೧೫ನೆ ಜೂನ್ ೧೮೮೪, ಜ್ಯೇಷ್ಠ ಕೃಷ್ಣ ಷಷ್ಠಿ, ಭಾನುವಾರ
ಶ್ರೀರಾಮಕೃಷ್ಣರು ಪ್ರಾತಃಕಾಲವೇ ಕಾಕುರ್ಗಾಚಿ ಎಂಬ ಹಳ್ಳಿಯಲ್ಲಿರುವ ಸುರೇಂದ್ರನ ತೋಟದ ಮನೆಗೆ ಬಂದಿದ್ದಾರೆ. ಅದು ಕಲ್ಕತ್ತಕ್ಕೆ ಬಹಳ ಸಮೀಪದಲ್ಲೇ ಇದೆ. ಸುರೇಂದ್ರ ಪರಮಹಂಸರನ್ನು ಮತ್ತು ಅನೇಕ ಮಂದಿ ಭಕ್ತರನ್ನು ಇಲ್ಲಿಗೆ ಆಹ್ವಾನಿಸಿದ್ದ.
ಭಕ್ತರೆಲ್ಲರು ಕೀರ್ತನೆಯನ್ನು ಕೇಳಲು ತೋಟದ ಮನೆಯ ಹಾಲ್ನಲ್ಲಿ ಸಾಲುಸಾಲಾಗಿ ನಿಂತುಕೊಂಡಿದ್ದಾರೆ. ಪ್ರಾತಃಕಾಲದಿಂದಲೇ ಕೀರ್ತನೆ ಆರಂಭವಾಗಿದೆ. ಕೀರ್ತನಕಾರರು ಗೌರಾಂಗನ ಸಂನ್ಯಾಸ, ಆತ ಕೃಷ್ಣಪ್ರೇಮದಿಂದ ಹುಚ್ಚನಂತಾಗಿರುವಿಕೆ, ಆತನನ್ನು ಕಾಣದೆ ನವದ್ವೀಪದ ಭಕ್ತರು ಕಾತರರಾಗಿ ಅಳುತ್ತಿರುವುದು ಇವುಗಳ ವಿಷಯವಾಗಿ ಹಾಡುತ್ತಿದ್ದಾರೆ.
ಕೀರ್ತನಕಾರರು ಹಾಡುತ್ತಿದ್ದಾರೆ:
ಮರಳಿ ಬಾ ಗೌರಾಂಗ ನಿನ್ನೂರಿಗೆ!
ಈಗ ಕೀರ್ತನಕಾರರು ಶ್ರೀಮತಿಯ (ರಾಧೆಯ) ವಿರಹಾವಸ್ಥೆಯ ಸಂಬಂಧವಾಗಿ ವರ್ಣನೆ ಮಾಡುತ್ತಿದ್ದಾರೆ. ಆ ವರ್ಣನೆಯನ್ನು ಕೇಳಿ ಪರಮಹಂಸರು ಭಾವಾವಿಷ್ಟರಾಗಿ ಬಿಟ್ಟಿದ್ದಾರೆ. ಇದ್ದಕ್ಕಿದ್ದ ಹಾಗೆ ಎದ್ದು ನಿಂತು ಹೃದಯವಿದ್ರಾವಕ ಕರುಣಸ್ವರದಿಂದ ಆಶುಕವಿತೆ ಮಾಡುತ್ತಿದ್ದಾರೆ. ಹಾಡುತ್ತಿದ್ದಾರೆ: “ಹೇ, ಸಖಿ, ಸಾಧ್ಯವಾದರೆ ನನ್ನ ಪ್ರಾಣವಲ್ಲಭ ಶ್ರೀಕೃಷ್ಣನನ್ನು ಇಲ್ಲಿಗೇ ಕರೆದುಕೊಂಡು ಬಾ. ಇಲ್ಲದಿದ್ದರೆ ಅಲ್ಲಿಗೇ ನನ್ನನ್ನು ಕರೆದುಕೊಂಡು ಹೋಗು.” ಹೀಗೆಂದು ಹಾಡಿ ಪರಮಹಂಸರು ರಾಧೆಯ ಭಾವನೆಯಲ್ಲಿ ತದ್ಗತರಾಗಿಬಿಟ್ಟಿದ್ದಾರೆ. ಅವರ ಬಾಯಿಂದ ಒಂದು ಮಾತೂ ಹೊರಬರುತ್ತಿಲ್ಲ. ದೇಹ ಸ್ಥಿರವಾಗಿದೆ. ಕಣ್ಣು ಅರ್ಧ ಮುಚ್ಚಿವೆ. ಸಂಪೂರ್ಣವಾಗಿ ಬಾಹ್ಯಜ್ಞಾನಶೂನ್ಯರಾಗಿದ್ದಾರೆ ಎಂದರೆ ಸಮಾಧಿಸ್ಥರಾಗಿದ್ದಾರೆ.
ಬಹಳ ಹೊತ್ತೇ ಆಯಿತು-ಪರಮಹಂಸರಿಗೆ ಮತ್ತೆ ಬಾಹ್ಯಪ್ರಜ್ಞೆ ಬರಲು. ಮತ್ತೆ ಅದೇ ಕರುಣಾಮಯ ಕಂಠದಿಂದ ಹೇಳುತ್ತಿದ್ದಾರೆ: “ಹೇ ಸಖಿ. ನನ್ನನ್ನು ನನ್ನ ಪ್ರಾಣವಲ್ಲಭ ಕೃಷ್ಣನ ಹತ್ತಿರಕ್ಕೆ ಕರೆದುಕೊಂಡು ಹೋಗಿ ಬಿಟ್ಟು ನನ್ನನ್ನು ನೀನು ನಿನ್ನ ಬದ್ಧದಾಸಿಯನ್ನಾಗಿ ಮಾಡಿಕೊ. ನಾನು ಎಂದೆಂದಿಗೂ ನಿನ್ನ ದಾಸಿಯಾಗಿರುವೆನು. ಕೃಷ್ಣನನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ತೋರಿಸಿಕೊಟ್ಟವಳು ನೀನೇ. ಹೇ ಕೃಷ್ಣ! ಹೇ ಪ್ರಾಣವಲ್ಲಭ!”
ಕೀರ್ತನಕಾರರು ಕೀರ್ತನೆ ಮುಂದುವರಿಸುತ್ತಿದ್ದಾರೆ. ಶ್ರೀಮತಿ ಹೇಳುತ್ತಿದ್ದಾಳೆ: “ಸಖಿ, ನಾನು ಯಮುನೆಗೆ ನೀರು ತರಲು ಹೋಗುವುದಿಲ್ಲ. ಒಮ್ಮೆ ಕದಂಬದಡಿಯಲ್ಲಿ ನನ್ನ ಪ್ರಿಯ ಸಖನನ್ನು ನೋಡಿದೆ. ಅಲ್ಲಿಗೆ ಹೋದರೇ ನಾನು ವಿಹ್ವಲಳಾಗಿಬಿಡುತ್ತೇನೆ.”
ಪರಮಹಂಸರು ಮತ್ತೆ ಭಾವಾವಿಷ್ಟರಾಗುತ್ತಿದ್ದಾರೆ. ನಿಟ್ಟುಸಿರನ್ನು ಬಿಟ್ಟು ಆಕಾಂಕ್ಷಿತರಾಗಿ ಹೇಳುತ್ತಿದ್ದಾರೆ: “ಆಹಾ! ಆಹಾ!”
ಕೀರ್ತನೆ ಮುಂದುವರಿಯುತ್ತಿದೆ. ರಾಧೆ ಹೇಳುತ್ತಿದ್ದಾಳೆ:
ನಿನ್ನಂಗದ ಸಂಗಸುಖವ ನಾನು ನೆನೆದ ಮಾತ್ರಕೆ
ನನ್ನಂಗದ ಬೇಗೆ ಹಿಂಗಿ ತಣ್ಣಗಾಯಿತೇತಕೆ!
ಕೀರ್ತನಕಾರರು ಆಗಾಗ ಆಶುಕವಿತೆ ಮಾಡುತ್ತಿದ್ದಾರೆ: “ಹೇ ಸಖಿಯರೆ, ನೀವು ಕಾದಿರಬಲ್ಲಿರಿ. ನನಗೆ ಒಮ್ಮೆ ಶ್ರೀಕೃಷ್ಣನನ್ನು ನನ್ನ ಪ್ರಾಣವಲ್ಲಭನನ್ನು ತೋರಿಸಿ.” ಮತ್ತೆ: “ಭೂಷಣಗಳಲ್ಲೆಲ್ಲಾ ಭೂಷಣನಾದ ಶ್ರೀಕೃಷ್ಣನನ್ನೇ ಕಳೆದುಕೊಂಡ ಮೇಲೆ ಇನ್ನೀ ಭೂಷಣಗಳೇಕೆ?” ಮತ್ತೆ: ‘ಅಯ್ಯೋ! ನನ್ನ ಸುದಿನಗಳು ಹೋಗಿ ದುರ್ದಿನಗಳು ಬಂದುಬಿಟ್ಟಿವೆ.’ ಕೊನೆಯದಾಗಿ: “ಈ ದುರ್ದಶೆಯ ದಿನಗಳು ಇಷ್ಟೊಂದು ಕಾಲ ತಳ್ಳುತ್ತಿವೆಯಲ್ಲಾ!”
ಪರಮಹಂಸರು ಆಶುಕವಿತೆ ಮಾಡುತ್ತಿದ್ದಾರೆ: “ಆ ಸುದಿನ ಇಂದೂ ಬರಲಿಲ್ಲವೇನು?” ಕೀರ್ತನಕಾರರು ಆಶುಕವಿತೆ ಮಾಡುತ್ತಿದ್ದಾರೆ: “ಎಷ್ಟೊಂದು ಕಾಲವಾಗಿ ಹೋಯಿತು. ಆ ಸುದಿನ ಇಂದೂ ಬರಲಿಲ್ಲವೇನು?”
ರಾಧೆ ತನ್ನ ಸಖಿಯರಿಗೆ ಹೇಳಿದ ಮಾತನ್ನು ಕೀರ್ತನಕಾರರು ಹಾಡುತ್ತಿದ್ದಾರೆ:
ನಾನು ಬದುಕಿರಲಾರೆ ಸಖಿಯರೆ
ನಾನು ಸಾಯುವೆ ನಿಶ್ಚಯ.
ತಡೆಯಲಾರೆನು ತಡೆಯಲಾರೆನು
ಕೃಷ್ಣವಿರಹದ ಬೇಗೆಯ.
ಯಾರಿಗೊಪ್ಪಿಸಿ ಹೋಗಲಯ್ಯೋ
ನನ್ನ ಪ್ರೇಮದ ನಿಧಿಯನು?
ನಾನು ಸತ್ತರೆ ಚಿತೆಯ ಬೆಂಕಿಗೆ
ಒಡ್ಡದಿರು ಈ ತನುವನು.
ಬೇಡಿಕೊಳುವೆನು ಸಖಿಯರೇ, ಇದ-
ನೆಸೆಯಬೇಡಿರಿ ಯಮುನೆಗೆ,
ಏಕೆನಲು ಈ ದೇಹದಲಿ ನಾ-
ನೊಲಿದಿರುವೆ ಶ್ರೀಕೃಷ್ಣಗೆ!
ನನ್ನ ದೇಹವ ಬಿಗಿದು ಕಟ್ಟಿರಿ
ತಮಾಲ ವೃಕ್ಷದ ಕೊಂಬೆಗೆ
ನನ್ನ ತನುವೂ ಹೊಂದಿಕೊಳುವುದು
ಈ ತಮಾಲದ ಬಣ್ಣಕೆ;
ಏಕೆನಲು ಶ್ರೀಕೃಷ್ಣನಂತೆಯೆ
ಈ ತಮಾಲವು ಶ್ಯಾಮಲ
ನನ್ನ ಕಿರಿತನದಿಂದಲೂ ಈ
ಶ್ಯಾಮವರ್ಣವು ಮೋಹಕ!
ನನ್ನ ಈ ತನು ಶ್ಯಾಮನೋರ್ವನಿ-
ಗಾಗಿಯೇ ಮುಡಿಪಾಗಿದೆ.
ಕೃಷ್ಣವರ್ಣದೊಳಿರಲಿ ಈ ತನು
ಅಗಲುವುದೆ ಬೇಡಾಗಿದೆ.
ರಾಧೆ ತನ್ನ ವಿರಹದ ಪರಮಾವಧಿಯನ್ನು ಮುಟ್ಟಿ ಮೂರ್ಛೆಹೋಗಿಬಿಡುತ್ತಾಳೆ.
ಹಾ ನೆಲಕೆ ಬಿದ್ದಳಲ್ಲ ಮೂರ್ಛೆಹೋದ ರಾಧೆಯು
“ಕೃಷ್ಣ” -ಎಂಬ ಹೆಸರಿನೊಡನೆ ಮುಗಿದುವವಳ ಕಂಗಳು.
ಏನು ಕತೆಯು ಮುಗಿಯಿತೇನು? ಅಯ್ಯೋ ಕೃಷ್ಣಪ್ರಿಯತಮೆ
ಒಂದೇ ಒಂದು ಚಣದ ಹಿಂದೆ ಮಾತಾಡಿದೆಯಲ್ಲವೆ?
ಬಳಿಗೆ ಬಂದರಲ್ಲಿ ನೋಡಲು ಅವರ ಪ್ರಾಣಸಖಿಯರು
ಶಿಶಿರಗಂಧ ವಾರಿಯಿಂದ ಉಪಚಾರವ ಗೈವರು.
ಹಲವರಳುತ ನಿಂತಿರುವರು ರಾಧೆಗಾದ ಪಾಡಿಗೆ,
ತಣ್ಣೀರನು ಚಿಮುಕಿಸುವರು ಹಲವರವಳ ವದನಕೆ.
ಸಹಿಸಲಾರರೀ ಸಖಿಯರು ರಾಧೆಗಾದ ಗತಿಯನು
ಬಹುಶಃ ಮೇಲೇಳಬಹುದು ಇಷ್ಟರಲ್ಲೆ ರಾಧೆಯು,
ಅದರೊಂದೆ ಶಂಕೆ ನನಗೆ; ಕೃಷ್ಣಪ್ರೇಮ ಮೃತಳಿಗೆ
ಹರಣವ ತಂದೀವ ಶಕ್ತಿ ಇಹುದೆ ಶೀತವಾರಿಗೆ?
ರಾಧೆ ಮೂರ್ಛಿತಳಾಗಿರುವುದನ್ನು ನೋಡಿ ಸಖಿಯರು ಆಕೆಯ ಕಿವಿಯ ಹತ್ತಿರ ಕೃಷ್ಣನಾಮವನ್ನು ಪಠಿಸುತ್ತಿದ್ದಾರೆ. ಇದು ಆಕೆಗೆ ಕಿಂಚಿತ್ ಬಾಹ್ಯಪ್ರಜ್ಞೆಯನ್ನು ತರುತ್ತಿದೆ. ಎದುರಿಗಿರುವ ತಮಾಲ ವೃಕ್ಷವನ್ನು ನೋಡಿ ಭಾವಿಸುತ್ತಾಳೆ, ಶ್ರೀಕೃಷ್ಣನೇ ತನ್ನೆದುರಿಗೆ ನಿಂತಿರುವನೆಂದು.
ಶ್ಯಾಮನಾಮದಿಂದ ಹರಣ ಮರಳಿ ಬಂತು ರಾಧೆಗೆ
ಮುಗಿದ ಕಣ್ಣ ಮೆಲ್ಲ ತೆರೆದು ದಿಟ್ಟಿಸುವಳು ಸುಮ್ಮನೆ,
ಕೃಷ್ಣನೆಲ್ಲು ಕಾಣಲಿಲ್ಲ; ಕಂಬನಿಯೊಳು ನುಡಿವಳು;
“ಎಲ್ಲಿರುವನು ನನ್ನ ಕೃಷ್ಣ ಕರೆತನ್ನಿರಿ ಸಖಿಯರೇ,
ಯಾರ ಹೆಸರ ಕಿವಿಯಲುಸುರಿ ನನಗೆಚ್ಚರಗೈದಿರೋ
ಆತನನ್ನು ಒಮ್ಮೆ ನನ್ನ ಕಣ್ಣೆದುರಿಗೆ ತೋರಿರೇ.”
ಕಪ್ಪು ಹೊಂಗೆ ತೊಂಗಲನ್ನು ತೂಗುತಿರಲು ಎದುರಿಗೆ,
ಆ ಅದನೇ ಕೃಷ್ಣನೆಂದು ದಿಟ್ಟಿಸುವಳು ಸುಮ್ಮನೆ!
“ಆ ಅಗೋ ಮಯೂರ ಪಿಂಛ! ಅವನ ಮುಡಿಯು ಕಾಣಿರೆ
ಎನಿತು ಸೊಗಸು ಎನಿತು ಸೊಗಸು” -ಎನುತ ಸಖಿಗೆ ತೋರಿರೆ,
ಯಾವುದೊ ನವಿಲೊಂದು ಅಲ್ಲಿ ಸುಳಿದಡಿಗಿತು ಎದುರಿಗೆ
ಅದನೆ ಕೃಷ್ಣ ಚೂಡವೆಂದು ಭ್ರಮಿಸಿದಳೇ ವಿಹ್ವಲೆ!
ಶ್ರೀಕೃಷ್ಣ ಮಥುರೆಗೆ ಹೋಗಿದ್ದಾನೆ-ರಾಜ್ಯಭಾರ ವಹಿಸಿಕೊಳ್ಳಲು. ಆತ ತನ್ನ ಬೃಂದಾವನದ ಉಡುಪು ಮತ್ತು ಕೊಳಲನ್ನು ತ್ಯಜಿಸಿ ಈಗ ರಾಜಯೋಗ್ಯ ಉಡಿಗೆ-ತೊಡಿಗೆಗಳನ್ನು ಹಾಕಿಕೊಂಡಿದ್ದಾನೆ. ರಾಧೆಯ ಸಖಿಯರು ಸಮಾಲೋಚನೆ ನಡೆಸಿ ಒಬ್ಬ ದೂತಿಯನ್ನು ಮಥುರೆಗೆ ಕಳುಹಿಸುತ್ತಾರೆ. ಆಕೆ ದಾರಿಯಲ್ಲಿ ಒಬ್ಬ ಮಥುರಾಪುರಿ ಹೆಂಗಸಿನ ಪರಿಚಯಮಾಡಿಕೊಳ್ಳುತ್ತಾಳೆ. ಆಕೆಗೂ ಈ ದೂತಿಯ ವಯಸ್ಸೇ. ಆಕ ಈ ದೂತಿಯ ಊರು ಮುಂತಾದುವನ್ನು ಕೇಳಿ ತಿಳಿದುಕೊಳ್ಳುತ್ತಾಳೆ.
ದೂತಿ ಹೇಳುತ್ತಾಳೆ: “ನಾನು ಹೋಗಿ ಆತನನ್ನು ಕರೆಯಬೇಕಾಗಿಲ್ಲ. ಆತ ತಾನಾಗಿಯೇ ನನ್ನ ಹತ್ತಿರಕ್ಕೆ ಬಂದುಬಿಡುತ್ತಾನೆ.” ಬಾಯಲ್ಲಿ ಹಾಗೆಂದರೂ ಕೃಷ್ಣನ ಅರಮನೆಗೆ ಆ ಮಥುರೆಯ ಹೆಂಗಸಿನೊಡನೆ ಮುಂದುವರಿಯುತ್ತಾಳೆ. ಬೀದಿಯಲ್ಲಿ ಹೋಗುತ್ತ ವ್ಯಾಕುಲದಿಂದ ಅಳುತ್ತ ಅಳುತ್ತ ಕೂಗಿಕೊಳ್ಳುತ್ತಾಳೆ: “ಹೇ ಹರಿ ಎಲ್ಲಿರುವೆ? ಹೇ ಗೋಪೀಜನಜೀವನ! ಹೇ ಪ್ರಾಣವಲ್ಲಭ! ಹೇ ರಾಧಾವಲ್ಲಭ! ಹೇ ಲಜ್ಜಾನಿವಾರಣ ಹರಿ! ಒಮ್ಮೆ ನನಗೆ ದರ್ಶನ ಕೊಡು! ನಾನು ಬಹಳ ಹೆಮ್ಮೆಯಿಂದ ಇಲ್ಲಿನ ನಿವಾಸಿಗಳಿಗೇ ಹೇಳಿಬಿಟ್ಟಿದ್ದೇನೆ: ‘ನೀನೇ ಬಂದು ನನ್ನನ್ನು ಸಂಧಿಸುವೆ’ ಎಂದು. ನನಗೆ ಅವಮಾನ ಮಾಡಬೇಡ.
ಬಿಂಕದಿ ನುಡಿವಳು ಮಧುರಾಪುರನಾರಿ:
“ಓ ನೀನಾರೇ ಗೋಪಕುಮಾರೀ,
ಚಕ್ರವರ್ತಿ ಶ್ರೀಕೃಷ್ಣನನೀತೆರ
ಹರಕು ಬಟ್ಟೆಯೊಳೆ ನೋಡುವೆನೆನ್ನುವ
ಹಳ್ಳಿಗಮಾರಿ?
ಸಪ್ತದ್ವಾರಗಳ ಪಹರೆಯಾಚೆಗಿದೆ
ಕೃಷ್ಣನಿವಾಸ!
ಎಂತು ಬಂದೆ ನೀ, ನಿನಗೆಷ್ಟು ಧೈರ್ಯವೇ
ಕಾಪಿನರಮನೆಯ ನೀನೆಂತು ನುಗ್ಗುವೇ,
ಓ, ಬಿಡು ನಿನಗಿಲ್ಲ ಪ್ರವೇಶ.”
ಗದ್ಗದದೊಳು ನುಡಿವಳು ಗೋಪಕುಮಾರಿ:
“ಓ ಪ್ರಿಯತಮ ಕೃಷ್ಣಾ
ಗೋಪೀಜನ ಮನಹಾರೀ,
ದಯಮಾಡಿಸು ಎಲ್ಲಿಹೆ ನೀ
ಸುಂದರ ಮೊಗದೋರಿ.
