೨ನೆ ಫೆಬ್ರವರಿ ೧೮೮೪, ಮಾಘ ಶುಕ್ಲ ಷಷ್ಠಿ, ಶನಿವಾರ
ಪರಮಹಂಸರು ತಮ್ಮ ಕೊಠಡಿಯಲ್ಲಿ ಕುಳಿತುಕೊಂಡು ರಾಖಾಲ, ಮಹಿಮಚರಣ, ಹಾಜರಾ ಮತ್ತು ಇನ್ನೂ ಕೆಲವು ಭಕ್ತರೊಡನೆ ಮಾತುಕತೆ ಆಡುತ್ತಿದ್ದಾರೆ. ಘಂಟೆ ಅಪರಾಹ್ನ ಮೂರು. ಮಾಸ್ಟರ್ ದಬ್ಬೆ, ಸಿಂಬಿ, ಮೆದುಬಟ್ಟೆ, ಪಟ್ಟಿ ಇವುಗಳೊಡನೆ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡುತ್ತಿದ್ದಾನೆ.
ಒಂದು ದಿನ ಪರಮಹಂಸರು ಭಾವಾವಿಷ್ಟರಾಗಿ ಸರ್ವೆಮರಗಳ ಕಡೆಗೆ ಹೋಗುತ್ತಿದ್ದಾಗ ಅವರ ಜೊತೆಯಲ್ಲಿ ಯಾರೂ ಇಲ್ಲದಿದ್ದುದರಿಂದ ಬೇಲಿಯ ಹತ್ತಿರ ಬಿದ್ದುಬಿಟ್ಟು ಅವರ ಎಡಗೈ ತೋಳಿನ ಒಂದು ಮೂಳೆ ಕೀಲು ತಪ್ಪಿಬಿಟ್ಟಿದೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನಿನಗೇನು ದೇಹಾರೋಗ್ಯ ಸರಿಯಾಗಿರಲಿಲ್ಲವೆ? ಈಗ ಸರಿಯಾಗಿದೆ ತಾನೆ?”
ಮಾಸ್ಟರ್: “ಹೌದು, ಈಗ ಸರಿಯಾಗಿದೆ.”
ರಮಹಂಸರು ಚಿಕ್ಕ ಮಂಚದ ಮೇಲೆ ಕುಳಿತುಕೊಂಡು ಮಹಿಮಚರಣನ ತೀರ್ಥಯಾತ್ರೆಯ ಸಂಬಂಧವಾಗಿ ಕೇಳುತ್ತಿದ್ದಾರೆ. ಆತ ಹನ್ನೆರಡು ವರ್ಷಗಳ ಹಿಂದೆ ಅನೇಕ ತೀರ್ಥಸ್ಥಾನಗಳಿಗೆ ಹೋಗಿದ್ದ.
ಮಹಿಮಚರಣ: “ನಾನು ಕಾಶಿಯ ‘ಸಿಕ್ರೋಲ’ ಎಂಬ ಭಾಗದ ಒಂದು ತೋಟದಲ್ಲಿ ಒಬ್ಬ ಬ್ರಹ್ಮಚಾರಿಯನ್ನು ನೋಡಿದೆ. ಆತ ಹೇಳಿದ, ತಾನು ಆ ತೋಟದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಇದ್ದರೂ ಅದರ ಯಜಮಾನ ಯಾರೆಂಬುದು ತನಗೆ ಗೊತ್ತಾಗಿಲ್ಲ ಎಂದು. ನನ್ನನ್ನು ಕೇಳಿದ, ನನಗೇನಾದರೂ ಸರ್ಕಾರಿ ಕೆಲಸವಿದೆಯೆ ಎಂದು. ಇಲ್ಲವೆಂದು ಹೇಳಿದಾಗ ಆತ ಕೇಳಿದ: ‘ಹಾಗಾದರೆ ನೀನೇನು ಪರಿವ್ರಾಜಕನೇ?’ ನರ್ಮದಾ ತೀರದಲ್ಲಿ ನಾನು ಒಬ್ಬ ಸಾಧುವನ್ನು ನೋಡಿದೆ. ಆತ ಮನಸ್ಸಿನೊಳಗೇ ಗಾಯತ್ರಿ ಜಪ ಮಾಡುತ್ತಿದ್ದ-ಶರೀರ ಪುಲಕಗೊಳ್ಳುತ್ತಿತ್ತು! ಆತ ಪ್ರಣವ ಮತ್ತು ಗಾಯತ್ರಿಯನ್ನು ಗಟ್ಟಿಯಾಗಿ ಉಚ್ಚರಿಸಿದಾಗಲಂತೂ, ಆತನ ಹತ್ತಿರ ಕುಳಿತಿದ್ದವರಿಗೂ ರೋಮಾಂಚನ, ಪುಲಕ ಆಗಿಬಿಡುತ್ತಿತ್ತು!”
ಪರಮಹಂಸರು ಬಾಲಕರ ಸ್ವಭಾವ. ಹಸಿವಾಗಿದ್ದುದರಿಂದ ಮಾಸ್ಟರನ್ನು ಕೇಳುತ್ತಿದ್ದಾರೆ: “ಎಲ್ಲಿ, ಏನಾದರೂ ತಂದಿದ್ದೀಯೇನು?” ರಾಖಾಲನ ಕಡೆ ನೋಡಿ ಪರಮಹಂಸರು ಸಮಾಧಿಸ್ಥರಾಗಿಬಿಟ್ಟರು.
ಈಗ ಪರಮಹಂಸರದು ಕ್ರಮೇಣ ಪ್ರಕೃತಿಸ್ಥರಾಗುತ್ತಿದ್ದಾರೆ. ಪೂರ್ಣ ಪ್ರಕೃತಿಸ್ಥರಾಗಲು ಹೇಳುತ್ತಿದ್ದಾರೆ: “ನನಗೆ ಜಿಲೇಬಿ ಬೇಕು, ಕುಡಿಯಲು ನೀರು ಬೇಕು.”
ಪರಮಹಂಸರು ಮಗುವಿನ ಹಾಗೆ ಅಳುತ್ತ ಅಳುತ್ತ ಭಗವತಿಗೆ ಹೇಳುತ್ತಿದ್ದಾರೆ: “ಹೇ, ಬ್ರಹ್ಮಮಯಿ, ನನಗೇಕೆ ಹೀಗೆ ಮಾಡಿಬಿಟ್ಟೆ? ತೋಳು ಬಹಳವಾಗಿ ನೋಯುತ್ತಿದೆಯಲ್ಲ. (ಭಕ್ತರ ಕಡೆ ನೋಡಿ) ಮತ್ತೆ ಸರಿಯಾಗಿಬಿಡುತ್ತದೆಯೆ?” ಭಕ್ತರು ಚಿಕ್ಕ ಮಗುವನ್ನು ಸಮಾಧಾನಪಡಿಸುವ ರೀತಿಯಲ್ಲಿ ಅವರಿಗೆ ಹೇಳುತ್ತಿದ್ದಾರೆ: “ಖಂಡಿತ, ಬೇಗ ಸರಿಯಾಗಿ ಬಿಡುತ್ತದೆ.”
ಶ್ರೀರಾಮಕೃಷ್ಣರು ರಾಖಾಲನಿಗೆ: “ನೀನು ಇಲ್ಲಿ ಇರುವುದು ನನ್ನ ಶರೀರ ನೋಡಿಕೊಳ್ಳುವುದಕ್ಕಾದರೂ, ಇದು ನಿನ್ನ ತಪ್ಪೇನಲ್ಲ. ಏಕೆಂದರೆ ನೀನು ನನ್ನ ಜೊತೆಯಲ್ಲಿ ಬಂದಿದ್ದರೂ ನೀನು ಆ ಬೇಲಿಯವರೆಗೆ ಬರಲಾಗುತ್ತಿರಲಿಲ್ಲ.”
ಶ್ರೀರಾಮಕೃಷ್ಣರು ಮತ್ತೆ ಭಾವಾವಿಷ್ಟರಾಗಿ ಹೇಳುತ್ತಿದ್ದಾರೆ: “ಓಂ ! ಓಂ ! ಓಂ ! ಹೇ ತಾಯೆ, ಇದೇನು ನಾನು ಹೇಳುತ್ತಿರುವುದು? ಹೇ ತಾಯೆ, ನನಗೆ ಬ್ರಹ್ಮಜ್ಞಾನವನ್ನು ಕೊಟ್ಟು ಬಾಹ್ಯ ಜ್ಞಾನಶೂನ್ಯನನ್ನಾಗಿ ಮಾಡಬೇಡ. ನನಗೆ ಬ್ರಹ್ಮಜ್ಞಾನವನ್ನು ಕೊಡಬೇಡ. ನಾನು ಕೇವಲ ನಿನ್ನ ಕೂಸು. ಆದ್ದರಿಂದ ನನಗೆ ಅಂಜಿಕೆ ಬಹಳ. ನನಗೆ ತಾಯಿ ಬೇಕು, ಬ್ರಹ್ಮಜ್ಞಾನಕ್ಕೆ ನನ್ನ ಕೋಟಿ ನಮಸ್ಕಾರಗಳು! ಯಾರು ಕೇಳುತ್ತಾರೊ ಅವರಿಗೆ ಅದನ್ನು ಕೊಡು. ಹೇ ಆನಂದಮಯಿ!”
ಪರಮಹಂಸರು ಉಚ್ಚಕಂಠದಿಂದ “ಆನಂದಮಯಿ! ಆನಂದಮಯಿ!” ಎಂದು ಹೇಳುತ್ತ ಅಳುತ್ತ ಅಳುತ್ತಲೇ ಹಾಡುತ್ತಿದ್ದಾರೆ:
ಈ ಎದೆಯ ಕೊರೆಯುವುದು ಒಂದೆ ವ್ಯಥೆ ನನಗೆ;
ನೀನೊಡನೆ ಇದ್ದರೂ ನಾನೆಚ್ಚರಿದ್ದರೂ
ಕಳ್ಳತನವಾಯ್ತಲ್ಲ ನನ್ನ ಮನೆಯೊಳಗೆ!
ಮತ್ತೆ ಪರಮಹಂಸರು ಭಗವತಿಗೆ ಹೇಳುತ್ತಿದ್ದಾರೆ: “ನಾನೇನಾದರೂ ತಪ್ಪು ಮಾಡಿದ್ದೇನೆಯೆ ತಾಯೆ? ನಾನು ಯಾವುದನ್ನಾದರೂ ಸ್ವತಃ ಮಾಡುತ್ತೇನೆಯೆ ತಾಯೆ? ಎಲ್ಲವನ್ನೂ ಮಾಡತಕ್ಕವಳು ನೀನೆ ಅಲ್ಲವೆ ತಾಯೆ? ನಾನು ಯಂತ್ರ, ನೀನು ಯಂತ್ರಿ.
(ರಾಖಾಲನಿಗೆ ನಗುತ್ತ) “ನೋಡಿಕೊ, ಕೆಳಕ್ಕೆ ಬಿದ್ದುಬಿಟ್ಟೀಯೆ! ಮೋಸಹೋಗಬೇಡ, ಮುನಿಸಿಕೊಂಡು.”
ಮತ್ತೆ ಭಗವತಿಯನ್ನು ಸಂಬೋಧಿಸಿ ಪರಮಹಂಸರು ಆಕೆಗೆ ಹೇಳುತ್ತಿದ್ದಾರೆ: “ತಾಯೆ, ನೋಯುತ್ತಿದೆ ಅಂತ ನಾನು ಅಳುತ್ತಿದ್ದೇನೆಯೆ? ಎಂದಿಗೂ ಇಲ್ಲ.
ಈ ಎದೆಯ ಕೊರೆಯುವುದು ಒಂದು ವ್ಯಥೆ ನನಗೆ;
ನೀನೊಡನೆ ಇದ್ದರೂ ನಾನೆಚ್ಚರಿದ್ದರೂ
ಕಳ್ಳತನವಾಯ್ತಲ್ಲ ನನ್ನ ಮನೆಯೊಳಗೆ!”
ಮಗು ಕಾಯಿಲೆಯಿಂದ ನರಳುತ್ತಿದ್ದರೂ ಒಮ್ಮೊಮ್ಮೆ ಅದು ಅದನ್ನು ಮರೆತು ನಗುವುದು, ಆಟವಾಡುವುದು, ಸುತ್ತಾಡುವುದು ಇವುಗಳನ್ನೆಲ್ಲ ಮಾಡುವುದಿಲ್ಲವೆ, ಹಾಗೆ ಪರಮಹಂಸರೂ ವರ್ತಿಸುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಸಚ್ಚಿದಾನಂದನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳದೆ ಇತ್ತು ಎಂದರೆ, ಜೀವನ ಬರಿದೆ ವ್ಯರ್ಥ. ವಿವೇಕ ವೈರಾಗ್ಯಗಳಂಥ ವಸ್ತು ಇನ್ನು ಬೇರೆ ಯಾವುದೂ ಇಲ್ಲ. ಸಂಸಾರಿಗಳ ಅನುರಾಗ ಬಹಳ ಕ್ಷಣಿಕ-ಕಾದ ಬಾಣಲೆಯ ಮೇಲೆ ಬಿದ್ದ ನೀರಿನ ಹನಿಯ ಹಾಗೆ. ಒಂದು ಹೂವನ್ನು ನೋಡಿ ಬಹುಶಃ ಆತ ಹೇಳಬಹುದು: ‘ಅಹಹ, ಭಗವಂತನ ಸೃಷ್ಟಿ ಎಷ್ಟು ಅದ್ಭುತವಾದದ್ದು!’
“ವ್ಯಾಕುಲತೆ ಬೇಕು. ಮಗ ತನ್ನ ಭಾಗದ ಹಿಸ್ಸೆಗಾಗಿ ಬಹಳವಾಗಿ ಪೀಡಿಸಿದ್ದೇ ಆದರೆ ಆಗ ತಂದೆ ತಾಯಿ ಇಬ್ಬರೂ ಆಲೋಚಿಸಿ, ಮಗ ಇನ್ನೂ ಪ್ರಾಪ್ತವಯಸ್ಕನಾಗದಿದ್ದರೂ, ಆತನಿಗೆ ಆತನ ಭಾಗದ ಹಿಸ್ಸೆಯನ್ನು ಕೊಟ್ಟುಬಿಡುತ್ತಾರೆ. ವ್ಯಾಕುಲತೆಯೊಂದಿತ್ತು ಎಂದರೆ, ಭಗವಂತ ನಮ್ಮ ಪ್ರಾರ್ಥನೆಯನ್ನು ಕೇಳಿಯೇ ಕೇಳುತ್ತಾನೆ. ಭಗವಂತ ಎಂದು ನಮ್ಮನ್ನು ಸೃಷ್ಟಿಸಿದನೋ ಅಂದೇ ನಾವು ಆತನ ಸ್ವತ್ತಿಗೆ ಹಕ್ಕುದಾರರಾಗಿಬಿಟ್ಟಿದ್ದೇವೆ. ಆತ ನಮ್ಮ ತಂದೆ ತಾಯಿ. ನಾವು ಆತನನ್ನು ಬಲಾತ್ಕರಿಸಿ ಕೇಳಬಹುದು. ನಾವು ಆತನನ್ನು ಕೇಳಬಹುದು: ‘ಕೊಡು ನಿನ್ನ ದರ್ಶನವನ್ನು. ಇಲ್ಲದೆ ಇದ್ದರೆ ನೋಡಿಕೊ ಕತ್ತು ಕತ್ತರಿಸಿಕೊಂಡು ಬಿಡುತ್ತೇನೆ.”’
ಪರಮಹಂಸರು ಭಗವತಿಯನ್ನು ಹೇಗೆ ಪ್ರಾರ್ಥಿಸಬೇಕು ಎಂಬುದನ್ನು ಈಗ ತೋರಿಸಿಕೊಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ನಾನು ಭಗವತಿಯನ್ನು ಈ ರೀತಿಯಾಗಿ ಪ್ರಾರ್ಥಿಸುತ್ತಿದ್ದೆ : ‘ಹೇ ತಾಯಿ! ಹೇ ಆನಂದಮಯಿ! ನಿನ್ನ ದರ್ಶನವನ್ನು ಕೊಡು. ಕೊಟ್ಟೇ ಕೊಡಬೇಕು!’ ಇನ್ನು ಕೆಲವು ವೇಳೆ ಪ್ರಾರ್ಥಿಸುತ್ತಿದ್ದೆ: ‘ಹೇ ದೀನನಾಥೆ! ಹೇ ಜಗನ್ನಾಥೆ! ನಾನು ನಿನ್ನ ಜಗತ್ತಿನಿಂದ ಹೊರಗೇನಿಲ್ಲ. ನಾನು ಜ್ಞಾನಹೀನ, ಸಾಧನಹೀನ, ಭಕ್ತಿಹೀನ. ನನಗೆ ಏನೆಂದರೆ ಏನೂ ಗೊತ್ತಿಲ್ಲ. ಕೃಪೆಮಾಡಿ ನಿನ್ನ ದರ್ಶನವನ್ನು ನನಗೆ ಕೊಟ್ಟೇ ಕೊಡಬೇಕು.’”
ಹೀಗೆ ಪರಮಹಂಸರು ಭಗವತಿಯನ್ನು ಯಾವ ರೀತಿಯಾಗಿ ಪ್ರಾರ್ಥನೆಮಾಡಬೇಕು ಎಂಬುದನ್ನು ಭಕ್ತರಿಗೆ ತೋರಿಸಿಕೊಟ್ಟರು. ಅವರೆಲ್ಲರ ಹೃದಯವು ಕರಗಿ ನೀರಾಗಿ ಹೋಯಿತು. ಮಹಿಮಚರಣನ ಕಣ್ಣುಗಳಿಂದ ನೀರು ಸುರಿಯಲಾರಂಭಿಸಿತು. ಪರಮಹಂಸರು ಆತನ ಕಡೆ ನೋಡಿ ಹಾಡುತ್ತಿದ್ದಾರೆ:
ನಂಬಿ ಕರೆದರೆ ತಾಯಿ ಓ ಎನ್ನದಿಹಳೇನೊ?
ನಿನ್ನ ತೊರೆದವಳೆಂತು ಇರಬಲ್ಲಳೊ?………
ಶಿವಪುರದಿಂದ ಅನೇಕ ಮಂದಿ ಭಕ್ತರು ಬಂದಿದ್ದಾರೆ. ಅವರು ಅಷ್ಟು ದೂರದಿಂದ ಶ್ರಮವಹಿಸಿ ಬಂದಿರುವುದನ್ನು ನೋಡಿ ಪರಮಹಂಸರ ಕೈಯಲ್ಲಿ ಸುಮ್ಮನೆ ಇರಲು ಆಗಲಿಲ್ಲ. ಮುಖ್ಯ ಮುಖ್ಯವಾದ ವಿಷಯಗಳನ್ನು ಅವರಿಗೆ ಹೇಳಲಾರಂಭಿಸಿದ್ದಾರೆ.
ಶ್ರೀರಾಮಕೃಷ್ಣರು: “ಭಗವಂತನೊಬ್ಬನೇ ಸತ್ಯ, ಉಳಿದುದೆಲ್ಲಾ ಅನಿತ್ಯ. ತೋಟ ಮತ್ತು ಅದರ ಯಜಮಾನ. ಭಗವಂತ ಮತ್ತು ಆತನ ಐಶ್ವರ್ಯ. ಜನರ ಕಣ್ಣೆಲ್ಲಾ ತೋಟದ ಕಡೆಗೇ. ಯಜಮಾನನನ್ನು ನೋಡಬೇಕೆಂಬುವವರು ಎಷ್ಟು ಅಲ್ಪ ಮಂದಿ!”
ಭಕ್ತ: “ನಿಜ, ಆದರೆ, ಮಾರ್ಗವೇನು?”
ಶ್ರೀರಾಮಕೃಷ್ಣರು: “ಸದಸದ್ವಿಚಾರ. ಭಗವಂತನೊಬ್ಬನೇ ಸತ್ಯ. ಉಳಿದುದೆಲ್ಲಾ ಅನಿತ್ಯ-ಇದರ ಸಂಬಂಧವಾಗಿ ಸರ್ವದಾ ವಿಚಾರ ಮಾಡುತ್ತಿರಬೇಕು. ವ್ಯಾಕುಲನಾಗಿ ಕರೆ.”
ಭಕ್ತ: “ಮಹಾಶಯರೆ, ಸಮಯವೆಲ್ಲಿ?”
