ಫೆಬ್ರುವರಿ, ೧೮೮೨
ಶ್ರೀರಾಮಕೃಷ್ಣ ಪರಮಹಂಸರು ದಕ್ಷಿಣೇಶ್ವರದಲ್ಲಿ ಗಂಗೆಯ ದಡದಲ್ಲಿರುವ ಕಾಳೀ ದೇವಾಲಯದಲ್ಲಿ ವಾಸವಾಗಿದ್ದಾರೆ. ಮಾಸ್ಟರ್ ಮಹಾಶಯನಿಗೆ ಪರಮಹಂಸರ ಪ್ರಥಮ ದರ್ಶನ ದೊರೆತುದು ವಸಂತ ಋತುವಿನ ಒಂದು ಭಾನುವಾರ. ಅವರ ಜನ್ಮೋತ್ಸವ ನಡೆದು ಆಗತಾನೆ ಕೆಲವು ದಿನಗಳು ಆಗಿದ್ದುವು.
ಭಾನುವಾರ ರಜಾದಿನವಾದ್ದರಿಂದ ಮಾಸ್ಟರ್ ತನ್ನ ಸ್ನೇಹಿತ ಸಿಧುವಿನೊಡನೆ ವರಾಹ ನಗರದಲ್ಲಿನ ಉದ್ಯಾನವನಗಳಲ್ಲಿ ಸುತ್ತಾಡಿ ಬರಲು ಬಂದಿದ್ದಾನೆ. ಪ್ರಸನ್ನ ವಂದ್ಯೋಪಾಧ್ಯಾಯನ ಉದ್ಯಾನವನದಲ್ಲಿ ಅಡ್ಡಾಡುತ್ತಿರುವಾಗ ಸಿಧು ಮಾಸ್ಟರನ್ನು ಕೇಳಿದ: “ಗಂಗಾ ತೀರದಲ್ಲಿ ಬಹಳ ಮನೋಹರವಾದ ಒಂದು ಉದ್ಯಾನವನವಿದೆ. ಅಲ್ಲಿ ಪರಮಹಂಸರೊಬ್ಬರು ವಾಸವಾಗಿದ್ದಾರೆ. ಅಲ್ಲಿಗೆ ಹೋಗೋಣವೇ?” ಅದಕ್ಕೆ ಮಾಸ್ಟರ್ ಒಪ್ಪಿ ಇಬ್ಬರೂ ದಕ್ಷಿಣೇಶ್ವರ ಕಾಳೀದೇವಾಲಯದ ಕಡೆ ಮುಂದುವರಿಯಲಾರಂಭಿಸಿದರು. ಹೆಬ್ಬಾಗಿಲು ಹತ್ತಿರ ಬರುವುದರೊಳಗಾಗಿಯೆ ಮುಂಗತ್ತಲು ಕಾಲಿಕ್ಕಲಾರಂಭಿಸಿತು. ಅವರು ನೇರವಾಗಿ ಪರಮಹಂಸರ ಕೊಠಡಿಗೇ ಮುಂದುವರಿದು ನೋಡುತ್ತಾರೆ, ಪರಮಹಂಸರು ಪೂರ್ವಾಭಿಮುಖವಾಗಿ ಒಂದು ಮಂಚದ ಮೇಲೆ ಕುಳಿತು ಪ್ರಸನ್ನಚಿತ್ತದಿಂದ ಭಗವದ್ವಿಷಯವಾಗಿ ಮಾತನಾಡುತ್ತಿದ್ದಾರೆ. ಕೊಠಡಿ ಜನರಿಂದ ಕಿಕ್ಕಿರಿದು ತುಂಬಿದೆ. ಎಲ್ಲರೂ ನೆಲದ ಮೇಲೆ ಕುಳಿತು ಅವರ ಅಮೃತವಾಣಿಯನ್ನು ಸ್ತಬ್ಧರಾಗಿ ಕೇಳುತ್ತಿದ್ದಾರೆ.
ಮಾಸ್ಟರ್ ಮಂತ್ರಮುಗ್ಧನಾಗಿ ಸುಮ್ಮನೆ ನಿಂತು ನೋಡಲಾರಂಭಿಸಿದ. ಆತನಿಗೆ ತೋರಿತು, ಸಾಕ್ಷಾತ್ ಶುಕದೇವನೇ ಭಗವದ್ವಿಷಯವಾಗಿ ಅಲ್ಲಿ ಮಾತನಾಡುತ್ತಿರುವ ಹಾಗೆ, ಸರ್ವ ತೀರ್ಥಗಳೂ ಅಲ್ಲಿ ಸಮಾಗಮವಾಗಿರುವ ಹಾಗೆ, ಸಾಕ್ಷಾತ್ ಚೈತನ್ಯ ದೇವನೇ ಜಗನ್ನಾಥ-ಪುರಿ ಕ್ಷೇತ್ರದಲ್ಲಿ ಕುಳಿತು, ರಾಮಾನಂದ, ಸ್ವರೂಪ ಇವರೇ ಮೊದಲಾದ ಭಕ್ತರೊಡನೆ ಭಗವಂತನ ನಾಮಗುಣ ಕೀರ್ತನೆ ಮಾಡುತ್ತಿರುವ ಹಾಗೆ.
ಶ್ರೀರಾಮಕೃಷ್ಣರು ಹೇಳುತ್ತಿದ್ದಾರೆ: “ಯಾವಾಗ ನಿಮಗೆ ಹರಿನಾಮವನ್ನೊ, ರಾಮನಾಮವನ್ನೊ ಒಮ್ಮೆ ಉಚ್ಚರಿಸಿದ ಮಾತ್ರದಿಂದಲೇ ರೋಮಾಂಚನವಾಗುವುದೊ, ಪ್ರೇಮಾಶ್ರು ಸುರಿಯುವುದೊ, ಆಗ ನಿಜವಾಗಿ ತಿಳಿದುಕೊಳ್ಳಿ, ಇನ್ನು ನೀವು ಸಂಧ್ಯಾದಿ ಕರ್ಮಗಳನ್ನು ಮಾಡಬೇಕಾಗಿಲ್ಲ ಎಂದು. ಆಗ ಮಾತ್ರವೇ ನಿಮಗೆ ಕರ್ಮತ್ಯಾಗದ ಅಧಿಕಾರ-ಕರ್ಮ ತನಗೆ ತಾನೇ ನಿಮ್ಮನ್ನು ಬಿಟ್ಟು ತೊಲಗಿ ಹೋಗುತ್ತದೆ. ಆಗ ಕೇವಲ ರಾಮನಾಮವನ್ನೊ, ಹರಿನಾಮವನ್ನೊ ಅಥವಾ ಬರೀ ಓಂಕಾರವನ್ನೊ ಜಪಿಸಿದರೆ ಸಾಕು.” ಮತ್ತೆ ಹೇಳುತ್ತಿದ್ದಾರೆ: “ಸಂಧ್ಯೆ ಗಾಯತ್ರಿಯಲ್ಲಿ ಲಯಹೊಂದುತ್ತದೆ, ಗಾಯತ್ರಿ ಓಂಕಾರದಲ್ಲಿ ಲಯಹೊಂದುತ್ತದೆ.”
ಮಾಸ್ಟರ್ ಹಾಗೇ ಸುತ್ತಲೂ ನೋಡುತ್ತ ನೋಡುತ್ತ ತನಗೆ ತಾವೇ ಹೇಳಿಕೊಳ್ಳುತ್ತಿದ್ದಾನೆ: “ಎಂಥ ರಮ್ಯವಾದ ಸ್ಥಳ ಇದು! ಎಂಥ ಮೋಹಕ ವ್ಯಕ್ತಿ ಇವರು! ಎಂಥ ಅಮೃತೋಪಮ ಮಾತುಗಳು ಇವರ ಬಾಯಿಂದ! ಈ ಸ್ಥಳವನ್ನು ಬಿಟ್ಟು ಕದಲಲೇ ಮನಸ್ಸಾಗುತ್ತಿಲ್ಲವಲ್ಲ!” ಕೆಲವು ನಿಮಿಷಗಳಾದನಂತರ ಆತನಿಗೆ ಯೋಚನೆ ಬಂತು, “ಮೊದಲು ನಾನೆಲ್ಲಿಗೆ ಬಂದಿದ್ದೇನೆ ಎಂಬುದನ್ನು ನೋಡಿಕೊಂಡು ಬಂದು, ಅನಂತರ ಇಲ್ಲಿಗೇ ಬಂದು ಕುಳಿತುಕೊಳ್ಳುತ್ತೇನೆ.”
ಸಿಧುವಿನೊಡಗೂಡಿ ಮಾಸ್ಟರ್ ಕೊಠಡಿಯಿಂದ ಹೊರಕ್ಕೆ ಬಂದನೋ ಇಲ್ಲವೋ ಎನ್ನುವಷ್ಟರಲ್ಲೇ ಶಂಖ, ಗಂಟೆ, ಜಾಗಟೆ, ತಾಳ, ನಗಾರಿ ಇವುಗಳಿಂದ ಹೊರಹೊಮ್ಮುತ್ತಿದ್ದ ಸಾಯಂ ಮಂಗಳಾರತಿಯ ಮಧುರ ನಿನಾದ ದೇವಾಲಯದಿಂದ ಕೇಳಿಬಂತು. ದಕ್ಷಿಣ ಅಂಚಿನಲ್ಲಿದ್ದ ನಹಬತ್ ಖಾನೆಯಿಂದಲೂ ಇಂಪಾದ ವಾದ್ಯಘೋಷ ಹೊಮ್ಮಿ ಬರಲಾರಂಭಿಸಿತು. ಆ ಶಬ್ದ ತರಂಗಗಳೆಲ್ಲಾ ಭಾಗೀರಥಿಯ ವಕ್ಷಸ್ಥಲದ ಮೇಲೆ ತೇಲಿ ತೇಲಿ ಮುಂದುವರಿದು ಕೊನೆಗೆ ಎಲ್ಲೋ ಬಹುದೂರದಲ್ಲಿ ಲಯವಾಗುವಂತೆ ತೋರಿಬರಲಾರಂಭಿಸಿದುವು. ಕುಸುಮಗಳ ಸುವಾಸನೆಯನ್ನು ಹೊತ್ತಿರುವ ವಸಂತ ಋತುವಿನ ಮಂದಮಾರುತ ಬೀಸಲಾರಂಭಿಸಿತು. ಚಂದ್ರ ಆಗತಾನೆ ಉದಯವಾಗಲಾರಂಭಿಸಿದ. ಪ್ರಕೃತಿ, ಮನುಷ್ಯ ಇಬ್ಬರೂ ಸಹಕರಿಸಿ ಭಗವಂತನ ಸಾಯಂ ಮಂಗಳಾರತಿಗೆ ಸನ್ನದ್ಧರಾಗುತ್ತಿರುವಂತೆ ತೋರಿ ಬರಲಾರಂಭಿಸಿತು. ದ್ವಾದಶ ಶಿವ ದೇವಾಲಯಗಳಲ್ಲೂ, ಭವತಾರಿಣೀ ದೇವಾಲಯದಲ್ಲಿಯೂ ನಡೆದ ಮಂಗಳಾರತಿಯನ್ನು ನೋಡಿ ಮಾಸ್ಟರಿಗೆ ಪರಮಾನಂದವಾಯಿತು.
ಅವರಿಬ್ಬರೂ ಪರಮಹಂಸರ ಕೊಠಡಿಯ ಕಡೆ ಬರುತ್ತಿದ್ದಾಗ ಸಿಧು ಮಾಸ್ಟರಿಗೆ ಹೇಳಿದ: “ರಾಣಿ ರಾಸಮಣಿಯ ದೇವಾಲಯ ಎಂಬುದು ಇದೇ. ಇಲ್ಲಿ ನಿತ್ಯ ಪೂಜೆ ನಡೆಯುತ್ತದೆ; ಅನೇಕ ಅತಿಥಿಗಳ, ಭಿಕ್ಷುಕರ ಸೇವೆ ನಡೆಯುತ್ತದೆ.” ಪರಮಹಂಸರ ಕೊಠಡಿಯ ಹತ್ತಿರ ಬಂದು ನೋಡುತ್ತಾರೆ, ಬಾಗಿಲು ಮುಚ್ಚಿದೆ. ಈಗತಾನೆ ಧೂಪ ಹಾಕಿದಂತಿದೆ. ಬೃಂದೆ ಎಂಬ ಸೇವಕಿ ಬಾಗಿಲ ಹತ್ತಿರ ನಿಂತಿದ್ದಾಳೆ. ಒಳ್ಳೆ ಮನೆತನದವನಾದ ಮಾಸ್ಟರ್ ಏಕಾ ಏಕೀ ಕೊಠಡಿಯನ್ನು ಪ್ರವೇಶಿಸಲು ಹಿಂಜರಿದು ಬೃಂದೆಯನ್ನು ಕೇಳಿದ: “ಸಾಧುಗಳು ಒಳಗಿರುವರೆ?”
ಬೃಂದೆ ಹೇಳಿದಳು: “ಹೌದು, ಒಳಗಿದ್ದಾರೆ.”
ಮಾಸ್ಟರ್: “ಇವರು ಇಲ್ಲಿ ಎಷ್ಟು ಕಾಲದಿಂದ ಇದ್ದಾರೆ?”
ಬೃಂದೆ: “ಬಹಳ ಕಾಲದಿಂದ.”
ಮಾಸ್ಟರ್: “ಒಳ್ಳೇದು, ಇವರೇನು ಬಹಳವಾಗಿ ಗ್ರಂಥಗಳನ್ನು ಓದುತ್ತಾರೊ?”
ಬೃಂದೆ: “ಗ್ರಂಥಗಳೇ! ಎಲ್ಲಾ ಇವರ ಬಾಯಲ್ಲೇ!”
ಮಾಸ್ಟರ್ ಆಗತಾನೆ ತನ್ನ ವಿಶ್ವವಿದ್ಯಾನಿಲಯದ ವ್ಯಾಸಂಗ ಮುಗಿಸಿ ಬಂದಿದ್ದ. ಪರಮಹಂಸರು ಗ್ರಂಥಗಳನ್ನು ಏನೂ ಓದೋದಿಲ್ಲ ಎಂಬುದನ್ನು ಕೇಳಿ ಬಹಳ ಆಶ್ಚರ್ಯಪಟ್ಟ.
ಮಾಸ್ಟರ್: “ಬಹುಶಃ ಈಗ ಇವರು ಸಾಯಂ ಜಪತಪಾದಿಗಳಲ್ಲಿ ತೊಡಗಿರಬಹುದು. ನಾವು ಈಗ ಒಳಕ್ಕೆ ಹೋಗಬಹುದೆ? ದಯವಿಟ್ಟು ಸಮಾಚಾರ ತಿಳಿಸಿ ಬರುತ್ತೀಯ?”
ಬೃಂದೆ: “ನೀವು ಒಳಕ್ಕೆ ಹೋಗಿ. ಒಂದು ಕಡೆ ಕುಳಿತುಕೊಳ್ಳಿ.”
ಆಗ ಅವರು ಕೊಠಡಿಯನ್ನು ಪ್ರವೇಶಿಸಿ ನೋಡುತ್ತಾರೆ, ಅಲ್ಲಿ ಬೇರೆ ಯಾರೂ ಇಲ್ಲ. ಪರಮಹಂಸರೊಬ್ಬರೆ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಕೊಠಡಿಗೆ ಧೂಪ ಹಾಕಿದೆ. ಕಿಟಕಿ ಬಾಗಿಲುಗಳೆಲ್ಲ ಮುಚ್ಚಿವೆ. ಕೊಠಡಿಯನ್ನು ಪ್ರವೇಶಿಸಿದೊಡನೆಯೆ ಮಾಸ್ಟರ್ ಅವರಿಗೆ ಪ್ರಣಾಮ ಮಾಡಿದ. ಅವರ ಸಂಜ್ಞಾನುಸಾರ ಮಾಸ್ಟರ್ ಮತ್ತು ಸಿಧು ನೆಲದ ಮೇಲೆ ಕುಳಿತುಕೊಳ್ಳುತ್ತಾರೆ. ಪರಮಹಂಸರು ಅವರನ್ನು ಕೇಳುತ್ತಿದ್ದಾರೆ: “ಎಲ್ಲಿದ್ದೀರಿ? ಏನು ಕೆಲಸ? ವರಾಹನಗರಕ್ಕೆ ಬಂದ ಉದ್ದೇಶವೇನು?” ಇತ್ಯಾದಿ. ಮಾಸ್ಟರ್ ಅವಕ್ಕೆಲ್ಲಾ ಉತ್ತರವೀಯಲಾರಂಭಿಸಿದ. ಆದರೆ ಆಗಾಗ ಪರಮಹಂಸರು ಅನ್ಯಮನಸ್ಕರಾಗುತ್ತಿದ್ದುದು ಆತನ ಮನಸ್ಸಿಗೆ ಬಂತು. ಅದಕ್ಕೆ “ಭಾವ” ಅಂತ ಹೆಸರು ಎಂಬುದನ್ನು ಕ್ರಮೇಣ ಆತ ಅರಿತುಕೊಂಡ. ಅದು ಗಾಳ ಹಾಕಿ ಮೀನು ಹಿಡಿಯಲು ಕುಳಿತಿರುವವನ ಮಾನಸಿಕ ಅವಸ್ಥೆಯ ಹಾಗೆ; ಮೀನು ಎರೆ ತಿನ್ನಲು ಆರಂಭಿಸಿದಾಗ ಬೆಂಡು ಅಲುಗಲು ಆರಂಭಿಸುತ್ತದೆ; ಮೀನು ಹಿಡಿಯುವವ ಬಹಳ ಎಚ್ಚರಿಕೆಯಿಂದ ಗಾಳದ ಕಡ್ಡಿಯನ್ನು ಬಲವಾಗಿ ಹಿಡಿದು ಆ ಬೆಂಡಿನ ಕಡೆಗೇ ಏಕಾಗ್ರಚಿತ್ತನಾಗಿ ನೋಡತೊಡಗುತ್ತಾನೆ; ಆಗ ಆತ ಬೇರೆ ಯಾರೊಡನೆಯೂ ಮಾತನಾಡಲೊಲ್ಲ. ಪರಮಹಂಸರದೂ ಅದೇ ತರದ ಮಾನಸಿಕ ಅವಸ್ಥೆ. ಅವರಿಗೆ ಮುಸ್ಸಂಜೆಯಾದ ಮೇಲೆ ಪ್ರಾಯಶಃ ಈ ವಿಧವಾದ ಅವಸ್ಥೆ ಬರುತ್ತದೆ ಮತ್ತು ಒಮ್ಮೊಮ್ಮೆ ಅವರು ಸಂಪೂರ್ಣ ಬಾಹ್ಯಜ್ಞಾನ ಶೂನ್ಯರಾಗಿಬಿಡುತ್ತಾರೆ ಎಂಬುದನ್ನು ಕ್ರಮೇಣ ಕೇಳಿ ತಿಳಿದುಕೊಂಡುದೂ ಅಲ್ಲದೆ ತಾನೂ ಪ್ರತ್ಯಕ್ಷ ನೋಡಿಯೂ ನೋಡಿದ.
ಮಾಸ್ಟರ್: “ಬಹುಶಃ ಈಗ ನೀವು ಸಾಯಂ ಸಂಧ್ಯಾವಂದನಾದಿಗಳಲ್ಲಿ ತೊಡಗಬೇಕಾಗಿರಬಹುದು. ನಾವು ಹೋಗಿಬರಲು ಅನುಮತಿಯೇ?”
ಶ್ರೀರಾಮಕೃಷ್ಣರು ಭಾವಸ್ಥರಾಗಿಯೇ: “ಸಂಧ್ಯಾವಂದನೆಯೆ? ಇಲ್ಲ, ಅಂಥದೇನಿಲ್ಲ.”
ಹಾಗೇ ಇನ್ನೂ ಸ್ವಲ್ಪ ಹೊತ್ತು ಮಾತುಕತೆಗಳಾಡಿದ ನಂತರ ಮಾಸ್ಟರ್ ಅವರಿಗೆ ಪ್ರಣಾಮಮಾಡಿ ಬೀಳ್ಗೊಂಡ. ಪರಮಹಂಸರು ಹೇಳುತ್ತಿದ್ದಾರೆ: “ಮತ್ತೆ ಬನ್ನಿ” ಎಂದು.
ಮಾಸ್ಟರ್ ಹಿಂದಿರುಗುವಾಗ ಆಲೋಚಿಸಲಾರಂಭಿಸಿದ: “ಯಾರನ್ನು ಮತ್ತೆ ಹೋಗಿ ನೋಡಬೇಕೆಂಬ ಇಚ್ಛೆಯಾಗುತ್ತಿರುವುದೊ ಅಂಥ ಈ ಸೌಮ್ಯರು ಯಾರು? ಪುಸ್ತಕ ಓದದೆ ಮನುಷ್ಯ ದೊಡ್ಡವನಾಗಬಲ್ಲನೆ? ಏನಾಶ್ಚರ್ಯ, ಇವರನ್ನು ಮತ್ತೆ ನೋಡಬೇಕು ಅಂತ ಅನ್ನಿಸುತ್ತಾ ಇದೆಯಲ್ಲ! ಇವರೂ ಹೇಳಿದ್ದಾರೆ: ‘ಮತ್ತೆ ಬನ್ನಿ’ ಎಂದು. ನಾಳೆಯೊ, ನಾಳಿದ್ದೊ ಬೆಳಗ್ಗೆಯೇ ಬಂದುಬಿಡುತ್ತೇನೆ.”
