೯ನೆ ಮಾರ್ಚ್ ೧೮೮೪, ಫಾಲ್ಗುಣ ಶುಕ್ಲ ದ್ವಾದಶಿ, ಭಾನುವಾರ
ಶ್ರೀರಾಮಕೃಷ್ಣರು ಅನೇಕ ಮಂದಿ ಭಕ್ತರೊಡನೆ ದಕ್ಷಿಣೇಶ್ವರದಲ್ಲಿ ತಮ್ಮ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ಅವರ ಮಧ್ಯೆ ಮಣಿಲಾಲ ಮಲ್ಲಿಕ, ಸಿಂಥಿಯ ಕವಿರಾಜ ಮಹೇಂದ್ರ, ಬಲರಾಮ, ಮಾಸ್ಟರ್, ಭವನಾಥ, ರಾಖಾಲ, ಲಾಟು, ಹರೀಶ, ಕಿಶೋರಿ, ಶಿವಚಂದ್ರ ಮೊದಲಾದವರೂ ಕುಳಿತಿದ್ದಾರೆ. ಪರಮಹಂಸರ ತೋಳು ಇನ್ನೂ ಪಟ್ಟಿಯಿಂದ ಬಿಗಿಯಲ್ಪಟ್ಟಿದೆ. ಅದು ಬಹಳವಾಗಿ ನೋಯುತ್ತಿದ್ದರೂ ಪ್ರಾಯಿಕವಾಗಿ ಸಮಾಧಿಸ್ಥರಾಗಿಯೊ ಅಥವಾ ಭಕ್ತರಿಗೆ ಗಂಭೀರ ತತ್ತ್ವಗಳನ್ನು ಬೋಧಿಸುತ್ತಲೊ ಇರುತ್ತಿದ್ದಾರೆ.
ಮಣಿಮಲ್ಲಿಕ ಮತ್ತು ಭವನಾಥ ವಸ್ತುಪ್ರದರ್ಶನ ಶಾಲೆಯ ಸಂಬಂಧವಾಗಿ ಮಾತುಕತೆ ಎತ್ತಿದರು. ಅದನ್ನು ಏಷಿಯಾಟಿಕ್ ಮ್ಯೂಸಿಯಮ್ಮಿನ ಹತ್ತಿರ ಏರ್ಪಡಿಸಿದ್ದಾರೆ. ಅವರು ಹೇಳುತ್ತಿದ್ದಾರೆ: “ಅನೇಕ ಮಂದಿ ರಾಜರು ಬಹು ಅಮೂಲ್ಯವಸ್ತುಗಳನ್ನು ಕಳುಹಿಸಿದ್ದಾರೆ-ಚಿನ್ನದ ಮಂಚ, ಆ ತರಹದವನ್ನೇ. ಅವನ್ನು ನೋಡಬೇಕಾದದ್ದೇ.”
ಶ್ರೀರಾಮಕೃಷ್ಣರು ಭಕ್ತರಿಗೆ ನಗುತ್ತ : “ಹೌದು, ಅಲ್ಲಿಗೆ ಹೋದರೆ ಒಂದು ದೊಡ್ಡ ಉಪಕಾರವಾಗುತ್ತದೆ. ರಾಜಮಹಾರಾಜರು ಕಳುಹಿಸಿರುವ ಚಿನ್ನದ ಮಂಚ ಮೊದಲಾದುವುಗಳನ್ನು ನೋಡಿದ ನಂತರ ಅವೆಲ್ಲಾ ಕೇವಲ ಕಸಕಡ್ಡಿ ಎಂಬ ಬೋಧೆಯಾಗುತ್ತದೆ. ಅದೂ ಎಷ್ಟೋ ಉಪಕಾರಿ. ನಾನು ಕಲ್ಕತ್ತಕ್ಕೆ ಹೋಗುವಾಗಲೆಲ್ಲಾ ಹೃದೆ ನನಗೆ ವೈಸ್ರಾಯನ ಬಂಗಲೆ ತೋರಿಸಿ ಹೇಳುತ್ತಿದ್ದ: ‘ಮಾವ, ಅಲ್ಲಿ ನೋಡಿ, ವೈಸ್ರಾಯನ ಬಂಗಲೆಯನ್ನು! ಎಷ್ಟೊಂದು ದೊಡ್ಡ ದೊಡ್ಡ ಕಂಬಗಳು!’ ಭಗವತಿ ನನಗ ತೋರಿಸಿದಳು, ಅವು ಕೇವಲ ಮಣ್ಣಿನ ಇಟ್ಟಿಗೆಗಳನ್ನು ಒಂದರ ಮೇಲೊಂದು ಜೋಡಿಸಿರುವ ಜೋಡಣೆ ಎಂದು.
“ಭಗವಂತ ಮತ್ತು ಆತನ ಐಶ್ವರ್ಯ. ಭಗವಂತನೇ ಸತ್ಯ:ಆತನ ಐಶ್ವರ್ಯ ಎರಡು ದಿನದ್ದು. ಐಂದ್ರಜಾಲಿಕ ಮತ್ತು ಆತನ ಇಂದ್ರಜಾಲ. ಇಂದ್ರಜಾಲವನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿಬಿಡುತ್ತಾರೆ. ಆದರೆ ಅವೆಲ್ಲಾ ಮಿಥ್ಯಾ. ಐಂದ್ರಜಾಲಿಕನೇ ಸತ್ಯ. ಯಜಮಾನ ಮತ್ತು ಆತನ ತೋಟ. ಜನರಿಗೆ ತೋಟದ ಕಡೆಯೇ ದೃಷ್ಟಿ; ಆದರೆ ತೋಟದ ಯಜಮಾನನನ್ನು ಪತ್ತೆಮಾಡಿಕೊಳ್ಳಬೇಕು.”
ಮಣಿಮಲ್ಲಿಕ ಶ್ರೀರಾಮಕೃಷ್ಣರಿಗೆ: “ವಸ್ತುಪ್ರದರ್ಶನ ಶಾಲೆಯಲ್ಲಿ ಎಷ್ಟೊಂದು ದೊಡ್ಡ ಎಲೆಕ್ಟ್ರಿಕ್ ದೀಪ ಇಟ್ಟಿದ್ದಾರೆ! ಅದನ್ನು ನೋಡಿದಾಗ ನಮಗನಿಸುತ್ತದೆ, ಅಂಥ ದೊಡ್ಡ ದೀಪವನ್ನು ನಿರ್ಮಿಸಿದವನು ಎಂಥ ಅಸಾಧಾರಣ ವ್ಯಕ್ತಿಯಾಗಿ ಇರಬೇಕು ಎಂದು.”
ಶ್ರೀರಾಮಕೃಷ್ಣರು ಮಣಿಲಾಲನಿಗೆ: “ಒಂದು ಮತವಿದೆ. ಅದು ಹೇಳುತ್ತದೆ, ಭಗವಂತನೆ ಎಲ್ಲವೂ ಆಗಿದ್ದಾನೆ ಎಂದು. ಆ ರೀತಿಯಾಗಿ ಹೇಳತಕ್ಕವನೂ ಭಗವಂತನೇ. ಸಚ್ಚಿದಾನಂದನೇ ಎಲ್ಲವೂ ಆಗಿದ್ದಾನೆ-ಸೃಷ್ಟಿಕರ್ತ, ಮಾಯೆ, ಜೀವ, ಜಗತ್ತು ಎಲ್ಲವೂ.”
ಈಗ ಮಾತುಕತೆ ವಿವಿಧ ವಸ್ತುಸಂಗ್ರಹ ಶಾಲೆಗಳ ಸಂಬಂಧವಾಗಿ ಆರಂಭವಾಯಿತು.
ಶ್ರೀರಾಮಕೃಷ್ಣರು ಭಕ್ತರಿಗೆ: “ಒಮ್ಮೆ ನಾನು ವಿವಿಧ ವಸ್ತುಸಂಗ್ರಹಶಾಲೆಗೆ ಹೋಗಿದ್ದೆ. ಅಲ್ಲಿ ನನಗೆ ಜೀವಜಂತುಗಳ ಮತ್ತು ಸಸ್ಯಗಳ ಅವಶೇಷಗಳನ್ನು ತೋರಿಸಿದರು. ಒಂದು ಇಡೀ ಪ್ರಾಣಿಯೇ ಕಲ್ಲಿನಂತಾಗಿಬಿಟ್ಟಿತ್ತು! ಹಾಗೇ ನೋಡು, ಸಂಗದೋಷ ಏನೆಂಬದನ್ನು! ಅದೇ ರೀತಿಯಾಗಿ ಸರ್ವದಾ ಸಾಧುಸಂಗ ಮಾಡಿದರೆ ಅವರಂತೆಯೇ ಆಗಿಬಿಡುತ್ತೇವೆ.
ಮಣಿಮಲ್ಲಿಕ ನಗುತ್ತ : “ನೀವು ಅಲ್ಲಿಗೆ ಹೋಗಿಬಂದಿದ್ದರೆ ನಮಗೆ ಹತ್ತು ಹದಿನೈದು ವರ್ಷಗಳವರೆಗೆ ಉಪದೇಶ ನಡೆಯುತ್ತಿತ್ತು.”
ಶ್ರೀರಾಮಕೃಷ್ಣರು: “ಅದು ಹೇಗೆ? ಉಪಮೆಗಳಿಗಾಗೇನು?”
ಬಲರಾಮ: “ಬೇಡಿ, ಹಾಗೆಲ್ಲಾ ನೀವು ಹೋಗಕೂಡದು. ಅಲ್ಲಿಗಿಲ್ಲಿಗೆ ಆ ರೀತಿಯಾಗಿ ಅಲೆದರೆ ನಿಮ್ಮ ಕೈ ಗುಣಹೊಂದದು.”
ಶ್ರೀರಾಮಕೃಷ್ಣರು: “ನನಗೆ ಎರಡು ವಿಧದ ಚಿತ್ರಪಟ ಬೇಕಾಗಿದೆ. ಒಂದನೆಯದು ಯೋಗಿ ಧುನಿ ಹೊತ್ತಿಸಿಕೊಂಡು ಅದರ ಬಳಿ ಕುಳಿತುಕೊಂಡಿರುವುದು. ಎರಡನೆಯದು ಯೋಗಿ ಗಾಂಜಾ ಕುಡಿಯುವಾಗ ಅದು ‘ಭಗ್, ಭಗ್’ ಅಂತ ಹೊತ್ತಿ ಉರಿಯುತ್ತಿರುವುದು. ಈ ವಿಧದ ಚಿತ್ರಪಟಗಳನ್ನು ನೋಡಿದರೆ ಒಳ್ಳೇ ಉದ್ದೀಪನವಾಗುತ್ತದೆ. ಇದು ಕೃತಕ ಸೀತಾಫಲದ ಹಣ್ಣು ನೋಡಿದರೆ, ನಿಜವಾದ ಸೀತಾಫಲದ ಹಣ್ಣಿನ ಭಾವನೆ ಬರುವುದಿಲ್ಲವೆ, ಹಾಗೆ.
“ಯೋಗಕ್ಕೆ ವಿಘ್ನ ಕಾಮಕಾಂಚನ. ಈ ಮನಸ್ಸು ಶುದ್ಧವಾಯಿತು ಎಂದರೆ ಯೋಗ ಉಂಟಾಗುತ್ತದೆ. ಮನಸ್ಸಿನ ನಿವಾಸಸ್ಥಾನ ಭ್ರೂಮಧ್ಯ; ಆದರೆ ಅದರ ದೃಷ್ಟಿ ಮಾತ್ರ ಲಿಂಗ, ಗುಹ್ಯ, ನಾಭಿಗಳ ಕಡೆ-ಎಂದರೆ ಕಾಮಕಾಂಚನಗಳ ಕಡೆ. ಸಾಧನೆ ಮಾಡಿದರೆ ಈ ಮನಸ್ಸಿಗೇ ಊರ್ಧ್ವದೃಷ್ಟಿ ಉಂಟಾಗುತ್ತದೆ.
“ಯಾವ ಸಾಧನೆ ಮಾಡಿದರೆ ಮನಸ್ಸಿಗೆ ಊರ್ಧ್ವದೃಷ್ಟಿ ಉಂಟಾಗುತ್ತದೆ? ಸರ್ವದಾ ಸಾಧುಸಂಗ ಮಾಡಿದರೆ ಎಲ್ಲವನ್ನೂ ಅರಿತುಕೊಳ್ಳಬಹುದು. ಋಷಿಗಳು ಯಾವಾಗಲೂ ನಿರ್ಜನಪ್ರದೇಶದಲ್ಲಿ, ಇಲ್ಲದಿದ್ದರೆ ಸಾಧುಗಳೊಡನೆ ಇರುತ್ತಿದ್ದರು. ಆದ್ದರಿಂದ ಅವರು ಅನಾಯಾಸವಾಗಿ ಕಾಮಕಾಂಚನ ತ್ಯಜಿಸಿ ಭಗವಂತನ ಕಡೆ ಮನಸ್ಸನ್ನು ತಿರುಗಿಸಿಡುತ್ತಿದ್ದರು. ಅವರಿಗೆ ಭಯ ಎಂಬುದೇ ಇರಲಿಲ್ಲ; ನಿಂದೆಯನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಲೇ ಇರಲಿಲ್ಲ.
“ತ್ಯಾಗಮಾಡಬೇಕಾಗಿದ್ದರೆ ಭಗವಂತನನ್ನು ಮನಶ್ಶಕ್ತಿಗಾಗಿ ಪ್ರಾರ್ಥನೆ ಮಾಡಬೇಕು. ಯಾವುದು ಮಿಥ್ಯೆಯೆಂದು ತೋರುವುದೋ ಅದನ್ನು ಕೂಡಲೇ ತ್ಯಜಿಸಿಬಿಡಬೇಕು. ಹಿಂದಿನ ಋಷಿಗಳಿಗೆ ಈ ವಿಧದ ಮನೋಬಲವಿತ್ತು. ಈ ಮನೋಬಲದಿಂದ ಅವರು ಇಂದ್ರಿಯಗಳನ್ನು ಜಯಿಸಿದ್ದರು. ಆಮೆ ಒಮ್ಮೆಯೇನಾದರೂ ತನ್ನ ಕೈಕಾಲುಗಳನ್ನು ಒಳಕ್ಕೆ ಎಳೆದುಕೊಂಡಿತು ಎಂದರೆ, ಅದನ್ನು ನಾಲ್ಕು ಹೋಳಾಗಿ ಕತ್ತರಿಸಿದರೂ ಅದು ಅವನ್ನು ಹೊರಕ್ಕೆ ಬಿಡದು.
“ಪ್ರಾಪಂಚಿಕ ಮನುಷ್ಯ ಕಪಟಿಯಾಗುತ್ತಾನೆ-ಸರಳನಾಗುವುದಿಲ್ಲ. ಬಾಯಲ್ಲಿ ಹೇಳುತ್ತಾನೆ, ಭಗವಂತನನ್ನು ಪ್ರೀತಿಸುತ್ತೇನೆ ಎಂದು. ಆದರೆ ವಿಷಯಸುಖಗಳ ಕಡೆ ಅಷ್ಟೊಂದು ಮನದ ಸೆಳೆತ, ಕಾಮಕಾಂಚನಗಳ ಮೇಲೆ ಅಷ್ಟೊಂದು ಪ್ರೀತಿ. ಆ ಪ್ರೀತಿಯ ಅತ್ಯಲ್ಪ ಅಂಶವನ್ನೂ ಆತ ಭಗವಂತನ ಕಡೆಗೆ ತಿರುಗಿಸುವುದಿಲ್ಲ. ಆದರೂ ಬಾಯಲ್ಲಿ ಮಾತ್ರ ಹೇಳುತ್ತಾನೆ, ಭಗವಂತನನ್ನು ಪ್ರೀತಿಸುತ್ತೇನೆ ಎಂದು. (ಮಣಿಮಲ್ಲಿಕನಿಗೆ) ಕಪಟಾಚರಣೆಯನ್ನು ಬಿಟ್ಟುಬಿಡು.”
ಮಣಿಮಲ್ಲಿಕ: “ಮನುಷ್ಯನ ಸಂಬಂಧವಾಗಿಯೊ ಅಥವಾ ಭಗವಂತನ ಸಂಬಂಧವಾಗಿಯೊ?”
ಶ್ರೀರಾಮಕೃಷ್ಣರು: “ಎಲ್ಲಾ ವಿಧದ್ದು. ಮನುಷ್ಯನ ಸಂಬಂಧವಾಗಿಯೂ ಬಿಟ್ಟುಬಿಡಬೇಕು, ಭಗವಂತನ ಸಂಬಂಧವಾಗಿಯೂ ಬಿಟ್ಟುಬಿಡಬೇಕು. ಏನೇ ಆಗಲಿ, ಕಪಟಾಚರಣೆ ಮಾಡಕೂಡದು.
“ಭವನಾಥ ಎಷ್ಟು ಸರಳ! ವಿವಾಹವಾದ ನಂತರ ಬಂದು ನನಗೆ ಹೇಳಿದ: ‘ಹೆಂಡತಿಯ ಮೇಲೆ ನನಗೆ ಅಷ್ಟೊಂದು ಪ್ರೀತಿಯುಂಟಾಗುತ್ತಿದೆಯಲ್ಲ ಏಕೆ?’ ಆಹಾ, ಆತ ಅತ್ಯಂತ ಸರಳ!
“ಹೆಂಡತಿಯ ಮೇಲೆ ಪ್ರೀತಿಯುಂಟಾಗದೆ ಇರುತ್ತದೆಯೇ? ಇದೇ ಜಗನ್ಮಾತೆಯ ಭುವನಮೋಹಿನೀ ಮಾಯೆ ಎಂಬುದು. ಹೆಂಡತಿಯನ್ನು ಕಂಡರೆ ಭಾವನೆಯುಂಟಾಗುತ್ತದೆ, ಇಂಥಾ ಪ್ರಿಯ ವಸ್ತು ಈ ಜಗತ್ತಿನಲ್ಲಿ ಬೇರೊಂದಿಲ್ಲ. ಮುಂದೆ ಉದ್ಭವವಾಗುವುದೂ ಇಲ್ಲ. ಆಕೆ ಆತ್ಮೀಯಳು-ಜೀವನದಲ್ಲಿ, ಮರಣದಲ್ಲಿ, ಇಹದಲ್ಲಿ, ಪರದಲ್ಲಿ.
“ಮನುಷ್ಯ ಹೆಂಡತಿಯನ್ನು ಕಟ್ಟಿಕೊಂಡು ಎಷ್ಟೊಂದು ದುಃಖ ಅನುಭವಿಸುತ್ತಾನೆ! ಆದರೂ ಭಾವಿಸುತ್ತಾನೆ, ಇಂಥ ಆತ್ಮೀಯ ವಸ್ತು ಬೇರೊಂದಿಲ್ಲ ಎಂದು. ಏನು ದುರವಸ್ಥೆ ಇದು! ಒಬ್ಬ ಗೃಹಸ್ಥನಿಗೆ ಬರುತ್ತಿರುವ ಸಂಬಳ ತಿಂಗಳಿಗೆ ಇಪ್ಪತ್ತು ರೂಪಾಯಿ. ಮೂರು ಮಕ್ಕಳು ಆಗಿವೆ. ಅವಕ್ಕೆ ಸರಿಯಾಗಿ ಅನ್ನ ಹಾಕಲು ಶಕ್ತಿಯಿಲ್ಲ. ಚಾವಣಿಯಿಂದ ನೀರು ಸೋರುತ್ತಿರುತ್ತದೆ. ಅದನ್ನು ಸರಿಪಡಿಸಲು ಕೈಯಲ್ಲಿ ಕಾಸಿಲ್ಲ. ಮಕ್ಕಳಿಗೆ ಹೊಸ ಪುಸ್ತಕ ಕೊಂಡುಕೊಳ್ಳಲು ಶಕ್ತಿ ಇಲ್ಲ. ಅವುಗಳಿಗೆ ಉಪನಯನ ಮಾಡಲು ಗತಿಯಿಲ್ಲ. ಇವರ ಹತ್ತಿರ ಒಂದೆಂಟಾಣೆ, ಅವರ ಹತ್ತಿರ ಒಂದು ನಾಲ್ಕಾಣೆ-ಈ ರೀತಿಯಾಗಿ ಭಿಕ್ಷೆ ಬೇಡುತ್ತಿರುತ್ತಾನೆ!
