೫ನೆ ಏಪ್ರಿಲ್ ೧೮೮೪, ಚೈತ್ರ ಶುಕ್ಲ ನವಮಿ, ಶನಿವಾರ
ಮಾಸ್ಟರ್ ದಕ್ಷಿಣೇಶ್ವರದ ದೇವಾಲಯಕ್ಕೆ ಬಂದಾಗ ಬೆಳಗಿನ ಎಂಟು ಗಂಟೆ. ಪರಮಹಂಸರು ತಮ್ಮ ಕೊಠಡಿಯಲ್ಲಿ ನಗುಮುಖರಾಗಿ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ನೆಲದ ಮೇಲೆ ಕೆಲವು ಮಂದಿ ಭಕ್ತರು ಕುಳಿತುಕೊಂಡಿದ್ದಾರೆ. ಅವರ ಮಧ್ಯದಲ್ಲಿ ಪ್ರಾಣಕೃಷ್ಣ ಮುಖ್ಯೋಪಾಧ್ಯಾಯನೂ ಕುಳಿತಿದ್ದಾನೆ.
ಪ್ರಾಣಕೃಷ್ಣ ಒಂದು ದೊಡ್ಡ ಮನೆತನಕ್ಕೆ ಸೇರಿದವನು. ಕಲ್ಕತ್ತದ ಉತ್ತರ ಭಾಗದ ಶ್ಯಾಮಪುಕುರಿನಲ್ಲಿ ಮನೆ ಇದೆ. ಒಂದು ಇಂಗ್ಲೀಷ್ ಕಂಪನಿನಲ್ಲಿ ದೊಡ್ಡದೊಂದು ಹುದ್ದೆ ದೊರಕಿದೆ. ಗೃಹಸ್ಥನಾದರೂ ವೇದಾಂತಚರ್ಚೆ ಕಂಡರೆ ಬಹಳ ಪ್ರೀತಿ. ಪರಮಹಂಸರನ್ನು ಬಹಳವಾಗಿ ಪ್ರೀತಿಸುತ್ತಿದ್ದಾನೆ. ಆಗಾಗ ಬಂದು ಅವರ ದರ್ಶನ ಮಾಡಿ ಹೋಗುತ್ತಿದ್ದಾನೆ. ಒಮ್ಮೆ ಪರಮಹಂಸರನ್ನು ತನ್ನ ಮನೆಗೂ ಕರೆದುಕೊಂಡು ಹೋಗಿ ಒಂದು ದೊಡ್ಡ ಮಹೋತ್ಸವವನ್ನೇ ಏರ್ಪಡಿಸಿದ್ದ. ಪ್ರತಿದಿನವೂ ಪ್ರಾತಃಕಾಲ ಗಂಗಾಸ್ನಾನ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದಾನೆ. ದೋಣಿ ಅನುಕೂಲವಾಗಿ ದೊರೆತಾಗಲೆಲ್ಲಾ ನೇರವಾಗಿ ದಕ್ಷಿಣೇಶ್ವರಕ್ಕೆ ಬಂದುಬಿಡುತ್ತಿದ್ದಾನೆ.
ಇಂದು ಬೆಳಿಗ್ಗೆ ಪ್ರಾಣಕೃಷ್ಣ ಒಂದು ದೋಣಿಯನ್ನು ಬಾಡಿಗೆಗೆ ತೆಗೆದುಕೊಂಡು, ತನ್ನ ಜೊತೆಯಲ್ಲಿ ಮಾಸ್ಟರನ್ನೂ ದಕ್ಷಿಣೇಶ್ವರಕ್ಕೆ ಕರೆದುಕೊಂಡು ಹೋಗಲು ಆತನನ್ನು ಕರೆದ. ದೋಣಿ ದಡ ಬಿಟ್ಟು ಸ್ವಲ್ಪ ದೂರ ಮುಂದುವರಿಯುವುದರೊಳಗೇ ನದಿಯಲ್ಲಿ ಅಲೆ ಏಳಲಾರಂಭಿಸಿದುವು. ಮಾಸ್ಟರ್ ಹೆದರಿ ಆತನನ್ನು ಕೇಳಿಕೊಳ್ಳಲಾರಂಭಿಸಿದ, ತನ್ನನ್ನು ಮತ್ತೆ ದಡಕ್ಕೆ ತಲುಪಿಸಿಬಿಡಬೇಕೆಂದು. ಆತ ಎಷ್ಟೇ ಧೈರ್ಯಕೊಟ್ಟರೂ ಮಾಸ್ಟರ್ ಮಾತ್ರ ಕೇಳಲಿಲ್ಲ. ಹೇಳುತ್ತಲೇ ಇದ್ದ: “ನನ್ನನ್ನು ಇಳಿಸಿಬಿಡಿ, ನನ್ನನ್ನು ಇಳಿಸಿಬಿಡಿ. ನಾನು ನಡೆದುಬರುತ್ತೇನೆ, ನಾನು ನಡೆದುಬರುತ್ತೇನೆ.” ವಿಧಿಯಿಲ್ಲದೆ ಪ್ರಾಣಕೃಷ್ಣ ಆತನನ್ನು ದಡಕ್ಕೆ ತಲುಪಿಸಿ ತಾನು ದಕ್ಷಿಣೇಶ್ವರಕ್ಕೆ ಮುಂದುವರಿದ. ಮಾಸ್ಟರ್ ನಡೆದು ದಕ್ಷಿಣೇಶ್ವರವನ್ನು ಮುಟ್ಟಿದಾಗ ಪ್ರಾಣಕೃಷ್ಣ ಆಗಲೇ ದಕ್ಷಿಣೇಶ್ವರವನ್ನು ತಲುಪಿ ಪರಮಹಂಸರೊಡನೆಮಾತುಕತೆಯಾಡುತ್ತಿದ್ದುದು ಆತನ ಕಣ್ಣಿಗೆ ಬಿತ್ತು.
ಶ್ರೀರಾಮಕೃಷ್ಣರು ಪ್ರಾಣಕೃಷ್ಣನಿಗೆ: “ಆದರೆ ಭಗವಂತ ಮನುಷ್ಯನಲ್ಲಿ ವಿಶೇಷವಾಗಿ ವ್ಯಕ್ತನಾಗಿದ್ದಾನೆ. ನೀನು ಕೇಳಬಹುದು: ‘ಯಾವ ಮನುಷ್ಯನಲ್ಲಿ ಜೀವಿಗಳ ಹಸಿವು ಬಾಯಾರಿಕೆ ಇವೇ ಮೊದಲಾದ ಧರ್ಮಗಳು ಇವೆಯೋ, ಬಹುಶಃ ಯಾರು ರೋಗ ಶೋಕಗಳಿಂದಲೂ ನರಳುತ್ತಾನೋ ಅಂಥವನನ್ನು ಅವತಾರಪುರುಷ ಎನ್ನುವ ಬಗೆ ಹೇಗೆ?’ ಅದಕ್ಕೆ ಉತ್ತರ: ‘ಪಂಚಭೂತಗಳ ಬಲೆಗೆ ಸಿಕ್ಕು ಬ್ರಹ್ಮನೂ ನರಳುತ್ತಿದ್ದಾನೆ’ ಎಂಬುದೇ.
“ಗೊತ್ತಿಲ್ಲವೆ ನಿನಗೆ, ರಾಮಚಂದ್ರ ಸೀತೆಗಾಗಿ ಶೋಕಾಕ್ರಾಂತನಾಗಿ ಅಳುತ್ತಿದ್ದುದು? ಮತ್ತೆ ನೋಡು ಭಗವಂತ ಹಿರಣ್ಯಾಕ್ಷನನ್ನು ವಧಿಸಲು ವರಾಹ ಅವತಾರ ಎತ್ತಿದ್ದುದನ್ನು. ಹಿರಣ್ಯಾಕ್ಷನ ವಧೆಯೇನೊ ಆಯಿತು, ಆದರೆ ನಾರಾಯಣ ಮಾತ್ರ ಸ್ವಧಾಮಕ್ಕೆ ಹಿಂದಿರುಗಲು ಇಚ್ಛೆಪಡಲಿಲ್ಲ. ವರಾಹರೂಪಿನಿಂದಲೇ ಆನಂದದಿಂದಿರಲಾರಂಭಿಸಿದ. ಅನೇಕ ಮರಿಗಳಿಗೆ ಜನ್ಮ ಕೊಟ್ಟು ಬಿಟ್ಟು ಅವುಗಳೊಡನೆ ಸಂತೋಷದಿಂದ ಇರಲಾರಂಭಿಸಿದ. ದೇವತೆಗಳು ತಮ್ಮೊಳಗೆ ತಾವೇ ಮಾತನಾಡಿಕೊಳ್ಳಲಾರಂಭಿಸಿದರು: ‘ಏನು ಮಾಡೋಣ? ಭಗವಂತ ಹಿಂದಿರುಗಲಿಚ್ಛಿಸುತ್ತಿಲ್ಲವಲ್ಲ!’ ಬಳಿಕ ಎಲ್ಲರೂ ಶಿವನನ್ನು ಸಮೀಪಿಸಿ ವಿಷಯ ಏನು ಎಂಬುದನ್ನು ತಿಳಿಸಿದರು. ಶಿವ ಹೋಗಿ ಆತನಿಗೆ ಬೇಕಾದಷ್ಟು ಹೇಳಿದ. ಆದರೆ ಅದೊಂದನ್ನೂ ಕಿವಿಗೆ ಹಾಕಿಕೊಳ್ಳದೆ ಆತ ತನ್ನ ಮರಿಗಳಿಗೆ ಸ್ತನಕೊಡಲಾರಂಭಿಸಿದ. (ಎಲ್ಲರೂ ನಗುತ್ತಿದ್ದಾರೆ.) ಆಗ ಶಿವ ತನ್ನ ತ್ರಿಶೂಲದಿಂದ ವರಾಹಶರೀರವನ್ನು ಸೀಳಿಹಾಕಿದ. ಬಳಿಕ ನಾರಾಯಣ ಆ ಶರೀರದಿಂದ ಹೊರಕ್ಕೆ ಬಂದು ‘ಹ! ಹ! ಹ!’ ಅಂತ ನಗುತ್ತ ತನ್ನ ಸ್ವಧಾಮಕ್ಕೆ ಹಿಂದಿರುಗಿದ.”
ಪ್ರಾಣಕೃಷ್ಣ ಪರಮಹಂಸರಿಗೆ: “ಮಹಾಶಯರೆ, ಅನಾಹತ ಶಬ್ದ ಎಂಬುದು ಏನು?”
ಶ್ರೀರಾಮಕೃಷ್ಣರು: “ಅನಾಹತ ಶಬ್ದ ತಾನಾಗೇ ಸರ್ವದಾ ಆಗುತ್ತಿರುತ್ತದೆ. ಅದು ಪ್ರಣವ ಧ್ವನಿ. ಪರಬ್ರಹ್ಮನಿಂದ ಬರುತ್ತಿದೆ, ಯೋಗಿಗಳು ಕೇಳಬಲ್ಲರು. ವಿಷಯಾಸಕ್ತ ಜೀವಕ್ಕೆ ಅದನ್ನು ಕೇಳಲು ಸಾಧ್ಯವಿಲ್ಲ. ಯೋಗಿಗೆ ಗೊತ್ತಾಗುತ್ತದೆ ಅದು ತನ್ನ ನಾಭಿಯಿಂದಲೂ ಮತ್ತು ಕ್ಷೀರಸಾಗರಶಾಯಿಯಾದ ಪರಬ್ರಹ್ಮನಿಂದಲೂ ಹೊರಡುತ್ತಿದೆ ಎಂಬುದಾಗಿ.”
ಪ್ರಾಣಕೃಷ್ಣ: “ಮಹಾಶಯರೆ, ಪರಲೋಕದ ಸ್ವರೂಪವೇನು?”
ಶ್ರೀರಾಮಕೃಷ್ಣರು: “ಕೇಶವಸೇನನೂ ಅದೇ ಪ್ರಶ್ನೆಯನ್ನು ಹಾಕಿದ. ಎಲ್ಲಿಯವರೆಗೆ ಮನುಷ್ಯ ಅಜ್ಞಾನದಲ್ಲಿರುವನೊ, ಅಂದರೆ ಎಲ್ಲಿಯವರೆಗೆ ಭಗವಂತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುವುದಿಲ್ಲವೊ, ಅಲ್ಲಿಯವರೆಗೆ ಆತ ಜನ್ಮವೆತ್ತಬೇಕಾಗುತ್ತದೆ. ಆದರೆ ಬ್ರಹ್ಮಜ್ಞಾನ ದೊರೆತುಬಿಟ್ಟಿತು ಎಂದರೆ ಮತ್ತೆ ಈ ಜಗತ್ತಿಗೆ ಬರಬೇಕಾಗಿಲ್ಲ. ಈ ಭೂಮಿಗಾಗಲಿ ಅಥವಾ ಇನ್ನಾವ ಲೋಕಕ್ಕಾಗಲಿ ಹೋಗಬೇಕಾಗಿಲ್ಲ.
“ಕುಂಬಾರ ಮಡಕೆಗಳನ್ನು ಬಿಸಿಲಿನಲ್ಲಿ ಒಣಗಿಸಲು ಇಡುತ್ತಾನೆ. ನೋಡಿಲ್ಲವೆ, ಅವುಗಳಲ್ಲಿ ಬೆಂದ ಮತ್ತು ಹಸಿಯ ಮಡಕೆಗಳು ಇರುವುದನ್ನು? ದನಕರುಗಳು ಅವುಗಳ ಮೇಲೆ ನಡೆದು ಹೋಗಿಬಿಟ್ಟರೆ, ಅವುಗಳಲ್ಲಿ ಕೆಲವು ಒಡೆದುಹೋಗಿಬಿಡುತ್ತವೆ. ಬೆಂದ ಮಡಕೆಗಳು ಒಡೆದು ಹೋಗಿದ್ದರೆ ಕುಂಬಾರ ಅವನ್ನು ಬಿಸಾಡಿಬಿಡುತ್ತಾನೆ-ಅವು ಇನ್ನು ಯಾವ ಉಪಯೋಗಕ್ಕೂ ಬಾರದೆಹೋಗುವುದರಿಂದ. ಹಸಿಮಡಕೆಗಳು ಒಡೆದಿದ್ದರೆ ಅವನ್ನು ಮತ್ತೆ ಆರಿಸಿಕೊಳ್ಳುತ್ತಾನೆ. ಆ ಚೂರುಗಳನ್ನು ಮುದ್ದೆ ಮಾಡಿ ಚಕ್ರದಲ್ಲಿಟ್ಟು ಹೊಸ ಮಡಕೆಗಳನ್ನು ತಯಾರುಮಾಡುತ್ತಾನೆ. ಇದೇ ರೀತಿ ಎಲ್ಲಿಯವರೆಗೆ ಭಗವಂತನ ದರ್ಶನ ಪಡೆದುಕೊಳ್ಳುವುದಿಲ್ಲವೊ, ಅಲ್ಲಿಯವರೆಗೆ ಮನುಷ್ಯ ಕುಂಬಾರನ ಕೈಗೆ ಸಿಕ್ಕಬೇಕಾಗುತ್ತದೆ, ಎಂದರೆ ಈ ಜಗತ್ತಿನಲ್ಲಿ ಮತ್ತೆ ಮತ್ತೆ ಜನ್ಮವೆತ್ತಬೇಕಾಗುತ್ತದೆ.
“ಬೇಯಿಸಿದ ಬತ್ತವನ್ನು ಬಿತ್ತುವುದರಿಂದ ಆಗುವ ಪ್ರಯೋಜನವೇನು? ಅದು ಎಂದಿಗೂ ಪೈರಾಗಿ ಬೆಳೆಯದು. ಮನುಷ್ಯ ಜ್ಞಾನಾಗ್ನಿಯಲ್ಲಿ ಬೆಂದುದೇ ಆದರೆ ಆತನಿಂದ ಮುಂದಕ್ಕೆ ಪ್ರಜೋತ್ಪತ್ತಿ ಸಾಧ್ಯವಿಲ್ಲ. ಆತ ಮುಕ್ತನಾಗಿಬಿಡುತ್ತಾನೆ.
“ಪುರಾಣದೃಷ್ಟಿಯಿಂದ ಭಕ್ತ ಬೇರೆ, ಭಗವಂತ ಬೇರೆ. ನಾನು ಬೇರೆ, ನೀನು ಬೇರೆ. ಶರೀರ ಒಂದು ತಟ್ಟೆ ಇದ್ದ ಹಾಗೆ. ಅದರೊಳಗೆ ಮನಸ್ಸು, ಬುದ್ಧಿ, ಅಹಂಕಾರ ಇವುಗಳ ರೂಪವನ್ನು ಧರಿಸಿರುವ ನೀರು ಇದೆ. ಬ್ರಹ್ಮ ಸೂರ್ಯನಿದ್ದ ಹಾಗೆ, ಆತ ನೀರಿನಲ್ಲಿ ಪ್ರತಿಬಿಂಬಿತನಾಗುತ್ತಾನೆ. ಭಕ್ತ ಈ ಕಾರಣದಿಂದ ಭಗವದ್ರೂಪವನ್ನು ದರ್ಶನಮಾಡುತ್ತಾನೆ.
