೨೪ನೆ ಮೇ ೧೮೮೪, ಜ್ಯೇಷ್ಠ ಅಮಾವಾಸ್ಯೆ, ಶನಿವಾರ
ಪರಮಹಂಸರು ತಮ್ಮ ಕೊಠಡಿಯಲ್ಲಿ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಘಂಟೆ ಬೆಳಗಿನ ಹನ್ನೊಂದು. ರಾಖಾಲ, ಮಾಸ್ಟರ್ ಇವರೇ ಮೊದಲಾದ ಭಕ್ತರೂ ಅಲ್ಲಿ ಕುಳಿತಿದ್ದಾರೆ. ಹಿಂದಿನ ರಾತ್ರಿ ಫಲಹಾರಿಣಿ ಕಾಳಿಯ ಪೂಜೆ ನಡೆಯಿತು. ಆ ಸಂದರ್ಭದಲ್ಲಿ ನಾಟ್ಯಮಂದಿರದಲ್ಲಿ ಬೆಳಗಿನ ಜಾವ “ವಿದ್ಯಾಸುಂದರ” ಎಂಬ ನಾಟಕ ನಡೆಯಿತು. ಪರಮಹಂಸರು ಎಲ್ಲೋ ಸ್ವಲ್ಪ ಹೊತ್ತು ಅದನ್ನು ನೋಡಿದ್ದರು. ನಟರು ಸ್ನಾನ ಮುಗಿಸಿ ಪರಮಹಂಸರ ದರ್ಶನ ಪಡೆಯಲು ಕೊಠಡಿಗೆ ಬಂದಿದ್ದಾರೆ. ವಿದ್ಯಾಸುಂದರನ ಪಾರ್ಟು ವಹಿಸಿದ್ದ ಒಬ್ಬ ಗೌರವರ್ಣದ ಹುಡುಗ ಬಹಳ ಚೆನ್ನಾಗಿ ಅಭಿನಯಿಸಿದ್ದ. ಆತನೊಡನೆ ಪರಮಹಂಸರು ಈಗ ಬಹಳ ಆನಂದದಿಂದ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು ನಟನಿಗೆ: “ನೀನು ಬಹಳ ಚೆನ್ನಾಗಿ ಅಭಿನಯಿಸಿದೆ. ಯಾರೇ ಆಗಲಿ ಹಾಡುವುದರಲ್ಲೊ, ಬಾಜಿಸುವುದರಲ್ಲೊ, ನರ್ತಿಸುವುದರಲ್ಲೊ ಅಥವಾ ಬೇರಾವ ಕಲೆಯಲ್ಲೊ ಇತರರನ್ನು ಮೀರಿಸಿದ್ದೇ ಆದರೆ, ಆತ ಪ್ರಯತ್ನಪಟ್ಟರೆ ಬಹುಬೇಗ ಭಗವತ್ಸಾಕ್ಷಾತ್ಕಾರ ಪಡೆದುಕೊಂಡುಬಿಡಬಲ್ಲ.
“ಯಾವ ರೀತಿ ನೀವು ಬಹಳವಾಗಿ ಅಭ್ಯಾಸಮಾಡಿ ಹಾಡಲು, ಬಾಜಿಸಲು, ನರ್ತಿಸಲು ಕಲಿಯುತ್ತೀರೊ, ಹಾಗೇ ಭಗವಂತನಲ್ಲಿ ಮನಸ್ಸು ನಿಲ್ಲಿಸಲೂ ಬಹಳವಾಗಿ ಅಭ್ಯಾಸ ಮಾಡಬೇಕು. ಪೂಜೆ, ಜಪ, ತಪ, ಧ್ಯಾನ ಇವನ್ನೆಲ್ಲ ಒಂದು ನಿಯಮಿತ ರೀತಿಯಾಗಿ ಅಭ್ಯಾಸ ಮಾಡಬೇಕು.
“ನಿನಗೆ ವಿವಾಹವಾಗಿರುವುದೇ? ಮಕ್ಕಳುಮರಿ?”
ನಟ: “ಹೌದು. ಹೆಣ್ಣು ಮಗು ಆಗಿದ್ದು ಸತ್ತುಹೋಯಿತು. ಈಗಿನ್ನೊಂದು ಆಗಿದೆ.”
ಶ್ರೀರಾಮಕೃಷ್ಣರು: “ಒಂದು ಹುಟ್ಟಿ ಸತ್ತೂ ಹೋಯಿತೆ ಇಷ್ಟು ಬೇಗ! ನಿನಗಿನ್ನೂ ಎಳೆ ವಯಸ್ಸಲ್ಲ! ಒಂದು ನಾಣ್ಣುಡಿ ಹೇಳುತ್ತದೆ: ‘ಕೈ ಹಿಡಿದ ಮಾರನೆ ದಿನವೆ ಪತಿ ಸತ್ತುಹೋದ. ಅಳುತ್ತ ಇನ್ನೆಷ್ಟು ರಾತ್ರಿಗಳನ್ನು ತಳ್ಳಬೇಕೊ!’ ಸಂಸಾರಸುಖ ಎಂಥದು ಎಂಬುದು ನಿನಗಾಗಲೆ ಅರ್ಥವಾಗಿರಬೇಕು. ಅದು ಕೇವಲ ಅಮಟೆಕಾಯಿಯ ಹಾಗೆ: ಬರೀ ಸಿಪ್ಪೆ ಮತ್ತು ಬೀಜ. ತಿಂದುದೇ ಆದರೆ ಹೊಟ್ಟೆಶೂಲೆ.
“ನಾಟಕಶಾಲೆಯಲ್ಲಿ ನೀನೊಬ್ಬ ನಟನಾಗಿದ್ದೀಯೆ. ಅದು ಬಹಳ ಒಳ್ಳೆಯದೆ. ಆದರೆ ಅದು ಬಹಳ ಕಷ್ಟದ ಕೆಲಸ. ನಿನಗಿನ್ನೂ ಚಿಕ್ಕ ವಯಸ್ಸು; ಆದ್ದರಿಂದ ಈಗ ಗುಂಡು ಗುಂಡಾಗಿ ಇದ್ದೀಯೆ, ಅನಂತರ ಬಡಕಲಾಗಿಬಿಡುತ್ತೀಯೆ. ಸಾಮಾನ್ಯವಾಗಿ ನಟರಿಗೆಲ್ಲ ಇದೇ ಗತಿ; ಬತ್ತಿ ಹೋದ ಕೆನ್ನೆ, ಗುಡಾಣದಂಥ ಹೊಟ್ಟೆ, ಗಳುವಿನಂಥ ಕೈಕಾಲು. (ಎಲ್ಲರೂ ನಗುತ್ತಿದ್ದಾರೆ.)
“ನಾನೇಕೆ ನಿನ್ನ ಅಭಿನಯ ನೋಡುತ್ತ ಕುಳಿತಿದ್ದೆ ಗೊತ್ತೆ? ತಾಳ ಮೇಳ ಸಂಗೀತ ಬಹಳ ಚೆನ್ನಾಗಿತ್ತು. ಜೊತೆಗೆ ಭಗವತಿಯೂ ತೋರಿಸಿದಳು, ಭಗವಂತನೇ ನಟರ ರೂಪ ಧರಿಸಿ ಅಭಿನಯಿಸುತ್ತಾನೆ ಎಂಬುದಾಗಿ.”
ನಟ: “ಒಳ್ಳೇದು, ಕಾಮಕ್ಕೂ ಕಾಮನೆಗೂ ವ್ಯತ್ಯಾಸವೇನು?”
ಶ್ರೀರಾಮಕೃಷ್ಣರು: “ಕಾಮ ಮರದ ಬೇರು ಇದ್ದ ಹಾಗೆ. ಕಾಮನೆ ರೆಂಬೆ, ಕೊಂಬೆ ಇದ್ದ ಹಾಗೆ.
“ಕಾಮ, ಕ್ರೋಧ, ಲೋಭ ಮೊದಲಾದ ಅರಿಷಡ್ವರ್ಗಗಳನ್ನು ಒಮ್ಮೆಗೇ ಸಮೂಲವಾಗಿ ನಿರ್ಮೂಲಮಾಡಲು ಸಾಧ್ಯವಿಲ್ಲ. ಆದ್ದರಿಂದ ಅವುಗಳ ಗತಿಯನ್ನು ಭಗವಂತನ ಕಡೆಗೆ ತಿರುಗಿಸಬೇಕು. ಕಾಮ ಪಡಬೇಕಾದರೆ, ಲೋಭ ಪಡಬೇಕಾದರೆ ಭಗವಂತನಲ್ಲಿ ಭಕ್ತಿಗಾಗಿ ಕಾಮ ಪಡಬೇಕು, ಆತನ ಸಾಕ್ಷಾತ್ಕಾರಕ್ಕಾಗಿ ಲೋಭ ಪಡಬೇಕು. ಹೆಮ್ಮೆ ಪಡಬೇಕಾದರೆ, ಅಹಂಕಾರಪಡಬೇಕಾದರೆ, ನಾನು ಭಗವಂತನ ದಾಸ, ಭಗವಂತನ ಪುತ್ರ ಎಂಬುದಾಗಿ ಹೆಮ್ಮೆ ಪಡಬೇಕು, ಅಹಂಕಾರ ಪಡಬೇಕು.
“ಇಡೀ ಮನಸ್ಸನ್ನು ಭಗವಂತನಿಗೆ ಅರ್ಪಿಸದೆ ಇದ್ದರೆ ಆತನ ದರ್ಶನ ದೊರೆಯದು. ಕಾಮಕಾಂಚನಗಳಲ್ಲಿ ಮನಸ್ಸಿಟ್ಟರೆ ಅದು ಬರಿದೆ ಖರ್ಚಾಗಿಹೋಗುತ್ತದೆ. ಈಗ ನಿನ್ನನ್ನೇ ತೆಗೆದುಕೊ. ನಿನಗೆ ಮಕ್ಕಳುಮರಿ ಆಗಿಬಿಟ್ಟಿವೆ; ನಾಟಕಶಾಲೆಯಲ್ಲಿ ಕೆಲಸಮಾಡಬೇಕಾಗಿ ಬಂದಿದೆ. ಈ ಹಲವಾರು ಕೆಲಸಕಾರ್ಯಗಳ ದೆಸೆಯಿಂದ ಮನಸ್ಸನ್ನು ಭಗವಂತನ ಕಡೆ ತಿರುಗಿಸಲಾಗುತ್ತಿಲ್ಲ.
“ಭೋಗ ಇತ್ತು ಎಂದರೆ, ಯೋಗ ಕಡಮೆ. ಭೋಗ ಇತ್ತು ಎಂದರೇ ಮತ್ತೆ ದುಃಖ. ಶ್ರೀಮದ್ಭಾಗವತದಲ್ಲಿ ಹೇಳಿದೆ, ಒಬ್ಬ ಅವಧೂತನಿಗೆ ದೊರೆತ ಗುರುಗಳಲ್ಲಿ ಹದ್ದೂ ಒಂದು ಎಂದು. ಹದ್ದಿನ ಬಾಯಲ್ಲಿ ಒಂದು ಮೀನು ಇತ್ತು. ಅದನ್ನು ಕಂಡು ಸಾವಿರಾರು ಕಾಗೆಗಳು ಅದನ್ನು ಮುತ್ತಿದ್ದುವು. ಆ ಮೀನನ್ನು ಕಚ್ಚಿಕೊಂಡು ಆ ಹದ್ದು ಯಾವ ದಿಕ್ಕಿಗೆ ಹಾರಿಹೋದರೂ ಅದೇ ದಿಕ್ಕಿಗೆ ಕಾಗೆಗಳೂ ‘ಕಾ, ಕಾ’ ಎಂದು ಕೂಗುತ್ತ ಅದರ ಬೆನ್ನು ಹತ್ತುತ್ತಿದ್ದುವು. ಅಕಸ್ಮಾತ್ತಾಗಿ ಯಾವಾಗ ಆ ಹದ್ದಿನ ಬಾಯಿಂದ ಆ ಮೀನು ಬಿದ್ದುಹೋಯಿತೊ, ಆಗ ಕಾಗೆಗಳೆಲ್ಲವೂ ಆ ಮೀನು ಬಿದ್ದ ಕಡೆಗೆ ನುಗ್ಗಿ ಹದ್ದನ್ನು ಸುಮ್ಮನೆ ಬಿಟ್ಟುಬಿಟ್ಟವು.
“ಮೀನು ಎಂದರೆ ಭೋಗವಸ್ತು. ಭಾವನೆ, ಚಿಂತನೆಯೇ ಕಾಗೆಗಳು. ಎಲ್ಲಿ ಭೋಗವಿರುವುದೊ ಅಲ್ಲಿ ಭಾವನೆ, ಚಿಂತನೆ. ಭೋಗವನ್ನು ತ್ಯಜಿಸಿದೊಡನೇ ಶಾಂತಿ.
“ಮತ್ತೆ ನೋಡು, ಅರ್ಥದಿಂದಲೇ ಅನರ್ಥ. ನೀವು ಸೋದರರು ಆನಂದದಿಂದ ಇದ್ದೀರಿ. ಪಾಲು ಹಂಚಿಕೊಳ್ಳುವಾಗ ಬರುತ್ತೆ ಎಲ್ಲೂ ಇಲ್ಲದ ತೊಂದರೆ. ಒಮ್ಮೊಮ್ಮೆ ನಾಯಿಗಳು ಒಂದರ ಮೈಯನ್ನೊಂದು ನೆಕ್ಕುತ್ತ ಸ್ನೇಹದಿಂದ ವರ್ತಿಸುತ್ತಿರುತ್ತವೆ. ಆದರೆ ಮನೆಯಿಂದ ಎಂಜಲೆಲೆ ಹಿತ್ತಲಿಗೆ ಬಂದು ಬೀಳುವುದೇ ತಡ ಪರಸ್ಪರ ಕಚ್ಚಾಡಿ ಸಾಯುತ್ತವೆ.
“ಆಗಾಗ ನೀನು ಇಲ್ಲಿಗೆ ಬಂದುಹೋಗುತ್ತಿರು. (ಮಾಸ್ಟರ್ ಮೊದಲಾದವರನ್ನು ತೋರಿಸಿ) ಇವರು ಭಾನುವಾರ ಮತ್ತು ಉಳಿದ ರಜಾ ದಿನಗಳಲ್ಲಿ ಇಲ್ಲಿಗೆ ಬರುವುದುಂಟು.”
ನಟ: “ನಮಗೆ ಮೂರು ತಿಂಗಳ ಕಾಲ-ಶ್ರಾವಣ, ಭಾದ್ರಪದ, ಪುಷ್ಯ ಮಾಸಗಳಲ್ಲಿ, ಅಂದರೆ ವರ್ಷಾಕಾಲ ಮತ್ತು ಸುಗ್ಗಿಕಾಲಗಳಲ್ಲಿ ರಜಾ. ಖಂಡಿತ ಬರುತ್ತೇನೆ. ಅದು ನಮ್ಮ ಸೌಭಾಗ್ಯವೇ. ಇಲ್ಲಿಗೆ ಬರುವಾಗ ಇಬ್ಬರ ವಿಷಯವಾಗಿ ಕೇಳಿದೆವು-ನಿಮ್ಮ ಮತ್ತು ಜ್ಞಾನಾರ್ಣವರ ವಿಷಯವಾಗಿ.”
ಶ್ರೀರಾಮಕೃಷ್ಣರು: “ನಿನ್ನ ಸಹೋದರನೊಡನೆ ಸ್ನೇಹದಿಂದಿರು. ಸ್ನೇಹದಿಂದಿದ್ದರೆ ನೋಡುವುದಕ್ಕೆ ಮಾಡುವುದಕ್ಕೆ ಎಲ್ಲ ಚೆನ್ನಾಗಿರುತ್ತದೆ. ನೀನು ನಾಟಕದಲ್ಲಿ ನೋಡಿರಬೇಕು. ಒಟ್ಟಿಗೆ ಎಲ್ಲರೂ ಹಾಡುವಾಗ ಒಬ್ಬೊಬ್ಬರು ಒಂದೊಂದು ರಾಗ ಹಿಡಿದರೆ ನಾಟಕ ಕೆಟ್ಟುಹೋಗಿಬಿಡುವುದನ್ನು.”
ನಟ: “ನಿಜ. ಅನೇಕ ಹಕ್ಕಿ ಬೇಡನ ಬಲೆಗೆ ಸಿಕ್ಕಿಕೊಳ್ಳುತ್ತವೆ. ಎಲ್ಲವೂ ಒಂದಾಗಿ ಪ್ರಯತ್ನಿಸಿ ಯಾವುದಾದರೂ ಒಂದು ದಿಕ್ಕಿಗೆ ಆ ಬಲೆಯನ್ನು ಹೊತ್ತು ಹಾರಿಹೋಗುವುದಾದರೆ ಅವುಗಳಲ್ಲಿ ಬಹು ಭಾಗ ಬಲೆಯಿಂದ ಬಿಡಿಸಿಕೊಳ್ಳಬಲ್ಲವು. ಆದರೆ ಅವು ವಿವಿಧ ದಿಕ್ಕುಗಳಿಗೆ ಹಾರಲಾರಂಭಿಸಿದರೆ ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
“ನಾಟಕದಲ್ಲಿ ನೋಡಬಹುದು, ತಲೆಯ ಮೇಲೆ ತುಂಬಿದ ಕಲಶವನ್ನು ಹೊತ್ತುಕೊಂಡಿದ್ದರೂ ನರ್ತಿಸುವುದನ್ನು.”
ಶ್ರೀರಾಮಕೃಷ್ಣರು: “ಸಂಸಾರದಲ್ಲಿರು, ಆದರೆ ತಲೆಯ ಮೇಲಿನ ಕಲಶ ಮಾತ್ರ ಕೆಳಕ್ಕೆ ಬೀಳದ ಹಾಗೆ ನೋಡಿಕೊ; ಅಂದರೆ ಭಗವಂತನ ಕಡೆಗೆ ಮನಸ್ಸು ಸತತ ಹರಿಯುತ್ತಿರುವಂತೆ ನೋಡಿಕೊಳ್ಳಬೇಕು.
“ನಾನು ಒಮ್ಮೆ ದಂಡಿನ ಸಿಪಾಯಿಗಳಿಗೆ ಹೇಳಿದೆ: ‘ಪ್ರಾಪಂಚಿಕ ಕೆಲಸಗಳನ್ನು ಮಾಡುತ್ತಿರಿ. ಆದರೆ ಮೃತ್ಯುರೂಪದ ಒನಕೆ ಎಂದಾದರೂ ಒಂದು ದಿನ ಕೈಯ ಮೇಲೆ ಬಿದ್ದೇ ಬೀಳುತ್ತದೆ ಎಂಬುದನ್ನು ಮರೆಯದಿರಿ. ಅದರ ವಿಷಯವಾಗಿ ಎಚ್ಚತ್ತಿರಿ.
“ಕಾಮಾರಪುಕುರಿನಲ್ಲಿ ಬಡಗಿ ಹೆಂಗಸರು ಏತದಲ್ಲಿ ಅವಲಕ್ಕಿ ಕುಟ್ಟುತ್ತಾರೆ. ಒಬ್ಬಳು ಏತವನ್ನು ತುಳಿಯುತ್ತಾಳೆ, ಇನ್ನೊಬ್ಬಳು ಒರಳಿನ ಹತ್ತಿರ ಕುಳಿತು ಒಂದು ಕೈಯಿಂದ ತಳ್ಳಿಕೊಡುವುದು ಮಾಡುತ್ತಿರುತ್ತಾಳೆ. ಅದೇ ಸಮಯದಲ್ಲಿ ಮಗುವಿಗೆ ಎದೆಹಾಲು ಕೊಡುತ್ತ ಇನ್ನೊಂದು ಕೈಯಿಂದ ಬೇಯಿಸಿದ ಬತ್ತವನ್ನು ಬಾಣಲೆಯಲ್ಲಿ ಹುರಿಯುತ್ತಿರುತ್ತಾಳೆ. ಇವೂ ಅಲ್ಲದೆ ಗಿರಾಕಿಗಳೊಡನೆ ಮಾತುಕತೆಯಾಡುತ್ತಿರುತ್ತಾಳೆ: ‘ನೀವು ಇಷ್ಟು ಬಾಕಿ ಕೊಡಬೇಕಾಗಿದೆ, ಕೊಟ್ಟು ಹೋಗಿ.’ ಒಂದೇ ಸಮಯದಲ್ಲಿ ಇಷ್ಟು ಕೆಲಸ ಮಾಡುತ್ತಿದ್ದರೂ ಆಕೆ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿರುತ್ತಾಳೆ, ಆ ಏತದ ಕಣ್ಣು ತನ್ನ ಕೈಯನ್ನು ಜಜ್ಜದ ಹಾಗೆ. ಅದೇ ರೀತಿ ಭಗವಂತನಲ್ಲಿ ಮನಸ್ಸಿಟ್ಟು, ಸಂಸಾರದ ನಾನಾ ಕಾರ್ಯಗಳನ್ನೂ ಮಾಡಲು ಸಾಧ್ಯ. ಆದರೆ ಅಭ್ಯಾಸವೂ ಬೇಕು; ಎಚ್ಚರಿಕೆಯೂ ಬೇಕು. ಆಗ ಎರಡು ಕಡೆಯೂ ಮನಸ್ಸಿಡಲು ಸಾಧ್ಯವಾಗುತ್ತದೆ.”
