವುದಲ್ಲದೆ, ಸಂಸಾರಿ ಕೂಡ! ಇಂಥ ಮನುಷ್ಯ ನನಗೇನು ಬ್ರಹ್ಮಜ್ಞಾನೋಪದೇಶ ಕೊಡಬಲ್ಲನಪ್ಪ?’ ಆದರೆ ಆ ವ್ಯಾಧ ಪೂರ್ಣಜ್ಞಾನಿಯಾಗಿದ್ದ. ಆತ ತನ್ನ ಕರ್ತವ್ಯವನ್ನು ಬಹಳ ನಿಷ್ಠೆಯಿಂದ ಮಾಡಿದುದರ ಫಲವಾಗಿ ಬ್ರಹ್ಮಜ್ಞಾನವನ್ನು ಪಡೆದುಕೊಂಡಿದ್ದ. ಆ ವ್ಯಾಧನ ಉಪದೇಶದಿಂದ ಆ ತಪಸ್ವಿಗೆ ಕೊನೆಗೆ ಬ್ರಹ್ಮಜ್ಞಾನ ದೊರೆಯಿತು.”
ಪರಮಹಂಸರು ಇನ್ನೇನು ಗಾಡಿ ಹತ್ತುವುದರಲ್ಲಿದ್ದಾರೆ, ಅವರು ಪಕ್ಕದಲ್ಲೇ ಇದ್ದ ಈಶಾನನ ಮಾವನ ಮನೆಯ ಬಾಗಿಲ ಹತ್ತಿರ ನಿಂತಿದ್ದಾರೆ. ಅವರ ಹತ್ತಿರ ಈಶಾನ ಮತ್ತು ಉಳಿದ ಭಕ್ತರೂ ನಿಂತುಕೊಂಡಿದ್ದಾರೆ-ಆಶೀರ್ವಾದ ಪಡೆಯಲು. ಪರಮಹಂಸರು ಮತ್ತೆ ಮಾತಾಡುತ್ತ ಈಶಾನನಿಗೆ ಹೇಳುತ್ತಿದ್ದಾರೆ: “ಇರುವೆಯ ಹಾಗೆ ಸಂಸಾರದಲ್ಲಿ ವಾಸಿಸು. ಈ ಜಗತ್ತಿನಲ್ಲಿ ನಿತ್ಯ, ಅನಿತ್ಯ ಎರಡೂ ಬೆರೆತುಕೊಂಡಿವೆ, ಮರಳು-ಸಕ್ಕರೆಯ ಹಾಗೆ. ಇರುವೆಯಾಗಿ ಕೇವಲ ಸಕ್ಕರೆಯನ್ನೇ ಆರಿಸಿಕೊ.
“ಚಿದಾನಂದರಸ, ವಿಷಯರಸ ಬೆರೆತುಕೊಂಡಿವೆ-ನೀರು, ಹಾಲಿನ ಹಾಗೆ. ಹಂಸಪಕ್ಷಿಯಾಗಿ ಹಾಲನ್ನು ಕುಡಿದು ನೀರನ್ನು ತ್ಯಜಿಸಿಬಿಡು.
“ಈ ಜಗತ್ತಿನಲ್ಲಿ ಬಾತುಕೋಳಿಯ ಹಾಗೆ ಇರು. ಅದರ ರೆಕ್ಕೆ-ಪುಕ್ಕಗಳಲ್ಲಿ ನೀರು ಸೇರಿಕೊಳ್ಳುತ್ತದೆ. ಆದರೆ ಅದು ಅದನ್ನು ಒದರಿಬಿಡುತ್ತದೆ. ಈ ಸಂಸಾರದಲ್ಲಿ ಕೆಸರು ಮೀನಿನ ಹಾಗೆ ವಾಸಿಸು. ಅದು ಕೆಸರಿನೊಳಗೇ ಇದ್ದರೂ, ಅದರ ಮೈ ಮಾತ್ರ ಪರಿಷ್ಕಾರ ಪರಿಚ್ಛಿನ್ನ.
“ಈ ಜಗತ್ತು ಸತ್ಯದ ಮತ್ತು ತೋರಿಕೆಯ ಒಂದು ಮಿಶ್ರಣ. ತೋರಿಕೆಯನ್ನು ತ್ಯಜಿಸಿ ಸತ್ಯವನ್ನು ಸ್ವೀಕರಿಸು.”
ಪರಮಹಂಸರು ಗಾಡಿಯನ್ನು ಹತ್ತಿ ದಕ್ಷಿಣೇಶ್ವರದ ಕಡೆ ಮುಂದುವರಿಯುತ್ತಿದ್ದಾರೆ.