ಮಾಸ್ಟರಿಗೆ ಪರಮಹಂಸರ ಎರಡನೆಯ ದರ್ಶನ ದೊರೆತುದು ಅವರ ಕೊಠಡಿಯ ಆಗ್ನೇಯ ಜಗಲಿಯ ಮೇಲೆ, ಸುಮಾರು ಎಂಟು ಗಂಟೆಯ ಸಮಯದಲ್ಲಿ ಕ್ಷೌರಿಕ ಆಗತಾನೆ ಬಂದಿದ್ದಾನೆ. ಕ್ಷೌರ ಮಾಡಿಸಿಕೊಳ್ಳಲು ಹೋಗುತ್ತಿದ್ದಾರೆ. ಇನ್ನೂ ಚಳಿಗಾಲವಾಗಿದ್ದುದರಿಂದ ಒಂದು ವಿಧದ ಉಣ್ಣೆಯ ಶಾಲು ಹೊದ್ದುಕೊಂಡಿದ್ದಾರೆ. ಅದಕ್ಕೆ ಕೆಂಪು ಅಂಚು ಹಾಕಿದೆ. ಮಾಸ್ಟರನ್ನು ನೋಡಿ ಹೇಳುತ್ತಿದ್ದಾರೆ: “ಬಂದೆಯಾ? ಒಳ್ಳೇದು, ಇಲ್ಲಿ ಕುಳಿತುಕೊ.” ಅವರು ನಗುಮುಖರಾಗಿದ್ದಾರೆ. ಮಾತನಾಡುವಾಗ ಸ್ವಲ್ಪ ಬಿಕ್ಕಳಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನಿನ್ನ ಮನೆ ಎಲ್ಲಿ?”
ಮಾಸ್ಟರ್: “ಕಲ್ಕತ್ತದಲ್ಲಿ”
ಶ್ರೀರಾಮಕೃಷ್ಣರು: “ಇಲ್ಲಿ ಯಾರ ಮನೆಗೆ ಬಂದಿದ್ದೀಯೆ?”
ಮಾಸ್ಟರ್: “ಹಿರಿಯಕ್ಕನ-ಈಶಾನ ಕವಿರಾಜನ ಮನೆಗೆ.”
ಶ್ರೀರಾಮಕೃಷ್ಣರು: “ಓಹೋ, ಈಶಾನನ ಮನೆಗೊ? ಒಳ್ಳೇದು, ಈಗ ಕೇಶವಸೇನನಿಗೆ ಹೇಗಿದೆ? ಆತನಿಗೆ ಬಹಳ ಖಾಯಿಲೆ ಆಗಿಬಿಟ್ಟಿತ್ತು.”
ಮಾಸ್ಟರ್: “ನಾನೂ ಹಾಗೇ ಕೇಳಿದ್ದೆ, ಆದರೆ ಇಷ್ಟರಲ್ಲಿ ಗುಣವಾಗಿರಬೇಕು.”
ಶ್ರೀರಾಮಕೃಷ್ಣರು: “ಕೇಶವನಿಗೆ ಗುಣವಾದರೆ ಭಗವತಿಗೆ ಎಳನೀರು ಸಕ್ಕರೆ ಅರ್ಪಿಸುವುದಾಗಿ ಹರಕೆ ಹೊತ್ತಿದ್ದೇನೆ. ಬೆಳಗಿನ ಜಾವ ಎಚ್ಚರವಾಗಿಬಿಡುತ್ತದೆ. ಆಗ ಎದ್ದು ಭಗವತಿಯ ಹತ್ತಿರ ಅಳುತ್ತಾ ಮೊರೆಯಿಡುತ್ತೇನೆ: ‘ಹೇ ತಾಯೆ, ಕೇಶವನಿಗೆ ಗುಣವಾಗುವಂತೆ ಮಾಡಿಬಿಡು. ಆತ ಬದುಕಿಕೊಳ್ಳದೆ ಹೋದರೆ ಕಲ್ಕತ್ತೆಗೆ ಹೋದಾಗ ನಾನು ಇನ್ನು ಬೇರೆ ಯಾರ ಸಂಗಡ ಮಾತಾಡಲಿ?’ ಅದಕ್ಕಾಗೇ ಎಳನೀರು ಸಕ್ಕರೆಯ ಹರಕೆ ಹೊತ್ತಿರುವುದು.
“ಒಳ್ಳೇದು, ಯಾರೊ ಒಬ್ಬ ‘ಕುಕ್ಸಾಹೇಬ’ ಅಂತ ಬಂದಿದ್ದಾನಂತಲ್ಲ, ನಿಜವೆ? ಆತ ಉಪನ್ಯಾಸ ಕೊಡುತ್ತಾ ಇದ್ದಾನೇನು? ಒಮ್ಮೆ ಕೇಶವ ನನ್ನನ್ನು ಜಹಜಿನಲ್ಲಿ ಕರೆದುಕೊಂಡು ಹೋಗಿದ್ದ. ಅದರಲ್ಲಿ ಆತನೂ ಇದ್ದ.”
ಮಾಸ್ಟರ್: “ಹೌದು, ನಾನೂ ಹಾಗೇ ಕೇಳಿದ್ದೇನೆ, ಆದರೆ ನಾನು ಮಾತ್ರ ಹೋಗಿ ಆತನ ಉಪನ್ಯಾಸ ಕೇಳಲಿಲ್ಲ. ಆತನ ವಿಷಯವಾಗಿ ಹೆಚ್ಚಾಗಿ ಏನೂ ಗೊತ್ತಿಲ್ಲ.”
ಶ್ರೀರಾಮಕೃಷ್ಣರು: “ಪ್ರತಾಪನ ಸೋದರ ಇಲ್ಲಿಗೆ ಬಂದಿದ್ದ. ಕೆಲವು ದಿನ ಇದ್ದ. ಕೆಲಸವೂ ಇಲ್ಲ, ಕಾರ್ಯವೂ ಇಲ್ಲ. ಹೇಳಿದ, ಇಲ್ಲಿ ಸುಮ್ಮನೆ ಇದ್ದುಬಿಡುತ್ತೇನೆ ಅಂತ. ಹೆಂಡತಿ ಮಕ್ಕಳನ್ನೆಲ್ಲ ಮಾವನ ಮನೆಗೆ ಅಟ್ಟಿಬಿಟ್ಟಿರುವುದಾಗಿ ತಿಳಿದುಬಂತು. ಅನೇಕ ಮಕ್ಕಳು ಮರಿ. ತರಾಟೆಗೆ ತೆಗೆದುಕೊಂಡೆ. ಹಾಗೇ ನೋಡು ಇದನ್ನ! ಮಕ್ಕಳು ಮರಿ ಆಗಿಬಿಟ್ಟಿವೆ! ನೆರೆಹೊರೆಯ ಜನರು ಬಂದು ಅವರನ್ನು ಪೋಷಿಸಿ ಬೆಳಸಿ ಮನುಷ್ಯರನ್ನಾಗಿ ಮಾಡುತ್ತಾರೆಯೇ? ಹೆಂಡತಿ ಮಕ್ಕಳನ್ನು ಮಾವನ ಮನೆಗೆ ಅಟ್ಟಿಬಿಟ್ಟಿದ್ದೇನಲ್ಲ, ಅವರನ್ನು ಬೇರೊಬ್ಬರು ಸಾಕಿ ಸಲಹುತ್ತಿದ್ದಾರಲ್ಲ ಎಂಬ ನಾಚಿಕೆಯೂ ಆತನಿಗಿರಲಿಲ್ಲ.ಆತನನ್ನು ಚೆನ್ನಾಗಿ ಬೈದು ಹೇಳಿದೆ, ಯಾವುದಾದರೂ ಒಂದು ಉದ್ಯೋಗಕ್ಕೆ ಸೇರಿಕೊ ಅಂತ. ಆಗ ಮಾತ್ರ ಇಲ್ಲಿಂದ ಹೊರಡಲು ಮನಸ್ಸು ಮಾಡಿದ.
“ನಿನಗೆ ವಿವಾಹವಾಗಿದೆಯೆ?”
ಮಾಸ್ಟರ್: “ಹೌದು, ಆಗಿದೆ.”
ಶ್ರೀರಾಮಕೃಷ್ಣರು ಬೆಚ್ಚಿಬಿದ್ದು: “ಓ ರಾಮಲಾಲ!1 ನೋಡು, ಈತ ಈಗಲೇ ವಿವಾಹ ಮಾಡಿಕೊಂಡುಬಿಟ್ಟಿದ್ದಾನೆ!”
ಮಾಸ್ಟರ್ ಘೋರತರ ಅಪರಾಧ ಮಾಡಿದವನ ಹಾಗೆ ಸ್ತಬ್ಧನಾಗಿ ತಲೆ ತಗ್ಗಿಸಿ ನೆಲ ದಿಟ್ಟಿಸಿ ನೋಡುತ್ತಾ ಕುಳಿತಿದ್ದಾನೆ. ಯೋಚಿಸುತ್ತಿದ್ದಾನೆ: “ವಿವಾಹವಾಗುವುದು ದೊಡ್ಡ ಪಾಪಕೃತ್ಯವೇ?”
ಶ್ರೀರಾಮಕೃಷ್ಣರು ಮತ್ತೆ ಕೇಳುತ್ತಿದ್ದಾರೆ: “ನಿನಗೆ ಮಕ್ಕಳಾಗಿವೆಯೇ?”
ಮಾಸ್ಟರನ ಹೃದಯ ‘ಡಬ್ ಡಬ್’ ಅನ್ನಲಾರಂಭಿಸಿತು. ಹೆದರಿ ಹೆದರಿ ಹೇಳಿದ: “ಹೌದು, ಆಗಿವೆ.”
ಅತ್ಯಂತವಾಗಿ ದುಃಖ ಸೂಚಿಸುತ್ತ ಶ್ರೀರಾಮಕೃಷ್ಣರು: “ನೋಡು, ಈತನಿಗೆ ಮಕ್ಕಳೂ ಆಗಿಬಿಟ್ಟಿವೆ!”
ಈ ರೀತಿಯಾಗಿ ಖಂಡಿಸಲ್ಪಟ್ಟವನಾಗಿ ಮಾಸ್ಟರ್ ಸ್ತಬ್ಧನಾಗಿ ಕುಳಿತಿದ್ದಾನೆ. ಆತನ ಅಹಂಕಾರ ಪುಡಿಪುಡಿಯಾಗಲಾರಂಭಿಸಿತು. ಕೆಲವು ನಿಮಿಷಗಳಾದ ನಂತರ ಪರಮಹಂಸರು ಆತನ ಕಡೆಗೆ ತಮ್ಮ ಕೃಪಾದೃಷ್ಟಿಯನ್ನು ಬೀರಿ ಪ್ರೇಮಪೂರಿತ ಹೃದಯದಿಂದ ಹೇಳುತ್ತಿದ್ದಾರೆ: “ನೋಡು, ನಿನ್ನಲ್ಲಿ ಒಳ್ಳೆ ಚಿಹ್ನೆಗಳಿವೆ. ಕಣ್ಣು, ಹಣೆ, ಮೊದಲಾದುವನ್ನು ನೋಡಿಯೇ ಅರಿತುಕೊಂಡುಬಿಡಬಲ್ಲೆ. ಒಳ್ಳೇದು, ನಿನ್ನ ಹೆಂಡತಿ ಎಂಥವಳು? ವಿದ್ಯಾಶಕ್ತಿಯೊ, ಅವಿದ್ಯಾ ಶಕ್ತಿಯೊ?”
ಮಾಸ್ಟರ್: “ಒಳ್ಳೆಯವಳೇ. ಆದರೆ ಅಜ್ಞೆ.”
ಶ್ರೀರಾಮಕೃಷ್ಣರು ಅಸಹನೆಯಿಂದ: “ನೀನು? ಜ್ಞಾನಿ!”
ಜ್ಞಾನವಾವುದು, ಅಜ್ಞಾನವಾವುದು ಎಂಬುದನ್ನು ಮಾಸ್ಟರ್ ಇನ್ನೂ ಅರಿತುಕೊಳ್ಳಬೇಕಾಗಿತ್ತು. ಓದುಬರಹ ಕಲಿತುಕೊಂಡರೆ, ಪುಸ್ತಕ ಓದುವುದಕ್ಕೆ ಬಂದರೆ ಜ್ಞಾನ ದೊರಕುತ್ತದೆ ಎಂಬುದು ಆತನ ಭಾವನೆಯಾಗಿತ್ತು. ಕ್ರಮೇಣ ಆತ ಈ ಭಾವನೆಯಿಂದ ಮುಕ್ತನಾದ. ಭಗವಂತನನ್ನು ಅರಿಯುವಿಕೆಯೇ ಜ್ಞಾನ, ಅರಿಯದಿರುವಿಕೆಯೇ ಅಜ್ಞಾನ ಎಂಬುದನ್ನು ಅರಿತುಕೊಂಡ. ಪರಮಹಂಸರು, ‘ನೀನು? ಜ್ಞಾನಿ!’ ಎಂದು ಹೇಳಿದಾಗ ಆತನ ಅಹಂಕಾರಕ್ಕೆ ಬಲವಾದ ಪೆಟ್ಟು ಬಿತ್ತು.
ಶ್ರೀರಾಮಕೃಷ್ಣರು: “ಒಳ್ಳೇದು, ನಿನಗೆ ಸಾಕಾರದಲ್ಲಿ ವಿಶ್ವಾಸವೊ, ನಿರಾಕಾರದಲ್ಲಿ ವಿಶ್ವಾಸವೊ?”
ಮಾಸ್ಟರ್ ಆಶ್ಚರ್ಯಚಕಿತನಾಗಿ, ತನಗೆ ತಾನೆ: “ಸಾಕಾರದಲ್ಲಿ ವಿಶ್ವಾಸವಿದ್ದುದೇ ಆದರೆ ನಿರಾಕಾರದಲ್ಲಿ ವಿಶ್ವಾಸವುಂಟಾದೀತೆ? ಭಗವಂತ ನಿರಾಕಾರ ಎಂಬ ವಿಶ್ವಾಸವಿರುವುದಾದರೆ, ಆತ ಸಾಕಾರ ಎಂಬ ವಿಶ್ವಾಸವುಂಟಾಗಲೂ ಸಾಧ್ಯವೇ? ವಿರುದ್ಧ ಅವಸ್ಥೆಗಳು, ಎರಡೂ ಸತ್ಯವಾಗಲು ಸಾಧ್ಯವೇ? ಬಿಳಿ ವಸ್ತುವಾದ ಹಾಲು ಕಪ್ಪಾಗಿಯೂ ಇರಬಲ್ಲುದೇ?”
ಮಾಸ್ಟರ್: “ನನಗೆ ನಿರಾಕಾರ ಹಿಡಿಸುತ್ತದೆ.”
ಶ್ರೀರಾಮಕೃಷ್ಣರು: “ಬಹಳ ಒಳ್ಳೆಯದೆ. ಒಂದರಲ್ಲಿ ವಿಶ್ವಾಸವಿದ್ದರೆ ಅದೇ ಯಥೇಷ್ಟ. ನಿರಾಕಾರದಲ್ಲಿ ವಿಶ್ವಾಸವೆ? ಬಹಳ ಒಳ್ಳೆಯದು. ಆದರೆ ಎಂದಿಗೂ ಹೀಗೆ ಯೋಚಿಸಬೇಡ-ಇದೇ ಕೇವಲ ಸತ್ಯ, ಉಳಿದುದೆಲ್ಲ ಮಿಥ್ಯಾ ಎಂದು. ತಿಳಿದುಕೊ-ನಿರಾಕಾರವೂ ಸತ್ಯ, ಸಾಕಾರವೂ ಸತ್ಯ. ಯಾವುದರಲ್ಲಿ ವಿಶ್ವಾಸವೊ ಅದರಲ್ಲಿ ದೃಢಬುದ್ಧಿ ಇಡು.”
ಪರಮಹಂಸರು ಎರಡೂ ಸತ್ಯ ಎಂಬುದನ್ನು ಒತ್ತಿ ಒತ್ತಿ ಹೇಳಿದ್ದನ್ನು ಕೇಳಿ ಮಾಸ್ಟರ್ ಬಹಳವಾಗಿ ಆಶ್ಚರ್ಯಪಡುತ್ತಿದ್ದಾನೆ. ಈ ವಿಷಯವನ್ನು ಆತನ ಪುಸ್ತಕರಾಶಿ ಯಾವುದೂ ತಿಳಿಸಿರಲಿಲ್ಲ. ಆತನ ಅಹಂಕಾರ ಮೂರನೆ ಸಲ ಪುಡಿಪುಡಿಯಾಗಲಾರಂಭಿಸಿತು. ಆದರೆ ಇನ್ನೂ ಸಂಪೂರ್ಣವಾಗಿ ಧ್ವಂಸವಾಗಿರಲಿಲ್ಲ. ಆದ್ದರಿಂದ ಸ್ವಲ್ಪ ತರ್ಕ ಮಾಡಲು ಮುಂದೆ ಬಂದ.
ಮಾಸ್ಟರ್: “ಒಂದು ಪಕ್ಷ ಭಗವಂತ, ಸಾಕಾರ ಅಂತ ಇಟ್ಟುಕೊಳ್ಳೋಣ. ಆದರೆ ಆತ ಮಣ್ಣಿನ ಪ್ರತಿಮೆಯೇನಲ್ಲವಲ್ಲ, ನಿಜವಾಗಿಯೂ!”
ಶ್ರೀರಾಮಕೃಷ್ಣರು ಮಧ್ಯೆ ಬಾಯಿ ಹಾಕಿ: “ಮಣ್ಣಿನದೇಕೆ? ಚಿನ್ಮಯಮೂರ್ತಿ.”
ಮಾಸ್ಟರಿಗೆ ‘ಚಿನ್ಮಯಮೂರ್ತಿ’ ಎಂಬುದರ ಸೂಚಿತಾರ್ಥ ಗೊತ್ತಾಗಲಿಲ್ಲ. ಮುಂದುವರಿಸುತ್ತಿದ್ದಾನೆ: “ಒಳ್ಳೇದು, ಯಾರು ಮಣ್ಣಿನ ಪ್ರತಿಮೆಯನ್ನು ಪೂಜಿಸುತ್ತಾರೋ ಅವರಿಗೆ ತಿಳಿಸಿಕೊಡಬೇಕಾಗುತ್ತದೆ, ‘ಮಣ್ಣಿನ ಪ್ರತಿಮೆಯೇ ಭಗವಂತನಲ್ಲ, ಅದನ್ನು ಪೂಜಿಸುವಾಗ ಭಗವಂತನನ್ನು ಉದ್ದೇಶಿಸಿ ಪೂಜಿಸಬೇಕೇ ವಿನಾ ಅದನ್ನೇ ಅಲ್ಲ. ಮಣ್ಣನ್ನು ಪೂಜಿಸುವುದು ಸೂಕ್ತವಲ್ಲ’ ಎಂದು.”
ಶ್ರೀರಾಮಕೃಷ್ಣರು ಅಸಹನೆಯಿಂದ: “ನಿಮ್ಮ ಕಲ್ಕತ್ತದ ಜನರಿಗೆಲ್ಲಾ ಇದೊಂದೇ ಹುಚ್ಚು-ಕೇವಲ ಲೆಕ್ಚರ್ ಕೊಡೋದು, ಇನ್ನೊಬ್ಬರ ಹೃದಯಕ್ಕೆ ಬೆಳಕು ತರೋದು! ಮೊದಲು ತಮ್ಮ ಹೃದಯಕ್ಕೆ ಯಾವ ರೀತಿ ಬೆಳಕು ತಂದುಕೊಳ್ಳುವುದು ಎಂಬುದರ ಯೋಚನೆಯೇ ಇಲ್ಲ. ಪರರಿಗೆ ತಿಳಿವಳಿಕೆ ಕೊಡಲು ಯಾರು ನೀವು?”
“ಈ ಜಗತ್ತು ಯಾರದೊ ಆತ ತಿಳಿವಳಿಕೆ ಕೊಡುತ್ತಾನೆ. ಯಾರು ಈ ಜಗತ್ತನ್ನು ಸೃಷ್ಟಿಸಿದ್ದಾನೊ; ಸೂರ್ಯ ಚಂದ್ರ ಮತ್ತು ಮನುಷ್ಯ ಜೀವಜಂತು ನಿರ್ಮಿಸಿದ್ದಾನೊ; ಜೀವಜಂತುಗಳ ಆಹಾರಕ್ಕೆ ವ್ಯವಸ್ಥೆ, ಬೆಳೆಗಾಗಿ ಮಳೆ, ಪಾಲನೆಗಾಗಿ ತಾಯಿತಂದೆ ಇವನ್ನು ಸೃಷ್ಟಿಸಿದ್ದಾನೊ, ತಾಯಿ ತಂದೆಗಳಲ್ಲಿ ಪ್ರೀತಿ, ಮಮತೆ ತುಂಬಿದ್ದಾನೊ ಆತ ತಿಳಿವಳಿಕೆ ಕೊಡುತ್ತಾನೆ. ಇಷ್ಟೊಂದು ಮಾಡಿರುವವನು ಅದೊಂದಷ್ಟು ಮಾಡಲಾರನೇ? ಒಂದು ಪಕ್ಷ ತಿಳಿವಳಿಕೆ ಕೊಡಲು ಆವಶ್ಯಕತೆಯೇನಾದರೂ ತೋರಿಬಂದರೆ ಆತನೇ ಆ ಕಾರ್ಯಕ್ಕೆ ಮುಂದೆ ಬರುತ್ತಾನೆ. ಆತ ನಮ್ಮ ಅಂತರ್ಯಾಮಿ.”