“ವಿದ್ಯಾರೂಪಿಣಿ ಹೆಂಡತಿಯೇ ನಿಜವಾದ ಸಹಧರ್ಮಿಣಿ. ಭಗವಂತನ ಕಡೆಗೆ ಹೋಗಲು ಪತಿಗೆ ಬಹಳವಾಗಿ ಸಹಾಯ ಮಾಡುತ್ತಾಳೆ. ಒಂದೆರಡು ಮಕ್ಕಳಾದ ನಂತರ ಇಬ್ಬರೂ ಅಣ್ಣ-ತಂಗಿಯರೋಪಾದಿಯಲ್ಲಿ ಇರುತ್ತಾರೆ. ಇಬ್ಬರೂ ಭಗವದ್ಭಕ್ತರೇ- ಭಗವಂತನ ದಾಸದಾಸಿಯರೇ. ಇವರ ಸಂಸಾರ ವಿದ್ಯಾಸಂಸಾರ, ಭಗವಂತನೊಡನೆ ಮತ್ತು ಆತನ ಭಕ್ತರೊಡನೆ ಸದಾ ಆನಂದದಿಂದ ಇರುತ್ತಾರೆ. ಇವರಿಗೆ ಗೊತ್ತಿದೆ, ಭಗವಂತನೇ ಏಕಮಾತ್ರ ಆತ್ಮೀಯ ಎಂದು-ಅನಾದಿಕಾಲದಿಂದ ಅನಂತಕಾಲದವರೆಗೆ ತಮ್ಮವನೇ ಎಂದು. ಸುಖದಲ್ಲಿ, ದುಃಖದಲ್ಲಿ ಎಂದಿಗೂ ಆತನನ್ನು ಮರೆಯರು-ಪಾಂಡವರಂತೆ.”
“ಸಂಸಾರಿಗಳ ಭಗವದನುರಾಗ ಬಹಳ ಕ್ಷಣಿಕವಾದದ್ದು-ಕಾದ ಬಾಣಲೆಯ ಮೇಲೆ ಬಿದ್ದ ಹನಿನೀರಿನ ಹಾಗೆ. ಅದು ‘ಚರ್’ ಅಂತ ಶಬ್ದಮಾಡಿ ಒಂದು ಕ್ಷಣದೊಳಗೇ ಒಣಗಿ ಹೋಗುತ್ತದೆ. ಸಂಸಾರಿಗಳಿಗೆ ಭೋಗದ ಕಡೆ ಮನಸ್ಸಿರುತ್ತದೆ. ಆದ್ದರಿಂದ ಅವರಲ್ಲಿ ಭಗವಂತನಿಗಾಗಿ ಅನುರಾಗ, ವ್ಯಾಕುಲತೆ ಉಂಟಾಗುತ್ತಿಲ್ಲ.
“ಏಕಾದಶಿಗಳಲ್ಲಿ ಮೂರು ವಿಧ. ಮೊದಲನೆಯದು ನಿರ್ಜಲ ಏಕಾದಶಿ-ಇದರಲ್ಲಿ ನೀರನ್ನೂ ಕುಡಿಯಕೂಡದು. ಇದೇ ರೀತಿಯಾಗಿ ಪೂರ್ಣತ್ಯಾಗಿ ಸಂನ್ಯಾಸಿ ಒಮ್ಮೆಗೇ ಎಲ್ಲಾ ಭೋಗಗಳನ್ನೂ ತ್ಯಜಿಸಿಬಿಡುತ್ತಾನೆ. ಎರಡನೆಯದರಲ್ಲಿ ಹಾಲು-ಸಂದೇಶ (ಸಿಹಿತಿಂಡಿ) ತಿನ್ನುವುದು. ಇದೇ ರೀತಿಯಾಗಿ ಭಕ್ತ ತನ್ನ ಮನೆಯಲ್ಲಿ ಸಾಮಾನ್ಯ ಭೋಗವಸ್ತುಗಳನ್ನು ಇಟ್ಟುಕೊಂಡಿರುತ್ತಾನೆ. ಮೂರನೆಯದು ಪೂರಿಪಲ್ಯ ತಿಂದು ಏಕಾದಶಿಯನ್ನು ಆಚರಿಸುವುದು. ಇದರಲ್ಲಿ ಹೊಟ್ಟೆ ಬಿರಿಯುವ ಹಾಗೆ ತಿನ್ನುವುದು. ಇದು ಸಾಲದೆಂದು ಒಂದೆರಡು ಚಿರೋಟಿಯನ್ನೂ ನೆನಸಿಟ್ಟುಕೊಂಡಿದ್ದು ಸ್ವಲ್ಪ ಹೊತ್ತಾದನಂತರ ತಿನ್ನುವುದು.”
“ಜನ ಸಾಧನೆ ಭಜನೆಗಳನ್ನೇನೊ ಮಾಡುತ್ತಾರೆ. ಆದರೆ ಅವರ ಮನಸ್ಸು ಕಾಮ ಕಾಂಚನಗಳ ಕಡೆ-ಭೋಗದ ಕಡೆ ಹರಿಯುತ್ತಿರುತ್ತದೆ. ಆದ್ದರಿಂದ ಅವರ ಸಾಧನೆ ಭಜನೆ ಸರಿಯಾದ ಪ್ರತಿಫಲವನ್ನು ಕೊಡದು.
“ಹಾಜರಾ ಇಲ್ಲಿ ಬಹಳವಾಗಿ ಜಪ ತಪ ಮಾಡುತ್ತಿದ್ದ. ಆದರೆ ಆತನ ಊರಿನಲ್ಲಿ ಆತನಿಗೆ ಹೆಂಡತಿ, ಮಕ್ಕಳು ಮರಿ, ಭೂಮಿ ಕಾಣಿ ಎಲ್ಲಾ ಇದ್ದುವು. ಆದ್ದರಿಂದ ಆತ ತನ್ನ ಜಪತಪಗಳೊಂದಿಗೆ ದಲ್ಲಾಳಿ ಕೆಲಸವನ್ನೂ ಮಾಡುತ್ತಿದ್ದ. ಈ ವಿಧದ ಜನರ ಮಾತು ನೆಟ್ಟಗಿರುವುದಿಲ್ಲ. ಮೀನು ತಿನ್ನುವುದಿಲ್ಲ ಎಂದು ಈಗ ಹೇಳುತ್ತಾರೆ, ಮತ್ತೆ ತಿಂದು ಬಿಡುತ್ತಾರೆ.
“ಹಣಕ್ಕಾಗಿ ಜನ ಏನನ್ನು ತಾನೆ ಮಾಡಲು ಹೇಸುವುದಿಲ್ಲ? ಸಾಧುಗಳ ಮತ್ತು ಬ್ರಾಹ್ಮಣರ ಕೈಯಲ್ಲೂ ಹೊರೆ ಹೊರಿಸಿ ದುಡ್ಡು ಸಂಪಾದಿಸಲು ಸಿದ್ಧರಾಗಿರುತ್ತಾರೆ.
“ಸತ್ಪಾತ್ರರು ದೊರೆಯದೆ ಒಮ್ಮೊಮ್ಮೆ ನನ್ನ ಕೊಠಡಿಯಲ್ಲಿ ಸಂದೇಶ ಹಳೆಯದಾಗಿ ಕೆಟ್ಟುಹೋಗುತ್ತಿತ್ತು; ಆದರೂ ಅವನ್ನು ಪ್ರಾಪಂಚಿಕರಿಗೆ ಕೊಡಲು ನನಗೆ ಇಚ್ಛೆ ಬರುತ್ತಿರಲಿಲ್ಲ. ಒಳ್ಳೆಯವರ ಕಾಲುತಂಬಿಗೆ ನೀರನ್ನು ಸ್ವೀಕರಿಸಲು ನನಗೆ ಸಾಧ್ಯವಾಗುತ್ತಿತ್ತು; ಆದರೆ ಈ ಪ್ರಾಪಂಚಿಕರ ತಂಬಿಗೆಯನ್ನು ಮುಟ್ಟಲೂ ಕೂಡ ಸಾಧ್ಯವಾಗುತ್ತಿರಲಿಲ್ಲ.
“ಧನಿಕರು ಹಾಜರಾನ ಕಣ್ಣಿಗೆ ಬೀಳುವುದೇ ತಡ, ಆತ ಅವರನ್ನು ತನ್ನ ಹತ್ತಿರಕ್ಕೆ ಕರೆದು ದೊಡ್ಡ ದೊಡ್ಡ ಲೆಕ್ಚರ್ ಕೊಡುತ್ತಿದ್ದ. ಅವರಿಗೆ ಹೇಳುತ್ತಿದ್ದ: ‘ನೋಡಿ, ರಾಖಾಲ ಮುಂತಾದವರು ಇದ್ದಾರಲ್ಲ, ಅವರಾರಿಗೂ ಜಪತಪ ಮಾಡಲು ಸಾಧ್ಯವಿಲ್ಲ. ತಮಾಷೆ ಮಾಡಿಕೊಂಡು ಸುಮ್ಮನೆ ಸುತ್ತಾಡುತ್ತಿರುತ್ತಾರೆ.
“ಒಬ್ಬ ಮನುಷ್ಯ ಮೈಗೆ ಬೂದಿ ಬಳಿದುಕೊಳ್ಳುತ್ತ, ಉಪವಾಸಮಾಡುತ್ತ, ಕಠೋರ ತಪಸ್ಸು ಮಾಡುತ್ತ ಗುಹೆಯಲ್ಲಿ ವಾಸಿಸುತ್ತಿರಬಹುದು. ಆದರೆ ಆತನ ಮನಸ್ಸು ವಿಷಯಸುಖಗಳ ಕಡೆ, ಕಾಮಕಾಂಚನಗಳ ಕಡೆ ಇರುವುದಾದರೆ ಅಂಥವನಿಗೆ ನಾನು ಹೇಳುತ್ತೇನೆ ‘ನಿನ್ನ ನಡತೆಗೆ ಧಿಕ್ಕಾರ!’ ಆದರೆ ಯಾರಿಗೆ ಕಾಮಕಾಂಚನಗಳ ಕಡೆ ಮನಸ್ಸಿಲ್ಲವೊ, ಯಾರು ಉಂಡು ತಿಂದು ಆನಂದದಿಂದ ಸುತ್ತಾಡುತ್ತಾನೊ ಆತನಿಗೆ ನಾನು ಹೇಳುತ್ತೇನೆ: ‘ನೀನೇ ಧನ್ಯ!’
(ಮಣಿಲಾಲ ಮಲ್ಲಿಕನನ್ನು ತೋರಿಸಿ) “ಈತನ ಮನೆಯಲ್ಲಿ ಸಾಧುಗಳ ಚಿತ್ರಪಟವಿಲ್ಲ. ಅವನ್ನು ಇಟ್ಟುಕೊಂಡಿದ್ದರೆ ಭಗವದುದ್ದೀಪನವಾಗುತ್ತದೆ.”
ಮಣಿಲಾಲ ಮಲ್ಲಿಕ: “ಇವೆ. ಕ್ರೈಸ್ತಭಕ್ತೆಯ ಒಂದು ಚಿತ್ರಪಟ ನನ್ನ ಮಗಳು ನಂದಿನಿಯ ಕೊಠಡಿಯಲ್ಲಿದೆ. ಅದರಲ್ಲಿ ಆ ಭಕ್ತೆ ಪ್ರಾರ್ಥನೆಯಲ್ಲಿ ತೊಡಗಿದ್ದಾಳೆ. ಇನ್ನೊಂದು ಚಿತ್ರಪಟವಿದೆ. ಅದರಲ್ಲಿ ಒಬ್ಬ, ಶ್ರದ್ಧೆ ಎಂಬ ಬೆಟ್ಟವನ್ನು ಹಿಡಿದುಕೊಂಡಿದ್ದಾನೆ; ಅದರ ಕೆಳಗೆ ಇದೆ ಅತಲಸ್ಪರ್ಶ ಸಾಗರ. ಶ್ರದ್ಧೆಯೆಂಬ ಬೆಟ್ಟವನ್ನು ಆತ ಕೈ ಬಿಟ್ಟ ಎಂದರೆ ಒಮ್ಮೆಗೇ ಅತಲದ ನೀರಿಗೆ ಬಿದ್ದುಬಿಡುತ್ತಾನೆ. ಇನ್ನೂ ಒಂದು ಚಿತ್ರಪಟವಿದೆ, ಅದರಲ್ಲಿ ಕೆಲವು ಮಂದಿ ಕನ್ಯೆಯರು ತಮ್ಮ ವರ ಬರುವನೆಂದು ದೀಪದ ಕಂಬಗಳಿಗೆ ಎಣ್ಣೆ ಹಾಕಿಕೊಂಡು ಕಾದು ಕುಳಿತುಕೊಂಡಿದ್ದಾರೆ. ಆದರೆ ಅವರ ಬಳಿಯಲ್ಲಿ ಒಬ್ಬ ಕನ್ಯೆ ನಿದ್ರಿಸುತ್ತಿದ್ದಾಳೆ. ವರ ಬಂದಾಗ ಆತನನ್ನು ನೋಡಲು ಆಕೆಗೆ ಸಾಧ್ಯವಾಗುವುದಿಲ್ಲ. ಇಲ್ಲಿ ಭಗವಂತನೇ ವರ.”
ಶ್ರೀರಾಮಕೃಷ್ಣರು ನಗುತ್ತ: “ಹಾಗಿದ್ದರೆ ಬಹಳ ಒಳ್ಳೆಯದು.”
ಮಣಿಮಲ್ಲಿಕ: “ಇನ್ನೂ ಕೆಲವು ಚಿತ್ರಪಟಗಳಿವೆ. ಶ್ರದ್ಧೆಯ ವೃಕ್ಷ, ಪಾಪಪುಣ್ಯಗಳ ಚಿತ್ರಪಟ ಇತ್ಯಾದಿ.”
ಶ್ರೀರಾಮಕೃಷ್ಣರು ಭವನಾಥನಿಗೆ: “ಅವೆಲ್ಲಾ ಒಳ್ಳೆ ಚಿತ್ರಗಳೇ. ನೀನು ಹೋಗಿ ನೋಡಿಕೊಂಡು ಬಾ.”
ಪರಮಹಂಸರು ಸ್ವಲ್ಪ ಹೊತ್ತಿನಿಂದ ಸುಮ್ಮನೆ ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು: “ಒಮ್ಮೊಮ್ಮೆ ಈ ಪಾಪಪುಣ್ಯಗಳ ಯೋಚನೆ ಬರುತ್ತದೆ. ನನಗೆ ಅವು ಹಿಡಿಸುತ್ತಿಲ್ಲ. ಮೊದಮೋದಲು ಪಾಪ-ಗೀಪಗಳ ಮತ್ತು ಅವುಗಳಿಂದ ಮುಕ್ತವಾಗುವುದರ ಕಡೆ ಮನಸ್ಸು ಕೊಡಬೇಕಾಗುತ್ತದೆ. ಆದರೆ ಭಗವಂತನ ಕೃಪೆಯಿಂದ ಆತನಲ್ಲಿ ಪ್ರೀತಿ ಉಂಟಾಯಿತು ಎಂದರೆ, ರಾಗಾಭಕ್ತಿಯುಂಟಾಯಿತು ಎಂದರೆ ಪಾಪ ಪುಣ್ಯ ಎಲ್ಲಾ ಮರೆತೇ ಹೋಗಿಬಿಡುತ್ತವೆ. ಶಾಸ್ತ್ರ ಮತ್ತು ಶಾಸನ ಎಷ್ಟೋ ದೂರದಲ್ಲಿ ಬಿದ್ದುಕೊಂಡಿರುತ್ತವೆ. ಅನುತಾಪ, ಪ್ರಾಯಶ್ಚಿತ್ತ ಇವುಗಳ ಭಾವನೆಯೇ ಮನಸ್ಸಿನಲ್ಲಿ ಏಳದು.
“ಪಾಪದ ಕಡೆ ಮನಸ್ಸು ಕೊಡುವುದು, ಸೊಟ್ಟಸೊಟ್ಟಾಗಿ ತಿರುಗಿಕೊಂಡಿರುವ ನದಿಯ ಮೂಲಕ ಗುರಿಯನ್ನು ಮುಟ್ಟಿದ ಹಾಗೆ. ಈ ಪ್ರಯತ್ನದಲ್ಲಿ ಬಹಳವಾಗಿ ಕಷ್ಟಪಡಬೇಕಾಗುತ್ತದೆ. ಆದರೆ ಪ್ರವಾಹ ಬಂದು ಎಲ್ಲೆಲ್ಲೂ ನೀರು ತುಂಬಿರುವಾಗ ನೇರವಾಗಿಯೇ ಮುಂದುವರಿದು ಅಲ್ಪ ಸಮಯದಲ್ಲೇ ಗುರಿಯನ್ನು ಮುಟ್ಟಿಬಿಡಬಹುದು. ಆಗ ಎಲ್ಲೆಲ್ಲೂ ಒಂದು ಗಳುವಿನುದ್ದ ನೀರು ನಿಂತಿರುತ್ತದೆ.
“ಆಧ್ಯಾತ್ಮಿಕ ಜೀವನದ ಮೊದಲ ಅವಸ್ಥೆಯಲ್ಲಿ ಬಹಳವಾಗಿ ಸುತ್ತಿ ಸುತ್ತಿ ಮುಂದುವರಿಯಬೇಕಾಗುತ್ತದೆ; ಬಹಳವಾಗಿ ಕಷ್ಟಪಡಬೇಕಾಗುತ್ತದೆ. ಹೃದಯದಲ್ಲಿ ರಾಗಾಭಕ್ತಿಯುಂಟಾಯಿತು ಎಂದರೆ, ಆಗ ಎಲ್ಲವೂ ಸುಲಭವಾಗಿಬಿಡುತ್ತದೆ. ಇದು, ಗದ್ದೆ ಕಟಾವಾದ ನಂತರ ಅವುಗಳ ಮೇಲೆ ಯಾವ ದಿಕ್ಕಿಗೆ ಅಂದರೆ ಆ ದಿಕ್ಕಿಗೆ ಹೋಗಬಹುದಲ್ಲ, ಹಾಗೆ. ಕಟಾವಿಗೆ ಮುಂಚೆ ತೆವರಿಗಳ ಮೇಲೆ ಸುತ್ತಿ ಸುತ್ತಿ ಹೋಗಬೇಕಾಗಿತ್ತು, ಅನಂತರ ಯಾವ ದಿಕ್ಕಿಗೆ ಬೇಕಾದರೂ ಹೋಗಬಹುದು. ಒಂದು ಪಕ್ಷ ಗದ್ದೆಯಲ್ಲಿ ಕೂಳೆ ಇರುವುದಾದರೆ, ಕಾಲಿಗೆ ಮೆಟ್ಟುಹಾಕಿಕೊಂಡು ಹೋಗಿಬಿಟ್ಟರೆ ಯಾವ ತೊಂದರೆಯೂ ಆಗದು. ವಿವೇಕ, ವೈರಾಗ್ಯ, ಗುರುವಾಕ್ಯದಲ್ಲಿ ಶ್ರದ್ಧೆ ಇವು ಇದ್ದುವು ಎಂದರೆ ಸಾಧಕನಿಗೆ ಯಾವ ಕಷ್ಟವೂ ಉಂಟಾಗದು.”
ಮಣಿಲಾಲ ಮಲ್ಲಿಕ ಶ್ರೀರಾಮಕೃಷ್ಣರಿಗೆ: “ಒಳ್ಳೆಯದು, ಧ್ಯಾನಕ್ಕೆ ಏನೇನು ನಿಯಮ? ಎಲ್ಲಿ ಧ್ಯಾನ ಮಾಡಬೇಕು?”
ಶ್ರೀರಾಮಕೃಷ್ಣರು: “ಹೃದಯ ಬಹಳ ಉತ್ತಮವಾದ ಸ್ಥಳ. ಅಲ್ಲಿ ಮಾಡಬಹುದು. ಅಥವಾ ಸಹಸ್ರಾರದಲ್ಲಿ ಮಾಡಬಹುದು. ಈ ರೀತಿಯಾಗಿ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಿದೆ. ಆದರೆ ನಿನಗೆಲ್ಲಿ ಅಭಿರುಚಿ ಇರುವುದೊ ಅಲ್ಲಿ ಧ್ಯಾನಮಾಡಬಹುದು. ಎಲ್ಲಾ ಸ್ಥಳವೂ ಬ್ರಹ್ಮಮಯ. ಎಲ್ಲಿ ತಾನೆ ಆತನಿಲ್ಲ? ಯಾವಾಗ ನಾರಾಯಣ ಬಲಿ ಚಕ್ರವರ್ತಿಯಿಂದ ಮೂರು ಹೆಜ್ಜೆ ದಾನ ಪಡೆದು ಸ್ವರ್ಗ, ಮರ್ತ್ಯ, ಪಾತಾಳಗಳನ್ನು ಅಳೆದುಬಿಟ್ಟನೊ, ಇನ್ನು ಯಾವ ಸ್ಥಳ ತಾನೆ ಬಾಕಿ ಉಳಿದುಕೊಂಡಿದೆ? ಗಂಗಾತೀರ ಎಷ್ಟರ ಮಟ್ಟಿಗೆ ಪವಿತ್ರವಾದದ್ದೊ ಅಷ್ಟೇ ಮಟ್ಟಿಗೆ ಹೊಲಸು ಪ್ರದೇಶವೊ ಪವಿತ್ರವಾದದ್ದೆ. ಇದೂ ಅಲ್ಲದೆ ಈ ಇಡೀ ಬ್ರಹ್ಮಾಂಡವೇ ಭಗವಂತನ ವಿರಾಟ್ ಸ್ವರೂಪ ಎಂದು ಶಾಸ್ತ್ರದಲ್ಲಿ ಹೇಳಿದೆ.