ಶ್ರೀರಾಮಕೃಷ್ಣರು: “ಯಾರಿಗೆ ಸಮಯವಿರುವುದೊ, ಅವರು ಧ್ಯಾನ ಭಜನೆ ಮಾಡಲೇಬೇಕು. ಆದರೆ ಯಾರಿಗೆ ಸಮಯವಿಲ್ಲವೊ ಅವರು ದಿನಕ್ಕೆ ಎರಡು ವೇಳೆ ಹೃತ್ಪೂರ್ವಕವಾಗಿ ಭಗವಂತನಿಗೆ ನಮಸ್ಕಾರ ಹಾಕಲಿ. ಆತ ಅಂತರ್ಯಾಮಿ. ಆತನಿಗೆ ಗೊತ್ತಿದೆ. ಇವರು ಇನ್ನೇನು ತಾನೆ ಮಾಡಿಯಾರು, ಇವರಿಗೆ ಬೇಕಾದಷ್ಟು ಕೆಲಸಕಾರ್ಯಗಳಿವೆಯಲ್ಲ, ಪಾಪ ಎಂದು. ಆತನನ್ನು ಪ್ರಾರ್ಥಿಸಲು ನಿಮಗೆ ಸಮಯವಿಲ್ಲ; ಆದ್ದರಿಂದ ಆತನಿಗೆ ನಿಮ್ಮ ವಕಾಲತ್ತನ್ನು ವಹಿಸಿಬಿಡಿ. ಆದರೆ ನೋಡಿಕೊಳ್ಳಿ. ಆತನ ಸಾಕ್ಷಾತ್ಕಾರವನ್ನು ಪಡೆದುಕೊಳ್ಳದೆ ಹೋದಿರಿ ಎಂದರೆ, ಆತನ ದರ್ಶನವನ್ನು ಮಾಡಿಕೊಳ್ಳದೆ ಹೋದಿರಿ ಎಂದರೆ, ಜೀವನ ಬರಿದೆ ವ್ಯರ್ಥವಾದಂತೆ.”
ಒಬ್ಬ ಭಕ್ತ: “ನಿಮ್ಮ ದರ್ಶನ ಮಾಡಿದರೆ ಭಗವಂತನ ದರ್ಶನ ಮಾಡಿದ ಹಾಗೆಯೇ.”
ಶ್ರೀರಾಮಕೃಷ್ಣರು: “ಮತ್ತೆ ಆ ರೀತಿಯಾಗಿ ಎಂದಿಗೂ ಹೇಳಬೇಡ. ಅಲೆ ಗಂಗೆಗೆ ಸೇರಿದುದೇ ವಿನಾ, ಎಂದಿಗೂ ಗಂಗೆ ಅಲೆಗೆ ಸೇರಿದುದಲ್ಲ. ‘ನಾನು ಒಬ್ಬ ದೊಡ್ಡ ಮನುಷ್ಯ’ ‘ನಾನು ಅಂಥವನು’ ಈ ವಿಧದ ಅಹಂಕಾರಗಳೆಲ್ಲ ಹೋಗದ ಹೊರತು ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲಾಗುವುದಿಲ್ಲ. ‘ಅಹಂ’ ಎಂಬ ಗುಡ್ಡವನ್ನು ‘ಭಕ್ತಿ’ ಎಂಬ ನೀರಿನಿಂದ ನೆನೆಯಿಸಿ ನೆಲಸಮ ಮಾಡಿಬಿಡು.”
ಭಕ್ತ: “ಭಗವಂತ ಏಕೆ ನಮ್ಮನ್ನು ಸಂಸಾರದಲ್ಲಿ ಇಟ್ಟಿದ್ದಾನೆ?”
ಶ್ರೀರಾಮಕೃಷ್ಣರು: “ತನ್ನ ಸೃಷ್ಟಿಯನ್ನು ಮುಂದುವರಿಸಲು. ಅದು ಆತನ ಇಚ್ಛೆ. ಆತನ ಮಾಯೆ. ಕಾಮಕಾಂಚನಗಳಿಂದ ಮನುಷ್ಯನನ್ನು ಭ್ರಾಂತಿಗೊಳಿಸಿ ಇಟ್ಟಿದ್ದಾನೆ.”
ಭಕ್ತ: “ಏತಕ್ಕೆ ಆತ ನಮ್ಮನ್ನು ಭ್ರಾಂತಿಗೊಳಿಸಿ ಇಟ್ಟಿದ್ದಾನೆ? ಏಕೆ, ಆತ ಹಾಗೆ ಇಚ್ಛಿಸಿದ?”
ಶ್ರೀರಾಮಕೃಷ್ಣರು: “ಭಗವದಾನಂದವನ್ನು ಸವಿಯಲು ಒಮ್ಮೆ ಆತ ನಮ್ಮನ್ನು ಬಿಟ್ಟುಕೊಟ್ಟುದೇ ಆದರೆ, ಬಳಿಕ ಯಾರಿಗೂ ಈ ಸಂಸಾರವನ್ನು ನಡೆಯಿಸಿಕೊಂಡು ಹೋಗಲು ಇಚ್ಛೆಯಾಗುವುದಿಲ್ಲ. ಸೃಷ್ಟಿ ನಿಂತೇಹೋಗಿಬಿಡುತ್ತದೆ.
“ದಿನಸಿ ವ್ಯಾಪಾರಿ ತನ್ನ ಉಗ್ರಾಣದಲ್ಲಿ ದೊಡ್ಡ ದೊಡ್ಡ ಚೀಲಗಳಲ್ಲಿ ಅಕ್ಕಿಯನ್ನು ಕಟ್ಟಿ ಇಡುತ್ತಾನೆ. ಇಲಿಗಳು ಆ ಮೂಟೆಗಳ ಹತ್ತಿರ ಹೋಗದಿರಲೆಂದು ಅವುಗಳ ಹತ್ತಿರವೇ ಆತ ಒಂದು ಮೊರದಲ್ಲಿ ಪುರಿಯನ್ನು ಇಡುತ್ತಾನೆ. ಆ ಪುರಿ ಅವಕ್ಕೆ ಬಹಳ ಸಿಹಿಯಾಗಿ ತೋರುತ್ತದೆ. ಆದ್ದರಿಂದ ಅವು ಇಡೀ ರಾತ್ರಿಯೆಲ್ಲಾ ‘ಕರ್ಕ್, ಕರ್ಕ್’ ಅಂತ ಆ ಪುರಿಯನ್ನು ತಿನ್ನುತ್ತಲೇ ಇರುತ್ತವೆ. ಅಕ್ಕಿ ಮೂಟೆಗಳ ಕಡೆಗೆ ಅವು ಹೋಗುವುದೇ ಇಲ್ಲ. ಆದರೆ ನೋಡು! ಒಂದು ಸೇರು ಅಕ್ಕಿಯನ್ನು ಹುರಿದರೆ ಹದಿನಾರು ಸೇರು ಪುರಿಯಾಗುತ್ತದೆ. ಕಾಮಕಾಂಚನಗಳ ಆನಂದದೊಡನೆ ಹೋಲಿಸಿ ನೋಡಿದರೆ, ಭಗವದಾನಂದ ಎಷ್ಟು ಅಮಿತವಾದ್ದು! ಭಗವಂತನ ರೂಪವನ್ನು ಚಿಂತಿಸಿದುದೇ ಆದರೆ, ರಂಭೆ ತಿಲೋತ್ತಮೆಯರ ರೂಪ ಚಿತೆಯ ಭಸ್ಮವೇ ಆಗಿ ತೋರಿಬರುತ್ತದೆ.”
ಭಕ್ತ: “ಆತನ ಸಾಕ್ಷಾತ್ಕಾರವನ್ನು ಪಡೆಯಬೇಕೆಂಬ ವ್ಯಾಕುಲತೆ ನಮಗೇಕೆ ಉಂಟಾಗುತ್ತಿಲ್ಲ?”
ಶ್ರೀರಾಮಕೃಷ್ಣರು: “ಭೋಗಾಂತವಾಗದವರೆಗೆ ವ್ಯಾಕುಲತೆ ಉಂಟಾಗುವುದಿಲ್ಲ. ಕಾಮಕಾಂಚನಗಳ ಭೋಗವನ್ನು ಎಷ್ಟು ಅನುಭವಿಸಬೇಕಾಗಿರುವುದೊ ಅಷ್ಟನ್ನೂ ಅನುಭವಿಸದವರೆಗೆ ಜಗನ್ಮಾತೆಯ ಭಾವನೆಯೇ ಮನಸ್ಸಿನಲ್ಲಿ ಏಳದು. ಮಗು ಆಟದಲ್ಲಿ ನಿರತವಾಗಿರುವಾಗ ಅದಕ್ಕೆ ತಾಯಿ ಬೇಕಾಗದು. ಆಟ ಮುಗಿಯಿತು ಎಂದರೆ ಆಗ ಅದು ಹೇಳುತ್ತದೆ ‘ತಾಯಿಯ ಹತ್ತಿರಕ್ಕೆ ಹೋಗಬೇಕು.’ ಹೃದೂನ ಮಗು ಪಾರಿವಾಳಗಳೊಡನೆ ಆಟವಾಡುತ್ತಿತ್ತು. ಅದು ಅವನ್ನು ಕರೆಯುತ್ತಿತ್ತು. ‘ಬಾ! ತೀ, ತೀ!’ ಅವುಗಳೊಡನೆ ಆಟವಾಡಿ ಅದಕ್ಕೆ ತೃಪ್ತಿಯಾಗುವುದೇ ತಡ, ಅಳಲಾರಂಭಿಸಿತು. ಆಗ ಒಬ್ಬ ಅಪರಿಚಿತ ಅದರ ಹತ್ತಿರಕ್ಕೆ ಬಂದು ಹೇಳಿದ: ‘ಬಾ, ನಿನ್ನನ್ನು ನಿನ್ನ ತಾಯಿಯ ಹತ್ತಿರಕ್ಕೆ ಕರೆದುಕೊಂಡು ಹೋಗುತ್ತೇನೆ. ಅದು ಆತನ ಹೆಗಲು ಹತ್ತಿ ಯಾವ ಯೋಚನೆಯನ್ನೂ ಮಾಡದೆ ಹೊರಟೇಹೋಯಿತು.
“ಯಾರು ನಿತ್ಯಸಿದ್ಧರೊ ಅವರು ಸಂಸಾರಕ್ಕೆ ಕಾಲಿಡಬೇಕಾಗಿರುವುದಿಲ್ಲ. ಅವರ ಭೋಗವಾಸನೆ, ಹುಟ್ಟುವುದಕ್ಕೆ ಮುನ್ನವೇ ಪೂರ್ಣಗೊಂಡುಬಿಟ್ಟಿರುತ್ತದೆ.”
ಘಂಟೆ ಸಾಯಂಕಾಲ ಐದು. ಡಾಕ್ಟರ್ ಮಧುಸೂದನ ಬಂದಿದ್ದಾನೆ. ದಬ್ಬೆ ಪಟ್ಟಿ ಇವುಗಳನ್ನೆಲ್ಲ ಸಿದ್ಧಮಾಡಿಕೊಳ್ಳುತ್ತಿದ್ದಾನೆ. ಪರಮಹಂಸರು ಬಾಲಕನ ಹಾಗೆ ನಗುತ್ತ ಹೇಳುತ್ತಿದ್ದಾರೆ: ‘ನೀನು ಇಹಪರದ ಮಧುಸೂದನ.’
ಡಾಕ್ಟರ್ ಮಧುಸೂದನ ನಗುತ್ತ: “ನಾನು ಆ ಹೆಸರಿನ ಹೊರೆಯನ್ನು ಹೊತ್ತುಕೊಂಡಿರುವುದೆಷ್ಟೊ ಅಷ್ಟೆ.”
ಶ್ರೀರಾಮಕೃಷ್ಣರು ನಗುತ್ತ: “ಏನು, ಹೆಸರೇನು ಕಡಮೆಯಾದುದೆ? ಭಗವಂತನಿಗೂ ಆತನ ಹೆಸರಿಗೂ ವ್ಯತ್ಯಾಸವೇನಿಲ್ಲ. ಸತ್ಯಭಾಮೆ ಚಿನ್ನ, ರತ್ನ, ಮಾಣಿಕ್ಯ ಇವುಗಳಿಂದ ಶ್ರೀಕೃಷ್ಣನನ್ನು ತುಲಾಯಂತ್ರದಲ್ಲಿ ತೂಗಲು ಪ್ರಯತ್ನಮಾಡಿದಾಗ ಆಕೆ ತಕ್ಕಡಿ ತಟ್ಟೆಗಳನ್ನು ಒಂದು ಸಮತೂಕಕ್ಕೆ ತರಲಾಗಲಿಲ್ಲ. ಆಗ ರುಕ್ಮಿಣಿ ತುಳಸಿ ಎಲೆಯ ಮೇಲೆ ಕೃಷ್ಣನ ಹೆಸರನ್ನು ಬರೆದು ತೂಕದ ತಟ್ಟೆಗೆ ಹಾಕಿದಳು. ಒಡನೆ ತೂಕ ಸರಿಹೋಗಿಬಿಟ್ಟಿತು.”
ಡಾಕ್ಟರ್ ಮಧುಸೂದನ ಪರಮಹಂಸರ ತೋಳಿಗೆ ಪಟ್ಟಿ ಕಟ್ಟಲು ಈಗ ಸಿದ್ಧನಾಗಿದ್ದಾನೆ. ನೆಲದ ಮೇಲೆ ಹಾಸಿಗೆಯನ್ನು ಹಾಸಲಾಯಿತು. ಪರಮಹಂಸರು ನಗುತ್ತ ನಗುತ್ತ ಅದರ ಮೇಲೆ ಮಲಗಿಕೊಂಡರು. ಅವರು ರಾಗ ಎಳೆದು ಹೇಳುತ್ತಿದ್ದಾರೆ: “ಇದೇ ರಾಧೆಯ ಕೊನೆಯ ಅವಸ್ಥೆ. ಆದರೆ ಬೃಂದೆ ಹೇಳುತ್ತಿದ್ದಾಳೆ: ‘ಇನ್ನೂ ಏನೇನು ಆಗಬೇಕೊ?”
ಭಕ್ತರು ಪರಮಹಂಸರ ಸುತ್ತಲೂ ಕುಳಿತಿದ್ದಾರೆ. ಪರಮಹಂಸರು ಈಗ ಹಾಡುತ್ತಿದ್ದಾರೆ.
ಗೋಪಿಯರೆಲ್ಲರು ಒಂದುಗೂಡಿದರು ಸರೋವರದ ಸುತ್ತ.
ಈಗ ಪರಮಹಂಸರು ನಗುತ್ತಿದ್ದಾರೆ, ಭಕ್ತರೂ ನಗುತ್ತಿದ್ದಾರೆ.
ಪರಮಹಂಸರ ತೋಳಿಗೆ ಪಟ್ಟಿಯನ್ನು ಕಟ್ಟಿಯಾದ ಮೇಲೆ ಅವರು ಹೇಳುತ್ತಿದ್ದಾರೆ: “ನನಗೆ ಕಲ್ಕತ್ತದ ಡಾಕ್ಟರುಗಳಲ್ಲಿ ಅಷ್ಟಾಗಿ ಶ್ರದ್ಧೆಯಿಲ್ಲ. ಶಂಭುಮಲ್ಲಿಕನಿಗೆ ಸನ್ನಿ ಮುಚ್ಚಿಕೊಂಡಿದ್ದಾಗ ಡಾಕ್ಟರ್ ಸರ್ವಾಧಿಕಾರಿ ಹೇಳಿದ: ‘ಓ, ಇದು ಏನೂ ಅಲ್ಲ. ಔಷಧದ ಮತ್ತು.’ ಆತ ಹಾಗೆಂದ ಸ್ವಲ್ಪ ಹೊತ್ತಿನೊಳಗೇ ಶಂಭುಮಲ್ಲಿಕ ದೇಹತ್ಯಾಗಮಾಡಿಬಿಟ್ಟ.”
ಸಾಯಂಕಾಲವಾದ ನಂತರ ಎಲ್ಲಾ ದೇವಾಲಯಗಳಲ್ಲೂ ಸಾಯಂ ಮಂಗಳಾರತಿ ಮುಗಿದುಹೋಯಿತು. ಅಧರಸೇನ ಕಲ್ಕತ್ತದಿಂದ ಬಂದು ಪರಮಹಂಸರಿಗೆ ಪ್ರಣಾಮ ಮಾಡಿದ. ಮಹಿಮಚರಣ, ರಾಖಾಲ, ಮಾಸ್ಟರ್ ಕೊಠಡಿಯಲ್ಲಿ ಕುಳಿತಿದ್ದಾರೆ.
ಅಧರಸೇನ: “ನಿಮ್ಮ ದೇಹಾರೋಗ್ಯ ಹೇಗಿದೆ?”
ಶ್ರೀರಾಮಕೃಷ್ಣರು ಪ್ರೀತಿಯಿಂದ: “ಇಲ್ಲಿ ನೋಡು, ತೋಳಿಗೆ ಪೆಟ್ಟು ಬಿದ್ದು ಏನಾಗಿ ಬಿಟ್ಟಿದೆ. (ನಗುತ್ತ) ಕಣ್ಣಿಗೇ ಕಾಣಿಸುತ್ತಿದೆ. ಮತ್ತೆ ಹೇಗೆ ಅಂತಲಂತೆ!”
ಅಧರಸೇನ ಭಕ್ತರೊಡನೆ ನೆಲದ ಮೇಲೆ ಕುಳಿತುಕೊಂಡಿದ್ದಾನೆ. ಪರಮಹಂಸರು ಆತನಿಗೆ ಹೇಳುತ್ತಿದ್ದಾರೆ: “ನೀನು ಇದರ ಮೇಲೆ ಸ್ವಲ್ಪ ಕೈ ಆಡಿಸು.” ಅಧರಸೇನ ಚಿಕ್ಕಮಂಚದ ಕೊನೆಯಲ್ಲಿ ಕುಳಿತು ಅವರ ಪಾದಗಳನ್ನು ಒತ್ತುತ್ತಿದ್ದಾನೆ.
ಪರಮಹಂಸರು ಈಗ ಮಹಿಮಚರಣನೊಡನೆ ಮಾತಾಡುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಅಹೇತುಕ ಭಕ್ತಿ-ಇದನ್ನು ನೀನು ಅಭ್ಯಾಸಮಾಡುವುದಾದರೆ, ನಿನಗೆ ಬಹಳ ಒಳ್ಳೆಯದಾಗುತ್ತದೆ. ಈ ವಿಧದ ಭಕ್ತಿಯನ್ನು ಹೊಂದಿದ ಭಕ್ತ ಹೇಳುತ್ತಾನೆ: ‘ಹೇ ಭಗವಂತ, ಮುಕ್ತಿ, ಕೀರ್ತಿ, ಹಣ, ರೋಗ ಗುಣವಾಗುವಿಕೆ-ಇವು ಯಾವುವೂ ನನಗೆ ಬೇಡ, ನನಗೆ ನೀನೊಬ್ಬನೇ ಬೇಕು.’ ಇದಕ್ಕೇ ಅಹೇತುಕ ಭಕ್ತಿ ಅಂತ ಹೆಸರು. ಧನಿಕನ ಹತ್ತಿರ ಅನೇಕರು ಬರುತ್ತಾರೆ-ಅನೇಕ ಕಾಮನೆಗಳನ್ನು ಹೃದಯದಲ್ಲಿಟ್ಟುಕೊಂಡು. ಆದರೆ ಯಾರೇ ಆಗಲಿ, ಏನೂ ಬೇಕಾಗಿರದೆ, ಪ್ರೀತಿಯಿಂದ ಧನಿಕನನ್ನು ನೋಡಲು ಬಂದರೆ, ಆಗ ಧನಿಕನಿಗೆ ಆತನ ಮೇಲೆ ಪ್ರೀತಿಯುಂಟಾಗುತ್ತದೆ. ಪ್ರಹ್ಲಾದನದು ಅಹೇತುಕ ಭಕ್ತಿ-ಭಗವಂತನಲ್ಲಿ ಶುದ್ಧ ನಿಷ್ಕಾಮ ಪ್ರೀತಿ.”