“ಒಂದು ಮಣ್ಣಿನ ಪ್ರತಿಮೆಯನ್ನು ಪೂಜಿಸುವುದು ಸರಿಯಲ್ಲ ಅಂತ ಇಟ್ಟುಕೊಂಡರೂ, ಅದರ ಮೂಲಕ ತನ್ನ ಪೂಜೆಯೇ ನಡೆಯುತ್ತದೆ ಎಂಬುದನ್ನು ಆತ ಅರಿಯನೇ? ಆತ ಆ ವಿಧದಪೂಜೆಯಿಂದಲೇಸಂತುಷ್ಟನಾಗುತ್ತಾನೆ. ಅದಕ್ಕೇಕೆ ತಲೆನೋವು? ಮೊದಲು ನಿನಗೆ ಯಾವುದರಿಂದ ಜ್ಞಾನ ಭಕ್ತಿ ದೊರೆಯಬಹುದೋ ಅದಕ್ಕಾಗಿ ಪ್ರಯತ್ನಿಸು.”
ಈ ಸಲ ಮಾಸ್ಟರ್ ಅಹಂಕಾರ ಬಹುಶಃ ಸಂಪೂರ್ಣವಾಗಿ ಧ್ವಂಸವಾಗಿ ಹೋಗಿರಬೇಕು. ಯೋಚಿಸಲಾರಂಭಿಸಿದ: “ನಿಜ. ಇವರು ಹೇಳುತ್ತಿರುವುದು ಸತ್ಯ. ತಿಳಿವಳಿಕೆ ಕೊಡಲು ಹೋಗುವ ಆವಶ್ಯಕತೆಯಾದರೂ ಏನಿದೆ? ನಾನು ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡಿದ್ದೇನೆಯೆ? ನನಗೆ ಆತನ ಪಾದಪದ್ಮಗಳಲ್ಲಿ ಭಕ್ತಿ ಉಂಟಾಗಿದೆಯೆ? ‘ತನಗೆ ಮಲಗಲು ಸ್ಥಳವಿಲ್ಲ; ಶಂಕರನ್ನ ಬೇರೆ ಕರೆಯೋದು!’ ನನಗೇ ಏನೆಂದರೆ ಏನೂ ಭಗವಂತನ ವಿಷಯವಾಗಿ ಗೊತ್ತಿಲ್ಲ, ಆದರೂ ಪರರಿಗೆ ತಿಳಿವಳಿಕೆ ಕೊಡಲು ಯತ್ನಿಸುತ್ತಿದ್ದೇನಲ್ಲ, ಇದು ಎಂತಹ ನಾಚಿಕೆಗೇಡಿತನ! ಎಂಥ ತಿಳಿಗೇಡಿ ನಾನು! ಪರರಿಗೆ ತಿಳಿಸಿಕೊಡಲು ಇದೇನು ಗಣಿತಶಾಸ್ತ್ರವೆ, ಇತಿಹಾಸವೆ, ಸಾಹಿತ್ಯವೆ? ಇದು ಭಗವತ್ತತ್ವ! ಇವರು ಹೇಳುತ್ತಿರುವುದು ನನ್ನ ಹೃದಯಕ್ಕೆ ಒಪ್ಪುತ್ತಿದೆ.”
ಮಾಸ್ಟರ್ ಶ್ರೀರಾಮಕೃಷ್ಣರೊಡನೆ ಮಾಡಿದ ವಾದ ಇದೇ ಮೊಟ್ಟಮೊದಲನೆಯದು, ಭಗವತ್ಕೃಪೆಯಿಂದ ಇದೇ ಕಟ್ಟಕಡೆಯದು.
ಶ್ರೀರಾಮಕೃಷ್ಣರು: “ನೀನು ಮಣ್ಣಿನ ಪ್ರತಿಮೆ ಪೂಜೆಯ ಸಂಬಂಧವಾಗಿ ಮಾತು ಎತ್ತಿದ್ದೆ. ಪ್ರತಿಮೆ ಮಣ್ಣಿನದಾದರೂ ಆ ವಿಧದ ಪೂಜೆಯ ಆವಶ್ಯಕತೆ ಇದೆ. ಹಲವಾರು ವಿಧದ ಪೂಜಾಕ್ರಮಗಳನ್ನು ಭಗವಂತನೇ ಏರ್ಪಡಿಸಿದ್ದಾನೆ. ಈ ಜಗತ್ತು ಯಾರದೊ, ಆತನೇ ಅಧಿಕಾರಭೇದಕ್ಕನುಗುಣವಾಗಿ ಇವನ್ನೆಲ್ಲಾ ಮಾಡಿದ್ದಾನೆ.”
“ತಾಯಿ, ತನ್ನ ಮಕ್ಕಳ ಜೀರ್ಣಶಕ್ತಿಗನುಸಾರವಾಗಿ ಆಹಾರ ತಯಾರು ಮಾಡುತ್ತಾಳೆ. ಒಬ್ಬಳಿಗೆ ಐದು ಮಕ್ಕಳಿವೆ ಅಂತ ಇಟ್ಟುಕೊ. ಆಕೆ ಮೀನನ್ನು ಅಡಿಗೆಮಾಡಬೇಕಾಗಿದ್ದರೆ ಮಕ್ಕಳ ರುಚಿ, ಜೀರ್ಣಶಕ್ತಿ ಇವಕ್ಕೆ ತಕ್ಕಂತೆ ಭಕ್ಷ್ಯಭೋಜ್ಯಗಳನ್ನು-ಪಲಾವು, ಉಪ್ಪಿನಕಾಯಿ, ಬಜ್ಜಿ, ಪಲ್ಯ, ಸಾರು ಇತ್ಯಾದಿ-ಅಡಿಗೆ ಮಾಡುತ್ತಾಳೆ.
“ಅರ್ಥವಾಯಿತೆ?”
ಮಾಸ್ಟರ್ ವಿನಯದಿಂದ: “ಹೌದು, ಆಯಿತು. ಒಳ್ಳೆಯದು, ಏನು ಮಾಡಿದರೆ ಭಗವಂತನ ಕಡೆ ಮನಸ್ಸು ಹರಿಯಲಾರಂಭಿಸುತ್ತದೆ?”
ಶ್ರೀರಾಮಕೃಷ್ಣರು: “ಭಗವಂತನ ನಾಮಗುಣಕೀರ್ತನೆಯನ್ನು ಸರ್ವದಾ ಮಾಡುತ್ತಿರಬೇಕು. ಸತ್ಸಂಗ, ಎಂದರೆ ಭಗವದ್ಭಕ್ತರ ಸಾಧುಸತ್ಪುರುಷರ ಸಹವಾಸ ಆಗಾಗ ಮಾಡುತ್ತಿರಬೇಕು. ಮನಸ್ಸು ಹಗಲಿರುಳೂ ಸಂಸಾರದಲ್ಲೇ, ಪ್ರಾಪಂಚಿಕ ಕೆಲಸಕಾರ್ಯಗಳಲ್ಲೇ ನಿರತವಾಗಿಬಿಟ್ಟಿದ್ದರೆ ಅದು ಭಗವನ್ಮುಖವಾಗಲಾರದು; ಆಗಾಗ ನಿರ್ಜನ ಪ್ರದೇಶಕ್ಕೆ ಹೋಗಿ ಭಗವದ್ಧ್ಯಾನದಲ್ಲಿ ತೊಡಗುವುದು ಅತ್ಯಂತ ಆವಶ್ಯಕ. ಮೊದಮೊದಲು ಪದೇಪದೇ ನಿರ್ಜನ ಪ್ರದೇಶಕ್ಕೆ ಹೋಗಿ ಆತನ ಧ್ಯಾನ ಮಾಡದೆ ಇದ್ದರೆ ಮನಸ್ಸನ್ನು ನಿಲ್ಲಿಸುವುದು ದುಸ್ಸಾಧ್ಯ. ಗಿಡ ಇನ್ನೂ ಸಸಿಯಾಗಿರುವಾಗ ಅದರ ಸುತ್ತಲೂ ಬೇಲಿ ಕಟ್ಟಬೇಕು; ಇಲ್ಲದಿದ್ದರೆ ದನಕರುಗಳು ಆಡುಕುರಿಗಳು ತಿಂದು ನಾಶಮಾಡಿಬಿಡುತ್ತವೆ.
“ಧ್ಯಾನವನ್ನು ಆಂತರ್ಯದಲ್ಲೊ, ಏಕಾಂತ ಸ್ಥಳದಲ್ಲೊ, ನಿಬಿಡ ಅರಣ್ಯದಲ್ಲೊ ಮಾಡಬೇಕು. ಸತತ ಸದಸದ್ವಿಚಾರ ಮಾಡುತ್ತಿರಬೇಕು-ಭಗವಂತನೊಬ್ಬನೇ ಸತ್, ನಿತ್ಯ ವಸ್ತು; ಉಳಿದುದೆಲ್ಲಾ ಅಸತ್, ಅನಿತ್ಯವಸ್ತು ಎಂದು. ಹೀಗೆ ವಿಚಾರ ಮಾಡುತ್ತ ಅನಿತ್ಯವಸ್ತುಗಳ ಮೇಲಿನ ಅನುರಾಗವನ್ನು ಕೊನೆಗೆ ಮನಸ್ಸಿನಿಂದ ಕಿತ್ತೊಗೆಯಬೇಕು.”
ಮಾಸ್ಟರ್ ವಿನಯದಿಂದ: “ಸಂಸಾರದಲ್ಲಿ ಯಾವ ರೀತಿಯಾಗಿ ಇರಬೇಕು?”
ಶ್ರೀರಾಮಕೃಷ್ಣರು: “ಎಲ್ಲಾ ಕೆಲಸಕಾರ್ಯಗಳನ್ನೂ ಮಾಡು, ಆದರೆ ಮನಸ್ಸನ್ನು ಮಾತ್ರ ಭಗವಂತನ ಪಾದಪದ್ಮಗಳಲ್ಲಿ ಇಡು. ಎಲ್ಲರೊಡನೆ, ಎಂದರೆ ಹೆಂಡತಿ, ಮಕ್ಕಳು, ತಂದೆ, ತಾಯಿ, ಇವರೊಡನೆ ಇರು. ಅವರ ಸೇವೆ ಮಾಡು. ಅವರೆಲ್ಲಾ ನಿನ್ನ ಪರಮ ಆಪ್ತರೆಂದೇ ಕಾಣು; ಆದರೆ ಅವರಾರೂ ನಿನಗೆ ಸೇರಿದವರಲ್ಲ ಎಂಬುದು ನಿನ್ನ ಹೃದಯಾಂತರಾಳದಲ್ಲಿ ನೆಲಸಿರಲಿ.”
“ಶ್ರೀಮಂತರ ಮನೆ ದಾಸಿ ಎಲ್ಲಾ ಕೆಲಸಕಾರ್ಯಗಳನ್ನೂ ಮಾಡುತ್ತಾಳೆ, ಆದರೆ ಆಕೆಯ ಮನಸ್ಸು ಮಾತ್ರ ಹಳ್ಳಿಯಲ್ಲಿರುವ ತನ್ನ ಮನೆಯ ಕಡೆಗೇ. ಯಜಮಾನನ ಮಕ್ಕಳು ತನ್ನವೆಂದೇ ಬೆಳೆಸುತ್ತಾಳೆ. ಅಷ್ಟೇ ಅಲ್ಲ, ಅವನ್ನ ಕರೆಯುತ್ತಾಳೆ, ‘ನನ್ನ ರಾಮ, ನನ್ನ ಹರಿ’ ಎಂಬುದಾಗಿ. ಆದರೆ ಅವಾವುವೂ ತನ್ನವಲ್ಲವೆಂಬುದು ಆಕೆಗೆ ಹೃದಯದಲ್ಲಿ ಚೆನ್ನಾಗಿ ಗೊತ್ತಿದೆ.
“ಆಮೆ ನೀರಲ್ಲಿ ಈಜಾಡುತ್ತಿರುತ್ತದೆ. ಆದರೆ ಅದರ ಮನಸ್ಸೆಲ್ಲಿದೆ ಗೊತ್ತೆ ನಿನಗೆ? ತನ್ನ ಮೊಟ್ಟೆಗಳಿರುವ ದಡದಲ್ಲಿ. ಸಂಸಾರದ ಎಲ್ಲಾ ಕೆಲಸಕಾರ್ಯಗಳನ್ನೂ ಮಾಡು, ಆದರೆ ಮನಸ್ಸನ್ನು ಮಾತ್ರ ಭಗವಂತನಲ್ಲಿ ನೆಡು.
ಭಗವಂತನಲ್ಲಿ ಭಕ್ತಿ ಬೆಳೆಸಿಕೊಳ್ಳುವುದಕ್ಕೆ ಮುನ್ನ ಸಂಸಾರಕ್ಕೆ ಕಾಲಿಟ್ಟೆ ಎಂದರೆ, ಇನ್ನೂ ಅಧಿಕಾಧಿಕವಾಗಿ ಕಷ್ಟಪರಂಪರೆಗಳಿಗೆ ಈಡಾಗುವೆ. ಶೋಕ, ತಾಪ, ವಿಪತ್ತು ಇವುಗಳಿಂದ ಸಂಪೂರ್ಣ ಬೆಂದು ಬೆಂಡಾಗಿಹೋಗುವೆ. ವಿಷಯಚಿಂತನೆ ಮಾಡಿದಷ್ಟೂ ಅವುಗಳಲ್ಲಿ ಆಸಕ್ತಿಯೂ ಬೆಳೆಯುತ್ತಾ ಹೋಗುತ್ತದೆ.
“ಮೊದಲು ಕೈಗೆ ಎಣ್ಣೆ ಸವರಿಕೊಂಡು ಹಲಸಿನಹಣ್ಣು ಬಿಡಿಸಬೇಕು. ಇಲ್ಲದಿದ್ದರೆ ಕೈಗೆ ಅಂಟು ಹತ್ತಿಕೊಂಡುಬಿಡುತ್ತದೆ. ಭಗವದ್ಭಕ್ತಿ ಎಂಬ ಎಣ್ಣೆಯನ್ನು ಮೊದಲು ಹವಣಿಸಿಕೊಂಡು ಬಳಿಕ ಸಾಂಸಾರಿಕ ಕೆಲಸಕಾರ್ಯಗಳಲ್ಲಿ ಕೈ ಇಡಬೇಕು.
“ಆದರೆ ಈ ವಿಧವಾದ ಭಕ್ತಿ ದೊರಕಬೇಕಾದರೆ, ನಿರ್ಜನಪ್ರದೇಶಗಳಿಗೆ ಹೋಗಿ ಇರಬೇಕು. ಬೆಣ್ಣೆ ತೆಗೆಯಬೇಕಾದರೆ ಮೊದಲು ನಿರ್ಜನಪ್ರದೇಶದಲ್ಲಿ ಹಾಲಿಗೆ ಹೆಪ್ಪುಹಾಕಿ ಇಡಬೇಕು; ಅದನ್ನು ಅತಿಯಾಗಿ ಅಲ್ಲಾಡಿಸುತ್ತಿದ್ದರೆ ಅದು ಮೊಸರಾಗದು. ಬಳಿಕ ಉಳಿದ ಎಲ್ಲಾ ಕೆಲಸಕಾರ್ಯಗಳನ್ನೂ ಒಂದು ಮೂಲೆಯಲ್ಲಿ ಕಟ್ಟಿಟ್ಟು, ನಿರ್ಜನ ಪ್ರದೇಶದಲ್ಲಿ ಕುಳಿತು ಅದನ್ನು ಕಡೆಯಬೇಕು. ಆಗ ಬೆಣ್ಣೆ ತೆಗೆಯಲು ಸಾಧ್ಯವಾಗುತ್ತದೆ.
“ನೋಡು, ನಿರ್ಜನಪ್ರದೇಶಕ್ಕೆ ಹೋಗಿ ಈ ಮನಸ್ಸನ್ನು ಭಗವಂತನ ಧ್ಯಾನದಲ್ಲಿ ತೊಡಗಿಸುವುದಾದರೆ, ಅದು ಜ್ಞಾನ, ಭಕ್ತಿ, ವೈರಾಗ್ಯ ಇವನ್ನು ಗಳಿಸಿಕೊಳ್ಳುತ್ತದೆ; ಸಂಸಾರದಲ್ಲಿ ತೊಡಗಿಸುವುದಾದರೆ ಇದೇ ಮನಸ್ಸು ಅಧೋಗತಿಗೆ ಇಳಿದುಬಿಡುತ್ತದೆ. ಸಂಸಾರದಲ್ಲಿ ಕೇವಲ ಒಂದೇ ಒಂದರ ಚಿಂತನೆ: ‘ಕಾಮಕಾಂಚನ’ ದ ಚಿಂತನೆ.
“ಸಂಸಾರವೇ ನೀರು, ಮನಸ್ಸೇ ಹಾಲು. ಹಾಲನ್ನು ನೀರಿಗೆ ಸುರಿಸಿದರೆ ಅವೆರಡೂ ಬೆರೆತು ಒಂದಾಗಿಬಿಡುತ್ತವೆ; ಮತ್ತೆ ಶುದ್ಧ ಹಾಲು ಬೇಕೆಂದರೆ ಕಣ್ಣ ಮೇಲೆ ಕಣ್ಣಿಟ್ಟು ಹುಡುಕಿದರೂ ಅದು ದೊರೆಯುವ ಹಾಗೇ ಇಲ್ಲ. ಆದರೆ ಹಾಲಿಗೆ ಹೆಪ್ಪು ಹಾಕಿ ಮೊಸರು ಮಾಡಿ ಬೆಣ್ಣೆ ತೆಗೆದು ಅದನ್ನು ನೀರಿನಲ್ಲಿ ಇಟ್ಟರೆ, ಅದು ಅಲ್ಲಿ ತೇಲಲಾರಂಭಿಸುತ್ತದೆ.
“ಭಗವಂತನ ಧ್ಯಾನದೊಡನೆ ವಿಚಾರಮಾಡುವುದೂ ಅತ್ಯಂತ ಆವಶ್ಯಕ. ಕಾಮ ಕಾಂಚನ ಅನಿತ್ಯ. ಭಗವಂತನೇ ಏಕಮಾತ್ರ ವಸ್ತು. ಹಣದಿಂದ ಏನು ದೊರೆಯುತ್ತದೆ? ಅನ್ನಾಹಾರ, ಬಟ್ಟೆಬರೆ, ಮನೆಮಠ-ಇಷ್ಟು ಮಾತ್ರ. ಭಗವಂತನ ಸಾಕ್ಷಾತ್ಕಾರ ಎಂದಿಗೂ ದೊರೆಯದು. ಆದ್ದರಿಂದ ಹಣ ಜೀವನದ ಪರಮೋದ್ದೇಶವಾಗಲಾರದು. ಇದಕ್ಕೇ ವಿಚಾರ ಅಂತ ಹೆಸರು. ಅರ್ಥವಾಯಿತೆ?”
ಮಾಸ್ಟರ್: “ಹೌದು, ಅರ್ಥವಾಯಿತು. ಈಗತಾನೆ ಕೆಲವು ದಿನದ ಹಿಂದೆ ‘ಪ್ರಬೋಧ ಚಂದ್ರೋದಯ’ ಎಂಬ ನಾಟಕ ಬಂದಿದೆ. ಅದರಲ್ಲಿದೆ ವಸ್ತುವಿಚಾರ.”
ಶ್ರೀರಾಮಕೃಷ್ಣರು: “ವಸ್ತುವಿಚಾರವೇ? ಯೋಚಿಸು-ಹಣದಲ್ಲಿ ತಾನೆ ಏನಿದೆ, ಸುಂದರ ದೇಹದಲ್ಲಿ ತಾನೆ ಏನಿದೆ? ಹಾಗೆಯೇ ವಿಚಾರ ಮಾಡಿ ನೋಡು. ಸುಂದರಿಯ ದೇಹದಲ್ಲೂ ಕೇವಲ ಅಸ್ಥಿ, ಮಾಂಸ, ಕೊಬ್ಬು, ಮಲ, ಮೂತ್ರ ಇತ್ಯಾದಿ ಇವೆ. ಮನುಷ್ಯ ಭಗವಂತನನ್ನು ಮರೆತು ಈ ಹೇಯವಾದ ವಸ್ತುಗಳಲ್ಲೇಕೆ ಮನಸ್ಸಿಡಲು ಹೋಗಬೇಕು? ಭಗವಂತನನ್ನು ಏಕೆ ಮರೆತುಬಿಡಬೇಕು?”
ಮಾಸ್ಟರ್: “ಭಗವಂತನನ್ನು ದರ್ಶನಮಾಡಲಾಗುವುದೆ?”
ಶ್ರೀರಾಮಕೃಷ್ಣರು: “ಹೌದು ನಿಸ್ಸಂದೇಹವಾಗಿ. ಆಗಾಗ ಏಕಾಂತವಾಸ, ಆತನ ನಾಮ ಗುಣಕೀರ್ತನೆ, ವಸ್ತುವಿಚಾರ-ಈ ಸಾಧನೆಗಳನ್ನೆಲ್ಲಾ ಅವಲಂಬಿಸಬೇಕಾಗುತ್ತದೆ.”
ಮಾಸ್ಟರ್: “ಯಾವ ಮಾನಸಿಕ ಅವಸ್ಥೆಯಲ್ಲಿ ಆತನ ದರ್ಶನ ದೊರೆಯುತ್ತದೆ?”