ನಟ: “ಮಹಾಶಯರೆ, ಆತ್ಮ ದೇಹದಿಂದ ಬೇರೆ ಎಂಬುದಕ್ಕೆ ಪ್ರಮಾಣವೇನು?”
ಶ್ರೀರಾಮಕೃಷ್ಣರು: “ಪ್ರಮಾಣ? ಭಗವಂತನನ್ನು ನೋಡಲು ತಪಸ್ಸುಮಾಡಿದರೆ ಭಗವಂತನ ದರ್ಶನ ದೊರೆಯುತ್ತದೆ-ಆತನ ಕೃಪೆಯಿಂದ ಋಷಿಗಳು ಆತ್ಮ ಸಾಕ್ಷಾತ್ಕಾರ ಮಾಡಿಕೊಂಡಿದ್ದರು. ವಿಜ್ಞಾನದಿಂದ (ಸೈನಸ್ನಿಂದ) ಭಗವತ್ತತ್ತ್ವವನ್ನು ಅರಿಯಲಾಗುವುದಿಲ್ಲ. ಅದರಿಂದ ಕೇವಲ ಇದರೊಡನೆ ಅದನ್ನು ಬೆರಸಿದರೆ ಇದಾಗುತ್ತದೆ, ಅದರೊಡನೆ ಇದನ್ನು ಬೆರಸಿದರೆ ಅದಾಗುತ್ತದೆ ಎಂಬುದಾಗಿ ಇಂದ್ರಿಯಗ್ರಾಹ್ಯ ವಸ್ತುಗಳ ಸಂಬಂಧವಾಗಿ ಮಾತ್ರ ಅರಿತುಕೊಳ್ಳಬಹುದು.
“ಆದ್ದರಿಂದ ನಮ್ಮ ಈ ವ್ಯಾವಹಾರಿಕ ಬುದ್ಧಿಯಿಂದ ಆಧ್ಯಾತ್ಮಿಕ ತತ್ತ್ವಗಳನ್ನು ಅರಿಯಲಾಗುವುದಿಲ್ಲ. ಅವನ್ನು ಅರಿಯಬೇಕಾದರೆ ಸಾಧು ಸತ್ಪುರುಷರ ಸಹವಾಸ ಮಾಡಬೇಕು. ಡಾಕ್ಟರೊಡನೆ ಇದ್ದು ನಾಡಿ ನೋಡುವುದನ್ನು ಕಲಿತುಕೊಳ್ಳಬಹುದು.”
ನಟ: “ಅದು ನಿಜ. ಈಗ ನನಗೆ ಅರ್ಥವಾಯಿತು.”
ಶ್ರೀರಾಮಕೃಷ್ಣರು: “ಮೊದಲು ತಪಸ್ಸು ಮಾಡಬೇಕು. ಆ ಬಳಿಕವೇ ಭಗವಂತನ ಸಾಕ್ಷಾತ್ಕಾರ. ಶಾಸ್ತ್ರಗಳ ಶ್ಲೋಕಗಳನ್ನೆಲ್ಲ ಕಂಠಪಾಠ ಮಾಡಿಕೊಂಡರೂ ಏನೂ ದೊರೆಯದು. ‘ಸಿದ್ಧಿ, ಸಿದ್ಧಿ’ ಅಂತ ಬಾಯಲ್ಲಿ ಮಾತ್ರವೇ ಹೇಳುತ್ತಿದ್ದರೆ ಅಮಲೇರದು. ಸಿದ್ಧಿಯನ್ನು ಕುಡಿಯಬೇಕು.
“ಭಗವದ್ದರ್ಶನದ ಸಂಬಂಧವಾಗಿ ಜನರಿಗೆ ವಿಶದಪಡಿಸಲಾಗುವುದಿಲ್ಲ. ಐದು ವರ್ಷದ ಬಾಲಕನಿಗೆ ದಾಂಪತ್ಯಜೀವನದ ಸುಖ ಅಂದರೆ ಏನು ಎಂಬುದನ್ನು ಅರಿಯುವಂತೆ ಮಾಡಲಾಗುವುದಿಲ್ಲ.”
ನಟ: “ಒಳ್ಳೇದು, ಆತ್ಮಸಾಕ್ಷಾತ್ಕಾರಕ್ಕೆ ಮಾರ್ಗವೇನು?”
ಈಗ ರಾಖಾಲ ಊಟಮಾಡಬೇಕಾಗಿದೆ. ಆದರೆ ಕೊಠಡಿಯಲ್ಲಿ ಅಷ್ಟೊಂದು ಜನ ಇರುವುದನ್ನು ನೋಡಿ ಶಂಕಿಸುತ್ತಿದ್ದಾನೆ. ಈಗ ಕೆಲವು ಕಾಲದಿಂದ ಪರಮಹಂಸರು ರಾಖಾಲನನ್ನು ಗೋಪಾಲಭಾವದಿಂದ ನೋಡುತ್ತಿದ್ದಾರೆ. ಅದು ಯಶೋದೆಯ ವಾತ್ಸಲ್ಯ ಭಾವನೆಯ ತದ್ವತ್ತೇ!
ಶ್ರೀರಾಮಕೃಷ್ಣರು ರಾಖಾಲನಿಗೆ: “ಊಟಮಾಡು, ನಾಚಿಕೆಯಾದರೆ ಇವರು ಒಂದು ಕಡೆಗೆ ಬಂದು ನಿಂತುಕೊಳ್ಳಲಿ. (ಒಬ್ಬ ಭಕ್ತನಿಗೆ) ರಾಖಾಲನಿಗಾಗಿ ಸ್ವಲ್ಪ ‘ಐಸ್’ ಇಡು. (ರಾಖಾಲನಿಗೆ) ವನಹುಗ್ಲಿಗೆ ನೀನು ಮತ್ತೆ ಹೋಗುತ್ತೀಯೇನು? ಬಿಸಿಲಿನಲ್ಲಿ ಹೋಗಬೇಡ.”
ರಾಖಾಲ ಊಟಕ್ಕೆ ಕುಳಿತುಕೊಂಡ. ಪರಮಹಂಸರು ಈಗ ಮತ್ತೆ ಆ ನಟನೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನೀವೆಲ್ಲರೂ ಅತಿಥಿಶಾಲೆಗೆ ಹೋಗಿ ಏಕೆ ಪ್ರಸಾದ ಸ್ವೀಕರಿಸಲಿಲ್ಲ? ನೀವೆಲ್ಲ ಇಲ್ಲೇ ಊಟಮಾಡಿಬಿಟ್ಟಿದ್ದರೆ ಚೆನ್ನಾಗಿತ್ತಲ್ಲ.”
ನಟ: “ಎಲ್ಲರ ಮತವೂ ಒಂದೇ ಅಲ್ಲವಲ್ಲ; ಆದ್ದರಿಂದ ಬೇರೆ ಬೇರೆ ಅಡಿಗೆ ಆಗುತ್ತಿದೆ. ಅತಿಥಿಶಾಲೆಯಲ್ಲಿ ಹೋಗಿ ಊಟಮಾಡಲು ಎಲ್ಲರಿಗೂ ಇಚ್ಛೆಯಿಲ್ಲ.”
ಈಗ ರಾಖಾಲ ಊಟಮಾಡುತ್ತಿದ್ದಾನೆ. ಪರಮಹಂಸರು ಭಕ್ತರೊಡನೆ ವರಾಂಡದಲ್ಲಿ ಕುಳಿತು ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು ನಟನಿಗೆ: “ನೀನು ಆತ್ಮಸಾಕ್ಷಾತ್ಕಾರದ ವಿಷಯವಾಗಿ ಕೇಳಿದೆಯಲ್ಲ, ಅದಕ್ಕೆ ಉಪಾಯ, ವ್ಯಾಕುಲತೆ. ಮನೋವಾಕ್ಕಾಯವಾಗಿ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸಬೇಕು. ಪಿತ್ತ ಅಧಿಕವಾದಾಗ ಕಾಮಾಲೆರೋಗ ಬರುತ್ತದೆ. ಆಗ ಎಲ್ಲವೂ ಹಳದಿಯಾಗಿ ಕಾಣುತ್ತವೆ. ಹಳದಿ ಬಣ್ಣ ಬಿಟ್ಟು ಬೇರಾವ ಬಣ್ಣವನ್ನೂ ನೋಡಲಾಗುವುದಿಲ್ಲ. ನಿಮ್ಮೊಳಗೆ ಯಾರು ಕೇವಲ ಹೆಂಗಸಿನ ಪಾರ್ಟನ್ನೇ ತೆಗೆದುಕೊಳ್ಳುತ್ತಾರೊ ಅವರಿಗೆ ಪ್ರಕೃತಿಯ ಭಾವ ಬಂದುಬಿಡುತ್ತದೆ; ಹೆಂಗಸಿನ ಸಂಬಂಧವಾಗಿ ಚಿಂತಿಸಿ ಹೆಂಗಸಿನ ಹಾವಭಾವಗಳೆಲ್ಲಾ ಬಂದುಬಿಡುತ್ತವೆ. ಅದೇ ರೀತಿ ಭಗವಂತನ ಸಂಬಂಧವಾಗಿ ಹಗಲಿರುಳು ಚಿಂತಿಸುತ್ತಿದ್ದರೆ ಆತನ ಸತ್ತ್ವವೇ ನಮಗೆ ಬಂದುಬಿಡುತ್ತದೆ.
“ಮನಸ್ಸೆಂಬುದು ಅಗಸನ ಮನೆಯ ಬಟ್ಟೆಯ ಹಾಗೆ. ಅದನ್ನು ಯಾವ ಬಣ್ಣದಲ್ಲಿ ಅದ್ದುತ್ತೇವೆಯೋ, ಅದಕ್ಕೆ ಆ ಬಣ್ಣ ಬಂದುಬಿಡುತ್ತದೆ.”
ನಟ: “ಆದರೆ, ಒಮ್ಮೆ ಮನಸ್ಸನ್ನು ಅಗಸನ ಮನೆಗೆ ಕಳುಹಿಸಬೇಕಲ್ಲ.”
ಶ್ರೀರಾಮಕೃಷ್ಣರು: “ಹೌದು. ಮೊದಲು ಚಿತ್ತಶುದ್ಧಿ ಆಗಬೇಕು. ಬಳಿಕ ಅದನ್ನು ಭಗವಂತನ ಕಡೆಗೆ ತಿರುಗಿಸಿದರೆ ಅದಕ್ಕೆ ಭಗವಂತನ ಬಣ್ಣ ಹತ್ತಿಕೊಂಡುಬಿಡುತ್ತದೆ. ಹಾಗೆ ಮಾಡುವುದನ್ನು ಬಿಟ್ಟು ಅದನ್ನು ಸಂಸಾರದ ಕಡೆಗೆ, ನಾಟ್ಯದ ಕಡೆಗೆ ತಿರುಗಿಸಿದರೆ ಅದಕ್ಕೆ ಆ ಬಣ್ಣ ಬಂದುಬಿಡುತ್ತದೆ.”
ಪರಮಹಂಸರು ಸ್ವಲ್ಪ ವಿಶ್ರಮಿಸಿಕೊಳ್ಳುತ್ತಿದ್ದ ಹಾಗೇ ಕಲ್ಕತ್ತದಿಂದ ಹರಿ, ನಾರಾಯಣ, ನರೇಂದ್ರ ವಂದ್ಯೋಪಾಧ್ಯಾಯ ಮೊದಲಾದವರು ಬಂದು ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ನರೇಂದ್ರ ವಂದ್ಯೋಪಾಧ್ಯಾಯ ಪ್ರೆಸಿಡೆನ್ಸಿ ಕಾಲೇಜಿನ ಸಂಸ್ಕೃತ ಅಧ್ಯಾಪಕನ ಮಗ. ಮನೆಯಲ್ಲಿ ಒಬ್ಬರಿಗೊಬ್ಬರಿಗೆ ಸರಿಹೋಗದೆ ಇದ್ದುದರಿಂದ ಹೆಂಡತಿ ಮಕ್ಕಳೊಡನೆ ಶ್ಯಾಮ್ಪುಕುರಿನಲ್ಲಿ ಪ್ರತ್ಯೇಕವಾಗಿ ವಾಸಮಾಡುತ್ತಿದ್ದಾನೆ. ನರೇಂದ್ರ ಅತ್ಯಂತ ಸರಳಜೀವಿ. ವಯಸ್ಸು ಇಪ್ಪತ್ತೊಂಬತ್ತೊ ಮೂವತ್ತೊ ಇರಬೇಕು. ಆತ ಧ್ಯಾನದ ಸಮಯದಲ್ಲಿ ಘಂಟಾ ನಿನಾದವೇ ಮೊದಲಾದ ಶಬ್ದಗಳನ್ನು ಕೇಳುತ್ತಿರುತ್ತಾನೆ. ಭಾರತದ ಅನೇಕ ಭಾಗಗಳನ್ನು ಸುತ್ತಿದ್ದಾನೆ. ಆಗಾಗ ಬಂದು ಪರಮಹಂಸರ ದರ್ಶನ ಮಾಡಿ ಹೋಗುತ್ತಿದ್ದಾನೆ.
ನಾರಾಯಣ ಹದಿನಾರೊ ಹದಿನೇಳೊ ವರ್ಷದ ಯುವಕ. ಆತನನ್ನು ಪರಮಹಂಸರು ಬಹಳವಾಗಿ ಪ್ರೀತಿಸುತ್ತಿದ್ದಾರೆ. ಆತ ಆಗಾಗ ಬಂದು ಪರಮಹಂಸರ ದರ್ಶನಮಾಡಿ ಹೋಗುತ್ತಿದ್ದಾನೆ.
ಹರಿ ತನ್ನ ಸೋದರರೊಡನೆ ಬಾಗ್ಬಜಾರಿನಲ್ಲಿರುವ ಸ್ವಂತ ಮನೆಯಲ್ಲಿ ಇದ್ದಾನೆ. ಜನರಲ್ ಅಸೆಂಬ್ಲಿ ಇನ್ಸ್ಟಿಟ್ಯೂಷನ್ನಿನಲ್ಲಿ ಮೆಟ್ರಿಕ್ಯುಲೇಷನ್ ಪಾಸುಮಾಡಿದ್ದಾನೆ.
ತಾತ್ಕಾಲಿಕವಾಗಿ ಈಗ ಮನೆಯಲ್ಲಿಯೇ ಇದ್ದುಕೊಂಡು ಭಗವಚ್ಚಿಂತನೆ, ಶಾಸ್ತ್ರಪಾಠ, ಯೋಗಾಭ್ಯಾಸಗಳಲ್ಲಿ ಕಾಲವನ್ನು ಕಳೆಯುತ್ತಿದ್ದಾನೆ. ಆಗಾಗ ದಕ್ಷಿಣೇಶ್ವರಕ್ಕೆ ಬಂದು ಪರಮಹಂಸರ ದರ್ಶನಮಾಡಿಕೊಂಡು ಹೋಗುತ್ತಿದ್ದಾನೆ. ಪರಮಹಂಸರು ಬಾಗ್ಬಜಾರಿನಲ್ಲಿರುವ ಬಲರಾಮನ ಮನೆಗೆ ಬಂದಾಗ ಒಮ್ಮೊಮ್ಮೆ ಆತನನ್ನು ಅಲ್ಲಿಗೆ ಕರೆಸಿಕೊಳ್ಳುತ್ತಿದ್ದರು.
ಶ್ರೀರಾಮಕೃಷ್ಣರು ಭಕ್ತರಿಗೆ: “ಬುದ್ಧದೇವನ ಸಂಬಂಧವಾಗಿ ಬಹಳವಾಗಿ ಕೇಳಿದ್ದೇನೆ. ಆತ ದಶಾವತಾರಗಳಲ್ಲಿ ಒಂದು ಅವತಾರ. ಬ್ರಹ್ಮ ಅಚಲ, ಕೂಟಸ್ಥ, ನಿಷ್ಕ್ರಿಯ, ಬೋಧಸ್ವರೂಪ, ಬುದ್ಧಿ ಯಾವಾಗ ಈ ಬೋಧಸ್ವರೂಪದಲ್ಲಿ ಲಯವಾಗುವುದೊ, ಆಗ ಬ್ರಹ್ಮಜ್ಞಾನ ಉಂಟಾಗುತ್ತದೆ; ಮನುಷ್ಯ ಬುದ್ಧನಾಗಿಬಿಡುತ್ತಾನೆ.”
“ತೋತಾಪುರಿ ಹೇಳುತ್ತಿದ್ದ ಮನಸ್ಸು ಬಿದ್ಧಿಯಲ್ಲಿ ಲಯಹೊಂದುತ್ತದೆ, ಬುದ್ಧಿಬೋಧಸ್ವರೂಪದಲ್ಲಿ ಲಯಹೊಂದುತ್ತದೆ ಎಂದು.
“ ‘ಅಹಂ’ ಎಂಬುದು ಇರುವವರೆಗೆ ಬ್ರಹ್ಮಜ್ಞಾನ ಉಂಟಾಗದು. ಬ್ರಹ್ಮಜ್ಞಾನ ದೊರೆತ ನಂತರ ‘ಅಹಂ’ ಎಂಬುದು ನಾವು ಹೇಳಿದ ಹಾಗೆ ಕೇಳುತ್ತದೆ. ಇಲದಿದ್ದರೆ ಅದು ಹಾಗೆ ಮಾಡದು. ನಾವೇ ನಮ್ಮ ನೆರಳನ್ನು ಹಿಡಿಯಲಾಗುವುದಿಲ್ಲ. ಆದರೆ ಸೂರ್ಯ ನೆತ್ತಿಯ ಮೇಲಕ್ಕೆ ಬಂದಾಗ ಅರ್ಧ ಮೊಲದ ಒಳಗೇ ಅದು ಇರುತ್ತದೆ.”
ಒಬ್ಬ ಭಕ್ತ: “ಭಗವಂತನ ದರ್ಶನ, ಅದು ಹೇಗಿರುತ್ತೆ?”
ಶ್ರೀರಾಮಕೃಷ್ಣರು: “ನೀನು ನಾಟಕ ನೋಡಿಲ್ಲವೇನು? ಪ್ರೇಕ್ಷಕರು ಸುಮ್ಮನೆ ಕುಳಿತು ಪರಸ್ಪರ ಮಾತುಕತೆಗಳನ್ನಾಡುತ್ತಿರುತ್ತಾರೆ. ಪರದೆ ಇದ್ದಕ್ಕಿದ್ದ ಹಾಗೆ ಮೇಲಕ್ಕೆ ಹೋಗುತ್ತದೆ. ಆಗ ಎಲ್ಲರ ಇಡೀ ಮನಸ್ಸು ಅಭಿನಯದ ಕಡೆಗೆ ಹೋಗುತ್ತದೆ; ಬೇರಾವ ಕಡೆಗೂ ದೃಷ್ಟಿ ಹೋಗದು. ಸಮಾಧಿಯನ್ನು ಹೊಂದುವುದೂ ಹೀಗೆಯೇ. ಮತ್ತೆ ಯಾವಾಗ ಪರದೆ ಕೆಳಕ್ಕೆ ಬೀಳುತ್ತದೊ ಆಗ ಎಲ್ಲರೂ ಸುತ್ತಮುತ್ತ ದೃಷ್ಟಿ ಹಾಕುತ್ತಾರೆ. ಅದೇ ರೀತಿ ಮಾಯಾರೂಪದ ಪರದೆ ಬಿದ್ದಾಗ ಮನುಷ್ಯ ಬಹಿರ್ಮುಖನಾಗಿ ಬಿಡುತ್ತಾನೆ.”
(ನರೇಂದ್ರ ವಂದ್ಯೋಪಾಧ್ಯಾಯನಿಗೆ) “ನೀನು ಬಹಳವಾಗಿ ದೇಶಸಂಚಾರ ಮಾಡಿ ಬಂದಿದ್ದೀಯೆ. ಸಾಧುಗಳ ಸಂಬಂಧವಾಗಿ ಏನಾದರೂ ಸ್ವಲ್ಪ ಹೇಳು.”
ವಂದ್ಯೋಪಾಧ್ಯಾಯ ಭೂತಾನಿನಲ್ಲಿ ಇಬ್ಬರು ಯೋಗಿಗಳನ್ನು ನೋಡಿದ್ದ. ಅವರು ದಿನವೂ ಅರ್ಧ ಸೇರು ಬೇವಿನ ಎಲೆಯ ರಸ ಕುಡಿಯುತ್ತಿದ್ದರು. ಅವರ ವಿಷಯವಾಗಿ ಈಗ ಸ್ವಲ್ಪ ಹೊತ್ತು ಮಾತನಾಡಿದ. ಆತ ಒಮ್ಮೆ ನರ್ಮದಾ ತೀರದಲ್ಲಿರುವ ಒಬ್ಬ ಸಾಧುವಿನ ಆಶ್ರಮಕ್ಕೆ ಹೋಗಿದ್ದ. ಆ ಸಾಧು ಪ್ಯಾಂಟು ಕೋಟು ಹಾಕಿಕೊಂಡಿದ್ದ. ಈ ಬಂಗಾಳಿ ಬಾಬುವನ್ನು ನೋಡಿ ಹೇಳಿದನಂತೆ: “ಈತನ ಮಡಿಯಲ್ಲಿ ಚೂರಿ ಇದೆ.”