“ವೇದಾಂತದೃಷ್ಟಿಯಿಂದ ಬ್ರಹ್ಮ ಮಾತ್ರವೇ ವಸ್ತು, ಉಳಿದುದೆಲ್ಲಾ ಮಾಯೆ; ಸ್ವಪ್ನವಿದ್ದ ಹಾಗೆ, ಅವಸ್ತು. ‘ಅಹಂ’ ಎಂಬ ಕೋಲು ಸಚ್ಚಿದಾನಂದಸಾಗರದ ಮಧ್ಯದಲ್ಲಿ ಬಿದ್ದಿದೆ. (ಮಾಸ್ಟರಿಗೆ) ನಾನು ಹೇಳುವುದರ ಕಡೆ ಲಕ್ಷ್ಯವಿಟ್ಟು ಕೇಳು. ‘ಅಹಂ’ ಎಂಬ ಕೋಲನ್ನು ತೆಗೆದುಹಾಕಿಬಿಟ್ಟಿದ್ದೇ ಆದರೆ ಇನ್ನು ಉಳಿದುಕೊಳ್ಳುವುದು ಆ ಅಖಂಡ ಸಚ್ಚಿದಾನಂದಸಾಗರ. ಆದರೆ ‘ಅಹಂ’ ಎಂಬ ಕೋಲು ಅಲ್ಲಿ ಬಿದ್ದಿರುವವರೆಗೆ ಸಾಗರ ಎರಡಾಗಿ ಕಾಣಬರುತ್ತದೆ-ಈ ಕಡೆ ಒಂದು ಭಾಗ, ಆ ಕಡೆ ಒಂದು ಭಾಗ ಇರುವಂತೆ. ಬ್ರಹ್ಮಜ್ಞಾನ ದೊರೆತೊಡನೆಯೇ ಮನುಷ್ಯ ಸಮಾಧಿಸ್ಥನಾಗುತ್ತಾನೆ. ಆಗ ಈ ‘ಅಹಂ’ ಎಂಬುದು ನಿರ್ನಾಮವಾಗುತ್ತದೆ.
“ಆದರೆ ಲೋಕಶಿಕ್ಷಣಾರ್ಥವಾಗಿ ಶಂಕರಾಚಾರ್ಯರು ‘ವಿದ್ಯಾ ಅಹಂ’ ಎಂಬುದನ್ನು ಇಟ್ಟುಕೊಂಡಿದ್ದರು. (ಪ್ರಾಣಕೃಷ್ಣನಿಗೆ) ಆದರೆ ಜ್ಞಾನಿಗೆ ಕೆಲವು ಲಕ್ಷಣಗಳಿವೆ. ಕೆಲವರು ಭಾವಿಸುತ್ತಾರೆ, ತಾವು ಜ್ಞಾನಿಗಳಾಗಿಬಿಟ್ಟಿದ್ದೇವೆ ಎಂದು. ಜ್ಞಾನದ ಲಕ್ಷಣಗಳೇನು? ಜ್ಞಾನಿ ಯಾರಿಗೂ ತೊಂದರೆ ತರಲಾರ. ಬಾಲಕನಂತಾಗಿಬಿಡುತ್ತಾನೆ. ಉಕ್ಕಿನ ಕತ್ತಿ ಸ್ಪರ್ಶಮಣಿಯನ್ನು ಸ್ಪರ್ಶಿಸಿತು ಎಂದರೆ ಅದು ಚಿನ್ನದ ಕತ್ತಿಯಾಗಿಬಿಡುತ್ತದೆ. ಚಿನ್ನದ ಕತ್ತಿಯಿಂದ ಯಾವ ಹಿಂಸಾಕಾರ್ಯವೂ ಸಾಧ್ಯವಿಲ್ಲ. ಹೊರಗಿನಿಂದ ಜ್ಞಾನಿಗೂ ಕೋಪ, ಅಹಂಕಾರ ಇರುವಂತೆ ಕಾಣಬರಬಹುದು, ಆದರೆ ವಸ್ತುತಃ ಇವು ಯಾವುವೂ ಇಲ್ಲ.
“ದೂರದಿಂದ, ನೆಲದ ಮೇಲೆ ಬಿದ್ದಿರುವ ಸುಟ್ಟ ಹಗ್ಗ ನಿಜವಾದ ಹಗ್ಗದ ಹಾಗೆ ತೋರಿಬರುತ್ತದೆ. ಆದರೆ ಹತ್ತಿರ ಬಂದು ‘ಫೂ’ ಎಂದು ಊದಿದರೆ ಎಲ್ಲಾ ಹಾರಿಹೋಗಿ ಬಿಡುತ್ತದೆ. ಜ್ಞಾನಿಯ ಕ್ರೋಧ, ಅಹಂಕಾರ ಕೇವಲ ತೋರಿಕೆಗಳು ಮಾತ್ರ; ಅವು ನಿಜವಾದುವಲ್ಲ.
“ಮಗುವಿಗೆ ಮಮಕಾರವಿಲ್ಲ. ಅದು ಆಟದ ಮನೆಯನ್ನು ಕಟ್ಟುತ್ತದೆ. ಯಾರಾದರೂ ಅದನ್ನು ಒಂದು ಸ್ವಲ್ಪ ಮುಟ್ಟಿದರೇ ಸಾಕು ‘ಹೋ!’ ಎಂದು ಆಕಾಶಕ್ಕೂ ಭೂಮಿಗೂ ನಗೆಯುತ್ತ ಅಳಲಾರಂಭಿಸುತ್ತದೆ. ಮರುಕ್ಷಣ ತಾನೇ ಎಲ್ಲವನ್ನೂ ನೆಲಸಮ ಮಾಡಿಬಿಡುತ್ತದೆ. ಈ ಕ್ಷಣದಲ್ಲಿ ಅದು ತನ್ನ ಬಟ್ಟೆಯ ಮೇಲೆ ಅಷ್ಟೊಂದು ಮಮತೆಯನ್ನು ತೋರಿಸಬಹುದು. ಅದು ಹೇಳುತ್ತದೆ: ‘ನಮ್ಮ ಅಪ್ಪ ತಂದುಕೊಟ್ಟಿದ್ದಾನೆ. ಯಾರಿಗೂ ಕೊಡುವುದಿಲ್ಲ.’ ಮರುಕ್ಷಣ ಅದರ ಕೈಗೊಂದು ಬೊಂಬೆ ಕೊಟ್ಟರೆ ಸಾಕು ಎಲ್ಲವನ್ನೂ ಮರೆತುಬಿಡುತ್ತದೆ. ಬಟ್ಟೆಯನ್ನು ಒಂದು ಕಡೆ ಬಿಸಾಡಿ ಹೊರಟುಹೋಗುತ್ತದೆ.
“ಇವೆಲ್ಲ ಜ್ಞಾನಿಯ ಲಕ್ಷಣ. ಮನೆಯಲ್ಲಿ ಬೇಕಾದಷ್ಟು ಭೋಗವಸ್ತುಗಳಿರಬಹುದು- ಸೋಫ, ಕುರ್ಚಿ, ಚಿತ್ರಪಟ, ಕುದುರೆ, ಗಾಡಿ ಇವೇ ಮೊದಲಾದುವು. ಆದರೆ ಯಾವಾಗ ಅಂದರೆ ಆವಾಗ ಎಲ್ಲವನ್ನೂ ತ್ಯಜಿಸಿ ಕಾಶಿಗೆ ಹೊರಟುಹೋಗಿಬಿಡುತ್ತಾನೆ.
“ವೇದಾಂತದೃಷ್ಟಿಯಿಂದ ಜಾಗ್ರದವಸ್ಥೆಯೂ ಸತ್ಯವಾದುದಲ್ಲ. ಒಮ್ಮೆ ಒಬ್ಬ ಸೌದೆ ಕಡಿಯುವವ ಸ್ವಪ್ನ ಕಾಣುತ್ತಿದ್ದ. ಇನ್ನೊಬ್ಬ ಬಂದು ಆತನನ್ನು ಏಳಿಸಿಬಿಟ್ಟುದಕ್ಕಾಗಿ ಆತ ಸಿಟ್ಟುಗೊಂಡು ಕೂಗಿಕೊಂಡ: ‘ನನ್ನನ್ನೇಕೆ ಏಳಿಸಿಬಿಟ್ಟೆ? ಸ್ವಪ್ನ ಕಾಣುತ್ತಿದ್ದೆ-ನಾನು ರಾಜನಾಗಿರುವ ಹಾಗೆ, ನನಗೆ ಏಳು ಮಕ್ಕಳಿರುವ ಹಾಗೆ. ಮಕ್ಕಳೆಲ್ಲರೂ ಒಳ್ಳೇ ವಿದ್ಯಾವಂತರಾಗಿಯೂ, ಧನುರ್ವಿದ್ಯಾಪಾರಂಗತರಾಗಿಯೂ ಬೆಳೆಯುತ್ತಿದ್ದರು. ನಾನು ಸಿಂಹಾಸನಾರೂಢನಾಗಿ ರಾಜ್ಯಭಾರ ಮಾಡುತ್ತಿದ್ದೆ. ನನ್ನ ಆ ಸುಖಮಯ ಸಂಸಾರವನ್ನು ಏಕೆ ನೀನು ಕೆಡಿಸಿಬಿಟ್ಟೆ?’ ಆ ವ್ಯಕ್ತಿ ಹೇಳಿದ : ‘ಅದು ಕೇವಲ ಸ್ವಪ್ನ, ಏಳಿಸಿದ್ದರಿಂದ ಯಾವ ರಾಜ್ಯ ಮುಳುಗಿಹೋಗಿಬಿಟ್ಟಿತು?’ ಸೌದೆ ಕಡಿಯುವವ ಹೇಳಿದ: ‘ತಿಳಿಗೇಡಿ! ನಿನಗೆ ಅರ್ಥವಾಗುತ್ತಿಲ್ಲ. ಈಗ ನಾನು ಸೌದೆ ಕಡಿಯುವವನಾಗಿರುವುದು ಎಷ್ಟು ಸತ್ಯವೋ, ಸ್ವಪ್ನದಲ್ಲಿ ನಾನು ರಾಜನಾಗಿದ್ದುದೂ ಅಷ್ಟೇ ಸತ್ಯ. ಸೌದೆ ಕಡಿಯುವವನಾಗಿರುವುದು ಸತ್ಯವಾಗಿದ್ದ ಪಕ್ಷದಲ್ಲಿ ರಾಜನಾಗಿದ್ದುದೂ ಸತ್ಯವೇ.’
ಪ್ರಾಣಕೃಷ್ಣ ಯಾವಾಗ ನೋಡಿದರೂ ಜ್ಞಾನದ ಸಂಬಂಧವಾಗಿಯೇ ಮಾತನಾಡುತ್ತಿರುತ್ತಾನೆ. ಅದಕ್ಕಾಗಿಯೇನು ಪರಮಹಂಸರು ಜ್ಞಾನಿಯ ಅವಸ್ಥೆಯನ್ನು ವರ್ಣಿಸಿದುದು? ಈಗ ವಿಜ್ಞಾನಿಯ ಅವಸ್ಥೆಯ ಸಂಬಂಧವಾಗಿ ವರ್ಣಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು: “ ‘ನೇತಿ, ನೇತಿ’, ‘ಇದಲ್ಲ, ಇದಲ್ಲ’ ಎಂಬ ಮಾರ್ಗ ಅನುಸರಿಸಿ ಆತ್ಮಸಾಕ್ಷಾತ್ಕಾರ ಪಡೆದುಕೊಳ್ಳುವುದಕ್ಕೆ ‘ಜ್ಞಾನ’ ಅಂತ ಹೆಸರು. ಈ ‘ನೇತಿ ನೇತಿ’ ಮಾರ್ಗ ಅನುಸರಿಸಿದರೆ ಸಮಾಧಿಯುಂಟಾಗಿ ಆತ್ಮಜ್ಞಾನ ದೊರೆಯುತ್ತದೆ.
“ ‘ವಿಜ್ಞಾನ’ ಎಂದರೆ ವಿಶೇಷರೂಪದ ಜ್ಞಾನ. ಕೆಲವರು ಹಾಲಿನ ವಿಷಯವಾಗಿ ಕೇಳಿದ್ದಾರೆ, ಇನ್ನು ಕೆಲವರು ಅದನ್ನು ನೋಡಿದ್ದಾರೆ, ಮತ್ತೆ ಕೆಲವರು ಅದನ್ನು ಕುಡಿದಿದ್ದಾರೆ. ಯಾರು ಅದರ ವಿಷಯವಾಗಿ ಕೇವಲ ಕೇಳಿದ್ದಾನೊ ಆತ ‘ಅಜ್ಞಾನಿ.’ ಯಾರು ಅದನ್ನು ನೋಡಿದ್ದಾನೊ ಆತ ‘ಜ್ಞಾನಿ.’ ಆದರೆ ಯಾರು ಅದನ್ನು ಕುಡಿದಿದ್ದಾನೊ ಆತ ‘ವಿಜ್ಞಾನಿ’. ಎಂದರೆ ಅದರ ಸಂಬಂಧವಾಗಿ ಆತನಿಗೆ ವಿಶೇಷರೂಪದ ಜ್ಞಾನ ಉಂಟಾಗುತ್ತದೆ. ಭಗವಂತನ ದರ್ಶನ ದೊರೆತ ನಂತರ ಭಕ್ತ ಆತನೊಡನೆ ಮಾತುಕತೆಯಾಡುತ್ತಾನೆ, ತನ್ನ ಪರಮ ಆತ್ಮೀಯನೋ ಏನೋ ಎಂಬಂತೆ. ಇದಕ್ಕೇ ‘ವಿಜ್ಞಾನ’ ಅಂತ ಹೆಸರು.
‘ಮೊದಮೊದಲು ‘ನೇತಿ ನೇತಿ’ ಮಾರ್ಗವನ್ನು ಅನುಸರಿಸಿ ವಿವೇಚಿಸಬೇಕಾಗುತ್ತದೆ. ‘ಭಗವಂತ ಪಂಚಭೂತಗಳಲ್ಲ, ಇಂದ್ರಿಯಗಳಲ್ಲ, ಮನಸ್ಸು ಬುದ್ಧಿ ಅಹಂಕಾರಗಳಲ್ಲ, ಆತ ಎಲ್ಲಾ ಚತುರ್ವಿಂಶತಿ ತತ್ತ್ವಗಳಿಗೂ ಅತೀತ’ ಎಂಬುದಾಗಿ. ನಿನಗೆ ಚಾವಣಿಯ ಮೇಲಕ್ಕೆ ಹತ್ತಿ ಹೋಗಬೇಕೆಂಬ ಇಚ್ಛೆಯಿದ್ದರೆ ಹಂತಗಳನ್ನೆಲ್ಲಾ ಒಂದೊಂದಾಗಿ ತ್ಯಜಿಸಿ ಮೇಲಕ್ಕೆ ಹತ್ತಬೇಕು. ಹಂತಗಳು ಎಂದಿಗೂ ಚಾವಣಿಯಲ್ಲ. ಆದರೆ ಚಾವಣಿಯ ಮೇಲಕ್ಕೆ ಹತ್ತಿದ ನಂತರ ಗೊತ್ತಾಗುತ್ತದೆ, ಯಾವ ವಸ್ತುಗಳಿಂದ-ಇಟ್ಟಿಗೆ, ಸುಣ್ಣ, ಇಟ್ಟಿಗೆಚೂರು-ಚಾವಣಿ ತಯಾರಾಗಿದೆಯೊ, ಅದೇ ವಸ್ತುಗಳಿಂದ ಹಂತಗಳೂ ತಯಾರಾಗಿವೆ ಎಂದು. ಯಾರು ಪರಬ್ರಹ್ಮನೊ ಆತನೇ ಈ ಜೀವ ಜಗತ್ತು ಆಗಿದ್ದಾನೆ, ಚತುರ್ವಿಂಶತಿತತ್ತ್ವ ಆಗಿದ್ದಾನೆ. ಯಾರು ಆತ್ಮನೋ ಆತನೇ ಪಂಚಭೂತಗಳಾಗಿದ್ದಾನೆ. ಮಣ್ಣು ಅದು ಆತ್ಮದಿಂದ ಉದ್ಭವವಾಗಿದ್ದ ಪಕ್ಷದಲ್ಲಿ ಇಷ್ಟು ಗಟ್ಟಿಯಾಗಿದೆಯಲ್ಲ ಏಕೆ?-ಎಂಬ ಪ್ರಶ್ನೆ ಏಳಬಹುದು. ಆತನ ಇಚ್ಛೆಯಿಂದ ಎಲ್ಲವೂ ಸಾಧ್ಯ. ಶುಕ್ರಶೋಣಿತಗಳಿಂದ ಮೂಳೆ, ಮಾಂಸ ಉತ್ಪತ್ತಿಯಾಗುತ್ತಿಲ್ಲವೆ? ಸಮುದ್ರದ ನೊರೆ ಎಷ್ಟು ಗಟ್ಟಿಯಾಗಿ ಮಾರ್ಪಡುತ್ತದೆ!