ಶ್ರೀರಾಮಕೃಷ್ಣರು: “ಅತ್ಯಂತ ವ್ಯಾಕುಲನಾಗಿ ಅತ್ತರೆ ಆತನ ದರ್ಶನ ಪಡೆಯಲು ಸಾಧ್ಯ. ಹೆಂಡತಿ ಮಕ್ಕಳಿಗಾಗಿ ಜನ ಬಿಂದಿಗೆ ತುಂಬ ಕಣ್ಣೀರು ಸುರಿಸುತ್ತಾರೆ; ಕಣ್ಣೀರ ಸಾಗರದಲ್ಲೇ ತೇಲಾಡಿಬಿಡುತ್ತಾರೆ ಹಣಕ್ಕಾಗಿ. ಆದರೆ ಭಗವಂತ ಬೇಕೆಂದು ಯಾರು ತಾನೆ ಕಣ್ಣೀರಿಡುತ್ತಾರೆ? ಸಹಜ ಕರೆಯಿಂದ ಆತನನ್ನು ಕರೆಯಬೇಕು.”
ಪರಮಹಂಸರು ಹಾಡಲಾರಂಭಿಸಿದ್ದಾರೆ:
ನಂಬಿ ಕರೆದರೆ ತಾಯಿ ಓ ಎನ್ನದಿಹಳೇನೊ?
ನಿನ್ನ ತೊರೆದವಳೆಂತು ಇರಬಲ್ಲಳೊ?
ಬಿಲ್ವದಳ ಹೂವುಗಳ ತಂದು ಪಾದಕೆ ಮುಡಿಸೊ
ನಿನ್ನ ಭಕ್ತಿಯ ದಿವ್ಯ ಗಂಧದೊಡನೆ!
ಮತ್ತೆ ಪರಮಹಂಸರು ಹೇಳುತ್ತಿದ್ದಾರೆ: “ವ್ಯಾಕುಲತೆ ಉಂಟಾಯಿತು ಎಂದರೆ ಅರುಣೋದಯವಾದ ಹಾಗೇ. ಬಳಿಕ ಸೂರ್ಯೋದಯ. ವ್ಯಾಕುಲತೆ ಆದ ನಂತರವೇ ಭಗವಂತನ ದರ್ಶನ.”
“ಈ ಮೂರೂ ಪ್ರೀತಿಗಳೂ ಒಟ್ಟಿಗೆ ಉಂಟಾಗುವುದಾದರೆ ಭಗವಂತ ಗೋಚರನಾಗಿ ಬಿಡುತ್ತಾನೆ-ವಿಷಯಿಗೆ ವಿಷಯಗಳ ಮೇಲಿರುವ ಪ್ರೀತಿ, ತಾಯಿಗೆ ಮಕ್ಕಳ ಮೇಲಿರುವ ಪ್ರೀತಿ, ಸತಿಗೆ ಪತಿಯ ಮೇಲಿರುವ ಪ್ರೀತಿ. ಈ ಮೂರು ಪ್ರೀತಿಗಳೂ ಯಾರಲ್ಲೇ ಆಗಲಿ ಒಟ್ಟಿಗೆ ಮೂಡುವುದಾದರೆ, ಅವುಗಳ ಜೋರಿನಿಂದ ಆತನಿಗೆ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ.”
“ಮುಖ್ಯಾಂಶವೇನೆಂದರೆ ಭಗವಂತನನ್ನು ಪ್ರೀತಿಸಬೇಕು-ತಾಯಿ ಮಗುವನ್ನು ಪ್ರೀತಿಸುವ ಹಾಗೆ, ಸತಿ ಪತಿಯನ್ನು ಪ್ರೀತಿಸುವ ಹಾಗೆ, ವಿಷಯಿ ವಿಷಯಗಳನ್ನು ಪ್ರೀತಿಸುವ ಹಾಗೆ. ಈ ಮೂರು ಪ್ರೀತಿಗಳನ್ನೂ, ಈ ಮೂರು ಆಕರ್ಷಣೆಗಳನ್ನೂ ಒಟ್ಟುಗೂಡಿಸಿದರೆ ಅದು ಏನಾಗುತ್ತದೊ ಅದಷ್ಟನ್ನೂ ಭಗವಂತನ ಕಡೆ ತಿರುಗಿಸುವುದಾದರೆ ಆತನ ದರ್ಶನ ದೊರೆಯುತ್ತದೆ.”
“ವ್ಯಾಕುಲನಾಗಿ ಆತನನ್ನು ಕರೆಯಬೇಕು. ಬೆಕ್ಕಿನ ಮರಿಗೆ ಕೇವಲ, ‘ಮಿಯಾವ್ ಮಿಯಾವ್!’ ಅಂತ ತನ್ನ ತಾಯನ್ನು ಕರೆಯುವುದೊಂದೇ ಗೊತ್ತಿರುವುದು. ತಾಯಿ ಅದನ್ನು ಎಲ್ಲಿ ಇಡುವುದೊ ಅಲ್ಲೇ ಬಿದ್ದಿರುತ್ತದೆ. ಕೆಲವು ವೇಳೆ ಅಡಿಗೆಮನೆಯಲ್ಲಿ, ಇನ್ನು ಕೆಲವು ವೇಳೆ ನೆಲದ ಮೇಲೆ, ಮತ್ತೆ ಕೆಲವು ವೇಳೆ ಹಾಸಿಗೆಯ ಮೇಲೆ ಇಡುತ್ತದೆ. ಅದಕ್ಕೇನಾದರೂ ತೊಂದರೆ ಬಂದರೆ ಅದು ಕೇವಲ ‘ಮಿಯಾವ್ ಮಿಯಾವ್!’ ಅಂತ ಕೂಗುತ್ತದೆ. ಅದಕ್ಕೆ ಇನ್ನು ಬೇರೆ ಏನೂ ಗೊತ್ತಿಲ್ಲ. ತಾಯಿಬೆಕ್ಕು ಎಲ್ಲಿದ್ದರೆ ತಾನೆ ಏನು, ಈ ‘ಮಿಯಾವ್ ಮಿಯಾವ್!’ ಎಂಬ ಶಬ್ದವನ್ನು ಕೇಳಿದೊಡನೆಯೇ ಮರಿಯ ಹತ್ತಿರಕ್ಕೆ ಬಂದುಬಿಡುತ್ತದೆ.
ಮಾಸ್ಟರಿಗೆ ಪರಮಹಂಸರ ಮೂರನೆ ದರ್ಶನ ದೊರೆತುದು ಮತ್ತೊಂದು ಭಾನುವಾರ ಅಪರಾಹ್ನದಲ್ಲಿ. ಹಿಂದಿನ ಎರಡು ಭೇಟಿಗಳೇ ಆತನ ಹೃದಯದಲ್ಲಿ ದೊಡ್ಡ ಪರಿವರ್ತನೆಯನ್ನು ತಂದುಬಿಟ್ಟಿದ್ದುವು. ಹಗಲೂ ಇರುಳೂ ಶ್ರೀರಾಮಕೃಷ್ಣರ ಸಂಬಂಧವಾಗಿ, ವಿಶೇಷತಃ ಆಧ್ಯಾತ್ಮಿಕ ಗಂಭೀರತತ್ತ್ವಗಳನ್ನು ಅವರು ಎಷ್ಟು ಸುಲಭವಾಗಿ ಸಾಮಾನ್ಯರಿಗೂ ಅರಿವಾಗುವ ರೀತಿಯಲ್ಲಿ ತಿಳಿಸುತ್ತಿದ್ದಾರೆ ಎಂಬುದರ ವಿಷಯವಾಗಿ, ಚಿಂತಿಸುತ್ತಲೇ ಇದ್ದ. ಇಂಥ ಮಹಾಪುರುಷರನ್ನು ಆತ ಹಿಂದೆ ಎಂದೂ ಸಂಧಿಸಿರಲಿಲ್ಲ.
ಪರಮಹಂಸರು ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ಕೊಠಡಿ ಭಕ್ತರಿಂದ ತುಂಬಿದೆ. ರಜಾದಿನವಾದ್ದರಿಂದ ಅನೇಕ ಭಕ್ತರು ಬಂದಿದ್ದಾರೆ. ಅವರಾರ ಪರಿಚಯವೂ ಮಾಸ್ಟರಿಗೆ ಇನ್ನೂ ಆಗಿರಲಿಲ್ಲ. ಆದ್ದರಿಂದ ಆತ ಒಂದು ಮೂಲೆಯಲ್ಲಿ ಕುಳಿತುಕೊಂಡಿದ್ದಾನೆ. ಪರಮಹಂಸರು ಹಸನ್ಮುಖಿಗಳಾಗಿ ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ.
ಪರಮಹಂಸರು ಹತ್ತೊಂಭತ್ತು ವಯಸ್ಸಿನ ಒಬ್ಬ ಹುಡುಗನನ್ನುದ್ದೇಶಿಸಿ ಆತನ ಕಡೆಗೆ ಬಾಗಿ ಆನಂದದಿಂದ ಏನೇನೋ ಆತನೊಡನೆ ಮಾತನಾಡುತ್ತಿದ್ದಾರೆ. ಆತನ ಹೆಸರು ನರೇಂದ್ರ; ಕಾಲೇಜಿನಲ್ಲಿ ಓದುತ್ತಿದ್ದಾನೆ; ಸಾಧಾರಣ ಬ್ರಾಹ್ಮಸಮಾಜಕ್ಕೆ ಹೋಗಿಬರುತ್ತಾ ಇದ್ದಾನೆ. ಆತನ ಮಾತುಕತೆಗಳು ತೇಜಃಪುಂಜವಾಗಿವೆ; ಕಣ್ಣು ಉಜ್ವಲವಾಗಿವೆ; ಭಕ್ತನ ಅವಲೋಕನ.
ಭಗವದಭಿಮುಖರಾಗಿರುವವರನ್ನು ವಿಷಯಾಸಕ್ತ ಸಂಸಾರಿಗಳು ಯಾವ ರೀತಿ ನಿಂದಿಸುತ್ತಾರೆ ಎಂಬ ವಿಷಯವಾಗಿ ಮಾತುಕತೆ ಆಗಿರಬೇಕೆಂದು ಮಾಸ್ಟರ್ ಊಹಿಸಿದ. ಈ ಜಗತ್ತಿನಲ್ಲಿ ಅಂಥವರು ಎಷ್ಟೊಂದು ಅಸಂಖ್ಯರಾಗಿದ್ದಾರೆ, ಅವರೊಡನೆ ಹೇಗೆ ವ್ಯವಹರಿಸಬೇಕು ಎಂಬುದರ ವಿಷಯವಾಗಿ ಮಾತುಕತೆ ಆಗುತ್ತಿದೆ.
ಶ್ರೀರಾಮಕೃಷ್ಣರು ನರೇಂದ್ರನಿಗೆ: “ನರೇಂದ್ರ, ನೀನು ಏನು ಹೇಳುತ್ತೀಯೆ? ಪ್ರಾಪಂಚಿಕರು ಎಷ್ಟೊಂದಾಗಿ ಆಡಿಕೊಳ್ಳುತ್ತಾರೆ ಏನು ಕತೆ! ಆದರೆ ನೋಡು, ಆನೆ ನಡೆದುಹೋಗುವಾಗ ಅದರ ಹಿಂದೆ ಎಷ್ಟೊಂದು ಪ್ರಾಣಿಗಳು ಎಷ್ಟೊಂದು ವಿಧವಾಗಿ ಚೀತ್ಕಾರಮಾಡುತ್ತವೆ; ಆದರೂ ಅದು ಮಾತ್ರ ಹಿಂದಿರುಗಿ ನೋಡುವುದೇ ಇಲ್ಲ. ನಿನ್ನನ್ನೂ ಯಾರಾದರೂ ನಿಂದಿಸಿದರೆ ನಿನಗೇನನಿಸುತ್ತದೆ?”
ನರೇಂದ್ರ: “ನಾನು ಭಾವಿಸುತ್ತೇನೆ, ನಾಯಿ ‘ಬೊವ್, ಬೊವ್!’ ಅನ್ನುತ್ತಿದೆ.
ಶ್ರೀರಾಮಕೃಷ್ಣರು ನಗುತ್ತ: “ಬೇಡಪ್ಪ, ಅಷ್ಟು ದೂರ ಹೋಗಬೇಡ! (ನಗು.) ಭಗವಂತ ಸರ್ವಭೂತಗಳಲ್ಲಿಯೂ ಇದ್ದಾನೆ. ಆದರೆ ನೀನು ಒಳ್ಳೆಯವರೊಡನೆ ಹೆಚ್ಚಾಗಿ ಬೆರೆಯಬಹುದು; ಕೆಟ್ಟವರಿಂದ ಬಹಳ ದೂರದಲ್ಲೇ ಇರಬೇಕು. ಹುಲಿಯಲ್ಲಿಯೂ ಭಗವಂತನಿದ್ದಾನೆ. ಹಾಗೆಂದು ಅದನ್ನು ಆಲಿಂಗನ ಮಾಡಿಕೊಳ್ಳಲಾಗುವುದಿಲ್ಲ (ನಗು). ನೀನು ಕೇಳಬಹುದು: ‘ಹುಲಿಯೂ ಭಗವಂತನ ಆವಿರ್ಭಾವವೇ ಆಗಿರುವಾಗ ಅದನ್ನು ಕಂಡು ಯಾಕೆ ಹೆದರಿ ಓಡಬೇಕು? ಉತ್ತರ: ‘ಓಡಿಹೋಗು ಎಂಬುದಾಗಿ ಹೇಳುವವರೂ ಭಗವದಾವಿರ್ಭಾವಿಗಳೇ-ಅವರ ಮಾತಿಗೆ ಏಕೆ ಬೆಲೆ ಕೊಡಬಾರದು?’
“ಒಂದು ಕಥೆ ಕೇಳು. ಒಂದು ಕಾಡಿನಲ್ಲಿ ಒಬ್ಬ ಸಾಧು ತಪಸ್ಸುಮಾಡಿಕೊಂಡಿದ್ದ. ಆತನಿಗೆ ಅನೇಕ ಮಂದಿ ಶಿಷ್ಯರಿದ್ದರು. ಆತ ಒಂದು ದಿನ ಶಿಷ್ಯರಿಗೆ ಉಪದೇಶ ಕೊಟ್ಟ. ‘ಸರ್ವಭೂತಗಳಲ್ಲಿಯೂ ಭಗವಂತನಿದ್ದಾನೆ. ಇದನ್ನು ಅರಿತುಕೊಂಡು ಅವುಗಳಿಗೆ ನಮಸ್ಕಾರ ಮಾಡಬೇಕು.’ ಒಂದು ದಿನ ಒಬ್ಬ ಶಿಷ್ಯ ಹೋಮಕ್ಕೆ ಸಮಿತ್ತು ತರಲು ಕಾಡಿಗೆ ಹೋದ. ಅಲ್ಲಿ ಇದ್ದಕ್ಕಿದ್ದ ಹಾಗೆ ಒಂದು ಬೊಬ್ಬೆ ಕೇಳಿಬಂತು: ‘ಇಲ್ಲಿ ಇರೋರೆಲ್ಲ ಓಡಿಹೋಗಿಬಿಡಿ! ಒಂದು ಮದಿಸಿದ ಆನೆ ಬರುತ್ತಾ ಇದೆ!’ ಎಲ್ಲರೂ ಕಂಬಿಕಿತ್ತರು. ಆದರೆ ಶಿಷ್ಯ ಮಾತ್ರ ಕದಲಲಿಲ್ಲ. ಆತ ವಿಚಾರದಲ್ಲಿ ತೊಡಗಿದ: ‘ಆನೆಯೂ ಭಗವಂತನ ಒಂದು ರೂಪ. ಆದ್ದರಿಂದ ನಾನೇಕೆ ಹೆದರಿ ಓಡಿಹೋಗಲಿ?’ ಅಲ್ಲೇ ನಿಂತು ನಮಸ್ಕಾರ ಹಾಕಿ ಸ್ತೋತ್ರ ಮಾಡಲಾರಂಭಿಸಿದ. ಇದನ್ನು ನೋಡಿ ಮಾವುತ ಗಂಟಲು ಕಿತ್ತುಹೋಗುವ ಹಾಗೆ ಕಿರಿಚಿಕೊಳ್ಳಲಾರಂಭಿಸಿದ : ‘ಓಡಿ ಹೋಗು! ಓಡಿ ಹೋಗು!’ ಹಾಗೂ ಶಿಷ್ಯ ಕದಲಲೇ ಇಲ್ಲ. ಕೊನೆಗೆ ಆನೆ ಬಂದು ಅವನನ್ನು ಸೊಂಡಿಲಿನಿಂದ ಎತ್ತಿ ಒಂದು ಕಡೆಗೆ ಬಿಸಾಡಿ ಹೊರಟು ಹೋಯಿತು. ಶಿಷ್ಯನ ಮೈಯೆಲ್ಲಾ ಕಿತ್ತುಹೋಗಿ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದಿರಬೇಕಾಯಿತು. ಈ ಸಮಾಚಾರ ಕೇಳಿ ಗುರು ಮತ್ತು ಉಳಿದ ಶಿಷ್ಯರು ಕ್ಷಣಮಾತ್ರದಲ್ಲಿ ಅಲ್ಲಿಗೆ ಬಂದು ಆತನನ್ನು ಆಶ್ರಮಕ್ಕೆ ಎತ್ತಿಕೊಂಡು ಹೋದರು. ಔಷಧೋಪಚಾರಗಳ ನಂತರ ಆತನಿಗೆ ಪ್ರಜ್ಞೆ ಬಂತು. ಒಬ್ಬ ಆತನನ್ನು ಕೇಳಿದ: ‘ಆನೆ ಬರುತ್ತಿದೆ ಎಂಬುದಾಗಿ ಕೇಳಿಯೂ ಏಕೆ ಆ ಸ್ಥಳ ಬಿಟ್ಟು ಕದಲಲಿಲ್ಲ?’ ಆತ ಹೇಳಿದ: ‘ಗುರುಗಳು ನಮಗೆ ತಿಳಿಸಿದ್ದರು- ಭಗವಂತನೇ ಮನುಷ್ಯ ಜೀವ ಜಂತು ಇವೇ ಮೊದಲಾದ ರೂಪುಗಳನ್ನು ಧರಿಸಿದ್ದಾನೆ; ಆದ್ದರಿಂದ ಆತ ಆನೆಯ ರೂಪದಲ್ಲಿ ಬರುತ್ತಿರುವುದನ್ನು ನೋಡಿ ಆ ಸ್ಥಳ ಬಿಟ್ಟು ಕದಲಲಿಲ್ಲ.’ ಇದನ್ನು ಕೇಳಿ ಗುರು ಹೇಳಿದರು: ‘ಮಗು, ಭಗವಂತ ಆನೆಯ ರೂಪದಲ್ಲಿ ಬರುತ್ತಿದ್ದುದೇನೋ ನಿಜ. ಆದರೆ ಮಾವಟಿಗನ ರೂಪದಲ್ಲಿದ್ದ ಭಗವಂತ ತಿಳಿಸಿದ, ಅಲ್ಲಿ ನಿಲ್ಲಕೂಡದು ಎಂಬುದಾಗಿ, ಭಗವಂತನೇ ಎಲ್ಲಾ ರೂಪಗಳನ್ನು ಧರಿಸಿರುವುದರಿಂದ, ಆತನ ಮಾತಿಗೆ ಏಕೆ ನೀನು ಬೆಲೆ ಕೊಡಲಿಲ್ಲ? ಮಾವಟಿಗನ ರೂಪದಲ್ಲಿದ್ದ ಭಗವಂತನ ಮಾತಿಗೂ ನೀನು ಬೆಲೆ ಕೊಡಬೇಕಾಗಿತ್ತು.’ (ಎಲ್ಲರೂ ನಗುತ್ತಾರೆ.)
“ಶಾಸ್ತ್ರದಲ್ಲಿ ಹೇಳಿದೆ, ‘ಆಪೋ ನಾರಾಯಣಃ’ -ನೀರು ಭಗವಂತನ ಒಂದು ರೂಪು. ಆದರೆ, ಕೆಲವು ನೀರು ಪೂಜೆಗೆ ಅರ್ಹವಾಗಿವೆ, ಇನ್ನು ಕೆಲವು ಮುಖ ತೊಳೆಯಲು, ಮತ್ತೆ ಕೆಲವು ಮುಸುರೆ ತಿಕ್ಕಲು, ಮತ್ತೂ ಕೆಲವು ಬಟ್ಟೆ ಒಗೆಯಲು. ಇದನ್ನು ಕುಡಿಯುವುದಕ್ಕಾಗಲಿ, ದೇವರ ಪೂಜೆಗಾಗಲಿ ಉಪಯೋಗಿಸಲಾಗುವುದಿಲ್ಲ. ಹಾಗೇನೇ ಭಗವಂತ ಎಲ್ಲರ ಹೃದಯದಲ್ಲೂ-ಸಾಧು, ಅಸಾಧು, ಭಕ್ತ, ಅಭಕ್ತ ಎಲ್ಲರಲ್ಲೂ ಇದ್ದಾನೆ; ಆದರೆ ಅಸಾಧು, ಅಭಕ್ತ, ದುಷ್ಟ ಇವರೊಡನೆ ವ್ಯವಹರಿಸಕೂಡದು. ಸ್ನೇಹ ಬೆಳೆಸಕೂಡದು. ಕೆಲವರೊಡನೆ ಕೇವಲ ಒಂದೆರಡು ಮಾತುಕತೆ ಆಡಬಹುದು, ಆದರೆ ಇನ್ನು ಕೆಲವರೊಡನೆ ಹಾಗೂ ಮಾತನಾಡಕೂಡದು. ಅಂಥವರಿಂದ ಬಹಳ ದೂರದಲ್ಲೇ ಇದ್ದುಬಿಡಬೇಕು.”