ಓ ಗೋಪೀಜನವಲ್ಲಭ-ಮಥುರಾಪುರವಾಸ
ಓ ರಾಧಾಪ್ರಿಯತಮ ಬಾರಾ-ಹೃದಯನಿವಾಸ;
ಓ ಬಾರಾ, ಲಜ್ಜಾಭಯದೂರ,
ಬಾರಾ, ಗೋಪೀಜನಜೀವನಧನ
ಸಂರಕ್ಷಣ ಚತುರ!”
ಕೀರ್ತನಕಾರರು, “ಓ ಪ್ರಿಯತಮ ಕೃಷ್ಣಾ ಗೋಪೀಜನಮನಹಾರೀ, ದಯಮಾಡಿಸು ಎಲ್ಲಿಹೆ ನೀ” ಎಂದು ಹಾಡಿದೊಡನೆಯೇ ಪರಮಹಂಸರು ಸಮಾಧಿಸ್ಥರಾಗಿಬಿಟ್ಟರು. ಕೀರ್ತನೆ ಇನ್ನೇನು ಮುಗಿಯಲಿರುವುದರಿಂದ ಕೀರ್ತನಕಾರರು ಉಚ್ಛಕಂಠದಿಂದ ಹಾಡಲಾರಂಭಿಸಿದ್ದಾರೆ. ಪರಮಹಂಸರು ಮತ್ತೆ ಎದ್ದು ನಿಂತುಕೊಂಡು ಸಮಾಧಿಸ್ಥರಾಗಿಬಿಟ್ಟರು. ಈಗ ಕಿಂಚಿತ್ ಬಾಹ್ಯಪ್ರಜ್ಞೆ ಪಡೆದವರಾಗಿ ಅಸ್ಪಷ್ಟ ಸ್ವರದಿಂದ ಹೇಳುತ್ತಿದ್ದಾರೆ: “ಕಿಟ್ಣ ! ಕಿಟ್ಣ” ಅವರು ಭಾವಾವಿಷ್ಟರಾಗಿಬಿಟ್ಟುದರಿಂದ ಕೃಷ್ಣನ ಹೆಸರನ್ನು ಉಚ್ಚರಿಸಲು ಅವರ ಕೈಯಲ್ಲಿ ಆಗುತ್ತಿಲ್ಲ.
ರಾಧಾಕೃಷ್ಣ ಮಿಲನವಾಯಿತು. ಕೀರ್ತನಕಾರರು ಆ ಮಿಲನದ ಸಂಬಂಧವಾಗಿ ಹಾಡುತ್ತಾರೆ. ಪರಮಹಂಸರು ಈಗ ಆಶುಕವಿತೆ ಮಾಡುತ್ತಿದ್ದಾರೆ.
ಒರಗಿ ನಿಂತಿಹಳು ರಾಧಾರಮಣಿಯು
ಕೃಷ್ಣವೃಕ್ಷದಲ್ಲಿ
ತಮಾಲ ವೃಕ್ಷವ ತಬ್ಬಿತೊ ಎನೆ
ಬಂಗಾರದ ಬಳ್ಳಿ!
ಈಗ ನಾಮ ಸಂಕೀರ್ತನೆ ಆರಂಭವಾಯಿತು. ಕೀರ್ತನಕಾರರು ತಾಳ ಮೃದಂಗಗಳೊಡನೆ ಹಾಡುತ್ತಿದ್ದಾರೆ: “ರಾಧೇ ಗೋವಿಂದ ಜಯ್!” ಎಂದು. ಭಕ್ತರೆಲ್ಲರೂ ಉನ್ಮತ್ತರಾಗಿ ಹಾಡುತ್ತಿದ್ದಾರೆ:ಪರಮಹಂಸರು ನರ್ತಿಸುತ್ತಿದ್ದಾರೆ. ಭಕ್ತರು ಅವರ ಸುತ್ತಲೂ ಸುತ್ತುಗಟ್ಟಿ ಆನಂದದಿಂದ ನರ್ತಿಸುತ್ತಿದ್ದಾರೆ. “ರಾಧೇ ಗೋವಿಂದ ಜಯ್! ರಾಧೇ ಗೋವಿಂದ ಜಯ್!” ಎಂಬ ಘೋಷವು ತೋಟದ ಮನೆಯಲ್ಲೆಲ್ಲಾ ಮರುಧ್ವನಿ ಕೊಡುತ್ತಿದೆ.
ಕೀರ್ತನೆ ಮುಗಿಯಿತು. ಈಗ ಪರಮಹಂಸರು ಭಕ್ತರೊಡನೆ ಕುಳಿತುಕೊಂಡಿದ್ದಾರೆ. ನಿರಂಜನ ಬಂದು ಪರಮಹಂಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿದೊಡನೆಯೇ ಅವರು ಎದ್ದು ನಿಂತು ಹರ್ಷೋತ್ಕರ್ಷ ಮುಖ ಮತ್ತು ಕಣ್ಣುಗಳಿಂದ ಹೇಳುತ್ತಿದ್ದಾರೆ “ನೀನೂ ಬಂದು ಬಿಟ್ಟೆ. (ಮಾಸ್ಟರಿಗೆ) ನೋಡು, ಈ ಹುಡುಗ ಬಹಳ ಸರಳ. ಪೂರ್ವಜನ್ಮಗಳಲ್ಲಿ ಬಹಳವಾಗಿ ತಪಸ್ಸುಮಾಡದಿದ್ದರೆ ಸರಳತೆ ಉಂಟಾಗದು. ಕಪಟತೆ, ಲೆಕ್ಕಾಚಾರದ ಬುದ್ಧಿ ಮೊದಲಾದುವು ಇದ್ದುವು ಎಂದರೆ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಲಾಗುವುದಿಲ್ಲ.
“ಕಾಣುವುದಿಲ್ಲವೆ, ಭಗವಂತ ಯಾರ ಮನೆಯಲ್ಲಿ ಅವತರಿಸಿದನೊ, ಆ ಮನೆಯವರು ಅತ್ಯಂತ ಸರಳರಾಗಿದ್ದುದು? ದಶರಥ ಎಷ್ಟು ಸರಳ! ನಂದ-ಶ್ರೀಕೃಷ್ಣನ ತಂದೆ ಎಂಥ ಸರಳ ಜೀವಿ! ಜನ ಹೇಳುವುದುಂಟು: ‘ಆಹಾ ಈತನೆಷ್ಟು ಸರಳ! ಈತ ನಂದಗೋಪನೇ.’
(ನಿರಂಜನನಿಗೆ) “ನೋಡು, ನಿನ್ನ ಮುಖದ ಮೇಲೆ ಕಪ್ಪು ಮುಸುಕಿಕೊಂಡಿರುವ ಹಾಗೆ ಕಾಣುತ್ತಿದೆ. ನೀನು ಆಫೀಸಿನಲ್ಲಿ ಕೆಲಸಮಾಡುತ್ತಿಲ್ಲವೆ, ಅದಕ್ಕಾಗಿ. ಅಲ್ಲಿ ಲೆಕ್ಕಪತ್ರ ಇಡಬೇಕಾಗುತ್ತದೆ. ಅದೂ ಅಲ್ಲದೆ ಇನ್ನೂ ಅನೇಕ ವಿಧದ ಕೆಲಸಕಾರ್ಯಗಳನ್ನು ಮಾಡಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಮನಸ್ಸು ಅಲ್ಲಿ ಯಾವಾಗಲೂ ಒಂದು ವಿಧವಾದ ಆಕಾಂಕ್ಷಾವಸ್ಥೆಯಲ್ಲಿರುತ್ತದೆ. ಸಂಸಾರಿಗಳಂತೆ ನೀನೂ ಚಾಕರಿಮಾಡುತ್ತಿದ್ದೀಯೆ. ಆದರೆ ಒಂದು ಸ್ವಲ್ಪ ವ್ಯತ್ಯಾಸವಿದೆ. ನೀನು ನಿನ್ನ ತಾಯಿಯ ಸಲುವಾಗಿ ಚಾಕರಿ ಸ್ವೀಕರಿಸಿದ್ದೀಯೆ. ತಾಯಿ ಪೂಜಾರ್ಹಳು. ಬ್ರಹ್ಮಮಯಿ ಸ್ವರೂಪ, ಹೆಂಡತಿ ಮಕ್ಕಳಿಗಾಗಿ ನೀನು ಚಾಕರಿ ಮಾಡುತ್ತಿದ್ದುದೇ ಆಗಿದ್ದರೆ, ನಾನು ಹೇಳಿಬಿಡುತ್ತಿದ್ದೆ: “ಛೇ ಛೇ ! ಹತ್ತು ಸಲ ಛೇ! ನೂರು ಸಲ ಛೇ!’
(ಮಣಿಮಲ್ಲಿಕನಿಗೆ ನಿರಂಜನನನ್ನು ತೋರಿಸಿ) “ನೋಡು. ಈ ಹುಡುಗ ಬಹಳ ಸರಳ. ಆದರೆ ಈಗ ಸ್ವಲ್ಪ ಕಾಲದಿಂದ ಒಂದಿಷ್ಟು ಸುಳ್ಳು ಹೇಳುವುದನ್ನು ಕಲಿತುಕೊಂಡುಬಿಟ್ಟಿದ್ದಾನೆ. ಇದೇ ಈತನಲ್ಲಿರುವ ದೋಷ. ಅಂದು ಹೇಳಿಹೋದ ಬರುತ್ತೇನೆ ಅಂತ, ಆದರೆ ಬರಲೇ ಇಲ್ಲ. (ನಿರಂಜನನಿಗೆ) ಇದಕ್ಕಾಗಿಯೇ ರಾಖಾಲ ನಿನ್ನನ್ನು ಕೇಳಿದ್ದು, ನೀನು ಏಡೇದೇರಕ್ಕೆ ಬಂದೂ ಏಕೆ ನನ್ನನ್ನು ನೋಡಲು ಬರಲಿಲ್ಲ ಎಂದು.”
ನಿರಂಜನ: “ಅಲ್ಲಿಗೆ ಕೇವಲ ಎರಡು ದಿನಕ್ಕೆ ಮಾತ್ರ ಬಂದಿದ್ದುದು.”
ಶ್ರೀರಾಮಕೃಷ್ಣರು ನಿರಂಜನನಿಗೆ ಮಾಸ್ಟರನ್ನು ತೋರಿಸಿ: “ಈತ ಹೆಡ್ಮಾಸ್ಟರ್. ನಿನ್ನನ್ನು ನೋಡಿ ಬರುವಂತೆ ನಾನು ಈತನನ್ನು ಕಳುಹಿಸಿದ್ದೆ. (ಮಾಸ್ಟರಿಗೆ) ಅಂದು ನೀನು ಬಾಬು ರಾಮನನ್ನು ನನ್ನ ಹತ್ತಿರಕ್ಕೆ ಕಳುಹಿಸಿದ್ದೆಯಾ?”
ಪರಮಹಂಸರು ಪಕ್ಕದ ಕೊಠಡಿಗೆ ಹೋಗಿ ಕೆಲವು ಮಂದಿ ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ- “ಆಹಾ, ಗೋಪಿಯರದು ಎಂಥ ಅನುರಾಗ! ತಮಾಲ ವೃಕ್ಷ ನೋಡಿದೊಡನೆಯೇ ಒಮ್ಮೆಗೇ ಪ್ರೇಮೋನ್ಮಾದ! ರಾಧೆಯ ವಿರಹಾಗ್ನಿ ಅಷ್ಟು ಉಜ್ಜ್ವಲವಾದದ್ದು. ಕಣ್ಣಿನಿಂದ ನೀರು ಸ್ರವಿಸಿದೊಡನೆಯೇ ಅದು ಇಂಗಿಹೋಗುತ್ತಿತ್ತು. ನೀರು ಸ್ರವಿಸುವುದೇ ತಡ. ಅದು ಆವಿಯಾಗಿ ಹೊರಟುಹೋಗುತ್ತಿತ್ತು! ಕೆಲಕೆಲವು ಸಮಯ ಆಕೆಯ ಭಾವ ಎಷ್ಟು ಗಂಭೀರವಾದುದು ಎಂಬುದು ಗೊತ್ತೇ ಆಗುತ್ತಿರಲಿಲ್ಲ. ವಿಶಾಲವಾದ ಸರೋವರಕ್ಕೆ ಆನೆ ಇಳಿದರೆ, ಅದು ಜನರ ಗಮನಕ್ಕೇ ಬರುವುದಿಲ್ಲ.”
ಮಾಸ್ಟರ್: “ಹೌದು, ನಿಜ. ಗೌರಾಂಗನಿಗೂ ಹೀಗೇ ಆಗಿತ್ತು. ಅರಣ್ಯವನ್ನು ನೋಡಿ ಅದು ಬೃಂದಾವನವೆಂದು, ಸಮುದ್ರ ನೋಡಿ ಅದು ಯಮುನೆಯೆಂದು ಆತ ತಪ್ಪು ಭಾವಿಸಿದ.”
ಶ್ರೀರಾಮಕೃಷ್ಣರು: “ಆಹಾ! ಆ ಪ್ರೇಮದ ಒಂದು ಬಿಂದು ಯಾರಿಗಾದರೂ ಉಂಟಾಗುವುದಾದರೆ! ಅದು ಎಂಥ ಅನುರಾಗ! ಏನು ಪ್ರೀತಿ ಅದು! ರಾಧೆಯದು ಕೇವಲ ನೂರಕ್ಕೆ ನೂರು ಭಾಗವಲ್ಲ, ನೂರಕ್ಕೆ ನೂರಿಪ್ಪತ್ತೈದು ಭಾಗ ಅನುರಾಗ! ಇದಕ್ಕೆ ಪ್ರೇಮೋನ್ಮಾದ ಅಂತ ಹೆಸರು. ಮುಖ್ಯವಾಗಿ ಮಾಡಬೇಕಾದ್ದೇನೆಂದರೆ, ಭಗವಂತನನ್ನು ಪ್ರೀತಿಸಬೇಕು. ಆತನ ಸಾಕ್ಷಾತ್ಕಾರಕ್ಕಾಗಿ ವ್ಯಾಕುಲಪಡಬೇಕು. ನೀನು ಯಾವ ಮಾರ್ಗವನ್ನಾದರೂ ಅನುಸರಿಸು; ಸಾಕಾರದಲ್ಲಾದರೂ ಶ್ರದ್ಧೆಯಿಡು, ನಿರಾಕಾರದಲ್ಲಾದರೂ ಶ್ರದ್ಧೆಯಿಡು; ಭಗವಂತ ಮನುಷ್ಯ ರೂಪಿನಲ್ಲಿ ಅವತರಿಸುತ್ತಾನೆ ಎಂಬುದರಲ್ಲಿ ನಿನಗೆ ಶ್ರದ್ಧೆ ಇರಲಿ, ಬಿಡಲಿ; ಆತನಲ್ಲಿ ಅನುರಾಗವಿದ್ದರೇ ಬೇಕಾದಷ್ಟು. ಆಗ ಆತ ತನ್ನ ನಿಜಸ್ವರೂಪ ಏನು ಎಂಬುದನ್ನು ತಾನಾಗಿಯೇ ತೋರಿಸಿಕೊಟ್ಟುಬಿಡುತ್ತಾನೆ. ಹುಚ್ಚನಾಗಬೇಕಾದರೆ, ಪ್ರಾಪಂಚಿಕ ವಸ್ತುಗಳಿಗಾಗಿ ಏಕೆ ಹುಚ್ಚನಾಗಬೇಕು? ಹುಚ್ಚನಾಗಬೇಕಾದರೆ, ಭಗವಂತನಿಗಾಗಿ ಹುಚ್ಚನಾಗು.”
ಪರಮಹಂಸರು ಈಗ ಹಾಲ್ಗೆ ಹಿಂದಿರುಗಿ ಬಂದಿದ್ದಾರೆ. ಅವರ ಆಸನದ ಹತ್ತಿರ ಒಂದು ಒರಗುದಿಂಬನ್ನು ಹಾಕಲಾಯಿತು. ಅವರು ಕುಳಿತುಕೊಳ್ಳುವಾಗ, “ಓಂ ತತ್ ಸತ್” ಎಂಬ ಮಂತ್ರ ಉಚ್ಚರಿಸಿ ಅದನ್ನು ಒರಗಿಕೊಂಡರು. ಅನೇಕ ಮಂದಿ ಪ್ರಾಪಂಚಿಕರು ಬಹುಶಃ ಅದನ್ನು ಉಪಯೋಗಿಸಿರಬೇಕು. ಅದಕ್ಕೇ ಅದನ್ನು ಆ ರೀತಿಯಾಗಿ ಶುದ್ಧಮಾಡಿದರು ಅಂತ ಕಾಣುತ್ತದೆ. ಭವನಾಥ ಮಾಸ್ಟರ್ ಮೊದಲಾದವರು ಅವರ ಹತ್ತಿರ ಕುಳಿತಿದ್ದಾರೆ. ಆಗಲೆ ಬಹಳ ಹೊತ್ತಾಗಿಬಿಟ್ಟಿದೆ. ಊಟಕ್ಕೆ ಎಲೆಯನ್ನು ಹಾಕುವ ಸೂಚನೆಯೇ ಕಂಡುಬರುತ್ತಿಲ್ಲ. ಅವರು ಮಕ್ಕಳ ಹಾಗೆ ಇನ್ನು ತಡೆಯಲಾರದೆ ಕೇಳುತ್ತಿದ್ದಾರೆ: “ಏನು ಸಮಾಚಾರ, ಇನ್ನೂ ಊಟದ ಪ್ರಸ್ತಾಪವೇ ಇಲ್ಲವಲ್ಲ? ನರೇಂದ್ರನೆಲ್ಲಿ?”
ಒಬ್ಬ ಭಕ್ತ ನಗುತ್ತ: “ಮಹಾಶಯರೆ, ರಾಮಬಾಬು ಮ್ಯಾನೇಜರ್. ಆತ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾನೆ.”
ಶ್ರೀರಾಮಕೃಷ್ಣರು ನಗುತ್ತ: “ಹಾಗೋ! ಅದಕ್ಕೇ ಹೀಗೆ.”
ಒಬ್ಬ ಭಕ್ತ: “ಆತ ಎಲ್ಲಿ ಮ್ಯಾನೇಜರ್ ಆದರೂ ಇದೇ ಗತಿ.” (ಎಲ್ಲರೂ ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು ಭಕ್ತರಿಗೆ: “ಸುರೇಂದ್ರನೆಲ್ಲಿ? ಆಹಾ, ಈಗ ಆತನಿಗೆ ಎಂಥ ಒಳ್ಳೇ ಸ್ವಭಾವ ಬಂದುಬಿಟ್ಟಿದೆ! ಆತ ಮುಚ್ಚುಮರೆಯಿಲ್ಲದೆ ಆಡಿಬಿಡತಕ್ಕವ; ಇದ್ದುದನ್ನು ಇದ್ದಹಾಗೆ ಹೇಳಲು ಸ್ವಲ್ಪವೂ ಹೆದರತಕ್ಕವನಲ್ಲ. ಮತ್ತೆ ನೋಡಿ, ಆತನದು ಮುಕ್ತಹಸ್ತ. ಸಹಾಯಕ್ಕಾಗಿ ಆತನನ್ನು ಸಮೀಪಿಸಿದವರು ಎಂದಿಗೂ ಬರಿಗೈಯಲ್ಲಿ ಹಿಂದಿರುಗುವಂತೆಯೇ ಇಲ್ಲ. (ಮಾಸ್ಟರಿಗೆ) ನೀನು ಭಗವಾನ್ದಾಸನನ್ನು 1 ನೋಡಲು ಹೋಗಿದ್ದೆಯಲ್ಲ, ಆತ ನಿನಗೆ ಹೇಗೆ ಕಂಡ ಹೇಳು ನೋಡೋಣ?”
ಮಾಸ್ಟರ್: “ಈಗ ಆತ ಬಹಳವಾಗಿ ಮುದುಕನಾಗಿಬಿಟ್ಟಿದ್ದಾನೆ. ಕಾಲ್ನಾಕ್ಕೆ ಹೋಗಿದ್ದೆ. ಅಲ್ಲಿ ರಾತ್ರಿ ವೇಳೆಯಲ್ಲಿ ಆತನನ್ನು ನೋಡಿದೆ. ಒಂದು ಹಾಸಿಗೆಯ ಮೇಲೆ ಮಲಗಿಕೊಂಡಿದ್ದ. ಒಬ್ಬ ಪ್ರಸಾದವನ್ನು ತಂದು ತಿನ್ನಿಸುತ್ತಿದ್ದ. ಗಟ್ಟಿಯಾಗಿ ಕೂಗಿ ಮಾತನಾಡಿಸಿದರೆ ಆತನಿಗೆ ಕೇಳಿಸುತ್ತದೆ. ನಾನು ನಿಮ್ಮ ವಿಷಯವಾಗಿ ಆತನಿಗೆ ಹೇಳಿದುದಕ್ಕಾಗಿ ಆತ ಹೇಳಿದ: ‘ನಿನಗಿನ್ನೇನು ಚಿಂತೆ?’
ಭವನಾಥ ಮಾಸ್ಟರಿಗೆ: “ನೀವು ಅನೇಕ ದಿನಗಳಿಂದ ದಕ್ಷಿಣೇಶ್ವರಕ್ಕೆ ಹೋಗಲೇ ಇಲ್ಲ. ಪರಮಹಂಸರು ನಿಮ್ಮ ವಿಷಯವಾಗಿ ವಿಚಾರಿಸಿ, ಕೇಳಿದರು: ‘ಮಾಸ್ಟರಿಗೆ ಈ ಸ್ಥಳ ಅರುಚಿಯಾಗಿಬಿಟ್ಟಿರುವುದೆ?’”