“ವಿಜ್ಞಾನ ದೊರೆತ ನಂತರ ಸಂಸಾರದಲ್ಲೂ ಇರಬಹುದು. ಆಗ ಬಹಳ ಸ್ಪಷ್ಟವಾಗಿ ಅನುಭವವಾಗುತ್ತದೆ, ಭಗವಂತನೇ ಈ ಜೀವ ಜಗತ್ತು ಆಗಿದ್ದಾನೆ, ಆತ ಈ ಸಂಸಾರದಿಂದ ಪ್ರತ್ಯೇಕವಲ್ಲ ಎಂಬುದಾಗಿ.
(ಪ್ರಾಣಕೃಷ್ಣನಿಗೆ) “ವಾಸ್ತವಾಂಶವೇನೆಂದರೆ, ದಿವ್ಯಚಕ್ಷು ಬೇಕು. ಮನಸ್ಸು ಶುದ್ಧವಾಯಿತೆಂದರೆ ಅದು ಉಂಟಾಗುತ್ತದೆ. ಉದಾಹರಣೆಗೆ ತೆಗೆದುಕೊ ಕುಮಾರಿ ಪೂಜೆಯನ್ನು ಆಕೆ ಉಟ್ಟ ಬಟ್ಟೆ ಕೆಡಿಸಿಕೊಳ್ಳುವ ಬಾಲಕಿ. ಆದರೂ ಆಕೆಯನ್ನು ಸಾಕ್ಷಾತ್ ಭಗವತಿಯೇ ಎಂದು ಪೂಜಿಸಿದೆ.
“ಒಂದು ಪಕ್ಕದಲ್ಲಿ ಹೆಂಡತಿ ಮಲಗಿದ್ದಾಳೆ, ಇನ್ನೊಂದು ಪಕ್ಕದಲ್ಲಿ ಮಗು. ಮನುಷ್ಯ ಇಬ್ಬರನ್ನೂ ಪ್ರೀತಿಸುತ್ತಾನೆ, ಆದರೆ ಬೇರೆ ಬೇರೆ ಭಾವನೆಗಳಿಂದ. ಇದರಿಂದ ವ್ಯಕ್ತಪಡುತ್ತದೆ, ಎಲ್ಲವೂ ಮನಸ್ಸನ್ನು ಅವಲಂಬಿಸಿದೆ ಎಂಬುದು.” ಶುದ್ಧ ಮನಸ್ಸಿಗೆ ಒಂದು ಹೊಸ ದೃಷ್ಟಿ ಉಂಟಾಗುತ್ತದೆ. ಅದು ಉಂಟಾಯಿತೆಂದರೆ ಈ ಜಗತ್ತು ಭಗವನ್ಮಯವಾಗಿ ಕಂಡುಬರುತ್ತದೆ. ಅದು ಹಾಗಾಗಬೇಕಾದರೆ ಸಾಧನೆ ಮಾಡಬೇಕು.
“ಸಾಧನೆ ಬೇಕು. ಇದನ್ನು ತಿಳಿದುಕೊಳ್ಳಬೇಕು, ಗಂಡಸಿಗೆ ಹೆಂಗಸಿನಲ್ಲಿ ಸಹಜವಾಗಿಯೇ ಆಸಕ್ತಿಯುಂಟಾಗಿಬಿಡುತ್ತದೆ. ಹೆಂಗಸು ಸ್ವಾಭಾವಿಕವಾಗಿಯೇ ಗಂಡಸನ್ನು ಪ್ರೀತಿಸುತ್ತಾಳೆ. ಗಂಡಸೂ ಸ್ವಾಭಾವಿಕವಾಗಿಯೇ ಹೆಂಗಸನ್ನು ಪ್ರೀತಿಸುತ್ತಾನೆ. ಆದ್ದರಿಂದ ಅವರು ಬಹುಬೇಗ ತಮ್ಮ ಆದರ್ಶಗಳಿಂದ ವಿಮುಖರಾಗಿಬಿಡುತ್ತಾರೆ. ಆದರೆ ಇದನ್ನು ಹೇಳಬೇಕಾದದ್ದೆ ಸಂಸಾರದಲ್ಲಿ ಬಹಳ ಅನುಕೂಲಗಳಿವೆ. ಅನಿವಾರ್ಯವಾದಾಗ ಸ್ವಪತ್ನಿಯ ಸಹವಾಸ ಮಾಡಿಬಿಡಬಹುದು.
(ನಗುತ್ತ) “ಏನು ಮಾಸ್ಟರ್, ಏಕೆ ನಗುತ್ತಿದ್ದೀಯೆ?”
ಮಾಸ್ಟರ್ ತನಗೆ ತಾನೇ: “ಸಂಸಾರಿಗಳು ಎಲ್ಲವನ್ನೂ ಒಮ್ಮೆಗೇ ತ್ಯಾಗಮಾಡಲು ಶಕ್ತರಾಗಿಲ್ಲವೆಂದು ಪರಮಹಂಸರು ಈ ಮಿತಿಯವರೆಗೆ ಅನುಮತಿ ಇತ್ತಿದ್ದಾರೆ. ಹದಿನಾರು ಆಣೆ ಬ್ರಹ್ಮಚರ್ಯ ಸಂಸಾರಿಗಳಿಗೆ ಎಂದಿಗೂ ಸಾಧ್ಯವಿಲ್ಲವೇ?”
ಪಂಟವಟಿಯಲ್ಲಿದ್ದ ಹಠಯೋಗಿ ಪರಮಹಂಸರ ಕೊಠಡಿಯನ್ನು ಪ್ರವೇಶಿಸುತ್ತಿದ್ದಾನೆ. ಆತ ಕೇವಲ ಹಾಲು ಕುಡಿಯುತ್ತಾನೆ, ಅಫೀಮು ಸೇವಿಸುತ್ತಾನೆ. ಅನ್ನ ಮುಂತಾದುವನ್ನು ತಿನ್ನುವುದಿಲ್ಲ. ಅಫೀಮಿಗೆ, ಹಾಲಿಗೆ ದುಡ್ಡಿನ ಅಭಾವ. ಪರಮಹಂಸರು ಪಂಚವಟಿಯ ಕಡೆ ಹೋಗಿದ್ದಾಗ ಆತನೊಡನೆ ಮಾತುಕತೆಯಾಡಿ ಬಂದಿದ್ದರು. ಆ ಹಠಯೋಗಿ ರಾಖಾಲನನ್ನು ಕೇಳಿಕೊಂಡಿದ್ದ, ಆತ ಪರಮಹಂಸರಿಗೆ ತನ್ನ ಸ್ಥಿತಿಯನ್ನು ವಿವರಿಸಿ ಹೇಳಿ ತನಗೆ ಏನಾದರೂ ಒಂದು ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು. ಕಲ್ಕತ್ತದಿಂದ ಬರುವ ಬಾಬುಗಳಿಗೆ ಆ ವಿಷಯವನ್ನು ತಿಳಿಸುವುದಾಗಿ ಪರಮಹಂಸರು ಆತನಿಗೆ ತಿಳಿಯಪಡಿಸಿದ್ದರು.
ಹಠಯೋಗಿ ಶ್ರೀರಾಮಕೃಷ್ಣರಿಗೆ: “ನೀವು ರಾಖಾಲನಿಗೆ ನನ್ನ ವಿಷಯವಾಗಿ ಏನು ತಿಳಿಸಿದ್ದೀರಿ?”
ಶ್ರೀರಾಮಕೃಷ್ಣರು: “ಹೌದು ಹೇಳಿದ್ದೆ, ನೋಡೋಣ ಯಾರಾದರೂ ಬಾಬುಗಳು ಏನಾದರೂ ಕೊಡಲಿಚ್ಛಿಸುವುದಾದರೆ. ಆದರೆ-(ಪ್ರಾಣಕೃಷ್ಣನಿಗೆ) ನಿನಗೆ ಬಹುಶಃ ಇಂಥವರನ್ನು ಕಂಡರೆ ಹಿಡಿಸುವುದಿಲ್ಲ ಅಂತ ಕಾಣತ್ತೆ?”
ಪ್ರಾಣಕೃಷ್ಣ ಸುಮ್ಮನೆ ಕುಳಿತಿದ್ದಾನೆ. ಹಠಯೋಗಿ ಕೊಠಡಿಯನ್ನು ಬಿಟ್ಟು ಹೊರಕ್ಕೆ ಹೋದ. ಪರಮಹಂಸರು ಮಾತು ಮುಂದುವರಿಸುತ್ತಿದ್ದಾರೆ.
ಪರಮಹಂಸರು ಪ್ರಾಣಕೃಷ್ಣನೇ ಮೊದಲಾದವರಿಗೆ: “ಸಂಸಾರದಲ್ಲಿ ಇರಬೇಕಾಗಿದ್ದರೆ ಸತ್ಯವಚನದಲ್ಲಿ ಅಚಲ ಶ್ರದ್ಧೆ ಇರಬೇಕು. ಸತ್ಯದಿಂದಲೇ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಬಹುದು. ಸತ್ಯವಚನದಲ್ಲಿ ಉತ್ಸಾಹ ಈಗ ನನಗೊಂದು ಸ್ವಲ್ಪ ಕಡಿಮೆಯಾಗಿದೆ. ಹಿಂದೆ ಬಹಳವಾಗಿತ್ತು. ನಾನು ಹೇಳಿದ್ದೇ ಆದರೆ: ‘ಸ್ನಾನ ಮಾಡುತ್ತೇನೆ’ ಎಂದು, ಗಂಗೆಗೆ ಇಳಿಯುವುದು, ಮಂತ್ರೋಚ್ಚಾರಮಾಡುವುದು, ತಲೆಯ ಮೇಲೆ ಒಂದಿಷ್ಟು ನೀರನ್ನೂ ಪ್ರೋಕ್ಷಿಸಿಕೊಳ್ಳುವುದು-ಎಲ್ಲಾ ನಡೆದುಹೋಗಿಬಿಡುತ್ತಿದ್ದುವು. ಆದರೂ ಸಂದೇಹ ಬಂದು ಬಿಡುತ್ತಿತ್ತು, ಪೂರ್ಣವಾಗಿ ಸ್ನಾನ ಆಯಿತೋ ಇಲ್ಲವೋ ಎಂಬುದಾಗಿ. ಬಹಿರ್ದೇಶಕ್ಕೆ ಒಂದು ಸ್ಥಳಕ್ಕೆ ಹೋಗಬೇಕೆಂದು ಸಂಕಲ್ಪ ಮಾಡಿಕೊಂಡಿದ್ದೆನೆಂದರೆ, ಅಲ್ಲಿಗೆ ಹೋಗಿಯೇ ತೀರಬೇಕಾಗುತ್ತಿತ್ತು. ಒಮ್ಮೆ ರಾಮನ ಮನೆಗೆ ಹೋಗಿದ್ದೆ ಕಲ್ಕತ್ತದಲ್ಲಿ. ಏನೊ ಸುಮ್ಮನೆ ಹೇಳಿಬಿಟ್ಟೆ: ‘ಪೂರಿಯನ್ನು ತಿನ್ನುವುದಿಲ್ಲ’ ಎಂದು. ಆದರೆ ಊಟಕ್ಕೆ ಕುಳಿತುಕೊಂಡಾಗ ಹಸಿವಾಗಲಾರಂಭಿಸಿತು. ಮೊದಲೇ ಹೇಳಿಬಿಟ್ಟಿದ್ದೆ ಪೂರಿಯನ್ನು ತಿನ್ನುವುದಿಲ್ಲವೆಂದು. ಆದ್ದರಿಂದ ಸಿಹಿತಿಂಡಿಗಳನ್ನು ತಿಂದೇ ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕಾಗಿ ಬಂತು. (ಎಲ್ಲರೂ ನಗುತ್ತಿದ್ದಾರೆ.)
“ಆದರೆ ಈಗ ಸತ್ಯವಚನದಲ್ಲಿನ ಉತ್ಸಾಹ ನನಗೊಂದು ಸ್ವಲ್ಪ ಕಡಿಮೆಯಾಗಿಬಿಟ್ಟಿದೆ. ಬಹಿರ್ದೇಶಕ್ಕೆ ಹೋಗಬೇಕೆಂದೆನಿಸುತ್ತಿಲ್ಲ, ಆದರೆ ಹಾಗೆ ಹೇಳಿಬಿಟ್ಟಿದ್ದೆ. ಆಗ ಏನು ಮಾಡುವುದು? ಆ ವಿಷಯವಾಗಿ ರಾಮನನ್ನು ಕೇಳಿದೆ. ಆತ ಹೇಳಿದ, ಹೋಗಬೇಕಾಗಿಲ್ಲವೆಂದು. ಆಗ ನನಗೇ ನಾನು ವಾದಿಸಿ ಹೇಳಿಕೊಳ್ಳಲಾರಂಭಿಸಿದೆ: ‘ಎಲ್ಲರೂ ಭಗವಂತನೇ. ಆದ್ದರಿಂದ ರಾಮನೂ ಭಗವಂತನೇ. ಆತನ ಮಾತು ಏಕೆ ಕೇಳಕೂಡದು? ಆನೆಯೇನೊ ನಿಶ್ಚಯವಾಗಿ ಭಗವಂತನೇ. ಆದರೆ ಮಾವಟಿಗನೂ ಭಗವಂತನೇ. ಮಾವಟಿಗ ಹೇಳುತ್ತಾನೆ : ‘ಆನೆಯ ಹತ್ತಿರ ಬರಕೂಡದು ಎಂದು, ಆತನ ಮಾತು ಏಕೆ ನಾನು ಕೇಳಕೂಡದು?’ ಈ ರೀತಿಯ ವಿಚಾರದಿಂದ ಸತ್ಯವಚನದಲ್ಲಿನ ಉತ್ಸಾಹ ಹಿಂದೆ ಇದ್ದುದಕ್ಕಿಂತ ಈಗ ಸ್ವಲ್ಪ ಕಡಿಮೆಯಾಗಿದೆ.
“ಈಗ ಕಂಡುಬರುತ್ತಿದೆ, ನನಗೆ ಬೇರೊಂದು ಅವಸ್ಥೆ ಬರುತ್ತಿರುವುದು. ವೈಷ್ಣವಚರಣ ಹೇಳಿ ಬಹಳ ಕಾಲವೇ ಆಗಿಹೋಯಿತು, ‘ಮನುಷ್ಯನ ಆಂತರ್ಯದಲ್ಲಿ ಭಗವಂತನ ದರ್ಶನ ಮಾಡಲು ಸಾಧ್ಯವಾಯಿತು ಎಂದರೆ, ಪೂರ್ಣಜ್ಞಾನ ದೊರೆತಂತೆಯೇ.’ ಈಗ ಕಂಡು ಬರುತ್ತಿದೆ, ಭಗವಂತನೇ ಒಂದೊಂದು ರೂಪದಿಂದ ಸುತ್ತಾಡುತ್ತಿರುವ ಹಾಗೆ-ಕೆಲವು ವೇಳೆ ಸಾಧುವಿನ ರೂಪದಿಂದ. ಇದಕ್ಕಾಗಿಯೇ ನಾನು ಹೇಳುವುದು : ‘ಸಾಧು ಭಗವಂತ, ಠಕ್ಕ ಭಗವಂತ, ಲುಚ್ಚ ಭಗವಂತ, ಮೋಸಗಾರ ಭಗವಂತ,’ ಎಂದು.
“ಈಗ ನನ್ನ ಸಮಸ್ಯೆ, ನಿಮಗೆಲ್ಲ ಊಟಕ್ಕೆ ಹಾಕುವ ಬಗೆ ಹೇಗೆ ಎಂದು. ಎಲ್ಲರಿಗೂ ಊಟಕ್ಕೆ ಹಾಕಲು ಇಚ್ಛೆಯಿದೆ. ಇದಕ್ಕಾಗಿಯೇ ಒಬ್ಬೊಬ್ಬರನ್ನಾಗಿ ಇಲ್ಲಿ ಇಟ್ಟುಕೊಂಡು ಊಟಕ್ಕೆ ಹಾಕುತ್ತ ಇರುವುದು.”
ಪ್ರಾಣಕೃಷ್ಣ ಮಾಸ್ಟರ್ ಕಡೆ ನೋಡಿ ನಗುತ್ತ: “ಒಳ್ಳೇ ಮನುಷ್ಯ ! (ಪರಮಹಂಸರಿಗೆ) ಮಹಾಶಯರೆ, ದೋಣಿಯಿಂದ ಇಳಿಸಿದ ನಂತರವೇ ನಮ್ಮನ್ನು ಮುಂದುವರಿಯಲು ಬಿಟ್ಟುಕೊಟ್ಟ.”
ಶ್ರೀರಾಮಕೃಷ್ಣರು, ನಸುನಗುತ್ತ: “ಏಕೆ? ಏನಾಗಿತ್ತು?”
ಪ್ರಾಣಕೃಷ್ಣ: “ನಮ್ಮ ದೋಣಿಗೆ ಹತ್ತಿದ್ದ. ನದಿಯಲ್ಲಿ ಸ್ವಲ್ಪ ಅಲೆ ಏಳುತ್ತಿರುವುದನ್ನು ನೋಡಿ ಹೇಳಲಾರಂಭಸಿದ: ‘ನನ್ನನ್ನು ಇಳಿಸಿಬಿಡಿ! ನನ್ನನ್ನು ಇಳಿಸಿಬಿಡಿ!’ (ಮಾಸ್ಟರಿಗೆ) ಅಲ್ಲಿಂದ ಹೇಗೆ ಬಂದೆ?”