ಒಬ್ಬ ಭಕ್ತ: “ಮಹಾಶಯರೆ, ದುಷ್ಟ ನಮಗೆ ಕೇಡು ತರಲು ಉದ್ಯುಕ್ತನಾಗಿದ್ದರೂ ಅಥವಾ ತಂದೇ ಬಿಟ್ಟರೂ ನಾವು ಸುಮ್ಮನೆ ಕೈ ಕಟ್ಟಿ ಕುಳಿತಿರಬೇಕೆ?”
ಶ್ರೀರಾಮಕೃಷ್ಣರು: “ಸಮಾಜದ ಮಧ್ಯೆ ಇರಬೇಕಾದರೆ, ದುಷ್ಟರ ಕೈಯಿಂದ ತಪ್ಪಿಸಿಕೊಳ್ಳಲು ಮನುಷ್ಯ ಸ್ವಲ್ಪ ತಮೋಗುಣವನ್ನು ಪ್ರದರ್ಶಿಸಬೇಕಾಗುತ್ತದೆ. ಆದರೆ ಮುಯ್ಯಿಗೆ ಮುಯ್ಯಿ ತೀರಿಸಲು ಹೋಗಬಾರದು.”
“ಒಂದು ಕಥೆ ಕೇಳು. ಕೆಲವು ಗೊಲ್ಲರ ಹುಡುಗರು ಒಂದು ಹುಲ್ಲುಗಾವಲಿನಲ್ಲಿ ದನ ಕಾಯುತ್ತಿದ್ದರು. ಅಲ್ಲಿ ಒಂದು ಭಯಂಕರ ವಿಷಸರ್ಪ ವಾಸವಾಗಿತ್ತು. ಆ ಹಾವಿಗೆ ಹೆದರಿ ಎಲ್ಲರೂ ಬಹಳ ಎಚ್ಚರಿಕೆಯಿಂದ ಇರುತ್ತಿದ್ದರು. ಒಂದು ದಿನ ಒಬ್ಬ ಬ್ರಹ್ಮಚಾರಿ ಆ ಹುಲ್ಲುಗಾವಲ ಮಾರ್ಗವಾಗಿ ಹೋಗುತ್ತಿದ್ದ. ಹುಡುಗರು ಓಡಿಹೋಗಿ ಆತನಿಗೆ ಹೇಳಿದರು: ‘ಮಹಾಶಯರೆ, ಈ ಮಾರ್ಗವಾಗಿ ಹೋಗಬೇಡಿ. ಅಲ್ಲಿ ಭಯಂಕರ ವಿಷಸರ್ಪವೊಂದಿದೆ.’ ಬ್ರಹ್ಮಚಾರಿ ಹೇಳಿದ: ‘ಇದ್ದರೆ ಇರಲಿ, ಗೆಳೆಯರಾ ನನಗೇನೂ ಹೆದರಿಕೆ ಇಲ್ಲ; ಮಂತ್ರ ಗೊತ್ತಿದೆ.’ ಹೀಗೆಂದು ಹೇಳಿ ಆತ ಹಾಗೇ ಮುಂದುವರಿದ. ಹೆದರಿಕೊಂಡು ಹುಡುಗರಾರೂ ಆತನನ್ನು ಹಿಂಬಾಲಿಸಲಿಲ್ಲ. ಸ್ವಲ್ಪ ದೂರ ಮುಂದುವರಿಯುವುದರೊಳಗೆ ಆ ಹಾವು ಹೆಡೆಬಿಚ್ಚಿ ಓಡಿಬರಲಾರಂಭಿಸಿತು. ಹತ್ತಿರಕ್ಕೆ ಬಂದೊಡನೆ ಆತ ಏನೊ ಒಂದು ಮಂತ್ರ ಪಠಿಸಿದ. ಹಾವು ಎರೆಹುಳುವಿನೋಪಾದಿಯಲ್ಲಿ ಆತನ ಪಾದದ ಬಳಿ ಸುಮ್ಮನೆ ಬಿದ್ದುಕೊಂಡಿತು. ಬ್ರಹ್ಮಚಾರಿ ಹೇಳಿದ: ‘ಕೇಳಿಲ್ಲಿ, ಪರರಿಗೆ ಹಿಂಸೆಮಾಡುತ್ತ ಏಕೆ ನೀನು ಸುತ್ತಾಡುತ್ತಿದ್ದೀಯೆ? ನಿನಗೆ ಮಂತ್ರ ಹೇಳಿಕೊಡುತ್ತೇನೆ. ಅದನ್ನು ಜಪಿಸಿದರೆ ನಿನಗೆ ಭಗವಂತನಲ್ಲಿ ಭಕ್ತಿಯುಂಟಾಗುತ್ತದೆ. ಆತನ ಸಾಕ್ಷಾತ್ಕಾರ ದೊರಕುತ್ತದೆ; ಹಿಂಸಾಪ್ರವೃತ್ತಿ ಬಿಟ್ಟು ತೊಲಗುತ್ತದೆ.’ ಹೀಗೆಂದು ಹೇಳಿ ಮಂತ್ರೋಪದೇಶ ಮಾಡಿದ. ಮಂತ್ರ ಪಡೆದ ನಂತರ ಆ ಹಾವು ಗುರುವಿಗೆ ಪ್ರಣಾಮಮಾಡಿ ಆತನನ್ನು ಕೇಳಿಕೊಂಡಿತು: ‘ಪೂಜ್ಯರೆ, ಯಾವ ರೀತಿ ಸಾಧನೆಯಲ್ಲಿ ತೊಡಗಬೇಕು, ದಯವಿಟ್ಟು ತಿಳಿಸಿ.’ ಗುರು ಹೇಳಿದ: ‘ಈ ಮಂತ್ರ ಜಪಿಸು, ಯಾರಿಗೂ ಹಿಂಸೆ ಮಾಡಬೇಡ.’ ಹೊರಡುವಾಗ ಹೇಳಿದ: ‘ಮತ್ತೆ ಬಂದು ನಿನ್ನನ್ನು ನೋಡುತ್ತೇನೆ.’
“ಹಾಗೇ ಕೆಲವು ದಿನ ಉರುಳಿದುವು. ಆ ಹುಡುಗರಿಗೆ ಗೊತ್ತಾಯಿತು, ಆ ಹಾವು ಕಡಿಯುವುದಿಲ್ಲ ಎಂಬುದಾಗಿ. ಕಲ್ಲು ಹೊಡೆದರು. ಆದರೂ ಅದು ಉದ್ರೇಕಗೊಳ್ಳಲಿಲ್ಲ. ಎರೆಹುಳುವಿನಂತೆ ವರ್ತಿಸಿತು. ಒಂದು ದಿನ ಒಬ್ಬ ಹುಡುಗ ಅದರ ಹತ್ತಿರಕ್ಕೆ ಹೋಗಿ ಬಾಲ ಹಿಡಿದು ಚೆನ್ನಾಗಿ ತಿರುಗಿಸಿ ನೆಲಕ್ಕೆ ಅಪ್ಪಳಿಸಿ ಒಂದು ಕಡೆಗೆ ಬಿಸಾಡಿಬಿಟ್ಟ. ಅದರ ಬಾಯಿಂದ ರಕ್ತ ಸುರಿಯಲಾರಂಭಿಸಿತು; ಪ್ರಜ್ಞೆ ತಪ್ಪಿ ಬಿದ್ದುಕೊಂಡಿತು. ಚಲನವಲನವೆಲ್ಲ ನಿಂತು ಹೋಯಿತು. ಆ ಹಾವು ಸತ್ತಿತೆಂದು ಭಾವಿಸಿ ಹುಡುಗರೆಲ್ಲರೂ ಹೊರಟು ಹೋದರು.”
“ರಾತ್ರಿ ಬಹಳವಾಗಿ ಮುಂದುವರಿದ ನಂತರ ಆ ಹಾವಿಗೆ ಪ್ರಜ್ಞೆ ಬಂತು. ಬಹಳ ಕಷ್ಟಪಟ್ಟು ಮೆತ್ತಮೆತ್ತನೆ ತೆವಳಿ ತನ್ನ ಹುತ್ತವನ್ನು ಸೇರಿಕೊಂಡಿತು. ಮೈಯೆಲ್ಲಾ ನಜ್ಜುಗುಜ್ಜಾಗಿ ಬಿಟ್ಟಿತ್ತು-ಚಲಿಸಲು ಶಕ್ತಿಯೇ ಇರಲಿಲ್ಲ. ಹಾಗೇ ಕೆಲವು ದಿನ ಕಳೆದುಹೋದುವು. ಅದು ಮೂಳೆಚಕ್ಕಳ ಆಗಿಹೋಯಿತು. ರಾತ್ರಿವೇಳೆ ತನ್ನ ಆಹಾರಕ್ಕಾಗಿ ಆಗಾಗ ಹೊರಕ್ಕೆ ಬರುತ್ತಿತ್ತು. ಹಗಲುವೇಳೆ ಹುಡುಗರಿಗೆ ಹೆದರಿ ಹುತ್ತದಿಂದ ಹೊರಕ್ಕೆ ಬರುತ್ತಲೇ ಇರಲಿಲ್ಲ. ಮಂತ್ರ ಪಡೆದಂದಿನಿಂದ ಯಾರಿಗೂ ಹಿಂಸೆ ಮಾಡುತ್ತಿರಲಿಲ್ಲ. ಕಸ, ಕಡ್ಡಿ, ಎಲೆ, ಮರದಿಂದ ಬಿದ್ದ ಹಣ್ಣು ಹಂಪಲು ಇವನ್ನು ತಿಂದೇ ಪ್ರಾಣಧಾರಣೆ ಮಾಡಿಕೊಳ್ಳುತ್ತಿತ್ತು.”
“ಸುಮಾರು ಒಂದು ವರ್ಷ ಕಳೆದ ನಂತರ ಆ ಬ್ರಹ್ಮಚಾರಿ ಅದೇ ಮಾರ್ಗವಾಗಿ ಬಂದು ಆ ಹಾವನ್ನು ಹುಡುಕಿದ. ಗೊಲ್ಲರ ಹುಡುಗರು ‘ಆ ಹಾವು ಸತ್ತುಹೋಯಿತು’ ಎಂದು ಹೇಳಿದರು. ಬ್ರಹ್ಮಚಾರಿ ನಂಬಲಿಲ್ಲ. ಆತನಿಗೆ ಗೊತ್ತಿತ್ತು, ಮಂತ್ರ ಸಿದ್ಧಿಯಾದ ಹೊರತು ಅದು ಸಾಯುವುದಿಲ್ಲ ಎಂಬುದು. ಹಾಗೇ ಹುಡುಕಿಕೊಂಡು ಅದು ವಾಸವಾಗಿದ್ದ ಸ್ಥಳಕ್ಕೆ ಹೋಗಿ ತಾನು ಕೊಟ್ಟಿದ್ದ ಹೆಸರಿನಿಂದ ಅದನ್ನು ಕೂಗಲಾರಂಭಿಸಿದ. ಗುರುವಿನ ಧ್ವನಿಯನ್ನು ಕೇಳಿ ಅದು ಹುತ್ತದಿಂದ ಹೊರಕ್ಕೆ ಬಂದು ಅತ್ಯಂತ ಶ್ರದ್ಧಾಭಕ್ತಿಯಿಂದ ಆತನಿಗೆ ಪ್ರಣಾಮ ಮಾಡಿತು. ಬ್ರಹ್ಮಚಾರಿ ಕೇಳಿದ: ‘ಕ್ಷೇಮವೇ?’ ಅದುಹೇಳಿತು: ‘ಹೌದು, ಕ್ಷೇಮದಿಂದಿದ್ದೇನೆ.’ ಬ್ರಹ್ಮಚಾರಿ ಹೇಳಿದ: ‘ಆದರೆ ನೀನೇಕೆ ಇಷ್ಟು ಕಂಗೆಟ್ಟು ಹೋಗಿದ್ದೀಯೆ?’ ಹಾವು ಹೇಳಿತು: ‘ಪೂಜ್ಯರೆ, ತಾವು ಉಪದೇಶವಿತ್ತಿದ್ದೀರಿ, ಯಾರಿಗೂ ಹಿಂಸೆಮಾಡಕೂಡದು ಎಂಬುದಾಗಿ. ಅದಕ್ಕಾಗಿ ಎಲೆ ಹಣ್ಣು ಹಂಪಲು ತಿನ್ನುತ್ತಿರುವುದರಿಂದ ಶರೀರ ಬಹುಶಃ ಕೃಶವಾಗಿ ತೋರುತ್ತಿರಬಹುದು.’
“ಅದರ ಹೃದಯದಲ್ಲಿ ಸತ್ತ್ವಗುಣ ಬೆಳೆದುಬಿಟ್ಟಿದ್ದರಿಂದ ಅದಕ್ಕೆ ಯಾರ ಮೇಲೂ ಕ್ರೋಧವಿರಲಿಲ್ಲ. ಆ ಗೊಲ್ಲರ ಹುಡುಗರು ತನ್ನನ್ನು ಕೊಂದುಹಾಕಲು ಯತ್ನಿಸಿದ್ದನ್ನು ಅದು ಮರೆತೇಬಿಟ್ಟಿತು.
“ಬ್ರಹ್ಮಚಾರಿ ಹೇಳಿದ: ‘ಕೇವಲ ಆಹಾರಾಭಾವದಿಂದಲೇ ಈ ದುರವಸ್ಥೆ ಉಂಟಾಗದು. ನಿಶ್ಚಯವಾಗಿ ಬೇರೆ ಏನೋ ಕಾರಣವಿರಬೇಕು, ಯೋಚಿಸಿ ನೋಡು.’ ಗೊಲ್ಲರ ಹುಡುಗರು ತನ್ನನ್ನು ಚೆನ್ನಾಗಿ ನೆಲಕ್ಕೆ ಅಪ್ಪಳಿಸಿದ್ದರ ಜ್ಞಾಪಕ ಅದಕ್ಕೆ ಬಂತು. ಅದು ಹೇಳಿತು. ‘ಪೂಜ್ಯರೆ, ಈಗ ನನ್ನ ಜ್ಞಾಪಕಕ್ಕೆ ಬಂತು; ಒಂದು ದಿನ ಆ ಗೊಲ್ಲರ ಹುಡುಗರು ನನ್ನನ್ನು ನೆಲಕ್ಕೆ ಅಪ್ಪಳಿಸಿದರು. ಏನೆಂದರೂ ಅವರಿನ್ನೂ ಅರಿಯದ ಹುಡುಗರು. ನನ್ನ ಮನಸ್ಸಿನಲ್ಲಿ ಎಂಥ ಬದಲಾವಣೆ ಆಗಿಬಿಟ್ಟಿದೆ ಎಂಬುದು ಅವರಿಗೆ ಗೊತ್ತಾಗಲಿಲ್ಲ. ನಾನು ಯಾರನ್ನೂ ಕಚ್ಚುವುದಿಲ್ಲ, ಬೇರೆ ಯಾವ ವಿಧದಿಂದಲೂ ಹಿಂಸೆ ಮಾಡುವುದಿಲ್ಲ ಎಂಬುದು ಅವರಿಗೆ ಹೇಗೆ ಗೊತ್ತಾಗಬೇಕು?’ ಬ್ರಹ್ಮಚಾರಿ ಬಯ್ದು ಹೇಳಿದ: ‘ಛೆ! ನೀನು ಎಂಥಾತಿಳಿಗೇಡಿ! ನಿನ್ನನ್ನು ನೀನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ನಿನಗೆ ಗೊತ್ತಿಲ್ಲವಲ್ಲ. ಕಚ್ಚಬೇಡ ಅಂತ ಹೇಳಿದೆನೇ ವಿನಾ ಬುಸುಗುಟ್ಟಬೇಡ ಅಂತ ಹೇಳಲಿಲ್ಲವಲ್ಲ. ಬುಸುಗುಟ್ಟಿ ಏಕೆ ಅವರನ್ನು ಹೆದರಿಸಬಾರದಾಗಿತ್ತು?’
“ದುಷ್ಟರ ಕಡೆ ಬುಸುಗುಟ್ಟಬೇಕು. ಕೇಡು ತರದೆ ಇರಲೆಂದು ಅವರಿಗೆ ಭಯ ತೋರಿಸಬೇಕು. ಅವರ ಮೇಲೆ ವಿಷ ಕಾರಬಾರದು; ಅನಿಷ್ಟ ತರಬಾರದು.”
“ಭಗವಂತನ ಸೃಷ್ಟಿಯಲ್ಲಿ ಹಲವಾರು ವಿಧದ ಜೀವ, ಜಂತು, ಮರ, ಗಿಡ ಇವೆ. ಪ್ರಾಣಿಗಳಲ್ಲಿ ಒಳ್ಳೆಯವೂ ಇವೆ, ಕೆಟ್ಟವೂ ಇವೆ. ಹುಲಿಯಂಥ ಕ್ರೂರ ಮೃಗಗಳೂ ಇವೆ. ಮರಗಳಲ್ಲಿ ಕೆಲವು ಅಮೃತೋಪಮ ಹಣ್ಣು ಬಿಡುತ್ತವೆ. ಇನ್ನು ಕೆಲವು ಇವೆ, ಅವು ವಿಷಪೂರಿತ ಹಣ್ಣು ಬಿಡುತ್ತವೆ. ಅದೇ ರೀತಿಯಾಗಿ ಮನುಷ್ಯರಲ್ಲಿ ಒಳ್ಳೆಯವರೂ, ಕೆಟ್ಟವರೂ, ಸಾಧು, ಅಸಾಧು ಎಲ್ಲರೂ ಇದ್ದಾರೆ; ಸಂಸಾರಾಸಕ್ತರೂ ಇದ್ದಾರೆ, ಭಕ್ತರೂ ಇದ್ದಾರೆ.
“ಜೀವರಲ್ಲಿ ನಾಲ್ಕು ವಿಧ: ಬದ್ಧ, ಮುಮುಕ್ಷು, ಮುಕ್ತ, ನಿತ್ಯ.
“ನಿತ್ಯಜೀವರು: ನಾರದಾದಿಗಳು. ಇವರು ಈ ಪ್ರಪಂಚದಲ್ಲಿರುವುದು ಜೀವರ ಮಂಗಳಕ್ಕಾಗಿ, ಜೀವರಿಗೆ ಶಿಕ್ಷಣ ಕೊಡಲೋಸುಗ.”
“ಬದ್ಧಜೀವರು: ವಿಷಯಾಸಕ್ತರಾಗಿರುತ್ತಾರೆ, ಭಗವಂತನನ್ನು ಮರೆತು ಇರುತ್ತಾರೆ. ಮರೆತು ಕೂಡ ಭಗವಂತನನ್ನು ನೆನೆಯೋದಿಲ್ಲ.”
“ಮುಮುಕ್ಷುಜೀವರು ಎಂದರೆ, ಮುಕ್ತರಾಗಲು ಇಚ್ಛೆಪಡುವವರು. ಆದರೆ ಇವರಲ್ಲಿ ಕೆಲವರು ಜಯಶೀಲರಾಗುತ್ತಾರೆ, ಇನ್ನು ಕೆಲವರು ಆಗುವುದಿಲ್ಲ.”
“ಮುಕ್ತಜೀವರು:ಈ ಪ್ರಪಂಚದಲ್ಲಿ ಕಾಮಕಾಂಚನದಿಂದ ಬಂಧಿತರಾಗದವರು- ಉದಾಹರಣೆಗೆ ಸಾಧು ಮಹಾತ್ಮರು. ಇವರ ಹೃದಯದಲ್ಲಿ ವಿಷಯಬುದ್ಧಿ ಲೇಶಮಾತ್ರವೂ ಇರದು. ಸರ್ವದಾ ಹರಿಪಾದಪದ್ಮಚಿಂತನೆ ಮಾಡುತ್ತಿರುತ್ತಾರೆ.”
“ಮೀನು ಹಿಡಿಯಲು ಕೆರೆಗೆ ಬಲೆ ಹಾಕುತ್ತಾರೆ. ಕೆಲವು ಮೀನುಗಳು ಅಂಥ ಬುದ್ಧಿಶಾಲಿಗಳು, ಬಲೆಗೆ ಬೀಳುವುದೇ ಇಲ್ಲ. ಅವನ್ನು ನಿತ್ಯಜೀವರಿಗೆ ಹೋಲಿಸಬಹುದು. ಆದರೆ ಬಹುಭಾಗ ಮೀನು ಬಲೆಗೆ ಬೀಳುತ್ತವೆ. ಅವುಗಳಲ್ಲಿ ಕೆಲವು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತವೆ. ಅವನ್ನು ಮುಮುಕ್ಷುಜೀವರಿಗೆ ಹೋಲಿಸಬಹುದು. ಆದರೆ ಎಲ್ಲವೂ ತಪ್ಪಿಸಿಕೊಂಡು ಹೋಗಲಾರವು. ಎಲ್ಲೋ ಕೆಲವು ‘ಟಪಕ್, ಟಪಕ್’ ಅಂತ ಶಬ್ದಮಾಡಿ ಬಲೆಯಿಂದ ನೆಗೆದುಬಿಡುತ್ತವೆ. ಆಗ ಬೆಸ್ತ ಕೂಗಿಕೊಳ್ಳುತ್ತಾನೆ : ‘ನೋಡಲ್ಲಿ! ದೊಡ್ಡದೊಂದು ಮೀನು ತಪ್ಪಿಸಿಕೊಂಡು ಹೋಗುತ್ತಿರುವುದನ್ನು!’ ಆದರೆ ಬಲೆಗೆ ಬಿದ್ದ ಅಧಿಕಾಂಶ ತಪ್ಪಿಸಿಕೊಳ್ಳಲಾರವು; ತಪ್ಪಿಸಿಕೊಳ್ಳಲು ಪ್ರಯತ್ನವನ್ನೂ ಮಾಡುವುದಿಲ್ಲ. ಅದಕ್ಕೆ ಬದಲು ಬಲೆಯನ್ನು ಕಚ್ಚಿಕೊಂಡು ಕೆಸರಿನೊಳಕ್ಕೆ ಹೋಗಿ ಸುಮ್ಮನೆ ಯೋಚಿಸುತ್ತವೆ: ‘ಇನ್ನು ಭಯಪಡಬೇಕಾದ್ದೇನಿಲ್ಲ; ಸುರಕ್ಷಿತವಾಗಿದ್ದೇವೆ ಇಲ್ಲಿ’ ಅಂತ. ಆದರೆ ಅವಕ್ಕೆ ಗೊತ್ತಿಲ್ಲ, ಬೆಸ್ತ ‘ಸರ್’ ಅಂತ ಬಲೆ ಎಳೆದು ತಮ್ಮನ್ನು ಹೊರಕ್ಕೆ ಹಾಕುತ್ತಾನೆ ಎಂಬುದು. ಇವನ್ನೇ ಬದ್ಧ ಜೀವರಿಗೆ ಹೋಲಿಸಬಹುದು.