ಶ್ರೀರಾಮಕೃಷ್ಣರು: “ನೋಡು ಸಾಧುಗಳ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ಆಗ ಸರ್ವದಾ ಭಗವದುದ್ದೀಪನವಾಗುತ್ತದೆ.”
ವಂದ್ಯೋಪಾಧ್ಯಾಯ: “ನಿಮ್ಮ ಭಾವಚಿತ್ರವನ್ನು ಮನೆಯಲ್ಲಿ ಇಟ್ಟಿದ್ದೇನೆ; ಜೊತೆಗೆ ಬೆಟ್ಟದಲ್ಲಿ ವಾಸಿಸುತ್ತಿದ್ದ ಒಬ್ಬ ಸಾಧುವಿನದು ಕೂಡ. ಆತ ಅದರಲ್ಲಿ ಗಾಂಜಾದ ಚಿಲುಮೆಯನ್ನು ಹೊತ್ತಿಸುತ್ತಿದ್ದಾನೆ.”
ಶ್ರೀರಾಮಕೃಷ್ಣರು: “ಇದು ನಿಜ, ಸಾಧುಗಳ ಚಿತ್ರವನ್ನು ನೋಡಿದರೆ ಉದ್ದೀಪನವುಂಟಾಗುತ್ತದೆ. ಇದು ಕೃತಕ ಸೀತಾಫಲದ ಹಣ್ಣನ್ನು ನೋಡಿದರೆ ನಿಜವಾದ ಸೀತಾಫಲದ ಹಣ್ಣಿನ ಉದ್ದೀಪನವಾಗುವ ಹಾಗೆ; ಯುವತಿಯನ್ನು ನೋಡಿದರೆ ಜನರಲ್ಲಿ ಭೋಗದ ಉದ್ದೀಪನವಾಗುವ ಹಾಗೆ; ಈ ಕಾರಣದಿಂದಲೇ ನಾನು ಹೇಳುತ್ತಿರುವುದು, ಸರ್ವದಾ ಸಾಧುಸಂಗ ಆವಶ್ಯಕ. ಎಂದು.”
(ವಂದ್ಯೋಪಾಧ್ಯಾಯನಿಗೆ): “ಸಂಸಾರದ ಬೇಗೆಯ ರುಚಿ ನಿನಗಾಗಲೆ ಉಂಟಾಗಿದೆ. ಭೋಗ ಬೇಕೆಂದರೇ ಬೇಗೆ. ಹದ್ದಿನ ಬಾಯಲ್ಲಿ ಎಲ್ಲಿಯವರೆಗೆ ಮೀನು ಇತ್ತೊ ಅಲ್ಲಿಯವರೆಗೆ ಕಾಗೆಗಳು ಗುಂಪುಗುಂಪಾಗಿ ಬಂದು ಅದನ್ನು ಕಾಡಿಸುತ್ತಿದ್ದುವು.
“ಸಾಧುಸಂಗದಿಂದ ಶಾಂತಿ ದೊರೆಯುತ್ತದೆ. ಮೊಸಳೆ ಬಹಳ ಹೊತ್ತಿನವರೆಗೆ ನೀರಿನಲ್ಲಿ ಇರುತ್ತದೆ. ಒಮ್ಮೊಮ್ಮೆ ನೀರಿನ ಮೇಲಕ್ಕೆ ಬರುತ್ತದೆ-ಉಸಿರಾಡುವುದಕ್ಕೆ. ಆಗ ದೊಡ್ಡ ಉಸಿರನ್ನು ಬಿಟ್ಟು ಅನ್ನುತ್ತದೆ, ಬದುಕಿದೆನಪ್ಪ ಎಂದು.”
ನಟ: “ಮಹಾಶಯರೆ, ನೀವು ಭೋಗದ ವಿಷಯವಾಗಿ ಹೇಳಿದಿರಲ್ಲ ಅದು ಖಂಡಿತ ಸತ್ಯ. ಭಗವಂತನನ್ನು ಭೋಗಸುಖಕ್ಕಾಗಿ ಪ್ರಾರ್ಥನೆಮಾಡಿದ್ದೇ ಆದರೆ ಕೊನೆಗೆ ಅನೇಕ ವಿಪತ್ತುಗಳಿಗೆ ಒಳಗಾಗಬೇಕಾಗುತ್ತದೆ. ಮನಸ್ಸಿನಲ್ಲಿ ಎಷ್ಟೊಂದು ವಿಧದ ಕಾಮನೆ, ವಾಸನೆ ಉಂಟಾಗುತ್ತದೆ. ಆದರೆ ಅವುಗಳಲ್ಲಿ ಎಲ್ಲವೂ ಶ್ರೇಯಸ್ಕರವಾದುದಲ್ಲ. ಭಗವಂತ ಕಲ್ಪತರು. ಆತನನ್ನು ಏನು ಕೇಳಿದರೂ ಅದು ದೊರೆತುಬಿಡುತ್ತದೆ. ಒಬ್ಬನಿಗೆ ಭಾವನೆ ಬಂತು: ‘ಭಗವಂತ ಕಲ್ಪತರು ತಾನೆ. ಹಾಗಾದರೆ ನೋಡೋಣ ಈಗ ಹುಲಿ ಬರುತ್ತದೆಯೆ.’ ಹುಲಿಯ ಚಿಂತನೆ ಮಾಡಿದೊಡನೆ ಹುಲಿ ಬಂದುಬಿಟ್ಟಿತು; ಆತನನ್ನು ತಿಂದುಬಿಟ್ಟಿತು.”
ಶ್ರೀರಾಮಕೃಷ್ಣರು: “ಹೌದು ನಿಜ. ಜ್ಞಾಪಕದಲ್ಲಿಟ್ಟುಕೊಳ್ಳಬೇಕು ಹುಲಿ ಬರುತ್ತದೆ ಎಂಬುದನ್ನು. ನಾನು ಇನ್ನೇನು ತಾನೆ ಹೇಳಲಿ? ಭಗವಂತನ ಕಡೆ ಮನಸ್ಸಿಡು. ಆತನನ್ನು ಎಂದಿಗೂ ಮರೆಯಬೇಡ. ಸರಳ ಹೃದಯದಿಂದ ಆತನನ್ನು ಕರೆದರೆ ಆತ ತನ್ನ ದರ್ಶನವನ್ನು ಕೊಟ್ಟೇ ಕೊಡುತ್ತಾನೆ. ಒಂದು ವಿಷಯ. ನಾಟಕದ ಕೊನೆಯಲ್ಲಿ ಏನಾದರೂ ಭಗವಂತನ ವಿಷಯವಾಗಿ ಹಾಡಿ ಅದನ್ನು ಕೊನೆಮಾಡು. ಹಾಗೆ ಮಾಡಿದ್ದೇ ಆದರೆ ನಟರು, ಹಾಡುವವರು ಪ್ರೇಕ್ಷಕರು ಎಲ್ಲರೂ ಭಗವಚ್ಚಿಂತನೆ ಮಾಡುತ್ತ ಮಾಡುತ್ತ ಮನೆಗೆ ಹಿಂದಿರುಗುತ್ತಾರೆ.”
ನಟರು ಪ್ರಣಾಮಮಾಡಿ ಹೊರಟುಹೋದರು. ಇಬ್ಬರು ಭಕ್ತೆಯರು ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡುತ್ತಿದ್ದಾರೆ. ಉಪವಾಸದಿಂದಿದ್ದು ಪರಮಹಂಸರ ದರ್ಶನಮಾಡಲು ಬಂದಿದ್ದಾರೆ. ಅವರಿಬ್ಬರೂ ಅತ್ತಿಗೆ ನಾದಿನಿಯರು. ವಯಸ್ಸು ಇಪ್ಪತ್ತೆರಡೊ ಇಪ್ಪತ್ತ ಮೂರೊ ಇರಬೇಕು. ಇಬ್ಬರೂ ಮಕ್ಕಳ ತಾಯಿಯರಾಗಿದ್ದಾರೆ. ತಲೆಗೆ ಮುಸುಕು ಹಾಕಿಕೊಂಡಿದ್ದಾರೆ.
ಶ್ರೀರಾಮಕೃಷ್ಣರು ಭಕ್ತೆಯರಿಗೆ: “ನೋಡಿ, ನೀವು ಶಿವಪೂಜೆ ಮಾಡಿ. ಹೇಗೆ ಮಾಡುವುದು ಎಂದರೆ, ‘ನಿತ್ಯಕರ್ಮ’ ಎಂಬ ಹೆಸರಿನ ಒಂದು ಪುಸ್ತಕ ಇದೆ, ಅದನ್ನು ಅನುಸರಿಸಿ ಪೂಜೆಯನ್ನು ಮಾಡಿ. ಭಗವಂತನ ಪೂಜೆ ಮಾಡಬೇಕಾದರೆ ಅದಕ್ಕೆ ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ. ಹೂವು ಕೊಯ್ಯುವುದು. ಚಂದನ ಮಾಡಿಕೊಳ್ಳುವುದು. ಪೂಜಾಸಾಮಗ್ರಿಗಳನ್ನು ಬೆಳಗಿಕೊಳ್ಳುವುದು, ನೈವೇದ್ಯಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಇವೇ ಮೊದಲಾದ ಕೆಲಸಗಳನ್ನು ಮಾಡುವಾಗಲೆಲ್ಲಾ ಮನಸ್ಸು ಭಗವಂತನ ಕಡೆಗೇ ಹರಿಯುತ್ತಿರುತ್ತದೆ. ಹೀನಬುದ್ಧಿ, ಕೋಪ, ದ್ವೇಷ ಇವೆಲ್ಲಾ ತೊಲಗಿಹೋಗುತ್ತದೆ. ನೀವಿಬ್ಬರೂ ಮಾತಾಡುವಾಗ ಭಗವಂತನ ವಿಷಯವಾಗಿಯೇ ಮಾತುಕತೆಗಳನ್ನಾಡಿ.
“ಮುಖ್ಯವಾಗಿ ಮಾಡಬೇಕಾದುದೇನೆಂದರೆ, ಹೇಗಾದರೂ ಮಾಡಿ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಬೇಕು. ಒಮ್ಮೆಯೂ ಆತನನ್ನು ಮರೆಯಕೂಡದು. ಅದು ತೈಲಧಾರೆಯಂತೆ ಅವಿಚ್ಛಿನ್ನವಾಗಿರಬೇಕು. ಒಂದು ಇಟ್ಟಿಗೆಯನ್ನೇ ಆಗಲಿ ಒಂದು ಕಲ್ಲನ್ನೇ ಆಗಲಿ ಅದೇ ಭಗವಂತ ಎಂದು ಭಾವಿಸಿ ಶ್ರದ್ಧಾಭಕ್ತಿಯಿಂದ ಪೂಜಿಸುವುದಾದರೆ, ಅದರಿಂದಲೇ, ಭಗವಂತನ ಕೃಪೆಯಿಂದ ಅದರಿಂದಲೇ ಆತನ ದರ್ಶನ ದೊರೆತುಬಿಡುವ ಸಂಭವ.
“ಈಗತಾನೆ ಹೇಳಿದೆನಲ್ಲ ಶಿವಪೂಜೆಯ ವಿಷಯವಾಗಿ-ಇವನ್ನೆಲ್ಲ ಮಾಡಬೇಕು. ಒಮ್ಮೆ ಮನಸ್ಸು ಪರಿಪಕ್ವವಾಯಿತು ಎಂದರೆ, ಬಳಿಕ ಹೆಚ್ಚುಕಾಲ ಪೂಜೆಪುರಸ್ಕಾರಗಳನ್ನು ಮಾಡಬೇಕಾಗಿರುವುದಿಲ್ಲ. ಆಗ ಯಾವಾಗಲೂ ಮನಸ್ಸು ಯೋಗಮುಖವಾಗಿರುತ್ತದೆ, ಸರ್ವದಾ ಸ್ಮರಣ ಮನನ ನಡೆದುಕೊಂಡೇ ಹೋಗುತ್ತಿರುತ್ತದೆ.”
ಅತ್ತಿಗೆ: “ನಮಗೇನಾದರೂ ಸ್ವಲ್ಪ ಉಪದೇಶ ಕೊಡುವುದಿಲ್ಲವೆ?”
ಶ್ರೀರಾಮಕೃಷ್ಣರು: “ನಾನು ಯಾರಿಗೂ ಮಂತ್ರೋಪದೇಶ ಮಾಡುತ್ತಿಲ್ಲ. ಮಂತ್ರೋಪದೇಶ ಮಾಡಿದ್ದೇ ಆದರೆ ಶಿಷ್ಯನ ಪಾಪಗಳನ್ನೆಲ್ಲಾ ಹೊತ್ತುಕೊಳ್ಳಬೇಕಾಗುತ್ತದೆ. ಭಗವತಿ ನನ್ನನ್ನು ಬಾಲಕನ ಅವಸ್ಥೆಯಲ್ಲಿ ಇಟ್ಟಿದ್ದಾಳೆ. ಸದ್ಯಕ್ಕೆ ನೀವು ನಾನು ತಿಳಿಸಿರುವಂತೆ ಶಿವಪೂಜೆಯನ್ನು ಮಾಡಿ. ಆಗಾಗ ಇಲ್ಲಿಗೆ ಬರುತ್ತಿರಿ-ಮುಂದೆ ಭಗವಂತನ ಇಚ್ಛೆಯಂತೆ ಏನಾಗಬೇಕೊ ಅದು ಆಗುತ್ತದೆ. ಸ್ನಾನಜಾತ್ರೆಯ ದಿನ ಮತ್ತೆ ಇಲ್ಲಿಗೆ ಬರಲು ಪ್ರಯತ್ನಿಸಿ. ಮನೆಯಲ್ಲಿ ಭಗವನ್ನಾಮ ಮಾಡಬೇಕು ಎಂಬುದಾಗಿ ನಾನು ತಿಳಿಸಿದ್ದೆನಲ್ಲ, ನೀವು ಹಾಗೆ ಮಾಡುತ್ತಿದ್ದೀರೇನು?”
ಅತ್ತಿಗೆ: “ಹೌದು, ಮಾಡುತ್ತಿದ್ದೇವೆ.”
ಶ್ರೀರಾಮಕೃಷ್ಣರು: “ಉಪವಾಸವೇಕೆ ಬಂದಿದ್ದೀರಿ? ಊಟ ಮಾಡಿ ಬರಬೇಕು. ಹೆಂಗಸರೆಲ್ಲರೂ ಭಗವತಿಯ ಒಂದೊಂದು ರೂಪವಾದ್ದರಿಂದ ಅವರು ಕಷ್ಟಪಡುವುದನ್ನು ನಾನು ನೋಡಲಾರೆ. ನೀವೆಲ್ಲರೂ ಭಗವತಿಯ ಒಂದೊಂದು ರೂಪವೇ. ಇನ್ನು ಮುಂದೆ ಊಟ ಮಾಡಿ ಬನ್ನಿ, ಆನಂದದಿಂದ ಇರಿ.”
ಹೀಗೆಂದು ಹೇಳಿ ಪರಮಹಂಸರು ರಾಮಲಾಲನಿಗೆ ಸಂಜ್ಞೆ ಮಾಡಿದರು, ಭಕ್ತೆಯರಿಗೆ ಉಪಾಹಾರ ಕೊಡುವಂತೆ. ಫಲಾಹಾರಿಣೀದೇವಿಗೆ ಅರ್ಪಿಸಿದ್ದ ಹಣ್ಣು ಹಂಪಲಾದಿಗಳ ಪ್ರಸಾದ ಆ ಭಕ್ತೆಯರಿಗೆ ದೊರೆಯಿತು.
ಶ್ರೀರಾಮಕೃಷ್ಣರು ಹೇಳಿದರು: “ಈಗ ನೀವು ಒಂದು ಸ್ವಲ್ಪ ಉಪಾಹಾರ ಮಾಡಿದಿರಿ. ನನ್ನ ಮನಸ್ಸಿಗೆ ಸ್ವಲ್ಪ ನೆಮ್ಮದಿಯಾಯಿತು. ಹೆಂಗಸರು ಉಪವಾಸದಿಂದಿರುವುದನ್ನು ನಾನು ಕಣ್ಣಿನಿಂದ ನೋಡಲಾರೆ.”
ಘಂಟೆ ಸಾಯಂಕಾಲ ಐದು. ಪರಮಹಂಸರು ಶಿವದೇವಾಲಯಗಳ ಮೆಟ್ಟಿಲುಗಳ ಮೇಲೆ ಕುಳಿತಿದ್ದಾರೆ. ಹತ್ತಿರದಲ್ಲಿ ಅಧರಸೇನ, ಡಾಕ್ಟರ್ ನಿತಾಯಿ, ಮಾಸ್ಟರ್ ಇವರೇ ಮೊದಲಾದ ಭಕ್ತರು ಕುಳಿತಿದ್ದಾರೆ.
ಶ್ರೀರಾಮಕೃಷ್ಣರು ಭಕ್ತರಿಗೆ: “ನೋಡಿ, ನನ್ನ ಸ್ವಭಾವ ಬದಲಾವಣೆ ಹೊಂದುತ್ತಿದೆ.”
ಪರಮಹಂಸರು ಈಗ ಏನೋ ಒಂದು ರಹಸ್ಯ ವಿಷಯ ತಿಳಿಸಬೇಕೆಂಬುದಾಗಿ ಒಂದು ಮೆಟ್ಟಿಲು ಕೆಳಕ್ಕೆ ಇಳಿದು ಭಕ್ತರ ಹತ್ತಿರ ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು: “ನೀವೆಲ್ಲರೂ ಭಕ್ತರು. ನಿಮಗೆ ಇದನ್ನು ತಿಳಿಸಲು ಯಾವ ಸಂಕೋಚವೂ ಇಲ್ಲ. ಈಗ ಕೆಲವು ಕಾಲದಿಂದ ನನಗೆ ಭಗವಂತನ ಚಿನ್ಮಯರೂಪ ದರ್ಶನ ಆಗುತ್ತಿಲ್ಲ. ಈಗ ಸಾಕಾರ ನರರೂಪದಿಂದ ಕಾಣಿಸಿಕೊಳ್ಳುತ್ತಿದ್ದಾನೆ. ನನ್ನ ಸ್ವಭಾವ ಭಗವಂತನ ರೂಪವನ್ನು ದರ್ಶನ, ಸ್ಪರ್ಶನ, ಆಲಿಂಗನ ಮಾಡಿಕೊಳ್ಳುವುದು. ಭಗವಂತ ಈಗ ಹೇಳುತ್ತಿದ್ದಾನೆ: ‘ನೀನು ದೇಹಧಾರಣೆ ಮಾಡಿದ್ದೀಯೆ; ನನ್ನ ಸಾಕಾರ ನರರೂಪದೊಡನೆ ಆನಂದಪಡು.’
“ಭಗವಂತನೇನೊ ಸಕಲ ಜೀವರಾಶಿಗಳಲ್ಲೂ ಇದ್ದಾನೆ. ಆದರೆ, ಮನುಷ್ಯನಲ್ಲಿ ಅಧಿಕವಾಗಿ ವ್ಯಕ್ತವಾಗಿದ್ದಾನೆ. ಮನುಷ್ಯನೇನು ಅಲ್ಪನೇ? ಭಗವಚ್ಚಿಂತನೆ ಮಾಡಬಲ್ಲ, ಅನಂತನ ಧ್ಯಾನ ಮಾಡಬಲ್ಲ. ಇದು ಅನ್ಯ ಜೀವಿಗಳ ಕೈಯಲ್ಲಿ ಸಾಧ್ಯವಿಲ್ಲ. ಅನ್ಯ ಜೀವಜಂತುಗಳಲ್ಲಿ, ಮರಗಿಡಗಳಲ್ಲಿ, ಸರ್ವಭೂತಗಳಲ್ಲೂ ಭಗವಂತ ಇದ್ದಾನೆ, ಆದರೆ ಆತ ಮನುಷ್ಯನಲ್ಲಿ ಹೆಚ್ಚಾಗಿ ವ್ಯಕ್ತವಾಗಿದ್ದಾನೆ. ಅಗ್ನಿ ಎಲ್ಲಾ ಭೂತಗಳಲ್ಲಿಯೂ, ಎಲ್ಲಾ ವಸ್ತುಗಳಲ್ಲಿಯೂ ಇದೆ; ಆದರೆ ಕಟ್ಟಿಗೆಯಲ್ಲಿ ಹೆಚ್ಚಾಗಿ ವ್ಯಕ್ತವಾಗಿದೆ. ರಾಮ ಲಕ್ಷ್ಮಣನಿಗೆ ಹೇಳಿದ: ‘ತಮ್ಮ, ಹಾಗೇ ಆನೆ ಕಡೆ ನೋಡು. ಅದು ಎಷ್ಟು ದೊಡ್ಡ ಪ್ರಾಣಿ, ಆದರೆ ಅದರ ಕೈಯಲ್ಲಿ ಭಗವಂತನ ಚಿಂತನೆ ಸಾಧ್ಯವಿಲ್ಲ.’