ಮಹಿಮಚರಣ ಸುಮ್ಮನೆ ಕುಳಿತಿದ್ದಾನೆ. ಪರಮಹಂಸರು ಮತ್ತೆ ಆತನ ಕಡೆಗೆ ತಿರುಗಿ ಮಾತನಾಡುತ್ತಿದ್ದಾರೆ. “ಒಳ್ಳೇದು, ನಿನ್ನ ಭಾವಕ್ಕನುಗುಣವಾಗಿ ಕೆಲವು ಮಾತು ಹೇಳುತ್ತೇನೆ ಕೇಳು. ವೇದಾಂತದ ದೃಷ್ಟಿಯ ಪ್ರಕಾರ ಪ್ರತಿಯೊಬ್ಬನೂ ತನ್ನ ನಿಜಸ್ವರೂಪವನ್ನು ಅರಿತುಕೊಳ್ಳಬೇಕು. ಆದರೆ ‘ಅಹಂ’ ಎಂಬುದನ್ನು ತ್ಯಜಿಸಿದ ಹೊರತು ಅದು ಸಾಧ್ಯವಿಲ್ಲ. ‘ಅಹಂ’ ಎಂಬುದು, ನೀರು ಎರಡು ಭಾಗವಾಗಿದೆಯೋ ಏನೋ ಎಂಬಂತೆ ತೋರಿಸುವ ಕೋಲು ಇದ್ದ ಹಾಗೆ. ನಾನು ಪ್ರತ್ಯೇಕ ನೀನು ಪ್ರತ್ಯೇಕ ಎಂಬ ಬೋಧೆಯನ್ನು ತರುತ್ತದೆ. ಆದರೆ ಸಮಾಧಿಯಲ್ಲಿ ಈ ‘ಅಹಂ’ ಎಂಬುದು ಹೊರಟುಹೋದಾಗ ಬೋಧೆಯಾಗುತ್ತದೆ, ಬ್ರಹ್ಮ ನಮ್ಮ ಬೋಧೆಯ ಬೋಧ ಎಂಬುದಾಗಿ.
“ ‘ನಾನು ಮಹಿಮಚರಣ ಚಕ್ರವರ್ತಿ,’ ‘ನಾನು ವಿದ್ವಾನ್’ ಎಂಬ ಈ ‘ಅಹಂ’ ಅನ್ನು ತ್ಯಾಗಮಾಡಬೇಕು, ಆದರೆ ‘ವಿದ್ಯಾ ಅಹಂ’ ನಿಂದ ಯಾವ ತೊಂದರೆಯೂ ಬಾರದು. ಶಂಕರಾಚಾರ್ಯರು ಲೋಕಶಿಕ್ಷಣಕ್ಕಾಗಿ ‘ವಿದ್ಯಾ ಅಹಂ’ ಇಟ್ಟುಕೊಂಡಿದ್ದರು.
‘ಹೆಂಗಸರ ಸಂಬಂಧವಾಗಿ ಬಹಳ ಎಚ್ಚರಿಕೆಯಿಂದ ಇರದಿದ್ದರೆ ಬ್ರಹ್ಮಜ್ಞಾನ ದೊರೆಯದು. ಆದ್ದರಿಂದ ಸಂಸಾರದಲ್ಲಿ ಇದನ್ನು ದೊರಕಿಸಿಕೊಳ್ಳುವುದು ಬಹಳ ಕಠಿಣ. ಎಷ್ಟೇ ಬುದ್ಧಿವಂತನಾಗಿದ್ದರೂ, ಮಸಿ ಹಿಡಿದ ಕೊಠಡಿಯಲ್ಲಿದ್ದರೆ, ಶರೀರಕ್ಕೆ ಮಸಿ ಬಳಿದೇ ಬಳಿದುಕೊಳ್ಳುತ್ತದೆ. ಯುವತಿಯ ಸಹವಾಸ ಕಾಮವಿಹೀನನಲ್ಲೂ ಕಾಮೋದ್ರೇಕವನ್ನುಂಟು ಮಾಡಿಬಿಡುತ್ತದೆ.
“ಆದರೆ ಸಂಸಾರದಲ್ಲಿರುವ ಜ್ಞಾನಮಾರ್ಗಿ ಯಾವಾಗಲಾದರೂ ಒಮ್ಮೊಮ್ಮೆ ತನ್ನ ಸ್ವಂತ ಸತಿಯ ಸಹವಾಸ ಮಾಡುವುದೇನು ಕೆಡುಕಾದದ್ದೇನಲ್ಲ. ಸ್ವಾಭಾವಿಕ ದೇಹಬಾಧೆಯನ್ನು ತೀರಿಸಿಕೊಳ್ಳುವ ಹಾಗೆ. ಈ ಬಾಧೆಯನ್ನೂ ತೀರಿಸಿಕೊಂಡಂತಾಗುತ್ತದೆ. ಇದು ಲಾಡು ಜಿಲೇಬಿಯನ್ನು ಅಪರೂಪಕ್ಕೆ ಒಮ್ಮೊಮ್ಮೆ ತಿಂದ ಹಾಗೆ, (ಮಹಿಮಚರಣ ನಗುತ್ತಿದ್ದಾನೆ.) ಇದು ಗೃಹಸ್ಥರಿಗೆ ಅಷ್ಟು ಕೆಡುಕಾದದ್ದೇನಲ್ಲ.
“ಆದರೆ ಸಂನ್ಯಾಸಿಗೆ ಇದು ಬಹಳ ಕೆಡುಕಾದ್ದು. ಸಂನ್ಯಾಸಿ ಹೆಂಗಸಿನ ಚಿತ್ರಪಟವನ್ನೂ ನೋಡಕೂಡದು. ಸಂನ್ಯಾಸಿ ಹೆಂಗಸಿನ ಸಹವಾಸ ಮಾಡುವುದೆಂದರೆ, ಉಗುಳಿದ ಉಗುಳನ್ನು ಮತ್ತೆ ನುಂಗಿದ ಹಾಗೆ.
“ಹೆಂಗಸಿನೊಡನೆ ಕುಳಿತುಕೊಂಡು ಸಂನ್ಯಾಸಿ ಮಾತುಕತೆಯಾಡಕೂಡದು-ಆಕೆ ಭಕ್ತಶಿಖಾಮಣಿಯಾಗಿದ್ದರೂ ಕೂಡ. ಜಿತೇಂದ್ರಿಯನಾಗಿದ್ದರೂ ಮಾತುಕತೆಯಾಡಕೂಡದು.
“ಸಂನ್ಯಾಸಿ ಕಾಮಕಾಂಚನ ಎರಡನ್ನೂ ತ್ಯಜಿಸಬೇಕು. ಹೆಂಗಸರ ಪಟವನ್ನೂ ಹೇಗೆ ನೋಡಕೂಡದೊ, ಹಾಗೇ ಕಾಂಚನ, ಎಂದರೆ ಹಣವನ್ನೂ ಸ್ಪರ್ಶಮಾಡಕೂಡದು. ಹಣ ಇತ್ತು ಎಂದರೇ ಆತನಿಗೆ ಕೆಡುಕು, ಏಕೆಂದರೆ ಅದು ಲೆಕ್ಕಾಚಾರ, ದುಶ್ಚಿಂತೆ, ಧನಮದ, ಕ್ರೋಧ ಇವೇ ಮೊದಲಾದುವನ್ನು ಉಂಟುಮಾಡಿಬಿಡುತ್ತದೆ. ಇದು ಈಗತಾನೆ ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಸೂರ್ಯನನ್ನು ಇದ್ದಕ್ಕಿದ್ದ ಹಾಗೆ ಮೋಡ ಬಂದು ಮುಚ್ಚಿಕೊಳ್ಳುವ ಹಾಗೆ.
“ಅದಕ್ಕಾಗಿಯೇ ನನಗಾಗಿ ಮಾರ್ವಾಡಿ ಭಕ್ತರು ಹೃದಯನ ಹತ್ತಿರ ಹಣ ಇಡಲು ಇಚ್ಛಿಸಿದಾಗ ನಾನು ಅವರಿಗೆ ಹೇಳಿದೆ: ‘ಅದೆಲ್ಲ ಆಗುವುದಿಲ್ಲ-ಹತ್ತಿರವಿದ್ದರೇ ಆಸೆಯೇಳುತ್ತದೆ.’
“ಸಂನ್ಯಾಸಿಗೆ ಇಂಥ ಕಠಿಣ ನಿಯಮಗಳೇಕೆ? ಆತನ ಸ್ವಂತ ಮಂಗಳಕ್ಕೇನೋ ನಿಜ. ಆದರೆ ಲೋಕಶಿಕ್ಷಣಕ್ಕೂ ಕೂಡ. ಸಂನ್ಯಾಸಿ ತಾನು ನಿರ್ಲಿಪ್ತನಾಗಿದ್ದರೂ, ಜಿತೇಂದ್ರಿಯನಾಗಿದ್ದರೂ ಲೋಕಶಿಕ್ಷಣಕ್ಕಾಗಿ ಕಾಮಕಾಂಚನವನ್ನು ಈ ರೀತಿಯಾಗಿ ತ್ಯಜಿಸಬೇಕು.
“ಸಂನ್ಯಾಸಿಯ ನೂರಕ್ಕೆ ನೂರು ಭಾಗ ತ್ಯಾಗವನ್ನು ನೋಡಿದರೆ ತಾನೆ ಸಾಮಾನ್ಯ ಜನರಿಗೆ ಸಾಹಸವುಂಟಾಗುತ್ತದೆ? ಆಗ ಮಾತ್ರ ತಾನೆ ಅವರು ಕಾಮಕಾಂಚನ ತ್ಯಜಿಸಲು ಪ್ರಯತ್ನ ಮಾಡುತ್ತಾರೆ. ಸಂನ್ಯಾಸಿ ಈ ಆದರ್ಶವನ್ನು ಅವರ ಮುಂದೆ ಇಡಲಿಲ್ಲ ಎಂದರೆ ಬೇರೆ ಇನ್ನಾರಿಗೆ ತಾನೆ ಸಾಧ್ಯ?
“ಮೊದಲು ಭಗವಂತನ ಸಾಕ್ಷಾತ್ಕಾರವನ್ನು ದೊರಕಿಸಿಕೊಂಡರೆ ಮಾತ್ರ ಬಳಿಕ ಸಂಸಾರದಲ್ಲಿರಲು ಸಾಧ್ಯ. ಇದು ಹಾಲಿನಿಂದ ಬೆಣ್ಣೆ ತೆಗೆದು ನೀರಿನಲ್ಲಿ ಇಟ್ಟ ಹಾಗೆ. ಜನಕರಾಜ ಮೊದಲು ಬ್ರಹ್ಮಜ್ಞಾನವನ್ನು ಪಡೆದುಕೊಂಡು ಅನಂತರ ಸಂಸಾರದಲ್ಲಿದ್ದ.
“ಜನಕರಾಜ ಎರಡು ವಿಧದ ಕತ್ತಿಗಳನ್ನು ತಿರುಗಿಸುತ್ತಿದ್ದ-ಒಂದು ಜ್ಞಾನದ್ದು ಇನ್ನೊಂದು ಕರ್ಮದ್ದು. ಸಂನ್ಯಾಸಿ ಕರ್ಮತ್ಯಾಗ ಮಾಡುತ್ತಾನೆ. ಆದ್ದರಿಂದ ಆತನ ರಕ್ಷಣೆಗೆ ಒಂದೇ ಒಂದು ಕತ್ತಿ-ಜ್ಞಾನದ್ದು. ಜನಕರಾಜನ ಹಾಗೆ ಜ್ಞಾನವನ್ನು ಪಡೆದುಕೊಂಡ ಸಂಸಾರಿ, ಗಿಡದ ಕೆಳಗಡೆಯ ಹಣ್ಣು ಮೇಲುಗಡೆಯ ಹಣ್ಣು ಎರಡನ್ನೂ ತಿನ್ನಬಲ್ಲ. ಆತ ಸಾಧುಸೇವೆ, ಅತಿಥಿಸತ್ಕಾರ ಇವೆಲ್ಲವನ್ನೂ ಮಾಡಬಲ್ಲ. ನಾನು ಭಗವತಿಗೆ ಹೇಳುತ್ತಿದ್ದೆ: ‘ಹೇ ತಾಯೆ, ನನಗೆ ಒಣ ಸಾಧು ಆಗಲು ಇಚ್ಛೆ ಇಲ್ಲ.’
“ಬ್ರಹ್ಮಜ್ಞಾನ ದೊರೆತ ನಂತರ ಊಟೋಪಚಾರಗಳ ವಿಷಯದಲ್ಲಿ ಒಂದು ನಿರ್ದಿಷ್ಟ ನಿಯಮವೇನೂ ಇರದು. ಹಿಂದಿನ ಕಾಲದ ಬ್ರಹ್ಮಜ್ಞಾನವುಳ್ಳ ಋಷಿಗಳು ಬ್ರಹ್ಮಾನಂದದಲ್ಲೇ ಮಗ್ನರಾಗಿದ್ದುದರಿಂದ ಎಲ್ಲವನ್ನೂ ತಿಂದುಬಿಡುತ್ತಿದ್ದರು. ಹಂದಿ ಮಾಂಸ ಕೂಡ.
(ಮಹಿಮಚರಣನಿಗೆ) “ಒಟ್ಟಿನಲ್ಲಿ ಎರಡು ವಿಧದ ಯೋಗಗಳಿವೆ-ಕರ್ಮಯೋಗ, ಮನೋಯೋಗ-ಎಂದರೆ ಕರ್ಮದ ಮೂಲಕ ಯೋಗ, ಮನಸ್ಸಿನ ಮೂಲಕ ಯೋಗ.
“ಒಟ್ಟು ನಾಲ್ಕು ಆಶ್ರಮಗಳಿವೆ:ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸ. ಮೊದಲು ಮೂರು ಆಶ್ರಮಗಳಲ್ಲೂ ಕರ್ಮಮಾಡಬೇಕಾಗುತ್ತದೆ. ಸಂನ್ಯಾಸಿ ದಂಡ ಕಮಂಡಲುಧಾರಿಯಾಗಿ ಭಿಕ್ಷಾಪಾತ್ರೆಯನ್ನು ಹಿಡಿದುಕೊಳ್ಳಬೇಕಾಗುತ್ತದೆ. ಆತನು ಕೆಲವು ನಿತ್ಯಕರ್ಮಗಳನ್ನು ಮಾಡಿದರೂ ಮಾಡಬಹುದು. ಆದರೆ ಆತನ ಮನಸ್ಸು ಅವುಗಳಲ್ಲಿ ಆಸಕ್ತವಾಗಿರುವುದಿಲ್ಲ; ಅವುಗಳನ್ನು ತಾನು ಮಾಡುತ್ತಿದ್ದೇನೆ ಎಂಬ ಭಾವನೆಯೇ ಆತನಿಗಿರದು. ಕೆಲವು ಮಂದಿ ಸನ್ಯಾಸಿಗಳು ನಿತ್ಯಕರ್ಮ ಮಾಡುತ್ತಾರೆ-ಲೋಕ ಶಿಕ್ಷಣಕ್ಕಾಗಿ. ಗೃಹಸ್ಥರಿಗೇ ಆಗಲಿ ಅಥವಾ ಅನ್ಯ ಆಶ್ರಮಿಗಳಿಗೇ ಆಗಲಿ, ನಿಷ್ಕಾಮ ಕರ್ಮ ಮಾಡಲು ಸಾಧ್ಯವಾಗುವುದಾದರೆ ಆಗ ಅವರಿಗೆ ಕರ್ಮದ ಮೂಲಕ ಯೋಗವುಂಟಾಗುತ್ತದೆ.
“ಪರಮಹಂಸಾವಸ್ಥೆಯಲ್ಲಿ-ಉದಾಹರಣೆಗೆ ಶುಕದೇವಾದಿಗಳು; ಎಲ್ಲ ಕರ್ಮಗಳೂ ನಿಂತು ಹೋಗಿಬಿಡುತ್ತವೆ-ಪೂಜೆ, ಜಪ, ತರ್ಪಣ, ಸಂಧ್ಯಾವಂದನೆ ಇವೆಲ್ಲಾ. ಈ ಅವಸ್ಥೆಯಲ್ಲಿ ಕೇವಲ ಮನಸ್ಸಿನ ಮೂಲಕ ಯೋಗ. ಬಾಹ್ಯಿಕ ಕರ್ಮಗಳನ್ನು ಅವರು ಮಾಡಿದರೂ ಮಾಡಬಹುದು. ಇಚ್ಛೆಬಂದರೆ-ಲೋಕಶಿಕ್ಷಣಕ್ಕಾಗಿ. ಆದರೆ ಅವರಲ್ಲಿ ಸರ್ವದಾ ಸ್ಮರಣ ಮನನ ಇದ್ದೇ ಇರುತ್ತವೆ.”
ಹೀಗೆ ಮಾತಾಡುತ್ತ ಮಾತಾಡುತ್ತ ಇದ್ದ ಹಾಗೆ ಘಂಟೆ ರಾತ್ರಿ ಎಂಟಾಗಿಬಿಟ್ಟಿತು. ಪರಮಹಂಸರು ಮಹಿಮಚರಣನನ್ನು ಶಾಸ್ತ್ರಗ್ರಂಥಗಳಿಂದ ಯಾವುದಾದರೂ ಕೆಲವು ಸ್ತೋತ್ರಗಳನ್ನು ಪಠಿಸುವಂತೆ ಕೇಳಿಕೊಂಡರು. ಮಹಿಮಚರಣನು ಉತ್ತರಗೀತೆಯಿಂದ ಪರಬ್ರಹ್ಮನ ಸಂಬಂಧವಾಗಿ ವರ್ಣಿತವಾಗಿರುವ ಮೊದಲನೆ ಅಧ್ಯಾಯದ ಒಂದನೆಯ ಶ್ಲೋಕವನ್ನು ಪಠಿಸಿದ:
ಯದೇಕಂ ನಿಷ್ಕಲಂ ಬ್ರಹ್ಮ
ವ್ಯೋಮಾತೀತಂ ನಿರಂಜನಮ್ ॥
ಅಪ್ರತರ್ಕ್ಯಮವಿಜ್ಞೇಯಂ
ವಿನಾಶೋತ್ಪತ್ತಿವರ್ಜಿತಮ್ ॥
ಮಹಿಮಚರಣ ಹಾಗೆಯೇ ಓದುತ್ತ ಮುಂದುವರಿದು ಮೂರನೇ ಅಧ್ಯಾಯದ ಎಂಟನೇ ಶ್ಲೋಕ ಪಠಿಸಲಾರಂಭಿಸಿದ:
ಅಗ್ನಿರ್ದೇವೋ ದ್ವಿಜಾತೀನಾಂ
ಮುನೀನಾಂ ಹೃದಿ ದೈವತಮ್ ॥
ಪ್ರತಿಮಾ ಸ್ವಲ್ಪಬುದ್ಧೀನಾಂ
ಸರ್ವತ್ರ ಸಮದರ್ಶಿನಾಮ್ ॥
“ಸರ್ವತ್ರ ಸಮದರ್ಶಿನಾಮ್” ಎಂಬ ಪಾದ ಪರಮಹಂಸರ ಕಿವಿಗೆ ಬೀಳುವುದೇ ತಡ ಅವರು ಎದ್ದು ನಿಂತುಕೊಂಡು ಸಮಾಧಿಸ್ಥರಾಗಿಬಿಟ್ಟರು. ಪಟ್ಟಿ ಮತ್ತು ದಬ್ಬೆಗಳಿಂದ ತೋಳು ಯಾವ ರೀತಿಯಾಗಿ ಕಟ್ಟಲ್ಪಟ್ಟಿತ್ತೋ ಅದು ಹಾಗೇ ಇದೆ. ಭಕ್ತರೆಲ್ಲರೂ ಆಶ್ಚರ್ಯಚಕಿತರಾಗಿ ಪರಮಹಂಸರ ಮೂಲಕ ಸಮದರ್ಶಿ ಮಹಾಯೋಗಿಯ ಅವಸ್ಥೆಯನ್ನು ನೋಡುತ್ತಿದ್ದಾರೆ.
ಪರಮಹಂಸರು ಬಹಳ ಹೊತ್ತಾದ ನಂತರ ಪ್ರಕೃತಿಸ್ಥರಾಗಿ ತಮ್ಮ ಸ್ಥಾನದಲ್ಲಿ ಕುಳಿತುಕೊಂಡರು. ಈಗ ಪರಮಹಂಸರು ಮಹಿಮಚರಣನಿಗೆ ಹೇಳುತ್ತಿದ್ದಾರೆ, ಭಗವದ್ಭಕ್ತಿಯ ಸಂಬಂಧವಾದ ಶ್ಲೋಕಗಳನ್ನು ಹೇಳುವಂತೆ. ಆತ ನಾರದಾದಿ ಪಂಚರಾತ್ರದಿಂದ ಹೇಳುತ್ತಿದ್ದಾನೆ:
ಪ್ರೇಮದೊಳಾರಾಧಿಸೆ ದೇವರ ಈ ಜಪತಪವಿನ್ನೇಕೆ?
ಪ್ರೇಮದೊಳಾರಾಧಿಸದಿದ್ದರೆ ಈ ಜಪತಪವಿನ್ನೇಕೆ?……..