ಹೀಗೆಂದು ಹೇಳಿ ಭವನಾಥ ನಗಲಾರಂಭಿಸಿದ. ಪರಮಹಂಸರು ಅವರಿಬ್ಬರ ಮಾತುಕತೆಗಳನ್ನು ಕೇಳುತ್ತಿದ್ದರು. ಮಾಸ್ಟರನ್ನು ಪ್ರೀತಿಯಿಂದ ದೃಷ್ಟಿಸಿ ಆತನನ್ನು ಕೇಳುತ್ತಿದ್ದಾರೆ. “ಹೌದು ನಿಜ. ನೀನು ಬಹಳ ದಿನಗಳಿಂದ ಅಲ್ಲಿಗೆ ಬರಲೇ ಇಲ್ಲವಲ್ಲ ಏಕೆ?” ಮಾಸ್ಟರ್ ಏನೋ ಕುಂಟು ನೆಪವನ್ನು ಕೊಡುತ್ತಿದ್ದಾನೆ.
ಈಗ ಮಹಿಮಚರಣ ಬಂದ. ಆತ ಕಾಶೀಪುರ ನಿವಾಸಿ. ಪರಮಹಂಸರಲ್ಲಿ ಆತನಿಗೆ ವಿಶೇಷವಾದ ಶ್ರದ್ಧಾಭಕ್ತಿ. ಸರ್ವದಾ ದಕ್ಷಿಣೇಶ್ವರಕ್ಕೆ ಹೋಗುತ್ತಲೇ ಇರುತ್ತಾನೆ.ಬ್ರಾಹ್ಮಣ; ಪಿತ್ರಾರ್ಜಿತ ಆಸ್ತಿ ಇದೆ. ಸ್ವತಂತ್ರ ಜೀವನ ನಡೆಸುತ್ತಿದ್ದಾನೆ. ಯಾರ ಕೈಕೆಳಗೂ ಕೆಲಸ ಮಾಡುತ್ತಿಲ್ಲ. ಸ್ವಲ್ಪ ಪಾಂಡಿತ್ಯವೂ ಇದೆ. ಅನೇಕ ಇಂಗ್ಲಿಷ್ ಮತ್ತು ಸಂಸ್ಕೃತ ಗ್ರಂಥಗಳನ್ನು ಓದಿದ್ದಾನೆ. ಯಾವಾಗಲೂ ವೇದಾಂತ ವಿಚಾರ ಮತ್ತು ಭಗವಚ್ಚಿಂತನೆ ಮಾಡುತ್ತಿರುತ್ತಾನೆ.
ಶ್ರೀರಾಮಕೃಷ್ಣರು ಮಹಿಮಚರಣನಿಗೆ: “ಏನಪ್ಪ ಇದು? ಇಲ್ಲಿಗೆ ಒಂದು ಜಹಜು ಬಂದು ನಿಂತುಬಿಟ್ಟಿದೆಯಲ್ಲ! (ಎಲ್ಲರೂ ನಗುತ್ತಿದ್ದಾರೆ.) ಇಂಥ ಸ್ಥಳಗಳಿಗೆ ಚಿಕ್ಕ ಪುಟ್ಟ ದೋಣಿ ಮಾತ್ರ ಬರಬಲ್ಲವು. ಆದರೆ ಒಂದು ವಿಷಯ. ಇದು ಮಳೆಗಾಲ!” (ನಗು)
ಪರಮಹಂಸರು ಮಹಿಮಚರಣನೊಡನೆ ಮಾತುಕತೆ ಆಡುತ್ತಿದ್ದಾರೆ. ಆತನನ್ನು ಕೇಳುತ್ತಿದ್ದಾರೆ: “ಒಳ್ಳೇದು, ಜನರಿಗೆ ಅನ್ನದಾನ ಮಾಡಿದರೆ ಒಂದು ರೀತಿಯಲ್ಲಿ ಭಗವಂತನ ಸೇವೆಯನ್ನೇ ಮಾಡಿದಂತಾಗುತ್ತದೆ. ಅಲ್ಲವೆ? ಎಲ್ಲಾ ಜೀವಿಗಳಲ್ಲಿಯೂ ಆತ ಅಗ್ನಿರೂಪದಲ್ಲಿ ಇದ್ದಾನೆ. ಜನರಿಗೆ ಅನ್ನ ಹಾಕುವುದು ಎಂದರೆ, ಅಂತರ್ಯಾಮಿಯಾಗಿರುವ ಆತನಿಗೆ ಅರ್ಪಿಸಿದಂತೆಯೇ. ಆದರೆ, ಹಾಗೆಂದು ದುಷ್ಟರಿಗೆ ಅನ್ನದಾನ ಮಾಡಕೂಡದು-ಅಂದರೆ ವ್ಯಭಿಚಾರಾದಿ ಮಹಾಪಾತಕಗಳನ್ನು ಮಾಡಿರತಕ್ಕವರಿಗೆ. ಅವರು ಎಲ್ಲಿ ಕುಳಿತುಕೊಳ್ಳುತ್ತಾರೋ ಆ ಜಾಗ ಏಳು ಮೊಳ ಆಳದವರೆಗೆ ಅಪವಿತ್ರವಾಗಿಬಿಡುತ್ತದೆ. ಒಮ್ಮೆ ಹೃದೆ ಊರಿನಲ್ಲಿ ಕೆಲವರಿಗೆ ಅನ್ನ ಹಾಕಿದ. ಅವರಲ್ಲಿ ಅನೇಕರು ಬಹಳ ಕೆಟ್ಟವರು. ನಾನು ಹೃದೂಗೆ ಹೇಳಿದೆ: ‘ಇಲ್ಲಿ ಕೇಳು. ಇಂಥವರಿಗೆ ನೀನು ಅನ್ನ ಹಾಕಿದೆಯೊ, ಇಗೋ ನಾನು ನಿನ್ನ ಮನೆಯಿಂದ ಹೊರಟೆ’ (ಮಹಿಮಚರಣನಿಗೆ) ನಾನು ಕೇಳಿದ್ದೇನೆ, ನೀನು ಹಿಂದೆ ಬಹಳವಾಗಿ ಅನ್ನದಾನ ಮಾಡುತ್ತಿದ್ದೆ ಎಂಬುದಾಗಿ. ಈಗ ಸಂಸಾರದ ವೆಚ್ಚ ಹೆಚ್ಚಾಗಿಬಿಟ್ಟಿದೆಯೇನು?’” (ನಗು.)
ಈಗ ಎಲೆ ಹಾಕುತ್ತಿದ್ದಾರೆ-ದಕ್ಷಿಣ ವರಾಂಡದಲ್ಲಿ. ಪರಮಹಂಸರು ಮಹಿಮಚರಣನಿಗೆ ಹೇಳುತ್ತಿದ್ದಾರೆ; “ನೀನು ಒಳಗೆ ಹೋಗಿ ನೋಡು. ಅವರು ಏನು ಮಾಡುತ್ತಿದ್ದಾರೆ. ಸಾಧ್ಯವಾದರೆ ಒಂದು ಸ್ವಲ್ಪ ಹೊತ್ತು ಬಡಿಸು. ಆದರೆ ಅದನ್ನು ನಾನು ಹೇಳುವುದು ಸರಿಯಲ್ಲ.” ಮಹಿಮಚರಣ ಹೇಳುತ್ತಿದ್ದಾನೆ: “ಮೊದಲು ಅವರು ಇಲ್ಲಿಗೆ ತಂದಿಡಲಿ. ಆಮೇಲೆ ಬೇಕಾದರೆ ನೋಡುತ್ತೇನೆ.” ಕೆಮ್ಮುತ್ತ ಅಡಿಗೆ ಮನೆ ಕಡೆಗೆ ಹೋದವನು ಒಡನೆಯೇ ಹಿಂದಿರುಗಿ ಬರುತ್ತಿದ್ದಾನೆ.
ಪರಮಹಂಸರು ಮತ್ತು ಭಕ್ತರು ಆನಂದದಿಂದ ಊಟಮಾಡಿ ಈಗ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಅಪರಾಹ್ನ ಎರಡು ಘಂಟೆಯಾದನಂತರ ಬ್ರಾಹ್ಮಸಮಾಜಕ್ಕೆ ಸೇರಿದ ಪ್ರತಾಪಚಂದ್ರ ಮಜುಮದಾರ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಅಭಿವಾದನೆ ಮಾಡುತ್ತಿದ್ದಾನೆ. ಪರಮಹಂಸರೂ ತಲೆಯನ್ನು ತಗ್ಗಿಸಿ ನಮಸ್ಕಾರ ಮಾಡುತ್ತಿದ್ದಾರೆ. ಈಗ ಅವರಿಬ್ಬರೂ ಮಾತುಕತೆ ಆಡುತ್ತಿದ್ದಾರೆ.
ಪ್ರತಾಪ: “ಮಹಾಶಯರೆ, ಆರೋಗ್ಯಲಾಭಕ್ಕಾಗಿ ನಾನು ಡಾರ್ಜಿಲಿಂಗಿಗೆ ಹೋಗಿದ್ದೆ.”
ಶ್ರೀರಾಮಕೃಷ್ಣರು: “ಆದರೆ ನಿನ್ನ ಶರೀರವೇನು ಉತ್ತಮಗೊಂಡಂತೆ ತೋರುತ್ತಿಲ್ಲವಲ್ಲ, ನಿನಗೇನಾಗಿದೆ?”
ಪ್ರತಾಪ: “ಕೇಶವಸೇನನಿಗೆ ಬಂದಿದ್ದ ರೋಗವೇ ನನಗೂ ಬಂದಿದೆ.”
ಈಗ ಕೇಶವಸೇನನ ಸಂಬಂಧವಾಗಿ ಮಾತುಕತೆ ಆರಂಭವಾಯಿತು. ಪ್ರತಾಪ ಹೇಳುತ್ತಿದ್ದಾನೆ: “ಕೇಶವನಲ್ಲಿ ವೈರಾಗ್ಯವನ್ನು ಬಾಲ್ಯಕಾಲದಿಂದಲೂ ನೋಡಬಹುದಾಗಿತ್ತು. ಆತ ಆಟ ಪಾಠ ವಿನೋದಗಳಲ್ಲಿ ತೊಡಗುತ್ತಿದ್ದುದು ಎಲ್ಲೋ ಅಪರೂಪಕ್ಕೊಮ್ಮೆ. ಹಿಂದೂ ಕಾಲೇಜಿನಲ್ಲಿ ಓದುತ್ತಿದ್ದ. ಅಲ್ಲಿ ಆತನಿಗೂ ಸತ್ಯೇಂದ್ರನಿಗೂ ಸ್ನೇಹ ಬೆಳೆಯಿತು. ಸತ್ಯೇಂದ್ರನ ಮೂಲಕ ಆತನ ತಂದೆ ದೇವೇಂದ್ರನಾಥ ಠಾಕೂರನ ಪರಿಚಯ ಕೇಶವನಿಗೆ ಆಯಿತು. ಕೇಶವನಿಗೆ ಎರಡೂ ಇತ್ತು. ಯೋಗವೂ ಇತ್ತು. ಭಕ್ತಿಯೂ ಇತ್ತು. ಒಂದೊಂದು ಸಮಯ ಆತನ ಭಕ್ತಿ ಅಂಥ ಉಚ್ಚಸ್ಥಿತಿಯನ್ನು ಮುಟ್ಟಿಬಿಡುತ್ತಿತ್ತು! ಆತ ಬಾಹ್ಯಜ್ಞಾನಶೂನ್ಯನಾಗಿ ಬಿಡುತ್ತಿದ್ದ. ಗೃಹಸ್ಥರ ಹೃದಯಕ್ಕೆ ಧರ್ಮವನ್ನು ನೀಡುವುದೇ ಆತನ ಜೀವನದ ಚರಮೋದ್ದೇಶವಾಗಿತ್ತು.”
ಈಗ ಒಬ್ಬ ಮಹಾರಾಷ್ಟ್ರ ಮಹಿಳೆಯ ಸಂಬಂಧವಾಗಿ ಮಾತುಕತೆ ಆರಂಭವಾಯಿತು.
ಪ್ರತಾಪ: “ನಮ್ಮ ದೇಶದ ಮಹಿಳೆಯರಲ್ಲೂ ಕೆಲವರು ವಿಲಾಯಿತಿಗೆ ಹೋಗಿ ಬಂದಿದ್ದಾರೆ. ಒಬ್ಬ ಮಹಾರಾಷ್ಟ್ರ ಮಹಿಳೆ, ಒಳ್ಳೇ ಪಂಡಿತೆ, ವಿಲಾಯಿತಿಗೆ ಹೋಗಿ ಬಂದಿದ್ದಾಳೆ. ಆದರೆ ಆಕೆ ಈಗ ಕ್ರೈಸ್ತಳಾಗಿಬಿಟ್ಟಿದ್ದಾಳೆ. ಮಹಾಶಯರೆ, ಆಕೆಯ ಹೆಸರು ಕೇಳಿದ್ದೀರೇನು?”
ಶ್ರೀರಾಮಕೃಷ್ಣರು: “ಇಲ್ಲ. ಆದರೆ ನೀನು ಹೇಳಿದುದನ್ನು ಕೇಳಿ ನನಗನಿಸುತ್ತಿದೆ, ಆಕೆಗೆ ಲೋಕಮಾನ್ಯಳಾಗಲು ಇಚ್ಛೆ ಇರಬೇಕು ಎಂಬುದಾಗಿ. ಈ ವಿಧವಾದ ಅಹಂಕಾರ ಒಳ್ಳೆಯದಲ್ಲ. ‘ನಾನು ಮಾಡುತ್ತಿದ್ದೇನೆ.’ ಎಂಬ ಭಾವನೆ ಅಜ್ಞಾನದಿಂದ ಜನಿತವಾದ್ದು. ಆದರೆ ‘ಹೇ ಭಗವಂತ, ಎಲ್ಲವನ್ನೂ ಮಾಡುತ್ತಿರುವವನು ನೀನೇ’ ಎಂಬ ಭಾವನೆ ಜ್ಞಾನದಿಂದ ಉಂಟಾಗುತ್ತದೆ. ಭಗವಂತನೊಬ್ಬನೇ ಕರ್ತ, ಉಳಿದವರೆಲ್ಲರೂ ಅಕರ್ತರು.
“ ‘ನಾನು, ನಾನು’ ಅನ್ನುತ್ತಲೇ ಇದ್ದರೆ, ಎಂಥ ದುರ್ಗತಿಯುಂಟಾಗುತ್ತದೆ ಎಂಬುದನ್ನು ಕರುವಿನ ದುರವಸ್ಥೆಯ ಸಂಬಂಧವಾಗಿ ಭಾವಿಸಿದರೇ ಅರ್ಥವಾಗಿಬಿಡುತ್ತದೆ. ಕರು ಕೂಗುತ್ತದೆ: ‘ಹಾಮ್ ಮಾ! ಹಾಮ್ ಮಾ!’ ಎಂಬುದಾಗಿ. ಅಂದರೆ ‘ನಾನು! ನಾನು!’ ಎಂದು. ನೋಡು ಅದರ ದುರ್ಗತಿಯನ್ನು! ಕೆಲವು ವೇಳೆ ಬೆಳಗಿನಿಂದ ಹಿಡಿದು ಸಾಯಂಕಾಲದವರೆಗೆ ನೇಗಿಲು ಎಳೆಯಬೇಕಾಗುತ್ತದೆ. ಇದು ಬಿಸಿಲು ಅದು ಮಳೆ ಅನ್ನುವ ಹಾಗೇ ಇಲ್ಲ. ಕಟುಕ ಅದನ್ನು ಕತ್ತರಿಸಬಹುದು. ಮಾಂಸವನ್ನು ಜನರು ತಿನ್ನುತ್ತಾರೆ; ಚರ್ಮವನ್ನು ಹದಮಾಡಿ ತೊಗಲನ್ನಾಗಿ ಮಾಡುತ್ತಾರೆ. ತೊಗಲಿನಿಂದ ಚೋಡು ಮುಂತಾದುವನ್ನು ತಯಾರು ಮಾಡುತ್ತಾರೆ. ಜನ ಅದನ್ನು ಮೆಟ್ಟಿಕೊಂಡು ನಡೆಯುತ್ತಾರೆ. ಇಷ್ಟಕ್ಕೇ ಅದರ ದುರ್ಗತಿ ಮುಗಿಯುವಂತಿಲ್ಲ. ಅದೇ ತೊಗಲಿನಿಂದ ನಗಾರಿ ತಯಾರುಮಾಡುತ್ತಾರೆ. ಆ ನಗಾರಿಯನ್ನು ಕಡ್ಡಿಗಳಿಂದ ಚೆನ್ನಾಗಿ ಬಡಿಯುತ್ತಾರೆ. ಕೊನೆಗೆ ಅದರ ಕರುಳನ್ನು ತೆಗೆದುಕೊಂಡು ಅದರಿಂದ ಹುರಿಯನ್ನು ತಯಾರುಮಾಡುತ್ತಾರೆ. ಆ ಹುರಿಯನ್ನು ಹತ್ತಿಬಿಡಿಸುವ ಯಂತ್ರಕ್ಕೆ ಕಟ್ಟಿ ಹತ್ತಿ ಎಕ್ಕುವಾಗ ಅದು ಶಬ್ದ ಮಾಡುತ್ತದೆ: ‘ತೂಹ್ಞೂ !’ ‘ತೂಹ್ಞೂ!’, ‘ನೀನು ! ನೀನು !’ ಎಂದು-ಅಂದರೆ ‘ಹೇ ಭಗವಂತ, ನೀನು ಕರ್ತ! ನೀನು ಕರ್ತ!’ ಅದು ಮತ್ತೆಂದಿಗೂ ಶಬ್ದಮಾಡದು. ‘ಹಾಮ್ ಮಾ! ಹಾಮ್ ಮಾ!’ ಎಂದು. ಆಗ ಮಾತ್ರವೇ ಕರುವಿನ ದುರ್ಗತಿ ಕೊನೆಗಾಣುತ್ತದೆ. ಆಗ ಮಾತ್ರವೇ ಅದಕ್ಕೆ ಮುಕ್ತಿ. ಕರ್ಮಕ್ಷೇತ್ರದಲ್ಲಿ ಅದು ಮತ್ತೆ ಬರಬೇಕಾಗಿ ಇರುವುದಿಲ್ಲ.
“ಅದೇ ರೀತಿಯಾಗಿ ಜೀವ ಯಾವಾಗ ಹೇಳುತ್ತದೊ: ‘ಹೇ ಭಗವಂತ, ನಾನು ಕರ್ತ ಅಲ್ಲ, ನೀನೇ ಕರ್ತ. ನಾನು ಯಂತ್ರ, ನೀನು ಯಂತ್ರಿ’ ಎಂಬುದಾಗಿ, ಆಗ ಮಾತ್ರವೇ ಅದರ ಸಾಂಸಾರಿಕ ತಾಪತ್ರಯಗಳೆಲ್ಲ ಕೊನೆಗಾಣುತ್ತವೆ. ಆಗ ಮಾತ್ರವೇ ಜೀವಕ್ಕೆ ಮುಕ್ತಿ. ಮತ್ತೆ ಅದು ಕರ್ಮಕ್ಷೇತ್ರಕ್ಕೆ ಇಳಿಯಬೇಕಾಗಿರುವುದಿಲ್ಲ.”
ಒಬ್ಬ ಭಕ್ತ : “ಮನುಷ್ಯನ ಅಹಂಕಾರ ನಾಶವಾಗುವುದಕ್ಕೆ ಮಾರ್ಗವೇನು?”
ಶ್ರೀರಾಮಕೃಷ್ಣರು: “ಭಗವಂತನ ದರ್ಶನವನ್ನು ಪಡೆದುಕೊಳ್ಳದವರೆಗೆ ಅಹಂಕಾರ ಹೋಗದು. ಯಾರಲ್ಲಿಯೇ ಆಗಲಿ, ಅಹಂಕಾರವಿಲ್ಲದಿರುವುದು ತೋರಿಬಂದರೆ, ತಿಳಿದುಕೊಳ್ಳಬೇಕು, ಅವರಿಗೆ ನಿಶ್ಚಯವಾಗಿ ಭಗವಂತನ ದರ್ಶನ ದೊರೆತಿದೆ ಎಂದು.”
ಭಕ್ತ: “ಮಹಾಶಯರೆ, ಭಗವಂತನ ದರ್ಶನ ಆಗಿದೆ ಅಂತ ಅರಿಯುವ ಬಗೆ ಹೇಗೆ?”
ಶ್ರೀರಾಮಕೃಷ್ಣರು: “ಭಗವಂತನ ದರ್ಶನವಾಗಿರುವುದಕ್ಕೆ ಲಕ್ಷಣಗಳಿವೆ. ಶ್ರೀ ಮದ್ಭಾಗವತದಲ್ಲಿ ಹೇಳಿದೆ, ಯಾರಿಗೆ ಭಗವಂತನ ದರ್ಶನ ಆಗಿದೆಯೊ, ಆತನಿಗೆ ನಾಲ್ಕು ಲಕ್ಷಣಗಳಿರುತ್ತವೆ. ಆತ ಕೆಲವು ವೇಳೆ ಬಾಲಕನ ಹಾಗೆ, ಇನ್ನು ಕೆಲವು ವೇಳೆ ಪಿಶಾಚಿಯ ಹಾಗೆ, ಮತ್ತೆ ಕೆಲವು ವೇಳೆ ಜಡನ ಹಾಗೆ, ಮತ್ತು ಕೆಲವು ವೇಳೆ ಉನ್ಮತ್ತನ ಹಾಗೆ ವರ್ತಿಸುತ್ತಾನೆ.