“ಅವತಾರಪುರುಷರಲ್ಲಿ ಭಗವಂತ ಹೆಚ್ಚಾಗಿ ವ್ಯಕ್ತವಾಗಿರುತ್ತಾನೆ. ರಾಮ ಲಕ್ಷ್ಮಣನಿಗೆ ಹೇಳಿದ: “ತಮ್ಮ, ಯಾರಲ್ಲೇ ಆಗಲಿ ಊರ್ಜಿತಭಕ್ತಿ ಬೆಳೆದು, ಆತ ಭಾವಪರವಶನಾಗಿ ನಗುವುದು, ಅಳುವುದು, ನರ್ತಿಸುವುದು, ಹಾಡುವುದು ಇವನ್ನು ಮಾಡುತ್ತಿದ್ದರೆ, ಆತನಲ್ಲಿ ನಾನು ನಿಜವಾಗಿಯೂ ಇದ್ದೇನೆ ಎಂಬುದನ್ನು ತಿಳಿದುಕೊ.”
ಪರಮಹಂಸರು ಸುಮ್ಮನೆ ಕುಳಿತಿದ್ದಾರೆ. ಈಗ ಮತ್ತೆ ಮಾತುಕತೆ ಆಡಲು ಆರಂಭಿಸಿದ್ದಾರೆ.
ಶ್ರೀರಾಮಕೃಷ್ಣರು: “ಕೇಶವಸೇನ ಇಲ್ಲಿಗೆ ಅಡಿಗಡಿಗೆ ಬರುತ್ತಿದ್ದ. ಇಲ್ಲಿಗೆ ಬಂದ ನಂತರ ಬಹಳ ಪರಿವರ್ತನೆ ಹೊಂದುಬಿಟ್ಟ. ಕೊನೆಯಲ್ಲಿ ಒಬ್ಬ ಮಹಾವ್ಯಕ್ತಿ ಆಗಿಬಿಟ್ಟ. ಇಲ್ಲಿಗೆ ಅನೇಕ ಸಲ ಬಂದಿದ್ದ-ತನ್ನ ಅನುಯಾಯಿಗಳನ್ನೆಲ್ಲಾ ಕಟ್ಟಿಕೊಂಡು; ಒಂಟಿಯಾಗಿ ಬರಲೂ ಆತನಿಗೆ ಇಚ್ಛೆ ಇತ್ತು. ಜೀವನದ ಪ್ರಾರಂಭದಲ್ಲಿ ಕೇಶವನಿಗೆ ಸಾಧುಸಂಗ ದೊರೆಯಲಿಲ್ಲ.”
“ಕೇಶವನನ್ನು ನಾನು ಕೊಲುತೊಲದಲ್ಲಿರುವ ಆತನ ಮನೆಗೆ ಹೋಗಿ ಸಂಧಿಸಿದೆ. ಹೃದೆ ನನ್ನೊಡನೆ ಬಂದಿದ್ದ. ಕೇಶವಸೇನ ಇದ್ದ ಕೊಠಡಿಗೇ ನಮ್ಮನ್ನು ಕರೆದುಕೊಂಡು ಹೋಗಿ ಕೂರಿಸಿದರು. ಮೇಜಿನ ಮೇಲೆ ಏನನ್ನೋ ಬರೆಯುತ್ತಿದ್ದ. ಸ್ವಲ್ಪ ಹೊತ್ತು ಆದನಂತರ ಬರೆಯುವುದನ್ನು ನಿಲ್ಲಿಸಿ ಕುರ್ಚಿಯಿಂದ ಇಳಿದುಬಂದು ನಮ್ಮೊಡನೆ ಕುಳಿತುಕೊಂಡ. ನಮಸ್ಕಾರ ಮಾಡಲಿಲ್ಲ.
“ಇಲ್ಲಿಗೆ ಆಗಾಗ ಬರುತ್ತಿದ್ದ. ನಾನು ಒಂದು ದಿನ ಭಾವಾವಸ್ಥೆಯಲ್ಲಿ ಹೇಳಿದೆ: ‘ಸಾಧು ಸತ್ಪುರುಷರ ಸಮ್ಮುಖದಲ್ಲಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳಬಾರದು. ಅದರಿಂದ ರಜೋಗುಣ ವೃದ್ಧಿಯಾಗಿಬಿಡುತ್ತದೆ.’ ಆತ ಮತ್ತು ಆತನ ಅನುಯಾಯಿಗಳು ಬಂದೊಡನೇ ನಾನು ಅವರಿಗೆ ನಮಸ್ಕಾರಮಾಡಿಬಿಡುತ್ತಿದ್ದೆ. ಕ್ರಮೇಣ ಅವರು ಸಾಷ್ಟಾಂಗ ಪ್ರಣಾಮ ಮಾಡುವುದನ್ನು ಕಲಿತುಕೊಂಡರು.
“ನಾನು ಕೇಶವನಿಗೆ ಹೇಳಿದೆ: ‘ನೀವು ಹರಿನಾಮಕೀರ್ತನೆ ಮಾಡಿ, ಕಲಿಯುಗದಲ್ಲಿ ಭಗವಂತನ ನಾಮಗುಣಕೀರ್ತನೆ ಮಾಡಬೇಕು.’ ಅನಂತರ ಅವರು ತಾಳಮೃದಂಗಗಳೊಡನೆ ಭಗವನ್ನಾಮಗುಣಕೀರ್ತನೆ ಮಾಡಲಾರಂಭಿಸಿದರು.
“ಹರಿನಾಮದಲ್ಲಿ ನನಗೆ ಶ್ರದ್ಧೆ ಮೊದಲು ಇದ್ದುದಕ್ಕಿಂತಲೂ ಅಧಿಕವಾಗಿ ಬಲಗೊಳ್ಳಲು ಕಾರಣ ಏನು ಗೊತ್ತೆ? ಈ ದೇವಾಲಯಕ್ಕೆ ಸಾಧುಸತ್ಪುರುಷರು ಬಂದು ಹೋಗುತ್ತಿರುವುದು ನಿಮಗೆ ಗೊತ್ತೇ ಇದೆ. ಒಮ್ಮೆ ಒಬ್ಬ ಮುಲ್ತಾನಿ ಸಾಧು ಬಂದಿದ್ದ. ಗಂಗಾಸಾಗರಕ್ಕೆ ಹೋಗುವ ಪಾರ್ಟಿಗಾಗಿ ಇಲ್ಲಿ ಕಾದಿದ್ದ. (ಮಾಸ್ಟರನ್ನು ತೋರಿಸಿ) ಈತನ ವಯಸ್ಸಿನ ಸಾಧು. ಅವನೇ ನನಗೆ ಹೇಳಿದ್ದು ‘ಕಲಿಯುಗದಲ್ಲಿ ಭಗವತ್ಸಾಕ್ಷಾತ್ಕಾರವನ್ನು ಪಡೆಯುವ ಮಾರ್ಗ ನಾರದೀಯ ಭಕ್ತಿ’ ಎಂದು.
“ಒಂದು ದಿನ ಕೇಶವಸೇನ ತನ್ನ ಅನುಯಾಯಿಗಳೊಡನೆ ಇಲ್ಲಿಗೆ ಬಂದಿದ್ದ. ರಾತ್ರಿ ಹತ್ತು ಘಂಟೆಯವರೆಗೆ ಇಲ್ಲೇ ಇದ್ದ. ಪ್ರತಾಪ ಮತ್ತೆ ಇನ್ನೂ ಕೆಲವರು ಹೇಳಿದರು, ರಾತ್ರಿಯನ್ನು ಇಲ್ಲೇ ಕಳೆದುಬಿಡೋಣ ಎಂದು. ಕೇಶವ ಹೇಳಿದ: ‘ಇಲ್ಲ, ಸಾಧ್ಯವಿಲ್ಲ. ಮನೆಯಲ್ಲಿ ಕೆಲಸವಿದೆ. ಹೋಗಲೇಬೇಕು.’ ಆಗ ನಾನು ನಕ್ಕು ಹೇಳಿದೆ: ‘ಮೀನಿನ ಕುಕ್ಕೆಯ ಗಂಧ ಬಾರದಿದ್ದರೆ ನಿದ್ದೆ ಬರುವುದಿಲ್ಲವೇನು?’ ಒಬ್ಬ ಬೆಸ್ತರವಳು ಒಮ್ಮೆ ಒಬ್ಬ ತೋಟದ ಮಾಲಿಯ ಮನೆಗೆ ಅತಿಥಿಯಾಗಿ ಬಂದಳು. ಆಕೆ ಪೇಟೆಯಲ್ಲಿ ಮೀನನ್ನು ಮಾರಿ ಬರೀ ಕುಕ್ಕೆಯನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದಳು. ಹೂವನ್ನು ಶೇಖರಿಸಿಡುವ ಕೊಠಡಿಯಲ್ಲಿ ಅವಳಿಗೆ ಮಲಗಲು ಸ್ಥಳ ದೊರೆಯಿತು. ಬಹಳ ಹೊತ್ತಿನವರೆಗೆ ಹೂವುಗಳ ಸುವಾಸನೆಯ ದೆಸೆಯಿಂದ ಆಕೆಗೆ ನಿದ್ದೆಯೇ ಹತ್ತಲಿಲ್ಲ. ಮನೆಯ ಯಜಮಾನಿ ಆಕೆಯ ಆ ಅವಸ್ಥೆಯನ್ನು ನೋಡಿ ಕೇಳಿದಳು: ‘ಏನಮ್ಮ, ನೀನು ಸುಮ್ಮನೆ ಹೊರಳಾಡುತ್ತಿದ್ದೀಯಲ್ಲ ಏಕೆ?’ ಅವಳು ಹೇಳಿದಳು: ‘ಇದೇಕೊ ಗೊತ್ತಾಗುತ್ತಿಲ್ಲ. ಬಹುಶಃ ಈ ಹೂವುಗಳ ಸುವಾಸನೆಯಿಂದ ನಿದ್ದೆ ಹತ್ತುತ್ತಿಲ್ಲ ಅಂತ ಕಾಣುತ್ತೆ. ದಯವಿಟ್ಟು ನೀನು ನನ್ನ ಮೀನಿನ ಕುಕ್ಕೆಯನ್ನು ತಂದುಕೊಡುತ್ತೀಯಾ? ಬಹುಶಃ ಆಗ ನಿದ್ದೆ ಹತ್ತಬಹುದು.’ ಕೊನೆಗೆ ಆ ಕುಕ್ಕೆಯನ್ನು ತಂದುಕೊಟ್ಟ ನಂತರ ಬೆಸ್ತರವಳು ಅದಕ್ಕೆ ನೀರು ಚಿಮುಕಿಸಿ ಮೂಗಿನ ಹತ್ತಿರ ಇಟ್ಟುಕೊಂಡದ್ದರಿಂದ ಚೆನ್ನಾಗಿ ನಿದ್ದೆ ಹತ್ತಿ ರಾತ್ರಿಯೆಲ್ಲಾ ಗೊರಕೆ ಹೊಡೆದಳು!’
“ಈ ಕಥೆ ಕೇಳಿ ಕೇಶವನ ಅನುಯಾಯಿಗಳೆಲ್ಲರೂ ಹೊಟ್ಟೆ ಹುಣ್ಣಾಗುವವರೆಗೆ ನಕ್ಕರು.
“ಕೇಶವ ಸಾಯಂಕಾಲವಾದ ನಂತರ ಸ್ನಾನಘಟ್ಟದ ಮೇಲೆ ಉಪಾಸನೆಯನ್ನು ಮುಗಿಸಿದ. ಅನಂತರ ನಾನು ಕೇಶವನಿಗೆ ಹೇಳಿದೆ: ‘ನೋಡು, ಭಗವಂತನೇ ಒಂದು ರೂಪದಲ್ಲಿ ಭಾಗವತ ಆಗಿದ್ದಾನೆ; ಆದ್ದರಿಂದ ವೇದ, ಪುರಾಣ, ತಂತ್ರ ಇವನ್ನೆಲ್ಲ ಪೂಜೆಮಾಡಬೇಕು. ಮತ್ತೆ ಆತ ಇನ್ನೊಂದು ರೂಪದಲ್ಲಿ ಭಕ್ತನಾಗಿದ್ದಾನೆ. ಭಕ್ತನ ಹೃದಯ ಆತನ ಬೈಠಕ್ಖಾನೆ. ಅಲ್ಲಿಗೆ ಹೋದರೆ ಸುಲಭವಾಗಿ ಮನೆಯ ಯಜಮಾನನನ್ನು ನೋಡಬಹುದು. ಆದ್ದರಿಂದ ಭಕ್ತನನ್ನು ಪೂಜಿಸಿದರೆ ಭಗವಂತನನ್ನು ಪೂಜಿಸಿದಂತೆಯೇ.’
“ಕೇಶವ ಮತ್ತು ಆತನ ಅನುಯಾಯಿಗಳು ಈ ಮಾತುಕತೆಗಳನ್ನೆಲ್ಲಾ ಚೆನ್ನಾಗಿ ಮನಸ್ಸಿಟ್ಟು ಕೇಳಿದರು. ಪೂರ್ಣಿಮೆಯಾಗಿದ್ದುದರಿಂದ ಎಲ್ಲೆಲ್ಲೂ ಬೆಳದಿಂಗಳು. ನಾವೆಲ್ಲರೂ ಮುಖಮಂಟಪದಲ್ಲಿ ಕುಳಿತುಕೊಂಡಿದ್ದೆವು. ನಾನು ಹೇಳಿದೆ: ‘ಈಗ ಎಲ್ಲರೂ ಹೇಳಿ: ‘ಭಾಗವತ-ಭಕ್ತ-ಭಗವಾನ್’ ಅಂತ.’ ಆಗ ಎಲ್ಲರೂ ಸೇರಿ ಏಕಕಂಠದಿಂದ ಹೇಳಿದರು: ‘ಭಾಗವತ-ಭಕ್ತ-ಭಗವಾನ್’. ಮತ್ತೆ ಹೇಳಿದೆ: ‘ಹೇಳಿ: ‘ಬ್ರಹ್ಮನೇ ಶಕ್ತಿ, ಶಕ್ತಿಯೇ ಬ್ರಹ್ಮ.’ ಅವರಿಗೆ ನಾನು ಹೇಳಿದೆ; ‘ಯಾರನ್ನು ನೀವು ಬ್ರಹ್ಮ ಅಂತ ಕರೆಯುತ್ತೀರೋ, ಆತನನ್ನೇ ನಾನು ತಾಯಿ ಎಂಬುದಾಗಿ ಕರೆಯುತ್ತೇನೆ. ತಾಯಿ ಎಂಬುದು ಒಳ್ಳೆ ಮಧುರನಾಮ.’
“ಆದರೆ ಯಾವಾಗ ನಾನು ಮತ್ತೆ ಹೇಳಿದೆನೊ: ‘ಹೇಳಿ ಈಗ: “ಗುರು-ಕೃಷ್ಣ-ವೈಷ್ಣವ” ಎಂಬುದಾಗಿ,’ ಆಗ ಕೇಶವ ಹೇಳಿದ: ‘ಮಹಾಶಯರೆ, ಅಲ್ಲಿಯವರೆಗೆ ಈಗ ಸದ್ಯಕ್ಕೆ ಬೇಡಿ. ಹಾಗೆ ಏನಾದರೂ ಮಾಡಿದ್ದೇ ಆದರೆ ಜನ ಭಾವಿಸಿಕೊಳ್ಳುತ್ತಾರೆ, ನಾವು ‘ಥೇಟ್ ವೈಷ್ಣವರೇ’ ಅಂತ.
‘ನಾನು ಕೇಶವನಿಗೆ ಆಗಾಗ ಹೇಳುತ್ತಿದ್ದೆ: ‘ನೀವು ಯಾರನ್ನು ಬ್ರಹ್ಮ ಅಂತ ಕರೆಯುತ್ತೀರೊ, ಆತನನ್ನೇ ನಾನು ಶಕ್ತಿ, ಆದ್ಯಾಶಕ್ತಿ ಅಂತ ಕರೆಯುತ್ತೇನೆ. ಯಾವಾಗ ಆತ ವಾಙ್ಮನಾತೀತ, ನಿರ್ಗುಣ, ನಿಷ್ಕ್ರಿಯನಾಗಿರುತ್ತಾನೊ ಆಗ ವೇದ ಆತನನ್ನು ಬ್ರಹ್ಮ ಅಂತ ಕರೆಯುತ್ತದೆ. ಯಾವಾಗ ಆತ ಸೃಷ್ಟಿಸ್ಥಿತಿಪ್ರಳಯಕಾರ್ಯಗಳನ್ನು ಮಾಡುತ್ತಾನೊ ಆಗ ಆತನನ್ನೇ ಶಕ್ತಿ, ಆದ್ಯಾಶಕ್ತಿ ಎಂಬುದಾಗಿ ಕರೆಯುತ್ತೇನೆ.’
“ಕೇಶವನಿಗೆ ಹೇಳಿದೆ: ‘ಸಂಸಾರದಲ್ಲಿ ಭಗವಂತನ ಸಾಕ್ಷಾತ್ಕಾರ ದೊರೆಯುವುದು ಬಹಳ ಕಷ್ಟ. ಯಾವ ಕೊಠಡಿಯಲ್ಲಿ ಉಪ್ಪಿನಕಾಯಿ, ಹುಣಿಸೆಹಣ್ಣು, ನೀರಿನ ಗುಡಾಣ ಇವೆಯೋ ಆ ಕೊಠಡಿಯಲ್ಲೇ ವಿಷಮಶೀತಜ್ವರದ ರೋಗಿಯನ್ನು ಇಟ್ಟರೆ ಆತ ಗುಣಹೊಂದುವ ಬಗೆ ಹೇಗೆ? ಆದ್ದರಿಂದ ಆಗಾಗ ಸಾಧನೆಭಜನೆ ಮಾಡಲು ನಿರ್ಜನಪ್ರದೇಶಕ್ಕೆ ಹೋಗಿ ಇರಬೇಕು. ಮರದ ಬುಡ ದಪ್ಪವಾದ ನಂತರ ಆನೆಯನ್ನು ಬೇಕಾದರೆ ಅದಕ್ಕೆ ಕಟ್ಟಬಹುದು; ಆದರೆ ಎಳೆ ಸಸಿಯನ್ನು ಆಡು ದನಕರು ತಿಂದುಬಿಡುತ್ತವೆ.’ ಇದಕ್ಕಾಗಿಯೇ ಕೇಶವ ಉಪನ್ಯಾಸ ಕೊಡುವಾಗ ಹೇಳುತ್ತಿದ್ದ: ‘ನೀವು ಹಣ್ಣಾದ ನಂತರ ಬೇಕಾದರೆ ಸಂಸಾರದಲ್ಲಿರಿ.’
(ಭಕ್ತರಿಗೆ) “ನೋಡಿ, ಕೇಶವ ಒಳ್ಳೆ ವಿದ್ಯಾವಂತ. ಇಂಗ್ಲಿಷಿನಲ್ಲಿ ಉಪನ್ಯಾಸ ಕೊಡುತ್ತಿದ್ದ. ಅನೇಕರು ಆತನಿಗೆ ಗೌರವ ತೋರಿಸುತ್ತಿದ್ದರು, ಅಷ್ಟೇ ಏಕೆ, ವಿಕ್ಟೋರಿಯಾ ರಾಣಿಯೇ ಆತನೊಡನೆ ಕುಳಿತು ಮಾತುಕತೆ ಆಡಿದಳು. ಆದರೆ ಆತ ಇಲ್ಲಿಗೆ ಬರುವಾಗ ಬರೀ ಕೈಯಲ್ಲಿ ಬರುತ್ತಿರಲಿಲ್ಲ. ಸಾಧುದರ್ಶನಕ್ಕೆ ಹೋದಾಗ ಕೈಯಲ್ಲಿ ಏನನ್ನಾದರೂ ತೆಗೆದುಕೊಂಡು ಹೋಗಬೇಕು. ಅದಕ್ಕಾಗಿ ಜೊತೆಯಲ್ಲಿ ಹಣ್ಣುಹಂಪಲು ತರುತ್ತಿದ್ದ. ಆತ ಸಂಪೂರ್ಣವಾಗಿ ಅಭಿಮಾನಶೂನ್ಯ.
(ಅಧರಸೇನನಿಗೆ) “ನೋಡು, ನೀನು ಒಬ್ಬ ದೊಡ್ಡ ವಿದ್ಯಾವಂತ. ಸಾಲದುದಕ್ಕೆ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಬೇರೆ. ಆದರೂ ನೀನು ಪತ್ನಿಯ ಗುಲಾಮ. ಮುಂದೆ ಹೋಗು. ಚಂದನದ ಅರಣ್ಯದಿಂದಾಚೆಗೂ ಒಳ್ಳೆ ಒಳ್ಳೆಯ ವಸ್ತುಗಳಿವೆ-ಬೆಳ್ಳಿಯ ಗಣಿ, ಚಿನ್ನದ ಗಣಿ, ಹೀರಮಾಣಿಕ್ಯಗಳ ಗಣಿ ಇವೆ. ಸೌದೆ ಕಡಿಯುವವ ಅರಣ್ಯದಲ್ಲಿ ಸೌದೆ ಕಡಿಯುತ್ತಿದ್ದ: ಬ್ರಹ್ಮಚಾರಿ ಆತನಿಗೆ ಹೇಳಿದ: ‘ಮುಂದೆ ಹೋಗು.’”