ಎರಡು ವಿಧದ ಧ್ಯಾನಗಳಿವೆ-ನಿರಾಕಾರ ಧ್ಯಾನ, ಸಾಕಾರ ಧ್ಯಾನ. ನಿರಾಕಾರ ಧ್ಯಾನ ಬಹಳ ಕಠಿಣ. ಈ ಧ್ಯಾನದಲ್ಲಿ ಕಣ್ಣಿಗೆ ಕಾಣಬರುವ ಎಲ್ಲಾ ವಸ್ತುಗಳನ್ನು ಬ್ರಹ್ಮನಲ್ಲಿ ಲೀನ ಮಾಡಬೇಕು. ಅನಂತರ ಕೇವಲ ತನ್ನ ಸ್ವಸ್ವರೂಪದ ಮೇಲೆ ಚಿಂತನೆ ಮಾಡಬೇಕು. ಶಿವ ತನ್ನ ಸ್ವಸ್ವರೂಪದ ಮೇಲೆ ಚಿಂತನೆ ಮಾಡುತ್ತ ನರ್ತಿಸುತ್ತಾನೆ:ಆತ ಹೇಳುತ್ತಾನೆ: ‘ನಾನು ಯಾರು! ನಾನು ಯಾರು!’ ಇದಕ್ಕೆ ‘ಶಿವಯೋಗ’ ಅಂತ ಹೆಸರು. ಈ ವಿಧದ ಧ್ಯಾನದಲ್ಲಿ ದೃಷ್ಟಿಯನ್ನು ಭ್ರೂಮಧ್ಯದ ಕಡೆ ಇಡಬೇಕು. ಇದರಲ್ಲಿ ‘ನೇತಿ’, ‘ನೇತಿ’ ಮಾರ್ಗವನ್ನು ಅನುಸರಿಸಿ ಜಗತ್ತನ್ನು ತ್ಯಜಿಸಿ ಸ್ವಸ್ವರೂಪದ ಮೇಲೆ ಚಿಂತನೆ ಮಾಡಬೇಕು.
“ಇನ್ನೊಂದು ವಿಧದ ಧ್ಯಾನವಿದೆ. ಅದಕ್ಕೆ ‘ವಿಷ್ಣುಯೋಗ’ ಅಂತ ಹೆಸರು. ನಾಸಾಗ್ರದಲ್ಲಿ ದೃಷ್ಟಿಯಿಡಬೇಕಾಗುತ್ತದೆ-ಅರ್ಧವನ್ನು ಆಂತರ್ಯದ ಕಡೆ ಇನ್ನರ್ಧವನ್ನು ಜಗತ್ತಿನ ಕಡೆ. ಸಾಕಾರದ ಮೇಲೆ ಧ್ಯಾನವನ್ನು ಹೀಗೆ ಮಾಡಬೇಕಾಗುತ್ತದೆ. ಶಿವ ಕೆಲವು ವೇಳೆ ಸಾಕಾರ ಧ್ಯಾನಮಾಡುತ್ತ ನರ್ತಿಸುತ್ತಾನೆ. ಆಗ ಆತ ‘ರಾಮ! ರಾಮ!’ ಎಂದು ಹೇಳುತ್ತ ನರ್ತಿಸುತ್ತಾನೆ.”
ಪರಮಹಂಸರು ಈಗ ವಿವರಿಸುತ್ತಿದ್ದಾರೆ, ಓಂಕಾರವೆಂದರೇನು, ನಿಜವಾದ ಬ್ರಹ್ಮಜ್ಞಾನ ಯಾವುದು, ಬ್ರಹ್ಮಸಾಕ್ಷಾತ್ಕಾರದ ಮೇಲೆ ಏನವಸ್ಥೆ ಉಂಟಾಗುತ್ತದೆ ಎಂಬುವುಗಳ ವಿಷಯವಾಗಿ.
ಶ್ರೀರಾಮಕೃಷ್ಣರು: “ಓಂಕಾರ ಶಬ್ದವೇ ಬ್ರಹ್ಮ. ಋಷಿಗಳು ಮುನಿಗಳು ಈ ಶಬ್ದ ಬ್ರಹ್ಮದ ಸಾಕ್ಷಾತ್ಕಾರಕ್ಕಾಗಿ ತಪಸ್ಸು ಮಾಡುತ್ತಿದ್ದರು. ಸಿದ್ಧಿ ದೊರೆಯಿತು ಅಂದರೆ ಕೇಳಬಹುದು ಆ ಶಬ್ದ-ತಾನಾಗೇ ನಾಭಿಯಿಂದ ಮೇಲಕ್ಕೆ ಏಳುವುದನ್ನು.
“ಕೆಲವು ಮಂದಿ ಋಷಿಗಳು ಕೇಳುತ್ತಾರೆ: ‘ಕೇವಲ ಈ ಶಬ್ದವನ್ನು ಕೇಳುವುದರಿಂದಲೇ ಏನು ದೊರೆಯುತ್ತದೆ?’ ದೂರದಿಂದ ಸಮುದ್ರದ ಕಲ್ಲೋಲ ಶಬ್ದವನ್ನು ಕೇಳಬಹುದು. ಅದನ್ನು ಹಿಡಿದು ಮುಂದುವರೆದರೆ ಸಮುದ್ರವನ್ನು ಮುಟ್ಟಬಹುದು. ಎಲ್ಲಿಯವರೆಗೆ ಕಲ್ಲೋಲ ಎಂಬುದು ಇರುವುದೊ ಅಲ್ಲಿಯವರೆಗೆ ಸಮುದ್ರವೆಂಬುದೂ ಇರಲೇಬೇಕು. ಹಾಗೇ ಅನಾಹತಧ್ವನಿಯನ್ನು ಹಿಡಿದು ಮುಂದುವರೆದರೆ ಅದರ ಪ್ರತಿಪಾದ್ಯ ಬ್ರಹ್ಮನನ್ನು ಮುಟ್ಟಬಹುದು. ಅದಕ್ಕೇ ಪರಮಪದ ಅಂತ ಹೆಸರು. ಆದರೆ ‘ಅಹಂ’ ಎಂಬುದು ಇತ್ತು ಎಂದರೆ ಆ ವಿಧದ ಸಾಕ್ಷಾತ್ಕಾರ ಸಾಧ್ಯವಿಲ್ಲ. ಯಾವ ಅವಸ್ಥೆಯಲ್ಲಿ ‘ನಾನು’, ‘ನೀನು’ ‘ಏಕ’, ‘ಅನೇಕ’ ಯಾವುದೂ ಇರದೋ ಆ ಅವಸ್ಥೆಯಲ್ಲಿ ಬ್ರಹ್ಮದರ್ಶನ ದೊರೆಯುತ್ತದೆ.
“ಭಾವಿಸಿಕೊಳ್ಳಿ, ಸೂರ್ಯ ಮತ್ತು ನೀರಿನಿಂದ ತುಂಬಿದ ಹತ್ತು ಘಟ ಇಲ್ಲಿ ಇವೆ ಎಂದು. ಪ್ರತಿಯೊಂದು ಘಟದಲ್ಲೂ ಸೂರ್ಯನ ಪ್ರತಿಬಿಂಬವನ್ನು ನೋಡಬಹುದು. ಈಗ ಕಂಡುಬರುತ್ತದೆ, ಒಬ್ಬ ನಿಜವಾದ ಸೂರ್ಯ ಮತ್ತು ಹತ್ತು ಪ್ರತಿಬಿಂಬಿತ ಸೂರ್ಯರು ಇರುವುದಾಗಿ. ಒಂದು ಪಕ್ಷ ಒಂಬತ್ತು ಘಟಗಳನ್ನು ಒಡೆದುಹಾಕಿಬಿಟ್ಟರೆ, ಉಳಿದುಕೊಳ್ಳುವುದು ಒಬ್ಬ ನಿಜವಾದ ಸೂರ್ಯ ಮತ್ತು ಆತನ ಒಂದು ಪ್ರತಿಬಿಂಬ. ಒಂದೊಂದು ಘಟವೂ ಒಂದೊಂದು ಜೀವವಿದ್ದ ಹಾಗೆ. ಪ್ರತಿಬಿಂಬದ ಮೂಲಕ ನಿಜವಾದ ಸೂರ್ಯನನ್ನು ಅರಿತುಕೊಳ್ಳಬಹುದು. ಜೀವಾತ್ಮನ ಮೂಲಕ ಪರಮಾತ್ಮನನ್ನು ಅರಿತುಕೊಳ್ಳಬಹುದು. ಜೀವಾತ್ಮ ಸಾಧನೆ ಭಜನೆ ಮಾಡಿದ್ದೇ ಆದರೆ, ಆತ ಪರಮಾತ್ಮನ ಸಾಕ್ಷಾತ್ಕಾರ ಪಡೆದುಕೊಳ್ಳಬಲ್ಲ. ಆ ಕೊನೆಯ ಘಟವನ್ನೂ ಒಡೆದುಹಾಕಿಬಿಟ್ಟ ನಂತರ ಏನು ಉಳಿದುಕೊಳ್ಳುತ್ತದೆ ಎಂಬುದನ್ನು ಬಾಯಿಂದ ಹೇಳಲಾಗುವುದಿಲ್ಲ.
“ಜೀವ ಮೊದಮೊದಲು ಅಜ್ಞಾನಾವಸ್ಥೆಯಲ್ಲಿ ಮುಳುಗಿಕೊಂಡಿರುತ್ತದೆ. ಅದಕ್ಕೆ ಭಗವಂತನ ಜ್ಞಾನವಿರದು; ನಾನಾ ವಸ್ತುಗಳ ಜ್ಞಾನ-ಅನೇಕ ವಸ್ತುಗಳ ಜ್ಞಾನ ಇರುತ್ತದೆ. ಆದರೆ ಜ್ಞಾನ ದೊರೆತಾಗ ಅದಕ್ಕೆ ಬೋಧೆಯಾಗುತ್ತದೆ, ಭಗವಂತ ಸರ್ವಭೂತಗಳಲ್ಲೂ ಇದ್ದಾನೆ ಎಂದು. ಒಬ್ಬನ ಕಾಲಿಗೆ ಮುಳ್ಳು ಚುಚ್ಚಿಕೊಂಡಿದೆ ಅಂತ ಇಟ್ಟುಕೊಳ್ಳಿ. ಆತ ಇನ್ನೊಂದು ಮುಳ್ಳನ್ನು ಹುಡುಕಿತಂದು ಮೊದಲನೆ ಮುಳ್ಳನ್ನು ತೆಗೆದುಹಾಕಿಬಿಡುತ್ತಾನೆ. ಎಂದರೆ, ಸಾಧಕ ‘ಅಜ್ಞಾನ’ ವೆಂಬ ಮುಳ್ಳನ್ನು ‘ಜ್ಞಾನ’ ವೆಂಬ ಮುಳ್ಳಿನಿಂದ ತೆಗೆದುಹಾಕುತ್ತಾನೆ. ವಿಜ್ಞಾನ ದೊರೆತಾಗ ಆತ ಎರಡು ಮುಳ್ಳನ್ನೂ ಬಿಸಾಡಿಬಿಡುತ್ತಾನೆ-ಅಜ್ಞಾನ ಮುಳ್ಳು, ಜ್ಞಾನ ಮುಳ್ಳು ಎರಡನ್ನೂ. ಬಳಿಕ ಆತ ರಾತ್ರಿ ಹಗಲು ಭಗವಂತನನ್ನು ಕೇವಲ ದರ್ಶನ ಮಾಡುತ್ತಿರುವುದೇ ಅಲ್ಲ, ಆತನೊಡನೆ ಮಾತುಕತೆಯಾಡುತ್ತಲೂ ಇರುತ್ತಾನೆ.
“ಯಾರು ಹಾಲಿನ ವಿಷಯವಾಗಿ ಕೇವಲ ಕೇಳಿದ್ದಾನೊ ಆತ ಇನ್ನೂ ‘ಅಜ್ಞಾನಿ’. ಯಾರು ಹಾಲನ್ನು ನೋಡಿದ್ದಾನೊ ಆತನಿಗೆ ಜ್ಞಾನ ದೊರೆತಿದೆ. ಯಾರು ಹಾಲನ್ನು ಕುಡಿದು ಹೃಷ್ಟಪುಷ್ಟನಾಗಿದ್ದಾನೊ ಆತನಿಗೆ ವಿಜ್ಞಾನ ದೊರೆತಿದೆ.”
ಈ ರೀತಿಯಾಗಿ ಪರಮಹಂಸರು ತಮ್ಮ ಮಾನಸಿಕ ಅವಸ್ಥೆಯ ಸಂಬಂಧವಾಗಿ ಭಕ್ತರಿಗೆ ತಿಳಿಸಿದರು. ಅವರು ನಿಜವಾಗಿಯೂ ಒಬ್ಬ ವಿಜ್ಞಾನಿ.
ಶ್ರೀರಾಮಕೃಷ್ಣರು ಭಕ್ತರಿಗೆ: “ಜ್ಞಾನಿ-ಸಾಧುವಿಗೂ, ವಿಜ್ಞಾನಿ-ಸಾಧುವಿಗೂ ವ್ಯತ್ಯಾಸವಿದೆ. ಜ್ಞಾನಿ-ಸಾಧು ಕುಳಿತುಕೊಳ್ಳುವ ವಿಧಾನವೇ ಬೇರೆ. ಆತ ಮೀಸೆ ಹುರಿ ಮಾಡಿ ಕುಳಿತುಕೊಳ್ಳುತ್ತಾನೆ. ಯಾರಾದರೂ ಆತನನ್ನು ನೋಡಲು ಬಂದರೆ ಅವರನ್ನು ಕೇಳುತ್ತಾನೆ: ‘ಒಳ್ಳೇದು, ಏನಾದರೂ ಪ್ರಶ್ನೆ ಕೇಳುವುದು ಇದೆಯೆ?’ ಆದರೆ ಯಾರು ಭಗವಂತನನ್ನು ಸತತ ದರ್ಶಿಸುತ್ತ ಆತನೊಡನೆ ಸ್ನೇಹಭಾವದಿಂದ ಮಾತುಕತೆಯಾಡುತ್ತಿರುವನೊ, ಆತನ ಎಂದರೆ ವಿಜ್ಞಾನಿಯ ಸ್ವಭಾವ ಜ್ಞಾನಿಯದಕ್ಕಿಂತ ಸಂಪೂರ್ಣ ಪ್ರತ್ಯೇಕ. ಆತ ಕೆಲವು ವೇಳೆ ಜಡನ ಹಾಗೆ, ಇನ್ನು ಕೆಲವು ವೇಳೆ ಪಿಶಾಚಿಯ ಹಾಗೆ, ಮತ್ತೆ ಕೆಲವು ವೇಳೆ ಬಾಲಕನ ಹಾಗೆ, ಮತ್ತೂ ಕೆಲವು ವೇಲೆ ಉನ್ಮತ್ತನ ಹಾಗೆ ವರ್ತಿಸುತ್ತಿರುತ್ತಾನೆ.
“ಆತ ಸಮಾಧಿಸ್ಥನಾದಾಗ ಬಾಹ್ಯಜ್ಞಾನಶೂನ್ಯನಾಗಿ ಜಡನಂತೆ ಕಾಣಬರುತ್ತಾನೆ. ಎಲ್ಲವೂ ಬ್ರಹ್ಮಮಯವಾಗಿರುವುದನ್ನು ನೋಡಿ, ಆತ ಪಿಶಾಚಿಯ ಹಾಗೆ ವರ್ತಿಸುತ್ತಾನೆ; ಶುಚಿ ಅಶುಚಿಗಳ ಬೋಧೆ ಇರದು. ದೇಹಬಾಧೆ ತೀರಿಸಿಕೊಳ್ಳುತ್ತಿರುವಾಗ ಹಣ್ಣು ತಿಂದು ಬಿಡುತ್ತಾನೆ ಬಾಲಕನ ಹಾಗೆ. ಸ್ವಪ್ನದೋಷವಾದ ನಂತರ ಶುಕ್ರದಿಂದ ಈ ಶರೀರ ಉತ್ಪನ್ನವಾಗಿದೆಯಲ್ಲ ಎಂದು ಭಾವಿಸಿ ಅಶುಚಿಯಾಯ್ತು ಎಂಬ ಬೋಧೆ ಇರುವುದಿಲ್ಲ ಇದು ವಿಷ್ಟ, ಅದು ಮೂತ್ರ ಎಂಬ ಜ್ಞಾನವಿರದು. ಎಲ್ಲವೂ ಬ್ರಹ್ಮಮಯವಾಗಿ ಕಾಣುತ್ತದೆ. ಅನ್ನ ಸಾರುಗಳನ್ನು ಹೆಚ್ಚು ದಿನ ಹಾಗೇ ಇಟ್ಟರೆ ಅವೂ ವಿಷ್ಟದ ಅವಸ್ಥೆಗೆ ಇಳಿದುಬಿಡುತ್ತವೆ.
“ಮತ್ತೆ ಆತ ಉನ್ಮತ್ತನಂತಿರುತ್ತಾನೆ. ಆತನ ನಡತೆ, ನುಡಿ, ವ್ಯವಹಾರ ನೋಡಿ ಜನ ಭಾವಿಸಿಕೊಳ್ಳುತ್ತಾರೆ ಆತ ಹುಚ್ಚ ಎಂದು. ಅಥವಾ ಕೆಲವು ವೇಳೆ ಬಾಲಕನಂತಿರುತ್ತಾನೆ, ಯಾವ ಬಂಧನವೂ ಇಲ್ಲದೆ-ಲಜ್ಜೆ, ದ್ವೇಷ, ಸಂಕೋಚ ಇತ್ಯಾದಿ ಯಾವುವೂ ಇಲ್ಲದೆ.
“ಭಗವಂತನ ದರ್ಶನ ದೊರೆತನಂತರ ಈ ಅವಸ್ಥೆ ಉಂಟಾಗುತ್ತದೆ. ಇದು ಚುಂಬಕ ಬೆಟ್ಟದ ಹತ್ತಿರ ಹಡಗು ಹೋಯಿತು ಎಂದರೆ ಅದರ ಸ್ಕ್ರೂಮೊಳೆಗಳು ಕಳಚಿ ಬಿದ್ದು ಹೋಗುವುದಿಲ್ಲವೆ, ಹಾಗೆ. ಭಗವಂತನ ದರ್ಶನ ದೊರೆತ ನಂತರ ಕಾಮಕ್ರೋಧಾದಿಗಳು ಇರಲಾರವು.
“ಒಮ್ಮೆ ಕಾಳೀದೇವಾಲಯಕ್ಕೆ ಸಿಡಿಲು ಹೊಡೆಯಿತು. ಹೋಗಿ ನೋಡಿದಾಗ, ಅದು ಮೊಳೆಗಳ ಬಾಯನ್ನೆಲ್ಲ ಮೊಟಕುಮಾಡಿಬಿಟ್ಟಿತ್ತು.
“ಯಾರಿಗೆ ಭಗವಂತನ ಸಾಕ್ಷಾತ್ಕಾರ ದೊರೆತಿರುವುದೊ ಆತನಿಂದ ಸಂತಾನೋತ್ಪತ್ತಿ ಮಾಡುವ ಕಾರ್ಯ, ಸೃಷ್ಟಿಯನ್ನು ಮುಂದುವರೆಸುವ ಕಾರ್ಯ ಸಾಧ್ಯವಿಲ್ಲ. ಹಸಿ ಬತ್ತವನ್ನು ಹುಟ್ಟುಹಾಕಿದರೆ ಅದು ಮೊಳೆತು ಪೈರಾಗುತ್ತದೆ; ಆದರೆ ಬೇಯಿಸಿದ ಬತ್ತ ಮೊಳೆಯದು.