ಮಾಸ್ಟರ್ ನಗುತ್ತ: “ನಡೆದು.”
ಪರಮಹಂಸರು ನಗುತ್ತಿದ್ದಾರೆ.
ಪ್ರಾಣಕೃಷ್ಣ ಶ್ರೀರಾಮಕೃಷ್ಣರಿಗೆ: “ಮಹಾಶಯರೆ, ಈ ಸಲ ಮನಸ್ಸು ಮಾಡಿಕೊಂಡು ಬಿಟ್ಟಿದ್ದೇನೆ-ಕರ್ಮವನ್ನು ಬಿಟ್ಟುಬಿಡಬೇಕೆಂದು. ಕರ್ಮಕ್ಕೆ ಕೈ ಹಾಕಿದ್ದೇ ಆದರೆ ಬೇರೆ ಏನನ್ನೂ ಸಾಧಿಸಲಾಗುವುದಿಲ್ಲ. (ಜೊತೆಯಲ್ಲಿದ್ದ ಬಾಬುವನ್ನು ತೋರಿಸಿ) ಈತನಿಗೆ ಕೆಲಸ ಕಲಿಸಿ ಕೊಡುತ್ತಾ ಇದ್ದೇನೆ. ನಾನು ಬಿಟ್ಟನಂತರ ಈತ ಅದನ್ನು ಮಾಡುತ್ತಾನೆ. ಇನ್ನು ನನ್ನ ಕೈಯಲ್ಲಿ ಸಾಧ್ಯವಿಲ್ಲ.”
ಶ್ರೀರಾಮಕೃಷ್ಣರು: “ಹೌದು, ಬಹಳ ಕಷ್ಟ. ಈಗ ಕೆಲವು ಕಾಲ ನಿರ್ಜನಪ್ರದೇಶದಲ್ಲಿ ಭಗವಚ್ಚಿಂತನೆ ಮಾಡುವುದು ಬಹಳ ಒಳ್ಳೆಯದು. ನೀನೇನೊ ಹೇಳುತ್ತಾ ಇದ್ದೀಯೆ ಬಿಟ್ಟು ಬಿಡುವುದಾಗಿ. ಕ್ಯಾಪ್ಟನ್ ಕೂಡ ಹಾಗೇ ಹೇಳುತ್ತಿದ್ದ. ಸಂಸಾರಿಗಳೇನೊ ಹಾಗೆ ಹೇಳುತ್ತಾರೆ; ಆದರೆ ಕಾರ್ಯತಃ ಮಾಡುವುದಿಲ್ಲ.
“ಬೇಕಾದಷ್ಟು ಮಂದಿ ಪಂಡಿತರು ಸಿಕ್ಕುತ್ತಾರೆ-ಜ್ಞಾನದ ಸಂಬಂಧವಾಗಿ ಮಾತನಾಡತಕ್ಕವರು. ಬಾಯಲ್ಲೇನೊ ಹೇಳುತ್ತಾರೆ. ಕಾರ್ಯತಃ ಏನೆಂದರೆ ಏನೂ ಇಲ್ಲ. ರಣಹದ್ದೇನೊ ಬಹಳ ಎತ್ತರಕ್ಕೆ ಹಾರಿಹೋಗುತ್ತದೆ. ಆದರೆ ಅದರ ದೃಷ್ಟಿ ಮಾತ್ರ ಸತ್ತ ಪ್ರಾಣಿಗಳ ಕಡೆಗೆ. ಹಾಗೇ ಇವರು ಕೂಡ; ಎಂದರೆ ಕಾಮಕಾಂಚನಗಳಲ್ಲಿ, ಸಂಸಾರದಲ್ಲಿ ಇವರಿಗೆ ಆಸಕ್ತಿ. ಪಂಡಿತರು ವಿವೇಕ-ವೈರಾಗ್ಯಸಂಪನ್ನರಾಗಿದ್ದಾರೆ ಎಂದು ಕೇಳಿದಾಗ ನನಗವರನ್ನು ಕಂಡರೆ ಸ್ವಲ್ಪ ಭಯವಾಗುತ್ತದೆ. ಇಲ್ಲದಿದ್ದರೆ ಅವರು ನನ್ನ ಕಣ್ಣಿಗೆ ನಾಯಿನರಿಗಳ ಹಾಗೆ, ಆಡುಕುರಿಗಳ ಹಾಗೆ ಕಾಣಬರುತ್ತಾರೆ.”
ಪ್ರಾಣಕೃಷ್ಣ ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಗೊಂಡ. ಆತ ಮಾಸ್ಟರನ್ನು ಕೇಳಿದ: “ಏನು ಜೊತೆಯಲ್ಲಿ ಬರುತ್ತೀಯಾ?”
ಮಾಸ್ಟರ್: “ನಮಸ್ಕಾರ! ದಯವಿಟ್ಟು ನೀವು ಹೋಗಿಬನ್ನಿ!”
ಪ್ರಾಣಕೃಷ್ಣ ನಕ್ಕು ಹೇಳುತ್ತಿದ್ದಾನೆ: “ನೀನು ದೋಣಿಯಲ್ಲಿ ಇನ್ನು!” (ಎಲ್ಲರೂ ನಗುತ್ತಿದ್ದಾರೆ.)
ಮಾಸ್ಟರ್ ಪಂಚವಟಿಯ ಹತ್ತಿರ ಸ್ವಲ್ಪ ಸುತ್ತಾಡುತ್ತಿದ್ದು ಬಳಿಕ ನದಿಯಲ್ಲಿ ಸ್ನಾನಮಾಡಿದ. ಈಗ ರಾಧಾಕಾಂತ ಮತ್ತು ಭವತಾರಿಣಿಯ ದೇವಾಲಯಗಳ ಕಡೆ ಮುಂದುವರಿಯುತ್ತಿದ್ದಾನೆ. ದರ್ಶನ ಪ್ರಣಾಮಗಳನ್ನು ಮುಗಿಸಿದ ನಂತರ ಭಾವಿಸುತ್ತಿದ್ದಾನೆ: “ಕೇಳಿದ್ದೇನೆ ಭಗವಂತ ನಿರಾಕಾರ ಎಂಬುದಾಗಿ. ಹಾಗಾದರೆ ಈ ಪ್ರತಿಮೆಗಳ ಮುಂದೆ ಏಕೆ ನಾನು ಪ್ರಣಾಮಮಾಡಿದ್ದು? ಪರಮಹಂಸರು ದೇವದೇವಿಯರನ್ನು ಒಪ್ಪುತ್ತಾರಲ್ಲ ಅದಕ್ಕಾಗಿಯೇನು? ನನಗಂತೂ ಭಗವಂತನ ಸಂಬಂಧವಾಗಿ ಏನೂ ಗೊತ್ತಿಲ್ಲ, ಅರ್ಥವೂ ಆಗುವುದಿಲ್ಲ. ಪರಮಹಂಸರಂಥವರೇ ಇವುಗಳಲ್ಲಿ ಶ್ರದ್ಧೆ ಇಟ್ಟಿರುವಾಗ, ಇನ್ನು ನಾನಾರು-ಒಪ್ಪಿಕೊಳ್ಳಲೇಬೇಕು.”
ಈಗ ಮಾಸ್ಟರ್, ಭವತಾರಿಣಿ ಕಾಳಿಯ ಕಡೆ ದೃಷ್ಟಿಸಿ ನೋಡುತ್ತಿದ್ದಾನೆ. ಕಾಣಬರುತ್ತಾ ಇದೆ, ಆಕೆ ತನ್ನ ಎಡ ಹಸ್ತದ್ವಯಗಳಲ್ಲಿ-ನರಮುಂಡ ಖಡ್ಗ ಹಿಡಿದುಕೊಂಡಿದ್ದಾಳೆ. ಬಲಹಸ್ತದ್ವಯಗಳಿಂದ ವರ ಅಭಯಗಳನ್ನು ನೀಡುತ್ತಿದ್ದಾಳೆ. ಒಂದು ದೃಷ್ಟಿಯಿಂದ ಭಯಂಕರ ಸ್ವರೂಪಿಣಿ, ಇನ್ನೊಂದು ದೃಷ್ಟಿಯಿಂದ ಭಕ್ತವತ್ಸಲೆ ಮಾತೆ. ಎರಡು ಭಾವಗಳೂ ಸಮಾವೇಶಗೊಂಡಿವೆ. ಭಕ್ತರಿಗೆ, ದೀನಹೀನರಿಗೆ ದಯಾಮಯಿ, ಪ್ರೇಮಮಯಿ ತಾಯಿ. ಆದರೆ ಇದೂ ಸತ್ಯ, ಆಕೆ ಭಯಂಕರಸ್ವರೂಪಿಣಿ. ಕಾಲಕಾಮಿನಿ, ಒಂದೇ ಆಧಾರದಲ್ಲಿ ಏಕೆ ಎರಡು ಭಾವವೋ ಭಗವತಿಗೇ ಗೊತ್ತು.
ಕಾಳಿಯ ಸಂಬಂಧವಾಗಿ ಪರಮಹಂಸರು ಕೊಟ್ಟಿದ್ದ ಈ ವಿವರಣೆಯನ್ನು ಮಾಸ್ಟರ್ ಸ್ಮರಿಸಿಕೊಳ್ಳಲಾರಂಭಿಸಿದ. ಈಗ ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೆ: “ಕೇಳಿದ್ದೇನೆ, ಕೇಶವ ಸೇನ ಪರಮಹಂಸರ ಎದುರಿನಲ್ಲಿ ಕಾಳಿಯನ್ನು ಒಪ್ಪಿಕೊಂಡ ಎಂದು. ಕೇಶವಸೇನ ಹೇಳುತ್ತಿದ್ದ ಹಾಗೆ, ಮೃಣ್ಮಯ ಆಧಾರದಲ್ಲಿರುವ ಚಿನ್ಮಯಿದೇವಿ ಈಕೆಯೆ ಏನು?”
ಈಗ ಮಾಸ್ಟರ್ ಪರಮಹಂಸರ ಕೊಠಡಿಗೆ ಬಂದು ನೆಲದ ಮೇಲೆ ಕುಳಿತುಕೊಂಡಿದ್ದಾನೆ. ಸ್ನಾನ ಮಾಡಿ ಬಂದಿರುವುದನ್ನು ನೋಡಿ ಪರಮಹಂಸರು ಆತನಿಗೆ ಹಣ್ಣು ಹಂಪಲುಗಳ ಪ್ರಸಾದವನ್ನು ಕೊಡುತ್ತಿದ್ದಾರೆ. ಮನೆಯಲ್ಲಿ ಏನೋ ತೊಂದರೆಯಾದದ್ದರಿಂದ ತನ್ನ ಪಾಠಶಾಲೆಯ ಹತ್ತಿರ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದಾನೆ. ಆತನ ತಂದೆ ಮತ್ತು ಸಹೋದರರು ಎಂದಿನ ಪಿತ್ರಾರ್ಜಿತ ಮನೆಯಲ್ಲೇ ವಾಸವಾಗಿದ್ದಾರೆ. ಪರಮಹಂಸರ ಇಚ್ಛೆ, ಮಾಸ್ಟರ್ ತನ್ನ ಸ್ವಂತ ಮನೆಗೇ ಹೋಗಿ ಇರಬೇಕೆಂದು. ಏಕೆಂದರೆ, ಒಟ್ಟಿಗೆ ಇರುವ ಸಂಸಾರದಲ್ಲಿ ಭಗವಂತನ ಧ್ಯಾನಕ್ಕೆ ಅನೇಕ ಅನುಕೂಲತೆಗಳಿರುತ್ತವೆ. ಪರಮಹಂಸರು ಆಗಾಗ ಈ ರೀತಿಯಾಗಿ ಹೇಳುತ್ತಿದ್ದರೂ ಆತನ ದುರ್ದೈವವಶದಿಂದ ಮನೆಗೆ ಹಿಂದಿರುಗಿ ಹೋಗಲು ಸಾಧ್ಯವಾಗಿಲ್ಲ. ಈಗ ಪರಮಹಂಸರು ಅದೇ ವಿಷಯವಾಗಿ ಮಾತು ಎತ್ತಿದ್ದಾರೆ.
ಶ್ರೀರಾಮಕೃಷ್ಣರು: “ಏನು, ಈ ಸಲ ನೀನು ಮನೆಗೆ ಹೋಗಿಬಿಡುತ್ತೀಯೆ ತಾನೆ?”
ಮಾಸ್ಟರ್: “ಎಷ್ಟೇ ಪ್ರಯತ್ನಪಟ್ಟರೂ ಅಲ್ಲಿಗೆ ಹೋಗಬೇಕು ಅಂತ ಮನಸ್ಸಿನಲ್ಲಿ ಭಾವನೆಯೇ ಏಳುತ್ತಿಲ್ಲವಲ್ಲ.”
ಶ್ರೀರಾಮಕೃಷ್ಣರು: “ಏಕೆ? ಈಗ ನಿಮ್ಮ ತಂದೆ ಮನೆಯ ವಾತಾವರಣವನ್ನೇ ಬದಲಾಯಿಸಿಬಿಟ್ಟಿದ್ದಾನೆ.”
ಮಾಸ್ಟರ್: “ಮನೆಯಲ್ಲಿ ನಾನು ಬಹಳ ಕಷ್ಟ ಅನುಭವಿಸಿದ್ದೇನೆ. ಅಲ್ಲಿಗೆ ಹೋಗಲು ಏನು ಮಾಡಿದರೂ ಮನಸ್ಸಿಗೆ ಇಚ್ಛೆಯಾಗುತ್ತಿಲ್ಲ.”
ಶ್ರೀರಾಮಕೃಷ್ಣರು: “ನಿನಗೆ ಯಾರನ್ನು ಕಂಡರೆ ಭಯ?”
ಮಾಸ್ಟರ್: “ಅವರೆಲ್ಲರನ್ನೂ.”
ಶ್ರೀರಾಮಕೃಷ್ಣರು ಗಂಭೀರಸ್ವರದಿಂದ: “ನಿನಗೆ ದೋಣಿ ಹತ್ತಲು ಭಯವಾಗುತ್ತದೆಯಲ್ಲ, ಇದೂ ಹಾಗೆ.”
ದೇವಾಲಯಗಳಲ್ಲಿ ಮಧ್ಯಾಹ್ನದ ಪೂಜೆ ಮುಗಿದಿದೆ. ಈಗ ಮಂಗಳಾರತಿ ನಡೆಯುತ್ತಿದೆ. ಗಂಟೆ, ಜಾಗಟೆ, ತಾಳಗಳನ್ನು ಹೊಡೆಯುತ್ತಿದ್ದಾರೆ. ಕಾಳೀದೇವಾಲಯ ಆನಂದದಿಂದ ಭರಿತವಾಗಿದೆ. ಮಂಗಳಾರತಿಯ ಶಬ್ದ ಕೇಳಿ ಭಿಕ್ಷುಕರು ಸಾಧಕರು, ಅತಿಥಿಗಳು ಎಲ್ಲರೂ ಅತಿಥಿ ಶಾಲೆಯ ಕಡೆ ತ್ವರಿತದಿಂದ ಬರುತ್ತಿದ್ದಾರೆ. ಕೆಲವರ ಕೈಯಲ್ಲಿ ಎಲೆ, ಇನ್ನು ಕೆಲವರ ಕೈಯಲ್ಲಿ ತಟ್ಟೆ, ನೀರಿನ ಪಾತ್ರೆ ಇವೆ. ಈಗ ಎಲ್ಲರೂ ಪ್ರಸಾದ ಪಡೆಯುತ್ತಿದ್ದಾರೆ. ಮಾಸ್ಟರಿಗೂ ಪ್ರಸಾದ ದೊರೆಯಿತು.
ಪ್ರಸಾದ ಸ್ವೀಕರಿಸಿದ ನಂತರ ಪರಮಹಂಸರು ವಿಶ್ರಮಿಸಿಕೊಳ್ಳುತ್ತಿದ್ದಾರೆ. ಈಗ ರಾಮ, ಗಿರೀಂದ್ರ ಇನ್ನೂ ಕೆಲವು ಮಂದಿ ಭಕ್ತರು ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿ ಒಂದು ಕಡೆ ಕುಳಿತುಕೊಳ್ಳುತ್ತಿದ್ದಾರೆ. ಕೇಶವಸೇನನ ನವವಿಧಾನದ ಸಂಬಂಧವಾಗಿ ಈಗ ಮಾತುಕತೆ ಆರಂಭವಾಗಿದೆ.