ಪರಮಹಂಸರು ಈಗ ಮೆಟ್ಟಿಲುಗಳಿಂದ ಕೆಳಕ್ಕೆ ಇಳಿದು ಪ್ರಾಂಗಣದ ಮೂಲಕ ತಮ್ಮ ಕೊಠಡಿಗೆ ಬರುತ್ತಿದ್ದಾರೆ. ಜೊತೆಯಲ್ಲಿ ಅಧರಸೇನ, ಮಾಸ್ಟರ್ ಮೊದಲಾದವರು ಬರುತ್ತಿದ್ದಾರೆ. ಆ ಸಮಯಕ್ಕೆ ಸರಿಯಾಗಿ ರಾಮಚಟ್ಟೋಪಾಧ್ಯಾಯ ಬಂದು ಹೇಳಿದ, ಶ್ರೀಶಾರದಾದೇವಿಯರ ಪರಿಚಾರಕನಿಗೆ ಕಾಲರಾ ತಗಲಿದೆ.
ರಾಮಚಟ್ಟೋಪಾಧ್ಯಾಯ ಶ್ರೀರಾಮಕೃಷ್ಣರಿಗೆ: “ನಾನು ನಿಮಗೆ ಹತ್ತು ಘಂಟೆ ಸಮಯದಲ್ಲೇ ಬಂದು ತಿಳಿಸಿದೆ, ಆದರೆ ನೀವು ನನ್ನ ಕಡೆ ಗಮನವನ್ನೇ ಕೊಡಲಿಲ್ಲ.”
ಶ್ರೀರಾಮಕೃಷ್ಣರು: “ನನ್ನ ಕೈಯಲ್ಲಿ ಏನು ಸಾಧ್ಯ?”
ರಾಮಚಟ್ಟೋಪಾಧ್ಯಾಯ: “ಹೌದು, ನಿಮ್ಮ ಕೈಯಲ್ಲಿ ಏನುತಾನೆ ಸಾಧ್ಯ! ಆದರೆ ರಾಖಾಲ, ರಾಮಲಾಲ ಇವರೇ ಮೊದಲಾದವರು ಇದ್ದರಲ್ಲ. ಅವರೂ ಏನು ಮಾಡಲಿಲ್ಲ.”
ಮಾಸ್ಟರ್: “ಕಿಶೋರಿ ಔಷಧ ತರಲು ಹೋಗಿದ್ದಾನೆ, ಆಲಂಬಜಾರಿಗೆ.”
ಶ್ರೀರಾಮಕೃಷ್ಣರು: “ಏನು, ಒಬ್ಬನೇ! ಎಲ್ಲಿಂದ ತರುತ್ತಾನೆ?”
ಮಾಸ್ಟರ್: “ಹೌದು, ಒಬ್ಬನೇ. ಆಲಂಬಜಾರಿನಿಂದ ತರುತ್ತಾನೆ.”
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನರ್ಸನ್ನು ಕೇಳಿಕೊಂಡು ಬಾ, ಕಾಯಿಲೆ ಜಾಸ್ತಿಯಾಗಿ ಬಿಟ್ಟರೆ ಏನು ಮಾಡಬೇಕು, ಗುಣಮುಖವಾಗುತ್ತಿದ್ದರೆ ಏನು ಮಾಡಬೇಕು ಎಂಬುದರ ವಿಷಯವಾಗಿ.”
ಮಾಸ್ಟರ್: “ಆಗಲಿ ಕೇಳಿಬರುತ್ತೇನೆ.”
ಆ ಇಬ್ಬರು ಭಕ್ತೆಯರು ಬಂದು ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಈಗ ಬೀಳ್ಕೊಳ್ಳುತ್ತಿದ್ದಾರೆ. ಪರಮಹಂಸರು ಅವರಿಗೆ ಮತ್ತೆ ಹೇಳುತ್ತಿದ್ದಾರೆ: “ನಾನು ತಿಳಿಸಿದ ರೀತಿಯಲ್ಲಿ ಶಿವಪೂಜೆಯನ್ನು ಮಾಡಿ. ಮುಂದೆ ಬರುವಾಗ ಊಟ ಮುಗಿಸಿ ಬನ್ನಿ. ಇಲ್ಲದಿದ್ದರೆ ನನ್ನ ಮನಸ್ಸಿಗೆ ತುಂಬ ವ್ಯಥೆಯುಂಟಾಗುತ್ತದೆ. ಸ್ನಾನಜಾತ್ರೆಯ ದಿನ ಮತ್ತೆ ಇಲ್ಲಿಗೆ ಬರಲು ಪ್ರಯತ್ನಿಸಿ.”
ಪರಮಹಂಸರು ತಮ್ಮ ಕೊಠಡಿಯ ಅರ್ಧಚಂದ್ರಾಕೃತಿಯ ವರಾಂಡದಲ್ಲಿ ಕುಳಿತಿದ್ದಾರೆ. ನರೇಂದ್ರ ವಂದ್ಯೋಪಾಧ್ಯಾಯ, ಹರಿ, ಮಾಸ್ಟರ್, ಮೊದಲಾದವರು ಅವರ ಹತ್ತಿರ ಕುಳಿತಿದ್ದಾರೆ. ನರೇಂದ್ರವಂದ್ಯೋಪಾಧ್ಯಾಯನ ಮನೆಯ ಕಷ್ಟಸುಖಗಳೆಲ್ಲಾ ಪರಮಹಂಸರಿಗೆ ಚೆನ್ನಾಗಿ ಗೊತ್ತಿದೆ.
ಶ್ರೀರಾಮಕೃಷ್ಣರು: “ನೋಡು, ‘ಒಂದು ತುಂಡು ಕೌಪೀನಕ್ಕಾಗಿ’ 1 ಇಷ್ಟೊಂದು ಕಷ್ಟ. ಮನುಷ್ಯ ಹೆಂಡತಿಯನ್ನು ಕಟ್ಟಿಕೊಂಡು ಮಕ್ಕಳುಮರಿಗಳನ್ನು ಪಡೆದುಕೊಳ್ಳುತ್ತಾನೆ; ಆದ್ದರಿಂದ ಆತ ಚಾಕರಿಗಾಗಿ ಹೋಗಲೇಬೇಕಾಗುತ್ತದೆ. ಸಾಧು ಕೌಪೀನದ ದೆಸೆಯಿಂದ ಪೇಚಾಟಕ್ಕೆ ಸಿಕ್ಕಿಕೊಳ್ಳುತ್ತಾನೆ; ಗೃಹಸ್ಥ ಹೆಂಡತಿಯನ್ನು ಕಟ್ಟಿಕೊಂಡು. ಇದೂ ಅಲ್ಲದೆ ಮನೆಯಲ್ಲಿ ಜಗಳ ಆಯಿತು ಎಂದರೆ, ಬೇರೆ ಮನೆ ಮಾಡಬೇಕಾಗಿ ಬರುತ್ತದೆ. (ನಗುತ್ತ) ಒಮ್ಮೆ ಚೈತನ್ಯದೇವ ನಿತಾಯಿಗೆ ಹೇಳಿದ: ‘ಇಲ್ಲಿ ಕೇಳು ತಮ್ಮ, ಸಂಸಾರಿಜೀವಕ್ಕೆ ಎಂದಿಗೂ ಮಾರ್ಗವೇ ಇಲ್ಲ!’”
ಮಾಸ್ಟರ್ ತನಗೆ ತಾನೇ: “ಪರಮಹಂಸರು ಬಹುಶಃ ಹೇಳುತ್ತಿರಬಹುದು ಅವಿದ್ಯಾ ಸಂಸಾರದ ಸಂಬಂಧವಾಗಿ, ಸಂಸಾರಿಜೀವವನ್ನು ಬಿಗಿದಿಟ್ಟಿರುವುದು ಅವಿದ್ಯಾಸಂಸಾರವೇ ಅಂತ ಕಾಣುತ್ತದೆ.”
ಮಾಸ್ಟರ್ ಮನೆಯಲ್ಲಿ ಒಬ್ಬರಿಗೊಬ್ಬರಿಗೆ ಸರಿಹೋಗದೆ ಇದ್ದುದರಿಂದ ಆತ ಪ್ರತ್ಯೇಕ ಮನೆ ಮಾಡಿಕೊಂಡಿದ್ದಾನೆ.
ಶ್ರೀರಾಮಕೃಷ್ಣರು ವಂದ್ಯೋಪಾಧ್ಯಾಯನಿಗೆ ಮಾಸ್ಟರನ್ನು ತೋರಿಸಿ: “ಈತನೂ ಬೇರೆ ಮನೆ ಮಾಡಿಕೊಂಡಿದ್ದಾನೆ. ನೀವಿಬ್ಬರೂ ಇದರಲ್ಲಿ ಒಂದು ಜೋಡಿ. ಒಂದು ಕಡೆ ಒಮ್ಮೆ ಇಬ್ಬರು ಅಪರಿಚಿತರು ಸಂಧಿಸಿದರು. ಒಬ್ಬ ಇನ್ನೊಬ್ಬನನ್ನು ಕೇಳಿದ: ‘ಯಾವೂರಪ್ಪ ನೀನು?’ ಅದಕ್ಕೆ ಆತ ಹೇಳಿದ: ‘ಓ, ನಾನು ಬಹಳ ದೂರದಿಂದ ಬಂದಿದ್ದೇನೆ, ವಿದೇಶಿ’ ಎರಡನೆಯವನು ಮೊದಲನೆಯವನನ್ನು ಕೇಳಿದ : ‘ಹಾಗಾದರೆ ನೀನಾವೂರಪ್ಪ?’ ಅದಕ್ಕೆ ಆತ ಹೇಳಿದ: ‘ಅಯ್ಯೋ ನಾನೆ! ನನ್ನ ನಲ್ಲೆಯನ್ನು ಬಿಟ್ಟು ಬಹಳ ದೂರ ಬಂದುಬಿಟ್ಟಿದ್ದೇನೆ, ವಿರಹಿ.’ ಇಬ್ಬರೂ ಒಂದೇ ದೋಣಿಯಲ್ಲಿ ತೇಲುತ್ತಿದ್ದರು; ಆದ್ದರಿಂದ ಇಬ್ಬರೂ ಜೊತೆಯಾದರು. (ಎಲ್ಲರೂ ನಗುತ್ತಿದ್ದಾರೆ.)
“ಆದರೆ ಭಗವಂತನಲ್ಲಿ ಶರಣಾಗತರಾದರೆ, ಬಳಿಕ ಹೆದರಿಕೊಳ್ಳಬೇಕಾಗಿರುವುದಿಲ್ಲ. ಆತನೇ ರಕ್ಷಿಸುತ್ತಾನೆ.”
ಹರಿ: “ಒಳ್ಳೇದು, ಅನೇಕರಿಗೆ ಆತನ ಸಾಕ್ಷಾತ್ಕಾರ ಪಡೆದುಕೊಳ್ಳಬೇಕಾದರೆ ಬಹಳ ಕಾಲ ಹಿಡಿಯುವುದಲ್ಲ, ಏಕೆ?”
ಶ್ರೀರಾಮಕೃಷ್ಣರು: “ಏಕೆ ಗೊತ್ತೆ? ಭೋಗ ಮತ್ತು ಕರ್ಮ ಮುಗಿದುಹೋಗದವರೆಗೆ ವ್ಯಾಕುಲತೆ ಉಂಟಾಗದು. ಡಾಕ್ಟರ್ ರೋಗಿಯ ಸಂಬಂಧವಾಗಿ ಹೇಳುವುದುಂಟು: ‘ಈಗ ಕೆಲವು ದಿನ ಕಳೆಯಲಿ. ಅನಂತರ ಸಾಮಾನ್ಯ ಔಷಧದಿಂದಲೇ ಗುಣವಾಗಿಬಿಡುತ್ತದೆ.’
“ನಾರದ ರಾಮನಿಗೆ ಹೇಳಿದ: ‘ರಾಮ, ನೀನು ನಿನ್ನ ಕಾಲವನ್ನು ಅಯೋಧ್ಯೆಯಲ್ಲಿಯೇ ಕಳೆಯುತ್ತಿದ್ದರೆ, ರಾವಣನ ವಧೆ ಆಗುವ ಬಗೆ ಹೇಗೆ? ನೀನು ಆ ಕಾರ್ಯಕ್ಕಾಗಿಯೇ ಅವತರಿಸಿರುವುದು.’ ರಾಮ ಉತ್ತರವಿತ್ತ: ‘ನಾರದ, ಸಕಾಲ ಬರಲಿ. ರಾವಣನ ಕರ್ಮ ಕ್ಷಯ ಹೊಂದಲಿ. ಆಗ ಆತನ ವಧೆಗೆ ಪ್ರಯತ್ನ ನಡೆಯುವುದು.’”
ಹರಿ: “ಒಳ್ಳೇದು, ಈ ಜಗತ್ತಿನಲ್ಲಿ ಇಷ್ಟೊಂದು ದುಃಖ ಇದೆಯಲ್ಲಾ, ಏಕೆ?”
ಶ್ರೀರಾಮಕೃಷ್ಣರು: “ಈ ಜಗತ್ತೆಂಬುದು ಭಗವಂತನ ಲೀಲೆ. ಇದು ಒಂದು ಆಟ ಇದ್ದ ಹಾಗೆ.ಈಲೀಲೆಯಲ್ಲಿ ಸುಖ-ದುಃಖ, ಪಾಪ-ಪುಣ್ಯ, ಜ್ಞಾನ-ಅಜ್ಞಾನ, ಒಳ್ಳೇದು-ಕೆಟ್ಟದ್ದು ಎಲ್ಲವೂ ಇವೆ. ದುಃಖ ಪಾಪ ಇವೆಲ್ಲ ಇಲ್ಲದೆ ಹೋಯಿತು ಎಂದರೆ ಲೀಲೆ ಸಾಧ್ಯವಿಲ್ಲ.
“ಕಣ್ಣುಮುಚ್ಚಾಲೆ ಆಟದಲ್ಲಿ ಹೋಗಿ ಅಜ್ಜಿಯನ್ನು ಮುಟ್ಟಿಬಿಟ್ಟರೆ ಆಕೆಗೆ ಸಂತೋಷವಾಗದು. ಆಟ ಸ್ವಲ್ಪ ಕಾಲ ಮುಂದುವರಿಯಲಿ ಅಂತ ಭಗವಂತನ ಇಚ್ಛೆ. ಅನಂತರ-
ಇಂತು ಹಾರುವ ನೂರು ಸಾವಿರದ ಪಟಗಳಲಿ
ಒಂದೊ ಎರಡೋ ಹರಿದು ಬಿಡುಗಡೆಯ ಪಡೆದು
ಹೋಗುತಿರಲವುಗಳನು ನಿರುಕಿಸುತ ಈ ತಾಯಿ
ಕೈಯ ಚಪ್ಪಾಳೆ ತಟ್ಟಿ ನಲಿಯುತಿಹಳು.
ಅಂದರೆ ಭಗವಂತನ ದರ್ಶನ ದೊರೆತ ನಂತರ ಒಬ್ಬಿಬ್ಬರು ಮುಕ್ತರಾಗಿಬಿಡುತ್ತಾರೆ, ಬಹಳ ತಪಸ್ಸಿನ ನಂತರ, ಆತನ ಕೃಪೆಯಿಂದ. ಆಗ ಭಗವತಿ ಆನಂದದಿಂದ ಕೈಚಪ್ಪಾಳೆ ಹಾಕುತ್ತಾಳೆ: ‘ಭೇಷ್! ಕಿತ್ತುಕೊಂಡುಬಿಟ್ಟವು!’ ಅಂತ ಹೇಳುತ್ತ.”
ಹರಿ: “ಭಗವಂತನಿಗೇನೊ ಆಟ. ಆದರೆ ನಮಗೆ ಪ್ರಾಣಸಂಕಟ.”
ಶ್ರೀರಾಮಕೃಷ್ಣರು ನಗುತ್ತ: “ನೀನು ಎಣಿಸಿಕೊಳ್ಳುವ ಈ ‘ನೀನು’ ಯಾರು ಹೇಳು ನೋಡೋಣ. ಎಲ್ಲವೂ ಭಗವಂತನೇ ಆಗಿದ್ದಾನೆ-ಮಾಯೆ, ಜೀವ, ಜಗತ್ತು, ಚತುರ್ವಿಂಶತಿ ತತ್ತ್ವ ಎಲ್ಲ. ‘ಹಾವಾಗಿ ಕಡಿಯುತ್ತೇನೆ, ಮಂತ್ರವಾದಿಯಾಗಿ ಗುಣಪಡಿಸುತ್ತೇನೆ’. ಭಗವಂತನೇ ವಿದ್ಯೆ, ಅವಿದ್ಯೆ ಎರಡೂ ಆಗಿದ್ದಾನೆ. ಅವಿದ್ಯಾಮಾಯೆಯಿಂದ ಅಜ್ಞಾನದಲ್ಲಿ ಮುಳುಗಿಕೊಂಡಿರುತ್ತಾನೆ; ವಿದ್ಯಾಮಾಯೆಯಿಂದ ಗುರುರೂಪ ಧರಿಸಿ ಮಂತ್ರವಾದಿಯಾಗಿ ಗುಣಪಡಿಸುತ್ತಾನೆ.
“ಅಜ್ಞಾನ, ಜ್ಞಾನ, ವಿಜ್ಞಾನ, ಜ್ಞಾನಿಗೆ ತೋರುತ್ತದೆ, ಇರುವವನು ಭಗವಂತನೊಬ್ಬನೇ, ಆತನೇ ಕರ್ತೃ, ಆತನೇ ಸೃಷ್ಟಿ-ಸ್ಥಿತಿ-ಪ್ರಳಯಕಾರ್ಯ ಮಾಡುತ್ತಾನೆ ಎಂಬುದಾಗಿ. ವಿಜ್ಞಾನಿಗೆ ತೋರುತ್ತದೆ, ಆತನೇ ಎಲ್ಲವೂ ಆಗಿದ್ದಾನೆ ಎಂಬುದಾಗಿ.”
“ಮಹಾಭಾವ, ಪ್ರೇಮ ಉಂಟಾಯಿತು ಎಂದರೆ ಕಂಡುಬರುತ್ತದೆ ಭಗವಂತ ಹೊರತು ಬೇರೇನೂ ಇಲ್ಲ ಎಂಬುದಾಗಿ. ಭಾವದ ಹತ್ತಿರ ಭಕ್ತಿ ಕೇವಲ ‘ಮಿಣಕ್, ಮಿಣಕ್’ ಅನ್ನುತ್ತದೆ. ಭಾವ ಪಕ್ವವಾಯಿತು ಎಂದರೆ ಮಹಾಭಾವ, ಪ್ರೇಮ.
(ವಂದ್ಯೋಪಾಧ್ಯಾಯನಿಗೆ) “ಧ್ಯಾನದ ಸಮಯದಲ್ಲಿ ಘಂಟೆಯ ಶಬ್ದ ಆಗುವುದನ್ನು ಈಗಲೂ ಕೇಳುತ್ತಿದ್ದೀಯೇನು?”
ವಂದ್ಯೋಪಾಧ್ಯಾಯ: “ಹೌದು, ದಿನವೂ. ಜೊತೆಗೆ ಭಗವದ್ರೂಪ ದರ್ಶನ ಕೂಡ. ಮನಸ್ಸಿಗೆ ಒಂದು ಸಲ ರುಚಿ ಸಿಕ್ಕಿತು ಎಂದರೆ ಮತ್ತೆ ಅದು ಬಿಟ್ಟುಬಿಡುವುದೆ?”
ಶ್ರೀರಾಮಕೃಷ್ಣರು ನಗುತ್ತ: “ಹೌದು, ನಿಜ. ಸೌದೆ ಒಮ್ಮೆ ಹೊತ್ತಿಕೊಂಡಿತು ಎಂದರೆ ಮತ್ತೆ ಅದು ಆರಿಹೋಗದು. (ಭಕ್ತರಿಗೆ) ಈತನಿಗೆ ಶ್ರದ್ಧೆಯ ಸಂಬಂಧವಾಗಿ ಅನೇಕ ಕಥೆ ಗೊತ್ತಿದೆ.”
ವಂದ್ಯೋಪಾಧ್ಯಾಯ: “ನನಗೆ ಶ್ರದ್ಧೆ ಬಹಳ ಅಧಿಕ.”
ಶ್ರೀರಾಮಕೃಷ್ಣರು: “ಏನಾದರೂ ಹೇಳು.”
ವಂದ್ಯೋಪಾಧ್ಯಾಯ: “ಗುರು ಒಬ್ಬನಿಗೆ ಕುರಿಯ ಮಂತ್ರ ಹೇಳಿಕೊಟ್ಟು ಆತನಿಗೆ ತಿಳಿಸಿದ, ಕುರಿಯೇ ನಿನ್ನ ಇಷ್ಟದೇವ ಎಂದು. ಆ ಮಂತ್ರವನ್ನೇ ಜಪಿಸಿ ಆತನಿಗೆ ಸಾಕ್ಷಾತ್ಕಾರ ದೊರೆಯಿತು.
“ಒಬ್ಬ ಹುಲ್ಲು ಕೊಯ್ಯುವವ ರಾಮನಾಮ ಜಪಿಸಿ ಗಂಗೆಯನ್ನು ದಾಟಿಬಿಟ್ಟ.”