“ಯಾರಿಗೆ ಭಗವಂತನ ದರ್ಶನವಾಗಿರುವುದೊ ಆತನ ‘ಅಹಂ’ ಹೆಸರಿಗೆ ಮಾತ್ರ ಉಳಿದುಕೊಂಡಿರುತ್ತದೆ. ಆ ‘ಅಹಂ’ ಮೂಲಕ ಯಾವ ದುಷ್ಟಕೆಲಸವನ್ನೂ ಮಾಡಲಾಗುವುದಿಲ್ಲ. ಅದು ಹೆಸರಿಗೆ ಮಾತ್ರ ಇರುತ್ತದೆ-ತೆಂಗಿನ ಮರದ ಮಟ್ಟೆಯ ಮಚ್ಚೆಯ ಹಾಗೆ. ಮಟ್ಟೆ ಬಿದ್ದುಹೋಗಿದೆ-ಈಗ ಕೇವಲ ಮಚ್ಚೆ ಮಾತ್ರ ಇದೆ.
“ನಾನು ಕೇಶವಸೇನನಿಗೆ ಹೇಳಿದೆ: ‘ಅಹಂ’ ಎಂಬುದನ್ನು-ನಾನು ಕರ್ತ, ನಾನು ಲೋಕಶಿಕ್ಷಣ ಕೊಡುತ್ತೇನೆ ಎಂಬ ‘ಅಹಂ’ ಅನ್ನು-ತ್ಯಾಗಮಾಡಿಬಿಡು.’ ಕೇಶವಸೇನ ಹೇಳಿದ : ‘ಮಹಾಶಯರೆ, ಹಾಗಾದರೆ ಸಮಾಜ ಏನೂ ಉಳಿಯದು.’ ಅದಕ್ಕೆ ನಾನು ಉತ್ತರವಿತ್ತೆ: ‘ದುಷ್ಟ ಅಹಂ’ ಅನ್ನು ತ್ಯಜಿಸಿಬಿಡು. ನಾನು ಭಗವಂತನ ದಾಸ, ನಾನು ಭಗವಂತನ ಭಕ್ತ ಎಂಬ ‘ಅಹಂ’ ಅನ್ನು ತ್ಯಜಿಸಬೇಕಾಗಿಲ್ಲ. ‘ದುಷ್ಟ ಅಹಂ’ ನಮ್ಮಲ್ಲಿ ಇರುವುದರಿಂದ ‘ಭಗವಂತನ ಅಹಂ’ ಎಂದೂ ನಮ್ಮಲ್ಲಿ ನೆಲಸದು. ಉಗ್ರಾಣವನ್ನು ಒಬ್ಬ ನೋಡಿಕೊಳ್ಳುತ್ತಾ ಇದ್ದರೆ, ಮನೆ ಯಜಮಾನ ಆ ಕಡೆಗೆ ಸುಳಿಯುವುದೇ ಇಲ್ಲ.
(ಭಕ್ತರಿಗೆ) “ನೋಡಿ, ಈ ಕೈಗೆ ಪೆಟ್ಟು ತಾಕಿರುವುದರಿಂದ ನನ್ನ ಸ್ವಭಾವ ಬದಲಾವಣೆಯನ್ನು ಹೊಂದುತ್ತಿದೆ. ಈಗ ಭಗವಂತ ಮನುಷ್ಯನ ಆಂತರ್ಯದಲ್ಲಿ ಉಳಿದ ಜೀವರಾಶಿಗಳಿಗಿಂತ ಹೆಚ್ಚಾಗಿ ವ್ಯಕ್ತವಾಗಿರುವುದು ನನಗೆ ಕಾಣಬರುತ್ತಿದೆ. ಆತ ನನಗೆ ಹೇಳುತ್ತಿರುವಂತಿದೆ ‘ನಾನು ಮನುಷ್ಯನ ಆಂತರ್ಯದಲ್ಲಿ ವಾಸವಾಗಿದ್ದೇನೆ. ನೀನು ಮನುಷ್ಯನೊಡನೆ ಆನಂದಪಡು’. ಮನುಷ್ಯರಲ್ಲಿಯೂ ಶುದ್ಧಭಕ್ತರಾದ ಮನುಷ್ಯರಲ್ಲಿ, ಇನ್ನೂ ಹೆಚ್ಚಾಗಿ ಪ್ರಕಾಶವಾಗಿದ್ದಾನೆ. ಅದಕ್ಕಾಗಿ ನಾನು ನರೇಂದ್ರ, ರಾಖಾಲ ಇವರಿಗಾಗಿ ಬಹಳವಾಗಿ ವ್ಯಾಕುಲಪಡುವುದು.
“ಸರೋವರ ತೀರದ ಉದ್ದಕ್ಕೂ ಚಿಕ್ಕ ಚಿಕ್ಕ ಬಿಲಗಳಿರುವುದುಂಟು. ಅಲ್ಲಿ ಮೀನು, ನಳ್ಳಿ ಇವೆಲ್ಲಾ ಬಂದು ಸೇರಿಕೊಳ್ಳುತ್ತವೆ. ಅದೇ ರೀತಿಯಾಗಿ ಮನುಷ್ಯನ ಆಂತರ್ಯದಲ್ಲಿ ಭಗವಂತನ ಪ್ರಕಾಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಮನುಷ್ಯ ಸಾಲಿಗ್ರಾಮಕ್ಕಿಂತಲೂ ದೊಡ್ಡವನು ಎಂಬ ಹೇಳಿಕೆ ಇದೆ. ನರ ನಾರಾಯಣನೇ. ಪ್ರತಿಮೆಯಲ್ಲಿ ಭಗವಂತ ಆವಿರ್ಭಾವವಾಗುವಾಗ ಇನ್ನು ಆತ ಮನುಷ್ಯನಲ್ಲಿ ಆವಿರ್ಭಾವವಾಗಲೊಲ್ಲನೆ?
“ಭಗವಂತ ನರಲೀಲೆ ನಡೆಸಲು ಮನುಷ್ಯರೂಪ ಧರಿಸಿ ಅವತರಿಸುತ್ತಾನೆ. ಉದಾಹರಣೆಗೆ ರಾಮಚಂದ್ರ, ಶ್ರೀಕೃಷ್ಣ, ಚೈತನ್ಯದೇವ. ಅವತಾರಪುರುಷನ ಮೇಲೆ ಧ್ಯಾನ ಮಾಡಿದ್ದೇ ಆದರೆ, ಭಗವಂತನ ಮೇಲೆ ಧ್ಯಾನಮಾಡಿದ ಹಾಗೇ.”
ಬ್ರಾಹ್ಮಸಮಾಜದ ಅನುಯಾಯಿ ಭಗವಾನ್ದಾಸ ಬಂದಿದ್ದಾನೆ.
ಶ್ರೀರಾಮಕೃಷ್ಣರು ಭಗವಾನ್ದಾಸನಿಗೆ: “ಋಷಿಗಳ ಧರ್ಮ, ಎಂದರೆ ಸನಾತನ ಧರ್ಮ ಅನಾದಿಕಾಲದಿಂದ ಬದುಕಿಬಂದಿದೆ. ಅನಂತಕಾಲದವರೆಗೆ ಬದುಕಿಯೂ ಇರುತ್ತದೆ. ಈ ಸನಾತನ ಧರ್ಮದಲ್ಲಿ ನಿರಾಕಾರಪೂಜೆ, ಸಾಕಾರಪೂಜೆ, ಈ ರೀತಿಯಾಗಿ ಎಲ್ಲಾ ವಿಧದ ಪೂಜೆಗಳೂ ಇವೆ; ಜ್ಞಾನಮಾರ್ಗ, ಭಕ್ತಿಮಾರ್ಗ ಎಲ್ಲಾ ಇವೆ. ಉಳಿದ ಧರ್ಮಗಳೆಲ್ಲ, ಎಂದರೆ ಆಧುನಿಕ ಧರ್ಮಗಳು ಕೆಲವು ಕಾಲ ಬದುಕಿರುತ್ತವೆ, ಅನಂತರ ನಶಿಸುತ್ತವೆ.”
೨೩ನೆ ಮಾರ್ಚ್ ೧೮೮೪, ಚೈತ್ರ ಕೃಷ್ಣ ಏಕಾದಶಿ, ಭಾನುವಾರ
ಪರಮಹಂಸರು ಮಧ್ಯಾಹ್ನದ ಊಟವಾದ ನಂತರ ರಾಖಾಲ, ರಾಮ ಮೊದಲಾದವರೊಡನೆ ತಮ್ಮ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ಅವರ ಆರೋಗ್ಯ ಸರಿಯಾಗಿಲ್ಲ. ಕೈಗೆ ಇನ್ನೂ ಪಟ್ಟಿ ಕಟ್ಟಿಕೊಂಡಿದ್ದಾರೆ.
ಪರಮಹಂಸರು ಅಸ್ವಸ್ಥರಾಗಿದ್ದರೂ ಆನಂದದ ಸಂತೆಯನ್ನೇ ಸೇರಿಸಿದ್ದಾರೆ. ಪ್ರತಿದಿನವೂ ಭಕ್ತರು ಗುಂಪುಗುಂಪಾಗಿ ಬರುತ್ತಲೇ ಇದ್ದಾರೆ. ಯಾವಾಗ ನೋಡಿದರೂ ಭಗವತ್ಸಂಬಂಧವಾಗಿಯೇ ಮಾತುಕತೆ ನಡೆಯುತ್ತಿದೆ. ಆನಂದಲಹರಿ ಸುಮ್ಮನೆ ಹರಿಯುತ್ತಿದೆ. ಪರಮಹಂಸರು ಕೆಲವು ವೇಳೆ ಕೀರ್ತನೆಯಲ್ಲಿ ತೊಡಗಿ ಕೀರ್ತನಾನಂದವನ್ನು, ಇನ್ನು ಕೆಲವು ವೇಳೆ ಸಮಾಧಿಸ್ಥರಾಗಿ ಬ್ರಹ್ಮಾನಂದವನ್ನು ಅನುಭವಿಸುತ್ತಿದ್ದಾರೆ. ಭಕ್ತರು ಸ್ತಂಭೀಭೂತರಾಗಿ ಇವುಗಳನ್ನೆಲ್ಲಾ ನೋಡುತ್ತಿದ್ದಾರೆ.
ರಾಮ: “ಆರ್. ಮಿತ್ರನ ಕನ್ಯೆಯನ್ನು ನರೇಂದ್ರನಿಗೆ ಕೊಡುವುದಾಗಿ ಮಾತುಕತೆ ನಡೆದಿದೆ. ಬಹಳ ಹೆಚ್ಚಾಗಿ ವರದಕ್ಷಿಣೆ ಕೊಡುವುದಾಗಿ ಹೇಳಿದ್ದಾರಂತೆ.”
ಶ್ರೀರಾಮಕೃಷ್ಣರು ನಗುತ್ತ: “ಹೌದು, ಅಲ್ಲೂ ಆತ ಒಬ್ಬ ಮುಂದಾಳು ಆಗಿಬಿಡಬಹುದು. ಯಾವ ಮಾರ್ಗ ಹಿಡಿದರೂ ಅದರಲ್ಲಿ ಆತ ಒಬ್ಬ ಮಹಾ ವ್ಯಕ್ತಿಯಾಗಿ ನಿಲ್ಲುತ್ತಾನೆ.”
ನರೇಂದ್ರನ ಸಂಬಂಧವಾಗಿ ಮಾತುಕತೆ ಇನ್ನು ಹೆಚ್ಚಾಗಿ ಮುಂದುವರಿಯಲು ಪರಮಹಂಸರು ಪ್ರೋತ್ಸಾಹವೀಯಲಿಲ್ಲ.
ಶ್ರೀರಾಮಕೃಷ್ಣರು ರಾಮನಿಗೆ: “ಒಳ್ಳೆಯದು, ಅಸ್ವಸ್ಥನಾದರೆ ನನಗೆ ಇಷ್ಟೊಂದು ಪುಕ್ಕಲುತನ ಬಂದುಬಿಡುತ್ತದೆಯಲ್ಲ ಏಕೆ? ಒಮ್ಮೊಮ್ಮೆ ಇವನನ್ನು ನನಗೆ ಗುಣವಾಗುವ ಬಗೆ ಹೇಗೆ ಎಂದು ಕೇಳುತ್ತಿರುತ್ತೇನೆ. ನೋಡು, ನಂಬಿಕೆಯಿಟ್ಟರೆ ಎಲ್ಲರಲ್ಲೂ ಇಡಬೇಕು, ಇಲ್ಲದಿದ್ದರೆ ಯಾರಲ್ಲೂ ಕೂಡದು.
“ಭಗವಂತನೇ ಡಾಕ್ಟರು, ಕವಿರಾಜ ಎಲ್ಲಾ ಆಗಿದ್ದಾನೆ. ಆದ್ದರಿಂದ ಅವರೆಲ್ಲರಲ್ಲೂ ನಂಬಿಕೆ ಇಡಬೇಕು. ಅವರು ಕೇವಲ ಮನುಷ್ಯಮಾತ್ರರು ಎಂದು ಭಾವಿಸಿದರೆ ಅವರಲ್ಲಿ ಶ್ರದ್ಧೆ ಇಡಲಾಗುವುದಿಲ್ಲ.
“ಶಂಭುವಿಗೆ ಬಲವಾದ ಸನ್ನಿ. ಡಾಕ್ಟರ್ ಸರ್ವಾಧಿಕಾರಿ ಆತನನ್ನು ಪರೀಕ್ಷಿಸಿ ಹೇಳಿದ, ಔಷಧದ ಉಷ್ಣ ಇದು ಎಂದು. ಹಲಧಾರಿ ಆತನಿಗೆ ತನ್ನ ಕೈ ತೋರಿಸಿದ. ಆತ ಹೇಳಿದ: ‘ಎಲ್ಲಿ ನಿನ್ನ ಕಣ್ಣು? ನಿನಗೆ ಪ್ಲೀಹದ ರೋಗ.’ ತನಗಂಥದೇನೂ ಇಲ್ಲವೆಂದು ಹಲಧಾರಿ ಹೇಳಿದ, ಆದರೆ ಡಾಕ್ಟರ್ ಮಧು ಒಳ್ಳೆ ಔಷಧ ಕೊಡುತ್ತಾನೆ.”
ರಾಮ: “ಔಷಧದಿಂದಲೇನೂ ಉಪಕಾರವಾಗುವುದಿಲ್ಲ. ಆದರೆ ಅದು ಪ್ರಕೃತಿಗೆ ಸಹಾಯ ಮಾಡುತ್ತದೆ.”
ಶ್ರೀರಾಮಕೃಷ್ಣರು: “ಔಷಧದಿಂದ ಉಪಕಾರವಾಗದಿದ್ದಲ್ಲಿ, ಅಫೀಮು ಮಲಬದ್ಧತೆಯನ್ನು ಉಂಟುಮಾಡುತ್ತದೆಯಲ್ಲ, ಅದು ಹೇಗೆ”
ರಾಮ ಈಗ ಕೇಶವಚಂದ್ರಸೇನನ ಸಾವಿನ ವಿಷಯವಾಗಿ ಮಾತು ಎತ್ತಿದ್ದಾನೆ.
ರಾಮ: “ನೀವು ಹೇಳಿದುದು ಸರಿ. ಗುಲಾಬಿ ಗಿಡ ಒಳ್ಳೆಯದಾಗಿದ್ದರೆ ತೋಟಗಾರ ಅದರ ಬೇರನ್ನು ಬಗೆದಿಡುತ್ತಾನೆ-ಅದು ಹಿಮವನ್ನು ಹೀರಿ ಇನ್ನೂ ಬಲಯುತ ವಾಗಲೆಂದು. ಸಿದ್ಧವಚನ ಫಲಿಸಿಬಿಟ್ಟಿತಲ್ಲ.”
ಶ್ರೀರಾಮಕೃಷ್ಣರು: “ಅದೆಲ್ಲ ನನಗೆ ಗೊತ್ತಿಲ್ಲ. ನಾನು ಹಾಗೆ ಹೇಳಿದಾಗ ಗುಣಾಕಾರ ಭಾಗಾಕಾರ ಹಾಕಿ ಹೇಳಲಿಲ್ಲ. ಆ ರೀತಿಯಾಗಿ ಹೇಳುತ್ತಿರುವವರು ನೀವು ಮಾತ್ರವೇ.”
ರಾಮ: “ಬ್ರಾಹ್ಮಸಮಾಜದವರು ನಿಮ್ಮ ವಿಷಯವಾಗಿ ತಮ್ಮ ಮಾಸಪತ್ರಿಕೆಯಲ್ಲಿ (ಸುಲಭ ಸಮಾಚಾರ) ಪ್ರಕಟಿಸಿದ್ದಾರೆ.”
ಶ್ರೀರಾಮಕೃಷ್ಣರು: “ನನ್ನ ವಿಷಯವಾಗಿ ಏಕೆ ಪ್ರಕಟಿಸಿದ್ದಾರೆಯೆ! ಏನಿದೆಲ್ಲ! ಏಕೆ ಈಗ ಹಾಗೆ ಮಾಡಬೇಕು? ನಾನು ತಿಂದು ಉಂಡು ಆನಂದದಿಂದಿದ್ದೇನೆ. ನನಗೆ ಬೇರೇನೂ ಗೊತ್ತಿಲ್ಲ.
“ನಾನು ಒಮ್ಮೆ ಕೇಶವಸೇನನನ್ನು ಕೇಳಿದೆ: ‘ನನ್ನ ವಿಷಯವಾಗಿ ಏಕೆ ಪ್ರಕಟಿಸಿದ್ದೀಯೆ?’ ಆತ ಹೇಳಿದ, ತಮ್ಮ ಹತ್ತಿರ ಜನ ಬರಲಿ ಎಂದು, ಅಂತ. ಮನುಷ್ಯನ ಸ್ವಶಕ್ತಿಯಿಂದಲೇ ಲೋಕಶಿಕ್ಷಣ ಕಾರ್ಯ ಸಾಗದು. ಭಗವಂತನ ಶಕ್ತಿ ಒದಗದಿದ್ದರೆ ಅವಿದ್ಯೆಯನ್ನು ಗೆಲ್ಲಲಾಗುವುದಿಲ್ಲ.
“ಒಮ್ಮೆ ಇಬ್ಬರಿಗೆ ಕುಸ್ತಿ ನಡೆಯಿತು-ಹನುಮಾನ್ಸಿಂಗನಿಗೂ ಮತ್ತು ಪಂಜಾಬಿನ ಒಬ್ಬ ಮುಸಲ್ಮಾನನಿಗೂ. ಮುಸಲ್ಮಾನ ಒಳ್ಳೆ ಗಟ್ಟಿಮುಟ್ಟಾಗಿ ಬೆಳೆದಿದ್ದ. ಆತ ಕುಸ್ತಿ ಮಾಡುವ ದಿನವೂ ಅಲ್ಲದೆ, ಅದರ ಹಿಂದಿನ ಹದಿನೈದು ದಿನಗಳಿಂದಲೂ ಮಾಂಸ ತುಪ್ಪ ಮೊದಲಾದುವನ್ನು ಬಹಳ ಚೆನ್ನಾಗಿ ತಿಂದಿದ್ದ. ಎಲ್ಲರೂ ಭಾವಿಸಿದ್ದರು ಆತನೇ ಗೆಲ್ಲುವನೆಂದು. ಅತ್ತಕಡೆ ಹನುಮಾನ್ಸಿಂಗನನ್ನು ನೋಡಿದರೆ, ಉಡುಪೋ ಬಹಳ ಮಲಿನವಾಗಿತ್ತು. ಕೆಲವು ದಿನಗಳಿಂದ ಕಡಮೆ ಕಡಮೆಯಾಗಿ ಆಹಾರ ತೆಗೆದುಕೊಳ್ಳುತ್ತ ಮಹಾವೀರನ ಮಂತ್ರವನ್ನು ಜಪಿಸುತ್ತಲೇ ಬರುತ್ತಿದ್ದ. ಕುಸ್ತಿ ಮಾಡುವ ದಿನ ಪೂರ್ಣ ಉಪವಾಸ ಮಾಡಿದ್ದ. ಎಲ್ಲರೂ ಭಾವಿಸಿದ್ದರು, ಈತ ನಿಶ್ಚಯವಾಗಿ ಸೋಲುವನೆಂದು. ಆದರೆ ಅಂದು ಗೆದ್ದವನು ಹನುಮಾನ್ಸಿಂಗನೇ. ಯಾರು ಹದಿನೈದು ದಿನಗಳಿಂದ ಚೆನ್ನಾಗಿ ತಿಂದಿದ್ದನೊ ಆತನೇ ಸೋತುಹೋದ.