“ಯಾರಿಗೆ ಭಗವಂತನ ಸಾಕಾತ್ಕಾರ ಆಗುವುದೊ, ಆತನಿಗೆ ಬಾಲಕನ ಸ್ವಭಾವ ಬಂದು ಬಿಡುತ್ತದೆ. ಆತ ತ್ರಿಗುಣಾತೀತನಾಗಿಬಿಡುತ್ತಾನೆ-ಯಾವುದಕ್ಕೂ ಬದ್ಧನಾಗಿರುವುದಿಲ್ಲ. ಆತನಿಗೆ ಇದು ಶುಚಿ, ಅದು ಅಶುಚಿ ಎಂಬ ಭೇದವಿರದು. ಆದ್ದರಿಂದ ಆತ ಪಿಶಾಚಿಯ ಹಾಗೆ ವರ್ತಿಸುತ್ತಾನೆ. ಮತ್ತೆ ಹುಚ್ಚನ ಹಾಗೆ ಕೆಲವು ವೇಳೆ ಬಹಳವಾಗಿ ನಗುತ್ತಾನೆ. ಇನ್ನು ಕೆಲವು ವೇಳೆ ಬಹಳವಾಗಿ ಅಳುತ್ತಾನೆ. ಈ ನಿಮಿಷ ಒಬ್ಬ ಷೋಕಿಲಾಲನ ಹಾಗೆ ಬಟ್ಟೆಬರೆ ಹಾಕಿಕೊಂಡಿರುತ್ತಾನೆ. ಮರುನಿಮಿಷ ಬರಿ ಬತ್ತಲೆಯಾಗಿ ಕಂಕುಳಿಗೆ ಬಟ್ಟೆ ಸಿಕ್ಕಿಸಿಕೊಂಡು ಸುತ್ತಾಡುತ್ತಿರುತ್ತಾನೆ-ಉನ್ಮತ್ತನ ಹಾಗೆ. ಮತ್ತೆ ಕೆಲವು ವೇಳೆ ಜಡನ ಹಾಗೆ ಸುಮ್ಮನೆ ಕುಳಿತಿರುತ್ತಾನೆ.”
ಭಕ್ತ: “ಭಗವಂತನ ದರ್ಶನ ದೊರೆತನಂತರ ಅಹಂಕಾರ ಸಂಪೂರ್ಣವಾಗಿ ಹೊರಟು ಹೋಗುವುದೆ?”
ಶ್ರೀರಾಮಕೃಷ್ಣರು: “ಹೌದು, ಕೆಲಕೆಲವು ವೇಳೆ ಭಗವಂತ ಅಹಂಕಾರವನ್ನು ಸಂಪೂರ್ಣವಾಗಿ ನಿರ್ಮೂಲಮಾಡಿಬಿಡುತ್ತಾನೆ-ಉದಾಹರಣೆಗೆ ಸಮಾಧಿ ಅವಸ್ಥೆಯಲ್ಲಿ. ಮತ್ತೆ ಪ್ರಾಯಿಕವಾಗಿ ಒಂದು ಕಿಂಚಿತ್ ಅಹಂಕಾರವನ್ನು ಇಟ್ಟುಕೊಂಡಿರುತ್ತಾನೆ. ಆದರೆ ಆ ಅಹಂಕಾರದಿಂದ ಯಾವ ತೊಂದರೆಯೂ ಉಂಟಾಗದು. ಬಾಲಕನ ಅಹಂಕಾರವಿದೆಯಲ್ಲ, ಅದರ ಹಾಗೆ. ಐದು ವರ್ಷದ ಬಾಲಕ ‘ನಾನು, ನಾನು’ ಅಂತಲೇನೋ ಹೇಳುತ್ತಾನೆ. ಆದರೆ ಆ ಅಹಂಕಾರ ಯಾರಿಗೂ ಯಾವ ತೊಂದರೆಯನ್ನೂ ತಾರದು. ಉಕ್ಕು ಸ್ಪರ್ಶವೇದಿಯನ್ನು ಮುಟ್ಟಿದ್ದೇ ಆದರೆ, ಅದು ಚಿನ್ನವಾಗಿಬಿಡುತ್ತದೆ. ಉಕ್ಕಿನ ಕತ್ತಿ ಚಿನ್ನದ ಕತ್ತಿಯಾಗಿಬಿಡುತ್ತದೆ. ಅದಕ್ಕೆ ಕತ್ತಿಯ ಆಕಾರವೇನೋ ಇರುತ್ತದೆ, ಆದರೆ ಅದರಿಂದ ಯಾವ ಹಿಂಸಾಕೃತ್ಯವೂ ಸಾಧ್ಯವಿಲ್ಲ. ಚಿನ್ನದ ಕತ್ತಿಯಿಂದ ಕಡಿಯುವ, ಕತ್ತರಿಸುವ ಕೆಲಸವನ್ನು ಮಾಡಲಾಗುವುದಿಲ್ಲ.
(ಪ್ರತಾಪನಿಗೆ) “ನೀನು ವಿಲಾಯಿತಿಗೆ ಹೋಗಿದ್ದೆ. ಅಲ್ಲಿ ಏನೇನು ನೋಡಿಬಂದೆ ಹೇಳು ನೋಡೋಣ.”
ಪ್ರತಾಪ: “ವಿಲಾಯತಿಯ ಜನ ನೀವು ‘ಕಾಂಚನ’ ಅಂತ ಹೇಳುತ್ತೀರಲ್ಲ, ಅದನ್ನೇ ಪೂಜೆ ಮಾಡುತ್ತಾರೆ. ಕೆಲವರು ಒಳ್ಳೆಯವರೂ, ಎಂದರೆ ಅನಾಸಕ್ತರೂ ಅವಶ್ಯವಾಗಿ ಇದ್ದಾರೆ. ಆದರೆ ಸಾಮಾನ್ಯವಾಗಿ ಪ್ರತಿಯೊಂದರಲ್ಲೂ ರಜೋಗುಣದ ಪ್ರದರ್ಶನವನ್ನು ನೋಡಬಹುದು. ಅಮೆರಿಕದಲ್ಲೂ ಇದನ್ನೇ ನೋಡಿ ಬಂದೆ.”
ಶ್ರೀರಾಮಕೃಷ್ಣರು ಪ್ರತಾಪನಿಗೆ: “ವಿಷಯ ಕರ್ಮಗಳಲ್ಲಿ ಆಸಕ್ತಿ ಕೇವಲ ವಿಲಾಯತಿಯಲ್ಲೇ ಇದೆ ಅಂತೇನಿಲ್ಲ. ಎಲ್ಲೆಲ್ಲಿಯೂ ಇದೆ. ಆದರೆ ಗೊತ್ತೆ ? ಕರ್ಮಕಾಂಡ, ಆದಿಕಾಂಡ. ಸತ್ತ್ವಗುಣವಿಲ್ಲದಿದ್ದರೆ-ಭಕ್ತಿ, ವಿವೇಕ, ವೈರಾಗ್ಯ, ದಯೆ ಇವೇ ಮೊದಲಾದುವು ಇಲ್ಲದಿದ್ದರೆ, ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲಾಗುವುದಿಲ್ಲ. ರಜೋಗುಣದಿಂದ ಕಾರ್ಯಕ್ಷೇತ್ರ ವಿಶಾಲವಾಗುತ್ತದೆ. ಅದರ ದೆಸೆಯಿಂದ ತಮೋಗುಣ ಬಂದು ಬಿಡುತ್ತದೆ. ಅಧಿಕವಾಗಿ ಕೆಲಸ ಹೆಚ್ಚಿಸಿಕೊಂಡರೆ, ಅವು ಭಗವಂತನನ್ನು ಮರೆಸಿಬಿಡುತ್ತವೆ. ಕಾಮಕಾಂಚನಗಳಲ್ಲಿ ಆಸಕ್ತಿ ವೃದ್ಧಿಯಾಗಿಬಿಡುತ್ತದೆ.
“ಆದರೆ ಕರ್ಮವನ್ನು ಸಂಪೂರ್ಣವಾಗಿ ತ್ಯಜಿಸಲು ಸಾಧ್ಯವಿಲ್ಲ. ನಿನ್ನ ಸ್ವಭಾವವೇ ನಿನ್ನನ್ನು ಕೆಲಸದಲ್ಲಿ ತೊಡಗಿಸಿಬಿಡುತ್ತದೆ-ನಿನಗೆ ಇಚ್ಛೆ ಇರಲಿ ಬಿಡಲಿ. ಈ ಕಾರಣದಿಂದಲೇ ಶಾಸ್ತ್ರ ಹೇಳುತ್ತಿದೆ, ಅನಾಸಕ್ತರಾಗಿ ಕೆಲಸಮಾಡಿ-ಅಂದರೆ ಫಲಾಪೇಕ್ಷೆ ಇಲ್ಲದೆ ಕೆಲಸಮಾಡಿ ಅಂತ. ಉದಾಹರಣೆಗೆ ನೀನು ಪೂಜೆ, ಜಪ-ತಪಾದಿಗಳನ್ನು ಮಾಡುತ್ತಿದ್ದೀಯೆ, ಆದರೆ ಲೋಕಮಾನ್ಯನಾಗಬೇಕೆಂದಾಗಲಿ ಅಥವಾ ಪುಣ್ಯಕಟ್ಟಿಕೊಳ್ಳಬೇಕೆಂದಾಗಲಿ ಮಾಡುತ್ತಿಲ್ಲ.”
“ಈ ರೀತಿಯಾಗಿ ಅನಾಸಕ್ತಿಯಿಂದ ಕೆಲಸ ಮಾಡುವುದಕ್ಕೆ ಕರ್ಮಯೋಗವೆಂದು ಹೆಸರು. ಇದು ಬಹಳ ಕಠಿಣ. ಇದು ಕಲಿಯುಗ. ಸಹಜವಾಗಿಯೇ ಆಸಕ್ತಿ ಉಂಟಾಗಿ ಬಿಡುತ್ತದೆ. ಭಾವಿಸುತ್ತೇವೆ, ಅನಾಸಕ್ತಿಯಿಂದ ಕೆಲಸಮಾಡುತ್ತಿದ್ದೇವೆ ಎಂಬುದಾಗಿ. ಆದರೆ ಎಲ್ಲಿಂದಲೋ ಆಸಕ್ತಿ ನಮ್ಮ ಹೃದಯವನ್ನು ಹೊಕ್ಕಿಬಿಡುತ್ತದೆ-ಗೊತ್ತೇ ಆಗದ ಹಾಗೆ. ಪೂಜೆ ಮಹೋತ್ಸವ ಮಾಡುತ್ತಿದ್ದೇವೆ; ಅನೇಕ ಮಂದಿ ದರಿದ್ರರಿಗೆ, ತಿರುಕರಿಗೆ ಅನ್ನ ಹಾಕುತ್ತಿದ್ದೇವೆ ಅಂತ ಇಟ್ಟುಕೊಳ್ಳಿ. ಭಾವಿಸಿಕೊಳ್ಳಬಹುದು, ಅನಾಸಕ್ತಿಯಿಂದ ಕೆಲಸ ಮಾಡುತ್ತಿದ್ದೇವೆ ಅಂತ. ಆದರೆ ನಮಗೆ ಗೊತ್ತೇ ಆಗದ ಹಾಗೆ ಎಲ್ಲಿಂದಲೋ ಲೋಕಮಾನ್ಯನಾಗಬೇಕೆಂಬ ಆಸೆ ಆಗಲೇ ನಮ್ಮ ಹೃದಯವನ್ನು ಹೊಕ್ಕು ಬಿಟ್ಟಿರುವುದನ್ನು ನಾವು ನೋಡಬಹುದು. ಆದರೆ ಸಂಪೂರ್ಣ ಅನಾಸಕ್ತನಾಗುವ ಸಂಭವ ಕೇವಲ ಕೆಲವರಿಗೆ-ಅಂದರೆ ಯಾರಿಗೆ ಭಗವಂತನ ದರ್ಶನ ದೊರೆತಿದೆಯೋ ಅವರಿಗೆ.”
ಒಬ್ಬ ಭಕ್ತ: “ಯಾರಿಗೆ ಭಗವಂತನ ಸಾಕ್ಷಾತ್ಕಾರ ದೊರೆತಿಲ್ಲವೊ ಅವರಿಗೆ ಮಾರ್ಗವೇನು? ಅವರು ಪ್ರಾಪಂಚಿಕ ಕರ್ಮಗಳನ್ನೆಲ್ಲಾ ಬಿಟ್ಟುಬಿಡಬೇಕೇನು?”
ಶ್ರೀರಾಮಕೃಷ್ಣರು: “ಕಲಿಯುಗಕ್ಕೆ ಭಕ್ತಿಯೋಗ-ನಾರದೀಯ ಭಕ್ತಿ. ಭಗವಂತನ ನಾಮಗುಣಕೀರ್ತನೆ ಮಾಡುವುದು ಮತ್ತು ವ್ಯಾಕುಲತೆಯಿಂದ ಪ್ರಾರ್ಥನೆ ಮಾಡುವುದು: ‘ಹೇ ಭಗವಂತ, ಜ್ಞಾನವನ್ನು ನೀಡು, ಭಕ್ತಿಯನ್ನು ಕರುಣಿಸು, ದರ್ಶನವನ್ನು ಕೊಡು.’ ಕರ್ಮಯೋಗ ಬಹಳ ಕಠಿಣವಾದ್ದು. ಆದ್ದರಿಂದಲೇ ಪ್ರಾರ್ಥನೆ ಮಾಡಬೇಕು: “ಹೇ ಭಗವಂತ, ನನ್ನ ಕೆಲಸಗಳನ್ನು ಕಡಮೆಮಾಡು. ಯಾವ್ಯಾವುದನ್ನು ಮಾಡಲೇಬೇಕಾಗಿದೆಯೋ ಅವೆಲ್ಲವನ್ನೂ ನಿನ್ನ ಕೃಪೆಯಿಂದ ಅನಾಸಕ್ತಿಯಿಂದ ಮಾಡಲಾಗುವಂತೆ ಪ್ರೇರೇಪಿಸು! ಕೆಲಸಗಳನ್ನು ಹೆಚ್ಚು ಮಾಡಿಕೊಳ್ಳುವ ಇಚ್ಛೆಯೂ ಹೃದಯದಲ್ಲಿ ಮೂಡದ ಹಾಗೆ ಮಾಡು!”
“ಸಂಪೂರ್ಣವಾಗಿ ಕೆಲಸಗಳನ್ನು ಬಿಟ್ಟುಬಿಡಲು ಸಾಧ್ಯವಿಲ್ಲ. ಚಿಂತಿಸುವುದು, ಧ್ಯಾನ ಮಾಡುವುದು, ಇವೂ ಕರ್ಮವೇ. ಭಕ್ತಿಯುಂಟಾಯಿತು ಎಂದರೆ, ವಿಷಯ ಕರ್ಮ ತನಗೆ ತಾನೇ ಕಡಮೆಯಾಗಿಬಿಡುತ್ತವೆ; ಮತ್ತೆ ಅವು ರುಚಿಸವು. ಕಲ್ಲುಸಕ್ಕರೆ ಪಾನಕ ದೊರೆಯುವಾಗ ಜೋನಿಬೆಲ್ಲದ ಪಾನಕ ಕುಡಿಯಲು ಯಾರು ತಾನೆ ಹೋಗುತ್ತಾರೆ?”
ಒಬ್ಬ ಭಕ್ತ: “ವಿಲಾಯತಿಯ ಜನ ಯಾವಾಗ ನೋಡಿದರೂ ಒತ್ತಿ ಒತ್ತಿ ಹೇಳುತ್ತಿದ್ದಾರೆ: ‘ಕಾರ್ಯಶೀಲರಾಗಿ, ಕಾರ್ಯಶೀಲರಾಗಿ’ ಎಂದು. ಹಾಗಾದರೆ, ಕಾರ್ಯವು ಜೀವನದ ಉದ್ದೇಶವಲ್ಲವೇನು?”
ಶ್ರೀರಾಮಕೃಷ್ಣರು: “ಜೀವನದ ಉದ್ದೇಶ ಭಗವಂತನ ಸಾಕ್ಷಾತ್ಕಾರ. ಕರ್ಮ, ಆದಿಕಾಂಡ, ಅದು ಜೀವನದ ಉದ್ದೇಶವಾಗಲಾರದು. ಆದರೆ ನಿಷ್ಕಾಮ ಕರ್ಮ ಒಂದು ಮಾರ್ಗವೇ ವಿನಾ ಉದ್ದೇಶವಲ್ಲ.
“ಶಂಭುಮಲ್ಲಿಕ ಒಮ್ಮೆ ನನ್ನನ್ನು ಬೇಡಿಕೊಂಡ: ‘ದಯವಿಟ್ಟು ಆಶೀರ್ವಾದ ಮಾಡಿ, ನನ್ನಲ್ಲಿ ಏನು ಹಣ ಉಳಿದುಕೊಂಡಿದೆಯೋ ಅದು ಸದ್ವಿನಿಯೋಗವಾಗುವಂತೆ-ಅಂದರೆ ಆಸ್ಪತ್ರೆ, ಡಿಸ್ಪೆನ್ಸರಿ, ರಸ್ತೆ, ಸ್ನಾನಘಟ್ಟ, ಬಾವಿ ಮೊದಲಾದುವುಗಳ ನಿರ್ಮಾಣಕ್ಕೆ ಉಪಯೋಗವಾಗುವಂತೆ.’ ನಾನು ಆತನಿಗೆ ಹೇಳಿದೆ: ‘ಇವನ್ನೆಲ್ಲಾ ಅನಾಸಕ್ತಿಯಿಂದ ಮಾಡುವುದಾದರೆ ಒಳ್ಳೆಯದೆ. ಆದರೆ ಬಹಳ ಕಠಿಣ. ನೀನು ಏನು ಮಾಡಿದರೂ ಸರಿಯೆ, ಇದನ್ನು ಮಾತ್ರ ಚೆನ್ನಾಗಿ ಜ್ಞಾಪಕದಲ್ಲಿಟ್ಟುಕೊ, ಮಾನವ ಜನ್ಮದ ಉದ್ದೇಶ ಭಗವಂತನ ಸಾಕ್ಷಾತ್ಕಾರವೇ ವಿನಾ ಆಸ್ಪತ್ರೆ ಡಿಸ್ಪೆನ್ಸರಿಗಳನ್ನು ಕಟ್ಟಿಸುವುದಲ್ಲ. ಭಾವಿಸಿಕೊ, ಭಗವಂತ ನಿನ್ನ ಸಮ್ಮುಖಕ್ಕೆ ಬಂದಿದ್ದಾನೆ; ಬಂದವನು ನಿನಗೆ ಹೇಳುತ್ತಿದ್ದಾನೆ: “ನನ್ನಿಂದ ಒಂದು ವರ ಪಡೆದುಕೊ.” ಆಗ ನೀನು ಆತನನ್ನು ಬೇಡುತ್ತೀಯೊ: “ಹೇ ಭಗವಂತ, ನನಗೆ ಕೆಲವು ಆಸ್ಪತ್ರೆ ಡಿಸ್ಪೆನ್ಸರಿಗಳನ್ನು ಕಟ್ಟಿಸಿಕೊಡು” ಎಂದು, ಅಥವಾ ಬೇಡುವೆಯೊ; “ಹೇ, ಭಗವಂತ, ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧಭಕ್ತಿ ಉಂಟಾಗುವಂತೆಯೂ, ನಿನ್ನನ್ನು ನಾನು ಸರ್ವದಾ ದರ್ಶನಮಾಡುವಂತೆಯೂ ಕರುಣಿಸು” ಎಂದು? ಆಸ್ಪತ್ರೆ ಡಿಸ್ಪೆನ್ಸರಿ ಇವೆಲ್ಲ ಅನಿತ್ಯ ವಸ್ತು. ಭಗವಂತನೊಬ್ಬನೇ ವಸ್ತು. ಉಳಿದುದೆಲ್ಲಾ ಆವಸ್ತು. ಆತನ ದರ್ಶನ ದೊರೆತರೆ ಆಗ ಅನುಭವವಾಗುತ್ತದೆ, ಆತನೊಬ್ಬನೇ ಕರ್ತ, ನಾವೆಲ್ಲಾ ಅಕರ್ತರು ಎಂಬುದಾಗಿ. ಆದ್ದರಿಂದ ನಾವೇಕೆ ಭಗವಂತನನ್ನು ಮರೆತು ಅನೇಕ ಕೆಲಸ ಕಾರ್ಯಗಳಲ್ಲಿ ಸಿಕ್ಕಿ ನರಳಬೇಕು? ಮೊದಲು ಆತನ ಸಾಕ್ಷಾತ್ಕಾರವನ್ನು ಪಡೆದುಕೊಂಡು ಬಿಟ್ಟಿದ್ದೇ ಆದರೆ, ಬಳಿಕ ಆತನಿಗೆ ಇಚ್ಛೆ ಇದ್ದರೆ, ಆತ ನಮ್ಮ ಮೂಲಕ ಅನೇಕ ಆಸ್ಪತ್ರೆ ಡಿಸ್ಪೆನ್ಸರಿಗಳನ್ನು ಕಟ್ಟಿಸಿಕೊಳ್ಳಬಲ್ಲ.”
“ಇದಕ್ಕಾಗಿಯೇ ನಾನು ಹೇಳುವುದು ಕರ್ಮ ಆದಿಕಾಂಡ ಎಂದು. ಅದು ಎಂದಿಗೂ ಜೀವನದ ಉದ್ದೇಶವಲ್ಲ. ಸಾಧನೆಯನ್ನು ಮಾಡಿ ಮುಂದುವರಿಯಬೇಕು. ಸಾಧನೆಯನ್ನು ಮಾಡುತ್ತ ಮಾಡುತ್ತ ಮುಂದುವರಿದರೆ ಕೊನೆಗೆ ಗೊತ್ತಾಗುತ್ತದೆ, ಭಗವಂತನೊಬ್ಬನೇ ವಸ್ತು ಉಳಿದುದೆಲ್ಲಾ ಅವಸ್ತು, ಆತನ ಸಾಕ್ಷಾತ್ಕಾರವೇ ಜೀವನದ ಉದ್ದೇಶ ಎಂಬುದಾಗಿ.