ರಾಮ, ಶ್ರೀರಾಮಕೃಷ್ಣರಿಗೆ: “ಮಹಾಶಯರೆ, ನವವಿಧಾನದಿಂದ ಉಪಕಾರ ಸ್ವಲ್ಪವಾದರೂ ಆಗಿದೆ ಅಂತ ನನಗೆ ತೋರಿಬರುತ್ತಿಲ್ಲ. ಕೇಶವಬಾಬುವಿನಲ್ಲಿ ಏನಾದರೂ ಸತ್ತ್ವವಿದ್ದ ಪಕ್ಷದಲ್ಲಿ ಆತನ ಶಿಷ್ಯರ ಅವಸ್ಥೆ ಹೀಗೇಕೆ ಆಗುತ್ತಿತ್ತು? ನನ್ನ ದೃಷ್ಟಿಯಿಂದ ಆತನೊಳಗೆ ಏನೂ ಇಲ್ಲ. ಇದು ಒಳಗೆ ಬಕ್ಕರೆ ಚೂರು ಅಲ್ಲಾಡಿಸಿ ಕೊಠಡಿಗೆ ಬೀಗ ಹಾಕಿದ ಹಾಗೆ. ಜನ ಮನಸ್ಸಿನಲ್ಲಿ ಭಾವಿಸಿಕೊಳ್ಳುತ್ತಾರೆ, ಬೇಕಾದಷ್ಟು ಹಣ ಒಳಗೆ ‘ಝಣ, ಝಣ ಅಂತ ಶಬ್ದ ಮಾಡುತ್ತಿದೆ ಎಂದು. ಆದರೆ ಒಳಗಿರುವುದು ಕೇವಲ ಬಕ್ಕರೆ ಚೂರು ಮಾತ್ರ. ಹೊರಗಿನವರಿಗೆ ಒಳಗಿನ ಸಮಾಚಾರ ಸ್ವಲ್ಪವೂ ಗೊತ್ತಿಲ್ಲ.’
ಶ್ರೀರಾಮಕೃಷ್ಣರು: “ಸ್ವಲ್ಪವಾದರೂ ಸತ್ತ್ವ ಇರಲೇಬೇಕು. ಇಲ್ಲದಿದ್ದರೆ ಇಷ್ಟೊಂದು ಜನ ಕೇಶವಸೇನನನ್ನು ಗೌರವಿಸುತ್ತಿದ್ದಾರಲ್ಲ ಏಕೆ? ಅದೇ ರೀತಿಯಾಗಿ ಶಿವನಾಥನನ್ನು ಗೌರವಿಸುತ್ತಿಲ್ಲವಲ್ಲ ಏಕೆ? ಭಗವಂತನ ಇಚ್ಛೆ ಇಲ್ಲದೆ ಇತ್ತು ಎಂದರೆ ಇದು ನಡೆಯುತ್ತಿರಲಿಲ್ಲ.”
“ಆದರೆ ಸಂಸಾರವನ್ನು ತ್ಯಜಿಸಿದ ಹೊರತು ಆಚಾರ್ಯನ ಕೆಲಸ ಸಾಧ್ಯವಾಗುವುದಿಲ್ಲ. ಜನರು ಆತನನ್ನು ಗೌರವಿಸರು. ಅವರು ಹೇಳುತ್ತಾರೆ: ‘ಈತ ಸಂಸಾರಿ. ಕಾಮಕಾಂಚನವನ್ನು ರಹಸ್ಯವಾಗಿ ಅನುಭವಿಸುತ್ತಿದ್ದಾನೆ. ನಮಗೆ ಮಾತ್ರ ಹೇಳುತ್ತಿದ್ದಾನೆ ಭಗವಂತನೇ ಸತ್ಯ. ಸಂಸಾರ ಸ್ವಪ್ನವತ್ ಅನಿತ್ಯ ಎಂದು.’ ಸರ್ವಸಂಗಪರಿತ್ಯಾಗಿ ಆಗದ ಹೊರತು ಆತನ ಮಾತನ್ನು ಎಲ್ಲರೂ ಅನುಮೋದಿಸುವುದಿಲ್ಲ. ಪ್ರಾಪಂಚಿಕರಲ್ಲಿ ಕೆಲವರು ಆತನ ಅನುಯಾಯಿಗಳಾಗಬಹುದು. ಕೇಶವ ಸಂಸಾರಿಯಾಗಿದ್ದ; ಆದ್ದರಿಂದ ಆತನ ಮನಸ್ಸು ಸಂಸಾರದ ಕಡೆಗೂ ಇತ್ತು. ಆತ ಸಂಸಾರ ರಕ್ಷಣೆಯನ್ನು ನೋಡಿಕೊಳ್ಳಬೇಕಾದ್ದೆ. ಆದ್ದರಿಂದಲೇ ಆತ ಅಷ್ಟೊಂದು ಉಪನ್ಯಾಸಗಳನ್ನು ಕೊಟ್ಟರೂ ತನ್ನ ಸಂಸಾರವನ್ನು ಒಳ್ಳೆಯ ಸುವ್ಯವಸ್ಥೆಯಲ್ಲಿ ಇಟ್ಟುಹೋಗಿದ್ದಾನೆ. ತನ್ನ ಮಗಳನ್ನು ಎಂಥ ಶ್ರೀಮಂತನಿಗೆ ವಿವಾಹಮಾಡಿದ್ದಾನೆ! ಮನೆಯ ಒಳಕ್ಕೆ ಹೋಗಿದ್ದೆ. ದೊಡ್ಡ ದೊಡ್ಡ ಮಂಚಗಳು. ಸಂಸಾರಕ್ಕೆ ಕಾಲು ಹಾಕಿದರೆ ಕ್ರಮೇಣ ಇವೆಲ್ಲಾ ಬಂದು ಸೇರಿಕೊಳ್ಳುತ್ತವೆ. ಭೋಗದ ಆಲಯವೇ ಸಂಸಾರ.”
ರಾಮ: “ಆ ಮಂಚಗಳು, ಮನೆ ಎಲ್ಲವೂ ಕೇಶವಸೇನ ಪಾಲುಮಾಡಿಕೊಂಡಾಗ ಆತನಿಗೆ ದೊರೆತುವು. ನೋಡಿ, ಕೇಶವಸೇನನಂಥವರು ಪಾಲು ತೆಗೆದುಕೊಳ್ಳುವುದೆ ! ಮಹಾಶಯರೆ, ನೀವು ಏನು ಬೇಕಾದರೂ ಹೇಳಿ, ವಿಜಯಬಾಬು ನನಗೆ ಹೇಳಿದ. ಕೇಶವಬಾಬು ಆತನಿಗೆ ಹೇಳಿದನಂತೆ: ‘ನಾನು ಕ್ರಿಸ್ತನ ಅಥವಾ ಗೌರಾಂಗನ ಅಂಶ. ನಿನಗೆ ಸಲಹೆ ಕೊಡುತ್ತೇನೆ. ನೀನೇ ಅದ್ವೈತ ಗೋಸ್ವಾಮಿ ಎಂದು ಹೇಳಿಕೊಳ್ಳಲಾರಂಭಿಸು.’ ಆತ ಇನ್ನೂ ಏನು ಹೇಳುತ್ತಾನೆ ನಿಮಗೆ ಗೊತ್ತೆ? ನೀವು ನವವಿಧಾನದ ಅನುಯಾಯಿ ಎಂದು.” (ಎಲ್ಲರೂ ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು (ನಗುನಗುತ್ತ): “ಇದೆಲ್ಲ ಯಾರಿಗೆ ಗೊತ್ತು? ಆದರೆ ನನಗೆ ಮಾತ್ರ ಆ ‘ವಿಧಾನ’ ಎಂಬುದರ ಅರ್ಥ ಸಹ ಗೊತ್ತಿಲ್ಲ.” (ನಗು)
ರಾಮ: “ಕೇಶವಸೇನನ ಶಿಷ್ಯರು ಹೇಳುತ್ತಾರೆ, ಜ್ಞಾನ ಭಕ್ತಿಗಳ ಸಾಮಂಜಸ್ಯವನ್ನು ತೋರಿಸಿದವರಲ್ಲಿ ಕೇಶವಸೇನನೇ ಮೊದಲನೆಯವನು ಎಂದು.”
ಶ್ರೀರಾಮಕೃಷ್ಣರು ಆಶ್ಚರ್ಯಚಕಿತರಾಗಿ: “ಅದು ಹೇಗೆ? ಹಾಗಾದರೆ ಆಧ್ಯಾತ್ಮ ರಾಮಾಯಣ ಎಲ್ಲಿಗೆ ಹೋಗಬೇಕು? ಅದರಲ್ಲಿ ನಾರದ ರಾಮಚಂದ್ರನನ್ನು ಸ್ತುತಿ ಮಾಡುತ್ತಾನೆ: ‘ಹೇ ರಾಮ, ವೇದಗಳಲ್ಲಿ ಪರಬ್ರಹ್ಮನ ವಿಷಯ ಇದೆಯಲ್ಲ, ಆ ಪರಬ್ರಹ್ಮ ನೀನೇ. ನೀನೇ ಮನುಷ್ಯರೂಪ ಧರಿಸಿ ನಮ್ಮೊಡನೆ ಇದ್ದೀಯೆ. ನೀನೂ ಮನುಷ್ಯನೇ ಎಂಬುದಾಗಿ ನಮಗೆ ತೋರಿಬರುತ್ತಿದೆ; ಆದರೆ ವಸ್ತುತಃ ನೀನು ಮನುಷ್ಯನಲ್ಲ, ಆ ಪರಬ್ರಹ್ಮನೇ.’ ರಾಮಚಂದ್ರ ಹೇಳುತ್ತಾನೆ: ‘ನಾರದ, ನಿನ್ನನ್ನು ಬಹುವಾಗಿ ಮೆಚ್ಚಿದ್ದೇನೆ. ಯಾವ ವರಬೇಕಾದರೂ ಕೇಳು.’ ನಾರದ ಹೇಳುತ್ತಾನೆ: ‘ಇನ್ನಾವ ವರಬೇಕು ನನಗೆ? ನಿನ್ನ ಪಾದಪದ್ಮಗಳಲ್ಲಿ ನನಗೆ ಶುದ್ಧಭಕ್ತಿ ಉಂಟಾಗುವಂತೆ ಕರುಣಿಸು. ನಿನ್ನ ಭುವನಮೋಹಿನೀ ಮಾಯೆಯಿಂದ ನಾನು ಮುಗ್ಧನಾಗದ ಹಾಗೆ ಮಾಡು!’ ಇಡೀ ಆಧ್ಯಾತ್ಮ ರಾಮಾಯಣದಲ್ಲೆಲ್ಲಾ ಕೇವಲ ಜ್ಞಾನ ಭಕ್ತಿ ವಿಷಯವೇ.”
ಕೇಶವಸೇನನ ಶಿಷ್ಯ ಅಮೃತನ ಸಂಬಂಧವಾಗಿ ಮಾತು ಈಗ ಆರಂಭವಾಯಿತು.
ರಾಮ: “ಅಮೃತಬಾಬು ಏನೋ ಒಂದು ರೀತಿಯಾಗಿ ಆಗಿಬಿಟ್ಟಿದ್ದಾನೆ.”
ಶ್ರೀರಾಮಕೃಷ್ಣರು: “ಹೌದು, ಅಂದು ಅಸ್ವಸ್ಥನಾಗಿ ತೋರಿಬಂದ.”
ರಾಮ: “ಮಹಾಶಯರೆ, ನವವಿಧಾನದವರ ಲೆಕ್ಚರ್ ಸಂಬಂಧವಾಗಿ ಸ್ವಲ್ಪ ಕೇಳಿ. ಮೃದಂಗ ಬಾಜಿಸಲು ಆರಂಭಿಸಿದೊಡನೇ ಸಭಿಕರೆಲ್ಲರೂ ಘೋಷಿಸುತ್ತಾರೆ: ‘ಕೇಶವಚಂದ್ರ ಸೇನಕೀ ಜಯ್!’ ನೀವು ಹೇಳುವುದಿಲ್ಲವೆ, ನಿಂತ ನೀರಿನಲ್ಲಿ ‘ದಲ್’ 1 ಬೆಳೆಯುತ್ತದೆ ಎಂದು. ಆದ್ದರಿಂದ ಅಮೃತಬಾಬು ಒಂದು ದಿನ ಲೆಕ್ಚರ್ ಕೊಡುವಾಗ ಹೇಳಿದ: ‘ಸಾಧು 2 ಹೇಳಿರುವುದೇನೋ ನಿಜ, ನಿಂತ ನೀರಿನಲ್ಲಿ “ದಲ್” ಬೆಳೆಯುತ್ತದೆ ಎಂದು. ಆದರೆ ಸಹೋದರರಿರಾ, ನಮಗೆ “ದಲ್” ಬೇಕು, ನಮಗೆ “ದಲ್” ಬೇಕು. ನಿಜವಾಗಿಯೂ, ಸತ್ಯವಾಗಿಯೂ ಹೇಳುತ್ತೇನೆ, ನಮಗೆ “ದಲ್” ಬೇಕು.’”
ಶ್ರೀರಾಮಕೃಷ್ಣರು: “ಏನಿದು! ಛೆ, ಛೆ, ಛೆ! ಇದೆಂಥ ಲೆಕ್ಚರಪ್ಪ?”
ಕೆಲವರಿಗೆ ಹೊಗಳಿಸಿಕೊಳ್ಳಬೇಕು ಅಂತ ಆಸೆ. ಅದರ ಸಂಬಂಧವಾಗಿ ಈಗ ಮಾತುಕತೆ ಆರಂಭವಾಯಿತು.
ಶ್ರೀರಾಮಕೃಷ್ಣರು: ‘ “ನಿಮಾಯಿಯ ಸಂನ್ಯಾಸ’ ಎಂಬುದರ ವಿಷಯವಾಗಿ ಒಮ್ಮೆ ಹರಿಕಥೆ ನಡೆಯುತ್ತಿತ್ತು-ಕೇಶವಸೇನನ ಮನೆಯಲ್ಲಿ. ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋದರು. ಕೇಶವ, ಪ್ರತಾಪ ಇಬ್ಬರೂ ಗೌರಾಂಗ ನಿತಾಯಿ ಎಂಬುದಾಗಿ ಯಾರೊ ಒಬ್ಬ ಹೇಳಿದ್ದನ್ನು ಅಂದು ಕೇಳಿದೆ. ಪ್ರಸನ್ನ ನನ್ನನ್ನು ಕೇಳಿದ: ‘ಹಾಗಾದರೆ ನೀವು ಯಾರು?’ ನೋಡಿದೆ, ಕೇಶವಸೇನ ನನ್ನ ಕಡೆಗೆ ದೃಷ್ಟಿಸಿ ನೋಡುತ್ತಿದ್ದುದನ್ನು-ನನ್ನ ಬಾಯಿಂದ ಏನು ಉತ್ತರ ಬರುತ್ತದೆ ಎಂಬುದನ್ನು ಅರಿಯಲು. ನಾನು ಹೇಳಿದೆ: ‘ನಾನು ನಿಮ್ಮ ದಾಸಾನುದಾಸ, ರೇಣುವಿನ ರೇಣು.’ ಕೇಶವಸೇನ ನಗುತ್ತ ಹೇಳಿದ: ‘ನೀನು ಅವರನ್ನು ಹಿಡಿಯಲಾರೆ!’”
ರಾಮ: “ಒಮ್ಮೊಮ್ಮೆ ಕೇಶವಸೇನ ಹೇಳುತ್ತಿದ್ದ, ನೀವು ‘ಜಾನ್ ದಿ ಬ್ಯಾಪ್ಟಿಸ್ಟ್’ ಎಂಬುದಾಗಿ.’
ಒಬ್ಬ ಭಕ್ತ: “ಅದೇ ಅಲ್ಲ, ಇನ್ನು ಕೆಲವು ವೇಳೆ ಹೇಳುತ್ತಿದ್ದ, ‘ನೀವು ‘ಹತ್ತೊಂಬತ್ತನೆಯ ಶತಮಾನದ ಚೈತನ್ಯ’ ಎಂಬುದಾಗಿ.”
ಶ್ರೀರಾಮಕೃಷ್ಣರು: “ಹಾಗೆಂದರೇನು?”
ಭಕ್ತ: “ಈಗ ನಡೆಯುತ್ತಿರುವ ಕ್ರಿಸ್ತಶಕೆಯ ಶತಮಾನದಲ್ಲಿ ಚೈತನ್ಯದೇವ ಮತ್ತೆ ಅವತರಿಸಿದ್ದಾನೆ; ಆ ವ್ಯಕ್ತಿಯೇ ನೀವು.”
ಶ್ರೀರಾಮಕೃಷ್ಣರು ಅನ್ಯಮನಸ್ಕರಾಗಿ: ‘ಏನು ಬೇಕಾದರೂ ಹೇಳಿಕೊಳ್ಳಲಿ. ಈಗ ಹೇಳು. ನನ್ನ ಕೈ ಯಾವ ರೀತಿಯಾಗಿ ಗುಣಹೊಂದಬಲ್ಲುದು? ಈಗ ಕೇವಲ ಈ ಭಾವನೆ, ಯಾವ ರೀತಿಯಾಗಿ ನನ್ನ ಕೈಯನ್ನು ಗುಣಪಡಿಸಿಕೊಳ್ಳುವುದು ಅಂತ.”
ಈಗ ತ್ರೈಲೋಕ್ಯನ ಹಾಡುಗಾರಿಕೆಯ ಸಂಬಂಧವಾಗಿ ಮಾತುಕತೆ ಆರಂಭವಾಯಿತು; ಆತ ಕೇಶವಸೇನನ ಸಮಾಜದಲ್ಲಿ ಭಗವಂತನ ನಾಮಗುಣಕೀರ್ತನೆ ಮಾಡುತ್ತಾನೆ.