ಶ್ರೀರಾಮಕೃಷ್ಣರು: “ಆಹ! ಆಹ!”
ಈ ಶ್ಲೋಕಗಳನ್ನು ಕೇಳಿ ಪರಮಹಂಸರು ಮತ್ತೆ ಭಾವಾವಿಷ್ಟರಾಗುವುದರಲ್ಲಿದ್ದರು. ಆದರೆ ಬಹಳ ಕಷ್ಟಪಟ್ಟು ಅದನ್ನು ಹಿಡಿದು ತಡೆದುಕೊಂಡರು.
ಮಹಿಮಚರಣ ಈಗ ಕಾಶೀಪಂಚಕದಿಂದ ಒಂದು ಶ್ಲೋಕವನ್ನು ಪಠಿಸಿದ:
ಯಸ್ಯಾಮಿದಂ ಕಲ್ಪಿತಮಿಂದ್ರಜಾಲಂ
ಚರಾಚರಂ ಭಾತಿ ಮನೋವಿಲಾಸಮ್ ॥
ಸಚ್ಚಿತ್ಸುಖೈಕಾ ಪರಮಾತ್ಮರೂಪಾ
ಸಾ ಕಾಶಿಕಾಹಂ ನಿಜಬೋಧರೂಪಾ ॥
“ಸಾ ಕಾಶಿಕಾಹಂ ನಿಜಬೋಧರೂಪಾ” ಎಂಬ ಚರಣವನ್ನು ಕೇಳಿದೊಡನೆಯೇ ಪರಮಹಂಸರು ನಗುತ್ತ ಹೇಳುತ್ತಿದ್ದಾರೆ : ‘ಯಾವುದು ಪಿಂಡಾಂಡದಲ್ಲಿ ಇದೆಯೋ, ಅದೇ ಬ್ರಹ್ಮಾಂಡದಲ್ಲೂ ಇದೆ.’
ಈಗ ಮಹಿಮಚರಣ ನಿರ್ವಾಣಷಟ್ಕವನ್ನು ಪಠಿಸುತ್ತಿದ್ದಾನೆ:
ಬುದ್ಧಿಮನ ಚಿತ್ತಹಂಕಾರ ನಾನಲ್ಲ;
ಕಣ್ಣು ಕಿವಿ ಮೂಗಲ್ಲ, ನಾಲಗೆಯುಮಲ್ಲ;
ನಭವಲ್ಲ ಧರೆಯಲ್ಲ; ಶಿಖಿವಾಯುವಲ್ಲ;
ಸಚ್ಚಿದಾನಂದಾತ್ಮ ಶಿವ ನಾನು ನಾನು!…..
ಮಹಿಮಚರಣ “ಸಚ್ಚಿದಾನಂದಾತ್ಮ ಶಿವ ನಾನು ನಾನು” ಎಂದು ಎಷ್ಟು ಸಲ ಹೇಳಿದನೋ ಅಷ್ಟು ಸಲವೂ ಪರಮಹಂಸರು ನಗುತ್ತ ಹೇಳಿದರು: “ನಾನಲ್ಲ! ನಾನಲ್ಲ! ಸಚ್ಚಿದಾನಂದಾತ್ಮ ಶಿವ ನೀನು! ನೀನು!”
ಮಹಿಮಚರಣ ಜೀವನ್ಮುಕ್ತಿ ಗೀತೆಯಿಂದ ಕೆಲವು ಶ್ಲೋಕಗಳನ್ನು ಪಠಿಸಿದ. ನಂತರ ಷಟ್ಚಕ್ರಗಳ ಸಂಬಂಧವಾಗಿ ಕೆಲವು ಶ್ಲೋಕಗಳನ್ನು ಪಠಿಸಿದ. ಬಳಿಕ ಆತ ಪರಮಹಂಸರಿಗೆ ತಿಳಿಸಿದ, ತಾನು ಕಾಶಿಯಲ್ಲಿ ಯೋಗಾವಸ್ಥೆಯಲ್ಲಿ ಮೃತಪಟ್ಟ ಒಬ್ಬ ಯೋಗಿಯನ್ನು ನೋಡಿದುದಾಗಿ.
ಮಹಿಮಚರಣ: “ರಾಮಗೀತೆಯಲ್ಲಿ ಬಹಳ ಒಳ್ಳೆಯ ವಿಷಯಗಳಿವೆ.”
ಶ್ರೀರಾಮಕೃಷ್ಣರು ನಗುತ್ತ: “ನೀನು ಯಾವಾಗ ನೋಡಿದರೂ ‘ರಾಮಗೀತೆ’, ‘ರಾಮಗೀತೆ’ ಅನ್ನುತ್ತಲೇ ಇದ್ದೀಯೆ. ಆದ್ದರಿಂದ ನೀನು ಒಬ್ಬ ದೊಡ್ಡ ವೇದಾಂತಿಯೇ ಇರಬೇಕು. ಆ ವಿಧದ ಪುಸ್ತಕಗಳನ್ನು ಸಾಧುಗಳು ಎಷ್ಟೊಂದಾಗಿ ಇಲ್ಲಿ ಓದುತ್ತಿದ್ದರು !”
ಈಗ ಮಹಿಮಚರಣನು “ಓಂ” ಎಂಬುದರ ಸ್ವರೂಪದ ಸಂಬಂಧವಾಗಿ ಪಠಿಸುತ್ತಿದ್ದಾನೆ:
ತೈಲಧಾರವದವಿಚ್ಛಿನ್ನಮ್-ದೀರ್ಘಘಂಟಾ ನಿನಾದಮ್ ॥
ಸಮಾಧಿಯ ಸಂಬಂಧವಾಗಿ ಆತ ಪಠಿಸಿದ:
ಊರ್ಧ್ವಪೂರ್ಣಮಧಃ ಪೂರ್ಣಂ
ಮಧ್ಯಪೂರ್ಣಂ ಯದಾತ್ಮಕಮ್ ॥
ಸರ್ವಪೂರ್ಣಂ ಸ ಆತ್ಮೇತಿ
ಸಮಾಧಿಸ್ತಸ್ಯ ಲಕ್ಷಣಮ್ ॥
ಅಧರಸೇನ, ಮಹಿಮಚರಣ ಪರಮಹಂಸರಿಗೆ ಪ್ರಣಾಮಮಾಡಿ ಅವರಿಂದ ಬೀಳ್ಕೊಂಡು ಹೊರಟುಹೋದರು.
ಮಾರನೇ ದಿನ ಪರಮಹಂಸರು ಮಧ್ಯಾಹ್ನದ ಊಟ ಮುಗಿಸಿ ತಮ್ಮ ಚಿಕ್ಕ ಮಂಚದ ಮೇಲೆ ಕುಳಿತುಕೊಂಡಿದ್ದಾರೆ. ರಾಮ, ಸುರೇಂದ್ರ, ಇನ್ನು ಕೆಲವು ಮಂದಿ ಭಕ್ತರು ಕಲ್ಕತ್ತದಿಂದ ಬಂದಿದ್ದಾರೆ. ಪರಮಹಂಸರ ಕೈ ಕೀಲು ತಪ್ಪಿರುವುದನ್ನು ನೋಡಿ ಅವರೆಲ್ಲರೂ ಚಿಂತಾಕ್ರಾಂತರಾಗಿದ್ದಾರೆ. ಮಾಸ್ಟರೂ ಹತ್ತಿರ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು ಭಕ್ತರಿಗೆ : “ಭಗವತಿ ನನ್ನನ್ನು ಅಂಥ ಅವಸ್ಥೆಯಲ್ಲಿ ಇಟ್ಟಿದ್ದಾಳೆ, ನಾನು ಯಾವುದನ್ನೂ ರಹಸ್ಯವಾಗಿ ಇಟ್ಟುಕೊಳ್ಳುವ ಹಾಗಿಲ್ಲ. ನನ್ನದು ಬಾಲಕನ ಅವಸ್ಥೆ. ರಾಖಾಲನಿಗೆ ಇದು ಅರ್ಥವಾಗುತ್ತಿಲ್ಲ. ಜನ ನನ್ನ ಕೀಲು ತಪ್ಪಿದ ತೋಳನ್ನು ನೋಡಿ ನನ್ನನ್ನು ನಿಂದಿಸಬಹುದೆಂದು ಆತ ಅದು ಕಾಣದ ರೀತಿಯಲ್ಲಿ ನನ್ನ ಮೇಲೆ ಬಟ್ಟೆ ಹೊದಿಸುತ್ತಾನೆ. ಆತ ಒಂದು ಬದಿಗೆ ಡಾಕ್ಟರ್ ಮಧುಸೂದನನನ್ನು ಕರೆದುಕೊಂಡು ಹೋಗಿ ನನ್ನ ಕೀಲು ತಪ್ಪಿದ ತೋಳಿನ ವಿಷಯವಾಗಿ ಆತನಿಗೆ ತಿಳಿಸುತ್ತಿದ್ದ. ಆದರೆ ನಾನು ಗಟ್ಟಿಯಾಗಿ ಕೂಗಿ ಹೇಳಿದೆ: ‘ಓ ಡಾಕ್ಟರ್ ಮಧುಸೂದನ, ಇಲ್ಲಿ ಬಂದು ನೋಡು. ನನ್ನ ಕೈ ಕೀಲು ತಪ್ಪಿಬಿಟ್ಟಿದೆ!’
“ಮಥುರಬಾಬು ಮತ್ತು ಆತನ ಹೆಂಡತಿ ಮಲಗುತ್ತಿದ್ದ ಕೊಠಡಿಯಲ್ಲೆ ಕೆಲವು ಕಾಲ ನಾನೂ ಮಲಗುತ್ತಿದ್ದೆ. ನಾನು ಅವರ ಒಂದು ಚಿಕ್ಕ ಮಗುವೋ ಏನೋ ಎಂಬಂತೆ ಅವರು ನನ್ನನ್ನು ನೋಡಿಕೊಳ್ಳುತ್ತಿದ್ದರು. ಆಗ ನನಗೆ ಉನ್ಮಾದ ಅವಸ್ಥೆ. ಮಥುರ ಬಾಬು ಕೇಳುತ್ತಿದ್ದ: ‘ಬಾಬಾ, ನಾವು ಮಾತುಕತೆಯಾಡಿಕೊಳ್ಳುವುದು ನಿಮಗೆ ಕೇಳಿಸುತ್ತಿದೆಯೇ?’ ನಾನು ಹೇಳುತ್ತಿದ್ದೆ: ‘ಹೌದು.’
“ಒಮ್ಮೆ ಮಥುರಬಾಬುವಿನ ಹೆಂಡತಿಗೆ ತನ್ನ ಪತಿಯ ನಡತೆಯ ಸಂಬಂಧವಾಗಿ ಸಂದೇಹ ಬಂದು ಆತನಿಗೆ ಹೇಳಿದಳು: ‘ನೀವು ಹೊರಗೆಲ್ಲಿಗಾದರೂ ಹೋಗುವುದಾದರೆ, ನಿಮ್ಮೊಡನೆ ಪರಮಹಂಸರನ್ನೂ ಕರೆದುಕೊಂಡು ಹೋಗಬೇಕು.’ ಒಂದು ದಿನ ಮಥುರ ಬಾಬು ಒಂದು ಸ್ಥಳಕ್ಕೆ ಹೋದ. ಅಲ್ಲಿ ಆತ ನನ್ನನ್ನು ಕೆಳಗಡೆ ಕೂರಿಸಿ ತಾನು ಮೇಲುಗಡೆ ಹೋದ. ಅರ್ಧ ಘಂಟೆಯಾದ ನಂತರ ಕೆಳಕ್ಕೆ ಇಳಿದು ಬಂದು ಹೇಳಿದ : ‘ಬಾಬಾ, ಬನ್ನಿ ಹೋಗೋಣ, ಗಾಡಿ ಕಾದುಕೊಂಡಿದೆ.’ ಅದರ ಸಂಬಂಧವಾಗಿ ಮಥುರಬಾಬುವಿನ ಹೆಂಡತಿ ನನ್ನನ್ನು ಕೇಳಿದಾಗ ನಾನು ಚಾಚೂ ತಪ್ಪದೆ ಎಲ್ಲವನ್ನೂ ಸಾಂಗವಾಗಿ ಹೇಳಿಬಿಟ್ಟೆ.ನಾನು ಆಕೆಗೆ ಹೇಳಿದೆ: ‘ನೋಡು, ನಾವು ಒಂದು ಮನೆಗೆ ಹೋದೆವು. ಆತ ನನ್ನನ್ನು ಕೆಳಗಡೆ ಕೂರಿಸಿ ತಾನು ಮೇಲ್ಮಹಡಿಗೆ ಹೋದ. ಅರ್ಧ ಘಂಟೆಯಾದ ಮೇಲೆ ಕೆಳಕ್ಕೆ ಇಳಿದುಬಂದು ಹೇಳಿದ: ‘ಬಾಬಾ, ಬನ್ನಿ ಹೋಗೋಣ ಬನ್ನಿ.’ ಆಕೆ ಅಲ್ಲಿ ಏನಾಗಿರಬೇಕು ಎಂಬುದನ್ನು ತನಗರಿವಾಗುವ ರೀತಿಯಲ್ಲಿ ಅರಿತುಕೊಂಡಳು.
“ಮಥುರಬಾಬುವಿನ ಜಮೀನುದಾರಿಯ ಒಬ್ಬ ಪಾಲುದಾರ ಇಲ್ಲಿನ ತೋಟದಿಂದ ಹಣ್ಣು ಹಂಪಲು ತರಕಾರಿಗಳನ್ನು ರಹಸ್ಯವಾಗಿ ಗಾಡಿಯಲ್ಲಿ ಸಾಗಿಸುವ ಅಭ್ಯಾಸವನ್ನಿಟ್ಟುಕೊಂಡಿದ್ದ. ಇನ್ನೊಬ್ಬ ಪಾಲುದಾರ ಆ ವಿಷಯವನ್ನು ಕೇಳಿದಾಗ ಆಗ ಎಲ್ಲವನ್ನೂ ಆತನಿಗೆ ಸಾಂಗವಾಗಿ ಹೇಳಿಬಿಟ್ಟೆ.”
೨೪ನೆ ಫೆಬ್ರವರಿ ೧೮೮೪, ಫಾಲ್ಗುಣ ಕೃಷ್ಣ ತ್ರಯೋದಶಿ, ಭಾನುವಾರ
ಪರಮಹಂಸರು ಮಧ್ಯಾಹ್ನದೂಟವಾದ ನಂತರ ವಿಶ್ರಮಿಸಿಕೊಳ್ಳುತ್ತಿದ್ದಾರೆ. ನೆಲದ ಮೇಲೆ ಮಣಿಮಲ್ಲಿಕ ಕುಳಿತುಕೊಂಡಿದ್ದಾನೆ. ಮಾಸ್ಟರ್ ಕೊಠಡಿಯನ್ನು ಪ್ರವೇಶಿಸಿ ಪರಮಹಂಸರಿಗೆ ಪ್ರಣಾಮಮಾಡಿ ಮಣಿಮಲ್ಲಿಕನ ಹತ್ತಿರ ಕುಳಿತುಕೊಂಡ. ಪರಮಹಂಸರ ತೋಳಿನಲ್ಲಿ ಇನ್ನೂ ಪಟ್ಟಿ ಇದೆ.
ಶ್ರೀರಾಮಕೃಷ್ಣರು ಮಾಸ್ಟರಿಗೆ: “ನೀನು ಯಾವ ರೀತಿಯಾಗಿ ಬಂದೆ?”
ಮಾಸ್ಟರ್: “ಆಲಂಬಜಾರಿನವರೆಗೆ ಗಾಡಿಯಲ್ಲಿ ಬಂದು, ಅಲ್ಲಿಂದ ನಡೆದು ಬಂದೆ.”
ಮಣಿಲಾಲ: “ಓ, ಬಹಳವಾಗಿ ಬೆವರಿದ್ದಾನೆ.”
ಶ್ರೀರಾಮಕೃಷ್ಣರು ನಗುತ್ತ : “ಇದಕ್ಕಾಗೇ ನಾನು ಭಾವಿಸುತ್ತಿರುವುದು, ಇವೆಲ್ಲಾ ನನ್ನ ತಲೆಯ ಕಲ್ಪನೆಗಳಲ್ಲ ಎಂದು. ಇಲ್ಲದಿದ್ದರೆ ಈ ‘ಇಂಗ್ಲೀಷ್ ಮ್ಯಾನ್ರೆಲ್ಲಾ’ ಇಷ್ಟು ಕಷ್ಟ ತೆಗೆದುಕೊಂಡು ಇಲ್ಲಿಗೆ ಏಕೆ ಬರುತ್ತಿದ್ದರು?”
ಪರಮಹಂಸರು ಈಗ ಅವರೊಡನೆ ತಮ್ಮ ಆರೋಗ್ಯದ ಸಂಬಂಧವಾಗಿಯೂ, ತಮ್ಮ ನೊಂದ ತೋಳಿನ ಸಂಬಂಧವಾಗಿಯೂ ಮಾತನಾಡತೊಡಗಿದ್ದಾರೆ.
ಶ್ರೀರಾಮಕೃಷ್ಣರು: “ನನಗೆ ಒಮ್ಮೊಮ್ಮೆ ಈ ತೋಳಿನ ಸಂಬಂಧವಾಗಿ ಚಿಂತೆ ಹತ್ತಿಕೊಂಡುಬಿಡುತ್ತದೆ. ಇವನಿಗೆ ತೋರಿಸಿ ಅವನಿಗೆ ತೋರಿಸಿ, ಇದು ಸರಿಯಾಗುವುದೆ ಎಂದು ಕೇಳುತ್ತಲೇ ಇರುತ್ತೇನೆ. ಇದನ್ನು ನೋಡಿ ನನ್ನ ಮೇಲೆ ರಾಖಾಲನಿಗೆ ಕೋಪ. ನನ್ನ ಅವಸ್ಥೆ ಏನು ಎಂಬುದು ಆತನಿಗೆ ಅರ್ಥವಾಗುತ್ತಿಲ್ಲ. ಒಮ್ಮೊಮ್ಮೆ ನಾನೇ ನನಗೆ ಹೇಳಿಕೊಳ್ಳುತ್ತೇನೆ. ‘ಆತ ಇಲ್ಲಿಂದ ಹೊರಟುಹೋಗಿಬಿಡಲಿ.’ ಮತ್ತೆ ಭಗವತಿಗೆ ಹೇಳುತ್ತೇನೆ: ‘ಹೇ ತಾಯೆ, ಆತ ಹೋಗುವುದು ತಾನೆ ಎಲ್ಲಿಗೆ? ಆತ ಈ ಪ್ರಪಂಚವೆಂಬ ಹುರಿಯುವ ಬಾಣಲೆಯಲ್ಲಿ ಬಿದ್ದು ಸುಟ್ಟು ಭಸ್ಮವಾಗಿಹೋಗಬೇಕೆ?’
“ನನ್ನ ಬಾಲಕನಂಥ ಅಧೈರ್ಯ ಹೊಸದೇನಲ್ಲ. ನಾನು ಮಥುರಬಾಬುವಿಗೆ ನನ್ನ ಕೈ ತೋರಿಸಿ ಆತನನ್ನು ಕೇಳುತ್ತಿದ್ದೆ: ‘ನನ್ನ ಆರೋಗ್ಯ ಸರಿಯಾಗಿಲ್ಲವೇನು?’
“ಒಳ್ಳೇದು, ಹಾಗಾದರೆ ನನಗೆ ಭಗವಂತನಲ್ಲಿ ಶ್ರದ್ಧೆ ಎಲ್ಲಿದ್ದ ಹಾಗಾಯಿತು? ಒಮ್ಮೆ ನಾನು ಕಾಮಾರಪುಕುರಕ್ಕೆ ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದೆ. ಅನೇಕರು ಡಕಾಯಿತರಂತೆ ದೊಣ್ಣೆ ಹಿಡಿದುಕೊಂಡು ಅದರ ಹತ್ತಿರಕ್ಕೆ ಬಂದರು. ನಾನು ದೇವರುಗಳ ಹೆಸರನ್ನೆಲ್ಲಾ ಹೇಳಲು ಉಪಕ್ರಮಿಸಿದೆ. ಕೆಲವು ವೇಳೆ ‘ರಾಮ’, ಇನ್ನು ಕೆಲವು ವೇಳೆ ‘ದುರ್ಗೆ’ ಮತ್ತು ಕೆಲವು ವೇಳೆ ‘ಓಂ ತತ್ ಸತ್’ ಎಂದು-ಒಂದಿಲ್ಲದಿದ್ದರೆ ಇನ್ನೊಂದು ಪ್ರಯೋಜನ ಆಗಲಿ ಅಂತ.