ಶ್ರೀರಾಮಕೃಷ್ಣರು: “ನಿನ್ನ ಮನೆಯ ಹೆಂಗಸರನ್ನು ಬಲರಾಮನ ಮನೆಯ ಹೆಂಗಸರೊಡನೆ ಕಳುಹಿಸು.”
ವಂದ್ಯೋಪಾಧ್ಯಾಯ: “ಬಲರಾಮ ಯಾರು”
ಶ್ರೀರಾಮಕೃಷ್ಣರು: “ಬಲರಾಮ ಗೊತ್ತಿಲ್ಲವೆ? ಬೋಸ್ಪಾರಾದಲ್ಲಿ ಆತನಿಗೆ ಮನೆ.”
ಸರಳಸ್ವಭಾವಿಗಳನ್ನು ಕಂಡರೆ ಪರಮಹಂಸರು ಆನಂದದಿಂದ ತುಂಬಿ ತುಳುಕಾಡಲಾರಂಭಿಸುತ್ತಾರೆ. ವಂದ್ಯೋಪಾಧ್ಯಾಯ ಅತ್ಯಂತ ಸರಳಜೀವಿ. ನಿರಂಜನನೂ ಸರಳನಾಗಿದ್ದುದರಿಂದ ಪರಮಹಂಸರು ಆತನನ್ನು ಪ್ರೀತಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನಾನು ಏಕೆ ನಿನಗೆ ಹೋಗಿ ನಿರಂಜನನನ್ನು ನೋಡಿಕೊಂಡು ಬಾ ಅಂತ ಹೇಳುತ್ತೇನೆ ಗೊತ್ತೆ? ಆತ ನಿಜವಾಗಿ ಸರಳನೊ ಅಲ್ಲವೊ ಎಂಬುದನ್ನು ಕಂಡುಹಿಡಿಯಲು.”
೨೫ನೆ ಮೇ ೧೮೮೪, ಜ್ಯೇಷ್ಠ ಶುಕ್ಲ ಪಾಡ್ಯ ಭಾನುವಾರ
ಪರಮಹಂಸರು ಪಂಚವಟಿಯಲ್ಲಿ ಆ ಪುರಾತನ ಆಲದ ಮರದ ಕೆಳಗೆ ಕೇದಾರ, ಸುರೇಂದ್ರ, ಭವನಾಥ, ರಾಖಾಲ ಮೊದಲಾದ ಅನೇಕ ಮಂದಿ ಭಕ್ತರೊಡನೆ ದಕ್ಷಿಣಾಭಿಮುಖವಾಗಿ ಕುಳಿತುಕೊಂಡಿದ್ದಾರೆ. ಎಲ್ಲೋ ಕೆಲವರು ಮಾತ್ರ ಆ ಕಟ್ಟೆಯ ಮೇಲೇ ಪರಮಹಂಸರೊಡನೆ ಕುಳಿತಿದ್ದಾರೆ. ಉಳಿದವರೆಲ್ಲ ಕೆಳಗೆ ಸುತ್ತಲೂ ನಿಂತುಕೊಂಡಿದ್ದಾರೆ. ಫಾಲ್ಗುಣ ಮಾಸದಲ್ಲಿ ಶುಕ್ಲ ಬಿದಿಗೆ ದಿನ ಪರಮಹಂಸರ ಜನ್ಮದಿನ ಬರುತ್ತದೆ. ಆದರೆ ಅವರ ಕೈ ಗುಣ ಹೊಂದಿಲ್ಲದಿದ್ದುದರಿಂದ ಇದುವರೆಗೂ ಅದನ್ನು ಆಚರಿಸಲಿಲ್ಲ. ಈಗ ಅದು ಬಹಳವಾಗಿ ಗುಣಹೊಂದಿದೆ; ಆದ್ದರಿಂದ ಭಕ್ತರು ಅದನ್ನು ಇಂದು ಆಚರಿಸುತ್ತಿದ್ದಾರೆ. ಒಳ್ಳೆ ಪ್ರಖ್ಯಾತಳಾಗಿರುವ ಒಬ್ಬ ಕೀರ್ತನಕಾರ್ತಿ ಹಾಡುತ್ತಾಳೆ.
ಘಂಟೆ ಅಪರಾಹ್ನ ಒಂದು. ಪರಮಹಂಸರು ತಮ್ಮ ಕೊಠಡಿಯಲ್ಲಿ ಇಲ್ಲದಿರುವುದನ್ನು ನೋಡಿ ಮಾಸ್ಟರ್ ಪಂಚವಟಿಗೆ ಬರುತ್ತಿದ್ದಾನೆ. ಪರಮಹಂಸರು ಎದುರಿಗೇ ಕುಳಿತಿರುವುದನ್ನು ನೋಡದೆ ಭಕ್ತರನ್ನು ಕೇಳುತ್ತಿದ್ದಾನೆ: “ಪರಮಹಂಸರೆಲ್ಲಿ?” ಇದನ್ನು ಕೇಳಿದ ಭಕ್ತರೆಲ್ಲ ಗೊಳ್ಳೆಂದು ನಗುತ್ತಿದ್ದಾರೆ. ಒಡನೇ ಆತನಿಗೆ ಕಂಡುಬರುತ್ತದೆ ಪರಮಹಂಸರು ಎದುರಿಗೇ ಕುಳಿತುಕೊಂಡಿರುವುದು. ಮಾಸ್ಟರಿಗೆ ದಿಗ್ಭ್ರಮೆ ಹಿಡಿದಂತಾಗಿ ಈಗ ಆತ ಪರಮಹಂಸರಿಗೆ ಪ್ರಣಾಮಮಾಡುತ್ತಿದ್ದಾನೆ. ಅವರ ಎಡಭಾಗದಲ್ಲಿ ಕೇದಾರ, ಬಲಭಾಗದಲ್ಲಿ ವಿಜಯ-ಕಟ್ಟೆಯ ಮೇಲೆಯೇ ಕುಳಿತುಕೊಂಡಿದ್ದಾರೆ. ಕೇದಾರ ಬ್ರಾಹ್ಮಸಮಾಜವನ್ನು ಬಿಟ್ಟಂದಿನಿಂದ ಅವನಿಗೂ ವಿಜಯನಿಗೂ ಮನಸ್ತಾಪ.
ಶ್ರೀರಾಮಕೃಷ್ಣರು ನಗುತ್ತ ಮಾಸ್ಟರಿಗೆ: “ನೋಡಿದೆಯಾ, ಹೇಗೆ ಇಬ್ಬರನ್ನೂ ಒಂದು ಕಡೆ ಸೇರಿಸಿಬಿಟ್ಟಿದ್ದೇನೆ.”
ಪರಮಹಂಸರು ೧೮೬೮ನೆ ಇಸವಿಯಲ್ಲಿ ಬೃಂದಾವನಕ್ಕೆ ಹೋಗಿದ್ದಾಗ ಅಲ್ಲಿಂದ ಒಂದು ಮಾಧವೀ ಲತೆಯನ್ನು ತಂದು ಪಂಚವಟಿಯಲ್ಲಿ ನೆಟ್ಟಿದ್ದರು. ಅದು ಈಗ ಬಹಳ ದೊಡ್ಡದಾಗಿ ಬಿಟ್ಟಿದೆ. ಚಿಕ್ಕಚಿಕ್ಕ ಮಕ್ಕಳು ಅದರ ಮೇಲೆ ಹತ್ತಿ ಅದನ್ನು ಹಿಡಿದುಕೊಂಡು, ಜೋಲಾಡುವುದು, ಅದರ ಮೇಲೆ ಕುಣಿಯುವುದು ಇವೇ ಮೊದಲಾದುವನ್ನು ಮಾಡುತ್ತಿದ್ದರು. ಪರಮಹಂಸರು ಆನಂದದಿಂದ ಆ ಮಕ್ಕಳ ಕಡೆ ನೋಡುತ್ತ ಹೇಳುತ್ತಿದ್ದಾರೆ: “ಇವು ಕಪಿಯ ಮರಿಗಳೇ. ಕೆಳಗೆ ಬಿದ್ದರೂ ಹತ್ತಿಹೋಗುವುದನ್ನು ಬಿಡವು.” ಸುರೇಂದ್ರನ ಕೆಳಗಡೆ ನಿಂತುಕೊಂಡಿರುವುದನ್ನು ನೋಡಿ ಪ್ರೀತಿಯಿಂದ ಹೇಳುತ್ತಿದ್ದಾರೆ: “ಬಾ ಮೇಲಕ್ಕೆ, ಕಾಲು ಇಳಿಬಿಟ್ಟುಕೊಂಡು ಸುಖವಾಗಿ ಕುಳಿತುಕೊಳ್ಳುವೆಯಂತೆ.” ಸುರೇಂದ್ರ ಹಾಗೇ ಮಾಡಿದ. ಭವನಾಥ ಕೋಟು ಹಾಕಿಕೊಂಡು ಕುಳಿತಿರುವುದನ್ನು ನೋಡಿ ಸುರೇಂದ್ರ ಹೇಳುತ್ತಿದ್ದಾನೆ: “ಏನು, ನೀನು ವಿಲಾಯಿತಿಗೆ ಹೋಗುತ್ತಿದ್ದೀಯೇನು?”
ಶ್ರೀರಾಮಕೃಷ್ಣರು ನಗುತ್ತ: “ಭಗವಂತನೇ ನಮ್ಮ ವಿಲಾಯಿತಿ. ನಾನು ಒಮ್ಮೊಮ್ಮೆ ಬಟ್ಟೆಯನ್ನೆಲ್ಲಾ ಬಿಸುಟು ಆನಂದದಿಂದ ತಿರುಗುತ್ತಿದ್ದೆ. ಶಂಭುಮಲ್ಲಿಕ ಒಂದು ದಿನ ಹೇಳಿದ: ‘ನೀವು ಇದಕ್ಕಾಗಿಯೇ ಅಂತ ಕಾಣುತ್ತೆ ಬತ್ತಲೆ ಓಡಾಡುವುದು-ಬಹಳ ಸುಖವಾಗಿರುತ್ತದೆ. ಒಂದು ದಿನ ನಾನೂ ಹಾಗೆ ಮಾಡಿ ನೋಡಿದೆ.’”
ಸುರೇಂದ್ರ: “ನಾನು ಆಫೀಸಿನಿಂದ ಮನೆಗೆ ಹಿಂದಿರುಗಿ ಬಂದು ಕೋಟು, ಪ್ಯಾಂಟು ಬಿಚ್ಚುವಾಗ ಅಂದುಕೊಳ್ಳುತ್ತೇನೆ : ‘ಹೇ ಭಗವತಿ, ಎಷ್ಟೊಂದು ಬಂಧನಗಳಿಂದ ನೀನು ನನ್ನನ್ನು ಬಂಧಿಸಿದ್ದೀಯೆ!’”
ಶ್ರೀರಾಮಕೃಷ್ಣರು: “ಅಷ್ಟಪಾಶಗಳಿಂದ-ಲಜ್ಜೆ, ದ್ವೇಷ, ಭಯ, ಜಾತ್ಯಭಿಮಾನ, ಸಂಕೋಚ, ಗೋಪನೇಚ್ಛೆ ಇವೇ ಮೊದಲಾದುವುಗಳಿಂದ.”
ಪರಮಹಂಸರು ಈಗ ಹಾಡುತ್ತಿದ್ದಾರೆ:
ಈ ಎದೆಯ ಕೊರೆಯುವುದು ಒಂದೆ ವ್ಯಥೆ ನನಗೆ:
ನೀನೊಡನೆ ಇದ್ದರೂ ನಾನೆಚ್ಚರಿದ್ದರೂ
ಕಳ್ಳತನವಾಯ್ತಲ್ಲ ನನ್ನ ಮನೆಯೊಳಗೆ!….
ಮತ್ತೆ ಹಾಡುತ್ತಿದ್ದಾರೆ:
ಪಟವನಾಡಿಸುತಿಹಳು ಈ ನನ್ನ ಘನಶ್ಯಾಮೆ
ಜಗದ ಸಂಸಾರಗಳ ಪೇಟೆಯಲ್ಲಿ,
ಮಾಯೆಯೀ ಸೂತ್ರದಲಿ ಬಿಗಿದ ಪಟವೇರುತಿವೆ
ತುಂಬಿರುವ ಭರವಸೆಯ ಗಾಳಿಯಲ್ಲಿ.
ನರರಸ್ಥಿಪಂಜರದಿ ಮೂರು ಗುಣಗಳ ಬೆಸೆದು
ಮಾಡಿರುವಳೀ ತಾಯಿ ಕುಶಲ ಕಲೆಯ;
ಪಟದ ಸೂತ್ರದ ಮೇಲೆ ವಿಷಯದಂಟನು ಬಳಿದು
ಹರಿಯದಂತವುಗಳನು ರಚಿಸಿರುವಳು……..
ಶ್ರೀರಾಮಕೃಷ್ಣರು: “ ‘ಮಾಯೆಯೀ ಸೂತ್ರದಲಿ’ ಎಂದರೆ ಹೆಂಡತಿ ಮಕ್ಕಳು. ಪಟದ ಸೂತ್ರದ ಮೇಲೆ ವಿಷಯದಂಟನು ಬಳಿದು
‘ವಿಷಯದ ಅಂಟು’ ಎಂದರೆ ಕಾಮಕಾಂಚನ.
“ಸತ್ತ್ವ, ರಜಸ್ಸು, ತಮಸ್ಸು ಈ ಮೂರು ಗುಣಗಳೂ ಮನುಷ್ಯನನ್ನು ವಶಮಾಡಿಕೊಂಡುಬಿಟ್ಟಿವೆ. ಇವು ಮೂರು ಸೋದರರಿದ್ದ ಹಾಗೇ. ಸತ್ತ್ವವಿತ್ತು ಎಂದರೆ ಅದು ರಜಸ್ಸನ್ನು ಸಹಾಯಕ್ಕೆ ಕರೆಯಬಲ್ಲುದು. ರಜಸ್ಸು ತಮಸ್ಸಿನಿಂದ ಸಹಾಯ ಪಡೆಯಬಲ್ಲುದು. ಮೂರು ಗುಣಗಳೂ ಡಕಾಯಿತರೇ. ತಮೋಗುಣ ವಿನಾಶಕಾರಿ. ರಜೋಗುಣ ಬಂಧನಕಾರಿ. ಸತ್ತ್ವಗುಣ ವಿಮೋಚನಕಾರಿಯೇನೊ ನಿಜ, ಆದರೆ ಭಗವಂತನ ಸಮೀಪಕ್ಕೆ ಕೊಂಡೊಯ್ಯಲಾರದು.”
ವಿಜಯ ನಗುತ್ತ: “ಸತ್ತ್ವವೂ ಡಕಾಯಿತ ತಾನೆ.”
ಶ್ರೀರಾಮಕೃಷ್ಣರು ನಗುತ್ತ: “ಭಗವಂತನ ಹತ್ತಿರಕ್ಕೇನೊ ಅದು ಕರೆದುಕೊಂಡು ಹೋಗಲಾರದು, ಆದರೆ ಮಾರ್ಗವನ್ನು ತೋರಿಸಿಕೊಟ್ಟುಬಿಡುತ್ತದೆ.”
ಭವನಾಥ: “ಬಹಳ ಅದ್ಭುತವಾದ ಮಾತು ಇವು.”
ಶ್ರೀರಾಮಕೃಷ್ಣರು: “ಹೌದು, ಇದು ಬಹಳ ಗಹನವಾದ ವಿಷಯವೇ.”
ಪರಮಹಂಸರ ಈ ಮಾತುಗಳನ್ನೆಲ್ಲಾ ಕೇಳಿ ಭಕ್ತರಿಗೆ ಬಹಳ ಆನಂದವಾಗಿಬಿಟ್ಟಿದೆ.
ಶ್ರೀರಾಮಕೃಷ್ಣರು: “ಬಂಧನಕ್ಕೆ ಕಾರಣ ಕಾಮಕಾಂಚನ. ಕಾಮಕಾಂಚನವೇ ಸಂಸಾರ. ಕಾಮಕಾಂಚನವೇ ಭಗವಂತನ ದರ್ಶನ ಮಾಡಲು ಬಿಟ್ಟುಕೊಡಲ್ಲೊಲ್ಲದು. (ಒಂದು ಚೌಕವನ್ನು ತಮ್ಮ ಮುಖದ ಎದುರು ಹಿಡಿದುಕೊಂಡು) ಈಗ ನನ್ನ ಮುಖ ನಿಮಗೆ ಕಾಣುವುದೆ? ಇಲ್ಲ. ಆವರಣವೆಂಬುದು ಇದೇ. ಈ ಕಾಮಕಾಂಚನವೆಂಬ ಆವರಣ ಹೋಯಿತು ಎಂದರೆ ಚಿದಾನಂದನ ಸಾಕ್ಷಾತ್ಕಾರ.
“ಇಲ್ಲಿ ನೋಡಿ-ಯಾರು ಹೆಂಡತಿಯ ಸುಖವನ್ನು ತ್ಯಜಿಸುತ್ತಾನೊ, ಆತ ಈ ಜಗತ್ತಿನ ಸುಖವನ್ನು ತ್ಯಜಿಸಿದಂತೆಯೇ. ಭಗವಂತ ಆತನಿಗೆ ಅತಿ ಸಮೀಪದಲ್ಲೇ.”
ಭಕ್ತರು ಈ ಮಾತುಗಳನ್ನು ಶಾಂತವಾಗಿ ಕೇಳುತ್ತಿದ್ದಾರೆ-ಕೆಲವರು ಕುಳಿತು, ಕೆಲವರು ನಿಂತು.
ಶ್ರೀರಾಮಕೃಷ್ಣರು ಕೇದಾರ, ವಿಜಯ ಮೊದಲಾದವರಿಗೆ: “ಯಾರು ಹೆಂಡತಿಯ ಸುಖವನ್ನು ತ್ಯಜಿಸಿದ್ದಾನೋ ಆತ ಈ ಜಗತ್ತಿನ ಸುಖವನ್ನು ತ್ಯಜಿಸಿದಂತೆಯೇ. ಕಾಮಕಾಂಚನವೇ ಆವರಣ. ನಿಮಗೆಲ್ಲ ಇಷ್ಟೊಂದು ದೊಡ್ಡ ದೊಡ್ಡ ಮೀಸೆ. ಆದರೂ ನೀವು ಅದರಲ್ಲೇ ಸಿಕ್ಕಿ ಬಿದ್ದಿದ್ದೀರಿ, ಇಲ್ಲವೆ ಹೇಳಿ. ನಿಮ್ಮ ಹೃದಯವನ್ನು ಒಳಹೊಕ್ಕು ನೋಡಿ.”
ವಿಜಯ: “ಹೌದು, ಅದು ನಿಜ.”
ಕೇದಾರ ಸ್ತಂಭೀಭೂತನಾಗಿ ಸುಮ್ಮನೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು: “ಯಾರನ್ನು ನೋಡಿದರೂ, ಎಲ್ಲರೂ ಹೆಂಗಸಿನ ವಶರೇ. ಒಂದು ದಿನ ಕ್ಯಾಪ್ಟನ್ನನ ಮನೆಗೆ ಹೋಗಿದ್ದೆ, ಅಲ್ಲಿಂದ ರಾಮನ ಮನೆಗೆ ಹೋಗಬೇಕಾಗಿತ್ತು. ಆದ್ದರಿಂದ ಕ್ಯಾಪ್ಟನ್ನನನ್ನು ಕೇಳಿದೆ: ‘ಗಾಡಿ ಬಾಡಿಗೆ ಕೊಡು.’ ಕ್ಯಾಪ್ಟನ್ ಹೋಗಿ ತನ್ನ ಹೆಂಡತಿಯನ್ನು ಕೇಳಿದ. ಅವಳೂ ಅಂಥವಳೆ! ಹೇಳಲಾರಂಭಿಸಿದಳು: ‘ಏಕೆ? ಏಕೆ?’ ಕೊನೆಗೆ ಕ್ಯಾಪ್ಟನ್ ಹಿಂದಿರುಗಿ ಬಂದು ಹೇಳಿದ: ‘ರಾಮನೇ ಕೊಡುತ್ತಾನೆ.’ ನೋಡಿ, ಗೀತೆ, ಭಾಗವತ, ವೇದಾಂತ ಎಲ್ಲವೂ ಹೆಂಗಸಿಗೆ ತಲೆಬಾಗುತ್ತಿವೆ! (ಎಲ್ಲರೂ ನಗುತ್ತಿದ್ದಾರೆ.)
“ಜನರು ದುಡ್ಡು ಕಾಸು ಎಲ್ಲವನ್ನೂ ಹೆಂಡತಿಯರ ವಶಕ್ಕೆ ಒಪ್ಪಿಸಿಬಿಡುತ್ತಾರೆ. ಹೇಳಿಕೊಳ್ಳುತ್ತಾರೆ: ‘ಇದು ನನ್ನ ದುರದೃಷ್ಟ, ನನ್ನ ಕೈಯಲ್ಲಿ ಒಂದು ಬಿಡಿಗಾಸೂ ನಿಲ್ಲುವುದಿಲ್ಲ!’