ಶ್ರೀರಾಮಕೃಷ್ಣರು: “ಆಹ! ಎಷ್ಟು ಚೆನ್ನಾದ ಹಾಡು ಆತನವು!”
ರಾಮ: “ಎಲ್ಲಾ ಚೆನ್ನಾಗಿವೆಯೇನು?”
ಶ್ರೀರಾಮಕೃಷ್ಣರು: “ಹೌದು, ಚೆನ್ನಾಗಿವೆ. ಇಲ್ಲದಿದ್ದರೆ ಅವು ನನ್ನ ಮನಸ್ಸನ್ನು ಬಹಳವಾಗಿ ಆಕರ್ಷಿಸುತ್ತಿವೆಯಲ್ಲ ಅದು ಹೇಗೆ?”
ರಾಮ: “ನಿಮ್ಮ ಭಾವನೆಗಳನ್ನು ತೆಗೆದುಕೊಂಡು ಆತ ಆ ಹಾಡುಗಳನ್ನು ರಚಿಸಿದ್ದಾನೆ. ಕೇಶವಸೇನ ಉಪಾಸನೆ ಸಮಯದಲ್ಲಿ ನಿಮ್ಮ ಭಾವನೆಗಳನ್ನು ವಿವರಿಸಿ ಹೇಳುತ್ತಿದ್ದ. ತ್ರೈಲೋಕ್ಯ ಅವುಗಳಿಗನುಗುಣವಾಗಿ ಹಾಡುಗಳನ್ನು ರಚಿಸುತ್ತಿದ್ದ. ಇಲ್ಲಿ ನೋಡಿ, ಈ ಹಾಡು ಹೇಗಿದೆ:
ಪ್ರೇಮದ ಪೇಟೆಯೊಳಾನಂದದ ಮೇಳ,
ಭಕ್ತಸಂಗರಸರಂಗದಿ ಕಾಣ್ ಹರಿಲೀಲಾ!
“ನೀವು ಭಕ್ತರೊಡನೆ ಆನಂದದಿಂದಿರುತ್ತೀರಿ. ಅದನ್ನು ನೋಡಿಕೊಂಡು ಹೋಗಿ ಈ ವಿಧದ ಹಾಡು ರಚಿಸಿದ್ದಾನೆ.”
ಶ್ರೀರಾಮಕೃಷ್ಣರು ನಗುತ್ತ: “ಹೋಗು! ಸುಮ್ಮನೆ ನನ್ನನ್ನು ಕಾಡಬೇಡ. ನನ್ನನ್ನೇಕೆ ಇದರಲ್ಲಿ ಸಿಕ್ಕಿಸಿ ನರಳಿಸಬೇಕು ಅಂತ ಇದ್ದೀಯೆ?” (ಎಲ್ಲರೂ ನಗುತ್ತಿದ್ದಾರೆ.)
ಗಿರೀಂದ್ರ: “ಬ್ರಾಹ್ಮಸಮಾಜದವರು ಹೇಳುತ್ತಾರೆ, ಪರಮಹಂಸರಿಗೆ ‘ಫ್ಯಾಕಲ್ಟಿ ಆಫ್ ಆರ್ಗನೈಸೇಷನ್’ ಇಲ್ಲ ಎಂದು.”
ಶ್ರೀರಾಮಕೃಷ್ಣರು: “ಇದರ ಅರ್ಥವೇನು?”
ಮಾಸ್ಟರ್: “ನಿಮಗೆ ಸಂಘ ನಡೆಯಿಸಿಕೊಂಡು ಹೋಗುವ ಶಕ್ತಿ ಇಲ್ಲ; ನಿಮಗೆ ಬುದ್ಧಿಶಕ್ತಿ ಸ್ವಲ್ಪ ಕಡಮೆ. ಹೀಗೆ ಅವರು ಹೇಳುತ್ತಾರಂತೆ.” (ಎಲ್ಲರೂ ನಗುತ್ತಿದ್ದಾರೆ.)
ಶ್ರೀರಾಮಕೃಷ್ಣರು ರಾಮನಿಗೆ: “ಹೇಳು ನೋಡೋಣ. ನನ್ನ ಕೈಗೆ ಏಕೆ ಪೆಟ್ಟು ತಗುಲಿತು? ನೀನು ಇದರ ಸಂಬಂಧವಾಗಿ ಹಾಗೇ ನಿಂತುಕೊಂಡು ಒಂದು ಲೆಕ್ಚರ್ ಕೊಡು. (ನಗು.)
“ಬ್ರಾಹ್ಮಸಮಾಜದವರು ಯಾವಾಗ ನೋಡಿದರೂ ‘ನಿರಾಕಾರ, ನಿರಾಕಾರ’ ಅನ್ನುತ್ತಲೇ ಇರುತ್ತಾರೆ. ಅದನ್ನೇನೊ ಒಪ್ಪಿಕೊಳ್ಳೋಣ. ಹೃತ್ಪೂರ್ವಕವಾಗಿ ಆತನನ್ನು ಕರೆದರೇ ಬೇಕಾದಷ್ಟು; ಭಗವಂತ ಅಂತರ್ಯಾಮಿಯಾಗಿರುವುದರಿಂದ ಪ್ರಾರ್ಥನೆ ಹೃತ್ಪೂರ್ವಕವಾಗಿದ್ದ ಪಕ್ಷದಲ್ಲಿ ತನ್ನ ನಿಜಸ್ವರೂಪ ಏನು ಎಂಬುದನ್ನು ಆತ ನಿಶ್ಚಯವಾಗಿ ತೋರಿಸಿಕೊಟ್ಟುಬಿಡುತ್ತಾನೆ.
“ಆದರೆ ನಾವು ಏನು ಹೇಳುತ್ತೇವೆಯೋ ಅದೇ ಸರಿ, ಉಳಿದವರು ಹೇಳುವುದೆಲ್ಲ ತಪ್ಪು ಎಂದು ಹೇಳುವುದು ಒಳ್ಳೆಯದಲ್ಲ. ನಾವು ನಿರಾಕಾರ ಅಂತ ಹೇಳುತ್ತೇವೆ; ಆದ್ದರಿಂದ ಆತ ನಿರಾಕಾರನೇ ವಿನಾ ಸಾಕಾರನಲ್ಲ. ನಾವು ಸಾಕಾರ ಅಂತ ಹೇಳುತ್ತೇವೆ; ಆದ್ದರಿಂದ ಆತ ಸಾಕಾರನೇ ವಿನಾ ನಿರಾಕಾರನಲ್ಲ. ಭಗವಂತ ಇಷ್ಟೇ ಎಂದು ಹೇಳಲು ಮನುಷ್ಯನಿಗೆ ಸಾಧ್ಯವೆ?
“ಈ ರೀತಿಯಾಗಿ ವೈಷ್ಣವರ ಮತ್ತು ಶಾಕ್ತರ ಮಧ್ಯೆ ಒಂದು ವಿಧವಾದ ಕಚ್ಚಾಟ ಇದೆ. ವೈಷ್ಣವ ಹೇಳುತ್ತಾನೆ: ‘ನಮ್ಮ ಕೇಶವನೇ ಏಕಮಾತ್ರ ಉದ್ಧಾರಕ.’ ಶಾಕ್ತ ಹೇಳುತ್ತಾನೆ: ‘ನಮ್ಮ ಭಗವತಿಯೇ ಏಕಮಾತ್ರ ಉದ್ಧಾರಕಿ.’
“ಒಮ್ಮೆ ನಾನು ವೈಷ್ಣವಚರಣನನ್ನು ಮಥುರಬಾಬುವಿನ ಹತ್ತಿರಕ್ಕೆ ಕರೆದುಕೊಂಡು ಹೋಗಿದ್ದೆ. ವೈಷ್ಣವಚರಣ ಬೈರಾಗಿ ಮತ್ತೆ ಪಂಡಿತ ಆಗಿದ್ದರೂ ಒಬ್ಬ ಗೊಡ್ಡು ವೈಷ್ಣವ. ಮಥುರಬಾಬುವೋ ಭಗವತಿಯ ಭಕ್ತ. ಒಳ್ಳೊಳ್ಳೆ ಮಾತುಕತೆ ನಡೆಯುತ್ತಿತ್ತು. ಇದ್ದಕ್ಕಿದ್ದ ಹಾಗೆ ವೈಷ್ಣವಚರಣ ಹೇಳಿಬಿಟ್ಟ: ‘ಮುಕ್ತಿಯನ್ನು ಕೊಡತಕ್ಕ ಏಕಮಾತ್ರ ಕರ್ತೃ ಕೇಶವನೇ. ‘ಕೇಶವ’ ಎಂಬ ಶಬ್ದವನ್ನು ಕೇಳಿದೊಡನೆಯೇ ಮಥುರಬಾಬುವಿನ ಮುಖ ಕೆಂಪಗಾಗಿ ಬಿಟ್ಟಿತು. ರೇಗಿ ಹೇಳಿದ: ‘ಎಲಾ ಧೂರ್ತ! ನನ್ನ-!’ (ಎಲ್ಲರೂ ನಗುತ್ತಿದ್ದಾರೆ.) ಆತ ಶಾಕ್ತನಲ್ಲವೆ, ಸುಮ್ಮನೆ ಬಿಡುತ್ತಾನೆಯೇ? ಆ ಪರಿಸ್ಥಿತಿ ನೋಡಿ ನಾನು ವೈಷ್ಣವಚರಣನನ್ನು ಮೊಳಕೈಯಿಂದ ಮೆತ್ತಗೆ ತಿವಿದೆ.
“ಯಾರನ್ನು ನೋಡಿದರೂ ಜನ ಸುಮ್ಮನೆ ‘ಧರ್ಮ, ಧರ್ಮ’ ಅನ್ನುತ್ತಲೇ ಇರುತ್ತಾರೆ; ಆದರೆ ಇವರೊಡನೆಯೂ ಜಗಳ ಕಾಯುತ್ತಾರೆ, ಅವರೊಡನೆಯೂ ಜಗಳ ಕಾಯುತ್ತಾರೆ. ಹಿಂದೂ, ಮುಸಲ್ಮಾನ, ಬ್ರಾಹ್ಮಸಮಾಜ, ಶಾಕ್ತ, ವೈಷ್ಣವ, ಶೈವ ಸಂಪ್ರದಾಯವರೆಲ್ಲರೂ ಪರಸ್ಪರ ಜಗಳ ಕಾಯುತ್ತಲೇ ಇರುತ್ತಾರೆ. ಯಾರನ್ನು ಕೃಷ್ಣ ಅಂತ ಕರೆಯುತ್ತೇವೆಯೊ ಆತನನ್ನೇ ಶಿವ, ಆತನನ್ನೇ ಆದ್ಯಾಶಕ್ತಿ ಎಂದು ಕರೆಯುತ್ತೇವೆ; ಆತನನ್ನೇ ಅಲ್ಲಾ ಎಂದು ಕರೆಯುತ್ತೇವೆ ಎಂಬುದಾಗಿ ತಿಳಿಯುವಷ್ಟು ಬುದ್ಧಿ ಅವರಿಗಿಲ್ಲ. ‘ಒಬ್ಬನೇ ರಾಮನಿಗೆ ಸಹಸ್ರಾರು ಹೆಸರು.’
“ವಸ್ತು ಒಂದೇ; ಹೆಸರು ಬೇರೆಬೇರೆ. ಎಲ್ಲರೂ ಆ ಒಂದು ವಸ್ತುವಿಗಾಗಿಯೇ ಹುಡುಕುತ್ತಿರುವುದು; ಆದರೆ ದೇಶ, ಪಾತ್ರಕ್ಕೆ ತಕ್ಕಂತೆ ಅದಕ್ಕೆ ಬೇರೆ ಬೇರೆ ಹೆಸರು. ಒಂದು ಕೊಳಕ್ಕೆ ಅನೇಕ ಘಟ್ಟಗಳು. ಒಂದು ಘಟ್ಟದಿಂದ ಹಿಂದುಗಳು ಬಿಂದಿಗೆಯಲ್ಲಿ ನೀರು ತರುತ್ತಾರೆ, ‘ನೀರು’ ಎಂದು ಹೇಳುತ್ತಾರೆ. ಇನ್ನೊಂದು ಘಟ್ಟದಿಂದ ಮುಸಲ್ಮಾನರು ಚಕ್ಕಳದ ಚೀಲದಲ್ಲಿ ನೀರು ತರುತ್ತಾರೆ, ಅವರು ‘ಪಾನಿ’ ಎಂದು ಹೇಳುತ್ತಾರೆ. ಮತ್ತೊಂದು ಘಟ್ಟದಿಂದ ಕ್ರಿಶ್ಚಿಯನ್ನರು ನೀರು ತರುತ್ತಾರೆ, ಅವರು ‘ವಾಟರ್’ ಎಂದು ಹೇಳುತ್ತಾರೆ. (ಎಲ್ಲರೂ ನಗುತ್ತಿದ್ದಾರೆ.) ಇಲ್ಲ ಈ ವಸ್ತು ನೀರಲ್ಲ ‘ಪಾನಿ’, ಅಥವಾ ಪಾನಿಯಲ್ಲ ‘ವಾಟರ್’, ಅಥವಾ ವಾಟರ್ ಅಲ್ಲ ‘ನೀರು’, ಎಂದು ಯಾರಾದರೂ ಹೇಳಿದ್ದೇ ಆದರೆ ಆಗ ಸುಮ್ಮನೆ ನಗಬೇಕಾಗುತ್ತದೆ. ಇದರಿಂದಲೇ ಘರ್ಷಣೆ, ಮನಸ್ತಾಪ, ಜಗಳ; ಧರ್ಮದಹೆಸರಿನಲ್ಲಿ ಹೊಡೆದಾಟ, ಬಡಿದಾಟ, ಕಚ್ಚಾಟ. ಇದೆಲ್ಲ ಒಳ್ಳೆಯದಲ್ಲ. ಎಲ್ಲರೂ ಭಗವಂತನ ಕಡೆಗೇ ಹೋಗುತ್ತಿದ್ದಾರೆ. ಹೃತ್ಪೂರ್ವಕ ವ್ಯಾಕುಲತೆ ಇತ್ತು ಎಂದರೆ, ಆತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ.
(ಮಾಸ್ಟರಿಗೆ) “ಇದು ನಿನಗೆ: ವೇದ, ಪುರಾಣ, ತಂತ್ರ-ಎಲ್ಲಾ ಶಾಸ್ತ್ರಗಳಿಗೂ ಭಗವಂತನೊಬ್ಬನೇ, ಆ ಸಚ್ಚಿದಾನಂದನೊಬ್ಬನೇ ಬೇಕೇ ವಿನಾ ಬೇರೆ ಯಾರೂ ಬೇಕಾಗಿಲ್ಲ. ಯಾರನ್ನು ವೇದ ‘ಸಚ್ಚಿದಾನಂದ ಬ್ರಹ್ಮ’ ಎಂಬುದಾಗಿ ಕರೆಯುವುದೊ ಆತನನ್ನೇ ತಂತ್ರ ‘ಸಚ್ಚಿದಾನಂದ ಶಿವ’ ಎಂಬುದಾಗಿ ಕರೆಯುತ್ತದೆ. ಆತನನ್ನೇ ಪುರಾಣ ಮತ್ತೆ ‘ಸಚ್ಚಿದಾನಂದ ಕೃಷ್ಣ’ ಎಂಬುದಾಗಿ ಕರೆಯುತ್ತದೆ.”
ಪರಮಹಂಸರಿಗೆ ಯಾರೋ ಹೇಳಿದರು, ರಾಮ ತನ್ನ ಮನೆಯಲ್ಲಿ ಸ್ವಯಂಪಾಕ ಮಾಡಿ ತಿನ್ನುತ್ತಿದ್ದಾನೆ ಎಂಬುದಾಗಿ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನೀನೂ ಸ್ವಯಂಪಾಕ ಮಾಡಿ ತಿನ್ನುತ್ತಿದ್ದೀಯೇನು?”
ಮಾಸ್ಟರ್: “ಇಲ್ಲ.”
ಶ್ರೀರಾಮಕೃಷ್ಣರು: “ಪ್ರಯತ್ನ ಮಾಡಿ ನೋಡು. ಸ್ವಲ್ಪ ಹಸುವಿನ ತುಪ್ಪ ಹಾಕಿಕೊಂಡು ತಿನ್ನು. ಆಗ ನಿನ್ನ ಮನಸ್ಸು ಮತ್ತು ಶರೀರ ಶುದ್ಧವಾಗುತ್ತದೆ.”