(ಮಾಸ್ಟರಿಗೆ): “ಒಳ್ಳೇದು, ಏಕೆ ಇಷ್ಟೊಂದು ಅಧೈರ್ಯ ನನಗೆ?”
ಮಾಸ್ಟರ್: “ನೀವು ಸರ್ವದಾ ಸಮಾಧಿಸ್ಥರಾಗಿದ್ದೀರಿ. ಭಕ್ತರಿಗಾಗಿ ನೀವು ಮನಸ್ಸನ್ನು ನಿಮ್ಮ ಶರೀರದ ಮೇಲೆ ಇಟ್ಟಿದ್ದೀರಿ. ಈ ಕಾರಣದಿಂದ ನೀವು ನಿಮ್ಮ ಶರೀರ ರಕ್ಷಣೆಗಾಗಿ ಆಗಾಗ ಅಧೈರ್ಯ ಪಡುತ್ತಿದ್ದೀರಿ.”
ಶ್ರೀರಾಮಕೃಷ್ಣರು: “ಹೌದು, ಅದು ನಿಜ, ಒಂದು ಕಿಂಚಿತ್ ಮನಸ್ಸಿದೆ, ಈ ಶರೀರದ ಮೇಲೆ. ಅದು ಭಗವದ್ಭಕ್ತಿ ಮತ್ತು ಭಕ್ತರೊಡನೆ ಆನಂದಪಡಲು ಇಚ್ಛಿಸುತ್ತದೆ.”
ಮಣಿಮಲ್ಲಿಕ ಕಲ್ಕತ್ತದಲ್ಲಿ ತೆರೆದಿರುವ ವಸ್ತುಪ್ರದರ್ಶನಾಲಯದ ಸಂಬಂಧವಾಗಿ ವಿವರಿಸಿ ಹೇಳಲಾರಂಭಿಸಿದ. ಆತ ಹೇಳಿದ, ಅಲ್ಲಿ ಯಶೋದೆ ಬಾಲಕ ಕೃಷ್ಣನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿರುವ ಬಹಳ ಸುಂದರವಾದ ಒಂದು ವಿಗ್ರಹ ಇದೆ ಎಂದು. ಅದನ್ನು ಕೇಳಿ ಪರಮಹಂಸರ ಕಣ್ಣುಗಳಿಂದ ಪ್ರೇಮಾಶ್ರು ಸುರಿಯಲಾರಂಭಿಸಿತು. ವಾತ್ಸಲ್ಯ ಭಾವದಿಂದ ಕೂಡಿದ ಯಶೋದೆಯ ಆ ವಿಗ್ರಹದ ಸಂಬಂಧವಾಗಿ ಕೇಳಿ ಪರಮಹಂಸರಿಗೆ ಉದ್ದೀಪನವಾಗಿಬಿಟ್ಟಿದೆ. ಅದಕ್ಕಾಗಿಯೇ ಅವರು ಪ್ರೇಮಾಶ್ರು ಸುರಿಸುತ್ತಿರುವುದು.
ಮಣಿಲಾಲ: “ನಿಮ್ಮ ಶರೀರಾರೋಗ್ಯ ಸರಿಯಾಗಿಲ್ಲ. ಇಲ್ಲದಿದ್ದರೆ ನೀವು ಒಮ್ಮೆ ಅಲ್ಲಿಗೆ ಹೋಗಿ ನೋಡಿ ಬರಬಹುದಾಗಿತ್ತು. ಪ್ರದರ್ಶನ ಏರ್ಪಟ್ಟಿರುವುದು ಆ ದೊಡ್ಡ ಮೈದಾನದಲ್ಲಿ.”
ಶ್ರೀರಾಮಕೃಷ್ಣರು ಮಾಸ್ಟರ್ ಮೊದಲಾದವರಿಗೆ: “ನಾನು ಅಲ್ಲಿಗೆ ಹೋದರೆ ಎಲ್ಲವನ್ನೂ ಪೂರ್ಣವಾಗಿ ನೋಡಿಬರಲಾಗುವುದಿಲ್ಲ. ವಿಶೇಷವಾದದ್ದು ಯಾವುದಾದರೂ ಒಂದನ್ನು ನೋಡಿ ನಾನು ಬಾಹ್ಯಜ್ಞಾನಶೂನ್ಯನಾಗಿಬಿಡಬಹುದು. ಬಳಿಕ ಯಾವುದನ್ನೂ ನೋಡಲಾಗುವುದಿಲ್ಲ. ಒಮ್ಮೆ ನನ್ನನ್ನು ಮೃಗಾಲಯಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಸಿಂಹವನ್ನು ನೋಡಿಬಿಟ್ಟು ಸಮಾಧಿಸ್ಥನಾಗಿಬಿಟ್ಟೆ. ಭಗವತಿಯ ವಾಹನವನ್ನು ನೋಡಿದೊಡನೆಯೇ ಭಗವತಿಯ ಉದ್ದೀಪನವೇ ಆಗಿಬಿಟ್ಟಿತು. ಆ ಅವಸ್ಥೆಯಲ್ಲಿ ಬೇರೆ ಮೃಗಗಳನ್ನು ನೋಡಲು ಎಲ್ಲಿ ಸಾಧ್ಯವಾದೀತು? ಕೇವಲ ಆ ಸಿಂಹವನ್ನು ನೋಡಿ ಹಿಂದಿರುಗಿ ಬರಬೇಕಾಯಿತು. ಅದಕ್ಕಾಗಿಯೇ ಮಣಿಮಲ್ಲಿಕನ ತಾಯಿ ಮೊದಲು ಹೇಳಿದಳು: ‘ಇವರನ್ನೂ ವಸ್ತುಪ್ರದರ್ಶನಾಲಯಕ್ಕೆ ಕರೆದುಕೊಂಡುಹೋಗಿ’ ಎಂದು; ಬಳಿಕ ಹೇಳಿದಳು: ‘ಬೇಡಿ’ ಎಂದು.
ಮಣಿಮಲ್ಲಿಕನ ವಯಸ್ಸು ಅರವತ್ತೈದು. ಬಹಳ ಹಿಂದಿನಿಂದಲೂ ಬ್ರಾಹ್ಮಸಮಾಜದ ಅನುಯಾಯಿ. ಪರಮಹಂಸರು ಆತನ ಭಾವಕ್ಕನುಗುಣವಾಗಿ ಆತನಿಗೆ ಉಪದೇಶವೀಯುತ್ತಿದ್ದಾರೆ.
ಶ್ರೀರಾಮಕೃಷ್ಣರು: “ಪಂಡಿತ ಜಯನಾರಾಯಣ ಒಳ್ಳೇ ಉದಾರಿ. ಆತನನ್ನು ಆತನ ಮನೆಯಲ್ಲಿ ಸಂಧಿಸಿದೆ. ಆತನ ಭಾವ ನನಗೆ ಬಹಳವಾಗಿ ಹಿಡಿಸಿತು. ಆದರೆ ಆತನ ಮಕ್ಕಳೆಲ್ಲಾ ಎತ್ತರವಾದ ಹಿಮ್ಮಡಿಯುಳ್ಳ ಬೂಟ್ಸ್ ಹಾಕಿಕೊಂಡಿದ್ದರು. ಅವನೇ ಹೇಳಿದ, ತಾನು ಕಾಶಿಗೆ ಹೋಗಿ ಇರುವುದಾಗಿ. ಹೇಳಿದಂತೆಯೇ ಕೊನೆಗೆ ನಡೆದುಕೊಂಡ. ಕಾಶಿಗೆ ಹೋಗಿ ಇದ್ದ. ಕೊನೆಗೆ ಅಲ್ಲಿಯೇ ಆತನ ದೇಹತ್ಯಾಗವೂ ಆಯಿತು. ಮುಪ್ಪಾದ ಮೇಲೆ ಜಯನಾರಾಯಣನಂತೆ ಮನೆ ಬಿಟ್ಟು ಹೋಗಿ ಭಗವಚ್ಚಿಂತನೆ ಮಾಡುವುದು ಶ್ರೇಯಸ್ಕರವಾದ್ದು, ಏನು ಹೇಳುತ್ತೀಯೆ?”
ಮಣಿಲಾಲ: “ಹೌದು, ಸಂಸಾರದ ತಾಪತ್ರಯ ನನಗೆ ಹಿಡಿಸುತ್ತಿಲ್ಲ.”
ಶ್ರೀರಾಮಕೃಷ್ಣರು: “ಗೌರೀಪಂಡಿತ ತನ್ನ ಹೆಂಡತಿಗೆ ಪುಷ್ಪಾಂಜಲಿಯನ್ನರ್ಪಿಸಿ ಆಕೆಯನ್ನು ಪೂಜಿಸುತ್ತಿದ್ದ. ಎಲ್ಲಾ ಹೆಂಗಸರೂ ಭಗವತಿಯ ಒಂದೊಂದು ರೂಪ. (ಮಣಿಲಾಲನಿಗೆ) ನಿನ್ನ ಆ ಕಥೆಯನ್ನು ಇವರಿಗೆ ಸ್ವಲ್ಪ ಹೇಳು.”
ಮಣಿಲಾಲ ನಗುತ್ತ: “ಕೆಲವು ಮಂದಿ ಒಂದು ದೋಣಿ ಮಾಡಿಕೊಂಡು ಗಂಗಾನದಿಯನ್ನು ದಾಟುತ್ತಿದ್ದರು. ಅವರಲ್ಲಿ ಒಬ್ಬ ಪಂಡಿತ ಇದ್ದ. ಆತ ತನ್ನ ಪಾಂಡಿತ್ಯವನ್ನು ಬಹಳವಾಗಿ ಕೊಚ್ಚಿಕೊಳ್ಳಲಾರಂಭಿಸಿದ. ಆತ ಹೇಳಿದ, ತಾನು ವೇದ, ವೇದಾಂತ, ಷಡ್ದರ್ಶನ ಇತ್ಯಾದಿ ಅನೇಕ ಶಾಸ್ತ್ರಗಳನ್ನು ಓದಿರುವುದಾಗಿ. ಆತ ಒಬ್ಬನನ್ನು ಕೇಳಿದ: ‘ನಿನಗೆ ವೇದಾಂತದ ಪರಿಚಯ ಆಗಿದೆಯೇ?’ ಆತ ಹೇಳಿದ: ‘ಇಲ್ಲ ಸ್ವಾಮಿ.’ ‘ಶಾಸ್ತ್ರಗೀಸ್ತ್ರಗಳನ್ನು ಸ್ವಲ್ಪವೂ ಓದಿಲ್ಲವೇ?’ ‘ಇಲ್ಲ ಸ್ವಾಮಿ.’ ಪಂಡಿತ ಅತ್ಯಂತ ಗರ್ವದಿಂದ ಹೀಗೆ ಮಾತಾಡುತ್ತಿದ್ದರೂ, ಆ ಪ್ರಯಾಣಿಕ ಸುಮ್ಮನೆ ಕುಳಿತಿದ್ದ. ಇದ್ದಕ್ಕಿದ್ದ ಹಾಗೆ ದೊಡ್ಡ ಬಿರುಗಾಳಿ ಎದ್ದು ದೋಣಿ ಇನ್ನೇನು ಮಗುಚಿಕೊಂಡು ಬಿಡುವುದರಲ್ಲಿತ್ತು. ಆಗ ಆ ಪ್ರಯಾಣಿಕ ಪಂಡಿತನನ್ನು ಕೇಳಿದ: ‘ಪಂಡಿತರೆ, ನಿಮಗೆ ಈಜು ಬರುವುದೆ?’ ಪಂಡಿತ ‘ಇಲ್ಲ’ ಎಂದ. ಪ್ರಯಾಣಿಕ ಹೇಳಿದ: ‘ಸ್ವಾಮಿ, ನನಗೆ ಸಾಂಖ್ಯ, ಪಾತಂಜಲ ಇವು ಯಾವುವೂ ಗೊತ್ತಿಲ್ಲ, ಆದರೆ ನನಗೆ ಈಜುವುದು ಗೊತ್ತಿದೆ.’
ಶ್ರೀರಾಮಕೃಷ್ಣರು ನಗುತ್ತ: “ಅನೇಕ ಶಾಸ್ತ್ರಗಳ ಪರಿಚಯಮಾಡಿಕೊಂಡಿದ್ದರೆ ಏನು ಬಂತು? ಭವನದಿಯನ್ನು ದಾಟುವುದು ಹೇಗೆ ಎಂಬುದನ್ನು ಅವಶ್ಯವಾಗಿ ಅರಿತುಕೊಳ್ಳಬೇಕು. ಭಗವಂತನೇ ವಸ್ತು, ಉಳಿದುದೆಲ್ಲಾ ಅವಸ್ತು.”
“ಲಕ್ಷ್ಯವನ್ನು ಭೇದಿಸುವ ಸಮಯದಲ್ಲಿ ದ್ರೋಣಾಚಾರ್ಯರು ಅರ್ಜುನನನ್ನು ಕೇಳಿದರು: ‘ನಿನ್ನ ಕಣ್ಣಿಗೆ ಏನು ಕಾಣುತ್ತಿದೆ? ಈ ದೊರೆಗಳು ನಿನ್ನ ಕಣ್ಣಿಗೆ ಬೀಳುತ್ತಿದ್ದಾರೆಯೇ? ಆತ ಹೇಳಿದ: ‘ಇಲ್ಲ.’ ‘ನಾನು ಕಣ್ಣಿಗೆ ಬೀಳುತ್ತಿದ್ದೇನೆಯೇ?’ ‘ಇಲ್ಲ’, ‘ಆ ಮರ?’ ‘ಇಲ್ಲ.’ ಆ ಮರದ ಮೇಲಿರುವ ಹಕ್ಕಿ?’ ‘ಇಲ್ಲ.’ ‘ಹಾಗಾದರೆ, ನಿನಗೇನು ಕಾಣುತ್ತಿದೆ?’ ‘ಕೇವಲ ಹಕ್ಕಿಯ ಕಣ್ಣು.’
“ಯಾರಿಗೆ ಕೇವಲ ಹಕ್ಕಿಯ ಕಣ್ಣು ಕಾಣಬರುವುದೋ, ಆತ ಮಾತ್ರ ತನ್ನ ಲಕ್ಷ್ಯವನ್ನು ಭೇದಿಸಬಲ್ಲ. ಯಾರ ದೃಷ್ಟಿಗೆ ಕೇವಲ ಭಗವಂತನೇ ವಸ್ತು, ಉಳಿದುದೆಲ್ಲಾ ಅವಸ್ತು ಎಂದು ಕಾಣಬರುವುದೋ ಆತನೇ ನಿಜವಾದ ಬುದ್ಧಿವಂತ. ಉಳಿದ ವಿಷಯಗಳ ಸುದ್ದಿ ಸಮಾಚಾರ ನಮಗೇಕೆ? ಹನುಮಂತ ಒಮ್ಮೆ ಹೇಳಿದ: ‘ನನಗೆ ತಿಥಿ, ವಾರ, ನಕ್ಷತ್ರ-ಇವುಗಳ ವಿಷಯವಾಗಿ ಏನೂ ಗೊತ್ತಿಲ್ಲ. ಕೇವಲ ರಾಮ ಚಿಂತನೆ ಮಾಡುತ್ತಿದ್ದೇನೆ.”
(ಮಾಸ್ಟರಿಗೆ) “ಇಲ್ಲಿನ ಉಪಯೋಗಕ್ಕಾಗಿ ಕೆಲವು ಬೀಸಣಿಗೆ ಕೊಂಡುಕೊಂಡು ಬಾ.
(ಮಣಿಲಾಲನಿಗೆ) “ಒಮ್ಮೆ ನೀನು ಹೋಗಿ ಇವನ (ಮಾಸ್ಟರ್) ತಂದೆಯನ್ನು ಸಂಧಿಸಿ ಬಾ. ಭಕ್ತನನ್ನು ನೋಡಿದರೆ ಉದ್ದೀಪನವಾಗುತ್ತದೆ.
(ಮಾಸ್ಟರಿಗೆ) “ನನ್ನ ತೋಳಿಗೆ ಪೆಟ್ಟು ತಗಲಿದನಂತರ ನನ್ನ ಮಾನಸಿಕ ಅವಸ್ಥೆಯಲ್ಲಿ ದೊಡ್ಡ ಪರಿವರ್ತನೆಯೇ ಆಗಿಬಿಟ್ಟಿದೆ. ಈಗ ಕೇವಲ ನರಲೀಲೆ ಬಹಳವಾಗಿ ಹಿಡಿಸುತ್ತಿದೆ. ನಿತ್ಯ ಮತ್ತು ಲೀಲೆ. ನಿತ್ಯ ಎಂದರೆ, ಆ ಅಖಂಡ ಸಚ್ಚಿದಾನಂದ; ಲೀಲೆ ಎಂದರೆ, ಭಗವಲ್ಲೀಲೆ, ನರಲೀಲೆ, ಜಗಲ್ಲೀಲೆ.”
“ವೈಷ್ಣವಚರಣ ಹೇಳುತ್ತಿದ್ದ, ನರಲೀಲೆಯಲ್ಲಿ ಶ್ರದ್ಧೆಯುಂಟಾದುದೇ ಆದರೆ, ಪೂರ್ಣಜ್ಞಾನ ದೊರೆತುಬಿಡುತ್ತದೆ ಎಂದು. ಆಗ ಅದು ಸರಿ ಎಂದು ತೋರಲಿಲ್ಲ. ಈಗ ಕಾಣುತ್ತಿದೆ ಸರಿ ಎಂದು. ಕೋಮಲಭಾವ, ಪ್ರೇಮಭಾವ; ಇದನ್ನು ಹೊರಸೂಸುವ ಮನುಷ್ಯನ ಭಾವಚಿತ್ರ ವೈಷ್ಣವಚರಣನಿಗೆ ಬಹಳವಾಗಿ ಹಿಡಿಸುತ್ತದೆ.
(ಮಣಿಲಾಲನಿಗೆ) “ಭಗವಂತನೇ ಮನುಷ್ಯನಾಗಿ ಲೀಲೆ ಮಾಡುತ್ತಾನೆ. ಆತನೇ ಮಣಿಮಲ್ಲಿಕನಾಗಿದ್ದಾನೆ. ಸಿಖ್ಖರು ಉಪದೇಶವೀಯುತ್ತಾರೆ: ‘ನೀನು ಸಚ್ಚಿದಾನಂದ’ ಎಂದು.
“ಒಮ್ಮೊಮ್ಮೆ ಮನುಷ್ಯನಿಗೆ ತನ್ನ ಸ್ವರೂಪದ ಕ್ಷಣದರ್ಶನ ದೊರೆತು ಆಶ್ಚರ್ಯಚಕಿತನಾಗಿಬಿಡುತ್ತಾನೆ. ಆನಂದದಿಂದ ತುಂಬಿತುಳುಕಾಡಲಾರಂಭಿಸುತ್ತಾನೆ. ಇದು ಇದ್ದಕ್ಕಿದ್ದ ಹಾಗೆ ಆತ್ಮೀಯ ಬಂಧುವನ್ನು ದರ್ಶಿಸಿದ ಹಾಗೆ. (ಮಾಸ್ಟರಿಗೆ) ಅಂದು ಗಾಡಿಯಲ್ಲಿ ಬರುತ್ತ ಬರುತ್ತ ಇದ್ದಹಾಗೆ ಬಾಬುರಾಮನನ್ನು ನೋಡಿ ನನಗೆ ಆ ರೀತಿಯಾಗಿ ಆಯಿತು. ಶಿವ ತನ್ನ ಸ್ವಸ್ವರೂಪವನ್ನು ದರ್ಶನಮಾಡಿದಾಗ ಆತ ಆನಂದದಿಂದ ಹೀಗೆ ಹೇಳಿಕೊಂಡು ನರ್ತಿಸುತ್ತಾನೆ: ‘ನಾನು ಏನು! ನಾನು ಏನು!’
“ಆಧ್ಯಾತ್ಮರಾಮಾಯಣದಲ್ಲಿ ಈ ವಿಷಯವೇ ಇದೆ. ಅಲ್ಲಿ ನಾರದ ಹೇಳುತ್ತಾನೆ: ‘ಹೇ ರಾಮ; ಪುರುಷರು ಯಾರಾರು ಇದ್ದಾರೊ, ಅವರೆಲ್ಲರೂ ನೀನೆ. ಹೆಂಗಸರು ಯಾರಾರೂ ಇದ್ದಾರೊ, ಅವರೆಲ್ಲರೂ ಸೀತೆಯೇ.’ ರಾಮಲೀಲೆಯಲ್ಲಿ ಯಾರಾರು ಅಭಿನಯಿಸಿದ್ದರೋ, ಅವರೆಲ್ಲರನ್ನೂ ನೋಡಿ ನನಗನಿಸಿತು, ಭಗವಂತನೇ ಈ ಎಲ್ಲಾ ಮನುಷ್ಯರ ರೂಪ ಧರಿಸಿದ್ದಾನೆ ಎಂದು. ವಾಸ್ತವ, ಕೃತಕ ಎರಡೂ ಸಮಾನವಾಗಿ ಕಂಡವು.