“ಒಮ್ಮೆ ಒಬ್ಬ ಸೌದೆ ಕಡಿಯುವವ ಅರಣ್ಯಕ್ಕೆ ಸೌದೆ ಕಡಿದು ತರಲು ಹೋಗಿದ್ದ. ಅಲ್ಲಿ ಅಕಸ್ಮಾತ್ತಾಗಿ ಒಬ್ಬ ಬ್ರಹ್ಮಚಾರಿಯನ್ನು ಕಂಡ. ಆ ಬ್ರಹ್ಮಚಾರಿ ಹೇಳಿದ: ‘ನೋಡಪ್ಪ, ಮುಂದಕ್ಕೆ ಹೋಗು.’ ಸೌದೆ ಕಡಿಯುವವ ಮನೆಗೆ ಹಿಂದಿರುಗಿ ಬಂದು ಯೋಚಿಸಲಾರಂಭಿಸಿದ, ಬ್ರಹ್ಮಚಾರಿ ಮುಂದಕ್ಕೆ ಹೋಗುವಂತೆ ಏತಕ್ಕೆ ಹೇಳಿದ? ಹಾಗೇ ಸ್ವಲ್ಪ ಕಾಲ ಕಳೆಯಿತು. ಒಂದು ದಿನ ಆ ಬ್ರಹ್ಮಚಾರಿ ಹೇಳಿದ್ದು ಜ್ಞಾಪಕಕ್ಕೆ ಬಂತು. ಆಗ ಆತ ತನಗೆ ತಾನೇ ಹೇಳಿಕೊಳ್ಳುತ್ತಾನೆ: ‘ಇಂದು ನಾನು ಮುಂದಕ್ಕೆ ಹೋಗಿ ನೋಡುತ್ತೇನೆ.’ ಅರಣ್ಯಕ್ಕೆ ಬಂದು ಇನ್ನೂ ಮುಂದಕ್ಕೆ ಹೋಗಿ ನೋಡುತ್ತಾನೆ, ಅಸಂಖ್ಯವಾಗಿ ಚಂದನ ಮರಗಳು ಬೆಳೆದಿವೆ. ಆಗ ಆನಂದದಿಂದ ಬಂಡಿಗಟ್ಟಲೆ ಚಂದನ ಮರಗಳನ್ನು ಕತ್ತರಿಸಿ ತಂದ. ಅವನ್ನು ಪೇಟೆಯಲ್ಲಿ ಮಾರಿ ದೊಡ್ಡ ಹಣಗಾರನಾಗಿಬಿಟ್ಟ.
“ಹೀಗೆ ಕೆಲವು ದಿನಗಳು ಕಳೆದ ನಂತರ ಮತ್ತೆ ಆ ಬ್ರಹ್ಮಚಾರಿ ‘ಮುಂದಕ್ಕೆ ಹೋಗು’ ಎಂಬುದಾಗಿ ಹೇಳಿದ್ದುದರ ಜ್ಞಾಪಕ ಬಂತು. ಅರಣ್ಯದಲ್ಲಿ ಇನ್ನೂ ಮುಂದಕ್ಕೆ ಹೋಗಿ ನೋಡುತ್ತಾನೆ, ಒಂದು ನದಿ ತೀರದಲ್ಲಿ ಬೆಳ್ಳಿಯ ಗಣಿ ಇದೆ. ಇದು ಹೀಗಿದೆ ಎಂದು ಆತ ಸ್ವಪ್ನದಲ್ಲೂ ಕಂಡಿರಲಿಲ್ಲ. ಬಳಿಕ ಗಣಿಯಿಂದ ಬೆಳ್ಳಿಯನ್ನು ಅಗೆದು ತೆಗೆದುಕೊಂಡು ಹೋಗಿ ಮಾರಲಾರಂಭಿಸಿದ. ಆತನಿಗೆ ಅಷ್ಟೊಂದು ಹಣ ದೊರೆಯಿತು, ಎಣಿಸಲೇ ಸಾಧ್ಯವಾಗಲಿಲ್ಲ!
“ಮತ್ತೆ ಕೆಲವು ದಿನ ಹಾಗೆಯೇ ಕಳೆದುವು. ಒಂದು ದಿನ ಸುಮ್ಮನೆ ಕುಳಿತು ಭಾವಿಸಲಾರಂಭಿಸಿದ: ‘ಬ್ರಹ್ಮಚಾರಿ ನನಗೆ ಬೆಳ್ಳಿಯ ಗಣಿಯವರೆಗೆ ಮಾತ್ರ ಹೋಗು ಅಂತಲೇನು ಹೇಳಲಿಲ್ಲವಲ್ಲ; ಆತ ಹೇಳಿದ್ದು ಮುಂದಕ್ಕೆ ಹೋಗು ಅಂತ.’ ಈ ಸಲ ನದಿಯನ್ನು ದಾಟಿ ಹೋಗಿ ನೋಡುತ್ತಾನೆ, ಚಿನ್ನದ ಗಣಿ ಇದೆ. ಆಗ ಆತ ಹರ್ಷೋದ್ಗಾರ ಮಾಡಿದ: ‘ಓಹೋ! ಇದಕ್ಕೇ ಬ್ರಹ್ಮಚಾರಿ ಹೇಳಿದ್ದು “ಮುಂದಕ್ಕೆ ಹೋಗು” ಅಂತ!’
“ಇನ್ನೂ ಕೆಲವು ದಿನಗಳಾದ ಮೇಲೆ ಇನ್ನೂ ಮುಂದಕ್ಕೆ ಹೋಗಿ ನೋಡುತ್ತಾನೆ, ಹೀರಮಾಣಿಕ್ಯ ರಾಶಿರಾಶಿಯಾಗಿ ಬಿದ್ದಿವೆ. ಬಳಿಕ ಆತನಿಗೆ ಕುಬೇರನಿಗೆ ಸರಿಸಮಾನವಾದ ಐಶ್ವರ್ಯ ದೊರೆತುಬಿಟ್ಟಿತು.
“ಇದಕ್ಕಾಗಿಯೇ ನಾನು ಹೇಳುವುದು, ಈಗ ನೀನು ಯಾವ ಸ್ಥಿತಿಯಲ್ಲಿದ್ದರೂ ಸರಿಯೆ, ಮುಂದಕ್ಕೆ ಮುಂದುವರಿದರೆ ಇನ್ನೂ ಒಳ್ಳೆ ಸ್ಥಿತಿ ಬರುವುದು ಎಂದು, ಒಂದು ಸ್ವಲ್ಪ ಜಪಮಾಡಿ ಉದ್ದೀಪನವಾಗಿಬಿಟ್ಟ ಮಾತ್ರಕ್ಕೇ ಭಾವಿಸಬೇಕಾಗಿಲ್ಲ ದೊರೆಯಬೇಕಾದ್ದೆಲ್ಲ ದೊರೆತು ಬಿಟ್ಟಿತು ಎಂದು. ಕರ್ಮ ಎಂದಿಗೂ ಜೀವನದ ಉದ್ದೇಶವಲ್ಲ. ಇನ್ನೂ ಮುಂದುವರಿ; ಆಗ ಕರ್ಮವನ್ನು ನಿಷ್ಕಾಮಭಾವನೆಯಿಂದ ಮಾಡಲು ಸಾಧ್ಯವಾಗುತ್ತದೆ. ಆದರೆ ನಿಷ್ಕಾಮ ಕರ್ಮ ಮಾಡುವುದು ಬಹಳ ಕಷ್ಟ. ಆದ್ದರಿಂದ ಭಕ್ತಿಯಿಂದೊಡಗೂಡಿದ ವ್ಯಾಕುಲತೆಯಿಂದ ಭಗವಂತನಿಗೆ ಪ್ರಾರ್ಥನೆ ಸಲ್ಲಿಸು; ‘ಹೇ ಭಗವಂತ, ನಿನ್ನ ಪಾದಪದ್ಮಗಳಲ್ಲಿ ನನಗೆ ಭಕ್ತಿಯುಂಟಾಗುವಂತೆ ಮಾಡು. ಕೆಲಸಗಳನ್ನು ಕಡಮೆಮಾಡಿಕೊಡು. ಯಾವ್ಯಾವ ಕೆಲವು ಕರ್ಮಗಳನ್ನು ನಾನು ಮಾಡಲೇಬೇಕಾಗಿರುವುದೋ ಅವನ್ನು ನಿಷ್ಕಾಮಭಾವನೆಯಿಂದ ಮಾಡಲು ಶಕ್ತವಾಗುವಂತೆ ಮಾಡು.’ ಇನ್ನೂ ಮುಂದುವರಿದರೆ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ. ಕ್ರಮೇಣ ಆತನೊಡನೆ ನೀನು ಮಾತುಕತೆಯನ್ನೂ ಆಡಬಹುದು.”
ಕೇಶವಸೇನನು ಸ್ವರ್ಗಸ್ಥನಾದ ಮೇಲೆ ವೇದಿಕೆಯನ್ನು ಯಾರು ಉಪಯೋಗಿಸಬೇಕು ಎಂಬುದರ ಸಂಬಂಧವಾಗಿ ಬ್ರಾಹ್ಮಸಮಾಜದಲ್ಲಿ ಒಡಕು ಹುಟ್ಟಿದೆ. ಈಗ ಮಾತುಕತೆ ಆ ವಿಷಯವಾಗಿ ಆರಂಭವಾಗಿದೆ.
ಶ್ರೀರಾಮಕೃಷ್ಣರು ಪ್ರತಾಪನಿಗೆ: “ಕೇಳಿದ್ದೇನೆ, ನಿನ್ನೊಡನೆ ವೇದಿಕೆಯ ಸಂಬಂಧವಾಗಿ ಜಗಳ ನಡೆಯಿತು ಎಂಬುದಾಗಿ. ಯಾರು ನಿನ್ನೊಡನೆ ಜಗಳವಾಡಿದರೋ ಅವರು ಅನಾಮಧೇಯರು-ಕೇಳುವವರೇ ಇಲ್ಲದವರು.
(ಭಕ್ತರಿಗೆ) “ನೋಡಿ, ಪ್ರತಾಪ, ಅಮೃತ ಇವರನ್ನು ಒಳ್ಳೆ ಶಬ್ದ ಕೊಡುವ ಶಂಖಕ್ಕೆ ಹೋಲಿಸಬಹುದು. ಉಳಿದವರಿದ್ದಾರಲ್ಲ, ಯಾರ ವಿಷಯವಾಗಿ ನಾವು ಅಷ್ಟೊಂದು ಕೇಳುತ್ತಿದ್ದೇವೆಯೋ, ಶಬ್ದ ಹೊರಡದ ಶಂಖಗಳೇ.” (ಎಲ್ಲರೂ ನಗುತ್ತಿದ್ದಾರೆ.)
ಪ್ರತಾಪ: “ಮಹಾಶಯರೆ, ಶಬ್ದ ಕೊಡುವುದರ ವಿಷಯವಾಗಿ ಹೇಳುವುದಾದರೆ, ಯಾವುದಕ್ಕೂ ಬಾರದ ಮಾವಿನ ಓಟೆ ಕೂಡ ಶಬ್ದ ಕೊಡುತ್ತದೆಯಲ್ಲ!”
ಶ್ರೀರಾಮಕೃಷ್ಣರು ಪ್ರತಾಪನಿಗೆ: “ನೋಡು, ನಿಮ್ಮ ಬ್ರಾಹ್ಮಸಮಾಜಕ್ಕೆ ಹೋಗಿ ಉಪನ್ಯಾಸ ಕೇಳಿದರೆ ಉಪನ್ಯಾಸಕನ ಭಾವ ಏನು ಎಂಬುದನ್ನು ಬಹಳ ಸುಲಭವಾಗಿ ಅರಿತುಕೊಂಡುಬಿಡಬಹುದು. ಒಮ್ಮೆ ನಾನು ಹರಿಸಭೆಗೆ ಹೋಗಿದ್ದೆ. ಸಮಾಧ್ಯಾಯಿ ಎಂಬ ಪಂಡಿತ ಆಚಾರ್ಯಪೀಠವನ್ನು ಅಲಂಕರಿಸಿದ್ದ. ಆಶ್ಚರ್ಯ! ಆತ ಏನು ಹೇಳಿದ ಗೊತ್ತೆ? ಉಪನ್ಯಾಸ ಮಾಡುವಾಗ ಹೇಳಿದ: “ಭಗವಂತ ನೀರಸ. ನಾವು ನಮ್ಮ ಪ್ರೇಮಭಕ್ತಿಯಿಂದ ಆತನನ್ನು ಸರಸನನ್ನಾಗಿ ಮಾಡಿಕೊಳ್ಳಬೇಕು.’ ಆತನ ಈ ಮಾತು ಕೇಳಿ ನಾನು ಸುಮ್ಮನೆ ಚಕಿತನಾದೆ. ಆಗ ನನಗೆ ಒಂದು ಕಥೆ ಜ್ಞಾಪಕಕ್ಕೆ ಬಂತು. ಒಬ್ಬ ಹುಡುಗ ಹೇಳಿದ: ‘ನಮ್ಮ ಸೋದರಮಾವನ ಮನೆಯಲ್ಲಿ ಅನೇಕ ಕುದುರೆ ಇವೆ. ಹೌದು ಒಂದು ಕೊಟ್ಟಿಗೆ ತುಂಬ!’ ಅದು ಕೊಟ್ಟಿಗೆಯಾಗಿದ್ದ ಪಕ್ಷದಲ್ಲಿ ಅಲ್ಲಿ ಕುದುರೆ ಇರಲು ಸಾಧ್ಯವೇ ಇಲ್ಲ. ಇದ್ದರೆ ಬಹುಶಃ ಗೋವುಗಳು ಮಾತ್ರವೇ ಇದ್ದುವು ಅಂತ ಕಾಣುತ್ತದೆ. ಈ ರೀತಿಯಾದ ಅಸಂಬದ್ಧ ಮಾತು ಕೇಳಿದರೆ ಜನ ಏನು ತಿಳಿದುಕೊಳ್ಳುತ್ತಾರೆ. ಅಲ್ಲಿ ಕುದುರೆ ಏನೂ ಇಲ್ಲವೆಂಬುದಾಗಿ!” (ಎಲ್ಲರೂ ನಗುತ್ತಿದ್ದಾರೆ.)
ಒಬ್ಬ ಭಕ್ತ: “ಕುದುರೆಗಳಂತೂ ಇಲ್ಲವೇ ಇಲ್ಲ. ಗೋವುಗಳೂ ಇಲ್ಲ ಅಂತ ಕಾಣುತ್ತದೆ!” (ಎಲ್ಲರೂ ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು: “ಹಾಗೆಯೇ ಯೋಚಿಸಿ ನೋಡು, ರಸಸ್ವರೂಪ ಭಗವಂತನನ್ನು ನೀರಸ ಅಂತ ವರ್ಣಿಸಿದುದನ್ನು! ಇದು ಚೆನ್ನಾಗಿ ತೋರಿಸುತ್ತದೆ. ಆತ ಭಗವಂತ ಏನು ಎಂಬುದನ್ನು ಸ್ವಪ್ನದಲ್ಲೂ ಕಂಡಿಲ್ಲ ಎಂದು.
(ಪ್ರತಾಪನಿಗೆ) “ನೋಡು, ನಿನಗೆ ಕೆಲವು ವಿಷಯ ಹೇಳಬೇಕೆಂದಿದ್ದೇನೆ. ನೀನು ವಿದ್ಯಾವಂತ, ಬುದ್ಧಿವಂತ, ಗಂಭೀರ ಪ್ರಕೃತಿಯುಳ್ಳವ. ಕೇಶವ ಮತ್ತು ನೀನು ಹಿಂದೆ ಇದ್ದೀರಿ, ಗೌರಾಂಗ ಮತ್ತು ನಿತಾಯಿ ಸೋದರರ ಹಾಗೆ. ಉಪನ್ಯಾಸ ಕೊಡುವುದು, ಚರ್ಚೆ, ವಾದವಿವಾದ ಇವೆಲ್ಲ ಬೇಕಾದಷ್ಟು ಆಗಿವೆ. ಇನ್ನೂ ಅವು ನಿನಗೆ ರುಚಿಸುತ್ತಿರುವುದೇನು? ಈಗ ನೀನು ಮಾಡಬೇಕಾದ್ದು, ಮನಸ್ಸನ್ನೆಲ್ಲ ಏಕೀಕರಿಸಿ ಭಗವಂತನ ಕಡೆಗೆ ತಿರುಗಿಸುವ ಕೆಲಸ. ಭಗವಂತನಲ್ಲಿ ಸಂಪೂರ್ಣವಾಗಿ ತನ್ಮಯನಾಗು.”
ಪ್ರತಾಪ: “ಹೌದು ನೀವು ಹೇಳುವುದು ಖಂಡಿತ ಸರಿ. ನಾನು ಹಾಗೆ ಮಾಡಬೇಕಾದ್ದೆ. ಆದರೆ ನಾನು ಅವನ್ನೆಲ್ಲ ಮಾಡುತ್ತಿರುವುದು ಕೇಶವನ ಹೆಸರು ಉಳಿದುಕೊಂಡಿರಲಿ ಎಂದು.”
ಶ್ರೀರಾಮಕೃಷ್ಣರು ನಗುತ್ತ: “ಈಗಲೇನೋ ನೀನು ಹೇಳುತ್ತಿದ್ದೀಯೆ, ಆತನ ಹೆಸರನ್ನು ಉಳಿಸಲು ಅದನ್ನೆಲ್ಲಾ ಮಾಡುತ್ತಿದ್ದೀಯೆ ಎಂದು. ಆದರೆ ಇನ್ನು ಸ್ವಲ್ಪ ದಿನ ಕಳೆದ ನಂತರ ಆ ಆಕಾಂಕ್ಷೆ ಇರದು. ಒಂದು ಕಥೆ ಹೇಳುತ್ತೇನೆ ಕೇಳು. ಒಬ್ಬ ಒಂದು ಬೆಟ್ಟದ ಮೇಲೆ ಒಂದು ಮನೆ ಕಟ್ಟಿಕೊಂಡಿದ್ದ. ಅದು ಮಣ್ಣಿನ ಮನೆಯೇ ಆದರೂ ಬಹಳ ಶ್ರಮವಹಿಸಿ ಕಟ್ಟಿದ್ದ. ಒಂದು ದಿನ ಒಂದು ದೊಡ್ಡ ಬಿರುಗಾಳಿ ಎದ್ದಿತು. ಮಣ್ಣಿನ ಮನೆ ಸುಮ್ಮನೆ ಅಲುಗಾಡಲಾರಂಭಿಸಿತು. ಅದನ್ನು ಹೇಗೆ ರಕ್ಷಿಸುವುದು ಎಂಬ ಯೋಚನೆ ಆತನಿಗೆ ಬಹಳವಾಗಿ ಹತ್ತಿಬಿಟ್ಟಿತು. ಆಗ ಆತ ವಾಯುದೇವನಿಗೆ ಪ್ರಾರ್ಥನೆ ಮಾಡಲಾರಂಭಿಸಿದ: ‘ಹೇ ವಾಯುದೇವ, ದಯವಿಟ್ಟು ಮನೆಯನ್ನು ನೆಲಸಮಮಾಡಿ ಬಿಡಬೇಡ!’ ಆದರೆ ವಾಯುದೇವ ಆತನ ಪ್ರಾರ್ಥನೆಗೆ ಕಿವಿಗೊಡಲಿಲ್ಲ. ಮನೆ ‘ಲಟ್, ಲಟ್’ ಅಂತ ಶಬ್ದ ಮಾಡುತ್ತ ಮುರಿದು ಬೀಳುವುದರಲ್ಲಿತ್ತು. ಆಗ ಆತನಿಗೆ ಒಂದು ಯುಕ್ತಿ ಹೊಳೆಯಿತು. ಹನುಮಂತ ವಾಯುದೇವನ ಪುತ್ರ ಎಂಬುದು ಜ್ಞಾಪಕಕ್ಕೆ ಬಂತು. ಒಡನೆಯೇ ವ್ಯಸ್ತನಾಗಿ ಕೂಗಿಕೊಳ್ಳಲಾರಂಭಿಸಿದ: ‘ವಾಯುದೇವ, ಮನೆಯನ್ನು ಬೀಳಿಸಬೇಡ. ಇದು ನಿನ್ನ ಮಗ ಹನುಮಂತನ ಮನೆ. ಇದನ್ನು ರಕ್ಷಿಸುವಂತೆ ಪ್ರಾರ್ಥಿಸಿಕೊಳ್ಳುತ್ತಿದ್ದೇನಪ್ಪ.’ ಆದರೂ ಮನೆ ಮುರಿದು ಬೀಳುವಂತೆಯೇ ಅಲ್ಲಾಡುತ್ತಿತ್ತು. ಆತನ ಪ್ರಾರ್ಥನೆಯನ್ನು ಯಾರೂ ಕೇಳುವಂತೆಯೇ ತೋರಿಬರಲಿಲ್ಲ. ಅನೇಕ ಸಲ ‘ಇದು ಹನುಮಂತನ ಮನೆ! ಇದು ಹನುಮಂತನ ಮನೆ! ಎಂದು ಕೂಗಿಕೊಂಡ ನಂತರ ನೋಡುತ್ತಾನೆ, ಪರಿಸ್ಥಿತಿಯನ್ನು ಬದಲಾಯಿಸಲಿಲ್ಲ.ಬಳಿಕ ಕೂಗಿಕೊಳ್ಳಲಾರಂಭಿಸಿದ: ‘ಇದು ಲಕ್ಷ್ಮಣನ ಮನೆ! ಇದು ಲಕ್ಷ್ಮಣನ ಮನೆ!’ ಇದರಿಂದಲೂ ಪರಿಸ್ಥಿತಿ ಬದಲಾಯಿಸಲಿಲ್ಲ, ಅನಂತರ ಕೂಗಿಕೊಳ್ಳಲಾರಂಭಿಸಿದ: ‘ಇದು ರಾಮನ ಮನೆ! ಇದು ರಾಮನ ಮನೆ!’ ಬೀಳಿಸಬೇಡಪ್ಪ, ಹೇ ವಾಯುದೇವ! ನಮ್ರತೆಯಿಂದ ಪ್ರಾರ್ಥಿಸಿಕೊಳ್ಳುತ್ತಿದ್ದೇನಪ್ಪ!’ ಇದರಿಂದಲೂ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಮನೆ ‘ಲಟ್, ಲಟ್ ಅಂತ ಶಬ್ದಮಾಡುತ್ತ ಮುರಿದುಬೀಳಲಾರಂಭಿಸಿತು. ಆಗ ಇನ್ನೇನು ತಾನೆ ಮಾಡಿಯಾನು, ಹೊರಕ್ಕೆ ಬಾರದೆ ಪ್ರಾಣ ಉಳಿಯುವಂತಿಲ್ಲ. ಮನೆಯಿಂದ ಹೊರಕ್ಕೆ ಓಡಿಬರುವಾಗ ಹೇಳಲಾರಂಭಿಸಿದ: ‘ಹಾಳಾಗಿ ಹೋಗಲಿ! ಇದು ದೆವ್ವದ ಮನೆಯೇ!’