“ಪ್ರಕಟಣೆ ಮುಂತಾದುವುಗಳಿಂದ ಏನು ಪ್ರಯೋಜನ? ಯಾರು ಲೋಕಶಿಕ್ಷಣವನ್ನು ಮಾಡಬೇಕಾಗಿರುವುದೊ, ಆತನಿಗೆ ಶಕ್ತಿ ಭಗವಂತನಿಂದಲೇ ಬರುತ್ತದೆ. ತ್ಯಾಗಿಯ ಕೈಯಲ್ಲಿ ವಿನಾ ಬೇರೆ ಯಾರ ಕೈಯಲ್ಲೂ ಲೋಕಶಿಕ್ಷಣ ಸಾಧ್ಯವಿಲ್ಲ. ನಾನಂತೂ ಮೂರ್ಖೋತ್ತಮ!” (ಎಲ್ಲರೂ ನಗುತ್ತಿದ್ದಾರೆ.)
ಒಬ್ಬ ಭಕ್ತ : “ಹಾಗಿದ್ದ ಪಕ್ಷದಲ್ಲಿ ನಿಮ್ಮ ಮುಖದಿಂದ ವೇದ, ವೇದಾಂತ, ಇವೂ ಅಲ್ಲದೆ ಇನ್ನೂ ಏನೇನೊ ವ್ಯಕ್ತವಾಗಿವೆಯಲ್ಲ, ಅದು ಹೇಗೆ?”
ಶ್ರೀರಾಮಕೃಷ್ಣರು ನಗುತ್ತ: “ನನ್ನ ಎಳೆ ವಯಸ್ಸಿನಲ್ಲಿ ಅಲ್ಲಿನ (ಕಾಮಾರಪುಕುರಿನ) ಲಾಹಾರವರ ಮನೆಯಲ್ಲಿ ಸಾಧುಗಳು ಏನನ್ನು ಓದುತ್ತಿದ್ದರೊ ಅದು ನನಗೆ ಅರ್ಥವಾಗುತ್ತಿತ್ತು. ಆದರೆ, ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಗೊತ್ತಾಗುತ್ತಿರಲಿಲ್ಲ. ಯಾರಾದರೂ ಪಂಡಿತರು ಬಂದು ಸಂಸ್ಕೃತದಲ್ಲಿ ಮಾತನಾಡಿದರೆ ನನಗೆ ಅರ್ಥವಾಗುತ್ತದೆ. ಆದರೆ ನಾನೇ ಸಂಸ್ಕೃತದಲ್ಲಿ ಮಾತನಾಡಬೇಕೆಂದರೆ ಸಾಧ್ಯವಾಗುವುದಿಲ್ಲ.”
“ಭಗವಂತನ ಸಾಕ್ಷಾತ್ಕಾರ ಪಡೆಯುವುದೇ ಜೀವನದ ಉದ್ದೇಶ. ಲಕ್ಷ್ಯಕ್ಕೆ ಗುರಿಯಿಡುವ ಸಮಯದಲ್ಲಿ ಅರ್ಜುನ ಹೇಳಿದ: ‘ನನಗೆ ಬೇರೇನೂ ಕಾಣುತ್ತಿಲ್ಲ-ಕೇವಲ ಹಕ್ಕಿಯ ಕಣ್ಣು ಮಾತ್ರವಲ್ಲದೆ ರಾಜರೂ ಕಾಣಿಸುತ್ತಿಲ್ಲ, ಹಕ್ಕಿ ಕೂಡ ಕಾಣಿಸುತ್ತಿಲ್ಲ.’
“ಭಗವಂತನ ಸಾಕ್ಷಾತ್ಕಾರ ದೊರೆತರೇ ಬೇಕಾದಷ್ಟು. ಸಂಸ್ಕೃತ ಗೊತ್ತಾಗದಿದ್ದರೆ ಮುಳುಗಿಹೋಗಿಬಿಡುವುದೇನು?
“ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲು ಯಾರು ವ್ಯಾಕುಲರಾಗಿದ್ದಾರೊ ಅವರು ಪಂಡಿತರಾಗಿದ್ದರೂ ಸರಿಯೆ ಅಥವಾ ನಿರಕ್ಷರಕುಕ್ಷಿಗಳಾಗಿದ್ದರೂ ಸರಿಯೆ. ಆತನ ಕೃಪೆ ಆತನ ಮಕ್ಕಳ ಮೇಲೆಲ್ಲಾ ಒಂದೇ ಸಮಾನ. ತಂದೆಗೆ ಎಲ್ಲಾ ಮಕ್ಕಳ ಮೇಲೂ ಒಂದೇ ವಿಧವಾದ ಪ್ರೀತಿ. ಒಬ್ಬ ತಂದೆಗೆ ಐದು ಜನ ಮಕ್ಕಳು ಅಂತ ಇಟ್ಟುಕೊ. ಅವರಲ್ಲಿ ಒಬ್ಬಿಬ್ಬರು ‘ಅಪ್ಪಾ’ ಎಂಬುದಾಗಿಯೂ, ಕೆಲವರು ‘ಪಪ್ಪಾ’ ಎಂಬುದಾಗಿಯೂ, ಇನ್ನು ಕೆಲವರು ‘ಪಾ’ ಎಂಬುದಾಗಿಯೂ ಕರೆಯುವರು. ಈ ಕೊನೆಯ ಮಕ್ಕಳಿಗೆ ಆತನ ಹೆಸರನ್ನು ಪೂರ್ಣವಾಗಿ ಉಚ್ಚರಿಸಲಾಗುತ್ತಿಲ್ಲ. ‘ಪಾ’ ಎಂದು ಕರೆಯುವ ಮಕ್ಕಳಿಗಿಂತ ‘ಪಪ್ಪಾ’ ಎಂದು ಕರೆಯುವ ಮಕ್ಕಳನ್ನು ತಂದೆ ಅಧಿಕವಾಗಿ ಪ್ರೀತಿಸುತ್ತಾನೇನು? ಆತನಿಗೆ ಗೊತ್ತಿರುತ್ತದೆ, ಈ ಮಕ್ಕಳು ಇನ್ನೂ ಚಿಕ್ಕ ಶಿಶುಗಳು, ‘ಅಪ್ಪಾ’ ಎಂದು ಕರೆಯಲು ಅವಕ್ಕೆ ಸಾಧ್ಯವಾಗುತ್ತಿಲ್ಲ ಎಂದು.
“ಈ ಕೈಗೆ ಪೆಟ್ಟು ತಗುಲಿದಂದಿನಿಂದ ನನ್ನ ಮಾನಸಿಕ ಅವಸ್ಥೆಯಲ್ಲಿ ಬದಲಾವಣೆ ಉಂಟಾಗುತ್ತಿದೆ. ನರಲೀಲೆಯ ಕಡೆ ಮನಸ್ಸಿನ ಒಲವು ಜಾಸ್ತಿಯಾಗುತ್ತಿದೆ. ಭಗವಂತನೆ ಮಾನವರೂಪ ಧರಿಸಿ ಕ್ರೀಡಿಸುತ್ತಿದ್ದಾನೆ. ಮಣ್ಣಿನ ಪ್ರತಿಮೆಯ ಮೂಲಕ ಆತನ ಪೂಜೆ ಸಾಧ್ಯವಾಗುವಾಗ, ಮನುಷ್ಯನ ಮೂಲಕ ಸಾಧ್ಯವಿಲ್ಲವೋ?
“ಒಮ್ಮೆ ಸಿಂಹಳದ್ವೀಪದ ಹತ್ತಿರ ಒಂದು ಹಡಗು ಮುಳುಗಿಹೋಯಿತು. ಅದರಲ್ಲಿದ್ದ ಒಬ್ಬ ವ್ಯಾಪಾರಿ ತೇಲಿಕೊಂಡುಬಂದು ಸಿಂಹಳದ್ವೀಪದ ದಡವನ್ನು ಮುಟ್ಟಿದ. ವಿಭೀಷಣನ ಸೇವಕರು ಆತನ ಆಜ್ಞೆಯ ಪ್ರಕಾರ ವ್ಯಾಪಾರಿಯನ್ನು ಆತನ ಹತ್ತಿರಕ್ಕೆ ಕರೆದುಕೊಂಡು ಹೋದರು. ‘ಆಹಾ! ಈತ ನಮ್ಮ ರಾಮಚಂದ್ರ ಮೂರ್ತಿಯೇ! ಅದೇ ನರರೂಪ!’ ಹೀಗೆಂದು ಹೇಳಿ ವಿಭೀಷಣನು ಆನಂದದಿಂದ ತುಂಬಿ ತುಳುಕಾಡಲಾರಂಭಿಸಿದ. ಆ ವ್ಯಾಪಾರಿಯನ್ನು ವಸ್ತ್ರಾಭರಣಗಳಿಂದ ಸಿಂಗರಿಸಿ ಪೂಜಿಸಿ ಆತನಿಗೆ ಆರತಿ ಬೆಳಗಲಾರಂಭಿಸಿದ. ಮೊಟ್ಟಮೊದಲು ಈ ಕತೆ ನನ್ನ ಕಿವಿಗೆ ಬಿದ್ದಾಗ ನನಗೆಷ್ಟು ಆನಂದವಾಯಿತು ಎಂಬುದನ್ನು ಬಾಯಿಂದ ವರ್ಣಿಸಲಾರೆ.
“ಒಮ್ಮೆ ವೈಷ್ಣವಚರಣನನ್ನು ಕೇಳಿದಾಗ, ಹೇಳಿದ: ‘ಯಾರಿಗೆ ಯಾವ ವ್ಯಕ್ತಿಯ ಮೇಲೆ ಪ್ರೀತಿಯೊ, ಆ ವ್ಯಕ್ತಿಯನ್ನೇ ಇಷ್ಟದೇವತೆಯೆಂದು ಭಾವಿಸಿದರೆ, ಶೀಘ್ರವಾಗಿ ಭಗವಂತನೆಡೆಗೆ ಮನಸ್ಸು ತಿರುಗುತ್ತದೆ’. ಕಾಮಾರಪುಕುರದ ಹತ್ತಿರವಿರುವ ಶ್ಯಾಮ್ಬಜಾರಿನ ಕರ್ತಾಭಜಾ ಎಂಬ ಸಂಪ್ರದಾಯದ ಗಂಡಸರು ಹೆಂಗಸರು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾರೆ: ‘ನಿನಗೆ ಯಾರನ್ನು ಕಂಡರೆ ಇಷ್ಟ?’ ‘ಆ ವ್ಯಕ್ತಿಯನ್ನು ಕಂಡೆರೆ. ‘ಹಾಗಾದರೆ ಆತನೇ ನಿನ್ನ ಇಷ್ಟದೇವ ಎಂಬುದಾಗಿ ಅರಿತುಕೊ.’ ಇದನ್ನು ಕೇಳಿದಾಗ ನಾನು ಹೇಳಿದೆ: ‘ನನ್ನದು ಈ ವಿಧದ್ದಲ್ಲ. ನನ್ನದು ಮಾತೃಭಾವ.’ ನಾನು ಕಂಡದ್ದೇನೆಂದರೆ, ಎಲ್ಲರೂ ಮಾತಿನಲ್ಲೇನೋ ಮಲ್ಲರು ಆದರೆ ವ್ಯಭಿಚಾರದಲ್ಲಿ ಸಿದ್ಧರು. ಹೆಂಗಸರು ನನ್ನನ್ನು ಕೇಳಿದರೆ, ‘ನಮಗೆ ಮುಕ್ತಿಯಿಲ್ಲವೇ?’ ನಾನು ತಿಳಿಸಿದೆ: ‘ಯಾವಾಗ ಒಬ್ಬನಲ್ಲಿ ನಿಷ್ಠೆಯಿಟ್ಟು ಆತನೇ ಭಗವಂತನೆಂದು ತಿಳಿಯುತ್ತೀರೋ, ಆವಾಗ ಸಾಧ್ಯ. ಐದು ಮಂದಿ ಪುರುಷರೊಡನೆ ಇದ್ದರೆ ದೊರಕದು.”’
ರಾಮ: “ಕೇದಾರಬಾಬು ಕರ್ತಾಭಜಾದವರ ಸ್ಥಳಕ್ಕೆ ಹೋಗಿದ್ದ ಅಂತ ಕಾಣುತ್ತೆ.”
ಶ್ರೀರಾಮಕೃಷ್ಣರು: “ಆತ ಅನೇಕ ಹೂವುಗಳಿಂದ ಮಧುವನ್ನು ಶೇಖರಿಸುತ್ತಾನೆ. (ರಾಮ, ನಿತ್ಯಗೋಪಾಲ ಮೊದಲಾದವರಿಗೆ) ತನ್ನ ಇಷ್ಟದೇವನೇ ಭಗವಂತ ಎಂಬುದಾಗಿ ಭಕ್ತ ನೂರಕ್ಕೆ ನೂರು ಭಾಗ ನಂಬುವುದಾದರೆ, ಆತನಿಗೆ ಭಗವಂತನ ಸಾಕ್ಷಾತ್ಕಾರ ದೊರಕುತ್ತದೆ-ದರ್ಶನ ದೊರೆಯುತ್ತದೆ.”
“ಹಿಂದಿನ ಕಾಲದವರಿಗೆ ಭಗವಂತನಲ್ಲಿ ಶ್ರದ್ಧೆ ಬಹಳ ಅಧಿಕವಾಗಿತ್ತು. ಹಲಧಾರಿಯ ತಂದೆಯ ಶ್ರದ್ಧೆ ಎಷ್ಟು ಅದ್ಭುತವಾದದ್ದು! ಒಮ್ಮೆ ಆತ ತನ್ನ ಮಗಳ ಮನೆಗೆ ಹೋಗುತ್ತಿದ್ದ. ದಾರಿಯಲ್ಲಿ ಬಹು ಸುಂದರವಾದ ಹೂವುಗಳು ಮತ್ತು ಬಿಲ್ವಪತ್ರೆ ಇರುವುದನ್ನು ಕಂಡು ದೇವರ ಪೂಜೆಗಾಗಿ ಅದನ್ನು ಕೊಯ್ದು ಐದಾರು ಮೈಲಿ ದೂರವನ್ನು ಮತ್ತೆ ಹಿಂದಿರುಗಿ ನಡೆದು ತನ್ನ ಮನೆಯನ್ನು ಸೇರಿದ.
“ಒಮ್ಮೆ ರಾಮಾಯಣ ನಾಟಕ ನಡೆಯುತ್ತಿತ್ತು. ಕೈಕೇಯಿ ರಾಮನನ್ನು ವನವಾಸಕ್ಕೆ ತೆರಳುವಂತೆ ಹೇಳಿದಳು. ನಾಟಕ ನೋಡಲು ಹೋಗಿದ್ದ ಹಲಧಾರಿಯ ತಂದೆ ಒಮ್ಮೆಗೇ ಎದ್ದು ನಿಂತ. ಯಾರು ಕೈಕೇಯಿಯ ಪಾರ್ಟು ವಹಿಸಿದ್ದನೊ ಆತನ ಹತ್ತಿರಕ್ಕೆ ಹೋಗಿ ‘ಎಲಾ ಪಾಪಿ!’ ಅಂತ ಹೇಳಿ ಪಂಜಿನಿಂದ ಆತನ ಮುಖ ಸುಡಲು ಹೋಗಿದ್ದ. ಆತ ಸ್ನಾನ ಮಾಡಿದ ನಂತರ ನೀರಿನಲ್ಲಿ ನಿಂತುಕೊಂಡು ‘ರಕ್ತವರ್ಣಂ ಚತುರ್ಮುಖಮ್’ ಎಂಬಿವೇ ಮೊದಲಾದ ಮಂತ್ರಗಳನ್ನು ಪಠಿಸಿ ಧ್ಯಾನಮಾಡುತ್ತಿದ್ದಾಗ, ಕಣ್ಣು ನೀರಿನಿಂದ ತುಂಬಿಕೊಂಡುಬಿಡುತ್ತಿತ್ತು.
“ನಮ್ಮ ತಂದೆ ಮರದ ಪಾದುಕೆಗಳನ್ನು ಹಾಕಿಕೊಂಡು ಬೀದಿಯಲ್ಲಿ ಹೋಗುವಾಗ ಗೌರವ ತೋರಿಸಲು ಅಂಗಡಿಯ ಜನ ಎದ್ದು ನಿಂತುಕೊಳ್ಳುತ್ತಿದ್ದರು, ಹೇಳುತ್ತಿದ್ದರು: ‘ಅಗೋ, ಅವರು ಅಲ್ಲಿ ಬರುತ್ತಿದ್ದಾರೆ!’ ಅವರು ಹಲಧಾರಪುಕುರಿನಲ್ಲಿ ಸ್ನಾನಮಾಡುವ ವೇಳೆಯಲ್ಲಿ ಬೇರೆ ಯಾರಿಗೂ ನೀರಿಗಿಳಿಯಲು ಸಾಹಸವಾಗುತ್ತಿರಲಿಲ್ಲ. ಮುನ್ನವೇ ಕೇಳಿ ತಿಳಿದುಕೊಳ್ಳುತ್ತಿದ್ದರು: ‘ಏನು ಅವರು ಸ್ನಾನ ಮಾಡಿ ಹೋದರೇ?’
“ ‘ರಘುವೀರಾ! ರಘುವೀರಾ!’ ಎಂದು ಜಪಿಸುವಾಗ ತಮ್ಮ ತಂದೆಯ ಎದೆ ಕಂಪೇರುತ್ತಿತ್ತು. ನನಗೂ ಹಾಗೇ ಆಗುತ್ತಿತ್ತು. ಬೃಂದಾವನಕ್ಕೆ ಹೋಗಿದ್ದಾಗ ಹುಲ್ಲುಗಾವಲಿನಿಂದ ಹಿಂದಿರುಗಿ ಬರುತ್ತಿದ್ದ ಗೋವುಗಳನ್ನು ನೋಡಿ ಭಗವದುದ್ದೀಪನವಾಗಿ ನನ್ನ ಶರೀರವೂ ಕಂಪೇರಿಬಿಟ್ಟಿತು.
“ಆಗಿನ ಕಾಲದ ಜನರಿಗೆ ಭಗವಂತನಲ್ಲಿ ಅತ್ಯಂತ ಶ್ರದ್ಧೆ. ಜನ ಹೇಳುವುದೂ ಉಂಟು, ಆಗಿನ ಕಾಲದಲ್ಲಿ ಭಗವಂತ ಕಾಳೀರೂಪ ಧರಿಸಿ ನರ್ತಿಸುತ್ತಿದ್ದ, ಭಕ್ತ ನರ್ತನಕ್ಕೆ ಸರಿಯಾಗಿ ಕೈತಾಳ ಹಾಕುತ್ತಿದ್ದ ಎಂಬುದಾಗಿ.”
ಪಂಚವಟಿಯ ಕುಟೀರಕ್ಕೆ ಒಬ್ಬ ಹಠಯೋಗಿ ಬಂದಿದ್ದಾನೆ. ಏಡೇದೇರ್ ಕೃಷ್ಣ ಕಿಶೋರನ ಮಗ ರಾಮಪ್ರಸನ್ನ ಮತ್ತು ಇನ್ನೂ ಕೆಲವು ಮಂದಿ ಆ ಹಠಯೋಗಿಯನ್ನು ಬಹಳ ಶ್ರದ್ಧಾಭಕ್ತಿಯಿಂದ ಕಾಣುತ್ತಿದ್ದಾರೆ. ಆತನಿಗೆ ಬೇಕಾಗುವ ಅಫೀಮು ಮತ್ತು ಹಾಲಿಗೆ ತಿಂಗಳಿಗೆ ಇಪ್ಪತ್ತೈದು ರೂಪಾಯಿ ಖರ್ಚು ಬೀಳುತ್ತಿತ್ತು. ಆದ್ದರಿಂದ ರಾಮಪ್ರಸನ್ನ ಪರಮಹಂಸರನ್ನು ಪ್ರಾರ್ಥಿಸಿಕೊಂಡಿದ್ದ, ತಮ್ಮ ಹತ್ತಿರಕ್ಕೆ ಅನೇಕ ಮಂದಿ ಭಕ್ತರು ಬರುತ್ತಿದ್ದಾರೆ; ಅವರ ಕಿವಿ ಮೇಲೆ ತಾವು ಈ ಮಾತು ಹಾಕಿದರೆ ಹಠಯೋಗಿಯ ಖರ್ಚುವೆಚ್ಚಗಳಿಗಾಗಿ ಸ್ವಲ್ಪ ದುಡ್ಡು ದೊರೆಯಬಹುದು ಎಂದು. ಪರಮಹಂಸರು ಈಗ ಕೆಲವು ಮಂದಿ ಭಕ್ತರಿಗೆ ಹೇಳುತ್ತಿದ್ದಾರೆ : “ಪಂಚವಟಿಗೆ ಒಬ್ಬ ಹಠಯೋಗಿ ಬಂದಿದ್ದಾನೆ. ಹೋಗಿ, ನೋಡಿಬನ್ನಿ. ಆತ ಎಂಥವನು ಎಂಬುದನ್ನು ತಿಳಿದುಬನ್ನಿ.”