“ಕುಮಾರಿಪೂಜೆ ಮಾಡುತ್ತಾರಲ್ಲ ಏಕೆ? ಎಲ್ಲಾ ಸ್ತ್ರೀಯರೂ ಭಗವತಿಯ ಒಂದೊಂದು ರೂಪ. ಆದರೆ ಶುದ್ಧಾತ್ಮಕುಮಾರಿಯಲ್ಲಿ ಆಕೆ ವಿಶೇಷವಾಗಿ ವ್ಯಕ್ತವಾಗಿರುತ್ತಾಳೆ.
(ಮಾಸ್ಟರಿಗೆ) “ನನಗೆ ದೇಹಾರೋಗ್ಯ ಕೆಟ್ಟಿತು ಎಂದರೆ, ಧೈರ್ಯಗೆಡುತ್ತದೆಯಲ್ಲ ಏಕೆ? ನನ್ನನ್ನು ಭಗವತಿ ಬಾಲಕನ ಅವಸ್ಥೆಯಲ್ಲಿ ಇಟ್ಟುಬಿಟ್ಟಿದ್ದಾಳೆ. ಮಗು ಎಲ್ಲಕ್ಕೂ ತಾಯಿಯನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ. ದಾಸಿಯ ಮಗು ಯಜಮಾನನ ಮಗುವಿನೊಡನೆ ಜಗಳಕಾಯುವಾಗ ಹೇಳುತ್ತದೆ: ‘ನೋಡು, ಅಮ್ಮನಿಗೆ ಹೇಳಿಬಿಡುತ್ತೇನೆ.’
“ರಾಜಾಬಜಾರಿಗೆ ಫೋಟೋ ತೆಗೆದುಕೊಳ್ಳಲು ನನ್ನನ್ನು ಕರೆದುಕೊಂಡು ಹೋದರು. ಅಂದು ನಾನು ರಾಜೇಂದ್ರಮಿತ್ರನ ಮನೆಗೆ ಹೋಗಿಬರಬೇಕೆಂದು ವ್ಯವಸ್ಥೆಯಾಗಿತ್ತು. ಕೇಶವನೇ ಮೊದಲಾದವರು ಅಲ್ಲಿಗೆ ಬರುವರೆಂದು ಕೇಳಿದ್ದೆ. ಅಲ್ಲಿ ಏನೇನು ಮಾತಾಡಬೇಕು ಎಂಬುದನ್ನು ಮೊದಲೇ ನಿರ್ಧಾರಮಾಡಿಕೊಂಡಿದ್ದೆ. ಆದರೆ ರಾಜಾಬಜಾರಿಗೆ ಹೋಗುವುದರಲ್ಲಿ ಎಲ್ಲಾ ಮರೆತುಹೋಯಿತು. ಆಗ ನಾನು ಭಗವತಿಗೆ ಹೇಳಿದೆ: ‘ತಾಯೆ, ನೀನೇ ಮಾತನಾಡು. ನನಗೆ ಏನುತಾನೆ ಗೊತ್ತು?’
“ನನ್ನದು ಜ್ಞಾನಿಯ ಸ್ವಭಾವವಲ್ಲ. ಆತ ತಾನೇ ದೊಡ್ಡವನು ಎಂದು ಭಾವಿಸುತ್ತಾನೆ. ಆತ ಹೇಳುತ್ತಾನೆ: ‘ಏನು, ನನಗೆ ರೋಗವೆ?’
“ಕೊಯರ್ ಸಿಂಗ್ ಒಮ್ಮೆ ನನಗೆ ಹೇಳಿದ: ‘ನಿಮಗೆ ಇನ್ನೂ ದೇಹದ ಮೇಲೆ ಭಾವನೆ ಇದೆ.’ ನನ್ನ ಸ್ವಭಾವ ಇದು-ನನ್ನ ತಾಯಿಗೆ ಎಲ್ಲಾ ಗೊತ್ತಿದೆ ಎಂಬುದು. ರಾಜೇಂದ್ರಮಿತ್ರನ ಮನೆಯಲ್ಲಿ ಮಾತನಾಡುವವಳು ಅವಳೇ. ಆಕೆಯ ಮಾತೇ ಮಾತು. ಸರಸ್ವತಿಯ ಜ್ಞಾನ ಭಂಡಾರದ ಒಂದು ಕಿರಣ ಸಹಸ್ರಾರು ಮಂದಿ ಪಂಡಿತರನ್ನು ದಿಗ್ಭ್ರಮೆಗೊಳಿಸಿಬಿಡಬಲ್ಲದು.
“ಭಗವತಿ ನನ್ನನ್ನು ಭಕ್ತನ ಅವಸ್ಥೆಯಲ್ಲಿ-ವಿಜ್ಞಾನಿಯ ಅವಸ್ಥೆಯಲ್ಲಿ ಇಟ್ಟಿದ್ದಾಳೆ. ಈ ಕಾರಣದಿಂದಲೇ ನಾನು ರಾಖಾಲ ಮೊದಲಾದವರೊಡನೆ ಹುಡುಗಾಟವಾಡುವುದು. ಆಕೆಯೇನಾದರೂ ನನ್ನನ್ನು ಜ್ಞಾನಿಯ ಅವಸ್ಥೆಯಲ್ಲಿ ಇಟ್ಟಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ.
“ಈ ಅವಸ್ಥೆಯಲ್ಲಿ ಕಂಡುಬರುತ್ತದೆ, ಭಗವತಿಯೇ ಎಲ್ಲವೂ ಆಗಿರುವುದು. ಎಲ್ಲೆಲ್ಲೂ ಆಕೆಯೇ ಕಾಣುತ್ತಿದ್ದಾಳೆ. ಕಾಳೀದೇವಾಲಯದಲ್ಲಿ ನನಗೆ ಅನುಭವವಾಯಿತು, ಎಲ್ಲವೂ ಭಗವತಿಯೇ ಆಗಿರುವುದು. ದುಷ್ಟರೂ ಕೂಡ-ಭಾಗವತ ಪಂಡಿತನ ಸೋದರ ಕೂಡ.
“ಒಮ್ಮೆ ನಾನು ರಾಮಲಾಲನ ತಾಯಿಯನ್ನು ಬಯ್ಯುವುದರಲ್ಲಿದ್ದು ತಡೆದುಕೊಳ್ಳಬೇಕಾಯಿತು. ಭಗವತಿಯ ಒಂದು ರೂಪವೇ ಆಗಿ ಅವಳು ಕಂಡುಬಂದಳು. ಕುಮಾರಿಯರ ಆಂತರ್ಯದಲ್ಲಿ ಭಗವತಿ ಕಾಣಬರುವುದರಿಂದ ನಾನು ಅವರನ್ನು ಪೂಜಿಸುತ್ತಿದ್ದೇನೆ. ನನ್ನ ಹೆಂಡತಿ ನನ್ನ ಕಾಲನ್ನು ಒತ್ತುತ್ತಾಳೆ. ಆದರೆ ಅನಂತರ ನಾನು ಆಕೆಗೆ ನಮಸ್ಕಾರ ಮಾಡುತ್ತೇನೆ.”
“ನೀವು ನನ್ನ ಪಾದ ಮುಟ್ಟಿ ನಮಸ್ಕಾರ ಮಾಡುತ್ತೀರಿ. ಹೃದೆ ಇಲ್ಲಿ ಇದ್ದುದೇ ಆದರೆ ಅದನ್ನು ಮುಟ್ಟಲು ಯಾರಿಗೆ ತಾನೆ ಧೈರ್ಯ ಉಂಟಾಗುತ್ತಿತ್ತು? ಪಾದಮುಟ್ಟಲು ಆತ ಯಾರನ್ನೂ ಬಿಟ್ಟುಕೊಡುತ್ತಿರಲಿಲ್ಲ. ಭಗವತಿ ನನ್ನನ್ನು ಎಲ್ಲರಲ್ಲೂ ಭಗವಂತನನ್ನು ನೋಡುವ ಅವಸ್ಥೆಯಲ್ಲಿ ಇಟ್ಟಿರುವುದರಿಂದ ನಾನು ಪ್ರತಿನಮಸ್ಕಾರ ಮಾಡಬೇಕಾಗಿದೆ.
“ನೋಡಿ, ದುಷ್ಟರನ್ನೂ ವರ್ಜಿಸಿಬಿಡುವ ಹಾಗಿಲ್ಲ. ತುಳಸಿ ದಳ ಒಣಗಿಹೋಗಲಿ, ಅಥವಾ ಬಹಳ ಪುಟ್ಟದಾಗಿರಲಿ-ಪೂಜೆಗೆ ಉಪಯೋಗ ಆಗಿಯೇ ಆಗುತ್ತದೆ.”
೨ನೆ ಮಾರ್ಚಿ ೧೮೮೪, ಫಾಲ್ಗುಣ ಶುಕ್ಲ ಪಂಚಮಿ, ಭಾನುವಾರ
ಪರಮಹಂಸರು ತಮ್ಮ ಕೊಠಡಿಯಲ್ಲಿ ಕುಳಿತುಕೊಂಡೇ ಬ್ರಾಹ್ಮಸಮಾಜದ ತ್ರೈಲೋಕ್ಯ ಹಾಡುತ್ತಿದ್ದ ಭಜನೆಯನ್ನು ಕೇಳುತ್ತಿದ್ದಾರೆ. ಪರಮಹಂಸರ ಶರೀರಾರೋಗ್ಯ ಎಂದಿನ ಸ್ಥಿತಿಗೆ ಇನ್ನೂ ಬಂದಿಲ್ಲ. ಇನ್ನೂ ಅವರ ತೋಳಿನಲ್ಲಿ ಪಟ್ಟಿ ಕಟ್ಟಲ್ಪಟ್ಟೇ ಇದೆ. ನರೇಂದ್ರ, ಸುರೇಂದ್ರ, ಮಾಸ್ಟರ್ ಅಲ್ಲದೆ ಇನ್ನೂ ಅನೇಕ ಮಂದಿ ಭಕ್ತರು ನೆಲದ ಮೇಲೆ ಕುಳಿತಿದ್ದಾರೆ.
ನರೇಂದ್ರನ ತಂದೆ ಹೈಕೋರ್ಟಿನ ಒಬ್ಬ ವಕೀಲನಾಗಿದ್ದ. ಆತ ಪರಲೋಕಪ್ರಾಪ್ತಿಯನ್ನು ಹೊಂದಿದ ನಂತರ ಆತನ ಪರಿವಾರವರ್ಗ ಬಹಳ ಕಷ್ಟದ ಮಡುವಿಗೆ ಧುಮುಕಿದೆ. ಆತನ ಮನೆಯವರಿಗೆ ಕೆಲವು ವೇಳೆ ಯಾವ ಆಹಾರವೂ ದೊರೆಯದೆ ಉಪವಾಸವಿರಬೇಕಾಗಿರುತ್ತದೆ. ನರೇಂದ್ರ ಈ ಕಷ್ಟಗಳ ದೆಸೆಯಿಂದ ಬಹಳ ಚಿಂತೆಗೊಳಗಾಗಿ ಕಾಲತಳ್ಳುತ್ತಿದ್ದಾನೆ.
ತ್ರೈಲೋಕ್ಯ ಭಗವತಿಯ ಸಂಬಂಧವಾಗಿ ಹಾಡುತ್ತಿದ್ದಾನೆ:
ನಿನ್ನೊಲವಿನ ಮಡಿಲೊಳಡಗಿ
ನಿನ್ನೆಡೆಗೇ ಕಣ್ಣ ಚಾಚಿ
ಓ ತಾಯೀ-ಎನ್ನುವೆ.
ಚಿದಾನಂದ ರಸಧಿಯಲ್ಲಿ
ಮಹಾಯೋಗ ನಿದ್ರೆಯಲ್ಲಿ
ನಾನು ಮುಳುಗಿ ಹೋಗುವೆ
ತೆರೆದೆವೆಗಳ ಮುಚ್ಚಲಾರೆ
ಭವಭಯದಲಿ ಲೀನನಾದೆ
ನಿನ್ನೊಲವಿನ ಮಡಿಲಿನಲ್ಲಿ
ಸ್ನೇಹಾಂಚಲದಾಸರೆಯಲಿ
ನನ್ನನಿರಿಸು ಎನ್ನುವೆ.
ಪರಮಹಂಸರು ಈ ಹಾಡನ್ನು ಕೇಳುತ್ತ ಕೇಳುತ್ತ ಇದ್ದ ಹಾಗೆ ಪ್ರೇಮಾಶ್ರುವನ್ನು ಸುರಿಸುತ್ತ ಹೇಳುತ್ತಿದ್ದಾರೆ: “ಆಹಾ! ಎಂಥ ಭಾವ!”
ತ್ರೈಲೋಕ್ಯ ಮತ್ತೆ ಹಾಡುತ್ತಿದ್ದಾನೆ:
ನನ್ನ ಲಜ್ಜೆಯ ನೀಗಿ ನನ್ನ ಮಾನವನುಳಿಪ
ನೀನಿಲ್ಲದಿನ್ನಾರು ಗತಿಯು ನನಗೆ?
ನೀನೆನ್ನ ಪ್ರಾಣಪತಿ, ನೀನೆ ಪ್ರಾಣಾಧಾರ,
ನೀನು ಆಲಂಬನವು ಈ ದಾಸಗೆ!
ಈಗ ಹಾಡುತ್ತಿದ್ದಾನೆ:
ನಿನ್ನ ಪಾದದ ನೆಳಲ ಸೇರುತ
ಜಾತಿಕುಲದಭಿಮಾನವೆಲ್ಲವ
ನಾನು ಕಳೆಯುತ ನಿಂದೆನು,
ಲಜ್ಜೆ ಭಯಗಳ ದೂಡಿ ನಾ-
ನೇಕಾಂಗಿ ಪಯಣಿಗನಾದೆನು,
ಜಗದ ಮಂದಿಯ ಜೊತೆಗೆ ನೇಹಿಗ-
ರೆನ್ನ ನಿಂದಿಸಿ ತೊರೆದರು,
ನಿನ್ನ ಕೃಪೆಗೀ ಎಲ್ಲ ಬವಣೆಯ
ಸಹಿಸಿ ನಿನ್ನೆಡೆ ಬಂದೆನು.
ನೀನೆ ನನಗಿನ್ನಾಸರೆಯು ಗುರುವೇ
ಕೊಲ್ಲು ಅಥವಾ ಕಾಪಿಡು
ನಿನ್ನ ಮಹಿಮೆಯು ನನ್ನ ಗೌರವ-
ದಲ್ಲಿ ಎಂಬುವ ನೆನಪಿಡು.
ನನ್ನ ಎದೆಯಧಿರಾಜ ನೀನೇ
ನನ್ನೊಳೊಲವಿನ ಕಿಡಿಯು ನೀನೇ
ನಿನಗೆ ತಿಳಿದೊಲು ನಡೆಯಿಸು.
ಮತ್ತೆ ಈಗ ಹಾಡುತ್ತಿದ್ದಾನೆ:
ಸಂಸಾರದ ಸೆರೆಯ ಬಿಡಿಸಿ
ನಿನ್ನೊಲವಿನ ಸೆರೆಯಲಿ
ನನ್ನ ಬಂಧಿಸಿರುವ ಗುರುವೆ
ರಕ್ಷಿಸು ನಿನ್ನಡಿಯಲಿ.
ನಿನ್ನೊಲವಿನ ಸುಧೆಯನೆರೆದು
ಹಗಲಿರುಳೂ ಪೋಷಿಸು-
ಎನ್ನುವನೀ ಪ್ರೇಮದಾಸ
ನಿನ್ನ ಚರಣದಾಸನು.
ಪರಮಹಂಸರು ಮತ್ತೆ ಪ್ರೇಮಾಶ್ರು ಸುರಿಸುತ್ತಿದ್ದಾರೆ. ಈಗ ಅವರೇ ರಾಮಪ್ರಸಾದನ ಒಂದು ಹಾಡಿನ ಕೆಲವು ಚರಣಗಳನ್ನು ಹಾಡಲಾರಂಭಿಸಿದ್ದಾರೆ:
ಯಶ-ಅಪಯಶ, ಕುರಸ-ಸರಸ,
ಸಕಲ ರಸವು ನಿನ್ನದೇ;
ಸಕಲ ರಸೇಶ್ವರಿಯು ನೀನೆ,
ಇದರೊಳೇಕೆ ನೀನೀತೆರ
ರಸಭಂಗವ ಮಾಡುವೆ?
ಪರಮಹಂಸರು ತ್ರೈಲೋಕ್ಯನನ್ನು ಸಂಬೋಧಿಸಿ ಹೇಳುತ್ತಿದ್ದಾರೆ: “ಆಹಾ! ನಿನ್ನ ಹಾಡುಗಳು ಎಷ್ಟು ಸೊಗಸಾದುವು, ಅವುಗಳಲ್ಲಿ ನಿಜವಾದ ಸತ್ತ್ವವಿದೆ. ಸಮುದ್ರಕ್ಕೆ ಯಾರು ಹೋಗಿದ್ದಾನೊ ಆತನೇ ಅಲ್ಲಿಂದ ನೀರು ತರಬಲ್ಲ.”
ತ್ರೈಲೋಕ್ಯ ಮತ್ತೆ ಹಾಡುತ್ತಿದ್ದಾನೆ:
ನಿನ್ನದೇ ಹಾಡು, ನಿನ್ನದೇ ಕುಣಿತ, ನಿನ್ನದೇ ರಾಗ ತಾಳ;
‘ಎಲ್ಲ ನನ್ನದೆಂದು’ ತಿಳಿಯುತಿರುವನೀ ಭ್ರಾಂತಮೂಢಮನುಜ
ನೆರಳ ಬೊಂಬೆ ನರ; ನಿನ್ನೊಡನಡೆಯಲು ದಿವ್ಯ ತೇಜನಹನು;
ದೇಹಯಂತ್ರದಲಿ ಕುಳಿತು ರಥವನ್ನು ನಡೆಸುವವಳು ನೀನು.
ಪಾಪಪುಣ್ಯಗಳ ಫಲವನೀಯುವಳು, ಮುಕ್ತಿದಾತೆ ನೀನು,
ಪಾಪಭಾರ ಪರಿತಾಪನಾದರೂ ಮುಕ್ತ ಭ್ರಾಂತನಿವನು!
ಸರ್ವಮೂಲ ನೀ, ಆತ್ಮದಾತ್ಮ ನೀ, ಹೃದಯದೊಡತಿ ನೀನು,
ನಿನ್ನ ಕರುಣೆಯಲಿ ಪರಮಪಾಪಿಯೂ ಪರಮಯೋಗಿಯಹನು!
ಹಾಡುವುದು ಮುಗಿಯಿತು. ಈಗ ಪರಮಹಂಸರು ಭಕ್ತರೊಡನೆ ಮಾತನಾಡಲು ಆರಂಭಿಸಿದ್ದಾರೆ.