(ಪ್ರತಾಪನಿಗೆ) “ಕೇಶವನ ಹೆಸರನ್ನು ನೀನು ಉಳಿಸಿಬಿಡಬೇಕಾದ ಆವಶ್ಯಕತೆಯೇನಿಲ್ಲ. ಇದುವರೆಗೆ ಏನಾಯಿತೊ, ತಿಳಿದುಕೊ, ಎಲ್ಲ ಭಗವಂತನ ಇಚ್ಛೆಗನುಸಾರ ಎಂಬುದನ್ನು ಆತನ ಇಚ್ಛೆಯಿಂದ ಆಯಿತು, ಆತನ ಇಚ್ಛೆಯಿಂದ ಹೋಗುತ್ತಿದೆ. ಅದಕ್ಕಾಗಿ ನೀನು ಏನು ತಾನೆ ಮಾಡಬಲ್ಲೆ? ಈಗ ನಿನ್ನ ಕರ್ತವ್ಯ ಭಗವಂತನಿಗೆ ನಿನ್ನ ಇಡೀ ಮನಸ್ಸನ್ನು ಕೊಡುವುದೇ-ಆತನ ಪ್ರೇಮಸಾಗರಕ್ಕೆ ಧುಮುಕುವುದೇ.”
ಹೀಗೆಂದು ಹೇಳಿ ಪರಮಹಂಸರು ತಮ್ಮ ಅತುಲನೀಯ ಕಂಠದಿಂದ ಹಾಡಲಾರಂಭಿಸಿದ್ದಾರೆ:
ಮುಳುಗು ಮುಳುಗು ಮನವೇ-
ಹಿರಿಯೊಲವಿನ ಕಡಲಾಳಕೆ…..
ಶ್ರೀರಾಮಕೃಷ್ಣರು ಮತ್ತೆ ಪ್ರತಾಪನಿಗೆ: “ಹಾಡನ್ನು ಕೇಳಿದೆಯೊ? ಉಪನ್ಯಾಸ, ವಾದ, ವಿವಾದ ಎಲ್ಲ ಬೇಕಾದಷ್ಟು ಆಗಿವೆ. ಈಗ ಭಗವತ್ಸಾಗರಕ್ಕೆ ಧುಮುಕು. ಈ ಸಾಗರಕ್ಕೆ ಧುಮುಕಿದರೆ ಸಾಯುವ ಭಯವೇನಿಲ್ಲ; ಇದು ಅಮೃತಸಾಗರ. ಇದು ಮನುಷ್ಯನ ತಲೆಯನ್ನು ಕೆಡಿಸಿಬಿಡುತ್ತದೆ ಎಂದು ಭಾವಿಸಬೇಡ. ಹೆಚ್ಚಾಗಿ ಭಗವಚ್ಚಿಂತನೆ ಮಾಡಿದರೆ ಹುಚ್ಚುಹಿಡಿದುಬಿಡುತ್ತದೆ ಎಂದು ಎಂದಿಗೂ ಭಾವಿಸಬೇಡ. ನಾನು ಒಮ್ಮೆ ನರೇಂದ್ರನಿಗೆ ಹೇಳಿದೆ-
ಪ್ರತಾಪ: “ಮಹಾಶಯರೆ, ನರೇಂದ್ರ ಯಾರು?”
ಶ್ರೀರಾಮಕೃಷ್ಣರು: “ಓ, ಇದ್ದಾನೆ. ಆ ಹೆಸರಿನ ಒಬ್ಬ ಹುಡುಗ, ನಾನು ನರೇಂದ್ರನಿಗೆ ಹೇಳಿದೆ: ‘ನೋಡು, ಭಗವಂತ ರಸದ ಸಾಗರ. ನಿನಗೆ ಇಚ್ಛೆ ಆಗುವುದಿಲ್ಲವೆ ಅದಕ್ಕೆ ಧುಮುಕಲು? ಒಳ್ಳೇದು, ಭಾವಿಸಿಕೊ, ಇಲ್ಲೊಂದು ಬಟ್ಟಲು ಪಾನಕ ಇದೆ, ನೀನೊಂದು ನೊಣ ಆಗಿದ್ದೀಯೆ ಎಂದು. ಎಲ್ಲಿ ಕುಳಿತುಕೊಂಡು ಪಾನಕ ಕುಡಿಯುತ್ತೀಯೆ, ಹೇಳು ನೋಡೋಣ?’ ನರೇಂದ್ರ ಹೇಳಿದ: ‘ನಾನು ಬಟ್ಟಲ ಅಂಚಿನಲ್ಲಿ ಕುಳಿತು ತಲೆಯನ್ನು ಚಾಚಿ ಕುಡಿಯುತ್ತೇನೆ.’ ನಾನು ಕೇಳಿದೆ: ‘ಏಕೆ? ಅಂಚಿನಲ್ಲಿ ಕುಳಿತು ಏಕೆ?’ ಆತ ಹೇಳಿದ: ‘ಇನ್ನೂ ಮುಂದಕ್ಕೆ ಹೋದರೆ ಪಾನಕದಲ್ಲಿ ಮುಳುಗಿ ಸತ್ತುಹೋಗುತ್ತೇನೆ.’ ಆಗ ನಾನು ಹೇಳಿದೆ: ‘ಮಗು, ಸಚ್ಚಿದಾನಂದ ಸಾಗರದಲ್ಲಿ ಆ ವಿಧವಾದ ಭಯಕ್ಕೆ ಎಡೆಯಿಲ್ಲ. ಅದು ಅಮೃತಸಾಗರ. ಅದಕ್ಕೆ ಧುಮುಕಿದರೆ ಮೃತ್ಯು ಉಂಟಾಗದು; ಮನುಷ್ಯ ಅಮರನಾಗಿಬಿಡುತ್ತಾನೆ. ಭಗವಂತನಿಗಾಗಿ ಉನ್ಮತ್ತನಾದರೆ ಮನುಷ್ಯ ತಲೆ ಕಳೆದುಕೊಳ್ಳುವುದಿಲ್ಲ.’
(ಭಕ್ತರಿಗೆ) “ನಾನು’, ‘ನನ್ನದು’ ಎಂಬುದೇ ಅಜ್ಞಾನ. ರಾಣಿ ರಾಸಮಣಿ ಕಾಳೀ ದೇವಾಲಯವನ್ನು ಕಟ್ಟಿಸಿದಳು ಎಂದು ಜನ ಹೇಳುವರೇ ವಿನಾ, ಭಗವಂತ ಕಟ್ಟಿಸಿದ ಅಂತ ಯಾರೂ ಹೇಳರು. ಬ್ರಾಹ್ಮಸಮಾಜವನ್ನು ಒಬ್ಬಾನೊಬ್ಬ ಸ್ಥಾಪಿಸಿದ್ದ ಅಂತ ಹೇಳುವರೇ ವಿನಾ, ಭಗವಂತನ ಇಚ್ಛೆಯಿಂದ ಅದು ಸ್ಥಾಪಿತವಾಯಿತು ಅಂತ ಯಾರೂ ಹೇಳರು. ‘ನಾನು ಮಾಡುತ್ತೇನೆ’ ಎಂಬ ಭಾವನೆಯೇ ಅಜ್ಞಾನ. ಇದಕ್ಕೆ ಬದಲಾಗಿ, ‘ಹೇ ಭಗವಂತ, ನೀನು ಕರ್ತ, ನಾನು ಅಕರ್ತ; ನೀನು ಯಾಂತ್ರಿಕ, ನಾನು ಯಂತ್ರ ಎಂಬ ಭಾವನೆಯೇ ಜ್ಞಾನ. ಜ್ಞಾನ ದೊರೆತನಂತರ ಮನುಷ್ಯ ಹೇಳುತ್ತಾನೆ: ‘ಹೇ ಭಗವಂತ, ನನ್ನದು ಎಂಬತಕ್ಕದ್ದು ಯಾವುದೂ ಇಲ್ಲ ಈ ಮಂದಿರ ನನ್ನದಲ್ಲ. ಈ ಕಾಳೀ ದೇವಾಲಯ ನನ್ನದಲ್ಲ, ಈ ಸಮಾಜ ನನ್ನದಲ್ಲ, ಇವೆಲ್ಲಾ ನಿನ್ನವು. ಹೆಂಡತಿ, ಮಕ್ಕಳು, ಬಂಧು, ಬಳಗ ಎಂದಿಗೂ ನನ್ನವಲ್ಲ. ಎಲ್ಲವೂ ನಿನಗೆ ಸೇರಿದವೆ.’
“ ‘ಇದು ನನಗೆ ಸೇರಿದ್ದು, ಇದು ನನಗೆ ಸೇರಿದ್ದು’ ಎಂಬುದಾಗಿ ಈ ವಸ್ತುಗಳನ್ನು ಪ್ರೀತಿಸುವುದಕ್ಕೇ ಮಾಯೆ ಅಂತ ಹೆಸರು. ಆದರೆ ಎಲ್ಲವನ್ನೂ ಪ್ರೀತಿಸುವುದಕ್ಕೆ ದಯೆ ಅಂತ ಹೆಸರು. ಕೇವಲ ಬ್ರಾಹ್ಮಸಮಾಜದವರನ್ನು ಪ್ರೀತಿಸುವುದಕ್ಕೆ ಅಥವಾ ಕೇವಲ ತನ್ನ ಪರಿವಾರದವರನ್ನು ಪ್ರೀತಿಸುವುದಕ್ಕೆ ಮಾಯೆ ಅಂತ ಹೆಸರು; ಕೇವಲ ಸ್ವದೇಶದವರನ್ನು ಪ್ರೀತಿಸುವುದಕ್ಕೆ ಮಾಯೆ ಅಂತ ಹೆಸರು. ಆದರೆ ಎಲ್ಲಾ ದೇಶದ ಜನರನ್ನು ಪ್ರೀತಿಸುವುದಕ್ಕೆ ಎಲ್ಲಾ ಧರ್ಮಗಳ ಜನರನ್ನೂ ಪ್ರೀತಿಸುವುದಕ್ಕೆ ದಯೆ ಅಂತ ಹೆಸರು. ಈ ವಿಧದ ಪ್ರೀತಿ ದಯೆಯಿಂದ ಉಂಟಾಗುತ್ತದೆ. ಭಕ್ತಿಯಿಂದ ಉಂಟಾಗುತ್ತದೆ.
“ಮಾಯೆ ಮನುಷ್ಯನನ್ನು ಬದ್ಧನನ್ನಾಗಿಯೂ, ಭಗವದ್ವಿಮುಖನನ್ನಾಗಿಯೂ ಮಾಡಿ ಬಿಡುತ್ತದೆ. ಆದರೆ ದಯೆ ಭಗವಂತನ ಸಾಕ್ಷಾತ್ಕಾರವನ್ನು ದೊರಕಿಸಿಕೊಡುತ್ತದೆ. ಶುಕದೇವ ಮತ್ತು ನಾರದಾದಿಗಳು ದಯಾವಂತರಾಗಿದ್ದರು.”
ಪ್ರತಾಪ: “ಮಹಾಶಯರೆ, ಕೆಲವರು ನಿಮ್ಮೊಡನೆಯೇ ಇದ್ದುಕೊಂಡಿದ್ದಾರಲ್ಲ, ಅವರಿಗೆ ಕ್ರಮೇಣ ಉನ್ನತಿ ಉಂಟಾಗುತ್ತಿದೆಯೇನು?”
ಶ್ರೀರಾಮಕೃಷ್ಣರು: “ನಾನು ಜನರಿಗೆ ಹೇಳುತ್ತೇನೆ, ಸಂಸಾರ ಜೀವನ ತಪ್ಪೇನಲ್ಲ. ಆದರೆ ಅದರಲ್ಲಿ ದಾಸಿಯಂತಿರಬೇಕು, ಅಷ್ಟೆ. ದಾಸಿ ತನ್ನ ಯಜಮಾನನ ಮನೆಯ ಸಂಬಂಧವಾಗಿಯೇ ಹೇಳುತ್ತಾಳೆ: ‘ನಮ್ಮ ಮನೆ’ ಆದರೆ ಆಕೆಯ ಸ್ವಂತ ಮನೆ ಯಾವುದೋ ಒಂದು ಹಳ್ಳಿಯಲ್ಲಿ ಇರಬಹುದು. ಯಜಮಾನನ ಮನೆ ತೋರಿಸಿ ಬಾಯಲ್ಲೇನೋ ಹೇಳುತ್ತಾಳೆ: ‘ಇದು ನಮ್ಮ ಮನೆ’ ಎಂದು. ಆದರೆ ಹೃದಯಾಂತರಾಳದಲ್ಲಿ ಆಕೆಗೆ ಚೆನ್ನಾಗಿ ಗೊತ್ತಿದೆ. ಅದು ತನ್ನ ಮನೆಯಲ್ಲ. ತನ್ನ ಮನೆ ದೂರದ ಹಳ್ಳಿಯಲ್ಲಿದೆ ಎಂದು. ಯಜಮಾನನ ಮಗುವನ್ನು ಲಾಲಿಸಿ ಪೋಷಿಸುತ್ತ ಒಮ್ಮೊಮ್ಮೆ ಹೇಳುತ್ತಾಳೆ: ನನ್ನ ಹರಿ ಬಹಳ ತುಂಟನಾಗಿಬಿಟ್ಟಿದ್ದಾನೆ.’ ಅಥವಾ ‘ನನ್ನ ಹರಿಗೆ ಸಿಹಿಯೇ ಸೇರದು.’ ಆಕೆ, ‘ನನ್ನ ಹರಿ’ ಅಂತ ಬಾಯಲ್ಲೇನೋ ಹೇಳುತ್ತಾಳೆ. ಆದರೆ ಹೃದಯದಲ್ಲಿ ಚೆನ್ನಾಗಿ ಗೊತ್ತಿದೆ ಹರಿ ತನ್ನ ಮಗುವಲ್ಲ, ಯಜಮಾನನದು ಎಂಬುದು.
“ಇದಕ್ಕಾಗಿಯೇ ಇಲ್ಲಿಗೆ ಬರುವವರಿಗೆ ನಾನು ಹೇಳುತ್ತಿದ್ದೇನೆ: ‘ಸಂಸಾರವನ್ನು ಏಕೆ ಬೇಡ ಅನ್ನುತ್ತೀರಿ? ಅದೇನು ತಪ್ಪಲ್ಲ. ಆದರೆ ಭಗವಂತನಲ್ಲಿ ಮನಸ್ಸಿಟ್ಟು ಅದರಲ್ಲಿರಬೇಕು. ಚೆನ್ನಾಗಿ ತಿಳಿದುಕೊಂಡುಬಿಡಿ, ಮನೆ, ಮಠ, ಬಂಧು, ಬಳಗ ನಿಮ್ಮವಲ್ಲ ಎಂಬುದನ್ನು. ಅವೆಲ್ಲವೂ ಭಗವಂತನಿಗೆ ಸೇರಿದುವು. ನಿಮ್ಮ ನಿಜವಾದ ಮನೆ ಇರುವುದು ಭಗವಂತನ ಹತ್ತಿರದಲ್ಲಿ’. ಮತ್ತೆ ಹೇಳುತ್ತೇನೆ: ‘ಭಗವಂತನ ಪಾದಪದ್ಮಗಳಲ್ಲಿ ನಿಮಗೆ ಭಕ್ತಿಯುಂಟಾಗಬೇಕೆಂದು ವ್ಯಾಕುಲ ಹೃದಯದಿಂದ ಸರ್ವದಾ ಪ್ರಾರ್ಥನೆಮಾಡಿ.’”
ವಿಲಾಯತಿಯ ಸಂಬಂಧವಾಗಿ ಮಾತುಕತೆ ಮತ್ತೆ ಈಗ ಆರಂಭವಾಯಿತು. ಒಬ್ಬ ಭಕ್ತ ಹೇಳಿದ: “ಮಹಾಶಯರೆ, ಈಗಿನ ಕಾಲದ ವಿಲಾಯತಿಯ ಪಂಡಿತರು ಭಗವಂತನಿದ್ದಾನೆ ಎಂಬುದನ್ನು ಒಪ್ಪುತ್ತಿಲ್ಲವಂತೆ.”
ಪ್ರತಾಪ: “ಬಾಯಲ್ಲಿ ಅವರು ಏನು ಬೇಕಾದರೂ ಹೇಳಿಕೊಳ್ಳಲಿ, ಹೃದಯದಲ್ಲಿ ಅವರು ಯಾರೂ ನಾಸ್ತಿಕರು ಎಂಬುದಾಗಿ ನನಗೆ ತೋರುವುದಿಲ್ಲ. ಈ ಜಗದ್ವ್ಯಾಪಾರದ ಹಿಂದೆ ಒಂದು ಮಹಾಶಕ್ತಿ ಇದೆ ಎಂಬುದನ್ನು ಅವರಲ್ಲನೇಕರು ಒಪ್ಪಿಕೊಳ್ಳಬೇಕಾಗಿ ಬಂದಿದೆ.”
ಶ್ರೀರಾಮಕೃಷ್ಣರು: “ಅಷ್ಟಾದರೇ ಸಾಕು. ಶಕ್ತಿಯನ್ನು ಒಪ್ಪುತ್ತಾರೆ ತಾನೆ? ಅವರು ನಾಸ್ತಿಕರು ಹೇಗೆ ಆಗುತ್ತಾರೆ?”
ಪ್ರತಾಪ: “ಅದೂ ಅಲ್ಲದೆ, ಸತ್ಕಾರ್ಯಕ್ಕೆ ಸತ್ಫಲ, ದುಷ್ಕಾರ್ಯಕ್ಕೆ ದುಷ್ಫಲ ದೊರೆಯುತ್ತದೆ ಎಂಬುದನ್ನೂ ಅವರು ಒಪ್ಪುತ್ತಾರೆ.”
ಪ್ರತಾಪ ಇನ್ನೇನು ಪರಮಹಂಸರಿಂದ ಬೀಳ್ಕೊಳ್ಳುವುದರಲ್ಲಿದ್ದಾನೆ.
ಶ್ರೀರಾಮಕೃಷ್ಣರು ಪ್ರತಾಪನಿಗೆ: “ಇನ್ನೇನು ತಾನೆ ಹೇಳಲಿ ನಿನಗೆ? ಆದರೆ ಇಷ್ಟು ಹೇಳಬಲ್ಲೆ. ನೀನು ಜಗಳ, ವಾದ-ವಿವಾದ ಇವುಗಳಲ್ಲಿ ಸಿಕ್ಕಿಕೊಳ್ಳಬೇಡ ಎಂದು. ಇನ್ನೊಂದು ವಿಷಯ. ಕಾಮಕಾಂಚನವೇ ಕಾರಣ-ಭಗವಂತನಿಂದ ಮನುಷ್ಯ ವಿಮುಖನಾಗುವುದಕ್ಕೆ. ಆ ಕಡೆಗೆ ಹೋಗಲು ಅವು ಬಿಟ್ಟುಕೊಡಲೊಲ್ಲವು. ನೋಡಿಲ್ಲವೆ ನೀನು, ಪ್ರತಿಯೊಬ್ಬನೂ ತನ್ನ ತನ್ನ ಹೆಂಡತಿಯನ್ನು ಕೇವಲ ಹೊಗಳುವುದನ್ನಲ್ಲದೆ ಬೇರೆ ಏನನ್ನೂ ಮಾಡದಿರುವುದನ್ನು? (ಎಲ್ಲರೂ ನಗುತ್ತಿದ್ದಾರೆ.) ಆಕೆ ಒಳ್ಳೆಯವಳಾಗಿರಲಿ, ಕೆಟ್ಟವಳಾಗಿರಲಿ-ಯಾರನ್ನೇ ಆಗಲಿ, ನಿನ್ನ ಹೆಂಡತಿ ಹೇಗೆ ಎಂದು ಕೇಳಿದರೆ, ಒಡನೆಯೇ ಆತ ಹೇಳುತ್ತಾನೆ: “ಓ ನಮ್ಮಾಕೆಯೆ, ಬಹಳ ಒಳ್ಳೆಯವಳು-’”
ಪ್ರತಾಪ ಈಗ ಎದ್ದು ನಿಂದು ಪರಮಹಂಸರಿಂದ ಬೀಳ್ಕೊಂಡು ಹೊರಟುಹೋಗುತ್ತಿದ್ದಾನೆ. ಪರಮಹಂಸರ ಅಮೃತಮಯ ಮಾತು, ಕಾಮಕಾಂಚನದ ತ್ಯಾಗದ ಮಾತು, ಅಲ್ಲಿಗೆ ನಿಂತುಹೋಯಿತು. ಸುರೇಂದ್ರನ ತೋಟದ ಗಿಡಮರಗಳ ಎಲೆಗಳು ದಕ್ಷಿಣ ದಿಕ್ಕಿನಿಂದ ಬೀಸುತ್ತಿದ್ದ ಗಾಳಿಯ ದೆಸೆಯಿಂದ ಮರ್ಮರ ಶಬ್ದ ಮಾಡುತ್ತಿದ್ದುವು. ಪರಮಹಂಸರ ಮಾತುಕತೆಗಳು ಆ ಶಬ್ದದೊಡನೆ ಬೆರೆತು, ಭಕ್ತರ ಹೃದಯವನ್ನು ಒಮ್ಮೆ ಮುಟ್ಟಿ, ಕೊನೆಗೆ ಅನಂತ ಆಕಾಶದಲ್ಲಿ ಲಯವಾಗಿಬಿಟ್ಟವು.