“ಒಬ್ಬ ಒಂದು ಆಫೀಸಿಗೆ ಕೆಲಸಕ್ಕಾಗಿ ಹೋದ. ಅಲ್ಲಿ ಅನೇಕ ಕೆಲಸ ಖಾಲಿಯಿದ್ದರೂ ಮ್ಯಾನೇಜರ್ ಕೊಡಲೊಪ್ಪಲಿಲ್ಲ. ಒಬ್ಬ ಸ್ನೇಹಿತ ಆ ಅರ್ಜಿದಾರನಿಗೆ ಹೇಳಿದ: ‘ಹೋಗಿ ಹಿಡಿ ಗೋಲಾಪಿಯನ್ನು, ಕೆಲಸ ಸಿಕ್ಕಿಬಿಡುತ್ತದೆ.’ ಗೋಪಾಲಿ ಮ್ಯಾನೇಜರನ ಉಪಪತ್ನಿ.
“ಗಂಡಸರಿಗೆ ಗೊತ್ತಾಗುವುದಿಲ್ಲ ಹೆಂಗಸರು ತಮ್ಮನ್ನು ಎಷ್ಟು ಅಧೋಗತಿಗೆ ಎಳೆದು ಬಿಡುತ್ತಾರೆ ಎಂಬುದು. ಒಮ್ಮೆ ನಾನು ಕೋಟೆಗೆ ಗಾಡಿಯಲ್ಲಿ ಕುಳಿತುಕೊಂಡು ಹೋದೆ. ಉದ್ದಕ್ಕೂ ಅನಿಸಿತು, ನಾನು ಮಟ್ಟವಾದ ರಸ್ತೆಯಲ್ಲೆ ಹೋಗುತ್ತಿದ್ದೇನೆ ಎಂಬುದಾಗಿ. ಕೊನೆಗೆ ಅಲ್ಲಿಗೆ ಹೋಗಿ ನೋಡುತ್ತೇನೆ, ನಾಲ್ಕು ಅಂತಸ್ತಿನಷ್ಟು ಎತ್ತರವನ್ನು ಕೆಳಕ್ಕೆ ಇಳಿದು ಬಿಟ್ಟಿದ್ದೇನೆ. ಅದು ಒಂದು ಇಳಿಜಾರು ರಸ್ತೆ.”
“ಯಾರನ್ನು ಭೂತ ಮೆಟ್ಟಿಕೊಳ್ಳುತ್ತದೆಯೊ, ಆತನಿಗೆ ಗೊತ್ತಾಗುವುದಿಲ್ಲ ತನ್ನನ್ನು ಭೂತ ಮೆಟ್ಟಿಕೊಂಡಿದೆ ಎಂಬುದಾಗಿ. ಆತ ಭಾವಿಸುತ್ತಾನೆ, ತಾನು ನೆಟ್ಟಗಿದ್ದೇನೆ.”
ವಿಜಯ ನಗುತ್ತ: “ಮಂತ್ರವಾದಿ ದೊರೆತುಬಿಟ್ಟುದೇ ಆದರೆ ಅವನು ಆತನನ್ನು ನೆಟ್ಟಗೆ ಮಾಡಿಬಿಡುತ್ತಾನೆ.”
ಪರಮಹಂಸರು ಅದಕ್ಕೆ ವಿಶೇಷವಾಗೇನೂ ಉತ್ತರಕೊಡದೆ ಕೇವಲ ಹೇಳಿದರು: “ಅದು ಭಗವಂತನ ಇಚ್ಛೆಯಂತೆ.” ಮತ್ತೆ ಈಗ ಅವರು ಹೆಂಗಸರ ಸಂಬಂಧವಾಗಿ ಮಾತಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಯಾರನ್ನು ನಾನು ಕೇಳಿದರೂ ಆತ ಹೇಳುತ್ತಾನೆ: ‘ಹೌದು, ಮಹಾಶಯರೆ, ನನ್ನ ಹೆಂಡತಿ ಬಹಳ ಒಳ್ಳೆಯವಳು.’ ಒಬ್ಬನ ಬಾಯಲ್ಲೂ ಬರುವುದಿಲ್ಲ ತನ್ನ ಹೆಂಡತಿ ಕೆಟ್ಟವಳು ಎಂದು. (ಎಲ್ಲರೂ ನಗುತ್ತಿದ್ದಾರೆ) ಯಾರು ಕಾಮಕಾಂಚನಗಳ ಮಧ್ಯೆ ವಾಸಿಸುತ್ತಾರೊ ಅವರಿಗೆ ಮತ್ತು ಹತ್ತಿಕೊಂಡು ಏನೂ ಗೊತ್ತಾಗಲೊಲ್ಲದು. ಯಾರು ಚದುರಂಗದಾಟ ಆಡುತ್ತಾರೊ ಅವರಿಗೆ ಅನೇಕ ವೇಳೆ ಹೊಳೆಯದು ಯಾವ ರೀತಿಯಾಗಿ ಕಾಯಿ ನಡೆಸಬೇಕು ಎಂಬುದು. ಆದರೆ ಯಾರು ಹತ್ತಿರ ಕುಳಿತುಕೊಂಡು ಆಟ ನೋಡುತ್ತಿರುತ್ತಾರೊ ಅವರಿಗೆ ಅದು ಬಹುಮಟ್ಟಿಗೆ ಚೆನ್ನಾಗಿ ಹೊಳೆಯುತ್ತದೆ.
“ಹೆಂಗಸು ಮಾಯಾರೂಪಿಣಿ. ನಾರದ ರಾಮನನ್ನು ಸ್ತೋತ್ರಮಾಡುವಾಗ ಹೇಳಿದ್ದಾನೆ: ‘ಹೇ ರಾಮ, ಎಲ್ಲಾ ಪುರುಷರೂ ನಿನ್ನ ಅಂಶವೇ. ಎಲ್ಲಾ ಸ್ತ್ರೀಯರೂ ನಿನ್ನ ಮಾಯಾರೂಪಿಣಿ ಸೀತೆಯ ಅಂಶವೇ. ಇದೊಂದು ವಿನಾ ನನಗಿನ್ನಾವ ವರವೂ ಬೇಕಾಗಿಲ್ಲ. ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧಭಕ್ತಿಯುಂಟಾಗುವಂತೆಯೂ, ನಿನ್ನ ಜಗನ್ಮೋಹಿನೀ ಮಾಯೆಯಿಂದ ನಾನು ಮುಗ್ಧನಾಗದಿರುವಂತೆಯೂ ಅನುಗ್ರಹಿಸು.”
ಸುರೇಂದ್ರನ ತಮ್ಮ ಗಿರೀಂದ್ರ ಮತ್ತು ಆತನ ಅಣ್ಣನ ಮಕ್ಕಳು ನಗೇಂದ್ರನೇ ಮೊದಲಾದವರು ಬಂದಿದ್ದಾರೆ. ಗಿರೀಂದ್ರನಿಗೆ ಒಂದು ಆಫೀಸಿನಲ್ಲಿ ಕೆಲಸ ಸಿಕ್ಕಿದೆ. ನಗೇಂದ್ರ “ಲಾ” ಪರೀಕ್ಷೆಗೆ ಓದುತ್ತಿದ್ದಾನೆ.
ಶ್ರೀರಾಮಕೃಷ್ಣರು ಗಿರೀಂದ್ರ ಮೊದಲಾದವರಿಗೆ: “ನಿಮ್ಮ ಹಿತಚಿಂತನೆಯಿಂದ ನಿಮಗೆ ಹೇಳುತ್ತೇನೆ. ನೀವು ಸಂಸಾರದಲ್ಲಿ ಆಸಕ್ತರಾಗಬೇಡಿ. ನೋಡಿ, ರಾಖಾಲನಿಗೆ ಈಗ ಜ್ಞಾನ, ಅಜ್ಞಾನಗಳ ಬೋಧೆ ಉಂಟಾಗಿದೆ. ಸದಸದ್ವಿಚಾರವನ್ನೂ ಮಾಡಬಲ್ಲ. ಆದ್ದರಿಂದ ಈಗ ನಾನು ಆತನಿಗೆ ಹೇಳುತ್ತಿದ್ದೇನೆ: ‘ಮನೆಗೆ ಹೋಗು, ಒಮ್ಮೊಮ್ಮೆ ಬಂದು ನನ್ನೊಡನೆ ಒಂದೆರಡು ದಿನ ಇಲ್ಲಿ ಇದ್ದರೇ ಸಾಕು.’
“ನೀವು ಪರಸ್ಪರ ಸ್ನೇಹದಿಂದ ಬಾಳಿ ಬದುಕಿ. ಆಗ ಮಾತ್ರವೇ ನಿಮಗೆ ಶ್ರೇಯಸ್ಸುಂಟಾಗುವುದು; ಆನಂದದಿಂದಿರಬಲ್ಲಿರಿ. ನಾಟಕ ಚೆನ್ನಾಗಿ ಆಗಬೇಕಾದರೆ ನಟರೆಲ್ಲರೂ ಏಕಕಂಠದಿಂದ ಹಾಡಿದರೆ ತಾನೆ. ಆಗ ಕೇಳುವವರಿಗೂ ಆನಂದವುಂಟಾಗುತ್ತದೆ.
“ಭಗವಂತನಲ್ಲಿ ಬಹುಭಾಗ ಮನಸ್ಸನ್ನಿಟ್ಟು ಎಲ್ಲೋ ಅಲ್ಪ ಭಾಗ ಮನಸ್ಸಿನಿಂದ ಸಾಂಸಾರಿಕ ಕೆಲಸಕಾರ್ಯಗಳನ್ನು ಮಾಡಿ. ಸಾಧು ತನ್ನ ಮುಕ್ಕಾಲುಭಾಗ ಮನಸ್ಸನ್ನು ಭಗವಂತನಲ್ಲಿಟ್ಟು ಕಾಲುಭಾಗ ಮನಸ್ಸಿನಿಂದ ಉಳಿದ ಕೆಲಸಗಳನ್ನು ಮಾಡುತ್ತಾನೆ. ಆತ ಆಧ್ಯಾತ್ಮಿಕ ವಿಷಯವಾಗಿ ಬಹಳ ಎಚ್ಚೆತ್ತಿರುತ್ತಾನೆ. ಹಾವಿನ ಬಾಲವನ್ನೇನಾದರೂ ತುಳಿದುಬಿಟ್ಟಿದ್ದೇ ಆದರೆ, ಮತ್ತೆ ಅದರಿಂದ ರಕ್ಷಿಸಿಕೊಳ್ಳುವುದು ಬಹಳ ಕಷ್ಟ. ಅದರ ಬಾಲ ಬಹಳ ಶೀಘ್ರವೇದಿ. ಅದೇ ರೀತಿಯಾಗಿ ಸಾಧುವಿನ ಆಧ್ಯಾತ್ಮಜೀವನಕ್ಕೆ ಭಂಗ ಬಂತೆಂದರೆ ಆತ ಸುಮ್ಮನಿರುವುದಿಲ್ಲ. ಆತನ ಇಡೀ ಜೀವನವೇ ಅದನ್ನು ಎದುರಿಸುವುದು.”
ಪರಮಹಂಸರು ಈಗ ಸರ್ವೆ ಮರಗಳ ಕಡೆ ಹೋಗುತ್ತಿದ್ದಾರೆ. ಸಿಂಥಿಯ ಗೋಪಾಲನಿಗೆ ಹೇಳುತ್ತಿದ್ದಾರೆ, ತಮ್ಮ ಛತ್ರಿಯನ್ನು ಕೊಠಡಿಯಲ್ಲಿ ಇಟ್ಟುಬರುವಂತೆ. ಪಂಚವಟಿಯಲ್ಲಿ ಕೀರ್ತನೆ ನಡೆಯುವಂತೆ ವ್ಯವಸ್ಥೆಯಾಗಿದೆ. ಪರಮಹಂಸರು ಹಿಂದಿರುಗಿ ಬಂದು ಮತ್ತೆ ಪಂಚವಟಿಯಲ್ಲಿ ಕುಳಿತುಕೊಂಡಿದ್ದಾರೆ. ಕೀತರ್ನನಕಾರ್ತಿ ಹಾಡುತ್ತಿದ್ದಾಳೆ. ಭಕ್ತರಲ್ಲಿ ಕೆಲವರು ಕುಳಿತುಕೊಂಡಿದ್ದಾರೆ. ಇನ್ನು ಕೆಲವರು ನಿಂತುಕೊಂಡಿದ್ದಾರೆ. ಇದ್ದಕ್ಕಿದ್ದ ಹಾಗೆ ಬಿರುಮಳೆ ಆರಂಭವಾಯಿತು, ಪರಮಹಂಸರು, ಭಕ್ತರು, ಎಲ್ಲರೂ ಕೊಠಡಿಗೆ ಹಿಂದಿರುಗುತ್ತಿದ್ದಾರೆ-ಕೊಠಡಿಯಲ್ಲೇ ಕೀರ್ತನೆಯನ್ನು ಮುಂದುವರಿಸುವಂತೆ ಸ್ಥಿರಮಾಡಿಕೊಂಡು.
ಶ್ರೀರಾಮಕೃಷ್ಣರು ಸಿಂಥಿಯ ಗೋಪಾಲನಿಗೆ: “ಏನು, ಛತ್ರಿ ತಂದೆಯಾ?”
ಗೋಪಾಲ: “ಇಲ್ಲ. ಕೀರ್ತನೆ ಕೇಳುತ್ತ ಕೇಳುತ್ತ ಮರೆತೇಬಿಟ್ಟೆ.”
ಛತ್ರಿ ಪಂಚವಟಿಯಲ್ಲೇ ಬಿದ್ದಿದೆ. ಗೋಪಾಲ ಅಲ್ಲಿಗೆ ಓಡಿಹೋದ.
ಶ್ರೀರಾಮಕೃಷ್ಣರು: “ನಾನೂ ಸ್ವಲ್ಪ ಹಾಗೆಯೇ, ಆದರೆ ಇಷ್ಟು ದೂರದವರೆಗಲ್ಲ. ರಾಖಾಲನೂ ಇದೇ ಗುಂಪಿಗೆ ಸೇರಿದವನು. ಒಬ್ಬರು ನಿಮಂತ್ರಣ ಮಾಡಿದ್ದು ಹದಿಮೂರನೆ ತಾರೀಖು ಆಗಿದ್ದರೆ, ಹನ್ನೊಂದು ಅಂತಲೇ ಹೇಳಿಬಿಟ್ಟ. ಇನ್ನು ಗೋಪಾಲನೋ ಗೊತ್ತೇ ಇದೆಯಲ್ಲ ದನಕಾಯುವವ ಅಂತ!” (ಎಲ್ಲರೂ ನಗುತ್ತಿದ್ದಾರೆ.)
ಕೀರ್ತನಕಾರ್ತಿ ಈಗ ಗೌರಾಂಗನ ಸಂನ್ಯಾಸದ ಸಂಬಂಧವಾಗಿ ಹಾಡುತ್ತಿದ್ದಾಳೆ. ಆಗಾಗ ಆಶುಕವಿತೆ ಮಾಡುತ್ತಿದ್ದಾಳೆ: “ಆತ ನಾರಿಯನ್ನು ಕಣ್ಣೆತ್ತಿಯೂ ನೋಡನು; ಅದು ಸಂನ್ಯಾಸ ಧರ್ಮಕ್ಕೆ ವಿರುದ್ಧ.” “ಜೀವರಾಶಿಗಳ ದುಃಖವನ್ನು ನಿವಾರಿಸಲು ಕಾತರನಾಗಿರುವುದರಿಂದ, ನಾರಿಯ ಕಡೆ ಕಣ್ಣೆತ್ತಿಯೂ ನೋಡನು.” “ಇಲ್ಲದಿದ್ದರೆ ಗೌರಾಂಗನ ಅವತಾರ ವ್ಯರ್ಥವಾಗುತ್ತದೆ.”
ಪರಮಹಂಸರು ಗೌರಾಂಗನ ಸಂನ್ಯಾಸದ ಸಂಬಂಧವಾಗಿ ಕೇಳುತ್ತ ಕೇಳುತ್ತ ಇದ್ದ ಹಾಗೆ ಎದ್ದು ನಿಂತುಕೊಂಡು ಸಮಾಧಿಸ್ಥರಾಗಿಬಿಟ್ಟರು. ಈಗ ಭಕ್ತರೆಲ್ಲರೂ ಅವರ ಕೊರಳಿಗೆ ಹೂವಿನ ಮಾಲೆಗಳನ್ನು ಹಾಕುತ್ತಿದ್ದಾರೆ. ಭವನಾಥ, ರಾಖಾಲ ಪರಮಹಂಸರನ್ನು ಹಿಡಿದುಕೊಂಡು ನಿಂತುಕೊಂಡಿದ್ದಾರೆ-ಅವರು ಬೀಳದೆ ಇರಲಿ ಎಂದು. ವಿಜಯ, ಕೇದಾರ, ರಾಮ, ಮಾಸ್ಟರ್, ಮನಮೋಹನ, ಲಾಟು ಮೊದಲಾದವರು ಪರಮಹಂಸರ ಸುತ್ತಲೂ ಗುಂಪಾಗಿ ನಿಂತುಕೊಂಡಿದ್ದಾರೆ. ಈಗ ಸಾಕ್ಷಾತ್ ಗೌರಾಂಗನೇ ಬಂದು ಭಕ್ತರೊಡನೆ ಹರಿನಾಮ ಸಂಕೀರ್ತನೆ ಮಾಡುತ್ತಿದ್ದಾನೊ ಏನೊ ಎಂಬಂತೆ ಕಾಣಬರುತ್ತಿದೆ.
ಪರಮಹಂಸರು ಕ್ರಮಕ್ರಮೇಣ ಪ್ರಕೃತಿಸ್ಥರಾಗುತ್ತಿದ್ದಾರೆ. ಆಗಾಗ ಸಚ್ಚಿದಾನಂದ ಕೃಷ್ಣನೊಡನೆ ಮಾತುಕತೆ ಆಡುತ್ತಿದ್ದಾರೆ. ಕೆಲವು ವೇಳೆ ಸುಮ್ಮನೆ “ಕೃಷ್ಣ! ಕೃಷ್ಣ!” ಅನ್ನುತ್ತಲೇ ಇದ್ದಾರೆ. ಇನ್ನು ಕೆಲವು ವೇಳೆ ಅದೂ ಅವರಿಗೆ ಸಾಧ್ಯವಾಗುತ್ತಿಲ್ಲ. ಮತ್ತೆ ಈಗ ಹೇಳುತ್ತಿದ್ದಾರೆ: “ಕೃಷ್ಣ! ಕೃಷ್ಣ! ಕೃಷ್ಣ! ಕೃಷ್ಣ! ಸಚ್ಚಿದಾನಂದ!-ಏಕೆ, ಈಗ ಕೆಲವು ಕಾಲದಿಂದ ನಿನ್ನ ರೂಪ ಕಾಣಿಸಿಕೊಳ್ಳುತ್ತಿಲ್ಲವಲ್ಲ? ಈಗ ನಾನು ನಿನ್ನನ್ನು ಒಳಗೂ ಹೊರಗೂ ನೋಡುತ್ತಿದ್ದೇನೆ. ಜೀವಜಗತ್ತು, ಚತುರ್ವಿಂಶತಿತತ್ತ್ವ ಎಲ್ಲವೂ ನೀನೇ. ಮನಸ್ಸು, ಬುದ್ಧಿ, ಎಲ್ಲವೂ ನೀನೆ. ಗುರು ಪ್ರಣಾಮ ಸ್ತೋತ್ರದಲ್ಲಿ ಹೇಳಿದೆ: ‘ಚರಾಚರ ವಸ್ತುಗಳನ್ನೆಲ್ಲಾ ವ್ಯಾಪಿಸಿಕೊಂಡಿರುವ ಅಖಂಡ ಮಂಡಲಾಕಾರನಾದ ಯಾವ ಪರಬ್ರಹ್ಮನನ್ನು ಯಾರ ಕೃಪೆಯಿಂದ ನಾನು ಸಾಕ್ಷತ್ಕಾರಮಾಡಿಕೊಂಡೆನೊ ಅಂಥ ಗುರುವಿಗೆ ನನ್ನ ಪ್ರಣಾಮ.’
“ನೀನೇ ಅಖಂಡ. ಮತ್ತೆ ನೀನೇ ಚರಾಚರ ವಸ್ತುಗಳನ್ನೆಲ್ಲ ವ್ಯಾಪಿಸಿಕೊಂಡಿದ್ದೀಯೆ. ನೀನೇ ಆಧಾರ. ನೀನೆ ಆಧೇಯ. ಓ ಪ್ರಾಣಕೃಷ್ಣ! ಮನಕೃಷ್ಣ! ಬುದ್ಧಿಕೃಷ್ಣ! ಆತ್ಮಕೃಷ್ಣ! ಪ್ರಾಣ ಹೇ ಗೋವಿಂದ ಮಮಜೀವನ!”
ವಿಜಯನೂ ಭಾವಾವಿಷ್ಟನಾಗಿದ್ದಾನೆ. ಪರಮಹಂಸರು ಹೇಳುತ್ತಿದ್ದಾರೆ: “ಏನಪ್ಪ, ನೀನೂ ಪ್ರಜ್ಞೆತಪ್ಪಿದವನಾಗಿಬಿಟ್ಟಿಯಾ?” ವಿಜಯ ವಿನಯದಿಂದ ಹೇಳಿದ: “ಏನಿಲ್ಲ.”