“ಬದ್ಧಜೀವರು ಈ ಪ್ರಪಂಚದಲ್ಲಿ ಕಾಮಕಾಂಚನದಿಂದಲೇ ಬದ್ಧರಾಗಿರುತ್ತಾರೆ. ಕೈಕಾಲುಗಳಿಗೆ ಬೇಡಿ. ಕಾಮಕಾಂಚನದಿಂದಲೇ ತಮಗೆ ಸುಖ ದೊರೆಯುತ್ತದೆ, ನಿರ್ಭಯರಾಗಿರಬಹುದು ಎಂಬುದಾಗಿ ಭಾವಿಸುತ್ತಾರೆ. ಅದರಿಂದಲೇ ಸರ್ವನಾಶ ಎಂಬುದು ಅವರಿಗೆ ಗೊತ್ತಿಲ್ಲ. ಬದ್ಧಜೀವ ಸಾಯುವಾಗ ಆತನ ಹೆಂಡತಿ ಹೇಳುತ್ತಾಳೆ : ‘ನೀವೇನೊ ಹೊರಟುಬಿಟ್ಟಿರಿ. ನನಗೇನು ಮಾಡಿಹೋಗುತ್ತ ಇದ್ದೀರಿ?’ ಮಾಯೆ ಅಂಥದು, ದೀಪ ಸ್ವಲ್ಪ ದಪ್ಪವಾಗಿ ಉರಿಯುತ್ತಿದ್ದರೆ ಬದ್ಧಜೀವ ಹೇಳುತ್ತಾನೆ: ‘ಎಣ್ಣೆಹೆಚ್ಚಾಗಿ ಖರ್ಚಾಗುತ್ತದೆ. ಬತ್ತಿ ಕಡಿಮೆ ಮಾಡು.’ ಆದರೆ ಆತ ಮಲಗಿರುವುದು ಮೃತ್ಯುಶಯ್ಯೆಯಲ್ಲಿ!
“ಬದ್ಧಜೀವರು ಭಗವಚ್ಚಿಂತನೆ ಮಾಡುವುದೇ ಇಲ್ಲ. ಸಮಯ ದೊರೆತರೆ ಕಾಡು ಹರಟೆ, ಇಲ್ಲದಿದ್ದರೆ ಕೆಲಸಕ್ಕೆ ಬಾರದ ಕೆಲಸ ಇವುಗಳಲ್ಲಿ ತೊಡಗುತ್ತಾರೆ. ‘ಏಕೆ ಹೀಗೆ’ ಎಂದು ಕೇಳಿದರೆ ಉತ್ತರ: ‘ಸುಮ್ಮನೆ ಕುಳಿತಿರಲಾಗುವುದಿಲ್ಲ, ಆಕಾಶಕ್ಕೆ ಏಣಿ ಹಾಕುತ್ತಾ ಇದ್ದೇವೆ.’ ಹಾಗೂ ಸಮಯ ಕಳೆಯದೆ ಇತ್ತು ಎಂದರೆ, ಇಸ್ಪೀಟಾಡಲು ಆರಂಭಿಸುತ್ತಾರೆ.”
ಕೊಠಡಿಯಲ್ಲಿ ನಿಶ್ಶಬ್ದತೆ ತಾಂಡವವಾಡುತ್ತಿದೆ.
ಒಬ್ಬ ಭಕ್ತ: “ಮಹಾಶಯರೆ, ಹಾಗಾದರೆ ಈ ವಿಧದ ಪ್ರಾಪಂಚಿಕ ಜೀವರ ಉದ್ಧಾರಕ್ಕೆ ಯಾವ ಮಾರ್ಗವೂ ಇಲ್ಲವೇ?”
ಶ್ರೀರಾಮಕೃಷ್ಣರು: “ನಿಶ್ಚಯವಾಗಿ ಇದೆ. ಆಗಾಗ ಸಾಧುಸಂಗ. ಆಗಾಗ ನಿರ್ಜನ ಪ್ರದೇಶದಲ್ಲಿ ಭಗವಚ್ಚಿಂತನೆ ಮಾಡುತ್ತಿರಬೇಕು. ಆತನನ್ನು ಪ್ರಾರ್ಥಿಸಬೇಕು: ‘ನನಗೆ ಶ್ರದ್ಧಾ ಭಕ್ತಿ ಕೊಡು’ ಎಂಬುದಾಗಿ, ಶ್ರದ್ಧೆಯುಂಟಾಗಿಬಿಟ್ಟಿತು ಎಂದರೆ ಎಲ್ಲವೂ ದೊರೆತ ಹಾಗೆ. ಶ್ರದ್ಧೆಗಿಂತ ಮಿಗಿಲಾದ್ದು ಯಾವುದೂ ಇಲ್ಲ.”
(ಕೇದಾರನಿಗೆ) “ಶ್ರದ್ಧೆಯ ಶಕ್ತಿ ಎಷ್ಟು ಜೋರಾದ್ದು ಗೊತ್ತೆ?ಪುರಾಣದಲ್ಲಿ ಹೇಳಿದೆ: ಸಾಕ್ಷಾತ್ ಪೂರ್ಣಬ್ರಹ್ಮ ಶ್ರೀರಾಮಚಂದ್ರ ಲಂಕೆಗೆ ಹೋಗಲು ಸೇತುವೆ ಕಟ್ಟಬೇಕಾಗಿ ಬಂತು. ಆದರೆ ಹನುಮಂತ ರಾಮನಾಮದಲ್ಲಿ ಶ್ರದ್ಧೆಯಿಟ್ಟು ಒಂದೇ ನೆಗೆತಕ್ಕೆ ಸಮುದ್ರ ದಾಟಿ ಆಚೆ ದಡ ತಲುಪಿದ! ಆತನಿಗೆ ಸೇತುವೆ ಏನೂ ಬೇಕಾಗಲಿಲ್ಲ.” (ಎಲ್ಲರೂ ನಗುತ್ತಿದ್ದಾರೆ.)
“ಒಮ್ಮೆ ಒಬ್ಬ ಸಮುದ್ರ ದಾಟಬೇಕಾಗಿತ್ತು. ವಿಭೀಷಣ ಒಂದು ಎಲೆಯ ಮೇಲೆ ರಾಮನಾಮ ಬರೆದು ಅದನ್ನು ಆತನ ಪಂಚೆ ಕೊನೆಗೆ ಕಟ್ಟಿ ಹೇಳಿದ: ‘ಏನೂ ಹೆದರಬೇಕಾಗಿಲ್ಲ, ಶ್ರದ್ಧೆಯಿಟ್ಟು ನೀರಿನ ಮೇಲೆ ನಡೆದುಹೋಗಿಬಿಡು. ಆದರೆ ನೋಡಿಕೊ-ಶ್ರದ್ಧೆ ಕಳೆದುಕೊಂಡೆಯೋ ಮುಳುಗಿಹೋಗಿಬಿಡುತ್ತೀಯೆ.’ ಆತ ನಿರಾಯಾಸವಾಗಿ ಸಮುದ್ರದ ಮೇಲೆ ನಡೆದುಹೋಗುತ್ತಿದ್ದ. ಆಗ ಆತನಿಗೆ ಅತ್ಯಂತ ಕುತೂಹಲ ಹುಟ್ಟಿತು. ಪಂಚೆ ಕೊನೆಯಲ್ಲಿ ಏನು ಕಟ್ಟಿದೆ ಒಮ್ಮೆ ನೋಡೋಣ ಎಂಬುದಾಗಿ. ಬಿಚ್ಚಿ ನೋಡುತ್ತಾನೆ, ಕೇವಲ ರಾಮನಾಮ ಬರೆದಿದೆ. ಆಗ ಅವನಿಗೆ ಭಾವನೆ ಬಂತು: ‘ಏನಿದು? ಬರೀ ರಾಮನಾಮ! ಶ್ರದ್ಧೆ ಕಳೆದುಕೊಳ್ಳುವುದೇ ತಡ, ಮುಳುಗಿಹೋದ.’
“ಯಾರಿಗೆ ಭಗವಂತನಲ್ಲಿ ಶ್ರದ್ಧೆ ಉಂಟಾಗಿದೆಯೊ, ಆತ ಮಹಾಪಾತಕಗಳನ್ನು ಮಾಡಿದ್ದರೂ-ಗೋ ಬ್ರಾಹ್ಮಣ ಸ್ತ್ರೀಹತ್ಯಾದಿಗಳನ್ನು ಮಾಡಿದ್ದರೂ-ಆ ಶ್ರದ್ಧೆಯ ಬಲದಿಂದ ಅಂಥಾ ದೊಡ್ಡ ದೊಡ್ಡ ಪಾಪಗಳಿಂದಲೂ ಮುಕ್ತನಾಗಿಬಿಡಲು ಸಾಧ್ಯ. ಆತ ಭಗವಂತನಿಗೆ ಹೇಳಿಬಿಟ್ಟಿದ್ದೇ ಆದರೆ: ‘ಹೇ ಭಗವಂತ ಇನ್ನು ಮುಂದೆ ಎಂದೂ ಇಂಥಾ ಕಾರ್ಯಗಳನ್ನು ಮಾಡುವುದಿಲ್ಲ’ ಅಂತ, ಆತ ಇನ್ನು ಹೆದರಬೇಕಾದ್ದೇನಿಲ್ಲ.”
ನಾ ಪಾಪಿಯಾದರೂ ನನ್ನ ಕಡೆಗಾಲದಲಿ
ನಿನ್ನ ಶ್ರೀನಾಮವನು ಜಪಿಸುತಿರಲು
ಮುಕ್ತಿಗೊಯ್ಯದೆ ನೀನು ಬಿಡುವಳೇನು?
ಸ್ತ್ರೀಹತ್ಯೆ ಪಶುಹತ್ಯೆ ಭ್ರೂಣ ಬ್ರಾಹ್ಮಣಹತ್ಯೆ
ಇನಿತೆಲ್ಲ ಪಾಪಗಳ ಮಾಡಿದ್ದರೂ
ನಿನ್ನ ಶ್ರೀಶುಭನಾಮ ನನ್ನ ದುರಿತವ ನೀಗಿ
ಬ್ರಹ್ಮಪದವಿಯ ಕಡೆಗೆ ಎತ್ತದೇನು?
ನರೇಂದ್ರನನ್ನು ತೋರಿಸಿ ಪರಮಹಂಸರು ಹೇಳುತ್ತಿದ್ದಾರೆ: ‘ಈ ಹುಡುಗ ನಿಮಗೆ ಗೊತ್ತಿದೆ. ಇಲ್ಲಿ ಹೀಗೆ ವರ್ತಿಸುತ್ತಿದ್ದಾನೆ. ತುಂಟ ಹುಡುಗ. ತಂದೆಯ ಬಳಿ ಬಹಳ ಸಾಧುಪ್ರಾಣಿ; ಜಗಲಿ ಮೇಲೆ ಆಟವಾಡುವಾಗ ಬೇರೆ ಮೂರ್ತಿ. ಇವರು ನಿತ್ಯಸಿದ್ಧರ ಗುಂಪಿಗೆ ಸೇರಿದವರು. ಎಂದಿಗೂ ಸಂಸಾರದ ಬಲೆಗೆ ಬೀಳರು. ಸ್ವಲ್ಪ ವಯಸ್ಸಾಗುವುದರೊಳಗೇ ಜಾಗೃತರಾಗಿಬಿಡುತ್ತಾರೆ. ನೇರವಾಗಿ ಭಗವಂತನ ಕಡೆಗೆ ಮುಂದುವರಿದು ಬಿಡುತ್ತಾರೆ. ಇವರು ಈ ಪ್ರಪಂಚದಲ್ಲಿ ಜನ್ಮತಳೆಯುವುದು ಲೋಕಶಿಕ್ಷಣಕ್ಕಾಗಿ. ಇವರಿಗೆ ಈ ಜಗತ್ತಿನದಾವುದೂ ರುಚಿಸವು. ಕಾಮಕಾಂಚನದಲ್ಲಿ ಎಂದಿಗೂ ಆಸಕ್ತರಾಗರು.
“ವೇದದಲ್ಲಿ ಹೋಮಾಪಕ್ಷಿ ಕತೆ ಇದೆ. ಅದು ಎತ್ತರದ ಆಕಾಶದಲ್ಲಿ ವಾಸಿಸುತ್ತದೆ. ಅಲ್ಲೇ ಮೊಟ್ಟೆಯಿಡುತ್ತದೆ. ಬಳಿಕ ಮೊಟ್ಟೆ ಬೀಳಲಾರಂಭಿಸುತ್ತದೆ-ಅದು ಅಷ್ಟೊಂದು ಎತ್ತರದಲ್ಲಿದೆ, ಅನೇಕ ದಿನಗಳವರೆಗೆ ಮೊಟ್ಟೆ ಬೀಳುತ್ತಲೇ ಇರುತ್ತದೆ. ಬೀಳುತ್ತ ಬೀಳುತ್ತ ಮೊಟ್ಟೆ ಬಿರಿದು ಮರಿಯಾಗುತ್ತದೆ. ಬಳಿಕ ಮರಿ ಬೀಳುತ್ತಲೇ ಇರುತ್ತದೆ. ಬೀಳುತ್ತ ಬೀಳುತ್ತ ಕಣ್ಣು ಬಿಡುತ್ತದೆ, ರೆಕ್ಕೆ ಬೆಳೆಯುತ್ತವೆ. ಕಣ್ಣು ಬಿಟ್ಟೊಡನೆ ಅದಕ್ಕೆ ಗೊತ್ತಾಗುತ್ತದೆ, ತಾನು ಕೆಳಕ್ಕೆ ಬೀಳುತ್ತಿರುವುದಾಗಿ; ನೆಲಕ್ಕೆ ಬಿದ್ದುದೇ ಆದರೆ ಒಮ್ಮೆಗೇ ಚೂರು ಚೂರಾಗಿ ಹೋಗುವುದಾಗಿ. ಒಡನೆಯೇ ಅದು ‘ಸೊಯ್ಞ್’ ಅಂತ ಎತ್ತರದಲ್ಲಿರುವ ತನ್ನ ತಾಯಿ ಕಡೆಗೆ ಹಾರಿಹೋಗಿಬಿಡುತ್ತದೆ.”
ನರೇಂದ್ರ ಈಗ ಕೊಠಡಿಯಿಂದ ಎದ್ದು ಹೊರಕ್ಕೆ ಹೋದ. ಪ್ರಾಣಕೃಷ್ಣ, ಕೇದಾರ, ಮಾಸ್ಟರ್ ಇತ್ಯಾದಿ ಅನೇಕ ಮಂದಿ ಕುಳಿತುಕೊಂಡಿದ್ದಾರೆ.
ಶ್ರೀರಾಮಕೃಷ್ಣರು: “ನೋಡಿ, ನರೇಂದ್ರ ಹಾಡುವುದರಲ್ಲಿ, ಬಾಜಿಸುವುದರಲ್ಲಿ, ಓದುವುದರಲ್ಲಿ ಎಲ್ಲದರಲ್ಲೂ ಚತುರ. ಅಂದು ಕೇದಾರನೊಡನೆ ತರ್ಕಮಾಡುತ್ತಿದ್ದ. ಆತನ ಮಾತುಕತೆಗಳನ್ನು ‘ಕಚ್, ಕಚ್’ ಅಂತ ಕತ್ತರಿಸಿ ತುಂಡು ಮಾಡಿಹಾಕಿಬಿಟ್ಟ. (ಎಲ್ಲರೂ ನಗುತ್ತಿದ್ದಾರೆ).
(ಮಾಸ್ಟರಿಗೆ) “ಇಂಗ್ಲಿಷಿನಲ್ಲಿ ತರ್ಕಶಾಸ್ತ್ರವಿದೆಯೇ?”
ಮಾಸ್ಟರ್: “ಹೌದು, ಇದೆ. ಅದಕ್ಕೆ ‘ಲಾಜಿಕ್’ ಅಂತ ಹೆಸರು.”
ಶ್ರೀರಾಮಕೃಷ್ಣರು: “ಅದು ಏನು ಹೇಳುತ್ತದೆ ಹೇಳು ನೋಡೋಣ.”
ಮಾಸ್ಟರಿಗೆ ಈಗ ಕಷ್ಟಕ್ಕಿಟ್ಟುಕೊಂಡಿತು. ಆತ ಹೇಳಿದ; “ಅದರ ಒಂದು ಭಾಗ ತಿಳಿಸುತ್ತದೆ-ಸಾಧಾರಣ ಸಿದ್ಧಾಂತದಿಂದ ವಿಶೇಷ ಸಿದ್ಧಾಂತಕ್ಕೆ ಬರುವುದರ ಸಂಬಂಧವಾಗಿ. ಉದಾಹರಣೆಗೆ: ಮನುಷ್ಯರೆಲ್ಲರೂ ಸಾಯುತ್ತಾರೆ. ಪಂಡಿತರು ಮನುಷ್ಯರು. ಆದ್ದರಿಂದ ಪಂಡಿತರೂ ಸಾಯುತ್ತಾರೆ. ಅದರ ಇನ್ನೊಂದು ಭಾಗ ವಿಶೇಷ ಸಿದ್ಧಾಂತದಿಂದ ಸಾಧಾರಣ ಸಿದ್ಧಾಂತಕ್ಕೆ ಬರುವುದರ ಸಂಬಂಧವಾಗಿ. ಉದಾಹರಣೆಗೆ: ಈ ಕಾಗೆ ಕಪ್ಪು. ಆ ಕಾಗೆ ಕಪ್ಪು. ಕಣ್ಣಿಗೆ ಬೀಳುವ ಕಾಗೆಗಳೆಲ್ಲಾ ಕಪ್ಪೇ. ಆದ್ದರಿಂದ ಕಾಗೆಗಳೆಲ್ಲಾ ಕಪ್ಪೇ. ಈ ವಿಧದ ಸಿದ್ಧಾಂತ ಅವ್ಯಾಪ್ಯವಾಗಬಹುದು. ಹುಡುಕುತ್ತಾ ಹುಡುಕುತ್ತಾ ಬೇರೊಂದು ದೇಶದಲ್ಲಿ ಬಿಳಿ ಕಾಗೆ ಸಿಕ್ಕರೂ ಸಿಕ್ಕಿಬಿಡಬಹುದು. ಇನ್ನೊಂದು ಉದಾಹರಣೆ ಇದೆ: ಮಳೆಯಾದ ಕಡೆ ಮೋಡ ಇದೆ ಅಥವಾ ಇತ್ತು. ಆದ್ದರಿಂದ ಮೋಡದಿಂದ ಮಳೆ ಬರುತ್ತದೆ. ಮತ್ತೊಂದು ಉದಾಹರಣೆ: ಈ ಮನುಷ್ಯನಿಗೆ ಮೂವತ್ತೆರಡು ಹಲ್ಲು. ಆ ಮನುಷ್ಯನಿಗೆ ಮೂವತ್ತೆರಡು ಹಲ್ಲು. ಯಾವ ಮನುಷ್ಯನನ್ನು ನೋಡಿದರೂ ಮೂವತ್ತೆರಡು ಹಲ್ಲು. ಆದ್ದರಿಂದ ಎಲ್ಲಾ ಮನುಷ್ಯರಿಗೂ ಮೂವತ್ತೆರಡೂ ಹಲ್ಲು. ಈ ವಿಧದ ಸಿದ್ಧಾಂತಗಳ ವಿಚಾರ ಆಂಗ್ಲ ತರ್ಕಶಾಸ್ತ್ರದಲ್ಲಿ ಇದೆ.”
ಪರಮಹಂಸರು ಈ ಮಾತುಗಳನ್ನು ಕಿವಿಯ ಮೇಲೆ ಬರಿದೆ ಹಾಕಿಕೊಂಡಿದ್ದೆಷ್ಟೊ ಅಷ್ಟೆ. ಕೇಳುತ್ತ ಕೇಳುತ್ತ ಅನ್ಯಮನಸ್ಕರಾಗಿಬಿಟ್ಟಿದ್ದರು. ಆದ್ದರಿಂದ ಇದರ ಸಂಬಂಧವಾಗಿ ವಿಶೇಷವಾಗಿ ಏನೂ ಮಾತುಕತೆ ಮುಂದುವರಿಯಲಿಲ್ಲ.