ಈಗ ಮಣಿಮಲ್ಲಿಕ ಪರಮಹಂಸರಿಗೆ ಹೇಳುತ್ತಿದ್ದಾನೆ: “ಮಹಾಶಯರೆ, ನೀವು ದಕ್ಷಿಣೇಶ್ವರಕ್ಕೆ ಹೊರಡಲು ಸಮಯ ಆಗಿಬಿಟ್ಟಿದೆ. ಇಂದು ಅಲ್ಲಿಗೆ ಕೇಶವಸೇನನ ತಾಯಿ ಮತ್ತು ಆತನ ಮನೆಯ ಹೆಂಗಸರು ತಮ್ಮನ್ನು ದರ್ಶನಮಾಡಲು ಬರುತ್ತಾರೆ. ಅವರಿಗೆ ನೀವು ಆಗ ಸಿಕ್ಕದೆ ಹೋಗಿಬಿಟ್ಟರೆ ಅವರು ದುಃಖಿತರಾಗಿ ಮನೆಗೆ ಹಿಂದಿರುಗುತ್ತಾರೆ.”
ಕೆಲವು ತಿಂಗಳು ಮಾತ್ರ ಆಗಿವೆ, ಕೇಶವಸೇನ ಸ್ವರ್ಗಸ್ಥನಾಗಿ. ಆ ಕಾರಣದಿಂದ ಆತನ ವೃದ್ಧತಾಯಿ ಮತ್ತು ಆತನ ಮನೆಯ ಹೆಂಗಸರು ಪರಮಹಂಸರ ದರ್ಶನ ಪಡೆಯಲು ಇಚ್ಛೆಪಟ್ಟಿದ್ದಾರೆ.
ಶ್ರೀರಾಮಕೃಷ್ಣರು ಮಣಿಮಲ್ಲಿಕನಿಗೆ: “ದಯವಿಟ್ಟು ಅವಸರಪಡಿಸಬೇಡ. ನನಗೆ ನಿದ್ದೆ ಬರಲೇ ಇಲ್ಲ. ನಾನು ಸುಮ್ಮನೆ ನುಗ್ಗಲಾರೆ. ಅವರು ದಕ್ಷಿಣೇಶ್ವರಕ್ಕೆ ಹೋಗುತ್ತಾರೆ ತಾನೆ. ಅದಕ್ಕಾಗಿ ನಾನೇನು ಮಾಡಬೇಕು? ಅವರು ಅಲ್ಲಿ ತೋಟ ಮುಂತಾದುವನ್ನು ಸುತ್ತಾಡಿ ಬಳಸಾಡಿ ಬಹಳವಾಗಿ ಆನಂದಪಡುತ್ತಾರೆ.”
ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡ ನಂತರ ಪರಮಹಂಸರು ಈಗ ಹೊರಡಲು ಸಿದ್ಧರಾಗಿದ್ದಾರೆ. ಸುರೇಂದ್ರನ ಶ್ರೇಯಸ್ಸಿಗಾಗಿ ಮನಸ್ಸಿನಲ್ಲೇ ಪ್ರಾರ್ಥನೆ ಮಾಡುತ್ತಿದ್ದಾರೆ. ಪ್ರತಿಯೊಂದು ಕೊಠಡಿಗೂ ಹೋಗಿ ಮೃದು ಮಧುರ ಧ್ವನಿಯಿಂದ ಭಗವಂತನ ನಾಮೋಚ್ಚಾರಣೆ ಮಾಡುತ್ತಿದ್ದಾರೆ. ಇದ್ದಕ್ಕಿದ್ದ ಹಾಗೆ ಒಂದು ಕಡೆ ನಿಂತು ಹೇಳುತ್ತಿದ್ದಾರೆ: “ನಾನು ಊಟದ ಸಮಯದಲ್ಲಿ ಪೂರಿ ತಿನ್ನಲಿಲ್ಲ. ಈಗ ಒಂದೆರಡನ್ನು ತಂದುಕೊಡು.” ಎಲ್ಲೋ ಒಂದು ಕಿಂಚಿತ್ತು ತಿಂದು ಹೇಳುತ್ತಿದ್ದಾರೆ: “ನಾನು ಹೀಗೆ ಮಾಡಿದ್ದರಲ್ಲಿ ಅರ್ಥವಿದೆ. ಪೂರಿಯನ್ನು ತಿನ್ನಲಿಲ್ಲ ಎಂಬ ಭಾವನೆ ಮನಸ್ಸಿನಲ್ಲಿ ಉಳಿದುಬಿಟ್ಟಿದ್ದೇ ಆದರೆ, ಮತ್ತೆ ಇಲ್ಲಿಗೆ ಅದಕ್ಕಾಗಿ ಬರಬೇಕಾಗಿ ಬಂದುಬಿಡುತ್ತದೆ.” (ಎಲ್ಲರೂ ನಗುತ್ತಿದ್ದಾರೆ.)
ಮಣಿಮಲ್ಲಿಕ ನಗುತ್ತ: “ಒಳ್ಳೇದೆ. ನಾವೂ ನಿಮ್ಮನ್ನು ಹಿಂಬಾಲಿಸುತ್ತಿದ್ದೆವು.”
ಭಕ್ತರೆಲ್ಲರೂ ನಗುತ್ತಿದ್ದಾರೆ.
೨೦ನೆ ಜೂನ್ ೧೮೮೪, ಜ್ಯೇಷ್ಠ ಕೃಷ್ಣ ಚತುರ್ದಶಿ, ಶುಕ್ರವಾರ
ಮುಸ್ಸಂಜೆಯಾಗಿದೆ. ಪರಮಹಂಸರು ತಮ್ಮ ಕೊಠಡಿಯಲ್ಲಿ ಜಗನ್ಮಾತೆಯ ಧ್ಯಾನದಲ್ಲಿ ತನ್ಮಯರಾಗಿದ್ದಾರೆ. ಆಗಾಗ ಆಕೆಯ ಹೆಸರನ್ನು ಪಠಿಸುತ್ತಿದ್ದಾರೆ. ಕೊಠಡಿಯಲ್ಲಿ ರಾಖಾಲ, ಅಧರಸೇನ, ಮಾಸ್ಟರ್, ಇನ್ನೂ ಒಬ್ಬಿಬ್ಬರು ಕುಳಿತಿದ್ದಾರೆ.
ಈಗ ದೇವಾಲಯಗಳಲ್ಲಿ ಸಾಯಂ ಮಂಗಳಾರತಿ ಆರಂಭವಾಯಿತು. ಅಧರಸೇನ ಮಂಗಳಾರತಿಯನ್ನು ನೋಡಿಬರಲು ಎದ್ದುಹೋದ. ಪರಮಹಂಸರು ಮಾಸ್ಟರೊಡನೆ ಮಾತುಕತೆಯಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಒಳ್ಳೇದು. ಬಾಬುರಾಮನಿಗೆ ವ್ಯಾಸಂಗ ಮುಂದುವರಿಸಲು ಇಚ್ಛೆ ಇದೆಯೇನು? ಆತನಿಗೆ ಹೇಳಿದೆ: ‘ನೀನು ಲೋಕಶಿಕ್ಷಣಕ್ಕಾಗಿ ವ್ಯಾಸಂಗ ಮುಂದುವರಿಸು. ಸೀತೆಯ ಬಿಡುಗಡೆ ಆದ ನಂತರ ವಿಭೀಷಣ ಲಂಕೆಗೆ ರಾಜನಾಗಲು ಒಪ್ಪಲಿಲ್ಲ. ರಾಮ ಹೇಳಿದ : ‘ನೀನು ಬುದ್ಧಿಹೀನರ ಕಣ್ಣು ತೆರೆಯಲು ರಾಜ್ಯಭಾರ ಸ್ವೀಕರಿಸು. ಇಲ್ಲದಿದ್ದರೆ ಅವರು ನಿನ್ನನ್ನು ಕೇಳುತ್ತಾರೆ, ನಿನಗೇನು ದೊರೆಯಿತು ನನ್ನ ಸೇವೆಯನ್ನು ಮಾಡಿದ್ದರಿಂದ ಎಂದು. ನಿನಗೆ ರಾಜ್ಯ ದೊರೆತುದಕ್ಕಾಗಿ ಅವರಿಗೆ ಬಹಳ ಆನಂದವಾಗುತ್ತದೆ.’
“ಇದು ನಿನ್ನ ಕಿವಿಗೆ ಮಾತ್ರ. ಅಂದು ನನಗೆ ಭಾವಾವಸ್ಥೆಯಲ್ಲಿ ಕಂಡುಬಂತು, ಬಾಬುರಾಮ, ಭವನಾಥ, ಹರೀಶ ಇವರದು ಪ್ರಕೃತಿಭಾವ ಎಂಬುದಾಗಿ. ಬಾಬುರಾಮ ಕಂಡು ಬಂದ ಒಬ್ಬ ದೇವೀಮೂರ್ತಿಯ ಹಾಗೆ. ಕೊರಳಲ್ಲಿ ಹಾರವಿತ್ತು, ಒಬ್ಬ ಸಖಿ ಜತೆಯಲ್ಲಿ ಇದ್ದಳು. ಆತನಿಗೆ ಸ್ವಪ್ನದಲ್ಲಿ ಏನೋ ಒಂದು ಅನುಭವ ದೊರೆಯಿತಂತೆ. ಆತನ ಶರೀರ ಶುದ್ಧವಾದ್ದು. ಸ್ವಲ್ಪ ಸಾಧನೆ ಮಾಡಿದರೇ ಆತ್ಮಜಾಗ್ರತಿಯುಂಟಾಗಿಬಿಡುತ್ತದೆ.
“ನೋಡು, ನನಗೆ ಈ ದೇಹರಕ್ಷಣೆಯ ಕೆಲಸ ಕಷ್ಟವಾಗಿ ತೋರುತ್ತದೆ. ಬಾಬುರಾಮ ಬಂದು ನನ್ನೊಡನೆ ಇರುವುದಾದರೆ ಬಹಳ ಚೆನ್ನಾಗಿರುತ್ತದೆ. ನನಗೆ ಸೇವೆ ಮಾಡುತ್ತಿರುವ ಈ ಹುಡುಗರ ಸ್ವಭಾವ ಪರಿವರ್ತನೆ ಹೊಂದಿಬಿಡುತ್ತದೆ. ಲಾಟು ಯಾವಾಗಲೂ ಭಾವದಲ್ಲೇ ಮುಳುಗಿದ್ದಾನೆ. ಆತ ಇನ್ನೇನು ಭಗವಂತನಲ್ಲಿ ಲಯವಾಗುವುದರಲ್ಲಿದ್ದಾನೆ. ರಾಖಾಲನಿಗೆ ಅಂಥಾ ಆಧ್ಯಾತ್ಮಿಕ ಉನ್ನತಿ ಬಂದುಬಿಟ್ಟಿದೆ. ಆತನಿಗೇನೇ ನಾವು ಸೇವೆ ಮಾಡಬೇಕಾಗಿ ಬಂದಿದೆ. ನಾನೇ ಆತನಿಗೆ ನೀರು ಮುಂತಾದುವನ್ನು ತಂದುಕೊಡಬೇಕಾಗಿ ಬಂದುಬಿಟ್ಟಿದೆ, ನನ್ನ ಸೇವೆ ಮಾಡಲು ಆತನ ಕೈಯಲ್ಲಿ ಸಾಧ್ಯವಿಲ್ಲ.
“ಬಾಬುರಾಮ, ನಿರಂಜನ ಇವರನ್ನು ಬಿಟ್ಟರೆ ಬೇರೆ ಹುಡುಗರು ಯಾರಿದ್ದಾರೆ? ಮುಂದೆ ಬೇರೆ ಯಾರು ಬಂದರೂ, ನನಗನ್ನಿಸುತ್ತಿದೆ, ಅವರು ಉಪದೇಶ ಪಡೆದುಕೊಂಡು ಹೋಗತಕ್ಕವರೇ.
“ಆದರೆ ಬಾಬುರಾಮ ಒಮ್ಮೆಗೇ ಬಂದುಬಿಡಲಿ ಎಂದು ನಾನು ಹೇಳುತ್ತಿಲ್ಲ. ಹಾಗೆ ಮಾಡಿದರೆ ಮನೆಯಲ್ಲಿ ತೊಂದರೆಗಿಟ್ಟುಕೊಳ್ಳಬಹುದು. (ನಗುತ್ತ) ಆತನಿಗೆ ‘ಬಂದುಬಿಡು’ ಎಂದು ಹೇಳಿದರೆ, ಅವನು ಹೇಳುತ್ತಾನೆ ‘ಬರುವ ಹಾಗೆ ಮಾಡಿಕೊಳ್ಳಿ ನೀವು.’ ರಾಖಾಲನನ್ನು ನೋಡಿ ಆತ ಸುಮ್ಮನೆ ಅಳುತ್ತಾನೆ. ಆತ ಹೇಳುತ್ತಾನೆ: ‘ರಾಖಾಲ ಇಲ್ಲಿ ಬಹಳ ಆನಂದದಿಂದ ಇದ್ದಾನೆ.’
“ರಾಖಾಲ ಇಲ್ಲಿ ಮನೆ ಹುಡುಗನ ಹಾಗೆ ಇದ್ದಾನೆ. ಚೆನ್ನಾಗಿ ಗೊತ್ತಿದೆ, ಆತ ಸಂಸಾರಾಸಕ್ತನಾಗುವುದಿಲ್ಲ ಎಂಬುದು. ಹೇಳುತ್ತಿದ್ದಾನೆ: ‘ಸಂಸಾರ ಸುಖ ಸಪ್ಪೆಯಾಗಿ ಕಾಣುತ್ತಿದೆ.’ ಆತನ ಹೆಂಡತಿ ಇಲ್ಲಿಗೆ ಬಂದಿದ್ದಳು. ಹದಿನಾಲ್ಕು ವಯಸ್ಸು. ಇಲ್ಲಿಂದ ಕೊನ್ನಗರಕ್ಕೆ ಹೋದಳು. ಕೊನ್ನಗರಕ್ಕೆ ಆತನನ್ನೂ ಕರೆದರು. ಆದರೆ ಆತ ಹೋಗಲಿಲ್ಲ. ಹೇಳಿದ ‘ಆಮೋದ, ಆಹ್ಲಾದ ನನಗೆ ರುಚಿಸುತ್ತಿಲ್ಲ.’
“ನಿರಂಜನ ನಿನಗೆ ಹೇಗೆ ಕಾಣುತ್ತಾನೆ?”
ಮಾಸ್ಟರ್: “ಒಳ್ಳೆಯ ಸುಂದರ ಕಾಯ.”
ಶ್ರೀರಾಮಕೃಷ್ಣರು: “ಕೇವಲ ಸುಂದರಕಾಯನೇ ಅಲ್ಲ, ಸರಳ. ಸರಳಜೀವಿ ಭಗವಂತನನ್ನು ಸುಲಭವಾಗಿ ಪಡೆದುಕೊಂಡುಬಿಡುತ್ತಾನೆ. ಸರಳ ಹೃದಯದಲ್ಲಿ ಉಪದೇಶ ಬೇಗ ಬೇರೂರುತ್ತದೆ. ಅಂಥ ಹೃದಯ ಉತ್ತು ಹದಮಾಡಿದ ಹೊಲದ ಹಾಗೆ. ಬೀಜ ಅಲ್ಲಿಗೆ ಬೀಳುವುದೇ ತಡ, ಅದು ಹುಟ್ಟಿಕೊಂಡುಬಿಡುತ್ತದೆ, ಬೇಗ ಫಲವನ್ನೂ ಕೊಟ್ಟು ಬಿಡುತ್ತದೆ.
“ನಿರಂಜನ ವಿವಾಹವಾಗುವುದಿಲ್ಲ. ಕಾಮಕಾಂಚನವೇ ಮನುಷ್ಯನ ಬಂಧನಕ್ಕೆ ಕಾರಣ. ನೀನು ಏನು ಹೇಳುತ್ತೀಯೆ?”
ಮಾಸ್ಟರ್: “ಹೌದು, ನಿಜ.”
ಶ್ರೀರಾಮಕೃಷ್ಣರು: “ಎಲೆಯಡಿಕೆ, ಹೊಗೆಸೊಪ್ಪು ಇವನ್ನು ತ್ಯಜಿಸಿಬಿಟ್ಟರೆ ಏನು ದೊರಕೀತು? ಕಾಮಕಾಂಚನ ತ್ಯಾಗವೇ ತ್ಯಾಗ.
“ಭಾವಾವಸ್ಥೆಯಲ್ಲಿ ತೋರಿಬಂತು, ನಿರಂಜನ ಚಾಕರಿಮಾಡುತ್ತಿದ್ದರೂ, ಅದರಿಂದ ಆತನಿಗೆ ಯಾವ ತೊಂದರೆಯೂ ಉಂಟಾಗದು. ಆತ ತಾಯಿಗಾಗಿ ಉದ್ಯೋಗ ಸ್ವೀಕರಿಸಿದ್ದಾನೆ-ಅದು ತಪ್ಪಲ್ಲ.
“ನೀನು ಮಾಡುತ್ತಿರುವ ಕರ್ಮವೂ ನಿನಗೆ ತೊಂದರೆಯನ್ನು ತರದು. ಅದು ಒಳ್ಳೆ ಕೆಲಸವೆ. ಏನೋ ತಪ್ಪಿಗಾಗಿ ಒಬ್ಬ ಗುಮಾಸ್ತನನ್ನು ಜೈಲಿಗೆ ಕಳುಹಿಸಿದರು ಅಂತ ಇಟ್ಟುಕೊ. ಆತನನ್ನು ಅಲ್ಲಿ ಬಂಧಿಸಿ ಕೈಗೆ ಸಂಕೋಲೆ ಹಾಕುತ್ತಾರೆ, ಕೊನೆಗೆ ಆತನನ್ನು ಬಿಟ್ಟುಬಿಡುತ್ತಾರೆ. ಬಿಡುಗಡೆಯಾದ ನಂತರ ‘ತಕತೈ, ತಕತೈ’ ಅಂತ ಕುಣಿಯುತ್ತಿರುತ್ತಾನೇನು? ಎಂದಿಗೂ ಇಲ್ಲ. ಮತ್ತೆ ಗುಮಾಸ್ತೆಯ ಕೆಲಸವನ್ನೇ ಮಾಡುತ್ತಾನೆ. ನಿನಗೆ ಬರಿದೆ ಕೂಡಿಡುವ ಇಚ್ಛೆಯೇನಿಲ್ಲ. ನಿನ್ನ ಸಂಸಾರವನ್ನು ಕಾಪಾಡಲು ಮಾತ್ರ ಹಾಗೆ ಮಾಡುತ್ತಿದ್ದೀಯೆ. ಇಲ್ಲದಿದ್ದರೆ ಅವರು ಎಲ್ಲಿಗೆ ಹೋಗಬೇಕು?”
ಮಾಸ್ಟರ್: “ಯಾರಾದರೂ ಹೊತ್ತುಕೊಳ್ಳುವುದಾದರೆಬಿಟ್ಟುಬಿಡಲುಸಿದ್ಧನಾಗಿದ್ದೇನೆ.”
ಶ್ರೀರಾಮಕೃಷ್ಣರು: “ಅದೇನೋ ನಿಜ. ಈಗ ನೀನು ಇದನ್ನೂ ಮಾಡಬೇಕು. ಅದನ್ನೂ ಮಾಡಬೇಕು.”
ಮಾಸ್ಟರ್: “ಎಲ್ಲವನ್ನೂ ತ್ಯಜಿಸಿಬಿಡಲು ಸಾಧ್ಯವಾಗುವುದು ಒಂದು ದೊಡ್ಡ ಸೌಭಾಗ್ಯವೇ.”
ಶ್ರೀರಾಮಕೃಷ್ಣರು: “ಅದೇನೋ ನಿಜ. ಆದರೆ ಇದು ಸಂಸ್ಕಾರವಿದ್ದಂತೆ. ನೀನು ಮಾಡಬೇಕಾಗಿರುವ ಕರ್ಮ ಇನ್ನೂ ಸ್ವಲ್ಪ ಬಾಕಿ ಇದೆ. ಅದು ಮುಗಿದೊಡನೆಯೇ ನಿನಗೆ ಶಾಂತಿ-ಆಗ ನಿನಗೆ ಬಿಡುಗಡೆಯಾಗುತ್ತದೆ. ಆಸ್ಪತ್ರೆಗೆ ಹೋಗಿ ದಾಖಲಾದರೆ, ಸುಲಭವಾಗಿ ಬಂದು ಬಿಡಲಾಗುವುದಿಲ್ಲ. ಸಂಪೂರ್ಣವಾಗಿ ಗುಣವಾದರೇನೆ ಅವರು ಬಿಟ್ಟು ಕೊಡುವುದು.
“ಭಕ್ತರು ಇಲ್ಲಿಗೆ ಬರುತ್ತಿದ್ದಾರಲ್ಲ. ಅವರಲ್ಲಿ ಎರಡು ಗುಂಪಿನವರಿದ್ದಾರೆ. ಒಂದು ಗುಂಪಿನವರು ಪ್ರಾರ್ಥಿಸುತ್ತಾರೆ: ‘ಹೇ ಭಗವಂತ, ನಮ್ಮನ್ನು ಉದ್ಧಾರಮಾಡು.’ ಇನ್ನೊಂದು ಗುಂಪಿನವರು, ಅಂದರೆ ನನ್ನ ಅಂತರಂಗಿಗಳು, ಅವರು ಹಾಗೆ ಪ್ರಾರ್ಥಿಸುವುದಿಲ್ಲ. ಅವರಿಗೆ ಈಎರಡು ವಿಷಯ ಗೊತ್ತಾಗಿಬಿಟ್ಟರೇ ಸಾಕು-ಮೊದಲನೆಯದು ನಾನು (ಪರಮಹಂಸರು) ಯಾರು ಎಂಬುದು. ಎರಡನೆಯದು, ತಾವು ಯಾರು, ತಮಗೂ ನನಗೂ ಏನು ಸಂಬಂಧ. ನೀನು ಈ ಎರಡನೆಯ ಗುಂಪಿಗೆ ಸೇರಿದವನು; ಇಲ್ಲದಿದ್ದರೆ……
“ಭವನಾಥ, ಬಾಬುರಾಮ ಮೊದಲಾದವರದು ಪ್ರಕೃತಿಭಾವ. ಹರೀಶ ಸೀರೆ ಉಟ್ಟುಕೊಂಡು ಮಲಗುತ್ತಾನೆ. ಬಾಬುರಾಮ ಹೇಳುತ್ತಾನೆ, ಪ್ರಕೃತಿಭಾವವೇ ತನಗೆ ರುಚಿಸುತ್ತದೆ ಎಂದು. ಆದ್ದರಿಂದ ನಾನು ಹೇಳುವುದು ಸರಿ. ಭವನಾಥನದೂ ಅದೇ. ನರೇಂದ್ರ, ರಾಖಾಲ, ನಿರಂಜನ ಇವರದು ಪುರುಷಭಾವ.