ಕೀರ್ತನೆಕಾರ್ತಿ ಮತ್ತೆ ಹಾಡುತ್ತಿದ್ದಾಳೆ-ಅಂಧಪ್ರೇಮದ ಸಂಬಂಧವಾಗಿ. ಆಕೆ ಆಶುಕವಿತೆಯನ್ನು ಮಾಡಿದಳೊ ಇಲ್ಲವೊ:
ಓ ನನ್ನ ಪ್ರಾಣವಧು, ನನ್ನ ಹೃದಯ ಮಂದಿರದಿ
ನಿನ್ನನಿರಿಸುತಲಿದ್ದೆ ಹಗಲು ಇರುಳೂ:
ಪರಮಹಂಸರು ಮತ್ತೆ ಸಮಾಧಿಸ್ಥರಾಗಿಬಿಟ್ಟರು. ಅವರ ಕೀಲು ತಪ್ಪಿದ ಕೈ ಭವನಾಥನ ಹೆಗಲ ಮೇಲೆ ಕುಳಿತಿದೆ.
ಪರಮಹಂಸರಿಗೆ ಈಗ ಕಿಂಚಿತ್ಬಾಹ್ಯಪ್ರಜ್ಞೆ ಬಂದಿದೆ, ಕೀರ್ತನಕಾರ್ತಿ ಮತ್ತೆ ಆಶುಕವಿತೆ ಮಾಡುತ್ತಿದ್ದಾಳೆ:
ನಿನಗಾಗಿ ಎಲ್ಲವನು ತ್ಯಾಗಮಾಡಿದ್ದರೂ
ಇವನೇಕೆ ಇನಿತೊಂದು ನೋಯಬೇಕು?
ಪರಮಹಂಸರು ಕೀರ್ತನಕಾರೆಗೆ ನಮಸ್ಕಾರಮಾಡಿ ಕೀರ್ತನೆ ಕೇಳಲು ಕುಳಿತುಕೊಂಡರು. ಆಗಾಗ ಭಾವಾವಿಷ್ಟರಾಗುತ್ತಿದ್ದಾರೆ. ಕೀರ್ತನಕಾರ್ತಿ ಹಾಡುವುದನ್ನು ನಿಲ್ಲಿಸಿದಳು. ಪರಮಹಂಸರು ಈಗ ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ.
ಶ್ರೀರಾಮಕೃಷ್ಣರು ವಿಜಯ ಮೊದಲಾದವರಿಗೆ: “ಯಾವುದಕ್ಕೆ ಪ್ರೇಮ ಅಂತ ಹೇಳುತ್ತಾರೆ ಗೊತ್ತೆ? ಚೈತನ್ಯದೇವನಿಗೆ ಉಂಟಾಗಿತ್ತಲ್ಲ ಅದಕ್ಕೆ. ಯಾರಿಗೆ ಭಗವಂತನಲ್ಲಿ ಪ್ರೇಮ ಉಂಟಾಗುವುದೊ ಅವರಿಗೆ ಈ ಜಗತ್ತೆಂಬುದು ಇದೆ ಎಂಬುದೇ ಮರೆತುಹೋಗಿಬಿಡುತ್ತದೆ. ನೋಡಿ, ಇಷ್ಟು ಪ್ರಿಯವಾದ ಈ ದೇಹ, ಇದೂ ಮರೆತೇಹೋಗಿಬಿಡುತ್ತದೆ.”
ಪ್ರೇಮ ಉಂಟಾದರೆ ಏನವಸ್ಥೆ ಬರುತ್ತದೆ ಎಂಬುದನ್ನು ಪರಮಹಂಸರು ಒಂದು ಹಾಡು ಹಾಡಿ ತಿಳಿಸುತ್ತಿದ್ದಾರೆ:
ಓ, ಎಂದಿಗೋ ಇನ್ನೆಂದಿಗೋ,
ಎದೆಯೊಳೊಲವಿನ ಕಿಡಿಯು ಜ್ವಲಿಸುವ
ದಿವ್ಯ ಶುಭದಿನವೆಂದಿಗೋ!…..
ಪರಮಹಂಸರು ನರ್ತಿಸುತ್ತಿದ್ದಾರೆ. ಅವರ ಜೊತೆಯಲ್ಲಿ ಭಕ್ತರೂ ನರ್ತಿಸುತ್ತಿದ್ದಾರೆ. ಪರಮಹಂಸರು ಮಾಸ್ಟರ ಕೈ ಹಿಡಿದೆಳೆದು ಆ ಗುಂಪಿನ ಜೊತೆಗೆ ದಬ್ಬಿದರು. ನರ್ತಿಸುತ್ತ ನರ್ತಿಸುತ್ತ ಇದ್ದ ಹಾಗೆ ಪರಮಹಂಸರು ಮತ್ತೆ ಸಮಾಧಿಸ್ಥರಾಗಿಬಿಟ್ಟರು. ಚಿತ್ರದ ಗೊಂಬೆಯಂತೆ ನಿಂತುಕೊಂಡಿದ್ದಾರೆ. ಅವರನ್ನು ಪ್ರಕೃತಿಸ್ಥರನ್ನಾಗಿ ಮಾಡಲು ಕೇದಾರ ಈ ಶ್ಲೋಕವನ್ನು ಹೇಳಲಾರಂಭಿಸಿದ:
ಹೃದಯಕಮಲಮಧ್ಯೇ ನಿರ್ವಿಶೇಷಂ ನಿರೀಹಂ,
ಹರಿಹರ ವಿಧಿವೇದ್ಯಂ ಯೋಗಿಭಿಃ ಧ್ಯಾನಗಮ್ಯಮ್ ॥……..
ಪರಮಹಂಸರು ಕ್ರಮೇಣ ಪ್ರಕೃತಿಸ್ಥರಾಗುತ್ತಿದ್ದಾರೆ. ಈಗ ಕೆಳಗೆ ಕುಳಿತುಕೊಂಡು ಭಗವನ್ನಾಮ ಉಚ್ಚಾರ ಮಾಡುತ್ತಿದ್ದಾರೆ: “ಓಂ ಸಚ್ಚಿದಾನಂದ! ಗೋವಿಂದ! ಗೋವಿಂದ! ಗೋವಿಂದ! ಯೋಗಮಾಯಾ! ಭಾಗವತ-ಭಕ್ತ-ಭಗವಾನ್!”
ಪರಮಹಂಸರು ಕೀರ್ತನೆ ನಡೆದ ಸ್ಥಳದಿಂದ ಧೂಳಿಯನ್ನು ತೆಗೆದು ತಮ್ಮ ಹಣೆಗೆ ಹಚ್ಚಿಕೊಳ್ಳುತ್ತಿದ್ದಾರೆ.
ಈಗ ಪರಮಹಂಸರು ತಮ್ಮ ಕೊಠಡಿಯ ಅರ್ಧಚಂದ್ರಾಕೃತಿಯ ವರಾಂಡದಲ್ಲಿ ಕುಳಿತಿದ್ದಾರೆ. ಅವರ ಬಳಿಯಲ್ಲಿ ವಿಜಯ, ಭವನಾಥ, ಮಾಸ್ಟರ್, ಕೇದಾರ ಮೊದಲಾದವರು ಕುಳಿತಿದ್ದಾರೆ. ಪರಮಹಂಸರು ಆಗಾಗ ಹೇಳುತ್ತಿದ್ದಾರೆ: “ಹಾ, ಕೃಷ್ಣಚೈತನ್ಯ!” ಎಂದು.
ಶ್ರೀರಾಮಕೃಷ್ಣರು ವಿಜಯ ಮೊದಲಾದವರಿಗೆ : “ಕೊಠಡಿಯಲ್ಲಿ ಇಂದು ಬಹಳವಾಗಿ ಭಗವನ್ನಾಮ ನಡೆಯಿತು. ಅದಕ್ಕಾಗಿ ವಾತಾವರಣ ಭಗವನ್ಮಯವಾಗಿಬಿಟ್ಟಿದೆ.”
ಭವನಾಥ “ಜೊತೆಗೆ ಇಂದು ಸಂನ್ಯಾಸದ ವಿಷಯ ಬೇರೆ.”
ಶ್ರೀರಾಮಕೃಷ್ಣರು: “ಅಹಹ, ಎಂಥ ಆದರ್ಶ!” ಹೀಗೆಂದು ಹೇಳಿ ಗೌರಾಂಗ ಮತ್ತು ನಿತಾಯಿಯ ಸಂಬಂಧವಾಗಿ ಹಾಡಲಾರಂಭಿಸಿದ್ದಾರೆ:
ಕುಂಭ ಕುಂಭಗಳಲಿ ತುಂಬಿ
ಗೌರಾಂಗನು ಪ್ರೇಮಸುಧೆಯ
ಕಡೆಯಿಲ್ಲದೆ ಸುರಿವನು.
ನಿತ್ಯಾನಂದನೆಲ್ಲರನೂ
ಅಕ್ಕರೆಯಲಿ ಕರೆವನು.
ಶಾಂತಿಪುರವು ಪ್ರೇಮಪೂರ-
ದಲ್ಲಿ ಇದೋ ಮುಳುಗಿತು
ನದಿಯಾ 2 ವೂ ಕೊಚ್ಚಿತು!
ಶ್ರೀರಾಮಕೃಷ್ಣರು ವಿಜಯ ಮೊದಲಾದವರಿಗೆ: “ಕೀರ್ತನಕಾರ್ತಿ ಸರಿಯಾಗಿಯೇ ಹೇಳಿದಳು: ‘ಸಂನ್ಯಾಸಿ ಹೆಂಗಸನ್ನು ಕಣ್ಣೆತ್ತಿಯೂ ನೋಡಕೂಡದು.’ ಇದು ಸಂನ್ಯಾಸಿಯ ಧರ್ಮ, ಎಂಥ ಮಹತ್ತಾದ ಆದರ್ಶ!”
ವಿಜಯ: “ಹೌದು, ನಿಶ್ಚಯವಾಗಿ.”
ಶ್ರೀರಾಮಕೃಷ್ಣರು: “ಸಂನ್ಯಾಸಿಯನ್ನು ನೋಡಿ ತಾನೆ ಉಳಿದವರು ಸನ್ಮಾರ್ಗಿಗಳಾಗುವುದು. ಅದಕ್ಕಾಗಿ ಆತನಿಗೆ ಅಷ್ಟೊಂದು ಕಠಿಣ ನಿಯಮ. ಸಂನ್ಯಾಸಿ ಹೆಂಗಸಿನ ಭಾವ ಚಿತ್ರವನ್ನೂ ನೋಡಕೂಡದು; ಎಂಥ ಕಠಿಣ ನಿಯಮ! ಕರಿ ಆಡನ್ನು ಭಗವತಿಗೆ ಬಲಿಕೊಡಬೇಕು ಎಂಬ ನಿಯಮವಿದೆ-ಆದರೆ ಕಿಂಚಿತ್ಗಾಯವಿದ್ದರೂ ಅದು ಅನರ್ಹವಾಗಿ ಬಿಡುತ್ತದೆ. ಸಂನ್ಯಾಸಿ ಹೆಂಗಸಿನ ಸಹವಾಸವನ್ನು ಮಾಡಕೂಡದು ಎಂಬುದಷ್ಟೇ ಅಲ್ಲ, ಆತ ಆಕೆಯೊಡನೆ ಮಾತುಕತೆಯನ್ನೂ ಆಡಕೂಡದು.”
ವಿಜಯ: “ಚಿಕ್ಕ ಹರಿದಾಸ ಭಕ್ತೆಯರೊಡನೆ ಮಾತುಕತೆ ಆಡಿದ. ಅದನ್ನು ನೋಡಿ ಚೈತನ್ಯದೇವ ಆತನನ್ನು ತ್ಯಜಿಸಿಬಿಟ್ಟ.”
ಶ್ರೀರಾಮಕೃಷ್ಣರು: “ಕಾಮಕಾಂಚನಗಳಲ್ಲಿ ಆಸಕ್ತನಾದ ಸಂನ್ಯಾಸಿ ದುರ್ಗಂಧದಿಂದ ಕೂಡಿದ ಸುಂದರಿಗೆ ಸರಿಸಮಾನ. ಆ ದುರ್ಗಂಧ ಆಕೆಯ ಸೌಂದರ್ಯವನ್ನು ವ್ಯರ್ಥವಾದುದನ್ನಾಗಿ ಮಾಡುತ್ತದೆ.
“ಒಮ್ಮೆ ಒಬ್ಬ ಮಾರ್ವಾಡಿ ನನ್ನ ಹೆಸರಿನಲ್ಲಿ ಹಣ ಇಡಲು ಪ್ರಯತ್ನಿಸಿದ. ಮಥುರಬಾಬು ಕೂಡ ನನ್ನ ಹೆಸರಿನಲ್ಲಿ ಒಂದು ಭೂಮಿಯನ್ನು ಮಾನ್ಯವಾಗಿ ಬಿಡಲುಯತ್ನಿಸಿದ. ಯಾವುದಕ್ಕೂ ನಾನು ಒಪ್ಪಲಿಲ್ಲ.”
“ಸಂನ್ಯಾಸಿಗೆ ಬಹಳ ಕಠಿಣ ನಿಯಮ. ಸಂನ್ಯಾಸಿಯ ವೇಷ ಹಾಕಿಕೊಂಡರೆ ಸಂನ್ಯಾಸಿಯಂತೆಯೇ ವರ್ತಿಸಬೇಕು. ನೀನು ನಾಟಕದಲ್ಲಿ ನೋಡಿಲ್ಲವೇನು, ದೊರೆಯ ಪಾತ್ರ ವಹಿಸಿದವನು ದೊರೆಯಂತೆಯೇ, ಮಂತ್ರಿಯ ಪಾತ್ರ ವಹಿಸಿದವನು ಮಂತ್ರಿಯಂತೆಯೇ ವರ್ತಿಸುವುದನ್ನು?
“ಆದರೆ ಪರಮಹಂಸಾವಸ್ಥೆ ಬಂದಾಗ ಬಾಲಕನ ಅವಸ್ಥೆ ಬಂದುಬಿಡುತ್ತದೆ. ಐದು ವರ್ಷದ ಬಾಲಕನಿಗೆ ಸ್ತ್ರೀಪುರುಷ ಜ್ಞಾನ ಇರದು. ಆದರೂ ಲೋಕಶಿಕ್ಷಣಕ್ಕಾಗಿ ಆತ ಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ.”
ಕೇಶವಸೇನ ಕಾಮಕಾಂಚನಗಳ ಮಧ್ಯೆ ಇದ್ದುದರಿಂದ ಲೋಕಶಿಕ್ಷಣಕಾರ್ಯಕ್ಕೆ ತಡೆ ಬಂತು ಎಂಬ ಮಾತನ್ನೆತ್ತಿ ಪರಮಹಂಸರು ವಿಜಯನಿಗೆ ಹೇಳುತ್ತಿದ್ದಾರೆ: “ಆತ-ಅರ್ಥವಾಯಿತೆ?”
ವಿಜಯ: “ಹೌದು, ಅರ್ಥವಾಯಿತು.”
ಶ್ರೀರಾಮಕೃಷ್ಣರು: “ರಾಮ, ಕಾಮ ಎಂಬ ಎರಡು ಕಣ್ಣುಗಳನ್ನೂ ಕಾಯುತ್ತಿದ್ದುದರಿಂದ ಉನ್ನತವಾದುದೇನನ್ನೂ ಸಾಧಿಸಲಾಗಲಿಲ್ಲ.”
ವಿಜಯ: “ಚೈತನ್ಯದೇವ ನಿತ್ಯಾನಂದನಿಗೆ ಹೇಳಿದ: “ನಿತಾಯಿ, ನಾನು ಸಂಸಾರವನ್ನು ತ್ಯಜಿಸದೆ ಇದ್ದರೆ, ಜನರಿಗೆ ಶ್ರೇಯಸ್ಸನ್ನು ತರಲಾಗುವುದಿಲ್ಲ. ಎಲ್ಲರೂ ನನ್ನನ್ನೇ ಮೇಲ್ಪಂಕ್ತಿಯನ್ನಾಗಿ ಮಾಡಿಕೊಂಡು ಗೃಹಸ್ಥಜೀವನ ನಡೆಸಲು ಇಚ್ಛೆಪಟ್ಟುಬಿಡುವರು. ಕಾಮಕಾಂಚನಗಳನ್ನು ತ್ಯಜಿಸಿ ಹರಿಪಾದಪದ್ಮಗಳಲ್ಲಿ ತಮ್ಮ ಇಡೀ ಮನಸ್ಸನ್ನು ಇಡಲು ಯಾರೂ ಪ್ರಯತ್ನಿಸರು.”
ಶ್ರೀರಾಮಕೃಷ್ಣರು: “ಹೌದು, ಚೈತನ್ಯದೇವ ಲೋಕಶಿಕ್ಷಣಕ್ಕಾಗಿಯೇ ಸಂಸಾರವನ್ನು ತ್ಯಜಿಸಿದ್ದು.”
“ಸಾಧು, ಸಂನ್ಯಾಸಿ ತನ್ನ ಸ್ವಂತ ಶ್ರೇಯಸ್ಸಿಗಾಗಿಯೇ ಕಾಮಕಾಂಚನಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಆತ ನಿರ್ಲಿಪ್ತನಾಗಿದ್ದರೂ, ಲೋಕಶಿಕ್ಷಣಕ್ಕಾಗಿ ಕಾಮಕಾಂಚನಗಳನ್ನು ಹತ್ತಿರ ಇಟ್ಟುಕೊಳ್ಳಕೂಡದು. ಸಂನ್ಯಾಸಿ ಎಂದರೆ ಸರ್ವಸಂಗಪರಿತ್ಯಾಗಿ. ಜಗದ್ಗುರು. ಆತನನ್ನು ನೋಡಿ ತಾನೆ ಜನ ಆಧ್ಯಾತ್ಮಿಕವಾಗಿ ಎಚ್ಚೆತ್ತುಕೊಳ್ಳುವುದು.”
ಇನ್ನೇನು ಮುಸ್ಸಂಜೆಯಾಗುವುದರಲ್ಲಿದೆ. ಭಕ್ತರೆಲ್ಲ ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಳ್ಳುತ್ತಿದ್ದಾರೆ.
1. ಇದು ಒಂದು ಕಥೆ : ಒಂದು ಕಡೆ ಒಬ್ಬ ಸಂನ್ಯಾಸಿ ಇದ್ದ. ಆತನಲ್ಲಿದ್ದ ಸ್ವತ್ತು ಕೇವಲ ಎರಡು ಜೊತೆ ಕೌಪೀನ ಮಾತ್ರ. ಒಂದು ದಿನ ಒಂದು ಇಲಿ ಆತನ ಒಂದು ಕೌಪೀನವನ್ನು ಕಡಿದುಹಾಕಿತು.ಕೌಪೀನಗಳನ್ನು ಇಲಿಗಳ ಹಾವಳಿಯಿಂದ ಉಳಿಸಿಕೊಳ್ಳಲು ಆತ ಒಂದು ಬೆಕ್ಕನ್ನು ಸಾಕಿದ. ಆ ಬೆಕ್ಕಿಗೆ ಹಾಲು ಒದಗಿಸಲು ಒಂದು ಹಸುವನ್ನು ಸಾಕಬೇಕಾಗಿ ಬಂತು. ಹಸುವನ್ನು ನೋಡಿಕೊಳ್ಳಲು ಒಬ್ಬ ಸೇವಕನನ್ನುನೇಮಿಸಬೇಕಾಯಿತು. ಕ್ರಮೇಣ ಹಸುಗಳ ಸಂಖ್ಯೆ ಬೆಳೆಯಿತು. ಅವುಗಳ ಮೇವಿಗಾಗಿ ಹುಲ್ಲುಗಾವಲು, ಗದ್ದೆ, ಹೊಲ ಇವನ್ನು ಕೊಂಡುಕೊಳ್ಳಬೇಕಾಯಿತು. ಅವನ್ನು ನೋಡಿಕೊಳ್ಳಲು ಸೇವಕರ ಸಂಖ್ಯೆಯನ್ನೂ ಹೆಚ್ಚಿಸಬೇಕಾಯಿತು. ಕೊನೆಗೆ ಆತ ಒಬ್ಬ ಜಮೀನುದಾರನ ಹಾಗೆ ಆದ. ಆಳುಕಾಳು ಎಲ್ಲರನ್ನೂ ನೋಡಿಕೊಳ್ಳಲು ಆತ ವಿಧಿಯಿಲ್ಲದೆ ಒಬ್ಬಳು ಹೆಂಡತಿಯನ್ನೂ ಕಟ್ಟಿಕೊಳ್ಳಬೇಕಾಗಿ ಬಂತು. ಒಂದು ದಿನ ಆತನ ಸ್ನೇಹಿತ, ಇನ್ನೊಬ್ಬ ಸಂನ್ಯಾಸಿ, ಬಂದು ನೋಡಿ ಆತನ ಈ ಪರಿವರ್ತನೆಗಾಗಿ ಆಶ್ಚರ್ಯಪಟ್ಟ. ಕಾರಣ ಕೇಳಲಾಗಿ ಆತ ಹೇಳಿದ: “ಇದೆಲ್ಲ ಒಂದು ತುಂಡು ಕೌಪೀನಕ್ಕಾಗಿ !”
2. ಗೌರಾಂಗನ ಜನ್ಮಸ್ಥಳ.