ಶ್ರೀರಾಮಕೃಷ್ಣರು: “ಭಗವಂತನೇ ಸೇವ್ಯ, ಭಗವಂತನೇ ಸೇವಕ-ಈ ಭಾವಪೂರ್ಣ ಜ್ಞಾನದ ಚಿಹ್ನೆ. ಮೊದಲು ಸಾಧಕ ‘ನೇತಿ, ನೇತಿ’ ಎಂದು ವಿಚಾರಮಾಡುತ್ತಾನೆ. ಅನಂತರ ಆತನಿಗೆ ಬೋಧೆಯಾಗುತ್ತದೆ, ಭಗವಂತನೊಬ್ಬನೇ ಸತ್ಯ ಉಳಿದುದೆಲ್ಲಾ ಮಿಥ್ಯೆ ಎಂಬುದಾಗಿ. ಬಳಿಕ ಅದೇ ಸಾಧಕನ ಅನುಭವಕ್ಕೆ ಬರುತ್ತದೆ, ಭಗವಂತನೊಬ್ಬನೇ ಎಲ್ಲವೂ ಆಗಿರುವುದು-ಮಾಯೆ, ಜೀವ, ಜಗತ್ತು ಎಲ್ಲವೂ. ಅನುಲೋಮದ ನಂತರ ವಿಲೋಮ. ಇದು ಪುರಾಣದ ಅಭಿಮತ. ಉದಾಹರಣೆಗೆ ಬೇಲದ ಹಣ್ಣಿನಲ್ಲಿ ತಿರುಳು, ಬೀಜ, ಕರಟ ಕೂಡಿಕೊಂಡಿವೆ. ಕರಟ, ಬೀಜಗಳನ್ನು ಪ್ರತ್ಯೇಕಿಸಿಬಿಟ್ಟರೆ ತಿರುಳು ದೊರೆಯುತ್ತದೆ. ಆದರೆ ಬೇಲದ ಹಣ್ಣಿನ ತೂಕ ಎಷ್ಟು ಎಂಬುದನ್ನು ತಿಳಿಯಬೇಕಾದರೆ, ಬೀಜ ಕರಟಗಳನ್ನು ಬಿಟ್ಟು ತೂಗಿದರೆ ಬೇಲದ ಹಣ್ಣಿನ ತೂಕ ಸಿಕ್ಕುವ ಹಾಗಿಲ್ಲ. ಈ ಕಾರಣದಿಂದ ಮೊದಲು ಜೀವ ಜಗತ್ತುಗಳನ್ನು ವರ್ಜಿಸಿ ಸಚ್ಚಿದಾನಂದವನ್ನು ಮುಟ್ಟಬೇಕು. ಆತನನ್ನು ಸಾಕ್ಷಾತ್ಕಾರ ಮಾಡಿಕೊಂಡ ನಂತರ ಕಂಡು ಬರುತ್ತದೆ, ಆತನೇ ಈ ಜೀವಜಗತ್ತು ಆಗಿದ್ದಾನೆ ಎಂಬುದಾಗಿ. ತಿರುಳು ಯಾವ ವಸ್ತುವಿನಿಂದ ಉತ್ಪತ್ತಿಯಾಗಿರುವುದೊ ಅದೇ ವಸ್ತುವಿನಿಂದ ಬೀಜ ಕರಟ ಉತ್ಪತ್ತಿಯಾಗಿವೆ. ಇದು ಮಜ್ಜಿಗೆ ಬೆಣ್ಣೆ ಎರಡೂ ಒಂದೇ ವಸ್ತುವಿನಿಂದ ಉತ್ಪನ್ನವಾಗುವ ಹಾಗೆ.
“ಆದರೆ ಪ್ರಶ್ನೆ ಏಳಬಹುದು: ‘ಸಚ್ಚಿದಾನಂದ ಇಷ್ಟೊಂದು ಗಟ್ಟಿ ಹೇಗೆ ಆದ?’ ಈ ಭೂಮಿಯನ್ನು ಮುಟ್ಟಿ ನೋಡಿದರೆ ಅದು ಬಹಳ ಗಟ್ಟಿಯಾಗಿರುವಂತೆ ತೋರಿ ಬರುತ್ತದೆಯಲ್ಲ ಮತ್ತೆ. ಇದಕ್ಕೆ ಉತ್ತರ ಶುಕ್ರ ಶೋಣಿತಗಳು ಬಹಳ ತೆಳುವಾದ ದ್ರವಗಳಾದರೂ ಕೂಡ ಅವುಗಳಿಂದ ಮನುಷ್ಯನ ಇಷ್ಟೊಂದು ದೊಡ್ಡ ಆಕಾರ ಉತ್ಪತ್ತಿಯಾಗುವುದಿಲ್ಲವೇ? ಭಗವಂತನಿಗೆ ಎಲ್ಲವೂ ಸಾಧ್ಯ. ಮೊದಲು ಅಖಂಡ ಸಚ್ಚಿದಾನಂದನ ಸಾಕ್ಷಾತ್ಕಾರ ಮಾಡಿಕೊಂಡು ಅನಂತರ ಕೆಳಕ್ಕೆ ಇಳಿದು ಬಂದು ಈ ಜಗತ್ತಿನ ಕಡೆ ನೋಡು, ಆಗ ಕಂಡುಬರುತ್ತದೆ. ಎಲ್ಲವೂ ಆತನೇ ಆಗಿರುವುದು. ಈ ಜಗತ್ತು ಎಂದಿಗೂ ಆತನಿಂದ ಪ್ರತ್ಯೇಕವಲ್ಲ.
“ಎಲ್ಲಾ ತತ್ತ್ವಗಳೂ ಕೊನೆಗೆ ಆಕಾಶತತ್ತ್ವದಲ್ಲಿ ಲಯವಾಗುತ್ತವೆ. ಮತ್ತೆ ಸೃಷ್ಟಿಯಾಗಬೇಕಾದರೆ ಆಕಾಶತತ್ತ್ವದಿಂದ ಮಹತ್ತತ್ತ್ವ, ಮಹತ್ತತ್ತ್ವದಿಂದ ಅಹಂಕಾರ ಉತ್ಪತ್ತಿಯಾಗುತ್ತದೆ. ಇದೇ ರೀತಿ ಕ್ರಮೇಣ ಇಡೀ ಬ್ರಹ್ಮಾಂಡವೇ ಸೃಷ್ಟಿಯಾಗುತ್ತದೆ. ಅನುಲೋಮ ವಿಲೋಮ ನಡೆಯುತ್ತಲೇ ಇರುತ್ತದೆ. ಭಕ್ತ ಎಲ್ಲವನ್ನೂ ಸ್ವೀಕರಿಸುತ್ತಾನೆ. ಆತ ಅಖಂಡ ಸಚ್ಚಿದಾನಂದವನ್ನೂ ಸ್ವೀಕರಿಸುತ್ತಾನೆ, ಜೀವಜಗತ್ತುಗಳನ್ನೂ ಸ್ವೀಕರಿಸುತ್ತಾನೆ.
“ಆದರೆ ಯೋಗಿಯ ಮಾರ್ಗ ಬೇರೆ. ಆತ ಪರಮಾತ್ಮನನ್ನು ಮುಟ್ಟಿದ ನಂತರ ಹಿಂದಿರುಗಿ ಬರುವುದಿಲ್ಲ. ಪರಮಾತ್ಮನೊಡನೆ ಐಕ್ಯವಾಗಿಬಿಡುತ್ತಾನೆ.
“ಯಾವುದಾದರೂ ಒಂದು ನಿರ್ದಿಷ್ಟ ವಸ್ತುವಿನಲ್ಲಿ ಮಾತ್ರ ಭಗವಂತನನ್ನು ಯಾರು ಕಾಣುವನೊ ಆತನಿಗೆ ‘ಖಂಡಜ್ಞಾನಿ’ ಅಂತ ಹೆಸರು. ಆತನ ಭಾವನೆ ಅದೊಂದನ್ನು ಬಿಟ್ಟರೆ ಬೇರೆ ಯಾವುದರಲ್ಲೂ ಭಗವಂತನಿಲ್ಲ ಎಂದು.
“ಭಕ್ತರಲ್ಲಿ ಮೂರು ವಿಧ-ಅಧಮ, ಮಧ್ಯಮ, ಉತ್ತಮ. ಅಧಮ ಭಕ್ತ ಹೇಳುತ್ತಾನೆ: ‘ಭಗವಂತ ಅಲ್ಲಿ.’ ಎಂದರೆ ಆತ ಆಕಾಶದ ಕಡೆ ಕೈ ತೋರಿಸುತ್ತಾನೆ. ಮಧ್ಯಮ ಭಕ್ತ. ಹೇಳುತ್ತಾನೆ: ‘ಭಗವಂತ ಹೃದಯಮಧ್ಯದಲ್ಲಿ ಅಂತರ್ಯಾಮಿ ರೂಪದಲ್ಲಿ ಇದ್ದಾನೆ.’ ಉತ್ತಮ ಭಕ್ತ ಹೇಳುತ್ತಾನೆ: ‘ಭಗವಂತನೇ ಎಲ್ಲವೂ ಆಗಿದ್ದಾನೆ, ಕಣ್ಣಿಗೆ ಏನೇನು ಬೀಳುವುದೊ ಎಲ್ಲವೂ ಆತನ ಒಂದೊಂದು ರೂಪ.’ ನರೇಂದ್ರ ಹಿಂದೆ ಹಾಸ್ಯ ಮಾಡುತ್ತ ಹೇಳುತ್ತಿದ್ದ: ‘ಹೌದು, ಭಗವಂತ ಎಲ್ಲವೂ ಆಗಿದ್ದಾನೆ! ಅದು ಹಾಗಿದ್ದರೆ ಈ ಬಟ್ಟಲೂ ಭಗವಂತ, ಆ ತಟ್ಟೆಯೂ ಭಗವಂತ!’ (ಎಲ್ಲರೂ ನಗುತ್ತಿದ್ದಾರೆ.)
“ಆದರೆ ಭಗವಂತನ ದರ್ಶನ ದೊರೆಯಿತು ಎಂದರೆ ಎಲ್ಲಾ ಸಂದೇಹಗಳೂ ನಿವೃತ್ತಿಯಾಗಿಬಿಡುತ್ತವೆ. ಬರಿದೆ ಕಿವಿಯಲ್ಲಿ ಕೇಳುವುದಕ್ಕೂ ಪ್ರತ್ಯಕ್ಷ ನೋಡುವುದಕ್ಕೂ ಅಜಗಜಾಂತರ ವ್ಯತ್ಯಾಸ. ಕೇವಲ ಶ್ರವಣದಿಂದ ನೂರಕ್ಕೆ ನೂರು ಭಾಗ ಶ್ರದ್ಧೆಯುಂಟಾಗುವುದಿಲ್ಲ. ಸಾಕ್ಷಾತ್ಕಾರವಾಯಿತು ಎಂದರೆ ಶ್ರದ್ಧೆಗೆ ಇನ್ನು ಯಾವುದರ ಕೊರತೆಯೂ ಇರದು.
“ಭಗವಂತನ ದರ್ಶನವಾದ ನಂತರ ಕರ್ಮತ್ಯಾಗ ಆಗಿಬಿಡುತ್ತದೆ. ದೇವಾಲಯದಲ್ಲಿ ನನ್ನ ಪೂಜೆ ನಿಂತುಹೋದುದೂ ಹೀಗೆಯೇ. ಹಿಂದೆ ಕಾಳೀದೇವಾಲಯದಲ್ಲಿ ಪೂಜೆ ಮಾಡುತ್ತಿದ್ದೆ. ಭಗವತಿ ಇದ್ದಕ್ಕಿದ್ದ ಹಾಗೆ ತೋರಿಸಿಬಿಟ್ಟಳು, ಎಲ್ಲವೂ ಚಿನ್ಮಯವಾಗಿರುವುದನ್ನು -ಪೂಜಾ ಪಾತ್ರೆಗಳು, ವೇದಿಕೆ, ಬಾಗಿಲು ಎಲ್ಲ ಚಿನ್ಮಯವಾಗಿರುವುದನ್ನು. ಮನುಷ್ಯರು, ಜೀವ, ಜಗತ್ತು-ಎಲ್ಲವೂ ಚಿನ್ಮಯವಾಗಿ ಕಂಡುವು. ಆಗ ಉನ್ಮತ್ತನ ಹಾಗೆ ಎಲ್ಲಾ ದಿಕ್ಕುಗಳಿಗೂ ಪುಷ್ಪವನ್ನು ಎರಚಲಾರಂಭಿಸಿದೆ. ಕಣ್ಣಿಗೆ ಬಿದ್ದುದನ್ನೆಲ್ಲಾ ಪೂಜಿಸಲಾರಂಭಿಸಿದೆ.
“ಒಂದು ದಿನ ಪೂಜೆಯ ಸಮಯದಲ್ಲಿ ಶಿವನ ತಲೆಯ ಮೇಲೆ ವಜ್ರದಾಭರಣ ಇಡುತ್ತಿದ್ದೆ. ಆಗ ಭಗವತಿ ನನಗೆ ತೋರಿಸಿದಳು, ಈ ವಿರಾಟ್, ಈ ವಿಶ್ವವೇ ಶಿವನೆಂದು. ಅಂದಿನಿಂದ ಶಿವನನ್ನು ನಾನು ಪ್ರತಿಮೆಯ ಮೂಲಕ ಪೂಜಿಸುವುದು ಕೊನೆಗೊಂಡಿತು. ಇನ್ನೊಂದು ದಿನ ನಾನು ಹೂವು ಕೊಯ್ಯುತ್ತಿದ್ದೆ. ಇದ್ದಕ್ಕಿದ್ದ ಹಾಗೆ ಭಗವತಿ ನನಗೆ ತೋರಿಸಿದಳು, ಹೂವಿನ ಗಿಡಗಳೆಲ್ಲಾ ಒಂದೊಂದು ತುರಾಯಿ ಎಂದು.”
ತ್ರೈಲೋಕ್ಯ: “ಆಹಾ! ಭಗವಂತನ ಸೃಷ್ಟಿರಚನೆ ಎಷ್ಟು ಸುಂದರವಾದದ್ದು!”
ಶ್ರೀರಾಮಕೃಷ್ಣರು: “ಅಲ್ಲ, ಅದಲ್ಲ. ಇದ್ದಕ್ಕಿದ್ದ ಹಾಗೆ ತೋರಿಸಿಬಿಟ್ಟಳು. ನಾನು ಲೆಕ್ಕಾಚಾರ ಮಾಡಿ ಹಾಗೆ ಹೇಳಲಿಲ್ಲ, ತೋರಿಸಿದಳು, ಒಂದೊಂದು ಹೂವಿನ ಗಿಡವೂ ಒಂದೊಂದು ತುರಾಯಿ-ಅವುಗಳಿಂದ ವಿರಾಟ್ಪುರುಷನ ಅಲಂಕಾರವಾಗಿದೆ ಎಂದು. ಅಂದಿನಿಂದ ನಾನು ಹೂವು ಕೊಯ್ಯುವುದು ನಿಂತುಹೋಯಿತು. ಮನುಷ್ಯನನ್ನೂ ನಾನು ಅದೇ ರೀತಿಯಾಗಿ ನೋಡುತ್ತೇನೆ. ಮನುಷ್ಯ ನನ್ನ ಕಣ್ಣಿಗೆ ಬಿದ್ದಾಗ ನನಗೆ ತೋರುತ್ತದೆ, ಭಗವಂತನೇ ಮನುಷ್ಯ ಶರೀರ ಧರಿಸಿ ಹಿಂದಕ್ಕೂ ಮುಂದಕ್ಕೂ ಜಗ್ಗಿ ಜಗ್ಗಿ ನಡೆಯುತ್ತಿದ್ದಾನೊ ಏನೊ ಎಂಬುದಾಗಿ-ಅಲೆಯ ಮೇಲೆ ತೇಲುತ್ತಿರುವ ದಿಂಬಿನ ಹಾಗೆ. ದಿಂಬು ಅಲೆಗಳೊಡನೆ ಚಲಿಸುತ್ತಿರುತ್ತದೆ-ಕೆಳಕ್ಕೆ ಬಿದ್ದು ಮೇಲಕ್ಕೆ ಎದ್ದು.”
“ಈ ಶರೀರ ಎರಡು ದಿನದ್ದು. ಭಗವಂತನೇ ಸತ್ಯ. ಶರೀರ ಈಗಿದ್ದುದು ಈಗಿರದು. ಅನೇಕ ವರ್ಷಗಳ ಹಿಂದೆ ನಾನು ಅಗ್ನಿಮಾಂದ್ಯದಿಂದ ಬಹಳವಾಗಿ ನರಳುತ್ತಿದ್ದಾಗ ಹೃದೆ ನನಗೆ ಸಲಹೆ ಇತ್ತ: “ಭಗವತಿಗೆ ಒಮ್ಮೆ ಪ್ರಾರ್ಥನೆ ಮಾಡಿ-ಗುಣಪಡಿಸಿಕೊಡಬೇಕೆಂದು.’ ನನ್ನ ರೋಗವನ್ನು ಗುಣಪಡಿಸಿಕೊಡಬೇಕೆಂದು ಆಕೆಯನ್ನು ಕೇಳಿಕೊಳ್ಳಲು ನನಗೆ ನಾಚಿಕೆಯಾಯಿತು. ನಾನು ಆಕೆಗೆ ಹೇಳಿದೆ: ‘ತಾಯೆ, ನಾನು ಒಮ್ಮೆ ಏಷ್ಯಾಟಿಕ್ ಸೊಸೈಟಿ ವಸ್ತುಸಂಗ್ರಹಶಾಲೆಯಲ್ಲಿ ಮನುಷ್ಯನ ಎಲುಬುಗೂಡನ್ನು ನೋಡಿದ್ದೆ. ತಂತಿಯಿಂದ ಬಿಗಿದು ಅದನ್ನು ಮನುಷ್ಯನ ಆಕೃತಿಗೆ ತಂದಿದ್ದರು. ತಾಯೆ, ಈ ಶರೀರವನ್ನೂ ಆ ರೀತಿಯಾಗಿ ಬಿಗಿದು ಸ್ವಲ್ಪ ನಿಲ್ಲಿಸು. ಆಗ ನನಗೆ ನಿನ್ನ ನಾಮಗುಣ ಕೀರ್ತನೆ ಮಾಡಿಕೊಂಡಿರಲು ಸಾಧ್ಯವಾಗುತ್ತದೆ.’
“ಬದುಕಬೇಕೆಂಬ ಇಚ್ಛೆ ಏಕೆ ಉಂಟಾಗುತ್ತದೆ? ರಾವಣನ ವಧೆಯಾದ ನಂತರ ರಾಮ-ಲಕ್ಷ್ಮಣರು ಲಂಕೆಯನ್ನು ಪ್ರವೇಶಿಸಿದರು. ಅವರು ರಾವಣನ ಅರಮನೆಗೆ ಹೋಗಿ ನೋಡುತ್ತಾರೆ, ರಾವಣನ ತಾಯಿ ನಿಕಷೆ ಅಲ್ಲಿಂದ ಓಡಿಹೋಗುತ್ತಿದ್ದಾಳೆ. ಲಕ್ಷ್ಮಣನಿಗೆ ಆಶ್ಚರ್ಯವಾಗಿ ಆತ ರಾಮನನ್ನು ಕೇಳಿದ: ‘ಓ ರಾಮ, ನಿಕಷೆಯ ವಂಶವೆಲ್ಲಾ ಧ್ವಂಸವಾಗಿ ಹೋಗಿದೆ. ಆದರೂ ಆಕೆಗೆ ಪ್ರಾಣದ ಮೇಲೆ ಇಷ್ಟೊಂದು ಆಸೆಯಿದೆಯಲ್ಲ!’ ರಾಮ ನಿಕಷೆಯನ್ನು ಹತ್ತಿರಕ್ಕೆ ಕರೆದು ಹೇಳಿದ: ‘ಹೆದರಬೇಡ. ನೀನು ಹೆದರಿ ಓಡಿಹೋಗುತ್ತಿದ್ದೆಯಲ್ಲ ಏಕೆ?’ ನಿಕಷೆ ಹೇಳಿದಳು: ‘ಹೇ ರಾಮ, ನಾನು ಹೆದರಿ ಓಡಿಹೋಗುತ್ತಿರಲಿಲ್ಲ. ನಾನು ಬದುಕಿಕೊಂಡಿದ್ದುದರಿಂದ ನಿನ್ನ ಇಷ್ಟೊಂದು ಲೀಲೆಗಳನ್ನು ನೋಡಲು ಸಾಧ್ಯವಾಯಿತು. ಬದುಕಿಕೊಂಡಿದ್ದರೆ ಇನ್ನೂ ಎಷ್ಟೋ ಲೀಲೆಗಳನ್ನು ನೋಡಲು ಸಾಧ್ಯವಾಗುತ್ತದೆ. ಆದ್ದರಿಂದ ಬದುಕಲು ಇಚ್ಛೆ.’
“ಆಸೆ ಇಲ್ಲದೆ ಇತ್ತು ಎಂದರೆ ಶರೀರ ಬದುಕಿರದು. (ನಗುತ್ತ) ನನಗೊಂದೆರಡು ಆಸೆಗಳಿದ್ದುವು. ನಾನು ಭಗವತಿಗೆ ಪ್ರಾರ್ಥನೆಮಾಡಿದ್ದೆ: ‘ಹೇ ತಾಯೆ, ಕಾಮಕಾಂಚನ ತ್ಯಾಗಿಗಳ ಸಹವಾಸ ಕೊಡು.’ ಮತ್ತೆ ಪ್ರಾರ್ಥಿಸಿದ್ದೆ: ‘ನಿನ್ನ ಭಕ್ತರ ಮತ್ತು ಜ್ಞಾನಿಗಳ ಸಹವಾಸ ಮಾಡಬೇಕು ಅಂತ ಇಚ್ಛೆಯಿದೆ. ನನಗೆ ಸ್ವಲ್ಪ ನಡೆಯುವ ಶಕ್ತಿಯನ್ನು ಕೊಡು. ಅಲ್ಲಿ ಇಲ್ಲಿ ಸುತ್ತಿ ಅವರನ್ನೆಲ್ಲಾ ನೋಡಿಕೊಂಡು ಬರುತ್ತೇನೆ.’ ಆದರೆ ಭಗವತಿ ಹಾಗೆ ಸುತ್ತಿಬರುವ ಶಕ್ತಿಯನ್ನು ನನಗೆ ಕರುಣಿಸಲಿಲ್ಲ.