ಮಾತುಕತೆ ಮುಗಿದನಂತರ ಭಕ್ತರು ಉದ್ಯಾನವನದಲ್ಲಿ ಅಲ್ಲಲ್ಲಿ ಸುತ್ತಾಡಲಾರಂಭಿಸಿದ್ದಾರೆ. ಮಾಸ್ಟರ್ ಪಂಚವಟಿಯ ಹತ್ತಿರ ಅಡ್ಡಾಡುತ್ತಿದ್ದಾನೆ. ಘಂಟೆ ಸಾಯಂಕಾಲ ಐದು. ಹಾಗೆ ಸ್ವಲ್ಪ ಹೊತ್ತು ಅಡ್ಡಾಡಿದ ನಂತರ ಪರಮಹಂಸರ ಕೊಠಡಿಗೆ ಬಂದ. ಅದರ ಉತ್ತರದಿಕ್ಕಿನ ಚಿಕ್ಕ ವರಾಂಡದಲ್ಲಿ ಒಂದು ಅದ್ಭುತ ದೃಶ್ಯ ಆತನ ಕಣ್ಣಿಗೆ ಬಿತ್ತು.
ಪರಮಹಂಸರು ಸ್ಥಿರವಾಗಿ ನಿಂತಿದ್ದಾರೆ. ನರೇಂದ್ರ ಹಾಡುತ್ತಿದ್ದಾನೆ. ಹತ್ತಿರವೇ ನಾಲ್ಕೈದು ಜನ ಭಕ್ತರೂ ನಿಂತಿದ್ದಾರೆ. ಪರಮಹಂಸರನ್ನು ಬಿಟ್ಟರೆ ಬೇರೆ ಯಾರೂ ಇಷ್ಟು ಮಧುರವಾಗಿ ಹಾಡುವುದನ್ನು ಆತ ಕೇಳಿರಲಿಲ್ಲ. ಹಾಗೇ ಪರಮಹಂಸರ ಕಡೆ ನೋಡಿ ಆಶ್ಚರ್ಯಚಕಿತನಾಗಿ ನಿಂತುಕೊಂಡ. ಅವರು ಎವೆಯಿಕ್ಕದೆ ನೆಟ್ಟಕಣ್ಣುಗಳಿಂದ ಸ್ಥಿರವಾಗಿ ನಿಂತಿದ್ದಾರೆ. ಉಸಿರಾಡುತ್ತಿರುವಂತೆಯೂ ತೋರಿಬರಲಿಲ್ಲ. ಕೇಳಲಾಗಿ ಒಬ್ಬ ಭಕ್ತ ಹೇಳಿದ, ಪರಮಹಂಸರು ಸಮಾಧಿಯಲ್ಲಿದ್ದಾರೆ ಎಂಬುದಾಗಿ. ಮಾಸ್ಟರ್ ಇಂಥದ್ದನ್ನು ಎಂದೂ ನೋಡಿಯೂ ಇರಲಿಲ್ಲ, ಕೇಳಿಯೂ ಇರಲಿಲ್ಲ. ವಿಸ್ಮಯಗೊಂಡು ಭಾವಿಸಲಾರಂಭಿಸಿದ: “ಭಗವಂತನ ಧ್ಯಾನದಲ್ಲಿರುವಾಗ ಮನುಷ್ಯ ಇಷ್ಟರಮಟ್ಟಿಗೆ ಬಾಹ್ಯಶೂನ್ಯನಾಗಲು ಸಾಧ್ಯವೆ? ಎಂಥಾ ಮಟ್ಟದ ಶ್ರದ್ಧಾಭಕ್ತಿಗಳಿದ್ದರೆ ಈ ರೀತಿ ಅವಸ್ಥೆ ಬರುತ್ತದೆಯೊ!”
ನರೇಂದ್ರ ಹಾಡುತ್ತಿದ್ದಾನೆ:
ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೊ
ನಿರಂತರ ಮೋಹನಮೂರುತಿಯನು ನೆನೆಯೊ,
ಅನುಪಮ ತೇಜನ, ಸುಂದರ ರೂಪನ
ಭಕ್ತರ ಎದೆಯಲಿ ರಂಜಿಪನ,
ಕೋಟಿಚಂದ್ರಸಮ ಕಾಂತಿಯ ನಾಚಿಸಿ
ಮಿಂಚಿನಂತೆ ನಮ್ಮೆದೆಯೊಳು ರಂಜಿಸಿ
ಮೋಹಿಪನ-
ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೊ
ನಿರಂತರ ಮೋಹನಮೂರುತಿಯನು ನೆನೆಯೊ!
ಹಾಡಿನ ಈ ಚರಣ ಹಾಡುತ್ತಿದ್ದಾಗ ಪರಮಹಂಸರ ಶರೀರ ಕಂಪಿಸಲಾರಂಭಿಸಿತು. ರೋಮಾಂಚನವಾಗಿ ಕಣ್ಣುಗಳಿಂದ ಪ್ರೇಮಾಶ್ರು ಸುರಿಯಲಾರಂಭಿಸಿತು. ಏನನ್ನೋ ನೋಡುತ್ತ ಆಗಾಗ ಮುಗುಳುನಗೆ ನಗುತ್ತಿದ್ದಾರೆ. “ಕೋಟಿಚಂದ್ರಸಮ ಕಾಂತಿಯ ನಾಚಿಸಿ” ಹೊಳೆಯುತ್ತಿದ್ದ ಭಗವಂತನ ಅನುಪಮ ರೂಪವನ್ನು ದರ್ಶನಮಾಡುತ್ತಿದ್ದಾರೆಯೇ? ಭಗವಂತನ ಚಿನ್ಮಯ ರೂಪದರ್ಶನ… ಎಂಬುದು ಇದೇ ಏನು? ಎಷ್ಟು ಸಾಧನೆ ಮಾಡಿದರೆ, ಎಷ್ಟು ತಪಸ್ಸು ಮಾಡಿದರೆ, ಎಂಥಾ ಶ್ರದ್ಧಾಭಕ್ತಿ ಇದ್ದರೆ ಈ ರೀತಿಯ ದರ್ಶನ ಪಡೆಯಲು ಸಾಧ್ಯವೊ!
ಹೃದಯಪದ್ಮದಲಿ ಪೂಜಿಸು ಆತನ
ಶಾಂತಮಾನಸದಿ ಜ್ಞಾನನಯನದಲಿ,
ಅಪೂರ್ವ ದರ್ಶನ ಮೋಹನನ!
ಮತ್ತೆ ಅದೇ ಭುವನಮೋಹನ ಮುಗುಳುನಗೆ, ಶರೀರ ಹಿಂದಿನಂತೆ ನಿಷ್ಪಂದ. ಅರ್ಧ ಮುಚ್ಚಿದ ಕಣ್ಣುಗಳು. ಯಾವುದೊ ಅಪೂರ್ವ ರೂಪದರ್ಶನಮಾಡುತ್ತ ಮಹದಾನಂದ ಸಾಗರದಲ್ಲಿ ಈಜಾಡುತ್ತಿರುವಂತೆ ಕಂಡಿತು.
ಈಗ ಆ ಹಾಡಿನ ಕೊನೆ ಭಾಗ ಬಂತು. ನರೇಂದ್ರ ಹಾಡುತ್ತಿದ್ದಾನೆ:
ಭಕ್ತಿಯೋಗದಾವೇಶದಿ ಮುಳುಗಿಪ
ಚಿದಾನಂದರಸ ಸಾಗರನ-
ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೊ
ನಿರಂತರ ಮೋಹನಮೂರುತಿಯನು ನೆನೆಯೊ!
ಈ ಸಮಾಧಿ, ಈ ಪ್ರೇಮಾನಂದ ಇವುಗಳ ದೃಶ್ಯ ಮಾಸ್ಟರ ಮನಸ್ಸಿನ ಮೇಲೆ ಅಗಾಧ ಮುದ್ರೆ ಒತ್ತಿಬಿಟ್ಟವು. ಇವನ್ನೇ ಚಿಂತಿಸುತ್ತ ಮನೆಗೆ ಹಿಂದಿರುಗುತ್ತಿದ್ದಾನೆ. ಆಗಾಗ ಆತನ ಹೃದಯವನ್ನು ಪ್ರೇಮೋನ್ಮತ್ತಕಾರಿ “ಭಕ್ತಿಯೋಗದಾವೇಶದಿ ಮುಳುಗಿಪ ಚಿದಾನಂದರಸ ಸಾಗರನ-” ಎಂಬ ನುಡಿ ತಾನುತಾನಾಗೇ ಮೀಟುತ್ತಿದೆ.
ಮಾರನೇ ದಿನವೂ ಮಾಸ್ಟರಿಗೆ ರಜವಿತ್ತು. ದಕ್ಷಿಣೇಶ್ವರಕ್ಕೆ ಅಪರಾಹ್ನ ಮೂರಕ್ಕೆ ಬಂದ. ಪರಮಹಂಸರು ತಮ್ಮ ಕೊಠಡಿಯಲ್ಲಿ ಕುಳಿತುಕೊಂಡಿದ್ದಾರೆ. ನೆಲದ ಮೇಲೆ ಮಂದಲಿಗೆ ಹಾಸಿದೆ. ಅದರ ಮೇಲೆ ನರೇಂದ್ರ, ಭವನಾಥ, ಇನ್ನೂ ಕೆಲವರು ಕುಳಿತಿದ್ದಾರೆ. ಅವರೆಲ್ಲರೂ ಹತ್ತೊಂಭತ್ತು ಇಪ್ಪತ್ತು ವರ್ಷದ ಯುವಕರು, ನಗುಮುಖದಿಂದ ಪರಮಹಂಸರು ತಮ್ಮ ಮಂಚದ ಮೇಲೆ ಕುಳಿತು ಅವರೊಡನೆ ಆನಂದದಿಂದ ಮಾತುಕತೆಯಾಡುತ್ತಿದ್ದಾರೆ.
ಮಾಸ್ಟರ್ ಕೊಠಡಿಯನ್ನು ಪ್ರವೇಶಿಸುವುದೇ ತಡ, ಪರಮಹಂಸರು ಗಟ್ಟಿಯಾಗಿ ನಗುತ್ತ ಯುವಕರಿಗೆ ಹೇಳುತ್ತಿದ್ದಾರೆ : “ಅಲ್ಲಿ ! ಮತ್ತೆ ಬಂದಿದ್ದಾನೆ.” ಅವರೂ ನಗಲಾರಂಭಿಸಿದರು, ಮಾಸ್ಟರ್ ಸಾಷ್ಟಾಂಗ ಪ್ರಣಾಮಮಾಡಿ ಕುಳಿತುಕೊಂಡ. ಹಿಂದೆ ಮಾಡುತ್ತಿದ್ದ, ಆಂಗ್ಲ ವಿದ್ಯಾಭ್ಯಾಸ ಪಡೆದವರ ಹಾಗೆ. ಆದರೆ ಇಂದು ಸಾಷ್ಟಾಂಗ ಪ್ರಣಾಮ ಮಾಡುವುದನ್ನು ಕಲಿತಿದ್ದಾನೆ.
ಈಗ ಪರಮಹಂಸರು ತಮ್ಮ ನಗುವಿಗೆ ಕಾರಣವೇನೆಂಬುದನ್ನು ಆ ಯುವಕರಿಗೆ ವಿವರಿಸಲಾರಂಭಿಸಿದರು. ಹೇಳುತ್ತಿದ್ದಾರೆ: “ನೋಡಿ, ಒಮ್ಮೆ ಒಬ್ಬ ಒಂದು ನವಿಲಿಗೆ ಅಪರಾಹ್ನ ನಾಲ್ಕು ಘಂಟೆ ಸಮಯಕ್ಕೆ ಅಫೀಮು ತಿನ್ನಿಸಿದ. ಮಾರನೆಯ ದಿನ ಸರಿಯಾಗಿ ನಾಲ್ಕು ಘಂಟೆಗೆ ನವಿಲು ಮತ್ತೆ ಬಂತು. ಅಫೀಮಿನ ತೆವಲು ಅದನ್ನು ಹಿಡಿದುಬಿಟ್ಟಿತ್ತು. ಅದಕ್ಕಾಗೇ ಆ ಸಮಯಕ್ಕೆ ಸರಿಯಾಗಿ ಅಫೀಮು ತಿನ್ನಲು ಬಂತು.” (ಎಲ್ಲರೂ ನಗುತ್ತಿದ್ದಾರೆ).
ಮಾಸ್ಟರ್ ತನ್ನೊಳಗೆ ತಾನೆ ಭಾವಿಸುತ್ತಿದ್ದಾನೆ, ಇದು ತನಗನ್ವಯಿಸುವ ಸರಿಯಾದ ಉದಾಹರಣೆ. ಮನೆಯಲ್ಲೂ ಇವರ ಯೋಚನೆ ಮಾಡದೆ ಒಂದು ಕ್ಷಣವೂ ಇರಲಾಗುತ್ತಿಲ್ಲ. ಮನಸ್ಸು ಇಲ್ಲೇ ನೆಲಸಿಬಿಟ್ಟಿದೆ. ಮತ್ತೆ ಬರುವವರೆಗೂ ನಿಮಿಷಗಳನ್ನು ಎಣಿಸುತ್ತಲೇ ಇರಬೇಕಾಗುತ್ತದೆ.
ಇಷ್ಟರಲ್ಲಿ ಪರಮಹಂಸರು, ಆ ಯುವಕರು ತಮ್ಮ ಸಮವಯಸ್ಕರೊ ಏನೊ ಎಂಬಂತೆ ಹುಡುಗಾಟವಾಡಲು ಆರಂಭಿಸಿಬಿಟ್ಟರು. ಹಾಸ್ಯದ ಲಹರಿ ಸುಮ್ಮನೆ ಏಳುತ್ತಿದೆ. ಆನಂದದ ಕೂಟವೇ ಆಗಿ ಕಾಣುತ್ತಿದೆ. ಮಾಸ್ಟರ್ ಆಶ್ಚರ್ಯಚಕಿತನಾಗಿ ಈ ಅದ್ಭುತ ಸೋಜಿಗವನ್ನು ನೋಡುತ್ತಿದ್ದಾನೆ. ಭಾವಿಸುತ್ತಿದ್ದಾನೆ: “ಇವರು ಪ್ರೇಮೋನ್ಮತ್ತರಾಗಿದ್ದುದನ್ನು ನಾನು ನೋಡಿದುದು ನಿನ್ನೆ ತಾನೆ? ಎಂದೂ ಕಾಣದ ಅಸದೃಶ ಪ್ರೇಮಾನಂದಸಾಗರದಲ್ಲಿ ಇವರು ಈಜಾಡುತ್ತಿರಲಿಲ್ಲವೆ? ಇಂದು ಪ್ರಾಕೃತರಂತೆ ವ್ಯವಹರಿಸುತ್ತಿದ್ದಾರಲ್ಲ! ಮೊದಲನೆ ದರ್ಶನದ ದಿನ ಉಪದೇಶ ಕೊಡುವಾಗ ನನ್ನನ್ನು ಒಂದು ವಿಧದ ತಿರಸ್ಕಾರ ದೃಷ್ಟಿಯಿಂದ ನೋಡಿದವರು ಇವರೇ ಅಲ್ಲವೆ? ಭಗವಂತನೊಬ್ಬನೇ ಸತ್ಯ, ಈ ಜಗತ್ತಿನ ಪ್ರತಿಯೊಂದೂ ಅನಿತ್ಯ ಎಂದು ಹೇಳಿದವರು ಇವರೇ ಅಲ್ಲವೇ? ಸಂಸಾರದಲ್ಲಿ ಶ್ರೀಮಂತರ ಮನೆ ದಾಸಿಯೋಪಾದಿಯಲ್ಲಿ ಇರಬೇಕು ಎಂದು ಬುದ್ಧಿವಾದವಿತ್ತವರು ಇವರೇ ಅಲ್ಲವೇ?”
ಪರಮಹಂಸರು ಆ ಯುವಕರೊಡನೆ ಬಹಳವಾಗಿ ಈಗ ತಮಾಷೆಯಲ್ಲಿರತೊಡಗಿದ್ದಾರೆ; ಆಗಾಗ ಮಾಸ್ಟರ ಕಡೆ ಕಣ್ಣು ಹಾಕುತ್ತಿದ್ದಾರೆ. ಮಾಸ್ಟರ್ ಮಂತ್ರಮುಗ್ಧನಾಗಿ ಸುಮ್ಮನೆ ಕುಳಿತಿರುವುದು ಅವರ ಕಣ್ಣಿಗೆ ಬಿತ್ತು. ಅವರು ರಾಮಲಾಲನನ್ನು ಸಂಬೋಧಿಸಿ ಹೇಳುತ್ತಿದ್ದಾರೆ: “ನೋಡು, ಈತನಿಗೆ ವಯಸ್ಸು ಸ್ವಲ್ಪ ಹೆಚ್ಚಾಗಿದೆಯಲ್ಲ, ಅದಕ್ಕಾಗಿ ಈ ಗಂಭೀರ ಮುದ್ರೆ. ಇವರು ಇಷ್ಟೊಂದು ತಮಾಷೆ ಮಾಡುತ್ತಿದ್ದಾರೆ, ಆದರೂ ಇವನು ಸುಮ್ಮನೆ ಕುಳಿತಿದ್ದಾನೆ.” (ಮಾಸ್ಟರಿಗೆ ಇಪ್ಪತ್ತೆಂಟು ವಯಸ್ಸು.)
ಹಾಗೇ ಮಾತಾಡುತ್ತ ಆಡುತ್ತ ಪರಮಭಕ್ತ ಹನುಮಂತನ ಮಾತು ಬಂತು. ಪರಮಹಂಸರ ಕೊಠಡಿಯಲ್ಲಿ ಆತನ ಒಂದು ಪಟವೂ ತೂಗುಹಾಕಿತ್ತು.
ಶ್ರೀರಾಮಕೃಷ್ಣರು ಹೇಳುತ್ತಿದ್ದಾರೆ: “ಆಲೋಚಿಸಿ ನೋಡಿ, ಹನುಮಂತನ ಭಾವ ಎಂಥದು ಎಂಬುದನ್ನು. ಧನ, ಮಾನ, ದೇಹಸುಖ ಯಾವುದೂ ಅವನಿಗೆ ಬೇಕಾಗಿರಲಿಲ್ಲ. ಬೇಕಾಗಿದ್ದುದು ಕೇವಲ ಭಗವಂತ ಮಾತ್ರ. ಸ್ಫಟಿಕದ ಕಂಬದೊಳಗಿಟ್ಟಿದ್ದ ಬ್ರಹ್ಮಾಸ್ತ್ರ ತೆಗೆದುಕೊಂಡು ಪರಾರಿಯಾಗುತ್ತಿದ್ದಾಗ, ಮಂಡೋದರಿ ವಿವಿಧ ಫಲಗಳಿಂದ ಆತನನ್ನು ಲೋಭಗೊಳಿಸಲು ಪ್ರಯತ್ನಿಸಿದಳು. ಆದರೆ ಹನುಮಂತ ಇದಕ್ಕೆಲ್ಲಾ ಮರುಳು ಹೋಗುವ ಮಗುವೇ! ಆಗ ಆತ ಹೀಗೆ ಹಾಡಿದ:
ನನಗಾವ ಫಲ ಬೇಕು
ಜನ್ಮ ಸಫಲವ ಗೈವ ಫಲವಿರಲು ನನಗೆ?
ಮೋಕ್ಷಫಲಗಳ ಬಿಡುವ
ಶ್ರೀರಾಮತರುವಿಹುದು ಎನ್ನ ಎದೆಯೊಳಗೆ!
ಶ್ರೀರಾಮ ಕಲ್ಪತರು ಮೂಲದಲಿ ನಾ ಕುಳಿತು
ಬೇಕಾದ ಫಲಗಳನು ಪಡೆಯುತಿರುವೆ
ಪ್ರತಿಫಲವ ನಾ ಬಯಸೆ, ಜಗದ ಕಹಿಫಲಗಳನು
ನಿಮ್ಮೊಂದಿಗೇ ಬಿಟ್ಟು ಮುನ್ನಡೆಯುವೆ!
ಪರಮಹಂಸರು ಈ ಹಾಡನ್ನು ಹಾಡುತ್ತಿದ್ದ ಹಾಗೇ ಸಮಾಧಿಸ್ಥರಾಗಿಬಿಟ್ಟಿದ್ದಾರೆ. ಮತ್ತೆ ನಿಷ್ಪಂದ ಹೃದಯ, ಸ್ಥಿಮಿತ ಲೋಚನ, ಸ್ಥಿರ ದೇಹ! ಕುಳಿತುಕೊಂಡಿದ್ದಾರೆ-ಫೋಟೋವಿನಲ್ಲಿ ಕುಳಿತಿರುವ ಹಾಗೆ. ಭಕ್ತರು ಈಗೊಂದು ಕ್ಷಣದ ಹಿಂದೆ ವಿನೋದದಲ್ಲಿ ತೊಡಗಿದ್ದವರು ಈಗ ಪರಮಹಂಸರ ಈ ಅದ್ಭುತ ಅವಸ್ಥೆಯನ್ನು ಏಕದೃಷ್ಟಿಯಿಂದ ನೋಡುತ್ತ ಕುಳಿತಿದ್ದಾರೆ. ಸಮಾಧಿ ಅವಸ್ಥೆಯನ್ನು ಮಾಸ್ಟರ್ ಈಗ ಎರಡನೆಯ ಸಲ ನೋಡುತ್ತಿದ್ದಾನೆ.