“ಒಳ್ಳೇದು, ನನ್ನ ಕೈಗೆ ಪೆಟ್ಟು ತಗಲಿದುದರ ಅರ್ಥವೇನು? ಹಿಂದೆ ಒಮ್ಮೆ ನಾನು ಭಾವಾವಸ್ಥೆಯಲ್ಲಿದ್ದಾಗ ಹಲ್ಲು ಮುರಿದುಹೋಯಿತು. ಈ ಸಲ ಕೈಗೆ ಪೆಟ್ಟು ಬಿದ್ದುಬಿಟ್ಟಿದೆ.”
ಮಾಸ್ಟರ್ ಸುಮ್ಮನೆ ಕುಳಿತಿರುವುದನ್ನು ನೋಡಿ ಪರಮಹಂಸರೇ ಅದಕ್ಕೆ ಉತ್ತರ ಕೊಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಕೈಗೆ ಪೆಟ್ಟು ತಗುಲಿದೆ-ಇಡೀ ಅಹಂಕಾರವನ್ನು ನಿರ್ಮೂಲ ಮಾಡುವುದಕ್ಕೆ. ಈಗ ಎಷ್ಟು ಪ್ರಯತ್ನಪಟ್ಟು ನೋಡಿದರೂ ನನ್ನ ಆಂತರ್ಯದಲ್ಲಿ ‘ಅಹಂ’ ಎಂಬುದು ತೋರಿಬರುತ್ತಿಲ್ಲ. ಹುಡುಕಿ ನೋಡುತ್ತೇನೆ, ಕೇವಲ ಭಗವಂತನೇ ಇದ್ದಾನೆ. ಅಹಂಕಾರ ಸಂಪೂರ್ಣವಾಗಿ ನಾಶವಾಗದ ಹೊರತು ಆತನ ಸಾಕ್ಷಾತ್ಕಾರವನ್ನು ಪಡೆಯಲಾಗುವುದಿಲ್ಲ. ಚಾತಕ ಪಕ್ಷಿಯ ಕಡೆ ನೋಡು. ಅದು ವಾಸಿಸುವುದು ನೆಲದ ಮೇಲೆ, ಆದರೆ ಎಷ್ಟು ಎತ್ತರಕ್ಕೆ ಹಾರುತ್ತದೆ!
“ಕ್ಯಾಪ್ಟನ್ ಹೇಳುತ್ತಾನೆ, ನಾನು ಮೀನು ತಿನ್ನುವುದರಿಂದ ನನಗೆ ಯಾವ ಸಿದ್ಧಿಯೂ ದೊರೆಯಲಿಲ್ಲ ಎಂದು. ಒಮ್ಮೊಮ್ಮೆ ಶರೀರವೆಲ್ಲಾ ನಡಗುತ್ತದೆ, ಎಲ್ಲಿ ಆ ಶಕ್ತಿಗಳು ನನಗೆ ಬಂದುಬಿಡುವುವೋ ಎಂದು. ಒಂದು ಪಕ್ಷ ಅವು ಉಂಟಾಗಿಬಿಟ್ಟಿದ್ದೇ ಆದರೆ, ಈ ಸ್ಥಳ ಔಷಧಾಲಯ. ಆಸ್ಪತ್ರೆಗಾಗಿ ಪರಿಣಮಿಸುತ್ತದೆ. ಜನ ಬಂದು ಹೇಳಲಾರಂಭಿಸುತ್ತಾರೆ, ತಮ್ಮ ರೋಗವನ್ನು ಗುಣಪಡಿಸಿಕೊಡಬೇಕೆಂದು. ಸಿದ್ಧಿಯಿರುವುದು ಒಳ್ಳೆಯದೆ?”
ಮಾಸ್ಟರ್: “ಒಳ್ಳೆಯದಲ್ಲ. ನೀವೇ ಹೇಳುತ್ತೀರಿ ಅಷ್ಟಸಿದ್ಧಿಗಳಲ್ಲಿ ಒಂದು ಇದ್ದರೂ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲಾಗುವುದಿಲ್ಲ ಎಂದು.”
ಶ್ರೀರಾಮಕೃಷ್ಣರು: “ನೀನು ಹೇಳುವುದು ಸರಿ. ಹೀನಬುದ್ಧಿಯುಳ್ಳವರು ಮಾತ್ರ ಅವುಗಳಿಗಾಗಿ ಹಾತೊರೆಯುತ್ತಾರೆ. ಯಾರೇ ಆಗಲಿ ದೊಡ್ಡ ಮನುಷ್ಯನನ್ನು ಯಾವುದಕ್ಕಾಗಿ ಆದರೂ ಬೇಡಿಕೊಂಡರೆ, ಮತ್ತೆ ಆತನಿಂದ ಮೆಚ್ಚಿಗೆ ದೊರಕಿಸಿಕೊಳ್ಳಲಾಗುವುದಿಲ್ಲ. ಆತ ಆ ಯಾಚಕನನ್ನು ತನ್ನ ಗಾಡಿಯಲ್ಲಿ ಕೂರಿಸಿಕೊಂಡು ಹೋಗಲು ಅನುಮತಿ ಕೊಡುವುದಿಲ್ಲ. ಒಂದು ಪಕ್ಷ ಅನುಮತಿ ಕೊಟ್ಟರೂ ಹತ್ತಿರ ಕೂರಿಸಿಕೊಳ್ಳುವುದಿಲ್ಲ. ಆದ್ದರಿಂದ ನಿಷ್ಕಾಮ ಭಕ್ತಿ. ಅಹೇತುಕ ಭಕ್ತಿ-ಎಲ್ಲಾ ದೃಷ್ಟಿಯಿಂದಲೂ ಒಳ್ಳೆಯದು.
“ಸಾಕಾರ, ನಿರಾಕಾರ ಎರಡೂ ಸತ್ಯ, ನೀನು ಏನು ಹೇಳುತ್ತೀಯೆ? ನಿರಾಕಾರದಲ್ಲಿ ಮನಸ್ಸನ್ನು ಹೆಚ್ಚು ಹೊತ್ತು ಇಡಲಾಗುವುದಿಲ್ಲ. ಆದ್ದರಿಂದ ಭಕ್ತರಿಗಾಗಿ ಸಾಕಾರ.
“ಕ್ಯಾಪ್ಟನ್ ಈ ವಿಷಯವಾಗಿ ಬಹಳ ಚೆನ್ನಾಗಿ ಹೇಳುತ್ತಾನೆ. ಹಕ್ಕಿ ಬಹಳ ಎತ್ತರಕ್ಕೆ ಹಾರಿ ದಣಿದ ನಂತರ ಮರದ ಮೇಲೆ ಇಳಿದು ವಿಶ್ರಮಿಸಿಕೊಳ್ಳುತ್ತದೆ. ಮೊದಲು ನಿರಾಕಾರ ನಂತರ ಸಾಕಾರ.
“ನಿಮ್ಮ ಮನೆಗೆ ಒಮ್ಮೆ ಬರಬೇಕಾಗಿದೆ. ಭಾವಾವಸ್ಥೆಯಲ್ಲಿ ನೋಡಿದೆ, ಅಧರಸೇನನ ಮನೆ, ಸುರೇಂದ್ರನ ಮನೆ, ಬಲರಾಮನ ಮನೆ ಇವು ನಾವೆಲ್ಲಾ ಒಟ್ಟಿಗೆ ಸೇರಿರುವ ಮನೆಗಳು ಎಂಬುದನ್ನು. ಆದರೆ, ನೀವು ಇವೆರಡಕ್ಕೂ ಅತೀತರು.”
ಶ್ರೀರಾಮಕೃಷ್ಣರು: “ಹೌದು. ಮತ್ತೆ ನಾನು ನೋಡುತ್ತಿದ್ದೇನೆ, ಐಂದ್ರಜಾಲಿಕನನ್ನು ಮತ್ತು ಆತನ ಇಂದ್ರಜಾಲವನ್ನು. ಐಂದ್ರಜಾಲಿಕನೇ ಸತ್ಯ, ಆತನ ಇಂದ್ರಜಾಲ ಅನಿತ್ಯ-ಸ್ವಪ್ನದ ಹಾಗೆ. ನಾನು ಚಂಡೀ ಪಾಠ ಕೇಳಿದಾಗ ಈ ಅನುಭವವಾಯಿತು. ಶುಂಭ, ನಿಶುಂಭರು ಈಗತಾನೆ ಹುಟ್ಟಿದರು ಅಂತ ಕೇಳಿದೆ. ಮತ್ತೆ ಕೆಲವು ಕ್ಷಣಗಳಲ್ಲೇ ಅವರು ಸತ್ತರು ಅಂತಲೂ ಕೇಳಿದೆ.”
ಮಾಸ್ಟರ್: “ಹೌದು. ಒಮ್ಮೆ ನಾನೂ ಕಾಲ್ನಾಕ್ಕೆ ಗಂಗಾಧರನೊಡನೆ ಜಹಜಿನಲ್ಲಿ ಹೋಗುತ್ತಿದ್ದೆ. ನಮ್ಮ ಜಹಜಿಗೆ ಢಿಕ್ಕಿ ಹೊಡೆದು ಒಂದು ದೋಣಿಯ ಇಪ್ಪತ್ತು ಇಪ್ಪತ್ತೈದು ಮಂದಿ ಇರಬೇಕು, ಮುಳುಗಿಹೋದರು. ಜಹಜು ಮುಂದುವರಿಯುವಾಗ ಯಾವ ರೀತಿಯಾಗಿ ಅದರ ಹಿಂದೆ ಏಳುವ ನೊರೆ ಆ ಕ್ಷಣವೇ ನೀರಿನಲ್ಲಿ ಲೀನವಾಗಿ ಬಿಡುವುದೋ, ಅದೇ ರೀತಿಯಾಗಿ ಅವರೆಲ್ಲರೂ ಲೀನವಾಗಿಬಿಟ್ಟರು.”
“ನಿಮ್ಮನ್ನು ಒಂದು ವಿಷಯ ಕೇಳಲೆ? ಇಂದ್ರಜಾಲವನ್ನು ನೋಡುವಾಗ ಅದರಲ್ಲಿ ತೋರಿಬರುವ ದುಃಖದುರಿತಗಳಿಗಾಗಿ ಪ್ರೇಕ್ಷಕನ ಹೃದಯದಲ್ಲಿ ಮರುಕ ಹುಟ್ಟದೆ ? ಆ ಸಮಯದಲ್ಲಿ ಆತನಿಗೆ ಕರ್ತೃತ್ವಬೋಧೆ ಉಂಟಾಗದೆ? ಕರ್ತೃತ್ವಬೋಧೆ ಉಂಟಾದರೆ ತಾನೆ ಮರುಕ ಹುಟ್ಟಬೇಕಾದರೆ?”
ಶ್ರೀರಾಮಕೃಷ್ಣರು: “ಜ್ಞಾನಿ ಎಲ್ಲವನ್ನೂ ಒಮ್ಮೆಗೇ ನೋಡುತ್ತಾನೆ-ಭಗವಂತ, ಮಾಯೆ, ಜೀವ, ಜಗತ್ತು ಎಲ್ಲವನ್ನೂ. ಆತನಿಗೆ ಕಂಡುಬರುತ್ತದೆ, ವಿದ್ಯಾಮಾಯೆ, ಅವಿದ್ಯಾಮಾಯೆ, ಜೀವ, ಜಗತ್ತು ಇವೆಲ್ಲ ಇವೆ, ಅದೇ ಸಮಯದಲ್ಲಿ ಇಲ್ಲ ಎಂಬುದಾಗಿ. ಎಲ್ಲಿಯವರೆಗೆ ಅವೆಲ್ಲವು ಇರುತ್ತವೆ? ಜ್ಞಾನಖಡ್ಗದಿಂದ ಅವೆಲ್ಲವನ್ನೂ ಕತ್ತರಿಸಿ ಹಾಕಿದ ನಂತರ ಏನೂ ಇರದು. ಆಗ ತನ್ನ ಸ್ವಂತ ‘ಅಹಂ’ ಕೂಡ ಐಂದ್ರಜಾಲಿಕನ ಇಂದ್ರಜಾಲದ ಹಾಗೆ ಮಿಥ್ಯೆಯಾಗಿ ಕಂಡುಬರುತ್ತದೆ.”
ಮಾಸ್ಟರ್ ತನ್ನಲ್ಲೇ ಅವುಗಳ ಸಂಬಂಧವಾಗಿ ಆಲೋಚಿಸುತ್ತ ಕುಳಿತಿದ್ದಂತೆಯೇ ಪರಮಹಂಸರು ಹೇಳಲಾರಂಭಿಸಿದರು: “ಇದು ಹೇಗೆ ಗೊತ್ತೆ? ಇದು ಇಪ್ಪತ್ತೈದು ಸಾಲು ದಳಗಳುಳ್ಳ ಹೂವನ್ನು ಒಂದೇ ಏಟಿಗೆ ಕತ್ತರಿಸಿದ ಹಾಗೆ.
“ಕರ್ತೃತ್ವಬೋಧೆಯೇ! ರಾಮ ರಾಮ! ಶುಕದೇವ, ಶಂಕರಾಚಾರ್ಯ ಇವರೇ ಮೊದಲಾದವರು ‘ವಿದ್ಯೆಯ ಅಹಂ’ ಅನ್ನು ಇಟ್ಟುಕೊಂಡಿದ್ದರು. ದಯಾಗುಣ ಮನುಷ್ಯನಿಗೆ ಸೇರಿದ್ದಲ್ಲ, ಭಗವಂತನಿಗೆ ಸೇರಿದ್ದು. ‘ವಿದ್ಯೆಯ ಅಹಂ’ ಗೆ ಮಾತ್ರ ದಯೆಯನ್ನು ತೋರಿಸಲು ಸಾಧ್ಯ. ‘ವಿದ್ಯೆಯ ಅಹಂ’ ಹೊಂದಿರತಕ್ಕವನು ಭಗವಂತನೇ.
“ಇದೆಲ್ಲ ಕೇವಲ ಇಂದ್ರಜಾಲ ಎಂದು ಸಾವಿರ ಸಲ ನಿನಗೆ ಅನ್ನಿಸಬಹುದು; ಆದರೂ ನೀನು ಇನ್ನೂ ಮಾಯೆಯ ಅಧೀನದಲ್ಲೇ ಇರುತ್ತೀ. ಆಕೆಯಿಂದ ತಪ್ಪಿಸಿಕೊಂಡು ಓಡಿಹೋಗುವ ಹಾಗಿಲ್ಲ. ನೀನು ಸ್ವತಂತ್ರನಲ್ಲ, ಆಕೆ ಮಾಡಿಸಿದ ಹಾಗೆಯೇ ಮಾಡಬೇಕಾಗುತ್ತದೆ. ಆ ಆದ್ಯಾಶಕ್ತಿ ಬ್ರಹ್ಮಜ್ಞಾನವನ್ನು ಕರುಣಿಸಿದರೆ ಮಾತ್ರ ನಿನಗೆ ಅದು ದೊರೆಯುತ್ತದೆ-ಆಗ ಮಾತ್ರವೇ ಎಲ್ಲವೂ ಇಂದ್ರಜಾಲವಾಗಿ ತೋರಿಬರುತ್ತದೆ; ಇಲ್ಲದಿದ್ದರೆ ಇಲ್ಲ.
“ಎಲ್ಲಿಯವರೆಗೆ ಒಂದು ಕಿಂಚಿತ್ತಾದರೂ ಸರಿಯೆ ‘ಅಹಂ’ ಎಂಬುದು ಇರುವುದೊ, ಅಲ್ಲಿಯವರೆಗೆ ವ್ಯಕ್ತಿ ಆದ್ಯಾಶಕ್ತಿಯ ಎಲ್ಲೆಯೊಳಗೇ ಇರಬೇಕಾಗುತ್ತದೆ. ಆಕೆಯ ಎಲ್ಲೆಯನ್ನು ಮೀರಿ ಹೋಗುವ ಹಾಗೇ ಇಲ್ಲ.
“ಆದ್ಯಾಶಕ್ತಿಯ ಸಹಾಯದಿಂದಲೇ ಭಗವಂತನ ಅವತಾರಲೀಲೆ. ಭಗವಂತ ತನ್ನ ಈ ಶಕ್ತಿಯಿಂದ ಮನುಷ್ಯನಾಗಿ ಅವತರಿಸುತ್ತಾನೆ. ಆಗ ಮಾತ್ರವೇ ಅವತಾರಪುರುಷನಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಎಲ್ಲವೂ ಭಗವತಿಯ ಶಕ್ತಿಯಿಂದಲೇ ಘಟಿಸುತ್ತವೆ.
“ಕಾಳೀದೇವಾಲಯದ ಹಿಂದಿನ ಖಜಾಂಚಿಯನ್ನು ಸ್ವಲ್ಪ ಸಹಾಯ ಮಾಡುವಂತೆ ಯಾರಾದರೂ ಕೇಳಿದರೆ, ಆತ ಹೇಳುತ್ತಿದ್ದ: ‘ಎರಡು ದಿನ ಬಿಟ್ಟುಕೊಂಡು ಬನ್ನಿ.’ ಮೊದಲು ಆತ ಯಜಮಾನರಿಂದ ಅಪ್ಪಣೆ ಪಡೆದುಕೊಳ್ಳಬೇಕು.
“ಕಲಿಯುಗದ ಕೊನೆಯಲ್ಲಿ ಕಲ್ಕಿ ಅವತರಿಸುತ್ತಾನೆ. ಆತ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಜನ್ಮ ತಳೆಯುತ್ತಾನೆ. ಇದ್ದಕ್ಕಿದ್ದ ಹಾಗೆ ಅನಿರೀಕ್ಷಿತವಾಗಿ ಒಂದು ಕತ್ತಿ ಮತ್ತು ಕುದುರೆ ಆತನಿಗೆ ದೊರೆಯುತ್ತವೆ…..”
ಅಧರಸೇನ ಮಂಗಳಾರತಿಯನ್ನು ಮುಗಿಸಿಕೊಂಡು ಈಗ ಪರಮಹಂಸರ ಕೊಠಡಿಗೆ ಬಂದು ಕುಳಿತಿದ್ದಾನೆ.
ಶ್ರೀರಾಮಕೃಷ್ಣರು ಅಧರಸೇನ ಮೊದಲಾದವರಿಗೆ: “ಭುವನ ಇಲ್ಲಿಗೆ ಬಂದಿದ್ದಳು. ಜೊತೆಯಲ್ಲಿ ಇಪ್ಪತ್ತೈದು ಬೊಂಬಾಯಿ ಮಾವಿನಹಣ್ಣು, ಸಂದೇಶ, ರಸಗುಲ್ಲ ಇವೇ ಮೊದಲಾದ ಸಿಹಿ ತಿಂಡಿಗಳನ್ನು ತಂದಿದ್ದಳು. ನನ್ನನ್ನು ಕೇಳಿದಳು: ‘ಒಂದು ಮಾವಿನ ಹಣ್ಣು ತಿನ್ನುತ್ತೀರಾ?’ ನಾನು ಹೇಳಿದೆ: ‘ನನಗೆ ಹೊಟ್ಟೆ ಭಾರವಾಗಿದೆ.’ ನಿಜವಾಗಿಯೂ ನೋಡು, ಸ್ವಲ್ಪ ಸಿಹಿ ತಿಂಡಿ ತಿಂದೇ ಹೊಟ್ಟೆ ಎಷ್ಟು ಉಬ್ಬರಿಸಿಕೊಂಡು ಬಿಟ್ಟಿದೆ!”
ಭುವನಮೋಹಿನಿ ಎಂಬ ಹೆಸರಿನ ದಾದಿ ಆಗಾಗ ಪರಮಹಂಸರ ದರ್ಶನ ಪಡೆಯಲು ಬರುತ್ತಿದ್ದಾಳೆ. ಪರಮಹಂಸರಿಗೆ ಎಲ್ಲರೂ-ವಿಶೇಷತಃ ಡಾಕ್ಟರುಗಳು, ಕವಿರಾಜರು, ದಾದಿಯರು-ತರುವ ತಿಂಡಿ ತೀರ್ಥಗಳನ್ನು ತಿನ್ನಲಾಗುತ್ತಿಲ್ಲ. ರೋಗಿಗಳು ಬಹಳವಾಗಿ ನರಳುತ್ತಿರುವುದನ್ನು ನೋಡಿಯೂ ಅವರು ಅವರಿಂದ ದುಡ್ಡನ್ನು ಸ್ವೀಕರಿಸುವುದರಿಂದ ಪರಮಹಂಸರಿಗೆ ತಿನ್ನಲು ಸಾಧ್ಯವಾಗುತ್ತಿಲ್ಲ.
ಶ್ರೀರಾಮಕೃಷ್ಣರು: “ಕೇಶವಸೇನನ ತಾಯಿ, ತಂಗಿ, ಇನ್ನು ಕೆಲವರು ಆತನ ಸಂಬಂಧಿಗಳು ಇಲ್ಲಿಗೆ ಬಂದಿದ್ದರು, ಆಗ ನಾನು ಒಂದು ಸ್ವಲ್ಪ ನರ್ತಿಸಬೇಕಾಗಿ ಬಂತು. ಅವರನ್ನು ಸ್ವಲ್ಪ ಸಂತೋಷಪಡಿಸಬೇಕಾಗಿ ಬಂತು. ಮತ್ತೇನು ಮಾಡಲಿ? ಬಹಳವಾಗಿ ದುಃಖಿತರಾಗಿದ್ದರು!”
1. ಒಬ್ಬ ದೊಡ್ಡ ವೈಷ್ಣವ ಭಕ್ತ.