ಠಾಕುರ್ದಾದ ಎಂಬ ಹೆಸರಿನ ಒಬ್ಬ ಯುವಕ ತನ್ನ ಒಬ್ಬಿಬ್ಬರು ಸ್ನೇಹಿತರೊಡನೆ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡುತ್ತಿದ್ದಾನೆ. ಆತನಿಗೆ ವಯಸ್ಸು ಇಪ್ಪತ್ತೇಳು ಇಪ್ಪತ್ತೆಂಟು ಇರಬಹುದು. ಆತನ ಮನೆ ವರಾಹನಗರದಲ್ಲಿದೆ. ಆತ ಒಬ್ಬ ಬ್ರಾಹ್ಮಣಪಂಡಿತನ ಮಗ. ಹರಿಕಥಾ ವೃತ್ತಿಯನ್ನು ಇಟ್ಟುಕೊಂಡಿದ್ದಾನೆ-ಸಂಸಾರದ ಖರ್ಚು ವೆಚ್ಚಗಳಿಗಾಗಿ. ಒಮ್ಮೆ ಆತನಿಗೆ ವೈರಾಗ್ಯ ಬಂದು ಕೆಲವು ಕಾಲದ ಮಟ್ಟಿಗೆ ಮನೆಬಿಟ್ಟು ಹೊರಟುಹೋಗಿದ್ದ. ಈಗಲೂ ಸಾಧನೆಭಜನೆಯನ್ನು ಮಾಡುತ್ತ ಇದ್ದಾನೆ.
ಶ್ರೀರಾಮಕೃಷ್ಣರು: “ಏನು, ನೀನು ನಡೆದುಬಂದೆಯಾ? ಎಲ್ಲಿದೆ ಮನೆ?”
ದಾದ: “ಹೌದು, ನಡೆದುಬಂದೆ. ವರಾಹನಗರದಲ್ಲಿದೆ ಮನೆ.”
ಶ್ರೀರಾಮಕೃಷ್ಣರು: “ಇಲ್ಲಿಗೆ ಬಂದ ಉದ್ದೇಶ?”
ದಾದ: “ತಮ್ಮ ದರ್ಶನ ಮಾಡಿಹೋಗಲು. ಭಗವಂತನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ. ಆದರೆ ಆಗಾಗ ಅಶಾಂತಿಯುಂಟಾಗುತ್ತದೆಯಲ್ಲ ಏಕೆ? ಒಂದು ನಾಲ್ಕೈದು ದಿನಗಳ ಮಟ್ಟಿಗೆ ಬಹಳ ಆನಂದದಿಂದಿರುತ್ತೇನೆ. ಅನಂತರ ಅಶಾಂತಿ. ಹೀಗೇಕೆ?”
ಶ್ರೀರಾಮಕೃಷ್ಣರು: “ಹಾಗೇನು? ಸರಿಯಾದ ರೀತಿಯಲ್ಲಿ ಜೋಡಣೆ ಆಗಿಲ್ಲ. ಯಂತ್ರ ಕೆಲಸ ಮಾಡುವವನು ಚಕ್ರಗಳ ಹಲ್ಲುಗಳು ಸರಿಯಾಗಿ ಕುಳಿತುಕೊಳ್ಳುವಂತೆ ಮಾಡುತ್ತಾನೆ. ಆಗ ಯಂತ್ರ ಸುಲಲಿತವಾಗಿ ನಡೆಯುತ್ತದೆ. ನಿನ್ನ ವಿಷಯದಲ್ಲಿ ಎಲ್ಲೋ ಒಂದು ಕಡೆ ಸ್ವಲ್ಪ ತಡೆ ಇದೆ.”
ದಾದ: “ಹೌದು, ನಿಜ. ಹಾಗೇ ಆಗಿರಬೇಕು.”
ಶ್ರೀರಾಮಕೃಷ್ಣರು: “ಮಂತ್ರೋಪದೇಶ ಪಡೆದಿದ್ದೀಯೇನು?”
ದಾದ: “ಹೌದು, ಪಡೆದಿದ್ದೇನೆ.”
ಶ್ರೀರಾಮಕೃಷ್ಣರು: “ಮಂತ್ರದಲ್ಲಿ ಶ್ರದ್ಧೆಯಿರುವುದೆ?”
ಠಾಕೂರ್ದಾದನ ಒಬ್ಬ ಸ್ನೇಹಿತ ಹೇಳಿದ: “ಈತ ಬಹಳ ಚೆನ್ನಾಗಿ ಹಾಡಬಲ್ಲ.” ಶ್ರೀರಾಮಕೃಷ್ಣರು ಆತನಿಗೆ ಹೇಳಿದರು ಹಾಡುವಂತೆ.
ಠಾಕುರ್ದಾದ ಹಾಡುತ್ತಿದ್ದಾನೆ:
ಪ್ರೇಮ ಗಿರಿಕಂದರದ ಗುಹೆಯಲಿ ಯೋಗಿಯಾಗುತ ನಿಲ್ಲುವೆ
ದಿವ್ಯ ನಿತ್ಯಾನಂದ ನಿರ್ಝರದಲ್ಲಿ ಧ್ಯಾನದಿ ಮುಳುಗುವೆ.
ತತ್ತ್ವಫಲರಸ ಪಾನಗೈಯುತ ಜ್ಞಾನಕ್ಷುಧೆಯನು ತಣಿಸುವೆ
ಪರಮಪುರುಷನ ಪಾದವನು ವೈರಾಗ್ಯ ಕುಸುಮದಿ ಪೂಜಿಪೆ.
ಎದೆಯ ದಾಹಕೆ ನೀರನೆರೆಯಲು ಕೂಪಜಲವನ್ನರಸದೆ
ಶಾಂತಿವಾರಿಯನೆತ್ತಿ ಹೃದಯದ ಹೊನ್ನಗಿಂಡಿಯ ತುಂಬುವೆ.
ನಿನ್ನ ಪಾದಪದ್ಮಗಳ ಸುಧೆಯನು ದಿನವು ದಿನವೂ ಕುಡಿಯುತ,
ನಗುವೆ, ಕುಣಿಯುವೆ, ಅಳುವೆ, ಹಾಡುವೆ, ಪರಮತೋಷದಿ ಮೀಯುತ!
ಶ್ರೀರಾಮಕೃಷ್ಣರು: “ಆಹಾ! ಬಹಳ ಒಳ್ಳೆ ಹಾಡು ಇದು!” ‘ದಿವ್ಯ ನಿತ್ಯಾನಂದ ನಿರ್ಝರದಲ್ಲಿ!’ ‘ತತ್ತ್ವಫಲರಸ ಪಾನಗೈಯುತ!’ ‘ನಗುವೆ, ಕುಣಿಯುವೆ, ಅಳುವೆ, ಹಾಡುವೆ!’ ನಿನ್ನಂಥವನ ಆಂತರ್ಯದಿಂದ ಇಂಥ ಹಾಡು! ನನಗೆ ಬಹಳ ಆನಂದವಾಗಿ ಬಿಟ್ಟಿದೆ. ಇನ್ನೇಕೆ ನಿನಗೆ ಯೋಚನೆ?
“ಸಂಸಾರದಲ್ಲಿ ಇದ್ದೆ ಎಂದರೆ, ಅದರ ಸುಖ ದುಃಖಗಳನ್ನು ಅನುಭವಿಸಲೇಬೇಕು. ಆಗಾಗ ಒಂದಷ್ಟು ಅಶಾಂತಿ ಉಂಟಾಗಿಯೇ ಉಂಟಾಗುತ್ತದೆ. ಮಸಿ ಕಟ್ಟಿದ ಕೊಠಡಿಯಲ್ಲಿ ವಾಸಿಸಿದರೆ ಮೈಗೆ ಅಲ್ಪ ಸ್ವಲ್ಪ ಮಸಿ ತಗಲೇ ತಗಲುತ್ತದೆ.”
ದಾದ: “ಒಳ್ಳೇದು, ಈಗ ನಾನು ಏನು ಮಾಡಬೇಕು-ದಯವಿಟ್ಟು ತಿಳಿಸಿ.”
ಶ್ರೀರಾಮಕೃಷ್ಣರು: “ಕೈತಾಳ ಹಾಕುತ್ತ ಬೆಳಗ್ಗೆ ಸಾಯಂಕಾಲ ಹರಿನಾಮಸಂಕೀರ್ತನೆ ಮಾಡು. ಇನ್ನೊಮ್ಮೆ ಬಾ-ನನ್ನ ಕೈ ಸ್ವಲ್ಪ ಗುಣಹೊಂದಲಿ.”
ಮಹಿಮಚರಣ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿದ. ಶ್ರೀರಾಮಕೃಷ್ಣರು ಆತನಿಗೆ ಹೇಳಿದರು: “ಆಹಾ! ಈತ ಬಹಳ ಒಳ್ಳೇ ಹಾಡನ್ನು ಹಾಡಿದ. ಮತ್ತೆ ಹಾಡು ಆ ಹಾಡನ್ನು.” ಠಾಕುರ್ದಾದ ಅದನ್ನು ಪುನಃ ಹಾಡಿದ.
ಶ್ರೀರಾಮಕೃಷ್ಣರು ಮಹಿಮಚರಣನಿಗೆ: “ನೀನು ಆ ಶ್ಲೋಕಗಳನ್ನು ಹೇಳು-ಹರಿಭಕ್ತಿಯ ಸಂಬಂಧವಾದುವು.”
ಮಹಿಮಚರಣ ನಾರದಪಂಚರಾತ್ರದಿಂದ ಕೆಲವು ಶ್ಲೋಕಗಳನ್ನು ಎತ್ತಿ ಹೇಳಿದ.
ಶ್ರೀರಾಮಕೃಷ್ಣರು: “ಆ ಭಾಗವೂ ಒಳ್ಳೆಯದೆ- ‘ಪಡೆ ಅವನಿಂ ವೈಷ್ಣವೋಕ್ತ ಹರಿ ಭಕ್ತಿಯನು!’”
ಮಹಿಮಚರಣ ಪಠಿಸುತ್ತಿದ್ದಾನೆ:
ಓ ಮಗು ಪರಬ್ರಹ್ಮಾ, ನಿನ್ನೀ ಜಪತಪವನು ನಿಲಿಸೋ!
ಜ್ಞಾನಸಿದ್ಧ ಶ್ರೀ ದ್ವಿಜವರ ಶಂಕರನೆಡೆ ನಡೆಯೋ.
ಭವಗಳನಿಬಂಧಚ್ಛೇದನಕಾರಣಶಕ್ತಿಯನು
ಪಡೆ ಅವನಿಂ ವೈಷ್ಣವೋಕ್ತ ಹರಿಭಕ್ತಿಯನು!
ಶ್ರೀರಾಮಕೃಷ್ಣರು: “ಹೌದು, ಶಂಕರ ಹರಿಭಕ್ತಿಯನ್ನು ಕೊಡುತ್ತಾನೆ.”
ಮಹಿಮಚರಣ: “ಪಾಶಮುಕ್ತನೇ ಸದಾಶಿವ.”
ಶ್ರೀರಾಮಕೃಷ್ಣರು: “ಲಜ್ಜೆ, ದ್ವೇಷ, ಭಯ, ಸಂಕೋಚ-ಇವೆಲ್ಲಾ ಪಾಶಗಳೇ ನೀನೇನು ಹೇಳುತ್ತೀಯೆ?”
ಮಹಿಮಚರಣ: “ಹೌದು, ನಿಶ್ಚಯ. ಗೋಪನಮಾಡುವ ಇಚ್ಛೆ, ಹೊಗಳಿದಾಗ ಹಿಗ್ಗುವುದು ಇವು ಕೂಡ.”
ಶ್ರೀರಾಮಕೃಷ್ಣರು: “ಜ್ಞಾನಕ್ಕೆ ಎರಡು ಲಕ್ಷಣಗಳು. ಮೊದಲನೆಯದು ಕೂಟಸ್ಥ ಬುದ್ಧಿ ಸಹಸ್ರಾರು ದುಃಖ, ಕಷ್ಟ, ವಿಪತ್ತು, ವಿಘ್ನ ಬಂದರೂ ಅಚಲವಾಗಿರುವಿಕೆ-ಕಮ್ಮಾರನ ಅಡಿಗಲ್ಲಿನ ಹಾಗೆ. ಸತತ ಕೊಡತಿ ಏಟು ಬೀಳುತ್ತಿದ್ದರೂ ಅದು ಎಂದಿನಂತೇ ಇರುತ್ತದೆ. ಎರಡನೆಯದು ಪುರುಷಕಾರ-ಒಳ್ಳೆ ಪೌರುಷ. ಕಾಮ ಕ್ರೋಧ ನಮಗೆ ಅನಿಷ್ಟ ತರುತ್ತವೆ ತಾನೆ. ಅವನ್ನು ಒಮ್ಮೆಗೇ ತ್ಯಜಿಸಿಬಿಡುವ ಸ್ಥೈರ್ಯ. ಆಮೆ ತನ್ನ ಕೈಕಾಲುಗಳನ್ನು ಒಳಕ್ಕೆ ಸೆಳೆದುಕೊಂಡಿತೆಂದರೆ ಅದನ್ನು ನಾಲ್ಕು ಭಾಗವಾಗಿ ಕತ್ತರಿಸಿದರೂ ಅದು ಮಾತ್ರ ಅವನ್ನು ಹೊರಕ್ಕೆ ಬಿಡದು. (ಠಾಕುರ್ದಾದ ಮೊದಲಾದವರಿಗೆ) ವೈರಾಗ್ಯದಲ್ಲಿ ಎರಡು ವಿಧ-ತೀವ್ರ, ಮಂದ. ಮಂದವೈರಾಗ್ಯ-ಆಗುತ್ತಾ ಇದೆ, ಆಗುತ್ತೆ ಅನ್ನುವ ಹಾಗೆ; ಬಹಳ ನಿಧಾನವಾದ ತಾಳ. ತೀವ್ರವೈರಾಗ್ಯ-ಸಾಣೆಹಿಡಿಸಿದ ಕತ್ತಿಯ ಅಲಗಿನ ಹಾಗೆ; ಮಾಯಾ ಪಾಶವನ್ನು ‘ಕಚ್, ಕಚ್’ ಅಂತ ಕತ್ತರಿಸಿಬಿಡುತ್ತದೆ.
“ಒಬ್ಬ ರೈತ ಬಹಳ ದಿನಗಳಿಂದ ಕೆಲಸ ಮಾಡುತ್ತಿದ್ದಾನೆ. ಆದರೆ ಕೆರೆಯ ನೀರು ಮಾತ್ರ ಇನ್ನೂ ಆತನ ಗದ್ದೆಗೆ ಬಂದಿಲ್ಲ. ಆತನ ಮನಸ್ಸಿನಲ್ಲಿ ಪೌರುಷವಿಲ್ಲ. ಇನ್ನೊಬ್ಬ ಒಂದು ನಾಲ್ಕೈದು ದಿನ ಕೆಲಸಮಾಡಿದ ನಂತರ- ‘ಇಂದು ಗದ್ದೆಗೆ ನೀರು ತಂದ ಮೇಲೇನೇ ಕೆಲಸ ನಿಲ್ಲಿಸುವುದು’ ಎಂದು ಪ್ರತಿಜ್ಞೆ ಮಾಡಿಕೊಳ್ಳುತ್ತಾನೆ. ಸ್ನಾನ ಊಟ ಇವುಗಳ ಭಾವನೆಯನ್ನೇ ಒಂದು ಮೂಲೆಗೆ ಕಟ್ಟಿಟ್ಟುಬಿಡುತ್ತಾನೆ. ಇಡೀ ದಿನವೆಲ್ಲಾ ಕೆಲಸಮಾಡುತ್ತಾನೆ. ಸಾಯಂಕಾಲದ ಹೊತ್ತಿಗೆ ಯಾವಾಗ ನೀರು ಆತನ ಗದ್ದೆಗೆ ‘ಕಲ ಕಲ’ ಅಂತ ಬರಲಾರಂಭಿಸುತ್ತದೋ ಆಗ ಆತನಿಗೆ ಬಹಳ ಆನಂದವಾಗಿಬಿಡುತ್ತದೆ. ಅನಂತರ ಮನೆಗೆ ಹಿಂದಿರುಗಿ ಹೆಂಡತಿಗೆ ಹೇಳುತ್ತಾನೆ: ‘ಕೊಡು ಈಗ ಎಣ್ಣೆಯನ್ನು, ಸ್ನಾನಮಾಡುತ್ತೇನೆ.’ ಸ್ನಾನ ಮುಗಿಸಿ, ಊಟ ಮಾಡಿ, ನಿಶ್ಚಿಂತನಾಗಿ ನಿದ್ರಿಸಲಾರಂಭಿಸುತ್ತಾನೆ.
“ಒಬ್ಬನ ಹೆಂಡತಿ ತನ್ನ ಪತಿಗೆ ಹೇಳಿದಳು: ‘ನೋಡಿ, ಆ ಮನೆಯವರಿಗೆ ದೊಡ್ಡ ವೈರಾಗ್ಯ ಬಂದು ಬಿಟ್ಟಿದೆ-ಆದರೆ ನಿಮ್ಮಲ್ಲಿ ಅಂಥದೇನು ಎಳ್ಳಷ್ಟೂ ಕಾಣುತ್ತಿಲ್ಲ. ಅವರಿಗೆ ಹದಿನಾರು ಜನ ಹೆಂಡತಿಯರಿದ್ದಾರೆ. ಒಬ್ಬೊಬ್ಬಳನ್ನಾಗಿ ತ್ಯಾಗಮಾಡುತ್ತಿದ್ದಾರೆ.’ ಆಗ ಆಕೆಯ ಪತಿ ಸ್ನಾನಕ್ಕೆ ಹೊರಟಿದ್ದ. ಹೆಗಲ ಮೇಲೆ ಚೌಕ ಇತ್ತು. ಹೇಳಿದ: ‘ಎಲೇ ಹುಚ್ಚಿ! ಆತನ ಕೈಯಲ್ಲಿ ತ್ಯಾಗ ಮಾಡಲು ಸಾಧ್ಯವಾಗುವುದಿಲ್ಲ. ತ್ಯಾಗದಲ್ಲಿ ಕಿಂಚಿತ್ ಕಿಂಚಿತ್ ಎಂಬುದು ಉಂಟೆ? ನನ್ನ ಕೈಯಲ್ಲಿ ಸಾಧ್ಯ. ಇಗೋ ನೋಡು! ಹೊರಟೆ ನಾನು.’ ಆತ ಮನೆಯ ವ್ಯವಸ್ಥೆಯ ಸಂಬಂಧವಾಗಿ ಸ್ವಲ್ಪವೂ ಯೋಚಿಸದೆ, ಅದೇ ಅವಸ್ಥೆಯಲ್ಲಿ, ಎಂದರೆ ಮೇಲೆ ಚೌಕ ಹಾಕಿಕೊಂಡಿದ್ದ ಹಾಗೇ ಮನೆ ಬಿಟ್ಟು ಹೊರಟೇಹೋದ. ಇದಕ್ಕೆ ತೀವ್ರ ವೈರಾಗ್ಯ ಅಂತ ಹೆಸರು.
“ಇನ್ನೊಂದು ವಿಧದ ವೈರಾಗ್ಯವಿದೆ. ಅದಕ್ಕೆ ಮರ್ಕಟವೈರಾಗ್ಯ ಅಂತ ಹೆಸರು. ಒಬ್ಬ ಸಂಸಾರದ ಬೇಗೆಯನ್ನು ತಡೆಯಲಾರದೆ ಕಾಷಾಯವಸ್ತ್ರ ಧರಿಸಿ ಕಾಶಿಗೆ ಹೋದ. ಬಹಳ ದಿನಗಳವರೆಗೆ ಆತನ ಸುದ್ಧಿ ಸಮಾಚಾರವೇ ಗೊತ್ತಾಗಲಿಲ್ಲ. ಅನಂತರ ಮನೆಗೆ ಒಂದು ಪತ್ರ ಬಂತು. ಅದರಲ್ಲಿ ಬರೆದಿತ್ತು: ‘ನೀವು ಚಿಂತಿಸಬೇಕಾಗಿಲ್ಲ. ನನಗೊಂದು ಕೆಲಸ ಸಿಕ್ಕಿದೆ.’