ಬಹಳ ಹೊತ್ತಾದ ಮೇಲೆ ಪರಮಹಂಸರ ಸಮಾಧ್ಯವಸ್ಥೆ ಪರಿವರ್ತನೆ ಹೊಂದಲಾರಂಭಿಸಿತು. ದೇಹ ಅಲುಗುತ್ತಿದೆ. ಮುಖದಲ್ಲಿ ಮಂದಹಾಸ ಹೊರಹೊಮ್ಮುತ್ತಿದೆ. ಇಂದ್ರಿಯ ಸಮೂಹ ತಮ್ಮ ತಮ್ಮ ಕೆಲಸ ಮಾಡಹತ್ತಿವೆ. ಕಣ್ಣಿನಿಂದ ಪ್ರೇಮಾಶ್ರುವನ್ನು ಸುರಿಸುತ್ತ ‘ರಾಮ,’ ‘ರಾಮ’ ಅಂತ ಉಚ್ಚರಿಸುತ್ತಿದ್ದಾರೆ. ಮಾಸ್ಟರ್ ಯೋಚಿಸಲಾರಂಭಿಸಿದ: ಈಗ ಕೆಲವು ನಿಮಿಷಗಳ ಹಿಂದೆ ಐದು ವರ್ಷದ ಹಸುಳೆಯ ಹಾಗೆ ಯುವಕರೊಡನೆ ತಮಾಷೆ ಮಾಡುತ್ತಿದ್ದವರು ಈ ಮಹಾಪುರುಷರೇ ಏನು!
ಪರಮಹಂಸರು ಪ್ರಕೃತಿಸ್ಥರಾಗಿ ಮತ್ತೆ ಸಾಮಾನ್ಯರ ಹಾಗೆ ವ್ಯವಹರಿಸಲಾರಂಭಿಸಿದರು. ಮಾಸ್ಟರ್ ಮತ್ತು ನರೇಂದ್ರನನ್ನು ಸಂಬೋಧಿಸಿ ಹೇಳುತ್ತಿದ್ದಾರೆ: “ನೀವಿಬ್ಬರೂ ಇಂಗ್ಲಿಷಿನಲ್ಲಿ ಸಂಭಾಷಿಸಿ, ವಾದಮಾಡಿ. ನಾನು ಆಲಿಸುತ್ತೇನೆ.” ಈ ಮಾತನ್ನು ಕೇಳಿ ಮಾಸ್ಟರ್ ನರೇಂದ್ರ ಇಬ್ಬರೂ ನಗುತ್ತಿದ್ದಾರೆ. ಇಬ್ಬರೂ ಸ್ವಲ್ಪಹೊತ್ತು ಸಂಭಾಷಣೆ ಮಾಡಿದರು-ಆದರೆ ಬಂಗಾಳಿಯಲ್ಲಿ. ಪರಮಹಂಸರೆದುರಿಗೆ ಮಾಸ್ಟರ್ ವಾದವಿವಾದದಲ್ಲಿ ತೊಡಗುವುದು ಎಂದಿಗೂ ನಡೆಯದ ಮಾತು. ಆತನ ತಾರ್ಕಿಕ ಪ್ರವೃತ್ತಿಗೆ ಪರಮಹಂಸರ ಕೃಪೆಯಿಂದ ಒಂದು ರೂಪದಲ್ಲಿ ಬೀಗಮುದ್ರೆ ಬಿದ್ದಿತ್ತು. ಆದ್ದರಿಂದ ಆತ ತರ್ಕ, ವಾದವಿವಾದ ಮಾಡುವ ಬಗೆ ಹೇಗೆ?ಪರಮಹಂಸರು ಬಲಾತ್ಕರಿಸಿದರೂ ಸಂಭಾಷಣೆ ಇಂಗ್ಲಿಷಿನಲ್ಲಿ ನಡೆಯಲಿಲ್ಲ.
ಘಂಟೆ ಐದು. ಕೆಲವು ಮಂದಿ ಭಕ್ತರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿ ಹೊರಟುಹೋದರು. ಕೇವಲ ಮಾಸ್ಟರ್ ಮತ್ತು ನರೇಂದ್ರ ಉಳಿದುಕೊಂಡಿದ್ದಾರೆ. ನರೇಂದ್ರ ಕಾಲು-ತಂಬಿಗೆ ತೆಗೆದುಕೊಂಡು ಹಂಸಪುಷ್ಕರಣಿ ಮತ್ತು ಸರ್ವೆ ಮರಗಳ ಕಡೆಗೆ ಕೈಕಾಲು ತೊಳೆಯಲು ಹೋದ. ಮಾಸ್ಟರ್ ದೇವಾಲಯಗಳ ಹತ್ತಿರ ಅಡ್ಡಾಡುತ್ತಿದ್ದಾನೆ. ಸ್ವಲ್ಪ ಹೊತ್ತಾದ ನಂತರ ಕುಟೀರದ ಮಾರ್ಗವಾಗಿ ಹಂಸಪುಷ್ಕರಣಿಯ ಕಡೆಗೆ ಮುಂದುವರಿದು ನೋಡುತ್ತಾನೆ-ಪುಷ್ಕರಣಿಯ ದಕ್ಷಿಣ ದಿಕ್ಕಿನ ಹಂತಗಳ ಮೇಲಿರುವ ಚೌಕಟ್ಟಿನ ಮೇಲೆ ಪರಮಹಂಸರು ನಿಂತಿದ್ದಾರೆ, ನರೇಂದ್ರ ಮುಖ ತೊಳೆದುಕೊಂಡು ಕೈಯಲ್ಲಿ ಕಾಲು-ತಂಬಿಗೆ ಹಿಡಿದುಕೊಂಡು ನಿಂತಿದ್ದಾನೆ; ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ: “ನೋಡು, ಇನ್ನೂ ಹೆಚ್ಚುಹೆಚ್ಚಾಗಿ ಇಲ್ಲಿ ಬಂದುಹೋಗುತ್ತಿರು. ಹೊಸದಾಗಿ ಬಂದಿದ್ದೀಯೆ. ಪರಿಚಯವಾದ ಹೊಸದರಲ್ಲಿ ಹೆಚ್ಚುಹೆಚ್ಚಾಗಿ ಭೇಟಿ ಮಾಡುವುದುಂಟು. ಉದಾಹರಣೆಗೆ ಹೊಸ ಪತಿ. (ನರೇಂದ್ರ, ಮಾಸ್ಟರ್ ಇಬ್ಬರೂ ನಗುತ್ತಾರೆ). ಏನು, ಬರುತ್ತೀಯೆ ತಾನೆ?”
ನರೇಂದ್ರ ಬ್ರಾಹ್ಮಸಮಾಜದ ಸದಸ್ಯನಾಗಿದ್ದುದರಿಂದ ತನ್ನ ವಾಗ್ದಾನದ ವಿಷಯವಾಗಿ ಬಹಳ ಎಚ್ಚರಿಕೆಯಿಂದ ಇದ್ದ. ನಗುತ್ತ ನಗುತ್ತ ಹೇಳುತ್ತಿದ್ದಾನೆ: “ಆಗಲಿ, ಪ್ರಯತ್ನ ಮಾಡುತ್ತೇನೆ.”
ಮೂವರೂ ಕುಟೀರದ ಮಾರ್ಗವಾಗಿ ಪರಮಹಂಸರ ಕೊಠಡಿ ಕಡೆ ಬರುತ್ತಿದ್ದಾರೆ. ಕುಟೀರದ ಹತ್ತಿರ ಪರಮಹಂಸರು ಮಾಸ್ಟರಿಗೆ ಹೇಳಲಾರಂಭಿಸಿದರು: “ನೋಡಿ, ರೈತರು ಜಾತ್ರೆಗೆ ಹೋರಿಗಳನ್ನು ಕೊಂಡುಕೊಂಡು ಬರಲು ಹೋಗುತ್ತಾರೆ. ಅವರು ಒಳ್ಳೆಯದಾವುದು, ಕೆಟ್ಟದ್ದಾವುದು ಎಂಬುದನ್ನು ಸರಿಯಾಗಿ ಗುರುತಿಸಬಲ್ಲರು. ಬಾಲದ ಹತ್ತಿರ ಕೈಯಿಟ್ಟು ನೋಡುತ್ತಾರೆ. ಕೆಲವು ಹೋರಿ ಆಗ ಸುಮ್ಮನೆ ಬಿದ್ದುಕೊಳ್ಳುತ್ತವೆ; ಅಂಥವನ್ನು ಕೊಂಡುಕೊಳ್ಳುವುದಿಲ್ಲ. ಬಾಲದ ಹತ್ತಿರ ಕೈಯಿಟ್ಟೊಡನೆಯೇ ಯಾವ ಹೋರಿ ಕೈಕಾಲು ಒದರಿ ಮೊರಗುಟ್ಟುತ್ತ ತಿವಿಯಲು ಬರುವುದೊ ಅಂಥವು ಅವರಿಗೆ ಹಿಡಿಸುತ್ತವೆ. ನರೇಂದ್ರ ಈ ಗುಂಪಿಗೆ ಸೇರಿದ ಹೋರಿ; ಆಂತರ್ಯದಲ್ಲಿ ಒಳ್ಳೇ ತಿರುಳಿದೆ.”
ಹೀಗೆಂದು ಹೇಳಿ ಪರಮಹಂಸರು ನಗಲಾರಂಭಿಸಿದರು. ಮತ್ತೆ ಹೇಳುತ್ತಿದ್ದಾರೆ : “ಕೆಲ ಕೆಲವರಿದ್ದಾರೆ, ಹಾಲಿನಲ್ಲಿ ನೆಂದ ಅವಲಕ್ಕಿ ಹಾಗೆ-ಸಾಹಸವಿಲ್ಲ, ಜೋರಿಲ್ಲ, ನಸೆನಸೆ ಅನ್ನುತ್ತಿರುತ್ತಾರೆ!”
ಸಾಯಂಕಾಲವಾಗಿದೆ. ಪರಮಹಂಸರು ಭಗವಚ್ಚಿಂತನೆ ಮಾಡುತ್ತಿದ್ದಾರೆ. ಮಾಸ್ಟರಿಗೆ ಹೇಳುತ್ತಿದ್ದಾರೆ: “ನೀನು ನರೇಂದ್ರನೊಡನೆ ಮಾತುಕತೆಯಾಡಿ ಅವನೆಂಥವನು ಎಂಬುದನ್ನು ನನಗೆ ಬಂದು ತಿಳಿಸು.”
ಸಾಯಂ ಮಂಗಳಾರತಿ ಮುಗಿಯಿತು. ಬಹಳ ಹೊತ್ತಾದ ನಂತರ ಮುಖಮಂಟಪದ ಪಶ್ಚಿಮ ಭಾಗದಲ್ಲಿ ನರೇಂದ್ರ ಮಾಸ್ಟರಿಗೆ ಸಿಕ್ಕಿದ. ಇಬ್ಬರೂ ಮಾತುಕತೆಗಳಾಡಲು ಶುರು ಮಾಡಿದರು. ನರೇಂದ್ರ ತಾನು ವಿಶ್ವವಿದ್ಯಾಲಯದಲ್ಲಿ ಓದುತ್ತಿರುವುದು, ಸಾಧಾರಣ ಬ್ರಾಹ್ಮ ಸಮಾಜದ ಸದಸ್ಯನಾಗಿರುವುದು ಇತ್ಯಾದಿಗಳ ವಿಷಯವಾಗಿ ಹೇಳಲಾರಂಭಿಸಿದ.
ಆಗಲೆ ಬಹಳವಾಗಿ ರಾತ್ರಿಯಾಗಿಬಿಟ್ಟಿದೆ. ಮಾಸ್ಟರ್ ಮನೆಗೆ ಹಿಂದಿರುಗಬೇಕಾಗಿದೆ. ಆದರೆ ಇಚ್ಛೆಯಾಗುತ್ತಿಲ್ಲ. ನರೇಂದ್ರನ ಹತ್ತಿರದಿಂದೆದ್ದು ಪರಮಹಂಸರನ್ನು ಹುಡುಕಲಾರಂಭಿಸಿದ. ಅವರ ಮಧುರವಾದ ಹಾಡು ಕೇಳಿ ಆತನ ಹೃದಯ ಮುಗ್ಧವಾಗಿ ಹೋಗಿದೆ; ಮತ್ತೆ ಕೇಳಬೇಕು ಅಂತ ಉತ್ಕಟೇಚ್ಛೆಯಾಗಿದೆ. ಹುಡುಕುತ್ತ ಹುಡುಕುತ್ತ ಕಾಳೀದೇವಾಲಯದ ಮುಂಭಾಗದಲ್ಲಿರುವ ನಾಟ್ಯಮಂದಿರದಲ್ಲಿ ಅವರು ಒಬ್ಬರೇ ಅಡ್ಡಾಡುತ್ತಿರುವುದನ್ನು ಕಂಡ. ದೇವಾಲಯದ ಭಗವತಿಯ ಎರಡು ಪಾರ್ಶ್ವಗಳಲ್ಲಿಯೂ ಬೆಳಕು ಉರಿಯುತ್ತಿದೆ, ಆ ಬೃಹತ್ ನಾಟ್ಯ ಮಂದಿರದಲ್ಲಿ ಎಲ್ಲೋ ಒಂದು ದೀಪ ಮಾತ್ರ ಉರಿಯುತ್ತಿದೆ. ಅದೂ ಕ್ಷೀಣವಾಗಿ. ಕತ್ತಲೆ ಬೆಳಕು ಮಿಶ್ರವಾದಾಗ ಹೇಗೆ ಕಾಣುತ್ತದೆಯೊ ಹಾಗೆ ಕಾಣುತ್ತದೆ ನಾಟ್ಯಮಂದಿರದ ಒಳಭಾಗ.
ಪರಮಹಂಸರ ಹಾಡು ಮಾಸ್ಟರನ್ನು ಮಂತ್ರಮುಗ್ಧ ಸರ್ಪದ ಹಾಗೆ ಮಾಡಿಬಿಟ್ಟಿದೆ. ಒಂದು ವಿಧವಾದ ಸಂಕೋಚದಿಂದ ಪರಮಹಂಸರನ್ನು ಕೇಳುತ್ತಿದ್ದಾನೆ: “ಮತ್ತೆ ತಾವು ಹಾಡುತ್ತೀರೇನು?” ಪರಮಹಂಸರು ಸ್ವಲ್ಪ ಹೊತ್ತು ಆಲೋಚಿಸಿ ಹೇಳುತ್ತಿದ್ದಾರೆ: “ಇಲ್ಲ, ಈ ದಿನ ಇಲ್ಲ.” ಬಳಿಕ ಏನನ್ನೋ ಜ್ಞಾಪಿಸಿಕೊಂಡವರಾಗಿ ಹೇಳುತ್ತಿದ್ದಾರೆ: ‘ಹಾಗಾದರೆ ಒಂದು ಕೆಲಸ ಮಾಡು. ನಾನು ಕಲ್ಕತ್ತದಲ್ಲಿರುವ ಬಲರಾಮನ ಮನೆಗೆ ಹೋಗಬೇಕಾಗಿದೆ. ನೀನೂ ಅಲ್ಲಿಗೆ ಬಾ, ಅಲ್ಲಿ ಹಾಡು ಕೇಳುವೆಯಂತೆ.’ ಮಾಸ್ಟರ್ ಒಪ್ಪಿಕೊಂಡ.
ಶ್ರೀರಾಮಕೃಷ್ಣರು: “ಬಲರಾಮನು ಗೊತ್ತೆ?”
ಮಾಸ್ಟರ್: “ಇಲ್ಲ, ಗೊತ್ತಿಲ್ಲ.”
ಶ್ರೀರಾಮಕೃಷ್ಣರು: “ಆತನ ಮನೆ ಗೋಸ್ಪಾರಾದಲ್ಲಿ.”
ಮಾಸ್ಟರ್: “ಒಳ್ಳೆಯದು, ಪತ್ತೆಮಾಡಿ ಬರುತ್ತೇನೆ.”
ಮಾಸ್ಟರೊಡನೆ ನಾಟ್ಯಮಂದಿರದಲ್ಲಿ ನಡೆಯುತ್ತ ನಡೆಯುತ್ತ ಇದ್ದಹಾಗೆ ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ: “ನಿನಗೊಂದು ಪ್ರಶ್ನೆ ಹಾಕಬೇಕೆಂದಿದ್ದೇನೆ. ನನ್ನ ಸಂಬಂಧವಾಗಿ ನಿನ್ನ ಅಭಿಪ್ರಾಯವೇನು?”
ಮಾಸ್ಟರ್ ಸುಮ್ಮನೆ ಇದ್ದಾನೆ. ಪರಮಹಂಸರು ಮತ್ತೆ ಆತನನ್ನು ಕೇಳಿದರು: “ನಿನಗೇನೆನಿಸುತ್ತದೆ? ನನಗೆ ಎಷ್ಟಾಣೆ ಜ್ಞಾನ ಇದೆ?”
ಮಾಸ್ಟರ್: “ಆಣೆ ಎಂದು ಹೇಳಿದಿರಲ್ಲ, ಅದು ನನಗೆ ಅರ್ಥವಾಗುತ್ತಿಲ್ಲ. ಆದರೆ ಇದು ಮಾತ್ರ ಸತ್ಯ: ಈ ವಿಧದ ಜ್ಞಾನವನ್ನೇ ಆಗಲಿ, ಪ್ರೇಮಭಕ್ತಿಯನ್ನೇ ಆಗಲಿ, ವಿಶ್ವಾಸವನ್ನೇ ಆಗಲಿ, ವೈರಾಗ್ಯವನ್ನೇ ಆಗಲಿ, ಔದಾರ್ಯವನ್ನೇ ಆಗಲಿ ಎಂದೂ ಎಲ್ಲೂ ನೋಡಿರಲಿಲ್ಲ.”
ಪರಮಹಂಸರು ನಗಲಾರಂಭಿಸಿದ್ದಾರೆ.
ಈ ರೀತಿ ಮಾತುಕತೆಗಳನ್ನಾಡಿದ ಮೇಲೆ ಮಾಸ್ಟರ್ ಪರಮಹಂಸರಿಗೆ ಪ್ರಣಾಮ ಮಾಡಿ ಅವರಿಂದ ಬೀಳ್ಕೊಂಡ. ಹೆಬ್ಬಾಗಿಲವರೆಗೆ ಹೋಗಿ ಏನನ್ನೋ ನೆನಸಿಕೊಂಡು ಮತ್ತೆ ನಾಟ್ಯಮಂದಿರದಲ್ಲಿದ್ದ ಪರಮಹಂಸರ ಹತ್ತಿರಕ್ಕೆ ಬಂದ. ಪರಮಹಂಸರು ಆ ಕ್ಷೀಣ ಬೆಳಕಿನಲ್ಲಿ ಏಕಾಕಿಯಾಗಿ ತಿರುಗಾಡುತ್ತಿದ್ದಾರೆ. ಒಬ್ಬರೇ-ನಿಸ್ಸಂಗರಾಗಿ. ಮೃಗರಾಜ ಅರಣ್ಯಮಧ್ಯದಲ್ಲಿ ಸ್ವೇಚ್ಛೆಯಿಂದ ಏಕಾಕಿ ತಿರುಗಾಡುತ್ತಿರುವುದೊ ಏನೊ ಎಂಬ ಹಾಗೆ! ಆತ್ಮಾರಾಮರು; ಸಿಂಹಕ್ಕೆ ಒಂಟಿಯಾಗಿರಲು, ಒಂಟಿಯಾಗಿ ತಿರುಗಲು ಇಚ್ಛೆ! ಅನಪೇಕ್ಷರು!
ಮಾಸ್ಟರ್ ಆಶ್ಚರ್ಯಚಕಿತನಾಗಿ ಮತ್ತೆ ಆ ಮಹಾಪುರುಷನನ್ನು ನೋಡಲಾರಂಭಿಸಿದ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ಮತ್ತೆ ಹಿಂತಿರುಗಿ ಬಂದುಬಿಟ್ಟೆ?”
ಮಾಸ್ಟರ್: “ಬಹುಶಃ ಅದು ದೊಡ್ಡಮನುಷ್ಯರ ಮನೆಯೇ ಆಗಿರಬೇಕು-ಬಿಡದೆ ಹೋಗಬಹುದು. ಅದಕ್ಕಾಗಿ ಹೋಗದಿರುವುದೇ ಮೇಲು. ಇಲ್ಲಿಗೇ ಬಂದು ತಮ್ಮನ್ನು ನೋಡುತ್ತೇನೆ.”
ಶ್ರೀರಾಮಕೃಷ್ಣರು: “ಏಕೆ, ಹಾಗೇಕೆ ಯೋಚಿಸುತ್ತಿದ್ದೀಯೆ? ನನ್ನ ಹೆಸರು ಹೇಳು. ನನ್ನನ್ನು ನೋಡಬೇಕು ಅಂತ ತಿಳಿಸು; ನನ್ನ ಹತ್ತಿರಕ್ಕೆ ಯಾರಾದರೂ ಕರೆದುಕೊಂಡು ಬರುತ್ತಾರೆ.”
ಮಾಸ್ಟರ್ ಒಪ್ಪಿಕೊಂಡು ಮತ್ತೆ ಅವರಿಂದ ಬೀಳ್ಕೊಂಡ.
1.ಶ್ರೀರಾಮಕೃಷ್ಣರ ಅಣ್ಣನ ಮಗ. ಕಾಳೀ ದೇವಾಲಯದಲ್ಲಿ ಅರ್ಚಕನಾಗಿದ್ದಾನೆ