ತ್ರೈಲೋಕ್ಯ ನಗುತ್ತ: “ನಿಮ್ಮ ಎಲ್ಲಾ ಇಚ್ಛೆಗಳೂ ಪೂರ್ಣಗೊಂಡುಬಿಟ್ಟೆವೆಯೇನು?”
ಶ್ರೀರಾಮಕೃಷ್ಣರು ನಗುತ್ತ: “ಇಲ್ಲ, ಇನ್ನೂ ಸ್ವಲ್ಪ ಉಳಿದುಕೊಂಡಿದೆ. (ಎಲ್ಲರೂ ನಗುತ್ತಿದ್ದಾರೆ.)”
“ಈ ಶರೀರ ಅನಿತ್ಯವಾದ್ದು. ನನ್ನ ತೋಳಿಗೆ ಪೆಟ್ಟು ತಗುಲಿದಾಗ ನಾನು ಭಗವತಿಗೆ ಹೇಳಿದೆ: ‘ತಾಯೆ, ಬಹಳವಾಗಿ ನೋಯುತ್ತಿದೆ.’ ಒಡನೆಯೆ ಆಕೆ ನನಗೆ ತೋರಿಸಿದಳು. ಗಾಡಿಯನ್ನು, ಅದನ್ನು ಹೊಡೆಯುವವನನ್ನು. ಗಾಡಿಯ ಸ್ಕ್ರೂ ಮೊಳೆಗಳು ಅಲ್ಲೊಂದು ಇಲ್ಲೊಂದು ಕಳಚಿಕೊಂಡಿದ್ದುವು. ಗಾಡಿ ಹೊಡೆಯುವವ ಓಡಿಸಿದ ಹಾಗೆ ಆ ಗಾಡಿ ಚಲಿಸುತ್ತಿತ್ತು. ಅದಕ್ಕೆ ತನ್ನದೇ ಆದ ಯಾವ ಶಕ್ತಿಯೂ ಇರಲಿಲ್ಲ.
“ಹಾಗಾದರೆ ಈ ದೇಹಕ್ಕೆ ಗಮನ ಕೊಡುತ್ತೇನಲ್ಲ ಏಕೆ? ಭಗವಂತನೊಡನೆ ಆನಂದಪಡಲು, ಆತನ ನಾಮಗುಣಕೀರ್ತನೆ ಮಾಡಲು, ಆತನ ಜ್ಞಾನಿಗಳನ್ನು, ಭಕ್ತರನ್ನು ಸಂಧಿಸಿ ಸುತ್ತಾಡಲು.”
ನರೇಂದ್ರ ಪರಮಹಂಸರ ಮುಂದುಗಡೆ ನೆಲದ ಮೇಲೆ ಕುಳಿತಿದ್ದಾನೆ.
ಶ್ರೀರಾಮಕೃಷ್ಣರು ತ್ರೈಲೋಕ್ಯನೇ ಮೊದಲಾದ ಭಕ್ತರಿಗೆ: “ದೇಹದ ಸುಖ, ದುಃಖ ಇದ್ದೇ ಇವೆ. ಯಾವ ಮಾರ್ಗವೂ ಆತನಿಗೆ ತೋರಿಬರುತ್ತಿಲ್ಲ. ಭಗವಂತ ನಮ್ಮನ್ನು ಕೆಲವು ವೇಳೆ ಸುಖದಲ್ಲಿ, ಕೆಲವು ವೇಳೆ ದುಃಖದಲ್ಲಿ ಇಡುತ್ತಾನೆ.”
ತ್ರೈಲೋಕ್ಯ: “ಅದೇನೋ ನಿಜ. ನರೇಂದ್ರನ ಮೇಲೆ ಭಗವಂತನ ದಯೆ ಉಂಟಾಗುತ್ತದೆ.”
ಶ್ರೀರಾಮಕೃಷ್ಣರು ನಗುತ್ತ: “ಇನ್ನು ಯಾವಾಗ? ಕಾಶಿಯ ಅನ್ನಪೂರ್ಣಾ ಛತ್ರದಲ್ಲಿ ಯಾರೂ ಹಸಿದಿರುವುದಿಲ್ಲವೆಂಬುದೇನೊ ನಿಜ. ಆದರೆ ಕೆಲಕೆಲವರು ಸಾಯಂಕಾಲದವರೆಗೂ ಹಸಿದು ಕುಳಿತಿರಬೇಕಾಗುತ್ತದೆ.
“ಒಮ್ಮೆ ಹೃದೆ ಶಂಭುಮಲ್ಲಿಕನನ್ನು ತನಗೆ ಸ್ವಲ್ಪ ದುಡ್ಡು ಬೇಕೆಂದು ಕೇಳಿದ. ಅಂಥ ವಿಷಯಗಳಲ್ಲಿ ಶಂಭುಮಲ್ಲಿಕನ ಸ್ವಭಾವ ಇಂಗ್ಲೀಷಿನವರ ಹಾಗೆ. ಆತ ಹೃದೆಗೆ ಹೇಳಿದ: ‘ನಾನೇಕೆ ನಿನಗೆ ದುಡ್ಡು ಕೊಡಬೇಕು? ದುಡಿದು ಸಂಪಾದಿಸುವ ಶಕ್ತಿ ನಿನಗಿದೆ. ಈಗ ನೀನು ಸ್ವಲ್ಪ ದುಡ್ಡನ್ನೂ ಸಂಪಾದಿಸುತ್ತಲೇ ಇದ್ದೀಯೆ. ನೀನು ಅತ್ಯಂತ ದರಿದ್ರನಾಗಿದ್ದರೆ ಆಗ ಒಮ್ಮೆ ನೋಡಬಹುದಾಗಿತ್ತು. ಕುರುಡ, ಕುಂಟ, ಹೆಳವರಿಗೆ ದಾನಮಾಡಿದರೆ ಅದು ಸಾರ್ಥಕವಾಗುತ್ತದೆ.’ ಆಗ ಹೃದೆ ಆತನಿಗೆ ಹೇಳಿದ: ‘ಮಹಾಶಯ, ನೀವು ಹಾಗೆಲ್ಲ ಹೇಳಬೇಡಿ. ನನಗೆ ನಿಮ್ಮ ದುಡ್ಡೂ ಬೇಕಾಗಿಲ್ಲ. ಕಾಸೂ ಬೇಕಾಗಿಲ್ಲ. ಭಗವಂತನ ಕೃಪೆಯಿಂದ ನಾನು ಕುಂಟನೊ, ಕುರುಡನೊ, ಹೆಳವನೊ ಅಥವಾ ಅತ್ಯಂತ ದರಿದ್ರನೊ ಆಗದೆ ಇರಲಿ! ನೀವು ಕೊಡಲೂ ಬೇಡಿ, ನಾನು ಸ್ವೀಕರಿಸುವುದೂ ಇಲ್ಲ.’”
ಭಗವಂತ ನರೇಂದ್ರನಿಗೆ ಇನ್ನೂ ಕೃಪೆಮಾಡದೆ ಇರುವುದನ್ನು ನೋಡಿ ಆತನ ಮೇಲೆ ಸಿಟ್ಟುಗೊಂಡಿರುವರೊ ಏನೊ ಎಂಬಂತೆ ಪರಮಹಂಸರು ಈ ಮಾತುಗಳನ್ನೆಲ್ಲಾ ಆಡಿದರು. ಆಗಾಗ ಅವರು ತಮ್ಮ ಸ್ನೇಹಪೂರಿತ ದೃಷ್ಟಿಯನ್ನು ನರೇಂದ್ರನ ಮೇಲೆ ಹಾಕುತ್ತಲೇ ಇದ್ದಾರೆ.
ನರೇಂದ್ರ: “ಈಗ ನಾನು ನಾಸ್ತಿಕಮತ ಗ್ರಂಥಗಳನ್ನು ಓದುತ್ತಿದ್ದೇನೆ.”
ಶ್ರೀರಾಮಕೃಷ್ಣರು: “ಆಸ್ತಿಕಮತ, ನಾಸ್ತಿಕಮತ ಎರಡೂ ಇವೆ. ಮೊದಲನೆಯದನ್ನು ಏಕೆ ಸ್ವೀಕರಿಸಬಾರದು?”
ಸುರೇಂದ್ರ: “ಭಗವಂತ ನ್ಯಾಯಪರಾಯಣ. ಆತ ಭಕ್ತರ ಯೋಗಕ್ಷೇಮವನ್ನು ನೋಡಿಯೇ ನೋಡಿಕೊಳ್ಳುತ್ತಾನೆ.”
ಶ್ರೀರಾಮಕೃಷ್ಣರು: “ಶಾಸ್ತ್ರಗಳು ಹೇಳುತ್ತವೆ, ಯಾರು ಪೂರ್ವಜನ್ಮಗಳಲ್ಲಿ ದಾನಾದಿ ಧರ್ಮಕಾರ್ಯಗಳನ್ನು ಮಾಡಿರುತ್ತಾರೋ ಅವರಿಗೆ ಈ ಜನ್ಮದಲ್ಲಿ ಧನ ದೊರೆಯುತ್ತದೆ ಎಂಬುದಾಗಿ. ಆದರೆ ಸತ್ಯ ಏನು ಗೊತ್ತೆ? ಈ ಜಗತ್ತು ಭಗವಂತನ ಮಾಯೆಯಿಂದ ಜನಿತವಾಗಿದೆ. ಈ ಮಾಯಾಪ್ರಪಂಚದಲ್ಲಿ ಅನೇಕ ಗೊಂದಲಗಳಿವೆ. ಕಾರಣಗೀರಣ ಏನೂ ಗೊತ್ತಾಗುವುದಿಲ್ಲ.
“ಭಗವಂತನ ಕಾರ್ಯವನ್ನು ಸ್ವಲ್ಪವೂ ಅರಿಯಲಾಗುವುದಿಲ್ಲ. ಭೀಷ್ಮ ಶರಶಯ್ಯೆಯಲ್ಲಿ ಮಲಗಿಕೊಂಡಿದ್ದಾಗ ಪಾಂಡವರು ಆತನನ್ನು ನೋಡಲು ಬಂದರು. ಅವರೊಡನೆ ಕೃಷ್ಣನೂ ಇದ್ದ. ಇದ್ದಕ್ಕಿದ್ದ ಹಾಗೆ ಭೀಷ್ಮ ಅಳಲಾರಂಭಿಸಿದ. ಪಾಂಡವರು ಕೃಷ್ಣನಿಗೆ ಹೇಳಿದರು: ‘ಓ ಕೃಷ್ಣ, ಏನಾಶ್ಚರ್ಯ ಇದು! ಪಿತಾಮಹ ಅಷ್ಟವಸುಗಳಲ್ಲಿ ಒಬ್ಬ. ಇವನಂಥ ಜ್ಞಾನಿ ಈ ಜಗತ್ತಿನಲ್ಲೇ ಇಲ್ಲ. ಈತನೂ ಮೃತ್ಯು ಸನ್ನಿಹಿತವಾಗಿರುವಾಗ ಮಾಯೆಯ ದೆಸೆಯಿಂದ ಅಳುತ್ತಿದ್ದಾನಲ್ಲ!’ ಕೃಷ್ಣ ಹೇಳಿದ: ‘ಭೀಷ್ಮ ಅದಕ್ಕಾಗಿ ಅಳುತ್ತಿಲ್ಲ. ಅದಕ್ಕೆ ಕಾರಣವನ್ನು ಆತನನ್ನೇ ಕೇಳಿ ತಿಳಿದುಕೊಳ್ಳೋಣ.’ ಕಾರಣ ಕೇಳಿದಾಗ ಭೀಷ್ಮ ಹೇಳಿದ: ‘ಓ ಕೃಷ್ಣ, ಭಗವಂತನ ಕಾರ್ಯ ನನಗೆ ಸ್ವಲ್ಪವೂ ಅರ್ಥವಾಗುತ್ತಿಲ್ಲ. ನಾನು ಅಳುತ್ತಿದ್ದೇನೆ, ಸಾಕ್ಷಾತ್ ಭಗವಂತನೇ ಪಾಂಡವರೊಡನೆ ಸರ್ವದಾ ಇದ್ದಾನೆ, ಆದರೂ ಅವರ ದುರ್ದೆಶೆಗೆ ಕೊನೆಯೇ ಇಲ್ಲವಲ್ಲ ಎಂದು. ಈ ಭಾವನೆ ಬಂದಾಗ ನನಗನಿಸುತ್ತದೆ, ಭಗವಂತನ ಕಾರ್ಯವನ್ನು ಸ್ವಲ್ಪವೂ ಅರಿತುಕೊಳ್ಳಲಾಗುವುದಿಲ್ಲ ಎಂದು.’
“ಭಗವಂತ ನನಗೆ ಪರಮಾತ್ಮನನ್ನು ತೋರಿಸಿದ್ದಾನೆ-ಯಾರನ್ನು ವೇದ, ಶುದ್ಧ ಆತ್ಮ ಎಂದು ಕರೆಯುವುದೊ ಆತನನ್ನು. ಆತನೇ ಕೇವಲ ಏಕಮಾತ್ರ ಅಚಲವಸ್ತು- ಸುಮೇರುವಿನ ಹಾಗೆ, ನಿರ್ಲಿಪ್ತ ಮತ್ತು ಸುಖದುಃಖಗಳಿಗತೀತ. ಆತನ ಮಾಯಾ ಕಾರ್ಯಗಳಲ್ಲಿ ಅನೇಕ ಗೊಂದಲಗಳಿವೆ. ಇದಾದ ಮೇಲೆ ಅದು, ಅದಾದ ಮೇಲೆ ಇದು ಎಂಬ ನಿಯಮ ನಿಬಂಧನೆಗಳಾವುವೂ ಇಲ್ಲ.”
ಸುರೇಂದ್ರ ನಗುತ್ತ : “ಪೂರ್ವಜನ್ಮಗಳಲ್ಲಿ ದಾನಾದಿಗಳನ್ನು ಮಾಡಿದ್ದರೆ ತಾನೆ ನಮಗೆ ಈ ಜನ್ಮದಲ್ಲಿ ಐಶ್ವರ್ಯ ದೊರಕಬೇಕಾದರೆ? ಆದ್ದರಿಂದ ನಾವು ಈ ಜನ್ಮದಲ್ಲಿ ದಾನ ಮಾಡಬೇಕು.”
ಶ್ರೀರಾಮಕೃಷ್ಣರು: “ಯಾರಲ್ಲಿ ಹಣವಿದೆಯೊ ಅವರು ಹಾಗೆ ಮಾಡಬೇಕಾದ್ದೆ. (ತ್ರೆಲೋಕ್ಯನಿಗೆ) ಜಯಗೋಪಾಲಸೇನನ ಹತ್ತಿರ ಹಣವಿದೆ. ಆತ ದಾನ ಧರ್ಮಾದಿಕಾರ್ಯಗಳನ್ನು ಮಾಡಬೇಕು. ಆತ ಹಾಗೆ ಮಾಡದಿರುವುದು ಅಪಯಶಸ್ಕರವಾದದ್ದು. ಕೆಲವರಲ್ಲಿ ಹಣವಿದ್ದರೂ ಕೃಪಣರಾಗಿರುತ್ತಾರೆ. ಅವರು ಸತ್ತ ನಂತರ ಅವರ ಹಣವನ್ನು ಯಾರು ಅನುಭವಿಸಬೇಕಾಗಿದೆಯೊ ಯಾರಿಗೆ ತಾನೆ ಗೊತ್ತು!
“ಅಂದು ಜಯಗೋಪಾಲಸೇನ ಇಲ್ಲಿಗೆ ಬಂದಿದ್ದ. ಗಾಡಿ ಮಾಡಿಕೊಂಡು ಬಂದಿದ್ದ. ಗಾಡಿಯಲ್ಲಿ ಒಡೆದುಹೋದ ಲಾಂದ್ರಗಳಿದ್ದುವು. ಕುದುರೆಗಳು ಕಟುಕನಿಗೂ ಬೇಡದ ಹಾಗೆ ಇದ್ದುವು. ಗಾಡಿ ಹೊಡೆಯುವವ ಈಗತಾನೆ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಬಂದಿದ್ದಾನೊ ಏನೊ ಎಂಬಂತಿದ್ದ. ನನಗಾಗಿ ಒಂದೆರಡು ಕೊಳೆತ ದಾಳಿಂಬೆ ಹಣ್ಣು ತಂದಿದ್ದ!” (ಎಲ್ಲರೂ ನಗುತ್ತಿದ್ದಾರೆ.)
ಸುರೇಂದ್ರ: “ಜಯಗೋಪಾಲಸೇನ ಬ್ರಾಹ್ಮಸಮಾಜದ ಅನುಯಾಯಿ. ಈಗ ಕೇಶವಸೇನನ ಬ್ರಾಹ್ಮಸಮಾಜದಲ್ಲಿ ಗಣ್ಯವ್ಯಕ್ತಿ ಯಾರೂ ಇಲ್ಲ ಅಂತ ಕಾಣುತ್ತೆ. ವಿಜಯ ಗೋಸ್ವಾಮಿ, ಶಿವನಾಥ ಮತ್ತೆ ಇನ್ನೂ ಕೆಲವರು ಕೂಡಿ ಸಾಧಾರಣ ಬ್ರಾಹ್ಮಸಮಾಜ ಮಾಡಿಕೊಂಡಿದ್ದಾರೆ.”
ಶ್ರೀರಾಮಕೃಷ್ಣರು ನಗುತ್ತ : “ಗೋವಿಂದ ಅಧಿಕಾರಿ ತನ್ನ ನಾಟಕಶಾಲೆಯಲ್ಲಿ ಒಳ್ಳೆಯ ನಟರನ್ನು ಇಟ್ಟುಕೊಳ್ಳುತ್ತಿರಲಿಲ್ಲ-ಅವರಿಗೆ ಲಾಭ ಹಂಚಬೇಕಾಗುತ್ತಲ್ಲ ಎಂದು (ಎಲ್ಲರೂ ನಗುತ್ತಿದ್ದಾರೆ.)
“ಅಂದು ಕೇಶವಸೇನನ ಒಬ್ಬ ಶಿಷ್ಯನನ್ನು ನೋಡಿದೆ. ಕೇಶವಸೇನನ ಮನೆಯಲ್ಲಿ ನಾಟಕ ನಡೆಯುತ್ತಿತ್ತು. ಅದರಲ್ಲಿ ಆತ ಕಂಕುಳಲ್ಲಿ ಮಗು ಎತ್ತಿಕೊಂಡು ನರ್ತಿಸುತ್ತಿದ್ದ. ಆತ ಉಪನ್ಯಾಸ ಕೊಡುತ್ತಾನೆ ಅಂತ ಕೇಳಿದ್ದೇನೆ. ಆತ ತನಗೆ ತಾನೇ ಶಿಕ್ಷಣ ಕೊಟ್ಟುಕೊಂಡರೇ ಬೇಕಾದಷ್ಟು!”
ತ್ರೈಲೋಕ್ಯ ಹಾಡುತ್ತಿದ್ದಾನೆ :
ಚಿದಾನಂದ ಸಿಂಧುವಿನಲಿ ಪ್ರೇಮಾನಂದದಲೆಗಳು
ಮಹಾಭಾವ ರಾಸಲೀಲ ಮಾಧುರ್ಯದೊಳಾಡಿವೆ!……
ಪರಮಹಂಸರು ತ್ರೈಲೋಕ್ಯನನ್ನು ಕೇಳಿಕೊಂಡರು, ‘ನನ್ನನೂ ಉನ್ಮತ್ತನಾಗಿಸಲೆ ತಾಯೆ’ ಎಂದು ಹಾಡನ್ನು ಹಾಡುವಂತೆ.
ತ್ರೈಲೋಕ್ಯ ಹಾಡುತ್ತಿದ್ದಾನೆ:
ನನ್ನನೂ ಉನ್ಮತ್ತನಾಗಿಸಲೆ ತಾಯೆ,
ನಿನ್ನ ಭಕ್ತಿಯ ಮಧುರ ಮಧುಪಾನದಿಂದ!…..