ರಾಮನ ಗೃಹಕೃತ್ಯದ ಸಂಬಂಧವಾಗಿ ಈಗ ಮಾತುಕತೆ ಆರಂಭವಾಯಿತು. ರಾಮನ ತಂದೆ ಪರಮವೈಷ್ಣವ. ಮನೆಯಲ್ಲಿ ಶ್ರೀಧರನ ನಿತ್ಯಪೂಜೆ ನಡೆಯುತ್ತಿದೆ. ರಾಮನ ತಂದೆ ಎರಡನೆ ಸಾರಿ ಮದುವೆಯಾಗಿದ್ದಾನೆ-ಆಗ ರಾಮನಿಗೆ ಎಳೆ ವಯಸ್ಸು. ತಂದೆ ಮತ್ತು ಬಲತಾಯಿ ರಾಮನೊಡನೆ ಇದ್ದಾರೆ. ರಾಮನಿಗೂ ಬಲತಾಯಿಗೂ ಸರಿಹೋಗುತ್ತಿರಲಿಲ್ಲ. ಇದು ತಂದೆಗೂ ಮಗನಿಗೂ ಆಗಾಗ ಮನಸ್ತಾಪವನ್ನು ತರುತ್ತಿತ್ತು.
ಇವುಗಳ ಸಂಬಂಧವಾಗಿ ಮಾತುಕತೆ ನಡೆಯುತ್ತಿದ್ದಾಗ ರಾಮ ಹೇಳಿದ: “ಆತ ಹಾಳಾಗಿ ಹೋದ.”
ಶ್ರೀರಾಮಕೃಷ್ಣರು ಭಕ್ತರಿಗೆ: “ಕೇಳಿದಿರಾ? ತಂದೆ ಹಾಳಾಗಿಹೋದ, ಇವನು ಮಾತ್ರ ಸರಿಯಾಗಿ ಇದ್ದಾನೆ!”
ರಾಮ: “ಬಲತಾಯಿ ಮನೆಗೆ ಬಂದಳು ಎಂದರೇ ಅಶಾಂತಿ. ಒಂದಲ್ಲ ಒಂದು ತೊಂದರೆ ಇದ್ದೇ ಇರುತ್ತದೆ. ಈಗ ಮನೆ ಒಡೆದುಹೋಗುವ ಸ್ಥಿತಿಯಲ್ಲಿದೆ. ಇದಕ್ಕಾಗಿಯೇ ನಾನು ಹೇಳುತ್ತಿರುವುದು, ಆಕೆ ತನ್ನ ತಂದೆಮನೆಗೆ ಹೋಗಿ ಇರಲಿ ಅಂತ.”
ಗಿರೀಂದ್ರ ರಾಮನಿಗೆ: “ನಿನ್ನ ಹೆಂಡತಿಯನ್ನು ಕೂಡ ನೀನು ಅದೇ ರೀತಿಯಾಗಿ ಏಕೆ ಆಕೆಯ ತೌರುಮನೆಯಲ್ಲಿ ಬಿಟ್ಟುಬಿಡಕೂಡದು?” (ನಗು.)
ಶ್ರೀರಾಮಕೃಷ್ಣರು ನಗುತ್ತ: “ಸತಿಪತಿಯರೇನು ಮಡಕೆ ಗುಡಾಣಗಳೇನು, ಗುಡಾಣ ಒಂದು ಕಡೆ ಬಿದ್ದಿರಲಿ ಮುಚ್ಚಳ ಇನ್ನೊಂದು ಕಡೆ ಬಿದ್ದಿರಲಿ ಎನ್ನುವುದಕ್ಕೆ? ಶಿವ ಒಂದು ಕಡೆ ಶಕ್ತಿ ಇನ್ನೊಂದು ಕಡೆಯೆ?”
ರಾಮ: “ಮಹಾಶಯರೆ, ಈಗ ನಾವು ಆನಂದದಿಂದ ಇದ್ದೇವೆ. ಆಕೆ ಬಂದಳು ಅಂದರೆ ಸಂಸಾರ ಒಡೆದುಹೋಗಿಬಿಡುತ್ತದೆ. ಅಂಥ ಸಂದರ್ಭದಲ್ಲಿ-”
ಶ್ರೀರಾಮಕೃಷ್ಣರು: “ಹಾಗಿದ್ದ ಪಕ್ಷದಲ್ಲಿ ಅವರಿಗೆ ಒಂದು ಹೊಸ ಮನೆಯನ್ನು ಕಟ್ಟಿಕೊಟ್ಟುಬಿಡು. ಅದೊಂದು ಮಾರ್ಗವಾಗುತ್ತೆ. ಅವರ ತಿಂಗಳ ತಿಂಗಳ ಖರ್ಚು ವೆಚ್ಚವನ್ನೆಲ್ಲಾ ನೀನು ವಹಿಸಿಕೊಂಡುಬಿಡಬೇಕು. ತಂದೆತಾಯಿ ಎಷ್ಟೊಂದು ಪೂಜ್ಯರು! ರಾಖಾಲ ನನ್ನನ್ನು ಕೇಳಿದ, ತಾನು ತನ್ನ ತಂದೆಯ ಎಲೆಯಲ್ಲಿನ ಉಚ್ಛಿಷ್ಟವನ್ನು ತಿನ್ನಬಹುದೆ ಎಂದು. ನಾನು ಹೇಳಿದೆ: ‘ಏನಿದು ನೀನು ಕೇಳುವುದು? ಏನಾಗಿಬಿಟ್ಟಿದೆ ನಿನಗೆ ಹಾಗೆ ಕೇಳುವುದಕ್ಕೆ?’ ಆದರೆ ಒಂದು ವಿಷಯ. ಯಾರು ಸಾತ್ತ್ವಿಕರೊ ಅವರು ತಮ್ಮ ಉಚ್ಛಿಷ್ಟವನ್ನು ಯಾರಿಗೂ ಕೊಡಲಿಚ್ಛಿಸರು; ಅಷ್ಟೇ ಏಕೆ, ನಾಯಿಗೂ ಕೊಡಲಿಚ್ಛಿಸರು.”
ಗಿರೀಂದ್ರ: “ತಂದೆತಾಯಿಗಳು ಗುರುತರ ಅಪರಾಧವನ್ನೇ ಆಗಲಿ ಅಥವಾ ಭಯಂಕರ ಪಾಪಕೃತ್ಯವನ್ನೇ ಆಗಲಿ ಮಾಡಿದ್ದರೆ?”
ಶ್ರೀರಾಮಕೃಷ್ಣರು: “ಮಾಡಿದ್ದರೇನು? ತಾಯಿ ವ್ಯಭಿಚಾರಿಣಿಯಾಗಿದ್ದರೂ ಆಕೆಯನ್ನು ತ್ಯಜಿಸಕೂಡದು. ಯಾವುದೊ ಒಂದು ಮನೆಯವರ ಗುರುಪತ್ನಿಯ ಶೀಲ ಸರಿಯಾಗಿಲ್ಲದಿದ್ದುದರಿಂದ ಆ ಮನೆಯವರು ಹೇಳುತ್ತಿದ್ದರು, ಆಕೆಯ ಮಗನನ್ನು ಗುರುವನ್ನಾಗಿ ಸ್ವೀಕರಿಸಿಕೊಂಡುಬಿಡೋಣ ಎಂಬುದಾಗಿ. ಅದಕ್ಕೆ ನಾನು ಹೇಳಿದೆ: ‘ಇದೇನಿದು? ಗೆಡ್ಡೆಯನ್ನು ಬಿಸುಟು ಮೊಳಕೆಯನ್ನು ಸ್ವೀಕರಿಸುವುದೆ? ಆಕೆಯ ಶೀಲ ನಷ್ಟವಾಗಿದ್ದರೇನಾಯಿತು? ನೀವು ಆಕೆಯನ್ನೇ ನಿಮ್ಮ ಇಷ್ಟದೇವತೆ ಎಂದು ಭಾವಿಸಿಕೊಳ್ಳಬೇಕು.’ “ನನ್ನ ಶ್ರೀಗುರು ಮದ್ಯಪಾನವ ದಿನವು ಮಾಡುತಲಿದ್ದರೂ, ಅವನೇ ನಿತ್ಯಾನಂದನೆನ್ನುತ ತಿಳಿವುದೆನ್ನೀ ಭಾವವು.”
“ತಂದೆತಾಯಿಗಳೇನು ಕಸಕಡ್ಡಿಗಳೇ? ಅವರು ಸುಪ್ರೀತರಾದ ಹೊರತು ಸಾಧನ ಕರ್ಮಗಳಾವುವೂ ಫಲ ಬಿಡದು. ಚೈತನ್ಯದೇವ ಯಾವಾಗ ನೋಡಿದರೂ ಪ್ರೇಮೋನ್ಮತ್ತನಾಗಿರುತ್ತಿದ್ದ. ಆದರೂ ಸಂನ್ಯಾಸ ತೆಗೆದುಕೊಳ್ಳುವ ಮುನ್ನ ಎಷ್ಟೊಂದು ದಿನ ಆತ ತನ್ನ ತಾಯಿಗೆ ಸಮಾಧಾನ ಹೇಳಬೇಕಾಯಿತು! ಆತ ಆಕೆಗೆ ಹೇಳಿದ: ‘ಅಮ್ಮಾ, ವ್ಯಸನಪಡಬೇಡ, ಆಗಾಗ ಬಂದು ನೋಡಿಹೋಗುತ್ತೇನೆ.’
(ಮಾಸ್ಟರಿಗೆ ಖಂಡಿಸುವ ದೃಷ್ಟಿಯಿಂದ) “ಮತ್ತೆ ನಿನಗೆ ಇದನ್ನು ಹೇಳುತ್ತೇನೆ. ನಿನ್ನ ತಂದೆತಾಯಿಗಳು ನಿನ್ನನ್ನು ಹೆತ್ತು ಹೊತ್ತು ಸಾಕಿ ಸಲಹಿ ಬೆಳೆಸಿದ್ದಾರೆ. ಈಗ ನಿನಗೇ ಅನೇಕ ಮಕ್ಕಳುಮರಿಗಳು ಆಗಿಬಿಟ್ಟಿವೆ. ಆದರೂ ನೀನು ಹೆಂಡತಿ ಕಟ್ಟಿಕೊಂಡು ಮನೆ ಬಿಟ್ಟು ಹೊರಟುಹೋಗಿರುವೆಯಲ್ಲ! ತಂದೆತಾಯಿಯರಿಗೆ ಮೋಸಮಾಡಿ, ಹೆಂಡತಿ ಮಕ್ಕಳು ಕಟ್ಟಿಕೊಂಡು ಮನೆಬಿಟ್ಟು ಹೊರಕ್ಕೆ ಬಂದುಬಿಟ್ಟಿದ್ದೀಯೆ. ಆದರೂ ಭಾವಿಸುತ್ತಿದ್ದೀಯೆ, ನೀನೊಬ್ಬ ಆಚಾರಶೀಲ ವೈಷ್ಣವ ಎಂಬುದಾಗಿ! ನಿಮ್ಮ ತಂದೆಗೆ ಯಾವುದರ ಅಭಾವವೂ ಇಲ್ಲ; ಹಾಗಿಲ್ಲದಿದ್ದರೆ ಹೇಳುತ್ತಿದ್ದೆ: ‘ನೀನೊಬ್ಬ ಅಯೋಗ್ಯ!’ ಎಂದು.”
ಕೊಠಡಿಯಲ್ಲಿದ್ದವರೆಲ್ಲರೂ ಈಗ ಗಂಭಿರಮುದ್ರೆ ಹಾಕಿಕೊಂಡು ಸುಮ್ಮನೆಕುಳಿತಿದ್ದಾರೆ.
ಶ್ರೀರಾಮಕೃಷ್ಣರು: “ಅನೇಕ ಋಣಗಳಿವೆ : ದೇವಋಣ, ಋಷಿಋಣ, ಮಾತೃಋಣ, ಪಿತೃಋಣ, ಸ್ತ್ರೀಋಣ. ತಂದೆತಾಯಿಯರ ಋಣವನ್ನು ತೀರಿಸದೆ ಇದ್ದರೆ ಏನನ್ನು ಸಾಧಿಸಲೂ ಆಗುವುದಿಲ್ಲ. ಸತಿಯ ಋಣವನ್ನು ತೀರಿಸಬೇಕಾದ್ದೆ. ಹರೀಶ ಹೆಂಡತಿಯನ್ನು ತ್ಯಜಿಸಿ ಇಲ್ಲಿಗೆ ಬಂದು ಇದ್ದಾನೆ. ಆಕೆಯ ಅನ್ನಾಹಾರಾದಿಗಳಿಗೆ ಅನುಕೂಲವಿಲ್ಲದೆ ಇತ್ತು ಎಂದರೆ, ನಾನು ಆತನಿಗೆ ಹೇಳುತ್ತಿದ್ದೆ: ‘ನೀನು ನೀಚರಲ್ಲಿ ಅಗ್ರಗಣ್ಯ!’ ಎಂದು.
“ಬ್ರಹ್ಮಜ್ಞಾನ ದೊರೆತ ನಂತರ ನಿನ್ನ ಸತಿಯನ್ನು ನೀನು ಸಾಕ್ಷಾತ್ ಭಗವತಿಯೇ ಎಂಬುದಾಗಿ ನೋಡಲಾರಂಭಿಸುತ್ತೀಯೆ. ಚಂಡಿಯಲ್ಲಿ ಹೇಳಿದೆ: ‘ಭಗವತಿ ಎಲ್ಲಾ ಭೂತಗಳಲ್ಲಿಯೂ ಮಾತೃರೂಪದಲ್ಲಿ ಇದ್ದಾಳೆ’ ಎಂದು. ಆಕೆಯೇ ನಿನ್ನ ಹೆತ್ತ ತಾಯಿಯಾಗಿದ್ದಾಳೆ.
“ನನ್ನ ಕಣ್ಣಿಗೆ ಬೀಳುವ ಹೆಂಗಸರೆಲ್ಲರೂ ಭಗವತಿಯರೇ. ಅದಕ್ಕಾಗಿಯೇ ನಾನು ಬೃಂದೆಗೆ (ಸೇವಕಿಗೆ) ಒಂದು ಬೈಗಳನ್ನೂ ಬಯ್ಯಲಾರೆ. ಕೆಲವರು ಶ್ಲೋಕಗಳನ್ನು ನೀರು ಕುಡಿದ ಹಾಗೆ ಹೇಳಬಲ್ಲರು, ಮತ್ತು ಗಹನ ವಿಷಯಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು. ಆದರೆ ವ್ಯವಹಾರದಲ್ಲಿ ಮಾತ್ರ ಬೇರೆ ಮನುಷ್ಯರು. ರಾಮಪ್ರಸನ್ನ ಆ ಹಠಯೋಗಿಗೆ ಹೇಗೆ ಅಫೀಮು ಹಾಲು ಒದಗಿಸುವುದು ಎಂಬ ಚಿಂತನೆಯಲ್ಲೇ ಓಡಾಡುತ್ತಿದ್ದಾನೆ. ಆತ ಹೇಳುತ್ತಾನೆ, ‘ಸಾಧುಸೇವೆ ಮಾಡಬೇಕೆಂದು ಮನು ಹೇಳಿದ್ದಾನೆ’ ಎಂಬುದಾಗಿ. ಆದರೆ ಆತನ ವೃದ್ಧೆ ತಾಯಿಗೆ ತಿನ್ನುವುದಕ್ಕೆ ಏನೆಂದರೆ ಏನೂ ಇಲ್ಲ. ತಾನೇ ಸಂತೆಪೇಟೆಗೆ ಹೋಗಿ ಬರುತ್ತಿದ್ದಾಳೆ. ಸುಮ್ಮನೆ ಕೋಪ ಉಕ್ಕಿಬರುತ್ತಿದೆ.
“ಆದರೆ ಒಂದು ವಿಷಯ. ಪ್ರೇಮೋನ್ಮಾದ ಉಂಟಾಗಿಬಿಟ್ಟಿತು ಎಂದರೆ, ಆಗ ಈತ ತಂದೆ, ಆಕೆ ತಾಯಿ, ಈಕೆ ಹೆಂಡತಿ ಎಂಬ ಭಾವನೆ ಎಲ್ಲಿರುತ್ತದೆ! ಭಕ್ತ ಭಗವಂತನನ್ನು ಅಷ್ಟೊಂದು ಪ್ರೀತಿಸುತ್ತಿರುತ್ತಾನೆ, ಆತ ಹುಚ್ಚನಂತಾಗಿಬಿಡುತ್ತಾನೆ. ಅಂಥವನಿಗೆ ಯಾವ ಕರ್ತವ್ಯವೂ ಇರದು. ಸಕಲ ಋಣಗಳಿಂದಲೂ ಮುಕ್ತ. ಪ್ರೇಮೋನ್ಮಾದವೆಂಬುದು ಏನು ಗೊತ್ತೆ? ಆ ಅವಸ್ಥೆ ಉಂಟಾದಾಗ ಈ ಜಗತ್ತೇ ಮರೆತುಹೋಗಿಬಿಡುತ್ತದೆ. ಸ್ವಂತ ದೇಹವಿದೆಯಲ್ಲ, ಅದು ಎಷ್ಟೊಂದು ಪ್ರೀತಿಯ ವಸ್ತು! ಅದು ಕೂಡ ಮರೆತುಹೋಗಿಬಿಡುತ್ತದೆ. ಈ ಅವಸ್ಥೆ ಚೈತನ್ಯದೇವನಿಗೆ ಉಂಟಾಗಿತ್ತು. ಸಾಗರದೊಳಕ್ಕೆ ರಭಸದಿಂದ ನುಗ್ಗಿಬಿಟ್ಟ-ಅದು ಸಾಗರ ಎಂಬ ಜ್ಞಾನವಿಲ್ಲದೆ. ತತ್ತರಿಸಿ ತತ್ತರಿಸಿ ಆಗಾಗ ನೆಲದ ಮೇಲೆ ಬೀಳುತ್ತಲೇ ಇರುತ್ತಿದ್ದ. ಹಸಿವು, ಬಾಯಾರಿಕೆ, ನಿದ್ರೆ ಇವುಗಳ ಅರಿವು ಆತನಿಗಾಗುತ್ತಿರಲಿಲ್ಲ. ತನ್ನ ಶರೀರವೆಂಬುದೊಂದಿದೆ ಎಂಬ ಪ್ರಜ್ಞೆಯೇ ಆತನಿಗಿರುತ್ತಿರಲಿಲ್ಲ.”