“ಸಂಸಾರದ ಬೇಗೆಯಂತೂ ಇದ್ದೇ ಇರುತ್ತದೆ. ಹೆಂಡತಿ ಅವಿಧೇಯಳಾಗಿರಬಹುದು. ತಿಂಗಳಿಗೆ ಬರುವ ಸಂಬಳ ಇಪ್ಪತ್ತು ರೂಪಾಯಿ. ಮಗುವಿಗೆ ಅನ್ನಪ್ರಾಶನ ಮಾಡಿಸಲು ಯೋಗ್ಯತೆಯಿಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲು ಸಾಮರ್ಥ್ಯವಿಲ್ಲ. ಮನೆ ಹರುಕು ಮುರುಕು. ಚಾವಣಿಯಿಂದ ನೀರು ಸೋರುತ್ತಿರುತ್ತದೆ. ಸರಿಪಡಿಸಲು ಕೈಯಲ್ಲಿ ಕಾಸಿಲ್ಲ.
“ಅದಕ್ಕಾಗಿಯೇ ಯುವಕರು ಬಂದಾಗ ನಾನು ಅವರನ್ನು ಕೇಳುವುದು, ನಿಮ್ಮ ಮನೆಯಲ್ಲಿ ಯಾರ್ಯಾರಿದ್ದಾರೆ ಎಂದು. (ಮಹಿಮಚರಣನಿಗೆ) ನೀವು ಸಂಸಾರ ತ್ಯಾಗಮಾಡಬೇಕಾದ ಆವಶ್ಯಕತೆಯೇನಿದೆ? ಸಾಧುಗಳು ಎಷ್ಟೊಂದು ಕಷ್ಟಪಡಬೇಕು! ಒಬ್ಬನ ಹೆಂಡತಿ ತನ್ನ ಪತಿಗೆ ಹೇಳಿದಳು: ‘ನೀವು ಸಂಸಾರವನ್ನು ತ್ಯಜಿಸಬೇಕು ಅಂತ ಇದ್ದೀರೇನು? ಏಕೆ? ನೋಡಿ, ನೀವು ಎಂಟು ಮನೆಗಳ ಹೊಸ್ತಿಲ ಹತ್ತಿ ಭಿಕ್ಷೆ ಬೇಡಬೇಕಾಗುತ್ತದೆ. ಆದರೆ ಈಗ ಒಂದು ಮನೆಯಿಂದಲೇ ನಿಮಗೆ ಎಲ್ಲಾ ದೊರೆಯುತ್ತಿದೆ. ಇದೇ ಮೇಲಲ್ಲವೇ?’
“ಅನ್ನಸತ್ರಗಳನ್ನು ಹುಡುಕುತ್ತ ಹುಡುಕುತ್ತ ಸಾಧುಗಳು ತಾವು ಮುಂದುವರಿಯುತ್ತಿದ್ದ ರಸ್ತೆಯನ್ನು ಬಿಟ್ಟು ಐದು ಆರು ಮೈಲಿ ದೂರ ಒಮ್ಮೊಮ್ಮೆ ಸುತ್ತಿ ಬರಬೇಕಾಗಿ ಬರಬಹುದು. ನೋಡಿದ್ದೇನೆ, ಜಗನ್ನಾಥದರ್ಶನ ಮಾಡಿಕೊಂಡು ರಾಜಮಾರ್ಗಗಳಲ್ಲಿ ಬರುತ್ತಿದ್ದ ಸಾಧುಗಳು ಅನ್ನಸತ್ರಕ್ಕಾಗಿ ಅಡ್ಡದಾರಿ ಹಿಡಿಯಬೇಕಾಗಿ ಬರುತ್ತಿದ್ದುದನ್ನು.
“ನೀನು ಸಂಸಾರ ಜೀವನ ನಡೆಯಿಸಿಕೊಂಡು ಹೋಗುತ್ತಿದ್ದೀಯೆ. ಒಳ್ಳೆಯದೆ. ಇದು ಕೋಟೆಯೊಳಗಿನಿಂದ ಯುದ್ಧ. ಬಯಲಿನಲ್ಲಿ ನಿಂತು ಯುದ್ಧಮಾಡಿದರೆ ಅನೇಕ ಅಸೌಕರ್ಯ. ವಿಪತ್ತೂ ಕಾದಿರುತ್ತದೆ. ಶರೀರದ ಮೇಲೆ ಗುಂಡೂ ಬಂದು ಬೀಳಬಹುದು.
“ಆದರೆ ಕೆಲವು ಕಾಲ ಏಕಾಂತದಲ್ಲಿ ಇದ್ದು ಭಗವಂತನ ಸಾಕ್ಷಾತ್ಕಾರ ಪಡೆದುಕೊಂಡು ಬಳಿಕ ಬಂದು ಸಂಸಾರದಲ್ಲಿ ಇರಬೇಕು. ಜನಕರಾಜ ಬ್ರಹ್ಮಜ್ಞಾನವನ್ನು ಪಡೆದುಕೊಂಡ ನಂತರ ಬಂದು ಸಂಸಾರದಲ್ಲಿದ್ದ. ಬ್ರಹ್ಮಜ್ಞಾನ ದೊರೆತ ನಂತರ ಎಲ್ಲಿಬೇಕಾದರಲ್ಲಿ ಇರಬಹುದು. ಅದರಿಂದ ಯಾವ ತೊಂದರೆಯೂ ಬಾರದು.”
ಮಹಿಮಚರಣ: “ಮಹಾಶಯರೆ, ಮನುಷ್ಯ ಏಕೆ ವಿಷಯವಸ್ತುಗಳನ್ನು ಕಂಡರೆ ಮುಗ್ಧನಾಗಿ ಹೋಗುತ್ತಾನೆ?”
ಶ್ರೀರಾಮಕೃಷ್ಣರು: “ಭಗವಂತನ ಸಾಕ್ಷಾತ್ಕಾರ ಪಡೆದುಕೊಳ್ಳದೆ ವಿಷಯವಸ್ತುಗಳ ಮಧ್ಯೆ ವಾಸಿಸುವುದರಿಂದ. ಆತನ ಸಾಕ್ಷಾತ್ಕಾರ ಪಡೆದುಕೊಂಡ ನಂತರ ಎಂದಿಗೂ ಮುಗ್ಧನಾಗುವುದಿಲ್ಲ. ದೀಪದ ಚಿಟ್ಟೆಗೆ ಒಮ್ಮೆ ಏನಾದರೂ ಬೆಳಕು ಕಾಣಿಸಿಕೊಂಡಿತು ಎಂದರೆ ಅದಕ್ಕೆ ಕತ್ತಲೆ ಎಂದಿಗೂ ಹಿಡಿಸದು.”
“ಭಗವಂತನ ಸಾಕ್ಷಾತ್ಕಾರ ದೊರಕಬೇಕಾದರೆ ಬ್ರಹ್ಮಚರ್ಯಪರಿಪಾಲನೆ ಮಾಡಲೇಬೇಕು. ಶುಕದೇವಾದಿಗಳು ಊರ್ಧ್ವರೇತಸರು, ಇವರ ವೀರ್ಯ ಎಂದಿಗೂ ಪತನವಾಗಲಿಲ್ಲ. ಇನ್ನು ಕೆಲವರಿದ್ದಾರೆ, ಧೈರ್ಯರೇತಸರು-ಮೊದಲು ವೀರ್ಯವನ್ನು ಕಳೆದುಕೊಂಡಿದ್ದು ಅನಂತರ ಬ್ರಹ್ಮಚರ್ಯಪರಿಪಾಲನೆ ಮಾಡುತ್ತಿರುವವರು. ಹನ್ನೆರಡು ವರ್ಷಗಳ ಕಾಲ ಧೈರ್ಯರೇತಸರಾಗುವುದಾದರೆ ವಿಶೇಷ ಶಕ್ತಿ ಉಂಟಾಗುತ್ತದೆ. ಅವರ ಶರೀರದಲ್ಲಿ ಒಂದು ಹೊಸ ನಾಡಿ ಉತ್ಪನ್ನವಾಗುತ್ತದೆ. ಅದಕ್ಕೆ ಮೇಧಾನಾಡಿ ಅಂತ ಹೆಸರು. ಆ ನಾಡಿ ಉಂಟಾಯಿತು ಎಂದರೆ ಎಲ್ಲವೂ ಜ್ಞಾಪಕದಲ್ಲಿರುತ್ತದೆ, ಎಲ್ಲವನ್ನೂ ಅರಿಯಲು ಸಾಧ್ಯವಾಗುತ್ತದೆ.
“ವೀರ್ಯಪಾತದಿಂದ ಬಲ ಕುಗ್ಗುವುದು. ಸ್ವಪ್ನದೋಷವಾದಾಗ ಏನು ಹೊರಕ್ಕೆ ಬಂದುಬಿಡುವುದೊ ಅದರಿಂದ ಯಾವ ಹಾನಿಯೂ ತಟ್ಟದು. ಅದು ಆಹಾರದೋಷದಿಂದ ಉಂಟಾಗುತ್ತದೆ. ಆ ರೀತಿಯಾಗಿ ಹೋದ ನಂತರ ಏನು ಉಳಿದುಕೊಳ್ಳುವುದೊ ಅದೇ ಯಥೇಷ್ಟ. ಹಾಗೆಂದು ಹೆಂಗಸಿನ ಸಹವಾಸಮಾಡುವುದು ಸರಿಯಲ್ಲ.”
“ಸ್ವಪ್ನದೋಷವಾದ ನಂತರ ಏನು ಉಳಿದುಕೊಳ್ಳುವುದೋ ಅದು ಅತ್ಯಂತ ‘ರಿಫೈನ್ಡ್’ -ಪರಿಶುದ್ಧವಾದುದು. ಕಾಮಾರಪುಕುರಿನ ಲಾಹಾ ಮನೆತನದವರು ಒಮ್ಮೆ ಜೋನಿಬೆಲ್ಲದ ಗುಡಾಣಗಳನ್ನು ಇಟ್ಟಿದ್ದರು-ಪ್ರತಿಯೊಂದು ಗುಡಾಣದ ತಳದಲ್ಲೂ ಒಂದೊಂದು ರಂಧ್ರ ಮಾಡಿ. ಒಂದು ವರ್ಷವಾದ ನಂತರ ಅದನ್ನು ತೆಗೆದು ನೋಡಿದಾಗ ಒಳಗೆ ಎಲ್ಲಾ ಹರಳು ಕಟ್ಟಿಬಿಟ್ಟಿತ್ತು-ಕಲ್ಲುಸಕ್ಕರೆಯ ಹಾಗೆ. ನೀರಿನ ಭಾಗ ಎಷ್ಟು ಹೋಗಬೇಕಾಗಿತ್ತೊ ಅದು ಗುಡಾಣಗಳ ರಂಧ್ರದ ಮೂಲಕ ಹೊರಕ್ಕೆ ಬಂದುಬಿಟ್ಟಿತ್ತು.
“ಸಂನ್ಯಾಸಿ ಹೆಂಗಸರನ್ನು ಸಂಪೂರ್ಣವಾಗಿ ತ್ಯಾಗಮಾಡಬೇಕು. ನೀವು ಆಗಲೇ ಸಿಕ್ಕಿಬಿದ್ದಿದ್ದೀರಿ. ಆದರೆ ಹೆದರಬೇಕಾಗಿಲ್ಲ.”
“ಸಂನ್ಯಾಸಿ ಹೆಂಗಸಿನ ಚಿತ್ರಪಟ ಕೂಡ ನೋಡಕೂಡದು. ಸಾಧಾರಣ ಜನರ ಕೈಯಲ್ಲಿ ಇದು ಸಾಧ್ಯವಿಲ್ಲ. ಸ, ರಿ, ಗ, ಮ, ಪ, ದ, ನಿ. ‘ನಿ’ ಯಲ್ಲಿ ಹೆಚ್ಚು ಹೊತ್ತು ನಿಲ್ಲಲಾಗುವುದಿಲ್ಲ.
“ಸಂನ್ಯಾಸಿ ವೀರ್ಯ ಕಳೆದುಕೊಳ್ಳುವುದೆಂದರೆ ಬಹಳ ಕೆಟ್ಟದ್ದು. ಆದ್ದರಿಂದ ಅವರು ಬಹಳ ಎಚ್ಚರಿಕೆಯಿಂದ ಇರಬೇಕು-ಹೆಂಗಸು ಕಣ್ಣಿಗೆ ಬೀಳದ ರೀತಿಯಲ್ಲಿ. ಹೆಂಗಸು ಭಕ್ತೆಯಾಗಿದ್ದರೂ ಆಕೆಯಿಂದ ಬಹಳ ದೂರದಲ್ಲೇ ಇರಬೇಕು. ಹೆಂಗಸಿನ ರೂಪ ಕಣ್ಣಿಗೆ ಬೀಳುವುದೇ ಹಾನಿಕರ. ಜಾಗ್ರದವಸ್ಥೆಯಲ್ಲದಿದ್ದರೂ ಸ್ವಪ್ನಾವಸ್ಥೆಯಲ್ಲಿ ವೀರ್ಯ ಪತನವಾಗಿ ಬಿಡುತ್ತದೆ.”
“ಸಂನ್ಯಾಸಿ ಜಿತೇಂದ್ರಿಯನಾಗಿದ್ದರೂ ಲೋಕಶಿಕ್ಷಣಕ್ಕಾಗಿ ಹೆಂಗಸಿನೊಡನೆ ಮಾತುಕತೆ ಆಡಕೂಡದು. ಹೆಂಗಸು ಭಕ್ತೆಯಾಗಿದ್ದರೂ ಆಕೆಯೊಡನೆ ಹೆಚ್ಚು ಹೊತ್ತು ಮಾತನಾಡಕೂಡದು.”
“ಸಂನ್ಯಾಸಿಯದು ನಿರ್ಜಲ ಏಕಾದಶಿ. ಇನ್ನೆರಡು ವಿಧದ ಏಕಾದಶಿಗಳಿವೆ-ಹಣ್ಣು ಹಂಪಲು ತಿಂದು, ಪೂರಿಪಲ್ಯ ತಿಂದು. ಪೂರಿಪಲ್ಯದ ಜೊತೆಗೆ ಒಂದೆರಡು ರೊಟ್ಟಿಗಳನ್ನು ಹಾಲಿನಲ್ಲಿ ನೆನಸಿ ಕೂಡ. (ಎಲ್ಲರೂ ನಗುತ್ತಿದ್ದಾರೆ.)
(ನಗುತ್ತ) “ನಿಮ್ಮ ಕೈಯಲ್ಲಿ ನಿರ್ಜಲ ಏಕಾದಶಿ ಸಾಧ್ಯವಿಲ್ಲ.”
“ಒಮ್ಮೆ ಕೃಷ್ಣಕಿಶೋರ ಏಕಾದಶಿ ದಿವಸ ಪೂರಿಪಲ್ಯ ತಿಂದುದನ್ನು ನೋಡಿದೆ. ಹೃದೂಗೆ ಹೇಳಿದೆ: ‘ಹೃದು, ನನಗೆ ಕೃಷ್ಣಕಿಶೋರನ ಏಕಾದಶಿ ಮಾಡಲು ಇಚ್ಛೆಯಾಗುತ್ತದೆ!’ (ಎಲ್ಲರೂ ನಗುತ್ತಿದ್ದಾರೆ.) ಹಾಗೇ ಒಂದು ಏಕಾದಶಿಯನ್ನು ಮಾಡಿದೆ. ಹೊಟ್ಟೆ ಬಿರಿಯುವ ಹಾಗೆ ತಿಂದೆ. ಮಾರನೆ ದಿನ ಏನು ತಿನ್ನಲೂ ಆಗಲಿಲ್ಲ.” (ನಗು.)
ಪಂಚವಟಿಗೆ ಹಠಯೋಗಿಯನ್ನು ನೋಡಲು ಹೋಗಿದ್ದ ಭಕ್ತರೆಲ್ಲರೂ ಹಿಂದಿರುಗಿ ಬಂದಿದ್ದಾರೆ.
ಶ್ರೀರಾಮಕೃಷ್ಣರು ಅವರನ್ನು ಸಂಬೋಧಿಸಿ: “ಏನು, ಆತ ನಿಮಗೆ ಹೇಗೆ ಕಂಡ? ನಿಮ್ಮ ಗಜಕಡ್ಡಿಯಿಂದ ಆತನನ್ನು ಅಳೆದುಬಂದಿದ್ದೀರಿ ತಾನೆ?”
ಪರಮಹಂಸರಿಗೆ ತೋರಿಬಂತು, ಭಕ್ತರಲ್ಲಿ ಬಹುಭಾಗ ಜನರಿಗೆ ಆ ಹಠಯೋಗಿಗೆ ದುಡ್ಡು ಕೊಡಲು ಇಚ್ಛೆಯಿಲ್ಲದಿರುವ ಹಾಗೆ.
ಶ್ರೀರಾಮಕೃಷ್ಣರು: “ಸಾಧುವಿಗೇನಾದರೂ ದುಡ್ಡು ಕೊಡಬೇಕಾಗಿ ಬಂದರೆ, ನಿಮಗೆ ಆತನನ್ನು ಕಂಡರೆ ಆಗುವುದಿಲ್ಲ. ರಾಜೇಂದ್ರಮಿತ್ರನಿಗೆ ಎಂಟುನೂರು ರೂಪಾಯಿ ಸಂಬಳ ತಿಂಗಳಿಗೆ. ಪ್ರಯಾಗದಲ್ಲಿ ಕುಂಭಮೇಳ ನೋಡಿ ಬಂದಿದ್ದ. ನಾನು ಆತನನ್ನು ಕೇಳಿದೆ: ‘ಏನು ವಿಶೇಷ? ಮೇಳದಲ್ಲಿ ಯಾವ್ಯಾವ ರೀತಿಯ ಸಾಧುಗಳನ್ನು ನೋಡಿ ಬಂದೆ?’ ರಾಜೇಂದ್ರ ಹೇಳಿದ: ‘ಅಲ್ಲಿ ಅಂಥ ದೊಡ್ಡ ಸಾಧುಗಳೇನು ಕಣ್ಣಿಗೇ ಬೀಳಲಿಲ್ಲವಲ್ಲ. ಒಬ್ಬರೇನೊ ಕಣ್ಣಿಗೆ ಬಿದ್ದರು. ಆದರೆ ಅವರೂ ಹಣ ಸ್ವೀಕರಿಸುತ್ತಿದ್ದರು.
“ನನಗೆ ನಾನೇ ಹೇಳಿಕೊಳ್ಳುತ್ತೇನೆ: ‘ಸಾಧುವಿಗೆ ಯಾರೂ ದುಡ್ಡು, ಕಾಸು ಕೊಡದೆ ಇದ್ದರೆ ಆತ ಹೊಟ್ಟೆ ಹೊರೆಯೋ ಬಗೆ ಹೇಗೆ?’ ಇಲ್ಲಿ ದಕ್ಷಿಣೆ ಕೊಡಬೇಕಾಗಿಲ್ಲ; ಆದ್ದರಿಂದ ಎಲ್ಲರೂ ಬರುತ್ತಿದ್ದಾರೆ. ನನಗೆ ನಾನೇ ಹೇಳಿಕೊಳ್ಳುತ್ತೇನೆ: ‘ಆಹಾ! ಅವರು ಹಣವನ್ನು ಬಹಳವಾಗಿ ಪ್ರೀತಿಸುತ್ತಾರೆ. ಅವರು ಅದರಲ್ಲೇ ತೃಪ್ತರಾಗಿರಲಿ.’
ಪರಮಹಂಸರು ಈಗ ಸ್ವಲ್ಪ ವಿಶ್ರಮಿಸಿಕೊಳ್ಳುತ್ತಿದ್ದಾರೆ. ಒಬ್ಬ ಭಕ್ತ ಚಿಕ್ಕಮಂಚದ ಉತ್ತರದ ಕೊನೆಯಲ್ಲಿ ಕುಳಿತು ಅವರ ಪಾದಗಳನ್ನು ಮೆಲ್ಲಗೆ ಒತ್ತುತ್ತಿದ್ದಾನೆ. ಪರಮಹಂಸರು ಆತನಿಗೆ ಮೆಲ್ಲಗೆ ಹೇಳುತ್ತಿದ್ದಾರೆ: “ಯಾರು ನಿರಾಕಾರನೊ, ಆತನೇ ಸಾಕಾರನಾಗಿದ್ದಾನೆ. ಸಾಕಾರವನ್ನೂ ಒಪ್ಪಬೇಕು. ಕಾಳಿಯ ರೂಪವನ್ನು ಚಿಂತಿಸುತ್ತ ಚಿಂತಿಸುತ್ತ ಮುಂದುವರಿದರೆ ಸಾಧಕನಿಗೆ ಕಾಳಿಯ ರೂಪದರ್ಶನವೇ ಆಗುತ್ತದೆ. ಅನಂತರ ನೋಡಬಹುದು, ಆ ರೂಪವೇ ಅಖಂಡದಲ್ಲಿ ಲೀನವಾಗುವುದನ್ನು. ಯಾರು ಅಖಂಡ ಸಚ್ಚಿದಾನಂದನೋ ಆತನೇ ಕಾಳಿ.”