ಶ್ರೀರಾಮಕೃಷ್ಣರು ಇದ್ದಕ್ಕಿದ್ದ ಹಾಗೆ “ಹಾ ಚೈತನ್ಯ!” ಎಂದು ಕೂಗುತ್ತ ಎದ್ದು ನಿಂತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು ಭಕ್ತರಿಗೆ: “ಚೈತನ್ಯವೆಂದರೆ ‘ಅಖಂಡ ಚೈತನ್ಯ.’ ವೈಷ್ಣವಚರಣ ಹೇಳುತ್ತಿದ್ದ, ಗೌರಾಂಗ ಈ ಅಖಂಡ ಚೈತನ್ಯದ ಒಂದು ಗುಳ್ಳೆ ಎಂದು.
(ಹಿರಿಯ ಗೋಪಾಲನಿಗೆ) “ಏನು, ನೀನು ಈಗ ತೀರ್ಥಯಾತ್ರೆಗೆ ಹೋಗಬೇಕು ಅಂತ ಇದ್ದೀಯೇನು?”
ಹಿರಿಯ ಗೋಪಾಲ: “ಹೌದು. ಸ್ವಲ್ಪ ಸುತ್ತಿಕೊಂಡು ಬರೋಣ ಅಂತ.”
ರಾಮ, ಹಿರಿಯ ಗೋಪಾಲನಿಗೆ: “ಇವರು (ಪರಮಹಂಸರು) ಹೇಳುತ್ತಾರೆ, ಸಾಧು ಬಹೂದಕನಾದಮೇಲೆ ಕುಟೀಚಕನಾಗುತ್ತಾನೆ ಎಂದು. ತೀರ್ಥಯಾತ್ರೆಗೆ ಎಂದು ಅನೇಕ ಸ್ಥಳಗಳಿಗೆ ಹೋಗುವವನಿಗೆ ‘ಬಹೂದಕ’ ಅಂತ ಹೆಸರು. ತೀರ್ಥಯಾತ್ರೆಯನ್ನು ಮುಗಿಸಿ ಯಾವನು ಒಂದು ಸ್ಥಳದಲ್ಲಿ ಸ್ಥಿರವಾಗಿ ಇರಲು ಆರಂಭಿಸುವನೊ ಆತನಿಗೆ ‘ಕುಟೀಚಕ’ ಅಂತ ಹೆಸರು.
“ಇವರು ಇದಕ್ಕೆ ಒಂದು ರೂಪಕಕಥೆಯನ್ನೂ ಹೇಳುತ್ತಾರೆ. ಒಮ್ಮೆ ಒಂದು ಹಕ್ಕಿ ಜಹಜಿನ ಧ್ವಜಸ್ತಂಭದ ಮೇಲೆ ಕುಳಿತುಕೊಂಡಿತು. ಜಹಜು ಗಂಗಾಮುಖವನ್ನು ಬಿಟ್ಟು ಸಮುದ್ರದ ಕಪ್ಪುನೀರನ್ನು ಮುಟ್ಟಿದರೂ ಅದಕ್ಕೆ ತಾನು ಎಲ್ಲಿಗೆ ಮುಂದುವರಿಯುತ್ತಿದ್ದೇನೆ ಎಂಬುದರ ಪ್ರಜ್ಞೆಯೇ ಇರಲಿಲ್ಲ. ತಾನು ಸಮುದ್ರದೊಳಗೆ ಮುಂದುವರಿಯುವುದರ ಅರಿವು ಅದಕ್ಕೆ ಉಂಟಾದೊಡನೇ ಅದು ತೀರ ಯಾವ ದಿಕ್ಕಿನಲ್ಲಿ ಇದೆ ಎಂಬುದನ್ನು ಅರಿಯಲು ಉತ್ತರ ದಿಕ್ಕಿನ ಕಡೆ ಹಾರಿಹೋಯಿತು. ಆ ಕಡೆ ಎಲ್ಲೂ ತೀರ ಕಾಣಿಸದೆಹೋದುದರಿಂದ ಹಿಂದಿರುಗಿ ಬಂದು ಧ್ವಜಸ್ತಂಭದ ಮೇಲೆ ಕುಲಿತುಕೊಂಡಿತು. ಅಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ದಕ್ಷಿಣ ದಿಕ್ಕಿನ ಕಡೆ ಹಾರಿಹೋಯಿತು. ಆ ಕಡೆಯೂ ತೀರ ಕಣ್ಣಿಗೆ ಬೀಳಲಿಲ್ಲ. ಏದುತ್ತ ಏದುತ್ತ ಹಿಂದಿರುಗಿ ಬಂದು ಮತ್ತೆ ಧ್ವಜಸ್ತಂಭದ ಮೇಲೆ ಕುಳಿತುಕೊಂಡಿತು. ಮತ್ತೆ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡನಂತರ ಒಮ್ಮೆ ಪೂರ್ವದಿಕ್ಕಿಗೆ, ಇನ್ನೊಮ್ಮೆ ಪಶ್ಚಿಮ ದಿಕ್ಕಿಗೆ ಹಾರಿ ನೋಡಿತು. ಯಾವ ದಿಕ್ಕಿನಲ್ಲಿಯೂ ಯಾವಾಗ ತೀರ ಕಾಣಬರಲಿಲ್ಲವೋ, ಆಗ ಅದು ಧ್ವಜಸ್ತಂಭದ ಮೇಲೆ ತೆಪ್ಪಗೆ ಕುಳಿತುಕೊಂಡುಬಿಟ್ಟಿತು.”
ಶ್ರೀರಾಮಕೃಷ್ಣರು ಹಿರಿಯ ಗೋಪಾಲನಿಗೆ ಮತ್ತು ಉಳಿದ ಭಕ್ತರಿಗೆ: “ಎಲ್ಲಿಯವರೆಗೆ ಭಾವನೆ ಇರುವುದೋ ಭಗವಂತ ‘ಅಲ್ಲಿ, ಅಲ್ಲಿ’ ಎಂಬುದಾಗಿ, ಅಲ್ಲಿಯವರೆಗೆ ಮನುಷ್ಯ ಅಜ್ಞಾನವಶನಾಗಿರುತ್ತಾನೆ. ಆದರೆ ಯಾವಾಗ ಭಾವನೆ ಬರುವುದೋ ಆತ ‘ಇಲ್ಲಿ, ಇಲ್ಲಿ’ ಎಂಬುದಾಗಿ, ಆಗ ಆತನಿಗೆ ಜ್ಞಾನೋದಯವಾಗುತ್ತದೆ.
“ಒಬ್ಬನಿಗೆ ಗುಡುಗುಡಿ ಸೇದಲು ಇಚ್ಛೆಯಾಯಿತು. ಅದನ್ನು ಹೊತ್ತಿಸಿಕೊಳ್ಳಲು ಆತ ಪಕ್ಕದ ಮನೆಗೆ ಹೋದ. ಆಗಲೇ ಬಹಳವಾಗಿ ರಾತ್ರಿಯಾಗಿಬಿಟ್ಟಿತು. ಅವರು ನಿದ್ದೆಮಾಡುತ್ತಿದ್ದರು. ಬಹಳ ಹೊತ್ತು ಕದ ಕಟ್ಟಿದ ನಂತರ ಒಬ್ಬ ಎದ್ದು ಬಂದು ಬಾಗಿಲು ತೆರೆದ. ಈತನನ್ನು ನೋಡಿ ಆತ ಕೇಳಿದ: ‘ಏನಯ್ಯ, ಏನು ಸಮಾಚಾರ?’ ಈತ ಹೇಳಿದ: ‘ಏನು ಊಹಿಸಲಾರೆಯಾ? ನನಗೆ ಹೊಗೆಸೊಪ್ಪಿನ ನೆಶಾ ಇರುವುದು ನಿನಗೆ ಗೊತ್ತೇ ಇದೆಯಲ್ಲ. ಗುಡಿಗುಡಿ ಹೊತ್ತಿಸಿಕೊಳ್ಳಲು ಬಂದಿದ್ದೇನೆ.’ ಆಗ ಆತ ನಕ್ಕು ಹೇಳಿದ: ‘ಹಹಹಃ! ನಿನ್ನ ಬುದ್ಧಿ ಒನಕೆ ಚಿಗುರೇ! ಇಷ್ಟು ಶ್ರಮವಹಿಸಿ ಬಂದದ್ದೂ ಅಲ್ಲದೆ ಜೊತೆಗೆ ಇಷ್ಟೊಂದು ಕದ ತಟ್ಟಿದ್ದೂ ಬೇರೆ! ನಿನ್ನ ಕೈಯಲ್ಲೆ ಉರಿಯುತ್ತಿರೋ ಲಾಟೀನು ಇದೆಯಲ್ಲ!’ (ಎಲ್ಲರೂ ನಗುತ್ತಿದ್ದಾರೆ.)
“ಏನು ಬೇಕೋ ಅದು ಹತ್ತಿರವೇ ಇದೆ, ಆದರೂ ಜನ ಅಲ್ಲಿ ಇಲ್ಲಿ ಹುಡುಕುತ್ತಾರೆ.”
ರಾಮ: “ಮಹಾಶಯರೆ, ಈಗ ಅರ್ಥವಾಗುತ್ತಿದೆ, ಏಕೆ ಗುರು ತನ್ನ ಕೆಲವು ಮಂದಿ ಶಿಷ್ಯರಿಗೆ ಹೇಳುತ್ತಾನೆ-ನಾಲ್ಕು ಧಾಮಗಳನ್ನೂ ಸುತ್ತಿಬರುವಂತೆ. ಒಮ್ಮೆ ಎಲ್ಲಾ ಕಡೆಯೂ ಸುತ್ತಿದ ನಂತರ ಆತನಿಗೆ ಅರ್ಥವಾಗುತ್ತದೆ, ಇಲ್ಲಿ ಏನಿದೆಯೊ ಅಲ್ಲೂ ಅದೇ ಇದೆ ಎಂದು. ಅನಂತರ ಗುರುವಿನ ಹತ್ತಿರಕ್ಕೆ ಹಿಂದಿರುಗಿ ಬರುತ್ತಾನೆ. ಈ ಭ್ರಮಣ ಕಾರ್ಯವೆಲ್ಲಾ ಕೇವಲ ಗುರುವಾಕ್ಯದಲ್ಲಿ ಶ್ರದ್ಧೆಯುಂಟಾಗಲೋಸುಗ.”
ಈ ಮಾತುಕತೆಗಳೆಲ್ಲ ಮುಗಿದು ಎಲ್ಲರೂ ಶಾಂತವಾಗಿ ಕುಳಿತಿದ್ದಾರೆ. ಈಗ ಪರಮಹಂಸರು ರಾಮನ ಗುಣಗಳನ್ನು ಶ್ಲಾಘನೆ ಮಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು ಭಕ್ತರಿಗೆ : “ಆಹ, ರಾಮನಲ್ಲಿ ಎಷ್ಟೊಂದು ಗುಣ! ಎಷ್ಟೊಂದು ಮಂದಿ ಭಕ್ತರ ಸೇವೆ, ಪ್ರತಿಪಾಲನೆ ಮಾಡುತ್ತಾನೆ! (ರಾಮನಿಗೆ) ಅಧರಸೇನ ಹೇಳುತ್ತಿದ್ದ, ನೀನು ಆತನಿಗೆ ಬಹಳವಾಗಿ ಅಕ್ಕರೆ ತೋರಿಸಿದೆಯಂತೆ.”
ಅಧರಸೇನನ ಮನೆ ಶೋಭಾಬಜಾರಿನಲ್ಲಿದೆ. ಆತ ಪರಮಹಂಸರ ಪರಮಭಕ್ತ. ಮನೆಯಲ್ಲಿ ಚಂಡೀಕೀರ್ತನೆ ಏರ್ಪಡಿಸಿದ್ದ. ಪರಮಹಂಸರೂ ಅಲ್ಲದೆ ಅನೇಕ ಮಂದಿ ಭಕ್ತರೂ ಅಲ್ಲಿಗೆ ಬಂದಿದ್ದರು. ಅಧರಸೇನ ರಾಮನನ್ನು ಆಮಂತ್ರಿಸಲು ಮರೆತುಬಿಟ್ಟಿದ್ದ. ರಾಮನಿಗೆ ಬಹಳ ಅಭಿಮಾನ. ಆತ ಜನರ ಹತ್ತಿರ ತನ್ನ ದುಃಖವನ್ನು ಪ್ರದರ್ಶಿಸಿಕೊಂಡಿದ್ದ. ಅದಕ್ಕಾಗಿ ಅಧರಸೇನ ರಾಮನ ಮನೆಗೆ ಹೋಗಿದ್ದ, ತಾನು ಮರೆತುದಕ್ಕಾಗಿ ಆತನಿಂದ ಕ್ಷಮೆ ಬೇಡಿಬರಲು.
ರಾಮ: “ಅದು ಅಧರಸೇನನ ತಪ್ಪಲ್ಲ. ನನಗೆ ಗೊತ್ತಾಯಿತು ಅದು ರಾಖಾಲನ ತಪ್ಪು ಎಂದು. ಆ ಭಾರ ರಾಖಾಲನ ಮೇಲೆ ಬಿದ್ದಿತ್ತು.”
ಶ್ರೀರಾಮಕೃಷ್ಣರು: “ರಾಖಾಲನನ್ನು ಹೊಣೆಯಾಗಿ ಮಾಡುವುದು ಸರಿಯಲ್ಲ. ಆತ ಇನ್ನೂ ಏನೂ ಅರಿಯದ ಹಸುಳೆ. ಗಂಟಲು ಅದುಮಿದರೆ ತಾಯಿಯ ಎದೆಹಾಲು ಹೊರಕ್ಕೆ ಬಂದುಬಿಡುತ್ತದೆ.”
ರಾಮ: “ಮಹಾಶಯರೆ, ಹಾಗೇಕೆ ಮಾತಾಡುತ್ತಿದ್ದೀರಿ? ಚಂಡಿಕೀರ್ತನೆ ನಡೆಯಿತು-”
ಶ್ರೀರಾಮಕೃಷ್ಣರು: “ಅಧರಸೇನ ನಿನ್ನನ್ನು ಆಹ್ವಾನಿಸಲು ಮರೆತುಬಿಟ್ಟ ಅಷ್ಟೆ. ಆತನಿಗೆ ಮರೆವು ಜಾಸ್ತಿ. ಇಲ್ಲಿ ಕೇಳು, ಅಂದು ಯದುಮಲ್ಲಿಕನ ಮನೆಗೆ ನನ್ನೊಡನೆ ಬಂದಿದ್ದ. ಹಿಂದಿರುಗಿ ಬರುವಾಗ ನಾನು ಆತನನ್ನು ಕೇಳಿದೆ, ‘ಏನು, ನೀನು ಸಿಂಹವಾಹಿನಿಗೆ ಕಾಣಿಕೆ ಅರ್ಪಿಸುವುದಿಲ್ಲವೆ?’ ಅದಕ್ಕೆ ಹೇಳಿದ: ‘ನನಗೆ ಗೊತ್ತಿರಲಿಲ್ಲ-ಕಾಣಿಕೆ ಅರ್ಪಿಸಬೇಕು ಎಂಬುದಾಗಿ.’
(ರಾಮನಿಗೆ) “ಒಂದು ಪಕ್ಷ ಆತ ನಿನ್ನನ್ನು ಆಹ್ವಾನಿಸಲೇ ಇಲ್ಲ ಅಂತ ಇಟ್ಟುಕೊ. ಭಗವಂತನ ನಾಮಗುಣಕೀರ್ತನೆ ನಡೆಯುತ್ತಿರುವ ಜಾಗಕ್ಕೆ ಬರಲೇಕೆ ಇಷ್ಟೊಂದು ಅಸಮಾಧಾನ? ಇಂಥ ಸ್ಥಳಗಳಿಗೆ ಯಾರು ಬೇಕಾದರೂ ಹೋಗಿಬರಬಹುದು. ಆಹ್ವಾನದ ಆವಶ್ಯಕತೆಯೇನು ಇರುವುದಿಲ್ಲ.”
1. ಬಂಗಾಳದಲ್ಲಿ ಇದಕ್ಕೆ ಎರಡು ಅರ್ಥ ಇವೆ-“ಪಾಚಿ “, “ಗುರು”.
2. ಶ್ರೀರಾಮಕೃಷ್ಣ ಪರಮಹಂಸರನ್ನುದ್ದೇಶಿಸಿ.