ಪರಮಹಂಸರು ತಮ್ಮ ಕೊಠಡಿಯ ಪಶ್ಚಿಮ ವರಾಂಡದಲ್ಲಿ ಮಹಿಮಚರಣನೇ ಮೊದಲಾದ ಭಕ್ತರೊಡನೆ ಕುಳಿತು ಆ ಹಠಯೋಗಿಯ ಸಂಬಂಧವಾಗಿ ಮಾತುಕತೆ ಆಡುತ್ತಿದ್ದಾರೆ. ಈಗ ಮಾತು ಕೃಷ್ಣಕಿಶೋರನ ಮಗ ರಾಮಪ್ರಸನ್ನನ ಸಂಬಂಧವಾಗಿ ಆರಂಭವಾಯಿತು. ಪರಮಹಂಸರಿಗೆ ಆ ಯುವಕನನ್ನು ಕಂಡರೆ ಬಹಳ ಪ್ರೀತಿ.
ಶ್ರೀರಾಮಕೃಷ್ಣರು: “ರಾಮಪ್ರಸನ್ನ ಗೊತ್ತುಗುರಿಯಿಲ್ಲದೆ ಸುಮ್ಮನೆ ಅಲೆದಾಡುತ್ತಿರುತ್ತಾನೆ. ಅಂದು ಇಲ್ಲಿಗೆ ಬಂದು ಕುಳಿತಿದ್ದ. ಒಂದೂ ಮಾತೂ ಆಡಲಿಲ್ಲ. ಪ್ರಾಣಾಯಾಮ ಮಾಡುತ್ತ ಮೂಗಿನ ಹೊಳ್ಳೆಗಳನ್ನು ಅದುಮಿ ಹಿಡಿದು ಕುಳಿತಿದ್ದ. ತಿನ್ನಲು ಕೊಟ್ಟೆ. ಮುಟ್ಟಲಿಲ್ಲ. ಇನ್ನೊಂದು ದಿನ ಕರೆದು ಇಲ್ಲಿ ಕೂರಿಸಿದೆ. ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡ-ಕ್ಯಾಪ್ಟನ್ ಕಡೆ ಕಾಲುಚಾಚಿ. ಆತನ ತಾಯಿಯ ದುಃಖ ನೋಡಿ ನಾನು ಅಳುತ್ತಿರುತ್ತೇನೆ.
(ಮಹಿಮಚರಣನಿಗೆ) “ಆ ಹಠಯೋಗಿಯ ಸಂಬಂಧವಾಗಿ ನಿನಗೆ ಹೇಳುವಂತೆ ರಾಮಪ್ರಸನ್ನ ನನಗೆ ಹೇಳಿದ್ದಾನೆ. ದಿನದ ಖರ್ಚು ಆರೂವರೆ ಆಣೆ. ತಾನಾಗಿಯೇ ಬಂದು ಅದನ್ನು ಹೇಳುವ ಧೈರ್ಯ ಆತನಿಗಿಲ್ಲ.”
ಮಹಿಮಚರಣ: “ಹೇಳಿದರೆ, ಆತನ ಮಾತಿಗೆ ಬೆಲೆ ಕೊಡುವವರಾರು?”
ಪರಮಹಂಸರು ಈಗ ತಮ್ಮ ಕೊಠಡಿಗೆ ಹಿಂದಿರುಗಿ ಬಂದು ತಮ್ಮ ಸ್ವಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ. ಪಾನಿಹಾಟಿಯ ಮಣಿಸೇನ ತನ್ನ ಒಬ್ಬಿಬ್ಬರು ಸ್ನೇಹಿತರೊಡನೆ ಕೊಠಡಿಗೆ ಬಂದು ಕುಳಿತುಕೊಂಡು ಪರಮಹಂಸರ ಪೆಟ್ಟು ತಗುಲಿದ ಕೈಯ ವಿಚಾರವಾಗಿ ಅವರನ್ನು ಕೇಳಿ ತಿಳಿದುಕೊಳ್ಳುತ್ತಿದ್ದಾನೆ. ಆತನೊಡನೆ ಬಂದಿದ್ದ ಸ್ನೇಹಿತರಲ್ಲಿ ಒಬ್ಬ ಡಾಕ್ಟರ್. ಡಾಕ್ಟರ್ ಪ್ರತಾಪ ಮಜುಮದಾರ ಪರಮಹಂಸರಿಗೆ ಕೊಡುತ್ತಿದ್ದ ಔಷಧವನ್ನು ಆತ ಒಪ್ಪಲಿಲ್ಲ. ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ: “ಆತನೇನು ಪೆದ್ದನಲ್ಲ. ಏಕೆ ಹಾಗೆ ಹೇಳುತ್ತಿದ್ದೀಯೆ?”
ಆ ಸಮಯಕ್ಕೆ ಸರಿಯಾಗಿ ಲಾಟು ಗಟ್ಟಿಯಾಗಿ ಕೂಗಿ ಹೇಳಲಾರಂಭಿಸಿದ: “ಅಯ್ಯೋ, ಔಷಧದ ಸೀಸೆ ಕೆಳಕ್ಕೆ ಬಿದ್ದು ಒಡೆದುಹೋಗಿಬಿಟ್ಟಿತಲ್ಲ!”
ಇನ್ನೂ ಸಾಯಂಕಾಲವಾಗಿಲ್ಲ. ಪರಮಹಂಸರು ತಮ್ಮ ಸ್ವಸ್ಥಾನದಲ್ಲಿ ಕುಳಿತು ಮಾಸ್ಟರೊಡನೆ ಮಾತುಕತೆಯಾಡುತ್ತಿದ್ದಾರೆ. ಮಹಿಮಚರಣ ಅರ್ಧಚಂದ್ರಾಕೃತಿಯ ವರಾಂಡದಲ್ಲಿ ಕುಳಿತು ಮಣಿಸೇನನೊಡನೆ ಬಂದಿದ್ದ ಡಾಕ್ಟರೊಡನೆ ಉಚ್ಚಕಂಠದಿಂದ ಶಾಸ್ತ್ರಗಳ ಸಂಬಂಧವಾಗಿ ಮಾತುಕತೆ ಆಡುತ್ತಿದ್ದಾನೆ. ಪರಮಹಂಸರು ತಾವು ಕುಳಿತಲ್ಲೇ ಎಲ್ಲವನ್ನೂ ಕೇಳುತ್ತ ಸ್ವಲ್ಪ ನಕ್ಕು ಮಾಸ್ಟರಿಗೆ ಹೇಳುತ್ತಿದ್ದಾರೆ: “ಅಲ್ಲಿ ನೋಡು! ಸುಮ್ಮನೆ ಒದರುತ್ತಿದ್ದಾನೆ. ಇದು ರಜೋಗುಣದ ಪ್ರಭಾವ. ರಜೋಗುಣವಿದ್ದರೆ ಪಾಂಡಿತ್ಯ ತೋರಿಸಿಕೊಳ್ಳಬೇಕು, ಲೆಕ್ಚರ್ ಕೊಡಬೇಕು ಅಂತ ಅನಿಸುತ್ತದೆ. ಸತ್ತ್ವಗುಣದಿಂದ ಅಂತರ್ಮುಖತೆ ಉಂಟಾಗುತ್ತದೆ. ಸದ್ಗುಣಗಳನ್ನು ಬಚ್ಚಿಟ್ಟುಕೊಳ್ಳುವಂತೆ ಅದು ಪ್ರೇರೇಪಿಸುತ್ತದೆ. ಆದರೆ ಇದನ್ನು ಹೇಳಲೇಬೇಕಾಗುತ್ತದೆ, ಮಹಿಮಚರಣ ಬಹಳ ಒಳ್ಳೆ ದೊಡ್ಡ ಮನುಷ್ಯ. ಭಗವತ್ಸಂಬಂಧವಾದ ಮಾತುಕತೆ ಕಂಡರೆ ಅವನಿಗೆ ಬಹಳ ಉಲ್ಲಾಸ.”
ಅಧರಸೇನ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿ ಮಾಸ್ಟರ್ ಹತ್ತಿರ ಕುಳಿತುಕೊಂಡ. ಈಗ ಕೆಲವು ದಿನಗಳಿಂದ ಆತ ಇಲ್ಲಿಗೆ ಬಂದಿರಲಿಲ್ಲ.
ಶ್ರೀರಾಮಕೃಷ್ಣರು: “ಏನು ಸಮಾಚಾರ? ಇಷ್ಟು ದಿನಗಳಿಂದ ಇಲ್ಲಿಗೆ ಬರಲಿಲ್ಲವಲ್ಲ ಏಕೆ?”
ಅಧರಸೇನ: “ಹೌದು, ಹೆಚ್ಚಾಗಿ ಕೆಲಸ ಬಂದುಬಿಟ್ಟಿತ್ತು. ಸ್ಕೂಲಿನ ಮೀಟಿಂಗು, ಇನ್ನೂ ಏನೇನೊ ಮೀಟಿಂಗುಗಳಿಗೆ ಹೋಗಬೇಕಾಗಿ ಬಂದುಬಿಟ್ಟಿತ್ತು.”
ಶ್ರೀರಾಮಕೃಷ್ಣರು: “ಸ್ಕೂಲು, ಮೀಟಿಂಗು ಇವುಗಳಲ್ಲೇ ನಿರತನಾಗಿ ಎಲ್ಲವನ್ನೂ ಸುಮ್ಮನೆ ಮರೆತುಬಿಟ್ಟಿದ್ದೆಯಾ?”
ಅಧರಸೇನ ವಿನಯದಿಂದ: “ಹೌದು, ಎಲ್ಲವೂ ಮರೆತುಹೋಗಿಬಿಟ್ಟಿತು. ಈಗ ನಿಮ್ಮ ಕೈ ಹೇಗಿದೆ?”
ಶ್ರೀರಾಮಕೃಷ್ಣರು: “ಇಲ್ಲಿ ನೋಡು, ಇನ್ನೂ ಗುಣವಾಗಿಲ್ಲ. ಪ್ರತಾಪನ ಔಷಧವನ್ನು ತೆಗೆದುಕೊಳ್ಳುತ್ತೇನೆ.”
ಸ್ವಲ್ಪ ಹೊತ್ತಾದ ನಂತರ ಪರಮಹಂಸರು ಇದ್ದಕ್ಕಿದ್ದ ಹಾಗೆ ಅಧರಸೇನನ ಕಡೆ ತಿರುಗಿ ಹೇಳುತ್ತಿದ್ದಾರೆ: “ನೋಡು, ಇವೆಲ್ಲಾ ಅನಿತ್ಯ. ಮೀಟಿಂಗು, ಸ್ಕೂಲು, ಆಫೀಸು ಇವೆಲ್ಲಾ ಅನಿತ್ಯ. ಭಗವಂತನೊಬ್ಬನೇ ವಸ್ತು. ಉಳಿದುದೆಲ್ಲಾ ಅವಸ್ತು. ಇಡೀ ಮನಸ್ಸಿಟ್ಟು ಭಗವಂತನನ್ನು ಪೂಜಿಸಬೇಕು.”
ಅಧರಸೇನ ಒಂದು ಮಾತನ್ನೂ ಆಡದೆ ಸುಮ್ಮನೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು: “ಇವೆಲ್ಲಾ ಅನಿತ್ಯ. ಈ ಶರೀರ ಈಗಿದ್ದುದು ಈಗಿರದು. ಕಾಲ ವಿಳಂಬ ಮಾಡದೆ ಭಗವಂತನನ್ನು ಕರೆಯಲು ಉಪಕ್ರಮಿಸಬೇಕು.
“ನೀನು ಎಲ್ಲವನ್ನೂ ತ್ಯಾಗಮಾಡಬೇಕಾದ ಆವಶ್ಯಕತೆಯೇನಿಲ್ಲ. ಆಮೆಯ ಹಾಗೆ ಸಂಸಾರದಲ್ಲಿ ವಾಸಿಸು. ಆಮೆ ಸ್ವೇಚ್ಛೆಯಿಂದ ನೀರಿನಲ್ಲಿ ಈಜಾಡುತ್ತಿರುತ್ತದೆ. ಆದರೆ ಅದು ಮೊಟ್ಟೆಯನ್ನು ಮಾತ್ರ ದಡದಲ್ಲಿಟ್ಟಿರುತ್ತದೆ. ಅದರ ಇಡೀ ಮನಸ್ಸೆಲ್ಲ ಮೊಟ್ಟೆ ಎಲ್ಲೊ ಅಲ್ಲೇ.
“ಕ್ಯಾಪ್ಟನ್ ಎಂಥ ಒಳ್ಳೆ ಗುಣಗಳನ್ನು ರೂಢಿಸಿಕೊಂಡಿದ್ದಾನೆ! ಪೂಜೆಗೆ ಕುಳಿತಾಗ ಆತನನ್ನು ಒಬ್ಬ ಋಷಿಯೇ ಅಂತ ಹೇಳಬಹುದು. ಕರ್ಪೂರದಿಂದ ಮಂಗಳಾರತಿ ಮಾಡುತ್ತಾನೆ. ಒಳ್ಳೊಳ್ಳೆ ಸ್ತೋತ್ರಗಳನ್ನು ಹೇಳುತ್ತಾನೆ. ಪೂಜೆ ಮುಗಿಸಿ ಎದ್ದಾಗ ಕಣ್ಣುಗಳು ಇರುವೆ ಕಡಿದುಬಿಟ್ಟಿವೆಯೊ ಏನೊ ಅನ್ನುವ ಹಾಗೆ ಕಾಣಬರುತ್ತವೆ. ಯಾವಾಗಲೂ ಗೀತೆ, ಭಾಗವತ ಇದೇ ಮುಂತಾದುವನ್ನು ಪಾರಾಯಣ ಮಾಡುತ್ತಿರುತ್ತಾನೆ. ಒಮ್ಮೆ ನಾನು ಆತನೆದುರು ಒಂದೆರಡು ಇಂಗ್ಲೀಷು ಶಬ್ದಗಳನ್ನು ಉಪಯೋಗಿಸಿಬಿಟ್ಟೆ. ಅದಕ್ಕೆ ಆತನಿಗೆ ಕೋಪ ಬಂದುಬಿಟ್ಟಿತು. ಹೇಳಿದ: ಇಂಗ್ಲೀಷು ವಿದ್ಯಾಭ್ಯಾಸ ಮಾಡಿರತಕ್ಕವರು ಭ್ರಷ್ಟಾಚಾರಿಗಳು.”
ಸ್ವಲ್ಪ ಹೊತ್ತಾದ ನಂತರ ಅಧರಸೇನ ಅತ್ಯಂತ ವಿನಯದಿಂದ ಶ್ರೀರಾಮಕೃಷ್ಣರಿಗೆ ಹೇಳುತ್ತಿದ್ದಾನೆ: “ನೀವು ನಮ್ಮ ಮನೆಗೆ ಬಹಳ ಕಾಲದಿಂದ ಬಂದಿಲ್ಲ. ಬೈಠಕ್ಖಾನೆ ದುರ್ವಾಸನೆಯಿಂದ ಕೂಡಿದೆ. ಯಾವ ಕಡೆ ತಿರುಗಿ ನೋಡಿದರೂ ಕೇವಲ ಅಂಧಕಾರ.”
ಭಕ್ತನ ಈ ಮಾತು ಕೇಳಿ ಪರಮಹಂಸರ ಕರುಣೆಯ ಸಾಗರ ಅಲ್ಲೋಲಕಲ್ಲೋಲವಾಗಲಾರಂಭಿಸಿತು. ಅವರು ಇದ್ದಕ್ಕಿದ್ದ ಹಾಗೆ ಎದ್ದು ನಿಂತು ಭಾವಾವಿಷ್ಟರಾಗಿ ಅಧರಸೇನನ ಮತ್ತು ಮಾಸ್ಟರ ತಲೆ, ಹೃದಯಗಳನ್ನು ಸ್ಪರ್ಶಮಾಡಿ ಆಶೀರ್ವದಿಸಲಾರಂಭಿಸಿದ್ದಾರೆ. ಪ್ರೀತಿಯಿಂದ ಹೇಳುತ್ತಿದ್ದಾರೆ: “ನೀವು ಸಾಕ್ಷಾತ್ ನಾರಾಯಣನೇ ಆಗಿ ಕಾಣುತ್ತಿದ್ದೀರಿ. ನೀವು ವಾಸ್ತವಿಕವಾಗಿ ನನ್ನವರೇ.”
ಈಗ ಮಹಿಮಚರಣ ಕೊಠಡಿಗೆ ಬಂದು ಕುಳಿತುಕೊಳ್ಳುತ್ತಿದ್ದಾನೆ.
ಶ್ರೀರಾಮಕೃಷ್ಣರು ಮಹಿಮಚರಣನಿಗೆ: “ಧೈರ್ಯರೇತಸರ ಸಂಬಂಧವಾಗಿ ನಾನು ಹೇಳುತ್ತಾ ಇದ್ದೆನಲ್ಲ ಅದು ನಿಜ. ವೀರ್ಯವನ್ನು ರಕ್ಷಿಸಿಕೊಳ್ಳದಿದ್ದರೆ ಈ ಉಪದೇಶಗಳನ್ನು ಗ್ರಹಿಸಲಾಗುವುದಿಲ್ಲ.”
“ಒಮ್ಮೆ ಒಬ್ಬ ಚೈತನ್ಯದೇವನನ್ನು ಕೇಳಿದ : ‘ನೀವು ಈ ಭಕ್ತರಿಗೆಲ್ಲ ಇಷ್ಟೊಂದು ಉಪದೇಶವೀಯುತ್ತಿದ್ದೀರಿ. ಆದರೆ ಇವರು ಮುಂದುವರಿಯುತ್ತಿಲ್ಲವಲ್ಲ ಏಕೆ?’ ಚೈತನ್ಯದೇವ ಹೇಳಿದ: ‘ಇವರು ಹೆಂಗಸಿನ ಸಹವಾಸ ಮಾಡಿ ಎಲ್ಲಾ ಶಕ್ತಿಯನ್ನು ಕಳೆದುಕೊಂಡು ಬಿಡುತ್ತಿದ್ದಾರೆ. ಆದ್ದರಿಂದ ಗ್ರಹಿಸಲು ಸಾಧ್ಯವಾಗುತ್ತಿಲ್ಲ.’ ತೂತು ಬಿಂದಿಗೆಯಲ್ಲಿ ನೀರು ತುಂಬಿಟ್ಟರೆ, ನೀರು ಕ್ರಮಕ್ರಮೇಣ ಹೊರಕ್ಕೆ ಬಂದುಬಿಡುತ್ತದೆ.”
ಮಹಿಮಚರಣನೇ ಮೊದಲಾದ ಭಕ್ತರು ಸುಮ್ಮನೆ ಕುಳಿತಿದ್ದಾರೆ. ಸ್ವಲ್ಪ ಹೊತ್ತಾದ ನಂತರ ಮಹಿಮಚರಣ ಕೇಳಿಕೊಳ್ಳುತ್ತಿದ್ದಾನೆ: “ಭಗವಂತನಲ್ಲಿ ನಮಗಾಗಿ ಪ್ರಾರ್ಥನೆ ಮಾಡಿ-ನಮಗೆ ಆ ಶಕ್ತಿ ಉಂಟಾಗುವ ಹಾಗೆ.”
ಶ್ರೀರಾಮಕೃಷ್ಣರು: “ಈಗಲೂ ನೀವು ಎಚ್ಚರಿಕೆಯಿಂದಿರಬೇಕು. ಆಷಾಢಮಾಸದ ಮಳೆಯ ಪ್ರವಾಹವನ್ನು ತಡೆಯುವುದೆಂದರೆ ಸ್ವಲ್ಪ ಕಷ್ಟವೇ. ಆದರೆ ಇಷ್ಟರಲ್ಲಿ ನೀರು ಬಹಳವಾಗಿ ಹರಿದುಹೋಗಿಬಿಟ್ಟಿದೆ. ಈಗ ಕಟ್ಟೆ ಕಟ್ಟಿದರೆ ಅದು ನಿಂತುಕೊಂಡು ಬಿಡುತ್ತದೆ.”